ಪಂಪಭಾರತ ಚತುರ್ಥಾಶ್ವಾಸಂ
ಗೋಚರ
ಪಂಪಭಾರತ -ಪದವಿಭಾಗ ಮತ್ತು ಅರ್ಥ::ಚತುರ್ಥಾಶ್ವಾಸಂ
[ಸಂಪಾದಿಸಿ]- (XXV.II.IIX-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))
- ಕಂ|| ಶ್ರೀರಮಣಿಯಂ ದ್ವಿಷದ್ಬಲ
- ಪಾರಾವಾರದೊಳುದಗ್ರ ಭುಜ ವಿಜಯ ಮಹಾ|
- ಮೇರುವಿನ ಕಡೆದು ಪಡೆದಳ
- ವಾರುಮನಿೞಿಸಿದುದುದಾತ್ತನಾರಾಯಣನಾ ||೧||
- ಪದ್ಯ-೦೦:ಪದವಿಭಾಗ-ಅರ್ಥ:ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳ್ (ಶತ್ರುಗಳ ಸೈನ್ಯವೆಂಬ ಸಾಗರದಲ್ಲಿ) ಉದಗ್ರ ಭುಜ ವಿಜಯ ಮಹಾಮೇರುವಿನ (ತನ್ನ ಅತಿಶಯವೂ ವಿಜಯಪ್ರದವೂ ಆದ ತೋಳೆಂಬ ಮಹಾ ಮೇರುಪರ್ವತದಿಂದ) ಕಡೆದು ಪಡೆದ ಹೊಂದಿದ ಅಳವು ಆರುಮಂ ಇೞಿಸಿದುದು ಉದಾತ್ತನಾರಾಯಣನಾ(ಉದಾತ್ತನಾರಾಯಣನಾದ ಅರ್ಜುನನ ಅಳವು- ಪರಾಕ್ರಮವು ಆರುಮಂ ಇೞಿಸಿದುದು ಯಾರನ್ನೂ/ ಎಲ್ಲರನ್ನೂ ತಿರಸ್ಕರಿಸಿತು -ಎಲ್ಲರನ್ನೂ ಮೀರಿದ್ದು )
- ಪದ್ಯ-೦೦:ಅರ್ಥ: ಲಕ್ಷ್ಮಿದೇವಿಯನ್ನು ಶತ್ರುಸೈನ್ಯವೆಂಬ ಸಮುದ್ರದಲ್ಲಿ ತನ್ನ ಅತಿಶಯವೂ ವಿಜಯಪ್ರದವೂ ಆದ ತೋಳೆಂಬ ಮಹಾ ಮೇರುಪರ್ವತದಿಂದ ಕಡೆದು ಪಡೆದ ಅರ್ಜುನನ ಪರಾಕ್ರಮವು ಯಾರನ್ನೂ/ ಎಲ್ಲರನ್ನೂ ತಿರಸ್ಕರಿಸಿತು -ಎಲ್ಲರನ್ನೂ ಮೀರಿದ್ದು,
- ವ|| ಅಂತು ದ್ರುಪದನ ಪೊೞಲೊಳ್ ಪಾಂಡವರ್ ಚಾಗಕ್ಕೆ ಬೂತುಂ ಭೋಗಕೆ ಪೊೞ್ತುಂ ನೆರೆಯದೆನಿಸಿ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಿರ್ಪನ್ನೆಗಮಿತ್ತಲ್-
- ವಚನ:ಪದವಿಭಾಗ-ಅರ್ಥ:ಅಂತು ದ್ರುಪದನ ಪೊೞಲೊಳ್ (ಪಟ್ಟಣದಲ್ಲಿ)ಪಾಂಡವರ್ ಚಾಗಕ್ಕೆ (ದಾನ ಪಡೆಯುವುದಕ್ಕೆ) ಬೂತುಂ (ಯಾವ ಭೂತವೂ ಉಳಿಯಲಿಲ್ಲ?) ಭೋಗಕೆ ಪೊೞ್ತುಂ ನೆಯದೆನಿಸಿ (ಸುಖಪಡುವುದಕ್ಕೆ ಸಮಯವೇ ಸಾಲದೆಂಬಂತೆಯೂ) ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಿರ್ಪನ್ನೆಗಮಿತ್ತಲ್
- ವಚನ:ಅರ್ಥ:ಹಾಗೆ ದ್ರುಪದನ ಪಟ್ಟಣದಲ್ಲಿ ಪಾಂಡವರು (ತಾವು ಮಾಡುವ) ದಾನಕ್ಕೆ ಪಾತ್ರರಾದವರು ಒಬ್ಬರೂ ಉಳಿಯಲಿಲ್ಲವೆಂಬಂತೆಯೂ ಸುಖಪಡುವುದಕ್ಕೆ ಸಮಯವೇ ಸಾಲದೆಂಬಂತೆಯೂ ಸೌಖ್ಯದಿಂದ ರಾಜ್ಯವಾಳುತ್ತಿದ್ದರು ಆಗ ಇತ್ತ -
- ಮ|| ಚರರಾಗೆಯ್ದಿದರೆಯ್ದಿ ಹಸ್ತಿನಪುರಕ್ಕಾ ಪಾಂಡವರ್ ತಮ್ಮುತ
- ಯ್ವರುಮಿರ್ದರ್ ದ್ರುಪದಾರಾಜ ಪುರದೊಳ್ ಕೆಯ್ಕೊಂಡು ಪಾಂಚಾಳಿಯಂ|
- ಧುರದೊಳ್ ಕರ್ಣನನಾಂತು ಗೆಲ್ದವನವಂ ಸಂದರ್ಜುನಂ ತಳ್ತು ಸಂ
- ಗರದೊಳ್ ಶಲ್ಯನನಿಕ್ಕಿ ಗೆಲ್ದದಟನಾ ಭೀಮಂ ಗಡಂ ಕಾಣಿರೇ|| ೨||
- ಪದ್ಯ-೦೦:ಪದವಿಭಾಗ-ಅರ್ಥ:ಚರರ್ ಆಗ ಎಯ್ದಿದರ್ ಎಯ್ದಿ ಹಸ್ತಿನಪುರಕ್ಕೆ (ಗೂಢಚಾರರು ಹೊರಟು, ಹಸ್ತಿನಾಪಟ್ಟಣಕ್ಕೆ ಬಂದು ) ಆ ಪಾಂಡವರ್ ತಮ್ಮುತ ಅಯ್ವರುಂ ಇರ್ದರ್, ದ್ರುಪದಾರಾಜ ಪುರದೊಳ್(ಆ ಪಾಂಡವರು ಐದು ಮಂದಿಯೂ ದ್ರುಪದರಾಜನ ಪಟ್ಟಣದಲ್ಲಿ ಇದ್ದಾರೆ) ಕೆಯ್ಕೊಂಡು ಪಾಂಚಾಳಿಯಂ (ದ್ರೌಪದಿಯನ್ನು ಪಡೆದು) ಧುರದೊಳ್ ಕರ್ಣನನಾಂತು ಗೆಲ್ದವನವಂ ಸಂದ ಅರ್ಜುನಂ (ಯುದ್ಧದಲ್ಲಿ ಕರ್ಣನನ್ನು ಗೆದ್ದವನು ಪ್ರಸಿದ್ಧನಾದ ಅರ್ಜುನ); ತಳ್ತು (ಹಿಡಿದು, ಸೇರಿ)ಸಂಗರದೊಳ್ (ಯುದ್ಧದಲ್ಲಿ) ಶಲ್ಯನನು ಇಕ್ಕಿ ಗೆಲ್ದ ಅದಟನು ಆ ಭೀಮಂ ಗಡಂ ಕಾಣಿರೇ( ಹಿಡಿದು ಯುದ್ಧದಲ್ಲಿ ಶಲ್ಯನನ್ನೂ ಹೊಡೆದು ಸೋಲಿಸಿದ ಪರಾಕ್ರಮಿಯೇ ಭೀಮ ತಿಳಿಯಿರಿ!)
- ಪದ್ಯ-೦೦:ಅರ್ಥ: ಗೂಢಚಾರರು ಹೊರಟು, ಹಸ್ತಿನಾಪಟ್ಟಣಕ್ಕೆ ಬಂದು ಆ ಪಾಂಡವರು ಐದು ಮಂದಿಯೂ ದ್ರುಪದರಾಜನ ಪಟ್ಟಣದಲ್ಲಿ ಇದ್ದಾರೆ. ದ್ರೌಪದಿಯನ್ನು ಪಡೆದು ಯುದ್ಧದಲ್ಲಿ ಕರ್ಣನನ್ನು ಗೆದ್ದವನು ಪ್ರಸಿದ್ಧನಾದ ಅರ್ಜುನ, ಹಿಡಿದು ಯುದ್ಧದಲ್ಲಿ ಶಲ್ಯನನ್ನೂ ಹೊಡೆದು ಗೆದ್ದ ಪರಾಕ್ರಮಿಯು ಭೀಮನೇ, ತಿಳಿಯಿರಿ!
- ವ|| ಎಂಬ ಮಾತಂ ಧೃತರಾಷ್ಟ್ರ ದುರ್ಯೋಧನಾದಿಗಳ್ ಕೇಳ್ದು ಬಿಲ್ಲುಂಬೆಱಗುಮಾಗಿ
- ವಚನ:ಪದವಿಭಾಗ-ಅರ್ಥ:ಎಂಬ ಮಾತಂ ಧೃತರಾಷ್ಟ್ರ ದುರ್ಯೋಧನಾದಿಗಳ್ ಕೇಳ್ದು ಬಿಲ್ಲುಂಬೆಱಗುಮಾಗಿ (ಕೇಳಿ ಆಶ್ಚರ್ಯ ಭಯಗಳಿಂದ ಸ್ತಂಭೀಭೂತರಾಗಿ-)
- ವಚನ:ಅರ್ಥ:ಎಂಬ ಮಾತನ್ನು ಧೃತರಾಷ್ಟ್ರ ದುರ್ಯೋಧನನೇ ಮೊದಲಾದವರು ಕೇಳಿ ಆಶ್ಚರ್ಯ ಭಯಗಳಿಂದ ಸ್ತಂಭೀಭೂತರಾಗಿ-
- ಕಂ|| ಕಾಯ್ವೞಲುಱೆ ಜತುಗೃಹದೊಳ
- ಗಯ್ವರುಮಂ ಮಂತ್ರಬಲದೆ ಸುಟ್ಟೊಡಮವರಂ|
- ದೆಯ್ವಬಲಮೊಂದೆ ಕಾದುದು
- ದೆಯ್ವಮನಾರಯ್ಯ ಮೀಱಿ ಬಾೞಲ್ ನೆರೆವರ್|| ೩
- ಪದ್ಯ-೦೦:ಪದವಿಭಾಗ-ಅರ್ಥ:ಕಾಯ್ವ ಅೞಲ್ ಉಱೆ ಜತುಗೃಹದೊಳಗೆ ಅಯ್ವರುಮಂ (ಸುಡುವ ನೋವು ಉಂಟಾಗಲು; ಅರಗಿನಮನೆಯಲ್ಲಿ ಅಯ್ದುಜನರನ್ನೂ) ಮಂತ್ರಬಲದೆ ಸುಟ್ಟೊಡಂ ಅವರಂ (ಮಂತ್ರಶಕ್ತಿಯಿಂದ ಸುಟ್ಟರೂ ಅವರನ್ನು) ದೆಯ್ವಬಲಮೊಂದೆ ಕಾದುದು (ದೈವಬಲವೊಂದೇ ರಕ್ಷಿಸಿತು) ದೆಯ್ವಮನು ಆರಯ್ಯ ಮೀಱಿ ಬಾೞಲ್ ನೆರೆವರ್(ದೈವಬಲವನ್ನು ಮೀರಿ ಯಾರಯ್ಯಾ ತಾನೆ ಬದುಕುಲು ಸಮರ್ಥರು?)
- ಪದ್ಯ-೦೦:ಅರ್ಥ:ಕೌರವರು ತಮ್ಮನ್ನು ಸುಡುವ ದುಖವು ಹೆಚ್ಚಾಗುತ್ತಿರಲು (?); ತಮ್ಮ ಮಂತ್ರಶಕ್ತಿಯಿಂದ ಸುಟ್ಟರೂ ಅವರನ್ನು ದೈವಬಲವೊಂದೇ ರಕ್ಷಿಸಿತು. ದೈವಬಲವನ್ನು ಮೀರಿ ಯಾರಯ್ಯಾ ತಾನೆ ಬದುಕುಲು ಸಮರ್ಥರು? ಯಾರೂ ಇಲ್ಲ.
- ವ|| ಎಂಬುದುಂ ಭೀಷ್ಮ ದ್ರೋಣಾದಿಗಳ್ ನಿಶ್ಚಿತಮಂತ್ರರಾಗಿ ವಿದುರನಂ ಕರೆದಾಳೋಚಿಸಿ ಪೃಥಾತನೂಜರಂ ನಿನ್ನ ಬಲ್ಲ ಮಾೞ್ಕೆಯಿಂ ನುಡಿದೊಡಂಗೊಂಡು ಬರ್ಪುದೆಂದು ಪೇೞ್ದಟ್ಟುವುದುಮಾತನಂತೆ ಗೆಯ್ವೆನೆಂದು ರಥಾರೂಢನಾಗಿ ಪಾಂಚಾಳರಾಜಪುರಕ್ಕೆ ವಂದು ಪಾಂಡುಪುತ್ರರಂ ಕಂಡು-
- ವಚನ:ಪದವಿಭಾಗ-ಅರ್ಥ:ಎಂಬುದುಂ (ಪಾಂಡವರು ಬದುಕಿರುವರೆಂದು ತಿಳಿಯಲಾಗಿ) ಭೀಷ್ಮ ದ್ರೋಣಾದಿಗಳ್ ನಿಶ್ಚಿತಮಂತ್ರರಾಗಿ (ನಿಶ್ಚಯ ತೀರ್ಮಾನ ಉಳ್ಳವರಾಗಿ) ವಿದುರನಂ ಕರೆದು ಆಳೋಚಿಸಿ (ಆಲೋಚನೆ ಮಾಡಿ) ಪೃಥಾ ತನೂಜರಂ (ಪೃಥೆಯ-ಕುಂತಿಯ ಮಕ್ಕಳನ್ನು) ನಿನ್ನ ಬಲ್ಲ ಮಾೞ್ಕೆಯಿಂ ನುಡಿದೊಡಂಗೊಂಡು ಬರ್ಪುದು ಎಂದು (ನಿನಗೆ ತಿಳಿದ ರೀತಿಯಲ್ಲಿ ಬುದ್ಧಿ ಹೇಳಿ ಒಪ್ಪಿಸಿ ಕರೆದುಕೊಂಡು ಬರುವುದು ಎಂದು,) ಪೇೞ್ದು ಅಟ್ಟುವುದುಂ (ಹೇಳಿ ಕಳುಹಿಸಲು) ಆತನು ಅಂತೆ ಗೆಯ್ವೆನೆಂದು (ಹಾಗೆಯೇ ಮಾಡುತ್ತೇನೆಂದು)ರಥಾರೂಢನಾಗಿ ಪಾಂಚಾಳರಾಜಪುರಕ್ಕೆ ವಂದು (ಬಂದು) ಪಾಂಡುಪುತ್ರರಂ ಕಂಡು-
- ವಚನ:ಅರ್ಥ:ಭೀಷ್ಮ, ದ್ರೋಣ ಮೊದಲಾದವರು ನಿಷ್ಕೃಷ್ಟವಾದ ಮಂತ್ರಾಲೋಚನೆಯುಳ್ಳವರಾಗಿ ವಿದುರನ್ನು ಕರೆದು ಅವನೊಡನೆ ವಿಚಾರಮಾಡಿ ಪಾಂಡವರನ್ನು ನಿನಗೆ ತಿಳಿದ ರೀತಿಯಲ್ಲಿ ಬುದ್ಧಿ ಹೇಳಿ ಒಪ್ಪಿಸಿ ಕರೆದುಕೊಂಡು ಬರುವುದು ಎಂದು ಹೇಳಿ ಕಳುಹಿಸಿದರು. ಅವನು ಹಾಗೆಯೇ ಮಾಡುತ್ತೇನೆಂದು ತೇರನ್ನು ಹತ್ತಿ ದ್ರುಪದನ ಪಟ್ಟಣಕ್ಕೆ ಬಂದು ಪಾಂಡುಪುತ್ರರನ್ನು ನೋಡಿ
- ಚಂ|| ಅದು ಪಿರಿದುಂ ಪ್ರಮಾದಮದುವುಂ ಕುರುರಾಜನಿನಾಯ್ತು ಪೋಯ್ತು ಸಂ
- ದುದು ಮರೆಯಲ್ಕೆ ವೇೞ್ಪುದದನಾಳ್ವುದು ತಪ್ಪದೆ ಪಾಂಡುರಾಜನಾ||
- ಳ್ದುದನೆಳೆಯಂ ಮನಂ ಬಸದೆ ಬರ್ಪುದು ನೀಮೆನೆ ಪೋಪ ಕಜ್ಜಮಂ
- ವಿದುರನೊಳಯ್ವರುಂ ಸಮೆದು ಪೇೞ್ವುದುಮಾ ದ್ರುಪದಂಗೆ ರಾಜದಿಂ|| ೪||
- ಪದ್ಯ-೦೦:ಪದವಿಭಾಗ-ಅರ್ಥ:ಅದು ಪಿರಿದುಂ ಪ್ರಮಾದಂ ಅ(ಆ)ದುವುಂ ಕುರುರಾಜನಿಂ ಆಯ್ತು (ಅದು-ಆಗಿದ್ದು ದೊಡ್ಡ ತಪ್ಪು ಕುರುರಾಜನಿಂದ ಆಗಿಹೋಯಿತು,) ಪೋಯ್ತು (ಹೋಗಲಿ ಬಿಡಿ) ಸಂದುದು ಮರೆಯಲ್ಕೆ ವೇೞ್ಪುದು (ಕಳೆದುಹೋದುದನ್ನು ಮರೆತು ಬಿಡಬೇಕು) ಅದನು ಆಳ್ವುದು ತಪ್ಪದೆ ಪಾಂಡುರಾಜನು ಆಳ್ದುದನ್ ಎ(ಇ)ಳೆಯಂ -ಭೂಮಿಯನ್ನು (ಪಾಂಡುರಾಜನು ಆಳಿದ ಭೂಮಿಯನ್ನು ಬಿಡದೆ ಅದನ್ನು ನೀವು ಆಳಬೇಕು) ಮನಂ ಬಸದೆ ಬರ್ಪುದು ನೀಂ ಎನೆ (ನಿಂ-ನೀವು ಮನಸ್ಸನ್ನು ಬೇಸರಕ್ಕೆ ಒಳಪಡಿಸದೆ ಬರುವುದು, ಎನ್ನಲು) ಪೋಪ ಕಜ್ಜಮಂ (ಹೊರಡುವ ಕಾರ್ಯವನ್ನು)ವಿದುರನೊಳು ಅಯ್ವರುಂ ಸಮೆದು(ಏರ್ಪಡಿಸಿ) ಪೇೞ್ವುದುಂ ಆ ದ್ರುಪದಂಗೆ ರಾಜದಿಂ (ರಾಗದಿಂ-ಸಂತೋಷದಿಂದ)(ಹೊರಡುವ ವಿಷಯವನ್ನು ದ್ರುಪದನಿಗೆ ಸಂತೋಷದಿಂದ ತಿಳಿಸಿದರು)
- ಪದ್ಯ-೦೦:ಅರ್ಥ:ಕುರುರಾಜನಿಂದ ದೊಡ್ಡ ತಪ್ಪು ಆಗಿದೆ. ಆಗಿದ್ದು ಆಗಿ ಹೋಯಿತು- ಹೋಗಲಿ, ಕಳೆದುಹೋದುದನ್ನು ಮರೆತು ಬಿಡಬೇಕು. ಪಾಂಡುರಾಜನು ಆಳಿದ ಭೂಮಿಯನ್ನು ಬಿಡದೆ ನೀವು ಆಳಬೇಕು. ನೀವು ದೃಢಚಿತ್ತದಿಂದ ಬರಬೇಕು ಎಂದು ವಿದುರನು ಹೇಳಲು, ಪ್ರಯಾಣಮಾಡುವ ಕಾರ್ಯವನ್ನು ವಿದುರನೊಡನೆ ಅಯ್ವರೂ ಕೂಡಿ ಆಲೋಚಿಸಿ ಹೊರಡುವ ವಿಷಯವನ್ನು ದ್ರುಪದನಿಗೆ ಸಂತೋಷದಿಂದ ತಿಳಿಸಿದರು.
- ವ|| ಆತನ ಬೞಿವೞಿಗೊಟ್ಟ ಮದಕರಿ ಕರೇಣು ಜಾತ್ಯಶ್ವ ಶಶಿತಾರ ಹಾರ ವಸ್ತುಗಳಂ ಕೆಯ್ಕೊಂಡು ದ್ರುಪದಜೆಯನೊಡಗೊಂಡು ದ್ರುಪದನನಿರವೇೞ್ದ್ದು ಕತಿಪಯ ಪ್ರಯಾಣಂಗಳಿಂ ಮದಗಜಪುರಮನೆಯ್ದೆ ವಂದಾಗಳ್-
- ವಚನ:ಪದವಿಭಾಗ-ಅರ್ಥ:ಆತನ ಬೞಿವೞಿಗೊಟ್ಟ ಮದಕರಿ ಕರೇಣು ಜಾತ್ಯಶ್ವ ಶಶಿತಾರ ಹಾರ ವಸ್ತುಗಳಂ ಕೆಯ್ಕೊಂಡು (ಅವನು/ ದ್ರುಪದನು ಬಳುವಳಿಯಾಗಿ ಕೊಟ್ಟ ಮದ್ದಾನೆ, ಹೆಣ್ಣಾನೆ, ಜಾತಿಯ ಕುದುರೆಗಳು ಚಂದ್ರನಂತೆ ಹೊಳೆಯುತ್ತಿರುವ ಮುತ್ತಿನ ಹಾರ ಮೊದಲಾದ ವಸ್ತುಗಳನ್ನು ಸ್ವೀಕರಿಸಿ) ದ್ರುಪದಜೆಯನು ಒಡಗೊಂಡು ( ದ್ರೌಪದಿಯನ್ನು ಒಡಗೂಡಿಕೊಂಡು) ದ್ರುಪದನನು ಇರವೇೞ್ದ್ದು (ಕಳುಹಿಸಲು ಸ್ವಲ್ಪ ದೂರಬಂದ, ದ್ರುಪದನನ್ನು ಅಲ್ಲಿಯೇ ಇರಹೇಳಿ) ಕತಿಪಯ (ಕೆಲವು) ಪ್ರಯಾಣಂಗಳಿಂ ಮದಗಜಪುರಮನು ಎಯ್ದೆ ವಂದಾಗಳ್ (ಹಸ್ತಿನಾಪುರದ ಹತ್ತಿರ ಬಂದಾಗ)-
- ವಚನ:ಅರ್ಥ:ಅವನು/ ದ್ರುಪದನು ಬಳುವಳಿಯಾಗಿ ಕೊಟ್ಟ ಮದ್ದಾನೆ, ಹೆಣ್ಣಾನೆ, ಜಾತಿಯ ಕುದುರೆಗಳು ಚಂದ್ರನಂತೆ ಹೊಳೆಯುತ್ತಿರುವ ಮುತ್ತಿನ ಹಾರ ಮೊದಲಾದ ವಸ್ತುಗಳನ್ನು ಸ್ವೀಕರಿಸಿ ದ್ರೌಪದಿಯನ್ನು ಒಡಗೂಡಿಕೊಂಡು, ಕಳುಹಿಸಲು ಸ್ವಲ್ಪ ದೂರಬಂದ, ದ್ರುಪದನನ್ನು ಅಲ್ಲಿಯೇ ಇರಹೇಳಿ, ಕೆಲವು ದಿನದ ಪ್ರಯಾಣಗಳಿಂದ ಹಸ್ತಿನಾಪುರದ ಹತ್ತಿರ ಬಂದಾಗ-.
- ಚಂ|| ಘನಪಥಮಂ ಪಳಂಚಲೆವ ಸೌಧಚಯಂಗಳಿನಾಡುತಿರ್ಪ ಕೇ
- ತನತತಿಯಿಂ ಕರೀಂದ್ರ ಗಳಗರ್ಜನೆಯಿಂ ಪಟಹಪ್ರಣಾದಮಂ|
- ಘನರವಮೆಂದೆ ನರ್ತಿಸುವ ಕೇಕಿಗಳಿಂ ಕಡುರಯ್ಯಮಪ್ಪ ಹ
- ಸ್ತಿನಪುರಮಂ ಜಿತೇಂದ್ರಪುರಮಂ ಪರಮೇಶ್ವರರಾಗಳೆಯ್ದಿದರ್|| ೫||
- ಪದ್ಯ-೦೦:ಪದವಿಭಾಗ-ಅರ್ಥ: ಘನಪಥಮಂ ಪಳಂಚಿ ಅಲೆವ ಸೌಧಚಯಂಗಳಿಂ (ಆಕಾಶವನ್ನು ತಾಗುವ ಉಪ್ಪರಿಗೆಮನೆಗಳ ಸಮೂಹದಿಂದಲೂ) ಆಡುತಿರ್ಪ ಕೇತನತತಿಯಿಂ (ಚಲಿಸುತ್ತಿರುವ ಧ್ವಜಗಳಿಂದಲೂ) ಕರೀಂದ್ರಗಳ ಗರ್ಜನೆಯಿಂ (ಶ್ರೇಷ್ಠವಾದ ಆನೆಗಳಕೊರಳಿನ ಘೀಳಿಡುವದರಿಂದಲೂ) ಪಟಹ ಪ್ರಣಾದಮಂ ಘನರವಮೆಂದೆ (ತಮಟೆಯ (ವಾದ್ಯದ) ದೊಡ್ಡ ಮೋಡದ ಗುಡುಗಿನ ಶಬ್ದವೆಂದೇ ಭಾವಿಸುವಂತೆ) ನರ್ತಿಸುವ ಕೇಕಿಗಳಿಂ (ನವಿಲುಗಳಿಂದಲೂ) ಕಡುರಯ್ಯಮಪ್ಪ (ಬಹು ರಮ್ಯವಾದ) ಹಸ್ತಿನಪುರಮಂ ಜಿತೇಂದ್ರಪುರಮಂ (ಇಂದ್ರನಗರಿಯನ್ನು) ಪರಮೇಶ್ವರರ್ ಆಗಳ್ ಎಯ್ದಿದರ್
- ಪದ್ಯ-೦೦:ಅರ್ಥ: . ಆಕಾಶವನ್ನು ತಾಗುವ ಉಪ್ಪರಿಗೆಮನೆಗಳ ಸಮೂಹದಿಂದಲೂ ಚಲಿಸುತ್ತಿರುವ ಧ್ವಜಗಳಿಂದಲೂ ಶ್ರೇಷ್ಠವಾದ ಆನೆಗಳ ಕೊರಳಿನ ಘೀಳಿಡುವದರಿಂದಲೂ ತಮಟೆಯ (ವಾದ್ಯದ) ದೊಡ್ಡ ಶಬ್ದವನ್ನು ಮೋಡದ ಗುಡುಗೆಂದೇ ತಿಳಿದು ಕುಣಿದಾಡುತ್ತಿರುವ ನವಿಲುಗಳಿಂದಲೂ ಬಹು ರಮ್ಯವಾದ ಇಂದ್ರನಗರಿಯನ್ನೂ ಸೋಲಿಸಿದ ಹಸ್ತಿನಾಪುರವನ್ನು ರಾಜಶ್ರೇಷ್ಠರಾದ ಪಾಂಡವರು ಆಗ ಸೇರಿದರು
- ವ|| ಆಗಳಾ ಪೊೞಲ ಬೀದಿಗಳೊಳೆಲ್ಲಂ ಗಂಧೋದಕ ಪಂಚಗವ್ಯಂಗಳಂ ತಳಿಯಿಸಿ ಗುಡಿಯಂ ತೋರಣಂಗಳುಮಂ ತುಱುಗಲುಂ ಬಂಬಲುಮಾಗೆ ಕಟ್ಟಿಸಿ ಧೃತರಾಷ್ಟ್ರರ ದುರ್ಯೋಧನ ಕರ್ಣ ಶಲ್ಯ ಶಕುನಿ ನದೀತನೂಜ ಭಾರದ್ವಾಜ ಕೃಪಾದಿಗಳ್ವೆರಸಿದಿರ್ವಂದು ಯಥೋಚಿತ ಪ್ರತಿಪತ್ತಿಗಳಿಂದಯ್ವರುಮಂ ನಿಬಿಡಾಲಿಂಗನಂಗೆಯ್ದು ಮುಂದಿಟ್ಟೊಡಗೊಂಡು ವಂದು ಪೊೞಲಂಪುಗಿಸಿ ಮುನ್ನಮೆ ಸಮೆದ ಬೀಡುಗಳೊಳ್ ಬೀಡಂ ಬಿಡಿಸಿ ಸೂೞ್ಸೂಳೊಳೆ ಬಿರ್ದನಿಕ್ಕಿ ವಿವಿಧ ವಿನೋದಂಗಳಂ ತೋಱಿ ಕೆಲವು ದಿವಸಮಿರ್ದು ದ್ರೋಣ ಭೀಷ್ಮ ಕೃಪ ವಿದುರರ್ಕಳ್ ತಮ್ಮೊಳಾಲೋಚಿಸಿಯೆನ್ನ ನಡಪಿದುದರ್ಕಂ ಕೂರ್ತುದರ್ಕಂ ಪಾಂಡುಪುತ್ರರ್ಗೆ ನೆಲನಂ ಪಚ್ಚುಕೊಟ್ಟು ಪಟ್ಟಮಂ ಕಟ್ಟುವೆನೆನೆ ದುರ್ಯೋಧನನೇಗೆಯ್ದುಮೊಡಂಬಡದಿರೆ ಭೀಷ್ಮರ್ ಮುನಿದು
- ವಚನ:ಪದವಿಭಾಗ-ಅರ್ಥ:ಆಗಳಾ ಪೊೞಲ (ನಗರದ) ಬೀದಿಗಳೊಳು ಎಲ್ಲಂ ಗಂಧೋದಕ ಪಂಚಗವ್ಯಂಗಳಂ ತಳಿಯಿಸಿ (ಚಿಮುಕಿಸಿ) ಗುಡಿಯಂ (ಧ್ವಜಗಳನ್ನೂ) ತೋರಣಂಗಳುಮಂ ತುಱುಗಲುಂ ಬಂಬಲುಮಾಗೆ (ಗುಂಪುಗುಂಪಾಗಿ) ಕಟ್ಟಿಸಿ ಧೃತರಾಷ್ಟ್ರರ ದುರ್ಯೋಧನ ಕರ್ಣ ಶಲ್ಯ ಶಕುನಿ ನದೀತನೂಜ ಭಾರದ್ವಾಜ ಕೃಪಾದಿಗಳ್ ವೆರಸಿ ಇದಿರ್ವಂದು (ಮೊದಲಾದವರನ್ನು ಒಳಗೊಂಡು ಎದುರುಗೊಂಡು ಸ್ವಾಗತಿಸಿ) ಯಥೋಚಿತ ಪ್ರತಿಪತ್ತಿಗಳಿಂದ ಅಯ್ವರುಮಂ (ಮರ್ಯಾದೆ- ಸತ್ಕಾರಗಳಿಂದ ಅಯ್ದು ಜನರನ್ನೂ) ನಿಬಿಡ ಆಲಿಂಗನಂ ಗೆಯ್ದು (ಗಟ್ಟಿಯಾಗಿ ಆಲಿಂಗನ ಮಾಡಿಕೊಂಡು) ಮುಂದಿಟ್ಟು ಒಡಗೊಂಡು ವಂದು (ಬಂದು) ಪೊೞಲಂಪುಗಿಸಿ ( ಪಟ್ಟಣವನ್ನು ಪ್ರವೇಶಮಾಡಿ) ಮುನ್ನಮೆ ಸಮೆದ ಬೀಡುಗಳೊಳ್ ಬೀಡಂ ಬಿಡಿಸಿ (ಮೊದಲೇ ಸಿದ್ಧಮಾಡಿದ್ದ ಮನೆಗಳಲ್ಲಿ ತಂಗುವ ಹಾಗೆ ಮಾಡಿ) ಸೂೞ್ಸೂಳೆ (ಬಾರಿಬಾರಿಗೂ) ಬಿರ್ದನು ಇಕ್ಕಿ (ಆತಿಥ್ಯವನ್ನು ಮಾಡಿ) ವಿವಿಧ ವಿನೋದಂಗಳಂ ತೋಱಿ ಕೆಲವು ದಿವಸಂ ಇರ್ದು (ಇದ್ದು) ದ್ರೋಣ ಭೀಷ್ಮ ಕೃಪ ವಿದುರರ್ಕಳ್ ತಮ್ಮೊಳು ಆಲೋಚಿಸಿ ಯೆನ್ನ ನಡಪಿದುದರ್ಕಂ ಕೂರ್ತುದರ್ಕಂ (ಸಾಕಿದುದಕ್ಕೂ ಪ್ರೀತಿಸಿದುದಕ್ಕೂ) ಪಾಂಡುಪುತ್ರರ್ಗೆ ನೆಲನಂ (ರಾಜ್ಯವನ್ನು) ಪಚ್ಚುಕೊಟ್ಟು (ಹಂಚಿಕೊಟ್ಟು) ಪಟ್ಟಮಂ ಕಟ್ಟುವೆನು ಎನೆ (ಎನ್ನಲು) ದುರ್ಯೋಧನನು ಏಗೆಯ್ದುಂ ಒಡಂಬಡದಿರೆ (ಏನು ಮಾಡಿದರೂ ಒಪ್ಪದಿರಲು) ಭೀಷ್ಮರ್ ಮುನಿದು (ಸಿಟ್ಟಾಗಿ)-
- ವಚನ:ಅರ್ಥ:|| ಆಗ ಪಟ್ಟಣದ ಬೀದಿಗಳಲ್ಲೆಲ್ಲ ಶ್ರೀಗಂಧದ ನೀರನ್ನೂ ಪಂಚಗವ್ಯವನ್ನೂ (ಹಸುವಿಗೆ ಸಂಬಂಧಪಟ್ಟ ಹಾಲು ಮೊಸರು, ತುಪ್ಪ, ಗಂಜಲ, ಸಗಣಿ ಇವುಗಳನ್ನು ಮಿಶ್ರಮಾಡಿ ಶುದ್ಧಿಗಾಗಿ ಉಪಯೋಗಿಸುವ ಪದಾರ್ಥ) ಚಿಮುಕಿಸಿ ಧ್ವಜಗಳನ್ನೂ ತೋರಣಗಳನ್ನೂ ಗುಂಪುಗುಂಪಾಗಿ ಕಟ್ಟಿಸಿ ಧೃತರಾಷ್ಟ್ರನು ದುರ್ಯೋಧನ, ಕರ್ಣ, ಶಲ್ಯ, ಶಕುನಿ, ಭೀಷ್ಮ, ದ್ರೋಣ, ಕೃಪ ಮೊದಲಾದವರನ್ನು ಒಳಗೊಂಡು ಎದುರುಗೊಂಡು ಸ್ವಾಗತಿಸಿ, ಬಂದು ಯಥೋಚಿತವಾದ ಮರ್ಯಾದೆ- ಸತ್ಕಾರಗಳಿಂದ ಅಯ್ದು ಜನರನ್ನೂ ಗಟ್ಟಿಯಾಗಿ ಆಲಿಂಗನ ಮಾಡಿಕೊಂಡು ಮುಂದಿಟ್ಟುಕೊಂಡು ಕರೆದುತಂದು ಪಟ್ಟಣವನ್ನು ಪ್ರವೇಶಮಾಡಿದನು. ಮೊದಲೇ ಸಿದ್ಧಮಾಡಿದ್ದ ಮನೆಗಳಲ್ಲಿ ತಂಗುವ ಹಾಗೆ ಮಾಡಿ ಬಾರಿಬಾರಿಗೂ ಆತಿಥ್ಯವನ್ನು ಮಾಡಿ ನಾನಾರೀತಿಯ ವಿನೋದಗಳನ್ನು ತೋರಿಸಿ ಸಂತೋಷಪಡಿಸಿದನು. ಕೆಲವು ದಿವಸಗಳಾದ ಮೇಲೆ ದ್ರೋಣ ಭೀಷ್ಮ ಕೃಪರುಗಳು ತಮ್ಮಲ್ಲಿ ಆಲೋಚನೆ ಮಾಡಿ ನಾವು ಸಾಕಿದುದಕ್ಕೂ ಪ್ರೀತಿಸಿದುದಕ್ಕೂ (ಅನುಗುಣವಾಗಿ) ಪಾಂಡವರಿಗೆ ರಾಜ್ಯವನ್ನು ಭಾಗಮಾಡಿಕೊಟ್ಟು ಪಟ್ಟವನ್ನು ಕಟ್ಟೋಣವೆಂದು ಹೇಳಲು, ದುರ್ಯೋಧನನು ಏನು ಮಾಡಿದರೂ ಒಪ್ಪಲಿಲ್ಲ. ಭೀಷ್ಮರು ಸಿಟ್ಟಾಗಿ-
- ಚಂ|| ಒಡೆಯರದೇವರೆಂದು ನಿನಗಿತ್ತೊಡೆ ಪಟ್ಟಮನುರ್ಕಿದಪ್ಪೆ ಪೇೞ್
- ಪೊಡವಿಗಧೀಶರಂತವರ್ಗಳಯ್ವರುಮಂ ಕ್ರಮದಿಂದೆ ಪಟ್ಟಮಂ|
- ತಡೆಯದೆ ಕಟ್ಟಿ ಭೂತಳಮನಾಳಿಸದಿರ್ದೊಡದರ್ಕೆ ಸೊರ್ಕಿ ನೀಂ
- ನುಡಿಯದಿರಣ್ಣ ನಿನ್ನ ನುಡಿಗಾಂ ತಡೆದಿರ್ಪೆನೆ ಪೇೞ್ ಸುಯೋಧನಾ|| ೬||
- ಪದ್ಯ-೦೦:ಪದವಿಭಾಗ-ಅರ್ಥ:ರಾಜ್ಯವನ್ನು, ಒಡೆಯರ್ ಅದು ಏವರು (ಅಧಿಕಾರಿಗಳಾದ ಪಾಂಡವರು ಏನಾದರೋ) ಎಂದು ನಿನಗೆ ಇತ್ತೊಡೆ ಪಟ್ಟಮನು (ಕೊಟ್ಟರೆ ಪಟ್ಟವನ್ನು) ಉರ್ಕಿದಪ್ಪೆ (ಉಬ್ಬಿಹೋಗಿದ್ದೀಯೆ); ಪೇೞ್ ಪೊಡವಿಗಧೀಶರು ಅಂತ ಅವರ್ಗಳು ಐಯ್ವರುಮಂ ಕ್ರಮದಿಂದೆ ಪಟ್ಟಮಂ ತಡೆಯದೆ ಕಟ್ಟಿ (ಹೇಳು ಭೂಮಿಗೆ ಒಡೆಯರಾದ ಆ ಆಯ್ದುಜನರಿಗೂ ಸಾವಕಾಶಮಾಡದೆ ಕ್ರಮವಾಗಿ ಪಟ್ಟವನ್ನು ಕಟ್ಟಿ) ಭೂತಳಮನು ಆಳಿಸದಿರ್ದೊಡೆ ಅದರ್ಕೆ ಸೊರ್ಕಿ (ರಾಜ್ಯವನ್ನೂ ಆಳಿಸದೆ ಇದ್ದುದ್ದರಿಂದ, ಅದಕ್ಕೆ ಸೊಕ್ಕಿ) ನೀಂ ನುಡಿಯದಿರಣ್ಣ (ನೀನು ಮಾತನಾಡಬೇಡವೋ) ನಿನ್ನ ನುಡಿಗೆ ಆಂ ತಡೆದಿರ್ಪೆನೆ ಪೇೞ್ (ನಿನ್ನ ಮಾತು ಕೇಳಿ ನಾನು ತಡೆಯುವೆನೇ ಹೇಳು) ಸುಯೋಧನಾ, ಎಂದನು ಭೀಷ್ಮ.
- 'ಪದ್ಯ-೦೦:ಅರ್ಥ: ‘ಒಡೆಯರಾದ ಪಾಂಡವರು ಏನಾದರೋ ಎಂದು ನಿನಗೆ ಪಟ್ಟವನ್ನು ಕೊಟ್ಟರೆ ಕೊಬ್ಬಿಹೋಗಿದ್ದೀಯೆ. ಹೇಳು ಭೂಮಿಗೆ ಒಡೆಯರಾದ ಆ ಆಯ್ದುಜನರಿಗೂ ಸಾವಕಾಶಮಾಡದೆ ಕ್ರಮವಾಗಿ ಪಟ್ಟವನ್ನು ಕಟ್ಟಿ ರಾಜ್ಯವನ್ನೂ ಆಳಿಸದೆ ಇದ್ದುದ್ದರಿಂದ, ಅದಕ್ಕೆ ಸೊಕ್ಕಿ ನೀನು ಮಾತನಾಡಬೇಡವೋ, ನಿನ್ನ ಮಾತು ಕೇಳಿ ನಾನು ತಡೆಯುವೆನೇ ಹೇಳು ಸುಯೋಧನಾ,' ಎಂದನು ಭೀಷ್ಮ.
- ಕ್ರಮಮಱಿದೆನ್ನ ಕೊಟ್ಟುದನೆ ಕೊಂಡು ಮನೋಮುದದಿಂದೆ ಬಾೞ್ವುದಂ
- ತವರಿವರೆಲ್ಲರುಂ ಸಮನದಲ್ಲದೆ ಮಾರ್ಮಲೆದುರ್ಕಿ ಭೀಮನೊಳ್|
- ಸಮರದೆ ಗರ್ವದಿಂ ಪೊಣರಲಾರ್ಪಿರೆ ಗಾವಿಲರಿನ್ನುಮೆಲ್ಲರಂ
- ಯಮಸುತನುಂ ಸುರೇಂದ್ರಸುತನುಂ ಪೊಸದೀಗಳೆ ಮುಕ್ಕಿ ತೋಱರೇ|| ೭||
- ಪದ್ಯ-೦೦:ಪದವಿಭಾಗ-ಅರ್ಥ:ಕ್ರಮಮಱಿದು ಎನ್ನ ಕೊಟ್ಟುದನೆ ಕೊಂಡು (‘ಕ್ರಮವರಿತು ಯಾವುದು ಸರಿ ಎಂಬುದುನ್ನು ತಿಳಿದುಕೊಂಡು) ಮನೋಮುದದಿಂದೆ (ಮನಸ್ಸಂತೋಷದಿಂದ) ಬಾೞ್ವುದು ಅಂತು, ಅವರಿವರೆಲ್ಲರುಂ (ನಾನು ಕೊಟ್ಟುದುದನ್ನು ಪಡೆದು ಬಾಳುವುದು); ಸಮನ ಅದಲ್ಲದೆ (ಸಮನ -ಇಬ್ಬರೂ ಸಮಾನ); ಅದಲ್ಲದೆ ಮಾರ್ಮಲೆದು ಉರ್ಕಿ (ವಿರೋಧಿಸಿ ಉಕ್ಕಿ- ಮಿತಿಮೀರಿ) ಭೀಮನೊಳ್ ಸಮರದೆ ಗರ್ವದಿಂ ಪೊಣರಲ್ ಆರ್ಪಿರೆ (ಯುದ್ಧದಲ್ಲಿ ಗರ್ವದಿಂದ ಹೊರಾಡಲು ಸಮರ್ಥರೇ) ಗಾವಿಲರು ಇನ್ನುಂ (ನೀವು ದಡ್ಡರು! ಇನ್ನು ಹೋರಾಡಿದರೆ,) ಎಲ್ಲರಂ (ಎಲ್ಲರನ್ನೂ) ಯಮಸುತನುಂ ಸುರೇಂದ್ರಸುತನುಂ ಪೊಸದು ಈಗಳೆ ಮುಕ್ಕಿ ತೋಱರೇ (ಧರ್ಮರಾಜನೂ ಅರ್ಜುನನೂ ಈಗಲೇ ನಿಮ್ಮನ್ನು ಹೊಸೆದು ತಿಂದು ತೋರಿಸಲಾರರೇ?).
- ಪದ್ಯ-೦೦:ಅರ್ಥ: ನಾನು(ಬೀಷ್ಮ) ‘ಕ್ರಮವರಿತು ಯಾವುದು ಸರಿ ಎಂಬುದುನ್ನು ತಿಳಿದುಕೊಂಡು ನಾನು ಕೊಟ್ಟುದುದನ್ನು ಪಡೆದು ಮನಸ್ಸಂತೋಷದಿಂದ ಬಾಳುವುದು; ಹಾಗೆ ಅವರು ಇವರು (ಪಾಂಡವರು ಕೌರವರು) ಇಬ್ಬರೂ ಸಮಾನ, ಅದನ್ನು ತಿಳಿಯದೆ ವಿರೋಧಿಸಿ ಮಿತಿಮೀರಿ, ಭೀಮನನ್ನು ಯುದ್ಧದಲ್ಲಿ ಅಹಂಕಾರದಿಂದ ಕಾದಬಲ್ಲಿರಾ? ನೀವು ದಡ್ಡರು! ಇನ್ನು ಹೋರಾಡಿದರೆ, ಎಲ್ಲರನ್ನೂ ಧರ್ಮರಾಜನೂ ಅರ್ಜುನನೂ ಈಗಲೇ ನಿಮ್ಮನ್ನು ಹೊಸೆದು ತಿಂದು ತೋರಿಸಲಾರರೇ? ಎಂದನು ಭೀಷ್ಮ.
- ವ|| ಅದಲ್ಲದೆಯುಂ ಪಾಂಡುಪುತ್ರರಪ್ಪೊಡೆ ಪಾಂಡುರಾಜಂಗೆ ಬೆಸಕೆಯ್ಯದುದನೆನಗೆ ಬೆಸಕೆಯ್ವರೆನ್ನೆಂದುದಂ ವಿಱುವರಲ್ಲರಾನವರ್ಗೆ ಪಟ್ಟಮಂ ಕಟ್ಟಿ ನೆಲನಂ ಪಚ್ಚುಕೊಡುವಾಗಳಡ್ಡಂ ಬರ್ಪ ಗಂಡರಂ ನೋೞ್ಪೆನೆಂದು ಬೀಷ್ಮರ್ ಬಗ್ಗಿಸಿದೊಡೆ ದುರ್ಯೋಧನನತಿ ಸಂಭ್ರಮಾಕುಳಿತನಾಗಿ ನೀಮೆಂದುದನೆಂದು ಬಾೞ್ವೆನೆಂದೊಡಪ್ಪುದೆಂದು-
- ವಚನ:ಪದವಿಭಾಗ-ಅರ್ಥ:ಅದಲ್ಲದೆಯುಂ ಪಾಂಡುಪುತ್ರರು ಅಪ್ಪೊಡೆ ಪಾಂಡುರಾಜಂಗೆ ಬೆಸಕೆಯ್ಯದುದನು ಎನಗೆ ಬೆಸಕೆಯ್ವರು (ಪಾಂಡವರಾದರೋ ತಮ್ಮ ತಂದೆಯಾದ ಪಾಂಡುರಾಜನಿಗೆ ವಿಧೇಯರಾಗಿ ಮಾಡದಿದ್ದುದನ್ನು ನನಗೆ ಮಾಡುತ್ತಾರೆ) ಎನ್ನೆಂದುದಂ ವಿಱುವರಲ್ಲರ್ (ನಾನು ಹೇಳಿದುದನ್ನು ಮೀರುವವರಲ್ಲ) ಆನು ಅವರ್ಗೆ ಪಟ್ಟಮಂ ಕಟ್ಟಿ ನೆಲನಂ (ರಾಜ್ಯವನ್ನು) ಪಚ್ಚುಕೊಡುವಾಗಳು (ಹಂಚಿಕೊಡುವಾಗ) ಅಡ್ಡಂ ಬರ್ಪ ಗಂಡರಂ ನೋೞ್ಪೆನು (ಅಡ್ಡ ಬರುವ ಶೂರರನ್ನು ನೋಡಿಯೆ ಬಿಡುತ್ತೇನೆ), ಎಂದು ಬೀಷ್ಮರ್ ಬಗ್ಗಿಸಿದೊಡೆ (ಎಂದು ಭೀಷ್ಮರು ಗದರಿಸಲು) ದುರ್ಯೋಧನನು ಅತಿ ಸಂಭ್ರಮಾಕುಳಿತನಾಗಿ (ಬಹಳ ವ್ಯಥೆಯಿಂದ ಗಾಬರಿಗೊಂಡು) ನೀಮೆಂದುದನು ಎಂದು ಬಾೞ್ವೆನೆಂದೊಡೆ ಅಪ್ಪುದು ಎಂದು(ನೀವು ಹೇಳಿದುದನ್ನೇ ಒಪ್ಪಿ ಬಾಳುತ್ತೇನೆ ಎಂದು ಒಪ್ಪಿಕೊಂಡನು)-
- ವಚನ:ಅರ್ಥ:ಅದಲ್ಲದೆ ಪಾಂಡವರಾದರೋ (ತಮ್ಮ ತಂದೆಯಾದ) ಪಾಂಡುರಾಜನಿಗೆ ವಿಧೇಯರಾಗಿ ಮಾಡದಿದ್ದುದನ್ನು ನನಗೆ ಮಾಡುತ್ತಾರೆ. ನಾನು ಹೇಳಿದುದನ್ನು ಮೀರುವವರಲ್ಲ. ನಾನು ಅವರಿಗೆ ಪಟ್ಟವನ್ನೂ ಕಟ್ಟಿ ರಾಜ್ಯವನ್ನು ಹಂಚಿಕೊಡುವಾಗ ಅಡ್ಡ ಬರುವ ಶೂರರನ್ನು ನೋಡಿಯೆ ಬಿಡುತ್ತೇನೆ ಎಂದು ಭೀಷ್ಮರು ಗದರಿಸಲು, ದುರ್ಯೋಧನನು ಬಹಳ ವ್ಯಥೆಯಿಂದ ಗಾಬರಿಗೊಂಡು ನೀವು ಹೇಳಿದುದನ್ನೇ ಒಪ್ಪಿ ಬಾಳುತ್ತೇನೆ ಎಂದು ಒಪ್ಪಿಕೊಂಡನು.
- ಮ|| ಧರಣೀನಾರಿಗೆ ಪಾಂಡುವಿಂ ಬೞಿಯಮಿಲ್ಲಾರುಂ ಪೆಱರ್ ಗಂಡರಂ
- ತಿರಲೇವಂ ಬಡೆದಿರ್ದೊಡೞ್ದು ಕಿಡುಗುಂ ಸಪ್ತಾಂಗವಮೀರಾಜಕ|
- ಕ್ಕರಸಂ ಧರ್ಮಜನಕ್ಕುಮೆಂದು ನಯದಿಂ ನಿಶೈಸಿ ಕಲ್ಯಾಣ ಕಾ
- ರ್ಯರತರ್ ಕಟ್ಟಿದರಾ ಯುಷ್ಠಿರನೃಪಂಗುತ್ಸಾಹದಿಂ ಪಟ್ಟಮಂ|| ೮||
- ಪದ್ಯ-೦೦:ಪದವಿಭಾಗ-ಅರ್ಥ:ಧರಣೀನಾರಿಗೆ ಪಾಂಡುವಿಂ ಬೞಿಯಂ ಇಲ್ಲ ಆರುಂ ಪೆಱರ್ ಗಂಡರ್ (ಭೂದೇವಿಗೆ ಪಾಂಡುರಾಜನಾದ ಮೇಲೆ ಬೇರೆ ಯಾರೂ ಒಡೆಯರು/ರಾಜರು ಇಲ್ಲ.) ಅಂತಿರಲ್ ಏವಂಬಡೆದೆ ಇರ್ದೊಡೆ (ಹೊಂದಾಣಿಕೆ ಇಲ್ಲದೆ ಮಾತ್ಸರ್ಯಪಟ್ಟರೆ ) ಅೞ್ದು ಕಿಡುಗುಂ ಸಪ್ತಾಂಗಂ (ರಾಜ್ಯದ ಸಪ್ತಾಂಗಗಳೂ ನಾಶವಾಗುತ್ತವೆ.) ಈ ರಾಜಕಕ್ಕೆ ಅರಸಂ ಧರ್ಮಜನು ಅಕ್ಕುಂ ಎಂದು ನಯದಿಂ (ಈ ರಾಜ್ಯಕ್ಕೆ ಧರ್ಮರಾಯನು ರಾಜನಾಗಲಿ ಎಂದು ನಯದಿಂ-ರಾಜನೀತಿಗೆ ಅನುಗುಣವಾಗಿ) ನಿಶೈಸಿ ಕಲ್ಯಾಣ ಕಾರ್ಯರತರ್ (ರಾಜ್ಯದ ಕಲ್ಯಾಣಚಿಂತಕರು) ಕಟ್ಟಿದರು ಆ ಯುಷ್ಠಿರನೃಪಂಗೆ ಉತ್ಸಾಹದಿಂ ಪಟ್ಟಮಂ|
- ಪದ್ಯ-೦೦:ಅರ್ಥ: ಈ ಭೂದೇವಿಗೆ ಪಾಂಡುರಾಜನಾದ ಬಳಿಕ ಬೇರೆ ಯಾರೂ ಒಡೆಯರು/ರಾಜರು ಇಲ್ಲ. ಹಾಗಿರುವಾಗ ನಿಮ್ಮಲ್ಲಿ ಹೊಂದಾಣಿಕೆ ಇಲ್ಲದೆ ಮಾತ್ಸರ್ಯಪಟ್ಟರೆ ರಾಜ್ಯದ ಸಪ್ತಾಂಗಗಳೂ ನಾಶವಾಗುತ್ತವೆ. ಈ ರಾಜ್ಯಕ್ಕೆ ಧರ್ಮರಾಯನು ರಾಜನಾಗಲಿ ಎಂದು ರಾಜನೀತಿಗನುಗುಣವಾಗಿ ರಾಜ್ಯದ ಕಲ್ಯಾಣಚಿಂತಕರಾದ ಭೀಷ್ಮಾದಿಗಳು ಆ ಧರ್ಮರಾಜನಿಗೆ ಉತ್ಸಾಹದಿಂದ ಪಟ್ಟವನ್ನು ಕಟ್ಟಿದರು.
- ವ|| ಕಟ್ಟಿ ಸೇತುಬಂಧಮಂ ತಾಗೆ ಗಂಗಾನದಿಯ ತೆಂಕಣ ಪಡುವಣ ನೆಲನಂ ನೀಮಾಳ್ವುದು, ಮೂಡಣ ಬಡಗಣ ನೆಲನಂ ದುರ್ಯೋಧನನಾಳ್ವುದೆಂದು ಧೃತರಾಷ್ಟ್ರಂ ಪೂರ್ವಸ್ಥಿತಿಳ್ ಪಚ್ಚುಕೊಟ್ಟು ದುರ್ಯೋಧನನಪ್ಪೊಡೆ ಪೊಲ್ಲಮಾನಸಂ ನೀಮುಂ ತಾಮುಮೊಂದೆಡೆಯೊಳಿರೆ ಕಿಸುರುಂ ಕಲಹಮುಮೆಂದುಂ ಕುಂದದದು ಕಾರಣದಿಂದಿಲ್ಲಿಗಱುವತ್ತು ಯೋಜನದೊಳಿಂದ್ರಪ್ರಸ್ಥಮೆಂಬುದು ಪೊೞಲಲ್ಲಿಗೆ ಪೋಗಿ ಸುಖದಿಂ ರಾಜ್ಯಂಗೆಯ್ಯುತ್ತಿರಿ ಮೆಂಬುದುಮಂತೆಗೆಯ್ವೆಮೆಂದು ಸಮಸ್ತ ಪರಿವಾರ ಪರಿವೃತರಾಗಿ-
- ವಚನ:ಪದವಿಭಾಗ-ಅರ್ಥ:ಕಟ್ಟಿ ಸೇತುಬಂಧಮಂ ತಾಗೆ ಗಂಗಾನದಿಯ ತೆಂಕಣ ಪಡುವಣ ನೆಲನಂ ನೀಂ ಆಳ್ವುದು (ಪಟ್ಟಕಟ್ಟಿದ ನಂತರ, ದಕ್ಷಿಣ ಪಶ್ಚಿಮಭಾಗದ ಭೂಮಿಯನ್ನು ನೀವು-ಪಾಂಡವರು ಆಳುವುದು)) ಮೂಡಣ ಬಡಗಣ ನೆಲನಂ ದುರ್ಯೋಧನನು ಆಳ್ವುದೆಂದು (ಪೂವೋತ್ತರಭಾಗದ ನೆಲವನ್ನು ದುರ್ಯೋಧನನಾಳತಕ್ಕದ್ದು ಎಂದು) ಧೃತರಾಷ್ಟ್ರಂ ಪೂರ್ವಸ್ಥಿತಿಳ್ ಪಚ್ಚುಕೊಟ್ಟು (ತರಾಷ್ಟ್ರನು ಮೊದಲಿನ ರೀತಿಯಲ್ಲಿಯೇ ಭಾಗಮಾಡಿಕೊಟ್ಟು) ದುರ್ಯೋಧನನು ಅಪ್ಪೊಡೆ ಪೊಲ್ಲಮಾನಸಂ (ದುರ್ಯೋಧನನಾದರೆ ದುರ್ಬುದ್ಧಿಯವನು.) ನೀಮುಂ ತಾಮುಂ ಒಂದೆಡೆಯೊಳು ಇರೆ ಕಿಸುರುಂ ಕಲಹಮುಂ (ಅಸೂಯೆ ಕಲಹವು ) ಎಂದುದುಂ ಕುಂದದದು (ತಪ್ಪುವುದಿಲ್ಲ) ಕಾರಣದಿಂದ ಇಲ್ಲಿಗೆ ಅಱುವತ್ತು (೬೦) ಯೋಜನದೊಳು ಇಂದ್ರಪ್ರಸ್ಥಮೆಂಬುದು ಪೊೞಲ್ (ನಗರ) ಅಲ್ಲಿಗೆ ಪೋಗಿ ಸುಖದಿಂ ರಾಜ್ಯಂಗೆಯ್ಯುತ್ತಿರಿ ( ರಾಜ್ಯವಾಳುತ್ತಿರಿ ) ಮೆಂಬುದುಂ ಅಂತೆ ಗೆಯ್ವೆಮೆಂದು (ಹಾಗೆಯೇ ಮಾಡುತ್ತೇವೆ ಎಂದು) ಸಮಸ್ತ ಪರಿವಾರ ಪರಿವೃತರಾಗಿ-
- ವಚನ:ಅರ್ಥ:ಪಟ್ಟಕಟ್ಟಿದ ನಂತರ,ರಾಮಸೇತುವಿನಿಂದ ಹಿಡಿದು ಗಂಗಾನದಿಯ ದಕ್ಷಿಣ ಪಶ್ಚಿಮಭಾಗದ ಭೂಮಿಯನ್ನು ನೀವು-ಪಾಂಡವರು ಆಳುವುದು. ಪೂವೋತ್ತರಭಾಗದ ನೆಲವನ್ನು ದುರ್ಯೋಧನನಾಳತಕ್ಕದ್ದು ಎಂದು ಧೃತರಾಷ್ಟ್ರನು ಮೊದಲಿನ ರೀತಿಯಲ್ಲಿಯೇ ಭಾಗಮಾಡಿಕೊಟ್ಟು; ದುರ್ಯೋಧನನಾದರೆ ದುರ್ಬುದ್ಧಿಯವನು. ನೀವೂ ಅವರೂ ಒಂದೇ ಕಡೆ ಇದ್ದರೆ ಅಸೂಯೆ ಕಲಹವು ಎಂದೂ ತಪ್ಪುವುದಿಲ್ಲ. ಆದ ಕಾರಣದಿಂದ ಇಲ್ಲಿಗೆ ಅರವತ್ತುಯೋಜನ ದೂರದಲ್ಲಿ ಇಂದ್ರಪ್ರಸ್ಥವೆಂಬ ಪಟ್ಟಣವಿದೆ. ಅಲ್ಲಿಗೆ ಹೋಗಿ ಸುಖವಾಗಿ ರಾಜ್ಯವಾಳುತ್ತಿರಿ ಎಂದನು. ಹಾಗೆಯೇ ಮಾಡುತ್ತೇವೆ ಎಂದು ಪಾಂಡವರು ಸಮಸ್ತ ಪರಿವಾರ ಸಹಿತರಾಗಿ-
- ಮು|| ಒಡವರ್ಪುಗ್ರ ಮದೇಭ ವಾಜಿ ಗಣಿಕಾನರ್ಘ್ಯಾದಿ ರತ್ನಂಗಳೊಳ್
- ತೊಡರ್ದೊಪ್ಪುತ್ತಿರೆ ಲಕ್ಷ್ಮಿ ದಂತಿ ತುರಗಂ ಶ್ರೀ ದಿವ್ಯಕಾಂತಾಜನಂ|
- ತೊಡೆವೆಂಬೊಂದುಮನಾ ಸುರಾಸುರರಿನಾ ಗೋವಿಂದನಿಂ ಮುನ್ನೆ ಕೋ
- ಳ್ಪಡೆದಂಭೋನಿಧಿಯಂತೆ ಬಂದು ನೆಗೞ್ದಂದ್ರಪ್ರಸ್ಥಮಂ ಧರ್ಮಜಂ|| ೯||
- ಪದ್ಯ-೦೦:ಪದವಿಭಾಗ-ಅರ್ಥ:(ಪಾಂಡವರ) ಒಡವರ್ಪು (ಜೊತೆಯಲ್ಲಿಯೇ ಬರುತ್ತಿದ್ದ) ಉಗ್ರ ಮದೇಭ ವಾಜಿ ಗಣಿಕಾ ಅನರ್ಘ್ಯ ಆದಿ ರತ್ನಂಗಳೊಳ್ ತೊಡರ್ದು (ಇವೆಲ್ಲವೂ ಜೊತೆಯಲ್ಲಿ ಸೇರಿ) ಒಪ್ಪುತ್ತಿರೆ (ಶೋಬಿಸುತ್ತಿರಲು) ಲಕ್ಷ್ಮಿ ದಂತಿ ತುರಗಂ ಶ್ರೀ ದಿವ್ಯಕಾಂತಾಜನಂ (ಲಕ್ಷ್ಮಿ, ಐರಾವತ, ಉಚ್ಚೆ ಶ್ರವಸ್ಸು, ದೇವದಾನವರಿಂದಲೂ) ತೊಡೆವು (ಆಭರಣಗಳಿಂದಲೂ) ಎಂಬ ಒಂದುಮನು (ಎನ್ನುವ ಎಲ್ಲವನ್ನೂ ) ಆ ಸುರ ಅಸುರರಿನ ಆ ಗೋವಿಂದನಿಂ ಮುನ್ನೆ ಕೋಳ್ಪಡೆದ (ದೇವದಾನವರಿಂದಲೂ ವಿಷ್ಣುವಿನಿಂದಲೂ ಸಮುದ್ರ ಮಥನದಲ್ಲಿ ಸೂರೆಯಾಗುವುದಕ್ಕೂ ಮೊದಲಿದ್ದ) ಅಂಭೋನಿಧಿಯಂತೆ (ಸಮುದ್ರದಂತೆ) ಬಂದು ನೆಗೞ್ದ ಇಂದ್ರಪ್ರಸ್ಥಮಂ (ಪ್ರಸಿದ್ಧವಾದ ಇಂದ್ರಪ್ರಸ್ಥಪುರವನ್ನು) ಧರ್ಮಜಂ(ಧರ್ಮರಾಯನು,- ಸೇರಿದನು)
- ಪದ್ಯ-೦೦:ಅರ್ಥ: ಪಾಂಡವರ ಜೊತೆಯಲ್ಲಿಯೇ ಬರುತ್ತಿದ್ದ ಭಯಂಕರವಾದ ಆನೆ, ಕುದುರೆ, ವೇಶ್ಯೆಯರು, ವಿಶೇಷ ಬೆಲೆಯುಳ್ಳ ರತ್ನ ಇವೆಲ್ಲವೂ ಜೊತೆಯಲ್ಲಿ ಶೋಬಿಸುತ್ತಿರಲು ಆ ಪಾಂಡವರು ದೇವದಾನವರಿಂದಲೂ ಲಕ್ಷ್ಮಿ, ಐರಾವತ, ಉಚ್ಚೆ ಶ್ರವಸ್ಸು, ಅಪ್ಸರಸ್ತ್ರೀಯರು, ಚಿಂತಾಮಣಿ ಮೊದಲಾದವುಗಳು ಸಮುದ್ರ ಮಥನದಲ್ಲಿ ಸೂರೆಯಾಗುವುದಕ್ಕೆ ಮೊದಲಿದ್ದ ಸಮುದ್ರದ ಹಾಗೆ ಸಂಪೂರ್ಣವಾದ ಐಶ್ವರ್ಯದಿಂದ ಬಂದು ಧರ್ಮರಾಯನು ಪ್ರಸಿದ್ಧವಾದ ಇಂದ್ರಪ್ರಸ್ಥಪುರವನ್ನು ಸೇರಿದನು.
- ಮಟ್ಟರಗಳೆ|| ಎಯ್ದುವುದುಂ ತತ್ಪುರದುಪವನಂಗಳವಿರಳ ಮಳಯಾನಿಳಕಂಪಿತಂಗ|
- ಎಯ್ದುವುದುಂ (ನಗರಕ್ಕೆ- ಸೇರುತ್ತಲೂ) ತತ್ಪುರದ (ತತ್-ಆ ಪುರದ) ಉಪವನಂಗಳ ಅವಿರಳ (ದಟ್ಟವಾದ); ಮಳಯಾನಿಳ (ಮಲಯಮಾರುತದ)
- ಳ ವಿರಳ ಕುಸುಮಾವಳಿ ಕಂಪುವೇರೆ ಸೊಗಯಿಪ ಕಿಱು ಮಿಡಿಗಳೊಳೊಪ್ಪಿ ತೋರೆ|
- ಕಂಪಿತಂಗಳ ವಿರಳ ಕುಸುಮ ಆವಳಿ ಕಂಪುವೇರೆ (ರಾಶಿ ಹೂವುಗಳ ಪರಿಮಳವನ್ನು ಹೊರಲು) ಸೊಗಯಿಪ (ಸುಂದರ) ಕಿಱು ಮಿಡಿಗಳೊಳು(ಸಣ್ಣಹಿಚುಗಳಲ್ಲಿ) ಒಪ್ಪಿ ತೋರೆ (ಚನ್ನಾಗಿ ಕಾಣಲು)
- ಲವಣಾಬ್ಧಿಯೆ ಬಳಸಿದುದೆನಿಸುವಗೞ ಬಳಸೆಸೆದಿರೆ ಕೋಂಟೆಯ ಚೆಲ್ವು ಪೊಗೞ|
- ಲವಣಾಬ್ಧಿಯೆ ಬಳಸಿದುದು ಎನಿಸುವ ಅಗೞ (ಅಗಳ) ಬಳಸೆಇ ಎಸೆದಿರೆ (ಉಪ್ಪಿನ ಸಮುದ್ರವೇ ಸುತ್ತುವರಿದಿದೆಯೋ ಎಂಬಂತಿದ್ದ ಕಂದಕಗಳು ಸುತ್ತಿ ಶೋಬಿಸುತ್ತಿರಲು) ಕೋಂಟೆಯ ಚೆಲ್ವು ಪೊಗೞ|
- ಲರಿದೆನಿಸಿರೆ ನೆಗೆದುದು ನಭಮನೆಯ್ದೆ ಮಿಳಿರ್ವ ಪತಾಕಾವಳಿ ದಿವಮನೆಯ್ದೆ
- ಪೊಗೞಲು ಅರಿದು ಎನಿಸಿರೆ (ಕೋಟೆಯ ಸೌಂದರ್ಯವು ಹೊಗಳಲು ಅಸಾಧ್ಯವೆನಿಸಿರಲು) ನೆಗೆದುದು ನಭಮನು ಎಯ್ದೆ (ಆಕಾಶಕ್ಕೆ ಮೇಲಕ್ಕೆದ್ದು) ಮಿಳಿರ್ವ (ಅಲುಗುವ) ಪತಾಕಾವಳಿ ದಿವಮನು ಐಯ್ದೆ (ಅಲುಗಾಡುತ್ತಿರುವ ಬಾವುಟಗಳ ಸಾಲು ಸ್ವರ್ಗದವರೆಗೂ ಹೋಗಿದ್ದುವು.)
- ಬಳಸಿದ ಕೆಂಬೊನ್ನ ಮದಿಲ್ಗಳೊಳಗೆ ಮಣಿಮಯ ಭವನಾವಳಿ ತೊಳಗಿ ಬೆಳಗೆ
- ಬಳಸಿದ ಕೆಂಬೊನ್ನ ಮದಿಲ್ಗಳೊಳಗೆ(ಸುತ್ತುವರಿದ ಕೆಂಪು ಚಿನ್ನದಿಂದ ಮಾಡಿದ ಕೋಟೆಯ ಗೋಡೆಗಳೊಳಗೆ) ಮಣಿಮಯ ಭವನಾವಳಿ ತೊಳಗಿ ಬೆಳಗೆ (ರತ್ನಖಚಿತವಾದ ಅರಮನೆಗಳ ಸಮೂಹಗಳು ತೊಳಗಿ ಬೆಳಗುತ್ತಿದ್ದುವು)
- ರಸ ರಸದ ಬಾವಿ ಮನೆ ಮನೆಗೆ ಬೇರೆ ಕಿಸುಗಲ್ಗಳ ರಜದ ಕಣಿವೆರಸು ತೋರೆ
- ರಸ ರಸದ ಬಾವಿ ಮನೆ ಮನೆಗೆ ಬೇರೆ (ಬೇರೆ ಬೇರೆ ರಸಯುಕ್ತ ಬಾವಿಗಳು ಪ್ರತಿಮನೆಯಲ್ಲೂ) ಕಿಸುಗಲ್ಗಳ ರಜದ ಕಣಿವೆರಸು (ಕೆಂಪುರತ್ನಗಳ ಧೂಳಿನ ಗಣಿಯಿಂದ ಕೂಡಿ)
- ತೋರೆ ಸುರುಕುಜದ ನೆೞಲೊಳಂಗಣದೊಳೇನುಮಲಪಿಲ್ಲದೆ ಕಟ್ಟಿರೆ ಕಾಮಧೇನು
- ತೋರೆ ಸುರುಕುಜದ ನೆೞಲೊಳು (ಕಲ್ಪವೃಕ್ಷದ ನೆರಳಿನಲ್ಲಿ ಕಾಮಧೇನುವು ತೋರುತ್ತಿತ್ತು) ಆಂಗಣದೊಳು ಏನುಂ ಅಲಪಿಲ್ಲದೆ (ಅಲೆದಾಟವಿಲ್ಲದೆ) ಕಟ್ಟಿರೆ (ಹಸುವನ್ನು ಕಟ್ಟಿರಲು)
- ಪರದರ ಪಾರ್ವರ ಸೂಳೆಯರ ಮನೆಗಳವು ಧನದನ ಮನೆಯುಮನೇೞಪ ಮನೆಗಳವು
- ಪರದರ ಪಾರ್ವರ ಸೂಳೆಯರ ಮನೆಗಳವು ಧನದನ (ಕುಬೇರನ) ಮನೆಯುಮನು ಏೞಪ (ಹೆಚ್ಚಿನ) ಮನೆಗಳವು(ವ್ಯಾಪಾರಿಗಳ, ಬ್ರಾಹ್ಮಣರ, ವೇಶ್ಯಾಜನರ ಮನೆಗಳು ಕುಬೇರನ ಮನೆಗೂ ಹೆಚ್ಚಿನವು)
- ಪೊೞಲ ಬೆಡಂಗಂ ಮೆಚ್ಚಿ ಮೆಚ್ಚಿ ನೋಡಿ ದಿವಿಜೇಂದ್ರ ವಿಳಾಸದೊಳಿಂತು ಕೂಡಿ
- ಪೊೞಲ ಬೆಡಂಗಂ ಮೆಚ್ಚಿ ಮೆಚ್ಚಿ ನೋಡಿ ದಿವಿಜೇಂದ್ರ ವಿಳಾಸದೊಳು ಇಂತು ಕೂಡಿ(ಆ ಪಟ್ಟಣದ ಬೆಡಗನ್ನು ವಿಶೇಷವಾಗಿ ಮೆಚ್ಚಿ ದೇವೇಂದ್ರನ ವೈಭವದಿಂದ ಹೀಗೆ ಕೂಡಿ ಪಾಂಡವರು )
- ಪರಿತಂದಾಗಳ್ ಪಿರಿದೊಸಗೆವೆರಸಿ ಪುರಕಾಂತೆಯರಾದರದಿಂದೆ ಪರಸಿ
- ಪರಿತಂದಾಗಳ್ (ನಡೆದುಬಂದಾಗ) ಪಿರಿದು(ಹಿರಿದು) ಒಸಗೆವೆರಸಿ (ಉತ್ಸವದೊಡನೆ) ಪುರಕಾಂತೆಯರು ಆದರದಿಂದೆ ಪರಸಿ(ಪಟ್ಟಣದ ಸ್ತ್ರೀಜನರು ವಿಶೇಷ ಸಂತೋಷದಿಂದ ಕೂಡಿ ಆದರದಿಂದ ಹರಸಿದರು.)
- ಸೂಸುವ ಶೇಷಾಕ್ಷತಮಂ ಸಮಂತು ಪಿರಿದುಂ ಮನ ಸಂತಸದಿಂದಮಾಂತು
- ಸೂಸುವ ಶೇಷಾಕ್ಷತಮಂ ಸಮಂತು ಪಿರಿದುಂ ಮನ ಸಂತಸದಿಂದಂ ಆಂತು (ಅವರು ಚೆಲ್ಲುವ ಮಂತ್ರಾಕ್ಷತೆಯನ್ನೂ ಬಹಳ ಮನಸ್ಸಂತೋಷದಿಂದ ಸ್ವೀಕರಿಸಿ)
- ಕರುಮಾಡಮನಾದರದಿಂದಮೇಱಿ ಕೆಲದೊಳ್ಮಾಡಂಗಳನಱಿದು ತೋಱಿ
- ಕರುಮಾಡಮನು (ಉಪ್ಪರಿಗೆಯನ್ನು)ಆದರದಿಂದಂ ಏಱಿ (ಹತ್ತಿ) ಕೆಲದೊಳ್ ಮಾಡಂಗಳನು ಅಱಿದು ತೋಱಿ(ಪಕ್ಕದಲ್ಲಿದ್ದ ಮಾಡಗಳನ್ನು ತೋರಿಸಿದಾಗ ಪರಿಚಯಮಾಡಿಕೊಂಡರು)
- ಮಣಿ ಕನಕ ರಜತ ವಸ್ತುಗಳನಿತ್ತು ಬೇಡಿದ ನಾಡುಗಳನವಯವದಿಂದಮಿತ್ತು
- ಮಣಿ ಕನಕ ರಜತ ವಸ್ತುಗಳನಿತ್ತು ಬೇಡಿದ ನಾಡುಗಳನು ಅವಯವದಿಂದಂ ಇತ್ತು (ಆರ್ಥಿಗಳು ಬೇಡಿದ ಚಿನ್ನ, ಬೆಳ್ಳಿ, ರತ್ನಖಚಿತವಾದ ವಸ್ತುಗಳನ್ನೂ ಭೂಮಿಗಳನ್ನೂ ಶ್ರಮವಿಲ್ಲದೆ ದಾನಮಾಡಿ-.
- ಕರಿ ತುರಗ ಬಲಂಗಳ್ ಪೆರ್ಚುವಂತು ಮಲೆಯುಂ ಮಂಡಲಮುಂ ಬೆರ್ಚುವಂತು
- ಕರಿ ತುರಗ ಬಲಂಗಳ್ ಪೆರ್ಚುವಂತು (ಹೆಚ್ಚುವಂತೆ) ಮಲೆಯುಂ ಮಂಡಲಮುಂ ಬೆರ್ಚುವಂತು (ಆನೆ, ಕುದುರೆ, ಕಾಲಾಳಿನ ಬಲಗಳನ್ನೂ ಹೆಚ್ಚಿಸಿಕೊಂಡು, ಶತ್ರುಗಳೂ ಸಾಮಂತಮಂಡಲವೂ ಹೆದರುವಂತೆ)
- ಕೊಂಡಾಡುವ ನಾಲ್ವರುಂ ಅನುಜರೊಳಗೆ ನೆಗೞ್ದ ಅರಿಗನ ತೇಜಮೆ ತೊಳಗಿ ಬೆಳಗೆ
- ಕೊಂಡಾಡುವ (ಹೊಗಳಲ್ಪಟ್ಟರು. ಅವರಲ್ಲಿ) ನಾಲ್ವರುಂ ಅನುಜರೊಳಗೆ ನೆಗೞ್ದ (ಪ್ರಸಿದ್ಧ) ಅರಿಗನ(ಅರ್ಜುನ) ತೇಜಮೆ ತೊಳಗಿ ಬೆಳಗೆ,(ನಾಲ್ಕು ಜನರಲ್ಲಿ ಅರ್ಜುನನ ತೇಜಸ್ಸೇ ತೊಳಗಿ ಬೆಳಗುತ್ತಿರಲು)
- ನೆಲನಂ ಪ್ರತಿಪಾಲಿಸಿ ಧರ್ಮಸೂನು ಸೂಖಮಿರ್ದಂ ರಿಪುಬಳ ತಿಮಿರಭಾನು||೧೦||
- ನೆಲನಂ (ರಾಜ್ಯವನ್ನು) ಪ್ರತಿಪಾಲಿಸಿ ಧರ್ಮಸೂನು ಸೂಖಮಿರ್ದಂ (ಸುಖವಾಗಿದ್ದನು) ರಿಪುಬಳ ತಿಮಿರಭಾನು (ಶತ್ರುಸೈನ್ಯವೆಂಬ ಕತ್ತಲಿಗೆ ಸೂರ್ಯನಂತಿದ್ದ)
- ಪದ್ಯ-೦೦:ಪದವಿಭಾಗ-ಅರ್ಥ:ಮೇಲಿನಂತೆ-
- ಪದ್ಯ-೦೦:ಅರ್ಥ: . ಆ ಪಟ್ಟಣದ ತೋಟಗಳು ದಟ್ಟವಾದ ಮಲಯಮಾರುತದಿಂದ ಅಲುಗಾಡಿಸಲ್ಪಟ್ಟು ಸಾಂದ್ರವಾದ ಪುಷ್ಪರಾಶಿಯು ಸುಗಂಧವನ್ನು ಬೀರುತ್ತಿತ್ತು. ಸೊಗಸಾಗಿ ಕಾಣುವ ಸಣ್ಣ ಹೀಚುಗಳು ಒಪ್ಪಿ ತೋರುತ್ತಿದ್ದುವು, ಉಪ್ಪಿನ ಸಮುದ್ರವೇ ಸುತ್ತುವರಿದಿದೆಯೋ ಎಂಬಂತಿದ್ದ ಕಂದಕಗಳು ಸುತ್ತಿ ಶೋಬಿಸುತ್ತಿರಲು ಕೋಟೆಯ ಸೌಂದರ್ಯವು ಹೊಗಳಲು ಅಸಾಧ್ಯವೆನಿಸಿತ್ತು, ಆಕಾಶಕ್ಕೆ ಮೇಲಕ್ಕೆದ್ದು ಅಲುಗಾಡುತ್ತಿರುವ ಬಾವುಟಗಳ ಸಾಲು ಸ್ವರ್ಗದವರೆಗೂ ಹೋಗಿದ್ದುವು. ಸುತ್ತುವರಿದ ಕೆಂಪು ಚಿನ್ನದಿಂದ ಮಾಡಿದ ಕೋಟೆಯ ಗೋಡೆಗಳೊಳಗೆ, ರತ್ನಖಚಿತವಾದ ಅರಮನೆಗಳ ಸಮೂಹಗಳು ತೊಳಗಿ ಬೆಳಗುತ್ತಿದ್ದುವು, ಪ್ರತಿಮನೆಯಲ್ಲೂ ಬೇರೆ ಬೇರೆ ರಸಯುಕ್ತ ಬಾವಿಗಳು ಕೆಂಪುರತ್ನಗಳ ಧೂಳಿನ ಗಣಿಯಿಂದ ಕೂಡಿ ತೋರುತ್ತಿದ್ದುವು. ಕಲ್ಪವೃಕ್ಷದ ನೆರಳಿನಲ್ಲಿ ಕಾಮಧೇನುವು ಯಾವ ಅಲೆತವೂ ಇಲ್ಲದೆ ಸುಖವಾಗಿದ್ದಿತು. ವ್ಯಾಪಾರಿಗಳ, ಬ್ರಾಹ್ಮಣರ, ವೇಶ್ಯಾಜನರ ಮನೆಗಳು ಕುಬೇರನ ಮನೆಗೂ ಹೆಚ್ಚಿನವು. ಆ ಪಟ್ಟಣದ ಬೆಡಗನ್ನು ವಿಶೇಷವಾಗಿ ಮೆಚ್ಚಿ ದೇವೇಂದ್ರನ ವೈಭವದಿಂದ ಕೂಡಿ ಪಾಂಡವರು ನಡೆದುಬಂದಾಗ ಪಟ್ಟಣದ ಸ್ತ್ರೀಜನರು ವಿಶೇಷ ಸಂತೋಷದಿಂದ ಕೂಡಿ ಆದರದಿಂದ ಹರಸಿದರು. ಅವರು ಚೆಲ್ಲುವ ಮಂತ್ರಾಕ್ಷತೆಯನ್ನೂ ಬಹಳ ಮನಸ್ಸಂತೋಷದಿಂದ ಸ್ವೀಕರಿಸಿ ಉಪ್ಪರಿಗೆಯನ್ನು ಆದರದಿಂದ ಹತ್ತಿ ಸುಖವಾಗಿನೆಲಸಿದರು. ಪಕ್ಕದಲ್ಲಿದ್ದ ಮಾಡಗಳನ್ನು ಪರಿಚಯಮಾಡಿಕೊಂಡರು. ಆರ್ಥಿಗಳು ಬೇಡಿದ ಚಿನ್ನ, ಬೆಳ್ಳಿ, ರತ್ನಖಚಿತವಾದ ವಸ್ತುಗಳನ್ನೂ ಭೂಮಿಗಳನ್ನೂ ಶ್ರಮವಿಲ್ಲದೆ ದಾನಮಾಡಿ- ಆನೆ, ಕುದುರೆ, ಕಾಲಾಳಿನ ಬಲಗಳನ್ನೂ ಹೆಚ್ಚಿಸಿಕೊಂಡರು.ಶತ್ರುಗಳೂ ಸಾಮಂತಮಂಡಲವೂ ಹೆದರುವಂತೆ ಹೊಗಳಲ್ಪಟ್ಟರು. ನಾಲ್ಕು ಜನರಲ್ಲಿ ಅರ್ಜುನನ ತೇಜಸ್ಸೇ ತೊಳಗಿ ಬೆಳಗುತ್ತಿರಲು ಶತ್ರುಸೈನ್ಯವೆಂಬ ಕತ್ತಲಿಗೆ ಸೂರ್ಯನಂತಿದ್ದ ಧರ್ಮರಾಯನು ರಾಜ್ಯವನ್ನು ಸುಖವಾಗಿ ಪರಿಪಾಲಿಸುತ್ತಿದ್ದನು.
- ವ|| ಅಂತಜಾತಶತ್ರು ಶತ್ರುಪಕ್ಷ ಕ್ಷಯಕರ ಕರವಾಳ ದಂಷ್ಟ್ರಾಭೀಳ ಭುಜಂಗಮೂರ್ತಿ ವಿಶ್ವ ವಿಶ್ವಂಭರಾಧಾರಮಪ್ಪರಿಕೇಸರಿಯ ತೋಳ್ವಲದೊಳ್ ರಾಜ್ಯಂಗೆಯ್ಯುತಿರ್ಪನ್ನೆಗಂ ವಿಕ್ರಾಂತತುಂಗ ನೊಂದೆಡೆಯೊಳಿರ್ಪಿರವಿಂಗುಮ್ಮಳಿಸಿ ದಿಗಂಗನಾ ಮುಖಾವಲೋಕನಂಗೆಯ್ಯಲ್ ಬಗೆದು-
- ವಚನ:ಪದವಿಭಾಗ-ಅರ್ಥ:ಅಂತು ಅಜಾತಶತ್ರು (ಅ ಜಾತ(ಹುಟ್ಟಿರದ) ಶತ್ರು- ಧರ್ಮರಾಯನು) ಶತ್ರುಪಕ್ಷ ಕ್ಷಯಕರ (ನಾಶಮಾಡುವ) ಕರವಾಳ ದಂಷ್ಟ್ರಾ (ಕೋರೆಹಲ್ಲಿನ) ಅಭೀಳ (ಭಯಂಕರವಾದ) ಭುಜಂಗಮೂರ್ತಿ (ಸರ್ಪಾಕಾರ ವುಳ್ಳವನು) ವಿಶ್ವ ವಿಶ್ವಂಭರಾಧಾರಂ ಅಪ್ಪ (ಸಮಸ್ತಭೂಮಿಗೂ ಆಧಾರವಾಗಿರುವ ) ಅರಿಕೇಸರಿಯ (ಅರ್ಜುನನ) ತೋಳ್ವಲದೊಳ್ (ಬಾಹುಬಲದ ಆಶ್ರಯದಲ್ಲಿ) ರಾಜ್ಯಂಗೆಯ್ಯುತಿರ್ಪ ಅನ್ನೆಗಂ (ರಾಜ್ಯಭಾರಮಾಡುತ್ತಿರವ ಆ ಸಮಯದಲ್ಲಿ) ವಿಕ್ರಾಂತತುಂಗನು (ಅರ್ಜುನನು) ಒಂದೆಡೆಯೊಳು ಇರ್ಪ ಇರವಿಂಗೆ ಉಮ್ಮಳಿಸಿ (ಒಂದೇ ಸ್ಥಳದಲ್ಲಿರುವ ಸ್ಥಿತಿಗೆ ವ್ಯಥೆಪಟ್ಟು/ ಜುಗುಪ್ಸೆಪಟ್ಟು) ದಿಗಂಗನಾ ಮುಖಾವಲೋಕನಂಗೆಯ್ಯಲ್ (ದಿಕ್ ಅಂಗನಾ ಮುಖ ಅವಲೋಕನಂ ಗಯ್ಯಲ್ ದಿಕ್ಕುಗಳೆಂಬ ಅಂಗನೆಯರ ಮುಖವನ್ನು ನೋಡಲು- ಎಲ್ಲಾ ದಿಕ್ಕುಗಳಲ್ಲಿ ಸಂಚಾರ ಮಾಡಲು) ಬಗೆದು (ಯೋಚಿಸಿ)-
- ವಚನ:ಅರ್ಥ:ಶತ್ರುಗಳೇ ಹುಟ್ಟಿರದ ಧರ್ಮರಾಯನು, ಶತ್ರುಸೈನ್ಯವನ್ನು ನಾಶಮಾಡುವ ಕತ್ತಿಯೆಂಬ ಹಲ್ಲಿನಿಂದ ಭಯಂಕರವಾದ ಸರ್ಪದಂತಿರುವ, ಸಮಸ್ತಭೂಮಿಗೂ ಆಧಾರವಾಗಿರುವ ಅರಿಕೇಸರಿಯ ಬಾಹುಬಲದ ಆಶ್ರಯದಲ್ಲಿ ರಾಜ್ಯಭಾರಮಾಡುತ್ತಿರವ ಆ ಸಮಯದಲ್ಲಿ ವಿಕ್ರಾಂತತುಂಗನಾದ ಅರ್ಜುನನು ಒಂದೇ ಸ್ಥಳದಲ್ಲಿರುವ ಸ್ಥಿತಿಗೆ ಜುಗುಪ್ಸೆಪಟ್ಟು ಜೈತ್ರಯಾತ್ರೆಯನ್ನು ಮಾಡಲು ಯೋಚಿಸಿದನು.
- ಮ|| ಸ್ರ|| ಸೆಣಸುಳ್ಳುದ್ವ ತ್ತರಂ ತಳ್ತಿಱಿಯದೆ ಚತುರಂಭೋಧಿ ಪರ್ಯಂತಮಂ ಧಾ
- ರಿಣಿಯಂ ತಾಂ ಪೋಗಿ ಬಾಯ್ಕೇಳಿಸದೆ ಮುನಿಜನಕ್ಕಿಷ್ಟಿ ವಿಘ್ನಂಗಳಂ ದಾ|
- ರುಣ ದೈತ್ಯರ್ ಮಾಡೆ ನೀಡಿಲ್ಲದೆ ಚಲದಾಟಂದು ಕೊಂದಿಕ್ಕದೊರ್ವಂ
- ಗುಣಮುಟೆಂದುಂಡು ಪಟ್ಟರ್ಪನನಣಮೆ ನಿರುದ್ಯೋಗಿಯಂ ಭೂಪನೆಂಬರ್|| ೧೧ ||
- ಪದ್ಯ-೧೧:ಪದವಿಭಾಗ-ಅರ್ಥ:ಸೆಣಸುಳ್ಳ ಉದ್ವ ತ್ತರಂ ತಳ್ತು ಇಱಿಯದೆ (ಅಸೂಯೆಯುಳ್ಳ ದಾರಿತಪ್ಪಿ ನಡೆಯುವ ದುಷ್ಟರನ್ನು ಸಂಹರಿಸಿ) ಚತುರ್ ಅಂಭೋಧಿ ಪರ್ಯಂತಮಂ ಧಾರಿಣಿಯಂ (ನಾಲ್ಕು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು) ತಾಂ ಪೋಗಿ (ತಾನು ಹೋಗಿ) ಬಾಯ್ಕೇಳಿಸದೆ (ವಿಧೇಯರನ್ನಾಗಿ ಮಾಡದೆ) ಮುನಿಜನಕ್ಕೆ ಇಷ್ಟಿ ವಿಘ್ನಂಗಳಂ (ಯಜ್ಞಕ್ಕೆ ವಿಘ್ನವನ್ನು) ದಾರುಣ ದೈತ್ಯರ್ ಮಾಡೆ (ದುಷ್ಟ ರಾಕ್ಷಸರು ಮಾಡಲು) ನೀಡಿಲ್ಲದೆ (ವಿಳಂಬವಿಲ್ಲದೆ) ಚಲದೆ ಆಟಂದು (ಹಠಹಿಡಿದು ಅಟಕಾಯಿಸಿ/ಮೇಲೆಬಿದ್ದು) ಕೊಂದಿಕ್ಕದೆ (ಕೊಲ್ಲದೆ) ಒರ್ವಂ ಗುಣಂ ಉಂಟೆಂದು ಉಂಡು ಪಟ್ಟರ್ಪನನ್ (ಒಬ್ಬನು ತನ್ನಲ್ಲಿ ಗುಣವುಂಟೆಂದು ಹೇಳುತ್ತ ಊಟಮಾಡಿ ಮಲಗಿರುವ) ಅಣಮೆ (ವಿಶೇಷವಾಗಿ) ನಿರುದ್ಯೋಗಿಯಂ ಭೂಪನೆಂಬರ್ (ನಿರುದ್ಯೋಗಿಯನ್ನು ರಾಜನೆನ್ನುತ್ತಾರೆಯೇ?)
- ಪದ್ಯ-೧೧:ಅರ್ಥ: . ಅಸೂಯೆಯುಳ್ಳ ದಾರಿತಪ್ಪಿ ನಡೆಯುವ ದುಷ್ಟರನ್ನು ಕತ್ತರಿಸದೆ (ಸಂಹರಿಸದೆ), ನಾಲ್ಕು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು ತನ್ನ ವಿಧೇಯರನ್ನಾಗಿ ಮಾಡದೆ, ಋಷಿಗಳ ಯಜ್ಞಕ್ಕೆ ವಿಘ್ನಮಾಡುತ್ತಿರುವ ದುಷ್ಟ ರಾಕ್ಷಸರನ್ನು ವಿಳಂಬವಿಲ್ಲದೆ ಪ್ರತಿಭಟಿಸಿ ಕೊಲ್ಲದೆ, ತನ್ನಲ್ಲಿ ಗುಣವುಂಟೆಂದು ಹೇಳುತ್ತ ಊಟಮಾಡಿ ಮಲಗಿರುವವ ನಿರುದ್ಯೋಗಿಯನ್ನು ರಾಜನೆನ್ನುತ್ತಾರೆಯೇ?
- ವ|| ಎಂದು ವಿಜಿರ್ಗೀಷುವೃತ್ತೋದ್ಯುಕ್ತನಾಗಲ್ ಬಗೆದು-
- ವಚನ:ಪದವಿಭಾಗ-ಅರ್ಥ:ಎಂದು ವಿಜಿರ್ಗೀಷುವೃತ್ತ (ಜಯಿಸಲು ಇಚ್ಛಸುವ) ಉದ್ಯುಕ್ತನಾಗಲ್ ಬಗೆದು (ಕ್ರಿಯಾಶೀಲನಾಗಲು ಯೋಚಿಸಿ)-
- ವಚನ:ಅರ್ಥ: ಎಂದು ಜಯಿಸಲು ಇಚ್ಛಸಿ, ಕ್ರಿಯಾಶೀಲನಾಗಲು ಯೋಚಿಸಿ ಜೈತ್ರಯಾತ್ರೆಗೆ-ಹೊರಡಲು ನಿಶ್ಚಯಿಸಿದವನಾಗಿ-
- ಚಂ|| ಅಱಿಪಿದೊಡೆನ್ನ ಪೋಗನಿನಿಯಳ್ಗೆ ಮನಂ ಮಱುಕಕ್ಕೆ ನೀಳ್ದ ಕ
- ಣ್ಣೊಱಿದುಗುವಶ್ರುವಾರಿಗೆ ತೊದಳ್ನುಡಿ ಲಲ್ಲೆಗೆ ಪಕ್ಕುಗೊಟ್ಟು ಕಾ|
- ಲ್ಗೆಱಗಿರೆ ಪೋಗು ಕೆಟ್ಟಪುದು ಮೋಹಮಯಂ ನಿಗಳಂ ಕಳತ್ರಮೆಂ
- ದಱಪದೆ ನಟ್ಟಿರುಳ್ ಮರೆದು ಸಾರ್ಚಿದ ನಲ್ಲಳ ತಳ್ತ ತೋಳ್ಗಳಂ|| ೧೨||
- ಪದ್ಯ-೧೨:ಪದವಿಭಾಗ-ಅರ್ಥ:ಅಱಿಪಿದೊಡೆ (ಹೇಳಿದರೆ) ಎನ್ನ ಪೋಗಂ ಇನಿಯಳ್ಗೆ(ತನ್ನ ಜೈತ್ರಯಾತ್ರೆಯ ವಿಷಯವನ್ನು ಪ್ರಿಯಳಾದ ದ್ರೌಪದಿಗೆ ತಿಳಿಸಿದರೆ) ಮನಂ ಮಱುಕಕ್ಕೆ (ಅವಳ ಮನಸ್ಸಿನ ದುಃಖಕ್ಕೆ) ನೀಳ್ದ ಕಣ್ಣು ಒಱಿದುಗುವ ಅಶ್ರುವಾರಿಗೆ (ಕಣ್ಣಲ್ಲಿ ಒಸರಿ ಉಕ್ಕುವ ಕಣ್ಣೀರಿಗೆ ಮತ್ತು) ತೊದಳ್ನುಡಿ ಲಲ್ಲೆಗೆ (ತೊದಲುಮಾತು-ಪ್ರೀತಿಯಲಲ್ಲೆ ಮಾತಿಗೆ) ಪಕ್ಕುಗೊಟ್ಟು ಕಾಲ್ಗೆಱಗಿರೆ (ಪಕ್ಕಾಗಿ ಕಾಲಿಗೆಬಿದ್ದ ಕೇಳಲು) ಪೋಗು ಕೆಟ್ಟಪುದು (ಪ್ರಯಾಣವು ಕೆಟ್ಟು ಹೊಗುತ್ತದೆ.) ಮೋಹಮಯಂ ನಿಗಳಂ (ಸಂಕೋಲೆ) ಕಳತ್ರಂ (ಹೆಂಡತಿ) ಎಂದು (ಹೆಂಡತಿಯು ಮೊಹದಿಂದಾದ ಸಂಕೊಲೆ ಎಂದು ) ಅಱಪದೆ ನಟ್ಟಿರುಳ್ (ಹೇಳದೆ ನಡುರಾತ್ರಿ)ಮರೆದು ಸಾರ್ಚಿದ (ಮೈಮರೆತು ಮಲಗಿ ನಿದ್ರಿಸುತ್ತಿದ್ದ) ನಲ್ಲಳ ತಳ್ತ ತೋಳ್ಗಳಂ (ತನ್ನ ಬಳಿ, ನೀಡಿದ್ದ ಅವಳ ತೋಳುಗಳನ್ನು)|
- ಪದ್ಯ-೧೨:ಅರ್ಥ:ತನ್ನ ಜೈತ್ರಯಾತ್ರಾಪ್ರಯಾಣ ವಿಷಯವನ್ನು ಪ್ರಿಯಳಾದ ದ್ರೌಪದಿಗೆ ತಿಳಿಸಿದರೆ ಆ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಅವಳ ಮನಸ್ಸಿನ ದುಖದಿಂದ ಕೂಡಿದ ಕಣ್ಣೀರಿಗೂ ತೊದಳ್ನುಡಿಯ ಪ್ರಿಯವಾರ್ತೆಗೂ ಮನಸೋತು, ಅವಳು ನನ್ನ ಕಾಲಿಗೆರಗಿದರೆ ನನ್ನ ಪ್ರಯಾಣಕ್ಕೆ ವಿಘ್ನವುಂಟಾಗುತ್ತದೆ. ಹೆಂಡತಿಯು ಮೊಹದಿಂದಾದ ಸಂಕೊಲೆ ಎಂದು, ಅವಳಿಗೆ ತಿಳಿಸದೆಯೇ ನಡುರಾತ್ರಿಯಲ್ಲಿ ಮೈಮರೆತು ಮಲಗಿ ತನ್ನ ಬಳಿ ನೀಡಿದ್ದ ಅವಳ ತೋಳುಗಳನ್ನು-
- ವ|| ಮೆಲ್ಲಮೆಲ್ಲನೆ ಪತ್ತುವಿಡಿಸಿ ತನ್ನ ತೊಟ್ಟ ದಿವ್ಯಾಭರಣಂಗಳೆಲ್ಲಮಂ ಕಳೆದು ದಿವ್ಯಶರಗಳಂ ಬಿಗಿದುಕೊಂಡು ದಿವ್ಯಚಾಪಮಂ ಪಿಡಿದು ಪ್ರಥಮ ಚಳಿತ ದಕ್ಷಿಣ ಚರಣನಾಗಿನಿಜನಿವಾಸದಿಂ ಪೊಱಮಟ್ಟು ಖಾಂಡವಪ್ರಸ್ಥದಿಂದುತ್ತರಾಭಿಮುಖನಾಗಿ ಕಾಮ್ಯಕವನದೊಳಗನೆ ನೀಲಪರ್ವತದ ಮೇಗನೆ ಪೋಗಿ-
- ವಚನ:ಪದವಿಭಾಗ-ಅರ್ಥ:ಮೆಲ್ಲಮೆಲ್ಲನೆ ಪತ್ತುವಿಡಿಸಿ (ಮೆಲ್ಲಗೆ ಬಿಡಿಸಿಕೊಂಡು) ತನ್ನ ತೊಟ್ಟ ದಿವ್ಯಾಭರಣಂಗಳು ಎಲ್ಲಮಂ ಕಳೆದು (ಕಳಚಿಟ್ಟು) ದಿವ್ಯಶರಗಳಂ ಬಿಗಿದುಕೊಂಡು ದಿವ್ಯಚಾಪಮಂ (ಉತ್ತಮವಾದ ಬಿಲ್ಲನ್ನು) ಪಿಡಿದು ಪ್ರಥಮ ಚಳಿತ ದಕ್ಷಿಣ ಚರಣನಾಗಿ (ಬಲಗಾಲನ್ನು ಮುಂದಿಟ್ಟು) ನಿಜನಿವಾಸದಿಂ ಪೊಱಮಟ್ಟು (ತನ್ನ ಮನೆಯಿಂದ ಹೊರಟು) ಖಾಂಡವಪ್ರಸ್ಥದಿಂದ ಉತ್ತರಾಭಿಮುಖನಾಗಿ ಕಾಮ್ಯಕವನದ ಒಳಗನೆ (ಒಳಗಡೆಯೇ/ ಒಳಗಿನಿಂದಲೇ ) ನೀಲಪರ್ವತದ ಮೇಗನೆ ಪೋಗಿ-
- ವಚನ:ಅರ್ಥ:ಮೆಲ್ಲಗೆ ಅವಳ ಕೈಯನ್ನು ಬಿಡಿಸಿಕೊಂಡು ತಾನು ಧರಿಸಿದ್ದ ಉತ್ತಮ ಒಡವೆಗಳನ್ನೆಲ್ಲ ಕಳಚಿಟ್ಟು, ಶ್ರೇಷ್ಠವಾದ ಬತ್ತಳಿಕೆಯನ್ನು ಬಿಗಿದುಕೊಂಡು ಉತ್ತಮವಾದ ಬಿಲ್ಲನ್ನು ಹಿಡಿದು ಬಲಗಾಲನ್ನು ಮುಂದಿಟ್ಟು ತನ್ನ ಮನೆಯಿಂದ ಹೊರಟು ಖಾಂಡವಪ್ರಸ್ಥದಿಂದ ಉತ್ತರದ ಕಡೆಗೆ ಹೊರಟು ಕಾಮ್ಯಕವನದ ಒಳಗಿನಿಂದಲೇ ನೀಲಪರ್ವತದ ಮೇಲಕ್ಕೆ ಹೋಗಿ-(ಅಲ್ಲಿ ನಿಂತನು).
- ಚಂ|| ಸಗರರ ಮೇಲೆ ಗಂಗೆಯನನಾಕುಲದಿಂ ತರಲಾ ಭಗೀರಥಂ
- ನೆಗೞೆತಪೋನಿಯೋಗದೊಳವಂಗಮರಾಪಗೆ ಮೆಚ್ಚಿ ಪಾಯ್ವುದುಂ|
- ಗಗನದಿನಂಧಕ ದ್ವಿಷ ಜಟಾಟವಿಯೊಳ್ ಬೞಿಕಾದ ಶೈಲದೊಳ್
- ಸೊಗಯಿಸೆ ಪಾಯ್ದುದಿಂತಿದುವೆ ಬಂಧುರ ಕೂಟ ಕುಳಂ ಹಿಮಾಚಳಂ|| ೧೩||
- ಪದ್ಯ-೧೩:ಪದವಿಭಾಗ-ಅರ್ಥ:ಸಗರರ (ತನ್ನ ಅಜ್ಜಂದಿರಾದ ಸಗರನ ಸುಟ್ಟ ಪುತ್ರರ ಭಸ್ಮರಾಶಿಯ ಮೇಲೆ) ಗಂಗೆಯನು ಆನಾಕುಲದಿಂ (ಅನಾಯಾಸದಿಂದ) ತರಲು ಆ ಭಗೀರಥಂ ನೆಗೞೆ (ತೊಡಗಲು) ತಪೋನಿಯೋಗದೊಳ್ (ತಪಸ್ಸಿನಕಾರ್ಯದಲ್ಲಿ) ಅವಂಗೆ ಅಮರಾಪಗೆ (ಅಮರ ಅಪಗೆ ಸ್ವರ್ಗದಿಂದ ಇಳಿದವಳು-ಗಂಗೆ) ಮೆಚ್ಚಿ ಪಾಯ್ವುದುಂ ಗಗನದಿಂ (ಆಕಾಶದಿಂದ ಹರಿದುಬರಲು) ಅಂಧಕ ದ್ವಿಷ ಜಟಾಟವಿಯೊಳ್ (ಜಟೆಯ ಅಟವಿ) (ಅಂಧಕಾಸುರನ ಶತ್ರುವಾದ ಶಿವನ ಜಟೆಯೆಂಬ ಅಡವಿಯಲ್ಲಿ) ಬೞಿಕ ಆದ ಶೈಲದೊಳ್ಸೊಗಯಿಸೆ ಪಾಯ್ದುದು (ಬಳಿಕ ಅಡ್ಡವಾದ ಪರ್ವತದಲ್ಲಿಯೂ ಸೊಗಸಿನಿಂದ ಹರಿದಳು) ಅಂತು ಇದುವೆ ಬಂಧುರ ಕೂಟ ಕುಳಂ ಹಿಮಾಚಳಂ(ಹೀಗೆ ಇದು ಅನೇಕ ಶಿಖರಗಳ ಸಮೂಹದಿಂದ ಮನೋಹರವಾಗಿರುವ ಆ ಹಿಮಾಚಲ ಪರ್ವತ.)
- ಪದ್ಯ-೧೩:ಅರ್ಥ: ತನ್ನ ಅಜ್ಜಂದಿರಾದ, ಸಗರನ ಸುಟ್ಟ ಪುತ್ರರ ಭಸ್ಮರಾಶಿಯ ಮೇಲೆ ಗಂಗೆಯನ್ನು ತರಲು ಆ ಭಗೀರಥನು ತಪಸ್ಸಿನಲ್ಲಿ ನಿರತನಾಗಲು ಅವನ ತಪಸ್ಸಿಗೆ ಮೆಚ್ಚಿ ದೇವನದಿಯಾದ ಗಂಗೆಯು ಮೊದಲು ಅಂಧಕಾಸುರನ ಶತ್ರುವಾದ ಶಿವನ ಜಟೆಯೆಂಬ ಕಾಡಿನಲ್ಲಿಯೂ ಬಳಿಕ ಅಡ್ಡವಾದ ಪರ್ವತದಲ್ಲಿಯೂ ಸೊಗಸಿನಿಂದ ಹರಿದಳು. ಹೀಗೆ ಇದು ಅನೇಕ ಶಿಖರಗಳ ಸಮೂಹದಿಂದ ಮನೋಹರವಾಗಿರುವ ಆ ಹಿಮಾಚಲಪರ್ವತ.
- ಮ|| ಸ್ರ|| ವಿಲಸತ್ಕಲ್ಲೋಲ ನಾದಂ ನೆಗೞ್ದಿರೆ ನಿಜ ಕೂಟಾಗ್ರದೊಳ್ ಪಾಯ್ವ ಗಂಗಾ
- ಜಲದಿಂ ಮೂರ್ಧಾಭಿಷೇಕೋನ್ನತಿ ನಿಲೆ ಚಮರೀ ಲೋಲ ಲಾಂಗೂಲಮಾಲಾ|
- ವಲಿ ವಿಕ್ಷೇಪಂಗಳಿಂ ತಚ್ಚಮರರುಹ ಮಹಾಶೋಭೆ ಕೈಗಣ್ಮೆ ವಿಶ್ವಾ
- ಚಲ ಚಕ್ರೇಶತ್ವಮುಂ ತಾಳ್ದಿದುದಖಿಳ ಧರಾರಮ್ಯಹೈಮಾಚಳೇಂದ್ರಂ|| ೧೪||
- ಪದ್ಯ-೧೪:ಪದವಿಭಾಗ-ಅರ್ಥ:ವಿಲಸತ್ ಕಲ್ಲೋಲ ನಾದಂ (ಪ್ರಕಾಶಮಾನವಾದ ಅಲೆಗಳ ಧ್ವನಿಯು) ನೆಗೞ್ದಿರೆ (ಉಂಟಾಗುತ್ತಿರಲು) ನಿಜ ಕೂಟಾಗ್ರದೊಳ್ ಪಾಯ್ವ (ತನ್ನ ಶಿಖರಗಳ ತುದಿಯಲ್ಲಿ ಹರಿಯುವ) ಗಂಗಾಜಲದಿಂ ಮೂರ್ಧಾಭಿಷೇಕೋನ್ನತಿ (ತಲೆಯ ಮೇಲೆ ಆಗುವ ಅಭಿಷೇಕದ ಮಾನ್ಯತೆಯುಂಟಾಗಲು) ನಿಲೆ (ನೆಲೆಯಾಗಲು) ಚಮರೀ ಲೋಲ ಲಾಂಗೂಲಮಾಲಾವಲಿ ವಿಕ್ಷೇಪಂಗಳಿಂ (ಚಮರೀಮೃಗಗಳ ಮನೋಹರವಾದ ಬಾಲದ ತುದಿಯ ಕೂದಲುಗಳ ಸಮೂಹದ ಬೀಸುವಿಕೆಯಿಂದ) ತಚ್ಚಮರರುಹ ಮಹಾಶೋಭೆ (ಚಾಮರಗಳಿಂದ ಬೀಸುವ ವೈಭವವು) ಕೈಗಣ್ಮೆ (ಅಧಿಕವಾಗುತ್ತಿರಲು) ವಿಶ್ವಾಚಲ ಚಕ್ರೇಶತ್ವಮುಂ (ಪ್ರಪಂಚದಲ್ಲಿರುವ ಎಲ್ಲ ಬೆಟ್ಟಗಳ ಚಕ್ರವರ್ತಿ ಪದವಿಯನ್ನು) ತಾಳ್ದಿದುದ ಅಖಿಳ ಧರಾರಮ್ಯಹೈಮಾಚಳೇಂದ್ರಂ(ಶ್ರೇಷ್ಠವಾದ ಈ ಹಿಮಾಚಲ ಪರ್ವತವು ಧರಿಸಿತು)
- ಪದ್ಯ-೧೪:ಅರ್ಥ: ಪ್ರಕಾಶಮಾನವಾದ ಅಲೆಗಳ ಧ್ವನಿಯು ಉಂಟಾಗುತ್ತಿರಲು ತನ್ನ ಶಿಖರಗಳ ತುದಿಯಲ್ಲಿ ಹರಿಯುವ ಗಂಗಾಜಲದಿಂದ ತಲೆಯ ಮೇಲೆ ಆಗುವ ಭಿಷೇಕದ ಮಾನ್ಯತೆಯುಂಟಾಗಲು ಚಮರೀಮೃಗಗಳ ಮನೋಹರವಾದ ಬಾಲದ ತುದಿಯ ಕೂದಲುಗಳ ಸಮೂಹದ ಬೀಸುವಿಕೆಯಿಂದ ಚಾಮರಗಳಿಂದ ಬೀಸುವ ವೈಭವವು ಅಧಿಕವಾಗುತ್ತಿರಲು, ಪ್ರಪಂಚದಲ್ಲಿರುವ ಎಲ್ಲ ಬೆಟ್ಟಗಳ ಚಕ್ರವರ್ತಿ ಪದವಿಯನ್ನು ಶ್ರೇಷ್ಠವಾದ ಈ ಹಿಮಾಚಲ ಪರ್ವತವು ಧರಿಸಿತು.
- ವ|| ಎಂದು ಮೆಚ್ಚಿ-
- ವಚನ:ಅರ್ಥ:ಎಂದು ಮೆಚ್ಚಿ-
- ಕಂ|| ಚಾರು ವಿವಿಧಾಗ್ನಿಕಾರ್ಯ
- ಪ್ರಾರಂಭ ಮಹಾದ್ವಿಜನ್ಮ ಘೋಷದಿನಂಹೋ|
- ದೂರಮುಮವನಿತವಾಳಂ
- ಕಾರಂ ಸಂಸಾರ ಸಾರ ಗಂಗಾದ್ವಾರಂ|| ೧೫||
- ಪದ್ಯ-೧೫:ಪದವಿಭಾಗ-ಅರ್ಥ:ಚಾರು (ಮನೋಹರ)ವಿವಿಧ ಅಗ್ನಿಕಾರ್ಯ ಪ್ರಾರಂಭ ಮಹಾದ್ವಿಜನ್ಮ ಘೋಷದಿಂ ಅಂಹೋದೂರಮುಂ (ಪಾಪದಿಂದ ದೂರವಾದದ್ದು) ಅವನಿತವಾಳಂಕಾರಂ (ಭೂಮಿಗೆಅಲಂಕಾರವಾದುದು)ಸಂಸಾರ ಸಾರ ಗಂಗಾದ್ವಾರಂ(ಗಂಗಾದ್ವಾರವು ಸಂಸಾರಸಾರವೂ ಆಯಿತು)
- ಪದ್ಯ-೧೫:ಅರ್ಥ: ಗಂಗಾದ್ವಾರವೆಂಬ ಪುಣ್ಯಕ್ಷೇತ್ರವು ಮನೋಹರವೂ ನಾನಾ ವಿಧವೂ ಆದ ಮಹಾಬ್ರಾಹ್ಮಣರ ವೇದಘೋಷದಿಂದ ಪಾಪದೂರವೂ, ಭೂಮಂಡಲಕ್ಕೆ ಅಲಂಕಾರ ಪ್ರಾಯವೂ ಸಂಸಾರಸಾರವೂ ಆಯಿತು.
- ವ|| ಎನೆ ಸೊಗಯಿಸುವ ಗಂಗಾದ್ವಾರದೊಳ್ ಮುನಿಜನಂಗಳ ಬೇಳ್ವೆಗಳ್ಗುಪದ್ರವಂಗೆಯ್ವ ನಿಶಾಟಕೋಟಿಯಂ ನಿಶಿತ ಶರಕೋಟಿಯಿಂದಮುಚ್ಚಾಟಿಸಿ ಕೆಲವು ದಿವಸಮಿರ್ದಲ್ಲಿ ಪಡೆಮೆಚ್ಚೆ ಗಂಡನ ಗಂಡಗಾಡಿಯಂ ಕಂಡು ಫಣೀಂದ್ರನ ಕನ್ನೆ ಮದನಲತೆಯೆಂಬ ನಾಗಕನ್ನೆ ಕಣ್ಬೇಟಂಗೊಂಡು ತನ್ನ ಲೋಕಕ್ಕೊಡಗೊಂಡು ಪೋಗಲ್-
- ವಚನ:ಪದವಿಭಾಗ-ಅರ್ಥ:ಎನೆ ಸೊಗಯಿಸುವ ಗಂಗಾದ್ವಾರದೊಳ್ ಮುನಿಜನಂಗಳ ಬೇಳ್ವೆಗಳ್ಗೆ ಉಪದ್ರವಂಗೆಯ್ವ (ಯಜ್ಞಕಾರ್ಯಕ್ಕೆ ಹಿಂಸೆಯನ್ನು ಮಾಡುವ ) ನಿಶಾಟಕೋಟಿಯಂ ನಿಶಿತ (ಹರಿತವಾದ) ಶರಕೋಟಿಯಿಂದಂ ಉಚ್ಚಾಟಿಸಿ (ರಾಕ್ಷಸ ಸಮೂಹವನ್ನು ಹರಿತವಾದ ಬಾಣಗಳ ರಾಶಿಯಿಂದ ಹೊಡೆದೋಡಿಸುತ್ತ) ಕೆಲವು ದಿವಸಂ ಇರ್ದಲ್ಲಿ (ಅಲ್ಲಿ ಕೆಲವು ದಿವಸವಿದ್ದನು.) ಪಡೆಮೆಚ್ಚೆ ಗಂಡನ (ಅರಿಕೇಸರಿಯಬಿರುದು-ಇಲ್ಲಿ ಅರ್ಜುನನ) ಗಂಡಗಾಡಿಯಂ (ವೀರ ಸೌಂದರ್ಯವನ್ನು) ಕಂಡು ಫಣೀಂದ್ರನ ಕನ್ನೆ (ನಾಗೇಂದ್ರನ ಮಗಳು) ಮದನಲತೆಯೆಂಬ ನಾಗಕನ್ನೆ ಕಣ್ಬೇಟಂಗೊಂಡು(ನೋಡಿದ ತಕ್ಷಣ ಮೋಹಗೊಂಡು) ತನ್ನ ಲೋಕಕ್ಕೆ ಒಡಗೊಂಡು ಪೋಗಲ್-(ತನ್ನ ನಾಗಲೋಕಕ್ಕೆ ಕೊಂಡುಹೋದಳು)
- ವಚನ:ಅರ್ಥ:ಇಂತಹ ಸೊಗಸಾಗಿರುವ ಗಂಗಾದ್ವಾರದಲ್ಲಿ ತಪಸ್ವಿಗಳ ಯಜ್ಞಕಾರ್ಯಕ್ಕೆ ಹಿಂಸೆಯನ್ನು ಮಾಡುವ ರಾಕ್ಷಸ ಸಮೂಹವನ್ನು ಹರಿತವಾದ ಬಾಣಗಳ ರಾಶಿಯಿಂದ ಹೊಡೆದೋಡಿಸುತ್ತ ಅಲ್ಲಿ ಕೆಲವು ದಿವಸವಿದ್ದನು. ಅಲ್ಲಿಯೇ ಪಡೆಮೆಚ್ಚೆಗಂಡನಾದ ಅರ್ಜುನನ ವೀರಸೌಂದರ್ಯವನ್ನು ನಾಗಕನ್ಯೆಯಾದ ಮದನಲತೆಯೆಂಬುವಳು ನೋಡಿದ ತಕ್ಷಣ ಮೋಹಗೊಂಡು, ಅವನನ್ನು ತನ್ನ ನಾಗಲೋಕಕ್ಕೆ ಕರೆದುಕೊಂಡು ಹೋದಳು
- ಉ|| ಆಗಳುಮಿಂದು ಸೂರ್ಯರಣಮಿಲ್ಲದೆ ಕೞ್ತಲೆಯೆಂಬುದಿಲ್ಲ ತ
- ದ್ಭೋಗಿ ಫಣಾಮಣಿ ದ್ಯುತಿಯೆ ಕೞ್ತಲೆಯಂ ತಲೆದೋಱಲೀಯದಾ||
- ನಾಗರ ನಾಗಕನ್ನೆಯರ ರೂಪುಗಳಿಟ್ಟಳಮಾಗೆ ಬೋಗಿಗಳ್
- ಬೋಗಿಗಳೆಂಬ ಭೋಗಿಗಳೆ ಭೋಗಿಗಳಲ್ಲಿಯು ಭೋಗನಾಯಕರ್|| ೧೬||
- ಪದ್ಯ-೧೬:ಪದವಿಭಾಗ-ಅರ್ಥ:ಆಗಳುಂ ಇಂದು(ಚಂದ್ರ) ಸೂರ್ಯರ್ ಅಣಂ ಇಲ್ಲದೆ ಕೞ್ತಲೆಯೆಂಬುದಿಲ್ಲ (ಅಲ್ಲಿ ಚಂದ್ರಸೂರ್ಯರು ಇಲ್ಲದಿದ್ದರೂ ಕತ್ತಲೆಯೆಂಬುದು ಇಲ್ಲ. ) ತದ್ ಭೋಗಿ ಫಣಾಮಣಿ ದ್ಯುತಿಯೆ (ಆ ಹಾವುಗಳ ಹೆಡೆಗಳಲ್ಲಿರುವ ರತ್ನಕಾಂತಿಯೇ) ಕೞ್ತಲೆಯಂ ತಲೆದೋಱಲೀಯದು (ಕತ್ತಲೆಯು ತಲೆಹಾಕುವುದಕ್ಕೆ ಅವಕಾಶಕೊಡುವುದಿಲ್ಲ.) ಆ ನಾಗರ ನಾಗಕನ್ನೆಯರ ರೂಪುಗಳ್ ಇಟ್ಟಳಮಾಗೆ (ಆ ನಾಗರ ಮತ್ತು ನಾಗಕನ್ನಿಕೆಯರ ರೂಪಗಳು ಮನೋಹರವಾಗಿವೆ.) ಬೋಗಿಗಳ್ (ನಾಗರುಗಳು) ಭೋಗಿಗಳ್ (ಸುಖಪಡುವವರು) ಎಂಬ (ಎನ್ನುವ) ಭೋಗಿಗಳೆ (ಸರ್ಪಗಳೆ) ಭೋಗಿಗಳು ಅಲ್ಲಿಯು ಭೋಗನಾಯಕರ್ (ಅಲ್ಲಿಯ- ಸರ್ಪಲೋಕದ ಭೋಗನಾಯಕರು- ಪ್ರದೇಶಪಾಲಕರು ಮಂಡಲಪಾಲಕರು ಭೋಗಿಗಳು- ಎಂದರೆ ಸುಖಪಡುವವರ.)
- ಪದ್ಯ-೧೬:ಅರ್ಥ:ಅಲ್ಲಿ ಚಂದ್ರಸೂರ್ಯರು ಇಲ್ಲದಿದ್ದರೂ ಕತ್ತಲೆಯೆಂಬುದು ಇಲ್ಲ. ಆ ಹಾವುಗಳ ಹೆಡೆಗಳಲ್ಲಿರುವ ರತ್ನಕಾಂತಿಯೇ ಕತ್ತಲೆಯು ತಲೆಹಾಕುವುದಕ್ಕೆ ಅವಕಾಶಕೊಡುವುದಿಲ್ಲ. ಆ ನಾಗರ ಮತ್ತು ನಾಗಕನ್ನಿಕೆಯರ ರೂಪಗಳು ಮನೋಹರವಾಗಿವೆ. ಆದುದರಿಂದಲೇ ಸರ್ಪಗಳು ಭೋಗಿಗಳು ಎನ್ನಿಸಿಕೊಂಡಿವೆ. ಭೋಗಿಗಳೆಂದರೆ ಭೋಗಪಾಲಕರೇ
- ವ|| ಎಂದು ನಾಗಕನ್ನೆ ನಾಗಲೋಕದ ವಿಳಾಸಂಗಳಂ ತೋಱುತ್ತುಂ ತನ್ನ ಕೆೞಗಣ ನಾಗವಿಮಾನಕ್ಕೆ ವಂದು ನಾಗಕನ್ನೆಯರುಂ ತಾನುಂ ಮನಂಬುಗಿಸುವಂತೆ ಮಜ್ಜನಂಬುಗಿಸಿ ರಸರಸಾಯನಂಗಳನೂಡುವಂತೆ ದಿವ್ಯಾಹಾರಂಗಳನೂಡಿ-
- ವಚನ:ಪದವಿಭಾಗ-ಅರ್ಥ:ಎಂದು ನಾಗಕನ್ನೆ ನಾಗಲೋಕದ ವಿಳಾಸಂಗಳಂ (ವೈಭವಗಳನ್ನು) ತೋಱುತ್ತುಂ (ತೋರಿಸುತ್ತಾ) ತನ್ನ ಕೆೞಗಣ (ಕೆಳಗಣ) ನಾಗವಿಮಾನಕ್ಕೆ ವಂದು (ಕೆಳಭಾಗದಲ್ಲಿದ್ದ ತನ್ನ ಅಂತಪುರಕ್ಕೆ ಬಂದು) ನಾಗಕನ್ನೆಯರುಂ ತಾನುಂ ಮನಂಬುಗಿಸುವಂತೆ ಮಜ್ಜನಂಬುಗಿಸಿ (ಮನಸ್ಸಿಗೆ ತೃಪ್ತಿಯಾಗುವಂತೆ ಅವನಿಗೆ ಮಜ್ಜನ- ಸ್ನಾನಮಾಡಿಸಿ) ರಸರಸಾಯನಂಗಳನು ಊಡುವಂತೆ (ತಿನ್ನಿಸುವಂತೆ) ದಿವ್ಯಾಹಾರಂಗಳನು ಊಡಿ (ತಿನ್ನಿಸಿ)-
- ವಚನ:ಅರ್ಥ:ಎಂದು ಆ ನಾಗಕನ್ನಿಕೆಯು ನಾಗಲೋಕದ ವೈಭವಗಳನ್ನು ತೋರಿಸುತ್ತ ಕೆಳಭಾಗದಲ್ಲಿದ್ದ ತನ್ನ ಅಂತಪುರಕ್ಕೆ ಬಂದು ತಾನೂ ಆ ನಾಗಕನ್ನಿಕೆಯರೂ ತಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ಅವನಿಗೆ ಸ್ನಾನಮಾಡಿಸಿ ರಸಯುಕ್ತವಾದ ರಸಾಯನಗಳನ್ನು ತಿನ್ನಿಸುವಂತೆ ದಿವ್ಯಾಹಾರಗಳನ್ನು ತಿನ್ನಿಸಿ- (ತಿನ್ನಿಸಿದರು)
- ಉ|| ನಾಗವಿಭೂಷಣಪ್ರತತಿ ನಾಗರಖಂಡಮಪೂರ್ವಮಪ್ಪ ಪು
- ನ್ನಾಗದ ಬಾಸಿಗಂ ಬಗೆದ ಬಣ್ಣದ ಪುಟ್ಟಿಗೆ ನಾಗಜಾಲಮೆಂ|
- ದಾಗಡೆ ನಾಗಲೋಕ ವಿಭವಂಗಳೊಳಾೞಿಸಿ ನಾಗಶಯ್ಯೆಯೊಳ್
- ನಾಗಿಣಿ ನಾಗಬಂಧದೊಳ್ ತಳ್ತು ಗುಣಾರ್ಣವನಂ ಮರುಳ್ಚಿದಳ್|| ೧೭||
- ಪದ್ಯ-೧೭:ಪದವಿಭಾಗ-ಅರ್ಥ:ನಾಗವಿಭೂಷಣಪ್ರತತಿ (ನಾಗರು ಧರಿಸುವ ಆಭರಣಗಳ ರಾಶಿ) ನಾಗರಖಂಡಂ, ಅಪೂರ್ವಮಪ್ಪ ಪುನ್ನಾಗದ ಬಾಸಿಗಂ, ಬಗೆದ ಬಣ್ಣದ ಪುಟ್ಟಿಗೆ (ವಸ್ತ್ರ), ನಾಗಜಾಲಂ (ವೀಳಯದ ಎಲೆ), ಎಂದು ಆಗಡೆ (ಆಗಲೇ)ನಾಗಲೋಕ ವಿಭವಂಗಳೊಳು ಆೞಿಸಿ (ವೈಭವಗಳಲ್ಲಿ ಮುಳುಗಿಸಿ) ನಾಗಶಯ್ಯೆಯೊಳ್ ನಾಗಿಣಿ ನಾಗಬಂಧದೊಳ್ ತಳ್ತು (ರತಿಬಂಧದಲ್ಲಿ ಸೇರಿಕೊಂಡು) ಗುಣಾರ್ಣವನಂ ಮರುಳ್ಚಿದಳ್ (ಅರ್ಜುನನ್ನು ಮರುಳು ಮಾಡಿದಳು )
- ಪದ್ಯ-೧೭:ಅರ್ಥ:.ಅರ್ಜುನನನ್ನು ಆ ನಾಗಕನ್ನಿಕೆಯು ನಾಗರ ಒಡವೆಗಳ ರಾಶಿಯಲ್ಲಿ ತುಂಬಿ; ನಾಗರ ಖಂಡವೆಂಬ ಪ್ರದೇಶ, ಅಪೂರ್ವವಾದ ಪುನ್ನಾಗ ಪುಷ್ಪಗಳ ಹಾರ, ಬಗೆಬಗೆಯ ವಸ್ತ್ರಗಳು, ನಾಗದವಲ್ಲಿ (ತಾಂಬೂಲ) ಮೊದಲಾದ ನಾಗಲೋಕದ ವೈಭವಗಳಲ್ಲಿ ಮುಳುಗಿಸಿ ನಾಗಶಯ್ಯೆಯಲ್ಲಿ ನಾಗಬಂಧವೆಂಬ ರತಿಬಂಧದಲ್ಲಿ ಸೇರಿಕೊಂಡು ಮರುಳು ಮಾಡಿದಳು
- ವ|| ಅಂತಾಕೆಯ ಮುದ್ದುವೆರಸಿದ ತೊದಳ್ನುಡಿಗಂ ಪೂಮಾಲೆವೆರಸಿದ ಬೞಲ್ಮುಡಿಗಮಲಂಪುವೆರಸಿದ ನೋಟಕ್ಕಮಿಂಬುವೆರಸಿದ ಕೂಟಕ್ಕಂ ಪುರುಡುವೆರಸಿದ ಕೊಂಕಿಂಗಂ ಕದ್ದವಣಿ(?) ವೆರಸಿದ ಸೋಂಕಿಂಗಂ ಗಾಡಿವೆರಸಿದ ಹಾವಕ್ಕಂ ನಾಣ್ವೆರಸಿದ ಭಾವಕ್ಕಮೊಲ್ದು ಮೊಱಲ್ದುಮಿರೆಯಿರೆ ದೇವೇಂದ್ರಂಗಮಿಂದ್ರಾಣಿಗಂ ಜಯಂನೆಂತಂತೆ-
- ವಚನ:ಪದವಿಭಾಗ-ಅರ್ಥ:ಅಂತು ಆಕೆಯ ಮುದ್ದುವೆರಸಿದ ತೊದಳ್ನುಡಿಗಂ (ಹಾಗೆ ಮುದ್ದಿನಿಂದ ಕೂಡಿದ ಲಲ್ಲೆಮಾತಿಗೂ) ಪೂಮಾಲೆವೆರಸಿದ ಬೞಲ್ಮುಡಿಗಂ (ಹೂಮಾಲೆಯಿಂದ ಕೂಡಿ ಜೋಲಾಡುತ್ತಿರುವ ತುರುಬಿಗೂ) ಅಲಂಪುವೆರಸಿದ ನೋಟಕ್ಕಂ (ಪ್ರೀತಿಯಿಂದ ಕೂಡಿದ ನೋಟಕ್ಕೂ) ಇಂಬುವೆರಸಿದ ಕೂಟಕ್ಕಂ (ಸುಖಮಯವಾದ ಕೂಡುವಿಕೆಗೂ) ಪುರುಡುವೆರಸಿದ ಕೊಂಕಿಂಗಂ (ಸ್ಪರ್ಧೆಯಿಂದ ಕೂಡಿದ ವಕ್ರತೆಗೂ) ಕದ್ದವಣಿ(?) ವೆರಸಿದ ಸೋಂಕಿಂಗಂ ( ಬಿಗಿದಪ್ಪಿದ ಆಲಿಂಗನಕ್ಕೂ) ಗಾಡಿವೆರಸಿದ ಹಾವಕ್ಕಂ (ಸೌಂದರ್ಯದಿಂದ ಕೂಡಿದ ಶೃಂಗಾರ ಚೇಷ್ಟೆಗೂ ) ನಾಣ್ವೆರಸಿದ ಭಾವಕ್ಕಂ (ನಾಯಿಕೆಯಿಂದ ಕೂಡಿದ ಭಾವಗಳಿಗೂ) ಒಲ್ದು ಮೊಱಲ್ದುಮಿರೆಯಿರೆ ದೇವೇಂದ್ರಂಗಮಿಂದ್ರಾಣಿಗಂ ಜಯಂನೆಂತಂತೆ- (ಒಲಿದು ಪ್ರೀತಿಸಿರಲು ದೇವೇಂದ್ರನಿಗೂ ಶಚಿದೇವಿಗೂ ಜಯಂತನು ಹುಟ್ಟುವ ಹಾಗೆ)
- ವಚನ:ಅರ್ಥ: ಹಾಗೆ ನಾಗಕನ್ನಿಕೆಯ (ಆಕೆಯ) ಮುದ್ದಿನಿಂದ ಕೂಡಿದ ಲಲ್ಲೆಮಾತಿಗೂ (ತೊದಳ್ನುಡಿ) ಹೂಮಾಲೆಯಿಂದ ಕೂಡಿ ಜೋಲಾಡುತ್ತಿರುವ ತುರುಬಿಗೂ ಪ್ರೀತಿಯಿಂದ ಕೂಡಿದ ನೋಟಕ್ಕೂ, ಸುಖಮಯವಾದ ಕೂಡುವಿಕೆಗೂ ಸ್ಪರ್ಧೆಯಿಂದ ಕೂಡಿದ ವಕ್ರತೆಗೂ ಬಿಗಿದಪ್ಪಿದ ಆಲಿಂಗನಕ್ಕೂ ಸೌಂದರ್ಯದಿಂದ ಕೂಡಿದ ಶೃಂಗಾರ ಚೇಷ್ಟೆಗೂ ನಾಯಿಕೆಯಿಂದ ಕೂಡಿದ ಭಾವಗಳಿಗೂ ಒಲಿದು ಪ್ರೀತಿಸಿರಲು ದೇವೇಂದ್ರನಿಗೂ ಶಚಿದೇವಿಗೂ ಜಯಂತನು ಹುಟ್ಟುವ ಹಾಗೆ-
- ಕಂ|| ಅಂತಾ ಫಣಿಕಾಂತೆಗಮರಿ
- ಕಾಂತಾಳಿಕ ಫಳಕ ತಿಳಕ ಹರನೆನಿಪರಿಗಂ||
- ಗಂ ತನಯನಧಿಕ ತೇಜೋ
- ವಂತನಿಳಾವಂತನಿಂದುಮಂಡಳಕಾಂತಂ|| ೧೮||
- ಪದ್ಯ-೧೮:ಪದವಿಭಾಗ-ಅರ್ಥ:ಅಂತು ಆ ಫಣಿಕಾಂತೆಗಂ( ಆ ನಾಗಕನ್ನಿಕೆಗೂ) ಅರಿಕಾಂತಾಳಿಕ ಫಳಕ ತಿಳಕ ಹರನು ಎನಿಪ ಅರಿಗಂಗಂ (ಶತ್ರುಸ್ತ್ರೀಯರ ಮುಖವೆಂಬ ಹಲಗೆಯಲ್ಲಿರುವ ತಿಲಕವನ್ನು ನಾಶಪಡಿಸುವವನೆಂಬ ಅರಿಕೇಸರಿಗೂ/ ಅರ್ಜುನನಿಗೂ) ತನಯಂ (ಇಳಾವಂತನು ಎಂಬ ಮಗನು ಹುಟ್ಟಿದನು) ಅಧಿಕ ತೇಜೋವಂತನು ಇಳಾವಂತನು ಇಂದುಮಂಡಳಕಾಂತಂ (ಚಂದ್ರಮಂಡಳದ ಕಾಂತಿಯುಳ್ಳ)
- ಪದ್ಯ-೧೮:ಅರ್ಥ: . ಆ ನಾಗಕನ್ನಿಕೆಗೂ, ಶತ್ರುಸ್ತ್ರೀಯರ ಮುಖವೆಂಬ ಹಲಗೆಯಲ್ಲಿರುವ ತಿಲಕವನ್ನು ನಾಶಪಡಿಸುವವನೆಂಬ (ಕೀರ್ತಿಯನ್ನುಳ್ಳ) ಅರ್ಜುನನಿಗೂ ಅಕ ತೇಜಸ್ಸಿನಿಂದ ಕೂಡಿದವನೂ ಚಂದ್ರಮಂಡಳದ ಕಾಂತಿಯುಳ್ಳ ಇಳಾವಂತನೆಂಬ ಮಗನು ಹುಟ್ಟಿದನು.
- ವ|| ಅಂತು ಪುಟ್ಟುವುದುಮಾತನ ಬಾಲಕ್ರೀಡೆಯುಮಾಕೆಯ ಸುರತಕ್ರೀಡೆಯುಂ ತನ್ನ ನೋಟಕ್ಕಂ ಕೂಟಕ್ಕಂ ಸೊಗೆಯಿಸೆ ಕೆಲವು ದಿವಸಮಿರ್ದಲ್ಲಿಂ ಪೊಱಮಟ್ಟು ಬಂದು ಹಿಮವದ್ಗಿರೀಂದ್ರ ತಟ ನಿಕಟವರ್ತಿಗಳಪ್ಪಗಸ್ತ್ಯವಟಮುಂ ವಸಿಷ್ಠಪರ್ವತಂಗಳೆಂಬ ತೀಥಂಂಗಳೊಳೋಲಾಡುತ್ತುಮಾ ದಿಶಾಭಾಗಮನಾತ್ಮೀಯ ಶಾಸನಾಯತ್ತಂ ಮಾಡುತ್ತುಂ ಬಂದಿಂದುಬಿಂಬವಿಗಳದಮೃತಬಿಂದು ದುರ್ದಿನಾರ್ದ್ರ ಚಂದನಾನ್ವಿತಮುಮಶಿಶಿರ ಕರ ರಥ ತುರಗ ಖುರ ಶಿಖರ ನಿಖಂಡಿತ ಲವಂಗ ಪಲ್ಲವಮುಮೈರಾವತ ಕರಲೂನ ಸಲ್ಲಕೀ ಶಬಳ ಮುಮಪ್ಪುದಯಗಿರಿಯಿಂ ಸೊಗಯಿಸುವ ಮೂಡಣ ದೆಸೆಗೆ ವಂದು ನಂದೆಯ ಪರನಂದೆಯಶ್ವಿನಿ ಮಹಾನಂದೆಯೆಂಬ ತೀರ್ಥಜಲಂಗಳೊಳೋಲಾಡುತ್ತುಮುದ್ವೃತ್ತ ರಿಪುನೃಪತಿಗಳನೇಸಾಡುತ್ತುಮಲ್ಲಿಂ ತಳರ್ದು ಚಪಳ ಕಪಿಬಳ ವಿಲುಪ್ತ ವಿಗಳಿತ ಲತಾಭವನ ಮುಮಕ ಬಳ ನಳ ಕರತಳಗಳಿತ ಕುಳಶೈಳ ಸಹಸ್ರ ಸಂತಾಸ ಕಳಿತ ಸೇತುಬಂಧುರಮುಮಪ್ಪ ದಕ್ಷಿಣ ಸಮುದ್ರದ ತಡಿವಿಡಿದು ಬಂದು ರಾಮಚಂದ್ರಂ ವಿಹರಿಸಿದೆಡೆಗಳಂ ನೋಡಿ-
- ವಚನ:ಪದವಿಭಾಗ-ಅರ್ಥ:ಅಂತು ಪುಟ್ಟುವುದು ಆತನ ಬಾಲಕ್ರೀಡೆಯುಂ ಆಕೆಯ ಸುರತಕ್ರೀಡೆಯುಂ ತನ್ನ ನೋಟಕ್ಕಂ ಕೂಟಕ್ಕಂ ಸೊಗೆಯಿಸೆ (ರತಿಕ್ರೀಡೆಯು ತನ್ನ ಕೂಟಕ್ಕೂ ಸೊಗಯಿಸುತ್ತಿರಲು) ಕೆಲವು ದಿವಸಂ ಇರ್ದು, ಅಲ್ಲಿಂ ಪೊಱಮಟ್ಟು (ಕೆಲವು ದಿವಸವಿದ್ದು ಅಲ್ಲಿಂದ ಹೊರಟು) ಬಂದು ಹಿಮವದ್ಗಿರೀಂದ್ರ ತಟ ನಿಕಟವರ್ತಿಗಳಪ್ಪ (ಶ್ರೇಷ್ಠವಾದ ಹಿಮಾಲಯ ಪರ್ವತದ ತಪ್ಪಲಿನ ಸಮೀಪದಲ್ಲಿರುವ ) ಅಗಸ್ತ್ಯವಟಮುಂ ವಸಿಷ್ಠಪರ್ವತಂಗಳೆಂಬ ತೀರ್ಥಂಗಳೊಳ್ ಓಲಾಡುತ್ತುಂ (ವಿಹರಿಸಿ )ಆ ದಿಶಾಭಾಗಮನು ಆತ್ಮೀಯ ಶಾಸನಾಯತ್ತಂ ಮಾಡುತ್ತುಂ (ಆ ದಿಗ್ಭಾಗ ಪ್ರದೇಶಗಳನ್ನೆಲ್ಲ ತನ್ನ ಆಜ್ಞಾನುವರ್ತಿಗಳನ್ನಾಗಿ ಮಾಡಿ) ಬಂದು ಇಂದುಬಿಂಬ ವಿಗಳತ್ ಅಮೃತಬಿಂದು ದುರ್ದಿನ ಆರ್ದ್ರ(ಚಂದ್ರಬಿಂಬದಿಂದ ಸ್ರವಿಸುತ್ತಿರುವ ಅಮೃತದ ಹನಿಗಳೆಂಬ ದುರ್ದಿನದಿಂದ/ತೇವ? ಒದ್ದೆಯಾದ) ಚಂದನ ಆನ್ವಿತಂ (ಶ್ರೀಗಂಧದಿಂದ ಕೂಡಿದ) ಉಮಶಿಶಿರ ಕರ ರಥ ತುರಗ ಖುರ ಶಿಖರ ನಿಖಂಡಿತ ಲವಂಗ ಪಲ್ಲವಮುಂ(ಸೂರ್ಯನ ಕುದುರೆಯ ಗೊರಸಿನ ತುದಿಯಿಂದ ಕತ್ತರಿಸಲ್ಪಟ್ಟ ಲವಂಗದ ಬಳ್ಳಿಯ ಚಿಗುರನ್ನುಳ್ಳ) ಐರಾವತ ಕರಲೂನ (ಸೊಂಡಿಲಿನಿಂದ ಕತ್ತರಿಸಲ್ಪಟ್ಟ) ಸಲ್ಲಕೀ ಶಬಳಮುಂ (ಆನೆಬೇಲದ ಮರದ ವಿವಿಧ ಬಣ್ಣಗಳಿಂದ - ಕೂಡಿದ) ಅಪ್ಪ ಉದಯಗಿರಿಯಿಂ ಸೊಗಯಿಸುವ (ಸುಂದರ) ಮೂಡಣ ದೆಸೆಗೆ ವಂದು (ಪೂರ್ವದಿಕ್ಕಿಗೆ ಬಂದು), ನಂದೆಯ ಅಪರನಂದೆ ಅಶ್ವಿನಿ ಮಹಾನಂದೆಯೆಂಬ ತೀರ್ಥಜಲಂಗಳೊಳ್ ಓಲಾಡುತ್ತುಂ (ವಿಹರಿಸತ್ತಾ) ಉದ್ವೃತ್ತ ರಿಪುನೃಪತಿಗಳನು ಏಸಾಡುತ್ತುಂ (ಪ್ರತಿಭಟಿಸಿದ ರಾಜರುಗಳನ್ನು ಹೊಡೆದು ಸೋಲಿಸುತ್ತಾ), ಅಲ್ಲಿಂ ತಳರ್ದು (ಅಲ್ಲಿಂದ ಹೊರಟು) ಚಪಳ ಕಪಿಬಳ (ಕಪಿಗಳ ಸೈನ್ಯದಿಂದ) ವಿಲುಪ್ತ (ಹಾಳುಮಾಡಿದ) ವಿಗಳಿತ (ಶಿಥಿಲವಾದ) ಲತಾಭವನಮುಂ, ಅಧಿಕ ಬಳ (ವಾನರ ಶಿಲ್ಪಿ) ನಳ ಕರತಳಗಳಿತ (ಕೈತಲದಿಂದ ಸರಿಸಿ) ಕುಳಶೈಳ ಸಹಸ್ರ ಸಂತಾಸ ಕಳಿತ ಸೇತುಬಂಧುರಮುಂ ಅಪ್ಪ (ಅಕ ಬಲವಂತನಾದ ವಾನರ ಶಿಲ್ಪಿ ನಳನು ಸಾವಿರಾರು ಕುಲಪರ್ವತಗಳನ್ನು ಕೈಯಿಂದ ಸರಿಸಿ ಸೇರಿಸಿ ನಿರ್ಮಿಸಿದ ಸೇತುವೆಯಿಂದ ರಮಣೀಯವಾದ) ದಕ್ಷಿಣ ಸಮುದ್ರದ ತಡಿವಿಡಿದು (ದಡವನ್ನುಅನುಸರಿಸಿ) ಬಂದು ರಾಮಚಂದ್ರಂ ವಿಹರಿಸಿದ ಎಡೆಗಳಂ (ಸ್ಧಳಗಳನ್ನು ) ನೋಡಿ-
- ವಚನ:ಅರ್ಥ:(ಅರ್ಜುನ ತನ್ನ ಮಗನ) ಇಳಾವಂತ ಬಾಲಕನ ಬಾಲಕ್ರೀಡೆಯು ತನ್ನ ನೋಟಕ್ಕೂ ಅವಳ ರತಿಕ್ರೀಡೆಯು ತನ್ನ ಕೂಟಕ್ಕೂ ಸೊಗಯಿಸುತ್ತಿರಲು ಕೆಲವು ದಿವಸವಿದ್ದು ಅಲ್ಲಿಂದ ಹೊರಟು, ಶ್ರೇಷ್ಠವಾದ ಹಿಮಾಲಯ ಪರ್ವತದ ತಪ್ಪಲಿನ ಸಮೀಪದಲ್ಲಿರುವ ಅಗಸ್ತ್ಯವಟ ಮತ್ತು ವಸಿಷ್ಠಪರ್ವತವೆಂಬ ಪವಿತ್ರಕ್ಷೇತ್ರಗಳಲ್ಲಿ ವಿಹರಿಸಿ ಆ ದಿಗ್ಭಾಗ ಪ್ರದೇಶಗಳನ್ನೆಲ್ಲ ತನ್ನ ಆಜ್ಞಾನುವರ್ತಿಗಳನ್ನಾಗಿ ಮಾಡಿಕೊಂಡನು. ಚಂದ್ರಬಿಂಬದಿಂದ ಸ್ರವಿಸುತ್ತಿರುವ ಅಮೃತದ ಹನಿಗಳೆಂಬ ದುರ್ದುನದಿಂದ ಒದ್ದೆಯಾದ ಶ್ರೀಗಂಧದಿಂದ ಕೂಡಿದ ಸೂರ್ಯನ ಕುದುರೆಯ ಗೊರಸಿನ ತುದಿಯಿಂದ ಕತ್ತರಿಸಲ್ಪಟ್ಟ ಲವಂಗದ ಬಳ್ಳಿಯ ಚಿಗುರನ್ನುಳ್ಳದ್ದೂ ಐರಾವತವೆಂಬ ಇಂದ್ರನ ಆನೆಯ ಸೊಂಡಲಿನಿಂದ ಮುರಿಯಲ್ಪಟ್ಟ ಆನೆಬೇಲದ ಮರದ ವಿವಿಧ ಬಣ್ಣಗಳಿಂದ ಕೂಡಿದ ಪೂರ್ವದಿಕ್ಕಿಗೆ ಬಂದನು. ನಂದೆ, ಅಪರನಂದೆ, ಅಶ್ವಿನಿ, ಮಹಾನಂದೆಯೆಂಬ ತೀರ್ಥೋದಕಗಳಲ್ಲಿ ವಿಹರಿಸುತ್ತಾ ಪ್ರತಿಭಟಿಸಿದ ರಾಜರುಗಳನ್ನು ಹೊಡದು ಸೋಲಿಸುತ್ತ, ಅಲ್ಲಿಂದ ಹೊರಟು ಚಪಳವಾದ ಕಪಿಗಳ ಸಮೂಹದಿಂದ ನಾಶಮಾಡಲ್ಪಟ್ಟ ಬಳ್ಳಿವನೆಗಳಿಂದಲೂ ಅಕ ಬಳವಂತನಾದ ನಳನು ಸಾವಿರಾರು ಕುಲಪರ್ವತಗಳನ್ನು ಸೇರಿಸಿ ನಿರ್ಮಿಸಿದ ಸೇತುವೆಯಿಂದಲೂ ಅತಿ ರಮಣೀಯವಾದ ದಕ್ಷಿಣಸಮುದ್ರದ ತೀರಪ್ರದೇಶವನ್ನು ಅನುಸರಿಸಿ ಬಂದು (ಹಿಂದೆ) ರಾಮಚಂದ್ರನು ವಿಹರಿಸಿದ ಸ್ಧಳಗಳನ್ನು ನೋಡಿ-
- ಉ|| ಅಂದಿದು ಸೀತೆಯೊಳ್ ನೆರೆದು ನಿಂದೆಡೆ ತತ್ಖರದೂಷಣರ್ಕಳಂ
- ಕೊಂದೆಡೆ ಪೋಗಿ ಪೊಮ್ಮರೆಯನೆಚ್ಚೆಡೆ ತಪ್ಪದಿದಪ್ಪುದೆಂದು ಕಾ|
- ಯ್ಪಿಂ ದಶಕಂಠನಂ ತ್ರಿದಶ ಕಂಟಕನಂ ಕೊಲಲೆಂದು ರಾಮನಾ
- ದಂದಿನ ಸಾಹಸಂ ಮನದೊಳಾವರಿಸಿತ್ತಕಳಂಕರಾಮನಾ|| ೧೯||
- ಪದ್ಯ-೧೯:ಪದವಿಭಾಗ-ಅರ್ಥ:ಅಂದಿದು ಸೀತೆಯೊಳ್ ನೆರೆದು (ಸೇರಿ) ನಿಂದ ಎಡೆ (ಸ್ಥಳ) ತತ್ ಖರದೂಷಣರ್ಕಳಂ ಕೊಂದ ಎಡೆ ಪೋಗಿ ಪೊಮ್ ಅರೆಯನು ಎಚ್ಚೆಡೆ ತಪ್ಪದ ಇದು ಅಪ್ಪುದೆಂದು (ಚಿನ್ನದ ಜಿಂಕೆಯನ್ನು ಹೊಡೆದ ಸ್ಥಳವಿದು,) ಕಾಯ್ಪಿಂ ದಶಕಂಠನಂ ತ್ರಿದಶ ಕಂಟಕನಂ ಕೊಲಲೆಂದು (ವಿಶೇಷಕೋಪದಿಂದ ದೇವತೆಗಳಿಗೆ ಕಂಟಕನಾಗಿದ್ದ ಆ ಹತ್ತುತಲೆಯ ರಾವಣನನ್ನು ಕೊಲ್ಲಲು) ರಾಮನಾದ ಅಂದಿನ ಸಾಹಸಂ ಮನದೊಳು ಅವರಿಸಿತ್ತು ಅಕಳಂಕರಾಮನಾ(ಅವತರಿಸಿದ ರಾಮನ ಅಂದಿನ ಸಾಹಸವು ಅಕಳಂಕರಾಮನಾದ ಅರ್ಜುನನ ಮನಸ್ಸಿನಲ್ಲಿ ಪುನ ಅಂಕುರಿಸಿತು)
- ಪದ್ಯ-೧೯:ಅರ್ಥ: ಹಿಂದೆ ತ್ರೇತಾಯುಗದಲ್ಲಿ ಸೀತೆಯೊಡನೆ ಸೇರಿ ನಿಂತ ಸ್ಥಳವಿದು, ಆ ಖರದೂಷಣರನ್ನು ಕೊಂದ ಸ್ಥಳವಿದು, ಹೋಗಿ ಚಿನ್ನದ ಜಿಂಕೆಯನ್ನು ಹೊಡೆದ ಸ್ಥಳವಿದು, ಆಗಿರಬೇಕು ಎಂದು ವಿಶೇಷಕೋಪದಿಂದ ದೇವತೆಗಳಿಗೆ ಕಂಟಕನಾಗಿದ್ದ ಆ ಹತ್ತುತಲೆಯ ರಾವಣನನ್ನು ಕೊಲ್ಲಲು ಅವತರಿಸಿದ ರಾಮನ ಅಂದಿನ ಸಾಹಸವು ಅಕಳಂಕರಾಮನಾದ ಅರ್ಜುನನ ಮನಸ್ಸಿನಲ್ಲಿ ಪುನ ಅಂಕುರಿಸಿತು (ಇಲ್ಲಿ ಕವಿ ಅರ್ಜುನನು ಹಿಂದೆ ರಾಮನಾಗಿ ಅವತರಿಸಿದ್ದನೆಂದೂ ಅದನ್ನು ನೆನಪಿಸಿಕೊಳ್ಲತ್ತಿದ್ದನೆಂದೂ ಹೇಳಿದ್ದಾನೆ.)
- ವ|| ಅಂತು ರಾಮ ಜನ್ಮೋತ್ತತ್ತಿಯೊಳಾದ ತನ್ನಯ ಮುನ್ನಿನ ಸಾಹಸಂಗಳಂ ನೆನೆಯುತ್ತುಂ ಬಂದಗಸ್ತ್ಯತೀರ್ಥಮಂ ಕಂಡು-
- ವಚನ:ಪದವಿಭಾಗ-ಅರ್ಥ:ಅಂತು ರಾಮ ಜನ್ಮ ಉತ್ತತ್ತಿಯೊಳು ಆದ ತನ್ನಯ ಮುನ್ನಿನ ಸಾಹಸಂಗಳಂ ನೆನೆಯುತ್ತುಂ ಬಂದು ಅಗಸ್ತ್ಯತೀರ್ಥಮಂ ಕಂಡು-
- ವಚನ:ಅರ್ಥ:ರಾಮಾವತಾರದಲ್ಲಾದ ಅಂದಿನ (ತನ್ನ ಹಿಂದಿನ) ಸಾಹಸಗಳನ್ನು ನೆನೆಯುತ್ತ ಬಂದು ಅಗಸ್ತ್ಯತೀರ್ಥವನ್ನು ಕಂಡನು.
- ಮ|| ಬಳೆಯಲ್ಕಣ್ಮಿದುದಿಲ್ಲ ವಿಂಧ್ಯಗಿರಿಯುಂ ತನ್ನಾಜ್ಞೆಯಿಂದೊರ್ಮೆ ಮು
- ಕ್ಕುಳಿಸಲ್ಕಂಬು ಸಾಲ್ದುದಿಲ್ಲ ಜಗಮಂ ತಿಂದಿರ್ದ ವಾತಾಪಿ ಪೊ|
- ಕ್ಕಳುರ್ವಾತ್ಮೋದರ ವಹ್ನಿಯಿಂ ಪೊಱಮಡಲ್ ತಾನಾರ್ತನಿಲ್ಲೞ್ದುದಿ
- ಲ್ಲೆಳೆ ತೇಂಕಿರ್ದುದು ಭಾರದಿಂ ಬಡಗೆನಲ್ ಪೆಂಪಾರ್ಗಗಸ್ತ್ಯಂಬರಂ|| ೨೦||
- ಪದ್ಯ-೨೦:ಪದವಿಭಾಗ-ಅರ್ಥ:ಬಳೆಯಲ್ಕೆ ಅಣ್ಮಿದುದಿಲ್ಲ (ಪ್ರಯತ್ನಿಸಲಿಲ್ಲ) ವಿಂಧ್ಯಗಿರಿಯುಂ ತನ್ನಾಜ್ಞೆಯಿಂದ (ವಿಂಧ್ಯಪರ್ವತವು ತನ್ನ ಆಜ್ಞೆಯನ್ನು ಮೀರಿ ಬಳೆಯಲು ಪ್ರಯತ್ನಿಸಲಿಲ್ಲ.) ಒರ್ಮೆ ಮುಕ್ಕುಳಿಸಲ್ಕಂಬು (ಒಮ್ಮೆ ಬಾಯ್ಮುಕ್ಕಳಿಸಲೂ) ಸಾಲ್ದುದಿಲ್ಲ (ಸಾಕಾಗಲಿಲ್ಲ); ಜಗಮಂ ತಿಂದಿರ್ದ ವಾತಾಪಿ ಪೊಕ್ಕು (ತನ್ನ ಬಳಿ ಬಂದವರನ್ನೆಲ್ಲಾ ತಿಂದ) ವಾತಾಪಿಯೆಂಬ ರಾಕ್ಷಸನು ಅಗಸ್ತ್ಯನ ಹೊಟ್ಟೆಯನನ್ನು ಪ್ರವೇಶಮಾಡಿ,) ಅಳುರ್ವ ಆತ್ಮೋದರ ವಹ್ನಿಯಿಂ ಪೊಱಮಡಲ್ ತಾನು ಆರ್ತನು ಇಲ್ಲ(ಉರಿಯುತ್ತಿದ್ದ ಅವನ ಜಠರಾಗ್ನಿಯಿಂದ ಹೊರಟುಬರಲು ಸಮರ್ಥನಾಗಲಿಲ್ಲ.) ; ಅೞ್ದುದಿಲ್ಲ (ಈ ಋಷಿಯ ಮಹಿಮೆಯಿಂದ ಭೂಮಿ- ಮುಳುಗಲಿಲ್ಲ) ಎಳೆ (ಇಳೆ-ಭೂಮಿ) ತೇಂಕಿರ್ದುದು (ತೇಲಿಹೋಯಿತು) ಭಾರದಿಂ ಬಡಗು (ಉತ್ತರಕ್ಕೆ) ಎನಲ್ (ಎಂದು ಹೇಳಲು), ಪೆಂಪು ಆರ್ಗೆ ಅಗಸ್ತ್ಯಂಬರಂ(ಆ ಮಹಿಮೆ ಅಗಸ್ತ್ಯ ಋಷಿಗಳಿಗಲ್ಲದೆ ಮತ್ತಾರಿಗುಂಟು)
- ಪದ್ಯ-೨೦:ಅರ್ಥ: ಅಗಸ್ತ್ಯ ಋಷಿಯ ಮಹಿಮೆಯ ವರ್ಣನೆ: ವಿಂಧ್ಯಪರ್ವತವು ತನ್ನ (ಅಗಸ್ಯನ) ಆಜ್ಞೆಯನ್ನು ಮೀರಿ ಬೆಳೆಯಲು ಪ್ರಯತ್ನಿಸಲಿಲ್ಲ. ಸಮುದ್ರವು ತನಗೆ ಒಮ್ಮೆ ಬಾಯ್ಮುಕ್ಕಳಿಸಲೂ ಸಾಕಾಗಲಿಲ್ಲ. ಜಗತ್ತನ್ನು ನುಂಗಿದ -(ತನ್ನ ಬಳಿ ಬಂದವರನ್ನೆಲ್ಲಾ ತಿಂದ) ವಾತಾಪಿಯೆಂಬ ರಾಕ್ಷಸನು ಅಗಸ್ತ್ಯನ ಹೊಟ್ಟೆಯನನ್ನು ಪ್ರವೇಶಮಾಡಿ, ಉರಿಯುತ್ತಿದ್ದ ಅವನ ಜಠರಾಗ್ನಿಯಿಂದ ಹೊರಟುಬರಲು ಸಮರ್ಥನಾಗಲಿಲ್ಲ. ಭೂಮಿಯು ತನ್ನ ಭಾರಕ್ಕೆ ಮುಳುಗದೆ ಉತ್ತರಕ್ಕೆ ಸರಿಯಿತು ಎಂಬ (ಮಹಿಮೆ) ಮಹಿಮೆ ಅಗಸ್ತ್ಯಋಷಿಗಳಿಗಲ್ಲದೆ ಮತ್ತಾರಿಗುಂಟು!
ಅಗಸ್ತ್ಯರ ಪೂರ್ವ ಕಥೆ:
|
- ವ|| ಎಂದಗಸ್ತ್ಯತೀರ್ಥ ಸೌಭದ್ರ ಪೌಳೋಮ ಕಾಂಭೋಜ ಭಾರದ್ವಾಜಮೆಂಬಯ್ದು ತೀರ್ಥಂಗಳೊಳ್ ವರ್ಧಮಾನನೆಂಬ ಋಷಿಯ ಶಾಪದೊಳುಗ್ರಗ್ರಾಹ ಸ್ವರೂಪದೊಳಿರ್ದಚ್ಚರಸೆ ಯರುಮಂ ವಿಶಾಪೆಯರ್‌ಮಾಡಿ ಮಳಯಪರ್ವತಮನೆಯ್ದೆವಂದು-
- ವಚನ:ಪದವಿಭಾಗ-ಅರ್ಥ:ಎಂದು ಅಗಸ್ತ್ಯತೀರ್ಥ ಸೌಭದ್ರ ಪೌಳೋಮ ಕಾಂಭೋಜ ಭಾರದ್ವಾಜಮೆಂಬ ಅಯ್ದು (ಐದು) ತೀರ್ಥಂಗಳೊಳ್ (ತೀರ್ಥಂಗಳಲ್ಲಿ) ವರ್ಧಮಾನನೆಂಬ ಋಷಿಯ ಶಾಪದೊಳ್ ಉಗ್ರಗ್ರಾಹ ಸ್ವರೂಪದೊಳ್ ಇರ್ದ(ಭಯಂಕರ ಮೊಸಳೆಯ ರೂಪದಲ್ಲಿದ್ದ) ಅಚ್ಚರಸೆಯರುಮಂ ವಿಶಾಪೆಯರ್‌ಮಾಡಿ (ಅಪ್ಸರಸ್ತ್ರೀಯರನ್ನು ಶಾಪ ವಿಮೋಚಿತರನ್ನಾಗಿ ಮಾಡಿ) ಮಳಯಪರ್ವತಮನು ಐಯ್ದೆವಂದು (ಬಂದು ತಲುಪಿ)
- ವಚನ:ಅರ್ಥ:ಎಂದು ಆಲೋಚಿಸುತ್ತಾ, ಅರ್ಜುನನು, ಅಗಸ್ತ್ಯತೀರ್ಥ, ಸೌಭದ್ರ, ಪೌಳೋಮ, ಕಾಂಭೋಜ, ಭಾರದ್ವಾಜವೆಂಬ ಅಯ್ದು ತೀರ್ಥಗಳಲ್ಲಿ ಸಂಚರಿಸಿ ವರ್ಧಮಾನನೆಂಬ ಋಷಿಯ ಶಾಪದಿಂದ ಭಯಂಕರವಾದ ಮೊಸಳೆಯ ಆಕಾರದಲ್ಲಿದ್ದ ಅಪ್ಸರಸ್ತ್ರೀಯರನ್ನು ಶಾಪ ವಿಮೋಚಿತರನ್ನಾಗಿ ಮಾಡಿ ಮಲಯಪರ್ವತಕ್ಕೆ ಬಂದು ತಲುಪಿದನು.
- ಚಂ|| ಇದು ಮಳಯಾಚಳಂ ಮಳಯಜಂ ಮಳಯಾನಿಳನೆಂದು ಪೆಂಪುವೆ
- ತ್ತುದು ಸಿರಿಕಂಡಮುಂ ಪದೆದು ತೀಡುವ ಗಾಳಿಯುಮಿಲ್ಲಿ ಪುಟ್ಟಿ ಪೋ|
- ಗದು ಪೊಸ ಸುಗ್ಗಿ ಮೂಗುವಡದಿಲ್ಲಿಯ ಕೋಗಿಲೆ ಬಂದಮಾವು ಬೀ
- ಯದು ಕುಸುಮಾಸ್ತ್ರನಾಜ್ಞೆ ತವದೆಲ್ಲಿಯುಮಿಲ್ಲಿಯ ನಂದನಂಗಳೊಳ್|| ೨೧||
- ಪದ್ಯ-೨೧:ಪದವಿಭಾಗ-ಅರ್ಥ:ಇದು ಮಳಯಾಚಳಂ ಮಳಯಜಂ ಮಳಯಾನಿಳನೆಂದು ಪೆಂಪುವೆತ್ತುದು (ಪ್ರಸಿದ್ಧಿಪಡೆದಿದೆ) ಸಿರಿಕಂಡಮುಂ (ಶ್ರೀಗಂಧದ ಪರಿಮಳವನ್ನು) ಪದೆದು ತೀಡುವ ಗಾಳಿಯುಮಿಲ್ಲಿ ಪುಟ್ಟಿ ಪೋಗದು ಪೊಸ ಸುಗ್ಗಿ (ವಸಂತ ಮಾಸ) ಮೂಗುವಡದಿಲ್ಲಿಯ ಕೋಗಿಲೆ ಬಂದಮಾವು ಬೀಯದು ಕುಸುಮಾಸ್ತ್ರನಾಜ್ಞೆ ತವದೆಲ್ಲಿಯುಮಿಲ್ಲಿಯ ನಂದನಂಗಳೊಳ್|
- ಪದ್ಯ-೨೧:ಅರ್ಥ: ಇದು ಮಲಯಪರ್ವತ, ಶ್ರೀಗಂಧಕ್ಕೆ ಮಲಯಜನೆಂದು ತಂಪಾದ ಗಾಳಿಗೆ ಮಲಯಾನಿಲ ಎಂದೂ ಹೆಸರು ಬಂದುದು ಇಲ್ಲಿ ಹುಟ್ಟಿದುದರಿಂದಲೇ, ಶ್ರೀಗಂಧದ ಪರಿಮಳವನ್ನು ಪದೆದು ಬೀಸುವ ಗಾಳಿಯುಮಿಲ್ಲಿ ವಸಂತಋತುವೂ ಇಲ್ಲಿ ಹುಟ್ಟಿ ಮತ್ತೆಲ್ಲಿಗೂ ಹೋಗುವುದಿಲ್ಲ. ಇಲ್ಲಿಯ ಕೋಗಿಲೆಯ ಮೂಕತೆಯನ್ನು ಪಡೆಯುವುದಿಲ್ಲ, ಫಲ ಬಿಟ್ಟ ಮಾವು ಎಂದೂ ಮುನಿದುಹೋಗುವುದಿಲ್ಲ. ಇಲ್ಲಿಯ ನಂದನವನಗಳಲ್ಲಿ ಮನ್ಮಥನ ಆಜ್ಞೆ ಎಂದೂ ತಪ್ಪುವುದಿಲ್ಲ.
- ಮ|| ಇದಱಭ್ರಂಕಷ ಕೂಟ ಕೋಟಿಗಳೊಳಿರ್ದಂಭೋಜ ಷಂಡಂಗಳಂ
- ಪುದಿದುಷ್ಣಾಂಶುವಿನೂರ್ದ್ವಗಾಂಶುನಿವಹಂ ಮೆಯ್ಯಿಟ್ಟಲರ್ಚುತ್ತುಮಿ|
- ರ್ಪುದು ಮಾದ್ಯದ್ಗಜ ಗಂಡ ಭಿತ್ತಿ ಕರ್ಷಣಪ್ರೋದ್ಭೇದದಿಂ ಸಾರ್ದು ಬಂ
- ದಿದಿರೊಳ್ ಕೂಡುವುದಿಲ್ಲಿ ಚಂದನ ರಸಂ ಕೆಂಬೊನ್ನ ಟಂಕಂಗಳೊಳ್|| ೨೨||
- ಪದ್ಯ-೨೨:ಪದವಿಭಾಗ-ಅರ್ಥ:ಇದಱ ಅಭ್ರಂಕಷ ಕೂಟ ಕೋಟಿಗಳೊಳ್ ಇರ್ದ(ಇದರ ಅನೇಕ ಆಕಾಶಗಾಮಿಯಾದ ಶಿಖರಗಳ ಮೇಲಿರುವ) ಅಂಭೋಜ ಷಂಡಂಗಳಂ (ತಾವರೆಗಳ ಸಮೂಹವನ್ನು) ಪುದಿದು (ವ್ಯಾಪಿಸಿ) ಉಷ್ಣಾಂಶುವಿನ ಊರ್ದ್ವಗಾಂಶು ನಿವಹಂ (ಸೂರ್ಯನ ಊರ್ಧ್ವಗಾಮಿಯಾದ ಉಷ್ಣ ಕಿರಣಗಳು) ಮೆಯ್ಯಿಟ್ಟು (ಮೈಯನ್ನು ಇಟ್ಟು) ಅಲರ್ಚುತ್ತುಂ ಇರ್ಪುದು (ಅರಳಿಸುತ್ತ ಇರುವುದು); ಮಾದ್ಯತ್ (ಮದಿಸಿದ) ಗಜ ಗಂಡ ಭಿತ್ತಿ (ಗಜದ ಗಂಡಸ್ಥಳವೆಂಬ ಗೋಡೆಗಳ ) ಕರ್ಷಣ (ಉಜ್ಜುವಿಕೆಯಿಂದ) ಪ್ರೋದ್ಭೇದದಿಂ (ಪ್ರೋತ್ ಬೇಧದಿಂ -ಮುರಿದು ಸ್ರವಿಸುತ್ತಿರುವ) ಸಾರ್ದುಬಂದು (ಸಮೀಪಿಸಿ ಬಂದು) ಇದಿರೊಳ್ ಕೂಡುವುದು ಇಲ್ಲಿ (ಇಲ್ಲಿ ಸೇರುವುದು.) ಚಂದನ ರಸಂ ಕೆಂಬೊನ್ನ ಟಂಕಂಗಳೊಳ್ (ಶ್ರೀಗಂಧದ ರಸವು ಹರಿದುಬಂದು ಇಲ್ಲಿಯ ಅಪರಂಜಿಯ/ಕೆಂಪು ಬಣ್ಣದ ಪರ್ವತದ ತಪ್ಪಲುಗಳನ್ನು ಸೇರುತ್ತದೆ.)
- ಪದ್ಯ-೨೨:ಅರ್ಥ: ಇದರ ಅನೇಕ ಆಕಾಶಗಾಮಿಯಾದ ಶಿಖರಗಳ ಮೇಲಿರುವ ತಾವರೆಗಳ ಸಮೂಹವನ್ನು ಸೂರ್ಯನ ಊರ್ಧ್ವಗಾಮಿಯಾದ ಉಷ್ಣ ಕಿರಣಗಳು ಪ್ರವೇಶಿಸಿ ಅರಳಿಸುತ್ತವೆ. ಮದ್ದಾನೆಗಳ ಗಂಡಸ್ಥಳವೆಂಬ ಗೋಡೆಗಳ ಉಜ್ಜುವಿಕೆಯಿಂದ ಮುರಿದು ಸ್ರವಿಸುತ್ತಿರುವ ಶ್ರೀಗಂಧದ ರಸವು ಹರಿದುಬಂದು ಇಲ್ಲಿಯ ಅಪರಂಜಿಯ ಬಣ್ಣದ ಪರ್ವತದ ತಪ್ಪಲುಗಳನ್ನು ಸೇರುತ್ತದೆ.
- ಮ||ಸ್ರ|| ನೆಗಳ್ದೀ ಕರ್ಪೂರ ಕಾಳಾಗರು ಮಳಯ ಮಹೀಜಂಗಳೇಳಾ ಲತಾಳೀ|
- ಸ್ಧಗಿತಂಗಳ್ ಕಣ್ಗೆವಂದಿರ್ದುವನಿವನೆ ವಲಂ ಕೊಂಬುಗೊಂಡಂಗಜಂ ಮೆ|
- ಲ್ಲಗೆ ಪಾರ್ದಾರ್ದಾಗಳುಂ ಕಿನ್ನರ ಯುವತಿ ಮೃಗೀವ್ರಾತಮಂ ತನ್ನ ನಲ್ಲಂ
- ಬುಗಳಿಂದೆಚ್ಚೆಚ್ಚು ಮೆಚ್ಚಂ ಸಲಿಸುವನದಱಿಂ ರಮ್ಯಮಿಂತೀ ನಗೇಂದ್ರಂ|| ೨೩||
- ಪದ್ಯ-೨೩:ಪದವಿಭಾಗ-ಅರ್ಥ:ನೆಗಳ್ದೀ (ನೆಗಳ್ದ ಈ- ಈ ಪ್ರಸಿದ್ಧವಾದ) ಕರ್ಪೂರ, ಕಾಳಾಗರು, ಮಳಯ ಮಹೀಜಂಗಳು (ಮಲಯ ಪರ್ವತದ ಗಂಧದ ಮರಗಳು) ಏಳಾ ಲತಾಳೀ ಸ್ಧಗಿತಂಗಳ್ (ಏಲಕ್ಕಿ ಬಳ್ಳಿಗಳಿಂದ ವ್ಯಾಪ್ತವಾಗಿ ತುಂಬಿದ) ಕಣ್ಗೆ ವಂದಿರ್ದುವಂ (ಕಣ್ಣಿಗೆ ಸೊಗಸಾಗಿರುವುದನ್ನು) ಇವನೆ ವಲಂ (ಇವನ್ನೇ ಅಲ್ಲವೇ) ಕೊಂಬುಗೊಂಡು ಅಂಗಜಂ (ಮನ್ಮಥನು ತನ್ನ ಸಂಕೇತಸ್ಥಳವನ್ನಾಗಿ ಮಾಡಿಕೊಂಡು) ಮೆಲ್ಲಗೆ ಪಾರ್ದು ಆರ್ದು ಆಗಳುಂ (ಮೆಲ್ಲಗೆ ನೋಡಿ ಆರ್ಭಟಿಸಿ ಆಗ,) ಕಿನ್ನರ ಯುವತಿ ಮೃಗೀವ್ರಾತಮಂ (ಕಿನ್ನರಯುವತಿಯೆಂಬ ಜಿಂಕೆಯ ಸಮೂಹವನ್ನು) ತನ್ನ ನಲ್ಲಂಬುಗಳಿಂದ (ತನ್ನ ಉತ್ತಮ ಬಾಣಗಳಿಂದ) ಎಚ್ಚೆಚ್ಚು ಮೆಚ್ಚಂ ಸಲಿಸುವನು (ಹೊಡೆದು ಅವರ ಇಷ್ಟಾರ್ಥವನ್ನು ಸಲ್ಲಿಸುತ್ತಾನೆ.) ಅದಱಿಂ ರಮ್ಯಂ ಇಂತು ಈ ನಗೇಂದ್ರಂ (ಆದುದರಿಂದ ಈ ಪರ್ವತಶ್ರೇಷ್ಠವು ರಮಣೀಯವಾಗಿದೆ)
- ಪದ್ಯ-೨೩:ಅರ್ಥ: ಏಲಕ್ಕಿ ಬಳ್ಳಿಗಳಿಂದ ವ್ಯಾಪ್ತವಾಗಿ ಪ್ರಸಿದ್ಧವಾಗಿರುವ ಇಲ್ಲಿಯ ಕರ್ಪೂರ, ಕರಿ ಅಗಿಲು, ಗಂಧದ ಮರಗಳು ಬಹು ರಮಣೀಯವಾಗಿವೆ. ಇದನ್ನೇ ಅಲ್ಲವೇ ಮನ್ಮಥನು ತನ್ನ ಸಂಕೇತಸ್ಥಳವನ್ನಾಗಿ ಮಾಡಿಕೊಂಡು ಮೆಲ್ಲಗೆ ನೋಡಿ ಆರ್ಭಟಿಸಿ ಕಿನ್ನರಯುವತಿಯೆಂಬ ಜಿಂಕೆಯ ಸಮೂಹವನ್ನು ಯಾವಾಗಲೂ ತನ್ನ ಉತ್ತಮ ಬಾಣಗಳಿಂದ ಹೊಡೆದು ಅವರ ಇಷ್ಟಾರ್ಥವನ್ನು ಸಲ್ಲಿಸುತ್ತಾನೆ. ಆದುದರಿಂದ ಈ ಪರ್ವತಶ್ರೇಷ್ಠವು ರಮಣೀಯವಾಗಿದೆ
- ಮ|| ಇದಿರೊಳ್ ನಿಂದೊಡೆ ವಜ್ರಿ ಸೈರಿಸನಿರಲ್ವೇಡೆಮ್ಮೊಳೊಳ್ವೊಕ್ಕು ನಿ
- ಲ್ವುದು ನೀನೆಂದು ಕಡಂಗಿ ಕಾಲ್ವಿಡಿವವೋಲ್ ತನ್ನೂರ್ಮಿಗಳ್ ಬಂದುವಂ|
- ದಿದಱಿಂ ಪೋದ ತಪೋಪಳಂ (?) ಗಗನಮಂ ಮಾರ್ಪೊಯ್ಯೆ ಕಣ್ಗೊಪ್ಪಿ ತೋ
- ರ್ಪುದಿದುತ್ಪ್ರೇಂಖದಸಂಖ್ಯ ಶಂಖ ಧವಳಂ ಗಂಭೀರ ನೀರಾಕರಂ|| ೨೪ ||
- ಪದ್ಯ-೨೪:ಪದವಿಭಾಗ-ಅರ್ಥ:ಇದಿರೊಳ್ ನಿಂದೊಡೆ ವಜ್ರಿ (ಇಂದ್ರನು ) ಸೈರಿಸಂ ಇರಲ್ವೇಡ (ಇಂದ್ರನು ಸೈರಿಸುವುದಿಲ್ಲ. ಇಲ್ಲಿರಬೇಡ;) ಎಮ್ಮೊಳ್ ಒಳ್ವೊಕ್ಕು ನಿಲ್ವುದು (ನಮ್ಮೊಳಗೆ-ಸಮುದ್ರದೊಳಗೆ ಪ್ರವೇಶ ಮಾಡಿ ನಿಲ್ಲುವುದು) ನೀನು ಎಂದು ಕಡಂಗಿ (ಹುರಿದುಂಬಿಸಿ) ಕಾಲ್ವಿಡಿವವೋಲ್ (ಕಾಲನ್ನು ಹಿಡಿಯುವ ಹಾಗೆ) ತನ್ನ ಊರ್ಮಿಗಳ್ (ಅಲೆಗಳು) ಬಂದುವು ಅಂದು ಇದಱಿಂ (ಸಮುದ್ರದಿಂದ ಅಲೆಗಳು ಬಂದವು); ಪೋದ ತಪೋ ಪಳಂ (ತಪೋ-ಬಿಸಿ, ಪಳಂ-ತಾಗು) (?) ಗಗನಮಂ (ಹಿಂದೆ ಹೋದ ಅಲೆಗಳು ಬಿಸಿಯಾಗಿ ಆಕಾಶವನ್ನು ತಾಗಿ) ಮಾರ್ಪೊಯ್ಯೆ (ಪ್ರತಿಭಟಿಸಲು) ಕಣ್ಗೆ ಒಪ್ಪಿ ತೋರ್ಪುದು (ಕಣ್ಣಿಗೆ ಚಂದವಾಗಿ ತೋರುವುದು) ಇದು ಉತ್ಪ್ರೇಂಖದ (ದಡದಹತ್ತಿರ-ಮೇಲೆ ತೇಲಾಡುವ) ಅಸಂಖ್ಯ ಶಂಖ ಧವಳಂ (ಬಿಳಿಶಂಖಗಳು) ಗಂಭೀರ ನೀರಾಕರಂ (ಗಂಭೀರ ಸಮುದ್ರವು)|
- ಪದ್ಯ-೨೪:ಅರ್ಥ:ಸಮುದ್ರ ವರ್ಣನೆ: ನೀನು ಎದುರಿನಲ್ಲಿ ನಿಂತರೆ ಇಂದ್ರನು ಸೈರಿಸುವುದಿಲ್ಲ. ಇಲ್ಲಿರಬೇಡ; ನಮ್ಮೊಳಗೆ ಪ್ರವೇಶ ಮಾಡಿ ನಿಲ್ಲತಕ್ಕದ್ದು ಎಂದು ಹುರಿದುಂಬಿಸಿ ಕಾಲನ್ನು ಹಿಡಿಯುವ ಹಾಗೆ ಸಮುದ್ರದ ಅಲೆಗಳು ಪಕ್ಕದಲ್ಲಿರುವ ಪರ್ವತಗಳ ಬುಡವನ್ನು ಆಶ್ರಯಿಸಿವೆ. ಇಲ್ಲಿಂದ ಹಿಂದೆ ಹೋದ ಅಲೆಗಳು ಬಿಸಿಯಾಗಿ ಆಕಾಶವನ್ನು ತಾಗಿ ಅಲೆಗಳು ಪರಸ್ಪರ ಪ್ರತಿಭಟಿಸಲು, ದಡದಹತ್ತಿರ-ಮೇಲೆ ತೇಲಾಡುವ ಅಸಂಖ್ಯಾತವಾದ ಬೆಳ್ಳಗಿರುವ ಶಂಖಗಳಿಂದ ಕೂಡಿದ ಗಂಭೀರವಾದ ಸಮುದ್ರವು ಕಣ್ಣಿಗೆ ಚಂದವಾಗಿ ತೋರಿತು.
- ಚಂ|| ಚಳದನಿಳಾಹತ ಕ್ಷುಭಿತ ಭಂಗುರ ತುಂಗ ತರಂಗಮಾಳಿಕಾ
- ವಳನ ಸಮುಚ್ಚಳನ್ಮಣಿಗಣಾತ್ತ ಮರೀಚಿ ಲತಾ ಪ್ರತಾನ ಸಂ|
- ವಳಯಿತ ವಿದ್ರುಮ ದ್ರುಮ ವಿಳಾಸ ವಿಶೇಷಿತ ಬಾಡವಾನಳಾ
- ವಿಳ ಜಳಮಂ ಮನಂ ಬಯಸಿ ನೋಡಿದನರ್ಣವಮಂ ಗುಣಾರ್ಣವಂ|| ೨೫ ||
- ಪದ್ಯ-೨೫:ಪದವಿಭಾಗ-ಅರ್ಥ:ಚಳದ (ಚಲಿಸುತ್ತಿರುವ) ಅನಿಳ ಆಹತ (ಗಾಳಿಯ ಹೊಡೆತದಿಂದ) ಕ್ಷುಭಿತ (ಕದಡಿದ) ಭಂಗುರ ತುಂಗ ತರಂಗ (ಅಸ್ಥಿರವೂ ಎತ್ತರವೂ ಆದ ಅಲೆಗಳ) ಮಾಳಿಕಾ ಆವಳನ(ಅಲೆಗಳ ಹೊರಳುವಿಕೆಯಿಂದ) ಸಮುಚ್ಚಳತ್ (ಮೇಲಕ್ಕೆ ಚಿಮ್ಮಿದ ) ಮಣಿಗಣ ಆತ್ತ (ಮಣಿಗಳ ರತ್ನಕಾಂತಿಗಳನ್ನ ಪಡೆದ) ಮರೀಚಿ ಲತಾ ಪ್ರತಾನ ಸಂವಳಯಿತ(ಮರೀಚಿ-ಕಿರಣಗಳ ಬಳ್ಳಿಗಳ ಗುಂಪಿನಿಂದ ಆವರಿಸಿದ) ವಿದ್ರುಮ ದ್ರುಮ ವಿಳಾಸ ವಿಶೇಷಿತ (ಹವಳದ ಗಿಡಗಳ ಸೊಗಸಿನಿಂದ ವಿಶಿಷ್ಟವಾಗಿ) ಬಾಡವಾನಳ (ಬಡಬಾನಲವೆಂಬ ಸಮುದ್ರದ ಬೆಂಕಿಯಿಂದ) ಆವಿಳ ಜಳಮಂ (ಬಗ್ಗಡವಾದ ನೀರಿನ್ನು) ಮನಂ ಬಯಸಿ ನೋಡಿದನು ಅರ್ಣವಮಂ (ಇಷ್ಟಪಟ್ಟು ಸಮುದ್ರವನ್ನು ಅರ್ಜುನನು ನೋಡಿದನು) ಗುಣಾರ್ಣವಂ
- ಪದ್ಯ-೨೫:ಅರ್ಥ: ಚಲಿಸುತ್ತಿರುವ ಗಾಳಿಯ ಹೊಡೆತದಿಂದ ಕದಡಿದುದೂ ಅಸ್ಥಿರವೂ ಎತ್ತರವೂ ಆದ ಅಲೆಗಳ ಹೊರಳುವಿಕೆಯಿಂದ ಚಂಚಲವಾದುದು. ಮೇಲಕ್ಕೆ ಚಿಮ್ಮಿದ ಮಣಿಗಳ ರತ್ನಕಾಂತಿಗಳಿಂದ ಕೂಡಿದುದೂ ಹವಳದ ಗಿಡಗಳ ಸೊಗಸಿನಿಂದ ವಿಶಿಷ್ಟವಾಗಿ ಮಾಡಲ್ಪಟ್ಟುದೂ ಬಡಬಾಗ್ನಿಯ ಬೆಂಕಿಯಿಂದ ಬಗ್ಗಡವಾದ ನೀರುಳ್ಳ ಸಮುದ್ರವನ್ನು ಗುಣಾರ್ಣವನಾದ ಅರ್ಜುನನು ಇಷ್ಟಪಟ್ಟು ನೋಡಿದನು.
- ವ|| ಅಂತು ನೋಡುತ್ತುಂ ಬಂದು ಮುಂದೊಂದೆಡೆಯೊಳದಭ್ರಾಭ್ರವಿಭ್ರಮ ಭ್ರಾಜಿತೋತ್ತುಂಗಶೈಲಮಂ ಕಂಡು-
- ವಚನ:ಪದವಿಭಾಗ-ಅರ್ಥ:ಅಂತು ನೋಡುತ್ತುಂ ಬಂದು ಮುಂದೆ ಒಂದೆಡೆಯೊಳ್ ಅದಭ್ರ (ಅತಿಶಯವಾದ) ಆಭ್ರ ವಿಭ್ರಮ (ಮೋಡಗಳ ವಿಲಾಸದಿಂದ) ಭ್ರಾಜಿತ (ಪ್ರಕಾಶಮಾನವಾದ) ಉತ್ತುಂಗಶೈಲಮಂ (ಎತ್ತರವಾದ ಪರ್ವತವನ್ನು) ಕಂಡು-
- ವಚನ:ಅರ್ಥ:ಹಾಗೆ ನೋಡುತ್ತ ಬಂದು ಮುಂಭಾಗದಲ್ಲಿ ಅತಿಶಯವಾದ ಮೋಡಗಳ ವಿಲಾಸದಿಂದ ಪ್ರಕಾಶಮಾನವಾದ ಎತ್ತರವಾದ ಪರ್ವತವನ್ನು ನೋಡಿ-
- ಮ|| ವಿನತಾಪುತ್ರನ ವಜ್ರತುಂಡಹತಿಗಂ ಮೆಯ್ಯಾಂತು ಕಂಡಂಗಳು
- ಳ್ಳಿನಮಂಗಂಗಳನೊಡ್ಡಿಯೊಡ್ಡಿ ತನುವಂ ಕೊಟ್ಟಂತು ಜೀಮೂತವಾ|
- ಹನನೆಂಬಂಕದ ಚಾಗಿ ನಿಚ್ಚಟಿಕೆಯಿಂದೀ ಶೈಳದೊಳ್ ಶಂಖಚೂ
- ಡನನಾನಂದದೆ ಕಾದ ಪೆಂಪೆಸೆಯೆ ನಾಗಾನಂದಮಂ ಮಾಡಿದಂ|| ೨೬ ||
- ಪದ್ಯ-೨೬:ಪದವಿಭಾಗ-ಅರ್ಥ:ವಿನತಾಪುತ್ರನ (ಗರುಡನ) ವಜ್ರತುಂಡ ಹತಿಗಂ (ವಜ್ರದಷ್ಟು ಕಠಿಣವಾದ ಪೆಟ್ಟಿಗೆ) ಮೆಯ್ಯಾಂತು (ಶರೀರವನ್ನೊಡ್ಡಿ) ಕಂಡಂಗಳುಳ್ಳಿನಂ (ಮಾಂಸಖಂಡಗಳಿರುವವರೆಗೂ) ಅಂಗಂಗಳನು ಒಡ್ಡಿಯೊಡ್ಡಿ (ಅವಯವಗಳನ್ನು ಚಾಚಿ) ತನುವಂ ಕೊಟ್ಟಂತು (ಶರೀರ ದಾನಮಾಡಿದ) ಜೀಮೂತವಾಹನನೆಂಬ ಅಂಕದ ಚಾಗಿ (ಪ್ರಸಿದ್ಧ ತ್ಯಾಗಿಯು) ನಿಚ್ಚಟಿಕೆಯಿಂದ (ಮನಸ್ಸಿನ ನಿಶ್ಚಲತ್ವದಿಂದ) ಈ ಶೈಳದೊಳ್ ಶಂಖಚೂಡನನು ಆನಂದದೆ ಕಾದ ಪೆಂಪೆಸೆಯೆ (ಹಿರಿಮೆಯನ್ನು ಪ್ರಕಾಶಿಸಿ) ನಾಗಾನಂದಮಂ (ನಾಗರಿಗೆ ಆನಂದವನ್ನು) ಮಾಡಿದಂ
- ಪದ್ಯ-೨೬:ಅರ್ಥ: ವಿನತೆಯ ಮಗನಾದ ಗರುಡನ ವಜ್ರದಷ್ಟು ಕಠಿಣವಾದ ಪೆಟ್ಟಿಗೆ ಶರೀರವನ್ನೊಡ್ಡಿ ಮಾಂಸಖಂಡಗಳಿರುವವರೆಗೂ ಅವಯವಗಳನ್ನು ಚಾಚಿ ಶರೀರ ದಾನಮಾಡಿದ, ಪ್ರಸಿದ್ಧನಾದ ಜೀಮೂತವಾಹನನೆಂಬ ಪ್ರಸಿದ್ಧ ತ್ಯಾಗಿಯು ಮನಸ್ಸಿನ ನಿಶ್ಚಲತ್ವದಿಂದ ಶಂಖಚೂಡ ನೆಂಬುವವನನ್ನು ರಕ್ಷಿಸಿದ ಹಿರಿಮೆಯನ್ನು ಪ್ರಕಾಶಿಸಿ ನಾಗರಿಗೆ ಆನಂದವನ್ನು ಉಂಟುಮಾಡಿದನು. ಅದು ಈ ಬೆಟ್ಟದಲ್ಲಿಯೇ.
- ವ|| ಎಂದಭಿನವ ಜೀಮೂತವಾಹನಂ ಜೀಮೂತವಾಹನನ ಪರೋಪಕಾರದ ಬೀರದ ಪೆಂಪಂ ಮೆಚ್ಚುತ್ತುಂ ಬಂದು ಗೋಕರ್ಣನಾಥನಂ ಗೌರೀನಾಥನನವನಿ ಪವನ ಗಗನ ದಹನ ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ ತ್ರಿಳೋಕೈಕ ಸಂಗೀತ ಕೀರ್ತಿಯಂ ಕಂಡು ಕೆಯ್ಗಳಂ ಮುಗಿದು-
- ವಚನ:ಪದವಿಭಾಗ-ಅರ್ಥ:ಎಂದು ಅಭಿನವ ಜೀಮೂತವಾಹನಂ (ಅರ್ಜುನನು) ಜೀಮೂತವಾಹನನ ಪರೋಪಕಾರದ ಬೀರದ ಪೆಂಪಂ (ಶೌರ್ಯದ ಹಿರಿಮೆಯನ್ನು) ಮೆಚ್ಚುತ್ತುಂ ಬಂದು ಗೋಕರ್ಣನಾಥನಂ ಗೌರೀನಾಥನನವನಿ ಪವನ ಗಗನ ದಹನ ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ ತ್ರಿಳೋಕೈಕ ಸಂಗೀತ ಕೀರ್ತಿಯಂ ಕಂಡು ಕೆಯ್ಗಳಂ ಮುಗಿದು-
- ವಚನ:ಅರ್ಥ:ಎಂದು ಅಭಿನವ ಜೀಮೂತವಾಹನನಾದ (ಅರ್ಜುನನು) ಅರಿಕೇಸರಿಯು ಜೀಮೂತವಾಹನನ ಪರೋಪಕಾರದ, ಶೌರ್ಯದ ಹಿರಿಮೆಯನ್ನು ಮೆಚ್ಚುತ್ತ ಬಂದು ಗೌರೀಶನೂ ಭೂಮಿ, ವಾಯು, ಆಕಾಶ, ಅಗ್ನಿ, ಸೂರ್ಯ, ಅಪ್, ಚಂದ್ರ, ಯಜಮಾನ ಎಂಬು ಅಷ್ಟಮೂರ್ತಿಯತನೂ ಮೂರು ಲೋಕಗಳಿಂದ ಸ್ತೋತ್ರಮಾಡಲ್ಪಡುವ ಕೀರ್ತಿಯುಳ್ಳವನೂ ಆದ ಗೋಕರ್ಣನಾಥನನ್ನು ಕಂಡು ಕೈಗಳನ್ನು ಮುಗಿದು-.
- ಪೃಥ್ವಿ|| ಪ್ರಚಂಡ ಲಯ ತಾಂಡವ ಕ್ಷುಭಿತಯಾಶು ಯಸ್ಯಾನಯಾ
- ಸದಿಗ್ವಳಯಯಾ ಭುವಾ ಸ ಗಿರಿ ಸಾಗರ ದ್ವೀಪಯಾ|
- ಕುಲಾಲ ಕರ ನಿರ್ಭರ ಭ್ರಮಿತ ಚಕ್ರಲೀಲಾಯಿತಂ
- ಸ ಸರ್ವ ಜಗತಾಂ ಗುರುರ್ಗಿರಿಸುತಾಪತಿ ಪಾತು ನಃ|| ೨೭||
- ಪದ್ಯ-೨೭:ಪದವಿಭಾಗ-ಅರ್ಥ:ಪ್ರಚಂಡ ಲಯ ತಾಂಡವ (ನೃತ್ಯದಿಂದ) ಕ್ಷುಭಿತಯಾಶು (ಅಲುಗಾಡಲ್ಪಟ್ಟಳೋ) ಯಸ್ಯಾನಯಾ ಸದಿಗ್ವಳಯಯಾ (ಯಾವ ದಿಙ್ಮಂಡಲಗಳಿಂದಲೂ) ಭುವಾ (ಭೂಮಿ) ಸ ಗಿರಿ ಸಾಗರ ದ್ವೀಪಯಾ ( ಪರ್ವತ, ಸಮುದ್ರ, ದ್ವೀಪಗಳಿಂದ) ಕುಲಾಲ ಕರ ನಿರ್ಭರ ಭ್ರಮಿತ (ಕುಂಬಾರನ ಕೈಯಿಂದ ವೇಗವಾಗಿ) ಚಕ್ರಲೀಲಾಯಿತಂಸ (ಲೀಲೆಯಂದ ತಿರುಗಿಸಲ್ಪಟ್ಟು) ಸರ್ವ ಜಗತಾಂ (ಸರ್ವ ಜಗತಾಂ ಪತಿಃ - ಸಮಸ್ತಜಗತ್ತಿಗೂ ಒಡೆಯನಾದ) ಗುರುರ್ಗಿರಿಸುತಾಪತಿ (ಗುರುರ್ಗಿರಿಸುತಾಪತಿಃ- ಗುರುವೂ ಪಾರ್ತಿಯ ಪತಿ ಶಿವನು) ಪಾತು ನಃ(ನಮ್ಮನ್ನು ಕಾಪಾಡಲಿ)
- ಪದ್ಯ-೨೭:ಅರ್ಥ: ಯಾರ ಬಹಳವೇಗವಾದ ಲಯ ತಾಳಗತಿಯನ್ನುಳ್ಳ ತಾಂಡವ ನೃತ್ಯದಿಂದ ದಿಙ್ಮಂಡಲಗಳು, ಪರ್ವತಗಳು ಸಮುದ್ರಗಳು, ದ್ವೀಪಗಳಿಂದಲೂ ಕೂಡಿದ ಭೂಮಿಯು ಕುಂಬಾರನ ಕೈ ಚಕ್ರದಂತೆ ವೇಗವಾಗಿ ಸುತ್ತುವ ಲೀಲೆಗೆ ಒಳಗಾಯಿತೋ ಆ ಸರ್ವಜಗತ್ಪತಿಯೂ ಪಾರ್ವತಿ ರಮಣನೂ ಆದ ಶಿವನು ನಮ್ಮನ್ನು ಕಾಪಾಡಲಿ-
- ವ|| ಎಂದು ಬಾಳೇಂದುಮೌಳಿಯಂ ಸ್ತುತಿಸಿ-
- ವಚನ:ಪದವಿಭಾಗ-ಅರ್ಥ:ಎಂದು ಬಾಳೇಂದುಮೌಳಿಯಂ (ಬಾಲ-ಬಾಲ, ಇಂದು- ಚಂದ್ರ, -ಮೌಳಿ- ತಲೆಯಲ್ಲಿ ಧರಿಸಿರುವವನು) ಸ್ತುತಿಸಿ-
- ವಚನ:ಅರ್ಥ:ಎಂದು ಬಾಲಚಂದ್ರನನ್ನು ತಲೆಯಲ್ಲಿ ಧರಿಸಿದ ಶಿವನನ್ನು ಸ್ತೋತ್ರಮಾಡಿ- (ಬನವಾಸಿ ಪ್ರದೇಶವನ್ನು ನೋಡಿದನು)
- ಚಂ|| ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ
- ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ|
- ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ
- ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮||
- ಪದ್ಯ-೨೮:ಪದವಿಭಾಗ-ಅರ್ಥ:(ಪದವಿಭಾಗ): ಸೊಗಯಿಸಿ ಬಂದ ಮಾಮರನೆ ತಳ್ತ ಎಲೆವಳ್ಳಿಯೆ ಪೂತಜಾತಿ ಸಂಪಗೆಯೆ ಕುಕಿಲ್ವ ಕೋಗಿಲೆಯೆ ಪಾಂಡುವ ತುಂಬಿಯೆ ನಲ್ಲರೊಳ್ ಮೊಗಂ ನಗೆಮೊಗದೊಳ್ ಪಳಂಚಲೆಯೆ ಪಳಂಚು:ತಾಗು, ಬಡಿ, ಅಲೆಯ -ಪೀಡಿಸುವ ನಲ್ಲ ನಲ್ಲೆಯರು.) ಕೂಡುವ ನಲ್ಲರೆ.ಕೂಡುವ ನಲ್ಲರೆ ನೋಳ್ಪೊಡೆ ಆವ ಬೆಟ್ಟುಗಳೊಳ ಮಾವ ನಂದನಂಗಳು ಒಳಂ ಬನವಾಸಿ ದೇಶದೊಳ್
- ಪದ್ಯ-೨೮:ಅರ್ಥ: ಆ ಬನವಾಸಿ ದೇಶದ ಯಾವುದೇ ಬೆಟ್ಟಗಳಲ್ಲಿ ಮತ್ತು ಉದ್ಯಾನವನಗಳಲ್ಲಿ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪೀಡಿಸಿ ಕೂಡುವ ನಲ್ಲರೇ.
- ಉ|| ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
- ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ|
- ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್
- ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೨೯||
- ಪದ್ಯ-೨೯:ಪದವಿಭಾಗ-ಅರ್ಥ:ಚಾಗದ (ತ್ಯಾಗದ) ಭೋಗದ (ಸುಖದ) ಅಕ್ಕರದ (ವಿದ್ಯೆಯ) ಗೇಯದ (ಸಂಗಿತದ) ಗೊಟ್ಟಿಯ ಅಲಂಪಿನ ಇಂಪುಗಳ್ಗೆ (ಗೋಷ್ಠಿಗಳ ಸಂತೋಷದ ಸುಖಕ್ಕೆ) ಆಗರವಾದ ಮಾನಸರೆ ಮಾನಸರ್ (ಆಗರವಾಗಿರುವ ಮನುಷ್ಯರೇ ಮನುಷ್ಯರು) ಅಂತವರಾಗಿ ಪುಟ್ಟಲ್ ಏನಾಗಿಯುಮೇನೊ ತೀರ್ದಪುದೆ (ಹುಟ್ಟಲು ಏನಾದರೂ ತಾನೇ ತೀರುವುದೇ-ಸಾಧ್ಯವಾಗುತ್ತದೆಯೇ?) ತೀರದೊಡಂ ಮಱಿದುಂಬಿಯಾಗಿ (ಮರಿಜೇನಾಗಿ) ಮೇಣ್ ಕೋಗಿಲೆಯಾಗಿ ಪುಟ್ಟುವುದು (ಕೋಗಿಲೆಯಾಗಿಯೋ ಹುಟ್ಟಬೇಕು) ನಂದನದೊಳ್ ವನವಾಸಿ ದೇಶದೊಳ್.
- ಪದ್ಯ-೨೯:ಅರ್ಥ: ಆ ಬನವಾಸಿ ದೇಶದಲ್ಲಿ ತ್ಯಾಗ, ಸುಖ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷದ ಸುಖಕ್ಕೆ ಆಗರವಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವಾಗುತ್ತದೆಯೇ?? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು.
- ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
- ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ|
- ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
- ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೩೦||
- ಪದ್ಯ-೩೦:ಪದವಿಭಾಗ-ಅರ್ಥ:ತೆಂಕಣ ಗಾಳಿ ಸೋಂಕಿದೊಡಂ ಒಳ್ನುಡಿ ಕೇಳ್ದೊಡಂ ಇಂಪನಾಳ್ದ ಗೇಯಂ ಕಿವಿವೊಕ್ಕೊಡಂ (ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ತಾಗಿದರೂ, ಒಳ್ಳೆಯ ಮಾತನ್ನು ಕೇಳಿದರೂ, ಇಂಪಾದ ಗಾನವು ಕಿವಿಗೆ ಕೇಳಿಸಿದರೂ) ಬಿರಿದ ಮಲ್ಲಿಗೆಗಂಡೊಡಂ (ಮಲ್ಲಿಗೆ ಕಂಡೊಡಂ) ಆದ ಕೆಂದ (ಆದ ತನಿ ನಿದ್ದೆಯ) ಅಲಂಪಂಗೆ ಎಡೆಗೊಂಡೊಡಂ (ಸುಖಕ್ಕೆ ಎಡೆಗೊಂಡರೂ ಅವಕಾಶವಾದರೂ,) ಮಧುಮಹೋತ್ಸವಮಾದೊಡಂ (ವಸಂತ ಮಹೋತ್ಸವವಾದರೂ) ಏನನೆಂಬೆನು ಆರಂಕುಸಂ ಇಟ್ಟೊಡಂ (ಏನು ಹೇಳಲಿ ಯಾರು ಅಂಕುಶದಿಂದ ತಿವಿದರೂ ಅಥವಾ ತಡೆದರೂ ನೆನೆವುದು (ನೆನಪುಮಾಡಿಕೊಳ್ಳುವುದು) ಎನ್ನ ಮನಂ (ಮನಸ್ಸು) ವನವಾಸಿ ದೇಶಮಂ.
- ಪದ್ಯ-೩೦:ಅರ್ಥ: . (ಅತಿಸುಖಹೇತುಗಳಾದ) ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ತಾಗಿದರೂ, ಒಳ್ಳೆಯ ಮಾತನ್ನು ಕೇಳಿದರೂ, ಇಂಪಾದ ಗಾನವು ಕಿವಿಗೆ ಕೇಳಿಸಿದರೂ, ಅರಳಿದ ಮಲ್ಲಿಗೆಯ ಹೂವನ್ನು ಕಂಡಡೊಡನೆಯೂ ಕಂಡ ತಕ್ಷಣ, ಆದ ತನಿ ನಿದ್ದೆಯ ಸುಖಕ್ಕೆ ಎಡೆಗೊಂಡರೂ ಅವಕಾಶವಾದರೂ, ವಸಂತ ಮಹೋತ್ಸವವಾದರೂ, ಏನು ಹೇಳಲಿ ಯಾರು ಅಂಕುಶದಿಂದ ತಿವಿದರೂ ಅಥವಾ ತಡೆದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನಪುಮಾಡಿಕೊಳ್ಳುವುದು.
- ಮ|| ಅಮರ್ದಂ ಮುಕ್ಕುಳಿಪಂತುಟಪ್ಪ ಸುಸಿಲೊಂದಿಂಪುಂ ತಗುಳ್ದೊಂದು ಗೇ
- ಯಮುಮಾದಕ್ಕರಗೊಟ್ಟಿಯುಂ ಚದುರರೊಳ್ವಾತುಂ ಕುಳಿರ್ ಕೋೞ್ಪ ಜೊಂ|
- ಪಮುಮೇವೇೞ್ವುದನುಳ್ಳ ಮೆಯ್ಸುಕಮುಮಿಂತೆನ್ನಂ ಕರಂ ನೋಡಿ ನಾ
- ಡೆ ಮನಂಗೊಂಡಿರೆ ತೆಂಕನಾಡ ಮರೆಯಲ್ಕಿನ್ನೇಂ ಮನಂ ಬರ್ಕುಮೇ|| ೩೧||
- ಪದ್ಯ-೩೧:ಪದವಿಭಾಗ-ಅರ್ಥ:ಅಮರ್ದಂ ಮುಕ್ಕುಳಿಪಂತುಟಪ್ಪ (ಮುಕ್ಕಳಿಸು-ಉಗುಳು; ಅಮೃತವನ್ನೂ ಮೀರಿಸುವಷ್ಟು) ಸುಸಿಲ ಒಂದಿಂಪುಂ (ರತಿಕ್ರೀಡೆಯ ಮಾಧುರ್ಯ ಹೊಂದಿದ) ತಗುಳ್ದೊಂದು ಗೇಯಮುಂ (ಅದರೊಡನೆ ಬರುತ್ತಿರುವ ಗಾನವೂ), ಆದ ಅಕ್ಕರಗೊಟ್ಟಿಯುಂ (ಸೇರಿದ ವಿದ್ವಾಂಸರ ಸಭೆಯೂ,) ಚದುರರ ಒಳ್ವಾತುಂ (ಜಾಣರ ಒಳ್ಳೆಯ ಮಾತುಗಳು) ಕುಳಿರ್ ಕೋೞ್ಪ ಜೊಂಪಮುಂ (ತಂಪಿನಿಂದ ತಣ್ಣಗಿರುವ ಹೂಗೊಂಚಲುಗಳೂ) ಏವೇೞ್ವುದನುಳ್ಳ (ಏನು ಬೇಳ್ಪುದೂ- ಬಯಸುವುದೋ ಅದನುಳ್ಳ) ಮೆಯ್ಸುಕಮುಂ ಇಂತು ಎನ್ನಂ ಕರಂ ನೋಡಿ ನಾಡೆ (ಮಯ್ ಸುಖ- ದೇಹ ಸೌಖ್ಯವೂ ಹೀಗೆ ನನ್ನನ್ನು ಬಹಳ ಚೆನ್ನಾಗಿ) ಮನಂಗೊಂಡಿರೆ (ಆಕ್ರಮಿಸಿರಲು) ತೆಂಕನಾಡ (ದಕ್ಷಿಣ ದೇಶವನ್ನು) ಮರೆಯಲ್ಕಿನ್ನೇಂ ಮನಂ ಬರ್ಕುಮೇ (ಮರೆಯಲು ಇನ್ನೇನು ಮನಸ್ಸು ಬರುವುದೇ? ಇಲ್ಲ!.)
- ಪದ್ಯ-೩೧:ಅರ್ಥ: ಅಮೃತವನ್ನೂ ಮೀರಿಸುವಷ್ಟು ಹಿತಕರವಾದ ರತಿಕ್ರೀಡೆಯ ಮಾಧುರ್ಯ ಹೊಂದಿದ, ಅದರೊಡನೆ ಬರುತ್ತಿರುವ ಗಾನವೂ, ಸೇರಿದ ವಿದ್ವಾಂಸರ ಸಭೆಯೂ, ಜಾಣರ ಒಳ್ಳೆಯ ಮಾತುಗಳು, ತಣ್ಣಗಿರುವ ಹೂಗೊಂಚಲುಗಳೂ ಯಾವ ಸುಖವನ್ನು ಬಯಸುವುದೋ ಆ ದೇಹ ಸುಖಗಳೂ ನನ್ನ ಮನಸ್ಸನ್ನು ಬಹಳ ಚೆನ್ನಾಗಿ ಆಕ್ರಮಿಸಿರಲು, ದಕ್ಷಿಣ ದೇಶವನ್ನು ಮರೆಯಲು ಇನ್ನೇನು ಮನಸ್ಸು ಬರುವುದೇ? ಇಲ್ಲ!.
- ವ|| ಎಂದರಿಕೇಸರಿ ತೆಂಕನಾಡಂ ನಾಡಾಡಿಯಲ್ಲದೆ ಮೆಚ್ಚುತ್ತುಮಾ ನಾಡನೊಂದೆ ಬಿಲ್ಲೊಳುಂಡಿಗೆ ಸಾಧ್ಯಂ ಮಾಡಿ ಪಶ್ಚಿಮ ದಿಗ್ವಿಭಾಗಾಭಿಮುಖನಾಗಿ ಬಂದು-
- ವಚನ:ಪದವಿಭಾಗ-ಅರ್ಥ:ಎಂದು ಅರಿಕೇಸರಿ ತೆಂಕನಾಡಂ (ದಕ್ಷಿಣ ದೇಶವನ್ನು) ನಾಡಾಡಿಯಲ್ಲದೆ(ನಾಡಾಡಿ- ಸಾಮಾನ್ಯ, ಬಹಳವಾಗಿ) ಮೆಚ್ಚುತ್ತುಮಾ ನಾಡನು ಒಂದೆ ಬಿಲ್ಲೊಳು (ಸುಲಭವಾಗಿ) ಉಂಡಿಗೆ ಸಾಧ್ಯಂ ಮಾಡಿ (ತನ್ನ ಮುದ್ರೆ ಚಲಾವಣೆಮಾಡಿ - ಗೆದ್ದು) ಪಶ್ಚಿಮ ದಿಗ್ವಿಭಾಗ ಆಭಿಮುಖನಾಗಿ ಬಂದು-
- ವಚನ:ಅರ್ಥ:ಎಂದು ಅರಿಕೇಸರಿಯು ದಕ್ಷಿಣ ದೇಶವನ್ನು ಬಹಳವಾಗಿ ಮೆಚ್ಚುತ್ತ ಆ ನಾಡನ್ನು ಸುಲಭವಾಗಿ ಜಯಿಸಿ ವಶಪಡಿಸಿಕೊಂಡು ಪಶ್ಚಿಮ ದಿಕ್ಕಿಗೆ ಎದುರಾಗಿ ಬಂದು-
- ಖಚರಪ್ಲುತ|| ಸಾರ ವಸ್ತುಗಳಿಂ ನೆರೆದಂಭೋರಾಶಿಯೆ ಕಾದಿಗೆ ಕಾವನುಂ
- ಸೀರಪಾಣಿ ವಿಳಾಸದಿನಾಳ್ದಂ ಚಕ್ರಧರಂ ಬಗೆವಂಗೆ ಸಂ|
- ಸಾರಸಾರಮಿದೆಂಬುದನೆಂದೆಯ್ತಂದನಸಂಚಳ ಕಾಂಚನ
- ದ್ವಾರ ಬಂಧುರ ಬಂಧ ಗೃಹೋದ್ಯದ್ದ್ವಾರವತೀಪುರಮಂ ನರಂ|| ೩೨||
- ಪದ್ಯ-೩೨:ಪದವಿಭಾಗ-ಅರ್ಥ:ಸಾರ ವಸ್ತುಗಳಿಂ ನೆರೆದ (ತುಂಬಿದ) ಅಂಭೋರಾಶಿಯೆ (ಸಮುದ್ರವೇ) ಕಾದಿಗೆ (ಕಂದಕ) ಕಾವನುಂ ಸೀರಪಾಣಿ (ಅದರ ರಕ್ಷಕ ನೇಗಿಲು ಹಿಡಿದ ಬಲರಾಮ) ವಿಳಾಸದಿನ್ ಆಳ್ದಂ ಚಕ್ರಧರಂ (ಅದನ್ನು ಆಳುವವನು ಚಕ್ರಧರ ಶ್ರೀಕೃಷ್ಣ, ) ಬಗೆವಂಗೆ (ಯೋಚಿಸಿ) ಸಂಸಾರ ಸಾರಮಿದು ಎಂಬುದಂ ನು ಎಂದ ಎಯ್ತಂದನು (ಬಂದು ಸೇರಿದನು-> /ಕೊನೆಯ ಪದ/) ಅಸಂಚಳ (ಅಚಲ- ಅಲುಗಾಡದಿರುವ) ಕಾಂಚನದ್ವಾರ ಬಂಧುರ (ಚಿನ್ನದ ಬಾಗಿಲುಗಳಿಂದ ಕೂಡಿದ) ಬಂಧ(ಕಟ್ಟನ್ನುಳ್ಳ) ಗೃಹ ಉದ್ಯತ್ (ಎತ್ತರವಾದ ಮನೆಗಳ) ದ್ವಾರವತೀಪುರಮಂ ನರಂ (ಅರ್ಜುನನು)
- ಪದ್ಯ-೩೨:ಅರ್ಥ: ಉತ್ತಮವಸ್ತುಗಳಿಂದ ತಂಬಿದ ಸಮುದ್ರವೇ ಕಂದಕ; ಅದರ ರಕ್ಷಕ ನೇಗಿಲು ಹಿಡಿದ ಬಲರಾಮ; ವೈಭವದಿಂದ ಅದನ್ನು ಆಳುವವನು ಚಕ್ರಧರ ಶ್ರೀಕೃಷ್ಣ, ವಿಚಾರ ಮಾಡುವವನಿಗೆ ಇದೇ ಸಂಸಾರಸಾರ ಎಂದೆನಿಸಿಕೊಳ್ಳುವ ಅಲುಗಾಡದಿರುವ ಚಿನ್ನದ ಬಾಗಿಲುಗಳಿಂದ ಕೂಡಿದ ಎತ್ತರವಾದ ಮನೆಗಳುಳ್ಳ ದ್ವಾರಾವತೀ ಪಟ್ಟಣವನ್ನು ಅರ್ಜುನನು ಬಂದು ಸೇರಿದನು.
- ವ|| ಅನ್ನೆಗಂ ತನ್ನ ಮಯ್ದನನಪ್ಪಮೋಘಾಸ್ತ್ರ ಧನಂಜಯನ ಬರವಿನ ಸಂತಸದೊಸಗೆಪಡೆಮಾತಂ ಮುಂದುವರಿದಱಿಪುವಂತೆ-
- ವಚನ:ಪದವಿಭಾಗ-ಅರ್ಥ:ಅನ್ನೆಗಂ (ಅಷ್ಟರಲ್ಲಿ) ತನ್ನ ಮಯ್ದನನು ಅಪ್ಪ ಅಮೋಘಾಸ್ತ್ರ ಧನಂಜಯನ ಬರವಿನ ಸಂತಸದ ಒಸಗೆ ಪಡೆಮಾತಂ (ಸಂತೋಷ ಸುದ್ದಿಯನ್ನು) ಮುಂದುವರಿದ ಅಱಿಪುವಂತೆ (ಅರಿಪು- ತಿಳಿಸು; ಮೊದಲೇ ತಿಳಿಸುವಂತೆ)-
- ವಚನ:ಅರ್ಥ:ಅಷ್ಟರಲ್ಲಿ ತನ್ನ ಮಯ್ದುನನಾದ ಅಮೋಘಾಸ್ತ್ರಗಳನ್ನುಳ್ಳ ಧನಂಜಯನ ಬರುವಿಕೆಯ ಸಂತೋಷ ಸುದ್ದಿಯನ್ನು ತನಗೆ ಮೊದಲೇ ತಿಳಿಸುವಂತೆ-
- ಮ|| ಪಲವುಂ ಜನ್ಮದೊಳಾದ ನಿನ್ನ ಕೆಳೆಯಂ ಬಂದಪ್ಪನಾತಂಗೆ ಬೆಂ
- ಬಲಮಿನ್ನೀಂ ನಿನಗಾತನಾತನನಿಳಾವಿಖ್ಯಾತನಂ ಕೂರ್ತು ನೋ|
- ಡಲುಮೞ್ಕರ್ತಮರ್ದಪ್ಪಲುಂ ಪಡೆವೆಯಿಂದೆಂಬಂತೆ ಕೆತ್ತಿತ್ತು ದಲ್
- ಬಲಗಣ್ಣುಂ ಬಲದೋಳುಮಾ ಬಲಿ ಬಲಪ್ರಧ್ವಂಸಿಗಂದಿಟ್ಟಳಂ|| ೩೩ ||
- ಪದ್ಯ-೩೩:ಪದವಿಭಾಗ-ಅರ್ಥ:ಪಲವುಂ ಜನ್ಮದೊಳು ಆದ ನಿನ್ನ ಕೆಳೆಯಂ ಬಂದಪ್ಪನು (ಗೆಳೆಯನು ಬರುತ್ತಾನೆ.) ಆತಂಗೆ ಬೆಂಬಲಂ ಇಂ ನೀಂ - ನಿನಗೆ ಆತನು ಆತನು (ಆತನಿಗೆ ನೀನು ಬಲ, ನಿನಗೆ ಆತನು) ಇನಿಳಾವಿಖ್ಯಾತನಂ (ಲೋಕಪ್ರಸಿದ್ಧನಾದ ಅವನನ್ನು) ಕೂರ್ತು (ಪ್ರೀತಿಸಿ) ನೋಡಲುಂ ಅೞ್ಕತ್ರ್ತಂ (ಅಳ್ಕರ್ತ್ತು- ಒಲಿದು) ಅಮರ್ದು ಅಪ್ಪಲುಂ (ಅವನನ್ನು ಕಣ್ತುಂಬ ನೋಡಲು, ಪ್ರೀತಿಯಿಂದ ಅಪ್ಪಿಕೊಳ್ಳಲು ಸುಯೋಗವನ್ನು) ಪಡೆವೆ ಇಂದು ಎಂಬಂತೆ ಕೆತ್ತಿತ್ತು ದಲ್ (ಹೋ ನಿಶ್ಚಯವಾಗಿ) ಬಲಗಣ್ಣುಂ ಬಲದೋಳುಂ (ಕೃಷ್ಣನಿಗೆ ಬಲಗಣ್ಣೂ, ಬಲ ತೋಳು ಏಕಪ್ರಕಾರವಾಗಿ) ಆ ಬಲಿ ಬಲಪ್ರಧ್ವಂಸಿಗಂ ಅಂದು ಇಟ್ಟಳಂ (ಬಲಿಯ ಬಲವನ್ನು ನಾಶಪಡಿಸಿದ ಕೃಷ್ಣನಿಗೆ)
- ಪದ್ಯ-೩೩:ಅರ್ಥ: ನಿನ್ನ ಹಿಂದಿನ ಅನೇಕ ಜನ್ಮಗಳ ಗೆಳೆಯನು ಬರುತ್ತಾನೆ. ಆತನಿಗೆ ನೀನು ಬಲ, ನಿನಗೆ ಆತನು (ಸಹಾಯಕ); ಲೋಕಪ್ರಸಿದ್ಧನಾದ ಅವನನ್ನು ಕಣ್ತುಂಬ ನೋಡಲು, ಪ್ರೀತಿಯಿಂದ ಅಪ್ಪಿಕೊಳ್ಳಲು ಸುಯೋಗವನ್ನು ಪಡೆಯುವೆ ಎಂದು ಸೂಚಿಸುವುದೋ ಎನ್ನುವ ಹಾಗೆ, ಬಲಿ ಚಕ್ರವರ್ತಿಯ ಬಲವನ್ನು ನಾಶಪಡಿಸಿದ) ಕೃಷ್ಣನಿಗೆ ಬಲದ ಕಣ್ಣೂ ಬಲ ತೋಳೂ ಏಕಪ್ರಕಾರವಾಗಿ ಅದುರಿದುವು.
- ವ|| ಅಂತು ದಕ್ಷಿಣಾಕ್ಷಿ ಸ್ಪಂದನದೊಳಂ ಸೂಚಿಸುವ ಶುಭಸೂಚನೆಯೊಳಂ ನಾರಾಯಣನುದಾತ್ತನಾರಾಯಣನ ಬರವನಱಿದು ಬಲದೇವ ಸಾತ್ಯಕಿ ಕೃತವರ್ಮಾದಿಗಳಪ್ಪ ತನ್ನೊಡವುಟ್ಟಿದರುಂ ವೃಷ್ಣಿಕಾಂಭೋಜಕುಳತಿಳಕರಪ್ಪ ಯಾದವರುಂಬೆರಸು ಮದಕರಿ ಕರೇಣು ತುರಗಾದಿ ನಾನಾವಿಧವಾಹನಂಗಳನೇಱಿ ಮಯ್ದುನಂಗಿದಿರ್ವಂದು ತಮ್ಮಲಂಪಿನೞ್ಕಱಿನ ರೂಪನೆ ಕಾಣ್ಬಂತೆ ಕಂಡು ದಿಕ್ಕರಿಕರಾನುಕಾರಿಗಳಪ್ಪ ಬಾಹುಗಳಿಂದಮೋರೊರ್ವರಂ ತೆಗೆದಪ್ಪಿ ನಿಬಿಡಾಲಿಂಗ ನಂಗೆಯ್ದಾನಂದಜಳಪರಿಪೂರ್ಣವಿಸ್ತೀರ್ಣವಿಲೋಚನಂಗಳಿಂದಂ ಮುಹುರ್ಮುಹು ರಾಲೋಕನಂ ಗೆಯ್ಯುತ್ತುಮುತ್ತುಂಗ ಮತ್ತವಾರಣಂಗಳನೇಱಿ ಪೊೞಲಂ ಪುಗೆ-
- ವಚನ:ಪದವಿಭಾಗ-ಅರ್ಥ:ಅಂತು ದಕ್ಷಿಣಾಕ್ಷಿ ಸ್ಪಂದನದೊಳಂ ಸೂಚಿಸುವ ಶುಭಸೂಚನೆಯೊಳಂ ನಾರಾಯಣನು ದಾತ್ತನಾರಾಯಣನ ಬರವನಱಿದು ಬಲದೇವ ಸಾತ್ಯಕಿ ಕೃತವರ್ಮಾದಿಗಳಪ್ಪ ತನ್ನೊಡವುಟ್ಟಿದರುಂ ವೃಷ್ಣಿ ಕಾಂಭೋಜ ಕುಳತಿಳಕರಪ್ಪ (ಕುಲತಿಲಕರಾದ) ಯಾದವರುಂ ಬೆರಸು (ಕೂಡಿಕೊಂಡು) ಮದಕರಿ ಕರೇಣು ತುರಗಾದಿ (ಮದ್ದಾನೆ, ಹೆಣ್ಣಾನೆ, ಕುದುರೆ) ನಾನಾವಿಧ ವಾಹನಂಗಳನು ಏಱಿ (ಏರಿ- ಹತ್ತಿ) ಮಯ್ದುನಂಗೆ ಇದಿರ್ವಂದು (ಎದಿರುಗೊಳ್ಳವುದು- ಸ್ವಾಗತ ಬಯಸುವುದು) ತಮ್ಮ ಅಲಂಪಿನ ಅೞ್ಕಱಿನ (ಸಂತೋಷ ಮತ್ತು ಪ್ರೀತಿಯ ) ರೂಪನೆ ಕಾಣ್ಬಂತೆ ಕಂಡು, ದಿಕ್ಕರಿ ಕರಾನುಕಾರಿಗಳು ಅಪ್ಪ (ದಿಗ್ಗಜಗಳ ಸೊಂಡಲಿನಂತಿದ್ದ ತೋಳುಗಳಿಂದ) ಬಾಹುಗಳಿಂದಂ ಓರೊರ್ವರಂ (ಒಬ್ಬೊಬ್ಬರನ್ನೂ) ತೆಗೆದಪ್ಪಿ (ಅಪ್ಪಿಕೊಂಡು) ನಿಬಿಡಾಲಿಂಗನಂಗೆಯ್ದು (ಬಲವಾಗಿ ಅಪ್ಪಿಕೊಂಡರು) ಆನಂದಜಳಪರಿಪೂರ್ಣ (ಸಂತೋಷದ ಕಣ್ಣೀರು ತುಂಬಿದ) ವಿಸ್ತೀರ್ಣವಿಲೋಚನಂಗಳಿಂದಂ (ಅರಳಿದ ಕಣ್ಣುಗಳಿಂದ) ಮುಹುರ್ಮುಹುರ್ (ಪುನಃ ಪುನಃ) ಆಲೋಕನಂ ಗೆಯ್ಯುತ್ತುಮು ಉತ್ತುಂಗ ಮತ್ತವಾರಣಂಗಳನು ಏಱಿ ಪೊೞಲಂ ಪುಗೆ -
- ವಚನ:ಅರ್ಥ:ಹಾಗೆ ಬಲಗಣ್ಣಿನ ಅದುರುವಿಕೆ (ಸ್ಪಂದನ) ಯಿಂದಲೂ ಸೂಚಿತವಾದ ಶುಭಶಕುನಗಳಿಂದಲೂ ನಾರಾಯಣನಾದ ಕೃಷ್ಣನು ಉದಾತ್ತ ನಾರಾಯಣನಾದ(ಅರಿಕೇಸರಿಯ ಬಿರುದು) ಅರ್ಜುನನ ಬರುವಿಕೆಯನ್ನು ತಿಳಿದು ಬಲರಾಮ, ಸಾತ್ಯಕಿ, ಕೃತವರ್ಮ ಮೊದಲಾದ ಒಡಹುಟ್ಟಿದವರನ್ನು ವೃಷ್ಣಿ ಮತ್ತು ಕಾಂಭೋಜ ಕುಲಶ್ರೇಷ್ಠರಾದ ಯಾದವರನ್ನೂ ಕೂಡಿಕೊಂಡು ಮದ್ದಾನೆ, ಹೆಣ್ಣಾನೆ, ಕುದುರೆ ಮೊದಲಾದ ಅನೇಕ ವಾಹನಗಳನ್ನು ಹತ್ತಿ ಮೈದುನನಿಗೆ ಸ್ವಾಗತಕೋರಲು ಬಂದು ತಮ್ಮ ಸಂತೋಷ ಮತ್ತು ಪ್ರೀತಿಯ ಆಕಾರವನ್ನೇ ಕಾಣುವ ಹಾಗೆ ಕಂಡು, ದಿಗ್ಗಜಗಳ ಸೊಂಡಲಿನಂತಿದ್ದ ತೋಳುಗಳಿಂದ ಒಬ್ಬೊಬ್ಬರನ್ನೂ ಬಿಗಿದು ಆಲಿಂಗನ ಮಾಡಿಕೊಂಡರು. ಸಂತೋಷದ ಕಣ್ಣೀರು ತುಂಬಿದ, ಅರಳಿದ ಕಣ್ಣುಗಳಿಂದ ಪುನಃ ಪುನಃ ಪರಸ್ಪರ ನೋಡುತ್ತಾ ಎತ್ತರವಾದ ಮದ್ದಾನೆಯನ್ನು ಹತ್ತಿ ನಗರವನ್ನು ಪ್ರವೇಶ ಮಾಡಲು.
- ಚಂ|| ಸುರ ನರ ಕಿನ್ನರೋರಗ ನಭಶ್ಚರ ಕಾಂತೆಯರೇವರೆಂದು ಮಾಂ
- ಕರಿಸುವ ಕೆಯ್ತದಂದದ ಮುರಾರಿಯ ತಂಗೆಯನಪ್ಪುಕೆಯ್ದು ಚ|
- ಚ್ಚರಮೊಳಪೊಯ್ದು ನೀಂ ನಿನಗೆ ಮಾಡುವುದೇಂದಮರೇಂದ್ರಪುತ್ರನಂ
- ಕರೆವವೊಲಾದುವಾ ಪುರದ ವಾತ ವಿಧೂತವಿನೂತ ಕೇತುಗಳ್|| ೩೪||
- ಪದ್ಯ-೩೪:ಪದವಿಭಾಗ-ಅರ್ಥ:ಸುರ ನರ ಕಿನ್ನರ ಉರಗ (ನಾಗ) ನಭಶ್ಚರ (ಆಕಾಶಗಮನ ಉಳ್ಳವರು ಖೇಚರರು - ಅಪ್ಸರೆಯರು) ಕಾಂತೆಯರು ಏವರೆಂದು (ಅವರು ಯಾರು ಎಂತಹವರು ಎಂದು) ಮಾಂಕರಿಸುವ (ಅಲಕ್ಷಮಾಡುವ) ಕೆಯ್ತದ ಅಂದದ ಮುರಾರಿಯ ತಂಗೆಯನು ಅಪ್ಪುಕೆಯ್ದು (ಮಾಟವುಳ್ಳ ಸುಂದರಿ, ಶ್ರೀಕೃಷ್ಣನ ತಂಗಿಯಾದ ಆ ಸುಭದ್ರೆಯನ್ನು ಒಪ್ಪಿ) ಚಚ್ಚರಮೊಳ ಪೊಯ್ದು ನೀಂ ನಿನಗೆ ಮಾಡುವುದು (ಬೇಗ ಒಲಿಸಿಕೊಂಡು ನಿನ್ನವಳನ್ನಾಗಿಮಾಡಿಕೊ) ಎಂದು ಅಮರೇಂದ್ರಪುತ್ರನಂ (ಅರ್ಜುನನ್ನು) ಕರೆವವೊಲ್ ಆದುವು ಆ ಪುರದ ವಾತ ವಿಧೂತ (ಗಾಳಿಯಿಂದ ತೂಗುವ) ವಿನೂತ ಕೇತುಗಳ್(ಬಾವುಟ,ಧ್ವಜ)
- ಪದ್ಯ-೩೪:ಅರ್ಥ: . ದೇವ, ಮಾನವ, ಕಿನ್ನರ, ಉರಗ, ಖೇಚರ ಸ್ತ್ರೀಯರು (ಇವಳ ಮುಂದೆ) ಅವರು ಯಾರು ಎಂತಹವರು ಎಂದು ಅಲಕ್ಷ್ಯಮಾಡುವ ಮಾಟವುಳ್ಳ ಸುಂದರಿ, ಶ್ರೀಕೃಷ್ಣನ ತಂಗಿಯಾದ ಆ ಸುಭದ್ರೆಯನ್ನು ಒಪ್ಪಿ, ಬೇಗ ಒಲಿಸಿಕೊಂಡು ಬೇಗ ನಿನ್ನವಳನ್ನಾಗಿಮಾಡಿಕೊ ಎಂದು ಇಂದ್ರಪುತ್ರನಾದ ಅರ್ಜುನನನ್ನು ಕರೆಯುವ ಹಾಗೆ ಆ ನಗರದ ಗಾಳಿಯಿಂದ ಅಲುಗುವ ಹೊಗಳಬಹುದಾದ ಧ್ವಜಗಳು ಕಂಡವು.
- ವ|| ಆಗಳ್ ಮೊೞಗುವ ಬದ್ಧವಣದ ಪರೆಗಳುಂ ಪಿಡಿದ ಕೆಂಬೊನ್ನ ತಳಿಗೆಯೊಳ್ ತೆಕ್ಕನೆ ತೀವಿದ ಬಿಡುಮುತ್ತಿನ ಸೇಸೆಯುಂ ಬೆರಸು-
- ವಚನ:ಪದವಿಭಾಗ-ಅರ್ಥ:ಆಗಳ್ ಮೊೞಗುವ ಬದ್ಧವಣದ (ಮೊಳಗುವ ಮಂಗಳವಾದ್ಯಗಳ) ಪರೆಗಳುಂ (?ದೀಪಗಳನ್ನು ಹಿಡಿದ) ಪಿಡಿದ ಕೆಂಬೊನ್ನ ತಳಿಗೆಯೊಳ್ (ಚಿನ್ನದ ತಟ್ಟೆಯಲ್ಲಿ) ತೆಕ್ಕನೆ ತೀವಿದ ಬಿಡುಮುತ್ತಿನ ಸೇಸೆಯುಂ ಬೆರಸು (ಬಿಡಿಮುತ್ತಿನ ಅಕ್ಷತೆಯನ್ನು/ ಸೇಸೆಯ/ಸುಳಿಯುವ ಮುತ್ತಿನುಂಡೆ? ತುಂಬಿಕೊಂಡು)-
- ವಚನ:ಅರ್ಥ:|| ಆಗ ಮಂಗಳವಾದ್ಯಗಳು ಮೊಳಗಲು, (ಆ ನಗರದ ಸ್ತ್ರೀಯರು) ದೀಪಗಳನ್ನು ಹಿಡಿದು ಚಿನ್ನದ ತಟ್ಟೆಯನ್ನು ಬಿಡಿಮುತ್ತಿನ ಅಕ್ಷತೆಯನ್ನು ತುಂಬಿಕೊಂಡು-
- ಚಂ|| ಒದವಿದ ನೂಲ ತೊಂಗಲುಲಿ ದೇಸೆಯನಾಂತು ವಿಳಾಸದಿಂದಿಱುಂ
- ಕಿದ ನಿಱಿ ಗಂಡರಳ್ಳೆರ್ದೆಗಳಂ ತುೞಿವೋಜೆಯನುಂಟುಮಾಡುವಂ|
- ದದೆ ನಿಡುಗಣ್ಗಳೊಳ್ನಡೆ ಮನೋಭವನೊಡ್ಡಣದಂತೆ ತಂಡ ತಂ
- ಡದೆ ಪರಿತಂದು ಸೂಸಿದುದು ಸೇಸೆಯನಂದು ಪುರಾಂಗನಾಜನಂ|| ೩೫||
- ಪದ್ಯ-೩೫:ಪದವಿಭಾಗ-ಅರ್ಥ:ಒದವಿದ ನೂಲ ತೊಂಗಲುಲಿ (ನಡುಪಟ್ಟಿಯ ನೂಲಿನ ಕುಚ್ಚುಗಳಿಂದ ಒದವಿದ- ಕೂಡಿದ) ದೇಸೆಯನಾಂತು (ಸೌಂದರ್ಯದಿಂದ ಕೂಡಿ) ವಿಳಾಸದಿಂದ ಇಱುಂಕಿದ (ಸೊಗಸಿನಿಂದ ಸಿಕ್ಕಿಸಿಕೊಂಡಿರುವ) ನಿಱಿ ಗಂಡರ ಅಳ್ಳ ಎರ್ದೆಗಳಂ (ಗಂಡಸರ ದುರ್ಬಲ ಹೃದಯಗಳನ್ನು) ತುೞಿವ ಓಜೆಯನುಂಟುಮಾಡುವ ಅಂದದೆ (ತುಳಿಯುವ/ ನೋಯಿಸುವ ರೀತಿಯನ್ನು ಉಂಟುಮಾಡುವಂತೆ) ನಿಡುಗಣ್ಗಳೋಳ್ ನೆಡೆ (ಉದ್ದಕಣ್ಣಿನಲ್ಲಿ ನಾಟಲು,) ಮನೋಭವನ ಒಡ್ಡಣದಂತೆ (ಮನ್ಮಥನ ಸೈನ್ಯದಂತೆ) ತಂಡ ತಂಡದೆ ಪರಿತಂದು (ತಂಢ ತಂಡವಾಗಿ ಬಂದು) ಸೂಸಿದುದು ಸೇಸೆಯನು ( ಚೆಲ್ಲಿದರು ಅಕ್ಷತೆಯನ್ನು) ಅಂದು ಪುರ ಅಂಗನಾ ಜನಂ (ಅಂದು ನಗರದ ಹೆಂಗಸರ ಗುಂಪು)
- ಪದ್ಯ-೩೫:ಅರ್ಥ: ನಡುಪಟ್ಟಿಯ ಕುಚ್ಚುಗಳಿಂದ ಒದವಿದ- ಕೂಡಿದ ಸೌಂದರ್ಯದಿಂದ ಕೂಡಿ ಸೊಗಸಿನಿಂದ ತೊಡೆಗಳ ಮಧ್ಯೆ ಸಿಕ್ಕಿಸಿಕೊಂಡಿರುವ ಸೀರೆಗಳ ನೆರಿಗೆಗಳು ಗಂಡಸರ ದುರ್ಬಲ ಹೃದಯಗಳನ್ನು ತುಳಿದು ನೋಯಿಸುವ ಹಾಗೆ, ಅವರ ಉದ್ದ ಕಣ್ಣುಗಳಲ್ಲಿ (ದೃಷ್ಠಿ)ನಾಟಲು, ಮನ್ಮಥನ ಸೈನ್ಯದ ಹಾಗೆ ಗುಂಪುಗುಂಪಾಗಿ ಓಡಿ ಬಂದು ನಗರದ ಹೆಂಗಸರು ಅಂದು ಅರ್ಜುನನಿಗೆ ಅಕ್ಷತೆಯನ್ನು ಚೆಲ್ಲಿದರು (ಆಶೀರ್ವದಿಸಿದರು).
- ಮಿಳಿರ್ವ ಕುರುಳ್ಗಳೊಳ್ ಪೊಳೆವ ಕಣ್ಗಳ ಬೆಳ್ಪು ಪಳಂಚಿ ಚಿನ್ನ ಪೂ
- ಗಣೆಗೆಣೆಯಾಗೆ ಪುರ್ವುಮೆಮೆಗಳ್ ಬಿಡದಳ್ಳಿಱಿದಿಕ್ಷುಚಾಪದೊಳ್|
- ಖಳ ಕುಸುಮಾಸ್ತ್ರನಿಟ್ಟ ಗೊಣೆಯಕ್ಕೆಣೆಯಾಗಿರೆ ನಿಳ್ಕಿ ನಿಳ್ಕಿ ಕೋ
- ಮಳೆ ನಡೆ ನೋಡಿದಳ್ ಕರಿಯನೇಱಿದನಂ ಪಡೆಮೆಚ್ಚೆಗಂಡನಂ|| ೩೬
- ಪದ್ಯ-೩೬:ಪದವಿಭಾಗ-ಅರ್ಥ:ಮಿಳಿರ್ವ ಕುರುಳ್ಗಳೊಳ್ (ಅಲುಗುತ್ತಿರುವ ಮುಂಗುರುಳುಗಳಲ್ಲಿ) ಪೊಳೆವ ಕಣ್ಗಳ ಬೆಳ್ಪು (ಬೆಳಕಿನ ಪ್ರಕಾಶ) ಪಳಂಚಿ (ಸೇರಿ) ಚಿನ್ನ ಪೂಗಣೆಗೆ ಎಣೆಯಾಗೆ (ಚಿನ್ನದ ಪುಷ್ಪಬಾಣಕ್ಕೆ ಸಮಾನವಾಗಿರಲು) ಪುರ್ವುಂ ಎಮೆಗಳ್ (ಹುಬ್ಬುಗಳೂ ಕಣ್ಣಿನ ರೆಪ್ಪೆಗಳೂ) ಬಿಡದೆ ಅಳ್ಳಿಱಿದು ಇಕ್ಷುಚಾಪದೊಳ್(ನಿಲ್ಲದೆ ಕಂಪಿಸಿ/ಹೊಡೆದು) ಖಳ ಕುಸುಮಾಸ್ತ್ರನಿಟ್ಟ (ದುಷ್ಟನಾದ ಮನ್ಮಥನು ಕಬ್ಬಿನ ಬಿಲ್ಲಿನಲ್ಲಿ ಹೂಡಿದ) ಗೊಣೆಯಕ್ಕೆ (ಬಿಲ್ಲಿನ ಹೆದೆಗೆ) ಎಣೆಯಾಗಿರೆ (ಸಮಾನವಾಗಿರಲು) ನಿಳ್ಕಿ ನಿಳ್ಕಿ ಕೋಮಳೆ ನಡೆ ನೋಡಿದಳ್ ( ಹಿಮ್ಮಡಿಎತ್ತಿ ನೀಕಿ ನೀಕಿ ಒಬ್ಬ ಕೋಮಲೆ ಆನೆಯಮೇಲೇರಿ ಬರುತ್ತಿದ್ದ ಅರ್ಜುನನ್ನು ನೋಡಿದಳು) ಕರಿಯನು ಏಱಿದನಂ (ಆನೆಯನ್ನು ಏರಿ ಕುಳಿತ ಪಡೆಮೆಚ್ಚೆಗಂಡನಂ- ಅರ್ಜುನನ್ನು) (ಪಡೆಮೆಚ್ಚೆಗಂಡನಂ - ಅರಿಕೇಸರಿ ರಾಜನ ಬಿರುದು)
- ಪದ್ಯ-೩೬:ಅರ್ಥ: ಅಲುಗುತ್ತಿರುವ ಮುಂಗುರುಳುಗಳಲ್ಲಿ ಹೊಳೆಯುವ ಕಣ್ಣುಗಳ ಬೆಳಕಿನ ಪ್ರಕಾಶ ಸೇರಿಕೊಂಡು ಚಿನ್ನದ ಪುಷ್ಪಬಾಣಕ್ಕೆ ಸಮಾನವಾಗಿರಲು ಹುಬ್ಬುಗಳೂ ಕಣ್ಣಿನ ರೆಪ್ಪೆಗಳೂ ಒಂದೇ ಸಮನಾಗಿ ಕುಣಿಯುತ್ತ ದುಷ್ಟನಾದ ಮನ್ಮಥನು ಕಬ್ಬಿನ ಬಿಲ್ಲಿನಲ್ಲಿ ಹೂಡಿದ ಬಿಲ್ಲಿನ ಹೆದೆಗೆ ಸಮಾನವಾಗಿರಲು ಹಿಮ್ಮಡಿಎತ್ತಿ ನೀಕಿ ನೀಕಿ ಒಬ್ಬ ಕೋಮಲೆ ಆನೆಯಮೇಲೇರಿ ಬರುತ್ತಿದ್ದ ಅರ್ಜುನನ್ನು ಅತಿಶಯವಾಗಿ ನೋಡಿದಳು.
- ವ|| ಮತ್ತೊರ್ವಳತಿ ಸಂಭ್ರಮ ತ್ವರಿತದಿಂ ಮೇಖಳಾಕಳಿತ ರುಚಿರ ಲುಳಿತಾಧರ ಪಲ್ಲವೆ ನೋೞ್ಪ ದಂಡುಗಳೊಳಂಡುಗೊಂಡು ಸೊರ್ಕಿದಾನೆ ಬರ್ಪಂತೆ ಬಂದು-
- ವಚನ:ಪದವಿಭಾಗ-ಅರ್ಥ:ಮತ್ತೊರ್ವಳು ಅತಿ ಸಂಭ್ರಮ ತ್ವರಿತದಿಂ (ಅವಸರದಲ್ಲಿ ಬೇಗ) ಮೇಖಳಾಕಳಿತ (ಒಡ್ಯಾಣದ ನಡುಪಟ್ಟಿಯಿಂದ ಕೂಡಿದ) ರುಚಿರ ಲುಳಿತಾಧರ ಪಲ್ಲವೆ (ಮನೋಹರವಾಗಿ ಬಾಗಿರುವ ಚಿಗುರಿನಂತಿರುವ ತುಟಿಯುಳ್ಳ) ನೋೞ್ಪ ದಂಡುಗಳೊಳ್ (ನೋಡುವ ಗುಂಪಿನಲ್ಲಿ) ಅಂಡುಗೊಂಡು (ಹತ್ತಿರ ಬಂದು) ಸೊರ್ಕಿದಾನೆ ಬರ್ಪಂತೆ ಬಂದು-
- ವಚನ:ಅರ್ಥ:ಒಡ್ಯಾಣದ ನಡುಪಟ್ಟಿಯಿಂದ ಕೂಡಿದ ಮನೋಹರವಾಗಿ ಬಾಗಿರುವ ಚಿಗುರಿನಂತಿರುವ ತುಟಿಯುಳ್ಳ ಮತ್ತೊಬ್ಬಳು ಓಡಿಬಂದು ನೋಡುವ ಗುಂಪಿನಲ್ಲಿ ಸೊಕ್ಕಿದ ಆನೆ ಬರುವ ಹಾಗೆ ಅರ್ಜುನನ ಹತ್ತಿರಕ್ಕೆ ಬಂದು-
- ಉ|| ಕಾಯದೆ ಕಾಮನಾರ್ದಿಸೆ ತೊವಲ್ವಿಡಿವಂತೆಡಗಯ್ಯೊಳೊಪ್ಪೆ ತೋ
- ರ್ಪಾಯೆಲೆ ನೋಟ ಬೇಟದ ಕೊನರ್ ತಲೆದೋರ್ಪವೊಲಾಗೆ ಬಾಯೊಳಿ
- ರ್ದಾಯೆಲೆ ಕಣ್ಗೆವಂದೆಸೆಯೆ ಕಯ್ಯೆಲೆ ಕಯ್ಯೊಳೆ ಬಾಯ ತಂಬುಲಂ
- ಬಾಯೊಳೆ ತೋೞೆ ಮೆಯ್ಮರೆದು ನೋಡಿದಳ್ ಸಮರೈಕಮೇರುವಂ|| ೩೭||
- ಪದ್ಯ-೩೭:ಪದವಿಭಾಗ-ಅರ್ಥ:ಕಾಯದೆ ಕಾಮನು ಆರ್ದು ಇಸೆ (ರಕ್ಷಣೆ ಮಾಡದೆ ಕಾಮನು ಗರ್ಜಿಸಿ ಬಾಣಹೊಡೆಯಲು,) ತೊವಲ್ವಿಡಿವಂತೆ (ತೊವಲ್ ಹಿಡಿವಂತೆ- ಚಿಗುರನ್ನು ಹಿಡಿಯುವಹಾಗೆ) ಎಡಗಯ್ಯೊಳು ಒಪ್ಪೆ ತೋರ್ಪಾ ಯೆಲೆ (ಎಡಗಯ್ಯಲ್ಲಿ ವೀಳೆಯದೆಲೆಯು ಒಪ್ಪಿರಲು) ನೋಟ ಬೇಟದ ಕೊನರ್ ತಲೆದೋರ್ಪವೊಲ್ ಆಗೆ (ಕಣ್ಣುಬೇಟದ ಪ್ರೇಮದ ಚಿಗುರು ಕಾಣಿಸಿಕೊಂಡ ಹಾಗೆ) ಬಾಯೊಳು ಇರ್ದ ಆ ಯೆಲೆ (ಬಾಯಲ್ಲಿ ಇದ್ದ ಎಲೆ-ತಾಂಬೂಲ) ಕಣ್ಗೆವಂದು ಎಸೆಯೆ (ಕಣ್ಣಿಗೆ ಅರ್ಜುನನ ರೂಪದ ಶೋಭೆ ತೋರಲು) ಕಯ್ಯೆಲೆ ಕಯ್ಯೊಳೆ (ಕೈಯಲ್ಲಿದ್ದ ಎಲೆ ಕೈಯಲ್ಲಿ )ಬಾಯ ತಂಬುಲಂ ಬಾಯೊಳೆ ತೋೞೆ (ಬಾಯಲ್ಲಿದ್ದ ತಾಂಬೂಲ ಬಾಯಲ್ಲಿಯೇ ಉಳಿದು) ಮೆಯ್ಮರೆದು ನೋಡಿದಳ್ (ಕೈಯಲ್ಲಿದ್ದ ವೀಳಯದ ಎಲೆಯನ್ನು ಮೈಮರೆತು ಬಾಯಿಗೆ ಹಾಕಿಕೊಳ್ಳದೆ ಅರ್ಜುನನ್ನು ನೋಡಿದಳು) ಸಮರೈಕಮೇರುವಂ (ಅರ್ಜುನನ್ನು)
- ಪದ್ಯ-೩೭:ಅರ್ಥ: ಕಾಮನು ಕರುಣೆಯಿಲ್ಲದೆ ಬಾಣಪ್ರಯೋಗ ಮಾಡಲು ಹೆದರಿ ಚಿಗುರನ್ನು ಹಿಡಿಯುವ ಹಾಗೆ ಎಡಗಯ್ಯಲ್ಲಿ ವೀಳೆಯದೆಲೆಯು ಒಪ್ಪಿರಲು ಕಣ್ಣುಬೇಟದ ಪ್ರೇಮದ ಚಿಗುರು ಕಾಣಿಸಿಕೊಂಡ ಹಾಗೆ ಬಾಯಲ್ಲಿ ಎಲೆ-ತಾಂಬೂಲ ಇದ್ದಾಗ, ಕಣ್ಣಿಗೆ ಅರ್ಜುನನ ರೂಪದ ಶೋಭೆ ಕಾಣಲು, ಕೈಯಲ್ಲಿದ್ದ ಎಲೆ ಕೈಯಲ್ಲಿ - ಬಾಯಲ್ಲಿದ್ದ ತಾಂಬೂಲ ಬಾಯಲ್ಲಿಯೇ ಉಳಿದು, ಕೈಯಲ್ಲಿದ್ದ ವೀಳಯದ ಎಲೆಯನ್ನು ಬಾಯಿಗೆ ಹಾಕಿಕೊಳ್ಳದೆ ಕೈಯಲ್ಲಿಯೇ ಉಳಿದು, ಮೈಮರೆತು ಅರ್ಜುನನ್ನು ನೋಡಿದಳು.
- ವ|| ಮತ್ತೊರ್ವಳ್ ಕರ್ವಿನ ಬಿಲ್ಲ ತಿರುವಿಂ ಬರ್ದುಂಕಿ ಬರ್ಪಲರಂಬು ಬರ್ಪಂತೆ ಬಂದು-
- ವಚನ:ಪದವಿಭಾಗ-ಅರ್ಥ: ಮತ್ತೊರ್ವಳ್ ಕರ್ವಿನ ಬಿಲ್ಲ ತಿರುವಿಂ ಬರ್ದುಂಕಿ (ಮನ್ಮಥನ ಕಬ್ಬಿನ ಬಿಲ್ಲಿನ ಹೆದೆಯಿಂದ ಜೀವಂತ ಬರುವ) ಬರ್ಪಲರಂಬು ಬರ್ಪಂತೆ (ಅಲರ್ -ಹೂವು, ಅಂಬು ಬಾಣದಂತೆ )ಬಂದು-
- ವಚನ:ಅರ್ಥ:ಮತ್ತೊಬ್ಬಳು ಕಬ್ಬಿನ ಬಿಲ್ಲಿನ ಹೆದೆಯಿಂದ ಜೀವಂತ ಬರುವ ಹೂ ಬಾಣವು ಬರುವ ಹಾಗೆ ಬಂದು - (ಅವಳು ಮನ್ಮಥನ ಜೀವಂತ ಬಾಣ)
- ಮ|| ಸ್ಮರನಂ ರೂಪಿನೊಳಿಂದ್ರನಂ ವಿಭವದೊಳ್ ಪೋ ಮೆಚ್ಚಿ (ಮೆಚ್ಚೆ) ನಾನಾವ ಗಂ
- ಡರುಮಂ ಕಚ್ಚೆಯೊಳಿಟ್ಟು ಕಟ್ಟುವೆನೆನುತ್ತಿರ್ಪಾಕೆ ಗಂಧೇಭ ಕಂ|
- ಧರ ಬಂಧ ಪ್ರವಿಭಾಸಿಯಪ್ಪರಿಗನಂ ಕಾಣುತ್ತೆ ಕಣ್ಸೋಲ್ತು ಕಾ
- ಮರಸಂ ಭೋಂಕನೆ ಸೂಸೆ ತಾಳ್ದಲರಿದೆಂದಿರ್ಕಚ್ಚೆಯಂ ಕಟ್ಟಿದಳ್ || ೩೮ ||
- ಪದ್ಯ-೩೮:ಪದವಿಭಾಗ-ಅರ್ಥ:ಸ್ಮರನಂ ರೂಪಿನೊಳ್ ಇಂದ್ರನಂ ವಿಭವದೊಳ್ (ರೂಪದಲ್ಲಿ ಮನ್ಮಥನನ್ನೂ ವೈಭವದಲ್ಲಿ ಇಂದ್ರನನ್ನೂ) ಪೋ (ಹೋಗು) ಮೆಚ್ಚಿ? (ಮೆಚ್ಚೆ- ಮೆಚ್ಚೆನು ) ನಾನು ಆವ ಗಂಡರುಮಂ ಕಚ್ಚೆಯೊಳಿಟ್ಟು ಕಟ್ಟುವೆನು ಎನುತ್ತಿರ್ಪಾಕೆ (ಎಂತಹ ಶೂರನನ್ನಾದರೂ ನನ್ನ ಕಚ್ಚೆಯಲ್ಲಿಟ್ಟು ಕಟ್ಟಿಬಿಡುತ್ತೇನೆ ಎನ್ನುತ್ತಿದ್ದ ಆಕೆ,) ಗಂಧೇಭ ಕಂಧರ ಬಂಧ (ಮದ್ದಾನೆಯ ಕುಂಭಸ್ಥಳದಲ್ಲಿ) ಪ್ರವಿಭಾಸಿಯಪ್ಪ ಅರಿಗನಂ ಕಾಣುತ್ತೆ (ಪ್ರಕಾಶಮಾನವಾಗಿದ್ದ ಅರಿಗನನ್ನು ಕಂಡ ತಕ್ಷಣವೆ) ಕಣ್ಸೋಲ್ತು (ಅವನಿಗೆ ಕಣ್ಣಿನ ನೋಟದಲ್ಲೇ ಮರುಳಾಗಿ) ಕಾಮರಸಂ ಭೋಂಕನೆ ಸೂಸೆ ( ಸುರತರಸವನ್ನು ತಕ್ಷಣ ಸುರಿಸುತ್ತಿರಲು) ತಾಳ್ದಲರಿದೆಂದು ಇರ್ಕಚ್ಚೆಯಂ ಕಟ್ಟಿದಳ್ (ಇರ್ ಕಚ್ಚೆ-ಎರಡು ಕಚ್ಚೆ; ಸಹಿಸಲು ಸಾಧ್ಯವಿಲ್ಲವೆಂದು ಎರಡು ಕಚ್ಚೆಯನ್ನು ಬಿಗಿಯಾಗಿ ಕಟ್ಟಿದಳು)|
- ಪದ್ಯ-೩೮:ಅರ್ಥ: ರೂಪದಲ್ಲಿ ಮನ್ಮಥನನ್ನೂ ವೈಭವದಲ್ಲಿ ಇಂದ್ರನನ್ನೂ ನಾನು ಮೆಚ್ಚುವುದಿಲ್ಲ, ಬಿಡು ಎಂತಹ ಶೂರನನ್ನಾದರೂ ನನ್ನ ಕಚ್ಚೆಯಲ್ಲಿಟ್ಟು ಕಟ್ಟಿಬಿಡುತ್ತೇನೆ ಎನ್ನುತ್ತಿದ್ದ ಆಕೆ, ಮದ್ದಾನೆಯ ಕುಂಭಸ್ಥಳದಲ್ಲಿ ಪ್ರಕಾಶಮಾನವಾಗಿದ್ದ ಅರಿಗನನ್ನು ಕಂಡ ತಕ್ಷಣವೆ ಅವನಿಗೆ ಕಣ್ಣಿನ ನೋಟದಲ್ಲೇ ಮರುಳಾಗಿ, ಸುರತರಸವನ್ನು ತಕ್ಷಣ ಸುರಿಸುತ್ತಿರಲು, ಸಹಿಸಲು ಸಾಧ್ಯವಿಲ್ಲವೆಂದು ಎರಡು ಕಚ್ಚೆಯನ್ನು ಬಿಗಿಯಾಗಿ ಕಟ್ಟಿದಳು
- ವ|| ಅಂತು ನೋಡಿದ ಪೆಂಡಿರೆಲ್ಲಂ ಕಾಮದೇವನೆಂಬ ಬೇಂಟೆಕಾಱಂಗೊಡ್ಡಿದ ಪುಲ್ಲೆಗಳಂತರಲಂಬಿನ ಮೊನೆಗೆ ಪೂಣೆ ಪೊಕ್ಕು ಪಕ್ಕಾಗಿರೆ ಪೊೞಲೊಳಗಣಿಂ ಬಂದು ದಿವಿಜೇಂದ್ರ ವಿಳಾಸೋಪಹಾಸಿತಮಪ್ಪ ನಿಜಮಂದಿರಮಂ ಪುಗೆ-
- ವಚನ:ಪದವಿಭಾಗ-ಅರ್ಥ:ಅಂತು ನೋಡಿದ ಪೆಂಡಿರೆಲ್ಲಂ (ಹೆಂಗಸರೆಲ್ಲರೂ) ಕಾಮದೇವನೆಂಬ ಬೇಂಟೆಕಾಱಂಗೆ ಒಡ್ಡಿದ ಪುಲ್ಲೆಗಳಂತೆ ಅರಲಂಬಿನ (ಹೂಬಾಣದ) ಮೊನೆಗೆ ಪೂಣೆ ಪೊಕ್ಕು (ಪುಷ್ಪಬಾಣದ ಮೊನಚಿಗೆ ಪ್ರತಿಜ್ಞೆ/ಗಟ್ಟಿಯಾಗಿ ಮಾಡಿ ಹೊಕ್ಕು) ಪಕ್ಕಾಗಿರೆ ಪೊೞಲೊಳಗಣಿಂ (ನಗರದೊಳಗಿನಿಂದ) ಬಂದು ದಿವಿಜೇಂದ್ರ ವಿಳಾಸ ಉಪಹಾಸಿತಮಪ್ಪ (ದೇವೇಂದ್ರನ ವೈಭವವನ್ನೂ ಉಪಹಾಸಮಾಡುವಂತಿದ್ದ) ನಿಜ ಮಂದಿರಮಂ ಪುಗೆ (ತನ್ನ ಅರಮನೆಯನ್ನು ಹೊಗಲು- ಪ್ರವೇಶಿಸಲು)-
- ವಚನ:ಅರ್ಥ:ಹಾಗೆ ನೋಡಿದ ಹೆಂಗಸರೆಲ್ಲರೂ ಕಾಮದೇವನೆಂಬ ಬೇಟೆಗಾರನಿಗೆ ಒಡ್ಡಿದ ಹುಲ್ಲೆಗಳ ಹಾಗೆ ಪುಷ್ಪಬಾಣದ ಮೊನಚಿಗೆ ಪ್ರತಿಜ್ಞೆ/ಗಟ್ಟಿಯಾಗಿ ಮಾಡಿ ಹೊಕ್ಕು ಅದಕ್ಕನವಾಗಿರಲು ಅರ್ಜುನನು ನಗರದ ಒಳಭಾಗದಿಂದ ಬಂದು ದೇವೇಂದ್ರನ ವೈಭವವನ್ನೂ ಉಪಹಾಸಮಾಡುವಂತಿದ್ದ ತನ್ನ ಅರಮನೆಯನ್ನು ಪ್ರವೇಶಿಸಲು.
- ಮ|| ಲತೆಗಳ್ ಜಂಗಮರೂಪದಿಂ ನೆರೆದುವೋ ದಿವ್ಯಾಪ್ಸರೋವೃಂದವಿ
- ಕ್ಷಿತಿಗೇನಿಂದ್ರನ ಶಾಪದಿಂದಿೞಿದುವೋ ಪೇೞೆಂಬ ಶಂಕಾಂತರಂ|
- ಮತಿಗಂ ಪುಟ್ಟುವಿನಂ ಕರಂ ಪರಕೆಗಳ್ ತಳ್ಪೊಯ್ಯೆ ಸೇಸಿಕ್ಕಿತಿಂ
- ದ್ರತನೂಜಂಗಿದಿರ್ವಂದು ಷೋಡಶ ಸಹಸ್ರಾಂತಪುರಂ ಕೃಷ್ಣನಾ|| ೩೯||
- ಪದ್ಯ-೩೯:ಪದವಿಭಾಗ-ಅರ್ಥ:ಲತೆಗಳ್ ಜಂಗಮರೂಪದಿಂ ನೆರೆದುವೋ (ಬಳ್ಳಿಗಳು ತಿರುಗಾಡವ ರೂಪದಿಂದ ಒಟ್ಟುಸೇರಿವೆಯೋ) ದಿವ್ಯ ಅಪ್ಸರೋವೃಂದ (ಸ್ವರ್ಗದ ಅಪ್ಸರಸ್ತ್ರೀಯರ ಸಮೂಹ) ವಿಕ್ಷಿತಿಗೆ ಏನು ಇಂದ್ರನ ಶಾಪದಿಂದ ಇೞಿದುವೋ (ಭೂಮಿಗೆ ಇಂದ್ರನ ಶಾಪದಿಂದ ಇಳಿದಿದ್ದಾರೆಯೋ) ಪೇೞೆಂಬ (ಪೇೞೆಂಬ -ಪೇಳು ಎಂಬ) ಶಂಕಾಂತರಂಮತಿಗಂ (ಶಂಕ ಅಂತರಂ ಮತಿಗಂ -) ಪುಟ್ಟುವಿನಂ (ಉಂಟುಮಾಡುತ್ತಿದ್ದ) ಕರಂ ಪರಕೆಗಳ್ ತಳ್ಪೊಯ್ಯೆ ಸೇಸಿಕ್ಕಿತು (ವಿಶೇಷವಾಗಿ ಆಶೀರ್ವಾದವನ್ನು ತಳ್ಳಾಡುತ್ತಾ ಅಕ್ಷತೆಯನ್ನು ಹಾಕಿತು) ಇಂದ್ರತನೂಜಂಗಿದಿರ್ವಂದು (ಇಂದ್ರತನೂಜಂಗೆ ಇದಿರ್ವಂದು - ಅರ್ಜುನನಿಗೆ ಎದುರುಗೊಂಡು/ ಸ್ವಾಗತಿಸಿ) ಷೋಡಶ ಸಹಸ್ರಾಂತಪುರಂ ಕೃಷ್ಣನಾ (ಕೃಷ್ಣನ ಅಂತಪುರದ ಹದಿನಾರು ಸಾವಿರ ಸ್ತ್ರೀಯರು)
- ಪದ್ಯ-೩೯:ಅರ್ಥ: ಬಳ್ಳಿಗಳು ತಿರುಗಾಡವ ರೂಪದಿಂದ ಒಟ್ಟುಸೇರಿವೆಯೋ, ಸ್ವರ್ಗದ ಅಪ್ಸರಸ್ತ್ರೀಯರ ಸಮೂಹ ಇಂದ್ರನ ಶಾಪದಿಂದ ಭೂಮಿಗೆ ಇಳಿದಿದ್ದಾರೆಯೋ ಎಂಬ ಸಂದೇಹವನ್ನು ಮನಸ್ಸಿಗೆ ಉಂಟುಮಾಡುತ್ತಿದ್ದ ಕೃಷ್ಣನ ಅಂತಪುರದ ಹದಿನಾರು ಸಾವಿರ ಸ್ತ್ರೀಯರು ಅರ್ಜುನನಿಗೆ ಎದುರುಗೊಂಡು/ ಸ್ವಾಗತಿಸಿ, ವಿಶೇಷವಾಗಿ ತಳ್ಳಾಡುತ್ತಾ ಆಶೀರ್ವಾದದ ಅಕ್ಷತೆಯನ್ನು ಹಾಕಿತು.
- ವ|| ಆಗಳ್ ನಾರಾಯಣನ ತಂಗೆ ಸುಭದ್ರೆಯೆಂಬ ಕನ್ನೆ ಕೆಮ್ಮುಗಿಲ ತೆರೆಯ ಪೊರೆಯೊಳ್ ನೆಗೆದು ಪೊಱಮಡುವ ವಿದ್ಯಾಧರಿಯಂತೆ ತನ್ನ ಚೆಂಬೊನ್ನ ಕನ್ನೆಮಾಡದ ಮೇಗಣ ನೆಲೆಯ ಚೌಪಳಿಗೆಯ ಬಾಗಿಲೊಳ್ ನಿಂದು-
- ವಚನ:ಪದವಿಭಾಗ-ಅರ್ಥ:ಆಗಳ್ ನಾರಾಯಣನ ತಂಗೆ (ತಂಗಿ) ಸುಭದ್ರೆಯೆಂಬ ಕನ್ನೆ (ಕನ್ಯೆಯು) ಕೆಮ್ಮುಗಿಲ ತೆರೆಯ ಪೊರೆಯೊಳ್ (ಕೆಂಪಾದ ಮೋಡವೆಂಬ ತೆರೆಯ ಮಧ್ಯಭಾಗದಿಂದ) ನೆಗೆದು (ದಾಟಿ) ಪೊಱಮಡುವ ವಿದ್ಯಾಧರಿಯಂತೆ (ಹೊರಬರುವ ವಿದ್ಯಾಧರಸ್ತ್ರೀಯ ಹಾಗೆ) ತನ್ನ ಚೆಂಬೊನ್ನ (ಚೆಂಪು-ಕೆಂಪು, ಹೊನ್ನ -ಚಿನ್ನದ) ಕನ್ನೆಮಾಡದ (ತನ್ನ ಸುವರ್ಣಖಚಿತವಾದ ಕನ್ಯಾಮಾಡದ) ಮೇಗಣ ನೆಲೆಯ ಚೌಪಳಿಗೆಯ ಬಾಗಿಲೊಳ್ ನಿಂದು (ಮೇಲಂತಸ್ತಿನ ತೊಟ್ಟಿಯ ಬಾಗಿಲಲ್ಲಿ ನಿಂತುಕೊಂಡು)-
- ವಚನ:ಅರ್ಥ:|| ಆಗ ಕೃಷ್ಣನ ತಂಗಿಯಾದ ಸುಭದ್ರೆಯೆಂಬ ಕನ್ಯೆಯು ಕೆಂಪಾದ ಮೋಡವೆಂಬ ತೆರೆಯ ಮಧ್ಯಭಾಗದಿಂದ ದಾಟಿ ಹೊರಬರುವ ವಿದ್ಯಾಧರ ಸ್ತ್ರೀಯ ಹಾಗೆ ತನ್ನ ಸುವರ್ಣಖಚಿತವಾದ ಕನ್ಯಾಮಾಡದ ಮೇಲಂತಸ್ತಿನ ತೊಟ್ಟಿಯ ಬಾಗಿಲಲ್ಲಿ ನಿಂತುಕೊಂಡು-
- ಚಂ|| ಬಳಸಿದ ಗುಜ್ಜುಗಳ್ ನೆರೆದ ಮೇಳದ ಕನ್ನೆಯರೆತ್ತಮಿಕ್ಕೆ ಸಂ
- ಚಳಿಸುವ ಚಾಮರಂ ಕನಕ ಪದ್ಮದ ಸೀಗುರಿ ತೊಟ್ಟ ಮಾಣಿಕಂ|
- ಗಳ ಬೆಳಗಿಟ್ಟಳಂ ತನಗೊಡಂಬಡೆ ದೇಸೆ ವಿಳಾಸಮಂ ಪುದುಂ
- ಗೊಳಿಸೆ ಮರಲ್ದು ಕನ್ನೆ ನಡೆ ನೋಡಿ ಗುಣಾರ್ಣವನೆಂಬನೀತನೇ|| ೪೦ ||
- ಪದ್ಯ-೪೦:ಪದವಿಭಾಗ-ಅರ್ಥ:ಬಳಸಿದ ಗುಜ್ಜುಗಳ್ (ಸುತ್ತುವರಿದ ಸೇವಕ ಕುಬ್ಜರು) ನೆರೆದ ಮೇಳದ (ಒಡನಾಡಿ) ಕನ್ನೆಯರು ಎತ್ತಮಿಕ್ಕೆ (ಎಲ್ಲ ಕಡೆಯಿಂದಲೂ) ಸಂಚಳಿಸುವ (ಬೀಸುವ) ಚಾಮರಂ ಕನಕ ಪದ್ಮದ ಸೀಗುರಿ (ಚಿನ್ನದ ತಾವರೆಯ ಕೊಡೆ) ತೊಟ್ಟ ಮಾಣಿಕಂಗಳ ಬೆಳಗಿಟ್ಟಳಂ (ಕಾಂತಿ) ತನಗೆ ಒಡಂಬಡೆ ದೇಸೆ ವಿಳಾಸಮಂ (ಸೊಗಸು ಸೌಂದರ್ಯಗಳೂ) ಪುದುಂಗೊಳಿಸೆ (ಹದಗೊಳಿಸಿ ಒಪ್ಪುವಂತೆ ಮಾಡಿರಲು) ಮರಲ್ದು (ಮರುಳಾಗಿ/ ಸೋತು) ಕನ್ನೆ ನಡೆ ನೋಡಿ (ದಿಟ್ಟಿಸಿ ನೋಡಿ) ಗುಣಾರ್ಣವನೆಂಬನು (ಅರ್ಜುನನೆಂಬುವವನು) ಈತನೇ!
- ಪದ್ಯ-೪೦:ಅರ್ಥ: ತನ್ನ ಸುತ್ತಲೂ ಸುತ್ತುವರಿದ ಸೇವಕ ಕುಬ್ಜರು, ಅಲ್ಲಿ ಸೇರಿದ ಒಡನಾಡಿ ಕನ್ಯೆಯರು, ಎಲ್ಲ ಕಡೆಯಿಂದಲೂ ಬೀಸಲು ಚಲಿಸುತ್ತಿರುವ ಚಾಮರವೂ ಚಿನ್ನದ ತಾವರೆಯ ಕೊಡೆ, ಧರಿಸಿದ್ದ ಮಾಣಿಕ್ಯರತ್ನದ ಕಾಂತಿ, ಇವು ಚೆಲುವಾಗಿ ತನಗೆ ಒಪ್ಪಿರಲು ಸೊಗಸು ಸೌಂದರ್ಯಗಳು ಹದಗೊಳಿಸಿ ಒಪ್ಪುವಂತೆ ಮಾಡಿರಲು,ಮರುಳಾಗಿ, ಕನ್ಯೆಯಾದ ಸುಭದ್ರೆಯು ದಿಟ್ಟಿಸಿ ನೋಡಿ ಅರ್ಜುನನೆಂಬುವವನು ಇವನೇಯೇ! ಎಂದು ಕೇಳಿದಳು.
- ವ|| ಎಂದು ತನ್ನ ಮೇಳದಾಕೆಗಳಂ ಬೆಸಗೊಂಡೊಡಾಕೆಗಳಾಕೆಯ ಪತ್ತಿದ ಕಣ್ಣುಮನುೞ್ಗಿದ ಮನಮುಮಂ ಜೋಲ್ದ ನಾಣುಮಂ ನೇಲ್ದ ಸರಮುಮನಱಿದು ಸಹಜಮನೋಜನ ಕುಲದ ಚಲದ ಚಾಗದ ಬೀರದ ಭಾಗ್ಯದ ಸೌಭಾಗ್ಯದಗುಂತಿಗಳನಂತುಮಳವಲ್ಲದೆ ಪೊಗೞೆ-
- ವಚನ:ಪದವಿಭಾಗ-ಅರ್ಥ:(ಇವನೇಯೇ! ) ಎಂದು ತನ್ನ ಮೇಳದಾಕೆಗಳಂ ಬೆಸಗೊಂಡೊಡೆ ಆಕೆಗಳು(ಎಂದು ತನ್ನ ಒಡನಾಡಿಗಳನ್ನು ಕೇಳಿದಾಗ) ಆಕೆಯ ಪತ್ತಿದ ಕಣ್ಣುಮಂ ಉೞ್ಗಿದ ಮನಮುಮಂ ( ಅವರು ಅವಳ ನಟ್ಟದೃಷ್ಟಿಯನ್ನೂ ಪ್ರೀತಿಯಿಂದ ಕೂಡಿದ ಮನಸ್ಸನ್ನೂ), ಜೋಲ್ದ ನಾಣುಮಂ ನೇಲ್ದ ಸರಮುಮನು ಅಱಿದು (ಸಡಿಲವಾದ ಲಜ್ಜೆಯನ್ನೂ ಮೆಲ್ಲಗಾದ ಧ್ವನಿಯನ್ನೂ ತಿಳಿದು) ಸಹಜಮನೋಜನ ಕುಲದ ಚಲದ ಚಾಗದ ಬೀರದ ಭಾಗ್ಯದ ಸೌಭಾಗ್ಯದ ಅಗುಂತಿಗಳನು ಅಂತುಂ ಅಳವಲ್ಲದೆ ಪೊಗೞೆ (ಅತಿಶಯಗಳನ್ನು ಅಳತೆಯಿಲ್ಲದೆ ಹೊಗಳಲು)-
- ವಚನ:ಅರ್ಥ: (ಅರ್ಜುನನೆಂಬುವವನು ಇವನೇಯೇ!) ಎಂದು ತನ್ನ ಒಡನಾಡಿಗಳನ್ನು ಕೇಳಿದಾಗ, ಅವರು ಅವಳ ನಟ್ಟದೃಷ್ಟಿಯನ್ನೂ ಪ್ರೀತಿಯಿಂದ ಕೂಡಿದ ಮನಸ್ಸನ್ನೂ ಸಡಿಲವಾದ ಲಜ್ಜೆಯನ್ನೂ ಮೆಲ್ಲಗಾದ ಧ್ವನಿಯನ್ನೂ ತಿಳಿದು ಸಹಜಮನ್ಮಥನಾದ ಅರ್ಜುನನ ಕುಲದ, ಛಲದ, ತ್ಯಾಗದ, ವೀರದ, ಭಾಗ್ಯದ, ಸೌಭಾಗ್ಯದ ಅತಿಶಯಗಳನ್ನು ಅಳತೆಯಿಲ್ಲದೆ ಹೊಗಳಲು-
- ಚಂ|| ಒದವಿದ ತನ್ನ ಜವ್ವನದ ರೂಪಿನ ಮೆಯ್ಯೊಳೆ ತಪ್ಪುದಪ್ಪು ನೋ
- ಟದೊಳೆ ಪೊಡರ್ಪು ತಪ್ಪು ಬಗೆ ತಪ್ಪು ಮನೋಜನ ಪೂವಿನಂಬು ತೀ|
- ವಿದ ದೊಣೆ ತೀವಿ ತನ್ನನಿಸೆ ಜಾಣನೆ ತಪ್ಪದೆ ತಪ್ಪುದಪ್ಪ ನೋ
- ಡಿದುದದಱಿಂ ಗುಣಾರ್ಣವನನಾ ಸತಿ ತಪ್ಪದೆ ತಪ್ಪು ನೋಟದೊಳ್|| ೪೧ ||
- ಪದ್ಯ-೪೧:ಪದವಿಭಾಗ-ಅರ್ಥ:ಒದವಿದ (ಉಂಟಾದ) ತನ್ನ ಜವ್ವನದ ರೂಪಿನ (ಯೌವನದ ಸೌಂದರ್ಯವು) ಮೆಯ್ಯೊಳೆ ತಪ್ಪುದಪ್ಪು (ದೇಹದಲ್ಲಿ ಏರುಪೇರು), ನೋಟದೊಳೆ ಪೊಡರ್ಪು ತಪ್ಪು (ನೋಟದಲ್ಲಿಯೂ ಅತಿಶಯ ಚಂಚಲತೆ, ) ಬಗೆ ತಪ್ಪು (ಬಗೆ-ಮನಸ್ಸಿನ ಹತೋಟಿ ತಪ್ಪಿತು, )ಮನೋಜನ ಪೂವಿನಂಬು ತೀವಿದ ದೊಣೆ ತೀವಿ (ಮನ್ಮಥನ ತುಂಬಿದ ಬತ್ತಳಿಕೆಯ ಹೂವಿನಬಾಣ ) ತನ್ನನು ಇಸೆ (ತನ್ನನ್ನು ಹೊಡೆಯಲು) ಜಾಣನೆ ತಪ್ಪದೆ ತಪ್ಪುದು ಅಪ್ಪ ನೋಡಿದುದದಱಿಂ (ನೋಡಿದ್ದರಿಂದ ಜಾನ್ಮೆ ತಿಳುವಳಿಕೆ ತಪ್ಪಿಯೇ ತಪ್ಪವುದು) ಗುಣಾರ್ಣವನನಾ ಸತಿ ತಪ್ಪದೆ ತಪ್ಪು ನೋಟದೊಳ್ (ಅರ್ಜುನನ್ನು ಸುಭದ್ರೆ ತಪ್ಪದೆ -ಬಿಡದೆ - ತಪ್ಪು ನೋಟದಲ್ಲಿ ನೋಡಿದಳು, ನಾಚಿಕೆ ಬಿಟ್ಟು ದಿಟ್ಟಿಸಿನೋಡಿದಳು. )
- ಪದ್ಯ-೪೧:ಅರ್ಥ: . ಆಗ ಅವಳಿಗೆ ಯವ್ವನಪ್ರಾಪ್ತವಾದ ದೇಹದಲ್ಲಿ ಏರುಪೇರುಂಟಾಯಿತು. ನೋಟದಲ್ಲಿಯೂ ಅತಿಶಯ ಚಂಚಲತೆಯಾಯಿತು. ಮನಸ್ಸಿನ ಹತೋಟಿ ತಪ್ಪಿತು. ಮನ್ಮಥನ ತುಂಬಿದ ಬತ್ತಳಿಕೆಯ ಹೂವಿನಬಾಣ ತನ್ನನ್ನು ಹೊಡೆಯಲು ತನ್ನ ಜಾಣ್ಮೆಯೇ ವ್ಯತ್ಯಸ್ತವಾಗಿ ಆ ಸತಿಯು ನೋಡಿದ್ದರಿಂದ ಜಾಣ್ಮೆ/ ತಿಳುವಳಿಕೆ ತಪ್ಪಿಯೇ ತಪ್ಪಿ ಅರ್ಜುನನ್ನು ಸುಭದ್ರೆ ತಪ್ಪದೆ -ಬಿಡದೆ - ತಪ್ಪು ನೋಟದಲ್ಲಿ ಅಂದರೆ ನಾಚಿಕೆ ಬಿಟ್ಟು ದಿಟ್ಟಿಸಿನೋಡಿದಳು.
- ವ|| ಅಂತು ತಳತಳ ತೊಳಗುವ ದುಕೂಲದ ಸಕಳವಟ್ಟೆಯೊಳ್ ನಿಮಿರ್ಚಿದಂತಾನು ಮರಲ್ದ ತಾವರೆಯೆಸೞ್ಗಳೊಳ್ ಪುದಿದು ಪುದುಂಗೊಳಿಸಿದಂತಾನುಮನಂಗಾಮೃತವರ್ಷಮನೊದವಿಸಿದಂತಾನುಮೆರ್ದೆಯೊಳೆಡೆವಱಿಯದ ಪೊಳಪಿನೊಳ್ ತಳ್ಪೊಯ್ದು ಕಡೆಗಣ್ಣ ಬೆಳ್ಪುಗಳ್ ಸೊಗಯಿಸುವ ಕುವಳಯದಳನಯನೆಯ ನೋಟಂ ತನ್ನ ಮನದೊಳಳ್ಳಾಟಮಂ ಪಡೆಯೆ-
- ವಚನ:ಪದವಿಭಾಗ-ಅರ್ಥ:ಅಂತು ತಳತಳ ತೊಳಗುವ ದುಕೂಲದ ಸಕಳವಟ್ಟೆಯೊಳ್ (ರೇಷ್ಮೆಯ ವಿವಿಧ ಬಣ್ಣಗಳ ಬಟ್ಟೆಯಲ್ಲಿ) ನಿಮಿರ್ಚಿದಂತಾನುಮ್ (ಹರಡಿದ/ನಟ್ಟಗೆ ನಿಂತ) ಅರಲ್ದ ತಾವರೆಯೆಸೞ್ಗಳೊಳ್ (ಅರಳಿದ ತಾವರೆಯ ದಳದಲ್ಲಿ) ಪುದಿದು ಪುದುಂಗೊಳಿಸಿದಂತಾನುಮ್ (ಮುಚ್ಚಿ ಹುದುಗೊಳಿಸಿದಂತಿರುವ) ಅನಂಗ ಅಮೃತವರ್ಷಮನು (ಕಾಮದ ಅಮೃತ ಮಳೆಯನ್ನು) ಒದವಿಸಿದಂತಾನುಮ್ (ಉಂಟುಮಾಡಿದ ಹಾಗೆ) ಎರ್ದೆಯೊಳು ಎಡೆವಱಿಯದ (ಎದೆಯಲ್ಲಿ ವಿರಂತರವಾಗಿ) ಪೊಳಪಿನೊಳ್ ತಳ್ಪೊಯ್ದು (ಹೊಳೆಯುತ್ತಾ ಗಟ್ಟಿಯಾಗಿ->) ಕಡೆಗಣ್ಣ ಬೆಳ್ಪುಗಳ್ ಸೊಗಯಿಸುವ ಕುವಳಯದಳನಯನೆಯ ನೋಟಂ (ಕಡೆಗಣ್ಣಿನ ಬಿಳಿಯ ಬಣ್ಣಗಳು ಸೊಗಯಿಸುತ್ತಿರುವ ಕನ್ನೆ ದಿಲೆಯ ಎಸಳಿನಂತೆ ಕಣ್ಣುಳ್ಳ ಆ ಸುಭದ್ರೆಯ ನೋಟವು) ತನ್ನ ಮನದೊಳು ಅಳ್ಳಾಟಮಂ ಪಡೆಯೆ-
- ವಚನ:ಅರ್ಥ:ಹಾಗೆ ತಳತಳನೆ ಹೊಳೆಯುವ ರೇಷ್ಮೆಯ ವಿವಿಧ ಬಣ್ಣಗಳ ಬಟ್ಟೆಯಲ್ಲಿ ಹರಡಿದಂತೆಯೂ ಅರಳಿದ ತಾವರೆಯ ದಳದಲ್ಲಿ ಮುಚ್ಚಿ ಹುದುಗೊಳಿಸಿದಂತಿರುವ ಕಾಮದ ಅಮೃತ ಮಳೆಯನ್ನು ಉಂಟುಮಾಡಿದ ಹಾಗೆ ಎದೆಯಲ್ಲಿ ವಿರಂತರವಾಗಿ ಹೊಳೆಯುತ್ತಾ (ಗಟ್ಟಿಯಾಗಿ ನಿಂತು->), ಕಡೆಗಣ್ಣಿನ ಬಿಳಿಯ ಬಣ್ಣಗಳು ಸೊಗಯಿಸುತ್ತಿರುವ ಕನ್ನೆ ದಿಲೆಯ ಎಸಳಿನಂತೆ ಕಣ್ಣುಳ್ಳ ಆ ಸುಭದ್ರೆಯ ನೋಟವು (ಅರ್ಜುನನ ಮೇಲೆ)ಗಟ್ಟಿಯಾಗಿ ನಿಂತು, ತನ್ನ/ಅವಳ ಮನಸ್ಸಿನಲ್ಲಿ ತಳಮಳವನ್ನುಂಟುಮಾಡಲು-
- ಮ|| ನನೆಯಂಬಂಬನೆ ಕರ್ಚಿ ಪಾಱಿದಪುದೋ ಶೃಂಗಾರ ವಾರಾಶಿ ಭೋಂ
- ಕನೆ ಬೆಳ್ಳಂಗೆಡೆದತ್ತೊ ಕಾಮಂ ನೆರೆ ಮೆಯ್ವೆರ್ಚಿತ್ತೊ ಪೇಳೀಕೆಗೆಂ|
- ಬಿನೆಗಂ ಸೋಲಮನುಂಟುಮಾಡೆ ಹರಿಗಂ ಕರ್ಣಾಂತ ವಿಶ್ರಾಂತ ಲೋ
- ಚನನಾಲೋಚನಗೋಚರಂಬರೆಗಮೊಲ್ದಾ ಕನ್ನೆಯಂ ನೋಡಿದಂ|| ೪೨||
- ಪದ್ಯ-೪೨:ಪದವಿಭಾಗ-ಅರ್ಥ:ನನೆಯ ಅಂಬು ಅಂಬನೆ ಕರ್ಚಿ (ಮನ್ಮಥನ ಹೂವಿನ ಬಾಣವು ಹೂವನ್ನೇ ಕಚ್ಚಿಕೋಡು) ಪಾಱಿದಪುದೋ (ಹಾರಿಬರುವುದೊ) ಶೃಂಗಾರ ವಾರಾಶಿ (ಸಮುದ್ರ)ಭೋಂಕನೆ ಬೆಳ್ಳಂಗೆಡೆದತ್ತೊ (ಶೃಂಗಾರ ಸಮುದ್ರವು ತಟ್ಟನೆ ಪ್ರವಾಹವಾಗಿ ಹರಿದಿದೆಯೋ) ಕಾಮಂ ನೆರೆ ಮೆಯ್ವೆರ್ಚಿತ್ತೊ (ಕಾಮವು ಮೈಯಲ್ಲಿ ಅಧಿಕವಾಯಿತೊ,) ಪೇಳ್ ಈಕೆಗೆ ಎಂಬಿನೆಗಂ (ಇವಳಿಗೆ ಎನ್ನುವಂತೆ) ಸೋಲಮನುಂಟುಮಾಡೆ (ಮೋಹವನ್ನುಂಟುಮಾಡುವಂತೆ) ಹರಿಗಂ ಕರ್ಣಾಂತ ವಿಶ್ರಾಂತ ಲೋಚನನು ಆಲೋಚನ ಗೋಚರಂ ಬರೆಗಂ ಒಲ್ದು ಆ ಕನ್ನೆಯಂ (ಕಣ್ಣಿಗೆ ನಿಲುಕುವವರೆಗೂ ಆ ಕನ್ಯೆಯನ್ನು ಪ್ರೀತಿಯಿಂದ) ನೋಡಿದಂ
- ಪದ್ಯ-೪೨:ಅರ್ಥ: . ಈ ಸುಭದ್ರೆಗಾಗಿ ಪುಷ್ಪಬಾಣವೇ ಪುಷ್ಪಬಾಣ ಕಚ್ಚಿಕೊಂಡು ಹಾರಿಬರುತ್ತಿದೆಯೋ ಶೃಂಗಾರ ಸಮುದ್ರವು ತಟ್ಟನೆ ಪ್ರವಾಹವಾಗಿ ಹರಿದಿದೆಯೋ, ಕಾಮವು ಮೈಯಲ್ಲಿ ಅಧಿಕವಾಯಿತೊ, ಹೇಳು ಎನ್ನುವ ಹಾಗೆ ತನಗೆ ಮೋಹವನ್ನುಂಟು ಮಾಡುವಂತೆ, ಕಿವಿಯವರೆಗೂ ಉದ್ದಕಣ್ಣುಳ್ಳವನಾದ ಅರ್ಜುನನು ಕಣ್ಣಿಗೆ ನಿಲುಕುವವರೆಗೂ ಆ ಕನ್ಯೆಯನ್ನು ಪ್ರೀತಿಯಿಂದ ನೋಡಿದನು.
- ವ|| ಅಂತು ಸುರತಮಕರಧ್ವಜನ (ಮನ್ಮಥ-ಅರ್ಜುನನ) ಕಡೆಗಣ್ಣ ನೋಟಂ ಕಾಮನ ಕಿಸುಗಣ್ಚಿದ ನೋಟದಂತೊರ್ಮೊದಲೆ ತನ್ನ ಮನದೊಳಳ್ಳಾಟಮಂ ಪಡೆಯೆ-
- ವಚನ:ಪದವಿಭಾಗ-ಅರ್ಥ:ಅಂತು ಸುರತಮಕರಧ್ವಜನ ಕಡೆಗಣ್ಣ ನೋಟಂ ಕಾಮನ ಕಿಸುಗಣ್ಚಿದ (ಕೆಂಪೇರಿದ) ನೋಟದಂತೆ ಒರ್ಮೊದಲೆ (ಕೂಡಲೆ) ತನ್ನ ಮನದೊಳು ಆಳ್ಳಾಟಮಂ ಪಡೆಯೆ (ಚಂಚಲತೆಯನ್ನುಂಟುಮಾಡಲು)-
- ವಚನ:ಅರ್ಥ:ಮನ್ಮಥನಂತಿರುವ ಅರ್ಜುನನ ಕಡೆಗಣ್ಣಿನ ನೋಟವು ಕಾಮನ ಕೆಂಪೇರಿದ ನೋಟದಂತೆ ಕೂಡಲೆ ತನ್ನ ಮನಸ್ಸಿನಲ್ಲಿ ಚಂಚಲತೆಯನ್ನುಂಟುಮಾಡಲು-
- ಉ|| ಸೋಲದೊಳೆಯ್ದೆ ಪೀರ್ದ ತೆಱದಿಂದೆಮೆಯಿಕ್ಕದೆ ನೋೞ್ಪ ಕಣ್ಗೆ ಕಣ್
- ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್|
- ಕೀಲಸೆ ಕಾವನಂಬವಱ ಬಿಣ್ಪಿನೊಳೊಯ್ಯನೆ ಜೋಲ್ದವೋಲೆ ತಾಂ
- ಬೂಲಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ|| ೪೩
- ಪದ್ಯ-೪೩:ಪದವಿಭಾಗ-ಅರ್ಥ:ಸೋಲದೊಳ್ ಎಯ್ದೆ (ಚೆನ್ನಾಗಿ) ಪೀರ್ದ ತೆಱದಿಂದೆ ಎಮೆಯಿಕ್ಕದೆ ನೋೞ್ಪ ಕಣ್ಗೆ (ಪ್ರೇಮದಿಂದ ಚೆನ್ನಾಗಿ ಹೀರುವ ರೀತಿಯಲ್ಲಿ ರೆಪ್ಪೆ ಹೊಡೆಯದೇ ನೋಡುವ ಕಣ್ಣಿಗೆ) ಕಣ್ ಪೀಲಿವೊಲಾಗೆ (ನವಿಲುಗರಿಯ ಕಣ್ಣಿನ ಹಾಗಾಗಿ ) ಬಂದು ಪೆಱತೊಂದು ಮನಂಬುಗೆ (ಮನಸ್ಸನ್ನು ಪ್ರವೇಶಿಸಲು) ಪತ್ತಿ ಚಿತ್ತದೊಳ್ (ಮನಸ್ಸನಲ್ಲಿ ಅಂಟಿ) ಕೀಲಸೆ ಕಾವನಂಬ ಅವಱ ಬಿಣ್ಪಿನೊಳು (ಕಾಮಬಾಣವು ಮನಸ್ಸಿನಲ್ಲಿ ನಾಟಿರಲು ಅದರ ಭಾರದಲ್ಲಿ) ಒಯ್ಯನೆ (ಮೆಲ್ಲನೆ) ಜೋಲ್ದವೋಲೆ (ಜೋತುಬಿದ್ದ ಹಾಗೆ ) ತಾಂಬೂಲಕರಂಕವಾಹಿನಿಯ ಮೇಲೆ (ತಾಂಬೂಲ ಹಿಡಿದಿರುವ ದಾಸಿಯ ಮೇಲೆ) ನೆಱಲ್ದಿರೆ ಬಾಲೆ ಲೀಲೆಯಿಂ(ಒರಗಿಕೊಂಡು ಸುಭದ್ರೆ ಚಂದವಾಗಿ ನಿಂತಳು)
- ಪದ್ಯ-೪೩:ಅರ್ಥ: ಪ್ರೇಮದಿಂದ ಚೆನ್ನಾಗಿ ಹೀರುವ ರೀತಿಯಲ್ಲಿ ರೆಪ್ಪೆ ಹೊಡೆಯದೇ ನೋಡುವ ಕಣ್ಣಿಗೆ, ಬೇರೊಂದು ಕಣ್ಣು (ಅಂದರೆ ಅರ್ಜುನನ ಕಣ್ಣು) ನವಿಲುಗರಿಯ ಕಣ್ಣಿನ ಹಾಗಾಗಿ ಮನಸ್ಸನಲ್ಲಿ ಅಂಟಿ, ಕಾಮಬಾಣವು ಮನಸ್ಸಿನಲ್ಲಿ ನಾಟಿರಲು ಆ ಬಾಣಗಳ ಭಾರದಿಂದ ಮೆಲ್ಲಗೆ ಜೋತುಬಿದ್ದ ಹಾಗೆ ಸುಭದ್ರೆಯು ತನ್ನ ತಾಂಬೂಲ ಹಿಡಿದಿರುವ ದಾಸಿಯ ಮೇಲೆ ಚಂದವಾಗಿ ಒರಗಿಕೊಂಡು ನಿಂತಳು.
- ವ|| ಆಗಳಾ ನಾರಾಯಣನುಮುದಾತ್ತನಾರಾಯಣನುಮಾನೆಯಿಂದಮಿೞಿದು ನವ ಕಿಸಲಯ ವಂದನಮಾಳಾಳಂಕೃತಮಪ್ಪ ಸಪ್ತ ತಾಳೋತ್ತುಂಗ ರಮ್ಯ ಹರ್ಮ್ಯದೆರಡನೆಯ ಮೊಗಸಾಲೆಯೊಳಿಟ್ಟ ಪೊನ್ನ ಪಡಿಗಂಗಳೊಳಮಿಕ್ಕಿದ ಪೞಿಯ ಸುಖಾಸನಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಮೆಸೆದಿರ್ದ ಮಣಿಮಯಪೀಠದೊಳೊಡನೇಱಿ ಕಿಱಿದು ಪೊೞ್ತು ಕುಳ್ಳಿರ್ದು ಮಜ್ಜನ ಭೋಜನ ತಾಂಬೂಲಾನುಲೇಪನ ವಿಭೂಷಣ ಸುರಭಿ ಕುಸುಮ ದಾಮಾದಿಗಳಿಂ ಸಂತಸಂಬಡಿಸಿ ದಾಮೋದರನುದರದೊಳಿಟ್ಟುಕೊಳ್ವನಿತೞ್ಕಱೊಳಪಗತ ಪಥ ಪರಿಶ್ರಮನಂ ಮಾಡಿ-
- ವಚನ:ಪದವಿಭಾಗ-ಅರ್ಥ:ಆಗಳು ಆ ನಾರಾಯಣನುಂ (ಕೃಷ್ಣನು)ಉದಾತ್ತನಾರಾಯಣನುಂ (ವೀರಕೇಸರಿಯ ಬಿರುದು- ಅರ್ಜುನನು) ಆನೆಯಿಂದಂ ಇೞಿದು (ಇಳಿದು) ನವ ಕಿಸಲಯ ವಂದನಮಾಳ ಅಳಂಕೃತಮಪ್ಪ (ಹೊಸ ಚಿಗುರು ಎಲೆಗಳ ತೋರಣಮಾಲೆಯಿಂದ ಅಲಂಕೃತವಾದ) ಸಪ್ತ ತಾಳೋತ್ತುಂಗ ರಮ್ಯ ಹರ್ಮ್ಯದ ಎರಡನೆಯ ಮೊಗಸಾಲೆಯೊಳ್ ಇಟ್ಟ (ಎತ್ತರವಾದ ಏಳುತಾಳೆಯ ಮರಗಳಷ್ಟು ಎತ್ತರವೂ ರಮಣೀಯವೂ ಆದ ಉಪ್ಪರಿಗೆಯ ಎರಡನೆಯ ಮುಖಮಂಟಪವನ್ನೇರಿ ಅಲ್ಲಿ ಇಟ್ಟಿದ್ದ ) ಪೊನ್ನ ಪಡಿಗಂಗಳೊಳಂ ಇಕ್ಕಿದ ಪೞಿಯ (ಚಿನ್ನದ ಪೀಕದಾನಿಗಳಲ್ಲಿಯೂ ಬಟ್ಟೆಗಳಿಂದ- ಮುಚ್ಚಿದ್ದ) ಸುಖಾಸನಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಂ (ದಿಂಬು) ಎಸೆದಿರ್ದ(ಶೋಭಿಸುತ್ತಿದ್ದ) ಮಣಿಮಯಪೀಠದೊಳು (ಸುಖಾಸನಗಳಲ್ಲಿ ಸಿದ್ಧಪಡಿಸಿದ್ದ ಚಿನ್ನದ ದಿಂಬುಗಳಲ್ಲಿ ಚೆಲುವಾಗಿದ್ದ ರತ್ನಮಯಪೀಠಗಳಲ್ಲಿ) ಒಡನೆ ಏಱಿ ಕಿಱಿದು ಪೊೞ್ತು ಕುಳ್ಳಿರ್ದು (ಕೂಡಲೆ ಕುಳಿತು ಕೆಲವುಕಾಲ ವಿಶ್ರಮಿಸಿ) ಮಜ್ಜನ (ಸ್ನಾನ) ಭೋಜನ ತಾಂಬೂಲ ಅನುಲೇಪನ ವಿಭೂಷಣ ಸುರಭಿ ಕುಸುಮ ದಾಮಾದಿಗಳಿಂ ಸಂತಸಂಬಡಿಸಿ (ಭೋಜನ, ತಾಂಬೂಲ, ಗಂಧದ ಅನುಲೇಪನ, ಅಲಂಕಾರ ಸುರಭಿ ಕುಸುಮ ದಾಮಾದಿಗಳಿಂದ/ ಹೂವಿನಹಾರಗಳಿಂದ ಸಂತಸಪಡಿಸಿ) ದಾಮೋದರನು ಉದರದೊಳಿಟ್ಟುಕೊಳ್ವ (ಅಂತರಂಗದ ಪ್ರೀತಿಯ ನಿಜನೆಂಟನ ಹಾಗೆ)ಅನಿತ ಅೞ್ಕಱೊಳ್ ಉಪಗತ ಪಥ ಪರಿಶ್ರಮನಂ (ಎಲ್ಲಾ ಅಲ್ಲಿಯವರೆಗಿನ ಪ್ರಯಾಣದ ಆಯಾಸವನ್ನು ಪರಿಹರಿಸುವಂತೆ ಮಾಡಿ)ಮಾಡಿ-
- ವಚನ:ಅರ್ಥ:ಆಗ ಕೃಷ್ಣನೂ ಅರ್ಜುನನೂ ಆನೆಯಿಂದ ಇಳಿದು ಹೊಸ ಚಿಗುರು ಎಲೆಗಳ ತೋರಣಮಾಲೆಯಿಂದ ಅಲಂಕೃತವಾದ, ಎತ್ತರವಾದ ಏಳುತಾಳೆಯ ಮರಗಳಷ್ಟು ಎತ್ತರವೂ ರಮಣೀಯವೂ ಆದ ಉಪ್ಪರಿಗೆಯ ಎರಡನೆಯ ಮುಖಮಂಟಪವನ್ನೇರಿ ಅಲ್ಲಿ ಇಟ್ಟಿದ್ದ ಚಿನ್ನದ ಪೀಕದಾನಿಗಳಲ್ಲಿಯೂ ಬಟ್ಟೆಗಳಿಂದ ಮುಚ್ಚಿದ್ದ ಸುಖಾಸನಗಳಲ್ಲಿಯೂ ಸಿದ್ಧಪಡಿಸಿದ್ದ ಚಿನ್ನದ ದಿಂಬುಗಳಲ್ಲಿಯೂ ಚೆಲುವಾಗಿದ್ದ ರತ್ನಮಯಪೀಠಗಳಲ್ಲಿಯೂ ಕೂಡಲೆ ಕುಳಿತು ಕೆಲವುಕಾಲ ವಿಶ್ರಮಿಸಿ ಸ್ನಾನ, ಭೋಜನ-ತಾಂಬೂಲ, ಗಂಧಾನುಲೇಪನ, ಆಭರಣ, ಸುಗಂಧಪುಷ್ಪಮಾಲೆಯೇ ಮೊದಲಾದವುಗಳಿಂದ ಸಂತೋಷಪಡಿಸಿ, ಕೃಷ್ಣನು ತನ್ನ ಹೊಟ್ಟೆಯಲ್ಲಿಯೇ ಅರ್ಜುನನನ್ನು ಮಡಗಿಕೊಳ್ಳುವಷ್ಟು ಪ್ರೀತಿಯಿಂದ ಆಯಾಸ ಪರಿಹಾರವನ್ನು ಮಾಡಿದನು.
- ಕಂ|| ಈತನ ಬಿರ್ದಿನನೀತಂ
- ಭೂತಳಪತಿಯೆನಿಸಿದರಿಗನೊಡೆಯಂ ಹರಿ ತಾ|
- ನೀತನೆ ಬಿರ್ದಿನನೆನೆ ವಿ
- ಖ್ಯಾತಂಗೆ ನರಂಗೆ ಸೆಱಪುಗೆಯ್ದನನಂತಂ|| ೪೪ ||
- ಪದ್ಯ-೪೪:ಪದವಿಭಾಗ-ಅರ್ಥ:ಈತನ ಬಿರ್ದಿನನ್ (ಅಥಿತಿ) ಈತಂ ಭೂತಳಪತಿಯೆನಿಸಿದ ಅರಿಗನು (ಅರ್ಜುನ), ಒಡೆಯಂ ಹರಿ ತಾನು (ಇಬ್ಬರೂ ಒಂದೇ) ಈತನೆ ಬಿರ್ದಿನನ್ ಎನೆ ವಿಖ್ಯಾತಂಗೆ ನರಂಗೆ ಸೆಱಪುಗೆಯ್ದನು ಅನಂತಂ (ಸುಪ್ರಸಿದ್ಧನಾದ ಅರ್ಜುನನಿಗೆ ಕೃಷ್ಣನು ನೆರಪುಗೆಯ್ದನು/-ಅತಿಥ್ಯವನ್ನು ಮಾಡಿದನು)
- ಪದ್ಯ-೪೪:ಅರ್ಥ: ಇವನು ಅತಿಥಿ; ಇವನೇ ಭೂಮಿಯ ಒಡೆಯನಾದ ಅರಿಕೇಸರಿ (ಅರ್ಜುನ); ಒಡೆಯನಾದ ಕೃಷ್ಣನು ತಾನೂ ಈತನೇ- ಇಬ್ಬರೂ ಒಂದೇ. ಆದರೂ ಇವನೇ ನೆಂಟ, ಎನ್ನುವ ಹಾಗೆ ಸುಪ್ರಸಿದ್ಧನಾದ ಅರ್ಜುನನಿಗೆ ಕೃಷ್ಣನು ಅತಿಥ್ಯವನ್ನು ಮಾಡಿದನು.
- ವ|| ಅಂತೆನಿತಾನುಮಂದದೊಳ್ ಸೆಱಪುಗೆಯ್ದು ವಿವಿಧ ವಿನೋದಂಗಳಂ ತೋಱ ಮುನ್ನೆ ಬದರಿಕಾಶ್ರಮದೊಳ್-
- ವಚನ:ಪದವಿಭಾಗ-ಅರ್ಥ: ಅಂತು ಎನಿತಾನುಂ ಅಂದದೊಳ್ ಸೆಱಪುಗೆಯ್ದು (ನಾನಾ ರೀತಿಯಲ್ಲಿ ಸತ್ಕಾರಮಾಡಿ), ವಿವಿಧ ವಿನೋದಂಗಳಂ ತೋಱ (ತೋರಿಸಿ) ಮುನ್ನೆ (ಹಿಂದೆ) ಬದರಿಕಾಶ್ರಮದೊಳ್-
- ವಚನ:ಅರ್ಥ:ಹಾಗೆ ನಾನಾರೀತಿಯಲ್ಲಿ ಸತ್ಕಾರಮಾಡಿ ನಾನಾರೀತಿಯ ಆಟಪಾಟಗಳನ್ನು ತೋರಿ, (ಕೃಷ್ಣನು ಅರ್ಜುನನಿಗೆ ಹೀಗೆಂದನು- ಅರ್ಜುನ!) ಹಿಂದೆ ಬದರೀಕಾಶ್ರಮದಲ್ಲಿ-
- ಕಂ|| ಆಯತಿಯಿಂದಂ ನರ ನಾ
- ರಾಯಣರೆನೆ ನೆಗೞ್ದೆವರಿಗ ನಾವಿರ್ವರುಮಿಂ|
- ತೀ ಯುಗದೊಳೀಗಳಾಂ ನಾ
- ರಾಯಣನೆಂ ನೀನುದಾತ್ತನಾರಾಯಣನೈ| ೪೫ ||
- ಪದ್ಯ-೪೫:ಪದವಿಭಾಗ-ಅರ್ಥ:ಆಯತಿಯಿಂದಂ (ಅವಲಂಬನದಿಂದ) ನರ ನಾರಾಯಣರೆನೆ ನೆಗೞ್ದೆವರಿಗ (ಸುಪ್ರಸಿದ್ಧರಾದ) ನಾವು ಈರ್ವರುಂ; ಇಂತು ಈ ಯುಗದೊಳು ಈಗಳು ಆಂ ನಾರಾಯಣನೆಂ ನೀನು ಉದಾತ್ತನಾರಾಯಣನೈ|
- ಪದ್ಯ-೪೫:ಅರ್ಥ: ಹಿಂದೆ ನಾವು ಒಬ್ಬರಿಗೊಬ್ಬರು ಅವಲಂಬನದಿಂದ ಸುಪ್ರಸಿದ್ಧರಾದ ನರನಾರಾಯಣರಾಗಿದ್ದೆವು. ಈಗ ಈ ಯುಗದಲ್ಲಿಯೂ ನಾವಿಬ್ಬರೂ, ಹಾಗೆಯೇ, ನಾನು ನಾರಾಯಣ (ಶ್ರೀಕೃಷ್ಣ), ನೀನು ಉದಾತ್ತನಾರಾಯಣನಾದ ಅರಿಕೇಸರಿ (ಅರ್ಜುನ).
- ವ||ಅದಱಿಂ ನಿನಗಮೆನಗಮೇತಱೊಳಂ ವಿಕಲ್ಪಮುಂ ವಿಚ್ಛಿನ್ನಮುಮಿಲ್ಲೆಂದು ನುಡಿಯುತಿರ್ಪನ್ನೆಗಮಿತ್ತಲ್-
- ವಚನ:ಪದವಿಭಾಗ-ಅರ್ಥ:ಅದಱಿಂ (ಅದರಿಂದ) ನಿನಗಂ ಎನಗಂ ಏತಱೊಳಂ (ಯಾವುದರಲ್ಲಿಯೂ) ವಿಕಲ್ಪಮುಂ ವಿಚ್ಛಿನ್ನಮುಂ (ಭೇದವೂ ಅಗಲುವಿಕೆಯೂ) ಇಲ್ಲೆಂದು ನುಡಿಯುತಿರ್ಪ ಅನ್ನೆಗಂ (ಆ ಸಮಯಕ್ಕೆ)ಇತ್ತಲ್-
- ವಚನ:ಅರ್ಥ:ಆದುದರಿಂದ ನಿನಗೂ ನನಗೂ ಯಾವ ವಿಧದಲ್ಲಿಯೂ ಭೇದವೂ ಅಗಲುವಿಕೆಯೂ ಇಲ್ಲವೆಂದು ಹೇಳುತ್ತಿರುವಲ್ಲಿ ಸಾಯಂಕಾಲವಾಯಿತು. ಇತ್ತ-
- ಚಂ|| ನವ ನಳಿನೀ ವನಂಗಳ ಪರಾಗರಜಂಗಳನುಂಡು ಮುನ್ನಮಂ
- ತವನೆ ವಿಯತ್ತಳ ಭ್ರಮಣ ವಿಹ್ವಲನಾಗಿ ಬೞಲ್ದು ಕಾಱುವಂ|
- ತೆವೊಲಿರೆ ಕೆಂಪು ತತ್ಕಮಳ ಕಾನನ ಕಂಟಕ ಲಗ್ನಪಾದನಾ
- ದವೊಲುಡುಗುತ್ತುಮಾತ್ಮ ಕರಮಂ ರವಿ ಪೊರ್ದಿದನಸ್ತಶೈಲಮಂ|| ೪೬||
- ಪದ್ಯ-೪೬:ಪದವಿಭಾಗ-ಅರ್ಥ:ನವ ನಳಿನೀ ವನಂಗಳ ಪರಾಗರಜಂಗಳನು ಉಂಡು (ಹೊಸ ಅರಳಿದ ತಾವರೆಯ ತೋಟದ (ಪರಾಗದ ಧೂಳನ್ನು ತಿಂದು) ಮುನ್ನಂ (ಮೊದಲು), ಅಂತವನೆ ವಿಯತ್ತಳ ಭ್ರಮಣ ವಿಹ್ವಲನಾಗಿ ಬೞಲ್ದು (ಅಂತು ಅವನೆ ಆಕಾಶದಲ್ಲಿ ಸುತ್ತಿದ ಶ್ರಮದಿಂದ ಬಳಲಿ) ಕಾಱುವಂತೆವೊಲ್ ಇರೆ ಕೆಂಪು (ಆ ತಿಂದ ಧೂಳನ್ನೇ ಕಾರುವ-ವಾಂತಿ ಮಾಡುತ್ತಿರುವ ಹಾಗೆ ಸಂಜೆಗೆಂಪು ಇರಲು) ಕೆಂಪು; ತತ್ ಕಮಳ ಕಾನನ (ಕಮಲದ ಕಾಡು) ಕಂಟಕ (ಮುಳ್ಳು) ಲಗ್ನಪಾದನು ಆದವೊಲು (ಲಗ್ನ-ಸಿಕ್ಕಿಕೊಂಡ ಪಾದ) ಉಡುಗುತ್ತುಂ ಅತ್ಮ ಕರಮಂ (ಉಡುಗಿಸಿಕೊಂಡು ತನ್ನ ಕಿರಣಗಳನ್ನು) ರವಿ ಪೊರ್ದಿದನು ಅಸ್ತಶೈಲಮಂ (ಅಸ್ತಾಚಲವನ್ನು ಸೇರಿದನು)
- ಪದ್ಯ-೪೬:ಅರ್ಥ: ಸೂರ್ಯನು ಮೊದಲು ಹೊಸ ಅರಳಿದ ತಾವರೆಯ ತೋಟದ ಪರಾಗವ ಧೂಳನ್ನು ತಿಂದು, ಆಕಾಶದಲ್ಲಿ ಸುತ್ತಿದ ಶ್ರಮದಿಂದ ಬಳಲಿ ಆ ತಿಂದ ಧೂಳನ್ನೇವಾಂತಿ ಮಾಡುತ್ತಿರುವ ಹಾಗೆ ಸಂಜೆಗೆಂಪು ಕಾಣುತ್ತಿರಲು, ಆ ತಾವರೆಯ ಕಾಡಿನ ಮುಳ್ಳುಗಳಲ್ಲಿ ಕಾಲು ಸಿಕ್ಕಿಕೊಂಡ ಕಿರಣವುಳ್ಳವನಾಗಿ ತನ್ನ ಕಿರಣಗಳನ್ನು ಉಡುಗಿಸಿಕೊಂಡು ಅಸ್ತಾಚಲವನ್ನು ಸೇರಿದನು - ಸೂರ್ಯನು ಮುಳುಗಿದನು.
- ವ|| ಆ ಪ್ರಸ್ತಾವದೊಳ್-
- ವಚನ:ಅರ್ಥ:ಆ ಸಮಯದಲ್ಲಿ-
- ಉ|| ಆ ಸರಸೀಜ ಬಾಂಧವನ ಪಿಂಬಡಿನೊಳ್ ಕಡುವಿನ್ನನಾದುವಿಂ
- ತೀ ಸರಸೀರುಹಂಗಳವನೀ ಪದದೊಳ್ ಬಿಸುಟೆಂತು ಪೋಪೆವೆಂ|
- ಬೀ ಸಮಕಟ್ಟಿನೊಳ್ ನೆಲಸಿದಂತೆಱಗಿರ್ದುವು ಷಟ್ಪದಂಗಳು
- ತ್ಕೇಸರ ಕೋಟಿ ಸಂಕಟ ಕುಶೇಶಯಕೋಶ ಕುಟೀರಕಂಗಳೊಳ್|| ೪೭||
- ಪದ್ಯ-೪೭:ಪದವಿಭಾಗ-ಅರ್ಥ:ಆ ಸರಸೀಜ ಬಾಂಧವನ (ಸೂರ್ಯನ) ಪಿಂಬಡಿನೊಳ್ (ಹಿಂಬದಿ-ಅನಂತರ) ಕಡುವಿನ್ನನಾದುವು (ಬಹಳ ಖಿನ್ನವಾದವು) ಇಂತು ಈ ಸರಸೀರುಹಂಗಳು (ಕಮಲಗಳು); ಅವನು ಈ ಪದದೊಳ್ ಬಿಸುಟೆಂತು (ಅವನ್ನು ಈ ಸಮಯದಲ್ಲಿ ಬಿಟ್ಟು) ಪೋಪೆವೆಂಬ (ಹೇಗೆ ಹೋಗುವೆವು) ಈ ಸಮಕಟ್ಟಿನೊಳ್ ನೆಲಸಿದಂತೆ (ಸಂಧಿಗ್ಲ್ದದಲ್ಲಿ ಸಿಲುಕಿದಂತೆ) ಎಱಗಿರ್ದುವು (ಸಿಕ್ಕಿ ಬಿದ್ದಿದ್ದವು) ಷಟ್ಪದಂಗಳ ಉತ್ಕೇಸರ ( ಷಟ್ ಪದಂಗಳು -ದುಂಬಿಗಳು, ಉತ್ ಕೇಸರ ಕೋಟಿ -ಕೋಟಿ ಕಮಲದ ಕೇಸರದಲ್ಲಿ) ಸಂಕಟ ಕುಶೇಶಯಕೋಶ (ಸಮಕಟ-ಇಕ್ಕಟ್ಟಿನ ಕಮಲದ ಮೊಗ್ಗಿನ ಕೋಶದ ಗುಡಿಸಲುಗಳಲ್ಲಿ-> ) ಕುಟೀರಕಂಗಳೊಳ್.
- ಪದ್ಯ-೪೭:ಅರ್ಥ: ಕಮಲಬಂಧುವಾದ ಸೂರ್ಯನ ಅಸ್ತದ ನಂತರ ಈ ತಾವರೆಗಳೂ ಬಹಳ ಖಿನ್ನವಾಗಿ ಬಾಡಿದವು. ಈ ಸಮಯದಲ್ಲಿ ಇವುಗಳನ್ನು ಬಿಟ್ಟು ನಾವು ಹೇಗೆ ಹೋಗುವೆವು ಎಂದು ಸಂಧಿಗ್ಲ್ದದಲ್ಲಿ ಸಿಲುಕಿದಂತೆ ದುಂಬಿಗಳು ಅನೇಕ ಕೇಸರಗಳ ಇಕ್ಕಟ್ಟಿನ ಸಂಕಟಕ್ಕೊಳಗಾಗಿ ತಾವರೆಯ ಮೊಗ್ಗೆಂಬ ಗುಡಿಸಲಿನ ಒಳಗೆ ಸಿಕ್ಕಿಬಿದ್ದಿದ್ದವು.
- ಉ||ಚಂಡಮರೀಚಿಗಸ್ತಮಯಮಿಲ್ಲದುದೊಂದೆಡೆ ನಿಮ್ಮ ಕೇಳ್ದುದುಂ
- ಕಂಡುದುಮುಳ್ಳೊಡಿನ್ ಬೆಸಸಿಮಾಮಿರದಲ್ಲಿಗೆ ಪೋಪೆವೆಂದು ಮೆ|
- ಯ್ಗೊಂಡೊಲವಿಂದಗಲ್ಕೆಗಣಮಾಱದೆ ಪಕ್ಕಿಗಳೆಲ್ಲಮಂ ಮರು
- ಳ್ಗೊಂಡವೊಲೂಳ್ದು ಕೂಡೆ ಬೆಸಗೊಂಡು ಬಿೞಲ್ದುವು ಜಕ್ಕವಕ್ಕಿಗಳ್|| ೪೮||
- ಪದ್ಯ-೪೮:ಪದವಿಭಾಗ-ಅರ್ಥ:ಚಂಡಮರೀಚಿಗೆ ಅಸ್ತಮಯಮಿಲ್ಲದುದು ಒಂದೆಡೆ (ಸೂರ್ಯನಿಗೆ ಅಸ್ತವು ಇಲ್ಲದ ಸ್ಥಳವೊಂದು ಇದ್ದರೆ) ನಿಮ್ಮ ಕೇಳ್ದುದುಂ ಕಂಡುದುಂ ಉಳ್ಳೊಡಿಂ (ಕಂಡು ಕೇಳಿದ್ದರೆ) ಇಂಬೆಸಸಿಂ (ಹೇಳಿರಿ) ಆಂ ಇರದೆ ಅಲ್ಲಿಗೆ ಪೋಪೆವೆಂದು (ನಾವು ಕೂಡಲೆ ಅಲ್ಲಿಗೆ ಹೋಗುವೆವು ಎಂದು) ಮೆಯ್ಗೊಂಡು ಒಲವಿಂದ ಅಗಲ್ಕೆಗೆ ಅಣಮಾಱದೆ (ಸೂರ್ಯನನ್ನು ಅಗಲಲು ಸಾದ್ಯವಾಗದೆ) ಪಕ್ಕಿಗಳೆಲ್ಲಮಂ ಮರುಳ್ಗೊಂಡವೊಲ್ (ಹುಚ್ಚುಹಿಡಿದಂತೆ) ಉಳ್ದು (ಕೂಗಿ) ಕೂಡೆ ಬೆಸಗೊಂಡು ಬಿೞಲ್ದುವು ಜಕ್ಕವಕ್ಕಿಗಳ್ (ಕೂಡಲೆ ಕೇಳಿ ಚಕ್ರವಾಕಗಳು ಬಳಲಿದವು)
- ಪದ್ಯ-೪೮:ಅರ್ಥ: . ಸೂರ್ಯನಿಗೆ ಅಸ್ತವು ಇಲ್ಲದ ಸ್ಥಳವೊಂದನ್ನು ನೀವು ಕೇಳಿದ್ದರೆ ಅಥವಾ ಕಂಡಿದ್ದರೆ ಹೇಳಿ; ನಾವು ಕೂಡಲೆ ಅಲ್ಲಿಗೆ ಹೋಗುವೆವು ಎಂದು, ಹುಚ್ಚರಂತೆ ಎಲ್ಲ ಪಕ್ಷಿಗಳಿಗೂ ಕೂಗಿ ಹೇಳಿ ಮತ್ತು ಚಕ್ರವಾಕಪಕ್ಷಿಗಳು ವಿಶೇಷವಾಗಿ ಬಳಲಿದುವು.
- ವ|| ಅಂತು ಕಮಳವನಂಗಳಾದಿತ್ಯಂಗೆ ಕೆಯ್ಯಂ ಮುಗಿವಂತೆ ಮುಗಿಯೆ ಜಕ್ಕವಕ್ಕಿಗಳ್ ಸುರತಮಕರಧ್ವಜನ ಸುಭದ್ರೆಯ ವಿರಹಪರಿತಾಪಮಂ ಪಚ್ಚುಕೊಂಡಸುಂಗೊಂಡಗಲೆ ಸಂಧ್ಯಾರಾಗಮವರ ಮನದನುರಾಗಮನನುಕರಿಸುವಂತುಟಾಗೆ ಬೞಿಯಂ ಕ್ರಮಕ್ರಮದೊಳ್-
- ವಚನ:ಪದವಿಭಾಗ-ಅರ್ಥ:ಅಂತು ಕಮಳವನಂಗಳ ಆದಿತ್ಯಂಗೆ ಕೆಯ್ಯಂ ಮುಗಿವಂತೆ (ಕೈಮುಗಿಯುವಂತೆ) ಮುಗಿಯೆ ಜಕ್ಕವಕ್ಕಿಗಳ್ ಸುರತಮಕರಧ್ವಜನ (ಅರ್ಜುನನ) ಸುಭದ್ರೆಯ ವಿರಹ ಪರಿತಾಪಮಂ ಪಚ್ಚುಕೊಂಡು ಅಸುಂಗೊಂಡು ಅಗಲೆ (ಭಾಗಿಗಳಾಗಿ ತಕ್ಷಣ ಅಗಲಲು) ಸಂಧ್ಯಾರಾಗಂ (ಸಂಜೆಯ ಕೆಂಪುಬಣ್ಣವು) ಅವರ ಮನದ ಅನುರಾಗಮನು (ಪ್ರಿತಿಯನ್ನು) ಅನುಕರಿಸುವಂತುಟೆ ಆಗೆ- ಬೞಿಯಂ ಕ್ರಮಕ್ರಮದೊಳ್-
- ವಚನ:ಅರ್ಥ:ವ|| ಹಾಗೆ ಕಮಲಗಳ ತೋಟಗಳು ಸೂರ್ಯನಿಗೆ ಕೈಮುಗಿಯುವಂತೆ ಮೊಗ್ಗಾಗಿ ಮುಚ್ಚಿಕೊಳ್ಳಲು, ಚಕ್ರವಾಕಪಕ್ಷಿಗಳು ಅರ್ಜುನ ಸುಭದ್ರೆಯರ ವಿರಹತಾಪದಲ್ಲಿ ತಾವೂ ಭಾಗಿಗಳಾಗಿ (ದುಖಪಟ್ಟು?) ತಕ್ಷಣ ಅಗಲಲು ಸಂಜೆಯ ಕೆಂಪುಬಣ್ಣವು ಅವರ ಮನಸ್ಸಿನ ಪ್ರೀತಿಯನ್ನು ಅನುಕರಿಸುವಂತೆ ಸಂಧ್ಯಾರಾಗವು ಕಾಣಿಸಿತು. ಬಳಿಕ ಕ್ರಮವಾಗಿ-
- ಮ|| ಮಸಿಯಿಂದಂ ಜಗಮೆಲ್ಲಮಂ ದಿತಿಸುತಂ ಮುಂ ಪೂೞ್ದನೋ ಕಾಲಮೇ
- ಘಸಮೂಹಂ ದೆಸೆಯೆಲ್ಲಮಂ ಕವಿದುದೋ ಗಂಧೇಭ ಚರ್ಮಂಗಳಂ|
- ಪಸರಂಗೆಯ್ದನೊ ಶಂಭುವೆಂಬ ಬಗೆಯಿಂ ತಳ್ಪೊಯ್ದು ಕೞ್ಪೇಱೆ ಸೂ
- ಚಿಸಲಾರ್ಗಂ ವಶಮಾಗದಂತು ಕವಿದತ್ತುದ್ದಾಮ ಭೀಮಂ ತಮಂ|| ೪೯
- ಪದ್ಯ-೪೯:ಪದವಿಭಾಗ-ಅರ್ಥ:ಮಸಿಯಿಂದಂ (ಕಪ್ಪುಬಣ್ನದಿಂದ) ಜಗಮೆಲ್ಲಮಂ ದಿತಿಸುತಂ ಮುಂ ಪೂೞ್ದನೋ (ದಿತಿಯಮಗ ರಾಕ್ಷಸನು ಮೊದಲೇ ಜಗತ್ತೆಲ್ಲವನ್ನೂ ಹೂಳಿದನೋ!) ಕಾಲಮೇಘಸಮೂಹಂ ದೆಸೆಯೆಲ್ಲಮಂ ಕವಿದುದೋ (ಕಪ್ಪು ಮೋಡಗಳು ದಿಕ್ಕುಗಳನ್ನು ಮುಚ್ಚಿತೋ,) ಗಂಧೇಭ ಚರ್ಮಂಗಳಂ (ಆನೆಯ ಚರ್ಮಗಳನ್ನು) ಪಸರಂಗೆಯ್ದನೊ ಶಂಭುವೆಂಬ (ಶಂಭು-ಶಿವನು ಹರಡಿದನೊ) ಬಗೆಯಿಂ ತಳ್ಪೊಯ್ದು ಕೞ್ಪೇಱೆ (ಚಿಂತೆಯನ್ನು ಉಂಟುಮಾಡಿ) ಸೂಚಿಸಲು ಆರ್ಗಂ ವಶಮಾಗದಂತು (ಇದು ಹೀಗೆ ಎಂದು ಸೂಚಿಸುವುದಕ್ಕೆ ಆಗದಂತೆ) ಕವಿದತ್ತು (ಕತ್ತಲೆ ಮುಸುಗಿತು) ಉದ್ದಾಮ ಭೀಮಂ ತಮಂ (ಭಯಂಕರವಾದ ಕತ್ತಲೆಯು)
- ಪದ್ಯ-೪೯:ಅರ್ಥ: ನಂತರ ರಾಕ್ಷಸನು ಸಮಸ್ತ ಜಗತ್ತನ್ನು ಕಾಡಿಗೆಯಿಂದ ಹೂಳಿಬಿಟ್ಟಿದ್ದಾನೆಯೋ, ಪ್ರಳಯಕಾಲದ ಮೋಡಗಳು ದಿಕ್ಕುಗಳನ್ನೆಲ್ಲ ಮುಚ್ಚಿತೋ, ಶಿವನು ಮದ್ದಾನೆಯ ಚರ್ಮವನ್ನು ಹರಡಿದನೋ ಎಂಬ ಚಿಂತೆಯನ್ನು ಉಂಟುಮಾಡಿ ಕಪ್ಪುಬಣ್ಣವು ವೃದ್ಧಿಯಾಗಿ ಇದು ಹೀಗೆ ಎಂದು ಸೂಚಿಸುವುದಕ್ಕೆ ಯಾರಿಗೂ ಶಕ್ಯವಿಲ್ಲದ ರೀತಿಯಲ್ಲಿ ಬಹಳ ಭಯಂಕರವಾದ ಕತ್ತಲೆಯು ಕವಿದುಕೊಂಡಿತು.
- ವ|| ಆಗಳಾ ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆನಿತು ಬೆಳಗಿಯುಂ ಕೞ್ತಲೆಯನಲೆಯಲಾಱವಾದುವು ಕನಕ ಪ್ರಾಸಾದ ಪಂಙ್ಕೆ ಗಳ್ ಪೞಪೞನೆ ಬೆಳಗುವ ಸೊಡರ್ಗಳನಾದಿತ್ಯನ ನಂಟರೆಂದು ತಮೋರಾಜಕಂ ಮುಳಿದು ಸೆರೆಗೆಯ್ದ ಬೆಳಗಿನ ಸೆರೆಯ ಮನೆಗಳನ್ನವಾದುವು ಮದಗಜ ಗಂಡಸ್ಥಳಂಗಳೊಳೆಱಗಿ ಮೊರೆವ ತುಂಬಿಯ ಬಂಬಲ್ಗಳೆ ವಿಮುಖಿಭೂತಂಗಳಾದುವು ತಂಡತಂಡದೋಲಗಕ್ಕೆ ಪುಗುವ ಪೊಱಮಡುವ ವಾರವಿಳಾಸಿನಿಯರ ನೂಪುರಂಗಳ ರವಂಗಳೊಳ್ ನೃಪಭವನೋಪವನ ದೀರ್ಘಿಕಾಹಂಸಕುಳಂಗಳ್ ತಳವೆಳಗಾದುವು ರಾಜಹಂಸಪಾರಾವತಮಿಥುನಂಗಳುತ್ತುಂಗಪ್ರಾಸಾದಶಿಖರ ಮಣಿಗವಾಕ್ಷಾಂತರಾಳ ವಿವಿಧ ಗೃಹಾಂತರಗತಂಗಳಾದುವು ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜ ಹರಿಣ ರುಧಿರ ನಿಚಯ ನಿಚಿತಮಾದಂತೆ ಲೋಹಿತಾಂಗನಾಗೆ-
- ವಚನ:ಪದವಿಭಾಗ-ಅರ್ಥ:ಆಗಳು ಆ ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆ (ಆಗ ಸಮೂಹವು ದಿಕ್ಕಿನ ವನಿತೆಯರ ಕಿರೀಟದಂತೆ,) ಎನಿತು ಬೆಳಗಿಯುಂ ಕೞ್ತಲೆಯನು ಅಲೆಯಲಾಱವಾದುವು (ಕತ್ತಲೆಯನ್ನು ಹೋಗಲಾಡಿಸಲು ಶಕ್ತವಾಗಲಿಲ್ಲ) ಕನಕ ಪ್ರಾಸಾದ ಪಂಙ್ಕೆ ಗಳ್ (ಚಿನ್ನದ ಉಪ್ಪರಿಗೆಯ ಸಾಲುಗಳು) ಪೞಪೞನೆ (ಪಳಪಳನೆ) ಬೆಳಗುವ ಸೊಡರ್ಗಳನು (ದೀಪಗಳನ್ನು) ಆದಿತ್ಯನ ನಂಟರೆಂದು ತಮೋರಾಜಕಂ ಮುಳಿದು (ಕತ್ತಲೆಯೆಂಬ ರಾಜನು ಕೋಪಗೊಂಡು) ಸೆರೆಗೆಯ್ದ (ಸೆರೆ ಹಿಡಿದು) ಬೆಳಗಿನ ಸೆರೆಯ ಮನೆಗಳನ್ನವಾದುವು (ಬೆಳಕಿನ ಸೆರೆಮನೆಗಳಂತೆ ಆದವು); ಮದಗಜ ಗಂಡಸ್ಥಳಂಗಳೊಳು ಎಱಗಿ (ಎರಗಿ) ಮೊರೆವ ತುಂಬಿಯ ಬಂಬಲ್ಗಳೆ (ಗುಂಪುಗಳು) ವಿಮುಖಿಭೂತಂಗಳಾದುವು (ಮುಖತಿರುಗಿಸಿದವು) ತಂಡತಂಡದ ಓಲಗಕ್ಕೆ ಪುಗುವ ಪೊಱಮಡುವ (ಬರುವ ಹೊಗುವ) ವಾರವಿಳಾಸಿನಿಯರ (ವೇಶ್ಯೆಯರ) ನೂಪುರಂಗಳ ರವಂಗಳೊಳ್ (ಶಬ್ದದಲ್ಲಿ) ನೃಪಭವನ (ಅರಮನೆ) ಉಪವನ ದೀರ್ಘಿಕಾ (ಹಂಸಗಳು) ಹಂಸಕುಳಂಗಳ್ ತಳವೆಳಗಾದುವು (ಹೆದರಿದವು); ರಾಜಹಂಸ ಪಾರಾವತ (ಪಾರಿವಾಳ) ಮಿಥುನಂಗಳು (ಜೊಡಿಗಳು) ಉತ್ತುಂಗಪ್ರಾಸಾದಶಿಖರ (ಉತ್ತುಂಗ-ಎತ್ತರದ ಪ್ರಾಸಾದಶಿಖರ -ಉಪ್ಪರಿಗೆಯ ತುದಿಯಲ್ಲಿರುವ) ಮಣಿಗವಾಕ್ಷಾಂತರಾಳ (ಮಣಿ - ರತ್ನ, ಗವಾಕ್ಷ- ಕಿಟಕಿ ಅಂತರಾಳ -ಒಳಗೆ ಮತ್ತು) ವಿವಿಧ ಗೃಹ ಅಮತರಗತಂಗಳಾದುವು (ಮನೆಯ ಒಳಗೆ ಸೇರಿದವು); ಉದಯಗಿರಿ ಕಟಕ (ತಪ್ಪಲು) ಕುಹರ (ಗವಿಗಳ) ಪರಿಕರ ನಿಶಾಕರಂ (ಸಹಾಯದ ಚಂದ್ರನು) ಹರಿದಳಿತ (ಹರಿ- ಸಿಂಹದಿಂದ ಸೀಳಿದ) ನಿಜ ಹರಿಣ ರುಧಿರ ನಿಚಯ (ತನ್ನ ಜಿಂಕೆಯ ರಕ್ತದ ರಾಶಿಯಿಂದ) ನಿಚಿತಮಾದಂತೆ (ತುಂಬಿದಂತೆ) ಲೋಹಿತಾಂಗನಾಗೆ (ಕೆಂಪು ಬಣ್ಣದವನಾಗಲು)-
- ವಚನ:ಅರ್ಥ:ಆಗ ಸಮೂಹವು ದಿಕ್ಕಿನ ವನಿತೆಯರ ಕಿರೀಟದಂತೆ, ಬೆಳಗಿದರೂ ಕತ್ತಲೆಯನ್ನು ಹೋಗಲಾಡಿಸಲು ಶಕ್ತವಾಗಲಿಲ್ಲ. ಚಿನ್ನದ ಉಪ್ಪರಿಗೆಯ ಸಾಲುಗಳು ಪಳಪಳನೆ ಬೆಳಗುತ್ತಿದ್ದ ದೀಪಗಳು ಸೂರ್ಯನ ನಂಟರೆಂದು ಕತ್ತಲೆಯೆಂಬ ರಾಜನು ಕೋಪಗೊಂಡು (ಆ ದೀಪಗಳನ್ನು) ಸರೆಹಿಡಿದು ಬಂಧಿಸಿದ; ಅವು ಬೆಳಕಿನ ಸೆರೆಮನೆಗಳಂತೆ ಆದವು. ಮದ್ದಾನೆಗಳ ಕಪೋಲ ಪ್ರದೇಶಗಳಲ್ಲಿ ಎರಗಿ ಝೇಂಕರಿಸುವ ದುಂಬಿಯ ಸಮೂಹಗಳು ಮುಖತಿರುಗಿಸಿದವು- ಹೊರಟುಹೋದವು. ಗುಂಪುಗುಂಪಾಗಿ ಅರಮನೆಗೆ ಬಂದು ಹೋಗುವ ವೇಶ್ಯೆಯರ ಕಾಲಂದಿಗೆಯ ಶಬ್ದವನ್ನು ಕೇಳಿ ಅರಮನೆಯ ಕೈದೋಟ ಸರೋವರದಲ್ಲಿದ್ದ ಹಂಸ ಸಮೂಹಗಳು ಹೆದರಿದವು. ರಾಜಹಂಸ ಮತ್ತು ಪಾರಿವಾಳದ ಜೋಡಿಗಳು ಉಪ್ಪರಿಗೆಯ ತುದಿಯಲ್ಲಿರುವ ರತ್ನಖಚಿತವಾದ ಕಿಟಕಿಗಳ ಮಧ್ಯಭಾಗದ ಮನೆಗಳ ಒಳಗೆ ಮತ್ತು ಮನೆಯ ಗೂಡುಗಳನ್ನು ಹೋಗಿ ಸೇರಿದುವು. ಉದಯ ಪರ್ವತದ ತಪ್ಪಲಿನ ಗವಿಗಳ ಸಹಾಯಕ ಉದಯ ಚಂದ್ರನು ಸಿಂಹದಿಂದ ಸೀಳಲ್ಪಟ್ಟ ತನ್ನ ಜಿಂಕೆಯ ರಕ್ತರಾಶಿಯಿಂದ ತುಂಬಿದವನಂತೆ ಕೆಂಪು ಬಣ್ಣದವನಾಗಲು. (ಸೂರ್ಯ ಮುಳುಗಿ ಕತ್ತಲಾಯಿತು, ಕೆಂಪು ಚಂದ್ರ ಉದಯಿಸಿದ, ಆಗ-)
- ಮ|| ನೆರೆದೈ ಸಂಜೆಯೊಳೆಂದು ಕಾಯ್ದೊದೆದೊಡೇನಾತ್ಮಾಂಗದೊಳ್ ರೋಹಿಣೀ
- ಚರಣಾಲಕ್ತಕ ರಾಗಮಚ್ಚಿಱಿದುದೋ ಮೇಣ್ ಕಾಮಿಗಳ್ಗೀವ ರಾ|
- ಗರಸಂ ಪೊಣ್ಮಿದುದೋ ತಮೋಗಜದ ಕೋಡೇಱಿಂದಮೇಂ ನೊಂದುದೋ
- ಹರಿಣಂ ತಾನೆನಿಸಿತ್ತು ರಕ್ತರುಚಿಯಿಂ ಬಿಂಬಂ ಸುಧಾಸೂತಿಯಾ|| ೫೦ ||
- ಪದ್ಯ-೫೦:ಪದವಿಭಾಗ-ಅರ್ಥ:ನೆರೆದೈ(ಬೆರೆ, ಸೇರು) ಸಂಜೆಯೊಳು ಎಂದು (ಚಂದ್ರನೇ ಸಂಜೆಹೆಣ್ಣಿನ ಜೊತೆ ಸೇರಿದೆಯಾ) ಕಾಯ್ದು ಒದೆದೊಡೆ (ಚಂದ್ರನ ಪತ್ನಿ ಸಿಟ್ಟಿನಿಂದ ಒದ್ದಾಗ) ಏನು ಆತ್ಮಾಂಗದೊಳ್ (ಆತ್ಮ-ತನ್ನ- ಚಂದ್ರನ ದೇಹದಲ್ಲಿ) ರೋಹಿಣೀಚರಣ ಅಲಕ್ತಕ (ರೋಹಿಣಿ ಕಅಲಿನ ಅರಗಿನ ಬಣ್ಣ->) ರಾಗಂ ಅಚ್ಚಿಱಿದುದೋ (ಹತ್ತಿತೊ), ಮೇಣ್ (ಅಥವಾ) ಕಾಮಿಗಳ್ಗೆ ಈವ ರಾಗರಸಂ (ಕುಡಿಯಲು ಕೊಡುವ ಕಾಮ ಹೆಚ್ಚುವ ರಸವು) ಪೊಣ್ಮಿದುದೋ (ಹೊರಹೊಮ್ಮಿತೊ), ತಮೋಗಜದ ಕೋಡ ಏಱಿಂದಂ ಏಂ ನೊಂದುದೋ ಹರಿಣಂ (ಜಿಂಕೆಯು ಕತ್ತಲೆಯೆಂಬ ಆನೆಯ ಕೊಂಬಿನ ಗಾಯದಿಂದ ನೊಂದಿತೋ) ತಾನ್ ಎನಿಸಿತ್ತು ರಕ್ತರುಚಿಯಿಂ (ಕೆಂಪು ಕಾಂತಿಯಿಂದ) ಬಿಂಬಂ ಸುಧಾಸೂತಿಯಾ(ಚಂದ್ರನ , ಬಿಂಬಂ - ಮಂಡಲವು) (ಎನ್ನುವ ಹಾಗೆ ಚಂದ್ರಬಿಂಬದ ಕೆಂಪು ಕಾಂತಿಯು ಎನ್ನಿಸಿತು)
- ಪದ್ಯ-೫೦:ಅರ್ಥ: ಸಂಜೆಯೆಂಬ (ಅನ್ಯ) ಸ್ತ್ರೀಯಲ್ಲಿ ಕೂಡಿದೆಯಾ ಎಂದು (ಹೆಂಡತಿಯಾದ ರೋಹಿಣಿ ದೇವಿಯು) ಕೋಪದಿಂದ ಒದೆಯಲು ಅವಳ ಕಾಲಿನ ಅರಗಿನ ಬಣ್ಣವು ಚಂದ್ರನಿಗೆ ಹತ್ತಿತೋ, ಅಥವಾ ಕಾಮಿಗಳಿಗೆ ಕುಡಿಯಲು ಕೊಡುವ ಕಾಮ ಹೆಚ್ಚುವ ರಸವು ಹೊರಹೊಮ್ಮಿತೊ, ಅಥವಾ (ಚಂದ್ರನ) ಜಿಂಕೆಯು ಕತ್ತಲೆಯೆಂಬ ಆನೆಯ ಕೊಂಬಿನ ಗಾಯದಿಂದ ನೊಂದಿತೋ ಎನ್ನುವ ಹಾಗೆ ಚಂದ್ರನ ಬಿಂಬದ ಕೆಂಪು ಕಾಂತಿಯು ಎನ್ನಿಸಿತು/ಎನ್ನುಂವಂತೆ ಕಾಣುತ್ತಿತ್ತು.
- ವ|| ಆಗಳ್ ತನ್ನ ರಾಗಮಂ ರಾಗಿಗಳ್ಗೆಲ್ಲಂ ಪಚ್ಚುಕೊಟ್ಟಂತೆ ಕೆಂಪು ಪತ್ತುವಿಟ್ಟಾಗಳ್-
- ವಚನ:ಪದವಿಭಾಗ-ಅರ್ಥ:ಆಗಳ್ ತನ್ನ ರಾಗಮಂ (ಬಣ್ಣವನ್ನು) ರಾಗಿಗಳ್ಗೆಲ್ಲಂ ಪಚ್ಚುಕೊಟ್ಟಂತೆ (ಹಂಚಿಕೊಟ್ಟಂತೆ) ಕೆಂಪು ಪತ್ತುವಿಟ್ಟಾಗಳ್ (ಬಿಟ್ಟು ಹೋದಾಗ)-
- ವಚನ:ಅರ್ಥ:ಸ್ವಲ್ಪಕಾಲದ ಮೇಲೆ ತನ್ನ ಕೆಂಪುಬಣ್ಣವನ್ನು ಪ್ರೀತಿಪಾತ್ರರಾದವರಿಗೆ ಹಂಚಿಕೊಟ್ಟಂತೆ ಬಿಟ್ಟು ಹೋದಾಗ-
- ಮ|| ಮುನಿದೀಶಂ ತವೆ ಸುಟ್ಟು ಮುಂ ಕರುಣದಿಂದಿತ್ತಂ ಪುನರ್ಜನ್ಮಮಂ
- ನಿನಗೆಂದಾ ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮ|
- ಜ್ಜನಕೆಂದೆತ್ತಿದ ಚಂದ್ರಕಾಂತ ಘಟದೊಳ್ ತಂದೞ್ತಿಯಿಂ ಪುಷ್ಪ ವಾ
- ಸನೆಗೆಂದಿಕ್ಕಿದ ನೀಳ ನೀರರುಹಮಂ ಪೋಲ್ದತ್ತು ಕೞ್ವಿಂದುವಾ|| ೫೧||
- ಪದ್ಯ-೫೧:ಪದವಿಭಾಗ-ಅರ್ಥ:ಮುನಿದು (ಸಿಟ್ಟುಮಾಡಿ) ಈಶಂ ತವೆ (ಚನ್ನಾಗಿ) ಸುಟ್ಟು ಮುಂ (<-ಮೊದಲು), ಕರುಣದಿಂದ ಇತ್ತಂ ಪುನರ್ಜನ್ಮಮಂ ನಿನಗೆ ಎಂದು, ಆ ರತಿ ಪಾಪಮುಂ ಪಡಣಮುಂ (ಪತನವೂ) ಪೋಪಂತೆ ಕಾಮಂಗೆ ಮಜ್ಜನಕೆ (ಸ್ನಾನಕ್ಕೆ) ಎಂದು ಎತ್ತಿದ ಚಂದ್ರಕಾಂತ ಘಟದೊಳ್ (ಕೊಡದಲ್ಲಿ) ತಂದು ಅೞ್ತಿಯಿಂ ಪುಷ್ಪ ವಾಸನೆಗೆ ಎಂದು ಇಕ್ಕಿದ (ಹಾಕಿದ) ನೀಳ ನೀರರುಹಮಂ (ನೀಳ ನೀಲ- ಕಪ್ಪು ತಾವರೆಯನ್ನು) ಪೋಲ್ದತ್ತು (ಹೋಲುತ್ತಿತ್ತು) ಕೞ್ಪಿಂದುವಾ (ಕಳ್ಪು ಇಂದುವಾ, ಚಂದ್ರನ ಮೇಲಿದ್ದ ಕಪ್ಪುಕಲೆ)|
- ಪದ್ಯ-೫೧:ಅರ್ಥ: ಈಶ್ವರನೂ ಮನ್ಮಥನ ಮೇಲೆ ಮೊದಲು ಕೋಪಿಸಿಕೊಂಡು (ನೇತ್ರಾಗ್ನಿಯಿಂದ) ಸುಟ್ಟು ಭಸ್ಮಮಾಡಿ ಪುನ ಕರುಣೆಯಿಂದ ನಿನಗೆ ಜನ್ಮವಿತ್ತಿದ್ದಾನೆ ಎಂದು ರತಿದೇವಿಯು ಅವನ ಪಾಪವನ್ನು ಪತನವನ್ನು ಹೋಗಲಾಡಿಸಲು ಕಾಮನ ಸ್ನಾನಕ್ಕೆ ಎತ್ತಿದ ಚಂದ್ರಕಾಂತ ಶಿಲೆಯ ಕೊಡದಲ್ಲಿ ಹೂವಿನ ವಾಸನೆಗಾಗಿ ಪ್ರೀತಿಯಿಂದ ತಂದಿಟ್ಟ (ಕನೈದಿಲೆ) ಕಪ್ಪು ತಾವರೆಯನ್ನು ಚಂದ್ರನ ಮೇಲಿದ್ದ ಕಪ್ಪು ಕಲೆ ಹೋಲುತ್ತಿತ್ತು.
- ಕಂ||ಆವರಿಸಿತ್ತೊ ನಭೋಂತ
- ರ್ಭೂವಿವರಮನಮರ್ದಿನೆಎಸಕಮೆನೆ ವಿರಹಿಗಳೋ|
- ವೋವಿದು ಮದನನಸೋವನ
- ದೀವಿಗೆಯೆನೆ ತೊಳಗಿ ಬೆಳಗಿದಂತುಹಿನಕರಂ||೫೨||
- ಪದ್ಯ-೫೨:ಪದವಿಭಾಗ-ಅರ್ಥ:ಆವರಿಸಿತ್ತೊ ನಭೋ ಅಂತರ್ ಭೂವಿವರಮಂ ( ಭೂಮಿ ಅಂತರಿಕ್ಷಗಳ ಮಧ್ಯಭಾಗವನ್ನು) ಅಮರ್ದಿನ ಎಸಕಮ್ (ಅಮೃತದಕಾಂತಿ) ಎನೆ (ಎನ್ನುವ ಹಾಗೆ) ವಿರಹಿಗಳು ಓ ಓ ಇದು ಮದನನ ಸೋವನ ದೀವಿಗೆಯೆನೆ (ಮನ್ಮಥನ ಶೋಧನೆಯ ದೀವಟಿಗೆ ಎನ್ನುವಂತೆ) ತೊಳಗಿ ಬೆಳಗಿದಂ ತುಹಿನಕರಂ(ಚಂದ್ರನು ತೊಳಗಿ ಬೆಳಗಿದನು)
- ಪದ್ಯ-೫೨:ಅರ್ಥ:ಬೆಳುದಿಂಗಳು ಭೂಮಿ ಅಂತರಿಕ್ಷಗಳ ನಡುವಿನ ಭಾಗವನ್ನು ಅಮೃತದಕಾಂತಿ ಆವರಿಸಿತೊ ಎನ್ನುವ ಹಾಗೆ ವಿರಹಿಗಳು ಓ ಓ ಇದು ಮನ್ಮಥನ ಶೋಧನೆಯ ದೀವಟಿಗೆ ಎನ್ನುವಂತೆ, (ಕಾಪಾಡಿ ಕಾಪಾಡಿ ಎಂದು ಕೂಗಿಕೊಳ್ಳುವ ಹಾಗೆ) ಚಂದ್ರನು ತೊಳಗಿ ಬೆಳಗಿದನು.
- ವ||ಅಂತು ಸೊಗಯಿಸುವ ಅಚ್ಚಬೆಳ್ದಿಂಗಳೊಳ್ ಸುಧಾಧವಳಿತೋತ್ತಂಗ ರಮ್ಯಹರ್ಮ್ಯಾಗ್ರದೊಳೆ ಸಿರಿಯೋಲಗಂಗೊಟ್ಟು ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು-
- ವಚನ:ಪದವಿಭಾಗ-ಅರ್ಥ:ಅಂತು ಸೊಗಯಿಸುವ ಅಚ್ಚ ಬೆಳ್ದಿಂಗಳೊಳ್ ಸುಧಾಧವಳಿತ ಉತ್ತಂಗ (ಎತ್ತರದ) ರಮ್ಯಹರ್ಮ್ಯಾಗ್ರದೊಳೆ (ಸುಂದರ ಉಪ್ಪರಿಗೆಯಲ್ಲಿ) ಸಿರಿಯ ಓಲಗಂಗೊಟ್ಟು (ಸಂಪತ್ತಿನ ಸಭೆನೆಡಸಿ) ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು (ಅರ್ಜುನನೊಡನೆ)-
- ವಚನ:ಅರ್ಥ:ಹಾಗೆ ಸೊಗಸಾದ ಸ್ವಚ್ಛವಾದ ಬೆಳದಿಂಗಳಿನಲ್ಲಿ ಸುಣ್ಣದಿಂದ ಬಿಳುಪುಮಾಡಲ್ಪಟ್ಟ ಸಂಪತ್ತಿನ ಸಭೆನೆಡಸಿ ಅರ್ಜುನನೊಡನೆ ಕೃಷ್ಣನು ದ್ವಾರವತಿಯ ಅರಮನೆಯ ಉಪ್ಪರಿಗೆಯಲ್ಲಿ ವಿನೋದದಿಂದಿದ್ದನು.
- ಕಂ||ಆಗಳನಂತನನಂತಫ
- ನಾಗಣಮಣಿ ಕಿರಣಮೆಸೆಯೆದುಗ್ಧಾರ್ಣವದೊಳ್|
- ರಾಗದಿನಿರ್ಪಂತಿರ್ದಂ
- ಭೋಗಿ ತಳತ್ತಳಿಸಿಬೆಳಗೆ ಕೆಯ್ದೀವಿಗೆಗಳ್||೫೩||
- ಪದ್ಯ-೫೩:ಪದವಿಭಾಗ-ಅರ್ಥ:ಆಗಳು ಅನಂತಂ (ಕೃಷ್ನನು) ಅನಂತಫಣಾಗಣಮಣಿ ಕಿರಣಂ ಎಸೆಯೆ ದುಗ್ಧಾರ್ಣವದೊಳ್ (ದುಗ್ಧ ಆರ್ಣವ- ಹಾಲಿ ಸಮುದ್ರದಲ್ಲಿ) ರಾಗದಿಂ ಇರ್ಪಂತೆ ಇರ್ದಂ ಭೋಗಿ (ಸುಖವಾಗಿ ಅರ್ಜುನನು ಇದ್ದನು) ತಳತ್ತಳಿಸಿಬೆಳಗೆ ಕೆಯ್ದೀವಿಗೆಗಳ್ (ಕೈದೀವಿಗೆಗಳು ತಳತಳನೆ ಬೆಳಗುತ್ತಿರಲು )
- ಪದ್ಯ-೫೩:ಅರ್ಥ:ಕೃಷ್ನನು, ಆದಿಶೇಷನ ಅನಂತವಾದ ಹೆಡೆಯ ರತ್ನಗಳ ಸಮೂಹವು ಪ್ರಕಾಶಿಸುತ್ತಿರಲು, ಕ್ಷೀರಸಮುದ್ರದಲ್ಲಿ ಸಂತೋಷದಿಂದಿರುವ ಹಾಗೆ (ಇಲ್ಲಿ) ಅರ್ಜುನನು ಕೈದೀವಿಗೆಗಳು ತಳತಳನೆ ಬೆಳಗುತ್ತಿರಲು ಸುಖವಾಗಿ ಇದ್ದನು.
- ವ||ಆಗಳ್
- ವಚನ:ಅರ್ಥ:ಆಗ-
- ಕಂ||ಅತ್ತಸುಭಧ್ರೆಯುಮೊಡಲುರಿ
- ಯುತ್ತಿರೆ ಮೊರವಟ್ಟು ವಿಜಯನಿರ್ದತ್ತಲೆ ನೋ|
- ಡುತ್ತಿರೆ ಸುಸಾಳಭಂಜಿಕೆ
- ಗೆತ್ತುದು ಕೆಳದಿಯರ ತಂಡಮಾಕೆಯ ರೂಪಂ||೫೪||
- ಪದ್ಯ-೫೪:ಪದವಿಭಾಗ-ಅರ್ಥ:ಅತ್ತ ಸುಭಧ್ರೆಯುಮಂ ಒಡಲು ಉರಿಯುತ್ತಿರೆ (ವಿರಹತಾಪದಿಂದ ಮೈಸುಡುತ್ತಿರಲು) ಮೊರವಟ್ಟು (ಮರಗಟ್ಟಿದಂತೆ) ವಿಜಯನು ಇರ್ದ ಅತ್ತಲೆ ನೋಡುತ್ತಿರೆ ಸುಸಾಳಭಂಜಿಕೆಗೆತ್ತುದು (ಸುಂದರವಾದ ಬೊಂಬೆಯೆಂದು ಭಾವಿಸಿತು) ಕೆಳದಿಯರ ತಂಡಂ ಆಕೆಯ ರೂಪಂ (ಅವಳ ಗೆಳತಿಯರ ತಂಡ, ಅವಳ ಆಕಾರವನ್ನು)|
- ಪದ್ಯ-೫೪:ಅರ್ಥ:ಅತ್ತ ಸುಭದ್ರೆಯು ಸಹ ವಿರಹತಾಪದಿಂದ ಮೈಸುಡುತ್ತಿರಲು ಮರಗಟ್ಟಿದಂತೆ ಅರ್ಜುನನು ಇದ್ದ ಕಡೆಯೇ ನೋಡುತ್ತಿರಲು ಅವಳ ಗೆಳತಿಯರ ತಂಡ ಅವಳ ಆಕಾರವನ್ನು ಸುಂದರವಾದ ಬೊಂಬೆಯೆಂದು ಭಾವಿಸಿತು.
- ಕಂ||ಕನ್ನೆತನಂಗೆಯ್ಯಲ್ ಬಗೆ
- ಗುನ್ನಾಣ್ ಮಿಗೆ ಮನಮುಮಿೞ್ದುವರಿಯಲ್ ಬಗೆಗುಂ|
- ಕನ್ನಡಿಕುಂ ತನ್ನಳಿಪಂ
- ತನ್ನಲೆ ತಾನಿಂತು ಕನ್ನೆ ತಳವೆಳಗಾದಳ್|| ೫೫||
- ಪದ್ಯ-೫೫:ಪದವಿಭಾಗ-ಅರ್ಥ:ಕನ್ನೆತನಂಗೆಯ್ಯಲ್ (ಕನ್ಯಾಭಾವವನ್ನು ತೋರಲು) ಬಗೆಗುಂ (ಇಷ್ಟಪಟ್ಟರೆ) ನಾಣ್ (ನಾಚಿಕೆ) ಮಿಗೆ (ಅದಕ್ಕೂ ಹೆಚ್ಚಾಗಿ) ಮನಂ ಇೞ್ದುವರಿಯಲ್ ಬಗೆಗುಂ (ಮನಸ್ಸು ಅರ್ಜುನನ ಕಡೆ ಸೆಳೆದುಕೊಂಡು ಹೋಗಲು ಬಯಸುತ್ತದೆ) ಕನ್ನಡಿಕುಂ (ಪ್ರತಿಫಲಿಸುತ್ತದೆ) ತನ್ನ ಅಳಿಪಂ (ತನ್ನ ಪ್ರೇಮವನ್ನು) ತನ್ನಲೆ (ತನ್ನೊಳಗೇ) ತಾಂ ಇಂತು(ತಾನು ಹೀಗೆ ಕಂಡು) ಕನ್ನೆ ತಳವೆಳಗಾದಳ್ (ತಬ್ಬಿಬ್ಬಾದಳು).
- ಪದ್ಯ-೫೫:ಅರ್ಥ: ನಾಚಿಕೆಯು ಕನ್ಯಾಭಾವವನ್ನು ತೋರಲು ಇಚ್ಚಿಸುತ್ತದೆ; ಆದರೆ ಅದಕ್ಕೂ ಹೆಚ್ಚಾಗಿ ಮನಸ್ಸು ಅರ್ಜುನನ ಕಡೆ ಸೆಳೆದುಕೊಂಡು ಹೋಗಲು ಬಯಸುತ್ತದೆ. ತನ್ನ ಪ್ರೇಮವನ್ನು ತನ್ನ ಮನಸ್ಸಿನಲ್ಲಿಯೇ- ಕನ್ನಡಿಯಲ್ಲಿ ಕಂಡಂತೆ ಕಂಡು ಕನ್ಯೆಯಾದ ಸುಭದ್ರೆಯು ತಬ್ಬಿಬ್ಬಾದಳು.
- ಕಂ||ನುಡಿಯಿಸಿ ಕೇಳ್ಗುಂ ಹರಿಗನ
- ಪಡೆಮಾತನೆ ಮಾತು ತಪ್ಪೊಡಂ ಮತ್ತಮದಂ|
- ನುಡಿಯಿಸುಗುಂ ಮೊದಲಿಂದಾ
- ನುಡಿ ಪಱಿಪಡೆ ಮುಳಿದು ನೋಡುಗಂ ಕೆಳದಿಯರಂ|| ೫೬||
- ಪದ್ಯ-೫೬:ಪದವಿಭಾಗ-ಅರ್ಥ:ನುಡಿಯಿಸಿ ಕೇಳ್ಗುಂ ಹರಿಗನ ಪಡೆಮಾತನೆ (ಅರ್ಜುನನ ಸುದ್ದಿಯನ್ನೆ (ಕೆಳದಿಯರಿಂದ) ಹೇಳಿಸಿ ಕೇಳುತ್ತಾಳೆ.) ಮಾತು ತಪ್ಪೊಡಂ (ಆ ಮಾತು ನಿಂತರೆ) ಮತ್ತಂ ಅದಂ ನುಡಿಯಿಸುಗುಂ ಮೊದಲಿಂದ ಆ ನುಡಿ (ಪುನಃ ಆ ಮಾತನ್ನೇ ಮೊದಲಿಂದ ಹೇಳಿಸುತ್ತಾಳೆ.) ಪಱಿಪಡೆ ಮುಳಿದು ನೋಡುಗಂ (ಹರಿದರೆ- ಆ ಮಾತು ನಿಂತರೆ ಗೆಳತಿಯರನ್ನು ಕೋಪದಿಂದ ನೋಡುತ್ತಾಳೆ.) ಕೆಳದಿಯರಂ.
- ಪದ್ಯ-೫೬:ಅರ್ಥ: ಅರ್ಜುನನ ಸುದ್ದಿಯನ್ನೆ (ಕೆಳದಿಯರಿಂದ) ಹೇಳಿಸಿ ಕೇಳುತ್ತಾಳೆ. ಆ ಮಾತು ನಿಂತರೆ ಪುನಃ ಆ ಮಾತನ್ನೇ ಹೇಳಿಸುತ್ತಾಳೆ. ಆ ಮಾತು ನಿಂತರೆ ಗೆಳತಿಯರನ್ನು ಕೋಪದಿಂದ ನೋಡುತ್ತಾಳೆ.
- ಕಂ||ಅಱಿ ಮರುಳಂತುಟೆ ಸೊರ್ಕಿನ
- ತೆಱದಂತುಟೆ ಮನಮೊಱಲ್ವುದೆರ್ದೆಯುರಿವುದು ಮೆ|
- ಯ್ಯೆಱಗುವುದು ಪದೆವುದಾನಿದ
- ನಱಿಯೆನಿದೇಕೆಂದು ಕನ್ನೆ ತಳವೆಳಗಾದಳ್|| ೫೭||
- ಪದ್ಯ-೫೭:ಪದವಿಭಾಗ-ಅರ್ಥ:ಅಱಿ ಮರುಳಂತುಟೆ (ಅರುಳುಮರುಳಂತೆ ಆಗುವಳು ) ಸೊರ್ಕಿನತೆಱದಂತುಟೆ (ಸೊಕ್ಕಿನಲ್ಲಿ ಮೈಮರತಂತೆ ಇರುವಳು) ಮನಮೊಱಲ್ವುದು (ಮನಂ ಒರಲ್ವುದ ಮನಸ್ಸು ಪ್ರೀತಿಯಿಂದ ಕೂಗುವುದು) ಎರ್ದೆಯು ಉರಿವುದು (ಎದೆಯಲ್ಲಿ ಉರಿ- ಸಂಕಟ) ಮೆಯ್ಯೆಱಗುವುದು (ಮೈ ಎರಗುವುದು- ಮೈ ಒಲೆಯುವುದು) ಪದೆವುದು (ಬಯಸುವುದು) ಇದನು ಅಱಿಯೆಂ (ಅರಿಯೆನು) ಇದೇಕೆ ಎಂದು ಕನ್ನೆ ತಳವೆಳಗಾದಳ್ (ತಳವೆಳಗೊಂಡಳು).
- ಪದ್ಯ-೫೭:ಅರ್ಥ: ಅರುಳುಮರುಳಂತೆ ಆಗುವಳು; ಸೊಕ್ಕಿನಿಂದ ಮೈಮರತಂತೆ ಇರುವಳು. ಮನಸ್ಸು ಪ್ರೀತಿಸುತ್ತದೆ. ಎದೆಯುರಿಯುತ್ತದೆ. ಮೈ ಒಲೆಯುವುದು)(ಅವನ ಕಡೆ ಬಾಗುತ್ತದೆ). (ಅವನನ್ನೇ) ಬಯಸುವುದು. ಹೀಗೇಕೆ, ಇದನ್ನು ತಾನು ಅರಿಯೆನು, ಎಂದು ಕನ್ಯೆಯಾದ ಸುಭದ್ರೆಯು ತಳವೆಳಗೊಂಡಳು.
- ಉ|| ಆನೆಯನೇಱಿ ಸೌಷ್ಠವದೆ ಬರ್ಪರಿಕೇಸರಿಯೊಂದು ಗಾಡಿಯು
- ದ್ದಾನಿ ತಗುಳ್ದು ಕಣ್ಣೊಳೆ ತೊೞಲ್ದೆರ್ದೆಯೊಳ್ ತಡಮಾಡೆ ಬೇಟದು ||
- ದ್ದಾನಿಯನಾನೆ ಮನ್ಮಥ ಮಹೀಭುಜನೋವದೆ ತೋಱಿಕೊಟ್ಟುದೊಂ
- ದಾನೆಯೆ ತನ್ನನಾನೆಗೊಲೆಗೊಂದಪುದೆಂದು ಲತಾಂಗಿ ಬೆರ್ಚಿದಳ್|| ೫೮ ||
- ಪದ್ಯ-೫೭:ಪದವಿಭಾಗ-ಅರ್ಥ:ಆನೆಯನು ಏಱಿ ಸೌಷ್ಠವದೆ ಬರ್ಪ ಅರಿಕೇಸರಿಯ ಒಂದು ಗಾಡಿಯ ಉದ್ದಾನಿ (ಆನೆಯನ್ನು ಹತ್ತಿ ಚಂದವಾಗಿ ಬರುತ್ತಿರುವ ಅರ್ಜುನನ ಒಂದು -ಗಾಡಿಯ ಉದ್ದಾನಿ- ಸೌಂದರ್ಯದ ಅತಿಶಯವು) ತಗುಳ್ದು (ತಗಲಿಕೊಂಡು ಬಂದು) ಕಣ್ಣೊಳೆ ತೊೞಲ್ದು (ಕಣ್ಣಲ್ಲಿ ತೊಳಲಿ ) ಎರ್ದೆಯೊಳ್ ತಡಮಾಡೆ(ಎದೆಯಲ್ಲಿ ನಿಲ್ಲಲು) ಬೇಟದು ಉದ್ದಾನಿಯನು ಆನೆ (ಪ್ರೇಮದ ಉತ್ಕಟತೆಯನ್ನು ಆನೆ- ತಡೆಯಲು) ಮನ್ಮಥ ಮಹೀಭುಜನು ಓವದೆ (ರಕ್ಷಿಸದೆ ಕರುಣೆಯಿಲ್ಲದೆ ) ತೋಱಿಕೊಟ್ಟ (ತೋರಿಸಿ ಛೂಬಿಟ್ಟ) ಒಂದು ಆನೆಯೆ ತನ್ನನು ಆನೆಗೊಲೆಗೊಂದಪುದೆಂದು (ಛೂಬಿಟ್ಟು ಒಂದು ಆನೆಯಿಂದ ಕೊಲ್ಲಿಸುವಂತೆ ತನ್ನನ್ನು ಕೊಲ್ಲಿಸುತ್ತಿದ್ದಾನೆ ಎಂದು) ಲತಾಂಗಿ ಬೆರ್ಚಿದಳ್ (ಹೆದರಿದಳು.)
- ಪದ್ಯ-೫೭:ಅರ್ಥ: . ಆನೆಯನ್ನು ಹತ್ತಿ ಚಂದವಾಗಿ ಬರುತ್ತಿರುವ ಅರ್ಜುನನ ಒಂದು -ಗಾಡಿಯ ಉದ್ದಾನಿ- ಸೌಂದರ್ಯದ ಅತಿಶಯವು ತನ್ನನ್ನು (ಸುಭದ್ರೆಯನ್ನು) ಹಿಂಬಾಲಿಸಿ ಕಣ್ಣಿನಲ್ಲಿ ತೊಳಲಿಕೊಂಡು ಎದೆಯಲ್ಲಿ ನಿಂತು ಪ್ರೇಮದ ಉತ್ಕಟತೆಯನ್ನು ತಡೆಯಲು, ಮದನನೆಂಬ ರಾಜನು ಸಹಾಯಮಾಡಿ ರಕ್ಷಿಸದೆ ಕರುಣೆಯಿಲ್ಲದೆ, "ತೋರಿಸಿ ಛೂಬಿಟ್ಟು ಒಂದು ಆನೆಯಿಂದ ಕೊಲ್ಲಿಸುವಂತೆ" (ನುಡಿಗಟ್ಟು)ಒಂದು ಆನೆಯಿಂದ (ಅತಿ ವಿರಹ ವೇದನೆಯಿಂದ) ತನ್ನನ್ನು ಕೊಲ್ಲುತ್ತಿದ್ದಾನೆ ಎಂದು ಲತಾಂಗಿಯಾದ ಸುಭದ್ರೆಯು ಹೆದರಿದಳು.
- ಮ|| ಮನಮಾರಾತಹೋಮಭೂಮಿ ಪಶುಗಳ್ ಕಾಮಾತುರರ್ ಬಂದ ಮಾ
- ವನಿತುಂ ಸ್ಥಾಪಿತ ಯೂಪಕೋಟಿ ಬಳವತ್ಕಾಮಾಗ್ನಿ ಹೋಮಾಗ್ನಿ ಚಂ|
- ದನ ಕರ್ಪೂರ ಮೃಣಾಳನಾಳಮೆ ಪೊದಳ್ದಿಧ್ಮಂಗಳಿಂತಾಗೆ ತಾ
- ನಿನಿತುಂ ಕಾಮನ ಬೇಳ್ವೆಯೆಂದು ಸುಗಿದಳ್ ತನ್ವಂಗಿ ಬೆಳ್ದಿಂಗಳೊಳ್|| ೫೯||
- ಪದ್ಯ-೫೯:ಪದವಿಭಾಗ-ಅರ್ಥ:ಮನಮ್ ಆರಾತಹೋಮಭೂಮಿ ಪಶುಗಳ್ ಕಾಮಾತುರರ್ (ಮನಸ್ಸು ಆರಾಧಿಸಲ್ಪಟ್ಟ ಯಜ್ಞಭೂಮಿ, ಕಾಮಪೀಡಿತರಾದವರೇ ಬಲಿಗಾಗಿರುವ ಪಶುಗಳು,) ಬಂದ ಮಾವು ಅನಿತುಂ ಸ್ಥಾಪಿತ ಯೂಪಕೋಟಿ (ಹೂಬಂದ ಮಾವಿನಮರಗಳೇ ನೆಟ್ಟಿರುವ ಬಲಿಗಂಬಗಳು) ಬಳವತ್ ಕಾಮಾಗ್ನಿ ಹೋಮಾಗ್ನಿ (ಬಲವಾದ ಕಾಮಾಗ್ನಿಯೇ ಹೋಮಾಗ್ನಿ,) ಚಂದನ ಕರ್ಪೂರ ಮೃಣಾಳನಾಳಮೆ (ತಾವರೆಯ ದಂಟುಗಳೇ) ಪೊದಳ್ದ (ಹರಡಿದ) ಇಧ್ಮಂಗಳು (ಸೌದೆಗಳು) ಇಂತಾಗೆ ತಾನ್ ಇನಿತುಂ ಕಾಮನ ಬೇಳ್ವೆಯೆಂದು (ಇವಿಷ್ಟೂ ಕಾಮನ ಯಜ್ಞವೆಂದು) ಸುಗಿದಳ್ (ಭಯಪಟ್ಟಳು) ತನ್ವಂಗಿ (ಕೋಮಲವಾದ ಶರೀರದ ಸುಭದ್ರೆ) ಬೆಳ್ದಿಂಗಳೊಳ್
- ಪದ್ಯ-೫೯:ಅರ್ಥ: . ಮನಸ್ಸು ಆರಾಧಿಸಲ್ಪಟ್ಟ ಯಜ್ಞಭೂಮಿ, ಕಾಮಪೀಡಿತರಾದವರು ಬಲಿಗಾಗಿರುವ ಪಶುಗಳು, ಹೂಬಂದ ಮಾವಿನಮರಗಳೇ ನೆಟ್ಟಿರುವ ಬಲಿಗಂಬಗಳು. ಬಲವಾದ ಕಾಮಾಗ್ನಿಯೇ ಹೋಮಾಗ್ನಿ, ಶ್ರೀಗಂಧ, ಕರ್ಪೂರ, ತಾವರೆಯ ದಂಟುಗಳೇ ಅಲ್ಲಿ ಹರಡಿರುವ ಸೌದೆಗಳು. ಹೀಗಿರಲು ಇವಿಷ್ಟೂ ಕಾಮನ ಯಜ್ಞವೆಂದು ಕೋಮಲವಾದ ಶರೀರದ ಸುಭದ್ರೆಯು ಬೆಳುದಿಂಗಳಿನಲ್ಲಿ ಭಯಗೊಂಡಳು
- ವ|| ಅಂತು ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂ ಸ್ತೋಭಂಗೊಂಡ ದಿವ್ಯ ಗ್ರಹದಂತೆ ಕಾಮಗ್ರಹ ಗೃಹೀತೆಯಾಗಿರೆ (ಕಾಮವೆಂಬ ಗ್ರಹದಿಂದ ಹಿಡಿಯಲ್ಪಟ್ಟು) ಮನೋವೈಕಲ್ಯ ರೋಮಾಂಚಕ ಸ್ತಂಭಕ ಕಂಪ ಸ್ವೇದ ವೈವರ್ಣ್ಯ ಸಂತಾಪನಾಹಾರ ವ್ಯಾಮೋಹ ಗದ್ಗದಾಶ್ರುಮೋಕ್ಷ ಮೂರ್ಛಾದಿ ನಾನಾ ವಿಕಾರಂಗಳನೊಡನೊಡನೆ ತೋಱುವುದುಮಾಕೆಯ ದಾದಿಯ ಮಗಳ್ ಚೂತಲತಿಕೆಯೆಂಬಳ್ ಕಂಡು-
- ವಚನ:ಪದವಿಭಾಗ-ಅರ್ಥ:ಅಂತು ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂ ಸ್ತೋಭಂಗೊಂಡ (ಸ್ತಂಭಿತಳಾದ) ದಿವ್ಯ ಗ್ರಹದಂತೆ, ಕಾಮಗ್ರಹ ಗೃಹೀತೆಯಾಗಿರೆ ಮನೋವೈಕಲ್ಯ ರೋಮಾಂಚಕ ಸ್ತಂಭಕ ಕಂಪ ಸ್ವೇದ ವೈವರ್ಣ್ಯ (ಣ್ನ ಕಂದುವುದು) ಸಂತಾಪನಾಹಾರ(ಆಹಾರವಿಲ್ಲದಿರುವಿಕೆ) ವ್ಯಾಮೋಹ, ಗದ್ಗದಾಶ್ರುಮೋಕ್ಷ (ಗದ್ಗದ ಅಶ್ರುಮೋಕ್ಷ -ತಡವರಿಸಿದ ಗದ್ಗದಮಾತು, ಕಣ್ಣೀರುಸುರಿಯುವಿಕೆ) ಮೂರ್ಛೆ ಆದಿ ನಾನಾ ವಿಕಾರಂಗಳನು ಒಡನ ಒಡನೆ (ಮತ್ತೆಮತ್ತೆ ) ತೋಱುವುದುಂ ಆಕೆಯ ದಾದಿಯ ಮಗಳ್ ಚೂತಲತಿಕೆಯೆಂಬಳ್ ಕಂಡು-
- ವಚನ:ಅರ್ಥ:ಹಾಗೆ ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂದ ಸ್ತಂಭಿತಳಾದ ದಿವ್ಯಗ್ರಹದ ಹಾಗೆ ಕಾಮವೆಂಬ ಗ್ರಹದಿಂದ ಹಿಡಿಯಲ್ಪಟ್ಟು, ಬುದ್ಧಿಭ್ರಮಣೆ, ರೋಮಾಂಚ, ಸ್ತಂಭನ, ನಡುಕ, ಬೆವರುವುದು, ಬಣ್ನ ಕಂದುವುದು, ಚಿಂತೆ, ಆಹಾರವಿಲ್ಲದಿರುವಿಕೆ, ಪ್ರೇಮಾತಿಶಯ, ಗದ್ಗದಮಾತು, ಕಣ್ಣೀರುಸುರಿಯುವಿಕೆ, ಮೂರ್ಛೆಹೋಗುವುದು ಮೊದಲಾದ ನಾನಾ ವಿಕಾರಗಳನ್ನು (ಸುಭದ್ರೆಯು) ಮತ್ತೆಮತ್ತೆ ತೋರುತ್ತಿರಲು ಆಕೆಯ ದಾದಿಯ ಮಗಳಾದ ಚೂತಲತಿಕೆಯೆಂಬವಳು ಇದನ್ನು ಕಂಡು -.
- ಚಂ|| ಪದೆವೆರ್ದೆ ಬತ್ತೆ ಕೆತ್ತುವಧರಂ ದೆಸೆಗೆಟ್ಟಲರ್ಗಣ್ಣ ನೋಟಮು
- ಣ್ಮಿದ ಬೆಮರೋಳಿವಟ್ಟ ನಿಡುಸುಯ್ ತೊದಳಿಂಗೆಡೆಗೊಂಡ ಮಾತು ಕುಂ||
- ದಿದ ಲತಿಕಾಂಗಮೊಂದಿದ ವಿಕಾರಮದೀಕೆಯೊಳೀಗಳಾದುದಿಂ
- ತಿದು ಕುಸುಮಾಸ್ತ್ರನೆಂಬದಟನಿಕ್ಕಿದ ಸೊರ್ಕಿನ ಗೊಡ್ಡಮಾಗದೇ|| ೬೦||
- ಪದ್ಯ-೬೦:ಪದವಿಭಾಗ-ಅರ್ಥ:ಪದೆವೆರ್ದೆ ಬತ್ತೆ (ಪದೆವೆ ಎರ್ದೆ ಬತ್ತೆ - ಪ್ರೀತಿಸುವ ಎದೆ ಒಣಗಲು), ಕೆತ್ತುವಧರಂ (ಕೆತ್ತುವ ಅಧರಂ ನಡುಗುವ ತುಟಿ) ದೆಸೆಗೆಟ್ಟ ಅಲರ್ ಕಣ್ಣ (ಹೂವಿನಂತಿರುವ ಕಣ್ಣು ದೆಸೆಕಟ್ಟ ಸ್ಥಿತಿ) ನೋಟಂ ಉಣ್ಮಿದ (ಹೊರಸೂಸಿದ ನೋಟ) ಬೆಮರ, ಓಳಿವಟ್ಟ ನಿಡುಸುಯ್ (ಸಾಲಾಗಿ ಬರುವ ಕೂಡಿದ ನಿಟ್ಟುಸಿರು) ತೊದಳಿಂಗೆ ಎಡೆಗೊಂಡ ಮಾತು (ತೊದಲು ಮಾತು), ಕುಂದಿದ ಲತಿಕಾಂಗಂ- ಲತಿಕ ಅಂಗ (ಕುಗ್ಗಿದ ಬಳ್ಳಿಯಂತಿರುವ ಶರೀರ,) ಒಂದಿದ ವಿಕಾರಂ ಅದು ಈಕೆಯೊಳು ಈಗಳು ಆದುದು- ಇಂತು ಇದು ಕುಸುಮಾಸ್ತ್ರನೆಂಬ ಅದಟನು (ಪುಷ್ಪಬಾಣನಾದ ಮನ್ಮಥನೆಂಬ ಶೂರನು) ಇಕ್ಕಿದ ಸೊರ್ಕಿನ ಗೊಡ್ಡಮಾಗದೇ(ಹಾಕಿರುವ ಉನ್ಮಾದ ಚೇಷ್ಟೆಯಲ್ಲವೇ! )
- ಪದ್ಯ-೬೦:ಅರ್ಥ: ಈಕೆಯ ಪ್ರೀತಿಸುವ ಎದೆ ಒಣಗಲು, ನಡುಗುವ ತುಟಿ, ಹೂವಿನಂತಿರುವ ಕಣ್ಣಿನ ದೆಸೆಗೆಟ್ಟ ದೃಷ್ಟಿ, ಬೆವರುತ್ತಿರುವ, ಸಾಲಾಗಿ ಬರುವ ಕೂಡಿದ ನಿಟ್ಟುಸಿರು, ತೊದಲು ಮಾತು, ಕುಗ್ಗಿದ ಬಳ್ಳಿಯಂತಿರುವ ಶರೀರ, ಹೇಗೆ ತೋರುವ ವಿಕಾರಗಳು ಇವೆಲ್ಲ ಈಗ ಇವಳಲ್ಲಿ ಉಂಟಾಗುತ್ತಿವೆ, ಇವು ಪುಷ್ಪಬಾಣನಾದ ಮನ್ಮಥನೆಂಬ ಶೂರನು ಹಾಕಿರುವ ಉನ್ಮಾದ ಚೇಷ್ಟೆಯಲ್ಲವೇ! ಅದೇ ಸರಿ.
- ವ|| ಎಂದು ತನ್ನೊಳೆ ಬಗೆದು ಮತ್ತಮಿಂತೆಂದಳ್ -
- ವಚನ:ಪದವಿಭಾಗ-ಅರ್ಥ:ಎಂದು ತನ್ನೊಳೆ ಬಗೆದು (ಯೋಚಿಸಿ) ಮತ್ತಮ್ ಇಂತೆಂದಳ್ -
- ವಚನ:ಅರ್ಥ:ಎಂದು ತನ್ನಲ್ಲಿಯೇ ಯೋಚಿಸಿ ಪುನ ಹೀಗೆಂದಳು
- ಚಂ|| ಕೞಿಯಲರಾದ ಸಂಪಗೆಯ ಬಣ್ಣದವೋಲೆ ಬೆಳರ್ತ ಬಣ್ಣದೊಳ್
- ಗೞಿಯಿಸೆ ಕೆಂಪು ಕಣ್ಗಳ ಮೊದಲ್ಗಳೊಳೊಯ್ಯನೆ ತೋರಿ ಬಾಡಿ ಪಾ|
- ಡೞಿದು ಬೞಲ್ದು ಜೋಲ್ದಿರವು ಮೆಯ್ಯೊಳೆ ಮೆಯ್ವಿಡಿದೆನ್ನ ಕಣ್ಗಳೊಳ್
- ಸುೞಿದುವು ತಾಮೆ ಕನ್ನಡಿಸಿದಪ್ಪುವು ಕನ್ನೆಯ ಕನ್ನೆವೇಟಮಂ|| ೬೧||
- ಪದ್ಯ-೬೧:ಪದವಿಭಾಗ-ಅರ್ಥ:ಕೞಿಯಲರಾದ (ಕಳಿ ಅಲರು, ಕಳಿತ- ಹಣ್ಣಾದ- ಹೂ)ಸಂಪಗೆಯ ಬಣ್ಣದವೋಲೆ ಬೆಳರ್ತ (ಬಿಳಿಚಿದ) ಬಣ್ಣದೊಳ್ ಗೞಿಯಿಸೆ (ಉಂಟಾಗಲು) ಕೆಂಪು ಕಣ್ಗಳ ಮೊದಲ್ಗಳು, ಒಯ್ಯನೆ (ಮೆಲ್ಲಗೆ) ತೋರಿ ಬಾಡಿ ಪಾಡೞಿದು ಬೞಲ್ದು (ಪಾಡು ಅಳಿದು -ಸ್ಥಿತಿಗೆಟ್ಟು ಬಳಲಿ) ಜೋಲ್ದ ಇರವು (ಜೋತು ಬಾಡಿದ ಇರುವಿಕೆ) ಮೆಯ್ಯೊಳೆ ಮೆಯ್ವಿಡಿದು (ಇವಳ ದೇಹವನ್ನು ಹಿಡಿದು) ಎನ್ನ (ದಾಸಿಯ ಮಗಳ) ಕಣ್ಗಳೊಳ್ ಸುೞಿದುವು (ಸುಳಿದವು) ತಾಮೆ ಕನ್ನಡಿಸಿದಪ್ಪುವು ಕನ್ನೆಯ ಕನ್ನೆವೇಟಮಂ (ಇವೆಲ್ಲಾ ತಾವೇ ಕನ್ಯೆಯ ಕನ್ಯಾ ಪ್ರೀತಿಯನ್ನು/ ಪ್ರಥಮ ಪ್ರೇಮವನ್ನು ಕನ್ನಡಿಸಿದಪ್ಪುವು - ಪ್ರತಿಬಿಂಬಿಸುತ್ತವೆ.)
- ಪದ್ಯ-೬೧:ಅರ್ಥ: ಕಳಿತು ಹಣ್ಣಾದ ಸಂಪಗೆಯ ಹೂವಿನ ಬಣ್ಣದ ಹಾಗೆ ಬಿಳಿಸಿದ ಕಣ್ಣಿನ ಮೊದಲಿನಲ್ಲಿ, ಕೆಂಪುಬಣ್ಣವು ಉಂಟಾಗಲು, ಬಾಡಿ, ಸ್ಥಿತಿಗೆಟ್ಟು ಬಳಲಿ, ಜೋತು ಬಾಡಿದ ಇರುವಿಕೆ, ಈಕೆಯ ಶರೀರಸ್ಥಿತಿಯೇ ನನ್ನ ಕಣ್ಣಿನಲ್ಲಿ(ದಾಸಿಯ ಮಗಳ ಕಣ್ಣಿನಲ್ಲಿ) ಇವೆಲ್ಲಾ ತಾವೇ ಕನ್ಯೆಯ ಪ್ರಥಮ ಪ್ರೇಮವನ್ನು ಪ್ರತಿಬಿಂಬಿಸುತ್ತವೆ (ಎಂದು ತಿಳಿದಳು).
- ವ|| ಅದಱಿನೀಕೆಯ ಬಗೆಯನಱಿಯಲ್ವೇೞ್ಕುಮೆಂದು ಮೆಲ್ಲಮೆಲ್ಲನೆ ಕೆಲಕ್ಕೆವಂದು ಕುಂಚದಡಪದ ಡವಕೆಯ ಪರಿಚಾರಿಕೆಯರೆಲ್ಲರುಮಂ ಕಣ್ಗೆತ್ತಿ ಕಳೆದೇಕಾಂತದೊಳ್ ಕನ್ನೆಯನಿಂತೆಂದಳ್-
- ವಚನ:ಪದವಿಭಾಗ-ಅರ್ಥ:ಅದಱಿಂ ಈಕೆಯ ಬಗೆಯನು (ಮನಸ್ಸನ್ನು) ಅಱಿಯಲ್ವೇೞ್ಕುಂ (ತಿಳಿಯಬೇಕು) ಎಂದು ಮೆಲ್ಲಮೆಲ್ಲನೆ ಕೆಲಕ್ಕೆವಂದು (ಪಕ್ಕಕ್ಕೆ ಬಂದು) ಕುಂಚದಡಪದ ಡವಕೆಯ (ಕುಂಚವನ್ನು ಹಿಡಿಯುವ, ಅಡಕೆಲೆ ಹಿಡಿಯುವ) ಪರಿಚಾರಿಕೆಯರೆಲ್ಲರುಮಂ (ಸೇವಕಿಯರನ್ನೆಲ್ಲ) ಕಣ್ಗೆತ್ತಿ (ಕಣ್ಸನ್ನೆಯಿಂದ) ಕಳೆದು (ಕಳುಹಿಸಿ) ಏಕಾಂತದೊಳ್ ಕನ್ನೆಯನು ಇಂತೆಂದಳ್-
- ವಚನ:ಅರ್ಥ:ಆದುದರಿಂದ ಈಕೆಯ ಮನಸ್ಸನ್ನು ತಿಳಿಯಬೇಕು ಎಂದು ನಿಧಾನವಾಗಿ ಪಕ್ಕಕ್ಕೆ ಬಂದು ಕುಂಚವನ್ನು ಹಿಡಿಯುವ, ಅಡಕೆಲೆ ಹಿಡಿಯುವ, ಸೇವಕಿಯರನ್ನೆಲ್ಲ ಕಣ್ಸನ್ನೆಯಿಂದ ಕಳುಹಿಸಿ ಏಕಾಂತದಲ್ಲಿ ಕನ್ಯೆ ಸುಭದ್ರೆಯನ್ನು ಕುರಿತು ಕೇಳಿದಳು -
- ಚಂ|| ಮೃಗಮದ ಪತ್ರರೇಖೆಗಳನೇಕೆಗೆ ತಾಳ್ದಿರದಾದುವೀ ಕದಂ
- ಪುಗಳುರಮೇಕೆ ಹಾರ ಮಣಿಮಂಜರಿಯಿಲ್ಲದೆ ಬಿನ್ನಗಿರ್ದುದೀ|
- ಜಗನಮಿದೇಕೆ ಹೇಮರಶನಾಧ್ವನಿಯಿಲ್ಲದೆ ಮೂಗುವಟ್ಟುದೀ
- ಬಗೆಯೊಳಲಕ್ತಕ ದ್ರವದೊಳೊಂದದೆ ನಿಂದುವು ಪಾದಪಂಕಜಂ|| ೬೨ ||
- ಪದ್ಯ-೬೨:ಪದವಿಭಾಗ-ಅರ್ಥ:ಮೃಗಮದ ಪತ್ರರೇಖೆಗಳನು ಏಕೆಗೆ ತಾಳ್ದಿರದಾದುವು ಈ ಕದಂಪುಗಳ್ (ಈ ನಿನ್ನ ಕೆನ್ನೆಗಳು ಕಸ್ತೂರಿಯಿಂದ ಬರೆದ ಪತ್ರರೇಖೆಗಳನ್ನು ಏಕಮ್ಮ ಧರಿಸಿಲ್ಲದೆ ಇವೆ?) ಉರಂ (ಎದೆ) ಏಕೆ ಹಾರ ಮಣಿಮಂಜರಿ ಯಿಲ್ಲದೆ ಬಿನ್ನಗಿರ್ದುದು (ಶೂನ್ಯವಾಗಿದೆ) ಈ ಜಗನಂ (ಸೊಂಟವು)ಇದೇಕೆ ಹೇಮರಶನಾಧ್ವನಿಯಿಲ್ಲದೆ ಮೂಗುವಟ್ಟುದು (ಚಿನ್ನದ ಡಾಬಿನ ಸದ್ದಿಲ್ಲದೆ ಮೂಕವಾಗಿದೆ?) ಈ ಬಗೆಯೊಳು ಅಲಕ್ತಕ ದ್ರವದೊಳು ಒಂದದೆ ನಿಂದುವು (ಅರಗಿನ ರಸದ ಲೇಪನಹೊಂದದೆ ನಿಂತಿವೆ) ಪಾದಪಂಕಜಂ (ಕಮಲದಂತಿರುವ ಪಾದಗಳು ಏಕೆ).
- ಪದ್ಯ-೬೨:ಅರ್ಥ: ಈ ನಿನ್ನ ಕೆನ್ನೆಗಳು ಕಸ್ತೂರಿಯಿಂದ ಬರೆದ ಪತ್ರರೇಖೆಗಳನ್ನು ಏಕಮ್ಮ ಧಏಕಮ್ಮ ಧರಿಸಿಲ್ಲದೆ ಇವೆ? ನಿನ್ನ ಎದೆಯೇಕೆ ರತ್ನಹಾರದ ಗೊಂಚಲುಗಳಿಲ್ಲದೆ ಶೂನ್ಯವಾಗಿದೆ? ಈ ನಿನ್ನ ಸೊಂಟವೇಕೆ ಚಿನ್ನದ ಡಾಬಿನ ಗೆಜ್ಜೆಗಳ ಸದ್ದಿಲ್ಲದೆ ಮೂಕವಾಗಿದೆ. ನಿನ್ನ ಕಮಲದಂತಿರುವ ಪಾದಗಳು ಏಕೆ ಈ ರೀತಿಯಲ್ಲಿ ಅರಗಿನ ರಸದ ಲೇಪನಹೊಂದದೆ ನಿಂತಿವೆ? ಎಂದು ಚೂತಲತಿಕೆಯೆಂಬವಳು ಸುಭದ್ರೆಯನ್ನು ಕೇಳಿದಳು.
- ಮ|| ನಗೆಗಣ್ ಸೋರ್ವ ಕದುಷ್ಣ ವಾರಿಚಯದಿಂ ಬಿಂಬಾಧರಂ ಸುಯ್ಯ ಬೆಂ
- ಕೆಗಳಿಂ ನಾಡೆ ಬೆಡಂಗುಗೆಟ್ಟಿರವಿದಿಂತೇಕಾರಣಂ ಮಜ್ಜನಂ|
- ಬುಗದಾರೋಗಿಸಲೊಲ್ಲದಿರ್ಪಿರವಿದೇಂ ನಾಣಳ್ಕಿದೇಂ ಕಾಮನಂ
- ಬುಗಳತ್ತಿತ್ತೆಡೆಯಾಡೆ ಸೋಂಕವೆ ವಲಂ ನಿನ್ನಂ ಸರೋಜಾನನೇ|| ೬೩ ||
- ಪದ್ಯ-೬೩:ಪದವಿಭಾಗ-ಅರ್ಥ:ನಗೆಗಣ್ (ನೆಗೆಯಿಂದ ಕೂಡಿದ ಕಣ್ಣು) ಸೋರ್ವ ಕದುಷ್ಣ ವಾರಿಚಯದಿಂ (ಸ್ವಲ್ಪ ಬಿಸಿ ಕಣ್ಣೀರು ಸೋರುವ, ನೆಗೆಯಿಂದ ಕೂಡಿದ ಕಣ್ಣು) ಬಿಂಬಾಧರಂ (ತುಟಿ) ಸುಯ್ಯ ಬೆಂಕೆಗಳಿಂ (ನಿಟ್ಟುಸಿರಿನ ಬೆಂಕಿಯಿಂದ ತೊಂಡೆಹಣ್ಣಿನಂತಿರುವ ತುಟಿ) ನಾಡೆ (ವಿಶೇಷವಾಗಿ) ಬೆಡಂಗುಗೆಟ್ಟ ಇರವು ಇದಿಂತು ಏ ಕಾರಣಂ (ತನ್ನ ಬೆಡಗು ಕೆಟ್ಟ ಈ ಸ್ಥಿತಿಯೂ ಇದೇಕೆ? ) ಮಜ್ಜನಂಬುಗದ, ಆರೋಗಿಸಲೊಲ್ಲದ ಇರ್ಪ ಇರವು ಇದೇಂ (ಸ್ನಾನ ಮಾಡದ, ಊಟ ಒಲ್ಲದ, ಇರುವು ಇದಕ್ಕೆ ಕಾರಣವೇನು?) ನಾಣ್ ಅಳ್ಕು ಇದೇಂ (ನಾಚಿಕೆ ಅಳುಕು ಇದೇನು?) ಕಾಮನ ಅಂಬುಗಳು ಅತ್ತಿತ್ತೆಡೆಯಾಡೆ ಸೋಂಕವೆ ವಲಂ ನಿನ್ನಂ ಸರೋಜಾನನೇ (ಕಮಲ ಮುಖಿಯೇ, ಕಾಮನ ಬಾಣಗಳು ಅತ್ತಿತ್ತ ಸುತ್ತಾಡಿ ಬಂದು ನಿನ್ನನ್ನು ವಲಂ-ನಿಜವಾಗಿಯೂ ತಾಗುತ್ತಿಲ್ಲವೇ? ತಾಗುತ್ತಿದೆಯೋ ಹೇಗೆ? )
- ಪದ್ಯ-೬೩:ಅರ್ಥ: ಸ್ವಲ್ಪ ಬಿಸಿ ಕಣ್ಣೀರು ಸೋರುವ, ನೆಗೆಯಿಂದ ಕೂಡಿದ ಕಣ್ಣು, ನಿಟ್ಟುಸಿರಿನ ಬೆಂಕಿಯಿಂದ ತೊಂಡೆಹಣ್ಣಿನಂತಿರುವ ತುಟಿ, ತನ್ನ ಬೆಡಗು ಕೆಟ್ಟ ಈ ಸ್ಥಿತಿಯೂ ಇದೇಕೆ? ಸ್ನಾನ ಮಾಡದ, ಊಟ ಒಲ್ಲದ, ಇರುವು ಇದಕ್ಕೆ ಕಾರಣವೇನು? ನಾಚಿಕೆ, ಅಳುಕು ಇದೇನು? ಕಮಲ ಮುಖಿಯೇ, ಕಾಮನ ಬಾಣಗಳು ಅತ್ತಿತ್ತ ಸುತ್ತಾಡಿ ಬಂದು ನಿನ್ನನ್ನು ವಲಂ-ನಿಜವಾಗಿಯೂ ತಾಗುತ್ತಿಲ್ಲವೇ? ತಾಗುತ್ತಿದೆಯೋ ಹೇಗೆ?
- ವ|| ಎಂದು ಮುನ್ನಮೆ ಮುಟ್ಟಿ ನುಡಿಯದೆ ಪೊಱಪೊಱಗನೆ ಬಳಸಿ ಕನ್ನೆಯ ಶಂಕೆಯಂ ಕಿಡಿಸಿ ಮತ್ತಮಿಂತೆಂದಳ್-
- ವಚನ:ಪದವಿಭಾಗ-ಅರ್ಥ: ಎಂದು ಮುನ್ನಮೆ ಮುಟ್ಟಿ ನುಡಿಯದೆ (ಎಂದು ಮೊದಲೇ ಒಳಮನಸ್ಸನ್ನು ಹೊಕ್ಕು ತಿಳಿದು ಮಾತನಾಡದೆ) ಪೊಱಪೊಱಗನೆ (ಪೊರಪೊರಗನೆ ) ಬಳಸಿ (ಮೇಲೆ ಮೇಲೆ ಬಳಸುಮಾತನಾಡಿ) ಕನ್ನೆಯ ಶಂಕೆಯಂ ಕಿಡಿಸಿ (ತಗೆದು) ಮತ್ತಂ ಇಂತೆಂದಳ್-
- ವಚನ:ಅರ್ಥ:ಎಂದು ಎಂದು ಮೊದಲೇ ಒಳಮನಸ್ಸನ್ನು ಹೊಕ್ಕು ತಿಳಿದು ಮಾತನಾಡದೆ, ಮೇಲೆ ಮೇಲೆ ಬಳಸುಮಾತನಾಡಿ ಅವಳ ಸಂದೇಹವನ್ನು ಹೋಗಲಾಡಿಸಿ ಪುನ ಹೀಗೆಂದಳು-
- ಮ|| ವನಭೃತ್ಕುಂತಳೆಯಾ ಶಿರೀಷ ಕುಸುಮಾಭಾಂಗಕ್ಕೆ ಕಂದಂ ಕನ
- ತ್ಕನಕಾಂಭೋಜನಿಭಾನನಕ್ಕೆ ಪಿರಿದುಂ ದೀನತ್ವಮಂ ನೀಳ್ದ ಮಾ|
- ವಿನ ಪೋೞಂದದ ಕಣ್ಗೆ ಬಾಷ್ಪಜಲಮಂ ಚಿತ್ತಕ್ಕೆ ಸಂತಾಪಮಂ
- ನಿನಗಂ ಮಾಡಿದನಾವನಾತನೆ ವಲಂ ಗಂಧೇಭ ವಿದ್ಯಾಧರಂ|| ೬೪||
- ಪದ್ಯ-೬೪:ಪದವಿಭಾಗ-ಅರ್ಥ:ವನಭೃತ್ಕುಂತಳೆಯಾ (ವನಭೃತ್ ಕುಂತಳೆಯಾ -ಮೋಡದ ಬಣ್ಣದ ಗುಂಗುರು ಕೇಶವುಳ್ಳ) ಶಿರೀಷ ಕುಸುಮಾಭಾಂಗಕ್ಕೆ ಕಂದಂ (ಶಿರೀಷ ಕುಸುಮ ಅಭಾಂಗಕ್ಕೆ - ಬಾಗೆಹೂವಿನ ಬಣ್ಣವುಳ್ಳ ನಿನ್ನ ಶರೀರಕ್ಕೆ ಮಾಸುವಿಕೆಯನ್ನೂ) ಕನತ್ ಕನಕಾಂಭೋಜನಿಭ ಆನನಕ್ಕೆ ಪಿರಿದುಂ ದೀನತ್ವಮಂ (ಹೊಳೆವ ಹೊಂದಾವರೆಗೆ ಸಮಾನವಾದ ಮುಖಕ್ಕೆ ಬಹಳ ದೀನತೆನ್ನೂ) ನೀಳ್ದ ಮಾವಿನ ಪೋೞಂದದ ಕಣ್ಗೆ ಬಾಷ್ಪಜಲಮಂ (ಮಾವಿನ ಹೋಳಿನಂತೆ ನೀಳವಾದ ಕಣ್ಣಿಗೆ ಕಣ್ಣೀರನ್ನೂ), ಚಿತ್ತಕ್ಕೆ ಸಂತಾಪಮಂ (ಮನಸ್ಸಿಗೆ ದುಃಖವನ್ನೂ) ನಿನಗಂ ಮಾಡಿದನು ಆವನು ಆತನೆ ವಲಂ ಗಂಧೇಭವಿದ್ಯಾಧರಂ (ನಿನಗೆ ಮಾಡಿದವನು, ಯಾವನು! - ಅವನೇ ನಿಜಕ್ಕೂ ಗಂದೇಭವಿದ್ಯಾಧರನಾದ ಅರ್ಜುನ! ಅಲ್ಲವೇ?)|
- ಪದ್ಯ-೬೪:ಅರ್ಥ: ಮೋಡದಂತೆ ಕಪ್ಪಾದ ಮುಂಗುರುಳುಳ್ಳ ಬಾಗೆಹೂವಿನ ಬಣ್ಣವುಳ್ಳ ನಿನ್ನ ಶರೀರಕ್ಕೆ ಮಾಸುವಿಕೆಯನ್ನೂ, ಹೊಳೆವ ಹೊಂದಾವರೆಗೆ ಸಮಾನವಾದ ಮುಖಕ್ಕೆ ಬಹಳ ದೀನತೆನ್ನೂ, ಮಾವಿನ ಹೋಳಿನಂತೆ ನೀಳವಾದ ಕಣ್ಣಿಗೆ ಕಣ್ಣೀರನ್ನೂ, ಮನಸ್ಸಿಗೆ ದುಃಖವನ್ನೂ ನಿನಗೆ ಮಾಡಿದವನು, ಯಾವನು - ಅವನೇ ನಿಜಕ್ಕೂ ಗಂದೇಭವಿದ್ಯಾಧರನಾದ ಅರ್ಜುನ! ಅಲ್ಲವೇ?
- ವ|| ಎಂದು ತನ್ನ ಮನಮನಱಿದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಱತೇನುಮನೆನಲಱಯದೆ ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಂ ನೀರೊಳ್ ಮುೞುಗಿದರಂತುಮ್ಮನೆ ಬೆಮರುತ್ತುಮ್ಮಳಿಕೆ ವಂದು ಬೆಚ್ಚನೆ ಸುಯ್ಡೊಡೆ-
- ವಚನ:ಪದವಿಭಾಗ-ಅರ್ಥ:ಎಂದು ತನ್ನ ಮನಮನಱಿದು ಮುಟ್ಟಿ ನುಡಿದ ಕೆಳದಿಯ ನುಡಿಗೆ (ಮನಸ್ಸನ್ನು ತಿಳಿದು ಮನಮುಟ್ಟುವಂತೆ ಮಾತನಾಡಿದ ಗೆಳತಿಯ ಮಾತಿಗೆ) ಪೆಱತೇನುಮಂನು ಎನಲು ಅಱಯದೆ (ಬೇರೆಯೇನನ್ನೂ ಹೇಳಲು ತಿಳಿಯದೆ) ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಂ (ನಾಚಿ ತಲೆಯನ್ನು ಬಗ್ಗಿಸಿ ನೆಲವನ್ನು ಕಾಲಿನಿಂದ ಬರೆಯುತ್ತ ) ನೀರೊಳ್ ಮುೞುಗಿದರಂತು ಉಮ್ಮನೆ (ನೀರಿನಲ್ಲಿ ಮುಳುಗಿದವರ ಹಾಗೆ ಸುಮ್ಮನೆ ಇದ್ದು,) ಬೆಮರುತ್ತುಂ ಉಮ್ಮಳಿಕೆ ವಂದು ಬೆಚ್ಚನೆ ಸುಯ್ಡೊಡೆ-
- ವಚನ:ಅರ್ಥ:ಎಂದು ತನ್ನ ಮನಸ್ಸನ್ನು ತಿಳಿದು ಮನಮುಟ್ಟುವಂತೆ ಮಾತನಾಡಿದ ಗೆಳತಿಯ ಮಾತಿಗೆ ಬೇರೆಯೇನನ್ನೂ ಹೇಳಲು ತಿಳಿಯದೆ, ನಾಚಿ ತಲೆಯನ್ನು ಬಗ್ಗಿಸಿ ನೆಲವನ್ನು ಕಾಲಿನಿಂದ ಬರೆಯುತ್ತ ನೀರಿನಲ್ಲಿ ಮುಳುಗಿದವರ ಹಾಗೆ ಸುಮ್ಮನೆ ಇದ್ದು, ಬೆವರುತ್ತ ದುಖದಿಂದ ಬಿಕ್ಕಳಿಕೆ ಬಂದು, ಬಿಸು ಸುಯ್ದಳು; ಆಗ-
- ಕಂ|| ಉಸಿರದಿರೆ ಮನದೊಳೆರ್ದೆಯಂ
- ಪಸರಿಸುಗುಂ ಮಱುಕಮದಱಿನೆನಗಿಂತುಟೆ ಎಂ|
- ದುಸಿರುಸಿರ್ದೊಡೆ ಬಗೆ ತೀರ್ಗುಂ
- ಬಿಸಿದುಂ ಬೆಟ್ಟತ್ತುಮುಸಿರದೇಂ ತೀರ್ದಪುದೇ|| ೬೫ ||
- ಪದ್ಯ-೬೫:ಪದವಿಭಾಗ-ಅರ್ಥ:ಉಸಿರದಿರೆ (ಹೇಳದಿದ್ದರೆ ) ಮನದೊಳು ಎರ್ದೆಯಂ ಪಸರಿಸುಗುಂ ಮಱುಕಂ(ಮರುಕವು- ದುಖವು ಹೃದಯವನ್ನು ಆವರಿಸುವುದು,) ಅದಱಿಂ ಎನಗಿಂತುಟೆ ಎಂದು ಉಸಿರ್ (ಅದರಿಂದ ನನಗೆ ಹೀಗೆ ಎಂದು ಹೇಳು) ಉಸಿರ್ದೊಡೆ (ಹೇಳಿದರೆ) ಬಗೆ ತೀರ್ಗುಂ (ಇಷ್ಟವು ನೆರವೇರುವುದು) ಬಿಸಿದುಂ ಬೆಟ್ಟತ್ತುಂ ಉಸಿರು ಅದೇಂ ತೀರ್ದಪುದೇ (ಅದಿಲ್ಲದೆ- ಬಿಸಿಯುಸಿರು, ಬಿರುಸು ಉಸಿರು ಅದೇನು ನಿಲ್ಲುತ್ತದೆಯೇ?)
- ಪದ್ಯ-೬೫:ಅರ್ಥ: ಸುಭದ್ರೆಗೆ ಗೆಳತಿಯು, ಸುಭದ್ರೆ ಮನಸ್ಸಿನಲ್ಲಿ ಇರುವುದನ್ನು ಬಾಯಿಬಿಟ್ಟು ಹೇಳದಿದ್ದರೆ, ದುಖವು ಹೃದಯವನ್ನು ಆವರಿಸುತ್ತದೆ. ಅದರಿಂದ ನನಗೆ ಹೀಗೆ ಎಂದು ಹೇಳು; ಹೇಳಿದರೆ ಇಷ್ಟವು ನೆರವೇರುವುದು. ಅದಿಲ್ಲದೆ ಬಿಸಿಯುಸಿರು, ಬಿರುಸು-ಸಂಕಟದ ಉಸಿರು ಅದೇನು ನಿಲ್ಲುತ್ತದೆಯೇ? ಎಂದಳು-
- ಕ||ಪೇೞೆಂಬುದುಮಾಂ ನಿನಗೆಡೆ
- ವೇೞದೆ ಪೇೞಾರ್ಗೆ ಪೇೞ್ವೆನಿಂದಿನ ಬಂದಾ|
- ಕಾೞಾದ ವಾೞ್ತೆಗೊಂಡೊಡೆ
- ಪಾೞಾದುದು ಮನಮುಮೆರ್ದೆಯುಮೇನಂ ಪೇೞ್ವೆಂ|| ೬೬ ||
- ಪದ್ಯ-೬೬:ಪದವಿಭಾಗ-ಅರ್ಥ:ಪೇೞ್ ಎಂಬುದುಮಾಂ (ಹೇಳು ಎನ್ನಲಾಗಿ) ನಿನಗೆ ಎಡೆವೇೞದೆ ಪೇೞು ಆರ್ಗೆ ಪೇೞ್ವೆನು (ನಿನಗೆ ತಿಳಿಸದೆ ಬೇರೆ ಯಾರಿಗೆ ಹೇಳಲಿ;) ಇಂದಿನ ಬಂದ ಆ ಕಾಳಾದ ವಾೞ್ತೆ ಗೊಂಡೊಡೆ (ಈ ದಿನ ಆ ಕೆಟ್ಟ ಸುದ್ದಿಯನ್ನು ಕೇಳಿದೊಡನೆಯೇ) ಪಾೞಾದುದು ಮನಮುಂ ಎರ್ದೆಯುಂ ಏನಂ ಪೇೞ್ವೆಂ (ಮನಸ್ಸೂ ಎದೆಯೂ ಹಾಳಾಯಿತು, ಏನು ಹೇಳಲಿ!)
- ಪದ್ಯ-೬೬:ಅರ್ಥ: ಹೇಳು ಎನ್ನುತ್ತಲು ನಾನು ನಿನಗೆ ತಿಳಿಸದೆ ಬೇರೆ ಯಾರಿಗೆ ಹೇಳಲಿ. ಈ ದಿನ ಆ ಕೆಟ್ಟ ಸುದ್ದಿಯನ್ನು ಕೇಳಿದೊಡನೆಯೇ ಮನಸ್ಸೂ ಎದೆಯೂ ಹಾಳಾಯಿತು,ಏನು ಹೇಳಲಿ! ಎಂದಳು ಸುಭದ್ರೆ.
- ಕಂ||ಭೋಂಕನೆ ಮನಮಂ ಕದಡಿ ಕ
- ಲಂಕಿದಪುದು ಬಿಡದೆ ಮನಮನೊನಲಿಸಿದಪುದಾ|
- ದಂ ಕೆಳದಿ ಪಾಣ್ಬರಂಕುಸ
- ನಂಕುಸದಾ ಪೊಳಪುಮವನ ಕಣ್ಗಳ ಬೆಳ್ಪುಂ|| ೬೭ ||
- ಪದ್ಯ-೬೭:ಪದವಿಭಾಗ-ಅರ್ಥ:ಭೋಂಕನೆ (ಇದ್ದಕಿಕ್ಕಿದ್ದಂತೆ) ಮನಮಂ ಕದಡಿ ಕಲಂಕಿದಪುದು (ಮನಸ್ಸನ್ನು ಕದಡಿ ಕಲಕಿಸುವುದ) ಬಿಡದೆ ಮನಮನು ಒನಲಿಸಿದಪುದು (ಒಂದೇ ಸಮನೆ ಮನಸ್ಸನ್ನು ಉದ್ರೇಕಿಸುವುದು) ಅದಂ ಕೆಳದಿ (ಗೆಳತಿಯೇ ಅದು) ಪಾಣ್ಬರಂಕುಸನ (ಪಾಣ್ಬರಂಕುಶ ಎಂಬುದು ಅರಿಕೇಸರಿಯ ಬಿರುದು ಅನ್ವಯ- ಇಲ್ಲಿ ಅರ್ಜುನ; ಅರ್ಜುನನ) ಅಂಕುಸದ ಆ ಪೊಳಪುಂ ಅವನ ಕಣ್ಗಳ ಬೆಳ್ಪುಂ (ಅಂಕುಶದಂತೆ ಸೆಳೆಯುತ್ತಿದೆ, ಅವನ ಕಣ್ಣಿನ ಬೆಳ್ಪು- ಕಾಂತಿ, ಆ ಪೊಳಪು - ಆ ಪ್ರಕಾಶ )
- ಪದ್ಯ-೬೭:ಅರ್ಥ: (ಎಲೆ ಸಖಿಯೇ) ಇದ್ದಕ್ಕಿದ್ದಂತೆ ಅರ್ಜುನನ - ಅವನ ಕಣ್ಣಿನ ಕಾಂತಿ, ಆ ಪ್ರಕಾಶ ಅಂಕುಶದಂತೆ ಸೆಳೆಯುತ್ತಿದೆ, ಇದ್ದಕ್ಕಿದ್ದ ಹಾಗೆ ಮನಸ್ಸನ್ನು ಕದಡಿ ಕಲಕಿಸುತ್ತವೆ. ಅಷ್ಟಕ್ಕೆ ಬಿಡದೆ ಮನಸ್ಸನ್ನು ಉದ್ರೇಕಿಸುವುದು. ಎಂದಳು ಸುಭದ್ರೆ.
- ಚಂ|| ಮನಸಿಜನಂಬರಲ್ದ ಪೊಸ ಮಲ್ಲಿಗೆ ತೆಂಕಣ ಗಾಳಿಯೆಂಬಿವಿಂ
- ತನುಬಲದಿಂದಮೆನ್ನನಲೆದಪ್ಪುವವೆನ್ನನೆ ಪೆಟ್ಟುವೆರ್ಚಿ ಚಂ|
- ದ್ರನ ಬಲದಿಂದಮೆನ್ನ ನಲೆದಪ್ಪುವದರ್ಕೆನಗೀಗಳೊಂದಿ ಚಂ
- ದ್ರನ ಬಲಮೊಳ್ಳಿತಾಗಿ ಸಲೆಯಿಲ್ಲದೊಡಾವುದುಮೊಳ್ಳಿಕೆಯ್ಗುಮೇ|| ೬೮ ||
- ಪದ್ಯ-೬೮:ಪದವಿಭಾಗ-ಅರ್ಥ:ಮನಸಿಜನ (ಮನ್ಮಥನ) ಅಂಬು, ಅರಲ್ದ ಪೊಸ ಮಲ್ಲಿಗೆ, ತೆಂಕಣ ಗಾಳಿಯೆಂಬಿವು ಇಂತು ಅನುಬಲದಿಂದಂ (ಇವು ಪರಸ್ಪರ ಒಟ್ಟುಗೂಡಿದ ಶಕ್ತಿಯಿಂದ) ಎನ್ನನು ಅಲೆದಪ್ಪುವವು (ಹಿಂಸಿಸುತ್ತವೆ.) ಎನ್ನನೆ ಪೆಟ್ಟುವೆರ್ಚಿ(ಗರ್ವದಿಂದ) ಚಂದ್ರನ ಬಲದಿಂದಂ ಎನ್ನನು ಅಲೆದಪ್ಪುವು (ಹಿಂಸಿಸುತ್ತವೆ) ಅದರ್ಕೆ ಎನಗೆ ಈಗಳು ಒಂದಿ ಚಂದ್ರನ ಬಲಮೊಳ್ಳಿತಾಗಿ (ಚಂದ್ರನ ಬೆಳದಿಂಗಳ ಬಲ) ಸಲೆಯಿಲ್ಲದೊಡೆ (ಚೆನ್ನಾಗಿ ಇಲ್ಲದಿದ್ದರೆ) ಆವುದುಂ ಒಳ್ಳಿಕೆಯ್ಗುಮೇ (ಯಾವುದು ತಾನೆ ಒಳಳೆಯದು ಮಾಡುವುದು?)
- ಪದ್ಯ-೬೮:ಅರ್ಥ:ಸುಭಧ್ರೆಯ ದುಃಖ: ಮನ್ಮಥನ ಬಾಣ ಅರಳಿದ ಹೊಸಮಲ್ಲಿಗೆ ದಕ್ಷಿಣಗಾಳಿ ಇವು ಪರಸ್ಪರ ಒಟ್ಟುಗೂಡಿದ ಶಕ್ತಿಯಿಂದ ನನ್ನನ್ನು ಹಿಂಸಿಸುತ್ತವೆ. ಇವು ಚಂದ್ರನ ಬೆಳದಿಂಗಳಿನ ಬಲದಿಂದ ನನ್ನನ್ನು ಮತ್ತೂ ಹಿಂಸಿಸುತ್ತವೆ. ಈಗ ನನಗೆ ಚಂದ್ರಬಲವು (ಗ್ರಹಬಲ) ಸರಿಯಾಗಿಲ್ಲದಿದ್ದರೆ ಯಾವುದು ತಾನೆ ಒಳ್ಳೆಯದು ಮಾಡುವುದು?
- ವ|| ಎಂದು ಮನದ ಮಱುಕಮುಮನೆರ್ದೆಯ ಕುದಿಪಮುಮಂ ಬಗೆಯ ಕುಱಿಪಮುಮಂ ಮೆಯ್ಯ ಬಡತನಮುಮನಱಿಯೆ ತೋಱಿ ನುಡಿದೊಡೆ ರಾಜಹಂಸಿ ಮಾನಸ ಸರೋವರಮನಲ್ಲದೆ ಪೆಱತನೇಕೆ ಬಯಸುಗುಂ ಕಳಹಂಸಗಮನೆಯಾ ಸುರತಮಕರಧ್ವಜನನಲ್ಲದೆ ಪೆಱತನೇಕೆ ಬಯಸುಗುಮೆಂದು ಮನದೊಳೆ ಮಂತಣಮಿರ್ದು ಬಗೆಯೊಳೆ ಗುಡಿಗಟ್ಟಿ ಸಂತಸಂಬಟ್ಟಿಂತೆಂದಳ್-
- ವಚನ:ಪದವಿಭಾಗ-ಅರ್ಥ:ಎಂದು ಮನದ ಮಱುಕಮುಮನು ಎರ್ದೆಯ ಕುದಿಪಮುಮಂ (ಮನಸ್ಸಿನ ದುಃಖವನ್ನೂ ಹೃದಯದ ಬೇಗೆಯನ್ನೂ) ಬಗೆಯ ಕುಱಿಪಮುಮಂ (ಮನಸ್ಸಿನ ರೀತಿಯನ್ನೂ), ಮೆಯ್ಯ ಬಡತನಮುಮನು ಅಱಿಯೆ (ದೇಹದ ಬಡತನವನ್ನು) ತೋಱಿ ನುಡಿದೊಡೆ (ಸ್ಪಷ್ಟವಾಗಿ ತಿಳಿಯುವ ಹಾಗೆ ಹೇಳಿದಾಗ), ರಾಜಹಂಸಿ ಮಾನಸ ಸರೋವರಮನಲ್ಲದೆ ಪೆಱತನೇಕೆ ಬಯಸುಗುಂ (ರಾಜಹಂಸಪಕ್ಷಿಯು ಮಾನಸಸರೋವರವನ್ನು ಅಲ್ಲದೆ ಬೇರೆಯದನ್ನೇಕೆ ಬಯಸುತ್ತದೆ?) ಕಳಹಂಸಗಮನೆಯು ಆ ಸುರತಮಕರಧ್ವಜನನಲ್ಲದೆ ಪೆಱತನೇಕೆ ಬಯಸುಗುಂ ಎಂದು (ಹಂಸದಂತೆ ನೆಡೆಯುವ ಸುಭದ್ರೆಯು ಸುರತಮಕರಧ್ವಜನಾದ ಅರ್ಜುನನನ್ನಲ್ಲದೆ ಇತರರನ್ನೇಕೆ ಆಶಿಸುತ್ತಾಳೆ?) ಎಂದು ಮನದೊಳೆ ಮಂತಣಮಿರ್ದು (ಮನಸ್ಸಿನಲ್ಲಿ ಯೋಚಿಸಿ) ಬಗೆಯೊಳೆ ಗುಡಿಗಟ್ಟಿ ಸಂತಸಂಬಟ್ಟು (ಮನಸ್ಸಿನಲ್ಲೇ ಮುಂದಿನ ಶುಭದ ಧ್ವಜವೇರಿಸಿ ಸಂತಸಪಟ್ಟು) ಇಂತೆಂದಳ್ -
- ವಚನ:ಅರ್ಥ:ಎಂದು ಸುಭದ್ರೆಯು, ಮನಸ್ಸಿನ ದುಃಖವನ್ನೂ ಹೃದಯದ ಬೇಗೆಯನ್ನೂ ಮನಸ್ಸಿನ ರೀತಿಯನ್ನೂ ಶರೀರದ ಬಡತನವನ್ನೂ ಸ್ಪಷ್ಟವಾಗಿ ತಿಳಿಯುವ ಹಾಗೆ ಹೇಳಿದರೆ ಆ ಸಖಿಯು ತನ್ನ ಮನಸ್ಸಿನಲ್ಲಿಯೇ ರಾಜಹಂಸಪಕ್ಷಿಯು ಮಾನಸಸರೋವರವನ್ನಲ್ಲದೆ ಬೇರೆಯದನ್ನೇಕೆ ಅಪೇಕ್ಷಿಸುತ್ತದೆ. ಹಂಸದಂತೆ ನೆಡೆಯುವ ಸುಭದ್ರೆಯು ಸುರತಮಕರಧ್ವಜನಾದ ಅರ್ಜುನನನ್ನಲ್ಲದೆ ಇತರರನ್ನೇಕೆ ಆಶಿಸುತ್ತಾಳೆ? ಎಂದು ಯೋಚಿಸುತ್ತಿದ್ದು ಮನಸ್ಸಿನಲ್ಲೇ ಮುಂದಿನ ಶುಭದ ಧ್ವಜವೇರಿಸಿ ಸಂತಸಪಟ್ಟು, ಹೀಗೆಂದಳು-
- ಮ|| ನನೆಯಂಬಂ ತೆಗೆದೆಚ್ಚನಂಗಜನ ತಪ್ಪೇನಾನುಮಂ ತೋರೆ ಕಾ
- ಣ್ಬನಿತಂ ಮಾಡದೆ ಪದ್ಮಜಂ ಮದನನಂ ಬೈದಂತುಟೇ ಬೇಡಮೀ
- ಬಿನದಂ ತಪ್ಪಲೆ ಕಲ್ಪಿತಂ ಪರಿಯದಾತಂಗೆಂದು ನಿನ್ನೀ ಮನಂ
- ನಿನಗಾತಂ ದೊರೆ ನೆಟ್ಟನಾದಿ ಪುರುಷಂಗೇಕಕ್ಕ ನೀನ್ನಾಣ್ಚುವೈ|| ೬೯||
- ಪದ್ಯ-೬೯:ಪದವಿಭಾಗ-ಅರ್ಥ:ನನೆಯಂಬಂ (ಹೂವಿನ ಬಾಣವನ್ನು) ತೆಗೆದೆಚ್ಚಂ(ಹೊಡೆದನು) ಅಂಗಜನ ತಪ್ಪು ಏನಾನುಮಂ ( ಮನ್ಮಥನ ತಪ್ಪೇನನ್ನೂ) ತೋರೆ ಕಾಣ್ಬನಿತಂ ಮಾಡದೆ ಪದ್ಮಜಂ (ಬ್ರಹ್ಮನು ತೋರಿ ಸರಿಯಾಗಿ ಕಾಣುವಂತೆ ಮಾಡದೆ ಇರುವಾಗ ) ಮದನನಂ ಬೈದಂತುಟೇ (ಮನ್ಮಥನನ್ನು ಬೈಯುವುದೇ?) ಬೇಡಂ ಈ ಬಿನದಂ, (ಈ ವಿನೋದವು ಬೇಡ!) ತಪ್ಪಲೆ ಕಲ್ಪಿತಂ ಪರಿಯದು ಆತಂಗೆ ಎಂದು ನಿನ್ನೀ ಮನಂ (ಪ್ರೀತಿಸಿದ್ದು ತಪ್ಪು ಎಂಬುದು ಕಲ್ಪಿತ, ಅದು ತಪ್ಪಲ್ಲ! ; ನಿನ್ನ ಮನಸ್ಸು ಆತನನ್ನು ಬಿಟ್ಟು ಹರಿಯದು ಎಂದು ನಿನ್ನ ಮನಸ್ಸು ಹೇಳುವುದು.) ನಿನಗೆ ಆತಂ ದೊರೆ (ನಿನಗೆ ಅವನೇ ತಕ್ಕವನು) ನೆಟ್ಟನೆ ಆದಿ ಪುರುಷಂಗೆ ಏಕೆ ಅಕ್ಕ ನೀನ್ ನಾಣ್ಚುವೈ (ನೆಟ್ಟನೆ ಇರುವ- ನ್ಯಾಯವಾಗಿ ಪ್ರೀತಿಸುವ ನೀನು ಅರ್ಜುನನವಿಷಯದಲ್ಲಿ ನಾಚಿಕೆ ಏಕೆ?)
- ಪದ್ಯ-೬೯:ಅರ್ಥ: ಪುಷ್ಟಬಾಣವನ್ನು ಹೊಡೆದ ಮನ್ಮಥನ ತಪ್ಪನ್ನು ಪ್ರಕಟವಾಗಿ ತೋರುವಂತೆ ಬ್ರಹ್ಮನು ಮಾಡದೆ ಇರಲು, ಮನ್ಮಥನನ್ನು ಬೈಯುವುದೇ? ಈ ವಿನೋದವು ಬೇಡ? ಪ್ರೀತಿಸಿದ್ದು ತಪ್ಪು ಎಂಬುದು ಕಲ್ಪಿತ, ಅದು ತಪ್ಪಲ್ಲ! ನಿನ್ನ ಮನಸ್ಸು ಆತನನ್ನು ಬಿಟ್ಟು ಹರಿಯದು. ನಿನಗೆ ಅವನೇ ತಕ್ಕವನು. ನ್ಯಾಯವಾಗಿ ಪ್ರೀತಿಸುವ ನೀನು, ಆದಿಪುರುಷನಾದ ಅರಿಕೇಸರಿಯ/ ಅರ್ಜುನನ ವಿಷಯದಲ್ಲಿ ನಾಚಿಕೆ ಏಕೆ)? ಎಂದಳು ಸಖಿ.
- ವ|| ನೀನಿದರ್ಕೇನುಮಂ ಬಗೆಯಲ್ವೇಡ ನಿನ್ನ ಬಗೆಯಂ ಬಗೆದಂತೆ ತೀರ್ಚುವೆನೆಂದನೇಕ ಪ್ರಕಾರ ವಚನ ರಚನೆಗಳಿಂದಾಕೆಯ ಮನಮನಾರೆ ನುಡಿಯುತ್ತಿರ್ಪಿನಮಿತ್ತ ವಿಕ್ರಮಾರ್ಜುನನುಮೋಲಗಂ ಪರೆದಿಂಬೞಿಯಂ ತನ್ನ ಪವಡಿಸುವ ಮಾಡಕ್ಕೊಡನೊಡ ನೋಲಗಿಸುತ್ತುಂ ಬಂದ ಪಂಡಿಕರ್ತಳುಮನುಚಿತ ಪ್ರತಿಪತ್ತಿಗಳಿಂ ವಿಸರ್ಜಿಸಿ ಸುಭದ್ರೆಯ ರೂಪು ಕಣ್ಣ ಪಾಪೆಯಂತೆ ಕಣ್ಣೊಳೆ ತೊೞಲೆ ಕಣ್ಮುಚ್ಚದೆ ತನ್ನ ಜಸದಂತೆ ಪಸರಿಸಿದಚ್ಚವೆಳ್ದಿಂಗಳನಾಕೆಯ ಕಣ್ಗಳ ಬೆಳ್ಪಿನ ತಳರ್ಪೆನುತ್ತುಂ ಪೆಳ್ಪಳಿಸಿ ಚಂದ್ರನಂ ನೋಡಿ-
- ವಚನ:ಪದವಿಭಾಗ-ಅರ್ಥ:ನೀನು ಇದರ್ಕೆ ಏನುಮಂ ಬಗೆಯಲ್ವೇಡ (ಏನೂ ಚಿಂತಿಸಬೇಡ) ನಿನ್ನ ಬಗೆಯಂ ಬಗೆದಂತೆ ತೀರ್ಚುವೆನು (ನಿನ್ನ ಆಸೆಯನ್ನು ಇಷ್ಟಟ್ಟಣತೆಯೇ ತೀರಿಸುತ್ತೇನೆ) ಎಂದು ಅನೇಕ ಪ್ರಕಾರ ವಚನ ರಚನೆಗಳಿಂದ ಆಕೆಯ ಮನಮನು ಆರೆ ನುಡಿಯುತ್ತಿರ್ಪಿನಂ (ಮನಸ್ಸನ್ನು ಶಾಂತಪಿಸಲು ನುಡಿಯುತ್ತಿರಲು) ಇತ್ತ, ವಿಕ್ರಮಾರ್ಜುನನುಂ ಓಲಗಂ ಪರೆದಿಂಬೞಯಂ (ಪರೆದು ಇಂಬೞಿಯಂ- ಹರೆದು- ಚದುರಿದ ನಂತರ) ತನ್ನ ಪವಡಿಸುವ (ಮಲಗುವ) ಮಾಡಕ್ಕೆ ಒಡನೊಡನೆ ಓಲಗಿಸುತ್ತುಂ ಬಂದ (ತನ್ನ ಜೊತೆಯಲ್ಲಿಯೇ ಅನುಸರಿಸಿ ಬಂದ )ಪಂಡಿಕರ್ತಳುಮನು ಉಚಿತ ಪ್ರತಿಪತ್ತಿಗಳಿಂ ವಿಸರ್ಜಿಸಿ (ಉಚಿತವಾದ ಸತ್ಕಾರಗಳಿಂದ ಬೀಳ್ಕೊಟ್ಟು), ಸುಭದ್ರೆಯ ರೂಪು ಕಣ್ಣ ಪಾಪೆಯಂತೆ ಕಣ್ಣೊಳೆ ತೊೞಲೆ (ಕಣ್ಣಿನ ಗುಡ್ಡೆಯಂತೆಯೇ ಸುತ್ತಾಡುತ್ತಿರಲು) ಕಣ್ಣು ಮುಚ್ಚದೆ ತನ್ನ ಜಸದಂತೆ (ಯಶಸ್ಸಿನಂತೆ) ಪಸರಿಸಿದ ಅಚ್ಚ ವೆಳ್ದಿಂಗಳನು (ಸ್ವಚ್ಛವಾದ ಬೆಳುದಿಂಗಳನ್ನು) ಆಕೆಯ ಕಣ್ಗಳ ಬೆಳ್ಪಿನ ತಳರ್ಪೆನುತ್ತುಂ(ಚಲನೆಯೆಂದುಕೊಂಡು) ಪೆಳ್ಪಳಿಸಿ (ಆಕೆಯ ಕಣ್ಣುಗಳ ಬಿಳಿಯ ಬಣ್ಣದ ಚಲನೆಯೆಂದುಕೊಂಡು ಭಾವಿಸಿ ಹೆದರಿ) ಚಂದ್ರನಂ ನೋಡಿ-
- ವಚನ:ಅರ್ಥ:ನೀನು ಇದಕ್ಕೆ ಏನೂ ಚಿಂತಿಸಬೇಡ. ನಿನ್ನ ಆಸೆಯನ್ನು ಇಷ್ಟಟ್ಟಣತೆಯೇ ತೀರಿಸುತ್ತೇನೆ ಎಂದು ಅನೇಕ ರೀತಿಯ ಮಾತಿನ ಹಿತವಚಗಳಿಂದ ಅವಳ ಮನಸ್ಸು ಶಾಂತಪಡಿಸುವಂತೆ ನುಡಿಯುತ್ತಿರಲು, ಈ ಕಡೆ ವಿಕ್ರಮಾರ್ಜುನನಾದ ಅರಿಕೇಸರಿಯು ಸಭೆಯು ಚದುರಿದ ಬಳಿಕ ಮಲಗುವ ಮನೆಗೆ ಬರುವಾಗ, ತನ್ನ ಜೊತೆಯಲ್ಲಿಯೇ ಅನುಸರಿಸಿ ಬಂದ ಪಂಡಿತರುಗಳನ್ನು ಉಚಿತವಾದ ಸತ್ಕಾರಗಳಿಂದ ಬೀಳ್ಕೊಟ್ಟು. ಸುಭದ್ರೆಯ ಸೌಂದರ್ಯವು ತನ್ನ ಕಣ್ಣಿನಲ್ಲಿ ತನ್ನ ಕಣ್ಣಿನ ಗುಡ್ಡೆಯಂತೆಯೇ ಸುತ್ತಾಡುತ್ತಿರಲು ಕಣ್ಣನ್ನು ಮುಚ್ಚದೆ ತನ್ನ ಯಶಸ್ಸಿನಂತೆ ಹರಡಿದ್ದ ಸ್ವಚ್ಛವಾದ ಬೆಳುದಿಂಗಳನ್ನು ಆಕೆಯ ಕಣ್ಣುಗಳ ಬಿಳಿಯ ಬಣ್ಣದ ಚಲನೆಯೆಂದೇ ಭಾವಿಸಿ ಹೆದರಿದನು. ಚಂದ್ರನನ್ನು ನೋಡಿ-
- ಚಂ|| ಪ್ರಿಯ ಸತಿಯಾನನೇಂದುವೊಳಮಿಂದುವೊಳಂ ಬಿದಿ ಮುನ್ನಮಾವುದಂ
- ನಯದೊಳೆ ನೋಡಿ ಮಾಡಿದನದಾವುದನೆಂದಱಿಯಲ್ಕೆ ನಾಡೆ ಸಂ|
- ದೆಯಮದು ನೀಳ ನೀರಜ ವನಂಗಳ ಚೆಲ್ವುಗಳೆಂಬುವಾ ಲತಾಂ
- ಗಿಯ ಕಡೆಗಣ್ಣ ಬೆಳ್ಪುಗಳ ಸಿಲ್ಕಿದ ಸಿಲ್ಕಿನ ಸಿಲ್ಕಿವಲ್ಲವೇ|| ೭೦ ||
- ಪದ್ಯ-೭೦:ಪದವಿಭಾಗ-ಅರ್ಥ:ಪ್ರಿಯಸತಿಯ ಆನನೇಂದು (ಪ್ರಿಯವನಿತೆಯಾದ ಸುಭದ್ರೆಯ, ಆನನ ಇಂದು- ಚಂದ್ರನಂತಿರುವ ಮುಖ) ಒಳಂ (ಇದೆ, ಹೇಗೆಂದರೆ-)ಇಂದುಂ ಒಳಂ (ಚಂದ್ರನಂತೆ), ಬಿದಿ (ಬ್ರಹ್ಮನು), ಮುನ್ನಂ ಆವುದಂ ನಯದೊಳೆ ನೋಡಿ ಮಾಡಿದನು ಆದಾವುದನು ಎಂದಱಿಯಲ್ಕೆ (ಬ್ರಹ್ಮನು ಇವುಗಳಲ್ಲಿ ಯಾವುದನ್ನು ನಯದಿಂದ/ ಚಂದವಾಗಿ ಯೋಚಿಸಿ-ಮಾದರಿಯಾಗಿ ಮೊದಲು ಮಾಡಿದನು ಎಂದು ತಿಳಿಯುವುದಕ್ಕೆ) ನಾಡೆ ಸಂದೆಯಂ (ಬಹಳ ಸಂದೇಹವೇ ಸರಿ,) ಅದು ನೀಳ ನೀರಜ ವನಂಗಳ (ನೀಲವಾಧ ಕನ್ನೈದಿಲೆ ಹೂವಿನ ತೋಟಗಳ) ಚೆಲ್ವುಗಳೆಂಬುವು (ಸೌಂದರ್ಯಗಳು) ಆ ಲತಾಂಗಿಯ ಕಡೆಗಣ್ಣ ಬೆಳ್ಪುಗಳ ಸಿಲ್ಕಿದ (ಆ ಸುಭದ್ರೆಯ ಕಡೆಗಣ್ಣ ಕಾಂತಿಯ ಸಿಲುಕಿನ) ಸಿಲ್ಕಿನ ಸಿಲ್ಕು ಇವಲ್ಲವೇ (ಮತ್ತು ಚಂದ್ರನ ಕಾಂತಿಯ ಸಿಲುಕಿನ, ಎರಡೂ ಸೇರಿದ ಸಿಲುಕು- ಸಿಕ್ಕು, ಬಿಡಿಸಲಾರದ ಸಿಕ್ಕು ಇದು. ಅಲ್ಲವೇ? ಎರಡೂ ಒಂದೇ ಬಗೆ)?
- ಪದ್ಯ-೭೦:ಅರ್ಥ: ಪ್ರಿಯವನಿತೆಯಾದ ಸುಭದ್ರೆಯ ಚಂದ್ರನಂತಿರುವ ಮುಖ ಚಂದ್ರನಂತೆಯೇ ಇದೆ, ಅವು ಎರಡೂ ಒಂದೇ ರೀತಿಯಲ್ಲಿವೆ. ಬ್ರಹ್ಮನು ಇವುಗಳಲ್ಲಿ ಯಾವುದನ್ನು ಮಾದರಿಯಾಗಿ ಮೊದಲು ಮಾಡಿದನು ಎಂದು ತಿಳಿಯುವುದಕ್ಕೆ ಬಹಳ ಸಂದೇಹವೇ ಸರಿ. ನೀಲವಾಧ ಕನ್ನೈದಿಲೆ ಹೂವಿನ ತೋಟಗಳ ಸೌಂದರ್ಯಗಳು ಆ ಸುಭದ್ರೆಯ ಕಡೆಗಣ್ಣ ಕಾಂತಿಯ ಒಂದಕ್ಲೊಂದು ಸೇರಿ ಸಿಲುಕಿನ-ಸಿಕ್ಕಿನ ಮತ್ತು ಚಂದ್ರನ ಕಾಂತಿಯ ಸಿಲುಕಿನ, ಎರಡೂ ಸೇರಿದ ಸಿಲುಕು- ಸಿಕ್ಕು ಇದು, ಬಿಡಿಸಲಾರದ ಸಿಕ್ಕು ಇದು. ಅಲ್ಲವೇ? ಎರಡೂ ಒಂದೇ ಬಗೆ ಇದೆ.)
- ವ|| ಅದಲ್ಲದೆಯುಂ-
- ವಚನ:ಅರ್ಥ:|| ಅದೂ ಅಲ್ಲದೆ
- ಉ|| ಆ ನವ ಮಾಳಿಕಾ ಕುಸುಮ ಕೋಮಳೆ ರಾಗ ರಸ ಪ್ರಪೂರ್ಣಂ ಚಂ
- ದ್ರಾನನ ಲಕ್ಷ್ಮಿಯಿಂ ನಭದೊಳಿರ್ದಮೃತಾಂಶುವಿನುದ್ಘಕಾಂತಿ ಸಂ|
- ತಾನಮನಾವಗಂ ತನಗೆ ಮಾಡಿದಳೆಂದೊಡೆ ತದ್ಗೃ ಹಾಂತರೋ
- ದ್ಯಾನಸರಸ್ಸರೋಜರುಚಿಯೆಂಬುದಿದಾಕೆಯ ಕೆಯ್ಯದೆನ್ನಿರೇ|| ೭೧||
- ಪದ್ಯ-೭೧:ಪದವಿಭಾಗ-ಅರ್ಥ: ಆ ನವ ಮಾಳಿಕಾ ಕುಸುಮ ಕೋಮಳೆ (ಆ ಹೊಸದಾದ ಮಾಲೆಯ ಹೂವಿನಂತೆ ಕೋಮಲವಾಗಿರುವ ಆ ಸುಭದ್ರೆಯು) ರಾಗ ರಸ ಪ್ರಪೂರ್ಣಂ ಚಂದ್ರಾನನ ಲಕ್ಷ್ಮಿಯಿಂ (ಕೆಂಪು ಬಣ್ಣದ ತನ್ನ ಪ್ರೀತಿರಸದಿಂದ ತುಂಬಿದ ಚಂದ್ರನಂತಿರುವ ಮುಖ ಕಾಂತಿಯಿಂದ) ನಭದೊಳಿರ್ದ ಅಮೃತಾಂಶುವಿನ ಉದ್ಘಕಾಂತಿ ಸಂತಾನಮನು (ಆಕಾಶದಲ್ಲಿರುವ ಚಂದ್ರನ ಉತ್ತಮಕಾಂತಿಯ ಮೊತ್ತವನ್ನು) ಆವಗಂ ತನಗೆ ಮಾಡಿದಳೆಂದೊಡೆ (ತನ್ನದ್ದನ್ನಾಗಿ ಮಾಡಿಕೊಂಡಿದ್ದಾಳೆಂದರೆ) ತದ್ ಗೃಹ ಅಂತರ ಉದ್ಯಾನ ಸರಸ್ ಸರೋಜ ರುಚಿ (ಅವಳ ಮನೆಯ ಉದ್ಯಾನವ ಕೊಳಗಳ ತಾವರೆಯ ಕಾಂತಿಯು) ಎಂಬುದು ಇದು ಆಕೆಯ ಕೆಯ್ಯದು ಎನ್ನಿರೇ (ಆಕೆಯ ಕೈಲ್ಲಿರುವ ವಸ್ತು ಎಂದು ಎನ್ನಿ.)
- ಪದ್ಯ-೭೧:ಅರ್ಥ: ಆ ಹೊಸದಾದ ಮಾಲೆಯ ಹೂವಿನಂತೆ ಕೋಮಲವಾಗಿರುವ ಆ ಸುಭದ್ರೆಯು ಕೆಂಪು ಬಣ್ಣದ ತನ್ನ ಪ್ರೀತಿರಸದಿಂದ ತುಂಬಿದ ಚಂದ್ರನಂತಿರುವ ಮುಖ ಕಾಂತಿಯಿಂದ ಆಕಾಶದಲ್ಲಿರುವ ಚಂದ್ರನ ಉತ್ತಮವಾದ ಕಾಂತಿಯ ಮೊತ್ತವನ್ನು ತನ್ನದ್ದನ್ನಾಗಿ ಮಾಡಿಕೊಂಡಿದ್ದಾಳೆಂದರೆ ಅವಳ ಮನೆಯ ಉದ್ಯಾನವ ಕೊಳಗಳ ತಾವರೆಯ ಕಾಂತಿಯು ಆಕೆಯ ಕೈಲ್ಲಿರುವ ವಸ್ತು ಎನ್ನಿ. ಆ ಕಮಲಗಳ ಕಾಂತಿಯನ್ನು ತನ್ನದು ಮಾಡಿಕೊಂಡಿದ್ದಾಳೆ.
- ವ|| ಎಂದು ತನ್ನ ಮನಮುಮನೆರ್ದೆಯುಮನುರೆ ಸೆವಿಡಿದಿರ್ದಪೂರ್ವ ರೂಪೆಯ ರೂಪಮಂ ಮನದೊಳೆ ಬಗೆದು ಭಾವಿಸಿ ಮತ್ತಮಿಂತೆಂದಂ-
- ವಚನ:ಪದವಿಭಾಗ-ಅರ್ಥ:ಎಂದು ತನ್ನ ಮನಮುಮನು ಎರ್ದೆಯುಮನು (ಮನಸ್ಸನ್ನೂ, ಹೃದಯವನ್ನೂ) ಉರೆ ಸೆರೆವಿಡಿದಿರ್ದ ಅಪೂರ್ವ ರೂಪೆಯ ರೂಪಮಂ ಮನದೊಳೆ ಬಗೆದು ಭಾವಿಸಿ ಮತ್ತಂ ಇಂತೆಂದಂ-
- ವಚನ:ಅರ್ಥ:ಎಂದು ತನ್ನ ಮನಸ್ಸನ್ನೂ, ಹೃದಯವನ್ನೂ ಬಹಳ ಸೆರೆಹಿಡಿದಿದ್ದ ಅಪೂರ್ವ ಸುಂದರಿಯ ರೂಪವನ್ನು ತನ್ನ ಮನಸ್ಸಿನಲ್ಲಿ ಯೋಚಿಸಿ ಪುನ ಭಾವಿಸಿಕೊಂಡು ಹೀಗೆಂದನು-
- ಚಂ|| ಕುಸುರಿಯ ರೂಪನೆಯ್ದೆ ಪೊಗೞಲ್ಕಱಿಯೆಂ ನಡು ಪುರ್ವು ಬಾಸೆ ಕ
- ಣ್ಗೊಸಗೆಯನುಂಟುಮಾೞ್ಪ ಜಘನಂ ಬೆಳರ್ವಾಯ್ ಮೊಲೆಗಳ್ ಕದಂಪುಗು|
- ರ್ವಸಿಱನೆ ನೋಡೆ ಮೊಕ್ಕಳಮದಾರ್ ನಡೆ ನೋೞ್ಪೊಡಮಂತುಮಿಂತುಂ ಮೂ
- ಱಸಿಯವು ಮೂಱು ದೊಡ್ಡಿದುವು ಮೂಡೆ ತೆಳ್ಳಿದುವಂಬುಜಾಕ್ಷಿಯಾ|| ೭೨||
- ಪದ್ಯ-೭೨:ಪದವಿಭಾಗ-ಅರ್ಥ:ಕುಸುರಿಯ ರೂಪನು ಎಯ್ದೆ ಪೊಗೞಲ್ಕೆ ಅಱಿಯೆಂ (ಹೂವಿನ ಕೇಸರಗಳಂತಿರುವ ಅವಳ ಸೌಂದರ್ಯವನ್ನು ಚೆನ್ನಾಗಿ ಹೊಗಳಲು ಅರಿಯೆನು) ನಡು ಪುರ್ವು ಬಾಸೆ ಕಣ್ಗೆ ಒಸಗೆಯನು ಉಂಟುಮಾೞ್ಪ ಜಘನಂ (ಅವಳ ಸೊಂಟ, ಹುಬ್ಬು, ಹೊಟ್ಟೆಯ ಮೇಲಿನ ಕೂದಲಿನ ಸಾಲು, ಕಣ್ಣು, ಹಬ್ಬವನ್ನುಂಟುಮಾಡುವ ಜಘನಗಳು,) ಬೆಳರ್ವಾಯ್ ಮೊಲೆಗಳ್ ಕದಂಪು ಉಗುರ್ ವಸಿಱನೆ (ಬೆಳ್ಳಗಿರುವ ಬಾಯಿ, ಮೊಲೆಗಳು, ಕೆನ್ನೆ, ಉಗುರು, ಹೊಟ್ಟೆ) ನೋಡೆ ಮೊಕ್ಕಳಂ (ನೋಡಿದರೆ ವಿಶೇಷವಾಗಿ) ಅದು ಆರ್ (ಅದು ಯಾರು) ನಡೆ ನೋೞ್ಪೊಡಂ (ವಿಶೇಷವಾಗಿ ದೃಷ್ಟಿಸಿ ನೋಡಿದರೂ) ಅಂತುಮಿಂತುಂ ಮೂಱಸಿಯವು ಮೂಱು ದೊಡ್ಡಿದುವು ಮೂಡೆ ತೆಳ್ಳಿದುವು ಅಂಬುಜಾಕ್ಷಿಯಾ.
- ಪದ್ಯ-೭೨:ಅರ್ಥ: ಹೂವಿನ ಕೇಸರಗಳಂತಿರುವ ಅವಳ ಸೌಂದರ್ಯವನ್ನು ಹೊಗಳಲು ನನಗೆ ಶಕ್ಯವಿಲ್ಲ. ಇಷ್ಟುಮಾತ್ರ ಹೇಳಬಲ್ಲೆ : ಅವಳ ಸೊಂಟ, ಹುಬ್ಬು, ಹೊಟ್ಟೆಯ ಮೇಲಿನ ಕೂದಲಿನ ಸಾಲು, ಕಣ್ಣು, ಹಬ್ಬವನ್ನುಂಟುಮಾಡುವ ಜಘನಗಳು, ಬೆಳ್ಳಗಿರುವ ಬಾಯಿ, ಮೊಲೆಗಳು, ಕೆನ್ನೆ, ಉಗುರು, ಹೊಟ್ಟೆ ಇವುಗಳನ್ನು ನೋಡಿದರೆ, ವಿಶೇಷವಾಗಿ ದೃಷ್ಟಿಸಿ ನೋಡಿದರೂ ಕಮಲಾಕ್ಷಿಯಾದ ಆ ಸುಭದ್ರೆಯ ಅಂಗಗಳಲ್ಲಿ ಅಂತು ಇಂತು ಮೂರು ಸಣ್ಣವು, ಮೂರು ದಪ್ಪ, ಮೂರು ತೆಳುವಾದುವು.
- ಕಂ|| ಮೃಗಶಿಶುನೇತ್ರೆಯ ನಡುವೆರ್ದೆ
- ಯುಗುರ್ಗಳ್ ಕರಮಸಿದು ಕನಕ ಕಾಂಚೀ ನಿನದ|
- ಪ್ರಗಣಿತಮಗಲ್ದ ನಲ್ಲಳ
- ಜಗನಮಿದೆನ್ನೆರ್ದೆಯನೆಂತು ಪೊಕ್ಕಳಿಪುವುದೋ|| ೭೩||
- ಪದ್ಯ-೭೩:ಪದವಿಭಾಗ-ಅರ್ಥ:ಮೃಗಶಿಶುನೇತ್ರೆಯ (ಜಿಂಕಮರಿಯ ಕಣ್ಣುಗಳ) ನಡು ಎರ್ದೆಯು ಉಗುರ್ಗಳ್ (ಸೊಂಟ, ಎದೆ, ಉಗುರುಗಳು) ಕರಂ ಅಸಿದು (ವಿಶೇಷ ತೆಳುವು) ಕನಕ ಕಾಂಚೀ ನಿನದ ಪ್ರಗಣಿತಂ (ಚಿನ್ನದ ಡಾಬಿನ ಸದ್ದಿನ ಸದ್ದುಗಳು) ಅಗಲ್ದ ನಲ್ಲಳ (ಡಾಬು ಇಲ್ಲದ ಪ್ರಿಯೆಯ-) ಜಗನಂ ಇದು ಎನ್ನೆರ್ದೆಯನು (ನನ್ನ ಹೃದಯವನ್ನು ಪ್ರವೇಶಿಸಿ) ಎಂತು ಪೊಕ್ಕು ಅಳಿಪುವುದೋ(ಅರಳಿಸುವುದೋ - ಪ್ರೀತಿಯನ್ನುಂಟುಮಾಡುವುದೋ)
- ಪದ್ಯ-೭೩:ಅರ್ಥ: ಜಿಂಕಮರಿಯ ಕಣ್ಣುಗಳಂತೆ ಕಣ್ಣುಳ್ಳ ಸುಭದ್ರೆಯ ಸೊಂಟ, ಎದೆ, ಉಗುರುಗಳು ವಿಶೇಷ ತೆಳುವು. ಚಿನ್ನದ ಡಾಬಿನ ಸದ್ದಿಲ್ಲದ ಪ್ರಿಯೆಯ ಜಘನಗಳು ನನ್ನ ಹೃದಯವನ್ನು ಪ್ರವೇಶಿಸಿ ಹೇಗೆ ಪ್ರೀತಿಯನ್ನುಂಟುಮಾಡುವುದೋ!
- ವ|| ಎಂದು ಸೈರಿಸದೆ-
- ವಚನ:ಅರ್ಥ:ಎಂಬುದಾಗಿ ಸೈರಿಸಲಾರದೆ-
- ಮ|| ಮೊಲೆಗಳ್ ಬಟ್ಟಿದುವಾಗಿ ಕರ್ಗಿದ ಕುರುಳ್ ಕೊಂಕಾಗಿ ಕಣ್ಗೆಯ್ದೆ ನೀ
- ಳ್ದರ್ಗಣ್ಗಳ್ ಚಪಳಂಗಳಾಗಿ ಜಘನಂ ಕಾಂಚೀ ಕಳಾಪ ಪ್ರಭೋ|
- ಜ್ಜ ಲಮುಧ್ವ ತ್ತಮುಮಾಗಿ ತಾಮಲೆಗೆ ಮಧ್ಯಸ್ಥಂಗಳಾಗಿರ್ದುವ
- ಕ್ಕಲೆಯಲ್ ತಕ್ಕುದೆ ಕೆನ್ನಮಾ ತ್ರಿವಳಿಗಳ್ಗೆನ್ನಂ ಸರೋಜಾಕ್ಷಿಯಾ|| ೭೪ ||
- ಪದ್ಯ-೭೪:ಪದವಿಭಾಗ-ಅರ್ಥ:ಮೊಲೆಗಳ್ ಬಟ್ಟಿದುವಾಗಿ (ಮೊಲೆಗಳು ದುಂಡಾಗಿ) ಕರ್ಗಿದ ಕುರುಳ್ ಕೊಂಕಾಗಿ ಕಣ್ಗೆಯ್ದೆ (ಕರ್ರಗಿನ ಕುರುಳು ಗುಂಗುರಾಗಿ ಕಣ್ಣಿನ ಬಳಿ ಬಂದಿರಲು,) ನೀಳ್ದರ್ಗಣ್ಗಳ್ ಚಪಳಂಗಳಾಗಿ (ನೀಳ್ದ ಅಲರ್ ಕಣ್ಗಳ್ - ಉದ್ದವಾದ ಹೂವಿನಂತಿರುವ ಕಣ್ಣುಗಳು ಚಂಚಲವಾಗಿದ್ದು) ಜಘನಂ ಕಾಂಚೀ ಕಳಾಪ ಪ್ರಭೋಜ್ಜಲಂ ಉಧ್ವ ತ್ತಮುಂ ಆಗಿ ತಾಂ ಅಲೆಗೆ- ಪೀಡಿಸಲಿ (ಜಘನವು ಡಾಬಿನ ಕಾಂತಿಯಿಂದ ಪ್ರಕಾಶವಾಗಿದ್ದು ಉಬ್ಬಿದ ಜಘನಗಳು ಅವು ನನ್ನನ್ನು ಪೀಡಿಸಲಿ;) ಮಧ್ಯಸ್ಥಂಗಳು ಆಗಿರ್ದುವು ಅಕ್ಕಲೆಯಲ್ (ಪೀಡಿಸಲು - ಕಲಕಲು) ತಕ್ಕುದೆ ಕೆನ್ನಂ (ವಿಶೇಷ) ಆ ತ್ರಿವಳಿಗಳ್ಗೆ ಎನ್ನಂ ಸರೋಜಾಕ್ಷಿಯಾ(ಕಮಲಾಕ್ಷಿಯಾದ ಸುಭದ್ರೆಯ ಮಧ್ಯಪ್ರದೇಶದ - ಹೊಟ್ಟೆಯಮೇಲಿನ ಮೂರು ವಿಶೇಷ ನೆರಿಗೆ- ತ್ರಿವಳಿಗಳು ನನ್ನನ್ನು ಮನಸ್ಸನ್ನು ಕಲಕಲು ತಕ್ಕದಾಗಿದೆ.)
- ಪದ್ಯ-೭೪:ಅರ್ಥ: ಅವಳ ದುಂಡುಮೊಲೆಗಳು ಕರ್ರಗಿನ ಕುರುಳು ಗುಂಗುರಾಗಿ ಕಣ್ಣಿನ ಬಳಿ ಬಂದಿರಲು, ಉದ್ದವಾದ ಹೂವಿನಂತಿರುವ ಕಣ್ಣುಗಳು ಚಂಚಲವಾಗಿದ್ದು ಡಾಬಿನ ಕಾಂತಿಯ ಸಮೂಹದಿಂದ ಕೊಬ್ಬಿ ಬೆಳೆದ ಜಘನಗಳು ನನ್ನನ್ನು ಪೀಡಿಸಲಿ; ಕಮಲದಂತಿರುವ ಆ ಸುಭದ್ರೆಯ ಮಧ್ಯಪ್ರದೇಶದ ತ್ರಿವಳಿಗಳು ನನ್ನ ಮನಸ್ಸನ್ನು ವಿಶೇಷವಾಗಿ ಕಲಕಲು ಯೋಗ್ಯವಾಗಿವೆ. ಎಂಬುದಾಗಿ ಸ್ವಲ್ಪ ಹೊತ್ತು ಜ್ಞಾನಶೂನ್ಯನಾದಂತೆ ಹಲುಬಿ ಹಂಬಲಿಸಿ ಪುನ ಹಾವ, ಭಾವ, ವಿಳಾಸ, ವಿಭ್ರಮ, ಕಟಾಕ್ಷ ದೃಷ್ಟಿಗಳ ಮನಸ್ಸನ್ನು ಒಲಿಸಿಯೂ ಎದೆಯನ್ನು ಕಲಕಿಯೂ ಮನ್ಮಥನೆಂಬ ಆನೆಯಿಂದ
- ವ|| ಎಂದು ಕಿಱಿದುಂ ಬೇಗಮಱಮರುಳಂತು ಪಲುಂಬಿ ಪಂಬಲಿಸಿ ಮತ್ತಮಾಕೆಯ ಹಾವ ಭಾವ ವಿಳಾಸ ವಿಭ್ರಮ ಕಟಾಕ್ಷೇಕ್ಷಂಗಳ್ ಮನಮನೊನಲಿಸೆಯುಮೆರ್ದೆಯಂ ಕನಲಿಸೆಯು ಮನಂಗ ಮತಂಗಜ ಕೋಳಾಹಳಾಕುಳೀಕೃತಾಂತರಂಗನಾಗಿ-
- ವಚನ:ಪದವಿಭಾಗ-ಅರ್ಥ:ಎಂದು ಕಿಱಿದುಂ ಬೇಗಂ ಅಱಮರುಳಂತು ಪಲುಂಬಿ ಪಂಬಲಿಸಿ(ಅರುಳುಮರುಳನಂತೆ ಹಲುಬಿ, ಬಯಸಿ ವ್ಯಥೆಪಟ್ಟು) ಮತ್ತಂ ಆಕೆಯ ಹಾವ ಭಾವ ವಿಳಾಸ ವಿಭ್ರಮ ಕಟಾಕ್ಷ ಈಕ್ಷಂಗಳ್ (ನೋಟಗಳನ್ನು) ಮನಮನು ಒನಲಿಸೆಯುಂ (ಮನಸ್ಸನ್ನು ಕೆರಳುವಂತೆ) ಎರ್ದೆಯಂ ಕನಲಿಸೆಯುಂ (ರೇಗಿಸಿ, ಉದ್ರೇಕಿಸಿ) ಅನಂಗ ಮತಂಗಜ (ಮನ್ಮಥನೆಂಬ ಮದಗಜದಿಂದ) ಕೋಳಾಹಳ ಆಕುಳೀಕೃತ ಅಂತರಂಗನಾಗಿ (ಗದ್ದಲ ಉಂಟುಮಾದಿದ ಮನಸ್ಸುಳ್ಳವನಾಗಿ)-
- ವಚನ:ಅರ್ಥ:ಎಂಬುದಾಗಿ ಸ್ವಲ್ಪ ಹೊತ್ತು ಅರುಳುಮರುಳನಂತೆ ಹಲುಬಿ, ಹಂಬಲಿಸಿ ಪುನ ಹಾವ, ಭಾವ, ವಿಳಾಸ, ವಿಭ್ರಮ, ಕಟಾಕ್ಷ ದೃಷ್ಟಿಗಳ ಮನಸ್ಸನ್ನು ಕೆರಳುವಂತೆಮಾಡಿ, ಎದೆಯನ್ನು ಉದ್ರೇಕಿಸಿ, ಮನ್ಮಥನೆಂಬ ಮದಗಜದಿಂದ ಗದ್ದಲ ಉಂಟುಮಾದಿದ ಮನಸ್ಸುಳ್ಳವನಾಗಿದ್ದನು.
- ವ|| ಜಗಮಂ ಮಾಡಿದ ಪದ್ಮಜಂ ಪಡೆದನಿಲ್ಲೀ ಕನ್ನೆಯಂ ಮಾಡುವ
- ಲ್ಲಿಗೆ ಚಂದ್ರಂ ಮಳಯಾನಿಳಂ ಮಳಯಜಂ ನೀರೇಜಮಿಮ್ಮಾವು ಮ|
- ಲ್ಲಿಗೆಯೆಂದಿಂತಿವನೞ್ಕಿಱಿಂದಮರ್ದಿನೊಳ್ ತಾನೞ್ತಿಯಿಂ ತೊಯ್ದು ಮೆ
- ಲ್ಲಗೆ ಸಂದಂಗಜನೆಂಬಜಂ ಪಡೆದನಂತಾ ಕಾಂತಿಯಿಂ ಕಾಂತೆಯಂ|| ೭೫||
- ಪದ್ಯ-೭೫:ಪದವಿಭಾಗ-ಅರ್ಥ:ಜಗಮಂ ಮಾಡಿದ ಪದ್ಮಜಂ ಪಡೆದನು ಇಲ್ಲ ಈ ಕನ್ನೆಯಂ (ಜಗತ್ತನ್ನು ಸೃಷ್ಟಿಸಿದ ಬ್ರಹ್ಮನು ಈ ಕನ್ಯೆಯನ್ನು ಸೃಷ್ಟಿಸಿದು ಅಲ್ಲ) (ಹಿಂದೆ ಇದ್ದ ಮನ್ಮಥನೆಂಬ ಬ್ರಹ್ಮನು ಪಡೆದನು- ಸೃಷ್ಟಿಸಿದನು-) ಮಾಡುವ ಅಲ್ಲಿಗೆ (ಹಾಗೆ ಮಾಡುವಾಗ) ಚಂದ್ರಂ ಮಳಯಾನಿಳಂ ಮಳಯಜಂ ನೀರೇಜಂ ಇಮ್ಮಾವು ಮಲ್ಲಿಗೆಯೆಂದ ಇಂತಿವಂ (ಇವನ್ನೆಲ್ಲಾ) ಅೞ್ಕಿಱಿಂದ ಅಮರ್ದಿನೊಳ್ ತಾನೞ್ತಿಯಿಂ ತೊಯ್ದು (ಪ್ರೀತಿಯಿಂದ ಅಮೃತದಲ್ಲಿ ಇಷ್ಟಪಟ್ಟು ನೆನೆಯಿಸಿ) ಮೆಲ್ಲಗೆ ಸಂದಂಗಜನೆಂಬಜಂ (ಸಂದ -ಆಗಿಹೋದ -ಇದ್ದ, ಅಂಗಜನೆಂಬ-ಮನ್ಮಥನೆಂಬ ಅಜಂ - ಬ್ರಹ್ಮನು) ಪಡೆದನು, ಅಂತು ಆ ಕಾಂತಿಯಿಂ ಕಾಂತೆಯಂ- ಕನ್ಯೆಯನ್ನು (ಈ ಕನ್ಯೆಯನ್ನು ಆ ಪ್ರಕಾಶದಿಂದ ಪಡೆದನು)
- ಪದ್ಯ-೭೫:ಅರ್ಥ: ಜಗತ್ತನ್ನು ಸೃಷ್ಟಿಸಿದ ಬ್ರಹ್ಮನು ಈ ಕನ್ಯೆಯನ್ನು ಸೃಷ್ಟಿಸಿರಲಾರ; ಇಷ್ಟು ಕಾಂತಿಯುಕ್ತಳಾದ ಈ ಕನ್ಯೆಯನ್ನು ಮನ್ಮಥನೆಂಬ ಬ್ರಹ್ಮನು ಸೃಷ್ಟಿಸುವಾಗ ಚಂದ್ರ, ಮಲಯಮಾರುತ, ಶ್ರೀಗಂಧ, ತಾವರೆ, ಸಿಹಿಮಾವು, ಮಲ್ಲಿಗೆ ಇವನ್ನೆಲ್ಲಾ ಪ್ರೀತಿಯಿಂದ ಅಮೃತದಲ್ಲಿ ಇಷ್ಟಪಟ್ಟು ನೆನೆಯಿಸಿ ಮೆಲ್ಲಗೆ ಹೀಗೆ ಪಡೆದನು, ಈ ಕನ್ಯೆಯನ್ನು ಆ ಕಾಂತಿಯಿಂದ ಸೃಷ್ಠಿಸಿದನು
- ವ|| ಅಂತಲ್ತಪ್ಪಂದಾ ಕಾಂತೆಯಂ ವಿಧಾತ್ರಂ ಮಾಡುವಂದು ಕೊಸಗಿನ ಕೇಸರಂಗಳನಮೃತರಸದೊಳಂ ಶೃಂಗಾರರಸದೊಳಂ ಭಾವಿಸಿ ರಸಸಿದ್ಧಮಪ್ಪ ಪೊನ್ನ ಲತೆಯ ಮೆಯ್ಯುಮಂ ನೀಲದ ತಲೆನವಿರುಮಂ ಪವಳದ ಬಾಯ್ದೆರೆಯುಮಂ ಮುತ್ತಿನ ಪಲ್ಲುಮಂ ರಾಜಾವರ್ತದ ಸೆಳ್ಳುಗುರುಮಂ ಧೂಪದ ಸುಯ್ಯುಮಂ ರತಿಯ ಸೌಭಾಗ್ಯಮುಮಂ ಸೀತೆಯ ಸೈರಣೆಯುಮನದ್ರಿಜಾತೆಯ ಶೃಂಗಾರಮುಮಂ ಮನೋಮಥನ ಮದನ ಮೋಹನ ಸಂತಾಪನ ವಶೀಕರಣಂಗಳೆಂಬ ಕಾಮದೇವನಯ್ದಲರಂಬಿನ ಶಕ್ತಿಗಳುಮನೊಂದುಮಾಡಿ ಲೋಕಮೆಲ್ಲಂ ಮರುಳ್ಮಾಡಲೆಂದು ಪೆಣ್ಮಾಡಿದನಕ್ಕುಮೆಂದು ಮತ್ತಮಾಕೆಯ ನೋಡಿದ ನೋಟಮಂ ಭಾವಿಸಿ-
- ವಚನ:ಪದವಿಭಾಗ-ಅರ್ಥ:ಅಂತಲ್ತು ಅಪ್ಪಂದು ಆ ಕಾಂತೆಯಂ ವಿಧಾತ್ರಂ (ಹಾಗಿಲ್ಲದ ಪಕ್ಷದಲ್ಲಿ ಆ ಹೆಣ್ಣನ್ನು ಬ್ರಹ್ಮನು) ಮಾಡುವಂದು ಕೊಸಗಿನ ಕೇಸರಂಗಳನು ಅಮೃತರಸದೊಳಂ ಶೃಂಗಾರರಸದೊಳಂ ಭಾವಿಸಿ (ಮಾಡುವಾಗ ಬೆಟ್ಟದಾವರೆಯ ಎಸಳುಗಳನ್ನು ಅಮೃತರಸ ಮತ್ತು ಶೃಂಗಾರರಸದಲ್ಲಿ ನೆನೆಯಿಸಿ) ರಸಸಿದ್ಧಮಪ್ಪ ಪೊನ್ನ ಲತೆಯ ಮೆಯ್ಯುಮಂ (ರಸವಿದ್ಯೆಯಿಂದ ಸಿದ್ಧವಾಗಿರುವ ಚಿನ್ನದ ಬಳ್ಳಿಯಂತಿರುವ ಮೈಯನ್ನು) ನೀಲದ ತಲೆನವಿರುಮಂ ಪವಳದ ಬಾಯ್ದೆಯುಮಂ (ಕಪ್ಪು ತಲೆಗೂದಲನ್ನೂ ಹಳವದಂತಿರುವ ತುಟಿಯನ್ನು), ಮುತ್ತಿನ ಪಲ್ಲುಮಂ (ಮುತ್ತಿನಂತಿರುವ ಹಲ್ಲನ್ನೂ), ರಾಜಾವರ್ತದ ಸೆಳ್ಳುಗುರುಮಂ (ಎಳೆನೀಲದಂತಿರುವ ತೆಳುವಾದ ಉಗುರುಗಳನ್ನೂ) ಧೂಪದ ಸುಯ್ಯುಮಂ ರತಿಯ ಸೌಭಾಗ್ಯಮುಮಂ (ಧೂಪದ ಪರಿಮಳದ ಉಸಿರನ್ನೂ, ರತಿಯ ಅಂದವನ್ನೂ) ಸೀತೆಯ ಸೈರಣೆಯುಮಂ ಅದ್ರಿಜಾತೆಯ ಶೃಂಗಾರಮುಮಂ (ಸೀತಾದೇವಿಯ ಸಹನೆಯನ್ನೂ ಗಿರಿಜೆಯ ಶೃಂಗಾರವನ್ನೂ) ಮನೋಮಥನ, ಮದನ, ಮೋಹನ, ಸಂತಾಪನ, ವಶೀಕರಣಂ,ಗಳೆಂಬ ಕಾಮದೇವನ ಅಯ್ದು ಅಲರಂಬಿನ ಶಕ್ತಿಗಳುಮನು ಒಂದುಮಾಡಿ (ಮನ್ಮಥನ ಅಯ್ದು ಪುಷ್ಪಬಾಣಗಳ ಶಕ್ತಿಗಳನ್ನು ಒಂದುಗೂಡಿಸಿ) ಲೋಕಮೆಲ್ಲಂ ಮರುಳ್ಮಾಡಲೆಂದು ಪೆಣ್ಮಾಡಿದನು ಅಕ್ಕುಮೆಂದು (ಲೋಕವನ್ನು ಮರುಳುಮಾಡಲು ಇದೇ ಸರಿ ಎಂದು ಹೆಣ್ಣನ್ನು ಸೃಷ್ಠಿಸಿದನು ) ಮತ್ತಂ ಆಕೆಯ ನೋಡಿದ ನೋಟಮಂ ಭಾವಿಸಿ-
- ವಚನ:ಅರ್ಥ:ಹಾಗಿಲ್ಲದ ಪಕ್ಷದಲ್ಲಿ ಆ ಹೆಣ್ಣನ್ನು (ಸುಭದ್ರೆಯನ್ನು) ಬ್ರಹ್ಮನು ಮಾಡುವಾಗ ಬೆಟ್ಟದಾವರೆಯ ಎಸಳುಗಳನ್ನು ಅಮೃತರಸದಲ್ಲಿಯೂ ಶೃಂಗಾರರಸದಲ್ಲಿಯೂ ನೆನೆಯಿಸಿ ರಸವಿದ್ಯೆಯಿಂದ ಸಿದ್ಧವಾಗಿರುವ ಚಿನ್ನದ ಬಳ್ಳಿಯಂತಿರುವ ದೇಹವನ್ನೂ, ಕಪ್ಪು ತಲೆಗೂದಲನ್ನೂ ಹಳವದಂತಿರುವ ತುಟಿಯನ್ನೂ, ಮುತ್ತಿನಂತಿರುವ ಹಲ್ಲನ್ನೂ ಎಳೆನೀಲದಂತಿರುವ ತೆಳುವಾದ ಉಗುರುಗಳನ್ನೂ, ಧೂಪದ ಪರಿಮಳದಿಂದ ಕೂಡಿದ ಉಸಿರನ್ನೂ ಸೀತಾದೇವಿಯ ಸಹನೆಯನ್ನೂ ಗಿರಿಜೆಯ ಶೃಂಗಾರವನ್ನೂ, ಮನೋಮಥನ (ಮನಸ್ಸನ್ನು ಕಲಕುವಿಕೆ), ಮದನ (ಕಾಮೋದ್ರೇಕವನ್ನುಂಟು ಮಾಡುವಿಕೆ) ಮೋಹನ (ಪರವಶವನ್ನಾಗಿಸುವಿಕೆ) ಸಂತಾಪನ (ದುಃಖನ್ನುಂಟುಮಾಡುವಿಕೆ) ವಶೀಕರಣ (ತನಗೆ ವಶ ಮಾಡಿಕೊಳ್ಳುವಿಕೆ) ಎಂಬ ಮನ್ಮಥನ ಅಯ್ದು ಪುಷ್ಪಬಾಣಗಳ ಶಕ್ತಿಗಳನ್ನು ಒಂದುಗೂಡಿಸಿ ಲೋಕವನ್ನೆಲ್ಲ ಮರುಳುಮಾಡಲು ಇದೇ ಸರಿ ಎಂದು ಹೆಣ್ಣನ್ನು ಸೃಷ್ಠಿಸಿದನು. ಪುನ ಆಕೆಯ ನೋಟದ ನೋಟವನ್ನು ಮನಸ್ಸಿನಲ್ಲಿ ಭಾವಿಸಿಕೊಂಡು -
- ಚಂ||ನೆರೆಗೊಳೆ ಗಾಡಿ ನೋೞ್ಪ ಬಗೆ ಬರ್ಪುದುಮಾನೆ ದಲಂದು ದಂತಿಯಂ
- ನಿಱಿಸಿ ಮರಲ್ದು ನೋಡುವುದುಮೆನ್ನುಮನಾ ಸತಿ ಸೋಲದತ್ತ ಮ|
- ತ್ತೆಱಗಿ ಬೞಲ್ದು ಜೋಲ್ದಳಿಪಿ ನೋಡಿದಳಿಂತೆಲೆ ಸತ್ತ ಪೊತ್ತ ಕ
- ಣ್ಣಱಿಯದ ಬೆಳ್ಳನಲ್ಲೆನಱಿದೆಂ ಧವಳಾಕ್ಷಿಯ ನೋಟದಂದಮಂ || ೭೬||
- ಪದ್ಯ-೭೬:ಪದವಿಭಾಗ-ಅರ್ಥ:ನೆರೆಗೊಳೆ ಗಾಡಿ (ಗಾಡಿ- ಸೌಂದರ್ಯವು, ನೆರೆಗೊಳೆ-ನೆರೆ ಕೊಳಲ್- ಪೂರ್ಣ ಸೆಳೆಯಲು) ನೋೞ್ಪ ಬಗೆ ಬರ್ಪುದುಂ(ನೋಡುವ ಮನಸ್ಸು ಬರಲು), ಆನೆ ದಲ್ ಅಂದು ದಂತಿಯಂ ನಿಱಿಸಿ (ದಲ್- ಅಲ್ಲವೇ, ಅಂದು ನಾನೇ ಆನೆಯನ್ನು ನಿಲ್ಲಿಸಿ) ಮರಲ್ದು ನೋಡುವುದುಂ (ಪುನ ಅವಳನ್ನು ನೋಡಿದಾಗ) ಎನ್ನುಮನು ಆ ಸತಿ ಸೋಲದತ್ತ ಮತ್ತೆಱಗಿ ಬೞಲ್ದು ಜೋಲ್ದು ಅಳಿಪಿ ನೋಡಿದಳು (ಆ ವನಿತೆ ನನ್ನನ್ನೂ ಪ್ರೇಮದಿಂದ ಈ ಕಡೆಗೆ ವಲೆದು, ತಾನೂ ನನಗೆ ಸೋತು ಪ್ರೀತಿಯಿಂದ ನೋಡಿದಳು.) ಇಂತೆಲೆ (ಇಂತು ಎಲೆ-ಎಲವೋ) ಸತ್ತ ಪೊತ್ತ ಕಣ್ಣಱಿಯದ (ಸತ್ತದ್ದನ್ನು ಹೊತ್ತಿರವುದನ್ನು ಕಂಡು ತಿಳಿಯದ ) ಬೆಳ್ಳನಲ್ಲೆನ್ ಅಱಿದೆಂ (ಬೆಪ್ಪನಲ್ಲ, ಅವಳ ಮನಸ್ಸನ್ನು ಅರಿತೆನು,) ಧವಳಾಕ್ಷಿಯ ನೋಟದಂದಮಂ (ಕಾಂತಿಯ ಕಣ್ಣುಳ್ಳ ಆ ಸುಭದ್ರೆಯ ನೋಟದ ಮರ್ಮವನ್ನು ತಿಳಿದೆನು)
- ಪದ್ಯ-೭೬:ಅರ್ಥ: ಅರ್ಜುನನ ಚಿಂನೆ- ಅವಳ ಸೌಂದರ್ಯವು ನನ್ನನ್ನು ಪೂರ್ಣವಾಗಿ ಸೆಳೆಯಲು, ನಾನೇ ಆ ಆನೆಯನ್ನು ನಿಲ್ಲಿಸಿ, ಪುನ ಅವಳನ್ನು ನೋಡಿದಾಗ, ಆ ವನಿತೆ ನನ್ನನ್ನೂ ಪ್ರೇಮದ ಕಡೆಗೆ ಬಾಗಿಸಿ ತಾನೂ ಈ ಕಡೆಗೆ ವಲೆದು, ನನಗೆ ಸೋತು ಪ್ರೀತಿಯಿಂದ ನೋಡಿದಳು. ಇಂತು ಎಲವೋ ಸತ್ತದ್ದನ್ನು ಹೊತ್ತಿರವುದನ್ನು ಕಂಡು ತಿಳಿಯದ ಬೆಪ್ಪನಲ್ಲ ತಾನು, ಅವಳ ಮನಸ್ಸನ್ನು ಅರಿತೆನು, ಕಾಂತಿಯ ಕಣ್ಣುಳ್ಳ ಆ ಸುಭದ್ರೆಯ ನೋಟದ ಮರ್ಮವನ್ನು ತಿಳಿದೆನು.
- ಹರಣೀಪ್ಲುತ ವೃತ್ತ || ದಳಿತ ಕಮಲಚ್ಛಾಯಾಟೋಪಂ ಮನೋಜ ರಸ ಪ್ರಭಾ
- ವಳಯ ನಿಳಯಂ ಪ್ರೋದ್ಯದ್ಭ್ರೂವಿಭ್ರಮಂ ಮುಕುಳೀಕೃತಂ||
- ಲಳಿತ ಮಧುರಂ ಲಜ್ಜಾಳೋಳಂ ಸ್ಮರಾಕುಳಿತಂ ಮನಂ
- ದಳಿತಮಪಸನ್ಮುಗ್ಧಂ ಸ್ನಿಗ್ಧಂ ವಿಳೋಕನಮೋಪಳಾ|| ೭೭ ||
- ಪದ್ಯ-೦೭೭:ಪದವಿಭಾಗ-ಅರ್ಥ:ದಳಿತ ಕಮಲಚ್ಛಾಯ ಆಟೋಪಂ (ಅರಳಿದ ಕಮಲದ ಬಣ್ಣವುಳ್ಳದ್ದು), ಮನೋಜ(ಮನ್ಮಥನ) ರಸ (ಭಾವ- ಪ್ರೇಮರಸ) ಪ್ರಭಾವಳಯ ನಿಳಯಂ (ಪ್ರೇಮರಸದ ಪ್ರಭಾ ಆವರಣಕ್ಕೆ ಮನೆಯಾಗಿದೆ.) ಪ್ರೋದ್ಯದ್ಭ್ರೂವಿಭ್ರಮಂ (ಪ್ರೋದ್ಯತ್ ಭ್ರೂ ವಿಭ್ರಮಂ- ಎತ್ತರದ ಹುಬ್ಬಿನ ವಿಲಾಸದ್ದು) ಮುಕುಳೀಕೃತಂ ಲಳಿತ ಮಧುರಂ ಲಜ್ಜಾಳೋಳಂ (ಮುಕುಳೀಕೃತಂ-ಮುಚ್ಚಿದ- ಮೊಗ್ಗಿನ ಆಕಾರದ್ದು) ಸ್ಮರಾಕುಳಿತಂ (ಸ್ಮರ ಆಕುಳಿತಂ- ಮನ್ಮಥನಿಂದ ಬಾಧಿತ/ಆವರಿಲ್ಪಟ್ಟುದು; ಸುಂದರವೂ ಮಧುರವೂ ಆದುದು;) ಮನಂದಳಿತಂ(ಮನಂ- ತಳಿತಂ ಮನಸ್ಸನು ಅರಳಿಸುವಂತಹದು) ಅಪಸನ್ಮುಗ್ಧಂ ಸ್ನಿಗ್ಧಂ (ಅಪಸನ್ ಮುಗ್ಧಂ-ಮುಗ್ಧತೆಮೀರಿದುದು; ಸ್ನಿಗ್ಧಂ- ನಯ/ ಕೋಮಲವಾದುದು.) <-/ವಿಳೋಕನಂ(ನೋಟವು) ಓಪಳಾ (ಪ್ರಿಯಳಾದ ಸುಭದ್ರೆಯ)
- ಪದ್ಯ-೭೭:ಅರ್ಥ: ಪ್ರಿಯಳಾದ ಸುಭದ್ರೆಯ ನೋಟವು ಅರಳಿದ ಕಮಲದ ಬಣ್ಣವುಳ್ಳದ್ದು ; ಪ್ರೇಮರಸದ ಪ್ರಭಾ ಆವರಣಕ್ಕೆ ಮನೆಯಾಗಿದೆ.. ಎತ್ತಿದ ಹುಬ್ಬಿನ ವೈಭವವುಳ್ಳದ್ದು ; ಮೊಗ್ಗಾಗಿ ಮಾಡಲ್ಪಟ್ಟುದು; ಸುಂದರವೂ ಮಧುರವೂ ಆದುದು; ಲಜ್ಜೆಯಲ್ಲಿ ಆಸಕ್ತವಾದುದು; ಮನ್ಮಥನಿಂದ ಬಾಸಲ್ಪಟ್ಟುದು; ಮನಸ್ಸನ್ನು ಅರಳಿಸುವಂತಹದು; ಮುಗ್ಧತೆಮೀರಿದುದು (ಸರಳವಾದುದು) ಕೋಮಲವಾದುದು.
- ಚಂ||ಉಡಮೊಗಮೆಂಬ ತಾವರೆಯ ನೀಳ್ದೆಸೞೊಳ್ ಮಱಿದುಂಬಿ ಪಾಯ್ದೊಡಂ
- ಬಡನೊಳಕೊಂಡು ಕಣ್ಮಲರ ಬೆಳ್ಪುಗಳಾಲಿಯ ಕೞ್ಪಿನೊಳ್ ಪೊದ|
- ಳ್ದೊಡನೊಡನೋಡುವಟ್ಟೆನಗೆ ಸಂತಸಮಂ ಮಱುಕಕ್ಕೆ ಮಾಣ್ದೊಡೀ
- ನಡೆಗಿಡೆ ಸತ್ಯಮಂ ತಮಮುಮಂ ಕಡೆಗಣ್ಣೊಳೆ ಕಂಡೆನೋಪಳಾ|| ೭೮||
- ಪದ್ಯ-೭೭:ಪದವಿಭಾಗ-ಅರ್ಥ: ಉಡಮೊಗಮೆಂಬ ತಾವರೆಯ (ಬಾಗೆಹೂವಿನ ತಾವರೆಮುಖ) ನೀಳ್ದ ಎಸೞೊಳ್ ಮಱಿದುಂಬಿ ಪಾಯ್ದು (ತಾವರೆಯ ನೀಳವಾದ ಎಸಳುಗಳಲ್ಲಿ ಮರಿದುಂಬಿಯು ಹೋಗಿ) ಒಡಂಬಡನು ಒಳಕೊಂಡು (ಒಪ್ಪಿಗೆ ಪಡದು) ಕಣ್ಮಲರ (ಕಣ್ ಅಲರ್ -ಹೂವಿನಂತಿರುವ ಕಣ್ಣಿನ ) ಬೆಳ್ಪುಗಳಾಲಿಯ ಕೞ್ಪಿನೊಳ್ (ಬಿಳಿಯಭಾಗದ ಮಧ್ಯದ ಕಪ್ಪುಪಾಪೆಯಲ್ಲಿ,) ಪೊದಳ್ದು (ಸೇರಿಹೊಂದಿಕೊಂಡು) ಒಡನೆ ಒಡನೋಡುವಟ್ಟ ಎನಗೆ (ಆಗಲೇ ಜೊತೆಯಲ್ಲಿಯೇ ಅವಳನ್ನೇ ನೋಡುತ್ತಿರುವ ನನಗೆ) ಸಂತಸಮಂ ಮಱುಕಕ್ಕೆ (ಸಂತೋಷವನ್ನೂ ಸಂತಾಪವನ್ನೂ) ಮಾಣ್ದೊಡೆ (ಬಿಟ್ಟರೆ) ಈ ನಡೆಗಿಡೆ (ಈ ಕ್ರಿಯೆ ನಿಂತುಹೋದಾಗ) ಸತ್ಯಮಂ ತಮಮುಮಂ ) ಕಡೆಗಣ್ಣೊಳೆ ಕಂಡೆನು ಓಪಳಾ(ಪ್ರಿಯಳಾ) (ಪ್ರಿಯಳಾದ ಅವಳ ಕಡೆಗಣ್ಣಿನಲ್ಲಿ ಸತ್ವ (ಪ್ರೇಮ)ಮತ್ತು ತಮೋಗುಣ (ಕಾಮ)ಗಳನ್ನು ಏಕತ್ರ ನೋಡುತ್ತಿದ್ದೇನೆ
- ಪದ್ಯ-೭೭:ಅರ್ಥ: . ಬಾಗೆಹೂವಿನ ತಾವರೆಮುಖ ಎಂಬಂತಿರುವ ಅವಳ ಮುಖವೆಂಬ ತಾವರೆಯ ದೀರ್ಘವಾದ ಎಸಳುಗಳಲ್ಲಿ ಮರಿದುಂಬಿಯು ಹೋಗಿ ಸೇರಿ ಸಮನ್ವಯಗೊಂಡಿರುವಂತೆ ಹೂವಿನಂತಿರುವ ಅವಳ ಕಣ್ಣಿನ ಬಿಳಿಯ ಬಣ್ಣವು ಗುಡ್ಡೆಯ ಕಪ್ಪು ಬಣ್ಣದಲ್ಲಿ ಹೊಂದಿಕೊಂಡು ಆಗಲೇ ಜೊತೆಯಲ್ಲಿಯೇ ಅವಳನ್ನೇ ನೋಡುತ್ತಿರುವ ನನಗೆ (ಅವಳ ಪ್ರೇಮದ)ಸಂತೋಷವನ್ನೂ (ಕಾಮದ) ಸಂತಾಪವನ್ನೂ ನಾನು ಅವಳ ಕಡೆಗಣ್ಣಿನಲ್ಲಿ ಸತ್ವ (ಪ್ರೇಮ)ಮತ್ತು ತಮೋಗುಣ (ಕಾಮ)ಗಳನ್ನು ಏಕತ್ರ ನೋಡುತ್ತಿದ್ದೇನೆ
- ಚಂ|| ಒದವಿದ ಬೇಟವಪ್ಪೊಡೆನಗತ್ತಳಗಂ ಬಗೆವೇೞ್ವೊಡೆನ್ನ ಮೇ
- ಳದ ಕೆಳೆಯರ್ಕಳಿಲ್ಲವಳುಮಪ್ಪೊಡೆ ಜವ್ವನಮತ್ತೆ ನಾಣ ಕಾ|
- ಪದು ಪಿರಿದೋತು ಮಾತಡಕಲೊಂದಿದ ದೂದವರಿಲ್ಲ ನೆಟ್ಟನ
- ಪ್ಪುದಱಿನದಿಂತರಣ್ಯರುದಿತಂ ವಲವೆನ್ನೊಲವಿಂದುವಕ್ತ್ರೆಯಾ|| ೭೯ ||
- ಪದ್ಯ-೭೯:ಪದವಿಭಾಗ-ಅರ್ಥ:ಒದವಿದ ಬೇಟವಪ್ಪೊಡೆ ಎನಗೆ ಅತ್ತಳಗಂ (ನನಗೆ ಈಗ ಒದಗಿದ ಪ್ರೇಮವಾದರೋ ಸಹಿಸಲಶಕ್ಯವಾದುದು) ಬಗೆವೇೞ್ವೊಡೆ ಎನ್ನ ಮೇಳದ ಕೆಳೆಯರ್ಕಳಿಲ್ಲ ( ಮನಸ್ಸನ್ನು (ಅವಳಿಗೆ) ತಿಳಿಸೋಣವೆಂದರೆ ಆಪ್ತ ಸ್ನೇಹಿತರಿಲ್ಲ) ಅವಳುಂ ಅಪ್ಪೊಡೆ ಜವ್ವನಮತ್ತೆ ( ಸುಭದ್ರೆಯಾದರೋ ಯವ್ವನದಿಂದ ಮದಿಸಿರುವವಳು;) ನಾಣ ಕಾಪದು ಪಿರಿದು (ಅವಳಿಗೆ ನಾಚಿಕೆಯ ತಡೆ ದೊಡ್ಡದು) ಓತು ಮಾತಡಕಲು ಒಂದಿದ ದೂದವರಿಲ್ಲ (ಪ್ರೀತಿಸಿ ಮಾತಾಡೋಣವೆಂದರೆ ನಂಬಿದ ದೂತರಿಲ್ಲ.) ನೆಟ್ಟನೆ ಅಪ್ಪುದಱಿನದಿಂತು ಅರಣ್ಯರುದಿತಂ (ನಿಜಕ್ಕೂ ಆದ್ದರಿಂದ ಇದು ಅರಣ್ಯರೋದನವಾಗಿದೆ) ವಲಂ! ಎನ್ನೊಲವು ಇಂದುವಕ್ತ್ರೆಯಾ(ಚಂದ್ರಮುಖಿಯ ನನ್ನ ಪ್ರೇಮವು ವಲಂ-ನಿಜಕ್ಕೂ)
- ಪದ್ಯ-೭೯:ಅರ್ಥ: ನನಗೆ ಈಗ ಒದಗಿದ ಪ್ರೇಮವಾದರೋ ಸಹಿಸಲಶಕ್ಯವಾದುದು. ಮನಸ್ಸನ್ನು (ಅವಳಿಗೆ) ತಿಳಿಸೋಣವೆಂದರೆ ಆಪ್ತ ಸ್ನೇಹಿತರಿಲ್ಲ ; ಸುಭದ್ರೆಯಾದರೋ ಯವ್ವನದಿಂದ ಮದಿಸಿರುವವಳು; ಅವಳಿಗೆ ನಾಚಿಕೆಯ ತಡೆ ದೊಡ್ಡದು. ಪ್ರೀತಿಸಿ ಮಾತಾಡೋಣವೆಂದರೆ ನಂಬಿದ ದೂತರಿರಿಲ್ಲ. ಆದುದರಿಂದ ಚಂದ್ರಮುಖಿಯಾದ ಸುಭದ್ರೆಗೆ ಸಂಬಂಸಿದ ನನ್ನ ಪ್ರೇಮವು ವಲಂ-ನಿಜಕ್ಕೂ ಇದು ಅರಣ್ಯರೋದನವಾಗಿದೆ.
- ವ|| ಎಂದಿಂತು ನಲ್ಲಳಂ ನೆನೆದು ಕಣ್ಗಾಪನೆ ಕಾದು ಚಿಂತಾಸಮುದ್ರಾಂತರ ಪರಿವೃತನಾಗಿ ಸೈರಿಸಲಾಱದೆಪೊೞಲಂ ತೊೞಲ್ದು ನೋೞ್ಪ ಬಗೆದಂದು ರಾಜಮಂದಿರದಿಂ ಪೊಱಮಟ್ಟು ಬರೆ ತನ್ನಂ ಕಾಣಲೊಡಮಱಿದು ನುಡಿಯಿಸಿ ಮೆಚ್ಚಿ ಮೇಳದ ನಾಗರಿಕ ವಿಟ ವಿದೂಷಕ ಪೀತಮರ್ದಕರ್ಕಳ್ವೆರಸು ಕಾಮದೇವನೋಲಗಕ್ಕೆ ಬರ್ಪಂತೆ ಸೂಳೆಗೇರಿಯೊಳಗನೆ ಬರ್ಪುದುಮಲ್ಲಿ-
- ವಚನ:ಪದವಿಭಾಗ-ಅರ್ಥ:ಎಂದು ಇಂತು ನಲ್ಲಳಂ ನೆನೆದು ಕಣ್ಗಾಪನೆ ಕಾದು (ಅವಳು ಕಣ್ಣಿಗೆ ಬೀಳುವುದನ್ನೇ ಕಾಯುತ್ತಾ) ಚಿಂತಾಸಮುದ್ರಾಂತರ ಪರಿವೃತನಾಗಿ ಸೈರಿಸಲಾಱದೆ (ಚಿಂತೆಯ ಸಮುದ್ರದದಿಂದ ಸುತ್ತುವರಿದವನಾಗಿ ಸಹಿಸಲಾರದೆ) ಪೊೞಲಂ ತೊೞಲ್ದು ನೋೞ್ಪ ಬಗೆದು (ನಗರವನ್ನು ಸುತ್ತಿ ನೋಡಿ ಬರೋಣವೆಂದು ಮನಸ್ಸು ನಾಡಿ- ಮಾಡಿದನು.) ಅಂದು ರಾಜಮಂದಿರದಿಂ ಪೊಱಮಟ್ಟು ಬರೆ (ಅರಮನೆಯಿಂದ ಹೊರಟು ಬರಲು) ತನ್ನಂ ಕಾಣಲೊಡಂ ಅಱಿದು ನುಡಿಯಿಸಿ ಮೆಚ್ಚಿ ಮೇಳದ ನಾಗರಿಕ ವಿಟ ವಿದೂಷಕ (ಅರಮನೆಯಿಂದ ಹೊರಟು ಬರಲು ತನ್ನನ್ನು ಕಂಡು ತಕ್ಷಣವೇ ಗುರುತಿಸಿ ಮಾತನಾಡಿ ಮೆಚ್ಚಿದ ಜೊತೆಗಾರರಾದ ನಾಗರಿಕ ವಿಟ / ಸ್ತ್ರೀಲೋಲ ಹಾಸ್ಯಗಾರ ಮತ್ತು) ಪೀತಮರ್ದಕರ್ಕಳ್ ವೆರಸು (ರಾಜಕುಮಾರರ ಸ್ತ್ರೀಸಹಾಯಕರ ಒಡಗೂಡಿ) ಕಾಮದೇವನ ಓಲಗಕ್ಕೆ ಬರ್ಪಂತೆ (ಬರುವಂತೆ) ಸೂಳೆಗೇರಿಯೊಳಗನೆ ಬರ್ಪುದುಂ ಅಲ್ಲಿ-
- ವಚನ:ಅರ್ಥ:ಹೀಗೆ ಅರ್ಜುನನು ಪ್ರಿಯಳನ್ನು ಜ್ಞಾಪಿಸಿಕೊಂಡು ಅವಳು ಕಣ್ಣಿಗೆ ಬೀಳುವುದನ್ನೇ ಕಾಯುತ್ತಾ ಚಿಂತಾಸಮುದ್ರದ ಮಧ್ಯದಿಂದ ಸುತ್ತುವರಿಯಲ್ಪಟ್ಟವನಾಗಿ ಸಹಿಸಲಾರದೆ (ಮನಶಾಂತಿಗಾಗಿ) ನಗರವನ್ನು ಸುತ್ತಿ ನೋಡಿ ಬರೋಣವೆಂದು ಮನಸ್ಸು ಮಾಡಿ, ಅರಮನೆಯಿಂದ ಹೊರಟು ಬರಲು ತನ್ನನ್ನು ಕಂಡು ತಕ್ಷಣವೇ ಗುರುತಿಸಿ ಮಾತನಾಡಿ ಮೆಚ್ಚಿದ ಜೊತೆಗಾರರಾದ ನಾಗರಿಕ (ಜಾಣನಾದ ಪಟ್ಟಣದವನು) ವಿಟ (ಸ್ತ್ರೀಲೋಲರಾದ ರಾಜಕುಮಾರರ ಸ್ನೇಹಿತ) ವಿದೂಷಕ (ಹಾಸ್ಯಗಾರ) ಪೀತಮರ್ದಕರೊಡಗೂಡಿ ಮನ್ಮಥನ ಸಭೆಗೆ ಬರುವಂತೆ ಸೂಳೆಗೇರಿಯೊಳಗೆ ಬಂದಾಗ ಅಲ್ಲಿ.
- ಮ|| ಮೃಗಭೂಋದ್ಧ ವಿಳಾಸಿನೀ ಕಬರಿಕಾ ಬಂಧಂಗಳಂ ಪೊತ್ತು ಮ
- ಲ್ಲಿಗೆಯೊಳ್ ಭಾವಿಸಿ ಧೂಪದೊಳ್ ಪೊರೆದು ತತ್ಕಾಂತಾ ರತಿ ಸ್ವೇದ ಬಿಂ|
- ದುಗಳೊಳ್ ನಾಂದು ಕುರುಳ್ಗಳೊಳ್ ಸುೞಿದು ಮುಂದೊಂದಿರ್ದ ಸೌಭಾಗ್ಯ ಘಂ
- ಟೆಗಳೊಂದಿಂಚರದೊಳ್ ಪಳಂಚಿ ಸುೞದತ್ತಂದೊಂದು ಮಂದಾನಿಳಂ|| ೮೦ ||
- ಪದ್ಯ-೮೦:ಪದವಿಭಾಗ-ಅರ್ಥ:ಮೃಗಭೂ ಋದ್ಧ ವಿಳಾಸಿನೀ ಕಬರಿಕಾ ಬಂಧಂಗಳಂ ಪೊತ್ತು (ಕಸ್ತೂರಿಯಿಂದ ಹೆಚ್ಚಿದ ತರುಬಿನ ಗಂಟುಗಳನ್ನು ಹೊತ್ತು) ಮಲ್ಲಿಗೆಯೊಳ್ ಭಾವಿಸಿ ಧೂಪದೊಳ್ ಪೊರೆದು (ಮಲ್ಲಿಗೆಯ ಪರಿಮಳ, ಧೂಪಹೊಗೆ ಕೊಟ್ಟುಕೊಂಡು) ತತ್ ಕಾಂತಾ ರತಿ ಸ್ವೇದ ಬಿಂದುಗಳೊಳ್ ನಾಂದು(ಆ ಸ್ತ್ರೀಯರ ರತಿಕ್ರೀಡೆಯಲ್ಲಿನ ಬೆವರ ಹನಿಯಲ್ಲಿ ತೊಯ್ದು) ಕುರುಳ್ಗಳೊಳ್ ಸುೞಿದು (ಮುಂಗುರುಳಿನಲ್ಲಿ ಸುತ್ತಾಡಿ) ಮುಂದೆ ಒಂದಿರ್ದ ಸೌಭಾಗ್ಯ ಘಂಟೆಗಳ ಒಂದು ಇಂಚರದೊಳ್ (ದನಿ) ಪಳಂಚಿ (ವೇಶ್ಯಾಗೃಹದ ಮುಂದೆ ಕಟ್ಟಿದ ಇಂಪಾದ ಘಂಟಾನಾದದಲ್ಲಿ ತಾಗಿ,) ಸುೞಿದತ್ತು ಅದೊಂದು ಮಂದಾನಿಳಂ (ಒಂದು ಮಂದಮಾರುತವು ಬೀಸಿತು)
- ಪದ್ಯ-೮೦:ಅರ್ಥ: . ಅಲ್ಲಿಯ ಸುಂದರ ಸ್ತ್ರೀಯರು ತಮ್ಮ ತುರುಬಿನಲ್ಲಿ ವಿಶೇಷವಾಗಿ ಲೇಪಿಸಿಕೊಂಡಿದ್ದ ಕಸ್ತೂರಿಯ ಕಂಪನ್ನು ಧರಿಸಿ ಮಲ್ಲಿಗೆಯ ಪರಿಮಳ, ಧೂಪಹೊಗೆ ಕೊಟ್ಟುಕೊಂಡು ಆ ಸ್ತ್ರೀಯರ ರತಿಕ್ರೀಡೆಯ ಬೆವರ ಹನಿಯಲ್ಲಿ ತೊಯ್ದು, ಮುಂಗುರುಳಿನಲ್ಲಿ ಸುತ್ತಾಡಿ, ವೇಶ್ಯಾಗೃಹದ ಮುಂದೆ ಕಟ್ಟಿದ ಇಂಪಾದ ಘಂಟಾನಾದದಲ್ಲಿ ತಾಗಿ, ಅಲ್ಲಿ ಆಗ ಒಂದು ಮಂದಮಾರುತವು ಬೀಸಿತು.
- ವ|| ಆಗಳಾಱುಂ ಋತುಗಳ ಪೂಗಳನೊಂದುಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದೋಜನ ಸಾಲೆಯಿರ್ಪಂತಿರ್ದ ಪೂವಿನ ಸಂತೆಯೊಳ್ ವಸಂತಕಾಂತೆಯರಂತೆ-
- ವಚನ:ಪದವಿಭಾಗ-ಅರ್ಥ:ಆಗಳು ಆಱುಂ (ಆರು) ಋತುಗಳ ಪೂಗಳನು ಒಂದುಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ (ಪುಷ್ಪಬಾಣಗಳನ್ನು ಮಾಡಬೇಕೆಂದು ಕಾಮದೇವನು) ಮಾಡಿದ ಓಜನ ಸಾಲೆಯಿರ್ಪಂತೆ ಇರ್ದ(ಕಮ್ಮಾರನ ಬಾಣದತುದಿ ಹದಮಾಡುವ ಶಾಲೆಯಂತೆ ಇದ್ದ) ಪೂವಿನ ಸಂತೆಯೊಳ್ ವಸಂತಕಾಂತೆಯರಂತೆ (ವಸಂತ ಋತುವಿನ ಅಧಿ ದೇವತೆಯರಂತೆ )-
- ವಚನ:ಅರ್ಥ:ಆಗ ಆರು ಋತುಗಳ ಹೂವುಗಳನ್ನೂ ಒಟ್ಟುಗೂಡಿಸಿ ತನ್ನ ಪುಷ್ಪಬಾಣಗಳನ್ನು ಮಾಡಬೇಕೆಂದು ಕಾಮದೇವನು ಮಾಡಿದ ಅಕ್ಕಸಾಲೆಯ ಮನೆಯ ಹಾಗಿದ್ದ ಹೂವಿನ ಸಂತೆಯು ಕಂಡಿತು. ಹೂವಿನ ಸಮೂಹದ ಮಧ್ಯೆ ಇರುವ ವಸಂತ ಋತುವಿನ ಅಧಿ ದೇವತೆಯರಂತೆ- (ಮಾಲೆಗಾತಿಯರು)
- ವ|| ಎತ್ತಿದ ತೋಳ ಮೊತ್ತಮೊದಲಂಗಜ ಲಂಪಟ ವಿದ್ದೆಗೆತ್ತಿದಂ
- ತೆತ್ತಮಪೂರ್ವಮಾಗೆ ಪೊಸವಾಸಿಗಮಂಗಜ ಚಕ್ರವರ್ತಿಗೆಂ|
- ದೆತ್ತಿದ ಮೀನಕೇತನಮನೋತ್ತರಿಸುತ್ತಿರೆ ಚಲ್ಲವಾಡಿ ಪೂ
- ವೆತ್ತುವ ಮಾಲೆಗಾರ್ತಿಯರನೆಂದರಿಕೇಸರಿ ನಿಂದು ನೋಡಿದಂ|| ೮೧||
- ಪದ್ಯ-೮೧:ಪದವಿಭಾಗ-ಅರ್ಥ:ಎತ್ತಿದ ತೋಳ ಮೊತ್ತಮೊದಲ ಅಂಗಜ ಲಂಪಟ ವಿದ್ದೆಗೆ ಅತ್ತಿದಂತೆ(ಎತ್ತಿದ ತೋಳ- ಬುಡದ ಮೊದಲ ಮನ್ಮಥನ ಗಾಳಿಪಟ ಆಡಿಸಲು ಎತ್ತಿದಂತೆ) ಎತ್ತಂ ಅಪೂರ್ವಮಾಗೆ (ಎಲ್ಲೆಡೆ ವಿಶೇಷವಾಗಲು) ಪೊಸವಾಸಿಗಂ (ಹೊಸ ಬಾಸಿಗ, ಹೂವಿನಹಾರ) ಅಂಗಜ ಚಕ್ರವರ್ತಿಗೆಂದು (ಕಾಮರಾಜನಿಗೆ) ಎತ್ತಿದ ಮೀನಕೇತನಮನು ಒತ್ತರಿಸುತ್ತಿರೆ (ಮೀನಿನ ಧ್ವಜವನ್ನು ತಿರಸ್ಕರಿಸುತ್ತಿರಲು) ಚಲ್ಲವಾಡಿ ಪೂವ ಎತ್ತುವ ಮಾಲೆಗಾರ್ತಿಯರನು ಅಂದು ಅರಿಕೇಸರಿ ನಿಂದು ನೋಡಿದಂ
- ಪದ್ಯ-೮೧:ಅರ್ಥ: . ಎತ್ತಿದ ತೋಳ- ಬುಡದ ಮೊದಲ ಮನ್ಮಥನ ಗಾಳಿಪಟದಂತೆ ಆಡಿಸಲು ಎತ್ತಿದ ಅಪೂರ್ವ ಸೌಂದರ್ಯದಿಂದ ಕೂಡಿರಲು ಹೊಸದಾಗಿ ಕಟ್ಟಿದ ಹಾರವು ಮನ್ಮಥ ಚಕ್ರವರ್ತಿಗೆಂದೆತ್ತಿದ ಮೀನಿನ ಧ್ವಜವನ್ನು ತಿರಸ್ಕರಿಸುತ್ತಿರಲು ಚೆಲ್ಲಾಟಗಳಿಂದ ಹೂವನ್ನು ಮೇಲೆತ್ತಿ ತೋರಿಸುತ್ತಿರುವ ಅವರನ್ನು ಅರಿಕೇಸರಿಯು ನಿಂತು ನೋಡಿದನು
- ವ|| ನೋಡಿ ನಾಡಾಡಿಯಲ್ಲದಾಕೆಗಳ ಜೋಡೆಗೆಯ್ತಂಗಳಂ ಕಂಡಿದು ಮನೆಯಾಣ್ಮನಂ ಮಾರುವಂದಮಲ್ಲದೆ ಪೂ ಮಾರುವಂದಮಲ್ತೆಂದು ಮುಗುಳ್ನಗೆ ನಗುತುಂ ಬರ್ಪನೊಂದೆಡೆಯೊಳ್ ಮನೆಯಾಣ್ಮನ ಕಣ್ಣೆಮೆಯೆ ಕಾಂಡಪಟಮಾಗೆಯುಂ ಬಗೆಯಾಣ್ಮನ ಕಣ್ಣೆಮೆಯೆ ದೂದವಿಯಾಗೆಯುಂ ಬಗೆದೆಡೆಯನೆಯ್ದಿ ಬಗೆದ ಬಗೆಯಂ ಬಗೆದಂತೆ ತೀರ್ಚಿ ಪೋಪ ಜೋಡೆಯರಂ ಕಂಡು ವಿಕ್ರಮಾರ್ಜುನನಿಂತೆಂದಂ-
- ವಚನ:ಪದವಿಭಾಗ-ಅರ್ಥ: ನೋಡಿ ನಾಡಾಡಿಯಲ್ಲದ ಆಕೆಗಳ ಜೋಡೆಗೆಯ್ತಂಗಳಂ ಕಂಡು (ಸಾಮಾನ್ಯ ನಡತೆಯಲ್ಲದ ಅವರ ಜಾರಚೇಷ್ಟೆಗಳನ್ನು ಕಂಡು ) ಇದು ಮನೆಯ ಆಣ್ಮನಂ (ಗಂಡನನ್ನು) ಮಾರುವ ಅಂದಂ (ರೀತಿ) ಅಲ್ಲದೆ ಪೂ ಮಾರುವ ಅಂದಮು ಅಲ್ತೆಂದು ಮುಗುಳ್ನಗೆ ನಗುತುಂ, ಬರ್ಪನು ಒಂದೆಡೆಯೊಳ್ ಮನೆಯ ಆಣ್ಮನ ಕಣ್ಣೆಮೆಯೆ ಕಾಂಡಪಟಂ ( ಆಣ್ಮನ ತೆರೆಯನ್ನಾಗಿ, -ಗಂಡನ ಕಣ್ಣುತಪ್ಪಿಸಿ) ಆಗೆಯುಂ ಬಗೆಯ ಆಣ್ಮನ (ಮನದ ಪ್ರೀತಿಯ ಪರಪುರುಷನ) ಕಣ್ಣೆಮೆಯೆ ದೂದವಿಯಾಗೆಯುಂ (ಸಖಿ ದಾಸಿಯಾಗಿಯೂ) ಬಗೆದ ಎಡೆಯನು ಎಯ್ದಿ () ಬಗೆದ ಬಗೆಯಂ ಬಗೆದಂತೆ ತೀರ್ಚಿ ಪೋಪ (ತೀರಿಸಿಕೊಂಡು ಹೋಗುವ) ಜೋಡೆಯರಂ(ಜಾರೆಯರನ್ನು) ಕಂಡು ವಿಕ್ರಮಾರ್ಜುನನು ಇಂತು ಎಂದಂ-
- ವಚನ:ಅರ್ಥ:ಸಾಮಾನ್ಯ ನಡತೆಯಲ್ಲದಅವರ ಜಾರಚೇಷ್ಟೆಗಳನ್ನು ಕಂಡು, ಇದು ಮನೆಯ ಗಂಡನನ್ನು ಮಾರುವ ರೀತಿಯಲ್ಲದೆ ಹೂವನ್ನು ಮಾರುವ ರೀತಿಯಲ್ಲವೆಂದು ಹುಸಿನಗೆಯನ್ನು ನಗುತ್ತ ಮುಂದೆ ನಡೆದನು. ಒಂದು ಕಡೆಯಲ್ಲಿ ಮನೆಯೊಡೆಯನ ಕಣ್ಣರೆಪ್ಪೆಯನ್ನು ತೆರೆಯನ್ನಾಗಿಯೂ ಮನದೊಲವಿನ ಮಿಂಡನ ಕಣ್ಣ ದೃಷ್ಟಿಯನ್ನೇ ಸಖಿಯನ್ನಾಗಿಯೂ ಭಾವಿಸಿದ ಆಸೆಯನ್ನ ಅವನೊಡನೆ ಸೇರಿ ಇಷ್ಟಾರ್ಥವನ್ನು ಬಗೆದಂತೆ ತೀರಿಸಿಕೊಂಡು ಹೋಗುವ ಜಾರೆಯರನ್ನು ಕಂಡು ವಿಕ್ರಮಾರ್ಜುನನು ಹೀಗೆಂದನು-
- ಮ|| ಕುಱುಪಂ ಪುರ್ವಿನ ಜರ್ವೆ ತೋರೆ ಬಗೆಯಂ ಕಣ್ಸನ್ನೆಗಳ್ ಪೇೞೆ ತ
- ನ್ನೆಱಕಂ ತನ್ನ ಮನಕ್ಕೆ ಕೂಡೆ ಕೆಲಕಂ ಗಂಡಂಗಮೊಳ್ಪಂ ಕರಂ|
- ಮೆರೆವಾ ಪ್ರೌಢೆಯ ಜೋಡೆಯಕ್ಕುಮೆಡೆಯೊಳ್ ದೂಂಟಿಂದೆ ದೂರಟಿಂಗೆ ಪೆ
- ರ್ವಯಂ ಪೊಯ್ಸಿ ಕೆಲಕ್ಕೆ ನಾಣ್ಚಿ ತಲೆಗುತ್ತಿರ್ಪಾಕೆಯೇಂ ಜೋಡೆಯೇ|| ೮೨ ||
- ಪದ್ಯ-೮೨:ಪದವಿಭಾಗ-ಅರ್ಥ:ಕುಱುಪಂ ಪುರ್ವಿನ ಜರ್ವೆ ತೋರೆ (ಸಂಕೇತಸ್ಥಳವನ್ನು ಹುಬ್ಬನ್ನು ಜರಗಿಸುವುದರಿಂದಲೇ ತೋರುವ) ಬಗೆಯಂ ಕಣ್ಸನ್ನೆಗಳ್ ಪೇೞೆ ತನ್ನೆಱಕಂ (ತನ್ನ ಮನಸ್ಸಿನ ಬಯಕೆಯವನ್ನು ಕಣ್ಣಿನ ಸನ್ನೆಗಳಿಂದಲೇ ತೋರಿಸುತ್ತ,) ತನ್ನ ಮನಕ್ಕೆ ಕೂಡೆ ಕೆಲಕಂ ಗಂಡಂಗಂ ಒಳ್ಪಂ ಕರಂ ಮೆರೆವಾ ಪ್ರೌಢೆಯ ಜೋಡೆಯಕ್ಕುಂ ಎಡೆಯೊಳ್ -ಎಲ್ಲರ ನಡುವೆ, (ತನ್ನ ಪ್ರೀತಿಯು ತನ್ನ ಮನಸ್ಸಿಗೆ ಒಪ್ಪಿರಲು ತನ್ನ ಪಕ್ಕದವ ಮತ್ತು ತನ್ನ ಗಂಡ ಇವರಿಗೆ ಒಳಿತನ್ನು ಚೆನ್ನಾಗಿ ನೆಡೆಸುವ ಆ ಚತುರಳೇ ಎಲ್ಲರ ನಡುವೆ ನಿಜವಾದ ಜಾರೆ.) ದೂಂಟಿಂದೆ ದೂರಟಿಂಗೆ (ಹೆಜ್ಜೆ ಹೆಜ್ಜೆಗೆ) ಪೆರ್ವಯಂ ಪೊಯ್ಸಿ (ಡಂಗುರ ಹೊಡಿಸಿ) ಕೆಲಕ್ಕೆ ನಾಣ್ಚಿ (ಪಕ್ಕದವರಿಗೆ- ಸಮಾಜಕ್ಕೆ ನಾಚಿ) ತಲೆಗುತ್ತಿರ್ಪ ಆಕೆಯೇಂ ಜೋಡೆಯೇ (ತಲೆತಗ್ಗಿಸುವಾಕೆ ಜಾರೆಯಾಗಬಲ್ಲಳೇ?)
- ಪದ್ಯ-೮೨:ಅರ್ಥ: ಸಂಕೇತಸ್ಥಳವನ್ನು ಹುಬ್ಬನ್ನು ಜರಗಿಸುವುದರಿಂದಲೇ ತೋರುವ, ತಮ್ಮ ಮನಸ್ಸಿನ ಬಯಕೆಯವನ್ನು ಕಣ್ಣಿನ ಸನ್ನೆಗಳಿಂದಲೇ ತೋರಿಸುತ್ತ, ತನ್ನ ಪ್ರೀತಿಯು ತನ್ನ ಮನಸ್ಸಿಗೆ ಒಪ್ಪಿರಲು ತನ್ನ ಪಕ್ಕದವ ಮತ್ತು ತನ್ನ ಗಂಡ ಇವರಿಗೆ ಒಳಿತನ್ನು ಚೆನ್ನಾಗಿ ನೆಡೆಸುವ ಆ ಚತುರಳೇ ನಿಜವಾದ ಜಾರೆ. ಪಕ್ಕಪಕ್ಕಗಳಲ್ಲಿ ಹೆಜ್ಜೆ ಹೆಜ್ಜೆಗೂ ಡಂಗುರ ಹೊಡಿಸಿ ಅಕ್ಕಪಕ್ಕದವರಿಗೆ ನಾಚಿಕೊಂಡು ತಲೆತಗ್ಗಿಸುವಾಕೆ ಜಾರೆಯಾಗಬಲ್ಲಳೇ? (ನಾಚಿಕೆ ಬಿಟ್ಟವಳು ಮಾತ್ರಾ ಜಾರೆ ಎಂದು ಭಾವವೇ? ಆಥವಾ ತನ್ನ ಗುಟ್ಟನ್ನು ಬಿಡದವಳು ಎಂದೇ? )
- ಉ|| ಕೂರಿದುವಪ್ಪ ಕಣ್ಮಲರ್ಗಳಳ್ಳೆರ್ದೆಯೊಳ್ ತಡಮಾಡೆ ತಾಮೆ ಕಣ್
- ಪೇರಿಸೆ ಪುರ್ವು ನಾಲಗೆವೊಲಾಗೆ ಮನಂಬುಗಿಸಲ್ಕೆ ಬಲ್ಲೊಡಾ|
- ಜಾರೆಯೆ ಜಾರೆ ಪಾರೆನೆ ಕರಂ ಪಿರಿದುಂ ಗೞಪುತ್ತುಮಿರ್ಪಳಂ
- ಸಾರಿಕೆಯೆಂಬರಲ್ಲದಭಿಸಾರಿಕೆಯೆಂಬರೆ ಬುದ್ಧಿಯುಳ್ಳವರ್| | ೮೩ ||
- ಪದ್ಯ-೦೦:ಪದವಿಭಾಗ-ಅರ್ಥ:ಕೂರಿದುವಪ್ಪ (ತೀಕ್ಷ್ಣವಾದ) ಕಣ್ ಅಲರ್ಗಳು ಅಳ್ಳೆರ್ದೆಯೊಳ್ ತಡಮಾಡೆ (ಕಣ್ಣೆಂಬ ಹೂವುಗಳು ವಿಟನ ದುರ್ಬಲವಾದ ಎದೆಯನ್ನು ಅಲುಗಿಸಿ) ತಾಮೆ ಕಣ್ಪೇರಿಸೆ ಪುರ್ವು ನಾಲಗೆವೊಲ್ ಆಗೆ (ಹುಬ್ಬುಗಳನ್ನು ನಾಲಗೆಯಂತೆ ನುಡಿಸುವ ಹಾಗೆ ಚಲಿಸಿ) ಮನಂಬುಗಿಸಲ್ಕೆ ಬಲ್ಲೊಡೆ ಆ(ಅವನ ಮನಸ್ಸೊಳಗೆ ತನ್ನ ಇಂಗಿತ ಸೇರುವಂತೆ ಮಾಡಲು ಬಲ್ಲವಳು- ಅವಳು) ಜಾರೆಯೆ ಜಾರೆ (ನಿಜವಾದ ವೇಶ್ಯೆ.) ಪಾರೆನೆ ಕರಂ ಪಿರಿದುಂ ಗೞಪುತ್ತುಂ ಇರ್ಪಳಂ ಸಾರಿಕೆಯೆಂಬರು (ಬಾಯಿಬಡುಕಿ- ಗಿಣಿಯೆನ್ನುವರು) ಅಲ್ಲದ ಅಭಿಸಾರಿಕೆಯೆಂಬರೆ ಬುದ್ಧಿಯುಳ್ಳವರ್?
- ಪದ್ಯ-೦೦:ಅರ್ಥ: ತನ್ನ ತೀಕ್ಷ್ಣವಾದ ಕಣ್ಣೆಂಬ ಹೂವುಗಳು ವಿಟನ ದುರ್ಬಲವಾದ ಎದೆಯನ್ನು ಅಲುಗಿಸಿ, ಹುಬ್ಬುಗಳನ್ನು ನಾಲಗೆಯಂತೆ ನುಡಿಸಿ ಅವನ ಮನಸ್ಸೊಳಗೆ ತನ್ನ ಇಂಗಿತ ಸೇರುವಂತೆ ಮಾಡಲು ಬಲ್ಲವಳು ನಿಜವಾದ ವೇಶ್ಯೆ. ಜಾರತ್ವವನ್ನು ಕುರಿತು ವಿಶೇಷವಾಗಿ ಹರಟುವವಳನ್ನು ಗಿಣಿಯೆನ್ನುವರು ಅಲ್ಲದೆ ಅಭಿಸಾರಿಕೆಯೆಂದು ಬುದ್ಧಿಯುಳ್ಳವರು ಅನ್ನುತ್ತಾರೆಯೆ?
- ವ|| ಎಂದು ಪಾಣ್ಬರಂಕುಸನಾ ಪಾಣ್ಬೆಯರ ಗೆಯ್ವ ಗೆಯ್ತಂಗಳುಮಂ ತೋರ್ಪ ಸನ್ನೆಗಳುಮಂ ಆಡುವ ಮಿೞ್ತುಗೊಡ್ಡಂಗಳುಮಂ ಕಂಡು ಚೋದ್ಯಂಬಟ್ಟು-
- ವಚನ:ಪದವಿಭಾಗ-ಅರ್ಥ:ಎಂದು ಪಾಣ್ಬರ (ಜಾರೆಯರ) ಅಂಕುಸನು ಆ ಪಾಣ್ಬೆಯರ ಗೆಯ್ವ (ಮಾಡುವ) ಗೆಯ್ತಂಗಳುಮಂ (ಕಾರ್ಯಗಳನ್ನು) ತೋರ್ಪ ಸನ್ನೆಗಳುಮಂ ಆಡುವ ಮಿೞ್ತುಗೊಡ್ಡಂಗಳುಮಂ (ಮೃತ್ಯುವಿನಂತಹ ಚೇಷ್ಟೆಯ ಮಾತು) ಕಂಡು ಚೋದ್ಯಂಬಟ್ಟು-
- ವಚನ:ಅರ್ಥ:ಎಂದು ಜಾರೆಯರಿಗೆ ಅಂಕುಶದಂತಿರುವ ಅರಿಕೇಸರಿಯು ಆ ಜಾರೆಯರು ಮಾಡುವ ಕಾರ್ಯವನ್ನೂ ತೋರುವ ಸನ್ನೆಗಳನ್ನೂ ಆಡುವ ಮೃತ್ಯುವಿನಂತಹ ಚೇಷ್ಟೆಯ ಮಾತುಗಳನ್ನೂ ಕಂಡು ಆಶ್ಚರ್ಯಪಟ್ಟು-
- ಮ|| ಅಲರ್ಗಣ್ಣೊಳ್ ಸ್ಮರನಿರ್ದನಕ್ಕುಮೆಡೆವೋಪಾ ಜೋಡೆ ಕಾಮಂಗೆ ಕಾ
- ದಲೆಯಕ್ಕುಂ ಪೆಱತೇನೊ ಪಾರದರದೊಳ್ ಸಂಸಾರ ಸರ್ವಸ್ವಮಂ|
- ಗೆಲೆವಂದಿಂಪಿನಲಂಪನಾಳ್ದ ಸವಿಯುಂಟಕ್ಕುಂ ಸಮಂತಾವಗಂ
- ತಲೆಯಂ ಮೂಗುಮನೊತ್ತೆಯಿಟ್ಟು ನೆರೆವಂತುಂತೇನವರ್ ಗಾಂಪರೇ|| ೮೪ ||
- ಪದ್ಯ-೦೦:ಪದವಿಭಾಗ-ಅರ್ಥ:ಅಲರ್ಗಣ್ಣೊಳ್ (ಅಲರ್ ಕಣ್ಣೊಳ್) ಸ್ಮರಂ ಇರ್ದನಕ್ಕುಂ (ಹೂವಿನಂತಿರುವ ಕಣ್ಣಿನಲ್ಲಿ ಮನ್ಮಥನಿದ್ದಿರಬೇಕು.) ಎಡೆವೋಪಾ ಜೋಡೆ (ಸಂಕೇತಸ್ಥಾನಕ್ಕೆ ಹೋಗುವ ಆ ಜಾರೆ) ಕಾಮಂಗೆ ಕಾದಲೆಯಕ್ಕುಂ (ಕಾಮನ ಪ್ರೀತಿಗೆ ಪಾತ್ರಳಾಗಿದ್ದಿರಬೇಕು) ಪೆಱತೇನೊ ಪಾರದರದೊಳ್ (ಹಾದರದಲ್ಲಿ ಬೇರೆ ಏನೋ)ಸಂಸಾರ ಸರ್ವಸ್ವಮಂ ಗೆಲೆವಂದ (ಗೆದ್ದ, ಮೀರಿದ) ಇಂಪಿನ ಅಲಂಪನು (ಸುಖ) ಅಳ್ದ ಸವಿಯುಂಟಕ್ಕುಂ (ಹೊಂದಿದ ರುಚಿಯಿದ್ದಿರಬೇಕು) ಸಮಂತು ಆವಗಂ(ಯಾವಾಗಲೂ ಚೆನ್ನಾಗಿ) ತಲೆಯಂ ಮೂಗುಮಂ ಒತ್ತೆಯಿಟ್ಟು ನೆರೆವಂತೆ (ತಲೆಯನ್ನೂ ಮೂಗನ್ನೂ ಒತ್ತೆಯಿಟ್ಟು ಹಾದರದಲ್ಲಿ ಕೂಡಲು- ಹಿಂದೆ ಶಿಕ್ಷೆ - ಹಾದರಕ್ಕೆ ತಲೆ ಮೂಗು ಕತ್ತರಿಸುತ್ತಿದ್ದರು) ಅಂತೇನವರ್ ಗಾಂಪರೇ (ಹಾಗೆ ಅವರು ದಡ್ಡರೇ?)
- ಪದ್ಯ-೦೦:ಅರ್ಥ: (ಜಾರಸ್ತ್ರೀಯರ) ಹೂವಿನಂತಿರುವ ಕಣ್ಣಿನಲ್ಲಿ ಮನ್ಮಥನಿದ್ದಿರಬೇಕು. ಸಂಕೇತಸ್ಥಾನಕ್ಕೆ ಹೋಗುವ ಆ ಜಾರೆ ಕಾಮನ ಪ್ರೀತಿಗೆ ಪಾತ್ರಳಾಗಿದ್ದಿರಬೇಕು. ಹಾದರದಲ್ಲಿ ಸಂಸಾರಸಾರ ಸರ್ವಸ್ವವನ್ನೂ ಮೀರಿರುವ ಸುಖದ ಸೊಂಪನ್ನು ಹೊಂದಿದ ರುಚಿಯಿದ್ದಿರಬೇಕು. ಹಾಗಿಲ್ಲದ ಪಕ್ಷದಲ್ಲಿ ಯಾವಾಗಲೂ ಅವರು ತಲೆಯನ್ನೂ ಮೂಗನ್ನೂ ಒತ್ತೆಯಿಟ್ಟು ಸುಮ್ಮನೆ ಜಾರತನ ಮಾಡಿ ಕೂಡಲು ದಡ್ಡರೆ?
- ವ|| ಎನತ್ತುಂ ಬರ್ಪನೊಂದೆಡೆಯೊಳ್ ಮನಸಿಜನ ನಡಪಿದ ಜಂಗಮಲತೆಗಳಂತೆ ಮನೋಜನ ಕಾಪಿನ ಕಲ್ಪಲತೆಗಳಂತೆ ಮನೋಜನೆಂಬ ದೀವಗಾಱನ ಪುಲ್ಲೆಗಳಂತೆ ತಂತಮ್ಮ ಮನೆಯ ಮುಂದಣ ಪಚ್ಚೆಯ ಜಗುಲಿಗಳೊಳಂ ಮಣಿಮಯ ಮತ್ತವಾರಣಂಗಳೊಳಮಳವಿಗೞಿದ ವಿಳಾಸಂಗಳೊಳಂ ತಂಡತಂಡದೆ ನೆರೆದಿರ್ದ ಪೆಂಡವಾಸದೊಳ್ವೆಂಡಿರಂ ಕಂಡು-
- ವಚನ:ಪದವಿಭಾಗ-ಅರ್ಥ:ಎನತ್ತುಂ ಬರ್ಪನೊಂದು ಎಡೆಯೊಳ್ ಮನಸಿಜನ ನಡಪಿದ () ಜಂಗಮಲತೆಗಳಂತೆ (ಮನ್ಮಥನು ನೆಟ್ಟ ನೆಡೆದಾಡುವ ಬಳ್ಳಿಯಂತೆಯೂ,) ಮನೋಜನ ಕಾಪಿನ ಕಲ್ಪಲತೆಗಳಂತೆ ಮನೋಜನೆಂಬ ದೀವಗಾಱನ (ಬಲಿಯೊಡ್ಡಿ ಬೇಟೆಯಾಡುವವ) ಪುಲ್ಲೆಗಳಂತೆ ತಂತಮ್ಮ ಮನೆಯ ಮುಂದಣ ಪಚ್ಚೆಯ ಜಗುಲಿಗಳೊಳಂ ಮಣಿಮಯ ಮತ್ತವಾರಣಂಗಳೊಳಂ ಅಳವಿಗೞಿದ (ಅಳೆಯಲಾಗದ) ವಿಳಾಸಂಗಳೊಳಂ (ವೈಭವಗಳಿಂದ ಕೂಡಿ) ತಂಡತಂಡದೆ ನೆರೆದಿರ್ದ ಪೆಂಡವಾಸದೊಳ್ (ಸೂಳೆಗೇರಿಯಲ್ಲಿ) ವೆಂಡಿರಂ (ಒಳ್ಳೆಯ ಹೆಂಗಸರನ್ನು) ಕಂಡು-
- ವಚನ:ಅರ್ಥ:ಎಂದುಕೊಂಡು ಬರುತ್ತಿದ್ದವನು ಒಂದು ಸ್ಥಳದಲ್ಲಿ ಮನ್ಮಥನು ನೆಟ್ಟ ನೆಡೆದಾಡುವ ಬಳ್ಳಿಯಂತೆಯೂ, ಕಾಮನ ರಕ್ಷಣೆಯಲ್ಲಿರುವ ಕಲ್ಪಲತೆಗಳಂತೆಯೂ, ಮನೋಜನೆಂಬ ಬೇಟೆಗಾರನ ಬಲಿಗಿಟ್ಟ ಹುಲ್ಲೆಯಂತೆಯೂ, ತಮ್ಮ ತಮ್ಮ ಮನೆಯ ಮುಂದಿನ ಪಚ್ಚೆಯ ರತ್ನದಿಂದ ನಿರ್ಮಿತವಾದ ಜಗಲಿಗಳಲ್ಲಿಯೂ ರತ್ನಖಚಿತವಾದ ಮನೆಯ ಮುಂದಿನ ಕೈಸಾಲೆಗಳಲ್ಲಿಯೂ ಅಳೆಯಲಾಗದ ವೈಭವಗಳಿಂದ ಕೂಡಿ ಗುಂಪು ಗುಂಪಾಗಿ ಸೇರಿದ್ದ ಸೂಳೆಗೇರಿಯಲ್ಲಿ ಒಳ್ಳೆಯ ಹೆಂಗಸರನ್ನು ನೋಡಿದನು; ನೋಡಿ-
- ಚಂ|| ಮನಸಿಜನೀಕೆಗಂಡು ರತಿಯಂ ಬಿಸುಟಂ ಹರನೀಕೆಗಂಡು ನೂ
- ತನ ಗಿರಿಜಾತೆಯಂ ತೊರೆದನಾ ನರಕಾಂತಕನೀಕೆಗಂಡು ತೊ|
- ಟ್ಟನೆ ನಿಜಲಕ್ಷ್ಮಿಯಂ ಮರೆದನೆಂಬ ನೆಗೞ್ತೆಯನಪ್ಪುಕೆಯ್ದು ಜ
- ವ್ವನದ ವಿಳಾಸದಂದದ ಬೆಡಂಗಿನ ಪೆಂಡಿರೆ ಪೆಂಡಿರಲ್ಲಿಯಾ|| ೮೫||
- ಪದ್ಯ-೮೫:ಪದವಿಭಾಗ-ಅರ್ಥ:ಮನಸಿಜನು (ಮನ್ಮಥನು) ಈಕೆಗಂಡು ರತಿಯಂ ಬಿಸುಟಂ ಹರನು ಈಕೆಗಂಡು ನೂತನ ಗಿರಿಜಾತೆಯಂ ತೊರೆದಂ, ಆ ನರಕಾಂತಕನು (ವಿಷ್ಣುವು) ಈಕೆಗಂಡು ತೊಟ್ಟನೆ ನಿಜಲಕ್ಷ್ಮಿಯಂ ಮರೆದನು, ಎಂಬ ನೆಗೞ್ತೆಯನು ಅಪ್ಪುಕೆಯ್ದು ಜವ್ವನದ ವಿಳಾಸದ ಅಂದದ (ಪ್ರಸಿದ್ಧಿಯನ್ನು ಪಡೆದು ಯವ್ವನದ ಶೋಭೆಯ) ಬೆಡಂಗಿನ ಪೆಂಡಿರೆ ಪೆಂಡಿರು ಇಲ್ಲಿಯಾ
- ಪದ್ಯ-೮೫:ಅರ್ಥ: (ಈ ವೇಶ್ಯಾವಟಿಕೆಯ ಹೆಣ್ಣನ್ನು ಕಂಡು ಅರ್ಜುನ-) ಇವಳ ಸೌಂದರ್ಯವನ್ನು ನೋಡಿ ಮನ್ಮಥನು (ತನ್ನ ಪ್ರಿಯಪತ್ನಿಯಾದ) ರತಿಯನ್ನು ಬಿಸುಟಿದ್ದಾನೆ. ಈಶ್ವರನು ಇವಳನ್ನು ನೋಡಿ ನೂತನವಧುವಾದ ಪಾರ್ವತಿಯನ್ನು ತೊರೆದಿದ್ದಾನೆ. ಆ ನರಕಾಸುರನಿಗೆ ಮೃತ್ಯುವಾದ ವಿಷ್ಣುವು ಇದಕ್ಕಿದ್ದ ಹಾಗೆ ತನ್ನ ಲಕ್ಷ್ಮಿಯನ್ನೂ ಮರೆತಿದ್ದಾನೆ ಎಂಬ ಪ್ರಸಿದ್ಧಿಯನ್ನು ಪಡೆದು ಯವ್ವನದ ವಿಳಾಸದ ಬೆಡಗಿನಿಂದ ಕೂಡಿದ ಸ್ತ್ರೀಯರೇ ಸ್ತ್ರೀಯರು! (ಇವರ ಚೆಲುವಿಗೆ ಮಿಗಿಲಿಲ್ಲ ಎಂಬ ಭಾವ).
- ಚಂ||ತಿಸರಮಿದಾವುದಕ್ಕ ಧರಣೀಂದ್ರನ ಕೊಟ್ಟುದು ವಜ್ರದಾಳಿ ಕ
- ಣ್ಗೆಸೆವುದಿದಾವುದೊಲ್ಲದುೞಿದಟ್ಟಿದೊಡಂದು ಕುಬೇರನಿತ್ತುದೆ|
- ಕ್ಕಸರಮಿದಾವುದಾಂ ಮುಳಿಯೆ ಕಾಲ್ವಿಡಿದಿಂದ್ರನ ಕೊಟ್ಟುದಲ್ತೆ ಪೋ
- ಪುಸಿಯದಿರೆಂಬ ಸೂಳೆಯರೆ ಸೂಳೆಯರಲ್ಲಿಯ ಪೆಂಡವಾಸದಾ|| ೮೬ ||
- ಪದ್ಯ-೮೬:ಪದವಿಭಾಗ-ಅರ್ಥ:ತಿಸರಂ(ಮೂರೆಳೆ ಸರ) ಇದಾವುದು ಅಕ್ಕ? ಧರಣೀಂದ್ರನ ಕೊಟ್ಟುದು, ವಜ್ರದಾಳಿ (ವಜ್ರದ ತಾಲಿ) ಕಣ್ಗೆಸೆವುದು (ಕಣ್ಣಿಗೆ ಎಸೆವುದು); ಇದಾವುದು? ಒಲ್ಲದೆ ಉೞಿದು (ಸಿಟ್ಟು ಮಾಡಿ) ಅಟ್ಟಿದೊಡೆ, ಅಂದು ಕುಬೇರನು ಇತ್ತುದು; ಎಕ್ಕಸರಂ (ಒಂದೆಳೆಸರ) ಇದಾವುದು? ಆ ಮುಳಿಯೆ ಕಾಲ್ವಿಡಿದು ಇಂದ್ರನ (ಇಂದ್ರನು) ಕೊಟ್ಟುದಲ್ತೆ; ಪೋ ಪುಸಿಯದಿರು (ಹೋಗು ಸುಳ್ಳು ಹೇಳಬೇಡ) ಎಂಬ ಸೂಳೆಯರೆ ಸೂಳೆಯರು ಅಲ್ಲಿಯ ಪೆಂಡವಾಸದಾ (ಆ ಸೂಳೆಗೇರಿಯ)
- ಪದ್ಯ-೮೬:ಅರ್ಥ: ಮೂರೆಳೆಯ ಹಾರವು ಇದಾವುದಕ್ಕ? ಧರಣೀಂದ್ರನೆಂಬ ಸರ್ಪರಾಜನು ಕೊಟ್ಟುದು; ವಜ್ರದ ತಾಲಿಯ ಕಾಂತಿ ಕಣ್ಣಿಗೆ ಕುಕ್ಕುವುದು, ಇದು ಯಾವುದು? ನೀನು ಒಪ್ಪದೆ ತಿರಸ್ಕರಿಸಿ ಕಳುಹಿಸಲು ಆ ದಿನ ಕುಬೇರನು ಕೊಟ್ಟುದು. ಈ ಒಂದೆಳೆಯ ಸರ ಯಾವುದು? ನಾನು ಕೋಪಿಸಿಕೊಂಡಾಗ ನನ್ನ ಕಾಲನ್ನು ಕಟ್ಟಿಕೊಂಡು ಇಂದ್ರನು ಕೊಟ್ಟುದಲ್ಲವೇ? ಹೋಗು ಸುಳ್ಳು ಹೇಳಬೇಡ! ಎಂಬ ಪ್ರಸಿದ್ಧಿಯನ್ನು ಪಡೆದಿರುವ ಸೂಳೆಯರೇ ಸೂಳೆಯರು, ಆ ಸೂಳೆಗೇರಿಯ!
- ವ|| ಎಂಬುದಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-
- ವಚನ:ಪದವಿಭಾಗ-ಅರ್ಥ:ಎಂಬುದಂ ಕೇಳುತ್ತುಂ ಬರೆವರೆ (ಬರುವಾಗ) ಮತ್ತಂ ಆ ಪೆಂಡವಾಸಗೇರಿಯೊಳಗೆ (ಆ ಸೂಳೆಗೇರಿಯೊಳಗೆ) ಸೌಭಾಗ್ಯದ ಭೋಗದ ಚಾಗದ (ತ್ಯಾಗದ) ರೂಪುಗಳ್ ಮಾನಸರೂಪಾದಂತೆ-
- ವಚನ:ಅರ್ಥ:ಎನ್ನುವುದನ್ನು ಕೇಳುತ್ತಾ ಬರುವಾಗ ಪುನ ಆ ಸೂಳೆಗೇರಿಯೊಳಗೆ ಸೌಭಾಗ್ಯದ, ಭೋಗದ, ತ್ಯಾಗದ ರೂಪಗಳು ಮನುಷ್ಯಾಕಾರವನ್ನು ತಾಳಿದಂತೆ- (ಇತ್ತು).
- ಉ|| ಸೀಗುರಿ ಚಾಪಿ ನಾಣ್ಕುಣಿದು ಮೆಟ್ಟುವ ಗುಜ್ಜರಿಗೞ್ತೆ ಬೀರಮಂ
- ಚಾಗದ ಪೆಂಪುಮಂ ಪೊಗೞ್ವ ಸಂಗಡವರ್ಪವರೊಳ್ಪಿನಿಂದೆ ಮೆ|
- ಯ್ಯೋಗಮಳುಂಬಮಪ್ಪ ಬಿಯಮಾಗೆರ್ದೆಗಂ ಬರೆ ಬರ್ಪ ಪಾಂಗಗು
- ರ್ವಾಗಿರೆ ಚೆಲ್ವನಾಯ್ತುರಬೊಜಂಗರ ಲೀಲೆ ಸುರೇಂದ್ರ ಲೀಲೆಯಿಂ|| ೮೭||
- ಪದ್ಯ-೮೭:ಪದವಿಭಾಗ-ಅರ್ಥ:ಸೀಗುರಿ ಚಾಪಿ (ಸೀಗುರಿಯೆಂಬ ಛತ್ರಿ) ನಾಣ್ಕುಣಿದು ಮೆಟ್ಟುವ ಗುಜ್ಜರಿಗೞ್ತೆ (ಕುಣಿವ ಗುರ್ಜರ ಕತ್ತೆ) ಬೀರಮಂ ಚಾಗದ ಪೆಂಪುಮಂ ಪೊಗೞ್ವ (ಶ್ರೇಷ್ಠತೆಯನ್ನು ಹೊಗಳುವ ) ಸಂಗಡ ವರ್ಪವರ ಒಳ್ಪಿನಿಂದೆ (ಒಳ್ಳೆಯರೀತಿ ಮಾಡಿಕೊಂಡಿರುವ) ಮೆಯ್ಯೋಗಂ ಅಳುಂಬಮಪ್ಪ (ದೇಹಾಲಂಕಾರವು ಅತ್ಯತಿಶಯವಾಇರಲು) ಬಿಯಂ ಆಗೆ ಎರ್ದೆಗಂ ಬರೆ (ಅದರ ವೆಚ್ಚ ಹೆಚ್ಚಿ ಎದೆಗೆ/ಮನಸ್ಸಿಗೆ ಬರಲು) ಬರ್ಪ ಪಾಂಗು ಅಗುರ್ವಾಗಿರೆ (ಬರುವ ಠೀವಿಯು ಅಚ್ಚರಿಯುಂಟು ಮಾಡಲು,) ಚೆಲ್ವನಾಯ್ತು (ಚಂದವಾಗಿದ್ದಿತು) ಅರಬೊಜಂಗರ ಲೀಲೆ (ಅರಸವಿಟರ ವಿಲಾಸ) ಸುರೇಂದ್ರ ಲೀಲೆಯಿಂ (ದೇವೇಂದ್ರನ ವಿಲಾಸಕ್ಕಿಂತ )
- ಪದ್ಯ-೮೭:ಅರ್ಥ: ಸೀಗುರಿಯೆಂಬ ಛತ್ರಿ, ಅಂಗರಕ್ಷಕರು, ಕುಣಿವ ಗುರ್ಜರ ಕತ್ತೆ, ತಮ್ಮ ವೀರ ಮತ್ತು ತ್ಯಾಗದ ಶ್ರೇಷ್ಠತೆಯನ್ನು ಹೊಗಳುವ ಜೊತೆಗೆ ಬರುತ್ತಿರುವವರ ಒಳ್ಳೆಯರೀತಿ ಮಾಡಿಕೊಂಡಿರುವ ದೇಹಾಲಂಕಾರವು ಅದರ ವೆಚ್ಚ ಹೆಚ್ಚಿ ಎದೆಗೆ/ಮನಸ್ಸಿಗೆ ಬರಲು (ಹೃದಯಸ್ಪರ್ಶಿಯಾಗಿರಲು), ಠೀವಿಯು ಅಚ್ಚರಿಯುಂಟು ಮಾಡಲು, ಬರುತ್ತಿರುವ ರಾಜವಿಟರ ವಿಲಾಸ ದೇವೇಂದ್ರನ ವಿಲಾಸಕ್ಕಿಂತ ಚಂದವಾಗಿದ್ದಿತು
- ವ|| ಮತ್ತಮಲ್ಲಿ ಕೋಟಿ ಪೊಂಗೆ ಘಂಟೆಯಲುಗುವ ಕಿಱುಕುಳ ಬೊಜಂಗರುಮಂ ಸುಣ್ಣದೆಲೆಯನೊತ್ತೆಯಿಟ್ಟು ಮದದಾನೆಯುಮಂ ಮಾಣಿಕಮುಮನೊತ್ತೆವಿಡಿಸಲಟ್ಟುವ ಚಿಕ್ಕ ಪೋರ್ಕುಳಿ ಬೊಜಂಗರುಮಂ ಕತ್ತುರಿ ಬಿಯಮಂ ಮೆರೆದು ಕತ್ತುರಿಯೊಳ್ ಪೂೞ್ದು ಕತ್ತುರಿಮಿಗದಂತಿರ್ಪ ಕತ್ತುರಿ ಬೊಜಂಗರುಮಂ ನೋಡಿ ಪೊೞಲ ಬೊಜಂಗರ ಬಿಯದಳವಿಗೆ ಮನದೊಳ್ ಮೆಚ್ಚುತ್ತುಂ ಬರ್ಪನೊಂದೆಡೆ ಯೊಳ್‌ರ್ದು ಕಳ್ಳೊಳಮಮರ್ದಿನೊಳಂ ಪುಟ್ಟಿದ ಪೆಂಡಿರಂತೆ ಸೊಗಯಿಸುವ ಪಲರು ಮೊಳ್ವೆಂಡಿರೊಂದೆಡೊಯೊಳಿರ್ದು ಕಾಮದೇವನೆಂಬ ಬಳಮರ್ದುಕಾಱನ ಮಾಡಿದ ಮರ್ದಿನಂತೆ ಬಳೆದು ದಳಂಬಡೆದು ಮೂನೂಱಱುವತ್ತು ಜಾತಿಯ ಕಳ್ಗಳಂ ಮುಂದಿಟ್ಟು ಮಧುಮಂತ್ರದಿಂ ಮಧುದೇವತೆಗಳನರ್ಚಿಸಿ ಪೊನ್ನ ಬೆಳ್ಳಿಯ ಪದ್ಮರಾಗದ ಪಚ್ಚೆಯ ಗಿಳಿಯ ಕೋಗಿಲೆಯ ಕೊಂಚೆಯಂಚೆಯ ಕುಂತಳಿಕೆಯ ಮಾೞ್ಕೆಯ ಸಿಪ್ಪುಗಳೊಳ್ ತೀವಿ ಮಧುಮಂತ್ರಂಗಳಿಂ ಮಂತ್ರಿಸಿ ನೆಲದೊಳೆರೆದು ತಲೆಯೊಳ್ ತಳಿದು ಕಳ್ಳೊಳ್ ಬೊಟ್ಟನಿಟ್ಟುಕೊಂಡು ಕೆಲದರ್ಗೆಲ್ಲಂ ಬೊಟ್ಟಿಟ್ಟು ಕಿಱಿಯರ್ ಪಿರಿಯರಱಿದು ಪೊಡವಟ್ಟು ಧರ್ಮಗಳ್ಗುಡಿವರ್ಗೆಲ್ಲಂ ಮೀಸಲ್ಗಳ್ಳನೆದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿಱಿಕಿಱಿದನೆರೆದು ಕುಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುದಿನ ಮೆಣಸುಗಡಲೆಯ ಪುಡಿಯೊಳಡಸಿದಲ್ಲವಲ್ಲಣಿಗೆಯ ಚಕ್ಕಣಂಗಳಂ ಸವಿಸವಿದು-
- ವಚನ:ಪದವಿಭಾಗ-ಅರ್ಥ:ಮತ್ತಂ ಅಲ್ಲಿ ಕೋಟಿ ಪೊಂಗೆ(ಹೊನ್ನಿಗೆ) ಘಂಟೆಯ ಅಲುಗುವ ಕಿಱುಕುಳ (ಸಾಮಾನ್ಯ) ಬೊಜಂಗರುಮಂ (ವಿಟರನ್ನೂ) ಸುಣ್ಣದೆಲೆಯನು ಒತ್ತೆಯಿಟ್ಟು ಮದದಾನೆಯುಮಂ ಮಾಣಿಕಮುಮನು ಒತ್ತೆವಿಡಿಸಲು ಅಟ್ಟುವ ಚಿಕ್ಕ ಪೋರ್ಕುಳಿ ಬೊಜಂಗರುಮಂ (ಕೆಳಮಟ್ಟದ ಜಗಳಗಂಟ ವಿಟರನ್ನೂ) ಕತ್ತುರಿ ಬಿಯಮಂ (ವೆಚ್ಚವನ್ನು) ಮೆರೆದು ಕತ್ತುರಿಯೊಳ್ ಪೂೞ್ದು ಕತ್ತುರಿಮಿಗದಂತಿರ್ಪ (ಕಸ್ತೂರಿಯಲ್ಲಿ ಹೂಳಿದ- ಮುಳುಗಿದಂತಿರುವ, ಕಸ್ತೂರಿ ಮೃಗದಮತಿರುವ) ಕತ್ತುರಿ ಬೊಜಂಗರುಮಂ (ವಿಟರನ್ನು ನೋಡಿ) ನೋಡಿ ಪೊೞಲ ಬೊಜಂಗರ (ನಗರದ ವಿಟರ) ಬಿಯದಳವಿಗೆ (ಬಿಯದ - ಖರ್ಚಿನ ಪ್ರಮಾಣಕ್ಕೆ) ಮನದೊಳ್ ಮೆಚ್ಚುತ್ತುಂ ಬರ್ಪನ್ ಒಂದೆಡೆಯೊಳ್ ಇರ್ದು (ಮುಂದೆ ಬರಲು, ಒಂದು ಕಡೆ) ಕಳ್ಳೊಳಂ ಅಮರ್ದಿನೊಳಂ ಪುಟ್ಟಿದ ಪೆಂಡಿರಂತೆ(ಕಳ್ಳಿನಲ್ಲಿಯೂ ಅಮೃತದಲ್ಲಿಯೂ ಹುಟ್ಟಿದ ಸ್ತ್ರೀಯರಂತೆ) ಸೊಗಯಿಸುವ ಪಲರುಂ ಒಂಳ್ವೆಂಡಿರ್ (ಹಲವು ಒಳ್ಳೆಯ ಹೆಂಗಸರು) ಒಂದೆಡೊಯೊಳ್ ಇರ್ದು ಕಾಮದೇವನೆಂಬ ಬಳಮರ್ದುಕಾಱನ (ಸೈನ್ಯದ ಸಿಡಿಮದ್ದು ಮಾಡುವವನ) ಮಾಡಿದ ಮರ್ದಿನಂತೆ ಬಳೆದು (ಬೆಳೆದು) ದಳಂಬಡೆದು (ದೊಡ್ಡದಾಗಿ) ಮೂನೂಱಱುವತ್ತು (೩೬೦) ಜಾತಿಯ ಕಳ್ಗಳಂ (ಮದ್ಯವನ್ನು) ಮುಂದಿಟ್ಟು ಮಧುಮಂತ್ರದಿಂ ಮಧುದೇವತೆಗಳನು ಅರ್ಚಿಸಿ (ಮದ್ಯವನ್ನು ಪೂಜೆಮಾಡಿ) ಪೊನ್ನ ಬೆಳ್ಳಿಯ ಪದ್ಮರಾಗದ ಪಚ್ಚೆಯ (ಈ ವಿಧದ) ಗಿಳಿಯ ಕೋಗಿಲೆಯ ಕೊಂಚೆಯಂಚೆಯ ಕುಂತಳಿಕೆಯ ಮಾೞ್ಕೆಯ (ಆಕಾರದ)ಸಿಪ್ಪುಗಳೊಳ್ ತೀವಿ (ಚಿಪ್ಪು-ಬಟ್ಟಲಲ್ಲಿ) ಮಧುಮಂತ್ರಂಗಳಿಂ ಮಂತ್ರಿಸಿ ನೆಲದೊಳೆರೆದು (ನೆಲಕ್ಕೆ ಹಾಕಿ) ತಲೆಯೊಳ್ ತಳಿದು (ಚಿಮುಕಿಸಿಕೊಂಡು) ಕಳ್ಳೊಳ್ ಬೊಟ್ಟನಿಟ್ಟುಕೊಂಡು ಕೆಲದರ್ಗೆಲ್ಲಂ (ಪಕ್ಕದ) ಬೊಟ್ಟಿಟ್ಟು ಕಿಱಯರ್ ಪಿರಿಯರಱದು ಪೊಡವಟ್ಟು (ನಮಿಸಿ) ಧರ್ಮಗಳ್ಗುಡಿವರ್ಗೆಲ್ಲಂ ಮೀಸಲ್ಗಳ್ಳನೆರೆದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿಱಿಕಿಱಿದನೆರೆದು (ಸ್ವಲ್ಪ ಸ್ವಲ್ಪ ಹಾಕಿ) ಕುಡಿಬಿದಿರ ಕುಡಿಯ (ಕಳಲೆಚೂರು) ಮಾವಿನ ಮಿಡಿಯ ಮಾರುಡಿನ (ಬಿಲ್ಪತ್ರೆಕಾಯಿ) ಮೆಣಸುಗಡಲೆಯ ಪುಡಿಯೊಳು ಅಡಸಿದ ಅಲ್ಲವಲ್ಲಣಿಗೆಯ (ಹಸಿಯ ಶುಂಠಿಯ ಮಿಶ್ರಣವ) ಚಕ್ಕಣಂಗಳಂ ಸವಿಸವಿದು- (ಕುಡಿಯುತ್ತಿದ್ದರು)
- ವಚನ:ಅರ್ಥ:ಮತ್ತೆ ಅಲ್ಲಿ ಕೋಟಿಹೊನ್ನುಗಳನ್ನು ಕೊಡುತ್ತೇವೆ ಎಂದು ಸೂಳೆಯರ ಮನೆಯ ಮುಂದಿನ ಗಂಟೆಯನ್ನು ಬಾರಿಸುವ ಸಾಮಾನ್ಯ ವಿಟರನ್ನೂ, ಸುಣ್ಣದೆಲೆಯನ್ನು ಒತ್ತೆಯಿಟ್ಟು ಮದ್ದಾನೆಯನ್ನೂ ಮಾಣಿಕ್ಯವನ್ನೂ ಒತ್ತೆಯಾಗಿಡಲು ಹೇಳಿಕಳುಹಿಸುವ ಚಿಕ್ಕ ಜಗಳಗಂಟ ವಿಟರನ್ನೂ, ತಾವು ವಿಶೇಷವಾಗಿ ಕಸ್ತೂರಿಯನ್ನು ಲೇಪನ ಮಾಡಿಕೊಂಡು ಅದರಲ್ಲಿಯೇ ಮುಳುಗಿದಂತಿರುವ ಆ ಕಸ್ತೂರಿಯ ವೆಚ್ಚವನ್ನೇ ಒತ್ತೆಯನ್ನಾಗಿ ತೋರಿಸುತ್ತ ಕಸ್ತೂರಿಯ ಮೃಗದಂತೆ ಕರ್ರಗಿರುವ ಕಸ್ತೂರಿ ವಿಟರನ್ನೂ, ನೋಡಿ ಆ ಪಟ್ಟಣದ ವಿಟರ ಖರ್ಚು ಮಾಡುವ ಹಂದ ಪ್ರಮಾಣಕ್ಕೆ ಮನಸ್ಸಿನಲ್ಲಿ ಮೆಚ್ಚುತ್ತ ಮುಂದೆ ಬರಲು, ಪಾನಶಾಲೆಯು ಕಣ್ಣಿಗೆ ಬಿದ್ದಿತು. ಒಂದು ಕಡೆಯಲ್ಲಿ ಕಳ್ಳಿನಲ್ಲಿಯೂ ಅಮೃತದಲ್ಲಿಯೂ ಹುಟ್ಟಿದ ಸ್ತ್ರೀಯರಂತೆ – ಸುರಾದೇವಿ ಮತ್ತು ಲಕ್ಷ್ಮೀದೇವಿಯರಂತೆ ಸೊಗಯಿಸುವ ಅನೇಕ ಸುಂದರಿಯರು ಒಂದು ಕಡೆ ಸೇರಿ ಕಾಮದೇವನೆಂಬ ಮದ್ದುಗಾರನು (ತುಬಾಕಿಯ ಮದ್ದನ್ನು ಮಾಡುವವನು) ಮಾಡಿದ ಮದ್ದಿನಂತೆ ಅಭಿವೃದ್ಧಿಯಾಗಿ ಪುಷ್ಟಿಗೊಂಡಿರುವ ಮುನ್ನೂರರುವತ್ತು ಜಾತಿಯ ಕಳ್ಳುಗಳನ್ನು (ಹೆಂಡಗಳನ್ನು) ತಮ್ಮ ಮುಂದೆ ಇಟ್ಟುಕೊಂಡು ಮಧುಮಂತ್ರದಿಂದಲೇ ಮಧುದೇವತೆಗಳನ್ನು ಪೂಜಿಸಿದರು. ಚಿನ್ನ ಬೆಳ್ಳಿ ಮತ್ತು ಪದ್ಮರಾಗಗಳಿಂದ ಗಿಳಿ, ಕೋಗಿಲೆ, ಕ್ರೌಂಚ, ಹಂಸ ಮತ್ತು ಕುಂತಳಿಕೆಯೆಂಬ ಹಕ್ಕಿಗಳ ಮಾದರಿಗಳಲ್ಲಿ ಮಾಡಿರುವ ಚಿಪ್ಪುಗಳಲ್ಲಿ ಯಾ ಬಟ್ಟಲಲ್ಲಿ ತುಂಬಿ (ಮಧುಮಂತ್ರಗಳಿಂದಲೇ ಮಂತ್ರಿಸಿ ನೆಲದಲ್ಲಿ ಸ್ವಲ್ಪ ಸ್ವಲ್ಪ ಚೆಲ್ಲಿ ತಲೆಯಲ್ಲಿ ಪ್ರೋಕ್ಷಿಸಿಕೊಂಡು,) ಕಳ್ಳಿನಿಂದ ಮುಖಕ್ಕೆ ಬೊಟ್ಟನ್ನಿಟ್ಟು ಕಿರಿಯರಾದವರು ಹಿರಿಯರಾದವರನ್ನು ನಮಿಸಿ ಮಾಡಿ ಉಚಿತವಾಗಿ ದಾನಮಾಡಬೇಕಾದವರಿಗಾಗಿ ಮೀಸಲಾದುದನ್ನು ಅವರಿಗೆ ದಾನಮಾಡಿದರು. ಚಿನ್ನದ ಮತ್ತು ಬೆಳ್ಳಿಯ ಚಿಪ್ಪುಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ತುಂಬಿಕೊಂಡು ಎಳೆಯ ಬಿದಿರಿನ ಕಳಲೆಚೂರು,, ಮಾವಿನ ಮಿಡಿ, ಬಿಲ್ಪತ್ರೆಯ ಕಾಯಿನ ತಿರುಳು, ಕಾರದ ಕಡಲೆಯ ಪುಡಿಯಿಂದ ಕೂಡಿದ ಹಸಿಯ ಶುಂಠಿಯ ಮಿಶ್ರಣವನ್ನುಳ್ಳ ಚಕ್ಕಣಗಳೆಂಬ ನಂಜಿಕೊಳ್ಳುವ ಪದಾರ್ಥಗಳನ್ನು ಸವಿಸವಿದು ಕಳ್ಳು(ಕುಡಿಯುತ್ತಿದ್ದರು)
- ಮ|| ಮಧು ಸೀತುಂ(ಸೀಧುಂ) ಕಟು ಸೀದು ಪೋ ಪುಳಿತ ಕಳ್ಳಲ್ತುಂ ಕರಂ ಕಯ್ತು ಬ
- ರ್ಪುದು ಮಾರೀಚಿ ತೊಡರ್ಪುಳಿಂದೆ ಸರದಿಂ ಕಂಪಿಲ್ಗ ಸೊರ್ಕಿಪ್ಪಲಾ|
- ಱದು ಚಿಂತಾಮಣಿಗೇವುದಕ್ಕ ದಳಮಿಲ್ಲೀ ಕಕ್ಕರಕ್ಕಿಂತುಟ
- ಪ್ಪುದು ಕಳ್ಳಪ್ಪುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್|| ೮೮||
- ಪದ್ಯ-೮೮:ಪದವಿಭಾಗ-ಅರ್ಥ:ಮಧು ಸೀತುಂ ಕಟು ಸೀದು (ಮಧು, ಸೀಧು, ಕಟುಸೀದು ಮೂರು ಬಗೆ ಮದ್ಯವು,) ಪೋ (ಏ ಹೋಗು!) ಪುಳಿತ(ಹುಳಿಯ) ಕಳ್ಳಲ್ತುಂ ಕರಂ ಕಯ್ತು ಬರ್ಪುದು(ಬಹಳ ಕಹಿಯಾಗಿರುವುದು), ಮಾರೀಚಿ ತೊಡರ್ಪುಳಿಂದೆ ಸರದಿಂ ಕಂಪಿಲ್ಗ (ಶರದೆಯೆಂಬ ಮದ್ಯ ಸವಾಸನೆಯದಲ್ಲ;) ಸೊರ್ಕಿಪ್ಪಲಾಱದು (ಬಹಳ ಮತ್ತುಕೊಡುವುದಲ್ಲ) ಚಿಂತಾಮಣಿಗೆ ಏವುದಕ್ಕ (ಏವುದು- ಏಕೆ ಅಕ್ಕ ) ದಳಂ (ಅಡಿಕೆ) ಇಲ್ಲ ಈ ಕಕ್ಕರಕ್ಕೆ ಇಂತುಟಪ್ಪುದು (ಹೀಗಿರುವುದು) ಕಳ್ಳಪ್ಪುದು ತಪ್ಪದೆಂದು (ಹಾಗೆಯೇ ಮದ್ಯವಾಗುತ್ತದೆ ಎಂದು) ಕುಡಿದರ್ ಕಾಮಾಂಗಮಂ (ಕಾಮವನ್ನು ಕೆರಳಿಸುವ) ಕಾಂತೆಯರ್
- ಪದ್ಯ-೮೮:ಅರ್ಥ: ಮಧು, ಸೀಧು, ಕಟುಸೀದು ಮೂರು ಬಗೆ ಮದ್ಯವು, ಕಟುಸೀದುವೆಂಬುದು ಕಟುವಾದುದು, ಹುಳಿಯ ಹೆಂಡವಲ್ಲ; ಬಹಳ ಕಹಿಯಾಗಿರುವುದು. ಮಾರೀಚಿ ಮತ್ತು ತೊಡರ್ಪುಳ್ ಎಂಬ ಮದ್ಯಗಳಿಗಿಂತ ಶರದೆಯೆಂಬ ಮದ್ಯ ಸವಾಸನೆಯದಲ್ಲ, ಅಷ್ಟು ಸೊಕ್ಕಿಸಲಾರದು; ಚಿಂತಾಮಣಿಯೆಂಬ ಮದ್ಯದ ಸೇವನೆಗೆ ಅಡಿಕೆಯೇಕೆ ಅಕ್ಕ?, ಕಕ್ಕರವೆಂಬ ಮದ್ಯಕ್ಕೂ ಹಾಗೆಯೇ (ಬೇಕಿಲ್ಲ) ಇಂತಹವೇ ಸರಿಯಾದ ಮದ್ಯ ಎಂದು ಆ ಸ್ತ್ರೀಯರು ಕಾಮೋದ್ರೇಕಮಾಡುವ ಮದ್ಯವನ್ನು ಕುಡಿದರು.
- ವ|| ಅಂತು ಕುಡಿಯೆ ಕಕ್ಕರಗೆಯ್ತದಿಂ ತುದಿನಾಲಗೆಯೊಳ್ ತೊದಳ್ವೆರಸು ನುಡಿವ ನುಡಿಗಳುಂ ಪೊಡರ್ವ ನಿಡಿಯ ಪುರ್ವುಗಳುಂ ನಿಡಿಯಲರ್ಗಣ್ಗಳೊಳ್ ವಿಕಾರಂ ಬೆರಸು ನೆಗೞ್ದಭಿನಯಂಗಳುಂ ಮಳಮಳಿಪ ರೂಪು ಕಣ್ಗಳೊಳ್ ಬೆಳ್ಪನೞಿಯೆ ಸೋಂಕುವ ಕೆಂಪುಗಳುಂ ತಮ್ಮ ಕೆಂಪಂ ಕಣ್ಗಳ್ಗೆ ಕೊಟ್ಟು ಕಣ್ಗಳ ಬೆಳ್ಪಂ ತಮಗೆ ಮಾಱುಗೊಂಡಂತೆ ತನಿಗೆತ್ತುವರೆಸು ಬತ್ತಿ ಸೊಗಯಿಸುವ ಬೆಳರ್ವಾಯ್ಗಳೊಳಿಂಪಂ ತಾಳ್ದಿ ಪೊಱಮಡುವ ತಣ್ಗಂಪುಗಳುಮಮೃತಬಿಂದುಗಳಂತೆ ನೆಗೞ್ವ ಬೆಮರ ಬಿಂದುಗಳುಮಳವಲ್ಲದೊಪ್ಪೆ ಪಲರುಮೊಳ್ವೆಂಡಿರೊಂದೆಡೆ ಯೊಳಿರ್ದಲ್ಲಿ ಯೊರ್ವಳ್-
- ವಚನ:ಪದವಿಭಾಗ-ಅರ್ಥ:ಅಂತು ಕುಡಿಯೆ ಕಕ್ಕರಗೆಯ್ತದಿಂ (ಕಕ್ಕರ ಕೈತ- ಮದ್ಯಕುಡಿಯುವ ಕಾರ್ಯ) ತುದಿನಾಲಗೆಯೊಳ್ ತೊದಳ್ವೆರಸು (ತೊದಲು ಮಾತುಗಳು ಬೆರೆತು) ನುಡಿವ ನುಡಿಗಳುಂ ಪೊಡರ್ವ ನಿಡಿಯ ಪುರ್ವುಗಳುಂ (ಉದ್ದವಾದ ಪುರ್ಬು/ ಹುಬ್ಬುಗಳು ಅಲುಗಾಡುತ್ತಿದ್ದವು) ನಿಡಿಯ ಅಲರ್ಗಣ್ಗಳೊಳ್ (ಹೂವಿನಂತಿರುವ ಉದ್ದ ಕಣ್ಣುಗಳಲ್ಲಿ) ವಿಕಾರಂ ಬೆರಸು ನೆಗೞ್ದ ಅಭಿನಯಂಗಳುಂ (ಚೇಷ್ಟೆಗಳು) ಮಳಮಳಿಪ ರೂಪು (ಕೆಂಪು ಮುಖದ ರೂಪು) ಕಣ್ಗಳೊಳ್ ಬೆಳ್ಪನೞಿಯೆ (ಕಣ್ಣಿನ ಬಿಳುಪು ಅಳಿಯೆ/ ಹೋಗಲು) ಸೋಂಕುವ ಕೆಂಪುಗಳುಂ ತಮ್ಮ ಕೆಂಪಂ ಕಣ್ಗಳ್ಗೆ ಕೊಟ್ಟು, ಕಣ್ಗಳ ಬೆಳ್ಪಂ ತಮಗೆ ಮಾಱುಗೊಂಡಂತೆ ತನಿಗೆತ್ತುವರೆಸು (ತುಟಿಗಳು- ನಡುಕವನ್ನು ಹೊಂದಿ) ಬತ್ತಿ ಸೊಗಯಿಸುವ ಬೆಳರ್ವಾಯ್ಗಳೊಳ್ ಇಂಪಂ ತಾಳ್ದಿ (ಬತ್ತಿದ ಬಿಳುಪಾದ ಬಾಯಿಗಳಲ್ಲಿ ಇಂಪಾದ) ಪೊಱಮಡುವ ತಣ್ಗಂಪುಗಳುಂ (ತಂಪಾದ ವಾಸನೆಗಳು) ಅಮೃತಬಿಂದುಗಳಂತೆ ನೆಗೞ್ವ ಬೆಮರ ಬಿಂದುಗಳುಂ (ಶೋಭಿಸಿವ ಬೆವರ ಹನಿಗಳು) ಅಳವಲ್ಲದೆ ಒಪ್ಪೆ (ಅಳತೆಮೀರಿ ಒಪ್ಪಲು) ಪಲರುಂ ಒಳ್ವೆಂಡಿರ್ (ಉತ್ತಮ ಸ್ತ್ರೀಯರು) ಒಂದೆಡೆಯೊಳು ಇರ್ದು ಅಲ್ಲಿಯ ಒರ್ವಳ್ -
- ವಚನ:ಅರ್ಥ:ಹಾಗೆ ಕುಡಿಯಲು ಕಕ್ಕರವೆಂಬ ಮದ್ಯಪಾನದ ಮದದಿಂದ ತುದಿನಾಲಗೆಯಲ್ಲಿ ತೊದಲು ಮಾತುಗಳುಂಟಾದುವು. ಉದ್ದವಾದ ಹುಬ್ಬುಗಳು ಅಲುಗಾಡುತ್ತಿದ್ದವು. ಹೂವಿನಂತಿರುವ ಉದ್ದ ಕಣ್ಣುಗಳಲ್ಲಿ ವಿಕಾರದಿಂದ ಕೂಡಿದ ಚೇಷ್ಟೆಗಳು ಕಂಡವು. ಕೆರಳಿ ಕೆಂಪಾದ ರೂಪವು ಕಣ್ಣುಗಳು, ಕಣ್ಣಿನ ಬಿಳುಪು ಹೋಯಿತು. ಆವರಿಸುತ್ತಿರುವ ಕೆಂಪುಬಣ್ಣದ ತುಟಿಗಳು ತಮ್ಮ ಕೆಂಪನ್ನು ಕಣ್ಣುಗಳಿಗೆ ಕೊಟ್ಟು ಅದರ ಬಿಳುಪನ್ನು ತಾವು ತೆಗೆದುಕೊಂಡಂತೆ ತೋರಿದವು. ವಿಶೇಷವಾಗಿ ಅಲುಗಾಡುತ್ತ ಬತ್ತಿದ ಬಿಳುಪಾದ ಬಾಯಿಗಳಲ್ಲಿ ಇಂಪಾದ ತಂಪಾದ ವಾಸನೆಗಳು ಸೂಸಿದವು. ಅಮೃತಬಿಂದುಗಳಂತೆ ಬೆವರ ಹನಿಗಳು ಶೋಭಿಸಿದುವು. ಅಳತೆಮೀರಿ ಒಪ್ಪಲು, ಸೌಂದರ್ಯದಿಂದ ಕೂಡಿದ ಅನೇಕ ಉತ್ತಮ ಸ್ತ್ರೀಯರು ಒಂದೆಡೆ ಸೇರಿದರು. ಆ ಸ್ಥಳದಲ್ಲಿ ಒಬ್ಬಳು-
- ಪೃಥ್ವಿ|| ಬೆಳರ್ತ ಬೆಳರ್ವಾಯ್ ಕರಂ ಪೊಳೆವಪಾಂಗೆ ಕಣ್ಣಿಂದಳು
- ರ್ತುಳುಂಕೆ ನಿಡುವುರ್ವುಗಳ್ ಪೊಡರೆ ಬಾಯ ಕಂಪಿಂಗೆ ಸಾ|
- ರ್ವಳಿಪ್ರಕರಮಂದು ಸೀಗುಡಿವೊಲಾಗೆ ನಾಣ್ಗೆಟ್ಟು ಮೊ
- ಕ್ಕಳಂ ಜತಿಗೆ ಮೆಟ್ಟುವಳ್ ಪಿಡಿದು ಮೆಟ್ಟುವಳ್ ನೋೞ್ಪರಂ|| ೮೯
- ಪದ್ಯ-೮೯:ಪದವಿಭಾಗ-ಅರ್ಥ:ಬೆಳರ್ತ ಬೆಳರ್ವಾಯ್ (ಬಿಳಿಚಿಕೊಂಡ ತುಟಿ) ಕರಂ ಪೊಳೆವ ಅಪಾಂಗೆ (ಕಡೆಗಣ್ಣಿನ ನೋಟವುಳ್ಳ) ಕಣ್ಣಿಂದ ಅಳುರ್ ತುಳುಂಕೆ (ಅಲುರ್/ದೃಷ್ಟಿಯು ವ್ಯಾಪಿಸಲು) ನಿಡುವುರ್ವುಗಳ್ ಪೊಡರೆ (ನೀಳ ಹುಬ್ಬುಗಳು ಕುಣಿಯಲು) ಬಾಯ ಕಂಪಿಂಗೆ ಸಾರ್ವ ಅಳಿಪ್ರಕರಂ (ಮುತ್ತುತ್ತಿರುವ ದುಂಬಿಯ ಸಮೂಹವು) ಅಂದು ಸೀಗುಡಿವೊಲಾಗೆ ನಾಣ್ಗೆಟ್ಟು (ನಾಣ್ ಕೆಟ್ಟು) ಮೊಕ್ಕಳಂ ಜತಿಗೆ ಮೆಟ್ಟುವಳ್ (ಜತಿಗೆ-ತಾಳಕ್ಕೆ ಸರಿಯಾಗಿ ಕುಣಿಯುವಳು) ಪಿಡಿದು ಮೆಟ್ಟುವಳ್ ನೋೞ್ಪರಂ (ನೋಡುವವರನ್ನು ಹಿಡಿದು ಮೆಟ್ಟುವಳು (ಮರುಳು ಮಾಡುವಳು.)
- ಪದ್ಯ-೮೯:ಅರ್ಥ: ಬಿಳಿಚಿಕೊಂಡ ತುಟಿ, ವಿಶೇಷವಾಗಿ ಹೊಳೆವ ಕಡೆಗಣ್ಣಿನ ನೋಟವುಳ್ಳ ಒಬ್ಬಳು ತನ್ನ ಕಣ್ಣಿನ ದೃಷ್ಟಿಯು ಎಲ್ಲಡೆ ಹರಿಯುತ್ತಿರಲು ನೀಳ ಹುಬ್ಬುಗಳು ಕುಣಿಯಲು, ಬಾಯ ವಾಸನೆಯ ಮುತ್ತುತ್ತಿರುವ ದುಂಬಿಯ ಸಮೂಹವು ಸೀಗುಡಿ/ ಕೊಡೆಯಂತಾಗಲು ಲಜ್ಜೆಯಿಲ್ಲದೆ ನೋಡುವವರನ್ನು ಮರುಳುಮಾಡುವಂತೆ ತಾಳಕ್ಕೆ ಸರಿಯಾಗಿ ಕುಣಿಯುವಳು-ಕುಣಿದಳು.
- ವ|| ಮತ್ತಮೊರ್ವಳೂರ್ವಶಿಯನೆ ಪೋಲ್ವಾಕೆ ತನ್ನ ಗಂಭೀರನವಯೌವನ ಮದದೊಳಂ ಮದಿರಾಮದದೊಳಮಳವಿಗೞಿಯೆ ಸೊರ್ಕಿ-
- ವಚನ:ಪದವಿಭಾಗ-ಅರ್ಥ:ಮತ್ತಮೊರ್ವಳು ಊರ್ವಶಿಯನೆ ಪೋಲ್ವಾಕೆ ತನ್ನ ಗಂಭೀರನವಯೌವನ ಮದದೊಳಂ ಮದಿರಾಮದದೊಳಂ ಅಳವಿಗೞಿಯೆ ಸೊರ್ಕಿ-
- ವಚನ:ಅರ್ಥ:ಊರ್ವಶಿಯನ್ನೇ ಹೋಲುವ ಮತ್ತೊಬ್ಬಳು ಗಂಭೀರವಾದ ತನ್ನ ಹೊಸಯವ್ವನದ ಮದದಿಂದಲೂ ಮದ್ಯಪಾನ ಮದದಿಂದಲೂ ಮಿತಿಮೀರಿ ಸೊಕ್ಕಿ-
- ಚಂ|| ಮುಡಿ ಮಕರಧ್ವಜಂಬೊಲೆೞಲುತ್ತಿರೆ ಬೆಂಬಿಡಿದೊಯ್ಯನೊಯ್ಯನು
- ಳ್ಳುಡೆ ಕಟಿಸೂತ್ರದೊತ್ತಿನೊಳೆ ಜೋಲ್ದಿರೆ ನಾಣ್ ತಲೆದೋರೆ ಕೂಡೆ ಕೂ|
- ಕಿಡುವ ಕುಕಿಲ್ವ ಬಿಕ್ಕುಳಿಪ ತೇಗುವ ತನ್ನ ತೊಡಂಕದೆಯ್ದೆ ನೂ
- ರ್ಮಡಿ ಮನದೊಳ್ ಪಳಂಚಲೆಯೆ ಡಕ್ಕೆಯೊಳೞ್ಕಜವಾಗೆಯಾಡಿದಳ್|| ೯೦||
- ಪದ್ಯ-೯೦:ಪದವಿಭಾಗ-ಅರ್ಥ:ಮುಡಿ ಮಕರಧ್ವಜಂಬೊಲ್ (ಮನ್ಮಥನ ಬಾವುಟ) ಎೞಲುತ್ತಿರೆ (ಜೋಲಾಡುತ್ತಿರಲು) ಬೆಂಬಿಡಿದು ಒಯ್ಯನೊಯ್ಯನೆ ಉಳ್ಳುಡೆ (ಜೊತೆಗೆ ಒಳುಡುಪು ಮೆಲ್ಲಮೆಲ್ಲಗೆ) ಕಟಿಸೂತ್ರದ ಒತ್ತಿನೊಳೆ ಜೋಲ್ದಿರೆ (ಉಡುದಾರದ ಹತ್ತಿರವೇ ಜೋತುಬಿದ್ದಿರಲು) ನಾಣ್ ತಲೆದೋರೆ (ನಾಚಿಕೆಯಸ್ಥಳವು ಕಾಣಿಸುತ್ತಿರಲು) ಕೂಡೆ ಕೂಕಿಡುವ (ನೆಗೆಯುವ) ಕುಕಿಲ್ವ ಬಿಕ್ಕುಳಿಪ ತೇಗುವ ತನ್ನ ತೊಡಂಕು ಅದೆಯ್ದೆ (ತನ್ನ ವೇದನೆ ಬಹಳ) ನೂರ್ಮಡಿ ಮನದೊಳ್ ಪಳಂಚಿ ಅಲೆಯೆ (ಸುಳಿದಾಡಿ ಅಲೆಯಲು) ಡಕ್ಕೆಯೊಳ್ ಅೞ್ಕಜವಾಗೆ ಆಡಿದಳ್ (ಡಕ್ಕೆಗೆ-ತಬಲಕ್ಕೆಸರಿಯಾಗಿ ಅಚ್ಚರಿಯಾಗುವಂತೆ ಕುಣಿದಳು)
- ಪದ್ಯ-೯೦:ಅರ್ಥ: ತನ್ನ ತಲೆಕೂದಲು (ದಪ್ಪಜಡೆ) ಮನ್ಮಥನ ಮೀನಿನ ಬಾವುಟದಂತೆ ಜೋಲಾಡುತ್ತಿರಲು ಒಳಉಡುಪು ಉಡುದಾರದ ಹತ್ತಿರವೇ ಜೋತುಬಿದ್ದಿರಲು ನಾಚಿಕೆಯ ಸ್ಥಳವು ಕಾಣಿಸುತ್ತಿರಲು, ಒಡನೆಯೇ ಮೇಲಕ್ಕೆ ನೆಗೆದು ಹಕ್ಕಿಯಂತೆ ಶಬ್ದಮಾಡಿ ಬಿಕ್ಕಳಿಸುವ ತೇಗುವ ತನ್ನ ವೇದನೆ ಬಹಳ ಸುಳಿದಾಡಿ ಅಲೆಯುವಂತೆ ತಬಲಕ್ಕೆಸರಿಯಾಗಿ ಅಚ್ಚರಿಯಾಗುವಂತೆ ಕುಣಿದಳು'
- ವ|| ಅಂತಾಕೆಗಳ್ ತೂಗಿ ತೊನೆವ ತೊನೆಪಂಗಳುಮಂ ಮರಸರಿಗೆವಿಡಿದು ಬಿಲ್ವಿಡಿದಾಡುವ ಬೂತಾಟಂಗಳುಮಂ ನೋಡಿ ಗಂಧೇಭವಿದ್ಯಾಧರನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಅಂತಾಕೆಗಳ್ ತೂಗಿ ತೊನೆವ ತೊನೆಪಂಗಳುಮಂ ಮರಸರಿಗೆವಿಡಿದು (ಬಿಂದಿಗೆ) ಬಿಲ್ವಿಡಿದಾಡುವ ಬೂತಾಟಂಗಳುಮಂ ನೋಡಿ ಗಂಧೇಭವಿದ್ಯಾಧರನಿಂತೆಂದಂ-
- ವಚನ:ಅರ್ಥ:ಹಾಗೆ ಆ ಹೆಣ್ಣುಗಳು ಅತ್ತಿತ್ತ ತೊನೆದಾಡುವ ತೂಗಾಟಗಳನ್ನೂ ಬಿಂದಿಗೆ- ಬಿಲ್ಲುಗಳನ್ನು ಹಿಡಿದು ಭೂತಗಳ ಆಟವಾಡುವುದನ್ನು ಗಂದೇಭವಿದ್ಯಾಧರನಾದ ಅರ್ಜುನನು ನೋಡಿ ಹೀಗೆಂದನು-
- ಚಂ|| ನುಡಿವರೆ ನೋಡ ಕಳ್ಗುಡಿವರೆಂಬುದಿದಾಗದ ಸೂರುಳಂತದಂ
- ಕುಡಿವನುಮಂತೆ ಕಳ್ಗುಡಿವರೆಂದೊಡೆ ನಾಣ್ಚುವರಂತುಟಪ್ಪುದಂ|
- ಕುಡಿದುಮಿವಂದಿರಾರೆರ್ದೆಯುಮಂ ಸೆರೆಗೆಯ್ದಪರೆಯ್ದೆ ದೋಷದೊಳ್
- ತೊಡರ್ವುದುಮೊಂದುಪಾಶ್ರಯವಿಶೇಷದೊಳೊಳ್ಪನೆ ತಳ್ವುದಾಗದೇ|| ೯೧||
- ಪದ್ಯ-೯೧:ಪದವಿಭಾಗ-ಅರ್ಥ:ನುಡಿವರೆ ನೋಡ ಕಳ್ಗುಡಿವರೆಂಬುದು (ಕಳ್ ಕುಡಿಯುವವರು ಎಂದು ಹೇಳಬಹುದೇ-ನೋಡು!) ಇದು ಆಗದ ಸೂರುಳಂತದಂಕುಡಿವನುಮಂತೆ ಕಳ್ಗುಡಿವರೆಂದೊಡೆ ನಾಣ್ಚುವರ್ ಅಂತುಟಪ್ಪುದಂ(ಲಜ್ಜಿತರಾಗುತ್ತಾರೆ. ಹಾಗೆ ಕುಡಿದರೂ) ಕುಡಿದುಂ ಇವಂದಿರು ಆರೆರ್ದೆಯುಮಂ ಸೆರೆಗೆಯ್ದಪರು (ಅವರು ಎಲ್ಲರ ಹೃದಯವನ್ನೂ ಸೆರೆಹಿಡಿಯುತ್ತಾರಲ್ಲವೇ.) ಎಯ್ದೆ ದೋಷದೊಳ್ ತೊಡರ್ವುದುಂ ಒಂದು ಉಪಾಶ್ರಯ ವಿಶೇಷದೊಳ್ ಒಳ್ಪನೆ ತಳ್ವುದು ಆಗದೇ- (ವಿಶೇಷ ಅವಲಂಬನದಿಂದ ಅವರಿಗೆ ಒಳ್ಳೆಯದೇ ಆಗುವುದಿಲ್ಲವೇ? ).
- ಪದ್ಯ-೯೧:ಅರ್ಥ: ಕುಡಿಯುವವರನ್ನು ಕಳ್ ಕುಡಿಯುವವರು ಎಂದು ಹೇಳಬಹುದೇ? ನೋಡು! ಆಗದು. ಕುಡಿಯುವವರನ್ನು ಹಾಗೆ ಕುಡುಕರೆಂದರೆ ಅವರು ಲಜ್ಜಿತರಾಗುತ್ತಾರೆ. ಹಾಗೆ ಕುಡಿದರೂ ಅವರು ಎಲ್ಲರ ಹೃದಯವನ್ನೂ ಸೆರೆಹಿಡಿಯುತ್ತಾರಲ್ಲವೇ. ಹೀಗೆಮಾಡಿ ದೋಷದಲ್ಲಿ ತೊಡಗಿದರೂ ಒಂದು ವಿಶೇಷ ಅವಲಂಬನದಿಂದ ಅವರಿಗೆ ಒಳ್ಳೆಯದೇ ಆಗುವುದಿಲ್ಲವೇ? (ಯಾವುದೋ ನೋವನ್ನು ಕಳೆಯುವ ದಾರಿಯೇ?)
- ವ|| ಎನುತುಂ ಬರ್ಪನೊಂದೆಡೆಯೊಳೊರ್ವಂ ಪೞಿಕೆಯ್ದ ನಲ್ಲಳನುೞಿಯಲಾಱದೆ ಸುೞಯೆ ಮುಳಿದಾತನ ಕೆಳೆಯನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಎನುತುಂ ಬರ್ಪನು ಒಂದೆಡೆಯೊಳ್ ಒರ್ವಂ ಪೞಕೆಯ್ದ ನಲ್ಲಳಂ (ಹಳಿದ ಪ್ರಿಯಳನ್ನು) ಉೞಿಯಲಾಱಿದೆ (ಬಿಡಲಾದೆ) ಸುೞಿಯೆ (ಅವಳ ಮನೆ ಬಳಿ ಸುಳಿಯಲು) ಮುಳಿದು ಆತನ ಕೆಳೆಯನಿಂತೆಂದಂ-
- ವಚನ:ಅರ್ಥ:ಎನ್ನುತ್ತ ಬರುತ್ತಿದ್ದವನು ಒಂದೆಡೆಯಲ್ಲಿ ತನ್ನನ್ನು ಬಯ್ಯುತ್ತಿದ್ದ ಪ್ರಿಯಳನ್ನು ಬಿಡಲಾರದೆ ಅವಳ ಮನೆಯ ಬಳಿ ಸುಳಿದಾಡುತ್ತಿರಲು ಕೋಪಿಸಿಕೊಂಡ ಅವನ ಗೆಳೆಯನು ಹೀಗೆಂದು ಅವನಿಗೆ ಹೀಗೆ ಹೇಳಿದನು
- ಚಂ|| ಬಸನದೊಡಂಬಡಿಂಗಲಸಿ ಮಾಣ್ದೊಡಮಿಂತಿದನೀವೆನೆಂದನಂ
- ಪುಸಿದೊಡಮಾಸೆದೋಱೆ ಬಗೆದೋಱದೊಡಂ ನೆರದಿರ್ದೊಡಂ ಸಗಾ|
- ಟಿಸದೊಡಮಾಯಮುಂ ಚಲಮುಮುಳ್ಳೊಡೆ ಪೇಸದವಳ್ಗೆ ಮತ್ತಮಾ
- ಟಿಸುವುದೆ ಮತ್ತಮಂಜುವುದೆ ಮತ್ತಮೞಲ್ವುದೆ ಮತ್ತಮೀವುದೇ|| ೯೨ ||
- ಪದ್ಯ-೯೨:ಪದವಿಭಾಗ-ಅರ್ಥ: ಬಸನದ ಒಡಂಬಡಿಂಗೆ ಅಲಸಿ (ವ್ಯಸನದ-ರತಿಕ್ರೀಡೆಗೆ ಒಡಗೂಡಲು ಬೇಸರಿಸಿ) ಮಾಣ್ದೊಡಂ (ಮಾಣ್-ಬೇಡವೆಂದು ಬಿಟ್ಟರೂ) ಇಂತು ಇದನು ಈವೆನು ಎಂದನಂ (ಹೀಗೆ ಇವುಗಳನ್ನು ಕೊಡುವನೆಂದ ನಿನಗ) ಪುಸಿದೊಡಂ ಆಸೆದೋಱೆ ಬಗೆದೋಱದೊಡಂ (ಸುಳ್ಳು ಹೇಳಿದರೂ, ಆಸೆತೋರಿಸಿದರೂ, ಬಗೆ- ಮನಸ್ಸು - ತನ್ನ ಪ್ರೇಮವನ್ನೂ ತೋರಿಸದಿದ್ದರೂ) ನೆರದಿರ್ದೊಡಂ (ಜೊತೆ ಸೇರದಿದ್ದರೂ,) ಸಗಾಟಿಸದೊಡಂ (ಪ್ರೇಮವನ್ನು ತೋರಿಸದಿದ್ದರೂ) ಆಯಮುಂ ಚಲಮುಮುಳ್ಳೊಡೆ (ಬಲವೂ ಛಲವೂ ಇದ್ದ ಪಕ್ಷದಲ್ಲಿ) ಪೇಸದೆ ಅವಳ್ಗೆ ಮತ್ತಮಾಟಿಸುವುದೆ (ಅವಳಿಗೆ ಹೇಸದೆ ಪುನಃ ಅವಳಿಗಾಗಿ ಆಸೆ ಪಡುವುದೇ,) ಮತ್ತಂ ಅಂಜುವುದೆ ಮತ್ತಂ ಅೞಲ್ವುದೆ ಮತ್ತಂ ಈವುದೇ(ಪುನ ಅವಳಿಗೆ (ಧನಕನಕಾದಿಗಳನ್ನು- ಈವುದೇ- ಕೊಡುವುದೇ?)
- ಪದ್ಯ-೯೩:ಅರ್ಥ: ರತಿಕ್ರೀಡೆಗೆ ಒಡಗೂಡಲು ಬೇಸರಿಸಿ ಅವಳು ಬಿಟ್ಟರೂ (ನಿನಗೆ ಬೇಕಾದ) ಹೀಗೆ ಇವುಗಳನ್ನು ಕೊಡುವನೆಂದ ನಿನಗೆ ಸುಳ್ಳು ಹೇಳಿದರೂ ನೀನು ಆಸೆ ತೋರಿಸಿದರೂ ತನ್ನ ಪ್ರೇಮವನ್ನೂ ತೋರಿಸದಿದ್ದರೂ ನೀನು ಅವಳನ್ನು ಕೂಡಿಕೊಂಡಿದ್ದರೂ ಅವಳು ತನ್ನ ಪ್ರತಿಪ್ರೇಮವನ್ನು ತೋರಿಸದಿದ್ದರೂ ನಿನಗೆ ಬಲವೂ ಛಲವೂ ಇದ್ದ ಪಕ್ಷದಲ್ಲಿ, ಅವಳಿಗೆ ಹೇಸದೆ ಪುನಃ ಅವಳಿಗಾಗಿ ಆಸೆ ಪಡುವುದೇ, ಅಂಜುವುದೇ, ಪುನ ವ್ಯಸನ ಪಡುವುದೇ, ಪುನ ಅವಳಿಗೆ (ಧನಕನಕಾದಿಗಳನ್ನು) ಕೊಡುವುದೇ?
- ವ|| ಎಂದು ನುಡಿದು ಬಿಸುಡಿಸಿದಂ ಮತ್ತೊರ್ವಂ ತನಗೆರಡಱಿಯದೊಲ್ದ ನಲ್ಲಳನೇತರೊಳಪ್ಪೊಡಮೇವಮಂ ಮಾಡದೆ ಬೇಟಮಂ ಸಲಿಸುವುದರ್ಕೆ ಸಂತಸಂಬಟ್ಟು ಮುಂತಣ್ಗೆ ಕಾಪನಿಟ್ಟಿಂತೆಂದಂ-
- ವಚನ:ಪದವಿಭಾಗ-ಅರ್ಥ:ಎಂದು ನುಡಿದು ಬಿಸುಡಿಸಿದಂ (ಬಿಸುಡು - ದೂರೀಕರಿಸು, ಬಿಡಿಸಿದನು) ಮತ್ತೊರ್ವಂ ತನಗೆ ಎರಡಱಿಯದೆ ಒಲ್ದ ನಲ್ಲಳನು (ಕಪಟವಿಲ್ಲದೆ ಪ್ರೀತಿಸುತ್ತಿದ್ದ ಪ್ರಿಯಳನ್ನು) ಏತರೊಳಪ್ಪೊಡಂ ಏವಮಂ ಮಾಡದೆ (ನೋವನ್ನುಮಾಡದೆ) ಬೇಟಮಂ ಸಲಿಸುವುದರ್ಕೆ ಸಂತಸಂಬಟ್ಟು ಮುಂತಣ್ಗೆ ಕಾಪನಿಟ್ಟು (ಮುಂದಕ್ಕೆ ಕಾವಲಿಟ್ಟು ?) ಇಂತೆಂದಂ-
- ವಚನ:ಅರ್ಥ:ಎಂಬುದಾಗಿ ಹೇಳಿ (ಅವಳನ್ನು) ಬಿಡಿಸಿದನು. ಮತ್ತೊಬ್ಬನು ತನಗೆ ಕಪಟವಿಲ್ಲದೆ ಪ್ರೀತಿಸುತ್ತಿದ್ದ ಪ್ರಿಯಳನ್ನು ಯಾವುದರಲ್ಲಿಯೂ ನೋವನ್ನುಮಾಡದೆ ಪ್ರೀತಿಯನ್ನು ಸಲ್ಲಿಸಿದ್ದಕ್ಕೆ ಸಂತೋಷಪಟ್ಟು ಮುಂದಕ್ಕೆ ಕಾವಲಿಟ್ಟು ಹೀಗೆ ಹೇಳಿದನು.
- ವ|| ಇನಿಯಂ ನೊಯ್ದುಮೊಡಂಬಡಂ ನುಡಿದೊಡೆಂದೆಂದಪ್ಪೊಡಂ ನಿನ್ನೊಳೆ
- ಳ್ಳನಿತುಂ ದೋಷಮನುಂಟುಮಾಡದಿರೆಯುಂ ಕಣ್ಪಿಂತೆ ಸಂದಪ್ಪುದೊಂ|
- ದನೆ ಕೇಳ್ದೋಪಳೆ ಕೂರ್ಮೆಗೆಟ್ಟೆನಗೆ ನೀನೇನಾನುಮೊಂದೇವಮಂ
- ಮನದೊಳ್ ಮಾಡಿದೊಡಂದೆ ದೀವಳಿಗೆಯಂ ಮಾನಾಮಿಯಂ ಮಾಡೆನೇ|| ೯೩ ||
- ಪದ್ಯ-೯೩:ಪದವಿಭಾಗ-ಅರ್ಥ:ಇನಿಯಂ (ಇನಿಯಳ್ -ಪ್ರಿಯಳು -ಡಿಎಲ್‍ಎನ್) ನೊಯ್ದುಂ ಒಡಂಬಡಂ ನುಡಿದೊಡೆಂದು (ಪ್ರಿಯನು ಅಡಬಡ/ ಎಡವಟ್ಟು ಮಾತನಾಡಿದರೆ ನೊಂದಕೊಳ್ಳುವನು ಎಂದು) ಎಂದಪ್ಪೊಡಂ (ಎಂದುಕೊಂಡರೂ ) ನಿನ್ನೊಳೆ ಎಳ್ಳನಿತುಂ ದೋಷಮನು (ನಿನ್ನಲ್ಲಿ ಸ್ವಲ್ಪ ದೋಷವನ್ನು) ಉಂಟುಮಾಡದಿರೆಯುಂ (ದೋಷವನ್ನುಂಟುಮಾಡದಿದ್ದರೂ) ಕಣ್ಪಿಂತೆ (ಕಣ್ ಪಿಂತೆ -ಕಣ್ಣನೋಟ ಹಿಂದೆ) ಸಂದಪ್ಪುದು (ಸರಿಯುವುದು ) ಒಂದನೆ ಕೇಳ್ದೋಪಳೆ (ಕೇಳ್ದು ಓಪಳೆ- ಪ್ರಿಯಳೇ ಒಂದುಮಾತನ್ನು ಕೇಳು) ಕೂರ್ಮೆಗೆಟ್ಟೆನಗೆ (ನಿನ್ನ ಪ್ರೀತಿಯನ್ನು ಕಳೆದುಕೊಂಡ ನನಗೆ) ನೀನ್ ಏನಾನುಮೊಂದು ಏವಮಂ ((ಅನಾದರ, ತಿರಸ್ಕಾರ, ಕಡುಕು) ) ಮನದೊಳ್ ಮಾಡಿದೊಡೆ (ನೀನು ಏನಾನಾದರೊಂದು ನಿಂದೆಯನ್ನು ಮನಸ್ಸಿನ್ನಲ್ಲಿ ಮಾಡಿದರೂ) ಅದೆ ದೀವಳಿಗೆಯಂ ಮಾನಾಮಿಯಂ ಮಾಡೆನೇ (ನನಗೆ ಅದೇ ದೀವಳಿಗೆ ಮಹಾನವಮಿಯ ದೊಡ್ಡ ಹಬ್ಬ)
- ಪದ್ಯ-೯೩:ಅರ್ಥ: ಪ್ರಿಯನು ಎಡವಟ್ಟು ಮಾತನಾಡಿದರೆ ನೊಂದಕೊಳ್ಳುವನು ಎಂದು ನೀನು ಎಂದುಕೊಂಡಿದ್ದರೂ - ಹಾಗೆ ಭಾವಿಸಿ ಮೌನವಹಿಸಬೇಡ, ನಾನು ನಿನ್ನಲ್ಲಿ ಸ್ವಲ್ಪ ದೋಷವನ್ನು ನಾನು ಉಂಟುಮಾಡದಿದ್ದರೂ, ನಿನ್ನ ಕಣ್ಣನೋಟ ಹಿಂದೆ ಸರಿಯುವುದು- ಅಸಮಾಧಾನ ಪಡುವೆ; ಪ್ರಿಯಳೇ ಒಂದು ಮಾತನ್ನು ಕೇಳು ನಿನ್ನ ಪ್ರೀತಿಯನ್ನು ಕಳೆದುಕೊಂಡ ನನಗೆ, ನೀನು ಏನಾದರೊಂದು ನಿಂದೆಯನ್ನು ಮನಸ್ಸಿನ್ನಲ್ಲಿ ಮಾಡಿದರೂ ಅದೇ ದೀವಳಿಗೆ ಮಹಾನವಮಿಯ ದೊಡ್ಡ ಹಬ್ಬ. ನೀನು ಅನಾದರಿಸಿ ನನ್ನನ್ನು ಮರೆಯದೆ, ನನಗೆ ಬೈದರೂ ಸಂತೋಷ. (ಎಂದು ಪ್ರಿಯಳಿಗೆ ಒಬ್ಬನು ಹೇಳಿದನು)
- ವ|| ಎಂದು ನುಡಿದಂ ಮತ್ತಮೊಂದು ಎಡೆಯೊಳ್ ಒರ್ವನು ಒರ್ವಳ ನಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಗೆ ನಕ್ಕು ತನ್ನ ಕಳೆಯಂಗೆ ತೋಱಿ-
- ವಚನ:ಪದವಿಭಾಗ-ಅರ್ಥ: ಎಂದು ನುಡಿದಂ ಮತ್ತಂ ಒಂದೆಡೆಯೊಳ್ ಒರ್ವನು ಒರ್ವಳ ನಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಗೆ ನಕ್ಕು ತನ್ನ ಕಳೆಯಂಗೆ ತೋಱ-
- ವಚನ:ಅರ್ಥ:ಎಂದು ನುಡಿದನು. ಮತ್ತೊಂದ ಕಡೆಯಲ್ಲಿ ಒಬ್ಬನು ಒಬ್ಬಳ ನೆಡಿಗೆಯ, ಮಾತಿನ, ತುರುಬಿನ, ದಡ್ಡತನಕ್ಕೆ ಮುಗುಳ್ನಗೆ ನಕ್ಕು, ತನ್ನ ಸ್ನೇಹಿತನಿಗೆ ತೋರಿಸಿ ಹೇಳಿದನು
- ಚಂ|| ನಯದೊಳೆ ನೋಡಿ ನೋಟದೊಳೆ ಮೇಳಿಸಿ ಮೇಳದೊಳಪ್ಪುಕೆಯ್ದು ಗೊ
- ಟ್ಟಿಯೊಳೊಳಪೊಯ್ದು ಪತ್ತಿಸುವ ಸೂಳೆಯರಂದಮನೆಯ್ದೆ ಪೋಲ್ವಂ ಸೂ|
- ಳೆಯರ ತುಱುಂಬು ಸೂಳೆಯರ ಮೇಲ್ನುಡಿ ಸೂಳೆಯರಿರ್ಪ ಪಾಂಗು ಸೂ
- ಳೆಯರ ನೆಗೞ್ತೆ ನಾಡೆ ತನಗೞ್ತಿ ದಲಕ್ಕನೆ ಸೂಳೆಯಾಗಳೇ|| ೯೪||
- ಪದ್ಯ-೯೪:ಪದವಿಭಾಗ-ಅರ್ಥ: ನಯದೊಳೆ ನೋಡಿ (ಹಿತವಾಗಿ ನೋಡಿ,) ನೋಟದೊಳೆ ಮೇಳಿಸಿ (ನೋಟದಲ್ಲೇ ಮನಕ್ಕೆ ಮನಕೂಡಿಸಿ) ಮೇಳದೊಳು ಒಪ್ಪುಕೆಯ್ದು (ಕೂಟಕ್ಕೆ ಒಪ್ಪುವಂತೆ ಮಾಡಿ) ಗೊಟ್ಟಿಯೊಳು ಒಳಪೊಯ್ದು (ಗೋಷ್ಠಿಯಲ್ಲಿ ವಶಪಡಿಸಿಕೊಂಡು - ಒಳಹೊಗಿಸಿಕೊಂಡು) ಪತ್ತಿಸುವ ಸೂಳೆಯರ ಅಂದಮನು ಎಯ್ದೆ ಪೋಲ್ವಂ ಸೂಳೆಯರ (ಹತ್ತಿಸಿಕೊಳ್ಲುವ- ಬೆಸದುಕೊಳ್ಳುವ ಸೂಳೆಯರ ರೀತಿಯನ್ನು ಹೋಲುವ,) ತುಱುಂಬು (ತುರುಬು) ಸೂಳೆಯರ ಮೇಲ್ನುಡಿ ಸೂಳೆಯರು ಇರ್ಪ ಪಾಂಗು (ಇರುವ ರೀತಿ) ಸೂಳೆಯರ ನೆಗೞ್ತೆ (ನೆಡವಳಿಕೆ) ನಾಡೆ (ವಿಶೇಷವಾಗಿ) ತನಗೆ ಅೞ್ತಿ (ಇಷ್ಟವಾದುದು) ದಲ್ (ಅಲ್ಲವೇ) ಅಕ್ಕನೆ ಸೂಳೆಯಾಗಳೇ (ಈ ಅಕ್ಕನೆ- ಹೆಣ್ಣೇ ಸೂಳೆಯಾಗಿಯೇ ಇರಬೇಕಲ್ಲವೆ?)
- ಪದ್ಯ-೯೪:ಅರ್ಥ: ಹಿತವಾಗಿ ನೋಡಿ, ನೋಟದಲ್ಲೇ ಮನಕ್ಕೆ ಮನಕೂಡಿಸಿ, ಕೂಟಕ್ಕೆ ಒಪ್ಪುವಂತೆ ಮಾಡಿ, ಆಲಿಂಗನದಿಂದಲೇ ಕೂಡಿಕೊಂಡು ಕೂಡುವುದರಿಂದಲೇ ವಶಪಡಿಸಿಕೊಂಡು ತಮ್ಮ ಮನಸ್ಸನ್ನು ಬೆಸೆಯುವ ಸೂಳೆಯರ ರೀತಿಯನ್ನು ಚೆನ್ನಾಗಿ ಹೋಲುವ ಸೂಳೆಯರ ತುರುಬು, ಸೂಳೆಯರ ಮೃದುವಾದ ಮಾತು, ಸೂಳೆಯರು ಇರುವ ಸ್ಥಿತಿ, ಸೂಳೆಯರ ನಡೆವಳಿಕೆ ಇವು ನನಗೆ ವಿಶೇಷವಾಗಿ ಇಷ್ಟವಾದುದು. ಈ ಅಕ್ಕನ ಆಟ, ನೋಟ, ತುರುಬು, ಇರುವ ರೀತಿ, ನೋಡಿದರೆ ಈ ಅಕ್ಕನೆ- ಈ ಹೆಣ್ಣು- ಹೆಣ್ಣೇ ಸೂಳೆಯಾಗಿಯೇ ಇರಬೇಕಲ್ಲವೆ?
- ವ|| ಎನೆ ಕೇಳ್ದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳೊಂದು ಕಂದದ ಮೊದಲುಮಂ ವೃತ್ತದ ತುದಿಯುಮನೊಂದುಮಾಡಿ ಪದಮಿಕ್ಕಿಯೋದಿ ಪಂಡಿತಿಕ್ಕೆಗೆ ಮುಯ್ವಾಂತುಮಾವ ಕಾಳೆಗದೊಳಂ ತಾನೆ ಓಡಿಯಾರೋಡಿದರೆಂಬಂತೆ ಬೀರಕ್ಕೆ ಮುಯ್ವಾಂತುಮೊಂದು ವೀಸನಪ್ಪೊಡಮಾರ್ಗಮಿತ್ತಱಿಯದೆ ಚಾಗಕ್ಕೆ ಮುಯ್ವಾಂತುಂ ತಮ್ಮಂ ನಗುವರನಱಿಯದೆಣ್ಬರೇಱಿದ ಕೞ್ತೆಯಂತೆ ದೆಸೆದೆಸೆಗೆ ಬೆಸೆವ ಪಚ್ಚಪಸಿಯೆಗ್ಗರುಮಂ ಕಂಡು
- ವಚನ:ಪದವಿಭಾಗ-ಅರ್ಥ:ಎನೆ (ಅರ್ಜುನನು) ಕೇಳ್ದು ಮುಗುಳ್ನಗೆ ನಗುತ್ತುಂ ಬರ್ಪನು ಒಂದೆಡೆಯೊಳು ಒಂದು ಕಂದದ ಮೊದಲುಮಂ (ಕಂದಪದ್ಯದ ಆದಿಯನ್ನೂ), ವೃತ್ತದ ತುದಿಯಂ ಒಂದುಮಾಡಿ ಪದಮಿಕ್ಕಿಯೋದಿ (ಪದಜೋಡಿಸಿ ಓದಿ) ಪಂಡಿತಿಕ್ಕೆಗೆ ಮುಯ್ವಾಂತುಂ (ತನ್ನ ಪಾಂಡಿತ್ಯಕ್ಕೆ ಮೆಚ್ಚಿಕೊಳ್ಳುತ್ತ) ಆವ ಕಾಳೆಗದೊಳಂ ತಾನೆ ಓಡಿಯಾರೋಡಿದರು (ಓಡಿ ಆರಿ-ಹಾರಿ, ಓಡಿದರು) ಎಂಬಂತೆ ಬೀರಕ್ಕೆ ಮುಯ್ವಾಂತುಮ್ ಒಂದು (ಶೌರ್ಯವನ್ನು ಹೊಗಳಿ ಬೆನ್ನತಟ್ಟಿಕೊಳ್ಳುತ್ತಲೂ) ಒಂದು ವೀಸನ ಅಪ್ಪೊಡಮಾರ್ಗಂ ಇತ್ತು ಅಱಿಯದೆ ಚಾಗಕ್ಕೆ ಮುಯ್ವಾಂತುಂ(ಒಂದು ವೀಸವನ್ನಾದರೂ ಉತ್ತಮ ಕಾರ್ಯಕ್ಕೆ ಕೊಟ್ಟು ಅರಿಯದ ತಾನು ತ್ಯಾಗಿಯೆಂದು ಕೊಚ್ಚಿಕೊಳ್ಳುತ್ತಲೂ) ತಮ್ಮಂ ನಗುವರನು ಅಱಿಯದೆ (ಅರಿಯದೆ)ಎಣ್ಬರೇಱಿದ ಕೞ್ತೆಯಂತೆ (ಎಂಟುಜನ ಹತ್ತಿಕೊಂಡಿರುವ ಕತ್ತೆಯಂತೆ) ದೆಸೆದೆಸೆಗೆ ಬೆಸೆವ ಪಚ್ಚಪಸಿಯೆಗ್ಗರುಮಂ - ಪಚ್ಚ ಪಸಿ ಅಗ್ಗರು (ಅಚ್ಚ ಹಸಿ ದಡ್ಡರನ್ನು) ಕಂಡು
- ವಚನ:ಅರ್ಥ:ಎಂಬುದನ್ನು ಕೇಳಿ ಅರ್ಜುನನು ಮುಗುಳ್ನಗೆ ನಗುತ್ತ ಬರುತ್ತಿದ್ದವನು ಒಂದು ಕಡೆಯಲ್ಲಿ ಒಂದು ಕಂದಪದ್ಯದ ಆದಿಯನ್ನೂ ಮತ್ತೊಂದು ವೃತ್ತದ ಅಂತ್ಯವನ್ನೂ ಪದಜೋಡಿಸಿ ಓದಿ ತನ್ನ ಪಾಂಡಿತ್ಯಕ್ಕೆ ಮೆಚ್ಚಿಕೊಳ್ಳುತ್ತಲೂ ಯಾವುದೋ ಕಾಳಗದಲ್ಲಿ ತಾನು ಓಡಿ ಹಾರಿ ಹೋರಾಡಿದನು ಎಂಬಂತೆ ತನ್ನ ಶೌರ್ಯವನ್ನು ಹೊಗಳಿ ಬೆನ್ನತಟ್ಟಿಕೊಳ್ಳುತ್ತಲೂ, ಒಂದು ವೀಸವನ್ನಾದರೂ ಉತ್ತಮ ಕಾರ್ಯಕ್ಕೆ ಕೊಟ್ಟು ಅರಿಯದ ತಾನು ತ್ಯಾಗಿಯೆಂದು ಕೊಚ್ಚಿಕೊಳ್ಳುತ್ತಲೂ, ತಮ್ಮನ್ನು ನೋಡಿ ನಗುವವರನ್ನು ತಿಳಿಯದೆ ಎಂಟುಜನ ಹತ್ತಿಕೊಂಡಿರುವ ಕತ್ತೆಯಂತೆ ದಿಕ್ಕುದಿಕ್ಕಿನಲ್ಲಿಯೂ ಗರ್ವವನ್ನು ಪ್ರದರ್ಶಿಸುತ್ತಲೂ ಇರುವ ಶುದ್ಧ ಹಸಿಯ ದಡ್ಡರನ್ನು ನೋಡಿ
- ಚಂ|| ಇಱಿಯದ ಬೀರಮಿಲ್ಲದ ಕುಲಂ ತಮಗಲ್ಲದ ಚಾಗಮೋದದೋ
- ದಱಿಯದ ವಿದ್ದೆ ಸಲ್ಲದ ಚದುರ್ ನೆರೆ ಕಲ್ಲದ ಕಲ್ಪಿ ಕೇಳ ಮಾ||
- ತಱಿಯದ ಮಾತು ತಮ್ಮ ಬಱುವಾತುಗಳೊಳ್ ಪುದಿದೆಗ್ಗರೆಯ್ದೆ ಕ
- ಣ್ಣೆರೆವಿನಮಾರ್ ಪೞಿಯದೇನೆಳೆಯಂ ಕಿಡಿಸಲ್ಕೆ ಬಲ್ಲರೋ|| ೯೫||
- ಪದ್ಯ-೯೫:ಪದವಿಭಾಗ-ಅರ್ಥ:ಇಱಿಯದ (ಇರಿಯದ) ಬೀರಂ, ಇಲ್ಲದ ಕುಲಂ, ತಮಗಲ್ಲದ ಚಾಗಂ, ಓದದ ಓದು, ಅಱಿಯದ ವಿದ್ದೆ, ಸಲ್ಲದ ಚದುರ್ (ಸಲ್ಲದ ಜಾಣ್ಮೆ) ನೆರೆ ಕಲ್ಲದ ಕಲ್ಪಿ, ಕೇಳ್ ಮಾತು ಅಱಿಯದ ಮಾತು, ತಮ್ಮ ಬಱುವಾತುಗಳೊಳ್ (ಬರಿಮಾತು, ವ್ಯರ್ಥಮಾತುಗಳಲ್ಲಿ) ಪುದಿದ ಎಗ್ಗರು ಎಯ್ದೆ (ಸೇರಿರುವ ದಡ್ಡರು ಹೆಚ್ಚುತ್ತಿರಲು) ಕಣ್ಣೆರೆವಿನಂ ಆರ್ ಪೞಿಯದೇನು (ಕಣ್ಣುತೆರೆಯುತ್ತಿರಲು - ಹೆಚ್ಚುತ್ತಿರಲು,) ಎಳೆಯಂ (ಇಳೆ- ಲೋಕವನ್ನು) ಕಿಡಿಸಲ್ಕೆ ಬಲ್ಲರೋ ()
- ಪದ್ಯ-೯೫:ಅರ್ಥ: ಕಾದದ ಶೌರ್ಯ, ಇಲ್ಲದ ಕುಲ, ತಮ್ಮಲ್ಲಿಲ್ಲದ ತ್ಯಾಗ, ತಾವು ಓದದ ಓದು, ತಿಳಿಯದ ವಿದ್ಯೆ, ಇಲ್ಲದ ಜಾಣ್ಮೆ, ವಿಶೇಷವಾಗಿ ಕಲಿಯದ ಕಲಿಕೆ, ಆಡಲು ತಿಳಿಯದ ಮಾತು, ಇವು ತಮ್ಮ ವ್ಯರ್ಥಮಾತುಗಳಲ್ಲಿ, ಸೇರಿರುವ ದಡ್ಡರು ಹೆಚ್ಚುತ್ತಿರಲು, ಯಾರು ತಾನೆ ಅವರನ್ನು ಹಳಿಯುವುದಿಲ್ಲ? ಅವರು ಲೋಕವನ್ನು ಕೆಡಿಸಲು ಬಲ್ಲರೋ! (ಕೆಡಿಸಬಹುದು, ತಿಳಿದವರಿಗೆ ಎಡೆಯಿಲ್ಲ)
- ವ|| ಎನೆ ನಗುತ್ತುಂ ಬರೆಯೊಂದೆಡೆಯೊಳ್ ನಾಲ್ವರಯ್ವರ್ ಗಾೞ್ದೊೞ್ತಿರಿರ್ದಲ್ಲಿಗೊರ್ವ ನೆಗ್ಗಂ ಗೊಟ್ಟಿಗೆ ವಂದು ಕಣ್ಣಱಿಯದೆ ಸೋಂಕೆಯುಂ ಮನಮಱಿಯದೆ ನುಡಿಯೆಯುಮಾತನ ನಾಕೆಗಳ್ ಬಾಸೆಯೊಳಿಂತೆಂದರ್-
- ವಚನ:ಪದವಿಭಾಗ-ಅರ್ಥ:ಎನೆ ನಗುತ್ತುಂ ಬರೆ ಒಂದೆಡೆಯೊಳ್ ನಾಲ್ವರು ಅಯ್ವರ್ (೪- ೫ ಜನ) ಗಾೞ್ದೊೞ್ತಿರ್ (ಗಾಳ್‍ದೊಳ್‍ತಿರ್- ತುಂಟದಾಸಿಯರು) ಇರ್ದಲ್ಲಿಗೆ ಒರ್ವ ನೆಗ್ಗಂ (ದಡ್ಡ) ಗೊಟ್ಟಿಗೆ ವಂದು (ಗೋಷ್ಠಿಗೆ ಬಂದು) ಕಣ್ಣಱಿಯದೆ (ಅಭಿಪ್ರಾಯವನ್ನು ತಿಳಿಯದೆ) ಸೋಂಕೆಯುಂ-ಮುಟ್ಟಿ ಮನಮಱಿಯದೆ ನುಡಿಯೆಯುಂ (ಮುಟ್ಟಿ ಇಷ್ಟವನ್ನು ತಿಳಿಯದೆ ನುಡಿಯಲು) ಆತನನು ಆಕೆಗಳ್ ಬಾಸೆಯೊಳ್ ಇಂತೆಂದರ್ (ತಮ್ಮ ರಹಸ್ಯಭಾಷೆಯಲ್ಲಿ ಹೀಗೆಂದರು)-
- ವಚನ:ಅರ್ಥ:ಎನ್ನಲು ಅದನ್ನು ಕೇಳಿ ನಗುತ್ತ ಬರುತ್ತಿರಲು, ಒಂದು ಕಡೆಯಲ್ಲಿ ನಾಲ್ಕೈದು ಜನ ತಂಟದಾಸಿಯರು ಇದ್ದ ಕಡೆಗೆ ಒಬ್ಬ ದಡ್ಡನು ಅವರ ಗೋಷ್ಠಿಗೆ ಬಂದು, ಅಭಿಪ್ರಾಯವನ್ನು ತಿಳಿಯದೆ, ಮುಟ್ಟಿ ಇಷ್ಟವನ್ನು ತಿಳಿಯದೆ ನುಡಿಯಲು ಆ ದಾಸಿಯರು ಅವನನನ್ನು ಕುರಿತು ತಮ್ಮ ರಹಸ್ಯಭಾಷೆಯಲ್ಲಿ ಹೀಗೆಂದರು
- ಉ|| ಭಾವಕನೆಂದೊಡಂ ಚದುರನೆಂದೊಡಮಾರ್ ಪೆಱರಾರೊ ನೀನೆ ನಿ
- ನ್ನಾವ ಗುಣಂಗಳಂ ಪೊಗೞ್ವೊಡೆಲ್ಲವಱಿಂ ನೆರೆದೆಮ್ಮೊಳಿಂತು ಸ|
- ದ್ಭಾವದೆ ಗೊಟ್ಟಿರಲ್ ಬಯಸಿ ಬಂದೆಯದೀಗಳಿದೊಳ್ಳಿತಾಯ್ತು ಮಾ
- ದೇವರ ಮುಂದಣಾತನೆನಲಲ್ಲದೆ ಪೇೞು ಪೆಱತೇನನೆಂಬುದೋ|| ೯೬||
- ಪದ್ಯ-೯೬:ಪದವಿಭಾಗ-ಅರ್ಥ:ಭಾವಕನೆಂದೊಡಂ ಚದುರನೆಂದೊಡಂ ಆರ್ (ರಸಿಕರೆಂದರೆ ಚತುರನೆಂದರೆ ಯಾರು) ಪೆಱರಾರೊ ನೀನೆ (ಬೇರೆ ಯಾರಿದ್ದಾರೆ, ನೀನೆ) ನಿನ್ನ ಆವ ಗುಣಂಗಳಂ ಪೊಗೞ್ವೊಡೆ ಎಲ್ಲವಱಿಂ ನೆರೆದು (ನಿನ್ನ ಯಾವ ಎಲ್ಲ ಗುಣಗಳನ್ನೂ ಹೊಗಳುವುದಾದರೆ ನೀನು ಎಲ್ಲಗುಣಗಳಿಂದ ತುಂಬಿ.) ಎಮ್ಮೊಳಿಂತು-ಎಮ್ಮೊಳು ಇಂತು ಸದ್ಭಾವದೆ ಗೊಟ್ಟಿರಲ್ ಬಯಸಿ ಬಂದೆ (ನೀನು ಸದ್ಭಾವದಿಂದ ನಮ್ಮಲ್ಲಿ ಗೋಷ್ಠಿಯಲ್ಲಿರಲು ಬಯಸಿ ಬಂದಿದ್ದೀಯೆ) ಬಂದೆ ಅದೀಗಳು ಇದು ಒಳ್ಳಿತಾಯ್ತು (ಅದೀಗ ಒಳ್ಳೆಯದಾಯಿತು.) ಮಾದೇವರ ಮುಂದಣ ಆತನು ಎನಲು ಅಲ್ಲದೆ ಪೇೞು(ಹೇಳು) (ನೀನು ಮಹಾದೇವನಾದ ಶಿವನ ಮುಂದಿರುವ ಆತನು-'ಬಸವ' ಅಲ್ಲದೆ ಮತ್ತೇನೆಂದು ಹೇಳೋಣ- ಎಂದರೆ ನೀನು ಎತ್ತು-ದಡ್ಡ ಬಸವಣ್ಣ ) ಪೆಱತೇನನು ಎಂಬುದೋ (ಮತ್ತೇನೆಂದು ಹೇಳೋಣ- ಎಂದರೆ ನೀನು ಎತ್ತು-ದಡ್ಡ ಬಸವಣ್ಣ)
- ಪದ್ಯ-೯೬:ಅರ್ಥ: ರಸಿಕರೆಂದರೆ ಚತುರನೆಂದರೆ ಯಾರು? ಬೇರೆ ಯಾರಿದ್ದಾರೆ, ನೀನೆ! ನಿನ್ನ ಯಾವ ಎಲ್ಲ ಗುಣಗಳನ್ನೂ ಹೊಗಳುವುದಾದರೆ ನೀನು ಎಲ್ಲಗುಣಗಳಿಂದ ತುಂಬಿ/ ನೀನು ಸರ್ವಗುಣಸಂಪನ್ನನೆನ್ನಲೇಬೇಕು. ನೀನು ಸದ್ಭಾವದಿಂದ ನಮ್ಮಲ್ಲಿ ಗೋಷ್ಠಿಯಲ್ಲಿರಲು ಬಯಸಿ ಬಂದಿದ್ದೀಯೆ; ಅದೀಗ ಒಳ್ಳೆಯದಾಯಿತು. ನೀನು ಮಹಾದೇವನಾದ ಶಿವನ ಮುಂದಿರುವ ಆತನು-'ಬಸವ' ಅಲ್ಲದೆ ಮತ್ತೇನೆಂದು ಹೇಳೋಣ- ಎಂದರೆ ನೀನು ಎತ್ತು-ದಡ್ಡ ಬಸವಣ್ಣ
- ವ|| ಎಂದಾತನನಾಕೆಗಳ್ ಕಾಡಿ ಕೊಱಚಾಡಿ ಕಳೆದರ್ ಮತ್ತಮೊಂದೆಡೆಯೊಳೊರ್ವಳ್ ತನ್ನನುೞಿದ ಪೊಸ ಬೇಟದಾಣ್ದ (ಣ್ಮ)ನನೇಗೆಯ್ದುಂ ಪೊಗಲೀಯದೆ ತನ್ನಳಿಪನೆ ತೋಱಿ-
- ವಚನ:ಪದವಿಭಾಗ-ಅರ್ಥ:ಎಂದು ಆತನನು ಆಕೆಗಳ್ ಕಾಡಿ ಕೊಱಚಾಡಿ ಕಳೆದರ್ (ಎಂದು ಆ ಹೆಣ್ಣುಗಳು ಆತನನ್ನು ಕಾಡಿ ಕಡೆಗಣಿಸಿ ಮಾತನಾಡಿ ಕಳುಹಿಸಿದರು.) ಮತ್ತಮೊಂದು (ಮತ್ತೊಂದು) ಎಡೆಯೊಳ್ (ಕಡೆ) ಒರ್ವಳ್ ತನ್ನನು ಉೞಿದ (ಒಬ್ಬಳು ತನ್ನನ್ನು ಬಿಟ್ಟ) ಪೊಸ ಬೇಟದ ಆಣ್ಮನನು ಏಗೆಯ್ದುಂ ಪೊಗಲೀಯದೆ (ಒಬ್ಬಳು ತನ್ನನ್ನು ಬಿಟ್ಟುಹೋಗುತ್ತಿದ್ದ ಹೊಸ ಪ್ರೇಮದ ಪ್ರಿಯಕರನನ್ನು ಏನು ಮಾಡಿದರೂ ಹೋಗುವುದಕ್ಕೆ ಬಿಡದೆ) ತನ್ನ ಅಳಿಪನೆ ತೋಱಿ (ತನ್ನ ಒಲಿಮೆಯನ್ನೇ ತೋರಿಸಿ)-
- ವಚನ:ಅರ್ಥ:ಎಂದು ಆ ಹೆಣ್ಣುಗಳು ಆತನನ್ನು ಕಾಡಿ ಕಡೆಗಣಿಸಿ ಮಾತನಾಡಿ ಕಳುಹಿಸಿದರು. ಬೇರೊಂದೆಡೆಯಲ್ಲಿ ಒಬ್ಬಳು ತನ್ನನ್ನು ಬಿಟ್ಟುಹೋಗುತ್ತಿದ್ದ ಹೊಸ ಪ್ರೇಮದ ಪ್ರಿಯಕರನನ್ನು ಏನು ಮಾಡಿದರೂ ಹೋಗುವುದಕ್ಕೆ ಬಿಡದೆ ತನ್ನ ಒಲಿಮೆಯನ್ನೇ ತೋರಿಸಿ-
- ಚಂ|| ಮನೆಯನಿವಂ ಮನೋಭವನಿವಂ ಪೊಸ ಸುಗ್ಗಿಯೊಳಾದದೊಂದು ಕಿ
- ತ್ತನಿವನಿದೆನ್ನನೇನುೞಿಯಲೀಗುಮೆ ನೀನುೞಿದಾಗಳೆಂದು ಪೋ|
- ಪನನಿರದೋಪನಂ ಮಿಡುಕಲೀಯದೆ ಕಾಲ್ವಿಡಿದೞ್ತು ತೋರ ಕ
- ಣ್ಬನಿಗಳನಿಕ್ಕಿದಳ್ ತರಳಲೋಚನೆ ಸಂಕಲೆಯಿಕ್ಕಿದಂತೆವೋಲ್|| ೯೭||
- ಪದ್ಯ-೯೭:ಪದವಿಭಾಗ-ಅರ್ಥ:ಮನೆಯನು ಇವಂ ಮನೋಭವನು ಇವಂ (ಇವನು ನನ್ನ ಮನೆಯ ಯಜಮಾನ, ಇವನು ಮನಸಿಜ- ಮನ್ಮಥ) ಪೊಸ ಸುಗ್ಗಿಯೊಳು ಆದದೊಂದು ಕಿತ್ತನು ಇವಂಇದು ಎನ್ನನೇನು ಉೞಿಯಲು ಈಗುಮೆ ನೀನು ಉೞಿದಾಗಳೆಂದು (ನೀನು ಬಿಟ್ಟಾಗ)--(ಹೊಸ ವಸಂತಕಾಲದಲ್ಲಿ ಮದುವೆ ಆದುದು, ಚಿಕ್ಕಪ್ರಾಯದವ ಇವನು, ಇದು- ನೀನು ಬಿಟ್ಟಾಗ ಇವನು ನನ್ನನ್ನೇನು ತೊರೆಯಲು ಬಿಡುವೆನೇ? ಇಲ್ಲ. ಎಂದು ಹೇಳಿಕೊಂಡು) ಪೋಪನನು ಇರದೆ ಓಪನಂ ಮಿಡುಕಲೀಯದೆ ಕಾಲ್ವಿಡಿದು ಅೞ್ತು (ಹೋಗುವ ಪ್ರಿಯನನ್ನು ಸುಮ್ಮನೆ ಚಲಿಸುವುದಕ್ಕೂ ಬಿಡದೆ ಕಾಲುಗಳನ್ನು ಕಟ್ಟಿಕೊಂಡು ಅತ್ತು ) ತೋರ ಕಣ್ಬನಿಗಳನ್ ಇಕ್ಕಿದಳ್ ತರಳಲೋಚನೆ ಸಂಕಲೆಯ ಇಕ್ಕಿದಂತೆವೋಲ್ (ಸಂಕೋಲೆ ಹಾಕಿದಂತೆ ಚಂಚಲನೇತ್ರೆಯಾದ ಅವಳು ತೋರ/ ದೊಡ್ಡ ಕಣ್ಣೀರಿನ ಹನಿಗಳನ್ನು ಸುರಿಸಿದಳು)
- ಪದ್ಯ-೯೭:ಅರ್ಥ: ಇವನು ನನ್ನ ಮನೆಯ ಯಜಮಾನ, ಇವನು ಮನ್ಮಥ, ಹೊಸ ವಸಂತಕಾಲದಲ್ಲಿ ಮದುವೆ ಆದುದು, ಚಿಕ್ಕಪ್ರಾಯದವ ಇವನು, ಇದು- ನೀನು ಬಿಟ್ಟಾಗ ಇವನು ನನ್ನನ್ನೇನು ತೊರೆಯಲು ಬಿಡುವೆನೇ? ಇಲ್ಲ. ಹೋಗುವ ಪ್ರಿಯನನ್ನು ಸುಮ್ಮನೆ ಚಲಿಸುವುದಕ್ಕೂ ಬಿಡದೆ ಕಾಲುಗಳನ್ನು ಕಟ್ಟಿಕೊಂಡು ಅತ್ತು, ಸಂಕೋಲೆ ಹಾಕಿದಂತೆ ಚಂಚಲನೇತ್ರೆಯಾದ ಅವಳು ತೋರ/ ದೊಡ್ಡ ಕಣ್ಣೀರಿನ ಹನಿಗಳನ್ನು ಸುರಿಸಿದಳು
- ವ|| ಮತ್ತೊರ್ವಂ ತನ್ನ ಸೂಳೆಯೊಳಾದ ಬೇಸಱಂ ತನ್ನ ಕೆಳೆಯಂಗಿಂತೆಂದಂ-
- ವಚನ:ಪದವಿಭಾಗ-ಅರ್ಥ:ಮತ್ತೊರ್ವಂ ತನ್ನ ಸೂಳೆಯೊಳು ಆದ ಬೇಸಱಂ (ಬೇಸರವನ್ನು) ತನ್ನ ಕೆಳೆಯಂಗೆ ಇಂತೆಂದಂ(ಹೀಗೆಂದನು)-
- ವಚನ:ಅರ್ಥ:ಮತ್ತೊಬ್ಬನು ತನ್ನ ಸೂಳೆಯೊಡನೆ ಆದ ಬೇಸರವನ್ನು ತನ್ನ ಗೆಳೆನಿಗೆ ಹೀಗೆ ಹೇಳಿದನು.
- ಚಂ|| ಮುಳಿಸಱಿದಂಜಿ ಬಾೞ್ತೆಯಱಿದಿತ್ತು ಮನಂಗೊಳೆಯುಂ ಕನಲ್ವುದ
- ರ್ಕಳವಿಯುಮಂತುಮಿಲ್ಲ ಸನಿಯನ್ನಳೆ ಕುಂಟಣಿ ಪೋದ ಮಾರಿಯ|
- ನ್ನಳೆ ಮನೆದೊೞ್ತು ಸೀರ್ಕರಡಿಯನ್ನಳೆ ನಾದುನಿಯೊಲ್ದುಮೊಲ್ಲದ
- ನ್ನಳೆ ಗಡ ಸೂಳೆಯೆಂದೊಡಿನಿತಂ ತಲೆವೇಸಱನೆಂತು ನೀಗುವೆಂ|| ೯೮||
- ಪದ್ಯ-೯೮:ಪದವಿಭಾಗ-ಅರ್ಥ:ಮುಳಿಸ ಅಱಿದು ಅಂಜಿ (ಅವಳ ಕೋಪವನ್ನು ನೋಡಿ ಹೆದರಿ) ಬಾೞ್ತೆಯ ಅಱಿದು ಇತ್ತು ಮನಂಗೊಳೆಯುಂ (ಬಾಳ್ತೆಯ-ಒಡವೆಯನ್ನು ಅಪೇಕ್ಷೆ ತಿಳಿದು ಕೊಟ್ಟು ಅವಳ ಮನಸ್ಸನ್ನು ವಶಪಡಿಸಿಕೊಂಡಿದ್ದರೂ) ಕನಲ್ವುದರ್ಕೆ ಅಳವಿಯುಂ ಅಂತುಮಿಲ್ಲ ಸನಿಯನ್ನಳೆ (ಶನಿ) ಕುಂಟಣಿ (ಅವಳು ರೇಗುವುದಕ್ಕೆ ಅಳತೆಯೂ ಅಂತ್ಯವೂ ಅಲ್ಲ. ತಲೆಹಿಡಿಕಿಯೂ ಶನಿಯಂತಹವಳೇ.) ಪೋದ ಮಾರಿಯನ್ನಳೆ ಮನೆದೊೞ್ತು (ಹೋದ ಮಾರಿಯಂತಹವಳೇ ಮನೆಕೆಲಸ ಮಾಡುವ ದಾಸಿಯೂ) ಸೀರ್ ಕರಡಿಯನ್ನಳೆ ನಾದುನಿ (ನಾದಿನಿಯು ಸೀರ್ಕರಡಿಯಂತೆ ಜಗಳಗಂಟಿ) ಒಲ್ದುಂ ಒಲ್ಲದನ್ನಳೆ ಗಡ ಸೂಳೆಯೆಂದೊಡೆ(ಒಲಿದೂ ಒಲಿಯದಂತೆ ಇರುವವಳು ತಾನೆ! ಸೂಳೆಯರು) ಇನಿತಂ ತಲೆವೇಸಱನೆಂತು ನೀಗುವೆಂ(ಇಷ್ಟೊಂದು ತಲೆಬೇನೆಯನ್ನು ಹೇಗೆ ನೀಗಲಿ)
- ಪದ್ಯ-೯೮:ಅರ್ಥ: . (ಅವಳ)- ಕೋಪವನ್ನ ನೋಡಿ ಹೆದರಿ (ಅವಳ) ಬಾಳ್ತೆಯ-ಒಡವೆಯ ಅಪೇಕ್ಷೆಯನ್ನು ತಿಳಿದು ಕೊಟ್ಟು ಅವಳ ಮನಸ್ಸನ್ನು ವಶಪಡಿಸಿಕೊಂಡಿದ್ದರೂ, ಅವಳು ರೇಗುವುದಕ್ಕೆ ಅಳತೆಯೂ ಅಂತ್ಯವೂ ಅಲ್ಲ. ತಲೆಹಿಡಿಕಿಯೂ ಶನಿಯಂತಹವಳೇ. ಮಾರಿಯಂತಹವಳೇ ಮನೆಕೆಲಸ ಮಾಡುವ ದಾಸಿಯೂ. ನಾದಿನಿಯು ಸೀರ್ಕರಡಿಯಂತೆ ಜಗಳಗಂಟಿ. ಎಷ್ಟಾದರೂ ಸೂಳೆಯು ಒಲಿದೂ ಒಲಿಯದಂತಿರುವವಳೆ ತಾನೆ! ಇಷ್ಟೊಂದು ತಲೆಬೇನೆಯನ್ನು ಹೇಗೆ ನೀಗಲಿ.
- ವ|| ಎಂದು ನುಡಿದು ಗೆಂಟಾದಂ ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದಾಣ್ಮನಂ ಪಿಡಿದು-
- ವಚನ:ಪದವಿಭಾಗ-ಅರ್ಥ: ಎಂದು ನುಡಿದು ಗೆಂಟಾದಂ (ಹೋದನು) ಮತ್ತೊರ್ವ ಬೇಟಕಾರ್ತಿ (ನಲ್ಲಳು) ತಾಯ ಕಣ್ಣಂ ಬಂಚಿಸಿ (ತಾಯಿಯಕಣ್ಣು ತಪ್ಪಿಸಿ) ತನ್ನ ಮೋಪಿನಾಕೆಯ ಮನೆಗೆ ಪೋಪ (ಹೋಗುತ್ತಿರುವ) ಬೇಟದಾಣ್ಮನಂ (ಪ್ರಿಯನಲ್ಲನನ್ನು) ಪಿಡಿದು-
- ವಚನ:ಅರ್ಥ:ಎಂದು ಹೇಳಿ ಹೋದನು. ಬೇರೊಬ್ಬ ಪ್ರಿಯಳು ತನ್ನ ತಾಯಿಯ ಕಣ್ಣನ್ನು ತಪ್ಪಿಸಿ ತನ್ನ ಗೆಳತಿಯ ಮನೆಗೆ ಹೋಗುತ್ತಿರುವ ತನ್ನ ಪ್ರಿಯನಲ್ಲನನ್ನು ಹಿಡಿದುಕೊಂಡು
- ಉ|| ತಪ್ಪುದು ಮಾತು ದೂದವರ ಕೆಯ್ಯೊಳೆ ಕಾಲ್ವಿಡಿದಟ್ಟಿ ಕಣ್ಣ ನೀರ್
- ತಪ್ಪುವು ನಿಚ್ಚಮಚ್ಚಿಗದೊಳೞ್ತು ಕರಂ ಬಿಸುಸುಯ್ಯೆ ಸುಯ್ದ ಸುಯ್|
- ತಪ್ಪುದು ತಪ್ಪುದೆನ್ನ ತನು ಬೇಟದ ಕಾಟದೊಳಿಂತು ಕಂಡುಮಿ
- ನ್ನಪ್ಪೊಡಮಾಸೆವಾತನೆನಗೋಪನೆ ನೀಂ ದಯೆಗೆಯ್ಯಲಾಗದೇ|| ೯೯||
- ಪದ್ಯ-೯೯:ಪದವಿಭಾಗ-ಅರ್ಥ:ತಪ್ಪುದು ಮಾತು ದೂದವರ ಕೆಯ್ಯೊಳೆ ಕಾಲ್ವಿಡಿದು ಅಟ್ಟಿ (ಸಂದೇಶವಾಹಕರ ಕಯ್ಯಲ್ಲಿ ಅವರ ಕಾಲುಹಿಡಿದು ಕಳುಹಿಸಿದ ಮಾತುಗಳು ತಪ್ಪಿತು- ಪ್ರಯೋಜನವಾಗಿಲ್ಲ.) ಕಣ್ಣ ನೀರ್ ತಪ್ಪುವು ನಿಚ್ಚಂ ಅಚ್ಚಿಗದೊಳ್ ಅೞ್ತು (ನಿತ್ಯವೂ ದುಃಖಪಟ್ಟು ಅತ್ತು ಕಣ್ಣುನೀರು ಸುರಿಸುವುದು ತಪ್ಪುವುದಿಲ್ಲ) ಕರಂ ಬಿಸುಸುಯ್ಯೆ ಸುಯ್ದ ಸುಯ್ ತಪ್ಪುದು ತಪ್ಪುದು ಎನ್ನ ತನು ಬೇಟದ ಕಾಟದೊಳು ಇಂತು ಕಂಡುಂ ಇನ್ನಪ್ಪೊಡಂ (ಇನ್ನಾದರೂ) ಅಸೆವಾತನು ಎನಗೆ ಓಪನೆ ನೀಂ ದಯೆಗೆಯ್ಯಲಾಗದೇ (ಪ್ರಿಯನೇ ನೀನು ಪ್ರೀತಿಯ ಮಾತನ್ನು ಕರಣಿಸಬಾರದೇ?) (ತಪ್ಪುದು- ಹಾಳಾಗುವುದು-ವ್ಯರ್ಥವಾಗುವುದು)
- ಪದ್ಯ-೯೯:ಅರ್ಥ: . ಸಂದೇಶವಾಹಕರ ಕಯ್ಯಲ್ಲಿ ನಿನ್ನ ಕಾಲುಹಿಡಿದು ಕಳುಹಿಸಿದ ಮಾತುಗಳು ತಪ್ಪಿತು- ಪ್ರಯೋಜನವಾಗಿಲ್ಲ. ನಿತ್ಯವೂ ದುಃಖಪಟ್ಟು ಅತ್ತು ಕಣ್ಣುನೀರು ಸುರಿಸುವುದು ತಪ್ಪುವುದಿಲ್ಲ. ದಿನವೂ/ಬಹಳ ನಿಟ್ಟುಸಿರು ಬಿಸಿಯುಸಿರು ಬಿಡುವುದು ತಪ್ಪುವುದಿಲ್ಲ. ನನ್ನ ಶರೀರವು ಬೇಟದ ಕಾಟದಿಂದ ಸೊರಗುವುದು ತಪ್ಪುವುದಿಲ್ಲ. ಇದನ್ನು ನೋಡಿಯೂ ಇನ್ನು ಮೇಲಾದರೂ ಪ್ರಿಯನೇ ನೀನು ಪ್ರೀತಿಯ ಮಾತನ್ನು ಕರಣಿಸಬಾರದೇ?- ಎಂದು ತನ್ನ ಪ್ರಿಯನಲ್ಲನನ್ನು ಹಿಡಿದುಕೊಂಡು ಬೇಡಿದಳು.
- ವ|| ಎಂದು ಕರುಣಂಬಡೆ ನುಡಿದೊಡಗೊಂಡು ಪೋದಳ್ ಮತ್ತಮೊಂದೆಡೆಯೊಳೊರ್ವಳ್ ಕುಂಟಣಿಯುಪರೋಧಕ್ಕೆ ಪಿರಿದೀವ ಮುದುಪನನುೞಿಯಲಂಜಿ ತನ್ನ ಬೇಸಱಂ ತನ್ನ ಸಬ್ಬವದಾಕೆಗಿಂತೆಂದಳ್-
- ವಚನ:ಪದವಿಭಾಗ-ಅರ್ಥ:ಎಂದು ಕರುಣಂಬಡೆ (ಕರುಣೆ ಬರುವಂತೆ) ನುಡಿದು ಒಡಗೊಂಡು ಪೋದಳ್, ಮತ್ತಮೊಂದು ಎಡೆಯೊಳ್ ಒರ್ವಳ್ ಕುಂಟಣಿಯು (ವಿಟರದೂತಿಯ) ಅಪರೋಧಕ್ಕೆ ಪಿರಿದು ಈವ (ಹೆಚ್ಚು ಹಣಕೊಡುವ ಒತ್ತಾಯಕ್ಕೆ) ಮುದುಪನನು ಉೞಿಯಲಂಜಿ (ಮುದುಕನನ್ನು ಉಳಿಯಲು-ಬಿಡಲು ಅಂಜಿ) ತನ್ನ ಬೇಸಱಂ ತನ್ನ ಸಬ್ಬವದಾಕೆಗಿಂತೆಂದಳ್-
- ವಚನ:ಅರ್ಥ:ಎಂದು ಕರುಣೆ ಬರುವಂತೆ ಮಾತನಾಡಿ ಜೊತೆಯಲ್ಲಿ ಕರೆದುಕೊಂಡು ಹೋದಳು. ಬೇರೊಂದು ಕಡೆಯಲ್ಲಿ ಕುಂಟಣಿಯ ಹೆಚ್ಚು ಹಣಕೊಡುವ ಒತ್ತಾಯಕ್ಕೆ, ಹೆಚ್ಚು ಹಣ ಕೊಡುವ ಮುದುಕನನ್ನು ಬಿಡಲು ಅಂಜಿ ತನ್ನ ಬೇಸರವನ್ನು ತನ್ನ ಪ್ರಿಯಸಖಿಗೆ ಹೀಗೆಂದಳು
- ಚಂ|| ಕೊರೆವೊಡೆ ಬೆಟ್ಟುಗಳ್ ಬಿರುವುವುಣ್ಮುವ ಲಾಳೆಯ ಲೋಳೆಗಳ್ ಪೊನ
- ಲ್ವರಿವುವು ಕೆಮ್ಮಿ ಕುಮ್ಮಿದೊಡೆ ತೋಳೊಳೆ ಜೀವ ವಿಯೋಗಮಪ್ಪುದೆಂ|
- ದಿರದೆರ್ದೆಗಪ್ಪುದತ್ತಳಗಮಾ ನೆರೆಪಂ ನೆರೆವಂದು ಪೊಂಗಳಂ
- ಸುರಿವೊಡಮಾರೊ ಸೈರಿಸುವರಾತನ ಪಲ್ಲಿಲ್ಲಿವಾಯ ನಾತಮಂ|| ೧೦೦||
- ಪದ್ಯ-೧೦೦:ಪದವಿಭಾಗ-ಅರ್ಥ:ಕೊರೆವೊಡೆ ಬೆಟ್ಟುಗಳ್ ಬಿರುವುವು (ಗೊರಕೆಹೊಡೆದರೆ ಬೆಟ್ಟಗಳೇ ಬಿರಿಯುವುವು) ಉಣ್ಮುವ ಲಾಳೆಯ ಲೋಳೆಗಳ್ ಪೊನಲ್ವರಿವುವು (ಹೊಮ್ಮುವ ಜೊಲ್ಲುರಸ ಪೊನಲ್ ವರಿವುವು- ಪ್ರವಾಹ ಹರಿಯುವುದು) ಕೆಮ್ಮಿ ಕುಮ್ಮಿದೊಡೆ ತೋಳೊಳೆ ಜೀವ ವಿಯೋಗಮಪ್ಪುದೆಂದು ಇರದೆ (ಕೆಮ್ಮಿ ಕುಮ್ಮಿಟ್ಟಿದರೆ ತನ್ನ ತೋಳಿನಲ್ಲಿಯೇ ಜೀವ ಬಿಡುವನೆಂದು ) ಎರ್ದೆಗೆ ಅಪ್ಪುದು ಅತ್ತಳಗಂ(ಮನಸ್ಸಿಗೆ ಅತ್ತಳಗ- ಕಳವಳ ಆಗುತ್ತದೆ.) ಆ ನೆರೆಪಂ ನೆರೆವಂದು (ಆ ನರೆಗೂದಲಿನ ಕೂಡಲು ಬಂದು) ಪೊಂಗಳಂ ಸುರಿವೊಡಂ (ಹೊನ್ನುಗಳನ್ನು ಸುರಿದರೂ) ಆರೊ ಸೈರಿಸುವರರ ಆತನ ಪಲ್ಲಿಲ್ಲಿವಾಯ (ಯಾರು ಸಹಿಸುವರು ಅವನ ಹಲ್ಲಿಲ್ಲದ ಬಾಯಿನ ನಾತವನ್ನು!)ನಾತಮಂ
- ಪದ್ಯ-೧೦೦:ಅರ್ಥ: (ಆ ಮುದುಕನು) ಗೊರಕೆಹೊಡೆದರೆ ಬೆಟ್ಟಗಳೇ ಬಿರಿಯುವುವು. ಸುರಿಯುವ ಜೊಲ್ಲಿನ ಲೋಳೆಗಳು ಪ್ರವಾಹವಾಗಿ ಹರಿಯುತ್ತವೆ. ಕೆಮ್ಮಿ ಕುಮ್ಮಿಟ್ಟಿದರೆ ತೋಳಿನಲ್ಲಿಯೇ ಜೀವ ಬಿಡುವನೆಂದು ಮನಸ್ಸಿಗೆ ಕಳವಳ ಆಗುತ್ತದೆ. (ಇಂತಹ) ಆ ನರೆಗೂದಲಿನವನು ಕೂಡಲು ಬಂದು ಎಷ್ಟು ಹೊನ್ನುಗಳನ್ನು ಸುರಿದರೂ, ಯಾರು ಸಹಿಸುವರು ಅವನ ಹಲ್ಲಿಲ್ಲದ ಬಾಯಿನ ನಾತವನ್ನು! (ಎಂದು ನಗಿಸುವಳು)
- ವ|| ಎಂದು ನಗಿಸುತ್ತಿರ್ದಳ್ ಮತ್ತಮೊಂದೆಡೆಯೊಳೊರ್ವಳ್ ತನ್ನ ನಲ್ಲನಲ್ಲಿಗೆದೂದುವೋಗಿ ಬಂದ ದೂದವಿಗೇಗಯ್ವ ತೆಱನುಮನಱಯದೆ ಪದೆದು ಪಡೆಮಾತಂ ಬೆಸಗೊಳ್ವಳಂ ಕಂಡು-
- ವಚನ:ಪದವಿಭಾಗ-ಅರ್ಥ:ಎಂದು ನಗಿಸುತ್ತಿರ್ದಳ್ (ಎಂದು ನಗಿಸುತ್ತಿದ್ದಳು) ಮತ್ತಮೊಂದೆಡೆಯೊಳ್ ಒರ್ವಳ್ ತನ್ನ ನಲ್ಲನಲ್ಲಿಗೆ ದೂದುವೋಗಿ ಬಂದ ದೂದವಿಗೇಗಯ್ವ ತೆಱನುಮನಱಯದೆ ಪದೆದು ಪಡೆಮಾತಂ ಬೆಸಗೊಳ್ವಳಂ ಕಂಡು-
- ವಚನ:ಅರ್ಥ:ಎಂದು ನಗಿಸುತ್ತಿದ್ದಳು, ಇನ್ನೊಂದೆಡೆಯಲ್ಲಿ ಒಬ್ಬಳು ತನ್ನ ಪ್ರಿಯನ ಕಡೆಗೆ ಪ್ರೇಮಸಂದೇಶವನ್ನು ಕೊಂಡುಹೋಗಿ ಬಂದ ದೂತಿಗೆ ಏನು ಮಾಡಬೇಕೆಂಬುದನ್ನು ತಿಳಿಯದೆ ಆಶೆಪಟ್ಟು (ಅವನು ಕಳುಹಿಸಿದ) ಪ್ರತ್ಯುತ್ತರವನ್ನು ಕೇಳುವವಳನ್ನು ನೋಡಿ
- ಚಂ|| ಬಿರಯಿಸಿ ಬೇಟದೊಳ್ ಬಿರಿವ ನಲ್ಲರಗಲ್ದು ಕನಲ್ದೊನಲ್ದು ನ
- ಲ್ಲರ ದೆಸೆಯಿಂದಮೞ್ತಿವರೆ ಕೋಗಿಲೆಯಕ್ಕೆಲರಕ್ಕೆ ತುಂಬಿಯ|
- ಕ್ಕರಗಿಳಿಯಕ್ಕೆ ಬಂದೊಡಮೊಱಲ್ದೆರ್ದೆಯಾಱುವರೆಂದೊಡೋತ ದೂ
- ತರೆ ತರೆ ಬಂದ ಸಬ್ಬವದ ಮಾತುಗಳಂ ಗುಡಿಗಟ್ಟಿ ಕೇಳರೇ ||೧೦೧||
- ಪದ್ಯ-೧೦೧:ಪದವಿಭಾಗ-ಅರ್ಥ:ಬಿರಯಿಸಿ (ವಿರಹದಿ) ಬೇಟದೊಳ್ ಬಿರಿವ ನಲ್ಲರು(ಪ್ರೇಮದಲ್ಲಿ ನರಳುವ ಪ್ರಿಯರು) ಅಗಲ್ದು ಕನಲ್ದೊನು (ಸಿಟ್ಟಿನಿಂದ ಬಿಟ್ಟುಹೋದ) ಒಲ್ದು ನಲ್ಲರ ದೆಸೆಯಿಂದಂ ಅೞ್ತಿವರೆ (ತಮ್ಮನಲ್ಲರ ಕಡೆಯಿಂದ ಪ್ರೇಮ ಸಂದೇಶ ಬರಲು) ಕೋಗಿಲೆಯಕ್ಕೆ ಎಲರಕ್ಕೆ(ಗಾಳಿಯಾಗಲಿ) ತುಂಬಿಯಕ್ಕೆ ಅರಗಿಳಿಯಕ್ಕೆ ಬಂದೊಡಂ (ಬಂದರೂ) ಒಱಲ್ದು (ಒಲಿದು?) ಎರ್ದೆಯಾಱುವರು ಎಂದೊಡೆ (ಮನಸ್ಸಮಾಧಾನವನ್ನು ಪಡೆಯುತ್ತಾರೆ ಎಂದಾಗ,) ತಮ್ಮ ಪ್ರೀತಿಪಾತ್ರರಾದ) ಓತ ದೂತರೆ ತರೆ ಬಂದ(ಒಲಿದ ದೂತರೇ ತೆಗೆದುಕೊಂಡು ಬಂದ) ಸಬ್ಬವದ ಮಾತುಗಳಂ ಗುಡಿಗಟ್ಟಿ (ಬಾವುಟಹಾರಿಸಿ- ಸಂತಸದಿಂದ) ಕೇಳರೇ(ವಿನೋದದ ವಾರ್ತೆಯನ್ನು ಪುಳಕಿತರಾಗಿ ಕೇಳುವುದಿಲ್ಲವೇ?)
- ಪದ್ಯ-೧೦೧:ಅರ್ಥ: ವಿರಹವೇದನೆಯಿಂದ ನರಳುತ್ತಿರುವ ಪ್ರೇಮಿಗಳು, ಸಿಟ್ಟಿನಿಂದ ಬಿಟ್ಟುಹೋದ ತಮ್ಮನಲ್ಲರ ಕಡೆಯಿಂದ ಪ್ರೇಮ ಸಂದೇಶ ಬರಲು, ಕೋಗಿಲೆಯಾಗಲಿ, ಗಾಳಿಯಾಗಲಿ, ತುಂಬಿಯಾಗಲಿ, ಗಿಳಿಯಾಗಲಿ, ಬಂದರೂ ಒಲಿದು/ನಲಿದು ಮನಸ್ಸಮಾಧಾನವನ್ನು ಪಡೆಯುತ್ತಾರೆ ಎಂದಾಗ ತಮ್ಮ ಒಲಿದ ದೂತರೇ ತೆಗೆದುಕೊಂಡು ಬಂದ ವಿನೋದದ ವಾರ್ತೆಯನ್ನು ಪುಳಕಿತರಾಗಿ ಕೇಳುವುದಿಲ್ಲವೇ?
- ವ|| ಅಂತುಮಲ್ಲದೆಯುಂ-
- ವಚನ:ಪದವಿಭಾಗ-ಅರ್ಥ: ಅಂತುಂ ಅಲ್ಲದೆಯುಂ-
- ವಚನ:ಅರ್ಥ: ಹಾಗಲ್ಲದೆಯೂ-
- ಚಂ|| ಮನದೊಳಲಂಪನಾಳ್ದಿನಿಯನಟ್ಟಿದ ದೂದರ ಸೀಯನಪ್ಪ ಮಾ
- ತಿನ ರಸದೊಳ್ ಕೊನರ್ವುದು ತಳಿರ್ವುದು ಪೂವುದು ಕಾಯ್ವುದಂತು ಕಾ
- ಯ್ತನಿತರೊಳಂತು ನಿಂದು ಮನದೊಳ್ ತೊದಳಿಲ್ಲದ ನಲ್ಮೆಯೆಂಬ ನಂ
- ದನವನಮೋಪರೊಳ್ ನೆರೆದೊಡಂತು ರಸಂ ಬಿಡೆ ಪಣ್ತುದಾಗದೇ|| ೧೦೨||
- ಪದ್ಯ-೧೦೨:ಪದವಿಭಾಗ-ಅರ್ಥ:ಮನದೊಳು ಅಲಂಪನು ಆಳ್ದ ಇನಿಯನು ಅಟ್ಟಿದ (ಮನಸ್ಸಿನಲ್ಲಿ ಸಂತೋಷಪಟ್ಟು ಪ್ರಿಯನು ಕಳುಹಿಸಿದ ) ದೂದರ ಸೀಯನಪ್ಪ ಮಾತಿನ ರಸದೊಳ್ (ದೂತರ ತಂದಿರುವ ಸಿಹಿ/ಪ್ರಿಯವಾರ್ತೆಯ ರಸದಲ್ಲಿ) ಕೊನರ್ವುದು ತಳಿರ್ವುದು ಪೂವುದು ಕಾಯ್ವುದು (ಪ್ರೇಮವು- ಕವಲೊಡೆಯುವುದು, ಚಿಗುರುವುದು, ಹೂವುಬಿಡುವುದು, ಕಾಯಿ ಬಿಡುವುದು) ಅಂತು ಕಾಯ್ತ ಅನಿತರೊಳ್ ಅಂತು ನಿಂದು (ಹಾಗೆ ಕಾಯಿಬಿಟ್ಟ ಅಷ್ಟರಲ್ಲೂ) ಮನದೊಳ್ ತೊದಳಿಲ್ಲದ ನಲ್ಮೆಯೆಂಬ (ಮನಸ್ಸಿನಲ್ಲಿ ಕಪಟವಿಲ್ಲದ ಪ್ರೇಮವೆಂಬ ನಂದನವನವು) ನಂದನವನಂ ಓಪರೊಳ್ ನೆರೆದೊಡೆ (ನಂದನವನವು, ಪ್ರೇಮಿಗಳಲ್ಲಿ ಸೇರಿದರೆ)ಅಂತು ರಸಂ ಬಿಡೆ ಪಣ್ತುದಾಗದೇ (ಹಾಗೆ ರಸವು ಸುರಿದು ಹಣ್ಣಾಗದೇ? ಆಗುವುದು.)|
- ಪದ್ಯ-೧೦೨:ಅರ್ಥ: ಮನಸ್ಸಿನಲ್ಲಿ ಸಂತೋಷಪಟ್ಟು ಪ್ರಿಯನು ಕಳುಹಿಸಿದ ದೂತರ ತಂದಿರುವ ಪ್ರಿಯವಾರ್ತೆಯ ರಸದಲ್ಲಿ ಪ್ರೇಮವು ಕವಲೊಡೆಯುವುದು, ಚಿಗುರುವುದು, ಹೂವುಬಿಡುವುದು, ಕಾಯಿ ಬಿಡುವುದು. ಹಾಗೆ ಕಾಯಿಬಿಟ್ಟ ಅಷ್ಟರಲ್ಲೂ, ಮನಸ್ಸಿನಲ್ಲಿ ಕಪಟವಿಲ್ಲದ ಪ್ರೇಮವೆಂಬ ನಂದನವನವು ಪ್ರೇಮಿಗಳಲ್ಲಿ ಸೇರಿದರೆ, ಹಾಗೆ ರಸವು ಸುರಿದು ಹಣ್ಣಾಗದೇ? ಆಗುವುದು.
- ವ|| ಅಂತುಮಲ್ಲದೆಯುಂ-
- ವಚನ:ಅರ್ಥ:ಹಾಗಲ್ಲದೆಯೂ
- ಚಂ|| ಅನುವಿಸೆ ಬೇಟಕಾಱನೊಲವಿರ್ಮಡಿಯಪ್ಪುದು ಬಯ್ಕೆ ಬೇಟಕಾ
- ಱನ ಬಗೆ ನಿಲ್ಲದಿಕ್ಕೆಗೊಳಗಪ್ಪುದು ನಿಟ್ಟಿಸೆ ಬೇಟ ಬೇಟಕಾ|
- ಱನ ರುಚಿ ಬಂಬಲುಂ ತುಱುಗಲುಂ ಕೊಳುತಿರ್ಪುದು ನೂಂಕೆ ಬೇಟಕಾ
- ಱನ ಮನವಟ್ಟಿ ಪತ್ತುವುದು ಬೇಟವಿದೇಂ ವಿಪರೀತವೃತ್ತಿಯೋ|| ೧೦೩ ||
- ಪದ್ಯ-೧೦೩:ಪದವಿಭಾಗ-ಅರ್ಥ:ಅನುವಿಸೆ ಬೇಟಕಾಱನ ಒಲವು ಇರ್ಮಡಿಯಪ್ಪುದು (ಪ್ರೇಮಿಯ ಪ್ರೀತಿ ಎರಡರಷ್ಟಾಗುತ್ತದೆ.) ಬಯ್ಕೆ ಬೇಟಕಾಱನ ()ಪ್ರೇಮಿಯ) ಬಗೆ (ಮನಸ್ಸು) ನಿಲ್ಲದಿಕ್ಕೆಗ ಒಳಗಪ್ಪುದು (ಅಸ್ಥಿರತೆಗೆ ಒಳಗಾಗುತ್ತದೆ), ನಿಟ್ಟಿಸೆ ಬೇಟ ಬೇಟಕಾಱನ ರುಚಿ (ದಿಟ್ಟಿಸಿ ನೋಡಿದರೆ ಪ್ರಿಯನ ಸವಿ) ಬಂಬಲುಂ (ಗೊಂಚಲು) ತುರುಱುಗಲುಂ ಕೊಳುತಿರ್ಪುದು (ಸಂದಣಿ ಅಧಿಕವಾಗಿಹೆಚ್ಚುವುದು) ನೂಂಕೆ ಬೇಟಕಾಱನ ಮನವಟ್ಟಿ ಪತ್ತುವುದು (ಬೇಡವೆಂದು ನೂಕಿದರೆ ಮನಸ್ಸು ಅಟ್ಟಿಬಂದು ಮೇಲೇರುವುದು ) ಬೇಟವಿದೇಂ ವಿಪರೀತವೃತ್ತಿಯೋ (ಪ್ರೇಮದ ಸ್ವಭಾವವು ಏನು ವಿರುದ್ಧಗತಿಯದೋ!)
- ಪದ್ಯ-೧೦೩:ಅರ್ಥ: ಒತ್ತಾಯ/ ಪ್ರೇಮದ ಬಲವಂತ ಮಾಡಿದರೆ ಪ್ರೇಮಿಯ ಪ್ರೀತಿ ಎರಡರಷ್ಟಾಗುತ್ತದೆ. ಬಯ್ದರೆ ಪ್ರಿಯನ ಮನಸ್ಸು ಅಸ್ಥಿರವಾಗುತ್ತದೆ. ದೃಷ್ಟಿಸಿ ನೋಡಿದರೆ ಪ್ರೇಮವೂ ಪ್ರೇಮಿಯ ಸವಿಯೂ ಕವಲೊಡೆದು ಇಮ್ಮಡಿಯಾಗುವುದು. ನೂಕಿದರೆ ಬೇಡವೆಂದು ನೂಕಿದರೆ ಮನಸ್ಸು ಬೆನ್ನಟ್ಟಿಬಂದು ಮೇಲೇರುವುದು/ ಹೆಚ್ಚುವುದು. ಪ್ರೇಮದ ಸ್ವಭಾವವು ಏನು ವಿರುದ್ಧಗತಿಯದೋ!
- ವ|| ಇಂದಿವಿ ದೂದವರೆಂಬರ್ ಬೇಟಕಾಱರ ಬೇಟಮೆಂಬ ಲತೆಗಳಡರ್ಪಿರ್ಪಂತಿರ್ದರೆಂತಪ್ಪ ಬೇಟಂಗಳುಮವರ್ ಪೊಸಯಿಸೆ ಪೊಸತಪ್ಪುದು ಕಿಡಿಸೆ ಕಿಡುವುದಂತುಮಲ್ಲದೆಯುಂ-
- ವಚನ:ಪದವಿಭಾಗ-ಅರ್ಥ:ಇಂದು ಇವಿ ದೂದವರೆಂಬರ್ (ವಿಟರ ದೂತಿಯರು) ಬೇಟಕಾಱರ ಬೇಟಮೆಂಬ (ಪ್ರೇಮಿಗಳ ಪ್ರೇಮವೆಂಬ ಲತೆಗಳು) ಲತೆಗಳು ಅಡರ್ಪು ಇರ್ಪಂತೆ ಇರ್ದರು (ಲತೆಗೆ ಹಬ್ಬುವ ಗಿಡದಂತೆ ಇದ್ದಾರೆ) ಎಂತಪ್ಪ ಬೇಟಂಗಳುಂ ಅವರ್ ಪೊಸಯಿಸೆ ಪೊಸತಪ್ಪುದು (ಹೀಗೆ ವಿಟವನಿತೆಯರ ಪ್ರೇಮಗಳನ್ನ ಅವರು ಹೊಸದು ಮಾಡಿದರೆ ಹೊಸದಾಗುತ್ತದೆ) ಕಿಡಿಸೆ ಕಿಡುವುದು (ಕೆಡಿಸಿದರೆ ಕೆಡುವುದು). ಅಂತುಮಲ್ಲದೆಯುಂ-
- ವಚನ:ಅರ್ಥ:ಹೀಗೆ ನಲ್ಲ/ನಲ್ಲೆಯರ ದೂತಿಯರೆಂಬುವರು ಪ್ರೇಮಿಗಳ ಪ್ರೇಮವೆಂಬ ಬಳ್ಳಿಗೆ/ಲತೆಗೆ ಹಬ್ಬುವ ಗಿಡದಂತೆ ಇದ್ದಾರೆ. ಹೀಗೆ ವಿಟವನಿತೆಯರ ಪ್ರೇಮಗಳನ್ನ ಅವರು ಹೊಸದು ಮಾಡಿದರೆ ಹೊಸದಾಗುತ್ತದೆ. ಕೆಡಿಸಿದರೆ ಕೆಟ್ಟುಹೋಗುತ್ತದೆ. ಹಾಗೆ ಅಲ್ಲದೆಯೂ
- ಚಂ|| ನುಡಿಗಳೊಳಾಸೆಯುಂಟೆನಲೊಡಂ ತಳೆದಂತಿರೆ ನಿಲ್ವುದೆಂತುಮಾ
- ವೆಡೆಯೊಳಮಾಸೆಗಾಣೆನೆನೆ ತೊಟ್ಟನೆ ಪೋಪುವು ನಲ್ಲರಿರ್ವರೀ|
- ರೊಡಲೊಳಗಿರ್ಪ ಜೀವಮದುಕಾರಣದಿಂದಮೆ ಪೋಪ ಬರ್ಪೊಡಂ
- ಬಡನೊಳಕೊಂಡ ದೂದವರ ಕೆಯ್ಯೊಳೆ ಕೆಯ್ಯೆಡೆಯಿರ್ಪುದಾಗದೇ|| ೧೦೪
- ಪದ್ಯ-೧೦೪:ಪದವಿಭಾಗ-ಅರ್ಥ:ನುಡಿಗಳೊಳು ಆಸೆಯುಂಟು ಎನಲೊಡಂ (ದೂತರು ತರುವ ಮಾತುಗಳಲ್ಲಿ ಆಸೆಯಿದೆಯೆಂದೊಡನೆ) ತಳೆದಂತಿರೆ ನಿಲ್ವುದು (ಜೀವಧಾರಣೆ ಮಾಡಿದ ಹಾಗೆ ಎದ್ದು ನಿಲ್ಲುತ್ತದೆ.) ಅಂತುಂ ಆವೆಡೆಯೊಳಂ ಆಸೆಗಾಣೆನು ಎನೆ ತೊಟ್ಟನೆ ಪೋಪುವು (ಯಾರ ಕಡೆಯಲ್ಲಿಯೂ ಆಸೆಯಿಲ್ಲ ಎಂದೊಡನೆ ತಟಕ್ಕನೆ ಹೊರಟು ಹೋಗುತ್ತದೆ.) ನಲ್ಲರು ಈರ್ವರು ಈರ್ ಒಡಲೊಳಗಿರ್ಪ ಜೀವಂ ಅದುಕಾರಣದಿಂದಮೆ (ಪ್ರೇಮಿಗಳಿಬ್ಬರ ದೇಹದಲ್ಲಿರುವ ಪ್ರಾಣವು ಅದರಿಂದ) ಪೋಪ ಬರ್ಪ ಒಡಂಬಡನು ಒಳಕೊಂಡ ದೂದವರ ಕೆಯ್ಯೊಳೆ ಕೆಯ್ಯೆಡೆಯಿರ್ಪುದು (ಪ್ರಿಯರಲ್ಲಿಗೆ ಹೋಗಿ ಬಂದು ಅವರ ಒಪ್ಪಿಗೆಯನ್ನು ಪಡೆದಿರುವ ದೂತಿಯರ ಕಯ್ಯಲ್ಲಿಯೇ ಪ್ರಣಯಿಗಳ ಪ್ರಾಣವು ಇರುವುದು) ಆಗದೇ- ಅಲ್ಲವೇ!
- ಪದ್ಯ-೧೦೪:ಅರ್ಥ: ಪ್ರೇಮಿಗಳಿಬ್ಬರ ದೇಹದಲ್ಲಿರುವ ಪ್ರಾಣವು ದೂತರು ತರುವ ಮಾತುಗಳಲ್ಲಿ ಆಸೆಯಿದೆಯೆಂದೊಡನೆ ಜೀವಧಾರಣೆ ಮಾಡಿದ ಹಾಗೆ ಎದ್ದು ನಿಲ್ಲುತ್ತದೆ. ಯಾರ ಕಡೆಯಲ್ಲಿಯೂ ಆಸೆಯಿಲ್ಲವೆಂದೊಡನೆ ತಟಕ್ಕನೆ ಹೊರಟು ಹೋಗುತ್ತದೆ. ಆದುದರಿಂದ ಪ್ರಿಯರಲ್ಲಿಗೆ ಹೋಗಿ ಬಂದು ಅವರ ಒಪ್ಪಿಗೆಯನ್ನು ಪಡೆದಿರುವ ದೂತಿಯರ ಕಯ್ಯಲ್ಲಿಯೇ ಪ್ರಣಯಿಗಳ ಪ್ರಾಣವು ಇರುವುದು) ಆಗದೇ- ಅಲ್ಲವೇ (ಅಷ್ಟು ಗಾಢವಾದ ಪ್ರೇಮವನ್ನು ಅಗಲಿ ನಾನು ದೂರವಿರುವುದನ್ನು ಹೇಗೆ ಸಹಿಸಲಿ ಎಂದು ಭಾವ)
- ವ|| ಎಂದು ನುಡಿಯುತ್ತುಂ ಬರೆವರೆ ಮತ್ತೊಂದೆಡೆಯೊಳೊರ್ವಂ ಗರ್ಭೇಶ್ವರಂ ತನ್ನ ಹೃದಯೇಶ್ವರಿಯನಗಲ್ದು ಬಂದು ಪೆಱರಾರುಮಂ ಮೆಚ್ಚದಾಕೆಯಂ ನೆನೆದು-
- ವಚನ:ಪದವಿಭಾಗ-ಅರ್ಥ:ಎಂದು ನುಡಿಯುತ್ತುಂ ಬರೆವರೆ ಮತ್ತೊಂದು ಎಡೆಯೊಳ್ ಒರ್ವಂ ಗರ್ಭೇಶ್ವರಂ (ಮತ್ತೊಂದು ಕಡೆಯಲ್ಲಿ ಒಬ್ಬ ಆಗರ್ಭ ಶ್ರೀಮಂತನು) ತನ್ನ ಹೃದಯೇಶ್ವರಿಯನು ಅಗಲ್ದು (ಅಗಲಿ) ಬಂದು ಪೆಱರಾರುಮಂ (ಬೇರೆ ಯಾರನ್ನೂ) ಮೆಚ್ಚದೆ ಆಕೆಯಂ ನೆನೆದು-(
- ವಚನ:ಅರ್ಥ:ಎಂದು ಮಾತಾಡುತ್ತ ಬರುತ್ತಿರುವಾಗ ಮತ್ತೊಂದು ಕಡೆಯಲ್ಲಿ ಒಬ್ಬ ಆಗರ್ಭ ಶ್ರೀಮಂತನು ತನ್ನ ಪ್ರಿಯೆಯನ್ನು ಅಗಲಿ ಬಂದು, ಬೇರೆ ಯಾರನ್ನೂ ಮೆಚ್ಚದೆ ಆಕೆಯನ್ನು ಜ್ಞಾಪಿಸಿಕೊಂಡು
- ಚಂ|| ಮಿಱುಗುವ ತೋರಹಾರಮುಮನಪ್ಪಿನ ಕಾಳಸೆಗಡ್ಡಮೆಂಬ ಬೇ
- ಸಱಿನೊಳೆ ಕಟ್ಟಲೊಲ್ಲದನಿತೞ್ಕಱನಿೞ್ಕುಳಿಗೊಂಡಲಂಪಿನ|
- ತ್ತೆಱಗಿದ ನಲ್ಲಳಳ್ಳೆರ್ದೆಯೊಳಕ್ಕಟ ಬೆಟ್ಟುಗಳುಂ ಬನಂಗಳುಂ
- ತೊರೆಗಳುಮೀಗಳೊಡ್ಡೞಿಯದೊಡ್ಡಿಸೆ ಸೈರಿಸುವಂತುಟಾದುದೇ|| ೧೦೫ ||
- ಪದ್ಯ-೧೦೫:ಪದವಿಭಾಗ-ಅರ್ಥ:ಮಿಱುಗುವ ತೋರಹಾರಮುಮಂ ಅಪ್ಪಿನ ಕಾಳಸೆಗೆ ಅಡ್ಡಮೆಂಬ ಬೇಸಱಿನೊಳೆ (ಮಿರುಗುವ ದೊಡ್ಡ ಹಾರವನ್ನು ಅಪ್ಪುವ ಗಾಢತೆಗೆ ಅಡ್ಡ ಎಂದು ಅದನ್ನು ) ಕಟ್ಟಲೊಲ್ಲದೆ ಅನಿತು ಅೞ್ಕಱನು ಇೞ್ಕುಳಿಗೊಂಡ (ಕಟ್ಟಿಕೊಳ್ಳಲು ಒಪ್ಪದೆ, ಅಷ್ಟು ಪ್ರೇಮವನ್ನು, ಹಾರವನ್ನು ಇ/ಕಸಿದುಕೊಂಡು ಅಪ್ಪಿ) ಅಲಂಪಿನತ್ತ ಎಱಗಿದ (ಸುಖದತ್ತ ಎರಗಿದ/ ಧಾವಿಸಿ) ನಲ್ಲಳ ಅಳ್ಳೆರ್ದೆಯೊಳು ಅಕ್ಕಟ (ಪ್ರಿಯಳ ಮೃದು ಹೃದಯದಲ್ಲಿ ಇರಲು ಅಯ್ಯೋ/ಅಕ್ಕಟಾ ಅಡ್ಡಬಂದಿದೆ) ಬೆಟ್ಟುಗಳುಂ ಬನಂಗಳುಂ/ವನಗಳು ತೊರೆಗಳುಂ/ನದಿಗಳು ಈಗಳು ಒಡ್ಡೞಿಯದೆ(ರಾಶಿರಾಶಿಯಾಗಿ) ಒಡ್ಡಿಸೆ (ಹೀಗೆ ಚಾಚಿಕೊಂಡಿರಲು) ಸೈರಿಸುವಂತುಟೆ ಆದುದೇ (ಸಹಿಸುವ ಹಾಗಾಯಿತೆ?)
- ಪದ್ಯ-೧೦೨:ಅರ್ಥ: ಮಿರುಗುವ ದೊಡ್ಡ ಹಾರವನ್ನು ಅಪ್ಪುವ ಗಾಢತೆಗೆ ಅಡ್ಡ ಎಂದು ಅದನ್ನು ಕಟ್ಟಿಕೊಳ್ಳಲು ಒಪ್ಪದೆ, ಅಷ್ಟು ಪ್ರೇಮವನ್ನು, ಹಾರವನ್ನು ಇ/ಕಸಿದುಕೊಂಡು ಅಪ್ಪಿ ಸುಖದತ್ತ ಎರಗಿದ/ ಧಾವಿಸಿ, ಪ್ರಿಯಳ ಮೃದು ಹೃದಯದಲ್ಲಿ ಇರಲು ಆಗದೆ,ಅಯ್ಯೋ/ಅಕ್ಕಟಾ, ಬೆಟ್ಟಗಳೂ ತೊರೆಗಳೂ ಕಾಡುಗಳೂ ರಾಶಿ ರಾಶಿಯಾಗಿ ಅಡ್ಡವಾಗಿ ಚಾಚಿಕೊಂಡಿರಲು ಸಹಿಸುವ ಹಾಗಾಯಿತೆ! (ಪ್ರಿಯಳು ಮುತ್ತಿನ ಹಾರವನ್ನು ಧರಿಸಿದರೆ ನಮ್ಮ ಅಪ್ಪುಗೆಯ ಸುಖಕ್ಕೆ ಅಡ್ಡಿಯಾಗುತ್ತದೆಂದು ಅವಳ ಕತ್ತಿನಹಾರವನ್ನು ತೊಡಿಸದೇ ಅಷ್ಟು ಪ್ರೇಮವನ್ನು ತೋರಿದ್ದು, ಈಗ ಸುಖದ ಕಡೆಗೇ ಬಾಗಿದ ನನಗೂ, ನಲ್ಲಳ ನಡುಗುವ ಎದೆಗೂ ನನಗೂ ಮಧ್ಯೆ ಅಯ್ಯೋ ಬೆಟ್ಟಗಳೂ ತೊರೆಗಳೂ ಕಾಡುಗಳೂ ರಾಶಿ ರಾಶಿಯಾಗಿ ಅಡ್ಡವಾಗಿರುವಂತೆ ಚಾಚಿಕೊಂಡಿರಲು ಸಹಿಸುವ ಹಾಗಾಯಿತೆ? (ಎಂದು ಸಿರಿವಂತನು ದಃಖಿಸಿದನು.)
- ಚಂ||ಮುನಿಸಿನೊಳಾದಮೇವಯಿಸಿ ಸೈರಿಸದಾದೞಲೊಳ್ ಕನಲ್ದು ಕಂ
- ಗನೆ ಕನಲುತ್ತುಮುಮ್ಮಳಿಸಿ ಸೈರಿಸಲಾಱದೆ ಮೇಲೆವಾಯ್ದು ಬ
- ಯ್ದನುವಿಸಿ ಕಾಡಿ ನೋಡಿ ತಿಳಿದೞ್ಕಱನಿೞ್ಕುಳಿಗೊಂಡಲಂಪುಗಳ್
- ಕನಸಿನೊಳಂ ಪಳಂಚಲೆವುವೆನ್ನೆರ್ದೆಯೊಳ್ ತರಾಳಾಯತೇಕ್ಷಣೇ|| ೧೦೬
- ಪದ್ಯ-೧೦೬:ಪದವಿಭಾಗ-ಅರ್ಥ:ಮುನಿಸಿನೊಳು ಆದಂ ಏವಯಿಸಿ (ಹೇವರಿಸಿ?) ಸೈರಿಸದಾದ ಅೞಲೊಳ್ (ಸಿಟ್ಟಿನಲ್ಲಿ ಬಹಳ ಬೇಸರಪಟ್ಟು ಸಹಿಸದೆ ಆದ ದುಃಖದಲ್ಲಿ) ಕನಲ್ದು ಕಂಗನೆ ಕನಲುತ್ತ ಉಮುಮ್ಮಳಿಸಿ ಸೈರಿಸಲಾಱದೆ (ಬಹಳ ಕೋಪಿಸುತ್ತ ದುಃಖದಿಂದ ಉಮ್ಮಳಿಸಿ, ತಾಳಲಾರದೆ) ಮೇಲೆವಾಯ್ದು ಬಯ್ದು ಅನುವಿಸಿ ಕಾಡಿ ನೋಡಿ (ಮೇಲೆ ಬಿದ್ದು ಬಯ್ದು ಬಲಾತ್ಕರಿಸಿ ಕಾಡಿ ನೋಡಿ ) ತಿಳಿದ ಅೞ್ಕಱಂ (ಶಾಂತವಾಗಿ ಪ್ರೀತಿಯನ್ನು/ ಮುತ್ತನ್ನು) ಇೞ್ಕುಳಿಗೊಂಡ (ಪಡೆದುಕೊಂಡ) ಅಲಂಪುಗಳ್ (ಸುಖಗಳು) ಕನಸಿನೊಳಂ ಪಳಂಚಿ ಅಲೆವುವು ಎನ್ನೆರ್ದೆಯೊಳ್(ಸುಖದ ನೆನಪುಗಳು ಕನಸ್ಸಿನಲ್ಲಿಯೂ ನನ್ನೆದೆಯಲ್ಲಿ ತಗುಲಿಕೊಂಡು ಪೀಡಿಸುತ್ತಿರುವುವು) ತರಾಳಾಯತೇಕ್ಷಣೇ (ಚಂಚಲಾಕ್ಷಿಯೇ)
- ಪದ್ಯ-೧೦೬:ಅರ್ಥ: ಎಲೌ ಚಂಚಲಾಕ್ಷಿಯೇ ಕೋಪದಲ್ಲಿ ಬಹಳ ಬೇಸರಪಟ್ಟು ಸಹಿಸದೆ ಆದ ದುಃಖದಲ್ಲಿ ಬಹಳ ಕೋಪಿಸುತ್ತ ದುಃಖದಿಂದ ಉಮ್ಮಳಿಸಿ, ತಾಳಲಾರದೆ, ಮೇಲೆ ಬಿದ್ದು ಬಯ್ದು ಬಲಾತ್ಕರಿಸಿ ಕಾಡಿ ನೋಡಿ ಶಾಂತವಾಗಿ ಪ್ರೀತಿಯನ್ನು/ ಮುತ್ತನ್ನು ಸೆಳೆದುಕೊಂಡ ಸುಖದ ನೆನಪುಗಳು ಕನಸ್ಸಿನಲ್ಲಿಯೂ ನನ್ನೆದೆಯನ್ನು ತಗುಲಿ ಪೀಡಿಸುತ್ತಿರುವುವು.
- ವ|| ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯೊಡನಿರ್ದಂದಿನ ಮುಳಿಸೊಸಗೆಗಳಂ ನೆನೆದು-
- ವಚನ:ಪದವಿಭಾಗ-ಅರ್ಥ:ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯ ಒಡನಿರ್ದ ಅಂದಿನ ಮುಳಿಸ ಒಸಗೆಗಳಂ (ಪ್ರೇಮದಕಾಣಿಕೆ) ನೆನೆದು-
- ವಚನ:ಅರ್ಥ:ಎಂದು ಸಹಿಸಲಾರದೆ ತನ್ನ ಪ್ರಾಣಪ್ರಿಯೆಯ ಜೊತೆಯಲ್ಲಿದ್ದ ಆ ದಿನದ ಕೋಪ, ಪ್ರೇಮದಕಾಣಿಕೆಗಳನ್ನು ನೆನೆಸಿಕೊಂಡು
- ಚಂ|| ಬಗೆ ಗೆಲಲೆಂದು ಕಾಡಿ ಪುಸಿನಿದ್ದೆಯೊಳಾನಿರೆ ಲಲ್ಲೆಗೆಯ್ದು ಲ
- ಲ್ಲೆಗೆ ಮರೆದಿರ್ದೊಡೞ್ಕಱಿನೊಳೊಂದಿ ಮೊಗಂ ಮೊಗದತ್ತ ಸಾರ್ಚಿ ಬೆ|
- ಚ್ಚಗೆ ನಿಡುಸುಯ್ದ ನಲ್ಲಳ ಮುಖಾಂಬುಜ ಸೌರಭದೊಳ್ ಪೊದಳ್ದದೇಂ
- ಮಗಮಗಿಸಿತ್ತೊ ಕತ್ತುರಿಯ ಕಪ್ಪುರದೊಂದು ಕದಂಬದಂಬುಲಂ|| ೧೦೭||
- ಪದ್ಯ-೧೦೭:ಪದವಿಭಾಗ-ಅರ್ಥ:ಬಗೆ (ಮನಸ್ಸನ್ನು) ಗೆಲಲೆಂದು ಕಾಡಿ ಪುಸಿನಿದ್ದೆಯೊಳು ಆನು ಇರೆ (ಅವಳ- ಮನಸ್ಸನ್ನು ಗೆಲ್ಲಬೇಕೆಂದು ಸುಳ್ಳುನಿದ್ದೆಯಲ್ಲಿ ನಾನು ಇರಲು) ಲಲ್ಲೆಗೆಯ್ದು (ಅವಳು ಮುದ್ದುಮಾತುಗಳನ್ನಾಡಿ) ಲಲ್ಲೆಗೆ ಮರೆದಿರ್ದೊಡೆ (ಲಲ್ಲೆಗೆ ಮೈಮರೆತವನಂತೆ ಇರಲು) ಅೞ್ಕಱಿನೊಳು ಒಂದಿ (ಪ್ರೇಮದಿಂದ ಕೂಡಿ) ಮೊಗಂ ಮೊಗದತ್ತ ಸಾರ್ಚಿ ( ಮುಖದೊಡನೆ ತನ್ನ ಮುಖವನ್ನು ಸೇರಿಸಿ) ಬೆಚ್ಚಗೆ ನಿಡುಸುಯ್ದ ನಲ್ಲಳ (ಬಿಸಿಯಾಗಿ ನಿಟ್ಟುಸಿರು ಬಿಟ್ಟ ಪ್ರಿಯೆಯ) ಮುಖಾಂಬುಜ ಸೌರಭದೊಳ್ (ಮುಖಕಮಲದ ಸುಗಂಧದಲ್ಲಿ) ಪೊದಳ್ದು (ತುಂಬಿಕೊಂಡ) ಅದೇಂ ಮಗಮಗಿಸಿತ್ತೊ (ಎಷ್ಟೊಂದು ಗಮಗಮಿಸಿತ್ತೊ?) ಕತ್ತುರಿಯ ಕಪ್ಪುರದೊಂದು ಕದಂಬದಂಬುಲಂ(ಕಸ್ತೂರಿಯ ಸುಗಂಧದಲ್ಲಿ ಸೇರಿಕೊಂಡ ಪಚ್ಚಕರ್ಪೂರ ಮಿಶ್ರಿತವಾದ ತಾಂಬೂಲದ ಉಂಡೆಯು)
- ಪದ್ಯ-೧೦೭:ಅರ್ಥ: (ಪ್ರಿಯಳೊಡನೆ) ಜಗಳಾಡಿ, ನಂತರ ಅವಳ ಮನಸ್ಸನ್ನು ಗೆಲ್ಲಬೇಕೆಂದು ನಾನು ಹುಸಿನಿದ್ದೆಯಲ್ಲಿರಲು ಅವಳು ಮುದ್ದುಮಾತುಗಳನ್ನಾಡಿ ಆ ಮುದ್ದುಮಾತಿಗೂ ನಾನು ಮೈಮರೆತವನಂತಿರಲು, ಪ್ರೇಮದಿಂದ ಕೂಡಿ ನನ್ನ ಮುಖದೊಡನೆ ತನ್ನ ಮುಖವನ್ನು ಸೇರಿಸಿ ಬಿಸಿಯಾಗಿ ನಿಟ್ಟುಸಿರು ಬಿಟ್ಟ ಪ್ರಿಯಳ ಮುಖಕಮಲದ ಕಸ್ತೂರಿಯ ಸುಗಂಧದಲ್ಲಿ ಸೇರಿಕೊಂಡ ಪಚ್ಚಕರ್ಪೂರ ಮಿಶ್ರಿತವಾದ ತಾಂಬೂಲದ ಉಂಡೆಯೂ ಎಷ್ಟೊಂದು ಗಮಗಮಿಸಿತ್ತೊ?
- ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-
- ವಚನ:ಪದವಿಭಾಗ-ಅರ್ಥ:ಎಂದು ತನ್ನೊಳ್ ಪಲುಂಬುತಿರ್ದನಂ (ಹಲುಬುತ್ತಿದ್ದವನನ್ನು) ಕಂಡು ಈತನುಮ್ ಎಮ್ಮಂದಿಗನುಮ್ ಎಮ್ಮ ನಂಟನುಮ್ ಅಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದು ಎಡೆಯೊಳ್-
- ವಚನ:ಅರ್ಥ:ಅರ್ಜುನನು- ಎಂದು ತನ್ನಲ್ಲಿಯೇ ಹಲುಬುತ್ತಿದ್ದವನನ್ನು ಕಂಡು ಇವನೂ ನಮ್ಮಂತಹವನೂ ನಮ್ಮ ನಂಟನೂ ಆಗಿದ್ದಾನೆ ಎಂದು ಮುಗುಳ್ನಗೆ ನಗುತ್ತ ಬರುತ್ತಿದ್ದವನು ಒಂದು ಕಡೆಯಲ್ಲಿ
- ಚಂ|| ಒಲವಿನೊಳಾದ ಕಾಯ್ದು ಮಿಗೆ ಕಾದಲನಂ ಬಿಸುಟಂತೆ ಪೋಪ ಕಾ
- ದಲಳೞುತಂ ತೆಱಂದಿರಿದು ನೋಡಿದ ನೋಟದೊಳೆಯ್ದೆ ತಳ್ತ ಪೆ|
- ರ್ಮೊಲೆ ಪೊಱಮುಯ್ವು ಬೆನ್ನಿನಿತುಮೊರ್ಮೆಯೆ ನಾಂಬಿನಮುಣ್ಮಿ ಪೊಣ್ಮಿ ಕ
- ಣ್ಮಲರ್ಗಳಿನೆಚ್ಚು ಪಾಯ್ದುವರಲಂಬುಗಳಂತೆ ವಿಲೋಚನಾಂಬುಗಳ್|| ೧೦೮ ||
- ಪದ್ಯ-೧೦೭:ಪದವಿಭಾಗ-ಅರ್ಥ:ಒಲವಿನೊಳು ಆದ ಕಾಯ್ದು ಮಿಗೆ (ಪ್ರಣಯಕಲಹದಲ್ಲಿ ಉಂಟಾದ ಕೋಪವು ಹೆಚ್ಚಲು) ಕಾದಲನಂ ಬಿಸುಟಂತೆ ಪೋಪ ಕಾದಲಳ್ ಅೞುತಂ (ಪ್ರಿಯನನ್ನು ಅಲಕ್ಷ್ಯದಿಂದ ತೊರೆದು ಹೋಗುತ್ತಿರುವ ಪ್ರಿಯಳು ಅಳುತ್ತಾ) ತೆಱಂದಿರಿದು (ನಾನಾತೆರದಲ್ಲಿ ಹಿಂದಿರುಗಿ ನೋಡುತ್ತಾ) ನೋಡಿದ ನೋಟದೊಳ್ ಅಯ್ದೆ ತಳ್ತ ಪೆರ್ಮೊಲೆ (ನೋಟದಲ್ಲಿ ಅವಳ ಗಾಢವಾದ ದಪ್ಪಮೊಲೆಗಳೂ) ಪೊಱಮುಯ್ವು (ಹೆಗಲ ಹಿಂಭಾಗವೂ) ಬೆನ್ ಇನಿತುಂ (ಬೆನ್ನು ಇಷ್ಟೂ) ಒರ್ಮೆಯೆ ನಾಂಬಿನಂ ಉಣ್ಮಿ-> (ಹೆಗಲ ಹಿಂಭಾಗವೂ ಬೆನ್ನೂ ಏಕಕಾಲದಲ್ಲಿ ತೊಯ್ದುಹೋಗುವ ಹಾಗೆ )ಉಣ್ಮಿ ಪೊಣ್ಮಿ ಕಣ್ಮಲರ್ಗಳಿಂ ಇನು ಎಚ್ಚು (ಚಿಮ್ಮಿ ಸೂಸಿ ಕಣ್ ಅಲರ್ಗಳಿಂ ಹೂವಿನಂತಿರುವ ಕಣ್ಣುಗಳಿಂದ ಇಸು -ಹೊಡೆದು) ಪಾಯ್ದುವು ಅರಲಂಬುಗಳಂತೆ (ಅಲರ್ ಅಂಬುಗಳಂತೆ- ಹೂವಿನ ಕಣೆಗಳಂತೆ ಹಾಯ್ದವು-ಚಿಮ್ಮಿ ಹರಿದವು) ವಿಲೋಚನಾಂಬುಗಳ್ (ನೋಟದ ಬಾಣಗಳು)
- ಪದ್ಯ-೧೦೮:ಅರ್ಥ: ಪ್ರಣಯಕಲಹದಲ್ಲಿ ಉಂಟಾದ ಕೋಪವು ಹೆಚ್ಚಲು, ಪ್ರಿಯನನ್ನು ಅಲಕ್ಷ್ಯದಿಂದ ತೊರೆದು ಹೋಗುತ್ತಿರುವ ಪ್ರಿಯಳು ಅಳುತ್ತಾ ನಾನಾತೆರದಲ್ಲಿ ಹಿಂತಿರುಗಿ ನೋಡಿದ ನೋಟದಲ್ಲಿ ಅವಳ ಗಾಢವಾದ ಪೆರ್ಮೊಲೆಗಳೂ ಹೆಗಲ ಹಿಂಭಾಗವೂ ಬೆನ್ನೂ ಏಕಕಾಲದಲ್ಲಿ ತೊಯ್ದುಹೋಗುವ ಹಾಗೆ ಅವಳ ಹೂವಿನಂತಿರುವ ಕಣ್ಣುಗಳಿಂದ ಕಣ್ಣೀರು ಪುಷ್ಟಬಾಣಗಳಂತೆ ಹೆಚ್ಚಿ ಚಿಮ್ಮಿ ಸೂಸಿ ನೋಟದ ಬಾಣಗಳು ಹರಿದುವು.
- ವ|| ಮತ್ತಮೊಂದೆಡೆಯೊಳೊಂದು ಕಾಳಾಗರು ಧೂಪ ಧೂಮ ಮಲಿನ ಶ್ಯಾಮಲಾಲಂ ಕೃತವಿಚಿತ್ರಭಿತ್ತಿವಿರಾಜಿತರಮ್ಯಹರ್ಮ್ಯತಳದೊಳ್ ಪಲಕಾಲಮಗಲ್ದ ನಲ್ಲರಿರ್ವರುಮೊಂದೆಡೆಯೊಳ್ ಕೂಡಿ-
- ವಚನ:ಪದವಿಭಾಗ-ಅರ್ಥ:ಮತ್ತಮೊಂದು ಎಡೆಯೊಳು ಒಂದು ಕಾಳ ಅಗರು ಧೂಪ ಧೂಮ ಮಲಿನ ಶ್ಯಾಮಲಾಲಂಕೃತ (ಕಪ್ಪುಬಣ್ಣದಿಂದ ವರ್ಣದಿಂದ ಅಲಂಕರಿಸಲ್ಪಟ್ಟ) ವಿಚಿತ್ರ ಭಿತ್ತಿವಿರಾಜಿತ (ಚಿತ್ರಮಯ ಗೋಡೆಗಳಿಂದ ಶೋಭಿಸುವವ) ರಮ್ಯಹರ್ಮ್ಯತಳದೊಳ್ (ರಮಣೀಯವಾದ ಉಪ್ಪರಿಗೆಗಳಲ್ಲಿ) ಪಲಕಾಲಂ ಅಗಲ್ದ ನಲ್ಲರು ಇರ್ವರುಂ ಒಂಮೊಂದೆಡೆಯೊಳ್ ಕೂಡಿ(ಅಗಲಿದ್ದ ಇಬ್ಬರು ಪ್ರೇಮಿಗಳು ಒಂದು ಕಡೆ ಕೂಡಿದ್ದರು.)-
- ವಚನ:ಅರ್ಥ:ಮತ್ತೊಂದು ಕಡೆಯಲ್ಲಿ ಕಪ್ಪಾಗಿರುವ ಅಗುರು ಧೂಪದ ಹೊಗೆಯಿಂದ, ಮಾಸಿದ ಶ್ಯಾಮಲ/ಕಪ್ಪುಬಣ್ಣದಿಂದ ವರ್ಣದಿಂದ ಅಲಂಕರಿಸಲ್ಪಟ್ಟು ಚಿತ್ರಮಯ ಗೋಡೆಗಳಿಂದ ಶೋಭಿಸುವವ ರಮಣೀಯವಾದ ಉಪ್ಪರಿಗೆಯ ಪ್ರದೇಶದಲ್ಲಿ ಹಲವು ಕಾಲ ಅಗಲಿದ್ದ ಇಬ್ಬರು ಪ್ರೇಮಿಗಳು ಒಂದು ಕಡೆ ಕೂಡಿದ್ದರು.
- ಮ|| ಸಮಸಂದೞ್ಕಱಲಂಪನೀಯೆ ಶಯನಂ ಘರ್ಮಾಂಬುವಿಂ ನಾನೆ ಮು
- ನ್ನಮೆ ನಾಣೊೞ್ಕುಡಿವೋಗಿ ಸೂಸುವ ಪದಂ ಗಂಗಾಂಬುವಂ ಪೋಲೆ ವಿ|
- ಭ್ರಮಮಂ ಕಂಠರವಕ್ಕೆ ತಾಡನ ರವಂ ತಂದೀಯೆ ತಚ್ಛಯ್ಯೆಯೊಳ್
- ಸಮಹಸ್ತಂಬಿಡಿವಂತುಟಾಯ್ತು ಸುರತ ಪ್ರಾರಂಭ ಕೋಳಾಹಳಂ|| ೧೦೯ |
- ಪದ್ಯ-೧೦೯:ಪದವಿಭಾಗ-ಅರ್ಥ:ಸಮಸಂದ ಅೞ್ಕಱ ಅಲಂಪನು ಈಯೆ (ಸಮಾನವಾಗಿ ಉಂಟಾದ ಪ್ರೀತಿಯು ಸುಖವನ್ನು ಕೊಡಲು) ಶಯನಂ ಘರ್ಮಾಂಬುವಿಂ ನಾನೆ (ಬೆವರಿನಿಂದ ಹಾಸಿಗೆಯು ಒದ್ದೆಯಾಗಲು) ಮುನ್ನಮೆ ನಾಣ್ ಒೞ್ಕುಡಿವೋಗಿ ಸೂಸುವ ಪದಂ (ಮೊದಲೇ ಲಜ್ಜೆಯಿಂದ ಪ್ರಸರಿಸಿ ಹರಿಯುವ ಸುರತದ್ರವವು) ಗಂಗಾಂಬುವಂ ಪೋಲೆ (ಗಂಗಾಜಲವನ್ನು ಹೋಲಲು,) ವಿಭ್ರಮಮಂ ಕಂಠರವಕ್ಕೆ ತಾಡನ ರವಂ ತಂದೀಯೆ (ಕೊರಳಿನ ಗರಗರಿಕೆಯ ಶಬ್ದಕ್ಕೆ ಸುರತಧ್ವನಿ ಸೊಗಸನ್ನು ಕೊಡಲು,) ತತ್ ಶೆಯ್ಯೆಯೊಳ್ ಸಮಹಸ್ತಂ ಬಿಡಿವಂತುಟಾಯ್ತು ಸುರತ ಪ್ರಾರಂಭ ಕೋಳಾಹಳಂ (ಆ ಹಾಸಿಗೆಯಲ್ಲಿ ಪ್ರಿಯ ಪ್ರೇಯಸಿಯರ ಸುರತಕ್ರೀಡೆಯ ಪ್ರಾರಂಭದ ಅಬ್ಬರವು ಎರಡುಹಸ್ತ ಬಡಿದಂತೆ/ ಕೈತಟ್ಟಿದಂತೆ ಸಮಪ್ರಮಾಣವುಳ್ಳದ್ದಾಯಿತು.)
- ಪದ್ಯ-೧೦೯:ಅರ್ಥ: ಆ ಪ್ರಿಯ ಪ್ರೇಯಸಿಯರಲ್ಲಿ ಸಮಾನವಾಗಿ ಉಂಟಾದ ಪ್ರೀತಿಯು ಸುಖವನ್ನು ಕೊಡಲು, ಬೆವರಿನಿಂದ ಹಾಸಿಗೆಯು ಒದ್ದೆಯಾಗಲು. ಮೊದಲೇ ಲಜ್ಜೆಯಿಂದ ಪ್ರಸರಿಸಿ ಹರಿಯುವ ಸುರತದ್ರವವು ಗಂಗಾಜಲವನ್ನು ಹೋಲಲು, ಕೊರಳಿನ ಗರಗರಿಕೆಯ ಶಬ್ದಕ್ಕೆ ಸುರತಧ್ವನಿ ಸೊಗಸನ್ನು ಕೊಡಲು, ಆ ಹಾಸಿಗೆಯಲ್ಲಿ ಪ್ರಿಯ ಪ್ರೇಯಸಿಯರ ಸುರತಕ್ರೀಡೆಯ ಪ್ರಾರಂಭದ ಅಬ್ಬರವು ಎರಡುಹಸ್ತ ಬಡಿದಂತೆ/ ಕೈತಟ್ಟಿದಂತೆ ಸಮಪ್ರಮಾಣವುಳ್ಳದ್ದಾಯಿತು.
- ವ|| ಅಂತನೇಕಪ್ರಕಾರ ಪುರ ಜನಜನಿತ ವಿಕಾರಂಗಳಂ ತೊೞಲ್ದು ನೋೞ್ಪನ್ನೆಗಂ-
- ವಚನ:ಪದವಿಭಾಗ-ಅರ್ಥ:ಅಂತು ಅನೇಕಪ್ರಕಾರ ಪುರ ಜನಜನಿತ ವಿಕಾರಂಗಳಂ ತೊೞಲ್ದು ನೋೞ್ಪನ್ನೆಗಂ-
- ವಚನ:ಅರ್ಥ: ಹೀಗೆ ಪುರಜನರ ಅನೇಕ ಪ್ರಕಾರವಾದ ಜನಜನಿತ ವಿಕಾರಗಳನ್ನು ಅರ್ಜುನನು ಅಲೆಯುತ್ತಾ ನೋಡುವಾಗ;-
- ಚಂ|| ಸೊಡರ್ಗುಡಿಯೊಯ್ಯನಾಗೆ ಪೊಸ ಮಲ್ಲಿಗೆ ಮೆಲ್ಲಗೆ ಕಂಪು ನಾರೆ ತ
- ಣ್ಪಿಡಿದೆಲರೂದೆ ಗಾವರದ ಮೆಲ್ಲುಲಿ ತುಂಬಿಯ ಗಾವರಂಗಳಂ|
- ಗೆಡೆಗೊಳೆ ಚಂದ್ರಿಕಾಪ್ರಭೆ ಮೊದಲ್ಗಿಡೆ ನಾಡೆ ವಿತರ್ಕದಿಂ ಬೆರ
- ಲ್ಮಿಡಿದು ಗುಣಾರ್ಣವಂ ನೆರೆಯೆ ನಿಟ್ಟಿಸಿದಂ ಬೆಳಗಪ್ಪ ಜಾವಮಂ|| ೧೧೦||
- ಪದ್ಯ-೧೧೦:ಪದವಿಭಾಗ-ಅರ್ಥ:ಸೊಡರ್ಗುಡಿಯು ಒಯ್ಯನಾಗೆ (ಉರಿಯುವ ದೀಪದ ಕುಡಿಯು ಮೆಲ್ಲಗೆ/ ಸಣ್ಣವಾಯಿತು) ಪೊಸ ಮಲ್ಲಿಗೆ ಮೆಲ್ಲಗೆ ಕಂಪು ನಾರೆ(ಮಲ್ಲಿಗೆಯು ಮೃದುವಾಗಿ ಪರಿಮಳವನ್ನು ಬೀರಿತು) ತಣ್ಪಿಡಿದ ಎಲರು ಊದೆ (ತಂಪಾದ ಗಾಳಿ ಬೀಸಲು,) ಗಾವರದ ಮೆಲ್ಲುಲಿ (ತಂಗಾಳಿಯ ಸಣ್ಣ ಸದ್ದು) ತುಂಬಿಯ ಗಾವರಂಗಳಂಗೆ ಎಡೆಗೊಳೆ (ದುಂಬಿಯ ಝೇಂಕಾರದೊಡನೆ ಸೇರಲು,) ಚಂದ್ರಿಕಾಪ್ರಭೆ ಮೊದಲ್ಗಿಡೆ (ಬೆಳುದಿಂಗಳ ಕಾಂತಿ ಮೊದಲ್ ಕಿಡೆ, ಕಡಿಮೆಯಾಗಲು) ನಾಡೆ ವಿತರ್ಕದಿಂ (ರೂಢಿಯ ವಿಶೇಷ ತರ್ಕದಿಂದ) ಬೆರಲ್ಮಿಡಿದು (ಬೆರಳಲ್ಲಿ ಚಿಟಿಕೆ ಹೊಡೆದು) ಗುಣಾರ್ಣವಂ ನೆರೆಯೆ ನಿಟ್ಟಿಸಿದಂ (ಚೆನ್ನಾಗಿ ನೋಡಿದನು) ಬೆಳಗಪ್ಪ ಜಾವಮಂ (ಅರ್ಜುನನು ಬೆಳಗಾಗುವ ಸಮಯವನ್ನು ಚೆನ್ನಾಗಿ ನೋಡಿದನು.)
- ಪದ್ಯ-೧೧೦:ಅರ್ಥ: ಉರಿಯುವ ದೀಪದ ಕುಡಿಯು ಸಣ್ಣವಾಯಿತು, ಮಲ್ಲಿಗೆಯು ಮೃದುವಾಗಿ ಪರಿಮಳವನ್ನು ಬೀರಿತು, ತಂಪಾದ ಗಾಳಿ ಬೀಸಲು, ತಂಗಾಳಿಯ ಮೃದುವಾದ ಸದ್ದು ದುಂಬಿಯ ಝೇಂಕಾರದೊಡನೆ ಸೇರಲು. ಬೆಳುದಿಂಗಳಿನ ಕಾಂತಿ ಕಡಮೆಯಾಗಲು, ರೂಢಿಯ ವಿಶೇಷ ತರ್ಕದಿಂದ, ಚಿಟಿಕೆಹೊಡೆದು ಅರ್ಜುನನು ಬೆಳಗಾಗುವ ಸಮಯವನ್ನು ಚೆನ್ನಾಗಿ ನೋಡಿದನು.
- ವ|| ಆಗಳ್ ತನ್ನೊಡನೆ ತೊೞಲ್ವ ನಾಗರಕ ವಿಟ ವಿದೂಷಕ ಪೀಠಮರ್ದಕರ್ಕಳನಿರಲ್ವೇೞ್ದು ರಾಜಮಂದಿರಮಂ ಪೊಕ್ಕು ತನ್ನ ಪವಡಿಸುವ ಮಾಡಕ್ಕೆವಂದು ಹಂಸ ಧವಳ ಶಯ್ಯಾತಳದೊಳ್ ಗಂಗಾನದೀ ಪುಳಿನ ಪರಿಸರ ಪ್ರದೇಶದೊಳ್ ಮರೆದೊಱಗುವೈರಾವತದಂತೆ ಪವಡಿಸಿ ಕಿಱಿದಾನುಂ ಬೇಗದೊಳ್ ಸುಭದ್ರೆಯಂ ಕನಸಿನೊಳ್ ಕಂಡು ನನಸೆಂದು ಬಗೆದು ಮಂಗಳಪಾಠಕರವಂಗಳೊಳ್ ಭೋಂಕನೆೞ್ಚತ್ತನನ್ನೆಗಂ-
- ವಚನ:ಪದವಿಭಾಗ-ಅರ್ಥ:ಆಗಳ್ ತನ್ನೊಡನೆ ತೊೞಲ್ವ ನಾಗರಕ ವಿಟ ವಿದೂಷಕ ಪೀಠಮರ್ದಕರ್ಕಳಂ ನಿರಲ್ವೇೞ್ದು (ಇರಲ್ ವೇಳ್ದು- ಅಲ್ಲಿಯೇ ಇರಲುಹೇಳಿ) ರಾಜಮಂದಿರಮಂ ಪೊಕ್ಕು (ಹೊಕ್ಕು) ತನ್ನ ಪವಡಿಸುವ ಮಾಡಕ್ಕೆವಂದು ಹಂಸ ಧವಳ ಶಯ್ಯಾತಳದೊಳ್ (ತಾನು ಮಲಗುವ ಉಪ್ಪರಿಗೆಯ ಮನೆಗೆ ಬಂದು ಹಂಸದಷ್ಟು ಬೆಳ್ಳಗಿರುವ ಹಾಸಿಗೆಯಲ್ಲಿ) ಗಂಗಾನದೀ ಪುಳಿನ ಪರಿಸರ ಪ್ರದೇಶದೊಳ್ (ಗಂಗಾನದಿಯ ಮರಳು ದಿಣ್ಣೆಯ ಪ್ರದೇಶದಲ್ಲಿ ) ಮರೆದು ಒಱಗುವ ಐರಾವತದಂತೆ ಪವಡಿಸಿ (ಮರೆತು ಮಲಗಿರುವ ಐರಾವತದ ಹಾಗೆ ಮಲಗಿದ್ದು) ಕಿಱಿದಾನುಂ ಬೇಗದೊಳ್ ಸುಭದ್ರೆಯಂ ಕನಸಿನೊಳ್ ಕಂಡು(ಸ್ವಲ್ಪ ಕಾಲದ ಮೇಲೆ ಸುಭದ್ರೆಯನ್ನು ಕನಸಿನಲ್ಲಿ ಕಂಡು,), ನನಸೆಂದು ಬಗೆದು ಮಂಗಳಪಾಠಕ ರವಂಗಳೊಳ್ (ಮಂಗಳವನ್ನು ಹಾಡುವ ಹೊಗಳುಭಟರ ಸದ್ದುಗಳಿಂದ) ಭೋಂಕನೆ ಎೞ್ಚತ್ತನು (ಎಚ್ಚರಾದನು) ಅನ್ನೆಗಂ-
- ವಚನ:ಅರ್ಥ: ಆಗ ತನ್ನ ಜೊತೆ ಅಲೆಯುತ್ತಿದ್ದ ನಾಗರಿಕ, ವಿಟ, ವಿದೂಷಕ, ಪೀಠಮರ್ದಕರನ್ನು ಅಲ್ಲಿಯೇ ಇರಲುಹೇಳಿ ಅರಮನೆಯನ್ನು ಪ್ರವೇಶಿಸಿ, ತಾನು ಮಲಗುವ ಉಪ್ಪರಿಗೆಯ ಮನೆಗೆ ಬಂದು ಹಂಸದಷ್ಟು ಬೆಳ್ಳಗಿರುವ ಹಾಸಿಗೆಯಲ್ಲಿ ಗಂಗಾನದಿಯ ಮರಳು ದಿಣ್ಣೆಯ ಪ್ರದೇಶದಲ್ಲಿ ಮರೆತು ಮಲಗಿರುವ ಐರಾವತದ ಹಾಗೆ ಮಲಗಿದ್ದು, ಸ್ವಲ್ಪ ಕಾಲದ ಮೇಲೆ ಸುಭದ್ರೆಯನ್ನು ಕನಸಿನಲ್ಲಿ ಕಂಡು, ಅದು ನಿಜ ಎಂದು ಭಾವಿಸುವಷ್ಟರಲ್ಲಿ, ಮಂಗಳವನ್ನು ಹಾಡುವ ಹೊಗಳುಭಟರ ಸದ್ದುಗಳಿಂದ ಇದ್ದಕ್ಕಿದ್ದ ಹಾಗೆ ಎಚ್ಚರಾದನು. ಅಷ್ಟರಲ್ಲಿ
- ಚಂ|| ಪುದಿದ ತಮಂ ಮದೀಯ ಕಿರಣಾಳಿಯನಾನದವೋಲೆ ನಿನ್ನ ನಾ
- ವದಟರುಮಾನರೆನ್ನುದಯಮಭ್ಯುದಯಂ ನಿನಗೆಂದು ಕನ್ನೆಯಂ|
- ಪದೆದೊಡಗೊಂಡು ಪೋಗಿರದಿರೆಂದು ಗುಣಾರ್ಣವ ಭೂಭುಜಂಗೆ ಕ
- ಟ್ಟಿದಿರೊಳೆ ಬಟ್ಟೆದೋಱುವವೊಲಂದೊಗೆದಂ ಕಮಲೈಕಬಾಂಧವಂ|| ೧೧೧||
- ಪದ್ಯ- ೧೧೧:ಪದವಿಭಾಗ-ಅರ್ಥ:ಪುದಿದ ತಮಂ (ಕವಿದ ಕತ್ತಲೆ) ಮದೀಯ ಕಿರಣಾಳಿಯನ ಆನದವೋಲೆ (ನನ್ನ ಕಿರಣಸಮೂಹಗಳನ್ನು ಎದುರಿಸಲಾರದಂತೆ) ನಿನ್ನನ್ನು ಆವ ಅದಟರುಂ ಆನರ್ ( ನಿನ್ನನ್ನು ಯಾವ ಶೂರರೂ ಎದುರಿಸಲಾರರು.) ಎನ್ನ ಉದಯಂ ಅಭ್ಯುದಯಂ ನಿನಗೆಂದು ಕನ್ನೆಯಂ ಪದೆದು ಒಡಗೊಂಡು ಪೋಗು ಇರದಿರ್ ಎಂದು (ನನ್ನ ಉದಯವು ನಿನಗೆ ಶ್ರೇಯಸ್ಕರವು, ಕನ್ಯೆ ಸುಭದ್ರೆಯನ್ನು ಬಯಸಿ ಜೊತೆಯಲ್ಲಿ ಕರೆದುಕೊಂಡು ಹೋಗು (ಹೋಗದೇ ಇರಬೇಡ) ಇಲ್ಲಿರಬೇಡ ಎಂದು) ಗುಣಾರ್ಣವ ಭೂಭುಜಂಗೆ (ಅರ್ಜುನನಿಗೆ) ಕಟ್ಟಿದಿರೊಳೆ ಬಟ್ಟೆದೋಱುವವೊಲ್ (ಮುಂದಿನ ದಾರಿ ತೋರಿಸುವ ಹಾಗೆ) ಅಂದು ಒಗೆದಂ ಕಮಲೈಕಬಾಂಧವಂ( ಕಮಲದ ಏಕ ಬಾಂಧವನಾದ ಸೂರ್ಯನು ಆ ದಿನ ಉದಯವಾದನು)
- ಪದ್ಯ- ೧೧೧:ಅರ್ಥ: ಕವಿದದ ಕತ್ತಲೆಯು ನನ್ನ ಕಿರಣಸಮೂಹಗಳನ್ನು ಎದುರಿಸಲಾರದಂತೆ, ಹಾಗೆಯೇ ನಿನ್ನನ್ನು ಯಾವ ಶೂರರೂ ಎದುರಿಸಲಾರರು. ನನ್ನ ಉದಯವು ನಿನಗೆ ಶ್ರೇಯಸ್ಕರವು, ಕನ್ಯೆ ಸುಭದ್ರೆಯನ್ನು ಬಯಸಿ ಜೊತೆಯಲ್ಲಿ ಕರೆದುಕೊಂಡು ಹೋಗು, ಇಲ್ಲಿರಬೇಡ ಎಂದು, ಅರ್ಜುನ ಮಹಾರಾಜನಿಗೆ ಮುಂದಿನ ದಾರಿ ತೋರಿಸುವ ಹಾಗೆ ಸೂರ್ಯನು ಆ ದಿನ ಉದಯವಾದನು
ಪಂಪಭಾರತ
[ಸಂಪಾದಿಸಿ]ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> | ಪಂಪ:ಕವಿ-ಕೃತಿ ಪರಿಚಯ | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | ಅನುಬಂಧ 16 | ಪಂಪ - ಒಂದು ಚಿಂತನೆ | ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ |
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ