ವಿಷಯಕ್ಕೆ ಹೋಗು

ಆದಿಪರ್ವ: ೦೮. ಎಂಟನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಎಂಟನೆಯ ಸಂಧಿ

[ಸಂಪಾದಿಸಿ]

ಸೂಚನೆ: ವಾಯುಸುತನುರಿಮನೆಯ ಕೌರವ
ರಾಯ ಕೃತಕವ ಕಳೆದು ಹೊಕ್ಕನು
ತಾಯಿ ವೊಡಹುಟ್ಟಿದರು ಸಹಿತ ಮಹಾ ವನಾಂತರವ

~~ಓಂ~~


ಕೇಳು ಜನಮೇಜಯ ಧರಿತ್ರೀ
ಪಾಲ ಗಜನಗರಿಯಲಿ ಕೌರವ
ರಾಳ ಪಾಂಡವರಾಳ ಸೆಣಸಿನ ಕಾಲು ಮೆಟ್ಟುಗಳ |
ಸೂಳು ಮತ್ಸರ ಬಿರುದು ಪಾಡಿನ
ಚೂಳಿಗಲಹದ ಕದಡು ಜೂಜಿನ
ತೋಳುವಲರೊಳತೋಟಿ ಮಸಗಿತು ದಿವಸ ದಿವಸದಲಿ || (೧)
 
ಬೀದಿಗಲಹದ ಕದಡು ಬೀಡಿನ
ಲೈದೆ ಹಬ್ಬಿತು ಬೀಡುಗಲಹದ
ಕೈದೊಳಸು ಕೊಂಡೆಸಗಿ ನಟಿಸಿತು ನಾಡು ನಾಡಿನಲಿ |
ಅದುದೆರಡರಸಿಭಪುರಿಗೆ ಕಾ
ಳಾದುದಿನ್ನೇನೆಂದು ಪುರಜನ
ವೈದೆ ಹೆದರಿತು ಭೀಮ ದುರ್ಯೋಧನರ ಹೋರಟೆಗೆ || (೨)
 
ಬೇರೆ ಪಾಂಡುವರಿರಲಿ ರಾಯನ
ನೂರು ಮಕ್ಕಳು ಪುರವನಾಳಲಿ
ಬೇರೆ ಕೌರವರಿರಲಿ ಪಾಂಡವರಾಳಲಿಭ ಪುರಿಯ |
ನೂರರೊಡನೈವರನು ಧರಿಸಿರ
ಲಾರದೀ ಪುರಿಯೆನುತ ದುಗುಡವ
ಹೇರಿ ಹೊದಕುಳಿಗೊಳುತಳಿರ್ದುದು ಹಸ್ತಿನಾನಗರ || (೩)
 
ಒಂದು ದಿವಸ ಸುಯೋಧನನು ನಿಜ
ಮಂದಿರದೊಳೇಕಾಂತದಲಿ ಮನ
ನೊಂದು ನುಡಿದನು ಶಕುನಿ ಕರ್ಣ ಜಯದ್ರಥಾದ್ಯರಿಗೆ |
ಅಂದು ಭೀಮಾರ್ಜುನರು ದ್ರುಪದನ
ತಂದು ದಕ್ಷಿಣೆಯಿತ್ತು ಗುರುವಿಗೆ
ಸಂದರೈ ಸಮರದಲಿ ಪರಿಭವವಾಯ್ತು ತಮಗೆಂದ || (೪)
 
ವನಜ ವನದಲಿ ತುರುಚೆ ಕಬ್ಬಿನ
ಬನದಿ ಕದಸಿಗೆ ಚೂತಮಯ ಕಾ
ನನದಿ ಬೊಬ್ಬುಲಿ ಭೀಮಸೇನನಯಿರವು ತಮ್ಮೊಳಗೆ |
ಇನಿತು ಪಾರ್ಥನ ಮೇಲೆ ಯಮಳರ
ಜಿನುಗಿನಲಿ ಜಾರೆನು ಯುಧಿಷ್ಠಿರ
ಜನಪನಾಗಲಿ ಮೇಣು ಮಾಣಲಿ ಭೀತಿಯಿಲ್ಲೆಂದ || (೫)
 
ಹುದು ನಡೆಯದಿವರೊಡನೆ ನಮ್ಮಲಿ
ಕದನವೇ ಕೈಗಟ್ಟುವುದು ಕಾ
ದಿದೊಡೆ ಹೆಬ್ಬಲವಹುದು ದುರ್ಬಲ ದೈವಗತಿ ಬೇರೆ |
ನದಿಗಳರಳೆಯ ಹಾಸು ನವ ವಿಷ
ವುದರ ದೀಪನ ಚೂರ್ಣವಾವಂ
ಗದಲಿ ಸಾಪತ್ನರಲಿ ಸದರವ ಕಾಣೆ ತಾನೆಂದ || (೬)
 
ದುಗುಡವೇತಕೆ ಜೀಯ ಡೊಂಬಿನ
ಜಗಳವನು ತೆಗೆದರಿನೃಪರ ಸುಂ
ಟಗೆಯನಾಯ್ಸುವೆನವರ ತನುವನು ಯುದ್ಧ ರಂಗದಲಿ |
ದಿಗು ಬಲಿಯ ಕೊಡಿಸುವೆನು ಸಾಕಿ
ನ್ನೊಗುಮಿಗೆಯ ಚಿಂತಾಂಗನೆಯನೋ
ಲಗಿಸದಿರು ಕುರುರಾಯ ಚಿತ್ತೈಸೆಂದನಾ ಕರ್ಣ || (೭)
 
ಹೊಡೆದು ಹೊಡೆ ಚೆಂಡಾಡಿ ರಿಪುಗಳ
ಗಡಣವನು ಯಮರಾಜಧಾನಿಗೆ
ನಡೆಸುವೆನು ನೀ ನೋಡುತಿರು ಸಾಕೊಂದು ನಿಮಿಷದಲಿ |
ಕೊಡು ತನೆಗೆ ನೇಮವನು ದುಗುಡವ
ಬಿಡು ಮನಸ್ಸಿನ ಕಂದು ಕುಂದನು
ಹಿಡಿಯದಿರು ಕುರುರಾಯ ಚಿತ್ತೈಸೆಂದನಾ ಕರ್ಣ || (೮)
 
ಹಬ್ಬುಗೆಯ ಹದಿನಾಲ್ಕು ಲೋಕದ
ಮೊಬ್ಬುಗಳನೀಡಾಡಿನಭದೊಳ
ಗೊಬ್ಬನೇ ರವಿ ತೊಳಗಿ ಬೆಳಗುವವೋಲು ಪಾಂಡವರ |
ಕೊಬ್ಬುಗಳ ನಿಲುಸುವೆನು ಧರೆಯೊಳ
ಗೊಬ್ಬನೇ ದುರ್ಯೋಧನನು ಮ
ತ್ತೊಬ್ಬರಿಲ್ಲೆಂದೆನಿಸಿ ತೋರುವೆನೆಂದನಾ ಕರ್ಣ || (೯)
 
ವಿದುರ ಭೀಷ್ಮಾದಿಗಳು ನಿನ್ನಯ
ಸದನದೊಳಗುಂಡುಟ್ಟು ಪರರ
ಭ್ಯುದಯೆವನೆ ಬಯಸುವರು ದೂರುವರೆಮ್ಮನವರುಗಳ |
ಹದನ ನೀನೇ ಬಲ್ಲೆ ಸಾಕಿ
ನ್ನದರ ಮಾತೇಕೆಂದ ತನ್ನಯ
ಕದನವನು ಚಿತ್ತೈಸು ಸಾಕಿನ್ನೆಂದನಾ ಕರ್ಣ || (೧೦)
 
ಸಹಜವೀ ನುಡಿ ಕರ್ಣನಾಡಿದ
ನಹುದು ಪಾಂಡವರೆಂಬವರು ಕಡು
ಸಹಸಿಗಳು ಗೆಲಲರಿದು ಕುಹಕೋಪಾಯ ಮಾರ್ಗದಲಿ |
ಅಹಿತರನು ಗೆಲಬಹುದು ಪರಿಕರ
ಸಹಿತವರುಗಳ ನಿಮ್ಮ ಚಿತ್ತಕೆ
ಬಹರೆ ತನ್ನ ಭಿಮತವನವಧರಿಸೆಂದನಾ ಶಕುನಿ || (೧೧)
 
ಐದು ಮುಖವೀರೈದುಭುಜ ಹದಿ
ನೈದು ಕಂಗಳ ವಿಗಡ ರುದ್ರನು
ಮೇದಿನಿಯ ಮೇಲೊಂದು ಶಿರ ಭುಜವೆರಡನಳವಡಿಸಿ |
ಆದಿಪುರುಷನು ಭೀಮ ಪೆಸರಿನ
ಲೈದೆ ಜನಿಸಿದನಾತನಿದಿರಲಿ
ಕೈದುಕಾರನದಾವನೈ ಹೇಳೆಂದನಾ ಶಕುನಿ || (೧೨)
 
ಅರಸ ಕೇಳ್ಬಿಲು ವಿದ್ಯದಲಿ ಮೂ
ವರು ಕಣಾ ಸಾಮರ್ಥ್ಯ ಪುರುಷರು
ಧರೆಯೊಳೊಬ್ಬರಿಗೊಂದು ಗುರ್ಣ ಪಾರ್ಥಂಗೆ ಮೂರು ಗುಣ |
ಭರಿತವಾಗಿಹುದಾತನೊಬ್ಬನ
ಸರಿಸದಲಿ ಮಾರಾಂತು ಜೀವಿಸಿ
ಮರಳ ಬಲ್ಲವನಾವನೈ ಹೇಳೆಂದನಾ ಶಕುನಿ || (೧೩)
 
ರಾಮಚಂದ್ರನ ಚರನಯುಗ ನಿ
ಸ್ಸೀಮ ಭೀಷ್ಮಾಚಾರಿಯರ ಶಿರ
ವಾ ಮಹಾರಥ ದ್ರೋಣನೆದೆ ನಡುಗುವುದು ಸಮರದಲಿ |
ಸೌಮನಸ್ಯನು ನಿಷ್ಪ್ರಕಂಪ ಸ
ನಾಮನರ್ಜುನ ದೇವನಿದಿರಲಿ
ಭೂಮಿಯಲಿ ಬಿಲ್ಲಾಳದಾವವನೆಂದನಾ ಶಕುನಿ || (೧೪)

ಶತ್ರುಗಳ ಸಂಹರಿಸಿ ರಾಜ್ಯವ
ನೊತ್ತಿಯಾಳುವೆನೆಂಬ ಸಾಹಸ
ಸತ್ವಗುಣ ನಿನಗಿಲ್ಲ ಪಾಂಡವರತುಲ ಭುಜಬಲರು |
ಕೃತ್ರಿಮದ ಮುಖದಿಂದ ರಿಪುಗಳ
ಕಿತ್ತು ಹಾಯಿಕಿ ನೆಲನನೇಕ
ಚ್ಛತ್ರದಲಿ ಸಲಹುವುದು ಮತ ಕೇಳೆಂದನಾ ಶಕುನಿ || (೧೫)
 
ಸೋದರರುಗಳು ನೀವು ನಿಮ್ಮೊಳು
ಭೇದ ಮಂತ್ರವ ಮಾಡುವುದು ಮ
ರ್ಯಾದೆಯೇ ನಾವ್ ನಿಮ್ಮಡಿಯಲರಮನೆಯ ಸೇವಕರು |
ವಾದಿಸುವರಿತ್ತಂಡ ಸರಿ ನಮ
ಗಾದಗೆಯು ಕಂಡುದ ನುಡಿಯ ಬೇ
ಕಾದರಿಸು ಮೇಣ್ ಮಾನು ಬಿನ್ನಹವೆಂದನಾ ಶಕುನಿ || (೧೬)
 
ಪಕ್ಷವರಡೇ ಲೋಕದೊಳ್ ಪಿತೃ
ಪಕ್ಷ ಮೇಣಾ ಮಾತೃಪಕ್ಷ ವಿ
ಪಕ್ಷ ತಂದೆಯ ದೆಸೆ ಸಪಕ್ಷವು ತಾಯ ದೆಸೆಯವರು |
ತಕ್ಷಕನ ತೆರನಂತೆ ನಿಮ್ಮನು
ಭಕ್ಷಿಸುವರಾವಂಗದಲಿ ನೀ
ನೀಕ್ಷಿಸುವುದೈ ಪಾಂಡು ಪುತ್ರರನೆಂದನಾ ಶಕುನಿ || (೧೭)
 
ಮೊಳೆಯಲೇ ಮುರುಡಿಸಲು ಬೇಹುದು
ಬಲಿದ ಬಳಿಕದು ನಿನ್ನ ಹವಣೀ
ಇಳೆಯೊಳಧರ್ವನಿತ್ತು ರಿಪುಗಳ ಹೆಚ್ಚಿಸಿದ ಬಳಿಕ |
ಗೆಲುವನಾವನು ದೇವ ದಾನವ
ರೊಳಗೆ ಭೀಮಾರ್ಜುನರ ಕೈ ಮನ
ದಳವನರಿಯಾ ಭಾರವೈ ಮೇಲೆಂದನಾ ಶಕುನಿ || (೧೮)
 
ಧಾರುಣಿಯೊಳು ಪಿಪೀಲಿಕೆಯು ವಿ
ಸ್ತಾರದಲಿ ಮಾಡಿದ ಮನೆಯ ಕಾ
ಳೋರಗನು ಹೋಗುವಂತೆ ರಿಪು ಕುಂತೀಕುಮಾರಕರು |
ವೈರದಲಿ ಸಪ್ತಾಂಗವನು ಕೈ
ಸೂರೆಗೊಂಬರು ತಪ್ಪದಿದಕೆ ವಿ
ಚಾರವನು ಕಾಲದಲಿ ಮಾಡುವುದೆಂದನಾ ಶಕುನಿ || (೧೯)
 
ಹಿಂದೆ ನೀನವರುಗಳ ನಾನಾ
ಚಂದದಲಿ ನೋಯಿಸಿದೆ ಮನದಲಿ
ಕಂಡು ಕುಂದದು ಕಷ್ಟ ವೃತ್ತಿಯನಾಚರಿಸುತಿಹರು |
ಇಂದು ನೀನಾ ಪಾಂಡುಪುತ್ರರ
ನಂದಗೆಡಿಸದೆ ಬಿಟ್ಟೆಯಾದೊಡೆ
ಮುಂದೆ ಬೆಟ್ಟಿತು ರಾಜಕಾರಿಯವೆಂದನಾ ಶಕುನಿ || (೨೦)
 
ಇರುಬಿನಲಿ ಸಿಕ್ಕಿರ್ದ ಹುಲಿಯನು
ಮುರಿದು ಕಳೆಯದೆ ತಳಪಟಕೆ ಬಿ
ಟ್ಟಿರಿಯ ಬಹುದೇ ಕೊಂದು ಕೂಗದೆ ಬಿಡುವುದೇ ಬಳಿಕ |
ಕರುಬರಹ ಪಾಂಡವರಿಗೀಗಲೆ
ಹರುವ ನೆನೆ ಹೊರಬಿದ್ದರಾದೊಡೆ
ತರಿದು ಬಿಸುಡದೆ ಮಾಣ್ವರೇ ಹೇಳೆಂದನಾ ಶಕುನಿ || (೨೧)
 
ಹರಿಹಯನು ವೃತ್ರಾಸುರನ ಸಂ
ಹರಿಸಲರಿಯದೆ ಗರುವದಿಂದಿರು
ತಿರಲವನು ದಿನದಿನದೊಳಣುವಣು ಮಾತ್ರವನು ಬೆಳೆದು |
ಧರೆಯ ತುಂಬಲು ತನ್ನ ಸತ್ವದ
ನೆರವಣಿಗೆಗೈದಿಸದೆ ನಾನಾ
ತೆರದೊಳಾಯಸಗೊಳ್ಳನೇ ಹೇಳೆಂದನಾ ಶಕುನಿ || (೨೨)
 
ಅಡವಿಯಲಿ ಜನಿಸಿದರು ಬೆಳವಿಗೆ
ಯಡವಿಯೊಳಗಿನ್ನವರ ಬಾಳಿಕೆ
ಗಡವಿಯೇ ನೆಲಮನೆಯದಲ್ಲದೆ ಪಾಂಡು ಪುತ್ರರಿಗೆ |
ಪೊಡವಿಯೊಡೆತನ ಸಲ್ಲದವರನು
ನಡೆಸುವುದು ಕಾಲದಲಿ ರಾಜ್ಯವ
ಕೊಡುವುದಾವಂಗದಲಿ ಮತವಲ್ಲೆಂದನಾ ಶಕುನಿ || (೨೩)
 
ತಿಮಿರವಡಗಿದ ಲೋಕ ಶಿಕ್ಷಾ
ಕ್ರಮಣವಡಗಿದ ದಂತಿ ಕರ್ಮ
ಭ್ರಮೆಗಳಡಗಿದ ಯೋಗಿ ರುಜೆಯಡಗಿದ ನರೋತ್ತಮನು |
ಹಿಮವಡಗಿದ ಸರೋಜದಂತಿಹು
ದಮಲ ಮತ ಕೇಳ್ವಗೆಗಳಡಗಿದ
ಡಮರ ಪದವೆನಿಸುವುದು ಚಿತ್ತೈ ಸೆಂದನಾ ಶಕುನಿ || (೨೪)
 
ಬಿಡದೆ ಸುಖ ದುಃಖಗಳೊಳೊಂದನು
ಹಿಡಿದು ಸದ್ವ್ಯವಹಾರ ಮುಖದಲಿ
ನಡೆಯಲೊಂದರ ತುಷ್ಟಿಯೊಂದರ ನಷ್ಟ ತನಗಹುದು |
ಹಿಡಿವುದಿಹಪರವೆರಡರೊಳಗಳ
ವಡಿಕೆ ತನಗಹುದೊಂದನೊಂದನು
ಬಿಡುವುದಲ್ಲದೆ ಬೇರೆ ಮತವಿಲ್ಲೆಂದನಾ ಶಕುನಿ || (೨೫)
 
ಭಾವ ಮೈದುನನಣ್ಣ ತಮ್ಮನು
ಮಾವನಳಿಯನು ಪುತ್ರ ಮಿತ್ರರು
ಸೇವಕರು ಸಜ್ಜನರು ಸುಜನರು ಸತ್ಯಯುತರೆಂದು |
ಭಾವಿಸದಿರಾರುವನು ನಿನ್ನಯ
ಜೀವವುಳ್ಳನ್ನೆಬರ ನಿನ್ನಯ
ದೈವಗತಿಯೆಂದು ನಂಬಿಹುದೆಂದನಾ ಶಕುನಿ || (೨೬)
 
ಶತ್ರುಶೇಷವಿದಲ್ಪವೆಂದಳು
ಹುತ್ತ ಬರಲಾಗದು ಕಣಾ ಭೂ
ಪೋತ್ತಮರುಗಳು ವೈರಿ ರಾಯರ ವಂಶ ಬೀಜವನು |
ಬಿತ್ತುವರೆ ನೇತ್ರಾವಳಿಯ ಮೀ
ಟೆತ್ತಿ ಕಾರಾಗಾರದೊಳಗೆ ಕ
ಳತ್ರ ಸಹಿತನಶನದಲಧಿಕ ವ್ರತವ ಮಾಡೆಂದ || (೨೭)
 
ವಿಷವನಣುವೆಂದಳುಕದುಪಭೋ
ಗಿಸಲು ಕೊಲ್ಲದೆ ಬಿಡುವುದೇ ಕರ
ಗಸದ ನಡು ಬದವಾದರೆಯು ಕುಯ್ದಿಕ್ಕದೇ ತರುವ
ಶಿಶುವಿವನು ಸಾಮರ್ಥ್ಯಪುರುಷನೆ
ಪುಸಿ ಕಣಾಯೆಂದುಳುಹಿದೊಡೆ ರ
ಕ್ಕಸನಹನು ಮುಂದಕ್ಕೆ ತನಗವನೆಂದನು ಶಕುನಿ || (೨೮)
 
ಕಾಲವನು ಗೂಗೆಗಳು ನಿರ್ಜರ
ರೇಳಿಗೆಯನಾ ದೈತ್ಯರುಗಳು ತ
ಮಾಳಿ ರವಿರಶ್ಮಿಗಳನಾ ಬಲು ನಿದ್ರೆಯನು ಚೋರ |
ಕಾಲ ಭುಜಗನು ಗರುಡನುಳಿವನು
ತಾಳದಂದದಿ ಪಾಂಡವರು ನಿ
ನ್ನೇಳಿಗೆಯ ಸೈರಿಸರು ಚಿತ್ತೈಸೆಂದನಾ ಶಕುನಿ || (೨೯)
 
ವಿಗಡ ರುದ್ರನು ಲೋಚನಾಗ್ನಿಯೊ
ಳೊಗುಮಿಗೆಯ ಕೋಪದಲಿ ಕಾಮನ
ಮಿಗೆ ದಹಿಸಿದಂದದಲಿ ರಿಪು ಕುಂತೀಕುಮಾರಕರ |
ಹೊಗೆದು ಕಲೆ ಲಾಕ್ಷಾಭವನದಲಿ
ಹಗೆಗೆ ಹರಿವಹುದಲ್ಲದಿರ್ದೊಡೆ
ವಿಗಡಿಸುವುದೈ ರಾಜಕಾರ್ಯವಿದೆಂದನಾ ಶಕುನಿ || (೩೦)

ಹಿಡಿವ ಫಣಿಯನು ಹೊಡೆವ ಸಿಡಿಲನು
ಜಡಿವ ಮಾರಿಯ ನಲಿವ ರುಜೆಯನು
ಮಡಿವ ದಿನವನು ಹಾನಿವೃದ್ಧಿಯ ಹೆಚ್ಚು ಕುಂದುಗಳ |
ಕಡಿವ ಹಗೆಯನು ಕಾಲಕರ್ಮದ
ಗಡಣವನು ಸುಖದುಃಖದುದಯದ
ಕಡೆ ಮೊದಲ ಕಾಣಿಸುವನಾವವನೆಂದನಾ ಶಕುನಿ || (೩೧)
 
ಇನಿತು ಚಿಂತಿಸಲೇಕೆ ಕೌರವ
ಜನಪ ನಿಮ್ಮಡಿಗಳಿಗೆ ತಾನೊಂ
ದನುವ ಬಿನ್ನಹ ಮಾಡುವೆನು ಪಾಂಡವರ ನೆಳಲಿರಲು |
ನಿನಗೆ ರಾಜ್ಯವನಾಳ್ವ ಫಲ ಸಂ
ಜನಿಸಲರಿಯದು ಕಾಲದಲಿ ನೀ
ನೆನೆ ಉಪಾಯವನೊಂದನೆಂದು ಕಳಿಂಗ ಕೈ ಮುಗಿದ || (೩೨)
 
ದೇವ ದಾನವರಂತೆ ಹದ್ದಿನ
ಹಾವಿನೋಲತಿ ವೈರ ಬಂಧದ
ಠಾವು ಠವಣಿಯ ನೀರು ಭೇದಿಸುವಂತೆ ಭೇದಿಸುತ |
ಕಾವರ ಕಾವುತ್ತ ಕಂಟಕ
ಜೀವಿಗಳನಪಹರಿಸುತಂತ
ರ್ಭಾವಶುದ್ಧಿಯೊಳಿಳೆಯನಾಳುವುದೆಂದನಾ ಶಕುನಿ || (೩೩)
 
ಮೃತ್ಯುವಿನ ತಾಳಿಗೆಯೊಳಗ್ಗದ
ಶತ್ರುಗಳ ಸಾಮೀಪ್ಯದಲಿ ದು
ರ್ವೃತ್ತರೋಲಗದೊಳಗೆ ಸಿಂಹದ ಗುಹೆಯೊಳಹಿಪತಿಯ |
ಹುತ್ತಿನೊಳಗಿಹವೋಲು ಸಲೆ ಬಾ
ಳುತ್ತ ಲಂತಃಪುರದೊಳಸಿರ
ಲತ್ಯಧಿಕವೆಚ್ಚರಿಕೆಯಿರ ಬೇಕೆಂದನಾ ಶಕುನಿ || (೩೪)
 
ಹಗೆಯ ಹೆಂಗಳನರಮನೆಗಳೊಳು
ಪೊಗಿಸಲಾಗದು ತನಗವರು ಹೇ
ಳಿಗೆಯ ಹಾವಿನವೋಲು ಸುಖತರವಲ್ಲವರಿ ನೃಪರ |
ಮಗಳ ಮಕ್ಕಳ ದೆಸೆಯವರನೋ
ಲಗಿಸುವರ ಬಾಹತ್ತರ ನಿಯೋ
ಗಿಗಳ ನಂಬುವುದುಚಿತವೇ ಹೇಳೆಂದನಾ ಶಕುನಿ || (೩೫)
 
ದೈವ ಹೊಡೆದಂದದಲಿ ಬೆರತು ಸ
ಭಾ ವಲಯದಲಿ ಗರ್ವ ವಿಭ್ರಮ
ಭಾವ ಭೂಷಿತನಾಗಿ ವೈಹಾಯಸವನೀಕ್ಷಿಸುತ |
ಹಾವಿನಂದದೊಳಿರದೆ ಹಾಸ್ಯ ರ
ಸಾವಲಂಬನಾಗದೆಯು ಸುಖ
ಜೀವಿಯಾಗಿಹುದುತ್ತಮವು ಕೇಳೆಂದನಾ ಶಕುನಿ || (೩೬)
 
ಹೀನಮುಖ ಬಹುಮುಖ ಪರಾಙ್ಮುಖ
ದೀನಮುಖ ವಾಚಾಲಮುಖವ
ಜ್ಞಾನಮುಖವಂತರ್ಮುಖ ಬಹಿರ್ಮುಖದ ಕಾರ್ಯದಲಿ |
ಆ ನರೇಂದ್ರನ ವರ್ತನಕೆ ದು
ಸ್ಥಾನವಾಗದೆ ಬಿಡದು ಸಂಶಯ
ವೇನಿದಕೆ ಕುರುರಾಯ ಚಿತ್ತೈಸೆಂದನಾ ಶಕುನಿ || (೩೭)
 
ಶಯನದಲಿ ವಹ್ನಿಯಲಿ ವೈಹಾ
ಳಿಯಲಿ ಬೇಟೆಯಲೂಟದಲಿ ಕೇ
ಳಿಯಲಿ ಸುರತ ಕ್ರೀ ಡೆಯಲಿ ಮಜ್ಜನದ ಸಮಯದಲಿ |
ಜಯದ ಜೋಕೆಯಲೋಲಗದ ಮರ
ವೆಯಲಿ ವಾರಸ್ತ್ರೀಯರುಗಳಲಿ
ಲಯವನೈದಿಸಬಹುದು ಚತ್ತೈಸೆಂದನಾ ಶಕುನಿ || (೩೮)
 
ರುಜೆಯನಲುಗುವ ರದನವ ದ್ರುಗು
ರಜವನನುಚಿತಜಾಯಜಾತ ಧೂಮ
ಧ್ವಜವ ರುಣವನವಿದ್ಯೆಯನು ಗೃಹವಾಸ ಕುಂಡಲಿಯ |
ವೃಜಿನವನು ಕಂಪಿತವ ವೈರಿ
ವ್ರಜವನುಳುಹುವನೆಗ್ಗನೆಂಬಿದು
ಸುಜನರಭಿಮತ ನಿನ್ನ ಮತವೇನೆಂದನಾ ಶಕುನಿ || (೩೯)
 
ಮಣಿದು ಕೂಪದ ಜೀವನವ ಕಡೆ
ಗಣಿಸದೇ ಘಟಯಂತ್ರ ಮೃಗರಿಪು
ಹಣಿಗಿದರೆ ಹರಿಣಂಗೆ ಗೆಲವೇ ಕಾರ್ಯಗತಿಯರಿದು |
ಮಣಿವುದಳುಕುವುದಾವ ಪರಿಯಿಂ
ದೆಣಿಸಿ ಮನದಲಿ ವೈರಿ ರಾಯರ
ಹಣಿದವಾಡುವುಪಾಯವಿದು ಕೇಳೆಂದನಾ ಶಕುನಿ || (೪೦)
 
ಅಹಿಯ ಬಾಧೆಯ ಬಲೆಗೆ ಸಿಲುಕಿದ
ಮಿಹಿರ ಬಿಂಬದವೋಲು ಮಾಯಾ
ವಿಹರಣದ ವೀಥಿಯಲಿ ಸಿಕ್ಕದ ಜೀವರುಗಳಂತೆ |
ಅಹಿತರುಪಟದೊಳಗೆ ಸಿಲುಕದೆ
ಕುಹಕರವ ದಿರ ಹರಿವ ನೆನೆ ಲೇ
ಸಹುದು ಕಾಲಕ್ಷೇಪವಿದಕೇನಂದನಾ ಶಕುನಿ || (೪೧)
 
ನಂಬುವರ ನೆರೆ ನಂಬು ನಂಬದ
ಡಂಬಕರ ನಂಬದಿರು ಸಂಗರ
ವೆಂಬ ಮಾತಿಗೆ ಹಂಬಲಿಸಿ ಬೆಂಬೀಳ್ವಬಾಹಿರರ |
ನಂಬಿರದಿರರಿರಾಯ ಹನನ ವಿ
ಳಂಬನವ ಮಾಡದಿರು ರೋಷಾ
ಡಂಬರವ ರಚಿಸದಿರು ಬಹಿರಂಗದಲಿ ನೀನೆಂದ || (೪೨)
 
ಖೂಳನಹ ದಾತಾರನನು ದು
ರ್ಮೇಳನಹ ಮಿತ್ರನನು ತನಗನು
ಕೊಲೆಯಲ್ಲದ ಸತಿಯನಂತರ್ದಾಯಿಯಹ ನರನ |
ವ್ಯಾಳಯುತವಹ ನಿಳಯವಿನಿತುವ
ಕಾಲದಲಿ ವರ್ಜಿಸುವುದಲ್ಲದೊ
ಡೂಳಿಗವು ಹಿರಿದಹುದು ಚಿತ್ತೈಸೆಂದನಾ ಶಕುನಿ || (೪೩)
 
ಎಲ್ಲರಿಂ ಬಹುಧನವ ಕೊಳು ನಿ
ನಲ್ಲಿ ಕಾಣಿಯ ಬರಿದೆ ಸೋಲದಿ
ರಿಲ್ಲವೆನ್ನದೆ ನುಡಿದು ಕಾಲಕ್ಷೇಪವನು ಮಾಡು |
ಒಳ್ಳಿದನು ನಮಗೆಂಬ ನಯ ನುಡಿ
ಯೆಲ್ಲರಲಿ ಬೆಚ್ಚಂತೆ ರಿಪುಗಳ
ಗೆಲ್ಲಗೆಡಹುವ ಮಂತ್ರವಿದು ಕೇಳೆಂದನಾ ಶಕುನಿ || (೪೪)
 
ಧನವನಿತ್ತಾ ದೊಡೆಯು ಸಹ ಭೋ
ಜನವನುಂಡಾದೊಡೆಯು ಮೇಣ್ ನಿಜ
ತನುಜೆಯರನಿತ್ತಾದೊಡೆಯು ಬಳಿಸಂದು ಬೇಸರದೆ |
ತನುವ ಬೆರಸಿದ್ದಾದೊಡೆಯು ನೂ
ತನಗುಣವ ನುಡಿದಾದೊಡೆಯು ರಿಪು
ಜನಪತಿಯ ವಶ ಮಾಳ್ಪುದುಚಿತವಿದೆಂದನಾ ಶಕುನಿ || (೪೫)
 
ಕೋಶ ಪಾನದಿಗಳ ಮಾಡಿ ಮ
ಹೀಸುರರ ಮೇಲಾಯುಧಂಗಳ
ಸೂಸಿ ದೈವವ ಮುಟ್ಟಿ ದಿವ್ಯಾಜ್ಞೆಗಳಲೋಡಬಡಿಸಿ |
ಹೇಸದರಿ ಭೂಪಾಲರನು ನಿ
ಶ್ಯೇಷವೆನಿಸುವುದಲ್ಲದಿರ್ದೊಡೆ
ಪೈಸರಿಸುವುದು ರಾಜಕಾರ್ಯವಿದೆಂದನಾ ಶಕುನಿ || (೪೬)
 
ನರಕವಿಲ್ಲದ ನರರು ನಾರಿಯ
ರುರುಬೆಯಿಲ್ಲದ ಯತಿಗಳ’ಸುರರ
ವಿರಸವಿಲ್ಲದ ಸುರರು ಮಾಯಪಾಶವನು ಹರಿದ |
ಪರಮ ತತ್ವಜ್ಞಾನಿಯವೋಲೀ
ಧರೆಯ ನರಪಾಲಕರುಗಳು ಹಗೆ
ಹರಿದು ಹೋಗಲಸಾಧ್ಯವಹುದೇನೆಂದನಾ ಶಕುನಿ || (೪೭)
 
ಮಸಗೆ ಮೂಡಿದ ಹೊಲನು ದುಷ್ಟ
ಪ್ರಸರದೇಳಿಗೆ ಪಾಪಿಯೋಲಗ
ಹುಸಿಯ ಬಾಳುವೆ ಹುದುವಿನಾರಂಭದ ಫಲೋದಯವು |
ನಸಿದು ಹೋಗದೆ ಲೋಕದೊಳಗವು
ಹೆಸರುವಡೆವವೆ ಹಗೆಯ ಹೆಚ್ಚುಗೆ
ಹಸನ ಕೊಡುವುದೆ ರಾಯ ಚಿತ್ತೈಸೆಂದನಾ ಶಕುನಿ || (೪೯)
 
ಜಾತಿ ಬಾವನ್ನದಲಿ ಸರ್ಪದ
ಭೀತಿ ಸತ್ಪುರುಷರಿಗೆ ದುರ್ಜನ
ಭೀತಿ ದೇವಾದ್ಯರಿಗೆ ದನುಜಾದಿಗಳ ಬಲು ಭೀತಿ |
ಜಾತ ಮಾತ್ರಕೆ ಜನನ ಮರಣದ
ಭೀತಿ ಬೆಂಬಿಡದಂತೆ ಗೋತ್ರಜ
ಭೀತಿ ಭೂಪಾಲರಿಗೆ ಹಿರಿದಹುದೆಂದನಾ ಶಕುನಿ || (೪೯)
 
ಕರುಣಿಕರು ಕರಣಿಕರೊಡನೆ ಸಹ
ಚರರು ಸಹಚರರೊಡನೆ ಸಾವಂ
ತರಲಿ ಸಾವಂತರುಗಳಾ ಮಂತ್ರಿಯಲಿ ಮಂತ್ರಿಗಳು |
ತರುಣಿಯರು ತರುಣಿಯರೊಡನೆ ಪರಿ
ಕರರು ಪರಿಕರರೊಡನೆಯಿರಲೊರ
ಸೊರಸು ಮಿಗೆ ಮಸೆವುದು ಕಣಾ ಭೂಭುಜನೆ ಕೇಳೆಂದ || (೫೦)
 
ವ್ಯಾಕುಲಿತ ವಿಪ್ರರ ವಿಸತಿಯ ದಿ
ವಾಕರನ ಲೋಕಾಯತರ ರ
ತ್ನಾಕರನ ಲಾವಕರ ಹಿಸುಳರ ದಾಯಭಾಗಿಗಳ |
ಶೋಕಿಗರ ಮಾಯಾವಿಗಳ ದ
ರ್ವೀಕರನ ವಿನಿಯೋಗಿಗಳ ಸ
ರ್ವೈಕ ಮತ್ಸರದೊಳಗೆ ಬದುಕುವನಾವ ಪೇಳೆಂದ || (೫೧)
 
ಮಂಜು ಮಹಿಯನು ಮುಸುಕುವಂತೆ ಧ
ನಂಜಯನು ಕಾನನವ ಸುಡುವಂ
ತಂಜಿಕೆಗಳುಮ್ಮಾಹವನು ಹೊಯ್ದೊರಸುವಂದದಲಿ |
ರಂಜಕರು ಪಾಂಡವರು ನಿನ್ನನು
ಭಂಜಿಸುವರಾವಂಗದಲಿ ನವ
ಕುಂಜರನ ಕಾಲಾಟ ಸಿಂಹಕೆ ಸೇರುವುದೆಯೆಂದ || (೫೨)
 
ದನಿಗೆ ನಡೆದೊಳ ಪೊಕ್ಕು ಮರ ಗೂ
ಡಿನಲಿ ಸಿಲುಕಿದ ಹುಲಿಯವೋಲ್ ಕಾ
ನನದಿ ಬೀಸಿದ ಬಲೆಯೊಳಗೆ ಗಾನಕ್ಕೆ ಮನ ಸೋಲ್ದು |
ಹನನವರಿಯದ ಮೃಗದವೋಲಿರು
ಬಿನಲಿ ಕೆಡಹಿದ ಕರಿಯವೋಲ್ ರಿಪು
ಜನಪರಭ್ಯುದಯದ ವಿನಾಶವನೆಸಗ ಬೇಕೆಂದ || (೫೩)

ಎಂದು ದುರ್ಬೋಧೆಗಳ ನಾನಾ
ಚಂದದಲಿ ಬೋಧಿಸಿ ಸುನೀತಿಯ
ನಂದಗೆಡಿಸಿ ತದೀಯ ವಂಶಚ್ಛೇದ ಮಾರ್ಗವನು |
ಒಂದುಗೂಡಿ ಸುಯೋಧನಂಗಾ
ನಂದವೆನಿಸಿ ಕಳಿಂಗ ಲೋಕವ
ಕೊಂದನೈ ಜನಮೇಜಯ ಕ್ಷಿತಿಪಾಲ ಕೇಳೆಂದ || (೫೪)
 
ಎಮ್ಮ ಬಹುಮಾನಾವಮಾನವು
ನಿಮ್ಮದಲ್ಲದೆ ಬೇರೆ ನಮ್ಮಯ
ಸೋಮ್ಮು ಸಂಬಂಧದಲಿ ಹಿತವರ ಕಾಣೆ ನಾನಿನ್ನು |
ಸಂಮತದೆ ಪಾಂಡವರಿಗಗ್ನಿಯ
ಲೋಮ್ಮೆ ಹರಿವನು ನೆನೆವೆನೊದವಿದ
ಡೆಮ್ಮ ಸುಕೃತೋದಯದ ಫಲವೆಂದನು ಸುಯೋಧನನು || (೫೫)
 
ಎನೆ ಕಳಿಂಗಾದಿಗಳು ತಂತ
ಮ್ಮನುಮತವ ಹೇಳಿದರು ಕೌರವ
ಜನಪನವರಿಗೆ ಕೇಡ ನಿಶ್ಚೈಸಿದನು ಮನದೊಳಗೆ |
ಜನಕನಲ್ಲಿಗೆ ನಡುವಿರುಳು ಬಂ
ದನು ನಯದೊಳೀ ಮಾತ ತೆಗೆದೆಂ
ದನು ವೃಕೋದರ ನೂಳಿಗವನರ್ಜುನನ ಸಾಹಸವ || (೫೬)
 
ಅರಿಗಳುದ್ಭವವಿನ್ನು ಗಂಟಲ
ನರಿವುದೆಮ್ಮನು ನೂರು ಮಕ್ಕಳ
ನರಸ ಬರಿದೇ ಹಡೆದು ಕೆಡಿಸಿದೆ ತಾಯ ಜವ್ವನವ |
ಇರಲಿ ಭೀಮಾರ್ಜುನರು ಹಸ್ತಿನ
ಪುರದೊಳಮ್ಮಿನಿಬರನು ದೇಶಾಂ
ತರೆಕೆ ನೇಮಿಸು ಜೀಯ ನೂಕದು ಭೀಮನೊಡನೆಂದ || (೫೭)
 
ಅಕಟ ಮಗನೇ ಧರ್ಮಸುತ ಬಾ
ಧಕನೆ ಭೀಮಾರ್ಜುನರ ಮತಿ ಕಂ
ಟಕದೊಳೆರಗದು ಮೀರಿ ನಡೆಯರು ಧರ್ಮನಂದನನ |
ಸಕಲ ರಾಜ್ಯಕೆ ಪಾಂಡುವೇ ಪಾ
ಲಕನು ತನ್ನೊಳು ತಪ್ಪಿದನೆ ಬಿಡು
ವಿಕಳ ಮತಿಗಳ ಮಾತನೆಂದನು ಮಗಗೆ ಧೃತರಾಷ್ಟ್ರ || (೫೮)

ಬೊಪ್ಪ ಬಿನ್ನಹವವರ ಜನಕನು
ತಪ್ಪಿ ನಡೆಯನು ನಿಮಗೆ ನೀವಿ
ನ್ನೊಪ್ಪಿಸುವುದಾ ಪಾಂಡುಸುತರಿಗೆ ರಾಜ್ಯ ವೈಭವವ |
ಅಪ್ಪುದಿಳೆ ಧರ್ಮಜನ ತರುವಾ
ಯಪ್ಪುದಾ ವಿಧಿಯಲ್ಲಿ ಸಂತತಿ
ತಪ್ಪದವರಿಗೆ ಸಲಲಿ ನೆಲವಿದು ಹೊಲ್ಲೆಹೇನೆಂದ || (೫೯)
 
ಜನಪ ಸುಖದಲಿ ನಿಮ್ಮ ತಮ್ಮನ
ತನುಜರೊಡನೆಯು ರಾಜ್ಯ ಮಾಡುವು
ದನುನಯವಲಾ ಬೀಳುಕೊಡುವುದು ನಮ್ಮ ನೂರ್ವರನು |
ಜನಪರುಂಟೋಲೈಸಿ ಕೊಂಬರೆ
ತನಗಿರದೆ ಖಂಡೆಯದ ಸಿರಿ ಕರೆ
ಜನನಿಯನು ಬೀಳ್ಕೊಂಬೆವಿನ್ನೇನೆಂದು ನಿಂದಿರ್ದ || (೬೦)

ಎಲೆಮಗನೆ ಎನ್ನಾಣೆ ಬಾ ಕುರು
ಕುಲತಿಲಕ ನೀಹೋಗಲೆನ್ನೊಡ
ಲುಳಿವುದೇ ಮರಿಯಾನೆ ಬಾರೈ ಕಂದ ಬಾಯೆಂದು |
ಸೆಳೆದು ಬಿಗಿಯಪ್ಪಿದನುಕಂಬನಿ
ದುಳುಕಿದನು ಹೇಳಿನ್ನು ಮೇಲಣ
ಬಳಕೆಯನು ರಿಪುರಾಜ ಕಾರ್ಯಕೆ ಬುದ್ಧಯೇನೆಂದ || ೬೧ ||

ನೀರ ವಿಷವಿಕ್ಕಿದೆವುಕಿಚ್ಚಿನ
ಭಾರವಣೆಯೇನಹುದೊ ಪುಣ್ಯವ
ಹೋರಿಸುವ ಒದಗಿದರೆ ಹೋಗಲಿ ನಮ್ಮ ಹಗೆ ಹರಿದು ||
ಓರಣಿಸಿತೈವೈರಿಗಳ ವಿ
ಸ್ತಾರ ಮೆರೆಯಲಿ ಜೀಯ ಜೂಜಿನ
ಬಾರುಗುತ್ತಿದು ನಿಮ್ಮ ಚಿತ್ತಕೆ ಬಹಡೆ ಮಾಡುವೆವು ||6೨||

ಆವ ತೆರದಲಿ ವೈರಿಭಟಕುಲ
ದಾವಿಗೆಯನಿಡಿಸುವಿರಿ ನಿಮ್ಮೊಳ
ಗಾವು ಹೊರಗೇ ಮಗನೆ ಸೊಗಸೆನೆ ನಿಮ್ಮವೈಭವಕೆ ||
ಸಾವರಾವಂದದಲಿ ಮಿಗೆ ಸಂ
ಭಾವಿಸುವುದಾ ತೆರನ ನೀ ಹೇ
ಳಾವು ಸೊಗಸುವೆವೆಂದುನುಡಿದನು ಮಗಗೆ ಧೃತರಾಷ್ಟ್ರ ||೬೩ ||

ಕರೆಸಿ ಪಾಂಡು ಕುಮಾರಕರ ನೀ
ಧರೆಯ ಹಸುಗೆಯ ಮಾಡಿಕೊಡು ಕರಿ
ತುರುಗ ಭಂಡಾರವನು ಸಹ ದಾಯಾದ ವಿಷಯದಲಿ ||
ಇರವನವರಿಗೆ ವಾರಣಾವತಿ
ಪುರದೊಳಗೆ ಪರುಠವಿಸಿ ಕೊಡು ತಾ
ನುರುಹಿ ಸುಡುವೆನು ಬಳಿಕಲಾಕ್ಷಾಭವನ ರಚನೆಯಲಿ ||೬೪ ||

ಅನುದು ಮಗನೇ ಮಂತ್ರವಿದು ಮತ
ವಹುದು ನಮಗೀ ಭೀಷ್ಮ ವಿದುರರು
ಕುಹಕಿಗಳು ಕೃತಭಿನ್ನವಾದರೆ ಭಾರವದು ಮೇಲೆ ||
ಗಹನ ಗತಿಯಲಿ ಗೂಢತರ ಸ
ನ್ನಹಿತ ಕರ್ಮ ಕಲಾಪದಲಿ ರಿಪು
ದಹನ ಸಿದ್ಧಯ ನೆನೆವುದೆಂದನುಮಗಗೆ ಧೃತರಾಷ್ಟ್ರ ||೬೫||

ಜನಕನನು ಬೀಳ್ಕೊಂಡುಕೌರವ
ಜನಪ ತನ್ನರಮನೆಯ ಸಚಿವರೊ
ಳನುನುಪಮಿತ ವಿಶ್ವಾಸ ಸೂಚಕನನು ಪುರೋಚನನ ||
ನೆನೆದ ರೌರವ ರಾಜಕಾರ್ಯದ
ಘನವನರುಹಿ ಸಮಗ್ರ ಧನ ಸಾ
ದನವ ಜೋಡಿಸಿಕೊಟ್ಟು ಕಳುಹಿದನವನ ಗುಪ್ತದಲಿ ||೬೬ ||

ಆ ಪುರೋಚನನೆಂಬುವನು ಬಲು
ಪಾಪಕರ್ಮನು ಕುರುಪತಿಗೆ ಬಳಿ
ಕಾ ಪುರಾಂತಕದಿಂದ ಬಂದನು ವಾರಣಾವತಿಗೆ ||
ಆ ಪುರದ ಜನರರಿಯದಂತಿರೆ
ಕಾಪುರುಷನಳವಡಿಸಿದನು ನಸು
ದೀಪ ತಾಗಿದೊಡೆಏಕರೂಪಹ ರಾಜಭವನವನು ||೬೭ ||

ನಿಗಮ ಪರಿಸ್ಥಿತ ವಾಸ್ತು ರಚನಾ
ದಿನಗಳನಾಯವ್ಯದ ತಾರಾ
ದಿಗಳ ರಾಶಿಗ್ರಹ ಬಲದ ವಿಪರೀತ ಯೋಗದಲಿ ||
ಹಗಲು ತೀರಲು ತಳಿತ ಕೈ ದೀ
ವಿಗೆಯ ಹಂತಿಯ ಬೆಡಗಿನಲಿ ಕೇ
ಡಿಗನು ಕೃತ್ರಿಮ ರಚನೆಯಲಿ ಮಾಡಿಸಿದನರಮನೆಯ || ೬೮ ||

ಅರಗಿನಲಿ ಭಿತ್ತಿಗಳ ನವ ಸ
ಜ್ಜರಸ ಗುಡ ಮಿಶ್ರದಲಿ ನೆಲೆಯು
ಪ್ಪರಿಗೆಗಳನವರಲಿ ಕವಾಟ ಸ್ತಂಭ ವೇಧಿಗಳ |\
ವಿರಚಿಸಿದ ನವ ಸವದಭದ್ರಾ
ಸ್ತರಣನಂದ್ಯಾವರ್ತದಲಿಪರಿ
ಪರಿಯ ಬಿನ್ನಾಣದೊಳರಗಿನ ನೆಯ ಮಾಡಿಸಿದ || ೬೯ ||

ಹಿರಿಯ ಭವನದ ಸುತ್ತುವಳಯದ
ಮುರುಹಿನಲಿ ಮನೆಮನರಗಳಾ ಮಂ
ದಿರ ನಿಕಾಯಕೆ ಬಾಗಿಲೊಂದಾ ದ್ವಾರದೇಶದಲಿ ||
ಇರವು ತನ್ನದು ಬಾಗಿಲಿಕ್ಕಿದು
ಹೊರಗೆ ಮುದ್ರಸಿಕಿಚ್ಚ ಹಚ್ಚುವ
ಪರುಥುವಣೆಯಲಿ ಖಳ ಪುರೋಚನನಂದು ನಿರ್ಮಿಸಿದ ||೭೦ ||

ಧರಣಿಪತಿ ಕೇಳಿತ್ತ ಹಸ್ತಿನ
ಪುರದೊಳಗೆ ಕುಂತೀ ಕುಮಾರರ
ಕರೆಸಿ ಕಟ್ಟೇಕಾಂತದಲಿ ಧೃತರಾಷ್ಟ್ರ ಭೂಪಾಲ ||
ಬೆರಗು ಬಿನ್ನಾಣದಲಿ ಮಕ್ಕಳ
ಮರುಳು ಮಾಡಿದನೇನ ಹೇಳುವೆ
ನುರಿವ ಮನೆಯ ಬೀಡಾರದಲಿ ಬಿಡಿಸಲ್ಕೆ ಮನ ದಂದ ||೭೧ ||

ದುರುಳರೀ ಕೌರವರು ನೀವತಿ
ಗುರುವರವದಿರು ಪಾಪಕರ್ಮರು
ಪರಮಪುಣ್ಯರುನೀವು ತನ್ನವದಿರು ಕುಮಂತ್ರಿಗಳು ||
ಎರಳೆ ತೋಳನ ಸಾಧು ಸುಣ್ಣದ
ನೆರವಿಗದು ವಾವಗೆಯುಸೇರುವೆ
ಯರಸ ನಿನ್ನೊಡನೆನ್ನ ಕುನ್ನಿಗಳೆನುತ ಬಿಸು ಸುಯ್ದ || ೭೨ ||

ತಂದೆಯಿಲ್ಲದ ನಿಮಗೆ ಹಿತರಾ
ರೆಂದು ಮರರುಗುವೆನೆನ್ನ ಮಕ್ಕಲು
ಕೊಂದು ಹಿಂಡು ಕೂಳನುಂಬರೆ ಹೇಸುವವರಲ್ಲ ||
ಇಂದು ನಿಮಗವರಿಂದಲುಪಹತಿ
ಬಂದುದಾದರೆ ತನ್ನ ತಲೆಯಲಿ
ನಿಂದು ಹೊರುವುದಕೀರ್ತಿಕಿಲ್ಬಿಷ ಮಗನೆ ಕೇಳೆಂದ || ೭೩ ||

ತಾತ ಕೆಡುವಿರಿ ನೀವು ತನಗ
ಖ್ಯಾತಿ ಕೌರವರೆಂಬುವರು ದು
ನೀತಿಕಾರರರು ಭೀಷ್ಮ ವಿದುರರು ಭೀತರವದಿರಿಗೆ ||
ನೀತಿ ಸಮ್ಮತವಾಗಿ ಚಿತ್ತದೊ
ಳಾತ ಮತವನು ಹೇಳಿ ನಮ್ಮೊಳು
ಬೀತಿ ಬೇಡೆಂದರಸ ಹಿಡಿದನು ಧರ್ಮಜನ ಕರವ || ೭೪ ||

ಬೇರೆ ಮತವೆಗೇನು ಬೊಪ್ಪನ
ಚಾರಿ ನಿಮ್ಮದು ನೀವು ಬೊಪ್ಪನ
ನೂರುಮಡಿಯೆಮಗೊಳ್ಳಿದರು ಬೇರಿನ್ನ ಹಿತರುಂಟೆ ||
ಬೇರಿರಿಸಿ ಕೊಡಿಸಿರಿ ನಿಮಗೆಯು
ತೋರಿದುದೆ ಮತ ನಿಮ್ಮ ನೇಮವ
ಮೀರಬಲ್ಲನೆ ಯೆಂದುಧರ್ಮಜ ನುಡಿದನರಸಂಗೆ ||೭೫ ||

ಎರೆವ ವಂಕಿಯೊ ಕಳಿತ ಮೆಕ್ಕೆಯೊ
ಹುರಿಯ ಬಲೆಯೋ ರಾಗ ಸನ್ನೆಯೊ
ಸರಿಯ ಗೊರೆಯೋ ಠಕ್ಕಿನುಂಡೆಯೊಸವಿಯ ಚಿತ್ರಕವೊ ||
ಅರಸನಂಕೆಯ ಮನದ ಬಯಕೆಯ
ಹೊರೆಯ ಬಳಕೆಯನೀ ಸಮಂಜಸ
ತರದ ಸಾತ್ವಿಕರೆತ್ತಬಲ್ಲರು ಭೂಪ ಕೇಳೆಮದ |} ೭೬||

ಕಂದ ಮನ ಮುನಿಸಿಲ್ಲಲೇ ನಾ
ವೆಂದ ನುಡಿಗೊಡಂಬಡುವಿರಾದೊಡೆ
ಮುಂದೆ ಪುರವಿದೆ ವಾರಣಾವತವಿಲ್ಲಿಗರವತ್ತು ||
ಸಂದ ನಾಡು ಸಮಸ್ತ ವಸ್ತುಗ
ಳಿಂದ ಪೂರಿತ ಹಸ್ತಿನಾಪುರ
ದಿಂದ ಮಿಗಿಲುದು ರಾಜಧಾನಸ್ಥಾನ ನಿಮಗೆಂದ || ೭೭ ||

ಹೈ ಹಸಾದ ಭವತ್ ಕೃಪಾ ಸ
ನ್ನಾಹವೇ ಸಾಮ್ರಾಜ್ಯವಾವುದ
ನೊಹಿಸಿದೊಡಾ ಸ್ಥಿತಿಯೊಳಗಡಗಿಹೆವೆಂದು ವಿನಯದಲಿ ||
ಗಾಹುಗತಕವನರಿಯದಿವರು
ತ್ಸಾಹದಲಿ ಕೈಕೊಂಡು ಭೀಷ್ಮಗೆ
ಬೇಹ ವಿದುರ ದ್ರೋಣಮುಖ್ಯರಿಗರುಹಿದರು ಹದನ || ೭೮ ||

ಧಾರುಣೀಪತಿ ರತ್ನಮಯ ಭಂ
ಡಾರ ಸಹಿತ ಗಜಾಶ್ವ ರಥ
ಪರಿವಾರವನು ಮಾಡಿದನು ಹಸಿಗೆಯನೆರಡು ಭಾಗವನು ||
ಕೌರವರಿಗೊಂದಿವರಿಗೊಂದೆನ
ಲೋರಣದೊಳಡವಡಿಸಿ ಬಹು ವಿ
ಸ್ತಾರದಲಿ ಭೀಷ್ಮಾದ್ಯರಹುದೆನಲಿವರ ಮನ್ನಿಸಿದ || ೭೯ ||

ಇವರು ಶಭದಿನ ಶಭ ಮುಹೂರ್ತ
ಪ್ರವರದಲಿ ಹೊರಹೊಂಟರಾ ಜನ
ನಿಹವ ಮರುಗಿತರಣ್ಯವೇ ಗತಿಯರಸ ನಮಗೆಂದು ||
ಅವರ ಕಳುಹುತ ಬಂದರಾ ಕೌ
ರವರು ನಿಂದರು ಭೀಷ್ಮ ಕಲಶೋ
ದ್ಭವರು ಸುತರಿಗೆ ಬುದ್ಧಿಹೇಳಿದು ಮರಳಿದರು ಪುರಕೆ ||೮೦ ||

ವಿದುರನೊಡನೈತರತ ಸಂಕೇ
ತದಲಿ ಸೂಚಿಸಿ ಮರಳಿದನು ನೃಪ
ಸುದತಿ ವರ ಗಾಂಧಾರಿ ಮೊದಲಾದಖಿಳರಾಣಿಯರು ||
ಮುದದಮುರುವಿನಲಿವರತೆಗೆದ
ಪ್ಪಿದರು ಭೂಪತಿ ಸಹಿತ ಕಡು ಶೋ
ಕದಲಿ ಕಳುಹಿಸಿಕೊಂಡು ಬಂದರು ಹಸ್ತಿನಾಪುರಕೆ ||೮೧ ||

ಅರಸ ಕೇಳೈ ಹಸ್ತಿನಾಪುರ
ವರನ ಹೊರನೆಡೆವಾ ಮುಹೂರ್ತಕೆ
ವರುಷವಿಪ್ಪತ್ತೊಂಭತ್ತಾದುದು ಧರ್ಮನಂದನಗೆ ||
ವರಷ ಹದಿಮೂರರಲಿ ಹಸ್ತಿನ
ಪುರದೊಳಿದ್ದರು ಹಿಂದೆ ಶೋಡಶ
ವರುಷ ವನದೊಳಗಿಂತು ಲೆಕ್ಕವ ನೋಡಿಕೋಯೆಂದ || ೮೨ ||

ಬಂದರೈವರು ಕುಂತಿ ಸಹಿತಾ
ನಂದದಲಿ ವರ ವಾರಣಾವತ
ಕಂದು ಪುರಜನ ಕೂಡಿ ಕನ್ನಡಿ ಕಳಸ ವಿಭವದಲಿ ||
ಬಂದು ತಾವಿದಿರಾಗಿ ಕುಂತೀ
ನಂದನರ ಹೊಗಿಸಿದರು ಪಟ್ಟಣ
ವಂದು ಮೆರೆದುದು ಕೂಡೆ ಗುಡಿ ತೋರಣ ರಚನೆಯಲಿ || ೮೩ ||

ಬೀಡು ಕಾಣಿಕೆಯಿತ್ತು ಕಂಡುದು
ನಾಡೆ ಕಾಣಿಸಿದನು ಪುರೋಚನ
ಕೂಡೆ ಸಂದನು ಹಾಸುಹೊಕ್ಕಗವರ ಮನವರಿದು ||
ನೋಡಿದನು ಯಮನಂದನನು ಮನೆ
ಮಾಡಿದಂದವನರಗಿನರಮನೆ
ಗೂಡಿರುವ ಬೇಳುವೆಯ ನೆನೆದರೆ ಬೊಪ್ಪನವರೆಂದ || ೮೪ ||

ಸಮಿಧೆಗಳು ನಾವ್ ನಾಲ್ವರಯ್ಯನ
ರಮಣಿಯಾಹುತಿ ಭೀಮನೇ ಪಶು
ಕುಮತಿ ಕಟ್ಟಿಸಿದರಮನೆಯಗ್ನಿ ಕುಂಡವಿದು ||
ಎಮಗೆ ಸಂಶಯವಿಲ್ಲ ರಾಜೋ
ತ್ತಮನೊ ದುರ್ಯೋಧನನೊ ದೀಕ್ಷಾ
ಕ್ರಮವ ಧರಿಸಿದವನಾವನೆಂದನು ನಗುತ ಯಮಸೂನು || ೮೫ ||

ಜನಪ ಕೇಳೈ ವಿದುರನಟ್ಟಿದ
ಖನಕ ಬಂದನುಯಿವರ ಸಜ್ಜೆಯ
ಮನೆಯಲತಿ ಗುಪ್ತದಲಿ ನೆಲದೊಳು ಸವೆಸಿದನು ಪಥವ ||
ಅನುದಿನದೊಳಾ ಬಾಹಿರನು ಕಿ
ಚ್ಚಿನಲಿ ಚುಚ್ಚುವ ಸಂದುಗಟ್ಟನು
ನೆನೆವುತಿರ್ದನು ಖಳ ಪುರೋಚನನೊಡೆಯನಾಜ್ಞೆಯಲಿ ||೮೬ ||

ಒಂದು ದಿನ ಹಬ್ಬದಲಿ ಭೂಸುರ
ವೃಂದವುಂಡುದು ಪಂಚ ಪುತ್ರಿಕೆ
ಯೆಂದು ಬೇಡತಿಯೊಬ್ಬಳಿದ್ದಳು ಸುತರು ಸಹಿತಲ್ಲಿ ||
ಅಂದಿನಿರುಳು ಪುರೋಚನನು ತಾ
ನೊಂದ ನೆನೆದರೆ ದೈವಗತಿ ಬೇ
ರೊಂದ ನೆನೆದುದು ಕೇಳು ಜನಮೇಜಯ ಮಹೀಪಾಲ || ೮೭ ||

ಅವನು ನಿದ್ರೆಯೊಳರಿಯದಿರಲುಆ
 ಭವನ ಮುಖದಲಿ ಕಿಚ್ಚನೊಟ್ಟಿಸಿ
ಪವನಸುತ ಸಹಿತಿವರು ಹಾಯ್ದರು ಬಿಲದ ಮಾರ್ಗದಲಿ ||
ಅವರು ಬೆಂದರು ಮುನ್ನ ಬಳಕಾ
ಭವನ ಪಂಕ್ತಿಗಳುರಿದು ಕರಗಿದ
ವವನಿಯಲಿ ಹೊನಲಾಯ್ತು ಪುರಜನವೈದೆ ಬೆರಗಾಗೆ || ೮೮ ||

ಅಕಟ ಪಾಂಡವರಳಿದರೇ ಕೌ
ಳಿಕದಿ ಕೌರವರಿರಿದರೇ ಮತಿ
ವಿಕಳರವದಿರು ಬೆಂದು ಹೋದರು ಧರ್ಮದಲಿ ನೆಡೆದು ||
ಪ್ರಕಟ ಪಾಪರಿಗಹುದು ಸಾಮ್ರಾ
ಜ್ಯಕವು ಧರ್ಮಾತ್ಮರಿಗೆಯೀ ಪರಿ
ವಿಕಟತೆಯಸುರ ರಾಜ್ಯವೆಂದುದು ಪೌರಜನ ಮರುಗಿ || ೮೯ ||

ಮುನ್ನ ಬೆಂದನಲಾ ಪುರೋಚನ
 ಕುನ್ನಿಯದು ಲೇಸಾಯ್ತು ಹದನಾ
ಪನ್ನರಾದರೆ ಅವ್ಯೆಯರು ಸಹಿತಕಟ ಪಾಂಡವರು ||
ಇನ್ನು ಸುಡು ಸುಡು ಧರ್ಮ ಸಂಪ್ರತಿ
ಪನ್ನ ಗಣದಾಚಾರಗಳ ಸಂ
ಪನ್ನತೆಯನೊಂದರಲಿ ಮರುಗಿತು ನಿಖಿಲ ಪರಿವಾರ || ೯೦ ||

ಒಗೆದುದೀ ಬೇಳಂಬ ಹಸ್ತಿನ
ನಗರಿಯಲಿ ತತ್ಪೌರಜನ ಮನ
ವುಗಿದು ಬಿದ್ದುದು ಶೋಕಮಯ ಸಾಗರದ ಮಧ್ಯದಲಿ ||
ಹೊಗೆದುದಾನನ ವಿದುರಭೀಷ್ಮಾ
ದಿಗಳಿಗಾಧೃತರಾಷ್ಟದರ ಸುತರಿಗೆ
ದುಗುಡ ದಡ್ಡಿಯ ಹರಷಸಿರಿ ಹೊಕ್ಕಳು ಮುಖಾಂಬುಜವ || ೯೧ ||

ಬಂದುದಾ ಸುರನದಿಗೆ ಕೌರವ
ವೃಂದ ಪರಿಜನವೈದೆ ಶೋಕಿಸಿ
ಮಿಂದು ಗಂಗಾತೀರದಲಿ ಬಳಿಕೂರ್ಧ್ವದೇಹಿಕವ ||
ಸಂದ ವಿಧಿಯಲಿ ಮಾಡಿ ಪರಮಾ
ನಂದ ಮಿಗಲವರಿರ್ದರಿತ್ತಲು
ಇಂದು ಕುಲಸಂಭವರ ವಿಧಿಯನು ಮತ್ತೆ ಕೇಳೆಂದ ||೯೨ ||

ಬಿಲಮುಖದೊಳುತ್ತರಿಸಿ ಬಲಗ
ತ್ತಲೆಯೊಳಡವಿಯ ಮಾರ್ಗದಲಿ ಕಲು
ಮುಳುಗಳೊಳು ಕಾಪಥಕೆ ಕೋಮಲ ಚರಣ ಕೊಡುತ ||
ತೋಳಲಿದರು ಬೆಳಗಾಗೆ ಹಳ್ಳಿಯ
ಬಳಿಯ ಹೊದ್ದದೆ ಹಾಯ್ದು ಹೊಕ್ಕರು
ಹಳುವವನು ಬೆಳಗಡೆಗೆ ನಡೆದರು ಹಲವು ಯೋಜನವ || ೯೩ ||

ದಾಟಿದರು ಗಂಗೆಯನು ರಾಯನ
ಮಾಟದಲಿ ಹಲುಮುರಿದುದೇ ನ
ಮ್ಮಾಟಕಿದು ಹಿರಿದಲ್ಲಲಾಯೆನುತೈವರಡಿಗಡಿಗೆ ||
ಕೋಟಲೆಯ ಕೊಲ್ಲಣಿಗೆಯಲಿ ಮೈ
ನೋಟಕಲಸದೆ ಬಿಸಿಲಲವರು ಮ
ಹಾಟವಿಯ ಮಧ್ಯವನು ಹೊಕ್ಕರು ನೃಪತಿ ಕೇಳೆಮದ || ೯೪ ||

♦♦♦♦♦♦♦♦♦
ಆದಿಪರ್ವ ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ಪರ್ವಗಳು

[ಸಂಪಾದಿಸಿ]
ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ