ವಿಷಯಕ್ಕೆ ಹೋಗು

ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ/ಸಟೀಕಾ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೧.ಆದಿಪರ್ವ::ಸಂಧಿ-೪)

[ಸಂಪಾದಿಸಿ]

ಆದಿಪರ್ವ ನಾಲ್ಕನೇ ಸಂಧಿ

[ಸಂಪಾದಿಸಿ]
  • ಸೂಚನೆ-:
ಭರತ ವೊಂಶದೊಳೈದು ಮಿಗೆ ನೂ
ರ್ವರು ಕುಮಾರರು ಪಾಂಡು ಧೃತರಾ
ಷ್ಟ್ರರಿಗೆ ಜನಿಸಿದರಮಲ ಮುನಿ ಮಂತ್ರೋಪದೇಶದಲಿ ||
ಪದವಿಭಾಗ-ಅರ್ಥ: ಭರತ ವೊಂಶದೊಳೈದು- ವಂಶದೊಳು+ ಐದು ಮಿಗೆ= ಅದಕ್ಕೂ ಹೆಚ್ಚು, ನೂರ್ವರು=ನೂರು ಕುಮಾರರು ಪಾಂಡು ಧೃತರಾಷ್ಟ್ರರಿಗೆ ಜನಿಸಿದರಮಲ- ಜನಿಸಿದರು+ ಅಮಲ= ಪವಿತ್ರ, ಶ್ರೇಷ್ಠ; ಮುನಿ ಮಂತ್ರೋಪದೇಶದಲಿ.
ಅರ್ಥ: ಭರತ ವೊಂಶದಲ್ಲಿ ಐದು ಪುತ್ರರು ಪಾಂಡುವಿಗೂ, ಅದಕ್ಕೂ ಹೆಚ್ಚಾಗಿ ಧೃತರಾಷ್ಟ್ರನಿಗೆ ನೂರು ಕುಮಾರರೂ ಮುನಿಯ ಪವಿತ್ರ,ಮಂತ್ರೋಪದೇಶದಿಂದ ಜನಿಸಿದರು.

♠♠♠

ಪಾಂಡುವಿಗೆ ಕುಂತಿ ಮಾದ್ರಿಯರೊಡನೆ ವಿವಾಹ, ರಾಜ ಪಟ್ಟ

[ಸಂಪಾದಿಸಿ]
ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀಭೋಜ ಭೂಪತಿ
ಯಾಲಯದೊಳೀ ಕುಂತಿ ಮೆರೆದಳು ವಿವಿಧ ವಿಭವದಲಿ ||
ಕೇಳಿದನು ಗಾಂಗೇಯನಾ ನೀ
ಲಾಳಕಿಯ ಕುಲರೂಪು ಲಕ್ಷಣ
ಶೀಲವನು ಪಾಂಡು ವಿಗೆ ಪಾಸಟಿಯೆಂದು ರಾಗದಲಿ || ೧ ||
ಪದವಿಭಾಗ-ಅರ್ಥ:ಕೇಳು ಜನಮೇಜಯ ಧರಿತ್ರೀಪಾಲ ಕುಂತೀಭೋಜ ಭೂಪತಿಯ(ರಾಜನ)+ ಆಲಯದೊಳು= ಮನೆಯಲ್ಲಿ ಈ ಕುಂತಿ ಮೆರೆದಳು= ಪ್ರಸಿದ್ಧಳಾದಳು, ವಿವಿಧ= ಅನೇಕ ಗುಣಗಳ, ವಿಭವದಲಿ= ವೈಭವದಿಂದ, ಕೇಳಿದನು ಗಾಂಗೇಯನು+ ಆ ನೀಲಾಳಕಿಯ(ನೀಲ=ಕನ್ನೈದಿಲೆ ಆಲಕ= ಉಪೇಕ್ಷಿತ ಕನ್ಯೆಯ) ಕುಲರೂಪು ಲಕ್ಷಣಶೀಲವನು ಪಾಂಡುವಿಗೆ ಪಾಸಟಿಯೆಂದು= ತಕ್ಕವಳು, ರಾಗದಲಿ= ಪ್ರೀತಿಯಲ್ಲಿ,
ಅರ್ಥ: ಕೇಳು ಜನಮೇಜಯ ರಾಜನೇ, ಕುಂತೀಭೋಜ ರಾಜನ ಮನೆಯಲ್ಲಿ ಈ ಹಿಂದೆ ಹೇಳಿದ ಕುಂತಿಯು ಅನೇಕ ಗುಣಗಳ, ವೈಭವದಿಂದ ಪ್ರಸಿದ್ಧಳಾದಳು, ಭೀಷ್ಮನು ಯಾರೂ ಗಮನಿಸಿದ ಉಪೇಕ್ಷಿತ ಕನ್ಯೆಯ ಕುಲ, ರೂಪು, ಲಕ್ಷಣ, ಶೀಲ- ಅವುಗಳನ್ನು ಕೇಳಿದನು. ಅವಳು ಪಾಂಡುವಿಗೆ ತಕ್ಕವಳು ಎಂದು ಪ್ರೀತಿಯಿಂದ- ಅವಳ ತಂದೆಯನ್ನು ಕರೆಸಿದನು.
ಕರೆಸಿ ಕುಂತೀಭೋಜನನು ಸ
ತ್ಕರಿಸಿ ಕುಂತಿಯ ಪಾಂಡುವಿಗೆ ಭೂ
ಸುರರ ಮತದಿಂದಗ್ನಿ ಸಾಕ್ಷಿಕ ವರವಿವಾಹವನು ||
ಪರಮ ವಿಭವದಲೆಸಗಿ ಮುದ್ರೇ
ಶ್ಯರನನುಜೆ ಮಾದ್ರಿಯನು ಪಾಂಡುವಿ
ಗರಸಿಯನು ಮಾಡಿದನು ವೈವಾಹಿಕ ಮುಹೂರ್ತದಲಿ|| ೨ ||
ಪದವಿಭಾಗ-ಅರ್ಥ:ಕರೆಸಿ ಕುಂತೀಭೋಜನನು ಸತ್ಕರಿಸಿ ಕುಂತಿಯ ಪಾಂಡುವಿಗೆ ಭೂಸುರರ ಮತದಿಂದ+ ಅಗ್ನಿ ಸಾಕ್ಷಿಕ ವರವಿವಾಹವನು ಪರಮ ವಿಭವದಲಿ+ ಎಸಗಿ ಮುದ್ರೇಶ್ಯರನ+ ಅನುಜೆ= ತಂಗಿ- ಸಹೋದರಿ, ಮಾದ್ರಿಯನು ಪಾಂಡುವಿಗೆ+ ಅರಸಿಯನು= ಪತ್ನಿಯನ್ನು ಮಾಡಿದನು ವೈವಾಹಿಕ ಮುಹೂರ್ತದಲಿ
ಅರ್ಥ: ಕುಂತೀಭೋಜನನ್ನು ಕರೆಸಿ ಸತ್ಕರಿಸಿ ಕುಂತಿಯನ್ನು ಪಾಂಡುವಿಗೆ ಬ್ರಾಹ್ಮಣರ ಅಭಿಪ್ರಾಯ ಪಡೆದು ಅಗ್ನಿ ಸಾಕ್ಷಿಕವಾಗಿ ಶ್ರೇಷ್ಠವಾದ ವಿವಾಹ ಸಂಸ್ಕಾರವನ್ನು ಬಹಳ ವೈಭವದಿಂದ ಮಾಡಿ, ನಂತರ ಮುದ್ರದೇಶದ ರಾಜನ ತಂಗಿ ಮಾದ್ರಿಯನ್ನೂ ಸಹ ಪಾಂಡುವಿಗೆ ಅದೇ ವೈವಾಹಿಕ ಮುಹೂರ್ತದಲ್ಲಿ ವಿವಾಹವನ್ನು ಮಾಡಿದನು.
ವರ ವಿವಾಹ ಮುಹೂರ್ತ ಸಮನಂ
ತರ ಸುಲಗ್ನ ದೊಳಖಿಳ ರಾಜ್ಯದ
ಧುರದ ನಿರ್ವಾಹಕ ಮಹಾಪಟ್ಟಾಭಿಷೇಚನವ ||
ಸುರನದೀಸುತ ಪಾಂಡುವಿಗೆ ವಿ
ಸ್ತರಿಸಿದನು ಧೃತರಾಷ್ಟ ವಿದುರರ
ಪರಮ ಪರಿತೋಷಾನುಮತದಲಿ ಮೆರೆದುದಾ ವಿಭವ || ೩ ||
ಪದವಿಭಾಗ-ಅರ್ಥ:ವರ ವಿವಾಹ ಮುಹೂರ್ತ ಸಮನಂತರ= ನಂತರ ಅನುಕೂಲವಾದ, ಸುಲಗ್ನದೊಳಖಿಳ= ಸುಲಗ್ನದೊಳು+ ಅಖಿಳ= ಸಕಲ, ರಾಜ್ಯದ ಧುರದ= ಯುದ್ಧದಿಂದ ನಿರ್ವಾಹಕ= ರಕ್ಷಿಸಿ ನಿರ್ವಹಿಸುವ, ಮಹಾಪಟ್ಟಾಭಿಷೇಚನವ ಸುರನದೀಸುತ= ಭೀಷ್ಮ ಪಾಂಡುವಿಗೆ ವಿಸ್ತರಿಸಿದನು= ಕ್ರಮಬದ್ಧವಾಗಿ ಮಾಡಿದನು, ಧೃತರಾಷ್ಟ ವಿದುರರ ಪರಮ ಪರಿತೋಷ+ ಅನುಮತದಲಿ= ಒಪ್ಪಿಗೆಯಲ್ಲಿ, ಮೆರೆದುದು+ ಆ ವಿಭವ= ವೈಭವ.
ಅರ್ಥ: ನಂತರ ಅನುಕೂಲವಾದ ಶ್ರೇಷ್ಠವಾದ ವಿವಾಹ ಮುಹೂರ್ತದಲ್ಲಿ, ಸುಲಗ್ನಲ್ಲಿ, ಸಕಲ ರಾಜ್ಯವನ್ನೂ ಶೌರ್ಯದಿಂದ ರಕ್ಷಿಸಿ ನಿರ್ವಹಿಸುವ ಮಹಾಪಟ್ಟಾಭಿಷೇಕವನ್ನು, ಭೀಷ್ಮನು, ಧೃತರಾಷ್ಟ ವಿದುರರ ಸಂಪೂರ್ಣ ಸಂತೊಷದ ಒಪ್ಪಿಗೆಯನ್ನು ಪಡೆದು, ಪಾಂಡುವಿಗೆ ಕ್ರಮಬದ್ಧವಾಗಿ ಮಾಡಿದನು. ಆ ಕಾರ್ಯ ವೈಭವದಿಂದ ಮೆರೆಯಿತು.
ಸೋಮ ಕುಲದವರಲಿ ಭವತ್ ಪ್ರಪಿ
ತಾಮಹನವೋಲ್ ಧರ್ಮದಲಿ ಸಂ
ಗ್ರಾಮದಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿ ||
ಸಾಮದಲಿ ಶೌರ್ಯದಲಿ ಸುಜನ
ಪ್ರೇಮದಲಿ ನೀತಿಯಲಿ ದೃಢದಲಿ
ಭೂಮಿಯಲಿ ನಾ ಕಾಣೆನವನೀಪಾಲ ಕೇಳೆಂದ ||೪ ||
ಪದವಿಭಾಗ-ಅರ್ಥ:ಸೋಮ ಕುಲದವರಲಿ ಭವತ್= ನಿನ್ನ, ಪ್ರಪಿತಾಮಹನವೋಲ್= ಅಜ್ಜನ ತಂದೆ, ಇಲ್ಲಿ ಅಜ್ಜನ ಅಜ್ಜ:- ಜನಮೇಜಯ-> ಪರೀಕ್ಷಿತ-> ಅಭಿಮನ್ಯು->, ಅರ್ಜುನ-> ಪಾಂಡು; ಧರ್ಮದಲಿ ಸಂಗ್ರಾಮದಲಿ= ಯುದ್ಧದಲ್ಲಿ, ಸತ್ಯದಲಿ ಸಾಹಿತ್ಯದಲಿ ವಿನಯದಲಿ ಸಾಮದಲಿ ಶೌರ್ಯದಲಿ ಸುಜನಪ್ರೇಮದಲಿ ನೀತಿಯಲಿ ದೃಢದಲಿ ಭೂಮಿಯಲಿ ನಾ ಕಾಣೆನು+ ಅವನೀಪಾಲ ಕೇಳೆಂದ.
ಅರ್ಥ: ಚಂದ್ರವಂಶದಲ್ಲಿ ನಿನ್ನ ಅಜ್ಜನ ಅಜ್ಜನಾದ ಪಾಂಡುವಿಗೆ ಧರ್ಮದಲ್ಲಿ, ಯುದ್ಧದಲ್ಲಿ, ಸತ್ಯದಲ್ಲಿ, ಸಾಹಿತ್ಯದಲ್ಲಿ, ವಿನಯದಲ್ಲಿ, ಸಾಮನೀತಿಯಲ್ಲಿ ಶೌರ್ಯದಲ್ಲಿ, ಸಜ್ಜನರ ಪ್ರೇಮದಲ್ಲಿ, ನೀತಿಯಲ್ಲಿ ದೃಢತೆಯಲ್ಲಿ, ಭೂಮಿಯಲ್ಲಿ ಅವನಿಗೆ ಸಮಾನರಾದ ರಾಜರನ್ನು ನಾನು ಕಾಣೆನು, ರಾಜನೇ ಕೇಳು ಎಂದ.
ಪಸರಿಸಿದ ಪರಿಧೌತಕೀರ್ತಿ
ಪ್ರಸರದಲಿ ಬೆಳುಪಾಯ್ತು ಜಗ ನಿ
ಪ್ಪರಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ ||
ಮಸುಗಿತಗ್ಗದ ಕೆಂಪು ಪರಬಲ
ವಿಸರದಳನ ಕ್ರೋಧಮಯ ತಾ
ಮಸದಿನಸಿತಾಭಾಸಮಾದುದು ಭುವನವಿಸ್ತಾರ || ೫ ||
ಪದವಿಭಾಗ-ಅರ್ಥ:ಪಸರಿಸಿದ ಪರಿಧೌತ= ಬಿಳಿಯ, ಧೌತ= ಶುದ್ಧ; ಕೀರ್ತಿ ಪ್ರಸರದಲಿ= ಕೀರ್ತಿಯ ಹರಡುವಿಕೆಯಿಂದ, ಬೆಳುಪಾಯ್ತು ಜಗ= ಜಗತ್ತೇ ಬಿಳುಪಾಯಿತು (ಉತ್ಪ್ರೇಕ್ಷೆ); ನಿಪ್ಪರಸರದಲಿ= ನಿಷ್ಠುರತೆಯಿಂದ, ಝಳಪಿಸುವ ಖಂಡೆಯ= ಖಡ್ಗದ, ಸಿರಿಯ ಸೊಂಪಿನಲಿ= ಹೆಚ್ಚಿನ ಕಾಂತಿಯಿಂದ, ಮಸುಗಿತು+ ಅಗ್ಗದ ಕೆಂಪು= ಉತ್ತಮವಾದ ಕೆಂಪು ಬಣ್ಣ ಆವರಿಸಿತು. ಪರಬಲ= ಶತ್ರುಸೈನ್ದ, ವಿಸರದಳನ= ಆಕ್ರಮಿಸುವ ಸೈನ್ಯದ, ಕ್ರೋಧಮಯ ತಾಮಸದಿ= ಉಗ್ರ ಕೋಪದಿಂದ, ನಸಿತಾಭಾಸಮಾದುದು=ಸಿತ-ಬಿಳಿಪು, ನ+ಸಿತ, ಕಪ್ಪಾಯಿತು ಭುವನವಿಸ್ತಾರ= ವಿಶಾಲ ಜಗತ್ತು
ನಿಘಂಟು:- ವಿಸರ = 1. ರಕ್ಷಣೆ. 2. ಪಾಲನೆ. 3. ಹತ್ತಿರ. 4. ಉತ್ಸಾಹ. 5. ಸಂಬಂಧ.(ಕ.ಸಾ.ಪ.ನಿಘಂಟು. ವೆಂ.ಸು. ಹಿರಿ, ಹೊರಕ್ಕೆ ತೆಗೆ ೨ ಚುಚ್ಚು ತಿವಿ
ಅರ್ಥ: ಪಾಂಡುರಾಜನ ಶುದ್ಧ ಕೀರ್ತಿಯ ಹರಡುವಿಕೆಯಿಂದ ಜಗತ್ತೇ ಬಿಳುಪಾಯಿತು (ಉತ್ಪ್ರೇಕ್ಷೆ); ನಿಷ್ಠುರತೆಯಿಂದ, ಝಳಪಿಸುವ ಖಡ್ಗದ, ಹೆಚ್ಚಿನ ಕಾಂತಿಯಿಂದ, ಉತ್ತಮವಾದ ಕೆಂಪು ಬಣ್ಣ ಆವರಿಸಿತು. ಶತ್ರುಸೈನ್ಯವನ್ನು, ಆಕ್ರಮಿಸುವ ಸೈನ್ಯದ, ಉಗ್ರ ಕೋಪದಿಂದ, ವಿಶಾಲ ಜಗತ್ತು ಕಪ್ಪಾಯಿತು.
ಓಲಗಿಸುವುದು ಮಿತ್ರ ರಾಯರ
ಮೌಳಿಮಣಿ ಪಾಂಡುವಿನ ಚರಣ ನ
ಖಾಳಿಯನು ಸೆಣಸುವ ಮಹೀಶರ್ವ ಮೌಳಿಮಣಿ ಕಿರಣ ||
ಓಲಗಿಸಿತು ಪ್ರಣಯದಮರೀ
ಬಾಲೆಯರ ಪದನಖವನದನೇ
ವೇಳುವೇನು ಪಾಂಡುವಿನ ಖಂಡೆಯ ಸಿರಿಯ ಸಡಗರವ || ೬ ||
ಪದವಿಭಾಗ-ಅರ್ಥ: ಓಲಗಿಸುವುದು= ಸೇವೆಮಾಡುವುದು, ಮಿತ್ರ ರಾಯರಮೌಳಿಮಣಿ= ಮಿತ್ರರಾದ ಸಾಮಂತ ರಾಜರ ತಲೆಯ ಮೇಲಿದ್ದ ಕಿರೀಟದ ರತ್ದದ ಮಣಿಗಳು, ಪಾಂಡುವಿನ ಚರಣ= ಪಾದದ, ನಖಾಳಿಯನು- ನಖ= ಉಗುರು, ಆಳಿಯನು= ಸಮೂಹವನ್ನು. ಉಗುರುಗಳನ್ನು, ಸೆಣಸುವ= (ಅವನೊಡನೆ) ಯುದ್ಧಮಾಡುವ, ಮಹೀಶ+ ಅರ್ವ=ಹೀನ,ದುರ್ಬಲ, ನೀಚ; ಮೌಳಿಮಣಿ ಕಿರಣ= ತಲೆಯ ಮೇಲಿದ್ದ ಕಿರೀಟದ ರತ್ದದ ಮಣಿಗಳು, ಓಲಗಿಸಿತು= ಸೇವೆಮಾಡಿತು, ಪ್ರಣಯದ ಅಮರೀ=ಪ್ರೀತಿಸುವ ದೇವ, ಬಾಲೆಯರ= ಕನ್ಯೆಯರ, ಪದನಖವನು= ಪಾದದ ನಖಗಳನ್ನು ಉಗುರುಗಳನ್ನು, ಅದನು ಏ ವೇಳುವೇನು= ಅದನ್ನು ಏನು ಹೇಳಲಿ, ಪಾಂಡುವಿನ ಖಂಡೆಯ= ಖಡ್ಗದ ಸಿರಿಯ= ಉನ್ನತಿಯ, ಸಡಗರವ= ವೈಯಾರವನ್ನು.
ಅರ್ಥ:ಪಾಂಡುವಿನ ಪಾದಗಳ ಉಗುರುಗಳನ್ನು ಮಿತ್ರರಾದ ಸಾಮಂತ ರಾಜರ ತಲೆಯ ಮೇಲಿದ್ದ ಕಿರೀಟದ ರತ್ದದ ಮಣಿಗಳು ಸೇವೆಮಾಡುವುದು; ಅವರು ಪಾಂಡುವಿನ ಪಾದಕ್ಕೆ ತಲೆಬಾಗಿ ನಮಿಸುವರು. ಅವನೊಡನೆ ಯುದ್ಧಮಾಡುವ ದುರ್ಬಲ ರಾಜರ ತಲೆಯ ಮೇಲಿದ್ದ ಕಿರೀಟದ ರತ್ದದ ಮಣಿಗಳು ಪ್ರೀತಿಸುವ ದೇವಕನ್ಯೆಯರ ಪಾದದ ಉಗುರುಗಳನ್ನು ಸೇವೆಮಾಡಿತು; ಅವರು ಸತ್ತು ವೀರಸ್ವರ್ಗ ಸೇರಿ ಅಲ್ಲಿ ದೇವಕನ್ಯೆಯರ ಪಾದಕ್ಕೆ ಬಿದ್ದು ಪ್ರಣಯ ಭಿಕ್ಷೆ ಬೇಡಿದರು. ಪಾಂಡುವಿನ ಖಡ್ಗದ ಉನ್ನತಿಯ ವೈಯಾರವನ್ನು ಏನು ಹೇಳಲಿ.
ಓಲಗಿಸಿ ಕೊಂಬಾತನಂಧನೃ
ಪಾಲನುಳಿದಂತಖಿಳ ಧರಣೀ
ಪಾಲಕತ್ಪವ ಪಾಂಡುಭೂಪತಗೀ ಕುಮಾರಕರ ||
ಲಾಲಿಸುವ ಕುಲನೀತಿ ವಿಧದಲಿ
ಪಾಲಿಸುವ ಭರ ಭೀಷ್ಮನದು ಸಂ
ಬಾಳಿಸಿತುನಳ ನಹುಷಚರಿತವನಿವರ ಪರಿಪಾಟಿ || ೭ ||
ಪದವಿಭಾಗ-ಅರ್ಥ:ಓಲಗಿಸಿ ಕೊಂಬಾತನು ಅಂಧನೃಪಾಲನು (ಧೃತರಾಷ್ಟ್ರ)+ ಉಳಿದಂತೆ+ ಅಖಿಳ= ಎಲ್ಲಾ ಧರಣೀಪಾಲಕತ್ಪವ= ರಾಜ್ಯವಾಳುವ ಕಾರ್ಯವನ್ನು ಪಾಂಡುಭೂಪತಿಗೆ+ ಈ ಕುಮಾರಕರ ಲಾಲಿಸುವ= ಕಾಪಾಡುವ, ಕುಲನೀತಿ ವಿಧದಲಿ= ಅನುಸಾರ, ಪಾಲಿಸುವ ಭರ= ಭಾರ, ಹೊಣೆ, ಭೀಷ್ಮನದು, ಸಂಬಾಳಿಸಿತು= ನಿಭಾಯಿಸು ಆಳ್ವಿಕೆ, ನಳ ನಹುಷ ಚರಿತವು ಅನಿವರ= ಅವರೆಲ್ಲರ ಪರಿಪಾಟಿ= ಸಮಾನತೆ, ನೆಡೆ ನುಡಿ, ಆಳ್ವಿಕೆ. ಪರಿಪಾಟ.
ಅರ್ಥ: ಹಿರಿಯನಾಗಿ ಧೃತರಾಷ್ಟ್ರನು ರಾಜಮರ್ಯಾದೆ ಸ್ವೀಕರಿಸುವವನು. ಉಳಿದಂತೆ ಎಲ್ಲಾ ರಾಜ್ಯವಾಳುವ ಕಾರ್ಯವನ್ನು ಪಾಂಡುಭೂಪತಿಗೆ ವಹಿಸಲಾಗಿತ್ತು. ಈ ಕುಮಾರರನ್ನು ಕಾಪಾಡುವ, ಕುಲನೀತಿ ಅನುಸಾರ ಪಾಲಿಸುವ ಹೊಣೆ ಭೀಷ್ಮನದು. ಹೀಗೆ ನಿಭಾಯಿಸಿದ ಆಳ್ವಿಕೆ, ನಳ ನಹುಷ ಅವರೆಲ್ಲರ ಚರಿತ್ರದ ಸಮಾನತೆ ಪಡೆದಿತ್ತು.
ನೃಪ ಪರಂಪರೆಯಿಂದ ಬಂದೀ
ವಿಪುಳ ವಂಶಸ್ಥಿತಿ ವಿಸರ್ಗವ
ನಪಹರಿಸಿದನು ಹಿಂದೆ ವೇದವ್ಯಾಸ ಮುನಿ ಬಂದು ||
ಕೃಪೆಯ ಮಾಡೆನೆ ತನ್ನ ಸಂತತಿ
ಕೃಪಣವಾಯ್ತೆಂದನವರತ ಕುರು
ನೃಪತಿ ಚಿಂತಾಭಾರದಲಿ ಬಳಲುವನು ಧೃತರಾಷ್ಟ್ರ || ೮ ||
ಪದವಿಭಾಗ-ಅರ್ಥ:ನೃಪ ಪರಂಪರೆಯಿಂದ ಬಂದ ಈ ವಿಪುಳ= ದೊಡ್ಡ ವಂಶಸ್ಥಿತಿ ವಿಸರ್ಗವನು= ಬಿಡುವಿಕೆ. ನಾಶ. ಅಪಹರಿಸಿದನು= ಪರಿಹರಿಸಿದನು, ಹಿಂದೆ= ಅವನ ಚಿಂತೆಯ ಹಿಂದೆಯೇ ಆ ಕೂಡಲೆ, ವೇದವ್ಯಾಸ ಮುನಿ ಬಂದು ಕೃಪೆಯ ಮಾಡೆನೆ= ಮಾಡು+ ಎನೆ, ಕೃಪೆ ಮಾಡು ಎನ್ನಲು; ತನ್ನ ಸಂತತಿ ಕೃಪಣವಾಯ್ತು+ ಎಂದು (ನಷ್ಟವಾಯಿತು ಎಂದು,)+ ಅನವರತ= ಸದಾಕಾಲ, ಕುರುನೃಪತಿ= ಕುರುವಂಶದ ರಾಜ, ಚಿಂತಾಭಾರದಲಿ= ಚಿಂತೆಯಿಂದ ಬಳಲುವನು ಧೃತರಾಷ್ಟ್ರ.
ಅರ್ಥ: ನೃಪ ಪರಂಪರೆಯಿಂದ ಬಂದ ಈ ದೊಡ್ಡ ಚಂದ್ರ ವಂಶದ ಸ್ಥಿತಿ ಕಡಿದುಹೋಗುವುದನ್ನು, ಕೃಪೆಯ ಮಾಡು ಎಂದಾಗ ಹಿಂದೆ ಆ ವೇದವ್ಯಾಸ ಮುನಿ ಆ ಕೂಡಲೆ ಬಂದು ಪರಿಹರಿಸಿದನು. ಈಗ ಪುನಃ ತನಗೆ ಸಂತತಿ ಇಲ್ಲವಾಯಿತು ಎಂದು ಸದಾಕಾಲ ಕುರುವಂಶದ ರಾಜನಾದ ಧೃತರಾಷ್ಟ್ರ (ಈಗಲೂ ವೇದವ್ಯಾಸ ಬಂದು ಪರಿಹರಿಸ ಬಾರದೆ ಎಂದು) ಚಿಂತೆಯಿಂದ ಬಳಲುವನು.

ವ್ಯಾಸ ಮುನಿ ಧರತರಾಷ್ಟ್ರನಿಗೆ ಹರಸಿ, ಗಾಂಧಾರಿ ಗರ್ಭದರಿಸಿದಳು

[ಸಂಪಾದಿಸಿ]
ಅರಸ ಚಿತ್ತೈಸೊಂದು ದಿನ ಮುನಿ
ವರನು ಬಿಜಯಂಗೈದು ಹಸ್ತಿನ
ಪುರವ ಹೊಕ್ಕನು ರಾಜಭವನಕೆ ಬಂದು ಹರ್ಷದಲಿ ||
ಸುರನದೀತನುಜಾದಿಗಳ ಸ
ತ್ಕರಣಿಯನು ಕೈಕೊಂಡು ಮಕ್ಕಳ
ಮುರಿದ ವಿಭವಕೆ ಮೈಯನಾಂತು ಮುನೀಂದ್ರನಿಂತೆಂದ || ೯ ||
ಪದವಿಭಾಗ-ಅರ್ಥ:ಅರಸ ಚಿತ್ತೈಸೊಂದು= ಚಿತ್ತೈಸು+ ಒಂದು ದಿನ ಮುನಿವರನು ಬಿಜಯಂಗೈದು= ಬಂದು, ಹಸ್ತಿನಪುರವ ಹೊಕ್ಕನು, ರಾಜಭವನಕೆ ಬಂದು ಹರ್ಷದಲಿ ಸುರನದೀತನುಜ+ ಆದಿಗಳ= ಮೊದಲಾದವರ, ಸತ್ಕರಣಿಯನು= ಸತ್ಕಾರಗಳನ್ನು, ಕೈಕೊಂಡು= ಸ್ವೀಕರಿಸಿ, ಮಕ್ಕಳಮುರಿದ= (ತನ್ನದೇ ಮಕ್ಕಳಾದ) ಧ್ರತರಾಷ್ಟ್ರ, ಪಾಂಡು ಇವರ ಕುಂದಿದ, ವಿಭವಕೆ= ವೈಭವಕ್ಕೆ ಸಂತೋಷಕ್ಕೆ, ಕುಂದಿದ ವೈಭವ= ದುಃಖ, ಮೈಯನಾಂತು= ಸಹಾಯಕ್ಕೆ ನಿಂತು, ಮುನೀಂದ್ರನು= ಇಂತೆಂದ= ಹೀಗೆ ಹೇಳಿದ.
ಅರ್ಥ: ಅರಸನೇ ಕೇಳು, ಒಂದು ದಿನ ಮುನಿವರ ವ್ಯಾಸಮಹರ್ಷಿ ಹಸ್ತಿನಾಪುರಕ್ಕೆ ಬಂದನು. ಮುನಿಯು ರಾಜಭವನಕ್ಕೆ ಬಂದು ಹರ್ಷದಿಂದ ಭೀಷ್ಮ ಮೊದಲಾದವರ ಸತ್ಕಾರಗಳನ್ನು, ಸ್ವೀಕರಿಸಿ, ಧ್ರತರಾಷ್ಟ್ರ, ಪಾಂಡು ಇವರ ದುಃಖ ಪರಿಹಾದ ಸಹಾಯಕ್ಕೆ ನಿಂತು, ಹೀಗೆ ಹೇಳಿದ.
ಭರತ ಕುಲದಲಿ ಮಕ್ಕಳಿಲ್ಲದ
ಕೊರತೆ ಕೋಮಲ ಸೌಖ್ಯಲತೆಗಿದು
ಕರಗಸವಲಾ ತಂದೆ ಬಾ ದೃತರಾಷ್ಟ್ರ ಬಾಯೆನುತ ||
ಕರೆದು ಕಟ್ಟೇಕಾಂತದಲಿ ನಿ
ನ್ನರಸಿಗನುಪಮ ಪುತ್ರ ಶತವವ
ತರಿಸುವುದು ಕೊಳ್ಳೆಂದು ಮಂತ್ರ ಪಿಂಡಕವ || ೧೦ ||
ಪದವಿಭಾಗ-ಅರ್ಥ:ಭರತ ಕುಲದಲಿ ಮಕ್ಕಳಿಲ್ಲದ ಕೊರತೆ, ಕೋಮಲ ಸೌಖ್ಯಲತೆಗೆ+ ಇದು ಕರಗಸವಲಾ= ಸುಖವೆಂಬ ಕೋಮಲವಾದ ಬಳ್ಳಿಗೆ ಗರಗಸದಂತೆ ಈ ಪುತ್ರಹೀನತೆ ಎಂದು, 'ತಂದೆ ಬಾ ದೃತರಾಷ್ಟ್ರ, ಬಾ, ಯೆನುತ ಕರೆದು, ಕಟ್ಟೇಕಾಂತದಲಿ= ಬಹಳ ರಹಸ್ಯದಲ್ಲಿ 'ನಿನ್ನ+ ಅರಸಿಗೆ+ ಅನುಪಮ ಪುತ್ರ ಶತ+ ಅವವತರಿಸುವುದು ಕೊಳ್(ತೆಗೆದುಕೊ)+ ಎಂದು ಮಂತ್ರ ಪಿಂಡಕವ(ಮಂತ್ರಿಸಿದ ತಿಂಡಿಯ ಉಂಡೆಯನ್ನು) ಮಂತ್ರಿಸಿದ ಪಿಂಡವನ್ನು ಕೊಟ್ಟನು.
ಅರ್ಥ: ಭರತ ಕುಲದಲಿ ಮಕ್ಕಳಿಲ್ಲದ ಕೊರತೆಯು ಸುಖವೆಂಬ ಕೋಮಲವಾದ ಬಳ್ಳಿಗೆ ಗರಗಸದಂತೆ ಇದೆ ಎಂದು, 'ತಂದೆ ಬಾ ದೃತರಾಷ್ಟ್ರ, ಬಾ, ಯೆನುತ ಅವನನ್ನು ಕರೆದು, ಬಹಳ ರಹಸ್ಯದಲ್ಲಿ 'ನಿನ್ನ ಪತ್ನಿಗೆ ಸರಿಸಾಟಿಯಿಲ್ಲದ ಪುತ್ರ ನೂರು ಮಕ್ಕಳು ಹುಟ್ಟುವರು; ತೆಗೆದುಕೊ+, ಎಂದು (ಮಂತ್ರಿಸಿದ ತಿನ್ನುವ ಉಂಡೆಯನ್ನು) ಮಂತ್ರಿಸಿದ ಪಿಂಡವನ್ನು ಕೊಟ್ಟನು.
ಧರಿಸಿದಳು ಗಾಂಧಾರಿ ಗರ್ಬೋ
ತ್ಯರವನಿತ್ತ ನಿಜಾಶ್ರಮಕೆ ಮುನಿ
ತಿರುಗಿದನು ದಿನದಿನದೊಳುಬ್ಬಿತು ರಾಯನಭ್ಯುದಯ ||
ಅರಸ ಕೇಳೈ ಬೇಂಟೆಗಾರರು
ಕರೆಯ ಬಂದರು ಮೃಗನಿಕಾಯದ
ನೆರವಿಗಳ ನೆಲೆಗೊಳಿಸಿ ಪಾಂಡು ನೃಪಾಲನೋಲಗಕೆ || ೧೧ ||
ಪದವಿಭಾಗ-ಅರ್ಥ:ಧರಿಸಿದಳು ಗಾಂಧಾರಿ ಗರ್ಬ+ ಉತ್ಯರವನು+ ಇತ್ತ ಉತ್ಕರ= ಬೆಳೆಯುವಿಕೆ; ನಿಜಾಶ್ರಮಕೆ= ತನ್ನ ಆಶ್ರಮಕ್ಕೆ, ಮುನಿತಿರುಗಿದನು ದಿನದಿನದೊಳು+ ಉಬ್ಬಿತು ರಾಯನ ಅಭ್ಯುದಯ; ಅರಸ ಕೇಳೈ ಬೇಂಟೆಗಾರರು ಕರೆಯ ಬಂದರು ಮೃಗ ನಿಕಾಯದ (ನಿಕಾಯ+ ಗುಂಪು) ನೆರವಿಗಳ= ಬೇಟೆಯಲ್ಲಿ ಒಡ್ಡುವ ಆಕರ್ಷಣೆ, ನೆಲೆಗೊಳಿಸಿ ಪಾಂಡು ನೃಪಾಲನ+ ಓಲಗಕೆ= ಆಸ್ಥಾನಕ್ಕೆ.
ಅರ್ಥ: ಗಾಂಧಾರಿ ಗರ್ಭವನ್ನು ಧರಿಸಿ ಬೆಳವಣಿಗೆಯಾಗುತ್ತಿತ್ತು. ಇತ್ತ ತನ್ನ ಆಶ್ರಮಕ್ಕೆ ಮುನಿ ಹಿಂತಿರುಗಿದನು. ದಿನದಿನಕ್ಕೂ ರಾಜನ ಅಭ್ಯುದಯ ಹೆಚ್ಚಿತು; ಅರಸ ಕೇಳೈ, ಮೃಗಗಳ ಗುಂಪುಹೆಚ್ಚಿ, ಬೇಟೆಯಲ್ಲಿ ಒಡ್ಡುವ ಆಕರ್ಷಣೆಗಳನ್ನು ನೆಲೆಗೊಳಿಸಿ, ಬೇಟೆಗಾರರು ಪಾಂಡು ನೃಪಾಲನ ಆಸ್ಥಾನಕ್ಕೆ ರಾಜನನ್ನು ಕರೆಯಲು ಬಂದರು.

ಪಾಂಡು ಬೇಟೆಗೆ ಹೋಗಿ- ಅಲ್ಲಿ ಮುನಿಯ ಶಾಪಕ್ಕೊಳಗಾದನು

[ಸಂಪಾದಿಸಿ]
ಕೇಳಿದನು ಮೃಗದಿಕ್ಕೆ ಹಕ್ಕೆಯ
ಗಾಳಿಯನು ಕೊಂಬುಗಳನಾಗಳೆ
ಬೀಳು ಕೊಟ್ಟನು ರಾಜಸಭೆಯನು ರಾಯನುಚಿತದಲಿ ||
ಬೋಳೆ ಕವಲಂಬುಗಳ ಹದವಿಲು
ತಾಳಿಕೆಯ ಕುಪ್ಪಸದ ಬೇಂಟೆಯ
ಮೇಳದಲಿ ಭೂಪಾಲ ಹೊರಹೊರಟನು ನಿಜಾಲಯವ || ೧೨ ||
ಪದವಿಭಾಗ-ಅರ್ಥ:ಕೇಳಿದನು ಮೃಗದ ಇಕ್ಕೆ=ಇರುವನ್ನು, ಹಕ್ಕೆಯ (ಕ.ಸಾ.ಪ.ಕಾಡುಪ್ರಾಣಿಗಳ ವಿಶ್ರಾಂತಿಸ್ಥಳ) ಗಾಳಿಯನು, ಕೊಂಬುಗಳನು ಆಗಳೆ ಬೀಳು ಕೊಟ್ಟನು= ಕೊಂಬುಗಳನ್ನು ಊದುವ ಬೇಟೆಗಾರರನ್ನು ಕಳುಹಿಸಿಕೊಟ್ಟನು. ರಾಜಸಭೆಯನು ರಾಯನು ಉಚಿತದಲಿ(ಬೇಗ)= ರಾಜಸಭೆಯನ್ನು ಮುಗಿಸಿದನು. ಬೋಳೆ ಅಂಬುಗಳನ್ನೂ(?), ಕವಲಂಬುಗಳ= ಕವಲಂಬುಗಳನ್ನೂ, ಹದವಿಲು= ಹದವಾದ ಬಿಲ್ಲುಗಳನ್ನೂ, ತಾಳಿಕೆಯ ಕುಪ್ಪಸದ= ಬೇಟೆಯ ಕುಪ್ಪಸಗಳನ್ನೂ, ಗಟ್ಟಿಯಾದ ಕವಚಗಳನ್ನೂ, ಬೇಂಟೆಯ ಮೇಳದಲಿ= ಬೇಟಗಾರರ ಜೊತೆಗೂಡಿ, ಭೂಪಾಲ= ರಾಜನು, ಹೊರಹೊರಟನು ನಿಜ+ ಆಲಯವ= ತನ್ನ ಅರಮನೆಯಿಂದ,
ಅರ್ಥ: ರಾಜನು ಮೃಗಗಳ ಇರುವನ್ನು ಕೇಳಿದನು, ಕಾಡುಪ್ರಾಣಿಗಳ ವಿಶ್ರಾಂತಿಸ್ಥಳ, ಅದರಿಂದ ಬರುವ ಗಾಳಿಯ ವಿಚಾರವನ್ನು ಕೇಳಿದನು, ಕೊಂಬುಗಳನ್ನು ಊದುವ ಬೇಟೆಗಾರರನ್ನು ಕಳುಹಿಸಿಕೊಟ್ಟನು. ರಾಜಸಭೆಯನ್ನು ರಾಜನು ಬೇಗ ಮುಗಿಸಿದನು. ಬೋಳೆ ಅಂಬುಗಳನ್ನೂ(?), ಕವಲಂಬುಗಳನ್ನೂ, ಹದವಾದ ಬಿಲ್ಲುಗಳನ್ನೂ, ತಾಳಿಕೆಯ ಬೇಟೆಯ ಕುಪ್ಪಸಗಳನ್ನೂ, ಗಟ್ಟಿಯಾದ ಕವಚಗಳನ್ನೂ ಧರಿಸಿ ಬೇಟಗಾರರ ಜೊತೆಗೂಡಿ, ರಾಜನು ತನ್ನ ಅರಮನೆಯಿಂದ ಹೊರಹೊರಟನು.
ಏನನೆಂಬೆನು ನಿಮ್ಮನು ಪಿಶಾ
ಚೋನ್ನೃಪಾಲಕರೆಂಬವೋಲ್ ವ್ಯಸ
ನಾನುಬಂಧದ ಬೇಗೆ ಕೊಂಡೊಯ್ದುದು ಮಹೀಪತಿಯ ||
ಕಾನನದೊಳಾಯತದ ಶರ ಸಂ
ಧಾನ ಕಲಿತ ಶರಾಸನನು ಮೃಗ
ಹಾನಿಗಳ ಹೆಕ್ಕಳದೊಳೋಲಾಡಿದನು ಬೇಂಟೆಯಲಿ ||೧೩ ||
ಪದವಿಭಾಗ-ಅರ್ಥ:ಏನನು+ ಎಂಬೆನು= ಹೇಳಲಿ, ನಿಮ್ಮನು= ನಿಮ್ಮವನು, ಪಾಂಡು,ಪಿಶಾಚೋನ್ನೃಪಾಲಕರೆಂಬವೋಲ್ -ಪಿಶಾಚೋ+ ನೃಪಾಲಕರು+ ಎಂಬವೋಲ್ = ರಾಜರು ಪಿಶಾಚಿಯು ಹಿಡಿದಿದೆಯೋ ಎನ್ನುವ ಹಾಗೆ, ವ್ಯಸನ ಅನುಬಂಧದ ಬೇಗೆ= ಬೇಟೆಯ ಚಪಲದ ಸಂಬಂಧದ ಬಯಕೆಯ ಕುದಿಯು, ಕೊಂಡೊಯ್ದುದು= ಕರೆದುಕೊಂಡು ಹೋಯಿತು. ಮಹೀಪತಿಯ= ರಾಜನನ್ನು, ಕಾನನದೊಳು= ಕಾಡಿನಲ್ಲಿ, ಆಯತದ ಶರ ಸಂಧಾನ ಕಲಿತ ಶರಾಸನನು= ಉಚಿತವಾದ ಬಾಣ ಸಂಧಾನ ವಿದ್ಯಾಪರಿಣತನಾಗಿ ಬಿಲ್ಲುಹಿಡಿದ ಪಾಂಡುವು ಮೃಗಹಾನಿಗಳ ಹೆಕ್ಕಳದೊಳು= ಮೃಗಗಳನ್ನು ಕೊಂದ ಹಿರಿಮೆಯಿಂದ ಓಲಾಡಿದನು ಬೇಂಟೆಯಲಿ= ಬೇಟೆಯಲ್ಲಿ ಓಲಾಡಿದನು.
ಅರ್ಥ: ಏನು ಹೇಳಲಿ, ನಿಮ್ಮವನು, ಪಾಂಡು,ರಾಜರು ಪಿಶಾಚಿಯು ಹಿಡಿದಿದೆಯೋ ಎನ್ನುವ ಹಾಗೆ,ಬೇಟೆಯ ಚಪಲದ ಸಂಬಂಧದ ಬಯಕೆಯ ಕುದಿಯು ರಾಜನನ್ನು ಕರೆದುಕೊಂಡು ಹೋಯಿತು, ಕಾಡಿನಲ್ಲಿ ಉಚಿತವಾದ ಬಾಣ ಸಂಧಾನ ವಿದ್ಯಾಪರಿಣತನಾಗಿ ಬಿಲ್ಲುಹಿಡಿದ ಪಾಂಡುವು ಮೃಗಗಳನ್ನು ಕೊಂದ ಹಿರಿಮೆಯಿಂದ ಬೇಟೆಯಲ್ಲಿ ಓಲಾಡಿದನು.
ಬಂದುದಾ ಪಾಂಡುವಿಗೆ ನಿನ್ನಯ
ತಂದೆಗಾದ ವಿಪ್ಪತ್ತಿನಂದದ
ಲೊಂದು ಠಾವಿನಲೊಬ್ಬ ಮುನಿ ಮೃಗ ವಿಥುನ ರೂಪಿನಲಿ ||
ನಿಂದು ರಮಿಸುತ್ತಿರೆ ಮೃಗದ್ವಯ
ವೆಂದು ಹೂಡಿದನಂಬನಿಬ್ಬರಿ
ಗೊಂದು ಶರದಲಿ ಕೀಲಿಸಿದಡೊರಲಿದರು ನರರಾಗಿ || ೧೪ ||
ಪದವಿಭಾಗ-ಅರ್ಥ:ಬಂದುದು+ ಆ ಪಾಂಡುವಿಗೆ ನಿನ್ನಯ ತಂದೆಗಾದ ವಿಪ್ಪತ್ತಿನ (ಪರೀಕ್ಷಿತನಿಗೆ ಆದ ಮುನಿಶಾಪದ ಕಷ್ಟದ)+ ಅಂದದಲಿ (ರೀತಿಯಲ್ಲಿ)+ ಒಂದು ಠಾವಿನಲಿ (ಸ್ಥಳದಲ್ಲಿ)+ ಒಬ್ಬ ಮುನಿ ಮೃಗ(ಜಿಂಕೆ) ವಿಥುನ ರೂಪಿನಲಿ( ಎರಡು ಜಿಂಕೆಗಳ ರೂಪ ಪಡೆದು) ನಿಂದು ರಮಿಸುತ್ತಿರೆ (ಕೂಡಿರಲು) ಮೃಗದ್ವಯವೆಂದು= ಜಿಂಕೆಗಳು ಎರಡು ಇವೆ ಎಂದು, ಹೂಡಿದನು+ ಆಂಬನು+ ಇಬ್ಬರಿಗೆ+ ಒಂದು ಶರದಲಿ= ಭಾಣದಲ್ಲಿ, ಕೀಲಿಸಿದಡೆ (ಆಳವಾಗಿ ಚುಚ್ಚಿದರೆ)+ ಒರಲಿದರು ನರರಾಗಿ= ಮನುಷ್ಯರಾಗಿ ಬದಲಾಯಿಸಿ ಚೀರಿದರು.

ಪರೀಕ್ಷಿತನಿಗೆ ಬಂದ ವಿಪ್ಪತ್ತು-
ಪರೀಕ್ಷಿತನು ಬೇಟೆಗೆ ಹೋದಾಗ ಆಯಾಸಗೊಂಡು,
ಅಲ್ಲಿ ಧ್ಯಾನಸ್ಥನಾಗಿದ್ದ ಶಮೀಕನೆಂಬ ಋಷಿಯ ಆಶ್ರಮಕ್ಕೆ
ಹೋದನು, ಋಷಿಯು ತನ್ನನ್ನು ಉಪಚರಿಸಲಿಲ್ಲ ಎಂದು
ಸಿಟ್ಟಿನಿಂದ ಅಲ್ಲಿಯೇ ಹರಿಯುತ್ತಿದ್ದ ಹಾವನ್ನು ಹೊಡೆದು
ಅವನ ಕೊರಳಿಗೆ ಹಾಕಿ ಹೋದನು.
ಋಷಿಯ ಮಗ ಶೃಂಗಿಯು ಬಂದು ನೋಡಿ ಸಿಟ್ಟಿನಿಂದ
ತಂದೆ ಕೊರಳಿಗೆ ಸತ್ತ ಹಾವನ್ನು ಹಾಕಿದವನು
ಏಳುದಿನಗಳ ಒಳಗೆ ಹಾವು ಕಚ್ಚಿ ಸಾಯಲಿ ಎಂದು
ಶಾಪ ಕೊಟ್ಟನು. ಅದರಂತೆ ಪರೀಕ್ಷಿತನು
ಹಾವುಕಚ್ಚಿ ಸತ್ತನು. ಅದರ ಸೇಡಿಗೆ ಪರೀಕ್ಷಿತನ
ಮಗ ಜನಮೇಜಯ ಸರ್ಪಗಳನ್ನು ಬಲಿಕೊಡುವ
ಸರ್ಪ ಯಾಗ ಮಾಡಿದನು. ವಾಸುಕಿಯ ಮೊಮ್ಮಗ
ಆಸ್ತೀಕನು ಬಂದು ಯಾಗ ಸಮಯದಲ್ಲಿ ಸರ್ಪಗಳ
ಪ್ರಾಣಭಿಕ್ಷೆ ಬೇಡಿದನು. ಜನಮೇಜಯನು ಒಪ್ಪಿ
ಸರ್ಪಯಾಗ ನಿಲ್ಲಿಸಿದನು. ಆ ಪಾಪದ ಪರಿಹಾರಕ್ಕಾಗಿ
ಜನಮೇಜಯನು ಮಹಾಭಾರತದ ಕಥೆಯನ್ನು ಕೇಳಿದನು.

ಅರ್ಥ: ಆ ಪಾಂಡುವಿಗೆ ನಿನ್ನಯ ತಂದೆ ಪರೀಕ್ಷಿತನಿಗೆ ಆದ ಮುನಿ ಶಾಪದ ಕಷ್ಟದ ರೀತಿಯಲ್ಲಿ ವಿಪ್ಪತ್ತು ಬಂದಿತು. ಒಂದು ಸ್ಥಳದಲ್ಲಿ ಒಬ್ಬ ಮುನಿ ಪತ್ನಿಯೊಡನೆ ಎರಡು ಜಿಂಕೆಗಳ ರೂಪ ಪಡೆದು ನಿಂದು ಕೂಡಿರಲು, ಇವುಎರಡು ಜಿಂಕೆಗಳು ಎಂದು, ಹೂಡಿದನು ಇಬ್ಬರಿಗೆ ಒಂದು ಭಾಣದಲ್ಲಿ ಹೊಡೆದು (ಆಳವಾಗಿ ನಾಟಿದಾಗ, ಅವರು ಮನುಷ್ಯರಾಗಿ ಬದಲಾಯಿಸಿ ಚೀರಿದರು.
ಹಾ ಮಹಾದೇವಾಯೆನುತ್ತೆ ಸ
ನಾಮಮುನಿ ತೆತ್ತಿಸಿದ ಬೆನ್ನಿನ
ತೋಮರದ ಮರುಮೊನೆಯ ಕಿಬ್ಬಸುರಿನ ನಿಜಾಂಗನೆಯ;||
ಕಾಮಿನಿಯೆ ಕಡುನೊಂದೆಲಾ ಮುಖ
ತಾಮರಸವನು ತೋರು ತೋರೆನು
ತಾ ಮುನೀಶ್ವರನಪ್ಪಿ ಮುಂಡಾಡಿದನು ನಿಜಸತಿಯ;|| ೧೫ ||
ಪದವಿಭಾಗ-ಅರ್ಥ:ಹಾ ಮಹಾದೇವಾ+ ಎನುತ್ತೆ 'ಸನಾಮ ಮುನಿ'= ಮುನಿಯು ತೆತ್ತಿಸಿದ ಬೆನ್ನಿನ= ತನ್ನ ಬೆನ್ನಿಗೆ ಚುಚ್ಚಿದ, ತೋಮರದ ಮರುಮೊನೆಯ= ಬಾಣದ ಮೊನಚಾದ ಮೊನೆಯನ್ನೂ, (ಮತ್ತು) ಕಿಬ್ಬಸುರಿನ= ಕಿಬ್ಬುಹೊಟ್ಟೆಯನ್ನು, (ಹೊಕ್ಕ) ನಿಜಾಂಗನೆಯ= ತನ್ನ ಪತ್ನಿಯ, ಕಾಮಿನಿಯೆ= ಸುಂದರಿಯ, ಕಡುನೊಂದು ()ಹಳನೋವನ್ನು ಅನುಭವಿಸಿ)+ ಎಲಾ ಮುಖ ತಾಮರಸವನು= ಮುಖ ಕಮಲವನ್ನು, ತೋರು ತೋರು+ ಎನುತಾ= ಎನ್ನತ್ತಾ, ಮುನೀಶ್ವರನು ಅಪ್ಪಿ ಮುಂಡಾಡಿದನು= ಮುದ್ದಾಡಿದನು, ನಿಜಸತಿಯ= ತನ್ನ ಪತ್ನಿಯನ್ನು.
ಅರ್ಥ: ಆ 'ಸನಾಮ ಮುನಿ'ಯು ಹಾ ಮಹಾದೇವಾ, ಎನುತ್ತಾ ತನ್ನ ಬೆನ್ನಿಗೆ ಚುಚ್ಚಿದ ಬಾಣದ ಮೊನಚಾದ ಮೊನೆಯನ್ನೂ, ಮತ್ತು ತನ್ನ ಪತ್ನಿಯ ಕಿಬ್ಬುಹೊಟ್ಟೆಯನ್ನು ಹೊಕ್ಕ ಬಾಣವುಳ್ಳ ಸುಂದರಿಯನ್ನು ನೋಡಿ, ಬಹಳನೋವನ್ನು ಅನುಭವಿಸಿ ಎಲೈ ನಿನ್ನ ಮುಖ ಕಮಲವನ್ನು ತೋರು ತೋರು ಎನ್ನತ್ತಾ, ಮುನೀಶ್ವರನು ಅಪ್ಪಿ ತನ್ನ ಪತ್ನಿಯನ್ನು ಮುದ್ದಾಡಿದನು,
ಕಾತರಿಪ ಮುನಿಮಿಥುನವನು ನಿ
ನ್ನಾತ ಕಂಡನು ಬಿಲ್ಲ ಕೊಪ್ಪಿನ
ಲಾತ ಕದಪಿನ ಮುಕುಟದೊಲವಿನ ಬೆರಳ ಬಿರುದನಿಯ ||
ಬೀತಸೊಂಪಿನ ತಳಿತ ಬೆರಗಿನ
ಪಾತಕದ ಪರುಠವದ ಮುಖದ ಮ
ಹೀತಳಾಧಿಪ ಸುಯ್ದು ನೊಂದನು ಶಿವ ಶಿವಾಯೆನುತ ||೧೬ ||
ಪದವಿಭಾಗ-ಅರ್ಥ:ಕಾತರಿಪ= ಸಂಕಟಪಡುತ್ತಿರುವ, ಮುನಿಮಿಥುನವನು= ಮನಿಯದಂಪತಿಯ ಜೋಡಿಯನ್ನು ನಿನ್ನಾತ= ನಿನ್ನ ಹಿರಿಯ ಪಾಂಡು ಕಂಡನು; ಬಿಲ್ಲ ಕೊಪ್ಪಿನಲಿ= ನಿಲ್ಲಸಿದ ಬಿಲ್ಲಿನ ತುದಿಯಲ್ಲಿ, ಆತ ಕದಪಿನ= ಗಲ್ಲವನ್ನೂರಿ, ಮುಕುಟದೊಲವಿನ ಬೆರಳ= ಕಿರೀಟವು ಕೆಳಗೆ ಜಾರದಂತೆ ಬೆರಳಲ್ಲಿ ಹಿಡಿದು, ಬಿರುದನಿಯ= ಚೀರುತ್ತಿರುವ ದನಿಯನ್ನು, ಬೀತಸೊಂಪಿನ= ಆನಂದವು ಕುಂದಿದ, ತಳಿತ ಬೆರಗಿನ= ಚಿಗುರಿದ ಬೆರಗಿನಲ್ಲಿ, ಪಾತಕದ ಪರುಠವದ (1.ವಿಸ್ತಾರ. 2.ನಿರೂಪಿಸಿದುದು.)= ತಾನು ಮಾಡಿದ ಪಾತಕವನ್ನು ನಿರೂಪಿಸುವ, ಮುಖದ ಮಹೀತಳಾಧಿಪ= ರಾಜ ಪಾಂಡುವು, ಸುಯ್ದು ನೊಂದನು= ನಿಟ್ಟುಸಿರು ಬಿಡುತ್ತಾ ಸಂಕಟಪಟ್ಟನು. ಶಿವ ಶಿವಾಯೆನುತ.
ಅರ್ಥ: ಸಂಕಟಪಡುತ್ತಿರುವ ಮುನಿದಂಪತಿಯ ಜೋಡಿಯನ್ನು ನಿನ್ನ ಹಿರಿಯ ಪಾಂಡು ಕಂಡನು; ನಿಲ್ಲಸಿದ ಬಿಲ್ಲಿನ ತುದಿಯಲ್ಲಿ ಗಲ್ಲವನ್ನೂರಿ, ಕಿರೀಟವು ಕೆಳಗೆ ಜಾರದಂತೆ ಬೆರಳಲ್ಲಿ ಹಿಡಿದು, ಚೀರುತ್ತಿರುವ ದನಿಯನ್ನು, ಬೇಟೆಯ ಆನಂದವು ಕುಂದಿದ, ಜಿಂಕೆಯು ಮಾನವರಾದ, ಚಿಗುರಿದ ಬೆರಗಿನಲ್ಲಿ, ತಾನು ಮಾಡಿದ ಪಾತಕವನ್ನು ನಿರೂಪಿಸುವ, ರಾಜ ಪಾಂಡುವು, ನಿಟ್ಟುಸಿರು ಬಿಡುತ್ತಾ ಶಿವ ಶಿವಾಯೆನ್ನುತ್ಯಾ ಸಂಕಟಪಟ್ಟನು.
ಅರಿಯೆ ನಾವಿವರೆಂದು ಮೃಗವೆಂ
ದಿರಿದೊಡಿದು ಮೊತ್ತೊಂದು ಪರಿಯಾ
ಯ್ತುರುವ ಮಾಣಿಕವೆಂದು ಕೊಂಡಡೆ ಕೆಂಡವಾದುದಲ ||
ಸರವಿಯೇ ಹಾವಾದುದೇನೆಂ
ದರಿಯನೀ ಕೌತುಕವನುರೆ ಮೈ
ಮರೆಸಿಕೊಂದುದೆ ವಿಧಿಯೆನುತ ಹರಿತಂದನಾ ಸ್ಥಳಕೆ || ೧೭ ||
ಪದವಿಭಾಗ-ಅರ್ಥ:ಅರಿಯೆ ನಾವು+ ಇವರೆಂದು= ಇವರು ಮಾನವರೆಂದು ತಿಳಿಯಲಿಲ್ಲ. ಮೃಗವೆಂದು+ ಇರಿದೊಡೆ+ ಇದು= ಇವು ಮೃಗಗಳು ಎಂದು ಹೊಡೆದರೆ, ಮೊತ್ತೊಂದು ಪರಿಯಾಯ್ತು (ಬಗೆಯಾಯಿತು.)+ ಉರುವ ಮಾಣಿಕವೆಂದು ಕೊಂಡಡೆ = ಹೊಳೆಯುವ ಮಾಣಿಕ್ಯವೆಂದು ಕೈಯಲ್ಲಿ ಹಿಡಿದರೆ, ಅದು ಕೆಂಡವಾದುದಲ= ಉರಿಯುವ ಕೆಂಡವಾಯಿತಲ್ಲಾ; ಸರವಿಯೇ ಹಾವಾದುದು= ಹುಲ್ಲಿನ ಹಗ್ಗವೇ ಹಾವಾಯಿತು)+ ಏನೆಂದು+ ಅರಿಯನು= ಇದು ಏನೆಂಬುದೇ ತಿಳಿಯಲಾರೆನು ಈ ಕೌತುಕವನು(ವಿಚಿತ್ರವನ್ನು), + ಉರೆ(ಬಹಳ, ಪೂರಾ) ಮೈಮರೆಸಿ ಕೊಂದುದೆ ವಿಧಿಯೆನುತ= ವಿಧಿಯು ತನ್ನನ್ನು ಪೂರಾ ಮೈಮರೆಸಿ ಕೊಂದುಬಿಟ್ಟಿತೇ? ಎಂದು ಯೋಚಿಸುತ್ತಾ, ಹರಿತಂದನು ಆ ಸ್ಥಳಕೆ = ಮುನಿ ಅವನ ಪತ್ನಿ ಬಿದ್ದಸ್ಥಳಕ್ಕೆ ಬಂದನು.
ಅರ್ಥ: ನನಗೆ ಇವರು ಮಾನವರೆಂದು ತಿಳಿಯಲಿಲ್ಲ. ಇವು ಮೃಗಗಳು ಎಂದು ಹೊಡೆದರೆ, ಮೊತ್ತೊಂದು ಬಗೆಯಾಯಿತು. ಹೊಳೆಯುವ ಮಾಣಿಕ್ಯವೆಂದು ಕೈಯಲ್ಲಿ ಹಿಡಿದರೆ, ಅದು ಉರಿಯುವ ಕೆಂಡವಾಯಿತಲ್ಲಾ; ಹುಲ್ಲಿನ ಹಗ್ಗವೇ ಹಾವಾಯಿತು. ಇದು ಏನೆಂಬುದೇ ತಿಳಿಯಲಾರೆನು ಈ ವಿಚಿತ್ರವನ್ನು. ವಿಧಿಯು ತನ್ನನ್ನು ಪೂರಾ ಮೈಮರೆಸಿ ಕೊಂದುಬಿಟ್ಟಿತೇ? ಎಂದು ಯೋಚಿಸುತ್ತಾ, ಮುನಿ ಮತ್ತು ಅವನ ಪತ್ನಿ ಬಿದ್ದಸ್ಥಳಕ್ಕೆ ಬಂದನು.
ಉಗಿದು ಬಿಸುಟನು ಸರಳ ಮಗ್ಗುಲ
ಮಗುಚಿ ನೆತ್ತರ ಹೊನಲಿನೀಚೆಗೆ
ತೆಗೆದು ತೊಳೆತೊಳೆದೊರಸಿದನು ಸಗ್ಗಳೆಯ ನೀರಿನಲಿ|
ಮೃಗವಹರೆ ಮಾನಿಸರಕಟ ಪಾ
ಪಿಗಳಿಗೆತ್ತಣತಪವಿದೆತ್ತಣ
ಮೃಗ ವಿನೋದಕ್ರೀಡೆ ಕೊಂದಿರೆನುತ್ತ ಬಿಸುಸುಯ್ದ ||(೧೮)
ಪದವಿಭಾಗ-ಅರ್ಥ:ಉಗಿದು ಬಿಸುಟನು ಸರಳ= ಬಾಣವನ್ನು, ಮಗ್ಗುಲ ಮಗುಚಿ ನೆತ್ತರ ಹೊನಲಿನ+ ಈಚೆಗೆ ತೆಗೆದು, ತೊಳೆ ತೊಳೆದು+ ಒರಸಿದನು ಸಗ್ಗಳೆಯ ನೀರಿನಲಿ ಮೃಗವು+ ಅಹರೆ ಮಾನಿಸರು+ ಅಕಟ, ಪಾಪಿಗಳಿಗೆ+ ಎತ್ತಣ ತಪವು+ ಇದೆತ್ತಣ ಮೃಗ, ವಿನೋದಕ್ರೀಡೆ, ಕೊಂದಿರೆ ಎನುತ್ತ ಬಿಸುಸುಯ್ದ
ಅರ್ಥ: ಪಾಂಡುವು, ಅವರಿಗೆ ಹೊಕ್ಕಿರುವ ಬಾಣವನ್ನು ಕಿತ್ತು ಎಸೆದನು; ಅವರ ಮಗ್ಗುಲನ್ನು ಮಗುಚಿ, ಅಂಗಾತ ಮಾಡಿ ರಕ್ತದ ಹೊಳೆಯಿಂದ ಈಚೆಗೆ ತೆಗೆದು, ತೊಳೆದು ತೊಳೆದು, ಒರಸಿದನು; ಸಗ್ಗಳೆಯ (ಚರ್ಮದ ಚೀಲದ) ನೀರಿನಲ್ಲಿ ತೊಳೆದು, ಮನುಷ್ಯರು ಮೃಗವಾಗುರೆ ! ಅಕಟ, ಪಾಪಿಗಳಿಗೆ! ಮುನಿಗಳಿಗೆ ಎಲ್ಲಿಯ ತಪಸ್ಸು, ಇದೆಲ್ಲಿಯ ಮೃಗ ವಿನೋದಕ್ರೀಡೆ! ನನ್ನನ್ನು ಕೊಂದಿರಲ್ಲಾ! ಎನುತ್ತಾ ನಿಟ್ಟುಸಿರುಬಿಟ್ಟನು.
ಮತ್ತೆ ನಾವೇ ಪಾಪಿಗಳೆ ನೀ
ನುತ್ತಮನಲಾ ಸಾಕಿದೇತಕೆ
ನುತ್ತ ಮರಳುವ ಕಂಗಳಡಿಗಡಿಗುಗಿಸುವ ಮೇಲುಸುರ|
ಎತ್ತಿ ಹಾಯ್ಕುವ ಕೊರಳ ಬಿಕ್ಕಳ
ತೆತ್ತುವಧರದ ರೋಷದಲಿ ಹೊಗೆ
ಸುತ್ತಿದುರಿವಾತುಗಳ ಸೂಸಿದರವನಿಪನ ಮೇಲೆ ||(೧೯)
ಪದವಿಭಾಗ-ಅರ್ಥ:ಮತ್ತೆ ನಾವೇ ಪಾಪಿಗಳೆ? ನೀನು+ ಉತ್ತಮನಲಾ= ಉತ್ತಮನೇ? ಸಾಕು+ ಇದೇತಕೆ (ಮಾತೇಕೆ)+ ಎನುತ್ತ ಮರಳುವ ಕಂಗಳ(ತೇಲುವಗಣ್ಣುಗಳಲ್ಲಿ,)+ ಅಡಿಗಡಿಗೆ (ಪದೇಪದೇ)+ ಉಗಿಸುವ= ಹೊಮ್ಮುವ ಮೇಲುಸುರ= ಮೇಲುಸಿರ, ಎತ್ತಿ ಹಾಯ್ಕುವ= ಎತ್ತೆತ್ತಿ ಹಾಕುತ್ತಿರುವ, ಕೊರಳ, ಬಿಕ್ಕಳ ತೆತ್ತುವ = ಬಿಕ್ಕಳಿಸುತ್ತಿರಯವ, ಅಧರದ= ತುಟಿಗಳಲ್ಲಿ, ರೋಷದಲಿ ಹೊಗೆಸುತ್ತಿದ (ಸಿಟ್ಟಿನ ಬೆಂಕಿಯ ಹೊಗೆಸುತ್ತಿದಂತೆ) + ಉರಿವಾತುಗಳ ಸೂಸಿದರು (ಉರಿಯುವ ಮಾತುಗಳನ್ನಾಡಿದನು ಮುನಿ)+ ಅವನಿಪನ=ರಾಜನ ಮೇಲೆ.
ಅರ್ಥ: ಮತ್ತೆ ನಾವೇ ಪಾಪಿಗಳೆ? ನೀನು ಉತ್ತಮನೇ? ಸಾಕು ಮಾತೇಕೆ ಎನುತ್ತ, ತೇಲುವ ಕಣ್ಣುಗಳಲ್ಲಿ, ಪದೇಪದೇ ಹೊಮ್ಮುವ ಮೇಲುಸಿರ, ಎತ್ತೆತ್ತಿ ಹಾಕುತ್ತಿರುವ, ಕೊರಳಲ್ಲಿ ಬಿಕ್ಕಳಿಸುತ್ತಿರಯವ, ತುಟಿಗಳಲ್ಲಿ ಸಿಟ್ಟಿನ ಬೆಂಕಿಯ ಹೊಗೆಸುತ್ತಿದಂತೆ ರಾಜನ ಮೇಲೆ ಉರಿಯುವ ಮಾತುಗಳನ್ನಾಡಿದನು ಮುನಿ.
ಎಲವೂ ರಾಜಬ್ರುವನೆ ತನ್ನಯ
ಲಲನೆಯೊಡನಿರೆ ಕೊಂದೆ ನಿನ್ನಯ
ಲಲನೆಯನು ನೀ ಕೂಡಿದಾಗಲೇ ಮರಣ ನಿನಗಹುದು ||
ಹಲವು ಮಾತೇಕೆನುತ ಹರಣವ
ಕಳೆದುದಾ ಮುನಿ ಮಿಥುನವವನಿಪ
ತಿಲಕ ದುಮ್ಮಾನದಲಿ ಬಂದನು ಹಸ್ತಿನಾಪುರಕೆ || ೨೦ ||
ಪದವಿಭಾಗ-ಅರ್ಥ:ಎಲವೂ ರಾಜಬ್ರುವನೆ = ರಾಜಾಧಮನೆ(?) ತನ್ನಯ ಲಲನೆಯೊಡನೆ+ ಇರೆ= ತನ್ನಪತ್ನಿಯೊಡನೆ ಇದ್ದಾಗ, ಕೊಂದೆ; ನಿನ್ನಯ ಲಲನೆಯನು ನೀ ಕೂಡಿದಾಗಲೇ ಮರಣ ನಿನಗೆ+ ಅಹುದು= ನಿನ್ನ ಪತ್ನಿಯನ್ನು ಕೂಡಿದಾಗಲೆ ನಿನ್ನ ಮರಣವಾಗುವುದು. ಹಲವು ಮಾತೇಕೆ+ ಎನುತ ಹರಣವ ಕಳೆದುದು= ಪ್ರಾಣ ಬಿಟ್ಟನು, ಆ ಮುನಿ ಮಿಥುನವ (ಜೋಡಿಯಾಗಿ) + ಅವನಿಪತಿಲಕ= ರಾಜನು ದುಮ್ಮಾನದಲಿ= ದುಃಖದಲ್ಲಿ, ಬಂದನು ಹಸ್ತಿನಾಪುರಕೆ.
ಅರ್ಥ: ಎಲವೂ ರಾಜಾಧಮನೆ(?) ತಾನು ತನ್ನ ಪತ್ನಿಯೊಡನೆ ಇದ್ದಾಗ ಕೊಂದೆ; ಬಹಳ ಮಾತು ಏಕೆ, ನಿನ್ನ ಪತ್ನಿಯನ್ನು ನೀನು ಕೂಡಿದಾಗಲೆ ನಿನ್ನ ಮರಣವಾಗುವುದು, ಎಂದು ಶಪಿಸಿದನು. ಹೀಗೆ ಶಪಿಸಿ, ಆ ಮುನಿಯು ಪ್ತನಿಯ ಜೋಡಿಯಲ್ಲಿ ಪ್ರಾಣವನ್ನು ಬಿಟ್ಟನು. ರಾಜನು ದುಃಖದಲ್ಲಿ ಮುಳುಗಿ ಹಸ್ತಿನಾಪುರಕ್ಕೆ ಬಂದನು.

ಪಾಂಡುರಾಜನು ರಾಜ್ಯವನ್ನು ತ್ಯಜಿಸಿ ಕಾಡಿಗೆ ಹೋದನು

[ಸಂಪಾದಿಸಿ]
ಆದ ಹದನನು ಭೀಷ್ಮ ಧೃತರಾ
ಷ್ಟ್ರಾದಿಗಳಿಗರುಹಿದರೆ ಹಯ ಮೇ
ಧಾದಿ ಯಜ್ಞದಲೀ ಮಹಾ ಪಾತಕ ವಿಘಾತಕವ ||
ವೈದಿಕೋಕ್ತಿಯ ಮಂತ್ರದಲಿ ಸಂ
ಪಾದಿಸುವೆವೆನೆ ಶಿರವ ಬಿದುರಿ ಮ
ಹಾದುರಾಗ್ರಹ ಬುದ್ಧಿಯಲಿ ಹೊರವಂಟನರಮನೆಯ || ೨೧ ||
ಪದವಿಭಾಗ-ಅರ್ಥ:ಆದ ಹದನನು= ಕಾಡಿನಲ್ಲಿ, ನಡೆದ ವಿಚಾರವನ್ನು, ಭೀಷ್ಮ ಧೃತರಾಷ್ಟ್ರ+ ಆದಿಗಳಿಗೆ ಅರುಹಿದರೆ= ಭೀಷ್ಮಾದಿಗಳಿಗೆ ಹೇಳಿದಾಗ, ಹಯ ಮೇಧಾದಿ ಯಜ್ಞದಲಿ= ಅಶ್ವಮೇದ ಮೊದಲಾದ ಯಜ್ಞಗಳಿಂದ, ಈ ಮಹಾ ಪಾತಕ ವಿಘಾತಕವ= ಈ ಮಹಾ ಪಾಪಕೃತ್ಯದ ದುಷ್ಟ ಪರಿಣಾಮಗಳಿಂದ, ವೈದಿಕೋಕ್ತಿಯ(ವೇದ ಮಂತ್ರದ+ ಉಕ್ತಿ= ಹೇಳಿಕೆ) ಮಂತ್ರದಲಿ= ಅವರು, ವೇದ ಮಂತ್ರಗಳು ಹೇಳಿದ ರೀತಿಯಲ್ಲಿ (ಪರಿಹಾರವನ್ನು) ಸಂಪಾದಿಸುವೆವು+ ಎನೆ= ಮಾಡಿಕೊಳ್ಳಬಹುದು ಎಂದಾಗ, ಶಿರವ ಬಿದುರಿ = ಆಗದು ಎಂದು ತಲೆಕೊಡವಿ, ಮಹಾದುರಾಗ್ರಹ= ಬಹಳ ಹಟದ, ಬುದ್ಧಿಯಲಿ= ಬುದ್ಧಿಯಿಂದ ಅದಕ್ಕೆ ಒಪ್ಪದೆ, ಹೊರವಂಟನು= ಅರಮನೆಯ= ಅರಮನೆಯಿಂದ ಹೊರಟನು.
ಅರ್ಥ: ಪಾಂಡುವು ಕಾಡಿನಲ್ಲಿ ನಡೆದ ವಿಚಾರವನ್ನು, ಭೀಷ್ಮ ಧೃತರಾಷ್ಟ್ರಾದಿಗಳಿಗೆ ಹೇಳಿದಾಗ, ಅವರು ಅಶ್ವಮೇದ ಮೊದಲಾದ ಯಜ್ಞಗಳ ಮೂಲಕ ಈ ಮಹಾ ಪಾಪಕೃತ್ಯದ ದುಷ್ಟ ಪರಿಣಾಮಗಳಿಂದ, ವೇದ ಮಂತ್ರಗಳು ಹೇಳಿದ ರೀತಿಯಲ್ಲಿ ಪರಿಹಾರವನ್ನು ಮಾಡುತ್ತೇವೆ ಎಂದಾಗ, ಆಗದು ಎಂದು ತಲೆಕೊಡವಿ ಬಹಳ ಹಟದ ಬುದ್ಧಿಯಿಂದ ಅದಕ್ಕೆ ಒಪ್ಪದೆ ಅರಮನೆಯಿಂದ ಹೊರಟನು.
ಸಕಲ ಭಂಡಾರವನು ಭೂಸುರ
ಸಿಕರದಲಿ ಚಲ್ಲಿದನು ಸುಜನ
ಪ್ರಕಾರವನು ಗಾಂಗೇಯ ಧೃತರಾಷ್ಟ್ರರಿಗೆ ಕೈಗೊಳಿಸಿ ||
ಚಕಿತ ಚಿತ್ತನು ಮುನಿಹತಿಯ ಪಾ
ತಕದ ನೆತ್ತಿಯ ಸಬಳವಾವುದೊ
ಸಕಲ ಯೋಗಾವಳಿಯೊಳೆನುತೈದಿದನು ಕಾನನವ || ೨೨ ||
ಪದವಿಭಾಗ-ಅರ್ಥ:ಸಕಲ ಭಂಡಾರವನು= ತಾನು ಸಂಪಾದಿಸಿದ ಸಮಸ್ತ ಸಂಪತ್ತನ್ನೂ, ಭೂಸುರಸಿಕರದಲಿ ಚಲ್ಲಿದನು= ಬ್ರಾಹ್ಮಣರಿಗೆ ದಾನಮಾಡಿದನು, ಸುಜನಪ್ರಕಾರವನು= ತನ್ನನ್ನು ಆಶ್ರಯಿಸಿದ್ದ ಸಜ್ಜನರನ್ನು ನೋಡಿಕೊಳ್ಳುವ ಹೊಣೆಯನ್ನು, ಗಾಂಗೇಯ ಧೃತರಾಷ್ಟ್ರರಿಗೆ ಕೈಗೊಳಿಸಿ= ಭೀಷ್ಮ ಧೃತರಾಷ್ಟ್ರರಿಗೆ ಕೈಗೆ ಒಪ್ಪಿಸಿ,, ಚಕಿತ ಚಿತ್ತನು= ಮಹತ್ ವಿಚಾರ ಹೊಂದಿದವನಾಗಿ, ಮುನಿಹತಿಯ ಪಾತಕದ= ಮುನಿಯನ್ನು ಕೊಂದ ಪಾತಕದ/ ಮಹಾಪಾಪದ, ನೆತ್ತಿಯ= ನೆತ್ತಿಯನ್ನು,(ಒಡೆಯುವ) ಸಬಳವು (ಆಯುಧವು)+ ಆವುದೊ= ಯಾವುದಿದೆ, ಸಕಲ ಯೋಗಾವಳಿಯೊಳು (= ಸಕಲ ಯೋಗಗಳ ಸಮೂಹದಲ್ಲಿ ಎಂದು)+ ಎನುತ (ಹೇಳುತ್ತಾ, ಯೋಚಿಸುತ್ತಾ,)+ ಐದಿದನು= ತಲುಪಿದನು, ಕಾನನವ= ಕಾಡನ್ನು.
ಅರ್ಥ: ತಾನು ಸಂಪಾದಿಸಿದ ಸಮಸ್ತ ಸಂಪತ್ತನ್ನೂ, ಬ್ರಾಹ್ಮಣರಿಗೆ ದಾನಮಾಡಿದನು. ತನ್ನನ್ನು ಆಶ್ರಯಿಸಿದ್ದ ಸಜ್ಜನರನ್ನು ನೋಡಿಕೊಳ್ಳುವ ಹೊಣೆಯನ್ನು ಭೀಷ್ಮ ಧೃತರಾಷ್ಟ್ರರಿಗೆ ಕೈಗೆ ಒಪ್ಪಿಸಿ, ಮಹತ್ ವಿಚಾರ ಹೊಂದಿದವನಾಗಿ, ಮುನಿಯನ್ನು (ಮುನಿದಂಪತಿಯನ್ನ) ಕೊಂದ ಮಹಾಪಾಪದ ನೆತ್ತಿಯನ್ನು ಒಡೆಯುವ ಆಯುಧವು ಸಕಲ ಯೋಗಗಳ ಸಮೂಹದಲ್ಲಿ ಯಾವುದಿದೆ ಎಂದು ಯೋಚಿಸುತ್ತಾ ಕಾಡನ್ನು ಹೊಕ್ಕನು.
ಅರಸ ಕೇಳ್ ಶತಶೃಂಗ ಶೈಲದ
ವರತಪೋಧನಾಶ್ರಮಕೆ ನಿ
ಮ್ಮರಸ ಬಂದನು ವಂದಿಸಿದನಾ ಪರಮಮುನಿವರರ||
ಹರುಷದಲಿ ಜಾಬಾಲಿ ಗಾರ್ಗ್ಯಾಂ
ಗಿರಸ ಗಾಲವ ಗೌತಮಾಧ್ಯರು
ಧರಣಿಪನ ಸಂಭಾವಿಸಿದರರ್ಘ್ಯಾಸನಾದಿಯಲಿ ||(೨೩)
ಪದವಿಭಾಗ-ಅರ್ಥ: ಅರಸ ಕೇಳ್ = ಅರಸನೇ ಕೇಳು, ಶತಶೃಂಗ ಶೈಲದ ವರತಪೋಧನ+ ಆಶ್ರಮಕೆ ನಿಮ್ಮ+ ಅರಸ ಬಂದನು, ವಂದಿಸಿದನು+ ಆ ಪರಮ ಮುನಿವರರ= ಆ ಮುನಿಗಳಿಗೆ ಪಾಂಡು ನಮಸ್ಕರಿಸಿದನು. ಹರುಷದಲಿ= ಸಂತೊಷದಿಂದ, ಜಾಬಾಲಿ ಗಾರ್ಗಿ+ ಆಂಗಿರಸ ಗಾಲವ ಗೌತಮ+ ಆಧ್ಯರು= ಮೊದಲಾದವರು, ಧರಣಿಪನ= ರಾಜನನ್ನು, ಸಂಭಾವಿಸಿದರು (ಗೌರವದಿಂದ ಉಪಚರಿಸಿದರು)+ ಅರ್ಘ್ಯ+ ಆಸನ+ ಆದಿಯಲಿ= ಮೊದಲಾದವುಗಳನ್ನು ಕೊಟ್ಟು,
ಅರ್ಥ: ಅರಸನೇ ಕೇಳು, ಶತಶೃಂಗ ಪರ್ವತದಲ್ಲಿದ್ದ ಶ್ರೇಷ್ಠ ತಪೋಧನರ ಆಶ್ರಮಕ್ಕೆ ನಿಮ್ಮ ಪಾಂಡುರಾಜನು ಬಂದನು. ಅವನು ಆ ಪರಮ ಮುನಿಗಳಿಗೆ ಪಾಂಡು ನಮಸ್ಕರಿಸಿದನು. ಜಾಬಾಲಿ ಗಾರ್ಗಿ, ಆಂಗಿರಸ, ಗಾಲವ, ಗೌತಮ, ಮೊದಲಾದವರು ಅರ್ಘ್ಯ, ಆಸನ, ಮೊದಲಾದವುಗಳನ್ನು ಕೊಟ್ಟು ಸಂತೊಷದಿಂದ ರಾಜನನ್ನು ಗೌರವದಿಂದ ಉಪಚರಿಸಿದರು.(ಹಿಂದಿನ ಉಪಚಾರದ ಕ್ರಮ: ಅರ್ಘ್ಯ- ಕೈತೊಳೆಯಲು ನೀರು, ಪಾದ್ಯ- ಕಾಲು ತೊಳೆಯಲು ನೀರು, ಆಸನ- ಕುಳಿತುಕೊಳ್ಳಲು ಚಾಪೆ, ದರ್ಭಾಸನ, ಕುಡಿಯಲು ನೀರು, ಹಣ್ಣು, ಬಿಸಿಲಲ್ಲಿ ಬಂದರೆ ಚಾಮರ- ಬೀಸಣಿಗೆಯಿಂದ ಗಾಳಿ ಹಾಕಿ ಉಪಚರಿಸುವರು.)
ಈತನಮಲಾಷ್ಟಾಂಗಯೋಗ ವಿ
ಧೂತ ಕಿಲ್ಬಿಷನಾಗಿ ಬಳಿಕ ಮ
ಹಾ ತಪಸ್ವಿಗಳೊಳಗೆ ಸಂದನು ತೀವ್ರ ತೇಜದಲಿ||
ಆ ತಪೊನಿಷ್ಠಂಗೆ ತಾವತಿ
ಭೀತಿ ಭಕ್ತಿಯೊಳಧಿಕಶುಶ್ರೂ
ಷಾತಿಶಯದಲಿ ಮನವ ಹಿಡಿದರು ಕುಂತಿ ಮಾದ್ರಿಯರು ||(೨೪)
ಪದವಿಭಾಗ-ಅರ್ಥ:ಈತನು ಅಮಲ+ ಅಷ್ಟಾಂಗಯೋಗ (ದಿಂದ) ವಿಧೂತ= ತೊರೆದ, ಕಿಲ್ಬಿಷನಾಗಿ= ದೋಷ, ದೋಷರಹಿತನಾಗಿ, ಬಳಿಕ ಮಹಾ ತಪಸ್ವಿಗಳೊಳಗೆ ಸಂದನು= ಸಮಾನನಾದನು, ತೀವ್ರ ತೇಜದಲಿ= ಮಹಾ ತೇಜಸ್ಸಿನಲ್ಲಿ; ಆ ತಪೊನಿಷ್ಠಂಗೆ ತಾವತಿ ಭೀತಿ ಭಕ್ತಿಯೊಳು ಅಧಿಕ ಶುಶ್ರೂಷ+ ಅತಿಶಯದಲಿ ಮನವ ಹಿಡಿದರು= ಮನಸ್ಸನ್ನು ತೊಡಗಿಸಿದರು. ಕುಂತಿ ಮಾದ್ರಿಯರು.
ಅರ್ಥ: ಪಾಂಡುವು, ಶ್ರೇಷ್ಠವಾದ ಅಷ್ಟಾಂಗಯೋಗ ದಿಂದ ದೋಷ ದೋಷರಹಿತನಾದ ಬಳಿಕ ಮಹಾ ತಪಸ್ವಿಗಳ ಸಾಲಿಗೆ ಸೇರಿ, ಮಹಾ ತೇಜಸ್ಸಿನಲ್ಲಿ ಅವರಿಗೆ ಸಮಾನನಾದನು, ಆ ತಪೊನಿಷ್ಠನಾದ ಪಾಂಡುವಿಗೆ ಕುಂತಿ ಮಾದ್ರಿಯರು, (ತಾವು) ಅತಿ ಭೀತಿ ಭಕ್ತಿಯಿಂದ ಬಹಳ ಅತಿಶಯವಾಗಿ ಶುಶ್ರೂಷೆ ಮಾಡಿ ಅದರಲ್ಲೇ ತಮ್ಮ ಮನಸ್ಸನ್ನು ತೊಡಗಿಸಿದರು.
ಪರಮ ವ್ಯರಾಗ್ಯದಿ ನಿರಂತಃ
ಕರಣ ನಿರುಪಮ ಭಾವ ಶುದ್ಧಿಯ
ಮುರಹರ ಧ್ಯಾನೈಕ ಪೀಯೂಷಾಭಿಷೇಕದಲಿ ||
ಹೊರೆದು ಹೊಂಗಿದ ನಿಷ್ಪ್ರಪಂಚೋ
ತ್ಯರದ ಸುಖದುನ್ನತಿಯಲಿದ್ದನು
ಧರಣಿಪತಿ ಮುನಿಪನ ಮಹಾಪಾತಕವ ಕೆಡೆಯೊದೆದು ||೨೫ ||)
ಪದವಿಭಾಗ-ಅರ್ಥ:ಪರಮ ವ್ಯರಾಗ್ಯದಿ= ಪರಮ ವ್ಯರಾಗ್ಯದಿಂದ ನಿರಂತಃಕರಣ= ಅಂತಃಕರಣದ ಶುದ್ಧಿಯನ್ನು ಹೊಂದಿ, ನಿರುಪಮ ಭಾವ ಶುದ್ಧಿಯ= ಅತಿಹೆಚ್ಚಿನ ಭಾವ ಶುದ್ಧಿಯನ್ನು ಸಾಧಿಸಿ, ಮುರಹರ ಧ್ಯಾನೈಕ= ಧ್ಯಾನ+ ಏಕ, ವಿಷ್ಣುವಿನ ಒಂದೇ ಧ್ಯಾನವೆಂಬ ಪೀಯೂಷಾಭಿಷೇಕದಲಿ= ಅಮೃತದ ಅಭಿಷೇಕದಲ್ಲಿ, ಹೊರೆದು ಹೊಂಗಿದ= ಮಾಯವಾಗಿ ಅಡಗಿದ ನಿಷ್ಪ್ರಪಂಚ+ ಉತ್ಯರದ= ಪ್ರಪಂಚವೇ ಅಂತರಮದಲ್ಲಿ ಇಲ್ಲದಂತಾಗಿ, ಸುಖದ+ ಉನ್ನತಿಯಲಿದ್ದನು= ಆನಂದದ ಅನುಭವದಲ್ಲಿದ್ದನು, ಧರಣಿಪತಿ= ಪಾಂಡು ರಾಜನು, ಮುನಿಪನ ಮಹಾಪಾತಕವ= ಮನಿಯನ್ನು ಕೊಂದ ಮಹಾ ಪಾಪವನ್ನು, ಕೆಡೆಯೊದೆದು= ಕಡೆ+ ಒದೆದು= ಪಕ್ಕಕ್ಕೆ ನೂಕಿ.
ಅರ್ಥ: ಪಾಂಡು ರಾಜನು, ಪರಮ ವ್ಯರಾಗ್ಯದಿಂದ ತನ್ನ ಅಂತಃಕರಣ ಶುದ್ಧಿಯನ್ನು ಹೊಂದಿ, ಅತಿಹೆಚ್ಚಿನ ಭಾವ ಶುದ್ಧಿಯನ್ನು ಸಾಧಿಸಿ, ವಿಷ್ಣುವಿನ ಒಂದೇ ಧ್ಯಾನವೆಂಬ ಅಮೃತದ ಅಭಿಷೇಕದಲ್ಲಿ ಪ್ರಪಂಚವು ಮಾಯವಾಗಿ ಅಡಗಿಹೊಗಿ, ಅಂತರಂದಲ್ಲಿ ಪ್ರಪಂಚವೇ ಇಲ್ಲದಂತಾಗಿ, ಮುನಿಯನ್ನು ಕೊಂದ ಮಹಾ ಪಾಪವನ್ನು ಪಕ್ಕಕ್ಕೆ ನೂಕಿ ಆನಂದದ ಅನುಭವದಲ್ಲಿದ್ದನು,

ಕುಂತಿ ಪುತ್ರರನ್ನು ಪಡೆಯಲು ಪಾಂಡುವಿನ ಒಪ್ಪಿಗೆ

[ಸಂಪಾದಿಸಿ]
ನಾರಿಯರು ಮರುಗಿದರಕಟ ಮುದಿ
ಹಾರುವನ ತನಿಬೇಂಟೆ ನಮ್ಮಯ
ಬೇರುಗೊಲೆಯಾಗಿರ್ದುದೇ ಹಾಯೆನುತ ಬಿಸುಸುಯ್ದು ||
ವಾರಿಜಾನನೆ ಕುಂತಿ ಮೆಲ್ಲನೆ
ಸಾರಿದಳು ನಯದಲಿ ರಹಸ್ಯದ
ಲಾರುವರಿಯದವೋಲ್ ಬಿನ್ನಹ ಮಾಡಿದಳು ಪತಿಗೆ ||೨೬ ||
ಪದವಿಭಾಗ-ಅರ್ಥ:ನಾರಿಯರು ಮರುಗಿದರು+ ಅಕಟ= ಪಾಂಡುವಿನ ಪತ್ನಿಯರು ದುಃಖಪಟ್ಟರು. ಮುದಿಹಾರುವನ= ಮುದುಕನಾದ ಬ್ರಾಹ್ಮಣನ, ತನಿಬೇಂಟೆ= ದೊಡ್ಡಬೇಟೆ (ಮಾಗಿದ, ಪಕ್ವ, ಉತ್ತಮ) ನಮ್ಮಯ ಬೇರುಗೊಲೆಯಾಗಿರ್ದುದೇ(ಬೇರು + ಕೊಲೆ)= ಸಂಸಾರದ ಬೇರಿನ ನಾಶಮಾಡಿಬಿಟ್ಟಿತೇ, ಹಾಯೆನುತ= ಹಾಯ್ ಎನುತ, ಬಿಸುಸುಯ್ದು= ನಿಟ್ಟುಚಿರುಬಿಟ್ಟು, ವಾರಿಜಾನನೆ= ಕಮಲಮುಖಿ, ಕುಂತಿ ಮೆಲ್ಲನೆ ಸಾರಿದಳು= ಹೋದಳು, ನಯದಲಿ ರಹಸ್ಯದಲಿ ಆರುವರಿಯದವೋಲ್= ಯಾರೂ ತಿಳಿಯದಂತೆ ಬಿನ್ನಹ (ಹೇಳು) ಮಾಡಿದಳು ಪತಿಗೆ= ಮೆಲ್ಲನೆ ಪತಿಯ ಬಳಿಗೆ ಹೋಗಿ ರಹಸ್ಯವಾಗಿ ನಯದಿಂದ
ಅರ್ಥ: ಪಾಡುವಿನ ಪತ್ನಿಯರು ದುಃಖಪಟ್ಟರು. ಅಕಟ ಮುದುಕನಾದ ಬ್ರಾಹ್ಮಣನ ದೊಡ್ಡಬೇಟೆ ನಮ್ಮ ಸಂಸಾರದ ಬೇರನ್ನು ಕತ್ತರಿಸಿಬಿಟ್ಟಿತೇ! ಹಾಯ್ ಎನ್ನುತ್ತಾ, ನಿಟ್ಟುಚಿರುಬಿಟ್ಟು, ಕಮಲಮುಖಿ, ಕುಂತಿಯು ಮೆಲ್ಲನೆ ಪತಿಯ ಬಳಿಗೆ ಹೋಗಿ ರಹಸ್ಯವಾಗಿ ಹೋದಳು, ಅವನಿಗೆ ನಯದಲ್ಲಿ ರಹಸ್ಯವಾಗಿ ಯಾರೂ ತಿಳಿಯದಂತೆ ಬಿನ್ನಹ ಮಾಡಿದಳು.
ಭರತ ವಂಶಕೆ ಪುತ್ರ ಶತವವ
ತರಿಸುವುದು ಗಾಂಧಾರಿ ದೇವಿಗೆ
ಮರ ಮುನೀಶ್ವರನಿತ್ತ ವರವದು ನಿಮ್ಮಡಿಗಳರಿಯೆ ||
ದುರುಳ ಮುನಿಪನ ಶಾಪವೇ ಸ್ತ್ರೀ
ಪುರುಷ ಸಂಗ ವಿರೋಧ ನಮಗಿ
ನ್ನರಸ ನಾಪುತ್ರಸ್ಯಗತಿಯೆಂದಿರದೆಶ್ರುತಿವಚನ ||೨೭ ||
ಪದವಿಭಾಗ-ಅರ್ಥ:ಭರತ ವಂಶಕೆ ಪುತ್ರ ಶತವು+ ಅವತರಿಸುವುದು= ನೂರು ಹುಟ್ಟುವುದು, ಗಾಂಧಾರಿ ದೇವಿಗೆ+ ಅಮರ ಮುನೀಶ್ವರನು+ ಇತ್ತ= ವ್ಯಾಸ ಮಹರ್ಷಿ ಕೊಟ್ಟ, ವರವದು ನಿಮ್ಮಡಿಗಳು+ ಅರಿಯೆ= ನೀವು ತಿಳಿದಂತೆ, ದುರುಳ ಮುನಿಪನ ಶಾಪವೇ= ದುಷ್ಟ ಮುನಿಯ ಶಾಪವು, ಸ್ತ್ರೀಪುರುಷ ಸಂಗ ವಿರೋಧ= ನಾವು ಪತಿ ಪತ್ನಿಯರು ಸಂಗ ಮಾಡುವುದಕ್ಕೆ ವಿರೋಧವಾಗಿದೆ ನಮಗೆ+ ಇನ್ನು+ ಅರಸ; ನಾಪುತ್ರಸ್ಯಗತಿಯೆಂದು (ಪುತ್ರರಿಲ್ಲದವರಿಗೆ ಸದ್ಗತಿ ಇಲ್ಲ ಎಂದು)+ ಇರದೆ ಶ್ರುತಿವಚನ= ವೇದದ ವಚನವಿಲ್ಲವೆ?
ಅರ್ಥ: ಭರತ ವಂಶಕ್ಕೆ ವ್ಯಾಸ ಮಹರ್ಷಿ ಕೊಟ್ಟ ವರದಿಂದ ಗಾಂಧಾರಿ ದೇವಿಗೆ ನೂರು ಪುತ್ರರು ಹುಟ್ಟುವರು. ನೀವು ಅದನ್ನು ತಿಳಿದಿದ್ದೀರಿ. ದುಷ್ಟ ಮುನಿಯ ಶಾಪವು, ನಮಗೆ ಇನ್ನು ಅರಸ, ನಾವು ಪತಿ ಪತ್ನಿಯರು ಸಂಗ ಮಾಡುವುದಕ್ಕೆ ವಿರೋಧವಾಗಿದೆ. 'ನಾಪುತ್ರಸ್ಯಗತಿಯೆಂದು' (ಪುತ್ರರಿಲ್ಲದವರಿಗೆ ಸದ್ಗತಿ ಇಲ್ಲ ಎಂದು) ವೇದದ ವಚನವಿಲ್ಲವೆ? ಕುಂತಿ ಪಾಂಡುವಿಗೆ ಹೇಳಿದಳು.
ಧರೆಯ ರಾಜ್ಯಸ್ಥಿತಿಗೆ ಸುತರವ
ತರಿಸುವರು ಗಾಂಧಾರಿಗಾ ಪು
ತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು||
ಧರೆ ಪರಂಪರೆಯಿಂದಲತ್ತಲೆ
ಸರಿವುದೀ ನಿಮ್ಮಡಿಗೆ ದರ್ಭಾ(ಸ್ತ)
ಸರಣ ಸಮಿಧಾಧಾನವೇ ಕದೆಗೆಂಡೆಳಾ ಕುಂತಿ ||(೨೮)
ಪದವಿಭಾಗ-ಅರ್ಥ:ಧರೆಯ ರಾಜ್ಯಸ್ಥಿತಿಗೆ ಸುತರು+ ಅವತರಿಸುವರು= ರಾಜ್ಯವನ್ನಾಳಲು ಪುತ್ರರು ಹುಟ್ಟುವರು, ಗಾಂಧಾರಿಗೆ+ ಆ ಪುತ್ರರಿಗೆ ಸುತರು+ ಆ ಸುತರ ಸುತರು+ ಆ ಸುತರ ಸೂನುಗಳು ಧರೆ= ಭೂಮಿ, ರಾಜ್ಯ ಪರಂಪರೆಯಿಂದಲಿ+ ಆತ್ತಲೆ ಸರಿವುದು+ ಅವಳ ಸುತರ ಪರಂಪರೆಯಲ್ಲಿ ರಾಜ್ಯವು ಅವಲ ಮಕ್ಕಳಿಗೇ ಸೇರುವುದು. ಈ ನಿಮ್ಮಡಿಗೆ ದರ್ಭಾಸ್ತರಣ ಸಮಿಧಾಧಾನವೇ ಕಡೆಗೆ+ ಎಂದಳು+ ಆ ಕುಂತಿ = ಕೊನೆಗೆ ನಿಮಗೆ ಧರ್ಭೆಯ ಆಸರೆಯೇ ಗತಿ ಎಂದಳು ಆ ಕುಂತಿ.
ಅರ್ಥ: ಗಾಂಧಾರಿಗೆ ರಾಜ್ಯವನ್ನಾಳಲು ಪುತ್ರರು ಹುಟ್ಟುವರು, ಆ ಪುತ್ರರಿಗೆ ಸುತರು, ಆ ಸುತರ ಸುತರು, ಆ ಸುತರ ಮಕ್ಕಳುಗ ರಾಜ್ಯ ಪರಂಪರೆಯಿಂದ ಅವಳ ಸುತರ ಪರಂಪರೆಯಲ್ಲಿ ರಾಜ್ಯವು ಅವಳ ಮಕ್ಕಳಿಗೇ ಸೇರುವುದು. ಈ ನಿಮಗೆ ಕೊನೆಗೆ ನಿಮಗೆ ಧರ್ಭೆಯ ಆಸರೆಯೇ ಗತಿ ಎಂದಳು ಆ ಕುಂತಿ.
ವಜನಮುಖಿ ಕೇಳ್ ಪುತ್ರಮುಖ ದ
ರ್ಶನವು ಸುಲಭವೆ ಪುಣ್ಯಹೀನರಿ
ಗೆನಿತು ಹಲುಬಿದರೇನು ಹಂಗಿಗರಾವು ದುಷ್ಕೃತಿಗೆ ||
ಮುನಿಯ ಬೇಟದ ಬೇಳುವೆಯ ಮಾ
ತಿನ ಹವಣ ನೀ ಬಲ್ಲೆ ಹೇಳಿ
ನ್ನೆನಗೆ ಕರ್ತವ್ಯವನು ಮಾನಿನಿ ಭೀತಿ ಬೇಡೆಂದ || ೨೯ ||
ಪದವಿಭಾಗ-ಅರ್ಥ:ವಜನಮುಖಿ ಕೇಳ್ ಪುತ್ರಮುಖ ದರ್ಶನವು ಸುಲಭವೆ= ಕಮಲಮುಖಿ, ಕೇಳು ಮಗನನ್ನು ಪಡೆದು ಅವನ ಮುಖ ನೋಡುವುದು ಸುಲಭವಲ್ಲ ಪುಣ್ಯಹೀನರಿಗೆ; + ಎನಿತು ಹಲುಬಿದರೇನು= ಎಷ್ಟು ದುಃಖಿಸದರೆ ಏನು ಲಾಭ? ಪ್ರಯೋಜನವಿಲ್ಲ. ಹಂಗಿಗರು+ ಆವು= ನಾವು/ ನಾನು, ದುಷ್ಕೃತಿಗೆ= ನಾನು ಕೆಟ್ಟ ಕಾರ್ಯದ ಹಂಗಿನಲ್ಲಿದ್ದೇನೆ, ಮುನಿಯ ಬೇಟದ ಬೇಳುವೆಯ= ಸಂತಾಪದ; ಮಾತಿನ ಹವಣ= ತಂತ್ರ, ಹಂಚಿಕೆ; ನೀ ಬಲ್ಲೆ= ಇದರ ಅರ್ಥವನ್ನು ನೀನು ಬಲ್ಲೆ (ನಾನು ನಿನಗೆ ಪುತ್ರ ಸಂತಾನ ಕೊಡುವಹಾಗಿಲ್ಲ), ಹೇಳಿನ್ನೆನಗೆ ಹೇಳು+ ಇನ್ನು+ ಎನಗೆ ಕರ್ತವ್ಯವನು ಮಾನಿನಿ ಭೀತಿ ಬೇಡೆಂದ= ಹೆದರಬೇಡ ಎಂದ.
ಅರ್ಥ: ಕಮಲಮುಖಿ ಕುಂತಿಯೇ, ಕೇಳು ಮಗನನ್ನು ಪಡೆದು ಅವನ ಮುಖ ನೋಡುವುದು ಪುಣ್ಯಹೀನರಿಗೆ ಸುಲಭವಲ್ಲ; ಎಷ್ಟು ದುಃಖಿಸದರೆ ಏನು ಲಾಭ? ಪ್ರಯೋಜನವಿಲ್ಲ. ನಾನು ಮುನಿಯ ಬೇಟೆಯ ಕೆಟ್ಟ ಕಾರ್ಯದ ಸಂತಾಪದ ಹಂಗಿನಲ್ಲದ್ದೇನೆ; ಮಾತಿನ ಹಂಚಿಕೆಯ ಅರ್ಥವನ್ನು ನೀನು ಬಲ್ಲೆ (ನಾನು ನಿನಗೆ ಪುತ್ರ ಸಂತಾನ ಕೊಡುವಹಾಗಿಲ್ಲ). ಮಾಡಬೇಕಾದ ಕರ್ತವ್ಯವನ್ನು ಇನ್ನು ನನಗೆ ಹೇಳು. ಮಾನಿನಿಯೇ ಹೆದರಬೇಡ, ಎಂದ.
ನಾರಿಯರು ಮತ್ತಲ್ಲಿ ರಾಜ ಕು
ಮಾರಿಯರು ಛಲವಾದಿಗಳು ಗಾಂ
ಧಾರಿಗಾದುದು ಪುತ್ರ ಸಂತತಿಯೆಂಬ ಭೇದದಲಿ ||
ಧೀರ ಬಿನ್ನವಿಸಿದೆನು ಕಾರ್ಯದ
ಭಾರವನು ನೀ ಬಲ್ಲೆಯಿವಳು ವಿ
ಕಾರಿಯೆನ್ನದಿರೆಂದುರಾಯನ ಚರಣಕೆರೆಗಿದಳು ||೩೦ ||
ಪದವಿಭಾಗ-ಅರ್ಥ:ನಾರಿಯರು ಮತ್ತೆ+ ಅಲ್ಲಿ ರಾಜ ಕುಮಾರಿಯರು ಛಲವಾದಿಗಳು ಗಾಂಧಾರಿಗಾದುದು ಪುತ್ರ ಸಂತತಿಯೆಂಬ ಭೇದದಲಿ ಧೀರ ಬಿನ್ನವಿಸಿದೆನು ಕಾರ್ಯದ ಭಾರವನು ನೀ ಬಲ್ಲೆ (ಯಿ) ಇವಳು ವಿಕಾರಿಯೆನ್ನದಿರು+ ಎಂದು ರಾಯನ ಚರಣಕೆ+ ಎರೆಗಿದಳು
ಅರ್ಥ: ಹೆಣ್ಣು ಮಕ್ಕಳು ಹಠಸ್ವಭಾವದವರು, ಅದರಲ್ಲಿಯೂ, ರಾಜಕುಮಾರಿಯರು ಮತ್ತೂ ಹಠವಾದಿಗಳು. ಗಾಂಧಾರಿಗೆ ಪುತ್ರ ಸಂತತಿಯ ಲಾಭ ಆಯಿತು ಎಂಬ ಅಸೂಯೆಯಲ್ಲಿ ಧೈರ್ಯದಿಂದ ಹೇಳಿದೆನು. ಮುಂದಿನ ಕಾರ್ಯದ ಒತ್ತಡವನ್ನು ನೀನೇ ಹೇಳಬೇಕು. ಇವಳು ಕೆಟ್ಟ ಬುದ್ಧಿಯವಳು ಎನ್ನಬೇಡ ಎಂದು ರಾಜನ ಕಾಲಿಗೆ ನಮಸ್ಕರಿಸಿದಳು.
ಲೋಲಲೋಚನೆ ದೃಢ ಪತಿವ್ರತೆ
ಯೇಳು ದುಃಖಿಸಬೇಡ ಭೃಗು ಜಾ
ಬಾಲಿ ಜಮದಗ್ನ್ಯಾದಿ ದಿವ್ಯ ಮುನೀಂದ್ರ ಗಣವಿದೆಲ||
ಓಲಗಿಸುವುದು ದುಷ್ಕೃತಿಗೆ ನಿ
ಷ್ಪಾಳೆಯವು ಬಳಿಕಹುದು ಮಂತ್ರ ವಿ
ಶಾಲ ಬೀಜದಿಯಹುದು ಸಂತತಿ ಕಾಂತೆ ಕೇಳೆಂದ ||(೩೧)
ಪದವಿಭಾಗ-ಅರ್ಥ:ಲೋಲಲೋಚನೆ ದೃಢ ಪತಿವ್ರತೆ+ ಏಳು ದುಃಖಿಸಬೇಡ ಭೃಗು ಜಾಬಾಲಿ ಜಮದಗ್ನಿ+ ಆದಿ ದಿವ್ಯ ಮುನೀಂದ್ರ ಗಣವು ಇದು+ಎಲ= ಇವರು ದಿವ್ಯ ಮುನೀಂದ್ರ ಗಣವಲ್ಲವೇ! ಓಲಗಿಸುವುದು= ಸೇವೆಮಾಡುವುದು, ದುಷ್ಕೃತಿಗೆ ನಿಷ್ಪಾಳೆಯವು= ಕೆಟ್ಟ ಕಾರ್ಯಕ್ಕೆ ಪ್ರಾಯಶ್ಚಿತವು ಆಗುವುದು, ಬಳಿಕ+ ಅಹುದು ಮಂತ್ರ ವಿಶಾಲ ಬೀಜದಿ+ ಅಹುದು= ಮಂತ್ರಬೀಜದಿಂದ ಮಕ್ಕಳು ಆಗುವುದು, ಸಂತತಿ= ಮಕ್ಕಳು, ಕಾಂತೆ ಕೇಳೆಂದ.
ಅರ್ಥ: ಸುಂದರಿ ಕುಂತಿಯೇ ನೀನು ದೃಢ ಪತಿವ್ರತೆಯು. ಏಳು ದುಃಖಿಸಬೇಡ. ಭೃಗು ಜಾಬಾಲಿ ಜಮದಗ್ನಿ ಮೊದಲಾದವರು ಇವರು ದಿವ್ಯ ಮುನೀಂದ್ರ ಗಣವಲ್ಲವೇ! ನೀನು ಅವರ ಸೇವೆಮಾಡುವುದು, ಅವರಿಂದ ಕೆಟ್ಟ ಕಾರ್ಯಕ್ಕೆ ಪ್ರಾಯಶ್ಚಿತವು ಆಗುವುದು, ಬಳಿಕ ಮಂತ್ರಬೀಜದಿಂದ ಮಕ್ಕಳು ಆಗುವುದು, ಕಾಂತೆಯೇ ಕೇಳು ಎಂದನು ಪಾಡು.
ಭವದನುಗ್ರಹದಿಂದ ಸುತರು
ದ್ಭವಿಸಿದರೆ ಲೇಸನ್ಯಥಾ ಸಂ
ಭವಿಸಿದರೆ ದುಷ್ಕೀರ್ತಿವಧುವೆಂಜಳಿಸಲೇ ಕುಲವ||
ಅವನಿಪತಿ ಕೇಳ್ ನಹುಷ ನಳ ಪೌ
ರವ ಸುಹೋತ್ರಾದ್ಯರ ನಿಜಾತ್ಮೋ
ದ್ಭ ವರ ಪಾರಂಪರೆಗೆ ಗತಿಯೇನೆಂದಳಾ ಕುಂತಿ ||(೩೨)
ಪದವಿಭಾಗ-ಅರ್ಥ:ಭವದ (ನಿನ್ನ)+ ಅನುಗ್ರಹದಿಂದ ಸುತರು+ ಉದ್ಭವಿಸಿದರೆ= ಹುಟ್ಟಿದರೆ, ಲೇಸು(ಒಳಿತು)+ ಅನ್ಯಥಾ ಸಂಭವಿಸಿದರೆ= ಬೇರೆ ರೀತಿಯಿಂದ ಹುಟ್ಟಿದರೆ, ದುಷ್ಕೀರ್ತಿವಧುವು= ಹೆಣ್ಣಿಗೆ ಅಪಕೀರ್ತಿ ಎಂಜಳಿಸಲೇ= ಎಂಜಲು ಎಂದು ಎಣಿಸುವುದಿಲ್ಲವೇ ಕುಲವ? ಅವನಿಪತಿ ಕೇಳ್ ನಹುಷ ನಳ ಪೌರವ ಸುಹೋತ್ರ+ ಆದ್ಯರ ನಿಜ=ತಮ್ಮ ತಮ್ಮಿಂದಲೇ, ಆತ್ಮೋದ್ಭವರ= ವಂಶದಲ್ಲಿ ಅವರಿಂದಲೇ ಜನಿಸಿದರ ಪಾರಂಪರೆಗೆ ಗತಿಯೇನು+ ಎಂದಳು ಆ ಕುಂತಿ.
ಅರ್ಥ: ನಿನ್ನ ಅನುಗ್ರಹದಿಂದಲೇ ಸುತರು ಹುಟ್ಟಿದರೆ ಒಳಿತು. ಬೇರೆ ರೀತಿಯಿಂದ ಹುಟ್ಟಿದರೆ, ಹೆಣ್ಣಿಗೆ ಅಪಕೀರ್ತಿ, ಕುಲವನ್ನು ಎಂಜಲು ಎಂದು ಎಣಿಸುವುದಿಲ್ಲವೇ? ಅವನಿಪತಿ ಕೇಳು ನಹುಷ ನಳ ಪೌರವ ಸುಹೋತ್ರ ಮೊದಲಾದವರ ವಂಶದಲ್ಲಿ ಅವರಿಂದಲೇ ಜನಿಸಿದರ ಪರಂಪರೆಗೆ ಗತಿಕೆಡುವುದಲ್ಲಾ, ಎಂದಳು ಆ ಕುಂತಿ.
ಅರಸಿ ಕೇಳ್ ತದ್ಬೀಜ ಪಾರಂ
ಪರೆ ಮುರಿಯೆ ತತ್ ಕ್ಷೇತ್ರದಲಿ ಮುನಿ
ವರರ ಕಾರುಣ್ಯದಲಿ ಪುತ್ರೋದ್ಭವವದೇ ವಿಹಿತ ||
ಪರಮ ವೈದಿಕ ಸಿದ್ಧವಿದು ಸುರ
ಸಿರುಹಮುಖಿ ನಿಶ್ಯಂಕೆಯಲಿ ನೀ
ಧರಿಸು ಮುನಿ ಮಂತ್ರೋಪದೇಶವನಿದುವೆ ನಿರ್ಧೋಷ || ೩೩ ||
ಪದವಿಭಾಗ-ಅರ್ಥ:ಅರಸಿ ಕೇಳ್ ತದ್ಬೀಜ= ತತ್= ಆ ಬೀಜ ಪಾರಂಪರೆ= ಪರಂಪರೆ, ಮುರಿಯೆ= ನಿಂತರೆ, ತತ್ ಕ್ಷೇತ್ರದಲಿ= ಅದೇ ವಂಶದ ಕ್ಷೇತ್ರದಲ್ಲಿ (ಪತ್ನಿಯರಲ್ಲಿ) ಮುನಿವರರ ಕಾರುಣ್ಯದಲಿ = ಮುನಿಗಳ ಕರುಣೆಯಿಂದ, ಪುತ್ರೋದ್ಭವವು+ ಅದೇ ವಿಹಿತ= ಮಕ್ಕಳನ್ನು ಪಡೆಯುವುದೇ ಯೋಗ್ಯ, ಪರಮ ವೈದಿಕ ಸಿದ್ಧವಿದು= ಅದು ವೇದ ಶಾಸ್ತ್ರ ಸಮ್ಮತವು. ಸುರಸಿರುಹಮುಖಿಸುಂದರಿ ಮುನಿಗಳ ಮಂತ್ರ ಉಪದೇಶದಿಂದ ನಿಶ್ಯಂಕೆಯಲಿ ನೀ= ನೀನು, ಶಂಕೆಯನ್ನು ಬಿಟ್ಟು, ಧರಿಸು ಮುನಿ ಮಂತ್ರೋಪದೇಶವನು+ ಇದುವೆ ನಿರ್ಧೋಷ= ಇದು ದೋಷವಿಲ್ಲದ ದಾರಿ ಎಂದನು ಪಾಂಡು.
ಅರ್ಥ: ಅರಸಿ ಕುಂತಿಯೇ ಕೇಳು, ವಂಶದ ಆ ಬೀಜ ಪರಂಪರೆಯು ನಿಂತರೆ, ಅದೇ ವಂಶದ ಕ್ಷೇತ್ರದಲ್ಲಿ (ಪತ್ನಿಯರಲ್ಲಿ) ಮುನಿಗಳ ಕರುಣೆಯಿಂದ, ಮಕ್ಕಳನ್ನು ಪಡೆಯುವುದೇ ಯೋಗ್ಯ, ಅದು ವೇದ ಶಾಸ್ತ್ರ ಸಮ್ಮತವು. ಸುಂದರಿ ಮುನಿಗಳ ಮಂತ್ರ ಉಪದೇಶದಿಂದ ನೀನು ಶಂಕೆಯನ್ನು ಬಿಟ್ಟು ಮುನಿ ಮಂತ್ರೋಪದೇಶವನನ್ನು ಧರಿಸು. ಇದು ದೋಷವಿಲ್ಲದ ದಾರಿ, ಎಂದನು ಪಾಂಡು.
ಆದಡವನಿಪ ಬಿನ್ನಹವು ತನ
ಗಾದಿಯಲಿ ದೂರ್ವಾಸಮುನಿ ಕರು
ಣೋದಯಲಿತ್ತೈದು ಮಂತ್ರಾಕ್ಷರದ ವರವುಂಟು ||
ನೀ ದಯಾಂಬುಧಿ ನಿನ್ನನುಗ್ರಹ
ವಾದುದಾದರೆ ತದ್ವಿಧಾನದ
ಲಾದರಿಸುವೆನು ಪುತ್ರ ಕಾಮ್ಯವನೆಂದಳಾ ಕುಂತಿ || ೩೪ ||
ಪದವಿಭಾಗ-ಅರ್ಥ:ಆದಡೆ+ ಅವನಿಪ= ಹಾಗಿದ್ದರೆ ರಾಜನೇ, ಬಿನ್ನಹವು= ಕೋರಿಕೆಯ ಬೇಡಿಕೆಯು, ತನಗೆ+ ಆದಿಯಲಿ=ಹಿಂದೆ, ದೂರ್ವಾಸಮುನಿ ಕರುಣೋದಯಲಿ+ ಇತ್ತ+ ಐದು ಮಂತ್ರಾಕ್ಷರದ ವರವುಂಟು; ನೀ ದಯಾಂಬುಧಿ ನಿನ್ನ+ ಅನುಗ್ರಹ ವಾದುದಾದರೆ ತದ್ (ಆ)+ ವಿಧಾನದಲಿ+ ದರಿಸುವೆನು ಪುತ್ರ ಕಾಮ್ಯವನು (ಬಯಕೆಯನ್ನು)+ ಎಂದಳು ಆ ಕುಂತಿ
ಅರ್ಥ:ಹಾಗಿದ್ದರೆ ರಾಜನೇ, ನನ್ನದು ಒಂದು ಕೋರಿಕೆಯಯ. ತನಗೆ ಹಿಂದೆ ದೂರ್ವಾಸಮುನಿ ಕರುಣೆಯಿಂದ+ ಕೊಟ್ಟ ಐದು ಮಂತ್ರಾಕ್ಷರದ ವರವು ಇದೆ; ನೀವು ದಯಾಂಬುಧಿಯಾಗಿ ನಿನ್ನ ಅನುಗ್ರಹ ವಾದುದಾದರೆ ಆ ಮಂತ್ರ ವಿಧಾನದಲ್ಲಿ ಪುತ್ರ ಬಯಕೆಯನ್ನು ಇಡೇರಿಸಲು ಗರ್ಭವನ್ನು ಧರಿಸುವೆನು ಎಂದು ಆ ಕುಂತಿ ಹೇಳಿದಳು.
ಲೇಸನಾಡಿದೆ ಕುಂತಿ ಮುನಿಯುಪ
ದೇಶಿಸಿದನೇ ನಮ್ಮ ಭಾಗ್ಯವಿ
ದೈಸಲೇ ನೀ ದೃಢಪತಿವ್ರತೆಯನ್ನನುಜ್ಞೆಯಲಿ
ಭಾಸುರರ ನೀ ಭರತವಂಶ ವಿ
ಲಾಸರನು ಕೃತ ಶತ್ರು ಪಕ್ಷವಿ
ನಾಶರನು ಬೆಸಲಾಗು ಹೊಗೆನ್ನಾಣೆ ಹೋಗೆಂದ ||(೩೫)
ಪದವಿಭಾಗ-ಅರ್ಥ: ಲೇಸನು(ಒಳ್ಳೆಯ ಮಾತನ್ನು)+ ಆಡಿದೆ ಕುಂತಿ, ಮುನಿಯು+ ಉಪದೇಶಿಸಿದನೇ ನಮ್ಮ ಭಾಗ್ಯವು + ಇದು+ ಐಸಲೇ= ಒಳ್ಳೆಯದು, ನೀ ದೃಢಪತಿವ್ರತೆ+ ಎನ್ನ ಅನುಜ್ಞೆಯಲಿ+ ಭಾಸುರರನು= ಶೂರರನ್ನು, ಈ ಭರತವಂಶ ವಿಲಾಸರನು= ಚಂದಗಾಣಿಸುವವರನ್ನು, ಕೃತ ಶತ್ರು ಪಕ್ಷ ವಿನಾಶರನು= ಶತ್ರು ಪಕ್ಷಗಳನ್ನು ನಾಶಮಾಡುವ ಕಾರ್ಯಶೂರರನ್ನು, ಬೆಸಲಾಗು= ಬೆಸಲು= ಹೆರಿಗೆ- ಹೆರುವವಳಾಗು, ಹೋಗು+ ಎನ್ನಾಣೆ ಹೋಗೆಂದ.
ಅರ್ಥ: ಕುಂತಿ ಒಳ್ಳೆಯ ಮಾತನ್ನು ಆಡಿದೆ, ಮುನಿಯು ನಿನಗೆ ಮಂತ್ರವನ್ನು ಉಪದೇಶಿಸಿದನೇ? ಇದು ನಮ್ಮ ಭಾಗ್ಯವು; ಒಳ್ಳೆಯದು. ನೀನು ದೃಢಪತಿವ್ರತೆಯು ನನ್ನ ಅನುಜ್ಞೆಯಲ್ಲಿ ಶೂರರನ್ನು, ಈ ಭರತವಂಶವನ್ನು ಚಂದಗಾಣಿಸುವವರನ್ನು, ಶತ್ರು ಪಕ್ಷಗಳನ್ನು ನಾಶಮಾಡುವ ಕಾರ್ಯಶೂರರನ್ನು ಹೆರುವವಳಾಗು. ಹೋಗು, ಎನ್ನಾಣೆ ಒಪ್ಪದೆ. ಹೋಗು ಎಂದನು ಪಾಂಡು.

ಕುಂತಿಗೆ ಯಮನಿಂದ ಯುಧಿಷ್ಠಿನು ಜನಿಸಿದನು

[ಸಂಪಾದಿಸಿ]
ತರುಣಿ ಪಾಂಡುವಿನಾಜ್ಞೆಯನು ನಿಜ
ರದೊಳಾಂತು ಸಮಸ್ತ ಮುನಿ ಮು
ಖ್ಯರಿಗೆ ವಂದಿಸಿ ಹರಿಹರಬ್ರಹ್ಮಾದಿಗಳಿಗೆರೆಗಿ ||
ಸರಸಿಯಲಿ ಮಿಂದಳು ಮುನೀಂದ್ರನ
ಪರಮ ಮಂತ್ರಾಕ್ಷರವ ತಾನು
ಚ್ಚರಿಸಿ ನೆನೆದಳು ಯಮನನಾಕ್ಷಣವಾತನೈತಂದ ||೩೬ ||
ಪದವಿಭಾಗ-ಅರ್ಥ: ತರುಣಿ ಪಾಂಡುವಿನ+ ಆಜ್ಞೆಯನು ನಿಜಶಿರದೊಳು+ ಆಂತು= ತನ್ನ ತಲೆಯಮೇಲೆ ಹೊತ್ತು, ಪಡೆದು, ಸಮಸ್ತ ಮುನಿ ಮುಖ್ಯರಿಗೆ ವಂದಿಸಿ ಹರಿಹರಬ್ರಹ್ಮಾದಿಗಳಿಗೆ+ ಎರೆಗಿ= ನಮಿಸಿ, ಸರಸಿಯಲಿ= ನದಿಯಲ್ಲಿ, ಮಿಂದಳು= ಸ್ನಾನ ಮಾಡಿದಳು, ಮುನೀಂದ್ರನ= ದೂರ್ವಾಸನ, ಪರಮ= ಶ್ರೇಷ್ಠ ಮಂತ್ರಾಕ್ಷರವ ತಾನು+ ಉಚ್ಚರಿಸಿ ನೆನೆದಳು ಯಮನನು+ ಆ ಕ್ಷಣವೆ+ ಆತನು+ ಐತಂದ= ಬಂದ
ಅರ್ಥ: ತರುಣಿ ಕುಂತಿಯು, ಪಾಂಡುವಿನ ಆಜ್ಞೆಯನ್ನು ಪಡೆದು, ಸಮಸ್ತ ಮುನಿ ಮುಖ್ಯರಿಗೆ ವಂದಿಸಿ, ಹರಿಹರಬ್ರಹ್ಮಾದಿಗಳಿಗೆ ನಮಿಸಿ, ನದಿಯಲ್ಲಿ ಸ್ನಾನ ಮಾಡಿದಳು. ಮುನೀಂದ್ರ ದೂರ್ವಾಸನು ಹೇಳಿದ, ಶ್ರೇಷ್ಠ ಮಂತ್ರಾಕ್ಷರವನ್ನು ಅವಳು ಉಚ್ಚರಿಸಿ ಯಮನನ್ನು ನೆನೆದಳು. ಆ ಕ್ಷಣವೆ ಆತನು ಬಂದ.
ಸತಿಯ ಸಮ್ಮುಖವಾಗಿ ವೈವ
ಸ್ವತನು ನುಡಿದನಿದೇಕೆ ನಮ್ಮ
ಕ್ಷಿತಿಗೆ ಬರಿಸಿದೆಯೆನಲು ಲಜ್ಜಾವನತಮುಖಿಯಾಗಿ ||
ಸುತನ ಕರುಣಿಪುದೆನಲು ಭಯ ಪರಿ
ವಿತತ ವಿಮಲಸ್ವೇದಜಲ ಕಂ
ಪಿತೆಯ ಮುಟ್ಟಿ ತಥಾಸ್ತುವೆನುತ ಕೃತಾಂತ ಬೀಳ್ಕೊಂಡ ||೩೭||
ಪದವಿಭಾಗ-ಅರ್ಥ: ಸತಿಯ ಸಮ್ಮುಖವಾಗಿ= ಎದುರು ನಿಂತು, ವೈವಸ್ವತನು ನುಡಿದನು+ ಇದೇಕೆ ನಮ್ಮ ಕ್ಷಿತಿಗೆ= ಭೂಮಿಗೆ, ಬರಿಸಿದೆಯೆನಲು= ಬರುವಂತೆ ಕರೆದೆ ಎನ್ನಲು, ಲಜ್ಜ+ ಅವನತ ಮುಖಿಯಾಗಿ= ನಾಚಿಕೆಯಿಂದ ತಲೆಯನ್ನು ತಗ್ಗಿಸಿ, ಸುತನ ಕರುಣಿಪುದು+ ಎನಲು= ಮಗನನ್ನು ಕರುಣಿಸು, ಕೊಡಬೇಕು ಎನ್ನಲು, ಭಯ ಪರಿವಿತತ (ಪರಿವೃತಳಾದ?)= ಭಯದಿಂದ ಆವರಿಸಿದ, ವಿಮಲ ಸ್ವೇದಜಲ= ಪವಿತ್ರ ಬೆವರಿನಿಂದ ಕೂಡಿ, ಕಂಪಿತೆಯ= ನಡುಗುತ್ತಿರುವವವಳನ್ನು, ಮುಟ್ಟಿ 'ತಥಾಸ್ತು' ವೆನುತ= ಎನ್ನುತ್ತಾ, ಕೃತಾಂತ ಬೀಳ್ಕೊಂಡ= ಯಮನು ಹೊರಟು ಹೋದ. (ದೇವತೆಗಳು ಸಂಕಲ್ಪದಿಂದಲೇ ಸೃಷ್ಠಿಸಬಲ್ಲರು)
ಅರ್ಥ: ಕುಂತಿಯ ಎದುರು ನಿಂತು ವೈವಸ್ವತನು ನುಡಿದನು,'ಇದೇಕೆ ನಮ್ಮನ್ನು ಭೂಮಿಗೆ ಬರುವಂತೆ ಕರೆದೆ' ಎನ್ನಲು, ಅವಳು ನಾಚಿಕೆಯಿಂದ ತಲೆಯನ್ನು ತಗ್ಗಿಸಿ, ಮಗನನ್ನು ಕರುಣಿಸು, ಎನ್ನಲು, ಧರ್ಮ ದೇವತೆಯ ದರ್ಶನದ ಭಯದಿಂದ ಆವರಿಸಿದ ಪವಿತ್ರ ಬೆವರಿನಿಂದ ಕೂಡಿ, ನಡುಗುತ್ತಿರುವವವಳನ್ನು ಮುಟ್ಟಿ 'ತಥಾಸ್ತು' ಎನ್ನುತ್ತಾ, ಯಮನು ಹೊರಟು ಹೋದ. (ದೇವತೆಗಳು ಸಂಕಲ್ಪದಿಂದಲೇ ಸೃಷ್ಠಿಸಬಲ್ಲರು)
ಧಾರುಣೀ ಪತಿ ಕೇಳು ಕುಂತೀ
ನಾರಿಗಾದುದು ಗರ್ಭ ಹರುಷದ
ಭಾರದಲಿ ಸತಿ ತಗ್ಗಿದಳು ನವ ಪುರ್ಣಮಾಸದಲಿ ||
ಚಾರುತರ ನಕ್ಷತ್ರ ಶುಭದಿನ
ವಾರ ಲಗ್ನದೊಳಿಂದುಕುಲ ವಿ
ಸ್ತಾರಕನು ಸುಕುಮಾರನವತರಿಸಿದನು ಧರಣಿಯಲಿ || ೩೮ ||
ಪದವಿಭಾಗ-ಅರ್ಥ: ಧಾರುಣೀ ಪತಿ= ಜನಮೇಜಯ ರಾಜನೇ ಕೇಳು, ಕುಂತೀನಾರಿಗೆ+ ಆದುದು ಗರ್ಭ; ಹರುಷದ ಭಾರದಲಿ= ಹೊರಲಾರದಷ್ಟು ಸಂತೋಷದಿಂದ ಸತಿ= ಕುಂತಿಯು, ತಗ್ಗಿದಳು. ನವ ಪುರ್ಣಮಾಸದಲಿ= ಒಂಭತ್ತು ತಿಂಗಳು ಪೂರ್ಣ ತುಂಬಿದಮೇಲೆ ಚಾರುತರ= ಶುಭ ನಕ್ಷತ್ರ, ಶುಭದಿನವಾರ ಲಗ್ನದೊಳು+ ಇಂದುಕುಲ= ಚಂದ್ರವಂಶದ ವಿಸ್ತಾರಕನು= ಉದ್ಧಾರಕನಾದ, ಸುಕುಮಾರನು+ ಅವತರಿಸಿದನು= ಹುಟ್ಟಿದನು, ಧರಣಿಯಲಿ= ಭೂಮಿಯಲ್ಲಿ.
ಅರ್ಥ: ಜನಮೇಜಯ ರಾಜನೇ ಕೇಳು, ಕುಂತೀದೇವಿಗೆ ಗರ್ಭಧಾರಣೆ ಆಯಿತು. ಅವಳು ಹೊರಲಾರದಷ್ಟು ಸಂತೋಷದ ಭಾರದಿಂದ ತಗ್ಗಿಹೋದಳು. ಒಂಭತ್ತು ತಿಂಗಳು ಪೂರ್ಣ ತುಂಬಿದಮೇಲೆ ಶುಭ ನಕ್ಷತ್ರ, ಶುಭದಿನ ವಾರ ಲಗ್ನದಲ್ಲಿ ಚಂದ್ರವಂಶದ ಉದ್ಧಾರಕನಾದ ಸುಕುಮಾರ ಮಗನು ಭೂಮಿಯಲ್ಲಿ ಹುಟ್ಟಿದನು,
ನಿರ್ಮಲಿನವಾಯ್ತು ಖಿಲ ದಸೆ ದು
ಷ್ಕರ್ಮತತಿ ಬೆಚ್ಚಿದುದು ಸಾಕ್ಷಾತ್
ಧರ್ಮವೇ ಧರಣಿಯಲಿ ನೃಪ ರೂಪಾಗಿ ಜನಿಸಿತಲ ||
ದುರ್ಮಹೀಶರ ಹೊತ್ತ ಭಾರದ
ಕರ್ಮ ವೇದನೆ ಧಾತ್ರಿಗಿಳಿದುದು
ಧರ್ಮವಿನ್ನೆಮಗಹುದೆನುತ ಹೆಚ್ಚಿದುದು ಮುನಿನಿಕರ ||೩೯ ||
ಪದವಿಭಾಗ-ಅರ್ಥ: ನಿರ್ಮಲಿನವಾಯ್ತು+ ಅಖಿಲ ದಸೆ= ಎಲ್ಲಾ ದಿಕ್ಕುಗಳು ಪರಿಶುದ್ಧವಾಯಿತು, ದುಷ್ಕರ್ಮ ತತಿ ಬೆಚ್ಚಿದುದು= ದುಷ್ಟರ ಸಮೂಹ ಹೆದರಿತು, ಸಾಕ್ಷಾತ್+ ಧರ್ಮವೇ, ಧರಣಿಯಲಿ ನೃಪ ರೂಪಾಗಿ= ಭೂಮಿಯ ಮೇಲೆ ರಾಜಕುಮಾರನ ರೂಪದಲ್ಲಿ, ಜನಿಸಿತಲ= ಹುಟ್ಟಿತಲ್ಲಾ! ದುರ್ಮಹೀಶರ (ಕೆಟ್ಟ ರಾಜರನ್ನು) ಹೊತ್ತ ಭಾರದ ಕರ್ಮ ವೇದನೆ (ಕುಕರ್ಮಗಳಿಂದ ಆಗುವ ನೋವು) ಧಾತ್ರಿಗೆ+ ಇಳಿದುದು, ಹೋಯಿತು,, ಧರ್ಮವಿನ್ನು+ ಎಮಗೆ+ ಅಹುದು ಎನುತ ಹೆಚ್ಚಿದುದು ಮುನಿನಿಕರ= ಮುನಿಗಳ ಸಮೂಹ.
ಅರ್ಥ: ಕುಂತಿಯ ಮೊದಲ ಮಗ ಹುಟ್ಟಿದಾಗ ಎಲ್ಲಾ ದಿಕ್ಕುಗಳು ಪರಿಶುದ್ಧವಾಯಿತು; ದುಷ್ಟರ ಸಮೂಹ ಹೆದರಿತು; ಸಾಕ್ಷಾತ್ ಧರ್ಮವೇ ಭೂಮಿಯ ಮೇಲೆ ರಾಜಕುಮಾರನ ರೂಪದಲ್ಲಿ, ಹುಟ್ಟಿತಲ್ಲಾ! ಕೆಟ್ಟ ರಾಜರನ್ನು ಹೊತ್ತ ಭಾರದ ಕರ್ಮಗಳಿಂದ ಆಗುವ ನೋವು ಭೂಮಿಗೆ ಹೋಯಿತು. ಇನ್ನು ನಮಗೆ ಧರ್ಮವು ಆಗುವುದು, ಎನ್ನುತ್ತಾ ಮುನಿಗಳ ಸಮೂಹ ಹಿಗ್ಗಿತು.
ಧರಣಿಪತಿ ಧರ್ಮಜನ ಮುಖ ಸಂ
ದರುಶನವ ಮಾಡಿದನು ಹೆಚ್ಚಿದ
ಹರುಷ ಭಾರಕೆ ಚಿತ್ತ ತಗ್ಗಿತು ಮುಗ್ಗಿ ತಡಿಗಡಿಗೆ ||
ಹರಿದು ಪುತ್ರೋತ್ಸವದ ನುಡಿ ಗಜ
ಪುರದೊಳಬ್ಬರವಾಯ್ತು ಪಾಂಡು ವಿ
ನರಸಿಯಲಿ ಸಂತಾನ ಜನಿಸಿದುದೆಂದು ಜನಜನಿತ ||೪೦ ||
ಪದವಿಭಾಗ-ಅರ್ಥ: ಧರಣಿಪತಿ ಧರ್ಮಜನ ಮುಖ ಸಂದರುಶನವ= ಸಂದರ್ಶನವನ್ನು, ಮಾಡಿದನು ಹೆಚ್ಚಿದಹರುಷ ಭಾರಕೆ ಚಿತ್ತ ತಗ್ಗಿತು ಮುಗ್ಗಿತು (ಮುಗ್ಗುರಿಸು;)+ ಅಡಿಗಡಿಗೆ= ಹೆಜ್ಜೆ ಜೆಜ್ಜೆಗೆ, ಹರಿದು= ಸುದ್ದಿ ಹರಡಿ ಪುತ್ರೋತ್ಸವದ ನುಡಿ= ಸುದ್ದಿ, ಗಜಪುರದೊಳು ಹಸ್ತಿನಾವತಿಯಲ್ಲಿ+ ಅಬ್ಬರವಾಯ್ತು= ಅದು ದೊಡ್ಡ ಸುದ್ದಿಯಾಯಿತು. ಪಾಂಡುವಿನ+ ಅರಸಿಯಲಿ= ಪತ್ನಿ ಕುಂತಿಗೆ, ಸಂತಾನ ಜನಿಸಿದುದೆಂದು= ಮಗ ಹುಟ್ಟಿದನೆಂದು ಜನಜನಿತ ಜನರಲ್ಲೆಲ್ಲಾ
ಅರ್ಥ: ಧರಣಿಪತಿ ಪಾಂಡುವು ಧರ್ಮಜನ ಮುಖ ಸಂದರ್ಶನವನ್ನು ಮಾಡಿದನು. ಅವನಿಗೆ ಹರುಷ ಹೆಚ್ಚಿ ಅದರ ಭಾರಕ್ಕೆ ಮನಸ್ಸು ತಗ್ಗಿತು( ಜಗತ್ತೇ ಮರೆತು ಹೋಯಿತು?). ಹೆಜ್ಜೆ ಜೆಜ್ಜೆಗೆ ಮುಗ್ಗುರಿಸುತ್ತಾ ಸುದ್ದಿ ಹರಡಿ ಮಗ ಹುಟ್ಟಿದ ಸುದ್ದಿ, ಹಸ್ತಿನಾವತಿಯಲ್ಲಿ ಅದು ದೊಡ್ಡ ಸುದ್ದಿಯಾಯಿತು. ಪಾಂಡುವಿನ ಪತ್ನಿ ಕುಂತಿಗೆ ಮಗ ಹುಟ್ಟಿದನೆಂದು ನಗರದ ಜನರಲ್ಲೆಲ್ಲಾ ಸುದ್ದಿ ಹರಡಿತು.

ಗಾಂಧಾರಿಗೆ ನೂರು ಕೌರವರ ಜನನ

[ಸಂಪಾದಿಸಿ]
ಕೇಳಿದಳು ಗಾಂಧಾರಿ ಕುಂತಿಗೆ
ಬಾಲ ಕೇಳಿ ವಿನೋದವೇ ಕೈ
ಮೇಳವಿಸಿತೇ, ಮುನ್ನ ಹಾ ತಪ್ಪೇನು ತಪ್ಪೇನು ||
ಕಾಳು ಮಾಡಿದನೆನಗೆ ಮುನಿಪತಿ
ಠೌಳಿಕಾರನಲಾ ಸುಡೀಗ
ರ್ಭಾಳಿಗಳನೆಂದಬಲೆ ಹೊಸೆದಳು ಬಸುರನೋದೆ ಮುರಿದು ||೪೧ ||
ಪದವಿಭಾಗ-ಅರ್ಥ:ಕುಂತಿಗೆ ಮಗನಾದ ಸುದ್ದಿಯನ್ನು- ಕೇಳಿದಳು ಗಾಂಧಾರಿ, ಕುಂತಿಗೆ ಬಾಲಕೇಳಿ ವಿನೋದವೇ= ಮಕ್ಕಳನ್ನು ಆಡಿಸುವ ಆನಂದ ಒದಗಿತು. ಕೈಮೇಳವಿಸಿತೇ, ಮುನ್ನ= ಮೊದಲು ಮಗನನ್ನು ಪಡೆದು ಅವಳ ಕೈ ಮೇಲಾಯಿತೇ, ಹಾ ತಪ್ಪೇನು ತಪ್ಪೇನು= ಇದರಲ್ಲಿ ಅವಳ ತಪ್ಪಿಲ್ಲ ತಪ್ಪಿಲ್ಲ. ಕಾಳು ಮಾಡಿದನು ಎನಗೆ ಮುನಿಪತಿ= ಮನಿ ವೇದವ್ಯಾಸನು ಕೆಡುಕು ಮಾಡಿದನು. ಠೌಳಿಕಾರನಲಾ= ಮೋಸಗಾರನಲ್ಲವೇ! ಸುಡು+ ಈ+ ಗರ್ಭಾಳಿಗಳನು+ ಎಂದು+ ಅಬಲೆ= ಗಾಂಧಾರಿ, ಹೊಸೆದಳು= ಹಿಸುಕಿದಳು, ಬಸುರನು+ ಓದೆ ಮುರಿದು= (ಓದದೆ- ವಿಚಾರಮಾಡದೆ?) ಹೊಟ್ಟೆಯನ್ನು ಮರಿದು ಹಿಸುಕಿದಳು.
ಅರ್ಥ: ಕುಂತಿಗೆ ಮಗನಾದ ಸುದ್ದಿಯನ್ನು ಗಾಂಧಾರಿ ಕೇಳಿದಳು. ಕುಂತಿಗೆ ಮಕ್ಕಳನ್ನು ಆಡಿಸುವ ಆನಂದ ಒದಗಿತು. ಮೊದಲು ಮಗನನ್ನು ಪಡೆದು ಅವಳ ಕೈ ಸೇರಿತೇ? ಮೇಲಾಯಿತೇ? ಹಾ ಇದರಲ್ಲಿ ಅವಳ ತಪ್ಪಿಲ್ಲ ತಪ್ಪಿಲ್ಲ. ಮನಿ ವೇದವ್ಯಾಸನು ನನಗೆ ಕೆಡುಕು ಮಾಡಿದನು. ಅವನು ಮೋಸಗಾರನಲ್ಲವೇ! 'ಸುಡು ಈ ಗರ್ಭ ನೂರರ ಸಮೂಹವನ್ನು',ಎಂದು ಗಾಂಧಾರಿ ಬಸುರನ್ನು ಹಿಸುಕಿದಳು. ವಿಚಾರಮಾಡದೆ ಹೊಟ್ಟೆಯನ್ನು ಮರಿದು ಹಿಸುಕಿದಳು.
ಉದುರಿದವು ಧರಣಿಯಲಿ ಬಲು ಮಾಂ
ಸದ ಸುರಕ್ತದ ಘಟ್ಟಿಗಳು ಖಂ
ಡದ ಸೂಢಾಳದ ಜಿಗಿಯ ಪೇಸಿಕೆ ನಿಕರ ನೂರೊಂದು ||
ಕೆದರಿದಳು ವಾಮಾಂಘ್ರಿಯಲಿ ನೂ
ಕಿದಳು ಹಾಯ್ಕಿವ ಹೊರಗೆನುತ ನೋ
ಡಿದಳು ಕರೆ ಕೈನೆಯರನೆನುತ ಕಠೋರ ಕೋಪದಲಿ || ೪೨ ||
ಪದವಿಭಾಗ-ಅರ್ಥ: ಉದುರಿದವು ಧರಣಿಯಲಿ= ಭೂಮಿಯಮೇಲೆ, ಬಲು= ಬಹಳ, ಮಾಂಸದ ಸುರಕ್ತದ= ರಕ್ತಅಂಟಿದ, ಘಟ್ಟಿಗಳು= ಮುದ್ದೆಗಳು, ಖಂಡದ ಸೂಢಾಳದ= ಖಂಡದ ದಪ್ಪ ದಂಡೆಯಂತಿರುವ, ಜಿಗಿಯ= ಅಜಿಗಿಜಿಯಾದ, ಪೇಸಿಕೆ ನಿಕರ= ಹೇಸಿಗೆಯ ರಾಶಿ, ನೂರೊಂದು= ನೂರಾ ಒಂದು, ಕೆದರಿದಳು ವಾಮಾಂಘ್ರಿಯಲಿ= ಎಡದ ಪಾದದಲ್ಲಿ ಅವನ್ನು ಕೆದರಿದಳು, ನೂಕಿದಳು= ತಳ್ಳಿದಳು, ಹಾಯ್ಕಿವ= ಹಾಯ್ಕು+ ಇವ=ಇವುಗಳನ್ನು ಹಾಕು, ಹೊರಗೆ = ಹೊರಕ್ಕೆ, ಎನುತ= ಎನ್ನುತ್ತಾ, ನೋಡಿದಳು, ಕರೆ ಕೈನೆಯರನು+ ಎನುತ ಕಠೋರ ಕೋಪದಲಿ= ಅತಿಯಾದ ಕೋಪದಿದಂದ, ಪರಿಚಾರಿಕೆಯರನ್ನು ಕರೆ ಎಂದು ಹೇಳಿದಳು.
ಅರ್ಥ: ಭೂಮಿಯಮೇಲೆ, ಮಾಂಸದ ರಕ್ತ ಅಂಟಿದ, ದಪ್ಪ ದಂಡೆಯಂತಿರುವ ಮಾಂಸದ ಬಹಳ ಮುದ್ದೆಗಳು ಉದುರಿದವು,, ಅಜಿಗಿಜಿಯಾದ, ನೂರಾ ಒಂದು ಹೇಸಿಗೆಯ ರಾಶಿ. ಎಡದ ಪಾದದಲ್ಲಿ ಅವನ್ನು ಕೆದರಿದಳು, ತಳ್ಳಿದಳು. ಇವುಗಳನ್ನು ಹೊರಕ್ಕೆ ಹಾಕು, ಎನ್ನುತ್ತಾ, ನೋಡಿದಳು, ಕರೆ ಪರಿಚಾರಿಕೆಯರನ್ನು ಎನುತ್ತಾ, ಅತಿಯಾದ ಕೋಪದಿದಂದ, ಪರಿಚಾರಿಕೆಯರನ್ನು ಕರೆ ಎಂದು ಹೇಳಿದಳು.
ತನ ತನಗೆ ನಡುಗಿ ಕಾಂತಾ
ಜನವು ಬಂದುದು ತಾಯೆ ಬೆಸನೇ
ನೆನಲು ಬಿಸುಡಿವ ನೂರ ಹೊರಗೆಂದಾ ಮುಹೂರ್ತದಲಿ ||
ಮುನಿಪವೇದವ್ಯಾಸನಾಕೆಯ
ಮನೆಗೆ ಬಂದನು ಕಂಡನೀ ಕಾ
ಮಿನಿಯ ಕೋಲಾಹಲವಿದೇನೇನೆಂದು ಬೆಸಗೊಂಡ || ೪೩ ||
ಪದವಿಭಾಗ-ಅರ್ಥ: ತನ ತನಗೆ ನಡುಗಿ ಕಾಂತಾಜನವು= ದಾಸಿಯರು, ಬಂದುದು ತಾಯೆ ಬೆಸನು(ಹೇಳಿಕೆ, ಆಜ್ಞೆ, ಅಪ್ಪಣೆ)+ ಏನು+ಎನಲು = ತಮ್ಮ ಆಜ್ಞೆ ಏನು ಎನ್ನಲು, ಬಿಸುಡು+ ಇವ ನೂರ ಹೊರಗೆಂದು= ಇವು ನೂರ ಗರ್ಭದ ತುಂಡುಗಳನ್ನು ಹೊಗೆ ಎಸೆಯಿರಿ ಎಂದಳು; ಆ ಮುಹೂರ್ತದಲಿ= ಆ ಸಮಯದಲ್ಲಿ ಮುನಿಪವೇದವ್ಯಾಸನು= ವೇದವ್ಯಾಸಮುನಿಯು, ಆಕೆಯ ಮನೆಗೆ ಬಂದನು, ಕಂಡನು ಈ ಕಾಮಿನಿಯ= ಗಾಂಧಾರಿಯ ಕೋಲಾಹಲವ (ಕೂಗಾಟವನ್ನು)+ ಇದೇನು ಏನೆಂದು ಬೆಸಗೊಂಡ= ಕೇಳಿದನು.
ಅರ್ಥ: ತಾವು ತಾವಾಗಿಯೇ ದಾಸಿಯರು ನಡುಗುತ್ತಾ ಬಂದರು; ತಾಯೆ ಅಪ್ಪಣೆ ಏನು ಎನ್ನಲು (ತಮ್ಮ ಆಜ್ಞೆ ಏನು ಎನ್ನಲು), ಇವು ನೂರ ಗರ್ಭದ ತುಂಡುಗಳನ್ನು ಹೊರಗೆ ಎಸೆಯಿರಿ ಎಂದಳು; ಆದೇ ಸಮಯದಲ್ಲಿ ವೇದವ್ಯಾಸಮುನಿಯು ಆಕೆಯ ಮನೆಗೆ ಬಂದನು, ಇದನ್ನು ಕಂಡನು. ಗಾಂಧಾರಿಯ ಕೋಲಾಹಲ ಕೂಗಾಟವನ್ನು ಕಂಡು, ಇದೇನು ಎಂದು ಕೇಳಿದನು.
ಭರತ ಸಂತಾನಕೆ ಕುಮಾರರ
ಹೆರುವೆ ನಾ ಮುನ್ನೆಂದು ಗರ್ಭವ
ಧರಿಸಿದೆನು ನಿಮ್ಮಡಿಯ ಕೃಪೆಯಲಿ ಮಂತ್ರಭಾವಿತವ ||
ವರುಷವೆರಡಾಯ್ತಿದರ ಭಾರವ
ಧರಿಸಿದೆನು ದಾಯಾದ್ಯರೊಳಗವ
ತರಿಸಿದನು ಮಗನೆನುತ ಮುಖದಿರುಹಿದಳು ಗಾಂಧಾರಿ ||೪೪ ||
ಪದವಿಭಾಗ-ಅರ್ಥ: ಭರತ ಸಂತಾನಕೆ= ವಂಶಕ್ಕೆ, ಕುಮಾರರ ಹೆರುವೆ ನಾ ಮುನ್ನೆಂದು= ಮುನ್ನ ಎಂದು - ಮೊದಲೆ ಎಂದು, ಗರ್ಭವ ಧರಿಸಿದೆನು ನಿಮ್ಮಡಿಯ ಕೃಪೆಯಲಿ ಮಂತ್ರಭಾವಿತವ ವರುಷವು+ ಎರಡಾಯ್ತು+ ಇದರ ಭಾರವ ಧರಿಸಿದೆನು ದಾಯಾದ್ಯರೊಳಗೆ+ ಅವತರಿಸಿದನು= ನನ್ನ ದಾಯಾದಿಯ ಮನೆಯಲ್ಲಿ ಹುಟ್ಟಿದನು, ಮಗನು+ ಎನುತ ಮುಖದಿರುಹಿದಳು- ಮೂಖ ತಿರುಗಿದಳು ಗಾಂಧಾರಿ.
ಅರ್ಥ: ನಿಮ್ಮ ಕೃಪೆಯ ಮಂತ್ರಭಾವದಿಂದ ಭರತ ವಂಶಕ್ಕೆ ಮೊದಲೆ ಕುಮಾರರನ್ನು ನಾನು ಹೆರುವೆ ಎಂದು ಗರ್ಭವನ್ನು ಧರಿಸಿದೆನು. ಇದನ್ನು ಧರಿಸಿ ಇದರ ಭಾರವನ್ನು ಧರಿಸಿ ಎರಡು ವರುಷವಾಯ್ತು ಮಕ್ಕಳು ಹುಟ್ಟಲಿಲ್ಲ. ಆದರೆ ನನ್ನ ದಾಯಾದಿ ಕುಂತಿಯಲ್ಲಿ ಮಗನು ಹುಟ್ಟಿದನು ಎನ್ನುತ್ತಾ ಬೇಸರದಿಂದ ಗಾಂಧಾರಿ ಮುಖವನ್ನು ತಿರುಗಿದಳು.
ಮರುಳು ಹೆಂಗುಸಲಾ ಮಹಾತ್ಮರ
ಪರಿಯ ನೀನೆಂತರಿವೆ ಗರ್ಭೋ
ತ್ಕರವ ಕೆಡಿಸಿದೆ ಪಾಪಿ ನೀ ಸಾರೆನುತ ಮುನಿ ಮುಳಿದು||
ತರಿಸಿದನು ಘೃತಪೂರಿತದ ಕೊ
ಪ್ಪರಿಗೆಗಳ ನೊಂದೊಂದನೊಂದರೊ
ಳಿರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ ||(೪೫)
ಪದವಿಭಾಗ-ಅರ್ಥ: ಮರುಳು ಹೆಂಗುಸಲಾ= ತಿಳುವಳಿಕೆ ಇಲ್ಲದ ಹೆಂಗಸಲ್ಲವೇ ನೀನು, ಮಹಾತ್ಮರ ಪರಿಯ= ರೀತಿಯನ್ನು ನೀನೆಂತರಿವೆ= ನೀನು+ ಎಂತು+ ಅರಿವೆ= ರೀತಿಯನ್ನು ನೀನು ಹೇಗೆ ತಿಳಿಯಬಲ್ಲೆ; ಗರ್ಭೋತ್ಕರವ= ಗರ್ಭ+ ಉತ್ಕರ= ಗರ್ಭದ ಬೆಳವಣಿಗೆಯನ್ನು ಕೆಡಿಸಿದೆ; ಪಾಪಿ ನೀ ಸಾರು (ಹೋಗು)+ ಎನುತ ಮುನಿ ಮುಳಿದು+ ಸಿಟ್ಟು ಮಾಡಿ, ತರಿಸಿದನು ಘೃತಪೂರಿತದ= ತುಪ್ಪ ತುಂಬಿದ ಕೊಪ್ಪರಿಗೆಗಳನು+ ಒಂದೊಂದನು+ ಒಂನದರೊಳು+ ಇರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ.
ಅರ್ಥ: ತಿಳುವಳಿಕೆ ಇಲ್ಲದ ಹೆಂಗಸಲ್ಲವೇ ನೀನು; ಮಹಾತ್ಮರ ರೀತಿಯನ್ನು ನೀನು ಹೇಗೆ ತಿಳಿಯಬಲ್ಲೆ ಗರ್ಭದ ಬೆಳವಣಿಗೆಯನ್ನು ಕೆಡಿಸಿದೆ; ನೀನು ಪಾಪಿಯಾದೆ; ಹೋಗು ಎನ್ನುತ್ತಾ ಮುನಿಯು ಸಿಟ್ಟು ಮಾಡಿ, ತುಪ್ಪ ತುಂಬಿದ ಕೊಪ್ಪರಿಗೆಗಳನು ತರಿಸಿದನು; ಒಂದೊಂದು ಗರ್ಭದ ಪಿಂಡವನ್ನು ಒಂದೊಂದು ತುಪ್ಪದಕೊಪ್ಪರಿಗೆಯಲ್ಲಿ ಇರಿಸಿ, ಅವಕ್ಕೆ ಮಂತ್ರಿಸಿದ ನೀರನ್ನು ತಳಿದನು ಮತ್ತು ರಕ್ಷೆಗಳನ್ನು ರಚಿಸಿದನು.
ಚಿಂತೆಯಿಲ್ಲದೆ ನೂರುದಿನ ಪರಿ
ಯಂತ ರಕ್ಷಿಸು ಬಳಿಕ ನಿನ್ನಯ
ಸಂತತಿಯ ಸಾಮರ್ಥ್ಯವನು ಗಾಂಧಾರಿ ನೋಡೆಂದು ||
ಕುಂತುಪಿತ ಸಂನಿಭನು ಸತಿಯನು
ಸಂತವಿಸಿ ಮರಳಿದನು ಧರಣೀ
ಕಾಂತ ಕೇಳೈ ಬನದೊಳಿತ್ತಲು ಭೀಮನುದ್ಭವವ ||೪೬ ||
ಪದವಿಭಾಗ-ಅರ್ಥ: ಚಿಂತೆಯಿಲ್ಲದೆ ನೂರುದಿನ ಪರಿಯಂತ ರಕ್ಷಿಸು, ಬಳಿಕ ನಿನ್ನಯ ಸಂತತಿಯ ಸಾಮರ್ಥ್ಯವನು ಗಾಂಧಾರಿ ನೋಡು+ ಎಂದು, ಕುಂತುಪಿತ ಸಂನಿಭನು= ವಿಷ್ಣು ಸಮಾನನಾದ ಮುನಿಯು, ಸತಿಯನು ಸಂತವಿಸಿ= ಸಂತಯಸಿ, ಮರಳಿದನು= ಹಿಂದಿರುಗಿ ಹೋದನು; ಧರಣೀಕಾಂತ ಕೇಳೈ=(ಧರಣೀ =ಭೂಮಿಗೆ, ಕಾಂತ= ಒಡೆಯ) ರಾಜನೇ ಕೇಳು, ಬನದೊಳು ಇತ್ತಲು= ಕಾಡಿನಲ್ಲಿ ಈ ಕಡೆ ಭೀಮನ ಉದ್ಭವವ= ಭೀಮನ ಜನನವನ್ನು, ಎಂದನು ವೈಶಂಪಾಯನ ಮುನಿ.
ಅರ್ಥ: ಚಿಂತೆಮಾಡದೆ ನೂರು ದಿನ ಪರಿಯಂತ ರಕ್ಷಿಸು, ಬಳಿಕ ನಿನ್ನಯ ಮಕ್ಕಳ ಸಾಮರ್ಥ್ಯವನ್ನು ಗಾಂಧಾರಿ ನೋಡು, ಎಂದು ವಿಷ್ಣು ಸಮಾನನಾದ ಮುನಿಯು ಹೇಳಿ, ಗಾಂಧಾರಿಯನ್ನು ಸಂತೈಸಿ, ಹಿಂದಿರುಗಿ ಹೋದನು; ರಾಜನೇ ಕೇಳು, ಕಾಡಿನಲ್ಲಿ ಈ ಕಡೆ ಭೀಮನ ಜನನವನ್ನು, ಎಂದನು ವೈಶಂಪಾಯನ ಮುನಿ.

ಕುಂತಿಯಲ್ಲಿ ಭೀಮನ ಜನನ

[ಸಂಪಾದಿಸಿ]
ನಿಯಮದಲಿ ಕಾಮಿನಿ ಸರೋವಾ
ರಿಯಲಿ ಮಿಂದಳು ಬೀಜಮಂತ್ರ
ವ್ಯಯವ ಮಾಡಿದಳಮರ ನಿಕರವ ನೋಡಿ ಕೈ ಮುಗಿದು||
ಬಯಸಿದಳು ವಾಯುವನು ನಿಜ ಮೂ
ರ್ತಿಯಲಿ ಬಂದು ಸಮೀರನಾ ಕುಂ
ತಿಯನು ನುಡಿಸಿದನೆಮ್ಮ ಬರಿಸಿದ ಹದನದೇನೆಂದು ||(೪೭)
ಪದವಿಭಾಗ-ಅರ್ಥ: ನಿಯಮದಲಿ ಕಾಮಿನಿ ಸರೋವಾರಿಯಲಿ ಮಿಂದಳು ಬೀಜಮಂತ್ರ+ ಅವ್ಯಯವ= ದೋಷವಿಲ್ಲದಂತೆ ಹೇಳಿದಳು, ಮಾಡಿದಳು, ಅಮರ ನಿಕರವ= ದೇವತೆಗಳ ಸಮೂಹವನ್ನು, ನೋಡಿ ಕೈ ಮುಗಿದು ಬಯಸಿದಳು ವಾಯುವನು, ನಿಜ ಮೂರ್ತಿಯಲಿ ಬಂದು ಸಮೀರನು ಆ ಕುಂತಿಯನು ನುಡಿಸಿದನು= ಕೇಳಿದನು, ಎಮ್ಮ= ನಮ್ಮನ್ನು ಬರಿಸಿದ= ಬರುವಂತೆ ಕರೆದ, ಹದನು= ಉದ್ದೇಶ, ಅದೇನು ಎಂದು.
ಅರ್ಥ: ಧಾರ್ಮಿಕ ನಿಯಮದಂತೆ ಕುಂತಿ ಸರೋವಾರಿಯಲಿ= ನದಿಯಲ್ಲಿ ಸ್ನಾನ ಮಾಡಿದಳು. ಮುನಿ ಕೊಟ್ಟ ಬೀಜಮಂತ್ರವನ್ನು ದೋಷವಿಲ್ಲದಂತೆ ಹೇಳಿದಳು. ದೇವತೆಗಳ ಸಮೂಹವನ್ನು, ನೋಡಿ ಕೈ ಮುಗಿದು ವಾಯುವನ್ನು ಬರಬೇಕೆಂದು ಬಯಸಿದಳು. ವಾಯುವು ತನ್ನ ಮೂರ್ತಿರೂಪದಲ್ಲಿ ಬಂದು ಆ ಕುಂತಿಯನ್ನು ನಮ್ಮನ್ನು ಬರುವಂತೆ ಕರೆದ ಉದ್ದೇಶ ಅದೇನು ಎಂದು ಕೇಳಿದನು.
ಬರಿಸಿದುದು ಬೇರೇನು ಸುತನನು
ಕರುಣಿಸುವುದೈಸಲೆಯೆನಲು ಸಂ
ಸ್ಪರುಶನದಿ ಭವದಿಷ್ವಮಸ್ತು ಯೆನುತ್ತಲಂಬರಕೆ ||
ಮರಳಿದನು ಪವಮಾನನೀ ಪಂ
ಕರುಹಮುಖಿ ಬೆಸಲಾದಳೊಂದೇ
ವರುಷ ಗರ್ಭವ ಧರಿಸಿ ಪರಬಲ ಕಾಲ ಭೈರವನ ||೪೮ ||
ಪದವಿಭಾಗ-ಅರ್ಥ: ಬರಿಸಿದುದು ಬೇರೆ+ ಏನು= ನಿಮ್ಮನ್ನು ಕರೆದ ಕಾರಣ ಮತ್ತೆ ಬೇರೆ+ ಏನು- ಏನಿದೆ? ಸುತನನು ಕರುಣಿಸುವುದು= ನನಗೆ ಮಗನನ್ನು ಕೊಡಬೇಕೆ ಎಂದಳು. ಐಸಲೆಯೆನಲು= ಹಾಗೇ ಆಗಲಿ ಎಂದು (ಎನ್ನಲು - ಮುಟ್ಟಿದನು) ಸಂಸ್ಪರುಶನದಿ= ಸಂ+ ಸ್ಪರ್ಶ+ ಮುಟ್ಟು, ಅವಳನ್ನು ಮುಟ್ಟಿ- 'ಭವದಿಷ್ವಮಸ್ತು' ಭವತ್= ನಿನ್ನ, ಇಷ್ಟಂ= ಅಪೇಕ್ಷೆಯು, ಅಸ್ತು= ನೆರವೇರಲಿ, ಯೆನುತ್ತಲಿ+ ಅಂಬರಕೆ= ಎಂದು ಹೇಳುತ್ತಾ, ಅಂಬರಕೆ= ಆಕಾಶಕ್ಕೆ ಮರಳಿದನು, ಪವಮಾನನು= ವಾಯುವು ಈ ಪಂಕರುಹಮುಖಿ=ಕಮಲದಂತೆ ಮುಖವುಳ್ಳ ಸುಂದರಿಯಾದ ಕುಂತಿ, ಬೆಸಲಾದಳು (ಬಸುರಾದಳು)+ ಒಂದೇ ವರುಷ ಗರ್ಭವ ಧರಿಸಿ, ಪರಬಲ ಕಾಲ ಭೈರವನ= ಶತ್ರು ಸೈನ್ಯಕ್ಕೆ ಕಾಲಭೈರವನಂತಿರುವ ಮಗನ ಗರ್ಭಧರಿಸಿದಳು.
ಅರ್ಥ: ಬನಿಮ್ಮನ್ನು ಕರೆದ ಕಾರಣ ಮತ್ತೆ ಬೇರೆ ಏನಿದೆ? ನನಗೆ ಮಗನನ್ನು ಕೊಡಬೇಕು ಎಂದಳು. ಹಾಗೇ ಆಗಲಿ ಎಂದು ಅವಳನ್ನು ಮುಟ್ಟಿದನು. ಹೀಗೆ ಅವಳನ್ನು ಮುಟ್ಟಿ- 'ಭವದಿಷ್ವಮಸ್ತು' ನಿನ್ನ ಪೇಕ್ಷೆಯು ನೆರವೇರಲಿ ಎಂದು ಹೇಳುತ್ತಾ, ವಾಯುವು ಆಕಾಶಕ್ಕೆ ಮರಳಿದನು. ಸುಂದರಿಯಾದ ಕುಂತಿ, ಬಸುರಾದಳು. ಒಂದೇ ವರುಷ ಗರ್ಭವನ್ನು ಧರಿಸಿ, ಶತ್ರು ಸೈನ್ಯಕ್ಕೆ ಕಾಲಭೈರವನಂತಿರುವ ಮಗನನ್ನು ಗರ್ಭದಲ್ಲಿ ಧರಿಸಿದಳು.
ಅವನಿಸುತವಾರ ತ್ರಯೋದಶಿ
ದಿವದ ಮಧ್ಯದೊಳರ್ಕ ನಿರೆ ಸಂ
ಭವಿಸಿದನು ಮಘೆಯಲಿ ಶುಭಗ್ರಹ ಲಗ್ನದುದಯದಲಿ ||
ಭವದ ಮಾತ್ರದೊಳಹಿತ ಪಾರ್ಥಿವ
ನಿವಹ ನಡುಗಿತು ಭೂಮಿಪತಿ ಹೇ
ಳುವೆನದೇನನು ಭಿಮಸೇನನ ಜನನದದ್ಭುತವ ||೪೯ ||
ಪದವಿಭಾಗ-ಅರ್ಥ: ಅವನಿಸುತವಾರ= (ಭೂಸುತ-ಮಂಗಳ) ಮಂಗಳವಾರ ತ್ರಯೋದಶಿ ದಿವದ ಮಧ್ಯದೊಳು ಅರ್ಕ=ಸೂರ್ಯ ನಿರೆ= ಇರಲು, ಸಂಭವಿಸಿದನು= ಜನಿಸಿದನು, ಮಘೆಯಲಿ= ಮಘಾ ನಕ್ಷತ್ರದಲ್ಲಿ, ಶುಭಗ್ರಹ ಲಗ್ನದ+ ಉದಯದಲಿ, ಭವದ ಮಾತ್ರದೊಳು (ಹುಟ್ಟಿದ ತಕ್ಷಣ)= ಅಹಿತಪಾರ್ಥಿವ ನಿವಹ= ಶತ್ರುರಾಜರ ಸಮೂಹ, ನಡುಗಿತು ಭೂಮಿಪತಿ ಹೇಳುವೆನು+ ಅದು+ ಏನನು ಭಿಮಸೇನನ ಜನನದ+ ಅದ್ಭುತವ
ಅರ್ಥ: ಭೀಮನು ಮಂಗಳವಾರ ತ್ರಯೋದಶಿ ದಿವದ ಮಧ್ಯಾಹ್ನದಲ್ಲಿ ಮಘಾ ನಕ್ಷತ್ರದಲ್ಲಿ, ಶುಭಗ್ರಹ ಲಗ್ನದ ಉದಯದಲಿ ಜನಿಸಿದನು, ಅವನು ಹುಟ್ಟಿದ ತಕ್ಷಣ ಶತ್ರುರಾಜರ ಸಮೂಹ ನಡುಗಿತು. ರಾಜನೇ, ಅದು ಏನೆಂದು ಹೇಳಲಿ, ಭಿಮಸೇನನ ಜನನದ ಅದ್ಭುತವನ್ನು, ಎಂದನು ವೈಶಂಪಾಯನ ಮುನಿ.

ದುರ್ಯೋಧನ ಮತ್ತು ಅವನ ಸಹೋದರು- ನೂರು ಕೌರವರ ಜನನ

[ಸಂಪಾದಿಸಿ]
ಭೂಮಿಸುತನುದಯಿಸಿದಿರುಳು ಕೌರವ
ಭೂಮಿಪತಿ ಜನಿಸಿದನೆಲೈ ನಿ
ಮ್ಮಾ ಮಹಾತ್ಮನ ಹುಟ್ಟು ಬೆದರಿಸಿತಖಿಳಜನಮನವ ||
ಭೂಮಿನಡುಗಿತು ದೆಸೆಗೆ ಹರಿದವು
ಧೂಮಕೇತುಗಳೊದರಿದವು ಬಳಿ
ಕಾ ಮಹಾನಗರದಲಿ ಭರದಲಿ ಭೂರಿ ಗೋಮಾಯ ||೫೦||
ಪದವಿಭಾಗ-ಅರ್ಥ: ಭೀಮನು+ ಉದಯಿಸಿದ(ಹುಟ್ಟಿದ)+ ಇರುಳು, ಕೌರವಭೂಮಿಪತಿ ಜನಿಸಿದನು+ ಎಲೈ ನಿಮ್ಮ+ ಆ ಮಹಾತ್ಮನ ಹುಟ್ಟು ಬೆದರಿಸಿತು+ ಅಖಿಳ ಜನಮನವ ಭೂಮಿ ನಡುಗಿತು, ದೆಸೆಗೆ ಹರಿದವು ಧೂಮಕೇತುಗಳು+ ಒದರಿದವು ಬಳಿಕ+ ಆ ಮಹಾನಗರದಲಿ ಭರದಲಿ ಭೂರಿ ಗೋಮಾಯು= 1. ನರಿ. (2. ಒಂದು ಬಗೆಯ ಕಪ್ಪೆ.)
ಅರ್ಥ: ಭೀಮನು ಹುಟ್ಟಿದ ರಾತ್ರಿ, ಕೌರವರಾಯನು ಜನಿಸಿದನು+.ಎಲೈ, ನಿಮ್ಮ ಆ ಮಹಾತ್ಮನ ಹುಟ್ಟು ಎಲ್ಲ ಜನರನ್ನೂ ಹೆದರಿಸಿತು. ಭೂಮಿ ನಡುಗಿತು, ಧೂಮಕೇತುಗಳು ಎಲ್ಲಾ ದಿಕ್ಕುಗಳಲ್ಲಿ ಚಲಿಸಿದವು. ಬಳಿಕ ಆ ಮಹಾನಗರದಲ್ಲಿ ನಗರದಲ್ಲಿ ನರಿಗಳು ದೊಡ್ಡದಾಗಿ ಊಳಿಟ್ಟವು.
ಕರೆಸಿದನು ಧೃತರಾಷ್ಟ್ರನವನೀ
ಸುರರ ಬೆಸಗೊಂಡನು ಕುಮಾರನ
ದರುಶನದ ಸುಮನಂತರದಲುತ್ಪಾತ ಫಲಗತಿಯ||
ಭರತ ವಂಶವನುಳಿದ ಭೂಮೀ
ಶ್ವರರನಂತವನೀತನೇ ಸಂ
ಹರಿಸುವನು ಸಂದೇಹವಿದಕೇನೆಂದರಾ ದ್ವಿಜರು ||(೫೧)
ಪದವಿಭಾಗ-ಅರ್ಥ: ಕರೆಸಿದನು ಧೃತರಾಷ್ಟ್ರನು+ ಅವನೀಸುರರ= ಬ್ರಾಹ್ಮಣರ, ಬೆಸಗೊಂಡನು= ಕೇಳಿದನು, ಕುಮಾರನ ದರುಶನದ= ದರ್ಶನದ, ಸುಮನಂತರದಲಿ= ಅನಂತರ, ಉತ್ಪಾತ ಫಲಗತಿಯ= ಫಲಗತಿಯನ್ನು, ಭರತ ವಂಶವನು+ ಉಳಿದ ಭೂಮೀಶ್ವರರನಂತವನು+ ಈತನೇ ಸಂಹರಿಸುವನು ಸಂದೇಹವಿದಕೇನು+ ಎಂದರು ಆ ದ್ವಿಜರು= ಬ್ರಾಹ್ಮಣರು.
ಅರ್ಥ: ಧೃತರಾಷ್ಟ್ರನು ಬ್ರಾಹ್ಮಣರನ್ನು ಕರೆಸಿದನು; ಬೆಸಗೊಂಡನು= ಕೇಳಿದನು, ಕುಮಾರನ ದರುಶನದ= ದರ್ಶನದ, ಸುಮನಂತರದಲಿ= ಅನಂತರ, ಉತ್ಪಾತ ಫಲಗತಿಯ= ಫಲಗತಿಯನ್ನು, ಭರತ ವಂಶವನು+ ಉಳಿದ ಭೂಮೀಶ್ವರರನಂತವನು+ ಈತನೇ ಸಂಹರಿಸುವನು ಸಂದೇಹವಿದಕೇನು+ ಎಂದರು ಆ ದ್ವಿಜರು= ಬ್ರಾಹ್ಮಣರು.
ಕುಲಕೆ ಕಂಟಕನಾದಡೊಬ್ಬನ
ಕಳೆವುದೂರಳಿವಿನಲಿ ಕಳೆವುದು
ಕುಲವನೊಂದನು ದೇಶದಳಿವಿನಲೂರ ಕೆಡಿಸುವುದು ||
ಇಳೆಯನಖಿಳವ ಬಿಸುಡುವುದು ತ
ನ್ನುಳಿವ ಮಾಡುವುದೆಂಬ ವಚನವ
ತಿಳಿವುದೀತನ ಬಿಸುಟು ಕಳೆ ನೀನೆಂದನಾ ವಿದುರ || ೫೨||
ಪದವಿಭಾಗ-ಅರ್ಥ: ಕುಲಕೆ ಕಂಟಕನಾದಡೆ+ ಒಬ್ಬನ ಕಳೆವುದು+ ಊರ+ ಅಳಿವಿನಲಿ ಕಳೆವುದು ಕುಲವನು + ಒಂದನು, ದೇಶದ+ ಅಳಿವಿನಲಿ+ ಊರ ಕೆಡಿಸುವುದು ಇಳೆಯನು= ಭೂಮಿಯ, ಅಖಿಳವ= ಎಲ್ಲಾ ಸಂಪತ್ತನ್ನು, ಬಿಸುಡುವುದು= ಬಿಟ್ಟುಬಿಡಬೇಕು, ತನ್ನ+ ಉಳಿವ ಮಾಡುವುದು+ ಎಂಬ= ತನ್ನ ಅಳಿವು ಉಳಿವಿನ ಸಮಸ್ಯೆ ಬಂದಾಗ, ತನ್ನಬದುಕು ಉಳಿಯುವುದಾದರೆ ಎಲ್ಲಾ ಸಂಪತ್ತನ್ನೂ ಬಿಡಬೇಕು, ಎಂಬ, ವಚನವ ತಿಳಿವುದು (ನೀತಿಯನ್ನು ತಿಳಿದುಕೊಳ್ಳಬೇಕು)+ ಈತನ ಬಿಸುಟು ಕಳೆ= ಆದ್ದರಿಂದ ಅಶುಭ ಸೂಚಕವಾದ ಈ ಪುತ್ರನನ್ನು ಬಿಟ್ಟುಬಿಡು, ನೀನು+ ಎಂದನು+ ಆ ವಿದುರ.
ಅರ್ಥ: 'ಕುಲಕ್ಕೆ ಕಂಟಕನಾದರೆ ಆ ಒಬ್ಬನನ್ನು ತ್ಯಜಿಸಬೇಕು, ಊರನ್ನು ನಾಶದಿಂದ ಉಳಿಸಲು ಒಂದು ಕುಲವನ್ನು ಬಿಡಬೇಕು (ತ್ಯಾಗಮಾಡಬೇಕು), ದೇಶದ ನಾಶವನ್ನು ಉಳಿಸಲು ಊರನ್ನು ತ್ಯಾಗಮಾಡಬೇಕು. ತನ್ನ ಅಳಿವು ಉಳಿವಿನ ಸಮಸ್ಯೆ ಬಂದಾಗ, ತನ್ನ ಬದುಕು ಉಳಿಯುವುದಾದರೆ ಭೂಮಿಯ ಎಲ್ಲಾ ಸಂಪತ್ತನ್ನೂ ಬಿಡಬೇಕು,' ಎಂಬ, ನೀತಿಯನ್ನು ತಿಳಿದುಕೊಳ್ಳಬೇಕು. ಆದ್ದರಿಂದ ಕುಲಕಂಟಕದ ಅಶುಭ ಸೂಚಕನಾದ ಈ ಪುತ್ರನನ್ನು ನೀನು ಬಿಟ್ಟುಬಿಡು,' ಎಂದನು, ಆ ವಿದುರ.
ಸುತನ ಮೋಹದ ತಿಮಿರವಾ ದು
ಸ್ಥಿತಿಯನೀಕ್ಷಿಸಲೀ ವುದೇ ದು
ರ್ಮತಿಯೊಳೀತನ ಬಿಸುಡಲೀಸಿದುದಿಲ್ಲ ಗಾಂಧಾರಿ ||
ಸುತನಿರೀಕ್ಷಣ ಜಾತಕರ್ಮೋ
ಚಿತದ ದಾನಂಗಳಲಿ ಭೂಸುರ
ತತಿಯ ದಣಿಸಿದನನಿಬರಿಗೆ ಗುಣನಾಮಕರಣಲಿ || ೫೩ ||
ಪದವಿಭಾಗ-ಅರ್ಥ: ಸುತನ ಮೋಹದ ತಿಮಿರವು (ಕತ್ತಲೆಯು)+ ಆ ದುಸ್ಥಿತಿಯನು (ಮುಂದಾಗುವ ಕೆಡುಕನ್ನು)+ ಈಕ್ಷಿಸಲು (ನೋಡಲು)+ ಈವುದೇ= ಅವಕಾಶ ಕೊಡುವುದೇ? ಕೊಡುವುದಿಲ್ಲ. ದುರ್ಮತಿಯೊಳು (ಕೆಟ್ಟಬುದ್ಧಿಯಿಂದ) + ಈತನ ಬಿಸುಡಲು (ಬಿಟ್ಟುಬಿಡಲು)+ ಈಸಿದುದಿಲ್ಲ(ಇಚ್ಛಿಸಲಿಲ್ಲ) ಗಾಂಧಾರಿ, ಸುತನಿರೀಕ್ಷಣ ಜಾತಕರ್ಮ+ ಉಚಿತದ ದಾನಂಗಳಲಿ ಭೂಸುರತತಿಯ= ಬ್ರಾಹ್ಮಣ ಸಮೂಹವನ್ನು, ದಣಿಸಿದನು (ತಣಿಸಿದನು = ತೃಪ್ತಿಪಡಿಸಿದನು)+ ಅನಿಬರಿಗೆ= ಆ ನೂರು ಮಕ್ಕಳಿಗೆ, ಗುಣನಾಮಕರಣಲಿ= ಗುಣಕ್ಕೆ ತಕ್ಕಂತೆ ಹೆಸರಿಟ್ಟು ನಾಮಕರಣ ಸಂಸ್ಕಾರ ಮಾಡಿದನು.
ಅರ್ಥ: ಮಗನ ಮೇಲಿನ ಮೋಹವೆಂಬ ಕತ್ತಲೆಯು ಮುಂದಾಗುವ ಕೆಡುಕನ್ನು ನೋಡಲು ಅವಕಾಶ ಕೊಡುವುದೇ? ಕೊಡುವುದಿಲ್ಲ. ಕೆಟ್ಟಬುದ್ಧಿಯಿಂದ ಈತನನ್ನು ಬಿಸಾಡಲು- ಬಿಟ್ಟುಬಿಡಲು ಗಾಂಧಾರಿ ಇಚ್ಛಿಸಲಿಲ್ಲ. ಸಂಸ್ಕಾರಗಳಾದ ಸುತನಿರೀಕ್ಷಣ, ಜಾತಕರ್ಮ, ಉಚಿತವಾದ ದಾನಗಳಿಂದ ಬ್ರಾಹ್ಮಣ ಸಮೂಹವನ್ನು ತೃಪ್ತಿಪಡಿಸಿದನು. ಆ ನೂರು ಮಕ್ಕಳಿಗೆ, ಗುಣಕ್ಕೆ ತಕ್ಕಂತೆ ಹೆಸರಿಟ್ಟು ನಾಮಕರಣ ಸಂಸ್ಕಾರ ಮಾಡಿದನು.
ಜನಪ ದುರ್ಯೋಧನನು ದುಶ್ಯಾ
ಸನ ವಿಕರ್ಣ ಸುಬಾಹು ದುಸ್ಸಹ
ಕನಕವರ್ಣ ಸುಷೇಣ ದೀರ್ಘೋದರ ಮಹೋದರನು||
ಜನವಿಜಯ ಜಲಸಂಧ ದೃಢವಾ
ಹನ ವಿವಂ(ವಿಂ)ಶತಿ ಕುಂಡಧಾರಕ
ನೆನಲು ನೂರ್ವರ ನಾಮಕರಣವನರಸ ಮಾಡಿಸಿದ || ೫೪ ||
ಪದವಿಭಾಗ-ಅರ್ಥ: ಜನಪ ದುರ್ಯೋಧನನು ದುಶ್ಯಾಸನ ವಿಕರ್ಣ ಸುಬಾಹು ದುಸ್ಸಹ ಕನಕವರ್ಣ ಸುಷೇಣ ದೀರ್ಘೋದರ ಮಹೋದರನು ಜನವಿಜಯ ಜಲಸಂಧ ದೃಢವಾಹನ ವಿವಂ(ವಿಂ)ಶತಿ ಕುಂಡಧಾರಕನೆನಲು ನೂರ್ವರ ನಾಮಕರಣವನು ಅರಸ ಮಾಡಿಸಿದ.
ಅರ್ಥ: ರಾಜನೇ ದೃತರಾಷ್ಟ್ರನು ಮಕ್ಕಳಿಗೆ, ದುರ್ಯೋಧನನು ದುಶ್ಯಾಸನ ವಿಕರ್ಣ ಸುಬಾಹು ದುಸ್ಸಹ ಕನಕವರ್ಣ ಸುಷೇಣ ದೀರ್ಘೋದರ ಮಹೋದರನು ಜನವಿಜಯ ಜಲಸಂಧ ದೃಢವಾಹನ ವಿವಂ(ವಿಂ)ಶತಿ ಕುಂಡಧಾರಕನೆನಲು ನೂರ್ವರ ನಾಮಕರಣವನ್ನು ತನ್ನ ಮಕ್ಕಳಿಗೆ ಮಾಡಿಸಿದ.
ಜನಪತಿಗೆ ಬಳಿಕೊಬ್ಬ ವೇಶ್ಯಾಂ
ಗನೆಯ ಸುತನು ಯುಯುತ್ಸು ನೂರೊಂ
ದೆನಿಸಿತರಸು ಕುಮಾರಕರು ಗಾಂಧಾರಿಯುದರದಲಿ||
ಜನಿಸಿದರು ನೂರೊಂದು ನೂರ್ವರಿ
ಗನುಜೆ ದುಸ್ಸಳೆಯಾದಳಾ ಮಾ
ನಿನಿ ಜಯದ್ರಥನರಸಿಯಾದಳು ರಾಯ ಕೇಳೆಂದ ||(೫೫)
ಪದವಿಭಾಗ-ಅರ್ಥ: ಜನಪತಿ ದೃತರಾಷ್ಟ್ರನಿಗೆ ಬಳಿಕ ಒಬ್ಬ ವೇಶ್ಯಾಂಗನೆಯ ಸುತನು= ಮಗನು, ಯುಯುತ್ಸು- ನೂರೊಂದು ಎನಿಸಿತು+ ಅರಸು ಕುಮಾರಕರು ಗಾಂಧಾರಿಯ+ ಉದರದಲಿ ಜನಿಸಿದರು ನೂರೊಂದು, ನೂರ್ವರಿಗೆ ಅನುಜೆ ದುಸ್ಸಳೆಯಾದಳು ಆ ಮಾನಿನಿ ಜಯದ್ರಥನ ಅರಸಿಯಾದಳು ರಾಯ ಕೇಳೆಂದ
ಅರ್ಥ: ಜನಪತಿ ದೃತರಾಷ್ಟ್ರನಿಗೆ ಬಳಿಕ ವೇಶ್ಯಾಂಗನೆಯಲ್ಲಿ ಒಬ್ಬ ಮಗನು ಹುಟ್ಟಿದನು. ಅವನು ಯುಯುತ್ಸು ಒಟ್ಟು ನೂರಾ ಒಂದು ಅರಸು ಕುಮಾರಕರು ಎಂದಾಯಿತು. ಗಾಂಧಾರಿಯ ಹೊಟ್ಟೆಯಲ್ಲಿ ಹುಟ್ಟಿದವರು ನೂರಾ ಒಂದುಮಕ್ಕಳು. ನೂರು ಪುತ್ರರಿಗೆ ಒಬ್ಬ ತಂಗಿ ದುಸ್ಸಳೆಯು ಹುಟ್ಟಿದಳು. ಆ ಮಗಳು ಜಯದ್ರಥನಿಗೆ ಪತ್ನಿಯಾದಳು; ಅರಸನೇ ಕೇಳು ಎಂದ ಮುನಿ.

ಅರ್ಜುನನ ಜನನ

[ಸಂಪಾದಿಸಿ]
ಅತ್ತಲಾ ಹದನಾಯ್ತು ಬಳಿಕಿನ
ಲಿತ್ತ ಧರ್ಮಜ ಭೀಮಸೇನರ
ಹೆತ್ತ ಹರುಷದೊಳಿವರು ಮೆರೆದರು ಪಾಂಡು ಕುಂತಿಯರು ||
ಮತ್ತೆ ಕೇಳದ್ಭುತವನುರೆ ಮೊರೆ
ವುತ್ತ ಹೆಬ್ಬುಲಿ ವರ ತಪೋಧನ
ರತ್ತ ಲೈತರೆ ಪಾಂಡು ಕೆಡಹಿದನಾ ಮೃಗಾಂತಕನ || ೫೬ ||
ಪದವಿಭಾಗ-ಅರ್ಥ: ಅತ್ತಲಾ ಹದನಾಯ್ತು -ಹದನು(ರೀತಿ)= ಅಲ್ಲಿ ಹಸ್ತಿನಾವತಿಯಲ್ಲಿ ಆ ರೀತಿಯಾಯಿತು. ಬಳಿಕಿನಲಿ+ ಇತ್ತ = ಬಳಿಕ ಇತ್ತ ಕಾಡಿನಲ್ಲಿ, ಧರ್ಮಜ ಭೀಮಸೇನರ ಹೆತ್ತ ಹರುಷದೊಳು+ ಇವರು ಮೆರೆದರು= ಧರ್ಮಜ ಭೀಮಸೇನರನ್ನು ಹೆತ್ತ ಹರುಷದಲ್ಲಿ ಇವರು ಇದ್ದರು, - ಪಾಂಡು ಕುಂತಿಯರು; ಮತ್ತೆ ಕೇಳು+ ಅದ್ಭುತವನು+ ಉರೆ= ಹೆಚ್ಚಾಗಿ, ಒಂದು ಅಧ್ಬುತ ವಿಶೇಷವನ್ನು ಕೇಳು, ಘರ್ಜಿಸುತ್ತ ಒಂದು ಹೆಬ್ಬುಲಿ ವರ= ಪೂಜ್ಯ ತಪೋಧನರತ್ತಲು+ ಐತರೆ= ಬರಲು, ಪಾಂಡು ಕೆಡಹಿದನು= ಕೊಂದನು + ಆ ಮೃಗಾಂತಕನ(ಮೃಗಾಧಿಪನ)= ಹುಲಿಯನ್ನು (ಮೃಗಗಳನ್ನು ಕೊಲ್ಲುವವನನ್ನು- ಹುಲಿಯನ್ನು)
ಅರ್ಥ: ಅಲ್ಲಿ ಹಸ್ತಿನಾವತಿಯಲ್ಲಿ ಆ ರೀತಿಯಾಯಿತು. ಬಳಿಕ ಇತ್ತ ಕಾಡಿನಲ್ಲಿ, ಧರ್ಮಜ ಭೀಮಸೇನರನ್ನು ಹೆತ್ತ ಹರುಷದಲ್ಲಿ ಇವರು ಪಾಂಡು ಕುಂತಿಯರು ಇದ್ದರು; ಒಂದು ಅಧ್ಬುತವನ್ನು ಕೇಳು, ಮೊರೆವುತ್ತ= ಘರ್ಜಿಸುತ್ತ ಹೆಬ್ಬುಲಿ ಪೂಜ್ಯ ತಪೋಧನರ ಕಡೆ ಬರಲು, ಪಾಂಡು ಹುಲಿಯನ್ನು ಕೊಂದನು.
ಆ ಮಹಾ ರಭಸಕ್ಕೆ ಮುನಿಪ
ಸ್ತೋಮವಂಜಿತು ಪರ್ವತಾಗ್ರದ
ಲಾ ಮಹೀಪತಿಯರಸಿ ನಡುಗಿದಳಹಹ ಶಿವಯೆನುತ ||
ಭೀಮ ಬಿದ್ದನು ತೊಡೆಯ ಮೇಲಿಂ
ದೀ ಮಹಿಗೆ ತಚ್ಚೈಲ ಶಿಲೆ ನಿ
ರ್ನಾಮವಾದುದು ಹಸುಳೆ ಹೊರಳಿದು ಬಿದ್ದ ಭಾರದಲಿ ||೫೭ ||
ಪದವಿಭಾಗ-ಅರ್ಥ: ಆ ಮಹಾ ರಭಸಕ್ಕೆ ಮುನಿಪಸ್ತೋಮವು+ ಅಂಜಿತು(ಸ್ತೋಮ= ಗುಂಪು) ಪರ್ವತ+ ಅಗ್ರದಲಿ+ಆ- ಪರ್ವತ+ ಅಗ್ರದಲಿ= ಬೆಟ್ಟದ ತುದಿಯಲ್ಲಿ ಮಹೀಪತಿಯ+ ಅರಸಿ = ಪಾಂಡುವಿನ ಪತ್ನಿ, ನಡುಗಿದಳು+ ಅಹಹ ಶಿವಯೆನುತ, ಭೀಮ ಬಿದ್ದನು ತೊಡೆಯ ಮೇಲಿಂದ+ ಈ ಮಹಿಗೆ= ಭೂಮಿಗೆ, ತಚ್ಚೈಲ= ತ್ತ್ ಶೈಲ ಶಿಲೆ= ಬೆಟ್ಟದ ಕಲ್ಲು, ಶಿಲೆ ನಿರ್ನಾಮವಾದುದು= ಪಡಿಯಾಯಿತು, ಹಸುಳೆ ಹೊರಳಿದು ಬಿದ್ದ ಭಾರದಲಿ= ಮಗುಹೊರಳಿ ಬಿದ್ದಭಾರದಲ್ಲಿ.
ಅರ್ಥ: ಹುಲಿಯ ಆ ಮಹಾ ರಭಸಕ್ಕೆ ಮುನಿಪರ ಗುಂಪು ಹೆದರಿತು. ಬೆಟ್ಟದ ತುದಿಯಲ್ಲಿ ಪಾಂಡುವಿನ ಪತ್ನಿ ಅಹಹ ಶಿವಯೆನುತ ನಡುಗಿದಳು. ಆಗ ಅವಳ ತೊಡೆಯ ಮೇಲಿಂದ ಭೀಮ ಭೂಮಿಗೆ ಬಿದ್ದನು. ಅವನು ಬಿದ್ದ ಆ ಬೆಟ್ಟದ ಕಲ್ಲು, ಮಗು ಹೊರಳಿ ಬಿದ್ದಭಾರದಲ್ಲಿ ಪುಡಿಯಾಯಿತು.
ಶಿಶುವ ತೂಪಿರಿದಳು ನಿವಾಳಿಸಿ
ಬಿಸುಟು ರಜವನು ಮಂತ್ರ ರಕ್ಷಾ
ಪ್ರಸರವನು ಮುನಿಗಳಲಿ ಮಾಡಿಸಿದಳು ಕುಮಾರಂಗೆ ||
ವಸುಧೆಗತಿ ಬಲನೊಬ್ಬ ಕಂದನ
ಬೆಸಲಹೆನುಯೆಂದೆನುತ ಸಾರಸ
ಲಸಿತ ಕಮಲಾಕರದ ತೀರಕೆ ಬಂದಳಾ ಕುಂತಿ || ೫೮ ||
ಪದವಿಭಾಗ-ಅರ್ಥ: ಶಿಶುವ ತೂಪಿರಿದಳು ಫೂ ಫೂ ಎಂದು ಬಾಯಿಯಿಂದ ಗಾಳಿಹಾಕಿ, ನಿವಾಳಿಸಿಬಿಸುಟು= ಶಿಶುವಿಗೆ ಸುಳಿದು ಎಸೆದಳು, ರಜವನು= ದೋಷವನ್ನು, ಮಂತ್ರ ರಕ್ಷಾಪ್ರಸರವನು= ಮಂತ್ರ ರಕ್ಷಾಬಂಧವನ್ನು, ಮುನಿಗಳಲಿ ಮಾಡಿಸಿದಳು ಕುಮಾರಂಗೆ, ವಸುಧೆಗೆ - ಭೂಮಿಗೆ+ ಅತಿ ಬಲನೊಬ್ಬ ಕಂದನ ಬೆಸಲಹೆನುಯೆಂದು= ಹೆರುವೆನು ಎಂದು, ಎನುತ= ಹೇಳುತ್ತಾ, ಸಾರಸಲಸಿತ= ಸಾರಸ ಪಕ್ಷಿಯಿಂದ ಶೋಬಿಸುವ, ಕಮಲಾಕರದ= ಸರೋವರದ, ತೀರಕೆ ಬಂದಳು+ ಆ ಕುಂತಿ
ಅರ್ಥ:ಶಿಶುವು ಕೆಳಗೆ ಬಿದ್ದಿಕ್ಕಾಗಿ, ಶಿಶುವಿಗೆ ತೂಪಿರಿದಳು ಫೂ ಫೂ ಎಂದು ಬಾಯಿಯಿಂದ ಗಾಳಿಹಾಕಿ, ಶಿಶುವಿಗೆ ನಿವಾಳಿಸಿ ಸುಳಿದು ದೋಷವನ್ನು ಎಸೆದಳು. ಕುಮಾರನಿಗೆ ಮಂತ್ರ ರಕ್ಷಾಬಂಧವನ್ನು, ಮುನಿಗಳಿಂದ ಮಾಡಿಸಿದಳು. ಆ ಕುಂತಿಯು ಭೂಮಿಗೇ ಅತಿ ಬಲಶಾಲಿಯಾದ ಕಂದನನ್ನು ಹೆರುವೆನು ಎಂದು ಹೇಳುತ್ತಾ, ಸಾರಸ ಪಕ್ಷಿಯಿಂದ ಶೋಬಿಸುವ ಸರೋವರದ, ತೀರಕ್ಕೆ ಬಂದಳು.
ಮಿಂದು ಕಡು ಶುಚಿಯಾಗಿ ಸುಮನೋ
ವೃಂದದೊಳಗಾರೈದು ನೋಡಿ ಪು
ರಂದರನ ನೆನೆದಳು ಮುನೀಂದ್ರನ ಮಂತ್ರ ಶಕ್ತಿಯಲಿ ||
ಬಂದನಲ್ಲಿಗೆ ಬಯಕೆಯೇನರ
ವಿಂದಲೋಚನೆ ಹೇಳೆನಲು ಪೂ
ರ್ಣೀಂದುಮುಖಿ ತಲೆವಾಗಿದಳು ಲಜ್ಜಾನುಭಾವದಲಿ ||೫೯ ||
ಪದವಿಭಾಗ-ಅರ್ಥ: ಮಿಂದು ಕಡು= ಬಹಳ ಶುಚಿಯಾಗಿ ಸು-ಮನೋವೃಂದದೊಳಗೆ= ಒಳ್ಳೆಯ ಮನಸ್ಸಿನಿಂದ, ಆರೈದು= ಮನಸ್ಸಿಟ್ಟು ಗೌರವಿಸಿ, ನೋಡಿ, ಪುರಂದರನ= ಇಂದ್ರನ, ನೆನೆದಳು, ಮುನೀಂದ್ರನ= ದೂರ್ವಾಸನ ಮಂತ್ರ ಶಕ್ತಿಯಲಿ, ಬಂದನು+ ಅಲ್ಲಿಗೆ ಬಯಕೆಯೇನು (ಆಸೆ ಏನು ನಿನ್ನದು)+ ಅರವಿಂದಲೋಚನೆ= ಕಮಲದಂತೆ ಕಣ್ಣುಳ್ಳ- ಸುಂದರಿ, ಹೇಳು+ ಎನಲು ಪೂರ್ಣೀಂದುಮುಖಿ= ಹುಣ್ಣಿಮೆ ಚಂದ್ರನ ಮುಖದ ಕುಂತಿ, ತಲೆವಾಗಿದಳು ಲಜ್ಜೆ+ ಅನುಭಾವದಲಿ= ನಾಚಿಕೆಯಿಂದ ತಲೆ ತಗ್ಗಿಸಿ ಹೇಳಿಧಳು.
ಅರ್ಥ: ಕುಂತಿಯು ಬಹಳ ಶುಚಿಯಾಗಿ ಒಳ್ಳೆಯ ಮನಸ್ಸಿನಿಂದ ಮನಸ್ಸಿಟ್ಟು ಗೌರವಿಸಿ ನೋಡಿ ದೂರ್ವಾಸನ ಮಂತ್ರ ಶಕ್ತಿಯಲ್ಲಿ, ಇಂದ್ರನನ್ನು ನೆನೆದಳು. ಅಲ್ಲಿಗೆ ಇಂದ್ರನು ಬಂದನು. ಸುಂದರಿ, 'ನಿನ್ನ ಬಯಕೆ ಏನು?' ಹೇಳು ಎನ್ನಲು, ಹುಣ್ಣಿಮೆ ಚಂದ್ರನ ಮುಖದ ಕುಂತಿ, ನಾಚಿಕೆಯಿಂದ ತಲೆ ತಗ್ಗಿಸಿ ಹೇಳಿಧಳು.
ಸುತನ ನಿತ್ತೆನು ನಿನಗೆ ಲೋಕ
ತ್ರಿತಯದಲಿ ಬಲುಗೈ ಕಣಾ ಪಶು
ಪತಿಗೆ ಪುರುಷೋತ್ತಮಗೆ ಸರಿಮಿಗಿಲೆಂಬ ಸಂದೇಹ ||
ಶತಭವಾಂತರ ಪುಣ್ಯತರು ಕಾ
ಮಿತವ ಫಲಿಸಿತು ಹೋಗೆನುತ ಸುರ
ಪತಿ ಲತಾಂಗಿಗೆ ವರವನಿತ್ತಡರಿದನು ಗಗನವನು ||೬೦ ||
ಪದವಿಭಾಗ-ಅರ್ಥ: ಇಂದ್ರನು ಅವಳ ಮನಸ್ಸಿನ ಭಾವವನ್ನು ತಿಳಿದು, ಸುತನ ನಿತ್ತೆನು ನಿನಗೆ = ನಿನಗೆ ಮಗನನ್ನು ಕರುಣಿಸಿದ್ದೇನೆ, ಲೋಕತ್ರಿತಯದಲಿ= ಮೂರು ಲೋಕದಲ್ಲಿ, ಬಲುಗೈ ಕಣಾ= (ಬಲಗೈ=ಶಕ್ತಿಯುಳ್ಳದ್ದು) ಮಹಾವೀರ, ಪಶುಪತಿಗೆ= ಶಿವನಿಗೆ, ಪುರುಷೋತ್ತಮಗೆ= ವಿಷ್ಉಣವಿಗೆ, ಸರಿಮಿಗಿಲೆಂಬ= ಸರಿ ಮಿಗಿಲು ಎಂಬ ಸಂದೇಹ= ಸರಿಸಮಾನನು,ಮೀರಿದವನು ಎಂಬ ಸಂದೇಹ ಬರುವಂತಿರುವ ಮಗನು, ಶತ+ ಭವಾಂತರ= ಹಿಂದಿನ ನೂರು ಜನ್ಮಗಳ, ಪುಣ್ಯತರು= ಪುಣ್ಯವೆಂಬ ಮರ, ಕಾಮಿತವ ಫಲಿಸಿತು= ಹಣ್ಣುಬಿಟ್ಟಿತು, ನಿನ್ನ ಬಯಕೆಯನ್ನು ಈಡೇರಿತು, ಹೋಗು+ ಎನುತ ಸುರಪತಿ= ಇಂದ್ರನು, ಲತಾಂಗಿಗೆ= ಸುಂದರಿಗೆ - ಕುಂತಿಗೆ ವರವನಿತ್ತು + ಅಡರಿದನು= ಪ್ರವೇಶಿಸಿದನು, ಗಗನವನು= ಆಕಾಶವನ್ನು, - ಸ್ವರ್ಗವನ್ನು.
ಅರ್ಥ: ಇಂದ್ರನು ಅವಳ ಮನಸ್ಸಿನ ಭಾವವನ್ನು ತಿಳಿದು, ನಿನಗೆ ಮಗನನ್ನು ಕರುಣಿಸಿದ್ದೇನೆ; ಅವನು ಮೂರು ಲೋಕದಲ್ಲಿ ಮಹಾವೀರನಾಗುವನು, ಶಿವನಿಗೆ,ವಿಷ್ಣುವಿಗೆ, ಸರಿಸಮಾನನು,ಮೀರಿದವನು ಎಂಬ ಸಂದೇಹ ಬರುವಂತಿರುವನು. ನಿನ್ನ ಹಿಂದಿನ ನೂರು ಜನ್ಮಗಳ ಪುಣ್ಯವೆಂಬ ಮರ ಹಣ್ಣುಬಿಟ್ಟಿತು- ನಿನ್ನ ಬಯಕೆಯನ್ನು ಈಡೇರಿತು, ಹೋಗು ಎನ್ನುತ್ತಾ ಇಂದ್ರನು ಸುಂದರ ಕುಂತಿಗೆ ವರವನ್ನು ಕೊಟ್ಟು ಆಕಾಶದಲ್ಲಿರುವ ಸ್ವರ್ಗವನ್ನು ಪ್ರವೇಶಿಸಿದನು.
ತೀವಿದವು ನವಮಾಸ ವಿಮಲ ವಿ
ಭಾವಸುವಿನುದಯದಲಿ ಶುಭ ಲ
ಗ್ನಾ ವಲಂಬನ ತಾರೆಯುತ್ತರೆ ಫಲುಗುಣಾಹ್ವಯದ ||
ಜೀವಕೆಂದ್ರ ಸ್ಥಿತಿ ದಶಾ ದಿ
ಗ್ಭಾವಿತ ಗ್ರಹರಾಶಿಯಿರೆ ಗಾಂ
ಡೀವಿ ಜನಿಸಿದನೊಡನೆ ಜನಿಸಿತು ಜನದ ಸುಮ್ಮಾನ || ೬೧ ||
ಪದವಿಭಾಗ-ಅರ್ಥ:ಕುಂತಿಗೆ, ತೀವಿದವು ನವಮಾಸ= ನವಮಾಸ ತುಂಬಿತು. ವಿಮಲ= ಶ್ರೇಷ್ಠ ವಿಭಾವಸು-ವಿನ+ ಉದಯದಲಿ= ಸೂರ್ಯನ ಉದಯಕಾಲದಲ್ಲಿ, ಶುಭ ಲಗ್ನ+ ಆವಲಂಬನ ತಾರೆಯು+ ಉತ್ತರೆ ಫಲುಗುಣಾಹ್ವಯದ= ಉತ್ತರೆಪಲ್ಗುಣಿ ನಕ್ಷತ್ರದಲ್ಲಿ, ಜೀವಕೆಂದ್ರ ಸ್ಥಿತಿ= ಗುರುವು ಕೇಂದ್ರದಲ್ಲಿ ಇರಲು, ದಶಾ ದಿಗ್ಭಾವಿತಗ್ರಹದೆಸೆಗಳು= ದಿಕ್+ ಭಾವಿತ= ಗ್ರಹ ದೆಸೆಗಳು, ದಿಕ್ಕುಗಳು ಉತ್ತಮ ಭಾವದಲ್ಲಿ ಗ್ರಹ ರಾಶಿಯಿರೆ= ಗ್ರ ರಾಶಿಗಳು ಇರಲು, ಗಾಂಡೀವಿ ಜನಿಸಿದನು+ ಒಡನೆ ಜನಿಸಿತು ಜನದ ಸುಮ್ಮಾನ= ಅರ್ಜುನ ಜನಿದನು, ಆಗ ಜನರ ಜನರಲ್ಲಿ ಸಂತೋಷ ಉಂಟಾಯಿತು.
ಅರ್ಥ: ಕುಂತಿಗೆ ನವಮಾಸ ತುಂಬಿತು. ಶ್ರೇಷ್ಠ ಸೂರ್ಯನ ಉದಯಕಾಲದಲ್ಲಿ, ಶುಭ ಲಗ್ನದಲ್ಲಿ, ಉತ್ತರೆಪಲ್ಗುಣಿ ನಕ್ಷತ್ರದಲ್ಲಿ, ಗುರುವು ಕೇಂದ್ರದಲ್ಲಿ ಇರಲು, ಗ್ರಹದೆಸೆಗಳು, ದಿಕ್ಕುಗಳು ಗ್ರಹ ರಾಶಿಗಳು ಉತ್ತಮ ಭಾವದಲ್ಲಿ ಇರಲು, ಅರ್ಜುನನು ಜನಿದನು, ಆಗ ಜನರ ಜನರಲ್ಲಿ ಸಂತೋಷ ಉಂಟಾಯಿತು.
ದೇವ ದುಂದುಭಿ ಮೊಳಗಿದವು ಕುಸು
ಮಾವಳಿಯ ಮಳೆ ಸುರಿದುದಾಡುವ
ದೇವ ವಧುಗಳ ಹೊಳೆವ ಕಂಗಳ ಢಾಳ ಮಿಂಚಿದವು|
ತೀವಿದುತ್ಸಹವುಬ್ಬರಿಸೆ ಭುವ
ನಾವಳಿಯೊಳಿಂದ್ರಾದಿ ನಿಖಿಳ ಸು
ರಾವಳಿಗಳುರೆ ಕೂಡೆ ಕೊಂಡಾಡಿತು ಧನಂಜಯನ || ೬೨ ||
ಪದವಿಭಾಗ-ಅರ್ಥ: ದೇವ ದುಂದುಭಿ ಮೊಳಗಿದವು= ದೇವತೆಗಳು ಭೇರಿ, ವಾದ್ಯಗಳನ್ನು ಬಾರಿಸಿದರು, ಕುಸುಮಾವಳಿಯ= ಹೂವಿನ ಮಳೆ, ಸುರಿದುದು+ ಆಡುವ= ನರ್ತಿಸುವ ದೇವ ವಧುಗಳ= ದೇವಕನ್ಯೆಯರ, ಹೊಳೆವ ಕಂಗಳ ಢಾಳ= ಪ್ರಕಾಶ ಮಿಂಚಿದವು, ತೀವಿದ (ಬಹಳ)+ ಉತ್ಸಹವು+ ಉಬ್ಬರಿಸೆ(ಹೆಚ್ಚಲು,) ಭುವನ+ ಆವಳಿಯೊಳು (ಸಮಸ್ತಲೋಕಗಳಲ್ಲಿ)+ ಇಂದ್ರಾದಿ ನಿಖಿಳ ಸುರ+ ಆವಳಿಗಳು- ಸಮೂಹ, (ಇಂದ್ರನೇ ಮೊದಲಾದ ದೇವತೆಗಳ ಸಮೂಹ)+ ಉರೆ= ಬಹಳ, ಕೂಡೆ= ಎಲ್ಲರೂ ಸೇರಿ, ಕೊಂಡಾಡಿತು= ಹೊಗಳಿತು. ಧನಂಜಯನ.
ಅರ್ಥ: ಅರ್ಜುನ ಹುಟ್ಟಿದಾಗ ದೇವತೆಗಳು ಭೇರಿ, ವಾದ್ಯಗಳನ್ನು ಬಾರಿಸಿದರು, ಅವು ಮೋಳಗಿದವು. ಹೂವಿನಮಳೆ ಸುರಿಯಿತು. ನರ್ತಿಸುವ ದೇವಕನ್ಯೆಯರ ಪ್ರಕಾಶ ಮಿಂಚಿದವು, ಸಮಸ್ತಲೋಕಗಳಲ್ಲಿ ಉತ್ಸಹವು ಬಹಳ ಹೆಚ್ಚಲು, ಇಂದ್ರನೇ ಮೊದಲಾದ ದೇವತೆಗಳ ಸಮೂಹ ಬಹಳ ಕೊಂಡಾಡಿತು. ಎಲ್ಲರೂ ಸೇರಿ ಧನಂಜಯನನ್ನು ಹೊಗಳಿದರು.

ಕೃಷ್ಣ​ನ​ ಜನನ

[ಸಂಪಾದಿಸಿ]
ರಣಭಯಂಕರನರ್ಜುನನು ಧಾ
ರುಣಿಯೊಳುದಿಸದ ಮುನ್ನ ತಿಂಗಳ
ನೆಣಿಸಿದರೆ ಆರಾಯ್ತು ಮಧುರೆಯ ರಾಜಭವನದಲಿ ||
ಗುಣರಹಿತನಚ್ಯುತನು ವರ ಶ್ರಾ
ವಣ ಬಹುಳದಷ್ಟಮಿಯಿರುಳು ರೋ
ಹಿಣಿಯಲವತರಿಸಿದನಲೈ ದೇವಕಿಯ ಜಠದಲಿ || ೬೩ ||
ಪದವಿಭಾಗ-ಅರ್ಥ: ರಣಭಯಂಕರನು+ ಅರ್ಜುನನು ಧಾರುಣಿಯೊಳು+ ಉದಿಸದ= ವೀರನಾದ ಅರ್ಜುನನು ಭೂಮಿಯಲ್ಲಿ ಹುಟ್ಟುವುದಕ್ಕೂ, ಮುನ್ನ= ಮೊದಲು, ತಿಂಗಳನು+ ಎಣಿಸಿದರೆ ಆರಾಯ್ತು = ತಿಂಗಳ ಲೆಕ್ಕದಲ್ಲಿ ಆರು, ಮಧುರೆಯ ರಾಜಭವನದಲಿ ಗುಣರಹಿತನು+ ಅಚ್ಯುತನು= ಕೃಷ್ನನು ವರ ಶ್ರಾವಣ ಬಹುಳದ+ ಅಷ್ಟಮಿ+ ಯಿರುಳು= ಇರುಳು- ರಾತ್ರಿ, ರೋಹಿಣಿಯಲಿ+ ಅವತರಿಸಿದನಲೈ= ಜನಿಸಿದನು, ದೇವಕಿಯ ಜಠದಲಿ= ದೇವಕಿಯ ಗರ್ಭದಲ್ಲಿ ಜನಿಸಿದನು.
ಅರ್ಥ: ಮಹಾವೀರನಾದ ಅರ್ಜುನನು ಭೂಮಿಯಲ್ಲಿ ಹುಟ್ಟುವುದಕ್ಕೂ ಲೆಕ್ಕದಲ್ಲಿ ಆರು ತಿಂಗಳ ಮೊದಲು, ಮಧುರೆಯ ರಾಜಭವನದಲ್ಲಿ ನಿರ್ಗುಣನಾದ ಅಚ್ಯುತನು (ಕೃಷ್ಣನು) ಶ್ರೇಷ್ಠ ಶ್ರಾವಣ ಬಹುಳದ ಅಷ್ಟಮಿಯದಿನ ರಾತ್ರಿ, ರೋಹಿಣಿ ನಕ್ಷತ್ರದಲ್ಲಿ ದೇವಕಿಯ ಗರ್ಭದಿಂದ ಜನಿಸಿದನು.(ಇಲ್ಲಿ 'ಆರಾಯ್ತು' ಎಂಬಲ್ಲಿ 'ಮೂರಾಯ್ತು' ಎಂಬ ಪಾಠವೂ ಉಂಟು. ಆರಾಯ್ತು ಎಂಬುದು ಮೂಲ ಮಹಾಭಾರತಕ್ಕೆ ಸರಿಹೊಂದುವ ಪಾಠವಾಗಿರುವುದರಿಂದ ಅದನ್ನೇ ಸ್ವೀಕರಿಸಲಾಗಿದೆ.)
ಈತ ನರಋಷಿ ನಿಖಿಳ ಭುವನ
ಖ್ಯಾತ ನಾರಾಯಣನಲೈ ಬಳಿ
ಕಾತನುರ್ವೀಭಾರ ಸಂಹರಂದ ವಿನೋದದಲಿ |
ಭೂತಪತಿ ಮೊದಲಾದ ದಿವಿಜ
ವ್ರಾತವೇ ನರ ರೂಪದಲಿ ಸಂ
ಭೂತವಾದುದು ಕೇಳುನೃಪ ಕೃಷ್ಣಾವತಾರದಲಿ || ೬೪ ||
ಪದವಿಭಾಗ-ಅರ್ಥ: ಈತ=ಅರ್ಜುನ ಮತ್ತು ಕೃಷ್ಣ ಇವರು, ನರಋಷಿ, (ಮತ್ತು) ನಿಖಿಳ ಭುವನಖ್ಯಾತ= ಜಗತ್ಪ್ರಸಿದ್ಧರಾದ ನಾರಾಯಣನಲೈ= ನಾರಾಯನರು, ಬಳಿಕ+ ಆತನು+ ಉರ್ವೀಭಾರ= ಆ ಅವತಾರದ ನಂತರ, ಭೂಭಾರವನ್ನು, ಸಂಹರಂದ ವಿನೋದದಲಿ= ಕಡಿಮೆಮಾಡುವ ವಿನೋದದಲ್ಲಿ, ಭೂತಪತಿ= ಶಿವ, ಮೊದಲಾದ ದಿವಿಜವ್ರಾತವೇ= ದೇವತೆಗಳ ಸಮೂಹವೇ, ನರ ರೂಪದಲಿ= ಮನುಷ್ಯ ರೂಪದಲ್ಲಿ, ಸಂಭೂತವಾದುದು= ಹುಟ್ಟಿದರು, ಕೇಳು ನೃಪ ಕೃಷ್ಣಾವತಾರದಲಿ= ರಾಜನೇ ಕೇಳು ಹೀಗೆ ಕೃಷ್ಣಾವತಾರವಾಯಿತು.
ಅರ್ಥ:ಅರ್ಜುನ ಮತ್ತು ಕೃಷ್ಣ ಇವರು ನು, ನರಋಷಿ ಮತ್ತು ಜಗತ್ಪ್ರಸಿದ್ಧರಾದ ನಾರಾಯನರು (ನರ ನಾರಾಯಣರು), ಆ ಅವತಾರದ ನಂತರ, ಭೂಭಾರವನ್ನು ಕಡಿಮೆಮಾಡುವ ವಿನೋದದಲ್ಲಿ (ದೈವಲೀಲೆ), ಶಿವ, ಮೊದಲಾದ ದೇವತೆಗಳ ಸಮೂಹವೇ ಮನುಷ್ಯ ರೂಪದಲ್ಲಿ ಹುಟ್ಟಿದರು, ರಾಜನೇ ಕೇಳು ಹೀಗೆ ಕೃಷ್ಣಾವತಾರವಾಯಿತು.

ನಕುಲ ಸಹದೇವರ ಜನನ

[ಸಂಪಾದಿಸಿ]
ಸಾಕು ಮೂವರು ಸುತರು ತನಗೆಂ
ದೀಕೆ ಮಾದ್ರೀ ದೇವಿಗಗ್ಗದ
ಶೋಕಿತೆಗೆ ಮಂತ್ರೋಪದೇಶ ವಿಧಾನವನು ಕಲಿಸಿ ||
ನಾಕ ನಿಲಯರ ವೊಲಿಸೆನಲು ಬಂ
ದಾಕೆ ಕೃತನಿಯಮದಲಿ ನೆನೆದಳು
ಲೋಕ ವಿಶ್ರುತ ರಾಶ್ವಿನೀ ದೇವರನು ಹರ್ಷದಲಿ || ೬೫ ||
ಪದವಿಭಾಗ-ಅರ್ಥ: ಸಾಕು ಮೂವರು ಸುತರು ತನಗೆಂದು+ ಈಕೆ (ಕುಂತಿಯು) ಮಾದ್ರೀ ದೇವಿಗೆ+ ಅಗ್ಗದಶೋಕಿತೆಗೆ= ಬಹಳ ದುಃಖಿತಳಾದ, ಮಂತ್ರೋಪದೇಶ ವಿಧಾನವನು ಕಲಿಸಿ, ನಾಕನಿಲಯರ= ದೇವತೆಗಳ, ವೊಲಿಸು ಎನಲು= ಒಲಿಸಿಕೋ ಎನ್ನಲು, ಬಂದು+ ಆಕೆ, ಕೃತನಿಯಮದಲಿ= ಶಾಸ್ತ್ರ ನಿಯಮದಂತೆ, ನೆನೆದಳು ಲೋಕ ವಿಶ್ರುತರ= ಲೋಕಪ್ರಖ್ಯಾತಿ ಹೊಂದಿದ, ಅಶ್ವಿನೀ ದೇವರನು ಹರ್ಷದಲಿ= ಅಶ್ವಿನೀ ದೇವತೆಗಳನ್ನು ಸಂತೋಷದಿಂದ.
ಅರ್ಥ: ತನಗೆ ಮೂವರು ಸುತರು ಸಾಕು ಎಂದು ಕುಂತಿಯು, ಮಕ್ಕಳಿಲ್ಲವೆಂದು ಬಹಳ ದುಃಖಿತಳಾದ ಪಾಂಡುವಿನ ಎಡನೇ ಪತ್ನಿ ಮಾದ್ರೀ ದೇವಿಗೆ ಮಂತ್ರೋಪದೇಶ ವಿಧಾನವನು ಕಲಿಸಿದಳು. ಅವಳಿಗೆ ದೇವತೆಗಳನ್ನು ಒಲಿಸಿಕೋ ಎನ್ನಲು, ಆಕೆ ಬಂದು ಶಾಸ್ತ್ರ ನಿಯಮದಂತೆ ಲೋಕಪ್ರಖ್ಯಾತಿ ಹೊಂದಿದ, ಅಶ್ವಿನೀ ದೇವತೆಗಳನ್ನು ಸಂತೋಷದಿಂದ ನೆನೆದಳು.
ಬಂದರವರಿಬ್ಬರು ಮಹೀತಳ
ಕಿಂದುವದನೆಗೆ ಸುತರನಿತ್ತರು
ಮಂದಗಮನೆಯ ಕಳುಹಿ ಹಾಯ್ದರು ಗಗನ ಮಂಡಲಕೆ ||
ಒಂದು ವರುಷಕೆ ಕಿರಿಯರರ್ಜುನ
ಗಿಂದ ಬಳಿಕವತರಿಸಿದರು ಮುನಿ
ವೃಂದ ನೆರೆಪತಿಕರಿಸಿ ಕೊಂಡಾಡಿತು ಕುಮಾರಕರ || ೬೬ ||
ಪದವಿಭಾಗ-ಅರ್ಥ: ಬಂದರು+ ಅವರಿಬ್ಬರು ಮಹೀತಳಕೆ (ಭೂಮಿಗೆ)+ ಇಂದುವದನೆಗೆ(ಚಂದ್ರನಂತೆ ಸುಂದರವಾದ ಮುಖವುಳ್ಳ ಮಾದ್ರಿಗೆ, ಸುತರನು+ ಇತ್ತರು= ಕೊಟ್ಟರು, ಮಂದಗಮನೆಯ= ಮೆಲ್ಲಗೆ ನೆಡೆಯುವ ಮಾದ್ರಿಯನ್ನು, ಕಳುಹಿ= ಹಿಂದಕ್ಕೆ ಕಳುಹಿಸಿ, ಹಾಯ್ದರು ಗಗನ ಮಂಡಲಕೆ= ಸ್ವರ್ಗಕಡೆ ಆಕಾಶಕ್ಕೆ ಹಾರಿದರು. ಒಂದು ವರುಷಕೆ ಕಿರಿಯರು ಅರ್ಜುನಗಿಂದ= ಅರ್ಜುನನಿಗಿಂತ, ಬಳಿಕ+ ಅವತರಿಸಿದರು, ಮುನಿವೃಂದ ನೆರೆ= ಬಹಳ, ಪತಿಕರಿಸಿ= ದಯೆತೋರಿ ಅನುಗ್ರಹಿಸಿ, ಕೊಂಡಾಡಿತು ಕುಮಾರಕರ= ಕುಮಾರರನ್ನು.
ಅರ್ಥ: ಮಾದ್ರಿಯ ಪ್ರಾರ್ಥನೆಗೆ ಅಶ್ವನಿ ದೇವತೆಗಳು ಇಬ್ಬರು ಭೂಮಿಗೆ ಬಂದರು. ಸುಂದರಿಯಾದ ಮಾದ್ರಿಗೆ, ಸುತರಾಗುವಂತೆ ಹರಸಿ ವರ ಕೊಟ್ಟರು. ಮಾದ್ರಿಯನ್ನು ಹಿಂದಕ್ಕೆ ಕಳುಹಿಸಿ, ಅವರುಸ್ವರ್ಗಕಡೆ ಆಕಾಶಕ್ಕೆ ಹಾರಿದರು. ಅವರು ಅರ್ಜುನನಿಗಿಂತ ಒಂದು ವರ್ಷಕ್ಕೆ ಕಿರಿಯರು. ಬಳಿಕ ಮುನಿಗಳಸಮೂಹ ಅವರನ್ನು- ಕುಮಾರರನ್ನು ಬಹಳ ದಯೆತೋರಿ ಅನುಗ್ರಹಿಸಿ ಕೊಂಡಾಡಿತು.

ಕುಂತಿಗೆ ವಸುದೇವನ ಉಡುಗೊರೆ

[ಸಂಪಾದಿಸಿ]
ಕರಿ ತುರಗ ನಿಕರವನು ಕುಲ ಭೃ
ತ್ಯರ ವಿಲಾಸಿನಿಯರನು ರತ್ನಾ
ಭರಣ ವಸನ ಹಿರಣ್ಯ ಗೋ ಮಹಿಷಾದಿ ವಸ್ತುಗಳ ||
ತರಿಸಿದನು ಕಶ್ಯಪನು ಯದು ರಾ
ಯರ ಪುರೋಹಿತನಲ್ಲಿ ಗಾತನ
ಪರುಠವಿಸಿ ಕಳುಹಿದನು ಪಾಂಡುನೃಪಂಗೆ ವಸುದೇವ || ೬೭ ||
ಪದವಿಭಾಗ-ಅರ್ಥ: ಕರಿ ತುರಗ ನಿಕರವನು= ಆನೆ ಕುದುರೆಗಳ ಸಮೂಹವನ್ನು, ಕುಲ ಭೃತ್ಯರ ವಿಲಾಸಿನಿಯರನು= ಉತ್ತಮ ಸೇವಕರನ್ನು, ದಾಸಿಯರನ್ನು, ರತ್ನಾಭರಣ ವಸನ ಹಿರಣ್ಯ ಗೋ ಮಹಿಷ+ ಆದಿ= ರತ್ನಾಭರಣ ಬಟ್ಟೆ ಚಿನ್ನ, ಗೋವುಗಳು, ಎಮ್ಮೆಗಳೆ ಮೊದಲಾದ, ವಸ್ತುಗಳ ತರಿಸಿದನು, ಕಶ್ಯಪನು- ಯದು ರಾಯರ ಪುರೋಹಿತನು ಅಲ್ಲಿಗೆ ಆತನ ಪರುಠವಿಸಿ= ಸಿದ್ಧಗೊಳಿಸಿ ಕಳುಹಿದನು ಪಾಂಡುನೃಪಂಗೆ ವಸುದೇವ.
ಅರ್ಥ: ವಸುದೇವನು ತನ್ನ ತಂಗಿ ಕುಂತಿಗೆ ಮಕ್ಕಳಾದುದನ್ನಕೇಳಿ, ಆನೆ ಕುದುರೆಗಳ ಸಮೂಹವನ್ನು, ಉತ್ತಮ ಸೇವಕರನ್ನು, ದಾಸಿಯರನ್ನು, ರತ್ನಾಭರಣ ಬಟ್ಟೆ ಚಿನ್ನ, ಗೋವುಗಳು, ಎಮ್ಮೆಗಳು ಮೊದಲಾದ, ವಸ್ತುಗಳ ತರಿಸಿದನು. ಯದುರಾಯರ ಪುರೋಹಿತನಾದ ಕಶ್ಯಪನೊಡನೆ - ಆತನನ್ನು ಸಿದ್ಧಗೊಳಿಸಿ ಅವನ್ನು ಪಾಂಡುನೃಪನಲ್ಲಿಗೆ- ಉಡುಗೊರೆಯಾಗಿ ಕಳುಹಿದನು.
  • ಕುಂತಿಯು ಚಿಕ್ಕವಳಿದ್ದಾಗ ಅವಳನ್ನು ತನ್ನಮಿತ್ರ ಕುಂತಿಭೋಜನಿಗೆ ಮಕ್ಕಳಿಲ್ಲವೆಂದು, ವಸುದೇವನ ತಂದೆ ಅವನಿಗೆ ದತ್ತು ಕೊಟ್ಟಿದ್ದನು.
ಬಂದನಾ ಕಶ್ಯಪನು ಕುಂತೀ
ನಂದನರ ಕಂಡಖಿಳ ವಸ್ತು ವ
ನಂದು ಕಾಣಿಕೆಯಿತ್ತು ಕಂಡನು ಪಾಂಡುಭೂಪತಿಯ ||
ಅಂದು ವಸುದೇವಾದಿ ಯಾದವ
ವೃಂದ ರೋಹಿಣಿ ದೇವಕಿಯರಾ
ನಂದ ಸುಕ್ಷೇಮವನು ಕುಶಲವನರಸ ಬೆಸಗೊಂಡ || ೬೮ ||
ಪದವಿಭಾಗ-ಅರ್ಥ: ಬಂದನು+ ಆ ಕಶ್ಯಪನು ಕುಂತೀನಂದನರ= ಕುಂತಿಯ ಮಕ್ಕಳನ್ನು, ಕಂಡು+ ಅಖಿಳ= ಎಲ್ಲಾ, ವಸ್ತುವನು+ ಅಂದು ಕಾಣಿಕೆಯಿತ್ತು ಕಂಡನು ಪಾಂಡುಭೂಪತಿಯ. ಅಂದು ವಸುದೇವ+ ಆದಿ ಯಾದವವೃಂದ ರೋಹಿಣಿ ದೇವಕಿಯರ+ ಆನಂದ ಸುಕ್ಷೇಮವನು ಕುಶಲವನು+ ಅರಸ ಬೆಸಗೊಂಡ= ಕೇಳಿದನು, ವಿಚಾರಿಸಿದನು.
ಅರ್ಥ: ಆ ಕಶ್ಯಪನು ಕುಂತಿ ಇದ್ದಲ್ಲಿಗೆ ಬಂದು ಅವನು ಕುಂತಿಯ ಮಕ್ಕಳನ್ನು ಕಂಡು, ಎಲ್ಲಾ, ವಸ್ತುಗಳನ್ನು ಅಂದೇ ಕಾಣಿಕೆಯಾಗಿ ಕೊಟ್ಟು, ಪಾಂಡುಭೂಪತಿಯನ್ನು ಕಂಡನು. ಆಗ ಪಾಂಡುವು ವಸುದೇವ ಮೊದಲಾಗಿ ಯಾದವರ, ಮತ್ತು ರೋಹಿಣಿ ದೇವಕಿಯರ, ಸುಖ, ಸುಕ್ಷೇಮವನ್ನು, ಕುಶಲವನ್ನೂ ಅರಸ ಪಾಡುವು ವಿಚಾರಿಸಿದನು.
ಯಾದವರ ಸುಕ್ಷೇಮ ಕುಶಲವ
ನಾದರಿಸಿ ಬಳಿಕಾದ ಪರಮಾ
ಹ್ಲಾದದಲಿ ಕಷ್ಯಪನೊಳಾಲೋಚಿಸಿ ಮಹೀಪಾಲ ||
ವೈದಿಕೋಕ್ತಿಯ ಚೌಲವುಪನಯ
ನಾದಿ ಸಕಲ ಕ್ರಿಯೆಗಳನು ಗಾ
ರ್ಗ್ಯಾದಿ ಋಷಿಗಳನುಜ್ಞೆಯಲಿ ಮಾಡಿಸಿದನನಿಬರಿಗೆ || ೬೯ ||
ಪದವಿಭಾಗ-ಅರ್ಥ: ಯಾದವರ ಸುಕ್ಷೇಮ ಕುಶಲವನು+ ಆದರಿಸಿ ಬಳಿಕ+ ಆದ= ಉಂಟಾದ ಪರಮಾಹ್ಲಾದದಲಿ= ಸಂತೋಷದಲ್ಲಿ ಕಷ್ಯಪನೊಳು ಆಲೋಚಿಸಿ ಮಹೀಪಾಲ ವೈದಿಕೋಕ್ತಿಯ ಚೌಲ+ (ವು) ಉಪನಯನ+ ಆದಿ ಸಕಲ ಕ್ರಿಯೆಗಳನು ಗಾರ್ಗ್ಯಿ+ ಆದಿ ಋಷಿಗಳ+ ಅನುಜ್ಞೆಯಲಿ= ಅಪ್ಪಣೆಪಡೆದು ಮಾಡಿಸಿದನು+ ಅನಿಬರಿಗೆ= ಎಲ್ಲರಿಗೆ- ಪಾಂಡುವಿನ ಮಕ್ಕಳಿಗೆ.
ಅರ್ಥ: ಯಾದವರ ಸುಕ್ಷೇಮ ಕುಶಲವನ್ನು ಪಾಂಡುವು ಆದರದಲ್ಲಿ ವಿಚಾರಿಸಿದನು. ಬಳಿಕ ಪರಮ ಸಂತೋಷದಲ್ಲಿ ಕಷ್ಯಪನ ಬಳಿ ಆಲೋಚಿಸಿ ಪಾಂಡುರಾಜನು ವೈದಿಕೋಕ್ತಿಯಂತೆ ಚೌಲ, ಉಪನಯನ, ಮೊದಲಾದ ಸಕಲ ಕ್ರಿಯೆಗಳನ್ನು ಗಾರ್ಗ್ಯಿ ಮೊದಲಾದ ಋಷಿಗಳ ಅಪ್ಪಣೆಪಡೆದು ಪಾಂಡುವಿನ ಎಲ್ಲಾ ಮಕ್ಕಳಿಗೆ ಮಾಡಿಸಿದನು.
ಈತನೇ ಧರ್ಮಜನು ಯೆರಡನೆ
ಯಾತ ಭೀಮನು ಮೂರನೆ
ಯಾತನರ್ಜುನ ನಕುಲನೈದನೆಯಾತ ಸಹದೇವ ||
ಈತಗಳು ಕೌಂತೇಯ ಮಾದ್ರೇ
ಯಾತಿಶಯ ಪರಿಬೇಧರಹಿತ
ಖ್ಯಾತರೆಂದರು ಪರಮಮುನಿಗಳು ಪಾಂಡುನಂದನರ ||೭೦ ||

ಪದವಿಭಾಗ-ಅರ್ಥ: ಈತನೇ ಧರ್ಮಜನು, ಯೆರಡನೆಯಾತ ಭೀಮನು, ಮೂರನೆಯಾತನು ಅರ್ಜುನ, (ಬಳಿಕ ನಾಲ್ಕನೆಯವನು) ನಕುಲನು ಐದನೆಯಾತ ಸಹದೇವ ಈತಗಳು- ಇವರು ಕೌಂತೇಯ ಮಾದ್ರೇಯ+ ಆತಿಶಯ ಪರಿಬೇಧ-ರಹಿತ (ಬೇಧವಿರಲಿಲ್ಲ) ಖ್ಯಾತರು+ ಎಂದರು ಪರಮಮುನಿಗಳು ಪಾಂಡುನಂದನರ
ಅರ್ಥ: ಈತನೇ ಧರ್ಮಜನು (ಯುಧಿಷ್ಟಿರ), ಎರಡನೆಯವ ಭೀಮನು, ಮೂರನೆಯವನು ಅರ್ಜುನ, ಬಳಿಕ ನಾಲ್ಕನೆಯವನು ಮಾದ್ರಿಯ ಮಕ್ಕಳಾದ ನಕುಲನು ಮತ್ತು ಐದನೆಯ ಸಹದೇವ. ಇವರಲ್ಲಿ ಕೌಂತೇಯ ಅಥವಾ ಕುಂತಿಯ ಮಕ್ಕಳು, ಮಾದ್ರೇಯ ಅಥವಾ ಮಾದ್ರಿಯ ಮಕ್ಕಳು ಎಂಬ ಆತಿಶಯ ಬೇಧವಿರಲಿಲ್ಲ. ಪಾಂಡುನಂದನರಾದ ಇವರು ಪಾಂಡವರು ಎಂದು ಪ್ರಖ್ಯಾತರು ಎಂದರು ಪರಮಮುನಿಗಳು

♦♣♣♣♣♣♣♣♣♣♣♣♣♣♣♣♣♣♣♣♦
  1. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧)
  2. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)
  3. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)
  4. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)
  5. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)
  6. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)
  7. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)
  8. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮)
  9. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
  10. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]