ಪಂಪಭಾರತ ಸಪ್ತಮಾಶ್ವಾಸಂ

ವಿಕಿಸೋರ್ಸ್ದಿಂದ

ಪಂಪಭಾರತ -ಪದವಿಭಾಗ ಮತ್ತು ಅರ್ಥ::ಪಂಪಭಾರತ ಸಪ್ತಮಾಶ್ವಾಸಂ[ಸಂಪಾದಿಸಿ]

  • (V|/IIV/XIIX)-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))
ಧರ್ಮರಾಯನಿಗೆ ಲೆತ್ತದಲ್ಲಿ ಸೋಲು- ವನವಾಸ
ಕಂ|| ಶ್ರೀ ರಮಣೀರಮಣಂಗರಿ
ನಾರೀ ವೈಧವ್ಯ ದಿವ್ಯ ದೀಕ್ಷಾ ದಕ್ಷಂ|
ಗಾರೆಣೆ ಹರಿಗಂಗೀಗಡೆ
ಬಾರಿಸು ನೀಂ ನಿನ್ನ ಮಗನನಂಧನರೇಂದ್ರಾ|| ೧ ||
ಪದ್ಯ-೧:ಪದವಿಭಾಗ-ಅರ್ಥ: ಶ್ರೀ ರಮಣೀರಮಣಂಗೆ ಅರಿನಾರೀ ವೈಧವ್ಯ ದಿವ್ಯ ದೀಕ್ಷಾ ದಕ್ಷಂಗೆ ಆರೆಣೆ ಹರಿಗಂಗೆ ಈಗಡೆ ಬಾರಿಸು ನೀಂ ನಿನ್ನ ಮಗನನು ಅಂಧನರೇಂದ್ರಾ
ಪದ್ಯ-೧:ಅರ್ಥ: ಐಶ್ವರ್ಯವೆಂಬ ಲಕ್ಷ್ಮಿಯ ಪತಿಗೂ, ಶತ್ರುರಾಜಸ್ತ್ರೀಯರಿಗೆ ವೈಧವ್ಯ ದೀಕ್ಷೆಯನ್ನು ಕೊಡುವ ಶಕ್ತಿಯುಳ್ಳವನೂ ಆದ ಅರಿಕೇಸರಿಗೆ ಸಮಾನರಾದವರು ಯಾರು? ಕುರುಡ ದೊರೆಯೇ ನಿನ್ನ ಮಗನನ್ನು ಈ ಜೂಜಿನ ಕಾರ್ಯದಿಂದ ತಡೆ.
ಕಂ|| ಕಾದುದು ಸರಣ್ಗೆವಂದರ
ನಾದುದು ಕಾಲಾಗ್ನಿಬಲವದರಿನೃಪತಿಗೆ ಕಾ|
ಪಾದುದು ನೆಲಕ್ಕೆ ತೋಳ್ವಲ
ವಿ ದೊರೆತೆನೆ ಮರುಳೆ ಹರಿಗನೊಳ್ ಪಗೆಗೊಳ್ವಾ|| ೨ ||
ಪದ್ಯ-೨:ಪದವಿಭಾಗ-ಅರ್ಥ: ಕಾದುದು ಸರಣ್ಗೆವಂದರನು (ಶರಣು ಬಂದವರನ್ನು ರಕ್ಷಿಸಿತು), ಆದುದು ಕಾಲಾಗ್ನಿ ಬಲವು ಅದು ಅರಿನೃಪತಿಗೆ, (ಅವನ ಬಲವು ಶತ್ರುರಾಜರಿಗೆ ಕಾಲಾಗ್ನಿಯಾಯಿತು) ಕಾಪಾದುದು ನೆಲಕ್ಕೆ (ಭೂಮಿಗೆ ರಕ್ಷಣೆಯಾಯಿತು) ತೋಳ್ ವಲವಿ ದೊರೆತು ಎನೆ (ಅವನ ತೋಳುಬಲ ಇಂಥಾದ್ದು ಎನ್ನುವಾಗ) ಮರುಳೆ ಹರಿಗನೊಳ್ ಪಗೆಗೊಳ್ವಾ (ಮರುಳೆ ಅರ್ಜುನನಲ್ಲಿ ಹಗೆತನ ಮಾಡವೆಯಾ?)
ಪದ್ಯ-೨:ಅರ್ಥ: ಅರ್ಜುನನ ತೋಳಿನ ಬಲವು ಶರಣು ಬಂದವರನ್ನು ರಕ್ಷಿಸಿತು. ಅವನ ಬಲವು ಶತ್ರುರಾಜರಿಗೆ ಕಾಲಾಗ್ನಿಯಾಯಿತು. ಭೂಮಿಗೆ ರಕ್ಷಣೆಯಾಯಿತು. ಅವನ ತೋಳುಬಲ ಇಂಥಾದ್ದು ಎನ್ನುವಾಗ, ಹುಚ್ಚ! ಅರ್ಜುನನಲ್ಲಿ ಹಗೆತನ ಮಾಡವೆಯಾ?
ವ|| ಎಂದೆನಿತಾನುಂ ತೆಱದೊಳೆ ಸಾಱಯುಂ ಕೀಱಯುಂ ನುಡಿದೊಡೆ ಧೃತರಾಷ್ಟ್ರಂ ಮಗನಲ್ಲಿಗೆ ವಂದು ಜಡಿದು ನುಡಿದುಮೇಗೆಯ್ದು ಮೊಡಂಬಡಿಸಲಾಱದಿರೆ ಯುಧೀಷ್ಠಿರಂ ತಲೆಗವಿವನಲ್ಲದೆಯುಮೇವದೊಳ್ ತಲೆಗವಿದು ಸಿಗ್ಗಂ ಕೊಂಡಾಡಿ ನೆತ್ತಮನಾಡಿ-
ವಚನ:ಪದವಿಭಾಗ-ಅರ್ಥ:ಎಂದು ಎನಿತಾನುಂ ತೆಱದೊಳೆ ಸಾಱಿಯುಂ ಕೀಱಿಯುಂ ನುಡಿದೊಡೆ (ಎಂದು ಎಷ್ಟೋ ರೀತಿಯಲ್ಲಿ ಸಾರಿ ಸಾರಿ ಕೋಪದಿಂದ ಹೇಳಿದರೂ) ಧೃತರಾಷ್ಟ್ರಂ ಮಗನಲ್ಲಿಗೆ ವಂದು ಜಡಿದು ನುಡಿದುಂ ಏಗೆಯ್ದುಂ ಒಡಂಬಡಿಸಲಾಱದಿರೆ (ಧೃತರಾಷ್ಟ್ರನು ಮಗನ ಹತ್ತಿರಕ್ಕೆ ಬಂದು ಗದರಿಸಿ ಹೇಳಿ ಏನೂ ಮಾಡಿದರೂ ಒಪ್ಪಿಸಲಾಗದಿರಲು) ಯುಧಿಷ್ಠಿರಂ ತಲೆಗವಿವನಲ್ಲದೆಯುಂ (ತಲೆತಗ್ಗಿಸುವವನಲ್ಲವಾದರೂ) ಏವದೊಳ್ ತಲೆಗವಿದು (ಬೇಸರದಿಂದ ತಲೆತಗ್ಗಿಸಿ) ಸಿಗ್ಗಂ ಕೊಂಡು (ನಾಚಿಕೆ ಪಟ್ಟು)ಆಡಿ ನೆತ್ತಮನಾಡಿ (ಪಗಡೆಯಾಡಿ)-
ವಚನ:ಅರ್ಥ:ಎಂದು ಎಷ್ಟೋ ರೀತಿಯಲ್ಲಿ ಸಾರಿ ಸಾರಿ ಕೋಪದಿಂದ (ಭೀಷ್ಮರು?) ಹೇಳಿದರೂ, ಧೃತರಾಷ್ಟ್ರನು ಮಗನ ಹತ್ತಿರಕ್ಕೆ ಬಂದು ಗದರಿಸಿ ಬಯ್ದು ಹೇಳಿ ಏನೂ ಮಾಡಿದರೂ ಒಪ್ಪಿಸಲಾಗದಿರಲು, ಧರ್ಮರಾಜನು ತಲೆತಗ್ಗಿಸುವವನಲ್ಲವಾದರೂ ಬೇಸರದಿಂದ ತಲೆತಗ್ಗಿಸಿ ನಾಚಿಕೆಪಟ್ಟು ಪಗಡೆಯಾಡಿ-
ಕಂ|| ವ್ಯಾಳ ಗಜಂಗಳನಗ್ಗದ
ಸೂಳೆಯರೊಕ್ಕನಲನರ್ಘ್ಯ ವಸ್ತುಗಳನಿಳಾ|
ಪಾಳಂ ಸೇಲ್ತೊಡೆ ಜೂದಿನ
ಕೇಳಿಯನಾ ಕೇಳಿಯನಿತಳ್ ಮಾಣಿಸಿದರ್|| ೩ ||
ಪದ್ಯ-೩:ಪದವಿಭಾಗ-ಅರ್ಥ:ವ್ಯಾಳ ಗಜಂಗಳನು ಅಗ್ಗದಸೂಳೆಯರ ಒಕ್ಕನಲ ಅನರ್ಘ್ಯ ವಸ್ತುಗಳನು (ತುಂಟಾದ ಆನೆಗಳನ್ನೂ ಶ್ರೇಷ್ಠರಾದ ದಾಸಿಯರನ್ನೂ ಕುಟುಂಬಗಳನ್ನೂ ) ಇಳಾಪಾಳಂ ಸೇಲ್ತೊಡೆ (ಇಳೆಯ ಪಾಲಕ ಧರ್ಮರಾಜನು ಸೋತಾಗ) ಜೂದಿನಕೇಳಿಯನು ಆ ಕೇಳಿಯನಿತಳ್ ಮಾಣಿಸಿದರ್ (ಜೂಜಿನ ಆಟವನ್ನು ಆ ಆಟಕ್ಕೆ ನಿಲ್ಲಿಸಿದರು)
ಪದ್ಯ-೩:ಅರ್ಥ: ತುಂಟಾದ ಆನೆಗಳನ್ನೂ ಶ್ರೇಷ್ಠರಾದ ದಾಸಿಯರನ್ನೂ ಕುಟುಂಬಗಳನ್ನೂ ಬೆಲೆಯಿಲ್ಲದ ವಸ್ತುಗಳನ್ನೂಇಳೆಯ ಪಾಲಕ ಧರ್ಮರಾಜನು ಸೋತಾಗ, ಜೂಜಿನಾಟವನ್ನು ಆ ಆಟಕ್ಕೆ ನಿಲ್ಲಿಸಿದರು.
ವ|| ಮಾಣಿಸಿದೊಡೆ ಮಾಣದೆ ರಪಣಮಂ ತೋಱಯುಮೊತ್ತೆಯನುಗ್ಗಡಿಸಿಯುಮಾಡಿಮೆನೆ ಪೆಱತೇನುಮುಪಾಯಮಿಲ್ಲದೆಮ್ಮಾಳ್ವ ನೆಲನೊತ್ತೆಯೆಂದೊಡೆ ಬಗೆದು ನೋಡ್ ಗೆಲ್ದಿಂ ಬೞಯಂ ಮುದುಗಣ್ಗಳ್ ಮಗುೞ ಕುಡಿಸುವರೆಂಬ ಬಗೆಯೊಳಂ ವಿಕ್ರಮಾರ್ಜುನನುಂ ಭೀಮನುಂ ಯಮಳರುಮೆೞೆದುಕೊಳ್ವರೆಂಬ ಸಂಕೆಯೊಳಮಂತಲ್ತು ನಿನ್ನನ ನ್ನಿಯೊಳಂ ವರ್ಷಾವಯೊಳಲ್ಲದೆ ನೆಲನನೊತ್ತೆವಿಡಿಯೆನೆಂದೊಡೆ ಧರ್ಮಪುತ್ರಂ ಪನ್ನೆರಡು ವರುಷಂಬರಂ ನಾಡಂ ಪುಗರಣ್ಯದೊಳಿರ್ಪಂತುಮಜ್ಞಾತವಾಸಮೆಂದೊಂದು ವರುಷದೊಳಾರಾನು ಮಱದರಪ್ಪೊಡೆ ಮತ್ತಂ ದ್ರಾದಶಾಬ್ದಂಬರಂ ನಾಡ ದೆಸೆಯಂ ನೋಡದಂತಾಗೆಯೊಂದೆ ಪಲಗೆಯೊಳೆ ಗೆಲ್ಲಸೋಲಮಪ್ಪಂತು ನನ್ನಿ ನುಡಿದು ನೆಲನನೊತ್ತೆಯಿಟ್ಟಾಡಿ-
ವಚನ:ಪದವಿಭಾಗ-ಅರ್ಥ:ಮಾಣಿಸಿದೊಡೆ ಮಾಣದೆ ರಪಣಮಂ ತೋಱಯುಂ (ಹಾಗೆ ನಿಲ್ಲಿಸಿದರೂ ದುರ್ಯೋಧನನು ನಿಲ್ಲಿಸಲು ಇಷ್ಟಪಡದೆ ವಸ್ತುಗಳನ್ನು ತೋರಿಸಿಯೂ) ಒತ್ತೆಯನು ಅಗ್ಗಡಿಸಿಯುಂ ಆಡಿಂ ಎನೆ (ಒತ್ತೆಗಳನ್ನು ಕೂಗಿ ಹೇಳುತ್ತಲೂ ಆಡಿ ಎನ್ನಲು,) ಪೆಱತೇನುಂ ಉಪಾಯಮಿಲ್ಲದೆ ಎಮ್ಮ ಆಳ್ವ ನೆಲನೊತ್ತೆಯೆಂದೊಡೆ (ನಮ್ಮ ಆಳುತ್ತಿರುವ ರಾಜ್ಯವೇ ಒತ್ತೆ’ಯೆಂದೊಡನೆಯೇ) ಬಗೆದು ನೋಡ್ ಗೆಲ್ದಿಂ ಬೞಯಂ ಮುದುಗಣ್ಗಳ್ ಮಗುೞ ಕುಡಿಸುವರೆಂಬ ಬಗೆಯೊಳಂ (ಗೆದ್ದ ಬಳಿಕ (ಎಲ್ಲವನ್ನೂ) ಈ ಭೀಷ್ಮ ವಿದುರ ಮುದಿಕಗಣ್ಣಗಳು ಪುನ ಹಿಂದಕ್ಕೆ ಕೊಡಿಸಿಬಿಡುವರೆಂಬ ಯೋಚನೆಯಿಂದಲೂ) ವಿಕ್ರಮಾರ್ಜುನನುಂ ಭೀಮನುಂ ಯಮಳರುಂ ಎೞೆದುಕೊಳ್ವರೆಂಬ ಸಂಕೆಯೊಳಂ (ಅರ್ಜುನ ಭೀಮ ನಕುಲರು ಯುದ್ಧದಿಂದ ಕಸಿದುಕೊಳ್ಳುತ್ತಾರೆಂಬ ಸಂದೇಹದಿಂದಲೂ) ಅಂತಲ್ತು ನಿನ್ನ ನನ್ನಿಯೊಳಂ ವರ್ಷಾವಧಿಯೊಳಲ್ಲದೆ ನೆಲನನು ಒತ್ತೆವಿಡಿಯೆನು ಎಂದೊಡೆ (ಸಂದೇಹದಿಂದಲೂ ದುರ್ಯೋಧನನು ಧರ್ಮರಾಜನನ್ನು ಕುರಿತು ಹಾಗಲ್ಲ ನಿನ್ನ ಸತ್ಯನಡೆಯಲ್ಲಿ ನಂಬಿಕೆಯಿಲ್ಲದಿಲ್ಲ. ಆದರೂ ವರ್ಷದ ಕಾಲ ಅವಧಿಯೊಳು ಅಲ್ಲದೆ ನಿನ್ನ ಭೂಮಿಯನ್ನು ಒತ್ತೆಯಾಗಿ ಸ್ವೀಕರಿಸುವುದಿಲ್ಲ ಎನ್ನಲು), ಧರ್ಮಪುತ್ರಂ ಪನ್ನೆರಡು ವರುಷಂಬರಂ ನಾಡಂ ಪುಗದರಣ್ಯದೊಳಿರ್ಪಂತುಂ ಅಜ್ಞಾತವಾಸಮೆಂದು ಒಂದು ವರುಷದೊಳು ಆರಾನು ಮಱಿದರಪ್ಪೊಡೆ ಮತ್ತಂ ದ್ರಾದಶಾಬ್ದಂಬರಂ ನಾಡ ದೆಸೆಯಂ ನೋಡದಂತಾಗೆಯುಂ (ಧರ್ಮರಾಜನು ‘ಹನ್ನೆರಡು ವರ್ಷದವರೆಗೆ ನಾಡನ್ನು ಪ್ರವೇಶಮಾಡದೆ ಕಾಡಿನಲ್ಲಿರುತ್ತೇವೆ. ಒಂದು ವರ್ಷ ಅಜ್ಞಾನತವಾಸ ಮಾಡುತ್ತೇವೆ. ಆ ಅಜ್ಞಾತವಾಸವೆಂಬ ಒಂದು ವರ್ಷದಲ್ಲಿ ಯಾರಾದರೂ ತಿಳಿದರಾದರೆ ಪುನ ಹನ್ನೆರಡು ವರ್ಷದವರೆಗೆ ರಾಜ್ಯದ ಕಡೆಗೆ ನೋಡುವುದಿಲ್ಲ) ಒಂದೆ ಪಲಗೆಯೊಳೆ ಗೆಲ್ಲಸೋಲಂ ಅಪ್ಪಂತು ನನ್ನಿ ನುಡಿದು ನೆಲನಂ (ರಾಜ್ಯವನ್ನು) ಒತ್ತೆಯಿಟ್ಟಾಡಿ (ಒಂದು ಹಲಗೆಯಾಟದಲ್ಲಿ ಗೆಲುವು ಸೋಲು ನಿರ್ಧರವಾಗಲಿ ಎಂದು ಸತ್ಯಮಾಡಿ ರಾಜ್ಯವನ್ನು ಒತ್ತೆ ಇಟ್ಟು ಆಡಿ- )-
ವಚನ:ಅರ್ಥ:ಹಾಗೆ ನಿಲ್ಲಿಸಿದರೂ ದುರ್ಯೋಧನನು ನಿಲ್ಲಿಸಲು ಇಷ್ಟಪಡದೆ ವಸ್ತುಗಳನ್ನು ತೋರಿಸಿಯೂ ಒತ್ತೆಗಳನ್ನು ಕೂಗಿ ಹೇಳುತ್ತಲೂ ಆಡಿ ಎನ್ನಲು, ಬೇರೆ ಉಪಾಯವಿಲ್ಲದೆ ಧರ್ಮರಾಜನು ನಮ್ಮ ಆಳುತ್ತಿರುವ ರಾಜ್ಯವೇ ಒತ್ತೆ ಯೆಂದೊಡನೆಯೇ ಯೋಚನೆಮಾಡಿ ಗೆದ್ದ ಬಳಿಕ (ಎಲ್ಲವನ್ನೂ) ಈ ಭೀಷ್ಮ ವಿದುರ ಮುದಿಕಗಣ್ಣಗಳು ಪುನ ಹಿಂದಕ್ಕೆ ಕೊಡಿಸಿಬಿಡುವರೆಂಬ ಯೋಚನೆಯಿಂದಲೂ, ಅರ್ಜುನ ಭೀಮ ನಕುಲರು ಯುದ್ಧದಿಂದ ಕಸಿದುಕೊಳ್ಳುತ್ತಾರೆಂಬ ಸಂದೇಹದಿಂದಲೂ ದುರ್ಯೋಧನನು ಧರ್ಮರಾಜನನ್ನು ಕುರಿತು ಹಾಗಲ್ಲ ನಿನ್ನ ಸತ್ಯನಡೆಯಲ್ಲಿ ನಂಬಿಕೆಯಿಲ್ಲದಿಲ್ಲ. ಆದರೂ ವರ್ಷದ ಕಾಲ ಅವಧಿಯೊಳು ಅಲ್ಲದೆ ನಿನ್ನ ಭೂಮಿಯನ್ನು ಒತ್ತೆಯಾಗಿ ಸ್ವೀಕರಿಸುವುದಿಲ್ಲ ಎನ್ನಲು, ಧರ್ಮರಾಜನು ‘ಹನ್ನೆರಡು ವರ್ಷದವರೆಗೆ ನಾಡನ್ನು ಪ್ರವೇಶಮಾಡದೆ ಕಾಡಿನಲ್ಲಿರುತ್ತೇವೆ. ಒಂದು ವರ್ಷ ಅಜ್ಞಾನತವಾಸ ಮಾಡುತ್ತೇವೆ. ಆ ಅಜ್ಞಾತವಾಸವೆಂಬ ಒಂದು ವರ್ಷದಲ್ಲಿ ಯಾರಾದರೂ ತಿಳಿದರಾದರೆ ಪುನ ಹನ್ನೆರಡು ವರ್ಷದವರೆಗೆ ರಾಜ್ಯದ ಕಡೆಗೆ ನೋಡುವುದಿಲ್ಲ. ಒಂದು ಹಲಗೆಯಾಟದಲ್ಲಿ ಗೆಲುವು ಸೋಲು ನಿರ್ಧರವಾಗಲಿ ಎಂದು ಸತ್ಯಮಾಡಿ ರಾಜ್ಯವನ್ನು ಒತ್ತೆ ಇಟ್ಟು ಆಡಿ-
ಕಂ|| ಆ ಪಲಗೆಯುಮಂ ಸೋಲ್ತು ಮ
ಹೀಪತಿ ಚಲದಿಂ ಬೞಿಕ್ಕೆ ಸೋಲ್ತಂ ಗಡಮಾ|
ದ್ರೌಪದಿಯುಉಮನೇನಾಗದೊ
ಪಾಪದ ಫಳಮೆಯ್ದೆವಂದ ದೆವಸದೊಳಾರ್ಗಂ|| ೪ ||
ಪದ್ಯ-೪:ಪದವಿಭಾಗ-ಅರ್ಥ:ಆ ಪಲಗೆಯುಮಂ ಸೋಲ್ತು ಮಹೀಪತಿ (ಮಹೀಪತಿ ಧರ್ಮರಾಯನು ಆ ಹಲಗೆಯ ಆಟವನ್ನೂ ಸೋತು) ಚಲದಿಂ ಬೞಿಕ್ಕೆ ಸೋಲ್ತಂ ಗಡಂ ಆ ದ್ರೌಪದಿಯುಮನೆ (ಬಳಿಕ ಹಟದಂದ ಆಡಿ ದ್ರೌಪದಿಯನ್ನೂ ಸೋತನು ಗಡ!) ಏನಾಗದೊ ಪಾಪದ ಫಳಂ ಎಯ್ದೆವಂದ ದೆವಸದೊಳು ಆರ್ಗಂ(ಪಾಪದ ಫಲ ಕೂಡಿಬಂದ ದಿವಸ ಯಾರಿಗೆ ಏನು ತಾನೇ ಆಗುವುದಿಲ್ಲ!)
ಪದ್ಯ-೪:ಅರ್ಥ: ಆ ಹಲಗೆಯನ್ನೂ ಸೋತನು. ಧರ್ಮರಾಜನು ಅಷ್ಟಕ್ಕೇ ಬಿಡದೆ ಬಳಿಕ ಹಟದಿಂದ ದ್ರೌಪದಿಯನ್ನೂ ಸೋತನು. ಪಾಪದ ಫಲ ಕೂಡಿಬಂದ ದಿವಸ ಯಾರಿಗೆ ಏನು ತಾನೇ ಆಗುವುದಿಲ್ಲ!

ಸಭೆಯಲ್ಲಿ ದ್ರೌಪದಿಯ ತುರುಬು ಎಳೆದು ಮಾನಭಂಗ[ಸಂಪಾದಿಸಿ]

ವ|| ಅಂತು ದುರ್ಯೋಧನನಜಾತಶತ್ರುವಿನ ಸರ್ವಸ್ವಮೆಲ್ಲಮಂ ಗೆಲ್ದು ಗೆಲ್ದ ಕಸವರ ಮೆಲ್ಲಂ ಬಂದುದು ಪಾಂಚಾಳರಾಜತನೂಜೆ ಯೊರ್ವಳ್ ಬಂದಳಿಲ್ಲಾಕೆಯಂ ತನ್ನಿಮೆಂದು ಯುಧಿಷ್ಠಿರಂ ಕೊಟ್ಟ ನನ್ನಿಯ ಬಲದೊಳ್ ತನಗೆ ಲಯಮಿಲ್ಲದುದನಱದು ಮೇಗಿಲ್ಲದ ಗೊಡ್ಡಾಟಮಾಡಲ್ ಬಗೆದು ಕರ್ಣನ ಲೆಂಕಂ ಪ್ರಾತಿಕಾಮಿಯೆಂಬನುಮಂ ತನ್ನ ತಮ್ಮಂ ದುಶ್ಶಾಸನನುಮಂ ಪೇೞ್ದೊಡವಂದಿರಾಗಳೆ ಬೀಡಿಂಗೆವರಿದು ರಜಸ್ವಲೆಯಾಗಿರ್ದೆಂ ಮುಟ್ಟಲಾಗದೆನೆಯುಮೊತ್ತಂಬದಿಂದೊಳಗಂ ಪೊಕ್ಕು ಪಾಂಚಾಳಿಯಂ ಕಣ್ಗಿಡೆ ಜಡಿದು ಮುಡಿಯಂ ಪಿಡಿದು ತನ್ಮಧ್ಯದಿಂ ಸುಯೋಧನನ ಸಭಾಮಧ್ಯಕ್ಕೆ ತಂದು-
ವಚನ:ಪದವಿಭಾಗ-ಅರ್ಥ:ಅಂತು ದುರ್ಯೋಧನನು ಅಜಾತಶತ್ರುವಿನ (ಶತ್ರು ಹುಟ್ಟದೇ ಇರುವವ (ಸರ್ವಸಖನಾದ)) ಸರ್ವಸ್ವಮೆಲ್ಲಮಂ ಗೆಲ್ದು, ಗೆಲ್ದ ಕಸವರಮೆಲ್ಲಂ (ಚಿನ್ನ ಸಂಪತ್ತು) ಬಂದುದು ಪಾಂಚಾಳರಾಜತನೂಜೆ (ದ್ರೌಪದಿ)ಯೊರ್ವಳ್ ಬಂದಳಿಲ್ಲ (ಬರಲಿಲ್ಲ) ಆಕೆಯಂ ತನ್ನಿಂ ಎಂದು ಯುಧಿಷ್ಠಿರಂ ಕೊಟ್ಟ ನನ್ನಿಯ ಬಲದೊಳ್ (ಸತ್ಯದ ಬಲದಲ್ಲಿ) ತನಗೆ ಲಯಮಿಲ್ಲದುದನು ಅಱಿದು ಮೇಗಿಲ್ಲದ ಗೊಡ್ಡಾಟಮಾಡಲ್ ಬಗೆದು (ಉತ್ತಮವಲ್ಲದ ತುಂಟಾಟವಾಡಲು) ಕರ್ಣನ ಲೆಂಕಂ ಪ್ರಾತಿಕಾಮಿಯೆಂಬನುಮಂ ತನ್ನ ತಮ್ಮಂ ದುಶ್ಶಾಸನನುಮಂ ಪೇೞ್ದೊಡೆ ಅವಂದಿರು ಆಗಳೆ ಬೀಡಿಂಗೆವರಿದು (ದುಶ್ಶಾಸನನಿಗೆ ಹೇಳಿದಾಗ ಅವರು ಅವಳ ಬೀಡುಬಿಟ್ಟ ಸ್ಥಳಕ್ಕೆ ಹೋಗಿ) ರಜಸ್ವಲೆಯಾಗಿರ್ದೆಂ ಮುಟ್ಟಲಾಗದು ಎನೆಯುಂ (‘ರಸಜ್ವಲೆಯಾಗಿದ್ದೇನೆ ಮುಟ್ಟಕೂಡದು’ ಎಂದರೂ) ಒತ್ತಂಬದಿಂದ ಒಳಗಂ ಪೊಕ್ಕು ಪಾಂಚಾಳಿಯಂ ಕಣ್ಗಿಡೆ ಜಡಿದು ಮುಡಿಯಂ ಪಿಡಿದು (ಬಲಾತ್ಕಾರದಿಂದ ಒಳಗೆ ಪ್ರವೇಶಿಸಿ ದ್ರೌಪದಿಯನ್ನು ಭಯಪಡುವಂತೆ ಗದರಿಸಿ ಅವಳ ತುರುಬನ್ನು ಹಿಡಿದು) ತನ್ಮಧ್ಯದಿಂ ಸುಯೋಧನನ ಸಭಾಮಧ್ಯಕ್ಕೆ ತಂದು-
ವಚನ:ಅರ್ಥ:ಹಾಗೆ ದುರ್ಯೋಧನನು ಯುಧಿಷ್ಠಿರನ ಸರ್ವಸ್ವವನ್ನೂ ಗೆದ್ದು, ಗೆದ್ದ ಬೆಲೆಯುಳ್ಳ ವಸ್ತುಗಳೆಲ್ಲವೂ ಬಂದುವು. ದ್ರೌಪದಿಯೊಬ್ಬಳು ಮಾತ್ರ ಬಂದಿಲ್ಲ. ಆಕೆಯನ್ನು ತನ್ನಿಯೆಂದು ಧರ್ಮರಾಜನು ಕೊಟ್ಟ ಸತ್ಯವಾಕ್ಕಿನ ಬಲದಿಂದಲೇ ತನಗೆ ಆಜ್ಞೆಗೆ ಕೇಡಿಲ್ಲವೆಂದು ತಿಳಿದು ಉತ್ತಮವಲ್ಲದ ತುಂಟಾಟವಾಡಲು (ಚೇಷ್ಟೆ ಮಾಡಲು) ಯೋಚಿಸಿ ಕರ್ಣನ ಸೇವಕನಾದ ಪ್ರಾತಿಕಾಮಿಯೆಂಬುವನಿಗೂ ತನ್ನ ತಮ್ಮನಾದ ದುಶ್ಶಾಸನನಿಗೆ ಹೇಳಿದಾಗ ಅವರು ಅವಳ ಬೀಡುಬಿಟ್ಟ ಸ್ಥಳಕ್ಕೆ ಹೋಗಿ, ‘ರಸಜ್ವಲೆಯಾಗಿದ್ದೇನೆ ಮುಟ್ಟಕೂಡದು’ ಎಂದರೂ ಬಲಾತ್ಕಾರದಿಂದ ಒಳಗೆ ಪ್ರವೇಶಿಸಿ ದ್ರೌಪದಿಯನ್ನು ಭಯಪಡುವಂತೆ ಗದರಿಸಿ ಅವಳ ತುರುಬನ್ನು ಹಿಡಿದು ಆ ಮನೆಯ ಮಧ್ಯಭಾಗದಿಂದ ದುರ್ಯೋಧನನ ಸಭಾಮಂದಿರದ ಮಧ್ಯಭಾಗಕ್ಕೆ ಸೆಳೆದು ತಂದು- ತಂದರು.
ಮ|| ಮನದೊಳ್ ನೊಂದಮರಾಪಗಾಸುತ ಕೃಪ ದ್ರೋಣಾದಿಗಳ್ ಬೇಡವೇ
ಡೆನೆಯುಂ ಮಾಣದೆ ತೋೞ್ತೆ ತೊೞ್ತುವೆಸಕೆಯ್ ಪೋ ಪೋಗು ನೀನೆಂದು ಬ|
ಯ್ದೆನಿತಾನು ತೆಱದಿಂದಮುಟ್ಟುದುವರಂ ಕೆಯ್ವಂದು ದುಶ್ಶಾಸನಂ
ತನಗಂ ಮೆಲ್ಲನೆ ಮೃತ್ಯು ಸಾರೆ ತೆಗೆದಂ ಧಮ್ಮಿಲ್ಲಮಂ ಕೃಷ್ಣೆಯಾ|| ೫ ||
ಪದ್ಯ-೫:ಪದವಿಭಾಗ-ಅರ್ಥ:ಮನದೊಳ್ ನೊಂದಂ ಅರಾಪಗಾಸುತ (ಗಂಗೆಯ ಮಗ- ಭೀಷ್ಮ) ಕೃಪ ದ್ರೋಣಾದಿಗಳ್ ಬೇಡವೇಡೆನೆಯುಂ ಮಾಣದೆ (ಬಿಡದೆ) ತೋೞ್ತೆ ತೊೞ್ತುವೆಸಕೆಯ್ ಪೋ ಪೋಗು ನೀನೆಂದು ಬಯ್ದು ಎನಿತಾನು ತೆಱದಿಂದಂ (‘ದಾಸಿ, ನಡೆ, ನೀನು ತೊತ್ತಿನ ಕೆಲಸಮಾಡು ಹೋಗು, ಹೋಗು’ ಎಂದು ಎಷ್ಟೋ ರೀತಿಯಲ್ಲಿ ಬಯ್ದು) ಉಟ್ಟುದುವರಂ ಕೆಯ್ವಂದು ದುಶ್ಶಾಸನಂ ತನಗಂ ಮೆಲ್ಲನೆ ಮೃತ್ಯು ಸಾರೆ ತೆಗೆದಂ ಧಮ್ಮಿಲ್ಲಮಂ (ತುರುಬನ್ನು) ಕೃಷ್ಣೆಯಾ(ದ್ರೌಪದಿಯ)
ಪದ್ಯ-೫:ಅರ್ಥ:ಭೀಷ್ಮ ಕೃಪ ದ್ರೋಣಾದಿಗಳು ಮನಸ್ಸಿನಲ್ಲಿ ದುಖಪಟ್ಟು ಬೇಡಬೇಡವೆಂದರೂ ಬಿಡದೆ ‘ದಾಸಿ, ನಡೆ, ನೀನು ತೊತ್ತಿನ ಕೆಲಸಮಾಡು ಹೋಗು, ಹೋಗು’ ಎಂದು ಎಷ್ಟೋ ರೀತಿಯಲ್ಲಿ ಬಯ್ದು ಉಟ್ಟ ಸೀರೆಯವರೆಗೆ ಕೈಹಾಕಿ ತನಗೆ ಮೃತ್ಯು ಸಮೀಪವಾಗಿರಲು ದುಶ್ಶಾಸನನು ದ್ರೌಪದಿಯ ತುರುಬನ್ನು ಹಿಡಿದು ಸೆಳೆದನು.
ವ|| ಅಂತು ಕೃಷ್ಣೆಯ ಕೃಷ್ಣಕಬರೀಭಾರಮಂ ಮೇಗಿಲ್ಲದೆ ಪಿಡಿದು ತೆಗೆದು ಕೃಷ್ಣೋರಗನಂ ಪಿಡಿದ ಬೆಳ್ಳಾಳಂತುಮ್ಮನೆ ಬೆಮರುತ್ತುಮಿರ್ದ ದುಶ್ಶಾಸನನುಮಂ ಕಣ್ಕೆತ್ತಿ ಕಿಱುನಗೆ ನಗುವ ಕೂರದರ ಮೊಗಮುಮಂ ತಮ್ಮಣ್ಣನ ಬಿನ್ನನಾದ ಮೊಗಮುಮಂ ಕಂಡು ಕಣ್ಗಳಿಂ ನೆತ್ತರ್ ತುಳುಂಕೆ-
ವಚನ:ಪದವಿಭಾಗ-ಅರ್ಥ:ಅಂತು ಕೃಷ್ಣೆಯ ಕೃಷ್ಣಕಬರೀಭಾರಮಂ (ಕಪ್ಪಾದ ಮುಡಿಯ ಗಂಟನ್ನು) ಮೇಗಿಲ್ಲದೆ ಪಿಡಿದು ತೆಗೆದು ಕೃಷ್ಣೋರಗನಂ ಪಿಡಿದ ಬೆಳ್ಳಾಳಂ ತುಮ್ಮನೆ ಬೆಮರುತ್ತುಮಿರ್ದ ದುಶ್ಶಾಸನನುಮಂ (ನೀಚವಾದ ರೀತಿಯಲ್ಲಿ ಹಿಡಿದು ಸೆಳೆದು ಕಾಳಸರ್ಪವನ್ನು ಹಿಡಿದ ಪೆಚ್ಚನಂತೆ ಸುಮ್ಮನೆ ಬೆವರುತ್ತಿದ್ದ ದುಶ್ಶಾಸನನೂ) ಕಣ್ಕೆತ್ತಿ ಕಿಱುನಗೆ ನಗುವ ಕೂರದರ ಮೊಗಮುಮಂ ತಮ್ಮಣ್ಣನ ಬಿನ್ನನಾದ ಮೊಗಮುಮಂ ಕಂಡು ಕಣ್ಗಳಿಂ ನೆತ್ತರ್ ತುಳುಂಕೆ-
ವಚನ:ಅರ್ಥ:ಹಾಗೆ ದ್ರೌಪದಿಯ ಕಪ್ಪಾದ ಮುಡಿಯ ಗಂಟನ್ನು ನೀಚವಾದ ರೀತಿಯಲ್ಲಿ ಹಿಡಿದು ಸೆಳೆದು ಕಾಳಸರ್ಪವನ್ನು ಹಿಡಿದ ಪೆಚ್ಚನಂತೆ ಸುಮ್ಮನೆ ಬೆವರುತ್ತಿದ್ದ ದುಶ್ಶಾಸನನೂ ಕಣ್ಸನ್ನೆಮಾಡಿ (ಹಾಸ್ಯದಿಂದ) ಕಿರುನಗೆ ನಗುವ ಹಗೆಗಳ ಮುಖವನ್ನೂ ತಮ್ಮಣ್ಣನ ಖಿನ್ನವಾದ ಮುಖವನ್ನೂ ಭೀಮನು ನೋಡಿದನು. ಅದನ್ನು ಕಂಡು ಕಣ್ಣಿನಲ್ಲಿ (ಕೋಪದಿಂದ) ರಕ್ತವು ತುಳುಕಿತು
ಉ|| ಕೋಪದ ಪೆರ್ಚಿನೊಳ್ ನಡುಗುವೂರುಯುಗಂ ಕಡುಪಿಂದರಲ್ವ ನಾ
ಸಾಪುಟಮೆಕ್ಕೆಯಿಂ ಪೊಡರ್ವ ಪುರ್ವು ಪೊದಳ್ದ ಲಯಾಂತಕ ತ್ರಿಶೂ|
ಲೋಪಮ ಭೀಷಣ ಭ್ರುಕಟಿ ಮುನ್ನಮೆ ರೌದ್ರ ಗದಾಯುಧಂಬರಂ
ಪೋಪ ಭುಜಾರ್ಗಳಂ ರಿಪುಗಳ ಗ್ರಹಮಾದುದು ಭೀಮಸೇನನಾ|| ೬ ||
ಪದ್ಯ-೬:ಪದವಿಭಾಗ-ಅರ್ಥ:ಕೋಪದ ಪೆರ್ಚಿನೊಳ್ (ಆಧಿಕ್ಯದಿಂದ) ನಡುಗುವೂರುಯುಗಂ (ನಡುಗುವ ಊರುಯುಗಂ -ಎರಡೂತೊಡೆಗಳು) ಕಡುಪಿಂದ ಅರಲ್ವ ನಾಸಾಪುಟ (ಮೂಗಿನ ಹೊಳ್ಳಿಗಳು) ಎಕ್ಕೆಯಿಂ ಪೊಡರ್ವ ಪುರ್ವು(ಒಟ್ಟಿಗೆ ವಿಮಿರಿದ ಹುಬ್ಬು) ಪೊದಳ್ದ ಲಯಾಂತಕ ತ್ರಿಶೂಲೋಪಮ ಭೀಷಣ ಭ್ರುಕಟಿ (ಭಯಂಕರವೂ ಆದ ಹುಬ್ಬು ) ಮುನ್ನಮೆ ರೌದ್ರ ಗದಾಯುಧ ಅಂಬರಂ ಪೋಪ ಭುಜಾರ್ಗಳಂ (ಗದೆಯ ಕಡೆ ತಿರುಗಿದ ತೋಳುಗಳು) ರಿಪುಗಳ ಗ್ರಹಮಾದುದು (ಕತ್ತನ್ನು ಹಿಡಿ?) ಭೀಮಸೇನನಾ
ಪದ್ಯ-೬:ಅರ್ಥ: .ಅತಿಯಾದ ಕೋಪದಿಂದ ಎರಡು ತೊಡೆಗಳೂ ನಡುಗಿದುವು. ತೀವ್ರವಾಗಿ ಮೂಗಿನ ಹೊಳ್ಳೆಗಳು ಅರಳಿದುವು. ಪ್ರಳಯಕಾಲದ ಯಮನ ತ್ರಿಶೂಲಕ್ಕೆ ಸಮಾನವೂ ಭಯಂಕರವೂ ಆದ ಹುಬ್ಬು ಗಂಟಿಕ್ಕಿತು. ಮೊದಲೇ ಭಯಂಕರವಾದ ಭೀಮಸೇನನ ಅಗುಳಿಯಂತಿರುವ ತೋಳುಗಳು ಗದೆಯ ಕಡೆ ತಿರುಗಿ ಶತ್ರುಗಳ ಕತ್ತನ್ನು ಹಿಡಿಯುವಂತಾಯಿತು.

ದುಶ್ಶಾಸನನ ಕರುಳು ಬಗೆಯುವುದಾಯೂ ನೂರು ಕೌರವರನ್ನು ಕೊಲ್ಲವುದಾಗಿಯೂ ಭೀಮನ ಪ್ರತಿಜ್ಞೆ[ಸಂಪಾದಿಸಿ]

ಮ|| ನೆಲನಂ ನುಂಗುವ ಮೇರುವಂ ಪಿಡಿದು ಕೀೞ್ವಾಶಾಗಜೇಂದ್ರಂಗಳಂ
ಚಲದಿಂ ಕಟ್ಟುವ ಸಪ್ತ ಸಪ್ತಿಯನಿಳಾಭಾಗಕ್ಕೆ ತರ್ಪೊಂದು ತೋ|
ಳ್ವಲಮುಂ ಗರ್ವಮುಮುಣ್ಮಿ ಪೊಣ್ಮೆ ಮನದೊಳ್ ಕೋಪಾಗ್ನಿ ಕೆಯ್ಗಣ್ಮಿ ಕ
ಣ್ಮಲರೊಳ್ ಬಂದಿರೆ ನೋಡಿದಂ ಕಲುಷದಿಂ ಗಾಂಡೀವಿ ಗಾಂಡೀವಮಂ|| ೭
ಪದ್ಯ-೭:ಪದವಿಭಾಗ-ಅರ್ಥ:ನೆಲನಂ (ಭೂಮಿಯನ್ನೇ) ನುಂಗುವ ಮೇರುವಂ ಪಿಡಿದು ಕೀೞ್ವ, ಅಶಾಗಜೇಂದ್ರಂಗಳಂ ಚಲದಿಂ ಕಟ್ಟುವ, ಸಪ್ತ ಸಪ್ತಿಯನು (ಸೂರ್ಯನನ್ನು) ಇಳಾಭಾಗಕ್ಕೆ (ಭೂಮಿಗೆ) ತರ್ಪೊಂದು ತೋಳ್ವಲಮುಂ ಗರ್ವಮುಂ ಉಣ್ಮಿ ಪೊಣ್ಮೆ (ಚಿಮ್ಮಿ ಹೊಮ್ಮಲು) ಮನದೊಳ್ ಕೋಪಾಗ್ನಿ ಕೆಯ್ಗಣ್ಮಿ (ಕೈಮೀರಿ, ಮಿತಿಮೀರಿ) ಕಣ್ಮಲರೊಳ್ ಬಂದಿರೆ ನೋಡಿದಂ ಕಲುಷದಿಂ ಗಾಂಡೀವಿ ಗಾಂಡೀವಮಂ
ಪದ್ಯ-೭:ಅರ್ಥ: ಭೂಮಿಯನ್ನೇ ನುಂಗುವ, ಮೇರುಪರ್ವತವನ್ನು ಹಿಡಿದು ಕೀಳುವ, ದಿಗ್ಗಜಗಳನ್ನು ಹಟದಿಂದ ಕಟ್ಟುವ, ಸೂರ್ಯನನ್ನು ಭೂಭಾಗಕ್ಕೆ ತರುವ, ಬಾಹುಬಲವೂ ಅಹಂಕಾರವೂ ಚಿಮ್ಮಿ ಹೊಮ್ಮಲು ಕೋಪದ ಬೆಂಕಿಯು ಮಿತಿಮೀರಿ ಹೂವಿನಂತಿರುವ ಕಣ್ಣಿನಲ್ಲಿ ಬಂದಿರಲು, ಅರ್ಜುನನು ಕೋಪದಿಂದ ತನ್ನ ಗಾಂಡೀವವನ್ನು ನೋಡಿದನು.
ಕಂ|| ಪ್ರಕುಪಿತ ಮೃಗಪತಿ ಶಿಶು ಸ
ನ್ನಿಕಾಶರತಿ ವಿಕಟ ಭೀಷಣ ಭ್ರೂ ಭಂಗರ್
ನಕುಲ ಸಹದೇವರಿರ್ವರು
ಮಕಾಲ ಕಾಲಾಗ್ನಿರೂಪಮಂ ಕೆಯ್ಕೊಂಡರ್|| ೮ ||
ಪದ್ಯ-೮:ಪದವಿಭಾಗ-ಅರ್ಥ:ಪ್ರಕುಪಿತ (ಬಹಳಕೋಪಿತ) ಮೃಗಪತಿ ಶಿಶು ಸನ್ನಿಕಾಶರ್ (ಸಿಮಹದ ಮರಿ ಸಮಾನರು) ಅತಿ ವಿಕಟ ಭೀಷಣ ಭ್ರೂ ಭಂಗರ್ (ಅತಿ ವಿಕಟವೂ ಭಯಂಕರವೂ ಹುಬ್ಬಿನ ಗಂಟುಳ್ಳವರೂ) ನಕುಲ ಸಹದೇವರಿರ್ವರುಂ ಅಕಾಲ ಕಾಲಾಗ್ನಿರೂಪಮಂ ಕೆಯ್ಕೊಂಡರ್ (ಅಕಾಲದಲ್ಲಿ ಬರುವ ಪ್ರಳಯಾಗ್ನಿರೂಪವನ್ನು ಹೊಂದಿದರು.)
ಪದ್ಯ-೮:ಅರ್ಥ: ಬಹಳ ಕೋಪಗೊಂಡಿರುವ ಸಿಂಹದ ಮರಿಗೆ ಸಮಾನರೂ ಅತಿ ವಿಕಟವೂ ಭಯಂಕರವೂ ಹುಬ್ಬಿನ ಗಂಟುಳ್ಳವರೂ ಆದ ನಕುಲ ಸಹದೇವರಿಬ್ಬರೂ ಅಕಾಲದಲ್ಲಿ ಬರುವ ಪ್ರಳಯಾಗ್ನಿ ರೂಪವನ್ನು ಹೊಂದಿದರು.
ವ|| ಅಂತು ವಿಳಯಕಾಲಜಳನಿಧಿಗಳಂತೆ ಮೇರೆದಪ್ಪಲ್ ಬಗೆದ ತನ್ನ ನಾಲ್ವರ್ ತಮ್ಮಂದಿರ ಮುನಿದ ಮೊಗಮಂ ಕಂಡು ತನ್ನ ನುಡಿದ ನನ್ನಿಯ ಕೇಡಂ ಬಗೆದರೆಂದು ಕಟಾಕ್ಷ ವಿಕ್ಷೇಪದಿಂ ಬಾರಿಸೆ-
ವಚನ:ಪದವಿಭಾಗ-ಅರ್ಥ:ಅಂತು ವಿಳಯಕಾಲಜಳನಿಗಳಂತೆ(ವಿಳಯಕಾಲದ ಜಲನಿಧಿಗಳಂತೆ) ಮೇರೆದಪ್ಪಲ್ ಬಗೆದ ತನ್ನ ನಾಲ್ವರ್ ತಮ್ಮಂದಿರ ಮುನಿದ ಮೊಗಮಂ ಕಂಡು ತನ್ನ ನುಡಿದ ನನ್ನಿಯ ಕೇಡಂ ಬಗೆದರೆಂದು ಕಟಾಕ್ಷ ವಿಕ್ಷೇಪದಿಂ ಬಾರಿಸೆ(ಕಣ್ಸನ್ನೆಯಿಂದಲೇ ತಡೆಯಲು- ತಡೆದನು. )
ವಚನ:ಅರ್ಥ:ಹಾಗೆ ಪ್ರಳಯಕಾಲದ ಸಮುದ್ರಗಳ ಹಾಗೆ ಎಲ್ಲೆಮೀರಲು ಯೋಚಿಸಿದ ತನ್ನ ನಾಲ್ಕು ತಮ್ಮಂದಿರ ಕೋಪಗೊಂಡ ಮುಖಗಳನ್ನು ನೋಡಿ ಧರ್ಮರಾಜನು ತಾನಾಡಿದ ಸತ್ಯದ ಕೇಡನ್ನು ಯೋಚಿಸಿದ್ದಾರೆಂದು ತಿಳಿದು ಕಣ್ಸನ್ನೆಯಿಂದಲೇ ತಡೆಯಲು- ತಡೆದನು.
ಮ|| ಅನಿತೊಂದುರ್ಕಿನೊಳುರ್ಕಿ ಕೌರವ ಖಳರ್ ಪಾಂಚಾಳರಾಜಾತ್ಮಜಾ
ನನ ಪದ್ಮಗ್ಲಪನೈಕ ಕಾರಣಪರರ್ ತಾಮಾಗೆಯುಂ ಮತ್ತಮ|
ಣ್ಣನ ಕಣ್ಸನ್ನೆಗೆ ಮೀಱಲಣ್ಮದೆ ಸಮಂತಿರ್ದರ್ ಪೃಥಾಪುತ್ರರಂ
ತಿನಿತೊಂದಾದೊಡಮೇಂ ಮಹಾಪುರುಷರಾಜ್ಞಾಲಂಘನಂಗೆಯ್ವರೇ|| ೯ ||
ಪದ್ಯ-೯:ಪದವಿಭಾಗ-ಅರ್ಥ:ಅನಿತೊಂದು ಉರ್ಕಿನೊಳು ಉರ್ಕಿ ಕೌರವ ಖಳರ್ (ಕೊಬ್ಬಿನಲ್ಲಿ ಉಬ್ಬಿ ದುಷ್ಟಕೌರವರು) ಪಾಂಚಾಳರಾಜಾತ್ಮಜಾನನ ಪದ್ಮಗ್ಲಪನೈಕ ಕಾರಣಪರರ್ (ಪಾಂಚಾಳರಾಜ ಆತ್ಮಜ ಆನನ (ಪಾಂಚಾಲಿಯ ಮುಖ) ಪದ್ಮಗ್ಲಪನ್ ಏಕ (ಮುಖಕಮಲ ಬಾಡಲು ಕಾರಣ ಪರರು) ತಾಂ ಆಗೆಯುಂ (ಅವರು ಆಗಿದ್ದರೂ) ಮತ್ತಂ ಅಣ್ಣನ ಕಣ್ಸನ್ನೆಗೆ ಮೀಱಲಣ್ಮದೆ ಸಮಂತಿರ್ದರ್ (ಮೀರಲು ಸಮರ್ಥರಾಗದೆ ಸುಮ್ಮನೆ ಇದ್ದರು) ಪೃಥಾಪುತ್ರರು ಅಂತು ಇನಿತೊಂದು ಆದೊಡಂ ಏಂ ಮಹಾಪುರುಷರ್ ಆಜ್ಞಾಲಂಘನಂ ಗೆಯ್ವರೇ (ಮಹಾಪುರುಷರು ಹಿರಿಯರ ಆಜ್ಞೆಯನ್ನು ದಾಟುವರೇ? )
ಪದ್ಯ-೯:ಅರ್ಥ: ಅಷ್ಟೊಂದು ಕೊಬ್ಬಿನಲ್ಲಿ ಉಬ್ಬಿ ದುಷ್ಟಕೌರವರು ದ್ರೌಪದಿಯ ಮುಖಕಮಲವು ಬಾಡುವುದಕ್ಕೆ ಮುಖ್ಯ ಕಾರಣರಾಗಿದ್ದರೂ, ಅಣ್ಣನಾದ ಧರ್ಮರಾಜನ ಕಣ್ಸನ್ನೆಗೆ ಮೀರಲು ಸಮರ್ಥರಾಗದೆ ಪಾಂಡವರು ಸುಮ್ಮನೆ ಶಾಂತಿಯಿಂದಿದ್ದರು. ಮಹಾಪುರುಷರು ಹಿರಿಯರ ಆಜ್ಞೆಯನ್ನು ದಾಟುವರೇ?

ದ್ರೌಪದಿಯ ಪ್ರತಿಜ್ಞೆ[ಸಂಪಾದಿಸಿ]

ವ|| ಆಗಳ್ ದ್ರೌಪದಿ ತನ್ನ ಕೇಶಪಾಶಮಂ ದುಶ್ಶಾಸನಂ ಪಿಡಿದು ತೆಗೆದನೆಂಬ ಸಿಗ್ಗಗ್ಗಳಂ ಪೆರ್ಚೆ ಸಭೆಯೊಳಿಂತೆಂದಳ್-
ವಚನ:ಪದವಿಭಾಗ-ಅರ್ಥ:ಆಗಳ್ ದ್ರೌಪದಿ ತನ್ನ ಕೇಶಪಾಶಮಂ (ಕೂದಲಿನ ಗಂಟನ್ನು) ದುಶ್ಶಾಸನಂ ಪಿಡಿದು ತೆಗೆದನೆಂಬ ಸಿಗ್ಗು ಅಗ್ಗಳಂ ಪೆರ್ಚೆ (ನಾಚಿಕೆಯು ಬಹಳವಾಗಿ ಹೆಚ್ಚಲು) ಸಭೆಯೊಳು ಇಂತೆಂದಳ್-
ವಚನ:ಅರ್ಥ:ಆಗ ತನ್ನ ಕೂದಲಿನ ಗಂಟನ್ನು ದುಶ್ಶಾಸನನು ಹಿಡಿದು ಸೆಳೆದನೆಂಬ ನಾಚಿಕೆಯು ಬಹಳವಾಗಿ ಹೆಚ್ಚಲು ದ್ರೌಪದಿಯು ಸಭೆಯಲ್ಲಿ ಹೀಗೆಂದಳು.
ಕಂ|| ಮುಡಿಯಂ ಪಿಡಿದೆೞೆದವನಂ
ಮಡಿಯಿಸಿ ಮತ್ತವನ ಕರುಳ ಪಿಣಿಲಿಂದೆನ್ನಂ|
ಮುಡಿಯಿಸುವಿನೆಗಂ ಮುಡಿಯಂ
ಮುಡಿಯೆಂ ಗಡ ಕೇಳಿಮೀಗಳಾನ್ ನುಡಿ ನುಡಿದೆಂ|| ೧೦
ಪದ್ಯ-೧೦:ಪದವಿಭಾಗ-ಅರ್ಥ:ಮುಡಿಯಂ ಪಿಡಿದು ಎೞೆದವನಂ ಮಡಿಯಿಸಿ (ಕೂದಲಿನ ಮುಡಿಯನ್ನು ಹಿಡಿದು ಎಳೆದವನನ್ನು ಸಾಯಿಸಿ) ಮತ್ತೆ ಅವನ ಕರುಳ ಪಿಣಿಲಿಂದೆ ಎನ್ನಂ ಮುಡಿಯಿಸುವಿನೆಗಂ (ಅವನ ಕರುಳಿನ ಜಡೆಯಿಂದ ನನ್ನ ಮುಡಿಯನ್ನು ಮುಡಿಯಿಸುವವರೆಗೂ) ಮುಡಿಯಂ ಮುಡಿಯೆಂ ಗಡ (ಆ ಮುಡಿಯನ್ನು ಪುನ ಮುಡಿಯುವುದಿಲ್ಲ;) ಕೇಳಿಂ ಈಗಳ್ ಆನ್ ನುಡಿ ನುಡಿದೆಂ (ಕೇಳಿ ಈಗ ನಾನು ಪ್ರತಿಜ್ಞೆ ಮಾಡಿದ್ದೇನೆ ಎಂದಳು)
ಪದ್ಯ-೧೦:ಅರ್ಥ: ಮುಡಿಯನ್ನು ಹಿಡಿದೆಳೆದವನನ್ನು ಕೊಂದು ಅವನ ಕರುಳಿನ ಜಡೆಯಿಂದ ನನ್ನ ಮುಡಿಯನ್ನು ಮುಡಿಯಿಸುವವರೆಗೂ ಆ ಮುಡಿಯನ್ನು ಪುನ ಮುಡಿಯುವುದಿಲ್ಲ; ನೀವೆಲ್ಲ ಕೇಳಿ ಈಗ ನಾನು ಪ್ರತಿಜ್ಞೆ ಮಾಡಿದ್ದೇನೆ ಎಂದಳು.

ಭೀಮನ ಪ್ರತಿಜ್ಞೆ[ಸಂಪಾದಿಸಿ]

ವ|| ಎಂಬುದುಂ ಭೀಮಸೇನನಾ ಮಾತಂ ಕೇಳ್ದು ಸೈರಿಸಲಾಱದೆ-
ವಚನ:ಪದವಿಭಾಗ-ಅರ್ಥ:ಎಂಬುದುಂ ಭೀಮಸೇನನು ಆ ಮಾತಂ ಕೇಳ್ದು ಸೈರಿಸಲಾಱದೆ- (ಸಹಿಸಲಾಗದೆ)
ವಚನ:ಅರ್ಥ:ಭೀಮಸೇನನು ಆ ಮಾತನ್ನು ಕೇಳಿ ಸಹಿಸಲಾಗದೆ-
ಉ|| ಆಱದ ಕೋಪ ಪಾವಕನಿನಣ್ಣನ ನನ್ನಿಯನಿಲ್ಲಿ ಮೀಱುವೆಂ
ಮೀರೆನೆನುತ್ತುಮಿರ್ಪ ಪದದಲ್ಲಿಯೆ ನೋಡೆ ಮರುಳ್ಗೆ ಧೂಪಮಂ|
ತೋಱದ ಮಾೞ್ಕೆಯಿಂ ದ್ರುಪದರಾಜಸುತಾ ವಚನಂಗಳಲ್ಲಿ ಮೆ
ಯ್ದೋರೆ ಮರುತ್ಸುತಂ ನುಡಿದನಾ ಸಭೆಯೊಳ್ ನವ ಮೇಘನಾದದಿಂ|| ೧೧ ||
ಪದ್ಯ-೧೧:ಪದವಿಭಾಗ-ಅರ್ಥ:ಆಱದ ಕೋಪ ಪಾವಕನಿಂ (ಆರದ ಕೋಪಾಗ್ನಿಯಿಂದ) ಅಣ್ಣನ ನನ್ನಿಯನು ಇಲ್ಲಿ ಮೀಱುವೆಂ ಮೀರೆನೆ ಎನುತ್ತುಮಿರ್ಪ ಪದದಲ್ಲಿಯೆ (ಮೀರುವೆನು - ಮೀರುವುದಿಲ್ಲ, ಎನ್ನುತ್ತಿದ್ದ ಸಮಯದಲ್ಲಿಯೇ) ನೋಡೆ ಮರುಳ್ಗೆ ಧೂಪಮಂ ತೋಱದ ಮಾೞ್ಕೆಯಿಂ (ದೆವ್ವಕ್ಕೆ ಧೂಪವನ್ನು ತೋರಿಸಿದ ರೀತಿಯಿಂದ ) ದ್ರುಪದರಾಜಸುತಾ (ದ್ರೌಪದಿಯ) ವಚನಂಗಳಲ್ಲಿ ಮೆಯ್ದೋರೆ ಮರುತ್ಸುತಂ (ಮಾತುಗಳಲ್ಲಿ ಕಾಣಿಸಿಕೊಳ್ಳಲು) ನುಡಿದನು ಆ ಸಭೆಯೊಳ್ ನವ ಮೇಘನಾದದಿಂ (ಹೊಸಗುಡುಗಿನ ಶಬ್ದದಿಂದ ಹೇಳಿದನು)
ಪದ್ಯ-೧೧:ಅರ್ಥ: ಕಡಿಮೆಯಾಗದ ಕೋಪಾಗ್ನಿಯಿಂದ ಅಣ್ಣನ ಸತ್ಯವಾಕ್ಕನ್ನು ಮೀರುವೆನು - ಮೀರುವುದಿಲ್ಲ, ಎನ್ನುತ್ತಿದ್ದ ಸಮಯದಲ್ಲಿಯೇ ದೆವ್ವಕ್ಕೆ ಧೂಪವನ್ನು ತೋರಿಸಿದ ರೀತಿಯಿಂದ ದ್ರೌಪದಿಯ ಮಾತುಗಳಲ್ಲಿ ಕಾಣಿಸಿಕೊಳ್ಳಲು ಭೀಮಸೇನನು ಆ ಸಭೆಯಲ್ಲಿ ಹೊಸಗುಡುಗಿನ ಶಬ್ದದಿಂದ ಹೇಳಿದನು.
ಮ|| ಮುಳಿಸಿಂದಂ ನುಡಿದೊಂದು ನಿನ್ನ ನುಡಿ ಸಲ್ಗಾರಾಗದೆಂಬರ್ ಮಹಾ
ಪ್ರಳಯೋಲ್ಕೋಪಮ ಮದ್ಗದಾಹತಿಯಿನತ್ಯುಗ್ರಾಜಿಯೊಳ್ ಮುನ್ನಮೀ|
ಖಳ ದುಶ್ಶಾಸನನಂ ಪೊರಳ್ಚಿ ಬಸಿಱಂ ಪೋೞಕ್ಕಿ ಬಂಬಲ್ಗರು
ಳ್ಗಳಿನಾನಲ್ತೆ ವಿಳಾಸದಿಂ ಮುಡಿಯಿಪಂ ಪಂಕೇಜಪತ್ರೇಕ್ಷಣೇ|| ೧೨||
ಪದ್ಯ-೧೨:ಪದವಿಭಾಗ-ಅರ್ಥ:ಮುಳಿಸಿಂದಂ ನುಡಿದ ಒಂದು ನಿನ್ನ ನುಡಿ ಸಲ್ಗೆ ಆರು ಆಗದೆಂಬರ್ ( ಕೋಪದಿಂದ ನೀನು ಆಡಿದ ನಿನ್ನ ಶಪಥ ಸಲ್ಲಲಿ, ಆಗದು ಎನ್ನುವವರು ಯಾರು) ಮಹಾಪ್ರಳಯ ಉಲ್ಕೆಗೆ ಉಪಮ,(ಸಮಾನವಾದ) ಮತ್ ಗದಾಹತಿಯಿಂ (ನನ್ನ ಗದೆಯ ಹೊಡೆತದಿಂದ) ಅತ್ಯುಗ್ರ ಆಜಿಯೊಳ್ (ಅತಿಭಯಂಕರವಾದ ಯುದ್ಧದಲ್ಲಿ ) ಮುನ್ನಂ ಈ ಖಳ ದುಶ್ಶಾಸನನಂ ಪೊರಳ್ಚಿ ಬಸಿಱಂ ಪೋೞಕ್ಕಿ (ಮೊದಲು ದುಶ್ಶಾಸನನನ್ನು ಹೊರಳಿಸಿ ಹೊಟ್ಟೆಯನ್ನು ಹೋಳಾಗಿ ಸೀಳಿ) ಬಂಬಲ್ ಕರುಳ್ಗಳಿನು ಆನಲ್ತೆ ವಿಳಾಸದಿಂ ಮುಡಿಯಿಪಂ ಪಂಕೇಜಪತ್ರೇಕ್ಷಣೇ (ಹೆಣೆದುಕೊಂಡಿರುವ ಕರುಳಿನಿಂದ ವೈಭವದಿಂದ ಮುಡಿಯಿಸುವವನು ನಾನೇ ಅಲ್ಲವೇ ಎಲೌ ಕಮಲದಳದ ಹಾಗೆ ಕಣ್ಣುಳ್ಳ ದ್ರೌಪದಿಯೇ? )|
ಪದ್ಯ-೧೨:ಅರ್ಥ: . ಕೋಪದಿಂದ ನೀನು ಆಡಿದ ನಿನ್ನ ಶಪಥ ಸಲ್ಲಲಿ, ಆಗದು ಎನ್ನುವವರು ಯಾರು. ಮಹಾಪ್ರಳಯಕಾಲದ ಉಲ್ಕೆಗೆ ಸಮಾನವಾದ ನನ್ನ ಗದೆಯ ಹೊಡೆತದಿಂದ ಅತಿಭಯಂಕರವಾದ ಯುದ್ಧದಲ್ಲಿ ಮೊದಲು ದುಶ್ಶಾಸನನನ್ನು ಹೊರಳಿಸಿ ಹೊಟ್ಟೆಯನ್ನು ಹೋಳಾಗಿ ಸೀಳಿ ಹೆಣೆದುಕೊಂಡಿರುವ ಕರುಳಿನಿಂದ ವೈಭವದಿಂದ ನಾನೇ ಮುಡಿಯಿಸುವೆನು ಅಲ್ಲವೇ ದ್ರೌಪದಿಯೇ? (ಮುಡಿಸುವವನು ನಾನೇ ಅಲ್ಲವೇ ದ್ರೌಪದೀ)
ಮ||ಸ್ರ|| ಕುಡಿವೆಂ ದುಶ್ಶಾಸನೋರಸ್ಥಳಮನಗಲೆ ಪೋೞುರ್ದು ಕೆನ್ನೆತ್ತರಂ ಪೊ
ಕ್ಕುಡಿವೆಂ ಪಿಂಗಾಕ್ಷನೂರುದ್ವಯಮನುರು ಗದಾಘಾತದಿಂ ನುಚ್ಚು ನೂಱು|
ಗೊಡೆವೆಂ ತದ್ರತ್ನ ರಶ್ಮಿ ಪ್ರಕಟ ಮಕುಟಮಂ ನಂಬು ನಂಬೆನ್ನ ಕಣ್ಣಿಂ
ಕಿಡಿಯುಂ ಕೆಂಡಂಗಳುಂ ಸೂಸಿದಪುವಹಿತರಂ ನೋಡಿ ಪಂಕೇಜವಕ್ತ್ರೇ|| ೧೩||
ಪದ್ಯ-೧೩:ಪದವಿಭಾಗ-ಅರ್ಥ:ಕುಡಿವೆಂ ದುಶ್ಶಾಸನ ಓರಸ್ಥಳಮನು ಅಗಲೆ ಪೋೞುರ್ದು ಕೆನ್ನೆತ್ತರಂ (ದುಶ್ಶಾಸನನ ಎದೆಯನ್ನು ಅಗಲವಾಗಿ ಸೀಳಿ ಕೆನ್ನೆತ್ತರನ್ನು ಕುಡಿಯುತ್ತೇನೆ) ಪೊಕ್ಕುಡಿವೆಂ ಪಿಂಗಾಕ್ಷನ (ದುರ್ಯೋಧನನ) ಊರುದ್ವಯಮನು ಉರು ಗದಾಘಾತದಿಂ (ದೊಡ್ಡ ಗದೆಯ ಹೊಡೆತದಿಂದ ಮುರಿಯುತ್ತೇನೆ) ನುಚ್ಚು ನೂಱುಗೊಡೆವೆಂ ತದ್ ರತ್ನ ರಶ್ಮಿ ಪ್ರಕಟ ಮಕುಟಮಂ (ಕಿರೀಟವನ್ನು ನುಚ್ಚುನೂರಾಗುವಂತೆ); ನಂಬು ನಂಬೆನ್ನ ಕಣ್ಣಿಂಕಿಡಿಯುಂ ಕೆಂಡಂಗಳುಂ ಸೂಸಿದಪುವು ಅಹಿತರಂ ನೋಡಿ ಪಂಕೇಜವಕ್ತ್ರೇ
ಪದ್ಯ-೧೩:ಅರ್ಥ: ದುಶ್ಶಾಸನನ ಎದೆಯನ್ನು ಅಗಲವಾಗಿ ಸೀಳಿ ಕೆನ್ನೆತ್ತರನ್ನು ಕುಡಿಯುತ್ತೇನೆ. ಮೇಲೆಬಿದ್ದು ದುರ್ಯೋಧನನ ಎರಡುತೊಡೆಗಳನ್ನೂ ದೊಡ್ಡ ಗದೆಯ ಹೊಡೆತದಿಂದ ಮುರಿಯುತ್ತೇನೆ). ರತ್ನಕಾಂತಿಗಳಿಂದ ಪ್ರಕಾಶವಾದ ಅವನ ಕಿರೀಟವನ್ನು ನುಚ್ಚುನೂರಾಗುವಂತೆ ಪುಡಿಮಾಡುತ್ತೇನೆ. ದ್ರೌಪದಿ ಈ ನನ್ನ ಮಾತನ್ನು ನಂಬು, ನಂಬು; ಶತ್ರುಗಳನ್ನು ನೋಡಿ ನನ್ನ ಕಣ್ಣಿನಿಂದ ಕಿಡಿಯೂ ಕೆಂಡಗಳೂ ಚೆಲ್ಲುವುವು.
ಮ|| ಮುಳಿಸಂ ಮಾಡಿಯುಮೇವಮಂ ಪಡೆದುಮಿನ್ನೀ ಪಂದೆಗಳ್ ಪ್ರಾಣದಿಂ
ದೊಳರಿನ್ನುಂ ತಲೆ ಮತ್ತಮಟ್ಟೆಗಳ ಮೇಲಿರ್ದಪ್ಪುವೆಂದಂತೆ ದಲ್|
ಮುಳಿಸಿಲ್ಲಣ್ಣನ ನನ್ನಿಯೆಂಬುದನೆ ಪೇೞೀವೇೞ್ದುಮೀ ಕೌರವ
ರ್ಕಳನುಂತಿನ್ನೆಗಮುರ್ಚಿ ಮುಕ್ಕದೆ ಸಡಿಲ್ದೀ ಭೀಮನೇಂ ಮಾಣ್ಗುಮೇ|| ೧೪ ||
ಪದ್ಯ-೧೪:ಪದವಿಭಾಗ-ಅರ್ಥ:ಮುಳಿಸಂ ಮಾಡಿಯುಂ ಏವಮಂ ಪಡೆದುಂ ಇನ್ನೀ ಪಂದೆಗಳ್ ಪ್ರಾಣದಿಂದ ಒಳರು (ಕೋಪವನ್ನುಂಟುಮಾಯೂ, ನೋವನ್ನು ಬರಿಸಿಯೂ ಇನ್ನೂ ಈ ಹೇಡಿಗಳು ಜೀವದಿಂದಿದ್ದಾರೆ.) ಇನ್ನುಂ ತಲೆ ಮತ್ತೆ ಅಮಟ್ಟೆಗಳ ಮೇಲಿರ್ದಪ್ಪುವೆಂದು ಅಂತೆ ದಲ್ (ಇನ್ನೂ ಅವರ ತಲೆಗಳು ಅವರು ಮುಂಡಗಳ ಮೇಲಿವೆ ಎನ್ನುವುದು) ಮುಳಿಸಿಲ್ಲ - ಅಣ್ಣನ ನನ್ನಿಯೆಂಬುದನೆ ಪೇೞ್ (ಕೋಪವಿಲ್ಲ-ಅಣ್ಣನ ಸತ್ಯವೆಂಬುದು ಒಂದೇ ಹೇಳು; ಇಲ್ಲದಿದ್ದರೆ ಏನು ಹೇಳಿದರೂ) ಈ ಏೞ್ದುಂ ಈ ಕೌರವರ್ಕಳಂ ಉಂತು ಇನ್ನೆಗಂ ಉರ್ಚಿ ಮುಕ್ಕದೆ ಸಡಿಲ್ದೀ ಭೀಮನೇಂ ಮಾಣ್ಗುಮೇ (ಈ ಕೌರವರನ್ನು ಈ ಕೆರಳಿದ ಭೀಮನು ಇಷ್ಟು ಹೊತ್ತಿಗೆ ಸುಲಿದು ಬಾಯಿಗೆ ಹಾಕಿಕೊಳ್ಳದೆ ಬಿಡುತ್ತಿದ್ದೇನೆ? )
ಪದ್ಯ-೧೪:ಅರ್ಥ: ನಮಗೆ ಇಷ್ಟು ಕೋಪವನ್ನುಂಟುಮಾಯೂ, ನೋವನ್ನು ಬರಿಸಿಯೂ ಇನ್ನೂ ಈ ಹೇಡಿಗಳು ಜೀವದಿಂದಿದ್ದಾರೆ. ಇನ್ನೂ ಅವರ ತಲೆಗಳು ಅವರು ಮುಂಡಗಳ ಮೇಲಿವೆ ಎನ್ನುವುದು ಕೋಪವಿಲ್ಲದ ಅಣ್ಣನ ಸತ್ಯವೆಂಬುದು ಒಂದೇ ಕಾರಣ ಹೇಳು, ಕೇಳು- ಇಲ್ಲದಿದ್ದರೆ ಏನು ಹೇಳಿದರೂ ಅಣ್ಣನ ಸತ್ಯವೆಂಬುದು ಒಂದು ಇಲ್ಲದಿದ್ದರೆ ಏನು ಹೇಳಿದರೂ ಈ ಕೆರಳಿದ ಭೀಮನು ಇಷ್ಟು ಹೊತ್ತಿಗೆ ಸುಲಿದು ಬಾಯಿಗೆ ಹಾಕಿಕೊಳ್ಳದೆ ಬಿಡುತ್ತಿದ್ದೇನೆ?
ವ|| ಎಂದು ಪಾಂಚಾಳರಾಜತನೂಜೆಯ ಮನಮನಾರೆ ನುಡಿದು ಮತ್ತಮಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಪಾಂಚಾಳರಾಜತನೂಜೆಯ ಮನಮನು ಆರೆ (ಆರುವಂತೆ-ಸಮಾಧಾನವಾಗಲು) ನುಡಿದು ಮತ್ತಂ ಇಂತೆಂದಂ-
ವಚನ:ಅರ್ಥ:ಎಂದು ದ್ರೌಪದಿಯ ಮನಸ್ಸು ಸಮಾಧಾನವಾಗುವ ಹಾಗೆ ನುಡಿದು ಪುನ ಹೀಗೆಂದನು-
ಮ|| ಸುರಸಿಂಧುಪ್ರಿಯಪುತ್ರ ಕೇಳ್ ಕಳಶಜಾ ನೀಂ ಕೇಳ್ ಕೃಪಾ ಕೇಳ ಮಂ
ದರದಿಂದಂಬುಯಂ ಕಲಂಕಿದಸುರಪ್ರಧ್ವಂಸಿವೋಲ್ ಬಾಹುಮಂ||
ದರದಿಂ ವೈರಿಬಲಾಬ್ಧಿ ಘೂರ್ಣಿಸೆ ಬಿಗುರ್ತೀ ಕೌರವರ್ ಕೂಡೆ ನೂ
ರ್ವರುಮಂ ಕೊಲ್ವೆನಿದೆನ್ನ ಪೂಣ್ಕೆ ನುಡಿದೆಂ ನಿಮ್ಮೀ ಸಭಾಮಧ್ಯದೊಳ್|| ೧೫ ||
ಪದ್ಯ-೧೫:ಪದವಿಭಾಗ-ಅರ್ಥ:ಸುರಸಿಂಧುಪ್ರಿಯಪುತ್ರ (ಭೀಷ್ಮನೇ ಕೇಳು) ಕೇಳ್ ಕಳಶಜಾ (ದ್ರೋಣನೇ ಕೇಳು) ನೀಂ ಕೇಳ್ ಕೃಪಾ (ಕೃಪನೇ ನೀನೂ ಕೇಳು) ಕೇಳ ಮಂದರದಿಂದ ಅಂಬುಯಂ ಕಲಂಕಿದ ಸುರಪ್ರಧ್ವಂಸಿವೋಲ್ ಬಾಹುಮಂದರದಿಂ (ಮಂದರಪರ್ವತದಿಂದ ಕ್ಷೀರಸಮುದ್ರವನ್ನು ಕಲಕಿದ ನಾರಾಯಣನ ಹಾಗೆ ನನ್ನ ತೋಳೆಂಬ ಮಂದರದಿಂದ ) ವೈರಿಬಲಾಬ್ಧಿ ಘೂರ್ಣಿಸೆ ಬಿಗುರ್ತೀ (ಶತ್ರುಸೇನಾಸಮುದ್ರವನ್ನು ಕಡೆದು ಮದಿಸಿರುವ) ಕೌರವರ್ ಕೂಡೆ ನೂರ್ವರುಮಂ ಕೊಲ್ವೆನು (ಈ ನೂರು ಕೌರವರನ್ನೂ ಒಟ್ಟಿಗೆ ಕೊಲ್ಲುತ್ತೇನೆ.) ಇದು ಎನ್ನ ಪೂಣ್ಕೆ (ಪ್ರತಿಜ್ಞೆ) ನುಡಿದೆಂ ನಿಮ್ಮೀ ಸಭಾಮಧ್ಯದೊಳ್(ನಿಮ್ಮ ಈ ಸಭೆಯ ಮಧ್ಯದಲ್ಲಿ ಈ ನನ್ನ ಪ್ರತಿಜ್ಞೆಯನ್ನು ತಿಳಿಸಿದ್ದೇನೆ)
ಪದ್ಯ-೧೫:ಅರ್ಥ: ಭೀಷ್ಮರೇ ಕೇಳಿ, ದ್ರೋಣರೇ ಕೇಳಿ, ಕೃಪರೇ ಕೇಳಿ, ಮಂದರಪರ್ವತದಿಂದ ಕ್ಷೀರಸಮುದ್ರವನ್ನು ಕಲಕಿದ ನಾರಾಯಣನ ಹಾಗೆ ನನ್ನ ತೋಳೆಂಬ ಮಂದರದಿಂದ ಘೋಷಿಸುತ್ತಿರುವ ಶತ್ರುಸೇನಾಸಮುದ್ರವನ್ನು ಕಡೆದು ಮದಿಸಿರುವ ಈ ನೂರು ಕೌರವರನ್ನೂ ಒಟ್ಟಿಗೆ ಕೊಲ್ಲುತ್ತೇನೆ. ನಿಮ್ಮ ಈ ಸಭೆಯ ಮಧ್ಯದಲ್ಲಿ ಈ ನನ್ನ ಪ್ರತಿಜ್ಞೆಯನ್ನು ತಿಳಿಸಿದ್ದೇನೆ, ಎಂದನು ಭೀಮ.
ವ|| ಎಂದು ವಿಳಯಕಾಳಜಳಧರನಿನಾದದಿಂ ಗಿರಿ ತಾಟಿಸಿದಂತಾನುಂ ನೆಲಂ ಮೊೞಗಿದಂತಾನುಂ ಗಜಱಿ ಗರ್ಜಿಸಿ ನುಡಿದು ಮಹಾಪ್ರತಿಜ್ಞಾರೂಢನಾದ ಭೀಮಸೇನನ ನುಡಿಯಂ ಕೇಳ್ದು ಕೌರವರ್ ಕಡಲ ನಡುವಣ ಪರ್ವತದಂತಳ್ಳಾಡೆ ಕುರುವೃದ್ಧನುಂ ಬುದ್ಧಿವೃದ್ಧನುಮಪ್ಪ ಗಾಂಗೇಯ ಧೃತರಾಷ್ಟ್ರಂಗಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ವಿಳಯಕಾಳ ಜಳಧರ ನಿನಾದದಿಂ (ಪ್ರಳಯಕಾಲದ ಸಮುದ್ರಘೋಷದಂತೆ) ಗಿರಿ ತಾಟಿಸಿದಂತೆ ಆನುಂ ನೆಲಂ ಮೊೞಗಿದಂತೆ ಆನುಂ ಗಜಱಿ ಗರ್ಜಿಸಿ (ಪರ್ವತವು ಅಪ್ಪಳಿಸಿದ ಭೂಮಿಯ ಗುಡುಗಿನಂತೆ ಆರ್ಭಟಿಸಿ ಗರ್ಜನೆಮಾಡಿ) ನುಡಿದು ಮಹಾಪ್ರತಿಜ್ಞಾರೂಢನಾದ ಭೀಮಸೇನನ ನುಡಿಯಂ ಕೇಳ್ದು ಕೌರವರ್ ಕಡಲ ನಡುವಣ ಪರ್ವತದಂತೆ ಅಳ್ಳಾಡೆ ಕುರುವೃದ್ಧನುಂ ಬುದ್ಧಿವೃದ್ಧನುಮಪ್ಪ ಗಾಂಗೇಯ ಧೃತರಾಷ್ಟ್ರಂಗೆ ಇಂತೆಂದಂ (ಕೌರವರಲ್ಲಿ ಹಿರಿಯನೂ ಆದ ಜ್ಞಾನವೃದ್ಧನೂ ಆದ ಭೀಷ್ಮನು ಧೃತರಾಷ್ಟ್ರನಿಗೆ ಹೀಗೆ ಹೇಳಿದನು)-
ವಚನ:ಅರ್ಥ:ಎಂದು ಪ್ರಳಯಕಾಲದ ಸಮುದ್ರಘೋಷದಂತೆ ಪರ್ವತವು ಅಪ್ಪಳಿಸಿದ ಭೂಮಿಯ ಗುಡುಗಿನಂತೆ ಆರ್ಭಟಿಸಿ ಗರ್ಜನೆಮಾಡಿ ನುಡಿದು ಮಹಾಪ್ರತಿಜ್ಞೆಯನ್ನು ಅಂಗೀಕರಿಸಿದ ಭೀಮಸೇನನ ಮಾತನ್ನು ಕೇಳಿ ಕೌರವರು ಸಮುದ್ರಮಧ್ಯದ ಪರ್ವತದಂತೆ ನಡುಗಿದರು. ಕೌರವರಲ್ಲಿ ಹಿರಿಯನೂ ಹಿರಿಯನೂ ಆದ ಜ್ಞಾನವೃದ್ಧನೂ ಆದ ಭೀಷ್ಮನು ಧೃತರಾಷ್ಟ್ರನಿಗೆ ಹೀಗೆ ಹೇಳಿದನು

ಭೀಷ್ಮರ ವ್ಯಥೆ[ಸಂಪಾದಿಸಿ]

ಚಂ|| ಭರತ ಯಯಾತಿ ಕುತ್ಸ ಪುರುಕುತ್ಸ ಪುರೂರವರಿಂದಮಿನ್ನೆಗಂ
ಪರಿವಿಡಿಯಿಂದೆ ಬಂದ ಶಶಿವಂಶಮದೀಗಳಿವಂದಿರಿಂದೆ ನಿ|
ತ್ತರಿಸುವುದಕ್ಕುಮೆಂದೆ ಬಗೆದಿರ್ದೊಡೆ ಕೀಲೊಳೆ ಕಿಚ್ಚು ಪುಟ್ಟಿ ಭೋ
ರ್ಗರೆದುರಿದಂತೆ ನಿನ್ನ ಮಗನಿಂದುರಿದತ್ತಿದನಾರೊ ಬಾರಿಪರ್|| ೧೬ ||
ಪದ್ಯ-೧೬:ಪದವಿಭಾಗ-ಅರ್ಥ:ಭರತ ಯಯಾತಿ ಕುತ್ಸ ಪುರು ಕುತ್ಸ ಪುರೂರವರಿಂದಂ ಇನ್ನೆಗಂ ಪರಿವಿಡಿಯಿಂದೆ ಬಂದ ಶಶಿವಂಶಂ ಇದೀಗಳ್ ಇವಂದಿರಿಂದೆ ನಿತ್ತರಿಸುವುದಕ್ಕುಮೆಂದೆ ಬಗೆದಿರ್ದೊಡೆ ಕೀಲೊಳೆ ಕಿಚ್ಚು ಪುಟ್ಟಿ ಭೋರ್ಗರೆದು ಉರಿದಂತೆ ನಿನ್ನ ಮಗನಿಂದ ಉರಿದತ್ತು ಇದನಾರೊ ಬಾರಿಪರ್ (ತಡೆಯುವವರು)
ಪದ್ಯ-೧೬:ಅರ್ಥ: ಕುಲವೃದ್ಧ ಭೀಷ್ಮನು ಧೃತರಾಷ್ಟ್ರನಿಗೆ ಹೇಳುತ್ತಾನೆ: ಭರತ ಯಯಾತಿ ಕುತ್ಸ ಪುರೂರವರಿಂದ ಹಿಡಿದು ಇಲ್ಲಿಯವರೆಗೂ ಕ್ರಮವಾಗಿ ನಡೆದುಬಂದ ಚಂದ್ರವಂಶವು ಈಗ ಈ ಕೌರವರಿಂದ ಮುಂದುವರಿಯುತ್ತದೆ ಎಂದು ಯೋಚಿಸುತ್ತಿರಲು, ಅದರ ಬದಲು ಕೀಲಿನಲ್ಲಿಯೇ ಬೆಂಕಿಹುಟ್ಟಿ ಶಬ್ದಮಾಡಿ ಉರಿಯುವ ಹಾಗೆ ನಿನ್ನ ಮಗನಿಂದ ನಮ್ಮ ವಂಶವೇ ಸುಟ್ಟುಹೋಯಿತು (ಹೋಗುತ್ತದೆ). ಇದನ್ನು ತಡೆಯುವವರು ಯಾರೋ! ಯಾರೂ ಇಲ್ಲ!

ಪಾಂಡವರು ಹಸ್ತಿನಾವತಿಯಿಂದ ವನವಾಸಕ್ಕೆ ನಿರ್ಗಮನ[ಸಂಪಾದಿಸಿ]

ವ|| ಎಂದೞಲ್ದು ಧೃತರಾಷ್ಟ್ರನೊಳ್ ನುಡಿಯೆ ಕುಂಭಸಂಭವಾಶ್ವತ್ಥಾಮ ಕೃಪ ವಿದುರಾದಿಗಳ್ ನೀಮೆನಿತು ನುಡಿದೊಡಮಾನೆಯ ಕೋಡು ಬಾಗದೆಂಬಂತೆ ದುರ್ಯೋಧನನುದ್ವೃತ್ತತೆಯುಮಂ ಭೀಮಸೇನನ ಮಹಾಪ್ರತಿಜ್ಞೆಯುಮನಾರ್ಗಂ ಬಾರಿಸಲ್ಬಾರದು ಕೆಯ್ಗೞದ ಮನೆವಾೞ್ತೆ ಬುದ್ಧಿವೇೞಲೆಡೆಯಿಲ್ಲ ತಾಮುಂ ತಾಮುಮಱಿವರ್ ಬನ್ನಿಮೆಂದು ನಿಜನಿವಾಸಂಗಳ್ಗೆ ಪೋದರಾಗಳ್ ಭೀಮಸೇನಂ ಧರ್ಮಪುತ್ರಂಗೆಂದನುಪ್ಪಿಕ್ಕಿದೊಡೆ ತುಪ್ಪದ ಮೆಳ್ಪಡಿತೆಂಬಂತೆ ನಮ್ಮ ಕೆಮ್ಮನಿರ್ಪಿರವಿದೇ ಕಾರಣಂ ಬನ್ನಿ ಪೋಪಮೆಂದರಮನೆಯಂ ಪೊಱಮಟ್ಟು ಬರೆ ಧೃತರಾಷ್ಟ್ರಂ ದುರ್ಯೋಧನನೇಗೆಯ್ದುಮೊಡಂಬಡಿಸಲಾಱದಿರೆಯುಂ ದ್ರೌಪದಿ ಪರಸ್ತ್ರೀಯಂ ನಮ್ಮ ಮನೆಯೊಳಿರಿಸುವುದು ಚಿತಮಲ್ಲೆಂದು ಕೞಿಪಿದೊಡೆ ಪಾಂಚಾಳರಾಜತನೂಜೆವೆರಸು ಬಿನ್ನ ಬಿನ್ನನೆ ಪೊೞಲಂ ಪೊಱಮಡೆ ಪುರಜನಂಗಳೆಲ್ಲಂ ನೆರೆದವರ ಪೋಗಿಂಗೆ ಸೈರಿಸಲಾಱದೆ ತಮ್ಮೊಳಿಂತೆಂದರ್-
ವಚನ:ಪದವಿಭಾಗ-ಅರ್ಥ:ಎಂದೞಲ್ದು ಧೃತರಾಷ್ಟ್ರನೊಳ್ ನುಡಿಯೆ, ಕುಂಭಸಂಭವ ಅಶ್ವತ್ಥಾಮ ಕೃಪ ವಿದುರಾದಿಗಳ್ ನೀಂ ಎನಿತು ನುಡಿದೊಡಂ ಆನೆಯ ಕೋಡು ಬಾಗದೆಂಬಂತೆ ದುರ್ಯೋಧನನು ಉದ್ವೃತ್ತತೆಯುಮಂ (ಉದ್ ವೃತ್ತತೆ ) ಭೀಮಸೇನನ ಮಹಾಪ್ರತಿಜ್ಞೆಯುಮನು ಆರ್ಗಂ ಬಾರಿಸಲ್ ಬಾರದು, ಕೆಯ್ಗೞಿದ ಮನೆವಾೞ್ತೆ ಬುದ್ಧಿವೇೞಲು (ಬುದ್ಧಿಹೇಳಲು) ಎಡೆಯಿಲ್ಲ, ತಾಮುಂ ತಾಮುಂ ಅಱಿವರ್, ಬನ್ನಿಂ ಎಂದು ನಿಜ ನಿವಾಸಂಗಳ್ಗೆ ಪೋದರಾಗಳ್, ಭೀಮಸೇನಂ ಧರ್ಮಪುತ್ರಂಗೆ ಎಂದನು 'ಉಪ್ಪು ಇಕ್ಕಿದೊಡೆ ತುಪ್ಪದ ಮೆಳ್ಪಡಿತೆ' ಎಂಬಂತೆ ನಮ್ಮ ಕೆಮ್ಮನಿರ್ಪಿರವು (ಸುಮ್ಮನಿರುವುದು) ಇದೇ ಕಾರಣಂ; ಬನ್ನಿ ಪೋಪಮೆಂದು ಅರಮನೆಯಂ ಪೊಱಮಟ್ಟು ಬರೆ, ಧೃತರಾಷ್ಟ್ರಂ ದುರ್ಯೋಧನನು ಏಗೆಯ್ದುಂ ಒಡಂಬಡಿಸಲು ಆಱದಿರೆಯುಂ, ದ್ರೌಪದಿ ಪರಸ್ತ್ರೀಯಂ ನಮ್ಮ ಮನೆಯೊಳು ಇರಿಸುವುದು ಉಚಿತಮಲ್ಲೆಂದು ಕೞಿಪಿದೊಡೆ ಪಾಂಚಾಳರಾಜತನೂಜೆವೆರಸು ಬಿನ್ನ ಬಿನ್ನನೆ (ಸುಮ್ಮನೆ ಮೌನವಾಗಿ) ಪೊೞಲಂ ಪೊಱಮಡೆ ಪುರಜನಂಗಳೆಲ್ಲಂ ನೆರೆದವರ ಪೋಗಿಂಗೆ ಸೈರಿಸಲಾಱದೆ ತಮ್ಮೊಳಿಂತೆಂದರ್-
ವಚನ:ಅರ್ಥ:|| ಎಂದು ವ್ಯಸನಪಟ್ಟು ಧೃತರಾಷ್ಟ್ರನಲ್ಲಿ ಹೇಳಲು, ದ್ರೋಣ, ಅಶ್ವತ್ಥಾಮ, ಕೃಪ, ವಿದುರರೇ ಮೊದಲಾದವರು ನೀವೆಷ್ಟು ಹೇಳಿದರೂ ಆನೆಯ ಕೊಂಬು ಬಗ್ಗುವುದಿಲ್ಲ ಎನ್ನುವ ಹಾಗೆ ದುರ್ಯೋಧನನ ಉದ್ಧಟತನವನ್ನೂ, ಭೀಮನ ಮಹಾಪ್ರತಿಜ್ಞೆಯನ್ನೂ ಯಾರಿಗೂ ತಡೆಯಲಾಗುವುದಿಲ್ಲ; ಕೈಮೀರಿದ ಮನೆವಾರ್ತೆಗೆ ಬುದ್ಧಿಹೇಳಲು ಅವಕಾಶವಿಲ್ಲ; ಅವರವರೇ ತಿಳಿಯಲಿ ಬನ್ನಿ ಎಂದು ತಮ್ಮ ಮನೆಗಳಿಗೆ ಹೋದರು. ಆಗ ಭೀಮಸೇನನು ಧರ್ಮರಾಜನಿಗೆ ಹೇಳಿದನು. 'ಉಪ್ಪನ್ನು ಬಡಿಸಿದರೆ ತುಪ್ಪಕ್ಕೆ ಮೋಸ' ಎನ್ನುವ ಹಾಗೆ ನಾವು ಸುಮ್ಮನಿರುವುದರಿಂದ ಏನು ಪ್ರಯೋಜನ, ಬನ್ನಿ ಹೋಗೋಣ ಎಂದು ಅರಮನೆಯಿಂದ ಹೊರಟು ಬರಲು, ಧೃತರಾಷ್ಟ್ರನು ದುರ್ಯೋಧನನನ್ನು ಏನು ಮಾಡಿಯೂ ಒಪ್ಪಿಸಲಾಗದಿರಲು, ಪರಸ್ತ್ರೀಯಾದ ದ್ರೌಪದಿಯನ್ನು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದು ಯೋಗ್ಯವಲ್ಲವೆಂದು ಕಳುಹಿಸಿದನು. ದ್ರೌಪದಿಯೊಡನೆ ಪಾಂಡವರು ಸುಮ್ಮನೆ ಮೌನವಾಗಿ ಪಟ್ಟಣವನ್ನು ಬಿಟ್ಟು ಹೊರಟರು. ಪಟ್ಟಣದ ಜನರೆಲ್ಲರೂ ಒಟ್ಟುಗೂಡಿ ಅವರು ಆ ಸ್ಥಿತಿಯಲ್ಲಿ ಹೋಗುತ್ತಿರುವುದನ್ನು ನೋಡಿ ಸಹಿಸಲಾರದೆ ದುಖಪಟ್ಟು ತಮ್ಮತಮ್ಮಲ್ಲಿ ಹೀಗೆಂದರು-
ಕಂ|| ಏದೊರೆಯಂ ಯಮನಂದನ
ನೇದೊರೆಯಂ ಭೀಮಸೇನನೇದೊರೆಯಂ ಕಂ|
ಜೋದರನ ಮೈದುನಂ ತಾ
ಮೇದೊರೆಯರಮಳ್ಗಳವರ್ಗಮೀಯಿರವಾಯ್ತೇ|| ೧೭ ||
ಪದ್ಯ-೧೭:ಪದವಿಭಾಗ-ಅರ್ಥ:ಏದೊರೆಯಂ ಯಮನಂದನನು, ಏದೊರೆಯಂ ಭೀಮಸೇನನು, ಏದೊರೆಯಂ ಕಂಜೋದರನ (ಕಮಲನಾಭ) ಮೈದುನಂ, ತಾಮೇದೊರೆಯರು ಅಮಳ್ಗಳ್ ಅವರ್ಗಂ ಈಯಿರವಾಯ್ತೇ
ಪದ್ಯ-೧೭:ಅರ್ಥ: ಎಂಥವನು ಧರ್ಮರಾಜನು ಅಸಮಾನನು, ಭೀಮಸೇನನು ಎಂತಹವನು, ಕೃಷ್ಣನ ಮೈದುನನಾದ ಅರ್ಜುನನು ಎಂಥವನು; ಅವಳಿಗಳಾದ ನಕುಲಸಹದೇವರೆಂಥವರು. ಅವರಿಗೂ ಈ ಸ್ಥಿತಿಯಾಯಿತೇ!
ಕಂ||ಜೂದಾಡಿ ಸೋಲ್ತು ನನ್ನಿಗೆ
ಮೇದಿನಿಯಂ ಕೊಟ್ಟು ಪಾಂಡುನಂದನರೀಗಳ್|
ಪೋದೊಡಮೇನ್ ತಿಣುಕಾಗದೆ
ಪೋದಪುದೇ ನಮ್ಮ ನೃಪತಿಗವು ತವುದಲೆಯೊಳ್|| ೧೮ ||
ಪದ್ಯ-೧೮:ಪದವಿಭಾಗ-ಅರ್ಥ:ಜೂದಾಡಿ ಸೋಲ್ತು ನನ್ನಿಗಂ ಮೇದಿನಿಯಂ ಕೊಟ್ಟು, ಪಾಂಡುನಂದನರ್ ಈಗಳ್ ಪೋದೊಡಂ ಏನ್! ತಿಣುಕಾಗದೆ ಪೋದಪುದೇ(ಕಷ್ಟ-ಕೆಡುಕಾಗದೇ ಹೋಗುವುದೇ?) ನಮ್ಮ ನೃಪತಿಗೆ ಅವು ತವುದಲೆಯೊಳ್ (ಅವು -ರಾಜ್ಯಾಪಹಾರ ಅಂತ್ಯದಲ್ಲಿ)
ಪದ್ಯ-೧೮:ಅರ್ಥ: ಜೂಜಾಡಿ ಸೋತು, ಸತ್ಯಕ್ಕಾಗಿ ರಾಜ್ಯವನ್ನು ಕೊಟ್ಟು, ಪಾಂಡವರು ಹೋದರೇನು? ರಾಜನಾದ ದುರ್ಯೋಧನನಿಗೆ ಕೊನೆಯಲ್ಲಿ ಅವು- ರಾಜ್ಯಾಪಹಾರ ಕೆಡುಕಾಗದೇ ಹೋಗುವುದೇ??
ಕಂ||ಜೂದಿನ ಗೆಲ್ಲದೊಳಾದೀ
ಮೇದಿನಿಯಂ ಕಂಡು ಕಜ್ಜಮಂ ಕಾಣದೆ ದು|
ಜ್ಜೋದನನದೇನದೇಂ ಮರು
ಳಾದನೊ ಬಡಿಗಂಡನಿಲ್ಲ ಪಾಲನೆ ಕಂಡಂ|| ೧೯||
ಪದ್ಯ-೧೯:ಪದವಿಭಾಗ-ಅರ್ಥ:ಜೂದಿನ ಗೆಲ್ಲದೊಳಾದ ಈ ಮೇದಿನಿಯಂ ಕಂಡು ಕಜ್ಜಮಂ ಕಾಣದೆ (ಮುಂದಿನ ಕಾರ್ಯವನ್ನು ಕಾಣದೆ) ದುಜ್ಜೋದನಂ ಅದೇನ್ ಅದೇಂ ಮರುಳಾದನೊ ಬಡಿಗಂಡನಿಲ್ಲ (ಎತ್ತಿದ ಬಡಿಗೆಯನ್ನು ಕಂಡನಿಲ್ಲ - ಕಾಣಲಿಲ್ಲ.) ಪಾಲನೆ ಕಂಡಂ
ಪದ್ಯ-೧೯:ಅರ್ಥ: ಜೂಜಿನ ಗೆಲುವಿನಲ್ಲಿ ಬಂದ ಈ ರಾಜ್ಯವನ್ನು ನೋಡಿ, ಮುಂದಾಗುವ ಕಾರ್ಯವನ್ನು ಕಾಣದೆ ದುರ್ಯೋಧನನು ಅದೇತಕ್ಕೆ ಅತ್ಯಂತ ಹುಚ್ಚನಾದನೊ! ಎತ್ತಿದ ಬಡಿಗೆಯನ್ನು ಕಾಣಲಿಲ್ಲ! ಹಾಲನ್ನು ಮಾತ್ರ ಕಂಡನು.
ಎನಿತಾನುಮಂದದಿಂ ಜೂ
ದನಿಕ್ಕೆಯುಂ ದ್ರುಪದಸುತೆಯನೆೞೆದುಯ್ಯೆಯುಮಿಂ|
ತಿನಿತೊಂದಾದುದು ದುಶ್ಶಾ
ಸನನಿಂದಂ ಶಕುನಿಯೆಂಬ ಬೆಳ್ಪೊಱಸಿಂದಂ|| ೨೦||
ಪದ್ಯ-೨೦:ಪದವಿಭಾಗ-ಅರ್ಥ:ಎನಿತಾನುಂ ಅಂದದಿಂ (ಎಷ್ಟೋ ರೀತಿಯಲ್ಲಿ) ಜೂದನು ಇಕ್ಕೆಯುಂ (ಜೂಜನ್ನು ಹೂಡಿಯೂ) ದ್ರುಪದಸುತೆಯನು ಎೞೆದುಯ್ಯೆಯುಂ (ಸಭೆಗೆ ಎಳೆದು ಒಯ್ದುದೂ) ಇಂತಿನಿತು ಒಂದು ಆದುದು (ಇಷ್ಟೆಲ್ಲಾ ಒಂದು-ಕಟ್ಟ ಕೆಲಸ- ಆದುದು) ದುಶ್ಶಾಸನನಿಂದಂ ಶಕುನಿಯೆಂಬ ಬೆಳ್ಪೊಱಸಿಂದಂ (ಬಿಳಿಪೊರನಿಂದ- ಬಿಳಿ ಪಾರಿವಾಳದಿಂದ )
ಪದ್ಯ-೨೦:ಅರ್ಥ: ಎಷ್ಟೋ ರೀತಿಯಲ್ಲಿ ಜೂಜನ್ನು ಹೂಡಿಯೂ ದ್ರೌಪದಿಯನ್ನು ಸಭೆಗೆ ಎಳೆದು ಒಯ್ದುದೂ, ಇಷ್ಟೆಲ್ಲಾ ಒಂದು-ಕಟ್ಟ ಕೆಲಸ- ಆದುದು ಆ ದುಶ್ಶಾಸನನಿಂದ ಮತ್ತು ಶಕುನಿಯೆಂಬ ಕೇಡು ಸೂಚಿಸುವ ಬಿಳಿ ಪಾರಿವಾಳದಿಂದ, ಎಂದರು ಜನ.
ವ|| ಎಂದಿರ್ದರಿರ್ದಲ್ಲಿಯೆ ತಂತಮ್ಮ ಕಂಡುದನೆ ನುಡಿಯೆಯುಂ, ಕೆಲರವರ ಪೋಗಿಂಗೞಲ್ದು ಕಣ್ಣನೀರನಿಕ್ಕೆಯುಂ ಕೆಲರ್ ಪರಸಿ ಸೇಸೆಯನಿಕ್ಕೆಯುಂ ಪೊೞಲಂ ಪೊಱಮಟ್ಟು ಪುರದ ಬಾಹಿಗೆಯನೆಯ್ದುವಾಗಳ್ ಗಾಂಗೇಯ ದ್ರೋಣ ಕೃಪ ವಿದುರಾದಿಗಳ್ ಕೊಂತಿವೆರಸೆಯ್ದೆವಂದು ಕಿಱಿದಂತರಮಂ ಕಳಿಪುತ್ತುಂ ಬರೆ (ಕುಂತಿಯೊಡಗೂಡಿ ಸ್ವಲ್ಪದೂರ ಬಂದು ಕಳುಹಿಸಿ ಬರಲು) ಧರ್ಮಪುತ್ರನೆಮಗೆ ತಕ್ಕ ಬುದ್ಧಿಯಂ ಪೇೞ್ದು ಮಗುೞಿಮೆಂದೊಡನಿಬರುಂ ಮನಂ ಬಂಧಿಸಿದ ಮೋಹದಿಂ ಗೞಗೞನೆ ಕಣ್ಣ ನೀರ್ಗಳಂ ಸುರಿದು-
ವಚನ:ಪದವಿಭಾಗ-ಅರ್ಥ:ಎಂದು ಇರ್ದರು ಇರ್ದಲ್ಲಿಯೆ ತಂತಮ್ಮ ಕಂಡುದನೆ ನುಡಿಯೆಯುಂ ಕೆಲರು ಅವರ ಪೋಗಿಂಗೆ ಅೞಲ್ದು ಕಣ್ಣ ನೀರನು ಇಕ್ಕೆಯುಂ (ಕೆಲವರು ಪಾಂಡವರು ಹಾಗೆ ಹೋಗುತ್ತಿರುವುದಕ್ಕೆ ಅತ್ತು ಕಣ್ಣೀರನ್ನು ಸುರಿಸಿದರು.) ಕೆಲರ್ ಪರಸಿ ಸೇಸೆಯನಿಕ್ಕೆಯುಂ (ಕೆಲವರು ಹರಸಿ ಅಕ್ಷತೆಯನ್ನಿಕ್ಕಿದರು) ಪೊೞಲಂ ಪೊಱಮಟ್ಟು ಪುರದ ಬಾಹಿಗೆಯನೆಯ್ದುವಾಗಳ್ (ಪಟ್ಟಣವನ್ನು ಬಿಟ್ಟು ಹೊರಟು ಹೊರಭಾಗವನ್ನು ಸೇರುವಾಗ) ಗಾಂಗೇಯ ದ್ರೋಣ ಕೃಪ ವಿದುರಾದಿಗಳ್ ಕೊಂತಿವೆರಸಿ ಎಯ್ದೆವಂದು ಕಿಱಿದಂತರಮಂ ಕಳಿಪುತ್ತುಂ ಬರೆ (ಕುಂತಿಯೊಡಗೂಡಿ ಸ್ವಲ್ಪದೂರ ಬಂದು ಕಳುಹಿಸಿ ಬರಲು) ಧರ್ಮಪುತ್ರಂ ಎಮಗೆ ತಕ್ಕ ಬುದ್ಧಿಯಂ ಪೇೞ್ದು ಮಗುೞಿಂ ಎಂದೊಡನೆ (‘ನಮಗೆ ಯೋಗ್ಯವಾದ ನೀತಿಯನ್ನು ಹೇಳಿ ಹಿಂತಿರುಗಿ’ ಎಂದಾಗ) ಇಬರುಂ ಮನಂ ಬಂಧಿಸಿದ ಮೋಹದಿಂ ಗೞಗೞನೆ ಕಣ್ಣ ನೀರ್ಗಳಂ ಸುರಿದು (ತಮ್ಮ ಮನಸ್ಸನ್ನು ಕಟ್ಟಿದ ಪ್ರೀತಿಯಿಂದ ಗಳಗಳನೆ ಕಣ್ಣೀರನ್ನು ಸುರಿಸಿದರು)-
ವಚನ:ಅರ್ಥ:ಎಂದು ಇದ್ದವರು ಇದ್ದ ಕಡೆಯಲ್ಲಿಯೇ ತಾವು ತಾವು ನೋಡಿದುದನ್ನು ನುಡಿಯುತ್ತಿದ್ದರು. ಕೆಲವರು ಪಾಂಡವರು ಹಾಗೆ ಹೋಗುತ್ತಿರುವುದಕ್ಕೆ ಅತ್ತು ಕಣ್ಣೀರನ್ನು ಸುರಿಸಿದರು. ಮತ್ತೆ ಕೆಲವರು ಹರಸಿ ಅಕ್ಷತೆಯನ್ನಿಕ್ಕಿದರು. ಪಟ್ಟಣವನ್ನು ಬಿಟ್ಟು ಹೊರಟು ಹೊರಭಾಗವನ್ನು ಸೇರುವಾಗ ಭೀಷ್ಮ ದ್ರೋಣ ಕೃಪ ವಿದುರರೇ ಮೊದಲಾದವರು ಕುಂತಿಯೊಡಗೂಡಿ ಸ್ವಲ್ಪದೂರ ಬಂದು ಕಳುಹಿಸಿ ಬರಲು, ಧರ್ಮರಾಜನು ‘ನಮಗೆ ಯೋಗ್ಯವಾದ ನೀತಿಯನ್ನು ಹೇಳಿ ಹಿಂತಿರುಗಿ’ ಎಂದಾಗ . ಅವರೆಲ್ಲರೂ ತಮ್ಮ ಮನಸ್ಸನ್ನು ಕಟ್ಟಿದ ಪ್ರೀತಿಯಿಂದ ಗಳಗಳನೆ ಕಣ್ಣೀರನ್ನು ಸುರಿಸಿದರು.
ಚಂ|| ಪುಗುವುದರಣ್ಯಮಿರ್ಪಿರವು ಪನ್ನೆರಡಬ್ದಮದಲ್ಲದಲ್ಲಿ ಕೋ
ೞ್ಮಿಗದ ವನೇಚರಾಪರ ದಾಯಿಗರತ್ತಣಿನಪ್ಪಪಾಯ ಕೋ|
ಟಿಗೆ ಪವಣಿಲ್ಲ ಕಲ್ಪಿಗೆಡೆಯಾವುದೊ ಪಾೞಿಯ ಬಟ್ಟೆದಪ್ಪಿ ಮುಂ
ನೆಗೞ್ದೆಡೆಯಿಲ್ಲ ಪೋಗು ಜಯಮಕ್ಕೆ ಶುಭಂ ನಿಮಗಕ್ಕೆ ಮಂಗಳಂ|| ೨೧ ||
ಪದ್ಯ-೨೧:ಪದವಿಭಾಗ-ಅರ್ಥ:ಪುಗುವುದರಣ್ಯಂ ಇರ್ಪಿರವು ಪನ್ನೆರಡು ಅಬ್ದಂ (ವರ್ಷ) ಅದಲ್ಲದೆ ಅಲ್ಲಿ ಕೋೞ್ಮಿಗದ (ಕೊಂಬಿನ ಪ್ರಾಣಿಗಳ) ವನೇಚರ ಆಪರ (ಬೇಡರ ನಾಯಕರ) ದಾಯಿಗರತ್ತಣಿಂ ಅಪ್ಪ ಅಪಾಯ (ದಾಯಾದಿಗಳ ಕಡೆಯಿಂದ ಬರುವ ಅಪಾಯ), ಕೋಟಿಗೆ ಪವಣಿಲ್ಲ (ಬರುವ ಅಪಾಯಕ್ಕೆ ಲೆಕ್ಕವಿಲ್ಲ) ಕಲ್ಪಿಗೆ ಎಡೆಯಾವುದೊ (ಬುದ್ಧಿ ಹೇಳುವುದಕ್ಕೆ ಅವಕಾಶವೆಲ್ಲಿದಯೊ!) ಪಾೞಿಯ ಬಟ್ಟೆದಪ್ಪಿ ಮುಂ ನೆಗೞ್ದೆ ಎಡೆಯಿಲ್ಲ (ಧರ್ಮಮಾರ್ಗವನ್ನು ಬಿಟ್ಟು ಮೊದಲು ನೀವು ನಡೆದ ಸಂದರ್ಭವೇ ಇಲ್ಲ) ಪೋಗು ಜಯಮಕ್ಕೆ ಶುಭಂ ನಿಮಗೆ ಅಕ್ಕೆ (ಆಗಲಿ) ಮಂಗಳಂ|
ಪದ್ಯ-೨೧:ಅರ್ಥ: ನೀವು ಪ್ರವೇಶಮಾಡಬೇಕಾಗಿರುವುದು ಕಾಡು, ಇರಬೇಕಾದ ಕಾಲ ಹನ್ನೆರಡುವರ್ಷ; ಅದಲ್ಲದೆಯೂ ಅಲ್ಲಿ ಕೊಂಬುಳ್ಳ ಕ್ರೂರಮೃಗಗಳ, ಬೇಡನಾಯಕರ, ದಾಯಾದಿಗಳ ಕಡೆಯಿಂದ ಬರುವ ಅಪಾಯಕ್ಕೆ ಲೆಕ್ಕವಿಲ್ಲ; ಬುದ್ಧಿ ಹೇಳುವುದಕ್ಕೆ ಅವಕಾಶವೆಲ್ಲಿದಯೊ! ಧರ್ಮಮಾರ್ಗವನ್ನು ಬಿಟ್ಟು ಮೊದಲು ನೀವು ನಡೆದ ಸಂದರ್ಭವೇ ಇಲ್ಲ ; 'ಧರ್ಮರಾಜ! ಹೋಗು ನಿನಗೆ ಶುಭವಾಗಲಿ ಮಂಗಳವಾಗಲಿ' ಎಂದು ಆಶೀರ್ವದಿಸಿದರು
ವ|| ಎಂದೊಡಲ್ಲಿರ್ದು ನಿಮ್ಮ ಮನಕ್ಕೆ ಕೊಕ್ಕರಿಕ್ಕೆಯಾಗಿಯುಂ ಪಾೞಿಗೆ ಗೆಂಟಾಗಿಯುಂ ನೆಗೞ್ವಮಲ್ಲೆಂದು ಪೊಡವಟ್ಟು ಕೊಂತಿಯಂ ವಿದುರನ ಮನೆಯೊಳಿರಲ್ವೇೞ್ದು ಸುಭದ್ರೆಯನಭಿಮನ್ಯುವರೆಸು ನಾರಾಯಣನಲ್ಲಿಗೆ ದ್ವಾರಾವತಿಗೆ ಕಳಿಪಿ ನಿಜ ಪರಿಜನಂಬೆರಸು ಗಂಗೆಯಂ ಪಾಯ್ದದಱ ಪಡುವಣ ದೆಸೆಯ ಕಾಮ್ಯಕವನದ ಬಟ್ಟೆಯಂ ತಗುಳ್ದು ಪೋಗೆ ವೋಗೆ-
ವಚನ:ಪದವಿಭಾಗ-ಅರ್ಥ:ಎಂದೊಡೆ ಅಲ್ಲಿರ್ದು ನಿಮ್ಮ ಮನಕ್ಕೆ ಕೊಕ್ಕರಿಕ್ಕೆಯಾಗಿಯುಂ (ಅಸಹ್ಯವಾಗುವ ಹಾಗೆಯೂ) ಪಾೞಿಗೆ ಗೆಂಟಾಗಿಯುಂ ನೆಗೞ್ವಮಲ್ಲೆಂದು (ಧರ್ಮಕ್ಕೆ ದೂರವಾಗಿಯೂ ನಡೆಯುವವರಲ್ಲ) ಪೊಡವಟ್ಟು (ನಮಸ್ಕರಿಸಿ) ಕೊಂತಿಯಂ ವಿದುರನ ಮನೆಯೊಳಿರಲ್ ವೇೞ್ದು ( ಹೇಳಿ) ಸುಭದ್ರೆಯನು ಅಭಿಮನ್ಯುವರೆಸು (ಸುಭದ್ರೆಯನ್ನು ಅಭಿಮನ್ಯುವಿನೊಡನೆ) ನಾರಾಯಣನಲ್ಲಿಗೆ ದ್ವಾರಾವತಿಗೆ ಕಳಿಪಿ ನಿಜ ಪರಿಜನಂಬೆರಸು (ತಮ್ಮ ಪರಿವಾರದೊಡನೆ) ಗಂಗೆಯಂ ಪಾಯ್ದು ಅದಱ ಪಡುವಣ ದೆಸೆಯ (ಪಶ್ಚಿಮ ದಿಕ್ಕಿನ) ಕಾಮ್ಯಕವನದ ಬಟ್ಟೆಯಂ ತಗುಳ್ದು ಪೋಗೆ (ಬಟ್ಟೆ-ದಾರಿಯನ್ನು ಅನುಸರಿಸಿ ಹೋಗಲು) ವೋಗೆ-
ವಚನ:ಅರ್ಥ:ಧರ್ಮರಾಜನು ‘ನಾವು ಅಲ್ಲಿದ್ದರೂ ನಿಮ್ಮ ಮನಸ್ಸಿಗೆ ಅಸಹ್ಯವಾಗುವ ಹಾಗೆಯೂ ಧರ್ಮಕ್ಕೆ ದೂರವಾಗಿಯೂ ನಡೆಯುವವರಲ್ಲ’ ಎಂದು ಹೇಳಿ ನಮಸ್ಕಾರ ಮಾಡಿ ಕುಂತಿಯನ್ನು ವಿದುರನ ಮನೆಯಲ್ಲಿರಹೇಳಿ ಸುಭದ್ರೆಯನ್ನು ಅಭಿಮನ್ಯುವಿನೊಡನೆ ದ್ವಾರಾವತಿಗೆ ಕೃಷ್ಣನ ಹತ್ತಿರಕ್ಕೆ ಕಳುಹಿಸಿ, ತಮ್ಮ ಪರಿವಾರದೊಡನೆ ಮುಂದಕ್ಕೆ ನಡೆದರು. ಗಂಗಾನದಿಯನ್ನೂ ದಾಟಿ ಅದರ ಪಶ್ಚಿಮದಿಕ್ಕಿನಲ್ಲಿರುವ ಕಾಮ್ಯಕವನದ ದಾರಿಯನ್ನು ಅನುಸರಿಸಿ ಹೋದರು. - ಹಾಗೆ ಹೋಗಲು-

ಕಾಮ್ಯಕವನ - ಮಳೆಗಾಲದ ವರ್ಣನೆ[ಸಂಪಾದಿಸಿ]

ಚಂ|| ದೆಸೆ ಪಸುರೇಱೆ ಪಚ್ಚೆಯೊಳೆ ಮುಚ್ಚಿ ಮುಸುಂಕಿದ ಮಾೞ್ಕೆಯಾದುದಾ
ಗಸಮಳಿ ನೀಳ ನೀಳ ಗಳಕಂಠ ತಮಾಳ ವಿನೀಳನೀರದ|
ಪ್ರಸರ ವಿಭಾಸಿಯಾದುದು ಸಮೀರನುದಾರ ಕದಂಬ ಕೇತಕೀ
ಪ್ರಸರ ರಜಸ್ವರ ಪ್ರಕಟ ಪಾಂಸುಳಮಾದುದು ಮೇಘಕಾಲದೊಳ್|| ೨೨
ಪದ್ಯ-೨೨:ಪದವಿಭಾಗ-ಅರ್ಥ:ದೆಸೆ ಪಸುರೇಱೆ (ದಿಕ್ಕು - ಎಲ್ಲಾ ದಿಕ್ಕಿನಲ್ಲೂ ಪಸಿರು ಏರೆ- ಹಸಿರು ಹೆಚ್ಚಲು) ಪಚ್ಚೆಯೊಳೆ ಮುಚ್ಚಿ ಮುಸುಂಕಿದ ಮಾೞ್ಕೆಯಾದುದು (ಪಚ್ಚೆಯ ರತ್ನದಿಂದ ಹೊದಿಸಿದ ಹಾಗಾಯಿತು) ಆಗಸಂ ಅಳಿ (ದುಂಬಿ) ನೀಳ ನೀಳ ಗಳಕಂಠ (ಶಿವನ ಕಂಠ) ತಮಾಳ (ಹೊಂಗೆಯ ಮರ) ವಿನೀಳ ನೀರದ ಪ್ರಸರ (ಬಹಳ ನೀಲಿಯ ಮೋಡದ ಹರಡುವಿಕೆ) ವಿಭಾಸಿಯಾದುದು (ಆಕಾಶವು ದುಂಬಿಯಂತೆ ಶಿವನ ಕೊರಳಿನಂತೆ, ಹೊಂಗೆಯ ಮರದಂತೆ ಕಪ್ಪಗಿರುವ ಅತ್ಯಂತ ನೀಲ ಬಣ್ಣದ ಮೋಡಗಳ ಹರಡುವಿಕೆಯಿಂದ ಶೋಭಿಸಿತು.) ಸಮೀರಂ (ಗಾಳಿ) ಉದಾರ (ವಿಸ್ತಾರವಾಗಿ ಹಬ್ಬಿರುವ) ಕದಂಬ ಕೇತಕೀ ಪ್ರಸರ (ಸಮೂಹದಿಂದ) ರಜಸ್ವರ ಪ್ರಕಟ ಪಾಂಸುಳಂ-ದೂಳಿನಿಂದ (ಕೇದಗೆಯ ಹೊರಬರು ಪರಾಗದ ಧೂಳಿನಂದ ಗಾಳಿ ತುಂಬಿದುದು ) ಆದುದು ಮೇಘಕಾಲದೊಳ್ (ಮಳೆಗಾಲದಲ್ಲಿ)
ಪದ್ಯ-೨೨:ಅರ್ಥ: ೨೨. ಮಳೆಗಾಲವು ಪ್ರಾರಂಭವಾಯಿತು. ದಿಕ್ಕುಗಳು ಪಚ್ಚೆ-ಹಸಿರು ಪೈರುಗಳಿಂದ ಹಸಿರುಹತ್ತಲು ಪಚ್ಚೆಯ ರತ್ನದಿಂದ ಹೊದಿಸಿದ ಹಾಗಾಯಿತು. ಆಕಾಶವು ದುಂಬಿಯಂತೆ ಶಿವನ ಕೊರಳಿನಂತೆ, ಹೊಂಗೆಯ ಮರದಂತೆ ಕಪ್ಪಗಿರುವ ಅತ್ಯಂತ ನೀಲ ಬಣ್ಣದ ಮೋಡಗಳ ಹರಡುವಿಕೆಯಿಂದ ಶೋಭಿಸಿತು. ಮಳಗಾಲದಲ್ಲಿ ಗಾಳಿಯು ವಿಸ್ತಾರವಾಗಿ ಹಬ್ಬಿರುವ ಕದಂಬ ಮತ್ತು ಕೇದಗೆ ಹೂವುಗಳ ಸಮೂಹದಿಂದ ಹೊರಗೆ ಚೆಲ್ಲುತ್ತಿರುವ ಪರಾಗದಿಂದ ತುಂಬಿತು.
ಚಂ|| ಕರಿಯ ಮುಗಿಲ್ಗಳಿಂ ಗಗನಮಂಡಳಮೊಪ್ಪಿರೆ ಸೋಗೆಯಿಂ ವನಾಂ
ತರಮೆಸೆದೊಪ್ಪೆ ತೋರ್ಪ ಮೊಳೆವುಲ್ಗಳಿನೀ ಧರಣೀವಿಭಾಗಮೊ|
ಪ್ಪಿರೆ ಪೊಸ ವೇಟಕಾಱರೆರ್ದೆಗಳ್ ಪೊಸ ಕಾರ ಪೊಡರ್ಪುಗಂಡದೇಂ
ಕರಿತುವದೇಂ ಕಲಂಕಿದುವದೇಂ ಕುೞಿಗೊಂಡುವದೇಂ ಕನಲ್ದುವೋ|| ೨೩
ಪದ್ಯ-೨೩:ಪದವಿಭಾಗ-ಅರ್ಥ: ಕರಿಯ ಮುಗಿಲ್ಗಳಿಂ ಗಗನಮಂಡಳಂ ಒಪ್ಪಿರೆ (ಕಪ್ಪಾಗಿರುವ ಮೋಡಗಳಿಂದ ಆಕಾಶವು ಒಪ್ಪಿರಲು ಚಂದಕಾಣಲು) ಸೋಗೆಯಿಂ ವನಾಂತರಂ ಎಸೆದೊಪ್ಪೆ (ಕಾಡು ನವಿಲುಗಳಿಂದ ಸೊಗಸಾಗಿರಲು) ತೋರ್ಪ ಮೊಳೆವುಲ್ಗಳಿಂ ಈ ಧರಣೀ ವಿಭಾಗಮೊಪ್ಪಿರೆ (ಈ ಭೂಭಾಗವು ಮೊಳೆಯುತ್ತಿರುವ ಹುಲ್ಲುಗಳಿಂದ ಚಂದಕಾಣಲು) ಪೊಸ ವೇಟಕಾಱರ ಎರ್ದೆಗಳ್ (ಹೊಸ ಪ್ರಣಯಿಗಳ ಹೃದಯವು) ಪೊಸ ಕಾರ ಪೊಡರ್ಪುಗಂಡದೇಂ (ಪೊಡರ್ಪು ಕಂಡು ಅದೇಂ) ಕರಿತುವದೇಂ(ಹೊಸ ಮಾಳೆಗಾಲದ ವೈಭವವನ್ನು ಕಂಡು ಅದೇನು ಕರ್ರಗಾದವೇ!) ಕಲಂಕಿದುವು ಅದೇಂ, ಕುೞಿಗೊಂಡುವು ಅದೇಂ ಕನಲ್ದುವೋ
ಪದ್ಯ-೨೩:ಅರ್ಥ: ಕಪ್ಪಾಗಿರುವ ಮೋಡಗಳಿಂದ ಆಕಾಶವೊಪ್ಪಿರಲು, ನವಿಲುಗಳಿಂದ ಕಾಡಿನ ಮಧ್ಯಭಾಗವ ಒಪ್ಪಿರಲು, ಈ ಭೂಭಾಗವು ಮೊಳೆಯುತ್ತಿರುವ ಹುಲ್ಲುಗಳಿಂದ ಚಂದಕಾಣಲು, ಹೊಸ ಪ್ರಣಯಿಗಳ ಹೃದಯವು ಹೊಸ ಮಾಳೆಗಾಲದ ವೈಭವವನ್ನು ಕಂಡು ಅದೇನು ಕರ್ರಗಾದವೇ!, ಅದೆಷ್ಟು ಕೆರಳಿದುವೋ; ಅದೆಷ್ಟು ಗುಳಿಗೊಂಡವೋ! ಉದ್ರೇಕಗೊಂಡವೂ!

ವ|| ಅದಲ್ಲದೆಯುಂ-

ವಚನ:ಅರ್ಥ: ಅಷ್ಟೇ ಅಲ್ಲದೆ .
ಮ|| ಭವ ಲಾಲಾಟವಿಲೋಚನಾಗ್ನಿಶಿಖೆಯಿಂ ಬೆಂದಳ್ಕಿ ಮತ್ತಂ ಮನೋ
ಭವನೆೞ್ಚತ್ತೊಡೆ ಕಾಮಕಾಂತೆ ಬೞಯಂ ತನ್ನಿಚ್ಚೆಯಿಂ ಮೆಚ್ಚಿ ಬ|
ಣ್ಣವುರಂ ತೀವಿದ ಮಾೞ್ಕೆಯಾಯ್ತು ನವಿಲಿಂ ಕುಂದಂಗಳಿಂದಿಂದ್ರಗೋ
ಪವಿಳಾಸಂಗಳಿನಾಳಿಕಲ್ಲ ಪರಲಿಂ ಕಾರೊಳ್ ಮಹೀಮಂಡಲಂ|| ೨೪ ||
ಪದ್ಯ-೨೪:ಪದವಿಭಾಗ-ಅರ್ಥ:ಭವ ಲಾಲಾಟ ವಿಲೋಚನ ಅಗ್ನಿಶಿಖೆಯಿಂ (ಶಿವನ ಹಣೆಗಣ್ಣ ಉರಿಯ ಜ್ವಾಲೆಯಿಂದ) ಬೆಂದು ಅಳ್ಕಿ ಮತ್ತಂ ಮನೋಭವನು ಎೞ್ಚತ್ತೊಡೆ (ಸುಟ್ಟು ಬಳಲಿ ಮತ್ತೆ ಮನೋಭವನಾದ ಕಾಮನು ಸಜೀವನಾಗಿ ಎಚ್ಚರಗೊಂಡರೆ) ಕಾಮಕಾಂತೆ ಬೞಯಂ (ರತಿ ನಂತರ) ತನ್ನಿಚ್ಚೆಯಿಂ ಮೆಚ್ಚಿ ಬಣ್ಣವುರಂ ತೀವಿದ ಮಾೞ್ಕೆಯಾಯ್ತು (ತನ್ನ ಇಷ್ಟದಂತೆ ಮೆಚ್ಚಿಕೊಂಡು ಬಣ್ಣದ ಬಣ್ಣದ ವರ್ಣಪೂರ ಎಂಬ ಬಟ್ಟೆಯಿಂದ -ಮುಚ್ಚಿದ ತೆರನಾಯಿತು- ಯಾವುದೆಂದರೆ-) ನವಿಲಿಂ ಕುಂದಂಗಳಿಂ(ಕುಂದ ಹೂಗಳಿಂದಲೂ) ಇಂದ್ರಗೋಪ ವಿಳಾಸಂಗಳಿಂ (ಮಿಂಚುಹುಳಗಳ ವಿಲಾಸದಿಂದಲೂ) ಆಳಿಕಲ್ಲ ಪರಲಿಂ (ಆಲಿಕಲ್ಲುಗಳಿಂದಲೂ) ಕಾರೊಳ್ (ಮಳೆಗಾಲದಲ್ಲಿ) ಮಹೀಮಂಡಲಂ (ಭೂಮಂಡಲವು)|
ಪದ್ಯ-೨೪:ಅರ್ಥ: ಮಳೆಗಾಲದಲ್ಲಿ ಭೂಮಂಡಲವು ನವಿಲುಗಳಿಂದಲೂ, ಕುಂದ ಹೂಗಳಿಂದಲೂ, ಮಿಂಚುಹುಳಗಳ ಲೀಲೆಯಿಂದಲೂ, ಆಲಿಕಲ್ಲುಗಳಿಂದಲೂ ಕೂಡಿರಲು ಈಶ್ವರನ ಹಣೆಗಣ್ಣಿನ ಬೆಂಕಿಯ ಜ್ವಾಲೆಯಿಂದ ಸತ್ತ ಮನ್ಮಥನು ಪುನ ಸಜೀವನಾಗಲು ಅದರಿಂದ ಸಂತೋಷಗೊಂಡ ಕಾಮನ ಸತಿಯಾದ ರತಿಯು ತನ್ನಿಷ್ಟಬಂದಂತೆ ನೆಲಕ್ಕೆ ಹಾಸಿದ ವಿವಿಧ ಬಣ್ಣದ ವಸ್ತ್ರದಂತೆ ಭೂಮಿಯು ಶೋಭಿಸಿತು.
ಚಂ|| ಪೊಳೆವಮರೇಂದ್ರಗೋಪದ ಪಸುರ್ತೆವುಲ್ಗಳ ತಳ್ತ ಕಾರ್ಮುಗಿ
ಲ್ಗಳ ಕಿಱುಗೊಂಕುಗೊಂಕಿದ ಪೊನಲ್ಗಳ ಕೆಂಪು ಪಸುರ್ಪು ಕರ್ಪು ಬೆ|
ಳ್ಪೊಳಕೊಳೆ ಶಕ್ರ ಕಾರ್ಮುಕ ವಿಳಾಸಮನೇನೆರ್ದೆಗೊಂಡು ಬೇಟದ
ತ್ತಳಗಮನುಂಟುಮಾಡಿದುದೊ ಕಾಮನ ಕಾರ್ಮುಕದಂತೆ ಕಾರ್ಮುಕಂ|| ೨೫ ||
ಪದ್ಯ-೨೪:ಪದವಿಭಾಗ-ಅರ್ಥ:ಪೊಳೆವಮರೇಂದ್ರಗೋಪದ (ಹೊಳೆಯುವ ಮಿಂಚುಹುಳುಗಳ) ಪಸುರ್ತೆ ವುಲ್ಗಳ (ಹಸುರಾದ ಎಳೆಯ ಹುಲ್ಲುಗಳ) ತಳ್ತ ಕಾರ್ಮುಗಿಲ್ಗಳ (ಒತ್ತಾಗಿ ಸೇರಿರುವರುವ ಕರಿಯಮೋಡಗಳ) ಕಿಱುಗೊಂಕುಗೊಂಕಿದ ಪೊನಲ್ಗಳ (ಸಣ್ಣ ಅಂಕುಡೊಂಕಿನ ಪ್ರವಾಹಗಳ) ಕೆಂಪು ಪಸುರ್ಪು ಕರ್ಪು ಬೆಳ್ಪು ಒಳಕೊಳೆ (ಕೆಂಪು ಹಸುರು ಬಿಳುಪು ಬಣ್ಣಗಳು ಒಟ್ಟಾಗಿ ಸೇರಿ ಒಳಗಳಡಿರಲು) ಶಕ್ರ ಕಾರ್ಮುಕ ವಿಳಾಸಮನು (ಕಾಮನಬಿಲ್ಲಿನ ಶೋಭೆಯನ್ನು) ಏನ್ ಎರ್ದೆಗೊಂಡು (ಮನವನ್ನು ಸೂರೆಕೊಂಡು) ಬೇಟದ ಅತ್ತಳಗಮನು (ಪ್ರೇಮದ ಆಧಿಕ್ಯವನ್ನು) ಉಂಟುಮಾಡಿದುದೊ ಕಾಮನ ಕಾರ್ಮುಕದಂತೆ (ಮನ್ಮಥನ ಬಿಲ್ಲಿನಂತೆ) ಕಾರ್ಮುಕಂ (ಕಾರ್ ಮುಖಂ -ಮಳೆಗಾಲದ ಆರಂಭವು)
ಪದ್ಯ-೨೪:ಅರ್ಥ: . ಹೊಳೆಯುವ ಮಿಂಚುಹುಳುಗಳ, ಹಸುರಾದ ಎಳೆಯ ಹುಲ್ಲುಗಳ, ಒತ್ತಾಗಿ ಸೇರಿರುವರುವ ಕರಿಯಮೋಡಗಳ, ಸಣ್ಣ ಅಂಕುಡೊಂಕಿನ ಪ್ರವಾಹಗಳ, ಕೆಂಪು ಹಸುರು ಬಿಳುಪು ಬಣ್ಣಗಳು ಒಟ್ಟಾಗಿ ಸೇರಿ ಒಳಗೊಂಡಿರಲು, ಕಾಮನಬಿಲ್ಲಿನ ಶೋಭೆಯು ಮನವನ್ನು ಸೂರೆಕೊಂಡು ಮಳೆಗಾಲದ ಆರಂಭವು ಮನ್ಮಥನ ಬಿಲ್ಲಿನಂತೆಯೇ ಮನವನ್ನು ಸೂರೆಕೊಂಡು ಪ್ರೇಮದ ಆಧಿಕ್ಯವನ್ನು ಉಂಟುಮಾಡಿತೊ!
ವ|| ಅಂತು ತಮಗಿದಿರಂ ಬರ್ಪಂತೆ ಬಂದ ಪಯೋಧರಕಾಲದೊಳೆರಡು ತಡಿಯುಮಂ ಪೊಯ್ದು ಪರಿವ ತೊಗಳುಮಂ ತೊವಲ್ತು ಸೊಗಯಿಸುವಡವಿಗಳುಮಂ ಪಸಿಯ ನೇತ್ರಮಂ ಪಚ್ಚವಡಿಸಿದಂತೆ ಪಸುರ್ಪುವಡೆದ ನೆಲದೊಳ್ ಪದ್ಮರಾಗದ ಪರಲ್ಗಳಂ ಬಲಿಗೆದಱದಂತೆ ಉಪಾಶ್ರಯಂಬಡೆದಳಂಕರಿಸುವಿಂದ್ರಗೋಪಂಗಳುಮಂ ಕಿಸುಗಾಡ ನೆಲಂಗಳೆಳೆದಳಿರ ಬಣ್ಣಮಂ ಕೆಯ್ಕೊಂಡು ವಿರಹಿಗಳ ಮನಮನೊಲಿಸುವಂತೆ ಜಲಜಲನೆ ಪರಿವ ಜರಿವೊನಲ್ಗಳುಮಂ ಕಂಡು ತಮ್ಮ ಕಣ್ಗಂ ಮನಕಂ ಸೊಗಯಿಸೆ ಪಯಣಂಬಂದು ಕಾಮ್ಯಕವನಮಂ ಪುಗುತಂದರದೆಂತೆಂದೊಡೆ-
ವಚನ:ಪದವಿಭಾಗ-ಅರ್ಥ:ಅಂತು ತಮಗೆ ಇದಿರಂ ಬರ್ಪಂತೆ ಬಂದ ಪಯೋಧರ ಕಾಲದೊಳು ( ತಮಗೆ ಎದುರಾಗಿ ಬರುವಂತೆ ಬಂದ ಮಳೆಗಾಲದಲ್ಲಿ) ಎರಡು ತಡಿಯುಮಂ ಪೊಯ್ದು ಪರಿವ ತೊಗಳುಮಂ (ಎರಡು ದಡಗಳನ್ನು ಘಟ್ಟಿಸಿ ಹರಿಯುವ ನದಿಗಳನ್ನೂ) ತೊವಲ್ತು ಸೊಗಯಿಸುವ ಅಡವಿಗಳುಮಂ (ಚಿಗುರಿ ಸೊಗಯಿಸುವ ಕಾಡುಗಳನ್ನೂ) ಪಸಿಯ ನೇತ್ರಮಂ ಪಚ್ಚವಡಿಸಿದಂತೆ ಪಸುರ್ಪುವಡೆದ ನೆಲದೊಳ್ (ಹಸಿರು ಬಟ್ಟೆಯನ್ನು ಹರಡಿದಂತೆ ಹಸುರಾದ ನೆಲದಲ್ಲಿ ) ಪದ್ಮರಾಗದ ಪರಲ್ಗಳಂ ಬಲಿಗೆದಱಿದಂತೆ (ಪದ್ಮರಾಗರತ್ನದ ಹರಳುಗಳನ್ನು ಬಲಿಗೆ? ಕೆದರಿದಂತೆ ಚೆಲ್ಲಿದಂತೆ ) ಉಪಾಶ್ರಯಂ ಬಡೆದು ಅಳಂಕರಿಸುವ ಇಂದ್ರಗೋಪಂಗಳುಮಂ (ಪಡೆದು ಅಲಂಕಾರವಾಗಿರುವ ಮಿಂಚುಹುಳುಗಳನ್ನೂ) ಕಿಸುಗಾಡ ನೆಲಂಗಳು ಎಳೆದಳಿರ ಬಣ್ಣಮಂ ಕೆಯ್ಕೊಂಡು (ಕೆಂಪುನೆಲದ ಕಾಡುಗಳ ನೆಲಗಳ ಎಲೆಯ ಚಿಗುರಿನ ಬಣ್ಣವನ್ನು ಹೊಂದಿ) ವಿರಹಿಗಳ ಮನಮನೊಲಿಸುವಂತೆ ಜಲಜಲನೆ ಪರಿವ (ಹರಿಯುವ) ಜರಿವೊನಲ್ಗಳುಮಂ (ಝರಿಗಳ ಪ್ರವಾಹವನ್ನೂ) ಕಂಡು ತಮ್ಮ ಕಣ್ಗಂ ಮನಕಂ ಸೊಗಯಿಸೆ ಪಯಣಂಬಂದು (ಕಣ್ಣಿಗೂ ಮನಸ್ಸಿಗೂ ಆನಂದಕೊಡುವ ಪ್ರಯಾಣಮಾಡಿ) ಕಾಮ್ಯಕವನಮಂ ಪುಗುತಂದರು; ಅದು ಎಂತೆಂದೊಡೆ (ಪಾಂಡವರು ಕಾಮ್ಯಕವನವನ್ನು ಪ್ರವೇಶ ಮಾಡಿದರು. ಅದು ಹೇಗಿತ್ತೆಂದರೆ)-
ವಚನ:ಅರ್ಥ:ಹಾಗೆ ತಮಗೆ ಎದುರಾಗಿ ಬರುವಂತೆ ಬಂದ ಮಳೆಗಾಲದಲ್ಲಿ ಎರಡು ದಡಗಳನ್ನು ಘಟ್ಟಿಸಿ ಹರಿಯುವ ನದಿಗಳನ್ನೂ, ಚಿಗುರಿ ಸೊಗಯಿಸುವ ಕಾಡುಗಳನ್ನೂ, ಹಸುರುಬಟ್ಟೆಯನ್ನು ಹರಡಿದಂತೆ ಹಸುರಾದ ನೆಲದಲ್ಲಿ ಪದ್ಮರಾಗರತ್ನದ ಹರಳುಗಳನ್ನು ಚೆಲ್ಲಿದಂತೆ ಅವಲಂಬನವನ್ನು ಪಡೆದು ಅಲಂಕಾರವಾಗಿರುವ ಮಿಂಚುಹುಳುಗಳನ್ನೂ ಕೆಂಪುನೆಲದ ಕಾಡುಗಳ ನೆಲಗಳ ಎಲೆಯ ಚಿಗುರಿನ ಬಣ್ಣವನ್ನು ಹೊಂದಿ ವಿರಹಿಗಳ ಮನಸ್ಸನ್ನು ಕೆರಳಿಸುವಂತೆ ಜಲಜಲನೆ ಹರಿಯುವ ಝರಿಗಳ ಪ್ರವಾಹವನ್ನೂ ನೋಡಿ ಕಣ್ಣಿಗೂ ಮನಸ್ಸಿಗೂ ಆನಂದವಾಗಿರಲು ಪ್ರಯಾಣಮಾಡಿ ಪಾಂಡವರು ಕಾಮ್ಯಕವನವನ್ನು ಪ್ರವೇಶ ಮಾಡಿದರು. ಅದು ಹೇಗಿತ್ತೆಂದರೆ
ಮ|| ದೆಸೆಗೆತ್ತಂ ಗಜಱುತ್ತುಮಿರ್ಪ ಪುಲಿಯಿಂ ನೀಳಾಭ್ರಮಂ ದಂತಿಗೆ
ತ್ತು ಸಿಡಿಲ್ದಾಗಸಕೆಯ್ದೆ ಪಾಯ್ವ ಪಲವುಂ ಸಿಂಗಂಗಳಿಂದೆತ್ತಗು|
ರ್ವಿಸಿ ಪಾಯ್ವರ್ವಿಗಳಿಂ ಮದಾಂಧ ವನಗಂಧೇಭಂಗಳಿಂ ಕಣ್ಗಗು
ರ್ವಿಸೆಯುಂ ಚಿತ್ತದೊಳಂದು ಕಾಮ್ಯಕವನಂ ಮಾಡಿತ್ತತಿ ಪ್ರೀತಿಯಂ|| ೨೬ ||
ಪದ್ಯ-೨೬:ಪದವಿಭಾಗ-ಅರ್ಥ:ದೆಸೆಗೆತ್ತಂ ಗಜಱುತ್ತುಮಿರ್ಪ ಪುಲಿಯಿಂ (ಎಲ್ಲ ದಿಕ್ಕುಗಳಲ್ಲಿಯೂ ಗರ್ಜಿಸುತ್ತಿರುವ ಹುಲಿಗಳಿಂದಲೂ) ನೀಳಾಭ್ರಮಂ ದಂತಿಗೆತ್ತು (ಕಪ್ಪುಮೋಡವನ್ನು ಆನೆಯೆಂದು ಭ್ರಮಿಸಿ) ಸಿಡಿಲ್ದು ಆಗಸಕೆ ಎಯ್ದೆ ಪಾಯ್ವ (ಸಿಡಿದು ಆಕಾಶಕ್ಕೆ ವಿಶೇಷವಾಗಿ ಹಾರುವ) ಪಲವುಂ ಸಿಂಗಂಗಳಿಂದ (ಹಲವು ಸಿಂಹಗಳಿಂದಲೂ) ಎತ್ತಗುರ್ವಿಸಿ ಪಾಯ್ವ ಅರ್ವಿಗಳಿಂ (ಎಲ್ಲೆಲ್ಲಿಯೂ ಭಯವನ್ನುಂಟುಮಾಡಿ ಹರಿಯುವ ಬೆಟ್ಟದ ಝರಿಗಳಿಂದಲೂ) ಮದಾಂಧ ವನ ಗಂಧೇಭಂಗಳಿಂ (ಮದದಿಂದ ಸೊಕ್ಕಿದ ಕಾಡಾನೆಗಳಿಂದಲೂ) ಕಣ್ಗೆ ಅಗುರ್ವಿಸೆಯುಂ (ಕಣ್ಣಿಗೆ ಭಯವನ್ನುಂಟುಮಾಡಿದರೂ) ಚಿತ್ತದೊಳಂದು ಕಾಮ್ಯಕವನಂ ಮಾಡಿತ್ತು ಅತಿ ಪ್ರೀತಿಯಂ.
ಪದ್ಯ-೨೬:ಅರ್ಥ: ಎಲ್ಲ ದಿಕ್ಕುಗಳಲ್ಲಿಯೂ ಗರ್ಜಿಸುತ್ತಿರುವ ಹುಲಿಗಳಿಂದಲೂ, ಕಪ್ಪುಮೋಡವನ್ನು ಆನೆಯೆಂದು ಭ್ರಮಿಸಿ ಸಿಡಿದು ಆಕಾಶಕ್ಕೆ ವಿಶೇಷವಾಗಿ ಹಾರುವ ಹಲವು ಸಿಂಹಗಳಿಂದಲೂ, ಎಲ್ಲೆಲ್ಲಿಯೂ ಭಯವನ್ನುಂಟುಮಾಡಿ ಹರಿಯುವ ಬೆಟ್ಟದ ಝರಿಗಳಿಂದಲೂ, ಮದದಿಂದ ಸೊಕ್ಕಿದ ಕಾಡಾನೆಗಳಿಂದಲೂ ಕಾಮ್ಯಕವನವು ಕಣ್ಣಿಗೆ ಭಯವನ್ನುಂಟುಮಾಡಿದರೂ ಮನಸ್ಸಿಗೆ ಅತ್ಯಂತ ಪ್ರೀತಿಯನ್ನುಂಟುಮಾಡಿತು.
ವ|| ಅಂತು ಸೌಮ್ಯಭಯಂಕರಾಕರಾಮಪ್ಪ ಕಾಮ್ಯಕವನಮಂ ಪುಗುತಂದಲ್ಲಿ ತದ್ವನಾಪತಿಯಪ್ಪ ದೈತ್ಯಂ ಕಿವಿರನವರಂ ಪುಗಲೀಯದಡ್ಡಮಾಗಿರೆ-
ವಚನ:ಪದವಿಭಾಗ-ಅರ್ಥ:ಅಂತು ಸೌಮ್ಯ ಭಯಂಕರ ಆಕರಾಮಪ್ಪ ಕಾಮ್ಯಕವನಮಂ ಪುಗುತಂದು (ಪ್ರವೇಶಿಸಿದಾಗ) ಅಲ್ಲಿ ತದ್ವನಾಪತಿಯಪ್ಪ ದೈತ್ಯಂ ಕಿವಿರನು ಅವರಂ ಪುಗಲೀಯದೆ ಅಡ್ಡಮಾಗಿರೆ-
ವಚನ:ಅರ್ಥ:ಹಾಗೆ ಸೌಮ್ಯವೂ ಭಯಂಕರವೂ ಆದ ಕಾಮ್ಯಕವನವನ್ನು ಪ್ರವೇಶಿಸಿದಾಗ, ಆ ಕಾಡಿಗೆ ಒಡೆಯನಾದ ಕಿಮ್ಮೀರನೆಂಬ ರಾಕ್ಷಸನು ಅವರು ಪ್ರವೇಶ ಮಾಡುವುದಕ್ಕೆ ಅವಕಾಶಕೊಡದೆ ತಡೆದನು. ಹಾಗೆ ತಡೆದಾಗ-

ಕಿಮ್ಮೀರನ ಸಂಹಾರ[ಸಂಪಾದಿಸಿ]

ಮ|| ಮಸಿಯಂ ಪುಂಜಿಸಿದಂತುಟಪ್ಪ ತನು ನೀಳಾಂಭೋಧರಂ ದಾಡೆಗಳ್
ಪೊಸ ಮಿಂಚುಗ್ರ ವಿಲೋಚನಂ ದಿವಿಜ ಗೋಪಂ ಕಾರೊ ಮೇಣ್ ಕಾಳ ರ|
ಕ್ಕಸನೋ ಪೇೞೆನೆ ಬಂದು ತಾಗೆ ಗದೆಯಂ ಕೊಂಡೆಯ್ದೆ ಭೀಮಂ ಸಿಡಿ
ಲ್ದು ಸಿಡಿಲ್ ಪೊಯ್ದವೊಲಾಗೆ ಪೊಯ್ದನಿಳೆಯೊಳ್ ಕಿವಿರನಂ ವೀರನಂ|| ೨೭ ||
ಪದ್ಯ-೨೭:ಪದವಿಭಾಗ-ಅರ್ಥ:ಮಸಿಯಂ ಪುಂಜಿಸಿದಂತುಟಪ್ಪ ತನು ನೀಳಾಂಭೋಧರಂ -ನೀಲ ಅಂಬ ಧರ +ಉ=ಕಾರ್ಮೋಡ (ಕಪ್ಪು ಇದ್ದಿಲನ್ನು ಯನ್ನು ಒಟ್ಟುಗೂಡಿಸಿದ ಹಾಗಿದ್ದ ಅವನ ಶರೀರವೇ ಕರಿಯಮೋಡ) ದಾಡೆಗಳ್ ಪೊಸ ಮಿಂಚು, ಉಗ್ರ ವಿಲೋಚನಂ (ಕಣ್ಣು) ದಿವಿಜಗೋಪಂ (ಮಿಂಚುಹುಳುಗಳು) ಕಾರೊ (ಮಳೆಗಾಲದ ರೂಪವೋ) ಮೇಣ್ ಕಾಳ ರಕ್ಕಸನೋ ಪೇೞು ಎನೆ ಬಂದು ತಾಗೆ (ಬಂದು ಮೇಲೆಬೀಳಲು) ಗದೆಯಂ ಕೊಂಡು ಎಯ್ದೆ ಭೀಮಂ (ಭೀಮನು ಗದೆಯನ್ನು ತೆಗೆದುಕೊಂಡು ಅವನ ಹತ್ತರ ಹೋಗಿ) ಸಿಡಿಲ್ದು ಸಿಡಿಲ್ ಪೊಯ್ದವೊಲಾಗೆ ಪೊಯ್ದನು ಇಳೆಯೊಳ್ ಕಿವಿರನಂ ವೀರನಂ(ಸಿಡಿಲುಹೊಡೆದ ಹಾಗೆ ವೀರನಾದ ಕಿಮ್ಮೀರನನ್ನು ಹೊಡೆದು ಭೂಮಿಯಲ್ಲಿ ಕೆಡವಿದನು)
ಪದ್ಯ-೨೭:ಅರ್ಥ: . ಕಪ್ಪು ಇದ್ದಿಲನ್ನು ಯನ್ನು ಒಟ್ಟುಗೂಡಿಸಿದ ಹಾಗಿದ್ದ ಅವನ ಶರೀರವೇ ಕರಿಯಮೋಡ, ಕೋರೆಹಲ್ಲುಗಳೇ ಮಿಂಚು, ಭಯಂಕರವಾದ ಕಣ್ಣುಗಳೇ ಮಿಂಚುಹುಳುಗಳು, ಇದು ಮಳೆಗಾಲವೋ ಕಾಳರಾಕ್ಷಸನೋ ಎನ್ನುವ ಹಾಗೆ ಬಂದು ಮೇಲೆಬೀಳಲು, ಭೀಮನು ಗದೆಯನ್ನು ತೆಗೆದುಕೊಂಡು ಅವನ ಹತ್ತರ ಹೋಗಿ ಸಿಡಿದು-ಆರ್ಭಟಿಸಿ ಸಿಡಿಲುಹೊಡೆದ ಹಾಗೆ ವೀರನಾದ ಕಿಮ್ಮೀರನನ್ನು ಹೊಡೆದು ಭೂಮಿಯಲ್ಲಿ ಕೆಡವಿದನು.

ಕಾಮ್ಯಕ ವನದಲ್ಲಿ ವಾಸ[ಸಂಪಾದಿಸಿ]

ವ|| ಅಂತು ಕಿವಿರನಂ ಕೊಂದು ಕಾಮ್ಯಕವನಮಂ ಪೊಕ್ಕು ತತ್ವನ ತಪೋಧನರ ಗೋಷ್ಠಿಯೊಳಮಾಟವಿಕರಟ್ಟಟ್ಟಿಯೊಳಂ ತಮಗಿಂದ್ರಪ್ರಸ್ಥದ ರಾಜ್ಯಶ್ರೀಯಂ ಮಸುಳಿಸೆ-
ವಚನ:ಪದವಿಭಾಗ-ಅರ್ಥ:ಅಂತು ಕಿವಿರನಂ ಕೊಂದು ಕಾಮ್ಯಕವನಮಂ ಪೊಕ್ಕು (ಹೊಕ್ಕು) ತತ್ ವನ ತಪೋಧನರ ಗೋಷ್ಠಿಯೊಳಂ ಆ ಅಟವಿಕರ ಅಟ್ಟಟ್ಟಿಯೊಳಂ ತಮಗೆ ಇಂದ್ರಪ್ರಸ್ಥದ ರಾಜ್ಯಶ್ರೀಯಂ ಮಸುಳಿಸೆ (ಕಂದಿಸುವಂತೆ ಇದ್ದರು.)-
ವಚನ:ಅರ್ಥ:ಹಾಗೆ ಕಿಮ್ಮೀರನನ್ನು ಕೊಂದು ಕಾಮ್ಯಕವನವನ್ನು ಪ್ರವೇಶಿಸಿ ಆ ಕಾಡಿನಲ್ಲಿದ್ದ ತಪಸ್ವಿಗಳ ಗುಂಪಿನಲ್ಲಿಯೂ ಅಲ್ಲಿಯ ಕಾಡುಜನರ ಸೇವೆಗಳಲ್ಲಿಯೂ ಸುಖದಿಂದಿದ್ದರು. ಅಲ್ಲಿಯ ಸೌಖ್ಯವು ಅವರಿಗೆ ಇಂದ್ರಪ್ರಸ್ಥದ ರಾಜ್ಯವೈಭವವನ್ನು ಕಂದಿಸುವಂತೆ ಇದ್ದರು.
ಪಿರಿಯಕ್ಕರ|| ಪಿರಿಯ ಮರಂಗಳೆ ಮಾಡಮಾಗೆ ಪೊಳೆವೆಳದಳಿರ್ಗಳೆ ಸೆಜ್ಜೆಯಾಗೆ
ಪಿರಿಯ ಮಡುಗಳೆ ಮಜ್ಜನಮಾಗೆ ಪೊಸ ನಾರೆ ದೇವಾಂಗವಸ್ತ್ರಮಾಗೆ|
ಪರೆದ ತಱಗೆಲೆಯೆ ಪರಿಯಣಮಾಗೆ ಪಣ್ಪಲಮೆತ್ತಿದ ಬೋನಮಾಗೆ
ಸಿರಿಯ ಮಹಿಮೆಯಂ ಮೆರೆಯಲೇನಾರ್ತುದೊ ಬನದೊಳಿರ್ಪಿರವಾ ಪಾಂಡವರಾ|| ೨೮ ||
ಪದ್ಯ-೨೮:ಪದವಿಭಾಗ-ಅರ್ಥ:ಪಿರಿಯ ಮರಂಗಳೆ ಮಾಡಮಾಗೆ (ಮನೆಯಾಗಲು) ಪೊಳೆವೆಳದಳಿರ್ಗಳೆ ಸೆಜ್ಜೆಯಾಗೆಪಿರಿಯ (ಎಳೆಯ ಚಿಗುರೆಲೆಗಳೇ ಹಾಸಿಗೆಯಾಗಲು) ಮಡುಗಳೆ ಮಜ್ಜನಮಾಗೆ (ಆಳವಾದ ಹೊಂಡಗಳೇ ಸ್ನಾನಗೃಹವಾಗಲು) ಪೊಸ ನಾರೆ ದೇವಾಂಗವಸ್ತ್ರಮಾಗೆ (ಹೊಸ ನಾರುಗಳೇ ವಸ್ತ್ರಕ್ಕಾಗಲು- ನಾರುಮಡಿ) ಪರೆದ ತಱಗೆಲೆಯೆ ಪರಿಯಣಮಾಗೆ (ಹರಡಿದ/ ಹರವಾದ ತರಗೆಲೆಯೇ ಹರಿವಾಣ - ಊಟದ ತಟ್ಟೆಯಾಗಲು,) ಪಣ್ಪಲಂ (ಪಣ್ ಫಲಂ) ಎತ್ತಿದ ಬೋನಮಾಗೆ, ಸಿರಿಯ ಮಹಿಮೆಯಂ ಮೆರೆಯಲು ಏನು ಆರ್ತುದೊ (ಸಮರ್ಥವೊ, ಅರ್ಹವೊ) ಬನದೊಳು ಇರ್ಪ ಇರವ ಆ ಪಾಂಡವರಾ
ಪದ್ಯ-೨೮:ಅರ್ಥ: ದೊಡ್ಡಮರಗಳೇ ಮನೆಯಾಗಲು, ಆಳವಾದ ಹೊಂಡಗಳೇ ಸ್ನಾನಗೃಹವಾಗಲು ಹೊಸ ನಾರೆ ರೇಷ್ಮೆಯ ಬಟ್ಟೆಯಾಯಿತು. ಹರಡಿದ/ ಹರವಾದ ತರಗೆಲೆಯೇ ಹರಿವಾಣ - ಊಟದ ತಟ್ಟೆಯಾಗಲು. ಹಣ್ಣು ಹಂಪಲುಗಳೇ ಶ್ರೇಷ್ಠವಾದ ಭೋಜನವಾಗಲು, ಪಾಂಡವರ ವನವಾಸವೂ ಐಶ್ವರ್ಯದ ಮಹತ್ವವನ್ನು ಪ್ರಕಟಿಸಲು ಏನು ಅರ್ಹವಾಯಿತೊ!. ಹೀಗೆ ಸರಳತನವೇ ಐಶ್ವರ್ಯವಾಯಿತು!
ಉ|| ಪಾಸ ಸಿಂಹಪೀಠಮಳಿನೀರುತಿ ಮಂಗಳಗೀತಿ ಭೂತಳಂ
ಪಾಸು ಮೃಗವ್ರಜಂ ಪರಿಜನಂ ಪೊದರೋಲಗಸಾಲೆ ಮೊಕ್ಕಳಂ|
ಬೀಸುವ ಗಾಳಿ ಚಾಮರದ ಗಾಳಿಯೆನಲ್ ದೊರೆವೆತ್ತದೇಂ ಸುಖಾ
ವಾಸ ನಿಮಿತ್ತವಾಯ್ತೊ ವನವಾಸನಿವಾಸಮೆ ಪಾಂಡುಪುತ್ರರಾ|| ೨೯||
ಪದ್ಯ-೨೯:ಪದವಿಭಾಗ-ಅರ್ಥ:ಪಾಸ ಸಿಂಹಪೀಠಂ ಅಳಿನೀರುತಿ ಮಂಗಳಗೀತಿ (ದುಂಬಿಯ ಸದ್ದೇ ಮಂಗಳವಾದ್ಯ,) ಭೂತಳಂ ಪಾಸು (ಭೂಮಿಯೇ ಹಾಸಿಗೆ) ಮೃಗವ್ರಜಂ ಪರಿಜನಂ (ಮೃಗಗಳ ಸಮೂಹವೇ ಪರಿವಾರ), ಪೊದರೋಲಗಸಾಲೆ (ಗಿಡಗಳ ಹೊದರುಗಳೇ ಸಭಾಸ್ಥಾನ) ಮೊಕ್ಕಳಂ (ವಿಶೇಷವಾಗಿ) ಬೀಸುವ ಗಾಳಿ ಚಾಮರದ ಗಾಳಿಯೆನಲ್ (ಚಾಮರದ ಗಾಳಿ ಎನ್ನುವ ಹಾಗಿರಲು) ದೊರೆವೆತ್ತದು ಏಂ(ಎಷ್ಟೊಂದು ಸಮಾನವಾಯಿತು) ಸುಖ ಆವಾಸ ನಿಮಿತ್ತವಾಯ್ತೊ ವನವಾಸ ನಿವಾಸಮೆ ಪಾಂಡುಪುತ್ರರಾ (ಪಾಂಡವರ ವನವಾಸವೇ ರಾಜ್ಯವಾಸಕ್ಕೆ ಸಮಾನವಾಗಿ ಅವರ ಸುಖಾವಾಸಕ್ಕೆ ಕಾರಣವಾಯಿತು)|
ಪದ್ಯ-೨೯:ಅರ್ಥ: ಹಾಸು ಬಂಡೆಯೇ ಸಿಂಹಾಸನ, ದುಂಬಿಯ ಸದ್ದೇ ಮಂಗಳವಾದ್ಯ, ಭೂಮಿಯೇ ಹಾಸಿಗೆ, ಮೃಗಗಳ ಸಮೂಹವೇ ಪರಿವಾರ, ಹೊದರುಗಳೇ ಸಭಾಸ್ಥಾನ, ವಿಶೇಷವಾಗಿ ಬೀಸುವ ಗಾಳಿಯೇ ಚಾಮರದ ಗಾಳಿ ಎನ್ನುವ ಹಾಗಿರಲು ಪಾಂಡವರ ವನವಾಸವೇ ರಾಜ್ಯವಾಸಕ್ಕೆ ಸಮಾನವಾಗಿ ಅವರ ಸುಖಾವಾಸಕ್ಕೆ ಕಾರಣವಾಯಿತು.

ದ್ವೈತವನಕ್ಕೆ ಪಾಂಡವರ ಪಯಣ[ಸಂಪಾದಿಸಿ]

ವ|| ಅಂತು ಕಾಮ್ಯಕವನದೊಳಯ್ದು ವರುಷಮಿರ್ದಾಱನೆಯ ವರುಷದೊಳದಱ ಕೆಲದೊಳೊಂದಿ ಸಂದಿಸಿ ಗಗನತಳಮಂ ತಱುಂಬುವಂತಿರ್ದ ಶಿಖರಿಶಿಖರಂಗಳಿಂದಂ ದೆಸೆಗಳಂ ತಡವರಿಸಿ ಕೊಳ್ವಂತೆ ಬಳ್ವವ ಬಳೆದು ಸೊಗಯಿಸುವ ಪೆರ್ಮರಂಗಳಿಂದಂ ವನಲಕ್ಷ್ಮಿಯ ಗೋಮಂಡಲದಂತಿರ್ದ ಕಡವಿ ಕಾಡೆರ್ಮೆಯ ಪಿಂಡುಗಳಿಂದಂ ದೆಸೆಗಳ್ಗೆ ಬೆರ್ಚಿ ಮೂಂಕಿಱದ ವನಮಹಿಷಿಗಳಿಂ ಮದಹಸ್ತಿಯಂತೆ ಮರವಾಯ್ವ ಪುಲಿಗಳಿನತಿ ಭಯಂಕರಾಕಾರಮಪ್ಪ ದ್ವೈತವನಕ್ಕೆ ಬಂದು ತದ್ವನೋಪಕಂಠವರ್ತಿಗಳಪ್ಪ ತಾಪಸಾಶ್ರಮಂಗಳೊಳ್ ವಿಶ್ರಮಿಸಲ್ ಬಗೆದು-
ವಚನ:ಪದವಿಭಾಗ-ಅರ್ಥ:ಅಂತು ಕಾಮ್ಯಕವನದೊಳು ಅಯ್ದು ವರುಷಮಂ ಇರ್ದು ಆಱನೆಯ ವರುಷದೊಳು ಅದಱ ಕೆಲದೊಳು ಪಕ್ಕದಲ್ಲಿ ಒಂದಿ ಸಂದಿಸಿ ಗಗನತಳಮಂ ತಱುಂಬುವಂತೆ ಇರ್ದ (ಆಕಾಶಪ್ರದೇಶವನ್ನು ಅಪ್ಪುವ ಹಾಗಿದ್ದ) ಶಿಖರಿ ಶಿಖರಂಗಳಿಂದಂ (ಬೆಟ್ಟ ಶಿಖರಗಳಿಂದಲೂ,) ದೆಸೆಗಳಂ ತಡವರಿಸಿ ಕೊಳ್ವಂತೆ ಬಳ್ವವ ಬಳೆದು ಸೊಗಯಿಸುವ ಪೆರ್ಮರಂಗಳಿಂದಂ (ದಿಕ್ಕುಗಳನ್ನೂ ಹುಡುಕುವಂತೆ ಕೊಬ್ಬಿ ಬೆಳೆದು ಸೊಗಯಿಸುತ್ತಿರುವ ದೊಡ್ಡ ಮರಗಳಿಂದಲೂ) ವನಲಕ್ಷ್ಮಿಯ ಗೋಮಂಡಲದಂತಿರ್ದ ಕಡವಿ ಕಾಡೆರ್ಮೆಯ ಪಿಂಡುಗಳಿಂದಂ (ವನಲಕ್ಷ್ಮಿಯ ಗೋವುಗಳ ಗುಂಪಿನ ಹಾಗಿರುವ ಕಡವು ಮತ್ತು ಕಾಡುಕೋಣಗಳ ಹಿಂಡುಗಳಿಂದಲೂ), ದೆಸೆಗಳ್ಗೆ ಬೆರ್ಚಿ ಮೂಂಕಿಱದ ವನಮಹಿಷಿಗಳಿಂ (ದಿಕ್ಕುದಿಕ್ಕುಗಳಿಗೆ ಹೆದರಿ ವಾಸನೆ ನೋಡಲು ಮೂಗನ್ನು ಚಾಚುತ್ತಿರುವ ಕಾಡೆಮ್ಮೆಗಳಿಂದಲೂ), ಮದಹಸ್ತಿಯಂತೆ ಮರವಾಯ್ವ ಪುಲಿಗಳಿನ ಅತಿ ಭಯಂಕರಾಕಾರಮಪ್ಪ ದ್ವೈತವನಕ್ಕೆ ಬಂದು (ಮದ್ದಾನೆಯಂತೆ ಬಂದು ಮರಕ್ಕೆ ಹಾಯುವ ಹುಲಿಗಳಿರುವ ಅತ್ಯಂತ ಭಯಂಕರವಾಗಿರುವ ದ್ವೆತವನಕ್ಕೆ ಬಂದು) ತದ್ ವನ ಉಪಕಂಠ ವರ್ತಿಗಳಪ್ಪ (ಆ ವನದ ಸಮೀಪದಲ್ಲಿರುವ) ತಾಪಸಾಶ್ರಮಂಗಳೊಳ್ ವಿಶ್ರಮಿಸಲ್ ಬಗೆದು (ವಿಶ್ರಮಿಸಿಕೊಳ್ಳಲು ಯೋಚಿಸಿ)-
ವಚನ:ಅರ್ಥ:|| ಹಾಗೆ ಕಾಮ್ಯಕವನದಲ್ಲಿ ಪಾಂಡವರು ಅಯ್ದು ವರ್ಷಗಳ ಕಾಲವಿದ್ದು ಆರನೆಯ ವರ್ಷದಲ್ಲಿ ಅದರ ಪಕ್ಕದಲ್ಲಿಯೇ ಸೇರಿಕೊಂಡು ಆಕಾಶಪ್ರದೇಶವನ್ನು ಅಪ್ಪುವ ಹಾಗಿದ್ದ ಬೆಟ್ಟ ಶಿಖರಗಳಿಂದಲೂ, ದಿಕ್ಕುಗಳನ್ನೂ ಹುಡುಕುವಂತೆ ಕೊಬ್ಬಿ ಬೆಳೆದು ಸೊಗಯಿಸುತ್ತಿರುವ ದೊಡ್ಡ ಮರಗಳಿಂದಲೂ, ವನಲಕ್ಷ್ಮಿಯ ಗೋವುಗಳ ಗುಂಪಿನ ಹಾಗಿರುವ ಕಡವು ಮತ್ತು ಕಾಡುಕೋಣಗಳ ಹಿಂಡುಗಳಿಂದಲೂ, ದಿಕ್ಕುದಿಕ್ಕುಗಳಿಗೆ ಹೆದರಿ ವಾಸನೆ ನೋಡಲು ಮೂಗನ್ನು ಚಾಚುತ್ತಿರುವ ಕಾಡೆಮ್ಮೆಗಳಿಂದಲೂ, ಮದ್ದಾನೆಯಂತೆ ಬಂದು ಮರಕ್ಕೆ ಹಾಯುವ ಹುಲಿಗಳಿರುವ ಅತ್ಯಂತ ಭಯಂಕರವಾಗಿರುವ ದ್ವೆತವನಕ್ಕೆ ಬಂದು ಆ ವನದ ಸಮೀಪದಲ್ಲಿರುವ ತಪಸ್ವಿಗಳ ಆಶ್ರಮಗಳಲ್ಲಿ ವಿಶ್ರಮಿಸಿಕೊಳ್ಳಲು ಯೋಚಿಸಿದರು. ಯೋಚಿಸಿ
ಮ|| ಪುಗಲಿಲ್ಲೀ ಬನಮಾರ್ಗಮಿಂಬು ನೆಲಸಲ್ ನಾರುಂಟುಡಲ್ ಮೆಲ್ಲೆ ಕೊಂ
ಬುಗಳೊಳ್ ಪಣ್ಪಲಮುಂಟು ಮೀಯೆ ಕುಡಿಯಲ್ ನೀರುಂಟು ಪದ್ಮಾಕರಾ|
ಳಿಗಳೊಳ್ ತಣ್ಪುಗಳುಂಟು ಹೇಮಲತಿಕಾ ಕುಂಜಂಗಳೊಳ್ ನಮ್ಮ ನ
ನ್ನಿಗೆ ಬನ್ನಂ ಬರಲೀಯದೀ ಬನದೊಳಿರ್ದೇಂ ಕಾಲಮಂ ಪಾರೆವೇ|| ೩೦||
ಪದ್ಯ-೦೩೦:ಪದವಿಭಾಗ-ಅರ್ಥ:ಪುಗಲು ಇಲ್ಲ ಈ ಬನಂ ಆರ್ಗಂ ಇಂಬು ನೆಲಸಲ್ (ಈ ವನವು ಯಾರಿಗೂ ಹೊಗಲು ನಲೆಸಲು ಇಂಬಿಲ್ಲ-ಅವಕಾಶವಿಲ್ಲ), ನಾರುಂಟು ಉಡಲ್, ಮೆಲ್ಲೆ ಕೊಂಬುಗಳೊಳ್ (ರೆಂಬೆಗಳಲ್ಲಿ) ಪಣ್ ಫಲಮುಂಟು, ಮೀಯೆ(ಸ್ನಾನಕ್ಕೆ) ಕುಡಿಯಲ್ ನೀರುಂಟು, ಪದ್ಮಾಕರಾಳಿಗಳೊಳ್ ತಣ್ಪುಗಳುಂಟು (ತವರೆಯ ಸಾಲು ಕೊಳಗಳಲ್ಲಿ ತಂಪಿದೆ) ಹೇಮಲತಿಕಾ ಕುಂಜಂಗಳೊಳ್ (ಹೊಂಬಣ್ಣದ ಬಳ್ಳಿಮನೆಗಳಲ್ಲಿ ವಾಸವಿದ್ದರೆ,) ನಮ್ಮ ನನ್ನಿಗೆ ಬನ್ನಂ ಬರಲೀಯದು (ನಮ್ಮ ಸತ್ಯಪರಿಪಾಲನೆಗೆ ಭಂಗಬರುವುದಿಲ್ಲ.) ಈ ಬನದೊಳಿರ್ದು ಏಂ ಕಾಲಮಂ ಪಾರೆವೇ (ಈ ವನದಲ್ಲಿಯೇ ಇದ್ದು ಕಾಲಯಾಪನೆ ಮಾಡಮಾಡೋಣವೇ? )
ಪದ್ಯ-೩೦:ಅರ್ಥ: ಈ ವನವನ್ನು ಯಾರಿಗೂ ಹೊಗಲು ನಲೆಸಲು ಇಂಬಿಲ್ಲ-ಅವಕಾಶವಿಲ್ಲ ; ಇರುವುದಕ್ಕೆ ಸ್ಥಳಾವಕಾಶವೂ ಉಡಲು ನಾರೂ ಉಂಟು; ಊಟಮಾಡಲು ಕೊಂಬೆಗಳಲ್ಲಿ ಹಣ್ಣು ಹಂಪಲುವುಂಟು; ಸ್ನಾನಮಾಡಲೂ ಕುಡಿಯಲೂ ಕೊಳಗಳಲ್ಲಿ ನೀರುಂಟು; ಹೊಂಬಣ್ಣದ ಬಳ್ಳಿಮನೆಗಳಲ್ಲಿ ತಂಪುಂಟು; ಈ ವನದಲ್ಲಿ ನಮ್ಮ ಸತ್ಯಪರಿಪಾಲನೆಗೆ ಭಂಗಬರುವುದಿಲ್ಲ. ಈ ವನದಲ್ಲಿಯೇ ಇದ್ದು ಕಾಲಯಾಪನೆ ಮಾಡಮಾಡೋಣವೇ- (ಎಂದು ಯೋಚಿಸಿ ಅಲ್ಲಿಯೇ ವಾಸಿಸಲು ನಿರ್ಧರಿಸಿದರು)

ಸೈಂಧವನಿಂದ ದ್ರೌಪದಿಯ ಅಪಹರಣ- ಭೀಮಾರ್ಜುನರಿಂದ ಸೋಲು ಅಪಮಾನ[ಸಂಪಾದಿಸಿ]

ವ|| ಎಂದು ತಮ್ಮೊಳಯ್ವರುಮೇಕ ಕಾರ್ಯಾಳೋಚನಪರರಾಗಿ ದ್ವೈತವನದೊಳದ್ವೈತ ಸಾಹಸರಿರ್ಪನ್ನೆಗಮೊಂದು ದಿವಸಂ ದುರ್ಯೋಧನನ ಮಯ್ದುನಂ ಸಿಂಧುದೇಶಾಶ್ವರಂ ಸೈಂಧವನವರಂ ಛಿದ್ರಿಸಲೆಂದು ಮೆಯ್ಗರೆದು ಬಂದು-
ವಚನ:ಪದವಿಭಾಗ-ಅರ್ಥ:ಎಂದು ತಮ್ಮೊಳು ಐಯ್ವರುಂ ಏಕ ಕಾರ್ಯಾಳೋಚನ ಪರರಾಗಿ (ಅಲ್ಲಿ ವಾಸಿಸುವ ಕಾರ್ಯಲ್ಲಿ ಆಲೋಚಿಸಿ, ಅಲ್ಲಿರಲು ನಿರ್ಧರಿಸಿದರು) ದ್ವೈತವನದೊಳು ಅದ್ವೈತ ಸಾಹಸರು ಇರ್ಪನ್ನೆಗಂ (ಅದ್ವಿತೀಯ ಬಲಶಾಲಿಗಳಾದ ಅವರು ಆ ದ್ವೆತವನದಲ್ಲಿ ಇರುವಾಗ) ಒಂದು ದಿವಸಂ ದುರ್ಯೋಧನನ ಮಯ್ದುನಂ ಸಿಂಧುದೇಶಾಶ್ವರಂ ಸೈಂಧವನು ಅವರಂ ಛಿದ್ರಿಸಲೆಂದು (ಛಿದ್ರಿಸು- ರಹಸ್ಯವಾಗಿ ಮೋಸಮಾಡು ಹಿಂಸಿಸು) ಮೆಯ್ಗರೆದು ಬಂದು (ಪಾಂಡವರನ್ನು ರಹಸ್ಯವಾಗಿ ಹಿಂಸಿಸಬೇಕೆಂದು ಮೈಮರೆಸಿಕೊಂಡು ಬಂದರು)-
ವಚನ:ಅರ್ಥ:ಐದು ಜನ ಪಾಂಡವರೂ ತಮ್ಮಲ್ಲಿ ಅಲ್ಲಿ ವಾಸಿಸುವ ಕಾರ್ಯಲ್ಲಿ ಆಲೋಚಿಸಿ, ಅದ್ವಿತೀಯ ಬಲಶಾಲಿಗಳಾದ ಅವರು ಆ ದ್ವೆತವನದಲ್ಲಿ ಇರುವಾಗ, ಅಷ್ಟರಲ್ಲಿ ಒಂದು ದಿವಸ ದುರ್ಯೋಧನನ ಮೈದುನನೂ ಸಿಂಧುದೇಶಾಪತಿಯೂ ಆದ ಸೈಂಧವನು ಪಾಂಡವರನ್ನು ರಹಸ್ಯವಾಗಿ ಹಿಂಸಿಸಬೇಕೆಂದು ಮೈಮರೆಸಿಕೊಂಡು ಬಂದರು.
ಮ|| ಮೃಗಯಾಕ್ರೀಡೆಗೆ ಪಾಂಡುರಾಜತನಯರ್ ಪೋಪನ್ನೆಗಂ ಬಂದು ತೊ
ಟ್ಟಗೆ ಪಾಂಚಾಳಿಯನೆತ್ತಿ ತನ್ನ ರಥದೊಳ್ ತಂದಿಟ್ಟುಕೊಂಡುಯ್ದನ|
ನ್ನೆಗಮಂತಾ ಪಡೆಮಾತುಗಳೇಳ್ದತಿಬಳರ್ ಭೀಮಾರ್ಜುನರ್ ಕಾಯ್ಪು ಕೆ
ಯ್ಮಿಗೆ ಬೆನ್ನಂ ಪರಿದೆತ್ತ ಪೋಪೆಯೆಲವೋ ಪೋ ಪೋಗಲೆಂದೆಯ್ದಿದರ್|| ೩೧||
ಪದ್ಯ-೩೧:ಪದವಿಭಾಗ-ಅರ್ಥ:ಮೃಗಯಾಕ್ರೀಡೆಗೆ ಪಾಂಡುರಾಜತನಯರ್ ಪೋಪನ್ನೆಗಂ ಬಂದು (ಆ ಪಾಂಡುಪುತ್ರರು ಬೇಟೆಗೆ ಹೋಗಿರುವ ಸಮಯವನ್ನೇ ನೋಡಿ ಬಂದು) ತೊಟ್ಟಗೆ ಪಾಂಚಾಳಿಯನು ಎತ್ತಿ ತನ್ನ ರಥದೊಳ್ ತಂದಿಟ್ಟುಕೊಂಡು ಉಯ್ದನು (ಇದ್ದಕ್ಕಿದ್ದ ಹಾಗೆ ದ್ರೌಪದಿಯನ್ನೆತ್ತಿ ತನ್ನ ರಥದಲ್ಲಿಟ್ಟುಕೊಂಡು ಹೋದನು); ಅನ್ನೆಗಂ ಅಂತು ಆ ಪಡೆಮಾತುಗಳ ಏಳ್ದತಿಬಳರ್ ಭೀಮಾರ್ಜುನರ್ ಕಾಯ್ಪು - ಕೆಯ್ಮಿಗೆ- ಕೈ ಮಿಗೆ- ಕೋಪ ಮಿತಿಮೀರಿಹೆಚ್ಚಲು (ಅಷ್ಟರಲ್ಲಿ ಆ ಸಮಾಚಾರವನ್ನು ಕೇಳಿ ಬಹುಸಾಹಸಿಗಳಾದ ಭೀಮಾರ್ಜುನರ ಕೋಪವು ಮಿತಿಮೀರಿ ಹೆಚ್ಚಲು) ಬೆನ್ನಂ ಪರಿದು (ಅವನ ಬೆನ್ನಿನ ಹಿಂದೆಯೇ ಓಡಿ) ಎತ್ತ ಪೋಪೆ ಯೆಲವೋ ಪೋ ಪೋಗಲ್ ಎಂದು ಎಯ್ದಿದರ್ (ಹೋಗಬೇಡ ಎಂದು ಅವನನ್ನು ಸಮೀಪಿಸಿದರು)
ಪದ್ಯ-೩೧:ಅರ್ಥ: ಆ ಪಾಂಡುಪುತ್ರರು ಬೇಟೆಗೆ ಹೋಗಿರುವ ಸಮಯವನ್ನೇ ನೋಡಿ, ಸಿಂಧುದೇಶದರಾಜ ಸೈಂಧವನು ಬಂದು ಇದ್ದಕ್ಕಿದ್ದ ಹಾಗೆ ದ್ರೌಪದಿಯನ್ನೆತ್ತಿ ತನ್ನ ರಥದಲ್ಲಿಟ್ಟುಕೊಂಡು ಹೋದನು. ಅಷ್ಟರಲ್ಲಿ ಆ ಸಮಾಚಾರವನ್ನು ಕೇಳಿ ಬಹುಸಾಹಸಿಗಳಾದ ಭೀಮಾರ್ಜುನರ ಕೋಪವು ಮಿತಿಮೀರಿ ಹೆಚ್ಚಲು, ಅವನ ಬೆನ್ನಿನ ಹಿಂದೆಯೇ ಓಡಿ ಎಲ್ಲಿಗೆ ಹೋಗುವೆಯೋ? ಹೋಗಬೇಡ ಎಂದು ಅವನನ್ನು ಸಮೀಪಿಸಿದರು.
ವ|| ಅಂತೆಯ್ದಿ ತದ್ಗದಾಘಾತದೊಳಂ ಬಾಣಪಾತದೊಳಮವನ ರಥಮಂ ಶತಚೂರ್ಣಂ ಮಾಡಿ ಜಯದ್ರಥನಂ ಕೋಡಗಗಟ್ಟುಗಟ್ಟಿ ಬೆನ್ನಂ ಬಿಲ್ಲ ಕೊಪ್ಪಿನೊಳಿಱಿದು ನಡೆಯೆಂದು ನಡೆಯಿಸಿ ಪಾಂಚಾಳಿಯಂ ಲೀಲೆಯಿಂದೊಡಗೊಂಡು ಬೀಡಿಂಗೆ ವಂದಿ ಧರ್ಮಪುತ್ರಂಗೆ ತೋಱಿದೊಡೆ-
ವಚನ:ಪದವಿಭಾಗ-ಅರ್ಥ:ಅಂತು ಎಯ್ದಿ ತದ್ ಗದಾಘಾತದೊಳಂ ಬಾಣಪಾತದೊಳಂ ಅವನ ರಥಮಂ ಶತಚೂರ್ಣಂ ಮಾಡಿ (ಆ ಗದೆಯ ಹೊಡೆತದಿಂದಲೂ ಬಾಣ ಪ್ರಯೋಗದಿಂದಲೂ ಅವನ ರಥವನ್ನು ನೂರು ಚೂರುಮಾಡಿ) ಜಯದ್ರಥನಂ ಕೋಡಗಗಟ್ಟುಗಟ್ಟಿ (ಕಪಿಯನ್ನು ಬಿಗಿಯುವಂತೆ ಬಿಗಿದು) ಬೆನ್ನಂ ಬಿಲ್ಲ ಕೊಪ್ಪಿನೊಳ ಇಱಿದು (ಬಿಲ್ಲಿನ ತುದಿಯಿಂದ ತಿವಿದು) ನಡೆಯೆಂದು ನಡೆಯಿಸಿ ಪಾಂಚಾಳಿಯಂ ಲೀಲೆಯಿಂದ ಒಡಗೊಂಡು ಬೀಡಿಂಗೆ ವಂದಿ ಧರ್ಮಪುತ್ರಂಗೆ ತೋಱಿದೊಡೆ-
ವಚನ:ಅರ್ಥ:ಹಾಗೆ ಹೋಗಿ ಅವನ/ಆ ಗದೆಯ ಹೊಡೆತದಿಂದಲೂ ಬಾಣ ಪ್ರಯೋಗದಿಂದಲೂ ಅವನ ರಥವನ್ನು ನೂರು ಚೂರುಮಾಡಿ, ಸೈಂಧವನನ್ನು ಕಪಿಯನ್ನು ಬಿಗಿಯುವಂತೆ ಬಿಗಿದು ಅವನ ಬೆನ್ನನ್ನು ಬಿಲ್ಲಿನ ತುದಿಯಿಂದ ತಿವಿದು ಗಾಯಮಾಡಿ ನಡೆ ಎಂದು ನಡೆಯಿಸಿ, ದ್ರೌಪದಿಯೊಡನೆ ಸಂತಸದಿಂದ ಬಿಡದಿಗೆ ಬಂದು ಧರ್ಮರಾಜನಿಗೆ ಅವನನ್ನು ತೋರಿಸಿದರು.
ಕಂ|| ಲಾಕ್ಷಾಗೃಹಮಂ ಪುಗಿಸಲು
ಮಕ್ಷಕ್ರೀಡೆಯೊಳೆ ಧರಣಿಯಂ ಕೊಳಲುಂ ಪಿಂ|
ಗಾಕ್ಷಂಗೆವೇೞ್ದು ಸೈರಿಸ
ದಾಕ್ಷೇಪದಿನೆಮ್ಮನಿಲ್ಲಿ ಛಿದ್ರಿಸ ಬಂದೈ|| ೩೨ ||
ಪದ್ಯ-೩೨:ಪದವಿಭಾಗ-ಅರ್ಥ:ಲಾಕ್ಷಾಗೃಹಮಂ ಪುಗಿಸಲುಂ(ಅರಗಿನ ಮನೆಯನ್ನು ಪ್ರವೇಶಮಾಡಿಸಲೂ) ಅಕ್ಷಕ್ರೀಡೆಯೊಳೆ ಧರಣಿಯಂ ಕೊಳಲುಂ ಪಿಂಗಾಕ್ಷಂಗೆ ವೇೞ್ದು (ಪಗಡೆಯಾಟದಿಂದ ರಾಜ್ಯವನ್ನು ಕಸಿದುಕೊಳಲೂ ದುರ್ಯೋಧನನಿಗೆ ಪ್ರೇರೇಪಿಸಿ) ಸೈರಿಸದೆ ಆಕ್ಷೇಪದಿಂ ಎಮ್ಮನು ಇಲ್ಲಿ ಛಿದ್ರಿಸ ಬಂದೈ (ನಮ್ಮನ್ನು ದೌಷ್ಟ್ಯದಿಂದ ಇಲ್ಲಿಯೂ ಛಿದ್ರಿಸಲು ಬಂದೆಯಾ?’ )
ಪದ್ಯ-೩೨:ಅರ್ಥ: ಅರಗಿನ ಮನೆಯನ್ನು ಪ್ರವೇಶಮಾಡಿಸಲೂ ಪಗಡೆಯಾಟದಿಂದ ರಾಜ್ಯವನ್ನು ಕಸಿದುಕೊಳಲೂ ದುರ್ಯೋಧನನಿಗೆ ಪ್ರೇರೇಪಿಸಿ (ಅಷ್ಟಕ್ಕೇ) ತೃಪ್ತಿಪಡದೆ ನಮ್ಮನ್ನು ದೌಷ್ಟ್ಯದಿಂದ ಇಲ್ಲಿಯೂ ಛಿದ್ರಿಸಲು ಬಂದೆಯಾ?’

ದ್ವೈತವನದಲ್ಲಿ ಗಂಧರ್ವರಿಂದ ದುರ್ಯೋಧನನ ಸೋದರರ ಬಂಧನ- ಧರ್ಮಜನ ಕರುಣೆಯಿಂದ ಜೀವದಾನ- ಅಪಮಾನ[ಸಂಪಾದಿಸಿ]

ವ|| ಎಂದು ನಿನ್ನಂ ಪರಿಭವಕ್ಕೆ ತಂದು ನಿನ್ನ ಯಶಮಂ ಕಿಡಿಸಿದೆವಿನ್ ಕೊಂದೊಡೇವಂದಪುದೆಂದು ದುರ್ಯೋಧನನಲ್ಲಿಗೆ ಪೋಗೆಂದು ಕಟ್ಟಿದ ಕಟ್ಟುಗಳಂ ಬಿಟ್ಟು ಕಳೆದೊಡೆ ಜಯದ್ರಥಂ ಸಿಗ್ಗಾಗಿ ಕೈಲಾಸದೊಳೀಶ್ವರಂಗೆ ತಪಂಗೆಯ್ದು ಮೆಚ್ಚಿಸಿ ಪಾಂಡವರನೊಂದು ದೆವಸದನುವರದೊಳ್ ಗೆಲ್ವೆನಕ್ಕೆಂದು ಬರಂಬಡೆದು ಪೋದನಿತ್ತ ದುರ್ಯೋಧನಂ ಸಮಸ್ತಸಾಧನಸಹಿತನಾಗಿ ಕಾಡೊಳ್ ಬೇಡರಂತೆ ತೊೞಲ್ವ ದಾಯಿಗರ ಕಂದಿ ಕುಂದಿದ ಮೊಗಂಗಳಂ ನೋಡುವುದುಮೆನ್ನನವರಿಂ ನೋಡಿಸುವುದಮೀಯೆರಡೆ ಸಂಸಾರಫಲಮೆಂದು, ನಾಗಪುರದಿಂ ಪೊಱಮಟ್ಟು ದುಶ್ಶಾಸನಾದಿಗಳಪ್ಪ ನೂರ್ವರ್ ತಮ್ಮಂದಿರುಂ ಭಾನುಮತಿಯುಂ ಚಂದ್ರಮತಿಯುಮೆಂಬ ಬೇಟದರಸಿಯರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಭೃತಿಗಳುಮಶ್ವತ್ಥಾಮ ಕರ್ಣ ಶಲ್ಯ ಶಕುನಿ ಸೈಂಧವ ಪ್ರಮುಖನಾಯಕರುಂಬೆರಸು ಬೇಂಟೆಯ ನೆವದಿಂ ಬಂದು ದ್ವೈತವನದ ಕೆಲದ ನಂದನವನದೊಳ್ ಪಾಂಡವರ್ಗೆ ಸಮೀಪಮಾಗೆ ಬೀಡು ಬಿಟ್ಟು ಪಾಡಿಸುತ್ತುಂ ಪೊಗೞಿಸುತ್ತಮಿರ್ದನನ್ನೆಗಂ ಪಗೆಯಿಱಿಯಬಂದರ ಮೂಗನರಿದರೆಂಬಂತನಿಬರಂ ಬಾಯಂ ಬಿಟ್ಟು ನೋಡೆ ಮೂಗನರಿದರೆಂಬಂತನಿಬರಂ ಬಾಯಂ ನೋಡೆ ನೋಡೆ ಪೂರ್ವಜನ್ಮದ ಪಗೆ ಚಿತ್ರಾಂಗದನೆಂಬ ಗಂಧರ್ವನಱುವತ್ತು ಕೋಟಿ ಗಾಂಧರ್ವಬಲಂಬೆರಸು ಬಂದು ದುರ್ಯೋಧನ ದುಶ್ಶಾಸನರಿರ್ವರುಮಂ ಕೋಡಗಗಟ್ಟುಗಟ್ಟಿ-
ವಚನ:ಪದವಿಭಾಗ-ಅರ್ಥ:ಎಂದು ನಿನ್ನಂ ಪರಿಭವಕ್ಕೆ ತಂದು (ನಿನ್ನನ್ನು ಸೋಲಿಸಿ ಅವಮಾನ ಪಡಿಸಿ) ನಿನ್ನ ಯಶಮಂ ಕಿಡಿಸಿದೆವಿನ್ ಕೊಂದೊಡೆ ಏವಂದಪುದೆಂದು (ಕೊಂದರೆ ಏನು ಬರುತ್ತದೆ, ನಿನ್ನ ಯಶಸ್ಸನ್ನು ಕೆಡಿಸಿದೆವು. ಇನ್ನು ನಿನ್ನನ್ನು ಕೊಂದರೆ ಏನು ಬರುತ್ತದೆ’,) ದುರ್ಯೋಧನನಲ್ಲಿಗೆ ಪೋಗೆಂದು ಕಟ್ಟಿದ ಕಟ್ಟುಗಳಂ ಬಿಟ್ಟು ಕಳೆದೊಡೆ, ಜಯದ್ರಥಂ ಸಿಗ್ಗಾಗಿ (ನಾಚಿಕೆಪಟ್ಟು) ಕೈಲಾಸದೊಳು ಈಶ್ವರಂಗೆ ತಪಂಗೆಯ್ದು (ತಪಸ್ಸುಮಾಡಿ) ಮೆಚ್ಚಿಸಿ ಪಾಂಡವರನು ಒಂದು ದೆವಸದ ಅನುವರದೊಳ್ ಗೆಲ್ವೆನಕ್ಕೆಂದು ಬರಂಬಡೆದು (‘ಪಾಂಡವರನ್ನು ಒಂದು ದಿನದ ಯುದ್ಧದಲ್ಲಿಯಾದರೂ ಗೆಲ್ಲುವಂತಾಗಲಿ’ ಎಂದು ವರವನ್ನು ಪಡೆದು) ಪೋದನು; ಇತ್ತ ದುರ್ಯೋಧನಂ ಸಮಸ್ತಸಾಧನಸಹಿತನಾಗಿ ಕಾಡೊಳ್ ಬೇಡರಂತೆ ತೊೞಲ್ವ ದಾಯಿಗರ ಕಂದಿ ಕುಂದಿದ ಮೊಗಂಗಳಂ ನೋಡುವುದುಂ ಎನ್ನನು ಅವರಿಂ ನೋಡಿಸುವುದಂ ಈಯೆರಡೆ ಸಂಸಾರಫಲಮೆಂದು (ಬಾಡಿ ಕೃಶವಾದ ಮುಖಗಳನ್ನು ನೋಡುವುದೂ ವೈಭವಯುಕ್ತವಾದ ತನ್ನನ್ನು ಅವರಿಂದ ನೋಡಿಸುವುದೂ ಇವೆರಡೇ ಸಂಸಾರದ ಫಲವೆಂದು ಭಾವಿಸಿ), ನಾಗಪುರದಿಂ ಪೊಱಮಟ್ಟು (ಹಸ್ತಿನಾಪುರದಿಂದ ಹೊರಟು) ದುಶ್ಶಾಸನಾದಿಗಳಪ್ಪ ನೂರ್ವರ್ ತಮ್ಮಂದಿರುಂ ಭಾನುಮತಿಯುಂ ಚಂದ್ರಮತಿಯುಮೆಂಬ ಬೇಟದರಸಿಯರುಂ (ಪ್ರೀತಿಪಾತ್ರರಾದ ರಾಣಿಯರನ್ನು) ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಭೃತಿಗಳುಮಶ್ವತ್ಥಾಮ ಕರ್ಣ ಶಲ್ಯ ಶಕುನಿ ಸೈಂಧವ ಪ್ರಮುಖನಾಯಕರುಂ ಬೆರಸು (ಕೂಡಿಕೊಂಡು) ಬೇಂಟೆಯ ನೆವದಿಂ ಬಂದು ದ್ವೈತವನದ ಕೆಲದ ನಂದನವನದೊಳ್ ಪಾಂಡವರ್ಗೆ ಸಮೀಪಮಾಗೆ ಬೀಡು ಬಿಟ್ಟು ಪಾಡಿಸುತ್ತುಂ ಪೊಗೞಿಸುತ್ತಂ ಇರ್ದನು ಅನ್ನೆಗಂ ಪಗೆಯಿಱಿಯಬಂದರ ಮೂಗನರಿದರು (ಹಗೆಯನ್ನು ಕೊಲ್ಲಲು ಬಂದವರ ಮೂಗನ್ನು ಕತ್ತರಿಸಿದರು’) ಎಂಬಂತೆ ಅನಿಬರಂ ಬಾಯಂ ಬಿಟ್ಟು ನೋಡೆ ಮೂಗನರಿದರೆಂಬಂತನಿಬರಂ ಬಾಯಂ ನೋಡೆ ನೋಡೆ ಪೂರ್ವಜನ್ಮದ ಪಗೆ ಚಿತ್ರಾಂಗದನೆಂಬ ಗಂಧರ್ವನು ಅಱುವತ್ತು ಕೋಟಿ ಗಾಂಧರ್ವ ಬಲಂಬೆರಸು (ಗಂಧರ್ವಸೈನ್ಯದೊಡನೆ ಕೂಡಿ) ಬಂದು ದುರ್ಯೋಧನ ದುಶ್ಶಾಸನರು ಇರ್ವರುಮಂ ಕೋಡಗಗಟ್ಟುಗಟ್ಟಿ (ಕಪಿಯನ್ನು ಕಟ್ಟುವ ಹಾಗೆ ಕಟ್ಟಿ)-
ವಚನ:ಅರ್ಥ:ನಿನ್ನನ್ನು ಸೋಲಿಸಿ ಅವಮಾನ ಪಡಿಸಿ ನಿನ್ನ ಯಶಸ್ಸನ್ನು ಕೆಡಿಸಿದೆವು. ಇನ್ನು ನಿನ್ನನ್ನು ಕೊಂದರೆ ಏನು ಬರುತ್ತದೆ’, ದುರ್ಯೋಧನನ ಹತ್ತಿರಕ್ಕೆ ಹೋಗಿ ಬದುಕು ಎಂದು ಕಟ್ಟಿದ್ದ ಕಟ್ಟುಗಳನ್ನೆಲ್ಲ ಬಿಚ್ಚಿ ಕಳುಹಿಸಲು, ಸೈಂಧವನು ನಾಚಿಕೆಪಟ್ಟು ಕೈಲಾಸಕ್ಕೆ ಹೋಗಿ ಈಶ್ವರನನ್ನು ಕುರಿತು ತಪಸ್ಸುಮಾಡಿ ಮೆಚ್ಚಿಸಿ ‘ಪಾಂಡವರನ್ನು ಒಂದು ದಿನದ ಯುದ್ಧದಲ್ಲಿಯಾದರೂ ಗೆಲ್ಲುವಂತಾಗಲಿ’ ಎಂದು ವರವನ್ನು ಪಡೆದು ಹೋದನು. ಈ ಕಡೆ ದುರ್ಯೋಧನನು ಕಾಡಿನಲ್ಲಿ ಬೇಡರಂತೆ ತೊಳಲುತ್ತಿರುವ ದಾಯಾದಿಗಳ ಬಾಡಿ ಕುಂದಿದ ಮುಖಗಳನ್ನು ನೋಡುವುದೂ ವೈಭವಯುಕ್ತವಾದ ತನ್ನನ್ನು ಅವರಿಂದ ನೋಡಿಸುವುದೂ ಇವೆರಡೇ ಸಂಸಾರದ ಫಲವೆಂದು ಯೋಚಿಸಿ, ಸಮಸ್ತ ಸಲಕರಣೆಗಳೊಡನೆ ಹಸ್ತಿನಾಪುರದಿಂದ ಹೊರಟು ದುಶ್ಶಾಸನನೇ ಮೊದಲಾದ ನೂರ್ವರು ತಮ್ಮಂದಿರನ್ನೂ ಭಾನುಮತಿ ಮತ್ತು ಚಂದ್ರಮತಿ ಎಂಬ ಇಬ್ಬರು ಪ್ರೀತಿಪಾತ್ರರಾದ ರಾಣಿಯರನ್ನೂ, ಲಕ್ಷಣನೇ ಮೊದಲಾದ ನೂರುಜನ ಮಕ್ಕಳನ್ನೂ, ಭೀಷ್ಮ, ದ್ರೋಣ ಕೃಪ ವಿದುರ ಮೊದಲಾದ ಪ್ರಭೃತಿಗಳನ್ನೂ ಅಶ್ವತ್ಥಾಮ, ಕರ್ಣ, ಶಲ್ಯ, ಶಕುನಿ ಸೈಂಧವನೇ ಮೊದಲಾದ ನಾಯಕರನ್ನೂ, ಕೂಡಿಕೊಂಡು ಬೇಟೆಯ ನೆಪದಿಂದ ಬಂದು ದ್ವೆ ತವನದ ಪಕ್ಕದ ನಂದನವನದೊಳಗೆ ಪಾಂಡವರಿಗೆ ಸಮೀಪವಾಗಿರುವ ಹಾಗೆ ಬೀಡು ಬಿಟ್ಟು, ತನ್ನ ವೈಭವವನ್ನು ಹಾಡಿಸುತ್ತಲೂ ಹೊಗಳಿಸುತ್ತಲೂ ಇದ್ದನು. ಅಷ್ಟರಲ್ಲಿ ‘ಹಗೆಯನ್ನು ಕೊಲ್ಲಲು ಬಂದವರ ಮೂಗನ್ನು ಕತ್ತರಿಸಿದರು’ ಎಂಬಂತೆ ಎಲ್ಲರೂ ಆಶ್ಚರ್ಯದಿಂದ ಬಾಯಿಬಿಟ್ಟುಕೊಂಡು ನೋಡುತ್ತಿದ್ದ ಹಾಗೆಯೇ ಹಿಂದಿನ ಜನ್ಮದ ಶತ್ರುವಾದ ಚಿತ್ರಾಂಗದನೆಂಬ ಗಂಧರ್ವನು ಅರುವತ್ತು ಕೋಟಿ ಗಂಧರ್ವಸೈನ್ಯದೊಡನೆ ಕೂಡಿ ಬಂದು ದುರ್ಯೋಧನ ದುಶ್ಶಾಸನರಿಬ್ಬರನ್ನೂ ಕಪಿಯನ್ನು ಕಟ್ಟುವ ಹಾಗೆ ಕಟ್ಟಿ- (ಕಟ್ಟಿದನು).

ದ್ವೈತವನವಿಹಾರದಲ್ಲಿ ಗಂಧರ್ವರಿಂದ ದುರ್ಯೋಧನನ ಗರ್ವಭಂಗ- ಅವಮಾನ[ಸಂಪಾದಿಸಿ]

ಚಂ|| ಮಿಡುಕದೆ ಭೀಷ್ಮ ನೋಡುತಿರು ಕುಂಭಜ ಸುರ್ಕಿರು ಕರ್ಣ ಮಿಕ್ಕು ಮಾ
ರ್ನುಡಿಯದೆ ಮೂಗುವಟ್ಟಿರು ಗುರು ಪ್ರಿಯನಂದನ ಕೂಗಡಂಗದಿ|
ರ್ದೊಡೆ ಬರ್ದುಕಾವುದಿರ್ ಪೊಡರ್ದೊಡೀಗಡೆ ಕೊಂದಪೆನೆಂದು ಕೂಡೆ ಕ
ಣ್ಗಿಡೆ ಜಡಿದುಯ್ದನಾ ಖಚರನಿರ್ವರುಮಂ ಪರಮಾಣುಮಾರ್ಗದಿಂ|| ೩೩||
ಪದ್ಯ-೩೩:ಪದವಿಭಾಗ-ಅರ್ಥ:ಮಿಡುಕದೆ ಭೀಷ್ಮ ನೋಡುತಿರು ಕುಂಭಜ ಸುರ್ಕಿರು (ಸುಕ್ಕಿಕೊ- ಮುದುರಿಕೊಂಡಿರು) ಕರ್ಣ ಮಿಕ್ಕು ಮಾರ್ನುಡಿಯದೆ ಮೂಗುವಟ್ಟಿರು (ಎದುರಾಡದೆ ಸುಮ್ಮನಿರು) ಗುರು ಪ್ರಿಯನಂದನ ಕೂಗು ಅಡಂಗದಿರ್ದೊಡೆ ಬರ್ದುಕು ಆವುದು ಇರ್,(ಅಶ್ವತ್ಥಾಮ ನಿನ್ನ ಕೂಗು ಅಡಗದಿದ್ದರೆ ಬದುಕುವುದೆಲ್ಲಿ ಬಂತು) ಪೊಡರ್ದೊಡೀಗಡೆ ಕೊಂದಪೆನು ಎಂದು (ಪೊಗರು ತೋರಿದರೆ ಮಾಡಿದರೆ ಈಗಲೆ ಕೊಲ್ಲುತ್ತೇನೆ) ಕೂಡೆ ಕಣ್ಗಿಡೆ ಜಡಿದು ಉಯ್ದನು ಆ ಖಚರನು ಇರ್ವರುಮಂ ಪರಮಾಣುಮಾರ್ಗದಿಂ (ಆ ಕ್ಷಣದಲ್ಲಿ ಹೆದರುವಂತೆ ಬೆದರಿಸಿ ಇಬ್ಬರನ್ನೂ ಆ ಚಿತ್ರಾಂಗದನು ಆಕಾಶಮಾರ್ಗದಿಂದ ಎತ್ತಿಕೊಂಡು ಹೋದನು.)
ಪದ್ಯ-೩೩:ಅರ್ಥ: ‘ಭೀಷ್ಮ ಅಲುಗಾಡದೆ ನೋಡುತ್ತಿರು, ದ್ರೋಣನೇ ಮುದುರಿಕೊಂಡಿರು; ಕರ್ಣನೇ ಮೀರಿ ಎದುರಾಡದೆ ಸುಮ್ಮನಿರು; ಅಶ್ವತ್ಥಾಮ ನಿನ್ನ ಕೂಗು ಅಡಗದಿದ್ದರೆ ನೀನು ಬದುಕುವುದೆಲ್ಲಿ ಬಂತು, ಸುಮ್ಮನಿರು; ಪೊಗರು ತೋರಿದರೆ ಮಾಡಿದರೆ ಈಗಲೆ ಕೊಲ್ಲುತ್ತೇನೆ’ ಎಂದು ಆ ಕ್ಷಣದಲ್ಲಿ ಹೆದರುವಂತೆ ಬೆದರಿಸಿ ಇಬ್ಬರನ್ನೂ ಆ ಚಿತ್ರಾಂಗದನು ಆಕಾಶಮಾರ್ಗದಿಂದ ಎತ್ತಿಕೊಂಡು ಹೋದನು.
ವ|| ಅಂತುಯ್ವುದುಂ ನೆಗೞ್ತೆಯ ಬೀರರೆಲ್ಲಂ ಬಡವರ ಪಿತರರಂತೆ ಮಿಳ್ಮಿಳ ನೋಡುತ್ತಿರೆ ಮಿಕ್ಕುದುಂಡರಂತೆ ತಲೆಯಂ ಬಾಗಿ ಬಿಲ್ಗಳಂ ಮುಂದಿಟ್ಟು ಬಿಲ್ಲುಂ ಬೆಱಗುಮಾಗಿರೆ ಸುಯೋಧನನ ಮಹಾದೇವಿ ಭಾನುಮತಿ ಬಾಯೞಿದು ಪುಯ್ಯಲಿಡುತುಂ ಬಂದು ಧರ್ಮನಂದನನ ಕಾಲ ಮೇಲೆ ಕವಿದುಪಟ್ಟು-
ವಚನ:ಪದವಿಭಾಗ-ಅರ್ಥ:ಅಂತು ಉಯ್ವುದುಂ ನೆಗೞ್ತೆಯ ಬೀರರೆಲ್ಲಂ (ಎತ್ತಿಕೊಂಡು ಹೋಗಲು ಪ್ರಸಿದ್ಧರಾದ ವೀರರೆಲ್ಲ) ಬಡವರ ಪಿತರರಂತೆ ಮಿಳ್ಮಿಳ ನೋಡುತ್ತಿರೆ (ಬಡವರ ತಂದೆಯರಂತೆ ಮಿಳಮಿಳನೆ ನೋಡುತ್ತಿಂದಂತೆ,) ಮಿಕ್ಕುದುಂಡರಂತೆ (ಎಂಜಲನ್ನು ತಿಂದವರಹಾಗೆ) ತಲೆಯಂ ಬಾಗಿ ಬಿಲ್ಗಳಂ ಮುಂದಿಟ್ಟು ಬಿಲ್ಲುಂ ಬೆಱಗುಮಾಗಿರೆ (ಏನು ಮಾಡಲೂ ತೋರದೆ ಆಶ್ಚರ್ಯಚಕಿತರಾಗಿರಲು,) ಸುಯೋಧನನ ಮಹಾದೇವಿ ಭಾನುಮತಿ ಬಾಯೞಿದು ಪುಯ್ಯಲಿಡುತುಂ (ಬಾಯಿಹರಿಯುವ ಹಾಗೆ ಅರಚುತ್ತಲೂ) ಬಂದು ಧರ್ಮನಂದನನ ಕಾಲ ಮೇಲೆ ಕವಿದುಪಟ್ಟು (ಎರಗಿಬಿದ್ದಳು)-ಎರಗಿಬಿದ್ದು-
ವಚನ:ಅರ್ಥ:ಹಾಗೆ ಎತ್ತಿಕೊಂಡು ಹೋಗಲು ಪ್ರಸಿದ್ಧರಾದ ವೀರರೆಲ್ಲ ಬಡವರ ತಂದೆಯರಂತೆ ಮಿಳಮಿಳನೆ ನೋಡುತ್ತಿಂದಂತೆ, ಎಂಜಲನ್ನು ತಿಂದವರಹಾಗೆ ತಲೆಯನ್ನು ತಗ್ಗಿಸಿಕೊಂಡರು. ಬಿಲ್ಲುಗಳನ್ನು ತಮ್ಮ ಮುಂದಿಟ್ಟುಕೊಂಡು ಏನು ಮಾಡಲೂ ತೋರದೆ ಆಶ್ಚರ್ಯಚಕಿತರಾಗಿರಲು, ದುರ್ಯೋಧನನ ಮಹಾರಾಣಿಯಾದ ಭಾನುಮತಿಯು ಬಾಯಿಹರಿಯುವ ಹಾಗೆ ಅರಚುತ್ತಲೂ ಬಂದು ಧರ್ಮರಾಜನ ಕಾಲಿನ ಮೇಲೆ ಎರಗಿಬಿದ್ದಳು.(ಎರಗಿಬಿದ್ದು)
ಕಂ|| ನೋಂತರ ಪಗೆವರನೆೞ್ತಿಱಿ
ದಂತಾಯ್ತೆಂದಿರದೆ ಪುರುಷಕಾರದ ಪೆಂಪಂ|
ಚಿಂತಿಸಿ ತರಿಸಿ ಮಹೀಶನ
ನೆಂತಪ್ಪೊಡಮೆನಗೆ ಪುರುಷಭಿಕ್ಷಮನಿಕ್ಕಿಂ|| ೩೪
ಪದ್ಯ-೩೪:ಪದವಿಭಾಗ-ಅರ್ಥ:ನೋಂತರ ಪಗೆವರನ ಎೞ್ತಿಱಿದಂತೆ ಆಯ್ತು ಎಂದು ಇರದೆ(‘ತಾನೇ ಕೊಲ್ಲಲು ಪ್ರತಜ್ಞೆಮಾಡಿದ್ದವರ ಹಗೆಯನ್ನು ಎತ್ತು ಇರಿದ ಹಾಗಾಯ್ತು' ಎಂದು ಸುಮ್ಮನಿರದೆ) ಪುರುಷಕಾರದ ಪೆಂಪಂಚಿಂತಿಸಿ ತರಿಸಿ ಮಹೀಶನನು (ಪುರುಷಪ್ರಯತ್ನದ (ಗಂಡಸುತನದ) ಶ್ರೇಷ್ಠತೆಯನ್ನು ಯೋಚಿಸಿ ಹೇಗಾದರೂ ಮಹಾರಾಜನನ್ನು ತರಿಸಿ) ಎಂತಪ್ಪೊಡಂ ಎನಗೆ ಪುರುಷಭಿಕ್ಷಮನು ಇಕ್ಕಿಂ(ಪುರುಷಭಿಕ್ಷೆಯನ್ನು- ಹೇಗಾದರೂ ಗಂಡನನ್ನು ಬದುಕಿಸಿ ಕೊಡಿ)
ಪದ್ಯ-೩೪:ಅರ್ಥ: ‘ತಾನೇ ಕೊಲ್ಲಲು ಪ್ರತಜ್ಞೆಮಾಡಿದ್ದವರ ಹಗೆಯನ್ನು ಎತ್ತು ಇರಿದ ಹಾಗಾಯ್ತು' ಎಂದು ಸುಮ್ಮನಿರದೆ ಪುರುಷಪ್ರಯತ್ನದ (ಗಂಡಸುತನದ) ಶ್ರೇಷ್ಠತೆಯನ್ನು ಯೋಚಿಸಿ ಮಹಾರಾಜನನ್ನು ತರಿಸಿ, ನನಗೆ ಪುರುಷಭಿಕ್ಷೆಯನ್ನು ಹೇಗಾದರೂ(ಗಂಡನನ್ನು ಬದುಕಿಸಿ ಕೊಡಿ) ಕೊಡಿ
ವ|| ಎಂದು ಪುಯ್ಯಲಿಡುವ ಭಾನುಮತಿಯ ಪುಯ್ಯಲಂ ಕೇಳ್ದು ಸುಯೋಧನಂ ಬಂದ ವೃತ್ತಾಂತಮನಱದು-
ವಚನ:ಪದವಿಭಾಗ-ಅರ್ಥ:ಎಂದು ಪುಯ್ಯಲಿಡುವ ಭಾನುಮತಿಯ ಪುಯ್ಯಲಂ ಕೇಳ್ದು ಸುಯೋಧನಂ ಬಂದ ವೃತ್ತಾಂತಮನಱದು-
ವಚನ:ಅರ್ಥ:ಎಂದು ಹೊಯಿಲಿಡುತ್ತಿರುವ/ ಕೂಗಿಕೊಳ್ಳುತ್ತಿರುವ ಭಾನುಮತಿಯ ಗೋಳನ್ನು ಕೇಳಿ, ದುರ್ಯೋಧನನು ದ್ವೈತ ವನಕ್ಕೆ ಬಂದ ಕಾರಣವನ್ನು ಧರ್ಮಜನು ತಿಳಿದು-
ಮ|| ಪಿರಿದುಂ ಕಾಯ್ಪಿನೊಳೆಯ್ದೆ ಕಾಯ್ವ ಸಮಕಟ್ಟಿಂ ದೋಷಮಲ್ತಕ್ಕ ಮ
ಚ್ಚರಮಂ ಮೋಘಮೊಡಂಬಡುಂ ಕಲುಷಮುಂ ಮುನ್ನುಳ್ಳುದಂತೆತ್ತಿಯುಂ|
ಪೊರೆಯುಂ ಪಂತಮುಮಿಲ್ಲದಂತೆ ಮನದೊಳ್ ನಿಷ್ಕಾರಣಂ ಕಾಯ್ವರಂ
ಪರ ಚಿಂತಾಕರ ಏಹಿ ಎಂಬ ನುಡಿಯಂ ಮುಂ ಕೇಳ್ದೆನಿಲ್ಲಾಗದೇ|| ೩೫
ಪದ್ಯ-೩೫:ಪದವಿಭಾಗ-ಅರ್ಥ: ಪಿರಿದುಂ ಕಾಯ್ಪಿನೊಳು ಎಯ್ದು (ಬಹಳ ಉದ್ವೇಗದಿಂದ ಬಂದು,) ಕಾಯ್ವ ಸಮಕಟ್ಟಿಂ ದೋಷಮಲ್ತು ಅಕ್ಕ (ಕಾಪಾಡಲು ಕೇಳಿದಾಗ ವ್ಯವಸ್ಥೆಮಾಡುವುದರಿಂದ ದೋಷವಿಲ್ಲ ಅಕ್ಕ!), ಮಚ್ಚರಮಂ (ಮತ್ಸರವೂ,) ಮೋಘಂ ಒಡಂಬಡುಂ (ನಿಷ್ಪ್ರಯೋಜಕವಾದ ಎಡವಟ್ಟು ಕೆಲಸ,) ಕಲುಷಮುಂ (ವೈರವೂ) ಮುನ್ನುಳ್ಳುದು (ಮೊದಲಿಂದಲೂ ಇದೆ), ಅಂತೆ ಎತ್ತಿಯುಂ (ಹಾಗೆ ಅದನ್ನು ಎತ್ತಿಕೊಂಡು) ಪೊರೆಯುಂ(ಕೊಳೆ, ಹೊಲಸು-ಬರಹಶಬ್ದಕೋಶ) ಪಂತಮುಂ (ಪಂಥ- ದ್ವೇಷ) ಇಲ್ಲದಂತೆ ಮನದೊಳ್ ( ಕೊಳೆ ದ್ವೇಷ ಮನಸ್ಸಿನಲ್ಲಿ ಇಲ್ಲದಂತೆ ಎಂಬ ಮಾತನ್ನು ಮೊದಲು ಕೇಳಿಲ್ಲವೇ ಕೇಳಿದ್ದೇನೆ ) 'ನಿಷ್ಕಾರಣಂ ಕಾಯ್ವರಂ ಪರ ಚಿಂತಾಕರ ಏಹಿ (ನಿಷ್ಕಾರಣವಾಗಿ ಸಿಟ್ಟುಮಾಡುವ-ಬೇರೆಯವರಿಗೆ ಚಿಂತೆಕೊಡುವ ಹಿಂಸಿಸುವಗುಣವೇ ಏಹಿ ಹೋಗು)' ಎಂಬ ನುಡಿಯಂ ಮುಂ ಕೇಳ್ದೆನು ಇಲ್ಲಾಗದೇ (ಈ ನೀತಿಯಮಾತನ್ನು ಮೊದಲು ಕೇಳಿದ್ದೇನೆ, ಅದನ್ನು ಇಲ್ಲಿ ಅನುಸರಿಸಲು ಆಗದೇ? ಅನುಸರಿಸುವೆನು.)
ಪದ್ಯ-೩೫:ಅರ್ಥ: ಬಹಳ ಉದ್ವೇಗದಿಂದ ಬಂದು, ಕಾಪಾಡಲು ಕೇಳಿದಾಗ ವ್ಯವಸ್ಥೆಮಾಡುವುದರಿಂದ ದೋಷವಿಲ್ಲ ಅಕ್ಕ!, ಮತ್ಸರವೂ, ನಿಷ್ಪ್ರಯೋಜಕವಾದ ಎಡವಟ್ಟು ಕೆಲಸ, ವೈರವೂ, ದುರ್ಯೋಧನನಿಗೆ ಮೊದಲಿಂದಲೂ ಇದೆ, ಹಾಗೆ ಅದನ್ನು ಎತ್ತಿಕೊಂಡು-ದ್ವೇಷ ಮಾಡುವವನಲ್ಲ. ಮನಸ್ಸಿನಲ್ಲಿ ಕೊಳೆ ದ್ವೇಷ ಇಲ್ಲದಂತೆ ಆಗಲಿ,ಎಂದರೆ 'ನಿಷ್ಕಾರಣಂ ಕಾಯ್ವರಂ ಪರ ಚಿಂತಾಕರ ಏಹಿ' ನಿಷ್ಕಾರಣವಾಗಿ ಸಿಟ್ಟುಮಾಡುವ-ಬೇರೆಯವರಿಗೆ ಚಿಂತೆಕೊಡುವ ಹಿಂಸಿಸುವ ಗುಣವೇ ಏಹಿ ಹೋಗು' ಎಂಬ ಈ ನೀತಿಯ ಮಾತನ್ನು ಮೊದಲು ಕೇಳಿದ್ದೇನೆ, ಅದನ್ನು ಇಲ್ಲಿ ಅನುಸರಿಸಲು ಆಗದೇ? ಅನುಸರಿಸುವೆನು.
  • ಅಥವಾ: ಬಹಳ ಉದ್ವೇಗದಿಂದ ಬಂದು, ಕಾಪಾಡಲು ಕೇಳಿದಾಗ ವ್ಯವಸ್ಥೆಮಾಡುವುದರಿಂದ ದೋಷವಿಲ್ಲ ಅಕ್ಕ! ಆದರೆ ಅಸೂಯೆಯೂ ವ್ಯರ್ಥವಾದ ತೊಂದರೆಯೂ ದ್ವೇಷವೂ ದುರ್ಯೋಧನನಿಗೆ ಸಹಜವಾದುದೇ. ಅದನ್ನೇ ಅನುಸರಿಸಿಕೊಂಡು ನಾನು ದುಖದಿಂದ ನಿಷ್ಕಾರಣವಾಗಿ ಕೋಪಿಸಿಕೊಳ್ಳುವುದು ನನಗೆ ಯೋಗ್ಯವಲ್ಲ. ಇತರರಿಗೆ ಹಿಂಸೆಮಾಡುವ ಸ್ವಭಾವವು ನನ್ನಿಂದ ದೂರವಿರಲಿ ಎಂಬ ಮಾತನ್ನು ನಾನು ಹಿಂದೆಯೇ ಕೇಳಿಲ್ಲವೇ?

ಗಂಧರ್ವರ ಸೆರೆಯಲ್ಲಿದ್ದ ದುರ್ಯೋಧನ ದುಶ್ವಾಸನರನ್ನು ಅರ್ಜುನ ರಕ್ಷಿಸಿದುದು[ಸಂಪಾದಿಸಿ]

ವ|| ಎಂದು ತನ್ನೊಳೆ ಬಗೆದು ಭಾನುಮತಿಯನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ತನ್ನೊಳೆ ಬಗೆದು ಭಾನುಮತಿಯನು ಇಂತು ಎಂದಂ-
ವಚನ:ಅರ್ಥ:ಎಂದು ತನ್ನಲ್ಲಿ ಯೋಚಿಸಿ ಭಾನುಮತಿಯನ್ನು ಕುರಿತು ಹೀಗೆಂದನು.
ಮ|| ಸುರಿಯಲ್ಬೇಡಮದರ್ಕೆ ಬಾಷ್ಪಜಳಮಂ ನಿನ್ನಾಣ್ಮನಂ ನಿನ್ನೊಳಿಂ
ದಿರದಾಂ ಕೂಡುವೆವೆಮ್ಮೊಳಾದ ಕಲಹಕ್ಕೆಂತಾದೊಡಂ ಕೇಳ ನೂ|
ರ್ವರೆ ದಲ್ ಕೌರವರಾಮುಮಯ್ವರೆ ವಲಂ ಮತ್ತೊರ್ವರೊಳ್ ತೊಟ್ಟ ಸಂ
ಗರರಂಗಕ್ಕೆ ಜಸಕ್ಕೆ ಕೂಡುವೆಡೆಯೊಳ್ ನೂಱಯ್ವರಾವಲ್ಲವೇ|| ೩೬ ||
ಪದ್ಯ-೩೬:ಪದವಿಭಾಗ-ಅರ್ಥ:ಸುರಿಯಲ್ಬೇಡಂ ಅದರ್ಕೆ ಬಾಷ್ಪಜಳಮಂ (ಅದಕ್ಕಾಗಿ ನೀನು ಕಣ್ಣೀರನ್ನು ಸುರಿಸಬೇಡ) ನಿನ್ನ ಆಣ್ಮನಂ ನಿನ್ನೊಳ್ ಇಂದು ಇರದೆ ಆಂ ಕೂಡುವೆವು (ತಡಮಾಡದೆ ನಿನ್ನ ಗಂಡನನ್ನು ಈ ದಿನವೇ ತಂದು ಸೇರಿಸುವೆವು;) ಎಮ್ಮೊಳಾದ ಕಲಹಕ್ಕೆ ಎಂತಾದೊಡಂ ಕೇಳ ನೂರ್ವರೆ ದಲ್ ಕೌರವರುಂ, ಆಮುಂ ಅಯ್ವರೆ ವಲಂ (ನಮ್ಮಲ್ಲಿಯೇ ಉಂಟಾದ ಜಗಳಕ್ಕೆ ಕೌರವರು ನೂರು ಜನ, ನಾವು ಅಯ್ದು ಜನವೇ ದಿಟ) ಮತ್ತೊರ್ವರೊಳ್ ತೊಟ್ಟ ಸಂಗರ ರಂಗಕ್ಕೆ ಜಸಕ್ಕೆ ಕೂಡುವೆಡೆಯೊಳ್ (ಆದರೆ ಮತ್ತೊಬ್ಬರಲ್ಲಿ ಉಂಟಾದ ಯುದ್ಧ ಸೇರುವ ಸಂದರ್ಭದಲ್ಲಿ) ನೂಱಯ್ವರಾವಲ್ಲವೇ (ನಾವು ನೂರೈದು ಜನವಲ್ಲವೇ?)
ಪದ್ಯ-೩೬:ಅರ್ಥ: ಅದಕ್ಕಾಗಿ ನೀನು ಕಣ್ಣೀರನ್ನು ಸುರಿಸಬೇಡ; ತಡಮಾಡದೆ ನಿನ್ನ ಗಂಡನನ್ನು ಈ ದಿನವೇ ತಂದು ಸೇರಿಸುವೆವು; ಕೇಳು ನಮ್ಮಲ್ಲಿಯೇ ಉಂಟಾದ ಜಗಳಕ್ಕೆ ಕೌರವರು ನೂರು ಜನ, ನಾವು ಅಯ್ದು ಜನವೇ ಸರಿ. ಆದರೆ ಮತ್ತೊಬ್ಬರೊಡನೆ ಉಂಟಾದ ಯುದ್ಧ ಕೂಡಿದ ಸಂದರ್ಭದಲ್ಲಿ ನಾವು ನೂರೈದು ಜನವಲ್ಲವೇ?
ವ|| ಎಂದು ಯುಧೀಷ್ಠಿರಂ ಪಾೞಿಯ ಪಸುಗೆಯನಱದು ನುಡಿದೊಡಾ ಪೂಣ್ದ ಬೆಸನಂ ಕರಮಾಸೆವಟ್ಟು ತನ್ನ ಕೆಲದೊಳಿರ್ದ ಸಾಹಸಾಭರಣನ ಮೊಗಮಂ ನೋಡಿ-
ವಚನ:ಪದವಿಭಾಗ-ಅರ್ಥ:ಎಂದು ಯುಧಿಷ್ಠಿರಂ ಪಾೞಿಯ ಪಸುಗೆಯನು ಅಱಿದು ನುಡಿದೊಡೆ ಆ ಪೂಣ್ದ ಬೆಸನಂ ಕರಂ ಆಸೆವಟ್ಟು (ತಾನು ಹೇಳಿದ ಆ ಮಾತನ್ನು / ಕಾರ್ಯವನ್ನು ಶೀಘ್ರವಾಗಿ ಸಾಧಿಸಲು ಬಯಸಿ) ತನ್ನ ಕೆಲದೊಳಿರ್ದ ಸಾಹಸಾಭರಣನ ಮೊಗಮಂ ನೋಡಿ-
ವಚನ:ಅರ್ಥ:ಎಂದು ಧರ್ಮರಾಜನು ಧರ್ಮದ ವಿವೇಕವನ್ನು ತಿಳಿದು ಹೇಳಿದಾಗ, ತಾನು ಹೇಳಿದ ಆ ಮಾತನ್ನು / ಕಾರ್ಯವನ್ನು ಶೀಘ್ರವಾಗಿ ಸಾಧಿಸಲು ಬಯಸಿ, ತನ್ನ ಪಕ್ಕದಲ್ಲಿದ್ದ ಸಾಹಸಾಭರಣನಾದ ಅರ್ಜುನನ ಮುಖವನ್ನು ನೋಡಿ-
ಕಂ|| ಪಿಡಿದುಯ್ದುದು ಗಂಧರ್ವರ
ಪಡೆ ಗಡ ನಿಮ್ಮಣ್ಣನಂ ಸುಯೋಧನನನಿದಂ|
ಕಡೆಗಣಿಸಲಾಗ ನಮಗೀ
ಗಡೆ ಬೇಗಂ ಬಿಡಿಸಿ ತರ್ಪುದಾತನ ಸೆಯಂ|| ೩೭ ||
ಪದ್ಯ-೦೦:ಪದವಿಭಾಗ-ಅರ್ಥ:ಪಿಡಿದು ಉಯ್ದುದು (ಗಂಧರ್ವಸೈನ್ಯವು ಹಿಡಿದುಕೊಂಡು ಹೋಗಿದೆ) ಗಂಧರ್ವರ ಪಡೆ ಗಡ ನಿಮ್ಮಣ್ಣನಂ, ಸುಯೋಧನನನು ಇದಂ ಕಡೆಗಣಿಸಲಾಗ (ಕಡೆಗಣಿಸಬಾರದು) ನಮಗೀ ಗಡೆ ಬೇಗಂ ಬಿಡಿಸಿ ತರ್ಪುದು ಆತನ ಸೆರೆಯಂ (ಬಂಧನವನ್ನು -ಬಿಡಿಸಿ )
ಪದ್ಯ-೦೦:ಅರ್ಥ: ನಿಮ್ಮಣ್ಣನಾದ ದುರ್ಯೋಧನನನ್ನು ಗಂಧರ್ವಸೈನ್ಯವು ಹಿಡಿದುಕೊಂಡು ಹೋಗಿದೆ. ನಾವು ಇದನ್ನು ಕಡೆಗಣಿಸಬಾರದು; ಈಗಲೇ ಬೇಗ ಆತನ ಬಂಧನವನ್ನು ಬಿಡಿಸಿ ತರತಕ್ಕದ್ದು. ಎಂದನು ಧರ್ಮಜ.
ವ|| ಎಂಬುದುಂ ಮಹಾಪ್ರಸಾದಮಂತೆಗೆಯ್ವೆನೆಲ್ಲಿವೊಕ್ಕೊಡಂ ಕೊಂಡು ಬಂದೆಪೆನೆಂದು ಬಗೆಯದಿದಿರಂ ನೋಡುತ್ತಿರಿಮೆಂದು ತವದೊಣೆಗಳಂ ಬಿಗಿದು ಗಾಂಡೀವಮನೇಱಸಿ ನೀವಿ ಜೇವೊಡೆದು ಗಂಧರ್ವರ ಪೋಪ ಬೞಿಯಂ ಬೆಸಗೊಂಡು ಹಿಮವಂತದಲ್ಲಿ ರಾಕ್ಷಸಿ ಕೊಟ್ಟ ಚಕ್ಷುಸಿಯೆಂಬ ವಿದ್ಯೆಯಿಂ ತನ್ನ ಕಣ್ಣನಭಿಮಂತ್ರಿಸಿಕೊಂಡು ಪಾಱುವ ಗಂಧರ್ವಬಲಮಂ ಜಲಕ್ಕನೆ ಕಂಡು-
ವಚನ:ಪದವಿಭಾಗ-ಅರ್ಥ:ಎಂಬುದುಂ ಮಹಾಪ್ರಸಾದಂ ಅಂತೆಗೆಯ್ವೆನು ಎಲ್ಲಿವೊಕ್ಕೊಡಂ (ಎಲ್ಲಿ ಹೊಕ್ಕರೂ) ಕೊಂಡು ಬಂದೆಪೆನು ಎಂದು (ಎಲ್ಲಿ ಹೊಕ್ಕಿದ್ದರೂ ಅವರನ್ನು ತೆಗೆದುಕೊಂಡು ಬರುತ್ತೇನೆ,ಎಂದು) ಬಗೆಯದೆ ಇದಿರಂ (ವಿರೋಧಿಗಳನ್ನು ಲೆಕ್ಕಿಸದೆ) ನೋಡುತ್ತಿರಿಂ ಎಂದು ತವದೊಣೆಗಳಂ ಬಿಗಿದು ಗಾಂಡೀವಮನೇಱಸಿ (ಅಕ್ಷಯತೂಣೀರವನ್ನು ಬಿಗಿದುಕೊಂಡು ಗಾಂಡೀವಕ್ಕೆ ಹೆದೆಯನ್ನೇರಿಸಿ) ನೀವಿ ಜೇವೊಡೆದು (ಸವರಿ ಶಬ್ದಮಾಡಿ ನೋಡಿ) ಗಂಧರ್ವರ ಪೋಪ ಬೞಿಯಂ ಬೆಸಗೊಂಡು (ಗಂಧರ್ವರು ಹೋದ ದಾರಿಯನ್ನು ಕೇಳಿಕೊಂಡು/ ಹುಡುಕಿಕೊಂಡು ಹೊರಟನು) ಹಿಮವಂತದಲ್ಲಿ ರಾಕ್ಷಸಿ ಕೊಟ್ಟ ಚಕ್ಷುಸಿಯೆಂಬ ವಿದ್ಯೆಯಿಂ ತನ್ನ ಕಣ್ಣನು ಅಭಿಮಂತ್ರಿಸಿಕೊಂಡು ಪಾಱುವ ಗಂಧರ್ವಬಲಮಂ ಜಲಕ್ಕನೆ ಕಂಡು (ಹಾರಿಹೋಗುತ್ತಿದ್ದ ಗಂಧರ್ವಸೈನ್ಯವನ್ನು ಸ್ಪಷ್ಟವಾಗಿ ಕಂಡನು.)-
ವಚನ:ಅರ್ಥ:ಎನ್ನಲು ಮಹಾಪ್ರಸಾದ, ಹಾಗೆಯೇ ಮಾಡುತ್ತೇನೆ; ಎಲ್ಲಿ ಹೊಕ್ಕಿದ್ದರೂ ಅವರನ್ನು ತೆಗೆದುಕೊಂಡು ಬರುತ್ತೇನೆ ಎಂದು, ವಿರೋಧಿಗಳನ್ನು ಲೆಕ್ಕಿಸದೆ, ಆ ವಿಷವಾಗಿ ಚಿಂತಿಸದೆ ನಿರೀಕ್ಷಣೆ ಮಾಡುತ್ತಿರಿ ಎಂದು ತನ್ನ ಅಕ್ಷಯತೂಣೀರವನ್ನು ಬಿಗಿದುಕೊಂಡು ಗಾಂಡೀವಕ್ಕೆ ಹೆದೆಯನ್ನೇರಿಸಿ ಸವರಿ ಶಬ್ದಮಾಡಿ ನೋಡಿ ಗಂಧರ್ವರು ಹೋದ ದಾರಿಯನ್ನು ಕೇಳಿಕೊಂಡು/ ಹುಡುಕಿಕೊಂಡು ಹೊರಟನು. ಹಿಮವತ್ಪರ್ವತದಲ್ಲಿ ರಾಕ್ಷಸಿಯು ಕೊಟ್ಟ ಚಕ್ಷುಸಿಯೆಂಬ ವಿದ್ಯೆಯನ್ನು ತನ್ನ ಕಣ್ಣನ್ನು ಅಭಿಮಂತ್ರಿಸಿಕೊಂಡು ನೋಡಲು ಹಾರಿಹೋಗುತ್ತಿದ್ದ ಗಂಧರ್ವಸೈನ್ಯವನ್ನು ಸ್ಪಷ್ಟವಾಗಿ ಕಂಡನು.ಕಂಡು-
ಕಂ|| ಕೊಳ್ ಕೊಳ್ಳೆಂದೆಚ್ಚೊಡೆ ವಿಳ
ಯೋಳ್ಕದ ತೆಱದಿಂದೆ ಮುಸುಱಿ ದಿವ್ಯಾಸ್ತ್ರಚಯಂ|
ಗಳ್ ಕೊಳೆ ಗಾಂಧರ್ವಬಲಂ
ಗಳ್ ಕೆಡೆದುವು ಮಿಟ್ಟೆಗೊಂಡ ಚಿಟ್ಟೆಯ ತೆಱದಿಂ|| ೩೮ ||
ಪದ್ಯ-೩೮:ಪದವಿಭಾಗ-ಅರ್ಥ:ಕೊಳ್ ಕೊಳ್ಳೆಂದು ಎಚ್ಚೊಡೆ (ತೆಗೆದುಕೊ ತೆಗೆದುಕೊ ಎಂದು ಹೊಡೆಯಲು) ವಿಳಯ ಉಳ್ಕದ ತೆಱದಿಂದೆ ಮುಸುಱಿ (ಪ್ರಳಯಕಾಲದ ಬೆಂಕಿಯ ಚೂರಿನಂತೆ ಮುತ್ತಿ) ದಿವ್ಯಾಸ್ತ್ರಚಯಂಗಳ್ ಕೊಳೆ (ದಿವ್ಯಾಸ್ತ್ರಗಳ ಸಮೂಹವು ಆಕ್ರಮಿಸಲು) ಗಾಂಧರ್ವಬಲಂಗಳ್ ಕೆಡೆದುವು ಮಿಟ್ಟೆಗೊಂಡ ಚಿಟ್ಟೆಯ ತೆಱದಿಂ (ಗಂಧರ್ವಸೈನ್ಯಗಳು ಮಣ್ಣು ಹೆಂಟೆಯು ತಗುಲಿದ ಚಿಟ್ಟೆಯ ಹುಳುವಿನ ಹಾಗೆ ಉರುಳಿ ಬಿದ್ದುವು)
ಪದ್ಯ-೩೮:ಅರ್ಥ:ಅರ್ಜುನನು ತೆಗೆದುಕೊ ತೆಗೆದುಕೊ ಎಂದು ಹೊಡೆಯಲು, ದಿವ್ಯಾಸ್ತ್ರಗಳ ಸಮೂಹವು ಆಕ್ರಮಿಸಲು ಪ್ರಳಯಕಾಲದ ಬೆಂಕಿಯ ಚೂರಿನಂತೆ ಮುತ್ತಿ ನಾಟಲಾಗಿ ಗಂಧರ್ವಸೈನ್ಯಗಳು ಮಣ್ಣು ಹೆಂಟೆಯು ತಗುಲಿದ ಚಿಟ್ಟೆಯ ಹುಳುವಿನ ಹಾಗೆ ಉರುಳಿ ಬಿದ್ದುವು.
ವ|| ಅಂತಲ್ಲಿ ಪದಿನಾಲ್ಸಾಸಿರ್ವರ್ ಗಂಧರ್ವರಂ ಕೊಂದೊಡೆ ಚಿತ್ರಾಂಗದಂ ಬೆರ್ಚಿಕೊಳ್ ನಿನ್ನ ನಚ್ಚಿನ ಸೆರೆಯನೆಂದು ಬಿಸುಟ್ಟೊಡೆ ನೋಯಲೀಯದೆ ನೆಲದಾಕಾಶದೆಡೆಯೊಳಂಬುಗಳುಂ ತರತರದಿಂದೆಚ್ಚು ಸೋಪಾನಂ ಮಾಡಿ ದುರ್ಯೋಧನ ದುಶ್ಶಾಸನರನಿೞಪಿ ಕಟ್ಟುಗಳುಂ ಬಿಡದೊಡಗೊಂಡು ಬಂದು ಧರ್ಮಪುತ್ರಂಗೆ ತೋಱಿದೊಡೆ ಸಾಹಸಾಭರಣನ ಸಾಹಸಮನಳವಲ್ಲದೆ ಪೋಗೞ್ದು ತೊಡೆಯನೇಱಸಿಕೊಂಡು ಬಾಯೊಳ್ ತಂಬುಲಂಗೊಟ್ಟಂ ಪಾಂಚಾಲರಾಜತನೂಜೆ ಪಗೆವರ ಕಟ್ಟುವಟ್ಟಿರ್ದೇಳಿದಿಕ್ಕೆಗೆ ಸಂತಸಂಬಟ್ಟು ಸೈರಿಸಲಾಱದಿಂತೆಂದಳ್-
ವಚನ:ಪದವಿಭಾಗ-ಅರ್ಥ:ಅಂತಲ್ಲಿ ಪದಿನಾಲ್ ಸಾಸಿರ್ವರ್ ಗಂಧರ್ವರಂ ಕೊಂದೊಡೆ (ಕೊಂದಾಗ) ಚಿತ್ರಾಂಗದಂ ಬೆರ್ಚಿಕೊಳ್ (ಹೆದರಿ) ನಿನ್ನ ನಚ್ಚಿನ ಸೆರೆಯನೆಂದು (ಪ್ರೀಯಿಯ ಸೆರೆಯವರನ್ನು) ಬಿಸುಟ್ಟೊಡೆ(ಎಸೆದಾಗ) ನೋಯಲು ಈಯದೆ (ನೋವಾಗಲು ಅವಕಾಶ ಕೊಡದೆ) ನೆಲದ ಆಕಾಶದೆಡೆಯೊಳು ಅಂಬುಗಳುಂ ತರತರದಿಂದ ಎಚ್ಚು ಸೋಪಾನಂ ಮಾಡಿ (ಭೂಮ್ಯಾಕಾಶಗಳ ಮಧ್ಯದಲ್ಲಿ ಬಾಣಗಳನ್ನು ನಾನಾವಿಧವಾಗಿ ಪ್ರಯೋಗಮಾಡಿ ಮೆಟ್ಟಿಲುಗಳನ್ನು ಕಟ್ಟಿ) ದುರ್ಯೋಧನ ದುಶ್ಶಾಸನರನು ಇೞಿಪಿ (ಕೆಳಗೆ ಇಳಿಸಿ) ಕಟ್ಟುಗಳುಂ ಬಿಡದೆ ಎಡಗೊಂಡು ಬಂದು (ಕಟ್ಟುಗಳನ್ನು ಬಿಡಿಸದೆಯೆ ಕರೆತಂದು ) ಧರ್ಮಪುತ್ರಂಗೆ ತೋಱಿದೊಡೆ (ಧರ್ಮರಾಯನಿಗೆ ತೋರಿಸಿದಾಗ), ಸಾಹಸಾಭರಣನ ಸಾಹಸಮನು ಅಳವಲ್ಲದೆ ಪೋಗೞ್ದು (ಅಳತೆಯಿಲ್ಲದಷ್ಟು ಹೊಗಳಿ) ತೊಡೆಯನು ಏಱಸಿಕೊಂಡು ಬಾಯೊಳ್ ತಂಬುಲಂಗೊಟ್ಟಂ (ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಬಾಯಲ್ಲಿ ತಾಂಬೂಲವನ್ನು ಕೊಟ್ಟನು). ಪಾಂಚಾಲರಾಜತನೂಜೆ (ದ್ರೌಪದಿ) ಪಗೆವರ ಕಟ್ಟುವಟ್ಟಿರ್ದ ಏಳಿದಿಕ್ಕೆಗೆ ಸಂತಸಂಬಟ್ಟು (ಕಟ್ಟುಗಳನ್ನು ಕಟ್ಟಿಸಿಕೊಂಡ ಸ್ಥಿತಿಗೆ ಸಂತಸಪಟ್ಟು) ಸೈರಿಸಲಾಱದೆ ಇಂತೆಂದಳ್-
ವಚನ:ಅರ್ಥ:|| ಅಲ್ಲಿ ಹದಿನಾಲ್ಕು ಸಾವಿರ ಗಂಧರ್ವರನ್ನು ಕೊಂದಾಗ ಚಿತ್ರಾಂಗದನು ಹೆದರಿ ನಿನ್ನ ಪ್ರೀತಿಯ ಬಂಧಿತರನ್ನು ತೆಗೆದುಕೋ ಎಂದು ದುರ್ಯೋಧನ ಮತ್ತು ದುಶ್ಶಾಸನರನ್ನು ಎಸೆದನು. ಅವರು ನೋವಾಗಲು ಅವಕಾಶ ಕೊಡದೆ ಭೂಮ್ಯಾಕಾಶಗಳ ಮಧ್ಯದಲ್ಲಿ ಬಾಣಗಳನ್ನು ನಾನಾವಿಧವಾಗಿ ಪ್ರಯೋಗಮಾಡಿ ಮೆಟ್ಟಿಲುಗಳನ್ನು ಕಟ್ಟಿ ದುರ್ಯೋಧನ ದುಶ್ಶಾಸನರನ್ನು ಇಳಿಸಿ ಕಟ್ಟುಗಳನ್ನು ಬಿಡಿಸದೆಯೆ ಕರೆತಂದು ಧರ್ಮರಾಯನಿಗೆ ತೋರಿಸಿದನು. ಆಗ ಅವನು ಸಾಹಸಾಭರಣ ಅರ್ಜುನನ ಸಾಹಸವನ್ನು ಅಳತೆಯಿಲ್ಲದಷ್ಟು ಹೊಗಳಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಬಾಯಲ್ಲಿ ತಾಂಬೂಲವನ್ನು ಕೊಟ್ಟನು. ದ್ರೌಪದಿಯು ಅವರು ಕಟ್ಟುಗಳನ್ನು ಕಟ್ಟಿಸಿಕೊಂಡ ಸ್ಥಿತಿಗೆ (ಅವಮಾನ ಪಟ್ಟುದಕ್ಕೆ) ಸಂತೋಷಪಟ್ಟು ಸಹಿಸಲಾರದೆ ಹೀಗೆಂದಳು.
ಕಂ|| ಎಮ್ಮಂ ಪಿಡಿದೆೞೆವಂದಿನ
ನಿಮ್ಮದಟುಗಳೀಗಳೆತ್ತವೋದವೊ ಪಿಡಿವ|
ಟ್ಟಮ್ಮ ಬೞಲ್ದಿರೆ ಕಂಡಿರೆ
ನಿಮ್ಮಳವಂ ನಿಮಗವಮೀಗಳೀಯೆಡರಾಯ್ತೇ|| ೩೯ ||
ಪದ್ಯ-೩೯:ಪದವಿಭಾಗ-ಅರ್ಥ:ಎಮ್ಮಂ ಪಿಡಿದು ಎೞೆವ ಅಂದಿನ ನಿಮ್ಮ ಅದಟುಗಳು ಈಗಳು ಎತ್ತವೋದವೊ (ನಮ್ಮನ್ನು ಹಿಡಿದೆಳೆದ ಅಂದಿನ ನಿಮ್ಮ ಪರಾಕ್ರಮಗಳು ಈಗ ಎಲ್ಲಿಗೆ ಹೋದವೊ) ಪಿಡಿವಟ್ಟು ಅಮ್ಮ ಬೞಲ್ದಿರೆ (ಹಿಡಿಸಿಕೊಂಡು ಅಪ್ಪ ಬಳಲಿದಿರಲ್ಲಾ) ಕಂಡಿರೆ ನಿಮ್ಮ ಅಳವಂ (ನಿಮ್ಮ ಶಕ್ತಿಯ ಪ್ರಮಾಣ ತಿಳಿಯಿತೇ), ನಿಮಗಂ ಈಗಳ್ ಈ ಯೆಡರಾಯ್ತೇ (ನಿಮಗೂ ಈಗ ಈ ಕಷ್ಟ ಬಂತೇ?)
ಪದ್ಯ-೩೯:ಅರ್ಥ: ನಮ್ಮನ್ನು ಹಿಡಿದೆಳೆದ ಆ ದಿನದ ನಿಮ್ಮ ಪರಾಕ್ರಮಗಳು ಈಗ ಎಲ್ಲಿಗೆ ಹೋದವು; ಹಿಡಿಸಿಕೊಂಡು ಅಪ್ಪ ಬಳಲಿದಿರಲ್ಲಾ; ನಿಮ್ಮ ಶಕ್ತಿಯ ಪ್ರಮಾಣ ತಿಳಿಯಿತೇ; ಛೀ, ನಿಮಗೂ ಈಗ ಈ ಕಷ್ಟ ಬಂತೇ?
ವ|| ಎಂದು ಸಾಯೆ ಸರಸಂ ನುಡಿದು ಕಟ್ಟಿದ ಕಟ್ಟುಗಳಂ ತಾನೆ ಬಿಟ್ಟು ಕಳೆದು ಭಾನುಮತಿಗೆ ನಿನ್ನಾಣ್ಮನುಮಂ ನಿನ್ನ ಮಯ್ದುನನುಮಂ ನೀನೊಪ್ಪುಗೊಳ್ಳೆಂಬುದುಂ ದುರ್ಯೋಧನಂದಾಡೆಗಳೆದ ಕುಳಿಕನಂತೆಯುಂ ಕೋಡುಡಿದ ಮದಹಸ್ತಿಯಂತೆಯುಂ ನಖಮುಡಿದ ಸಿಂಹದಂತೆಯುಂ ಗಳಿತಗರ್ವನಾಗಿ ಪಾಂಡವರ ಮೊಗಮಂ ನೋಡಲ್ ನಾಣ್ಚಿ ಮದಗಜಪುರಕ್ಕೆ ಪೋಗಿ ಜೂದಿನೊಳ್ ಗೆಲ್ದ ನೆಲನಂ ನಯಜ್ಞನಾಗಿ ತನ್ನೊಳ್ ಪತ್ತಿಸಿ ದುಶ್ಶಾಸನನಂ ಯುವರಾಜನಂ ಮಾಡಿ ನಿರ್ವ್ಯಾಜಮರಸುಗೆಯ್ಯುತ್ತುಮಿರ್ದನಿತ್ತ ಯುಷ್ಠಿರನಟ್ಟಿದ ಕಿರಾತದೂತಂ ತಾಪಸ ವ್ಯಾಜನಾಗಿ ಪೋಗಿ ಸುಯೋಧನನ ವಾರ್ತೆಯೆಲ್ಲಮುಮನಱಿದು ಬಂದಜಾತಕಶತ್ರುಗಿಂತೆಂದು ಬಿನ್ನಪಂಗೆಯ್ದಂ-
ವಚನ:ಪದವಿಭಾಗ-ಅರ್ಥ:ಎಂದು ಸಾಯೆ ಸರಸಂ ನುಡಿದು (ಸಾಯುವ ಹಾಗೆ ಹಾಸ್ಯಮಾಡಿ) ಕಟ್ಟಿದ ಕಟ್ಟುಗಳಂ ತಾನೆ ಬಿಟ್ಟು ಕಳೆದು (ಬಿಚ್ಚಿ) ಭಾನುಮತಿಗೆ ನಿನ್ನ ಆಣ್ಮನುಮಂ ನಿನ್ನ ಮಯ್ದುನನುಮಂ ನೀನೊಪ್ಪುಗೊಳ್ಳ್ ಎಂಬುದುಂಒಪ್ಪಿಸಿಕೊ (ತೆಗೆದುಕೊ) ಎಂದಾಗ), ದುರ್ಯೋಧನಂ ದಾಡೆಗಳೆದ ಕುಳಿಕನಂತೆಯುಂ (ದುರ್ಯೋಧನನು ಹಲ್ಲುಕಿತ್ತ ಕ್ರೂರಸರ್ಪದಂತೆಯೂ) ಕೋಡು ಉಡಿದ ಮದಹಸ್ತಿಯಂತೆಯುಂ (ಕೊಂಬುಮುರಿದ ಮದ್ದಾನೆಯಂತೆಯೂ) ನಖಂ ಉಡಿದ ಸಿಂಹದಂತೆಯುಂ (ಉಗುರು ಉದುರಿದ ಸಿಂಹದಂತೆಯೂ) ಗಳಿತ ಗರ್ವನಾಗಿ (ಗರ್ವಹೀನನಾಗಿ ) ಪಾಂಡವರ ಮೊಗಮಂ ನೋಡಲ್ ನಾಣ್ಚಿ (ನಾಚಿ) ಮದಗಜಪುರಕ್ಕೆ ಪೋಗಿ ಜೂದಿನೊಳ್ ಗೆಲ್ದ ನೆಲನಂ ನಯಜ್ಞನಾಗಿ ತನ್ನೊಳ್ ಪತ್ತಿಸಿ ದುಶ್ಶಾಸನನಂ ಯುವರಾಜನಂ ಮಾಡಿ ನಿರ್ವ್ಯಾಜಂ (ನೀತಿಯುಕ್ತವಾಗಿ ) ಅರಸುಗೆಯ್ಯುತ್ತು ಇರ್ದನು.(ಸುಖದಿಂದ ರಾಜ್ಯಭಾರ ಮಾಡುತ್ತಿದ್ದನು) ಇತ್ತ ಯುಷ್ಠಿರನು ಅಟ್ಟಿದ ಕಿರಾತದೂತಂ ತಾಪಸ ವ್ಯಾಜನಾಗಿ ಪೋಗಿ ( ಕಿರಾತದೂತನು ತಪಸ್ವಿ ವೇಷದಿಂದ ಹೋಗಿ ) ಸುಯೋಧನನ ವಾರ್ತೆಯೆಲ್ಲಮುಮನು ಅಱಿದು ಬಂದು ಅಜಾತಕಶತ್ರುಗೆ ಇಂತೆಂದು ಬಿನ್ನಪಂಗೆಯ್ದಂ-
ವಚನ:ಅರ್ಥ:ಎಂದು ಸಾಯುವ ಹಾಗೆ ಹಾಸ್ಯಮಾಡಿ, ಕಟ್ಟಿದ ಕಟ್ಟುಗಳನ್ನು ತಾನೇ ಬಿಚ್ಚಿ, ಭಾನುಮತಿಗೆ ನಿನ್ನ ಗಂಡನನ್ನೂ ಮೈದುನನನ್ನೂ ಒಪ್ಪಿಸಿಕೊ (ತೆಗೆದುಕೊ) ಎಂದಳು. ದುರ್ಯೋಧನನು ಹಲ್ಲುಕಿತ್ತ ಕ್ರೂರಸರ್ಪದಂತೆಯೂ, ಕೊಂಬುಮುರಿದ ಮದ್ದಾನೆಯಂತೆಯೂ, ಉಗುರು ಉದುರಿದ ಸಿಂಹದಂತೆಯೂ ಗರ್ವಹೀನನಾಗಿ, ಪಾಂಡವರ ಮುಖವನ್ನು ನೋಡಲು ನಾಚಿ, ಹಸ್ತಿನಾಪುರಕ್ಕೆ ಹೋಗಿ ಜೂಜಿನಲ್ಲಿ ಗೆದ್ದ ರಾಜ್ಯವನ್ನು ನೀತಿಯುಕ್ತವಾಗಿ ಆಳುತ್ತಾ ದುಶ್ಶಾಸನನನ್ನೂ ಯುವರಾಜನನ್ನಾಗಿ ಮಾಡಿ ಸುಖದಿಂದ ರಾಜ್ಯಭಾರ ಮಾಡುತ್ತಿದ್ದನು. ಈ ಕಡೆ ಯುಷ್ಠಿರನು ಕಳುಹಿಸಿದ ಕಿರಾತದೂತನು ತಪಸ್ವಿ ವೇಷದಿಂದ ಹೋಗಿ ದುರ್ಯೋಧನನ ಸಮಾಚಾರವನ್ನೆಲ್ಲ ತಿಳಿದು ಬಂದು ಧರ್ಮರಾಯನಿಗೆ ವಿಜ್ಞಾಪಿಸಿದನು-
ಚಂ|| ಕಿವಿಗಿನಿದುಂ ನೃಪಂದೆ ಹಿತಮಂ ನುಡಿಯೆಲ್ಲಿಯುಮಿಲ್ಲ ಕೇಳ ಬಿ
ನ್ನವಿಸುವೆನೆನ್ನ ಕಂಡುದನೆ ಜೂದಿನೊಳುಕ್ಕೆವದಿಂದೆ ಗೆಲ್ದ ನಿ|
ನ್ನವನಿತಳಂ ಕರಾತಳದವೋಲ್ ತನಗಂ ಬೆಸಕೆಯ್ಯೆ ಕೆಯ್ಗೆ ಮಾ
ಡುವ ನಯಮಾ ಬೃಹಸ್ಪತಿಯುಮಂ ಗೆಲೆವಂದುದು ಧಾರ್ತರಾಷ್ಟ್ರನಾ|| ೪೦||
ಪದ್ಯ-೪೦:ಪದವಿಭಾಗ-ಅರ್ಥ:ಕಿವಿಗೆ ಇನಿದುಂ ನೃಪಂದೆ ಹಿತಮಂ ನುಡಿಯೆಲ್ಲಿಯುಂ ಇಲ್ಲ, ಕೇಳ ಬಿನ್ನವಿಸುವೆನು ಎನ್ನ ಕಂಡುದನೆ (ನಾನು ಕಂಡುದನ್ನು ವಿಜ್ಞಾಪಿಸುತ್ತೇನೆ) ಜೂದಿನೊಳು ಉಕ್ಕೆವದಿಂದೆ ಗೆಲ್ದ (ಜೂಜಿನಲ್ಲಿ ಮೋಸದಿಂದ ಗೆದ್ದ) ನಿನ್ನ ಅವನಿತಳಂ ಕರಾತಳದವೋಲ್ (ಅಂಗಯ್ಯಲ್ಲಿರುವ ಹಾಗೆ) ತನಗಂ ಬೆಸಕೆಯ್ಯೆ ಕೆಯ್ಗೆ ಮಾಡುವ ನಯಮ್ (ತನಗೆ ಸೇವೆ ಮಾಡುವ) ಆ ಬೃಹಸ್ಪತಿಯುಮಂ ಗೆಲೆವಂದುದು ಧಾರ್ತರಾಷ್ಟ್ರನಾ (ದುರ್ಯೋಧನನ ಆ ಹೊಸರಾಜನೀತಿ ಬೃಹಸ್ಪತಿಯನ್ನೂ ಮೀರಿಸಿದೆ).
ಪದ್ಯ-೪೦:ಅರ್ಥ: ಒಂದೇ ಮಾತು ಕಿವಿಗಿಂಪಾಗಿಯೂ ಶ್ರೇಯಸ್ಕರವಾಗಿಯೂ ಇರಲು ಸಾಧ್ಯವಿಲ್ಲ. ನಾನು ಕಂಡುದನ್ನು ವಿಜ್ಞಾಪಿಸುತ್ತೇನೆ. ಜೂಜಿನಲ್ಲಿ ಮೋಸದಿಂದ ಗೆದ್ದ ನಿನ್ನ ರಾಜ್ಯವು ಅವನ ಅಂಗಯ್ಯಲ್ಲಿರುವ ಹಾಗೆ, ತನಗೆ ಸೇವೆ ಮಾಡುವ, ಹಾಗೆ ಮಾಡಿಕೊಳ್ಳುವ ದುರ್ಯೋಧನನ ಆ ಹೊಸರಾಜನೀತಿ ಬೃಹಸ್ಪತಿಯನ್ನೂ ಮೀರಿಸಿದೆ, ಎಂದನು ದೂತ.
ಮ|| ಮೊದಲೊಳ್ ತಿಣ್ಣಮದೊಪ್ಪಿ ತಪ್ಪಿದುದನೀಯೆಂದಟ್ಟಿದಂ ದಂಡನ
ಟ್ಟದೆ ಸಾಮರ್ಥ್ಯದಿನಟ್ಟಿದೋಲೆಗೆ ಮಹಾಪ್ರತ್ಯಂತ ಭೂಪಾಳರ|
ಟ್ಟಿದ ಕಾಳಿಂಗ ಗಜೇಂದ್ರ ದಾನಜಲಧಾರಾಸಾರದಿಂ ನೋಡ ಕುಂ
ದಿದುದಿಲ್ಗೊಳ್ಗೆಸಱು ಸುಯೋಧನ ನೃಪದ್ವಾರೋಪಕಂಠಗಳೊಳ್|| ೪೧ ||
ಪದ್ಯ-೪೧:ಪದವಿಭಾಗ-ಅರ್ಥ:ಮೊದಲೊಳ್ ತಿಣ್ಣಮದೆ ಒಪ್ಪಿ ತಪ್ಪಿದುದನು ಈಯೆಂ ದಟ್ಟಿದಂ ದಂಡನಟ್ಟದೆ (ಗಟ್ಟಿಯಾಗಿ ಒಪ್ಪಿದುದನ್ನು ಕೊಡದೆ ತಪ್ಪಿದವರಿಗೆ ಸೈನ್ಯವನ್ಟ್ಟು ಕಳುಹಿಸದೆ) ಸಾಮರ್ಥ್ಯದಿಂ ಅಟ್ಟಿದ ಓಲೆಗೆ ಮಹಾಪ್ರತ್ಯಂತ ಭೂಪಾಳರು ಅಟ್ಟಿದ ಕಾಳಿಂಗ ಗಜೇಂದ್ರ ದಾನಜಲಧಾರಾ ಸಾರದಿಂ (ಸಾಮಂತರಾಜರು ಕಳುಹಿಸಿದ ಕಳಿಂಗ) ನೋಡ ಕುಂದಿದುದಿಲ್ಗ ಒಳ್ಗೆಸಱು ಸುಯೋಧನ ನೃಪದ್ವಾರ ಉಪಕಂಠಗಳೊಳ್(ಆನೆಗಳ ಮದೋದಕದ ಧಾರಾಪ್ರವಾಹದಿಂದ ಉಂಟಾದ ಕೆಸರು ಆ ದುರ್ಯೋಧನ ರಾಜನ ಅರಮನೆಯ ಬಾಗಿಲುಗಳ ;ಸಮೀಪಪ್ರದೇಶದಲ್ಲಿ ಕಡಿಮೆಯೇ ಆಗಿಲ್ಲ.
ಪದ್ಯ-೪೧:ಅರ್ಥ: ಮೊದಲು ಗಟ್ಟಿಯಾಗಿ ಒಪ್ಪಿದುದನ್ನು ಕೊಡದೆ ತಪ್ಪಿದವರಿಗೆ ಸೈನ್ಯವನ್ಟ್ಟು ಕಳುಹಿಸದೆ, ಕೊಡು ಎಂದು ಸಾಮದ ಪತ್ರದ ಸಾಮರ್ಥ್ಯದಿಂದಲೇ ಹೇಳಿ ತರಿಸುವನು. ಹಾಗೆ ರಾಜ್ಯಾಕಾರದಿಂದ ಕಳುಹಿಸಿದ ಇವನ ಆಜ್ಞಾಪತ್ರಕ್ಕೆ ರಾಜ್ಯದ ಎಲ್ಲೆಡೆಗಳಲ್ಲಿದ್ದ ಸಾಮಂತರಾಜರು ಕಳುಹಿಸಿದ ಕಳಿಂಗ ದೇಶದ ಉತ್ತಮವಾದ ಆನೆಗಳ ಮದೋದಕದ ಧಾರಾಪ್ರವಾಹದಿಂದ ಉಂಟಾದ ಕೆಸರು ಆ ದುರ್ಯೋಧನ ರಾಜನ ಅರಮನೆಯ ಬಾಗಿಲುಗಳ ಸಮೀಪ ಪ್ರದೇಶದಲ್ಲಿ ಕಡಿಮೆಯೇ ಆಗಿಲ್ಲ.
ಕಂ|| ಕುಸಿದಂ ರಿಪುವಿಜಯದೆ ನಿ
ದ್ರಿಸಿದಂ ಕಂಡೆಂದಿನಂದಮಂ ತಪ್ಪಿದನಾ|
ಳ್ವೆಸಕಗಿಯೆ ನುಡಿದನೆಂಬೀ
ಪಿಸುಣನಣಂ ಕೇಳ್ದೆನಿಲ್ಲ ಬೀಡಿನೊಳವನಾ|| ೪೨ ||
ಪದ್ಯ-೪೨:ಪದವಿಭಾಗ-ಅರ್ಥ: ಕುಸಿದಂ (ಧರ್ಮಜನು ಆನು ದುರ್ಯೋಧನನ ಯಶಸ್ಸು ಕೇಳಿ ಕುಸಿದನು) ರಿಪು ವಿಜಯದೆ ನಿದ್ರಿಸಿದಂ ಕಂಡು ಎಂದಿನ ಅಂದಮಂ (ಶತ್ರುವು ವಿಜಯದಿಂದ ಗೆಲುವಿನಿಂದ ನಿದ್ರಿಸಿದುದನ್ನು ಕಂಡ,) ತಪ್ಪಿದನು ಆಳ್ವೆಸಕಗಿಯೆ ನುಡಿದನೆಂಬ ಈ ಪಿಸುಣನ ಅಣಂ ಕೇಳ್ದೆನಿಲ್ಲ ಬೀಡಿನೊಳು ಆವನಾ (ಕೆಟ್ಟಮಾತನಾಡಿದ ಎಂಬ ಈ ಚಾಡಿ ಮಾತುಗಳನ್ನೂ ಅವನ ಬೀಡಿನಲ್ಲಿ ಸ್ವಲ್ಪವೂ ಕೇಳಿಲ್ಲ)
ಪದ್ಯ-೪೨:ಅರ್ಥ:ಧರ್ಮಜನು, ತಾನು ದುರ್ಯೋಧನನ ಯಶಸ್ಸು ಕೇಳಿ ಕುಸಿದನು -ಕುಗ್ಗಿದನು; ಶತ್ರುವು ವಿಜಯದಿಂದ ಗೆಲುವಿನಿಂದ ನಿದ್ರಿಸಿದುದನ್ನು ಕಂಡ, ಹಿಂದಿನಿಂದ ಇದ್ದ ರೀತಿಯನ್ನು ತಪ್ಪಿದ, ಸೇವೆಮಾಡುವ ವಿಷಯದಲ್ಲಿ ಕೆಟ್ಟಮಾತನಾಡಿದ ಎಂಬ ಈ ಚಾಡಿ ಮಾತುಗಳನ್ನೂ ಅವನ ಬೀಡಿನಲ್ಲಿ ಸ್ವಲ್ಪವೂ ಕೇಳಿಲ್ಲ.
ಕಂ||ನೆಗೞ್ದರಿಗನ ಸಾಹಸಮೊ
ರ್ಮೆಗೊರ್ಮೆ ಮೆ ಕೆಲದವರ ಮಾತಿನೊಳ್ ತನ್ನ ಮನಂ|
ಬುಗೆ ಮಂತ್ರಪದಕ್ಕುರಗಂ
ಸುಗಿವಂತೆವೊಲಗಿದು ಸುಗಿದು ತಲೆಗರೆದಿರ್ಪಂ|| ೪೩||
ಪದ್ಯ-೪೩:ಪದವಿಭಾಗ-ಅರ್ಥ:ನೆಗೞ್ದ ಅರಿಗನ (ಪ್ರಸಿದ್ಧನಾದ ಅರಿಕೇಸರಿಯ/ ಅರ್ಜುನನ) ಸಾಹಸಂ ಒರ್ಮೆಗೊರ್ಮೆ (ಒಮ್ಮೊಮ್ಮೆ) ಕೆಲದವರ ಮಾತಿನೊಳ್ (ಪಕ್ಕದವರ ಮಾತಿನಲ್ಲಿ) ತನ್ನ ಮನಂಬುಗೆ ಮಂತ್ರಪದಕ್ಕೆ ಉರಗಂ ಸುಗಿವಂತೆವೊಲ್ (ಮನಸ್ಸನ್ನು ಹೊಗಲು ಮಂತ್ರಮುಗ್ಧವಾದ ಹಾವು ಹೆದರುವ ಹಾಗೆ) ಉಗಿದು ಸುಗಿದು ತಲೆಗರೆದಿರ್ಪಂ(ಹೆದರಿ ಹೆದರಿ ತಲೆಯನ್ನು ಬಗ್ಗಿಸಿ ಮರೆಸಿಕೊಂಡಿರುತ್ತಾನೆ.)
ಪದ್ಯ-೪೩:ಅರ್ಥ:ಆದರೆ ಪ್ರಸಿದ್ಧನಾದ ಅರಿಕೇಸರಿಯ/ಅರ್ಜುನನ ಸಾಹಸವು ಒಂದೊಂದು ಸಲ ಪಕ್ಕದವರ ಮಾತಿನಲ್ಲಿ ತನ್ನ ಮನಸ್ಸನ್ನು ಹೊಗಲು ಮಂತ್ರಮುಗ್ಧವಾದ ಹಾವು ಹೆದರುವ ಹಾಗೆ ಹೆದರಿ ಹೆದರಿ ತಲೆಯನ್ನು ಬಗ್ಗಿಸಿ ಮರೆಸಿಕೊಂಡಿರುತ್ತಾನೆ.
ಕಂ||ಅಱಿವಿಂತು ರಾಜಕಾರ್ಯದ
ತೆಱನೆನಗಱಿವಂತು ಮೊಗ್ಗೆ ದೇವರ ಮುಂದಾ|
ನಱಿಯೆಂ ಪಿರಿದುಂ ಗೞಪಲ್
ಮಱಸೊಂದಿದನಲ್ಲನಹಿತನೆೞ್ಚತ್ತಿರ್ದಂ|| ೪೪ ||
ಪದ್ಯ-೪೪:ಪದವಿಭಾಗ-ಅರ್ಥ:ಅಱಿವು ಇಂತು ರಾಜಕಾರ್ಯದ ತೆಱಂ ಎನಗೆ ಅಱಿವಂತು ಮೊಗ್ಗೆ (ನನಗೆ ತಿಳಿಯುವುದು ಸಾಧ್ಯವೇ) ದೇವರ ಮುಂದೆ ಆನು ಅಱಿಯೆಂ ( ನನಗೆ ತಿಳಿಯದು) ಪಿರಿದುಂ ಗೞಪಲ್ (ಬಹಳ ಹೇಳಲು), ಮಱಸೊಂದಿದನಲ್ಲನು ಅಹಿತನು (ಶತ್ರು) ಎೞ್ಚತ್ತಿರ್ದಂ (ಶತ್ರು ದುರ್ಯೋಧನನು ಮೈಮರೆತಿಲ್ಲ ; ಎಚ್ಚರದಿಂದಿದ್ದಾನೆ)
ಪದ್ಯ-೪೪:ಅರ್ಥ:ನನಗೆ ತಿಳಿದ ಸಮಾಚಾರ ಹೀಗಿದೆ, ರಾಜಕಾರ್ಯದ ರೀತಿಯನ್ನು ತಿಳಿಯುವುದು ನನಗೆ ಸಾಧ್ಯವೇ? ಪ್ರಭುವಿನ ಮುಂದೆ ಹೆಚ್ಚಾಗಿ ಹರಟುವುದು ನನಗೆ ತಿಳಿಯದು; ಶತ್ರು ದುರ್ಯೋಧನನು ಮೈಮರೆತಿಲ್ಲ ; ಎಚ್ಚರದಿಂದಿದ್ದಾನೆ
ವ|| ಎಂದು ಬಿನ್ನಪಂಗೆಯ್ದು ಕಿರಾತದೂತಂ ಪೋಪುದುಮಾ ಮಾತೆಲ್ಲಮಂ ಕೇಳ್ದು ಯಜ್ಞಸೇನತನೂಜೆ ಯಮತನೂಜಂಗಿಂತೆಂದಳ್-
ವಚನ:ಪದವಿಭಾಗ-ಅರ್ಥ:ಎಂದು ಬಿನ್ನಪಂಗೆಯ್ದು ಕಿರಾತದೂತಂ ಪೋಪುದುಂ (ಎಂದು ಬಿನ್ನವಿಸಿ ಕಿರಾತದೂತನು ಹೋಗಲು) ಆ ಮಾತೆಲ್ಲಮಂ ಕೇಳ್ದು ಯಜ್ಞಸೇನತನೂಜೆ ಯಮತನೂಜಂಗೆ ಇಂತೆಂದಳ್- (ಆ ಮಾತೆಲ್ಲವನ್ನೂ ಕೇಳಿ ಅಗ್ನಿಯ ಮಗಳು- ದ್ರೌಪದಿಯು ಯಮನ ಮಗ- ಧರ್ಮರಾಜನಿಗೆ ಹೀಗೆಂದಳು)

ಧರ್ಮರಾಜನಿಗೆ ದ್ರೌಪದಿಯ ಪ್ರಶ್ನೆ[ಸಂಪಾದಿಸಿ]

ವಚನ:ಅರ್ಥ:ಎಂದು ಬಿನ್ನವಿಸಿ ಕಿರಾತದೂತನು ಹೋಗಲು ಆ ಮಾತೆಲ್ಲವನ್ನೂ ಕೇಳಿ ದ್ರೌಪದಿಯು ಧರ್ಮರಾಜನಿಗೆ ಹೀಗೆಂದಳು-
ಚಂ|| ನುಡಿವೊಡೆ ರಾಜಕಾರ್ಯ ನಯಮೆತ್ತಬಲಾಜನದೊಂದು ಬುದ್ಧಿಯೆ
ತ್ತುಡುಪತಿವಂಶ ನೋಡುವೊಡಿದೊಂದಘಟಂ ಬಗೆವಾಗಳೆಂತು ಕೇಳ್|
ನುಡಿಯದೆ ಕೆಮ್ಮಗಿರ್ದೊಡಮಿರಲ್ಕಮಣಮೀಯದೆ ನಿಮ್ಮೊಳೆನ್ನುಮಂ
ನುಡಿಯಿಸಿದಪ್ಪುವಾ ಕುರುಕುಳರ್ಕಳ್ ಗೆಯ್ದಪರಾಧಕೋಟಿಗಳ್|| ೪೫ ||
ಪದ್ಯ-೪೫:ಪದವಿಭಾಗ-ಅರ್ಥ:ನುಡಿವೊಡೆ ರಾಜಕಾರ್ಯ ನಯಮೆತ್ತ ಅಬಲಾ ಜನದೊಂದು ಬುದ್ಧಿಯೆತ್ತ (ಹೇಳುವುದಾದರೆ ರಾಜಕಾರ್ಯದ ಬುದ್ಧಿ ಎತ್ತ? ರೀತಿಯೆಲ್ಲಿ ಸ್ತ್ರೀಜನರ ಬುದ್ಧಿಯೆಲ್ಲಿ?) ಉಡುಪತಿವಂಶ ನೋಡುವೊಡೆ ಇದೊಂದು ಅಘಟಂ (ಈಗ ನಡೆದಿರುವ ಘಟನಗಳು ವಂಶಕ್ಕೆ ಹೊಂದಿಕೊಳ್ಳದಿರುವ ಅಸಂಗತವು) ಬಗೆವಾಗಳು ಎಂತು ಕೇಳ್ (ಯೋಚನೆಮಾಡಿದರೆ ಹೇಗೆಂಬುದನ್ನು ಕೇಳು) ನುಡಿಯದೆ ಕೆಮ್ಮಗಿರ್ದೊಡಂ ಇರಲ್ಕೆಂ ಅಣಂ ಈಯದೆ (ಮಾತನಾಡದೆ ಸುಮ್ಮನಿರಬೇಕೆಂದಿದ್ದರೂ ಇರುವುದಕ್ಕೆ ಅಣುವಷ್ಟೂ ಅವಕಾಶಕೊಡದೆ) ನಿಮ್ಮೊಳು ಎನ್ನುಮಂ ನುಡಿಯಿಸಿದಪ್ಪುವು ಆ (ನಿಮ್ಮಲ್ಲಿ ನನ್ನನ್ನು ಮಾತನಾಡುವಂತೆ ಮಾಡುತ್ತಿವೆ. ಯಾವುದೆಂದರೆ-) ಆ ಕುರುಕುಳರ್ಕಳ್ ಗೆಯ್ದ ಅಪರಾಧ ಕೋಟಿಗಳ್ (ಆ ಕುರಕುಲದವರು ಮಾಡಿದ ಅಪರಾಧಗಳು ಕೋಟಿಗಳು)
ಪದ್ಯ-೪೫:ಅರ್ಥ: ಹೇಳುವುದಾದರೆ ರಾಜಕಾರ್ಯದ ಬುದ್ಧಿ ಎತ್ತ? ರೀತಿಯೆಲ್ಲಿ ಸ್ತ್ರೀಜನರ ಬುದ್ಧಿಯೆಲ್ಲಿ? ಎಲೈ ಚಂದ್ರವಂಶನಾದ ಧರ್ಮರಾಜನೇ ವಿಚಾರಮಾಡುವುದಾದರೆ ಚಂದ್ರವಂಶ, ಅದರಲ್ಲಿ ಈಗ ನಡೆದಿರುವ ಘಟನಗಳು ವಂಶಕ್ಕೆ ಹೊಂದಿಕೊಳ್ಳದಿರುವ ಅಸಂಗತವು) ಯೋಚನೆಮಾಡಿದರೆ ಹೇಗೆಂಬುದನ್ನು ಕೇಳು; ಮಾತನಾಡದೆ ಸುಮ್ಮನಿರಬೇಕೆಂದಿದ್ದರೂ ಇರುವುದಕ್ಕೆ ಅಣುವಷ್ಟೂ ಅವಕಾಶಕೊಡದೆ ಆ ಕುರಕುಲದವರು ಮಾಡಿದ ಅಪರಾಧದ ಕೋಟಿಗಳು ನಿಮ್ಮಲ್ಲಿ ನನ್ನನ್ನು ಮಾತನಾಡುವಂತೆ ಮಾಡುತ್ತಿವೆ.
ಕಂ|| ಆವಡವಿಗಳೊಳ್ ಪಣ್ಪಲ
ಮಾವಗಮೊಳವಲ್ಲಿಗಱಸಿ ಪರಿಪರಿದು ಕರಂ|
ತಾವಡಿಗೊಳ್ವೀ ಭೀಮನ
ಬೇವಸಮಿದು ನಿನ್ನ ಮನಮನೊನಲಿಸಿತಿಲ್ಲಾ|| ೪೬||
ಪದ್ಯ-೪೬:ಪದವಿಭಾಗ-ಅರ್ಥ:ಆವ ಅಡವಿಗಳೊಳ್ ಪಣ್ಪಲಂ ಆವಗಂ ಒಳವು ಅಲ್ಲಿಗೆ ಅಱಸಿ ಪರಿಪರಿದು (ಯಾವ ಕಾಡುಗಳಲ್ಲಿ ಹಣ್ಣುಹಂಪಲುಗಳು ಯಾವಾಗಲೂ ಇರುವುವೊ, ಅಲ್ಲಿಗೆ ಹುಡುಕಿಕೊಂಡು ಓಡಿ ಓಡಿ) ಕರಂ ತಾವಡಿಗೊಳ್ವ (ಬಹಳ ಅಲೆಯುತ್ತಿರುವ)ಈ ಭೀಮನ ಬೇವಸಂ ಇದು ನಿನ್ನ ಮನಮನು ಒನಲಿಸಿತಿಲ್ಲಾ (ಭೀಮನ ಈ ಶ್ರಮವು ನಿನ್ನ ಮನಸ್ಸನ್ನು ಕೆರಳಿಸಿಲ್ಲವೇ?)
ಪದ್ಯ-೪೬:ಅರ್ಥ: ಯಾವ ಕಾಡುಗಳಲ್ಲಿ ಹಣ್ಣುಹಂಪಲುಗಳು ಯಾವಾಗಲೂ ಇರುವುವೊ, ಅಲ್ಲಿಗೆ ಹುಡುಕಿಕೊಂಡು ಓಡಿ ಓಡಿ ಬಹಳ ಅಲೆಯುತ್ತಿರುವ ಈ ಭೀಮನ ಶ್ರಮವು ನಿನ್ನ ಮನಸ್ಸನ್ನು ಕೆರಳಿಸಿಲ್ಲವೇ?
ಉ|| ಪೋಗಿ ಸುಪರ್ವಪರ್ವತದ ಕಾಂಚನರೇಣುಗಳುಂ ಪರಾಕ್ರಮೋ
ದ್ಯೋಗದಿನೆತ್ತಿ ತಂದು ನಿನಗಿತ್ತದಟಂ ಬಡಪಟ್ಟು ಬೆಟ್ಟದೊಳ್|
ಪೋಗಿ ತೊೞಲ್ದು ನಾರ್ಗಳನುಡಲ್ ತರುತಿರ್ದೆಲೆ ಮಾಡಲಾರ್ತನಿ
ಲ್ಲಾಗಳೆ ಕೋಪಮಂ ನಿನಗೆ ಸಂಚಿತಶೌರ್ಯಧನಂ ಧನಂಜಯಂ|| ೪೭||
ಪದ್ಯ-೪೭:ಪದವಿಭಾಗ-ಅರ್ಥ:ಪೋಗಿ ಸುಪರ್ವಪರ್ವತದ ಕಾಂಚನರೇಣುಗಳುಂ ಪರಾಕ್ರಮ ಉದ್ಯೋಗದಿಂ ಎತ್ತಿ ತಂದು ನಿನಗಿತ್ತ ಅದಟಂ (ಮೇರುಪರ್ವತಕ್ಕೆ ಹೋಗಿ ಪೌರುಷಕಾರ್ಯದಿಂದ ಚಿನ್ನದ ಕಣಗಳನ್ನು ನಿನಗೆ ತಂದುಕೊಟ್ಟ ಸಾಹಸಿ ಅರ್ಜುನನು) ಬಡಪಟ್ಟು ಬೆಟ್ಟದೊಳ್ ಪೋಗಿ ತೊೞಲ್ದು (ಕೃಶವಾಗಿ ಬೆಟ್ಟದಲ್ಲಿ ತೊಳಲಿ) ನಾರ್ಗಳನು ಉಡಲ್ ತರುತಿರ್ದು (ಉಡುವುದಕ್ಕೆ ನಾರುಗಳನ್ನು ತರುತ್ತಿರುವ) ಎಲೆ ಮಾಡಲು ಆರ್ತನಿಲ್ಲಾಗಳೆ ಕೋಪಮಂ ನಿನಗೆ ಸಂಚಿತ ಶೌರ್ಯಧನಂ ಧನಂಜಯಂ(ಶೌರ್ಯವನ್ನೇ ಕೂಡಿಟ್ಟ ಧನವಾಗಿ ಉಳ್ಳ ಪರಾಕ್ರಮಶಾಲಿಯಾದ ಧನಂಜಯನೂ (ಅರ್ಜುನನೂ) ಎಲೈ ನಿನಗೆ ಕೋಪವನ್ನುಂಟು ಮಾಡಲು ಶಕ್ತನಾಗಲಿಲ್ಲವೆ?)
ಪದ್ಯ-೪೭:ಅರ್ಥ: ಮೇರುಪರ್ವತಕ್ಕೆ ಹೋಗಿ ಪೌರುಷಕಾರ್ಯದಿಂದ ಚಿನ್ನದ ಕಣಗಳನ್ನು ನಿನಗೆ ತಂದುಕೊಟ್ಟ ಸಾಹಸಿ ಅರ್ಜುನನು, ಕೃಶವಾಗಿ ಬೆಟ್ಟದಲ್ಲಿ ತೊಳಲಿ ಉಡುವುದಕ್ಕೆ ನಾರುಗಳನ್ನು ತರುತ್ತಿರುವ ಶೌರ್ಯವನ್ನೇ ಕೂಡಿಟ್ಟ ಧನವಾಗಿ ಉಳ್ಳ ಪರಾಕ್ರಮಶಾಲಿಯಾದ ಧನಂಜಯನೂ (ಅರ್ಜುನನೂ) ಎಲೈ ನಿನಗೆ ಕೋಪವನ್ನುಂಟು ಮಾಡಲು ಶಕ್ತನಾಗಲಿಲ್ಲವೆ?
ಕಂ|| ಕಾಯ ಕ್ಲೇಶದಿನಡವಿಯ
ಕಾಯಂ ಪಣ್ಣುಮನುದಿರ್ಪಿ ತಿಂದಗಲದೆ ನಿಂ|
ದೀ ಯಮಳರಾವ ತೆಱದಿಂ
ನೋಯಿಸರಯ್ ನಿನ್ನ ನನ್ನಿಕಾಱನ ಮನಮಂ|| ೪೮ ||
ಪದ್ಯ-೪೮:ಪದವಿಭಾಗ-ಅರ್ಥ:ಕಾಯ ಕ್ಲೇಶದಿಂ ಅಡವಿಯ ಕಾಯಂ ಪಣ್ಣುಮನು ಉದಿರ್ಪಿ ತಿಂದು ಅಗಲದೆ ನಿಂದ(ಅಲುಗಾಡದೆ, ನಿನ್ನ ಜೊತ್ಎ ಬಿಡದೆ ನಿಂತ) ಈ ಯಮಳರು (ಅವಳಿ ಸೋದರರು -ನಕುಲ ಸಹದೇವರು), ಆವ ತೆಱದಿಂ ನೋಯಿಸರಯ್ ನಿನ್ನ ನನ್ನಿಕಾಱನ (ಸತ್ಯವಂತನಾದ ನಿನ್ನ ಮನಸ್ಸನ್ನು ನೋಯಿಸದೆ ಇರುವರು?) ಮನಮಂ
ಪದ್ಯ-೪೮:ಅರ್ಥ: ದೇಹಶ್ರಮದಿಂದ ಕಾಡಿನ ಕಾಯನ್ನೂ ಹಣ್ಣನ್ನೂ ಉದುರಿಸಿ ತಿಂದು ನಿಮ್ಮನ್ನು ಅಗಲದೆ ನಿಂತ ಈ ಯಮಳರಾದ ನಕುಲ ಸಹದೇವರು ಸತ್ಯವಂತನಾದ ನಿನ್ನ ಮನಸ್ಸನ್ನು ನೋಯಿಸದೆ ಇರುವರು?
ಕಂ||ಆ ದುಶ್ಶಾಸನನಿಂದೆನ
ಗಾದ ಪರಾಭವಮನೇನುಮಂ ಬಗೆಯದೊಡಿಂ|
ತಾದರಮೆ ತೊವಲ್ನಾರುಮ
ನಾದರದೇಂ ನಿನ್ನ ಮನಕೆ ಚಿಂತೆಯುಮಿಲ್ಲಾ|| ೪೯ ||
ಪದ್ಯ-೪೯:ಪದವಿಭಾಗ-ಅರ್ಥ:ಆ ದುಶ್ಶಾಸನನಿಂದ ಎನಗಾದ ಪರಾಭವಮನು ಏನುಮಂ ಬಗೆಯದೊಡೆ (ಸ್ವಲ್ಪವೂ ಲೆಕ್ಕಿಸದಿರುವ) ಇಂತು ಆದರಮೆ ತೊವಲ್ನಾರುಂ, ಅನಾದರ ಅದೇಂ (ಈ ತೊಗಲುನಾರುಗಳು ಆದರಕ್ಕೆ ಪಾತ್ರವಾದುವೇ? ಈ ಅನಾಸಕ್ತಿಯೇತಕ್ಕೆ?) ನಿನ್ನ ಮನಕೆ ಚಿಂತೆಯುಂ ಇಲ್ಲಾ (ನಿನ್ನ ಮನಸ್ಸಿಗೆ ಚಿಂತೆಯೇ ಇಲ್ಲವೇ?)
ಪದ್ಯ-೪೯:ಅರ್ಥ: ಆ ದುಶ್ಶಾಸನನಿಂದ ನನಗುಂಟಾದ ಅವಮಾನವನ್ನು ಸ್ವಲ್ಪವೂ ಲೆಕ್ಕಿಸದಿರುವ ನಿನಗೆ ಈ ತೊಗಲುನಾರುಗಳು ಆದರಕ್ಕೆ ಪಾತ್ರವಾದುವೇ? ಈ ಅನಾಸಕ್ತಿಯೇತಕ್ಕೆ? ನಿನ್ನ ಮನಸ್ಸಿಗೆ ಚಿಂತೆಯೇ ಇಲ್ಲವೇ?
ಕಂ||ಎಮ್ಮಯ್ವರ ಬೇವಸಮಂ
ನೀಂ ಮನದೊಳ್ ನೆನೆಯೆಯಪ್ಪೊಡಂ ನಿನ್ನಿರವಂ|
ನೀಂ ಮರುಳೆ ಬಗೆಯದಂತುಂ
ಘುಮ್ಮೆಂಬಡವಿಯೊಳಡಂಗಿ ಚಿಂತಿಸುತಿರ್ಪಾ|| ೫೦
ಪದ್ಯ-೫೦:ಪದವಿಭಾಗ-ಅರ್ಥ:ಎಮ್ಮ ಐಯ್ವರ ಬೇವಸಮಂ (ನಮ್ಮ ಐದು ಜನರ ದುಮ್ಮಾನ, ಕಷ್ಟವನ್ನೂ) ನೀಂ ಮನದೊಳ್ ನೆನೆಯೆಯಪ್ಪೊಡಂ (ನೆನೆಯದಿದ್ದರೂ)ನಿನ್ನಿರವಂ ನೀಂ ಮರುಳೆ ಬಗೆಯದೆ ಅಂತುಂ ಘುಮ್ಮೆಂಬ ಅಡವಿಯೊಳು ಅಡಂಗಿ (ನಿನ್ನ ಸ್ಥಿತಿಯನ್ನು ಯೋಚಿಸಿ ನೋಡು ಈ ಘುಮ್ಮೆನ್ನುವ ಕಾಡಿನಲ್ಲಿ ಅಡಗಿಕೊಂಡು) ಚಿಂತಿಸುತಿರ್ಪಾ (ಚಿಂತಿಸುತ್ತಾ ಇರಬಹುದೇ?)
ಪದ್ಯ-೫೦:ಅರ್ಥ: ನಮ್ಮ ಐದು ಜನರ ದುಮ್ಮಾನ, ಕಷ್ಟವನ್ನೂ ನೀನು ಮನಸ್ಸಿನಲ್ಲಿ ನೆನೆಯದಿದ್ದರೂ ಎಲೈ ಹುಚ್ಚೀ ನಿನ್ನ ಸ್ಥಿತಿಯನ್ನು ಯೋಚಿಸಿ ನೋಡು ಈ ಘುಮ್ಮೆನ್ನುವ ಕಾಡಿನಲ್ಲಿ ಅಡಗಿಕೊಂಡು ಚಿಂತಿಸುತ್ತಾ ಇರಬಹುದೇ?
ಕಂ||ಶಮಮನೆ ಕೆಯ್ಕೊಳ್ವೊಡೆ ಬಿ
ಲ್ಲುಮಂಬುಮಂ ಬಿಸುಟು ತಪಕೆ ನೀಂ ಬಗೆವೊಡೆ ವಿ||
ಕ್ರಮಮಂ ಪಗೆಯಂ ಕಿಡಿಸುವ
ಶಮದಿಂ ಮುನಿಗಾಯ್ತು ಸಿದ್ಧಿ ಭೂಪತಿಗಾಯ್ತೆ|| ೫೧ ||
ಪದ್ಯ-೫೧:ಪದವಿಭಾಗ-ಅರ್ಥ:ಶಮಮನೆ ಕೆಯ್ಕೊಳ್ವೊಡೆ (ನೀನು ಶಾಂತಿಯನ್ನೇ ಅನುಸರಿಸುವುದಾದರೆ) ಬಿಲ್ಲುಂ ಅಂಬುಮಂ ಬಿಸುಟು, ತಪಕೆ ನೀಂ ಬಗೆವೊಡೆ (ತಪಸ್ಸನ್ನೇ ನೀನು ಇಷ್ಟಪಡುವುದಾದರೆ,) ವಿಕ್ರಮಮಂ ಪಗೆಯಂ ಕಿಡಿಸುವ ಶಮದಿಂ ಮುನಿಗಾಯ್ತು ಸಿದ್ಧಿ, (ವಿಕ್ರಮವನ್ನೂ ದ್ವೇಷವನ್ನೂ ಹೋಗಲಾಡಿಸುವ ಶಾಂತಿಯಿಂದ ಮುನಿಗೆ ಸಿದ್ಧಿಯಗಬಹುದು,) ಭೂಪತಿಗಾಯ್ತೆ (ಕ್ಷತ್ರಿಯನಾದ ರಾಜನಿಗೆ ಆಗುತ್ತದೆಯೇ? ಇಲ್ಲ.)
ಪದ್ಯ-೫೧:ಅರ್ಥ: ನೀನು ಶಾಂತಿಯನ್ನೇ ಅನುಸರಿಸುವುದಾದರೆ ಬಿಲ್ಲು ಬಾಣಗಳನ್ನೂ ಬಿಸಾಡಿ ತಪಸ್ಸನ್ನೇ ನೀನು ಇಷ್ಟಪಡುವುದಾದರೆ, ವಿಕ್ರಮವನ್ನೂ ದ್ವೇಷವನ್ನೂ ಹೋಗಲಾಡಿಸುವ ಶಾಂತಿಯಿಂದ ಮುನಿಗೆ ಸಿದ್ಧಿಯಗಬಹುದು, ವಿನಾ ಕ್ಷತ್ರಿಯನಾದ ರಾಜನಿಗೆ ಆಗುತ್ತದೆಯೇ? ಇಲ್ಲ.
ಕಂ||ತಪ್ಪುಮನೆ ನುಡಿಯೆನೆಂಬುದಿ
ದೊಪ್ಪದು ನಿನಗಹಿತರೆಯ್ದೆ ತಪ್ಪಿರ್ದರವರ್|
ತಪ್ಪಿದ ಬೞಕ್ಕೆ ತಪ್ಪಿದ
ತಪ್ಪೇಂ ಗಳ ನನ್ನಿಗೊಪ್ಪಮಲ್ಲದ ತಪ್ಪೇ|| ೫೨
ಪದ್ಯ-೫೨:ಪದವಿಭಾಗ-ಅರ್ಥ:ತಪ್ಪುಮನೆ ನುಡಿಯೆನೆಂಬುದಿದು ಒಪ್ಪದು (ತಪ್ಪಾದುದನ್ನೇ ನಾನು ಮಾತನಾಡುವುದಿಲ್ಲವೆಂಬ ಮಾತು ಒಪ್ಪುವ ವಿಚಾರವಲ್ಲ) ನಿನಗೆ ಅಹಿತರು ಎಯ್ದೆ (ಶತ್ರುಗಳಾದವರು ತಪ್ಪು ಮಾಡಿದ್ದರೆ) ತಪ್ಪಿರ್ದರ್ ಅವರ್ (ಅವರು ತಪ್ಪುಮಾಡಿದ್ದಾರೆ) ತಪ್ಪಿದ ಬೞಕ್ಕೆ ತಪ್ಪಿದತಪ್ಪು (ವರು ತಪ್ಪು ಮಾಡಿದ ಬಳಿಕ ನೀನು ತಪ್ಪುಮಾಡಿದರೆ)ಎಂಗಳ ನನ್ನಿಗೆ ಒಪ್ಪಮಲ್ಲದ ತಪ್ಪೇ (ಆ ತಪ್ಪು ನಿನ್ನ ಸತ್ಯಕ್ಕೆ ವಿರೋದವಾದ ತಪ್ಪಾಗುತ್ತದೆಯೇ? )
ಪದ್ಯ-೫೨:ಅರ್ಥ:ತಪ್ಪಾದುದನ್ನೇ ನಾನು ಮಾತನಾಡುವುದಿಲ್ಲವೆಂಬ ಮಾತು ಒಪ್ಪುವ ವಿಚಾರವಲ್ಲ ; ಶತ್ರುಗಳಾದವರು ತಪ್ಪು ಮಾಡಿದ್ದರೆ. ಅವರು ತಪ್ಪುಮಾಡಿದ್ದಾರೆ; ಅವರು ತಪ್ಪು ಮಾಡಿದ ಬಳಿಕ ನೀನು ತಪ್ಪುಮಾಡಿದರೆ ಆ ತಪ್ಪು ನಿನ್ನ ಸತ್ಯಕ್ಕೆ ವಿರೋದವಾದ ತಪ್ಪಾಗುತ್ತದೆಯೇ?

ದ್ರೌಪಡಿಯ ಮಾತಿಗೆ ಭೀಮನ ಸಹಮತ[ಸಂಪಾದಿಸಿ]

ವ|| ಎಂದು ಪಾಂಚಾಳರಾಜತನೂಜೆಯ ಮಾತಿಂಗೆ ಬೆಂಬಲಂಬಾಯ್ದಂತೆ ಭೀಮಸೇನ ನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಪಾಂಚಾಳರಾಜತನೂಜೆಯ (ದ್ರೌಪದಿಯ) ಮಾತಿಂಗೆ ಬೆಂಬಲಂಬಾಯ್ದಂತೆ (ಬೆಂಬಲವಾಗುವ ಹಾಗೆ) ಭೀಮಸೇನನು ಇಂತೆಂದಂ-
ವಚನ:ಅರ್ಥ:ಎಂಬುದಾಗಿ ಹೇಳಿದ ದ್ರೌಪದಿಯ ಮಾತಿಗೆ ಬೆಂಬಲವಾಗುವ ಹಾಗೆ ಭೀಮಸೇನನು ಹೀಗೆಂದನು-
ಕಂ|| ನುಡಿಯದೆ ಪೆಱತಂ ದ್ರೌಪದಿ
ನುಡಿದಳ್ ತಕ್ಕುದನೆ ಕೇಳಿಮಿಂ ಕೇಳದಿರಿಂ|
ನುಡಿಯಲೆಡೆಯಿಲ್ಲ ನಿಮ್ಮಂ
ನುಡಿಯಿಸಿದಪುದೆನ್ನ ಮನದ ಮುನಿಸವನಿಪತೀ|| ೫೩||
ಪದ್ಯ-೫೩:ಪದವಿಭಾಗ-ಅರ್ಥ:ನುಡಿಯದೆ ಪೆಱತಂ (ಬೇಡವಾದದ್ದನ್ನು ಹೇಳದೆ) ದ್ರೌಪದಿ ನುಡಿದಳ್ ತಕ್ಕುದನೆ, ಕೇಳಿಮಿಂ ಕೇಳದಿರಿಂ (ನೀವು ಕೇಳಿರಿ, ಕೇಳದೆಬಿಡಿ) ನುಡಿಯಲು ಎಡೆಯಿಲ್ಲ. ನಿಮ್ಮಂ ನುಡಿಯಿಸಿದಪುದು ಎನ್ನ ಮನದ ಮುನಿಸ ಅವನಿಪತೀ.
ಪದ್ಯ-೫೩:ಅರ್ಥ: ದ್ರೌಪದಿಯು ಬೇಡವಾದದ್ದನ್ನು ಹೇಳದೆ ಯೋಗ್ಯವಾದುದನ್ನೇ ಹೇಳಿದಳು. ನೀವು ಕೇಳಿರಿ, ಕೇಲದೆಬಿಡಿ; ಇನ್ನು ಮಾತನಾಡಲು ಅವಕಾಶವೇ ಇಲ್ಲ; ರಾಜನೇ, ನನ್ನ ಮನಸ್ಸಿನ ಕೋಪ ನನ್ನನ್ನೂ ನಿಮ್ಮನ್ನು ಕುರಿತು ಮಾತನಾಡುವ ಹಾಗೆ ಮಾಡುತ್ತದೆ
ಕಂ||ನಾಲ್ಕುಂ ನೃಪವಿದ್ಯೆಯನಾ
ಡಲ್ ಕಲ್ತುಂ ನೆರೆಯೆ ಕಲ್ತೆಯಿಲ್ಲಾಗದೆ ಸೋ|
ಲಲ್ಕೆ ನೃಪ ದೊರೆಯೆ ನೆಲನಂ
ವಲ್ಕಲವಸನಕ್ಕೆ ಮೆಯ್ಯನಾಂಪುದು ಪೆಂಪೇ|| ೫೪
ಪದ್ಯ-೫೪:ಪದವಿಭಾಗ-ಅರ್ಥ:ನಾಲ್ಕುಂ ನೃಪವಿದ್ಯೆಯನು ಆಡಲ್ ಕಲ್ತುಂ (ನಾಲ್ಕು ರಾಜನೀತಿಗಳನ್ನು ಅನುಸರಿಸಲು ಕಲಿತೂ) ನೆರೆಯೆ ಕಲ್ತೆಯಿಲ್ಲಾಗದೆ (ಪೂರ್ಣ ಕಲಿತವನಾಗಲಿಲ್ಲವಲ್ಲಾ) ಸೋಲಲ್ಕೆ ನೃಪ ದೊರೆಯೆ ನೆಲನಂ(ರಾಜ್ಯವನ್ನು ಸೋಲುವುದು ಉಚಿತವೇ?) ವಲ್ಕಲ ವಸನಕ್ಕೆ ಮೆಯ್ಯನು ಆಂಪುದು ಪೆಂಪೇ
ಪದ್ಯ-೫೪:ಅರ್ಥ:ರಾಜನಿಗೆ ಯೋಗ್ಯವಾದ ಸಾಮ, ದಾನ, ಭೇದ, ದಂಡಗಳೆಂಬ ನಾಲ್ಕು ರಾಜನೀತಿಗಳನ್ನು ತಿಳಿದಿದ್ದರೂ ನೀನು ಪೂರ್ಣ ಕಲಿತವನಾಗಲಿಲ್ಲವಲ್ಲಾ; ರಾಜ್ಯವನ್ನು ಸೋಲುವುದು ಉಚಿತವೇ? ದೇಹಕ್ಕೆ ನಾರುಮಡಿಯನ್ನು ಧರಿಸಿರುವುದು ಹಿರಿಮೆಯೇ?
ಉ|| ನನ್ನಿಗೆ ದಾಯಿಗಂಗೆಳೆಯನೊಪ್ಪಿಸಿದೆಂ ಗಡಿಮೆಂಬ ಮಾತುಗಳ್
ನಿನ್ನವು ಕೂರದರ್ ನೆಲನನೊಟ್ಟಜೆಯಿಂ ಕೊಳೆ ಕೊಟ್ಟು ಮುಟ್ಟುಗೆ|
ಟ್ಟಿನ್ನುಮರಣ್ಯದೊಳ್ ನಮೆದಪಂ ಯಮನಂದನನೆಂಬ ಬನ್ನಮುಂ
ಮುನ್ನಮೆ ಸೋಂಕಿ ಕಣ್ಮಲೆವ ಮಾತುಗಳೆಲ್ಲರ ಪೇೞ್ವ ಮಾತುಗಳ್|| ೫೫||
ಪದ್ಯ-೫೫:ಪದವಿಭಾಗ-ಅರ್ಥ:ನನ್ನಿಗೆ ದಾಯಿಗಂಗೆ ಎಳೆಯನು ಒಪ್ಪಿಸಿದೆಂ ಗಡಿಂ (ಸತ್ಯಪರಿಪಾಲನೆಗಾಗಿ ದಾಯಾದಿಗಳಿಗೆ ರಾಜ್ಯವನ್ನೂ ಒಪ್ಪಿಸಿದೆನು. ಗಡ! ಅಲ್ಲವೇ!) ಎಂಬ ಮಾತುಗಳ್ ನಿನ್ನವು, ಕೂರದರ್ ನೆಲನನು ಒಟ್ಟಜೆಯಿಂ ಕೊಳೆ (ಪ್ರೀತಿಸದ ವಿರೋಧಿಗಳು ರಾಜ್ಯವನ್ನು ಒಟ್ಟಾರೆ-ಹೇಗೋ ಕಿತ್ತುಕೊಳ್ಳಲು) ಕೊಟ್ಟು ಮುಟ್ಟುಗೆಟ್ಟು (ಕೊಟ್ಟು ಸಾಧನಗಳಿಲ್ಲದೆ) ಇನ್ನುಂ ಅರಣ್ಯದೊಳ್ ನಮೆದಪಂ (ಮರಮುಟ್ಟುಗಳಿಲ್ಲದೆ- ಸಾಧನಳಿಲ್ಲದೆ ಧರ್ಮರಾಯನು ಕಾಡಿನಲ್ಲಿ ನವೆಯುತ್ತಿದ್ದಾನೆ, ಯಮನಂದನನು), ಎಂಬ ಬನ್ನಮುಂ (ಅವಮಾನವು) ಮುನ್ನಮೆ ಸೋಂಕಿ (ಮೊದಲೇ ನಮಗೆ ಸೋಂಕಿದೆ) ಕಣ್ಮಲೆವ ಮಾತುಗಳು (ಕಣ್ ಮಲೆವ- ಕಣ್ಣು ಕೆರಳಿಸುವ ಮಾತುಗಳು), ಇದು ಎಲ್ಲರ ಪೇೞ್ವ ಮಾತುಗಳ್ (ಇದು ಎಲ್ಲರೂ ಹೇಳುವ ಮಾತುಗಳು)
ಪದ್ಯ-೫೫:ಅರ್ಥ:. ಸತ್ಯಪರಿಪಾಲನೆಗಾಗಿ ದಾಯಾದಿಗಳಿಗೆ ರಾಜ್ಯವನ್ನೂ ಒಪ್ಪಿಸಿದೆನು ಅಲ್ಲವೇ! ಎಂಬುದು ನೀವು ಹೇಳುವ ಮಾತುಗಳು; ಪ್ರೀತಿಸದ ವಿರೋಧಿಗಳು ರಾಜ್ಯವನ್ನು ಒಟ್ಟಾರೆ-ಹೇಗೋ ಕಿತ್ತುಕೊಳ್ಳಲು, ಸಾಧನಳಿಲ್ಲದೆ ನಿಸ್ಸಹಾಯಕನಾಗಿ ಧರ್ಮರಾಯನು ಕಾಡಿನಲ್ಲಿ ನವೆಯುತ್ತಿದ್ದಾನೆ ಎಂಬ ಕಣ್ಣನ್ನು ಕೆರಳಿಸುವ ಅವಮಾನಕರವಾದ ಎಲ್ಲರೂ ಹೇಳುವ ಮಾತುಗಳು, ನಮ್ಮನ್ನು ಹಿಂದೆಯೇ ತಲುಪಿವೆ. ಇದು ಎಲ್ಲರೂ ಹೇಳುವ ಮಾತುಗಳು.
ಕಂ|| ಸಲೆ ಸಂದಿರ್ಪತ್ತೊಂದುಂ
ತಲೆವರೆಗಂ ನಮಗೆ ಪರಿಭವಂ ಕೃಷ್ಣೆಯ ಮುಂ|
ದಲೆಯಂ ಪಿಡಿದೞೆವಲ್ಲಿಯೆ
ತಲೆವಿಡಿದರ್ ನಮ್ಮ ಬೀರಮಂ ಕೌರವರುಂ|| ೫೬ ||
ಪದ್ಯ-೫೬:ಪದವಿಭಾಗ-ಅರ್ಥ:ಸಲೆಸಂದ ಇರ್ಪತ್ತೊಂದುಂ ತಲೆವರೆಗಂ (ವಿಶೇಷವೆಂದರೆ ಪ್ರಸಿದ್ಧವಾದ ನಮ್ಮ ಇಪ್ಪತ್ತೊಂದು ತಲೆಮಾರಿನವರೆಗೂ) ನಮಗೆ ಪರಿಭವಂ (ನಮ್ಮ ಸೋಲು ಅಂಟುವುದು.) ಕೃಷ್ಣೆಯ ಮುಂದಲೆಯಂ ಪಿಡಿದು ಎೞೆವಲ್ಲಿಯೆ (ದ್ರೌಪದಿಯ ಮುಂದಲೆಯನ್ನು ಹಿಡಿದು ಎಳೆದಾಗಲೇ) ತಲೆವಿಡಿದರ್ ನಮ್ಮ ಬೀರಮಂ ಕೌರವರುಂ(ಕೌರವರು ನಮ್ಮ ಶೌರ್ಯವನ್ನು ಸೆರೆಹಿಡಿದರು.)
ಪದ್ಯ-೫೬:ಅರ್ಥ: ವಿಶೇಷವೆಂದರೆ ಪ್ರಸಿದ್ಧವಾದ ನಮ್ಮ ಇಪ್ಪತ್ತೊಂದು ತಲೆಮಾರಿನವರೆಗೂ ನಮಗೆ ಸೋಲಿನ ಅವಮಾನಅಂಟುವುದು. ದ್ರೌಪದಿಯ ಮುಂದಲೆಯನ್ನು ಹಿಡಿದೆಳೆದಾಗಲೇ ಕೌರವರು ನಮ್ಮ ಶೌರ್ಯವನ್ನು ಸೆರೆಹಿಡಿದರು.
ಚಂ|| ಮಲೆ ಮಲೆದುರ್ಕಿ ಸೊರ್ಕಿ ಸಭೆಯೊಳ್ ಕುಲಂಪಾಸುಲನೀ ಶಿರೀಷ ಕೋ
ಮಲೆಯ ವಿಲೋಲ ನೀಲ ಕಬರೀಭರಮಂ ತೆಗೆವಾಗಳಲ್ಲಿ ಕೆ|
ಯ್ಯಲೆ ಸದೆದಂತೆ ಪತ್ತಿ ಬೆರಲಚ್ಚುಗಳಚ್ಚಿಱದಂತೆ ಕೊಂಕುಗಳ್
ತಲೆ ನವಿರೊಂದಿ ಮೂದಲಿಸುವಂತೆವೊಲಿರ್ದುವು ನಮ್ಮ ವೀರಮಂ|| ೫೭ ||
ಪದ್ಯ-೫೭:ಪದವಿಭಾಗ-ಅರ್ಥ:ಮಲೆ ಮಲೆದು ಉರ್ಕಿ ಸೊರ್ಕಿ ಸಭೆಯೊಳ್ (ಉದ್ಧಟತನದಿಂದ ಮಲೆತು ಉಬ್ಬಿ ಸೊಕ್ಕಿ ಸಭೆಯಲ್ಲಿ) ಕುಲಂಪಾಸುಲನು ಈ ಶಿರೀಷ ಕೋಮಲೆಯ (ಈ ಕುಲಕಲಂಕಿತಕನಾದ ದುಶ್ಶಾಸನನು ಸಭೆಯಲ್ಲಿ ಬಾಗೆಯ ಹೂವಿನಂತೆ ಕೋಮಲೆಯ/ ಈ ದ್ರೌಪದಿಯ) ವಿಲೋಲ ನೀಲ ಕಬರೀಭರಮಂ ತೆಗೆವಾಗಳೆ (ಓಲಾಡುತ್ತಿರು ಕಪ್ಪು ಕೂದಲಿನ ರಾಶಿಯನ್ನು ಎಳೆದಾಗಲೆ,) ಅಲ್ಲಿ ಕೆಯ್ಯಲೆ ಸದೆದಂತೆ ಪತ್ತಿ ಬೆರಲಚ್ಚುಗಳು ಅಚ್ಚಿಱದಂತೆ (ಕೈಯಿಂದ ಹೊಡೆದ ಹಾಗೆ ಬೆರಳಿನ ಗುರುತುಗಳು ಅಂಟಿಕೊಂಡು ಬೆರಲಚ್ಚು ಮುದ್ರಿಸುವ ಹಾಗೆ) ಕೊಂಕುಗಳ್ ತಲೆ ನವಿರೊಂದಿ (ತಲೆಕೂದಲೊಡನೆ ಸೇರಿ) ಮೂದಲಿಸುವಂತೆವೊಲ್ ಇರ್ದುವು ನಮ್ಮ ವೀರಮಂ
ಪದ್ಯ-೫೭:ಅರ್ಥ: ಉದ್ಧಟತನದಿಂದ ಮಲೆತು ಉಬ್ಬಿ ಸೊಕ್ಕಿ ಸಭೆಯಲ್ಲಿ ಈ ಕುಲಕಲಂಕಿತಕನಾದ ದುಶ್ಶಾಸನನು ಸಭೆಯಲ್ಲಿ ಬಾಗೆಯ ಹೂವಿನಂತೆ ಕೋಮಲವೂ ಮೃದುವೂ ಚಂಚಲವೂ ಕರ್ರಗೂ ಇರುವ ಓಲಾಡುತ್ತಿರು ಕಪ್ಪು ಕೂದಲಿನ ರಾಶಿಯನ್ನು ಎಳೆದಾಗಲೆ, ಕೈಯಿಂದ ಹೊಡೆದ ಹಾಗೆ ಬಾಸುಂಡೆಯ ಬೆರಳಿನ ಗುರುತುಗಳು ಅಂಟಿಕೊಂಡು ಬೆರಳಚ್ಚು ಮುದ್ರಿಸುವ ಹಾಗೆ ದ್ರೌಪದಿಯ ಕೊಂಕಾದ ಮುಂಗುರುಳು ತಲೆಕೂದಲೊಡನೆ ಸೇರಿ ಈಗಲೂ ನಮ್ಮ ಶೌರ್ಯವನ್ನು ಮೂದಲಿಸುವಂತಿವೆ.
ಮ|| ಅಸೀತೇಂದೀವರಲೋಲಲೋಚನೆಯನಂದಂತಾ ಸಭಾಮಧ್ಯದೊಳ್
ಪಸುವಂ ಮೋದುವವೋಲೆ ಮೋದೆಯುಮದಂ ಕಂಡಂತೆ ಪಲ್ಗರ್ಚಿ ಸೈ|
ಸಿರಿದೆಂ ನಿನ್ನಯ ನನ್ನಿಗಿನ್ನೆವರಮಾ ದುಶ್ಶಾಸನೋರಸ್ಥಳೋ
ಷ್ಣಸೃತಾಸೃಗ್ಜಲಪಾನಮಂ ಬಯಸಿ ಬಾಯ್ ತೇರೈಸೆ ಸೈತಿರ್ಪೆನೇ|| ೫೮||
ಪದ್ಯ-೫೮:ಪದವಿಭಾಗ-ಅರ್ಥ:ಅಸೀತು (ಅಸಿತ -ನೀಲಿಬಣ್ಣದ) ಇಂದೀವರ ಲೋಲ ಲೋಚನೆಯನು (ನೀಲ ಕನ್ನೈದಿಲೆಯ ವಿಲಾಸವುಳ್ಳ ಕಣ್ಣುಳ್ಳ ದ್ರೌಪದಿಯನ್ನು) ಅಂದು ಅಂತು ಆ ಸಭಾಮಧ್ಯದೊಳ್ ಪಸುವಂ ಮೋದುವವೋಲೆ ಮೋದೆಯುಮದಂ (ಪಶುವನ್ನು ಹೊಡೆಯುವ ಹಾಗೆ ಹೊಡೆದುದನ್ನು) ಕಂಡು, ಅಂತೆ ಪಲ್ಗರ್ಚಿ ಸೈಸಿರಿದೆಂ ನಿನ್ನಯ ನನ್ನಿಗೆ (ಹಲ್ಲುಕಚ್ಚಿಕೊಂಡು ನಿನ್ನ ಸತ್ಯಕ್ಕಾಗಿ ಸಹಿಸಿದೆನು) ಇನ್ನೆವರಂ (ಇದುವರೆಗೂ) ಆ ದುಶ್ಶಾಸನ ಉರಸ್ಥಳ ಉಷ್ಣಸೃತ ಅಸೃಗ್ಜಲ ಪಾನಮಂ (ಆ ದುಶ್ಶಾಸನನ ಎದೆಯ ಬಿಸಿ ರಕ್ತವನ್ನು ಪಾನಮಾಡಲು) ಬಯಸಿ ಬಾಯ್ ತೇರೈಸೆ (ಬಾಯಿ ಬಯಸಿ ಆತುರ ಪಡುತ್ತಿರಲು) ಸೈತಿರ್ಪೆನೇ (ಸುಮ್ಮನಿರುತ್ತೇನೆಯೇ?)
ಪದ್ಯ-೫೮:ಅರ್ಥ:. ನೀಲ ಕನ್ನೈದಿಲೆಯ ವಿಲಾಸದ ಕಣ್ಣುಳ್ಳ ದ್ರೌಪದಿಯನ್ನು, ಆ ದಿನ ಆ ಸಭಾಮಧ್ಯದಲ್ಲಿ ಪಶುವನ್ನು ಹೊಡೆಯುವ ಹಾಗೆ ಹೊಡೆದುದನ್ನು ಕಂಡು ನಿನ್ನ ಸತ್ಯಕ್ಕಾಗಿ ಹಲ್ಲುಕಚ್ಚಿಕೊಂಡು ಸಹಿಸಿದೆನು. ಆ ದುಶ್ಶಾಸನನ ಎದೆಯ ಬಿಸಿರಕ್ತವನ್ನು ಪಾನಮಾಡಲು ನನ್ನ ಬಾಯಿ ಬಯಸಿ ಆತುರ ಪಡುತ್ತಿರಲು ನಾನು ಇನ್ನು ಸುಮ್ಮನಿರುತ್ತೇನೆಯೇ?
ವ|| ಎಂದು ಗದಾದಂಡಮಂ ಭುಜಾದಂಡದೊಳಳವಡಿಸಿಕೊಂಡು ಪಗೆವರಿರ್ದ ದೆಸೆಯಂ ನೋಡಿ ತಳಲರ್ ಬಗೆದ ಭೀಮಸೇನನಂ ಧರ್ಮಪುತ್ರಂ ಕೋಪತಾಪದಿಂ ಮಸಗಿದ ಮದಗಜಮನೆ ಮಾಣಿಸುವಂತೆಂತಾನುಂ ಮೃದುವಚನಂಗಳಿಂ ಮುಳಿಸನಾಱಸುತಿರ್ದನಿರ್ಪನ್ನೆಗಂ-
ವಚನ:ಪದವಿಭಾಗ-ಅರ್ಥ:ಎಂದು ಗದಾದಂಡಮಂ ಭುಜಾದಂಡದೊಳ್ ಅಳವಡಿಸಿಕೊಂಡು ಪಗೆವರು ಇರ್ದ ದೆಸೆಯಂ ನೋಡಿ ತಳಲರ್ ಬಗೆದ (ತೆರಳಲು ಯೋಚಿಸಿದ) ಭೀಮಸೇನನಂ ಧರ್ಮಪುತ್ರಂ ಕೋಪತಾಪದಿಂ ಮಸಗಿದ (ಕೆರಳಿದ) ಮದಗಜಮನೆ ಮಾಣಿಸುವಂತೆ (ತಡೆಯುವಂತೆ) ಎಂತಾನುಂ (ಹೇಗೋ)ಮೃದುವಚನಂಗಳಿಂ ಮುಳಿಸನಾಱಸುತಿರ್ದನಿರ್ಪನ್ನೆಗಂ-
ವಚನ:ಅರ್ಥ:ಎಂದು ತನ್ನ ಗದೆಯನ್ನು ಭುಜ ದಂಡದಲ್ಲಿ ಅಳವಡಿಸಿಕೊಂಡು ಶತ್ರುಗಳಿದ್ದ ಕಡೆಯನ್ನು ನೋಡಿ ತೆರಳಲು ಯೋಚಿಸಿದ ಭೀಮಸೇನನನ್ನು ಧರ್ಮರಾಜನು ಕೋಪಾಗ್ನಿಯಿಂದ ಕೆರಳಿದ ಮದಗಜವನ್ನು ತಡೆಯುವಂತೆ ಹೇಗೋ ಮೃದುವಾದ ಮಾತುಗಳಿಂದ ಸಮಾಧಾನಮಾಡಿದನು. ಅಷ್ಟರಲ್ಲಿ-

ವ್ಯಾಸ ಮಹರ್ಷಿಯ ಆಗಮನ[ಸಂಪಾದಿಸಿ]

ಚಂ|| ಕನಕ ಪಿಶಂಗ ತುಂಗ ಜಟಿಕಾವಳಯಂ ಕುಡುಮಿಂಚಿನೋಳಿಯಂ
ನೆನೆಯಿಸೆ ನೀಲ ನೀರದ ತನುಚ್ಛವಿ ಭಸ್ಮ ರಜೋವಿಲಿಪ್ತಮಂ|
ಜನ ಗಿರಿಯಂ ಶರಜ್ಜಳಧರಂ ಕವಿದಂತಿರೆ ಚೆಲ್ವನಾಳ್ದು ಭೋಂ
ಕನೆ ನಭದಿಂದಮಂದಿೞದನಲ್ಲಿಗೆ ವೃದ್ಧ ಪರಾಶರಾತ್ಮಜಂ|| ೫೯||
ಪದ್ಯ-೫೯:ಪದವಿಭಾಗ-ಅರ್ಥ: ಕನಕ ಪಿಶಂಗ (ಕಪ್ಪು ಕೆಂಪು ಮಿಶ್ರಬಣ್ಣದ) ತುಂಗ ಜಟಿಕಾವಳಯಂ (ಉದ್ದ ಜಟೆಯ) ಕುಡುಮಿಂಚಿನೋಳಿಯಂ ನೆನೆಯಿಸೆ (ಮಿಂಚಿನ ಸಾಲನ್ನು ನೆನೆಸುವಂತೆ) ನೀಲ ನೀರದ ತನುಚ್ಛವಿ (ಕಪ್ಪು ಮೋಡದ ದೇಹದ) ಭಸ್ಮ ರಜೋವಿಲಿಪ್ತಂ ಆಂಜನಗಿರಿಯಂ ಶರಜ್ಜಳಧರಂ ಕವಿದಂತಿರೆ (ಅಂಜನಾದ್ರಿಯನ್ನು ಶರತ್ಕಾಲದ ಮೋಡಗಳು ಕವಿದಂತಿರಲು) ಚೆಲ್ವನು ಆಳ್ದು (ಚೆಲುವನ್ನು ಹೊಂದಿ) ಭೋಂಕನೆ (ಇದ್ದಕ್ಕಿದ್ದ ಹಾಗೆ )ನಭದಿಂದಂ ಅಂದು ಇೞಿದನು ಅಲ್ಲಿಗೆ ವೃದ್ಧ ಪರಾಶರಾತ್ಮಜಂ (ಅಂದು ಆಕಾಶದಿಂದ ವೃದ್ಧ ವ್ಯಾಸನು ಅಲ್ಲಿಗೆ ಇಳಿದು ಬಂದನು )
ಪದ್ಯ-೫೯:ಅರ್ಥ: ಕಪ್ಪು ಕೆಂಪು ಮಿಶ್ರಬಣ್ಣದ (ಹೊಂಬಣ್ಣದ) ಉದ್ದವ ಜಟೆಯ ಸಮೂಹವೂ ಸುಳಿಮಿಂಚಿನ ಸಾಲನ್ನು ನೆನೆಸುವಂತೆ ಬಿಳಿ ವಿಭೂತಿ ಹಚ್ಚಿದ ಕೃಷ್ಣಮೇಘದಂತಿದ್ದ ಶರೀರಕಾಂತಿಯು ಅಂಜನಾದ್ರಿಯನ್ನು ಶರತ್ಕಾಲದ ಮೋಡಗಳು ಕವಿದಂತಿರವ ಸೌಂದರ್ಯದಿಂದ ಕೂಡಿದ ವೃದ್ಧನಾದ ವ್ಯಾಸಮಹರ್ಷಿಯು ಇದ್ದಕ್ಕಿದ್ದ ಹಾಗೆ ಅಂದು ಆಕಾಶದಿಂದ ಅಲ್ಲಿಗೆ ಇಳಿದು ಬಂದನು.
ವ|| ಅಂತು ನಭೋವಿಭಾಗದಿಂ ಧರಾವಿಭಾಗಕ್ಕಿೞಿತಂದ ಕೃಷ್ಣದ್ವೈಪಾಯನನಂ ಕಂಡಜಾತ ಶತ್ರು ತನ್ನೇಱಿದ ಸಟಿತ ಶಿಳಾತಳದ ಪಟ್ಟಕದಿಂದಿೞಿದು ನಿಜಾನುಜಸಹಿತಮಿದಿರ್ವಂದು ಧರಾತಳನಿಷ್ಠ ಲಲಾಟಪಟ್ಟಂ ಸಾಷ್ಟಾಂಗವೆಱಗಿ ಪೊಡವಟ್ಟು ತದೀಯಾಶೀರ್ವಾದಮನಾಂತು ತಚ್ಛಿಳಾತಳದೊಳ್ ಕುಳ್ಳಿರಿಸಿ ವನಕುಸುಮಂಗಳಿಂದರ್ಘ್ಯಮೆತ್ತಿ ಸರೋವರಜಲಂಗಳಂ ಪದ್ಮಪತ್ರ ಪುಟಂಗಳಿಂ ತಂದು ಪದಪದ್ಮಂಗಳಂ ಕರ್ಚಿ ತತ್ಪಾದ ಪವಿತ್ರೋದಕಂಗಳನನಿಬರು ಮುತ್ತಮಾಂಗದೊಳ್ ತಳಿದುಕೊಂಡಿರ್ದಾಗಳ್ ಸತ್ಯವತೀನಂದನಂ ತನ್ನ ಮಕ್ಕಳ ಸಾಯಸಂಗಳ್ಗೆ ಮನ್ಯುಮಿಕ್ಕು ಕಣ್ಣನೀರಂ ನೆಗಪೆ ಮಹಾಪ್ರಸಾದಮೆಂದು ಧರ್ಮನಂದನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ನಭೋವಿಭಾಗದಿಂ (ಆಕಾಶಪ್ರದೇಶದಿಂದ) ಧರಾವಿಭಾಗಕ್ಕಿೞಿತಂದ ಕೃಷ್ಣದ್ವೈಪಾಯನನಂ (ಭೂಪ್ರದೇಶಕ್ಕೆ ಇಳಿದು ಬಂದ ವ್ಯಾಸಮಹರ್ಷಿಯನ್ನು) ಕಂಡ ಅಜಾತ ಶತ್ರು (ಧರ್ಮರಾಯನು) ತನ್ನ ಏಱಿದ ಸಟಿತ ಶಿಳಾತಳದ ಪಟ್ಟಕದಿಂದಿೞಿದು (ತಾನು ಕುಳಿತಿದ್ದ ಸ್ಪಟಿಕ ಕಲ್ಲಿನತಲದ ಪೀಠದಿಂದ ಕೆಳಗಿಳಿದು) ನಿಜ ಅನುಜಸಹಿತಂ ಇದಿರ್ವಂದು (ತನ್ನ ತಮ್ಮಂದಿರೊಡನೆ ಇದಿರಾಗಿ ಬಂದು) ಧರಾತಳನಿಷ್ಠ ಲಲಾಟಪಟ್ಟಂ ಸಾಷ್ಟಾಂಗವೆಱಗಿ ಪೊಡವಟ್ಟು (ಭೂಮಿಯಲ್ಲಿಟ್ಟ ಹಣೆವುಳ್ಳವನಾಗಿ ಸಾಷ್ಟಾಂಗ ನಮಸ್ಕಾರಮಾಡಿ) ತದೀಯ ಆಶೀರ್ವಾದಮನು ಆಂತು (ಅವನ ಆಶೀರ್ವಾದಗಳನ್ನು ಪಡೆದು) ತತ್ ಶಿಳಾತಳದೊಳ್ ಕುಳ್ಳಿರಿಸಿ (ಶಿಲಾಪಟ್ಟದಲ್ಲಿಯೇ ಅವನನ್ನು ಕುಳ್ಳಿರಿಸಿ) ಅದೇ ವನಕುಸುಮಂಗಳಿಂದರ್ಘ್ಯಮೆತ್ತಿ (ಕಾಡುಹೂವುಗಳಿಂದ ಅರ್ಘ್ಯವನ್ನು ಕೊಟ್ಟು) ಸರೋವರಜಲಂಗಳಂ ಪದ್ಮಪತ್ರ ಪುಟಂಗಳಿಂ ತಂದು (ಕಮಲದೆಲೆಗಳಲ್ಲಿ ಸರೋವರದ ನೀರನ್ನು ತಂದು) ಪದಪದ್ಮಂಗಳಂ ಕರ್ಚಿ ತತ್ಪಾದ ಪವಿತ್ರೋದಕಂಗಳಂ ಅನಿಬರುಂ ಉಮುತ್ತಮಾಂಗದೊಳ್ (ತಲೆಯಲ್ಲಿ) ತಳಿದುಕೊಂಡಿರ್ದಾಗಳ್ (ಪಾದಕಮಲಗಳನ್ನು ತೊಳೆದು ಆ ಪವಿತ್ರವಾದ ಪಾದೋದಕವನ್ನು ಎಲ್ಲರೂ ತಲೆಯಲ್ಲಿ ಧರಿಸಿಕೊಂಡರು) ಸತ್ಯವತೀನಂದನಂ (ವ್ಯಾಸಮಹರ್ಷಿಯು) ತನ್ನ ಮಕ್ಕಳ ಸಾಯಸಂಗಳ್ಗೆ ಮನ್ಯುಮಿಕ್ಕು ಕಣ್ಣನೀರಂ ನೆಗಪೆ (ವ್ಯಾಸಮಹರ್ಷಿಯು ತನ್ನ ಮೊಮ್ಮಕ್ಕಳ ವಿಶೇಷವಾದ ಶ್ರಮಕಷ್ಟಕ್ಕಾಗಿ ದುಃಖ ಮೀರಿ ಕಣ್ಣ ನೀರನ್ನು ತುಂಬಿಕೊಳ್ಳಲು) ಮಹಾಪ್ರಸಾದಮೆಂದು ಧರ್ಮನಂದನನಿಂತೆಂದಂ-
ವಚನ:ಅರ್ಥ:ಹಾಗೆ ಆಕಾಶಪ್ರದೇಶದಿಂದ ಭೂಭಾಗಕ್ಕೆ ಇಳಿದು ಬಂದ ವ್ಯಾಸಮಹರ್ಷಿಯನ್ನು ನೋಡಿ ಧರ್ಮರಾಯನು ತಾನು ಕುಳಿತಿದ್ದ ಸ್ಪಟಿಕ ಕಲ್ಲಿನತಲದ ಪೀಠದಿಂದ ಕೆಳಗಿಳಿದು ತನ್ನ ತಮ್ಮಂದಿರೊಡನೆ ಇದಿರಾಗಿ ಬಂದು ಭೂಮಿಯಲ್ಲಿಟ್ಟ ಹಣೆವುಳ್ಳವನಾಗಿ ಸಾಷ್ಟಾಂಗ ನಮಸ್ಕಾರಮಾಡಿ, ಅವನ ಆಶೀರ್ವಾದಗಳನ್ನು ಪಡೆದು ಆ ಶಿಲಾಪಟ್ಟದಲ್ಲಿಯೇ ಅವನನ್ನು ಕುಳ್ಳಿರಿಸಿ ಕಾಡುಹೂವುಗಳಿಂದ ಅರ್ಘ್ಯವನ್ನು ಕೊಟ್ಟು ಕಮಲದೆಲೆಗಳಲ್ಲಿ ಸರೋವರದ ನೀರನ್ನು ತಂದು ಪಾದಕಮಲಗಳನ್ನು ತೊಳೆದು ಆ ಪವಿತ್ರವಾದ ಪಾದೋದಕವನ್ನು ಎಲ್ಲರೂ ತಲೆಯಲ್ಲಿ ಧರಿಸಿಕೊಂಡರು. ವ್ಯಾಸಮಹರ್ಷಿಯು ತನ್ನ ಮೊಮ್ಮಕ್ಕಳ ವಿಶೇಷವಾದ ಆಯಾಸ(ಶ್ರಮ)ಕ್ಕಾಗಿ ದುಃಖ ಮೀರಿ ಕಣ್ಣ ನೀರನ್ನು ತುಂಬಿಕೊಳ್ಳಲು. ಅವರು ಬಂದುದು ಮಹಾ ಅನುಗ್ರಹವೆಂದು ಧರ್ಮರಾಜನು ಅವರನ್ನು ಕುರಿತು ಹೀಗೆಂದನು-
ಉ|| ನೀಗಿದುದೀಗಳೆಮ್ಮ ವನವಾಸಪರಿಶ್ರಮಮೀಗಳಾಳ್ದೆವಾ
ಸಾಗರ ಮೇಖಳಾವೃತ ಧರಿತ್ರಿಯನೀಗಳಡಂಗಿತೆಮ್ಮ ಹೃ
ದ್ರೋಗಮನೇಕ ಮಂಗಳಪರಂಪರೆಗಳ್ ದೊರೆಕೊಂಡುವೀಗಳೇ
ನಾಗದೊ ಪೇೞು್ ಭವಚ್ಚರಣಪದ್ಮನಿರೀಕ್ಷಣದಿಂ ಮುನೀಶ್ವರಾ|| ೬೦ ||
ಪದ್ಯ-೬೦:ಪದವಿಭಾಗ-ಅರ್ಥ:ನೀಗಿದುದು ಈಗಳೆಮ್ಮ ವನವಾಸ ಪರಿಶ್ರಮಂ (ನಮ್ಮ ವನವಾಸದ ಆಯಾಸಗಳೆಲ್ಲವೂ ಮಾಯವಾದುವು) ಈಗಳು ಆಳ್ದೆವು ಆ ಸಾಗರ ಮೇಖಳಾವೃತ ಧರಿತ್ರಿಯನು (ಕಡಲೆಂಬವೆಂಬ ಒಡ್ಯಾಣದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು ನಾವು ಈಗ ಆಳಿದವರಾದೆವು) ಈಗಳು ಅಡಂಗಿತು ಎಮ್ಮ ಹೃದ್ರೋಗಂ (ನಮ್ಮ ಹೃದಯಬೇನೆಗಳು ಅಡಗಿದುವು) ಅನೇಕ ಮಂಗಳ ಪರಂಪರೆಗಳ್ ದೊರೆಕೊಂಡುವು ಈಗಳೇ ಏನಾಗದೊ ಪೇೞು ಭವಚ್ಚರಣಪದ್ಮನಿರೀಕ್ಷಣದಿಂ ಮುನೀಶ್ವರಾ
ಪದ್ಯ-೬೦:ಅರ್ಥ: ಎಲೈ ಮುನೀಶ್ವರನೇ ನಿಮ್ಮ ಪಾದಕಮಲದ ದರ್ಶನದಿಂದ ನಮ್ಮ ವನವಾಸದ ಆಯಾಸಗಳೆಲ್ಲವೂ ಮಾಯವಾದುವು. ಕಡಲೆಂಬವೆಂಬ ಒಡ್ಯಾಣದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು ನಾವು ಈಗ ಆಳಿದವರಾದೆವು. ನಮ್ಮ ಹೃದಯಬೇನೆಗಳು ಅಡಗಿದುವು. ನಮಗೆ ಅನೇಕ ಶುಭಪರಂಪರೆಗಳುಂಟಾದವು. ಇನ್ನೇನು ತಾನೆ ಆಗವುದಿಲ್ಲ ಹೇಳು? ನಿಮ್ಮ ದರ್ಶನದಿಂದ ಎಲ್ಲವೂ ದೊರಕಿದಂತಾಯಿತು.
ಕಂ|| ಆಪತ್ಪಯೋಧಿಯೊಳಗ
ತ್ಯಾಪತ್ತಿಂದುಳ್ಕಿಮುೞ್ಕಿ ನಮೆವೆಮಗೆ ಶರಣ್|
ಪಾಪಹರ ನೀಮೆ ಬಗೆದೆಮ
ಗಾಪತ್ಪ್ರತಿಕಾರಮಾವುದೀಗಳೆ ಬೆಸಸಿಂ|| ೬೧ ||
ಪದ್ಯ-೬೧:ಪದವಿಭಾಗ-ಅರ್ಥ:ಆಪತ್ ಪಯೋಧಿಯೊಳಗೆ (ಆಪತ್ತುಗಳ ಸಮುದ್ರದಲ್ಲಿ) ಅತಿ ಆಪತ್ತಿಂದ ಅಳ್ಕಿಮುೞ್ಕಿ (ಅತಿ ಅಪಾಯಗಳಿಂದ ಹೆದರಿ ಮುಳುಗಿ) ನಮೆವ ಎಮಗೆ ಶರಣ್ ಪಾಪಹರ ನೀಮೆ (ನವೆಯುತ್ತಿರುವ ನಮಗೆ ಪಾಪ ಹೋಗಲಾಡಿಸುವ ನೀವೇ) ಬಗೆದು ಎಮಗೆ ಆಪತ್ಪ್ರತಿಕಾರಂ - ಆಪತ್ ಪ್ರತೀಕಾರಂ ಆವುದೀಗಳೆ ಬೆಸಸಿಂ (ನೀವೇ ಯೋಚಿಸಿ ಈ ಆಪತ್ತಿಗೆ ಪರಿಹಾರವಾವುದೆಂಬುದನ್ನು ಈಗಲೆ ಹೇಳಿ)
ಪದ್ಯ-೬೧:ಅರ್ಥ:ಆಪತ್ತುಗಳ ಸಮುದ್ರದಲ್ಲಿ ಅತಿ ಅಪಾಯಗಳಿಂದ ಹೆದರಿ ಮುಳುಗಿ ನವೆಯುತ್ತಿರುವ ನಮಗೆ ಪಾಪ ಹೋಗಲಾಡಿಸುವ ನೀವೇ ಶರಣು(ಆಶ್ರಯ). ನೀವೇ ಯೋಚಿಸಿ ಈ ಆಪತ್ತಿಗೆ ಪರಿಹಾರವಾವುದೆಂಬುದನ್ನು ಈಗಲೆ ಹೇಳಿ.
ವ|| ಎಂಬುದುಮಾ ಮುನೀಂದ್ರನಾಮುಮಂತೆಂದೆ ಬಂದೆವೆಂದು-
ವಚನ:ಪದವಿಭಾಗ-ಅರ್ಥ:ಎಂಬುದುಂ ಆ ಮುನೀಂದ್ರನು ಆಮುಂ ಅಂತೆಂದೆ ಬಂದೆವೆಂದು-
ವಚನ:ಅರ್ಥ:ಎನ್ನಲು ಆ ಋಷಿಶ್ರೇಷ್ಠನು ನಾವೂ ಅದಕ್ಕಾಗಿಯೇ ಬಂದಿದ್ದೇವೆ ಎಂದು-
ಕಂ|| ಸುರರ್ಗಮೃತಮನುಂತೆ ಕಳಾಂ
ತರದಿಂದಿತ್ತಸಿಯನಾದ ಚಂದ್ರನವೋಲ್ ಭೂ|
ಭರಮಂ ನನ್ನಿಗೆ ದಾಯಿಗ
ರ್ಗಿರದಿತ್ತೆರಡರೊತ್ತೆ ನೀನೆ ಧನ್ಯನೆಯಲ್ತೇ|| ೬೨||
ಪದ್ಯ-೬೨:ಪದವಿಭಾಗ-ಅರ್ಥ:ಸುರರ್ಗೆ (ದೇವತೆಗಳಿಗೆ) ಅಮೃತಮನುಂ ಉಂತೆ (ಪ್ರತಿಫಲವಿಲ್ಲದೆ) ಕಳಾಂತರದಿಂದ ಇತ್ತು ಅಸಿಯನಾದ (ಕೊಟ್ಟು ಕೃಶವಾದ) ಚಂದ್ರನವೋಲ್ ಭೂಭರಮಂ ನನ್ನಿಗೆ ದಾಯಿಗರ್ಗೆ (ತ್ಯಕ್ಕಾಗಿ ದಾಯಾದ್ಯರಿಗೆ ಭೂಭಾರವನ್ನು) ಇರದೆ ಇತ್ತು ಎರಡರು ಒತ್ತೆ () ನೀನೆ ಧನ್ಯನೆಯಲ್ತೇ
ಪದ್ಯ-೬೨:ಅರ್ಥ: . ಪ್ರತಿಫಲವಿಲ್ಲದೆಸುಮ್ಮನೆ ದೇವತೆಗಳಿಗೆ ತನ್ನ ಕಲಾಸಮೂಹಗಳಿಂದ ಅಮೃತವನ್ನು ಕೊಟ್ಟು ಕೃಶವಾದ ಚಂದ್ರನ ಹಾಗೆ ಸತ್ಯಕ್ಕಾಗಿ ದಾಯಾದ್ಯರಿಗೆ ಭೂಭಾರವನ್ನು ಕೊಟ್ಟು ತಂದರೆಗಳು ಒತ್ತುತ್ತಿರಲು, ನೀನೇ ಧನ್ಯನಲ್ಲವೇ? ನೀನೇ ಧನ್ಯ.
ಕಂ||ನೀಂ ಬೇರೆಮಗೆ ಸುಯೋಧನ
ನೇಂ ಬೇರೆಯೆ ಕೂಸುತನದೊಳಾದೊಡಮಿನ್ನೇ|
ನೆಂಬುದೊ ಪಿರಿದೈವರೊಳಂ
ಪಂಬಲ್ ಗುಣಪಕ್ಷಪಾತಮಪ್ಪುದು ನಿಮ್ಮೊಳ್|| ೬೩||
ಪದ್ಯ-೬೩:ಪದವಿಭಾಗ-ಅರ್ಥ:ನೀಂ ಬೇರೆಮಗೆ ಸುಯೋಧನನೇಂ ಬೇರೆಯೆ (ಬೇರೆಯೇ?- ಬೇರೆಯಲ್ಲ; ನಮಗೆ ಬಾಲ್ಯದಿಂದಲೂ ನೀವೂ ಬೇರೆಯಿಲ್ಲ ಸುಯೋಧನನು ಬೇರೆಯಲ್ಲ ) ಕೂಸುತನದೊಳು ಆದೊಡಂ ಈನ್ನೇನೆಂಬುದೊ (ಆದರೂ ಇನ್ನೇನನ್ನು ಹೇಳುವುದೊ?) ಪಿರಿದು ಐವರೊಳ್ ಪಂಬಲ್ (ನಿಮೈವರ ಬಗೆಗೆ ನನ್ನು ಹಂಬಲ - ಹಿತದ ಅಪೇಕ್ಷೆ) ಗುಣಪಕ್ಷಪಾತಂ ಅಪ್ಪುದು ನಿಮ್ಮೊಳ್ ()
ಪದ್ಯ-೯೩:ಅರ್ಥ:ನಮಗೆ ಬಾಲ್ಯದಿಂದಲೂ ನೀವೂ ಬೇರೆಯಿಲ್ಲ ಸುಯೋಧನನು ಬೇರೆಯಲ್ಲ. ಆದರೂ ಇನ್ನೇನನ್ನು ಹೇಳುವುದೊ? ಈಗ ಹೇಳುವುದು ತಾನೆ ಏನಿದೆ. ನಿನಿಮೈವರ ಬಗೆಗೆ ನನ್ನು ಹಂಬಲ - ಹಿತದ ಅಪೇಕ್ಷೆ ಇದೆ. ಗುಣಪಕ್ಷಪಾತದಿಂದ ನನ್ನ ಮೆಚ್ಚಿಗೆ ನಿಮ್ಮಲ್ಲಿ ಹೆಚ್ಚಾಗಿದೆ.
ವ|| ಎಂದು ತನ್ನ ವರ್ತನಮುಂ ಮೋಹಮನುಂಟುಮಾಡೆ ಮತ್ತಮುಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ತನ್ನ ವರ್ತನಮುಂ ಮೋಹಮನುಂ ಉಂಟುಮಾಡೆ ಮತ್ತಂ ಇಂತೆಂದಂ-
ವಚನ:ಅರ್ಥ: ಎಂದು ಹೇಳಿ ತನ್ನ ನಡತೆಯನ್ನೂ ಮೋಹವನ್ನೂ ಸ್ಪಷ್ಟಪಡಿಸುವ ಹಾಗೆ ಪುನ ಹೀಗೆಂದನು
ಕಂ|| ಪನ್ನೆರಡು ವರುಷದವಯು
ಮಿನ್ನೆರೆಯಲ್ ಬಂದುದಹಿತನಿಳೆಯಂ ಕುಡನಾ|
ಸನ್ನಂ ಕಾಳೆಗಮಱಿಯಿರೆ
ಪನ್ನಗಕೇತನನ ಚಲದ ಕಲಿತನದಳವಂ|| ೬೪||
ಪದ್ಯ-೬೪:ಪದವಿಭಾಗ-ಅರ್ಥ:ಪನ್ನೆರಡು ವರುಷದ, ವಯುಂ ಇನ್ನು ನೆರೆಯಲ್ ಬಂದುದು (ಗಡುವು ಮುಗಿಯುತ್ತ ಬಂದಿದೆ) ಅಹಿತನು ಇಳೆಯಂ ಕುಡನು (ಶತ್ರುವಾದ ಕೌರವನು ರಾಜ್ಯವನ್ನು ಕೊಡುವುದಿಲ್ಲ) ಆಸನ್ನಂ ಕಾಳೆಗಂ (ಯುದ್ಧ ಹತ್ತಿರ ಬಂದಿದೆ) ಅಱಿಯಿರೆ ಪನ್ನಗಕೇತನನ ಚಲದ ಕಲಿತನದ ಅಳವಂ (ದುರ್ಯೋಧನನ ಹಟದ ಮತ್ತು ಪರಾಕ್ರಮದ ಪ್ರಮಾಣವು ನಿಮಗೆ ತಿಳಿದಿಲ್ಲವೇ? )
ಪದ್ಯ-೬೪:ಅರ್ಥ: ಇನ್ನೇನು ಹನ್ನೆರಡು ವರ್ಷದ ಅವಧಿಯು ಮುಗಿಯುತ್ತ ಬಂದಿದೆ. ಶತ್ರು ಕೌರವನು ರಾಜ್ಯವನ್ನು ಕೊಡುವುದಿಲ್ಲ. ಯುದ್ಧ ಹತ್ತಿರ ಬಂದಿದೆ. ದುರ್ಯೋಧನನ ಹಟದ ಮತ್ತು ಪರಾಕ್ರಮದ ಪ್ರಮಾಣವು ನಿಮಗೆ ತಿಳಿದಿಲ್ಲವೇ?
ಅನವದ್ಯಂ|| ಪರಶುರಾಮನನಂಜಿಸಿ ಬೀರಕ್ಕಾಗರಮಾದ ನದೀಜನೇ
ದೊರೆಯನೇದೊರೆಯಂಗಳ ಕುಂಭಪ್ರೋದ್ಭವನಾತನ ಪುತ್ರನೇ|
ದೊರೆಯನೇದೊರೆಯಂ ಕೃಪನಂತಾ ಪಾೞಯೊಳಂಕದ ಕರ್ಣನೇ
ದೊರೆಯನಿಂತಿವರೊರ್ಬರಿನೊರ್ಬರ್ ಗರ್ವಿತರಗ್ಗಳಮಲ್ಲರೇ|| ೬೫ ||
ಪದ್ಯ-೬೫:ಪದವಿಭಾಗ-ಅರ್ಥ: ಪರಶುರಾಮನನು ಅಂಜಿಸಿ ಬೀರಕ್ಕೆ ಆಗರಮಾದ ನದೀಜನು(ಭೀಷ್ಮ) ಏ ದೊರೆಯನೇ (ಪರಶುರಾಮನನ್ನು ಹೆದರಿಸಿ ಪರಾಕ್ರಮಕ್ಕೆ ಆಗರವಾದ ಭೀಷ್ಮನು ಸಾಮಾನ್ಯನೇ? ಅವನ ಸಮಾನರುಂಟೇ) ದೊರೆಯಂಗಳ- ಕುಂಭಪ್ರೋದ್ಭವನು,(ದ್ರೋಣನು ಸಾಮಾನ್ಯನೇ?) ಆತನ ಪುತ್ರನೇ ದೊರೆಯನೇ (ಅವನ ಮಗ ಅಶ್ವತ್ಥಾಮನೇನು ಸಾಮಾನ್ಯನೇ) ದೊರೆಯಂ ಕೃಪನಂತು ಆ ಪಾೞಯೊಳು ಅಂಕದ ಕರ್ಣನು ಏ ದೊರೆಯನೆ, ಇಂತು ಇವರೊರ್ಬರಿನೊರ್ಬರ್ ಗರ್ವಿತರ್ ಅಗ್ಗಳಮಲ್ಲರೇ (ಹೀಗೆ ಗರ್ವಿಷ್ಠರಾದ ಇವರಲ್ಲಿ ಒಬ್ಬರಿಗಿಂತೊಬ್ಬರು ಶ್ರೇಷ್ಠರು.)
ಪದ್ಯ-೬೫:ಅರ್ಥ: ಪರಶುರಾಮನನ್ನು ಹೆದರಿಸಿ ಪರಾಕ್ರಮಕ್ಕೆ ಆಗರವಾದ ಭೀಷ್ಮನು ಸಾಮಾನ್ಯನೇ? ಅವನ ಸಮಾನರುಂಟೇ? ಕುಂಭಸಂಭವನಾದ ದ್ರೋಣನು ಸಾಮಾನ್ಯನೇ? ಅವನ ಮಗ ಅಶ್ವತ್ಥಾಮನೇನು ಸಾಮಾನ್ಯನೇ, ಕೃಪನೇನು ಸಾಮಾನ್ಯನೇ? ಅದೇ ಕ್ರಮದಲ್ಲಿ ಶೂರನಾದ ಕರ್ಣನ ಸಮಾನನು ಯಾರು? ಹೀಗೆ ಗರ್ವಿಷ್ಠರಾದ ಇವರಲ್ಲಿ ಒಬ್ಬರಿಗಿಂತೊಬ್ಬರು ಶ್ರೇಷ್ಠರು.
ಕಂ|| ಪ್ರಳಯದುರಿ ಕಾಳಕೂಟದ
ಗುಳಿಗೆ ಪುರಾಂತಕ ಲಲಾಟನೇತ್ರಾನಳನೊಂ|
ದಳವಿಗಮಗ್ಗಳಮವರ್ಗಳ
ಮುಳಿಸುಗಳುಂ ಮುಳಿದು ತುಡುವ ದಿವ್ಯೇಷುಗಳುಂ|| ೬೬ ||
ಪದ್ಯ-೬೬:ಪದವಿಭಾಗ-ಅರ್ಥ:ಪ್ರಳಯದ ಉರಿ (ಬೆಂಕಿ) ಕಾಳಕೂಟದ ಗುಳಿಗೆ (ವಿಷಗುಳಿಗೆ) ಪುರಾಂತಕ ಲಲಾಟನೇತ್ರಾನಳನ (ಶಿವನ) ಒಂದಳವಿಗಂ ಅಗ್ಗಳಂ (ಇವುಗಳ ಪ್ರಮಾಣಕ್ಕಿಂತ ಹೆಚ್ಚಿನವು) ಅವರ್ಗಳ ಮುಳಿಸುಗಳುಂ ಮುಳಿದು ತುಡುವ ದಿವ್ಯ ಈಷುಗಳುಂ (ಅವರ ಕೋಪಗಳು, ಕೋಪದಿಂದ ಬಿಡುವ ದಿವ್ಯಾಸ್ತ್ರಗಳು)
ಪದ್ಯ-೬೬:ಅರ್ಥ: ಅವರ ಕೋಪಗಳು, ಕೋಪದಿಂದ ಬಿಡುವ ದಿವ್ಯಾಸ್ತ್ರಗಳು ಪ್ರಳಯಕಾಲದ ಬೆಂಕಿ, ಕಾಳಕೂಟವೆಂಬ ವಿಷಗುಳಿಗೆ, ಶಿವನ ಹಣೆಗಣ್ಣಿನ ಅಗ್ನಿ, ಇವುಗಳ ಪ್ರಮಾಣಕ್ಕಿಂತ ಹೆಚ್ಚಿನವು.
ವ|| ಅದು ಕಾರಣದಿಂದವರಂ ಗೆಲ್ವಾಗಳ್ ವಿಕ್ರಮಾರ್ಜುನನಲ್ಲದೆ ಗೆಲ್ಲನದಱಂದಾತಂಗೆ ದಿವ್ಯಾಸ್ತ್ರಂಗಳಂ ಪಡೆಯಲ್ವೇೞ್ಪುದದಂ ಪಡೆವುಪಾಯಮುಮಂ ಮಂತ್ರಮುಮನುಪದೇಶಂಗೆಯ್ಯಲ್ ಬಂದೆವೆಂದು ಯುಷ್ಠಿರಂಗೆ ವೇೞ್ದು ವಿಕ್ರಮಾರ್ಜುನಂಗೆ ಮಂತ್ರಾಕ್ಷರಂಗಳನುಪದೇಶಂಗೆಯ್ದು ಗುಹ್ಯಕನೆಂಬನಂ ಸ್ಮರಣಮಾತ್ರದೊಳ್ ಬರಿಸಿ ಸಾಹಸಾಭರಣನನಿಂದ್ರಕೀಲನಗೇಂದ್ರಮನೆಯ್ದಿಸಿ ಬರ್ಪುದೆಂದು ಪೇೞ್ವುದುಂ ಧರ್ಮಪುತ್ರನಾ ಮುನೀಂದ್ರಂಗೆ ಸಾಷ್ಟಾಂಗವೆಱಗಿ ಪೊಡವಡೆ ಪರಸಿ ಪಯೋಧರಪಥಕ್ಕೊಗೆದನಿತ್ತ ವಿಕ್ರಾಂತತುಂಗನುಂ ಧರ್ಮಪುತ್ರಂಗಂ ವಾಯುಸುತಂಗಂ ಪೊಡವಟ್ಟು ಬೆಸಕೇಳ್ವೆನೆಂದಾಗಳ್ ಪಾಂಚಾಳರಾಜತನೂಜೆಯಿಂತೆಂದಳ್-
ವಚನ:ಪದವಿಭಾಗ-ಅರ್ಥ:ಅದು ಕಾರಣದಿಂದ ಅವರಂ ಗೆಲ್ವಾಗಳ್ (ಆ ಕಾರಣ, ಅವರನ್ನು ಗೆಲ್ಲಬೇಕಾದರೆ) ವಿಕ್ರಮಾರ್ಜುನನು ಅಲ್ಲದೆ ಗೆಲ್ಲನು (ಬೇರೆಯವನು ಗೆಲ್ಲಲಾರ) ಅದಱಿಂದ ಆತಂಗೆ ದಿವ್ಯಾಸ್ತ್ರಂಗಳಂ ಪಡೆಯಲ್ ವೇೞ್ಪುದು (ಆದುದರಿಂದ ಅವನನ್ನು ದಿವ್ಯಾಸ್ತ್ರಗಳನ್ನು ಪಡೆಯುವಂತೆ ಹೇಳಬೇಕು); ಅದಂ ಪಡೆವ ಉಪಾಯಮುಮಂ ಮಂತ್ರಮುಮನು ಉಪದೇಶಂಗೆಯ್ಯಲ್ ಬಂದೆವು ಎಂದು ಯುಷ್ಠಿರಂಗೆ ವೇೞ್ದು, (ಮಂತ್ರವನ್ನೂ ಉಪದೇಶ ಮಾಡುವುದಕ್ಕಾಗಿಯೇ ಬಂದಿದ್ದೇವೆ ಎಂಬುದಾಗಿ ಧರ್ಮರಾಜನಿಗೆ ಹೇಳಿ) ವಿಕ್ರಮಾರ್ಜುನಂಗೆ ಮಂತ್ರಾಕ್ಷರಂಗಳನು ಉಪದೇಶಂ ಗೆಯ್ದು (ಅರ್ಜುನನಿಗೆ ಮಂತ್ರಾಕ್ಷರಗಳನ್ನು ಉಪದೇಶಮಾಡಿದರು. ಮಾಡಿ-) ಗುಹ್ಯಕನೆಂಬನಂ ಸ್ಮರಣಮಾತ್ರದೊಳ್ ಬರಿಸಿ (ಗುಹ್ಯಕನೆಂಬುವನನ್ನು ಸ್ಮರಿಸಿಕೊಳ್ಳುವುದರಿಂದಲೇ ಬರಮಾಡಿ) ಸಾಹಸಾಭರಣನನು ಇಂದ್ರಕೀಲನಗೇಂದ್ರಮನು ಐಯ್ದಿಸಿ ಬರ್ಪುದೆಂದು ಪೇೞ್ವುದುಂ (ಅರ್ಜುನನನ್ನು ಇಂದ್ರಕೀಲಪರ್ವತವನ್ನು ಸೇರಿಸಿ ಬರುವುದು ಎಂದು ಹೇಳಿದರು) ಧರ್ಮಪುತ್ರನು ಆ ಮುನೀಂದ್ರಂಗೆ ಸಾಷ್ಟಾಂಗವೆಱಗಿ ಪೊಡವಡೆ (ಧರ್ಮರಾಜನು ಋಷಿಶ್ರೇಷ್ಠನಿಗೆ ಸಾಷ್ಟಾಂಗಪ್ರಣಾಮ ಮಾಡಿ ನಮಸ್ಕರಿಸಲು) ಪರಸಿ ಪಯೋಧರ ಪಥಕ್ಕೆ ಒಗೆದನು (ವ್ಯಾಸನು ಆಶೀರ್ವದಿಸಿ ಆಕಾಶಪ್ರದೇಶಕ್ಕೆ ತೆರಳಿದನು) ಇತ್ತ ವಿಕ್ರಾಂತತುಂಗನುಂ ಧರ್ಮಪುತ್ರಂಗಂ ವಾಯುಸುತಂಗಂ ಪೊಡವಟ್ಟು ಬೆಸಕೇಳ್ವೆಂ ಎಂದಾಗಳ್ (ಈ ಕಡೆ ಪರಾಕ್ರಮದಲ್ಲಿ ಶ್ರೇಷ್ಠನಾದ ಅರ್ಜುನನು ಧರ್ಮರಾಜನಿಗೂ ಭೀಮಸೇನನಿಗೂ ನಮಸ್ಕಾರಮಾಡಿ ಅಪ್ಪಣೆಯನ್ನು ಕೇಳುತ್ತಿದ್ದೇನೆ ಎಂದಾಗ) ಪಾಂಚಾಳರಾಜತನೂಜೆ ಇಂತೆಂದಳ್-
ವಚನ:ಅರ್ಥ:|| ಆ ಕಾರಣ, ಅವರನ್ನು ಗೆಲ್ಲಬೇಕಾದರೆ ವಿಕ್ರಮಾರ್ಜುನನಲ್ಲದೆ ಬೇರೆಯವನು ಗೆಲ್ಲಲಾರ. ಆದುದರಿಂದ ಅವನನ್ನು ದಿವ್ಯಾಸ್ತ್ರಗಳನ್ನು ಪಡೆಯುವಂತೆ ಹೇಳಬೇಕು. ಅದನ್ನು ಪಡೆಯುವ ಉಪಾಯವನ್ನೂ ಮಂತ್ರವನ್ನೂ ಉಪದೇಶ ಮಾಡುವುದಕ್ಕಾಗಿಯೇ ಬಂದಿದ್ದೇವೆ ಎಂಬುದಾಗಿ ಧರ್ಮರಾಜನಿಗೆ ಹೇಳಿ ಅರ್ಜುನನಿಗೆ ಮಂತ್ರಾಕ್ಷರಗಳನ್ನು ಉಪದೇಶಮಾಡಿದರು. ಗುಹ್ಯಕನೆಂಬುವನನ್ನು ಸ್ಮರಿಸಿಕೊಳ್ಳುವುದರಿಂದಲೇ ಬರಮಾಡಿ ಸಾಹಸಾಭರಣನಾದ ಅರ್ಜುನನನ್ನು ಇಂದ್ರಕೀಲಪರ್ವತವನ್ನು ಸೇರಿಸಿ ಬರುವುದು ಎಂದು ಹೇಳಿದರು. ಧರ್ಮರಾಜನು ಋಷಿಶ್ರೇಷ್ಠನಿಗೆ ಸಾಷ್ಟಾಂಗಪ್ರಣಾಮ ಮಾಡಿ ನಮಸ್ಕರಿಸಲು ವ್ಯಾಸನು ಆಶೀರ್ವದಿಸಿ ಆಕಾಶಪ್ರದೇಶಕ್ಕೆ ತೆರಳಿದನು. ಈ ಕಡೆ ಪರಾಕ್ರಮದಲ್ಲಿ ಶ್ರೇಷ್ಠನಾದ ಅರ್ಜುನನು ಧರ್ಮರಾಜನಿಗೂ ಭೀಮಸೇನನಿಗೂ ನಮಸ್ಕಾರಮಾಡಿ ಅಪ್ಪಣೆಯನ್ನು ಕೇಳುತ್ತಿದ್ದೇನೆ ಎಂದಾಗ, ದ್ರೌಪದಿಯು ಹೀಗೆಂದಳು.
ಕಂ|| ಬಗೆಯದೆ ಮೆಯ್ಸೊಕಮಂ ಬಗೆ
ಪಗೆವರ ಕಡುವೆರ್ಚನೆನ್ನ ಪೂಣ್ಕೆಯನೆರ್ದೆಯೊಳ್|
ಬಗೆ ಮುನಿಯ ಮಂತ್ರಪದಮಂ
ಬಗೆ ಕೂಡುಗೆ ನಿನ್ನ ಬಗೆದ ಬಗೆಯೊಳ್ ಪಾರ್ಥಾ|| ೬೭ ||
ಪದ್ಯ-೬೭:ಪದವಿಭಾಗ-ಅರ್ಥ:ಬಗೆಯದೆ ಮೆಯ್ಸೊಕಮಂ (ನಿನ್ನ ದೇಹಸೌಖ್ಯವನ್ನು ಚಿಂತಿಸದೆ ಶ) ಬಗೆ ಪಗೆವರ ಕಡುವೆರ್ಚನು ಎನ್ನ ಪೂಣ್ಕೆಯನು (ಶತ್ರುಗಳ ಹೆಚ್ಚಿನ ಅಭಿವೃದ್ಧಿಯನ್ನೂ ನನ್ನ ಪ್ರತಿಜ್ಞೆಯನ್ನೂ ನೆನೆಸು.) ಎರ್ದೆಯೊಳ್ ಬಗೆ ಮುನಿಯ ಮಂತ್ರಪದಮಂ ಬಗೆ (ಋಷಿಯ ಮಂತ್ರೋಪದೇಶವನ್ನೂ ಹೃದಯದಲ್ಲಿ ಚಿಂತಿಸು.) ಕೂಡುಗೆ ನಿನ್ನ ಬಗೆದ ಬಗೆಯೊಳ್ ಪಾರ್ಥಾ (ನಿನ್ನ ಇಷ್ಟಾರ್ಥ ಅಪೇಕ್ಷಿಸಿದಂತೆಯೇ ಸಿದ್ಧಿಯಾಗಲಿ, ಎಂದಳು)
ಪದ್ಯ-೬೭:ಅರ್ಥ: ನಿನ್ನ ದೇಹಸೌಖ್ಯವನ್ನು ಚಿಂತಿಸದೆ ಶತ್ರುಗಳ ಹೆಚ್ಚಿನ ಅಭಿವೃದ್ಧಿಯನ್ನೂ ನನ್ನ ಪ್ರತಿಜ್ಞೆಯನ್ನೂ ಋಷಿಯ ಮಂತ್ರೋಪದೇಶವನ್ನೂ ಹೃದಯದಲ್ಲಿ ಚಿಂತಿಸು, ಅರ್ಜುನ ನಿನ್ನ ಇಷ್ಟಾರ್ಥ ಅಪೇಕ್ಷಿಸಿದಂತೆಯೇ ಸಿದ್ಧಿಯಾಗಲಿ
ವ|| ಎಂದು ಬುದ್ಧಿವೇೞ್ದು ಮನದಱಕಂ ಮನೋವೇಗದಿಂ ಪರಿಯೆ ಸೈರಿಸಲಾಱದೆ-
ವಚನ:ಪದವಿಭಾಗ-ಅರ್ಥ:ಎಂದು ಬುದ್ಧಿ ವೇೞ್ದು ಮನದ ಎಱಕಂ ಮನೋವೇಗದಿಂ ಪರಿಯೆ, ಸೈರಿಸಲಾಱದೆ-
ವಚನ:ಅರ್ಥ:ವ|| ಎಂದು ಬುದ್ಧಿಹೇಳಿ ಮನಸ್ಸಿನ ಪ್ರೀತಿಯು ಮನೋವೇಗದಿಂದ ಹರಿಯುತ್ತಿರಲು, ಸಹಿಸಲಾರದೆ-
ಉ|| ಬಳ್ವಳ ನೀಳ್ದ ಕಣ್ಮಲರ ತಳ್ತೆಮೆಯಿಂ ಕರೆಗಣ್ಮಿ ಬೆಳ್ಗಡ
ಲ್ಗಳ್ವರಿಯಲ್ಕಮಾಟಿಸಿದೊಡೊಯ್ಯನೆ ಮಂಗಳ ಭಂಗ ಭೀತಿಯಂ|
ತಳ್ವದೆ ಮಾಡೆ ಬಾಷ್ಪಜಳಮಂ ಕಳೆದೞ್ಕಱನೀಯೆ ಸಂಬಳಂ
ಗೊಳ್ವವೊಲಾ ತಳೋದರಿಯ ಚಿತ್ತಮನಿೞ್ಕುೞಗೊಂಡನರ್ಜುನಂ|| ೬೮ ||
ಪದ್ಯ-೬೮:ಪದವಿಭಾಗ-ಅರ್ಥ:ಬಳ್ವಳ ನೀಳ್ದ ಕಣ್ಮಲರ ತಳ್ತೆಮೆಯಿಂ(ಬಹಳ ನೀಳವಾದ ಕಣ್ ಅಲರ- ಅಲರ್ ಕಣ್ಣ್- ಹೂವಿನಂತಿರುವ ರೆಪ್ಪೆಯಿಂದ ಕೋಡಿದ ಕಣ್ಣಿನ) ಕರೆಗೆ ಅಣ್ಮಿ ಬೆಳ್ಗಡಲ್ಗಳ್ ಪರಿಯಲ್ಕಂ (ಕರೆಗೆ ಉಕ್ಕಿ ಬಿಳಿಯ ಕಾಂತಿಯ ಕಡಲು ಹರಿಯಲು) ಆಟಿಸಿದೊಡೆ (ಬಯಸಿದರೆ), ಒಯ್ಯನೆ ಮಂಗಳ ಭಂಗ ಭೀತಿಯಂ (ಮೆಲ್ಲಗೆ ಅಮಂಗಳವಾಗುವ ಹೆದರಿಕೆಯನ್ನು) ತಳ್ವದೆ ಮಾಡೆ (ಕೂಡಲೆ ಹೊಂದಿ) ಬಾಷ್ಪಜಳಮಂ ಕಳೆದು ಅೞ್ಕಱನು ಈಯೆ (ಕಣ್ಣೀರನ್ನು ಒರೆಸಿಕೊಂಡು, ಅರ್ಜುನನಿಗೆ ಪ್ರೀತಿಯನ್ನು-ಚುಂಬನವನ್ನು ಕೊಡಲು,) ಸಂಬಳಂಗೊಳ್ವವೊಲು (ಪ್ರಯಾಣದ ಬುತ್ತಿಯನ್ನು ಅವಳಿಂದ ತೆಗೆದುಕೊಂಡಂತೆ) ಆ ತಳೋದರಿಯ ಚಿತ್ತಮನು ಇೞ್ಕುೞಗೊಂಡಂ ಅರ್ಜುನಂ (ಅರ್ಜುನನು ಆ ಸಣ್ಣ ನಡುವಿನ ದ್ರೌಪದಿಯ ಮನಸ್ಸನ್ನು ಸೆಳೆದುಕೊಂಡನು.)
ಪದ್ಯ-೬೮:ಅರ್ಥ: ದ್ರೌಪದಿಯ ಬಹಳ ನೀಳವಾದ ಹೂವಿನಂತಿರುವ ರೆಪ್ಪೆಯಿಂದ ಕೋಡಿದ ಕಣ್ಣಿನ ಕರೆಗೆ ಉಕ್ಕಿ ಬಿಳಿಯ ಕಾಂತಿಯ ಕಡಲು ಹರಿಯಲು ಬಯಸಿದರೆ, (ಕಣ್ಣೀರಿನಿಂದಾಗುವ ಅಮಂಗಲವನ್ನು)ಮೆಲ್ಲಗೆ ಅಮಂಗಳವಾಗುವ ಹೆದರಿಕೆಯನ್ನು ಕೂಡಲೆ ಹೊಂದಿ, ಅಗಲಿಕೆಯ ವಿರಹದ ಕಣ್ಣೀರನ್ನು ತಡೆದುಕೊಂಡು, ಅರ್ಜುನನಿಗೆ ಪ್ರೀತಿಯನ್ನು-ಚುಂಬನವನ್ನು ಕೊಡಲು, ಅದನ್ನು ಪ್ರಯಾಣದ ಬುತ್ತಿಯನ್ನು ಅವಳಿಂದ ತೆಗೆದುಕೊಂಡಂತೆ, ಅರ್ಜುನನು ಆ ಸಣ್ಣ ನಡುವಿನ ದ್ರೌಪದಿಯ ಮನಸ್ಸನ್ನು ಸೆಳೆದುಕೊಂಡನು.
ವ|| ಅಂತು ಯಾತ್ರೋದ್ಯುಕ್ತನಾಗಿ ಗುಹ್ಯಕನ ಪೆಗಲನೇಱಿ ಗಂಧೇಭ ವಿದ್ಯಾಧರಂ ವಿದ್ಯಾಧರನಂತೆ ಗಗನತಳಕ್ಕೊಗೆದು ಮಹೇಂದ್ರಕೀಲಾಭಿಮುಖನಾದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಯಾತ್ರೆಯ ಉದ್ಯುಕ್ತನಾಗಿ ಗುಹ್ಯಕನ (ವ್ಯಾಸನ ದೂತ, ಅಮಾನುಷ ಯಕ್ಷ) ಪೆಗಲನು ಏಱಿ (ಏರಿ,ಹೆಗಲಮೇಲೆ ಕುಳಿತು) ಗಂಧೇಭ ವಿದ್ಯಾಧರಂ ವಿದ್ಯಾಧರನಂತೆ (ವೀರಕೇಸರಿಯ ಬಿರುದು-) ಅರ್ಜುನನು ಗಗನತಳಕ್ಕೆ ಒಗೆದು (ಆಕಾಶಕ್ಕೆ ನೆಗೆದು) ಮಹೇಂದ್ರಕೀಲ ಅಭಿಮುಖನಾದ ಆಗಳ್ ()-
ವಚನ:ಅರ್ಥ:ಹಾಗೆ ಪ್ರಯಾಣಕ್ಕೆ ಸಿದ್ಧನಾಗಿ ಯಕ್ಷನ ಹೆಗಲಮೇಲೆ ಕುಳಿತು ಅರ್ಜುನನು ವಿದ್ಯಾಧರನಂತೆ ಅರ್ಜುನನು ಆಕಾಶಕ್ಕೆ ನೆಗೆದು, ಮಹೇಂದ್ರಕೀಲದ ಕಡೆಗೆ ನಡೆದನು, ಆಗ-

ಶರತ್ಕಾಲದ ವರ್ಣನೆ[ಸಂಪಾದಿಸಿ]

ಚಂ|| ಕಡವಿನ ಕಂಪಡಂಗಿದುದು ಜಾದಿಯ ಕಂಪೊದವಿತ್ತು ಸೋಗೆಯು
ರ್ಕುಡುಗಿದುದಂಚೆಯುರ್ಕು ಪೊಸತಾಯ್ತು ಮುಗಿಲ್ಗಳ ಕರ್ಪುಪೀ ನಮೋ|
ಗಡಿಸಿದುದಿಂದುಮಂಡಳದ ಕರ್ಪೆಸೆದತ್ತು ಘನಾಗಮಂ ಮೊದ
ಲ್ಗಿಡೆ ಶರದಾಗಮಂ ನೆಯೆ ಪರ್ಬೆ ಸಮಸ್ತ ಮಹೀವಿಭಾಗಮಂ|| ೬೯ ||
ಪದ್ಯ-೬೯:ಪದವಿಭಾಗ-ಅರ್ಥ:ಕಡವಿನ ಕಂಪು ಅಡಂಗಿದುದು (ಕದಂಬಹೂವಗಳ ಪರಿಮಳಯು ಅಡಗಿತು.) ಜಾದಿಯ ಕಂಪು ಒದವಿತ್ತು (ಜಾಜಿಯ ಪರಿಮಳವು ಹೆಚ್ಚಿತು. ) ಸೋಗೆಯುರ್ಕು ಉಡುಗಿದುದು (ನವಿಲಿನ ವೈಭವವು ನಿಂತಿತು), ಅಂಚೆಯುರ್ಕು ಪೊಸತಾಯ್ತು (ಹಂಸದ ವೈಭವವೂ ಹೊಸದಾಗಿ ಬಂದಿತು), ಮುಗಿಲ್ಗಳ ಕರ್ಪುಪೀನಂ ಓಗಡಿಸಿದುದು(ಮೋಡಗಳ ಕಪ್ಪು ಸಂಪೂರ್ಣವಾಗಿ ಹಿಂಜರಿಯಿತು), ಇಂದುಮಂಡಳದ ಕರ್ಪು ಎಸೆದತ್ತು (ಚಂದ್ರಮಂಡಲದ ಕಪ್ಪುಮಚ್ಚೆಯು ಶೋಭಿಸಿತು); ಘನಾಗಮಂ ಮೊದಲ್ ಕಿಡೆ (ಮಳೆಗಾಲ ಹೋಗಲು) ಶರದಾಗಮಂ ನೆಯೆ ಪರ್ಬೆ ಸಮಸ್ತ ಮಹೀವಿಭಾಗಮಂ (ಸಮಸ್ತ ಭೂಭಾಗವನ್ನೂ ಶರತ್ ಆಗಮನ ಹೊಸದಾಗಿ ಹಬ್ಬಿಕೊಂಡಿತು. )
ಪದ್ಯ-೬೯:ಅರ್ಥ: ವರ್ಷಾಕಾಲವು ಕಳೆದು ಶರತ್ಕಾಲವು ಪ್ರಾಪ್ತವಾಗಲು ಕದಂಬಹೂವುಗಳ ಪರಿಮಳ ಅಡಗಿತು. ಜಾಜಿಯ ಪರಿಮಳವು ಹೆಚ್ಚಿತು. ನವಿಲಿನ ವೈಭವವು ನಿಂತಿತು. ಹಂಸದ ವೈಭವವೂ ಹೊಸದಾಗಿ ಬಂದಿತು. ಮೋಡಗಳ ಕಪ್ಪು ಸಂಪೂರ್ಣವಾಗಿ ಹಿಂಜರಿಯಿತು. ಚಂದ್ರಮಂಡಲದ ಕಪ್ಪುಮಚ್ಚೆಯು ಶೋಭಿಸಿತು. ಪ್ರಕಾಶಮಾಯವಾಯಿತು; ಮಳೆಗಾಲ ಹೋಗಲು ಸಮಸ್ತ ಭೂಭಾಗವನ್ನೂ ಶರತ್ ಆಗಮನ ಹೊಸದಾಗಿ ಹಬ್ಬಿಕೊಂಡಿತು.
ಅಳಿ ಬಿರಿದಿರ್ದ ಜಾದಿಯೊಳೆ ಪಲ್ಮೊರೆಯುತ್ತಿರೆ ಹಂಸೆ ಪೂತ ಪೂ
ಗೊಳದೊಳೆ ರಾಗಿಸುತ್ತಿರೆ ಶುಕಾವಳಿ ಬಂಧುರ ಗಂಧಶಾಳಿ ಸಂ|
ಕುಳದೊಳೆ ಪಾಯ್ದು ವಾಯ್ದು ನಲಿಯುತ್ತಿರೆ ಸಾರೆ ಚಕೋರಮಿಂದುಮಂ
ಡಳ ಗಳಿತಾಮೃತಾಸವಮನುಂಡುಸಿರುತ್ತಿರೆ ಚೆಲ್ವು ಶಾರದಂ|| ೭೦ ||
ಪದ್ಯ-೭೦:ಪದವಿಭಾಗ-ಅರ್ಥ:ಅಳಿ ಬಿರಿದಿರ್ದ ಜಾದಿಯೊಳೆ ಪಲ್ಮೊರೆಯುತ್ತಿರೆ ( ಜೇನುಗಳು ಅರಳಿದ ಜಾಜಿಯಲ್ಲಿ ಝೇಂಕರಿಸುತ್ತಿರಲು,) ಹಂಸೆ ಪೂತ ಪೂಗೊಳದೊಳೆ ರಾಗಿಸುತ್ತಿರೆ (ಹಂಸಪಕ್ಷಿಯು ಸುಮಭರಿತವಾದ ಪುಷ್ಪಸರೋವರದಲ್ಲಿ ಆನಂದಪಡುತ್ತಿರಲು) ಶುಕಾವಳಿ ಬಂಧುರ ಗಂಧಶಾಳಿ (ಪರಿಮಳದ ಭತ್ತ) ಸಂಕುಳದೊಳೆ ಪಾಯ್ದು ವಾಯ್ದು ನಲಿಯುತ್ತಿರೆ (ಗಿಳಿಗಳ ಹಿಂಡು ಮನೋಹರವಾದ ಸುಗಂಧದಿಂದ ಕೂಡಿದ ಬತ್ತದ ತೆನೆಗಳಲ್ಲಿ ಹಾದು ನುಗ್ಗಿ ನಲಿಯತ್ತಿರಲು,) ಸಾರೆ ಚಕೋರಂ ಇಂದುಮಂಡಳ ಗಳಿತ ಅಮೃತ ಆಸವಮಂ ಉಂಡು ಉಸಿರುತ್ತಿರೆ (ಪಕ್ಕದಲ್ಲಿಯೇ ಚಕೋರ ಪಕ್ಷಿಯು ಚಂದ್ರಬಿಂಬದಿಂದ ಸ್ರವಿಸುತ್ತಿರುವ ಅಮೃತವೆಂಬ ಮಕರಂದವನ್ನುಂಡು ಉಲಿಯುತ್ತಿರಲು,) ಚೆಲ್ವು ಶಾರದಂ(ಶರದ್ಋತು)
ಪದ್ಯ-೭೦:ಅರ್ಥ: ಜೇನುಗಳು ಅರಳಿದ ಜಾಜಿಯಲ್ಲಿ ಝೇಂಕರಿಸುತ್ತಿರಲು, ಹಂಸಪಕ್ಷಿಯು ಸುಮಭರಿತವಾದ ಪುಷ್ಪಸರೋವರದಲ್ಲಿ ಆನಂದಪಡುತ್ತಿರಲು, ಗಿಳಿಗಳ ಹಿಂಡು ಮನೋಹರವಾದ ಸುಗಂಧದಿಂದ ಕೂಡಿದ ಬತ್ತದ ತೆನೆಗಳಲ್ಲಿ ಹಾದು ನುಗ್ಗಿ ನಲಿಯತ್ತಿರಲು. ಪಕ್ಕದಲ್ಲಿಯೇ ಚಕೋರ ಪಕ್ಷಿಯು ಚಂದ್ರಬಿಂಬದಿಂದ ಸ್ರವಿಸುತ್ತಿರುವ ಅಮೃತವೆಂಬ ಮಕರಂದವನ್ನುಂಡು ಉಲಿಯುತ್ತಿರಲು,. ಇವುಗಳಿಂದ ಶರತ್ಕಾಲವು ಸುಂದರವಾಯಿತು
ಮ|| ಪುಳಿಯೊಳ್ ಕರ್ಚಿದ ಬಾಳ ಬಣ್ಣಮನೆ ಪೋಲ್ವಾಕಾಶಮಾಕಾಶಮಂ
ಡಳಮಂ ಪರ್ವಿದ ಬೆಳ್ಮುಗಿಲ್ ಮುಗಿಲ ಬೆಳ್ಪೊಳ್ಪೊಕ್ಕು ತಳ್ಪೊಯ್ಯೆ ಬ|
ಳ್ವಳ ನಿಳ್ದಿರ್ದ ದಿಶಾಳಿಶಾಳಿವನ ಗಂಧಾಂಧ ದ್ವಿರೇಫಾಳಿ ಕ
ಣ್ಗೊಳಿಸಿತ್ತೊರ್ಮೆಯ ಬಂದುದಂದು ಶರದಂ ಲೋಕಕ್ಕೆ ಕಣ್ ಬರ್ಪಿನಂ|| ೭೧||
ಪದ್ಯ-೭೧:ಪದವಿಭಾಗ-ಅರ್ಥ:ಪುಳಿಯೊಳ್ ಕರ್ಚಿದ ಬಾಳ ಬಣ್ಣಮನೆ ಪೋಲ್ವ ಆಕಾಶಂ ( (ನಿಂಬೆ)ಹುಳಿಯಲ್ಲಿ ತೊಳೆದ ಕತ್ತಿಯ ನೀಲಿಯ ಬಣ್ಣವನ್ನೇ ಹೋಲುವ ಆಕಾಶವು,) ಆಕಾಶಮಂಡಳಮಂ ಪರ್ವಿದ ಬೆಳ್ಮುಗಿಲ್ (ಆಕಾಶ ಪ್ರದೇಶದಲ್ಲಿ ಹಬ್ಬಿರುವ ಬಿಳಿಯ ಮೋಡ), ಮುಗಿಲ ಬೆಳ್ಪು ಒಳ್ಪೊಕ್ಕು ತಳ್ಪೊಯ್ಯೆ (ಮೋಡಗಳ ಬಿಳುಪು ಆಕಾಶದ ಒಳಗೆಲ್ಲಾ ವಿಸ್ತಾರವಾಗಿ ವ್ಯಾಪಿಸಿರಲು), ಬಳ್ವಳ ನಿಳ್ದು ಇರ್ದ ದಿಶಾಳಿ (ವಿಶೇಷವಾಗಿ ಉದ್ದಕ್ಕೂ ತೋರುತ್ತಿರುವ ದಿಕ್ಕುಗಳು), ಶಾಳಿವನ ಗಂಧಾಂಧ ದ್ವಿರೇಫ (ದುಂಬಿ) ಆಳಿ (ಶಾಳಿವನದ (ಬತ್ತದ ಗದ್ದೆಯ) ಸುವಾಸನೆಯಿಂದ ಸೊಕ್ಕಿರುವ ದುಂಬಿಗಳ ಸಮೂಹ,) ಕಣ್ಗೊಳಿಸಿತ್ತು ಒರ್ಮೆಯ ಬಂದುದು ಅಂದು ಶರದಂ ಲೋಕಕ್ಕೆ ಕಣ್ ಬರ್ಪಿನಂ (ಇವುಗಳಿಂದ ಆಕರ್ಷಕವಾಗಿರುವ ಶರತ್ಕಾಲವು ಲೋಕಕ್ಕೆ ಕಣ್ಣು ಬರುವಂತೆ ಪ್ರಾಪ್ತವಾಯಿತು)
ಪದ್ಯ-೭೧:ಅರ್ಥ: ೭೧. (ನಿಂಬೆ)ಹುಳಿಯಲ್ಲಿ ತೊಳೆದ ಕತ್ತಿಯ ನೀಲಿಯ ಬಣ್ಣವನ್ನೇ ಹೋಲುವ ಆಕಾಶ, ಆಕಾಶ ಪ್ರದೇಶದಲ್ಲಿ ಹಬ್ಬಿರುವ ಬಿಳಿಯ ಮೋಡ, ಮೋಡಗಳ ಬಿಳುಪು ಆಕಾಶದ ಒಳಗೆಲ್ಲಾ ವಿಸ್ತಾರವಾಗಿ ವ್ಯಾಪಿಸಿರಲು, ವಿಶೇಷವಾಗಿ ಉದ್ದಕ್ಕೂ ತೋರುತ್ತಿರುವ ದಿಕ್ಕುಗಳು, ಶಾಳಿವನದ (ಬತ್ತದ ಗದ್ದೆಯ) ಸುವಾಸನೆಯಿಂದ ಸೊಕ್ಕಿರುವ ದುಂಬಿಗಳ ಸಮೂಹ, ಇವುಗಳಿಂದ ಆಕರ್ಷಕವಾಗಿರುವ ಶರತ್ಕಾಲವು ಲೋಕಕ್ಕೆ ಕಣ್ಣು ಬರುವಂತೆ ಪ್ರಾಪ್ತವಾಯಿತು.
ವ|| ಆಗಳ್ ವಿಜಯಂ ತನ್ನ ವಿಜಯಶ್ರೀಯ ಬರವಿಂಗಿದಿರ್ವಂದಂತೆ ಬಂದ ಶರತ್ಕಾಲಶ್ರೀಯನುತ್ಕಂಠಿತಹೃದಯನಾಗಿ ಮೆಚ್ಚಿ ನೋಡುತ್ತುಂ ಬರ್ಪನ್ನೆಗಂ ಮುಂದೆ ಶಾರದ ನೀರದಂಗಳೆಲ್ಲಮೊಂದೆಡೆಗೆ ತೆರಳ್ದೊಟ್ಟಿ ಬೆಟ್ಟಾದಂತಿರ್ದ ನೀಹಾರಗಿರಿಯಂ ಕಂಡಿದಾವುದೆಂದು ಬೆಸಗೊಳೆ ಗುಹ್ಯಕನಿಂತೆಂದಂ-
ವಚನ:ಪದವಿಭಾಗ-ಅರ್ಥ:ಆಗಳ್ ವಿಜಯಂ ತನ್ನ ವಿಜಯಶ್ರೀಯ ಬರವಿಂಗೆ ಇದಿರ್ವಂದಂತೆ ಬಂದ (ಆಗ ಅರ್ಜುನನು ತನ್ನ ವಿಜಯಲಕ್ಷ್ಮಿಯ ಆಗಮನವನ್ನು ಸ್ವಾಗತ ಮಾಡುವುದಕ್ಕೆ ಇದಿರಾಗಿ ಬಂದಂತೆ ಬಂದ) ಶರತ್ಕಾಲಶ್ರೀಯನು ಉತ್ಕಂಠಿತಹೃದಯನಾಗಿ ಮೆಚ್ಚಿ ನೋಡುತ್ತುಂ ಬರ್ಪನ್ನೆಗಂ (ಶರತ್ಕಾಲಲಕ್ಷ್ಮಿಯನ್ನು ಸಂತುಷ್ಟ ಹೃದಯದಿಂದ ಮೆಚ್ಚಿ ನೋಡುತ್ತ ಬರುವಷ್ಟರಲ್ಲಿ), ಮುಂದೆ ಶಾರದ ನೀರದಂಗಳೆಲ್ಲಂ ಒಂದೆಡೆಗೆ ತೆರಳ್ದು ಒಟ್ಟಿ ಬೆಟ್ಟಾದಂತೆ ಇರ್ದ(ಮುಂದೆ ಶರತ್ಕಾಲದ ಮೋಡಗಳೆಲ್ಲ ಒಟ್ಟಾಗಿ ಸೇರಿ ಬೆಟ್ಟವಾದಂತೆ ಇದ್ದ) ನೀಹಾರಗಿರಿಯಂ (ಹಿಮವತ್ಪರ್ವತವನ್ನು) ಕಂಡು ಇದು ಆವುದು ಎಂದು ಬೆಸಗೊಳೆ ಗುಹ್ಯಕನು ಇಂತೆಂದಂ-
ವಚನ:ಅರ್ಥ:ಆಗ ಇಂದ್ರಕೀಲಕ್ಕೆ ಬಂದ ಅರ್ಜುನನು ತನ್ನ ವಿಜಯಲಕ್ಷ್ಮಿಯ ಆಗಮನವನ್ನು ಸ್ವಾಗತ ಮಾಡುವುದಕ್ಕೆ ಇದಿರಾಗಿ ಬಂದಂತೆ ಬಂದ ಶರತ್ಕಾಲಲಕ್ಷ್ಮಿಯನ್ನು ಸಂತುಷ್ಟ ಹೃದಯದಿಂದ ಮೆಚ್ಚಿ ನೋಡುತ್ತ ಬರುವಷ್ಟರಲ್ಲಿ, ಮುಂದೆ ಶರತ್ಕಾಲದ ಮೋಡಗಳೆಲ್ಲ ಒಟ್ಟಾಗಿ ಸೇರಿ ಬೆಟ್ಟವಾದಂತೆ ಇದ್ದ ಹಿಮವತ್ಪರ್ವತವನ್ನು ನೋಡಿ ಇದು ಯಾವುದು ಎಂದು ಪ್ರಶ್ನೆಮಾಡಲು, ಗುಹ್ಯಕನು ಹೀಗೆಂದು ಹೇಳಿದನು-

ಇಂದ್ರಕೀಲದಲ್ಲಿ ಅರ್ಜುನ[ಸಂಪಾದಿಸಿ]

ಮ|| ವಿದಳತ್ಕುಂದ ಶಶಾಂಕ ಶಂಖಧವಳಂ ಗಂಧೇಭ ದಾನಾಂಬು ಪೂ
ರ್ಣ ದರೀ ಸುಂದರ ಕಂದರಂ ಮೃಗಪತಿ ಪ್ರಧ್ವಾನ ಗರ್ಜದ್ಗುಹಂ|
ಮದಿರೋನ್ಮತ್ತ ನಿಳಿಂಪ ಕಿಂಪುರುಷ ಕಾಂತಾರಬ್ಧ ಸಂಗೀತಮೊ
ಪ್ಪಿದುದಲ್ತೇ ಸುರ ಸಿದ್ಧ ದಂಪತಿ ರತಿ ಶ್ರೀ ರಮ್ಯ ಹೈಮಾಚಳಂ|| ೭೨ ||
ಪದ್ಯ-೭೨:ಪದವಿಭಾಗ-ಅರ್ಥ:ವಿದಳತ್ ಕುಂದ ಶಶಾಂಕ ಶಂಖಧವಳಂ ಗಂಧೇಭ (ಬಿರಿಯುತ್ತಿರುವ ಕುಂದ ಹೂವಿನಂತಿರುವ ಹಾಗೂ ಚಂದ್ರನಂತೆಯೂ ಶಂಖದಂತೆಯೂ ಬೆಳ್ಳಗಿರುವ ಮದ್ದಾನೆಗಳ) ದಾನಾಂಬು ಪೂರ್ಣ ದರೀ ಸುಂದರ ಕಂದರಂ (ಮದೋದಕದಿಂದ ತುಂಬಿದ ದರಿಗಳಿಂದ ಕೂಡಿ ಸುಂದರ ಕಣಿವೆಗಳನ್ನುಳ್ಳುದ್ದೂ), ಮೃಗಪತಿ ಪ್ರಧ್ವಾನ ಗರ್ಜತ್ ಗುಹಂ (ಸಿಂಹದ ವಿಶೇಷವಾದ ಶಬ್ದದಿಂದ ಕೂಡಿದ ಗರ್ಜನೆಯನ್ನುಳ್ಳ ಗುಹೆಯನ್ನುಳ್ಳುದೂ) ಮದಿರೋನ್ಮತ್ತ (ಮದಿರ ಉನ್ಮತ್ತ) ನಿಳಿಂಪ (ದೇವತೆಗಳ) ಕಿಂಪುರುಷ ಕಾಂತ ಆರಬ್ಧ (ಸ್ತ್ರೀಯರಿಂದ ಆರಂಭಿಸಿದ) ಸಂಗೀತಂ ಒಪ್ಪಿದುದಲ್ತೇ (ಮದ್ಯಪಾನದ ಅಮಲೇರಿದ ದೇವತೆಗಳ ಮತ್ತು ಕಿಂಪುರುಷಸ್ತ್ರೀಯರಿಂದ ಪ್ರಾರಂಭಿಸಲ್ಪಟ್ಟ ಸಂಗೀತವನ್ನುಳ್ಳುದ್ದೂ ಅಲ್ಲದೆ) ಸುರ ಸಿದ್ಧ ದಂಪತಿ ರತಿ ಶ್ರೀ ರಮ್ಯ ಹೈಮಾಚಳಂ (ದೇವತೆಗಳು ಮತ್ತು ಸಿದ್ಧದಂಪತಿಗಳ ರತಿಕ್ರೀಡೆಯ ವೈಭವದಿಂದ ಮನೋಹರವಾಗಿರುವುದೂ ಆದ ಇದು ಹಿಮವತ್ಪರ್ವತ ಎಂದು ಹೇಳಿದನು)
ಪದ್ಯ-೭೨:ಅರ್ಥ: . ಬಿರಿಯುತ್ತಿರುವ ಕುಂದ ಹೂವಿನಂತಿರುವ ಚಂದ್ರನಂತೆಯೂ ಶಂಖದಂತೆಯೂ ಬೆಳ್ಳಗಿರುವ ಮದ್ದಾನೆಗಳ ಮದೋದಕದಿಂದ ತುಂಬಿದ ದರಿಗಳಿಂದ ಕೂಡಿ ಸುಂದರ ಕಣಿವೆಗಳನ್ನುಳ್ಳುದ್ದೂ, ಸಿಂಹದ ವಿಶೇಷವಾದ ಶಬ್ದದಿಂದ ಕೂಡಿದ ಗರ್ಜನೆಯನ್ನುಳ್ಳ ಗುಹೆಯನ್ನುಳ್ಳುದೂ, ಮದ್ಯಪಾನದ ಅಮಲೇರಿದ ದೇವತೆಗಳ ಮತ್ತು ಕಿಂಪುರುಷಸ್ತ್ರೀಯರಿಂದ ಪ್ರಾರಂಭಿಸಲ್ಪಟ್ಟ ಸಂಗೀತವನ್ನುಳ್ಳುದೂ ದೇವತೆಗಳು ಮತ್ತು ಸಿದ್ಧದಂಪತಿಗಳ ರತಿಕ್ರೀಡೆಯ ವೈಭವದಿಂದ ಮನೋಹರವಾಗಿರುವುದೂ ಆದ ಇದು ಹಿಮವತ್ಪರ್ವತ ಎಂದು ಹೇಳಿದನು
ಕಂ|| ಲಳಿತೋತ್ಸವ ಧ್ವಜಾಂಶುಕ
ವಿಳಸನಮಂ ಮುಂದೆ ನಿನಗೆ ತೋರ್ಪಂತಿರೆ ಕ|
ಣ್ಗೊಳಿಸಿರ್ದುದು ನೋಡ ಹಿಮಾ
ಚಳ ಶಿಖರದ ಮೇಲೆ ಪಾಯ್ವ ಗಂಗಾಸ್ರೋತಂ|| ೭೩ ||
ಪದ್ಯ-೭೩:ಪದವಿಭಾಗ-ಅರ್ಥ:ಲಳಿತ ಉತ್ಸವ ಧ್ವಜಾಂಶುಕ ವಿಳಸನಮಂ (ಸುಂದರ ಉತ್ಸವ ಸೂಚಕವಾದ ಬಟ್ಟೆಯ ವಿಲಾಸವನ್ನು) ಮುಂದೆ ನಿನಗೆ ತೋರ್ಪಂತಿರೆ (ನಿನ್ನೆದುರಿಗೆ ತೋರುವಂತಿರಲು ) ಕಣ್ಗೊಳಿಸಿರ್ದುದು ನೋಡ ಹಿಮಾಚಳ ಶಿಖರದ ಮೇಲೆ ಪಾಯ್ವ ಗಂಗಾಸ್ರೋತಂ (ಹಿಮವತ್ಪರ್ವತದ ಶಿಖರದ ಮೇಲೆ ಹರಿಯುತ್ತಿರುವ ಗಂಗಾಪ್ರವಾಹವು ಕಣ್ಣುಗಳಿಗೆ ಸುಂದರವಾಗಿ ತೋರುತ್ತಿದೆ ನೋಡು)
ಪದ್ಯ-೭೩:ಅರ್ಥ: . ಅದೋ ನಿನಗೆ ಸುಂದರ ಉತ್ಸವ ಸೂಚಕವಾದ ಬಾವುಟದ ಬಟ್ಟೆಯ ವಿಲಾಸವನ್ನು ನಿನ್ನೆದುರಿಗೆ ತೋರುವಂತಿರಲು, ಹಿಮವತ್ಪರ್ವತದ ಶಿಖರದ ಮೇಲೆ ಹರಿಯುತ್ತಿರುವ ಗಂಗಾಪ್ರವಾಹವು ಕಣ್ಣುಗಳಿಗೆ ಸುಂದರವಾಗಿ ತೋರುತ್ತಿದೆ ನೋಡು.

ವ|| ಎಂದು ಗುಹ್ಯಕಂ ಹಿಮವನ್ಮಹೀಧರಮಂ ತೋಱುತ್ತುಂ ಬಂದು ಕೈಲಾಸ ಪರ್ವತಮಂ ಕಂಡು-

ವಚನ:ಪದವಿಭಾಗ-ಅರ್ಥ:ಎಂದು ಗುಹ್ಯಕಂ ಹಿಮವತ್(ನ್) ಮಹೀಧರಮಂ (ಬೆಟ್ಟವನ್ನು) ತೋಱುತ್ತುಂ ಬಂದು ಕೈಲಾಸ ಪರ್ವತಮಂ ಕಂಡು-
ವಚನ:ಅರ್ಥ:ವ|| ಎಂದು ಗುಹ್ಯಕನು ಹಿಮಾಲಯಪರ್ವತವನ್ನು ತೋರಿಸುತ್ತ ಮುಂದೆ ಬಂದು ಕೈಲಾಸಪರ್ವತವನ್ನು ಕಂಡು-
ಮ|| ಸ್ರ|| ಇದು ಕೈಲಾಸಂ ಭವಾನೀಧವನ ನೆಲೆ ಮನೋಜಾತನಂ ಬೂದಿಮಾಡಿ
ತ್ತಿದರೊಳ್ ದಕ್ಷಾಧ್ವರಧ್ವಂಸಕನ ನೊಸಲ ಕಣ್ಣಾತನೊಳ್ ತನ್ನ ದೋರ್ಗ|
ರ್ವದಗುರ್ವಂ ಪ್ರಾಕಟಂ ಮಾಡುವ ಬಗೆಯೊಳಿದಂ ಪತ್ತಿ ಕಿೞ್ತೊತ್ತಿ ಪೊತ್ತೆ
ತ್ತಿದೊಡಿತ್ತಂ ಮೆಚ್ಚಿ ಲಂಕಾಪತಿಗೆ ಬರವಂ ರಾಗದಿಂ ನೀಳಕಂಠಂ|| ೭೪||
ಪದ್ಯ-೭೪:ಪದವಿಭಾಗ-ಅರ್ಥ:ಇದು ಕೈಲಾಸಂ, ಭವಾನೀ ಧವನ ನೆಲೆ (ಪಾರ್ವತೀಪತಿಯ ವಾಸಸ್ಥಾನ,) ಮನೋಜಾತನಂ ಬೂದಿಮಾಡಿತ್ತು ಇದರೊಳ್ (ಇಲ್ಲಿ ಮನ್ಮಥನನ್ನು ಬೂದಿಮಾಡಿತ್ತು) ದಕ್ಷಾಧ್ವರಧ್ವಂಸಕನ (ಶಿವನ) ನೊಸಲ ಕಣ್ಣು (ಶಿವನ ಹಣೆಗಣ್ಣು,) ಆತನೊಳ್ ತನ್ನ ದೋರ್ಗರ್ವದ (ಬಾಹುಬಲದ ಹೆಮ್ಮೆಯ) ಉಗುರ್ವಂ ಪ್ರಾಕಟಂ ಮಾಡುವ ಬಗೆಯೊಳ್ (ಶಿವನ ಮುಂದೆ ತನ್ನ ಬಾಹುಬಲದ ಹೆಮ್ಮೆಯನ್ನೂ ಅತಿಶಕ್ತಿಯನ್ನೂ ತೋರಿಸುವ ಆಶೆಯಿಂದ) ಇದಂ ಪತ್ತಿ (ಹತ್ತಿ-ಅಂಟಿ,ಅಪ್ಪಿಕೊಂಡು ಕಿೞ್ತೊತ್ತಿ ಪೊತ್ತು ಎತ್ತಿದೊಡೆ (ಈ ಪರ್ವತವನ್ನು ಕಿತ್ತು ಹೊತ್ತು ಮೇಲಕ್ಕೆತ್ತಲು) ಇತ್ತಂ ಮೆಚ್ಚಿ ಲಂಕಾಪತಿಗೆ ಬರವಂ ರಾಗದಿಂ ನೀಳಕಂಠಂ (ಈಶ್ವರನು ಮೆಚ್ಚಿ ಲಂಕಾಪತಿಯಾದ ರಾವಣನಿಗೆ ಶಿವನು ಸಂತೋಷದಿಂದ ವರವನ್ನು ಕೊಟ್ಟನು.
ಚಂ|| ತೊ ತೊಯೆಂಬ ಮಾತನಿನಿತಿಲ್ಲದೊಡಾಂ ತೊವೆಂ ದಲೆಂದೊಡಾ)
ಪದ್ಯ-೭೪:ಅರ್ಥ: ಇದು ಕೈಲಾಸಪರ್ವತ; ಪಾರ್ವತೀಪತಿಯ ವಾಸಸ್ಥಾನ, ದಕ್ಷಬ್ರಹ್ಮನ ಯಜ್ಞವನ್ನು ನಾಶಮಾಡಿದ ಈಶ್ವರನ ಹಣೆಗಣ್ಣು ಇಲ್ಲಿ ಮನ್ಮಥನನ್ನು ಬೂದಿಮಾಡಿದುದು, ಶಿವನ ಮುಂದೆ ತನ್ನ ಬಾಹುಬಲದ ಹೆಮ್ಮೆಯನ್ನೂ ಅತಿಶಕ್ತಿಯನ್ನೂ ತೋರಿಸುವ ಆಶೆಯಿಂದ ಈ ಪರ್ವತವನ್ನು ಕಿತ್ತು ಹೊತ್ತು ಮೇಲಕ್ಕೆತ್ತಲು ಈಶ್ವರನು ಮೆಚ್ಚಿ ಲಂಕಾಪತಿಯಾದ ರಾವಣನಿಗೆ ಶಿವನು ಸಂತೋಷದಿಂದ ವರವನ್ನು ಕೊಟ್ಟನು.
ಚಂ|| ತೊರೆ ತೊರೆಯೆಂಬ ಮಾತನಿನಿತಿಲ್ಲದೊಡಾಂ ತೊರೆವೆಂ ದಲೆಂದೊಡಾ
ತೊರೆಯೊಳೆ ಪೋಯ್ತು ಸೂರುಳನೆ ಸೂರುಳವೇವುವೊ ನಂಬೆನೆಂಬುದುಂ|
ಕರೆಗೊರಲಾತನಾತ್ಮ ವಿಟತತ್ತ್ವಮನುಂಟೊಡೆತಾಗಿ ಮಾಡಿ ಬಾಂ
ದೊರೆಯನೆ ಪೊತ್ತು ಗೌರಿಗೆ ಕವಲ್ದೊಗೆಯ್ಸಿದನೀ ಪ್ರದೇಶದೊಳ್|| ೭೫ ||
ಪದ್ಯ-೭೫:ಪದವಿಭಾಗ-ಅರ್ಥ:ತೊರೆ (ಬಿಡು) ತೊರೆಯೆಂಬ ಮಾತನು (ನದಿಯೆಂಬ/ ಗಂಗೆಯೆಂಬ ಮಾತನ್ನು) ಇನಿತಿಲ್ಲದೊಡೆ ಆಂ ತೊರೆವೆಂ (ಇಷ್ಟೂ ಮಾಡದಿದ್ದರೆ ನಾನು ಬಿಡುವೆನು, ದಲ್ ನಿಜವಾಗಿಯೂ!) ಎಂದೊಡೆ ಆ ತೊರೆಯೊಳೆ ಪೋಯ್ತು ಸೂರುಳನೆ (ಆ ನಿನ್ನ ಪ್ರತಿಜ್ಞೆಯು ಆ ನದಿಯ ಜೊತೆಯಲ್ಲಿಯೇ ಹೋಯಿತು,) ಸೂರುಳವೇವುವೊ ನಂಬೆನು ಎಂಬುದುಂ(ಆ ಪ್ರತಿಜ್ಞೆಯದೇನು ನಾನು ನಂಬುವುದಿಲ್ಲ ಎನ್ನಲು) ಕರೆಗೊರಲಾತನು (ಶಿವನು) ಆತ್ಮ ವಿಟತತ್ತ್ವಮನು (ತನ್ನ ಪ್ರೇಮ ವಿದ್ಯೆಯನ್ನು) ಉಂಟೊಡೆ ತಾಗಿ ಮಾಡಿ (ಅವುದಾದರೆ ಆ ತತ್ವ ಇದೆ ಎಂದು ಮಾಡಿ ) ಬಾಂದೊರೆಯನೆ ಪೊತ್ತು (ಶಿವನು ತೊರೆಯನೆ ಹೊತ್ತು -ಗಂಗೆಯನ್ನು ಹೊತ್ತು) ಗೌರಿಗೆ- ಗಂಗೆಯನ್ನು ಬಿಟ್ಟೆನೆಂದು ತೋರಿಸಲು- ಕವಲು ತೊರೆ ಗೆಯ್ಸಿದನು (ಗಂಗೆಯ ಒಂದು ಕವಲು ಧಾತೆಯನ್ನು ಹರಿಸಿದನು) ಈ ಪ್ರದೇಶದೊಳ್
ಪದ್ಯ-೭೫:ಅರ್ಥ:ಗಂಗೆಯ ಮೇಲಿನ ಸವ ತಿಮತ್ಸರದಿಂದ ಪಾರ್ವತಿ ಹೇಳುವಳು: ನದಿ (ಗಂಗೆ)ಯೆಂಬ ಮಾತನ್ನು ತಕ್ಷಣ ಬಿಟ್ಟುಬಿಡು. ಹಾಗಿಲ್ಲವಾದರೆ ನಾನು ಖಂಡಿತವಾಗಿಯೂ ನಿನ್ನನ್ನು ಬಿಟ್ಟುಬಿಡುತ್ತೇನೆ. ಎಂದು ಹೇಳಿದಳು. ಶಿವನು ಆ ನಿನ್ನ ಪ್ರತಿಜ್ಞೆಯು ಆ ನದಿಯ ಜೊತೆಯಲ್ಲಿಯೇ ಹೋಯಿತು, ಎಂದನು. ಗೌರಿಯು ಆ ಪ್ರತಿಜ್ಞೆಯದೇನು ನಾನು ನಂಬುವುದಿಲ್ಲ ಎನ್ನಲು ಕಪ್ಪು ಕೊರಳಿನ ಈಶ್ವರನು ಆ ಗೌರಿಯನ್ನು ನಂಬಿಸುವುದಕ್ಕಾಗಿಯೂ ತನ್ನ ವಿಟವಿದ್ಯೆಯನ್ನು ಪ್ರದರ್ಶಿಸುವುದಕ್ಕಾಗಿ ಗಂಗೆಯನ್ನು ತಲೆಯಲ್ಲಿ ಮರೆಮಾಡಿ ಇಟ್ಟುಕೊಂಡು ಈ ಸ್ಥಳದಲ್ಲಿ ಕವಲೊಡೆದ ಗಂಗೆಯ ಒಂದು ಕವಲು ಧಾರೆಯನ್ನು ಭೂಮಿಗೆ ಹರಿಸಿದನು. ಅಂದರೆ ತಲೆಯಲ್ಲಿಯೇ ಗಂಗೆಯನ್ನಿಟ್ಟುಕೊಂಡು ಕವಲೊಡೆದ ಒಂದು ಪ್ರವಾಹವನ್ನು ಹೊರಕ್ಕೆ ಬಿಟ್ಟನು. (ತಾತ್ಪರ್ಯ: ಶಿವನು ಇಲ್ಲಿ ತನ್ನ ಜಟೆಯಿಂದ ಗಂಗೆಯ ಒಂದು ಸಣ್ಣ ಪ್ರವಾಹವನ್ನು ಹರಿಸಿದನು.)
ವ|| ಎಂದು ಗುಹ್ಯಕಂ ಕೈಲಾಸಶೈಲದೆಲ್ಲೆಡೆಗಳುಮಂ ವಿಕ್ರಮಾರ್ಜುನಂಗೆ ತೋಱುತ್ತುಂ ಬಂದು-
ವಚನ:ಪದವಿಭಾಗ-ಅರ್ಥ:ಎಂದು ಗುಹ್ಯಕಂ ಕೈಲಾಸ ಶೈಲದ ಎಲ್ಲೆಡೆಗಳುಮಂ ವಿಕ್ರಮಾರ್ಜುನಂಗೆ ತೋಱುತ್ತುಂ ಬಂದು-
ವಚನ:ಅರ್ಥ:ಎಂದು ಗುಹ್ಯಕನು ಕೈಲಾಸಪರ್ವತದ ಎಲ್ಲಾ ಸ್ಥಳಗಳನ್ನೂ ಅರ್ಜುನನಿಗೆ ತೋರಿಸುತ್ತಾ ಬಂದನು.
ಉ|| ಸಾಳ ತಮಾಳ ಕಾನನಭರೋದ್ಧತ ಸಿಂಧುರಕಂಠಗರ್ಜನಾ
ಭೀಳಮನಂಬರೇಚರವಧೂಕರಪಲ್ಲವಸಂಚಳಲ್ಲತಾಂ|
ದೋಳಮನಾಶ್ರಿತಾದ್ರಿ ನದ ಕೂಳಮನತ್ಯಧರೀಕೃತಾನ್ಯ ಕು
ತ್ಕೀಳಮನಿಂದುಕಾಂತ ಸುಸಲೀಳಮನೆಯ್ದಿನಿಂದ್ರಕೀಳಮಂ|| ೭೬ ||
ಪದ್ಯ-೭೬:ಪದವಿಭಾಗ-ಅರ್ಥ:ಸಾಳ (ತೇಗ) ತಮಾಳ (ಹೊಂಗೆ)ಕಾನನ, ಭರೋದ್ಧತ (ಭರ-ತುಂಬಿದ, ಉದ್ಧತ -ಸೊಕ್ಕಿದ) ಸಿಂಧುರಕಂಠಗರ್ಜನ (ಸಿಂಧುರ-ಆನೆಗಳ ಕಂಠದ ಘೀಳು ಸದ್ದು ) ಆಭೀಳಮಂ (ಭಯಂಕರ), ಅಂಬರೇಚರ ವಧೂಕರ ಪಲ್ಲವ (ಆಕಾಶಗಾಮಿಗಳಾದ ಖೇಚರಸ್ತ್ರೀಯರ ಚಿಗುರಿನಂತಿರುವ ಕೈಗಳಿಂದ) ಸಂಚಳಲ್ಲತಾಂದೋಳಮನಾಶ್ರಿತಾದ್ರಿ (ಸಂಚಲತ್ -ಅಲುಗುತ್ತಿರುವ, ಲತಾಂದೋಳಂ-ಬಳ್ಳಿಗಳ ಉಯ್ಯಾಲೆಯು) ನದ ಕೂಳಮಂ (ನದಿಯ ತೀರವನ್ನು) ಅತ್ಯಧರೀಕೃತ (ಅತಿ ಅದರೀಕೃತ-ಕಡಿಮೆಮಾಡವ, ಕೀಳುಮಾಡುವ) ಅನ್ಯ ಕುತ್ಕೀಳಮಂ (ಬೇರೆ ಸಣ್ಣ ಬೆಟ್ಟಗಳನ್ನು) ಇಂದುಕಾಂತ (ಚಂದ್ರಕಾಂತ ಶಿಲೆಯ) ಸುಸಲೀಳಮನು ಎಯ್ದಿಂ ಇಂದ್ರಕೀಳಮಂ (ಸುಸಶೀಲವಾದ-ಚೆನ್ನಾದ ಉತ್ತಮ ಲೀಲೆಯುಳ್ಳ ಇಂದ್ರಕೀಲವನ್ನು ಎಯ್ದಿಂ-ತಲುಪಿದನು)
ಪದ್ಯ-೭೬:ಅರ್ಥ: ಅಲ್ಲಿ ಒತ್ತಾಗಿ ಬೆಳೆದ ತೇಗ ಮತ್ತು ಹೊಂಗೆಯ ಮರಗಳಿಂದ ತುಂಬಿದ ಕಾಡಿನಲ್ಲಿ ಸೊಕ್ಕಿದ ಮದ್ದಾನೆಗಳ ಕಂಠದ ಘೀಳಿಡುವಿಕೆಯ ಭಯಂಕರವಾಗಿದ್ದು, ಆಕಾಶಗಾಮಿಗಳಾದ ಖೇಚರಸ್ತ್ರೀಯರ ಚಿಗುರಿನಂತಿರುವ ಕೈಗಳಿಂದ ಚಲಿಸಲ್ಪಟ್ಟ ಬಳ್ಳಿಗಳ ಉಯ್ಯಾಲೆಗಳನ್ನುಳ್ಳುದ್ದೂ (ತನ್ನ ಔನ್ನತ್ಯದಿಂದ) ಇತರ ಎಲ್ಲ ಪರ್ವತಗಳನ್ನೂ ಬಹು ಕೀಳುಮಾಡುವ ಚಂದ್ರಕಾಂತಶಿಲೆಯ ಉತ್ತಮ ಲೀಲೆಯುಳ್ಳ ಇಂದ್ರಕೀಲಪರ್ವತವನ್ನು ಅರ್ಜುನನು ಬಂದು ತಲುಪಿದನು.
ಮ|| ಕಮಳಾಂತರ್ಗತ ಗಂಧ ಬಂಧು ನಯದಿಂ ಬಂದಪ್ಪಿಕೊಳ್ವಂತೆ ಗಾ
ಳಿ ಮನಂಗೊಂಡಿರೆ ತೀಡೆ ಭೃಂಗರುತಿಗಳ್ ಮಾಂಗಲ್ಯಗೇಯಂಗಳಂ|
ದಮನಂದೀಯೆ ಮಡಲ್ತು ಪೂತ ಲತೆಗಳ್ ಕೆಯ್ಗೆಯ್ದು ಪೂನೀಡಲ್ಕ
ರ್ಘ್ಯಮನೀವಂತೆವೊಲಾದುದದ್ರಿ ಹರಿಗಂಗಿಷ್ಟಾರ್ಥಸಂಸಿದ್ಧಿಯಂ|| ೭೭ ||
ಪದ್ಯ-೭೭:ಪದವಿಭಾಗ-ಅರ್ಥ:ಕಮಳ ಅಂತರ್ಗತ ಗಂಧ ಬಂಧು ನಯದಿಂ (ಕಮಲದ ಹೂವಿನಲ್ಲಿರುವ ಪರಿಮಳಕ್ಕೆ ಸ್ನೇಹಿತನಾದ ವಾಯುವು ವಿನಯದಿಂದ) ಬಂದು ಅಪ್ಪಿಕೊಳ್ವಂತೆ ಗಾಳಿ ಮನಂಗೊಂಡಿರೆ ತೀಡೆ (ಬಂದು ಅಪ್ಪಿಕೊಳ್ಳುವ ಹಾಗೆ ಆಹ್ಲಾದಕರವಾಗಿ ಬೀಸಿ ತಾಗಲು) ಭೃಂಗರುತಿಗಳ್ (ದುಂಬಿಯ ಸದ್ದು ) ಮಾಂಗಲ್ಯ ಗೇಯಂಗಳ ಅಂದಮನು ಅಂದು ಈಯೆ (ಮಂಗಳವಾದ್ಯದ ಸೊಗಸನ್ನುಂಟುಮಾಡುತ್ತಿರಲು-ಸೊಗಸನ್ನು ಕೊಡಲು) ಮಡಲ್ತು (ಹಬ್ಬಿ) ಪೂತ ಲತೆಗಳ್ (ಹೂವು ಬಿಟ್ಟ ಬಳ್ಳಿಗಳು) ಕೆಯ್ಗೆಯ್ದು ಪೂನೀಡಲ್ಕೆ ಅರ್ಘ್ಯಮನು ಈವಂತೆವೊಲಾದುದು (ಹಬ್ಬಿ ಹೂವಿನಿಂದ ಕೂಡಿರುವ ಬಳ್ಳಿಗಳು ಅಲಂಕಾರ ಮಾಡಿಕೊಂಡು ಕೈಗೆ ನೀರನ್ನು ಕೊಡುವ ಹಾಗೆ ಹೂವನ್ನು ಕೊಡಲು ) ಅದ್ರಿ (ಪರ್ವತ) ಹರಿಗಂಗೆ (ಅರ್ಜುನನಿಗೆ) ಇಷ್ಟಾರ್ಥ ಸಂಸಿದ್ಧಿಯಂ (ಅರ್ಜುನನಿಗೆ ಆ ಪರ್ವತವು ಇಷ್ಟಾರ್ಥಸಿದ್ಧಿಯನ್ನುಂಟು ಮಾಡುವ ಹಾಗೆ ಕಂಡಿತು.)
ಪದ್ಯ-೭೭:ಅರ್ಥ: ಕಮಲದ ಹೂವಿನಲ್ಲಿರುವ ಪರಿಮಳಕ್ಕೆ ಸ್ನೇಹಿತನಾದ ವಾಯುವು ವಿನಯದಿಂದ ಬಂದು ಅಪ್ಪಿಕೊಳ್ಳುವ ಹಾಗೆ ಆಹ್ಲಾದಕರವಾಗಿ ಬೀಸಿ ತಾಗಲು, ದುಂಬಿಯ ಸದ್ದು ಮಂಗಳವಾದ್ಯದ ಸೊಗಸನ್ನುಂಟುಮಾಡುತ್ತಿರಲು ಹಬ್ಬಿ ಹೂವಿನಿಂದ ಕೂಡಿರುವ ಬಳ್ಳಿಗಳು ಅಲಂಕಾರ ಮಾಡಿಕೊಂಡು ಕೈಗೆ ನೀರನ್ನು ಕೊಡುವ ಹಾಗೆ ಹೂವನ್ನು ಕೊಡಲು ಅರ್ಜುನನಿಗೆ ಆ ಪರ್ವತವು ಇಷ್ಟಾರ್ಥಸಿದ್ಧಿಯನ್ನುಂಟು ಮಾಡುವ ಹಾಗೆ ಕಂಡಿತು.
ವ|| ಆಗಳ್ ಗುಹ್ಯಕನು ಇಂದ್ರಸುತನನಿನಿಂದ್ರಕೀಲನಗೇಂದ್ರದ ಚಂದ್ರಕಾಂತಶಿಲಾ ತಲದೊಳಿೞಿಪಿ ಬೀಳ್ಕೊಂಡು ಪೋದನಿತ್ತ ವಿಕ್ರಮಾರ್ಜುನಂ ಪರಂತಪಂ ತಪೋನಿಯಮ ನಿಯಮಿತನಾಗಿ-
ವಚನ:ಪದವಿಭಾಗ-ಅರ್ಥ:ಆಗಳ್ ಗುಹ್ಯಕನು ಇಂದ್ರಸುತನನು ಇಂದ್ರಕೀಲ ನಗೇಂದ್ರದ ಚಂದ್ರಕಾಂತಶಿಲಾ ತಲದೊಳು ಇೞಿಪಿ (ಚಂದ್ರಕಾಂತಶಿಲಾ ತಲದಲ್ಲಿ ಇಳಿಸಿ) ಬೀಳ್ಕೊಂಡು ಪೋದನು, ಇತ್ತ ವಿಕ್ರಮಾರ್ಜುನಂ ಪರಂತಪಂ (ಶತ್ರುಗಳನ್ನು ಸುಡುವವನು) ತಪೋನಿಯಮ ನಿಯಮಿತನಾಗಿ- (ಇದ್ದನು)
ವಚನ:ಅರ್ಥ:ಆಗ ಗುಹ್ಯಕನು ಅರ್ಜುನನನ್ನು ಶ್ರೇಷ್ಠವಾದ ಇಂದ್ರಕೀಲಪರ್ವತದ ಚಂದ್ರಕಾಂತಶಿಲಾ ತಲದಲ್ಲಿ ಇಳಿಸಿ ಅವನ ಅಪ್ಪಣೆ ಪಡೆದು ಹೋದನು. ಈ ಕಡೆ ಅರ್ಜುನನು ತಪೋನಿಯಮದಲ್ಲಿ ಇದ್ದನು.
ಮ|| ಸ್ರ|| ಭಸಿತಂ ಕರ್ಪೂರ ಕಾಳಾಗರು ಬಹುಳ ರಜಂ ವಲ್ಕಲಂ ಕಲ್ಪವೃಕ್ಷ
ಪ್ರಸವಂ ಯಜ್ಞೋಪವೀತಂ ಕನಕ ಕಮಳನಾಳೋತ್ಕರಂ ನಿಚ್ಚನಿಚ್ಚಂ|
ಪೊಸತೆಂಬಂತಾಗೆ ಪಾರ್ಥಂಗೊಸೆದು ತುಡಲುಡಲ್ ಪೂಸಲುಂ ಸಾಲ್ವಿನಂ ಸಾಧಿ
ಸಿತುದ್ಯದ್ಭಕ್ತಿ ಭಾರಾನತ ವನವನಿತಾವೃಂದಮಾನಂದದಿಂದಂ|| ೭೮ ||
ಪದ್ಯ-೭೮:ಪದವಿಭಾಗ-ಅರ್ಥ:ಭಸಿತಂ (ಬೂದಿ-ಭಸ್ಮ) ಕರ್ಪೂರ ಕಾಳಾಗರು ಬಹುಳ ರಜಂ (ಅಗರಿನ ವಿಶೇಷ ಪುಡಿ,) ಕಲ್ಪವೃಕ್ಷಪ್ರಸವಂ ವಲ್ಕಲಂ (ಕಲ್ಪವೃಕ್ಷದಿಂದ ಹುಟ್ಟಿದ ನಾರು ಮಡಿ) ಯಜ್ಞೋಪವೀತಂ ಕನಕ ಕಮಳನಾಳ ಉತ್ಕರಂ (ಚಿನ್ನದ ಕಮಲದ ದಂಟಿನ ನಾರಿನ ಉಪವೀತ) ನಿಚ್ಚನಿಚ್ಚಂ ಪೊಸತೆಂಬಂತೆ ಆಗೆ (ದಿನದಿನೂ ಹೊಸತೆಂಬ ಹಾಗೆ) ಪಾರ್ಥಂಗೆ ಒಸೆದು ತುಡಲುಡಲ್ ಪೂಸಲುಂ ಸಾಲ್ವಿನಂ (ಅರ್ಜುನನಿಗೆ ಸಂತಸದಿಂದ ಉಡಲು-ತೊಡಲು ಹಚ್ಚಿಕೊಳ್ಳಲುಭಸ್ಮ, ಇವುಗಳನ್ನು ಸಾಕಾಗುವಷ್ಟನ್ನು) ಸಾಧಿಸಿತು (ಒದಗಿಸಿತು.) ಉದ್ಯದ್ಭಕ್ತಿ (ಅತಿಭಕ್ತಿಯ) ಭಾರಾನತ (ಭಾರದಿಂದ ಬಗ್ಗಿದ) ವನವನಿತಾ ವೃಂದಂ ( ವನದೇವತಾಸ್ತ್ರೀಯರ ಸಮೂಹವು) ಆನಂದದಿಂದಂ|
ಪದ್ಯ-೭೮:ಅರ್ಥ: ಅರ್ಜುನನ ಬಗೆಗೆ ಅತಿಭಕ್ತಿಯ ಭಾರದಿಂದ ಬಗ್ಗಿದ ವನದೇವತಾಸ್ತ್ರೀಯರ ಸಮೂಹವು ಅವನಿಗೆ ದಿನದಿನೂ ಹೊಸತೆಂಬ ಹಾಗೆ ಉಡಲು-ತೊಡಲು ಹಚ್ಚಿಕೊಳ್ಳಲುವಿಭೂತಿ, ಪಚ್ಚಕರ್ಪೂರ, ಕರಿಯ ಅಗರಿನ ಶ್ರೇಷ್ಠವಾದ ಧೂಳು, ಕಲ್ಪವೃಕ್ಷದಿಂದ ಹುಟ್ಟಿದ ನಾರುಮಡಿ, ಚಿನ್ನದ ಕಮಲದ ದಂಟಿನ ನಾರಿನ ಉಪವೀತ/ ಜನಿವಾರ ಇವುಗಳನ್ನು ಆನಂದದಿಂದ ಒದಗಿಸಿತು.
ಚಂ|| ಅದಿರದ ಚಿತ್ತಮಳ್ಕದ ಮನಂ ಬಗೆಗೊಳ್ಳದ ಮೋಹಮೆತ್ತಿ ಕ
ಟ್ಟಿದ ಜಡೆ ತೊಟ್ಟ ರತ್ನಕವಚಂ ಕೊರಲೊಳ್ ಸಲೆ ಕೋದ ಬಿಲ್ ಪ್ರಯ|
ತ್ನದೆ ಬಿಗಿದಿರ್ದೆರೞ್ದೊಣೆ ಮಿಸುಪ್ಪಸಿಖೇಟಕಮಿಂತಿವೊಂದುಂ ಗುಂ
ದದೆ ನಿಲೆ ನೋೞ್ಪ ನೋಟಕರ್ಗೆ ಸೌಮ್ಯಭಯಂಕರನಾದನರ್ಜುನಂ|| ೭೯ ||
ಪದ್ಯ-೭೯:ಪದವಿಭಾಗ-ಅರ್ಥ:ಅದಿರದ ಚಿತ್ತಂ ಅಳ್ಕದ ಮನಂ, ಬಗೆಗೊಳ್ಳದ ಮೋಹಂ (ಮನಸ್ಸನ್ನು ಅವರಿಸದ ಮೋಹ) ಎತ್ತಿ ಕಟ್ಟಿದ ಜಡೆ, ತೊಟ್ಟ ರತ್ನಕವಚಂ, ಕೊರಲೊಳ್ ಸಲೆ ಕೋದ ಬಿಲ್, ಪ್ರಯತ್ನದೆ ಬಿಗಿದಿರ್ದ ಎರೞ್ದೊಣೆ (ಎರಳ್ ದೊಣೆ -ಎರಡು ಬತ್ತಳಿಕೆ) ಮಿಸುಪ್ಪ ಅಸಿ ಖೇಟಕಂ (ಹೊಳೆಯುವ ಕತ್ತಿ ಗುರಾಣಿಗಳು) ಇಂತು ಇವೊಂದುಂ ಗುಂದದೆ ( ಹೀಗೆ ಇವು ಸ್ವಲ್ಪವೂ ಕಡಿಮೆ ಇಲ್ಲದೆ) ನಿಲೆ (ಇರಲು) ನೋೞ್ಪ ನೋಟಕರ್ಗೆ ಸೌಮ್ಯ ಭಯಂಕರನಾದನು ಅರ್ಜುನಂ (ನೋಡುವವರಿಗೆ ಅರ್ಜುನನು ಸೌಮ್ಯವಾಗಿಯೂ ಭಯಂಕರವಾಗಿಯೂ ಕಂಡನು )
ಪದ್ಯ-೭೯:ಅರ್ಥ: ಚಂಚಲವಾಗದ ಚಿತ್ತ, ಹೆದರದ ಅಳುಕದ ಮನಸ್ಸು, ಮನಸ್ಸನ್ನು ಅವರಿಸದಿರುವ ಮೋಹ (-ವಿರಕ್ತಿ), ಎತ್ತಿಕಟ್ಟಿರುವ ಜಡೆ, ತೊಟ್ಟಿರುವ ರತ್ನಖಚಿತವಾದ ಕವಚ, ಕತ್ತಿನಲ್ಲಿ ಚೆನ್ನಾಗಿ ಸಿಕ್ಕಿಸಿಕೊಂಡ ಬಿಲ್ಲು, ಪ್ರಯತ್ನಪೂರ್ವಕವಾಗಿ ಬಿಗಿದುಕೊಂಡಿರುವ ಎರಡು ಬತ್ತಳಿಕೆಗಳು, ಹೊಳೆಯುವ ಕತ್ತಿ ಗುರಾಣಿಗಳು, ಹೀಗೆ ಇವು ಸ್ವಲ್ಪವೂ ಕಡಿಮೆಇಲ್ಲದೆ ನೆಲಸಿರಲು, ನೋಡುವವರಿಗೆ ಅರ್ಜುನನು ಸೌಮ್ಯವಾಗಿಯೂ ಭಯಂಕರವಾಗಿಯೂ ಕಂಡನು.
ವ|| ಅಂತು ಪರಾಶರನಂದನನುಪದೇಶದೊಳ್ ತಪನಪ್ರಭಂ ತಪಂಗೆಯ್ಯಲ್ ತಗುಳ್ದೊಡೆ-
ವಚನ:ಪದವಿಭಾಗ-ಅರ್ಥ:ಅಂತು ಪರಾಶರನಂದನನ (ವ್ಯಾಸನ) ಉಪದೇಶದೊಳ್ ತಪನಪ್ರಭಂ (ಸೂರ್ಯನ ಕಾಂತಿಯ ಅರ್ಜುನನು) ತಪಂ ಗೆಯ್ಯಲ್ ತಗುಳ್ದೊಡೆ-
ವಚನ:ಅರ್ಥ:|| ಹಾಗೆ ವ್ಯಾಸಮಹರ್ಷಿಯ ಉಪದೇಶದಿಂದ ಸೂರ್ಯನ ಕಾಂತಿಯನ್ನುಳ್ಳ ಅರ್ಜುನನು ತಪಸ್ಸು ಮಾಡಲು ಪ್ರಾರಂಭಿಸಿದನು- ಪ್ರಾರಂಭಿಸಿದಾಗ
ಚಂ|| ಕರಿಣಿಯ ಸೀಯನಪ್ಪ ಮೊಲೆವಾಲ್ಗೆ ತಗುಳ್ದುದು ತತ್ಕಿಶೋರ ಕೇ
ಸರಿ ಹರಿಪೋತಮಂ ಬೆದಱುತುಂ ಕರಿಪೋತಮವುಂಡುಗರ್ಚಿ ಕೇ|
ಸರಿಣಿಯ ಕೆಚ್ಚಲಂ ತುಡುಕುತುಂ ಪರಿದತ್ತು ಕುರಂಗಯೂಧದೊಳ್
ಬೆರಸಿದುವಂದು ಪೆರ್ಬುಲಿಗಳಿಂದ್ರತನೂಜತಪಪ್ರಭಾವದಿಂ|| ೮೦ ||
ಪದ್ಯ-೮೦:ಪದವಿಭಾಗ-ಅರ್ಥ:ಕರಿಣಿಯ (ಕರಿ-ಕರಿಣಿ- ಹೆಣ್ಣಾನೆಯ) ಸೀಯನಪ್ಪ ಮೊಲೆವಾಲ್ಗೆ (ಸಿಹಿಯಾದ ಮೊಲೆಹಾಲಿಗಾಗಿ) ತಗುಳ್ದುದು ತತ್ ಕಿಶೋರ ಕೇಸರಿ (ಆ ಸಿಂಹದ ಮರಿಗಳು ಅದರ ಹಿಂದೆಯೇ ಹೋದುವು) ಹರಿಪೋತಮಂ ಬೆದಱುತುಂ (ಸಿಂಹದ ಮರಿಗಳನ್ನು ಹೆದರಿಸುತ್ತ) ಕರಿಪೋತಂ ಅವುಂಡುಗರ್ಚಿ ಕೇಸರಿಣಿಯ ಕೆಚ್ಚಲಂ ತುಡುಕುತುಂ ಪರಿದತ್ತು (ಆನೆಯ ಮರಿಗಳು ಅವಡುಗಚ್ಚಿ ಹೆಣ್ಣು ಸಿಂಹದ ಕೆಚ್ಚಲನ್ನು ಹಿಡಿದುಕೊಳ್ಳುತ್ತ ಓಡಿದುವು.) ಕುರಂಗಯೂಧದೊಳ್ (ಕುರಂಗ- ಜಿಂಕೆ) ಬೆರಸಿದುವಂದು ಪೆರ್ಬುಲಿಗಳ್ (ಹೆಬ್ಬುಲಿಗಳು ಜಿಂಕೆಯ ಸಮೂಹದಲ್ಲಿ ಬೆರಸಿಕೊಂಡವು.), ಇಂದ್ರತನೂಜ ತಪಪ್ರಭಾವದಿಂ (ಇಂದ್ರಪುತ್ರನಾದ ಅರ್ಜುನನ ತಪಸ್ಸಿನ ಪ್ರಭಾವದಿಂದ).
ಪದ್ಯ-೮೦:ಅರ್ಥ:ಇಂದ್ರಕೀಲದಲ್ಲಿ, ಇಂದ್ರನ ಮಗ ಅರ್ಜುನನ ತಪಸ್ಸಿನ ಪ್ರಭಾವದಿಂದ ಆ ಸಿಂಹದ ಮರಿಗಳು ಹೆಣ್ಣಾನೆಯ ಸಿಹಿಯಾದ ಮೊಲೆಹಾಲಿಗಾಗಿ ಅದರ ಹಿಂದೆಯೇ ಹೋದುವು. ಆನೆಯ ಮರಿಗಳು ಸಿಂಹದ ಮರಿಗಳನ್ನು ಹೆದರಿಸುತ್ತ ಅವಡುಗಚ್ಚಿ (ತುಟಿಯನ್ನು ಕಚ್ಚಿಕೊಂಡು) ಹೆಣ್ಣು ಸಿಂಹದ ಕೆಚ್ಚಲನ್ನು ಹಿಡಿದುಕೊಳ್ಳುತ್ತ ಓಡಿದುವು. ಹೆಬ್ಬುಲಿಗಳು ಜಿಂಕೆಯ ಸಮೂಹದಲ್ಲಿ ಬೆರಸಿಕೊಂಡವು.

ಅರ್ಜುನನ ತಪೋಭಂಗಕ್ಕೆ ಅಪ್ಸರೆಯರ ಆಗಮನ[ಸಂಪಾದಿಸಿ]

ವ|| ಮತ್ತಮಾ ಗಿರೀಂದ್ರಕಂದರದೊಳ್ ತಪಂಗೆಯ್ವ ತಪೋಧನರ ತಪಂಗಳೆಲ್ಲಮಾತನ ತಪೋಮಯಶಿಖಿಗಳಿಂ ಬೆಂದು ಬೆಂದ ನುಲಿಯಂತೇತರ್ಕಂ ಮುಟ್ಟಿಲ್ಲದೆ ಮುಟ್ಟಗಿಡೆ ದೇವೇಂದ್ರಂ ತನಗಾದ ಹೃತ್ಕಂಪದೊಳಮಾಸನಕಂಪದೊಳಂ ನರೇಂದ್ರತಾಪಸಂ ತನ್ನಿಂದ್ರತ್ವಮಂ ಕೊಳಲೆಂದು ತಪಂಗೆಯ್ದಪನೆಂಬ ಸಂಕೆಯೊಳ್ ತಪೋವಿಘಾತಂ ಮಾಡಿಮೆಂದು ತನ್ನ ನೆಚ್ಚಿನಚ್ಚರಸೆಯರು ಮನಾಱುಂ ಋತುಗಳುಮಂ ಗಂಧರ್ವರುಮಂ ಕಾಮದೇವನಂ ದಂಡನಾಯಕಂ ಮಾಡಿ ಪೇೞ್ದಾಗಳ್-
ವಚನ:ಪದವಿಭಾಗ-ಅರ್ಥ:ಮತ್ತಂ ಆ ಗಿರೀಂದ್ರ ಕಂದರದೊಳ್ (ಶ್ರೇಷ್ಠಪರ್ವತದ ಕಣಿವೆಗಳಲ್ಲಿ) ತಪಂ ಗೆಯ್ವ ತಪೋಧನರ ತಪಂಗಳೆಲ್ಲಂ (ತಪಸ್ಸು ಮಾಡುತ್ತಿದ್ದ ತಪೋಧನರ ತಪಸ್ಸುಗಳೆಲ್ಲವೂ )ಆತನ ತಪೋಮಯ ಶಿಖಿಗಳಿಂ (ಬೆಂಕಿಯಿಂದ) ಬೆಂದು ಬೆಂದ ನುಲಿಯಂತೆ ಏತರ್ಕಂ ಮುಟ್ಟಿಲ್ಲದೆ ಮುಟ್ಟಗಿಡೆ (ಸುಟ್ಟುಹೋಗಿ ಸುಟ್ಟ ಹಗ್ಗದಂತೆ ಉಪಯೋಗವಿಲ್ಲದೆ ನಿಷ್ಪ್ರಯೋಜನವಾಗಲು-) ದೇವೇಂದ್ರಂ ತನಗಾದ ಹೃತ್ಕಂಪದೊಳ್ (ದೇವೇಂದ್ರನು ತನಗುಂಟಾದ ಎದೆ ನಡುಕದಿಂದ) ಆಸನಕಂಪದೊಳಂ (ತನ್ನ ಸಿಂಹಾಸನದ ನಡುಗುವಿಕೆ) ನರೇಂದ್ರತಾಪಸಂ ತನ್ನಿಂದ್ರತ್ವಮಂ ಕೊಳಲೆಂದು ತಪಂಗೆಯ್ದಪನೆಂಬ ಸಂಕೆಯೊಳ್ (ಮನುಷ್ಯತಪಸ್ವಿಯು ತನ್ನ ಇಂದ್ರಪದವಿಯನ್ನು ಪಡೆಯಲು ತಪಸ್ಸು ಮಾಡುತ್ತಿದ್ದಾನೆಂಬ ಸಂದೇಹದಿಂದ) ತಪೋವಿಘಾತಂ ಮಾಡಿಮೆಂದು (ತಪಸ್ಸಿಗೆ ವಿಘ್ನಮಾಡಿ ಎಂದು) ತನ್ನ ನೆಚ್ಚಿನಚ್ಚರಸೆಯರು ಮನಾಱುಂ ಋತುಗಳುಮಂ (ತನಗೆ ಪರಮಪ್ರೀತಿಪಾತ್ರರಾದ ಅಪ್ಸರಸ್ತ್ರೀಯರನ್ನೂ ಆರು ಋತುಗಳನ್ನೂ) ಗಂಧರ್ವರುಮಂ ಕಾಮದೇವನಂ ದಂಡನಾಯಕಂ ಮಾಡಿ ಪೇೞ್ದಾಗಳ್- (ಗಂಧರ್ವರನ್ನೂ ಕಾಮದೇವನನ್ನು ದಂಡನಾಯಕನನ್ನಾಗಿ ಮಾಡಿ ಹೇಳಿಕಳುಹಿಸಿದಾಗ)
ವಚನ:ಅರ್ಥ:ಮತ್ತು ಆ ಶ್ರೇಷ್ಠಪರ್ವತದ ಕಣಿವೆಗಳಲ್ಲಿ ತಪಸ್ಸು ಮಾಡುತ್ತಿದ್ದ ತಪೋಧನರ ತಪಸ್ಸುಗಳೆಲ್ಲವೂ ಆತನ ತಪ್ಪಸ್ಸಿನಿಂದುಂಟಾದ ಬೆಂಕಿಯಿಂದ ಸುಟ್ಟುಹೋಗಿ ಸುಟ್ಟ ಹಗ್ಗದಂತೆ ಉಪಯೋಗವಿಲ್ಲದೆ ನಿಷ್ಪ್ರಯೋಜನವಾಗಲು, ದೇವೇಂದ್ರನು ತನಗುಂಟಾದ ಎದೆ ನಡುಕದಿಂದ ಮತ್ತು ತನ್ನ ಸಿಂಹಾಸನದ ನಡುಗುವಿಕೆಯಿಂದ ಮನುಷ್ಯತಪಸ್ವಿಯು ತನ್ನ ಇಂದ್ರಪದವಿಯನ್ನು ಪಡೆಯಲು ತಪಸ್ಸು ಮಾಡುತ್ತಿದ್ದಾನೆಂಬ ಸಂದೇಹದಿಂದ ಅವನ ತಪಸ್ಸಿಗೆ ವಿಘ್ನಮಾಡಿ ಎಂದು ತನಗೆ ಪರಮಪ್ರೀತಿಪಾತ್ರರಾದ ಅಪ್ಸರ ಸ್ತ್ರೀಯರನ್ನೂ ಆರು ಋತುಗಳನ್ನೂ ಗಂಧರ್ವರನ್ನೂ, ಕಾಮದೇವನನ್ನು ದಂಡನಾಯಕನನ್ನಾಗಿ ಮಾಡಿ ಹೇಳಿಕಳುಹಿಸಿದಾಗ-
ಚಂ|| ವನರುಹಗರ್ಬನೆಂಬವನ ಮುನ್ನಿನ ಗೆಯ್ದ ತಪಂ ತಿಲೋತ್ತಮಾಂ
ಗನೆಯಿನದಂತುಟಾದುದೆನೆ ಮತ್ತಿನ ಬೂತು ತಂಪಗಳೆಮ್ಮ ಪು|
ರ್ವಿನ ಕಡೆಯೊಂದು ಜರ್ವಿನೊಳೆ ತೀರ್ವುವವಲ್ಲದೆ ದೇವ ಬೆಂಬಲಂ
ಮನಸಿಜನೀಗಳಾಱು ಋತುವುಂ ನೆರವೆಂದೊಡೆ ಸೋಲದಿರ್ಪರಾರ್|| ೮೧ ||
ಪದ್ಯ-೮೧:ಪದವಿಭಾಗ-ಅರ್ಥ:ವನರುಹ ಗರ್ಬನೆಂಬವನ ಮುನ್ನಿನ ಗೆಯ್ದ ತಪಂ (ಹಿಂದೆ ತಾವರೆಯಲ್ಲಿ ಹುಟ್ಟಿದವನು ಮಾಡಿದ ತಪಸ್ಸು) ತಿಲೋತ್ತಮಾಂಗನೆಯಿಂ ಅದಂತುಟಾದುದೆನೆ (ತಿಲೋತ್ತಮೆಯಿಂದ ಅದು ಹಾಗೆ ನಷ್ಟ ಆಯಿತು ಎನ್ನುವಾಗ) ಮತ್ತಿನ ಬೂತು ತಂಪಗಳೆಮ್ಮ ಪುರ್ವಿನ ಕಡೆಯೊಂದು ಜರ್ವಿನೊಳೆ ತೀರ್ವುವವಲ್ಲದೆ (ಉಳಿದ ಪ್ರಾಣಿಗಳ ತಪಸ್ಸು ನಮ್ಮ ಹುಬ್ಬಿನ ಕೊನೆಯ ಒಂದು ಅಲುಗಾಟದಿಂದಲೇ ತೀರಿಹೋಗುವುದು) ದೇವ ಬೆಂಬಲಂ ಮನಸಿಜನು ಈಗಳಾಱು ಋತುವುಂ ನೆರವೆಂದೊಡೆ ಸೋಲದಿರ್ಪರಾರ್! (ಮತ್ತೆ ಈಗ ಮನ್ಮಥನ ಬೆಂಬಲವೂ ಆರುಋತುಗಳ ಸಹಾಯವೂ ಇರುವಾಗ ಸೋಲದಿರುವವರಾರಿದ್ದಾರೆ?)
ಪದ್ಯ-೮೧:ಅರ್ಥ: ಎಲೈ ಇಂದ್ರದೇವನೇ ಹಿಂದೆ ಬ್ರಹ್ಮನು ಮಾಡಿದ ತಪಸ್ಸು ತಿಲೋತ್ತಮೆಯಿಂದ ಅದು ಹಾಗೆ ನಷ್ಟ ಆಯಿತು ಎನ್ನುವಾಗ, ಉಳಿದ ಪ್ರಾಣಿಗಳ ತಪಸ್ಸು ನಮ್ಮ ಹುಬ್ಬಿನ ಕೊನೆಯ ಒಂದು ಅಲುಗಾಟದಿಂದಲೇ ತೀರಿಹೋಗುವುದು. ಮತ್ತೆ ಈಗ ಮನ್ಮಥನ ಬೆಂಬಲವೂ ಆರುಋತುಗಳ ಸಹಾಯವೂ ಇರುವಾಗ ಸೋಲದಿರುವವರಾರಿದ್ದಾರೆ!
ವ|| ಎಂದು ದೇವಪ್ಸರೋವೃಂದಂ ಎನಿತಾನುಮಂದದಿಂ ಪುರಂದರನ ಪಕ್ಕದೆ ಪೂಣ್ದು ಬಂದು ಗಗನತಳಮೆಲ್ಲಂ ತಮ್ಮ ತೊಟ್ಟ ದಿವ್ಯಾಭರಣಕಿರಣಂಗಳೊಳ್ ತೊಳಗಿ ಬೆಳಗೆ ಬಂದು ಮಹೀತಳಕ್ಕವತರಿಸಿ ನದನದೀಪುಳಿನಪರಿಸರಪ್ರದೇಶಂಗಳೊಳಂ ಕದಳೀವನಂಗಳೊಳಂ ಕನಕಲತಾಮಂಟಪಂಗಳೊಳಮಿಡಿದೆಡೆಗೊಳೆ ಪೂತ ಮಲ್ಲಿಗೆಯ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ಗಗನಗಮನಜನಿತಶ್ರಮವನಾ ಗಜಗಮನಯರಾಱಿಸಿ ಪಾಲ್ಗಡಲೊಳ ಮಮರ್ದಿನೊಳಂ ಪುಟ್ಟಿದ ಕಳ್ಳ ಸೊರ್ಕಿನೊಳಮುಂತೆ ನಡುಗುವ ಬಡನಡುಗಳ್ಗೆ ನಡುಕಮುಮನುಂತೆ ಪೊಡರ್ವ ಪುರ್ವುಗಳ್ಗೆ ಪೊಡರ್ಪುಮನುಂತೆ ಸೊಗಯಿಸುವ ಬೆಳರ್ವಾಯ್ಗಳ್ಗೆ ತನಿಗೆತ್ತುಮನುಂತೆ ಪೊಳೆವ ನಿಡಿಯಲರ್ಗಣ್ಗಳ್ಗೆ ಮಳಮಳಿಪ ನೋಟಮುಮನುಂತೆ ತೊದಳಿಸುವ ನುಡಿವ ನುಡಿಗಳ್ಗೆ ತೊದಳುಮನೆಕ್ಕೆಯಿಂ ತಳೆಯೆ ನೆರೆಯೆ ಕೆಯ್ಗೆಯ್ದು ಮುನ್ನಮಾಱುಂ ಋತುಗಳುಮಂ ನಿಮ್ಮ ನಿಮ್ಮ ಸ್ವರೂಪಂಗಳುಮನಾತನಿರ್ದಲ್ಲಿಗೆ ಪೋಗಿ ತೋಱಮೆಂದಾಗಳ್-
ವಚನ:ಪದವಿಭಾಗ-ಅರ್ಥ:ಎಂದು ದೇವ ಅಪ್ಸರ ವೃಂದಂ ಎನಿತಾನುಮಂದದಿಂ ಪುರಂದರನ ಪಕ್ಕದೆ ಪೂಣ್ದು ಬಂದು (ಷ್ಟೋ ರೀತಿಯಲ್ಲಿ ಪ್ರತಿಜ್ಞೆಮಾಡಿ ಬಂದು ಆ) ಗಗನತಳಂ ಎಲ್ಲಂ ತಮ್ಮ ತೊಟ್ಟ ದಿವ್ಯ ಆಭರಣಕಿರಣಂಗಳೊಳ್ ತೊಳಗಿ ಬೆಳಗೆ (ದಿವ್ಯವಾದ ಒಡವೆಗಳ ಕಾಂತಿಯಿಂದ ಬೆಳಗುತ್ತಿರಲು), ಬಂದು ಮಹೀತಳಕ್ಕೆ ಅವತರಿಸಿ (ಭೂಮಿಗೆ ಇಳಿದು) ನದನದೀ ಪುಳಿನಪರಿಸರ ಪ್ರದೇಶಂಗಳೊಳಂ (ನದನದಿಗಳ ಮರಳು ದಿಣ್ಣೆಗಳಲ್ಲಿಯೂ) ಕದಳೀವನಂಗಳೊಳಂ ಕನಕಲತಾಮಂಟಪಂಗಳೊಳಂ ಇಡಿದು ಎಡೆಗೊಳೆ (ಬಾಳೆಯ ತೋಟಗಳಲ್ಲಿಯೂ ಹೊಂಬಣ್ಣದ ಲತಾಮಂಟಪಗಳಲ್ಲಿಯೂ ಒತ್ತಾಗಿ ಸೇರಿ) ಪೂತ ಮಲ್ಲಿಗೆಯ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ (ಹೂ ಬಿಟ್ಟಿರುವ ಲತಾಗೃಹಗಳಲ್ಲಿಯೂ ಹೂವಿನಗೊಂಚಲುಗಳಲ್ಲಿಯೂ) ಗಗನ ಗಮನ ಜನಿತ ಶ್ರಮವನು ಆ ಗಜಗಮನಯರಾಱಿಸಿ (ಆಕಾಶದಲ್ಲಿ ಸಂಚರಿಸಿದ ಬಳಲಿಕೆಯನ್ನು ಆನೆಯಂತೆ ನಡಗೆಯುಳ್ಳ ಅಪ್ಸರಸ್ತ್ರೀಯರು ಪರಿಹರಿಸಿಕೊಂಡರು) ಪಾಲ್ಗಡಲೊಳಂ ಅಮರ್ದಿನೊಳಂ ಪುಟ್ಟಿದ ಕಳ್ಳ ಸೊರ್ಕಿನೊಳಂ (ಕ್ಷೀರಸಮುದ್ರದಲ್ಲಿ ಹುಟ್ಟಿದ ಅಮೃತದಿಂದ ಉತ್ಪನ್ನವಾದ ಮದ್ಯಕುಡಿದ ಸೊಕ್ಕಿನಿಂದ ಕೂಡಿದವರಾಗಿ) ಅಂತೆ ನಡುಗುವ ಬಡನಡುಗಳ್ಗೆ ನಡುಕಮುಮನು ಅಂತೆ (ಸುಮ್ಮನೆ ನಡುಗುತ್ತಿರುವ ಕೃಶವಾದ ಸೊಂಟಗಳಿಗೆ ಮತ್ತಷ್ಟು ನಡುಕವನ್ನುಂಟುಮಾಡಿಕೊಂಡು,) ಪೊಡರ್ವ ಪುರ್ವುಗಳ್ಗೆ ಪೊಡರ್ಪುಮನುಂತೆ (ಕುಣಿಯುತ್ತಿರುವ ದೀರ್ಘವಾದ ಹುಬ್ಬುಗಳಿಗೆ ಮತ್ತಷ್ಟು ಕುಣಿತವನ್ನು ಮಾಡಿ,) ಸೊಗಯಿಸುವ ಬೆಳರ್ವಾಯ್ಗಳ್ಗೆ ತನಿಗೆತ್ತುಮನುಂತೆ (ಸೊಗಯಿಸುವ ಬಿಳಿಯ ಬಾಯಿಗಳಿಗೆ ಹೊಸದಾದ ಅದಿರಾಟವನ್ನು ಕೊಟ್ಟು,) ಪೊಳೆವ ನಿಡಿಯಲರ್ಗಣ್ಗಳ್ಗೆ ಮಳಮಳಿಪ ನೋಟಮುಮನುಂತೆ (ಹೊಳೆಯುತ್ತಿರುವ ದೀರ್ಘವಾದ ಹೂವಿನಂತಿರುವ ಕಣ್ಣುಗಳಿಗೆ ಕೆಂಪಾಗಿ ಕದಡಿದ ನೋಟವನ್ನು ಕೊಟ್ಟು,) ತೊದಳಿಸುವ ನುಡಿವ ನುಡಿಗಳ್ಗೆ ತೊದಳುಮನು ಎಕ್ಕೆಯಿಂ ತಳೆಯೆ ನೆರೆಯೆ ಕೆಯ್ಗೆಯ್ದು (ಸುಮ್ಮನೆ ತೊದಳಿನಿಂದ ನುಡಿಯುತ್ತಿರುವ ತೊದಳುಮಾತಿಗೆ ಮತ್ತಷ್ಟು ತೊದಳುವಿಕೆಯನ್ನು ಏಕಕಾಲದಲ್ಲಿ ಕೂಡಿಕೊಳ್ಳುವಂತೆ ಪೂರ್ಣವಾಗಿ ಅಲಂಕರಿಸಿಕೊಂಡು ನಡೆಯುತ್ತಿರಲು) ಮುನ್ನಮಾಱುಂ ಋತುಗಳುಮಂ ನಿಮ್ಮ ನಿಮ್ಮ ಸ್ವರೂಪಂಗಳುಂ ಆ ನಾತನಿರ್ದಲ್ಲಿಗೆ ಪೋಗಿ ತೋಱಮೆಂದಾಗಳ್-(ಆರು ಋತುಗಳೂ ತಮ್ಮ ತಮ್ಮ ಸ್ವರೂಪಗಳಿಂದ ಆತನಿದ್ದ ಸ್ಥಳಕ್ಕೆ ಹೋಗಿ ತೋರಿಕೊಳ್ಳಿ ಎಂದಾಗ-)
ವಚನ:ಅರ್ಥ:ಎಂದು ದೇವಲೋಕದ ಅಪ್ಸರಸ್ತ್ರೀಯರ ಸಮೂಹವು ಇಂದ್ರನ ಹತ್ತಿರ ಎಷ್ಟೋ ರೀತಿಯಲ್ಲಿ ಪ್ರತಿಜ್ಞೆಮಾಡಿ ಬಂದು ಆಕಾಶಪ್ರದೇಶವೆಲ್ಲವೂ ತಾವು ಧರಿಸಿದ್ದ ದಿವ್ಯವಾದ ಒಡವೆಗಳ ಕಾಂತಿಯಿಂದ ಬೆಳಗುತ್ತಿರಲು ಭೂಮಿಗೆ ಇಳಿದು, ನದನದಿಗಳ ಮರಳು ದಿಣ್ಣೆಗಳಲ್ಲಿಯೂ ಬಾಳೆಯ ತೋಟಗಳಲ್ಲಿಯೂ ಹೊಂಬಣ್ಣದ ಲತಾಮಂಟಪಗಳಲ್ಲಿಯೂ ಒತ್ತಾಗಿ ಸೇರಿ ಹೂ ಬಿಟ್ಟಿರುವ ಲತಾಗೃಹಗಳಲ್ಲಿಯೂ ಹೂವಿನಗೊಂಚಲುಗಳಲ್ಲಿಯೂ ಆಕಾಶದಲ್ಲಿ ಸಂಚರಿಸಿದ ಬಳಲಿಕೆಯನ್ನು ಆನೆಯಂತೆ ನಡಗೆಯುಳ್ಳ ಅಪ್ಸರಸ್ತ್ರೀಯರು ಪರಿಹರಿಸಿಕೊಂಡರು. ಕ್ಷೀರಸಮುದ್ರದಲ್ಲಿ ಹುಟ್ಟಿದ ಅಮೃತದಿಂದ ಉತ್ಪನ್ನವಾದ ಮದ್ಯದ ಸೊಕ್ಕಿನಿಂದ ಕೂಡಿದವರಾಗಿ ಸುಮ್ಮನೆ ನಡುಗುತ್ತಿರುವ ಕೃಶವಾದ ಸೊಂಟಗಳಿಗೆ ಮತ್ತಷ್ಟು ನಡುಕವನ್ನುಂಟುಮಾಡಿಕೊಂಡು, ಕುಣಿಯುತ್ತಿರುವ ದೀರ್ಘವಾದ ಹುಬ್ಬುಗಳಿಗೆ ಮತ್ತಷ್ಟು ಕುಣಿತವನ್ನು ಮಾಡಿ, ಸೊಗಯಿಸುವ ಬಿಳಿಯ ಬಾಯಿಗಳಿಗೆ ಹೊಸದಾದ ಅದಿರಾಟವನ್ನು, ಹೊಳೆಯುತ್ತಿರುವ ದೀರ್ಘವಾದ ಹೂವಿನಂತಿರುವ ಕಣ್ಣುಗಳಿಗೆ ಕೆಂಪಾಗಿ ಕದಡಿದ ನೋಟವನ್ನುಕೊಟ್ಟು, ಈಗಾಗಲೆ ಸುಮ್ಮನೆ ತೊದಳಿನಿಂದ ನುಡಿಯುತ್ತಿರುವ ತೊದಳುಮಾತಿಗೆ ಮತ್ತಷ್ಟು ತೊದಳುವಿಕೆಯನ್ನು ಏಕಕಾಲದಲ್ಲಿ ಕೂಡಿಕೊಳ್ಳುವಂತೆ ಪೂರ್ಣವಾಗಿ ಅಲಂಕರಿಸಿಕೊಂಡು ನಡೆಯುತ್ತಿರಲು ಆರು ಋತುಗಳೂ ತಮ್ಮ ತಮ್ಮ ಸ್ವರೂಪಗಳಿಂದ ಆತನಿದ್ದ ಸ್ಥಳಕ್ಕೆ ಹೋಗಿ ತೋರಿಕೊಳ್ಳಿ ಎಂದಾಗ- (ತೋರ್ಪಡಿಸಿಕೊಂಡವು)
ಕಂ|| ಆಱುಂ ಋತುಗಳ ಪೂಗಳು
ಮಾಱುಂ ಋತುಗಳ ಪೊದಳ್ದ ಚೆಲ್ವುಗಳುಮಣಂ|
ಬೇಱಲ್ಲದೊಂದು ಸೂೞು ಮೆ
ಯ್ದೋಱಿದುವೊಡನೊಡನೆ ನೆಲದೊಳಂ ಗಗನದೊಳಂ|| ೮೨ ||
ಪದ್ಯ-೮೨:ಪದವಿಭಾಗ-ಅರ್ಥ:ಆಱುಂ ಋತುಗಳ ಪೂಗಳುಂ ಆಱುಂ ಋತುಗಳ ಪೊದಳ್ದ ಚೆಲ್ವುಗಳುಂ ಅಣಂ ಬೇಱಲ್ಲದೆ (ಸ್ವಲ್ಪವೂ ಬೇರೆ ಬೇರೆಯಾಗಿರದೆ) ಒಂದು ಸೂೞು (ಒಂದೇ ಬಾರಿಗೆ) ಮೆಯ್ದೋಱಿದುವು (ಕಾಣಿಸಿಕೊಂಡವು) ಒಡನೊಡನೆ ನೆಲದೊಳಂ ಗಗನದೊಳಂ(ಭೂಮಿಯಲ್ಲಿಯೂ ಆಕಾಶದಲ್ಲಿಯೂ)
ಪದ್ಯ-೮೨:ಅರ್ಥ: ಅರ್ಜುನ ತಪಸ್ಸು ಮಾಡುವಲ್ಲಿ ; ಆರು ಋತುಗಳ ಹೂವುಗಳೂ ಆರು ಋತುಗಳಲ್ಲಿ ವ್ಯಾಪಿಸಿರುವ ಸೌಂದರ್ಯವೂ ಸ್ವಲ್ಪವೂ ಬೇರೆ ಬೇರೆಯಾಗಿರದೆ ಒಟ್ಟಿಗೇ ಭೂಮಿಯಲ್ಲಿಯೂ ಆಕಾಶದಲ್ಲಿಯೂ ಒಂದೇ ಬಾರಿಗೆ ಕಾಣಿಸಿಕೊಂಡವು
ಮೆಯ್ದೋಱಿದೊಡವರೊಡನೆಯೆ
ಮೆಯ್ದೋಱಲ್ ಬಗೆದನಂಗಜಂಗಮಲತೆಗಳ್|
ಮೆಯ್ದೋಱುವಂತೆ ಮೆಲ್ಲನೆ
ಮೆಯ್ದೋಱಿದರಮರಗಣಿಕೆಯರ್ ವಂದಾಗಳ್|| ೮೩||
ಪದ್ಯ-೮೩:ಪದವಿಭಾಗ-ಅರ್ಥ:ಮೆಯ್ದೋಱಿದೊಡೆ ಅವರೊಡನೆಯೆ ಮೆಯ್ದೋಱಲ್ ಬಗೆದ ಅನಂಗ ಜಂಗಮಲತೆಗಳ್ (ಆರು ಋತುಗಳೊಡನೆಯೇ ತಾವೂ ಕಾಣಿಸಿಕೊಳ್ಳಬೇಕೆಂದು ಭಾವಿಸಿ ಮನ್ಮಥನ ಚಲಿಸುವ ಲತೆಗಳು ) ಮೆಯ್ದೋಱುವಂತೆ (ಕಾಣಿಸಿಕೊಳ್ಳುವ ಹಾಗೆ) ಮೆಲ್ಲನೆ ಮೆಯ್ದೋಱಿದರ್ ಅಮರಗಣಿಕೆಯರ್ (ಅಪ್ಸರಸ್ತ್ರೀಯರು)ವಂದು ಆಗಳ್ (ಕಾಣಿಸಿಕೊಳ್ಳುವ ಹಾಗೆ ಅಪ್ಸರಸ್ತ್ರೀಯರೂ ಬಂದು ನಿಧಾನವಾಗಿ ಕಾಣಿಸಿಕೊಂಡರು.)
ಪದ್ಯ-೮೩:ಅರ್ಥ:ಆರು ಋತುಗಳೊಡನೆಯೇ ತಾವೂ ಕಾಣಿಸಿಕೊಳ್ಳಬೇಕೆಂದು ಭಾವಿಸಿ ಮನ್ಮಥನ ಚಲಿಸುವ ಲತೆಗಳು ಕಾಣಿಸಿಕೊಳ್ಳುವ ಹಾಗೆ ಅಪ್ಸರಸ್ತ್ರೀಯರೂ ಬಂದು ನಿಧಾನವಾಗಿ ಕಾಣಿಸಿಕೊಂಡರು.
ಸಮದ ಗಜಗಮನೆಯರ್ ಮುಗಿ
ಲ ಮೇಲೆ ನಡೆಪಾಡುವಾಕೆಗಳ್ ತಮಗೆ ಧರಾ|
ಗಮನಂ ಪೊಸತಪ್ಪುದಱಂ
ದಮರ್ದಿರೆ ನಡೆ ನಡೆದು ನಡೆಯಲಾಱದೆ ಸುೞಿದರ್|| ೮೪ ||
ಪದ್ಯ-೮೪:ಪದವಿಭಾಗ-ಅರ್ಥ:ಸ-ಮದಗಜಗಮನೆಯರ್ ಮುಗಿಲ ಮೇಲೆ ನಡೆಪಾಡುವಾಕೆಗಳ್ (ಮೋಡಗಳ ಮೇಲೆ ನಡೆದಾಡುವ ಸ್ವಭಾವವುಳ್ಳ ಆ ಮದಗಜಮನೆಯರು) ತಮಗೆ ಧರಾಗಮನಂ ಪೊಸತಪ್ಪುದಱಿಂ (ನೆಲದ ಮೇಲೆ ನಡೆಯುವುದು ತಮಗೆ ಹೊಸದಾದುದರಿಂದ) ಅದು ಅಮರ್ದಿರೆ (ನೆಲಕ್ಕೆ ಪಾದ ಅಮರದಿರಲು) ನಡೆ ನಡೆದು ನಡೆಯಲಾಱದೆ ಸುೞಿದರ್ (ನಡೆದೂ ನಡೆದೂ ನೆಲಕ್ಕೆ ಪಾದ ತಾಗದಿದ್ದರೂ ಸುತ್ತಾಡಿದರು)
ಪದ್ಯ-೮೪:ಅರ್ಥ: ಮೋಡಗಳ ಮೇಲೆ ನಡೆದಾಡುವ ಸ್ವಭಾವವುಳ್ಳ ಆ ಮದಗಜಮನೆಯರು ನೆಲದ ಮೇಲೆ ನಡೆಯುವುದು ತಮಗೆ ಹೊಸದಾದುದರಿಂದ ನಡೆದೂ ನಡೆದೂ ನೆಲಕ್ಕೆ ಪಾದ ತಾಗದಿದ್ದರೂ ಸುತ್ತಾಡಿದರು
ಕಂ|| ಮುಡಿಯ ಕುಚಯುಗದ ಜಘನದ
ಕಡುವಿಣ್ಪಿಂ ಮಣಲೊಳೞ್ದು ಬರೆ ಮೆಲ್ಲಡಿಗಳ್|
ನಡೆಯದ ಬೇವಸಮಂ ತಾಂ
ನಡೆಯಿಸುವಂತವರ್ಗಳೊಯ್ಯನೊಯ್ಯನೆ ನಡೆದರ್|| ೮೫ ||
ಪದ್ಯ-೮೫:ಪದವಿಭಾಗ-ಅರ್ಥ:ಮುಡಿಯ ಕುಚಯುಗದ ಜಘನದ ಕಡುವಿಣ್ಪಿಂ (ತುರುಬಿನ, ಮೊಲೆಗಳ,ಜಘನಗಳ, ಅತಿಯಾದ ಭಾರದಿಂದ) ಮಣಲೊಳೞ್ದು ಬರೆ ಮೆಲ್ಲಡಿಗಳ್ (ಮೃದು ಪಾದಗಳು ಮರಳಿನಲ್ಲಿ ಹೂತುಹೋಗಲು) ನಡೆಯದ ಬೇವಸಮಂ ತಾಂ ನಡೆಯಿಸುವಂತೆ ಅವರ್ಗಳು ಒಯ್ಯನೊಯ್ಯನೆ ನಡೆದರ್ (ತಮ್ಮ ಆಯಾಸವನ್ನು ಪ್ರದರ್ಶಿಸುವಂತೆ ಮೆಲ್ಲಮೆಲ್ಲಗೆ ನಡೆದರು.)
ಪದ್ಯ-೮೫:ಅರ್ಥ: . ತುರುಬಿನ, ಮೊಲೆಗಳ,ಜಘನಗಳ, ಅತಿಯಾದ ಭಾರದಿಂದ ಅವರ ಮೃದುವಾದ ಪಾದಗಳು ಮರಳಿನಲ್ಲಿ ಹೂತುಹೋಗಲು ನಡೆಯಲು ಅಭ್ಯಾಸವಿಲ್ಲದ ತಮ್ಮ ಆಯಾಸವನ್ನು ಪ್ರದರ್ಶಿಸುವಂತೆ ಮೆಲ್ಲಮೆಲ್ಲಗೆ ನಡೆದರು.
ಮ|| ಮುಡಿಯಂ ಸೋಗೆಯೆಗೆತ್ತು ಸೋಗೆ ನಡೆಯಂ ಪೆಣ್ಣಂಚೆಗೆತ್ತಂಚೆ ಮೆ
ಲ್ನುಡಿಯಂ ಕೋಗಿಲೆಗೆತ್ತು ಕೋಗಿಲೆ ಘನೋತ್ತುಂಗ ಸ್ತನದ್ವಂದ್ವದಿ|
ಟ್ಟೆಡೆಯಂ ಕೋಕಮೆಗೆತ್ತು ಕೋಕಮಳಕಾನೀಕಂಗಳಂ ಸೊರ್ಕಿದಾ
ಱಡಿಗೆತ್ತಾಱಡಿ ಸುತ್ತುತುಂ ಬರೆ ಬನಂ ಬರ್ಪಂತೆ ಬಂದಾಕೆಗಳ್|| ೮೬ ||
ಪದ್ಯ-೮೬:ಪದವಿಭಾಗ-ಅರ್ಥ:ಮುಡಿಯಂ ಸೋಗೆಯೆಗೆತ್ತು (ಕೂದಲನ್ನು ನೋಡಿ ) ಸೋಗೆ (ಗಂಡು) ನಡೆಯಂ ಪೆಣ್ಣಂಚೆಗೆತ್ತು (ಹೆಣ್ಣು ಹಂಸವೆಂದು ಭಾವಿಸಿ) ಅಂಚೆ ಮೆಲ್ನುಡಿಯಂ ಕೋಗಿಲೆಗೆತ್ತು (ಗಂಡುಹಂಸವು ಮೃದುವಾದ ಮಾತನ್ನು ಹೆಣ್ಣುಕೋಗಿಲೆಯೆಂದು ಭಾವಿಸಿ) ಕೋಗಿಲೆ (ಯು) ಘನೋತ್ತುಂಗ ಸ್ತನದ್ವಂದ್ವದಿಟ್ಟೆಡೆಯಂ ಕೋಕಮೆಗೆತ್ತು (ಗಂಡುಕೋಗಿಲೆಯೂ ದಪ್ಪವೂ ಎತ್ತರವೂ ಆದ ಮೊಲೆಗಳ ಇಕ್ಕಟ್ಟಿನ / ಒತ್ತಡವನ್ನು ಕಂಡು ಚಕ್ರವಾಕದ ಜೋಡಿಯೆಂದು ಭ್ರಮಿಸಿ ) ಕೋಕಂ ಅಳಕಾನೀಕಂಗಳಂ ಸೊರ್ಕಿದ ಆಱಡಿಗೆ ಎತ್ತಾಱಡಿ ಸುತ್ತುತುಂ ಬರೆ (ಮುಂಗುರುಗಳ ಸಾಲನ್ನು ಸೊಕ್ಕಿದ ಹೆಣ್ಣುದುಂಬಿಯೆಂದೇ ಭ್ರಮಿಸಿ ಗಂಡುದುಂಬಿಗಳೂ ಆ ಅಪ್ಸರೆಯನ್ನು ಸುತ್ತಿಕೊಂಡು ಬರುತ್ತಿರಲು ) ಬನಂ ಬರ್ಪಂತೆ ಬಂದ ಆಕೆಗಳ್ (ಅಪ್ಸರೆಯರು ವನವೇ ಬರುವಂತೆ ಬಂದರು. )
ಪದ್ಯ-೮೬:ಅರ್ಥ: ಉದ್ದನೆಯ ತಲೆಕೂದಲನ್ನು ನೊಡಿ ನವಿಲೆಂದುಭಾವಿಸಿ ಗಂಡುನವಿಲೂ, ನಡಗೆಯನ್ನು ಹೆಣ್ಣು ಹಂಸವೆಂದು ಭ್ರಮಿಸಿ, ಗಂಡುಹಂಸವು ಮೃದುವಾದ ಮಾತನ್ನು ಹೆಣ್ಣುಕೋಗಿಲೆಯೆಂದು ಭಾವಿಸಿ ಗಂಡುಕೋಗಿಲೆಯೂ ದಪ್ಪವೂ ಎತ್ತರವೂ ಆದ ಮೊಲೆಗಳ ಒತ್ತಡವನ್ನು ಕಂಡು ಚಕ್ರವಾಕದ ಜೋಡಿಯೆಂದು ಭ್ರಮಿಸಿ ಚಕ್ರವಾಕವೂ, ಮುಂಗುರುಗಳ ಸಾಲನ್ನು ಸೊಕ್ಕಿದ ಹೆಣ್ಣುದುಂಬಿಯೆಂದೇ ಭ್ರಮಿಸಿ ಗಂಡುದುಂಬಿಗಳೂ ಆ ಅಪ್ಸರೆಯನ್ನು ಸುತ್ತಿಕೊಂಡು ಬರುತ್ತಿರಲು, ಅಪ್ಸರೆಯರು ವನವೇ ಬರುವಂತೆ ಬಂದರು.
ವ|| ಅಂತು ನರೇಂದ್ರತಾಪಸನಂ ಸೋಲಿಸಲೆಂದು ವಂದಾಕೆಗಳ್ ತಾಮೆ ಸೋಲ್ತು ಮುಂದು ಮುಂದನೆ ಸುೞಯೆ-
ವಚನ:ಅರ್ಥ:ಹಾಗೆ ರಾಜತಪಸ್ವಿಯನ್ನು ಸೋಲಿಸುವುದಕ್ಕಾಗಿ ಬಂದ ಅವರು ತಾವೇ ಸೋತು ಅವನ ಮುಂದು ಮುಂದಕ್ಕೆ ಸುಳಿಯಲು-(ಸುಳಿದಾಡಿದರು).
ಊರ್ವಸಿಯ ನೃತ್ಯ[ಸಂಪಾದಿಸಿ]
ಚಂ|| ಮಗಮಗಿಸುತ್ತುಮಿರ್ಪ ಮೃಗನಾಭಿಯ ನೀರ್ದಳಿವಲ್ಲಿ ಕಂಪನಾ
ಳ್ದುಗುೞ್ದಲಸು(ಸುX ರು)ತ್ತುಮಿರ್ಪ ಪದದೊಳ್ ಪದವಟ್ಟು ಪೊದಳ್ದು ತೋರ ಮ|
ಲ್ಲಿಗೆಯ ತುಱುಂಬು ರಾಹು ತವೆ ನುಂಗಿದ ಚಂದ್ರನನೊಯ್ಯನೊಯ್ಯನಂ
ದುಗುೞ್ವವೊಲೊಪ್ಪಿರಲ್ ಬಲದೊಳುರ್ವಸಿ ದೇಸಿಗೆ ದೇಸಿಯಾಡಿದಳ್|| ೮೭ ||
ಪದ್ಯ-೮೭:ಪದವಿಭಾಗ-ಅರ್ಥ:ಮಗಮಗಿಸುತ್ತುಂ ಇರ್ಪ ಮೃಗನಾಭಿಯ (ಕಸ್ತೂರಿ) ನೀರ್ ತಳಿವಲ್ಲಿ (ಗಮಗಮಿಸುವ ಸುವಾಸನೆಯ ಕಸ್ತೂರಿಯ ನೀರನ್ನು ಚಿಮುಕಿಸುವುದರಿಂದ) ಕಂಪನಾಳ್ದು ಉಗುೞ್ದು ಅಲುತ್ತುಮಿರ್ಪ ಪದದೊಳ್ (ವಾಸನಾಯುಕ್ತವಾಗಿ ಸುಟಗೊಂಡು ಅರಳುತ್ತಿರುವ ಸಮಯದಲ್ಲಿ) ಪದವಟ್ಟು ಪೊದಳ್ದು ತೋರ ಮಲ್ಲಿಗೆಯ ತುಱುಂಬು ರಾಹು ತವೆ (ಹೂವಿನಲ್ಲಿ ಹದವರಿತು ಸೇರಿದ ದಪ್ಪಮಲ್ಲಿಗೆಯ ದಂಡೆಯು ತುರುಬಿನ ಮೇಲೆ ಗ್ರಹಣಕಾಲದಲ್ಲಿ ರಾಹುವು) ನುಂಗಿದ ಚಂದ್ರನನು ಒಯ್ಯನೊಯ್ಯನೆ ಅಂದು ಉಗುೞ್ವವೊಲ್ ಒಪ್ಪಿರಲ್ (ನುಂಗಿದ ಚಂದ್ರನನ್ನು ನಿಧಾನವಾಗಿ ಹೊರಗೆ ಉಗುಳುವ ಹಾಗೆ ಸೊಗಸಾಗಿರಲು) ಬಲದೊಳು ಉರ್ವಸಿ ದೇಸಿಗೆ ದೇಸಿಯಾಡಿದಳ್ (ದೇಶೀಯ ನೃತ್ಯಕ್ಕಿಂತಲೂ ಉತ್ತಮವಾದ ನೃತ್ಯವನ್ನಾಡಿದಳು).
ಪದ್ಯ-೮೭:ಅರ್ಥ: ಗಮಗಮಿಸುವ ಸುವಾಸನೆಯ ಕಸ್ತೂರಿಯ ನೀರನ್ನು ಚಿಮುಕಿಸುವುದರಿಂದ ವಾಸನಾಯುಕ್ತವಾಗಿ ಅರಳುತ್ತಿರುವ ಸಮಯದಲ್ಲಿ ಹೂವಿನಲ್ಲಿ ಹದವರಿತು ಸೇರಿ ದಪ್ಪಮಲ್ಲಿಗೆಯ ದಂಡೆಯು ತುರುಬಿನ ಮೇಲೆ ಗ್ರಹಣಕಾಲದಲ್ಲಿ ರಾಹುವು ನುಂಗಿದ ಚಂದ್ರನನ್ನು ನಿಧಾನವಾಗಿ ಹೊರಗೆ ಉಗುಳುವ ಹಾಗೆ ಸೊಗಸಾಗಿರಲು ಬಲಗಡೆಯಲ್ಲಿ ಊರ್ವಶಿಯ ದೇಶೀಯ ನೃತ್ಯಕ್ಕಿಂತಲೂ ಉತ್ತಮವಾದ ನೃತ್ಯವನ್ನಾಡಿದಳು.
(ತಾತ್ಪರ್ಯ: ಊರ್ವಸಿಯು ನೃತ್ಯ ಮಾಡುವಾಗ, ಅವಳ ಗಂಟುಹಾಕಿದ ದೊಡ್ಡ ತುರುಬು ಮತ್ತು ಮತ್ತು ಆ ತುರುಬಿನಿಮದ ಜೊಲುಬಿಟ್ಟ ಕೂದಲು ಒಲಾಡುತ್ತಿತ್ತು. ಅವಳ ಮುಖವು ಪೂರ್ಣಚಂದ್ರನಂತೆಯೂ, ಮತ್ತು ಉದ್ದ ಬಾಲಬಿಟ್ಟು ಕಟ್ಟಿದ ಅವಳ ತುರುಬು, ಚಂದ್ರಗ್ರಹಣ ಕಾಲದಲ್ಲಿ, ಬಾಲವುಳ್ಳ ರಾಹು ತಾನು ನುಂಗಿದ ಚಂದ್ರನನನ್ನು ಉಗುಳುವಂತೆ ಕಾಣುತ್ತಿತ್ತು.
ರಾಹುವು ಉದ್ದ ಬಾಲವುಳ್ಳ ಹಾವಿನ ರೂಪ ಎಂಬ ನಂಬುಗೆ ಇದೆ.
ಮೇನಕೆಯ ಗಾನ[ಸಂಪಾದಿಸಿ]
ಚಂ|| ಪದ ಕೊರಲಿಂಪನಪ್ಪುಕೆಯೆ ಕೊಂಕು ನಯಂ ಗಮಕಂಗಳಿಂ ಪೊದ
ರ್ಕೊದಳೆೞೆದಿಕ್ಕಿದಂತೆ ಸುತಿಯೊಳ್ ಸಮವಾಗಿರೆ ಜಾಣನಾಂತು ಮೆ|
ಚ್ಚಿದ ತೆಱದಾಸೆವಟ್ಟಲಸದೆತ್ತಿದವೋಲ್ ದೊರೆವೆತ್ತು ದೂಱಿದಾ
ಱಿದ ದನಿ ಮುಟ್ಟೆ ಮೇನಕೆ ಸರಸ್ವತಿ ಬಾಯ್ದೆರೆದಂತೆ ಪಾಡಿದಳ್|| ೮೮ ||
ಪದ್ಯ-೮೮:ಪದವಿಭಾಗ-ಅರ್ಥ:ಪದಕೊರಲ್ (ಹದವಾದ ಶಾರೀರ) ಇಂಪನು ಅಪ್ಪುಕೆಯೆ (ಹೊಂದಿದೆ) ಕೊಂಕು ನಯಂ ಗಮಕಂಗಳಿಂ ಪೊದರ್ಕೊದಳೆೞೆದಿಕ್ಕಿದಂತೆ (ಪೊದರ್ ಕೊದಳ್ ಎೞೆದ ಇಕ್ಕಿದಂತೆ- ಸ್ಪುರಣೆಗೊಂಡ ಮಧುರವಾದ ಮಾತು ತಂತಿಎಳೆದ ಹಾಗೆ ) ಸುತಿಯೊಳ್ (ಶ್ರುತಿ) ಸಮವಾಗಿರೆ ಜಾಣನಾಂತು, ಮೆಚ್ಚಿದ ತೆಱದಾಸೆವಟ್ಟ (ತಾನೆ ಮೆಚ್ಚಿ ಇಷ್ಟಪಟ್ಟ ರಾಗವನ್ನು) ಅಲಸದೆ ಎತ್ತಿದವೋಲ್ ದೊರೆವೆತ್ತು ದೂಱಿದ ಆಱಿದ (ದೂರಿದ ಆರಿದ-ದೂರು ಆರಿದ ಇಲ್ಲದ- ದೋಷವಿಲ್ಲದ?) ದನಿ ಮುಟ್ಟೆ ಮೇನಕೆ ಸರಸ್ವತಿ ಬಾಯ್ದೆರೆದಂತೆ (ಬಾಯಿ ತೆರೆದಂತೆ) ಪಾಡಿದಳ್
ಪದ್ಯ-೮೮:ಅರ್ಥ:ಮೇನಕೆಯ ಗಾನ: ಅವಳದು ಹದವಾದ ಶಾರೀರ(ದನಿ), ಇಂಪಿನಿಂದ ಕೂಡಿಕೊಂಡಿರಲು ಕೊಂಕು (ಪಲುಕು) ನಯ (ಮಾಧುರ್ಯ) ಗಮಕಗಳಿಂದ ಸ್ಪುರಣೆಗೊಂಡ ಮಧುರವಾದ ಮಾತು ತಂತಿಎಳೆದ ಹಾಗೆ ಶ್ರುತಿಯು ಸೇರಿರಲು, ಜಾಣತನದಿಂದ ಕೂಡಿ ತಾನೆ ಮೆಚ್ಚಿ ಇಷ್ಟಪಟ್ಟ ರಾಗವನ್ನು ಎತ್ತಿಕೊಂಡು ಹಾಗೆ ಸ್ವಲ್ಪವೂ ಆಯಾಸ ಪಡದೆ ಮಧ್ಯಮಸ್ವರದಿಂದ ಹೃದಯಸ್ಪರ್ಶಿಯಾಗಿರಲು ಸರಸ್ವತಿಯೇ ಬಾಯಿತೆರೆದ ಹಾಗೆ ಮೇನಕೆಯು ಹಾಡಿದಳು.
ಚಂ||ನಡು ನಡುಗಲ್ಕೆ ಪುರ್ವು ಪೊಡರಲ್ಕೆ ಕುರುಳ್ ಮಿಳಿರಲ್ಕೆ ಬಾಯ್ ಬೆಡಂ
ಗಿಡಿದೆಳಸಲ್ ತೆರಳ್ತು ತುಡುಕಲ್ಕೆ ತಗುಳ್ದುದು ಕೆಂದನೀಕೆ ಕ|
ನ್ನಡಿಪಳೊ ಪಾಡಿದೀ ನೆವದಿನೆಂಬಿನೆಗಂ ದನಿಯಿಂಪು ಬೀಣೆಯಂ
ಮಿಡಿದವೊಲಾಗೆ ಗಾನದೊಳೊಡಂಬಡೆ ಮೇನಕೆ ಮುಂದೆ ಪಾಡಿದಳ್|| ೮೯ ||
ಪದ್ಯ-೮೯:ಪದವಿಭಾಗ-ಅರ್ಥ:ನಡು ನಡುಗಲ್ಕೆ ಪುರ್ವು ಪೊಡರಲ್ಕೆ ಕುರುಳ್ ಮಿಳಿರಲ್ಕೆ (ಅಲುಗಲು) ಬಾಯ್ ಬೆಡಂಗೆ ಇಡಿದೆಳಸಲ್ ತೆರಳ್ತು ತುಡುಕಲ್ಕೆ ತಗುಳ್ದುದು (ಅನುಸರಿಸಿತು) ಕೆಂದಂ (ರತಿಪ್ರೇಮವನ್ನು) ಈಕೆ ಕನ್ನಡಿಪಳೊ (ಪ್ರತಿಬಿಂಬಿಸುತ್ತಿದ್ದಾಳೆಯೋ) ಪಾಡಿದ ಈ ನೆವದಿಂ ಎಂಬಿನೆಗಂ (ಎನ್ನುವಂತಿರಲು) ದನಿಯಿಂಪು ಬೀಣೆಯಂ ಮಿಡಿದವೊಲಾಗೆ ಗಾನದೊಳು ಒಡಂಬಡೆ (ವೀಣೆಯನ್ನು ಮೀಟಿದ ಹಾಗೆ ಹೊಂದಿಕೊಂಡಿರಲು) ಮೇನಕೆ ಮುಂದೆ ಪಾಡಿದಳ್
ಪದ್ಯ-೮೯:ಅರ್ಥ: ಸೊಂಟವು ನಡುಗುತ್ತಿರಲು, ಹುಬ್ಬುಗಳು ಅದುರುತ್ತಿರಲು, ಮುಂಗುರುಳು ಅಲುಗಾಡುತ್ತಿರಲು, ಬಾಯಿ ಬೆಡಗಿನಿಂದ ಕೂಡಿ ತವಕಪಟ್ಟು ಹಿಡಿಯಲು ಅನುಸರಿಸಿತು (ಎನ್ನುವಂತಿತ್ತು). ಹಾಡಿದ ಈ ನೆಪದಿಂದ ಇವಳು ರತಿಪ್ರೇಮವನ್ನು ಪ್ರತಿಬಿಂಬಿಸುತ್ತಿದ್ದಾಳೆಯೋ ಎನ್ನುವ ಹಾಗೆ ಧ್ವನಿಯ ಇಂಪು ವೀಣೆಯನ್ನು ಮೀಟಿದ ಹಾಗೆ ಹೊಂದಿಕೊಂಡಿರಲು ಮೇನಕೆಯು ಅರ್ಜುನನ ಮುಂದೆ ಬಂದು ಹಾಡಿದಳು.
ಒದವಿದ ಕೆತ್ತ ಕಂಕಣದ ಪುರ್ವಿನ ಜರ್ವು ಲಯಕ್ಕೆ ಲಕ್ಕ ಲೆ
ಕ್ಕದ ಗತಿ ನಾಟಕಾಭಿನಯಮಾಯ್ತೆನೆ ಗೇಯದೊಳೀಕೆ ಸೊರ್ಕನಿ|
ಕ್ಕಿದಳೆನೆ ಕಳ್ಗೆ ಚಕ್ಕಣಮೆನಿಪ್ಪುದು ಸಾಗೆನಿಸಲ್ಕೆ ಸಾಲ್ವ ಸ
ಗ್ಗದ ಪೊಸ ದೇಸಿಯೋಳಿಗಳನೊರ್ವಳೊಱಲ್ದು ನೆಱಲ್ದು ಪಾಡಿದಳ್|| ೯೦||
ಪದ್ಯ-೯೦:ಪದವಿಭಾಗ-ಅರ್ಥ:ಒದವಿದ ಕೆತ್ತ ಕಂಕಣದ ಪುರ್ವಿನ ಜರ್ವು(ಜರ್ಕು- ಅಲುಗಾಟವೂ) ಲಯಕ್ಕೆ ಲಕ್ಕ ಲೆಕ್ಕದ ಗತಿ ನಾಟಕಾಭಿನಯಮಾಯ್ತೆನೆ ಗೇಯದೊಳಯ ಈಕೆ ಸೊರ್ಕನು ಇಕ್ಕಿದಳು ಎನೆ (ಹಾಡುಗಾರಿಕೆಯಲ್ಲಿ ಈಕೆ ಮಾದಕತೆನ್ನುಂಟುಮಾಡಿದಳು ಎನ್ನುವ ಹಾಗೆ) ಕಳ್ಗೆ (ಕಳ್ಳು -ಮದ್ಯಕ್ಕೆ) ಚಕ್ಕಣಮೆನಿಪ್ಪುದು ಸಾಗೆನಿಸಲ್ಕೆ (ಚಾಕಣವನ್ನು ಬೆರಸಿದ ಹಾಗಿದೆ) ಸಾಲ್ವ ಸಗ್ಗದ ಪೊಸ ದೇಸಿಯ ಓಳಿಗಳನು ಒರ್ವಳ ಒಱಲ್ದು ನೆಱಲ್ದು ಪಾಡಿದಳ್ (ದೇಸಿರಾಗಗಳ ಸಮೂಹವನ್ನು ಒಬ್ಬಳು ಅಪ್ಸರಸ್ತ್ರೀ ಪ್ರೀತಿಯಿಂದ ನೆರವಿಯಲ್ಲಿ ಹಾಡಿದಳು)|
ಪದ್ಯ-೯೦:ಅರ್ಥ: ಅವಳು ಧರಿಸಿದ ಬಳೆಗಳ ಚಲನೆಯಿಂದ ಉಂಟಾದ ಸದ್ದೂ ಹುಬ್ಬಿನ ಅಲುಗಾಟವೂ ತಾಳದ ಲಯಕ್ಕೆ ಅನುಗುಣವಾಗಿ ಲಕ್ಷಸಂಖ್ಯೆಯ ಗತಿಯನ್ನುಳ್ಳ ನಾಟಕಾಭಿನಯವಾಯಿತು ಎನ್ನುವ ಹಾಗೆ ಹಾಡುಗಾರಿಕೆಯಲ್ಲಿ ಈಕೆ ಮಾದಕತೆನ್ನುಂಟುಮಾಡಿದಳು ಎನ್ನುಂತೆ, ಇವಳ ಗೀತವು ಮದ್ಯಕ್ಕೆ ಚಾಕಣವನ್ನು ಬೆರಸಿದ ಹಾಗಿದೆ. ಹಾಗೆನಿಸಿಕೊಳ್ಳಲೂ ಸಾಕು ಎನ್ನಿಸಿಕೊಳ್ಳುವ ಸ್ವರ್ಗದ ಹೊಸ ದೇಸಿರಾಗಗಳ ಸಮೂಹವನ್ನು ಒಬ್ಬಳು ಅಪ್ಸರಸ್ತ್ರೀ ಪ್ರೀತಿಯಿಂದ ನೆರವಿಯಲ್ಲಿ ಹಾಡಿದಳು.
ತಿಲೋತ್ತಮೆಯ ನೃತ್ಯ[ಸಂಪಾದಿಸಿ]
ಉ|| ಆಡದ ಮೆಯ್ಗಳಿಲ್ಲ ನಿಡುಮೆಯ್ಗಳುಮಾಡಿದುವಂತೆ ಮೆಟ್ಟುವಳ್
ನೋಡಿದರೆಲ್ಲರಂ ಪಿಡಿದು ಮೆಟ್ಟಿದಳಿಟ್ಟಳಮಾಯ್ತು ದೇಸಿ ಕೆ|
ಯ್ಗೂಡಿದುದಿಲ್ಲ ಮಾರ್ಗಮೆನೆ ವಿಸ್ಮಯಮಾಗಿರೆ ತನ್ನ ಮುಂದೆ ಬಂ
ದಾಡಿದಳಾ ತಿಳೋತ್ತಮೆಯನೊಲ್ದನುಮಿಲ್ಲ ನರೇಂದ್ರತಾಪಸಂ|| ೯೧||
ಪದ್ಯ-೯೧:ಪದವಿಭಾಗ-ಅರ್ಥ:ಆಡದ ಮೆಯ್ಗಳಿಲ್ಲ ನಿಡುಮೆಯ್ಗಳುಂ ಆಡಿದುವು (ಎತ್ತರದ ದೇಹವಿಡೀ ಚಲಿಸಿತು) ಅಂತೆ ಮೆಟ್ಟುವಳ್ ನೋಡಿದರ್ ಎಲ್ಲರಂ ಪಿಡಿದು ಮೆಟ್ಟಿದಳ್ ಇಟ್ಟಳಮಾಯ್ತು (ರಮಣೀಯವಾಯಿತು) ದೇಸಿ ಕೆಯ್ಗೂಡಿದುದಿಲ್ಲಂ ಆರ್ಗಂ ಎನೆ (ದೇಶೀವಿದ್ಯೆ ಯಾರಿಗೂ ವಶವಾಗಲಿಲ್ಲ ಎನ್ನುವಂತೆ ) ವಿಸ್ಮಯಮಾಗಿರೆ ತನ್ನ ಮುಂದೆ ಬಂದು ಆಡಿದಳು (ನಾಟ್ಯವಾಡಿದಳು) (ಆಶ್ಚರ್ಯವಾಗುವ ಹಾಗೆ ತನ್ನ ಮುಂದೆ ನಾಟ್ಯವಾಡಿದ) ಆ ತಿಳೋತ್ತಮೆಯನು ಒಲ್ದನುಮಿಲ್ಲ ನರೇಂದ್ರತಾಪಸಂ (ರಾಜತಾಪಸನಾದ ಅರ್ಜುನನು ಮೋಹಿಸಲಿಲ್ಲ)
ಪದ್ಯ-೯೧:ಅರ್ಥ: ದೇಹದ ಯಾವ ಭಾಗವೂ ಚಲಿಸದೆ ಇರಲಿಲ್ಲ; ಎತ್ತರದ ದೇಹವಿಡೀ ಚಲಿಸಿತು. ಅವಳು ಪ್ರೇಕ್ಷಕರೆಲ್ಲರನ್ನು ಹಿಡಿದು ಮೆಟ್ಟಿದಳು; ಮಾರ್ಗಮಿಶ್ರವಿಲ್ಲದ ಇವಳ ದೇಶೀಯತೆ ಬಹು ರಮಣೀಯವಾಯಿತು; ದೇಶೀವಿದ್ಯೆ ಯಾರಿಗೂ ವಶವಾಗಲಿಲ್ಲ ಎನ್ನುವಂತೆ ಆಶ್ಚರ್ಯವಾಗುವ ಹಾಗೆ ತನ್ನ ಮುಂದೆ ನಾಟ್ಯವಾಡಿದ ತಿಲೋತ್ತಮೆಯನ್ನೂ ರಾಜತಾಪಸನಾದ ಅರ್ಜುನನು ಮೋಹಿಸಲಿಲ್ಲ
ವ|| ಅಂತಾಕೆಗಳೆಡೆಯಾಡಿಯುಂ ಮನಂಗೊಳೆ ಪಾಡಿಯುಂ ಮನುಜಮಾಂಧಾತನಂ ಸೋಲಿಸಲಾಱದೆ ಸಹಜಮನೋಜನ ರೂಪಿಂಗಂ ಸುರತಮಕರಧ್ವಜನ ಸೌಂದರ್ಯಕ್ಕಂ ಗಂಧೇಭವಿದ್ಯಾಧರನ ಗಂಡಗಾಡಿಗಂ ತಾಮೆ ಸೋಲ್ತೆಯ್ದೆ ವಂದು-
ವಚನ:ಪದವಿಭಾಗ-ಅರ್ಥ:ಅಂತು ಆಕೆಗಳು (ಅಪ್ಸರಸ್ತ್ರೀಯರು) ಎಡೆಯಾಡಿಯುಂ ಮನಂಗೊಳೆ ಪಾಡಿಯುಂ (ಸಮೀಪದಲ್ಲಿಯೇ ಕುಣಿದರೂ, ಮನೋಹರವಾಗಿರುವ ಹಾಗೆ ಹಾಡಿಯೂ) ಮನುಜಮಾಂಧಾತನಂ ಸೋಲಿಸಲಾಱದೆ (ಸೋಲಿಸಲಾರದೆ) ಸಹಜಮನೋಜನ (ಅರ್ಜುನನ) ರೂಪಿಂಗಂ ಸುರತಮಕರಧ್ವಜನ (ಅರ್ಜುನನ) ಸೌಂದರ್ಯಕ್ಕಂ ಗಂಧೇಭವಿದ್ಯಾಧರನ (ಅರ್ಜುನನ) ಗಂಡಗಾಡಿಗಂ(ಪೌರುಷದ ಸೊಬಗಿಗೂ) ತಾಮೆ ಸೋಲ್ತು ಐಯ್ದೆ ವಂದು (ತಾವೇ ಸೋತು ಅವನ ಸಮೀಪಕ್ಕೆ ಬಂದು)-
ವಚನ:ಅರ್ಥ:|| ಹಾಗೆ ಆ ಅಪ್ಸರಸ್ತ್ರೀಯರು ಸಮೀಪದಲ್ಲಿಯೇ ಕುಣಿದರೂ, ಮನೋಹರವಾಗಿರುವ ಹಾಗೆ ಹಾಡಿಯೂ ಮನುಜಮಾಂಧಾತನಾದ ಅರ್ಜುನನನ್ನು ಸೋಲಿಸಲು ಅಶಕ್ತರಾಗಿ ಸಹಜಮನ್ಮಥನಾದ ಅರ್ಜುನನ ರೂಪಕ್ಕೂ ಸುರತ ಮಕರ ಧ್ವಜನಾದ ಅವನ ಸೌಂದರ್ಯಕ್ಕೂ ಗಂಧೇಭವಿದ್ಯಾಧರನ ಪೌರುಷದ ಸೊಬಗಿಗೂ ತಾವೇ ಸೋತು ಅವನ ಸಮೀಪಕ್ಕೆ ಬಂದು- (ಅವನನ್ನೇ ಪ್ರಶ್ನಿಸಿದರು)
ಕಂ|| ಬೂದಿ ಜೆಡೆ ಲಕ್ಕಣಂ ತಪ
ಕಾದುವೆರೞ್ದೊಣೆ ಶರಾಸನಂ ಕವಚಮಿವೆಂ|
ತಾದುವೊ ಮುತ್ತುಂ ಮೆೞಸುಂ
ಕೋದಂತುಟೆ ನಿನ್ನ ತಪದ ಪಾಂಗೆಂತು ಗಡಾ|| ೯೨ ||
ಪದ್ಯ-೯೨:ಪದವಿಭಾಗ-ಅರ್ಥ:ಬೂದಿ ಜೆಡೆ ಲಕ್ಕಣಂ ತಪಕಾದುವು (ಭಸ್ಮ ಮತ್ತು ಜಟೆಯ ಲಕ್ಷಣಗಳು ತಪಸ್ಸಿಗೆ ಹೊಂದಿಕೊಳ್ಳುತ್ತವೆ.) ಎರೞ್ದೊಣೆ (ಎರಳ್ ದೊಣೆ -ಎರಡು ಬತ್ತಳಿಕೆ)ಶರಾಸನಂ ಕವಚಂ ಇಂವೆಂತಾದುವೊ (ಇವು ಹೇಗೆ ಹೊಂದಿಕೊಳ್ಳುತ್ತವೆ?) ಮುತ್ತುಂ ಮೆೞಸುಂ ಕೋದಂತುಟೆ (ಮೆಳಸುಂ- ಮಣಸು:-ಮುತ್ತನ್ನೂ ಮೆಣಸನ್ನೂ ಕೋದಂತಿರುವ) ನಿನ್ನ ತಪದ ಪಾಂಗೆಂತು ಗಡಾ (ಈ ನಿನ್ನ ತಪಸ್ಸಿನ ರೀತಿ ಅದೆಂತಹುದಪ್ಪಾ!)
ಪದ್ಯ-೯೨:ಅರ್ಥ: ಭಸ್ಮ ಮತ್ತು ಜಟೆಯ ಲಕ್ಷಣಗಳು ತಪಸ್ಸಿಗೆ ಹೊಂದಿಕೊಳ್ಳುತ್ತವೆ. ಆದರೆ ಎರಡು ಬತ್ತಳಿಕೆ ಬಿಲ್ಲು ಕವಚ ಇವು ಹೇಗೆ ಹೊಂದಿಕೊಳ್ಳುತ್ತವೆ? ಮುತ್ತನ್ನೂ ಮೆಣಸನ್ನೂ ಕೋದಂತಿರುವ ಈ ನಿನ್ನ ತಪಸ್ಸಿನ ರೀತಿ ಅದೆಂತಹುದಪ್ಪಾ!
ಚಂ|| ಕಡು ತಪದಿಂದೆ ನಿನ್ನ ಪಡೆವಾವುದೊ ಗಾವಿಲ ಸಗ್ಗಮಲ್ತೆ ಪೋ
ನುಡಿಯವೊ ಮೂರ್ಖ ಸಗ್ಗದ ಫಲಂ ಸುಖಮಲ್ತೆ ಸುಖಕ್ಕೆ ಪೇೞೊಡಂ|
ಬಡದವರಾರೊ ಪೆಂಡಿರೊಳಗಾರ್ ಪೆಱರಾಮೆ ದಲಾಮೆ ಬಂದು ಕಾ
ಲ್ವಿಡಿದಪೆವಿಂಬುಕೆಯ್ವೊಡಿವು ಮೆಲ್ಲಡಿಗಳ್ ಗಡ ಕರ್ಚು ಬೂದಿಯಂ|| ೯೩ ||
ಪದ್ಯ-೯೩:ಪದವಿಭಾಗ-ಅರ್ಥ:ಕಡು ತಪದಿಂದೆ ನಿನ್ನ ಪಡೆವಾವುದೊ ಗಾವಿಲ (ದಡ್ಡಾ) ಸಗ್ಗಮಲ್ತೆ ಪೋ ನುಡಿಯವೊ ಮೂರ್ಖ ಸಗ್ಗದ ಫಲಂ ಸುಖಮಲ್ತೆ ಸುಖಕ್ಕೆ (ಸ್ವರ್ಗದ ಫಲವೂ ಸುಖವೇ ಅಲ್ಲವೇ?) ಪೇೞ್ ಒಡಂಬಡದವರಾರೊ(ಹೇಳು ಒಪ್ಪದವರಾರಿದ್ದಾರೆ)! ಪೆಂಡಿರೊಳಗಾರ್ ಪೆಱರ್ ಆಮೆ ದಲ್(ಸ್ತ್ರೀಯರಲ್ಲಿ ನಮಗಿಂತ ಸೌಂದರ್ಯವತಿಯರಾದವರು? ನಾವೇ ಅಲ್ಲವೇ) ಆಮೆ ಬಂದು ಕಾಲ್ವಿಡಿದಪೆವು ಇಂಬುಕೆಯ್ವೊಡಿವು (ಆಶ್ರಯಿಸುವುದಕ್ಕೆ) ಮೆಲ್ಲಡಿಗಳ್ ಗಡ (ನಿನ್ನ ಕಾಲುಗಳು ನಾವು ಆಶ್ರಯಿಸುವುದಕ್ಕೆ ಯೋಗ್ಯವಾದುವಲ್ಲವೇ?) ಕರ್ಚು ಬೂದಿಯಂ (ಬೂದಿಯನ್ನು ತೊಳೆದುಕೊ)
ಪದ್ಯ-೯೩:ಅರ್ಥ: ಎಲೋ ದಡ್ಡ, ತೀವ್ರವಾದ ತಪಸ್ಸಿನಿಂದ ನೀನು ಪಡೆಯಬೇಕಾದ ವಸ್ತು ತಾನೆ ಏನು? ಸ್ವರ್ಗವಲ್ಲವೇ, ಹೋಗು ಮೂರ್ಖ, ಮಾತನಾಡಬೇಡ. ಸ್ವರ್ಗದ ಫಲವೂ ಸುಖವೇ ಅಲ್ಲವೇ? ಸುಖಕ್ಕೆ ಒಪ್ಪದವರಾರಿದ್ದಾರೆ, ಸ್ತ್ರೀಯರಲ್ಲಿ ನಮಗಿಂತ ಸೌಂದರ್ಯವತಿಯರಾದವರು? ನಾವೇ ಅಲ್ಲವೇ (ಪರಮ ಸೌಂದರ್ಯವತಿಯರಾದವರು) ನಾವೇ ಬಂದು ನಿನ್ನ ಕಾಲನ್ನು ಹಿಡಿಯುತ್ತಿದ್ದೇವೆ. ಈ ಮೃದುವಾದ ನಿನ್ನ ಕಾಲುಗಳು ನಾವು ಆಶ್ರಯಿಸುವುದಕ್ಕೆ ಯೋಗ್ಯವಾದುವಲ್ಲವೇ? ಬೂದಿಯನ್ನು ತೊಳೆದುಕೊ, ಎಂದರು ದೇವಕನ್ಯೆಯರು.
ಕಂ|| ಕೋಕಿಳಕುಳಕಳ ಗಳನಿನ
ದಾಕುಳರವಮಿಂಪನಾಗಳುಂ ಪಡೆದುದು ನೋ|
ಡೀಕೆಗಳ ಚಳಿತ ಲುಳಿತ
ಭ್ರೂಕುಟಿಯೇ ಪರಮ ಸುಖದ ಕೋಟಿಯನೀಗುಂ|| ೯೪ ||
ಪದ್ಯ-೯೪:ಪದವಿಭಾಗ-ಅರ್ಥ:ಕೋಕಿಳ ಕುಳಕಳ ಗಳನಿನದ (ಕಂಠಧ್ವನಿ) ಆಕುಳರವಂ ಇಂಪನಾಗಳುಂ ಪಡೆದುದು (ಕೋಗಿಲೆಗಳ ಸಮೂಹದ ಕಂಠಧ್ವನಿ ಯಾವಾಗಲೂ ಮಾಧುರ್ಯವನ್ನು ಪಡೆದಿದೆ) ನೋಡು ಈಕೆಗಳ ಚಳಿತ ಲುಳಿತ ಭ್ರೂಕುಟಿಯೇ(ಈ ಅಪ್ಸರೆಯರ ಚಲಿಸುತ್ತಿರುವ ವಕ್ರವಾದ ಹುಬ್ಬುಗಳ ತುದಿಗಳೇ) ಪರಮ ಸುಖದ ಕೋಟಿಯನು ಈಗುಂ (ಪರಮ ಸುಖದ ಕೋಟಿಯನ್ನು ಈಯುವುದು - ಕೊಡುವುದು)
ಪದ್ಯ-೯೪:ಅರ್ಥ:ಅವರ ಮಾತು, ಇಗೋ ಕೋಗಿಲೆಗಳ ಸಮೂಹದ ಕಂಠಧ್ವನಿ ಯಾವಾಗಲೂ ಮಾಧುರ್ಯವನ್ನು ಪಡೆದಿದೆ. ನೋಡು ಈ ಅಪ್ಸರೆಯರ ಚಲಿಸುತ್ತಿರುವ ವಕ್ರವಾದ ಹುಬ್ಬುಗಳ ತುದಿಗಳೇ ಪರಮ ಸುಖದ ಕೋಟಿಯನ್ನು ಕೊಡುವುದು.
ಇಂದ್ರನ ಆಗಮನ[ಸಂಪಾದಿಸಿ]
ವ|| ಎಂದೆನಿತಾನುಂ ತೆಱದೊಳೞಿಪಿನ ಲಲ್ಲೆಯ ಚೆಲ್ಲದ ಪುರುಡಿನ ಮುಳಿಸಿನ ನೆವದ ಪಡೆಮಾತುಗಳುಂ ನುಡಿದುಂ ಕಾಲ್ವಿಡಿದುಮಚಳಿತಧೈರ್ಯನ ಮನಮಂ ಚಳಿಯಿಸಲಾಱದಚ್ಚರಸೆಯರಚ್ಚಿಗಂಗೊಂಡಂತಾಗೆಯುಂ ಗಂಧರ್ವರ್ ಗರ್ವಮನುೞಿದು ಪೋಗೆಯುಂ ಕಾಮದೇವನೇವಮಂ ಕೆಯ್ಕೊಂಡು ಸೀಂತಂತೆ ಮೊಗಮಾಡಿ ಪೋಗಿ ದೇವೇಂದ್ರನ ಮೊಗಮಂ ನೋಡಲ್ ನಾಣ್ಚಿರ್ದನಾಗಳಿಂದ್ರಂ ನರೇಂದ್ರತಾಪಸನ ಧೈರ್ಯಕ್ಕೆ ಮೆಚ್ಚಿ ಧರಾಮರವೇಷದೊಳಿಂದ್ರಕೀಲನಗೇಂದ್ರಮನಯ್ದೆವಂದು-
ವಚನ:ಪದವಿಭಾಗ-ಅರ್ಥ:ಎಂದು ಎನಿತಾನುಂ ತೆಱದೊಉ ಅೞಿಪಿನ ಲಲ್ಲೆಯ ಚೆಲ್ಲದ ಪುರುಡಿನ ಮುಳಿಸಿನ ನೆವದ ಪಡೆಮಾತುಗಳುಂ (ಎಷ್ಟೋ ರೀತಿಯ ಪ್ರೇಮದ, ಮದ್ದಿನ, ಚೆಲ್ಲಾಟದ, ಹುರುಡಿನ, ಕೋಪದ, ನೆಪದ ರೂಡಿಯ ಮಾತುಗಳನ್ನು) ನುಡಿದುಂ ಕಾಲ್ವಿಡಿದುಂ ಅಚಳಿತಧೈರ್ಯನ ಮನಮಂ ಚಳಿಯಿಸಲಾಱದೆ(ಚಲಿಸಲಾರದೆ) -(ಆಡಿಯೂ ಕಾಲು ಹಿಡಿದೂ ಸ್ಥಿರಚಿತ್ತನಾದ ಅರ್ಜುನನ ಮನಸ್ಸನ್ನು ಕದಲಿಸಲಾರದೆ ಹೋದರು) ಅಚ್ಚರಸೆಯರು ಅಚ್ಚಿಗಂಗೊಂಡು ಅಂತಾಗೆಯುಂ (ಅಪ್ಸರಸ್ತ್ರೀಯರು ವ್ಯಸನಗೊಂಡವರಂತೆ ಅಸಮಾಧಾನವನ್ನು ಹೊಂದಿದರು) ಗಂಧರ್ವರ್ ಗರ್ವಮನುೞಿದು ಪೋಗೆಯುಂ (ಗಂಧರ್ವರು ತಮ್ಮ ಅಹಂಕಾರವನ್ನು ತೊರೆದು ಹೋದರು.) ಕಾಮದೇವನೇವಮಂ ಕೆಯ್ಕೊಂಡು ಸೀಂತಂತೆ ಮೊಗಮಾಡಿ ಪೋಗಿ (ಮನ್ಮಥನು ಅವಮಾನವನ್ನು ಹೊಂದಿ ಸೀದಹಾಗೆ (ಸುಟ್ಟ) ಮುಖವನ್ನು ಮಾಡಿಕೊಂಡು ಹೋಗಿ) ದೇವೇಂದ್ರನ ಮೊಗಮಂ ನೋಡಲ್ ನಾಣ್ಚಿ ಇರ್ದನು,(ದೇವೇಂದ್ರನ ಮುಖವನ್ನು ನೋಡಲು ನಾಚಿಕೆಗೊಂಡನು.) ಆಗಳ್ ಇಂದ್ರಂ ನರೇಂದ್ರತಾಪಸನ ಧೈರ್ಯಕ್ಕೆ ಮೆಚ್ಚಿ ಧರಾಮರವೇಷದೊಳ್ ಇಂದ್ರಕೀಲ ನಗೇಂದ್ರಮನು ಎಯ್ದೆವಂದು (ಆಗ ಇಂದ್ರನು ರಾಜತಾಪಸನಾದ ಅರ್ಜುನನ ಧೈರ್ಯಕ್ಕೆ ಮೆಚ್ಚಿ ಬ್ರಾಹ್ಮಣ ವೇಷದಲ್ಲಿ ತಾನೇ ಇಂದ್ರಕೀಲಪರ್ವತಕ್ಕೆ ಬಂದು- (ಬಂದನು)
ವಚನ:ಅರ್ಥ:ಎಂಬುದಾಗಿ ಎಷ್ಟೋ ರೀತಿಯ ಪ್ರೇಮದ, ಮದ್ದಿನ, ಚೆಲ್ಲಾಟದ, ಹುರುಡಿನ, ಕೋಪದ, ನೆಪದ ರೂಡಿಯಮಾತುಗಳನ್ನು ಆಡಿಯೂ ಕಾಲು ಹಿಡಿದೂ ಸ್ಥಿರಚಿತ್ತನಾದ ಅರ್ಜುನನ ಮನಸ್ಸನ್ನು ಕದಲಿಸಲಸಮರ್ಥರಾದರು. ಅಪ್ಸರಸ್ತ್ರೀಯರು ವ್ಯಸನಗೊಂಡವರಂತೆ ಅಸಮಾಧಾನವನ್ನು ಹೊಂದಿದರು. ಗಂಧರ್ವರು ತಮ್ಮ ಅಹಂಕಾರವನ್ನು ತೊರೆದರು. ಮನ್ಮಥನು ಅವಮಾನವನ್ನು ಹೊಂದಿ ಸುಟ್ಟಹಾಗೆ ಮುಖವನ್ನು ಮಾಡಿಕೊಂಡು ಹೋಗಿ ದೇವೇಂದ್ರನ ಮುಖವನ್ನು ನೋಡಲು ನಾಚಿಕೆಗೊಂಡನು. ಆಗ ಇಂದ್ರನು ರಾಜತಾಪಸನಾದ ಅರ್ಜುನನ ಧೈರ್ಯಕ್ಕೆ ಮೆಚ್ಚಿ ಬ್ರಾಹ್ಮಣ ವೇಷದಲ್ಲಿ ತಾನೇ ಇಂದ್ರಕೀಲ ಪರ್ವತಕ್ಕೆ ಬಂದನು
ಮ|| ಸ್ರ|| ಕಣಿಯಂ ಶೌರ್ಯಾಭಿಮಾನಕ್ಕೆಡಱಿದ ರಿಪುಸೈನ್ಯಕ್ಕೆ ಸಂಗ್ರಾಮದೊಳ್ ಬ
ಲ್ಕಣಿಯಂ ಕಲ್ಹಾರ ಸಾರಾಮೃತ ಶಶಿ ವಿಶದಾತ್ಮೀಯವಂಶಕ್ಕೆ ಚೂಡಾ|
ಮಣಿಯಂ ತೀವ್ರ ಪ್ರತಾಪ ದ್ಯುಮಣಿಯನೆರೆದರ್ಥಿವ್ರಜಂಗಳ್ಗೆ ಚಿಂತಾ
ಮಣಿಯಂ ಸಾಮಂತಚೂಡಾಮಣಿಯನಣಿಯರಂ ಬಂದು ಕಂಡಂ ಸುರೇಂದ್ರಂ|| ೯೫ ||
ಪದ್ಯ-೯೫:ಪದವಿಭಾಗ-ಅರ್ಥ:ಕಣಿಯಂ ಶೌರ್ಯಾಭಿಮಾನಕ್ಕೆ (ಶೌರ್ಯಾಭಿಮಾನಿಗಳಿಗೆ ಗಣಿಯಾದ) ಎಡಱಿದ ರಿಪುಸೈನ್ಯಕ್ಕೆ ಸಂಗ್ರಾಮದೊಳ್ ಬಲ್ಕಣಿಯಂ (ವಿರೋಧಿಸಿದ ಶತ್ರುಸೈನ್ಯಕೆ ಯುದ್ಧದಲ್ಲಿ ಬಹು ಶೂರನೂ) ಕಲ್ಹಾರ ಸಾರಾಮೃತ, ಶಶಿ ವಿಶದಾತ್ಮೀಯವಂಶಕ್ಕೆ, ಚೂಡಾ|ಮಣಿಯಂ (ಕಲ್ಹಾರ ಪುಷ್ಪದಂತೆಯೂ ಸಾರವತ್ತಾದ ಅಮೃತದಂತೆಯೂ, ಚಂದ್ರಮಂಡಲದಂತೆಯೂ ಸ್ವಚ್ಛವಾಗಿರುವ ತನ್ನ ವಂಶಕ್ಕೆ ತಲೆಯಾಭರಣವೂ) ತೀವ್ರ ಪ್ರತಾಪ ದ್ಯುಮಣಿಯನೆರೆದರ್ಥಿವ್ರಜಂಗಳ್ಗೆ ಚಿಂತಾಮಣಿಯಂ ಸಾಮಂತಚೂಡಾಮಣಿಯನಣಿಯರಂ ಬಂದು ಕಂಡಂ ಸುರೇಂದ್ರಂ
ಪದ್ಯ-೯೫ಅರ್ಥ: ಶೌರ್ಯಾಭಿಮಾನಿಗಳಿಗೆ ಗಣಿಯಾದ, ವಿರೋಧಿಸಿದ ಶತ್ರುಸೈನ್ಯಕೆ ಯುದ್ಧದಲ್ಲಿ ಬಹು ಶೂರನೂ, ಕಲ್ಹಾರ ಪುಷ್ಪದಂತೆಯೂ ಸಾರವತ್ತಾದ ಅಮೃತದಂತೆಯೂ, ಚಂದ್ರಮಂಡಲದಂತೆಯೂ ಸ್ವಚ್ಛವಾಗಿರುವ ತನ್ನ ವಂಶಕ್ಕೆ ತಲೆಯಾಭರಣವೂ ತೀಕ್ಷ್ಣವಾದ ಪ್ರತಾಪದಲ್ಲಿ ಸೂರ್ಯನೂ ಬೇಡುವ ಯಾಚಕವರ್ಗಕ್ಕೆ ಕೇಳಿದ್ದನ್ನು ಕೊಡುವ ಚಿಂತಾಮಣಿಯೂ, ಸಾಮಂತ ಚೂಡಾಮಣಿಯೂ (ಸಾಮಂತರಲ್ಲಿ ಶ್ರೇಷ್ಠ - ವೀರಕೇಸರಿ) ಆದ ಅರ್ಜುನನನ್ನು ಇಂದ್ರನು ಬಂದು ಕಂಡನು.
||ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಸಪ್ತಮಾಶ್ವಾಸಂ ||
||ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಏಳನೆಯ ಆಶ್ವಾಸ.||
♦♣♣♣♣♣♣♣♣♣♣♣♣♣♣♣♣♣♣♣♦

ಪಂಪಭಾರತ[ಸಂಪಾದಿಸಿ]

ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ