ಪಂಪಭಾರತ ದಶಮಾಶ್ವಾಸಂ

ವಿಕಿಸೋರ್ಸ್ ಇಂದ
Jump to navigation Jump to search

ಪಂಪಭಾರತ -ಪದವಿಭಾಗ ಮತ್ತು ಅರ್ಥ::ಪಂಪಭಾರತ ದಶಮಾಶ್ವಾಸಂ[ಸಂಪಾದಿಸಿ]

  • (X.V.XIIX)-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))
ಕುರುಕ್ಷೇತ್ರದಲ್ಲಿ ಮೊದಲ ದಿನದ ಯುದ್ಧ - ಪಾಂಡವರ ಕಡೆ ಸೇನಾಧಿಪತಿ ಶ್ವೇತನ ಮರಣ
ಕಂ|| ಶ್ರೀ ನಾರೀವಲ್ಲಭನಭಿ
ಮಾನಧನಂ ಹರಿಗನಾ ಕುರುಕ್ಷೇತ್ರದೊಳಂ|
ತೇನುಂ ಮಾಣದೆ ಬಿಟ್ಟುದ
ನಾ ನೆಗೞ್ದ ಸುಯೋಧನಂಗೆ ಚರರಱಿಪುವುದುಂ|| ೧ ||
ಪದ್ಯ-೦೧:ಪದವಿಭಾಗ-ಅರ್ಥ:ಶ್ರೀ ನಾರೀವಲ್ಲಭಂ ಅಭಿಮಾನಧನಂ ಹರಿಗನು (ಸಂಪತ್ತೆಂಬ ಹೆಣ್ಣಿಗೆ ಪತಿಯೂ, ಅಭಿಮಾನವೇ ಧನವಾಗಿ ಉಳ್ಳವನೂ ಆದ ಅರ್ಜುನನು) ಆ ಕುರುಕ್ಷೇತ್ರದೊಳಂ ಅಂತು ಏನುಂ ಮಾಣದೆ ಬಿಟ್ಟುದನು(ಕುರುಕ್ಷೇತ್ರದಲ್ಲಿ ಯಾವ ತಡಮಾಡದೆ ಯುದ್ಧಕ್ಕಾಗಿ ಬೀಡುಬಿಟ್ಟುದನ್ನು) ಆ ನೆಗೞ್ದ ಸುಯೋಧನಂಗೆ ಚರರ್ ಅಱಿಪುವುದುಂ(ದೂತರು ತಿಳಿಸಿದರು)
ಪದ್ಯ-೦೧:ಅರ್ಥ:ಸಂಪತ್ತೆಂಬ ಹೆಣ್ಣಿಗೆ ಪತಿಯೂ, ಅಭಿಮಾನವೇ ಧನವಾಗಿ ಉಳ್ಳವನೂ ಆದ ಅರ್ಜುನನು ಕುರುಕ್ಷೇತ್ರದಲ್ಲಿ ಯಾವ ತಡಮಾಡದೆ ತಾವು ಯುದ್ಧಕ್ಕಾಗಿ ಬೀಡುಬಿಟ್ಟುದನ್ನು ಆ ಪ್ರಸಿದ್ಧನಾದ ದುರ್ಯೋಧನನಿಗೆ ದೂತರು ತಿಳಿಸಿದರು.
ಗುರು ಗುರುಸುತ ಶಕುನಿ ಕೃಪಾಂ
ಗರಾಜರಂ ಬರಿಸಿ ನುಡಿದನವನಿಪನೇಂ ಕೇ|
ಳ್ದಿರೆ ಪಾಂಡುಸುತರ ಮುನಿಸಿನ
ತಱಿಸಲವಿನ ಚಲದ ಬಲದ ಕಲಿತನದಳವಂ|| ೨ ||
ಪದ್ಯ-೦೨:ಪದವಿಭಾಗ-ಅರ್ಥ:ಗುರು ಗುರುಸುತ ಶಕುನಿ ಕೃಪ ಅಂಗರಾಜರಂ ( ಕರ್ಣ) ಬರಿಸಿ (ಬರಮಾಡಿಕೊಂಡು) ನುಡಿದನು ಅವನಿಪಂ (ದುರ್ಯೋಧನನು ಹೇಳಿದನು), ಏಂ ಕೇಳ್ದಿರೆ ಪಾಂಡುಸುತರ ಮುನಿಸಿನ ತಱಿಸಲವಿನ (ತರಿಸಲವಿನ- ನಿರ್ಧಾರದ) ಚಲದ ಬಲದ ಕಲಿತನದ ಅಳವಂ(ಪ್ರಮಾಣವನ್ನು, ಸಾಮರ್ಥ್ಯನನ್ನು)
ಪದ್ಯ-೦೨:ಅರ್ಥ:೨. ದ್ರೋಣ, ಅಶ್ವತ್ಥಾಮ, ಶಕುನಿ, ಕೃಪ, ಕರ್ಣರನ್ನು ಬರಮಾಡಿಕೊಂಡು ದುರ್ಯೋಧನನು ಹೇಳಿದನು- ಪಾಂಡವರ ಕೋಪದ, ನಿಶ್ಚಯದ, ಛಲದ, ಬಲದ, ಪರಾಕ್ರಮದ ಸಾಮರ್ಥ್ಯನನ್ನು ಕೇಳಿದಿರಾ?
ಬಂದು ಕುರುಕ್ಷೇತ್ರದೊಳಳ
ವೊಂದಿರೆ ನಮ್ಮೊಳ್ ಕಡಂಗಿ ಮಿಗೆ ತಳ್ತಿಱಿಯ|
ಲ್ಕೆಂದಾನುಂ ಬಂದಿರ್ದರಿ
ದೇಂ ದಾಯಿಗತನಮನೆಮಗವರ್ ತೋಱಿದಪರ್|| ೩ ||
ಪದ್ಯ-೦೩:ಪದವಿಭಾಗ-ಅರ್ಥ:ಬಂದು ಕುರುಕ್ಷೇತ್ರದೊಳು ಅಳವೊಂದಿರೆ (ಕುರುಕ್ಷೇತ್ರಕ್ಕೆ ಬಂದು ಸಾಮರ್ಥ್ಯ ಹೊಂದಿಸಿಕೊಂಡಿರಲು) ನಮ್ಮೊಳ್ ಕಡಂಗಿ ಮಿಗೆ ತಳ್ತಿಱಿಯಲ್ಕೆಂದಾನುಂ ಬಂದಿರ್ದರ್ (ತಳ್ತು ಇರಿಯಲ್ಕೆ ಎಂದಾನುಂ- ನಮ್ಮೊಡನೆ ಬಹಳ ಉತ್ಸಾಹದಿಂದ ಯುದ್ಧಮಾಡುವ ಉದ್ದೇಶದಿಂದ ಬಂದಿದ್ದಾರೆ.) ಇದೇಂ ದಾಯಿಗತನಮನೆ ಎಮಗವರ್ ತೋಱಿದಪರ್ (ಅವರು ನಮ್ಮಲ್ಲಿ ದಾಯಾದಿತನವನ್ನೇ ತೋರಿಸುತ್ತಿದ್ದಾರೆ! ),
ಪದ್ಯ-೦೩:ಅರ್ಥ: ಕುರುಕ್ಷೇತ್ರಕ್ಕೆ ಬಂದು ಸಾಮರ್ಥ್ಯ ಹೊಂದಿಸಿಕೊಂಡಿರಲು, ನಮ್ಮೊಡನೆ ಬಹಳ ಉತ್ಸಾಹದಿಂದ ಯುದ್ಧಮಾಡುವ ಉದ್ದೇಶದಿಂದ ಬಂದಿದ್ದಾರೆ. ಅವರು ನಮ್ಮಲ್ಲಿ ದಾಯಾದಿತನವನ್ನೇ ತೋರಿಸುತ್ತಿದ್ದಾರೆ!
ಮ|| ಪಡೆವಳ್ಳಂ ಗಡಮಾ ಬಲಕ್ಕೆ ದಲೆ ಧೃಷ್ಟದ್ಯುಮ್ನನೆಂಬೊಳ್ಳೆಯಾ
ಪಡೆಯೊಳ್ ಗಂಡನುಮಾ ಮೊಲಂ ದ್ರುಪದನುಂ ಪೇರೊಟ್ಟೆಯಾ ಮತ್ಸ್ಯನುಂ|
ಗಡಮಂತಾ ಬಲಕಾಳ್ದನೇನಱಿಯಿರೇ ಧರ್ಮಜ್ಞನಾ ಧರ್ಮಜಂ
ಗಡಮೇಂ ನಾಯಕರೊಳ್ಳಿದರ್ ನೆರೆದರೋ ಕಾದಲ್ಕೆ ಮತ್ಸೈನ್ಯದೊಳ್|| ೪ ||
ಪದ್ಯ-೦೪:ಪದವಿಭಾಗ-ಅರ್ಥ:ಪಡೆವಳ್ಳಂ (ಸೇನಾನಾಯಕ) ಗಡಂ ಆ ಬಲಕ್ಕೆ ದಲೆ (ನಿಜಕ್ಕೂ) ಧೃಷ್ಟದ್ಯುಮ್ನನೆಂಬ ಒಳ್ಳೆಯು (ಆ ಪಾಂಡವರ ಸೈನ್ಯಕ್ಕೆ ನಿಜಕ್ಕೂ ಸೇನಾನಾಯಕನಾಗಿರುವವನು ಧೃಷ್ಟದ್ಯುಮ್ನನೆಂಬ ನೀರುಹಾವು) ಆ ಪಡೆಯೊಳ್ ಗಂಡನುಮ್ ಆ ಮೊಲಂ ದ್ರುಪದನುಂ, (ಆ ಸೈನ್ಯದಲ್ಲಿ ಶೂರನಾಗಿರುವವರು ದ್ರುಪದನೆಂಬ ಮೊಲ,) ಪೇರ್ ಒಟ್ಟೆಯು ಆ ಮತ್ಸ್ಯನುಂ ಗಡಂ (ಮತ್ಸ್ಯನೆಂಬ ಒಂಟೆ, ಓಹೋ!) ಅಂತು ಆ ಬಲಕೆ ಆಳ್ದನು ಏನ್ ಅಱಿಯಿರೇ ಧರ್ಮಜ್ಞನು ಆ ಧರ್ಮಜಂ ಗಡಂ (ಆ ಸೈನ್ಯಕ್ಕೆ ಯಜಮಾನ ಧರ್ಮದ ಗೊಡ್ಡಾದ ಧರ್ಮರಾಯ, ಅವರ ಯೋಗ್ಯತೆ ಏನೆಂಬುದು ತಿಳಿಯದೇ?) ಏಂ ನಾಯಕರು ಒಳ್ಳಿದರ್ ನೆರೆದರೋ ಕಾದಲ್ಕೆ ಮತ್ಸೈನ್ಯದೊಳ್ - ಮತ್ ಸೈನ್ಯದೊಳ್ (ಒಳ್ಳೆಯ ನಾಯಕರು ನನ್ನ ಸೈನ್ಯದೊಡನೆ ಯುದ್ಧಮಾಡುವುದಕ್ಕೆ ಸೇರಿದ್ದಾರೆ!)
ಪದ್ಯ-೦೪:ಅರ್ಥ:ಆ ಪಾಂಡವರ ಸೈನ್ಯಕ್ಕೆ ನಿಜಕ್ಕೂ ಸೇನಾನಾಯಕನಾಗಿರುವವನು ಧೃಷ್ಟದ್ಯುಮ್ನನೆಂಬ ನೀರುಹಾವು, ಆ ಸೈನ್ಯದಲ್ಲಿ ಶೂರನಾಗಿರುವವರು ದ್ರುಪದನೆಂಬ ಮೊಲ, ಮತ್ಸ್ಯನೆಂಬ ಒಂಟೆ, ಆ ಸೈನ್ಯಕ್ಕೆ ಯಜಮಾನ ಧರ್ಮದ ಗೊಡ್ಡಾದ ಧರ್ಮರಾಯ, ಅವರ ಯೋಗ್ಯತೆ ಏನೆಂಬುದು ತಿಳಿಯದೇ? ಒಳ್ಳೆಯ ನಾಯಕರು ನನ್ನ ಸೈನ್ಯದೊಡನೆ ಯುದ್ಧಮಾಡುವುದಕ್ಕೆ ಸೇರಿದ್ದಾರೆ!
ವ|| ಎಂಬುದುಂ ಕುಂಭಸಂಭವನಿಂತೆಂದಂ-
ವಚನ:ಪದವಿಭಾಗ-ಅರ್ಥ: ಎಂಬುದುಂ ಕುಂಭಸಂಭವನು ಇಂತೆಂದಂ-
ವಚನ:ಅರ್ಥ:ಎಂಬುದಾಗಿ ಹೇಳಲು ದ್ರೋಣಾಚಾರ್ಯನು ಹೀಗೆಂದನು.
ಮ|| ಕಳವೇೞ್ದೆ ಕುರುಭೂಮಿಯಂ ಕಳಕವರ್ ವಂದಿರ್ದರೆಂದಂತೆ ದೋ
ರ್ವಳ ಚಾತುರ್ವಳ ತತ್ಸುಹೃದ್ಬಳಮನಿನ್ನೇಗೇಳ್ದಪೈ ಪಾಂಡವರ್|
ಬಳಸಂಪನ್ನರುದಗ್ರದೈವಬಲಸಂಪನ್ನರ್ ಮರುಳ್ಮಾತನಿ
ನ್ನುೞಿ ಗಾಂಗೇಯರ ಪೇೞ್ದದೊಂದು ತೆಱದಿಂ ನೀಂ ಕಾದು ದುರ್ಯೋಧನಾ|| ೫ ||
ಪದ್ಯ-೦೫:ಪದವಿಭಾಗ-ಅರ್ಥ:ಕಳವೇೞ್ದೆ ಕುರುಭೂಮಿಯಂ (ಕಳಂ ಏಳ್ದೆ- ಕುರುಕ್ಷೇತ್ರವನ್ನು ಯುದ್ಧ ಭೂಮಿಯಾಗಿ ಹೇಳಿದ್ದೀಯ) ಕಳಕವರ್ ವಂದಿರ್ದರು ಎಂದಂತೆ ದೋರ್ವಳ (ತೋಳು ಬಲ) ಚಾತುರ್ವಳ ತತ್ ಸುಹೃದ್ಬಳಮನು (ಸುಹೃತ್ ಬಲ- ಸ್ನೇಹಿತರ ಸೈನ್ಯ) ಇನ್ನು ಏಗೆ ಕೇಳ್ದಪೈ (ಅವರ ಬಾಹುಬಲವನ್ನೂ ಚತುರಂಗಸೈನ್ಯದ ಬಲವನ್ನೂ ಅವರ ಮಿತ್ರವರ್ಗದ ಶಕ್ತಿಯನ್ನೂ ಇನ್ನು ಹೇಗೆಂದು ಕೇಳುತ್ತೀಯಾ?) ಪಾಂಡವರ್ ಬಳಸಂಪನ್ನರು ಉದಗ್ರ ದೈವಬಲಸಂಪನ್ನರ್ (ಪಾಂಡವರು ಬಲಸಂಪನ್ನರು, ಉತ್ತಮವಾದ ದೈವಬಲದಿಂದ ಕೂಡಿರುವವರು.) ಮರುಳ್ ಮಾತನು ಇನ್ನುೞಿ (ಮರುಳು ಮಾತನ್ನು ಬಿಟ್ಟುಬಿಡು) ಗಾಂಗೇಯರ ಪೇೞ್ದ ಅದೊಂದು ತೆಱದಿಂ ನೀಂ ಕಾದು ದುರ್ಯೋಧನಾ (ದುರ್ಯೋಧನಾ, ಭೀಷ್ಮರು ಹೇಳಿದ ರೀತಿಯಲ್ಲಿಯೇ ಯುದ್ಧಮಾಡು.)
ಪದ್ಯ-೦೫:ಅರ್ಥ:ನೀನು ಕುರುಕ್ಷೇತ್ರವನ್ನು ಯುದ್ಧ ಭೂಮಿಯಾಗಿ ಹೇಳಿದ್ದೀಯ. ನೀನು ಹೇಳಿದ ಹಾಗೆ (ಅದರಂತೆ) ಅವರು ಯುದ್ಧರಂಗಕ್ಕೆ ಬಂದಿದ್ದಾರೆ. ಅವರ ಬಾಹುಬಲವನ್ನೂ ಚತುರಂಗಸೈನ್ಯದ ಬಲವನ್ನೂ ಅವರ ಮಿತ್ರವರ್ಗದ ಶಕ್ತಿಯನ್ನೂ, ಇನ್ನು ಹೇಗೆಂದು ಕೇಳುತ್ತೀಯಾ? ಪಾಂಡವರು ಬಲಸಂಪನ್ನರು, ಉತ್ತಮವಾದ ದೈವಬಲದಿಂದ ಕೂಡಿರುವವರು. ಮರುಳು ಮಾತನ್ನು ಬಿಟ್ಟುಬಿಡು. ದುರ್ಯೋಧನಾ, ಭೀಷ್ಮರು ಹೇಳಿದ ರೀತಿಯಲ್ಲಿ ಯುದ್ಧಮಾಡು.

ದುರ್ಯೋಧನನ ಜಾಣ ರಾಜತಂತ್ರ[ಸಂಪಾದಿಸಿ]

ವ|| ಎಂಬುದುಮಾ ಮಾತಂ ಮನದೇಗೊಂಡಂತೆಗೆಯ್ವೆನೆಂದನಿಬರುಮಂ ವಿಸರ್ಜಿಸಿ ನಿಶಾಸಮಯದೊಳ್ ಪತ್ತೆಂಟು ಕೆಯ್ದೀವಿಗೆಗಳ ಬೆಳಗಿನೊಳಂ ಕತಿಪಯ ಪರಿಜನ ಪರಿವೃತನಾಗಿ ರಾಜರಾಜಂ ಸಿಂಧುಜನರಮನೆಗೆವಂದು ವಾಹನದಿಂದಮಿೞಿದು ಕುರುಪಿತಾಮಹಂಗೆಱಗಿ ಪೊಡೆವಡುವುದುಂ ಪರಸಿ ಮಂಚದೊಳೇಱಲ್ ಕರೆದೊಡೊಲ್ಲೆಂ ಮಹಾಪ್ರಸಾದಮಿಂತಿರ್ಪೆನೆಂದು ಮಣಿಮಯ ಹೇಮಾಸನದೊಳ್ ಕುಳ್ಳಿರ್ದನಂ ನೋಡಿ ಕಜ್ಜಂ ಪುಟ್ಟಿದೊಡೆಮಗೆ ಬೞಿಯಟ್ಟದೀ ಪೊೞ್ತಿದಾವುದು ಮನವಾೞ್ತೆಗೆೞ್ತಂದೆಯೆಂದೊಡೆ ಸುಯೋಧನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಆ ಮಾತಂ ಮನದೇಗೊಂಡು ಅಂತೆಗೆಯ್ವೆನೆಂದು ಅನಿಬರುಮಂ ವಿಸರ್ಜಿಸಿ (ಎನ್ನಲು ಆ ಮಾತನ್ನು ಅಂಗೀಕರಿಸಿ ಹಾಗೆಯೇ ಮಾಡುತ್ತೇನೆಂದು ಒಪ್ಪಿ, ಅವರೆಲ್ಲರನ್ನೂ ಕಳಿಸಿ,) ನಿಶಾಸಮಯದೊಳ್ ಪತ್ತೆಂಟು ಕೆಯ್ದೀವಿಗೆಗಳ ಬೆಳಗಿನೊಳಂ ಕತಿಪಯ ಪರಿಜನ ಪರಿವೃತನಾಗಿ ( ರಾತ್ರಿಯ ಸಮಯದಲ್ಲಿ ಹತ್ತೆಂಟು ಕೈದೀವಿಗೆಗಳ ಬೆಳಕಿನಲ್ಲಿ ಕೆಲವೇ ಜನ ಸೇವಕರಿಂದ ಕೂಡಿದವನಾಗಿ) ರಾಜರಾಜಂ ಸಿಂಧುಜನ ಅರಮನೆಗೆ ವಂದು ವಾಹನದಿಂದಮ್ ಇೞಿದು (ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನ ಅರಮನೆಗೆ ಬಂದು ವಾಹನದಿಂದಿಳಿದು) ಕುರುಪಿತಾಮಹಂಗೆ ಎಱಗಿ ಪೊಡೆವಡುವುದುಂ (ಕುರುಪಿತಾಮಹನಾದ ಭೀಷ್ಮನಿಗೆ ಬಗ್ಗಿ ನಮಸ್ಕಾರ ಮಾಡಿದನು.) ಪರಸಿ ಮಂಚದೊಳೇಱಲ್ ಕರೆದೊಡೆ ಒಲ್ಲೆಂ ಮಹಾಪ್ರಸಾದಂ ಇಂತಿರ್ಪೆನೆಂದು (ಅವರು ಹರಸಿ ಅವನನ್ನು ಮಂಚದ ಮೇಲೆ ಹತ್ತಿ ಕುಳಿತುಕೊಳ್ಳಹೇಳಲು ‘ಒಲ್ಲೆ ಹಾಗೆ ಮಾಡಲಾರೆ, ಇದೇ ನನಗೆ ಪರಮಾನುಗ್ರಹ, ಹೀಗಿರುತ್ತೇನೆ,) ಮಣಿಮಯ ಹೇಮಾಸನದೊಳ್ ಕುಳ್ಳಿರ್ದನಂ ನೋಡಿ (ಎಂದು ರತ್ನಖಚಿತವಾದ ಚಿನ್ನದ ಪೀಠದ ಮೇಲೆಯೇ ಕುಳಿತುಕೊಂಡವನನ್ನು ಭೀಷ್ಮನು ನೋಡಿ) ಕಜ್ಜಂ ಪುಟ್ಟಿದೊಡೆ ಎಮಗೆ ಬೞಿಯಟ್ಟದೆ (‘ಕಾರ್ಯವುಂಟಾದರೆ ನಮಗೆ ದೂತರ ಮೂಲಕ ಹೇಳಿಕಳುಹಿಸದೆ) ಈ ಪೊೞ್ತಿದಾವುದು ಮನವಾೞ್ತೆಗೆ ಎೞ್ತಂದೆ ಯೆಂದೊಡೆ (ಈ ಹೊತ್ತಿನಲ್ಲಿಯೂ ಮನೆವಾರ್ತೆಗಾಗಿ ಏತಕ್ಕಾಗಿ ಬಂದೆ’ ಎಂದರು) ಸುಯೋಧನನಿಂತೆಂದಂ( ದುರ್ಯೋಧನನು ಹೀಗೆಂದನು- )-
ವಚನ:ಅರ್ಥ:ದ್ರೋಣರು ದುರ್ಯೋಧನನಿಗೆ ಭೀಷ್ಮರು ಹೇಳಿದಂತೆ ಯುದ್ಧಮಾಡು ಎನ್ನಲು, ಆ ಮಾತನ್ನು ಅಂಗೀಕರಿಸಿ ಹಾಗೆಯೇ ಮಾಡುತ್ತೇನೆಂದು ಒಪ್ಪಿ, ಅವರೆಲ್ಲರನ್ನೂ ಕಳಿಸಿ, ರಾತ್ರಿಯ ಸಮಯದಲ್ಲಿ ಹತ್ತೆಂಟು ಕೈದೀವಿಗೆಗಳ ಬೆಳಕಿನಲ್ಲಿ ಕೆಲವೇ ಜನ ಸೇವಕರಿಂದ ಕೂಡಿದವನಾಗಿ ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನ ಅರಮನೆಗೆ ಬಂದು, ವಾಹನದಿಂದ ಇಳಿದು, ಕುರುಪಿತಾಮಹನಾದ ಭೀಷ್ಮನಿಗೆ ಬಗ್ಗಿ ನಮಸ್ಕಾರ ಮಾಡಿದನು. ಅವರು ಹರಸಿ ಅವನನ್ನು ಮಂಚದ ಮೇಲೆ ಹತ್ತಿ ಕುಳಿತುಕೊಳ್ಳಹೇಳಲು, ‘ಒಲ್ಲೆ ಹಾಗೆ ಮಾಡಲಾರೆ, ಇದೇ ನನಗೆ ಪರಮಾನುಗ್ರಹ, ಹೀಗಿರುತ್ತೇನೆ, ಎಂದು ರತ್ನಖಚಿತವಾದ ಚಿನ್ನದ ಪೀಠದ ಮೇಲೆಯೇ ಕುಳಿತುಕೊಂಡವನನ್ನು ಭೀಷ್ಮನು ನೋಡಿ ‘ಕಾರ್ಯವುಂಟಾದರೆ ನಮಗೆ ದೂತರ ಮೂಲಕ ಹೇಳಿಕಳುಹಿಸದೆ ಈ ಹೊತ್ತಿನಲ್ಲಿಯೂ ಮನೆವಾರ್ತೆಗಾಗಿ ಏತಕ್ಕಾಗಿ ಬಂದೆ’ ಎಂದರು. ದುರ್ಯೋಧನನು ಹೀಗೆಂದನು-
ಕಂ|| ಹರಿ ಬಲದಿಂ ಪಾಂಡವರನು
ವರಮಂ ಪೊತ್ತಿಸಿದರೆನ್ನೊಳಾಂ ಕರಮಱಿದಾ|
ಹರಿಯಂ ಕೋಡಗಗಟ್ಟಾ
ಗಿರೆ ಕಟ್ಟಿದೊಡಂದು ನೀಮೆ ಬಿಡಿಸಿದಿರಲ್ತೇ|| ೬ ||
ಪದ್ಯ-೬:ಪದವಿಭಾಗ-ಅರ್ಥ:ಹರಿ ಬಲದಿಂ ಪಾಂಡವರ್ ಅನುವರಮಂ (ಯುದ್ಧ) ಪೊತ್ತಿಸಿದರು ಎನ್ನೊಳು (ಪಾಂಡವರು ಕೃಷ್ಣನ ಬಲದಿಂದ ನಮ್ಮಲ್ಲಿ ಯುದ್ಧವನ್ನು ಹತ್ತಿಸಿದ್ದಾರೆ.) ಆಂ ಕರಮ್ ಅಱಿದು (ಇದನ್ನು ನಾನು ತಿಳಿದೇ) ಆ ಹರಿಯಂ ಕೋಡಗಗಟ್ಟಾಗಿರೆ ಕಟ್ಟಿದೊಡೆ (ಅಂದು ಕೃಷ್ಣನನ್ನು ಕೋಡಗಗಟ್ಟಿನಿಂದ- ಕಪಿಯನ್ನು ಕಟ್ಟುವರೀತಿ ಕಟ್ಟಿದರೆ) ಅಂದು ನೀಮೆ ಬಿಡಿಸಿದಿರಲ್ತೇ
ಪದ್ಯ-೬:ಅರ್ಥ:ಆ ಪಾಂಡವರು ಕೃಷ್ಣನ ಬಲದಿಂದ ನಮ್ಮಲ್ಲಿ ಯುದ್ಧವನ್ನು ಹತ್ತಿಸಿದ್ದಾರೆ. ಇದನ್ನು ನಾನು ತಿಳಿದೇ ಅಂದು ಕೃಷ್ಣನನ್ನು ಕಪಿಯನ್ನು ಕಟ್ಟುವರೀತಿ ಕಟ್ಟಿದರೆ ಆ ದಿನ ನೀವೆ ಬಿಡಿಸಿದಿರಲ್ಲವೇ?
ಕರಿಗಂ ಪರಮಾಣುಗಮಂ
ತರಮಾವುದೊ ನಿಮಗಮಸುರವೈರಿಗಮೇನಂ|
ತರಮಂತೆ ನಿಮ್ಮೊಳಗ್ಗದ
ಪರಶುಧರಂ ಪೊಣರ್ದು ತಾನದಂದೇನಾದಂ|| ೭ ||
ಪದ್ಯ-೭:ಪದವಿಭಾಗ-ಅರ್ಥ:ಕರಿಗಂ ಪರಮಾಣುಗಂ ಅಂತರಮಾವುದೊ ನಿಮಗಂ ಅಸುರವೈರಿಗಂ ಏನಂತರಮ್ (ನಿಮಗೂ ಕೃಷ್ಣನಿಗೂ ಎಷ್ಟೊಂದು ಅಂತರ?) ಅಂತೆ ನಿಮ್ಮೊಳು ಅಗ್ಗದ ಪರಶುಧರಂ ಪೊಣರ್ದು ತಾನು ಅದು ಅಂದು ಏನಾದಂ (ಆ ಪ್ರಸಿದ್ಧನಾದ ಪರಶುರಾಮನು ನಿಮ್ಮೊಡನೆ ಜಗಳವಾಡಿ ಆ ದಿನ ತಾನೇ ಏನಾದ? )
ಪದ್ಯ-೭:ಅರ್ಥ: ಆನೆಗೂ ಸೂಕ್ಷ್ಮವಾದ ಅಣುವಿಗೂ ಎಷ್ಟೊಂದು ವ್ಯತ್ಯಾಸ! ನಿಮಗೂ ಕೃಷ್ಣನಿಗೂ ಎಷ್ಟೊಂದು ಅಂತರ? ಆ ಪ್ರಸಿದ್ಧನಾದ ಪರಶುರಾಮನು ನಿಮ್ಮೊಡನೆ ಜಗಳವಾಡಿ ಆ ದಿನ ತಾನೇ ಏನಾದ? (ನೀವು ಆನೆ ಕೃಷ್ಣ ಅಣು,ಎಂದು ಭಾವ)
ಪಿಡಿದರವರಸುರವೈರಿಯ
ನೊಡಂಬಡಿಂ ತೊೞ್ತುವೆಸದಿನಾಂ ನಿಮ್ಮಡಿಯಂ|
ಪಿಡಿದೆನದೇಂ ತಾನೆಚ್ಚುಂ
ಪಿಡಿದೊಡವರ್ವಂದು ಪಿಡಿದರೆನ್ನರೆ ಗೆಲ್ಲಂ|| ೮||
ಪದ್ಯ-೮:ಪದವಿಭಾಗ-ಅರ್ಥ:ಪಿಡಿದರು ಅವರು ಅಸುರವೈರಿಯನು ಒಡಂಬಡಿಂ (ಅವರು ಶ್ರೀಕೃಷ್ಣನನ್ನು ಒಪ್ಪಿಸಿಕೊಂಡು ಆಶ್ರಯಿಸಿದ್ದಾರೆ) ತೊೞ್ತುವೆಸದಿಂ ಆಂ (ನಾನು) ನಿಮ್ಮಡಿಯಂ ಪಿಡಿದೆನು (ನಾನು ನಿಮ್ಮ ಪಾದವನ್ನು ಸೇವಕನಾಗಿ ಹಿಡಿದಿದ್ದೇನೆ.) ಅದೇಂ ತಾ ನೆಚ್ಚುಂ(ನಂಬಿಕೆ ಇಟ್ಟು) ಪಿಡಿದೊಡೆ, ಅವರ್ ವಂದು ಪಿಡಿದರೆ ಎನ್ನರೆ ಗೆಲ್ಲಂ (ಅವರೂ ಬಂದು ನಿಮ್ಮನು ಹಿಡಿದರೆ, ತಮ್ಮನ್ನು ಗೆಲ್ಲಿಸಿ ಎನ್ನರೇ?)
ಪದ್ಯ-೮:ಅರ್ಥ:ಅವರು ಶ್ರೀಕೃಷ್ಣನನ್ನು ಒಪ್ಪಿಸಿಕೊಂಡು ಆಶ್ರಯಿಸಿದ್ದಾರೆ. ನಾನು ನಿಮ್ಮ ಪಾದವನ್ನು ಸೇವಕನಾಗಿ ಹಿಡಿದಿದ್ದೇನೆ. ಅದು ಏನು ತಾನು ನಿಮ್ಮನ್ನು ನಂಬುಗೆ ಇಟ್ಟು ಆಶ್ರಯಿಸಿದ್ದೇನೆ; ಅವರೂ ಬಂದು ನಿಮ್ಮನು ಹಿಡಿದರೆ, ತಮ್ಮನ್ನು ಗೆಲ್ಲಿಸಿ ಎನ್ನರೇ? (ನನ್ನನ್ನು ಕೈ ಬಿಡಬೇಡಿ ಎಂದು ಭಾವವಿರಬಹುದು, ಮುಂದಿನ ಪದ್ಯ ಅದ್ನೇಹೇಳುವುದು)
ಮ|| ಕೊರಲೊಳ್ ಕಟ್ಟಿದ ದೇವಿಯಂತಿರುರದೊಳ್ ಶ್ರೀ ತೊಟ್ಟಲೊಳ್ ತೊಟ್ಟನಂ
ತರಮೆನ್ನೊಳ್ ನೆಲಸಿತ್ತು ನಿಮ್ಮ ದಯೆಯಿಂ ನಿಮ್ಮಂ ಕರಂ ನಚ್ಚಿ ಸಂ|
ಗರಮಂ ಬಲ್ಲಿದರೊಳ್ ಪೊಣರ್ಚಿದೆನದರ್ಕೆನ್ನೊಳ್ ರಣಶ್ರೀ ರಣಾ
ಜಿರದೊಳ್ ಮಾಣದೆ ಪೊರ್ದುವಂತೆ ಬೆಸಸಿಂ ನಿಮ್ಮೊಂದಭಿಪ್ರಾಯಮಂ|| ೯ ||
ಪದ್ಯ-೯:ಪದವಿಭಾಗ-ಅರ್ಥ:ಕೊರಲೊಳ್ ಕಟ್ಟಿದ ದೇವಿಯಂತೆ ಇರೆ, (ರಾಜ್ಯಲಕ್ಷ್ಮಿಯು ಕೊರಳಲ್ಲಿ ಕಟ್ಟಿದ ದುರ್ಗಾಪದಕದಂತೆ ಇರಲು) ಉರದೊಳ್ (ಎದೆಯಲ್ಲಿ) ಶ್ರೀ ತೊಟ್ಟಲೊಳ್ ತೊಟ್ಟನಂತರಂ ಎನ್ನೊಳ್ ನೆಲಸಿತ್ತು (ತೊಟ್ಟಿಲಲ್ಲಿಯ ಬಾಲ್ಯತನದಿಂದಲೂ ರಾಜ್ಯಲಕ್ಷ್ಮಿಯು ನನ್ನ ಎದೆಯಲ್ಲಿ ಇಲ್ಲಿಯವರೆಗೂ ನನ್ನಲ್ಲಿ ನೆಲಸಿದ್ದಾಳೆ,) ನಿಮ್ಮ ದಯೆಯಿಂ (ನಿಮ್ಮ ದಯೆಯಿಂದ) ನಿಮ್ಮಂ ಕರಂ ನಚ್ಚಿ ಸಂಗರಮಂ ಬಲ್ಲಿದರೊಳ್ ಪೊಣರ್ಚಿದೆನ್(ನಿಮ್ಮನ್ನು ಬಹಳವಾಗಿ ನಂಬಿ ಬಲಿಷ್ಠರಾದವರಲ್ಲಿ ಯುದ್ಧವನ್ನು ಹೂಡಿದ್ದೇನೆ.) ಅದರ್ಕೆ ಎನ್ನೊಳ್ ರಣಶ್ರೀ ರಣಾಜಿರದೊಳ್ ಮಾಣದೆ ಪೊರ್ದುವಂತೆ (ಅದಕ್ಕೆ ಈಗ ರಣರಂಗದಲ್ಲಿ ಜಯಲಕ್ಷ್ಮಿಯು ಯುದ್ಧದಲ್ಲಿ ನನ್ನನ್ನೇ ತಪ್ಪದೆ ಸೇರುವಂತೆ ಮಾಡಬೇಕು) ಬೆಸಸಿಂ ನಿಮ್ಮೊಂದು ಅಭಿಪ್ರಾಯಮಂ (ನಿಮ್ಮ ಅಭಿಪ್ರಾಯವನ್ನು ಕೊಡಿರಿ.)
ಪದ್ಯ-೯:ಅರ್ಥ: ನಿಮ್ಮ ದಯೆಯಿಂದ ರಾಜ್ಯಲಕ್ಷ್ಮಿಯು ಕೊರಳಲ್ಲಿ ಕಟ್ಟಿದ ದುರ್ಗಾಪದಕದಂತೆ ಇರಲು, ತೊಟ್ಟಿಲಲ್ಲಿಯ ಬಾಲ್ಯತನದಿಂದಲೂ ಎದೆಯಲ್ಲಿದ್ದ ರಾಜ್ಯಲಕ್ಷ್ಮಿಯು ಇಲ್ಲಿಯವರೆಗೂ ನನ್ನಲ್ಲಿ ನೆಲಸಿದ್ದಾಳೆ. ನಿಮ್ಮನ್ನು ಬಹಳವಾಗಿ ನಂಬಿ ಬಲಿಷ್ಠರಾದವರಲ್ಲಿ ಯುದ್ಧವನ್ನು ಹೂಡಿದ್ದೇನೆ. ಅದಕ್ಕೆ ಈಗ ರಣರಂಗದಲ್ಲಿ ಜಯಲಕ್ಷ್ಮಿಯು ಯುದ್ಧದಲ್ಲಿ ನನ್ನನ್ನೇ ತಪ್ಪದೆ ಸೇರುವಂತೆ ಮಾಡಬೇಕು. ನಿಮ್ಮ ಅಭಿಪ್ರಾಯವನ್ನು ಕೊಡಿರಿ.
ವ|| ಎಂದು ನುಡಿದ ತನ್ನ ಮೊಮ್ಮನ ನಯದ ವಿನಯದ ನುಡಿಗಳ್ಗೆ ಕರುಣಿಸಿ ಕುರುವೃದ್ಧನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ನುಡಿದ ತನ್ನ ಮೊಮ್ಮನ ನಯದ ವಿನಯದ (ಮೊಮ್ಮಗನ ವಿನಯದಿಂದ ಕೂಡಿದ )ನುಡಿಗಳ್ಗೆ ಕರುಣಿಸಿ ಕುರುವೃದ್ಧನು ಇಂತು ಎಂದಂ-
ವಚನ:ಅರ್ಥ:ಎಂದು ಹೇಳಿದ ತನ್ನ ಮೊಮ್ಮಗನ ವಿನಯದಿಂದ ಕೂಡಿದ ಮಾತುಗಳಿಗೆ ಕರುಣಿಸಿ ಭೀಷ್ಮನು ಹೀಗೆ ಹೇಳಿದನು.
ಮ|| ಧೃತರಾಷ್ಟ್ರಂ ನುಡಿದಾರ್ತನೇ ಹರಿ ಭರಂಗೆಯ್ದಾರ್ತನೇ ನೀಂ ಪೃಥಾ
ಸುತರಂ ನೋಯಿಸಲಾಗದೆಂದು ನುಡಿದೇನಾಮಾರ್ತೆಮೇ ನಿನ್ನೊರಂ|
ಟುತನಂ ಕೈಗೞಿವಾಯ್ತದಪ್ಪೊಡೆ ಮಹಾಭಾರಾವತಾರಂ ರಣೋ
ದ್ಯತನಾಗೆಂಬುದನೆಮ್ಮನನ್ಯರವೊಲೇಂ ನೀಂ ಪ್ರಾರ್ಥಿಸಲ್ವೇೞ್ಪುದೇ|| ೧೦ ||
ಪದ್ಯ-೦೦:ಪದವಿಭಾಗ-ಅರ್ಥ:ಧೃತರಾಷ್ಟ್ರಂ ನುಡಿದು ಆರ್ತನೇ (ಧೃತರಾಷ್ಟ್ರನು ಹೇಳಿ ನಿನ್ನನ್ನು ತಿದ್ದಲು ಆಯಿತೇ?) ಹರಿ ಭರಂಗೆಯ್ದು ಆರ್ತನೇ (ಕೃಷ್ಣನು ಆರ್ಭಟಮಾಡಿ ಹೇಳಿ ನಿನ್ನನ್ನು ತಿದ್ದಲುಆಯಿತೇ?.) ನೀಂ ಪೃಥಾಸುತರಂ ನೋಯಿಸಲಾಗದೆಂದು ನುಡಿದೇನಾಮಾರ್ತೆಮೇ- ನುಡಿದು,ಏನು ಆಂ (ನಾವು) ಆರ್ತೆಮೇ (ಕುಂತೀ ಪುತ್ರರನ್ನು ನೋಯಿಸಬಾರದೆಂದು ಹೇಳಿ ನಾವು ಸಮರ್ಥರಾದೆವೇ?) ನಿನ್ನ ಒರಂಟುತನಂ ಕೈಗೆ ಅೞಿವಾಯ್ತು ಅದಪ್ಪೊಡೆ (ನಿನ್ನ ಒರಟುತನ ಕೈಮೀರಿದ್ದಾಯಿತು.) ಮಹಾಭಾರಾವತಾರಂ (ಮಹಾಭಾರ ಅವತಾರಂ- ಭೂಮಿಯ ಮಹಾಭಾರವನ್ನು ಇಳಿಸುವುದು) ರಣ ಉದ್ಯತನಾಗು ('ಯುದ್ಧಕ್ಕೆ ಸಿದ್ಧನಾಗು') ಎಂಬುದನು ಎಮ್ಮನು ಅನ್ಯರವೊಲ್ ಏಂ ನೀಂ ಪ್ರಾರ್ಥಿಸಲ್ ವೇೞ್ಪುದೇ (ಇತರರ ಹಾಗೆ ನೀನು ಪ್ರಾರ್ಥಿಸಬೇಕೆ?)
ಪದ್ಯ-೦೦:ಅರ್ಥ: ೧೦. ನೀನು ಪಾಂಡವರನ್ನು ನೋಯಿಸಬಾರದು ಎಂದು ನಿನ್ನ ತಂದೆಯಾದ ಧೃತರಾಷ್ಟ್ರನು ಹೇಳಿ ನಿನ್ನನ್ನು ತಿದ್ದಲುಆಯಿತೇ?. ಕೃಷ್ಣನು ಆರ್ಭಟಮಾಡಿ ಹೇಳಿ ನಿನ್ನನ್ನು ತಿದ್ದಲುಆಯಿತೇ?. ಅವರಿಬ್ಬರೂ ಸಮರ್ಥರಾಗಲಿಲ್ಲ. ಕುಂತೀ ಪುತ್ರರನ್ನು ನೋಯಿಸಬಾರದೆಂದು ಹೇಳಿ ನಾವು ಸಮರ್ಥರಾದೆವೇ? ನಿನ್ನ ಒರಟುತನ ಕೈಮೀರಿದ್ದಾಯಿತು. ಮುಂದೆ ಭೂಮಿಯ ಮಹಾ ಭಾರವನ್ನು ಇಳಿಸುವುದು. 'ಯುದ್ಧಕ್ಕೆ ಸಿದ್ಧನಾಗು' ಎಂದು ನಮ್ಮನ್ನು ಇತರರ ಹಾಗೆ ನೀನು ಪ್ರಾರ್ಥಿಸಬೇಕೆ? (ಈಗ ಯುದ್ಧ ಮಾಡುವುದು ನಮ್ಮ ಕರ್ತವ್ಯ)
ವ|| ಎಂಬುದುಂ ಮಹಾಪ್ರಸಾದಮೆಂದು ದುರ್ಯೋಧನಂ ಪೋದನು ಇತ್ತ ಗಾಂಗೇಯಂ ತನ್ನಂತರ್ಗತದೊಳ್-
ವಚನ:ಪದವಿಭಾಗ-ಅರ್ಥ:ಎಂಬುದುಂ ಮಹಾಪ್ರಸಾದಂ ಎಂದು ದುರ್ಯೋಧನಂ ಪೋದನು ಇತ್ತ ಗಾಂಗೇಯಂ ತನ್ನ ಅಂತರ್ಗತದೊಳ್-(ಭೀಷ್ಮನು ತನ್ನ ಮನಸ್ಸಿನಲ್ಲಿ-)
ವಚನ:ಅರ್ಥ:ಎನ್ನಲು ದುರ್ಯೋಧನನು ಮಹಾಪ್ರಸಾದ ಎಂದು ಹೇಳಿ ದುರ್ಯೋಧನನು ಹೋದನು. ಈ ಕಡೆ ಭೀಷ್ಮನು ತನ್ನ ಮನಸ್ಸಿನಲ್ಲಿ (ಚಿಂತಾಕ್ರಾಂತನಾದನು).
ಕಂ|| ಅಣಿಯರಮೊದವಿದ ಮುಳಿಸಿನೊ
ಳಣಮಱದವರೆಂದು ರಣದೆ ಜಯಿಸಲ್ ನಾರಾ
ಯಣನೊಳಮುದಾತ್ತನಾರಾ
ಯಣನೊಳಮಿಂತೆತ್ತಿಕೊಂಡ ಗಂಡರುಮೊಳರೇ|| ೧೧||
ಪದ್ಯ-೧೧:ಪದವಿಭಾಗ-ಅರ್ಥ:ಅಣಿಯರಂ (ವಿಷೇಶ) ಒದವಿದ ಮುಳಿಸಿನೊಳ್ ಅಣಮ್ ಉಱದವರೆಂದು (ತನಲ್ಲುಂಟಾದ ವಿಶೇಷ ಕೋಪದಲ್ಲಿ ಪಾಂಡವರು ಸ್ವಲ್ಪವೂ ಶಕ್ತಿಇಲ್ಲದವರು ಎಂದು)ರಣದೆ ಜಯಿಸಲ್ ನಾರಾಯಣನೊಳಂ (ಕೃಷ್ಣನೊಡನೆ) ಉಮುದಾತ್ತನಾರಾಯಣನೊಳಂ (ಅರ್ಜುನ ಇವರೊಡನೆ) ಇಂತು ಎತ್ತಿಕೊಂಡ (ಹೀಗೆ ಯುದ್ಧವನ್ನು ನಿಶ್ಚಯಿಸಸುವ) ಗಂಡರುಮೊಳರೇ
ಪದ್ಯ-೧೧:ಅರ್ಥ: ದುರ್ಯೋಧನನು ತನಲ್ಲುಂಟಾದ ವಿಶೇಷ ಕೋಪದಲ್ಲಿ ಪಾಂಡವರು ಅಶಕ್ತರು ಎಂದು, ಜಯ ಪಡೆಯುವುದಕ್ಕಾಗಿ ಕೃಷ್ಣನ್ನೂ ಅರ್ಜುನನ್ನೂ ಹೀಗೆ ಯುದ್ಧದಲ್ಲಿ ತೊಡಗುವ ಇಂತಹ ಶೂರನು ಬೇರೆ ಇದ್ದಾನೆಯೇ? (ಮೂರ್ಖತನದ ಸಾಹಸ ಎಂಬ ಭಾವ)
ನಿನ್ನನೆ ನಚ್ಚಿದನನುವರ
ಕೆನ್ನನೆ ಪೂಣಿಸಿದನೆನಗೆರೞ್ತಂಡಮುಮೋ|
ರನ್ನರೆ ದಲೆಂತು ಕಾದುವೆ
ನೆನ್ನಯ ಮಕ್ಕಳೊಳಮೆನ್ನ ಮೊಮ್ಮಕ್ಕಳೊಳಂ|| ೧೨ ||
ಪದ್ಯ-೧೨:ಪದವಿಭಾಗ-ಅರ್ಥ:ನಿನ್ನನೆ ನಚ್ಚಿದನು ಅನುವರಕೆ ಎನ್ನನೆ ಪೂಣಿಸಿದನು (ನನಗೆ, ನಿನ್ನನ್ನೇ ನಂಬಿದ್ದೇನೆ ಎಂದು ಹೇಳಿ. ಯುದ್ಧಮಾಡುತ್ತೇನೆಂದು ನನ್ನಿಂದ ಪ್ರತಿಜ್ಞೆ ಮಾಡಿಸಿದ್ದಾನೆ.) ಎನಗೆ ಎರೞ್ತಂಡಮುಂ ಓರನ್ನರೆ ದಲ್(ನನಗೆ ಎರಡು ಗುಂಪಿನವರೂ ಸಮಾನರೆ ನಿಜಕ್ಕೂ!) ಎಂತು ಕಾದುವೆನು ಎನ್ನಯ ಮಕ್ಕಳೊಳಮ್ ಎನ್ನ ಮೊಮ್ಮಕ್ಕಳೊಳಂ (ನನ್ನ ಮಕ್ಕಳೊಡನೆಯೂ ಮೊಮ್ಮಕ್ಕಳೊಡನೆಯೂ ಹೇಗೆ ಯುದ್ಧಮಾಡಲಿ?)
ಪದ್ಯ-೧೨:ಅರ್ಥ:ದುರ್ಯೋಧನನು, ನನಗೆ, ನಿನ್ನನ್ನೇ ನಂಬಿದ್ದೇನೆ ಎಂದು ಹೇಳಿ. ಯುದ್ಧಮಾಡುತ್ತೇನೆಂದು ನನ್ನಿಂದ ಪ್ರತಿಜ್ಞೆ ಮಾಡಿಸಿದ್ದಾನೆ. ನನಗೆ ಎರಡು ಗುಂಪಿನವರೂ ಸಮಾನರೇ ನಿಜಕ್ಕೂ! ನನ್ನ ಮಕ್ಕಳೊಡನೆಯೂ ಮೊಮ್ಮಕ್ಕಳೊಡನೆಯೂ ಹೇಗೆ ಯುದ್ಧಮಾಡಲಿ?
ಮಕ್ಕಳ ಮೊಮ್ಮಕ್ಕಳ ರಥ
ಮೆಕ್ಕೆಯಿನೆಡೆಗೊಂಡೊಡವರನೋವದೆ ರಣದೊಳ್|
ಮಕ್ಕಳನಾಂ ಕೊಂದೊಡೆ ತ
ನ್ನಿಕ್ಕಿದ ತತ್ತಿಯನೆ ಪಾವು ನೊಣೆವಂತಕ್ಕುಂ|| ೧೩ ||
ಪದ್ಯ-೧೩:ಪದವಿಭಾಗ-ಅರ್ಥ:ಮಕ್ಕಳ ಮೊಮ್ಮಕ್ಕಳ ರಥಮ್ ಎಕ್ಕೆಯಿಂ ಎಡೆಗೊಂಡೊಡೆ (ಮಕ್ಕಳ ಮೊಮ್ಮಕ್ಕಳ ರಥಗಳು ಒಟ್ಟಾಗಿ ಎದುರಿಸಿದರೆ) ಅವರನು ಓವದೆ ರಣದೊಳ್ ಮಕ್ಕಳನು ಆಂ ಕೊಂದೊಡೆ (ಅವರನ್ನು ರಕ್ಷಿಸದೆ ಯುದ್ಧದಲ್ಲಿ ಮಕ್ಕಳನ್ನು ಕೊಂದೆನಾದರೆ) ತನ್ನ ಇಕ್ಕಿದ ತತ್ತಿಯನೆ ಪಾವು ನೊಣೆವಂತೆ ಅಕ್ಕುಂ (ಹಾವು ತಾನು ಇಟ್ಟ ಮೊಟ್ಟೆಗಳನ್ನು ತಾನೆ ನುಂಗಿದಂತೆ ಆಗುವುದು!)
ಪದ್ಯ-೧೩:ಅರ್ಥ: ಮಕ್ಕಳ ಮೊಮ್ಮಕ್ಕಳ ರಥಗಳು ಒಟ್ಟಾಗಿ ಎದುರಿಸಿದರೆ, ಅವರನ್ನು ರಕ್ಷಿಸದೆ ಯುದ್ಧದಲ್ಲಿ ಮಕ್ಕಳನ್ನು ಕೊಂದೆನಾದರೆ, ಹಾವು ತಾನು ಇಟ್ಟ ಮೊಟ್ಟೆಗಳನ್ನು ತಾನೆ ನುಂಗಿದಂತೆ ಆಗುವುದು!
ನರ ನಾರಾಯಣರಿರ್ವರೆ
ಧುರದೊಳ್ ಮಾರ್ಕೊಳ್ವರೆನ್ನನೊರ್ವಂ ಮೊಮ್ಮಂ|
ಪರಮಗುರುವೊರ್ವನವರಿ
ರ್ವರುಮಂ ಕಾದೞವೆನುೞಿದ ರಿಪುನೃಪಬಲಮಂ|| ೧೪ ||
ಪದ್ಯ-೧೪:ಪದವಿಭಾಗ-ಅರ್ಥ:ನರ ನಾರಾಯಣರು ಇರ್ವರೆ ಧುರದೊಳ್ ಮಾರ್ಕೊಳ್ವರು ಎನ್ನನು (ಕೃಷ್ಣ ಅರ್ಜುನರಿಬ್ಬರೇ ಯುದ್ಧದಲ್ಲಿ ನನ್ನನ್ನು ಎದುರಿಸುವವರು) ಒರ್ವಂ ಮೊಮ್ಮಂ, ಪರಮಗುರು ವೊರ್ವನ್ ಅವರಿರ್ವರುಮಂ ಕಾದು, (ಅವರಿಬ್ಬರನ್ನೂ ರಕ್ಷಿಸಿ) ಅೞಿವೆನು ಎೞಿದ ರಿಪು ನೃಪಬಲಮಂ (ಉಳಿದ ಶತ್ರುರಾಜಸೈನ್ಯವನ್ನು ನಾಶಪಡಿಸುತ್ತೇನೆ.)
ಪದ್ಯ-೧೪:ಅರ್ಥ: ನರನಾರಾಯಣರು ಇಬ್ಬರೇ- ಕೃಷ್ಣ ಅರ್ಜುನರಿಬ್ಬರೇ ಯುದ್ಧದಲ್ಲಿ ನನ್ನನ್ನು ಎದುರಿಸುವವರು. ಅವರಲ್ಲಿ ಒಬ್ಬ ಮೊಮ್ಮಗ, ಮತ್ತೊಬ್ಬ ಪರಮಗುರು. ಅವರಿಬ್ಬರನ್ನೂ ರಕ್ಷಿಸಿ ಉಳಿದ ಶತ್ರುರಾಜಸೈನ್ಯವನ್ನು ನಾಶಪಡಿಸುತ್ತೇನೆ.

ಭೀಷ್ಮನಿಗೆ ಸೇನಾಧಿಪತಿಯಾಗಿ ವೀರಪಟ್ಟಾಭಿಷೇಕ[ಸಂಪಾದಿಸಿ]

ವ|| ಎಂದು ತನ್ನೊಳ್ ಬಗೆಯುತ್ತಿರ್ಪಿನಮತ್ತ ದುರ್ಯೋಧನಂ ಸಹಸ್ರ ಕಿರಣೋದಯದೊಳನೇಕಸಹಸ್ರನರಪತಿ ಪರಿವೃತನುಮಾಗಿ ಮಂದಾಕಿನೀತನೂಜಂಗೆ ಬೞಿಯನಟ್ಟಿ ಬರಿಸಿ ಮಣಿಮಯಪೀಠದೊಳ್ ಕುಳ್ಳಿರಿಸಿ ದೇವಾಸುರಯುದ್ಧದೊಳ್ ಗುಹಂಗೆ ವೀರಪಟ್ಟಮಂ ಕಟ್ಟುವ ಪುರಂದರನಂದಮನೆ ಪೋಲ್ತು-
ವಚನ:ಪದವಿಭಾಗ-ಅರ್ಥ:ಎಂದು ತನ್ನೊಳ್ ಬಗೆಯುತ್ತಿರ್ಪಿನಂ (ಎಂದು ಭೀಷ್ಮನು ತನ್ನಲ್ಲಿ ಯೋಚಿಸುತ್ತಿರುವಾಗ) ಅತ್ತ ದುರ್ಯೋಧನಂ ಸಹಸ್ರ ಕಿರಣೋದಯದೊಳು ಅನೇಕ ಸಹಸ್ರ ನರಪತಿ ಪರಿವೃತನುಮಾಗಿ (ಆ ಕಡೆ ದುರ್ಯೋಧನನು ಸೂರ್ಯೋದಯದಲ್ಲಿ ಅನೇಕ ಸಾವಿರ ರಾಜರುಗಳಿಂದ ಸುತ್ತುವರಿಯಲ್ಪಟ್ಟು ) ಮಂದಾಕಿನೀತನೂಜಂಗೆ (ಭೀಷ್ಮನಿಗೆ) ಬೞಿಯನಟ್ಟಿ ಬರಿಸಿ (ದೂತರ ಮೂಲಕ ಹೇಳಿಕಳುಹಿಸಿ ಬರಮಾಡಿಕೊಂಡು) ಮಣಿಮಯಪೀಠದೊಳ್ ಕುಳ್ಳಿರಿಸಿ ದೇವಾಸುರ ಯುದ್ಧದೊಳ್ ಗುಹಂಗೆ (ಷಣ್ಮುಖನಿಗೆ) ವೀರಪಟ್ಟಮಂ ಕಟ್ಟುವ ಪುರಂದರನಂದಮನೆ ಪೋಲ್ತು ( ಇಂದ್ರನ ರೀತಿಯನ್ನೇ ಹೋಲುವಂತೆ)-
ವಚನ:ಅರ್ಥ:ಎಂದು ಭೀಷ್ಮನು ತನ್ನಲ್ಲಿ ಯೋಚಿಸುತ್ತಿರುವಾಗ, ಆ ಕಡೆ ದುರ್ಯೋಧನನು ಸೂರ್ಯೋದಯದಲ್ಲಿ ಅನೇಕ ಸಾವಿರ ರಾಜರುಗಳಿಂದ ಸುತ್ತುವರಿಯಲ್ಪಟ್ಟು ಭೀಷ್ಮನಿಗೆ ದೂತರ ಮೂಲಕ ಹೇಳಿಕಳುಹಿಸಿ ಬರಮಾಡಿದನು. ರತ್ನಖಚಿತವಾದ ಪೀಠದಲ್ಲಿ ಕುಳ್ಳಿರಿಸಿದನು. ದೇವಾಸುರಯುದ್ಧದಲ್ಲಿ ಷಣ್ಮುಖನಿಗೆ ವೀರಪಟ್ಟವನ್ನು ಕಟ್ಟುವ ಇಂದ್ರನ ರೀತಿಯನ್ನೇ ಹೋಲುವಂತೆ-
ಉ|| ತುಂಗ ಮೃದಂಗ ಶಂಖ ಪಟಹಧ್ವನಿ ದಿಕ್ತಟದಂತನೆಯ್ದೆ ವಾ
ರಾಂಗನೆಯರ್ ಚಳಲ್ಲುಳಿತ ಚಾಮರಮಂ ನೆರೆದಿಕ್ಕೆ ಪಂಚ ರ|
ತ್ನಂಗಳುಮಂ ಪುದುಂಗೊಳಿಸಿ ಪೊಂಗಳಸಂಗಳೊಳಿರ್ದ ಪುಣ್ಯತೋ
ಯಂಗಳೊಳೞ್ಕಱಿಂ ಮಿಸಿಸಿ ಕಟ್ಟಿದನಾ ವಿಭು ವೀರಪಟ್ಟಮಂ|| ೧೫ ||
ಪದ್ಯ-೧೫:ಪದವಿಭಾಗ-ಅರ್ಥ:ತುಂಗ ಮೃದಂಗ ಶಂಖ ಪಟಹಧ್ವನಿ (ಶ್ರೇಷ್ಠವಾದ ಮೃದಂಗ, ಶಂಖ, ತಮಟೆಗಳ ಧ್ವನಿಯು) ದಿಕ್ತಟದಂತನು ಎಯ್ದೆ (ದಿಕ್ಕುಗಳ ಕೊನೆಯನ್ನು ಮುಟ್ಟುತ್ತಿರಲು) ವಾರಾಂಗನೆಯರ್ ಚಳಲ್ಲುಳಿತ ಚಾಮರಮಂ ನೆರೆದಿಕ್ಕೆ (ವೇಶ್ಶಾಸ್ತ್ರೀಯರು ಚಲಿಸುತ್ತಿರುವ ಚಾಮರವನ್ನು ಗುಂಪಾಗಿ ಬೀಸುತ್ತಿರಲು) ಪಂಚ ರತ್ನಂಗಳುಮಂ ಪುದುಂಗೊಳಿಸಿ (ಪಂಚರತ್ನಗಳ ರಾಶಿಗಳ ರಾಶಿಮಾಡಿ,) ಪೊಂಗಳಸಂಗಳೊಳಿರ್ದ ಪುಣ್ಯತೋಯಂಗಳೊಳು (ಚಿನ್ನದ ಕಲಶಗಳಲ್ಲಿದ್ದ ಪುಣ್ಯ ತೀರ್ಥಗಳಿಂದ) ಅೞ್ಕಱಿಂ ಮಿಸಿಸಿ (ಮೀಯು-ಸ್ನಾನ,ಮೀಸು-ಮೀಸಿಸಿ ಸ್ನಾನ ಮಾಡಿಸಿ) (ಪ್ರೀತಿಯಿಂದ ಸ್ನಾನ ಮಾಡಿಸಿ) ಕಟ್ಟಿದನು ಆ ವಿಭು ವೀರಪಟ್ಟಮಂ (ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನಿಗೆ ವೀರಪಟ್ಟವನ್ನು ಕಟ್ಟಿದನು.)
ಪದ್ಯ-೧೫:ಅರ್ಥ: ಶ್ರೇಷ್ಠವಾದ ಮೃದಂಗ, ಶಂಖ, ತಮಟೆಗಳ, ಧ್ವನಿಯು ದಿಕ್ಕುಗಳ ಕೊನೆಯನ್ನು ಮುಟ್ಟುತ್ತಿರಲು, ವೇಶ್ಶಾಸ್ತ್ರೀಯರು ಚಲಿಸುತ್ತಿರುವ ಚಾಮರವನ್ನು ಗುಂಪಾಗಿ ಬೀಸುತ್ತಿರಲು ಪಂಚರತ್ನಗಳ ರಾಶಿಗಳ ರಾಶಿಮಾಡಿ, ಚಿನ್ನದ ಕಲಶಗಳಲ್ಲಿದ್ದ ಪುಣ್ಯ ತೀರ್ಥಗಳಿಂದ ಪ್ರೀತಿಯಿಂದ ಸ್ನಾನ ಮಾಡಿಸಿ, ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನಿಗೆ ವೀರಪಟ್ಟವನ್ನು ಕಟ್ಟಿದನು.
ವ|| ಅಂತು ಪರಶುರಾಮನನಂಜಿಸಿದ ವೀರಂಗೆ ವೀರಪಟ್ಟಮಂ ಕಟ್ಟಿ ಪಗೆವರನೆನ್ನ ಮಂಚದ ಕಾಲೊಳ್ ಕಟ್ಟಿದೆನೆಂದು ಪೊಟ್ಟಳಿಸುವ ಸುಯೋಧನನ ನುಡಿಯನವಕರ್ಣಿಸಿ ಕರ್ಣನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ಪರಶುರಾಮನನು ಅಂಜಿಸಿದ ವೀರಂಗೆ ವೀರಪಟ್ಟಮಂ ಕಟ್ಟಿ (ಹಾಗೆ ಪರಶುರಾಮನನ್ನು ಹೆದರಿಸಿದ ವೀರನಿಗೆ ವೀರಪಟ್ಟವನ್ನು ಕಟ್ಟಿ ) ಪಗೆವರನು ಎನ್ನ ಮಂಚದ ಕಾಲೊಳ್ ಕಟ್ಟಿದೆನೆಂದು (ಶತ್ರುಗಳನ್ನು ನನ್ನ ಮಂಚದ ಕಾಲಿನಲ್ಲಿ ಕಟ್ಟಿದೆನೆಂದು) ಪೊಟ್ಟಳಿಸುವ ಸುಯೋಧನನ ನುಡಿಯನು ಅವಕರ್ಣಿಸಿ (ಅಹಂಕಾರ ಪಡುತ್ತಿರುವ ದುರ್ಯೋಧನನ ಮಾತನ್ನು ಕೇಳಿ) ಕರ್ಣನು ಇಂತೆಂದಂ-
ವಚನ:ಅರ್ಥ:ಹಾಗೆ ಪರಶುರಾಮನನ್ನು ಹೆದರಿಸಿದ ವೀರನಿಗೆ ವೀರಪಟ್ಟವನ್ನು ಕಟ್ಟಿ, ಶತ್ರುಗಳನ್ನು ನನ್ನ ಮಂಚದ ಕಾಲಿನಲ್ಲಿ ಕಟ್ಟಿದೆನೆಂದು ಅಹಂಕಾರ ಪಡುತ್ತಿರುವ ದುರ್ಯೋಧನನ ಮಾತನ್ನು ಕೇಳಿ ಕರ್ಣನು ಹೀಗೆಂದನು
ಚಂ|| ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು ನೀನಿದಂ
ಬಗೆದಿವರಿನ್ನುಮಾಂತಿಱಿವರೆಂದು ವಿಮೋಹಿಸಿ ವೀರಪಟ್ಟಮಂ|
ಬಗೆಯದೆ ಕಟ್ಟಿದೈ ಗುರುಗಳಂ ಕುಲವೃದ್ಧರನಾಜಿಗುಯ್ದು ಕೆ
ಮ್ಮಗೆ ಪಗೆವಾಡಿಯೊಳ್ ನಗಿಸಿಕೊಂಡೊಡೆ ಬಂದಪುದೇಂ ಸುಯೋಧನಾ|| ೧೬ ||
ಪದ್ಯ-೧೬:ಪದವಿಭಾಗ-ಅರ್ಥ:ಭಗವತಿಯ ಏಱುವೇೞ್ವ (ಯುದ್ಧದಕಥೆ) ತೆರದಿಂ ಕಥೆಯಾಯ್ತು ಇವರ ಏಱು (ದುರ್ಗಾದೇವಿಯ ಯುದ್ಧದ ಕಥೆಯಂತೆ, ಕಟ್ಟುಕಥೆಯಾಯಿತು ಇವರ ಯುದ್ಧದ ಕತೆ) ನೀನು ಇದಂ ಬಗೆದು ಇವರು ಇನ್ನುಮ್ ಆಂತು ಇಱಿವರೆಂದು ವಿಮೋಹಿಸಿ (ಇದನ್ನು ಭಾವಿಸಿ ನೀನು ಇವರು ಇನ್ನೂ ಪ್ರತಿಭಟಿಸಿ ಯುದ್ಧಮಾಡುತ್ತಾರೆ ಎಂದು) ವೀರಪಟ್ಟಮಂ ಬಗೆಯದೆ ಕಟ್ಟಿದೈ (ಎಂದು ವಿಚಾರಮಾಡದೆ ಇವರಿಗೆ ಸೇನಾಧಿಪತ್ಯದ ಪಟ್ಟವನ್ನು ಕಟ್ಟಿದೆಯಲ್ಲವೆ.) ಗುರುಗಳಂ ಕುಲವೃದ್ಧರನು ಆಜಿಗೆ ಉಯ್ದು (ಗುರುಗಳೂ ಕುಲವೃದ್ಧರೂ ಆದ ಇವರನ್ನು ಯುದ್ಧರಂಗಕ್ಕೆ ತೆಗೆದುಕೊಂಡುಹೋಗಿ,) ಕೆಮ್ಮಗೆ ಪಗೆವಾಡಿಯೊಳ್ ( ಸುಮ್ಮನೆ ಶತ್ರುಗಳ ಗುಂಪಿನಲ್ಲಿ) ನಗಿಸಿಕೊಂಡೊಡೆ ಬಂದಪುದೇಂ ಸುಯೋಧನಾ (ನಗೆ ಬರುವ ಪ್ರಯೋಜನವೇನು ದುರ್ಯೋಧನ?)
ಪದ್ಯ-೧೬:ಅರ್ಥ:ಹಿಂದಿನ ದುರ್ಗಾದೇವಿಯ ಯುದ್ಧದ ಕಥೆಯಂತೆ, ಕಟ್ಟುಕಥೆಯಾಯಿತು ಇವರ ಯುದ್ಧದ ಕತೆ. ಇದನ್ನು ಭಾವಿಸಿ ನೀನು ಇವರು ಇನ್ನೂ ಪ್ರತಿಭಟಿಸಿ ಯುದ್ಧಮಾಡುತ್ತಾರೆ ಎಂದು ವಿಚಾರಮಾಡದೆ ಇವರಿಗೆ ಸೇನಾಧಿಪತ್ಯದ ಪಟ್ಟವನ್ನು ಕಟ್ಟಿದೆ. ಗುರುಗಳೂ ಕುಲವೃದ್ಧರೂ ಆದ ಇವರನ್ನು ಯುದ್ಧರಂಗಕ್ಕೆ ತೆಗೆದುಕೊಂಡುಹೋಗಿ, ಸುಮ್ಮನೆ ಶತ್ರುಗಳ ಗುಂಪಿನಲ್ಲಿ ನಗಿಸಿಕೊಂಡರೆ ನಿನಗೆ ಬರುವ ಪ್ರಯೋಜನವೇನು ದುರ್ಯೋಧನ?
ಕಂ|| ಕಟ್ಟಿದ ಪಟ್ಟಮೆ ಸರವಿಗೆ
ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕ|
ಣ್ಗೆಟ್ಟ ಮುದುಪಂಗೆ ಪಗೆವರ
ನಿಟ್ಟೆಲ್ವಂ ಮುಱಿವೊಡೆನಗೆ ಪಟ್ಟಂಗಟ್ಟಾ|| ೧೭ ||
ಪದ್ಯ-೧೭:ಪದವಿಭಾಗ-ಅರ್ಥ:ಕಟ್ಟಿದ ಪಟ್ಟಮೆ (ಕಟ್ಟಿದ ವೀರಪಟ್ಟವು) ಸರವಿಗೆ ನೆಟ್ಟನೆ ದೊರೆ (ಕಟ್ಟಿದ ವೀರಪಟ್ಟವು ಹಗ್ಗದ ಉರುಲಿಗೆ ಸಮಾನ.; ಸರ- ಉಲಿ ಕ.ಸಾ.ಪ.ನಿಘಂಟು) ಪಿಡಿದ ಬಿಲ್ಲೆ ದಂಟಿಂಗೆ ಎಣೆ (ಆತನು ಧರಿಸಿರುವ ಬಿಲ್ಲು ಊರು ಗೋಲಿಗೆ ಸಮಾನ) ಕಣ್ಗೆಟ್ಟ ಮುದುಪಂಗೆ (ಕಣ್ಣು ಕಾಣದ ಮುದುಕನಿಗೆ - ಕಟ್ಟಿದ ವೀರಪಟ್ಟವು;) ಪಗೆವರ ನಿಟ್ಟೆಲ್ವಂ ಮುಱಿವೊಡೆ ಎನಗೆ ಪಟ್ಟಂಗಟ್ಟಾ ()
ಪದ್ಯ-೧೭:ಅರ್ಥ: ಕಣ್ಣು ಕಾಣದ ಮುದುಕನಿಗೆ ಕಟ್ಟಿದ ವೀರಪಟ್ಟವು ಹಗ್ಗದ ಉರುಲಿಗೆ ಸಮಾನ. ಆತನು ಧರಿಸಿರುವ ಬಿಲ್ಲು ಊರುಗೋಲಿಗೆ ಸಮಾನ. ಶತ್ರುಗಳ ಉದ್ದ ಮೂಳೆಗಳನ್ನು ಪುಡಿಮಾಡಬೇಕಾದರೆ ನನಗೆ ಪಟ್ಟ ಕಟ್ಟಯ್ಯ.
ಆದಿಯೊಳವರಂ ಪಿರಿದೊಂ
ದಾದರದಿಂ ನಡಪಿದಜ್ಜರಪ್ಪುದಱಿಂದಂ|
ಕಾದರಿವರವರೊಳವರುಂ
ಕಾದರ್ ನೆರೆದಿವರೊಳೆಂತು ನಂಬುವೆ ನೃಪತೀ|| ೧೮ ||
ಪದ್ಯ-೧೮:ಪದವಿಭಾಗ-ಅರ್ಥ:ಆದಿಯೊಳ್ ಅವರಂ ಪಿರಿದೊಂದು ಆದರದಿಂ ನಡಪಿದ ಅಜ್ಜರಪ್ಪುದಱಿಂದಂ (ಮೊದಲು ಚಿಕ್ಕಂದಿನಿಂದಲೂ ಅವರನ್ನು ವಿಶೇಷ ಪ್ರೀತಿಯಿಂದ ಸಾಕಿದ ಅಜ್ಜರಾದುದರಿಂದ) ಕಾದರು ಇವರು ಅವರೊಳು (ಇವರು ಅವರೊಡನೆ ಅವರೊಡನೆ ಮನಸ್ಸಿಟ್ಟು ಯುದ್ಧಮಾಡುವುದಿಲ್ಲ.) ಅವರುಂ ಕಾದರ್ ನೆರೆದು ಇವರೊಳು (ಅವರೂ ಇವರೊಡನೆ ಹೆಚ್ಚು ಎದುರಿಸಿ ಕಾದುವುದಿಲ್ಲ.) ಎಂತು ನಂಬುವೆ ನೃಪತೀ (ಇವರನ್ನು ಹೇಗೆ ನಂಬುತ್ತೀಯೆ?)
ಪದ್ಯ-೧೮:ಅರ್ಥ: ಮೊದಲು ಚಿಕ್ಕಂದಿನಿಂದಲೂ ಅವರನ್ನು ವಿಶೇಷ ಪ್ರೀತಿಯಿಂದ ಸಾಕಿದ ಅಜ್ಜರಾದುದರಿಂದ ಇವರು ಅವರೊಡನೆ ಮನಸ್ಸಿಟ್ಟು ಯುದ್ಧಮಾಡುವುದಿಲ್ಲ. ಅವರೂ ಇವರೊಡನೆ ಹೆಚ್ಚು ಎದುರಿಸಿ ಕಾದುವುದಿಲ್ಲ. ರಾಜನೇ ಇವರನ್ನು ಹೇಗೆ ನಂಬುತ್ತೀಯೆ?
ವ|| ಎಂಬುದುಮಾ ನುಡಿಗೆ ಸಿಡಿಲ್ದು ಕುಂಭಸಂಭವನಿಂತೆಂದಂ-
ವಚನ:ಪದವಿಭಾಗ-ಅರ್ಥ: ಎಂಬುದುಮಾ ನುಡಿಗೆ ಸಿಡಿಲ್ದು ಕುಂಭಸಂಭವನು ಇಂತೆಂದಂ-
ವಚನ:ಅರ್ಥ:ಎನ್ನಲು ಆ ಮಾತಿಗೆ ದ್ರೋಣನು ಸಿಡಿದು ಹೀಗೆಂದನು.
ಕಂ|| ಸಿಂಗದ ಮುಪ್ಪು ನೆಗ್ದಳ್ದೀ
ಗಾಂಗೇಯರ ಮುಪ್ಪುಮಿೞಿಕೆವಡೆಗುಮೆ ವನಮಾ|
ತಂಗಂಗಳಿನಸುಹೃಚ್ಚತು
ರಂಗಬಲಂಗಳಿದನದೆಂತುಮಂಗಾಪಧಿತೀ|| ೧೯ ||
ಪದ್ಯ-೧೯:ಪದವಿಭಾಗ-ಅರ್ಥ:ಸಿಂಗದ ಮುಪ್ಪು ನೆಗ್ದಳ್ದ ಈ ಗಾಂಗೇಯರ ಮುಪ್ಪುಂ ಇೞಿಕೆವಡೆಗುಮೆ (ಸಿಂಹದ ಮುಪ್ಪನ್ನೂ ಭೀಷ್ಮರ ಮುಪ್ಪನ್ನೂ ಇಳಿಕೆ-ಕೀಳು ಕಡಿಮೆ ಎಂದು ಎಣಿಸಯಬೇಡ,) ವನಮಾತಂಗಂಗಳಿಂ ಅಸುಹೃತ್ (ಶತ್ರುಗಳ) ಚತುರಂಗಬಲಂಗಳ್ ಇದನ್ ಅದೆಂತುಂ ಅಂಗಾಪಧಿತೀ(ಚತುರಂಗಸೈನ್ಯವು ಅವರನ್ನು ಅದು ಹೇಗೆ ಎದುರಿಸಬಲ್ಲದು? ಅಸಾಧ್ಯ ,ಎಲೈ ಕರ್ಣಾ. )
ಪದ್ಯ-೧೯:ಅರ್ಥ: ಸಿಂಹದ ಮುಪ್ಪನ್ನೂ ಭೀಷ್ಮರ ಮುಪ್ಪನ್ನೂ ಕಡಿಮೆ ಎಂದು ಎಣಿಸಯಬೇಡ, ಕಾಡಾನೆಗಳಿಂದ ಮುಪ್ಪು ಸಿಂಹವನ್ನು ಎದುರಿಸಲಾರದು, ಇದೂ ಹಾಗೆಯೇ ಭೀಷ್ಮರು ಮುದುಕರಾದುದರಿಂದ ಶತ್ರುಗಳ ಚತುರಂಗಸೈನ್ಯವು ಅವರನ್ನು ಅದು ಹೇಗೆ ಎದುರಿಸಬಲ್ಲದು? ಅಸಾಧ್ಯ ,ಎಲೈ ಕರ್ಣಾ.
ಕುಲಜರನುದ್ಧತರಂ ಭುಜ
ಬಲಯುತರಂ ಹಿತರನೀ ಸಭಾಮಧ್ಯದೊಳ|
ಗ್ಗಲಿಸಿದ ಮದದಿಂ ನಾಲಗೆ
ಕುಲಮಂ ತುಬ್ಬುವವೊಲುಱದೆ ನೀಂ ಕೆಡೆನುಡಿವೈ|| ೨೦ ||
ಪದ್ಯ-೨೦:ಪದವಿಭಾಗ-ಅರ್ಥ:ಕುಲಜರನುದ್ಧತರಂ ಭುಜಬಲಯುತರಂ ಹಿತರನು (ಸತ್ಕುಲದವರನ್ನು ಶ್ರೇಷ್ಠರನ್ನು ಭಾಹುಬಲವುಳ್ಳವರನ್ನು, ಎಲ್ಲರಿಗೂ ಹಿತರಾದವರನ್ನು ಕುರಿತು) ಈ ಸಭಾಮಧ್ಯದೊಳ್ ಅಗ್ಗಲಿಸಿದ ಮದದಿಂ (ಹೆಚ್ಚಿದ ಕೊಬ್ಬಿನಿಂದ) ನಾಲಗೆ ಕುಲಮಂ ತುಬ್ಬುವವೊಲ್ (ಕುಲವನ್ನು ನಾಲಗೆ ಆಡಿ ತೋರಿಸುವಂತೆ) ಉಱದೆ ನೀಂ ಕೆಡೆನುಡಿವೈ (ನೀನು ಸಮ್ಮನೆ ಕೆಟ್ಟದಾಗಿ ಮಾತನಾಡಿದ್ದೀಯೆ.)
ಪದ್ಯ-೨೦:ಅರ್ಥ: ಸತ್ಕುಲದವರನ್ನು ಶ್ರೇಷ್ಠರನ್ನು ಭಾಹುಬಲವುಳ್ಳವರನ್ನು, ಎಲ್ಲರಿಗೂ ಹಿತರಾದವರನ್ನು ಕುರಿತು ಈ ಸಭಾಮಧ್ಯದಲ್ಲಿ ಹೆಚ್ಚಿದ ಕೊಬ್ಬಿನಿಂದ ಕುಲವನ್ನು ನಾಲಗೆ ಆಡಿ ತೋರಿಸುವಂತೆ, ನೀನು ಸಮ್ಮನೆ ಕೆಟ್ಟದಾಗಿ ಮಾತನಾಡಿದ್ದೀಯೆ.
ವ|| ಎಂದು ನುಡಿದ ಗುರುವಿನ ಕರ್ಣಕಠೋರವಚನಂಗಳ್ಗೆ ಕರ್ಣಂ ಕಿನಿಸಿ-
ವಚನ:ಪದವಿಭಾಗ-ಅರ್ಥ:ಎಂದು ನುಡಿದ ಗುರುವಿನ ಕರ್ಣಕಠೋರ ವಚನಂಗಳ್ಗೆ ಕರ್ಣಂ ಕಿನಿಸಿ (ಕೋಪಿಸಿ)-
ವಚನ:ಅರ್ಥ:ಎಂದು ನುಡಿದ ಕಿವಿಗೆ ಕರ್ಕಶವಾದ ಮಾತುಗಳಿಗೆ ಕರ್ಣನು ಕೋಪಿಸಿಕೊಂಡು
ಚಂ|| ಕುಲಮೆನೆ ಮುನ್ನಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ
ರ್ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂ ಗುಣಂ|
ಕುಲಮಭಿಮಾನಮೊಂದೆ ಕುಲಮಣ್ಮು ಕುಲಂ ಬಗೆವಾಗಳೀಗಳೀ
ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ|| ೨೧ ||
ಪದ್ಯ-೨೧:ಪದವಿಭಾಗ-ಅರ್ಥ:ಕುಲಮೆನೆ ಮುನ್ನಂ ಉಗ್ಗಡಿಪಿರೇಂಗಳ (ಮಾತಿಗೆ ಮೊದಲು ಕುಲವನ್ನೇ ಏಕೆ ಕುರಿತು ದೊಡ್ಡದಾಗಿ ಹೇಳುತ್ತೀರಿ?) ನಿಮ್ಮ ಕುಲಂಗಳು ಆಂತು ಮಾರ್ಮಲೆವನನು ಅಟ್ಟಿ ತಿಂಬುವೆ (ನಿಮ್ಮ ಕುಲಗಳು ಪ್ರತಿಭಟಿಸಿದವರನ್ನು ಎದುರಿಸಿ ಬೆನ್ನಟ್ಟಿ ತಿಂದು ಹಾಕುತ್ತವೆಯೇ?) ಕುಲಂ ಕುಲಮಲ್ತು ಚಲಂ ಕುಲಂ (ಹುಟ್ಟಿದ ಜಾತಿ ನಿಜವಾದ ಕುಲವಲ್ಲ; ಛಲವೇ-ಕುಲ) ಗುಣಂ ಕುಲಂ (ಸದ್ಗುಣವೇ-ಕುಲ) ಅಭಿಮಾನಮೊಂದೆ ಕುಲಂ (ಆತ್ಮಗೌರವಮಾತ್ರಾ ಕುಲ) ಅಣ್ಮು ಕುಲಂ (ಪರಾಕ್ರಮವು ಕುಲ) ಬಗೆವಾಗಳ್ (ವಿಚಾರಮಾಡುವುದಾದರೆ) ಈಗಳು ಈ ಕಲಹದೊಳು ಅಣ್ಣ (ಈಗ ಈ ಯುದ್ಧದಲ್ಲಿ ಅಣ್ಣಾ) ನಿಮ್ಮ ಕುಲವು ಆಕುಲಮಂ ನಿಮಗೆ ಉಂಟುಮಾಡುಗುಂ (ಕುಲದ ವಿಷಯವು ನಿಮಗೆ ಏಕೆ ಬೇಸರವನ್ನುಂಟುಮಾಡುತ್ತದೆ?)
ಪದ್ಯ-೨೧:ಅರ್ಥ:ಮಾತಿಗೆ ಮೊದಲು ಕುಲವನ್ನೇ ಏಕೆ ಕುರಿತು ದೊಡ್ಡದಾಗಿ ಹೇಳುತ್ತೀರಿ? ನಿಮ್ಮ ಕುಲಗಳು ಪ್ರತಿಭಟಿಸಿದವರನ್ನು ಎದುರಿಸಿ ಬೆನ್ನಟ್ಟಿ ತಿಂದು ಹಾಕುತ್ತವೆಯೇ? ಹುಟ್ಟಿದ ಜಾತಿ ನಿಜವಾದ ಕುಲವಲ್ಲ ; ಛಲವೇ-ಕುಲ, ಸದ್ಗುಣವೇ-ಕುಲ, ಆತ್ಮಗೌರವಮಾತ್ರಾ ಕುಲ, ಪರಾಕ್ರಮವು ಕುಲ, ವಿಚಾರಮಾಡುವುದಾದರೆ ಈಗ ಈ ಯುದ್ಧದಲ್ಲಿ ಅಣ್ಣಾ, ನಿಮ್ಮ ಕುಲದ ವಿಷಯವು ನಿಮಗೆ ಏಕೆ ಬೇಸರವನ್ನುಂಟುಮಾಡುತ್ತದೆ?
ಕಂ|| ಗಂಗಾಸುತಂ ಪೃಥಾಸುತ
ರಂ ಗೆಲ್ದೊಡೆ ತಪಕೆ ಪೋಪೆನವರ್ಗಳ ಕೆಯ್ಯೊಳ್|
ಗಾಂಗೇಯನೞಿದೊಡಹಿತರ
ನಾಂ ಗೆಲೆ ತಳ್ತಿಱಿವೆನನ್ನೆಗಂ ಬಿಲ್ವಿಡಿಯೆಂ|| ೨೨ ||
ಪದ್ಯ-೨೨:ಪದವಿಭಾಗ-ಅರ್ಥ:ಗಂಗಾಸುತಂ ಪೃಥಾಸುತರಂ ಗೆಲ್ದೊಡೆ ತಪಕೆ ಪೋಪೆನು (ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ. ) ಅವರ್ಗಳ ಕೆಯ್ಯೊಳ್ ಗಾಂಗೇಯನು ಅೞಿದೊಡೆ (ಅವರುಗಳ ಕಯ್ಯಲ್ಲಿ ಭೀಷ್ಮನು ಮರಣಹೊಂದಿದರೆ) ಅಹಿತರನು ಆಂ ಗೆಲೆ ತಳ್ತು ಇಱಿವೆಂ (ಶತ್ರುಗಳನ್ನು ಗೆಲ್ಲುವುದಕ್ಕಾಗಿ ನಾನು ಸೇರಿಕೊಂಡು ಯುದ್ಧಮಾಡುತ್ತೇನೆ.) ಅನ್ನೆಗಂ ಬಿಲ್ವಿಡಿಯೆಂ (ಅಲ್ಲಿಯವರೆಗೆ ನಾನು ಬಿಲ್ಲನ್ನು ಹಿಡಿಯುವುದಿಲ್ಲ.)
ಪದ್ಯ-೨೨:ಅರ್ಥ:ಕರ್ಣ ಹೇಳಿದ, ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ. ಅವರುಗಳ ಕಯ್ಯಲ್ಲಿ ಭೀಷ್ಮನು ಮರಣಹೊಂದಿದರೆ ಶತ್ರುಗಳನ್ನು ಗೆಲ್ಲುವುದಕ್ಕಾಗಿ ನಾನು ಸೇರಿಕೊಂಡು ಯುದ್ಧಮಾಡುತ್ತೇನೆ. ಅಲ್ಲಿಯವರೆಗೆ ನಾನು ಬಿಲ್ಲನ್ನು ಹಿಡಿಯುವುದಿಲ್ಲ.
ವ|| ಎಂದು ಕರ್ಣಂ ಪ್ರತಿಜ್ಞೆಗೆಯ್ವುದುಂ ಸಿಂಧುತನೂಜನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಕರ್ಣಂ ಪ್ರತಿಜ್ಞೆ ಗೆಯ್ವುದುಂ ಸಿಂಧುತನೂಜನು ಇಂತೆಂದಂ-
ವಚನ:ಅರ್ಥ:ವ|| ಎಂಬುದಾಗಿ ಕರ್ಣನು ಪ್ರತಿಜ್ಞೆ ಮಾಡಲು ಭೀಷ್ಮನು ಹೀಗೆ ಹೇಳಿದನು.
ಚಂ|| ಕಲಿತನದುರ್ಕು ಜವ್ವನದ ಸೊರ್ಕು ನಿಜೇಶನ ನಚ್ಚು ಮಿಕ್ಕ ತೋ
ಳ್ವಲದ ಪೊಡರ್ಪು ಕರ್ಣ ನಿನಗುಳ್ಳನಿತೇನೆನಗುಂಟೆ ಭಾರತಂ|
ಕಲಹಮಿದಿರ್ಚುವಂ ಹರಿಗನಪ್ಪೊಡೆ ಮೊಕ್ಕಳಮೇಕೆ ನೀಂ ಪಳಂ
ಚಲೆದಪೆಯಣ್ಣ ಸೂೞ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್|| ೨೩ ||
ಪದ್ಯ-೦೦:ಪದವಿಭಾಗ-ಅರ್ಥ:ಕಲಿತನದುರ್ಕು ಜವ್ವನದ ಸೊರ್ಕು ನಿಜೇಶನ ನಚ್ಚು (ಶೌರ್ಯದ ಗರ್ವ, ಯವ್ವನದ ಮದ, ಸ್ವಾಮಿಯ ನಂಬಿಕೆ,ನಿಷ್ಠೆ) ಮಿಕ್ಕ ತೋಳ್ವಲದ ಪೊಡರ್ಪು (ಮೀರಿದ ಬಾಹುಬಲದ ಶಕ್ತಿ ) ಕರ್ಣನೇ, ನಿನಗೆ ಉಳ್ಳ ಅನಿತು ಏನು ಎನಗುಂಟೆ (ಕರ್ಣನೇ, ಇವು ನಿನಗಿರುವಷ್ಟು ನನಗಿದೆಯೇನಪ್ಪ.) ಭಾರತಂ ಕಲಹಂ(ಇದು ಭಾರತದ ಯುದ್ಧ,) ಇದಿರ್ಚುವಂ ಹರಿಗನು ಅಪ್ಪೊಡೆ (ಎದುರಿಸುವವನು ಹರಿಗನಾಗಿರುವಾಗ) ಮೊಕ್ಕಳಂ (ವಿಶೇಷವಾಗಿ) ಏಕೆ ನೀಂ ಪಳಂಚಿ ಅಲೆದಪೆಯ್ ಅಣ್ಣ (ಏಕೆ ನೀನು ವಿರೋಧಿಸಿ ಹೀಯಾಳಿಸುವೆ ಏಕೆ, ಕರ್ಣಾ) ಸೂೞ್ (ಸರದಿಯು) ಪಡೆಯಲಪ್ಪುದು ಕಾಣ ಮಹ ಅಜಿರಂಗದೊಳ್- ಆಜಿ-ಯುದ್ಧ; (ಈ ಮಹಾಯುದ್ಧದಲ್ಲಿ ನಿನಗೂ ಸರದಿ ಬರುತ್ತದೆ ಕಾಣಯ್ಯಾ)
ಪದ್ಯ-೦೦:ಅರ್ಥ: ಕರ್ಣನಲ್ಲಿ, ಶೌರ್ಯದ ಗರ್ವ, ಯವ್ವನದ ಮದ, ಸ್ವಾಮಿಯ ನಂಬಿಕೆ, ಮೀರಿದ ಬಾಹುಬಲದ ಶಕ್ತಿ -ಇವು ನಿನಗಿರುವಷ್ಟು ನನಗಿದೆಯೇನಪ್ಪ. ಇದು ಭಾರತದ ಯುದ್ಧ, ಎದುರಿಸುವವನು ಹರಿಗನಾಗಿರುವಾಗ ಏಕೆ ನೀನು ವಿರೋಧಿಸಿ ಹೀಯಾಳಿಸುವೆ ಏಕೆ?, ಕರ್ಣಾ; ಈ ಮಹಾಯುದ್ಧದಲ್ಲಿ ನಿನಗೂ ಸರದಿ ಬರುತ್ತದೆ ಕಾಣಯ್ಯಾ
ವ|| ಎಂದು ಮತ್ತಮಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಮತ್ತಂ ಇಂತೆಂದಂ-
ವಚನ:ಅರ್ಥ:ವ|| ಎಂದು ಪುನ ಹೀಗೆಂದನು-
ಕಂ|| ಮುದುಪರ ಬಿಲ್ಬಲ್ಮೆಯುಮಿಱಿ
ವದಟುಂ ಬಗೆವಾಗಳಣ್ಣನೆಂದಂತುಟೆ ತ
ಪ್ಪದು ಕರಮೆ ತುಚ್ಛಮಕ್ಕುಂ
ಕದನದೊಳಿನ್ನೆನ್ನ ನುಡಿದ ನುಡಿಯಂ ಕೇಳಿಂ|| ೨೪ ||
ಪದ್ಯ-೦೦:ಪದವಿಭಾಗ-ಅರ್ಥ:ಮುದುಪರ ಬಿಲ್ ಬಲ್ಮೆಯುಂ ಇಱಿವ ಅದಟುಂ (ಮುದುಕರ ಅಸ್ತ್ರವಿದ್ಯಾಕೌಶಲ್ಯವನ್ನೂ ಯುದ್ಧಮಾಡುವ ಪರಾಕ್ರಮವನ್ನೂ) ಬಗೆವಾಗಳ್ ಅಣ್ಣಂ ಎಂದಂತುಟೆ (ವಿಚಾರಮಾಡಿ ನೋಡಿದರೆ ಕರ್ಣನು ಹೇಳಿದ ಹಾಗೆಯೇ,) ತಪ್ಪದು ಕರಮೆ ತುಚ್ಛಮಕ್ಕುಂ ಕದನದೊಳ್ (ತಪ್ಪದೆ ಬಹಳ ಹೀನಾಯಸ್ಥಿತಿಯಾಗುವುದು ಈ ಯುದ್ಧದಲ್ಲಿ.) ಇನ್ನೆನ್ನ ನುಡಿದ ನುಡಿಯಂ ಕೇಳಿಂ (ಇನ್ನು ಮೇಲೆ ನನ್ನ ಪ್ರತಿಜ್ಞೆಯನ್ನು ಕೇಳಿರಿ-)
ಪದ್ಯ-೦೦:ಅರ್ಥ: ನಾನೇನೋ ಮುದುಕ. ಮುದುಕರ ಅಸ್ತ್ರವಿದ್ಯಾಕೌಶಲ್ಯವನ್ನೂ ಯುದ್ಧಮಾಡುವ ಪರಾಕ್ರಮವನ್ನೂ ವಿಚಾರಮಾಡಿ ನೋಡಿದರೆ ಕರ್ಣನು ಹೇಳಿದ ಹಾಗೆಯೇ. ತಪ್ಪೇನಿಲ್ಲ, ತಪ್ಪದೆ ಬಹಳ ಹೀನಾಯಸ್ಥಿತಿಯಾಗುವುದು. ಇನ್ನು ಮೇಲೆ ನನ್ನ ಪ್ರತಿಜ್ಞೆಯನ್ನು ಕೇಳಿರಿ-

ಭೀಷ್ಮನ ಪ್ರತಿಜ್ಞೆ[ಸಂಪಾದಿಸಿ]

ಮ|| ಪಿಡಿಯೆಂ ಚಕ್ರಮನೆಂಬ ಚಕ್ರಿಯನಿಳಾಚಕ್ರಂ ಭಯಂಗೊಳ್ವಿನಂ
ಪಿಡಿಯೆಪ್ಪೆಂ ಕರಚಕ್ರಮಂ ನರರಥಂ ತೂಳ್ದಾ ಕುರುಕ್ಷೇತ್ರದಿಂ|
ಪಡುವೆಣ್ಗಾವುದು ಪೋಗೆ ಪೋಗಡಿಸುವೆಂ ನಿಚ್ಚಂ ಧರಾಧೀಶರಂ
ಪಡಲಿಟ್ಟಂತಿರೆ ಮಾೞ್ಪೆನೋವದೆ ಪಯಿಂಛಾಸಿರ್ವರಂ ಯುದ್ಧದೊಳ್|| ೨೫ ||
ಪದ್ಯ-೦೦:ಪದವಿಭಾಗ-ಅರ್ಥ:ಪಿಡಿಯೆಂ ಚಕ್ರಮನೆಂಬ ಚಕ್ರಿಯನು (ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನನ್ನು) ಇಳಾಚಕ್ರಂ ಭಯಂಗೊಳ್ವಿನಂ ( ಭೂಮಂಡಲವೆಲ್ಲ ಭಯಪಡುವ ಹಾಗೆ) ಪಿಡಿಯೆಪ್ಪೆಂ ಕರಚಕ್ರಮಂ (ಭೂಮಂಡಲವೆಲ್ಲ ಭಯಪಡುವ ಹಾಗೆ ಕೈಯಲ್ಲಿ ಚಕ್ರವನ್ನು ಹಿಡಿಯುವಂತೆ ಮಾಡುತ್ತೇನೆ.) ನರರಥಂ ತೂಳ್ದು ಆ ಕುರುಕ್ಷೇತ್ರದಿಂ (ಅರ್ಜುನನ ರಥ ತಳ್ಳಿ/ತೂರಿ ಕುರುಕ್ಷೇತ್ರದಿಂದ) ಪಡುವು ಎಣ್ಗಾವುದು ಪೋಗೆ (ಪಶ್ಚಿಮಕ್ಕೆ ಎಂಟುಗಾವುದ ಹೋಗುವ ಹಾಗೆ) ಪೋ ಗಡ ಇಸುವೆಂ ( ಪೋ ಗಡ! ಬಾಣಪ್ರಯೋಗ ಮಾಡುತ್ತೇನೆ) ನಿಚ್ಚಂ (ನಿತ್ಯವೂ) ಧರಾಧೀಶರಂ ಪಡಲಿಟ್ಟಂತಿರೆ (ಚದುರಿ ಬೀಳುವಂತೆ) ಮಾೞ್ಪೆನು ಓವದೆ (ಜೀವರಕ್ಷಣೆಮಾಡದೆ ---ಮಾಡುವೆನು) ಪಯಿಂ ಛಾಸಿರ್ವರಂ ಯುದ್ಧದೊಳ್ (ಹತ್ತು ಸಾವಿರಯೋಧರನ್ನು ಯುದ್ಧದಲ್ಲಿ)
ಪದ್ಯ-೦೦:ಅರ್ಥ:ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನನ್ನು, ಭೂಮಂಡಲವೆಲ್ಲ ಭಯಪಡುವ ಹಾಗೆ ಕೈಯಲ್ಲಿ ಚಕ್ರವನ್ನು ಹಿಡಿಯುವಂತೆ ಮಾಡುತ್ತೇನೆ. ಅರ್ಜುನನ ರಥ ತಳ್ಳಿ/ತೂರಿ ಕುರುಕ್ಷೇತ್ರದಿಂದ ಪಶ್ಚಿಮಕ್ಕೆ ಎಂಟುಗಾವುದ ಹೋಗುವ ಹಾಗೆ ಬಾಣಪ್ರಯೋಗ ಮಾಡುತ್ತೇನೆ. ಪ್ರತಿದಿನವೂ ಯುದ್ಧದಲ್ಲಿ ಹತ್ತು ಸಾವಿರ ಯೋಧರನ್ನು ಜೀವರಕ್ಷಣೆಮಾಡದೆ ಚದುರಿ ಸತ್ತುಬೀಳುವಂತೆ ಮಾಡುತ್ತೇನೆ.
ವ|| ಎಂದು ಮಹಾಪ್ರತಿಜ್ಞಾರೂಢನಾದ ಗಾಂಗೇಯನಳವನಳವಲ್ಲದೆ ಪೊಗೞ್ದವರಂ ಬೀಡಿಂಗೆ ಬಿಜಯಂಗೆಯ್ಯಿಮೆಂದು ಕಳಿಪಿ ಮಱುದಿವಸಂ ಯುದ್ಧಸನ್ನದ್ಧರಾಗಿ ಪ್ರಯಾಣಭೇರಿಯಂ ಪೊಯ್ಸಿದಾಗಳ್-
ವಚನ:ಪದವಿಭಾಗ-ಅರ್ಥ:ಎಂದು ಮಹಾಪ್ರತಿಜ್ಞೆ ರೂಢನಾದ (ಮಹಾಪ್ರತಿಜ್ಞೆ ಮಾಡಿದ) ಗಾಂಗೇಯನ ಅಳವನು ಅಳವಲ್ಲದೆ ಪೊಗೞ್ದವರಂ (ಭೀಷ್ಮನ ಶಕ್ತಿಯನ್ನು ಅಳತೆಯಿಲ್ಲದಷ್ಟು ಹೊಗಳಿದ ಎಲ್ಲರನ್ನೂ) ಬೀಡಿಂಗೆ ಬಿಜಯಂಗೆಯ್ಯಿಮ್ ಎಂದು ಕಳಿಪಿ (‘ಬೀಡಿಗೆ ಹೋಗಿರಿ’ ಎಂದು ಕಳುಹಿಸಿ), ಮಱುದಿವಸಂ ಯುದ್ಧಸನ್ನದ್ಧರಾಗಿ ಪ್ರಯಾಣ-ಭೇರಿಯಂ ಪೊಯ್ಸಿದಾಗಳ್ (ಮಾರನೆಯದಿನ ಯುದ್ಧಕ್ಕೆ ಸಿದ್ಧನಾಗಿ ಪ್ರಯಾಣಸೂಚಕವಾದ ಭೇರಿಯನ್ನು ಹೊಎಸಿದಾಗ.)-
ವಚನ:ಅರ್ಥ:ವ|| ಎಂದು ಮಹಾಪ್ರತಿಜ್ಞೆಯನ್ನು ಮಾಡಿದ ಭೀಷ್ಮನ ಶಕ್ತಿಯನ್ನು ಅಳತೆಯಿಲ್ಲದಷ್ಟು ಎಲ್ಲರೂ ಹೊಗಳಿದರು. ಹೊಗಳಿದ ಎಲ್ಲರನ್ನೂ ‘ಬೀಡಿಗೆ ಹೋಗಿರಿ’ ಎಂದು ಕಳುಹಿಸಿಕೊಟ್ಟನು. ಮಾರನೆಯದಿನ ಯುದ್ಧಕ್ಕೆ ಸಿದ್ಧನಾಗಿ ಪ್ರಯಾಣಸೂಚಕವಾದ ಭೇರಿಯನ್ನು ಹೊಎಸಿದಾಗ-
ಮ|| ಕೆಡೆದಂ ಪದ್ಮಜನಾಸನಾಂಬುರುಹದಿಂದಾಗಳ್ ಸುರೇಂದ್ರಾಚಳಂ
ನಡುಗಿತ್ತರ್ಕನಳುರ್ಕೆಗೆಟ್ಟು ನಭದಿಂ ತೂಳ್ದಂ ಮರುಳ್ದಪ್ಪಿದಳ್|
ಮೃಡನಂ ಗೌರಿ ಸಮಸ್ತಮೀ ತ್ರಿಭುವನಂ ಪಂಕೇಜಪತ್ರಾಂಬುವೋಲ್
ನಡುಗಿತ್ತೆಂಬಿನಮುರ್ವಿ ಪರ್ವಿದುದು ತತ್ಸನ್ನಾಹಭೇರೀರವಂ|| ೨೬ ||
ಪದ್ಯ-೦೦:ಪದವಿಭಾಗ-ಅರ್ಥ:ಕೆಡೆದಂ (ಬಿದ್ದನು) ಪದ್ಮಜನು ಆಸನ ಅಂಬುರುಹದಿಂದ ಆಗಳ್ (ಬ್ರಹ್ಮನು ಕಮಲದ ಆಸನದಿಂದ ಉರುಳಿದನು;) ಸುರೇಂದ್ರಾಚಳಂ (ಮೇರುಪರ್ವತವು) ನಡುಗಿತ್ತು ಅರ್ಕನು ಅಳುರ್ಕೆಗೆಟ್ಟು ನಭದಿಂ ತೂಳ್ದಂ (ಸೂರ್ಯನು ದಾರಿತಪ್ಪಿ ಆಕಾಶದಿಂದ ಜಾರಿದನು.) ಮರುಳ್ದಪ್ಪಿದಳ್ ಮೃಡನಂ ಗೌರಿ (ಪಾರ್ವತಿಯು ಹೆದರಿ/ ಭ್ರಾಂತಿಗೊಂಡು ಈಶ್ವರನ್ನು ತಬ್ಬಿಕೊಂಡಳು.) ಸಮಸ್ತಂ ಈ ತ್ರಿಭುವನಂ ( ಈ ಸಮಸ್ತ ಮೂರು ಲೋಕವೂ) ಪಂಕೇಜಪತ್ರಾಂಬುವೋಲ್ (ಕಮಲದೆಲೆಯ ಮೇಲಿನ ನೀರಿನ ಹಾಗೆ) ನಡುಗಿತ್ತೆಂಬಿನಂ (ನಡುಗಿತು ಎನ್ನುವಂತೆ) ಉರ್ವಿ ಪರ್ವಿದುದು (ಭೂಮಿಯಲ್ಲಿ ಹಬ್ಬು; ಭೂಮಿಯ ಮೇಲೆ ಹಬ್ಬಿತು) ತತ್ ಸನ್ನಾಹ ಭೇರೀ ರವಂ (ಆ ಪ್ರಯಾಣ ಸಿದ್ಧತೆಯ ಭೇರೀ ಶಬ್ದವು).
ಪದ್ಯ-೦೦:ಅರ್ಥ: ಆ ಭೇರಿಯ ಶಬ್ದವನ್ನು ಕೇಳಿ ಬ್ರಹ್ಮನು ಕಮಲದ ಆಸನದಿಂದ ಉರುಳಿದನು; ಮೇರುಪರ್ವತವು ನಡುಗಿತು. ಸೂರ್ಯನು ದಾರಿತಪ್ಪಿ ಆಕಾಶದಿಂದ ಜಾರಿದನು. ಪಾರ್ವತಿಯು ಭ್ರಾಂತಿಗೊಂಡು ಈಶ್ವರನ್ನು ತಬ್ಬಿಕೊಂಡಳು. ಈ ಸಮಸ್ತ ಮೂರು ಲೋಕವೂ ಕಮಲದೆಲೆಯ ಮೇಲಿನ ನೀರಿನ ಹಾಗೆ ನಡುಗಿತು ಎನ್ನುವಂತೆ ಆ ಪ್ರಯಾಣ ಸಿದ್ಧತೆಯ ಭೇರೀ ಶಬ್ದವು ಭೂಮಿಯ ಮೇಲೆ ಹಬ್ಬಿತು.

ಕೌರವಸೈನ್ಯ ಕುರುಕ್ಷೇತ್ರ ಸೇರಿದ ವರ್ಣನೆ[ಸಂಪಾದಿಸಿ]

ವ|| ಅಂತು ಮೊೞಗುವ ಭೇರೀರವದೊಡನೆ ನೆಲಂ ಮೊೞಗೆಯುಂ ತಳ್ತೆತ್ತಿದ ವಿಚಿತ್ರಕೇತುಗಳೊಡನುತ್ಪಾತಕೇತುಗಳ್ ಮೂಡೆಯುಂ ಪೆರ್ವೆಂಡಿರ್ ಸೇಸೆಯೊಡನೆ ರುಧಿರವರ್ಷಂ ಸುರಿಯೆಯುಂ ಹಿತ ಪುರೋಹಿತ ಜಯ ಜಯ ಧ್ವನಿಗಳೊಡನೆ ಹಾಹಾಕ್ರಂದನ ಧ್ವನಿಗಳ ನಿಮಿತ್ತಮಾಕಾಶದೊಳ್ ನೆಗೞೆಯುಂ ಕಾದುವೆನೆಂದು ನೆಗೞೆ ನುಡಿದ ನುಡಿಯುಮಂ ಪಿಡಿದ ಚಲಮುಮಂ ಬಗೆದು ಸೆರಗಂ ಬೆರಗುಮಂ ಬಗೆಯದೆ ಮಂಗಳಾಭರಣದೊಳ್ ನೆರೆಯೆ ಕೆಯ್ಗೆಯ್ದು ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳಾಯೋಗಂಗೊಂಡು ಬಂದ ಮದಾಂಧಗಂಧಸಿಂಧುರಮಪ್ಪ ಪಟ್ಟವರ್ಧನದ ಬೆಂಗೆವಾಯ್ದು-
ವಚನ:ಪದವಿಭಾಗ-ಅರ್ಥ:ಅಂತು ಮೊೞಗುವ ಭೇರೀರವದೊಡನೆ (ಹಾಗೆ ಮೊಳಗುವ ಭೃಇಯ ಶಬ್ದದದೊಡನೆ) ನೆಲಂ ಮೊೞಗೆಯುಂ (ಭೂಮಿಯು ಗುಡುಗಲು,) ತಳ್ತೆತ್ತಿದ ವಿಚಿತ್ರಕೇತುಗಳೊಡನೆ (ಎತ್ತಿ ಕಟ್ಟಿರುವ ಚಿತ್ರಮಯವಾದ ಧ್ವಜಗಳೊಡನೆ) ಉತ್ಪಾತಕೇತುಗಳ್ ಮೂಡೆಯುಂ (ಅಪಶಕುನ ಸೂಚಕವಾದ ನಕ್ಷತ್ರಗಳು ಬೀಳುವುದು ಕಾಣಿಸಿಕೊಂಡವು) ಪೆರ್ವೆಂಡಿರ್ ಸೇಸೆಯೊಡನೆ ರುಧಿರವರ್ಷಂ ಸುರಿಯೆಯುಂ (ವೃದ್ಧಸ್ತ್ರೀಯರು ಚೆಲ್ಲುವ ಮಂತ್ರಾಕ್ಷತೆಗಳೊಡನೆ ರಕ್ತದ ಮಳೆಯು ಸುರಿಯಿತು.) ಹಿತ ಪುರೋಹಿತ ಜಯ ಜಯ ಧ್ವನಿಗಳೊಡನೆ ಹಾಹಾಕ್ರಂದನ ಧ್ವನಿಗಳ ನಿಮಿತ್ತಮಾಕಾಶದೊಳ್ ನೆಗೞೆಯುಂ (ಹಿತರಾದ ಪುರೋಹಿತರ ಜಯಜಯಶಬ್ದಗಳೊಡನೆ ಅಳುವ ಶಬ್ದವು ಅಕಾರಣವಾಗಿ ಆಕಾಶದಲ್ಲಿ ಉಂಟಾಯಿತು.) ಕಾದುವೆನೆಂದು ನೆಗೞೆ ನುಡಿದ ನುಡಿಯುಮಂ ಪಿಡಿದ ಚಲಮುಮಂ ಬಗೆದು (ಆದರೂ ದುರ್ಯೋಧನನು ಯುದ್ಧ ಮಾಡುತ್ತೇನೆಂದು ಸ್ಪಷ್ಟವಾಗಿ ಆಡಿದ ಮಾತನ್ನೂ ಹಿಡಿದ ಛಲವನ್ನೂ ನೆನೆದು) ಸೆರಗಂ ಬೆರಗುಮಂ ಬಗೆಯದೆ (ಭಯವನ್ನೂ ಅಪಾಯವನ್ನೂ ಯೋಚನೆಮಾಡದೆ, ) ಮಂಗಳಾಭರಣದೊಳ್ ನೆರೆಯೆ (ಮಂಗಳಕರವಾದ ಒಡವೆಗಳಿಂದ ಪೂರ್ಣವಾಗಿ ಅಲಂಕಾರಮಾಡಿಕೊಂಡು) ಕೆಯ್ಗೆಯ್ದು ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳು ಆಯೋಗಂಗೊಂಡು ಬಂದ ಮದಾಂಧಗಂಧಸಿಂಧುರಮಪ್ಪ ಪಟ್ಟವರ್ಧನದ ಬೆಂಗೆವಾಯ್ದು -ಬೆಂಗೆ ವಾಯ್ದು-ಹಾಯ್ದು= ಬೆನ್ನಿನ ಮೇಲೆ ಹತ್ತಿ(ಮುತ್ತು ಮಾಣಿಕ್ಯದ ಆಭರಣಗಳಿಂದ ಅಲಂಕೃತವಾಗಿ ಬಂದ ಮದಗಜವಾದ ಪಟ್ಟದಾನೆಯನ್ನು ಹತ್ತಿ)-
ವಚನ:ಅರ್ಥ:ವ|| ಹಾಗೆ ಮೊಳಗುವ ಭೃಇಯ ಶಬ್ದದದೊಡನೆ ಭೂಮಿಯು ಗುಡುಗಲು, ಎತ್ತಿ ಕಟ್ಟಿರುವ ಚಿತ್ರಮಯವಾದ ಧ್ವಜಗಳೊಡನೆ, ಅಪಶಕುನ ಸೂಚಕವಾದ ನಕ್ಷತ್ರಗಳು ಬೀಳುವುದು ಕಾಣಿಸಿಕೊಂಡವು. ವೃದ್ಧಸ್ತ್ರೀಯರು ಚೆಲ್ಲುವ ಮಂತ್ರಾಕ್ಷತೆಗಳೊಡನೆ ರಕ್ತದ ಮಳೆಯು ಸುರಿಯಿತು. ಹಿತರಾದ ಪುರೋಹಿತರ ಜಯಜಯಶಬ್ದಗಳೊಡನೆ ಅಳುವ ಶಬ್ದವು ಅಕಾರಣವಾಗಿ ಆಕಾಶದಲ್ಲಿ ಉಂಟಾಯಿತು. ಆದರೂ ದುರ್ಯೋಧನನು ಯುದ್ಧ ಮಾಡುತ್ತೇನೆಂದು ಸ್ಪಷ್ಟವಾಗಿ ಆಡಿದ ಮಾತನ್ನೂ ಹಿಡಿದ ಛಲವನ್ನೂ ನೆನೆದು, ಭಯವನ್ನೂ ಅಪಾಯವನ್ನೂ ಯೋಚನೆಮಾಡದೆ, ಮಂಗಳಕರವಾದ ಒಡವೆಗಳಿಂದ ಪೂರ್ಣವಾಗಿ ಅಲಂಕಾರಮಾಡಿಕೊಂಡು , ಮುತ್ತು ಮಾಣಿಕ್ಯದ ಆಭರಣಗಳಿಂದ ಅಲಂಕೃತವಾಗಿ ಬಂದ ಮದಗಜವಾದ ಪಟ್ಟದಾನೆಯನ್ನು ಹತ್ತಿ -
ಕಂ|| ನಯಮನಯಂ ಜಯಮೆನಗಪ
ಜಯವಿದು ಯಶಮಯಶಮೆಂಬಿದಂ ಬಗೆಯದೆ ನಿ|
ಶ್ಚಯಿಸಿ ಕಲಹಮನೆ ಮನದೊಳ್
ಭಯಮಱಿಯದ ಕಲಿ ಸುಯೋಧನಂ ಪೊಱಮಟ್ಟಂ|| ೨೭ ||
ಪದ್ಯ-೨೭:ಪದವಿಭಾಗ-ಅರ್ಥ:ನಯಮ್ ಅನಯಂ ಜಯಮೆನಗೆ ಅಪಜಯವಿದು ಯಶಮ್ ಅಯಶಮೆಂಬ ಇದಂ ಬಗೆಯದೆ (ನೀತಿ- ಅನೀತಿ, ಇದು ಜಯ ಇದು ಅಪಜಯ, ಇದು ಯಶಸ್ಸು ಇದು ಅಪಯಶಸ್ಸು ಎಂದು ವಿಚಾರಮಾಡದೆ) ನಿಶ್ಚಯಿಸಿ ಕಲಹಮನೆ (ಯುದ್ಧವನ್ನೇ ಮನಸ್ಸಿನಲ್ಲಿ ನಿಶ್ಚಮಾಡಿ) ಮನದೊಳ್ ಭಯಮ್ ಅಱಿಯದ ಕಲಿ ಸುಯೋಧನಂ ಪೊಱಮಟ್ಟಂ (ಭಯವನ್ನೇ ತಿಳಿಯದ ಶೂರನಾದ ದುರ್ಯೋಧನನು ಯುದ್ಧಕ್ಕೆ ಹೊರಟನು. )
ಪದ್ಯ-೨೭:ಅರ್ಥ: ಇದು ನೀತಿ ಇದು ಅನೀತಿ, ಇದು ಜಯ ಇದು ಅಪಜಯ, ಇದು ಯಶಸ್ಸು ಇದು ಅಪಯಶಸ್ಸು ಎಂದು ವಿಚಾರಮಾಡದೆ ಯುದ್ಧವನ್ನೇ ಮನಸ್ಸಿನಲ್ಲಿ ನಿಶ್ಚಮಾಡಿ ಭಯವನ್ನೇ ತಿಳಿಯದ ಶೂರನಾದ ದುರ್ಯೋಧನನು ಯುದ್ಧಕ್ಕೆ ಹೊರಟನು.
ವ|| ಅಂತು ಪೊಱಮಟ್ಟು ಮುಂದೆ ಪರಿವ ಧವಳಚ್ಛತ್ರಚಾಮರಂಗಳುಂ ಮಿಳಿರ್ವ ಪಾಳಿ ಕೇತನಂಗಳುಂ ಪೊಯ್ವ ಪಂಚಮಹಾಶಬ್ದಂಗಳುಂ ತನಗೆ ರಾಜರಾಜ ಶಬ್ದಮನನ್ವರ್ಥಂ ಮಾಡೆ ಜಯದ್ರಥ ಜಯತ್ಸೇನ ಸುದಕ್ಷಿಣ ಶಲ್ಯ ಶಕುನಿ ಧೃಷ್ಟಕೇತು ನೀಳ ಭಗದತ್ತ ಶ್ರುತಾಯುಧ ನಿಯತಾಯುಧಾಚ್ಯುತಾಯುಧಾದಿಗಳಪ್ಪ ಪನ್ನೊಂದಕ್ಷೋಹಿಣೀಪತಿಗಳುಂ ಗಾಂಗೇಯ ದ್ರೋಣಾಶ್ವತ್ಥಾಮ ಕೃಪ ಕೃತವರ್ಮ ಪ್ರಭೃತಿಗಳುಂ ಕರ್ಣ ವೃಷಸೇನ ಚಿತ್ರಸೇನರೆಂಬ ತಂದೆ ಮಕ್ಕಳ್ ಮೂವರುಂ ಬೆರಸು ಬರೆ ಬಾಹ್ಲಿಕ ಭೂರಿಶ್ರವಸೋಮದತ್ತರೆಂಬ ಮೂವರುಮನಂತ ಬಲಂ ಬೆರಸು ಕೂಡಿಬರೆಯವಂತಿದೇಶಾಶ್ವರರಪ್ಪ ವಿಂದಾನುವಿಂದರೆಣ್ಬತ್ತು ನಾಲ್ಸಾಸಿರ ಮದದಾನೆ ವರೆಸು ಬಂದು ಕೂಡೆ ಕಳಿಂಗರಾಜಂ ಕ್ಷೇಮಧೂರ್ತಿಯುಂ ಭೀಮಸೇನನ ಕೆಯ್ಯೊಳ್ ಸತ್ತ ಬಕಾಸುರ ಜಟಾಸುರರ ಮಕ್ಕಳ್ ಚತುಸ್ತ್ರಿಂಶತ್ಸಹಸ್ರ ನಕ್ತಂಚರ ಪರಿವೃತ ಹಳಂಭೂಷ ಮುಸಲಾಯುಧ ಕಾಳನೀಳ ವಿದ್ಯುನ್ಮಾಲ್ಯಾದಿಗಳುಂ ಬಂದು ಕೂಡೆ ತ್ರಿಗರ್ತಾಶಂ ಸುಶರ್ಮನುಂ ಸಂಸಪ್ತಕರ್ ಪದಿನೆಂಟು ಕೋಟಿ ರಥಂ ಬೆರಸು ಬಂದು ಕೂಡೆ ಮತ್ತಮನೇಕ ದೇಶಾಶ್ವರರುಂ ಬರೆ ಯುಯುತ್ಸು ದುಶ್ಶಾಸನ ಚಿತ್ರಸೇನ ದುಸ್ಸಹ ದುಸ್ಸಳ ವಿಂದಾನುವಿಂದ ದುರ್ಧರ್ಷಣ ದುರ್ಮರ್ಷಣ ದುಸ್ಸ ರ್ಶನ ಸುಬಾಹು ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಚಿತ್ರೋಪಚಿತ್ರ ನಂದೋಪನಂದ ಚಿತ್ರಾಂಗದ ಚಿತ್ರಕುಂಡಲ ಜರಾಸಂಧ ಸತ್ಯಸಂಧ ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹುಗಳ್ ಮೊದಲಾಗೆ ತನ್ನ ನೂರ್ವರ್ ತಮ್ಮಂದಿರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಸುತ್ತಿಱಿದು ಬಳಸಿ ಬರೆ ವಿಳಯಕಾಳ ವಾತಾಹತಿಯಿಂ ಜಳನಿಯೆ ತಳರ್ವಂತೆ ತಳರ್ದು ಕುರುಕ್ಷೇತ್ರಕ್ಕೆ ಮೊಗಸಿದಾಗಳ್-
ವಚನ:ಪದವಿಭಾಗ-ಅರ್ಥ: ಅಂತು ಪೊಱಮಟ್ಟು(ಹೊರಟು) ಮುಂದೆ ಪರಿವ ಧವಳಚ್ಛತ್ರಚಾಮರಂಗಳುಂ (ನಡೆಯುತ್ತಿದ್ದ ಶ್ವೇತಚ್ಛತ್ರಚಾಮರಗಳೂ) ಮಿಳಿರ್ವ ಪಾಳಿ ಕೇತನಂಗಳುಂ (ಅಲುಗಾಡುತ್ತಿದ್ದ ಸಾಲು ಬಾವುಟಗಳಿಂದಲೂ) ಪೊಯ್ವ ಪಂಚಮಹಾಶಬ್ದಂಗಳುಂ (ಕೊಂಬು, ತಮಟೆ, ಭೇರಿ, ಘಂಟೆ ಮತ್ತು ಬಿನ್ನಹಂಗಳಗಳೆಂಬ ಪಂಚಮಹಾವಾದ್ಯಗಳೂ) ತನಗೆ ರಾಜರಾಜ ಶಬ್ದಮನು ಅನ್ವರ್ಥಂ ಮಾಡೆ (ತನ್ನ ಚಕ್ರವರ್ತಿ ಎಂಬ ಶಬ್ದವನ್ನು ಅನ್ವರ್ಥವಾಗಿ ಮಾಡುತ್ತಿರಲು,) ಜಯದ್ರಥ ಜಯತ್ಸೇನ ಸುದಕ್ಷಿಣ ಶಲ್ಯ ಶಕುನಿ ಧೃಷ್ಟಕೇತು ನೀಳ ಭಗದತ್ತ ಶ್ರುತಾಯುಧ ನಿಯತಾಯುಧ, ಅಚ್ಯುತಾಯುಧ ಆದಿಗಳಪ್ಪ ಪನ್ನೊಂದು ಅಕ್ಷೋಹಿಣೀಪತಿಗಳುಂ(ಮೊದಲಾದ ಹನ್ನೊಂದಕ್ಷೋಹಿಣೀ ನಾಯಕರೂ) ಗಾಂಗೇಯ ದ್ರೋಣಾಶ್ವತ್ಥಾಮ ಕೃಪ ಕೃತವರ್ಮ ಪ್ರಭೃತಿಗಳುಂ ಕರ್ಣ ವೃಷಸೇನ ಚಿತ್ರಸೇನರೆಂಬ ತಂದೆ ಮಕ್ಕಳ್ ಮೂವರುಂ ಬೆರಸು ಬರೆ (ಕರ್ಣ, ವೃಷಸೇನ ಚಿತ್ರಸೇನರೆಂಬ ತಂದೆ ಮಕ್ಕಳು ಮೂವರೂ ಒಟ್ಟುಗೂಡಿ ಬರಲು,) ಬಾಹ್ಲಿಕ ಭೂರಿಶ್ರವ ಸೋಮದತ್ತರೆಂಬ ಮೂವರುಂ ಅನಂತ ಬಲಂ ಬೆರಸು ಕೂಡಿಬರೆ (ಮೂವರೂ ಕಡೆಯಿಲ್ಲದಷ್ಟು ಸೇನಾಸಮೇತರಾಗಿ ಬಂದು ಸೇರಿದರು.) ಅವಂತಿದೇಶ ಆಶ್ವರರಪ್ಪ ವಿಂದಾನುವಿಂದರು ಎಂಣ್ಬತ್ತು ನಾಲ್ಸಾಸಿರ ಮದದಾನೆ ವರೆಸು ಬಂದು ಕೂಡೆ (ಅವಂತೀದೇಶದ ಒಡೆಯರಾದ ವಿಂದಾನುವಿಂದರು ಎಂಬತ್ತುನಾಲ್ಕು ಸಾವಿರ ಮದ್ದಾನೆಯೊಡಗೂಡಿ ಬಂದು ಕೂಡಿದರು) ಕಳಿಂಗರಾಜಂ ಕ್ಷೇಮಧೂರ್ತಿಯುಂ ಭೀಮಸೇನನ ಕೆಯ್ಯೊಳ್ ಸತ್ತ ಬಕಾಸುರ ಜಟಾಸುರರ ಮಕ್ಕಳ್ ಚತುಸ್ತ್ರಿಂಶತ್ಸಹಸ್ರ (ಭೀಮಸೇನನ ಕಯ್ಯಲ್ಲಿ ಸತ್ತ ಬಕಾಸುರ ಜಟಾಸುರರ ಮಕ್ಕಳಾದ ಹಳಂಭೂಷ ಮುಸಲಾಯುಧ ಕಾಳ ನೀಳ ) ನಕ್ತಂಚರ ಪರಿವೃತ ಹಳಂಭೂಷ ಮುಸಲಾಯುಧ ಕಾಳನೀಳ ವಿದ್ಯುನ್ಮಾಲ್ಯಾದಿಗಳುಂ ಬಂದು ಕೂಡೆ (ವಿದ್ಯುನ್ಮಾಲಿ ಮೊದಲಾದವರೂ ಮೂವತ್ತುನಾಲ್ಕುಸಾವಿರ ರಾಕ್ಷಸರಿಂದ ಸುತ್ತುವರಿಯಲ್ಪಟ್ಟು ಬಂದು ಜೊತೆಗೂಡಿದರು) ತ್ರಿಗರ್ತಾಶಂ ಸುಶರ್ಮನುಂ ಸಂಸಪ್ತಕರ್ ಪದಿನೆಂಟು ಕೋಟಿ ರಥಂ ಬೆರಸು ಬಂದು ಕೂಡೆ (ತ್ರಿಗರ್ತಾಶ್ವರನಾದ ಸುಶರ್ಮನೂ ಸಂಶಪ್ತಕರೂ ಹದಿನೆಂಟು ಕೋಟಿ ತೇರಿನೊಡನೆ ಬಂದು ನೆರೆದರು.) ಮತ್ತಂ ಅನೇಕ ದೇಶಾಶ್ವರರುಂ (ರಾಜರೂ) ಬರೆ ಯುಯುತ್ಸು ದುಶ್ಶಾಸನ ಚಿತ್ರಸೇನ ದುಸ್ಸಹ ದುಸ್ಸಳ ವಿಂದಾನುವಿಂದ ದುರ್ಧರ್ಷಣ ದುರ್ಮರ್ಷಣ ದುಸ್ಸ ರ್ಶನ ಸುಬಾಹು ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಚಿತ್ರೋಪಚಿತ್ರ ನಂದೋಪನಂದ ಚಿತ್ರಾಂಗದ ಚಿತ್ರಕುಂಡಲ ಜರಾಸಂಧ ಸತ್ಯಸಂಧ ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹುಗಳ್ ಮೊದಲಾಗೆ ತನ್ನ ನೂರ್ವರ್ ತಮ್ಮಂದಿರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಸುತ್ತಿಱಿದು ಬಳಸಿ ಬರೆ (ನೂರುಜನ ತಮ್ಮಂದಿರೂ ಲಕ್ಷಣನೇ ಮೊದಲಾದ ನೂರುಜನ ಮಕ್ಕಳೂ ಸುತ್ತುಗಟ್ಟಿ ಬಂದರು.) ವಿಳಯಕಾಳ ವಾತಾಹತಿಯಿಂ ಜಳನಿಯೆ ತಳರ್ವಂತೆ (ಪ್ರಳಯಕಾಲದ ಗಾಳಿಯ ಪೆಟ್ಟಿನಿಂದ ಸಮುದ್ರವೇ ಚಲಿಸುವಂತೆ) ತಳರ್ದು ಕುರುಕ್ಷೇತ್ರಕ್ಕೆ ಮೊಗಸಿದಾಗಳ್ (ಚಲಿಸಿ ಸೈನ್ಯವು ಕುರುಕ್ಷೇತ್ರವನ್ನು ಮುತ್ತಿಕೊಂಡಾಗ-)-
ವಚನ:ಅರ್ಥ:ವ|| ಹಾಗೆ ಹೊರಟು ತನ್ನ ಮುಂದೆ ನಡೆಯುತ್ತಿದ್ದ ಶ್ವೇತಚ್ಛತ್ರಚಾಮರಗಳೂ ಅಲುಗಾಡುತ್ತಿದ್ದ ಸಾಲು ಬಾವುಟಗಳಿಂದಲೂ ಕೊಂಬು, ತಮಟೆ, ಭೇರಿ, ಘಂಟೆ ಮತ್ತು ಬಿನ್ನಹಂಗಳಗಳೆಂಬ ಪಂಚಮಹಾವಾದ್ಯಗಳೂ ತನ್ನ ಚಕ್ರವರ್ತಿ ಎಂಬ ಶಬ್ದವನ್ನು ಅನ್ವರ್ಥವಾಗಿ ಮಾಡುತ್ತಿದ್ದವು. ಜಯದ್ರಥ, ಜಯತ್ಸೇನ, ಸುದಕ್ಷಿಣ, ಶಲ್ಯ, ಶಕುನಿ, ಧೃಷ್ಟಕೇತು, ನೀಳ, ಭಗದತ್ತ, ಶ್ರುತಾಯುಧ, ನಿಯತಾಯುಧ, ಅಚ್ಯುತಾಯುಧರೇ ಮೊದಲಾದ ಹನ್ನೊಂದಕ್ಷೋಹಿಣೀ ನಾಯಕರೂ ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ ಮೊದಲಾದವರೂ ಕರ್ಣ, ವೃಷಸೇನ ಚಿತ್ರಸೇನರೆಂಬ ತಂದೆ ಮಕ್ಕಳು ಮೂವರೂ ಒಟ್ಟುಗೂಡಿ ಬಂದರು. ಬಾಹ್ಲಿಕ ಭೂರಿಶ್ರವ ಸೋಮದತ್ತರೆಂಬ ಮೂವರೂ ಕಡೆಯಿಲ್ಲದಷ್ಟು ಸೇನಾಸಮೇತರಾಗಿ ಬಂದು ಸೇರಿದರು. ಅವಂತೀದೇಶದ ಒಡೆಯರಾದ ವಿಂದಾನುವಿಂದರು ಎಂಬತ್ತುನಾಲ್ಕು ಸಾವಿರ ಮದ್ದಾನೆಯೊಡಗೂಡಿ ಬಂದು ಕೂಡಿದರು. ಕಳಿಂಗ ರಾಜನಾದ ಕ್ಷೇಮಧೂರ್ತಿಯೂ ಭೀಮಸೇನನ ಕಯ್ಯಲ್ಲಿ ಸತ್ತ ಬಕಾಸುರ ಜಟಾಸುರರ ಮಕ್ಕಳಾದ ಹಳಂಭೂಷ ಮುಸಲಾಯುಧ ಕಾಳ ನೀಳ ವಿದ್ಯುನ್ಮಾಲಿ ಮೊದಲಾದವರೂ ಮೂವತ್ತುನಾಲ್ಕುಸಾವಿರ ರಾಕ್ಷಸರಿಂದ ಸುತ್ತುವರಿಯಲ್ಪಟ್ಟು ಬಂದು ಜೊತೆಗೂಡಿದರು. ತ್ರಿಗರ್ತಾಶ್ವರನಾದ ಸುಶರ್ಮನೂ ಸಂಶಪ್ತಕರೂ ಹದಿನೆಂಟು ಕೋಟಿ ತೇರಿನೊಡನೆ ಬಂದು ನೆರೆದರು. ಇನ್ನೂ ಅನೇಕ ದೇಶಾಶರು ಬಂದು ಒಟ್ಟುಗೂಡಿದರು. ಯುಯುತ್ಸು, ದುಶ್ಶಾಸನ, ಚಿತ್ರಸೇನ, ದುಸ್ಸಹ, ದುಸ್ಸಳ, ವಿಂದಾನುವಿಂದ, ದುರ್ಧಷಣ, ದುರ್ಮರ್ಷಣ, ದುಸ್ಪರ್ಶನ, ದುಷ್ಕರ್ಣ, ಸುಬಾಹು, ದುರ್ಮುಖ, ವಿಕರ್ಣ, ವಿವಿಂಶತಿ, ಸುಲೋಚನ, ಚಿತ್ರೋಪಚಿತ್ರ, ದೃಢಹಸ್ತ, ಪ್ರಮಾಥಿ, ದೀರ್ಘಬಾಹು, ಮಹಾಬಾಹುಗಳೇ ಮೊದಲಾದ ನೂರುಜನ ತಮ್ಮಂದಿರೂ ಲಕ್ಷಣನೇ ಮೊದಲಾದ ನೂರುಜನ ಮಕ್ಕಳೂ ಸುತ್ತುಗಟ್ಟಿ ಬಂದರು. ಪ್ರಳಯಕಾಲದ ಗಾಳಿಯ ಪೆಟ್ಟಿನಿಂದ ಸಮುದ್ರವೇ ಚಲಿಸುವಂತೆ ಚಲಿಸಿ ಸೈನ್ಯವು ಕುರುಕ್ಷೇತ್ರವನ್ನು ಮುತ್ತಿಕೊಂಡಾಗ-
ಚಂ|| ಕರಿ ಮಕರಂಗಳಂ ಕರಿ ಘಟಾವಳಿಯಬ್ದಕುಳಂಗಳಂ ಭಯಂ
ಕರತರಮಾದ ಪೆರ್ದೆರೆಗಳಂ ಹಯಸಂತತಿ ಮತ್ಸ್ಯಕೋಟಿಯಂ|
ಸುರಿತ ನಿಶಾತಹೇತಿಯುತ ಸದ್ಭಟಕೋಟಿ ನಿರಂತರಂ ತಿರ
ಸ್ಕರಿಸಿರೆ ಘೂರ್ಣಿತಾರ್ಣವಮನೊತ್ತರಿಸಿತ್ತು ಚತುರ್ಬಲಾರ್ಣವಂ|| ೨೮ ||
ಪದ್ಯ-೨೮:ಪದವಿಭಾಗ-ಅರ್ಥ:ಕರಿ ಮಕರಂಗಳಂ, (ಬಿಡಿ ಆನೆಗಳು ಮೊಸಳೆಗಳನ್ನೂ,) ಕರಿ ಘಟಾವಳಿಯು ಅಬ್ದಕುಳಂಗಳಂ -(ಮೋಡ) (ಆನೆಯ ಸಮೂಹವು ಮೋಡ ಸಮೂಹವನ್ನೂ,) ಭಯಂಕರ ತರಮಾದ ಪೆರ್ ತೆರೆಗಳಂ ಹಯಸಂತತಿ (ಹಯ- ಕುದುರೆ) (ಕುದುರೆಗಳ ಸಮೂಹವು ಅತಿಭಯಂಕರವಾದ ದೊಡ್ಡ ಅಲೆಗಳನ್ನೂ,) ಮತ್ಸ್ಯಕೋಟಿಯಂ ಸುರಿತ ನಿಶಾತ (ಹರಿತವಾದ) ಹೇತಿಯುತ (ಕತ್ತಿಯುಳ್ಳ) ಸದ್ಭಟಕೋಟಿ (ಪ್ರಕಾಶಮಾನವೂ ಹರಿತವೂ ಆದ ಕತ್ತಿಗಳಿಂದ ಕೂಡಿದ ಒಳ್ಳೆಯ ಭಟಸಮೂಹವು ಮೀನಿನ ಸಮೂಹವನ್ನೂ) ನಿರಂತರಂ ತಿರಸ್ಕರಿಸಿರೆ (ಸದಾ ಸಮುದ್ರವನ್ನು ಕೀಳು ಸ್ಥಿತಿಮಾಡುವಂತೆ) ಘೂರ್ಣಿತ ಆರ್ಣವಮಂ (ಆರ್ಬಟಿಸುವ ಸಮುದ್ರವನ್ನು) ಒತ್ತರಿಸಿತ್ತು ಚತುರ್ಬಲ ಆರ್ಣವಂ ()
ಪದ್ಯ-೨೮:ಅರ್ಥ:ಆ ಸೈನ್ಯದಲ್ಲಿ ಬಿಡಿ ಆನೆಗಳು ಮೊಸಳೆಗಳನ್ನೂ, ಆನೆಯ ಸಮೂಹವು ಮೋಡ ಸಮೂಹವನ್ನೂ, ಅತಿಭಯಂಕರವಾದ ದೊಡ್ಡ ಅಲೆಗಳನ್ನೂ, ಪ್ರಕಾಶಮಾನವೂ ಹರಿತವೂ ಆದ ಕತ್ತಿಗಳಿಂದ ಕೂಡಿದ ಭಟರು ಮೀನಿನ ಸಮೂಹವನ್ನೂ, ಭಟಸಮೂಹದ ಚತುರಂಗಸೇನಾಸಮುದ್ರವು ಘೋಷಿಸುತ್ತಿರುವ ಸಮುದ್ರವನ್ನೇ ಮೀರಿ ತಿರಸ್ಕರಿಸುವಂತೆ ಬಂದಿತು.
ಮ|| ಮದವದ್ದಂತಿ ವರೂಥ ವಾಜಿ ಭಟ ಸಂಘಾತಂಗಳೀ ಲೆಕ್ಕಮೆಂ
ಬುದನಾಂ ನಿಟ್ಟಿಸಲಾರೆನೊಂದನಱಿವೆಂ ತತ್ಸೈನ್ಯ ಪಾದೋತ್ಥಿತಂ|
ಪುದಿದೆತ್ತಂ ರಜಮಂಬರಸ್ಥಳಮುಮಂ ಮುಟ್ಟಿತ್ತು ತಳ್ತುರ್ವಿ ಪ
ರ್ವಿದೊಡಾ ಮುನ್ನಿನ ತೆಳ್ಪುಗೆಟ್ಟು ಕೆಸಱುಯ್ತಾಕಾಶ ಗಂಗಾಜಲಂ|| ೨೯ ||
ಪದ್ಯ-೨೯:ಪದವಿಭಾಗ-ಅರ್ಥ:ಮದವದ್ದಂತಿ (ಮದ್ದಾನೆ,) ವರೂಥ ವಾಜಿ ಭಟ ಸಂಘಾತಂಗಳು ಈ ಲೆಕ್ಕಮೆಂಬುದನು ಆ ನಿಟ್ಟಿಸಲಾರೆಂ (ನಿಟ್ಟಿಸು -ನೋಡು, ನಿರ್ಧರಿಸು?)(ಈ ಲೆಕ್ಕವುಳ್ಳದ್ದು ಎಂದು ನಾನು ನಿರ್ಧರಿಸಲಾರೆ.) ಒಂದನು ಅಱಿವೆಂ ತತ್ ಸೈನ್ಯ ಪಾದೋತ್ಥಿತಂ ಪುದಿದು(ತುಂಬಿ- ವ್ಯಾಪಿಸಿ) ಎತ್ತಂ (ಎತ್ತಲೂ, ಎಲ್ಲಾಕಡೆಯೂ) (ಆ ಸೈನ್ಯದ ತುಳಿತದಿಂದ ಮೇಲೆದ್ದ ಧೂಳು) ರಜಂ (ಧೂಳು) ಅಂಬರಸ್ಥಳಮುಮಂ ಮುಟ್ಟಿತ್ತು (ಧೂಳು ಆಕಾಶಪ್ರದೇಶವನ್ನು ಮುಟ್ಟಿತ್ತು.) ತಳ್ತು ಉರ್ವಿ (ಸೇರಿ ವ್ಯಾಪಿಸಲು) ಪರ್ವಿದೊಡೆ (ಹರಡಿದಾಗ) ಆ ಮುನ್ನಿನ ತೆಳ್ಪುಗೆಟ್ಟು - ತಿಳಿನೀರು ಕೆಟ್ಟು(ಮತ್ತೂ ಹೆಚ್ಚಾಗಿ ಸೇರಿ ವ್ಯಾಪಿಸಲು ಎಲ್ಲ ಕಡೆಯಲ್ಲೂ ವ್ಯಾಪಿಸಿ, ಗಂಗಾನದಿಯ ಮೊದಲಿನ ತಿಳಿನೀರು ಕೆಟ್ಟು ) ಕೆಸಱುಯ್ತು ಆಕಾಶ ಗಂಗಾಜಲಂ (ಆಕಾಶ ಮತ್ತು ಗಂಗಾನದಿಯ ನೀರು ತನ್ನ ಮೊದಲಿನ ಸ್ವಚ್ಚತೆ ಕೆಟ್ಟು ಬಗ್ಗಡವಾಯಿತು.)
ಪದ್ಯ-೨೯:ಅರ್ಥ: ಮದ್ದಾನೆ, ರಥ, ಕುದುರೆ, ಕಾಲಾಳುಗಳು ಈ ಲೆಕ್ಕವುಳ್ಳದ್ದು ಎಂದು ನಾನು ನಿರ್ಧರಿಸಲಾರೆ. ಇಷ್ಟು ಮಾತ್ರ ಹೇಳಬಲ್ಲೆ. ಆ ಸೈನ್ಯದ ತುಳಿತದಿಂದ ಮೇಲೆದ್ದು ಎಲ್ಲ ಕಡೆಯೂ ವ್ಯಾಪಿಸಿ ಧೂಳು ಆಕಾಶಪ್ರದೇಶವನ್ನು ಮುಟ್ಟಿತ್ತು. ಆಕಾಶ ಮತ್ತು ಗಂಗಾನದಿಯ ನೀರು ತನ್ನ ಮೊದಲಿನ ಸ್ವಚ್ಚತೆ ಕೆಟ್ಟು ಬಗ್ಗಡವಾಯಿತು.
ಚಂ|| ರವಿಕಿರಣಾಳಿಗಳ್ ಧ್ವಜಪಟಾಳಿಯ ತಿಂತಿಣಿಯಿಂದಮುರ್ಚಲಾ
ಱವೆ ರವಿವಾಜಿಗಳ್ ನೆಗೆದ ಪಾಂಸುಗಳಿಂ ದೆಸೆಗೆಟ್ಟು ಪೋಗಲಾ|
ಱವೆ ರವಿಬಿಂಬಮಂದೆಸೆಯಲಾಱದೆ ಪೆಂಪಿನ ತಿಣ್ಪನಾಂತ ಕೌ
ರವಬಳದಂತು ಮೇರೆ ಪವಣೆಂಬುದನಿನ್ನಱಿವಂದಮಾವುದೋ|| ೩೦ ||
ಪದ್ಯ-೦೦:ಪದವಿಭಾಗ-ಅರ್ಥ:ರವಿಕಿರಣಾಳಿಗಳ್ ('ಸೂರ್ಯನ ಕಿರಣಗಳ ಸಾಲುಗಳು,) ಧ್ವಜಪಟಾಳಿಯ ತಿಂತಿಣಿಯಿಂದಂ ಉರ್ಚಲಾಱವೆ (ಬಾವುಟದ ಬಟ್ಟೆಗಳ ಸಮೂಹವನ್ನು ಭೇದಿಸಿಕೊಂಡು ಬರಲಾರವು,) ರವಿವಾಜಿಗಳ್ ನೆಗೆದ ಪಾಂಸುಗಳಿಂ (ಸೂರ್ಯನ ಕುದುರೆಗಳು ಮೇಲೆದ್ದ ಧೂಳಿನಿಂದ) ದೆಸೆಗೆಟ್ಟು ಪೋಗಲಾಱವೆ (ಸೂರ್ಯನ ಕುದುರೆಗಳು ಮೇಲೆದ್ದ ಧೂಳಿನಿಂದ ದಿಕ್ಕು ಕಾಣಲಾರದೆ ಮುಂದೆ ಹೋಗಲಾರದ ಹಾಗಾಯಿತು,) ರವಿಬಿಂಬಮಂದು ಎಸೆಯಲಾಱದೆ (ಸೂರ್ಯಬಿಂಬವು ಪ್ರಕಾಶಹೀನವಾಗಿತ್ತು.) ಪೆಂಪಿನ ತಿಣ್ಪನಾಂತ ಕೌರವಬಳದ ಅಂತು ಮೇರೆ ಪವಣೆಂಬುದನು ಇನ್ನು ಅಱಿವಂದಮು ಆವುದೋ (ಇನ್ನು ತಿಳಿಯುವ ರೀತಿ ಯಾವುದೊ! - ಕೌರವಸೇನೆಯ ಕೊನೆಯ ಅಳತೆ ಎಂಬುದನ್ನು, ಎಲ್ಲೆ, ಪ್ರಮಾಣಗಳನ್ನು ತಿಳಿಯಲಾರದಂತಿದ್ದುವು)
ಪದ್ಯ-೦೦:ಅರ್ಥ:ಸೂರ್ಯನ ಕಿರಣಗಳ ಸಾಲುಗಳು, ಬಾವುಟದ ಬಟ್ಟೆಗಳ ಸಮೂಹವನ್ನು ಭೇದಿಸಿಕೊಂಡು ಬರಲಾರವು, ಸೂರ್ಯನ ಕುದುರೆಗಳು ಮೇಲೆದ್ದ ಧೂಳಿನಿಂದ ದಿಕ್ಕು ಕಾಣಲಾರದೆ ಮುಂದೆ ಹೋಗಲಾರದ ಹಾಗಾಯಿತು, ಸೂರ್ಯಬಿಂಬವು ಪ್ರಕಾಶಹೀನವಾಗಿ ಹಿರಿಮೆಯ ಭಾರದಿಂದ ಕೂಡಿದ ಕೌರವಸೇನೆಯಂತೆಯೇ ಕೊನೆ, ಎಲ್ಲೆ, ಪ್ರಮಾಣಗಳನ್ನು ಇನ್ನು ತಿಳಿಯುವ ರೀತಿ ಯಾವುದೊ! ತಿಳಿಯಲಾರದಂತಿದ್ದುವು.
ಮ|| ಮದವದ್ದಂತಿ ಮದಾಂಬುಧಾರೆಗಳವಂದೊಂದೊಂದರೊಳ್ ಕೂಡೆ ಪ
ಣ್ಣಿದ ಜಾತ್ಯಶ್ವ ರಥಾಶ್ವ ಸಂಕುಳ ಖಲೀನೋದ್ಭೂತ ಲಾಲಾಜಲಂ|
ಕದಡೆೞ್ದೆತ್ತಮವುಂಕೆ ಬೇರೆ ಪರಭಾಗಂಬೆತ್ತು ಲೋಕಕ್ಕೆ ಸ
ನ್ನಿದಮಾಗಿರ್ದುವು ಕೌರವಧ್ವಜಿನಿಯೊಳ್ ಕಾಳಿಂದಿಯುಂ ಗಂಗೆಯುಂ|| ೩೧ ||
ಪದ್ಯ-೩೧:ಪದವಿಭಾಗ-ಅರ್ಥ:ಮದವದ್ದಂತಿ ಮದಾಂಬುಧಾರೆಗಳು ಅವು ಒಂದೊಂದೊಂದರೊಳ್ ಕೂಡೆ (ಮದ್ದಾನೆಗಳ ಮದೋದಕದ ಒಟ್ಟುಗೂಡಿದ ಪ್ರವಾಹವು ಒಂದೊಂದರಲ್ಲಿ ಒಂದೊಂದು ಕೂಡಿದಾಗ) ಪಣ್ಣಿದ (ಸಿದ್ಧ ಮಾಡಿದ, ಅಲಂಕಾರ ಮಾಡಿದ) ಜಾತ್ಯಶ್ವ ರಥಾಶ್ವ ಸಂಕುಳ (ಕುದುರೆಗಳ ಸಮೂಹ೦ ಖಲೀನೋದ್ಭೂತ ಲಾಲಾಜಲಂ(ಕಡಿವಾಣದಲ್ಲಿ ಉಂಟಾದ ಜೊಲ್ಲುನೀರು) ಕದಡೆ ಎೞ್ದು ಎತ್ತಮ(ಎಲ್ಲಾಕಡೆ) ಅವುಂಕೆ (ಕದಡಿಎದ್ದು ಎಲ್ಲಾಕಡೆ ಒತ್ತರಿಸಿ ಹೋಗಲು) ಬೇರೆ ಪರಭಾಗಂಬೆತ್ತು (ಬೇರೆ ಹೊಸಬಗೆಯ ಸೊಗಸನ್ನು ಹೊಂದಿ) ಲೋಕಕ್ಕೆ ಸನ್ನಿದಮಾಗಿರ್ದುವು (ಜನರಿಗೆ ಹತ್ತರವಾಗಿದ್ದವು) ಕೌರವಧ್ವಜಿನಿಯೊಳ್ (ಕೌರವ ಸೈನ್ಯದಲ್ಲಿ) ಕಾಳಿಂದಿಯುಂ ಗಂಗೆಯುಂ (ಗಂಗಾ ಯುಮುನಾ ನದಿಗಳಂತೆ ಕೌರವ ಸೈನ್ಯದಲ್ಲಿ ಹರಿಯುವ ಹಾಗಿದ್ದುವು.)
ಪದ್ಯ-೩೧:ಅರ್ಥ:ಮದ್ದಾನೆಗಳ ಮದೋದಕದ ಒಟ್ಟುಗೂಡಿದ ಪ್ರವಾಹವು ಒಂದೊಂದರಲ್ಲಿ ಒಂದೊಂದು ಕೂಡಿದಾಗ, ಸಿದ್ಧವಾಗಿ ಅಲಂಕೃತವಾಗಿರುವ ಜಾತ್ಯಶ್ವ ಮತ್ತು ರಥಾಶ್ವ (ಜಾತಿ ಕುದುರೆ ಮತ್ತು ತೇರಿನ ಕುದುರೆ)ಗಳ ಕಡಿವಾಣಗಳ ಸಮೂಹದಿಂದ ಹುಟ್ಟಿದ ಜೊಲ್ಲಿನ ರಸವೂ ಒಂದರೊಡನೊಂದುಗೂಡಲು (ಒಂದನ್ನೊಂದು ಒತ್ತರಿಸಲು) ಬೇರೆ ಹೊಸಬಗೆಯ ಸೊಗಸನ್ನು ಹೊಂದಿ ಗಂಗಾ ಯುಮುನಾ ನದಿಗಳಂತೆ ಕೌರವ ಸೈನ್ಯ ಪ್ರದೇಶದಲ್ಲಿ ಹರಿಯುವ ಹಾಗಿದ್ದುವು.
ವ|| ಅಂತು ದುರ್ಯೋಧನಂ ತನ್ನ ಬಲದ ಕರಿಘಟೆಗಳ ಕರ್ಣ ತಾಳಾಹತಿಯಿಂ ಕುಲಗಿರಿಗಳಳ್ಳಾಡೆಯುಂ ತನ್ನ ಬಲದ ಪದಾಭಿಘಾತದೊಳಂ ಕುಲಗಿರಿಗಳ್ ಜೀರೇೞ್ದು ಪಾೞೆಯುಂ ತನ್ನ ಬಲದ ಪದೋತ್ಥಿತ ರಜಮೆ ಮಹಾಸಮುದ್ರಂಗಳಂ ತೆಕ್ಕನೆ ತೀವೆಯುಂ ನಿಚ್ಚವಯಣದಿಂ ಬಂದು ಕುರುಕ್ಷೇತ್ರದ ಪೂರ್ವ ದಿಗ್ಭಾಗದೊಳ್ ಪ್ರಳಯಂ ಮೂರಿವಿಟ್ಟಂತೆ ಬೀಡಂಬಿಟ್ಟು ಧರ್ಮಪುತ್ರನಲ್ಲಿ ಗುಳೂಕನೆಂಬ ದೂತನನಿಂತೆಂದಟ್ಟಿದಂ
ವಚನ:ಪದವಿಭಾಗ-ಅರ್ಥ:ಅಂತು ದುರ್ಯೋಧನಂ ತನ್ನ ಬಲದ ಕರಿಘಟೆಗಳ ಕರ್ಣ ತಾಳಾಹತಿಯಿಂ (ಕಿವಿಯ ಬೀಸುವಿಕೆಯ ಪೆಟ್ಟಿನಿಂದ) ಕುಲಗಿರಿಗಳು ಅಳ್ಳಾಡೆಯುಂ ತನ್ನ ಬಲದ ಪದಾಭಿಘಾತದೊಳಂ (ಅವನ ಸೈನ್ಯದ ಕಾಲಿನ ತುಳಿತದಿಂದ ಕುಲಪರ್ವತಗಳು ಪುಡಿಯಾಗಿ ಮೇಲಕ್ಕೆದ್ದು ಹಾರಿದುವು.) ಕುಲಗಿರಿಗಳ್ ಜೀರೇೞ್ದು ಪಾರೇೞೆಯುಂ (ಕುಲಪರ್ವತಗಳು ಜೀರೆಂದ ಸದ್ದುಮಾಡುತ್ತಾ ಮೇಲಕ್ಕೆದ್ದು ಹಾರಿದುವು.) ತನ್ನ ಬಲದ ಪದೋತ್ಥಿತ ರಜಮೆ (ಅವನ ಸೈನ್ಯದ ಕಾಲಿನಿಂದ ಎದ್ದ ಧೂಳೇ) ಮಹಾಸಮುದ್ರಂಗಳಂ ತೆಕ್ಕನೆ ತೀವೆಯುಂ (ಇದ್ದಕ್ಕಿದ್ದ ಹಾಗೆ ತುಂಬಿ,) ನಿಚ್ಚವಯಣದಿಂ (ನಿತ್ಯಪ್ರಯಾಣದಿಂದ) ಬಂದು ಕುರುಕ್ಷೇತ್ರದ ಪೂರ್ವ ದಿಗ್ಭಾಗದೊಳ್ (ಪೂರ್ವದಿಕ್ಕಿನ ಭಾಗದಲ್ಲಿ) ಪ್ರಳಯಂ ಮೂರಿವಿಟ್ಟಂತೆ ಬೀಡಂಬಿಟ್ಟು (ಗುಂಪುಕೂಡಿದ ಹಾಗೆ ಬೀಡನ್ನು ಬಿಟ್ಟು) ಧರ್ಮಪುತ್ರನಲ್ಲಿ ಗುಳೂಕನೆಂಬ ದೂತನನು ಇಂತೆಂದು ಅಟ್ಟಿದಂ (ಉಳೂಕನೆಂಬ ಆಳಿನ ಮೂಲಕ ಹೀಗೆಂದು ಹೇಳಿ ಕಳುಹಿಸಿದನು.)
ವಚನ:ಅರ್ಥ: ಹೀಗೆ ದುರ್ಯೋಧನನ ಸೈನ್ಯದ ಆನೆಗಳ ಹಿಂಡಿನ ಕಿವಿಯ ಬೀಸುವಿಕೆಯ ಪೆಟ್ಟಿನಿಂದ ಕುಲಪರ್ವತಗಳಳ್ಳಾಡಿದುವು. ಅವನ ಸೈನ್ಯದ ಕಾಲಿನ ತುಳಿತದಿಂದ ಕುಲಪರ್ವತಗಳು ಜೀರೆಂದ ಸದ್ದುಮಾಡುತ್ತಾ ಮೇಲಕ್ಕೆದ್ದು ಹಾರಿದುವು. ಅವನ ಸೈನ್ಯದ ಕಾಲಿನಿಂದ ಎದ್ದ ಧೂಳೇ ಮಹಾಸಮುದ್ರಗಳನ್ನು ಇದ್ದಕ್ಕಿದ್ದ ಹಾಗೆ ತುಂಬಿತು. ಹೀಗೆ ನಿತ್ಯಪ್ರಯಾಣದಿಂದ ಬಂದು ಕುರುಕ್ಷೇತ್ರದ ಪೂರ್ವದಿಕ್ಕಿನ ಭಾಗದಲ್ಲಿ ಪ್ರಳಯ ಕಾಲವೇ ಗುಂಪುಕೂಡಿದ ಹಾಗೆ ಬೀಡನ್ನು ಬಿಟ್ಟು ದುರ್ಯೋಧನನು ಧರ್ಮರಾಜನ ಹತ್ತಿರಕ್ಕೆ ಉಳೂಕನೆಂಬ ಆಳಿನ ಮೂಲಕ ಹೀಗೆಂದು ಹೇಳಿ ಕಳುಹಿಸಿದನು.
ಚಂ|| ಮಸೆಯಿಸುಗುಳ್ಳ ಕೆಯ್ದುಗಳನರ್ಚಿಸುಗಾನೆಗಳಂ ತಗುಳ್ದು ಪೂ
ಜಿಸುಗೆ ವಿಶುದ್ಧ ವಾಜಿಗಳನಾಜಿಗೆ ಜೆಟ್ಟಿಗರಾಗಿ ಕೊಳ್ಳಿವೀ|
ಸೀಸುಗೆ ನಿರಂತರಂ ರವಳಿ ಘೋಷಿಸುಗಿಂದೆ ಕಡಂಗಿ ಸಾರ್ಚಿ ಬಿ
ಟ್ಟುಸಿರದೆ ನಿಲ್ವ ಕಾರಣಮದಾವುದೊ ನೆಟ್ಟನೆ ನಾಳೆ ಕಾಳೆಗಂ|| ೩೨ ||
ಪದ್ಯ-೩೨:ಪದವಿಭಾಗ-ಅರ್ಥ:ಮಸೆಯಿಸುಗೆ ಉಳ್ಳ ಕೆಯ್ದುಗಳನು (ಇರುವ ಆಯುಧಗಳನ್ನು ಮಸೆದು ಹರಿತಮಾಡಲಿ) ಅರ್ಚಿಸುಗೆ ಆನೆಗಳಂ (ಆನೆಗಳನ್ನು ಪೂಜಿಸಲಿ,) ತಗುಳ್ದು ಪೂಜಿಸುಗೆ ವಿಶುದ್ಧ ವಾಜಿಗಳನು (ಪರಿಶುದ್ಧರಾದ ಕುದುರೆಗಳನ್ನು ಹೊಂದಿಸಿ ಶ್ರದ್ಧೆಯಿಂದ ಪೂಜಿಸಲಿ;) ಆಜಿಗೆ ಜೆಟ್ಟಿಗರಾಗಿ ಕೊಳ್ಳಿವೀಸೀಸುಗೆ ( ಯುದ್ಧವೀರರಾಗಿ ಯುದ್ಧ ಸೂಚಕಗಳಾದ ದೀವಟಿಗೆಗಳನ್ನು ಬೀಸಿಸಲಿ.) ನಿರಂತರಂ ರವಳಿ(ಶಬ್ದ,ಕೂಗು) ಘೋಷಿಸುಗೆ (ನಿಲ್ಲಿಸದೆ ಒಂದೇಸಮನಾಗಿ ಯುದ್ಧ ಕೂಗು ಘೋಷವಾಗುತ್ತಿರಲಿ;) ಇಂದೆ ಕಡಂಗಿ ಸಾರ್ಚಿ (ಉತ್ಸಾಹದಿಂದ ಕೂಡಿ ಮುಂದೆ ಸತ್ತಿರ ಬಂದು) ಬಿಟ್ಟು ಉಸಿರದೆ ನಿಲ್ವ ಕಾರಣಂ ಅದಾವುದೊ (ಯುದ್ಧಮಾಡಬೇಕಾದ ಯುದ್ಧರಂಗದಲ್ಲಿ ಸುಮ್ಮನಿರಲು ಕಾರಣವೇನೋ?) ನೆಟ್ಟನೆ ನಾಳೆ ಕಾಳೆಗಂ (ನೇರವಾಗಿ ನಾಳೆಯಿಂದಲೇ ಕಾಳಗ ಪ್ರಾರಂಭ.)
ಪದ್ಯ-೩೨:ಅರ್ಥ: ಇರುವ ಆಯುಧಗಳನ್ನು ಮಸೆದು ಹರಿತಮಾಡಲಿ, ಆನೆಗಳನ್ನು ಪೂಜಿಸಲಿ, ಪರಿಶುದ್ಧರಾದ ಕುದುರೆಗಳನ್ನು ಹೊಂದಿಸಿ ಶ್ರದ್ಧೆಯಿಂದ ಪೂಜಿಸಲಿ; ಯುದ್ಧವೀರರಾಗಿ ಯುದ್ಧ ಸೂಚಕಗಳಾದ ದೀವಟಿಗೆಗಳನ್ನು ಬೀಸಿಸಲಿ. ನಿಲ್ಲಿಸದೆ ಒಂದೇಸಮನಾಗಿ ಯುದ್ಧ ಕೂಗು ಘೋಷವಾಗುತ್ತಿರಲಿ; ಇಂದೇ ಉತ್ಸಾಹದಿಂದ ಕೂಡಿ ಮುಂದೆ ಸತ್ತಿರ ಬಂದು ಯುದ್ಧಮಾಡಬೇಕಾದ ಯುದ್ಧರಂಗದಲ್ಲಿ ಸುಮ್ಮನಿರಲು ಕಾರಣವೇನೋ? ನೇರವಾಗಿ ನಾಳೆಯಿಂದಲೇ ಕಾಳಗ ಪ್ರಾರಂಭ.
ವ|| ಎಂದಾ ದೂತನಾ ಮಾೞ್ಕೆಯೊಳೆ ಬಂದು ಪೇೞೆ ಕೇಳ್ದು ಯಮನಂದನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಆ ದೂತನು ಆ ಮಾೞ್ಕೆಯೊಳೆ ಬಂದು ಪೇೞೆ (ದೂತನು ಆ ರೀತಿಯಿಂದಲೇ ಬಂದು ಹೇಳಲು)ಕೇಳ್ದು ಯಮನಂದನನು ಇಂತೆಂದಂ-
ವಚನ:ಅರ್ಥ:ವ|| ಎಂದು ಹೇಳಿದ ಆ ಮಾತನ್ನು ಆ ದೂತನು ಆ ರೀತಿಯಿಂದಲೇ ಬಂದು ಹೇಳಲು ಧರ್ಮರಾಜನು ಕೇಳಿ ಹೀಗೆಂದನು.
ಚಂ|| ಪಗೆ ಮಸೆದಂದೆ ಕೆಯ್ದು ಮಸೆದಿರ್ದುವು ಪೂಡಿಸುವಂಕದಾನೆ ವಾ
ಜಿಗಳೆಮಗಿಲ್ಲ ಜಟ್ಟಿಗರೆ ಎನ್ನೊಡವುಟ್ಟಿದರಲ್ತೆ ನಾಲ್ಕುಮಾ|
ನೆಗಳಿವನಾಂ ದಲಿಂ ರಣದೊಳರ್ಚಿಸಿ ಬಿಟ್ಟಪೆನೇಕೆ ಮಾಣ್ಬೆನಾ
ವಗಮಿದನಂತೆ ಪೇೞು ನೆರೆಯೆ ನಾಳೆಯೆ ಕಾಳೆಗಮಂತೆ ಗೆಯ್ವಮಾಂ|| ೩೩
ಪದ್ಯ-೩೩:ಪದವಿಭಾಗ-ಅರ್ಥ:ಪಗೆ ಮಸೆದಂದೆ ಕೆಯ್ದು (ಆಯುಧಗಳು) ಮಸೆದಿರ್ದುವು (ಹಗೆತನ ಪ್ರಾರಂಭವಾದ ದಿನವೇ ಆಯುಧಗಳು ಸಾಣೆಹಿಡಿಯಲ್ಪಟ್ಟಿವೆ.) ಪೂಡಿಸುವ ಅಂಕದಾನೆ ವಾಜಿಗಳು ಎಮಗಿಲ್ಲ ( ಪೂಜಿಸಬೇಕಾದ ಪಟ್ಟದ ಆನೆ ಕುದುರೆಗಳು ನಮಗಿಲ್ಲ) ಜಟ್ಟಿಗರೆ ಎನ್ನ ಒಡವುಟ್ಟಿದರಲ್ತೆ (ನನ್ನೊಡನೆ ಹುಟ್ಟಿದವರೇ ಜಟ್ಟಿಗಳಾದವರಲ್ಲವೇ?) ನಾಲ್ಕುಂ ಆನೆಗಳು ಅವನು ಆಂ ದಲ್ ಇಂ ರಣದೊಳು ಅರ್ಚಿಸಿ ಬಿಟ್ಟಪೆನು (ಈ ನಾಲ್ಕು ಆನೆಗಳನ್ನೇ ಪೂಜಿಸಿ ಯುದ್ಧದಲ್ಲಿ ಬಿಡುತ್ತೇನೆ.) ಏಕೆ ಮಾಣ್ಬೆನು ( ಏಕೆ ತಡೆಯಲಿ?) ಆವಗಂ (ಪೂರ್ಣವಾಗಿ? ಅಷ್ಟನ್ನೂ,) ಇದನು ಅಂತೆ ಪೇೞು (ಇದನ್ನು ಹೀಗೆಯೇ ಪೂರ್ಣವಾಗಿ ಹೇಳು) ನೆರೆಯೆ ನಾಳೆಯೆ ಕಾಳೆಗಮ್ ಅಂತೆ ಗೆಯ್ವಂ ಆಂ (ನಾವು) (ಹೆಚ್ಚಾಗಿ, ನಾಳೆಯೇ ಯುದ್ಧವಾಗಲಿ. ನಾವೂ ಹಾಗೆಯೇ ಮಾಡುತ್ತೇವೆ)
ಪದ್ಯ-೩೩:ಅರ್ಥ: ಹಗೆತನ ಪ್ರಾರಂಭವಾದ ದಿನವೇ ಆಯುಧಗಳು ಸಾಣೆಹಿಡಿಯಲ್ಪಟ್ಟಿವೆ. ಪೂಜಿಸಬೇಕಾದ ಪಟ್ಟದ ಆನೆ ಕುದುರೆಗಳು ನಮಗಿಲ್ಲ; ನನ್ನೊಡನೆ ಹುಟ್ಟಿದವರೇ ಜಟ್ಟಿಗಳಾದವರಲ್ಲವೇ? ಈ ನಾಲ್ಕು ಆನೆಗಳನ್ನೇ ಪೂಜಿಸಿ ಯುದ್ಧದಲ್ಲಿ ಬಿಡುತ್ತೇನೆ. ಏಕೆ ತಡೆಯಲಿ? ಇದನ್ನು ಹೀಗೆಯೇ ಪೂರ್ಣವಾಗಿ ಹೇಳು. ಹೆಚ್ಚಾಗಿ, ನಾಳೆಯೇ ಯುದ್ಧವಾಗಲಿ. ನಾವೂ ಹಾಗೆಯೇ ಮಾಡುತ್ತೇವೆ.

ದೃಪದನ ಮಗ ಶ್ವೇತನಿಗೆ ವೀರಪಟ್ಟ[ಸಂಪಾದಿಸಿ]

ವ|| ಎಂದಾ ದೂತನಂ ವಿಸರ್ಜಿಸಿ ಪುಂಡರೀಕಾಕ್ಷಂಗೆ ಬೞಿಯನಟ್ಟಿ ಬರಿಸಿ ನಮ್ಮ ಪಡೆಯೊಳಾರ್ಗೆ ವೀರಪಟ್ಟಮಂ ಕಟ್ಟುವಂ ಪೇೞಮೆನೆ-
ವಚನ:ಪದವಿಭಾಗ-ಅರ್ಥ:ಎಂದಾ ದೂತನಂ ವಿಸರ್ಜಿಸಿ (ಕಳುಹಿಸಿ,) ಪುಂಡರೀಕಾಕ್ಷಂಗೆ ಬೞಿಯನಟ್ಟಿ ಬರಿಸಿ (ದೂತರ ಮೂಲಕ ಕಳುಹಿಸಿ ಬರಮಾಡಿಕೊಂಡು) ನಮ್ಮ ಪಡೆಯೊಳಾರ್ಗೆ ವೀರಪಟ್ಟಮಂ ಕಟ್ಟುವಂ ಪೇೞಿಂ ಎನೆ ()-
ವಚನ:ಅರ್ಥ:ವ|| ಎಂದು ಆ ದೂತನನ್ನು ಕಳುಹಿಸಿ, ಶ್ರೀಕೃಷ್ಣನಿಗೆ ಸಮಾಚಾರವನ್ನು ದೂತರ ಮೂಲಕ ಕಳುಹಿಸಿ ಬರಮಾಡಿಕೊಂಡು, ‘ನಮ್ಮ ಸೈನ್ಯದಲ್ಲಿ ಯಾರಿಗೆ ವೀರಪಟ್ಟವನ್ನು ಕಟ್ಟೋಣ ಅಪ್ಪಣೆ ಕೊಡಿ’ ಎಂದು ಕೇಳಲು-
ಶಾ|| ಮಾತಂಗಾಸುರವೈರಿಯಲ್ಲಿ ಪಡೆದುಂ ಬಿಲ್ಲಂ ಧನುರ್ವಿದ್ಯೆಗಂ
ತಾತಂಗಗ್ಗಳಮಾರುಮಲ್ಲದಱಿನಾ ಶ್ವೇತಂಗಮಂತಾ ನದೀ
ಜಾತಂಗಂ ದೊರೆ ಯುದ್ಧಮೆಂದಱಿದು ತಚ್ಛ್ವೇತಂಗೆ ಭೂಲೋಕವಿ
ಖ್ಯಾತಂಗಗ್ಗಳ ವೀರಪಟ್ಟಮನುದಾರಂ ಕಟ್ಟಿದಂ ಧರ್ಮಜಂ|| ೩೪ ||
ಪದ್ಯ-೩೪:ಪದವಿಭಾಗ-ಅರ್ಥ:ಮಾತಂಗಾಸುರವೈರಿಯಲ್ಲಿ (ಶಿವನಲ್ಲಿ) ಪಡೆದುಂ ಬಿಲ್ಲಂ (ಈಶ್ವರನಲ್ಲಿ ಬಿಲ್ಲನ್ನು ಪಡೆದಿದ್ದಾನೆ.) ಧನುರ್ವಿದ್ಯೆಗಂ ತಾತಂಗೆ ಅಗ್ಗಳಂ ಆರುಂ ಅಲ್ಲ ಅದಱಿಂ (ಬಿಲ್ವಿದ್ಯೆಯಲ್ಲಿ ಆತನನ್ನು ಮೀರಿಸುವವರಾರೂ ಇಲ್ಲ.) ಆ ಶ್ವೇತಂಗಂ ಅಂತು ಆ ನದೀಜಾತಂಗಂ ದೊರೆ ಯುದ್ಧಮೆಂದು ಅಱಿದು (ಆದುದರಿಂದ ಆ ಶ್ವೇತನಿಗೂ ಭೀಷ್ಮನಿಗೂ ಯುದ್ಧವು ಸಮಾನವಾದುದು ಎಂದು ತಿಳಿದು) ತಚ್ಛ್ವೇ ತಂಗೆ (ತತ್ ಶ್ವೇತಂಗೆ) ಭೂಲೋಕವಿಖ್ಯಾತಂಗೆ ಅಗ್ಗಳ ವೀರಪಟ್ಟಮನು ಉದಾರಂ ಕಟ್ಟಿದಂ ಧರ್ಮಜಂ (ಉದಾರಿಯಾದ ಧರ್ಮರಾಜನು ಭೂಲೋಕವಿಖ್ಯಾತನಾದ ಶ್ವೇತನಿಗೆ ಅತಿಶಯವಾದ ವೀರಪಟ್ಟವನ್ನು ಕಟ್ಟಿದನು. )
ಪದ್ಯ-೩೪:ಅರ್ಥ: ಶ್ವೇತನು ಶಿವನಲ್ಲಿ ಬಿಲ್ಲನ್ನು ಪಡೆದಿದ್ದಾನೆ. ಬಿಲ್ವಿದ್ಯೆಯಲ್ಲಿ ಆತನನ್ನು ಮೀರಿಸುವವರಾರೂ ಇಲ್ಲ. ಆದುದರಿಂದ ಆ ಶ್ವೇತನಿಗೂ ಭೀಷ್ಮನಿಗೂ ಯುದ್ಧವು ಸಮಾನವಾದುದು ಎಂದು ತಿಳಿದು ಆ ಉದಾರಿಯಾದ ಧರ್ಮರಾಜನು ಭೂಲೋಕವಿಖ್ಯಾತನಾದ ಶ್ವೇತನಿಗೆ ಅತಿಶಯವಾದ ವೀರಪಟ್ಟವನ್ನು ಕಟ್ಟಿದನು.
ವ|| ಅಂತು ವಿರಾಟನಂದನನಂ ಧರ್ಮನಂದನಂ ಸೇನಾನಾಯಕನಂ ಮಾಡೆ ನಾಳೆ ಕಾಳಗಮೆಂದು ಪಡೆವಳರ್ ಪೋಗಿ ಸಾಱಿಮೆಂಬುದುಮವರ್ ಬೀಡುವೀಡುಗಳ್ಗೆಲ್ಲಂ ಸಾಱಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ವಿರಾಟನಂದನನಂ ಧರ್ಮನಂದನಂ ಸೇನಾನಾಯಕನಂ ಮಾಡೆ ನಾಳೆ ಕಾಳಗಮೆಂದು ಪಡೆವಳರ್ ಪೋಗಿ (ಸೇನಾಪತಿಗಳು ಹೋಗಿ) ಸಾಱಿಂ ಮೆಂಬುದುಂ ಅವರ್ ಬೀಡುವೀಡುಗಳ್ಗೆಲ್ಲಂ ಸಾಱಿದಾಗಳ್ (ಸಾರಿರಿ ಎನ್ನಲು ಅವರು ಬೀಡುಬೀಡುಗಳಲ್ಲೆಲ್ಲ ಘೋಷಿಸಿದರು-)-
ವಚನ:ಅರ್ಥ:ಹಾಗೆ ವಿರಾಟನ ಮಗನಾದ ಶ್ವೇತನನ್ನು ಧರ್ಮರಾಜನು ಸೇನಾನಾಯಕನನ್ನಾಗಿ ಮಾಡಲು, ನಾಳೆಯೇ ಯುದ್ಧವೆಂದು ಸೇನಾಪತಿಗಳು ಹೋಗಿ ಸಾರಿರಿ ಎನ್ನಲು ಅವರು ಬೀಡುಬೀಡುಗಳಲ್ಲೆಲ್ಲ ಘೋಷಿಸಿದರು-
ಚಂ|| ಪಗೆ ಸುಗಿವನ್ನೆಗಂ ಮಸೆವ ವೀರಭಟರ್ಕಳ ರೌದ್ರಮಪ್ಪ ಕೆ
ಯ್ದುಗಳಿನಗುರ್ವಿನದ್ಭುತದಿನುರ್ವಿದ ಕೆಂಗಿಡಿಗಳ್ ಪಳಂಚಿ ತೊ|
ಟ್ಟಗೆ ಕೊಳೆ ಪಾಯ್ದವೋಲ್ ಪೊಳೆವ ಸಂಜೆಯ ಕೆಂಪದು ಸಾಣೆಗೊಡ್ಡಿದಿ
ಟ್ಟಗೆಯ ರಜಂಬೊಲೆಂಬಿನೆಗಮಸ್ತಮಯಕ್ಕಿೞಿದಂ ದಿವಾಕರಂ|| ೩೫ ||
ಪದ್ಯ-೩೫:ಪದವಿಭಾಗ-ಅರ್ಥ:ಪಗೆ ಸುಗಿವ ಅನ್ನೆಗಂ (ಶತ್ರುವು ಹೆದರುವಂತೆ) ಮಸೆವ ವೀರಭಟರ್ಕಳ ರೌದ್ರಮಪ್ಪ ಕೆಯ್ದುಗಳಿಂ (ಮಸೆದಿರುವ ವೀರಭಟರುಗಳ ಭಯಂಕರವಾದ ಆಯುಧಗಳಿಂದ) ಅಗುರ್ವಿನ ಅದ್ಭುತದಿಂ ಉರ್ವಿದ ಕೆಂಗಿಡಿಗಳ್ (ಭಯಂಕರವೂ ಆಶ್ಚರ್ಯಕರವೂ ಆಗಿ ಎದ್ದಿರುವ ಕೆಂಗಿಡಿಗಳು) ಪಳಂಚಿ ತೊಟ್ಟಗೆ ಕೊಳೆ ಪಾಯ್ದವೋಲ್ (ತಾಗಿ ಕೂಡಲೆ ಹಿಡಿಯಲು ನುಗ್ಗಿದಂತೆ ಕಾಣುವ,) ಪೊಳೆವ ಸಂಜೆಯ ಕೆಂಪದು (ಹೊಳೆಯುತ್ತಿರುವ ಆ ಸಂಜೆಗೆಂಪು, ಅದು) ಸಾಣೆಗೆ ಒಡ್ಡಿದ ಇಟ್ಟಗೆಯ ರಜಂಬೊಲ್ ಎಂಬಿನೆಗಂ (ಸಾಣೆಗೆ ಕೊಟ್ಟ ಇಟ್ಟಿಗೆಯ ಧೂಳೆನ್ನುವ ಹಾಗಿರಲು) ಅಸ್ತಮಯಕ್ಕೆ ಇೞಿದಂ ದಿವಾಕರಂ (ಸೂರ್ಯನು ಅಸ್ತವಾಗಲು ಇಳಿದನು)
ಪದ್ಯ-೩೫:ಅರ್ಥ: ಶತ್ರುವು ಹೆದರುವ ಹಾಗೆ ಮಸೆದಿರುವ ವೀರಭಟರುಗಳ ಭಯಂಕರವಾದ ಆಯುಧಗಳಿಂದ ಭಯಂಕರವೂ ಆಶ್ಚರ್ಯಕರವೂ ಆಗಿ ಎದ್ದಿರುವ ಕೆಂಗಿಡಿಗಳು ತಾಗಿ ಕೂಡಲೆ ಹಿಡಿಯಲು ನುಗ್ಗಿದಂತೆ ಕಾಣುವ, ಹೊಳೆಯುತ್ತಿರುವ ಆ ಸಂಜೆಗೆಂಪು ಸಾಣೆಗೆ ಕೊಟ್ಟ ಇಟ್ಟಿಗೆಯ ಧೂಳೆನ್ನುವ ಹಾಗಿರಲು ಸೂರ್ಯನು ಅಸ್ತವಾಗಲು ಇಳಿದನು
ವ|| ಆಗಳುಭಯಬಲಂಗಳೊಳಂ ಚಾತುರ್ಯಾಮಾವಸಾನಘಟಿತ ಘಂಟಿಕಾಧ್ವನಿಗಳುಂ ಸಂಧ್ಯಾಸಮಯಸಮುದಿತ ಶಂಖಧ್ವನಿಗಳುಂ ಪಂಚಮಹಾಶಬ್ದಧ್ವನಿಗಳುಮೊಡನೊಡನೆ ನೆಗೞ್ದುವಾಗಳೆರಡುಂ ಬೀಡುಗಳೊಳಂ ಭೋರೆಂದಾರ್ದು ರವಳಿ ಘೋಷಿಸಿ ಕೊಳ್ಳಿವೀಸಿದಾಗಳ್-
ವಚನ:ಪದವಿಭಾಗ-ಅರ್ಥ:ಆಗಳು ಉಭಯ ಬಲಂಗಳೊಳಂ ಚಾತುರ್ಯಾಂ ಆವಸಾನಘಟಿತ ಘಂಟಿಕಾಧ್ವನಿಗಳುಂ (ನಾಲ್ಕು ಜಾವಗಳ ಕಡೆಯಲ್ಲಿ ಉಂಟಾಗುವ ಗಂಟೆಯ ಶಬ್ದಗಳೂ) ಸಂಧ್ಯಾಸಮಯ ಸಮುದಿತ ಶಂಖಧ್ವನಿಗಳುಂ (ಸಂಧ್ಯಾಕಾಲದಲ್ಲಿ ಶಂಖಧ್ವನಿಗಳೂ) ಪಂಚಮಹಾಶಬ್ದಧ್ವನಿಗಳುಂ ಒಡನೊಡನೆ ನೆಗೞ್ದುವು (ಪಂಚಮಹಾಧ್ವನಿಗಳೂ ಜೊತೆಜೊತೆಯಲ್ಲಿಯೇ ಉಂಟಾದುವು) ಆಗಳ್ ಎರಡುಂ ಬೀಡುಗಳೊಳಂ (<-ಆಗ ಎರಡೂ ಸೈನ್ಯಗಳಲ್ಲಿ ) ಭೋರೆಂದು ಆರ್ದು ರವಳಿ (ಸದ್ದು) ಘೋಷಿಸಿ ಕೊಳ್ಳಿವೀಸಿದಾಗಳ್ (ಭೋರೆಂದು ಸಾಮೂಹಿಕ ಶಬ್ದವನ್ನು ಘೋಷಿಸಿ ಆ ಯುದ್ಧಸೂಚಕವಾದ ಕೊಳ್ಳಿಯ/ ದೀವಟಿಗೆಗಳನ್ನು ಬೀಸಿದರು)-
ವಚನ:ಅರ್ಥ:ಆಗ ಎರಡೂ ಸೈನ್ಯಗಳಲ್ಲಿ ನಾಲ್ಕು ಜಾವಗಳ ಕಡೆಯಲ್ಲಿ ಉಂಟಾಗುವ ಗಂಟೆಯ ಶಬ್ದಗಳೂ ಸಂಧ್ಯಾಕಾಲದಲ್ಲಿ ಶಂಖಧ್ವನಿಗಳೂ ಪಂಚಮಹಾಧ್ವನಿಗಳೂ ಜೊತೆಜೊತೆಯಲ್ಲಿಯೇ ಉಂಟಾದುವು. ಆಗ ಎರಡು ಬೀಡುಗಳಲ್ಲಿಯೂ ಭೋರೆಂದು ಸಾಮೂಹಿಕ ಶಬ್ದವನ್ನು ಘೋಷಿಸಿ ಆ ಯುದ್ಧಸೂಚಕವಾದ ದೀವಟಿಗೆಗಳನ್ನು ಬೀಸಿದರು.
ಕಂ|| ಉರಿಮುಟ್ಟಿದರಳೆಯಂತಂ
ಬರಮುರಿದತ್ತಜನ ಪದ್ಮವಿಷ್ಟರದೆಸಳಂ|
ದರೆಸೀದುವಖಿಳ ದಿಗ್ದ್ವಿ ರ
ದರದಂಗಳ್ ಕರಮೆ ಕರಿಪುಗಾಱಿದುವಾಗಳ್|| ೩೬ ||
ಪದ್ಯ-೩೬:ಪದವಿಭಾಗ-ಅರ್ಥ:ಉರಿಮುಟ್ಟಿದ ಅರಳೆಯಂತೆ ಅಂಬರಂ ಉರಿದತ್ತು (ಬೆಂಕಿ ತಗುಲಿದ ಹತ್ತಿಯಂತೆ ಆಕಾಶವು ಉರಿದುಹೋಯಿತು.) ಅಜನ ಪದ್ಮವಿಷ್ಟರದ ಎಸಳು ಅಂದು ಅರೆಸೀದುವು ಅಖಿಳ ದಿಕ್ ದ್ವಿರದ ರದಂಗಳ್ (ಎಲ್ಲ ದಿಗ್ಗಜಗಳ ದಂತಗಳೂ) ಕರಮೆ ಕರಿಪುಗಾಱಿದುವು ಆಗಳ್
ಪದ್ಯ-೩೬:ಅರ್ಥ:ಬೆಂಕಿ ತಗುಲಿದ ಹತ್ತಿಯಂತೆ ಆಕಾಶವು ಉರಿದುಹೋಯಿತು. ಬ್ರಹ್ಮನ ಕಮಲಾಸನದ ದಳಗಳು ಅರ್ಧ ಸುಟ್ಟವು. ಎಲ್ಲ ದಿಗ್ಗಜಗಳ ದಂತಗಳೂ ವಿಶೇಷವಾಗಿ (ಕರುಕಲು) ಕರ್ರಗಾದುವು
ವ|| ಅಂತು ಕೊಳ್ಳಿವೀಸಿದಿಂಬೞಿಯಂ-
ವಚನ:ಪದವಿಭಾಗ-ಅರ್ಥ:ಅಂತು ಕೊಳ್ಳಿವೀಸಿದ ಇಂಬೞಿಯಂ-
ವಚನ:ಅರ್ಥ:ಹಾಗೆ ಕೊಳ್ಳಿ ಬೀಸಿದ ಅನಂತರ-
ಕಂ|| ಧೃತ ಧವಳವಸನರಾರಾ
ಧಿತಶಿವರರ್ಚಿತ ಸಮಸ್ತಶಸ್ತ್ರರ್ ನೀರಾ|
ಜಿತತುರಗರೊಪ್ಪಿದರ್ ಕೆಲ
ರತಿರಥ ಸಮರಥ ಮಹಾರಥಾರ್ಧರಥರ್ಕಳ್|| ೩೭ ||
ಪದ್ಯ-೩೭:ಪದವಿಭಾಗ-ಅರ್ಥ:ಧೃತ (ಧರಿಸಿದ) ಧವಳವಸನರ್ ಆರಾಧಿತ ಶಿವರ್ ಅರ್ಚಿತ ಸಮಸ್ತಶಸ್ತ್ರರ್ (ಬಿಳಿವಸ್ತ್ರವನ್ನು ಧರಿಸಿದವರೂ ಶಿವನನ್ನು ಆರಾಸಿದವರೂ ಸಮಸ್ತ ಆಯುಧಗಳನ್ನು ಪೂಜಿಸಿದವರೂ) ನೀರಾಜಿತ ತುರಗರ್ ಒಪ್ಪಿದರ್ (ಆರತಿಯನ್ನೆತ್ತಿದ ಕುದುರೆಗಳುಳ್ಳವರೂ ಶೋಭಿಸಿದರು.) ಕೆಲರು ಅತಿರಥ ಸಮರಥ ಮಹಾರಥ ಅರ್ಧರಥರ್ಕಳ್ (- ಒಪ್ಪಿದರ್) (ಕೆಲವರು ಅತಿರಥ, ಸಮರಥ, ಮಹಾರಥ, ಅರ್ಧರಥರುಗಳು ಪ್ರಕಾಶಿಸಿದರು)
ಪದ್ಯ-೩೭:ಅರ್ಥ: ಆ ಸೈನ್ಯದಲ್ಲಿ ಬಿಳಿವಸ್ತ್ರವನ್ನು ಧರಿಸಿದವರೂ ಶಿವನನ್ನು ಆರಾಸಿದವರೂ ಸಮಸ್ತ ಆಯುಧಗಳನ್ನು ಪೂಜಿಸಿದವರೂ, ಆರತಿಯನ್ನೆತ್ತಿದ ಕುದುರೆಗಳುಳ್ಳವರೂ ಶೋಭಿಸಿದರು. ಕೆಲವರು ಅತಿರಥ, ಸಮರಥ, ಮಹಾರಥ, ಅರ್ಧರಥರುಗಳು ಪ್ರಕಾಶಿಸಿದರು.
ಉಡಲುಂ ತುಡಲುಂ ವಸ್ತ್ರಂ
ತುಡುಗೆಯನಾನೆಯುಮನರ್ಥಿಸಂತತಿಗೀಯಲ್|
ಬಿಡುವೊನ್ನುಮನಾಳ್ಗಟ್ಟುವ
ತೊಡರೊಳ್ ತೊಡರ್ದಿರ್ದರರಸುಮಕ್ಕಳ್ ಕೆಲಬರ್|| ೩೮ ||
ಪದ್ಯ-೩೮:ಪದವಿಭಾಗ-ಅರ್ಥ:ಉಡಲುಂ ತುಡಲುಂ ವಸ್ತ್ರಂತುಡುಗೆಯಂ ಆನೆಯುಮಂ ಅರ್ಥಿಸಂತತಿಗೆ ಈಯಲ್ (ಉಡಲು ವಸ್ತ್ರವನ್ನೂ ತೊಡಲು ಆಭರಣವನ್ನೂ ಆನೆಯನ್ನೂ ಯಾಚಕಸಮೂಹಕ್ಕೆ ಕೊಡಲು) ಬಿಡುವೊನ್ನುಮಂ ಆಳ್ಗೆ ಅಟ್ಟುವ ತೊಡರೊಳ್ (ಬಿಡಿ ಹೊನ್ನುಗಳನ್ನೂ ಸೇವಕರಿಗೆ ಕಳುಹಿಸುವ ತೊಡಕಿನಲ್ಲಿ) ತೊಡರ್ದಿರ್ದರು ಅರಸುಮಕ್ಕಳ್ ಕೆಲಬರ್ (ಬಿಡಿ ಹೊನ್ನುಗಳನ್ನೂ ಸೇವಕರಿಗೆ ಕಳುಹಿಸುವ ತೊಡಕಿನಲ್ಲಿ ಕೆಲವು ಅರಸು ಮಕ್ಕಳು ತೊಡಗಿದ್ದರು. )
ಪದ್ಯ-೩೮:ಅರ್ಥ:ಉಡಲು ವಸ್ತ್ರವನ್ನೂ ತೊಡಲು ಆಭರಣವನ್ನೂ ಆನೆಯನ್ನೂ ಯಾಚಕಸಮೂಹಕ್ಕೆ ಕೊಡಲು ಬಿಡಿ ಹೊನ್ನುಗಳನ್ನೂ ಸೇವಕರಿಗೆ ಕಳುಹಿಸುವ ತೊಡಕಿನಲ್ಲಿ ಕೆಲವು ಅರಸು ಮಕ್ಕಳು ತೊಡಗಿದ್ದರು.

ಸೈನಿಕ ಶೂರರ ವೀರಾಲಾಪ ಮತ್ತು ಸಿದ್ಧತೆ[ಸಂಪಾದಿಸಿ]

ವ|| ಆ ಪ್ರಸ್ತಾವದೊಳೊರ್ವಂ ತನ್ನ ದೋರ್ವಲದಗುರ್ವಿನೊಳುರ್ವೀಪತಿಯನಿಂತೆಂದಂ-
ವಚನ:ಪದವಿಭಾಗ-ಅರ್ಥ:ಆ ಪ್ರಸ್ತಾವದೊಳು ಒರ್ವಂ ತನ್ನ ದೋರ್ವಲದ ಅಗುರ್ವಿನೊಳು ಉರ್ವೀಪತಿಯನು ಇಂತೆಂದಂ-
ವಚನ:ಅರ್ಥ:ಆ ಸಂದರ್ಭದಲ್ಲಿ ಒಬ್ಬನು ತನ್ನ ತೋಳಬಲದ ಆಧಿಕ್ಯದಿಂದ ರಾಜನಿಗೆ ಹೀಗೆ ಹೇಳಿದನು-
ಉ|| ನಾಳೆ ವಿರೋಧಿ ಸಾಧನ ಘಟಾಘಟಿತಾಹವದಲ್ಲಿ ನಿನ್ನ ಕ
ಟ್ಟಾಳಿರೆ ಮುಂಚಿ ತಾಗದೊಡಮಳ್ಕುರೆ ತಾಗಿ ವಿರೋಸೈನ್ಯ ಭೂ|
ಪಾಳರನೊಂದೆ ಪೊಯ್ಯದೊಡಮೀ ತಲೆ ಪೋದೊಡಮಟ್ಟೆಯಟ್ಟಿ ಕ
ಟ್ಟಾಳನೆ ಮುಟ್ಟಿ ತಳ್ತಿಱಿಯದಿರ್ದೊಡಮಂಜಿದೆನಾಂ ಮಹೀಪತೀ|| ೩೯ ||
ಪದ್ಯ-೩೯:ಪದವಿಭಾಗ-ಅರ್ಥ:ನಾಳೆ ವಿರೋಧಿ ಸಾಧನ ಘಟಾಘಟಿತ ಆಹವದಲ್ಲಿ (ನಾಳೆ ನಡೆಯಲಿರುವ ಶತ್ರುಸೈನ್ಯದ ಗಜಯುದ್ಧದಲ್ಲಿ) ನಿನ್ನ ಕಟ್ಟಾಳಿರೆ (ನಿನ್ನ ಶೂರರಿರಲು ) ಮುಂಚಿ ತಾಗದೊಡೆ ಅಳ್ಕುರೆ (ಅಳುಕುವಂತೆ ಹೆದರುವಂತೆ) ತಾಗಿ (ಅವರನ್ನು ಮೊದಲೇ ಹೋಗಿ ಹೆದರುವಂತೆ ಎದುರಿಸದಿದ್ದರೆ) ವಿರೋಧಿಸೈನ್ಯ ಭೂಪಾಳರನು ಒಂದೆ ಪೊಯ್ಯದೊಡಂ ಈ ತಲೆ ಪೋದೊಡಂ (ವಿರೋಧಿ ಸೈನ್ಯದ ರಾಜರನ್ನು ಒಟ್ಟಿಗೆ ಹೊಡೆಯದಿದ್ದರೆ ಈ ತಲೆ ಹೊದರೂ) ಅಟ್ಟೆಯಟ್ಟಿ ಕಟ್ಟಾಳನೆ ಮುಟ್ಟಿ (ಮುಂಡವು ಹೋಗಿ ಶೂರನ್ನು ಹಿಡಿದು) ತಳ್ತಿಱಿಯದಿರ್ದೊಡಂ (ತಾಗಿಹೊಡೆಯದಿದ್ದರೆ) ಅಂಜಿದೆನ್ ಆಂ ಮಹೀಪತೀ (ರಾಜನೇ ನಾನು ಅಂಜಿದವನಾಗುತ್ತೇನೆ.)
ಪದ್ಯ-೩೯:ಅರ್ಥ:(ರಾಜನೇ,) ನಾಳೆ ನಡೆಯಲಿರುವ ಶತ್ರುಸೈನ್ಯದ ಗಜಯುದ್ಧದಲ್ಲಿ, ನಿನ್ನ ಶೂರರಿರಲು ಶತ್ರುಗಳು ಹೆದರುವಂತೆ, ಅವರನ್ನು ಮೊದಲೇ ಹೋಗಿ ಹೆದರುವಂತೆ ಎದುರಿಸದಿದ್ದರೆ, ವಿವಿರೋಧಿ ಸೈನ್ಯದ ರಾಜರನ್ನು ಒಟ್ಟಿಗೆ ಹೊಡೆಯದಿದ್ದರೆ ಈ ನನ್ನ ತಲೆ ಹೊದರೂ ಮುಂಡವು ಹೋಗಿ ಶೂರನ್ನು ಹಿಡಿದು ತಾಗಿಹೊಡೆಯದಿದ್ದರೆ, ರಾಜನೇ ನಾನು ಅಂಜಿದವನಾಗುತ್ತೇನೆ.
ವ|| ಎಂದು ತನ್ನ ಮನದ ಪೊಡರ್ಪುಮಂ ಕೂರ್ಪುಮನುಂಟುಮಾಡಿ ನುಡಿದಂ ಮತ್ತೊರ್ವಂ ತನ್ನನಾಳ್ದಂ ಪೆರ್ಚಿ ಪೊರೆದುದರ್ಕೆ ಕರಂ ಮೆಯ್ವೆರ್ಚಿ ನುಡಿದಂ-
ವಚನ:ಪದವಿಭಾಗ-ಅರ್ಥ:ಎಂದು ತನ್ನ ಮನದ ಪೊಡರ್ಪುಮಂ ಕೂರ್ಪುಮಂ ಉಂಟುಮಾಡಿ ನುಡಿದಂ (ಎಂದು ತನ್ನ ಮನದ ಉತ್ಸಾಹವನ್ನೂ ಕೆಚ್ಚನ್ನೂ ಪ್ರದರ್ಶನ ಮಾಡಿ ಹೇಳಿಸಿದನು.) ಮತ್ತೊರ್ವಂ ತನ್ನನು ಆಳ್ದಂ ಪೆರ್ಚಿ ಪೊರೆದುದರ್ಕೆ (ಸಾಕಿದುದಕ್ಕೆ) ಕರಂ ಮೆಯ್ವೆರ್ಚಿ (ಬಹಳ ಮೆಯ್ಯುಬ್ಬಿ) ನುಡಿದಂ -
ವಚನ:ಅರ್ಥ:ಎಂದು ತನ್ನ ಮನದ ಉತ್ಸಾಹವನ್ನೂ ಕೆಚ್ಚನ್ನೂ ಪ್ರದರ್ಶನ ಮಾಡಿ ಹೇಳಿಸಿದನು. ಮತ್ತೊಬ್ಬನು ತನ್ನ ಯಜಮಾನನು ತನ್ನನ್ನು ವಿಶೇಷವಾಗಿ ಸಾಕಿದುದಕ್ಕೆ ಬಹಳ ಮೆಯ್ಯುಬ್ಬಿ ಮಾತನಾಡಿದನು-
ಚಂ|| ಒದವಿದ ನಿನ್ನದೊಂದು ದಯೆ ಮೇಣ್ ಪಿರಿದೋ ನೆಗೞ್ದೆನ್ನ ಗಂಡುಮಾ
ದದಟುಮಳುರ್ಕೆಯುಂ ಪಿರಿದೊ ಸಂದೆಯಮಾದಪುದಿಂತಿದಿಲ್ಲಿ ತೂ|
ಗಿದೊಡಱಿಯಲ್ಕೆ ಬಾರದದು ಕಾರಣದಿಂ ರಿಪುಭೂಪ ದಂತಿದಂ
ತದ ತೊಲೆಯೊಳ್ ಪರಾಕ್ರಮದಿನೆನ್ನನೆ ಭೂಪತಿ ತೂಗಿ ತೋರೆನೇ|| ೪೦ ||
ಪದ್ಯ-೪೦:ಪದವಿಭಾಗ-ಅರ್ಥ:ಒದವಿದ ನಿನ್ನದೊಂದು ದಯೆ ಮೇಣ್ ಪಿರಿದೋ (ನನ್ನಲ್ಲಿ ನಿನಗುಂಟಾದ ದಯೆ ಹೆಚ್ಚಿನದೊ ಅಥವಾ) ನೆಗೞ್ದ ಎನ್ನ ಗಂಡುಂ ಆದ ಅದಟುಂ ಅಳುರ್ಕೆಯುಂ ಪಿರಿದೊ ಸಂದೆಯಮಾದಪುದು (ನನ್ನ ಶೌರ್ಯದ ಕೀರ್ತಿಯು ದೊಡ್ಡದೋ ಎನ್ನುವುದು ಸಂದೇಹವಾಗಿದೆ.) ಇಂತು ಇದು ಇಲ್ಲಿ ತೂಗಿದೊಡೆ ಅಱಿಯಲ್ಕೆ ಬಾರದು (ಇಲ್ಲಿ ಇವೆರಡರನ್ನೂ ತೂಗಿ ನೋಡಲು ಆಗದು.) ಅದು ಕಾರಣದಿಂ ರಿಪುಭೂಪ (ಆದುದರಿಂದ ಶತ್ರುರಾಜರ) ದಂತಿದಂತದ ತೊಲೆಯೊಳ್ (ಆನೆಯ ದಂತದ ತಕ್ಕಡಿಯಲ್ಲಿ) ಪರಾಕ್ರಮದಿಂ ಎನ್ನನೆ ಭೂಪತಿ ತೂಗಿ ತೋರೆನೇ (ನನ್ನ ಪರಾಕ್ರಮದಿಂದ ನನ್ನನ್ನು ತೂಗಿ ತೋರಿಸುತ್ತೇನೆ.)
ಪದ್ಯ-೪೦:ಅರ್ಥ: ಮತ್ತೊಬ್ಬ ವೀರನ ಹೇಳಿಕೆ: ನನ್ನ ಬಗೆಗೆ ನಿನಗುಂಟಾದ ದಯೆ ಹೆಚ್ಚಿನದೊ, ಪ್ರಸಿದ್ಧವಾದ ನನ್ನ ಪೌರುಷವೂ ಅಥವಾ ನನ್ನ ಶೌರ್ಯದ ಕೀರ್ತಿಯು ದೊಡ್ಡದೋ ಎನ್ನುವುದು ಸಂದೇಹವಾಗಿದೆ. ಇಲ್ಲಿ ಇವೆರಡರನ್ನೂ ತೂಗಿ ನೋಡಲು ಸಾಧ್ಯವಿಲ್ಲ. ಆದುದರಿಂದ ಶತ್ರುರಾಜರ ಆನೆಯ ದಂತದ ತಕ್ಕಡಿಯಲ್ಲಿ ನನ್ನ ಪರಾಕ್ರಮದಿಂದ ನನ್ನನ್ನು ತೂಗಿ ತೋರಿಸುತ್ತೇನೆ.
ವ|| ಎಂದು ತನ್ನ ಸೆರಗುಂ ಬೆರಗುಮಿಲ್ಲದ ಕಲಿತನಮನಱಿಯೆ ನುಡಿದಂ ಮತ್ತಮೊಂದೆಡೆಯೊಳೊರ್ವ ವೀರಭಟನುದಾರ ವೀರರಸರಸಿಕನಾಗಿ-
ವಚನ:ಪದವಿಭಾಗ-ಅರ್ಥ:ಎಂದು ತನ್ನ ಸೆರಗುಂ ಬೆರಗುಂ ಇಲ್ಲದ ಕಲಿತನಮನು(ಭಯವೂ ಅಪಾಯವೂ ಇಲ್ಲದ ಶೌರ್ಯವನ್ನು ) ಅಱಿಯೆ ನುಡಿದಂ (ಸ್ಪಷ್ಟವಾಗಿ ತಿಳಿಯುವಂತೆ ಹೇಳಿದನು.)ಮತ್ತಮೊಂದೆಡೆಯೊಳೊರ್ವ ವೀರಭಟನುದಾರ ವೀರರಸರಸಿಕನಾಗಿ-
ವಚನ:ಅರ್ಥ:ವ|| ಎಂದು ತನ್ನ ಭಯವೂ ಅಪಾಯವೂ ಇಲ್ಲದ ಶೌರ್ಯವನ್ನು ಸ್ಪಷ್ಟವಾಗಿ ತಿಳಿಯುವಂತೆ ಹೇಳಿದನು. ಬೇರೊಂದು ಸ್ಥಳದಲ್ಲಿ ವೀರಭಟನು ಔದಾರ್ಯದಿಂದ ಕೂಡಿದ ವೀರರಸದಲ್ಲಿ ಮಗ್ನನಾಗಿ ನುಡಿದನು.
ಚಂ|| ಕುದುರೆಯನೇಱಿದಂಬೆರಸು ಸೌಳೆನೆ ವೋಗಿರೆ ಪೊಯ್ದುಮೆಯ್ದೆ ಕ
ಟ್ಟಿದಿರೊಳೆ ನೂಂಕಿದಾನೆಗಳ ಕೋಡುಗಳಂ ಬಳೆವೋಗೆ ಪೊಯ್ದುಮಾಂ|
ತದಟರನೊಂದೆವೊಯ್ದುಮೆರಡುಂ ಬಲಮೆನ್ನನೆ ನೋಡೆ ತಕ್ಕಿನೆ
ನ್ನದಟುಮನೆನ್ನ ವೀರಮುಮನಾಜಿಯೊಳೆನ್ನರಸಂಗೆ ತೋಱುವೆಂ|| ೪೧ ||
ಪದ್ಯ-೪೧:ಪದವಿಭಾಗ-ಅರ್ಥ:ಕುದುರೆಯನು ಏಱಿದಂ ಬೆರಸು - ಏರಿದ ಸವಾರನು ಕುದುರೆಯೊಡನೆ ಸೇರಿ (ಹತ್ತಿದ ಕುದುರೆಯೊಡನೆ ಸವಾರನು) ಸೌಳೆನೆ ವೋಗಿರೆ ಪೊಯ್ದುಂ (‘ಸಿಳ್’ ಎಂದು ಕತ್ತರಿಸುವ ಹಾಗೆ ನುಗ್ಗಿ ಚೆನ್ನಾಗಿ ಹೊಡೆದು,) ಎಯ್ದೆ ಕಟ್ಟಿದಿರೊಳೆ ನೂಂಕಿದಾನೆಗಳ ಕೋಡುಗಳಂ (ನೇರ ಎದುರಾಗಿ ನುಗ್ಗಿದ ಆನೆಗಳ ಕೊಂಬುಗಳನ್ನು) ಬಳೆವೋಗೆ ಪೊಯ್ದುಂ (ಅವುಗಳ ಹಾಕಿದ ಅಣಸುಬಳೆ ಬಿದ್ದುಹೋಗುವಂತೆ ಹೊಡೆದು) ಆಂತ ಅದಟರನು ಒಂದೆವೊಯ್ದುಂ (ಎದುರಿಸಿದ ಶೂರರನ್ನೂ ಒಟ್ಟಿಗೆ ಧ್ವಂಸ ಮಾಡಿ) ಎರಡುಂ ಬಲಮೆನ್ನನೆ ನೋಡೆ (ಎರಡು ಸೈನ್ಯಗಳೂ ನನ್ನನ್ನೇ ನೋಡುವಂತೆ) ತಕ್ಕಿನ ಎನ್ನ ಅದಟುಮನು ಎನ್ನ ವೀರಮುಮಂ ಆಜಿಯೊಳ್ ಎನ್ನ ಅರಸಂಗೆ ತೋಱುವೆಂ (ಸಮರ್ಥವಾದ ನನ್ನ ಪರಾಕ್ರಮವನ್ನೂ ನನ್ನ ವೀರವನ್ನೂ ಯುದ್ಧದಲ್ಲಿ ನನ್ನ ಸ್ವಾಮಿಗೆ ತೋರಿಸುತ್ತೇನೆ )
ಪದ್ಯ-೪೧:ಅರ್ಥ:ಹತ್ತಿದ ಕುದುರೆಯೊಡನೆ ಸವಾರನು ‘ಸಿಳ್’ ಎಂದು ಕತ್ತರಿಸುವ ಹಾಗೆ ನುಗ್ಗಿ ಚೆನ್ನಾಗಿ ಹೊಡೆದು, ನೇರ ಎದುರಾಗಿ ನುಗ್ಗಿದ ಆನೆಗಳ ಕೊಂಬುಗಳನ್ನು ಅವುಗಳ ಹಾಕಿದ ಅಣಸುಬಳೆ ಬಿದ್ದುಹೋಗುವಂತೆ ಹೊಡೆದು, ಎದುರಿಸಿದ ಶೂರರನ್ನೂ ಒಟ್ಟಿಗೆ ಧ್ವಂಸ ಮಾಡಿ ಎರಡು ಸೈನ್ಯಗಳೂ ನನ್ನನ್ನೇ ನೋಡುವಂತೆ ಸಮರ್ಥವಾದ ನನ್ನ ಪರಾಕ್ರಮವನ್ನೂ ನನ್ನ ವೀರವನ್ನೂ ಯುದ್ಧದಲ್ಲಿ ನನ್ನ ಸ್ವಾಮಿಗೆ ತೋರಿಸುತ್ತೇನೆ
ವ|| ಎಂದತಿರಭಸ ರಣವ್ಯಸನಮನಾತ್ಮೀಯಶಾಸನಾಯತ್ತಂ ಮಾಡಿದಂ ಮತ್ತೊರ್ವ ನತ್ಯುಗ್ರ ಮಂಡಳಾಗ್ರಮನನುಗೆಯ್ದು ವೀರಗ್ರಹಗ್ರಸ್ತನಾಗಿ-
ವಚನ:ಪದವಿಭಾಗ-ಅರ್ಥ:ಎಂದು ಅತಿರಭಸ ರಣವ್ಯಸನಮನು (ಎಂದು ಅತ್ಯಂತ ರಭಸದ ತನ್ನ ಯುದ್ಧಾಸಕ್ತಿಯನ್ನು) ಆತ್ಮೀಯ ಶಾಸನಾಯತ್ತಂ ಮಾಡಿದಂ (ಆತ್ಮೀಯ-ತನ್ನ ಶಾಸನ, ಆಜ್ಞೆಗೆ ಅಧಿನನ್ನಾಗಿ ಮಾಡಿದನು-) ಮತ್ತೊರ್ವನು ಅತ್ಯುಗ್ರ ಮಂಡಳಾಗ್ರಮನನು(ಕತ್ತಿ) ಗೆಯ್ದು ವೀರ-ಗ್ರಹ- ಗ್ರಸ್ತನಾಗಿ- (ಮತ್ತೊಬ್ಬನು ಬಹಳ ಭಯಂಕರವಾದ ಕತ್ತಿ ಸಿದ್ಧಪಡಿಸಿಕೊಂಡು ಪರಾಕ್ರಮವೆಂಬ ಗ್ರಹದಿಂದ ಹಿಡಿಯಲ್ಪಟ್ಟವನಾದನು. )
ವಚನ:ಅರ್ಥ:ಎಂದು ಅತ್ಯಂತ ರಭಸದ ತನ್ನ ಯುದ್ಧಾಸಕ್ತಿಯನ್ನು ತೋರ್ಪಡಿಸಿಕೊಂಡನು. ಮತ್ತೊಬ್ಬನು ಬಹಳ ಭಯಂಕರವಾದ ಕತ್ತಿ ಸಿದ್ಧಪಡಿಸಿಕೊಂಡು ಪರಾಕ್ರಮವೆಂಬ ಗ್ರಹದಿಂದ ಹಿಡಿಯಲ್ಪಟ್ಟವನಾದನು.
ಚಂ|| ಸಿಡಿಲೊಳೆ ತಳ್ತು ಪೋರ್ವ ಸಿಡಿಲಂತಿರೆ ಬಾಳೊಳೆ ಬಾಳ್ ಪಳಂಚಿ ಮಾ
ರ್ಕಿಡಿವಿಡೆ ನೋಡಲಂಜಿ ದೆಸೆದೇವತೆಗಳ್ ಪೆಱಪಿಂಗ್ ತೋಳ ತೀನ್|
ಕಿಡೆ ನಲಿದೊಂದೆರೞ್ಕುದುರೆಯಟ್ಟೆಯುಮೊಂದೆರಡಾನೆಯಟ್ಟೆಯುಂ
ತೊಡರ್ದೊಡನಾಡೆ ತಳ್ತಿಱಿಯದಿರ್ದೊಡೆ ಜೋಳಮನೆಂತು ನೀಗುವೆಂ|| ೪೨ ||
ಪದ್ಯ-೪೨:ಪದವಿಭಾಗ-ಅರ್ಥ:ಸಿಡಿಲೊಳೆ ತಳ್ತು ಪೋರ್ವ ಸಿಡಿಲಂತಿರೆ ಬಾಳೊಳೆ (ಬಾಳ್-ಕತ್ತಿ) ಬಾಳ್ ಪಳಂಚಿ (ಕತ್ತಿಯಲ್ಲಿ ಕತ್ತಿಯು ಘಟ್ಟಿಸಿ) ಮಾರ್ ಕಿಡಿವಿಡೆ (ಎದುರು ಕಿಡಿಗಳನ್ನು ಸೂಸುತ್ತಿರಲು,) ನೋಡಲಂಜಿ ದೆಸೆದೇವತೆಗಳ್ ಪೆಱಪಿಂಗ್ ತೋಳ ತೀನ್ ಕಿಡೆ (ಅದನ್ನು ನೋಡಿ ದಿಗ್ದೇವತೆಗಳೆಲ್ಲ ಹೆದರಿ ಹಿಮ್ಮೆಟ್ಟುತ್ತಿರಲು ತೋಳಿನ ತೀಟೆಯು ಕಿಡೆ- ತೀರಲು) ನಲಿದು, ಒಂದು ಅರೞ್ಕ್ ಕುದುರೆಯು ಅಟ್ಟೆಯುಂ ಯುಂ ಒಂದೆರಡಾನೆಯಟ್ಟೆಯುಂ (ಒಂದೆರಡು ಕುದುರೆಯ ಮುಂಡಗಳೂ ಒಂದೆರಡಾನೆಯ ಮುಂಡಗಳೂ) ತೊಡರ್ದು ಒಡನಾಡೆ (ಜೊತೆಯಲ್ಲಿ ಕುಣಿಯುತ್ತಿರಲು,) ತಳ್ತು ಇಱಿಯದಿರ್ದೊಡೆ () ಜೋಳಮನೆಂತು ನೀಗುವೆಂ (ನಾನು ಸೆಣಸಿ ಕಾದದಿದ್ದರೆ ಜೋಳದ ಋಣವನ್ನು ನಾನು ಹೇಗೆ ತೀರಿಸುತ್ತೇನೆ?)
ಪದ್ಯ-೪೨:ಅರ್ಥ: ಸಿಡಿಲಿನಲ್ಲಿಯೇ ಸೇರಿಕೊಂಡು ಸೆಣಸಿ ಹೋರಾಡುವ ಸಿಡಿಲಿನಂತೆ, ಕತ್ತಿಯಲ್ಲಿ ಕತ್ತಿಯು ಘಟ್ಟಿಸಿ, ಎದುರು ಕಿಡಿಗಳನ್ನು ಸೂಸುತ್ತಿರಲು ಅದನ್ನು ನೋಡಿ ದಿಗ್ದೇವತೆಗಳೆಲ್ಲ ಹೆದರಿ ಹಿಮ್ಮೆಟ್ಟುತ್ತಿರಲು ತೋಳಿನ ನವೆಯು ತೀರಲು, ಒಂದೆರಡು ಕುದುರೆಯ ಮುಂಡಗಳೂ ಒಂದೆರಡಾನೆಯ ಮುಂಡಗಳೂ ಜೊತೆಯಲ್ಲಿ ಕುಣಿಯುತ್ತಿರಲು, ನಾನು ಸೆಣಸಿ ಕಾದದಿದ್ದರೆ ಜೋಳದ ಋಣವನ್ನು ನಾನು ಹೇಗೆ ತೀರಿಸುತ್ತೇನೆ?
ವ|| ಎಂದು ನಿಜಭುಜವಿಜಯಮನಪ್ಪುಕೆಯ್ದು ನುಡಿದಂ ಮತ್ತೊರ್ವನಲ್ಲಿಯೆ-
ವಚನ:ಪದವಿಭಾಗ-ಅರ್ಥ:ಎಂದು ನಿಜಭುಜವಿಜಯಮನು ಅಪ್ಪುಕೆಯ್ದು ನುಡಿದಂ (ತನ್ನ ತೋಳಿನ ಜಯವನ್ನು ನಂಬಿ ಮಾತನಾಡಿದನು) ಮತ್ತೊರ್ವನು ಅಲ್ಲಿಯೆ (ಅಲ್ಲಿಯೇ ಮತ್ತೊಬ್ಬನು )-
ವಚನ:ಅರ್ಥ:ವ|| ಎಂದು ತನ್ನ ತೋಳಿನ ಜಯವನ್ನು ನಂಬಿ ಮಾತನಾಡಿದನು. ಅಲ್ಲಿಯೇ ಮತ್ತೊಬ್ಬನು-
ಮ|| ಸುರಲೋಕಂ ದೊರೆಕೊಳ್ವುದೊಂದು ಪರಮ ಶ್ರೀಲಕ್ಷ್ಮಿಯುಂ ಬರ್ಪುದಾ
ದರದಿಂ ದೇವನಿಕಾಯದೊಳ್ ನೆರೆವುದೊಂದುತ್ಸಾಹಮುಂ ತನ್ನ ಮೆ|
ಯ್ಸಿರಿ ಭಾಗ್ಯಂ ನೆರಮಪ್ಪುದೊಂದೆ ರಣದೊಳ್ ಗೆಲ್ದಾಜಿಯಂ ತಳ್ತು ಸಂ
ಗರದೊಳ್ ಜೋಳದ ಪಾೞಿಯಂ ನೆರಪಿದಂ ಗಂಡಂ ಪೆಱಂ ಗಂಡನೇ|| ೪೩ ||
ಪದ್ಯ-೪೩:ಪದವಿಭಾಗ-ಅರ್ಥ:ಸುರಲೋಕಂ ದೊರೆಕೊಳ್ವುದೊಂದು, (ದೇವಲೋಕ ಪ್ರಾಪ್ತಿಯಾಗುವುದು ಒಂದು ಫಲ) ಪರಮ ಶ್ರೀಲಕ್ಷ್ಮಿಯುಂ ಬರ್ಪುದು (ಹಾಗೆಯೇ ಉತ್ತಮ ಐಶ್ವರ್ಯವೂ ಪ್ರಾಪ್ತವಾಗುವುದು ಮತ್ತೊಂದು ಫಲ.) ಅದರದಿಂ ದೇವನಿಕಾಯದೊಳ್ ನೆರೆವುದೊಂದು (ದೇವತೆಗಳ ಸಮೂಹದಲ್ಲಿ ಸೇರುವುದು,) ಉತ್ಸಾಹಮುಂ ತನ್ನ ಮೆಯ್ಸಿರಿ ಭಾಗ್ಯಂ ನೆರಮಪ್ಪುದು (ನನ್ನ ಉತ್ಸಾಹವೂ ದೇಹಕಾಂತಿಯೂ ಹೆಚ್ಚುವುದು.) ಒಂದೆ ರಣದೊಳ್ ಗೆಲ್ದು ಆಜಿಯಂ (ಯುದ್ಧವನ್ನು) ತಳ್ತು ಸಂಗರದೊಳ್ (ಇಂತಹ ಒಂದು ಯುದ್ಧದಲ್ಲಿ ಭಾಗವಹಿಸಿ ಗೆದ್ದು) ಜೋಳದ ಪಾೞಿಯಂ ನೆರಪಿದಂ (ಅನ್ನದ ಋಣವನ್ನು ತೀರಿಸಿದವನೇ) ಗಂಡಂ ಪೆಱಂ ಗಂಡನೇ (ನಿಜವಾಗಿ ಶೂರ. ಬೇರೆಯವನು ಶೂರನೇ? ಅಲ್ಲ!)
ಪದ್ಯ-೪೩:ಅರ್ಥ:ಯುದ್ಧದಲ್ಲಿ ಮಡಿದರೆ, ದೇವಲೋಕ ಪ್ರಾಪ್ತಿಯಾಗುವುದು ಒಂದು ಫಲ, ಹಾಗೆಯೇ ಉತ್ತಮ ಐಶ್ವರ್ಯವೂ ಪ್ರಾಪ್ತವಾಗುವುದು ಮತ್ತೊಂದು ಫಲ.ದೇವತೆಗಳ ಸಮೂಹದಲ್ಲಿ ಸೇರುವುದು, ನನ್ನ ಉತ್ಸಾಹವೂ ದೇಹಕಾಂತಿಯೂ ಹೆಚ್ಚುವುದು. ಇಂತಹ ಒಂದು ಯುದ್ಧದಲ್ಲಿ ಭಾಗವಹಿಸಿ ಗೆದ್ದು, ಅನ್ನದ ಋಣವನ್ನು ತೀರಿಸಿದವನೇ ನಿಜವಾಗಿ ಶೂರ. ಬೇರೆಯವನು ಶೂರನೇ? ಅಲ್ಲ.
ವ|| ಎಂದು ನುಡಿದಂ-
ವಚನ:ಅರ್ಥ:ವ|| ಎಂಬುದಾಗಿ ಹೇಳಿದನು.
ಮ|| ತವೆ ಮಾಱುಂತ ಬಲಂ ಕಱುತ್ತಿಱಿದು ತನ್ನಾಳ್ದಂ ಕರಂ ಮೆಚ್ಚೆ ಗೆ
ಲ್ದವನಂ ಶ್ರೀವಧು ಪತ್ತುಗುಂ ಮಡಿದನಂ ದೇವಾಂಗನಾನೀಕಮು|
ತ್ಸವದಿಂದುಯ್ಗುಮದೆಂತುಮಿಂಬು ಸುಭಟಂಗಿಂತಪ್ಪುದಂ ಕಂಡುಮಂ
ಜುವನೇಕಂಜುವನೆಂದು ಪೆರ್ಚಿ ನುಡಿದಂ ಮತ್ತೊರ್ವನಾಸ್ಥಾನದೊಳ್|| ೪೪||
ಪದ್ಯ-೪೪:ಪದವಿಭಾಗ-ಅರ್ಥ:ತವೆ (ಬಹಳ) ಮಾಱುಂತ ಬಲಂ ಕಱುತ್ತು (ಕೋಪದಿಂದ) ಇಱಿದು (ಹೊಡೆದು) ತನ್ನಾಳ್ದಂ ಕರಂ ಮೆಚ್ಚೆ ಗೆಲ್ದವನಂ (ತನ್ನ ಸ್ವಾಮಿಯು ವಿಶೇಷವಾಗಿ ಮೆಚ್ಚುವಂತೆ ಗೆದ್ದವನು) ಶ್ರೀವಧು ಪತ್ತುಗುಂ (ತನ್ನ ಸ್ವಾಮಿಯು ವಿಶೇಷವಾಗಿ ಮೆಚ್ಚುವಂತೆ ಗೆದ್ದವನನ್ನು ಅಪಾರವಾದ ಐಶ್ವರ್ಯವು ಸೇರುತ್ತದೆ.) ಮಡಿದನಂ ದೇವಾಂಗನಾನೀಕಂ ಉತ್ಸವದಿಂದ ಉಯ್ಗುಂ (ಮಡಿದವನನ್ನು ದೇವತಾಸ್ತ್ರೀಯರ ಸಮೂಹವು ಸಂತೋಷದಿಂದ ಒಯ್ಯುತ್ತದೆ.) ಅದು ಎಂತುಂ ಇಂಬು ಸುಭಟಂಗೆ ಇಂತಪ್ಪುದಂ ಕಂಡುಂ ಅಂಜುವನು (ಅದು ಹೇಗೂ ಸುಭಟನಿಗೆ ಹೀಗಿರುವುದನ್ನು ತಿಳಿದೂ ಹೆದರುವವನು ) ಏಕಂಜುವನು ಎಂದು (ಏಕೆ ಹೆದರುತ್ತಾನೆ ಎಂದು) ಪೆರ್ಚಿ (ಉಬ್ಬಿ) ನುಡಿದಂ ಮತ್ತೊರ್ನು ಆಸ್ಥಾನದೊಳ್ (ಎಂದು ಮತ್ತೊಬ್ಬನು ಆ ರಾಜಸಭೆಯಲ್ಲಿ ಉಬ್ಬಿ ಹೇಳಿದನು.)
ಪದ್ಯ-೪೪:ಅರ್ಥ: ಪ್ರತಿಭಟಿಸಿದ ಸೈನ್ಯವು ಬಹಳ ಕೋಪದಿಂದ ಹೊಡೆದು, ತನ್ನ ಸ್ವಾಮಿಯು ವಿಶೇಷವಾಗಿ ಮೆಚ್ಚುವಂತೆ ಗೆದ್ದವನನ್ನು ಅಪಾರವಾದ ಐಶ್ವರ್ಯವು ಸೇರುತ್ತದೆ. ಮಡಿದವನನ್ನು ದೇವತಾಸ್ತ್ರೀಯರ ಸಮೂಹವು ಸಂತೋಷದಿಂದ ಒಯ್ಯುತ್ತದೆ. ಅದು ಹೇಗೂ ಸುಭಟನಿಗೆ ಹೀಗಿರುವುದನ್ನು ತಿಳಿದೂ ಹೆದರುವವನು ಏಕೆ ಹೆದರುತ್ತಾನೆ ಎಂದು ಮತ್ತೊಬ್ಬನು ಆ ರಾಜಸಭೆಯಲ್ಲಿ ಉಬ್ಬಿ ಹೇಳಿದನು.
ವ|| ಅಂತು ನುಡಿದೆರಡುಂ ಬಲಂಗಳುಂ ತಂತಮ್ಮ ವೀರಮಂ ಚಾಗಮಂ ಮೆದು ತಮ್ಮ ಕೆಯ್ದುಗಳನರ್ಚಿಸಿ ದರ್ಭಶಯನಂ ಮಾಡಿ ಪಲ್ಲಂ ಸುಲಿದು ಶಸ್ತ್ರಸಂಗ್ರಹರಾಗಿ ಪಲರುಂ ವೀರಭಟರ್ ತಮ್ಮಂ ತಾಮೆ ಪರಿಚ್ಛೇದಿಸಿರ್ದರತ್ತ ಮತ್ತಮೊರ್ವಂ ತನ್ನ ನಲ್ಲಳೊಳಿಂತೆಂದನೀ ಪೊೞ್ತೆ ಪೊೞ್ತು ನಾಳೆ ದೇವಲೋಕದ ಕನ್ಯಕೆಯರೋಲಗದೊಳಿರ್ಪೆನೆಂದು ನುಡಿಯೆ ನೀನೆಂದಂತು ಪೋಗಲ್ ತೀರದು ನಾಳೆ ಮಗುೞ್ದು ಬಂದೆನ್ನೊಳ್ ನೆರೆವೆಯೆಂದು ಪೇೞೆ ನಿನಗಱಿವುಂಟೆ ಎಂದು ಕೇಳೆಯೆನ್ನೋಲೆವಾಗ್ಯಮುಂಟೆಂದಳ್ ಮತ್ತಮೊಂದೊಡೆಯೊಳೊರ್ವಳ್ ದರ್ಭಶಯನಸ್ಥನಾದ ನಿಜಪ್ರಾಣೇಶ್ವರನ ಪರಿಚ್ಛೇದಮನಱಿದು ತನ್ನ ಸಾವಂ ಪರಿಚ್ಛೇದಿಸಿ-
ವಚನ:ಪದವಿಭಾಗ-ಅರ್ಥ:ಅಂತು ನುಡಿದೆರಡುಂ ಬಲಂಗಳುಂ ತಂತಮ್ಮ ವೀರಮಂ ಚಾಗಮಂ ಮೆದು ತಮ್ಮ ಕೆಯ್ದುಗಳನರ್ಚಿಸಿ ದರ್ಭಶಯನಂ ಮಾಡಿ ಪಲ್ಲಂ ಸುಲಿದು ಶಸ್ತ್ರಸಂಗ್ರಹರಾಗಿ ಪಲರುಂ (ಹಲವರು)ವೀರಭಟರ್ ತಮ್ಮಂ ತಾಮೆ ಪರಿಚ್ಛೇದಿಸಿರ್; ಅತ್ತ ಮತ್ತಮೊರ್ವಂ ತನ್ನ ನಲ್ಲಳೊಳು ಇಂತೆಂದನು (ತನ್ನ ಪ್ರಿಯಳೊಡನೆ ಹೀಗೆಂದನು.) ಈ ಪೊೞ್ತೆ ಪೊೞ್ತು ನಾಳೆ ದೇವಲೋಕದ ಕನ್ಯಕೆಯರ ಓಲಗದೊಳು ಇರ್ಪೆನೆಂದು ನುಡಿಯೆ (ಈ ಹೊತ್ತೇ ಹೊತ್ತು. ನಾಳೆ ದೇವಲೋಕದ ಸ್ತ್ರೀಯರ ಸಭೆಯಲ್ಲಿ ಇರುತ್ತೇನೆ ಎಂದು ಹೇಳಲು,) ನೀನು ಎಂದು ಅಂತು ಪೋಗಲ್ ತೀರದು (ಅವಳು ‘ನೀನು ಹೇಳಿದ ಹಾಗೆ ಹೋಗುವುದು ಸಾಧ್ಯವಿಲ್ಲ.) ನಾಳೆ ಮಗುೞ್ದು ಬಂದು ಎನ್ನೊಳ್ ನೆರೆವೆಯೆಂದು ಪೇೞೆ (ನಾಳೆ ಪುನ ನೀನು ಬಂದು ನನ್ನಲ್ಲಿ ಸೇರುತ್ತೀಯೆ’ಎಂದು ಹೇಳಲು,) ನಿನಗೆ ಅಱಿವುಂಟೆ ಎಂದು ಕೇಳೆ ( ‘ಅದು ನಿನಗೆ ಹೇಗೆ ಗೊತ್ತು’ ಎಂದು ಪ್ರಶ್ನಿಸಲು,) ಎನ್ನೋಲೆವಾಗ್ಯಮುಂಟು ಎಂದಳ್ (ಅವಳು ‘ನನ್ನ ಓಲೆಭಾಗ್ಯವುಂಟು’ ಎಂದಳು) ಮತ್ತಮ್ ಒಂದೊಡೆಯೊಳು ಒರ್ವಳ್ ದರ್ಭಶಯನಸ್ಥನಾದ ನಿಜಪ್ರಾಣೇಶ್ವರನ (ದರ್ಭೆಯ ಹಾಸಿಗೆಯಲ್ಲಿದ್ದ ತನ್ನ ಪತಿಯ) ಪರಿಚ್ಛೇದಮನು ಅಱಿದು ತನ್ನ ಸಾವಂ ಪರಿಚ್ಛೇದಿಸಿ (ತನ್ನ ಸಾವನ್ನು ನಿಷ್ಕರ್ಷಿಸಿ)-
ವಚನ:ಅರ್ಥ:ಹೀಗೆ ಮಾತನಾಡಿ ಎರಡು ಸೈನ್ಯದವರೂ ತಮ್ಮ ತಮ್ಮ ಶೌರ್ಯವನ್ನೂ, ತ್ಯಾಗವನ್ನೂ ಪ್ರದರ್ಶಿಸಿ ತಮ್ಮ ಆಯುಧಗಳನ್ನು ಪೂಜಿಸಿ ದರ್ಭೆಯ ಮೇಲೆ ಮಲಗಿ, ಹಲ್ಲನ್ನು ತೊಳೆದು, ಶಸ್ತ್ರಧಾರಿಗಳಾಗಿ ಅನೇಕ ವೀರಭಟರು ತಮ್ಮ ವಿಷಯವನ್ನು ತಾವೇ ನಿಶ್ಚಯಿಸಿದರು. ಆ ಕಡೆ ಮತ್ತೊಬ್ಬನು ತನ್ನ ಪ್ರಿಯಳೊಡನೆ ಹೀಗೆಂದನು. ಈ ಹೊತ್ತೇ ಹೊತ್ತು. ನಾಳೆ ದೇವಲೋಕದ ಸ್ತ್ರೀಯರ ಸಭೆಯಲ್ಲಿ ಇರುತ್ತೇನೆ ಎಂದು ಹೇಳಿದನು. ಅವಳು ‘ನೀನು ಹೇಳಿದ ಹಾಗೆ ಹೋಗುವುದು ಸಾಧ್ಯವಿಲ್ಲ. ನಾಳೆ ಪುನ ನೀನು ಬಂದು ನನ್ನಲ್ಲಿ ಸೇರುತ್ತೀಯೆ’ ಎನ್ನಲು, ‘ಅದು ನಿನಗೆ ಹೇಗೆ ಗೊತ್ತು’ ಎಂದು ಪ್ರಶ್ನಿಸಿದನು. ಅವಳು ‘ನನ್ನ ಓಲೆಭಾಗ್ಯವುಂಟು’ ಎಂದಳು. ಬೇರೊಂದು ಕಡೆಯಲ್ಲಿ ಒಬ್ಬಳು ದರ್ಭೆಯ ಹಾಸಿಗೆಯಲ್ಲಿದ್ದ ತನ್ನ ಪತಿಯ ನಿಶ್ಚರ್ಯವನ್ನು ತಿಳಿದು ತನ್ನ ಸಾವನ್ನು ನಿಷ್ಕರ್ಷಿಸಿ
ಉ|| ತಾಂ ಗಡ ನಾಳೆ ಪೋಗಿ ದಿವಿಜಾಂಗನೆಯೊಳ್ ತೊಡರ್ದಿರ್ಪನಿಲ್ಲಿ ಮಾ
ಣ್ದಾಂ ಗಡಮಿರ್ಪೆನಂತನಿತು ಬೆಳ್ಳೆನೆ ಮುನ್ನಮೆ ಪೋಗಿ ನಲ್ಮೆಗೆ
ಲ್ಲಂಗೊಳೆ ದೇವಲೋಕದೊಳಧೀಶನನಾದಿರ್ಗೊಳ್ವೆನೋವೊ ಸ
ಗ್ಗಂಗಳೊಳಿರ್ಪ ದೇವಡಿತಿ ತೊೞ್ತಿರೊಳೞ್ತಿಯನಾಗಲೀವೆನೇ|| ೪೫ ||
ಪದ್ಯ-೪೫:ಪದವಿಭಾಗ-ಅರ್ಥ:ತಾಂ ಗಡ ನಾಳೆ ಪೋಗಿ ದಿವಿಜಾಂಗನೆಯೊಳ್ ತೊಡರ್ದಿರ್ಪನು (ಓಹೋ! ನನ್ನ ಪತಿಯು ನಾಳೆ ಹೋಗಿ ದೇವತಾಸ್ತ್ರೀಯರಲ್ಲಿ ಸೇರಿರುತ್ತಾನೆ,) ಇಲ್ಲಿ ಮಾಣ್ದು ಆಂ ಗಡಂ ಇರ್ಪೆನಂತು (ಇಲ್ಲಿ ನಾನು ಮಾತ್ರ ಹೇಗೆ ಇರಲಿ?) ಅನಿತು ಬೆಳ್ಳೆನೆ (ದಡ್ಡಳೇ) ಮುನ್ನಮೆ ಪೋಗಿ ನಲ್ಮೆಗೆಲ್ಲಂಗೊಳೆ ದೇವಲೋಕದೊಳು (ಮೊದಲೇ ಹೋಗಿ ನನ್ನ ಸದ್ಗುಣವು ಪ್ರಕಾಶವಾಗುವ ಹಾಗೆ ದೇವಲೋಕದಲ್ಲಿ) ಅಧೀಶನನು ಇದಿರ್ಗೊಳ್ವೆನು (ನನ್ನ ಪತಿಯನ್ನು ಇದಿರುಗೊಳ್ಳುತ್ತೇನೆ.) ಓವೊ ಸಗ್ಗಂಗಳೊಳಿರ್ಪ ದೇವಡಿತಿ ತೊೞ್ತಿರೊಳ್ ಅೞ್ತಿಯನು ಆಗಲು ಈವೆನೇ (ಓಹೋ ಸ್ವರ್ಗದಲ್ಲಿರುವ ದೇವಸ್ತ್ರೀಯರೆಂಬ ದಾಸಿಯರಲ್ಲಿ (ನನ್ನ ಪತಿಯು) ಪ್ರೀತಿಸುವುದಕ್ಕೆ ಅವಕಾಶ ಕೊಡುತ್ತೇನೆಯೇ? )
ಪದ್ಯ-೪೫:ಅರ್ಥ:ನನ್ನ ಪತಿಯು ನಾಳೆ ಹೋಗಿ ದೇವತಾಸ್ತ್ರೀಯರಲ್ಲಿ ಸೇರಿರುತ್ತಾನೆ, ಇಲ್ಲಿ ನಾನು ಮಾತ್ರ ಹೇಗೆ ಇರಲಿ? ಅಷ್ಟು ದಡ್ಡಳೇ ನಾನು! ಮೊದಲೇ ಹೋಗಿ ನನ್ನ ಸದ್ಗುಣವು ಪ್ರಕಾಶವಾಗುವ ಹಾಗೆ ದೇವಲೋಕದಲ್ಲಿ ನನ್ನ ಪತಿಯನ್ನು ಇದಿರುಗೊಳ್ಳುತ್ತೇನೆ. ಓಹೋ ಸ್ವರ್ಗದಲ್ಲಿರುವ ದೇವಸ್ತ್ರೀಯರೆಂಬ ದಾಸಿಯರಲ್ಲಿ (ನನ್ನ ಪತಿಯು) ಪ್ರೀತಿಸುವುದಕ್ಕೆ ಅವಕಾಶ ಕೊಡುತ್ತೇನೆಯೇ?
ವ|| ಎಂದು ಕೈದವಮಿಲ್ಲದ ನಲ್ಮೆಯಂ ನಾಲಗೆಯ ತುದಿಗೆ ತಂದು ನುಡಿದಳ್ ಮತ್ತೊರ್ವಳ್ ತನ್ನಾಣ್ಮನ ದೋರ್ವಲದಗುರ್ವಂ ನೆಚ್ಚಿ-
ವಚನ:ಪದವಿಭಾಗ-ಅರ್ಥ:ಎಂದು ಕೈದವಮಿಲ್ಲದ (ಕಪಟವಿಲ್ಲದ) ನಲ್ಮೆಯಂ (ಪ್ರೇಮವನ್ನು) ನಾಲಗೆಯ ತುದಿಗೆ ತಂದು ನುಡಿದಳ್ ಮತ್ತೊರ್ವಳ್ ತನ್ನ ಆಣ್ಮನ ದೋರ್ವಲದ ಅಗುರ್ವಂ ನೆಚ್ಚಿ ( ತನ್ನ ಪ್ರಿಯ ಗಂಡನ ಬಾಹುಬಲದ ಆಧಿಕ್ಯವನ್ನು ನಂಬಿ )-
ವಚನ:ಅರ್ಥ:ವ|| ಎಂದು ಕಪಟವಿಲ್ಲದ ತನ್ನ ಪ್ರೇಮವನ್ನು ನಾಲಗೆಯ ತುದಿಗೆ ತಂದು ಸ್ಪಷ್ಟವಾಗಿ ಹೇಳಿದಳು. ಮತ್ತೊಬ್ಬಳು ತನ್ನ ಪ್ರಿಯ ಗಂಡನ ಬಾಹುಬಲದ ಆಧಿಕ್ಯವನ್ನು ನಂಬಿ
ಚಂ|| ಜಲಧಿಯೊಳಾದ ಮುತ್ತುಗಳವೇಂ ಪೊಸತಾದುವೆ ನಿನ್ನ ತೋಳ ಬಾ
ಳೊಳೆ ಬಲಗರ್ವದಿಂ ತೆಗೆದುದಗ್ರ ವಿರೋಧಿ ಮದೇಭ ಮಸ್ತಕ|
ಸ್ಥಳ ಜಳರಾಶಿಯೊಳ್ ಬಳೆದ ನಿರ್ಮಳ ನಿರ್ವ್ರಣ ವೃತ್ತಮೌಕ್ತಿಕಾ
ವಳಿಯನೆ ತರ್ಪುದೆಂದು ನುಡಿದೞ್ಕರೊಳಾಱಿಸಿದಳ್ ನಿಜೇಶನಂ|| ೪೬ ||
ಪದ್ಯ-೪೬:ಪದವಿಭಾಗ-ಅರ್ಥ:ಜಲಧಿಯೊಳಾದ ಮುತ್ತುಗಳವೇಂ ಪೊಸತಾದುವೆ (ಸಮುದ್ರದಲ್ಲಿ ಹುಟ್ಟಿದ ಮುತ್ತುಗಳು ಹೊಸದಾದುದೇನು?) ನಿನ್ನ ತೋಳ ಬಾಳೊಳೆ (ತೋಳೆಂಬ ಕತ್ತಿಯಿಂದ) ಬಲಗರ್ವದಿಂ ತೆಗೆದ (ಬಲಪ್ರದರ್ಶನಮಾಡಿ ತೆಗೆದ) ಉದಗ್ರ ವಿರೋಧಿ ಮದೇಭ ಮಸ್ತಕಸ್ಥಳ ಜಳರಾಶಿಯೊಳ್ (ಭಯಂಕರವಾದ ಶತ್ರುರಾಜರ ಮದ್ದಾನೆಯ ಕುಂಭಸ್ಥಳದ ಜಲರಾಶಿಯಿಂದ) ಬಳೆದ ನಿರ್ಮಳ ನಿರ್ವ್ರಣ ವೃತ್ತಮೌಕ್ತಿಕಾವಳಿಯನೆ (ಬೆಳೆದ ನಿರ್ಮಲವಾದ ಮುಕ್ಕಾಗದ ಮುತ್ತುಗಳನ್ನೇ) ತರ್ಪುದೆಂದು ನುಡಿದು ಅೞ್ಕರೊಳು ಆಱಿಸಿದಳ್ ನಿಜೇಶನಂ (ತಂದುಕೊಡಬೇಕು ಎಂದು ಪ್ರೀತಿಯಿಂದ ತನ್ನ ಗಂಡನನ್ನು ಕುರಿತು ಸಮಾಧಾವಾಗಿ ಹೇಳಿದಳು)
ಪದ್ಯ-೪೬:ಅರ್ಥ: ಸಮುದ್ರದಲ್ಲಿ ಹುಟ್ಟಿದ ಮುತ್ತುಗಳು ಹೊಸದಾದುದೇನು? ನಿನ್ನ ತೋಳೆಂಬ ಕತ್ತಿಯಿಂದ ಬಲಪ್ರದರ್ಶನಮಾಡಿ ತೆಗೆದ ಭಯಂಕರವಾದ ಶತ್ರುರಾಜರ ಮದ್ದಾನೆಯ ಕುಂಭಸ್ಥಳದ ಜಲರಾಶಿಯಲ್ಲಿ ಬೆಳೆದ ನಿರ್ಮಲವಾದ ಮುಕ್ಕಾಗದ ಮುತ್ತುಗಳನ್ನೇ ತಂದುಕೊಡಬೇಕು ಎಂದು ಪ್ರೀತಿಯಿಂದ ತನ್ನ ಗಂಡನನ್ನು ಕುರಿತು ಸಮಾಧಾವಾಗಿ ಹೇಳಿದಳು.
ವ|| ಅಂತುಭಯ ಬಲಂಗಳೊಳಂ ವೀರಜನಜನಿತಾಳಾಪಂಗಳ್ ನೆಗೞೆ ವಿಕ್ರಮಾರ್ಜುನನನಂತನುಂ ತಾನುಂ ಜಲಕ್ಕನಿರೆ ಪಲ್ಲಂ ಸುಲಿದಗಣ್ಯ ಪುಣ್ಯ ತೀರ್ಥೋದಕಂಗಳಂ ಮಿಂದು ಮಂಗಳವಸದನಂಗೊಂಡು ಸಾಮಾನ್ಯಯಜ್ಞಂಗೆಯ್ದು ಪಲವುಂ ತೆಱದ ಪಗಳೆಸೆಯೆ ನಾಂದೀಮುಖಮಂ ನಿರ್ವರ್ತಿಸಿ ಶುಭಲಕ್ಷಣಲಕ್ಷಿತನುಂ ಸನ್ನಾಹಕರ್ಮನಿರ್ಮಿತನುಂ ಹಸ್ತಾಯುಧ ಕುಶಳನುಂ ಭದ್ರಮನನುಮಪ್ಪ ವಿಜಯಗಜಮುಮನಕ್ಷಯರಥಾಶ್ವಕೇತನ ಶರಾಸನ ಶರ ವಿಚಿತ್ರ ತನುತ್ರ ವಿವಿಧಾಸ್ತ್ರಶಸ್ತ್ರಂಗಳುಮಂ ಗಂಧ ಧೂಪ ದೀಪಾದಿಗಳಿಂದರ್ಚಿಸಿ ಪೊಡೆವಟ್ಟಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಉಭಯ ಬಲಂಗಳೊಳಂ ವೀರಜನಜನಿತ ಆಳಾಪಂಗಳ್ ನೆಗೞೆ (ಹಾಗೆ ಎರಡು ಸೈನ್ಯಗಳಲ್ಲಿ ವೀರಲಾಪಗಳು ಹೆಚ್ಚಲು,) ವಿಕ್ರಮಾರ್ಜುನನು ಅನಂತನುಂ ತಾನುಂ ಜಲಕ್ಕನಿರೆ ಪಲ್ಲಂ ಸುಲಿದು (ಅರ್ಜುನನೂ ಕೃಷ್ಣನೂ ನಿರ್ಮಲವಾಗಲು ಹಲ್ಲನ್ನು ತೊಳೆದು) ಅಗಣ್ಯ ಪುಣ್ಯ ತೀರ್ಥೋದಕಂಗಳಂ ಮಿಂದು (ಅಸಂಖ್ಯಾತವಾದ ಪವಿತ್ರ ತೀರ್ಥದ ನೀರಿನಲ್ಲಿ ಸ್ನಾನಮಾಡಿ,) ಮಂಗಳವಸದನಂಗೊಂಡು ಸಾಮಾನ್ಯಯಜ್ಞಂಗೆಯ್ದು (ಮಂಗಳಾಭರಣಗಳನ್ನು ತೊಟ್ಟು ನಿತ್ಯಕರ್ಮಗಳನ್ನು ಮುಗಿಸಿ) ಪಲವುಂ ತೆಱದ ಪಗಳೆಸೆಯೆ (ನಾನಾ ರೀತಿಯ ವಾದ್ಯಗಳು ಮೊಳಗುತ್ತಿರಲು) ನಾಂದೀಮುಖಮಂ ನಿರ್ವರ್ತಿಸಿ (ನಾಂದಿಮುಖವೆಂಬ ಪಿತೃಯಜ್ಞವನ್ನು ಮುಗಿಸಿದರು.) ಶುಭಲಕ್ಷಣ ಲಕ್ಷಿತನುಂ ಸನ್ನಾಹ ಕರ್ಮ ನಿರ್ಮಿತನುಂ (ಶುಭಲಕ್ಷಣಗಳಿಂದ ಕೂಡಿದುದೂ ಯುದ್ಧಕಾರ್ಯಕ್ಕೆ ಸಿದ್ಧಮಾಡಲಟ್ಟುದೂ) ಹಸ್ತಾಯುಧ ಕುಶಳನುಂ ಭದ್ರಮನನುಮಪ್ಪ ವಿಜಯಗಜಮುಮನು (ಕರಕೌಶಲ್ಯ ಉಳ್ಳುದೂ ಭದ್ರಜಾತಿಗೆ ಸೇರಿದುದೂ ಆದ ವಿಜಯಗಜವನ್ನೂ ) ಅಕ್ಷಯರಥ ಅಶ್ವ ಕೇತನ ಶರಾಸನ ಶರ ವಿಚಿತ್ರ ತನುತ್ರ ವಿವಿಧಾಸ್ತ್ರಶಸ್ತ್ರಂಗಳುಮಂ (ನಾಶವಿಲ್ಲದ ತೇರು, ಕುದುರೆ, ಧ್ವಜ, ಬಿಲ್ಲು, ಬಾಣ, ಕವಚ, ವಿವಿಧ ಅಸ್ತ ಶಸ್ತ್ರ -ಮೊದಲಾದವುಗಳನ್ನು) ಗಂಧ ಧೂಪ ದೀಪಾದಿಗಳಿಂದ ಅರ್ಚಿಸಿ ಪೊಡೆವಟ್ಟ ಆಗಳ್-(ಗಂಧ, ಧೂಪ, ದೀಪ, ಮೊದಲಾದವುಗಳಿಂದ ಪೂಜಿಸಿ ನಮಸ್ಕರಿಸಿದರು.)
ವಚನ:ಅರ್ಥ:ಹಾಗೆ ಎರಡು ಸೈನ್ಯಗಳಲ್ಲಿ ವೀರಲಾಪಗಳು ಹೆಚ್ಚಲು, ವಿಕ್ರಮಾರ್ಜುನನೂ ಕೃಷ್ಣನೂ ನಿರ್ಮಲವಾಗಲು ಹಲ್ಲನ್ನು ತೊಳೆದು ಅಸಂಖ್ಯಾತವಾದ ಪವಿತ್ರ ತೀರ್ಥದ ನೀರಿನಲ್ಲಿ ಸ್ನಾನಮಾಡಿ, ಮಂಗಳಾಭರಣಗಳನ್ನು ತೊಟ್ಟು ನಿತ್ಯಕರ್ಮಗಳನ್ನು ಮುಗಿಸಿದರು. ನಾನಾ ರೀತಿಯ ವಾದ್ಯಗಳು ಮೊಳಗುತ್ತಿರಲು ನಾಂದಿಮುಖವೆಂಬ ಪಿತೃಯಜ್ಞವನ್ನು ಮುಗಿಸಿದರು. ಶುಭಲಕ್ಷಣಗಳಿಂದ ಕೂಡಿದುದೂ ಯುದ್ಧಕಾರ್ಯಕ್ಕೆ ಸಿದ್ಧಮಾಡಲಟ್ಟುದೂ ಕರಕೌಶಲ್ಯ ಉಳ್ಳುದೂ ಭದ್ರಜಾತಿಗೆ ಸೇರಿದುದೂ ಆದ ವಿಜಯಗಜವನ್ನೂ ನಾಶವಿಲ್ಲದ ತೇರು, ಕುದುರೆ, ಧ್ವಜ, ಬಿಲ್ಲು, ಬಾಣ, ಕವಚ, ವಿವಿಧ ಅಸ್ತ ಶಸ್ತ್ರ -ಮೊದಲಾದವುಗಳನ್ನು, ಗಂಧ, ಧೂಪ, ದೀಪ, ಮೊದಲಾದವುಗಳಿಂದ ಪೂಜಿಸಿ ನಮಸ್ಕರಿಸಿದರು. ಆಗ-
ಕಂ|| ಬೆಳಗುವ ಸೊಡರ್ಗಳ ಬೆಳಗುಮ
ನಿಳಿಸಿ ತೞತ್ತೞಿಸಿ ಪೊಳೆಯೆ ತಮ್ಮಯ ಬೆಳಗ|
ಗ್ಗಳಿಸಿ ತೞತೞಿಸಿ ವಿದ್ಯು
ದ್ವಿಳಸಿತಮನೆನಿಸಿದುವು ನರನ ದಿವ್ಯಾಸ್ತ್ರಂಗಳ್|| ೪೭ ||
ಪದ್ಯ-೪೭:ಪದವಿಭಾಗ-ಅರ್ಥ:ಬೆಳಗುವ ಸೊಡರ್ಗಳ ಬೆಳಗುಮನ ಇಳಿಸಿ ತೞತ್ತೞಿಸಿ ಪೊಳೆಯೆ (ಬೆಳಗುವ ದೀಪದ ಬೆಳಕನ್ನು ಕೀಳುಮಾಡಿ ಥಳಥಳನೆ ಹೊಳೆಯಲು) ತಮ್ಮಯ ಬೆಳಗ ಅಗ್ಗಳಿಸಿ ತೞತೞಿಸಿ ( ತಮ್ಮ ಕಾಂತಿಯು ಅತ್ಯಧಿಕವಾಗಿ ಮಿಂಚಿನಿಂದ ಕೂಡಿದುವೋ ಎಂಬಂತೆ ಪ್ರಕಾಶಿಸಿದುವು.) ವಿದ್ಯುದ್ವಿಳಸಿತಮನ ಎನಿಸಿದುವು ನರನ ದಿವ್ಯಾಸ್ತ್ರಂಗಳ್ ( ಅತ್ಯಧಿಕವಾಗಿ ಮಿಂಚಿನಿಂದ ಕೂಡಿದುವೋ ಎಂಬಂತೆ ಎನಿಸಿದವು.)
ಪದ್ಯ-೪೭:ಅರ್ಥ:ಅರ್ಜುನನ ದಿವ್ಯಾಸ್ತ್ರಗಳು ಅಲ್ಲಿ ಕಾಂತಿಯುಕ್ತವಾಗಿ ಬೆಳಗುವ ದೀಪದ ಬೆಳಕನ್ನು ಕೀಳುಮಾಡಿ ಥಳಥಳನೆ ಹೊಳೆಯಲು ತಮ್ಮ ಕಾಂತಿಯು ಅತ್ಯಕವಾಗಿ ಮಿಂಚಿನಿಂದ ಕೂಡಿದುವೋ ಎಂಬಂತೆ ಪ್ರಕಾಶಿಸಿದುವು.
ಕಂ|| ಸೊಡರ್ಗುಡಿಯ ಕೆಂಪಿನೊಳ್ ಕೆಂ
ಪಿಡಿದಿರೆ ರಿಪುನೃಪತಿಬಲದ ಶೋಣಿತಜಳಮಂ|
ಕುಡಿಯದೆಯುಂ ದಲ್ ಮುನ್ನಮೆ
ಕುಡಿದಂತೆಸೆದಿರ್ದುವರಿಗನಸ್ತ್ರಚಯಂಗಳ್|| ೪೮ ||
ಪದ್ಯ-೪೮:ಪದವಿಭಾಗ-ಅರ್ಥ:ಸೊಡರ್ಗುಡಿಯ ಕೆಂಪಿನೊಳ್ ಕೆಂಪು ಇಡಿದಿರೆ (ದೀಪದ ಕುಡಿಯ ಕೆಂಪುಬಣ್ಣದಿಂದ ಕೆಂಪು ಬಣ್ಣ ತುಂಬಿರಲು,) ರಿಪುನೃಪತಿಬಲದ (ಶತ್ರುರಾಜರ) ಶೋಣಿತಜಳಮಂ ಕುಡಿಯದೆಯುಂ (ರಕ್ತಜಲವನ್ನು ಕುಡಿಯದಿದ್ದರೂ) ದಲ್, ಮುನ್ನಮೆ ಕುಡಿದಂತೆ ಎಸೆದಿರ್ದುವು ಅರಿಗನ ಅಸ್ತ್ರಚಯಂಗಳ್ (ನಿಜಕ್ಕೂ, ಅದಕ್ಕೆ ಮೊದಲೇ ಅವು ಕುಡಿದಿದ್ದಂತೆ ಶೋಭಾಯಮಾನವಾಗಿದ್ದುವು, ಅರ್ಜುನನ ಬಾಣಸಮೂಹವು)
ಪದ್ಯ-೪೮:ಅರ್ಥ:ಅರ್ಜುನನ ಬಾಣಸಮೂಹವು ದೀಪದ ಕುಡಿಯ ಕೆಂಪುಬಣ್ಣದಿಂದ ಕೆಂಪು ಬಣ್ಣ ತುಂಬಿರಲು ಶತ್ರುರಾಜರ ರಕ್ತಜಲವನ್ನು ಕುಡಿಯದಿದ್ದರೂ ಅದಕ್ಕೆ ಮೊದಲೇ ಅವು ಕುಡಿದಿದ್ದಂತೆ ಶೋಭಾಯಮಾನವಾಗಿದ್ದುವು.
ವ|| ಅಂತಾಯಿರುಳುಂ ವಿಜಯಂ ವಿಜಯೋದ್ಯೋಗದೊಳ್ ಕಳೆಯೆ ಬೆಳಗಪ್ಪ ಜಾವದೊಳ್ ಬೀಡುವೀಡುಗಳ್ಗೆಲ್ಲಂ ತೋೞಲ್ದೇಕಿರ್ಪಿರೇೞಿಂ ಪಣ್ಣಿಮೆನೆ-
ವಚನ:ಪದವಿಭಾಗ-ಅರ್ಥ: ಅಂತು ಆ ಯಿರುಳುಂ ವಿಜಯಂ ವಿಜಯೋದ್ಯೋಗದೊಳ್ ಕಳೆಯೆ (ಆ ರಾತ್ರಿಯನ್ನು ಅರ್ಜುನನು ಯುದ್ಧೋದ್ಯೋಗದಲ್ಲಿಯೇ ಕಳೆದು) ಬೆಳಗಪ್ಪ ಜಾವದೊಳ್ ಬೀಡುವೀಡುಗಳ್ಗೆ ಎಲ್ಲಂ (ಬೀಡು ಬೀಡುಗಳಲ್ಲೆಲ್ಲ) ತೋೞಲ್ದು ಏಕಿರ್ಪಿರಿ ಏೞಿಂ ಪಣ್ಣಿಂ ಎನೆ-(ಅಲೆದು ‘ಏಕೆ ಸುಮ್ಮನಿದ್ದೀರಿ ಎದ್ದು ಸಿದ್ಧರಾಗಿ’ ಎಂದನು. ಎನ್ನಲು-)
ವಚನ:ಅರ್ಥ:ಹಾಗೆ ಆ ರಾತ್ರಿಯನ್ನು ಅರ್ಜುನನು ಯುದ್ಧೋದ್ಯೋಗದಲ್ಲಿಯೇ ಕಳೆದು ಬೆಳಗಿನ ಜಾವದಲ್ಲಿ ಬೀಡು ಬೀಡುಗಳಲ್ಲೆಲ್ಲ ಅಲೆದು ‘ಏಕೆ ಸುಮ್ಮನಿದ್ದೀರಿ ಎದ್ದು ಸಿದ್ಧರಾಗಿ’ ಎಂದನು. ಎನ್ನಲು-
ಉ|| ತಂಡದೆ ಕೀಱಿ ಸಾಱುವ ಪಲರ್ ಪಡೆವಳ್ಳರ ಮಾತುಗಳ್ ಮನಂ
ಗೊಂಡಿರೆ ಸನ್ನಣಂದುಡುವ ಪಣ್ಣುವ ಬಾೞ್ತೆಯವಂದಿರಂ ಮರು|
ಳ್ಗೊಂಡವೊಲೂಳ್ವ ಬಗ್ಗಿಸುವ ಬೇಗದೊಳಾ ಕಟಕಂಗಳೆಯ್ದೆ ಕೆ
ಯ್ಕೊಂಡುವು ಮಂದರ ಕ್ಷುಭಿತ ದುಗ್ಧಪಯೋಧಿ ಗಭೀರನಾದಮಂ|| ೪೯ ||
ಪದ್ಯ-೪೯:ಪದವಿಭಾಗ-ಅರ್ಥ:ತಂಡದೆ ಕೀಱಿ (ಕೀಳಿ- ಕಿರುಚಿ ಕೋಪಿಸಿ) ಸಾಱುವ ಪಲರ್ ಪಡೆವಳ್ಳರ ಮಾತುಗಳ್ (ಗುಂಪುಗುಂಪಾಗಿ ಕಿರುಚಿ ಸಾರಿ ಹೇಳುತ್ತಿರುವ ಅನೇಕ ಸೇನಾನಾಯಕರ ಮಾತುಗಳು) ಮನಂಗೊಂಡಿರೆ ಸನ್ನಣಂದುಡುವ (ಸೆಳೆಯುತ್ತಿರಲು, ಕವಚವನ್ನು ತೊಡಿಸುವ,) ಪಣ್ಣುವ (ಯುದ್ಧಕ್ಕೆ ಅಣಿಮಾಡುತ್ತಿರುವ,) ಬಾೞ್ತೆಯವಂದಿರಂ ಮರುಳ್ಗೊಂಡವೊಲ್ (ಕೆಲಸದಲ್ಲಿರುವವರನ್ನು ಹುಚ್ಚು ಹಿಡಿದವರ ಹಾಗೆ) ಊಳ್ವ ಬಗ್ಗಿಸುವ ಬೇಗದೊಳು (ಕೂಗುವ, ಹೆದರಿಸುತ್ತಿರುವ ಸಮಯದಲ್ಲಿ,) ಆ ಕಟಕಂಗಳು ಎಯ್ದೆ (ಆ ಸೈನ್ಯವು ಬರಲು) ಕೆಯ್ಕೊಂಡುವು (ಅನುಕರಿಸಿದವು) ಮಂದರ ಕ್ಷುಭಿತ (ಮಂದರಪರ್ವತದಿಂದ ಕಡೆಯಲ್ಪಟ್ಟ) ದುಗ್ಧಪಯೋಧಿ ಗಭೀರನಾದಮಂ (ಕ್ಷೀರಸಮುದ್ರದ ಗಭೀರನಾದವನ್ನು--ಕೆಯ್ಕೊಂಡುವು- ಅನುಕರಿಸಿದವು.)
ಪದ್ಯ-೪೯:ಅರ್ಥ:ಗುಂಪುಗುಂಪಾಗಿ ಕಿರುಚಿ ಸಾರಿ ಹೇಳುತ್ತಿರುವ ಅನೇಕ ಸೇನಾನಾಯಕರ ಮಾತುಗಳು ಮನಸ್ಸನ್ನು ಸೆಳೆಯುತ್ತಿರಲು, ಕವಚವನ್ನು ತೊಡಿಸುವ, ಯುದ್ಧಕ್ಕೆ ಅಣಿಮಾಡುತ್ತಿರುವ, ಕೆಲಸದಲ್ಲಿರುವವರನ್ನು ಹುಚ್ಚು ಹಿಡಿದವರ ಹಾಗೆ ಕೂಗುವ, ಹೆದರಿಸುತ್ತಿರುವ ಸಮಯದಲ್ಲಿ, ಆ ಸೈನ್ಯವು ವೇಗದಲ್ಲಿ ಬರಲು, ಮಂದರಪರ್ವತದಿಂದ ಕಡೆಯಲ್ಪಟ್ಟ ಕ್ಷೀರಸಮುದ್ರದ ಗಭೀರನಾದವನ್ನು ಅನುಕರಿಸಿದವು.
ಚಂ|| ಕೃತ ವಿವಿಧಾಸ್ತ್ರ ವೀರಭಟಕೋಟಿ ಭಯಂಕರಮಾಗೆ ಬೀಸುವಾ
ವುತಿಯ ಕಳಂಕ ಪಂಕದೊಳೆ ಪೆರ್ಚಿದ ಕೞ್ತಲೆ ತೀವ್ರ ಶಸ್ತ್ರಸಂ|
ಹತಿಗಳ ದೀಪ್ತಿಯಿಂ ಬಿಸುಗೆಯಾಗಿ ಕರಂ ಪೊಗರ್ವಟ್ಟಗುರ್ವುಮ
ದ್ಭುತಮುಮನೀಯೆ ಪಣ್ಣಿದುವು ಪಾಂಡವ ಕೌರವ ರೌದ್ರಸಾಧನಂ|| ೫೦ ||
ಪದ್ಯ-೫೦:ಪದವಿಭಾಗ-ಅರ್ಥ:ಕೃತ ವಿವಿಧಾಸ್ತ್ರ ವೀರಭಟಕೋಟಿ ಭಯಂಕರಮಾಗೆ (ನಾನಾವಿಧವಾದ ಅಸ್ತ್ರಶಸ್ತ್ರಗಳಲ್ಲಿ ಪೂರ್ಣಪಾಂಡಿತ್ಯವನ್ನು ಪಡೆದಿರುವ ವೀರಭಟರ ಸಮೂಹವು ಭಯವಾಗುವ ಹಾಗೆ) ಬೀಸುವ ಆವುತಿಯ ಕಳಂಕ (ಸ್ವಚ್ಛವಾದ) ಪಂಕದೊಳೆ (ಬೀಸುತ್ತಿರುವ ಆವುತಿಯೆಂಬ ಆಯುಧದ ಸ್ವಚ್ಛವಾದ ಬೀಸಣಿಕೆಯಲ್ಲಿ / ಸಾಲಿನಲ್ಲಿ) ಪೆರ್ಚಿದ ಕೞ್ತಲೆ ತೀವ್ರ ಶಸ್ತ್ರಸಂ ಹತಿಗಳ ದೀಪ್ತಿಯಿಂ (ಹೆಚ್ಚಿದ ಕತ್ತಲೆಯು ಹರಿತವಾದ ಶಸ್ತ್ರ ಸಮೂಹಗಳ ಕಾಂತಿಯೊಡನೆ) ಬಿಸುಗೆಯಾಗಿ ಕರಂ ಪೊಗರ್ವಟ್ಟು ಅಗುರ್ವುಂ ಅದ್ಭುತಮುಮನು ಈಯೆ (ಸೇರಿಕೊಂಡು ಬಹಳ ಕಾಂತಿಯುಕ್ತವಾಗಿ ಭಯವನ್ನೂ ಆಶ್ಚರ್ಯವನ್ನೂ ಏಕಕಾಲದಲ್ಲಿ ಉಂಟುಮಾಡುತ್ತಿರಲು) ಪಣ್ಣಿದುವು ಪಾಂಡವ ಕೌರವ ರೌದ್ರಸಾಧನಂ (ಪಾಂಡವ ಕೌರವರ ಭಯಂಕರ ಸೈನ್ಯಗಳು ಪಣ್ಣಿದವು-ಸಿದ್ಧವಾದವು.)
ಪದ್ಯ-೫೦:ಅರ್ಥ: ನಾನಾವಿಧವಾದ ಅಸ್ತ್ರಶಸ್ತ್ರಗಳಲ್ಲಿ ಪೂರ್ಣಪಾಂಡಿತ್ಯವನ್ನು ಪಡೆದಿರುವ ವೀರಭಟರ ಸಮೂಹವು ಭಯವಾಗುವ ಹಾಗೆ ಬೀಸುತ್ತಿರುವ ಆವುತಿಯೆಂಬ ಆಯುಧದ ಸ್ವಚ್ಛವಾದ ಬೀಸಣಿಕೆಯಲ್ಲಿ ಹೆಚ್ಚಿದ ಕತ್ತಲೆಯು ಹರಿತವಾದ ಶಸ್ತ್ರ ಸಮೂಹಗಳ ಕಾಂತಿಯೊಡನೆ ಚೆನ್ನಾಗಿ ಸೇರಿಕೊಂಡು ಬಹಳ ಕಾಂತಿಯುಕ್ತವಾಗಿ ಭಯವನ್ನೂ ಆಶ್ಚರ್ಯವನ್ನೂ ಏಕಕಾಲದಲ್ಲಿ ಉಂಟುಮಾಡುತ್ತಿರಲು, ಪಾಂಡವ ಕೌರವರ ಭಯಂಕರ ಸೈನ್ಯಗಳು ಸಿದ್ಧವಾದವು.
ವ|| ಅಂತೆರಡುಂ ಪಡೆಗಳುಂ ಪಣ್ಣಪಣ್ಣನೆ ಪಣ್ಣಿ ಕಾಳೆಗಕ್ಕೆ ನಡೆಯಲೊಡರಿಸಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಎರಡುಂ ಪಡೆಗಳುಂ ಪಣ್ಣಪಣ್ಣನೆ ಪಣ್ಣಿ (ಮೆಲ್ಲಮೆಲ್ಲನೆ ಯುದ್ಧಸನ್ನದ್ಧವಾಗಿ ) ಕಾಳೆಗಕ್ಕೆ ನಡೆಯಲು ಒಡರಿಸಿದಾಗಳ್ (ತೊಡಗಿದಾಗ)-
ವಚನ:ಅರ್ಥ:ವ|| ಹಾಗೆ ಎರಡು ಸೈನ್ಯಗಳೂ ಮೆಲ್ಲಮೆಲ್ಲನೆ ಯುದ್ಧಸನ್ನದ್ಧವಾಗಿ ಯುದ್ಧಕ್ಕೆ ಹೊರಡಲು ತೊಡಗಿದಾಗ (ಸೂರ್ಯೋದಯವಾಯಿತು.)

ಕುರುಕ್ಷೇತ್ರ ರಣಭೂಮಿಯಲ್ಲಿ ಸೈನ್ಯಗಳ ವಿವರ[ಸಂಪಾದಿಸಿ]

ಕಂ|| ಲೋಕೈಕಚಕ್ಷು ನವ ಕಮ
ಲಾಕರ ಬಾಂಧವನನೇಕ ದಿತಿಸುತ ಸಮರಾ|
ನೀಕ ಭಯಂಕರನೆರಡುಮ
ನೀಕಂಗಳನಡರೆ ನೋಡುವಂತುದಯಿಸಿದಂ|| ೫೧
ಪದ್ಯ-೫೧:ಪದವಿಭಾಗ-ಅರ್ಥ:ಲೋಕೈಕಚಕ್ಷು (ಲೋಕ ಏಕ ಚಕ್ಷು-ಲೋಕಕ್ಕೆ ಒಂದೇ ಕಣ್ಣಾಗಿರುವ) ನವ ಕಮಲಾಕರ ಬಾಂಧವನು (ಹೊಸ ತಾವರೆಕೊಳದ ಬಾಂಧವನೂ) ಅನೇಕ ದಿತಿಸುತ ಸಮರಾನೀಕ ಭಯಂಕರನು (ದಿತಿಯ ಮಕ್ಕಳಾದ ಅನೇಕ ರಾಕ್ಷಸರ ಸೈನ್ಯಕ್ಕೆ ಭಯವನ್ನುಂಟುಮಾಡವ ಸೂರ್ಯನು) ಎರಡುಂ ಅನೀಕಂಗಳನು (ಎರಡು ಸೈನ್ಯಗಳನ್ನು) ಅಡರೆ ನೋಡುವಂತೆ ಉದಯಿಸಿದಂ (ಮೇಲೆ ಏರಿ ನೋಡುವಂತೆ ಉದಯಿಸಿದನು.)
ಪದ್ಯ-೫೧:ಅರ್ಥ:ಲೋಕಕ್ಕೆ ಒಂದೇ ಕಣ್ಣಾಗಿರುವವನೂ, ಹೊಸ ತಾವರೆಕೊಳದ ಬಾಂಧವನೂ, ದಿತಿಯ ಮಕ್ಕಳಾದ ಅನೇಕ ರಾಕ್ಷಸರ ಸೈನ್ಯಕ್ಕೆ ಭಯವನ್ನುಂಟುಮಾಡವ ಸೂರ್ಯನು, ಎರಡು ಸೈನ್ಯಗಳನ್ನು ಮೇಲೆ ಹತ್ತಿ ನೋಡುವಂತೆ ಉದಯಿಸಿದನು.
ವ|| ಆಗಳೇಱಿಸಿದ ಬಿಸುಗೆಗಳುಮಿಕ್ಕಿದ ಲೋಹವಕ್ಕರೆಗಳುಮುರ್ಚಿದ ಮೊಗವಡಂಗಳುಂ ಕಟ್ಟಿದ ಪೞಯಿಗೆಗಳುಮೊಟ್ಟಿದ ಮೂವತ್ತೆರಡಾಯುಧಂಗಳುಂ ಬೆರಸೆಱಂಕೆವೆರಸಿದ ಕುಲಗಿರಿಗಳೆ ತಳರ್ವಂತೆ ತಳರ್ವ ಮದಾಂಧಗಂಧಸಿಂಧುರಂಗಳುಮಂ ಚಕ್ರಚೀತ್ಕೃತ ನಾದದೊಳ್ ದಿಕ್ಚಕ್ರಮುಮಂ ಚಕ್ರಘಾತದೊಳ್ ಧರಾಚಕ್ರಮನಾಕ್ರಮಿಸಿ ನಿಶಾತಹೇತಿಗರ್ಭಂಗಳುಮನೇಕ ಪ್ರಕಾರ ಕೇತನ ವಾಜಿರಾಜಿಗಳುಮಾಗಿ ದೊಮ್ಮಳಿಸಿ ನಡೆವ ರಥಂಗಳುಮಂ ಕಣ್ಣುಂ ಖುರಮುಂ ತೋರೆ ಪಕ್ಕರೆಯಿಕ್ಕಿ ಪೊಳೆವ ಪೊನ್ನ ಪರ್ಯಾಣಂಗಳುಮೆಸೆಯೆ ಘೋಳಾಯ್ಲರ್ ಪೊಳೆಯಿಸೆ ಬಿಸಿಲ್ಗುದುರೆಗಳ್ ಪೊಳೆವಂತೆ ಪೊಳೆವ ಕಡುಗುದುರೆಗಳುಮಂ ಮಿಡುಮಿಡುಕನೆ ಮಿಡುಕುವ ಸಿಡಿಲೇೞ್ಗೆಯುಮಂ ಕೋಳ್ಮಸಗಿದ ಪುಲಿಯ ಪಿಂಡುಗಳುಮನನುಕರಿಸಿ ನಡೆವಣಿಯ ಸಂದಣಿಯುಮಂ ಕಾೞ್ತುಱು ಮಸಗಿದಂತೆ ಮಸಗಿದ ದುರ್ಧರ ಧನುರ್ಧರಬಲಮುಮಂ ಶ್ವೇತ ಭೀಷ್ಮರ ಪೇೞ್ದೋಜೆಯೊಳೆರಡುಂ ಪಡೆಗಳ ಪಡೆವಳರ್ಕಳ್ ಕುರುಕ್ಷೇತ್ರದೊಳ್ ಚಿತ್ರಿಸಿದಂತೊಡ್ಡಿ ನಿಂದಾಗಳ್-
ಪದ್ಯ-೫೨:ಪದವಿಭಾಗ-ಅರ್ಥ:ಆಗಳು ಏಱಿಸಿದ ಬಿಸುಗೆಗಳುಂ (ಎತ್ತಿ ಕಟ್ಟಿದ ಅಂಬಾರಿಗಳು) ಇಕ್ಕಿದ ಲೋಹವಕ್ಕರೆಗಳಂ ( ಹಾಕಿದ ಲೋಹದ ಪಕ್ಷರಕ್ಷೆಗಳು) ಉರ್ಚಿದ ಮೊಗವಡಂಗಳುಂ (ಬಿಚ್ಚಿರುವ ಮುಖವಾಡಗಳು) ಕಟ್ಟಿದ ಪೞಯಿಗೆಗಳುಂ (ಕಟ್ಟಿದ ಧ್ವಜಗಳು) ಒಟ್ಟಿದ ಮೂವತ್ತೆರಡು ಆಯುಧಂಗಳುಂ ಬೆರಸಿ ಎಱಂಕೆವೆರಸಿದ ಕುಲಗಿರಿಗಳೆ ತಳರ್ವಂತೆ ತಳರ್ವ (ರೆಕ್ಕೆಗಳಿಂದ ಕೂಡಿದ ಕುಲಪರ್ವತಗಳೇ ನಡೆಯುವಂತೆ ನೆಡೆಯುವ) ಮದಾಂಧಗಂಧ ಸಿಂಧುರಂಗಳುಮಂ (ಮದಾಂಧವಾದ ಆನೆಗಳು--- ನಡೆದುವು.) ಚಕ್ರಚೀತ್ಕೃತ ನಾದದೊಳ್ (ಚಕ್ರಗಳ ಚೀತ್ಕಾರ ಸದ್ದಿನಿಂದ) ದಿಕ್ಚಕ್ರಮುಮಂ ಚಕ್ರಘಾತದೊಳ್ ಧರಾಚಕ್ರಮನು ಆಕ್ರಮಿಸಿ (ಚಕ್ರಗಳ ಹೊಡೆತದಿಂದ ಭೂಮಂಡಲವನ್ನೂ ಆಕ್ರಮಿಸಿ) ನಿಶಾತಹೇತಿಗರ್ಭಂಗಳುಂ (ಹರಿತವಾದ ಆಯುಧಗಳನ್ನು) ಅನೇಕ ಪ್ರಕಾರ ಕೇತನ ವಾಜಿರಾಜಿಗಳುಂ ಆಗಿ (ನಾನಾ ರೀತಿಯ ಬಾವುಟ ಮತ್ತು ಕುದುರೆಗಳ ಸಮೂಹಗಳನ್ನುಳ್ಳುದಾಗಿ) ದೊಮ್ಮಳಿಸಿ ನಡೆವ ರಥಂಗಳುಮಂ (ಸಂಭಭ್ರದಿಂದ ತೇರುಗಳು) ಕಣ್ಣುಂ ಖುರಮುಂ ತೋರೆ ಪಕ್ಕರೆಯಿಕ್ಕಿ (ಕಣ್ಣು ಗೊರಸುಗಳನ್ನುಳಿದು ಪಾರ್ಶ್ವಕ್ಕೆ ಹಾಕಿದ ) ಪೊಳೆವ ಪೊನ್ನ ಪರ್ಯಾಣಂಗಳುಂ ಎಸೆಯೆ (ಗುಳದಿಂದಲೂ ಹೊಳೆಯುತ್ತಿರುವ ಚಿನ್ನದ ಜೀನುಗಳು ಶೋಭಿಸಲು,) ಘೋಳಾಯ್ಲರ್ (ಕುದುರೆಸವಾರರು) ಪೊಳೆಯಿಸೆ ಬಿಸಿಲ್ಗುದುರೆಗಳ್ ಪೊಳೆವಂತೆ (ಬಿಸಿಲ್ಗುದುರೆಗಳ ಹಾಗೆ ಹೊಳೆಯುತ್ತಿರುವ ಕುದುರೆಸವಾರರು,) ಪೊಳೆವ ಕಡುಗುದುರೆಗಳುಮಂ (ವೇಗಶಾಲಿಗಳಾದ ಕುದುರೆಗಳನ್ನು) ಮಿಡುಮಿಡುಕನೆ ಮಿಡುಕುವ ಸಿಡಿಲ ಏೞ್ಗೆಯುಮಂ (ಮಿಡುಮಿಡುಕನೆ ಮಿಡುಕುವ ಸಿಡಿಲಿನ ವೈಭವವನ್ನೂ) ಕೋಳ್ಮಸಗಿದ ಪುಲಿಯ ಪಿಂಡುಗಳುಮನು ಅನುಕರಿಸಿ (ಸರೆಸಿಕ್ಕ ಹುಲಿಗಳ ಹಿಂಡನ್ನೂ ಅನುಕರಿಸಿ) ನಡೆವ ಅಣಿಯ ಸಂದಣಿಯುಮಂ (ನಡೆಯುವ ಕಾಲಾಳುಗಳ ಸಮೂಹ) ಕಾೞ್ತುಱು ಮಸಗಿದಂತೆ ಮಸಗಿದ (ಕಾಡ ಹಸು ರೇಗಿದ ಹಾಗೆ ರೇಗಿರುವ) ದುರ್ಧರ ಧನುರ್ಧರ ಬಲಮುಮಂ (ಧರಿಸಲಸಾಧ್ಯವಾದ ಬಿಲ್ಲಾಳಿನ ಸೈನ್ಯವು) ಶ್ವೇತ ಭೀಷ್ಮರ ಪೇೞ್ದ ಓಜೆಯೊಳ್ (ಹೇಳಿದ ಕ್ರಮದಲ್ಲಿ) ಎರಡುಂ ಪಡೆಗಳ (ರಡು ಸೈನ್ಯವೂ ಶ್ವೇತ ಮತ್ತು ಭೀಷ್ಮರು ಆಜ್ಞೆ ಮಾಡಿದ ರೀತಿಯಲ್ಲಿ ನಡೆದು) ಪಡೆವಳರ್ಕಳ್ (ಸೇನಾಪಾಲಕರು) ಕುರುಕ್ಷೇತ್ರದೊಳ್ ಚಿತ್ರಿಸಿದಂತೆ ಒಡ್ಡಿ ನಿಂದಾಗಳ್ (ಕುರುಕ್ಷೇತ್ರದ ರಣರಂಗದಲ್ಲಿ ಎದುರುಬದರು ನಂತಾಗ ಅವು ಚಿತ್ರದಲ್ಲಿ ಬರೆದ ಹಾಗೆ ಕಂಡವು.)-
ವಚನ:ಅರ್ಥ: ಆಗ ಎತ್ತಿ ಕಟ್ಟಿದ ಅಂಬಾರಿಗಳು, ಹಾಕಿದ ಲೋಹದ ಪಕ್ಷರಕ್ಷೆಗಳು, ಬಿಚ್ಚಿರುವ ಮುಖವಾಡಗಳು, ಕಟ್ಟಿದ ಧ್ವಜಗಳು, ರಾಶಿಮಾಡಿರುವ ಮೂವತ್ತೆರಡಾಯುಧಗಳು, ಇವುಗಳಿಂದ ಕೂಡಿ ರೆಕ್ಕೆಗಳಿಂದ ಕೂಡಿದ ಕುಲಪರ್ವತಗಳೇ ನಡೆಯುವಂತೆ ನೆಡೆಯುವ ಮದಾಂಧವಾದ ಆನೆಗಳು ನಡೆದುವು. ಚಕ್ರಗಳ ಚೀತ್ಕಾರ ಸದ್ದಿನಿಂದ ದಿಕ್ಕುಗಳ ಸಮೂಹವನ್ನೂ, ಚಕ್ರಗಳ ಹೊಡೆತದಿಂದ ಭೂಮಂಡಲವನ್ನೂ ಆಕ್ರಮಿಸಿ ಹರಿತವಾದ ಆಯುಧಗಳನ್ನೂ, ನಾನಾ ರೀತಿಯ ಬಾವುಟ ಮತ್ತು ಕುದುರೆಗಳ ಸಮೂಹಗಳನ್ನುಳ್ಳುದಾಗಿ ಸಂಭಭ್ರದಿಂದ ತೇರುಗಳು ನಡೆದುವು. ಕಣ್ಣು ಗೊರಸುಗಳನ್ನುಳಿದು ಪಾರ್ಶ್ವಕ್ಕೆ ಹಾಕಿದ ಗುಳದಿಂದಲೂ ಹೊಳೆಯುತ್ತಿರುವ ಚಿನ್ನದ ಜೀನುಗಳು ಶೋಭಿಸಲು, ಬಿಸಿಲ್ಗುದುರೆಗಳ ಹಾಗೆ ಹೊಳೆಯುತ್ತಿರು ವಕುದುರೆಸವಾರರು, ವೇಗಶಾಲಿಗಳಾದ ಕುದುರೆಗಳನ್ನು, ಮಿಡುಮಿಡುಕನೆ ಮಿಡುಕುವ ಸಿಡಿಲಿನ ವೈಭವವನ್ನೂ ಸರೆಸಿಕ್ಕ ಹುಲಿಗಳ ಹಿಂಡನ್ನೂ ಅನುಕರಿಸಿ ನಡೆಯುವ ಕಾಲಾಳುಗಳ ಸಮೂಹ (ಮುಂದೆ ನಡೆಯಿತು) ಕಾಡ ಹಸು ರೇಗಿದ ಹಾಗೆ ರೇಗಿರುವ ಧರಿಸಲಸಾಧ್ಯವಾದ ಬಿಲ್ಲಾಳಿನ ಸೈನ್ಯವು (ಮುನ್ನುಗ್ಗಿತು). ಎರಡು ಸೈನ್ಯವೂ ಶ್ವೇತ ಮತ್ತು ಭೀಷ್ಮರು ಆಜ್ಞೆ ಮಾಡಿದ ರೀತಿಯಲ್ಲಿ ನಡೆದು ಸೇನಾನಾಯಕರು ಕುರುಕ್ಷೇತ್ರದ ರಣರಂಗದಲ್ಲಿ ಎದುರುಬದರು ನಂತಾಗ ಅವು ಚಿತ್ರದಲ್ಲಿ ಬರೆದ ಹಾಗೆ ಕಂಡವು.
ಚಂ|| ಜಲಶಯನೋದರಾಂತರದಿನೀ ತ್ರಿಜಗಂ ಪೊಱಮಟ್ಟುದೀಗಳೆಂ
ಬುಲಿ ಸಲೆ ತಮ್ಮ ತಮ್ಮ ಶಿಬಿರಂಗಳಿನುಗ್ರ ಚತುರ್ಬಲಂಗಳಂ|
ಪಲವುಮನೊಂದೆ ಮಾಡಿ ದೆಸೆಗಳ್ ಮಸುಳಲ್ ನಡೆತಂದರಾಜಿಗಿ
ರ್ವಲದಲರಾತಿನಾಯಕರುಮೊರ್ಬರನೊರ್ಬರೆ ಗೆಲ್ವ ತಕ್ಕಿನೊಳ್|| ೫೨ ||
ಪದ್ಯ-೫೨:ಪದವಿಭಾಗ-ಅರ್ಥ:ಜಲಶಯನ ಉದರಾಂತರದಿಂ ಈ ತ್ರಿಜಗಂ ಪೊಱಮಟ್ಟುದು ಈಗಳ್ (ಕ್ಷೀರಸಾಗರದಲ್ಲಿ ಮಲಗಿದ ವಿಷ್ಣುವಿನ ಗರ್ಭದ ಒಳಗಿಂದ ಮೂರುಲೋಕಗಳೂ ಈಗ ಹೊರಹೊರಟವು) ಎಂಬ ಉಲಿ ಸಲೆ(ಎಂಬ ಮಾತು ಸಲ್ಲಲು,) ತಮ್ಮ ತಮ್ಮ ಶಿಬಿರಂಗಳಿನಂ ಉಗ್ರ ಚತುರ್ಬಲಂಗಳಂ ಪಲವುಮನು ಒಂದೆ ಮಾಡಿ (ಚತುರ್ಬಲ ಸೈನ್ಯಗಳನ್ನೂ ಒಂದುಗೂಡಿಸಿಕೊಂಡು) ದೆಸೆಗಳ್ ಮಸುಳಲ್ (ದಿಕ್ಕುಗಳು ಕಪ್ಪಾಗಲು) ನಡೆತಂದರ್ ( ನಡೆದು ಬಂದರು.->) ಆಜಿಗೆ ಇರ್ವಲದಲ್ ಆರಾತಿನಾಯಕರುಂ ಒರ್ಬರನೊರ್ಬರೆ ಗೆಲ್ವ ತಕ್ಕಿನೊಳ್ (ಯುದ್ಧಕ್ಕೆ ಎರಡೂದಳದವರ ಶತ್ರುನಾಯಕರು ಒಬ್ಬರನ್ನೊಬ್ಬರು ಗೆಲ್ಲುವ ಸಾಮರ್ಥ್ಯದಿಂದ - ನಡೆತಂದರ್)
ಪದ್ಯ-೫೨:ಅರ್ಥ: ಕ್ಷೀರಸಾಗರದಲ್ಲಿ ಮಲಗಿದ ವಿಷ್ಣುವಿನ ಗರ್ಭದ ಒಳಗಿಂದ ಮೂರುಲೋಕಗಳೂ ಈಗ ಹೊರಹೊರಟವು ಎಂಬ ಮಾತು ಸಲ್ಲಲು, ದಿಕ್ಕುಗಳು ಕಾಂತಿಹೀನವಾಗುತ್ತಿರಲು ತಮ್ಮ ತಮ್ಮ ಶಿಬಿರಗಳಿಂದ ಚತುರ್ಬಲ ಸೈನ್ಯಗಳನ್ನೂ ಒಂದುಗೂಡಿಸಿಕೊಂಡು ಯುದ್ಧಕ್ಕೆ ಎರಡೂದಳದವರ ಶತ್ರುನಾಯಕರು ಒಬ್ಬರನ್ನೊಬ್ಬರು ಗೆಲ್ಲುವ ಸಾಮರ್ಥ್ಯದಿಂದ ಯುದ್ಧಕ್ಕೆ ನಡೆದು ಬಂದರು.
ವ|| ಆಗಳ್ ಕೌರವಬಲದ ಸೇನಾನಾಯಕಂ ಗಾಂಗೇಯನಡ್ಡಮಾಗೆ ತನ್ನೊಡ್ಡಿದ ಮಕರವ್ಯೂಹದ ಮೊನೆಯೊಳ್ ಸುತ್ತಿಱಿದೆತ್ತಿದ ಪೊನ್ನ ತೊಳಪ ಪೞಯಿಗೆಗಳುಂ ಮೆರೆವ ಬೆಳ್ಳಿಯ ರಥಮುಮಾ ರಥದೊಳೊಡಂಬಡೆ ಪೂಡಿದ ಕುದುರೆಗಳುಂ ಜೋಲ್ದ ಪುರ್ವನೆತ್ತಿ ಕಟ್ಟಿದ ಲಲಾಟಪಟ್ಟದೊಳಿಟ್ಟಳಮೊಪ್ಪುವ ಬೀರವಟ್ಟಮುಮಸದಳಮೆಸೆಯೆ ದಿವ್ಯಕವಚಮಂ ತೊಟ್ಟು ಪರಶುರಾಮಂ ಬಾೞ್ಗೆಂದು ಪ್ರಚಂಡ ಕೋದಂಡಮಂ ಕೊಂಡು ಪಾಂಡವಬಲಮಂ ಮಾರ್ಕೊಂಡು ನಿಂದಾಗಳ್ ಶ್ವೇತನುಮಾ ವ್ಯೂಹಕ್ಕೆ ಪ್ರತಿವ್ಯೂಹಮಾಗಿ ಸೂಚೀವ್ಯೂಹಮನೊಡ್ಡಿ ಕನಕಕವಚಾಲಂಕೃತ ಶರೀರನುಮಾರೂಢ ಸಮರ ರಸನುಮುಪಾರೂಢ ಕನಕರಥನುಮಾಗಿ ಕೈಲಾಸವಾಸಿಗೆ ಪೊಡೆವಟ್ಟು ಬಿಲ್ಲಂ ಕೊಂಡು ಗಂಗಾಸುತಂಗದಿರದಿದಿರ್ಚಿ ನಿಂದಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಕೌರವಬಲದ ಸೇನಾನಾಯಕಂ ಗಾಂಗೇಯನು ಅಡ್ಡಮಾಗೆ (ಅಡ್ಡಲಾಗಿ ನಿಂತನು) ತನ್ನ ಒಡ್ಡಿದ ಮಕರವ್ಯೂಹದ ಮೊನೆಯೊಳ್ (ಮೊಸಳೆಯ ಆಕಾರದ ಒಡ್ಡಿದ ತನ್ನ ಸೈನ್ಯರಚನೆಯ ತುದಿಯಲ್ಲಿ ಅಡ್ಡಲಾಗಿ ನಿಂತನು.) ಸುತ್ತಿಱಿದೆತ್ತಿದ ಪೊನ್ನ ತೊಳಪ ಪೞಯಿಗೆಗಳುಂ (ಅದರ ಮುಂಭಾಗದಲ್ಲಿ- ಸುತ್ತಲೂ ಎತ್ತಿ ಕಟ್ಟಿರುವ ಪ್ರಕಾಶಮಾನವಾದ ಚಿನ್ನದ ಬಾವುಟಗಳೂ) ಮೆರೆವ ಬೆಳ್ಳಿಯ ರಥಮುಂ ಆ ರಥದೊಳು ಒಡಂಬಡೆ (ಶೋಭಾಯಮಾನವಾಗಿರುವ ಬೆಳ್ಳಿಯ ತೇರು, ಆ ರಥಕ್ಕೆ ಹೊಂದಿಕೊಳ್ಳುವ ಹಾಗೆ) ಪೂಡಿದ ಕುದುರೆಗಳುಂ (ಹೂಡಿರುವ ಕುದುರೆಗಳು) ಜೋಲ್ದ ಪುರ್ವನು ಎತ್ತಿ ಕಟ್ಟಿದ ಲಲಾಟಪಟ್ಟದೊಳು (ಜೋತು ಹೋಗಿರುವ ಹುಬ್ಬನ್ನು ಎತ್ತಿ ಕಟ್ಟಿರುವ ಹಣೆಯಲ್ಲಿ) ಇಟ್ಟಳಮೊಪ್ಪುವ ಬೀರವಟ್ಟಮುಂ ಅಸದಳಂ ಎಸೆಯೆ (ಸೊಗಸಾಗಿ ಪ್ರಕಾಶಿಸುತ್ತಿರುವ ವೀರಪಟ್ಟವು ಅತಿಶಯವಾಗಿ ಮೆರೆಯುತ್ತಿರಲು) ದಿವ್ಯಕವಚಮಂ ತೊಟ್ಟು (ದಿವ್ಯವಾದ ಕವಚವನ್ನು ತೊಟ್ಟು) ಪರಶುರಾಮಂ ಬಾೞ್ಗೆಂದು (‘ಪರಶುರಾಮನು ಬಾಳಲಿ’ ಎಂದು ತನ್ನ ಆಚಾರ್ಯವನ್ನು ನೆನೆದನು.) ಪ್ರಚಂಡ ಕೋದಂಡಮಂ ಕೊಂಡು ಪಾಂಡವಬಲಮಂ ಮಾರ್ಕೊಂಡು ನಿಂದಾಗಳ್ (ಹೀಗೆ ಭಯಂಕರವಾದ ಬಿಲ್ಲನ್ನು ಹಿಡಿದು ಪಾಂಡವಸೈನ್ಯವನ್ನು ಪ್ರತಿಭಟಿಸಿ ನಿಂತಾಗ) ಶ್ವೇತನುಂ ಆ ವ್ಯೂಹಕ್ಕೆ ಪ್ರತಿವ್ಯೂಹಮಾಗಿ ಸೂಚೀವ್ಯೂಹಮನೊ ಒಡ್ಡಿ ( ಈ ಕಡೆ ಶ್ವೇತನೂ ಆ ಮಕರವ್ಯೂಹಕ್ಕೆ ಪ್ರತಿಯಾಗಿ ಸೂಜಿಯ ಆಕಾರದ ಸೇನಾರಚನೆಯನ್ನು ಒಡ್ಡಿದನು.) ಕನಕಕವಚಾಲಂಕೃತ ಶರೀರನುಂ ಆರೂಢ ಸಮರರಸನುಂ (ಯುದ್ಧೋತ್ಸಾಹದಿಂದ ಕೂಡಿದವನೂ) ಉಪಾರೂಢ ಕನಕರಥನುಮಾಗಿ (ಚಿನ್ನದ ಕವಚದಿಂದ ಅಲಂಕೃತವಾದ ಶರೀರವುಳ್ಳವನೂ ಯುದ್ಧೋತ್ಸಾಹದಿಂದ ಕೂಡಿದವನೂ ಆಗಿ) ಕೈಲಾಸವಾಸಿಗೆ ಪೊಡೆವಟ್ಟು ಬಿಲ್ಲಂ ಕೊಂಡು ಗಂಗಾಸುತಂಗೆ ಅದಿರದೆ ಇದಿರ್ಚಿ ನಿಂದಾಗಳ್ (ಭೀಷ್ಮನಿಗೆ ಹೆದರದೆ ಎದುರಿಸಿ ನಿಂತನು)-ನಿಂತಾಗ-
ವಚನ:ಅರ್ಥ:ಆಗ ಕೌರವ ಸೈನ್ಯದ ನಾಯಕನಾದ ಭೀಷ್ಮನು ಮೊಸಳೆಯ ಆಕಾರದ ಒಡ್ಡಿದ ತನ್ನ ಸೈನ್ಯರಚನೆಯ ತುದಿಯಲ್ಲಿ ಅಡ್ಡಲಾಗಿ ನಿಂತನು. ಅದರ ಮುಂಭಾಗದಲ್ಲಿ ಸುತ್ತಲೂ ಎತ್ತಿ ಕಟ್ಟಿರುವ ಪ್ರಕಾಶಮಾನವಾದ ಚಿನ್ನದ ಬಾವುಟಗಳೂ ಶೋಭಾಯಮಾನವಾಗಿರುವ ಬೆಳ್ಳಿಯ ತೇರು, ಆ ರಥಕ್ಕೆ ಹೊಂದಿಕೊಳ್ಳುವ ಹಾಗೆ ಹೂಡಿರುವ ಕುದುರೆಗಳು ಸಿದ್ಧವಾಗಿದ್ದುವು. ಜೋತು ಹೋಗಿರುವ ಹುಬ್ಬನ್ನು ಎತ್ತಿ ಕಟ್ಟಿರುವ ಹಣೆಯಲ್ಲಿ ಸೊಗಸಾಗಿ ಪ್ರಕಾಶಿಸುತ್ತಿರುವ ವೀರಪಟ್ಟವು ಅತಿಶಯವಾಗಿ ಮೆರೆಯುತ್ತಿರಲು ದಿವ್ಯವಾದ ಕವಚವನ್ನು ತೊಟ್ಟು ‘ಪರಶುರಾಮನು ಬಾಳಲಿ’ ಎಂದು ತನ್ನ ಆಚಾರ್ಯವನ್ನು ನೆನೆದನು. ಹೀಗೆ ಭಯಂಕರವಾದ ಬಿಲ್ಲನ್ನು ಹಿಡಿದು ಪಾಂಡವಸೈನ್ಯವನ್ನು ಪ್ರತಿಭಟಿಸಿ ನಿಂತಾಗ, ಈ ಕಡೆ ಶ್ವೇತನೂ ಆ ಮಕರವ್ಯೂಹಕ್ಕೆ ಪ್ರತಿಯಾಗಿ ಸೂಜಿಯ ಆಕಾರದ ಸೇನಾರಚನೆಯನ್ನು ಒಡ್ಡಿದನು. ಚಿನ್ನದ ಕವಚದಿಂದ ಅಲಂಕೃತವಾದ ಶರೀರವುಳ್ಳವನೂ ಯುದ್ಧೋತ್ಸಾಹದಿಂದ ಕೂಡಿದವನೂ ಆಗಿ ಕೈಲಾಸವಾಸಿಯಾದ ಈಶ್ವರನಿಗೆ ನಮಸ್ಕರಿಸಿ ಬಿಲ್ಲನ್ನು ಹಿಡಿದು ಭೀಷ್ಮನಿಗೆ ಹೆದರದೆ ಎದುರಿಸಿ ನಿಂತನು; ನಿಂತಾಗ-
ಕಂ|| ಶ್ವೇತನ ಗಂಗಾಜಾತನ
ಮಾತನೆ ಪಾರ್ದೆರಡುಮೊಡ್ಡಣಂ ಕಾದಲ್ಕೆಂ|
ದೀ ತೆಱದಿನೊಡ್ಡಿ ನಿಂದುವು
ಭೂತಳಮಳ್ಳಾಡೆ ಕೆಸಱ ಕಡಿತದ ತೆಱದಿಂ|| ೫೩ ||
ಪದ್ಯ-೫೩:ಪದವಿಭಾಗ-ಅರ್ಥ:ಶ್ವೇತನ ಗಂಗಾಜಾತನ ಮಾತನೆ ಪಾರ್ದು (ಶ್ವೇತ ಮತ್ತು ಭೀಷ್ಮರ ಆಜ್ಞೆಯನ್ನೇ ನಿರೀಕ್ಷಿಸುತ್ತಾ) ಎರಡುಂ ಒಡ್ಡಣಂ ಕಾದಲ್ಕೆಂದು ಈ ತೆಱದಿಂ ಒಡ್ಡಿ ನಿಂದುವು ಭೂತಳಂ ಅಳ್ಳಾಡೆ (ಎರಡು ಸೈನ್ಯವೂ ಯುದ್ಧ ಮಾಡುವುದಕ್ಕಾಗಿ ಬೂಮಿಯೇ ಅಲ್ಲಾಡುವ ರೀತಿಯಲ್ಲಿ ಎದರಿಸಿ ನಿಂತವು.) ಕೆಸಱ ಕಡಿತದ ತೆಱದಿಂ (ಸೈನ್ಯವು ಕೆಸರಿನ ಮೇಲೆ ದಟ್ಟವಾಗಿ ಹರಡಿ ಕುಳಿತ ಕಡಿನೊಣದಂತೆ ಇತ್ತು)
ಪದ್ಯ-೫೩:ಅರ್ಥ:ಸೇನಾಧಿಪತಿಗಳಾದ ಶ್ವೇತ ಮತ್ತು ಭೀಷ್ಮರ ಆಜ್ಞೆಯನ್ನೇ ನಿರೀಕ್ಷಿಸುತ್ತಾ, ಎರಡು ಸೈನ್ಯವೂ ಯುದ್ಧ ಮಾಡುವುದಕ್ಕಾಗಿ ಬೂಮಿಯೇ ಅಲ್ಲಾಡುವ ರೀತಿಯಲ್ಲಿ ಎದರಿಸಿ ನಿಂತವು. ಸೈನ್ಯವು ಕೆಸರಿನ ಮೇಲೆ ದಟ್ಟವಾಗಿ ಹರಡಿ ಕುಳಿತ ಕಡಿನೊಣದಂತೆ ಇತ್ತು.
ವ|| ಆಗಳ್ ಧರ್ಮಪುತ್ರಂ ಪುರುಷೋತ್ತಮನ ಮೊಗಮಂ ನೋಡಿ ಕೌರವ ಬಲದೊಡ್ಡಣದ ನಾಯಕರಿವರಾರೆಂದು ಬೆಸಗೊಳೆ ಮಕರ ಮಸ್ತಕಭೂಮಿಯೊಳ್ ಯುದ್ಧಸನ್ನದ್ಧನಾಗಿ-
ವಚನ:ಪದವಿಭಾಗ-ಅರ್ಥ: ಆಗಳ್ ಧರ್ಮಪುತ್ರಂ ಪುರುಷೋತ್ತಮನ ಮೊಗಮಂ ನೋಡಿ ಕೌರವ ಬಲದ ಒಡ್ಡಣದ ನಾಯಕರು ಅವರು ಆರೆಂದು ಬೆಸಗೊಳೆ(ಸೇನಾವ್ಯೂಹದ ನಾಯಕರು ಅವರು ಯಾರು ಯಾರು ಎಂದು ಪ್ರಶ್ನಿಸಲು-) ಮಕರ ಮಸ್ತಕ ಭೂಮಿಯೊಳ್ (ಮಕರವ್ಯೂಹದ ತಲೆಯ ಪ್ರದೇಶದಲ್ಲಿ - ಮುಂಭಾಗದಲ್ಲಿ) ಯುದ್ಧಸನ್ನದ್ಧನಾಗಿ-
ವಚನ:ಅರ್ಥ:ಆಗ ಧರ್ಮರಾಜನು ಕೃಷ್ಣನ ಮುಖವನ್ನು ನೋಡಿ ಕೌರವ ಸೇನಾವ್ಯೂಹದ ನಾಯಕರು ಅವರು ಯಾರು ಯಾರು ಎಂದು ಪ್ರಶ್ನಿಸಲು- ಮಕರವ್ಯೂಹದ ತಲೆಯ ಪ್ರದೇಶದಲ್ಲಿ (ಮುಂಭಾಗದಲ್ಲಿ) ಯುದ್ಧ ಸನ್ನದ್ಧನಾಗಿ-
ಕಂ|| ಕೆಂಬಣ್ಮದ ಕುದುರೆಗಳೊಳೊ
ಡಂಬಡೆ ನಿಜರಜತರಥಮಗುರ್ವುರ್ವರೆಯಂ|
ತಿಂಬೆ ಕಳಶಧ್ವಜಂ ಮಿಳಿ
ರ್ದಂಬರಮಂ ಬಳಸೆ ನಿಂದನಾತಂ ದ್ರೋಣಂ|| ೫೪ ||
ಪದ್ಯ-೫೪:ಪದವಿಭಾಗ-ಅರ್ಥ: ಕೆಂಬಣ್ಮದ ಕುದುರೆಗಳೊಳು ಒಡಂಬಡೆ (ಒಪ್ಪಿರಲು- ಜೊತೆ ಇರುವ) ನಿಜ ರಜತ ರಥಂ ಅಗುರ್ವು ಉರ್ವರೆಯಂ ತಿಂಬೆ (ತನ್ನ ಬೆಳ್ಳಿಯ ರಥದಲ್ಲಿ ಬೂಮಿಯಲ್ಲಿ ಭಯವನ್ನು ತುಂಬುವಂತೆ) ಕಳಶಧ್ವಜಂ ಮಿಳಿರ್ದಂಬರಮಂ ಬಳಸೆ (ಕಲಶದ ಧ್ವಜವು ಆಕಾಶದಲ್ಲಿ ಹಾರುವಂತಿರುವಲ್ಲಿ ) ನಿಂದನಾತಂ ದ್ರೋಣಂ (ನೀತಿರುವವನು ದ್ರೋಣನು)
ಪದ್ಯ-೫೪:ಅರ್ಥ: ತನ್ನ ಬೆಳ್ಳಿಯ ತೇರು ಕೆಂಪು ಬಣ್ಣದ ಕುದುರೆಗಳಿಂದ ಒಪ್ಪಿರಲು, ಭಯಂಕರನಾದ ಕಳಶ ಚಿಹ್ನೆಯುಳ್ಳ ಬಾವುಟವು ಚಲಿಸುತ್ತ ಆಕಾಶದಲ್ಲಿ ಹಾರುವಂತೆ ನಿಂತಿರುವವನು ದ್ರೋಣಾಚಾರ್ಯ.
ಆತನ ಸಾರೆ ಕಮಂಡಲು
ಕೇತನಮಂಬರಮನಡರೆ ಚತುರಂಗ ಬಲೋ|
ಪೇತನತಿ ಧವಳ ರಥನಭಿ
ಜಾತಂ ಕ್ಷತ್ರಿಯರನುಱದ ಕಲಿ ಕೃಪನಾತಂ|| ೫೫ ||
ಪದ್ಯ-೫೫:ಪದವಿಭಾಗ-ಅರ್ಥ:ಆತನ ಸಾರೆ ಕಮಂಡಲು ಕೇತನಂ ಅಂಬರಮನು ಅಡರೆ (ಪಕ್ಕದಲ್ಲಿಯೇ ಕಮಂಡಲು ಗುರುತಿನ ಬಾವುಟವು ಆಕಾಶವನ್ನು ವ್ಯಾಪಿಸಿರಲು) ಚತುರಂಗ ಬಲೋಪೇತನು ಅತಿ ಧವಳ ರಥನು ಅಭಿಜಾತಂ (ಚತುರಂಗಸೈನ್ಯದಿಂದ ಕೂಡಿರುವವನೂ ಅತ್ಯಂತ ಬಿಳುಪಾದ ತೇರನ್ನುಳ್ಳವನೂ ಒಳ್ಳೆಯ ಕುಲದಲ್ಲಿ ಹುಟ್ಟಿದವನೂ) ಕ್ಷತ್ರಿಯರನು ಉಱದ (ಲೆಕ್ಕಿಸದ) ಕಲಿ ಕೃಪನಾತಂ (ಕ್ಷತ್ರಿಯರನ್ನು ಲಕ್ಷ್ಯಮಾಡದವನೂ ಶೂರನೂ ಆದವನು ಕೃಪಾಚಾರ್ಯ)|
ಪದ್ಯ-೫೫:ಅರ್ಥ:ಅವನ ಪಕ್ಕದಲ್ಲಿಯೇ ಕಮಂಡಲು ಗುರುತಿನ ಬಾವುಟವು ಆಕಾಶವನ್ನು ವ್ಯಾಪಿಸಿರಲು ಚತುರಂಗಸೈನ್ಯದಿಂದ ಕೂಡಿರುವವನೂ ಅತ್ಯಂತ ಬಿಳುಪಾದ ತೇರನ್ನುಳ್ಳವನೂ ಒಳ್ಳೆಯ ಕುಲದಲ್ಲಿ ಹುಟ್ಟಿದವನೂ ಕ್ಷತ್ರಿಯರನ್ನು ಲಕ್ಷ್ಯಮಾಡದವನೂ ಶೂರನೂ ಆದವನು ಕೃಪಾಚಾರ್ಯ.
ವ|| ಮತ್ತಿತ್ತ ಗಾಂಗೇಯನ ದಕ್ಷಿಣೋಪಾಂತದೊಳ್ ಕರ್ಗನೆ ಕರ್ಗಿದ ಸಮದ ಗಜಘಟಾಟೋಪದ ನಡುವೆ-
ವಚನ:ಪದವಿಭಾಗ-ಅರ್ಥ:ಮತ್ತೆ ಇತ್ತ ಗಾಂಗೇಯನ ದಕ್ಷಿಣ ಉಪಾಂತದೊಳ್ (ಭೀಷ್ಮನ ಬಲಗಡೆಯ ಪಕ್ಕದಲ್ಲಿ) ಕರ್ಗನೆ ಕರ್ಗಿದ ಸಮದ ಗಜಘಟೆ ಆಟೋಪದ ನಡುವೆ (ಬಹಳ ಕಪ್ಪಾದ ಮದ್ದಾನೆಗಳ ಸಮೂಹದ ಆರ್ಭಟದ ನಡುವೆ)-
ವಚನ:ಅರ್ಥ:ಮತ್ತು ಈ ಕಡೆ ಭೀಷ್ಮನ ಬಲಗಡೆಯ ಪಕ್ಕದಲ್ಲಿ ಬಹಳ ಕಪ್ಪಾದ ಮದ್ದಾನೆಗಳ ಸಮೂಹದ ಆರ್ಭಟದ ನಡುವೆ
ಕಂ|| ಸರದದ ಮುಗಿಲನೆ ಬಿಡದನು
ಕರಿಸುವ ಧವಳಾಶ್ವದಿಂದಮೆಸೆದೊಪ್ಪುವ ಲೋ|
ಹ ರಥಮದು ಪುಲಿಯ ಪೞಯಿಗೆ
ವೆರಸು ತೞತ್ತೞಿಸೆ ನಿಂದನಾತಂ ಶಲ್ಯಂ|| ೫೬ ||
ಪದ್ಯ-೫೬:ಪದವಿಭಾಗ-ಅರ್ಥ:ಸರದದ ಮುಗಿಲನೆ (ಶರತ್ಕಾಲದ ಮೋಡವನ್ನು) ಬಿಡದೆ ಅನುಕರಿಸುವ (ಹಾಗೆಯೇ ಅನುಕರಿಸುತ್ತಿರುವ) ಧವಳಾಶ್ವದಿಂದಂ ಎಸೆದು ಒಪ್ಪುವ (ಬಿಳಿಯ ಕುದುರೆಗಳಿಂದ ಪ್ರಕಾಶಿಸುತ್ತಿರುವ) ಲೋಹ ರಥಂ ಅದು (ಆ ಕಬ್ಬಿಣದ ರಥದಲ್ಲಿ) ಪುಲಿಯ ಪೞಯಿಗೆ ವೆರಸು (ಹುಲಿಯ ಬಾವುಟದಿಂದ ಕೂಡಿ) ತೞತ್ತೞಿಸೆ ನಿಂದನಾತಂ ಶಲ್ಯಂ (ಥಳಥಳಿಸುತ್ತ ನಿಂತಿರುವವನು ಶಲ್ಯ)
ಪದ್ಯ-೫೬:ಅರ್ಥ:ಶರತ್ಕಾಲದ ಮೋಡವನ್ನು ಹಾಗೆಯೇ ಅನುಕರಿಸುತ್ತಿರುವ ಬಿಳಿಯ ಕುದುರೆಗಳಿಂದ ಪ್ರಕಾಶಿಸುತ್ತಿರುವ ಆ ಕಬ್ಬಿಣದ ರಥದಲ್ಲಿ ಹುಲಿಯ ಬಾವುಟದಿಂದ ಕೂಡಿ ಥಳಥಳಿಸುತ್ತ ನಿಂತಿರುವವನು ಶಲ್ಯ,
ವ|| ಮತ್ತಿತ್ತ ಗಂಗಾಸುತನ ವಾಮಭಾಗದೊಳಂಬರಭಾಗಮಂ ಕಟ್ಟಿ ಮೆಡಱಿದಂತಾಗಿ ತನ್ನ ರಥದೊಳೊಟ್ಟಿದ ಕೆಯ್ದುಗಳ ಬೆಳಗೆ ಬೆಳಗಾಗೆ-
ವಚನ:ಪದವಿಭಾಗ-ಅರ್ಥ:ಮತ್ತೆ ಇತ್ತ ಗಂಗಾಸುತನ ವಾಮಭಾಗದೊಳ್ (ಭೀಷ್ಮನ ಎಡಬದಿಯಲ್ಲಿ) ಅಂಬರಭಾಗಮಂ (ತ)ಕಟ್ಟಿ ಮೆಡಱಿದಂತಾಗಿ (ತಡಿಕೆಯಿಂದ ಹೆಣೆದ ಹಾಗೆ) ತನ್ನ ರಥದೊಳು ಒಟ್ಟಿದ ಕೆಯ್ದುಗಳ ಬೆಳಗೆ ಬೆಳಗಾಗೆ (ರಾಶಿ ಹಾಕಿದ ಆಯುಧಗಳ ಬೆಳಕೇ ಬೆಳಕಾಗಿರುವಂತೆ- )-
ವಚನ:ಅರ್ಥ:ವ|| ಮತ್ತು ಈ ಕಡೆ ಭೀಷ್ಮನ ಎಡಬದಿಯಲ್ಲಿ ಆಕಾಶ ಭಾಗವನ್ನು ತಡಿಕೆಯಿಂದ ಹೆಣೆದ ಹಾಗೆ ಮಾಡಿ ತನ್ನ ರಥದಲ್ಲಿ ರಾಶಿ ಹಾಕಿದ ಆಯುಧಗಳ ಬೆಳಕೇ ಬೆಳಕಾಗಿರುವಂತೆ-
ಕಂ|| ಕರೆ ಕೊರಲೊಳ್ ಕಣ್ಣೊಸಲೊಳ್
ಪೆರೆ ಮಕುಟದೊಳುಗ್ರಧನು ಕರಾಗ್ರದೊಳಿರೆಯ|
ಳ್ಳಿಱಿಯೆ ಹರಿಕೇತು ನಭದೊಳ್
ಮಿಱುಗುವ ಚೆಂಬೊನ್ನ ರಥದನಶ್ವತ್ಥಾಮಂ|| ೫೭ ||
ಪದ್ಯ-೫೭:ಪದವಿಭಾಗ-ಅರ್ಥ:ಕರೆ ಕೊರಲೊಳ್ (ಕೊರಳಿನಲ್ಲಿ ಕರಿಯ ಮಚ್ಚೆ) ಕಣ್ಣು ನೊಸಲೊಳ್, ಪರೆ ಮಕುಟದೊಳು (ಕೊರಳಿನಲ್ಲಿ ಕರಿಯ ಮಚ್ಚೆ ಹಣೆಯಲ್ಲಿ ಕಣ್ಣು ಕಿರೀಟದ ತುದಿಯಲ್ಲಿ ಚಂದ್ರ ) ಉಗ್ರ ಧನು ಕರಾಗ್ರದೊಳ್ (ಕೈಯಲ್ಲಿ ಉಗ್ರವಾದ ಬಿಲ್ಲು) ಇರೆ (ಇರಲು) ಅಳ್ಳಿಱಿಯೆ (ಮಿಡುಕುತ್ತಿರಲು, ಹಾರುತ್ತಿರಲು,-) ಹರಿಕೇತು ನಭದೊಳ್ (ಆಕಾಶದಲ್ಲಿ ಸಿಂಹಧ್ವಜವು) ಮಿಱುಗುವ ಚೆಂಬೊನ್ನ ರಥದನು ಅಶ್ವತ್ಥಾಮಂ (ಪ್ರಕಾಶವಾದ ಹೊಂಬಣ್ಣದ ತೇರಿನಲ್ಲಿರುವವನು ಅಶ್ವತ್ಥಾಮನು)
ಪದ್ಯ-೫೭:ಅರ್ಥ: ಕೊರಳಿನಲ್ಲಿ ಕರಿಯ ಮಚ್ಚೆ ಹಣೆಯಲ್ಲಿ ಕಣ್ಣು ಕಿರೀಟದ ತುದಿಯಲ್ಲಿ ಚಂದ್ರ ಕೈಯಲ್ಲಿ ಉಗ್ರವಾದ ಬಿಲ್ಲು ಇರಲು, ಇವುಗಳಿಂದ ಕೂಡಿ ಆಕಾಶದಲ್ಲಿ ಸಿಂಹಧ್ವಜವು ಮಿಡುಕುತ್ತಿರಲು, ಪ್ರಕಾಶವಾದ ಹೊಂಬಣ್ಣದ ತೇರಿನಲ್ಲಿರುವವನು ಅಶ್ವತ್ಥಾಮನು.
ವ|| ಆ ರುದ್ರಾವತಾರನ ಕೆಲದೊಳ್ ಕಿಕ್ಕಿಱಿಗಿಱಿದ ತೞೆದುಱುಗಲ ನಡುವೆ ಪೊನ್ನ ರಥಮನೇಱಿ ನಿಂದಂ ಭೂರಿಶ್ರವನಾತನ ಕೆಲದೊಳ್ ಬಾಳಬಟ್ಟಂ ತೂಂತಿಟ್ಟಂತೆ ಸಂದಣಿಸಿ ನಿಂದ ಗೋಪಕುಮಾರರಣಿಯ ನಡುವೆ ಪೊನ್ನ ರಥಮನೇಱಿ ನಿಂದಾತನೆನ್ನ ತಮ್ಮಂ ಕೃತವರ್ಮನಾತನ ಕೆಲದೊಳೊಂದಕ್ಷೋಹಿಣೀ ಬಲಂಬೆರಸು ಸುತ್ತಿಱಿದು ಕನಕ ದಂಡ ಮಂಡಿತ ವಿಚಿತ್ರಾತಪತ್ರಂಗಳ ನಡುವೆ ಮಣಿಮಕುಟ ಮರೀಚಿಗಳ್ ಪೊಳೆಯೆ ನಾನಾ ವಾಹನಂಗಳನೇಱಿ ನಿಂದರ್ ಜಯತ್ಸೇನ ಕಾಂಭೋಜ ಸುದಕ್ಷಿಣ ದಂಡಧಾರ ಶತದಂಡಧರರವರ ಕೆಲದೊಳ್ ನೀಳ ಶ್ರುತಾಯುಧ ನಿಯುತಾಯುಧಾಚ್ಯುತಾಯುಧರೆಂಬರವರ ಕೆಲದೊಳ್ ನಿಲೆ ಬಲದ ಸೆರೆಕೋಲೊಳೊಂದ ಕ್ಷೋಹಿಣೀಬಲಂಬೆರಸುಮಯ್ವತ್ತುಸಾಸಿರ ಮದದಾನೆವೆರಸು ನಿಂದಂ ಸುಯೋಧನನಣುಗ ಮಯ್ದುನುಂ ಸಿಂಧು ದೇಶಾಶ್ವರಂ ಜಯದ್ರಥನಾತನ ಕೆಲದೊಳ್ ಮಕರಮಸ್ತಕಭೂಮಿಯೊಳ್ ಕರಟತಟಗಳಿತ ಮದಜಳಧಾರಾಪೂರ ಪರಿಪ್ಲಾವಿತ ಸಕಳ ಭೂತಳಮಪ್ಪ ನಾಲ್ಕು ಲಕ್ಕ ಭದ್ರಹಸ್ತಿಯುಮನೊಂದು ಮಾಡಿ ಘಟೆಯ ಮೊನೆಯೊಳ್ ದಿಗ್ಗಜೇಂದ್ರಮೆನಿಸಿದ ಸುಪ್ರತೀಕ ಗಜೇಂದ್ರಮನೇಱಿ ನಿಂದಾತನಿಂದ್ರನ ಕೆಳೆಯಂ ಭಗದತ್ತನಾತನ ಕೆಲದೊಳೊಂದು ಲಕ್ಕ ಕುದುರೆಯುಮಱುವತ್ತು ಸಾಸಿರ ರಥಮುಮೊಂದ ಕ್ಷೋಹಿಣಿಯ ಕಾಲಾಳ್ವೆರಸು ನಿಂದರ್ ಸೋಮದತ್ತ ಬಾಹ್ಲೀಕರವರ ಕೆಲದೊಳ್ ದೇವೇಂದ್ರಂಗೆ ಪಗೆವರಾಗಿ ವಿಕ್ರಮಾರ್ಜುನನ ಕೆಯ್ಯೊಳ್ ಸತ್ತ ನಿವಾತಕವಚ ಕಾಳಕೇಯ ಪೌಳೋಮ ತಳತಾಳುಕರೆಂಬ ದೈತ್ಯರ್ ವೃದ್ಧ ವೈರಮಂ ನೆರೆದು ತ್ರಿಗರ್ತಾಶ ಸುಶರ್ಮ ಪ್ರಭೃತಿಗಳುಂ ಸಂಸಪ್ತಕುರಮಾಗಿ ಪುಟ್ಟಿ ಮೂರು ಕೋಟಿಯುಮಱುವತ್ತು ಸಾಸಿರ ದೈತ್ಯಪ್ರಧಾನನಾಯಕರುಮರ್ಜುನನೊಳ್ ಕಾದುವ ಬೆಸನಂ ದುರ್ಯೋಧನನೊಳ್ ಬೇಡಿ ಪಡೆದು ಪದಿನೆಂಟು ಕೋಟಿ ರಥಂಬೆರಸು ಬೇರೊಡ್ಡಿ ನಿಂದರ್; ಮತ್ತಿತ್ತ ಚತುರಂಗಬಳಜಳನಿಯ ನಡುವೆ ಕಳಿಂಗರಾಜ ವಂಗ ಕೊಂಗ ದೇಶಾಧೀಶ್ವರ ರೆಣ್ಬತ್ತುಸಾಸಿರ ಗಜಘಟೆಗಳುಂ ಮೂಱುಲಕ್ಕ ರಥಮುಮಱವತ್ತು ಕೋಟಿ ಪದಾತಿಯುಂ ಬೆರಸು ನಿಂದರ್ ಮತ್ತಂ ಕ್ಷೇಮಧೂರ್ತಿಯುಂ ಭೀಮಸೇನನ ಕೆಯ್ಯೊಳ್ ಸತ್ತ ಬಕಾಸುರ ಜಟಾಸುರರನ ಮಕ್ಕಳಳಂಭೂಷ ಹಲಾಯುಧ ಮುಸಲಾಯುಧ ಕಾಳ ನೀಳ ಪ್ರಮುಖ ರೂಕ್ಷರಾಕ್ಷಸ ಬಲಂಬೆರಸು ಸುತ್ತಿಱಿದು ಬಳಸಿಯುಮಿರೆ ದುಶ್ಶಾಸನಂ ಮೊದಲಾಗೆ ನೂರ್ವರ್ ತಮ್ಮಂದಿರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಮಱುವತ್ತು ಸಾಸಿರ ರಥಮುಂ ಪದಿನೆಂಟು ಸಾಸಿರ ಮದಾಂಧಗಂಧಸಿಂಧುರಂಗಳುಂ ಬೆರಸು ಪೊಯ್ವ ಪಂಚಮಹಾಶಬ್ದಂಗಳ್ ಕಾಳ ನೀಳ ಜಳಧರಂಗಳ್ ಮೊೞಗುವಂತೆ ಮೊೞಗೆ ಗಗನತಳಂ ತಳಿರ್ತಂತೆ ಪೊಳೆದು ಮಿಳಿರ್ವ ಪಾಳಿ ಮಹಾಧ್ವಜಂಗಳುಂ ಗಗನಸಿಂಧು ಫೇನ ಪಟಳ ಶಂಖ ಸಂಕಾಶ ಪಾಂಡು ಛತ್ರಚಾಮರಂಗಳುಂ ಪೆಱವುಂ ರಾಜಚಿಹ್ನಂಗಳುಮೆಸೆಯೆ-
ವಚನ:ಪದವಿಭಾಗ-ಅರ್ಥ:ಆ ರುದ್ರಾವತಾರನ ಕೆಲದೊಳ್ ಕಿಕ್ಕಿಱಿಗಿಱಿದ (ಕಿಕ್ಕಿರಿದು ಸೇರಿದ) ತೞೆದುಱುಗಲ (ಪಕ್ಕದಲ್ಲಿ ಒಟ್ಟಾಗಿ ಸೇರಿಕೊಂಡಿರುವ ಛತ್ರಿಗಳ) ನಡುವೆ ಪೊನ್ನ ರಥಮನೇಱಿ (ರಥವನ್ನು ಹತ್ತಿ )ನಿಂದಂ ಭೂರಿಶ್ರವನು ಆತನ ಕೆಲದೊಳ್ (ಪಕ್ಕದಲ್ಲಿ) ಬಾಳಬಟ್ಟಂ ತೂಂತಿಟ್ಟಂತೆ ಸಂದಣಿಸಿ (ತೂತುಮಾಡಿದ ಹಾಗೆ ಗುಂಪುಕೂಡಿಸಿ) ನಿಂದ ಗೋಪಕುಮಾರರಣಿಯ ನಡುವೆ ಪೊನ್ನ ರಥಮನೇಱಿ (ರಥವನ್ನು ಹತ್ತಿ ) ನಿಂದಾತನು ಎನ್ನ ತಮ್ಮಂ ಕೃತವರ್ಮನು. ಆತನ ಕೆಲದೊಳ್ ಒಂದು ಅಕ್ಷೋಹಿಣೀ ಬಲಂಬೆರಸು ಸುತ್ತಿಱಿದು (ಸುತ್ತುವರಿದು, )ಕನಕ ದಂಡ ಮಂಡಿತ (ಸೈನ್ಯದಿಂದ ಕೂಡಿ ಸುತ್ತುವರಿದು ವ್ಯಾಪಿಸಿ ಚಿನ್ನದ ದಂಡಿಗೆಯಿಂದಲಂಕೃತವಾದ) ವಿಚಿತ್ರಾತಪತ್ರಂಗಳ ನಡುವೆ ಮಣಿಮಕುಟ ಮರೀಚಿಗಳ್ ಪೊಳೆಯೆ ನಾನಾ ವಾಹನಂಗಳನೇಱಿ (ವಾಹನಗಳನ್ನು ಏರಿ) ನಿಂದರ್ ಜಯತ್ಸೇನ ಕಾಂಭೋಜ ಸುದಕ್ಷಿಣ ದಂಡಧಾರ ಶತದಂಡಧರರು. ಅವರ ಕೆಲದೊಳ್ ನೀಳ ಶ್ರುತಾಯುಧ ನಿಯುತಾಯುಧ ಅಚ್ಯುತಾಯುಧರೆಂಬರು; ಅವರ ಕೆಲದೊಳ್ ನಿಲೆ ಬಲದ ಸೆರೆಕೋಲೊಳ್ (ಬಲದಂಚಿನಲ್ಲಿ) ಒಂದು ಕ್ಷೋಹಿಣೀ ಬಲಂ ಬೆರಸುಂ ಐಯ್ವತ್ತುಸಾಸಿರ ಮದದಾನೆ ವೆರಸು ನಿಂದಂ ಸುಯೋಧನನ ಅಣುಗ ಮಯ್ದುನುಂ (ಪ್ರೀತಿಯ ಮೈದುನನು) ಸಿಂಧು ದೇಶಾಶ್ವರಂ ಜಯದ್ರಥನು. ಆತನ ಕೆಲದೊಳ್ (ಪಕ್ಕದಲ್ಲಿ) ಮಕರಮಸ್ತಕ ಭೂಮಿಯೊಳ್ ಕರಟತಟಗಳಿತ ಮದಜಳಧಾರಾಪೂರ ಪರಿಪ್ಲಾವಿತ (ಕಪೋಲಪ್ರದೇಶದಿಂದ ಧಾರಾಕಾರವಾಗಿ ಹರಿಯುತ್ತಿರುವ ಮದೋದಕದಿಂದ) ಸಕಳ ಭೂತಳಮಪ್ಪ ನಾಲ್ಕು ಲಕ್ಕ ಭದ್ರಹಸ್ತಿಯುಮನು ಒಂದು ಮಾಡಿ ಘಟೆಯ ಮೊನೆಯೊಳ್ ದಿಗ್ಗಜೇಂದ್ರಮೆನಿಸಿದ (ಮುಂಭಾಗದಲ್ಲಿ ದಿಗ್ಗಜವೆಂದು ಪ್ರಸಿದ್ಧಿಗೊಂಡಿರುವ) ಸುಪ್ರತೀಕ ಗಜೇಂದ್ರಮನು ಏಱಿ (ಹತ್ತಿ) ನಿಂದಾತನು ಇಂದ್ರನ ಕೆಳೆಯಂ ಭಗದತ್ತನು. ಆತನ ಕೆಲದೊಳು (ಪಕ್ಕದಲ್ಲಿ,) ಒಂದು ಲಕ್ಕ ಕುದುರೆಯುಂ ಅಱುವತ್ತು ಸಾಸಿರ ರಥಮುಂ ಒಂದು ಅಕ್ಷೋಹಿಣಿಯ ಕಾಲಾಳ್ವೆರಸು ನಿಂದರ್ ಸೋಮದತ್ತ ಬಾಹ್ಲೀಕರವರ ಕೆಲದೊಳ್ ದೇವೇಂದ್ರಂಗೆ ಪಗೆವರಾಗಿ ವಿಕ್ರಮಾರ್ಜುನನ ಕೆಯ್ಯೊಳ್ ಸತ್ತ ನಿವಾತಕವಚ ಕಾಳಕೇಯ ಪೌಳೋಮ ತಳತಾಳುಕರೆಂಬ ದೈತ್ಯರ್ ವೃದ್ಧ ವೈರಮಂ ನೆರೆದು ತ್ರಿಗರ್ತಾಶ ಸುಶರ್ಮ ಪ್ರಭೃತಿಗಳುಂ, ಸಂಸಪ್ತಕುರಂ ಆಗಿ ಪುಟ್ಟಿ (ಆಗಿ ಹುಟ್ಟಿ) ಮೂರು ಕೋಟಿಯುಂ ಅಱುವತ್ತು (೬೦) ಸಾಸಿರ ದೈತ್ಯಪ್ರಧಾನನಾಯಕರುಂ ಅರ್ಜುನನೊಳ್ ಕಾದುವ ಬೆಸನಂ (ಯುದ್ಧಮಾಡಲು ಆಜ್ಞೆಯನ್ನು) ದುರ್ಯೋಧನನೊಳ್ ಬೇಡಿ ಪಡೆದು, ಪದಿನೆಂಟು ಕೋಟಿ ರಥಂಬೆರಸು ಬೇರೊಡ್ಡಿ ನಿಂದರ್; ಮತ್ತಿತ್ತ ಚತುರಂಗಬಳ ಜಳನಿಯ (ಸೈನ್ಯ ಸಮುದ್ರದ) ನಡುವೆ ಕಳಿಂಗರಾಜ ವಂಗ ಕೊಂಗ ದೇಶಾಧೀಶ್ವರ ರೆ ಎಣ್ಬತ್ತುಸಾಸಿರ (೮೦,೦೦೦) ಗಜಘಟೆಗಳುಂ (ಆನೆ) ಮೂಱುಲಕ್ಕ ರಥಮುಂ ಅಱವತ್ತು (೬೦)ಕೋಟಿ ಪದಾತಿಯುಂ ಬೆರಸು (ಸೇರಿ) ನಿಂದರ್; ಮತ್ತಂ ಕ್ಷೇಮಧೂರ್ತಿಯುಂ ಭೀಮಸೇನನ ಕೆಯ್ಯೊಳ್ ಸತ್ತ ಬಕಾಸುರ ಜಟಾಸುರರನ ಮಕ್ಕಳ್-> ಅಳಂಭೂಷ ಹಲಾಯುಧ ಮುಸಲಾಯುಧ ಕಾಳ ನೀಳ ಪ್ರಮುಖ ರೂಕ್ಷರಾಕ್ಷಸ ಬಲಂಬೆರಸು (ಸೈನ್ಯ ಸಮೇತ) ಸುತ್ತಿಱಿದು (ಸುತ್ತುವರಿದು) ಬಳಸಿಯುಂ ಇರೆ ದುಶ್ಶಾಸನಂ ಮೊದಲಾಗೆ ನೂರ್ವರ್ ತಮ್ಮಂದಿರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಅಱುವತ್ತು (೬೦)ಸಾಸಿರ ರಥಮುಂ ಪದಿನೆಂಟು (೧೮) ಸಾಸಿರ ಮದಾಂಧಗಂಧಸಿಂಧುರಂಗಳುಂ (ಆನೆಗಳು) ಬೆರಸು (ಸೇರಿ) ಪೊಯ್ವ ಪಂಚಮಹಾಶಬ್ದಂಗಳ್ ಕಾಳ ನೀಳ ಜಳಧರಂಗಳ್ (ಮೋಡಗಳು) ಮೊೞಗುವಂತೆ (ಪಂಚಮಹಾಶಬ್ದಗಳು ಪ್ರಳಯಕಾಲದ ಕರಿಯ ಮೋಡಗಳು ಮೊಳಗುವ ಹಾಗೆ) ಮೊೞಗೆ (ಮೊಲಗೆ) ಗಗನತಳಂ ತಳಿರ್ತಂತೆ ಪೊಳೆದು ಮಿಳಿರ್ವ ಪಾಳಿ (ಅಲುಗುವ ಬಾವುಟ) ಮಹಾಧ್ವಜಂಗಳುಂ (ಹೊಳೆದು ಚಲಿಸುತ್ತಿರುವ ಧ್ವಜ ಮಹಾಧ್ವಜಗಳೂ ) ಗಗನಸಿಂಧು ಫೇನ ಪಟಳ ಶಂಖ ಸಂಕಾಶ ಪಾಂಡು ಛತ್ರಚಾಮರಂಗಳುಂ ಪೆಱವುಂ ರಾಜಚಿಹ್ನಂಗಳುಂ ಎಸೆಯೆ (ಇನ್ನೂ ಇತರ ರಾಜ್ಯಚಿಹ್ನೆಗಳೂ ಪ್ರಕಾಶಿಸುತ್ತಿರಲು- )-
ವಚನ:ಅರ್ಥ: ಆ ರುದ್ರನ ಅವತಾರ ಅಶ್ವತ್ಥಾಮನ ಪಕ್ಕದಲ್ಲಿ ಒಟ್ಟಾಗಿ ಸೇರಿಕೊಂಡಿರುವ ಛತ್ರಿಗಳ ಸಮೂಹದ ಮಧ್ಯದಲ್ಲಿ ಚಿನ್ನದ ರಥವನ್ನು ಹತ್ತಿ ನಿಂತಿರುವವನು ಭೂರಿಶ್ರವ; ಆತನ ಪಕ್ಕದಲ್ಲಿ ಆಕಾಶ ಪ್ರದೇಶವನ್ನು ತೂತುಮಾಡಿದ ಹಾಗೆ ಗುಂಪುಕೂಡಿಸಿ ನಿಂತಿರುವ ಗೋಪಕುಮಾರರ ಸೈನ್ಯದ ನಡುವೆ ಚಿನ್ನದ ತೇರನ್ನು ಹತ್ತಿ ನಿಂತಿರುವವನು ನನ್ನ ತಮ್ಮನಾದ ಕೃತವರ್ಮ, ಆತನ ಪಕ್ಕದಲ್ಲಿ ಒಂದಕ್ಷೋಹಿಣೀ ಸೈನ್ಯದಿಂದ ಕೂಡಿ ಸುತ್ತಲೂ ವ್ಯಾಪಿಸಿ ಚಿನ್ನದ ದಂಡಿಗೆಯಿಂದಲಂಕೃತವಾದ ಚಿತ್ರಖಚಿತವಾದ ಛತ್ರಿಗಳ ನಡುವೆ ರತ್ನಖಚಿತವಾದ ಕಿರೀಟವು ಹೊಳೆಯುವ ಹಾಗೆ ಅನೇಕ ವಿಧವಾದ ವಾಹನಗಳನ್ನು ಹತ್ತಿ ನಿಂತಿರುವವರು ಜಯತ್ಸೇನ, ಕಾಂಭೋಜ, ಸುದಕ್ಷಿಣ, ದಂಡಧಾರ, ಶತದಂಡಧರರು. ಅವರ ಪಕ್ಕದಲ್ಲಿ ಬಲದಂಚಿನಲ್ಲಿ ಒಂದಕ್ಷೋಹಿಣೀ ಸೈನ್ಯದಿಂದಲೂ ಐಯ್ವತ್ತು ಸಾವಿರ ಮದ್ದಾನೆಯಿಂದಲೂ ಕೂಡಿ ನಿಂತಿರುವವನು ದುರ್ಯೋಧನ ಪ್ರೀತಿಯ ಮೈದುನನೂ ಸಿಂಧುದೇಶಾಶ್ವರನೂ ಆದ ಜಯದ್ರಥ. ಆತನ ಪಕ್ಕದಲ್ಲಿ ಮಕರವ್ಯೂಹದ ಮುಂಭಾಗದಲ್ಲಿ ಕಪೋಲಪ್ರದೇಶದಿಂದ ಧಾರಾಕಾರವಾಗಿ ಹರಿಯುತ್ತಿರುವ ಮದೋದಕದಿಂದ ತೊಳೆಯಲ್ಪಟ್ಟ ಭೂಮಿಯನ್ನುಳ್ಳ ನಾಲ್ಕು ಲಕ್ಷ ಭದ್ರಜಾತಿಯ ಆನೆಗಳನ್ನು ಒಟ್ಟುಗೂಡಿಸಿಕೊಂಡು ಅವುಗಳ ಮುಂಭಾಗದಲ್ಲಿ ದಿಗ್ಗಜವೆಂದು ಪ್ರಸಿದ್ಧಿಗೊಂಡಿರುವ ಸುಪ್ರತೀಕವೆಂಬ ಆನೆಯನ್ನು ಹತ್ತಿ ನಿಂತಿರುವವನು ಇಂದ್ರನ ಸ್ನೇಹಿತನಾದ ಭಗದತ್ತ. ಆತನ ಪಕ್ಕದಲ್ಲಿ ಒಂದು ಲಕ್ಷ ಕುದುರೆಯನ್ನು ಅರವತ್ತು ಸಾವಿರ ರಥವನ್ನು ಒಂದು ಲಕ್ಷ ಕಾಲಾಳನ್ನು ಕೂಡಿಕೊಂಡು ನಿಂತವರು ಸೋಮದತ್ತ ಬಾಹ್ಲಿಕರು. ಅವರ ಪಕ್ಕದಲ್ಲಿ ದೇವೇಂದ್ರನಿಗೆ ಶತ್ರುಗಳಾಗಿ ವಿಕ್ರಮಾರ್ಜುನನ ಕಯ್ಯಲ್ಲಿ ಸತ್ತ ನಿವಾತಕವಚ, ಕಾಳಕೇಯ, ಪೌಳೋಮ, ತಳತಾಳುಕರೆಂಬ ರಾಕ್ಷಸರು ಹಳೆಯ ಶತ್ರುತ್ವವನ್ನು ನೆನೆಸಿಕೊಂಡು ಈಗ ತ್ರಿಗರ್ತಾಶ, ಸುಶರ್ಮರೇ ಮೊದಲಾದವರಾಗಿಯೂ ಸಂಸಪ್ತಕರಾಗಿಯೂ ಹುಟ್ಟಿ ಬಂದಿರುವ ಮೂರುಕೋಟಿ ಅರವತ್ತು ಸಾವಿರ ರಾಕ್ಷಸಮುಖ್ಯರಾದ ನಾಯಕರು ಅರ್ಜುನನೊಡನೆ ಯುದ್ಧ ಮಾಡುವ ಕಾರ್ಯವನ್ನು ದುರ್ಯೋಧನನಲ್ಲಿ ಬೇಡಿ ಪಡೆದು ಹದಿನೆಂಟು ಕೋಟಿ ರಥದಿಂದ ಕೂಡಿ ಪ್ರತ್ಯೇಕವಾಗಿ ಸನ್ನದ್ಧರಾಗಿ ನಿಂತಿದ್ದಾರೆ. ಅಲ್ಲದೆ ಈ ಕಡೆ ಚತುರಂಗ ಸೇನಾಸಮುದ್ರದ ಮಧ್ಯದಲ್ಲಿ ಕಳಿಂಗ ಕೊಂಗ ವಂಗಾಶರು ಎಂಬತ್ತು ಸಾವಿರ ಆನೆಯ ಗುಂಪುಗಳನ್ನೂ ಮೂರುಲಕ್ಷ ರಥವನ್ನೂ ಅರವತ್ತು ಕೋಟಿ ಕಾಲಾಳು ಸೈನ್ಯವನ್ನೂ ಕೂಡಿ ನಿಂತಿದ್ದಾರೆ. ಅಲ್ಲದೆ ಕ್ಷೇಮಧೂರ್ತಿಯೂ ಭೀಮನ ಕಯ್ಯಲ್ಲಿ ಸತ್ತ ಬಕಾಸುರ ಜಟಾಸುರರ ಮಕ್ಕಳಾದ ಅಳಂಭೂಷ, ಹಲಾಯುಧ, ಮುಸಲಾಯುಧ, ಕಾಳನೀಳರೇ ಮೊದಲಾದವರೂ ಕ್ರೂರರಾಕ್ಷಸಸೈನ್ಯದೊಡನೆ ಸುತ್ತಲೂ ವ್ಯಾಪಿಸಿ ಬಳಸಿ ನಿಂತಿದ್ದಾರೆ. ದುಶ್ಶಾಸನನೇ ಮೊದಲಾದ ನೂರು ಜನ ಮಕ್ಕಳೂ ಅರವತ್ತು ಸಾವಿರ ರಥದಿಂದಲೂ ಹದಿನೆಂಟು ಸಾವಿರ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಗಳಿಂದಲೂ ಕೂಡಿ ಪಂಚಮಹಾಶಬ್ದಗಳು ಪ್ರಳಯಕಾಲದ ಕರಿಯ ಮೋಡಗಳು ಮೊಳಗುವ ಹಾಗೆ ಮೊಳಗುತ್ತಿರಲು ಆಕಾಶ ಪ್ರದೇಶವೇ ಚಿಗುರಿದ ಹಾಗೆ ಹೊಳೆದು ಚಲಿಸುತ್ತಿರುವ ಧ್ವಜ ಮಹಾಧ್ವಜಗಳೂ ದೇವಗಂಗಾನದಿಯ ನೊರೆ ಮತ್ತು ಶಂಖಗಳಿಗೆ ಸಮಾನವಾದ ಬಿಳಿಯ ಬಣ್ಣದಿಂದ ಕೂಡಿದ ಛತ್ರಚಾಮರಗಳೂ ಇನ್ನೂ ಇತರ ರಾಜ್ಯಚಿಹ್ನೆಗಳೂ ಪ್ರಕಾಶಿಸುತ್ತಿರಲು-
ಚಂ|| ಕನಕ ಗಿರೀಂದ್ರ ರುಂದ್ರ ಶಿಖರಸ್ಥಿತ ಬಾಳದಿನೇಶಬಿಂಬಮಂ
ನೆನೆಯಿಸೆ ತನ್ನ ಪೊನ್ನ ರಥದೊಳ್ ನೆಲಸಿರ್ದು ವಿಳಾಸದಿಂದೆ ಭೀ|
ಮನ ಮೊನೆಯಂ ವನೀಪಕರನಾರಯಲಟ್ಟಿ ಯುಗಾಂತವಾರ್ಧಿ ಭೋಂ
ಕೆನೆ ತಳರ್ವಂದದಿಂ ತಳರಲಟ್ಟಿಪನಲ್ತೆ ಫಣೀಂದ್ರಕೇತನಂ|| ೫೮||
ಪದ್ಯ-೫೮:ಪದವಿಭಾಗ-ಅರ್ಥ:ಕನಕಗಿರೀಂದ್ರ ರುಂದ್ರ (ಮೇರುಪರ್ವತದ ವಿಶಾಲವಾದ) ಶಿಖರಸ್ಥಿತ ಬಾಳದಿನೇಶ ಬಿಂಬಮಂ (ಶಿಖರದಲ್ಲಿ ಇರುವ ಬಾಲಸೂರ್ಯನ ಬಿಂಬವನ್ನು) ನೆನೆಯಿಸೆ (ನೆನಪಿಸುವ) ತನ್ನ ಪೊನ್ನ ರಥದೊಳ್ ನೆಲಸಿರ್ದು ವಿಳಾಸದಿಂದೆ (ತನ್ನ ಚಿನ್ನದ ರಥದಲ್ಲಿ ವೈಭವದಿಂದ ಕುಳಿತಿದ್ದು) ಭೀಮನ ಮೊನೆಯಂ (ಭೀಮನ ಯುದ್ಧಯೊಜನೆಯನ್ನು) ವನೀಪಕರನು(ಗೂಢಚಾರರನ್ನು) ಆರಯಲು ಅಟ್ಟಿ (ವಿಚಾರಮಾಡಿ ಬರಲು ಗೂಢಚಾರರನ್ನು ಕಳುಹಿಸಿ) ಯುಗಾಂತವಾರ್ಧಿ ಭೋಂಕೆನೆ ತಳರ್ವಂದದಿಂ ( ಪ್ರಳಯಕಾಲದ ಸಮುದ್ರವು ಇದ್ದಕ್ಕಿದ್ದ ಹಾಗೆ ಚಲಿಸುವಂತೆ) ತಳರಲ್ (ತೆರಳಲು, ಚಲಿಸಲು) ಅಟ್ಟಿಪನಲ್ತೆ ಫಣೀಂದ್ರಕೇತನಂ (ಚಲಿಸಲು ದುರ್ಯೋಧನನು ಸಂದೇಶವನ್ನು ಕಳುಹಿಸಿದನಲ್ಲವೇ!)
ಪದ್ಯ-೫೮:ಅರ್ಥ:ಮೇರುಪರ್ವತದ ವಿಶಾಲವಾದ ಶಿಖರದಲ್ಲಿ ಇರುವ ಬಾಲಸೂರ್ಯನ ಬಿಂಬವನ್ನು ನೆನಪಿಸುವ ತನ್ನ ಚಿನ್ನದ ರಥದಲ್ಲಿ ವೈಭವದಿಂದ ಕುಳಿತಿದ್ದು, ಭೀಮನ ಯುದ್ಧಯೊಜನೆಯನ್ನು ವಿಚಾರಮಾಡಿ ಬರಲು ಗೂಢಚಾರರನ್ನು ಕಳುಹಿಸಿ, ಪ್ರಳಯಕಾಲದ ಸಮುದ್ರವು ಇದ್ದಕ್ಕಿದ್ದ ಹಾಗೆ ಚಲಿಸುವಂತೆ ಚಲಿಸಲು ದುರ್ಯೋಧನನು ಸಂದೇಶವನ್ನು ಕಳುಹಿಸಿದನಲ್ಲವೇ! ಕಳುಹಿಸಿದನು.
ಕಂ|| ಸೆರೆಕೋಲ್ ಸೆರೆಕೋಲಿಂ ಪ
ತ್ತಱುಗಾವುದ ಬಲದ ಪವಣನನಿತಿನಿತೆಂದಾ|
ನಱಿಯೆಂ ದೇವಾಸುರರೊಳ
ಮಱಿಯೆಂ ಕಂಡಿನಿತು ಬಲಮನಾನವನಿಪತೀ|| ೫೯ ||
ಪದ್ಯ-೫೯:ಪದವಿಭಾಗ-ಅರ್ಥ:ಸೆರೆಕೋಲ್ ಸೆರೆಕೋಲಿಂ (ಒಂದು ಬದಿಯ ಅಂಚಿನಿಂದ ಇನ್ನೊಂದು ಬದಿಯ ಅಂಚಿನವರೆಗಿರುವ) ಪತ್ತಱುಗಾವುದ ಬಲದ (ಹತ್ತು ಆರು; ಹದಿನಾರು ಗಾವುದ ವಿಸ್ತಾರದ ಪ್ರದೇಶದಲ್ಲಿರುವ ಸೈನ್ಯದ) ಪವಣನು ಅನಿತಿನಿತೆಂದು ಆನಱಿಯೆಂ (ಪ್ರಮಾಣವನ್ನು ಅಷ್ಟಿಷ್ಟೆಂದು ನಾನು ಅರಿಯೆನು.) ದೇವಾಸುರರೊಳಂ ಅಱಿಯೆಂ (ಅರಿಯೆಂ) ಕಂಡ ಇನಿತು ಬಲಮನು ಆನು ಅವನಿಪತೀ (ರಾಜನೇ, ದೇವಾಸುರರ ಯುದ್ಧದಲ್ಲಿಯೂ ಇಷ್ಟು ಸೈನ್ಯವನ್ನು ನಾನು ಕಂಡಿರಲಿಲ್ಲ.)
ಪದ್ಯ-೫೯:ಅರ್ಥ:ಒಂದು ಬದಿಯ ಅಂಚಿನಿಂದ ಇನ್ನೊಂದು ಬದಿಯ ಅಂಚಿನವರೆಗಿರುವ ಹದಿನಾರು ಗಾವುದ ವಿಸ್ತಾರದ ಪ್ರದೇಶದಲ್ಲಿರುವ ಸೈನ್ಯದ ಪ್ರಮಾಣವನ್ನು ಅಷ್ಟಿಷ್ಟೆಂದು ನಾನು ಅರಿಯೆನು. ರಾಜನೇ ದೇವಾಸುರರ ಯುದ್ಧದಲ್ಲಿಯೂ ಇಷ್ಟು ಸೈನ್ಯವನ್ನು ನಾನು ಕಂಡಿರಲಿಲ್ಲ, ಎಂದು ಕೃಷ್ಣನು ಧರ್ಮರಾಯನಿಗೆ ಹೇಳಿದನು.
ವ|| ಎಂದು ನಾಮುಂ ನಮ್ಮ ಬಲದ ನಾಯಕರನೆಡೆಯಱಿದೊಡ್ಡುವಮೆಂದು ದ್ರೋಣನ ಮೊನೆಗಱುವತ್ತು ಸಾಸಿರ ರಥಂಬೆರಸು ಧೃಷ್ಟದ್ಯುಮ್ನನುಮನಶ್ವತ್ಥಾಮನ ಮೊನೆಗೆ ನಾಲ್ವತ್ತು ಸಾಸಿರ ರಥಂ ಬೆರಸು ಶಿಖಂಡಿಯುಮಂ ಕೃತವರ್ಮನ ಮೊನೆಗೊಂದಕ್ಷೋಹಿಣೀ ಬಲಂ ಬೆರಸು ಸಾತ್ಯಕಿಯುಮಂ ದುರ್ಯೋಧನನ ಮೊನೆಗೊಂದು ಕೋಟಿ ರಥಮುಮೊಂದು ಲಕ್ಕ ಭದ್ರಹಸ್ತಿಯುಂ ಬೆರಸು ಭೀಮನುಮಂ ಬೃಹದಬಳನ ಮೊನೆಗೆ ಮೂವತ್ತು ಸಾಸಿರ ರಥಂಬೆರಸಭಿಮನ್ಯುವುಮಂ ದುಶ್ಶಾಸನನ ಮೊನೆಗೆ ನಾಲ್ವತ್ತು ಸಾಸಿರ ರಥಂಬೆರಸು ನಕುಲನುಮಂ ಶಕುನಿಯ ಮೊನೆಗೆ ನಾಲ್ವತ್ತು ಸಾಸಿರ ರಥಂಬೆರಸು ಸಹದೇವನುಮಂ ಕೃಪನ ಮೊನೆಗೊಂದಕ್ಷೋಹಿಣೀ ಬಲಂಬೆರಸು ಕೇಕಯರುಮಂ ಸಿಂಧುರಾಜನ ಮೊನೆಗೊಂದಕ್ಷೋಹಿಣೀ ಬರಂಬೆರಸು ದ್ರುಪದನುಮಂ ಭಗದತ್ತನ ಮೊನೆಗೊಂದಕ್ಷೋಹಿಣೀ ಬಲಂಬೆರಸು ವಿರಾಟನುಮಂ ಜಟಾಸುರ ಬಕಾಸುರರ ಮಕ್ಕಳಳಂಭೂಷ ಹಳಾಯುಧ ಮುಸಳಾಯುಧ ಕಾಳ ನೀಳ ನಕ್ತಂಚರರ ಮೊನೆಗೊಂದಕ್ಷೋಹಿಣೀ ಬಲಂಬೆರಸು ಘಟೋತ್ಕಚನುಮಂ ವಿಂದನ ಮೊನೆಗೆ ಪದಿನೆಂಟು ಸಾಸಿರ ರಥಮುಮೊಂದುಲಕ್ಕ ಮದದಾನೆಯುಂ ಬೆರಸು ಕೊಂತಿಯ ಮಾವನಪ್ಪ ಕೊಂತಿಭೋಜನುಮಂ ವಿಂದಾನುವಿಂದರ ಮೊನೆಗಱುವತ್ತು ಸಾಸಿರ ರಥಂಬೆರಸು ನಾಗಕುಮಾರನನಂತ ಬಲಸಮನ್ವಿತನಿಳಾವಂತನುಮಂ ಭೂರಿಶ್ರವನ ಮೊನೆಗೆ ನಾಲ್ವತ್ತು ಸಾಸಿರ ರಥಮುಂ ನಾಲ್ವತ್ತು ಸಾಸಿರ ಮದಹಸ್ತಿಗಳುಂ ಬೆರಸು ಮದಗಜಾರೂಢನುತ್ತರನುಮಂ ಸುಯೋಧನನ ಮಕ್ಕಳ್ ಲಕ್ಕಣಂ ಮೊದಲಾಗೆ ನೂರ್ವರ ಮೊನೆಗಱವತ್ತು ಸಾಸಿರ ರಥಂಬೆರಸು ಸುತ ಸೋಮಕ ಪ್ರಮುಖರಪ್ಪ ಪಂಚಪಾಂಡವರುಮಂ ಪೇೞ್ದು ಕಾಂಭೋಜ ಸುದಕ್ಷಿಣ ದಂಡಧಾರರೆಂಬ ಮೂವರಕ್ಷೋಹಿಣೀಪತಿಗಳ ಮೊನೆಗೆ ಮೂಱುಕೋಟಿ ರಥಂಬೆರಸು ಪಾಂಡ್ಯ ಶ್ರೀಜಯ ಸೋಮಕರಂ ಪೇೞ್ದು ವೀರ ಪುಷ್ಕರ ಪಾರಿಯಾತ್ರ ಬರ್ಬರ ಶಬರ ನೇಪಾಳ ಮಹೀಪಾಳರ ಮೊನೆಗೆರಡು ಕೋಟಿ ರಥಂಬೆರಸು ಹೈಹಯರಂ ಪೇೞ್ದು ನೀಳನನಱುವತ್ತು ಸಾಸಿರ ಭದ್ರಹಸ್ತಿವೆರಸು ತನ್ನ ಚಕ್ರರಕ್ಷೆಗೆ ಪೇೞ್ದು ಸಂಸಪ್ತಕರ ಪದಿನೆಂಟು ಕೋಟಿ ರಥಕ್ಕರಿಕೇಸರಿಯ ರಥಮನೊಂದನೆ ಪೇೞ್ದು ಯುಧಿಷ್ಠಿರಂ ಶಲ್ಯನ ಮೊನೆಗೆ ನೆರೆದು ನಿಂದು ಕೆಯ್ವೀಸುವಾ ಪ್ರಸ್ತಾವದೊಳ್ ‘ಶೂರಂ ಭೇದೇನ ಯೋಜಯೇತ್’ ಎಂಬ ನಯಮಂ ಕೆಯ್ಕೊಂಡು ವಿನಯಮನೆ ಮುಂದಿಟ್ಟು-
ವಚನ:ಪದವಿಭಾಗ-ಅರ್ಥ:ಎಂದು ನಾಮುಂ ನಮ್ಮ ಬಲದ ನಾಯಕರನು ಎಡೆಯಱಿದು ಒಡ್ಡುವಂ ಎಂದು (ಆಯಕಟ್ಟುನೋಡಿ ಎದುರು ನಿಲ್ಲಿಸೋಣ ಎಂದು), ದ್ರೋಣನ ಮೊನೆಗೆ (ಸೈನ್ಯಕ್ಕೆ) ಅಱುವತ್ತು ಸಾಸಿರ ರಥಂ ಬೆರಸು (ಸೇರಿ) ಧೃಷ್ಟದ್ಯುಮ್ನನುಮನು; ಅಶ್ವತ್ಥಾಮನ ಮೊನೆಗೆ ನಾಲ್ವತ್ತು ಸಾಸಿರ ರಥಂ ಬೆರಸು ಶಿಖಂಡಿಯುಮಂ; ಕೃತವರ್ಮನ ಮೊನೆಗೆ ಒಂದಕ್ಷೋಹಿಣೀ ಬಲಂ ಬೆರಸು ಸಾತ್ಯಕಿಯುಮಂ; ದುರ್ಯೋಧನನ ಮೊನೆಗೊಂದು ಕೋಟಿ ರಥಮುಮೊಂದು ಲಕ್ಕ ಭದ್ರಹಸ್ತಿಯುಂ ಬೆರಸು ಭೀಮನುಮಂ; ಬೃಹದಬಳನ ಮೊನೆಗೆ ಮೂವತ್ತು ಸಾಸಿರ ರಥಂಬೆರಸು ಅಭಿಮನ್ಯುವುಮಂ ದುಶ್ಶಾಸನನ ಮೊನೆಗೆ ನಾಲ್ವತ್ತು ಸಾಸಿರ ರಥಂಬೆರಸು ನಕುಲನುಮಂ; ಶಕುನಿಯ ಮೊನೆಗೆ ನಾಲ್ವತ್ತು ಸಾಸಿರ ರಥಂಬೆರಸು ಸಹದೇವನುಮಂ; ಕೃಪನ ಮೊನೆಗೆ ಒಂದು ಅಕ್ಷೋಹಿಣೀ ಬಲಂ ಬೆರಸು ಕೇಕಯರುಮಂ; ಸಿಂಧುರಾಜನ ಮೊನೆಗೆ ಒಂದು ಅಕ್ಷೋಹಿಣೀ ಬರಂಬೆರಸು ದ್ರುಪದನುಮಂ; ಭಗದತ್ತನ ಮೊನೆಗೆ ಒಂದು ಅಕ್ಷೋಹಿಣೀ ಬಲಂ ಬೆರಸು ವಿರಾಟನುಮಂ; ಜಟಾಸುರ ಬಕಾಸುರರ ಮಕ್ಕಳ ಅಳಂಭೂಷ ಹಳಾಯುಧ ಮುಸಳಾಯುಧ ಕಾಳ ನೀಳ ನಕ್ತಂಚರರ ಮೊನೆಗೊಂದು ಅಕ್ಷೋಹಿಣೀ ಬಲಂ ಬೆರಸು ಘಟೋತ್ಕಚನುಮಂ; ವಿಂದನ ಮೊನೆಗೆ ಪದಿನೆಂಟು ಸಾಸಿರ ರಥಮುಂ ಒಂದುಲಕ್ಕ ಮದದಾನೆಯುಂ ಬೆರಸು ಕೊಂತಿಯ ಮಾವನಪ್ಪ ಕೊಂತಿಭೋಜನುಮಂ; ವಿಂದಾನುವಿಂದರ ಮೊನೆಗೆ ಅಱುವತ್ತು ಸಾಸಿರ ರಥಂ ಬೆರಸು ನಾಗಕುಮಾರನ ಅನಂತ ಬಲಸಮನ್ವಿತನು ಇಳಾವಂತನುಮಂ; ಭೂರಿಶ್ರವನ ಮೊನೆಗೆ ನಾಲ್ವತ್ತು ಸಾಸಿರ ರಥಮುಂ ನಾಲ್ವತ್ತು ಸಾಸಿರ ಮದಹಸ್ತಿಗಳುಂ ಬೆರಸು ಮದಗಜ ಆರೂಢನು ಉತ್ತರನುಮಂ; ಸುಯೋಧನನ ಮಕ್ಕಳ್ ಲಕ್ಕಣಂ ಮೊದಲಾಗೆ ನೂರ್ವರ ಮೊನೆಗೆ ಅಱವತ್ತು ಸಾಸಿರ ರಥಂಬೆರಸು ಸುತ ಸೋಮಕ ಪ್ರಮುಖರಪ್ಪ ಪಂಚಪಾಂಡವರುಮಂ ಪೇೞ್ದು (ಅವರಿಗೆ ಎದುರಿಸಲು ಹೇಳಿ); ಕಾಂಭೋಜ ಸುದಕ್ಷಿಣ ದಂಡಧಾರರೆಂಬ ಮೂವರ ಅಕ್ಷೋಹಿಣೀಪತಿಗಳ ಮೊನೆಗೆ ಮೂಱುಕೋಟಿ ರಥಂಬೆರಸು ಪಾಂಡ್ಯ ಶ್ರೀಜಯ ಸೋಮಕರಂ ಪೇೞ್ದು; ವೀರ ಪುಷ್ಕರ ಪಾರಿಯಾತ್ರ ಬರ್ಬರ ಶಬರ ನೇಪಾಳ ಮಹೀಪಾಳರ ಮೊನೆಗೆರಡು ಕೋಟಿ ರಥಂಬೆರಸು ಹೈಹಯರಂ ಪೇೞ್ದು; ನೀಳನನ ಅಱುವತ್ತು ಸಾಸಿರ ಭದ್ರಹಸ್ತಿವೆರಸು ತನ್ನ ಚಕ್ರರಕ್ಷೆಗೆ ಪೇೞ್ದು; ಸಂಸಪ್ತಕರ ಪದಿನೆಂಟು ಕೋಟಿ ರಥಕ್ಕರಿಕೇಸರಿಯ ರಥಮನೊಂದನೆ ಪೇೞ್ದು; ಯುಧಿಷ್ಠಿರಂ ಶಲ್ಯನ ಮೊನೆಗೆ ನೆರೆದು ನಿಂದು; ಕೆಯ್ವೀಸುವಾ ಪ್ರಸ್ತಾವದೊಳ್ (ಯುದ್ಧಕ್ಕೆ ಆರಂಭ ಮಾಡಿ ಎಂದು ಕೈಬೀಸುವ ಸಮಯಕ್ಕೆ ಮೊದಲು,) ‘ಶೂರಂ ಭೇದೇನ ಯೋಜಯೇತ್’ ಎಂಬ ನಯಮಂ ಕೆಯ್ಕೊಂಡು ವಿನಯಮನೆ ಮುಂದಿಟ್ಟು-
ವಚನ:ಅರ್ಥ:ಎಂದು ನಾವೂ ನಮ್ಮ ಸೈನ್ಯದ ನಾಯಕರನ್ನು ಆಯಕಟ್ಟುನೋಡಿ ಎದುರು ನಿಲ್ಲಿಸೋಣ ಎಂದನು. ದ್ರೋಣನ ಸೈನ್ಯಕ್ಕೆ ಪ್ರತಿಯಾಗಿ ಅರವತ್ತು ಸಾವಿರ ರಥದೊಡನೆ ಕೂಡಿದ ಧೃಷ್ಟದ್ಯುಮ್ನನನ್ನು ಗೊತ್ತುಮಾಡಿದನು. ಅಶ್ವತ್ಥಾಮನ ಸೈನ್ಯಕ್ಕೆ ನಲವತ್ತು ಸಾವಿರ ತೇರಿನಿಂದ ಕೂಡಿದ ಶಿಖಂಡಿಯನ್ನು ನೇಮಿಸಿದನು. ಕೃತವರ್ಮನ ಕಾಳಗಕ್ಕೆ ಒಂದಕ್ಷೋಹಿಣೀ ಸೈನ್ಯದಿಂದ ಕೂಡಿದ ಸಾತ್ಯಕಿಯನ್ನು ನಿಯಮಿಸಿದನು. ದುರ್ಯೋಧನನೊಡನೆ ಯುದ್ಧ ಮಾಡುವುದಕ್ಕೆ ಒಂದು ಕೋಟಿ ರಥವನ್ನೂ ಒಂದುಲಕ್ಷ ಉತ್ತಮಜಾತಿಯ ಆನೆಗಳನ್ನೂ ಒಳಗೊಂಡ ಭೀಮನನ್ನು ಸಿದ್ಧಪಡಿಸಿದನು. ಬೃಹದ್ಬಳನನ್ನು ಎದುರಿಸುವುದಕ್ಕೆ ಮೂವತ್ತು ಸಾವಿರ ರಥದಿಂದ ಕೂಡಿದ ಅಭಿಮನ್ಯವೂ ದುಶ್ಶಾಸನನ ಕಾಳಗಕ್ಕೆ ನಲವತ್ತು ಸಾವಿರ ರಥದಿಂದ ಕೂಡಿದ ನಕುಲನೂ ಕೃಪನೊಡನೆ ಯುದ್ಧ ಮಾಡುವುದಕ್ಕೆ ಒಂದಕ್ಷೋಹಿಣೀ ಬಲದಿಂದ ಕೂಡಿದ ಕೇಕಯರೂ ಸೈಂಧವನ ಯುದ್ಧಕ್ಕೆ ಒಂದಕ್ಷೋಹಿಣೀ ಬಲದಿಂದ ಕೂಡಿದ ದ್ರುಪದನೂ ಸಿದ್ಧರಾದರು. ಭಗದತ್ತನ ಸೈನ್ಯಕ್ಕೆ ವಿಂದನೊಡನೆ ಯುದ್ಧಮಾಡುವುದಕ್ಕೆ ಹದಿನೆಂಟು ಸಾವಿರ ರಥವೂ ಒಂದು ಲಕ್ಷ ಮದ್ದಾನೆಗಳೂ ಕೂಡಿದ ಕುಂತಿಯ ಮಾವನಾದ ಕುಂತಿಭೋಜನು ಸಿದ್ಧನಾದನು. ವಿಂದಾನುವಿಂದರ ಸೈನ್ಯಕ್ಕೆ ಅರವತ್ತು ಸಾವಿರರಥದೊಡಗೂಡಿ ನಾಗಕುಮಾರನನ್ನೂ ಅನಂತಬಲದಿಂದ ಕೂಡಿದ ಇಳಾವಂತನನ್ನೂ ಭೂರಿಶ್ರವನೊಡನೆ ಯುದ್ಧ ಮಾಡುವುದಕ್ಕೆ ನಲವತ್ತು ಸಾವಿರ ತೇರುಗಳನ್ನೂ ನಲವತ್ತು ಸಾವಿರ ಮದ್ದಾನೆಗಳನ್ನೂ ಕೂಡಿ ಮದ್ದಾನೆಯನ್ನೇರಿದ್ದ ಉತ್ತರನನ್ನೂ ಏರ್ಪಡಿಸಿದನು. ದುರ್ಯೋಧನನ ಮಕ್ಕಳಾದ ಲಕ್ಷಣನೇ ಮೊದಲಾದ ನೂರು ಜನಗಳ ಯುದ್ಧಕ್ಕೆ ಅರವತ್ತು ಸಾವಿರ ತೇರಿನೊಡನೆ ಕೂಡಿದ ಸುತ ಸೋಮಕರೇ ಮುಖ್ಯರಾದ ಪಂಚಪಾಂಡವರನ್ನು ನೇಮಿಸಿದನು. ಕಾಂಭೋಜ ಸುದಕ್ಷಿಣ ದಂಡಧಾರರೆಂಬ ಮೂರುಮಂದಿ ಅಕ್ಷೋಹಿಣೀಪತಿಗಳ ಯುದ್ಧಕ್ಕೆ ಮೂರುಕೋಟಿ ರಥಗಳಿಂದ ಕೂಡಿದ ಪಾಂಡ್ಯ ಶ್ರೀಜಯ ಸೋಮಕರನ್ನೂ ಗೊತ್ತುಮಾಡಿದನು. ವೀರರಾದ ಪುಷ್ಕರ ಪಾರಿಯಾತ್ರ ಬರ್ಬರ ಶಬರ ನೇಪಾಳ ರಾಜರುಗಳ ಬಲಕ್ಕೆ ಎರಡುಕೋಟಿ ರಥಗಳಿಂದ ಕೂಡಿದ ಹೈಹಯರನ್ನು ನಿಯಮಿಸಿದನು. ಅರವತ್ತು ಸಾವಿರ ಭದ್ರಗಜಗಳೊಡನೆ ನೀಲನನ್ನು ತನ್ನ ಸೇನಾರಕ್ಷಣೆಗೆ ಇರಹೇಳಿದನು. ಸಂಸಪ್ತಕರ ಹದಿನೆಂಟುಕೋಟಿ ರಥಕ್ಕೆ ಅರಿಕೇಸರಿಯ (ಅರ್ಜುನ) ರಥವೊಂದನ್ನೇ ಸಿದ್ಧಪಡಿಸಿದನು. ಧರ್ಮರಾಯನು ತಾನೇ ಶಲ್ಯನ ಇದಿರಾಗಿ ನಿಂತನು. ಯುದ್ಧಕ್ಕೆ ಆರಂಭ ಮಾಡಿ ಎಂದು ಕೈಬೀಸುವ ಸಮಯಕ್ಕೆ ಮೊದಲು ‘ಶೂರನನ್ನು ಭೇದೋಪಾಯದಿಂದಲೇ ಗೆಲ್ಲಬೇಕು’ ಎಂಬ ನೀತಿಯನ್ನು ಅಂಗೀಕರಿಸಿ ವಿನಯವನ್ನೇ ಮುಂದು ಮಾಡಿಕೊಂಡು (ಧರ್ಮರಾಯನು ಹಿರಿಯರನ್ನು ನಮಸ್ಕರಿಸಿ ಆಶೀರ್ವಾದ ಪಡೆಯಲು ಮುಂದಾದನು.)-
ಕಂ|| ಬಳಮೆರಡುಂ ತನ್ನನೆ ಮಿಳ
ಮಿಳ ನೋಡೆ ನರೇಂದ್ರನೊಂದೇ ರಥದಿಂದಸುಹೃ|
ದ್ಬಳಮನಿರದೆಯ್ದಿ ಭೀಷ್ಮರ
ಚಳಣಯುಗಕ್ಕೆಱಗೆ ನಿನಗೆ ಜಯಮಕ್ಕೆಂದಂ|| ೬೦ ||
ಪದ್ಯ-೬೦:ಪದವಿಭಾಗ-ಅರ್ಥ:ಬಳಮೆರಡುಂ ತನ್ನನೆ ಮಿಳಮಿಳ ನೋಡೆ (ಎರಡು ಸೈನ್ಯಗಳೂ ತನ್ನನ್ನೇ ಬಿಟಕಣ್ಣುಬಿಟ್ಟಂತೆ ಅಚ್ಚರಿಯಿಂದ ಮಿಟಮಿಟನೆ ನೋಡುತ್ತಿರಲು) ನರೇಂದ್ರನು ಒಂದೇ ರಥದಿಂದ (ಒಂದೇ ರಥದಿಂದ ಏಕಾಕಿಯಾಗಿ) ಅಸುಹೃತ್ ಬಳಮನು ಇರದೆ ಎಯ್ದಿ (ಸಾವಕಾಶಮಾಡದೆ ಶತ್ರುಸೈನ್ಯವನ್ನು ಸೇರಿ) ಭೀಷ್ಮರ ಚಳಣಯುಗಕ್ಕೆ (ಳ- ಪ್ರಾಸಕ್ಕಾಗಿ ಮಾತ್ರಾ; ಚರಣಯುಗಕ್ಕೆ) ಎಱಗೆ (ಎರಗಿದಾಗ) ನಿನಗೆ ಜಯಮಕ್ಕೆಂದಂ (ಭೀಷ್ಮರ ಎರಡು ಕಾಲುಗಳಿಗೂ ನಮಸ್ಕಾರ ಮಾಡಲು, ಅವರು ನಿನಗೆ ಜಯವಾಗಲಿ ಎಂದು ಆಶೀರ್ವದಿಸಿದರು)
ಪದ್ಯ-೬೦:ಅರ್ಥ:ಎರಡು ಸೈನ್ಯಗಳೂ ತನ್ನನ್ನೇ ಬಿಟಕಣ್ಣುಬಿಟ್ಟಂತೆ ಅಚ್ಚರಿಯಿಂದ ಮಿಟಮಿಟನೆ ನೋಡುತ್ತಿರಲು ಧರ್ಮರಾಯನು ಒಂದೇ ರಥದಿಂದ ಏಕಾಕಿಯಾಗಿ ಸಾವಕಾಶಮಾಡದೆ ಶತ್ರುಸೈನ್ಯವನ್ನು ಸೇರಿ ಭೀಷ್ಮರ ಎರಡು ಕಾಲುಗಳಿಗೂ ನಮಸ್ಕಾರ ಮಾಡಲು, ಅವರು ನಿನಗೆ ಜಯವಾಗಲಿ ಎಂದು ಆಶೀರ್ವದಿಸಿದರು.
ವ|| ಎಂದು ಭೀಷ್ಮರ್ ತಮ್ಮ ಮೊಮ್ಮನ ವಿನಯಕ್ಕೆ ಮೆಚ್ಚಿ ಪರಸೆ ಪರಕೆಯಂ ಕೆಯ್ಕೊಂಡು-
ವಚನ:ಪದವಿಭಾಗ-ಅರ್ಥ:ಎಂದು ಭೀಷ್ಮರ್ ತಮ್ಮ ಮೊಮ್ಮನ (ಮೊಮ್ಮಗನ) ವಿನಯಕ್ಕೆ ಮೆಚ್ಚಿ ಪರಸೆ ಪರಕೆಯಂ ಕೆಯ್ಕೊಂಡು-
ವಚನ:ಅರ್ಥ:ಭೀಷ್ಮರು ತಮ್ಮ ಮೊಮ್ಮಗನ ವಿನಯಕ್ಕೆ ಮೆಚ್ಚಿ ವಿಜಯವಾಗಲಿ ಎಂದು ಹರಸಲು, ಆ ಹರಕೆಯನ್ನು ಸ್ವೀಕರಿಸಿ-
ಕಂ|| ಗುರು ಕೃಪ ಗುರುಸುತ ಶಲ್ಯರ
ಚರಣಂಗಳ್ಗೆಱಗಿ ಪೋಗಿ ಪೊಡೆವಡುವುದುಮಾ|
ದರದಿಂದಂ ನಲ್ಮೆಯೊಳಂ
ಪರಸಿ ಮನಗೊಂಡು ನುಡಿದರವರಾ ನೃಪನಂ|| ೬೧ ||
ಪದ್ಯ-೦೦:ಪದವಿಭಾಗ-ಅರ್ಥ:ಗುರು ಕೃಪ ಗುರುಸುತ ಶಲ್ಯರ ಚರಣಂಗಳ್ಗೆ ಎಱಗಿ ಪೋಗಿ ಪೊಡೆವಡುವುದುಂ (ಹೋಗಿ ನಮಸ್ಕಾರ ಮಾಡಿದಾಗ,) ಆದರದಿಂದಂ ನಲ್ಮೆಯೊಳಂ ಪರಸಿ ಮನಗೊಂಡು (ಹರಸಿ ತೃಪ್ತರಾಗಿ) ನುಡಿದರು ಅವರು ಆ ನೃಪನಂ.
ಪದ್ಯ-೦೦:ಅರ್ಥ:ದ್ರೋಣ ಕೃಪ ಅಶ್ವತ್ಥಾಮ ಶಲ್ಯರ ಪಾದಗಳಿಗೂ ಹಾಗೆಯೇ ಹೋಗಿ ನಮಸ್ಕಾರ ಮಾಡಿದಾಗ, ಅವರೂ ಸಂತಸದಿಂದಲೂ ಆದರದಿಂದಲೂ ಸದ್ಭಾವದಿಂದಲೂ ಹರಸಿ ತೃಪ್ತರಾಗಿ ರಾಜನನ್ನು ಕುರಿತು ಹೇಳಿದರು.
ನಿನ್ನ ಬರವಿಂದವೆಮ್ಮ ಮ
ನನ್ನಿನಗೆಱಗಿದುದು ಜಯಮುಮೆಮ್ಮೀ ದೆಸೆಯಿಂ|
ದನ್ನಿನಗೆ ಸಾರ್ಗೆ ಪೋಗೆನೆ
ಮನ್ನಿಸಿ ಗುರುಜನಮನಾಗಳಂತಕನತನಯಂ|| ೬೨ ||
ಪದ್ಯ-೦೦:ಪದವಿಭಾಗ-ಅರ್ಥ:ನಿನ್ನ ಬರವಿಂದಂ ಎಮ್ಮ ಮನಂ ನಿನಗೆ ಎಱಗಿದುದು (ನಮ್ಮ ಮನಸ್ಸು ನಿನ್ನ ಕಡೆಗೆ ಒಲಿಯಿತು) ಜಯಮಂ ಎಮ್ಮೀ ದೆಸೆಯಿಂದಂ ನಿನಗೆ ಸಾರ್ಗೆ (ನಮ್ಮ ಕಡೆಯಿಂದ ನಿನಗೆ ಜಯವು ಬರಲಿ,) ಪೋಗು ಎನೆ ಮನ್ನಿಸಿ ಗುರುಜನಮನು ಆಗಳ್ ಅಂತಕನತನಯಂ()
ಪದ್ಯ-೦೦:ಅರ್ಥ:ಧರ್ಮರಾಜನು ತಮ್ಮ ಹಿರಿಯರನ್ನು ಗೌರವಿಸಲು.ನಿನ್ನ ಬರುವಿಕೆಯಿಂದ ನಮ್ಮ ಮನಸ್ಸು ನಿನ್ನ ಕಡೆಗೆ ಒಲಿಯಿತು. ಹಾಗೆಯೇ ನಮ್ಮ ಕಡೆಯಿಂದ ನಿನಗೆ ಜಯವು ಬರಲಿ, ಹೋಗು ಎಂದರು.
ವ|| ಮಗುೞ್ದು ತನ್ನೊಡ್ಡಣಕ್ಕೆ ಬರುತ್ತುಂ ದುರ್ಯೋಧನನ ತಮ್ಮನಪ್ಪ ಯುಯುತ್ಸುವಂ ಕಂಡು-
ವಚನ:ಪದವಿಭಾಗ-ಅರ್ಥ:ಮಗುೞ್ದು (ಹಿಂತಿರುಗಿ) ತನ್ನ ಒಡ್ಡಣಕ್ಕೆ ಬರುತ್ತುಂ (ಸೈನ್ಯಕ್ಕೆ ಹಿಂತಿರುಗಿ ಬರುತ್ತ) ದುರ್ಯೋಧನನ ತಮ್ಮನಪ್ಪ ಯುಯುತ್ಸುವಂ ಕಂಡು-
ವಚನ:ಅರ್ಥ: ತನ್ನ ಸೈನ್ಯಕ್ಕೆ ಹಿಂತಿರುಗಿ ಬರುತ್ತ ದಾರಿಯಲ್ಲಿ ದುರ್ಯೋಧನನ ತಮ್ಮನಾದ ಯುಯುತ್ಸುವನ್ನು ಕಂಡು-,
ಚಂ|| ಪವನಜನಿಂದೆ ಕೌರವಕುಲಂ ಪಡಲಿಟ್ಟವೊಲಕ್ಕುಮಾದೊಡಿ
ನ್ನವರವರಾರುವಿಲ್ಲಣಮೆ ಸಂತತಿ ಕೆಟ್ಟಪುದಿಲ್ಲಿ ಕಾವೆನೀ|
ಬವರದೊಳೀಗಳಾನಿವನನೆಂದು ನೃಪಂ ದಯೆಯಿಂದಮಾ ಯುಯು
ತ್ಸುವನೊಡಗೊಂಡು ಬಂದನೆನಿತಾದೊಡಮೇಂ ಪ್ರಭು ಪೊಲ್ಲಕೆಯ್ಗುಮೇ|| ೬೩ ||
ಪದ್ಯ-೬೩:ಪದವಿಭಾಗ-ಅರ್ಥ:ಪವನಜನಿಂದೆ ಕೌರವಕುಲಂ ಪಡಲಿಟ್ಟವೊಲಕ್ಕುಂ (ಭೀಮನಿಂದ ಕೌರವಕುಲವು ನಾಶವಾದಂತಾಗುತ್ತದೆ.) ಆದೊಡೆ ಇನ್ನವರವರು ಆರುವಿಲ್ಲಣಮೆ (ಅವರ ಕಡೆಯವರು ಆರೂ ಇಲ್ಲದಂತಾಗುತ್ತದೆ.) ಸಂತತಿ ಕೆಟ್ಟಪುದು (ಅವರ ಸಂತತಿಯು ಸಂಪೂರ್ಣವಾಗಿ ನಾಶವಾಗುತ್ತದೆ.) ಇಲ್ಲಿ ಕಾವೆನು ಈ ಬವರದೊಳು ಈಗಳು ಆನು ಇವನನೆಂದು ( ಈ ಯುದ್ಧದಲ್ಲಿ ಇವನನ್ನಾದರೂ ರಕ್ಷಿಸುತ್ತೇನೆ ಎಂದು) ನೃಪಂ ದಯೆಯಿಂದಂ ಆ ಯುಯುತ್ಸುಉ ಒನೊಡಗೊಂಡು ಬಂದಂ (ರಾಜನು ದಯೆಯಿಂದ ಆ ಯುಯುತ್ಸುವನ್ನು ಒಡಗೊಂಡು ಬಂದನು) ಎನಿತಾದೊಡಂ ಏಂ ಪ್ರಭು ಪೊಲ್ಲಕೆಯ್ಗುಮೇ (ಪ್ರಭುವಾದವನು ಏನೇ ಆದರೂ ಕೆಟ್ಟದ್ದನ್ನು ಮಾಡುತ್ತಾನೆಯೇ? )
ಪದ್ಯ-೬೩:ಅರ್ಥ:ಹೇಗೂ ಭೀಮನಿಂದ ಕೌರವಕುಲವು ನಾಶವಾದಂತಾಗುತ್ತದೆ. ಅವರ ಕಡೆಯವರಾರೂ ಇಲ್ಲದಂತಾಗುತ್ತದೆ. ಅವರ ಸಂತತಿಯು ಸಂಪೂರ್ಣವಾಗಿ ನಾಶವಾಗುತ್ತದೆ. ಈ ಯುದ್ಧದಲ್ಲಿ ಇವನನ್ನಾದರೂ ರಕ್ಷಿಸುತ್ತೇನೆ ಎಂದು ರಾಜನು ದಯೆಯಿಂದ ಆ ಯುಯುತ್ಸುವನ್ನು ಒಡಗೊಂಡು ಬಂದನು. ಪ್ರಭುವಾದವನು ಏನೇ ಆದರೂ ಕೆಟ್ಟದ್ದನ್ನು ಮಾಡುತ್ತಾನೆಯೇ?
ವ|| ಅಂತಾ ಯುಯುತ್ಸುವನೊಡಗೊಂಡು ಬಂದು ಧರ್ಮಪುತ್ರನುತ್ಸಾಹದೊಳಿರ್ಪ ಪದದೊಳ್ ವಿಕ್ರಮಾರ್ಜುನನ ಮನದೊಳಾದ ವ್ಯಾಮೋಹಮಂ ಕಳೆಯಲೆಂದು ಮುಕುಂದಂ ದಿವ್ಯಸ್ವರೂಪಮಂ ತೋಱಿ-
ವಚನ:ಪದವಿಭಾಗ-ಅರ್ಥ: ಅಂತು ಆ ಯುಯುತ್ಸುವನು ಒಡಗೊಂಡು ಬಂದು ಧರ್ಮಪುತ್ರನು ಉತ್ಸಾಹದೊಳಿರ್ಪ ಪದದೊಳ್, ವಿಕ್ರಮಾರ್ಜುನನ (ಅರ್ಜುನನ) ಮನದೊಳು ಆದ ವ್ಯಾಮೋಹಮಂ ಕಳೆಯಲೆಂದು (ಅರ್ಜುನನ ಮನಸ್ಸಿನಲ್ಲುಂಟಾದ ವ್ಯಾಮೋಹವನ್ನು ಕಳೆಯುವುದಕ್ಕಾಗಿ) ಮುಕುಂದಂ ದಿವ್ಯಸ್ವರೂಪಮಂ ತೋಱಿ (ಕೃಷ್ಣನು ಅನಿಗೆ ವಿಶ್ವರೂಪವನ್ನು ತೋರಿಸಿ.)-
ವಚನ:ಅರ್ಥ:ಯುಯುತ್ಸುವನ್ನು ಒಡಗೊಂಡು ಬಂದು ಧರ್ಮರಾಜನು ಉತ್ಸಾಹದಿಂದಿರುವ ಸಮಯದಲ್ಲಿ, ಅರ್ಜುನನ ಮನಸ್ಸಿನಲ್ಲುಂಟಾದ ವ್ಯಾಮೋಹವನ್ನು ಕಳೆಯುವುದಕ್ಕಾಗಿ ಕೃಷ್ಣನು ಅನಿಗೆ ವಿಶ್ವರೂಪವನ್ನು ತೋರಿದನು.ತೋರಿಸಿ-
ಚಂ|| ಅದಿರದಿದಿರ್ಚಿ ತಳ್ತಿಱಿಯಲೀ ಮಲೆದೊಡ್ಡಿದ ಚಾತುರಂಗಮೆಂ
ಬುದು ನಿನಗೊಡ್ಡಿ ನಿಂದುದಿದನೋವದೆ ಕೊಲ್ವಡೆ ನೀನುಮೆನ್ನ ಕ|
ಜ್ಜದೊಳೆಸಗೆಂದು ಸೈತಜಿತನಾದಿಯ ವೇದರಹಸ್ಯದೊಳ್ ನಿರಂ
ತದ ಪರಿಚರ್ಯೆಯಿಂ ನೆರೆಯೆ ಯೋಜಿಸಿದಂ ಕದನತ್ರಿಣೇತ್ರನಂ|| ೬೪ ||
ಪದ್ಯ-೬೪:ಪದವಿಭಾಗ-ಅರ್ಥ:ಅದಿರದೆ ಇದಿರ್ಚಿ ತಳ್ತು (ತಾಗಿ, ಪ್ರತಿಭಟಿಸಿ) ಇಱಿಯಲು ಈ ಮಲೆದೊಡ್ಡಿದ ಚಾತುರಂಗಂ ಎಂಬುದು ನಿನಗೊಡ್ಡಿ ನಿಂದುದು(ನೀನು ಹೆದರದೆ ಎದುರಿಸಿ ಪ್ರತಿಭಟಿಸಿ ಯುದ್ಧಮಾಡಲು ಮಲೆತು ಚಾಚಿದ ಈ ಚತುರಂಗ ಸೈನ್ಯವು ನಿನಗೆ ಪ್ರತಿಭಟಿಸಿ ನಿಂತಿದೆ) ಇದನು ಓವದೆ (ಕರುಣೆ ತೋರಿ ಮೋಹದಿಂದ ಕಾಪಾಡದೆ) ಕೊಲ್ವಡೆ (ಇದನ್ನು ಕರುಣೆ ತೋರಿ ಮೋಹದಿಂದ ಕಾಪಾಡದೆ ಕೊಲ್ಲಬೇಕಾದರೆ), ನೀನುಂ ಎನ್ನ ಕಜ್ಜದೊಳು ಎಸಗೆಂದು (ನೀನು ನನ್ನು ಕಾರ್ಯದಲ್ಲಿ ಸಹಾಯವನ್ನು ನಾನು ಹೇಳಿದ ರೀತಿಯಲ್ಲಿ ಕೆಲಸ ಮಾಡು” ) ಸೈತಜಿತನು (ಶ್ರೀಕೃಷ್ಣನು) ಆದಿಯ ವೇದರಹಸ್ಯದೊಳ್ ನಿರಂತದ ಪರಿಚರ್ಯೆಯಿಂ ನೆರೆಯೆ (ಆದಿಕಾಲದಿಂದ ಬಂದ ವೇದ ರಹಸ್ಯವನ್ನು ಮನದಟ್ಟಾಗುವಂತೆ ನಿರಂತರ ಸೇವೆ/ ಕರ್ತವ್ಯಡಿಂದ ಸಿದ್ಧಿಯೆಂದು ಉಪದೇಶಿಸಿ) ಯೋಜಿಸಿದಂ ಕದನತ್ರಿಣೇತ್ರನಂ (ಅರ್ಜುನನನ್ನು ಯುದ್ಧಕಾರ್ಯದಲ್ಲಿ ನಿಯೋಜಿಸಿದನು.)
ಪದ್ಯ-೬೪:ಅರ್ಥ:“ಅರ್ಜುನನೇ ನೀನು ಹೆದರದೆ ಎದುರಿಸಿ ಪ್ರತಿಭಟಿಸಿ ಯುದ್ಧಮಾಡಲು ಮಲೆತು ಚಾಚಿದ ಈ ಚತುರಂಗ ಸೈನ್ಯವು ನಿನಗೆ ಪ್ರತಿಭಟಿಸಿ ನಿಂತಿದೆ. ಇದನ್ನು ಕರುಣೆ ತೋರಿ ಮೋಹದಿಂದ ಕಾಪಾಡದೆ ಕೊಲ್ಲಬೇಕಾದರೆ ನೀನು ನನ್ನು ಕಾರ್ಯದಲ್ಲಿ ಸಹಾಯವನ್ನು ನಾನು ಹೇಳಿದ ರೀತಿಯಲ್ಲಿ ಕೆಲಸ ಮಾಡು” ಎಂದು ಶ್ರೀಕೃಷ್ಣನು ಆದಿಕಾಲದಿಂದ ಬಂದ ವೇದ ರಹಸ್ಯವನ್ನು ಮನದಟ್ಟಾಗುವಂತೆ ನಿರಂತರ ಸೇವೆ/ ಕರ್ತವ್ಯಡಿಂದ ಸಿದ್ಧಿಯೆಂದು ಉಪದೇಶಿಸಿ ಅರ್ಜುನನನ್ನು ಯುದ್ಧಕಾರ್ಯದಲ್ಲಿ ನಿಯೋಜಿಸಿದನು.
ವ|| ಆಗಳ್ ಪರಸೈನ್ಯಭೈರವಂ ಪುರಾಣಪುರುಷನಪ್ಪ ಪುರುಷೋತ್ತಮಂಗೆಱಗಿ ಪೊಡಮಟ್ಟು ರಿಪುಪಕ್ಷಕ್ಷಯಕರಮಪ್ಪ ವಿಶ್ವಕರ್ಮ ನಿರ್ಮಿತಮಾದ ತನ್ನ ದಿವ್ಯರಥಮಂ ಮನೋರಥಂ ಬೆರಸು ರಥಾಂಗಧರನಂ ಮುನ್ನಮೇಱಲ್ವೇೞ್ದು ಮೂಱು ಸೂೞು ಬಲವಂದು ಪೊಡಮಟ್ಟು ಬೞಿಯಂ ತಾನೇಱಿ ವಜ್ರಕವಚಮಂ ತೊಟ್ಟು ತವದೊಣೆಗಳನೆರಡುಂ ದೆಸೆಯೊಳಂ ಬಿಗಿದು ದ್ರೋಣಾಚಾರ್ಯಂಗೆ ಮನದೊಳ್ ನಮಸ್ಕಾರಂಗೆಯ್ದು ದ್ರೋಣಂ ಬಾೞ್ಗೆಂದು ಮಹಾಪ್ರಚಂಡ ಗಾಂಡೀವಮಂ ಕೊಂಡೇಱಿಸಿ ನೀವಿ ಜೇವೊಡೆದು ದೇವದತ್ತ ಶಂಖಮಂ ಪೂರಿಸಿ ಸಂಸಪ್ತಕರೊಡ್ಡಣದತ್ತ ರಥಾಂಗಧರನಂ ರಥಮಂ ಚೋದಿಸಲ್ವೇೞ್ದೂಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಪರಸೈನ್ಯಭೈರವಂ ಪುರಾಣಪುರುಷನಪ್ಪ ಪುರುಷೋತ್ತಮಂಗೆ ಎಱಗಿ ಪೊಡಮಟ್ಟು (ಅರ್ಜುನನು ಪುರಾಣಪುರುಷನಾದ ಶ್ರೀಕೃಷ್ಣನಿಗೆ ನಮಸ್ಕಾರಮಾಡಿ) ರಿಪುಪಕ್ಷ ಕ್ಷಯಕರಮಪ್ಪ ವಿಶ್ವಕರ್ಮ ನಿರ್ಮಿತಮಾದ (ಶತ್ರುಪಕ್ಷವನ್ನು ನಾಶಮಾಡುವ ಶಕ್ತಿಯನ್ನುಳ್ಳವಿಶ್ವಕರ್ಮನಿಂದ ನಿರ್ಮಿತವಾದ) ತನ್ನ ದಿವ್ಯರಥಮಂ ಮನೋರಥಂ ಬೆರಸು (ತನ್ನ ದಿವ್ಯರಥವನ್ನು ತನ್ನ ಮನಸ್ಸಿನ ಸಂಕಲ್ಪದೊಡನೆ) ರಥಾಂಗಧರನಂ (ಚಕ್ರಧರನಾದ ಶ್ರೀಕೃಷ್ಣನನ್ನು) ಮುನ್ನಮೇ ಏಱಲ್ವೇೞ್ದು (ಮೊದಲು ಹತ್ತಲುಹೇಳಿ) ಮೂಱು ಸೂೞು ಬಲವಂದು ಪೊಡಮಟ್ಟು ಬೞಿಯಂ(ಅದನ್ನು ಮೂರುಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದ ಬಳಿಕ) ತಾನು ಏಱಿ ವಜ್ರಕವಚಮಂ ತೊಟ್ಟು (ತಾನೂ ಹತ್ತಿ ವಜ್ರಕವಚವನ್ನು ಧರಿಸಿದನು) ತವದೊಣೆಗಳನು ಎರಡುಂ ದೆಸೆಯೊಳಂ ಬಿಗಿದು (ಅಕ್ಷಯತೂಣೀರ (ಬತ್ತಳಿಕೆ)ಗಳನ್ನು ಎರಡು ಕಡೆಯಲ್ಲಿಯೂ ಬಿಗಿದು) ದ್ರೋಣಾಚಾರ್ಯಂಗೆ ಮನದೊಳ್ ನಮಸ್ಕಾರಂಗೆಯ್ದು ದ್ರೋಣಂ ಬಾೞ್ಗೆಂದು (ದ್ರೋಣಾಚಾರ್ಯರಿಗೆ ಮನಸ್ಸಿನಲ್ಲಿಯೇ ನಮಸ್ಕರಿಸಿ ‘ದ್ರೋಣಾಚಾರ್ಯರು ಬಾಳಲಿ’ ಎಂದು ಪ್ರಾರ್ಥಿಸಿದನು.) ಮಹಾಪ್ರಚಂಡ ಗಾಂಡೀವಮಂ ಕೊಂಡು ಏಱಿಸಿ ನೀವಿ ಜೇವೊಡೆದು ದೇವದತ್ತ ಶಂಖಮಂ ಪೂರಿಸಿ (ಮಹಾಪ್ರಚಂಡವಾದ ತನ್ನ ಗಾಂಡೀವವೆಂಬ ಬಿಲ್ಲಿಗೆ ಹೆದೆಯನ್ನೇರಿಸಿ ನೀವಿ ಟಂಕಾರಮಾಡಿ, ದೇವದತ್ತ ಶಂಖವನ್ನು ಊದಿ) ಸಂಸಪ್ತಕರ ಒಡ್ಡಣದತ್ತ (ಸಂಸಪ್ತಕರ ಸೈನ್ಯದ ಕಡೆಗೆ) ರಥಾಂಗಧರನಂ ರಥಮಂ ಚೋದಿಸಲ್ವೇೞ್ದೂಗಳ್- (ರಥವನ್ನು ನಡೆಸುವಂತೆ ಕೃಷ್ಣನಿಗೆ ಹೇಳಿದನು; ಹಾಗೆ ಹೇಳಿಧಾಗ-)
ವಚನ:ಅರ್ಥ: ಆಗ ಅರ್ಜುನನು ಪುರಾಣಪುರುಷನಾದ ಶ್ರೀಕೃಷ್ಣನಿಗೆ ನಮಸ್ಕಾರಮಾಡಿ ಶತ್ರುಪಕ್ಷವನ್ನು ನಾಶಮಾಡುವ ಶಕ್ತಿಯನ್ನುಳ್ಳವಿಶ್ವಕರ್ಮನಿಂದ ನಿರ್ಮಿತವಾದ ತನ್ನ ದಿವ್ಯರಥವನ್ನು ತನ್ನ ಮನಸ್ಸಿನ ಸಂಕಲ್ಪದೊಡನೆ ಶ್ರೀಕೃಷ್ಣನನ್ನು ಮೊದಲು ಹತ್ತಲುಹೇಳಿ ಅದನ್ನು ಮೂರುಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದ ಬಳಿಕ ತಾನೂ ಹತ್ತಿ ವಜ್ರಕವಚವನ್ನು ಧರಿಸಿದನು. ಅಕ್ಷಯತೂಣೀರ (ಬತ್ತಳಿಕೆ)ಗಳನ್ನು ಎರಡು ಕಡೆಯಲ್ಲಿಯೂ ಬಿಗಿದು, ದ್ರೋಣಾಚಾರ್ಯರಿಗೆ ಮನಸ್ಸಿನಲ್ಲಿಯೇ ನಮಸ್ಕರಿಸಿ ‘ದ್ರೋಣಾಚಾರ್ಯರು ಬಾಳಲಿ’ ಎಂದು ಪ್ರಾರ್ಥಿಸಿದನು. ಮಹಾಪ್ರಚಂಡವಾದ ತನ್ನ ಗಾಂಡೀವವೆಂಬ ಬಿಲ್ಲಿಗೆ ಹೆದೆಯನ್ನೇರಿಸಿ ನೀವಿ ಟಂಕಾರಮಾಡಿ, ದೇವದತ್ತ ಶಂಖವನ್ನು ಊದಿ, ಸಂಸಪ್ತಕರ ಸೈನ್ಯದ ಕಡೆಗೆ ರಥವನ್ನು ನಡೆಸುವಂತೆ ಕೃಷ್ಣನಿಗೆ ಹೇಳಿದನು.ಹಾಗೆ ಹೇಳಿಧಾಗ-
ಮ||ಸ್ರ|| ಕುಳಶೈಳೇಂದ್ರಂಗಳಂಭೋನಿಧಿಗಳಖಿಳ ದಿಗ್ದಂತಿಗಳ್ ವಿಶ್ವಧಾತ್ರೀ
ವಳಯಂ ಪಾತಾಳಮೂಲಂ ಸಕಲ ಭುವನಮೊಂದೊಂದರೊಳ್ ಕೇಣಿಗೊಂಡು|
ಚ್ಚಳಿಸಲ್ ಸೂಸಲ್ ಪಳಂಚಲ್ ಸಿಡಿದೊಡೆದಳಱಲ್ ಪಾಱಿ ಜೀಳೇೞಲಂದು
ಮ್ಮಳಿಸುತ್ತತ್ತಿರ್ದರಾವಂ ಹರಿಗನೊಳಿದಿರಂ ಮೀಱಿ ಮಾಱಾಂಪ ಗಂಡಂ|| ೬೫ ||
ಪದ್ಯ-೬೫:ಪದವಿಭಾಗ-ಅರ್ಥ:ಕುಳಶೈಳೇಂದ್ರಂಗಳ್, ಅಂಭೋನಿಧಿಗಳ್, ಅಖಿಳ ದಿಗ್ದಂತಿಗಳ್, ವಿಶ್ವಧಾತ್ರೀ ವಳಯಂ (ಸಮಗ್ರ ಭೂಮಂಡಲವೂ) ಪಾತಾಳಮೂಲಂ ಸಕಲ ಭುವನಮಂ ಒಂದೊಂದರೊಳ್ ಕೇಣಿಗೊಂಡು ಉಚ್ಚಳಿಸಲ್ (ಸಮಸ್ತಲೋಕಗಳೂ ಒಂದೊಂದೂ ಸಾಲಾಗಿ ಮೇಲಕ್ಕೆ ಚಿಮ್ಮಿ,) ಸೂಸಲ್ ಪಳಂಚಲ್ ಸಿಡಿದೊಡೆದು ಅಳಱಲ್ (ಒಂದೊಂದೂ ಸಾಲಾಗಿ ಮೇಲಕ್ಕೆ ಚಿಮ್ಮಿ, ಚೆಲ್ಲಾಡಿ, ತಾಗಿ, ಸಿಡಿಲೊಡೆದು,ಹೆದರಲು,) ಪಾಱಿ ಜೀಳೇೞಲು ಅಂದು ಉಮ್ಮಳಿಸುತ್ತ ಅತ್ತಿರ್ದರ್ (ಹಾರಿ, ಜೀರೆಂದು ಶಬ್ದಮಾಡಿ ವ್ಯಾಕುಲಪಟ್ಟವು.) ಆವಂ? ಯಾವನು?- ಹರಿಗನೊಳು ಇದಿರಂ ಮೀಱಿ ಮಾಱಾಂಪ ಗಂಡಂ (ಅರ್ಜುನನಿಗೆ ಇದಿರಾಗಿ ಪ್ರತಿಭಟಿಸುವ ಶೂರನು ಯಾವನಿದ್ದಾನೆ? )
ಪದ್ಯ-೬೫:ಅರ್ಥ: ಕುಲಪರ್ವತಗಳೂ, ಸಮುದ್ರಗಳೂ, ಎಲ್ಲಾ ದಿಗ್ಗಜಗಳೂ, ಸಮಗ್ರ ಭೂಮಂಡಲವೂ ಪಾತಾಳಲೋಕದ ತಳಭಾಗವೂ ಸಮಸ್ತಲೋಕಗಳೂ ಒಂದೊಂದೂ ಸಾಲಾಗಿ ಮೇಲಕ್ಕೆ ಚಿಮ್ಮಿ, ಚೆಲ್ಲಾಡಿ, ತಾಗಿ, ಸಿಡಿಲೊಡೆದು,ಹೆದರಲು- ನಡುಗಿ, ಹಾರಿ, ಜೀರೆಂದು ಶಬ್ದಮಾಡಿ ವ್ಯಾಕುಲಪಟ್ಟವು. ಅರ್ಜುನನಿಗೆ ಇದಿರಾಗಿ ಪ್ರತಿಭಟಿಸುವ ಶೂರನು ಯಾವನಿದ್ದಾನೆ?
ವ|| ಎಂಬನ್ನೆಗಂ ಪ್ರಳಯಕಾಲ ಜಾತೋತ್ಪಾತ ವಾತ ನಿರ್ಘಾತದಿಂದಮಳ್ಳಾಡಿ ತಳ್ಳಂಕಂಗುಟ್ಟುವ ಜಳನಿಧಿಗಳಂತೆ ಮೇರೆದಪ್ಪಲ್ ಬಗೆವುಭಯಸೈನ್ಯಂಗಳಂ ಕಂಡತ್ತ ರಾಜರಾಜನು ಮಿತ್ತ ಧರ್ಮರಾಜನುಮೊಡನೊಡನೆ ಕೆಯ್ವೀಸಿದಾಗಳ್-
ವಚನ:ಪದವಿಭಾಗ-ಅರ್ಥ:ಎಂಬ ಅನ್ನೆಗಂ ಪ್ರಳಯಕಾಲ ಜಾತೋತ್ಪಾತ ವಾತ ನಿರ್ಘಾತದಿಂದಂ ಅಳ್ಳಾಡಿ (ಪ್ರಳಯಕಾಲದಲ್ಲಿ ಹುಟ್ಟಿ ಉತ್ಪಾತದ ಗಾಳಿಯ ಹೊಡೆತದಿಂದ ಅಲುಗಿ) ತಳ್ಳಂಕಂಗುಟ್ಟುವ ಜಳನಿಧಿಗಳಂತೆ (ಕಲ್ಲೋಲಗೊಂಡ ಸಮುದ್ರಗಳಂತೆ) ಮೇರೆದಪ್ಪಲ್ ಬಗೆವ (ಎಲ್ಲೆಯನ್ನು ಮೀರಲು ಯೋಚಿಸುತ್ತಿರುವ) ಉಭಯ ಸೈನ್ಯಂಗಳಂ ಕಂಡು ಅತ್ತ ರಾಜರಾಜನುಂ ಇತ್ತ ಧರ್ಮರಾಜನುಂ ಒಡಂ ಒಡನೊಡನೆ (ತಕ್ಷಣ ಒಟ್ಟೊಟ್ಟಿಗೆ) ಕೆಯ್ವೀಸಿದಾಗಳ್- ( ಯುದ್ಧ ಆರಂಭಿಸಲು ಕೈ ಬೀಸಿದಾಗ)-
ವಚನ:ಅರ್ಥ:ಆ ಸಮಯಕ್ಕೆ, ಪ್ರಳಯಕಾಲದಲ್ಲಿ ಹುಟ್ಟಿ ಉತ್ಪಾತದ ಗಾಳಿಯ ಹೊಡೆತದಿಂದ ಅಲುಗಿ ಅಲ್ಲೋಲ ಕಲ್ಲೋಲಗೊಂಡ ಸಮುದ್ರಗಳಂತೆ, ಎಲ್ಲೆಯನ್ನು ಮೀರಲು ಯೋಚಿಸುತ್ತಿರುವ ಎರಡು ಕಡೆಯ ಸೈನ್ಯಗಳನ್ನೂ ಕಂಡು ಈ ಕಡೆ ಚಕ್ರವರ್ತಿಯಾದ ದುರ್ಯೋಧನನೂ ಆ ಕಡೆ ಧರ್ಮರಾಜನೂ ಯುದ್ಧ ಆರಂಭಿಸಲು ಸೂಚಕವಾಗಿ ಕೈಬೀಸಿದರು. ಆಗ-

ಯುದ್ಧದ ವರ್ಣನೆ[ಸಂಪಾದಿಸಿ]

ಕಂ|| ಪೂರ್ವಾಪರ ಜಳನಿಧಿಗಳ
ಗುರ್ವಿಸುವಿನಮೊಂದನೊಂದು ತಾಗುವವೊಲಗು|
ರ್ವುರ್ವಿರೆ ಪರ್ವಿ ಚತುರ್ವಲ
ಮೇರ್ವೆಸದಿಂದಂದು ಬಂದು ತಾಗಿತ್ತಾಗಳ್|| ೬೬ ||
ಪದ್ಯ-೬೬:ಪದವಿಭಾಗ-ಅರ್ಥ:ಪೂರ್ವ ಅಪರ (ಪಶ್ಚಿಮ) ಜಳನಿಧಿಗಳ್ ( ಪೂರ್ವ ಮತ್ತು ಪಶ್ಚಿಮ ಸಮುದ್ರಗಳು) ಅಗುರ್ವಿಸುವಿನಂ ಒಂದನೊಂದು ತಾಗುವವೊಲ್ (ಭಯವನ್ನುಂಟುಮಾಡುತ್ತ ಒಂದನ್ನೊಂದು ತಗಲುವ ಹಾಗೆ) ಅಗುರ್ವು ಉರ್ವಿರೆ ಪರ್ವಿ (ಭಯವು ಹೆಚ್ಚಿಸುತ್ತಾ ಹಬ್ಬಿ) ಚತುರ್ವಲಂ ಏರ್ವೆಸದಿಂದೆ (ಯುದ್ಧೋದ್ಯೋಗದಿಂದ) ಅಂದು ಬಂದು ತಾಗಿತ್ತಾಗಳ್ (ಬಂದು ಸಂಘಟ್ಟಿಸಿದುವು,)
ಪದ್ಯ-೬೬:ಅರ್ಥ: ಪೂರ್ವ ಮತ್ತು ಪಶ್ಚಿಮ ಸಮುದ್ರಗಳು ಭಯವನ್ನುಂಟುಮಾಡುತ್ತ ಒಂದನ್ನೊಂದು ತಗಲುವ ಹಾಗೆ ಚತುರಂಗಸೇನೆಗಳು ಉತ್ಸಾಹದಿಂದಲೂ ಯುದ್ಧೋದ್ಯೋಗದಿಂದಲೂ ಬಂದು ಸಂಘಟ್ಟಿಸಿದುವು.
ಘಟೆಯ ದೞದುಲಿವು ಲಯ ಘನ
ಘಟೆಗಳ ಮೊೞಗೆನಿಸೆ ಪೊಟ್ಟಗೊಡೆದತ್ತು ರಟ|
ತ್ಪಟು ಪಟಹ ಶಂಖ ಭೇರಿಯ
ಚಟುವಳಿತದಿಂದಟಳಪಟಳಮಂಬರಪಟಳಂ|| ೬೭ ||
ಪದ್ಯ-೬೭:ಪದವಿಭಾಗ-ಅರ್ಥ:ಘಟೆಯ ದೞದ ಉಲಿವು (ಆನೆಯ ಸೈನ್ಯದ ಘೀಂಕಾರ ಸದ್ದು), ಲಯ ಘನಘಟೆಗಳ ಮೊೞಗು ಎನಿಸೆ (ಪ್ರಳಯಕಾಲದ ಮೋಡಗಳ ಸಮೂಹದ ಗುಡುಗು ಎನ್ನಿಸಲು,) ಪೊಟ್ಟಗೆ ಒಡೆದತ್ತು (ಪಟ್ಠೆಂದು ಒಡೆದಿತ್ತು.) ರಟತ್ಪಟು (ರಟತ್ ಎಂದು ಪಟುವಾಗಿ, ದೊಡ್ಡದಾಗಿ) ಪಟಹ, ಶಂಖ, ಭೇರಿಯ ಚಟುವಳಿತದಿಂದ (ಬಡಿತದ ಶಬ್ದದಿಂದ) ಅಟಳ- ಪಟಳಮಂ ಅಂಬರ ಪಟಳಂ (ಪೊಟ್ಟಗೆ ಒಡೆದತ್ತು) (ಅತಲವೆಂಬ ಪಾತಾಳ ಲೋಕದ ಮಾಳಿಗೆಯೂ ಆಕಾಶದ ಮೇಲ್ಚಾವಣಿಯೂ ಏಕಕಾಲದಲ್ಲಿ ಪಟ್ಠೆಂದು ಒಡೆದಿತ್ತು. )
ಪದ್ಯ-೬೭:ಅರ್ಥ: ಆನೆಯ ಸೈನ್ಯದ ಘೀಂಕಾರ ಸದ್ದು, ಪ್ರಳಯಕಾಲದ ಮೋಡಗಳ ಸಮೂಹದ ಗುಡುಗು ಎನ್ನಿಸಲು, ಉಗ್ರವಾಗಿ ಶಬ್ದಮಾಡುತ್ತಿರುವ ದಮಟೆ, ಶಂಖ, ನಗಾರಿಯ ಬಡಿತದ ಸದ್ದಿನಿಂದ ಅತಲವೆಂಬ ಪಾತಾಳ ಲೋಕದ ಮಾಳಿಗೆಯೂ ಆಕಾಶದ ಮೇಲ್ಚಾವಣಿಯೂ ಏಕಕಾಲದಲ್ಲಿ ಪಟ್ಠೆಂದು ಒಡೆದಿತ್ತು.
ಕರಿ ತುರಗ ರಥ ಪದಾತಿಯ
ಚರಣಾಸಂಘಾತ ಜಾತ ರಜಮಾಜಸ್ರಂ|
ನೆರೆದಂಬರಕೊಗೆಯಲ್ ಬಳ
ಭರದಿಂ ಧರೆಯೆೞ್ದು ಪಾಱುವಂತಾಯ್ತಾಗಳ್|| ೬೮ ||
ಪದ್ಯ-೬೮:ಪದವಿಭಾಗ-ಅರ್ಥ:ಕರಿ ತುರಗ ರಥ ಪದಾತಿಯ ಚರಣಾಸಂಘಾತ ಜಾತ (ಪಾದಘಟ್ಟಣೆಯಿಂದ ಉಂಟಾದ) ರಜಮ್ ಅಜಸ್ರಂ ನೆರೆದು ಅಂಬರಕೆ ಒಗೆಯಲ್ (ಧೂಳು ಒಟ್ಟಿಗೆ ಕೂಡಿ ಆಕಾಶಕ್ಕೆ ಹಾರಲು,) ಬಳಭರದಿಂ (ಬಳ-ಬಲ-ಸೈನ್ಯದ ವೇಗದಿಂದ) ಧರೆಯೆೞ್ದು (ಭೂಮಿಯೇ ಎದ್ದು) ಪಾಱುವಂತಾಯ್ತು ಆಗಳ್ (ಹಾರುವ ಹಾಗಾಯಿತು. ಆಗ-)
ಪದ್ಯ-೬೮:ಅರ್ಥ:ಆನೆ ಕುದುರೆ ತೇರು ಕಾಲಾಳುಗಳ ಪಾದಘಟ್ಟಣೆಯಿಂದ ಉಂಟಾದ ಧೂಳು ಒಟ್ಟಿಗೆ ಕೂಡಿ ಆಕಾಶಕ್ಕೆ ಹಾರಲು, ಸೈನ್ಯದ ವೇಗದಿಂದ ಆಗ ಭೂಮಿಯೇ ಎದ್ದು ಹಾರುವ ಹಾಗಾಯಿತು.
ಸಮರ ರಸಪ್ರಿಯರೊಳ್ ಸ
ತ್ತ್ವಮುಮಿಳೆಯೊಳ್ ರಜಮುಮೊದವೆ ರಣಗೞ್ತಲೆಯೊಳ್|
ತಮಮುಂ ಮಿಗೆ ಸತ್ತ್ವ ರಜ
ಸ್ತಮಂಗಳುಂ ಕಾಣಲಾದುವೆರಡುಂ ಪಡೆಯೊಳ್|| ೬೯ ||
ಪದ್ಯ-೬೯:ಪದವಿಭಾಗ-ಅರ್ಥ:ಸಮರ ರಸಪ್ರಿಯರೊಳ್ ಸತ್ತ್ವಮುಮಿಳೆಯೊಳ್ ರಜಮುಮೊದವೆ ರಣಗೞ್ತಲೆಯೊಳ್|ತಮಮುಂ ಮಿಗೆ ಸತ್ತ್ವ ರಜಸ್ತಮಂಗಳುಂ ಕಾಣಲಾದುವೆರಡುಂ ಪಡೆಯೊಳ್
ಪದ್ಯ-೬೯:ಅರ್ಥ: ಯುದ್ಧಾಸಕ್ತರಾದವರಲ್ಲಿ ಸತ್ತ್ವಗುಣವೂ (ಶಕ್ತಿಯೂ) ಭೂಮಿಯಲ್ಲಿ ರಜೋಗುಣವೂ (ಧೂಳೂ) ರಣಗತ್ತಲೆಯಲ್ಲಿ ತಮೋ ಗುಣವೂ (ಕತ್ತಲೆ) ಉಂಟಾಗಲು ಎರಡು ಸೈನ್ಯಗಳಲ್ಲಿಯೂ ಸತ್ತ್ವರಜಸ್ತಮೋಗುಣಗಳು ತೋರಿಬಂದುವು.
ಪಡೆಯ ಪೊರೆಗಗಿದು ಶೇಷಂ
ಪೆಡೆಗಳನುಡುಗುವುದುಮೆಳೆ ಬೊದಿಲ್ಲೆನೆ ಬಿೞ್ದ|
ತ್ತಡಿಗಿಡೆ ಕೂರ್ಮನ ಬೆನ್ನಂ
ದೊಡೆದು ಸಿಡಿಲ್ದೊಡನೆ ನುಚ್ಚುನೂಱಪ್ಪಿನೆಗಂ|| ೭೦ ||
ಪದ್ಯ-೭೦:ಪದವಿಭಾಗ-ಅರ್ಥ:ಪಡೆಯ ಪೊರೆಗೆ ಅಗಿದು ಶೇಷಂ ಪೆಡೆಗಳನು ಉಡುಗುವುದುಂ (ಸೈನ್ಯಗಳ ಭಾರಕ್ಕೆ ಹೆದರಿ ಆದಿಶೇಷನು ಹೆಡೆಗಳನ್ನು ಕುಗ್ಗಿಸಿಕೊಂಡನು.) ಎಳೆ (ಇಳೆ- ಭೂಮಿ) ಬೊದಿಲ್ಲೆನೆ ಬಿೞ್ದತ್ತು (ಭೂಮಿಯು ಬೊದಿಲ್ಲೆಂದು ಕುಸಿಯಿತು) ಅಡಿಗಿಡೆ (ಅಡಿ+ ಕಿಡೆ: ಅಡಿ- ತಳ ಕಿಡೆ ಭೂಮಿಯ ತಳಭಾಗವು ಕೆಡಲು) ಕೂರ್ಮನ ಬೆನ್ನು ಒಂದೊಡೆದು ಸಿಡಿಲ್ದು ಒಡನೆ ನುಚ್ಚುನೂಱಪ್ಪಿನೆಗಂ (ಭೂಮಿಯನ್ನು ಹೊತ್ತ ಆಮೆಯ ಬೆನ್ನು ಒಡೆದು ತಕ್ಷಣ ನುಚ್ಚುನೂರಾಗುವಂತಾಯಿತು)
ಪದ್ಯ-೭೦:ಅರ್ಥ:ಸೈನ್ಯಗಳ ಭಾರಕ್ಕೆ ಹೆದರಿ ಆದಿಶೇಷನು ಹೆಡೆಗಳನ್ನು ಕುಗ್ಗಿಸಿಕೊಂಡನು. ಭೂಮಿಯು ಬೊದಿಲ್ಲೆಂದು ಕುಸಿಯಿತು. ಭೂಮಿಯ ತಳಭಾಗವು ಕೆಡಲು, ಭೂಮಿಯನ್ನು ಹೊತ್ತ ಆಮೆಯ ಬೆನ್ನು ಒಡೆದು ತಕ್ಷಣ ನುಚ್ಚುನೂರಾಗುವಂತಾಯಿತು
ವ|| ಅಂತು ನೆಲನುಮಾಕಾಶಮೊಂದೊಂದಳ್ ತಾಗಿದ ಬೇಗದೊಳಂಬರಂ ಬರಂ ನೆಗೆದ ಧೂಳಿಯೊಳ್ ದೆಸೆಯಱಿಯದೆಯುಂ ತಮ್ಮ ಬಲಮಂ ಮಾರ್ವಲಮನಱಿಯದೆಯುಂ ಚಾತುರ್ವಲಂಗಳ್ ಮೊದಲ ಸಮಕಟ್ಟುಗೆಟ್ಟು ತಡವರಿಸಿ ತಟ್ಟುಪೊಟ್ಟೆಂದಚ್ಚುಮಿಟ್ಟು ಮಿರಿದು ತಱಿದು ಘಟ್ಟಿಸೆಯುಮಾಂಕೆಗೊಂಡು ಕಿಱಿದುಪೊೞ್ತು ಕಾದೆ ಕಾದೆ ಸುರಿವ ಬಿಸುನೆತ್ತರ ಸರಿಯೊಳಮಂಬಿನ ಸರಿಯೊಳಮಂಬಿರಿವಿಟ್ಟು ಪಾಯ್ವ ಮದಗಜಂಗಳ ಮದಜಲದೊಳಂ ಬಲದ ಕಳಕಳಕ್ಕೆ ಮಸಗಿ ದೆಸೆಯಱಿಯದೆಯುಂ ಪಱಿಯೆ ಘಟ್ಟಿಸಿದ ಕೀಳ ಘಟ್ಟಣೆಯೊಳ್ ಪೊಟ್ಟಗೊಡೆದ ತಾಳುಗೆಗಳ ರುಧಿರಜಲದೊಳ್ ಬೆರಸಿ ಪದಗೆಂಪನಾಳ್ದ ಜಾತ್ಯಶ್ವದ ಲಾಳಾಜಳದೊಳಂ ನೆಲದೊಳೊಗೆವ ರಜಂ ಮೊದಲ್ಮೂಲಂಗಿಡೆಯುಂ ತಿಱಿದಿಕ್ಕಿದಂತೆ ತಲೆಗಳ್ ಪಱಿದುರುಳ್ದೊಡೆ ಪೆರ್ಮರಂಗಳ ಪೋೞ್ಗಳೊಳಗಣಿಂದಮೊಗೆದ ಕೇಸುರಿಗಳ ಬಳಗದಂತಟ್ಟೆಗಳಿಂದ ಬರಂಬರಂ ನೆಗೆದು ಪಾಱುವ ನೆತ್ತರ ಸುಟ್ಟುರೆಗಳಿಂದಂ ಮೇಗೆ ನೆಗೆದ ರಜಂ ಮಸುಳನಾಗೆ ದೆಸೆಯಱಿದು ತಮ್ಮ ಬಲಮುಮಂ ಮಾರ್ವಲಮುಮನಱಿದು ನವರುಧಿರಜಳ ಚಳತ್ಸೇಚನದೊಳ್ ಘಟ್ಟಿಸಿ ಸಿಂದುರದೊಳ್ ನೆಲಗಟ್ಟಿಸಿದಂತಿರ್ದ ರಂಗಭೂಮಿಯೊಳೆರಡುಂ ಪಡೆಯ ನಾಯಕರ್ ಬಿಲ್ಗಾಳೆಗಂಗಾದುವಾಗಳ್-
ವಚನ:ಪದವಿಭಾಗ-ಅರ್ಥ:ಅಂತು ನೆಲನುಂ ಆಕಾಶಮಂ ಒಂದೊಂದಳ್ ತಾಗಿದ ಬೇಗದೊಳ್ ಅಂಬರಂ ಬರಂ (ವೇಗ) ನೆಗೆದ ಧೂಳಿಯೊಳ್ (ಆಕಾಶದವರೆಗೆ ಹಾರಿದ ಧೂಳಿನಿಂದ) ದೆಸೆಯು ಅಱಿಯದೆಯುಂ ( ದಿಕ್ಕು ಅರಿಯದೆಯುಂ- ಕಾಣದೆಯೂ) ತಮ್ಮ ಬಲಮಂ ಮಾರ್ವಲಮನಱಿಯದೆಯುಂ (ತಮ್ಮ ಪಕ್ಷ ಪ್ರತಿಪಕ್ಷಗಳನ್ನರಿಯದೆಯೂ) ಚಾತುರ್ವಲಂಗಳ್ ಮೊದಲ ಸಮಕಟ್ಟುಗೆಟ್ಟು (ವ್ಯವಸ್ಥೆ ತಪ್ಪಿಹೋಗಿ) ತಡವರಿಸಿ ತಟ್ಟುಪೊಟ್ಟೆಂದು ಅಚ್ಚುಮಿಟ್ಟು ಮಿರಿದು ತಱಿದು (ಥಟ್ ಪೊಟ್ಟೆಂದು ಹೊಡೆದು ಇಟ್ಟು ಕತ್ತರಿಸಿ ತರಿದು) ಘಟ್ಟಿಸೆಯುಂ ಆಂಕೆಗೊಂಡು ಕಿಱಿದುಪೊೞ್ತು ಕಾದೆ (ಪ್ರತಿಭಟಿಸಿ ಕೆಲವು ಕಾಲ ಯುದ್ಧ ಮಾಡಲು,) ಕಾದೆ ಸುರಿವ ಬಿಸುನೆತ್ತರ ಸರಿಯೊಳಂ (ಸುರಿಯುತ್ತಿರುವ ಬಿಸಿರಕ್ತದ ಮಳೆಯಲ್ಲಿ ) ಅಂಬಿನ ಸರಿಯೊಳಂ (ಬಾಣವರ್ಷದಿಂದ ಪ್ರವಾಹವಾಗಿ) ಅಂಬು ಇರಿವಿಟ್ಟು ಪಾಯ್ವ ಮದಗಜಂಗಳ ಮದಜಲದೊಳಂ (ಹರಿಯುವ ಮದ್ದಾನೆಗಳ ಮದೋದಕದಲ್ಲಿ,) ಬಲದ ಕಳಕಳಕ್ಕೆ ಮಸಗಿ (ಸೈನ್ಯದ ಗದ್ದಲಕ್ಕೆ ರೇಗಿ) ದೆಸೆಯ ಅಱಿಯದೆಯುಂ ಪಱಿಯೆ(ದಿಕ್ಕು ತೋಚದಂತೆ ಓಡಲು, ಪರಿಯೆ- ಹರಿಯೆ - ಓಡಲು) ಘಟ್ಟಿಸಿದ ಕೀಳ ಘಟ್ಟಣೆಯೊಳ್ ಪೊಟ್ಟಗೊಡೆದ ತಾಳುಗೆಗಳ ರುಧಿರಜಲದೊಳ್ ಬೆರಸಿ (ತಾಗಿದ ಕಡಿವಾಣದ ಹೊಡೆತದಿಂದ ಪೂರ್ಣವಾಗಿ ಸೀಳಿದ ನಾಲಗೆಗಳ ರಕ್ತದಲ್ಲಿ ಸೇರಿ,) ಪದಗೆಂಪನಾಳ್ದ ಜಾತ್ಯಶ್ವದ ಲಾಳಾಜಳದೊಳಂ (ಹದವಾದ ಕೆಂಪುಬಣ್ಣವನ್ನು ತಾಳಿದ ಜಾತಿಕುದುರೆಗಳ ಜೊಲ್ಲು ರಸವು) ನೆಲದೊಳೊಗೆವ ರಜಂ (ಇವುಗಳಿಂದ ನೆಲದಿಂದ ಹೊರಟ ಧೂಳಿನ) ಮೊದಲ್ ಮೂಲಂ ಗಿಡೆಯುಂ (ಧೂಳಿನ ಮೂಲವು ನಾಶವಾಯಿತು). ತಿಱಿದು ಇಕ್ಕಿದಂತೆ ತಲೆಗಳ್ ಪಱಿದು ಉರುಳ್ದೊಡೆ ಪೆರ್ಮರಂಗಳ ಪೋೞ್ಗಳೊಳು (ಕತ್ತರಿಸಿ ಹಾಕಿದ ತಲೆಗಳು ಹರಿದು ಹಾರಲು ದೊಡ್ಡ ಮರಗಳ ಹೋಳುಗಳ ಒಳಭಾಗದಿಂದ) ಅಗಣಿಂದಂ ಒಗೆದ ಕೇಸುರಿಗಳ ಬಳಗದಂತೆ (ಒಳಭಾಗದಿಂದ ಹುಟ್ಟಿದ ಕೆಂಪುಜ್ವಾಲೆಯ ಸಮೂಹದಂತೆ) ಅಟ್ಟೆಗಳಿಂದ ಬರಂಬರಂ ನೆಗೆದು ಪಾಱುವ (ಮುಂಡಗಳಿಂದ ಆಕಾಶದವರೆಗೆ ಚಿಮ್ಮಿ ಹಾರುವ) ನೆತ್ತರ ಸುಟ್ಟ ಉರೆಗಳಿಂದಂ ಮೇಗೆ ನೆಗೆದ ರಜಂ ಮಸುಳನಾಗೆ (ರಕ್ತದಿಂದ ಕೂಡಿದ ಸುಂಟರುಗಾಳಿಯಿಂದ ಮೇಲೆ ಎದ್ದಿದ್ದ ಧೂಳೂ ಮಾಯವಾಯಿತು.) ದೆಸೆಯ ಅಱಿದು (ದಿಕ್ಕನ್ನು ತಿಳಿದು; ಧೂಳು ಅಡಗಲಾಗಿ ದಿಕ್ಕುಗಳನ್ನು ತಿಳಿದು) ತಮ್ಮ ಬಲಮುಮಂ ಮಾರ್ವಲಮುನು ಅಱಿದುಂ (ತಮ್ಮ ಸೈನ್ಯವನ್ನೂ ಪರಸೈನ್ಯವನ್ನೂ ತಿಳಿದು) ನವರುಧಿರಜಳ ಚಳತ್ಸೇಚನದೊಳ್ ಘಟ್ಟಿಸಿ (ಹೊಸದಾದ ರಕ್ತವನ್ನು ಚಿಮಿಕಿಸುವುದರಿಂದ ) ಸಿಂದುರದೊಳ್ (ಕೆಂಪುಕಲ್ಲು) ನೆಲಗಟ್ಟಿಸಿದಂತಿರ್ದ (ದಮ್ಮಸ್ಸು ಮಾಡಿ ಕೆಂಪು ಕಾವಿಕಲ್ಲನ್ನು ನೆಲಕ್ಕೆ ಹಾಸಿದಂತಿದ್ದ) ರಂಗಭೂಮಿಯೊಳ್ ಎರಡುಂ ಪಡೆಯ ನಾಯಕರ್ ಬಿಲ್ಗ್ ಕಾಳೆಗಂ ಕಾದುವಾಗಳ್ (ಎರಡು ಸೈನ್ಯದ ನಾಯಕರು ಬಿಲ್ಲಿನ ಕಾಳಗವನ್ನು ಕಾದಿದರು. ಆಗ)-
ವಚನ:ಅರ್ಥ:ವ|| ಹಾಗೆ ಭೂಮಿ ಆಕಾಶಗಳು ಒಂದೊಂದರಲ್ಲಿ ತಗುಲಿದ ವೇಗದಲ್ಲಿ ಆಕಾಶದವರೆಗೆ ಹಾರಿದ ಧೂಳಿನಿಂದ ದಿಕ್ಕು ಕಾಣದೆಯೂ ತಮ್ಮ ಪಕ್ಷ ಪ್ರತಿಪಕ್ಷಗಳನ್ನರಿಯದೆಯೂ ಚತುರಂಗ ಸೈನ್ಯವು ತಮ್ಮ ಮೊದಲಿನ ವ್ಯವಸ್ಥೆ ತಪ್ಪಿಹೋಗಿ ಹುಡುಕಾಡುತ್ತ ಥಟ್ ಪೊಟ್ಟೆಂದು ಹೊಡೆದು ಇಟ್ಟು ಕತ್ತರಿಸಿ ತರಿದು ಪ್ರತಿಭಟಿಸಿ ಕೆಲವು ಕಾಲ ಯುದ್ಧ ಮಾಡಲು, ಸುರಿಯುತ್ತಿರುವ ಬಿಸಿರಕ್ತದ ಮಳೆಯಲ್ಲಿ, ಬಾಣವರ್ಷದಿಂದ ಪ್ರವಾಹವಾಗಿ ಹರಿಯುವ ಮದ್ದಾನೆಗಳ ಮದೋದಕದಲ್ಲಿ, ಸೈನ್ಯದ ಗದ್ದಲಕ್ಕೆ ರೇಗಿ ದಿಕ್ಕು ತೋಚದಂತೆ ಓಡಲು, ತಾಗಿದ ಕಡಿವಾಣದ ಹೊಡೆತದಿಂದ ಪೂರ್ಣವಾಗಿ ಸೀಳಿದ ನಾಲಗೆಗಳ ರಕ್ತದಲ್ಲಿ ಸೇರಿ, ಹದವಾದ ಕೆಂಪು ಬಣ್ಣವನ್ನು ತಾಳಿದ, ಜಾತಿಕುದುರೆಗಳ ಜೊಲ್ಲು ರಸ, ಇವುಗಳಿಂದ ನೆಲದಿಂದ ಹೊರಟ ಧೂಳಿನ ಮೂಲವು ನಾಶವಾಯಿತು. (ನೆಲವು ಒದ್ದೆಯಾದುದರಿಂದ ಧೂಳೇಳುವುದೂ ನಿಂತುದರಿಂದ); ಕತ್ತರಿಸಿ ಹಾಕಿದ ತಲೆಗಳು ಹರಿದು ಹಾರಲು ದೊಡ್ಡ ಮರಗಳ ಹೋಳುಗಳ ಒಳಭಾಗದಿಂದ ಹುಟ್ಟಿದ ಕೆಂಪುಜ್ವಾಲೆಯ ಸಮೂಹದಂತೆ ಮುಂಡಗಳಿಂದ ಆಕಾಶದವರೆಗೆ ಚಿಮ್ಮಿ ಹಾರುವ ರಕ್ತದಿಂದ ಕೂಡಿದ ಸುಂಟರುಗಾಳಿಯಿಂದ ಮೇಲೆ ಎದ್ದಿದ್ದ ಧೂಳೂ ಮಾಯವಾಯಿತು. ಧೂಳು ಅಡಗಲಾಗಿ ದಿಕ್ಕುಗಳನ್ನು ತಿಳಿದು, ತಮ್ಮ ಸೈನ್ಯವನ್ನೂ ಪರಸೈನ್ಯವನ್ನೂ ತಿಳಿದು ಹೊಸದಾದ ರಕ್ತವನ್ನು ಚಿಮಿಕಿಸುವುದರಿಂದ ದಮ್ಮಸ್ಸು ಮಾಡಿ ಕೆಂಪು ಕಾವಿಕಲ್ಲನ್ನು ನೆಲಕ್ಕೆ ಹಾಸಿದಂತಿದ್ದ ಯುದ್ಧಭೂಮಿಯಲ್ಲಿ ಎರಡು ಸೈನ್ಯದ ನಾಯಕರು ಬಿಲ್ಲಿನ ಕಾಳಗವನ್ನು ಕಾದಿದರು.; ಆಗ
ಕಂ|| ಪಿಡಿಕೆಯ್ ತೀವಿದ ಕೂರ್ಗಣೆ
ಮಡಕಾಲ್ವರಮಲೆವ ಕಚ್ಚೆ ನಿಡಿಯಸಿಯೊರೆ ಕ|
ರ್ಪಿಡಿದ ಪಣೆಗಟ್ಟು ಕೆಯ್ಪೊಡೆ
ಬೆಡಂಗನೊಳಕೊಳೆ ಧನುರ್ಧರರ್ ಪೆಣೆದೆಚ್ಚರ್|| ೭೧ ||
ಪದ್ಯ-೭೧:ಪದವಿಭಾಗ-ಅರ್ಥ:ಪಿಡಿಕೆಯ್ ತೀವಿದ ಕೂರ್ಗಣೆ (ಮುಷ್ಟಿಕೈ ತುಂಬ ತುಂಬಿದ ಹರಿತವಾದ ಬಾಣ,) ಮಡಕಾಲ್ವರಂ ಅಲೆವ ಕಚ್ಚೆ (ಮೊಳಕಾಲುವರೆಗೆ ಜೋಲಾಡುವ ವೀರಗಚ್ಚೆ) ನಿಡಿಯ ಅಸಿಯ ಒರೆ (ಉದ್ದವಾದ ಕತ್ತಿಯ ಒರೆ) ಕರ್ಪಿಡಿದ ಪಣೆಗಟ್ಟು (ಕಪ್ಪಾದ ಹಣೆಗಟ್ಟು,) ಕೆಯ್ಪೊಡೆ ಬೆಡಂಗನು ಒಳಕೊಳೆ (ಇವು ಬೆಡಗನ್ನು ಹೊಂದಿರಲು) ಧನುರ್ಧರರ್ ಪೆಣೆದು ಎಚ್ಚರ್ (ಬಿಲ್ಗಾರರು ಪರಸ್ಪರ ಹೆಣೆದುಕೊಂಡು ಹೊಡೆದಾಡಿದರು.)
ಪದ್ಯ-೭೧:ಅರ್ಥ:ಮುಷ್ಟಿಕೈ ತುಂಬ ತುಂಬಿದ ಹರಿತವಾದ ಬಾಣ, ಮೊಳಕಾಲುವರೆಗೆ ಜೋಲಾಡುವ ವೀರಗಚ್ಚೆ, ಉದ್ದವಾದ ಕತ್ತಿಯ ಒರೆ, ಕಪ್ಪಾದ ಹಣೆಗಟ್ಟು, ಕೈಚೀಲ ಇವು ಬೆಡಗನ್ನು ಹೊಂದಿರಲು ಬಿಲ್ಗಾರರು ಪರಸ್ಪರ ಹೆಣೆದುಕೊಂಡು ಹೊಡೆದಾಡಿದರು.
ಶರಸಂಧಾನಂ ನಿಟ್ಟಿಸ
ಲರಿದೆಂಬಿನಮೆರಡು ಬಲದ ಕಡುವಿಲ್ಲರ್ ಭೋ|
ರ್ಗರೆದಿಸೆ ಕೂರ್ಗಣೆಯೊಳ್ ಪಂ
ದರಿಕ್ಕಿದಂತಾಯ್ತು ಗಗನಮಂಡಳಮೆಲ್ಲಂ|| ೭೨ ||
ಪದ್ಯ-೭೨:ಪದವಿಭಾಗ-ಅರ್ಥ:ಶರಸಂಧಾನಂ ನಿಟ್ಟಿಸಲು ಅರಿದೆಂಬಿನಂ (ಬಾಣವನ್ನು ಹೂಡುವುದನ್ನು ನೋಡಲಸಾಧ್ಯವೆನ್ನುವ ಹಾಗೆ) ಎರಡು ಬಲದ ಕಡುವಿಲ್ಲರ್ (ಎರಡು ಸೈನ್ಯದ ಗಟ್ಟಿಗರಾದ ಬಿಲ್ಗಾರರು ) ಭೋರ್ಗರೆದು ಇಸೆ (ಶಬ್ದಮಾಡಿ ಹೊಡೆಯಲಾಗಿ) ಕೂರ್ಗಣೆಯೊಳ್ ಪಂದರ (ಪಂಜರ) ಇಕ್ಕಿದಂತಾಯ್ತು ಗಗನಮಂಡಳಮೆಲ್ಲಂ (ಆಕಾಶಮಂಡಳವೆಲ್ಲ ಚಪ್ಪರ ಹಾಕಿದಂತಾಯಿತು)
ಪದ್ಯ-೭೨:ಅರ್ಥ:ಬಾಣವನ್ನು ಹೂಡುವುದನ್ನು ನೋಡಲಸಾಧ್ಯವೆನ್ನುವ ಹಾಗೆ ಎರಡು ಸೈನ್ಯದ ಗಟ್ಟಿಗರಾದ ಬಿಲ್ಗಾರರು ಶಬ್ದಮಾಡಿ ಹೊಡೆಯಲಾಗಿ ಆಕಾಶಮಂಡಳವೆಲ್ಲ ಚಪ್ಪರ ಹಾಕಿದಂತಾಯಿತು.
ಗಱಿಸನ್ನೆಗೆಯ್ದು ತೆಗೆನೆರೆ
ದೆಱಗಿ ಪರಂಕಲಿಸಿ ಪರ್ಮಿ ಕೂಕಿಱಿದಿಸೆ ಕೆಂ|
ಗಱಿಯ ಮೊನೆಯಂಬುಗಳ್ ಕ
ಣ್ದೆರೆಯಿಸಿದುವು ಪೊಣರ್ವ ಬಿಲ್ಲ ಕಡುವಿತ್ತೆಗರಂ|| ೭೩ ||
ಪದ್ಯ-೭೩:ಪದವಿಭಾಗ-ಅರ್ಥ:ಗಱಿ ಸನ್ನೆಗೆಯ್ದು (ಬಿಲ್ಲುಗಾರರು ಬಾಣಗಳ ಗರಿಸನ್ನೆ ಮಾಡಿ) ತೆಗೆನೆರೆದು ಎಱಗಿ (ದೀರ್ಘವಾಗಿ ಸೆಳೆದು ಗುರಿ ಇಡಲು ಬಾಗಿ) ಪರಂಕಲಿಸಿ ಪರ್ಮಿ (ವಿಸ್ತಾರವಾಗಿ ಬಿಲ್ಲನ್ನು ಬಗ್ಗಿಸಿ) ಕೂಕಿಱಿದು ಇಸೆ (ಕಾಕುಹೊಡೆದು -ಕೂಗಿ ಬಾಣ ಬಿಡಲು) ಕೆಂಗಱಿಯ ಮೊನೆಯಂಬುಗಳ್ (ಕೆಂಪಾದ ಗರಿಯನ್ನುಳ್ಳ ಬಾಣಗಳು) ಕಣ್ದ್ ಎರೆಯಿಸಿದುವು ಪೊಣರ್ವ ಬಿಲ್ಲ ಕಡುವಿತ್ತೆಗರಂ (ಕಣ್ಣು ತೆರೆಯುವ ಹಾಗೆ ಮಾಡಿದುವು - ಯುದ್ಧ ಮಾಡುತ್ತಿರುವ ಶೂರರಾದ ಬಿಲ್ಗಾರರನ್ನು)
ಪದ್ಯ-೭೩:ಅರ್ಥ:ಬಿಲ್ಲುಗಾರರು ಬಾಣಗಳ ಗರಿಸನ್ನೆ ಮಾಡಿ ದೀರ್ಘವಾಗಿ ಸೆಳೆದು ಬಾಗಿ, ವಿಸ್ತಾರವಾಗಿ ಬಿಲ್ಲನ್ನು ಹಿಗ್ಗಿಸಿ ಹಬ್ಬಿ ಕೂಗಿ ಬಾಣಪ್ರಯೋಗ ಮಾಡಲು ಕೆಂಪಾದ ಗರಿಯನ್ನುಳ್ಳ ಬಾಣಗಳು ಯುದ್ಧ ಮಾಡುತ್ತಿರುವ ಶೂರರಾದ ಬಿಲ್ಗಾರರನ್ನು ಕಣ್ಣು ತೆರೆಯುವ ಹಾಗೆ ಮಾಡಿದುವು. (ಅಚ್ಚರಿಯನ್ನುಂಟು ಮಾಡಿದವು)
ಅರಿವ ನಡುವುಡಿವ ನೇರ್ಗೋ
ಲ್ವರಿದುರ್ಚುವ ನಟ್ಟು ತೊನೆವ ಕಣೆಗಳ್ಗೆ ಸೊಗಂ|
ದಿರಿಯದಿದಿರಿದಿರನದಿರದೆ
ಸುರಿಗಿಱಿವಂತೆಚ್ಚರಂಬನಂಬಟ್ಟುವಿನಂ|| ೭೪
ಪದ್ಯ-೦೦:ಪದವಿಭಾಗ-ಅರ್ಥ:ಅರಿವ ನಡುವ ಉಡಿವ (ಕತ್ತರಿಸುವ, ನಾಟುವ, ಮುರಿದು ಹಾಕುವ,) ನೇರ್ಗೋಲ್‍ವರಿದು ಉರ್ಚುವ (ನೇರವಾಗಿ ಬಾಣಗಳು ಹಾರಿಬಂದು ಸೀಳುವ,) ನಟ್ಟು ತೊನೆವ (ನಾಟಿಕೊಂಡು ತೂಗಾಡುವ) ಕಣೆಗಳ್ಗೆ ಸೊಗಂದಿರಿಯದಿದಿರಿದಿರನದಿರದೆ (ಸೊಗಂದು?-ಇರಿಯದೆ ಪ್ರೀತಿ/ ಮೋಹದಿಂದ ಹೊಡೆಯದೆ ಸಿಟ್ಟಿನಿಂದ ಇರಿದರು;-ಮೊಗಂದು? ಇರಿಯದೆ ಇದಿರಿದಿರಂ ಅದಿರದೆ: ಮುಖವನ್ನು ತಿರುಗಿಸಿಕೊಳ್ಳದೆ ಎದುರಿನವರನ್ನು ಪ್ರತಿಭಟಿಸುವುದಕ್ಕೆ ಹೆದರದೆ ) ಸುರಿಗಿ ಇಱಿವಂತೆ ಎಚ್ಚರು ಅಂಬನು (ಕತ್ತಿಯಿಂದ ಹೊಡೆದ ಹಾಗೆ ಬಾಣವನ್ನು ಬಾಣವು ಹಿಂಬಾಲಿಸುವ ಹಾಗೆ ಹೊಡೆದರು) ಅಂಬ ಅಟ್ಟುವಿನಂ (ಬಾಣವು ಹಿಂಬಾಲಿಸುವ ಹಾಗೆ)
ಪದ್ಯ-೦೦:ಅರ್ಥ:ಕತ್ತರಿಸುವ, ನಾಟುವ, ಮುರಿದು ಹಾಕುವ, ನೇರವಾಗಿ ಬಾಣಗಳು ಹಾರಿಬಂದು ಸೀಳುವ, ನಾಟಿಕೊಂಡು ತೂಗಾಡುವ ಬಾಣಗಳಿಗೆ ಮುಖವನ್ನು ತಿರುಗಿಸಿಕೊಳ್ಳದೆ ಎದುರಿನವರನ್ನು ಪ್ರತಿಭಟಿಸುವುದಕ್ಕೆ ಹೆದರದೆ ಕತ್ತಿಯಿಂದ ಹೊಡೆದ ಹಾಗೆ ಬಾಣವನ್ನು ಬಾಣವು ಹಿಂಬಾಲಿಸುವ ಹಾಗೆ ಹೊಡೆದರು.
ಪಿಡಿಕೆಯ್ಯ ದೊಣೆಯ ಪೊದೆಯಂ
ಬಿಡೆ ಮುಡಿವಿನಮೆಚ್ಚು ಸುರಿಗೆಗಿೞ್ತಿದಿರಿದಿರಂ|
ಪಡೆ ಪೆಣೆದಿಱಿದುಂ ಬಿಲ್ವಡೆ
ಪಡೆದುದು ಭೋರ್ಗರೆದು ಪರಿವ ನೆತ್ತರ ಕಡಲಂ|| ೭೫ ||
ಪದ್ಯ-೦೦:ಪದವಿಭಾಗ-ಅರ್ಥ:ಪಿಡಿಕೆಯ್ಯ ದೊಣೆಯ (ಬತ್ತಳಿಕೆಯ ) ಪೊದೆಯ ಆಂಬು ಇಡೆ (ತೆಗೆದ ರಾಸಿರಾಶಿ ಬಾಣಗಳನ್ನು ಇಟ್ಟು) ಮುಡಿವಿನಂ ಎಚ್ಚು (ಸಂಪೂರ್ಣವಾಗಿ ಮುಗಿಯುವವರೆಗೂ ಪ್ರಯೋಗಮಾಡಿ) ಸುರಿಗೆಗೆ ಎೞ್ತು (ಕತ್ತಿಯನ್ನು ಸೆಳೆದು) ಇದಿರಿದಿರಂ ಪಡೆ ಪೆಣೆದು ಅಱಿದುಂ (ಎದುರೆದುರಿಗೆ ಬಂದವರನ್ನು ಹೊಡೆಹೊಡೆದು ಸೈನ್ಯದಲ್ಲಿ ಹೆಣೆದುಕೊಂಡು ಅರಿದು- ಕತ್ತರಿಸಿ), ಬಿಲ್ವಡೆ ಪಡೆದುದು ಭೋರ್ಗರೆದು ಪರಿವ ನೆತ್ತರ ಕಡಲಂ (ಬಿಲ್ಗುಗಾರರ ಪಡೆ ಆರ್ಭಟಮಾಡಿ ರಕ್ತ ಸಮುದ್ರವನ್ನು ಪಡೆದರು - ಹರಿಯಿಸಿದರು)
ಪದ್ಯ-೦೦:ಅರ್ಥ: ಕಯ್ಯಲ್ಲಿ ಹಿಡಿದಿರುವ ಬತ್ತಳಿಕೆಯಿಂದ ತೆಗೆದ ರಾಸಿರಾಶಿ ಬಾಣಗಳು ಸಂಪೂರ್ಣವಾಗಿ ಮುಗಿಯುವವರೆಗೂ ಪ್ರಯೋಗಮಾಡಿ ಅದು ಮುಗಿಯಲು ಕತ್ತಿಯನ್ನು ಸೆಳೆದು ಎದುರೆದುರಿಗೆ ಬಂದವರನ್ನು ಹೊಡೆಹೊಡೆದು ಸೈನ್ಯದಲ್ಲಿ ಹೆಣೆದುಕೊಂಡು ಅರಿದು ಕತ್ತರಿಸಿ, ಬಿಲ್ಗುಗಾರರ ಪಡೆ ಆರ್ಭಟಮಾಡಿ ರಕ್ತ ಸಮುದ್ರವನ್ನು ಹರಿಯಿಸಿದರು.
ವ|| ಅಂತುಭಯಬಲ ಧನುರ್ಧರಬಲಂಗಳುಮೞ್ಗಿ ಮೞ್ಗಿದಾಗಳ್-
ವಚನ:ಪದವಿಭಾಗ-ಅರ್ಥ: ಅಂತು ಉಭಯ ಬಲ ಧನುರ್ಧರ ಬಲಂಗಳುಂ ಅೞ್ಗಿ ಮೞ್ಗಿದಾಗಳ್ (ಬಿಲ್ಗುಗಾರರ ಸೈನ್ಯವು ಸತ್ತು ಮಲಗಿದಾಗ)-
ವಚನ:ಅರ್ಥ:ವ|| ಹಾಗೆ ಎರಡೂ ಸೈನ್ಯದ ಬಿಲ್ಗುಗಾರರ ಸೈನ್ಯವು ಸತ್ತು ನಾಶವಾಗಲು,
ಚಂ|| ತೊಳಗುವ ಬಾಳ್ ತೞತ್ತೞಿಪ ಕಕ್ಕಡೆ ಬುಂಭುಕದೊಳ್ ತಗುಳ್ದು ಪ
ಜ್ಜಳಿಸುವ ಪಂಚರಾಯುಧಮಗುರ್ವಿಸುವಾವುತಿ ಪೂಸಿದಂತಿರಿ|
ಟ್ಟಳಮಮರ್ದಿರ್ದ ಮಾಳಜಿಗೆ ಪಕ್ಕರೆಯಿಕ್ಕಿದ ಜಾಯಿಲಂ ಭಯಂ
ಗೊಳಿಸೆ ಕಡಂಗಿ ತಾಗಿದುದಸುಂಗೊಳೆ ತುಂಗ ತುರಂಗ ಸಾಧನಂ|| ೭೬||
ಪದ್ಯ-೭೬:ಪದವಿಭಾಗ-ಅರ್ಥ:ತೊಳಗುವ ಬಾಳ್ (ಹೊಳೆಯುವ ಕತ್ತಿ,) ತೞತ್ತೞಿಪ ಕಕ್ಕಡೆ( ತಳತಳಿಸುತ್ತಿರುವ ಕಕ್ಕಡೆಯೆಂಬ ಆಯುಧ) ಬುಂಭುಕದೊಳ್ ? ತಗುಳ್ದು ಪಜ್ಜಳಿಸುವ ಪಂಚರಾಯುಧಂ ( ಪ್ರಜ್ವಲಿಸುವ ಪಂಚರಾಯುಧ,) ಅಗುರ್ವಿಸುವ ಆವುತಿ (ಹೆದರಿಸುವ ಆವುತಿಎಂಬ ಆಯುಧ,) ಪೂಸಿದಂತಿರೆ ಇಟ್ಟಳಂ ಅಮರ್ದಿರ್ದ ಮಾಳಜಿಗೆ (ಒತ್ತಾಗಿ ಸೇರಿರುವ ಮಾಳಜಿಗೆ) ಪಕ್ಕರೆಯಿಕ್ಕಿದ ಜಾಯಿಲಂ (ಜೀನುಹಾಕಿದ ಜಾತಿಯ ಕುದುರೆಗಳು -) ಭಯಂಗೊಳಿಸೆ ಕಡಂಗಿ ತಾಗಿದುದು ಅಸುಂಗೊಳೆ ತುಂಗ ತುರಂಗ ಸಾಧನಂ (ಇವು ಭಯವನ್ನುಂಟುಮಾಡಲು ದೊಡ್ಡ ಕುದುರೆಯ ಸೈನ್ಯವು ಪ್ರಾಣವನ್ನಪಹರಿಸುವ ಹಾಗೆ ತಾಗಿದು.)
ಪದ್ಯ-೭೬:ಅರ್ಥ:ಹೊಳೆಯುವ ಕತ್ತಿ, ತಳತಳಿಸುತ್ತಿರುವ ಕಕ್ಕಡೆಯೆಂಬ ಆಯುಧ (ಮುಳ್ಳುಗೋಲು), ಕುಚ್ಚಿಲಿನಲ್ಲಿ ಸೇರಿ ಪ್ರಜ್ವಲಿಸುವ ಪಂಚರಾಯುಧ, ಹೆದರಿಸುವ ಆವುತಿಎಂಬ ಆಯುಧ, ಲೇಪಮಾಡಿದಂತೆ ಒತ್ತಾಗಿ ಸೇರಿರುವ ಮಾಳಜಿಗೆ, ಜೀನುಹಾಕಿದ ಜಾತಿಯ ಕುದುರೆಗಳು -ಇವು ಭಯವನ್ನುಂಟುಮಾಡಲು ದೊಡ್ಡ ಕುದುರೆಯ ಸೈನ್ಯವು ಪ್ರಾಣವನ್ನಪಹರಿಸುವ ಹಾಗೆ ತಾಗಿದು. (ಟಿ: ಇಲ್ಲಿ ಬರುವ ಪಂಚರಾಯುಧ, ಆವುತಿ, ಮಾಳಜಿಗೆ ಮೊದಲಾದ ಆ ಕಾಲದ ಆಯುಧಗಳು, ಈಗ ಅರ್ಥ ಆಗದು)
ವ| ಅಂತು ವಿಳಯಕಾಳದ ಕಾೞ್ಕಿರ್ಚಿನ ಬೇಗೆ ಸಾರ್ವಂತಿರ್ವಲದಳವುಂ ಕಿರ್ಚುಂ ಕಿಡಿಯುಮಾಗೆ ತಾಗಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ವಿಳಯಕಾಳದ ಕಾೞ್ಕಿರ್ಚಿನ (ಪ್ರಳಯಕಾಲದ ಕಾಡುಗಿಚ್ಚಿನ) ಬೇಗೆ ಸಾರ್ವಂತೆ ಇರ್ವಲ ದಳವುಂ (ಎರಡು ಸೈನ್ಯದ) ಕಿರ್ಚುಂ ಕಿಡಿಯುಂ ಆಗೆ ತಾಗಿದಾಗಳ್-(ಸಿಟ್ಟಿನಿಂದ ಎದುರಿಸಿದಾಗ.)
ವಚನ:ಅರ್ಥ:ವ|| ಹಾಗೆ ಪ್ರಳಯಕಾಲದ ಕಾಡುಗಿಚ್ಚಿನ ಬೆಂಕಿಯು ಶಾಖ ಬರುವ ಹಾಗೆ ಎರಡು ಸೈನ್ಯದ ಸಾಮರ್ಥ್ಯವೂ ಕಿಚ್ಚು ಕಿಡಿಯಾಗಿ/ ಸಿಟ್ಟಿನಿಂದ ಎದುರಿಸಿದಾಗ.
ಚಂ|| ಪಸುಗೆ ನೆಲಂ ಜಲಂ ಹಯದೊಡಂಬಡು ವಂಚನೆ ಕೇಣಮಾಸನಂ
ಕೊಸೆ ದೆಸೆ ದಿಟ್ಟಿ ಮುಟ್ಟಿ ಕೆಲಜಂಕೆ ನಿವರ್ತನೆ ಕಾಣ್ಕೆ ಪರ್ವಿದೇ|
ರ್ವೆಸನದೊಳಾದ ಬಲ್ಮೆಯೊಳೊಡಂಬಡೆ ತಳ್ತಿಱಿವಲ್ಲಿ ಮಿಂಚಿನೊಳ್
ಮುಸುಕಿದ ಮಾಳ್ಕೆಯಾಯ್ತು ಸಮರಾಂಗಣಮುಳ್ಕುವ ಬಾಳ್ಗಳುಳ್ಕದಿಂ|| ೭೭ ||
ಪದ್ಯ-೭೭:ಪದವಿಭಾಗ-ಅರ್ಥ:ಪಸುಗೆ ನೆಲಂ ಜಲಂ, ಹಯದ ಒಡಂಬಡು, (ನೆಲ ಒಡೆಯಲು ಜಲವೆದ್ದಿತು , ಕುದುರೆಗಳು ಸೇರಿಕೊಂಡವು,) ವಂಚನೆ ಕೇಣಂ (ಮೋಸ, ಮಾತ್ಸರ್ಯ) ಆಸನಂ ಕೊಸೆ (ಜಡತೆ, ಕೊಸರಾಟ,) ದೆಸೆ ದಿಟ್ಟಿ (ದಿಕ್ಕು ದೃಷ್ಟಿ) ಮುಟ್ಟಿ ಕೆಲಜಂಕೆ (ಮುನ್ನುಗ್ಗುವಿಕೆ, ಹೆದರಿಸುವಿಕೆ?) ನಿವರ್ತನೆ ಕಾಣ್ಕೆ (ಹಿಂದಿರುಗುವಿಕೆ, ಪುನ ಕಾಣಿಸಿಕೊಳ್ಳುವಿಕೆ) ಪರ್ವಿದ ಏರ್ವೆಸನದೊಳು ಆದ (ಹಬ್ಬಿದ ಹೊಡೆದಾಟದಲ್ಲಿ ಆದ) ಬಲ್ಮೆಯೊಳು ಒಡಂಬಡೆ (ಶಕ್ತಿ/ ಬಲುಮೆಯಲ್ಲಿ ಸಮಾನವಾಗಿ) ತಳ್ತು ಇಱಿವಲ್ಲಿ (ತಳುಕಿ ಇರಿಯುವಾಗ/ ಹತ್ತಿರಬಂದುತಾಗಿ ಯುದ್ಧಮಾಡುವಾಗ) ಮಿಂಚಿನೊಳ್ ಮುಸುಕಿದ ಮಾಳ್ಕೆಯಾಯ್ತು (ಮಿಂಚಿನಲ್ಲಿ ಮುಸುಕಿದಂತಾಯಿತು.) ಸಮರಾಂಗಣಂ ಉಳ್ಕುವ ಬಾಳ್ಗಳ ಉಳ್ಕದಿಂ (ಆ ಯುದ್ಧರಂಗವು ಹೊಳೆಯುವ ಕತ್ತಿಗಳ ಕಾಂತಿಯಿಂದ- -ಮಿಂಚಿನಲ್ಲಿ ಮುಸುಕಿದಂತಾಯಿತು.)
ಪದ್ಯ-೭೭:ಅರ್ಥ: ನೆಲ ಒಡೆಯಲು ಜಲವೆದ್ದಿತು , ಕುದುರೆಗಳು ಒಂದಕ್ಕೊಂದು ಸೇರಿಕೊಂಡವು, ಮೋಸ, ಮಾತ್ಸರ್ಯ, ಜಡತೆ, ಕೊಸರಾಟ, ದಿಕ್ಕು ದೃಷ್ಟಿ ಮುಷ್ಟಿ, ಮುನ್ನುಗ್ಗುವಿಕೆ, ಹೆದರಿಸುವಿಕೆ, ಹಿಂದಿರುಗುವಿಕೆ, ಪುನ ಕಾಣಿಸಿಕೊಳ್ಳುವಿಕೆ ಇವು ಹಬ್ಬಿದ ಹೊಡೆದಾಟದಲ್ಲಿ ಆದ ಶಕ್ತಿ/ ಬಲುಮೆಯಲ್ಲಿ ಸಮಾನವಾಗಿ ಸೇರಿಕೊಂಡಿರಲು ಹತ್ತಿರಬಂದುತಾಗಿ ಯುದ್ಧಮಾಡುವಾಗ ಆ ಯುದ್ಧರಂಗವು ಪ್ರಕಾಶಮಾನವಾದ ಹೊಳೆಯುವ ಕತ್ತಿಗಳ ಕಾಂತಿಯಿಂದ ಮಿಂಚಿನಲ್ಲಿ ಮುಸುಕಿದಂತಾಯಿತು.
ಕರ ಕರವಾಳಘಾತದೊಳರಾತಿಯ ಪಂದಲೆ ಪಂಚರಾಯುಧಂ
ಬೆರಸೆಸೆವಟ್ಟೆ ತೊಟ್ಟ ಕವಚಂಬೆರಸೇಱಿದ ವಾಜಿ ಲೋಹವ|
ಕ್ಕರೆವೆರಸೊಂದೆ ಸೂೞೊಳೆ ಪಡಲ್ವಡೆ ದೋರ್ವಲದುರ್ವು ಬೀರದೊಳ್
ಪೊರೆದಿರೆ ಬಿನ್ನಣಂ ನೆಗೞೆ ತಳ್ತಿಱಿದರ್ ಕೆಲರಾಜಿರಂಗದೊಳ್|| ೭೮ ||
ಪದ್ಯ-೭೮:ಪದವಿಭಾಗ-ಅರ್ಥ:ಕರ ಕರವಾಳಘಾತದೊಳು ಆರಾತಿಯ ಪಂದಲೆ (ಪಂದಲೆ-ಪಸಿ,ಹಸಿ ತಲೆ) (ಕೈಯಲ್ಲಿಹಿಡಿದ ಕೈಗತ್ತಿಯ ಪೆಟ್ಟಿನಿಂದ ಕೂಡಿದ ಶತ್ರುವಿನ ಹಸಿಯ ತಲೆ) ಪಂಚರ ಆಯುಧಂ ಬೆರಸು ಅಸೆವಟ್ಟೆ (ಪಂಚರವೆಂಬ ಆಯುಧದಿಂದ ಕೂಡಿದ ಕಣ್ಣಿಗೆ ಎಸೆಯುತ್ತಿರುವ ಮುಂಡ,) ತೊಟ್ಟ ಕವಚಂ ಬೆರಸು ಏಱಿದ ವಾಜಿ (ಧರಿಸಿದ ಕವಚದೊಡನೆ ಕೂಡಿ ಹತ್ತಿರುವ ಕುದುರೆ) ಲೋಹವ ಅಕ್ಕರೆವೆರಸು (ಕಬ್ಬಿಣದ ಗುಳ/ ಬಡಿಗೆ ಸಮೇತವಾಗಿ) ಒಂದೆ ಸೂೞೊಳೆ ಪಡಲ್ವಡೆ (ಒಂದೇ ಬಾರಿಗೆ ಕೆಳಗೆ ಬೀಳಲು) ದೋರ್ವಲದ ಉರ್ವು (ಬಾಹುಬಲದ ಆಧಿಕ್ಯವು) ಬೀರದೊಳ್ ಪರೆದಿರೆ (ಪರಾಕ್ರಮದಲ್ಲಿ ತೋರಿ ಬರುತ್ತಿರಲು) ಬಿನ್ನಣಂ ನೆಗೞೆ (ಯುದ್ಧದ ಪ್ರೌಢಿಮೆ ಹೆಚ್ಚಲು) ತಳ್ತು ಇಱಿದರ್ ಕೆಲರು ಆಜಿರಂಗದೊಳ್(ನುಗ್ಗಿ ಕೆಲವರು ಯುದ್ಧರಂಗದಲ್ಲಿ ಕೂಡಿಕೊಂಡು ಹೊಯ್ದಾಡಿದರು. )
ಪದ್ಯ-೭೮:ಅರ್ಥ:ಕೈಯಲ್ಲಿಹಿಡಿದ ಕೈಗತ್ತಿಯ ಪೆಟ್ಟಿನಿಂದ ಕೂಡಿದ ಶತ್ರುವಿನ ಹಸಿಯ ತಲೆ ಪಂಚರವೆಂಬ ಆಯುಧದಿಂದ ಕೂಡಿದ ಕಣ್ಣಿಗೆ ಎಸೆಯುತ್ತಿರುವ ಮುಂಡ, ಧರಿಸಿದ ಕವಚದೊಡನೆ ಕೂಡಿ ಹತ್ತಿರುವ ಕುದುರೆ, ಕಬ್ಬಿಣದ ಗುಳ/ ಬಡಿಗೆ ಸಮೇತವಾಗಿ ಒಂದೇ ಬಾರಿಗೆ ಕೆಳಗೆ ಬೀಳಲು ಬಾಹುಬಲದ ಆಧಿಕ್ಯವು ಪರಾಕ್ರಮದಲ್ಲಿ ತೋರಿ ಬರುತ್ತಿರಲು ಯುದ್ಧದ ಪ್ರೌಢಿಮೆ ಹೆಚ್ಚಲು, (ಆ ರೀತಿಯಲ್ಲಿ) ನುಗ್ಗಿ ಕೆಲವರು ಯುದ್ಧರಂಗದಲ್ಲಿ ಕೂಡಿಕೊಂಡು ಹೊಯ್ದಾಡಿದರು.
ಕಂ|| ಪಿಡಿದುದಿರ್ವ ಬಾಳ ಕಿಡಿಗಳ
ನೊಡನೊಡನರೆವೊತ್ತಿ ತೊಟ್ಟ ಸನ್ನಣವುರಿಯ|
ಲ್ಕೊಡರಿಸಿದೊಡವಱ ಪರ್ವಂ
ಬಿಡೆಯರಿದರಿಸಮಿತಿಯೊಡನೆ ಕಾದಿದರರೆಬರ್|| ೭೯ ||
ಪದ್ಯ-೭೯:ಪದವಿಭಾಗ-ಅರ್ಥ:ಪಿಡಿದು ಉದಿರ್ವ ಬಾಳ ಕಿಡಿಗಳನು ಒಡನೊಡನೆ ಅರೆವೊತ್ತಿ (ಎಡಬಿಡದೆ ಉದುರುತ್ತಿರುವ ಕತ್ತಿಯ ಕಿಡಿಗಳಿಂದ ತಕ್ಷಣವೇ ಅರ್ಧ ಹತ್ತಿಕೊಂಡ) ತೊಟ್ಟ ಸನ್ನಣವು ಉರಿಯಲ್ಕೆ(ತೊಟ್ಟ ಕವಚವು ಉರಿಯುವುದಕ್ಕೆ ಮೊದಲಾಗಲು) ಒಡರಿಸಿದೊಡೆ ಅವಱ ಪರ್ವಂ ಬಿಡೆಯರಿದು (ಆ ಕವಚಗಳ ಜೋಡಣೆಯನ್ನು ಬಿರಿಯುವಂತೆ ಬಿರಿಯುವಂತೆ ಕತ್ತರಿಸಿ) ಅರಿ ಸಮಿತಿಯೊಡನೆ ಕಾದಿದರ್ ಅರೆಬರ್/ ಅನೇಕರು (ಅನೇಕರು ಶತ್ರುಸಮೂಹದೊಡನೆ ಕಾದಿದರು.)
ಪದ್ಯ-೭೯:ಅರ್ಥ:ಕತ್ತಿಗೆ ಕತ್ತಿತಾಗಿ, ಎಡಬಿಡದೆ ಉದುರುತ್ತಿರುವ ಕತ್ತಿಯ ಕಿಡಿಗಳಿಂದ ತಕ್ಷಣವೇ ಅರ್ಧ ಹತ್ತಿಕೊಂಡ ತೊಟ್ಟ ಕವಚವು ಉರಿಯುವುದಕ್ಕೆ ಮೊದಲಾಗಲು ಆ ಕವಚಗಳ ಜೋಡಣೆಯನ್ನು ಬಿರಿಯುವಂತೆ ಕತ್ತರಿಸಿ ಅನೇಕರು ಶತ್ರುಸಮೂಹದೊಡನೆ ಕಾದಿದರು.
ಚಂ|| ಭುಗಭುಗನುರ್ಚಿ ಪಾಯ್ವ ಬಿಸುನೆತ್ತರ ಸುಟ್ಟುರೆಯಂ ನೆಲಕ್ಕೆ ಪ
ರ್ದುಗಳುಗಲೀಯದವ್ವಳಿಸಿ ಪೀರ್ವಿನಮೊರ್ಮೆಯೆ ಪೊಯ್ವ ಪೊಯ್ಗಳಿಂ|
ನೆಗೆದು ಮುಗಿಲ್ಗಳಿಟ್ಟೆಡೆಗಳೊಳ್ ತಲೆಗಳ್ ತೊಡರ್ದಿರ್ದ ಜೇನಪು
ಟ್ಟಿಗಳನೆ ಪೋಲ್ತುವೇಂ ಕಲಹಮಚ್ಚರಿಯಾಯ್ತೊ ತುರಂಗಸೈನ್ಯದೊಳ್|| ೮೦ ||
ಪದ್ಯ-೮೦:ಪದವಿಭಾಗ-ಅರ್ಥ:ಭುಗಭುಗನೆ ಉರ್ಚಿ ಪಾಯ್ವ ಬಿಸುನೆತ್ತರ (ಭುಗುಭುಗನೆ ಎಡಬಿಡದೆ ಉಕ್ಕಿ ಸುರಿಯುತ್ತಿರುವ ಬಿಸಿರಕ್ತದ) ಸುಟ್ಟುರೆಯಂ ನೆಲಕ್ಕೆ (ಸುಳಿಧಾರೆಯನ್ನು ನೆಲಕ್ಕೆ ಬೀಳಲು ಬಿಡದಂತೆ) ಪರ್ದುಗಳು ಉಗಲೀಯದೆ ಅವ್ವಳಿಸಿ ಪೀರ್ವಿನಂ (ಹದ್ದುಗಳು ಮೇಲಕ್ಕೆ ಹಾರಿ ಹೀರುತ್ತಿರಲು) ಒರ್ಮೆಯೆ ಪೊಯ್ವ ಪೊಯ್ಗಳಿಂ (ಒಂದೇ ಸಲ ಹೊಡೆದ ಹೊಡತದಿಂದ) ನೆಗೆದು ಮುಗಿಲ್ಗಳ್ ಇಟ್ಟೆಡೆಗಳೊಳ್ ತಲೆಗಳ್ ತೊಡರ್ದಿರ್ದ (ಹಾರಿ ಮೋಡಗಳ ಸಂದುಗಳೊಳಕ್ಕೆ ಸಿಕ್ಕಿಕೊಂಡಿರುವ ತಲೆಗಳು) ಜೇನಪುಟ್ಟಿಗಳನೆ ಪೋಲ್ತುವು (ಜೇನಿನ ಗೂಡುಗಳನ್ನೇ ಹೋಲಿದುವು) ಏಂ ಕಲಹಂ ಅಚ್ಚರಿಯಾಯ್ತೊ ತುರಂಗ ಸೈನ್ಯದೊಳ್ (ಕುದುರೆಯ ಸೈನ್ಯದಲ್ಲಿ ಕಾಳಗವು ಎಷ್ಟು ಆಶ್ಚರ್ಯಕರವಾಯಿತೋ!)
ಪದ್ಯ-೮೦:ಅರ್ಥ:ಭುಗುಭುಗನೆ ಎಡಬಿಡದೆ ಉಕ್ಕಿ ಸುರಿಯುತ್ತಿರುವ ಬಿಸಿರಕ್ತದ ಸುಳಿಧಾರೆಯನ್ನು ನೆಲಕ್ಕೆ ಬೀಳಲು ಬಿಡದಂತೆ ಹದ್ದುಗಳು ಮೇಲಕ್ಕೆ ಹಾರಿ ಹೀರುತ್ತಿರಲು, ಒಂದೇ ಸಲ ಹೊಡೆದ ಹೊಡತದಿಂದ ಹಾರಿ ಮೋಡಗಳ ಸಂದುಗಳೊಳಕ್ಕೆ ಸಿಕ್ಕಿಕೊಂಡಿರುವ ತಲೆಗಳು ಜೇನಿನ ಗೂಡುಗಳನ್ನೇ ಹೋಲಿದುವು. ಕುದುರೆಯ ಸೈನ್ಯದಲ್ಲಿ ಕಾಳಗವು ಎಷ್ಟು ಆಶ್ಚರ್ಯಕರವಾಯಿತೋ!
ವ|| ಅಂತೆರಡುಂ ಬಲದ ದೞಂಗಳ್ ಕೋಲಾಟಮಾಡುವಂತೆ ಕಿಱಿದಾನುಂ ಬೇಗಂ ತಟ್ಟುಪೊಟ್ಟೆಂದು ಕೋಲ್ಕುಟ್ಟಿ ಪತ್ತೆಂಟು ಸಾಸಿರ ಕುದುರೆಯಟ್ಟೆಯುಮೇೞೆಂಟು ನೆತ್ತರ ಕಡಲ್ ಕಡಲನಟ್ಟೆಯುಂ ಕಾದಿ ಬಸಮೞಿದು ಪೆಱಪಿಂಗಿ ನಿಂದಾಗಳ್ ಪ್ರಳಯದುರಿಯನುರುಳಿ ಮಾಡಿದಂತಾನುಂ ಬಡವಾಗ್ನಿಯನನುವಿಸಿದಂತಾನುಂ ಬಱಸಿಡಿಲ ಕಿಡಿಗಳ ಬಳಗಮನೊಳಗು ಮಾಡಿದಂತಾನುಂ ಗೊಂದಣಿಸಿ ಸಂದಣಿಸಿ ನಿಂದಣಿಯನೆರಡುಂ ಬಲದ ಕಡಿತಲೆಯ ನಾಯಕರ್ ಕೆಯ್ಕೊಂಡು ಬಳ್ಳುಗೆಡೆದೆಕ್ಕೆವಾಱುವಾಱಿ ಪಲಗೆವಾಡಿ ಗೂಳಿಸೊರ್ಕಿ ಮಾರ್ಕೊಂಡು ಕಾದೆ-
ವಚನ:ಪದವಿಭಾಗ-ಅರ್ಥ:ಅಂತು ಎರಡುಂ ಬಲದ ದೞಂಗಳ್ (ಎರಡು ಸೈನ್ಯದ ಸಾಮಾನ್ಯದಳಗಳೂ) ಕೋಲಾಟಮಾಡುವಂತೆ ಕಿಱಿದಾನುಂ ಬೇಗಂ (ಸ್ವಲ್ಪ ಹೊತ್ತು) ತಟ್ಟುಪೊಟ್ಟೆಂದು ಕೋಲ್ಕುಟ್ಟಿ (ಥಾಟ್ ಪೆಟ್ ಎಂದು ಬಾಣಗಳಿಂದ ಹೊಡೆದಾಡಲು) ಪತ್ತೆಂಟು ಸಾಸಿರ ಕುದುರೆಯ ಅಟ್ಟೆಯುಂ (ಹತ್ತೆಂಟುಸಾವಿರ ಕುದುರೆಯ ಶರೀರಗಳು ನಾಶವಾದವು.) ಏೞೆಂಟು ನೆತ್ತರ ಕಡಲ್ ಕಡಲು ಅಟ್ಟೆಯುಂ (ಏಳೆಂಟು ರಕ್ತದ ಸಮುದ್ರಗಳು ಸಮುದ್ರವು ಕುದುರೆಗಳ ಶರೀರವನ್ನು ಮುಂದಕ್ಕೆ ನೂಕುವಂತೆ ಹರಿದುವು) ಕಾದಿ ಬಸಮೞಿದು ಪೆಱಪಿಂಗಿ ನಿಂದಾಗಳ್ (ಸವಾರರು ಕಾದಿ ಶಕ್ತಿಗುಂದಿ ಹಿಂಜರಿದು ನಿಂದಾಗ) ಪ್ರಳಯದ ಉರಿಯನು ಉರುಳಿ ಮಾಡಿದಂತಾನುಂ (ಪ್ರಳಯಕಾಲದ ಉರಿಯನ್ನು ಉಂಡೆಮಾಡಿದ ಹಾಗೂ) ಬಡವಾಗ್ನಿಯನು ಅನುವಿಸಿದಂತಾನುಂ (ಬಡಬಾಗ್ನಿಯನ್ನು ಒಟ್ಟುಗೂಡಿಸಿದ ಹಾಗೂ) ಬಱಸಿಡಿಲ ಕಿಡಿಗಳ ಬಳಗಮನು ಒಳಗು ಮಾಡಿದಂತಾನುಂ (ಬರಸಿಡಿಲಿನ ಕಿಡಿಗಳ ಸಮೂಹವನ್ನು ತನ್ನಲ್ಲಿ ಸೇರಿಕೊಂಡ ಹಾಗೂ) ಗೊಂದಣಿಸಿ ಸಂದಣಿಸಿ ನಿಂದಣಿಯನು ಎರಡುಂ ಬಲದ ಕಡಿತಲೆಯ ನಾಯಕರ್ ಕೆಯ್ಕೊಂಡು (ಗುಂಪಾಗಿ ಒಂದುಕೂಡಿ ನಿಂತ ಎರಡೂ ಸೇನೆಯ ಮುಂದಿನ ಸಾಲಿನ ನಾಯಕರು ಯುದ್ಧವನ್ನು ಮಾಡಿ) ಬಳ್ಳುಗೆಡೆದು ಎಕ್ಕೆವಾಱುವಾಱಿ (ನರಿಯಂತೆ ಕೂಗಿ ಒಂದೇ ನೆಗೆತವನ್ನು ಹಾರಿ) ಪಲಗೆವಾಡಿ ಗೂಳಿಸೊರ್ಕಿ ಮಾರ್ಕೊಂಡು ಕಾದೆ (ಗುರಾಣಿ - ಕತ್ತಿಗಳನ್ನು ಝಳಪಿಸಿ ಹೋರಿಯಂತೆ ಸೊಕ್ಕಿನಿಂದ ಪ್ರತಿಭಟಿಸಿ ಕಾದಿದರು. ಕಾದಲು-)-
ವಚನ:ಅರ್ಥ: ಹಾಗೆ ಎರಡೂ ಸೈನ್ಯದ ಸಾಮಾನ್ಯದಳಗಳೂ ಕೋಲಾಟವಾಡುವ ಹಾಗೆ ಸ್ವಲ್ಪ ಹೊತ್ತು ಥಾಟ್ ಪೆಟ್ ಎಂದು ಬಾಣಗಳಿಂದ ಹೊಡೆದಾಡಲು ಹತ್ತೆಂಟುಸಾವಿರ ಕುದುರೆಯ ಶರೀರಗಳು ನಾಶವಾದವು. ಏಳೆಂಟು ರಕ್ತದ ಸಮುದ್ರಗಳು ಸಮುದ್ರವು ಕುದುರೆಗಳ ಶರೀರವನ್ನು ಮುಂದಕ್ಕೆ ನೂಕುವಂತೆ ಹರಿದುವು. ಸವಾರರು ಕಾದಿ ಶಕ್ತಿಗುಂದಿ ಹಿಂಜರಿದು ನಿಂದಾಗ ಎರಡು ಪಕ್ಷದ ಕತ್ತಿಯ ನಾಯಕರು ಪ್ರಳಯಕಾಲದ ಉರಿಯನ್ನು ಉಂಡೆಮಾಡಿದ ಹಾಗೂ ಬಡಬಾಗ್ನಿಯನ್ನು ಒಟ್ಟುಗೂಡಿಸಿದ ಹಾಗೂ ಬರಸಿಡಿಲಿನ ಕಿಡಿಗಳ ಸಮೂಹವನ್ನು ತನ್ನಲ್ಲಿ ಸೇರಿಕೊಂಡ ಹಾಗೂ ಗುಂಪಾಗಿ ಒಂದುಕೂಡಿ ನಿಂತ ಎರಡೂ ಸೇನೆಯ ಮುಂದಿನ ಸಾಲಿನ ನಾಯಕರು ಯುದ್ಧವನ್ನು ಮಾಡಿ ನರಿಯಂತೆ ಕೂಗಿ ಒಂದೇ ನೆಗೆತವನ್ನು ಹಾರಿ ಗುರಾಣಿ - ಕತ್ತಿಗಳನ್ನು ಝಳಪಿಸಿ ಹೋರಿಯಂತೆ ಸೊಕ್ಕಿನಿಂದ ಪ್ರತಿಭಟಿಸಿ ಕಾದಿದರು. ಕಾದಲು-
ಕಂ|| ಪುಸಿ ನಸುವಂಚನೆ ನೋರ್ಪನು
ವಸಿದಗಲಿತು ತಕ್ಕುದಕ್ಕು ಪಗೆ ಕೆಯ್ಬಗೆ ಕೆ|
ಯ್ಕುಸುರಿ ನುಸುಳೆಂಬ ಕೇಣದ
ಕುಸುರಿಯನಱಿದಱಿದು ಮೆದು ನೆರೆದುಱದರೆಬರ್|| ೮೧ ||
ಪದ್ಯ-೮೧:ಪದವಿಭಾಗ-ಅರ್ಥ:ಪುಸಿ, ನಸುವಂಚನೆ, ನೋರ್ಪ ಅನುವು (ಪುಸಿ, ನಸುವಂಚನೆ, ನೋಡುವ ನೋಟ,ಅನುವು ಅವವಕಾಶಕ್ಕೆ ಕಾಯುವುದು,) ಅಸಿದು ಅಗಲಿತು (ಹತ್ತಿರ ಮತ್ತ ದೂರಸರಿಯುವುದು,- ಅಸಿ-ಕೃಶ, ಅಗಲ-ದೂರ) ತಕ್ಕುದು ಅಕ್ಕು (ತಕ್ಕುದಾದುದು ಸರಿಯಾದುದು,) ಪಗೆ ಕೆಯ್ಬಗೆ (ವಿರೋಧ, ಕೈಚಳಕ,) ಕೆಯ್ ಕಸುರಿ ನುಸುಳೆಂಬ ಕೇಣದ ಕುಸುರಿಯನು (ವಿರೋಧ, ಕೈಚಳಕ, ಕೈ ಚಮತ್ಕಾರ, ನುಸುಳುವಿಕೆ, ಎನ್ನುವ ವಿರೋಧಿಸುದ ಸೂಕ್ಷ್ಮ ವಿವರವನ್ನು) ಅಱಿದಱಿದು ಮೆದು ನೆರೆದು ಉಱದೆ ಅರೆಬರ್(ತಿಳಿದು ದಕ್ಷತೆಯಿಂದ ಹೊಡೆದು ಕೆಲವರು ಉತ್ಸಾಹಶೂನ್ಯರಾಗದೆ ಹೊಯ್ದಾಡಿದರು.)
ಪದ್ಯ-೮೧:ಅರ್ಥ: ಪುಸಿ, ನಸುವಂಚನೆ, ನೋಡುವ ನೋಟ,ಅನುವು ಅವವಕಾಶಕ್ಕೆ ಕಾಯುವುದು, ಹತ್ತಿರ ಮತ್ತ ದೂರಸರಿಯುವುದು, ತಕ್ಕುದಾದುದು ಸರಿಯಾದುದು, ವಿರೋಧ, ಕೈಚಳಕ, ಕೈ ಚಮತ್ಕಾರ, ನುಸುಳುವಿಕೆ, ಎನ್ನುವ ವಿರೋಧಿಸುದ ಸೂಕ್ಷ್ಮ ವಿವರವನ್ನು ತಿಳಿದು ದಕ್ಷತೆಯಿಂದ ಹೊಡೆದು ಕೆಲವರು ಉತ್ಸಾಹಶೂನ್ಯರಾಗದೆ ಹೊಯ್ದಾಡಿದರು.
ಬಱಸಿಡಿಲೆಱಪಂತಿರೆ ಬಂ
ದೆಱಗಿದರಂ ತಳ್ತು ಬಾಳ ಕೀೞ್ಮೊನೆಯಿಂ ತ
ಳ್ತಱದಱಿದುಬ್ಬರಮೆಂಬಿವ
ನಱಿದಿಱಿದಿರ್ ಪೆಣಬಣಂಬೆಗಳ್ ನೆಗೆವಿನೆಗಂ|| ೮೨||
ಪದ್ಯ-೮೨:ಪದವಿಭಾಗ-ಅರ್ಥ:ಬಱಸಿಡಿಲು ಎಱಪಂತಿರೆ ಬಂದು ಎಱಗಿದರಂ ತಳ್ತು (ಬರಸಿಡಿಲು ಮೇಲೆ ಬೀಳುವಂತೆ ಮೇಲೆ ಬಿದ್ದವರನ್ನು ತಾಗಿಕೊಂಡು) ಬಾಳ ಕೀೞ್ಮೊನೆಯಿಂ (ಕತ್ತಿಯ ಕೆಳತುದಿಯಿಂದ) ತಳ್ತು ಅಱದಱಿದು (ಹತ್ತಿರಹೋಗಿ ಚೂರುಚೂರಾಗಿ ತರಿದು) ಉಬ್ಬರಮೆಂಬಿವಂ ಅಱಿದಿಱಿದಿರ್; (ಹೆಣದರಾಶಿಗಳು ಉಂಟಾಗುವಂತೆ ,-ಉತ್ಸಾಹದಿಂದ ಸಮುದ್ರದ?- ಉಬ್ಬರವೆಂಬಂತೆ ಅರಿದು ಇರಿದರು.) ಪೆಣಬಣಂಬೆಗಳ್ ನೆಗೆವಿನೆಗಂ (ಹೆಣದರಾಶಿಗಳು ಉಂಟಾಗುವಂತೆ,-)
ಪದ್ಯ-೮೨:ಅರ್ಥ:ಬರಸಿಡಿಲು ಮೇಲೆ ಬೀಳುವಂತೆ ಮೇಲೆ ಬಿದ್ದವರನ್ನು ತಾಗಿಕೊಂಡು ಕತ್ತಿಯ ಕೆಳತುದಿಯಿಂದ ಹತ್ತಿರಹೋಗಿ ಚೂರುಚೂರಾಗಿ ತರಿದು, (ಉತ್ಸಾಹದಿಂದ ಸಮುದ್ರದ?) ಉಬ್ಬರವೆಂಬಂತೆ ಅರಿದು ಇರಿದರು. ಹೆಣದ ರಾಶಿಗಳು ಬೀಳುವವರೆಗೆ ಹೊಡೆದಾಡಿದರು.
ಚಾರಿಸಿ ಬಾಳಾಗಮಮವ
ತಾರಂ ಗೆಯ್ದಂತೆ ಕಾಲದಂತಕನನೆ ಪೋ|
ಲ್ತಾರುತ್ತುಂ ಕವಿವದಟರ
ನೋರೊಂದೋರೊಂದೆವೊಯ್ದು ಕೊಂದರ್ ಪಲರಂ|| ೮೩ ||
ಪದ್ಯ-೮೩:ಪದವಿಭಾಗ-ಅರ್ಥ:ಚಾರಿಸಿ(ಝಳಪಿಸಿ) ಬಾಳ ಆಗಮಂ ಅವತಾರಂ ಗೆಯ್ದಂತೆ (ಶಸ್ತ್ರಶಾಸ್ತ್ರವೇ ಅವತಾರಮಾಡಿದ ಹಾಗೆ ಕತ್ತಿಯನ್ನು ಝಳಪಿಸಿ) ಕಾಲದ ಅಂತಕನನೆ ಪೋಲ್ತು ( ಪ್ರಳಯಕಾಲದ ಯಮನ ಹಾಗೆ) ಆರುತ್ತುಂ ಕವಿವ ಅದಟರನು ಓರೊಂದು ಓರೊಂದೆ (ಆರ್ಭಟ ಮಾಡುತ್ತ ಮೇಲೆ ಬೀಳುವ ಒಬ್ಬರಾದ ಮೇಲೆ ಒಬ್ಬರಂತೆ ) ವೊಯ್ದು ಕೊಂದರ್ ಪಲರಂ (ಅನೇಕರನ್ನು ಹೊಡೆದು ಕೊಂದರು.)
ಪದ್ಯ-೮೩:ಅರ್ಥ:ಶಸ್ತ್ರಶಾಸ್ತ್ರವೇ ಅವತಾರಮಾಡಿದ ಹಾಗೆ ಕತ್ತಿಯನ್ನು ಝಳಪಿಸಿ ಪ್ರಳಯಕಾಲದ ಯಮನ ಹಾಗೆ ಆರ್ಭಟ ಮಾಡುತ್ತ ಮೇಲೆ ಬೀಳುವ ಪರಾಕ್ರಮಶಾಲಿಗಳನ್ನು ಒಬ್ಬರಾದ ಮೇಲೆ ಒಬ್ಬರಂತೆ ಅನೇಕರನ್ನು ಹೊಡೆದು ಕೊಂದರು.
ಬಾಳ್ವಾಳ್ಗಳ ಘಟ್ಟಣೆಯೊಳ್
ಬಳ್ವಳ ಬಳೆದೊಗೆದು ನೆಗೆದ ಕಿಡಿಗಳ ಬಂಬ|
ಲ್ಗಳ್ವೆರಸು ಪೊಳೆದು ನೆಗೆದುದು
ಬಾಳ್ವೊಗೆ ಕಾಱಮುಗಿಲ್ ಬಳ್ಳಿಮಿಂಚಿನಿಂದುಳ್ಕುವವೋಲ್|| ೮೪||
ಪದ್ಯ-೮೪:ಪದವಿಭಾಗ-ಅರ್ಥ:ಬಾಳ್ (ವ) ಬಾಳ್ಗಳ ಘಟ್ಟಣೆಯೊಳ್ ಬಳ್ವಳ (ಕತ್ತಿಕತ್ತಿಗಳ ಹೊಡೆತದಿಂದ ಬಹಳ) ಬಳೆದು ಒಗೆದು (ಬೆಳೆದು ಹುಟ್ಟಿ ಹೆಚ್ಚಿ) ನೆಗೆದ ಕಿಡಿಗಳ (ಮೇಲಕ್ಕೆ ಹಾರಿದ ಕಿಡಿಗಳ) ಬಂಬಲ್ಗಳ್ ವೆರಸು ಪೊಳೆದು (ಸಮೂಹದಿಂದ ಕೂಡಿ ಹೊಳೆದು) ನೆಗೆದುದು ಬಾಳ್ವೊಗೆ (ಹೊಳೆದು ಕತ್ತಿಯ ಹೊಗೆಯು- - - ಹಾರಿತು,) ಕಾಱಮುಗಿಲ್ ಬಳ್ಳಿಮಿಂಚಿನಿಂದೆ ಉಳ್ಕುವವೋಲ್ (ಮಳೆಗಾಲದ ಮೋಡವು ಬಳ್ಳಿಮಿಂಚಿನಿಂದ ಪ್ರಕಾಶಿಸುವ ಹಾಗೆ ಹೊಳೆದು ಮೇಲಕ್ಕೆ ಹಾರಿತು.)
ಪದ್ಯ-೮೪:ಅರ್ಥ: ಕತ್ತಿಕತ್ತಿಗಳ ಹೊಡೆತದಿಂದ ಬಹಳ ಹುಟ್ಟಿ ಹೆಚ್ಚಿ ಮೇಲಕ್ಕೆ ಹಾರಿದ ಕಿಡಿಗಳ ಸಮೂಹದಿಂದ ಕೂಡಿ ಹೊಳೆದು ಕತ್ತಿಯ ಹೊಗೆಯು ಮಳೆಗಾಲದ ಮೋಡವು ಬಳ್ಳಿಮಿಂಚಿನಿಂದ ಪ್ರಕಾಶಿಸುವ ಹಾಗೆ ಹೊಳೆದು ಮೇಲಕ್ಕೆ ಹಾರಿತು.
ತಲೆ ನೆಲದೊಳುರುಳ್ದೊಡಂ ಮೆ
ಯ್ಗಲಿಯೊರ್ವಂ ಪಿಡಿದು ತಲೆಯನಿಟ್ಟಟ್ಟೆಯೊಳ|
ಗ್ಗಲಿಸಿದ ಮುಳಿಸಿಂ ಮಾಟದ
ತಲೆಯಿಟ್ಟಾಡುವನನಿನಿಸು ಪೋಲ್ತನುಗೆಯ್ದಂ|| ೮೫ ||
ಪದ್ಯ-೮೫:ಪದವಿಭಾಗ-ಅರ್ಥ:ತಲೆ ನೆಲದೊಳು ಉರುಳ್ದೊಡಂ ( ತಲೆಯು ನೆಲದಲ್ಲಿ ಉರುಳಿದರೂ ) ಮೆಯ್ಗಲಿಯೊರ್ವಂ (ಮೆಯ್ ಕಲಿಯೊರ್ವಂ- ಶೂರನೊಬ್ಬನು) ಪಿಡಿದು ತಲೆಯನು (ಆ ತಲೆಯನ್ನು ಹಿಡಿದು) ಇಟ್ಟಟ್ಟೆಯೊಳು ಅಗ್ಗಲಿಸಿದ ಮುಳಿಸಿಂ (ಮುಂಡದಲ್ಲಿಟ್ಟುಕೊಂಡು ಅಧಿಕವಾದ ಕೋಪದಿಂದ) ಮಾಟದ ತಲೆಯಿಟ್ಟಾಡುವ (ಕೃತಕವಾದ ತಲೆಯನ್ನು ಧರಿಸಿ ಆಟವಾಡುವ) ಅನನು ಇನಿಸು ಪೋಲ್ತನುಗೆಯ್ದಂ (ಅವನನ್ನು ಸ್ವಲ್ಪಮಟ್ಟಿಗೆ ಅನುಕರಿಸಿ ಕಾದಿದನು. )
ಪದ್ಯ-೮೫:ಅರ್ಥ: ತಲೆಯು ನೆಲದಲ್ಲಿ ಉರುಳಿದರೂ ಶೂರನೊಬ್ಬನು ಆ ತಲೆಯನ್ನು ಹಿಡಿದು ಮುಂಡದಲ್ಲಿಟ್ಟುಕೊಂಡು ಅಧಿಕವಾದ ಕೋಪದಿಂದ ಕೃತಕವಾದ ತಲೆಯನ್ನು ಧರಿಸಿ ಆಟವಾಡುವ ಅವನನ್ನು ಸ್ವಲ್ಪಮಟ್ಟಿಗೆ ಅನುಕರಣೆಮಾಡಿ ಕಾದಿದನು.
ವ|| ಅಂತಣಿ ಮಣಿಯದೆ ಸೆಣಸಿ ಪೊಣರ್ದು ಕಿಱದುಪೊೞ್ತು ಕಾದಿ ನಿಂದಾಗಳ್-
ವಚನ:ಪದವಿಭಾಗ-ಅರ್ಥ:ವ|| ಅಂತು ಅಣಿ (ಹಾಗೆ ಸೇನೆಯ ಸಾಲು) ಮಣಿಯದೆ ಸೆಣಸಿ ಪೊಣರ್ದು (ಭಯಪಡದೆ ಮತ್ಸರಿಸಿ ಹೋರಾಡಿ) ಕಿಱದು ಪೊೞ್ತು ಕಾದಿ ನಿಂದಾಗಳ್ (ಸ್ವಲ್ಪ ಕಾಲ ಕಾದಿ ನಿಂತಾಗ)-
ವಚನ:ಅರ್ಥ: ಹಾಗೆ ಸೇನೆಯ ಸಾಲು ಭಯಪಡದೆ ಮತ್ಸರಿಸಿ ಹೋರಾಡಿ ಸ್ವಲ್ಪ ಕಾಲ ಕಾದಿ ನಿಂತಾಗ-
ಉ|| ಮಾರುತ ಘಾತ ಸಂಚಳಿತ ಕೇತು ಸಮೂಹಮುದಗ್ರ ಚಕ್ರ ಚೀ
ತ್ಕಾರಮುದಾರ ವೀರಭಟ ಸಿಂಹನಿನಾದ ವಿಮಿಶ್ರಿತೋತ್ಕಟ|
ಜ್ಯಾರಾವಮಂಬರತರಮನಳ್ಳಿಱಿದವ್ವಳಿಪನ್ನೆಗಂ ಶಾರಾ
ಸಾರದಗುರ್ವು ಪರ್ವಿನಿಲೆ ತಾಗಿದುವುಗ್ರರಥಂ ರಥಾಳಿಯೊಳ್|| ೮೬ ||
ಪದ್ಯ-೮೬:ಪದವಿಭಾಗ-ಅರ್ಥ:ಮಾರುತ ಘಾತ ಸಂಚಳಿತ ಕೇತು ಸಮೂಹಂ (ಗಾಳಿಯ ಹೊಡೆತದಿಂದ ಚಲಿಸುತ್ತಿರುವ ಬಾವುಟಗಳ ಸಮೂಹವೂ) ಉದಗ್ರ ಚಕ್ರ ಚೀತ್ಕಾರಮಂ (ಎತ್ತರವಾದ ಚಕ್ರಗಳ ಚೀತ್ಕಾರ ಶಬ್ದವೂ) ಉದಾರ ವೀರಭಟ ಸಿಂಹನಿನಾದ (ಶ್ರೇಷ್ಠರಾದ ವೀರಭಟರ ಸಿಂಹನಾದದಿಂದ) ವಿಮಿಶ್ರಿತ ಉತ್ಕಟ ಜ್ಯಾ ರಾವಂ (ಕೂಡಿದ ಅತಿಶಯವಾದ ಬಿಲ್ಲಿನ ಹೆದೆಯ ಟಂಕಾರಧ್ವನಿಯೂ) ಅಂಬರತರಮನು ಅಳ್ಳಿಱಿದು ಅವ್ವಳಿಪ ಅನ್ನೆಗಂ (ಆಕಾಶಪ್ರದೇಶವನ್ನು ನಡುಗುವಂತೆ ಮಾಡಿ ಅಪ್ಪಳಿಸುತ್ತಿರಲು/ ಮುನ್ನುಗ್ಗುತ್ತಿರಲು.) ಶಾರ ಆಸಾರದ ಅಗುರ್ವು ಪರ್ವಿನಿಲೆ (ಶರ ಆಸಾರದ ಬಾಣದ ಮಳೆಯು ಭೀಕರತೆ ಹಬ್ಬು ಹಬ್ಬಿ ನಿಲ್ಲಲು.) ತಾಗಿದುವು ಉಗ್ರರಥಂ ರಥಾಳಿಯೊಳ್ (ಭಯಂಕರವಾದ ರಥಗಳು ರಥಸಮೂಹದೊಡನೆ ತಾಗಿದುವು- ಎದುರಾಗಿ ಹೋರಾಡಿದವು.)
ಪದ್ಯ-೮೬:ಅರ್ಥ:ಗಾಳಿಯ ಹೊಡೆತದಿಂದ ಚಲಿಸುತ್ತಿರುವ ಬಾವುಟಗಳ ಸಮೂಹವೂ, ಎತ್ತರವಾದ ಚಕ್ರಗಳ ಚೀತ್ಕಾರ ಶಬ್ದವೂ, ಶ್ರೇಷ್ಠರಾದ ವೀರಭಟರ ಸಿಂಹನಾದದಿಂದ ಕೂಡಿದ ಅತಿಶಯವಾದ ಬಿಲ್ಲಿನ ಹೆದೆಯ ಟಂಕಾರಧ್ವನಿಯೂ ಆಕಾಶಪ್ರದೇಶವನ್ನು ನಡುಗುವಂತೆ ಮಾಡಿ ಅಪ್ಪಳಿಸುತ್ತಿರಲು/ ಮುನ್ನುಗ್ಗುತ್ತಿರಲು. ಬಾಣದ ಮಳೆಯು ಭೀಕರತೆ ಹಬ್ಬು ಹಬ್ಬಿ ನಿಲ್ಲಲು. ಭಯಂಕರವಾದ ರಥಗಳು ರಥಸಮೂಹದೊಡನೆ ತಾಗಿದುವು- ಎದುರಾಗಿ ಹೋರಾಡಿದವು..
ವ|| ಅಂತು ತಾಗಿದಾಗಳ್
ವಚನ:ಅರ್ಥ: ವ|| ಎದುರಾಗಿ ಹೋರಾಡಿದಾಗ-
ಚಂ|| ಕುದುರೆಯ ಬಣ್ಣದಿಂ ರಥದ ತೋರ್ಕೆಯಿನೆತ್ತಿದ ಚಿತ್ರಕೇತು ವೃಂ
ದದ ಕುಱುಪಿಂದುದಗ್ರ ರಥಚೋದಕ ಚಿಹ್ನದಿನಾತನೀತನೆಂ|
ಬುದನಱಿದೊರ್ವರೊರ್ವರನೆ ಮಚ್ಚರದಿಂ ಗಱಿಸನ್ನೆಗೆಯ್ದಿದಿ
ರ್ಚಿದ ಪದದೊಳ್ ಪತತ್ರಿಮಯಮೆಂಬಿನಿತಾಯ್ತು ಸಮಸ್ತ ದಿಕ್ತಟಂ|| ೮೭ ||
ಪದ್ಯ-೮೭:ಪದವಿಭಾಗ-ಅರ್ಥ:ಕುದುರೆಯ ಬಣ್ಣದಿಂ ರಥದ ತೋರ್ಕೆಯಿಂ ಎತ್ತಿದ ಚಿತ್ರಕೇತು ವೃಂದದ ಕುಱುಪಿಂದ (ಕುದುರೆಯ ಬಣ್ಣದಿಂದಲೂ ರಥಗಳ ತೋರಿಕೆಯಿಂದಲೂ ಎತ್ತಿ ಕಟ್ಟಿರುವ ಚಿತ್ರಖಚಿತವಾದ ಧ್ವಜಗಳ ಗುರುತಿನಿಂದಲೂ) ಉದಗ್ರ ರಥಚೋದಕ ಚಿಹ್ನದಿಂ ಆತನು ಈತನೆಂಬುದನು ಅಱಿದು (ಶ್ರೇಷ್ಠರಾದ ಸಾರಥಿಗಳ ಚಿಹ್ನೆಗಳಿಂದಲೂ ಅವನು ಇನನೇ ಎಂಬುದನ್ನ ಗುರುತು ಹಿಡಿದು), ಒರ್ವರೊರ್ವರನೆ ಮಚ್ಚರದಿಂ ಗಱಿ ಸನ್ನೆಗೆಯ್ದು ಇದಿರ್ಚಿದ ಪದದೊಳ್ (ಒಬ್ಬರನೊಬ್ಬರು ಮತ್ಸರದಿಂದ ಬಾಣದ ಗರಿಯ ಮೂಲಕ ಸನ್ನೆಮಾಡಿ ಎದುರಿಸಿದ ಸಂದರ್ಭದಲ್ಲಿ) ಪತತ್ರಿಮಯಂ ಎಂಬಿನಿತಾಯ್ತು ಸಮಸ್ತ ದಿಕ್ತಟಂ (ಸಮಸ್ತವಾದ ದಿಕ್ತಟವೂ ಬಾಣಮಯವೆನ್ನುವ ಹಾಗಾಯಿತು.)
ಪದ್ಯ-೮೭:ಅರ್ಥ:ಕುದುರೆಯ ಬಣ್ಣದಿಂದಲೂ ರಥಗಳ ಲಕ್ಷಣದಿಂದಲೂ, ಎತ್ತಿ ಕಟ್ಟಿರುವ ಚಿತ್ರಖಚಿತವಾದ ಧ್ವಜಗಳ ಗುರುತಿನಿಂದಲೂ, ಶ್ರೇಷ್ಠರಾದ ಸಾರಥಿಗಳ ಚಿಹ್ನೆಗಳಿಂದಲೂ ಪರಸ್ಪರ ಪರಿಚಯ ಮಾಡಿಕೊಂಡು (ಗುರುತು ಹಿಡಿದು) ಒಬ್ಬರನೊಬ್ಬರು ಮತ್ಸರದಿಂದ ಬಾಣದ ಗರಿಯ ಮೂಲಕ ಸನ್ನೆಮಾಡಿ ಎದುರಿಸಿದ ಸಂದರ್ಭದಲ್ಲಿ ಸಮಸ್ತವಾದ ದಿಕ್ತಟವೂ ಬಾಣಮಯವೆನ್ನುವ ಹಾಗಾಯಿತು.
ಕಂ|| ಪರಶು ಶರ ನಿಕರದಿಂ ಕು
ಮ್ಮರಿಗಡಿದವೊಲೊಡನೆ ಕಡಿಯೆ ರಥಿಗಳ್ ರಥದಿಂ|
ಧರೆಗಿೞಿದು ವಿರಥರತಿರಥ
ರರೆಬರ್ ಮೇಲ್ವಾಯ್ದು ರಥಿಗಳಂ ಸುರಿಗಿಱಿದರ್|| ೮೮ ||
ಪದ್ಯ-೮೮:ಪದವಿಭಾಗ-ಅರ್ಥ:ಪರಶು ಶರ ನಿಕರದಿಂ ಕುಮ್ಮರಿಗಡಿದವೊಲ್ (ಕೊಡಲಿಯಿಂದ ಕಾಡಿನ ಮರಗಳನ್ನು ಕಡಿಯುವಂತೆ, ಬಾಣಗಳ ಸಮೂಹದಿಂದ) ಒಡನೆ ಕಡಿಯೆ( ಬಾಣಗಳ ಸಮೂಹದಿಂದ ತಕ್ಷಣವೇ ಸೈನ್ಯವನ್ನು ತರಿದು ಹಾಕಲು) ರಥಿಗಳ್ ರಥದಿಂ ಧರೆಗಿೞಿದು(ರಥದಲ್ಲಿದ್ದವರು ಭೂಮಿಗಿಳಿದು) ವಿರಥರು ಅತಿರಥರು ಅರೆಬರ್ (ರಥವಿಲ್ಲದವರು, ಅನೇಕ ಅತಿರಥರು) ಮೇಲ್ವಾಯ್ದು ರಥಿಗಳಂ ಸುರಿಗಿಱಿದರ್ (ಮೇಲೆ ಬಿದ್ದು ರಥದಲ್ಲಿದ್ದವರನ್ನು ಕತ್ತಿಯಿಂದ ಕತ್ತರಿಸಿದರು).
ಪದ್ಯ-೮೮:ಅರ್ಥ:ಕೊಡಲಿಯಿಂದ ಕಾಡಿನ ಮರಗಳನ್ನು ಕಡಿಯುವಂತೆ, ಬಾಣಗಳ ಸಮೂಹದಿಂದ ತಕ್ಷಣವೇ ಸೈನ್ಯವನ್ನು ತರಿದು ಹಾಕಲು ರಥದಲ್ಲಿದ್ದವರು ಭೂಮಿಗಿಳಿದು ರಥವಿಲ್ಲದವರು, ಅನೇಕ ಅತಿರಥರು ಮೇಲೆ ಬಿದ್ದು ರಥದಲ್ಲಿದ್ದವರನ್ನು ಕತ್ತಿಯಿಂದ ಕತ್ತರಿಸಿದರು.
ತೇರಂ ಪಾಯಿಸಿ ನೋಯಿಸಿ
ಪಾರುವ ಕುದುರೆಗಳನರೆಬರೆರ್ದೆಯುರಿಯೆಚ್ಚರ್|
ಸಾರಥಿಯ ರಥಿಯ ತಲೆಗಳ
ನೋರೊಂದಸ್ತ್ರದೊಳೆ ಪಾಱಿ ಜೀೞ್ವಿನೆಗಂ|| ೮೯ ||
ಪದ್ಯ-೮೯:ಪದವಿಭಾಗ-ಅರ್ಥ:ತೇರಂ ಪಾಯಿಸಿ ನೋಯಿಸಿ ಪಾರುವ ಕುದುರೆಗಳನು ಅರೆಬರ್(ಕೆಲವರು ತೇರನ್ನು ಹರಿಯಿಸಿ ಶತ್ರುಗಳನ್ನು ನೋಯಿಸಿ ಹಾರುತ್ತಿರುವ ಕುದುರೆಗಳನ್ನು ಕೆಲವರು) ಎರ್ದೆಯುರಿಯೆ ಎಚ್ಚರ್ (ಎದೆಯುರಿಯುವಂತೆ ಹೊಡೆದರು.) ಸಾರಥಿಯ ರಥಿಯ ತಲೆಗಳನು ಓರಂದು ಅಸ್ತ್ರದೊಳೆ (ಸಾರಥಿಯನ್ನು ಮತ್ತು ರಥದೊಳಗಿರುವವ ಯೋಧನನ್ನು ಒಂದೊಂದು ಬಾಣದಿಂದ ತಲೆಯು) ಪಾಱಿ ಜೀೞ್ ಅವೆನೆಗಂ (ಹಾರಿ ಜೀರೆಂದು ಶಬ್ದ ಮಾಡುವ ಹಾಗೆ ಹೊಡೆದರು.)
ಪದ್ಯ-೮೯:ಅರ್ಥ: ಕೆಲವರು ತೇರನ್ನು ಹರಿಯಿಸಿ ಶತ್ರುಗಳನ್ನು ನೋಯಿಸಿ ಹಾರುತ್ತಿರುವ ಕುದುರೆಗಳನ್ನು ಕೆಲವರು ಎದೆಯುರಿಯುವಂತೆ ಹೊಡೆದರು. ಸಾರಥಿಯನ್ನು ಮತ್ತು ರಥದೊಳಗಿರುವವ ಯೋಧನನ್ನು ಒಂದೊಂದು ಬಾಣದಿಂದ ತಲೆಯು ಹಾರಿ ಜೀರೆಂದು ಶಬ್ದ ಮಾಡುವ ಹಾಗೆ ಹೊಡೆದರು.
ನೆತ್ತರ ಕೆಸರೊಳ್ ಗಾಲಿಗ
ಳೆತ್ತಂ ತಳರದೆ ಜಿಗಿಲ್ತು ನಿಲೆ ಧರೆಗಿೞಿದಾ|
ರ್ದೆತ್ತಿ ಪರಿಯಿಸಿದರೇಂ ಮೆ
ಯ್ವೆತ್ತುದೊ ರಥಕಲ್ಪಮಲ್ಲಿ ಸೂತರ್ ಕೆಲಬರ್|| ೯೦ ||
ಪದ್ಯ-೯೦:ಪದವಿಭಾಗ-ಅರ್ಥ:ನೆತ್ತರ ಕೆಸರೊಳ್ ಗಾಲಿಗಳು ಎತ್ತಂ ತಳರದೆ ಜಿಗಿಲ್ತು ನಿಲೆ (ರಕ್ತದ ಕೆಸರಿನಲ್ಲಿ ಚಕ್ರಗಳು ಹೂತುಹೋಗಿ ಯಾವ ಕಡೆಯೂ ಚಲಿಸದೆ ಅಂಟಿಕೊಂಡು ನಿಲ್ಲಲು) ಧರೆಗೆ ಇೞಿದು ಆರ್ದು ಎತ್ತಿ ಪರಿಯಿಸಿದರು (ಭೂಮಿಗಿಳಿದು ಆರ್ಭಟಮಾಡಿ ಕೆಲವರು ಸೂತರು ಎತ್ತಿ ಹರಿಯುವ ಹಾಗೆ ಮಾಡಿದರು) ಏಂ ಮೆಯ್ವೆತ್ತುದೊ ರಥಕಲ್ಪಂ (ಸಾರಥಿ ವಿದ್ಯೆ) ಅಲ್ಲಿ ಸೂತರ್ ಕೆಲಬರ್ (ಸಮಯದಲ್ಲಿ ಅಲ್ಲಿ ಅವರ ರಥಸಾರಥ್ಯ ಕೌಶಲವು ಅದ್ಭುತವಾಗಿ ತೋರಿತೊ!)
ಪದ್ಯ-೬೦:ಅರ್ಥ: ರಕ್ತದ ಕೆಸರಿನಲ್ಲಿ ಚಕ್ರಗಳು ಹೂತುಹೋಗಿ ಯಾವ ಕಡೆಯೂ ಚಲಿಸದೆ ಅಂಟಿಕೊಂಡು ನಿಲ್ಲಲು ಭೂಮಿಗಿಳಿದು ಆರ್ಭಟಮಾಡಿ ಕೆಲವರು ಸೂತರು ಎತ್ತಿ ಹರಿಯುವ ಹಾಗೆ ಮಾಡಿದರು. ಆ ಸಮಯದಲ್ಲಿ ಅಲ್ಲಿ ಅವರ ರಥಸಾರಥ್ಯ ಕೌಶಲವು ಅದ್ಭುತವಾಗಿ ತೋರಿತೊ!
ವ|| ಅಂತುಭಯ ವರೂಥಿನಿಯ ವರೂಥಂಗಳ್ ಮಲ್ಲಾಮಲ್ಲಿಯಾಗೆ ಕಾದುವಾಗಳ್-
ವಚನ:ಪದವಿಭಾಗ-ಅರ್ಥ: ಅಂತು ಉಭಯ ವರೂಥಿನಿಯ ವರೂಥಂಗಳ್ (ಎರಡೂ ರಥಸೈನ್ಯದ ರಥಗಳು) ಮಲ್ಲಾಮಲ್ಲಿಯಾಗೆ ಕಾದುವಾಗಳ್ (ಪರಸ್ಪರ ಎದುರು ಎದುರಾಗಿ ಯುದ್ಧ ಮಾಡುತ್ತಿರಲು)-
ವಚನ:ಅರ್ಥ:ಹಾಗೆ ಎರಡೂ ರಥಸೈನ್ಯದ ರಥಗಳು ಪರಸ್ಪರ ಎದುರು ಎದುರಾಗಿ ಯುದ್ಧ ಮಾಡುತ್ತಿರಲು-
ಮ|| ಉಡಿದಿರ್ದಚ್ಚೞದೀಸು ತೞ್ಗಿದ ನೊಗಂ ಜೀೞ್ದ ಚಕ್ರಂ ಸಿಡಿಲ್
ಪೊಡೆದಂತೊರ್ಮೆಯೆ ಸೂಸಿ ಪಾಱಿದ ಮಡಂ ನುರ್ಗಾದ ಕೀಲ್ ಸಾಯಕಂ|
ನಡೆ ನೊಂದೆಯ್ದೆ ಸುರುಳ್ದುರುಳ್ದ ತುರಗಂ ಸುರ್ಕಿರ್ದ ಸೂತಂ ಕಡಲ್
ಕಡಲಂ ಮುಟ್ಟಿ ತೆರಳ್ವ ನೆತ್ತರ ಪೊನಲ್ ಕಣ್ಗೊಂಡುದುಗ್ರಾಜಿಯೊಳ್|| ೯೧ ||
ಪದ್ಯ-೯೧:ಪದವಿಭಾಗ-ಅರ್ಥ:ಉಡಿದಿರ್ದ ಅಚ್ಚು ಅೞದ ಈಸು (ಒಡೆದುಹೋದ ಗಾಲಿಯಕೇಂದ್ರದ ಅಚ್ಚಿನ ಗುಂಭವೂ ಮುರಿದ ಎರಡು ಗಾಲಿ ಜೋಡಿಸಿದ ಈಸು - ಕಬ್ಬಿಣದ ಹಾರೆ) ತೞ್ಗಿದ ನೊಗಂ ಜೀೞ್ದ ಚಕ್ರಂ (ತಗ್ಗಿಹೋದ ನೊಗವೂ, ಜೀರೆಂದು ಶಬ್ದಮಾಡುತ್ತಿರುವ ಚಕ್ರಗಳು) ಸಿಡಿಲ್ ಪೊಡೆದಂತೆ ಒರ್ಮೆಯೆ ಸೂಸಿ ಪಾಱಿದ ಮಡಂ (ಸಿಡಿಲು ಹೊಡೆದ ಹಾಗೆ ಒಂದೇ ಸಲ ಹಾರಿದ ಹಾರೆಯ ದಿಂಡೂ) ನುರ್ಗಾದ ಕೀಲ್ (ಜಜ್ಜಿಹೋದ ಗಾಲಿ ಹೊರಕ್ಕೆ ಜಾರದಂತೆ ಹಾಕಿದ ಕೀಲು,) ಸಾಯಕಂ ನಡೆ ನೊಂದು ಎಯ್ದೆ(ಬಹಳ) ಸುರುಳ್ದುರುಳ್ದ ತುರಗಂ (ಇಷ್ಟಲ್ಲದೆ ಬಾಣವು ನಾಟಲಾಗಿ ನೊಂದು ಬಹಳ ಸೊರಗಿಕೊಂಡು ಬಿದ್ದ ಕುದುರೆ,) ಸುರ್ಕಿರ್ದ ಸೂತಂ ಕಡಲ್ಕಡಲಂ ಮುಟ್ಟಿ ತೆರಳ್ವ ನೆತ್ತರ ಪೊನಲ್ (ಸಮುದ್ರವು ಸಮುದ್ರವನ್ನು ಮುಟ್ಟುವಂತೆ ಹರಿಯುವ ರಕ್ತಪ್ರವಾಹವು) ಕಣ್ಗೊಂಡುದು ಉಗ್ರ ಆಜಿಯೊಳ್ ( ಭಯಂಕರ ಯುದ್ಧದಲ್ಲಿ ಕಣ್ಣಿಗೆ ಕಂಡವು. )
ಪದ್ಯ-೯೧:ಅರ್ಥ:ಒಡೆದುಹೋದ ಗಾಲಿಯಕೇಂದ್ರದ ಅಚ್ಚಿನ ಗುಂಭವೂ ಮುರಿದ ಎರಡು ಗಾಲಿ ಜೋಡಿಸಿದ ಈಸು - ಕಬ್ಬಿಣದ ಹಾರೆ, ತಗ್ಗಿಹೋದ ನೊಗವೂ, ಜೀರೆಂದು ಶಬ್ದಮಾಡುತ್ತಿರುವ ಚಕ್ರಗಳೂ ಸಿಡಿಲು ಹೊಡೆದ ಹಾಗೆ ಒಂದೇ ಸಲ ಹಾರಿದ ಹಾರೆಯ ದಿಂಡೂ, ಜಜ್ಜಿಹೋದ ಕೀಲು, ಇಷ್ಟಲ್ಲದೆ ಬಾಣವು ನಾಟಲಾಗಿ ನೊಂದು ಬಹಳ ಸೊರಗಿಕೊಂಡು ಬಿದ್ದ ಕುದುರೆಯು, ಸಮುದ್ರವು ಸಮುದ್ರವನ್ನು ಮುಟ್ಟುವಂತೆ ಹರಿಯುವ ರಕ್ತಪ್ರವಾಹವು, ಭಯಂಕರ ಯುದ್ಧದಲ್ಲಿ ಕಣ್ಣಿಗೆ ಕಂಡವು.
ವ|| ಅಂತು ಪತ್ತೆಂಟು ನೆತ್ತರ ಕಡಲ್ ಕಡಲನಟ್ಟೆಯುಂ ವರೂಥಯೂಥಂಗಳಳ್ಕಿ ಮೆಳ್ಕಿದಂತಾದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಪತ್ತೆಂಟು (ಹತ್ತೆಂಟು) ನೆತ್ತರ ಕಡಲ್ ಕಡಲನು- (ಮೀರಿಸಿತು,) ಅಟ್ಟೆಯುಂ ವರೂಥಯೂಥಂಗಳು (ಮುಂಡಗಳು ರಥಸಮೂಹಗಳು) ಅಳ್ಕಿ ಮೆಳ್ಕಿದಂತೆ ಆದಾಗಳ್- (ಅಳಿದು ನಾಶವಾದಂತೆ ಆಗಲು)-
ವಚನ:ಅರ್ಥ: ಹಾಗೆ ಹತ್ತೆಂಟು ರಕ್ತ ಸಮುದ್ರವು ಸಮುದ್ರವನ್ನು ಮೀರಿಸಿತು, ಮುಂಡಗಳು ರಥಸಮೂಹಗಳು ಅಳಿದು ನಾಶವಾದಂತೆ ಆಗಲು.
ಉ|| ಇಕ್ಕಿದ ಲೋಹವಕ್ಕರೆಯ ಕರ್ಪುಗಳಿಂ ಕವಿತರ್ಪ ವಿಂಧ್ಯ ಶೈ
ಲಕ್ಕೆಣೆಯಾಗೆ ಜೋದರಿಸುವಂಬಿನ ಬಲ್ಸರಿ ತಿಣ್ಣಮಾಗಿ ಕೆ|
ಯ್ಮಿಕ್ಕು ವಿರೋಧಿ ಸಾಧನ ಘಟಾಳಿಯನೋಡಿಸಲಾಗಳಾರ್ದು ಬಿ
ಟ್ಟಕ್ಕಿದರುಗ್ರ ಸಿಂಧುರ ಘಟಾವಳಿಯಂ ಮುಳಿಸಿಂ ನಿಷಾದಿಗಳ್|| ೯೨ ||
ಪದ್ಯ-೯೨:ಪದವಿಭಾಗ-ಅರ್ಥ:ಇಕ್ಕಿದ ಲೋಹವಕ್ಕರೆಯ ಕರ್ಪುಗಳಿಂ ಕವಿತರ್ಪ (ತೊಡಿಸಿದ ಕಬ್ಬಿಣದ ತೊಡಿಗೆಯ ಕಪ್ಪುಬಣ್ಣದಿಂದ ಕೂಡಿದ ಕವಿದುಮುತ್ತಿ ಬರುವ ) ವಿಂಧ್ಯ ಶೈಲಕ್ಕೆಣೆಯಾಗೆ ಜೋದರ್ ಇಸುವ ಅಂಬಿನ ಬಲ್ಸರಿ ತಿಣ್ಣಮಾಗಿ (ಆನೆಗಳು ವಿಂಧ್ಯ ಪರ್ವತಕ್ಕೆ ಸಮಾನವಾಗಿರಲು ಮಾವಟಿಗರು ಪ್ರಯೋಗಿಸುವ ಬಾಣದ ಬಲವಾದ ಮಳೆಯು ಅಧಿಕವಾಗಿ) ಕೆಯ್ಮಿಕ್ಕು ವಿರೋಧಿ ಸಾಧನ ಘಟಾಳಿಯನು (ಕೈಮೀರಿದಾಗ ಶತ್ರುಪಕ್ಷದ ಆನೆಯ ಸಮೂಹವನ್ನು) ಓಡಿಸಲು ಆಗಳು ಆರ್ದು (ಓಡಿಸಲು ಆಗ ಘಟ್ಟಿಯಾಗಿ ಕೂಗಿಕೊಂಡು), ಬಿಟ್ಟಕ್ಕಿದರು (ನುಗ್ಗಿಸಿದರು) ಉಗ್ರ ಸಿಂಧುರ ಘಟಾವಳಿಯಂ ಮುಳಿಸಿಂ ನಿಷಾದಿಗಳ್ (ಮಾವಟಿಗರು)(ಮಾವಟಿಗರು ಭಯಂಕರವಾದ ಆನೆಯ ಸಮೂಹವನ್ನು ನುಗ್ಗಿಸಿಬಿಟ್ಟರು)
ಪದ್ಯ-೯೨:ಅರ್ಥ: ತೊಡಿಸಿದ ಕಬ್ಬಿಣದ ತೊಡಿಗೆಯ ಕಪ್ಪುಬಣ್ಣದಿಂದ ಕೂಡಿದ ಕವಿದು -ತೊಡಿಸಿದ ಕಬ್ಬಿಣದ ತೊಡಿಗೆಯ ಕಪ್ಪುಬಣ್ಣದಿಂದ ಕೂಡಿದ ಕವಿದು -ಮುತ್ತಿ ಬರುವ ಆನೆಗಳು ವಿಂಧ್ಯ ಪರ್ವತಕ್ಕೆ ಸಮಾನವಾಗಿರಲು ಮಾವಟಗರು ಪ್ರಯೋಗಿಸುವ ಬಾಣದ ಬಲವಾದ ಮಳೆಯು ಅಧಿಕವಾಗಲು, ಕೈಮೀರಿದಾಗ ಶತ್ರುಪಕ್ಷದ ಭಯಂಕರ ಆನೆಯ ಸಮೂಹವನ್ನು ಓಡಿಸುವುದಕ್ಕಾಗಿ ಮಾವಟಿಗರು ಸಿಟ್ಟಿನಿಂದ ಆಗ ಘಟ್ಟಿಯಾಗಿ ಕೂಗಿಕೊಂಡು ಮಾವಟಿಗರು ಭಯಂಕರವಾದ ಆನೆಯ ಸಮೂಹವನ್ನು ನುಗ್ಗಿಸಿಬಿಟ್ಟರು.
ಶಾ|| ಆದಿತ್ಯಂ ಮಸುಳ್ವನ್ನೆಗಂ ಧ್ವಜ ಘಟಾಟೋಪಂಗಳಿಂದಂ ಲಯಾಂ
ಭೋದಂಗಳ್ ಕವಿವಂತೆವೋಲ್ ಕವಿವುದುಂ ಕಾಲ್ಗಾಪು ಕಾಲ್ಗಾಪಿನೊಳ್|
ಜೋದರ್ ಜೋದರೊಳಾನೆಯಾನೆಯೊಳಗುರ್ವಪ್ಪನ್ನೆಗಂ ಕಾದೆ ಕ
ಣ್ಗಾದಂ ಚೆಲ್ವೆಸೆದತ್ತು ಮೂಱು ನೆಲೆಯಿಂ ಮಾದ್ಯದ್ಗಜೇಂದ್ರಾಹವಂ|| ೯೩ ||
ಪದ್ಯ-೯೩:ಪದವಿಭಾಗ-ಅರ್ಥ:ಆದಿತ್ಯಂ ಮಸುಳ್ವನ್ನೆಗಂ ಧ್ವಜ ಘಟಾಟೋಪಂಗಳಿಂದಂ (ಸೂರ್ಯನು ಮಸುಕಾಗುವ ಹಾಗೆ ಧ್ವಜದಿಂದ ಕೂಡಿದ ಆನೆಗಳು) ಲಯಾಂಭೋದಂಗಳ್ (ಲಯ ಅಂಬೋಧಂಗಳು -ಪ್ರಳಯಕಾಲದ ಮೋಡಗಳು) ಕವಿವಂತೆವೋಲ್ ಕವಿವುದುಂ (ಮುತ್ತುವ ಹಾಗೆ ಮುತ್ತಲು) ಕಾಲ್ಗಾಪು ಕಾಲ್ಗಾಪಿನೊಳ್ (ಪದಾತಿ ಸೈನ್ಯವು ಪದಾತಿಗಳೊಡನೆ) ಜೋದರ್ ಜೋ ದರೊಳು, ಆನೆಯು ಆನೆಯೊಳು ಉಗುರ್ವಪ್ಪನ್ನೆಗಂ ಕಾದೆ (ಪದಾತಿ ಸೈನ್ಯವು ಪದಾತಿಗಳೊಡನೆಯೂ ಮಾವಟಿಗರು ಮಾವಟಿಗರೊಡನೆ ಭಯವುಂಟಾಗುವ ಹಾಗೆ ಕಾದುತ್ತಿರಲು) ಕಣ್ಗಾದಂ ಚೆಲ್ವೆಸೆದತ್ತು ಮೂಱು ನೆಲೆಯಿಂ (ಆ ಮದಿಸಿದ ಆನೆಗಳ ಕಾಳಗವು ಮೂರು ಅವಸ್ಥೆಗಳಲ್ಲಿಯೂ ನೋಡಲು ಕಣ್ಣಿಗೆ ಸೊಗಸಾಗಿತ್ತುಗಿದ್ದಿತು) ಮಾದ್ಯದ್ ಗಜೇಂದ್ರ ಆಹವಂ(ಆ ಮದಿಸಿದ ಆನೆಗಳ ಕಾಳಗವು)
ಪದ್ಯ-೯೩:ಅರ್ಥ:ಸೂರ್ಯನು ಮಸುಕಾಗುವ ಹಾಗೆ ಧ್ವಜದಿಂದ ಕೂಡಿದ ಆನೆಗಳು ವಿಜೃಂಭಣೆಯಿಂದ ಪ್ರಳಯಕಾಲದ ಮೋಡಗಳು ಮುತ್ತುವ ಹಾಗೆ ಮುತ್ತಲು ಪದಾತಿ ಸೈನ್ಯವು ಪದಾತಿಗಳೊಡನೆಯೂ ಮಾವಟಿಗರು ಮಾವಟಿಗರೊಡನೆ ಭಯವುಂಟಾಗುವ ಹಾಗೆ ಕಾದುತ್ತಿರಲು ಆ ಮದಿಸಿದ ಆನೆಗಳ ಕಾಳಗವು ಮೂರು ಅವಸ್ಥೆಗಳಲ್ಲಿಯೂ ನೋಡಲು ಕಣ್ಣಿಗೆ ಸೊಗಸಾಗಿತ್ತುಗಿದ್ದಿತು.
ವ|| ಅಂತಾ ದಂತಿಘಟೆಗಳನಾರೋಹಕರ್ ತೋಱಿಕೊಟ್ಟೊಂದೊಂದರ್ಕೆ ಮೊಗಂಬುಗಿಸಿದಾಗಳುಭಯವ್ಯಾಳದಂತಿ ವಧ್ಯಕ್ರಮಂಗಳೊಳ್ ಭಾರ್ಗವರ್ ಸುರಿಗಿಱಿವಂತಿಱಿಯೆ ಸೂಸುವ ಕೆನ್ನೆತ್ತರ್ ಕೞಲ್ದುದಿರ್ವ ಸಕ್ಕದ ಸಿಪ್ಪುಗಳುಂ ಸಿಡಿಲ್ದು ಜೀರೇೞ್ವ ಕೋೞ್ಕಳುಮಗುರ್ವಂ ಪಡೆಯೆ-
ವಚನ:ಪದವಿಭಾಗ-ಅರ್ಥ:ಅಂತು ಆ ದಂತಿಘಟೆಗಳನು ಆರೋಹಕರ್ ತೋಱಿಕೊಟ್ಟು ಒಂದೊಂದರ್ಕೆ ಮೊಗಂಬುಗಿಸಿದಾಗಳ್ (ಆ ಮಂದೆಯ ಆನೆಯ ಸಮೂಹಗಳನ್ನು ಮೇಲಿದ್ದ ಮಾವಟಿಗರು ಅಟ್ಟಿಸಲು ಬಿಟ್ಟು ಎದುರುಬದರು ನಿಲ್ಲಸಿದಾಗ) ಉಭಯವ್ಯಾಳ ದಂತಿ ವಧ್ಯಕ್ರಮಂಗಳೊಳ್ (ಎರಡು ಕಡೆಯ ತುಂಟಾನೆಗಳೂ ಪರಸ್ಪರ ಕೊಲ್ಲುವ ವಿಧಾನಗಳಲ್ಲಿ) ಭಾರ್ಗವರ್ ಸುರಿಗಿ ಇಱಿವಂತಿಎ ಇಱಿಯೆ (ಧನುರ್ಧರರು ಕತ್ತಿಯಿಂದ ಇರಿಯುವಂತೆ ಇರಿಯಲು) ಸೂಸುವ ಕೆನ್ನೆತ್ತರ್ ಕೞಲ್ದು ಉದಿರ್ವ ಸಕ್ಕದ ದಂತದ ಸಿಪ್ಪುಗಳುಂ (ಚೆಲ್ಲುವ ರಕ್ತವೂ ಸಡಿಲವಾಗಿ ಕೆಳಗೆ ಬೀಳುವ ದಂತದ ಕಟವಾಯಿ ಚಪ್ಪುಗಳು) ಸಿಡಿಲ್ದು ಜೀರೇೞ್ವ ಕೋೞ್ಕಳುಂ ಅಗುರ್ವಂ ಪಡೆಯೆ (ಜೀರೆಂದು ಸಿಡಿಯುವ ಕೊಂಬುಗಳೂ ಭಯವನ್ನುಂಟುಮಾಡಿದುವು.)-
ವಚನ:ಅರ್ಥ: ಹಾಗೆಆ ಮಂದೆಯ ಆನೆಯ ಸಮೂಹಗಳನ್ನು ಮೇಲಿದ್ದ ಮಾವಟಿಗರು ಅಟ್ಟಿಸಲು ಬಿಟ್ಟು ಎದುರುಬದರು ನಿಲ್ಲಸಿದಾಗ ಎರಡು ಕಡೆಯ ತುಂಟಾನೆಗಳೂ ಪರಸ್ಪರ ಕೊಲ್ಲುವ ವಿಧಾನಗಳಲ್ಲಿ, ಧನುರ್ಧರರು ಕತ್ತಿಯಿಂದ ಇರಿಯುವಂತೆ ಇರಿಯಲು, ಚೆಲ್ಲುವ ರಕ್ತವೂ ಸಡಿಲವಾಗಿ ಕೆಳಗೆ ಬೀಳುವ ಕಟವಾಯಿ ದಂತದ ಚಪ್ಪುಗಳು ಜೀರೆಂದು ಸಿಡಿಯುವ ಕೊಂಬುಗಳೂ ಭಯವನ್ನುಂಟುಮಾಡಿದುವು.
ಚಂ|| ನಡುವ ಸರಲ್ಗೆ ಮೆಯ್ಯೊಳಗಡಂಗುವ ಸಂಕುಗೆ ದಿಂಕುಗೊಳ್ವ ಕ
ಕ್ಕಡೆಗಿದಿರುರ್ಚುವಿಟ್ಟಿಗಿದಿರಾನೆಯ ಕೋೞ್ಕಳ ಕೋಳ್ಗೆ ನೊಂದು ಬಾ|
ಯ್ವಿಡದಿನಿಸಪ್ಪೊಡಂ ಪೆಳಱದಳ್ಕದೆ ಪಾವಿನಲಿಟ್ಟವೋಲ್ ಪೊಡ
ರ್ಪುಡುಗದೆ ಬಿೞ್ದುವಿರ್ದ ನೆಲೆಯಿಂ ಕೆಳವುನ್ಮದ ಗಂಧಸಿಂಧುರಂ|| ೯೪ ||
ಪದ್ಯ-೦೯೪:ಪದವಿಭಾಗ-ಅರ್ಥ:ನಡುವ ಸರಲ್ಗೆ ಮೆಯ್ಯೊಳಗೆ ಅಡಂಗುವ ಸಂಕುಗೆ (ದೇಹದೊಳಕ್ಕೆ ನಾಟಿಕೊಳ್ಳುವ ಬಾಣಗಳಿಗೂ ಮೆಯ್ಯೊಳಕ್ಕೆ ಹೋಗಿ ಅಡಗಿಕೊಳ್ಳುವ ಕಠಾರಿಗಳಿಗೂ) ದಿಂಕುಗೊಳ್ವ ಕಕ್ಕಡೆಗೆ ಇದಿರು ಉರ್ಚುವ ಇಟ್ಟಿಗೆ (ಹಾರಿ ಬರುವ ಮುಳ್ಳು ಕೋಲುಗಳಿಗೂ ಎದುರಾಗಿ ಚುಚ್ಚಿ ಬರುತ್ತಿರುವ ಈಟಿಗಳಿಗೂ) ಇದಿರು ಆನೆಯ ಕೋೞ್ಕಳ ಕೋಳ್ಗೆ (ಆನೆಯ ಕೊಂಬುಗಳ ತಿವಿತಕ್ಕೂ) ನೊಂದು ಬಾಯ್ವಿಡದೆ ಇನಿಸಪ್ಪೊಡಂ (ನೊಂದು ಕೂಗಿಕೊಳ್ಳದೆ ) ಪೆಳಱದೆ ಅಳ್ಕದೆ (ಸ್ವಲ್ಪವೂ ಹೆದರದೆ ಶಕ್ತಿಗುಂದದೆ) ಪಾವಿನಲ ಇಟ್ಟವೋಲ್ ಪೊಡರ್ಪು ಉಡುಗದೆ (ಹಾವು ಹೊಡೆದಾಗ ಆಗುವ ಹಾಗೆ ಸಾಮರ್ಥ್ಯವನ್ನು ಕಡಿಮೆಮಾಡಿಕೊಳ್ಳದೆ) ಬಿೞ್ದುವು ಇರ್ದ ನೆಲೆಯಿಂ ಕೆಳವುಂ ಮದ ಗಂಧಸಿಂಧುರಂ (ಕೆಲವು ಮದ್ದಾನೆಗಳು ತಾವಿದ್ದ ಸ್ಥಳದಲ್ಲೇ ಬಿೞ್ದುವು- ಬಿಳ್ದವು - ಬಿದ್ದವು - ಉರುಳಿದುವು)
ಪದ್ಯ-೯೪:ಅರ್ಥ: ದೇಹದೊಳಕ್ಕೆ ನಾಟಿಕೊಳ್ಳುವ ಬಾಣಗಳಿಗೂ ಮೆಯ್ಯೊಳಕ್ಕೆ ಹೋಗಿ ಅಡಗಿಕೊಳ್ಳುವ ಕಠಾರಿಗಳಿಗೂ ಹಾರಿ ಬರುವ ಮುಳ್ಳು ಕೋಲುಗಳಿಗೂ ಎದುರಾಗಿ ಚುಚ್ಚಿ ಬರುತ್ತಿರುವ ಈಟಿಗಳಿಗೂ, ಆನೆಯ ಕೊಂಬುಗಳ ತಿವಿತಕ್ಕೂ ನೊಂದು ಕೂಗಿಕೊಳ್ಳದೆ ಸ್ವಲ್ಪವೂ ಹೆದರದೆ ಶಕ್ತಿಗುಂದದೆ ಹಾವು ಕಚ್ಚಿದಾಗ ಆಗುವ ಹಾಗೆ ಸಾಮರ್ಥ್ಯವನ್ನು ಕಡಿಮೆಮಾಡಿಕೊಳ್ಳದೆಯಿದ್ದರೂ, ಕೆಲವು ಮದ್ದಾನೆಗಳು ತಾವಿದ್ದ ಸ್ಥಳದಲ್ಲೇ ಉರುಳಿದುವು.
ಕಂ|| ಪಾಱುವ ಪಾಱುಂಬಳೆ ಕೊಳೆ
ಜೀೞ್ದಿಂಬರಕೆ ತಲೆ ಸಿಡಿಲ್ದೊಡಮಾ ಕಾ|
ಯ್ಪಾಱದೆ ಹರಣಂಗೆಯ್ದುವು
ಜಾಱಲ್ಲದೆ ಜೋದರಟ್ಟೆಗಳ್ ಕೆಲವಾಗಳ್|| ೯೫ ||
ಪದ್ಯ-೯೫:ಪದವಿಭಾಗ-ಅರ್ಥ:ಪಾಱುವ ಪಾಱುಂಬಳೆ (ಹಾರಿ ಬರುವ ಚಕ್ರಾಯುಧವು) ಕೊಳೆ (ಕೊಳ್ಳಲು ,ತಲೆಗಳನ್ನು ಕತ್ತರಿಸಲು,) ಜೀರೇೞ್ದು ಅಂಬರಕೆ ತಲೆ ಸಿಡಿಲ್ದೊಡಂ (ಜೀರೆಂದು ಶಬ್ದಮಾಡುತ್ತ ಆಕಾಶಕ್ಕೆ ತಲೆ ಸಿಡಿದರೂ) ಆ ಕಾಯ್ಪಾಱದೆ (ಆಗಿನ ಸಿಟ್ಟು ಕುಂದದೆ) ಹರಣಂಗೆಯ್ದುವು (ಕೊಂದು ಹಾಕಿದುವು.) ಜಾಱಲ್ಲದೆ (ಹಿಮ್ಮಟ್ಟದೆ), ಜೋದರ ಅಟ್ಟೆಗಳ್ ಕೆಲವು ಆಗಳ್ (ಮಾವಟಿಗರ ಕೆಲವು ಮುಂಡಗಳು ಆಗ)
ಪದ್ಯ-೯೫:ಅರ್ಥ:ಹಾರಿ ಬರುವ ಚಕ್ರಾಯುಧವು ತಲೆಗಳನ್ನು ಕತ್ತರಿಸಲು ಜೀರೆಂದು ಶಬ್ದಮಾಡುತ್ತ ಆಕಾಶಕ್ಕೆ ತಲೆ ಸಿಡಿದರೂ ಮಾವಟಿಗರ ಕೆಲವು ಮುಂಡಗಳು ಆಗಿನ ಸಿಟ್ಟು ಕುಂದದೆ ಹಿಂಜರಿಯದೆ ಶತ್ರುಗಳನ್ನು ಕೊಂದು ಹಾಕಿದುವು.
ಚಂ|| ಕಣಕೆನೆ ಚಕ್ರತೀವ್ರ ತಲೆ ಪೋದೊಡೆ ಜೋದರಟ್ಟೆ ಸಂ
ದಣಿಸಿದ ಬಂಧದಿಂ ಬಿಸುಗೆಯೊಳ್ ನೆಲಸಿರ್ದೆಸೆದಾಡೆ ನಟ್ಟ ಕೂ|
ರ್ಗಣೆವೆರಸಿರ್ದ ಕೂರ್ಗಣೆಗಳುಚ್ಚಳಿಸುತ್ತಿರೆ ಸುಯ್ದು ಪುಣ್ಣತಿಂ
ಥಿಣಿಗಳಿನಂದಗುರ್ವುವೆರಸಾಡಿದುವೊಂದೆರಡಾನೆಯಟ್ಟೆಗಳ್|| ೯೬ ||
ಪದ್ಯ-೯೬:ಪದವಿಭಾಗ-ಅರ್ಥ:ಕಣಕೆನೆ ಚಕ್ರತೀವ್ರ ತಲೆ ಪೋದೊಡೆ (ಚಕ್ರಾಯುಧದ ತೀವ್ರವಾದ ಪೆಟ್ಟಿನಿಂದ ತಲೆಗಳು ಕಣಕ್ಕೆಂದು ಕತ್ತರಿಸಿ ಹೋದರೂ) ಜೋದರ ಅಟ್ಟೆ ಸಂದಣಿಸಿದ ಬಂಧದಿಂ (ಮಾವಟಿಗರ ಮುಂಡಗಳು ಗುಂಪಾಗಿ ಸೇರಿ) ಬಿಸುಗೆಯೊಳ್ ನೆಲಸಿರ್ದು ಎಸೆದು (ಸೊಗಸಿ) ಆಡೆ (ಅಂಬಾರಿಯಲ್ಲಿಯೇ ನೆಲಸಿ ಇದ್ದು ಸೊಗಸಾಗಿ ನೆಗೆದು ಕುಣಿತ್ತಿರಲು,) ನಟ್ಟ ಕೂರ್ಗಣೆವೆರಸಿರ್ದ (ಹರಿತವಾದ ಬಾಣಗಳು ನಾಟಿಕೊಂಡಿದ್ದ-) ಕೂರ್ಗಣೆಗಳು ಉಚ್ಚಳಿಸುತ್ತಿರೆ (ಚೂಪು ಬಾಣಗಳು ಮೇಲಕ್ಕೆದ್ದು ಹಾರುತ್ತಿದ್ದರೂ) ಸುಯ್ದು ಪುಣ್ಣತಿಂಥಿಣಿಗಳಿಂ (ಸುರಿಯುತ್ತಿದ್ದ ಹುಣ್ಣುಗಳ ಸಮೂಹದಿಂದ ) ಅಂದು ಅಗುರ್ವುವೆರಸಿ (ಭೀಕರತೆಯಿಂದ ಕೂಡಿ) ಆಡಿದುವು ಒಂದೆರಡಾನೆಯ ಅಟ್ಟೆಗಳ್ (ಒಂದೆರಡು ಆನೆಯ ಮುಂಡಗಳು ಭೀಕರತೆಯಿಂದ ಕೂಡಿ ಕುಣಿದಾಡಿದುವು.)
ಪದ್ಯ-೯೬:ಅರ್ಥ:ಚಕ್ರಾಯುಧದ ತೀವ್ರವಾದ ಪೆಟ್ಟಿನಿಂದ ತಲೆಗಳು ಕಣಕ್ಕೆಂದು ಕತ್ತರಿಸಿ ಹೋದರೂ, ಮಾವಟಿಗರ ಮುಂಡಗಳು ಗುಂಪಾಗಿ ಸೇರಿ ಅಂಬಾರಿಯಲ್ಲಿಯೇ ನೆಲಸಿ ಇದ್ದು ಸೊಗಸಾಗಿ ನೆಗೆದು ಕುಣಿತ್ತಿರಲು, ಹರಿತವಾದ ಬಾಣಗಳು ನಾಟಿಕೊಂಡಿದ್ದ, ಚೂಪು ಬಾಣಗಳು ಮೇಲಕ್ಕೆದ್ದು ಹಾರುತ್ತಿದ್ದರೂ ಸುರಿಯುತ್ತಿದ್ದ ಹುಣ್ಣುಗಳ ಸಮೂಹದಿಂದ ಭಯಂಕರವಾಗಿ ಕಾಣುತ್ತಿದ್ದರೂ ಒಂದೆರಡು ಆನೆಯ ಮುಂಡಗಳು ಭೀಕರತೆಯಿಂದ ಕೂಡಿ ಕುಣಿದಾಡಿದುವು.
ವ||ಅಂತೆರಡುಂ ಬಲದ ಕರಿಘಟೆಗಳೊಂದೊಂದರೊಳ್ ತಾಗಿತಟ್ಟಳಿಯೆ ಬಿಸುನೆತ್ತರರ್ಬಿಗುಳುರ್ವಿ, ಪಾಯೆ ಪೇರರ್ವಿಗಳ್ವೆರಸು, ಜಾಜಿನ ಪರ್ವತಗಳಂತೆಕಡೆದಳ್ಗಿ,ತಳ್ಗಿದಾಗಳ್,
ವಚನ:ಪದವಿಭಾಗ-ಅರ್ಥ:ಅಂತೆ ಎರಡುಂ ಬಲದ ಕರಿಘಟೆಗಳು ಒಂದೊಂದರೊಳ್ ತಾಗಿ ತಟ್ಟಳಿಯೆ (ಸೇರಿಕೊಂಡು ತಾಗಿ ಹೋರಾಡಿ ಅಪ್ಪಳಿಸಿ ಹೊಡೆಯಲು) ಬಿಸುನೆತ್ತರ ಅರ್ಬಿಗುಳು ಉರ್ವಿ ಪಾಯೆ( ಬಿಸಿರಕ್ತದ ಜರಿಗಳಂತೆ ಉಕ್ಕಿ ಹರಿಯಲು.), ಪೇರ್ ಅರ್ವಿಗಳ್ ವೆರಸು, (ದೊಡ್ಡ ಝರಿಗಳಿಂದ ಕೂಡಿದ) ಜಾಜಿನ ಪರ್ವತಗಳಂತೆ ಕಡೆದು ಅಳ್ಗಿ ತಳ್ಗಿದಾಗಳ್ (ಕೆಂಪುಕಲ್ಲಿನ ಬೆಟ್ಟಗಳಂತೆ ಆನೆಗಳು ಕೆಳಗೆ ಬಿದ್ದು ಸತ್ತು ರಾಶಿಯಾದುವು),
ವಚನ:ಅರ್ಥ: ಹಾಗೆ ಎರಡು ಸೈನ್ಯದ ಆನೆಯ ಸಮೂಹಗಳು ಒಂದಕ್ಕೊಂದು ಸೇರಿಕೊಂಡು ತಾಗಿ- ಹೋರಾಡಿ ಅಪ್ಪಳಿಸಿ ಹೊಡೆಯಲು ಬಿಸಿರಕ್ತದ ಜರಿಗಳಂತೆ ಉಕ್ಕಿ ಹರಿಯಲು. ದೊಡ್ಡ ಝರಿಗಳಿಂದ ಕೂಡಿದ ಕೆಂಪುಕಲ್ಲಿನ ಬೆಟ್ಟಗಳಂತೆ ಆನೆಗಳು ಕೆಳಗೆ ಬಿದ್ದು ಸತ್ತು ರಾಶಿಯಾದುವು.

[ಭೀಮನ ಯುದ್ಧ]][ಸಂಪಾದಿಸಿ]

ಕಂ|| ಆನಿರೆಯೇನಿಱಿವುದು ಗಡ
ಮೀ ನಾಲ್ಕುಂ ಬಲಮಿದಲ್ತೆ ಪರಿಭವಮೆನಗಂ|
ದೇನುಂ ಮಾಣದೆ ಭೀಮನ
ನೂನಬಲಂ ಬಂದು ತಾಗಿದಂ ಕುರುಬಲದೊಳ್|| ೯೭ ||
ಪದ್ಯ-೯೭:ಪದವಿಭಾಗ-ಅರ್ಥ:ಆನು ಇರೆ (ನಾನು ಇರಲು) ಯೇನು ಇಱಿವುದು ಗಡಂ ಈ ನಾಲ್ಕುಂ ಬಲಂ (ನಾನು ಇರಲು ಈ ಚತುರಂಗಬಲವು ಯುದ್ಧ ಮಾಡುತ್ತದೆಯಲ್ಲವೇ? ) ಇದಲ್ತೆ ಪರಿಭವಂ ಎನಗೆಎಂದು ಏನುಂ ಮಾಣದೆ (ಇದಲ್ಲವೇ ನನಗೆ ಅವಮಾನಕರ’ ಎಂದು ಯಾವುದನ್ನೂ ಲಕ್ಷಿಸದೆ) ಭೀಮನು ಅನೂನಬಲಂ ಬಂದು ತಾಗಿದಂ ಕುರುಬಲದೊಳ್ (ಸ್ವಲ್ಪವೂ ಕಡಿಮೆಯಿಲ್ಲದ, ಅಸಮಾನ್ಯ ಶಕ್ತಿಯುಳ್ಳ ಭೀಮನು ಕೌರವಸೈನ್ಯವನ್ನು ಬಂದು ತಾಗಿದನು.)
ಪದ್ಯ-೯೭:ಅರ್ಥ:‘ನಾನು ಇರಲು ಈ ಚತುರಂಗಬಲವು ಯುದ್ಧ ಮಾಡುತ್ತದೆಯಲ್ಲವೇ? ಇದಲ್ಲವೇ ನನಗೆ ಅವಮಾನಕರ’ ಎಂದು ಯಾವುದನ್ನೂ ಲಕ್ಷಿಸದೆ, ಅಸಮಾನ್ಯ ಶಕ್ತಿಯುಳ್ಳ ಭೀಮನು ಕೌರವಸೈನ್ಯವನ್ನು ಬಂದು ತಾಗಿದನು/ ಎದುರಿಸಿದನು.
ವ|| ಅಂತು ಕುರುಬಲದ ಕರಿಘಟೆಗಳಂ ನುಂಗುವಂತೆ ದೆಸೆದೆಸೆಗೆ ಮಿಳಿರ್ದು ಮಿಳ್ಳಿಸಿದ ಸಿಂಗದ ಪೞವಿಗೆಯುಂ ಕುರುಬಲಕ್ಕೆ ಮಿೞ್ತು ಪಲ್ಮೊರೆವಂತೆ ಮೊರೆದು ಪರಿವ ತನ್ನ ಕಿಸುವೊನ್ನ ರಥಮುಂ ಭಯಂಕರಾಕಾರಮಾಗೆ ಪಗೆವರ ಗಂಟಲನೊತ್ತುವಂತೆ ಪೌಂಡ್ರಮೆಂಬ ಶಂಖಮನೊತ್ತಿ ಮುಂದೊಡ್ಡಿದೊಡ್ಡೆಲ್ಲಮನಂಬಿನ ಬಂಬಲೊಳೆ ಪಡಲ್ವಡಿಸುತ್ತುಂ ಬರ್ಪ ಭೀಮಸೇನಂಗೆ ದುರ್ಯೋಧನನ ದಿರದಿದಿರಾಂತಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಕುರುಬಲದ ಕರಿಘಟೆಗಳಂ ನುಂಗುವಂತೆ (ಕೌರವಸೈನ್ಯದ ಆನೆಗಳ ಸಮೂಹವನ್ನು ನುಂಗುವ ಹಾಗೆ) ದೆಸೆದೆಸೆಗೆ ಮಿಳಿರ್ದು ಮಿಳ್ಳಿಸಿದ ಸಿಂಗದ ಪೞವಿಗೆಯುಂ (ದಿಕ್ಕುದಿಕ್ಕಿಗೂ ಕಂಪಿಸಿ ಚಲಿಸುತ್ತಿದ್ದ ಸಿಂಹಧ್ವಜವು) ಕುರುಬಲಕ್ಕೆ ಮಿೞ್ತು ಪಲ್ಮೊರೆವಂತೆ ಮೊರೆದು (ಕೌರವಸೈನ್ಯಕ್ಕೆ ಮೃತ್ಯುದೇವತೆಯೇ ಹಲ್ಲುಕಡಿಯುವಂತೆ ಶಬ್ದಮಾಡಿಕೊಂಡು ಬರುತ್ತಿದೆಯೋ ಎಂಬಂತೆ) ಪರಿವ ತನ್ನ ಕಿಸುವೊನ್ನ ರಥಮುಂ (ಹರಿದು ಬರುತ್ತಿದ್ದ ತಾಮ್ರದ ತನ್ನ ತೇರು) ಭಯಂಕರಾಕಾರಮಾಗೆ ಪಗೆವರ ಗಂಟಲನೊತ್ತುವಂತೆ (ಭಯಂಕರವಾಗಿರಲು ಶತ್ರುಗಳ ಗಂಟಲನ್ನು ಒತ್ತುವ ಹಾಗೆ) ಪೌಂಡ್ರಮೆಂಬ ಶಂಖಮನು ಒತ್ತಿ (ಪೌಂಡ್ರವೆಂಬ ಶಂಖವನ್ನು ಊದುತ್ತಾ,) ಮುಂದೊಡ್ಡಿದ ಒಡ್ಡೆಲ್ಲಮನು ಅಂಬಿನ ಬಂಬಲೊಳೆ ಪಡಲ್ವಡಿಸುತ್ತುಂ (ಮುಂದೆ ಒಡ್ಡಿದ್ದ ಸೈನ್ಯವೆಲ್ಲವನ್ನೂ ಬಾಣಗಳ ಸಮೂಹದಿಂದ ಕೆಳಗೆ ಬೀಳಿಸುತ್ತ) ಬರ್ಪ ಭೀಮಸೇನಂಗೆ ದುರ್ಯೋಧನನು ಅದಿರದೆ ಇದಿರಾಂತಾಗಳ್ (ಬರುತ್ತಿದ್ದ ಭೀಮಸೇನನಿಗೆ ಹೆದರದೆ ದುರ್ಯೋಧನನು ಪ್ರತಿಭಟಿಸಿದಾಗ) -
ವಚನ:ಅರ್ಥ:ಹಾಗೆ ಕೌರವಸೈನ್ಯದ ಆನೆಗಳ ಸಮೂಹವನ್ನು ನುಂಗುವ ಹಾಗೆ ದಿಕ್ಕುದಿಕ್ಕಿಗೂ ಕಂಪಿಸಿ ಚಲಿಸುತ್ತಿದ್ದ ಸಿಂಹಧ್ವಜವು, ಕೌರವಸೈನ್ಯಕ್ಕೆ ಮೃತ್ಯುದೇವತೆಯೇ ಹಲ್ಲುಕಡಿಯುವಂತೆ ಶಬ್ದಮಾಡಿಕೊಂಡು ಬರುತ್ತಿದೆಯೋ ಎಂಬಂತೆ ಹರಿದು ಬರುತ್ತಿದ್ದ ತಾಮ್ರದ ತನ್ನ ತೇರು ಭಯಂಕರವಾಗಿರಲು ಶತ್ರುಗಳ ಗಂಟಲನ್ನು ಒತ್ತುವ ಹಾಗೆ ಪೌಂಡ್ರವೆಂಬ ಶಂಖವನ್ನು ಊದುತ್ತಾ, ಮುಂದೆ ಒಡ್ಡಿದ್ದ ಸೈನ್ಯವೆಲ್ಲವನ್ನೂ ಬಾಣಗಳ ಸಮೂಹದಿಂದ ಕೆಳಗೆ ಬೀಳಿಸುತ್ತ ಬರುತ್ತಿದ್ದ ಭೀಮಸೇನನಿಗೆ ಹೆದರದೆ ದುರ್ಯೋಧನನು ಪ್ರತಿಭಟಿಸಿದಾಗ-
ಉ|| ಎಂತಿದಿರಾಂತೆಯಂತೆ ಕಲಿಯಾಗೊಳಸೋರದಿರೆಂದು ಭೀಮನೋ
ರಂತೆ ಕನಲ್ದು ತಿಣ್ಣಮಿಸೆ ಪಾಯ್ವ ಸರಲ್ಗಳನೆಯ್ದಲೀಯದಾಂ|
ತಾಂತು ನಿರಂತರಂ ತಱಿದು ಸೂತನನಾತನ ವಾಜಿಯಂ ಮಹೀ
ಶಂ ತೆಗೆದೆಚ್ಚನಚ್ಚ ಬಿಸುನೆತ್ತರ ಸುಟ್ಟುರೆ ಸೂಸುವನ್ನೆಗಂ|| ೯೮ ||
ಪದ್ಯ-೯೮:ಪದವಿಭಾಗ-ಅರ್ಥ:ಎಂತು ಇದಿರಾಂತೆಯೋ ಅಂತೆ ಕಲಿಯಾಗು ಒಳಸೋರದಿರು ಎಂದು (ಹೇಗೆ ಎದುರಿಸಿದೆಯೋ ಹಾಗೆಯೇ ಶೂರನೂ ಆಗು; ಹಿಂಜರಿಯಬೇಡ ಎಂದು) ಭೀಮನು ಓರಂತೆ ಕನಲ್ದು ತಿಣ್ಣಂ ಇಸೆ, (ಭೀಮನು ಒಂದೇ ಸಮನಾಗಿ ಕೋಪಿಸಿಕೊಂಡು ಬಲವಾಗಿ ಬಾಣಪ್ರಯೋಗ ಮಾಡಲು) ಪಾಯ್ವ ಸರಲ್ಗಳನು (ಹಾರಿಬರುತ್ತಿದ್ದ ಬಾಣಗಳನ್ನು) ಯ್ದಲೀಯದೆ ಆಂತು ಆಂತು ನಿರಂತರಂ ತಱಿದು (ದುರ್ಯೋಧನನು ಅದನ್ನು ಪ್ರತಿಭಟಿಸಿ ಒಂದೇ ಸಮನಾಗಿ ಕತ್ತರಿಸಿ) ಸೂತನನು ಆತನ ವಾಜಿಯಂ ಮಹೀಶಂ ತೆಗೆದು ಎಚ್ಚನು ((ಭೀಮನ) ಸಾರಥಿಯನ್ನೂ ಆತನ ಕುದುರೆಯನ್ನೂ ಬಾಣದಿಂದ ಹೊಡೆದನು.) ಅಚ್ಚ ಬಿಸುನೆತ್ತರ ಸುಟ್ಟುರೆ ಸೂಸುವನ್ನೆಗಂ (ಆಗ ಅಪ್ಪಟ ಬಿಸಿರಕ್ತದ ಪ್ರವಾಹವನ್ನು ಹರಿಯಿಸಿದನು.)
ಪದ್ಯ-೯೮:ಅರ್ಥ:ಹೇಗೆ ಎದುರಿಸಿದೆಯೋ ಹಾಗೆಯೇ ಶೂರನೂ ಆಗು; ಹಿಂಜರಿಯಬೇಡ ಎಂದು ಭೀಮನು ಒಂದೇ ಸಮನಾಗಿ ಕೋಪಿಸಿಕೊಂಡು ಬಲವಾಗಿ ಬಾಣಪ್ರಯೋಗ ಮಾಡಲು (ಹಾಗೆ) ಹಾರಿಬರುತ್ತಿದ್ದ ಬಾಣಗಳನ್ನು ತನ್ನಲ್ಲಿಗೆ ಬರಲು ಅವಕಾಶಮಾಡದೆ ದುರ್ಯೋಧನನು ಅದನ್ನು ಪ್ರತಿಭಟಿಸಿ ಒಂದೇ ಸಮನಾಗಿ ಕತ್ತರಿಸಿ (ಭೀಮನ) ಸಾರಥಿಯನ್ನೂ ಆತನ ಕುದುರೆಯನ್ನೂ ಬಾಣದಿಂದ ಹೊಡೆದನಿ, ಆಗ ಅಪ್ಪಟ ಬಿಸಿರಕ್ತದ ಪ್ರವಾಹವನ್ನು ಹರಿಯಿಸಿದನು.
ಕಂ|| ಇಸೆ ಮಸಗಿ ಭೀಮನೀರ
ಯ್ದು ಶಿತಾಸ್ತ್ರದಿನುರುಳೆ ಸೂತನುಡಿಯೆ ರಥಂ ಕೀ|
ಲಿಸೆ ಕುದುರೆ ಮುಱಿಯೆ ಪೞವಿಗೆ
ಮಸಕದಿನೆಚ್ಚೆಚ್ಚನೊಂದೆ ಸರಲೊಳ್ ನೊಸಲಂ|| ೯೯ ||
ಪದ್ಯ-೯೯:ಪದವಿಭಾಗ-ಅರ್ಥ:ಇಸೆ ಮಸಗಿ ಭೀಮನು ಈರಯ್ದು ಶಿತಾಸ್ತ್ರದಿಂ ಉರುಳೆ ಸೂತನು ಉಡಿಯೆ(ಹಾಗೆ ಹೊಡೆಯಲಾಗಿ ಭೀಮನು ರೇಗಿ ಹರಿತವಾದ ಹತ್ತು ಬಾಣಗಳಿಂದ ಸೂತನು ಉರುಳುವ ಹಾಗೆ) ರಥಂ ಕೀಲಿಸೆ ಕುದುರೆ ( ರಥವೂ ಒಡೆದುಹೋಗುವ ಹಾಗೆ.) ಮುಱಿಯೆ ಪೞವಿಗೆ (ಧ್ವಜವು ಮುರಿದು ಹೋಗುವ) ಮಸಕದಿಂ ಎಚ್ಚೆ (ಧ್ವಜವು ಮುರಿದು ಹೋಗುವ ಹಾಗೆ ಹೊಡೆದು,) ಎಚ್ಚನು ಒಂದೆ ಸರಲೊಳ್ ನೊಸಲಂ (ಒಂದೇ ಬಾಣದಿಂದ ದುರ್ಯೋಧನನ ಹಣೆಗೆ ಹೊಡೆದನು. )
ಪದ್ಯ-೯೯:ಅರ್ಥ:ಹಾಗೆ ಹೊಡೆಯಲಾಗಿ ಭೀಮನು ರೇಗಿ ಹರಿತವಾದ ಹತ್ತು ಬಾಣಗಳಿಂದ ಸೂತನು ಉರುಳುವ ಹಾಗೆ, ರಥವೂ ಒಡೆದುಹೋಗುವ ಹಾಗೆ. ಕುದುರೆಯು ಮೊಳೆಯಿಂದ ನಾಟಿಕೊಂಡಹಾಗೆಯೂ, ಧ್ವಜವು ಮುರಿದು ಹೋಗುವ ಹಾಗೆ ಹೊಡೆದು, ಕೋಪದಿಂದ ಒಂದೇ ಬಾಣದಿಂದ ದುರ್ಯೋಧನನ ಹಣೆಗೆ ಹೊಡೆದನು.
ಪಟ್ಟಂಗಟ್ಟಿದ ನೊಸಲಂ
ನಟ್ಟ ಸರಲ್ವಿಡಿದು ನೆತ್ತರಂಬಿರಿವಿಡೆ ಕ|
ಣ್ಗೆಟ್ಟಿರ್ದ ನೃಪನನಂಕದ
ಕಟ್ಟಾಳ್ಗಳ್ ಕಾದು ಕಳಿಪೆ ದುರ್ಯೋಧನನಂ|| ೧೦೦/ 100||
ಪದ್ಯ-೧೦೦:ಪದವಿಭಾಗ-ಅರ್ಥ:ಪಟ್ಟಂಗಟ್ಟಿದ ನೊಸಲಂನು ಅಟ್ಟ (ಪಟ್ಟಕಟ್ಟಿದ ದುರ್ಯೋಧನ ಹಣೆಯನ್ನು ನಾಟಿದ) ಸರಲ್ (ವಿ) ಇಡಿದು (ಬಾಣದವನ್ನು ಅನುಸರಿಸಿ) ನೆತ್ತರು ಅಂಬಿರಿವಿಡೆ (ರಕ್ತವು ಧಾರಾಕಾರವಾಗಿ ಹರಿಯಲು) ಕಣ್ಗೆಟ್ಟಿರ್ದ ನೃಪನನು ಅಂಕದ ಕಟ್ಟಾಳ್ಗಳ್ (ದಿಕ್ಕುಗೆಟ್ಟಿದ್ದ ರಾಜನನ್ನು ಪ್ರಸಿದ್ಧರಾದ ಶೂರರು) ಕಾದು ಕಳಿಪೆ ದುರ್ಯೋಧನನಂ (ರಕ್ಷಿಸಿ ಶಿಬಿರಕ್ಕೆ ಕಳುಹಿಸಲು-)
ಪದ್ಯ-೧೦೦:ಅರ್ಥ:ಪಟ್ಟಕಟ್ಟಿದ ದುರ್ಯೋಧನ ಹಣೆಯನ್ನು ನಾಟಿದ ಬಾಣದವನ್ನು ಅನುಸರಿಸಿ ರಕ್ತವು ಧಾರಾಕಾರವಾಗಿ ಹರಿಯಲು ದಿಕ್ಕುಗೆಟ್ಟಿದ್ದ ರಾಜನನ್ನು ಪ್ರಸಿದ್ಧರಾದ ಶೂರರು ರಕ್ಷಿಸಿ ಶಿಬಿರಕ್ಕೆ ಕಳುಹಿಸಲು-
ವ|| ಆಗಳವನನುಜರ್ ನೂರ್ವರುಂ ಬಂದು ತನ್ನನೊರ್ವನಂ ತಾಗಿದೊಡನಿಬರುಮಂ ವಿರಥರ್ಮಾಡಿ ಭಾರತಮನಿಂದೆ ಸಮೆಯಿಸುವೆನೆಂದು ಕೋದಂಡಮಂ ಬಿಸುಟು ಗದಾದಂಡಮಂ ಭುಜಾದಂಡದೊಳಳವಡಿಸಿಕೊಂಡು-
ವಚನ:ಪದವಿಭಾಗ-ಅರ್ಥ:ಆಗಳ್ ಅವನ ಅನುಜರ್ ನೂರ್ವರುಂ ಬಂದು ತನ್ನನೊರ್ವನಂ ತಾಗಿದೊಡೆ ಅನಿಬರುಮಂ ವಿರಥರ್ಮಾಡಿ(ಆಗ ಅವನ ನೂರು ತಮ್ಮಂದಿರೂ ಬಂದು ತನ್ನೊಬ್ಬನನ್ನು ತಾಗಲು ಅಷ್ಟು ಜನವನ್ನೂ ರಥದಿಂದ ಉರುಳಿಸಿ) ಭಾರತಮನು ಇಂದೆ ಸಮೆಯಿಸುವೆನೆಂದು (ಭಾರತಯುದ್ಧವನ್ನು ಈ ದಿನವೇ ಮುಗಿಸಿಬಿಡುತ್ತೇನೆ ಎಂದು) ಕೋದಂಡಮಂ ಬಿಸುಟು ಗದಾದಂಡಮಂ ಭುಜಾದಂಡದೊಳು ಅಳವಡಿಸಿಕೊಂಡು (ಬಿಲ್ಲನ್ನು ಬಿಸಾಡಿ ಗದಾದಂಡವನ್ನು ದಂಡದಂತಿರುವ ತನ್ನ ತೋಳಿನಲ್ಲಿ ಅಳವಡಿಸಿಕೊಂಡು)-
ವಚನ:ಅರ್ಥ: ಆಗ ಅವನ- ದುರ್ಯೋಧನನ ನೂರು ತಮ್ಮಂದಿರೂ ಬಂದು ತನ್ನೊಬ್ಬನನ್ನು ಎದುರಿಸಲು, ಅಷ್ಟು ಜನವನ್ನೂ ರಥದಿಂದ ಉರುಳಿಸಿ ಭಾರತಯುದ್ಧವನ್ನು ಈ ದಿನವೇ ಮುಗಿಸಿಬಿಡುತ್ತೇನೆ ಎಂದು ಬಿಲ್ಲನ್ನು ಬಿಸಾಡಿ ಗದಾದಂಡವನ್ನು ದಂಡದಂತಿರುವ ತನ್ನ ತೋಳಿನಲ್ಲಿ ಅಳವಡಿಸಿಕೊಂಡನು.
ಚಂ|| ಕುರುಬಲಮಂ ಪಡಲ್ವಡಿಪ ತಕ್ಕಿನೊಳೆಯ್ತರೆ ಬರ್ಪ ಭೀಮನಂ
ಬರೆ ಬರಲೀಯದಿರ್ದವರನಾ ಪದದೊಳ್ ಪೆಱಗಿಕ್ಕಿ ಗಂಧಸಿಂ|
ಧುರ ಘಟೆ ನಾಲ್ಕು ಕೋಟಿವೆರಸಾಗಡೆ ಬಂದು ಕಳಿಂಗರಾಜನಾಂ
ತಿರೆ ಪಗೆ ಕೆಯ್ಗೆವಂದು ಬರ್ದುಕಾಡಿದ ಬಲ್ಮುಳಿಸಿಂ ವೃಕೋದರಂ|| ೧೦೧ ||
ಪದ್ಯ-೧೦೧:ಪದವಿಭಾಗ-ಅರ್ಥ:ಕುರುಬಲಮಂ ಪಡಲ್ವಡಿಪ ತಕ್ಕಿನೊಳು ಎಯ್ತರೆ (ಕೌರವಸೈನ್ಯವನ್ನು ನಾಶಮಾಡವ ಸಾಮರ್ಥ್ಯದಿಂದ ಭೀಮಸೇನನು ಬರಲು) ಬರ್ಪ ಭೀಮನಂ ಬರೆ (ಬರುವ ಭೀಮನನ್ನು ಬರುವುದಕ್ಕೆ ಅವಕಾಶಮಾಡದೆ) ಬರಲು ಈಯದೆ ಇರ್ದವರನು ಆ ಪದದೊಳ್ ಪೆಱಗಿಕ್ಕಿ (ಅಲ್ಲಿದ್ದವರನ್ನು (ಅಲ್ಲಿಂದ) ಹೊರಕ್ಕೆ ಕಳಿಸಿ) ಗಂಧಸಿಂಧುರ ಘಟೆ ನಾಲ್ಕು ಕೋಟಿವೆರಸು ಆಗಡೆ ಬಂದು ಕಳಿಂಗರಾಜನು ಆಂತಿರೆ (ಶ್ರೇಷ್ಠವಾದ ನಾಲ್ಕುಕೋಟಿ ಮದ್ದಾನೆಗಳೊಡಗೂಡಿ ಕಳಿಂಗರಾಜನು ಬಂದು ಎದುರಿಸಲು,) ಪಗೆ ಕೆಯ್ಗೆವಂದು ಬರ್ದುಕಾಡಿದ ಬಲ್ ಮುಳಿಸಿಂ ವೃಕೋದರಂ (ಶತ್ರುವು ಕೈಗೆ ಸಿಕ್ಕಿಯೂ ನುಣುಚಿಕೊಂಡುದಕ್ಕೆ ವಿಶೇಷ ಕೋಪವನ್ನು ಭೀಮನು (ತಾಳಿ)-)|
ಪದ್ಯ-೧೦೧:ಅರ್ಥ:ಕೌರವಸೈನ್ಯವನ್ನು ನಾಶಮಾಡವ ಸಾಮರ್ಥ್ಯದಿಂದ ಭೀಮಸೇನನು ಬರಲು, ಬರುವ ಭೀಮನನ್ನು ಬರುವುದಕ್ಕೆ ಅವಕಾಶಮಾಡದೆ ಅಲ್ಲಿದ್ದವರನ್ನು (ಅಲ್ಲಿಂದ) ಹೊರಕ್ಕೆ ಕಳಿಸಿ ಶ್ರೇಷ್ಠವಾದ ನಾಲ್ಕುಕೋಟಿ ಮದ್ದಾನೆಗಳೊಡಗೂಡಿ ಕಳಿಂಗರಾಜನು ಬಂದು ಎದುರಿಸಿದನು. ಶತ್ರುವು ಕೈಗೆ ಸಿಕ್ಕಿಯೂ ನುಣುಚಿಕೊಂಡುದಕ್ಕೆ ವಿಶೇಷ ಕೋಪವನ್ನು ಭೀಮನು (ತಾಳಿ)-
ವ|| ಅಂತು ಕಳಿಂಗರಾಜ ಮತ್ತಮಾತಂಗಘಟೆಗಳ ಮೇಲೆ ಮುಳಿಸಂ ಕಳೆವೆನೆಂದು ಸಿಂಹನಾದದಿನಾರ್ದು-
ವಚನ:ಪದವಿಭಾಗ-ಅರ್ಥ:ಅಂತು ಕಳಿಂಗರಾಜ ಮತ್ತಮಾತಂಗಘಟೆಗಳ ಮೇಲೆ ಮುಳಿಸಂ ಕಳೆವೆನೆಂದು (ಮದ್ದಾನೆಗಳ ಸಮೂಹದ ಮೇಲೆ ತನ್ನ ಸಿಟ್ಟನ್ನು ತೀರಿಸಿಕೊಳ್ಳುತ್ತೇನೆ ಎಂದು) ಸಿಂಹನಾದದಿಂ ಆರ್ದು (ಸಿಂಹಗರ್ಜನೆಯಿಂದ ಆರ್ಭಟಿಸಿ)-
ವಚನ:ಅರ್ಥ:ವ|| ಕಳಿಂಗರಾಜನ ಮದ್ದಾನೆಗಳ ಸಮೂಹದ ಮೇಲೆ ತನ್ನ ಸಿಟ್ಟನ್ನು ತೀರಿಸಿಕೊಳ್ಳುತ್ತೇನೆ ಎಂದು ಸಿಂಹಗರ್ಜನೆಯಿಂದ ಆರ್ಭಟಿಸಿದನು.
ಮ|| ಗಜೆಯಂ ಭೋರೆನೆ ಪರ್ವಿ ಬೀಸಿ ಕಡುಪಿಂದೆಯ್ತಂದು ಮಾಱಾಂತ ಸಾ
ಮಜಸಂಘಾತಮನೊಂದುಗೊಳ್ಳೆರಡುಗೊಳ್ಳೆಂದುರ್ವಿ ಪೊಯ್ವೊಂದು ಪೊ|
ಯ್ಗೆ ಜವಂಗುಂದಿ ಸಿಡಿಲ್ದು ಮುನ್ನಡಿಗುರುಳ್ತರ್ಪನ್ನೆಗಂ ಬೀೞೆ ದಿ
ಗ್ಗಜಮಂ ಪೋಲ್ವ ಗಜಂಗಳಂ ಪಲವುಮಂ ಕೊಂದು ಮರುನ್ನಂದನಂ|| ೧೦೨ ||
ಪದ್ಯ-೧೦೨:ಪದವಿಭಾಗ-ಅರ್ಥ:ಗಜೆಯಂ ಭೋರೆನೆ ಪರ್ವಿ ಬೀಸಿ (ಭೀಮನು ಗದೆಯನ್ನು ಭೋರೆಂದು ವಿಸ್ತಾರವಾಗಿ ಬೀಸಿ) ಕಡುಪಿಂದೆ ಎಯ್ತಂದು ಮಾಱಾಂತ ಸಾಮಜಸಂಘಾತಮನು (ಕ್ರೌರ್ಯದಿಂದ ಬಂದು ಪ್ರತಿಭಟಿಸಿದ ಆನೆಗಳ ಸಮೂಹವನ್ನು) ಒಂದುಗೊಳ್ ಎರಡುಗೊಳ್ ಎಂದು (ಒಂದು ತಕ್ಕೊ, ಎರಡು ತಕ್ಕೋ ಎಂದು) ಉರ್ವಿ ಪೊಯ್ವೊಂದು ಪೊಯ್ಗೆ (ಉಬ್ಬಿ ಹೊಡೆಯುವ ಹೊಡೆತಕ್ಕೆ) ಜವಂಗುಂದಿ ಸಿಡಿಲ್ದು ಮುನ್ನೆ ಅಡಿಗುರುಳ್ತರ್ಪ ಅನ್ನೆಗಂ ಬೀೞೆ (ಆನೆಗಳು ತಮ್ಮ ವೇಗವನ್ನು ಕಳೆದುಕೊಂಡು ಸಿಡಿದು ಮೊದಲೇ ಅಡಿಗುರುಳುವ ಹಾಗೆ ಉರುಳಿ ಬೀಳಲು) ದಿಗ್ಗಜಮಂ ಪೋಲ್ವ ಗಜಂಗಳಂ ಪಲವುಮಂ ಕೊಂದು ಮರುನ್ನಂದನಂ(ಭೀಮ)(ದಿಗ್ಗಜಗಳಂತಿದ್ದ ಅನೇಕ ಆನೆಗಳನ್ನು ಭೀಮನು ಕೊಂದನು.)
ಪದ್ಯ-೧೦೨:ಅರ್ಥ:ಭೀಮನು ಗದೆಯನ್ನು ಭೋರೆಂದು ವಿಸ್ತಾರವಾಗಿ ಬೀಸಿ ಕ್ರೌರ್ಯದಿಂದ ಬಂದು ಪ್ರತಿಭಟಿಸಿದ ಆನೆಗಳ ಸಮೂಹವನ್ನು ಒಂದು ತಕ್ಕೊ, ಎರಡು ತಕ್ಕೋ ಎಂದು ಉಬ್ಬಿ ಹೊಡೆಯುವ ಹೊಡೆತಕ್ಕೆ ಆನೆಗಳು ತಮ್ಮ ವೇಗವನ್ನು ಕಳೆದುಕೊಂಡು ಸಿಡಿದು ಮೊದಲೇ ಅಡಿಗುರುಳುವ ಹಾಗೆ ಉರುಳಿಬೀಳಲು, ದಿಗ್ಗಜಗಳಂತಿದ್ದ ಅನೇಕ ಆನೆಗಳನ್ನು ಭೀಮನು ಕೊಂದನು.
ಕಂ|| ಬಡಿಗೊಳೆ ಬಿದು ಬಿಬ್ಬರ ಬಿರಿ
ದೊಡನುಗೆ ಪೊಸಮುತ್ತು ಕೋಡನೂಱಿ ಮದೇಭಂ|
ಕೆಡೆದುವು ಕೊಲ್ಲದಿರೆಂದಿರ
ದಡಿಗೆಱಗುವ ತೆಱನನಿನಿಸನನುಕರಿಸುವಿನಂ|| ೧೦೩
ಪದ್ಯ-೧೦೩:ಪದವಿಭಾಗ-ಅರ್ಥ:ಬಡಿಗೊಳೆ (ಭೀಮನು ಗದೆಯಿಂದ ಹೊಡೆಯಲು,) ಬಿದು (ಕುಂಭಸ್ಥಳವು) ಬಿಬ್ಬರ ಬಿರಿದೊಡನೆ ಉಗೆ ಪೊಸಮುತ್ತು ಕೋಡನೂಱಿ (ಕುಂಭಸ್ಥಳವು ಸಂಪೂರ್ಣವಾಗಿ ಬಿರಿದುಹೋಗಲು, ಜೊತೆಯಲ್ಲಿಯೇ ಕುಂಭಸ್ಥಳದಲ್ಲಿದ್ದ ಹೊಸಮುತ್ತುಗಳು ಚೆಲ್ಲಾಡಲು) ಮದೇಭಂ ಕೆಡೆದುವು ಕೊಲ್ಲದಿರೆಂದು ಇರದ ಅಡಿಗೆಱಗುವ ತೆಱನಂ (ಮದ್ದಾನೆಗಳು ಕೊಂಬನ್ನು ಕೆಳಕ್ಕೆ ಊರಿ ‘ನಮ್ಮನ್ನು ಕೊಲ್ಲಬೇಡ’ ಎಂದು ಭೀಮನ ಕಾಲಿಗೆ ಬೀಳುವ ರೀತಿಯನ್ನು) ಇನಿಸನು ಅನುಕರಿಸುವಿನಂ (ಸ್ವಲ್ಪ ಮಟ್ಟಿಗೆ ಅನುಕರಿಸುತ್ತ ಕೆಡೆದವು- ಬಿದ್ದುವು.)
ಪದ್ಯ-೧೦೩:ಅರ್ಥ:ಭೀಮನು ಗದೆಯಿಂದ ಹೊಡೆಯಲು, ಕುಂಭಸ್ಥಳವು ಸಂಪೂರ್ಣವಾಗಿ ಬಿರಿದುಹೋಗಲು, ಜೊತೆಯಲ್ಲಿಯೇ (ಕುಂಭಸ್ಥಳದಲ್ಲಿದ್ದ) ಹೊಸಮುತ್ತುಗಳು ಚೆಲ್ಲಾಡಿದುವು. ಮದ್ದಾನೆಗಳು ಕೊಂಬನ್ನು ಕೆಳಕ್ಕೆ ಊರಿ ‘ನಮ್ಮನ್ನು ಕೊಲ್ಲಬೇಡ’ ಎಂದು ಭೀಮನ ಕಾಲಿಗೆ ಬೀಳುವ ರೀತಿಯನ್ನು, ಸ್ವಲ್ಪ ಮಟ್ಟಿಗೆ ಅನುಕರಿಸುತ್ತ ಬಿದ್ದುವು.
ವ|| ಅಂತು ಪತ್ತೆಂಟುಸಾಸಿರಮಾನೆಯಂ ಪಡಲ್ವಡಿಸಿಯುಂ ಸೈರಿಸಲಾಱದೆ-
ವಚನ:ಪದವಿಭಾಗ-ಅರ್ಥ:ಅಂತು ಪತ್ತೆಂಟು ಸಾಸಿರಂ ಆನೆಯಂ ಪಡಲ್ವಡಿಸಿಯುಂ ಸೈರಿಸಲಾಱದೆ (ನಾಶಪಡಿಸಿದರೂ ತೃಪ್ತಿಹೊಂದದೆ)-
ವಚನ:ಅರ್ಥ: ವ|| ಹಾಗೆ ಹತ್ತೆಂಟು ಸಾವಿರ ಆನೆಗಳನ್ನೂ ನಾಶಪಡಿಸಿದರೂ ತೃಪ್ತಿಹೊಂದದೆ,
ಮ|| ಪಿಡಿದೊಂದೊಂದಱ ಗಾತ್ರಮಂ ತಿರಿಪಿಕೊಂಡೊಂದೊಂದರೊಳ್ ಪೊಯ್ದುಮೆ
ಲ್ವಡಗಪ್ಪನ್ನೆಗಮೆತ್ತಿಕೊಂಡಸಗವೊಯ್ವೊಯ್ಲೊಳ್ ತಡಂಬೊಯ್ದುಮು|
ಳ್ಳಡುಗುಂ ನೆತ್ತರುಮೆಲ್ವುಮೆಲ್ಲ ದೆಸೆಗಂ ಜೀರೇೞ್ದು ಪಾರೇರಿ ಬ
ಲ್ದಡಿಗಂ ಬೀಸಿಯುಮೊಂದು ಕೋಟಿವರೆಗಂ ಕೊಂದಂ ಮದೇಭಂಗಳಂ|| ೧೦೪ ||
ಪದ್ಯ-೧೦೪:ಪದವಿಭಾಗ-ಅರ್ಥ:ಪಿಡಿದು ಒಂದೊಂದಱ ಗಾತ್ರಮಂ ತಿರಿಪಿಕೊಂಡು ಒಂದೊಂದರೊಳ್ (ಒಂದು ಆನೆಯ ಶರೀರವನ್ನು ಹಿಡಿದುಕೊಂಡು ವೇಗವಾಗಿ ತಿರುಗಿಸಿ ಒಂದರೊಡನೆ ಒಂದನ್ನು) ಪೊಯ್ದುಂ ಎಲ್ವು ಅಡಗು ಅಪ್ಪನ್ನೆಗಂ,(ಎಲುಬೂ ಮಾಂಸವೂ ಆಗುವ ಹಾಗೆ) ಎತ್ತಿಕೊಂಡು ಅಸಗ ವೊಯ್ ಪೊಯ್ಲೊಳ್ ತಡಂ ಬೊಯ್ದುಂ (ಮೇಲಕ್ಕೆತ್ತಿಕೊಂಡು ಅಗಸನು ಒಗೆಯುವ ರೀತಿಯಲ್ಲಿ ಬಿರುಸಾಗಿ ಮೇಲಕ್ಕೆತ್ತಿ ಹೊಡೆದನು;) ಉಳ್ಳ ಅಡುಗುಂ ನೆತ್ತರುಂ ಎಲ್ವುಂ ಎಲ್ಲ ದೆಸೆಗಂ (ಆಗ ಒಳಗಿದ್ದ ಮಾಂಸವೂ ರಕ್ತವೂ ಎಲ್ಲ ದಿಕ್ಕುಗಳಿಗೂ) ಜೀರ್ ಏೞ್ದು ಪಾರು ಏರಿ (ಜೀರೆಂದು ಶಬ್ದಮಾಡುತ್ತ ಎದ್ದು ಹಾರಿ ಚಿಮ್ಮಿ) ಬಲ್ದಡಿಗಂ (ಬಲು ಬಲಶಾಲಿಯಾದ ಭೀಮನು) ಬೀಸಿಯುಂ ಒಂದು ಕೋಟಿವರೆಗಂ ಕೊಂದಂ ಮದೇಭಂಗಳಂ (ಬಲು ಬಲಶಾಲಿಯಾದ ಭೀಮನು ಒಂದುಕೋಟಿ ಲೆಕ್ಕದವರೆಗಿನ ಮದ್ದಾನೆಗಳನ್ನು ಬೀಸಿಯುಂ-ಬೀಸಿ,ಬೀಸಿ ಬಡಿದು ಕೊಂದನು)
ಪದ್ಯ-೧೦೪:ಅರ್ಥ:ಭೀಮನು, ಒಂದು ಆನೆಯ ದೇಹವನ್ನು ಹಿಡಿದುಕೊಂಡು ವೇಗವಾಗಿ ತಿರುಗಿಸಿ ಒಂದರೊಡನೆ ಒಂದನ್ನು ಎಲುಬೂ ಮಾಂಸವೂ ಆಗುವ ಹಾಗೆ ಹೊಡೆದು ಮೇಲಕ್ಕೆತ್ತಿಕೊಂಡು ಅಗಸನು ಒಗೆಯುವ ರೀತಿಯಲ್ಲಿ ಬಿರುಸಾಗಿ ಮೇಲಕ್ಕೆತ್ತಿ ಹೊಡೆದನು; ಆಗ ಒಳಗಿದ್ದ ಮಾಂಸವೂ ರಕ್ತವೂ ಎಲುಬುಗಳೂ ಜೀರೆಂದು ಶಬ್ದಮಾಡುತ್ತ ಎದ್ದು ಹಾರಿ ಚಿಮ್ಮಿ ಎಲ್ಲ ದಿಕ್ಕುಗಳಿಗೂ ಹಾರಿ ನೆಗೆಯುವ ಹಾಗೆ ಬೀಸಿ ಬಲು ಬಲಶಾಲಿಯಾದ ಭೀಮನು ಒಂದುಕೋಟಿ ಲೆಕ್ಕದವರೆಗಿನ ಮದ್ದಾನೆಗಳನ್ನು ಕೊಂದನು.-
ಮ|| ಸಿಡಿಲಂತೊರ್ಮೆಯೆ ಪೊಯ್ಯೆ ಪೊಯ್ದ ಭರದಿಂದೊಂದಾನೆ ತೋಲ್ ನೆತ್ತರೆ
ಲ್ವಡಗೊಂದೊಂದರೊಳೊಂದುಮೊಂದದೆ ಗದಾನಿರ್ಘಾತದಿಂ ಮಾಯಮಾ|
ದೊಡೆ ಪೋ ತಪ್ಪಿದೆನೆಂದು ಪಲ್ಮೊರೆದಗುರ್ವಪ್ಪನ್ನೆಗಂ ಮೀಸೆಯಂ
ಕಡಿದಂ ತೋಳ್ವಲದೇೞ್ಗೆ ಮೆಚ್ಚುವನಿತರ್ಕುಗ್ರಾಜಿಯೊಳ್ ಭೀಮನಾ|| ೧೦೫ ||
ಪದ್ಯ-೧೦೫:ಪದವಿಭಾಗ-ಅರ್ಥ:ಸಿಡಿಲಂತೆ ಒರ್ಮೆಯೆ ಪೊಯ್ಯೆ ಪೊಯ್ದ ಭರದಿಂದೆ (ಡಿಲಿನ ಹಾಗೆ ಒಂದೇ ಸಲ ಹೊಡೆಯಲು ಹೊಡೆದ ವೇಗಕ್ಕೆ) ಒಂದಾನೆ ತೋಲ್ ನೆತ್ತರ್ ಎಲ್ವು ಅಡಗು ಒಂದೊಂದರೊಳೆ ಒಂದುಂ ಒಂದದೆ (ಆನೆಯ ಚರ್ಮ ರಕ್ತ ಎಲುಬು ಮಾಂಸಗಳು ಒಂದರಲ್ಲಿ ಒಂದು ಸೇರಿರದೆ) ಗದಾ ನಿರ್ಘಾತದಿಂ ಮಾಯಂ ಆದೊಡೆ ಪೋ ತಪ್ಪಿದೆನೆಂದು (ಗದೆಯ ಪೆಟ್ಟಿನಿಂದ ಮಾಯವಾಗಲು ಭೀಮನು ‘ಹೋಗಲಿ! ತಪ್ಪುಮಾಡಿದೆ’ ಎಂದು) ಪಲ್ಮೊರೆದು ಉಗುರ್ವು ಅಪ್ಪನ್ನೆಗಂ ಮೀಸೆಯಂ ಕಡಿದಂ (ಹಲ್ಲುಕಡಿದು ಭಯಹುಟ್ಟುವಂತೆ ಮೀಸೆಯನ್ನು ಕಡಿದನು.) ತೋಳ್ವಲದ ಏೞ್ಗೆ ಮೆಚ್ಚುವನಿತರ್ಕೆ ಅಗ್ರಾಜಿಯೊಳ್ ಭೀಮನಾ (ಆ ಯುದ್ಧರಂಗದಲ್ಲಿ ತನ್ನ ಬಾಹುಶಕ್ತಿಯ ಏಳಿಗೆಯನ್ನು ಮೆಚ್ಚುವಷ್ಟು --- ಹಲ್ಲುಕಡಿದು ಭಯಹುಟ್ಟುವಂತೆ ಮೀಸೆಯನ್ನು ಕಡಿದನು.)
ಪದ್ಯ-೧೦೫:ಅರ್ಥ:ಸಿಡಿಲಿನ ಹಾಗೆ ಒಂದೇ ಸಲ ಹೊಡೆಯಲು ಹೊಡೆದ ವೇಗಕ್ಕೆ ಆನೆಯ ಚರ್ಮ ರಕ್ತ ಎಲುಬು ಮಾಂಸಗಳು ಒಂದರಲ್ಲಿ ಒಂದು ಸೇರಿರದೆ ಗದೆಯ ಪೆಟ್ಟಿನಿಂದ ಮಾಯವಾಗಲು ಭೀಮನು ‘ಹೋಗಲಿ! ತಪ್ಪುಮಾಡಿದೆ’ ಎಂದು ಹಲ್ಲುಕಡಿದು ಭಯಹುಟ್ಟುವಂತೆ ಆ ಯುದ್ಧರಂಗದಲ್ಲಿ ತನ್ನ ಬಾಹುಶಕ್ತಿಯ ಏಳಿಗೆಯನ್ನು ಮೆಚ್ಚುವಷ್ಟು ಭಯಂಕರವಾದ ರೀತಿಯಲ್ಲಿ ಮೀಸೆಯನ್ನು ಕಡಿದನು.
ಕಂ|| ಧ್ವಜಮುಂ ಬಿಸುಗೆಯುಮೇಱಿ
ರ್ದ ಜೋದರುಂ ಬೆರಸು ಗಜೆಯನರಿಗಜಘಟೆಯಂ|
ಗಿಜಿಗಿಜಿಯಾಗಿರೆ ಪೊಯ್ದೊಡೆ
ಗುಜುಗುಜುಗೊಂಡಾರ್ದರಮರರಂಬರತಳದೊಳ್|| ೧೦೬||
ಪದ್ಯ-೧೦೬:ಪದವಿಭಾಗ-ಅರ್ಥ:ಧ್ವಜಮುಂ ಬಿಸುಗೆಯು ಮೇಱಿರ್ದ ಜೋದರುಂ ಬೆರಸು (ಧ್ವಜ ಮತ್ತು ಅಂಬಾರಿಯನ್ನು ಹತ್ತಿದ್ದ ಯೋಧರನ್ನೂ ಕೂಡಿ) ಗಜೆಯಿಂ ಅರಿಗಜ ಘಟೆಯಂ ಗಿಜಿಗಿಜಿಯಾಗಿರೆ ಪೊಯ್ದೊಡೆ (ಗದೆಯಿಂದ ಅಜ್ಜಿಗುಜ್ಜಾಗುವ ಹಾಗೆ ಹೊಡೆಯಲು) ಗುಜುಗುಜುಗೊಂಡು ಆರ್ದರು ಅಮರರ್ ಅಂಬರತಳದೊಳ್ (ಆಕಾಶಪ್ರದೇಶದಲ್ಲಿ ದೇವತೆಗಳು ತಮ್ಮಲ್ಲಿ ಪಿಸುಗುಟ್ಟಿಮಾತಾಡಿ ಆರ್ಭಟ ಮಾಡಿದರು.)
ಪದ್ಯ-೧೦೬:ಅರ್ಥ: ಧ್ವಜ ಮತ್ತು ಅಂಬಾರಿಯನ್ನು ಹತ್ತಿದ್ದ ಯೋಧರನ್ನೂ ಕೂಡಿ ಗದೆಯಿಂದ ಅಜ್ಜಿಗುಜ್ಜಾಗುವ ಹಾಗೆ ಹೊಡೆಯಲು ಆಕಾಶಪ್ರದೇಶದಲ್ಲಿ ದೇವತೆಗಳು ಪಿಸುಗುಟ್ಟಿಮಾತಾಡಿ ಆರ್ಭಟ ಮಾಡಿದರು.

ಧರ್ಮರಾಯ ಶಲ್ಯರ ಯುದ್ಧ[ಸಂಪಾದಿಸಿ]

ವ|| ಅಂತು ಗಾಳಿಗೊಡ್ಡಿದ ಘನಘಟೆಯಂತೆ ತನಗೊಡ್ಡಿದ ಕಳಿಂಗರಾಜ ಮತ್ತಮಾತಂಗ ಘಟೆಗಳಂ ಕೞಕುೞಂ ಮಾಡಿದನನ್ನೆಗಮಿತ್ತ ಶಲ್ಯನ ಮೊನೆಯೊಳ್ ಧರ್ಮಪುತ್ರಂ ಕಾದಿ ನಾಲ್ಕು ಕಲ್ಲಂಬುಗಳಿಂದಾತನ ವರೂಥ ಸೂತಕೇತನಂಗಳಂ ಕಡಿದು-
ವಚನ:ಪದವಿಭಾಗ-ಅರ್ಥ:ಅಂತು ಗಾಳಿಗೆ ಒಡ್ಡಿದ ಘನಘಟೆಯಂತೆ (ಹಾಗೆ ಗಾಳಿಗೆ ಸಿಕ್ಕಿದ ಮೋಡಗಳ ಸಮೂಹದ ಹಾಗೆ) ತನಗೆ ಒಡ್ಡಿದ ಕಳಿಂಗರಾಜ ಮತ್ತಮಾತಂಗ ಘಟೆಗಳಂ (ತನಗೆ ಎದುರಾದ ಕಳಿಂಗರಾಜನ ಮದ್ದಾನೆಗಳ ಸಮೂಹವನ್ನು) ಕೞಕುೞಂ ಮಾಡಿದನು (ಕಳಕಳ- ಕಳವಳ?- ಸಂಕಟಕ್ಕೀಡು ಮಾಡಿದನು.) ಅನ್ನೆಗಂ ಇತ್ತ ಶಲ್ಯನ ಮೊನೆಯೊಳ್ ಧರ್ಮಪುತ್ರಂ ಕಾದಿ (ಅಷ್ಟರಲ್ಲಿ ಈ ಕಡೆ ಶಲ್ಯನ ಯುದ್ಧದಲ್ಲಿ ಧರ್ಮರಾಜನು ಯುದ್ಧಮಾಡಿ) ನಾಲ್ಕು ಕಲ್ಲಂಬುಗಳಿಂದ ಆತನ ವರೂಥ ಸೂತಕೇತನಂಗಳಂ ಕಡಿದು (ನಾಲ್ಕು ಮೊನಚಾದ ಬಾಣಗಳಿಂದ ಅವನ ತೇರು ಸಾರಥಿ ಧ್ವಜಗಳನ್ನು ಕತ್ತರಿಸಿ)-
ವಚನ:ಅರ್ಥ: ಹಾಗೆ ಗಾಳಿಗೆ ಎದುರಾದ ಮೋಡಗಳ ಸಮೂಹದ ಹಾಗೆ ತನಗೆ ಎದುರಾದ ಕಳಿಂಗರಾಜನ ಮದ್ದಾನೆಗಳ ಸಮೂಹವನ್ನು ಸಂಕಟಕ್ಕೀಡು ಮಾಡಿದನು. ಅಷ್ಟರಲ್ಲಿ ಈ ಕಡೆ ಶಲ್ಯನ ಸೈನ್ಯದಲ್ಲಿ/ ಯುದ್ಧದಲ್ಲಿ ಧರ್ಮರಾಜನು ಯುದ್ಧಮಾಡಿ ನಾಲ್ಕು ಮೊನಚಾದ ಬಾಣಗಳಿಂದ ಅವನ ತೇರು ಸಾರಥಿ ಧ್ವಜಗಳನ್ನು ಕತ್ತರಿಸಿ-.
ಕಂ|| ಉರಮಂ ಬಿರಿವಿನಮಿಸೆ ಮ
ದ್ರರಾಜನಳಿಯನ ಪರಾಕ್ರಮಕ್ಕೊಸೆದು ಮೊಗಂ|
ಮುರಿಯದೆ ಪೆಱತುಂ ರಥಮಂ
ತರಿಸಿ ಕನಲ್ದಡರ್ದು ಕದನಕಾಗಳೆ ನೆರೆದಂ|| ೧೦೭ ||
ಪದ್ಯ-೧೦೭:ಪದವಿಭಾಗ-ಅರ್ಥ:ಉರಮಂ ಬಿರಿವಿನಂ ಇಸೆ (ಶಲ್ಯನ ಎದೆಯನ್ನು ಬಿರಿದು ಹೋಗುವ ಹಾಗೆ ಹೊಡೆಯಲು) ಮದ್ರರಾಜನು ಅಳಿಯನ ಪರಾಕ್ರಮಕ್ಕೆ ಒಸೆದು (ಶಲ್ಯನು ಅಳಿಯನಾದ ಧರ್ಮರಾಜನ ಪರಾಕ್ರಮಕ್ಕೆ ಸಂತೋಷಪಟ್ಟು) ಮೊಗಂ ಮುರಿಯದೆ (ಬೇಸರದಿಂದ ಹಿಮ್ಮಟ್ಟದೆ) ಪೆಱತುಂ ರಥಮಂ ತರಿಸಿ (ಬೇರೊಂದು ರಥವನ್ನು ತರಿಸಿ) ಕನಲ್ದು ಅಡರ್ದು ಕದನಕೆ ಆಗಳೆ ನೆರೆದಂ(ಕೋಪದಿಂದ ಹತ್ತಿ ಆಗಲೇ ಯುದ್ಧಕ್ಕೆ ಸಿದ್ಧವಾದನು)
ಪದ್ಯ-೧೦೭:ಅರ್ಥ: ಶಲ್ಯನ ಎದೆಯನ್ನು ಬಿರಿದು ಹೋಗುವ ಹಾಗೆ ಹೊಡೆಯಲು, ಶಲ್ಯನು ಅಳಿಯನಾದ ಧರ್ಮರಾಜನ ಪರಾಕ್ರಮಕ್ಕೆ ಸಂತೋಷಪಟ್ಟು, ಹಿಮ್ಮಟ್ಟದೆ ಬೇರೊಂದು ರಥವನ್ನು ತರಿಸಿ ಕೋಪದಿಂದ ಹತ್ತಿ ಆಗಲೇ ಯುದ್ಧಕ್ಕೆ ಸಿದ್ಧವಾದನು.
ಮುಱಿದು ರಥಮಂ ರಥಾಶ್ವಮ
ನುಱದೆರಡುಂ ಶರದೆ ನಾಲ್ಕಱಿಂ ಸೂತನನೊಂ|
ದಱಿಕೆಯ ಸರಲೊಳ್ ಮಾಣದೆ
ತಱಿದಂ ಪೞವಿಗೆಯನೇಂ ಕೃತಾಸ್ತ್ರನೊ ಶಲ್ಯಂ|| ೧೦೮ ||
ಪದ್ಯ-೧೦೮:ಪದವಿಭಾಗ-ಅರ್ಥ:ಮುಱಿದು ರಥಮಂ ರಥಾಶ್ವಮನು ಉಱದೆ ಎರಡುಂ ಶರದೆ (ಶಲ್ಯನು ರಭಸದಿಂದ ಅವನ ತೇರನ್ನು ರಥದ ಕುದುರೆಯನ್ನೂ ಎರಡು ಬಾಣಗಳಿಂದ ಮುರಿದು,) ನಾಲ್ಕಱಿಂ ಸೂತನನು ಒಂದು ಅಱಿಕೆಯ ಸರಲೊಳ್ (ನಾಲ್ಕರಿಂದ ಸಾರಥಿಯನ್ನೂ ಒಂದು ಪ್ರಸಿದ್ಧವಾದ ಬಾಣದಿಂದ) ಮಾಣದೆ ತಱಿದಂ ಪೞವಿಗೆಯನು (ಧ್ವಜವನ್ನೂ ಬಿಡದೆ ತರಿದು ಹಾಕಿದನು.) ಏಂ ಕೃತಾಸ್ತ್ರನೊ ಶಲ್ಯಂ ()
ಪದ್ಯ-೧೦೮:ಅರ್ಥ: ಶಲ್ಯನು ರಭಸದಿಂದ ಅವನ ತೇರನ್ನು ರಥದ ಕುದುರೆಯನ್ನೂ ಎರಡು ಬಾಣಗಳಿಂದ ಮುರಿದು, ನಾಲ್ಕರಿಂದ ಸಾರಥಿಯನ್ನೂ ಒಂದು ಪ್ರಸಿದ್ಧವಾದ ಬಾಣದಿಂದ ಧ್ವಜವನ್ನೂ ಬಿಡದೆ ತರಿದು ಹಾಕಿದನು. ಶಲ್ಯನು ಶಸ್ತ್ರವಿದ್ಯೆಯಲ್ಲಿ ಮಹಾಪಂಡಿತನೋ! ಪಂಡಿತನೇ ಸರಿ!
ವ|| ಅಂತು ವಿರಥನಂ ಮಾಡಿ ಧರ್ಮಪುತ್ರನಂ ಪಿಡಿಯಲೆಯ್ತರ್ಪ ಮದ್ರರಾಜನಂ ಪನ್ನಿರ್ಛಾಸಿರಮಾನೆವೆರಸು ನೃಪನ ಚಕ್ರರಕ್ಷಕಂ ನೀಳನೆಡೆಗೊಂಡು ತಾಗಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ವಿರಥನಂ ಮಾಡಿ ಧರ್ಮಪುತ್ರನಂ (ಹಾಗೆ ಧರ್ಮರಾಜನನ್ನು ರಥವಿಲ್ಲದವನನ್ನಾಗಿ) ಪಿಡಿಯಲ್ ಐ/ಎಯ್ತರ್ಪ ಮದ್ರರಾಜನಂ (ಅವನನ್ನು ಹಿಡಿಯಲು ಬರುತ್ತಿದ್ದ ಶಲ್ಯನನ್ನು,) ಪನ್ನಿರ್ಛಾಸಿರಮಂ ಆನೆ ವೆರಸು (ಹನ್ನೆರಡು ಸಾವಿರ ಆನೆಗಳೊಡನೆ ಕೂಡಿ) ನೃಪನ ಚಕ್ರರಕ್ಷಕಂ ನೀಳನು ಎಡೆಗೊಂಡು ತಾಗಿದಾಗಳ್ (ಧರ್ಮರಾಜನ ಸೇನಾಪತಿ ಯಾದ ನೀಲನು ಮಧ್ಯೆ ನುಗ್ಗಿ ಪ್ರತಿಭಟಿಸಿದಾಗ-)
ವಚನ:ಅರ್ಥ:ಹಾಗೆ ಧರ್ಮರಾಜನನ್ನು ರಥವಿಲ್ಲದವನನ್ನಾಗಿ ಮಾಡಿ ಅವನನ್ನು ಹಿಡಿಯಲು ಬರುತ್ತಿದ್ದ ಶಲ್ಯನನ್ನು, ಧರ್ಮರಾಜನ ಸೇನಾಪತಿ ಯಾದ ನೀಲನು ಮಧ್ಯೆ ನುಗ್ಗಿ ಹನ್ನೆರಡು ಸಾವಿರ ಆನೆಗಳೊಡನೆ ಕೂಡಿ ಶಲ್ಯನನ್ನು ಎದುರಿಸಿದನು.
ಕಂ|| ಮೃಗರಾಜನಖರ ಬಾಣಾ
ಳಿಗಳಿಂ ತೆಗೆರೆನೆರೆದು ಶಲ್ಯನುಱದಿಸೆ ಬಿದುವಂ|
ಮೃಗರಾಜಂಗಳೆ ಪೋೞ್ವವೊ
ಲಗಲ್ವಿನಂ ಪೋೞ್ದುವುಗ್ರ ಬಾಣಾವಳಿಗಳ್|| ೧೦೯ ||
ಪದ್ಯ-೧೦೯:ಪದವಿಭಾಗ-ಅರ್ಥ:ಮೃಗರಾಜನಖರ ಬಾಣಾಳಿಗಳಿಂ (ಸಿಂಹದ ಉಗುರಿನಂತಿದ್ದ ಬಾಣಗಳ ಸಮೂಹದಿಂದ) ತೆಗೆರೆನೆರೆದು (ಪೂರ್ಣವಾಗಿ ಎಳೆದು) ಶಲ್ಯನು ಉಱದೆ ಇಸೆ (ಉರದೆ- ಬಿಡದೆ ಹೊಡೆಯಲು) ಬಿದುವಂ ಮೃಗರಾಜಂಗಳೆ ಪೋೞ್ವವೊಲ್ (ಹೋಳುವಂತೆ, ಸೀಳುವಂತೆ) ಅಗಲ್ವಿನಂ (ಅಗಲಿಸುವಂತೆ) (ಕುಂಭಸ್ಥಳಗಳನ್ನು ಸಿಂಹಗಳೇ ಸೀಳುವ ಹಾಗೆ) ಪೋೞ್ದುವು ಉಗ್ರ ಬಾಣಾವಳಿಗಳ್ (ಉಗ್ರ ಬಾಣಸಮೂಹಗಳು ಹೋಳಗಳಾಗುವ ಹಾಗೆ ಸೀಳಿ ಹಾಕಿದುವು)
ಪದ್ಯ-೧೦೯:ಅರ್ಥ:ಸಿಂಹದ ಉಗುರಿನಂತಿದ್ದ ಬಾಣಗಳ ಸಮೂಹದಿಂದ ಶಲ್ಯನು ಪೂರ್ಣವಾಗಿ ಎಳೆದು ಹೊಡೆಯಲಾಗಿ ಕುಂಭಸ್ಥಳಗಳನ್ನು ಸಿಂಹಗಳೇ ಸೀಳುವ ಹಾಗೆ ಆ ತೀಕ್ಷ್ಣವಾದ ಬಾಣಸಮೂಹಗಳು ಕುಂಭಸ್ಥಳಗಳನ್ನು ಬೇರೆಯಾಗುವ ಹಾಗೆ ಹೋಳಗಳಾಗುವ ಹಾಗೆ ಸೀಳಿ ಹಾಕಿದುವು.
ವ|| ಅಂತಾ ದಂತಿಘಟೆಯಂ ಪಡಲ್ವಡಿಸಿ ನೀಳನೇಱಿದಾನೆಯುಮನೂಱಿ ಕೊಂಡೆಚ್ಚಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಆ ದಂತಿಘಟೆಯಂ ಪಡಲ್ವಡಿಸಿ (ಆನೆಯ ಸಮೂಹವನ್ನು ಚೆಲ್ಲಾಪಿಲ್ಲಿಯಾಗುವ ಹಾಗೆ ಮಾಡಿ) ನೀಳನು ಏಱಿದ ಆನೆಯುಮಂ ಊಱಿ (ಊರಿ) ಕೊಂಡು ಎಚ್ಚಾಗಳ್ (ನೀಲನು ಹತ್ತಿದ ಆನೆಯನ್ನು ಬಲವಾಗಿ ಅಮುಕಿ ಹೊಡೆದಾಗ)-
ವಚನ:ಅರ್ಥ:ಹಾಗೆ ಆ ಆನೆಯ ಸಮೂಹವನ್ನು ಚೆಲ್ಲಾಪಿಲ್ಲಿಯಾಗುವ ಹಾಗೆ ಮಾಡಿ ನೀಲನು ಹತ್ತಿದ ಆನೆಯನ್ನೂ ಬಲವಾಗಿ ಅಮುಕಿ ಹೊಡೆದನು.
ಕಂ|| ಪೆಱಗಿಡುವ ದಂತಿಯಂ ಕಲಿ
ನಿಱಿಸಿ ಚಲಂ ನೆಲಸೆ ತೋಱಿಕುಡುವುದುಮಾಗಳ್|
ಪೊಱಮುಯ್ವುವರಂ ತೆಗೆನೆರೆ
ದುಱದೆಚ್ಚಂ ಶಲ್ಯನಾಂತ ನೀಳನ ತಲೆಯಂ|| ೧೧೦ ||
ಪದ್ಯ-೧೧೦:ಪದವಿಭಾಗ-ಅರ್ಥ:ಪೆಱಗಿಡುವ ದಂತಿಯಂ ಕಲಿ ನಿಱಿಸಿ (ನಿರಿಸಿ- ನಿಲ್ಲಿಸಿ; ಹಿಮ್ಮೆಟ್ಟುತ್ತಿದ್ದ ಆನೆಯನ್ನು ಶೂರನಾದ ನೀಲನು ನಿಲ್ಲಿಸಿ) ಚಲಂ ನೆಲಸೆ (ಹಟವು ಹೆಚ್ಚಲು, ಹೆಚ್ಚಿನ ಛಲದಿಂದ) ತೋಱಿ ಕುಡುವುದುಂ ಆಗಳ್ (ಶಲ್ಯನನ್ನು ತೋರಿಸಿ ಛೂಬಿಡಲು) ಪೊಱಮುಯ್ವುವರಂ (ಭುಜದವರೆಗೆ) ತೆಗೆನೆರೆದು(ಕಿವಿಯವರೆಗೆ ಎಳೆದು) ಉಱದೆ ಎಚ್ಚಂ (ಭುಜದವರೆಗೆ ಬಾಣಗಳನ್ನು ಸೆಳೆದು ಉರದೆ-ಸಾವಕಾಶ ಮಾಡದೆ- ಹೊಡೆದನು.) ಶಲ್ಯನು ಆಂತ ನೀಳನ ತಲೆಯಂ (ಆಗ ಶಲ್ಯನು ಪ್ರತಿಭಟಿಸಿದ ನೀಲನ ತಲೆಯನ್ನು)
ಪದ್ಯ-೧೧೦:ಅರ್ಥ: ಹಿಮ್ಮೆಟ್ಟುತ್ತಿದ್ದ ಆನೆಯನ್ನು ಶೂರನಾದ ನೀಲನು ನಿಲ್ಲಿಸಿ ಹೆಚ್ಚಿನ ಛಲದಿಂದ ಅದನ್ನು ಶಲ್ಯನ ಮೇಲೆ ತೋರಿಸಿ ಛೂಬಿಡಲು, ಆಗ ಶಲ್ಯನು ಭುಜದವರೆಗೆ ಬಾಣಗಳನ್ನು ಸೆಳೆದು ತನ್ನನ್ನು ಪ್ರತಿಭಟಿಸಿದ ನೀಲನ ತಲೆಯನ್ನು ಸಾವಕಾಶಮಾಡದೆ- ವೇಗವಾಗಿ ಹೊಡೆದನು.
ವ|| ಅಂತು ನೀಳಂ ನೀಳಗಿರಿಯ ಮೇಗಣಿಂ ಬಱಸಿಡಿಲ್ ಪೊಡೆಯೆ ಕೆಡೆವ ಮೃಗರಾಜನಂತೆ ಹಸ್ತಿಮಸ್ತಕದಿಂ ಕೆಡೆವುದುಮತ್ತ ಭೂರಿಶ್ರವನ ಮೊನೆಯೊಳ್ ಕಾದುತ್ತಿರ್ದುತ್ತರಂ ನಾಲ್ವತ್ತು ಸಾಸಿರಮಾನೆವೆರಸರಸನಂ ಪೆಱಗಿಕ್ಕಿ ಬಂದಾಂತಾಗಳ್-

ಉತ್ತರನ ಮರಣ[ಸಂಪಾದಿಸಿ]

ವಚನ:ಪದವಿಭಾಗ-ಅರ್ಥ:ಅಂತು ನೀಳಂ ನೀಳಗಿರಿಯ ಮೇಗಣಿಂ (ನೀಲನು ಬರಸಿಡಿಲು ಹೊಡೆಯಲು ನೀಲಪರ್ವತದ ಮೇಲಿನಿಂದ) ಬಱಸಿಡಿಲ್ ಪೊಡೆಯೆ ಕೆಡೆವ ಮೃಗರಾಜನಂತೆ (ವೇಗವಾಗಿ ಕೆಳಗುರುಳುವ ಸಿಂಹದ ಹಾಗೆ) ಹಸ್ತಿಮಸ್ತಕದಿಂ ಕೆಡೆವುದುಂ ಅತ್ತ (ಆನೆಯ ಕುಂಭಸ್ಥಳದಿಂದ ಕೆಳಗೆ ಬಿದ್ದನು. ಆ ಕಡೆ) ಭೂರಿಶ್ರವನ ಮೊನೆಯೊಳ್ ಕಾದುತ್ತಿರ್ದ ಉತ್ತರಂ (ಆ ಕಡೆ ಭೂರಿಶ್ರವನ ಯುದ್ಧದಲ್ಲಿ ಕಾದಾಡುತ್ತಿದ್ದ ಉತ್ತರನು) ನಾಲ್ವತ್ತು ಸಾಸಿರಂ ಆನೆವೆರಸು ಅರಸನಂ ಪೆಱಗಿಕ್ಕಿ ಬಂದು ಆಂತಾಗಳ್ (ನಲವತ್ತುಸಾವಿರ ಆನೆಯೊಡನೆ ಕೂಡಿ ಬಂದು ರಾಜನನ್ನು ಹಿಂದಿಕ್ಕಿ ಪ್ರತಿಭಟಿಸಿದಾಗ)-
ವಚನ:ಅರ್ಥ:ಹಾಗೆ ನೀಲನು ಬರಸಿಡಿಲು ಹೊಡೆಯಲು ನೀಲಪರ್ವತದ ಮೇಲಿನಿಂದ ವೇಗವಾಗಿ ಕೆಳಗುರುಳುವ ಸಿಂಹದ ಹಾಗೆ ಆನೆಯ ಕುಂಭಸ್ಥಳದಿಂದ ಕೆಳಗೆ ಬಿದ್ದನು. ಆ ಕಡೆ ಭೂರಿಶ್ರವನ ಯುದ್ಧದಲ್ಲಿ ಕಾದಾಡುತ್ತಿದ್ದ ಉತ್ತರನು ನಲವತ್ತುಸಾವಿರ ಆನೆಯೊಡನೆ ಕೂಡಿ ಬಂದು ರಾಜನನ್ನು ಹಿಂದಿಕ್ಕಿ ಪ್ರತಿಭಟಿಸಿದನು. ಆಗ-
ಚಂ|| ನಗೆ ಪಗೆವಾಡಿ ಗೋಗ್ರಹಣದೊಳ್ ಪೊಱಮಾಱಿದ ಬನ್ನಮೊಂದು ನೆ
ಟ್ಟಗೆ ಮನಮಂ ಪಳಂಚಲೆಯೆ ಮಾಣದೆ ಶಲ್ಯನನಂದಶಲ್ಯನಂ|
ಬಗೆವವೊಲೇಳಿದಂ ಬಗೆದು ದಂತಿಯನಾಗಡೆ ತೋಱಿಕೊಟ್ಟು ತೊ
ಟ್ಟಗೆ ರಥಮಂ ಪಡಲ್ವಡಿಸಿ ಪೊೞ್ದನರಾತಿಯನಸ್ತ್ರಕೋಟಿಯಿಂ|| ೧೧೧||
ಪದ್ಯ-೧೧೧:ಪದವಿಭಾಗ-ಅರ್ಥ:ನಗೆ ಪಗೆವಾಡಿ ಗೋಗ್ರಹಣದೊಳ್ ಪೊಱಮಾಱಿದ ಬನ್ನಮೊಂದು (ಗೋಗ್ರಹಣಕಾಲದಲ್ಲಿ ಶತ್ರುಸೈನ್ಯವು ನುಗ್ಗುವ ಹಾಗೆ ಬೆನ್ನಿತ್ತುಹೋದ ಅವಮಾನವೊಂದು) ನೆಟ್ಟಗೆ ಮನಮಂ ಪಳಂಚಲೆಯೆ (ನೇರವಾಗಿ ತನ್ನ ಮನಸ್ಸನ್ನು ತಗುಲಿ ಹಿಂಸಿಸಲು) ಮಾಣದೆ ಶಲ್ಯನಂ ಅಂದು ಅಶಲ್ಯನಂ ಬಗೆವವೊಲು ಏಳಿದಂ ಬಗೆದು (ತಡೆಯದೆ ಉತ್ತರನು ಶತ್ರುರಾಜನನ್ನು ಅಸ್ತ್ರರಹಿತನಾದವನನ್ನು ನೋಡುವ ಹಾಗೆ ಉದಾಸೀನದಿಂದ ಕಡೆಗಣಿಸಿ ನೋಡಿ) ದಂತಿಯನು ಆಗಡೆ ತೋಱಿಕೊಟ್ಟು ತೊಟ್ಟಗೆ (ಆಗ ತನ್ನ ಆನೆಯನ್ನು ಅವನ ಮೇಲೆ ಛೂಬಿಟ್ಟು ಒಮ್ಮೆಯೇ) ರಥಮಂ ಪಡಲ್ವಡಿಸಿ (ರಥವನ್ನು ಕೆಳಗುರುಳಿಸಿ ಶತ್ರುವನ್ನು ಬಾಣಸಮೂಹದಿಂದ ಹೂಳಿದನು.) ಪೊೞ್ದನ್ (ಹೂಳಿದನು) (ಆ) ಅರಾತಿಯನು ಅಸ್ತ್ರಕೋಟಿಯಿಂ (ಬಾಣಸಮೂಹದಿಂದ ಹೂಳಿದನು.)
ಪದ್ಯ-೧೧೧:ಅರ್ಥ:ಉತ್ತರನಿಗೆ, ಹಿಂದೆ ಗೋಗ್ರಹಣಕಾಲದಲ್ಲಿ ಶತ್ರುಸೈನ್ಯವು ನುಗ್ಗುವ ಹಾಗೆ ಬೆನ್ನಿತ್ತುಹೋದ ಅವಮಾನವು ನೇರವಾಗಿ ತನ್ನ ಮನಸ್ಸನ್ನು ತಗುಲಿ ಹಿಂಸಿಸಲು ತಡೆಯದೆ ಉತ್ತರನು ಶತ್ರುರಾಜನನ್ನು ಅಸ್ತ್ರರಹಿತನಾದವನನ್ನು ನೋಡುವ ಹಾಗೆ ಉದಾಸೀನದಿಂದ ಕಡೆಗಣಿಸಿ ನೋಡಿ (ತನ್ನ) ಆನೆಯನ್ನು ಅವನ ಮೇಲೆ ಛೂಬಿಟ್ಟು ಒಮ್ಮೆಯೇ ರಥವನ್ನು ಕೆಳಗುರುಳಿಸಿ ಶತ್ರುವನ್ನು ಬಾಣಸಮೂಹದಿಂದ ಹೂಳಿದನು.
ವ|| ಅಂತುತ್ತರಂ ತನಗಳವುಮದಟುಂ ರಾಜೋತ್ತರಮಾಗೆ ಕಾದಿದೊಡೆ ಶಲ್ಯಂ ವಿರಥನಾಗಿ ಸಿಗ್ಗಾಗಿ-
ವಚನ:ಪದವಿಭಾಗ-ಅರ್ಥ:ಅಂತು ಉತ್ತರಂ ತನಗೆ ಅಳವುಂ ಅದಟುಂ (ಪರಾಕ್ರಮವೂ ಶಕ್ತಿಯೂ) ರಾಜೋತ್ತರಂ ಆಗೆ (ರಾಜಯೋಗ್ಯವಾಗುವಂತೆ) ಕಾದಿದೊಡೆ ಶಲ್ಯಂ ವಿರಥನಾಗಿ (ಯುದ್ಧಮಾಡಲು ಶಲ್ಯನು ರಥಹೀನನಾಗಿ ) ಸಿಗ್ಗಾಗಿ (ಅವಮಾನಗೊಂಡು-)-
ವಚನ:ಅರ್ಥ:ವ|| ಹಾಗೆ ಉತ್ತರನು ತನಗೆ ಪರಾಕ್ರಮವೂ ಶಕ್ತಿಯೂ ರಾಜಯೋಗ್ಯವಾಗುವಂತೆ ಯುದ್ಧಮಾಡಲು ಶಲ್ಯನು ರಥಹೀನನಾಗಿ ಅವಮಾನಗೊಂಡು-
ಉ|| ತಾರಕನಂ ಗುಹಂ ಮುಳಿದು ಶಕ್ತಿಯಿನಾಂತಿಡುವಂತರಾತಿ ಸಂ
ಹಾರಕವಪ್ಪ ವಿಸ್ಫುರಿತ ಶಕ್ತಿಯಿನಾತನನಿಟ್ಟು ಖೞ್ಗದಿಂ|
ವಾರಣಮಂ ಪಡಲ್ವಡಿಸಿ ತಾಂ ಪೆಱಪಿಂಗುವುದುಂ ಬಲಕ್ಕೆ ಹಾ
ಹಾ ರವಮುಣ್ಮೆ ದಂತಿವೆರಸಾಜಿಯೊಳುತ್ತರನೞ್ಗಿ ತೞ್ಗಿದಂ|| ೧೧೨ ||
ಪದ್ಯ-೧೧೨:ಪದವಿಭಾಗ-ಅರ್ಥ:ತಾರಕನಂ ಗುಹಂ ಮುಳಿದು (ತಾರಕಾಸುರನನ್ನು ಷಣ್ಮುಖನು ಸಿಟ್ಟಿನಿಂದ ಎದುರಿಸಿ) ಶಕ್ತಿಯಿಂ ಆಂತು ಇಡುವಂತೆ ಆರಾತಿ ಸಂಹಾರಕವಪ್ಪ (ಶಕ್ತ್ಯಾಯುಧದಿಂದ ತೆಗೆದುಕೊಂಡು ಹೊಡೆದ ಹಾಗೆ ಶತ್ರುಸಂಹಾರವೂ ಕಾಂತಿಯುಕ್ತವೂ ಆದ) ವಿಸ್ಫುರಿತ ಶಕ್ತಿಯಿಂ ಆತನನು ಇಟ್ಟು (ಶಕ್ತ್ಯಾಯುಧದಿಂದ ಉತ್ತರನನ್ನು ಹೊಡೆದು) ಖೞ್ಗದಿಂ ವಾರಣಮಂ ಪಡಲ್ವಡಿಸಿ (ತನ್ನ ಖಡ್ಗದಿಂದ ಆನೆಯನ್ನು ಕೆಳಗುರುಳಿಸಿ) ತಾಂ ಪೆಱಪಿಂಗುವುದುಂ (ಶಲ್ಯನು ತಾನು ಹಿಂದೆ ಸರಿಯುತ್ತಿರಲು) ಬಲಕ್ಕೆ ಹಾಹಾ ರವಮುಣ್ಮೆ (ಪಾಂಡವಸೈನ್ಯದಲ್ಲಿ ಹಾ ಹಾ ಕಾರ ಕೂಗನ್ನುಂಟುಮಾಡಿ) ದಂತಿವೆರಸು ಆಜಿಯೊಳು ಉತ್ತರನು ಅೞ್ಗಿ ತೞ್ಗಿದಂ(ಉತ್ತರನು ಆನೆಯೊಡನೆ ಸತ್ತು ಕೆಳಗುರುಳಿದನು)
ಪದ್ಯ-೧೧೨:ಅರ್ಥ:ಹಿಂದೆ ತಾರಕಾಸುರನನ್ನು ಷಣ್ಮುಖನು ಸಿಟ್ಟಿನಿಂದ ಎದುರಿಸಿ ಶಕ್ತ್ಯಾಯುಧದಿಂದ ತೆಗೆದುಕೊಂಡು ಹೊಡೆದ ಹಾಗೆ ಶತ್ರುಸಂಹಾರವೂ ಕಾಂತಿಯುಕ್ತವೂ ಆದ ಶಕ್ತ್ಯಾಯುಧದಿಂದ ಉತ್ತರನನ್ನು ಹೊಡೆದು ಆತನ ಆನೆಯನ್ನು ಕೆಳಗುರುಳಿಸಿದನು. ಪಾಂಡವಸೈನ್ಯದಲ್ಲಿ ಹಾ ಹಾ ಕಾರ ಕೂಗನ್ನುಂಟುಮಾಡಿ ಶಲ್ಯನು ತಾನು ಹಿಂದೆ ಸರಿಯುತ್ತಿರಲು ಯುದ್ಧದಲ್ಲಿ ಉತ್ತರನು ಆನೆಯೊಡನೆ ಸತ್ತು ಕೆಳಗುರುಳಿದನು (ಕುಸಿದನು).
ವ|| ಅಂತುತ್ತರನಂ ಜವಂಗೆ ಪೊಸತಿಕ್ಕುವಂತಿಕ್ಕಿ ಬಸವೞಿದ ಶಲ್ಯನಂ ಕೃತವರ್ಮಂ ತನ್ನ ರಥಮನೇಱಿಸಿಕೊಂಡು ನಿಂದನನ್ನೆಗ ಮಿತ್ತಲಮರಾಪಗಾಸುತನ ಮೊನೆಯೊಳ್ ಭರಂಗೆಯ್ದು ಕಾದುವ ಸೇನಾನಾಯಕಂ ಶ್ವೇತಂ ತನ್ನ ತಮ್ಮನತೀತನಾದುದಂ ಕೇಳ್ದು-
ವಚನ:ಪದವಿಭಾಗ-ಅರ್ಥ: ಅಂತು ಉತ್ತರನಂ ಜವಂಗೆ ಪೊಸತಿಕ್ಕುವಂತೆ ಇಕ್ಕಿ (ಉತ್ತರನನ್ನು ಯಮನಿಗೆ ಹೊಸದಾಗಿ ಬಲಿ ಕೊಡುವ ಹಾಗೆ ಬಲಿಕೊಟ್ಟು) ಬಸವೞಿದ ಶಲ್ಯನಂ ಕೃತವರ್ಮಂ ತನ್ನ ರಥಮನು ಏಱಿಸಿಕೊಂಡು (ಶಕ್ತಿಗುಂದಿದ ಶಲ್ಯನನ್ನು ಕೃತವರ್ಮನು ತನ್ನ ರಥದಲ್ಲಿ ಹತ್ತಿಕೊಂಡು) ನಿಂದನು ಅನ್ನೆಗಂ ಇತ್ತಲ್ ಅಮರಾಪಗಾಸುತನ (ಅಷ್ಟರಲ್ಲಿ ಈಕಡೆ ಭೀಷ್ಮನು; ಅಮರಾಪಗಾ ಸುತ - ಸ್ವರ್ಗದಿಂದ ಇಳಿದ ಗಂಗೆಯ ಮಗ) ಮೊನೆಯೊಳ್ (ಯುದ್ಧದಲ್ಲಿ) ಭರಂಗೆಯ್ದು ಕಾದುವ ಸೇನಾನಾಯಕಂ ಶ್ವೇತಂ (ಆರ್ಭಟಿಸಿ ವೇಗದಿಂದ ಯುದ್ಧಮಾಡುತ್ತಿದ್ದ ಸೇನಾನಾಯಕನಾದ ಶ್ವೇತನು) ತನ್ನ ತಮ್ಮನು ಅತೀತನಾದುದಂ ಕೇಳ್ದು (ಸತ್ತುಹೋದುದನ್ನು ಕೇಳಿ)-
ವಚನ:ಅರ್ಥ:ಹಾಗೆ ಉತ್ತರನನ್ನು ಯಮನಿಗೆ ಹೊಸದಾಗಿ ಬಲಿ ಕೊಡುವ ಹಾಗೆ ಬಲಿಕೊಟ್ಟು ಶಕ್ತಿಗುಂದಿದ ಶಲ್ಯನನ್ನು ಕೃತವರ್ಮನು ತನ್ನ ರಥದಲ್ಲಿ ಹತ್ತಿಕೊಂಡು ತಾನು ಯುದ್ಧಕ್ಕೆ ನಿಂತನು. ಅಷ್ಟರಲ್ಲಿ ಈಕಡೆ ಭೀಷ್ಮನು ಯುದ್ಧದಲ್ಲಿ ಆರ್ಭಟಿಸಿ ವೇಗದಿಂದ ಯುದ್ಧಮಾಡುತ್ತಿದ್ದ ಸೇನಾನಾಯಕನಾದ ಶ್ವೇತನು ತನ್ನ ತಮ್ಮನು ಸತ್ತುಹೋದುದನ್ನು ಕೇಳಿದನು-
ಚಂ|| ಪ್ರಳಯಪಯೋಧಿವೋಲಳುರ್ದು ಪೆಂಕುಳಿಗೊಂಡ ಮದೇಭವೈರಿವೋಲ್
ಕೆಳರ್ದು ಲಯಾಗ್ನಿವೋಲಳುರ್ದು ಮದ್ರಮಹೀಶನನೆಯ್ದೆ ತಾಗೆ ಬ|
ಳ್ವಳ ಬಳೆದತ್ತು ಶಲ್ಯನೊಳೆ ಕಾಳೆಗಮೀಗಳೆನುತ್ತುಮಂತೆ ಕೆ
ಯ್ಕೊಳಲಹಿಕೇತು ಸಿಂಧುತನಯಂಬೆರಸಾಗಡೆ ಬಂದು ತಾಗಿದಂ|| ೧೧೩
ಪದ್ಯ-೧೧೩:ಪದವಿಭಾಗ-ಅರ್ಥ:ಪ್ರಳಯಪಯೋಧಿವೋಲ್ ಅಳುರ್ದು (ಪ್ರಳಯಕಾಲದ ಸಮುದ್ರದಂತೆ ವ್ಯಾಪಿಸಿ) ಪೆಂಕುಳಿಗೊಂಡ ಮದೇಭವೈರಿವೋಲ್ ಕೆಳರ್ದು (ಹುಚ್ಚುಹಿಡಿದ ಸಿಂಹದಂತೆ ಕೆರಳಿ,) ಲಯಾಗ್ನಿವೋಲ್ ಅಳುರ್ದು (ಪ್ರಳಯಾಗ್ನಿಯಂತೆ ಹರಡಿ) ಮದ್ರಮಹೀಶನನು ಎಯ್ದೆ ತಾಗೆ (ಶಲ್ಯರಾಜನನ್ನು ವೇಗದಿಂದ ಬಂದು ಎದುರಿಸಿದನು. ಹೀಗೆ ತಾಗಲು,) ಬಳ್ವಳ ಬಳೆದತ್ತು ಶಲ್ಯನೊಳೆ ಕಾಳೆಗಂ ಈಗಳೆ ಎನುತ್ತುಂ (ಈಗ ಶಲ್ಯನಲ್ಲಿ ಯುದ್ಧವು ಶಕ್ತಿಮೀರಿ ಅಧಿಕವಾಗಿ ಬೆಳೆದಿದೆ ಎಂದು ಹೇಳುತ್ತಾ )ಅಂತೆ ಕೆಯ್ಕೊಳಲ್ (ತಾನೇ ವಹಿಸಿಕೊಳ್ಳಲು) ಅಹಿಕೇತು (ಅಹಿ- ಸರ್ಪ ಕೇತನ- ಧ್ವಜದವ; ಹಾಗೆಯೇ ದುರ್ಯೋಧನನು ಶಲ್ಯನನ್ನು ರಕ್ಷಿಸುವುದಕ್ಕಾಗಿ ಆ ಯುದ್ಧಭಾರವನ್ನು ತಾನೇ ವಹಿಸುವುದಕ್ಕಾಗಿ) ಸಿಂಧುತನಯಂಬೆರಸು ಆಗಡೆ ಬಂದು ತಾಗಿದಂ (ಭೀಷ್ಮನೊಡನೆ ಅಲ್ಲಿಗೆ ಬಂದು ಯುದ್ಧಕ್ಕೆನಿಂತನು. )
ಪದ್ಯ-೦೦:ಅರ್ಥ:ಸೇನಾಧಿಪತಿ ದ್ರುಪದನ ಮಗ ಶ್ವೇತನು ಪ್ರಳಯಕಾಲದ ಸಮುದ್ರದಂತೆ ವ್ಯಾಪಿಸಿ ಹುಚ್ಚುಹಿಡಿದ ಸಿಂಹದಂತೆ ಕೆರಳಿ, ಪ್ರಳಯಾಗ್ನಿಯಂತೆ ಹರಡಿ ಸುಟ್ಟು, ಶಲ್ಯರಾಜನನ್ನು ವೇಗದಿಂದ ಬಂದು ಎದುರಿಸಿದನು/ ತಾಗಲು. ಈಗ ಶಲ್ಯನಲ್ಲಿ ಯುದ್ಧವು ಶಕ್ತಿಮೀರಿ ಅಧಿಕವಾಗಿ ಬೆಳೆದಿದೆ ಎಂದು ಹೇಳುತ್ತಾ, ಕೂಡಲೆ ದುರ್ಯೋಧನನು ಶಲ್ಯನನ್ನು ರಕ್ಷಿಸುವುದಕ್ಕಾಗಿ ಆ ಯುದ್ಧಭಾರವನ್ನು ತಾನೇ ವಹಿಸುವುದಕ್ಕಾಗಿ ಭೀಷ್ಮನೊಡನೆ ಅಲ್ಲಿಗೆ ಬಂದು ಯುದ್ಧಕ್ಕೆನಿಂತನು.
ವ|| ಇತ್ತ ಧರ್ಮಪುತ್ರನುಂ ವಿರಾಟ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಕೇಕಯ ಸಾತ್ಯಕಿ ನಕುಳ ಸಹದೇವ ಸೌಭದ್ರ ಪ್ರಮುಖ ನಾಯಕರ್ವೆರಸು ರಣಪಟಹಂಗಳಂ ನೆಗೞ್ಚೆ ಕೃಪ ಕೃತವರ್ಮ ವಿವಿಂಶತಿ ವಿಕರ್ಣ ಚಿತ್ರಸೇನ ಸೋಮದತ್ತ ಭಗದತ್ತ ಬಾಹ್ಲೀಕ ಭೂರಿಶ್ರವ ಪ್ರಭೃತಿಗಳ್ ಗಱಿಸನ್ನೆಗೈದು ಕಾದುವಾಗಳ್-
ವಚನ:ಪದವಿಭಾಗ-ಅರ್ಥ:ಇತ್ತ ಧರ್ಮಪುತ್ರನುಂ ವಿರಾಟ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಕೇಕಯ ಸಾತ್ಯಕಿ ನಕುಳ ಸಹದೇವ ಸೌಭದ್ರ ಪ್ರಮುಖ ನಾಯಕರ್ವೆರಸು (ನಾಯಕರೊಡಗೂಡಿ) ರಣಪಟಹಂಗಳಂ ನೆಗೞ್ಚೆ (ರಣಭೇರಿಯನ್ನು ಹೊಡೆಯಿಸಿ) ಕೃಪ ಕೃತವರ್ಮ ವಿವಿಂಶತಿ ವಿಕರ್ಣ ಚಿತ್ರಸೇನ ಸೋಮದತ್ತ ಭಗದತ್ತ ಬಾಹ್ಲೀಕ ಭೂರಿಶ್ರವ ಪ್ರಭೃತಿಗಳ್ ಗಱಿ ಸನ್ನೆಗೈದು (ಬಾಣದ ಗರಿಗಳಿಂದಲೇ ಸನ್ನೆಮಾಡಿ) ಕಾದುವಾಗಳ್-
ವಚನ:ಅರ್ಥ:ಈ ಕಡೆ ಧರ್ಮರಾಜನೂ ವಿರಾಟ, ಧೃಷ್ಟದ್ಯುಮ್ನ, ಶಿಖಂಡಿ, ಚೇಕಿತಾನ, ಕೇಕಯ, ಸಾತ್ಯಕಿ, ನಕುಲ, ಸಹದೇವ, ಅಭಿಮನ್ಯುವೇ ಮೊದಲಾದ ನಾಯಕರೊಡಗೂಡಿ ಯುದ್ಧರಂಗಕ್ಕೆ ಬಂದು ರಣಭೇರಿಯನ್ನು ಹೊಡೆಯಿಸಿದನು. ಕೃಪ, ಕೃತವರ್ಮ, ವಿವಿಂಶತಿ, ವಿಕರ್ಣ, ಚಿತ್ರಸೇನ, ಸೋಮದತ್ತ, ಭಗದತ್ತ, ಬಾಹ್ಲಿಕ, ಭೂರಿಶ್ರವರೇ ಮೊದಲಾದ ಪ್ರತಿಪಕ್ಷದವರು ಬಾಣದ ಗರಿಗಳಿಂದಲೇ ಸನ್ನೆಮಾಡಿ ಯುದ್ಧಮಾಡಲು ಪ್ರಾರಂಭಿಸಿದರು. ಆಗ-
ಚಂ|| ನಡುವ ಸರಲ್ ಸರಲ್ಕೊಳೆ ಸುರುಳ್ವ ಹಯಂ ಹಯದುಳ್ಗರುಳ್ಗಳೊಳ್
ತೊಡರ್ವ ಭಟರ್ ಭಟರ್ಕಳೊಳೆ ತೊೞ್ತುೞಿಮಾೞ್ಪ ರಥಂ ರಥಕ್ಕೆ ವಾ|
ಯ್ದಡಿಗಿಡೆ ಮೆಯ್ವೊಣರ್ಚುವ ಮಹಾರಥರಾಜಿಯೊಳಂತಗುರ್ವಿನ
ಚ್ಚುಡಿದಿರೆ ಕಾದಿ ಬಿಚ್ಚೞಸಿದರ್ ಬಿಸುನೆತ್ತರ ಸುಟ್ಟುರೆ ಸೂಸುವನ್ನೆಗಂ|| ೧೧೪ ||
ಪದ್ಯ-೧೧೪:ಪದವಿಭಾಗ-ಅರ್ಥ: ನಡುವ ಸರಲ್ (ನಾಟುವ ಬಾಣಗಳು) ಸರಲ್ಕೊಳೆ ಸುರುಳ್ವ ಹಯಂ (ಬಾಣ ನಾಟಲು ಬೀಳುವ ಸುರುಳಿಕೊಂಡು ಕುದುರೆಗಳು) ಹಯದ ಉಳ್ಗರುಳ್ಗಳೊಳ್ ತೊಡರ್ವ ಭಟರ್ (ಕುದುರೆಗಳ ಒಳಗರುಳಿನಲ್ಲಿ ಸಿಕ್ಕಿಕೊಳ್ಳುವ ಶೂರರು) ಭಟರ್ಕೊಳೊಳೆ (ಭಟರಲ್ಲಿಯೇ) ತೊೞ್ತು ಉೞಮಾೞ್ಪ ರಥಂ (ತಾಗಿಕೊಂಡು ಪಡಿಮಾಡುವ ರಥಗಳು) ರಥಕ್ಕೆ ವಾಯ್ದು ಅಡಿಗಿಡೆ (ಹತ್ತುವಾಗ ಪಾದ ಜಾರಲು) ಮೆಯ್ ಒಣರ್ಚುವ ಮಹಾರಥರಾಜಿಯೊಳ್ (ಮಹಾರಥರು ನುಗ್ಗಿ ತೇರನ್ನು ಹತ್ತುವಾಗ ಕಾಲು ಜಾರಿ ಮೈಯನ್ನು ಸೇರುವವರು,) ಅಂತು ಅಗುರ್ವಿಂ ಅಚ್ಚು ಉಡಿದಿರೆ ಕಾದಿ ( ಹಾಗೆ ಭಯದ ಭಾವವು ಕುಗ್ಗಿರಲು ಯುಧ್ಧಮಾಡಿ) ಬಿಚ್ಚೞಸಿದರ್ (ವಿಸ್ತಸಿದರು) ಬಿಸುನೆತ್ತರ್ ಅಸುಟ್ಟುರೆ? ಸೂಸುವನ್ನೆಗಂ (ಬಿಸಿರಕ್ತದ ಪ್ರವಾಹವು ಹರಿಯುವವರೆಗೆ ಅದ್ಭುತವಾಗಿ ವಿಸ್ತರಿಸಿ ಯುದ್ಧಮಾಡಿದರು)
ಪದ್ಯ-೦೦:ಅರ್ಥ: ನಾಟುವ ಬಾಣಗಳು, ಬಾಣ ನಾಟಲು ಬೀಳುವ ಸುರುಳಿಕೊಂಡು ಕುದುರೆಗಳು, ಕುದುರೆಗಳ ಒಳಗರುಳಿನಲ್ಲಿ ಸಿಕ್ಕಿಕೊಳ್ಳುವ ಶೂರರು. ಅವರನ್ನು ತಾಗಿ ಪಡಿಮಾಡುವ ರಥಗಳು ( ಹರಿದು ಅವರನ್ನು ಅಜ್ಜುಗುಜ್ಜಿ ಮಾಡುವ ತೇರುಗಳು.) ಮಹಾರಥರು ನುಗ್ಗಿ ತೇರನ್ನು ಹತ್ತುವಾಗ ಕಾಲು ಜಾರಿ ಮುರಿದು ಬಿದ್ದು ನೆಲಕ್ಕೆ ಸೇರುವವರು, ಹಾಗೆ ಭಯದ ಭಾವವು ಕುಗ್ಗಿರಲು ಯುಧ್ಧಮಾಡಿ ಬಿಸಿರಕ್ತದ ಪ್ರವಾಹವು ಹರಿಯುವವರೆಗೆ ಅದ್ಭುತವಾಗಿ ಯುದ್ಧಮಾಡಿದರು
ವ|| ಅಂತೆರಡುಂ ಪಡೆಯ ನಾಯಕರೊರ್ವರೊರ್ವರೊಳ್ ತಲೆಮಟ್ಟು ಕಾದುವಾಗಳ್ ಶ್ವೇತಂ ತನ್ನ ತಮ್ಮನ ಅೞಿವಿನೊಳಾದ ಮುಳಿಸಿನೊಳ್ ಕಣ್ಗಾಣದೆ ಶಲ್ಯನಂ ಮುಟ್ಟೆವಂದು-
ವಚನ:ಪದವಿಭಾಗ-ಅರ್ಥ: ಅಂತು ಎರಡುಂ ಪಡೆಯ ನಾಯಕರ್ ಒರೊರ್ವರೊಳ್ ತಲೆಮಟ್ಟು ಕಾದುವಾಗಳ್ (ಪರಸ್ಪರ ಕೊನೆಮುಟ್ಟುವಂತೆ ಯುದ್ಧಮಾಡುತ್ತಿದ್ದಾಗ) ಶ್ವೇತಂ ತನ್ನ ತಮ್ಮನ ಅೞಿವಿನೊಳು () ಆದ ಮುಳಿಸಿನೊಳ್ (ಸಾವಿನಿಂದ ಆದ ಕೋಪದಿಂದ) ಕಣ್ಗಾಣದೆ ಶಲ್ಯನಂ ಮುಟ್ಟೆವಂದು (ಶಲ್ಯನ ಸಮೀಪಕ್ಕೆ ಬಂದು)-
ವಚನ:ಅರ್ಥ: ವ|| ಹಾಗೆ ಎರಡುಸೈನ್ಯದ ನಾಯಕರೂ ಪರಸ್ಪರ ಕೊನೆಮುಟ್ಟುವಂತೆ ಯುದ್ಧಮಾಡುತ್ತಿದ್ದಾಗ, ಶ್ವೇತನು ತನ್ನ ತಮ್ಮನ ಸಾವಿನಿಂದ ಆದ ಕೋಪದಿಂದ ಮುಂದಾಲೋಚನೆಯಿಲ್ಲದೆ ಶಲ್ಯನ ಸಮೀಪಕ್ಕೆ ಬಂದನು.
ಚಂ|| ಮುಳಿಸಿನೊಳೆಯ್ದೆ ಕೆಂಪಡರ್ದ ಕಣ್ಗಳಿನೊರ್ಮೆಯೆ ನುಂಗುವಂತಸುಂ
ಗೊಳೆ ನಡೆ ನೋಡಿ ಮಾಣದುರಮಂ ಬಿರಿಯೆಚ್ಚೊಡೆ ಸೂಸಿ ಪಾಯ್ವಸೃ|
ಗ್ಜಳಮವನುಗ್ರ ಕೋಪಶಿಖಿ ತಳ್ತಳುರ್ವಂತೆವೊಲಾಗೆ ಶಲ್ಯನಾ
ಗಳೆ ರಣದೊಳ್ ನೆಱಲ್ದೊಡವನಂ ಪೆಱಗಿಕ್ಕಿ ಸುರಾಪಗಾತ್ಮಜಂ|| ೧೧೫
ಪದ್ಯ-೧೧೫:ಪದವಿಭಾಗ-ಅರ್ಥ: ಮುಳಿಸಿನೊಳು ಎಯ್ದೆ ಕೆಂಪಡರ್ದ ಕಣ್ಗಳಿಂ ಒರ್ಮೆಯೆ ನುಂಗುವಂತೆ ಅಸುಂಗೊಳೆ (ಕೋಪದಿಂದ ವಿಶೇಷವಾಗಿ ಕೆಂಪೇರಿದ್ದ ಕಣ್ಣುಗಳಿಂದ ಒಂದೇಸಲ ನುಂಗುವಹಾಗೆಯೂ ಪ್ರಾಣಾಪಹಾರ ಮಾಡುವ ಹಾಗೆ) ನಡೆ ನೋಡಿ ಮಾಣದೆ ಉರಮಂ ಬಿರಿಯೆ ಎಚ್ಚೊಡೆ (ಗುರಿಯಿಟ್ಟು ನೋಡಿ ಅಷ್ಟಕ್ಕೇ ಬಿಡದೆ ಎದೆಯು ಸೀಳುವ ಹಾಗೆ ಹೊಡೆದಾಗ) ಸೂಸಿ ಪಾಯ್ವ (ಚೆಲ್ಲಿ ಹರಿಯುವ) ಅಸೃಗ್ ಜಳಂ (ರಕ್ತದನೀರು - ರಕ್ತವು) ಅವನ ಉಗ್ರ ಕೋಪಶಿಖಿ ತಳ್ತ ಅಳುರ್ವಂತೆವೊಲ್ ಆಗೆ (ಅವನ ತೀಕ್ಷ್ಣವಾದ ಕೋಪಾಗ್ನಿಯು ಸೇರಿ ವ್ಯಾಪಿಸುವ ಹಾಗೆ) ಶಲ್ಯನು ಆಗಳೆ ರಣದೊಳ್ ನೆಱಲ್ದೊಡೆ ಅವನಂ ಪೆಱಗಿಕ್ಕಿ (ಶಲ್ಯನು ಆಗಲೇ ಯುದ್ಧದಲ್ಲಿ ನಿಶ್ಚೇಷ್ಟನಾಗಲು ಭೀಷ್ಮನು ಅವನನ್ನು ಹಿಂದಿಕ್ಕಿದನು-) ಸುರಾಪಗಾತ್ಮಜಂ (ಭೀಷ್ಮನು )
ಪದ್ಯ-೧೧೫:ಅರ್ಥ:ಕೋಪದಿಂದ ವಿಶೇಷವಾಗಿ ಕೆಂಪೇರಿದ್ದ ಕಣ್ಣುಗಳಿಂದ ಒಂದೇಸಲ ನುಂಗುವಹಾಗೆಯೂ ಪ್ರಾಣಾಪಹಾರ ಮಾಡುವ ಹಾಗೆಯೂ ಗುರಿಯಿಟ್ಟು ನೋಡಿ ಅಷ್ಟಕ್ಕೇ ಬಿಡದೆ ಎದೆಯು ಸೀಳುವ ಹಾಗೆ ಹೊಡೆದಾಗ ಅದರಿಂದ ಶ್ವೇತನ ತೀಕ್ಷ್ಣವಾದ ಕೋಪಾಗ್ನಿಯು ಸೇರಿ ವ್ಯಾಪಿಸುವ ಹಾಗೆ ರಕ್ತಪ್ರವಾಹವು ಹರಿಯಿತು. ಶಲ್ಯನು ಆಗಲೇ ಯುದ್ಧದಲ್ಲಿ ನಿಶ್ಚೇಷ್ಟನಾದನು. ಭೀಷ್ಮನು ಅವನನ್ನು ಹಿಂದಿಕ್ಕಿ ತಾನು ಮುನ್ನುಗ್ಗಿದನು.
ವ|| ಅಂತು ಪ್ರಳಯಕಾಲದಂದು ಮೂಡುವ ಪನ್ನಿರ್ವರಾದಿತ್ಯರ ತೇಜಮುಮಂ ಮಹೇಶ್ವರ ಭೈರವಾಡಂಬರಮುಮಂ ಯುಗಾಂತ ಕಾಲಾಂತಕನ ಮಸಕಮುಮಂ ತನ್ನೊಳಳವಡಿಸಿಕೊಂಡು-
ವಚನ:ಪದವಿಭಾಗ-ಅರ್ಥ:ಅಂತು ಪ್ರಳಯಕಾಲದಂದು ಮೂಡುವ ಪನ್ನಿರ್ವರಾದಿತ್ಯರ ತೇಜಮುಮಂ (ದ್ವಾದಶಾದಿತ್ಯರ ತೇಜಸ್ಸನ್ನು) ಮಹೇಶ್ವರ ಭೈರವಾಡಂಬರಮುಮಂ (ಮಹೇಶ್ವರನ ಭಯಂಕರವಾದ ಅಟಾಟೋಪವನ್ನು) ಯುಗಾಂತ ಕಾಲಾಂತಕನ ಮಸಕಮುಮಂ (ಯುಗಾಂತದ ಯಮನ ರೇಗುವಿಕೆಯನ್ನು) ತನ್ನೊಳು ಅಳವಡಿಸಿಕೊಂಡು-
ವಚನ:ಅರ್ಥ:ಹಾಗೆ(ಭೀಷ್ಮನು ?) ಪ್ರಳಯಕಾಲದ ದ್ವಾದಶಾದಿತ್ಯರ ತೇಜಸ್ಸನ್ನು ಮಹೇಶ್ವರನ ಭಯಂಕರವಾದ ಅಟಾಟೋಪವನ್ನು ಯುಗಾಂತದ ಯಮನ ರೇಗುವಿಕೆಯನ್ನು ತನ್ನಲ್ಲಿ ಅಳವಡಿಸಿಕೊಂಡನು.
ಚಂ|| ಖರ ಕಿರಣ ಪ್ರಚಂಡ ಕಿರಣಾವಳಿ ಲೋಕಮನೆಯ್ದೆ ಪರ್ವುವಂ
ತಿರೆ ಕಡುಕೆಯ್ದು ತನ್ನೆರಡು ಕೆಯ್ಯೊಳಮೆಚ್ಚ ಶರಾಳಿಗಳ್ ಭಯಂ|
ಕರತರಮಾಗೆ ಭೂಭುವನಮೆಲ್ಲಮನೊರ್ಮೆಯೆ ಸುತ್ತಿ ಮುತ್ತಿ ಕೊಂ
ಡಿರೆ ದೆಸೆಗಾಣಲಾಗದು ದಲಾ ರಣಗೞ್ತಲೆ ಮಂದಮಾದುದೋ|| ೧೧೬ ||
ಪದ್ಯ-೧೧೬:ಪದವಿಭಾಗ-ಅರ್ಥ:ಖರ ಕಿರಣ ಪ್ರಚಂಡ ಕಿರಣಾವಳಿ (ತೀಕ್ಷ್ಣವಾದ ಸೂರ್ಯನ ಕಿರಣ ಸಮೂಹಗಳು) ಲೋಕಮನು ಎಯ್ದೆ ಪರ್ವುವಂತಿರೆ (ಲೋಕವನ್ನೆಲ್ಲ ಪೂರ್ಣವಾಗಿ ಹಬ್ಬುವ/ ಆವರಿಸುವ ಹಾಗೆ) ಕಡುಕೆಯ್ದು ತನ್ನೆರಡು ಕೆಯ್ಯೊಳಂ ಎಚ್ಚ ಶರಾಳಿಗಳ್ (ವೇಗಶಾಲಿಯಾದ ತನ್ನ ಎರಡು ಕೈಗಳಿಂದಲೂ ಬಿಟ್ಟ ಬಾಣಸಮೂಹಗಳು) ಭಯಂಕರ ತರಮಾಗೆ ಭೂಭುವನಮೆಲ್ಲಮನು ಒರ್ಮೆಯೆ ಸುತ್ತಿ ಮುತ್ತಿಕೊಂಡಿರೆ (ಅತ್ಯಂತ ಭಯಂಕರವಾಗಿ ಪ್ರಪಂಚವೆಲ್ಲವನ್ನೂ ಒಟ್ಟಿಗೆ ಸುತ್ತಿಮುತ್ತಿಕೊಂಡುವು.) ದೆಸೆಗಾಣಲಾಗದು ದಲಾ ರಣಗೞ್ತಲೆ (ಆ ಯುದ್ಧದ ಕತ್ತಲೆಯಿಂದ ನಿಜವಾಗಿಯೂ ದಿಕ್ಕೇ ಕಾಣದಂತಾಯಿತು.) ಮಂದಮಾದುದೋ (ಆ ರಣಗತ್ತಲೆ ಅತ್ಯಂತ ಸಾಂದ್ರವಾಗಿತ್ತೋ!. )
ಪದ್ಯ-೧೧೬:ಅರ್ಥ:ತೀಕ್ಷ್ಣವಾದ ಸೂರ್ಯನ ಕಿರಣ ಸಮೂಹಗಳು ಲೋಕವನ್ನೆಲ್ಲ ಪೂರ್ಣವಾಗಿ ಆವರಿಸುವ ಹಾಗೆ ವೇಗಶಾಲಿಯಾದ ತನ್ನ ಎರಡು ಕೈಗಳಿಂದಲೂ ಬಿಟ್ಟ ಬಾಣಸಮೂಹಗಳು ಅತ್ಯಂತ ಭಯಂಕರವಾಗಿ ಪ್ರಪಂಚವೆಲ್ಲವನ್ನೂ ಒಟ್ಟಿಗೆ ಸುತ್ತಿಮುತ್ತಿಕೊಂಡುವು. ಆ ಯುದ್ಧದ ಕತ್ತಲೆಯಿಂದ ನಿಜವಾಗಿಯೂ ದಿಕ್ಕೇ ಕಾಣದಂತಾಯಿತು. ಆ ರಣಗತ್ತಲೆ ಅತ್ಯಂತ ಸಾಂದ್ರವಾಗಿತ್ತೋ!.
ವ|| ಎಂಬಿನಮಂಬಿನ ಬಂಬಲೊಳಂ ಜೋಡಾಗಿ ಕೋಡನೂಱಿ ಕೆಡೆದ ಗಜ ವ್ರಜಂಗಳ ಡೊಣೆವುಗಳಿಂದೊರೆತು ಪರಿವ ನೆತ್ತರ ಕಡಲ್ಗಳುಂ ನೆತ್ತರ ಕಡಲ್ಗಲೊಳ್ ಮಿಳಿರ್ವ ಪೞವಿಗೆಗಳ್ ತಲೆದೋರೆ ಮುೞುಂಗಿದ ರಥಂಗಳುಂ ರಥಂಗಳ ಗಾಲಿಗಳ್ಗಡ್ಡಮಾಗಿ ಬಿೞ್ದಿರ್ದ ಮದಹಸ್ತಿಗಳುಂ ಮದಹಸ್ತಿಮಸ್ತಕಂಗಳನೋಸರಿಸಿ ರಥಮಂ ಪರಿಯಿಸುವ ರಥಚೋದಕರುಂ ರಥಚೋದಕರ ಬಿಟ್ಟ ಬಾಯ್ ಬಿಟ್ಟಂತಿರೆ ಬಿಟ್ಟ ತಮ್ಮ ಕರುಳ್ಗಳೊಳ್ ತವೆ ತೊಡರ್ದು ಕೀೞಂ ಕರ್ಚಿ ದಿಂಡುಮಗುಳ್ದು ಕೆಡೆವ ಜಾತ್ಯಶ್ವಂಗಳುಂ ಜಾತ್ಯಶ್ವಂಗಳ ಪೆಣದ ತಿಂತಿಣಿಯೊಳ್ ತೊಡರ್ದೆಡಪುತ್ತುಮಾಡುವ ಸುಭಟರಟ್ಟೆಗಳುಂ ಸುಭಟರಟ್ಟೆಗಳನೆೞ್ಬಟ್ಟಿ ಕುಟ್ಟುವ ತೊಂಡು ಮರುಳ್ಗಳುಂ ಮರುಳ್ಗಳಾಟಮಂ ಪಳಪಳನೆಮೆಯಿಕ್ಕದೆ ನೋಡಿ ಮುಗುಳ್ನಗೆ ನಗುವ ವೀರಭಟರ ಪಂದಲೆಗಳುಮಗುರ್ವುಮದ್ಭುತ ಭಯಾನಕ ವೀರ ಬೀಭತ್ಸ ರೌದ್ರ ರಸಂಗಳಂ ಪುದುಂಗೊಳಿಸೆ ಗಾಂಗೇಯಂ ನಾಡೆಯುಂ ಪೋೞ್ತು ಕಾದೆ-
ವಚನ:ಪದವಿಭಾಗ-ಅರ್ಥ:ಎಂಬಿನಮಂಬಿನ ಬಂಬಲೊಳಂ ಜೋಡಾಗಿ ಕೋಡನೂಱಿ (ಬಾಣಗಳ ರಾಶಿ ಸಮೂಹದಿಂದ ಜೊತೆ ಜೊತೆಯಾಗಿ ಕೊಂಬನ್ನೂರಿ) ಕೆಡೆದ ಗಜ ವ್ರಜಂಗಳ ಡೊಣೆವುಗಳಿಂದ (ಕೆಡೆದು ಬಿದ್ದ ಆನೆಗಳ ಗಾಯದ ಡೊಗರುಗಳಿಂದ) ಒರೆತು ಪರಿವ ನೆತ್ತರ ಕಡಲ್ಗಳುಂ (ಜಿನುಗಿ ಹರಿಯುವ ರಕ್ತದ ಸಮುದ್ರಗಳೂ,) ನೆತ್ತರ ಕಡಲ್ಗಲೊಳ್ ಮಿಳಿರ್ವ ಪೞವಿಗೆಗಳ್ (ರಕ್ತಸಮುದ್ರದಲ್ಲಿ ಚಲಿಸುತ್ತಿರುವ ಬಾವುಟಗಳ ತುದಿಗಳು) ತಲೆದೋರೆ ಮುೞುಂಗಿದ ರಥಂಗಳುಂ (ಮಾತ್ರ ತೋರುತ್ತ ಮುಳುಗಿದ್ದ ತೇರುಗಳೂ) ರಥಂಗಳ ಗಾಲಿಗಳ್ಗಡ್ಡಮಾಗಿ ಬಿೞ್ದಿರ್ದ ಮದಹಸ್ತಿಗಳುಂ (ತೇರುಗಳಿಗೆ ಅಡ್ಡವಾಗಿ ಬಿದ್ದಿದ್ದ ಮದ್ದಾನೆಗಳೂ) ಮದಹಸ್ತಿ ಮಸ್ತಕಂಗಳನೊ ಓಸರಿಸಿ ರಥಮಂ ಪರಿಯಿಸುವ ರಥಚೋದಕರುಂ (ತೇರುಗಳಿಗೆ ಅಡ್ಡವಾಗಿ ಬಿದ್ದಿದ್ದ ಮದ್ದಾನೆಗಳೂ ಮದ್ದಾನೆಗಳ ತಲೆಗಳನ್ನು ಒಂದು ಕಡೆಗೆ ಓಸರಿಸಿ ತೇರನ್ನು ಹರಿಯಿಸುವ ಸಾರಥಿಗಳೂ), ರಥಚೋದಕರ ಬಿಟ್ಟ ಬಾಯ್ ಬಿಟ್ಟಂತಿರೆ ಬಿಟ್ಟ ತಮ್ಮ ಕರುಳ್ಗಳೊಳ್ ತವೆ ತೊಡರ್ದು (ಸಾರಥಿಗಳು ಬಿಟ್ಟ ಬಾಯಿ ಬಿಟ್ಟ ಹಾಗೆ ತಮ್ಮ ಕರುಳುಗಳೂ ಸೇರಿಕೊಂಡ) ಕೀೞಂ ಕರ್ಚಿ ದಿಂಡುಮಗುಳ್ದು ಕೆಡೆವ ಜಾತ್ಯಶ್ವಂಗಳುಂ (ಹಾಗೆಯೇ ಕಡಿವಾಣವನ್ನು ಕಚ್ಚಿಕೊಂಡು ರಾಶಿರಾಶಿಯಾಗಿ ಬಿದ್ದಿದ್ದ ಉತ್ತಮವಾದ ಜಾತ್ಯಶ್ವಗಳೂ) ಜಾತ್ಯಶ್ವಂಗಳ ಪೆಣದ ತಿಂತಿಣಿಯೊಳ್ ತೊಡರ್ದು ಎಡಪುತ್ತುಂ ಆಡುವ ಸುಭಟರ ಅಟ್ಟೆಗಳುಂ (ಜಾತಿಕುದುರೆಗಳ ಸಮೂಹದಲ್ಲಿ ಸೇರಿಕೊಂಡು ಎಡವುತ್ತ ಆಡುತ್ತಿರುವ ಶೂರರ ಮುಂಡಗಳೂ) ಸುಭಟರ ಅಟ್ಟೆಗಳನೆ ಎೞ್ಬಟ್ಟಿ ಕುಟ್ಟುವ ತೊಂಡು ಮರುಳ್ಗಳುಂ (ಆ ಶೂರರ ಮುಂಡಗಳನ್ನು ಎಬ್ಬಿಸಿ ಓಡಿಸಿ ಬಡಿಯುತ್ತಿರುವ ತುಂಟ ಪಿಶಾಚಿಗಳ) ಮರುಳ್ಗಳ ಆಟಮಂ ಪಳಪಳನೆಮೆಯಿಕ್ಕದೆ ನೋಡಿ (ಆಟವನ್ನು ಪಳಪಳನೆ ರೆಪ್ಪೆಬಡಿಯದೆ ನೋಡಿ) ಮುಗುಳ್ನಗೆ ನಗುವ ವೀರಭಟರ ಪಂದಲೆಗಳುಂ,(ಹುಸಿನಗೆ ನಗುವ ಪರಾಕ್ರಮಶಾಲಿಗಳ ಹಸಿಯ ತಲೆಗಳೂ) ಅಗುರ್ವುಂ ಅದ್ಭುತ ಭಯಾನಕ ವೀರ ಬೀಭತ್ಸ ರೌದ್ರ ರಸಂಗಳಂ ಪುದುಂಗೊಳಿಸೆ (ಭಯ, ಆಶ್ಚರ್ಯ, ಅದ್ಭುತ, ಭಯಾನಕ, ವೀರ, ಬೀಭತ್ಸ, ರೌದ್ರರಸಗಳನ್ನು ಒಟ್ಟುಗೂಡಿಸಿದ್ದಂತೆ) ಗಾಂಗೇಯಂ ನಾಡೆಯುಂ ಪೋೞ್ತು ಕಾದೆ (ಭೀಷ್ಮನು ತುಂಬ ಹೋತ್ತು ಯುದ್ಧ ಮಾಡಲು.)-
ವಚನ:ಅರ್ಥ:ಭೀಷ್ಮನು ತುಂಬ ಹೋತ್ತು ಯುದ್ಧ ಮಾಡಲು. ಬಾಣಗಳ ರಾಶಿ ರಾಶಿ ಸಮೂಹದಿಂದ ಜೊತೆ ಜೊತೆಯಾಗಿ ಕೊಂಬನ್ನೂರಿ ಕೆಡೆದು ಬಿದ್ದ ಆನೆಗಳ ಗಾಯದ ಡೊಗರುಗಳಿಂದ ಜಿನುಗಿ ಹರಿಯುವ ರಕ್ತದ ಸಮುದ್ರಗಳೂ, ರಕ್ತಸಮುದ್ರದಲ್ಲಿ ಚಲಿಸುತ್ತಿರುವ ಬಾವುಟಗಳ ತುದಿಗಳು ಮಾತ್ರ ತೋರುತ್ತ ಮುಳುಗಿದ್ದ ತೇರುಗಳೂ, ತೇರುಗಳಿಗೆ ಅಡ್ಡವಾಗಿ ಬಿದ್ದಿದ್ದ ಮದ್ದಾನೆಗಳೂ, ಮದ್ದಾನೆಗಳ ತಲೆಗಳನ್ನು ಒಂದು ಕಡೆಗೆ ಓಸರಿಸಿ ತೇರನ್ನು ಹರಿಯಿಸುವ ಸಾರಥಿಗಳೂ, ಸಾರಥಿಗಳು ಬಿಟ್ಟ ಬಾಯಿ ಬಿಟ್ಟ ಹಾಗೆ ತಮ್ಮ ಕರುಳುಗಳೂ ಸೇರಿಕೊಂಡ ಹಾಗೆಯೇ ಕಡಿವಾಣವನ್ನು ಕಚ್ಚಿಕೊಂಡು ರಾಶಿರಾಶಿಯಾಗಿ ಬಿದ್ದಿದ್ದ ಉತ್ತಮವಾದ ಜಾತ್ಯಶ್ವಗಳೂ, ಜಾತಿಕುದುರೆಗಳ ಸಮೂಹದಲ್ಲಿ ಸೇರಿಕೊಂಡು ಎಡವುತ್ತ ಆಡುತ್ತಿರುವ ಶೂರರ ಮುಂಡಗಳೂ, ಆ ಶೂರರ ಮುಂಡಗಳನ್ನು ಎಬ್ಬಿಸಿ ಓಡಿಸಿ ಬಡಿಯುತ್ತಿರುವ ತುಂಟ ಪಿಶಾಚಿಗಳ ಆಟವನ್ನು ಪಳಪಳನೆ ರೆಪ್ಪೆಬಡಿಯದೆ ನೋಡಿ ಹುಸಿನಗೆ ನಗುವ ಪರಾಕ್ರಮಶಾಲಿಗಳ ಹಸಿಯ ತಲೆಗಳೂ, ಇವೆಲ್ಲವೂ ಭಯ, ಆಶ್ಚರ್ಯ, ಅದ್ಭುತ, ಭಯಾನಕ, ವೀರ, ಬೀಭತ್ಸ, ರೌದ್ರರಸಗಳನ್ನು ಒಟ್ಟುಗೂಡಿಸಿದ್ದಂತೆ ಕಾಣುತ್ತಿತ್ತು.
ಮ|| ಪಟ್ಟಂಗಟ್ಟಿದಿಳಾನಾಥರೆ ಪಯಿಂಛಾಸಿರ್ವರೊಳ್ಳಾನೆಗಳ್
ಪಟ್ಟಂಗಟ್ಟಿದುವೊಂದು ಲಕ್ಕ ತುರಗಂ ಪತ್ತೆಂಟು ಲಕ್ಕಂ ಪಡ|
ಲ್ವಟ್ಟೞ್ಕೂಡಿದುವೊಂದೆ ಬಿಲ್ಗೆನೆ ನದೀಪುತ್ರಂಗೆ ಪೇೞುರ್ ಚಲಂ
ಬಟ್ಟುಂ ಮಾರ್ಮಲೆದಂಬುದೊಟ್ಟುಮುೞಿವರ್ ಸಂಗ್ರಾಮರಂಗಾಗ್ರದೊಳ್|| ೧೧೭ ||
ಪದ್ಯ-೧೧೭:ಪದವಿಭಾಗ-ಅರ್ಥ:ಪಟ್ಟಂಗಟ್ಟಿದ ಇಳಾನಾಥರೆ (ಪಟ್ಟಾಭಿಷಿಕ್ತರಾದ ಚಕ್ರವರ್ತಿಗಳೂ) ಪಯಿಂಛಾಸಿರರ್ (ಹತ್ತು ಸಾವಿರ) ಒಳ್ಳಾನೆಗಳ್ ಪಟ್ಟಂಗಟ್ಟಿದ ಅವೊಂದು ಲಕ್ಕ (ಪಟ್ಟಾಭಿಷಿಕ್ತವಾದ ಒಂದು ಲಕ್ಷ ಭದ್ರಗಜಗಳೂ) ತುರಗಂ ಪತ್ತೆಂಟು ಲಕ್ಕಂ (ಹತ್ತೆಂಟುಲಕ್ಷ ಕುದುರೆಗಳೂ) ಪಡಲ್ವಟ್ಟು ಅೞ್ಕೂಡಿದುವು ಒಂದೆ ಬಿಲ್ಗೆ ಎನೆ (ಚದುರಿ ಕೆಳಗುರುಳಿ ನಾಶವಾದುವು ಎನ್ನಲು,ಒಂದೇ ಬಿಲ್ಲಿಗೆ ಎಂದಾಗ ) ನದೀಪುತ್ರಂಗೆ ಪೇೞುರ್ ಚಲಂಬಟ್ಟುಂ ಮಾರ್ಮಲೆದು (ಭೀಷ್ಮನಿಗೆ, ಹೇಳಯ್ಯಾ ಹಟ ಹಿಡಿದು ಪ್ರತಿಭಟಿಸಿ -- ಉಳಿಯುವವರು ಯಾರಿದ್ದಾರೆ?) ಅಂಬುದೊಟ್ಟುಂ ಉೞಿವರ್ ಸಂಗ್ರಾಮ ರಂಗಾಗ್ರದೊಳ್ (ಬಾಣಪ್ರಯೋಗಮಾಡಿಯೂ ಯುದ್ಧದ ರಣರಂಗದಲ್ಲಿ ಉಳಿಯುವವರು ಯಾರಿದ್ದಾರೆ? ಹೇಳಯ್ಯಾ )
ಪದ್ಯ-೧೧೭:ಅರ್ಥ: ೧೧೭. ಭೀಷ್ಮನ ಒಂದೇ ಬಿಲ್ಲಿಗೆ ಪಟ್ಟಾಭಿಷಿಕ್ತರಾದ ಹತ್ತು ಸಾವಿರ ಚಕ್ರವರ್ತಿಗಳೂ ಪಟ್ಟಾಭಿಷಿಕ್ತವಾದ ಒಂದು ಲಕ್ಷ ಭದ್ರಗಜಗಳೂ (ಮಂಗಳಕರವಾದ ಆನೆ) ಹತ್ತೆಂಟುಲಕ್ಷ ಕುದುರೆಗಳೂ ಕೆಳಗುರುಳಿ ನಾಶವಾದುವು ಒಂದೇ ಬಿಲ್ಲಿಗೆ ಎಂದಾಗ, ಯುದ್ಧದಲ್ಲಿ ಪಣದೊಟ್ಟು (ಹಟಮಾಡಿ) ಭೀಷ್ಮನಿಗೆ ಪ್ರತಿಭಟಿಸಿ ಬಾಣಪ್ರಯೋಗಮಾಡಿಯೂ ಯುದ್ಧದ ರಣರಂಗದಲ್ಲಿ ಉಳಿಯುವವರು ಯಾರಿದ್ದಾರೆ? ಹೇಳಯ್ಯಾ!

ಭೀಶ್ಮ ಮತ್ತು ಶ್ವೇತರ ಯುದ್ಧ: ಶ್ವೇತನ ಮರಣ[ಸಂಪಾದಿಸಿ]

ವ|| ಎಂಬನ್ನೆಗಂ ಶ್ವೇತನುಮನವರತ ಶರಾಸಾರದಿಂ ಕುರುಬಲಮೆಲ್ಲಮನರೆದು ಸಣ್ಣಿಸಿದಂತೆ ಮಾಡಿ ತವೆ ನೆರವಿಯನೆನಿತಂ ಕೊಂದೊಡಮೇವಂದಪುದೆಂದು ಗಾಂಗೇಯಂಗದಿರದಿದಿರಂ ಮಾರ್ಕೊಂಡು ಬಿಲ್ವೊಯ್ದು ನಿಂದಾಗಳ್-
ವಚನ:ಪದವಿಭಾಗ-ಅರ್ಥ:ಎಂಬನ್ನೆಗಂ (ಎನ್ನುವಷ್ಟರಲ್ಲಿ) ಶ್ವೇತನುಂ ಅನವರತ ಶರ ಆಸಾರದಿಂ (ಶ್ವೇತನು ಒಂದೇಸಮನೆ ಬಾಣದ ಮಳೆಯಿಂದ) ಕುರುಬಲಮೆಲ್ಲಮಂ ಅರೆದು ಸಣ್ಣಿಸಿದಂತೆ ಮಾಡಿ (ಕೌರವಸೈನ್ಯವನ್ನೆಲ್ಲ ಅರೆದು ಪುಡಿಮಾಡಿದಂತೆ ಮಾಡಿ) ತವೆ ನೆರವಿಯನು ಎನಿತಂ ಕೊಂದೊಡಂ ಏವಂದಪುದೆಂದು (ಈ ಸಾಮಾನ್ಯ ಸೈನ್ಯವಷ್ಟನ್ನೂ ಕೊಂದರೆ ಏನು ಪ್ರಯೋಜನ ಎಂಬುದಾಗಿ) ಗಾಂಗೇಯಂಗೆ ಇದಿರದೆ ಇದಿರಂ ಮಾರ್ಕೊಂಡು (ಭೀಷ್ಮನಿಗೆ ಹೆದರದೆ ಇದಿರಾಗಿ ಪ್ರತಿಭಟಿಸಿ) ಬಿಲ್ (ವ) ಹೊಯ್ದು ನಿಂದಾಗಳ್ (ಬಿಲ್ಲನ್ನು ಸೆಳೆದು ಠೇಂಕಾರಮಾಡಿ ನಿಂತನು)-
ವಚನ:ಅರ್ಥ:ಎನ್ನುವಷ್ಟರಲ್ಲಿ ಶ್ವೇತನು ಒಂದೇಸಮನೆ ಬಾಣದ ಮಳೆಯಿಂದ ಕೌರವಸೈನ್ಯವನ್ನೆಲ್ಲ ಅರೆದು ಪುಡಿಮಾಡಿದಂತೆ ಮಾಡಿ ನಾಶಪಡಿಸಿ ಈ ಸಾಮಾನ್ಯ ಸೈನ್ಯವಷ್ಟನ್ನೂ ಕೊಂದರೆ ಏನು ಪ್ರಯೋಜನ ಎಂಬುದಾಗಿ ಭೀಷ್ಮನಿಗೆ ಹೆದರದೆ ಇದಿರಾಗಿ ಪ್ರತಿಭಟಿಸಿ ಬಿಲ್ಲನ್ನು ಸೆಳೆದು ಠೇಂಕಾರಮಾಡಿ ನಿಂತನು-
ಉ|| ಶ್ವೇತನ ಬಿಲ್ಲೊಳಿರ್ದ ಮದನಾರಿಯ ರೂಪೆರ್ದೆಗೊಳ್ವುದುಂ ನದೀ
ಜಾತನುದಾತ್ತ ಭಕ್ತಿಯಳೆ ಕೆಯ್ಮುಗಿದಾಗಳಿದೆಂತೊ ನಿಮ್ಮ ಪೆ|
ರ್ಮಾತಿನ ಬೀರಮೀಯೆಡೆಗೆವಂದುದೆ ಮುಪ್ಪಿನೊಳೆಯ್ದೆ ಲೋಕ ವಿ
ಖ್ಯಾತರಿರಾಗಿ ಕೆಯ್ದುವಿಡಿವಲ್ಲಿಯೆ ಕಾಲ್ವಿಡಿಯಲ್ಕೆ ತಕ್ಕುದೇ|| ೧೧೮||
ಪದ್ಯ-೧೧೮:ಪದವಿಭಾಗ-ಅರ್ಥ:ಶ್ವೇತನ ಬಿಲ್ಲೊಳಿರ್ದ ಮದನಾರಿಯ ರೂಪು (ಶ್ವೇತನ ಬಿಲ್ಲಿನಲ್ಲಿದ್ದ ಮಹಾಶಿವನ ರೂಪವು) ಎರ್ದೆಗೊಳ್ವುದುಂ (ಹೃದಯವನ್ನು ಆಕರ್ಶಿಸಲು,) ನದೀಜಾತನು ಉದಾತ್ತ ಭಕ್ತಿಯಳೆ ಕೆಯ್ಮುಗಿದಾಗಳ್ (ಭೀಷ್ಮನು ಅತಿಶಯವಾದ ಭಕ್ತಿಯಿಂದ ಶ್ವೇತನ ಎದುರು ಕೈಮುಗಿದು ನಿಂತಾಗ-) ಇದೆಂತೊ ನಿಮ್ಮ ಪೆರ್ಮಾತಿನ ಬೀರಮು (ಇದೇನಿದು? ನಿಮ್ಮ ಪ್ರಸಿದ್ಧವಾದ ದೊಡ್ಡದಾಗಿ ಹೇಳಿಕೊಳ್ಳುವ ಪರಾಕ್ರಮವು) ಎಡೆಗೆವಂದುದೆ ಮುಪ್ಪಿನೊಳು ಎಯ್ದೆ (ಮುಪ್ಪಿನಲ್ಲಿ ಈ ಸ್ಥಿತಿಗೆ ಬಂದಿತೇ?) ಲೋಕ ವಿಖ್ಯಾತರಿರಾಗಿ ಕೆಯ್ದು ವಿಡಿವಲ್ಲಿಯೆ (ಲೋಕಪ್ರಸಿದ್ಧವಾಗಿರುವ ನೀವು ಶಸ್ತ್ರಹಿಡಿಯವಲ್ಲಿಯೇ) ಕಾಲ್ವಿಡಿಯಲ್ಕೆ ತಕ್ಕುದೇ (ಮಾಡಬೇಕಾದ ಕಾಲದಲ್ಲಿ ಕಾಲುಹಿಡಿಯುವದು ಅಂದರೆ ಶರಣಾಗತರಾಗುವುದು ಯೋಗ್ಯವೇ? ಎಂದನು ಶ್ವೇತ)
ಪದ್ಯ-೧೧೮:ಅರ್ಥ:ಶ್ವೇತನ ಬಿಲ್ಲಿನಲ್ಲಿದ್ದ ಮಹಾಶಿವನ ರೂಪವು ತನ್ನ ಹೃದಯವನ್ನು ಆಕರ್ಶಿಸಲು, ಭೀಷ್ಮನು ಅತಿಶಯವಾದ ಭಕ್ತಿಯಿಂದ ಶ್ವೇತನ ಎದುರು ಕೈಮುಗಿದು ನಿಂತಾಗ, (ಶ್ವೇತನು ಅವರನ್ನು ಕುರಿತು) ಇದೇನಿದು? ನಿಮ್ಮ ದೊಡ್ಡದಾಗಿ ಹೇಳಿಕೊಳ್ಳುವ ಪ್ರಸಿದ್ಧವಾದ ಪರಾಕ್ರಮವು! ಮುಪ್ಪಿನಲ್ಲಿ ಈ ಸ್ಥಿತಿಗೆ ಬಂದಿತೇ? ಲೋಕಪ್ರಸಿದ್ಧವಾಗಿರುವ ನೀವು ಶಸ್ತ್ರಹಿಡಿಯವಲ್ಲಿ ಮಾಡಬೇಕಾದ ಕಾಲದಲ್ಲಿ ಕಾಲುಹಿಡಿಯುವದು ಅಂದರೆ ಶರಣಾಗತರಾಗುವುದು ಯೋಗ್ಯವೇ? ಎಂದನು ಶ್ವೇತ.
ಚಂ|| ಎನಗೆ ರಣಾಗ್ರದೊಳ್ ಪೊಣರ್ವೊಡಂಕದ ಪೊಂಕದ ಸಿಂಧುಪುತ್ರನೊ
ರ್ವನೆ ದೊರೆಯೆಂದು ನಿಮ್ಮೊಳೆ ವಲಂ ತಱಸಂದಿಱಯಲ್ಕೆ ಪೂಣ್ದೆನಾ|
ನೆನಗಿಱಿವೞ್ತಿಯಂ ಕಿಡಿಸಿ ನಿಮ್ಮಳವಂ ಪೆಱಗಿಕ್ಕಿ ನೀಮುಮಿಂ
ತಿನಿತೆರ್ದೆಗೆಟ್ಟಿರಿಂ ತುೞಿಲ ಸಂದರನಾರುಮನೆಂತು ನಂಬುವರ್|| ೧೧೯ ||
ಪದ್ಯ-೧೧೯:ಪದವಿಭಾಗ-ಅರ್ಥ:ಎನಗೆ ರಣಾಗ್ರದೊಳ್ (ಅಗ್ರ- ದೊಡ್ಡ ರಣ-ಯುದ್ಧ) ಪೊಣರ್ವೊಡೆ ಅಂಕದ ಪೊಂಕದ ಸಿಂಧುಪುತ್ರನೊರ್ವನೆ ದೊರೆಯೆಂದು (ಡೊಡ್ಡ ಯುದ್ಧದಲ್ಲಿ ಕಾದಬೇಕಾದರೆ ಪ್ರಸಿದ್ಧನೂ ಹೆಮ್ಮೆಯವನೂ ಆದ ಭೀಷ್ಮನೊಬ್ಬನೇ ನನಗೆ ಸಮಾನನಾದವನು ಎಂದು) ನಿಮ್ಮೊಳೆ ವಲಂ ತಱಸಂದು ಇಱಯಲ್ಕೆ (ನಿಮ್ಮೊಡನೆ ನಿಜಕ್ಕೂ ಸರಿಯಾಗಿ ಯುದ್ಧಮಾಡಲು) ಪೂಣ್ದೆನು ಆನು (ನಾನು ಪ್ರತಿಜ್ಞೆ ಮಾಡಿ ಬಂದೆ) ಎನಗೆ ಇಱಿವೞ್ತಿಯಂ ಕಿಡಿಸಿ ( ನನಗುಂಟಾದ ಯುದ್ಧೋತ್ಸಾಹವನ್ನು ಕೆಡಿಸಿ) ನಿಮ್ಮ ಅಳವಂ ಪೆಱಗಿಕ್ಕಿ (ನಿಮ್ಮ ಪರಾಕ್ರಮವನ್ನು ಕೈಬಿಟ್ಟು, ಪಕ್ಕಕ್ಕಿಟ್ಟು ) ನೀಮುಂ ಇಂತು ಇನಿತು ಎರ್ದೆಗೆಟ್ಟಿರ್ (ನೀವೂ ಹೇಗೆ ಧೈರ್ಯಹೀನರಾಗಿದ್ದೀರಿ) ತುೞಿಲ ಸಂದರನು (ಯುದ್ಧಕ್ಕೆ ಬಂದವರನ್ನು) ಆರುಮನು ಎಂತು ನಂಬುವರ್ (ಇನ್ನು ಮೇಲೆ ಯುದ್ಧಕ್ಕೆ ಬಂದವರನ್ನು ಯಾರನ್ನಾದರೂ ಹೇಗೆ ನಂಬುವುದು?)
ಪದ್ಯ-೧೧೯:ಅರ್ಥ: ಯುಧ್ಧವನ್ನು ಬಿಟ್ಟು ಭೀಷ್ಮನು ಎರಡೂ ಕೈಮುಗಿದು ನಿಂತಾಗ, (ನನಗೆ) ಡೊಡ್ಡ ಯುದ್ಧದಲ್ಲಿ ಕಾದಬೇಕಾದರೆ ಪ್ರಸಿದ್ಧನೂ ಹೆಮ್ಮೆಯವನೂ ಆದ ಭೀಷ್ಮನೊಬ್ಬನೇ ನನಗೆ ಸಮಾನನಾದವನು ಎಂದು ನಿಮ್ಮೊಡನೆ ಸರಿಯಾಗಿ ಯುದ್ಧ ಮಾಡುವುದಕ್ಕೆ ನಾನು ಪ್ರತಿಜ್ಞೆ ಮಾಡಿ ಬಂದೆ. ನನಗುಂಟಾದ ಯುದ್ಧೋತ್ಸಾಹವನ್ನು ಕೆಡಿಸಿ ನಿಮ್ಮ ಪರಾಕ್ರಮವನ್ನು ಕೈಬಿಟ್ಟು ನೀವೂ ಹೇಗೆ ಧೈರ್ಯಹೀನರಾಗಿದ್ದೀರಿ. ಇನ್ನು ಮೇಲೆ ಯುದ್ಧಕ್ಕೆ ಬಂದವರನ್ನು ಯಾರನ್ನಾದರೂ ಹೇಗೆ ನಂಬುವುದು?
ವ|| ಎಂದು ತನ್ನಂ ನೋಯೆ ನುಡಿದೊಡೆ ಸಿಂಧುಪುತ್ರನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ತನ್ನಂ ನೋಯೆ ( ನೋವುಂಟಾಗುವ ಹಾಗೆ) ನುಡಿದೊಡೆ ಸಿಂಧುಪುತ್ರನು ಇಂತೆಂದಂ-
ವಚನ:ಅರ್ಥ:ಎಂದು ತನಗೆ ನೋವುಂಟಾಗುವ ಹಾಗೆ ನುಡಿಯಲು ಭೀಷ್ಮನು ಹೀಗೆ ಹೇಳಿದನು-
ಮ|| ನಿನಗೇನೆಂದೊಡಮೆಂದುದೊಪ್ಪಿದಪುದಂತೇಕೆನ್ನನಿನ್ನೀ ಶರಾ
ಸನದೊಳ್ ಶೂಲಕಪಾಲಪಾಣಿ ದಯೆಯಿಂ ಬಂದಿರ್ದನುಂತಾನುಮಿಂ|
ತಿನಿತಂ ನೀಂ ನುಡಿವನ್ನೆಗಂ ತಡೆವೆನೇ ತ್ರೈಲೋಕ್ಯನಾಥಂ ಕಣಾ
ವಿನಮನ್ಮಸ್ತಕನಾದೆನಣ್ಮುವೊಡೆ ನೀನೀ ದೇವನಂ ತೋಱುವೈ|| ೧೨೦ ||
ಪದ್ಯ-೧೨೦:ಪದವಿಭಾಗ-ಅರ್ಥ:ನಿನಗೇನೆಂದೊಡಂ ಎಂದುದು ಒಪ್ಪಿದಪುದು ಅಂತು ಏಕೆ ಎನ್ನ - (ನೀನು ಏನು ಹೇಳಿದರೂ ನಿನಗೆ ಒಪ್ಪುತ್ತದೆ. ಹಾಗೆ ಏಕೆ ಎಂದು ಎನ್ನ ಕೇಳುವೆಯಾ) ನಿನ್ನ ಈ ಶರಾಸನದೊಳ್ (ನಿನ್ನ ಬಿಲ್ಲಿನಲ್ಲಿ) ಶೂಲಕಪಾಲಪಾಣಿ ದಯೆಯಿಂ ಬಂದಿರ್ದನು ಉಂತೆ ಆನುಂ ಇಂತಿನಿತಂ (ಶೂಲಕಪಾಲಪಾಣಿಯಾದ ಈಶ್ವರನು ದಯೆಯಿಂದ ಬಂದು ಇರುವನು, ಹೀಗೆ ಇಷ್ಟನ್ನು) ನೀಂ ನುಡಿವನ್ನೆಗಂ ತಡೆವೆನೇ (ಹಾಗಿಲ್ಲದ ಪಕ್ಷದಲ್ಲಿ ನೀನು ಇಷ್ಟು ಹರಟುವವರೆಗೆ ತಡೆಯುತ್ತಿದ್ದೆನೇ?) ತ್ರೈಲೋಕ್ಯನಾಥಂ ಕಣಾ ವಿನಮನ್ ಮಸ್ತಕನಾದೆನು (ಶಿವನು ಮೂರುಲೋಕದ ಒಡೆಯನಲ್ಲವೇ? ಆದುದರಿಂದ ನಮಸ್ಕಾರ ಮಾಡಿದೆ) ಅಣ್ಮುವೊಡೆ (ಯುದ್ಧ ಮಾಡುವುದಕ್ಕೆ) ನೀನು ಈ ದೇವನಂ ತೋಱುವೈ (ನೀನು ಈಶ್ವರದೇವನನ್ನು ತೋರಿಸುತ್ತೀಯೆ)
ಪದ್ಯ-೧೨೦:ಅರ್ಥ: ನೀನು ಏನು ಹೇಳಿದರೂ ನಿನಗೆ ಒಪ್ಪುತ್ತದೆ. ಹಾಗೆ ಏಕೆ ಎಂದು ಎನ್ನ ಕೇಳುವೆಯಾ? ನಿನ್ನ ಈ ಬಿಲ್ಲಿನಲ್ಲಿ ಶೂಲಕಪಾಲಪಾಣಿಯಾದ ಈಶ್ವರನು ದಯೆಯಿಂದ ಬಂದು ಇರುವನು. ಹಾಗಿಲ್ಲದ ಪಕ್ಷದಲ್ಲಿ ನೀನು ಇಷ್ಟು ಹರಟುವವರೆಗೆ ತಡೆಯುತ್ತಿದ್ದೆನೇ? ಶಿವನು ಮೂರುಲೋಕದ ಒಡೆಯನಲ್ಲವೇ? ಆದುದರಿಂದ ನಮಸ್ಕಾರ ಮಾಡಿದೆ. ನಾನು ಯುದ್ಧ ಮಾಡುವುದಕ್ಕೆ ಬರಲು ನೀನು ಈಶ್ವರದೇವನನ್ನು ತೋರಿಸುತ್ತೀಯೆ.
ಕಂ|| ಇಱಿವಂತು ನಿನಗೆ ಮನದೊಳ್
ತಱಿಸಲವುಂಟಪ್ಪೊಡೆಲವೊ ದೇವೇಶನನೇಂ|
ಸೆರೆವಿಡಿದೆ ತೊಲಗು ದೇವನ
ಮರೆಯಂ ಬೞಿಕಱಿಯಲಕ್ಕುಮೆನಗಂ ನಿನಗಂ|| ೧೨೧ ||
ಪದ್ಯ-೦೦:ಪದವಿಭಾಗ-ಅರ್ಥ:ಇಱಿವಂತು (ಯುದ್ಧಮಾಡುವ ಹಾಗೆ) ನಿನಗೆ ಮನದೊಳ್ ತಱಿಸಲವುಂಟು ಅಪ್ಪೊಡೆ (ನಿನಗೆ ಮನಸ್ಸಿನಲ್ಲಿ ಯುದ್ಧಮಾಡುವ ಹಾಗೆ ನಿಶ್ಚಯವೇ ಇದ್ದರೆ) ಎಲವೊ ದೇವೇಶನನು ಏಂ ಸೆರೆವಿಡಿದೆ (ದೇವಶ್ರೇಷ್ಠನಾದ ಈಶ್ವರನನ್ನೇಕೆ ಮರೆಹೊಕ್ಕಿದ್ದೀಯೆ?) ತೊಲಗು ದೇವನಮರೆಯಂ (ದೇವನ ಆಶ್ರಯವನ್ನು ಬಿಟ್ಟು ಬಿಡು.) ಬೞಿಕ ಅಱಿಯಲಕ್ಕುಂ ಎನಗಂ ನಿನಗಂ (ಬಳಿಕ ನನಗೂ ನಿನಗೂ ಯುದ್ಧವಾಗಬಹುದು; ಅರಿ -ಯುದ್ಧ, ತಿಳಿ; ; ಆಥವಾ ಇರುವ ಸಾಮರ್ಥ್ಯವನ್ನು ತಿಳಿಯಲು ಸಾಧ್ಯವಾಗುತ್ತದೆ)
ಪದ್ಯ-೦೦:ಅರ್ಥ: ೧೨೧. ನಿನಗೆ ಮನಸ್ಸಿನಲ್ಲಿ ಯುದ್ಧಮಾಡುವ ಹಾಗೆ ನಿಶ್ಚಯವೇ ಇದ್ದರೆ ದೇವಶ್ರೇಷ್ಠನಾದ ಈಶ್ವರನನ್ನೇಕೆ ಮರೆಹೊಕ್ಕಿದ್ದೀಯೆ? ದೇವನ ಆಶ್ರಯವನ್ನು ಬಿಟ್ಟು ಬಿಡು. ಬಳಿಕ ನನಗೂ ನಿನಗೂ ಯುದ್ಧವಾಗಬಹುದು; ಆಥವಾ ಇರುವ ಸಾಮರ್ಥ್ಯವನ್ನು ತಿಳಿಯಲು ಸಾಧ್ಯವಾಗುತ್ತದೆ.
ವ|| ಎಂಬುದುಂ ಶ್ವೇತನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಶ್ವೇತನಿಉ ಇಂತೆಂದಂ-
ವಚನ:ಅರ್ಥ:ಎನ್ನಲು ಶ್ವೇತನು ಹೀಗೆಂದನು.
ಉ|| ಕಾಗೆವೊಲಿಂತು ಬಿಲ್ಗೆ ಕರಮಂಜುವಿರಂಜಲಿಮಾ ತ್ರಿಣೇತ್ರನಂ
ಪೋ ಗೆಡೆಗೊಂಡು ಕಾದುವೆನೆ ಕಾದೆನಿದಂ ಹರನಿತ್ತನೆಂದು ನೋ|
ಡಾಗಡುಮೞ್ತಿಯಿಂ ಪಿಡಿವೆನಕ್ಕಟ ನಿಮ್ಮನದಿರ್ಪುವಲ್ಲಿ ಚಾ
ಪಾಗಮಮೇವುದಂತೆನಗೆ ಬಿಲ್ವರಮಾಜಿಯೊಳಾಂಪ ಗಂಡರಾರ್|| ೧೨೨ ||
ಪದ್ಯ-೧೨೨:ಪದವಿಭಾಗ-ಅರ್ಥ:ಕಾಗೆವೊಲ್ ಇಂತು ಬಿಲ್ಗೆ ಕರಂ ಅಂಜುವಿರ್? ಅಂಜಲಿಮ್ (ಕಾಗೆಯ ಹಾಗೆ ಬಿಲ್ಲಿಗೆ ಹೆದರುತ್ತೀರಿ; ಹೆದರಬೇಡಿ) ಆ ತ್ರಿಣೇತ್ರನಂ ಪೋಗೆ ಎಡೆಗೊಂಡು ಕಾದುವೆನೆ (ಆ ಶಿವನು ಹೋಗಲಿ-ಆ ಮುಕ್ಕಣ್ಣನನ್ನು ಆಶ್ರಯಿಸಿ ಕಾದುತ್ತೇನೆಯೆ?) ಕಾದೆನು ಇದಂ ಹರನು ಇತ್ತನೆಂದು ನೋಡು ಆಗಡುಂ(ಯಾವಾಗಲೂ) ಅೞ್ತಿಯಿಂ ಪಿಡಿವೆನು (ಇದನ್ನು ಈಶ್ವರನು ಕೊಟ್ಟನೆಂದು ಯಾವಾಗಲೂ ಪ್ರೀತಿಯಿಂದ ಕಾದುಕೊಂಡಿದ್ದೇನೆ- ಹಿಡಿದಿದ್ದೇನೆ) ಅಕ್ಕಟ ನಿಮ್ಮನು ಇದಿರ್ಪುವಲ್ಲಿ ಚಾಪಾಗಮಂ ಏವುದು (ಅಯ್ಯೋ ನಿಮ್ಮನ್ನು ಅಡಗಿಸುವುದಕ್ಕೆ ಧನುರ್ವಿದ್ಯೆ ಯಾವುದು ಮಹಾ?) ಅಂತು ಎನಗೆ ಬಿಲ್ವರಂ ಆಜಿಯೊಳ್ ಆಂಪ ಗಂಡರಾರ್ ( ಅಲ್ಲದೆ ನಾನು ಬಿಲ್ಲನ್ನು ಹಿಡಿದರೆ ನನ್ನನ್ನು ಪ್ರತಿಭಟಿಸುವ ಶೂರರಾರು?)
ಪದ್ಯ-೧೨೨:ಅರ್ಥ: ೧೨೨. ಕಾಗೆಯ ಹಾಗೆ ಬಿಲ್ಲಿಗೆ ಹೆದರುತ್ತೀರಿ; ಹೆದರಬೇಡಿ, ಆ ಶಿವನು ಹೋಗಲಿ-ಆ ಮುಕ್ಕಣ್ಣನನ್ನು ಆಶ್ರಯಿಸಿ ಕಾದುತ್ತೇನೆಯೆ? ಇದನ್ನು ಈಶ್ವರನು ಕೊಟ್ಟನೆಂದು ಯಾವಾಗಲೂ ಪ್ರೀತಿಯಿಂದ ಧರಿಸಿದ್ದೇನೆ. ಅಯ್ಯೋ ನಿಮ್ಮನ್ನು ಅಡಗಿಸುವುದಕ್ಕೆ ಧನುರ್ವಿದ್ಯೆ ಯಾವುದು ಮಹಾ? ಅಲ್ಲದೆ ನಾನು ಬಿಲ್ಲನ್ನು ಹಿಡಿದರೆ ನನ್ನನ್ನು ಪ್ರತಿಭಟಿಸುವ ಶೂರರಾರು?
ಮ|| ಬಿಸುಟೆಂ ಬಿಲ್ಲನದೇವುದೆಂದು ಕಡುಪಿಂದೀಡಾಡಿ ಸೂರ್ಯಪ್ರಭಾ
ಪ್ರಸರಂಗಳ್ ಮಸುಳ್ವನ್ನೆಗಂ ಪೊಳೆವುದೊಂದಂ ಶಕ್ತಿಯಂ ಕೊಂಡಗು|
ರ್ವಿಸಿ ಗಾಂಗೇಯನನಿಟ್ಟನಿಟ್ಟೊಡದನೀರಯ್ದಸ್ತ್ರದಿಂದೆಚ್ಚು ಖಂ
ಡಿಸಿ ಪೇರಾಳ ತಿಱಿದಿಕ್ಕಿದಂತೆ ತಲೆಯಂ ಪೋಗೆಚ್ಚನಾ ಶ್ವೇತನಾ|| ೧೨೩ ||
ಪದ್ಯ-೦೦:ಪದವಿಭಾಗ-ಅರ್ಥ: ಬಿಸುಟೆಂ ಬಿಲ್ಲನು ಅದೇವುದು ಎಂದು ಕಡುಪಿಂದ ಈಡಾಡಿ (ಇದೋ ಬಿಲ್ಲನ್ನು ಬಿಸುಟಿದ್ದೇನೆ. ಅದರಿಂದೇನಾಗಬೇಕು, ಎಣದು ಪರಾಕ್ರಮದಿಂದ ಎಸೆದು ) ಸೂರ್ಯಪ್ರಭಾ ಪ್ರಸರಂಗಳ್ ಮಸುಳ್ವ ಅನ್ನೆಗಂ (ಸಂಜೆಯ ಸೂರ್ಯಕಾಂತಿಯ ಕಿರಣಗಳು ಕಾಂತಿಯು ಮಸುಕಾಗುತ್ತಿರಲು,) ಪೊಳೆವುದು ಒಂದಂ ಶಕ್ತಿಯಂ ಕೊಂಡು ಅಗುರ್ವಿಸಿ ಗಾಂಗೇಯನನು ಇಟ್ಟಂ (ಹೊಳೆಯುವ ಒಂದು ಶಕ್ತಾಯುಧವನ್ನು ತೆಗೆದುಕೊಂಡು ಹೆದರಿಸಿ ಭೀಷ್ಮನನ್ನು ಹೊಡೆದನು.) ಇಟ್ಟೊಡೆ ಅದನು ಈರಯ್ದು ಅಸ್ತ್ರದಿಂದ ಎಚ್ಚು ಖಂಡಿಸಿ (ಅದನ್ನು ಹತ್ತು ಬಾಣಗಳಿಂದ ಹೊಡೆದು ತಡೆದು - ಕತ್ತರಿಸಿ) ಪೇರಾಳ (ಪೇರ್ ಆಳ > ಪಿರಿಯ ಆಳಾದ (ದೊಡ್ಡ ಆಳು ಆದ- ಮಹಾ ಪುರಷ ಭೀಷ್ಮನು) ತಿಱಿದು ಇಕ್ಕಿದಂತೆ (ಆ ಶಕ್ತ್ಯಾಯುಧವು ಹಿಂದಕ್ಕೆ ತಿರುಗಿ ಚಿಮ್ಮುವಂತೆ) ತಲೆಯಂ ಪೋಗೆ ಎಚ್ಚನು ಆ ಶ್ವೇತನಾ (ಆ ಶ್ವೇತನ ತಲೆಯು ಹೋಗುವಂತೆ ಹೊಡೆದನು.)
ಪದ್ಯ-೦೦:ಅರ್ಥ: ಇದೋ ಬಿಲ್ಲನ್ನು ಬಿಸುಟಿದ್ದೇನೆ. ಅದರಿಂದೇನಾಗಬೇಕು ಎಂದು ಪರಾಕ್ರಮದಿಂದ ಎಸೆದು ಸಂಜೆಯ ಸೂರ್ಯಕಾಂತಿಯ ಕಿರಣಗಳು ಕಾಂತಿಯು ಮಸುಕಾಗುತ್ತಿರಲು, ಹೊಳೆಯುವ ಒಂದು ಶಕ್ತಾಯುಧವನ್ನು ತೆಗೆದುಕೊಂಡು ಹೆದರಿಸಿ ಹೊಡೆದನು. ಆ ಮಹಾ ಪುರಷ ಭೀಷ್ಮನು ಅದನ್ನು ಹತ್ತು ಬಾಣಗಳಿಂದ ಹೊಡೆದು ಖಂಡಿಸಿ- ತಡೆದು, ಅದು ಹಿಂದಕ್ಕೆ ತಿರುಗಿ ಚಿಮ್ಮುವಂತೆ ಆ ಶ್ವೇತನ ತಲೆಯು ಹೋಗುವಂತೆ ಹೊಡೆದನು.
ಕಂ|| ಶ್ವೇತನ ಬೀರಮನುಪಮಾ
ತೀತಮನೀ ಧರೆಗೆ ನೆಗೞೆ ನೆಗೞ್ದುದನಿದನಾಂ|
ಪಾತಾಳಕ್ಕಱಿಪುವೆನೆಂ
ಬೀ ತೆಱದೊಳೆ ದಿನಪನಪರಜಲನಿಧಿಗಿಱಿದಂ|| ೧೨೪ ||
ಪದ್ಯ-೦೦:ಪದವಿಭಾಗ-ಅರ್ಥ:ಶ್ವೇತನ ಬೀರಮನು ಉಪಮಾತೀತಮನು ಈ ಧರೆಗೆ ನೆಗೞೆ (ಹೋಲಿಕೆಗೂ ಮೀರಿದ್ದ ಈ ಶ್ವೇತನ ಪರಾಕ್ರಮವು ಈ ಲೋಕದಲ್ಲಿ ಪ್ರಸಿದ್ಧವಾಗಿದ್ದು ) ನೆಗೞ್ದುದನು ಇದನು ಆಂ ಪಾತಾಳಕ್ಕೆ ಅಱಿಪುವೆನು ಎಂಬ ಈ ತೆಱದೊಳೆ (ನಾನು ಅದನ್ನು ಪಾತಾಳಕ್ಕೂ ತಿಳಿಸುತ್ತೇನೆ ಎನ್ನುವ ರೀತಿಯಲ್ಲಿ) ದಿನಪನು ಅಪರಜಲನಿಧಿಗೆ ಇಱಿದಂ (ಸೂರ್ಯನು ಪಶ್ಚಿಮಸಮುದ್ರಕ್ಕೆ ಇಳಿದನು)
ಪದ್ಯ-೦೦:ಅರ್ಥ:ಹೋಲಿಕೆಗೂ ಮೀರಿದ್ದ ಈ ಶ್ವೇತನ ಪರಾಕ್ರಮವು ಈ ಲೋಕದಲ್ಲಿ ಪ್ರಸಿದ್ಧವಾಗಿದ್ದು ನಾನು ಅದನ್ನು ಪಾತಾಳಕ್ಕೂ ತಿಳಿಸುತ್ತೇನೆ ಎನ್ನುವ ರೀತಿಯಲ್ಲಿ ಸೂರ್ಯನು ಪಶ್ಚಿಮಸಮುದ್ರಕ್ಕೆ ಇಳಿದನು.
ವ|| ಆಗಳೆರಡುಂ ಪಡೆಯ ನಾಯಕರಪಹಾರತೂರ್ಯಂಗಳಂ ಬಾಜಿಸಿ ತಮ್ಮ ತಮ್ಮ ಬೀಡುಗಳ್ಗೆ ಪೋದರನ್ನೆಗಮಿತ್ತ ಸಂಸಪ್ತಕಬಲಮನೆಲ್ಲಮನೊಂದೆ ರಥದೊಳಾದಿತ್ಯ ನಸುರರನದಿರ್ಪುವಂತಾಟಂದು ವಿಕ್ರಮಾರ್ಜುನನುಮರಾತಿಕಾಳಾನಳನುಮತಿರಥ ಮಥನನುಂ ರಿಪುಕುರಂಗಕಂಠೀರವನುಂ ಸಾಹಸಾಭರಣನುಮಮ್ಮನ ಗಂಧವಾರಣನುಂ ಪಡೆಮಚ್ಚೆಗಂಡನುಂ ಪರಸೈನ್ಯಭೈರವನುಮೆಂಬ ಪೆಸರ್ಗಳನನ್ವರ್ಥಂ ಮಾಡಿ-
ವಚನ:ಪದವಿಭಾಗ-ಅರ್ಥ:ಆಗಳೆರಡುಂ ಪಡೆಯ ನಾಯಕರು ಅಪಹಾರತೂರ್ಯಂಗಳಂ ಬಾಜಿಸಿ (ಆಗ ಎರಡು ಸೈನ್ಯದ ನಾಯಕರೂ ಯುದ್ಧವನ್ನು ನಿಲ್ಲಿಸಲು ಸೂಚಕವಾದ ವಾದ್ಯಗಳನ್ನು ಬಾರಿಸಿ) ತಮ್ಮ ತಮ್ಮ ಬೀಡುಗಳ್ಗೆ ಪೋದರು (ತಮ್ಮ ತಮ್ಮ ಬೀಡುಗಳಿಗೆ ಹೋದರು.) ಅನ್ನೆಗಂ ಇತ್ತ ಸಂಸಪ್ತಕಬಲಮನು ಎಲ್ಲಮನು ಒಂದೆ ರಥದೊಳು (ಅಷ್ಟರಲ್ಲಿ ಈ ಕಡೆ ಸಂಸಪ್ತಕ ಸೈನ್ಯವೆಲ್ಲವನ್ನೂ ಒಂದೇ ತೇರಿನಲ್ಲಿ ಕುಳಿತು) ಆದಿತ್ಯನು ಅಸುರರನು ಅದಿರ್ಪುವಂತು ಆಟಂದು (ಸೂರ್ಯನು ರಾಕ್ಷಸರನ್ನು ಅಡಗಿಸುವಂತೆ ಶತ್ರುಗಳ ಮೇಲೆ ಬಿದ್ದು ) ವಿಕ್ರಮಾರ್ಜುನನುಂ ಆರಾತಿಕಾಳಾನಳನುಂ, ಅತಿರಥ ಮಥನನುಂ, ರಿಪುಕುರಂಗ ಕಂಠೀರವನುಂ, ಸಾಹಸಾಭರಣನುಂ, ಅಮ್ಮನ ಗಂಧವಾರಣನುಂ, ಪಡೆಮಚ್ಚೆಗಂಡನುಂ, ಪರಸೈನ್ಯಭೈರವನುಂ ಎಂಬ ಪೆಸರ್ಗಳನು ಅನ್ವರ್ಥಂ ಮಾಡಿ(ಎಂಬ ತನ್ನ ಹೆಸರುಗಳನ್ನು ಸಾರ್ಥಕವಾಗುವಂತೆ ಮಾಡಿ)-
ವಚನ:ಅರ್ಥ:ಆಗ ಎರಡು ಸೈನ್ಯದ ನಾಯಕರೂ ಯುದ್ಧವನ್ನು ನಿಲ್ಲಿಸಲು ಸೂಚಕವಾದ ವಾದ್ಯಗಳನ್ನು ಬಾರಿಸಿ ತಮ್ಮ ತಮ್ಮ ಬೀಡುಗಳಿಗೆ ಹೋದರು. ಅಷ್ಟರಲ್ಲಿ ಈ ಕಡೆ ಸಂಸಪ್ತಕ ಸೈನ್ಯವೆಲ್ಲವನ್ನೂ ಒಂದೇ ತೇರಿನಲ್ಲಿ ಕುಳಿತು, ಸೂರ್ಯನು ರಾಕ್ಷಸರನ್ನು ಅಡಗಿಸುವಂತೆ ಶತ್ರುಗಳ ಮೇಲೆ ಬಿದ್ದು ಅರ್ಜುನನೂ ಕೂಡಿ ತನ್ನ ಅರಾತಿಕಾಳಾನಳ, ಅತಿರಥಮಥನ, ರಿಪುಕುರಂಗ ಕಂಠೀರವ, ಸಾಹಸಾಭರಣ, ಗಂಧವಾರಣ, ಪಡೆಮೆಚ್ಚಗಂಡ, ಪರಸೈನ್ಯಭೈರವ ಎಂಬ ತನ್ನ ಹೆಸರುಗಳನ್ನು ಸಾರ್ಥಕವಾಗುವಂತೆ ಮಾಡಿದನು.
ಚಂ|| ನೆರೆದನುರಾಗದಿಂ ಪಡೆಯ ಪಾಡಿಯ ಬೀರರ ಪೆಂಡಿರೞ್ಕಱಿಂ
ಪರಸಿಯೊಱಲ್ತು ಸೇಸೆಗಳನಿಕ್ಕೆ ಮುರಾರಿಯ ಪಾಂಚಜನ್ಯ ವಿ|
ಸುರಿತ ರವಂ ಜಯತ್ಸೋವದ ಘೋಷಣೆಯಂತಿರೆ ಪೊಕ್ಕನಾತ್ಮ ಮಂ
ದಿರಮನುದಾತ್ತಚಿತ್ತನವನೀತಳ ಪೂಜ್ಯಗುಣಂ ಗುಣಾರ್ಣವಂ|| ೧೨೫ ||
ಪದ್ಯ-೦೦:ಪದವಿಭಾಗ-ಅರ್ಥ:ನೆರೆದ ಅನುರಾಗದಿಂ ಪಡೆಯ ಪಾಡಿಯ (ಪ್ರೀತಿಯಿಂದ ಸೈನ್ಯವನ್ನು ಹಾಡಿ ) ಬೀರರ ಪೆಂಡಿರ್ ಅೞ್ಕಱಿಂ (ವೀರರ ಪತ್ನಿಯರು ಪ್ರೀತಿಯಿಂದ) ಪರಸಿಯೊಱಲ್ತು (ಪರಸಿ ಒರಲ್ದು) ಸೇಸೆಗಳನಿಕ್ಕೆ (ಹರಸಿ ಹಾಡಿ ಸೇಸೆಯನ್ನಿಕ್ಕಿದರು.) ಮುರಾರಿಯ ಪಾಂಚಜನ್ಯ ವಿಸ್ಫುರಿತ ರವಂ ಜಯತ್ಸೋವದ ಘೋಷಣೆಯಂತಿರೆ (ಶ್ರೀಕೃಷ್ಣನ ಪಾಂಚಜನ್ಯವೆಂಬ ಶಂಖದ ವಿಜೃಂಭಿತ ಧ್ವನಿಯು ವಿಜಯೋತ್ಸವದ ಡಂಗುರದಂತಿರಲು) ಪೊಕ್ಕನು ಆತ್ಮ ಮಂದಿರಮನು ಉದಾತ್ತಚಿತ್ತನು ಅವನೀತಳ ಪೂಜ್ಯಗುಣಂ ಗುಣಾರ್ಣವಂ (ಉದಾತ್ತಚಿತ್ತನೂ ಭೂಮಂಡಲದಲ್ಲಿ ಪೂಜಿಸಲ್ಪಡುವ ಗುಣಗಳಿಂದ ಕೂಡಿದವನೂ ಆದ ಗುಣಾರ್ಣವ ಅರ್ಜುನನು ತನ್ನ ಮಂದಿರವನ್ನು ಪ್ರವೇಶಿಸಿದನು. )
ಪದ್ಯ-೦೦:ಅರ್ಥ:ಸೈನ್ಯಸಮೂಹದಲ್ಲಿದ್ದ ವೀರರ ಪತ್ನಿಯರು ಒಟ್ಟುಗೂಡಿ ಪ್ರೀತಿಯಿಂದ ಸೈನ್ಯವನ್ನು ಹರಸಿ ಹಾಡಿ ಸೇಸೆಯನ್ನಿಕ್ಕಿದರು. ಶ್ರೀಕೃಷ್ಣನ ಪಾಂಚಜನ್ಯವೆಂಬ ಶಂಖದ ವಿಜೃಂಭಿತ ಧ್ವನಿಯು ವಿಜಯೋತ್ಸವದ ಡಂಗುರದಂತಿತ್ತು. ಉದಾತ್ತಚಿತ್ತನೂ ಭೂಮಂಡಲದಲ್ಲಿ ಪೂಜಿಸಲ್ಪಡುವ ಗುಣಗಳಿಂದ ಕೂಡಿದವನೂ ಆದ ಗುಣಾರ್ಣವ ಅರ್ಜುನನು ತನ್ನ ಮಂದಿರವನ್ನು ಪ್ರವೇಶಿಸಿದನು.
|| ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ದಶಮಾಶ್ವಾಸಂ ||
||ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಹತ್ತನೆಯ ಆಶ್ವಾಸ||
♦♣♣♣♣♣♣♣♣♣♣♣♣♣♣♣♣♣♣♣♦

ಪಂಪಭಾರತ[ಸಂಪಾದಿಸಿ]

ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ