ಕುಮಾರವ್ಯಾಸನ 'ಕೃಷ್ಣ ಕಥೆ'

ವಿಕಿಸೋರ್ಸ್ ಇಂದ
Jump to navigation Jump to search

<ಕುಮಾರವ್ಯಾಸ ಭಾರತ

ಕುಮಾರವ್ಯಾಸನ 'ಕೃಷ್ಣ ಕಥೆ': ಮಗುದೊಂದು ಓದು[ಸಂಪಾದಿಸಿ]

Narayana Pradhan :ಎಲ್ಲ ಬಗೆಯ ಜ್ಞಾನವು ಮುಕ್ತವೂ ಉಚಿತವೂ ಕ್ಷಿಪ್ರವೂ ಆಗಿ ದೊರೆಯಬೇಕೆಂಬುದು ಲೇಖಕನ ಬಯಕೆ. ಹಾಗಾಗಿ, ಓದುಗರು ಈ ಬ್ಲಾಗ್‍ನಲ್ಲಿ ಪ್ರಕಟವಾಗುವ ಲೇಖನಗಳನ್ನು ಓದಲು, ಪ್ರತಿ ಮಾಡಿಕೊಳ್ಳಲು ಹಾಗೂ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಲು ನನ್ನ ಅಭ್ಯಂತರವಿಲ್ಲ. ಇದೀಗ ಇಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯ ನನ್ನ ಪುಸ್ತಕಗಳನ್ನು ಇಡಿಯಾಗಿ 'ಲಿಂಕ್' ಮೂಲಕ ಓದಲು, ಪ್ರತಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.[[೧]]

ಕುಮಾರವ್ಯಾಸನ ತಾತ್ವಿಕ ದರ್ಶನ[ಸಂಪಾದಿಸಿ]

 • ಕುಮಾರವ್ಯಾಸನ 'ಕೃಷ್ಣ ಕಥೆ': ಮಗುದೊಂದು ಓದು
 • ಷಟ್ಪದಿತಂಡದ ನಾಯಕ - ದೇಸೀ ಮಾರ್ಗ:
 • ಕನ್ನಡ ಸಾಹಿತ್ಯದ ಎರಡು ಪ್ರತಿಭೆಗಳು ನಮ್ಮ ಸಾಹಿತ್ಯದ ಎರಡು ಪ್ರಮುಖ ಘಟ್ಟಗಳನ್ನು ಕಟ್ಟಿದವರು, ಮುನ್ನಡೆಸಿದವರು. ಒಬ್ಬನು ಪಂಪನಾದರೆ ಮತ್ತೊಬ್ಬ ಕುಮಾರವ್ಯಾಸ. ಪಂಪ ಮಾರ್ಗದ ಮಾರ್ಗದರ್ಶಿ; ಕುಮಾರವ್ಯಾಸ ದೇಸಿಯ ಸಾರ್ವಭೌಮ. ಒಬ್ಬನು ಸಂಸ್ಕೃತ ಮಾದರಿಯನ್ನು ಎದುರಿಗಿಟ್ಟುಕೊಂಡರೂ ಕನ್ನಡ ಬದುಕುನ ತಿರುಳನ್ನು ಅದರಲ್ಲಿ ಮೇಳೈಸಿದವನು, ತನ್ನದು ಮಾರ್ಗವಾದರೂ ದೇಸಿಯಲ್ಲಿ ಹೊಕ್ಕು ನವೀಕರಿಸಿಕೊಂಡ ಮಾರ್ಗ ಎಂಬುದನ್ನು ಅವನೇ ಸ್ಪಷ್ಟಪಡಿಸುತ್ತಾನೆ; ತನ್ನ ನಂತರದ ಎರಡು ಶತಮಾನಗಳ ಕನ್ನಡ ಸಾಹಿತ್ಯಕ್ಕೆ ಅವನೇ ಮಾದರಿಯಾದ. ಅದೇ ರೀತಿ ಕುಮಾರವ್ಯಾಸನೂ ಸಂಸ್ಕೃತ ವಸ್ತುವನ್ನೇ ಆರಿಸಿಕೊಂಡರೂ ಅಲ್ಲಿರುವುದನ್ನೆಲ್ಲ ಕನ್ನಡಿಸದೆ ತನ್ನ ವೈಯಕ್ತಿಕ ನಿಲವಿನ ಪ್ರತಿಪಾದಕ ಸಾಧನವಾಗಿ ಅದನ್ನು ಮಾರ್ಪಡಿಸಿಕೊಂಡ. ಒಬ್ಬನದು 'ಹಿತಮಿತಮೃದುವಚನ', ಮತ್ತೊಬ್ಬನದು ವಿವರಮೋಹ. ಅದಕ್ಕೆ ಕಾರಣ ಪಂಪ ಬಂದ ಕಾಲ ಕನ್ನಡ ಕಾವ್ಯದ್ದು ಒಂದು ಬಗೆಯ ಕನ್ನೆನೆಲ. ಆ ಹಿಂದೆ ಸಾಕಷ್ಟು ಕನ್ನಡ ಕಾವ್ಯ ಮೂಡಿ ಬಂದಿದ್ದರೂ, ಮುಂದಿನ ಪೀಳಿಗೆಗಳಿಗೆ ಮಾರ್ಗದರ್ಶಿಯಾಗಬಲ್ಲವನು ಇನ್ನೂ ಹುಟ್ಡಿಬಂದಿರಲಿಲ್ಲ. ಹೀಗಾಗಿ ಕಾಡಿನಲ್ಲಿ ನಡೆದು ಆನೆ ಹಿಡಿದದ್ದೇ ಹಾದಿಯಾಗುವಂತೆ ಪಂಪ ಹಳೆಯ ಕಾಡಿನಲ್ಲಿ ನುಗ್ಗಿ ತನ್ನದೇ ಹಾದಿಯನ್ನು ನಿರ್ಮಿಸಿಕೊಂಡ. ಕುಮಾರವ್ಯಾಸನಾದರೋ, ತನ್ನ ವೇಳೆಗಾಗಲೇ ಮುಂಚೂಣಿಗೆ ಬಂದಿದ್ದ ದೇಸಿಯನ್ನು ತನ್ನ ಪ್ರತಿಭಾವಿಲಾಸದ ಆಡುಂಬೊಲವಾಗಿ ಮಾಡಿಕೊಂಡು ಮುಂದಿನ ಪೀಳಿಗೆಯ ಕವಿಗಳಿಗೆ ತೋರುಗಂಬವಾದ. ಪಂಪನ ಹೆಸರನ್ನು ಅನುಕರಿಸಿ ಅವನ ಮುಂದಿನ ಕವಿಗಳಂತೆಯೇ, ಕುಮಾರವ್ಯಾಸನ ನಂತರದ ಕವಿಗಳಲ್ಲಿ ಕೆಲವರು ಅವನ ಹೆಸರನ್ನು ಅನುಕರಿಸಿದರು; ಪಂಪನ ಕಾವ್ಯರೀತಿಯನ್ನು ಮುಂದಿನವರು ಅನುಸರಿದಂತೆಯೇ, ಕುಮಾರವ್ಯಾಸನ ಕಾವ್ಯಹಾದಿಯಲ್ಲೇ ಅವನ ನಂತರದ ಅನೇಕರು ನಡೆದರು. ಪಂಪ ಚಂಪೂ ಕವಿತಂಡದ ನಾಯಕ, ಕುಮಾರವ್ಯಾಸ ಷಟ್ಪದಿತಂಡದ ನಾಯಕ. ಇವರಿಬ್ಬರೂ ಆರಿಸಿಕೊಂಡದ್ದು ವ್ಯಾಸಭಾರತದ ಕಥಾಭಿತ್ತಿಯನ್ನೇ, ಆದರೆ ಅದರೊಳಗೆ ಮಾಡಿದ್ದು ತಮ್ಮ ನೆಚ್ಚಿನ ದರ್ಶನವೆಂಬ ಚಿತ್ರಣವನ್ನು. ಕಾವ್ಯ ಎಂದರೆ ಮುರಿದು ಕಟ್ಟುವ ಕಲೆ ಎಂದು ಹೇಳುತ್ತಾರೆ; ಇವರಿಬ್ಬರೂ ಅದನ್ನು ಯಶಸ್ವಿಯಾಗಿ ಮಾಡಿದವರು.
 • ಕವಿಯ ಕಾಣ್ಕೆ
 • ಜಗತ್ತಿನಲ್ಲಿ ಯಾವುದೂ ಹೊಸತಿಲ್ಲ, ಎಲ್ಲ ಹಳೆಯದೇ, ಅನಾದಿಕಾಲದಿಂದ ಇದ್ದದ್ದೇ. ಆದರೆ ಅದರಲ್ಲಿನ ಮೂಲದ್ರವ್ಯವನ್ನು ತನ್ನ ಪ್ರತಿಭೆಯ ಕಣ್ಣಿಗೆ ತಕ್ಕಂತೆ ಕಂಡು ಮುರಿದು ಮರುಜೋಡಣೆ ಮಾಡುವುದೇ ಕಲೆಗಾರರ ಕೆಲಸ. ಬದುಕಿನ ಸಮಗ್ರ ಚಿತ್ರಣದ ವ್ಯಾಸ ಭಾರತ ಅದ್ವಿತೀಯ ಕಥಾನಕ; ಅಂಥದನ್ನು ಮೂಲವಾಗಿ ಮಾಡಿಕೊಂಡು ಇಡಿಯಾಗಿಯೋ ಬಿಡಿಯಾಗಿಯೋ ಮರುಸೃಷ್ಟಿ ಮಾಡುವ ಕಾಯಕದಲ್ಲಿ ನೂರಾರು ಜನ ತೊಡಗಿದ ಸಂಗತಿ ಸಾಹಿತ್ಯಾಭ್ಯಾಸಿಗಳಿಗೆ ತಿಳಿಯದ ವಿಷಯವೇನಲ್ಲ. ಕಾವ್ಯವಿರಲಿ, ನಾಟಕವಿರಲಿ, ಗದ್ಯಕಥನವಿರಲಿ, ಅಥವಾ ಆಧುನಿಕ ಸಾಹಿತ್ಯ ಪ್ರಕಾರಗಳೇ ಇರಲಿ, ನೂರಾರು ಕೃತಿಗಳ ಹಿನ್ನೆಲೆ ಮಹಾಭಾರತವೇ. ಸೃಜನಶೀಲತೆ ಎಂದರೆ ಹಿಂದೆಂದೂ ಇಲ್ಲದ್ದನ್ನು ಸೃಷ್ಟಿಸುವುದೆಂದಲ್ಲ, ಇದ್ದುದನ್ನೇ ತನ್ನ ಕಾಣ್ಕೆಗನುಗುಣವಾಗಿ ಮರುಜೋಡಿಸುವುದು. ಕಾವ್ಯ ಎಷ್ಟಾದರೂ ಆಗಲಿ ಭಾವಾಭಿವ್ಯಕ್ತಿ; ಮನುಷ್ಯನ ಭಾವಗಳು ವ್ಯಕ್ತಿವ್ಯಕ್ತಿಗೇನೂ ಭಿನ್ನವಾಗುವುದಿಲ್ಲ, ಹದ ಭಿನ್ನ, ಅಷ್ಟೆ. ಹಾಗಾಗಿ ಹಿಂದಿನವರು ಬದುಕಿನಲ್ಲಿ ಅನುಭವಿಸಿದ್ದಕ್ಕೂ ನಾವು ಅನುಭವಿಸುತ್ತಿರುವುದಕ್ಕೂ ಸಾರತಃ ವ್ಯತ್ಯಾಸವೇನಿಲ್ಲ. 'ಮನುಷ್ಯಜಾತಿ ತಾನೊಂದೆ ವಲಂ' ಎಂದರೆ ಬಾಹ್ಯ ಬದುಕಿನಲ್ಲಿ ಮಾತ್ರವಲ್ಲ, ಆಂತರಿಕ ಅನುಭವಗಳಲ್ಲೂ ಒಟ್ಟಾರೆ ಸದೃಶ ಸತ್ವವುಳ್ಳದ್ದು. ಹಾಗಾಗಿಯೇ ಹಿಂದಿನ ಕಾವ್ಯ ನಮ್ಮನ್ನು ತಟ್ಟಬಲ್ಲುದು, ನಮ್ಮ ಕಾಲದ್ದು ಮುಂದಿನವರ ಎದೆಯನ್ನು ಹೊಗಬಲ್ಲುದು. ಪಂಪ-ಕುಮಾರವ್ಯಾಸರು ಮಾಡಿದ್ದೂ ಇದನ್ನೇ. ಕವಿ ತನ್ನ ಕಾಲದ ಸಮಷ್ಟಿಯ ಮತ್ತು ತನ್ನ ವೈಯಕ್ತಿಕ ಸಂವೇದನೆಗಳನ್ನು ತನ್ನ ಕೃತಿಯಲ್ಲಿ ಎಷ್ಟೆಷ್ಟರ ಮಟ್ಟಿಗೆ ಪ್ರಾತಿನಿಧಿಕಗೊಳಿಸಬಲ್ಲನೋ ಅಷ್ಟರ ಮಟ್ಟಿಗೆ ಅವನು ಶ್ರೇಷ್ಠನೆನಿಸಿಕೊಳ್ಳುತ್ತಾನೆ. ಇದರಲ್ಲಿ ಕವಿ ಸಫಲನಾಗುವ ಮಟ್ಟವು ಅವನು ಎಷ್ಟರಮಟ್ಟಿಗೆ ವೈಯಕ್ತಿಕತೆಯಿಂದ ಪಾರಾಗಿ ಆ ಕೆಲಸವನ್ನು ಮಾಡಿದ್ದಾನೆ ಎಂಬುದನ್ನವಲಂಬಿಸಿರುತ್ತದೆ. ಈ ದೃಷ್ಟಿಯಿಂದ ಪಂಪ-ಕುಮಾರವ್ಯಾಸರಿಬ್ಬರೂ, ಒಂದೆಡೆ ತಮ್ಮ ಕಾಲದ ಮತ್ತೊಂದೆಡೆ ತಮ್ಮ ವೈಯಕ್ತಿಕ ನಿಲವನ್ನು ಹುದುಗಿಸಿಕೊಂಡು ಕಾವ್ಯ ರಚಿಸಿ ಹೆಚ್ಚಿನ ಮಾನ್ಯತೆಗೆ ಒಳಗಾಗಿದ್ದಾರೆ.
 • ವೀರನಾರಾಯಣನೆ ಕವಿ:
 • ನೇರವಾಗಿ ಕುಮಾರವ್ಯಾಸನ ವಿಷಯಕ್ಕೆ ಬರೋಣ. ಮತ್ತೆ ಪಂಪ-ಕುಮಾರವ್ಯಾಸರಿಗೆ ಇಲ್ಲಿ ಬಹು ದೊಡ್ಡ ಅಂತರವಿದೆ. ಪಂಪ ತನ್ನ ವೈಯಕ್ತಿಕ ವಿಚಾರವನ್ನು ತನ್ನ ಕಾವ್ಯಗಳಲ್ಲಿ ಸಾಕಷ್ಟು ವಿವರವಾಗಿಯೇ ಪ್ರಸ್ತಾಪಿಸುತ್ತಾನೆ: ತನ್ನ ಹಿನ್ನೆಲೆ, ತನ್ನ ರೂಪ, ತನ್ನ ಆಶಯ, ಸಾಧನೆ ಇತ್ಯಾದಿಗಳ ಬಗ್ಗೆ 'ಆದಿಪುರಾಣ'ದಲ್ಲಿ ವರ್ಣಿಸಿಕೊಂಡು ಹೆಮ್ಮೆ ತಾಳುತ್ತಾನೆ. ಆದರೆ ಕುಮಾರವ್ಯಾಸ ಮಾತ್ರ ”ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ" ಎಂದಷ್ಟೇ ಹೇಳಿಕೊಳ್ಳುವುದು. ತನ್ನ ಸ್ವಂತ ಹೆಸರನ್ನೂ ಹೇಳಿಕೊಳ್ಳದವನು ವಿವರವಾಗಿ ತನ್ನ ವಂಶ ರೂಪುಗಳ ಬಗ್ಗೆ ಹೇಳಿಕೊಂಡಾನೇ! ಇದಕ್ಕೂ ಈ ಕವಿಗಳ ದೃಷ್ಟಿಕೋನವೇ ಕಾರಣ. ಪಂಪ ತನ್ನ 'ವಿಕ್ರಮಾರ್ಜುನ ವಿಜಯ'ವನ್ನು ಲೌಕಿಕ ಕಾವ್ಯ ಎಂದು ಹೇಳಿಕೊಳ್ಳುತ್ತಾನೆ; ಅವನ ದೃಷ್ಟಿಯಲ್ಲಿ 'ಲೌಕಿಕ' ಎಂಬುದನ್ನು ವಿಶಿಷ್ಟವಾಗಿಯೇ ನಾವು ವಿವರಿಸಬೇಕೆಂಬುದು ನಿಜ, ಆದರೆ ಈ ಕಾವ್ಯ ಬರೆಯುದರಲ್ಲಿ ಅವನಿಗೆ ಸಾಮಾನ್ಯಾರ್ಥದ ಪಾರಲೌಕಿಕ ದೃಷ್ಟಿಯಿಲ್ಲ ಎಂಬುದಂತೂ ನಿಜ. ಆದರೆ ಕುಮಾರವ್ಯಾಸನ ಕಾವ್ಯರಚನೋದ್ದೇಶವೆಂದರೆ ಬರೆದವನು ಮತ್ತು ಕೇಳಿದವರ "ಹಲವು ಜನ್ಮದ ಪಾಪ ಕಳೆ"ಯುವುದಕ್ಕಾಗಿ. ಪಂಪ 'ವಿಕ್ರಮಾರ್ಜುನ ವಿಜಯ'ವನ್ನು ಬರೆದು ಅರಿಕೇಸರಿ ಎಂಬ ರಾಜನಿಂದ ಧರ್ಮಪುರ ಎಂಬ ಅಗ್ರಹಾರವನ್ನೇ ಬಳುವಳಿಯಾಗಿ ಪಡೆದ; ಆದರೆ ಕುಮಾರವ್ಯಾಸ ಮಾತ್ರ ಈ ಕಾವ್ಯರಚನೆಯಿಂದ ಸ್ವಂತಕ್ಕಾಗಿ ಏನೂ ಪಡೆದವನಲ್ಲ, ಅವನ ಆಸೆ ತನ್ನ ಕಾವ್ಯವನ್ನು ಕೇಳಿದವರು ಪಾವನರಾಗಬೇಕೆಂಬುದು ಮಾತ್ರ. ಈ ದೃಷ್ಟಿಕೋನಕ್ಕೂ ಪ್ರಾಯಶಃ ಅವರ ಹಿನ್ನೆಲೆಗಳು ಕಾರಣವಾಗಿವೆ. ಒಬ್ಬನು ಅನುಸರಿಸಲು ಆರಿಸಿಕೊಂಡದ್ದು ನಿರೀಶ್ವರವಾದ ಜೈನವನ್ನು, ಆದರೆ ಇನ್ನೊಬ್ಬನಿಗೆ ಇಲ್ಲಿ ಕಾಣುವುದು "ಪದುಮನಾಭನ ಮಹಿಮೆ" ಮತ್ತು ತಾನು ಅರುಹಲು ಹೊರಟಿರುವುದು "ಎಸೆವ ವಿಪ್ರರ ಮತಿಗೆ ಸಂಭಾವಿಸುವ ಧರ್ಮ"ವನ್ನು. ಹಾಗಾಗಿಯೇ ಮಹಾಭಾರತದ ಮೂಲ ಕತೆ ಇಬ್ಬರಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಆದರೆ ತಮ್ಮ ಜಾಡಿನಲ್ಲಿ ನಡೆದ ಇಬ್ಬರೂ ದೊಡ್ಡ ಕವಿಗಳೆಂಬ ಮಾನ್ಯತೆಗೊಳಗಾದವರು. ಅವರೆಷ್ಟೇ ಹಿರಿಯ ಕವಿಗಳಾಗಿರಲೀ, ಅವರಿಬ್ಬರ ಕಾವ್ಯತ್ವದಲ್ಲಿಯೂ ಮಿತಿಗಳಿವೆ, ಕೊರತೆಗಳಿವೆ ಎಂಬುದನ್ನು ಮಾತ್ರ ಗಮನದಲ್ಲಿರಿಸಿಕೊಂಡಿರಬೇಕಾಗುತ್ತದೆ.
 • ದಂತಕಥೆ:
 • ಕುಮಾರವ್ಯಾಸನನನ್ನು ಕುರಿತ ಅನೇಕ ದಂತಕತೆಗಳಿವೆ. ಮುಖ್ಯವಾದ ಒಂದು ಎಂದರೆ, ಸಂತರ್ಪಣೆಯೊಂದರ ಸಂದರ್ಭದಲ್ಲಿ ಈತ ಹಿಂದಿನ ರಾತ್ರಿ ತಾನು ಕನಸಿನಲ್ಲಿ ಕಂಡಂತಹ ಬ್ರಾಹ್ಮಣನೊಬ್ಬನನ್ನು ಕಂಡು, ಆತನು ಅಲ್ಲಿದ್ದವರಾರೋ ದುರ್ಯೋಧನನ್ನು ಪ್ರಾಯಿಕವಾಗಿ ಬೈದುದರಿಂದ ನೊಂದು ಊಟದಿಂದ ಎದ್ದು ಹೋದಂತೆಯೂ, ಕುಮಾರವ್ಯಾಸ ಅವನನ್ನು ಹಿಂಬಾಲಿಸಿದಾಗ, ತಾನು ಅಶ್ವತ್ಥಾಮನೆಂದು ತಿಳಿಸಿ ಮಹಾಭಾರತವನ್ನು ಬರೆಯಲು ಪ್ರೇರಣೆಯಿತ್ತಂತೆಯೂ, ಆದರೆ ತನ್ನ ಈ ವಿಷಯವನ್ನು ಬಯಲುಮಾಡಿದರೆ ಪರಿಣಾಮ ನೆಟ್ಟಗಾಗದೆಂದೂ ಎಚ್ಚರಿಸಿದನಂತೆ. ಹತ್ತು ಪರ್ವ ಬರೆದ ನಂತರ ಕುಮಾರವ್ಯಾಸನಿಗೆ ಕುತೂಹಲ ತಾಳಲಾರದೆ ತಾನು ಅಶ್ವತ್ಥಾಮನನ್ನು ಕಂಡಿದ್ದುದನ್ನು ಹೇಳಿದನೆಂದೂ ಆಗ ಕಾವ್ಯ ಮುಗಿದುದಲ್ಲದೆ ಕವಿಯ ಬದುಕೂ ಮುಗಿಯಿತಂತೆ. ಆದರೆ ಮಹಾಭಾರತ ಯುದ್ಧ ಮುಗಿದು ಧರ್ಮದ ಪ್ರತೀಕವಾದ ಧರ್ಮರಾಯನಿಗೆ ಪಟ್ಟಾಭಿಷೇಕವಾಗುವ ಸನ್ನಿವೇಶದಿಂದ ಕಾವ್ಯ ಸಹಜವಾಗಿಯೇ ಮುಗಿದಂತೆ ತೋರುತ್ತದೆ; ಮೂಲ ಮಹಾಭಾರತದ ಮುಂದಿನೆಂಟು ಪರ್ವಗಳ ಕತೆ ಅವನಿಗೆ ಅನವಶ್ಯಕವಾಗಿ ಕಂಡಿರಬೇಕು. ಸಾಕ್ಷಾತ್ತಾಗಿ ಕೃಷ್ಣನನ್ನು ಜೀವನವಿಡೀ ತಮ್ಮ ಕಣ್ಣೆದುರಿಗಿರಿಸಿಕೊಂಡವರಿಗೆ 'ಸ್ವರ್ಗಾರೋಹಣ' ಮುಂತಾದ ಹಂತಗಳೆಕೆ ಬೇಕು ಎಂಬುದು ಅವನ ತರ್ಕವಿರಬೇಕು. "ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ" ಎಂದು ಹೇಳಿಕೊಂಡಿರುವುದರಿಂದ ಅವನು ಅನಕ್ಷರಸ್ಥನೆಂದೂ, ಅಧಿಕಾರಿಯೊಬ್ಬರ ಮನೆಯಲ್ಲಿ ಮಹಾಭಾರತದ ಪಾರಾಯಣ ಸಂದರ್ಭದಲ್ಲಿ ಹತ್ತು ಪರ್ವಗಳ ಕತೆ ಕೇಳಿ ಮುಂದೆ ತನಗೆ ತೋಚಿದಂತೆ ಅದನ್ನು ಪುನಾರಚಿಸಿದನಂತೆ. ಆದರೆ ಅವನ ಮಹಾಭಾರತ ಕಾವ್ಯವನ್ನು ಓದಿದರೆ ಈ ಕತೆಗಳಿಗೆ ಕಾಲಿಲ್ಲ ಎಂಬುದು ತಿಳಿಯುತ್ತದೆ; ಅದರ ಬದಲು ಅವನ ವಿಶಾಲ ಓದು ಅಲ್ಲಿ ಪಡಿಮೂಡಿರುವುದು ಕಾಣುತ್ತದೆ. ಅವನು ಅನಕ್ಷರಸ್ಥನಾಗಿದ್ದರೆ "ಲಿಪಿಕಾರ ಕುವರವ್ಯಾಸ" ಎಂದೇಕೆ ಹೇಳಿಕೊಳ್ಳುತ್ತಿದ್ದ?
 • ಮತ್ತೆ ಕುಮಾರವ್ಯಾಸನ ವಿಷಯ ನೇರವಾಗಿ. ತಂದೆತಾಯಿಗಳು ಅವನಿಗಿಟ್ಟ ಹೆಸರೇನೋ ತಿಳಿಯದು, ಅವನು ವೀರನಾರಾಯಣನ ಭಕ್ತನಾದ್ದರಿಂದ ಅವನ ಹೆಸರು ನಾರಣಪ್ಪನಿರಬೇಕೆಂಬುದು ಬಹುಜನ ವಿದ್ವಾಂಸರ ಅಭಿಪ್ರಾಯ. ಅವನು ಗದುಗಿನ ವೀರನಾರಾಯಣ ಎಂಬ ವದ ಉಪಾಸಕ. ಆ ವದ ದೇವಾಲಯದ ಹಿಂಬದಿಯ ಪುಷ್ಕರಿಣಿಯಲ್ಲಿ ಪ್ರತಿನಿತ್ಯ ಬೆಳಗಿನಲ್ಲಿ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲೇ ಬಂದು ದೇವಾಲಯದ ನವರಂಗದಲ್ಲಿ, ವೀರನಾರಾಯಣಮೂರ್ತಿಯ ಕಣ್ಣಳತೆಯಲ್ಲಿ ಕುಳಿತುಕೊಂಡು ಕಾವ್ಯ ಬರೆಯಲು ತೊಡಗುತ್ತಿದ್ದ: ಬಟ್ಟೆಯ ತೇವ ಆರುತ್ತ ಬಂದಂತೆ ಅವನ ಕಾವ್ಯಶಕ್ತಿಯೂ ಇಳಿಮುಖವಾಗುತ್ತ ಬರುತ್ತಿತ್ತು ಎಂಬೊಂದು ಕತೆ ಅವನ ಬಗ್ಗೆ ಪ್ರಚಲಿತವಾಗಿದೆ. ಈಗಲೂ ಗದುಗಿನ ವೀರನಾರಾಯಣಸ್ವಾಮಿ ದೇವಾಲಯದಲ್ಲಿ ಅವನು ಕುಳಿತುಕೊಂಡು ಕಾವ್ಯ ಬರೆಯುತ್ತಿದ್ದನೆನ್ನಲಾದ ಜಾಗ ಮತ್ತದಕ್ಕೆ ಅಂಟಿಕೊಂಡ ಕಂಬವನ್ನು ತೋರಿಸುತ್ತಾರೆ; ಅಲ್ಲದೆ ಈ ಕಂಬಕ್ಕೆ 'ಕುಮಾರವ್ಯಾಸ ಕಂಬ' ಎಂಬ ಹೆಸರೇ ಪ್ರಚಲಿತವಾಗಿದೆ; ಅದಕ್ಕೆ ಅಂಟಿಕೊಂಡಂತೆ ಕುಳಿತುಕೊಳ್ಳುತ್ತಿದ್ದ ಜಾಗ ಸ್ವಲ್ಪ ಕುಳಿಬಿದ್ದಿದೆ! ಈ ಕತೆ ಸಾಂಕೇತಿಕವಾಗಿದೆ: ಬಟ್ಟೆಯ ತೇವ ಕವಿಕರ್ಮದ ಹದ ಮನೋಭಾವದ ದ್ಯೋತಕ, ಹಾಗಾಗಿ ಆ ಹದ ಇರುವಷ್ಟು ಕಾಲ ಕಾವ್ಯರಚನೆ ಸರಾಗವಾಗಿ ಸಾಗುತ್ತಿತ್ತು ಎಂದು ಅರ್ಥವಿಸಬಹುದು. ಏಕೆಂದರೆ ಯಾವೊಬ್ಬನಿಗೂ, ಸಾಮಾನ್ಯನಿರಲಿ ಮಹಾಪ್ರತಿಭಾವಂತನಾಗಿರಲಿ, ಅವನ ಮನಃಸ್ಥಿತಿ ಅಂದರೆ ಚಿತ್ತೈಕಾಗ್ರತೆಯು ಹೆಚ್ಚು ಕಾಲ ಉಳಿಯಲಾರದು, ಅದಿದ್ದಾಗ ವ್ಯಕ್ತಿ 'ತನ್ಮಯತೆ'ಯನ್ನು ಸಾಧಿಸುತ್ತಾನೆ, ಅಷ್ಟರಮಟ್ಟಿಗೆ ತನ್ನ ಸ್ವಕೀಯತೆಯನ್ನು ಮರೆಯುತ್ತಾನೆ. ವೀರನಾರಾಯಣ ದೇವಸ್ಥಾನದಲ್ಲಿ ಕಾವ್ಯ ಬರೆಯುತ್ತಿದ್ದನೆಂದ ಮೇಲೆ ಈತ ಗದುಗಿನಲ್ಲಿಯೇ ವಾಸವಾಗಿದ್ದಿರಬಹುದು. ಆದರೆ ಇವನ ಹುಟ್ಟೂರು ಹತ್ತಿರದ ಕೋಳಿವಾಡ ಎಂಬುದು ಪ್ರತೀತಿ; ಅಲ್ಲದೆ ವಿದ್ವಾಂಸರು ಇವನ ಹಿನ್ನೆಲೆಯನ್ನೂ ಪರೋಕ್ಷ ಆಧಾರಗಳಿಂದ ಕಲೆಹಾಕಿದ್ದಾರೆ. ಅದರ ಪ್ರಕಾರ, ರಾಜಾ ನರಸಿಂಗರಾಯನ ಮುಖ್ಯ ದಂಡಾಳುವಾದ ಮಾಧವರಸಯ್ಯ ತನಗೆ ಉಂಬಳಿಯಾಗಿ ಬಂದ ಕೋಳಿವಾಡಕ್ಕೆ ಬಂದು ನೆಲೆಸಿದ; ತನ್ನ ಮಗ ತಿಮ್ಮರಸಯ್ಯನನ್ನು ಅಲ್ಲಿರಿಸಿ ತಾನು ವಿಜಯನಗರಕ್ಕೆ ಹೋದ; ಇವನಿಗೆ ಐವರು ಗಂಡುಮಕ್ಕಳು, ಇವರಲ್ಲಿ ಹಿರಿಯ ವೀರನಾರಾಯಣಯ್ಯ, ಇವನೇ ನಮ್ಮ ಕುಮಾರವ್ಯಾಸ ಎಂಬ ಪ್ರತೀತಿ ಕೋಳಿವಾಡದ ಸುತ್ತುಮುತ್ತ ಪ್ರಚಲಿತವಾಗಿದೆಯಂತೆ. ಕೋಳಿವಾಡ ಗ್ರಾಮದ ಮಾಧವ ಜನಾರ್ದನ ಗುಡಿಯಲ್ಲಿ ದೊರೆತಿರುವ ಕ್ರಿಶ 1485 ಶಾಸನದ ಆಧಾರದ ಮೇಲೆ ಇವನ ಪೂರ್ವಿಕರು ಕೋಳಿವಾಡದ ಗೌಡಿಕೆ ಹಾಗೂ ಶಾನುಭೋಗಿಕೆಗಳ ಅಧಿಕಾರ ಹೊಂದಿದ್ದರು; ಅಲ್ಲದೆ ವಿಜಯನಗರದ ಅರಸರಲ್ಲಿ ಗಜಸೇನಾಧಿಪತಿಗಳಗಿದ್ದರು; ಕುಮಾರವ್ಯಾಸನೂ ಅದೇ ಹುದ್ದೆಯಲ್ಲಿದ್ದವನು ಎಂದೂ ಕೆಲವು ವಿದ್ವಾಂಸರು ತೀರ್ಮಾನಿಸುತ್ತಾರೆ.
 • ಕುಮಾರವ್ಯಾಸ ಬದುಕಿದ್ದ ಕಾಲವಾವುದು? ಅದರ ಬಗ್ಗೆಯೂ ವಿದ್ವಾಂಸರಲ್ಲಿ ಚರ್ಚೆಗಳಿವೆ. ಹನ್ನೆರಡನೆಯ ಶತಮಾನದಿಂದ ಹದಿನಾರನೆಯ ಶತಮಾನದವರೆಗೂ ಅದರ ವ್ಯಾಪ್ತಿಯಿದೆ. ಕೆಲವು ವಿದ್ವಾಂಸರ ಪ್ರಕಾರ ಅದು 1230-35 ಆದರೆ, ಮತ್ತೆ ಕೆಲವರ ಪ್ರಕಾರ 1519-29. ಕುಮಾರವ್ಯಾಸನ ತಾತ ಮಾಧವರಸಯ್ಯನ ಕಾಲ ಕ್ರಿಶ 1147; ಹಾಗೆಯೇ ಈಗ ಹೇಳಿದ ಶಾಸನದಲ್ಲಿ ಕುಮಾರವ್ಯಾಸನ ಮೊಮ್ಮಗನಾದ ಆನೆಯ ದೇವಪ್ಪಯ್ಯನ ಹೆಸರು ಉಲ್ಲೇಖಗೊಂಡಿದೆ, ಅದರ ಕಾಲ, ಕ್ರಿಶ, 1563. ಅಂದರೆ ಮಾಧವರಸಯ್ಯ ಮತ್ತು ದೇವಪ್ಪಯ್ಯರ (ಮೊಮ್ಮಗನ ಮೊಮ್ಮಗ) ನಡುವೆ ಇರುವುದು ಮುನ್ನೂರ ತೊಂಬತ್ತಾರು ವರ್ಷಗಳು, ಸುಮಾರು ನಾಲ್ಕು ಶತಮಾನಗಳು. ಮೊಮ್ಮಗನ ಮೊಮ್ಮಗನವರೆಗಿನ ನಾಲ್ಕು ಪೀಳಿಗೆಗಳು ಸುಮಾರು ನಾಲ್ಕು ಶತಮಾನಗಳಷ್ಟು ಕಾಲದಲ್ಲಿ ಜೀವಿಸಿದ್ದರು, ಒಬ್ಬೊಬ್ಬರೂ ತನ್ನ ಮಗನನ್ನು ಪಡೆದಾಗ ಸುಮಾರು ಇಪ್ಪತ್ತು ವರ್ಷಗಳೆಂದು ಭಾವಿಸಿದರೂ, ಅವರಲ್ಲಿ ಪ್ರತಿಯೊಬ್ಬನೂ ಸರಾಸರಿ ನೂರ ಹತ್ತೊಂಬತ್ತು ವರ್ಷಗಳು ಬದುಕಿದ್ದರು, ಎಂದರೆ ನಂಬಲಾಗದು. ಸಿಕ್ಕಿದ ಆಧಾರಗಳನ್ನೆಲ್ಲ ಪರಿಶೀಲಿಸಿ ತೀರ್ಮಾನಿಸಿದರೂ ಉಳಿಯುವುದು ಗೋಜಲು. ಹೀಗಾಗಿ ಕುಮಾರವ್ಯಾಸನ ಕಾಲ ಸುಮಾರು ಕ್ರಿಶ 1400 ಎಂದು ಬಹುಮಂದಿ ತೀರ್ಮಾನಿಸುತ್ತಾರೆ. ಈಚೆಗೆ ಕೆಲವರು ತುಳು ಭಾಷೆಯ ಅರುಣಾಬ್ಜ ಕವಿ ಬರೆದ 'ಮಹಾಭಾರತೊ' ಕಾವ್ಯದ ಮೇಲೆ ಕುಮಾರವ್ಯಾಸನ ಪ್ರಭಾವವಾಗಿದೆ; ಅರುಣಾಬ್ಜನ ಕಾಲ ಕ್ರಿಶ 1383, ಆದ್ದರಿಂದ ಕುಮಾರವ್ಯಾಸ ಅದಕ್ಕೂ ಮುಂಚೆ ಅಂದರೆ ಹದಿಮೂರನೆಯ ಶತಮಾನದ ಆರಂಭದಲ್ಲಿದ್ದಿರಬಹುದೆಂದು ವಾದಿಸುತ್ತಾರೆ.
 • ಕುಮಾರವ್ಯಾಸನು ಬರೆದಿರುವ ಕಾವ್ಯ ಇದೊಂದೇ, ಅವನೇ ಅದಕ್ಕಿಟ್ಟ ಹೆಸರು 'ಕರ್ಣಾಟ ಭಾರತ ಕಥಾಮಂಜರಿ'. 'ಕರ್ಣಾಟ' ಎಂಬುದಕ್ಕೆ ಶ್ಲೇಷಾರ್ಥವೂ ಇರಬಹುದು; ಒಂದು ಕನ್ನಡ ಶಬ್ದ ಸಂಸ್ಕೃತ ರೂಪವಾಗಿ ತನ್ನದು ಕನ್ನಡ ಭಾರತ ಎಂದವನು ಹೇಳಿಕೊಳ್ಳುತ್ತಿರಬಹುದು (ಈ ಕೃತಿಗೆ ಕನ್ನಡ ಭಾರತ ಎಂಬ ಹೆಸರೂ ಪ್ರಚಲಿತವಾಗಿದೆ); ಮತ್ತೊಂದು 'ಕರ್ಣ+ಅಟ' ಎಂದರೆ ಕಿವಿಗೆ ಇಂಪಾಗಿರುವ ಭಾರತ ಎಂದಿರಬಹುದು. ಕುಮಾರವ್ಯಾಸ ತನ್ನ ಕಾವ್ಯವನ್ನು ಕೃಷ್ಣಕಥೆ ಎಂದು ಹೇಳಿಕೊಳ್ಳುವುದನ್ನು ಗಮನಿಸಿದರೆ, ಅದು ಭಕ್ತನಾದ ಕವಿಗೆ ಕರ್ಣಮಧುರವಾಗಿರುವದರಲ್ಲಿ ಸಂಶಯವಿಲ್ಲ. ಗದುಗಿನ ಭಾರತ ಎಂದೂ ಈ ಕೃತಿಯನ್ನು ಕುರಿತು ವ್ಯವಹರಿಸುವ ರೂಢಿಯಿದೆ. ಅವನಿಟ್ಟ ಹೆಸರು ಯಾವುದೇ ಆಗಿರಲಿ ಇದನ್ನು ಕುಮಾರವ್ಯಾಸಭಾರತ ಎಂದೇ ಹೆಚ್ಚಾಗಿ ವ್ಯವಹರಿಸುವುದು. ಪಂಪ ತನ್ನ ಮಹಾಭಾರತ ಕಾವ್ಯಕ್ಕೆ ತನ್ನ ಆಶಯಕ್ಕೆ ಅನುಗುಣವಾಗಿ 'ವಿಕ್ರಮಾರ್ಜುನ ವಿಜಯ' ಎಂದು ಹೆಸರಿಟ್ಟರೂ ಪರಂಪರೆ ಆ ಕೃತಿಯನ್ನು 'ಪಂಪಭಾರತ' ಎಂದೇ ಗುರುತಿಸುತ್ತಿದೆ, ಅಂತೆಯೇ ಇದನ್ನೂ. ಈ ಕವಿಯು 'ಐರಾವತ' ಎಂಬ ಮತ್ತೊಂದು ಕಿರುಕೃತಿಯನ್ನೂ ಬರೆದಿರಬೇಕೆಂದು ಕೆಲವರು ಹೇಳುತ್ತಾರೆ; ಆದರೆ ಅದನ್ನು ನಿರಾಕರಿಸುವವರೇ ಹೆಚ್ಚು. ಕುಮಾರವ್ಯಾಸಭಾರತದ ಆದಿಪರ್ವದ 'ಐರಾವತ' ಭಾಗವನ್ನು ಬೇರಾವನೋ ಸಾಮಾನ್ಯ ಕವಿ ತನಗೆ ತೋರಿದಂತೆ ವಿಸ್ತರಿಸಿ ಬರೆದಿರಬಹುದೆಂಖಬುದು ವ್ಯಾಪಕ ಅಭಿಪ್ರಾಯ.
 • ಬೇಕೋ ಬೇಡವೋ ಅಂತೂ ಕುಮಾರವ್ಯಾಸನ ಮತದ ಬಗ್ಗೆಯೂ ವಿದ್ವತ್ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಏಕೆಂದರೆ ಹಿಂದಿನ ಕಾಲದ ಕವಿಯೊಬ್ಬನ ಮನೋಭಾವವನ್ನು ಅವನ ಕಾವ್ಯದ ಮೂಲಕ ಅರಿಯಲು ಅವನಿಗೆ ಸಂಬಂಧಿಸಿದ ವೈಯಕ್ತಿ ಬದುಕಿನ ವಿವರಗಳು, ನಂಬಿಕೆ ಇವುಗಳೂ ಮುಖ್ಯವಾಗುತ್ತವೆ. ಹೀಗಾಗಿ ಈ ಬಗ್ಗೆ ಸಾಕಷ್ಟು ಮಂದಿ ತಲೆಕೆಡಿಸಿಕೊಂಡಿದ್ದಾರೆ. ಅಲ್ಲದೆ ಕುಮಾರವ್ಯಾಸನ ಮನೋಭಾವವನ್ನು ರೂಪಿಸಿದ ಅವನ ಹಿನ್ನೆಲೆ ಕೊಂಚ ಗೊತ್ತಿದ್ದರೆ ಮಾತ್ರವೇ ಅವನ ಕಾವ್ಯದ ಆಶಯ ಸ್ಪಷ್ಟವಾಗುವುದು. ಅವನು ಬ್ರಾಹ್ಮಣ ಕವಿ ಎಂಬುದರಲ್ಲಿ ಪ್ರಾಯಶಃ ಅನುಮಾನವಿಲ್ಲ; ತನ್ನ ಕಾವ್ಯದುದ್ದಕ್ಕೂ ಅವನು ಪೃಥಕ್ಕರಿಸುವ ವೈದಿಕ ಮಾರ್ಗ ಇದನ್ನು ದೃಢಪಡಿಸುತ್ತದೆ. ಆದರೆ ಯಾವ ಪಂಥದವನು ಎಂಬುದರ ಬಗ್ಗೆ ಜಿಜ್ಞಾಸೆಯಿದೆ. ಶ್ರೀ ಮಧ್ವಾಚಾರ್ಯರು ತಮ್ಮ ಮಹಾಭಾರತವನ್ನು ಕೃಷ್ಣಕಥೆ ಎಂದು ಕರೆದಿರುವುದನ್ನು ಕುಮಾರವ್ಯಾಸನೂ ಅನುಸರಿಸಿದ್ದಾನೆ, ಅಲ್ಲದೆ ಮತ್ತನೇಕ ಕಾರಣಗಳಿಂದ ಅವನು ದ್ವೈತಿ ಎಂದು ಕೆಲವರು ವಾದಿಸುತ್ತಾರೆ, ಆದರೆ ಅವನ ಅದ್ವೈತಿಯೆಂಬುದು ಬಹುಮಂದಿ ವಿದ್ವಾಂಸರು ಒಪ್ಪಿರುವ ವಿಚಾರ; ಆದರೆ "ಮಾಯೆ ನೀ ಸವಿಶೇಷ ಮಿಥ್ಯೆಯು ಮಾಯೆಯುಳಿದ್ವತ ಸತ್ಯವು" ಎಂಬುದರಿಂದಾಗಿ ಅವನು ಶಂಕರಪ್ರಣೀತ ಅದ್ವೈತದ ಹಿಂಬಾಲಕನಾಗಿರದೆ ವಿಷ್ಣು-ಶಿವ ಭೇದವೆಣಿಸದ ಭಾಗವತ ಸಂಪ್ರದಾಯದವನೆಂದು ಬಹುಜನ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಕುಮಾರವ್ಯಾಸ ವಂಶದವರೆಂದು ಹೇಳಿಕೊಳ್ಳುವ ಇಂದಿನವರು ಅದ್ವೈತಿಗಳಾದ್ದರಿಂದ ಕುಮಾರವ್ಯಾಸನು ಅದೇ ಪಂಥದ ಅವಲಂಬಿ ಎಂಬುದು ಬಹುಜನರ ಅಭಿಪ್ರಾಯ. ಆದರೆ ಅವನು ಅಪರಿಮಿತ ದೈವಭಕ್ತ ಎಂಬುದಂತೂ ಸ್ವತಃಸಿದ್ಧ. ಸಗುಣ ಮತ್ತು ನಿರ್ಗುಣ ಎರಡೂ ಬಗೆಯ ದೈವದ ಉಪಾಸನೆ ಅವನದು.
 • ಅವನು ವ್ಯಾಸಭಾರತವನ್ನು ಬಹುಪಾಲು ಅನುಸರಿಸಿದವನು; ತನ್ನನ್ನು ಹೆಮ್ಮೆ ಮತ್ತು ವಿನಯಗಳಿಂದ ಕುಮಾರವ್ಯಾಸ ಎಂದು ಕರೆದುಕೊಂಡಿರುವುದೇ ಅವನ ವ್ಯಾಸಭಕ್ತಿಯ ದ್ಯೋತಕ. ಆದರೆ ಎಲ್ಲೂ ವ್ಯಾಸನ ಸ್ತುತಿಯನ್ನಾಗಲೀ ವ್ಯಾಸಭಾರತದ ಕತೆಯಲ್ಲಿ ತಾನು ಮಾಡಿಕೊಂಡ ಬದಲಾವಣೆಗಳ ಬಗೆಗಾಗಲೀ ಪಂಪನಂತೆ ಹೇಳಿಕೊಂಡಿಲ್ಲ. ಭಾರತ ಎಂಬುದು ಅವನ ಮಟ್ಟಿಗೆ "ಹಲವು ಜನ್ಮದ ಪಾಪರಾಶಿಯ ತೊಳೆವ ಜಲವಿದು ಶ್ರೀಮದಾಗಮಕುಲಕೆ ನಾಯಕ ಭಾರತಾಕೃತಿ ಪಂಚಮಶ್ರುತಿ" ಹಾಗೂ "ಹರಿಯ ಬಸುರೊಳಗಖಿಳ ಲೋಕದ ವಿವರಡವಡಗಿಹವೋಲು ಭಾರತಶರಧಿಯೊಳಿಗಹವನೇಕ ಪುರಾಣ ಶಾಸ್ತ್ರಗಳು" ಎಂಬುದು. "ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ" ಎಂಬ ಮಾತಿನಲ್ಲಿ ತನ್ನ ಸ್ವೋಪಜ್ಞತೆಯ ಬಗೆಗಿನ ಹೆಮ್ಮೆ ವ್ಯಕ್ತವಾಗುತ್ತದೆ; ಹಾಗೆಯೇ ಆ ಕಾಲದಲ್ಲಿ ಮಹಾಭಾರತವನ್ನು ತೆಗಳುವ ಪಂಥ-ಪ್ರಸಂಗಗಳು ಇದ್ದಿರಬಹುದು; ಹಾಗಾಗಿಯೇ "ಚೋರ ನಿಂದಿಸಿ ಶಶಿಯ ಬೈದಡೆ ಕ್ಷೀರವನು ಕ್ಷಯರೋಗಿ ಹಳಿದರೆ ವಾರಣಾಸಿಯ ಹೆಳವ ನಿಂದಿಸಿ ಬೈದರೇನಹುದು; ಭಾರತದ ಕಥನ ಪ್ರಸಂಗವ ಕ್ರೂರಕರ್ಮಿಗಳೆತ್ತ ಬಲ್ಲರು" ಎಂದು ಝಂಕಿಸಿ ನುಡಿಯುತ್ತಾನೆ. ಅಲ್ಲದೆ ತನ್ನ ಭಾರತದ ಬಗ್ಗೆ ಕವಿ ಹೇಳಿಕೊಳ್ಳುವ ಮಾತಿದು: "ಇದ ವಿಚಾರಿಸೆ ಬರಿಯ ತೊಳಸಿಯವುದಕದಂತಿರೆಯಿಲ್ಲಿ ನೋಳ್ಪುದು ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು". ಕೇವಲ ಮಹಾಭಾರತ ಕಥನವು ಬರಿಯ ನೀರು; ಆದರೆ ಅದರಲ್ಲಿ ಶ್ರೀಕೃಷ್ಣ ತುಳಸಿ ಬೆರೆತಿರುವುದರಿಂದ ಅದು ಪಾವನ ತೀರ್ಥವಾಗುತ್ತದೆ; ತನ್ನ ಕಾವ್ಯ ಅಂತಹ ಪದುಮನಾಭನ ಮಹಿಮೆ ಮತ್ತು ಧರ್ಮವಿಚಾರಗಳನ್ನು ಮಾತ್ರ ಬಿತ್ತರಿಸುವಂಥದು. 'ಮಾತ್ರವನು' ಎಂಬ ಮಾತು ಬೇರೇನನ್ನೂ ತಾನು ಲಕ್ಷಿಸುವುದಿಲ್ಲ ಎಂಬುದನ್ನೂ ತೋರಿಸುತ್ತಿದೆ. "ವೇದಪಾರಾಯಣದ ಫಲ ಗಂಗಾದಿ ತೀರ್ಥಸ್ನಾನಫಲ ಕೃಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ ಮೇದಿನಿಯನೊಲಿದಿತ್ತ ಫಲ ವಸ್ತ್ರಾದಿ ಕನ್ಯಾದಾನ ಫಲವಹುದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ" ಎಂದು ಮುಂತಾಗಿ ಸಂಪ್ರಾದಾಯಸ್ಥನೊಬ್ಬ ಪುಣ್ಯಕರವೆಂದು ನಂಬುವ ಎಲ್ಲ ಕಾರ್ಯದ ಫಲವೂ 'ಆದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ' ಬರುತ್ತದೆಂಬುದು ಕಾವ್ಯಪಠಣದ ಫಲವೆಂದು ಆತ ಹೇಳುತ್ತಾನೆ.

ಕೃಷ್ಣನ ಪ್ರವೇಶ[ಸಂಪಾದಿಸಿ]

 • ಕುಮಾರವ್ಯಾಸನಿಗೆ ಪ್ರಾಚೀನ ಅಲಂಕಾರಶಾಸ್ತ್ರಜ್ಞರು ಹೇಳುವ "ಕಾವ್ಯಂ ಯಶಸೇ ಅರ್ಥಕೃತೇ ವ್ಯವಹಾರವಿದೇ ಶಿವೇತರಕ್ಷತಯೇ ಸದ್ಯಃಪರನಿರ್ವೃತಯೇ ಕಾಂತಾಸಮಿಮ್ಮತತೋಪದೇಶಯುಜೇ" ಎಂಬುದರಲ್ಲಾಗಗಲೀ, ಕಾವ್ಯದ "ಅನಂದಾಯ ಕಾಂತಾತುಲ್ಯತಯಾ ಉಪದೇಶಾಯ" ಎಂಬ ಫಲದಲ್ಲಾಗಲೀ ನಂಬಿಕೆಯಿಲ್ಲ. ಕಾವ್ಯ ಉಪದೇಶ ಮಾಡಿದರೂ ಅದು ಕಾಂತಾಸಮ್ಮಿತವಲ್ಲ, ಅವನ ಪ್ರಕಾರ ತನ್ನ ಕಾವ್ಯ ಮಾಡುವುದು ವೇದಸಮ್ಮಿತ ಉಪದೇಶ. ತನ್ನ ಕಾವ್ಯಜಲದ ಪಾವನತೆಗೆ ಕಾರಣವಾದ ಕೃಷ್ಣ ತುಳಸಿಯೇ ಎಲ್ಲೆಲ್ಲೂ ವಿಜೃಂಭಿಸವುದು. ತನ್ನದು 'ಕೃಷ್ಣಕಥೆ' ಎಂದೇ ಹೇಳಿಕೊಂಡುಬಿಟ್ಟಿದ್ದಾನಲ್ಲ. ಹಾಗಾಗಿ ಎಲ್ಲಲ್ಲಿ ನೋಡಿದರೂ ಕೃಷ್ಣಸ್ತುತಿಯೇ. ಕೃಷ್ಣ ಎಂದರೆ ಕುಮಾರವ್ಯಾಸನ ಮೈಮೇಲೆ ಬಂದಂತಾಗುತ್ತದೆ. ಕೃಷ್ಣ ಕುಮಾರವ್ಯಾಸಭಾರತದ ಮೊದಲ ನಾಲ್ಕು ಪರ್ವಗಳಲ್ಲಿ ಅಲ್ಲಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾಣಿಸಿಕೊಳ್ಳುತ್ತಾನೆ; ಆನಂತರ ಉದ್ಯೋಗ ಪರ್ವದಿಂದ ಹಿಡಿದು ಕೊನೆಯವರೆಗೆ ಭಾರತವನ್ನೆಲ್ಲ ಆಕ್ರಮಸಿಬಿಡುತ್ತಾನೆ. ಪಾಂಡವರು ಕಷ್ಟದಲ್ಲಿ ಸಿಲುಕಿಕೊಂಡು ನಲುಗುತ್ತಿರುವಾಗ, ಸಹಾಯಕ್ಕಾಗಿ ಬೇಡಿಕೊಂಡಾಗ ಮತ್ತು ಸಂದಿಗ್ಧ ಸಮಯಗಳಲ್ಲೆಲ್ಲ ಕೃಷ್ಣ ನೆರವಿಗೆ ಬರುತ್ತಾನೆ. ಯುದ್ಧ ನಡೆಯುವಾಗಲಂತೂ ಕೃಷ್ಣ ತಾನೇ ತಾನಾಗಿರುತ್ತಾನೆ; ಪಾಂಡವರನ್ನು ಗೆಲವಿನತ್ತ ನಡೆಸಲು ಏನೇನು ತಂತ್ರೋಪಾಯಗಳು ಬೇಕೋ ಎಲ್ಲವನ್ನೂ ಒದಗಿಸುತ್ತಾನೆ. ಯಾವ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ಪಾಂಡವವರ ಪರವಾಗಿ ಯೋಚಿಸುವವನೂ ಅವನೇ, ಹಾಗೆ ಆಗುವಂತೆ ಮಾಡುವವನೂ ಅವನೇ.
 • ಕುಮಾರವ್ಯಾಸಭಾರತದಲ್ಲಿ ಕೃಷ್ಣ ಮೊದಲು ಕಾಣಿಸಿಕೊಳ್ಳುವುದು ಆದಿಪರ್ವದ ದ್ರೌಪದೀ ಸ್ವಯಂವರ ಸನ್ನಿವೇಶದಲ್ಲಿ. ಸ್ವಯಂವರಕ್ಕೆ ಬಂದಿದ್ದವರಲ್ಲಿ ಕೃಷ್ಣ-ಬಲರಾಮರೂ ಇದ್ದರು. ದುರ್ಯೋಧನ-ಕರ್ಣ ಮುಂತಾದವರೂ ಮತ್ಸ್ಯಯಂತ್ರವನ್ನು ಭೇದಿಸಲು ವಿಫಲರಾದಾಗ ನಗುತ್ತ ಮೇಲೆದ್ದ ಬಲರಾಮ "ಕೃತಕ ಧನುವನು ಮುರಿದು ದ್ರುಪದನ ಸುತೆಯ ಮುಂದಲೆವಿಡಿದು ತಹೆನು" ಎಂದು ಹೊರಟಾಗ ಶ್ರೀಕೃಷ್ಣ ಅವನನ್ನು ತಡೆದು "ನಿಮಗಿಂದು ಕುಂತೀಮಾನಿನಿಯರತ್ತೆಯರಲೇ ತತ್ಸೂನುಗಳು ಮೈದುನರು ತತ್ಪತ್ನಿಯರು ತಂಗಿಯರು ಸಾನುರಾಗವೆ ಮನಕೆ ಸಂಶಯವೇನಿದಕೆ ತಪ್ಪಿಲ್ಲ ಕುಂತೀಸೂನುಗಳು ದ್ರೌಪದಿಗೆ ರಮಣರು ನೋಡಿ ನೀವು" ಎಂದು ವಾವೆ ವರಸೆಯನ್ನು ವಿವರಿಸಿ ತಡೆದನಂತೆ. "ಕುಂತೀಸೂನುಗಳು ದ್ರೌಪದಿಗೆ ರಮಣರು" ಎಂದು ಹೇಳಬೇಕಾದರೆ ಅವಳು ಪಂಚಪಾಂಡವರೆಲ್ಲರ ಪತ್ನಿಯಾಗುವಳೆಂಬ ವಿಷಯವನ್ನು ಕೃಷ್ಣ ಊಹಿಸಿದ್ದನೋ, ಹಾಗಾಗಬೇಕೆಂದು ವೇದಿಕೆಯನ್ನು ಸಿದ್ಧಪಡಿಸಿದ್ದನೋ! ಈ ಸನ್ನಿವೇಶದಲ್ಲಿ ಕೃಷ್ಣ ಪಾಂಡವರನ್ನೇನೂ ಭೇಟಿಯಾಗುವುದಿಲ್ಲ. ಅರ್ಜುನನನ್ನು ಅವನು ನೇರವಾಗಿ ಭೇಟಿಯಾಗುವುದು ಈ ಪರ್ವದ ಕೊನೆಯಲ್ಲಿ; 'ವಿಪ್ರ ಬಾಧೆಗಳನು' ನಿವಾರಿಸುವ ದಿಸೆಯಲ್ಲಿ ಶರಧನುವ ತೆಗೆದುಕೊಳ್ಳಲೆಂದು ಅರಮನೆಯ ಸೆಜ್ಜೆಗೆ ಬಂದ ಅರ್ಜುನನು ಯುಧಿಷ್ಠಿರ-ದ್ರೌಪದಿಯರು ಏಕಾಂತದಲ್ಲಿದ್ದುದನ್ನು ಕಂಡು ಪ್ರಾಯಶ್ಚಿತ್ತವಾಗಿ ನಾರದನು ವಿಧಿಸಿದ್ದಂತೆ ಏಕಾಂಗಿಯಾಗಿ ತೀರ್ಥಯಾತ್ರೆ ಹೊರಟು, ಅಲ್ಲಿಲ್ಲಿ ಸುತ್ತಿ ದ್ವಾರಾವತಿಗೆ ಬರುತ್ತಾನೆ. ಆ ಕ್ಷಣದಲ್ಲಿ ಸತ್ಯಭಾಮೆಯೊಡನಿದ್ದ ಶ್ರೀಕೃಷ್ಣ "ವಿಲಾಸವ ನೆನೆದು ನಕ್ಕನು ಶಕ್ರನಂದನನ". ರಾತ್ರಿಯ ಕಗ್ಗತ್ತಲಲ್ಲಿ ಸರಿವಳೆಗೆ ಸಿಲುಕಿದ್ದ ಅರ್ಜುನ ಕೃಷ್ಣನನ್ನು ನೆನೆಯುತ್ತಿದ್ದ. ಅದರಿಂದ ಅವನ ಸಹಾಯಕ್ಕೆಂದು ಕೃಷ್ಣ 'ಮಂಚವನಿಳಿ'ಯುತ್ತಾನೆ; ಸುಭದ್ರೆಯನ್ನು ಅವನಿಗಿತ್ತು ಮದುವೆ ಮಾಡುವುದಾಗಿ ದೇವಿಗೆ ಆಗಲೇ ಹೇಳಿ ಅರ್ಜುನನಿದ್ದೆಡೆಗೆ ಬಂದು ಅರಮನೆಗೆ ಕರೆತರುತ್ತಾನೆ. ಮುಂದೆ ಪಾಂಡವರಿಗೆ ಪುತ್ರೋತ್ಸವವಾದ ಸಂದರ್ಭದಲ್ಲಿ ಹಸ್ತಿನಾವತಿಗೆ ಶ್ರೀಕೃಷ್ಣ ಬಂದಾಗ "ಅರಸಿ ಕಾಣವು ವೇದತತಿ ತಾನರಸಿ ಬಂದನು ಭಕ್ತರನು ತನಗೆರಗಿ ಮೆಚ್ಚಿಸಲರಿಯಯರಜ ರುದ್ರಾಮರೇಶ್ವರರು ಎರಗುವನು ಯಮಜಂಗೆ ತನ್ನನು ಕುರುಹುಗಾಣವು ವೇದಶಿರವಿದು ಮರವೆಯೋ ಹರಿ ಬಂದು ಕಂಡನು ಧರ್ಮನಂದನನ" ಎಂದು ಕವಿ ಉದ್ಗರಿಸುತ್ತಾನೆ. ವೇದಗಳಿಗೆ ಕಾಣದ ಕೃಷ್ಣ ತಾನಾಗಿ ಭಕ್ತರನ್ನರಸಿ ಬರುತ್ತಾನಂತೆ; ಅಂದರೆ ಪಾಂಡವರು ತನ್ನ ಭಕ್ತರೆಂಬುದು ಅವನ ಮಾತಿನ ಅರ್ಥ, ಅವರು ಹಾಗಿರಬೇಕೆಂಬುದು ಅವನ ನಿರ್ಧಾರ. ಸುಭದ್ರೆಯನ್ನು ಅರ್ಜುನನಿಗಿತ್ತು ಮದುವೆ ಮಾಡಲು ಸಂಚುಮಾಡುವ ಕೃಷ್ಣ ಬಲರಾಮ ಬರುವುದರೊಳಗಾಗಿ ಮದುವೆ ಮಾಡಿ ಪೂರೈಸಿಬಿಡುತ್ತಾನೆ. ಇವರಿಬ್ಬರೂ ಸೇರುವುದರ ಹಿಂದಿರುವುದು ಕೃಷ್ಣಸಂಕಲ್ಪವೇ. ಕೃಷ್ಣ ಮತ್ತೆ ಕಾಣಿಸಿಕೊಳ್ಳುವುದು ಖಾಂಡವವನದಹನ ಪ್ರಸಂಗದಲ್ಲಿ, ಅರ್ಜುನನಿಗೆ ಸಹಾಯಕನಾಗಿ. ಬ್ರಾಹ್ಮಣ ವೇಷದ "ಗ್ರಾಸಾರ್ಥಿ"ಯಾದ ಅಗ್ನಿಗೆ ಅರ್ಜುನ ಕೇಳಿದ್ದನ್ನು ಕೊಡುವ ಭರವಸೆಯೀಯುತ್ತಾನೆ. ಇವನು ಅಗ್ನಿ ಎಂದು ಕೃಷ್ಣ ಹೇಳಿ "ನಿಖಿಳನಿರ್ಜರ ಬಲಸಹಿತ ಶತಮಖನೊಡನೆ ವಿಗ್ರಹವಲಾ" ಎಂದು ಆಕ್ಷೇಪಿಸಿದಂತೆ ತೋರಿದರೂ ಕೊನೆಯವರೆಗೂ ಅವನಿಗೆ ನೆರವಾಗುತ್ತಾನೆ. ತನ್ನ ವನವನ್ನು ಅಗ್ನಿಗಾಹುತಿ ಮಾಡುವವನ ಮೇಲೆ ಕೆಂಡಾಮಂಡಲನಾದ ಇಂದ್ರ ರಭಸದಿಂದ ಬರುತ್ತಾನೆ; ಆದರೆ ಕೃಷ್ಣನ ಮಧ್ಯಪ್ರವೇಶದಿಂದ ತಣ್ಣಗಾಗಿ "ಹರಿಗೆ ವಂದಿಸಿ ಮಗನನೊಲಿದಾದರಿಸಿ ಮರಳು"ತ್ತಾನೆ.
 • ಮುಂದೆ ಕೃಷ್ಣ ಪಾಂಡವರಲ್ಲಿಗೆ ಬರುವುದು ಸತ್ತ "ಪಿತನ ಪರಮಪ್ರೀತಿ"ಗಾಗಿ ರಾಜಸೂಯಯಾಗ ಮಾಡುವ ಅವರ ನಿರ್ಧಾರದ ಹಿನ್ನೆಲೆಯಲ್ಲಿ. ನಾರದ "ಮುನಿ ಹಾಯಿಕ್ಕಿದನಲಾ ಬಲೆಯನಕಟಾ ಸಿಕ್ಕಿದಿರಲಾ" ಎಂದು ಮೊದಲು ನಕ್ಕರೂ ಕೃಷ್ಣ ಮುಂದೆ ಜರಾಸಂಧವಧೆಯ ಸನ್ನಿವೇಶದಲ್ಲಿ ಭೀಮನ ನೆರವಿಗೆ ಹೋಗುತ್ತಾನೆ. ಆ ಮುಂದೆ ಯುಧಿಷ್ಠಿರನ ಬೆಂಬಲಕ್ಕೆ ಹೋಗುವುದು ರಾಜಸೂಯಯಾಗದ ಅಗ್ರಪೂಜೆಯ ಸಂದರ್ಭದಲ್ಲಿ; ತನ್ನನ್ನು ನೂರು ಬಾರಿ ನಿಂದಿಸುವವರೆಗೂ ತಾಳಿಕೊಂಡು ಕೊನೆಗೆ ತನ್ನ ಚಕ್ರಕ್ಕೆ ಬೆಸಸಿ ಶಿಶುಪಾಲನನ್ನು ಸಂಹಾರಮಾಡುತ್ತಾನೆ. ಆ ಮುಂದೆ ಬರುವುದು ಶ್ರೀಕೃಷ್ಣ ಅವಮಾನದಿಂದ ತತ್ತರಿಸಿದ ದ್ರೌಪದಿಯ ಸ್ತುತಿಯನ್ನು ಕೇಳಿದಾಗ. "ಭಕುತರಿಗೆ ತನ್ನನು ತೆತ್ತು ಬದುಕುವೆನೆಂಬ ಪರಮ ವ್ರತದ ನಿಷ್ಠೆಯ" ಆತ ತನ್ನ ಸತಿಯರೊಡನೆ ಹಾಸಂಗಿಯಾಡುತ್ತಿದ್ದವನು ಇದ್ದಲ್ಲಿಂದಲೇ "ಸೆಳೆವ ಸೀರೆಗೆ ಲಯವ ಕಾಣೆನು" ಎನ್ನುವಂತೆ "ಸೀರೆಯೊಟ್ಟಿಲು ಗಗನವನು ಗಾಹಿಸು"ವಂತೆ ಅನುಗ್ರಹ ಮಾಡಿದ ಸನ್ನಿವೇಶದಲ್ಲಿ.
 • ಆ ಮುಂದೆ ಕೃಷ್ಣ ಬರುವುದು ಪಾಂಡವರು ವನವಾಸಕ್ಕೆ ತೆರಳಿದ ವಿಷಯವನ್ನು ಕೇಳಿ; ಅವರು ವಾಸಿಸುತ್ತಿದ್ದ ಕಾಮ್ಯಕವನಕ್ಕೆ ಬಂದು ಅವರನ್ನು ಸಮಾಧಾನಪಡಿಸಿದ ಸಂದರ್ಭದಲ್ಲಿ. ಮತ್ತೆ ಅವನು ಕೃಪೆದೋರುವುದು ಕೆಲಕಾಲಾನಂತರ ನಡೆಯುವ ದೂರ್ವಾಸಾತಿಥ್ಯ ಪ್ರಸಂಗದಲ್ಲಿ. ಎಲ್ಲರೂ ಊಟ ಮಾಡಿ ಅಕ್ಷಯ ಪಾತ್ರೆಯನ್ನು ದ್ರೌಪದಿ ತೊಳೆದಿಟ್ಟ ಮೇಲೆ ದುರ್ಯೋಧನನ ಹುನ್ನಾರದಿಂದ ಅತಿಗಳಾಗಿ ಬಂದ ದೂರ್ವಾಸರಿಗೆ ನೀಡಲು ಏನೂ ಇಲ್ಲದ ಸಂಕಟ ಸಂಯ ಬಂದಾಗ ಆಕೆಯ ನೆನಪಿಗೆ ಬರುವುದು ಕೃಷ್ಣನೇ. ಅವಳ ಮತ್ತು ಯುಧಿಷ್ಠಿರನ ಪ್ರಾರ್ಥನೆಗೆ ಓಗೊಟ್ಟ ಶ್ರೀಕೃಷ್ಣ "ಧ್ಯಾನಗೋಚರನಾಗಿ ವನಿತೆಯ ಮಾನಿಸದಲಿಹ ಪರಮಹಂಸನು ಮಾನುಷಾಕೃತಿಯಾಗಿ ತೋರಿದ ಬಾಹ್ಯರಚನೆಯಲಿ". ಅವನ ಕಪಟ ನಾಟಕ ಶುರುವಾಯಿತು: ತಾನು ಹಸಿದು ಬಂದಿದ್ದೇನೆ, ತಿನ್ನಲು ಏನಾದರೂ ಕೊಡು ಎಂದಾಗ, ದ್ರೌಪದಿಯು "ಸ್ಥಾಲಿಯನು ತಡವಿ"ದಾಗ ಸಿಕ್ಕ "ಕಿಂಚಿತ್ಪಾಕಶೇಷ"ವನ್ನೇ ತಿಂದು ತೇಗಲು ದೂರ್ವಾಸಾದಿ ಮುನಿಗಳೆಲ್ಲ ಸಂತೃಪ್ತಿಯಿಂದ ತೇಗುತ್ತಾರಂತೆ: ಆಗ ಮುನಿಗೆ ಮುರಹರನ ಬರವು ನಿಶ್ಚಿತವಾಯಿತು.
 • ಮುಂದೆ "ಪರಮಸ್ವಾಮಿಯೆಮ್ಮುತ್ಸವದ ನೆಲೆಯೆಮ್ಮೈವರಸು ಯಾದವ ಶಿರೋಮಣಿ" ಎಂದು ಪಾಂಡವರು ಭಾವಿಸಿದ್ದ ಕೃಷ್ಣನ ಆಗಮನ ಪಾಂಡವರು ತಮ್ಮ ಅಜ್ಞಾತವಾಸದ ಕೊನೆಯ ಹಂತದಲ್ಲಿದ್ದಾಗ, ವಿರಾಟಪರ್ವದಲ್ಲಿ, ಅಭಿಮನ್ಯು-ಉತ್ತರೆಯರ ಮದುವೆಯ ಸಂದರ್ಭದಲ್ಲಿ. ಮದುವೆಗೆ ದಯಮಾಡಿಸಬೇಕೆಂದು ಧರ್ಮರಾಯನು ಶ್ರೀಕೃಷ್ಣನಿಗೆ ಬರೆದಿದ್ದ ಓಲೆಯಲ್ಲಿ "ಎಮ್ಮನರಿದು ವಿರಾಟ ಮನ್ನಿಸಿ ತನ್ನ ಮಗಳ ಕಿರೀಟಿ ತನಯಂಗೀವ ಭರವಿದೆ ದೇವರವಧರಿಸಿ, ಮದುವೆಯೆಂಬುದು ನೆವ, ನಿಜ ಶ್ರೀಪದವ ತೋರಿಸಬೇಕು ವನವಾಸದ ಪರಿಕ್ಲೇಶಾನುಸಂತಾಪವನು ಬೀಳ್ಕೊಡಿಸಿ ಕದಡು ಹೋಗಲು ಕಾಣಬೇಹುದು ... ... ಕರುಣಿ ಬಿಜಯಂಗೈದು ಭಕ್ತರ ಹೊರೆಯಬೇಹುದು ಬೇಡಿಕೊಂಬೆನು" ಎಂದು ಬರೆದಿದ್ದ. ಭಕ್ತಿಪೂರ್ವಕವಾದ ಆ ಆಹ್ವಾನವನ್ನು ಮನ್ನಿಸಿ ಬಂದ ಕೃಷ್ಣನು "ಹರುಷದಲಿ ಮಂಗಳ ಮುಹೂರ್ತವ ಮಾಡಿ" ಎಂದು ಸಲಹೆಯಿತ್ತು ಅಭಿಮನ್ಯು-ಉತ್ತರೆಯ ಮದುವೆಯ ಬಳಿಕ ದ್ವಾರಾವತಿಗೆ ಮರಳುತ್ತಾನೆ.
 • ಮುಂದಿನ ಆರು ಪರ್ವಗಳು ಶ್ರೀಕೃಷ್ಣಮಯ. ದ್ಯೂತದಲ್ಲಿ ಸೋತ ಪಣ ನೆರವೇರಿದರೂ ದುರ್ಯೋಧನ ತಮ್ಮ ರಾಜ್ಯವನ್ನು ವಾಪಸು ಕೊಡಲಾರನೆಂಬುದರಿಂದ ಯುಧಿಷ್ಠಿರ ಅರ್ಜುನನನ್ನು ಶ್ರೀಕೃಷ್ಣನ ನೆರವು ಬೇಡಿ ಅಟ್ಟಲು, ಅವನು "ದೇವ ಮಾತ್ರವೆ ನೀವು ದೇವರ ದೇವರೊಡೆಯರು ಹೊಗಳುವರೆ ವೇದಾವಳಿಗಳವಲ್ಲ ಸಾಕಾ ಮಾತದಂತಿರಲಿ ನಾವು ಭಕುತರು ಭಕುತ ಭೃತ್ಯರು ನೀವು ಸಾರಥಿಯಾಗಿ ಭೃತ್ಯನ ಕಾವುದೆಂದರ್ಜುನ"ನಿಗೆ ಮಾರ್ಗದರ್ಶನ ಮಾಡಲೊಪ್ಪುತ್ತಾನೆ. ಮುಂದಿನ ಮಾರ್ಗವನ್ನು ಸೂಚಿಸಲು ಬಂದ ಕೃಷ್ಣ ಪಾಂಡವರೈವರನ್ನು ಬೇರೆ ಬೇರೆಯಾಗಿ ಭೇಟಿ ಮಾಡಿ ಯುದ್ಧದ ಬಗ್ಗೆ ಅವರ ಅಭಿಪ್ರಾಯವನ್ನು ಸಂಗ್ರಹಿಸಿ, "ಕಾಳಗವನೇ ಬಲಿದು ಬಹೆನು ... ... ದೇವಕಿಯ ಮೇಲಾಣೆ ವರ ವಸುದೇವನಂಘ್ರಿಗಳಾಣೆ ಮನುಮಥದೇವನಾಣೆ ನಿಧಾನವನು ಕೇಳಬಲೆ ನಿನ್ನಾಣೆ ನಾವು ಸಂಧಿಯ ನೆವದವದಿರ ಭಾವವನು ಕಲಿಮಾಡಿ ಕೋಪವ ತೀವಿ ಸಂಧಿಯ ಮುರಿದು ಬಹೆವಿದ ನಂಬು" ಎಂದು ದ್ರೌಪದಿಗೆ ಆಶ್ವಾಸನೆಯಿತ್ತು ಹಸ್ತಿನಾವತಿಗೆ ಬರುವ ಸನ್ನಿವೇಶ. ಇನ್ನು ಮುಂದೆ ನಡಯುವುದಕ್ಕೆಲ್ಲ್ಲ ಕಾರಣವಾಗುವ ಕೃಷ್ಣದೌತ್ಯ ಪ್ರಸಂಗ ಭಾರತದ ಬಹು ಮುಖ್ಯವೂ ನಾಟಕೀಯವೂ ಆದ ಪ್ರಸಂಗ. ವಿದುರಭಕ್ತಿಗೆ ಒಲಿಯುವುದು, ಪರೋಕ್ಷವಾಗಿ ದುರ್ಯೋಧದನ ಗರ್ವ ಮುರಿಯುವುದು, ವಿದುರ ದುರ್ಯೋಧನನ ನೆರವಿಗೆಂದು ಇರಿಸಿಕೊಂಡಿದ್ದ ತನ್ನ ಬಿಲ್ಲನ್ನು ಮುರಿಯುವಂತೆ ಮಾಡುವುದು, ದ್ರೌಪದಿಗೆ ಮಾತು ಕೊಟ್ಟಿದ್ದಂತೆ ದುಷ್ಟಚತುಷ್ಟಯರ ಯುದ್ಧಛಲವನ್ನು ತೀವ್ರಗೊಳಿಸುವುದು, ತನ್ನನ್ನು ಕಟ್ಟಲು ಬಂದ ಸಂದರ್ಭದಲ್ಲಿ ವಿಶ್ವರೂಪದರ್ಶನ ಮಾಡಿಸುವುದು, ಕರ್ಣನಿಗೆ ಅವನ ಜನನ ವೃತ್ತಾಂತವನ್ನು ತಿಳಿಸಿ ಅವನ ಮನಸ್ಸೊಡೆಯುವುದು, ಕುಂತಿಗೆ ಸಲಹೆಯಿತ್ತು ಕರ್ಣ ಪಾಂಡವರನ್ನು ಕೊಲ್ಲದಂತೆಯೂ, ಒಮ್ಮೆ ಬಿಟ್ಟ ದಿವ್ಯಾಸ್ತ್ರವನ್ನು ಮರಳಿ ತೊಡದಂತೆಯೂ ಭಾಷೆ ಪಡೆಯುವುದು _ ಎಲ್ಲ ರಾಜನೈಪುಣ್ಯದ ಕಾರ್ಯಗಳನ್ನು ಮಾಡಿ ಮುಗಿಸುವ ಸನ್ನಿವೇಶ. ಆ ನಂತರದ್ದು ಯುದ್ಧಪಂಚಕಗಳು. ಯುದ್ಧದುದ್ದಕ್ಕೂ ಕೃಷ್ಣ ಪಾಂಡವರ ರಕ್ಷಕನಾಗಿ, ಅದರಲ್ಲೂ ಅರ್ಜುನನನ್ನು ಕಣ್ಣಲ್ಲಿಟ್ಟುಕೊಂಡು ಕಾಪಾಡುವ ಹದಿನೆಂಟು ದಿನಗಳು.
 • ಭೀಷ್ಮಪರ್ವದ ಆದಿಯಲ್ಲಿ ಇತ್ತಂಡದ ಸೈನ್ಯಗಳ ಮಧ್ಯೆ ನಿಂತ ರಥದಲ್ಲಿದ್ದು ಅರ್ಜುನನಿಗೆ ವಿಷಾದ ಹುಟ್ಟುವ ಪ್ರಸಂಗವಿದೆ. ಆ ವಿಷಾದವನ್ನು ತನ್ನ ಉಪದೇಶ ಮತ್ತು ವಿಶ್ವರೂಪಾತ್ಮಕತೆಯ ದರ್ಶನ ಮಾಡಿಸುವ ಮೂಲಕ ಕಳೆಯುವುದು ಕುಮಾರವ್ಯಾಸಭಾರತದ ಮುಖ್ಯ ಪ್ರಸಂಗ. ಅರ್ಜುನನ ಉರವಣೆಯಿಂದ ಕೆರಳಿದ ಭೀಷ್ಮನು ಬಿಟ್ಟ "ಭಾರ್ಗವದತ್ತ" ಬಾಣ ಕೃಷ್ಣನ ಹಣೆಯಲ್ಲಿ ನಡುತ್ತದೆ. ಇದರಿಂದ ಖತಿಗೊಂಡ ಕೃಷ್ಣ ಚಕ್ರವನ್ನು ಹಿಡಿದು "ಭೀಷ್ಮನ ಕಡಿದು ಭೂತಗಣಕ್ಕೆ ಬೋನವ ಬಡಿಸುವೆನು" ಎಂದು ಮುಂದುವರಿದಾಗ ಭೀಷ್ಮನು "ನಿನ್ನ ಘನತೆಗೆ ಡಿಂಗರಿಗರೇ ಮಿಗಿಲು ನಿನಗೆಯು ಡಿಂಗರಿಗರೇ ಬಲ್ಲಿದರು ದಾಕ್ಷಿಣ್ಯವೇನಿದಕೆ" ಎಂದು ಹೇಳಿ "ದಿಟ ಕೊಲುವ ಮನವೇ ಬಿಸುಡು ಚಕ್ರವನೆನ್ನ ಕಾಯದಲಿ" ಎಂದು ದಿಟ್ಟತನದಿಂದ ಹೇಳಿದಾಗ ಕೃಷ್ಣ "ನಚ್ಚಿದಾಳಿನ ಬಿನ್ನಹಕೆ ಮೆಚ್ಚಿ ಮನದಲಿ ನಾಚಿ ಚಕ್ರವ ಮುಚ್ಚಿದ". ಇದನ್ನೆಲ್ಲ ನೋಡುತ್ತಿದ್ದ ಅರ್ಜುನನು ನಡುಗುತ್ತಿರಲು ಕೃಷ್ಣ ಅವನನ್ನು ತಕ್ಕೈಸಿಕೊಂಡು ಸಮಾಧಾನಪಡಿಸುತ್ತಾನೆ. ಮುಂದೆ, ಭೀಷ್ಮನನ್ನು ಗೆಲ್ಲಲು ಅಸಾಧ್ಯವಾದಾಗ ಅಂದು ರಾತ್ರಿ ಕಾಣಬಂದ ಯುಧಿಷ್ಠಿರನಿಗೆ ಕೃಷ್ಣನ ಸಮ್ಮುಖದಲ್ಲಿ ಆತ "ಶಿಖಂಡಿಯನು ಮುಂದಿರಿಸಲಾತನ ಕಂಡು ನಾವ್ ಕಾಳಗವ ಮಾಡೆವು" ಎನ್ನುವ ಉಪಾಯವನ್ನು ಸೂಚಿಸುತ್ತಾನೆ.
 • ದ್ರೋಣಪರ್ವದಲ್ಲಿಯೂ ಕೃಷ್ಣ ಪಾಂಡವರ ನೆರವಿಗೆ ಬರುವುದು ಹಲವಾರು ವಿಧಗಳಲ್ಲಿ. ಅಭಿಮನ್ಯುವಿನ ಮರಣದಿಂದ ದುಃಖಗೊಂಡ ಅರ್ಜುನನು ಅವನ ಸಾವಿಗೆ ಕಾರಣನಾದ ಸೈಂಧವನನ್ನು ವಧಿಸುವ ನಿರ್ಧಾರವನ್ನು ಕೈಗೊಳ್ಳುತ್ತಾನೆ; ಅಷ್ಟೇ ಅಲ್ಲ, "ನಾಳೆ ಪಡುವಣ ತರಣಿ ತೊಲಗದ ಮುನ್ನ ಕೊಲುವೆನು ವೈರಿ ಸೈಂಧವನ"; ಹಾಗಾಗದಿದ್ದರೆ ತಾನು ಅಗ್ನಿಪ್ರವೇಶ ಮಾಡುವುದಾಗಿ ಶಪಥ ತೊಡುತ್ತಾನೆ. ಮಾರನೆಯ ದಿನ ರವಿರಶ್ಮಿಗಳು ಕೆಂಪೊತ್ತಿದಾಗ "ನರ ನಿದಾನಿಸಿದನೆನುತ್ತ ಮುರರಿಪು ರಥವ ಬಿಟ್ಟನು ಕಡೆಯ ಮೋಹರಕೆ". ಆದರೆ ಎಷ್ಟು ತೀವ್ರವಾಗಿ ಯುದ್ಧ ಮಾಡಿದರೂ ಸೈಂಧವನನ್ನು ಕಾಯುತ್ತಿದ್ದ ಶತ್ರು ಸೇನೆ ಸವೆಯದಿದ್ದಾಗ ಅರ್ಜುನನು "ಗಳಿಗೆಗಿನನಾಳುವನು ಜಲಧಿಯಲಿ ವೈರಿ ಸೈಂಧವನ ಹೇಳಿ ಫಲವೇನಿನ್ನು ವಹ್ನಿಜ್ವಾಲೆ ಕೊಳ್ಳಲಿ ದೇಹವನು ಸಾಕೇಳು ಮುರಹರ ತೇರ ತಿರುಹಿನ್ನೆಂದು" ಹತಾಶನಾಗಿ ನುಡಿಯುತ್ತಾನೆ. ಅದರೆ ಕೃಷ್ಣನು "ನಿನಗಾವ ಭಯ ಬೇಡಾಡಬಾರದು ತೊಡು ಮಹಾಶರವ ಈ ವಿರೋಧಿಯ ಕೆಡಹು ಸೂರ್ಯನ ನಾವು ತೋರಿಸಿಕೊಡುವೆವು" ಎಂದು ಅಭಯವಿತ್ತು ಹಾಗೆಯೇ ಮಾಡಿ ಅರ್ಜುನನ ಶಪಥ ಈಡೇರುವಂತೆ ಮಾಡುತ್ತಾನೆ. ಅಂತೆಯೇ ದ್ರೋಣವಧೆಯ ಸಂದರ್ಭ: ಪ್ರಚಂಡನಾದ ದ್ರೋಣನ್ನು ಗೆಲ್ಲುವುದು ಅಸಾಧ್ಯವೆಂದು ಅರ್ಜುನನಿಗನಿಸಿದಾಗ "ಧುರದ ಜಯವಹುದೊಂದು ನಿರುತವಲ್ಲದ ನುಡಿಯ ನುಡಿದರೆ ಪರಿಹರಿಸಬಹುದೆಂದನಸುರಾರಾತಿ ನಸುನಗುತ ನರನದೆಂತೆನೆ ಗುರುತನುಜ ಸಂಗರದೊಳೊರಗಿದನೆಂದು ದ್ರೋಣಂಗರುಹು" ಎಂದು ಸಲಹೆಯೀಯುತ್ತಾನೆ. ಇದನ್ನು ಕೇಳಿ ಅರ್ಜುನ ಕಿವಿಮುಚ್ಚಿಕೊಂಡರೆ, ಆ ಮಾತು ಕೇಳಿಸಿಕೊಂಡ ಭೀಮ "ಇಂದಿನ ಬವರದಲಿ ಕಡಿವಡೆದುದಶ್ವತ್ಥಾಮ" ಎಂದು ಜೋರಾಗಿ ನುಡಿಯುತ್ತಾನೆ. ಆದರೆ ತನ್ನ ಮಗ "ಶಿವನೊಡನೆ ಸಮಜೋಳಿ" ಎಂದು ಹೇಳಿದ ದ್ರೋಣ ಮತ್ತೆ ಯುದ್ಧಕ್ಕೆ ತೊಡಗುತ್ತಾನೆ. ಆ ಹೊತ್ತಿಗೆ ಗಗನದಿಂದಿಳಿತಂದ ಮಹಾಮುನಿಗಳು "ನಿನಗೀ ಭೂತಹಿಂಸೆಯದೇಕೆ" ಎಂದು ಹೇಳಿ, "ಈ ದುರಾಗ್ರಹ ನಿಲಲಿ ಹಾಯಿಕು ಕೈದುವನು ಸುಸಮಾಧಿ ಯೋಗದಲೈದು ನಿಜವನು ದೇಹನಿಸ್ಪೃಹನಾಗು ನೀನು" ಎಂದು ಉಪದೇಶಿಸುತ್ತಾರೆ. ಇದರಿಂದ ವಿಚಲಿತನಾದರೂ ಕ್ಷಣಾರ್ಧದಲ್ಲಿ ಯಥಾಪ್ರಕಾರವಾಗಿ ದ್ರೋಣನು ಯುಧಿಷ್ಠಿರನನ್ನು ಹುಡುಕಿಕೊಂಡು ಬಂದು ವಾಸ್ತವವೇನೆಂದು ಪ್ರಶ್ನಿಸುತ್ತಾನೆ. ಅವನಾದರೋ, "ಅಶ್ವತ್ಥಾಮಗಜವಿದಿರಾದುದಳಿದುದು ದಿಟ" ಎನ್ನುತ್ತಾನೆ. ಆದರೆ ಭೀಮನು ಮತ್ತೆ "ಶಿವ ಶಿವಾ ಸುತನಾಶವನು ಬಗೆಗೊಳ್ಳ"ನೆಂದು ಗೇಲಿ ಮಾಡಿದಾಗ ಅವನಿಗೆ ಮತ್ತೆ ಕೈ ಕೋಲು ಬಿಲ್ಲುಗಳು ಸಡಿಲಿ "ಅಸ್ತ್ರತ್ಯಾಗ ತನಗೆ" ಎಂದು ನಿರ್ಧರಿಸಿ ರಥದಲ್ಲಿಯೇ ಪದ್ಮಾಸನ ಹಾಕಿ ಕುಳಿತು (ಮುನಿಗಳು ಹೇಳಿ ಹೋದ ಮಾತುಗಳಿಂದ ಪ್ರಭಾವಿತನಾಗಿ) ಸಮಾಧಿಗೆ ಸಂದು "ನಿತ್ಯನನ್ಯನಮಳಜ್ಞಾನರೂಪವೆ ತನ್ನ ನಿಜವೆಂದರಿ"ಯುತ್ತಾನೆ. ಹೀಗೆ ದ್ರೋಣ ಅಳಿಯುತ್ತಾನೆ. ಇಡೀ ಪ್ರಸಂಗ ಕೃಷ್ಣನ ಕೈವಾಡದಿಂದ ನಡೆದುದೆಂಬಂತೆ ತೋರುತ್ತದೆ. ಮುನಿಗಳು ಬಂದು ದ್ರೋಣನಿಗೆ ಉಪದೇಶಿಸುವುದೂ ಕೃಷ್ಣ ಪ್ರೇರಣೆಯಿಂದಲೇ ಇರಬಹುದೇ! ಆನಂತರ, ತಂದೆಯ ಮರಣದಿಂದ ಕ್ರುದ್ಧನಾದ ಅಶ್ವತ್ಥಾಮನು ನಾರಾಯಣಾಸ್ತ್ರವನ್ನು ಪ್ರಯೋಗಿಸಲು ಅದು ಭಯಂಕರವಾಗಿ ಎಲ್ಲವನ್ನೂ ಸುಡುತ್ತ ಬಂದು ಕೊನೆಗೆ ಕೃಷ್ಣನ ಕರುಣೆಯಿಂದ "ಮುರಹರನ ಪಾದಾರವಿಂದದ ಹೊರೆಯೊಳಡಗಿತು".
 • ಕರ್ಣಪರ್ವದಲ್ಲಿನ ಪ್ರಸಂಗಗಳೂ ಇಂತಹ ಪ್ರಾಮುಖ್ಯವನ್ನು ಪಡೆದವೇ. ಕರ್ಣ ತನ್ನನ್ನು ಯುದ್ಧದಲ್ಲಿ ಎದುರಿಸಿದ ಧರ್ಮರಾಯನನ್ನು ತನ್ನ ಬಿರುಗಾಳೆಗದಿಂದ ಕಂಗೆಡಿಸುತ್ತಾನೆ; ಅಷ್ಟೇ ಅಲ್ಲ, "ಎದೆಯಲೌಕಿದ ಬಾಣ ಬೆನ್ನಲಿ ತುದಿಮೊನೆಯ" ತೋರುವ ಹಾಗೆ ಗಾಸಿಗೊಳಿಸುತ್ತಾನೆ. ಇದನ್ನು ಕಂಡ ಸುತ್ತಲ ಆಪ್ತಜನರು ಅವನ ಗಾಯಗಳನ್ನು ತೊಳೆದು ಉಪಚರಿಸಿ ಬಿಡಾರಕ್ಕೆ ಕರೆತರುತ್ತಾರೆ. ಬೇರೆಡೆ ಯುದ್ಧಮಾಡುತ್ತಿದ್ದ ಅರ್ಜುನ ಈ ಸುದ್ದಿಯನ್ನು ಕೇಳಿ ಕಾತರದಿಂದ ಮರಳುತ್ತಾನೆ. ಅವನ ದುಗುಡವನ್ನು ಕಂಡು ಕೃಷ್ಣನು ಅವನನ್ನು ಸಂತೈಸುತ್ತಾನೆ. ಅರ್ಜುನ ಬಂದಾಗ ಕಂಡದ್ದು "ಬಿಗಿದು ಕಟ್ಟಿದ ಗಾಯ ಮದ್ದಿನ ಜಿಗಿಯ ತೈಲದ ತಳಿತ ಲೇಪದಲುಗಿದ ಬಾಣವ್ಯಥೆಯ ಕರ್ಣಧ್ಯಾನಚೇತನದ ಸೊಗಸು ಮಿಗೆ ದ್ರೌಪದಿಯ ತುದಿವೆರಳುಗುರುವರಸಿದ ಸಿರಿಮುಡಿಯ ಬಲುದುಗುಡ ಭರದಲಿ ಕುಸಿದ ಭೂಪ"ನನ್ನು. ಕೃಷ್ಣ ಸಂತೈಸುವಿಕೆಯ ಮಾತಾಡಿದಾಗ "ಹರಿಕರಾಬ್ಜ
 • ಸ್ಪರ್ಶಮಾತ್ರಸ್ಫುರಣದಿಂದಾಪ್ಯಾಯಿತಾಂತಃಕರಣ"ನಾದ ಧರ್ಮರಾಯ ಅರ್ಜುನ ಸಮಾಧಾನದ ಮಾತುಗಳನ್ನಾಡಿದಾಗ ಕೆರಳುತ್ತಾನೆ. ಕರ್ಣನ ಯುದ್ಧರಂಗದಲ್ಲಿನ ಸರ್ವಾಂತರಾಯಿತ್ವವನ್ನು ಹೊಗಳಿದ ಆತ ಕೊನೆಗೆ "ಬವರ ಗೆಲುವರೆ ಹರಿಗೆ ಕೊಡು ಗಾಂಡಿವವ ಸಾರಥಿಯಾಗು ನೀನು" ಎಂದು ಅವಗಡಿಸುತ್ತಾನೆ. ಅವನ ಕಟಕಿ ಮಾತುಗಳ ಪೂರದಿಂದ ಅವಮಾನಿತನಾದ ಅರ್ಜುನ "ಅಡಾಯ್ದವನೊರೆಯೋಲುಗಿದು" ಅಣ್ಣನನ್ನು ಕೊಲ್ಲಹೋಗುತ್ತಾನೆ. ಆಗ ಇಬ್ಬರ ನಡುವೆ ಬಂದು ಅಣ್ಣತಮ್ಮರ ಜಗಳವನ್ನು ನಿಲ್ಲಿಸಿದವನು ಕೃಷ್ಣ. ಇಬ್ಬರೂ ಪಶ್ಚಾತ್ತಾಪದ ಕಣ್ಣೀರಿನಲ್ಲಿ ತೋಯುತ್ತಾರೆ. ಕೊನೆಗೆ ಅರ್ಜುನ "ಇಂದು ಕರ್ಣನ ಶಿರವುಳಿದು ತಾವರೆಯ ನಗೆ ಪೈಸರಿಸಿದರೆ ... ... ನಿಮ್ಮಯ ತಮ್ಮನಲ್ಲ" ಎಂದು ಶಪಥಮಾಡಿ ಹೋಗುತ್ತಾನೆ.
 • ಇನ್ನು ಮುಂದಿನ ಘಟ್ಟ ಕರ್ಣಾರ್ಜುನರ ಯುದ್ಧ. ಬಿರುಸಾಗಿ ಬಾಣಪ್ರಯೋಗ ಮಾಡುತ್ತಿದ್ದ "ಅರಿಯ ಶರಹತಿಗಳು ತಿರ್ರನೆ ತಿರುಗಿ ಪಾರ್ಥನ ತೇರು ಬಿಲ್ಲಂತರಕೆ ತೊಳಗೆ" ಕೃಷ್ಣ ಅವನ ರೀತಿಯನ್ನು ಕಂಡು "ಬಸುರೊಳಗೆ ಬ್ರಹ್ಮಾಂಡಕೋಟಿಯ ಮುಸುಕಿಕೊಂಡಿಹ ನಾ ಸಹಿತ ಮೇಲೆಸೆವ ಸಿಂಧದ ಹನುಮಸಹಿತೀ ದಿವ್ಯಹಯಸಹಿತ ಎಸುಗೆಯಲಿ ತೊಲಗಿಸುವ ಕರ್ಣನ ಅಸಮಸಾಹಸ ಪಿರಿದೊ ಹುಲುರಥದೆಸುಗೆ ನಿನ್ನಗ್ಗಳಿಕೆ ಪಿರಿದೋ ಪಾರ್ಥ ಕೇಳೆಂದ" ಮಾತು ಕರ್ಣನನ್ನು ಹೊಗಳುವುದಕ್ಕೂ ಆಯಿತು; ಅರ್ಜುನನು ಮತ್ತಷ್ಟು ಆವೇಶಗೊಳ್ಳುವಂತೆ ಮಾಡುವುದಕ್ಕೂ ಅಯಿತು. ಕರ್ಣ ಸರ್ಪಬಾಣವನ್ನು ತೊಟ್ಟು ಬಿಟ್ಟಾಗ ಅದು ಅರ್ಜುನನ ಕಡೆ ಸಾಗಿದ ರೀತಿಯಿಂದ ಎಲ್ಲರೂ ಅರ್ಜುನನ ಕತೆ ಮುಗಿಯಿತೆಂದೇ ಕಳವಳಿಸಿದರು; "ವಿಷವ ತೆಗೆದಳು ದ್ರುಪದಸುತೆ". ಅರ್ಜುನನ ತಲೆ ಹಾರಿಹೋಗುವುದೆಂದು ಎಲ್ಲ ನಡುಗಿದರು: ಆದರೆ "ಅರ್ಜುನನ ಮಕುಟದ ಬೆಸುಗೆ ಮುರಿದುದು ಹರಿ ವರೂಥವ ಕುಸಿಯಲೊತ್ತಿದನಿಂತು ತಪ್ಪಿತು ತೀವ್ರ ಫಣಿಬಾಣ". ಹೀಗೆ ಕೃಷ್ಣ ಅರ್ಜುನನನ್ನು ಸಾವಿನ ದವಡೆಯಿಂದ ಪಾರುಮಾಡುತ್ತಾನೆ. ಇನ್ನು ಕರ್ಣಪರ್ವದ ಕೊನೆಯ ಘಟ್ಟ. ಸರ್ಪಬಾಣವನ್ನು ಮತ್ತೆ ತೊಡುವಂತೆ ಮಾಡಿದ ಶಲ್ಯನ ಸಲಹೆಯನ್ನು ಕರ್ಣ ತಳ್ಳಿಹಾಕಲು "ಎನ್ನದು ಮರುಳುತನ ಕುಲಹೀನನಲಿ ಗುಣವರಸಲೇಕೆಂದೆನುತ ಧುಮ್ಮನಿಕ್ಕಿದನು ಧಾರುಣಿಗೆ"; ಅಂದರೆ ಶಲ್ಯ ಸಾರಥಿತನವನ್ನು ಬಿಟ್ಟು ಹೋಗುತ್ತಾನೆ, ಕರ್ಣ ಒಬ್ಬಂಟಿಯಾಗುತ್ತಾನೆ. ಖಾಂಡವವನದಹನದ ಸನ್ನಿವೇಶದಲ್ಲಿ ತಾನು ಎರಡಾಗಿ ಮಾಡಿದ್ದ ಹಾವೊಂದರ ಮುಂಡ ಬೆಂಕಿಗೆ ಬಿದ್ದು ಜೀವವುಳಿದಿದ್ದು "ಎನ್ನ ಹಗೆಯಲಿ ಮರಣ ನಿನಗೆನುತ" ಹಗೆ ಸಾಧಿಸುತ್ತಿದ್ದು ಕರ್ಣನ ಬತ್ತಳಿಕೆಯನ್ನು ಹೊಕ್ಕಿದ್ದ ಅಶ್ವಸೇನ ಮತ್ತೆ ತನ್ನನ್ನು ತೊಡದ ಕರ್ಣನ ಮೇಲೆ ಕೋಪಗೊಂಡು ಹೋದಾಗ "ತಾನೇ ಮರಳಿದನು ನೀನವಧರಿಸಿಕೊಳ್ಳೆನುತ" ದೈತ್ಯರಿಪು ನಗುತ್ತ ನುಡಿಯುತ್ತಾನೆ. ಕರ್ಣನನ್ನು ತೊರೆದುಹೋಗಿ ಅವನ ಶಕ್ತಿಕುಂದಿದುದು ಒಂದೆಡೆಯಾದರೆ, ಶತ್ರು ಅಶ್ವಸೇನ ತಾನಾಗಿ ಹೊರಟು ಹೋದುದು ಕೃಷ್ಣನ ಈ ನಗುವಿಗೆ ಕಾರಣ. ಇದರಿಂದ "ವಿಜಯಸಿರಿ ಮುಂಕೊಂಡು ಮನ್ನಿಸಿ ಭುಜಕೆ ಬಂದಳು ಕಲಿ ಧನಂಜಯನ". ಆನಂತರ ಕರ್ಣ ರಥದ ಚಕ್ರ ನೆಲದಲ್ಲಿ ಹೂತುಕೊಂಡಾಗ "ಎಸು ಮರುಳೆ ಗಾಂಡೀವಿ ಆಪತ್ತೆಸಗಿದಾಗಳೆ ಹಗೆಯ ಗೆಲುವುದು" ಎಂದು ಕೃಷ್ಣ ಸಲಹೆಯಿತ್ತಾಗ ಅರ್ಜುನ ಕರ್ಣನ ಮೇಲೆ ತನಗೆ ಆತ್ಮೀಯ ಭಾವನೆ ಮೂಡುತ್ತಿರಲು ಅವನನ್ನು ಕೊಲ್ಲಲಾಗದೆ ಚಿತ್ತಗ್ಲಾನಿಗೊಳಗಾಗುತ್ತಾನೆ. ಆಗ ಕೃಷ್ಣ ಮಾಡಿದ್ದೆಂದರೆ "ಬೀಸಿದನು ನಿಜ ಮಾಯೆಯನು ಡೊಳ್ಳಾಸದಲಿ ಹರಹಿದನು ತನುವನು ರೋಷವನು ಬಿತ್ತಿದನು ನರನ ಮನದಲಿ ಕಲಿಮಾಡಿ". ಅರ್ಜುನನ ಬಾಣಾಹತಿಗೆ ಬಿದ್ದ ಕರ್ಣ "ಸಲಹಿದೊಡೆಯನ ಜೋಳವಾಳಿಗೆ ತಲೆಯ ಮಾರುವುದೊಂದು ಪುಣ್ಯದ ಫಲವು" ಎಂದು ಧನ್ಯಭಾವದೊಡನೆ "ಮರಣದ ಹೊತ್ತು ಕೃಷ್ಣನ ಕಾಬ ಸುಕೃತಫಲ"ವೂ ತನ್ನದಾಯಿತೆಂದು ಬಗೆದು "ಹೊರಗೊಳಗೆ ಹರಿ ತಾನೆಂಬಭೇದವ ತಿಳಿದು ನಿಜದೆತ್ತರ ಸಮಾಧಿಗೆ" ಸಲ್ಲುತ್ತಾನೆ. ಅವನ ದೇಹದಿಂದ ಅಸು ಇನ್ನೂ ಹೋಗದಿರುವಾಗ ಕೃಷ್ಣ ಬ್ರಾಹ್ಮಣವೇಷದಿಂದ ಬಂದು "ಈ ಕುಂಡಲವನು" ಎಂದು "ನಿನ್ನಯ ಹೃದಯದೊಳಗಿರ್ದಮಲ ಗಂಗಾಜಲವ ತೆಗೆದೆನಗೆ ಹದುಳದಿಂದೆರೆ ಧಾರೆಯನು" ಎಂದೂ ಸೂಚಿಸಲು ಕರ್ಣ ಬಾಣದಿಂದ ಹೃದಯವನ್ನು ಬಗಿದು ಧಾರಾಜಲವನ್ನಾಗಿ ಮಾಡಿಕೊಂಡು ಕೃಷ್ಣನಿಗೆ ಕುಂಡಲ ದಾನಮಾಡಲು "ಪರಮ ಕರುಣಾಸಿಂಧು ಕರ್ಣಂಗಿರದೆ ನಿಜಮೂರ್ತಿಯನು ತೋರಿದನುರುತರ ಪ್ರೇಮದಲಿ ಮುಕುತಿಯ ಪದವ ನೇಮಿಸಿದ". ಕರ್ಣನ ದೇಹದಲ್ಲಿದ್ದ ಪರಮತೇಜಃಪುಂಜವೊಂದು ಹೊಮ್ಮಿ ಇನಮಂಡಲಮಧ್ಯದಲ್ಲಿ ಲೀನವಾಗುತ್ತದೆ. ಹೀಗೆ ಅರ್ಜುನನ್ನು ಉಳಿಸಿದ ಕೃಷ್ಣ ಕರ್ಣನಿಗೂ ಕರುಣೆ ತೋರಿದ.
 • ಕೃಷ್ಣನ ನೇರ ಮಧ್ಯಪ್ರವೇಶದ ಕೊನೆಯ ಘಟ್ಟವೆಂದರೆ ಗದಾಪರ್ವದಲ್ಲಿನ ಗದಾಯುದ್ಧದ ಸನ್ನಿವೇಶ. ಎಲ್ಲರನ್ನೂ ಕಳೆದುಕೊಂಡು ದುರ್ಯೋಧನನು "ಇದೆ ಸರೋವರವೊಂದು ಹರಿದೂರಲಿ ಭುವನಖ್ಯಾತ ತನ್ಮಧ್ಯದಲಿ ಮುಳುಗಿಹೆನೊಂದುದಿನ ಪರಿಯಂತ ಸಲಿಲದಲಿ" ಎಂದು ಸಂಜಯನೊಡನೆ ಹೇಳಿ ದ್ವೈಪಾಯನ ಸರೋವರವನ್ನು ಹೊಕ್ಕು "ಸಲಿಲಸ್ತಂಭವಿದ್ಯೆಯನರಸ ಚಿಂತಿಸಿದ". ಅವನನ್ನು ಹುಡುಕಿಕೊಡು ಕುರುಕ್ಷೇತ್ರದಲ್ಲೆಲ್ಲೂ ಕಾಣದಿದ್ದಾಗ, ಶಬರಪತಿಯೊಬ್ಬ ನೀರು ಕುಡಿಯಲು ಹೋಗಿದ್ದ ತಮಗೆ ಸರೋವರದ ದಡದಲ್ಲಿ "ಕಂಡೆವು ರಾಯನಂಘ್ರಿಗಳಾಣೆ" ಎಂದುದನ್ನು ಕೇಳಿ ಪಾಂಡವರು ಕೃಷ್ಣನೊಡನೆ ಅಲ್ಲಿಗೆ ಬರುತ್ತಾರೆ. ಭೀಮನ ಆಟೋಪದ ಮಾತುಗಳನ್ನು ಕೇಳಿದ ಸುಯೋಧನ "ಜಲಧಿ ಮಧ್ಯದೊಳೇಳ್ವ ಬಡಬಾನಲನವೊಲು" ಸರೋವರದಿಂದ ಮೇಲೆದ್ದು ಬರುತ್ತಾನೆ. ದುರ್ಯೋಧನನ ಆಹತಿಗೆ ಭೀಮ ಮೂರ್ಚೆ ಹೋದಾಗ ಅರ್ಜುನ "ನೀವು ಮೊದಲಲಿ ಬೆಸಸಿದಿರಿ ಮಾಯಾವಿಗಳ ಮಾಯೆಯಲಿ ಗೆಲುವುದು ದೈವಕೃತಿಯಿದು ರಾಜಮಂತ್ರವ ಸಾರತರವೆಂದು ಈ ವಿರೋಧಿಯ ಧರ್ಮಗತಿ ಸಂಭಾವವನು ಕರ್ತವ್ಯಭಾವವ ನೀವು ಬಲ್ಲಿರಿ" ಎಂದು ನೆನಪಿಸಿದಾಗ ಕೃಷ್ಣ "ಆ ಕ್ಷಣದನಿಲಸ್ಮರಣೆಯನು ಹರಿ ಮಾಡಿ"ದಾಗ ಭೀಮ "ಚೇತರಿಸಿ ಸರ್ವಾಂಗದಲಿ ಜೀವಸಮೀರ ಪಸರಿ"ಸುತ್ತಾನೆ. ಆನಂತರ ಭೀಮ "ತೊಡೆಯ ಹೊಯ್ದಾರುವ ಮುರಾರಿಯ ನಡೆಯುಡಗದೀಕ್ಷಿಸುತ ದೂರಕೆ ಸಿಡಿದ ಗದೆಯನು ತುಡುಕಿ ನೃಪತಿಯ ತೊಡೆಗೆ ಲಾಗಿಸಿದ". ದುರ್ಯೋಧನ ದೊಪ್ಪನೆ ಬಿದ್ದ. ಆ ಹೊತ್ತಿಗೆ ಅಲ್ಲಿಗೆ ಬಂದ ಬಲರಾಮ "ನಾಭಿಯಿಂದವೆ ಕೆಳಗೆ ಕೈಮಾಡುವುದು ಸಲ್ಲದು ಗದೆಯ ಕದನದಲಿ" ಎಂದು ಭೀಮ ದುರ್ಯೋಧನನ್ನು ಕೊಂದ ಪರಿಯನ್ನು ಝಂಕಿಸಿದರೆ, ದುರ್ಯೋಧನನೇ "ಕುರುವೀರವಂಶದ ರಾಯರೆಮ್ಮೊಳು ವೈರಬಂಧವ ಬಿತ್ತಿ ಕೊಂದವ ಕೃಷ್ಣ ನೀನು" ಎಂದುದಲ್ಲದೆ, "ಕೋಪವನು ಕೊನರಿಸುವ ನೃಪರನುತಾಪವನು ತೂಳುವ ಕುಬುದ್ಧಿವ್ಯಾಪಕನು ನೀ ವೈರಿಯಲ್ಲದೆ ಭೀಮನಲ್ಲೆಂದ". ಮಿಕ್ಕವರನ್ನು ಕಳಿಸಿ ಕೃಷ್ಣ ಪಾಂಡವರ ಜೊತೆ ಬಂದು ಕೌರವೇಂದ್ರನ ಶೂನ್ಯಶಿಬಿರವನ್ನು ಹೊಕ್ಕು, ಎಲ್ಲರನ್ನೂ ಕೆಳಗಿಳಿಸಿ ಕೊನೆಗೆ ಪಾರ್ಥನಿಗೆ ಹೇಳಲು ಅವನು 'ಮೊದಲು ನೀವಿಳಿಯಿರಿ' ಎಂದಾಗ ಕೃಷ್ಣ "ಎಲೆ ಮರುಳೆ ನಾ ಮುನ್ನಿಳಿಯೆ ನೀನುಳಿವಲಾ" ಎಂದು ಬೈದು ಅವನನ್ನು ಕೆಳಗಿಳಿಸಿ ಆನಂತರ ತಾನು ಇಳಿದ ಕ್ಷಣವೇ ರಥವು "ಛಟಛಟಿಲೆಂದು ಕಿಡಿಯಿಂದಲುಚ್ಚಳಿಸಲುರಿದುದು ತೇರು ಕೇಸುರಿ ನಭವನಪ್ಪಳಿಸೆ". ಇದು ದೈವಿಕಾಸ್ತ್ರದ ಮಹಿಮೆ ಎಂದು ಕೃಷ್ಣನೆನ್ನಲು ಅರ್ಜುನನು "ನೀವು ಬಲ್ಲಿರಿ ದೇವ ನೀ ಮಾಯಾವಿ ಮಾಯಾಪಾಶಬದ್ಧರು ನಾವು ನಾವು ಬಲ್ಲೆವೆ ನಿಮ್ಮನು" ಎಂದು ಕೃಷ್ಣನ ಚರಣಗಳಿಗೆರಗಿದ.
 • ಇತ್ತ ತೊಡೆಮುರಿದು ನೆಲ್ಕಕೆ ಬಿದ್ದಿದ್ದ ಸುಯೋಧನನ್ನು ಕಂಡು ಮುಳಿದ ಅಶ್ವತ್ಥಾಮನು ತಾನು "ರಜನಿಯೊಳಾ ಕುಠಾರರ ತಲೆಗಳನ್ನು ತಹೆನು" ಎಂದು ರೌದ್ರಾವೇಶದಿಂದ ನುಡಿದಾಗ, ದುರ್ಯೋಧನನು ಹೇಳುವ ಮಾತು: "ಬಕನ ಧರ್ಮಸ್ಥಿತಿಯವೊಲು ದೇವಕಿಯ ಮಗ ಕಾದಿಹನಲೇ ಕೌಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದು?" ಎಂದು. ಅದರಂತೇ ಆಯಿತು. ಪಾಂಡವರ ತಲೆಗಳನ್ನು ಕತ್ತರಿಸಿದೆನೆಂದು ಭಾವಿಸಿದ ಅಶ್ವತ್ಥಾಮನು ಉಪಪಾಂಡವರ ತಲೆಗಳನ್ನು ಕತ್ತರಿಸಿಬಿಟ್ಟ. ದುರ್ಯೋಧನ ಹೇಳಿದಂತೆ ಕೃಷ್ಣ ಪಾಂಡವರನ್ನು ಕಾಪಾಡಿಬಿಟ್ಟನೆಂಬುದನ್ನರಿತ ಅವನು ಮಂತ್ರಿಸಿ ಮಹಾ ವೈಷ್ಣವಾಸ್ತ್ರವನ್ನು ಬಿಟ್ಟ; ಅದು ಭೂಮಂಡಲವನ್ನೆಲ್ಲ ವ್ಯಾಪಿಸುವಂತೆ ಹೊರಟು ಅಭಿಮನ್ಯುವಿನ "ರಾಣಿವಾಸದುದರೋದ್ಭವದ ಗರ್ಭಕೆ ಮುರಿದು ಹರಿದುದು". ಆದರೆ ಕೃಷ್ಣನ "ಮಹಾಸುದರ್ಶನ ಬಿಗಿದು ಸುತ್ತಲು ವೇಢೆಯಾಯ್ತುತ್ತರೆಯ ಗರ್ಭದಲಿ". ಮುಂದೆ ಪುತ್ರಶೋಕತಪ್ತನಾದ ಧೃತರಾಷ್ಟ್ರನ ಮುಂದೆ ನಿಂತು ಧರ್ಮರಾಯನು ಕ್ಷಮೆ ಕೇಳಿದಾಗ ಅವನನ್ನು ಅಪ್ಪಿಕೊಂಡ, ಆದರೆ ಭೀಮ ಮುಂದೆ ನಿಲ್ಲಲು ಅವನನ್ನು ಅಪ್ಪಲು ಹೋದಾಗ ಕೃಷ್ಣ ಅವನನ್ನು "ಹಿಂದಿಕ್ಕಿ ಲೋಹದ ಭೀಮನನು ಮುಂದಿರಿಸಿಡೆ" ಅದು "ನುಗ್ಗಾಗಿ ಬಿದ್ದುದು ನೃಪನ ತೆಕ್ಕೆಯಲಿ". ಆನಂತರ ಗಾಂಧಾರಿಯ ಮುಂದೆ ಧರ್ಮರಾಯ ಕ್ಷಮೆ ಕೇಳಲು "ತಾಮಸಬೀಜಶೇಷದ ವನಜಮುಖಿ" ಅವನ ಉಗುರುಗಳ ಕಡೆ ನೋಡಲು ಅವು ಹೊತ್ತು ಉರಿದುವು; ಇದನ್ನು ಕಂಡ ಇತರ ಪಾಂಡವರು ಕೃಷ್ಣನ ಪಕ್ಕ ಬಂದು ನಿಂತಾಗ ಅವನು ಅವರಿಗೆ ಅಭಯವಿತ್ತ. ಕೊನೆಗೆ "ನಿಮ್ಮಧಿಕ ರೋಷದ ಹಗರಣದ ಹಗೆ ಹೋಯಿತು" ಎಂದು ಮುರಾರಿ ನಗುತ್ತ ಹೇಳುತ್ತಾನೆ. ಅಲ್ಲಿಂದ ಹಸ್ತಿನಪುರಕೆ ಬಂದು ಧರ್ಮರಾಯನ ಪಟ್ಟಾಭಿಷೇಕ ನಡೆದ ಮೇಲೆ "ನದಿಯ ನಂದನನನು ಪರಾನಂದದಲಿ ಸೇರಿಸಿ ಪರಮ ಪರಿತೋಷದಲಿ ಪಯಣವ ಮಾಡಿದನು ಮುರವೈರಿ ನಿಜಪುರಿಗೆ".
 • ಹೀಗೆ ಇಡೀ ಭಾರತದ ಎಲ್ಲೆಡೆಯೂ ಕೃಷ್ಣನೇ: ಅನೇಕ ವೇಳೆ ಕಾಣಿಸದೆ. ಪಾಂಡವರು ಸಂಪೂರ್ಣ ಗೆಲವನ್ನು ಪಡೆಯುವವರೆಗೂ ಅವರೊಡನಿದ್ದು ಮಾರ್ಗದರ್ಶನ ಮಾಡುತ್ತಾನೆ, ಮುಂದಾಗಬೇಕಾದುದನ್ನು ನಿರ್ದೇಶಿಸುತ್ತಾನೆ, ಲೌಕಿಕ ಪರಿಭಾಷೆಯಲ್ಲಿ ಹೇಳಬೇಕಾದರೆ ಗುರಿಯನ್ನು ಸಾಧಿಸಲು ಅನೇಕ ವೇಳೆ ಹುನ್ನಾರಗಳನ್ನು ಮಾಡುತ್ತಾನೆ, ದಿಗಿಲುಗೊಂಡಾಗ ಪಾಂಡವರನ್ನು ಹುರಿದುಂಬಿಸುತ್ತಾನೆ, ಸಂದಿಗ್ಧ ಮನಸ್ಕರಾದಾಗ ಅದನ್ನು ನಿವಾರಿಸುತ್ತಾನೆ. ಒಟ್ಟಿನಲ್ಲಿ, ಕೃಷ್ಣನಿಲ್ಲದಿದ್ದರೆ ಪಾಂಡವರೇ ಇಲ್ಲ ಎನ್ನುವಂತೆ ಅವರನ್ನು ಕಾಪಾಡುತ್ತಾನೆ. ಅದಕ್ಕಾಗಿ ಅವನು ಏನು ತಂತ್ರಗಳನ್ನು ಬೇಕಾದರೂ ಮಾಡುವವನು. ಯಾಕಂದರೆ ಅವನು 'ಜಗನ್ನಾಟಕಸೂತ್ರಧಾರಿ'. ಅವನ ಎಷ್ಟೋ ಕೃತ್ಯಗಳು ಅನ್ಯಾಯವೆಂದು ನಾವು ಹೇಳಬಹುದು, ಆದರೆ ಕುಮಾರವ್ಯಾಸನ ಮಟ್ಟಿಗೆ ಅವನು ಮಾಡಿದ್ದೇ ಸರಿ, ಕೊನೆಗೆ ಅವನ ತೀರ್ಮಾನವೇ ನಡೆಯುವುದು. His will be done ಎಂಬ ಮಾತನ್ನು ಕವಿ ನಮ್ಮ ನೆನಪಿಗೆ ತರುತ್ತಾನೆ. ಅವನು ಜಗದಂತರ್ಯಾಮಿ, ಸರ್ವಶಕ್ತ, ಖತೃಣಮಪಿ ನ ಚಲತಿ ತೇನ ವಿನಾಖ ಎಂಬುದು ಕವಿಯ ನಂಬಿಕೆ. ಹೀಗೆ ಮಹಾಭಾರತ ಕವಿಗೆ ಕೃಷ್ಣ ಕಥೆಯಾಗುತ್ತದೆ; ಅಂದರೆ ಮಹಾಭಾರತದ ದೊಡ್ಡ-ಚಿಕ್ಕ, ಒಳಿತು-ಕೆಡಕು ಎಲ್ಲವೂ ನಡೆಯುವುದು ಅವನ 'ಮಹಿಮೆ'ಯಿಂದ. ಇದನ್ನು ತಿಳಿಸುವುದೇ ಮಹಾಭಾರತ ರಚನೆಯ ಕವಿಯ ಗುರಿ.
 • ಕೃಷ್ಣನ ಈ ಸ್ವರೂಪ ರಹಸ್ಯದ ವಿಷಯವೇನಲ್ಲ; ಮಹಾಭಾರತದ ಮುಖ್ಯ ಪಾತ್ರಗಳೆಲ್ಲ ಈ ಸತ್ಯವನ್ನು ಅರಿತಿವೆಯೆಂಬುದು ಕವಿಯ ಹೇಳಿಕೆ. ಹೊರನೋಟಕ್ಕೆ ಅವನು ಮಾನವ ನಡವಳಿಕೆಯ ನಾಟಕವಾಡುತ್ತಾನೆ. ಕವಿ ಇದನ್ನು ಅಲ್ಲಲ್ಲಿ ಸ್ಪಷ್ಟಪಡಿಸುತ್ತಾನೆ. ನಿದರ್ಶನಕ್ಕೆ ದೌತ್ಯಕ್ಕಾಗಿ ಹಸ್ತಿನಾವತಿಗೆ ಬಂದ ಕೃಷ್ಣ ಕುಂತಿ ಬಂದಾಗ "ನಿಂದು ನರರಾಚರಣೆಗಳ ನಾಟಕವ ತಾನೇ ನಟಿಸಿ ತೋರಿದನು" ಎಂಬ ಮಾತು. ಶಿಶುಪಾಲವಧೆಯ ಸನ್ನಿವೇಶದಲ್ಲಿ ಭೀಷ್ಮನು "ಘನ ರಜೋಗುಣದಲ್ಲಿ ಚತುರಾನನ ತಮೋಗುಣದಲ್ಲಿ ಶಂಕರನೆನಿಸಿ ಸತ್ವಗುಣಾನುಗತಿಯಲಿ ವಿಷ್ಣುವೆಂದೆನಿಸಿ ಘನಜಗನ್ಮಯನಾಗಿ ಸರ್ವಾತ್ಮನು ಮಹಾಶ್ವರನೆನಿಪನೀತನ ನೆನಹನೀತನ ನಿಜವನರಿವ ಮಹಾತ್ಮರಾರು" ಎಂದು ವಿಸ್ಮಯಪಡುತ್ತಾನೆ. ಸಭಾಪರ್ವದ ಒಂಬತ್ತನೆಯ ಸಂಧಿಯ ಅರುವತ್ತೈದು ಪದ್ಯಗಳು ಭೀಷ್ಮನ ಕೃಷ್ಣಸ್ತುತಿಗೆ ಮೀಸಲಾಗಿವೆ. ಯುದ್ಧರಂಗದಲ್ಲಿ ಕೃಷ್ಣನನ್ನು ಕೆರಳಿಸಿದ ಭೀಷ್ಮ "ರೋಮರೋಮದೊಳಖಿಳ ಭುವನಸ್ತೋಮ ನಲಿದಾಡುವುದು ಗಡ ನಿಸ್ಸೀಮತನ ಗಡ" ಎಂದುದಲ್ಲದೆ, "ದೇವ ನೀ ದಿಟ ಕೊಲುವಡೆಯು ನಾ ಸಾವೆನೇ ತಾನಾವನೆಂಬುದ ದೇವರರಿಯಿರಲೈ" ಎಂದೆಲ್ಲ ಸ್ತುತಿಸಿ ತನ್ನ ಭಕ್ತಿಯಿಂದ ಕೃಷ್ಣನನ್ನು ಗೆಲ್ಲುತ್ತಾನೆ. ಭೀಷ್ಮನನ್ನು ಗೆಲ್ಲುವ ಬಗೆ ಹೇಗೆಂದು ಅವನನ್ನೇ ಕೇಳಲು ಧರ್ಮರಾಯನನ್ನು ಪ್ರಚೋದಿಸಿದ ಕೃಷ್ಣ ಅವನೊಡನೆ ಪಾಳಯಕ್ಕೆ ಬಂದಾಗ ಭೀಷ್ಮನು "ಯಂತ್ರಿ ಮಿಡಿದರೆ ಕಾದಿ ಬೀಳ್ವವು ಯಂತ್ರಮಯ ಹಾಹೆಗಳು ... ... ಯಂತ್ರಿ ಕೃಷ್ಣನು ನಾವು ನೀವೀ ತಂತ್ರವಖಿಲ ಚರಾಚರಂಗಳು ಯಂತ್ರರೂಪುಗಳೆಲ್ಲ ಕಾರಣವಿಲ್ಲ ನಿನಗೆ" ಎನ್ನುತ್ತಾನೆ; ದ್ರೋಣನೂ ಕೃಷ್ಣನ ಪರಿಯನ್ನು ಬಲ್ಲವನು: ತನ್ನನ್ನು ಗೆಲ್ಲುವ ಉಪಾಯದ ಬಗ್ಗೆ ತಿಳಿಯಲೋಸುಗ ರಾತ್ರಿ ಧರ್ಮರಾಯ ಬಂದಾಗ ದ್ರೋಣ ಕೃಷ್ಣನ ಮಹಿಮೆಯನ್ನು ವರ್ಣಿಸುವ ಪರಿಯಿದು: "ಜೀವಜಾತಕ್ಕೊಡೆಯನಾ ರಾಜೀವನಾಭನು" ಹಾಗೂ "ಇದು ಮುರಾರಿಯ ಲೀಲೆಗೋಸುಗ ಉದಯಿಸಿದ ಜಗವಿದರೊಳೊಬ್ಬನ ಸದೆವನೊಬ್ಬನು ಹಿಡಿದು ಸಲಹುವನೊಬ್ಬನೊಬ್ಬನಲಿ ಇದರೊಳಾತಂಗಿಲ್ಲ ಕರುಣಾಸ್ಪದತೆ ನಿಷ್ಕಾರುಣ್ಯ ಭೂಯಂತ್ರದ ವಿನೋದಕ್ರೀಡೆ ಕೃಷ್ಣನದೆಂದನಾ ದ್ರೋಣ".
 • ವಿದುರ ತನ್ನ ಕೃಷ್ಣಸ್ತೋತ್ರದಲ್ಲಿ ದ್ರೌಪದಿಗೆ ಮಾತ್ರ ಸಮಾನನಾದವನು. ಕೃಷ್ಣಭಕ್ತಿಯಿಂದ ಅವನು ಹುಚ್ಚನೇ ಆಗಿಬಿಡುತ್ತಾನೆ; ದೌತ್ಯಕ್ಕೆಂದು ಹಸ್ತಿನಾವತಿಗೆ ಬಂದು ತನ್ನ ಮನೆಗೆ ಮೊದಲು ಬಂದುದನ್ನು ಕಂಡು ಅವನು ನಡೆದುಕೊಳ್ಳುವ ಪರಿ ಕುಮಾರವ್ಯಾಸನ ಪರಿಯೇ ಎಂದು ಕಾಣುತ್ತದೆ. "ವೇದದರಿಕೆಗಳಡಗದುಪನಿಷದಾದಿ ಸ್ತುತಿಯ ಗಡಣೆಗೆ ಹೋದ ಹೊಲಬಳವಡದ ಮುನಿಗಳ ಮಖಕೆ ಮನಗುಡದ ಕಾದಿ ಕಡಗುವ ತಾರ್ಕಿಕರು ಬೆಂಡಾದರಲ್ಲದೆ ನಿಜವನರಿಯದನಾದಿ ಸಿದ್ಧನ ಬರವ ಕಂಡು" "ತನುವ ಮರೆದನು ಪುಳಕಜಲದಲಿ ನೆನೆದು ನಾರಾಯಣನ ಪದದರುಶನದ ಹರುಷಾರಣ್ಯದಲಿ ಮನ ಹೊಲಬುದಪ್ಪಿದನು". "ಲೋಕ ಮೈಮರೆವಂದು ಜಲಧಿಗಳೌಕಿ ಹಳಚುವ ಹೊತ್ತು ತಾನಿಹನೇಕಮೇವಾದ್ವಿತೀಯ ಪರಮೈಕಹಂಯೆಂದು" ಎಂಬ ಅವನ ನಿತ್ಯತೆಯನ್ನರಿತವನು. ದುರ್ಯೋಧನನ ಆಸ್ಥಾನದಲ್ಲಿ ಕೃಷ್ಣ ತೋರಿದ ವಿಶ್ವರೂಪದರ್ಶನ ಕಾಲದಲ್ಲಿ ಗಾಂಧಾರಿ "ಲಕ್ಷ್ಮೀರಮಣ ಕೃಪೆ ಮಾಡು" ಎಂದು ಎರಗುತ್ತಾಳೇ; ಕೃಷ್ಣನ ಕೃಪೆಯಿಂದ ದೃಷ್ಟಿ ಪಡೆದ ಧೃತರಾಷ್ಟ್ರನು "ದೇವ ನಿಮ್ಮೀ ಅಂಗವಟ್ಟವ ಕಂಡು ಬಳಿಕೀ ಕಂಗಳಿತರವ ಕಾಣಲಾಗದು" ಎಂದು ಮತ್ತೆ ಕುರುಡಾಗಲು ಬಯಸುತ್ತಾನೆ.
 • ಅರ್ಜುನನ ವಿಷಯ ಹೇಳಲೇಬೇಕಾಗಿಲ್ಲ. ದ್ರೌಪದಿ ಸ್ವಯಂವರ ಸನ್ನಿವೇಶದಲ್ಲಿ ಮೊದಲ ಬಾರಿಗೆ ಕಂಡ ಕ್ಷಣದಿಂದ ಕೃಷ್ಣ ಅವನನ್ನು ಕೊನೆಯವರೆಗೂ ತನ್ನ ಕಣ್ಣರಿಕೆಯಲ್ಲಿಯೇ ಕಾಪಾಡಿದನು. ಇದನ್ನು ಅರ್ಜುನ ಎಲ್ಲರಿಗಿಂತ ಹೆಚ್ಚು ಸನಿಹದಿಂದ ಬಲ್ಲವನು. ಯುದ್ಧಪೂರ್ವದ ಅರ್ಜುನನ ವಿಷಾದದ ಕಾಲದಲ್ಲಿ ಅವನಿಗೆ ತನ್ನ ವಿಶ್ವರೂಪದರ್ಶನ ಮಾಡಿಸಿದಾಗ ಮೊದಲು ದಿಗಿಲುಗೊಂಡ ಅವನು ಕೊನೆಯಲ್ಲಿ "ವಿಶ್ವ ನಿನ್ನಯ ಮಾಯೆ ನಿರ್ಮಲ ವಿಶ್ವರೂಪನು ನೀನು ಬಗೆವಡೆ ವಿಶ್ವ ನಿನ್ನೊಳು ಸುಳಿವುದಳಿವುದು ಲಲಿತಲೀಲೆಯಲಿ ವಿಶ್ವವಲ್ಲಭ ನೀನು ನಿನ್ನದು ವಿಶ್ವಪಾಲನೆ ವಿಶ್ವಚೇಷ್ಟಕ ವಿಶ್ವದಾಧಾರ" ಎಂದು ಅರಿತುಕೊಂಡ. ಕರ್ಣನೊಡನೆ ಕಾದಾಡುವಾಗ ಮತ್ತೆ ಅವನಿಗೆ ಮೋಹ ಆವರಿಸಿತು; ಆಗಲೂ ಕೃಷ್ಣ ಅವನ ಒಳತೋಟಿಯನ್ನು ನಿವಾರಿಸಲು ತನ್ನ ಮಾಯೆಯನ್ನು ಬೀಸಿದಾಗ ಅರ್ಜುನ "ಎನ್ನಖಿಳಗುಣದೋಷ ನಿನ್ನದು ಪುಣ್ಯಪಾಪದ ವಾಸಿ ನಮಗೇಕೆನುತ" ಮತ್ತೆ ಯುದ್ಧಕ್ಕೆ ತೊಡಗಿದ.
 • ಕರ್ಣ ಕೂಡ ಕೃಷ್ಣನ ಸ್ವರೂಪವನ್ನು ಅರಿತವನು. ಅಭಿಮನ್ಯುವಧೆಯ ಪ್ರಸಂಗದಲ್ಲಿ ದುರ್ಯೋಧನನಿಗೆ ಆತ "ಗೆಲವು ನಮಗೆಲ್ಲಿಯದು ಧರ್ಮಜ ಸಿಲುಕುವುದಿದು ತಾನಿಲ್ಲ ಕೃಷ್ಣನ ನೆಳಲು ದಿಟವುಂಟಾದೊಳಗಾಗರು ವಿರೋಧಿಗಳು ನೆಲನ ತಿಣ್ಣವ ತಿದ್ದಲೋಸುಗ ಸುಳಿದನರಿಯಾ ಕೃಷ್ಣನೀತನ ಬಲದವರಿಗೆಂತಹುದು ಬಾಧೆಗಳು" ಎನ್ನುತ್ತಾನೆ; "ಕೃಷ್ಣ ಭಕ್ತರ ಪರಿಭವವು ಜೀವರಿಗೆ ಪಥ್ಯವೇ" ಎನ್ನುತ್ತಾನೆ. ಅರ್ಜುನನ ಶರಾಘಾತದಿಂದ ಕೆಳಗುರುಳಿದ ಕರ್ಣನ ಜೀವ ಇನ್ನೂ ಹೋಗದಿದ್ದಾಗ, ಅವನಲ್ಲಿಗೆ ಕೃಷ್ಣ ಬ್ರಾಹ್ಮಣವೇಷದಿಂದ ಬರುತ್ತಾನೆ, "ಮೇಗಳತಿಶಯ ಪದವನೊಲುವಡೆ ಮನದ ಬಯಕೆಗಳ ಈಗಳೀವುದು" ಎಂದು ಹೇಳಿದಾಗ "ಆಗಳರಿದಾ ಕರ್ಣ ನಸುನಗುತಿರ್ದ ಮನದೊಳಗೆ". ಕೃಷ್ಣ ಯಾರೆಂದು ಅವನು ಬಲ್ಲ, ಅವನೀಗ ಬಂದಿರುವುದೇಕೆಂದು ಬಲ್ಲ, ಅವನ ಸ್ವರೂಪವೇನೆಂಬುದೂ ಅವನಿಗೆ ತಿಳಿದಿದೆ. ಹೀಗಾಗಿಯೇ ಅವನಿಗೆ ಕೃಷ್ಣ ಮೋಕ್ಷವನ್ನು ದಯಪಾಲಿಸಿದುದು. ಧರ್ಮರಾಯ ಎಲ್ಲದಕ್ಕೂ ಕೃಷ್ಣನನ್ನೇ ನಂಬಿದವನು; ಪ್ರತಿಯೊಂದು ಹೆಜ್ಜೆಯಲ್ಲೂ ಅವನ ಮಾರ್ಗದರ್ಶನ ಪಡೆಯುವವನು. ದ್ರೌಪದಿಯಾದರೋ ಪರಮ ಕೃಷ್ಣಭಕ್ತೆ. ದುಶ್ಶಾಸನ ತನ್ನ ಸೀರೆ ಸೆಳೆವ ಸಂದರ್ಭದಲ್ಲಿ ಯಾರೂ ತನ್ನ ನೆರವಿಗೆ ಬಾರದಿದ್ದಾಗ ಕೃಷ್ಣನನ್ನೇ ನಂಬಿದವಳು; ಅವಳ ಕೃಷ್ಣಸ್ತುತಿ ಕಟ್ಟಿಕೊಡುವುದು ಕವಿಯ ಪರಿಕಲ್ಪನೆಯ ಕೃಷ್ಣನನ್ನೇ. ದೂರ್ವಾಸಾತಿಥ್ಯ ಪ್ರಸಂಗದಲ್ಲಿಯೂ "ಶ್ರೀ ರಮಾವರ ತ್ಯಕುಲ ಸಂಹಾರ ಭಕ್ತಜನಾರ್ತಿಹರ ಭವದೂರ ಸಕಲ ಚರಾಚರಾತ್ಮಕ ದುಷ್ಟ ಕಂಸಹರ ಚಾರುಗುಣ ಗಂಭೀರ ಕರುಣಾಕಾರ ವಿಹಿತ ವಿಚಾರ ಪಾರಾವಾರ ಹರಿ" ಎಂಬುದು ದ್ರೌಪದಿಯ ಸ್ತುತಿ. ಅದಕ್ಕನುಗುಣವಾಗಿ ಅವಳ ಎಲ್ಲ ಕಷ್ಟದ ಸನ್ನಿವೇಶದಲ್ಲಿಯೂ ನೆರವಿಗೆ ಬರುವವನು ಕೃಷ್ಣ. "ಕರುಣಿ ನೀ ಕಾರುಣ್ಯ ಪಾತ್ರದ ತರಳೆ ನಾ ತಾ ದೀನಾರ್ತಿ ದುಃಖಿತೆಯಾನು ಜಗವರಿಯೆ ಪರಮಪಾಲಕ ನೀನೆ ಗತ್ಯಂತರರದ ವಿಹ್ವಲೆ ತಾನಲಾ". ದುರ್ಯೋಧನನೂ "ಈ ಮುರಹರನು ಹರಿಯೆಂದು ಮುನ್ನದನರಿತಿಹೆನು" ಎಂದು ತಿಳಿದವನು. ದೌತ್ಯಕ್ಕಾಗಿ ತನ್ನ ಆಸ್ಥಾನಕ್ಕೆ ಬಂದು ಸಂಧಿಯ ಪ್ರಸ್ತಾಪ ಮಾಡಿದಾಗ ದುರ್ಯೋಧನನೇ ಕೃಷ್ಣನನ್ನು "ಪರತರವಸ್ತು" ಎಂದು ವರ್ಣಿಸುತ್ತಾನೆ; "ಈತನಂತರ್ಯಾಮಿ ಜೀವವ್ರಾತದಲಿ ಜನಜನಿತವಿದು ಜಗವೀತನಾಜ್ಞೆಯೊಳೊಲೆವುದು" ಎಂದು ತಿಳಿದವನು; "ಕೊಲುವನನ್ಯರನನ್ಯರಿಂದವೆ ಕೊಲಿಸುವನು ಕಮಲಾಕ್ಷನಲ್ಲದೆ ಉಳಿದ ಜೀವವ್ರಾತಕೀ ಸ್ವಾತಂತ್ರ್ಯವಿಲ್ಲ" ಎಂದು ಅವನು ಬಲ್ಲ; "ಇಳಿದನವನಿಗೆ ಧಾರುಣಿಯ ಹೊರೆಗಳೆಯಲೋಸುಗ ನಮ್ಮೊಳಗೊಳಗೆ ವೈರವ ಬಿತ್ತಿ ಬರಿಕೈವನು ಮಹಾಬಲವ" ಎಂಬುದನ್ನರಿತವನು; ಕೊನೆಗೆ "ಕೈದಣಿಯೆ ಹೊಯ್ದಾಡುವೆನು ಕೃಷ್ಣನ ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲ" ಎಂದು ತೀರ್ಮಾನಿಸಿದವನು.
 • ಕೃಷ್ಣ ಕೂಡ ತನ್ನ ಸ್ವರೂಪವನ್ನು ಕೆಲವು ಸನ್ನಿವೇಶಗಳಲ್ಲಿ ವ್ಯಕ್ತಪಡಿಸುತ್ತಾನೆ. "ದೇವನೆಂದೇ ನೀವು ಬಗೆವಿರಿ ದೇವತನವೆಮಗಿಲ್ಲವೆಂಬುದ ನಾವು ಬಲ್ಲೆವು" ಎಂದು ಹೇಳಿಕೊಂಡರೂ, ಕೃಷ್ಣನೇ ಹೇಳುವ ಇನ್ನೊಂದು ಮಾತು ಹೀಗಿದೆ: "ಭಂಟರಾವ್ ಭಕ್ತರ್ಗೆ ನೆನವರು ನಂಟರೆಮಗೆ ಒಲಿದಂತೆ ಹೊಗಳಿದೊಡೆ ಎಂಟು ಮಡಿ ಮಾಡಿ ಮೆಚ್ಚುವೆವು ಮೆಚ್ಚೆವು ತರ್ಕಸಾಧಕರ". "ಬಸುರೊಳಗೆ ಬ್ರಹ್ಮಾಂಡಕೋಟಿಯ ಮುಸುಕಿಕೊಂಡಿಹ ನಾ ಸಹಿತ .. .. ಎಸುಗೆಯಲಿ ತೊಲಗಿಸುವ ಅಸಮ ಸಾಹಸ" ಎಂದು ಕರ್ಣನ ಸಾಹಸವನ್ನು ಕೃಷ್ಣ ಹೊಗಳವುದನ್ನು ಕಾಣಬಹುದು. ದ್ವೈಪಾಯನ ಸರೋವರದಲ್ಲಿ ಅಡಗಿದ್ದರಿಂದ ದುರ್ಯೋಧನ ಎಲ್ಲೂ ಕಾಣಿಸದಾದಾಗ ಧರ್ಮರಾಯನು "ಆವುದಿಲ್ಲಿಯ ವಿಧಿಯ ಸಮರ ವ್ಯಾವಹಾರಿಕ ವಿಷಯ ತಪ್ಪದೆ ಬೆಸಸುವುದು" ಎಂದು ಕೇಳಿಕೊಂಡಾಗ ಕೃಷ್ಣ ವಿಷ್ಣುವಾದ ತಾನೇ ಅನೇಕ ಅವತಾರಗಳನ್ನೆತ್ತಿ ಹಿರಣ್ಯಕಶಿಪು, ಕಾಲನೇಮಿ, ಭಸ್ಮಾಸುರ, ವೃತ್ರಾಸುರ, ರಾವಣ, ಕಂಸ, ದಂತವಕ್ರ, ಸಾಲುವ, ಮಾಗಧ ನರಕ ಗ ಇವರನ್ನೆಲ್ಲ ಕೊಂದವನು ಎಂದು ಹೇಳಿಕೊಳ್ಳುತ್ತಾನೆ.
 • ಇಂತಹ ಕೃಷ್ಣ ಭಾರತದಲ್ಲಿ ಸರ್ವಕ್ಕೂ ಕಾರಣ ಎಂಬುವ ಭಾವನೆ ಭಕ್ತಮನೋಭಾವದ ಓದುಗರಿಗೆ ಬರುವುದರಲ್ಲಿ ಅನುಮಾನವಿಲ್ಲ. ಹೀಗಾಗಿಯೇ ಕೆಲವರು ಕುಮಾರವ್ಯಾಸಭಾರತದಲ್ಲಿ ಕೃಷ್ಣನದು ನಾಯಕ ಪಾತ್ರ ಎಂದು ಹೇಳುತ್ತಾರೆ. "ಕೃಷ್ಣ ಮನುಷ್ಯ ಜೀವನದಲ್ಲಿ ಕಪ್ರವೇಶಕಿ ಮಾಡಿದವನು; ರಂಗದ ಮೇಲೆ ಬಂದ ಮೇಲೆ ಅವನು ತೊಡುವ ವೇಷಗಳಿಗೆ ಲೆಕ್ಕವಿಲ್ಲ. ಆದರೆ ಈ ವೇಷಗಳು ಅವನ ನಿಜವನ್ನು ಮುಚ್ಚುವುದರ ಬದಲಾಗಿ ಪ್ರಕಟಿಸುತ್ತವೆ". ಕಾವ್ಯದಲ್ಲಿ ಪಾತ್ರ ಎಂದರೆ ಎಂತಹುದು ಎಂಬುದನ್ನು ನಾವು ವಿವೇಚನೆ ಮಾಡಬೇಕಾಗಿದೆ. ಕಾವ್ಯ ಹೇಳಿ ಕೇಳಿ ಮಾನವ ಬದುಕಿನ ಆಗುಹೋಗುಗಳ, ಗುಣ-ರೂಪಗಳ, ವ್ಯಕ್ತಿಸ್ವಭಾವ-ಮನಃಸ್ಥಿತಿಗಳ, ತಾಕಲಾಟ-ನೆಮ್ಮದಿಗಳ, ಒಳತೋಟಿಗಳ, ಸಣ್ಣತನ-ಹಿರಿತನಗಳ ಚಿತ್ರಣ. ವ್ಯಕ್ತಿಗಳನ್ನು ವಿವಿಧ ಸನ್ನಿವೇಶಗಳಲ್ಲಿಟ್ಟು ಅಲ್ಲಿ ನಡೆದುಕೊಳ್ಳುವ ರೀತಿಯ ಮೂಲಕ ಅವನ ಗುಣಸ್ವರೂಪವನ್ನು ಈ ಗಾತ್ರದ ಸಾಹಿತ್ಯಕೃತಿಯೊಂದು ಕಟ್ಟಿಕೊಡುತ್ತದೆ. ಕೃಷ್ಣನನ್ನು ಪದೇ ಪದೇ ಲೀಲಾಮಯ, ಸೃಷ್ಟಿ-ಸ್ಥಿತಿ-ಲಯಕರ ಎಂದು ಕರೆದು ನೇರವಾಗಿಯೇ ದೇವರೆಂದು ಬಿಂಬಿಸಿದಾಗ ಪಾತ್ರವನ್ನು ಕಟ್ಟಿಕೊಡುವ ಪ್ರಮೇಯವೆಲ್ಲಿ ಬರುತ್ತದೆ? ಕೃಷ್ಣನೇ ಎಲ್ಲದರ ಕಾರಣ, ಪರಿಣಾಮ; ಅವನೆಂದೂ ಮಾನವನಂತೆ ಮಾನಸಿಕ ಸಂರ್ಷಕ್ಕೆ ಒಳಗಾಗುವುದಿಲ್ಲ, ಸರಿ-ತಪ್ಪುಗಳಾವುದು ಎಂಬ ಸಂದಿಗ್ಧಕ್ಕೆ ಬೀಳುವುದಿಲ್ಲ; ಕಷ್ಟ-ಸುಖ, ನೋವು-ನಲಿವು, ಗೆಲವು-ಸೋಲು - ಇಂತಹ ಯಾವ ದ್ವಂದ್ವ ಭಾವವನ್ನೂ ಅವನು ಅನುಭವಿಸುವುದಿಲ್ಲ; ಅವನು 'ಭವ'ನಾದ್ದರಿಂದ ಅವನಿಗೆ 'ಅನುಭವ'ವೇ ಇಲ್ಲವಲ್ಲ! ಹೀಗಾಗಿ ಅವನನ್ನು 'ಪಾತ್ರ' ಎಂದು ಹೇಗೆ ಕರೆಯುವುದು? ರಂಗ ಅವನೇ ಸೃಷ್ಟಿಸಿದ್ದು; ಪಾತ್ರಗಳೂ ಅವನ ಸೃಷ್ಟಿಯೇ; ನಾಟಕದ ಓಟಕ್ಕೂ ಅವನೇ ಕಾರಣ; ನಾಟಕದ ಹಿಂದುಮುಂದೆಲ್ಲ ಅವನವೇ. ಆದ್ದರಿಂದ ಅವನು ಮಾಡುವುದು ನಟನೆಯಾಗುವುದಿಲ್ಲ. ಕುಮಾರವ್ಯಾಸ ಕೃಷ್ಣನಿಗೆ ನೇರವಾಗಿ ದೈವತ್ವವನ್ನು ಆರೋಪಿಸದಿದ್ದು, ಅವನು ಈ ಬಗೆಯಲ್ಲಿ ನಡೆದುಕೊಂಡಿದ್ದರೆ ಅದನ್ನು ನಟನೆ ಎನ್ನಬಹುದಾಗಿತ್ತು. ಅವನು ಸೂತ್ರಧಾರಿ, ಪಾತ್ರಧಾರಿಯಲ್ಲ. ಸೂತ್ರ ಹಿಡಿದವನು ಪಾತ್ರಗಳನ್ನಾಡಿಸುತ್ತಾನೆಯೇ ಹೊರತು ತಾನೇ ಪಾತ್ರವಾಗಲಾರ. ಕುಮಾರವ್ಯಾಸನ ಕೃಷ್ಣನೂ ಹಾಗೆಯೇ.

ಪಾತ್ರಗಳು[ಸಂಪಾದಿಸಿ]

 • ಆದರೆ ಈ ಕಾವ್ಯದ ಅನೇಕ 'ಪಾತ್ರ'ಗಳು ಮನಸೆಳೆಯುವುದಂತೂ ನಿಜ. ಮಹಾಭಾರತದಲ್ಲಿನ ನೂರಾರು ಪಾತ್ರಗಳು ಅಸಂಖ್ಯ ಬಿಡಿ ಮತ್ತು ಸಂಮಿಶ್ರ ಭಾವಗಳನ್ನು ತಮ್ಮಲ್ಲಿ ತುಂಬಿಕೊಂಡು ಕಣ್ಣಿಗೆ ಕಟ್ಟುತ್ತವೆ. ಇದರಿಂದ ಓದುಗನಿಗೆ ತನ್ನ ಯಾವುದೋ ಪ್ರತಿರೂಪವನ್ನು ಅಲ್ಲಿ ಕಾಣಲು ಸಾಧ್ಯವಾಗುತ್ತದೆ; ತನ್ನನ್ನು ಅದರಲ್ಲಿ ಸಮೀಕರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಕಾವ್ಯ ನಮ್ಮನ್ನು ತಟ್ಟುವುದು. ನಮಗೆ ಹೊರತಾದ ಅನುಭವ ನಮಗೆ ದಕ್ಕುವುದು ಹೇಗೆ? ಕೃಷ್ಣನ ವಿಷಯದಲ್ಲಿ ಆಗುವುದು ಇದೇ. ನಾವು ಕೃಷ್ಣನಲ್ಲಿ ನಮ್ಮ ಯಾವ ಗುಣವನ್ನೂ ಕಾಣಲಾರೆವು, ಅವನು ಎಲ್ಲ ಗುಣಗಳಿಗೂ ಅತೀತನಾದವನು. "ಅಂತೂ ಸ್ಥೂಲವಾದ ಇಲ್ಲವೆ ಶುಷ್ಕತರ್ಕದಿಂದ ಪರಿಮಿತವಾದ ಮನಸ್ಸಿಗೆ ಕೃಷ್ಣಪಾತ್ರ ವಿರೋಧಗಳ ಕಗ್ಗಂಟು; ಸೂಕ್ಷ್ಮವಾದ ತಿಳಿವಳಿಕೆಯುಳ್ಳ ಇಲ್ಲವೆ ಭಕ್ತಿಪೂರ್ಣವಾದ ಚಿತ್ತಕ್ಕೆ ಅದು ಅರ್ಥವಾದರೂ ಆಗದ ಒಗಟು". ಇಲ್ಲಿನ 'ಸೂಕ್ಷ್ಮ ತಿಳಿವಳಿಕೆ' ಎಂಬ ಮಾತನ್ನು ನಂಬಿಕೆ ಎಂಬರ್ಥದಲ್ಲಿ ತೆಗೆದುಕೊಂಡರೆ ಈ ಮಾತು ಸರಿಯಾಗುತ್ತದೆ.
 • ಆದರೆ ಮಿಕ್ಕ ಹಲವು ಪಾತ್ರಗಳು ಮನುಷ್ಯರಾಗಿರುವುದರಿಂದ ನಮಗೆ ಹತ್ತಿರವಾಗುತ್ತವೆ. ಅದರಲ್ಲೂ ಭೀಷ್ಮ, ದ್ರೋಣ, ಧೃತರಾಷ್ಟ್ರ-ಗಾಂಧಾರಿಯರು, ಭೀಮ, ಅರ್ಜುನ, ದುರ್ಯೋಧನ, ಕರ್ಣ, ದ್ರೌಪದಿ - ಇವರು ನಮ್ಮನ್ನು ತಟ್ಟುತ್ತಾರೆ. ಒಬ್ಬೊಬ್ಬರದೂ ಸಂಕೀರ್ಣ ಗುಣಸ್ವಭಾವ. ಇವರೆಲ್ಲರಲ್ಲಿ ಮನುಷ್ಯ ಸಹಜವಾದ ಕೋಪತಾಪಗಳಿವೆ, ಸಣ್ಣತನಹಿರಿತನಗಳಿವೆ, ಸಿಟ್ಟು ಸೆಡವುಗಳಿವೆ, ರೋಷಾವೇಶಗಳಿವೆ, ಇಷ್ಟಾನಿಷ್ಟಗಳಿವೆ, ಪ್ರೇಮದ್ವೇಗಳಿವೆ. ಒಟ್ಟಾರೆ ಪಾಂಡವ-ಕೌರವರನ್ನು ಮಹಾಭಾರತವು ಒಳಿತು-ಕೆಡುಕುಗಳ ಸಂಕೇತವನ್ನಾಗಿಸಿದರೂ ಇಲ್ಲಿನ ಪಾತ್ರಗಳು ಕಪ್ಪು-ಬಿಳಿಪಿನವಲ್ಲ. ಓದುಗರನ್ನು ಸಂಕೀರ್ಣ ಪಾತ್ರಗಳು ಆಕರ್ಷಿಸುವಷ್ಟು ಕಪ್ಪುಬಿಳಿಪು ಪಾತ್ರಗಳು ಅಕರ್ಷಿಸದಿರಲು ಕಾರಣ ಪ್ರತಿ ವ್ಯಕ್ತಿಯೂ ಆಂತರಿಕವಾಗಿ ಸಂಕೀರ್ಣ ಸ್ವಭಾವದವನೇ ಆಗಿರುವುದು.
 • ಭೀಷ್ಮ-ದ್ರೋಣರು ಋಜುಮಾರ್ಗ ಹಿಡಿಯುವವರಾದರೂ, ಧರ್ಮದ ಹೆಸರಿನಲ್ಲಿ ಒಳಗೊಂದು ಹೊರಗೊಂದು ನಡತೆಯನ್ನು ತೋರಿಸುವವರು, ಅವರಿಗೂ ಪಕ್ಷಪಾತಗಳಿರುವುದರಿಂದ ಮನುಷ್ಯರೇ ಆಗಿದ್ದಾರೆ. ನಿದರ್ಶನಕ್ಕೆ ದ್ರೌಪದಿ ವಸ್ತ್ರಾಪಹರಣದ ಸನ್ನಿವೇಶ. ದುಶ್ಶಾಸನ ಕೃಷ್ಣೆಯನ್ನು ಸಭೆಗೆ ಎಳೆದು ತಂದಾಗ ಮೊದಲು ಭೀಷ್ಮ "ಓರೆಪೋರೆಯೊಳಾಡಿ ಧರ್ಮದ ಧಾರಣೆಯ ಧಟ್ಟಿಸುವದಿದು ಗಂಭೀರರಿಗೆ ಗರುವಾಯಿಯೇ ಸುಡಲಿ" ಎಂದು ದುರ್ಯೋಧನನನ್ನು ಝಂಕಿಸಿದರೂ ದುರ್ಯೋಧನ ಅವನ ಬಾಯಿ ಮುಚ್ಚಿಸುತ್ತಾನೆ. ದುಶ್ಶಾಸನ ಅವಳ ಉಡಿಗೆ ಕೈಯಿಕ್ಕಿದಾಗ ದ್ರೌಪದಿ "ಪತಿಗಳೆನ್ನನು ಮಾರಿ ಧರ್ಮಸ್ಥಿತಿಯ ಕೊಂಡರು ಭೀಷ್ಮ ಮೊದಲಾತಿರಥರು ಪರಹಿತವ ಬಿಸುಟರು ವ್ಯರ್ಥಭೀತಿಯಲಿ" ಎಂದೊರಲಿದರೂ ಅವರು ಸುಮ್ಮನಿರುತ್ತಾರೆ. ಯುದ್ಧ ನಿರ್ಧಾರವಾದಾಗ ದುರ್ಯೋಧನನು ಭೀಷ್ಮರಿಗೆ ಸೇನಾಪತ್ಯದ ಪಟ್ಟಗಟ್ಟುವ ಮುನ್ನ "ದೈವಬಲದಲಿ ನೀವೇ ದೈವಹೀನರು ಧರ್ಮಪರರವರೈವರೂ ಸತ್ಪುರುಷಶೀಲರು ನೀವಧಾರ್ಮಿಕರು ಮುಯ್ವುನಾನುವುದವರ್ಗೆ ಭುವನವು ಬೈವುದೈ ನಿಮ್ಮಿಬ್ಬರನು ನಿಮಗೈವಡಿಯ ಸಹಸಿಗಳವರು ದುರ್ಬಲರು ನೀವು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದವನು; ಆದರೂ "ಇದಿರಾದ ರಿಪುಬಲವಾದುದನು ಸಂಹರಿಸಿ ಮಕ್ಕಳ ಕಾದು ಬಿಸುಡುವೆನೊಡಲನಾ ಸಂಗ್ರಾಮಭೂಮಿಯಲಿ" ಎಂದು ನಿರ್ಧರಿಸುತ್ತಾನೆ. ಪಾಂಡವರನ್ನು ತಾನು ಕೊಲ್ಲಲಾರೆ ಎಂದು ಅವನು ಬಲ್ಲ, ಅಥವಾ ಕೊಲ್ಲಬಾರದೆಂಬುದು ಅವನ ನಿರ್ಧಾರ. ಮುಂದೆ ತನ್ನ ಅಪ್ರತಿಮ ಶೌರ್ಯವನ್ನು ಕಂಡು ತನ್ನನ್ನು ಗೆಲ್ಲುವ ಪರಿ ಯಾವುದೆಂದು ಕೇಳಿಕೊಂಡಾಗ ಧರ್ಮರಾಯನಿಗೆ "ನಿಮ್ಮ ಶಿಖಂಡಿಯನು ಮುಂದಿರಿಸಲಾತನ ಕಂಡು ನಾವ್ ಕಾಳೆಗವ ಮಾಡೆವು ಕೈದುಗಳ ಬಿಸುಟು ಚಂಡಿತನವನು ಮಾದು ಮಿಗೆ ಕೈಕೊಂಡು ಫಲುಗುಣನೆಸಲಿ ತನುವನು ದಿಂಡುಗೆಡಹಲಿ" ಎಂದು ಹೇಳಿಕೊಡುತ್ತಾನೆ. ತಾನು ಬಿದ್ದಾಗ ಪಶ್ಚಾತ್ತಾಪದಿಂದ ಧರ್ಮರಾಯನು ಮಾತನಾಡಲು "ಖೇದವೇಕೆಲೆ ಮಗನೆ ನಿನ್ನೋಪಾದಿಯಲಿ ಸುಚರಿತ್ರನಾವನು ಮೇದಿನಿಯೊಳಾ ಮಾತು ಸಾಕೈ ಕ್ಷತ್ರಧರ್ಮವನು ಆದರಿಸುವುದೆ ಧರ್ಮ ನಿನಗಪವಾದ ಪಾತಕವಿಲ್ಲ ಸುಕೃತಕ್ಕೀ ದಯಾಂಬುಧಿ ಕೃಷ್ಣ ಹೊಣೆ" ಎಂದು ಸಮಾಧಾನ ಮಾಡುತ್ತಾನೆ.
 • ದ್ರೋಣನ ಪರಿಯೂ ಇಂತಹುದೇ. ದ್ರುಪದನ ಬಗೆಗಿನ ದ್ವೇಷದಿಂದ ಶಿಷ್ಯರನ್ನು ಅವನ ಮರ್ದನಕ್ಕಾಗಿ ತಯಾರು ಮಾಡಲು ನಿರ್ಧರಿಸಿದ ದ್ರೋಣ ಅರ್ಜುನನಿಗೆ ಒಂದು ರೀತಿಯಲ್ಲಿ ತನ್ನನ್ನು ಮಾರಿಕೊಳ್ಳುತ್ತಾನೆ. ಆದರೆ ಮುಂದೆ ಅದೇ ಅರ್ಜುನನಿಗೆ ಶತ್ರುಪಕ್ಷದಲ್ಲಿಯೇ, ಅಂದರೆ ತನಗೆ ಆಶ್ರಯವಿತ್ತ ಕೌರವರ ಕಡೆಯೇ, ನಿಂತರೂ ಅವನ ಹೃದಯವೂ ಪಾಂಡವರತ್ತ ಒಲೆಯುವಂಥದೇ. ತನ್ನ ಸೇಡನ್ನು ತೀರಿಸಿಕೊಳ್ಳಲು ತುಂಬ ಚಾಣಾಕ್ಷನೆಂದು ಕಂಡು ಬಂದ ಅರ್ಜುನನಿಗೆ "ಫಲುಗುಣನನೆಕ್ಕಟಿಗರೆದು ಶಸ್ತ್ರಾಸ್ತ್ರ ಪ್ರಪಂಚದ ಪರಮಸಿದ್ಧಾಂತವನು ಕಲಿಸಿ ಮಹಾಸ್ತ್ರಸಂಗತಿಯ ಕರುಣಿಸಿದನಾಗ್ನೇಯ ಪೌರಂದರ ಮಹಾ ವಾಯವ್ಯ ವಾರುಣ ಹರಸಖ ಬ್ರಹ್ಮಾಸ್ತ್ರ ಸೌರೋರಗ ನಗಾದಿಗಳ". ಕೌರವರ ಪಕ್ದಲ್ಲಿದ್ದೂ, ಅಷ್ಟೇ ಅಲ್ಲ, ಅದರ ಸೈನ್ಯದ ನಾಯಕತ್ವ ವಹಿಸಿದ್ದಾಗಲೂ ತನ್ನನ್ನು ಏಕಾಂತದಲ್ಲಿ ಭೇಟಿ ಮಾಡಿದ ಅರ್ಜುನನಿಗೆ "ಕಂದನಶ್ವತ್ಥಾಮ ಹುಸಿಯೆನಗಿಂದು ಬೇಹ ಕುಮಾರ ನೀ ನಿನ್ನಿಂದ ತನ್ನಯ ಕೀರ್ತಿ ಮೆರೆವುದು ಮೂರುಲೋಕದಲಿ ತಂದೆ ನಿನಗಾ ಮುನಿಯಲಾಪೆನೆ ಸಂದುದಾಡಿದ ಭಾಷೆ ನೀ ಹೋಗು" ಎಂದು ಆಶ್ವಾಸನೆಯೀಯುವಂತಹವನು. ದ್ರೋಣ ಮಹಾ ಕುಲವ್ಯಾಮೋಹಿ. ಅರ್ಜುನನೊಡನೆ ಪೈಪೋಟಿ ನಡೆಸಲು ಬಂದ ಕರ್ಣನನ್ನು "ಆಯಿತೆಲವೋ ಕರ್ಣ ನೀನನುನಾಯಕನೊ ನೃಪಾಹಾರದಲಿ ಮೇಣ್ ನಾಯಕನೊ ನೀನಾವ"ನೆಂದು ಇತರರ ಜೊತೆ ಸೇರಿ ಹೀಯಾಳಿಸುತ್ತಾನೆ. ಇದೇ ಬಗೆಯ ಮಾತು ಭೀಷ್ಮರ ಸೈನ್ಯಾಭಿಷೇಕದ ಹೊತ್ತಿಗೂ ಆಡುತ್ತಾನೆ. ಆಗಾಗ್ಗೆ ಪಾಂಡವರನ್ನು ಹೊಗಳುವುದೂ ಕೌರವನನ್ನು ತೆಗಳುವುದೂ ನಡೆದೇ ಇರುತ್ತದೆ. ಯುದ್ಧದಲ್ಲಿ ಅಪರಿಮಿತ ಶೌರ್ಯದಿಂದ ಹೋರಾಡಿದರೂ ಕೊನೆಗೆ ಬೀಳುವುದು ಕೃಷ್ಣನ ಹುನ್ನಾರದಿಂದ; ಅಥವಾ ಅವನಿಂದ ಪ್ರೇರಿತನಾಗಿ ತನ್ನದೇ ನಿರ್ಧಾರದಿಂದ.
 • ಹುಟ್ಟುಗುರುಡ ಧೃತರಾಷ್ಟ್ರ ಹಾಗೂ ಕುರುಡುತನ ತಂದುಕೊಂಡ ಗಾಂಧಾರಿ ದುರ್ಬಲ ತಾಯ್ತಂದೆಯರ, ಪುತ್ರ ಮೋಹದ ಸೆಳವಿಗೆ ಸಿಕ್ಕವರಾಗಿ ಚಿತ್ರಿತರಾಗಿ ಲೋಕದ ಅಂತಹ ತಾಯ್ತಂದೆಯರ ಪ್ರತೀಕವಾಗುತ್ತಾರೆ. ಮಗನ ಮೇಲಿನ ಮೋಹದಿಂದ ಅವನು ಮಾಡಿದುದೆಲ್ಲಕ್ಕೂ ಕುಮ್ಮಕ್ಕು ಕೊಟ್ಟರೂ, ದ್ರೌಪದಿ ವಸ್ತ್ರಾಪಹರಣದ ಸನ್ನಿವೇಶದಲ್ಲಿ ಪಾಂಡವರನ್ನು ಅದರಲ್ಲೂ ದ್ರೌಪದಿಯನ್ನು ವಿಶೇಷವಾಗಿ ಸಮಾಧಾನ ಮಾಡುತ್ತಾನೆ. "ದುರುಳರೆನ್ನವದಿರು ದುರಿತಾಂತಃಕರಣರಾವ್ ದುಶ್ಚೇಷ್ಟೆಯೆಮ್ಮದು ದುರಭಿಮತದುಷ್ಪೂರ್ವರೆನ್ನ ಕುಮಾರರರು ಅಭಿಧಾನ ಕರುಣಿಗಳು ಕಮನೀಯ ಗುಣ ಬಂಧುರರು ಶೌರ್ಯಬಲ ಪ್ರಭವೋತ್ತರರು ನಿನ್ನವರು" ಎಂದು ಸಮಾಧಾನ ಮಾಡಿ ತನ್ನ ಮಕ್ಕಳು ಅನ್ಯಾಯದಿಂದ ಗೆದ್ದ ರಾಜ್ಯವನ್ನು ಮರಳಿ ಕೊಡಿಸುತ್ತಾನೆ. ಸಂಜಯನ ಮೂಲಕ ಯುದ್ಧರಂಗದ ಸಂಗತಿಗಳನ್ನು ಅಗಿಂದಾಗ್ಗೆ ತಿಳಿಯುತ್ತ, ತನ್ನ ಮಕ್ಕಳ ಸೋಲಿಗೆ ಧಾವಂತಪಡುತ್ತ, ಕೊನೆಗೆ ದುರ್ಯೋಧನನ ಸಾವಿನ ಸುದ್ದಿಯಿಂದ ಸಂತಪ್ತನಾಗುತ್ತಾನೆ. ತನ್ನ ಕ್ಷಮೆ ಕೇಳಲು ಬಂದ ದುರ್ಯೋಧನನನ್ನು ಕೊಂದ ಭೀಮನನ್ನು ಅಪ್ಪಿಕೊಳ್ಳಹೊರಟಾಗ ಕೃಷ್ಣ ಉಪಾಯದಿಂದ ಉಕ್ಕಿನ ವಿಗ್ರಹ ಮುಂದೆ ಒಡ್ಡಲು ಅದು ಅವನ ಅಪ್ಪುಗೆಯಿಂದ ನಜ್ಜುಗುಜ್ಜಾಗುತ್ತದೆಯಂತೆ. ಇದಕ್ಕಿಂತ ಉತ್ತಮವಾಗಿ ಅವನ ದುಃಖ-ಕೋಪಗಳನ್ನು ಚಿತ್ರಿಸಲು ಸಾಧ್ಯವಿಲ್ಲ.
 • ಗಾಂಧಾರಿಯೂ ಇಂತಹವಳೇ. ಅವಳು ತನ್ನ ಮಕ್ಕಳನ್ನು ಪಡೆದುದು ಸಹಜ ತಾಯ್ತನದ ಹಂಬಲಕ್ಕಿಂತ ಹೆಚ್ಚಾಗಿ ಕುಂತಿ ಹಡೆದಳೆಂಬ ಮಾತ್ಸರ್ಯದ ಕಾರಣದಿಂದ: "ಕುಂತಿಗೆ ಬಾಲಕೇಳಿ ವಿನೋದವೇ ಕೈ ಮೇಳವಿಸಿತೇ ಮುನ್ನ ಹಾ ತಪ್ಪೇನು ತಪ್ಪೇನು ಕಾಳುಮಾಡಿದನೆನಗೆ ಮುನಿಪತಿ ಠೌಳಿಕಾರನಲಾ ಸುಡೀ ಗರ್ಭಾಳಿಗಳನೆಂದಬಲೆ ಹೊಸೆದಳು ಬಸುರನೊಡೆಮುರಿದು"; ಹಾಗೆ ಬಿದ್ದ ತುಣುಕುಗಳೆ ಮುಂದೆ ಕೌರವರಾಗಿ ರೂಪುವಡೆಯುತ್ತಾರೆ, ಅಂತಹ ಮಕ್ಕಳ ಮಮತೆಯ ಸಂಕೋಲೆಗೆ ಬಿದ್ದು ಗಂಡನಂತೆಯೇ ತಾನೂ ನಡೆದುಕೊಳ್ಳುತ್ತಾಳೆ. ಹಲವಾರು ಸನ್ನಿವೇಶಗಳಲ್ಲಿ ಅವಳು ಮೃದುಹೃದಯಿಯಾದರೂ ಅವಳ ಹೃದಯದಲ್ಲಿ ಮಕ್ಕಳ ಬಗೆಗಿನ ಮೋಹ ಮಡುಗಟ್ಟಿ ವಿವೇಚನೆಗೆ ಕುರುಡು ಹಿಡಿಯುತ್ತದೆ. ಯುದ್ಧವೆಲ್ಲ ಮುಗಿದ ಮೇಲೆ ತಮ್ಮ ಕ್ಷಮೆ ಕೇಳಲು ಪಾಂಡವರು ಬಂದಾಗ "ರಾಜಸದ ಸಂಜನಿತ ತಾಮಸಬೀಜಶೇಷದ ವನಜಮುಖಿ ನೋಡಿದಳು ನಖಪಂಕ್ತಿಗಳವನಿಪನ"; ಆಗ "ಉರಿದವರಸನ ನಖನಿಕರ ಹೊಗೆವೆರಸಿ".
 • ಭೀಮನದು ಅತ್ಯಂತ ವರ್ಣಮಯ ವ್ಯಕ್ತಿತ್ವ. ಎಲ್ಲ ಭಾವಗಳನ್ನೂ ಅವನು ತೋರ್ಪಡಿಸಿಕೊಳ್ಳುತ್ತಾನೆ. ಕಲ್ಲಾಗಬಲ್ಲ, ಕರಗಬಲ್ಲ; ಸಮಾಧಾನಿಯಾಗಬಲ್ಲ, ಕೆಂಡವುಗುಳಬಲ್ಲ; ಕರುಣಿಯಾಗಬಲ್ಲ, ಕಟುಕನಾಗಬಲ್ಲ. ಭೀಮ ಒಂದೆಡೆ ಧರ್ಮಮಾರ್ಗವನ್ನು ಬಿಟ್ಟು ನಡೆಯಲಾರ, ಆದರೆ ಅಂತಹ ಧರ್ಮಮಾರ್ಗ ಅನ್ಯಾಯದ ಪರವಾಗಿದೆಯೆನಿಸಿದರೆ ಅದನ್ನು ಧಿಕ್ಕರಿಸಲು ಹಿಂದೆಮುಂದೆ ನೋಡದವನು. ವಸ್ತ್ರಾಪಹರಣ ಸನ್ನಿವೇಶದಲ್ಲಿ ದ್ರೌಪದಿಯ ಗೋಳುಕರೆ ಮೊದಲು ಮಿಡಿಯುವುದೇ ಭೀಮನ ಹೃದಯವನ್ನು. ಆದರೆ ಅವನ ದುಡುಕನ್ನು ತಡೆದವನು ಧರ್ಮರಾಯನೇ. ಆದರೂ ಅವನು "ಮಾಣಲದು ಕೌರವರ ನೂರ್ವರ ಬನಕಾಳಗದೊಳೆನ್ನಯ ಕೇಣಿ ತನ್ನಯ ಗದೆಗೆ ದುರಿಯೋಧನನ ತೊಡೆಗಳಿಗೆ ವಾಣಿಯವು ದುಶ್ಶಾಸನನ ತನಿಶೋಣಿತವ ತಾ ಕುಡಿಯದಿರೆ ನಿನ್ನಾಣೆ" ಎಂದು ಪ್ರತಿಜ್ಞೆ ಮಾಡುತ್ತಾನೆ. ಮುಂದೆಯೂ ಕೀಚಕಪ್ರಸಂಗದಲ್ಲಿ ಎಲ್ಲರನ್ನೂ ಬಿಟ್ಟು ತನ್ನನ್ನಾಶ್ರಯಿಸಿದ ದ್ರೌಪದಿಗೆ "ಕಲಹಕಾದೊಡೆ ನಾವು ರಮಿಸುವರುಳಿದವರು ಬಳಿಕೇನು ಗಾದೆಯ ಬಳಕೆ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು" ಎಂದು ವ್ಯಂಗ್ಯದ ಮಾತಾಡಿದರೂ, "ತರುಣಿ ದಿಟ ಕೇಳಿಂದು ಮೊದಲಾಗರಸ ನಾಲ್ವರಿಗೆ ನಾವೆಡೆ ಮುರಿದವರು" ಎಂದು ಹೇಳಿದರೂ, ಅವಳು "ಭೀಮ ಕೊಟ್ಟೈ ತನಗೆ ಸಾವಿನ ನೇಮವನು ನಿಮ್ಮಣ್ಣನಾಜ್ಞೆ ವಿರಾಮವಾಗದೆ ಬದುಕಿ ಧರ್ಮದ ಮೈಸಿರಿಯನರಿದು ಕಾಮಿನಿಯ ಕೇಳಿಯಲಿ ನೆನೆವುದು" ಎಂಬ ಮಾರ್ಮಿಕ ಮಾತುಗಳನ್ನಾಡಿದಾಗ ಭೀಮನು "ಮುನಿಸನಾದೊಡೆಯಣ್ಣತನವಿಂದಿನಲಿ ಹರಿಯಲಿ" ಎಂದು ಗರ್ಜಿಸಿ ಅವಳ ನೆರವಿಗೆ ಧಾವಿಸುತ್ತಾನೆ. ದುಶ್ಶಾಸನ ವಧೆಯ ಸನ್ನಿವೇಶದಲ್ಲಿ ಅವನ ಪರಾಕ್ರಮವನ್ನು ಕಂಡು ಯುದ್ಧಪ್ರೇಮಿಗಳು ಸಂತಸಗೊಂಡರೂ, "ಮಿಕ್ಕ ರಕುತವ ಮೊಗೆದು ಬದಿಗಳೊಳೊಕ್ಕ ಕರುಳ್ಗಳನಾಯ್ದು ಮೂಲೆಗಳೊಕ್ಕಿನಲಿ ಕೈಯಿಕ್ಕಿ" ರಿಂಗಣಗುಣಿಖಯುವುದನ್ನೂ, "ಜಠರದೊಳಗರುಳನುಗಿದಬುಜವದನೆಯ ಮುಡಿಗೆ ಮುಡಿಸಿದು"ದನ್ನೂ, "ಖಳನುರದ ರಕ್ತದ ತಿಳಕವನು ರಚಿಸಿದ" ಬಗೆಯನ್ನೂ ಕಂಡು ನಮಗೆ ದಿಗಿಲೂ ಆಗುವುದು, ಬೀಭತ್ಸಕರ ಎಂದೂ ಅನ್ನಿಸುವುದು. ಗದಾಯುದ್ಧದ ನಡುವೆ ತಾನು ಮೂರ್ಚೆ ಹೋದಾಗ ಗಾಳಿ ಬೀಸಿ ಎಬ್ಬಿಸಿದ್ದ ದುರ್ಯೋಧನನನ್ನು ಕೃಷ್ಣನ ಸಂಜ್ಞೆಯ ಮೇರೆಗೆ ಧರ್ಮಬಾಹಿರವಾಗಿ ಹೊಡೆದುರುಳಿಸುವುದು ಓದುಗರ ಮನಸ್ಸನ್ನು ದಿಙ್ಮೂಢರನ್ನಾಗಿಸುತ್ತದೆ.
 • ಅರ್ಜುನನ ಪಾತ್ರ ಅಷ್ಟೊಂದು ಸಂಕೀರ್ಣವಾದುದು ಎನ್ನಿಸದಿದ್ದರೂ ಅವನ ಒಳತೋಟಿಗಳು, ಮಾನವಸಹಜ ದ್ವೇಷ-ಪ್ರೇಮಗಳು ನಮ್ಮವೂ ಆಗಿರುವುದರಿಂದ ನಮಗೆ ಹತ್ತಿರವೆನಿಸುತ್ತಾನೆ. ದ್ರೌಪದಿ ಸ್ವಯಂವರದ ವೇಳೆ ಕೃಷ್ಣನ ಕಣ್ಣಿಗೆ ಮೊದಲು ಬಿದ್ದ ಕ್ಷಣದಿಂದ ಕೊನೆಯವರೆಗೂ ಅವನ ಬೆಚ್ಚನೆಯ ಆತ್ಮೀಯತೆಯಲ್ಲಿ ಮುಂದುವರಿದವನು ಅವನು. ಅವನಿಗೆ ಕೃಷ್ಣನ ಮಹಿಮೆ ಗೊತ್ತಿದೆ, ಆದರೆ ಮಾನವ ಸಹಜ ಸ್ವಾಭಿಮಾನವಿದೆ, ಹಲವು ಬಾರಿ ಒಳತೋಟಿಗಳು ಅವನನ್ನು ಕಾಡುತ್ತವೆ. ಇಂತಹ ಸನ್ನಿವೇಶದಲ್ಲಿ ಅವನು ನಮಗೆ ಹತ್ತಿರವಾಗಲು ಕಾರಣ ಅಂತಹ ಒಳತೋಟಿಗಳು ನಮ್ಮ ಮನಸ್ಸಿನಲ್ಲೂ ಉದಿಸುವುದು. ಅಣ್ಣನನ್ನು ಎಂದೂ ಮೀರದಿದ್ದರೂ ಒಮ್ಮೊಮ್ಮೆ ಅವನ ತೀರ್ಮಾನಗಳಿಂದ ಗಾಸಿಗೊಳಗಾಗಿ ಕನಲುತ್ತಾನೆ. ವಸ್ತ್ರಾಪಹರಣದ ಸನ್ನಿವೇಶದಲ್ಲಿ ಕೋಪಗೊಂಡ ಭೀಮನಿಗೆ "ಧಾರುಣೀಶನ ಧರ್ಮತತ್ವದ ಸಾರವುಳಿದರೆ ಸಾಕು ಮಿಕ್ಕಿನ ನಾರಿ ಧನವಭಿಮಾನ ಬೇಯಲಿ" ಎಂದ ಪಾರ್ಥನ ಮಾತಿನಲ್ಲಿ ಸಮಾಧಾನ ಮಾಡುವ ಪ್ರಯತ್ನಕ್ಕಿಂತ ಹೆಚ್ಚಾಗಿ ವ್ಯಂಗ್ಯವೇ ತುಂಬಿರುವಂತೆ ಕಾಣುತ್ತದೆ. ಕರ್ಣನಿಂದ ಗಾಯಗೊಂಡ ಧರ್ಮರಾಯ "ಬವರ ಗೆಲುವರೆ ಹರಿಗೆ ಕೊಡು ಗಾಂಡಿವವ ಸಾರಥಿಯಾಗು ನೀನು ಎಂದವಗಡಿಸಿ"ದಾಗ ಅಣ್ಣನ ಮೇಲೆ ಕೈಮಾಡಲು ಹೋದರೂ ಕೃಷ್ಣನ ಮಾತಿನಿನಿಂದ ಸಮಾಧಾನಗೊಳ್ಳುತ್ತಾನೆ. ತನ್ನ ರಥವನ್ನು ಎರಡೂ ಪಕ್ಷಗಳ ಸೇನೆಗಳ ನಡುವೆ ನಿಲ್ಲಿಸಿ ಕೌರವ ವೀರರುಗಳನ್ನು ಕೃಷ್ಣ ಪರಿಚಯ ಮಾಡಿಕೊಟ್ಟಾಗ ಅರ್ಜುನನ ಮನಸ್ಸು ತಲ್ಲಣಗೊಳ್ಳುತ್ತದೆ; "ಕೆಟ್ಟ ಕಾಯದ ಸುಖಕಳುಪಿ ಒಡಹುಟ್ಟಿದರ ಕೈಯಾರ ಕೊಂದರೆ ಮುಟ್ಟದೇ ಕಡುಪಾಪ" ಎಂಬ ಪರಿತಾಪಕ್ಕೊಳಗಾಗುತ್ತಾನೆ, "ರಥದೊಳು ಬಿಲ್ಲನಿಳುಹು"ತ್ತಾನೆ. ಆನಂತರ ಕೃಷ್ಣನ ಬೋಧೆ ಮತ್ತು ವಿಶ್ವರೂಪದರ್ಶನದಿಂದ ಸಾವರಿಸಿಕೊಂಡು ಯುದ್ಧಸನ್ನದ್ಧನಾಗುತ್ತಾನೆ. ಇಂಥದೇ ತುಯ್ದಾಟ ಕರ್ಣನನ್ನು ಕೊನೆಯ ಬಾರಿಗೆ ಎದುರಿಸುವಾಗಲೂ ಉಂಟಾಗುತ್ತದೆ. ರಥಚಕ್ರ ನೆಲದಲ್ಲಿ ಹೂತು ಅದನ್ನೆತ್ತಲು ಕರ್ಣ ಶಸ್ತ್ರವನ್ನು ಬಿಟ್ಟು ಕೆಳಗಿಳಿದಾಗ ಅವನನ್ನು ಹೊಡೆಯಲು ಕೃಷ್ಣ ಪ್ರೇರಿಸಲು ಅವನ ಮನಸ್ಸಿಗೆ ಇಲ್ಲದ ತಳಮಳ: "ಜೀವವೀತನ ಮೇಲೆ ಕರಗುವುದಾವ ಸಖನೋ ಶತ್ರುವೆಂಬೀ ಭಾವನೆಯ ಬಗೆ ಬೀಳುಕೊಂಡುದು ಕರ್ಣನಾರು" ಎಂದು ಹಲುಬುತ್ತಾನೆ. ಆಗ ಕೃಷ್ಣ ಇವನ ಮೇಲೆ "ಬೀಸಿದನು ನಿಜ ಮಾಯೆಯನು ಡೊಳ್ಳಾಸದಲಿ ಹರಹಿದನು ತನುವನು ರೋಷವನು ಬಿತ್ತಿದನು ಮನದಲಿ ನರನ ಕಲಿಮಾಡಿ". ಹೀಗೆ ಅರ್ಜುನ ಬಹುತೇಕ ಕೃಷ್ಣಕೃತ ಕಲಿ.
 • ದುರ್ಯೋಧನನದಂತೂ ಬಹುಜನರಿಗೆ ಹತ್ತಿರವಾಗಬಲ್ಲ ಪಾತ್ರ. ನಮ್ಮಲ್ಲಿನ ಎಷ್ಟೋ ಜನ ಸೌಮ್ಯರಾಗಿ ಕಂಡರೂ ಆಂತರಿಕವಾಗಿ ದುರ್ಯೋಧನತ್ವವನ್ನು ಅಡಗಿಸಿಕೊಂಡಿರುವುದೇ ಇದಕ್ಕೆ ಕಾರಣ. ಅವನ ಕೃತ್ಯಗಳು ಅಧರ್ಮವೆಂದು ನಾವು ಹೇಳಿದರೂ, ಅವನ ಅಂತ್ಯ ನಮಗೆ ದುರಂತದಂತೆ ಭಾಸವಾಗುವುದು ಧರ್ಮಮಾರ್ಗವೇ ಅಧರ್ಮದ ದಾರಿ ಹಿಡಿದು ಅವನನ್ನು ಮಣಿಸಲು ನಿರ್ಧರಿಸುವುದರಿಂದ. ಮೊದಲಿನಿಂದ ಅವನಿಗೆ ದಾಯಾದಿಗಳ ಮೇಲೆ ಮತ್ಸರ; ಅದಕ್ಕೆ ಮೂಲ ಕಾರಣ ಹುಟ್ಟಿಗುರುಡನಾದ ತಂದೆ ರಾಜ್ಯವಾಳಲು ಅಶಕ್ತನಾದ್ದರಿಂದ ಪಾಂಡುವಿಗೆ ರಾಜ್ಯದ ಹೊಣೆ ಹೋಗುತ್ತದೆ; ಸಹಜವಾಗಿ ಎಂಬಂತೆ ಅವನ ಮಕ್ಕಳೆನಿಸಿದ ಪಾಂಡವರಿಗೆ ಉತ್ತರಾಧಿಕಾರ ಪ್ರಾಪ್ತವಾಗಿ ತಾವು ಅಧಿಕಾರವಂಚಿತರಾಗಬೇಕಾಗುತ್ತದೆಂಬ ಭಯ. ಅದಕ್ಕೇ ಪಾಂಡವರನ್ನು ಇಲ್ಲವಾಗಿಸಲು ಅವನ ಪ್ರಯತ್ನ ನಿರಂತರವಾಗಿ ಸಾಗುತ್ತದೆ. ಅರ್ಜುನನಿಗೆ ಸರಿಸಾಟಿಯಾಗಬಲ್ಲ ವೀರನೆಂಬಂತೆ ಕಾಣಿಸಿದ ಕರ್ಣನಿಗೆ ಇತರರು ಇಲ್ಲವೆಂದು ಹೇಳಿದ್ದ "ರಾಜ್ಯದೊಳಾತನರಸೆನಿಸುವೆನು ಕರೆ ನಮ್ಮ ಪುರೋಹಿತರ" ಎಂದು ಕ್ಷಣಾರ್ಧದಲ್ಲಿ ನಿರ್ಧರಿಸಿ "ಅರಸುಪದವಿಯೊಳಂಗದೇಶದ ಸಿರಿಯನಿತ್ತನು ರಚಿಸಿದನು ಮೂರ್ಧಾಭಿಷೇಚನವ". ಮೋಸದ ಜೂಜಾಟ, ಅರಣ್ಯವಾಸದಲ್ಲಿದ್ದರೂ ಅವರಿಗೆ ಕಿರುಕುಳ ನೀಡುವ ಹಪಹಪಿಕೆ ಅವನದು. ಶತಾಯಗತಾಯ ಪಾಂಡವರಿಗೆ ರಾಜ್ಯ ದಕ್ಕದಂತೆ ನೋಡಿಕೊಳ್ಳಲು ಅವನ ತವಕ. ತನ್ನ ಯಾವ ಉಪಾಯವೂ ಸಫಲವಾಗದಾದಾಗ ಯುದ್ಧದಲ್ಲಾದರೂ ಪಾಂಡವರನ್ನು ಸೋಲಿಸುವ ತವಕ. ಆದರೆ ಅವನದು ಆಳವಾದ ಛಲ, ಸ್ವಾಭಿಮಾನ; ಸಾಯುವೆನೇ ಹೊರತು ಮಣಿಯೆ ಎಂಬುದು ಅವನ ತೀರ್ಮಾನ. ತನ್ನ ಅಳಿವು ಅವನಿಗೆ ವಿದಿತವೆಂಬಂತೆ ಕುಮಾರವ್ಯಾಸನ ಚಿತ್ರಣವಿದೆ. ದೌತ್ಯಕ್ಕಾಗಿ ಬಂದ ಕೃಷ್ಣನನ್ನು ಜರೆದು ಅವನನ್ನು ಕಟ್ಟ ಹೋದಾಗ ಕೃಷ್ಣ ತೋರಿದ ವಿಶ್ವರೂಪವನ್ನು ಕಂಡು ಧೃತರಾಷ್ಟ್ರ ಭಯಗೊಂಡಾಗ "ತಾತ ಬೆದರದಿರೀ ಮುಕುಂದನ ಕೈತವಕೆ ಬೆಚ್ಚದಿರು" ಎಂದುದಲ್ಲದೆ, "ಮಣಿದು ಬದುಕುವನಲ್ಲ ಹಗೆಯಲಿ ಸೆಣಸಿ ಬಿಡುವವನಲ್ಲ ದಿಟ ಧಾರುಣಿಯ ಸಿರಿಗಳುಪುವನಲ್ಲಳುಕಿಲ್ಲ ಕಾಯದಲಿ ರಣ ಮಹೋತ್ಸವವೆಮ್ಮ ಮತ ಕೈದಣಿಯೆ ಹೊಯ್ದಾಡುವೆನು ಕೃಷ್ಣ ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲ" ಎಂದು ತನ್ನ ಆಶ್ಚರ್ಯಕರ ವ್ಯಕ್ತಿತ್ವವನ್ನು ತೋರ್ಪಡಿಸುತ್ತಾನೆ. ಅದರಂತೆ ಕೊನೆಯವರೆಗೂ ಅವನು ನಡೆಯುವವನೇ. ಒಬ್ಬೊಬ್ಬರನ್ನಾಗಿ ಆಪ್ತರನ್ನು ಕಳೆದುಕೊಂಡಾಗ ಅವನ ಹೃದಯ ಜರ್ಜರಿತವಾಗುತ್ತ ಹೋದರೂ ಏಕಾಕಿಯಾಗಿ "ಪಾಂಡವರೈವರನು ಗೆಲಿದಂದು ಹೊಗುವೆನು ಗಜಪುರವನಿಂತೆಂದು ಜನನಿಗೆ ಜನಕವಿದುರರಿಗರುಹು" ಎಂದು ಸಂಜಯನಿಗೆ ಹೇಳಿ ಕಳಿಸುವ ದೃಢತೆ ಅವನದು. ಸಾಯುವಾಗ "ಧಾರುಣಿಯ ಭರವ ಬಿಡಿಸಲೋಸುಗ ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆ" ಎಂದು ಕೃಷ್ಣನಿಗೆ, ದೈವದ ಕದಡು ಮನಗಾಣಿಸಿತು ನಮಗೀ ಕಂಟಕವ್ಯಥೆಯ ಉದಯದಲಿ ನಾವೀ ಶರೀರವನೊದೆದು ಹಾಯ್ವೆವು ನೀವು ನಿಜಮಾರ್ಗದಲಿ ಬಿಜಯಂಗೈವುದು" ಎಂದು ತನ್ನ ಸ್ಥಿತಿಯನ್ನು ಕಂಡು ಹಲುಬುವ ಕೃಪ ಅಶ್ವತ್ಥಾಮ ಕೃತವರ್ಮರಿಗೆ ನಿರ್ಲಿಪ್ತತೆಯಿಂದ ಹೇಳುವ ಪ್ರಜ್ಞಾವಂತ. ಮಹಾಭಾರತದಲ್ಲೆಲ್ಲ ನಮ್ಮನ್ನು ತೀರ ಹತ್ತಿರಕ್ಕೆ ಸೆಳೆದುಕೊಳ್ಳುವ ಪಾತ್ರಗಳೆಂದರೆ ದುರ್ಯೋಧನ ಮತ್ತು ದ್ರೌಪದಿಯರದು.
 • ಕರ್ಣನ ಬದುಕಂತೂ ಎಂತಹವನನ್ನೂ ಕರಗಿಸುವಂಥದು; ಅವನದಲ್ಲದ ತಪ್ಪುಗಳಿಗೆ ಬೆಲೆ ತೆರುತ್ತ, ತಾನು ಪಡೆಯಬೇಕಾದ ಸೌಲಭ್ಯದಿಂದ ವಂಚಿತನಾಗುತ್ತ, ದುರ್ಯೋಧನನಂತೆಯೇ ದೈವದ ಪಕ್ಷಪಾತ ಕಾರಣವಾಗಿ ಬದುಕನ್ನು ನೀಗಿಕೊಳ್ಳಬೇಕಾದವನು. ಕುಂತಿಯ ಬಾಲ್ಯಸಹಜ ಕುತೂಹಲದಿಂದ ಹುಟ್ಟಿದ ಕರ್ಣ ಹುಟ್ಟಿನ ಕ್ಷಣದಲ್ಲಿಯೇ ತಾಯಿಂದ ಪರಿತ್ಯಕ್ತನಾದ ನತದೃಷ್ಟ. ಅವನನ್ನು ಸಾಕು ತಾಯ್ತಂದೆಯರು ಮಮತೆಯಿಂದ ಬೆಳಸಿದರು ನಿಜ, ಆದರೆ ಅದರಿಂದಾಗಿ ಇವನ ಸಾಮಾಜಿಕ ಸ್ಥಾನ ತಗ್ಗುವಂತಾಯಿತು. ಪರಶುರಾಮನಲ್ಲಿ ಧನುರ್ವಿದ್ಯೆಯನ್ನು ಕಲಿತ ಕರ್ಣ "ಪರಶುರಾಮನೊಳಾಯುಧದ ಶ್ರಮಗಲಿತು ಬಳಿಕದು ವಾಯವಾದೊಡೆ" ಗಜಪುರಿಗೆ ಬಂದ. ಆದರೆ ಇತರರೆಲ್ಲ ತನ್ನ ಹುಟ್ಟನ್ನು ಹಿಡಿದು ಅಪಮಾನ ಮಾಡುತ್ತಿರಲು (ತನ್ನ ಕುಲವನ್ನು ಹಿಡಿದು ತೆಗಳಿದ ದ್ರೋಣ ಕೃಪರಿಗೆ ಕರ್ಣ ಹೇಳಿದ "ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ ನೀಮೊಲಿದೆಲ್ಲಿ ಪುಟ್ಟಿ ಬಳೆದಿರೊ ಕುಲಮಿರ್ದುದೆ ಕೊಡದೊಳಂ ಶರಸ್ತಂಬದೊಳಂ" ಎಂಬ 'ಪಂಪಭಾರತ'ದಂತಹ ಮಾತುಗಳನ್ನು ಕುಮಾರವ್ಯಾಸನ ಕರ್ಣ ಆಡಲಾರ). ದುರ್ಯೋಧನ ತನ್ನನ್ನು ಗೌರವಿಸಿದ್ದರಿಂದ ಕೊನೆಯವರೆಗೂ ಅವನಿಗೆ ಋಣಿಯಾದ. ಅವನ ಎಲ್ಲ ಕಾರ್ಯಗಳಿಗೂ ಕುಮ್ಮಕ್ಕಿತ್ತ. ಕೃಷ್ಣ ದೌತ್ಯಕ್ಕೆಂದು ಬಂದು ಯುದ್ಧ ನಿರ್ಧಾರವಾದ ಸಂಜೆಯೇ ಕರ್ಣನನ್ನು ಏಕಾಂತಕ್ಕೆ ಕರೆದೊಯ್ದು ಅವನ ಜನನವೃತ್ತಾಂತವನ್ನು ತಿಳಿಸಿ "ಆದರಿನಾ ಪಾಂಡವರಲೈವರ ಮೊದಲಿಗನು ನೀನಿರಲು ಧರಣಿಯ ಕದನವಿತ್ತಂಡಕ್ಕೆ ಕಾಮಿತವಲ್ಲ" ಎಂದು ಹೇಳಿ "ನಿನಗೆ ಹಸ್ತಿನಪುರದ ರಾಜ್ಯದ ಘನತೆಯನು ಮಾಡುವೆನು" ಎಂದು ಆಮಿಷ ತೋರಿದರೂ ಖಕೌರವೇಶ್ವರನೊಲುಮೆ ತಪ್ಪಿಸಿ ಭುವನದೊಳಗೆನಗಾಪ್ತ ಜನವಿಲ್ಲಖ ಎಂದು ತಿಳಿಸಿ ಖಕೌರವನ ಹಗೆ ಹರಿಬ ತನಗೆಖ ಖಆಹವಯಜ್ಞದೀಕ್ಷಿತನಹೆನು ತಾನುಖ ಎಂಬ ದೃಢತೆಯನ್ನು ತೋರಿಸಿ ಕೃಷ್ಣ ಸುಮ್ಮನಾಗುವಂತೆ ಮಾಡಿದವನು. ಆದರೆ ಮತ್ತೆ ತಾಯ ತಂತ್ರದಿಂದಾಗಿ ಅವಳೆಂದಂತೆ "ಆದೊಡೈವರ ಮಕ್ಕಳನು ತಲೆಗಾಯ್ದು ತೋರೈ ಕಂದ ನಿನಗಿನ್ನೀ ದುರಾಗ್ರಹವೊಪ್ಪುವುದೆ ಕೌರವನ ಸೇವೆಯಲಿ, ಹೋದ ಬಾಣವ ಮರಳಿ ತೊಡದಿರು ಮಾದು ಕಳೆ ವೈರವೆನಲ್ಕೆ ಹಸಾದ" ಎಂದ ಧೀರೋದಾತ್ತ ಅವನು. ಅವನ ಶೌರ್ಯವನ್ನು ಕಂಡು ಕೃಷ್ಣನೂ "ಆಳುತನದಲಿ ವೀರಕರ್ಣನ ಹೋಲುವರ ನಾ ಕಾಣೆನೈ ಸುರಪಾಲಕರು ತಾವಾನಬಹುದೇ ಕರ್ಣನುರವಣೆಯ" ಎಂದು ಮೆಚ್ಚಿ ತಲೆದೂಗುವುದ ಜೊತೆಗೆ ಅರ್ಜುನನ ಬಾವುಟದಲ್ಲಿದ್ದ ಆಂಜನೇಯನೂ ಮೆಚ್ಚಿದನಂತೆ. ಅಂತಹವನನ್ನು ನೇರಾಗಿ ಎದುರಿಸುವುದು ದುಸ್ತರವೆಂದು ತಿಳೆದೇ ಕೃಷ್ಣನೂ ಸಾರಥಿ ತೊರೆದು ಹೋಗಿ ರಥಚಕ್ರವನ್ನೆತ್ತಲು ಕರ್ಣ ಬರಿಗೈಯಾಗಿ ಕೆಳಗಿಳಿದಾಗ ಖಆಪತ್ತೆಸಗಿದಾಗಳೆ ಹಗೆಯ ಗೆಲುವುದು .. .. ಸೈರಿಸಿದ ಬಳಿಕೀ ಕರ್ಣ ಕೈಕೊಂಬನೆ ತ್ರಿಯಂಬಕನಖ ಎಂದು ಪ್ರಚೋದಿಸಿದುದು. ಕೊನೆಗೆ ಕೃಷ್ಣನೇ ಅವನೆದುರು ಮಣಿದ ಹಾಗೆ "ಕರ್ಣಂಗಿರದೆ ನಿಜಮೂರ್ತಿಯನು ತೋರಿದನುರುತರ ಪ್ರೇಮದಲಿ ಮುಕುತಿಯ ಪದವ ನೇಮಿಸಿದ"ನಂತೆ. ಆದರೂ ಕರ್ಣನ ಬದುಕು ತನ್ನದಲ್ಲದ ತಪ್ಪುಗಳಿಗಾಗಿ ಬೆಲೆ ತೆರುವ ಬಲಿಪಶುವಾಯಿತು. ಹೀಗೆ ಮಹಾಭಾರತವು ಒಂದು ನಿಟ್ಟಿನಿಂದ 'ಕರ್ಣ ಸುಲಿಗೆಯ ಕತೆ".
 • ದ್ರೌಪದಿಯಂತೂ ಹೆಣ್ಣಿನ ದಯನೀಯಸ್ಥಿತಿಯ ಪ್ರತೀಕವಾಗಿದ್ದಾಳೆ. ಒಂದೆಡೆ ಇವಳು, ಮತ್ತೊಂದೆಡೆ ಸೀತೆ ನಮ್ಮ ದೇಶದ ಹೆಣ್ಣಿನ ಸ್ಥಿತಿಯನ್ನು ಸಹಜ ಸಂಕೀರ್ಣವಾಗಿ ಸಂಕೇತಿಸುವಂತಹವು. ಆದರೆ ದ್ರೌಪದಿ ಸೀತೆಯಂತೆ ಎಲ್ಲವನ್ನೂ ಮೂಕವಾಗಿ ಅನುಭವಿಸುವುದಿಲ್ಲ, ಕೆರಳುತ್ತಾಳೆ, ಕೊನೆಯವರೆಗೂ ತನ್ನ ಸೇಡಿನ ಉಳಿಸಿಕೊಳ್ಳಬಲ್ಲಳು. ಅವಳ ರೋಷ-ಅಸಹಾಯಕತೆ, ಭಕ್ತಿ-ಆರ್ತತೆ, ಪ್ರೀತಿ-ಸೇಡುಗಳು ಕಣ್ಣಿಗೆ ಕಟ್ಟುವಂತಹವು, ಹೃದಯವನ್ನು ತಟ್ಟುವಂತಹವು. ಅವಳು ಹೇಳಿಕೇಳಿ ಅಗ್ನಿಪುತ್ರಿ, ಅವಳದು ಕೊನೆಯವರೆಗಿನ ರೋಷ. ಅವಳ ಸೌಮ್ಯರೂಪ ಕಾಣುವುದು ಪ್ರಾಯಶಃ ಒಂದೇ ಬಾರಿ, ಅವಳ ಸ್ವಯಂವರ ಸಂದರ್ಭದಲ್ಲಿ: "ಅಸಿಯ ನಡುವಿನ ನಿಮ್ನ ನಾಭಿಯ ಮಸುಳ ಬಾಸೆಯ ತೋರ ಮೊಲೆಗಳ ಚಾರು ಜಂಘೆಯ ಚರಣಪಲ್ಲವದ ಎಸಳುಗಂಗಳ ತೊಳಗಿ ಬೆಳಗುವ ಮುಸುಡ ಕಾಂತಿಯ ಮುರಿದ ಕುರುಳಿನ ಬಿಸಜಗಂಧಿಯ ರೂಪನಭಿವರ್ಣಿಸುವಡರಿದು" ಎಂಬ ದ್ರೌಪದಿಯ ಬಗೆಗಿನ ಸರಳ ವರ್ಣನೆ ಇಲ್ಲಿ ಮಾತ್ರ ಸಾಧ್ಯ; ಮಿಕ್ಕೆಡೆಯಲ್ಲೆಲ್ಲ ಕಾಣುವುದು ಅವಳ ಸಂಕೀರ್ಣ ವ್ಯಕ್ತಿತ್ವ. ಪ್ರಾಯಶಃ ಅವಳ ದುರದೃಷ್ಟ ಆರಂಭಗೊಂಡುದು ತನ್ನನ್ನು ಸ್ವಯಂವರದಲ್ಲಿ ಗೆದ್ದು ವರಿಸಿದ ಅರ್ಜುನನೊಬ್ಬನೇ ಆದರೂ, "ರಾಯರೆಲ್ಲರ ಗೆಲಿದು ತಂದೆನು ನಾಯಕವನನುಪಮಿತ ಮೌಲ್ಯವನಮಲ ಮೌಕ್ತಿಕವ" ಎಂದಾಗ "ಲೇಸಾಯಿತೈವರು ಕೂಡಿ ಭೋಗಿಪುದು" ಎಂದ ಕುಂತಿಯ ವಾಕ್ಯವನ್ನು ಮಕ್ಕಳು ಪಾಲಿಸಿದ್ದರಿಂದ. "ಏಕಪತಿ ಬಹುಸತಿಯರೆಂಬುದು ಲೋಕಪದ್ಧತಿ ಕಂಡೆವಾವಿಂದೇಕೆ ಪತ್ನಿಗೆ ಪುರುಷಪಂಚಕವನು ಮಹಾದೇವ ಲೋಕಶಾಸ್ತ್ರ ವಿರುದ್ಧವನು ಕಿವಿಯೋಕರಿಸುತಿದೆ ಕಣ್ಮನಕೆ ಸುವ್ಯಾಕುಲತೆ ಹಿರಿದಾದುದು" ಎಂದು ದ್ರುಪದನೂ ಚಿಂತೆಗೊಳಗಾದ. ಆದರೇನು 'ತಮಾಷೆ ಹೋಗಿ ಅಮಾಸೆಯಾಯ್ತು' ಎನ್ನುವಂತಾಯಿತು. ಹಸ್ತಿನಾಪುರಕ್ಕೆ ಬಲಗಾಲಿಟ್ಟೇ ಬಂದಿರಬಹುದಾದರೂ ಕಾಲಿಟ್ಟ ಕ್ಷಣದಿಂದ ಅವಳ ಬವಣೆ ಶುರುವಾಯಿತು. ದಾಯಾದಿಗಳ ವೈರದುರಿಯ ನಡುವೆ ಸಿಲುಕಿದ ಮಲ್ಲಿಗೆಯಾದಳವಳು. ಅವಳ ಬದುಕಿನ ಅತ್ಯಂತ ದುಸ್ತರ ಕ್ಷಣ ಸಭೆಯಲ್ಲಿ ಎಲ್ಲರೆದುರಿಗೆ ಖೂಳನೊಬ್ಬ ಸೀರೆಯನ್ನು ಸುಲಿಯುತ್ತಿದ್ದರೆ ಎಲ್ಲರೂ ಸುಮ್ಮನಿರುವ ಪರಿಸ್ಥಿತಿ. ಒಂದು ರೀತಿ ಹೆಣ್ಣಿನ ಹಕ್ಕಿನ ಹೋರಾಟದ ಕತೆ ಅವಳ ಬದುಕು. ಧರ್ಮವನ್ನು ಪ್ರಶ್ನಿಸುವವಳು ಅವಳೊಬ್ಬಳೇ. ದ್ಯೂತದಲ್ಲಿ ತನ್ನನ್ನೂ ಸೋತ ಧರ್ಮರಾಯನ ನಡೆಯನ್ನು ಪ್ರಶ್ನಿಸುತ್ತಾಳೆ; ಸಭೆಯ ಹಿರಿಯರ ಬಗ್ಗೆ "ಹಿರಿಯರಿಲ್ಲದ ಸಭೆ ಮನುಷ್ಯರ ನೆರವಿ, ಸಭೆಯಲ್ಲ; ಮೂರ್ಖರು ಹಿರಿಯರಲ್ಲ ಯಥಾರ್ಥ ಭಾಷಣ ಭೀತಚೇತನರು, ಹಿರಿಯರಿದೆ ಸಾಮಾಜಿಕರು ಸಚ್ಚರಿತದೆಲಾ ಸ್ತ್ರೀಮತವನುತ್ತರಿಸಲಾಗದೆ ಧರ್ಮಶಾಸ್ತ್ರದೊಳು" ಎಂದು ಹೇಳುತ್ತಾಳೆ (ಈ ಪದ್ಯವು ಮೂಲಮಹಾಭಾರತದ ಉದ್ಯೋಗಪರ್ವದಲ್ಲಿನ ಈ ಸಂದರ್ಭದ "ನ ಸಾ ಸಭಾ ಯತ್ರ ನ ಸಂತಿ ವೃದ್ಧಾ| ನತೇ ವೃದ್ಧಾ ಯೇನ ವದಂತಿ ಧರ್ಮಂ| ನಾ ಸೌ ಧರ್ಮೋ ಯತ್ರ ನ ಸತ್ಯಮಸ್ತಿ| ನ ತತ್ ಸತ್ಯಂ ಯತ್ ಛಲೇನಾಭ್ಯುಪೇತಂ||" ಎಂಬ ಶ್ಲೋಕದ ಬಹುತೇಕ ಅನುವಾದವೇ ಆಗಿದೆ). "ಪತಿಗಳೆನ್ನನು ಮಾರಿ ಧರ್ಮಸ್ಥಿತಿಯ ಕೊಂಡರು ಭೀಷ್ಮ ಮೊದಲಾದತಿರಥರು ಪರಹಿತವ ಬಿಸುಟರು ವ್ಯರ್ಥಭೀತಿಯಲಿ" ಎಂದು ಝಂಕಿಸಿ ನುಡಿಯುತ್ತಾಳೆ. ಕೊನೆಗೆ ಅವಳನ್ನು ಕಾಪಾಡಿದ್ದು ಅವಳ ನಂಬಿಕೆಯೇ ಹೊರತು ನಂಬಿದವರ ನೆರವಲ್ಲ. ಅವಳ ಅರಣ್ಯವಾಸವೂ ಇಂತಹ ಭಂಗಗಳಿಂದಲೇ ಕೂಡಿದುದು. ವೈರಿಗಳು ಪಾಂಡವರಿಗೆ ಕಿರುಕುಳ ನೀಡಲು ಬಂದಾಗ ಸಿಲುಕಿಕೊಳ್ಳುವವಳು ಇವಳೇ. ದೂರ್ವಾಸರ ಪ್ರಸಂಗ, ಘೋಷಯಾತ್ರೆಯ ಪ್ರಸಂಗ, ಜಯದ್ರಥ ಇವಳನ್ನು ಹೊತ್ತೊಯ್ದದ್ದು - ಇಲ್ಲೆಲ್ಲ ನೇರವಾಗಿಯೋ ಪರೋಕ್ಷವಾಗಿಯೋ ಕಷ್ಟದಲ್ಲಿ ಸಿಲುಕುವವಳು ದ್ರೌಪದಿಯೇ. ಆದರೆ ಇವಳ ರೋಷ ಎಂದಿಗೂ ಕುಗ್ಗದು. ಗಂಧರ್ವರಿಂದ ಕೌರವರನ್ನು ಬಿಡಿಸಿ ತಂದು ನಿಲ್ಲಿಸಿದಾಗ ಕಟಕಿಯಾಡುತ್ತಾಳೆ: ಆಗ ದುರ್ಯೋಧನ "ಮಾನಿನಿಯ ಕಟಕಿಯ ಮಹಾಸ್ತ್ರಕೆ ಮೌನವನು ಮರೆಗೊಂಡು ಕಲುಷಧ್ಯಾನ"ನಾಗಿದ್ದ. ಅಜ್ಞಾತವಾಸ ಕಾಲದಲ್ಲಿ ಅನುಭವಿಸಿದ ಕೀಚಕನ ಕಿರುಕುಳದ ಸನ್ನಿವೇಶ. "ಶಿವಶಿವಾ ಪಾಪಿಗಳು ಪತಿಯಾದವರ ತಾಗಲಿ ಸುಯ್ಲು" ಎಂದೂ "ಬಡಿ ಹೋರಿಗಳು ಪಾಂಡವರಂತೆ ಮೂಗುರ್ಚಿಗಳದಿನ್ನಾರುಂಟು" ಎಂದೂ "ತೋಳ ಹೊರೆ ನಿಮಗೇಕೆ ಭೂಮೀಪಾಲ ವಂಶದೊಳುದಿಸಲೇತಕೆ ಕೂಳುಗೇಡಿಂಗೊಡಲ ಹೊರೆವಿರಿ" ಎಂದೂ ಹರಿಹಾಯಬಲ್ಲಳು. ವನವಾಸ-ಅಜ್ಞಾತವಾಸಗಳು ಮುಗಿದರೂ ಕೌರವನು ರಾಜ್ಯದ ತಮ್ಮ ಪಾಲಿನ ಭಾಗವನ್ನು ಕೊಡದಿದ್ದಾಗ ಎಲ್ಲರೂ ಸಂಧಿ ಮಾಡಿಕೊಂಡು ಹೇಗೋ ಕಾಲ ಹಾಕಲು ಸಿದ್ಧರಿದ್ದರೂ (ಪ್ರಾಯಶಃ ಮೊದಲು ಹಾಗೆ ತೀರ್ಮಾನಿಸಿದ್ಧ ಧರ್ಮರಾಯನನ್ನು ಅನುಸರಿಸಿ) ದ್ರೌಪದಿ ಮಾತ್ರ ಯುದ್ಧವನ್ನೇ ಬಯಸುವವಳು. ಸಂಧಿಗೆ ಸಿದ್ಧರಾದ ಗಂಡಂದಿರನ್ನು ಕುರಿತು "ಯತಿಗಳಾದಿರಿ ನೀವು ರೋಷಚ್ಯುತರಲೇ" ಎಂದು ಅವರ ಮುಂದೆಯೂ "ಖಳರು ತಮ್ಮುನ್ನತಿಯ ಕೀಲನು ಕಳಚಿ ಕಳೆದರು ಮರಳಿ ಮಾಡುವಡಳುಕಿದರು ತನ್ನವರು ಪತಿಗಳೆ ಪರಮವೈರಿಗಳು ಹಳಿವ ನೀನೇ ಬಲ್ಲೆಯಿನ್ನುಳಿವ ನೀನೇ ಬಲ್ಲೆ" ಎಂದು ಕೃಷ್ಣನನ್ನು ಅಂಗಲಾಚಿ ಆತ "ನಾವು ಸಂಧಿಯ ನೆವದಲವದಿರ ಭಾವವನು ಕಲಿಮಾಡಿ ಕೋಪವ ತೀವಿ ಸಂಧಿಯ ಮುರಿದು ಬಹೆವು" ಎಂದು ನಿಶ್ಚೈಸುವಂತೆ ಮಾಡಿದವಳು. ಅವಳಿಗಿರುವುದು ರಾಜ್ಯವೈಭವದ ಮೇಲಿನ ವ್ಯಾಮೋಹವಲ್ಲ, ತನಗೆ ಅವಮಾನ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವ ತವಕ. ಹೀಗಾಗಿ ದುಶ್ಶಾಸನ-ದುರ್ಯೋಧನರು ಮಡಿದಾಗ ಹೆಚ್ಚು ಸಂಭ್ರಮಿಸುವವಳು ಅವಳೇ. ದುಶ್ಶಾಸನ ಬಿದ್ದಾಗ ಭೀಮ ಹೇಳಿಕಳಿಸಲು ಬಂದ ದ್ರೌಪದಿ "ಆರರೆ ಭೀಮನ ವಿಜಯಲಕ್ಷ್ಮಿಯ ಬರವೊ ಕೌರವನೃಪನ ಮರಣಾಂಕುರವ ಸೂಚಿಸುವಾತುರಶ್ರೀಸತಿಯ ಸಂಭ್ರಮವೊ" ಎಂಬಂತಿದ್ದಳು. ಆದರೆ ಅಶ್ವತ್ಥಾಮನು "ಅಭಿಮಂತ್ರಿತ ಭೀಮವಿಕ್ರಮ ತೃಣ"ವನು ಪ್ರಯೋಗಿಸಲು ಅದನ್ನು ಶ್ರೀಕೃಷ್ಣ ತಡೆದ ಮೇಲೆ ಭೀಮಾರ್ಜುನರು ಅಶ್ವತ್ಥಾಮನನ್ನು ಕೊಲ್ಲಲು ಮುಂದಾದಾಗ, ದುರ್ಯೋಧನ-ದುಶ್ಶಾಸನರ ಸಾವಿನಿಂದ ಗಾಂಧಾರಿಗೆ ಉಂಟಾಗುವ ನೋವಿನ ಬಗ್ಗೆ ಯೋಚಿಸುವವಳು, "ಗುರುನಂದನನ ಕೊಲಬಾರದಕಟೀ ನಂದನರ ಮರಣದ ಮಹಾವ್ಯಥೆಯೀತನಳಿವಿನಲಿ ಕೊಂದುಕೂಗದೆ ಕೃಪೆಯನು" ಎಂದು ಕೃಪೆಯ ಮಾತೃಹೃದಯವನ್ನು ನೆನಪಿಸಿಕೊಂಡು ಮೃದುವಾಗಬಲ್ಲಳು.

ಅವನೇ ಕಾರಣ[ಸಂಪಾದಿಸಿ]

 • ಹೀಗಿರುವ ಕುಮಾರವ್ಯಾಸಭಾರತದ ಪಾತ್ರಗಳು ಪೂರ್ತಿ ಅವನ ಸೃಷ್ಟಿಯೇನಲ್ಲ. ಸುಮಾರು ಇದೇ ಬಗೆಯಲ್ಲಿ ಅವು ಎಲ್ಲ ಭಾರತಗಳಲ್ಲೂ ಚಿತ್ರಿತವಾಗಿವೆ: ಆದರೆ ಇಲ್ಲಿನ ಪಾತ್ರಗಳಿಗೆ ಕುಮಾರವ್ಯಾಸಸ್ಪರ್ಶವಿರುವುದು ನಿಜ. ಅದೆಂದರೆ ಇವರೆಲ್ಲ ಈ ಕಾವ್ಯದಲ್ಲಿ ನಿಯಂತ್ರಿತ ಹಾಹೆಗಳಾಗಿರುವುದು. ಅವರು ಅನುಭವಿಸುವುದೆಲ್ಲ ಪೂರ್ವನಿಶ್ಚಿತ. ಅವರೇಕೆ ತಮ್ಮ ಪಾಡುಗಳನ್ನು ಅನುಭವಗಳನ್ನು ಹೀಗೆ ಹೀಗೇ ಅನುಭವಿಸಬೇಕು ಎಂದರೆ ಕುಮಾರವ್ಯಾಸನ ಸಮಾಧಾನ ಅವೆಲ್ಲ ದೈವನಿಯಾಮಕ ಎಂಬುದು. ದೈವವೇಕೆ ಎಲ್ಲವನ್ನೂ ತನಗೆ ತಾನೇ ನಿರ್ಧರಿಸಬೇಕು ಎಂಬುದು ನಮಗೆ, ಕನಿಷ್ಠ ಪಕ್ಷ ನನ್ನಂಥವನಿಗೆ, ಅರ್ಥವಾಗುವುದಿಲ್ಲ. ಕೆಟ್ಟ ಪಾತ್ರಗಳು ಹಾಗೇಕೆ ಇವೆ, ಒಳ್ಳೆಯವರು ಹೀಗೇಕೆ ಇರಬೇಕು ಎಂದರೆ ಎಲ್ಲದಕ್ಕೂ ಒಂದೇ ಉತ್ತರ: 'ಅವನೇ ಕಾರಣ'. ಅವನಾದರೂ ಒಳ್ಳೆಯವರನ್ನು ಆ ರೀತಿಯೂ, ಕೆಟ್ಟವರನ್ನು ಈ ರೀತಿಯೂ ಯಾಕೆ ಸೃಷ್ಟಿಸಬೇಕು ಎಂದರೆ ಬರುವ ಉತ್ತರ: 'ಎಲ್ಲ ಅವನ ಲೀಲೆ' ಎಂಬುದು. ದೇವರಿಗೆ ಬೇಸರ ಹೋಗಲಾಡಿಸಿಕೊಳ್ಳಲು ಈ ಲೀಲೆಗಳು ಆವಶ್ಯಕವೇ? ಹಾಗಿದ್ದೆ ಅವನಿಗೇಕೆ ಬೇಸರ, ಅವನಿಗೆ ಬೇಸರವೆಂಬುದುಂಟೆ? ಹೀಗೆ ಒಂದಾದ ಮೇಲೊಂದರಂತೆ ಪ್ರಶ್ನೆಗಳ ಸರಮಾಲೆ ಹುಟುತ್ತದೆ. ಎಲ್ಲದಕ್ಕೂ 'ಗೊತ್ತಿಲ್ಲ, ಅವನನ್ನು ಅರ್ಥಮಾಡಿಕೊಳ್ಳಲು ನಮಗೆ ಅಸಾಧ್ಯ' ಎಂಬ ಸಮಾಧಾನ. ಹೀಗಾಗಿ ಇಲ್ಲಿನ ಪಾತ್ರಗಳು ಕೃಷ್ಣನ ಪೂರ್ವನಿರ್ಧಾರಿತ ಗೈಮೆಗಳಾದುದರಿಂದ ಅವರ ನಡವಳಿಕೆಯಿಂದ ಪಾತ್ರಗಳನ್ನು ನಾವು ಪರಿಭಾವಿಸಿಕೊಳ್ಳುವುದು ಹೇಗೆ?
 • "ವ್ಯಕ್ತಿಯ ಪಾಪಪುಣ್ಯಗಳು ಅವನ ಜವಾಬ್ದಾರಿಯಾಗಿರುವುದರಿಂದ ಕೃಷ್ಣ ಅದರಲ್ಲಿ ಕೈಹಾಕಲು ಹೋಗುವುದಿಲ್ಲ. ದುರ್ಯೋಧನನ ಹಗೆತನವಾಗಲೀ, ಯುಧಿಷ್ಠಿರನ ದ್ಯೂತವ್ಯಸನವಾಗಲೀ ಕೃಷ್ಣನ ಉಪದೇಶದಿಂದ ತಪ್ಪುವುದಿಲ್ಲ" ಎಂದೊಬ್ಬರು ಹಿರಿಯರು ಹೇಳುತ್ತಾರೆ. ಆದರೆ ಕೃಷ್ಣ ಪದೇ ಪದೇ "ಹಿಂಸೆಯರಿವಡಹಿಂಸೆ", "ಸುಕೃತದುಷ್ಕೃತವೆಂಬವವೇ ಬಾಧಕವು ಜೀವರಿಗೀಯಹಂಕೃತಿ ವಿಕಳತೆಗೆ ತಾ ಬೀಜ" ಎಂಬಂತಹ ಮಾತುಗಳನ್ನಾಡುತ್ತ, "ಎನ್ನ ಹೃದಯದೊಳಿರ್ದು ಮುರಿವನು ಗನ್ನದಲಿ ಸಂಧಿಯನು ರಿಪುಗಳೊಳಿನ್ನು ತನ್ನವರೊಳಿರ್ದಾ ನುಡಿವವನೀ ಹದನ", "ಎನ್ನ ಖಳಗುಣದೋಷ ನಿನ್ನದು ಪುಣ್ಯಪಾಪದ ವಾಸಿ ನಮಗೇಕೆ" ಎಂಬ ರೀತಿಯ ಅಲೋಚನೆ ಮಾಡುವಂತೆ ಏಕೆ ಪ್ರೇರಿಸಬೇಕು? ಕಾವ್ಯದುದ್ದಕ್ಕೂ ಕೃಷ್ಣನ ಕೈವಾಡವಿರುವುದರಿಂದ ಇಲ್ಲಿನ ಪಾತ್ರಗಳ ಆಗುಹೋಗುಗಳಿಗೆ ಅವರು ತಾನೇ ಹೇಗೆ ಜವಾಬುದಾರರಾಗುತ್ತಾರೆ? ಅಲ್ಲದೆ, ಯಾರಿಗೂ ಸ್ವಂತ ಜವಾಬ್ದಾರಿಯೇ ಇಲ್ಲವಲ್ಲ, ಎಲ್ಲದಕ್ಕೂ ಕೃಷ್ಣನೇ ತಾನೇ ಹೊಣೆ! ಅಂದರೆ ಕುಮಾರವ್ಯಾಸಭಾರತದ ಪಾತ್ರಗಳನ್ನು ನಾವು ವಿವೇಚಿಸುವಂತೆಯೇ ಇಲ್ಲ; ಅವನು ಹೀಗೆ ನಡೆದುಕೊಳ್ಳಬಾರದಿತ್ತು, ಇವನದು ಒಳ್ಳೆಯ ಕಾರ್ಯ; ಅವನದು ದುಷ್ಟತನ, ಇವನದು ಪುಣ್ಯವಿಶೇಷ ಎಂದೆಲ್ಲ ಪಾತ್ರಗಳ ತಲೆಗೆ ಕಟ್ಟುವುದು ಹೇಗೆ? ಅಂದರೆ ಈ ಕಾವ್ಯವನ್ನು ಒಟ್ಟಾಗಿ ನೋಡಿದರೆ ಪಾತ್ರಗಳಿಗೆ (ಅಂದರೆ ನಿಜಜೀವನದ) ವ್ಯಕ್ತಿಗಳಿಗೆ ಯಾವ ಹೊಣೆಗಾರಿಕೆಯೂ ಇರದಾಗುತ್ತದೆ. ಆ ಕಾರಣದಿಂದ ಕವಿ ಕೃಷ್ಣನನ್ನು ಸರ್ವಾಂತರ್ಯಾಮಿ, ಸರ್ವಶಕ್ತ, ಸರ್ವನಿಯಾಮಕ ಎಂಬಂತೆ ನೇರವಾಗಿ ಹೊಗಳದೆ, ಅವನಿಂದಲೂ ಅಂತಹ ಮಾತುಗಳನ್ನಾಡಿಸದೆ, ಎಲ್ಲದಕ್ಕೂ ಕಾರಣವಾಗುವ, ಆದರೆ ತಾನೂ ಕೆಲವೊಮ್ಮೆಯಾದರೂ ಎಡಹುವ, ಬೇಕಾದ ಸಮಯದಲ್ಲಿ ಕುಟಿಲತನವನ್ನು ತೋರುವ ಪ್ರಭಾವಶಾಲೀ 'ವ್ಯಕ್ತಿ'ಯಂತೆ ಚಿತ್ರಿಸಿದ್ದರೆ, ಇಲ್ಲಿನ ಪಾತ್ರಗಳಿಗೆ ಸ್ವಂತಿಕೆ ಪ್ರಾಪ್ತವಾಗುತ್ತಿತ್ತು ಎನ್ನಿಸುತ್ತದೆ. ಇಲ್ಲಿನ ಕೃಷ್ಣನನ್ನು ನೆನಪಿಸಿಕೊಂಡರೆ, ಷೇಕ್ಸ್ಪಿಯರ್ನ As flies to wanton boys are we to gods, they kill us for their sport ಎಂಬ ಮಾತು ನೆನಪಿಗೆ ಬರುತ್ತದೆ. ಮನುಷ್ಯಪ್ರಜ್ಞೆಯ ಜೊತೆಗೆ ಚೆಲ್ಲಾಟವಾಡುವ ಕೃಷ್ಣಪ್ರಜ್ಞೆಯ ಬಗ್ಗೆ ಏನನ್ನಬೇಕು? ಸಾಮಾನ್ಯ ಜೀವನದಲ್ಲಾದರೆ, ಇತರರ ಬದುಕಿನೊಡನೆ ಹೀಗೆ ಚೆಲ್ಲಾಟವಾಡುವವನ್ನು ಕುರಿತು 'ಅವನಿಗೇನು ಬೇರೆ ಕೆಲಸ ಇಲ್ಲವೇ?' ಎಂದು ಪ್ರಶ್ನಿಸುತ್ತೇವೆ. ಆದರೆ ಇಲ್ಲಿ ಹಾಗೆ ಕೇಳಲು ಸಾಧ್ಯವಾಗದು. ಇಂತಹ ಚಿತ್ರಣ ಮನುಷ್ಯನ ಬದುಕಿಗೆ ಹತ್ತಿರ ಎಂದು ಹೇಗೆ ಹೇಳುವುದು? ಹೀಗಾಗಿ ಇದನ್ನು ಪುರಾಣವಾಗಿಯೇ ಕಾಣಬೇಕೋ ಏನೋ. ಆದ್ದರಿಂದಲೇ "ಕುಮಾರವ್ಯಾಸನಲ್ಲಿ ಸಾಹಿತ್ಯದ ದೃಷ್ಟಿಗಿಂತ ಭಕ್ತಿಮಾರ್ಗದ ದೈವೀಭಾವನೆಯೇ ಕಂಡುಬರುತ್ತದೆ. ಆದ್ದರಿಂದ ಸುಸಂಬದ್ಧ ಪಾತ್ರರಚನೆಯನ್ನು ಅಪೇಕ್ಷಿಸುವುದೇ ಸರಿಯಾಗಲಾರದು" ಹಾಗೂ "ಕಥನಮೂಲಕವಾಗಿ ಭಾಗವತದರ್ಶನವನ್ನು ಜನಸುಲಭರೀತಿಯಲ್ಲಿ ನಿರೂಪಿಸಿದ ಕಾರಣ ಕುಮಾರವ್ಯಾಸಭಾರತವು ಪುರಾಣಕಾವ್ಯವಾಗಿದೆ ಎಂದು ಹೇಳಿದರೆ ತಪ್ಪಲ್ಲ" ಎಂದು ಕೆಲವರು ತೀರ್ಮಾನಿಸುವುದು ಸಕಾರಣವಾಗಿಯೂ ಸಮಂಜಸವಾಗಿಯೇ ಇದೆ.
 • ಕುಮಾರವ್ಯಾಸಭಾರತವು ದೇಸಿಯನ್ನು ಅಳವಡಿಸಿಕೊಂಡದ್ದರಿಂದಾಗಿ ಅಷ್ಟಾದಶವರ್ಣನೆಗಳ ಕಟ್ಟುಪಾಡಿನಿಂದ ಪಾರಾಯಿತು; ಇಲ್ಲದಿದ್ದರೆ ಸುಭದ್ರೆಯ ವಿರಹದಲ್ಲಿರುವ ಅರ್ಜುನ ಸೂಳೆಗೇರಿಯನ್ನು ಸಂದರ್ಶಿಸುವಂತಹ ಪಂಪನ ಅಸಂಬದ್ಧತೆ ಇಲ್ಲಿಯೂ ನುಸುಳುತ್ತಿತ್ತೇನೋ. ಕುಮಾರವ್ಯಾಸಭಾರತ ವರ್ಣಕ ಕಾವ್ಯ; ಎಲ್ಲದರಲ್ಲೂ ಅದರಲ್ಲಿ ವಿವರಮೋಹ. ಆದರೆ ಅದು ವರ್ಣನೆಯಲ್ಲ, ಹಿಂಜುವಿಕೆ. ಕುಮಾರವ್ಯಾನದು ತನ್ನ ಆವಶ್ಯಕತೆಗೆ ತಕ್ಕುದು ಎನಿಸುವಂತಹ ವರ್ಣನೆ, ಬಲವಂತವಾಗೇನೂ ಯಾವುದನ್ನೂ ಅವನು ವರ್ಣಿಸಬೇಕಾಗಿಲ್ಲ. ಈ ಸ್ವಾತಂತ್ರ್ಯವನ್ನು ಕುಮಾರವ್ಯಾಸ ಸರಿಯಾಗಿಯೇ ಬಳಸಿಕೊಂಡಿದ್ದಾನೆ. "ವಿರಹಿಗಳ ಶೃಂಗಾರಕ" ಎಂದು ವರ್ಣಿಸಿದ್ದರೂ ಹಳೆಯ ಕಾವ್ಯಗಳ ಅತಿರೇಕದ ಅಂಗಾಂಗ ವರ್ಣನೆ ಅವನಲ್ಲಿಲ್ಲ; ಆದರೆ ಹೆಣ್ನನ್ನು ಕಂಡಾಗ ಗಂಡಿನ ಮನಸ್ಸಿನಲ್ಲಿ ಸುಳಿಯುವ ಭಾವನೆಗಳಿಗೆ ಅಲಲ್ಲಿ ಎಡೆಯಿದೆ; ಆದರೆ ಅಂತಹ ಸನ್ನಿವೇಶಗಳೇ ಕಡಿಮೆ. ದ್ರೌಪದಿ ಸ್ವಯಂವರದಲ್ಲಿ "ನಾರಿಯನು ಸಂಸಾರಸುಖ ಸಾಕಾರಿಯನು ಜನನಯನ ಕಾರಾಗಾರಿಯನು ಮುನಿಧೈರ್ಯ ಸರ್ವಸ್ವಾಪಹಾರಿಯನು ಧೀರರಿಗೆ ಮಾರಂಕವನು ವರ ಪಾರಿಕಾಂಕ್ಷೆಯ ಚಿತ್ತಚೌರ್ಯವಿಹಾರಿಯನು ದ್ರೌಪದಿಯಯನಭಿವರ್ಣಿಸುವಡಾರು" ಎಂದು ಅವಳ ಸೌಂದರ್ಯವನ್ನು ಕುರಿತು ವರ್ಣಿಸಲು ರಚಿಸುವುದು ಐದು ಪದ್ಯಗಳನ್ನು ಮಾತ್ರ. ಈ ಸಂದರ್ಭದಲ್ಲಿ ವಿಮರ್ಶಕರೊಬ್ಬರ ಈ ಮಾತುಗಳನ್ನು ನೆನಪಿಸಿಕೊಳ್ಳಬಹುದು: "ಭಾರತ ಕತೆಯಲ್ಲಿ ಮುಂದೆ ಉದ್ದಕ್ಕೂ ಸುಡುವ ಕೆಂಡವಾಗುವ ದ್ರೌಪದಿ ಇಲ್ಲಿ ಮಾತ್ರ ಶೀತಳ ಮಾಣಿಕವಾಗಿದ್ದಾಳೆ". ಉತ್ತರೆಯ ಮದುವೆಯ ಸನ್ನಿವೇಶದಲ್ಲಿಯೂ ಅವನು ಆ ಷೋಡಶಿಯ ರೂಪವರ್ಣನೆ ಮಾಡುವುದಿಲ್ಲ. ಅದು ಅವಳ ರೂಪು ಕಂಡು ಅಭಿಮನ್ಯು ಮನಸೋಲುವ ಸನ್ನಿವೇಶವಲ್ಲವಲ್ಲ. ತನಗೆ ಗೆಲವು ತಂದಿತ್ತ ಅರ್ಜುನನಿಗೆ ಕಾಣಿಕೆಯ ರೂಪವಾಗಿ ತನ್ನ ಮಗಳಾದ ಉತ್ತರೆಯನ್ನು ಮದುವೆ ಮಾಡಕೊಡಲು ವಿರಾಟ ಮುಂದಾದಾಗ ಅರ್ಜುನನೇ "ವರುಷವಿವಳಲಿ ನಾಟ್ಯವಿದ್ಯೆಯ ಪರುಟವಿಸಿದೆನು ತಂದೆಯಂತೀ ತರುಣಿ ಭಜಿಸಿದಳಾ ಪ್ರಕಾರ ರಹಸ್ಯ ದೇಶದಲಿ .. .. ಕುಮಾರಿಯನೀವಡಭಿಮನ್ಯುವಿಗೆ ಕೊಡಲಿ" ಎಂದು ಸಲಹೆ ನೀಡುವ ಸನ್ನಿವೇಶ. ಇದು ಸಮಂಜಸವಾಗಿಯೇ ಇದೆ. ಅಲ್ಲದೆ, ಇಡೀ ಮಹಾಭಾರತದ ಪರಿವೇಷ ಬಿಗುವಿನಿಂದ ಕೂಡಿದುದು; ಅಲ್ಲಿ ವಿವರವಾದ ಶೃಂಗಾರಕ್ಕೆ ಅವಕಾಶವೇ ಇಲ್ಲ. ಪಾಂಡುವಿಗೆ ಶಾಶ್ವತ ವಿರಹವನ್ನು ಹೊತ್ತು ತರುವ ಸಂದರ್ಭದಲ್ಲಿ ಅತ್ಯಂತ ಸಮಂಜಸವಾಗಿ ಆರು ಪದ್ಯಗಳಲ್ಲಿ ವಸಂತದ ಸೊಬಗನ್ನು ವರ್ಣಿಸಿದ ಕವಿ ಮಾದ್ರಿ ಶಾಪಗ್ರಸ್ತ ಪಾಂಡುವನ್ನು ತೀವ್ರ ಸೆಳೆತಕ್ಕೊಳಗುಮಾಡಿದ ಸೌಂದರ್ಯವನ್ನು ಒಂದೇ ಪದ್ಯದಲ್ಲಿ ವರ್ಣಿಸುವ ಕವಿ, ಅದರ ಪರಿಣಾಮವನ್ನು "ತಾಗಿದವು ಶರನಿಕರ ಕಾಮನ ಲಾಗು ವೇಗವದೆಂತುಟೋ ತೆಗೆ ಹೂಗಣೆಗಳೈದಲ್ಲ ರೋಮಗಳೆಂಟು ಕೋಟಿಯಲಿ ತೂಗಿ ನೆಟ್ಟವು ಕಣೆಗಳೆಂಬವೊಲಾ ಗರುವನಳುಕಿದನು ಪ್ರಜ್ಞಾಸಾಗರಂಗಳು ಮಧ್ಯಕಟಿ ಜಾನ್ವಂಘ್ರಿ ಮಿತವಾಯ್ತು" ಎಂದು ವರ್ಣಿಸುತ್ತಾನೆ.
 • ಕುಮಾರವ್ಯಾಸ ತುಂಬ ವಾಚಾಳಿಯಾಗುವುದು ಯುದ್ಧ ವರ್ಣನೆಯಲ್ಲಿ. "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುದು, ಭಾರತ ಕಣ್ಣಲಿ ಕುಣಿವುದು, ಮೈಯಲಿ ಮಿಂಚಿನ ಹೊಳೆತುಳುಕಾಡುವುದು; ಆ ಕುರುಭೂಮಿಯ ತೋರುವುದು, ಆ ಸಂಗ್ರಾಮದಲಿ ಪಟುಭಟರಾರ್ಭಟ ಕೇಳುವುದು, ಮೈನವಿರೇಳುವುದು" ಎಂಬ ಮೆಚ್ಚಿಕೆಯ ಉದ್ಗಾರಗಳೆ ಬಂದಿವೆ. ಒಂದೆಡೆ ಕವಿ "ಯುದ್ಧವ್ಯಾಕರಣ ಪಾಂಡಿತ್ಯ"ವನ್ನು ಉಲ್ಲೇಖಿಸುತ್ತಾನೆ. ಅದು ಈ ಕವಿಗೇ ಕರಗತವಾದಂತೆ ಕಾಣುತ್ತದೆ, ಯುದ್ಧವರ್ಣನೆಯಲ್ಲಿನ ಸೂಕ್ಷ್ಮ ವಿವರಗಳನ್ನು ಕಂಡಾಗ ಜರಾಸಂಧ-ಭೀಮರ ಸಂಗ್ರಾಮವಿರಲಿ, ಅರ್ಜುನ-ಗಂಧರ್ವರಾಜನ ಯುದ್ಧವಿರಲಿ, ಅರ್ಜುನ-ಕಪಟ ಕಿರಾತನ ಹೋರಾಟವಿರಲಿ, ಯುದ್ಧಪಂಚಕದಲ್ಲಿನ ನಿತ್ಯ ಯುದ್ಧಗಳಿರಲಿ ಕುಮಾರವ್ಯಾಸನ ಲೇಖನಿಗೆ ಓಟ ಸಿಗುತ್ತದೆ, ಪದ್ಯಗಳು ಧಾರಾಳವಾಗಿ ರಚಿತವಾಗುತ್ತವೆ. ಪಟುಭಟರ ಆರ್ಭಟ, ಆಯುಧಗಳ ಝಣತ್ಕಾರ, ಗಾಯಗೊಂಡವರ ಆರ್ತಸ್ವರ, ಗೆದ್ದವರ ಅಹಂಕಾರ ಎಲ್ಲ ಮತ್ತೆ ಮತ್ತೆ ಬಂದರೂ ಕವಿಗೆ ಮಾತ್ರ ಈ ವರ್ಣನೆಗಳಲ್ಲಿ ದಣಿವರಿಯದ ಉತ್ಸಾಹ. ಯುದ್ಧಗಳಲ್ಲಿ ವೈವಿಧ್ಯವಿರಲು ಹೇಗೆ ಸಾಧ್ಯ? ಅದೇ ರಣೋತ್ಸಾಹ, ಅದೇ ರೋಷ, ಅದೇ ಮೂದಲಿಕೆ, ಅದೇ ತಿವಿಯಾಟ-ಹೊಡೆದಾಟ-ಕೊಲ್ಲಾಟಗಳೇ. ಸನ್ನಿವೇಶ ಬೇರೆಯಾಗಬಹುದು, ಹೋರಾಡುವವರು ಬೇರೆ ವ್ಯಕ್ತಿಗಳಾಗಬಹುದು, ಹಿಡಿದ ಕೈದುಗಳು ವಿಭಿನ್ನವಾಗಿರಬಹುದು, ಯುದ್ಧ ಮಾಡಲು ಬೇಕಾದದು ಮಾತ್ರ ಪೌರುಷ ರೋಷಗಳೇ. ಹೀಗಾಗಿ ಒಂದು ದೀರ್ಘ ಯುದ್ಧವರ್ಣನೆಯನ್ನು ಓದಿ ಮತ್ತೊಂದರ ಜೊತೆಗಿಟ್ಟು ನೋಡಿದರೆ ಹೆಚ್ಚೇನೂ ವ್ಯತ್ಯಾಸ ಕಾಣದು, ಕವಿ ಬಳಸುವ ಭಾಷೆಯ ಹೊರತಾಗಿ. ಈ ಯುದ್ಧೋತ್ಸಾಹ ಕುಮಾರವ್ಯಾಸನ ಹಿರಿಯರು ಗಜಾಧಿಪತಿಗಳಾಗಿದ್ದುದರಿಂದಲೋ ತಾನೇ ಅಂತಹ ಹುದ್ದೆಯನ್ನು ಪಡೆದಿರಬಹುದಾದರಿಂದಲೋ ಬಂದುದೇ ತಿಳಿಯದು. ಆದರೆ ಅವನು ಯುದ್ಧವಿವರಗಳನ್ನು ಕಲೆಹಾಕುವ ರೀತಿ ಮಾತ್ರ ವಿಸ್ಮಯಕಾರಿಯಾದುದು.
 • ಕುಮಾರವ್ಯಾಸನ ಬರವಣಿಗೆ ಲಂಬಿಸುವುದು ಭಕ್ತಿಯ ಸನ್ನಿವೇಶಗಳಲ್ಲಿ, ಭಕ್ತ ಸ್ತೋತ್ರ ಮಾಡುವಾಗ, ಭಕ್ತಜೀವ ಸಂಕಷ್ಟದಲ್ಲಿ ಸಿಲುಕಿ ಆರ್ತತೆಯಿಂದ ದೈವವನ್ನು ನೆನೆದಾಗ. ಬಹು ನಿರ್ಭರವಾಗಿ ಇಂತಹ ಸ್ತೋತ್ರ ಮಾಲಿಕೆ ಹರಿದಿರುವುದು ದ್ರೌಪದಿ ಆರ್ತತೆಯಿಂದ ತನಗಾಗುತ್ತಿರುವ ಅಪಮಾನದಿಂದ ಪಾರುಮಾಡೆಂದು ಸಭೆಯಲ್ಲಿ ಪ್ರಾರ್ಥಿಸುವಾಗ, ವನವಾಸದಲ್ಲಿದ್ದಾಗ ದೂರ್ವಾಸಾಗಮನದಿಂದ ಸಂದಿಗ್ಧದಲ್ಲಿ ಸಿಲುಕಿದ ಸನ್ನಿವೇಶದಲ್ಲಿ, ಕಿರಾತಾರ್ಜುನ ಪ್ರಸಂಗದಲ್ಲಿ ತನ್ನದುರಿನ ಶಬರ ಶಿವನೆಂದು ತಿಳಿದಾಗ ಅರ್ಜುನ ಮಾಡುವ ಪ್ರಾರ್ಥನೆಯಲ್ಲಿ, ದೌತ್ಯಕ್ಕಾಗಿ ಕೃಷ್ಣ ಹಸ್ತಿನಾವತಿಗೆ ಬಂದವನು ವಿದುರನ ಮನೆಗೆ ದಯಮಾಡಿಸಿದಾಗ, ದುರ್ಯೋಧನನ ಆಸ್ಥಾನದಲ್ಲಿಯೂ ಅರ್ಜುನವಿಷಾದದ ಸನ್ನಿವೇಶದಲ್ಲಿಯೂ ತೋರಿಸಿದ ವಿಶ್ವರೂಪದ ಸನ್ನಿವೇಶದಲ್ಲಿ ಸುತ್ತಲಿದ್ದವರು ಭಯಭೀತರಾಗಿ ಪ್ರಾರ್ಥಿಸುವಾಗ - ಹೀಗೆ; ಕ್ರಮವಾಗಿ ಈ ಸನ್ನಿವೇಶಗಳಲ್ಲಿ ಇಪ್ಪತ್ತು ಪದ್ಯಗಳಲ್ಲಿ, ಏಳು ಪದ್ಯಗಳಲ್ಲಿ, ಇಪ್ಪತ್ತೇಳು ಪದ್ಯಗಳಲ್ಲಿ, ಒಂಬತ್ತು ಪದ್ಯಗಳಲ್ಲಿ, ಹನ್ನೊಂದು ಪದ್ಯಗಳಲ್ಲಿ, ಮೂವತ್ತನಾಲ್ಕು ಪದ್ಯಗಳಲ್ಲಿ ಸ್ತುತಿ ಹರಿಯುತ್ತದೆ. ಭಕ್ತಿಯ ಸನ್ನಿವೇಶದಲ್ಲಿ ಕಾಣುವುದು ಭಕ್ತಚೇತನದ ಅಸಹಾಯಕತೆ, ದೈನ್ಯ, ಶರಣಾಗತಿ, ದೇವರ ಹೊಗಳಿಕೆ, ಕೃಪೆಗೈಯಬೇಕೆಂಬ ಬೇಡುವಿಕೆ - ಇಂತಹವು. ಭಕ್ತಿ ಬೇರೆಡೆ ಬೇರೆ ಬೇರೆ ರೂಪಗಳಲ್ಲಿಯೂ ವ್ಯಕ್ತವಾಗಬಹುದು. ನವವಿಧ ಭಕ್ತಿ, ದ್ವಾದಶಭಕ್ತಿ ಮುಂತಾದ ಮಾತುಗಳು ಬಳಕೆಯಲ್ಲಿವೆಯಲ್ಲ. ಅಲ್ಲೆಲ್ಲ ಭಕ್ತಿ ವಿವಿಧರೂಪವನ್ನು ಪಡೆಯುತ್ತದೆ. ಹಾಗೆ ನೋಡಿದರೆ ಭಕ್ತಿ ಎಂಬುದು ಒಂದು ಭಾವವಲ್ಲ, ಭಯವಿನೀತತೆಗಳ ಹಿನ್ನೆಲೆಯಲ್ಲಿ ಅನೇಕ ಭಾವಗಳೊಡನೆ ತಳುಕುಹಾಕೊಕೊಂಡ ಮಿಶ್ರಭಾವ. ಮನುಷ್ಯಸಹಜ ಸ್ಥಾಯಿಭಾವಗಳು ತನ್ನ ನಂಬಿಕೆ ದೇವರೆಡೆಗೆ ದಿಗ್ದರ್ಶಿತವಾದಾಗ ಉಂಟಾಗುವ ವಿವಿಧ ಭಕ್ತಿರೂಪಗಳೇ ಮಧುರ, ದಾಸ್ಯ, ಸಖ್ಯ, ವಾತ್ಸಲ್ಯ ಮುಂತಾದವು. ಆದರೆ ಕುಮಾರವ್ಯಾಸಭಾರತದಲ್ಲಿ ಕಾಣುವುದು ಅಸಹಾಯಕ ಚೇತನವು ಸಂದಿಗ್ಧದಲ್ಲಿ ಸಿಲುಕಿಕೊಂಡಾಗ ಮಾಡುವ ಆರ್ತನಾದದ ಭಕ್ತಿ; ದೇವರನ್ನು ಕಾಣಲು ತವಕಿಸುವ ಭಕ್ತಚೇನದ ಭಾವನಿರ್ಭರತೆಯಲ್ಲ, ತನಗೇಕೆ ಕಾಣಿಸೆ ಎಂಬ ಹಲುಬಲ್ಲ. ಎಲ್ಲಿಯೇ ಆಗಲಿ. ಭಕ್ತಿ ಶುದ್ಧಭಾವವಾದ್ದರಿಂದ ಅದರಲ್ಲಿ ತಾರ್ಕಿಕತೆಯಿರುವುದಿಲ್ಲ, ವಿವೇಚನಾಲಹರಿಯಿರುವುದಿಲ್ಲ, ಸುಸಂಬದ್ಧತೆಯಿರುವುದಿಲ್ಲ; "ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವ". ಈ ಕಾವ್ಯದಲ್ಲಿ ಒಂದೆಡೆ ಕೃಷ್ಣನೇ ಹೇಳಿಕೊಳ್ಳುತ್ತಾನಲ್ಲ "ಭಂಟರಾವ್ ಭಕ್ತರ್ಗೆ ನೆನೆವರು ನಂಟರೆಮಗೆ, ಒಲಿದಂತೆ ಹೊಗಳಿದೊಡೆ ಎಂಟು ಮಾಡಿ ಮೆಚ್ಚುವೆವು, ಮೆಚ್ಚೆವು ತರ್ಕಸಾಧಕರ". ಅದಕ್ಕನುಗುಣವಾಗಿಯೇ ಕುಮಾರವ್ಯಾಸನ ಸ್ತೋತ್ರಮಾಲಿಕೆಯಿದೆ. ಇಲ್ಲಿ ಉಲ್ಲೇಖಿಸಿರುವ ಪ್ರಸಂಗಗಳು ಕೆಲವು ಮಾತ್ರ, ಆದರೆ ಇಡೀ ಕಾವ್ಯದಲ್ಲಿ ಅಂತರ್ವಾಹಿನಿಯಾಗಿ ಹರಿಯುವುದು ಭಕ್ತಿಸ್ರೋತ. "ಕುಮಾರವ್ಯಾಸ ಭಕ್ತ ಕವಿ, ಮಹಾಭಾರತವು ಪುರಾಣ. ಶ್ರೀಕೃಷ್ಣನು ಅವತಾರಪುರುಷನು, ಶ್ರೀಮನ್ನಾರಾಯಣನು, ಅಷ್ಟೇ ಅಲ್ಲ, ಅವನು ಗದುಗಿನ ವೀರನಾರಾಯಣನು. ನಾರಣಪ್ಪನಿಗೆ ಭಕ್ತಿಯೇ ಪ್ರಧಾನ ರಸ" ಎಂದು ಎಲ್ಲರೂ ಗುರುತಿಸುತ್ತಾರೆ. ಆದರೆ "ಭಕ್ತಾಗ್ರಣಿಗಳು ಕೂಡ ಬೇಸರದಿಂದ ರೇಗಿಬಿದ್ದರೂ ಸರಿಯೆ, ದೇವರಿಗೆ ಕೂಡ ಮುಖಸ್ತುತಿಯನ್ನು ಕೇಳೀ ಕೇಳೀ ರೇಜಿಗೆ ಹಿಡಿದರೂ ಸರಿಯೆ, ಕುಮಾರವ್ಯಾಸನು ಮಾತ್ರ ಕೈಮುಗಿದುಕೊಂಡು, ಆನಂದಬಾಷ್ಪಗಳನ್ನು ಸುರಿಸುತ್ತ, ಭಾವಾವಿಷ್ಟನಾಗಿಯೇ ಹಾಡುವನು" ಎಂದು ಕೆಲವರು ಗೇಲಿಯನ್ನೂ ಮಾಡುತ್ತ್ದಾರೆ.

ಭಾಷೆ[ಸಂಪಾದಿಸಿ]

 • ಕುಮಾರವ್ಯಾಸನ ಮಾತುಗಾರಿಕೆ ಅಪ್ರತಿಮವಾದುದು. ಕನ್ನಡ ನಾಡಿನ ಮನೆಗಳಲ್ಲಿ, ಬೀದಿಗಳಲ್ಲಿ, ಸಂತೆಗಳಲ್ಲಿ, ಹೊಲಗಳಲ್ಲಿ, ಕಣಗಳಲ್ಲಿ, ಜಗಳ ಪ್ರೀತಿ ವೈರ ರೋಷಗಳ ಸನ್ನಿವೇಶಗಳಲ್ಲಿ ನಡೆದಾಡುವ ಕನ್ನಡ ಮಾತು ಕುಮಾರವ್ಯಾಸಭಾರತದಲ್ಲಿ ಗೆಜ್ಜೆ ಕಟ್ಟಿಕೊಂಡು ಭಾಮಿನಿ ಲಯಕ್ಕನುಗುಣವಾಗಿ ಕುಣಿದಾಡುತ್ತದೆ. ಅವನದು ವಿಶೇಷ ಕಾವ್ಯಭಾಷೆಯೇನಲ್ಲ, ಜನವಾಣಿ ಕವಿವಾಣಿಯಾಗುವ ಪರಿ. ಅವನ ಮಟ್ಟಿಗೆ ಕನ್ನಡ ಮತ್ತು ಭಾಮಿನಿ ಲಯ ಎರಡೂ ಅಭಿನ್ನ. ಅವನ ಆಲೋಚನೆಗಳೆಲ್ಲ ಒಮ್ಮೆಗೇ ರೂಪಕಗಳಲ್ಲಿ ಭಾಮಿನಿಯ ಲಯದಲ್ಲಿ ರೂಪುವಡೆಯುತ್ತವೆ. ನಿಜಜೀವನದಲ್ಲೂ ಅವನು ಈ ಲಯದಲ್ಲಿಯೇ ಮಾತನಾಡುತ್ತಿದ್ದನೋ ಏನೋ! ಅವನ ಮೈಮೇಲೆ ಬರುವುದು ಕೃಷ್ಣ ಮಾತ್ರವಲ್ಲ, ಭಾಮಿನೀ ಲಯವೂ. ಯಾವ ಪದ್ಯವನ್ನೂ ಅವನು ಕಟ್ಟುವುದಿಲ್ಲ, ತಾನಾಗಿ ಅದು ಹೊಮ್ಮುತ್ತದೆ, ಅದಕ್ಕಾಗಿ ಕವಿ ಪ್ರಯಾಸವೇ ಪಡಬೇಕಾಗಿಲ್ಲ. ಅವನ ಷಟ್ಪದಿಗಳನ್ನು ದೀರ್ಘ ಕಾಲ ಓದಿಕೊಂಡರೆ ಓದುಗನ ಮನಸ್ಸು ಕೂಡ ಭಾಮಿನಿ ಲಯದಲ್ಲಿ ಆಲೋಚಿಸಲು ತೊಡಗಿಬಿಡುತ್ತದೆ; ಅಷ್ಟು ಪ್ರಭಾವಶಾಲಿ ಅವನ ಷಟ್ಪದಿ ಶೈಲಿ. ಇನ್ನು ಅವನ ರಚನಾ ರೀತಿಯನ್ನು ಸ್ವಲ್ಪ ನೋಡೋಣ. ಅರ್ಜುನ-ಸುಭದ್ರೆಯ ಪ್ರಣಯವನ್ನು ಅವನು "ಬಾಲಕಿಗೆ ಸಂನ್ಯಾಸಿದೇವರ ಮೇಲೆ ಮನವಾಯ್ತವರಿಗೀಕೆಯ ಮೇಲೆ ನೆಲಸಿತ್ತು ಚಿತ್ತ" ಎಂದು ನೇರವಾಗಿರುವಂತೆ ಕಂಡರೂ ಆಪ್ತವಾಗಿ ಕರಾರುವಾಕ್ಕಾಗಿ ಓದುಗನ ಹೃದಯಕ್ಕಿಳಿಯುವಂತೆ ಮಾತನಾಡುತ್ತಾನೆ ಕವಿ. ದ್ರೋಣನ ಸಾವಿನ ಬಳಿಕ ದುರ್ಯೋಧನನ ಆಸ್ಥಾನದ ಪರಿಯನ್ನು ಕವಿ ವರ್ಣಿಸುವುದು ಹೀಗೆ: "ಎಲೆ ಮಿಡುಕದಾಸ್ಥಾನ ವೀಳೆಯದೆಲೆಯ ಮಡಿಸುವ ರಭಸವಿಲ್ಲೊಳಗೊಳಗೆ ಸನ್ನೆಗಳೋರೆಗೊರಳುಗಳೌಡುಗಚ್ಚುಗಳ ಹಳಸಿದಗ್ಗಳಿಕೆಗಳ ಮೀಸಲುಗಳೆದ ಬಿರುದಿನ ಮಾನಭಂಗದ ಕಳವಳದ ಕನಸುಗಳಲಿದ್ದುದು ರಾಯನಾಸ್ಥಾನ!" ಕಣ್ಣಿಗೆ ಕಟ್ಟುತ್ತದೆ ಚಿತ್ರ, ಕುಮಾರವ್ಯಾಸನ ಮಾತು ಚಿತ್ರವಾಗುವ ಪರಿಯಿದು. ದುರ್ಯೋಧನ ಕೃಷ್ಣನನ್ನು ವಿಡಂಬಿಸುವ ಮಾತು: "ಜಗವನೀರಡಿ ಮಾಡಿಕೊಂಡ ಮಹಾತ್ಮ ನಿನಗಂಜುವೆನು ನಾನು'; ಅಭಿಮನ್ಯುವಿನ ಆತ್ಮವಿಶ್ವಾಸದ ಮಾತು "ಮಗುವು ತಾನಹೆ ತನ್ನ ಬಾಣಕೆ ಮಗುವುತನ ಬೇರಿಲ್ಲ"; 'ಭೂಪಾಲಕನ ಸೈರಣೆಗಾಯ್ತು ಮಹನವಮಿ"; "ವಿಜಯಲಕ್ಷ್ಮಿಯ ಸೆರಗು ಸೋಂಕಿತು ಕೌರವೇಶ್ವರಗೆ"; "ಕದನದಲಿ ದುಶ್ಶಾಸನನ ತೇಗಿದನಲಾ"; "ಸಿರಿಮೊಗದ ಕಿರುಬೆಮರ ತೇಜಿಯ ಖುರಪುಟದ ಕೆಂದೂಳಿ ಸೋಂಕಿದ ಸಿರಿಮುಡಿಯ ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ ಖರ ಮರೀಚಿಕೆಯ ಜಳಕೆ ಬಾಡಿದ ತರುಣ ತುಲಸಿಯ ದಂಡೆಯೊಪ್ಪುವ ಗರುವ ದೇವ" ಎಂಬ ಕೃಷ್ಣನ ಸಹಜಸುಂದರ ವರ್ಣನೆ; "ವಿರಾಟಕುಮಾರನಸು ಲಂಘಿಸಿತು ಕಾಯವನೊದೆದು ಖಚರೀಜನದ ಕುಚಯುಗಕೆ" ಎಂಬ ಸಾವಿನ ವರ್ಣನೆ; "ಹೊತ್ತುಗಳೆಯದೆ ಹೆರಿಸಿರೇ ನಾರಿಯನು ನಿಮ್ಮ ಬಾಣಗರ್ಭಿಣಿಯ" ಎಂಬಲ್ಲಿನ ಸಾರ್ಥಕ ಶ್ಲೇಷೆ; "ಇಬ್ಬರಿಗೆ ಫಡ ಹುಬ್ಬನಿಕ್ಕುವಳೊಬ್ಬಳೇ ಜಯಲಕ್ಷ್ಮಿ ಬೊಡ್ಡಿ" ಎಂಬ ಅಸಾಧಾರಣ ಕಲ್ಪನೆ; "ಕೆಲರಂತಕನ ನೆರೆಯೂರವರು"; "ಕಾರಿರುಳ ಪಟ್ಟಣಕೆ ಚಂದ್ರನ ತೋರಣವ ಬಿಗಿದಂತೆ" ಇದ್ದ ಘಟೋತ್ಕಚನ ವರ್ಣನೆ; ಕೀಚಕ ಸತ್ತು ಬಿದ್ದಾಗ "ಖಳನು ಕಾಲನ ಕೋಣ ತುಳಿದಿಳೆಯೊಳಗಿದ"ನೆಂಬ ವರ್ಣನೆ; "ಬೆಂದ ಹುಣ್ಣಿಗೆ ಸಾಸಿವೆಯ ಬಳಸದಿರು", "ಕಾಣಿಯ ಬೀಯದಲಿ ಬಡವಹುದೆ ಕನಕಾಚಲವು", "ನೀಲಮಣಿ ತಲೆಗೇರಿಸಿದ ತೃಣವದಕೆ ಸರಿಯೆ", "ಆಲವಟ್ಟದ ಗಾಳಿಯಲಿ ಮೇಘಾಳಿ ಮುರಿವುದೆ", "ಎಲವದ ಕಾಯಿಗೋಸುಗ ಕಲ್ಪವೃಕ್ಷವ ಕಡಿವನಲ್ಲ" ಎಂಬಂತಹ ಸಹಜ ಬೀಸಿನ ಮಾತುಗಾರಿಕೆ ಅವನದು. "ಹೋದ ಮಾರಿಯ ಕರೆದು ಮನೆಯೊಳಗಾದರಿಸಿದವರುಂಟೆ"; "ಕೆಲಬರು ಗಳಿಸಿದರೆ ಕೆಲರುಂಡು ಜಾರುವರು"; "ಬತ್ತಿದ ಕೆರೆಯೊಳಗೆ ಬಲೆಯೇಕೆ"; "ತರುಣಿಯರು ಪರಿಮಳದ ಜಂಗಮಭರಣಿಯರುಕ"; "ಬೆಳುದಿಂಗಳಿನ ಬಿರುಸಾರ ಸುಡುವುದುಕ"; "ಬಾಯಿ ಹುಳುವುದು ಬಯಲು ನುಡಿದೊಡೆ"; "ಕೆಣಕಿ ನಾಯ್ಗಳ ವೀಸ ಬಡ್ಡಿಯೊಳಸುವ ಕೊಂಬೆನುಕ" ಎಂಬಂತಹ ಗಾದೆ ನಾಣ್ಣುಡಿ ಮತ್ತು ಸ್ವಂತ ಟಂಕಿಸಿದ ನುಡಿಗಳು ಕುಮಾರವ್ಯಾಸನಲ್ಲಿ ಎಡವಿಬಿದ್ದೆಡೆ ಸಿಕ್ಕುತ್ತವೆ. 'ಅಣ್ಣತನ', 'ವಿಕ್ರಮದರಿದ್ರರು', 'ತಿಮಿರಲತೆ', 'ತಾರತಮತೆ' (ತಾರತಮ್ಯ ಎಂಬರ್ಥದಲ್ಲಿ), 'ನಾಲಗೆಯ ವೀರ', 'ಪುನ್ನಾಮ ನಾರಿ', 'ಹೊಟ್ಟುಗುಟ್ಟು', 'ಬಕುತಿ ಕೇಳಿ', 'ಕರುಣಕಲುಷಿತಕಾಯ' ಎಂಬಂತಹ ಅಸಂಖ್ಯಾತ ಶಬ್ದಗಳನ್ನು ಸೃಷ್ಟಿಸಬಲ್ಲ ಶಬ್ದಬ್ರಹ್ಮ ಅವನು.
 • ಅವನನ್ನು ವಿಮರ್ಶಕರೊಬ್ಬರು 'ರೂಪಕ ಸಾಮ್ರಾಜ್ಯದ ಚಕ್ರವರ್ತಿ' ಎಂದು ಕರೆದು ಗೌರವ ಸಲ್ಲಿಸಿರುವುದು ಸಮಂಜಸವಾಗಿಯೇ ಇದೆ. ಮೇಲೆ ಕೊಟ್ಟ ಉದಾಹರಣೆಗಳು ರೂಪಕಗಳೇ ಆಗಿರುವುದನ್ನು ಗಮನಿಸಬಹುದು. ಅಲ್ಲದೆ ಅವನ ರೂಪಕಗಳು "ಎಲ್ಲವೂ ನಾರಣಪ್ಪನು ತಾನೇ ಅನುಭಾವಿಸಿದವು; ನಾರಣಪ್ಪನ ಪ್ರತಿಭೆಯ ಗಿಡದಲ್ಲಿ ಅರಳಿದ ಹೂಗಳು". ಒಟ್ಟಾರೆ, "ಜಗತ್ತಿನಲ್ಲಿ ಕುಮಾರವ್ಯಾಸನಂಥ ನಿರರ್ಗಳವಾಣಿಯ ಕವಿಗಳು ದೊರೆಯುವುದು ಅಪರೂಪ". ಅವನ ಇಡೀ ಮಾತುಗಾರಿಕೆಯೇ ರೂಪಕದಲ್ಲಿರುವುದರಿಂದ ಬೇರೆ ಬೇರೆ ರೂಪಕಗಳನ್ನು ಉದಾಹರಣೆಗಳಾಗಿ ಹೆಕ್ಕಿ ತೆಗೆಯಬೇಕಾದ್ದಿಲ್ಲ. "ಸಿಡಿಲ ಪೊಟ್ಟಣಗಟ್ಟಿ ಸೇಕವ ಕೊಡುವರೆ", "ಕಾಲಕೂಟದ ತೊರೆಗಳಲಿ ಜಲಕೇಳಿಯೇ", "ಪುಷ್ಪವತಿಯಾಗಿಲ್ಲಿ ಫಲವತಿಯಾಗು ನಡೆ ಕುರುರಾಜ ಭವನದಲಿ", "ಹುಲಿಯ ಮುರಿದೊತ್ತಿದೊಡೆ ಪಶು ಸಂಕುಲಕೆ ಸಂಕಟವೇನು", "ಪ್ರಜ್ಞಾಸಾಗರಂಗಳು ಜಾನ್ವಂಘ್ರಿ ಮಿತವಾಯ್ತು", "ಭಾಸುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ" ಎಂಬಂತಹ ಬಿಡಿಚಿತ್ರಗಳು; "ಜಗದ ನಿಡು ನಿದ್ರೆಯಲಿ ಮೋಹರದೆಗೆದ ಮುಗಿಲೋ ಮೇಳಖಿಳ ಕುಲದಿಗಿಭವೆಂಟೊಂದಾಯ್ತೊ ಕೈಕಾಲ್ ಮೂಡಿತೋ ನಭಕೆ" ಎಂಬಂತಹ ಸಾಲುರೂಪಕಗಳು; "ನೆನೆದ ಮಂತ್ರವ ತನ್ನ ತಂದೆಯ ಮನದ ಮಚ್ಚದೊಳೊರೆದು ಕರ್ಣನ ನೆನಹಿನೊಳು ಪುಟವಿಟ್ಟು ಶಕುನಿಯ ನೀತಿಯೊಳು ನಿಗುಚಿ ಅನುಜಮತದೊಳು ವಿಸ್ತರಿಸಿ ಮೈದುನನ ಮತದೊಳು ಬಣ್ಣವಿಟ್ಟನು ಜನಪನಪಕೀತ್ರ್ಯಂಗನೆಗೆ ತುಡಿಸಿದನು ಭೂಷಣವ" ಹಾಗೂ "ಎಳನಗೆಯ ಬೆಳದಿಂಗಳನು ನೀ ತಳಿದು ತಾಪವ ಕೆಡಿಸು ಮಧುರದ ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು ಅಳಿಮನದ ಬಡತನ ನಿನ್ನಯ ಕಳಸಕುಚಲಕ್ಷ್ಮಿಯಲಿ ಕಳೆ ಮನದೊಲವನಿತ್ತಲು ತಿದ್ದಬೇಹುದು ಕಾಂತೆ ಕೇಳು" ಎಂಬಂತೆ ಇಡೀ ಪದ್ಯದಲ್ಲಿ ರೂಪಕವು ಬೆಳೆಯುತ್ತ ಧ್ವನಿರಮ್ಯತೆಯನ್ನು ನೀಡುವ ಪರಿ ಅಸಂಖ್ಯ ಸಂದರ್ಭಗಳಲ್ಲಿವೆ. ಅವನು ನೆಚ್ಚಿದ ಆಡುನುಡಿಯಲ್ಲಿ ತನ್ನ ಕಾಲದ ತನ್ನ ಭಾಗದ ಜನರ ದಿನದ ಮಾತಿನಲ್ಲಿದ್ದಿರಬಹುದಾದ ಗರುವಾಯಿ, ನವಾಯಿ, ಖೇಳಮೇಳ, ಮಝರೇ, ಫೂತು, ಫಡ ಎಂಬ ಇತರ ಭಾಷೆಯ ಶಬ್ದಗಳು ಮತ್ತು ಅವ್ಯಯಗಳು, ದ್ವಿತ್ವಗಳ ನಡುವೆ ಸ್ವರವನ್ನು ಸೇರಿಸಿ ಮಾಡಿಕೊಳ್ಳುವ ಕೇಳಿದು, ನೋಡಿದು, ತೊಳಲಿದು, ತೋರಿದು, ಬಕುತಿ, ರಕುತ ಮುಂತಾದ ಸ್ವರಭಕ್ತಿಯ ನಿದರ್ಶನಗಳು ಕಾವ್ಯದುದ್ದಕ್ಕೂ ಹರಡಿಕೊಂಡಿವೆ. ಅವನ ಮಾತುಗಾರಿಕೆ ಲೀಲಾಜಾಲ; ಅವನೆಂದೂ ಹುಡುಕಿ ಬಳಸಿದ ಮಾತುಗಳಿಲ್ಲ, ಎಲ್ಲ ನೇರವಾಗಿ ಸರಾಗವಾಗಿ ಗ್ರಥನಕಾಲದಲ್ಲಿ ಮೂಡಿಬಂದವು ಎಂದೇ ತೋರುತ್ತದೆ. ಹೀಗಾಗಿ "ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಪದವಿಟ್ಟಳುಪದೊಂದಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ" ಎಂಬ ಆತ್ಮಪ್ರಶಂಸೆಯ ಮಾತು ಬಡಾಯಿಯಾಗದೆ ವಾಸ್ತವಸನಿಹವಾದ ಮಾತಾಗುತ್ತದೆ.
 • ಕುಮಾರವ್ಯಾಸ ಕೆಲವು ವಿಷಯಗಳಲ್ಲಿ ವಿವರಮೋಹಿ. ಒಂದು ಮಾತಲ್ಲಿ ಹೇಳುವುದರ ಬದಲು ಅವನು ಹತ್ತು ಮಾತು ಬಳಸುತ್ತಾನೆ. ಉದಾಹರಣೆಗೆ ಜರಾಸಂಧವಧೆಯ ಪ್ರಸಂಗವನ್ನು ಪಂಪ ಒಂದೇ ವೃತ್ತದಲ್ಲಿ ಮುಗಿಸಿದ್ದರೆ ಕುಮಾರವ್ಯಾಸ 129 ಪದ್ಯಗಳಲ್ಲಿ ವಿವರಿಸುತ್ತಾನೆ. ಭೀಮನು ಕಿಮ್ಮೀರನನ್ನು ಕೊಂದ ವಿಷಯವನ್ನು ವಿದುರ ಧೃತರಾಷ್ಟ್ರನಿಗೆ ತಿಳಿಸಿದಾಗ ಅವನು "ಆತನನನಿಲಜನೊ ಫಲುಗುಣನೊ ಕೊಂದಾತನು ಯುಧಿಷ್ಠಿರನೊ ಸವಿಸ್ತರವಾಗಿ ಹೇಳು" ಎಂದನಂತೆ; ಅದನ್ನು ಅವನ ಅಪೇಕ್ಷೆಯಂತೆ ವಿವರಿಸಲು ಹನ್ನೆರಡು ಪದ್ಯಗಳನ್ನು ತೆಗೆದುಕೊಳ್ಳುತ್ತಾನೆ. ತನ್ನನ್ನು ಸ್ವರ್ಗಕ್ಕೆ ಕರೆದೊಯ್ಯಲು ಬಂದ ಇಂದ್ರರಥದ ಸಾರಥಿಯನ್ನು ಅರ್ಜುನ ದಾರಿಯಲ್ಲಿನ ಲೋಕಗಳ ವಿವರಗಳನ್ನು ಹೇಳು ಎಂದಾಗ ಅವನು ನೀಡಿದ ವಿವರಗಳ ನೆವದಲ್ಲಿ ಕವಿ ಸುಮಾರು ಅರುವತ್ತು ಪದ್ಯಗಳಲ್ಲಿ ಪೌರಾಣಿಕ ವಿವರಗಳನ್ನು ನೀಡುತ್ತಾನೆ. ಶಲ್ಯನನ್ನು ಕರ್ಣನ ಸಾರಥಿಯಾಗುವಂತೆ ದುರ್ಯೋಧನನು ಒಪ್ಪಿಸಿದ ಬಳಿಕ ಹೇಳಿದ್ದು ತ್ರಿಪುರದಹನ ಪ್ರಸಂಗವನ್ನು. ಇದನ್ನು ಕವಿ ಎರಡು ಸಂಧಿಗಳಲ್ಲಿ, ಒಟ್ಟು ಸುಮಾರು ಎಂಬತ್ತು ಪದ್ಯಗಳಲ್ಲಿ ನಿರೂಪಿಸುತ್ತಾನೆ. ವಿಷ್ಣು ಶಿವನ ಸಾರಥಿಯಾದುದರಿಂದ ಅವನಿಗೆ ಗೆಲವು ದೊರಕಿತು, ಹಾಗೆಯೇ ನೀವು ಕರ್ಣನ ಸಾರಯಾಗಿ ಎಂದೊಪ್ಪಿಸಿದ ಬಳಿಕ ಶಲ್ಯ ಅರ್ಜುನನನ್ನು ದೀರ್ಘವಾಗಿ ಹೊಗಳುತ್ತಾನೆ, ಹದಿನಾಲ್ಕು ಪದ್ಯಗಳಲ್ಲಿ. ಇನ್ನು ನೀತಿನಿರೂಪಣೆ ಎಂದರೆ ಕುಮಾರವ್ಯಾಸನಿಗೆ ಎಲ್ಲಿಲ್ಲದ ಉತ್ಸಾಹ. ರಾಜಸೂಯಕ್ಕೆ ಧರ್ಮರಾಯನನ್ನು ಸಿದ್ಧಪಡಿಸುವ ಪೂರ್ವದಲ್ಲಿ ನಾರದ ಬೋಧಿಸಿದ ನೀತಿ ಐವತ್ತೈದು ಪದ್ಯಗಳಲ್ಲಿ ಹರಿಯುತ್ತದೆ. ಮಾರನೆಯ ದಿನದ ಕೃಷ್ಣದೌತ್ಯದಲ್ಲಿ ಸಂಧಿಯೋ ಯುದ್ಧವೋ ಯಾವುದು ನಿರ್ಧಾರವಾಗುತ್ತದೆಂಬ ಕಳವಳದಲ್ಲಿ ರಾತ್ರಿ ನಿದ್ರೆ ಬಾರದೆ ಧೃತರಾಷ್ಟ್ರ ವಿದುರನನ್ನು ಕರೆದಾಗ ಅವನು ನಿರೂಪಿಸಿದ ನೀತಿ ಒಂದು ಇಡೀ ಸಂಧಿಯನ್ನಾವರಿಸಿದೆ (134 ಪದ್ಯಗಳು); ಹಾಗೆಯೇ ಮುಂದೆ ಆತ್ಮವಿದ್ಯೆಯ ಬಗೆಗೆ ಕೇಳಿದಾಗ ಸನತ್ಸುಜಾತ ನಿರೂಪಿಸಿದ ನೀತಿಗೆ 122 ಪದ್ಯಗಳು ಮೀಸಲಾಗಿವೆ. ಇನ್ನು, ಮಾರ್ಗಕಾವ್ಯಕ್ಕಿಂತ ಭಿನ್ನವಾಗಿ ದೇಸಿಯ ಶೈಲಿ ವರ್ಣನಾತ್ಮಕವಾಗುವುದರಿಂದ ಭಾವಪ್ರಕಟಣೆಯೂ ಎಲ್ಲೆಡೆ ರ್ದೀವಾಗುತ್ತದೆ.
 • ಕುಮಾರವ್ಯಾಸನನ್ನು ಬಿಡಿಬಿಡಿಯಾಗಿ ಪರಿಶೀಲಿಸಿದರೆ ಅದ್ಭುತ ಸೃಜನಶೀಲನಾಗಿ ಕಾಣುತ್ತಾನೆ. ಆದರೆ ಅವನ ಕಾವ್ಯವನ್ನು ಇಡಿಯಾಗಿ ಪರಿಭಾವಿಸಿದಾಗ ನಿರಾಸೆಯೇ ಆಗುತ್ತದೆ. ಏಕೆಂದರೆ ಅಲ್ಲಿನದು ಪಕ್ಷಪಾತದೃಷ್ಟಿ, ಪೂರ್ವನಿಶ್ಚಿತ ಕಥನಸ್ವರೂಪ, ವಾಚ್ಯವಾದ ಧಾರ್ಮಿಕತೆಗಳು. "ಸಂಪ್ರದಾಯದ ಬಲೆಗೆ ನಾರಣಪ್ಪನ ಚೈತನ್ಯಮೃಗ ಸಿಕ್ಕಿದ್ದರಿಂದ" ಹೀಗಾಗುತ್ತದೆಂದು ವಿಮರ್ಶಕರೊಬ್ಬರು ಸರಿಯಾಗಿಯೇ ವಿಶ್ಲೇಷಿಸಿದ್ದಾರೆ. ಅಲ್ಲದೆ "ಅವನ ಭಾರತವನ್ನು ಒಟ್ಟಿಗೇ ಓದುವುದಕ್ಕಿಂತಲೂ ಕೆಲವು ಭಾಗಗಳನ್ನು ಆಯ್ದು ಪಠಿಸುವುದು ಹೆಚ್ಚು ಪ್ರಯೋಜನಕರ" ಎಂಬ ಮಾತುಗಳನ್ನಾಡುತ್ತಾರೆ. ಇದಕ್ಕೆ ಕಾರಣವಿಲ್ಲದಿಲ್ಲ. ಇದನ್ನು ಪರಿಶೀಲಿಸುವ ಮುಂಚೆ ಕಾವ್ಯಕರ್ಮದ ಬಗೆಗಿನ ತಾತ್ವಿಕತೆಯನಗ್ನು ಕೊಂಚ ತಿಳಿಯುವುದು ಸಮಂಜಸ ಹಿನ್ನೆಲೆಯನ್ನು ಒದಗಿಸುತ್ತದೆ.
 • ಎಲ್ಲ ಮಾನವ ಪ್ರಜ್ಞೆಯ ಎರಡು ಪಾತಳಿಗಳಲ್ಲಿ ವೈಯಕ್ತಿಕತೆಯ ಲೇಪದಿಂದ ವಸ್ತುಸ್ಥಿತಿಯನ್ನು ಪರಿಭಾವಿಸುವುದು ಹಾಗೂ ಅನುಭವಿಸುವುದು ಒಂದಾದರೆ, ಸ್ವಕೀಯತೆಯಿಂದ ಪಾರಾಗಿ 'ನಿಷ್ಪಕ್ಷಪಾತ' ದೃಷ್ಟಿಯಿಂದ ಕೂಡಿರುವುದು ಇನ್ನೊಂದು. ಎರಡರಲ್ಲೂ ಇನ್ನೊಂದರ ನೆರಳು ಇರುವುದೇನೂ ಅಸಹಜವಲ್ಲ. ಅಂದರೆ ವೈಯಕ್ತಿಕ ನೆಲೆಯ ಅನುಭವದಲ್ಲೂ ಒಂದಷ್ಟು ವಸ್ತುನಿಷ್ಠತೆ ಹಾಗೂ ವ್ಯಕ್ತ್ಯತೀತ ನೆಲೆಯ ಆಳದಲ್ಲಿರಬಹುದಾದ ವೈಯಕ್ತಿಕ ಒಲವು. ಇದು ಮನುಷ್ಯಸಹಜವಾದದ್ದೇ. ವ್ಯಕ್ತಿ ಎಷ್ಟೇ ವಸ್ತುನಿಷ್ಠವಾಗಿರಲಿ, ಅನುಭವ ಮತ್ತು ಸಂವೇದನೆಗಳ ವಿಷಯದಲ್ಲಿ, ಸ್ವಂತಿಕೆಯನ್ನು ಉಳಿಸಿಕೊಂಡಿರುತ್ತಾನೆ; ಅವನ ಹಿನ್ನೆಲೆ ಪರಿಸರ ಹಾಗೂ ಮನೋರಚನೆ ಹಾಗೆ ಮಾಡುತ್ತದೆ. ಆದರೂ ವೈಯಕ್ತಿಕ ನೆಲೆಯಲ್ಲಿ ಮೌಲ್ಯಮಾಪನ ಮಾಡುವುದಕ್ಕಿಂತ ವ್ಯಕ್ತ್ಯತೀತ ನೆಲೆಯಲ್ಲಿ ಹಾಗೆ ಮಾಡುವ ಸಾಮಥ್ರ್ಯ ಸಾಧ್ಯ. ಈ ಎರಡನೆಯ ಪರಿಯನ್ನೇ ಕಾವ್ಯಮೀಮಾಂಸಕರು 'ಪ್ರತಿಭೆ' ಎಂಬ ಹೆಸರಿನಿಂದ ಗುರುತಿಸುವಂತೆ ತೋರುತ್ತದೆ. ಹೀಗಾಗಿ ಪ್ರತಿಭೆ ವಸ್ತುಸ್ಥಿತಿಯನ್ನು ವೈಯಕ್ತಿಕತೆಯಿಂದ ಪಾರುಮಾಡಿ ಅನುಭವವಾಗಿಸಿಕೊಳ್ಳುವಂತೆ ಮಾಡುತ್ತದೆ. ಅಂತಹ ಸಾಮರ್ಥ್ಯ ಎಲ್ಲರಲ್ಲಿಯೂ ಇರುತ್ತದೆ; ಆದರೆ ಕೆಲವರಲ್ಲಿ ಅದು ತೀರ ಕಡಿಮೆಯಿದ್ದರೆ, ಮತ್ತೆ ಅಪರೂಪವಾಗಿ ಕೆಲವರಲ್ಲಿ ಅಗಾಧ ಪ್ರಮಾಣದಲ್ಲಿರುತ್ತದೆ. ಹೀಗೇಕೆ ಎಂಬುದಕ್ಕೆ ನಿಖರವಾದ ಅಥವಾ ಒಂದು ಮಾತಿನ ಉತ್ತರ ಅಸಾಧ್ಯ. ಇದು ದೈವದತ್ತ ಅಥವಾ ಪ್ರಕೃತಿದತ್ತ ಎಂದು ಹಿಂದಿನವರು ಭಾವಿಸಿದ್ದರು. ಇದು ಕೆಲವರ ಹುಟ್ಟಿನಲ್ಲಿ ಇರುತ್ತದೆ ಎಂದಷ್ಟೇ ನಾವೀಗ ಹೇಳಬಹುದಾದುದು. ತನ್ನ ಹಾಗೂ ಇತರರ ಅನುಭವಗಳನ್ನು ಈ ನೆಲೆಯಲ್ಲಿ ಕಾಣುವವನು ಯಾವುದೋ ಒಂದು ಸಂವಹನ ಮಾಧ್ಯಮದಲ್ಲಿ ಸೃಷ್ಟಿಸುವುದನ್ನೇ ಲಲಿತ ಕಲೆ ಎಂದು ಕರೆಯಲಾಗುತ್ತದೆ. ಭಾಷೆಯ ಮೂಲಕ ಹಾಗೆ ನಿರ್ಮಿತವಾದರೆ ಅದು 'ಸಾಹಿತ್ಯ' ಎನಿಸಿಕೊಳ್ಳುತ್ತದೆ, ಇದನ್ನೇ ಸೃಜನಶೀಲ ಬರವಣಿಗೆ ಎಂದು ಗುರುತಿಸುವುದು. ಹಿಂದೆ ಎಲ್ಲ ಬಗೆಯ ಸೃಜನಶೀಲ ಬರವಣಿಗೆಯನ್ನೂ 'ಕಾವ್ಯ' ಎಂದೇ ಕರೆಯುತ್ತಿದ್ದರು.
 • ಪ್ರತಿಭಾವಂತನಿಗೆ ಎರಡು ನೆಲೆಯ ಸಾಮಥ್ರ್ಯ: ಒಂದು, ಪರಿಭಾವಿಸುವುದರಲ್ಲಿ; ಎರಡು, ಅದನ್ನು ಮಾತಾಗಿಸುವುದರಲ್ಲಿ. ಒಂದು ದರ್ಶನ, ಇನ್ನೊಂದು ಸೃಜನ; ಒಂದು ಕಾಣ್ಕೆ, ಇನ್ನೊಂದು ಕಟ್ಟುವಿಕೆ. ತಾನು ವ್ಯಕ್ತ್ಯತೀತ ನೆಲೆಯಲ್ಲಿ ಕಂಡುಂಡುದನ್ನು ಸಮರ್ಥವಾಗಿ ಭಾಷೆಯಲ್ಲಿ ಹಿಡಿದಿಟ್ಟಾಗ, ಈ ಪರಿಯ ಪರಿಭಾವನೆ ಸಾಧ್ಯವಾದ ಓದುಗನ ಮೇಲೆ ಅದು ಉಂಟುಮಾಡುವ ಅನುಭವವೂ ವ್ಯಕ್ತ್ಯತೀತವಾಗಿಯೇ ಇರುತ್ತದೆ. ಹೀಗಾಗುವ ಪ್ರಕ್ರಿಯೆಯನ್ನೇ ಕಾವ್ಯಮೀಮಾಂಸೆಯಲ್ಲಿ 'ಸಾಧಾರಣೀಕರಣ' ಎನ್ನುವುದು. ಎಲ್ಲ ವ್ಯಕ್ತಿಗಳಲ್ಲಿಯೂ ಹುಟ್ಟಿನೊಡನೇ ಬಂದಿರುವ ವಿವಿಧ ಮಗ್ಗುಲ ಅನುಭವವಿಶೇಷವನ್ನೇ ಭಾವ ಎನ್ನುವುದು, ಅಂತಹ ಪ್ರಮುಖ ಭಾವಗಳನ್ನು ಎಂಟು ಎಂದು ಹಿಂದಿನರು ಗುರುತಿಸಿದರು. ಆ ಭಾವವು ಸಾಧಾರಣೀಕರಣಗೊಂಡು ಓದುಗ ಅಥವಾ ಸಹೃದಯನಲ್ಲಿಯೂ ಅನುಭವವಾಗಿ ಮರುವುಟ್ಟುವಡೆದರೆ ಅದನ್ನು ರಸಾನುಭವ ಎಂಬ ಹೆಸರಿನಿಂದ ಕರೆದರು. ಹೀಗೆ, ಶ್ರೇಷ್ಠ ಕಾವ್ಯವು ಎಲ್ಲ ಅನುಭವಗಳನ್ನೂ ಸಾಧಾರಣೀಕರಣ ಪ್ರಕ್ರಿಯೆಗೊಳಪಡಿಸಿ ಎಲ್ಲರಿಗೂ ದಕ್ಕುವಂತೆ ಮಾಡುವುದೇ ಕಾವ್ಯದ ಕಾರ್ಯವೈಖರಿ. ಹೀಗೆ ಯಾವ ಕೃತಿಯು ಪರಿಣಾಮ ಬೀರಬಲ್ಲುದೋ ಅದು ಶ್ರೇಷ್ಠ ಕೃತಿ ಎನ್ನಿಕೊಳ್ಳುತ್ತದೆ; ಅಂತಹುದು ಎಲ್ಲ ಕಾಲದ (ಆ ಭಾಷೆ ಬಲ್ಲ) ಎಲ್ಲ ದೇಶದ ಎಲ್ಲ ಬಗೆಯ ಜನರಿಗೂ ಅಂಥ ಅನುಭವವನ್ನು ದಾಟಿಸಬಲ್ಲುದು. ಇದು ಆದರ್ಶಸ್ಥಿತಿ. ಆದರೆ ಪ್ರತಿಭಾವಂತನೊಬ್ಬನ ಈ ಸಾಮಥ್ರ್ಯ ಎಲ್ಲ ಕಾಲದಲ್ಲೂ ಒಂದೇ ಮಟ್ಟದಲ್ಲಿ ಜಾಗೃತವಾಗಿರುವುದಿಲ್ಲ, ಎಲ್ಲ ಕಾಲದಲ್ಲಿಯೂ ಇರುವುದಿಲ್ಲ. ಅದು ಜಾಗೃತಗೊಂಡ ಸ್ಥಿತಿಯಲ್ಲಿ ನಿರ್ಮಿತವಾದ ಕಾವ್ಯ ಅಷ್ಟರ ಮಟ್ಟಿಗೆ ಶ್ರೇಷ್ಠವಾಗುತ್ತದೆ.
 • ಈ ಹಿನ್ನೆಲೆಯಲ್ಲಿ ಕುಮಾರವ್ಯಾಸನ ಕಥನಕ್ರಮವನ್ನು ನಾವು ಪರಿಶೀಲಿಸಬೇಕಾಗುತ್ತದೆ. ಹಾಗೆ ನೋಡಿದಾಗಲೇ ನಮಗೆ ಕುಮಾರವ್ಯಾಸಭಾರತ ಹಲವೊಮ್ಮೆ ಉಜ್ವಲವಾಗಿದ್ದರೂ, ಮತ್ತೆ ಕೆಲವೆಡೆ ವೈಯಕ್ತಿಕತೆಯಿಂದ ಪಾರಾಗದೆ ಉಳಿದುಬಿಟ್ಟಿದೆ ಅನ್ನಿಸುವುದು. ಈ ಕಾವ್ಯದ ಇಂತಹ ಒಂದು ವೈಯಕ್ತಿಕ ನೆಲೆ ಎಂದರೆ ವ್ಯಕ್ತಿ ಹಾಗೂ ಸಮಾಜಗಳ ನಡಾವಳಿಗಳನ್ನು ಪರಿಶೀಲಿಸುವುದು, ಬೆಲೆಗಟ್ಟುವುದು ಪಕ್ಷಪಾತ ದೃಷ್ಟಿಕೋನದಿಂದ ಎಂಬುದು; ಅಂದರೆ ಕುಮಾರವ್ಯಾಸ ತನ್ನ ವೈಯಕ್ತಿಕ ನಂಬಿಕೆಯ ನೆಲೆಯ ವೈದಿಕ ಮಾನದಂಡದಿಂದಲೇ ಎಲ್ಲವನ್ನೂ ಪರಿಭಾವಿಸುತ್ತಾನೆ, ಕಾವ್ಯದುದ್ದಕ್ಕೂ ಈ ವೈದಿಕ ಮಾನದಂಡ ತಲೆಯೆತ್ತುತ್ತದೆ. ಅಂತಹ ಕೆಲವನ್ನು ಉದಹರಿಸಬಹುದು. ರಾಜಸೂಯ ಯಾಗವನ್ನು ಮಾಡಿ ಮುಗಿಸಿ ಧರ್ಮರಾಯನ ಆಳ್ವಿಕೆಯು "ದ್ವಾಪರದ ಮರೆ ಜವನಿಕೆಯಲೀ ದ್ವಾಪರವೊ ಕೃತಯುಗವೊ ಧರ್ಮದ ರೂಪು ನಾನಾ ಮುಖದಲವತರಿಸಿತೊ ದಿಗಂತದಲಿ ಸ್ಥಾಪಿಸಿತು ವರ್ಣಾಶ್ರಮದ ಧರ್ಮೋಪಚಯವೆರಡಂಘ್ರಿ ಮುರಿದು ವಿರೂಪವಾದುದಧರ್ಮವೀ ಧರ್ಮಜನ ರಾಜ್ಯದಲಿ". ಅಗ್ರಪೂಜೆಯ ಸಂದರ್ಭದಲ್ಲಿ ಭೀಷ್ಮ ಕೃಷ್ಣನ ಮಹಿಮೆಯನ್ನು ವರ್ಣಿಸುತ್ತ "ದ್ವಿಜರು ಮುಖದಲಿ ಭೂಪರೀತನ ಭುಜದಲಾದರು ನಿಖಿಳ ವೈಶ್ಯವ್ರಜ ನೋರುಗಳಿಂದ ಶೂದ್ರರು ಪಾದಪದ್ಮದಲಿ" ಎಂದು ಹೇಳುವ ಮಾತು ಋಗ್ವೇದದ ಪುರುಷಸೂಕ್ತದ್ದೆಂದು ಹೇಳಲಾದ ಶ್ಲೋಕದ ಅನುವಾದ. ಇಂದ್ರಕೀಲಕ್ಕೆ ಹೊರಟ ಅರ್ಜುನನಿಗೆ ಹೇಳುವ "ನಾಸ್ತಿಕರೊಡನೆ ಮಾತಾಡದಿರು" ಎಂಬ, "ಜಾತಿನಾಶಕಂಗೆ ವರ್ಣಾಶ್ರಮ ವಿದೂಷಂಗೆ ಜಾತಸಂಕರಕಾರಗಾ ಕ್ರೋಧಾತಿರೇಕಗೆ ಗಾಢ ಗರ್ವಿಗೆ ಭೂತವೈರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದಕಿ" ಎಂಬ ಮಾತುಗಳು; ಧರ್ಮವ್ಯಾಧ ಹೇಳುವ "ಜಾತಧರ್ಮತ್ಯಾಗ ಕರ್ಮ ವಿಜಾತಿ ಧರ್ಮ ಗ್ರಹಣವೇ ವಿಖ್ಯಾತ ಕುಂಭೀಪಾಕಸಾಧನ ವಿಪ್ರ ಕೇಳು" ಎಂಬ ಮಾತು. ದುಂದುಮಾರನೃಪನ ಆಳ್ವಿಕೆಯ ನೆಪದಲ್ಲಿ ಅರಣ್ಯಪರ್ವದ ಹದಿನಾಲ್ಕನೆಯ ಸಂಧಿಪೂರ್ತಿ ವಿವರಿಸುವ ವರ್ಣಾಶ್ರಮ ಪರಿಪಾಲನೆ ಮಾಡಬೇಕಾದ ಪರಿ; ನಹುಷನೊಡನೆ ಧರ್ಮರಾಜನು ನಡೆಸುವ ಸಂಭಾಷಣೆಯಲ್ಲಿ ಬರುವ "ಧರ್ಮವೆಂಬುದು ವೇದಮಾರ್ಗವಲೆ" ಎಂಬ, "ಎಸೆವ ವಿಪ್ರರ ಮತಿಗೆ ಸಂಭಾವಿಸುವ ಧರ್ಮವನರುಹುವೆನು" ಎಂಬ ಹಾಗೂ "ಅರಸ ಕೇಳೈ ಕ್ಷಾತ್ರ ತೇಜವ ಹೊರೆವುದೇ ಬ್ರಾಹ್ಮಣ್ಯ ಶಕ್ತಿಸ್ಫುರಣೆ ನೀನೀ ಬ್ರಹ್ಮವರ್ಗದ ಸಾರಸೌಖ್ಯದಲಿ ಮೆರೆದಲಾ ವಿಪ್ರಾವಮಾನವೆ ಸಿರಿಗೆ ನಂಜು ಕಣ" ಎಂಬ ಮಾತುಗಳು; ಉದ್ಯೋಗಪರ್ವದಲ್ಲಿ ವಿದುರನೀತಿಯ 137 ಪದ್ಯಗಳಲ್ಲಿ ಬರುವ ದೀರ್ಘ ನೀತಿಪಠಣ; ಅದರಲ್ಲೂ "ಬವರಮುಖದಲಿ ವೈರಿರಾಯರನವಗಡಿಸಿ ತಂದಾ ಧನವ ಭೂದಿವಿಜಸಂತತಿಗಿತ್ತ ಫಲವಿನಿಂತೆಂದು ಗಣಿಸುವೊಡೆ ದಿವಿಜಪತಿಗಾಗದು", "ಅರಸುಗಳು ವರ್ಣೋತ್ತಮರ ದೆಸೆಗಂಜಬೇಕು", "ಕರೆಕರೆದು ಮೃಷ್ಟಾನ್ನವನು ಭೂಸುರರಿಗೀವ ಸದಾಗ್ನಿಹೋತ್ರಾಚರಿತನಹ ವೇದಾಂತ ವೇದಿಯನಾ ಪತಿವ್ರತೆಯ .. .. ಅಭಿವಂದಿಸುವರೈ ಮೂರು ಮೂರ್ತಿಗಳು", "ಭೂಸುರವೃಂದವನು ನೆರೆ ಹೊರೆವಡೆವ ಸುತ ವಂದ್ಯನೈ ಲೋಕಕ್ಕೆ" ಎಂಬ ಮಾತುಗಳು; ಹಾಗೆಯೇ ಸನತ್ಸುಜಾತ ನೀತಿಯ "ಸತಿಯರಿಗೆ ಗತಿ ಯಾವುದೈ ನಿಜಪತಿಗಳಲ್ಲದೆ ವಿಪ್ರಜಾತಿಗೆ ಹುತವಹನು ವರ್ಣತ್ರಯಕೆ ಭೂದೇವರುಗಳಿರಲು ಕ್ಷಿತಿಯೊಳತಿಶಯವಾವು ಭೂಪತಿಯೆ ಕೇಳಿಹಪರಕೆ ಸುಖ ಸಂಗತಿಯನೊಲುವೊಡೆ ಪೂಜಿಸುವು ಬ್ರಾಹ್ಮಣೋತ್ತಮರ", "ದೈವವೇ ಬ್ರಾಹ್ಮಣನದಲ್ಲದೆ ಭಾವಿಸಲು ಬುಧರಿಂದಧಿಕವಹ ದೈವವೆಂಬುದದಾವು", "ವಿಪ್ರೋತ್ತಮರುಳಿಯೆ ಜಗದೊಳಗೆ ದೈವವದಾವುದು", "ವಿಪ್ರಪಾದವಿಮುಕ್ತ ವಿಮಳೋದಕವನಾವನು ನೆತ್ತಿಯಲಿ ಧರಿಸಿದವನವನು ಕೃತಾರ್ಥನಹನು", "ಪೊಡವಿಯೊಳಗೆ ಪುರೋಹಿತರನವಗಡಿಸಿ ಧರ್ಮದ ಬಲದಿ ನಾಕಕೆ ನಡೆವ ರಾಯರ ಹೊಯಿದಿಳೆಯೊಳಿಕ್ಕುವರೋಧೋಗತಿಗೆ .. .. ನಿರ್ಜರರು" _ ಇಂತಹ ಮಾತುಗಳು ನೇರವಾಗಿ ಕಾವ್ಯದೆಲ್ಲೆಡೆ ಹಣುಕಿ ಕವಿಯ ಜಾಗೃತಪ್ರಜ್ಞೆಯ ಮಾರ್ಗವಾವುದೆಂಬುದನ್ನು ಸ್ಪಷ್ಟಪಡಿಸುತ್ತದೆ. ಅಂದರೆ ವ್ಯಕ್ತಿ ಸಮುದಾಯಗಳ ಜೀವನಸಾರ್ಥಕ್ಯವನ್ನು ವೈದಿಕ ಜೀವನದರ್ಶನಕ್ಕೆ ಅನ್ವಯಿಸುವುದರಿಂದಾಗಿ ಕಾವ್ಯಕ್ಕೆ ಸೀಮಿತತೆ ಪ್ರಾಪ್ತವಾಗಿಬಿಡುತ್ತದೆ. ಅದಕ್ಕೇ ಸಂಪ್ರದಾಯಪ್ರೇಮೀ ವಿಮರ್ಶಕರೊಬ್ಬರು "ಮಹಾಭಾರತವು ಆರ್ಯಸಂಸ್ಕೃತಿಯನ್ನು ವಿಶದವಾಗಿ ವರ್ಣಿಸುವ ಅಮೂಲ್ಯವಾದ ಗ್ರಂಥ" ಎಂಬ ನಿಲವಿಗೆ ಬರುವುದು. ಹೀಗಾಗಿ ಈ ವೈದಿಕ ಹಾಗೂ ಬಾಹ್ಮಣ ಮಾನದಂಡದಿಂದ ಜನರ ನಡಾವಳಿಯನ್ನು ಅಳೆಯಹೋದರೆ ಆಗುವ ಪರಿಣಾಮ ಪಕ್ಷಪಾತದ್ದಾಗುವುದಿಲ್ಲವೇ? ಹಾಗಾಗಿ "ಸಂಪ್ರದಾಯದ ಬಲೆಗೆ ನಾರಣಪ್ಪನ ಚೈತನ್ಯಮೃಗವು ಸಿಕ್ಕಿದೆ" ಎಂಬ ಮಾತು "ಅವನ ಭಾರತವನ್ನು ಒಟ್ಟಿಗೇ ಓದುವುದಕ್ಕಿಂತಲೂ ಕೆಲವು ಭಾಗಗಳನ್ನು ಆಯ್ದು ಪಠಿಸುವುದು ಹೆಚ್ಚು ಪ್ರಯೋಜನಕರ" ಎಂಬ ಮಾತೂ ಖಂಡಿತ ಸತ್ಯ. ಅಂದರೆ ಕಾಲಕ್ಕನುಗುಣವಾಗಿ ಎಲ್ಲರಿಗೂ ಪರಿಚಯಿಸಲೋಸುಗ ಈ ಕಾವ್ಯದ ಸಂಗ್ರಹವನ್ನು ಪ್ರಕಟಿಸುವುದು ಸೂಕ್ತ. ಇಲ್ಲಿನ ಅನೇಕ ಮಾತುಗಳು ಇವತ್ತಿನ ಸಂದರ್ಭದಲ್ಲಿ ಅಪ್ರಸ್ತುತ. ಇದಲ್ಲದೆ ಮುಖ್ಯ ಕವಿಯೊಬ್ಬನ ಕೃತಿಯನ್ನು ಪ್ರತಿ ಬದಲಾದ ಸನ್ನಿವೇಶದಲ್ಲಿಯೂ ಪ್ರತ್ಯೇಕವಾಗಿ ಪರಿಶೀಲಿಸುವುದು ಉತ್ತಮ.

ಜೀವನದರ್ಶನ[ಸಂಪಾದಿಸಿ]

 • ಹಾಗೆಯೇ ಕುಮಾರವ್ಯಾಸಭಾರತದ ಸ್ವರೂಪಚರ್ಚೆಯ ಮತ್ತೊಂದು ಅಂಶವನ್ನೂ ಸ್ಪಷ್ಟಪಡಿಸಬೇಕು. ಕವಿ ತನ್ನ ಜೀವನದರ್ಶನವನ್ನು ತನ್ನ ಕಾವ್ಯದಲ್ಲಿ ಹುದುಗಿಸುವುದು ಸಹಜವಾದುದು; ಏಕೆಂದರೆ ಕವಿ ತನ್ನನ್ನು ಸ್ಪಷ್ಟಪಡಿಸಿಕೊಳ್ಳುವ ಸೃಜನಶೀಲ ಮಾರ್ಗ ಅದೊಂದೇ. ಕುಮಾರವ್ಯಾಸನ ಕಾವ್ಯವು ಅ್ವತವನ್ನು ಸಾಕ್ಷಾತ್ಕರಿಸಿಕೊಂಡಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ತನ್ನ ದೃಷ್ಟಿಕೋನಕ್ಕೆ ಇಡೀ ಕಾವ್ಯವನ್ನು ಅಡಕಗೊಳಿಸಿದ್ದರಿಂದಾಗಿ ಭಾಗಗಳಲ್ಲಿ ಉಜ್ವಲವಾದ ಈ ಕಾವ್ಯ ಒಟ್ಟಂದದಲ್ಲಿ ತನ್ನ ಧ್ವನಿಶಕ್ತಿಯನ್ನು ಕಳೆದುಕೊಳ್ಳುತ್ತದೆ. "ಇದು ಮುರಾರಿಯ ಲೀಲೆಗೋಸುಗ ಉದಯಿಸಿದ ಜಗವಿದಕೊಬ್ಬನ ಸದೆವನೊಬ್ಬನ ಹಿಡಿದು ಸಲಹುವನೊಬ್ಬನಲಿ ಇದರೊಳಾತಂಗಿಲ್ಲ ಕರುಣಾಸ್ಪದತೆ" ಎಂಬಂತಹ ಮಾತುಗಳು ಆಗಿಂದಾಗ್ಗೆ ಕಾಣಿಸಿಕೊಂಡು ಅದ್ವೈತವನ್ನೋ ಕೃಷ್ಣಪಾರಮ್ಯವನ್ನೋ ಅವನ ಸೂತ್ರಧಾರಿತನವನ್ನೋ ಕಾವ್ಯದಲ್ಲಿ ವಾಚ್ಯವಾಗಿಸಿಬಿಡುತ್ತದೆ. ಹಾಗೆಯೇ "ವೇದಪಾರಾಯಣದ ಫಲ ಗಂಗಾದಿ ತೀರ್ಥಸ್ನಾನಫಲ ಕೃಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ ಮೇದಿಯನೊಲಿದಿತ್ತ ಫಲ ವಸ್ತ್ರಾದಿ ಕನ್ಯಾದಾನಫಲವಹುದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ" ಎಂಬ ಕಾವ್ಯದ ಫಲಶ್ರುತಿಯಲ್ಲಿ ಅವನ ಉದ್ದೇಶವೂ ಸ್ಪಷ್ಟವಾಗುತ್ತದೆ. ಈ ಕಾವ್ಯದ ಓದು ಪುಣ್ಯದಾಯಕವಾದುದೆಂಬ ಆಶಯ ವ್ಯಕ್ತವಾಗುತ್ತದೆ. ಹೀಗಾಗಿ ಪುಣ್ಯಸಂಪಾದನೆಯಲ್ಲಿ ಆಸಕ್ತರಾದ ಓದುಗರು ಅವನ ಕಾವ್ಯದಿಂದ ಹೆಚ್ಚು ಪುಲಕಿತಗೊಳ್ಳುವುದರಲ್ಲಿ ಸಂದೇಹವಿಲ್ಲ; ಅಥವಾ ಕುಮಾರವ್ಯಾಸನ ಉದ್ದಿಷ್ಟ ಓದುಗವರ್ಗವೂ ಅಂತಹುದೇ ಎಂದು ಕಾಣುತ್ತದೆ, ಕಾವ್ಯಪ್ರಿಯರಿಗಿಂತ ಹೆಚ್ಚಾಗಿ ಭಕ್ತಮನೋಭಾವದವರು. ಹೀಗಾಗಿ ಕುಮಾರವ್ಯಾಸನ ಕಾವ್ಯ ಮಹಾ ಹರಿಕಥೆಯಾಗಿ ಕಾಣುತ್ತದೆ. ಈ ಸಂದರ್ಭದಲ್ಲಿ ಹೋಲಿಕೆಗಾಗಿ 'ಪಂಪಭಾರತ'ದ ಕೊನೆಯ ಪದ್ಯವನ್ನು ನೋಡಬಹುದು. ತನ್ನ ಕಾವ್ಯವನ್ನು ಲೌಕಿಕ ಎಂದು ಹೇಳಿಕೊಂಡಿದ್ದರೂ ಪಂಪನ ದೃಷ್ಟಿಯಲ್ಲಿ ಅದರ ವಿಶಿಷ್ಟ ಪಾತ್ರಗಳಿಂದಾಗಿ "ಭಾರತಂ ಲೋಕಪೂಜ್ಯ"ವಾದುದು; ಅದನ್ನು ಓದುವ ಓದಿಸುವ ಕೇಳುವವವರಿಗೆ ಬರುವ ಫಲಗಳೆಂದರೆ "ಧೃತಿ ತುಷ್ಟಿ ಪುಷ್ಟಿ ವಿಭವಂ ಸೌಭಾಗ್ಯಮಿಷ್ಟಾಂಗನಾಸುರತಂ ಕಾಂತಿಯಗುಂತಿ ಶಾಂತಿ ವಿಭವ"ಗಳು. ಇದರಿಂದ ಎರಡೂ ಕಾವ್ಯಗಳ ಉದ್ದೇಶ ಸ್ಪಷ್ಟವಾಗುವುದಲ್ಲದೆ, ಅವೆರಡರ ನಡುವಣ ವ್ಯತ್ಯಾಸವೂ ಗೊತ್ತಾಗುತ್ತದೆ. ಅದರ ಬದಲು, ಕುಮಾರವ್ಯಾಸನು ದೈವಿಕತೆಯನ್ನು ಇತರ ಪಾತ್ರಗಳು ಅರಿಯದೆ, ಎಲ್ಲವನ್ನೂ ತನ್ನ ಚಾಲಾಕಿತನದಿಂದ ನಿಯಂತ್ರಿಸುವ, ಕಾವ್ಯ ಬೆಳೆದಂತೆ ಅವನು ದೈವಪ್ರತೀಕವೇ ಎಂಬ ಭಾವನೆ ಓದುಗನಲ್ಲಿ ಬರುವ ಬಗೆಯ ಚಿತ್ರಣ ನೀಡಿದ್ದರೆ ಕಾವ್ಯವು ಮತ್ತಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ನಿದರ್ಶನಕ್ಕೆ, ದ್ರೌಪದಿಯ ಸೀರೆ ಸೆಳೆಯುವ ಪ್ರಸಂಗ ನಿರ್ವಹಣೆ. ಆಕೆಯ ಭಕ್ತಿಗೆ ಕರಗಿ ರುಕ್ಮಿಣಿ-ಸತ್ಯಭಾಮೆಯರೊಡನೆ ಪಗಡೆಯ ಸಂಭ್ರಮದಲ್ಲಿದ್ದ ಕೃಷ್ಣ ಇರುವಲ್ಲಿಂದಲೇ ಅಕ್ಷಯವಸ್ತ್ರವನ್ನು ದಯಪಾಲಿಸಿದನೆಂಬ ಪ್ರಸಂಗ. ಅವಮಾನದ ಪ್ರಸಂಗದಲ್ಲಿ ಗಂಡಂದಿರಾಗಲೀ ಹಿರಿಯರಾಗಲೀ ಸಾರ್ವಜನಿಕರಾಗಲೀ ತನ್ನ ನೆರವಿಗೆ ಬಾರದಿದ್ದಾಗ ಅತ್ಯಂತ ಅಸಹಾಯಕಳಾದ ಹೆಣ್ಣೊಬ್ಬಳು ಮಾಡಿದ ದೈವಸ್ತುತಿ ಎದುರಿಗಿದ್ದ ಖೂಳನ ಮನಸ್ಸನ್ನು ವಿಚಲಿತಗೊಳಿಸಿ ತಾನಾಗಿ ತನ್ನ ಕೃತ್ಯವನ್ನು ನಿಲ್ಲಿಸುವಂತಹ ರೀತಿಯಲ್ಲಿ ಚಿತ್ರಿಸಿದ್ದರೆ ಅದರಲ್ಲಿ ಸಹಜತೆಯ ಜೊತೆಗೆ ಧ್ವನಿಪೂರ್ಣತೆಯೂ ತುಂಬುತ್ತಿತ್ತೇನೋ. ಆದರೆ ಕವಿಗೆ ತನ್ನ ಕಾವ್ಯದ ಧ್ವನಿಪೂರ್ಣತೆಗಿಂತ ಮಹಿಮಾವರ್ಣನೆ ಮುಖ್ಯವಾಗುತ್ತದೆ. "ಹೀಗಾಗಿ ಕುಮಾರವ್ಯಾಸನಲ್ಲಿ ಸಾಹಿತ್ಯದ ದೃಷ್ಟಿಗಿಂತ ದೈವೀಭಾವನೆಯೆ ಕಂಡುಬರುತ್ತದೆ" ಎಂಬ ಮಾತು ಸರಿ. ಆದರೆ ಅವನ ಕಾವ್ಯಕ್ಕೆ ತಿದ್ದುಪಡಿಗಳನ್ನು ಸೂಚಿಸಲು ನಾವಾರು? ತನಗೆ ಬೇಕಾದಂತೆ ರಚಿಸುವುದು ಕವಿಯ ಸ್ವಾತಂತ್ರ್ಯ, ಹಕ್ಕು. ಆದರೆ ಅದನ್ನು ನಮ್ಮ ನಿಲವಿನಿಂದ ಪರಿಶೀಲಿಸುವುದು ಓದುಗನ ಸ್ವಾತಂತ್ರ್ಯ. ಅಷ್ಟನ್ನೇ ನಾವು ಮಾಡಬಹುದು. ಯಾವ ಮಾನವ ಕೃತಿಯೂ ಪರಿಪೂರ್ಣವಾದುದಾಗಲು ಸಾಧ್ಯವಿಲ್ಲ, ಕಾವ್ಯವೂ ಹಾಗೆಯೇ. ಪರಿಪೂರ್ಣತೆ ಎಂಬುದು ನಮ್ಮ ಕಾಣ್ಕೆಯ ಪರಿಯೇ ವಿನಾ ಅದು ವಾಸ್ತವವಾಗಲಾರದು, ಪರಿಪೂರ್ಣತೆ ಮಾನವನಿಂದ ಅಸಾಧ್ಯ. ಆದರೆ ಇಷ್ಟನ್ನು ಮಾತ್ರ ನಿಶ್ಚಿತವಾಗಿ ಹೇಳಬಹುದು: ಕುಮಾರವ್ಯಾಸಭಾರತ ಕನ್ನಡದ ಬಹು ಮುಖ್ಯ ಕಾವ್ಯಗಳಲ್ಲೊಂದು ಎಂಬುದು ಎಲ್ಲರೂ ಒಪ್ಪುವ ಮಾತು.

ಲೇಖಕರ ಬಿನ್ನಹ[ಸಂಪಾದಿಸಿ]

ಇದು ಕುಮಾರವ್ಯಾಸಭಾರತದ ಸಮಗ್ರ ವಿಮರ್ಶೆಯಲ್ಲ. ಕಾವ್ಯವನ್ನು ಮತ್ತೊಮ್ಮೆ ಆಮೂಲಾಗ್ರವಾಗಿ ಓದಿದ ಬಳಿಕ ನನ್ನ ತಿಳಿವಳಿಕೆಯ ನೆಲೆಯಲ್ಲಿ, ನನ್ನ ದೃಷ್ಟಿಕೋನದ ಬೆಳಕಿನಲ್ಲಿ, ನನ್ನಲ್ಲಿ ಮೂಡಿದ ಅನಿಸಿಕೆಗಳನ್ನಿಲ್ಲಿ ದಾಖಲಿಸಿದ್ದೇನೆ. ಕುಮಾರವ್ಯಾಸ ನಾನು ಅಳುಕಿದಂತೆ ಅಥವಾ ಕೆಲವರು ಆಕ್ಷೇಪಿಸಬಹುದಾದಂತೆ, ಪೂರ್ತಿ ನನ್ನ ಕೈಗೆ ಹತ್ತದ ಕವಿಯಿರಬಹುದು, ಅವನ ದರ್ಶನಸೂಕ್ಷ್ಮತೆ ತನ್ನ ಸಮಗ್ರತೆಯಲ್ಲಿ ನನಗೆ ದಕ್ಕದಿರಬಹುದು. ಹಾಗಾಗಿ ಈ ಬರಹವನ್ನು ಕೇವಲ ಸಾಮಾನ್ಯ ಓದುಗನೊಬ್ಬನ ಪ್ರತಿಕ್ರಿಯೆ ಎಂದು ಭಾವಿಸಬಹುದು. ನಾನು ಯೋಚಿಸಿದ ಬಗೆಯಲ್ಲಿಯೇ ಕೆಲವು ಅಂಶಗಳನ್ನು ಹಿಂದಿನ ಕೆಲವರೂ ವ್ಯಕ್ತಪಡಿಸಿದ್ದಾರೆ. ಅಂತಹವರನ್ನು ಹೆಸರಿಸದೆಯೇ ಅವರಿಗೆ ನಾನು ಋಣಿಯಾಗಿರುವುದನ್ನು ಸೂಚಿಸಲು ಅಂತಹವರ ಮಾತುಗಳನ್ನು (ಹಾಗೂ ಕಾವ್ಯದ ಪದ್ಯ ಮತ್ತು ಪದ್ಯಖಂಡಗಳನ್ನು) ಉದ್ಧರಣಚಿಹ್ನೆಗಳಲ್ಲಿ ಕೊಟ್ಟಿದ್ದೇನೆ. ಹಾಗಿಲ್ಲದ ನಿರೂಪಣೆಯ ಮಾತುಗಳು ನನ್ನವೇ ಆಗಿವೆ. :(Narayana Pradhan; . Vijaya College,, Bengaluru as Lecture in Kannada. Worked there till 31-12-2000; Now President,BMSri Smaraka Pratishtana-N R Colony-Bengaluru - 560 019)

ನೋಡಿ[ಸಂಪಾದಿಸಿ]

ಆದಿಪರ್ವ ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ನೋಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ