ಪಂಪಭಾರತ ಷಷ್ಠಾಶ್ವಾಸಂ
ಗೋಚರ
ಪಂಪಭಾರತ -ಪದವಿಭಾಗ ಮತ್ತು ಅರ್ಥ::ಪಂಪಭಾರತ ಷಷ್ಠಾಶ್ವಾಸಂ
[ಸಂಪಾದಿಸಿ]- (XXIX.III.XIIX)-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ.
ಧರ್ಮರಾಯನಿಂದ ರಾಜಸೂಯ ಯಾಗ |
- ಕಂ||ಶ್ರೀಗೆ ಫಳಂ ಚಾಗಂ ವಾಕ್
- ಶ್ರೀಗೆ ಫಳಂ ಸರ್ವಶಾಸ್ತ್ರ ಪರಿಣತಿ ವೀರ|
- ಶ್ರೀಗೆ ಫಳಮಾಯವೆಂದಿಂ
- ತಾಗಳು ಮರಿದೆಸಗಿದಂ ಪರಾಕ್ರಮಧವಳಂ||೧||
- ಪದ್ಯ-೧:ಪದವಿಭಾಗ-ಅರ್ಥ:ಶ್ರೀಗೆ ಫಳಂ(ಫಲಮ- ಫಲವು) ಚಾಗಂ (ತ್ಯಾಗವು), ವಾಕ್ ಶ್ರೀಗೆ ಫಳಂ ಸರ್ವಶಾಸ್ತ್ರ ಪರಿಣತಿ (ಫಲವು ಸರ್ವ ಶಾಸ್ರಜ್ಞಾನ) ವೀರಶ್ರೀಗೆ (ಶೌರ್ಯಕ್ಕೆ ) ಫಳಮ ಆಯವೆಂದು ಇಂತು ಆಗಳುಂ ಅರಿದು ಎಸಗಿದಂ ಪರಾಕ್ರಮಧವಳಂ (ಶೌರ್ಯಕ್ಕೆ ಫಲವು ಔಚತ್ಯ ಎಂದು ಅರ್ಜುನನು ತಿಳಿದು ನೆಡೆದನು)
- :ಪದ್ಯ-೧:ಅರ್ಥ:ಶ್ರೀಗೆ ಫಲವು ತ್ಯಾಗವು, ವಿದ್ಯೆಗೆ ಸರ್ವಶಾಸ್ತ್ರ ಪರಿಣತಿ - ಸರ್ವ ಶಾಸ್ರಜ್ಞಾನವು ಫಲವು; ಶೌರ್ಯಕ್ಕೆ ಶೌರ್ಯಕ್ಕೆ ಫಲವು ಔಚತ್ಯ ಎಂದು ಅರ್ಜುನನು ತಿಳಿದು ನೆಡೆದನು.
- ವ||ಅಂತು ಖಾಂಡವದಹನ ಪ್ರಪಂಚದಿಂ ಬಳಿಮಾರಾತಿ ವನದಹನ ತೀವ್ರಪ್ರತಾಪ ಗಹನಕ್ಕೆ ಮುನ್ನಮಳ್ಕಿ ಪರಮಂಡಳಿಕರಿತ್ತುಂ ತೆತ್ತು ಬೆಸಕೈಯ್ಯೆ ಕೆಲವು ದಿವಸಮಿರ್ದು ನಾರಾಯಣನಂ ದ್ವಾರಾವತಿಗೆ ಕಳಿಸಿ-
- ವಚನ:ಪದವಿಭಾಗ-ಅರ್ಥ:ಅಂತು (ಹಾಗೆ) ಖಾಂಡವದಹನ ಪ್ರಪಂಚದಿಂ (ಖಾಂಡವದಹನ ಪ್ರಕರಣದ) ಬಳಿಂ ಆರಾತಿ (ಬಳಿಕ ಶತ್ರುಗಳು) ವನದಹನ ಬಹಳಪ್ರತಾಪ ತೀವ್ರತೆಗೆ ಮುನ್ನಮ್ ಅಳ್ಕಿ (ಮೊದಲೇ ಹೆದರಿ) ಪರಮಂಡಳಿಕರ್ ಇತ್ತುಂ ತೆತ್ತು ಬೆಸಕೈಯ್ಯೆ (ಸಾಮಂತರು ಕಪ್ಪಕಾಣಿಕೆಗಳನ್ನು ಕೊಟ್ಟು ಆಜ್ಞೆಯನ್ನು ಪಾಲಿಸುತ್ತಿರಲು,) ಕೆಲವು ದಿವಸಮಿರ್ದು ನಾರಾಯಣನಂ ದ್ವಾರಾವತಿಗೆ ಕಳಿಸಿ-
- ವಚನ:ಅರ್ಥ:ಹಾಗೆ ಖಾಂಡವದಹನ ಪ್ರಕರಣದ ಬಳಿಕ ಶತ್ರುಗಳೆಂಬ ವನದಹನ ಬಹಳಪ್ರತಾಪ ತೀವ್ರತೆಗೆ ಸಾಮಂತರು ಕಪ್ಪಕಾಣಿಕೆಗಳನ್ನು ಕೊಟ್ಟು ಆಜ್ಞೆಯನ್ನು ಪಾಲಿಸುತ್ತಿರಲು,ಕೆಲವು ದಿವಸ ಇದ್ದು ಕೃಷ್ಣನನ್ನು ದ್ವಾರಾವತಿಗೆ ಕಳಿಸಿದನು.-
- ಉ||ತುಂಗ ತರಂಗ ಭಂಗುರಪಯೋಧಿಪರೀತಮಹಾಮಹೀತಳಾ
- ಲಿಂಗಿತ ಕೀರ್ತಿಕೇಳ್ದು ಬಡ ಪಾರ್ವನ ಪುಯ್ಯಲೊರ್ಮೆ ಕೇಳ್ದನಾ
- ವಂಗಮಗುರ್ವು ಪರ್ವೆ ಜವನೊಳ್ ಸೆರಗಿಲ್ಲದೆ ಪೋಗಿತಾಗಿ ತಂ
- ದಂ ಗಡ ವಿಕ್ರಮಾರ್ಜುನನೆ ಪಾರ್ವರ ಪಿಳ್ಳೆಯ ಪೋದ ಜೀವಮಂ||೨||
- ಪದ್ಯ-೨:ಪದವಿಭಾಗ-ಅರ್ಥ:ತುಂಗ ತರಂಗ ಭಂಗುರ ಪಯೋಧಿ ಪರೀತ (ಎತ್ತದ ಅಲೆಗಳ ಅಸ್ಥಿರ ಸಮುದ್ರದಿಂದ ಸುತ್ತುವರಿದ) ಮಹಾಮಹೀತಳ ಆಲಿಂಗಿತ ಕೀರ್ತಿ(ಭೂಮಿಯನ್ನು ಹೊಂದಿದ ಕೀರ್ತಿಯ ಅರ್ಜುನನು) ಕೇಳ್ದು ಬಡ ಪಾರ್ವನ ಪುಯ್ಯಲೊರ್ಮೆ ಕೇಳ್ದನು (ಬಡ ಬ್ರಾಹ್ಮಣನ ಗೋಳನ್ನು ಕೇಳಿದನು. ) ಆವಂಗಂ ಅಗುರ್ವು ಪರ್ವೆ (ಯಾವನಿಗೂ ಭಯವು ಹುಟ್ಟಲು) ಜವನೊಳ್ ಸೆರಗಿಲ್ಲದೆ ಪೋಗಿ ತಾಗಿ (ಯಮನಲ್ಲಿಗೆ ಸಹಾಯವಿಲ್ಲದೆ ಹೋಗಿ ಅವನನ್ನು ಎದುರಿಸಿ) ತಂದಂ ಗಡ (ತಂದನು ಅಬ್ಬಾ!) ವಿಕ್ರಮಾರ್ಜುನನೆ ಪಾರ್ವರ ಪಿಳ್ಳೆಯ ಪೋದ ಜೀವಮಂ (ಅರ್ಜುನನು ಯಮನಲ್ಲಿಗೆ ಯಾರ ಸಹಾಯವಿಲ್ಲದೆ ಹೋಗಿ ಅವನನ್ನು ಎದುರಿಸಿ ಆ ಬ್ರಾಹ್ಮಣನ ಮಗನ ಜೀವವನ್ನು ತಂದನು. ಗಡ- ಅಬ್ಬಾ!)
- ಪದ್ಯ-೨:ಅರ್ಥ:ಎತ್ತದ ಅಲೆಗಳ ಅಸ್ಥಿರ ಸಮುದ್ರದಿಂದ ಸುತ್ತುವರಿದ ಮಹತ್ತಾದ ಭೂಮಿಯನ್ನು ಹೊಂದಿದ ಕೀರ್ತಿಯ ಅರ್ಜುನನು, ಬಡ ಬ್ರಾಹ್ಮಣನ ಗೋಳನ್ನು ಕೇಳಿ ಯಾವನಿಗೂ ಭಯವು ಹುಟ್ಟಲು, ಅರ್ಜುನನು ಯಮನಲ್ಲಿಗೆ ಯಾರ ಸಹಾಯವಿಲ್ಲದೆ ಹೋಗಿ ಆ ಬ್ರಾಹ್ಮಣನ ಮಗನ ಜೀವವನ್ನು ತಂದನು. ಗಡ- ಅಬ್ಬಾ!
- ವ||ಎಂದು ಲೋಕಮೆಲ್ಲಂಪೊಗಳೆ ವಿದ್ವಿಷ್ಠವಿದ್ರಾವುಣನುಂ ಭೀಮ ಯುಧಿಷ್ಠಿರ ನಕುಳ ಸಹದೇವರುಮಯ್ವರುಂಬೆರಸೊಂದು ದಿವಸಮೋಲಗಂಗೊಟ್ಟರೆ ಧರ್ಮಪುತ್ರನಲ್ಲಿಗೆ ಮಯಂ ಪಂಚರತ್ನಹಿರಣ್ಮಯಂ ಚತುರಶ್ರಮೂರುಂ ಯೋಜನದಳವಿಯ ಸಭಾಮಂಟಪಮನುನೊಂದುಲಕ್ಕ ರಕ್ಕಸವಡೆಯಂ ಪೊತ್ತು ತರಿಸಿ ತನ್ನ ನಲ್ಮೆಯ ಬಲ್ಮೆಯಂ ಮೆರೆಯಲೆಂದು ದೇವಲೋಕದಿಂ ತಂದು ಮುಂದಿಟ್ಟು -
- ವಚನ:ಪದವಿಭಾಗ-ಅರ್ಥ:ಎಂದು ಲೋಕಮೆಲ್ಲಂ ಪೊಗಳೆ ವಿದ್ವಿಷ್ಠವಿದ್ರಾವುಣನುಂ (ಅರ್ಜುನ) ಭೀಮ ಯುಧಿಷ್ಠಿರ ನಕುಳ ಸಹದೇವರುಂ ಅಯ್ವರುಂ ಬೆರಸೊಂದು ದಿವಸಂ ಓಲಗಂಗೊಟ್ಟರೆ ಧರ್ಮಪುತ್ರನಲ್ಲಿಗೆ ಮಯಂ ಪಂಚರತ್ನಹಿರಣ್ಮಯಂ ಚತುರಶ್ರ ಮೂರುಂ ಯೋಜನದ ಅಳವಿಯ ಸಭಾಮಂಟಪಮನುಂ ಒಂದು ಲಕ್ಕ ರಕ್ಕಸವಡೆಯಂ ಪೊತ್ತು ತರಿಸಿ ತನ್ನ ನಲ್ಮೆಯ ಬಲ್ಮೆಯಂ ಮೆರೆಯಲೆಂದು ದೇವಲೋಕದಿಂ ತಂದು ಮುಂದಿಟ್ಟು -
- ವಚನ:ಅರ್ಥ:(ಹೋದ ಜೀವವನ್ನು ತಂದನು) ಎಂದು ಲೋಕಮೆಲ್ಲವೂ ಹೊಗಳಲು ಅರ್ಜುನ, ಭೀಮ, ಯುಧಿಷ್ಠಿರ, ನಕುಲ, ಸಹದೇವರು ಈ ಅಯ್ವರು ಸೇರಿ ಒಂದು ದಿವಸ ಓಲಗವನ್ನು -ಸಭೆಯನ್ನು ನೆಡೆಸುತ್ತುವಾಗ, ಧರ್ಮಪುತ್ರನಲ್ಲಿಗೆ ಮಯನು ಪಂಚರತ್ನ ಹಿರಣ್ಮಯಂ ಚತುರಶ್ರ-ಚಚ್ಚೌಕವಾದ ಮೂರುಂ ಯೋಜನದ ಅಳತೆಯ ಸಭಾಮಂಟಪವನ್ನು ಒಂದು ಲಕ್ಷ ರಕ್ಕಸ ವಡೆಯಿಂದ ಹೊರಿಸಿಕೊಂಡು ತರಿಸಿ ತನ್ನ ನಲಿಮೆಯ/ಒಳ್ಳೆಯತನವನ್ನು ಶಕ್ತಿಯನ್ನೂ ಮೆರೆಸಲು ದೇವಲೋಕದಿಂದ ತಂದು ಅವರ ಮುಂದಿಟ್ಟು - (ಮುಂದಿಟ್ಟನು)
- ಮ|| ಇದರಂದಂ ಬಸವಂದ ಮೊಂದಿಟ್ಟು ತೆರನಲ್ತೆಂತೆಂತೊಡಾರೊಯ್ವಡಿಂ
- ತಿದರೊಳ್ ದಿವ್ಯಸರೋವರಂಗಳಿದರೊಳ್ ಕಲ್ಪಾಜ/ವನೀದಂಗಳಿಂ|
- ತಿದರೊಳ್ ನಾಟಕಶಾಲೆ ರಯ್ಯಮಿದರೊಳ್ ದೇವಾಪ್ಸರೋನೃತ್ಯ ವಿಂ
- ತಿದರಂತಾಗಿರೆ ನೋಳ್ಪೊಡಾರುಮರಿಯರ್ ಮಾಡಲ್ ಸಭಾಗೇಹಮಂ||೩||
- ಪದ್ಯ-೩:ಪದವಿಭಾಗ-ಅರ್ಥ:ಇದರ ಅಂದಂ ಬಸವಂದಂ (ಇದರ ಸೌಂದರ್ಯ ಆಸ್ಚರ್ಯ-ಅದ್ಭುತವಾದುದು;) ಒಂದಿಟ್ಟು ತೆರನಲ್ತು (ಒಂದೇ ಬಗೆಯದಲ್ಲ,) ಅಂತು ಎಂತೊಡೆ ಆರೊಯ್ವಡೆ ಇಂತಿದರೊಳ್ ದಿವ್ಯಸರೋವರಂಗಳ್ ಇದರೊಳ್ ಕಲ್ಪಾಜ/ವನೀದಂಗಳ್ ಇಂತಿದರೊಳ್ ನಾಟಕಶಾಲೆ ರಯ್ಯಮಿದರೊಳ್ ದೇವ ಅಪ್ಸರೋನೃತ್ಯ ಇಂತು ಇದರಂತಾಗಿರೆ ನೋಳ್ಪೊಡೆ ಆರುಮರಿಯರ್ (ಆರುಂ ಅರಿಯರ್ ) ಮಾಡಲ್ (ಮಾಡವಿಕೆ -ನಿರ್ಮಾಣ ) ಸಭಾಗೇಹಮಂ.
- ಪದ್ಯ-೩:ಅರ್ಥ:ಇದರ ಸೌಂದರ್ಯ ಆಸ್ಚರ್ಯ-ಅದ್ಭುತವಾದುದು; ಒಂದೇ ಬಗೆಯದಲ್ಲ, ದಿವ್ಯಸರೋವರಂಗಳೂ ಕಲ್ಪವೃಕ್ಷಗಳೂ, ನಾಟಕಶಾಲೆಯು, ರಮ್ಯತೆಯೂ, ಇದರಲ್ಲಿ ದೇವ ಅಪ್ಸರೆಯರ ನೃತ್ಯ, ಈ ಸಭಾಮಂಟಪದ ನಿರ್ಮಾಣ ನೊಡಿದಾಗ ಯಾರೂ ಇದರ (ರಹಸ್ಯವನ್ನು) ಅರಿಯದು.
- ವ|| ಎಂದೆನ್ನೀ ಪ್ರಾಣಮೆಂಬುದುವಿಕ್ರಮಾರ್ಜುನನ ದಯೆಗೆಯ್ದು ಪ್ರಾಣಮೆನ್ನ ಕೊಟ್ಟುದರ್ಕೆ ಮಾರ್ಕೊಳ್ಳದೆ ಕೊಳ್ಳಖಿಮೆಂದೊಡಂತೆಗೆಯ್ವೆಮೆಮದು ನಿಶ್ಚಯಿಸೆ ಧರ್ಮಪುತ್ರಂಗೋಲಗಂಗುಡಲ್ತಕ್ಕುದೆಂದದಂ ಧರ್ಮಪುತ್ರಂಗೆ ಕೊಟ್ಟು ಪರಾಕ್ರಮಧವಳಂಗೆ ಶಶಾಠಂಕವಿಶದಯಶಮೆತೆರಳ್ದುರುಳಿಗೊಂಡಂತಿರ್ದ ಶಂಖಮಂ ಬಾಸಣಿಗೆಗಳೆದು-
- ವಚನ:ಪದವಿಭಾಗ-ಅರ್ಥ:ಎಂದು ಎನ್ನ ಈ ಪ್ರಾಣಮೆಂಬುದು ವಿಕ್ರಮಾರ್ಜುನನ ದಯೆಗೆಯ್ದು ಪ್ರಾಣಮೆನ್ನ(ನನ್ನ ಪ್ರಾಣವು ವಿಕ್ರಮಾರ್ಜುನನು ದಯೆಯಿಂದ ಕೊಟ್ಟದ್ದು ಎನ್ನ ಪ್ರಾಣವು, ಎಂದು), ಕೊಟ್ಟುದರ್ಕೆ ಮಾರ್ಕೊಳ್ಳದೆ (ಕೊಟ್ಟಿದ್ದನ್ನು ಪ್ರತಿಹೇಳದೆ) ಕೊಳ್ಳಿಂ ಎಂಮೆಂದೊಡೆ ಅಂತೆಗೆಯ್ವೆಮೆಂದು (ಹಾಗೆ ಮಾಡುವೆವೆಂದು) ನಿಶ್ಚಯಿಸೆ ಧರ್ಮಪುತ್ರಂಗೆ ಓಲಗಂಗುಡಲ್ ತಕ್ಕುದೆಂದು ಅದಂ ಧರ್ಮಪುತ್ರಂಗೆ ಕೊಟ್ಟು ಪರಾಕ್ರಮಧವಳಂಗೆ (ಅರ್ಜುನನಿಗೆ) ಶಶಾಂಕವಿಶದ ಯಶಮೆತೆರಳ್ದು ಉರುಳಿಗೊಂಡಂತಿರ್ದ ಶಂಖಮಂ (ಚಂದ್ರನಷ್ಟು ದೊಡ್ಡ ಕೀರ್ತಿಯೇ ಸುತ್ತಿಕೊಂಡು ಉಂಡೆಯಂತಿದ್ದ ಶಂಖವನ್ನು) ಬಾಸಣಿಗೆಗಳೆದು (ಅದಕ್ಕೆ ಸುತ್ತಿದ್ದ ಮುಸುಕನ್ನು ತೆಗೆದು ಕೊಟ್ಟನು.)
- ವಚನ:ಅರ್ಥ:ಮಯನು, ನನ್ನ ಪ್ರಾಣವು ವಿಕ್ರಮಾರ್ಜುನನು ದಯೆಯಿಂದ ಕೊಟ್ಟದ್ದು ಎನ್ನ ಪ್ರಾಣವು, ಎಂದು, ಕೊಟ್ಟಿದ್ದನ್ನು ಪ್ರತಿಹೇಳದೆ ತೆಗೆದುಕೊಳ್ಳಿರಿ ಎಂದನು. ಹಾಗೆ ಮಾಡುವೆವೆಂದು ನಿಶ್ಚಯಿಸಿ ತೆಗೆದುಕೊಳ್ಳಲು ಒಪ್ಪಿದರು. ಧರ್ಮಪುತ್ರನಿಗೆ ಓಲಗ ನೆಡೆಸಲು ತಕ್ಕುದೆಂದು ಅದನ್ನು ಧರ್ಮಪುತ್ರನಿಗೆ ಕೊಟ್ಟು, ಅರ್ಜುನನಿಗೆ, ಚಂದ್ರನಷ್ಟು ದೊಡ್ಡ ಕೀರ್ತಿಯೇ ಸುತ್ತಿಕೊಂಡು ಉಂಡೆಯಂತಿದ್ದ ಶಂಖವನ್ನು ಅದಕ್ಕೆ ಸುತ್ತಿದ್ದ ಮುಸುಕನ್ನು ತೆಗೆದು ಮಯನು ಕೊಟ್ಟನು.
- ಕಂ|| ಇದನಿಂದ್ರನಟ್ಟಿದಂ ನಿನ
- ಗಿದರ ಪೆಸರ್ ದೇವದತ್ತಮೆಂಬುದು ನಿನಗ|
- ಭ್ಯುದಯಕರಂ ಶಂಖಂ ರಿಪು
- ಹೃದಯಕವಾಟಪುಟವಿಘಟನಂ ನೋಡರಿಗಾ||೪||
- ಪದ್ಯ-೪:ಪದವಿಭಾಗ-ಅರ್ಥ:ಇದನು ಇಂದ್ರನು ಅಟ್ಟಿದಂ ನಿನಗೆ, (ಇದನ್ನು ನಿನಗಾಗಿ ಇಂದ್ರನು ಕಳುಹಿಸಿಕೊಟ್ಟನು) ಇದರ ಪೆಸರ್ ದೇವದತ್ತಮೆಂಬುದು ನಿನಗೆ ಅಭ್ಯುದಯಕರಂ ಶಂಖಂ ರಿಪು ಹೃದಯ ಕವಾಟ ಪುಟವಿಘಟನಂ (ಶತ್ರುಗಳ ಹೃದಯದ ಬಾಗಿಲನ್ನು ಒಡೆಯುವುದು ) ನೋಡು ಅರಿಗಾ (ಅರ್ಜುನನೇ)
- ಪದ್ಯ-೪:ಅರ್ಥ:ಈ ಶಂಖವನ್ನು ನಿನಗಾಗಿ ಇಂದ್ರನು ಕಳುಹಿಸಿಕೊಟ್ಟನು. ಇದರ ಹೆಸರು ದೇವದತ್ತವೆಂದು; ಈ ಶಂಖವು ನಿನಗೆ ಅಭ್ಯುದಯಕರವು , ಶತ್ರುಗಳ ಹೃದಯದ ಬಾಗಿಲನ್ನು ಒಡೆಯುವುದು ನೋಡು ಅರ್ಜುನನೇ, ಎಂದನು ಮಯ.
- ವ||ಎಂದದಂ ವಿಕ್ರಮಾರ್ಜುನಂಗೆ ಕೊಟ್ಟು ಮುನ್ನಂ ಷೋಡಶರಾಜರೊಳಗೆ ಮಾಂಧಾತನೆಂಬಂ ವಿದ್ಯಾಧರನಾತನ ಗದೆಯಿದು ಬಳಿಯಮಾತನಂ ಲವಣನೆಂಬಸುರಂ ಕಾದಿ ಕೊಂದು ಕೊಂಡೊಡಾತನಂ ರಾಮಚಂದ್ರನ ತಮ್ಮಂ ಶತ್ರುಘ್ನ ಗೆಲ್ದು ತನಗೆ ಕೊಂಡು ಸಮುದ್ರದ ನಡುವಣ ಮೈನಾಕಪರ್ವತದೊಳ್ ಮಡಗಿದೊಡೆನೆನಗಿದಂ ವರುಣದೇವನಿತ್ತನಿಂತಪ್ಪುದು-
- ವಚನ:ಪದವಿಭಾಗ-ಅರ್ಥ:ಎಂದು ಅದಂ ವಿಕ್ರಮಾರ್ಜುನಂಗೆ ಕೊಟ್ಟು ಮುನ್ನಂ ಷೋಡಶರಾಜರೊಳಗೆ ಮಾಧಾತನೆಂಬಂ ವಿದ್ಯಾಧರನಾತನ ಗದೆಯಿದು ಬಳಿಯಂ ಆತನಂ ಲವಣನೆಂಬ ಅಸುರಂ ಕಾದಿ ಕೊಂದು ಕೊಂಡೊಡೆ ಆತನಂ ರಾಮಚಂದ್ರನ ತಮ್ಮಂ ಶತ್ರುಘ್ನ ಗೆಲ್ದು ತನಗೆ ಕೊಂಡು ಸಮುದ್ರದ ನಡುವಣ ಮೈನಾಕಪರ್ವತದೊಳ್ ಮಡಗಿದೊಡೆನೆ ಎಗಿದಂ ವರುಣದೇವನು ಇತ್ತನು ಇಂತಪ್ಪುದು-
- ವಚನ:ಅರ್ಥ:ಎಂದು ಅದನ್ನು ಮಯನು, ಅರ್ಜುನನಿಗೆ ಕೊಟ್ಟು, ಮೊದಲು ಷೋಡಶ(೧೬) ಮಹಾರಾಜರಲ್ಲಿ ಮಾಂಧಾತನೆಂಬವನು ವಿದ್ಯಾಧರನು; ಆತನ ಗದೆಯಿದು; ಬಳಿಕ ಆತನನ್ನು ಲವಣನೆಂಬ ಅಸುರನು ಯುದ್ಧಮಾಡಿ ಕೊಂದು ಅದನ್ನು ತೆಗೆದುಕೊಂಡ ನಂತರ ಆತನನ್ನು ರಾಮಚಂದ್ರನ ತಮ್ಮನಾದ ಶತ್ರುಘ್ನನು ಗೆದ್ದು ತಾನೇ ತೆಗೆದುಕೊಂಡು ಸಮುದ್ರದ ನಡುವಿನ ಮೈನಾಕಪರ್ವತದಲ್ಲಿ ಇಟ್ಟ ನಂತರ ತನಗೆ ಅದನ್ನು ವರುಣದೇವನು ನನಗೆ ಕೊಟ್ಟನು; ಹೀಗಿದೆ ಇದರ ವಿಷಯ ಎಂದನು.-
- ಕಂ||ಅಧಿಕರಿಪುನೃಪತಿಬಳನವ
- ರುಧಿರಜಳಸ್ಪುರಿತ ರೌದ್ರಮೀಗದೆ ಪೆಸರಿಂ|
- ರುಧಿರಮುಖಿಯೆಂಬುದೆಂದದ
- ನಧಿಕಬಳಸ್ಥಂಗೆ ಭೀಮಸೇನಂಗಿತ್ತಂ||೫||
- ಪದ್ಯ-೫:ಪದವಿಭಾಗ-ಅರ್ಥ:ಅಧಿಕ ರಿಪುನೃಪತಿ ಬಳ ನವ ರುಧಿರಜಳ ಸ್ಪುರಿತ (ಈ ಗದೆ ಬಹಳ ಶತ್ರುರಾಜರ ಸೈನ್ಯದ ಹೊಸ ರಕ್ತಜಲದಿಂದದ ಕೂಡಿಶೋಭಿಸುವ) ರೌದ್ರಮಂ ಈ ಗದೆ ಪೆಸರಿಂ ರುಧಿರಮುಖಿಯೆಂಬುದೆಂದು (ಉದರವಾದ ಈ ಗದೆಯ ಹೆಸರು ರುಧಿರಮುಖಿ ಎಂದು ) ಅದನು ಅಧಿಕಬಳಸ್ಥಂಗೆ ಭೀಮಸೇನಂಗೆ ಇತ್ತಂ (ಕೊಟ್ಟನು)
- :ಪದ್ಯ-೫:ಅರ್ಥ:ಈ ಗದೆ ಬಹಳ ಶತ್ರುರಾಜರ ಸೈನ್ಯದ ಹೊಸ ರಕ್ತಜಲದಿಂದದ ಕೂಡಿಶೋಭಿಸುವ ಇದರ ಹೆಸರು ರುಧಿರಮುಖಿ ಎಂಬುದು, ಎಂದು ಹೇಳಿ ಅದನ್ನು ಅಧಿಕಬಲನಾದ ಭಿಮಸೇನನಿಗೆ ಕೊಟ್ಟನು.
- ವ||ಇಂತಿತ್ತುಬಳಿಯಮವರ ದಾನಸನ್ಮಾದಿಗಳಿಂ ಮಯಂ ರಾಗರಸಮಯನಾಗಿ ಸಂತಸಂಬಟ್ಟು ಪೋದನಿತ್ತಮತ್ತೊದು ದಿವಸಮಾ ಸಭಾಮಂಟಪದೊಳ್ ಧರ್ಮರಾಜಂ ತನ್ನ ನಾಲ್ವರು ತಮ್ಮಂದಿರೊಡನೆ ದೇವೇಂದ್ರಲೀಲೆಯಿಂದೋಲಗೊಟ್ಟರೆಯಿರೆ-
- ವಚನ:ಪದವಿಭಾಗ-ಅರ್ಥ:ಇಂತು ಇತ್ತು ಬಳಿಯಂ (ನಂತರ) ಅವರ ದಾನಸನ್ಮಾದಿಗಳಿಂ ಮಯಂ ರಾಗರಸಮಯನಾಗಿ (ಪ್ರೀತಿಯುಳ್ಳವನಾಗಿ) ಸಂತಸಂಬಟ್ಟು ಪೋದನು ಇತ್ತ ಮತ್ತೊದು ದಿವಸಂ ಆ ಸಭಾಮಂಟಪದೊಳ್ ಧರ್ಮರಾಜಂ ತನ್ನ ನಾಲ್ವರು ತಮ್ಮಂದಿರೊಡನೆ ದೇವೇಂದ್ರಲೀಲೆಯಿಂದೋಲಗೊಟ್ಟರೆಯಿರೆ-
- :ವಚನ:ಅರ್ಥ:ಹೀಗೆಗದೆಯನ್ನು ಕೊಟ್ಟು ಬಳಿಕ ಅವರ ದಾನಸನ್ಮಾದಿಗಳಿಂದ ಮಯನು ಅಧಿಕ ಪ್ರೀತಿಯುಳ್ಳವನಾಗಿ ಸಂತಸಪಟ್ಟು ಹೋದನು. ಇತ್ತ ಮತ್ತೊದು ದಿವಸ ಆ ಸಭಾಮಂಟಪದಲ್ಲಿ ಧರ್ಮರಾಜನು ತನ್ನ ನಾಲ್ವರು ತಮ್ಮಂದಿರೊಡನೆ ದೇವೇಂದ್ರನ ಸಭೆಯಂತೆ ರಾಜಸಭೆಯನ್ನು ನೆಡೆಸುತ್ತಿರಲು-
- ಚಂ||ಬೆಳಗುಗಳೆಲ್ಲಮೊಂದುರುಳಿಯಾಗಿ ನಭಸ್ಥಳದಿಂದಮೀಮಹೀ
- ತಳಕಿಳಿತರ್ಪುದೆಂದು ಮನುಜಾಕೃತಿಯೆಂದು ಮುನೀಂದ್ರನೆಂದು ಕ|
- ಣ್ಗೊಳಿಸೆ ಮುನೀಂದ್ರರೊಳ್ ಕಮಳಸಂಬವನಂದನನೆಂದು ನೋಟಕರ್
- ತಳವೆಳಗಾಗೆ ಸಾರೆವರೆ ನೀರದಮಾರ್ಗದಿನಂದುನಾರದಂ ||೬||
- ಪದ್ಯ-೬:ಪದವಿಭಾಗ-ಅರ್ಥ:ಬೆಳಗುಗಳೆಲ್ಲಂ ಒಂದುರುಳಿಯಾಗಿ (ಕಾಂತಿಗಳೆಲ್ಲಾ ಸೇರಿ ಒಂದು ಗೋಲವಾಗಿ) ನಭಸ್ಥಳದಿಂದಂ ಈ ಮಹೀತಳಕೆ ಇಳಿತರ್ಪುದು ಎಂದು (ಆಕಾಶದಿಂದ ಈ ಭೂಮಿಗೆ ಇಳಿದು ಬರುತ್ತಿದೆ ಎಂಬಂತೆ) ಮನುಜಾಕೃತಿಯೆಂದು ಮುನೀಂದ್ರನೆಂದು ಕಣ್ಗೊಳಿಸೆ(ಮಾನವನ ಆಕಾರವಾಗಿ ಕಣ್ಣಿಗೆ ಕಾಣಲು) ಮುನೀಂದ್ರರೊಳ್ ಕಮಳಸಂಬವ ನಂದನನೆಂದು (ಮುನಿಗಳಲ್ಲಿ ಬ್ರಹ್ಮನ ಮಗ ನಾರದನೆಂದು) ನೋಟಕರ್ ತಳವೆಳಗಾಗೆ (ನೋಡುವವರು ಚಿಂತಿತರರಾಗಲು) ಸಾರೆವರೆ ನೀರದಮಾರ್ಗದಿಂ ಅಂದು ನಾರದಂ (ನಾರದನು ಆಕಾಶ ಮಾರ್ಗದಿಂದ ಅಂದು ಸಾರಿಬಂದನು. )
- :ಪದ್ಯ-೬:ಅರ್ಥ:ಕಾಂತಿಗಳೆಲ್ಲಾ ಸೇರಿ ಒಂದು ಗೋಲವಾಗಿ ಆಕಾಶದಿಂದ ಈ ಭೂಮಿಗೆ ಇಳಿದು ಬರುತ್ತಿದೆ ಎಂಬಂತೆ ಮಾನವನ ಆಕಾರವಾಗಿ ಕಣ್ಣಿಗೆ ಕಾಣಲು ಮುನಿಗಳಲ್ಲಿ ಬ್ರಹ್ಮನ ಮಗ ನಾರದನೆಂದು ನೋಡುವವರು ಚಿಂತಿತರರಾಗಲು, ನಾರದನು ಆಕಾಶ ಮಾರ್ಗದಿಂದ ಅಂದು ಸಾರಿ ಅಲ್ಲಿಗೆ ಬಂದನು.
- ತರಳ||ಬಳಸಿ ತನ್ನೊಡನೊಯ್ಯನೊಯ್ಯನೆ ಬರ್ಪ ದೇವರದೊಂದು ಗಾ
- ವುಳಿಯನಿನ್ನಿರಿಮೆಂದು ತನ್ನನೆ ನಿಳ್ಕಿ ನೋಳ್ಪರ ಕಣ್ಗೆ ಕ|
- ಣ್ಬೊಳಪುತನ್ನಯ ಮೈಯ ಬೆಳ್ಪಿನೊಳಳ್ಪು(ಳ್ದು) ನಿಂದೊಡೆ ವಾಳೆಮೀನ್
- ಪೊಳೆಯೆ ಧಾತ್ರಿಗೆ ವರ್ಷಗಂಗೆವೊಲೊಪ್ಪಿದಂ ಮುನಿಪುಂಗವಂ||೭||
- ಪದ್ಯ-೭:ಪದವಿಭಾಗ-ಅರ್ಥ:ಬಳಸಿ ತನ್ನೊಡನೆ ಒಯ್ಯನೊಯ್ಯನೆ ಬರ್ಪ ದೇವರದೊಂದು ಗಾವುಳಿಯನು ಇನ್ನಿರಿಮೆಂದು (ಸುತ್ತುವರಿದು ತನ್ನೊಡನೆ ಮೆಲ್ಲಗೆ ಬರುತ್ತಿದ್ದ ದೇವತೆಗಳ ಗುಂಪನ್ನು ಕುರಿತು, 'ಇನ್ನು ಇಲ್ಲಿಯೇ ಇರಿ' ಎಂದು ಹೇಳಿ) ತನ್ನನೆ ನಿಳ್ಕಿ ನೋಳ್ಪರ ಕಣ್ಗೆ (ತನ್ನನ್ನು ನಿಟ್ಟಿಸಿ ನೋಡುವವರ) ಕಣ್ಬೊಳಪು (ಕಣ್ಣಿನ ಪ್ರಕಾಶ) ತನ್ನಯ ಮೈಯ ಬೆಳ್ಪಿನೊಳಳ್ಪು(ಳ್ದು) ನಿಂದೊಡೆ (ತನ್ನದೇಹದ ಕಾಂತಿಯೊಡನೆ ಸೇರಿ ನಿಂತರೆ) ವಾಳೆಮೀನ್ ಪೊಳೆಯೆ (ಬಾಳೆಮೀನು ಹೊಳೆದಂತೆ ಕಾಣುವುದು,) ಧಾತ್ರಿಗೆ ವರ್ಪ (-ಬರುವ) ಗಂಗೆವೊಲ್ ಒಪ್ಪಿದಂ ಮುನಿಪುಂಗವಂ (ಹೀಗೆ ಭೂಮಿಗೆ ಇಳಿದು ಬರುತ್ತಿರುವ ಗಂಗೆಯಂತೆ ಮುನಿಪುಂಗವನು ಕಂಡನು)
- :ಪದ್ಯ-೭:ಅರ್ಥ:ಸುತ್ತುವರಿದು ತನ್ನೊಡನೆ ಮೆಲ್ಲಗೆ ಬರುತ್ತಿದ್ದ ದೇವತೆಗಳ ಗುಂಪನ್ನು ಕುರಿತು, 'ಇನ್ನು ಇಲ್ಲಿಯೇ ಇರಿ' ಎಂದು ಹೇಳಿ, ತನ್ನನ್ನು ನಿಟ್ಟಿಸಿ ನೋಡುವವರ ಕಣ್ಣಿನ ಪ್ರಕಾಶ, ತನ್ನ ದೇಹದ ಕಾಂತಿಯೊಡನೆ ಸೇರಿ ನಿಂತರೆ, ಬಾಳೆಮೀನು ಹೊಳೆದಂತೆ ಕಾಣುವುದು; ಹೀಗೆ ಭೂಮಿಗೆ ಇಳಿದು ಬರುತ್ತಿರುವ ಗಂಗೆಯಂತೆ ಮುನಿಪುಂಗವನು ಕಂಡನು.
- ವ|| ಅಂತು ಬರ್ಪಾಗಳ್-
- :ವಚನ:ಅರ್ಥ:ಹಾಗೆ ಬರುವಾಗ-
- ತರಳ|| ಸರಿಗೆಯೊಳ್ ಸಮೆದಕ್ಷಮಾಲಿಕೆ ಪೊನ್ನ ಮುಂಜಿ ತೊಳಪ್ಪ ಕ
- ಪ್ಪರದ ಭಸ್ಮರಜಸ್ತ್ರೀ ಪುಂಡ್ರಕಮೊಪ್ಪೆ ಪಿಂಗ ಜಟಾಳಿ ತಾ|
- ವರೆಯ ಸೂತ್ರದೊಳಾದ ಜನ್ನವಿರಂ ದುಕೂಲದ ಕೋವಣಂ
- ಕರಮೊಡಂಬಡೆ ನೋಟಕರ್ಕಳನಾ ತಪಸ್ವಿ ಮರಳ್ಚಿದಂ || ೮ ||
- ಪದ್ಯ-೮:ಪದವಿಭಾಗ-ಅರ್ಥ:ಸರಿಗೆಯೊಳ್ ಸಮೆದ (ಮಾಡಿದ) ಅಕ್ಷಮಾಲಿಕೆ (ಚಿನ್ನದ ತಂತಿಯಲ್ಲಿ ಮಾಡಿದ ಜಪಮಾಲೆ), ಪೊನ್ನ ಮುಂಜಿ (ಹೊನ್ನಿನ ಉಡಿದಾರ) ತೊಳಪ್ಪ ಕಪ್ಪರದ ಭಸ್ಮರಜಸ್ತ್ರೀ ಪುಂಡ್ರಕಂ ಒಪ್ಪೆ (ಹೊಳೆಯುವ ಪರ್ಪೂರ ಮಿಶ್ರಿತ ಭಸ್ಮದ ಪುಡಿಯ ಮೂರು ಗೆರೆಗಳು, -ಭಸ್ಮ ರಜಸ್ತ್ರೀ- ರಜಸ್ -ಪುಡಿ, ತ್ರೀ ಪುಂಡ್ರಕಂ ಮೂರು ಗೆರಯ ಲೇಪನ) ಪಿಂಗ ಜಟಾಳಿ ತಾವರೆಯ ಸೂತ್ರದೊಳಾದ ಜನ್ನವಿರಂ (ತಾವರೆಯ ದಂಟಿನ ನಾರಿನಲ್ಲಿ ಮಾಡಿದ ಜನಿವಾರ) ದುಕೂಲದ ಕೋವಣಂ (ರೇಷ್ಮೆಯ ಬಟ್ಟೆಯ ಕೌಪೀನ), ಕರಂ ಒಡಂಬಡೆ ನೋಟಕರ್ಕಳನು ಆ ತಪಸ್ವಿ ಮರಳ್ಚಿದಂ ( ಬಹಳ ಒಪ್ಪಿತ ವೇಷದಲ್ಲಿ ನೋಡುವವರು ಮೆಚ್ಚುವಂತಿರಲು ಆತಪಸ್ವಿ ನಾರದನು ಜನರನ್ನು ಮರುಳುಮಾಡಿದನು)
- :ಪದ್ಯ-೮:ಅರ್ಥ: ಚಿನ್ನದ ತಂತಿಯಲ್ಲಿ ಮಾಡಿದ ಜಪಮಾಲೆ, ಹೊನ್ನಿನ ಉಡಿದಾರ, ಹೊಳೆಯುವ ಪರ್ಪೂರ ಮಿಶ್ರಿತ ಭಸ್ಮದ ಪುಡಿಯ ಮೂರು ಗೆರೆಗಳು, -ಭಸ್ಮ ರಜಸ್ತ್ರೀ- ರಜಸ್ -ಪುಡಿ, ತ್ರೀ ಪುಂಡ್ರಕಂ ಮೂರು ಗೆರಯ ಲೇಪನ, ಪಿಂಗಲಬಣ್ಣದ ಜಟೆಗಳು, ತಾವರೆಯ ದಂಟಿನ ನಾರಿನಲ್ಲಿ ಮಾಡಿದ ಜನಿವಾರ, ರೇಷ್ಮೆಯ ಬಟ್ಟೆಯ ಕೌಪೀನ, ಬಹಳ ಒಪ್ಪಿತ ವೇಷದಲ್ಲಿ ನೋಡುವವರು ಮೆಚ್ಚುವಂತಿರಲು ಆತಪಸ್ವಿ ನಾರದನು ಜನರನ್ನು ಮರುಳುಮಾಡಿದನು.
- ಕಂ|| ಬಟ್ಟಗೊಡೆ ಚಂದ್ರಕಾಂತಿಯ
- ನಟ್ಟುಂಬರಿಗೊಳೆ ಪೊದಳ್ದ ಕೃಷ್ಣಾಜಿನಮೊಂ
- ದಿಟ್ಟಳಮೆಸೆಯ ಬೆಡಂಗಂ
- ಪುಟ್ಟಿಸೆ ಗಾಡಿಗಳೊಳೆಸೆವ ವೀಣಾಕ್ಷಣಿತಂ||೯||
- ಪದ್ಯ-೦೦:ಪದವಿಭಾಗ-ಅರ್ಥ:ಬಟ್ಟಗೊಡೆ (ದುಂಡಗಿರುವ ಕೊಡೆ) ಚಂದ್ರಕಾಂತಿಯನು ಅಟ್ಟುಂಬರಿಗೊಳೆ ಪೊದಳ್ದ ಕೃಷ್ಣಾಜಿನಮೊಂದಿ- ಕೃಷ್ಣಾಜಿನಂ ಒಂದು(ಚಂದ್ರನ ಕಾಂತಿಯನ್ನು ಓಡಿಸುವಂತಿರುವ ಹೊದ್ದಿರುವ/ ಹರಡಿದ ಕೃಷ್ಣಾಜಿನ) ಒಂದು ಇಟ್ಟಳಂ ಎಸೆಯ ಬೆಡಂಗಂ ಪುಟ್ಟಿಸೆ ಗಾಡಿಗಳೊಳು (ಸೊಗಸಾಗಿ ಎಸೆವ- ತೋರುವ) ಎಸೆವ ವೀಣಾಕ್ಷಣಿತಂ (ವೀಣಾನಾದ)
- :ಪದ್ಯ-೦೦:ಅರ್ಥ: ನಾರದರ ಗಾಡಿ-ಭೂಮಿಕೆ ಲಕ್ಷಣ: ದುಂಡಗಿರುವ ಕೊಡೆ, ಚಂದ್ರನ ಕಾಂತಿಯನ್ನು ಓಡಿಸುವಂತಿರುವ ಹೊದ್ದಿರುವ/ ಹರಡಿದ ಕೃಷ್ಣಾಜಿನ, ಸೊಗಸಾಗಿ ತೋರುವ (ವೀಣಾನಾದ ಮಾಡುತ್ತಿರುವ ನಾರದ.
- ಕಂ||ಬೆರಲೊಳ್ ಬೀಣೆಯ ತಂತಿಗ
- ಳೊರಸಿದ ಕೆಂಗಲೆಗಳಕ್ಷಮಾಲೆಯೊಳೆಸದಂ|
- ತಿರೆ ಪೊಸಯೆ ಮುತ್ತು ಪವಳಂ
- ಬೆರಸಿದವೊಲಾಯ್ತು ಚೆನ್ನತಪಸಿಯ ಕೈಯೊಳು||೧೦||
- ಪದ್ಯ-೧೦:ಪದವಿಭಾಗ-ಅರ್ಥ:ಬೆರಲೊಳ್ ಬೀಣೆಯ ತಂತಿಗಳು ಒರಸಿದ ಕೆಂಗಲೆಗಳ ಅಕ್ಷಮಾಲೆಯೊಳು ಎಸದಂತಿರೆ ಪೊಸಯೆ ಮುತ್ತು ಪವಳಂ ಬೆರಸಿದವೊಲಾಯ್ತು ಚೆನ್ನತಪಸಿಯ ಕೈಯೊಳು-
- :ಪದ್ಯ-೧೦:ಅರ್ಥ:ಬೆರಳುಗಳಲ್ಲಿ ವೀಣೆಯ ತಂತಿಯನ್ನು ತೀಡಿ ಬಾರಿಸುತ್ತಿರುವ, ಕೆಂಪು ಜಡೆಗಳ, ಜಪಮಾಲೆಯಲ್ಲಿ ಶೋಭಿಸುತ್ತಿರಲು, ಆ ಚೆಂದದ ತಪಸ್ವಿಯ ಕೈಯಲ್ಲಿ ಮುತ್ತು ಹವಳ ಬೆರೆಸಿದಹಾಗೆ ಚಂದವಾಯಿತು.
- ವ|| ಅಂತಯ ಸಾಕ್ಷಾತ್ ಬ್ರಹ್ಮ ಬರ್ಪಂತೆ ಬಂದು -
- :ವಚನ:ಅರ್ಥ:ಅಂತಯ-ಹಾಗೆಯೇ ಸಾಕ್ಷಾತ್ ಬ್ರಹ್ಮ ಬರ್ಪಂತೆ/ಬರುವಂತೆ ಬಂದು -
- ಕಂ|| ಅಡಿಯಿಟ್ಟನೆಳೆಯೊಳಿವನೆಂ
- ಬೆಡೆಯೊಳ್ ಪರಿಜನ ಸಮೇತಮಿದಿಳ್ದರಸಂ|
- ಪೊಡವಡೆ ತಪಸ್ವಿ ಕೆಯ್ಯಂ
- ಪಡಿದೆತ್ತಿ ಪಲರ್ಮೆ ಪರಸಿದಂ ಪರಕೆಗಳಂ||೧೧||
- ಪದ್ಯ-೧೧:ಪದವಿಭಾಗ-ಅರ್ಥ:ಅಡಿಯಿಟ್ಟನು ಎಳೆಯೊಳು(ಭೂಮಿಯಮೇಲೆ) ಇವನು, ಎಂಬೆಡೆಯೊಳ್ (ಎನ್ನುವಾಗ), ಪರಿಜನ ಸಮೇತಂ ಇದಿಳ್ದ ಅರಸಂ (ಅರಸ ಧರ್ಮಜನು ಸ್ವಾಗತಕ್ಕಾಗಿ ಎದುರುಗೊಂಡನು) ಪೊಡವಡೆ (ನಮಸ್ಕರಿಸಲು) ತಪಸ್ವಿ ಕೆಯ್ಯಂ ಪಡಿದೆತ್ತಿ (ತಪಸ್ವಿ ನಾರದನು ಅವನನ್ನು ಕೈಹಿಡಿದು ಎತ್ತಿದನು,) ಪಲರ್ಮೆ ಪರಸಿದಂ (ಹಲವೊಮ್ಮೆ ಹಲವು ಹರಕೆಗಳನ್ನು ಹರಸಿದನು.)
- :ಪದ್ಯ-೧೧:ಅರ್ಥ:(ನಾರದನು) ಭೂಮಿಯಮೇಲೆ ಇವನು ಕಾಲಿಟ್ಟನು ಎನ್ನುವಾಗ, ಅರಸ ಧರ್ಮಜನು ಸ್ವಾಗತಕ್ಕಾಗಿ ಪರಿಜನ ಸಮೇತ ಎದುರುಗೊಂಡನು. ಅವನು ನಮಸ್ಕರಿಸಲು, ತಪಸ್ವಿ ನಾರದನು ಅವನನ್ನು ಕೈಹಿಡಿದು ಎತ್ತಿದನು, ಹಲವು ಆಶೀರ್ವಾದಗಳನ್ನು ಹರಸಿದನು.
- ವ||ಅಂತು ಧರ್ಮಪುತ್ರಂ ಅಬ್ಜಜಪುತ್ರನಂ ಮುಂದಿಟ್ಟೊಡಗೊಂಡು ಬಂದು ಮಣಿಕನಕರಚನವಿಚಿತ್ರವೇತ್ರಾಸನದೊಳಿರಿಸಿ ಮಹಾರ್ಘ್ಯಗುಣಮಣಿವಿಭೂಷಭಣಂಗೆ ಕನಕಪಾತ್ರದೊಳ್ ಅರ್ಘ್ಯಮೆತ್ತಿ ಕನಕ ಕಳಶ ಸಂಭೃಶ ಶುಚಿಜಲಂಗಳಿಂದಮಾ ಮುನೀಶ್ವರನ ಪಾದಪದ್ಮಮಂ ಕರ್ಚಿ ತತ್ಪಾದಪವಿತ್ರೋದಕಗಳಿಂ ಮಹಾಋಷಿಯ ತಳಿದ ಕನಕಕಮಂಡಲುವಿನ ತೀರ್ಥೋದಕಂಗಳಿಂದಯ್ವರುಂ ಪವಿತ್ರೀಕೃತಮಸ್ತಕರಾಗಿರ್ದು ಯುಧಿಷ್ಠಿರಂ ನಾರದಮಹಾಮುನಿಯ ಮೊಗಮಂ ನೋಡಿ -
- ವಚನ:ಪದವಿಭಾಗ-ಅರ್ಥ:ಅಂತು (ಈ ರೀತಿ)ಧರ್ಮಪುತ್ರಂ ಅಬ್ಜಜಪುತ್ರನಂ (ಕಮಲದಲ್ಲಿ ಹುಟ್ಟಿದ ಬ್ರಹ್ಮನ ಮಗ ನಾರದನನ್ನು) ಮುಂದಿಟ್ಟೊಡಗೊಂಡು ಬಂದು (ಮುಂದೆ ಮಾಡಿಕೊಂಡು ಬಂದು) ಮಣಿಕನಕರಚನವಿಚಿತ್ರ ವೇತ್ರಾಸನದೊಳು ಇರಿಸಿ (ಬೆತ್ತದ ಪೀಠದ ಮೇಲೆ ಕೂರಿಸಿ) ಮಹಾರ್ಘ್ಯ ಗುಣ ಮಣಿವಿಭೂಷಭಣಂಗೆ (ನಾರದನಿಗೆ) ಕನಕಪಾತ್ರದೊಳ್ ಅರ್ಘ್ಯಮೆತ್ತಿ (ಚಿನ್ನದ ಪಾತ್ರೆಯಲ್ಲಿ ಅರ್ಘ್ಯಕೊಟ್ಟು) ಕನಕ ಕಳಶ ಸಂಭೃಶ ಶುಚಿ ಜಲಂಗಳಿಂದಂ ಆ ಮುನೀಶ್ವರನ ಪಾದಪದ್ಮಮಂ (ಚಿನ್ನದ ಕಳಶದ ಶುಚಿಯಾದ ನೀರಿನಲ್ಲಿ ಮುನಿಯ ಪಾದಕಮಲಗಳನ್ನು) ಕರ್ಚಿ (ತೊಳೆದು) ತತ್ಪಾದ ಪವಿತ್ರೋದಕಗಳಿಂ (ಆ ಪಾದದ ಪವಿತ್ರ ಪಾದೋದಕಗಳಿಂದ ಮತ್ತು ) ಮಹಾಋಷಿಯ ತಳಿದ ಕನಕಕಮಂಡಲುವಿನ ತೀರ್ಥೋದಕಂಗಳಿಂದ ಅಯ್ವರುಂ (ಮಹಾಋಷಿಯು ಚಿಮುಕಿಸಿದ ಕೈ ಕಮಂಡಲ ತೀರ್ಥದ ನೀರಿನಿಂದ ಐದು ಜನ ಪಾಂಡವರೂ) ಪವಿತ್ರೀಕೃತಮಸ್ತಕರಾಗಿರ್ದು (ತಲೆಯ ಮೇಲೆ ಪವಿತ್ರ ಸಿಂಚನ ಮಾಡಿಸಿಕೊಂಡವರಾಗಿ-ದರು) ಯುಧಿಷ್ಠಿರಂ ನಾರದಮಹಾಮುನಿಯ ಮೊಗಮಂ ನೋಡಿ (ಯುಧಿಷ್ಠಿರನು ನಾರದಮಹಾಮುನಿಯ ಮುಖವನ್ನು ನೋಡಿ) -
- :ವಚನ:ಅರ್ಥ:ಈ ರೀತಿ ಧರ್ಮಪುತ್ರನು ಕಮಲದಲ್ಲಿ ಹುಟ್ಟಿದ ಬ್ರಹ್ಮನ ಮಗ ನಾರದನನ್ನು ಮುಂದಿಟ್ಟೊಡಗೊಂಡು / ಮುಂದೆ ಮಾಡಿಕೊಂಡು ಬಂದು ಮಣಿಕನಕ ರಚನ ವಿಚಿತ್ರವಾದ ಬೆತ್ತದ ಪೀಠದ ಮೇಲೆ ಕೂರಿಸಿ) ಮಹಾರ್ಘ್ಯ ಗುಣ ಮಣಿವಿಭೂಷಭಣನಾದ ನಾರದನಿಗೆ ಚಿನ್ನದ ಪಾತ್ರೆಯಲ್ಲಿ ಅರ್ಘ್ಯಕೊಟ್ಟು, ಚಿನ್ನದ ಕಳಶದ ಶುಚಿಯಾದ ನೀರಿನಲ್ಲಿ ಮುನಿಯ ಪಾದಕಮಲಗಳನ್ನು ತೊಳೆದು, ಆ ಪಾದದ ಪವಿತ್ರ ಪಾದೋದಕಗಳಿಂದ ಮತ್ತು ಮಹಾಋಷಿಯು ಚಿಮುಕಿಸಿದ ಕೈ ಕನಕಕಮಂಡಲ ತೀರ್ಥದ ನೀರಿನಿಂದ ಐದು ಜನ ಪಾಂಡವರೂ ತಲೆಯ ಮೇಲೆ ಪವಿತ್ರ ಸಿಂಚನ ಮಾಡಿಸಿಕೊಂಡವರಾಗಿ-ದರು. ಯುಧಿಷ್ಠಿರನು ನಾರದಮಹಾಮುನಿಯ ಮುಖವನ್ನು ನೋಡಿ-
- ಕಂ|| ಪಡೆದಂ ಬ್ರಹ್ಮ ಜಗಮಂ
- ಪಡೆಯಲ್ ತಾನಾರ್ತನಿಲ್ಲ ಪೆಂಪಂ ನಿಮ್ಮಂ |
- ಪಡೆದಲ್ತೆ ಪಡೆದನೆನಿಸಿದ
- ಕಡುಪೆಂಪಿನ ಪೊರೆಗೆನೀವ್ ಮೊದಲಿಗರಾದಿರ್ ||೧೨||
- ಪದ್ಯ-೧೨:ಪದವಿಭಾಗ-ಅರ್ಥ:ಪಡೆದಂ ಬ್ರಹ್ಮ ಜಗಮಂ ಪಡೆಯಲ್ ತಾನು ಆರ್ತನಿಲ್ಲ ಪೆಂಪಂ (ಹಿರಿಮೆ-ಕೀರ್ತಿ) ನಿಮ್ಮಂ ಪಡೆದಲ್ತೆ ಪಡೆದನು (ನಿಮ್ಮನ್ನು ಪಡೆದಮೇಲೆ ನಾರದನ ತಂದೆ ಸೃಷ್ಟಿಕರ್ತ ಎಂಬ ದೊಡ್ಡ ಕೀರ್ತಿ ಪಡೆದ) ಎನಿಸಿದ ಕಡುಪೆಂಪಿನ ಪೊರೆಗೆ ನೀವ್ ಮೊದಲಿಗರಾದಿರ್ (ಹೀಗೆ ಬ್ರಹ್ಮನಿಗೆ ಹಿರಿಮೆ ತರಲು ನೀವು ಮೊದಲಿಗರಾದಿರಿ,)
- :ಪದ್ಯ-೧೨:ಅರ್ಥ: ಬ್ರಹ್ಮನು ಜಗತ್ತನ್ನು ಸೃಷ್ಟಿಸಿದನು; ಆದರೆ ಅವನು ಕೀರ್ತಿಯನ್ನು ಪಡೆಯಲು ಆಗಲಿಲ್ಲ. ನಿಮ್ಮನ್ನು ಪಡೆದಮೇಲೆ ನಾರದನ ತಂದೆ ಸೃಷ್ಟಿಕರ್ತ ಎಂಬ ದೊಡ್ಡ ಕೀರ್ತಿ ಪಡೆದ, ಹೀಗೆ ನೀವು ಬ್ರಹ್ಮನ ಹೊರಗೆ ಕೀರ್ತಿಗೆ ಕಾರಣರಾದಿರಿ, ಹೀಗೆ ಬ್ರಹ್ಮನಿಗೆ ಹಿರಿಮೆ ತರಲು ನೀವು ಮೊದಲಿಗರಾದಿರಿ, ಎಂದು ಧರ್ಮರಾಯನು ಮುನಿಗೆ ಹೇಳಿದನು.
- ಕಂ||ಬಾದೇನಾ ಮದೀಯ ಕರ್ಮ ಫ
- ಳೋದಿತ ಸಂತಾಪರೂಪ ಪಾಪಕಳಾಪ|
- ಚ್ಛೇದನಕರಮಾಯ್ತು ಭವ
- ತ್ಪಾದ ಪ್ರಕ್ಷಾಲನೋದಕಂ ಮುನಿನಾಥಾ ||೧೩||
- ಪದ್ಯ-೧೩:ಪದವಿಭಾಗ-ಅರ್ಥ:ಬಾದೇನ್ ಆ ಮದೀಯ ಕರ್ಮ ಫಳೋದಿತ ಸಂತಾಪರೂಪ ಪಾಪಕಳಾಪ ಚ್ಛೇದನಕರಮಾಯ್ತು ಭವತ್ಪಾದ ಪ್ರಕ್ಷಾಲನೋದಕಂ (ನಿಮ್ಮಪಾದದ ನೀರಿನ ಪ್ರೋಕ್ಣಣದಿಂದ) ಮುನಿನಾಥಾ
- :ಪದ್ಯ-೧೩:ಅರ್ಥ:ಮಾತೇನು! ನಾನು ಮಾಡಿದ ಕರ್ಮ ನಿಮ್ಮ ಪಾದದ ನೀರಿನ ಪ್ರೋಕ್ಣಣದಿಂದ ಸಂತಾಪರೂಪದ ಪಾಪಸಮೂಹ ಮನಿನಾಥನೇ ಛೇದನವಾಯಿತು- ನಾಶವಾಯಿತು.
ಕಂ||ಬೆಸನೆನಗಾವುದೋ ಬೆಸಸಿಂ ಬೆಸನಂ ಪಿರಿದಕ್ಕೆ ಗೆಯ್ಯೆ ಸಾರ್ದಿರ್ದೆನದಂ | ಬೆಸಸಿಂ ನಿಮ್ಮಯ ಬರವಂ ಪೊಸತಾಗಿರೆ ಬಂದಿರೀಗಳೆಲ್ಲಿಂ ಬಂದಿರಿ||೧೪||
- ಪದ್ಯ-೧೪:ಪದವಿಭಾಗ-ಅರ್ಥ:ಬೆಸನು ಎನಗೆ ಆವುದೋ ಬೆಸಸಿಂ, ಬೆಸನಂ ಪಿರಿದಕ್ಕೆ ಗೆಯ್ಯೆ (ನೀವು ಹೇಳಿದ್ದು ಹಿರದಾದರೂ ಮಾಡಲು) ಸಾರ್ದಿರ್ದೆನ್ (ಹತ್ತಿರವಿದ್ದೇನೆ.) ಅದಂ ಬೆಸಸಿಂ ನಿಮ್ಮಯ ಬರವಂ ಪೊಸತಾಗಿರೆ ಬಂದಿರ್, ಈಗಳ್ ಎಲ್ಲಿಂ ಬಂದಿರಿ- (ನೀವು ಹೊಸತಾಗಿ ಬಂದಿದ್ದೀರಿ. ಈಗ ಎಲ್ಲಿಂದ ಬಂದಿರಿ)
- :ಪದ್ಯ-೧೪:ಅರ್ಥ:ಹೇಳಬೇಕಾದ ಕಾರ್ಯವೇನು ನನಗೆ ಹೇಳಿ. ನೀವು ಹೇಳಿದ್ದು ಹಿರದಾದರೂ ಮಾಡಲು ಹತ್ತಿರವಿದ್ದೇನೆ. ಅದನ್ನು ಹೇಳಿ,ನೀವು ಹೊಸತಾಗಿ ಬಂದಿದ್ದೀರಿ. ಈಗ ಎಲ್ಲಿಂದ ಬಂದಿರಿ? ಎಂದು ಧರ್ಮಜನು ಕೇಳಿದನು.
- ವ||ಎಂಬುದುಮಾ ಮುನೀಂದ್ರನಿಂದ್ರಲೋಕದಿಂ ಬಂದನೆಂದೊಡಲ್ಲಿಯ ಪಡೆಮಾಮಾತಾವುದು -
- ವಚನ:ಪದವಿಭಾಗ-ಅರ್ಥ:ಎಂಬುದುಂ ಆ ಮುನೀಂದ್ರನು ಇಂದ್ರಲೋಕದಿಂ ಬಂದನೆಂದೊಡೆ ಅಲ್ಲಿಯ ಪಡೆಮಾಮಾತಾವುದು -
- ವಚನ:ಅರ್ಥ: ಎನ್ನಲು ಆಮುನಿಯು ಇಂದ್ರಲೋಕದಿಂದ ಬಂದೆನು ಎಂದನು; ಅದಕ್ಕೆ ಧರ್ಮಜನು ಅಲ್ಲಿಯ ಸುದ್ದಿಯೇನು ಎಂದು ಕೇಳಿದನು- ಮತ್ತೆ-
- ದಿವಿಜೇಂದ್ರಂ ಸುಖಮಿರ್ದನೇ ದಿತಿಸುತವ್ಯಾಬಾಧೆಗಳ್ದೇವರ್ಗಿ
- ಲ್ಲವಲಾ ಷೋಡಶರಾಜರಿರ್ಪ ತೆರೆರನೇನೆಮ್ಮನ್ವಯಕ್ಷ್ಮಾಪರಾ
- ವ ವಿಳಾಸಂಗಳೊಳಿರ್ಪರೇ ದೊರೆತು ತಾನೆಮ್ಮಯ್ಯನೈಶ್ವರ್ಯಮಂ
- ತಿವನೆಲ್ಲಂ ತಿಳಿವಂತುಟಾಗಿ ಬೆಸಸಿಂ ಪಂಕೇಜಗರ್ಭಾತ್ಮಜಾ||೧೫||
- ಪದ್ಯ-೧೫:ಪದವಿಭಾಗ-ಅರ್ಥ:ದಿವಿಜೇಂದ್ರಂ ಸುಖಮಿರ್ದನೇ (ಇಂದ್ರ ಸುಖವಾಗಿರುವನೇ, ) ದಿತಿಸುತವ್ಯಾ (ರಾಕ್ಷಸರ) ಬಾಧೆಗಳ್ ದೇವರ್ಗೆ ಇಲ್ಲವಲಾ?; ಷೋಡಶರಾಜರಿರ್ಪ ತೆರೆರನೇನು ?ಎಮ್ಮ ಅನ್ವಯಕ್ಷ್ಮಾಪರ್ (ನಮ್ಮ ವಂಶದವರು) ಆವ ವಿಳಾಸಂಗಳೊಳು ಇರ್ಪರೇ?; ದೊರೆತು ತಾನ್ ಎಮ್ಮಯ್ಯನ ಐಶ್ವರ್ಯಮಂತು? ಇವನೆಲ್ಲಂ ತಿಳಿವಂತುಟಾಗಿ ಬೆಸಸಿಂ (ಹೇಳಿರಿ) ಪಂಕೇಜಗರ್ಭಾತ್ಮಜಾ (ಕಮಲಜಾತನ ಮಗನೇ)
- :ಪದ್ಯ-೧೫:ಅರ್ಥ: ಬ್ರಹ್ಮನ ಪುತ್ರರೇ, ಇಂದ್ರ ಸುಖವಾಗಿರುವನೇ, ದೇವತೆಗಳಿಗೆ ರಾಕ್ಷಸರ ಬಾಧೆ ಇಲ್ಲವಲ್ಲವೇ? ಹದಿನಾರು ಮಹಾರಾಜರು ಯಾವ ರೀತಿ ಇದ್ದಾರೆ? ನಮ್ಮ ವಂಶದವರು ಯಾ ವೈಭವದಲ್ಲಿದ್ದಾರೆ? ನಮ್ಮ ತಂದೆಯ ಭಾಗ್ಯ ಹೇಗಿದೆ? ಇವೆಲ್ಲವನ್ನೂ ತಿಳಿಯುವಂತೆ ಹೇಳಿರಿ
- ವ||ಎಂಬುದುಮಾ ಮುನೀಶ್ವರನಿಳಾದರೇಶ್ವರಂ ಬೆಸಗೊಂಡಂದದೊಳೆ ದೇವಲೋಕದ ಪಡೆಮಾತೆಲ್ಲಮಂ ಪೇಳ್ದು ಪಾಂಡುರಾಜನ ಮಾತನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಎಂಬುದುಂ ಆ ಮುನೀಶ್ವರನು ಇಳಾದರೇಶ್ವರಂ ಬೆಸಗೊಂಡ ಅಂದದೊಳೆ (ಧರ್ಮಜನು ಕೇಳಲು ಆ ಮುನೀಶ್ವರನು ಭೂಒಡೆಯ ಧರ್ಮರಾಜನು ಕಾಳಿದ ರೀತಿಯಲ್ಲಿಯೇ) ದೇವಲೋಕದ ಪಡೆಮಾತೆಲ್ಲಮಂ ಪೇಳ್ದು ಪಾಂಡುರಾಜನ ಮಾತನಿಂತೆಂದಂ-
- :ವಚನ:ಅರ್ಥ:ಧರ್ಮಜನು ಕೇಳಲು ಆ ಮುನೀಶ್ವರನು ಭೂ ಒಡೆಯ ಧರ್ಮರಾಜನು ಕಾಳಿದ ರೀತಿಯಲ್ಲಿಯೇ ದೇಲೋಕದ ಸುದ್ದಿಯನ್ನು ಹೇಳಿ ಪಾಡುರಾಜನ ಮಾತನ್ನು ಹೀಗೆ ಹೇಳದನು.
- ಉ||ನೀಡಿರದಿಂದ್ರನೋಲಗಕೆ ಪೋಪುದುಮಾಗಳುಮಂತೆ ಪೋಗಿಯುಂ
- ಶೋಡಶ ರಾಜರಿಂ ಕಡೆಯೊಳಿರ್ಪುದು ಜೀಯ ಹಸಾದಮೆಂಬುದಂ|
- ನೋಡಿದ ದೃಷ್ಟಿಗಳ್ಕಿ ಸುಗಿದಿರ್ಪುದುಮಾದಮೆ ಮಾನಭಂಗಮಂ
- ಮಾಡೆ ಮನಃ ಕ್ಷತಕ್ಕಳವಿಗಾಣೆವು ನೋಡಿರೇ ಪಾಂಡುರಾಜನಾ||೧೬||
- ಪದ್ಯ-೧೬:ಪದವಿಭಾಗ-ಅರ್ಥ:ನೀಡಿರದೆ (ನೀಡು ಇರದೆ, ತಡವಿಲ್ಲದೆ) ಇಂದ್ರನೋಲಗಕೆ ಪೋಪುದುಂ ಆಗಳುಂ ಅಂತೆ ಪೋಗಿಯುಂ (ಪಾಂಡುವು ಆಗ ಇಂದ್ರನ ಹಾಗೆ ಸಭೆಗೆ ಹೋಗಿಯೂ) ಶೋಡಶ ರಾಜರಿಂ ಕಡೆಯೊಳಿರ್ಪುದು (ಹದಿನಾರು ಮಹಾರಾಜರ ಕೊನೆಯಲ್ಲಿ ಇದ್ದೂ.) ಜೀಯ ಹಸಾದಂ ಎಂಬುದಂ ನೋಡಿದ ದೃಷ್ಟಿಗೆ ಅಳ್ಕಿ (ಅವರು ನೋಡಿದ ದೃಷ್ಟಿಗೆ ಅಳುಕಿ ಅವರಿಗೆ ಜೀಯ ಹಸಾದ ಎನ್ನಬೇಕಾಗಿದೆ,- ಸಮಾನತೆ ಇಲ್ಲ) ಸುಗಿದಿರ್ಪುದುಂ ಆದಮೆ (ವಿಶೇಷವಾಗಿ) ಮಾನಭಂಗಮಂ ಮಾಡೆ ಮನಃ ಕ್ಷತಕ್ಕೆ ಅಳವಿಗಾಣೆವು (ವಿಶೇಷವಾಗಿ ಮಾನಹಾನಿ ಮಾಡಲು ಅವನ ಮನಸ್ಸಿನ ಗಾಯಕ್ಕೆ ಅಳತೆ ಕಾಣೆವು ಎಂದನು ನಾರದ.) ನೋಡಿರೇ ಪಾಂಡುರಾಜನಾ
- :ಪದ್ಯ-೧೬:ಅರ್ಥ:ತಡವಿಲ್ಲದೆ ಪಾಂಡುವು ಆಗ ಇಂದ್ರನ ಹಾಗೆ ಸಭೆಗೆ ಹೋಗಿಯೂ ಹದಿನಾರು ಮಹಾರಾಜರ ಕೊನೆಯಲ್ಲಿ ಇದ್ದೂ ಅವರು ನೋಡಿದ ದೃಷ್ಟಿಗೆ ಅಳುಕಿ ಅವರಿಗೆ ಜೀಯ ಹಸಾದ ಎನ್ನಬೇಕಾಗಿದೆ,- ಸಮಾನತೆ ಇಲ್ಲ.ಹೀಗೆ ಸುಗ್ಗಿಕುಗ್ಗಿ ಇರಬೇಕಾಗಿದೆ. ವಿಶೇಷವಾಗಿ ಮಾನಹಾನಿ ಮಾಡಲು ಅವನ ಮನಸ್ಸಿನ ಗಾಯಕ್ಕೆ ಅಳತೆ ಕಾಣೆವು. ಇದು ನೋಡಿ ಇದು ಪಾಂಡುವಿನ ಸ್ಥತಿ, ಎಂದನು ನಾರದ.
- ಮ|| ಪರಚಕ್ರಂಗಳನೊತ್ತಿಕೊಂಡದಟರಂ ಕೊಂದಿಕ್ಕಿದಾಯಾದರೆ
- ಲ್ಲರುಮುಳ್ಕುತ್ತಿರೆ ಸಂದಸಾಹಸದನಿಮ್ಮೀಯಯ್ಬರುಮ ಮಕ್ಕಳಾ |
- ಗಿರೆಯುಂ ನಿಚ್ಚಲುಮಿಂದ್ರನೋಲಗದೊಳಂತಾ ಪಾಂಡುರಾಜಂಗೆ ನಿ
- ರ್ನೆರಮಪ್ಪೊಂದಪಮಾನದಿಂದಮಿನಿತೊಂದೂನತಮಪ್ಪಂದುಟೇ||೧೭||
- ಪದ್ಯ-೦೦:ಪದವಿಭಾಗ-ಅರ್ಥ:ಪರಚಕ್ರಂಗಳನೊತ್ತಿಕೊಂಡು ಅದಟರಂ ಕೊಂದಿಕ್ಕಿ (ಪರ ರಾಜರನ್ನು ಆಕ್ರಮಿಸಿ ಕೊದು) ದಾಯಾದರ ಎಲ್ಲರುಂ ಅಳ್ಕುತ್ತಿರೆ (ದಾಯಾದುಗಳೆಲ್ಲಾ ಅಂಜುತ್ತಿರಲು) ಸಂದಸಾಹಸದ ನಿಮ್ಮ ಈ ಅಯ್ಬರುಂ ಮಕ್ಕಳಾಗಿರೆಯುಂ (ಹೆಚ್ಚನ ಸಾಹಸದ ನೀವು ಐದು ಮಕ್ಖಳಿದ್ದೂ) ನಿಚ್ಚಲುಂ ಇಂದ್ರನೋಲಗದೊಳು (ನಿತ್ಯವೂ ಇಂದ್ರನ ಓಲಗದಲ್ಲಿ) ಅಂತು ಆ ಪಾಂಡುರಾಜಂಗೆ (ಆ ಪಾಂಡುರಾಜನಿಗೆ ಹಾಗೆ) ನಿರ್ನೆರಮಪ್ಪೊಂದು ಅಪಮಾನದಿಂದಂ ಇನಿತೊಂದು ಊನತಂ ಅಪ್ಪಂದುಟೇ (ನಿಶ್ಕಾರಣವಾಗಿ ಇಷ್ಟೊಂದು ಅಪಮಾನ ದಿಂದ ಈ ರೀತಿಯ ಊನತ -ಕೊರತೆ ಆಗಬಹುದೇ?)-
- :ಪದ್ಯ-೦೦:ಅರ್ಥ:ಪರ ರಾಜರನ್ನು ಆಕ್ರಮಿಸಿ ಕೊದು, ದಾಯಾದರ ಎಲ್ಲರೂ ದಾಯಾದುಗಳೆಲ್ಲಾ ಅಂಜುತ್ತಿರಲು, ಹೆಚ್ಚಿನ ಸಾಹಸದ ನೀವು ಐದು ಮಕ್ಖಳಿದ್ದೂ ನಿತ್ಯವೂ ಇಂದ್ರನ ಓಲಗದಲ್ಲಿ ಆ ಪಾಂಡುರಾಜನಿಗೆ ಹಾಗೆ ನಿಷ್ಕಾರಣವಾಗಿ ಇಷ್ಟೊಂದು ಅಪಮಾನವಾಗುವ ಈ ರೀತಿಯ ಊನತ -ಕೊರತೆ ಆಗಬಹುದೇ?)-
- ವ|| ಆಮುಮದಂ ನೋಡಲಾರದೆಯುಂ ಪಾಂಡುರಾಜನೆನ್ನಿರ್ದಿರವನೆನ್ನ ಮಕ್ಕಳ್ಗರಿಪಿರಾಜಸೂಯಮೆಂಬ ಯಾಗಮಂಬೇಳ್ವಂತೆ ಮಾಡಿಬನ್ನಮೆನೆಯುಮದನರಿಪಲೆಂದೆ ಬಂದೆಮಾ ಮಖದ ಮಹಾತ್ಮ್ಯಮಂ ಪೇಳ್ದೊಡೆ ಮುನ್ನಂ ಕೃತಯುಗದೊಳ್ ಹರಿಶ್ಚಂದ್ರನೆಂಬ ಚಕ್ರವರ್ತಿ ಚತುರರ್ಣವಪರೀತಮಹೀತಳಮೆಲ್ಲಮಂ ಧರಾಮರರ್ಕಳ್ಗೆ ದಕ್ಷಿಣೆಕೊಟ್ಟನಪ್ಪುದರಿಂದಮದರ ಫಲೊದೊಳೀಗಳಾತನಲ್ಲಿಗಿಂದ್ರಂ ನಿಚ್ಚಮೊಂದು ಪೊಳ್ತು ಪೋಗಿ ಪೂಜಿಸಿ ಬರ್ಪಂ ನಿಮ್ಮಯ್ಯಂಗೆ ನೀಮುಮನಿತುಮಹಿಮೆಯಂ ಮಾಳ್ಪಿರಪ್ಪೊಡೆ-
- ವಚನ:ಪದವಿಭಾಗ-ಅರ್ಥ: ಆಮುಂ ಅದಂ ನೋಡಲಾರದೆಯುಂ (ನಾನು ಅದನ್ನು ನೋಡಲಾರದೆ -ಬಂದೆ-) ಪಾಂಡುರಾಜನು ಎನ್ನ ಇರ್ದಿರವನೆನ್ನ (ಪಾಂಡುರಾಜನು ತನ್ನ ಇರುವ ಸ್ಥಿತಿಯನ್ನು) ಮಕ್ಕಳ್ಗೆ ಅರುಪಿ ರಾಜಸೂಯಮೆಂಬ ಯಾಗಮಂ ಬೇಳ್ವಂತೆ (ಮಕ್ಕಳಿಗೆ ತಿಳಿಸಿ ರಾಜಸೂಯ ಯಾಗವನ್ನು ಮಾಡುವಂತೆ) ಮಾಡಿಬನ್ನಿಂ ಎನೆಯುಂ ಅದನು ಅರಿಪಲೆಂದೆ ಬಂದೆಂ ( ಮಾಡಿಬನ್ನಿ ಎನ್ನಲು ಅದನ್ನು ತಿಳಿಸಲೆಂದೇ ಬಂದೆ) ಆ ಮಖದ (ಯಜ್ಞದ) ಮಹಾತ್ಮ್ಯಮಂ ಪೇಳದೊಡೆ (ಹೇಳುವುದಾದರೆ) ಮುನ್ನಂ ಕೃತಯುಗದೊಳ್ ಹರಿಶ್ಚಂದ್ರನೆಂಬ ಚಕ್ರವರ್ತಿ ಚತುರರ್ಣವ ಪರೀತ ಮಹೀತಳಂ ಎಲ್ಲಮಂ (ಹಿಂದೆ ಕೃತಯುಗದಲ್ಲಿ ಹರಿಶ್ಚಂದ್ರನೆಂಬ ಚಕ್ರವರ್ತಿ ನಾಲ್ಕು ಸಮುದ್ರದಿಂದ ಸುತ್ತುವರಿದ ಮಹೀತಳ-ಭೂಮಿಯನ್ನು ಗೆದ್ದು- ಅದೆಲ್ಲವನ್ನೂ ) ಧರಾ ಅಮರರ್ಕಳ್ಗೆ (ಭೂಸುರರಿಗೆ) ದಕ್ಷಿಣೆಕೊಟ್ಟನು ಅಪ್ಪುದರಿಂದಂ ಅದರ ಫಲೊದೊಳು ಈಗಳು ಆತನಲ್ಲಿಗೆ ಇಂದ್ರಂ ನಿಚ್ಚಮೊಂದು ಪೊಳ್ತು ಪೋಗಿ(ನಿತ್ಯವೂ ಒಂದು ಹೊತ್ತು ಹೋಗಿ) ಪೂಜಿಸಿ ಬರ್ಪಂ (ಬರುವನು) ನಿಮ್ಮಯ್ಯಂಗೆ ನೀಮುಂ ಅನಿತು ಮಹಿಮೆಯಂ ಮಾಳ್ಪಿರಪ್ಪೊಡೆ (ಮಾಡುವವರಾದರೆ)-
- :ವಚನ:ಅರ್ಥ:ನಾನು ಅದನ್ನು ನೋಡಲಾರದೆ -ಬಂದೆ- ಪಾಂಡುರಾಜನು ತನ್ನ ಇರುವ ಸ್ಥಿತಿಯನ್ನು ಮಕ್ಕಳಿಗೆ ತಿಳಿಸಿ ರಾಜಸೂಯ ಯಾಗವನ್ನು ಮಾಡುವಂತೆ ಮಾಡಿಬನ್ನಿ ಎನ್ನಲು ಅದನ್ನು ತಿಳಿಸಲೆಂದೇ ಬಂದೆ ಆ ಯಜ್ಞದ) ಮಹಾತ್ಮ್ಯವನ್ನು ಹೇಳುವುದಾದರೆ, ಹಿಂದೆ ಕೃತಯುಗದಲ್ಲಿ ಹರಿಶ್ಚಂದ್ರನೆಂಬ ಚಕ್ರವರ್ತಿ ನಾಲ್ಕು ಸಮುದ್ರದಿಂದ ಸುತ್ತುವರಿದ ಮಹೀತಳ-ಭೂಮಿಯನ್ನು ಗೆದ್ದು- ಅದೆಲ್ಲವನ್ನೂ ಭೂಸುರರಿಗೆ ದಕ್ಷಿಣೆಕೊಟ್ಟನು. ಹಾಗೆ ಮಾಡಿದ್ದರಿಂದ ಅದರ ಫಲೊದಲ್ಲಿ ಈಗಲೂ ಆತನಲ್ಲಿಗೆ ಇಂದ್ರನು ನಿತ್ಯವೂ ಒಂದು ಹೊತ್ತು ಹೋಗಿ) ಪೂಜಿಸಿ ಬರುವನು. ನಿಮ್ಮ ತಂದೆಗೆ ನೀವೂ ಅಷ್ಟು ಮಹಿಮೆಯನ್ನು ಮಾಡುವವರಾದರೆ-
- ಚಂ|| ಬಿರುದರನೊತ್ತಿ ಬೀರರನಡಂಗಿಸಿ ಕೊಂಕಿಗಳಂ ಕಳಲ್ಚಿ ಚಿ
- ನ್ನರನಡಿಗೊತ್ತಿ ಮಂಡಳಿಕರಂ ಬೆಸಕೊಯ್ಸಿ ಕರುಂಬರಂ ನಿರಾ |
- ಕರಿಸಿ ಸಮಸ್ತವಾರಿಧಿಮಹೀತಲದರ್ಥಮೆಲ್ಲಮಂ
- ತರಿಸಿ ನೆಗಳ್ತಿಯಂ ನಿರಿಸಲಾರ್ಪಡೆ ಮಾಡಿರೆ ರಾಜಸೂಯಮಂ||೧೮||
- ಪದ್ಯ-೧೮:ಪದವಿಭಾಗ-ಅರ್ಥ:ಬಿರುದರನು ಒತ್ತಿ (ಬಿರುದುಳ್ಲ ರಾಜರನ್ನು ಆಕ್ರಮಿಸಿ), ಬೀರರನಡಂಗಿಸಿ (ವೀರರನ್ನು ಅಡಗಿಸಿ) ಕೊಂಕಿಗಳಂ ಕಳಲ್ಚಿ (ದೂರುವವರನ್ನು ಕಳಚಿ- ಶಕ್ತಿ ಕುಂದಿಸಿ) ಚೆನ್ನರನು ಅಡಿಗೊತ್ತಿ (ಬಲಿಷ್ಠರನ್ನು ಬಗ್ಗುಬಡಿದು) ಮಂಡಳಿಕರಂ ಬೆಸಕೊಯ್ಸಿ (ಮಂಡಳಿಕರನ್ನು ಸೇವೆ ಮಾಡುವಂತೆಮಾಡಿ) ಕರುಂಬರಂ ನಿರಾಕರಿಸಿ (ಅಸೂಯೆ ಪಡುವವರನ್ನು ಅಲಕ್ಷಿಸಿ) ಸಮಸ್ತವಾರಿಧಿಮಹೀತಲದ ಅರ್ಥಂ ಎಲ್ಲಮಂ (ಸಕಲ ಸಮುದ್ರ ಬಳಸಿದ ಭೂಮಿಯಲ್ಲಿರುವ ಎಲ್ಲಾ ಸಂಪತ್ತನ್ನೂ ತರಿಸಿ)ತರಿಸಿ ನೆಗಳ್ತಿಯಂ ನಿರಿಸಲಾರ್ಪಡೆ (ಕೀರ್ತಿಯು ನಿಲ್ಲುವಂತೆ ಮಾಡುವುದಾದರೆ) ಮಾಡಿರೆ (ಮಾಡಿರಯ್ಯಾ) ರಾಜಸೂಯಮಂ.
- :ಪದ್ಯ-೧೮:ಅರ್ಥ:ಬಿರುದುಳ್ಲ ರಾಜರನ್ನು ಆಕ್ರಮಿಸಿ, ವೀರರನ್ನು ಅಡಗಿಸಿ, ದೂರುವವರನ್ನು ಕಳಚಿ- ಶಕ್ತಿ ಕುಂದಿಸಿ, ಬಲಿಷ್ಠರನ್ನು ಬಗ್ಗುಬಡಿದು, ಮಂಡಳಿಕರನ್ನು ಸೇವೆ ಮಾಡುವಂತೆಮಾಡಿ, ಅಸೂಯೆ ಪಡುವವರನ್ನು ಅಲಕ್ಷಿಸಿ, ಸಕಲ ಸಮುದ್ರ ಬಳಸಿದ ಭೂಮಿಯಲ್ಲಿರುವ ಎಲ್ಲಾ ಸಂಪತ್ತನ್ನೂ ತರಿಸಿ, ಕೀರ್ತಿಯು ನಿಲ್ಲುವಂತೆ ಮಾಡುವುದಾದರೆ, ಮಾಡಿರಯ್ಯಾ) ರಾಜಸೂಯಯಾಗವನ್ನು!
- ವ|| ಎಂದು ರಾಜಸೂಯಾಂತಂ ಕಳಹಮೆಂಬುದಂ ಬಗೆದು ತಾನುಂ ಕಲಹಪ್ರಿಯನಪ್ಪುದರಿಂದಮನಿತನೆ ನುಡಿದು ಮಾಣ್ದ ಮುನೀಂದ್ರನಂ ನರೇಂದ್ರನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಎಂದು ರಾಜಸೂಯ ಅಂತಂ ಕಳಹಮೆಂಬುದಂ ಬಗೆದು (ತಿಳಿದು) ತಾನುಂ ಕಲಹಪ್ರಿಯನು ಅಪ್ಪುದರಿಂದಂ ಅನಿತನೆ ನುಡಿದು ಮಾಣ್ದ (ಅಷ್ಟನ್ನೇ ಹೇಳಿ ನಿಲ್ಲಿಸಿದ) ಮುನೀಂದ್ರನಂ ನರೇಂದ್ರನು ಇಂತೆಂದಂ-
- :ವಚನ:ಅರ್ಥ:ಎಂದು ರಾಜಸೂಯದ ಅಂತ್ಯ ಕಲಹವೆಂಬುದನ್ನು ತಿಳಿದಿದ್ದೂ ತಾನು ಕಲಹಪ್ರಿಯನು ಆಗಿರುವುದರಿಂದ ಅಷ್ಟನ್ನೇ ಹೇಳಿ ನಿಲ್ಲಿಸಿದ ಮುನೀಂದ್ರನನ್ನು ಕುರಿತು ನರೇಂದ್ರನು/ರಾಜನು ಹೀಗೆಂದನು-
- ಚಂ|| ಬೆಳಗುವುದಿಂದ್ರಲೋಕದೊಳಗಯ್ಯನ ಮಾತೆನಲೆಮ್ಮ ಸಾಹಸಂ
- ಬೆಳಗುವುದೀಧರಾವಳಯದೊಳ್ ತಣಿವರ್ ದ್ಜಿಮುಖ್ಯರಪ್ಪುದ |
- ಗ್ಗಳಿಕೆ ಪೊದಳ್ದು ಪರ್ವುವುದು ಕೀರ್ತಿ ಪುರಾಕೃತ ಪುಣ್ಯದಿಂದೆಸಂ
- ಗಳಿಸುವುದೆಂದೊಡೀ ಮಖದೊಳೇನ್ ತೊದಲುಂಟೆ ಮುನೀಂದ್ರನಾಯಕಾ||೧೯||
- ಪದ್ಯ-೧೯:ಪದವಿಭಾಗ-ಅರ್ಥ:ಬೆಳಗುವುದು ಇಂದ್ರಲೋಕದೊಳಗೆ ಅಯ್ಯನ ಮಾತು ಎನಲು ಎಮ್ಮ ಸಾಹಸಂ ಬೆಳಗುವುದು ಈ ಧರಾವಳಯದೊಳ್ (ಭೂಮಂಡಲದಲ್ಲಿ) ತಣಿವರ್ ದ್ಜಿಮುಖ್ಯರು ಅಪ್ಪುದು ಅಗ್ಗಳಿಕೆ (ಬ್ರಾಹ್ಂಣರು ತೃಪ್ತಿ ಹೊಂದುವರು, ಹಿರಿಮೆಯು ಆಗುವುದು.) ಪೊದಳ್ದು ಪರ್ವುವುದು ಕೀರ್ತಿ (ಕೀರ್ತಿಯು ಹಬ್ಬುವುದು) ಪುರಾಕೃತ ಪುಣ್ಯದಿಂದ ಎಸಂಗಳಿಸುವುದು (ಈ ಯಶಸ್ಸು ಬರುವುದು) ಎಂದೊಡೆ (ಎಂದಾಗ) ಈ ಮಖದೊಳೇನ್ ತೊದಲುಂಟೆ ಮುನೀಂದ್ರನಾಯಕಾ (ಮುನೀಂದ್ರನೇ ಈ ಯಜ್ಞದಿಂದ ಏನಾದರೂ ದೋಷವಿದೆಯೇ/ಕಂಟಕವಿದೆಯೇ! ಎಂದನು ಧರ್ಮಜ)
- :ಪದ್ಯ-೧೯:ಅರ್ಥ:ಇಂದ್ರಲೋಕದೊಳಗೆ ನಮ್ಮ ಅಯ್ಯನ ಮಾತು ಬೆಳಗುವುದು ಎನ್ನಲು ನಮ್ಮ ಸಾಹಸವೂ ಬೆಳಗುವುದು ಈ ಭೂಮಂಡಲದಲ್ಲಿ. ಬ್ರಾಹ್ಮಣರು ತೃಪ್ತಿ ಹೊಂದುವರು, ಹಿರಿಮೆಯು ಆಗುವುದು. ಕೀರ್ತಿಯು ಹಬ್ಬುವುದು ಪುರಾಕೃತ ಪುಣ್ಯದಿಂದ ಈ ಯಶಸ್ಸು ಬರುವುದು, ಎಂದಾಗ, ಮುನೀಂದ್ರನೇ ಈ ಯಜ್ಞದಿಂದ ಏನಾದರೂ ದೋಷವಿದೆಯೇ/ಕಂಟಕವಿದೆಯೇ! ಎಂದನು ಧರ್ಮಜ)
- ವ|| ಎಂಬುದುಮಾಮಾತಂ ನಿಲೆ ನುಡಿದುರ್ಕೆ ಮೆಚ್ಚಿ ನಿನಗಿದೇವಿರಿದು-
- ವಚನ:ಪದವಿಭಾಗ-ಅರ್ಥ:ಎಂಬುದುಂ ಆ ಮಾತಂ ನಿಲೆ ನುಡಿದುರ್ಕೆ ಮೆಚ್ಚಿ ನಿನಗಿದು ಏಂ ಹಿರಿದು-
- :ವಚನ:ಅರ್ಥ: ರಾಜನು ಹಾಗೆಂದಾಗ ಆವನ ಮಾತು ಗಟ್ಟಿ ನಿಲ್ಲುವುದಕ್ಕಾಗಿ - ನಿನಗೆ ಇದೇನು ಮಹಾ ದೊಡ್ಡದು! (ಮಾಡು ಯಜ್ಞವ ಎಂದನು ನಾರದ)
- ಕಂ|| ಪರಪಿನ ನೀಳದ ಕಡೆಯಂ
- ಮರುಳಂ ತವೆ ನೋಡಲಾರದಂಬರದತಳಮಂ|
- ಕರಿದೆಂಬತಿರೆ ನಿನ್ನಂ
- ನರನೆಂಬುದೆ ನಿನ್ನ ಸಾಹಸಕ್ಕದು ಪಿರಿದೇ||೨೦||
- ಪದ್ಯ-೨೦:ಪದವಿಭಾಗ-ಅರ್ಥ:ಪರಪಿನ (ಹರಡಿದ) ನೀಳದ ಕಡೆಯಂ (ನೀಲಿಬಣ್ಣದ ಅಂಚನ್ನು) ಮರುಳಂ ತವೆ ನೋಡಲಾರದೆ (ಮರುಳನು ಪೂರಾ ನೋಡಲಾರದೆ) ಅಂಬರದತಳಮಂ ಕರಿದೆಂಬತಿರೆ (ಆಕಾಶದ ತಳವನ್ನು ಕರಿದು ಎಂಬ ಹಾಗೆ) ನಿನ್ನಂ ನರನೆಂಬುದೆ ನಿನ್ನ ಸಾಹಸಕ್ಕೆ ಅದು ಪಿರಿದೇ (ನಿನ್ನನ್ನು ಸಾಮಾನ್ಯ ನರನೆನ್ನಬಹುದೇ! ನಿನ್ನ ಶೌರ್ಯಕ್ಕೆ ಆ ಯಜ್ಞ ದೊಡ್ಡದೇ! ಎಂದನು ನಾರದ )
- :ಪದ್ಯ-೨೦:ಅರ್ಥ:
- ವ|| ನುಡಿದು ನಾಡೆಯುಂ ಪೊಳ್ತಿರ್ದುಮಿನ್ ಪೋಪೆನೆಂದ ಮುನಿನಾಥನಂ ನರನಾಥಂ ಬಿಜಯಂಗಯ್ಯಿಮೆನೆ ನಾರದನಿರದೆ ಗಗನತಳಕ್ಕೊಗೆದು ಮುಗಿಲಪೊರೆಯೊಳಡಂಗಿದನಿತ್ತ ಧರ್ಮರಾಜಂ ನಿಜಾನುಜರೊಡನೆರಾಜಸೂಯಪ್ರಪಂಚಮನಾಳೋಚಿಸಿ ಪುರುಷೋತ್ತಮನನೀಪದದೊಳ್ ಬರಿಸುವುದು ನಮಗುತ್ತಮಪಕ್ಷಮೆಂದು-
- ವಚನ:ಪದವಿಭಾಗ-ಅರ್ಥ:ನುಡಿದು (ಹೀಗೆ ಹೇಳಿ) ನಾಡೆಯುಂ ಪೊಳ್ತು ಇರ್ದುಂ ಇನ್ ಪೋಪೆನೆಂದ ಮುನಿನಾಥನಂ (ಹೇಳಿ, ಮತ್ತೆ ಸ್ವಲ್ಪ ಹೊತ್ತು ಇದ್ದು ಹೋಗುವೆನು ಎಂದ ಮಿನಿಯನ್ನು) ನರನಾಥಂ ಬಿಜಯಂಗಯ್ಯಿಮೆನೆ (ಧರ್ಮರಾಜನು ದಯಮಾಡಿಸಿ/ ಬಿಜಂಗಯ್ಯಿರಿ ಎನ್ನಲು,)ನಾರದನು ಇರದೆ ಗಗನತಳಕ್ಕೆ ಒಗೆದು ಮುಗಿಲಪೊರೆಯೊಳು ಅಡಂಗಿದನು (ನಾರದನು ಆಕಾಶದ ತಳಕ್ಕೆ ಹಾರಿ ಮೋಡದ ಮೋಡದ ಪದರದಲ್ಲಿ ಮರೆಯಾದನು.) ಇತ್ತ ಧರ್ಮರಾಜಂ ನಿಜಾನುಜರೊಡನೆ ರಾಜಸೂಯಪ್ರಪಂಚಮನು ಆಳೋಚಿಸಿ ಪುರುಷೋತ್ತಮನನು ಈ ಪದದೊಳ್ ಬರಿಸುವುದು ನಮಗೆ ಉತ್ತಮ ಪಕ್ಷಮೆಂದು (ಇತ್ತಲಾಗಿ ಹಸ್ತಿನಾವತಿಯಲ್ಲಿ ಧರ್ಮರಾಜನು ತನ್ನ ತಮ್ಮಂದಿರೊಡನೆ ರಾಜಸೂಯ ವಿಚಾರವನ್ನು ಆಲೋಚಿಸಿ ಶ್ರೀ ಕೃಷ್ಣನು ಈ ಸಮಯದಲ್ಲಿ ತಮಗೆ ಉತ್ತಮ ಸಂಗಾತಿಯೆಂದು)-
- :ವಚನ:ಅರ್ಥ:ಹೀಗೆ ಹೇಳಿ, ಮತ್ತೆ ಸ್ವಲ್ಪ ಹೊತ್ತು ಇದ್ದು, ಹೋಗುವೆನು ಎಂದ ಮುನಿಯನ್ನು ಧರ್ಮರಾಜನು ದಯಮಾಡಿಸಿ/ ಬಿಜಂಗಯ್ಯಿರಿ ಎನ್ನಲು,ನಾರದನು ಆಕಾಶದ ತಳಕ್ಕೆ ಹಾರಿ ಮೋಡದ ಮೋಡದ ಪದರದಲ್ಲಿ ಮರೆಯಾದನು. ಇತ್ತಲಾಗಿ ಹಸ್ತಿನಾವತಿಯಲ್ಲಿ ಧರ್ಮರಾಜನು ತನ್ನ ತಮ್ಮಂದಿರೊಡನೆ ರಾಜಸೂಯ ವಿಚಾರವನ್ನು ಆಲೋಚಿಸಿ ಶ್ರೀ ಕೃಷ್ಣನು ಈ ಸಮಯದಲ್ಲಿ ತಮಗೆ ಉತ್ತಮ ಸಂಗಾತಿಯೆಂದು-ಅವನನ್ನು ಕರೆಸಿದನು.
- ಉ|| ದ್ವಾರವತೀಪುರಕ್ಕೆ ಚರರಂ ತಡವಿಲ್ಲದೆ ಬೇಗಮಟ್ಟಿ ಪಂ
- ಕೇರುಹನಾಭನಂ ಬರಿಸಿ ಮಜ್ಜನ ಭೋಜನ ಭೂಷಣಾದಿ ಸ|
- ತ್ಕಾರದೊಳಳ್ಕಿರಂ ನರೆಯೆ ಮಾಡಿ ಮುರಾಂತಕಂ ಪಾಂಡುಭೂಭುಜಂ
- ಕಾರಣಮಾಗೆ ನಾರದನ ಪೇಳ್ದ ನೆಗಳ್ತಿಯ ರಾಜಸೂಯಮಂ||೨೧||21||
- ಪದ್ಯ-೨೧:ಪದವಿಭಾಗ-ಅರ್ಥ:ದ್ವಾರವತೀಪುರಕ್ಕೆ ಚರರಂ (ದೂತರನ್ನು ಕಳಿಸಲು) ತಡವಿಲ್ಲದೆ ಬೇಗಮಟ್ಟಿ (ಕಳಿಸಿ) ಪಂಕೇರುಹನಾಭನಂ (ಕೃಷ್ಣನನ್ನು) ಬರಿಸಿ ಮಜ್ಜನ ಭೋಜನ ಭೂಷಣಾದಿ ಸತ್ಕಾರದೊಳು ಅಳ್ಕಿರಂ ನರೆಯೆ ಮಾಡಿ (ಕರೆಸಿಕೊಂಡು, ಅವನಗೆ ಸ್ನಾನ, ಊಟ, ಅಲಂಕಾರಾದಿ ಸತ್ಕಾರಗಳನ್ನು ಪ್ರೀತಿಯಿಂದ ವಿಶೇಷವಾಗಿ ಮಾಡಿ) ಮುರಾಂತಕಂ ಪಾಂಡುಭೂಭುಜಂ ಕಾರಣಮಾಗೆ ನಾರದನ ಪೇಳ್ದ ನೆಗಳ್ತಿಯ ರಾಜಸೂಯಮಂ (ಪಾಂಡುರಾಜನನ್ನು ಕಾರಣವಾಗಿಟ್ಟುಕೊಂಡು ನಾರದನು ಹೇಳಿದ ಪ್ರಸಿದ್ಧವಾದ ರಾಜಸುಯ ಯಾಗದ ವಿಷಯವನ್ನು)-
- :ಪದ್ಯ-೨೧:ಅರ್ಥ:ದ್ವಾರವತೀಪುರಕ್ಕೆ ದೂತರನ್ನು ಕಳಿಸಲು ತಡವಿಲ್ಲದೆ ಬೇಗಕಳಿಸಿ ಶ್ರೀಕೃಷ್ಣನನ್ನು ಕರೆಸಿಕೊಂಡು, ಅವನಗೆ ಸ್ನಾನ, ಊಟ, ಅಲಂಕಾರಾದಿ ಸತ್ಕಾರಗಳನ್ನು ಪ್ರೀತಿಯಿಂದ ವಿಶೇಷವಾಗಿ ಮಾಡಿ, ಪಾಂಡುರಾಜನನ್ನು ಕಾರಣವಾಗಿಟ್ಟುಕೊಂಡು ನಾರದನು ಹೇಳಿದ ಪ್ರಸಿದ್ಧವಾದ ರಾಜಸುಯ ಯಾಗದ ವಿಷಯವನ್ನು)-
- ಕಂ|| ಬೇಳಲೆ ಬಗೆಯೊಡೆ ಹರಿಯೊಡ
- ನಾಳೊಚಿಪಮೆಂದು ಬಳಿಯನಟ್ಟಿದನೆಮ್ಮಂ|
- ಪಾಳಿಸುವೈ ನೀನ್ ನಿಮ್ಮೊಡ
- ನಾಳೋಚಿಸದೆಮಗೆ ನೆಗಳಲೇಂನೆರವುಟೇ||೨೨||
- ಪದ್ಯ-೦೦:ಪದವಿಭಾಗ-ಅರ್ಥ:ಬೇಳಲೆ ಬಗೆಯೊಡೆ (ಬೆಳಲು - ಮಾಡಲು ಯೋಚಿಸುವ ಪಕ್ಷದಲ್ಲಿ) ಹರಿಯೊಡನೆ ಆಳೊಚಿಪಮೆಂದು (ಹರಿಯೊನೆ ಆಲೋಚಿಸೋಣ ಎಂದು) ಬಳಿಯನಟ್ಟಿದನು ಎಮ್ಮಂ ಪಾಳಿಸುವೈ ನೀನ್(ದೂತರನ್ನು ಕಳಿಸಿದೆ, ನಮ್ಮನ್ನು ಕಾಪಾಡವೆಯಲ್ಲವೆ ನೀನು) ನಿಮ್ಮೊಡನೆ ಆಳೋಚಿಸದೆ ಎಮಗೆ ನೆಗಳಲೇಂ ನೆರವುಟೇ (ನಿಮ್ಮೊಡನೆ ಆಲೋಚಿಸದೆ ಕಾರ್ಯಮಾಡಲು ನಮಗೆ ಬೇರೆ ನೆರವು ಇದೆಯೇ?)|
- :ಪದ್ಯ-೦೦:ಅರ್ಥ:ಯಾಗ ಮಾಡಲು ಯೋಚಿಸುವ ಪಕ್ಷದಲ್ಲಿ ಹರಿಯೊನೆ ಆಲೋಚಿಸೋಣ ಎಂದು ದೂತರನ್ನು ಕಳಿಸಿದೆ, ನಮ್ಮನ್ನು ಕಾಪಾಡವೆಯಲ್ಲವೆ ನೀನು. ನಿಮ್ಮೊಡನೆ ಆಲೋಚಿಸದೆ ಕಾರ್ಯಮಾಡಲು ನಮಗೆ ಬೇರೆ ನೆರವು ಇದೆಯೇ?
- ವ||ಎಂಬುದುಮದೆಲ್ಲಮುಮಂ ನೆರೆಯೆ ಕೇಳ್ದು ಮುಂದಣ ಕಜ್ಜದ ಬಿಣ್ಪುನರಿದಂ ಭೋರುಹನಾಭಂ ಶುಂಭದಂಭೋಧರಧ್ವಯಿನಿತೆಂದಂ-
- ವಚನ:ಪದವಿಭಾಗ-ಅರ್ಥ:ಎಂಬುದುಂ ಅಂದು ಎಲ್ಲಮುಮಂ ನೆರೆಯೆ ಕೇಳ್ದು (ಧರ್ಮಜನು ಆಗ ಹೇಳಿದ್ದೆಲ್ಲವನ್ನೂ ಕೇಳಿ) ಮುಂದಣ ಕಜ್ಜದ ಬಿಣ್ಪುನು ಅರಿದಂ (ಮುಂದಿನ ಕಾರ್ದಬಿಗುವನ್ನೂ ಭಾರವನ್ನೂ ಅರಿತನು.) ಭೋರುಹನಾಭಂ ಶುಂಭದಂಭೋಧರ ಧ್ವಯಿನಿತೆಂದಂ (ಆಗ ಕೃಷ್ಣನು ಒಡೆಯತ್ತಿರುವ ಮೇಘದ ಘರ್ಜನೆಯ ಧ್ವನಿಯಿಂದ ಹೀಗೆ ಹೇಳಿದನು.)-
- :ವಚನ:ಅರ್ಥ:ಧರ್ಮಜನು ಆಗ ಹೇಳಿದ್ದೆಲ್ಲವನ್ನೂ ಕೇಳಿ ಮುಂದಿನ ಕಾರ್ದಬಿಗುವನ್ನೂ ಭಾರವನ್ನೂ ಅರಿತನು. ಆಗ ಕೃಷ್ಣನು, ಒಡೆಯತ್ತಿರುವ ಮೇಘದ ಘರ್ಜನೆಯ ಧ್ವನಿಯಿಂದ ಹೀಗೆ ಹೇಳಿದನು.-
- ಉ|| ಎಂತು ಬಿಗರ್ತು ಧೀರರೆನೆ ಕೊಂದಪಿರೆಂತು ಸಮಸ್ತ ವಾರ್ಧಿ ಪ
- ರ್ಯಂತ ಧರಿತ್ರಿ ವಶಕೆ ತಂದಪಿರೆಂತು ಧನಂಗಳಂ ಪ್ರಯೋ |
- ಗಾಂತರದಿಂ ತೆರಳ್ಚಿದಪಿರಾಗದಿದಾದೊಡಮೆಂತು ರಾಜಸೂ
- ಯಾಂತಮಿದೆಂತು ಬೇಳ್ದಪಿರಪಾಯಶತಂ ಬರೆ ರಾಜಸೂಯಮಂ || ೨೩||
- ಪದ್ಯ-೨೩:ಪದವಿಭಾಗ-ಅರ್ಥ:ಎಂತು ಬಿಗರ್ತು ಧೀರರೆನೆ ಕೊಂದಪಿರೆಂತು (ಹೇಗೆ- ಭಯಪಡಿಸಿ ಧೀರರಾದ ರಾಜರನ್ನು ಕೊಲ್ಲುವಿರಿ?) ಸಮಸ್ತ ವಾರ್ಧಿ ಪರ್ಯಂತ ಧರಿತ್ರಿ ವಶಕೆ ತಂದಪಿರೆಂತು (ಸಮಸ್ತ ಸಮುದ್ರಗಳ ಕೊನೆಯವರಿಗೆ ಭೂಮಿಯನ್ನು ವಶಕ್ಕೆ ತರುವಿರಿ?) ಧನಂಗಳಂ ಪ್ರಯೋಗಾಂತರದಿಂ ತೆರಳ್ಚಿದಪಿರಿ (ಧನವನ್ನು ಯಾವ ಬೇರೆ ಬೇರೆ ಉಪಾಯಗಳಿಂದ ಕೂಡಿಹಾಕುವಿರಿ) ಆಗದ ಇದಾದೊಡಂ (ಕಷ್ಟವಾದ ಇದು ಆದರೂ) ಎಂತು ರಾಜಸೂಯಾಂತಂ ಇದೆಂತು ಬೇಳ್ದಪಿರ್ (ಹೇಗೆ ರಾಜಸೂಯದ ಅಂತ್ಯವನ್ನು ಹೇಗೆ ಮಾಡುವಿರಿ) ಅಪಾಯಶತಂ ಬರೆ (ನೂರಾರು ಅಪಾಯ ಬರಲು) ರಾಜಸೂಯಮಂ?|
- :ಪದ್ಯ-೨೩:ಅರ್ಥ:ಹೇಗೆ- ಭಯಪಡಿಸಿ ಧೀರರಾದ ರಾಜರನ್ನು ಕೊಲ್ಲುವಿರಿ? ಸಮಸ್ತ ಸಮುದ್ರಗಳ ಕೊನೆಯವರಿಗೆ ಭೂಮಿಯನ್ನು ವಶಕ್ಕೆ ತರುವಿರಿ? ಧನವನ್ನು ಯಾವ ಬೇರೆ ಬೇರೆ ಉಪಾಯಗಳಿಂದ ಕೂಡಿಹಾಕುವಿರಿ? ಕಷ್ಟವಾದ ಇದು ಆದರೂ, ನೂರಾರು ಅಪಾಯ ಬರಲು, ಹೇಗೆ ರಾಜಸೂಯದ ಅಂತ್ಯವನ್ನು ಹೇಗೆ ಮಾಡುವಿರಿ?
- ಕಂ||ಗಾಳು ಗೊರವಂ ತಗುಳ್ಚಿ ಪ
- ಳಾಳಮನೇನೊಂದನಪ್ಪೊಡಂ ಗಳಪಿದೊಡಾ |
- ಬೇಳುನುಡಿಗೇಳ್ದು ಕೆಮ್ಮನೆ
- ಬೇಳಲ್ ನಿಮಗಂತು ರಾಜಸೂಯಂ ಮೊಗ್ಗೇ||೨೪||
- ಪದ್ಯ-೨೪:ಪದವಿಭಾಗ-ಅರ್ಥ:ಗಾಳು ಗೊರವಂ (ಆ ಕಪಟಿಯಾದ ಸಂನ್ಯಾಸಿ) ತಗುಳ್ಚಿ ಪಳಾಳಮನು ಏನೊಂದನು ಅಪ್ಪೊಡಂ (ಏನಾದರೊಂದು ಪೊಳ್ಳು ಕೆಲಸವನ್ನು ಅಂಟಿಸಿ) ಗಳಪಿದೊಡೆ (ಹರಟಿದರೆ) ಆ ಬೇಳು ನುಡಿಗೇಳ್ದು ಕೆಮ್ಮನೆ ಬೇಳಲ್ (ಆ ಮರುಳುಮಾಡುವ ಮಾತನ್ನು ಕೇಳಿ ಸುಮ್ಮನೆ ಯಜ್ಷಮಾಡಲು)ನಿಮಗಂತು ರಾಜಸೂಯಂ ಮೊಗ್ಗೇ (ನಿಮಗೆ ಹಾಗೆ ರಾಜಸೂಯ ಮಾಡಲು ಯಜ್ಞವು ಏನು ಜಗಿದು ತಿನ್ನುವ ಹೂವಿನ ಮೊಗ್ಗೇ?)
- :ಪದ್ಯ-೨೪:ಅರ್ಥ:ಆ ಕಪಟಿಯಾದ ಸಂನ್ಯಾಸಿ ನಾರದನು ಏನಾದರೊಂದು ಪೊಳ್ಳು ಕೆಲಸವನ್ನು ಅಂಟಿಸಿ ಹರಟಿದರೆ, ಆ ಮರುಳುಮಾಡುವ ಮಾತನ್ನು ಕೇಳಿ ಸುಮ್ಮನೆ ಯಜ್ಷಮಾಡಲು, ನಿಮಗೆ ಹಾಗೆ ರಾಜಸೂಯ ಮಾಡಲು ಯಜ್ಞವು ಏನು ಜಗಿದು ತಿನ್ನುವ ಹೂವಿನ ಮೊಗ್ಗೇ? ಎಂದನು ಕೃಷ್ಣ.
- ವ||ಮುನ್ನಂ ಕೃತಯುಗದೊಳ್ ಸೋಮನ ವರುಣನ ರಾಜಸೂಯದ ಕಡೆಯೊಳ್ ದೇವಾಸುರ ಯುದ್ಧ ನೆಗಳಿ ಹಿರಣ್ಯ ಕಾಳನೇಮಿಗಳ್ ಮೊದಲಾಗಿ ನೆಗಳ್ತಿಯ ದೈತ್ಯರೆಲ್ಲಮೆನ್ನ ಚಕ್ರಘಾತದೊಳಳ್ಕಿ ಮಳ್ಗಿದಂತಾದರದೊಂದು ಧಾರಾವನಿತೆಯ ಭಾರಾವತಾರದೊಳೆನಿತಾನುಂ ಘಸಣಿ ಪೋದುದದು, ಕಾರಣದಿಂ ರಾಜಸೂಯದ ಮಾತಂ ಕೇಳ್ದಲ್ಲಿಯೇ ಮರೆವುದು ನುಡಿಯಲ್ವೇಡೆನೆ ಮರುಮಾತುಗುಡಲರಿಯದೆ ಧರ್ಮಪುತ್ರಂ ಮೌನಗೊಂಡುಸರದಿರೆ ಪರಾಕ್ರಮಧವಳನಿಂತೆಂದಂ|
- ವಚನ:ಪದವಿಭಾಗ-ಅರ್ಥ:ಮುನ್ನಂ ಕೃತಯುಗದೊಳ್ ಸೋಮನ ವರುಣನ ರಾಜಸೂಯದ ಕಡೆಯೊಳ್ ದೇವಾಸುರ ಯುದ್ಧ ನೆಗಳಿ ಹಿರಣ್ಯ ಕಾಳನೇಮಿಗಳ್ ಮೊದಲಾಗಿ ನೆಗಳ್ತಿಯ ದೈತ್ಯರೆಲ್ಲಮೆನ್ನ ಚಕ್ರಘಾತದೊಳು ಅಳ್ಕಿ ಮಳ್ಗಿದಂತಾದರು ಅದು ಒಂದು ಧಾರಾವನಿತೆಯ ಭಾರಾವತಾರದೊಳು ಎನಿತಾನುಂ ಘಸಣಿ ಪೋದುದದು(ಭಾರವನ್ನು ಇಳಿಸುವಲ್ಲಿ ಎಷ್ಟೋ ಆಯಾಸವಾಯಿತು), ಕಾರಣದಿಂ ರಾಜಸೂಯದ ಮಾತಂ ಕೇಳ್ದಲ್ಲಿಯೇ ಮರೆವುದು ನುಡಿಯಲ್ವೇಡೆನೆ, ಮರುಮಾತುಗುಡಲು ಅರಿಯದೆ ಧರ್ಮಪುತ್ರಂ ಮೌನಗೊಂಡು ಉಸರದಿರೆ ಪರಾಕ್ರಮಧವಳನು ಇಂತೆಂದಂ (ಆಗ ಅರ್ಜುನನು ಹೀಗೆಂದನು-)|
- :ವಚನ:ಅರ್ಥ:ಕೃಷ್ಣನು ಹೇಳಿದ: ಹಿಂದೆ ಕೃತಯುಗದಲ್ಲಿ ಸೋಮ ವರುಣರ ರಾಜಸೂಯ ಯಾಗದ ಕೊನೆಯಲ್ಲಿ ದೇವತೆಗಳ ಮತ್ತು ಅಸುರರ ನಡುವೆ ಯುದ್ಧ ಆರಂಭವಾಯಿತು; ಹಿರಣ್ಯ ಕಾಲನೇಮಿಗಳೇ ಮೊದಲಾಗಿ ಪ್ರಸಿದ್ಧ ದೈತ್ಯರೆಲ್ಲಾ ನನ್ನ ಚಕ್ರದ ಹೊಡೆತದಿಂದ ಅಳಿದು ಮಲಗಿದರು/ ನಾಶವಾದರು, ಅದೊಂದು ಭೂಮಿಯ ಭಾರವನ್ನು ಇಳಿಸುವಲ್ಲಿ ಪರಿಶ್ರಮವಾಯಿತು. ಈ ಕಾರಣದಿಂದ ರಾಜಸೂಯದ ಮಾತನ್ನು ಕೇಳಿದಲ್ಲಿಯೇ ಮರೆಯುವುದು ಒಳ್ಳೆಯದು, ಇನ್ನು ಹೆಚ್ಚು ಹೇಳುವುದು ಬೇಡ, ಎನ್ನಲು ಧರ್ಮರಾಜನಿಗೆ ಮರುಮಾತನಾಡಲು ತಿಳಿಯದೆ ಸುಮ್ಮನಿದ್ದನು. ಆಗ ಅರ್ಜುನನು ಹೀಗೆಂದನು-.
- ಕಂ||ಎನಿತುಂ ಗಡ ಪಯೋನಿಧಿಪರೀತಮಹೀತಳಮೆಂಬುದಾಂಪ ಬೀ
- ರನ ಪೆಸರಾವುದೀ ನುಡಿಯನೀ ಪದದೊಳ್ ಪರನಿಕ್ಕಿ ನಾರದಂ|
- ಮನದೊಳ್ ಪೇಸುಗುಂ ಸುರಪನುಂ ನಗುಗುಂ ಕಡುವಿನ್ನಕ್ಕುಮ
- ಯ್ಯನಮುಖಮೆಂತುಪೇಕ್ಷಿಸುವುದೀ ಮಖಮಂ ಸರಸೀರುಹೋದರಾ|| ೨೫||
- ಪದ್ಯ-೨೫:ಪದವಿಭಾಗ-ಅರ್ಥ:ಎನಿತುಂ ಗಡ ಪಯೋನಿಧಿ ಪರೀತ ಮಹೀತಳಮೆಂಬುದು (ಕಡಲು ಸುತ್ತುವರಿದ ಭೂಮಿ ಎಷ್ಟಪ್ಪಾ ಗಡ!) ಆಂಪ ಬೀರನ ಪೆಸರಾವುದು (ಅದನ್ನು ಎದುರಿಸುವ/ ಗೆದ್ದುಕೊಡುವ ವೀರನ ಹೆಸರಾವುದು?) ಈ ನುಡಿಯನು ಈ ಪದದೊಳ್ (ಈ ಸಮಯದಲ್ಲಿ) ಪರನಿಕ್ಕಿ (ಹಿಂದಿಡಲು - ಬಿಡಲು) ನಾರದಂ ಮನದೊಳ್ ಪೇಸುಗುಂ (ಹೇಸು) (ನಾರದನು ಮನಸ್ಸಿನಲ್ಲೇ ಜಿಗುಪ್ಸೆಪಡುವನು,) ಸುರಪನುಂ ನಗುಗುಂ (ಇಂದ್ರನು ನಮ್ಮನ್ನು ನೋಡಿ ನಗಬಹುದು,) ಕಡುವಿನ್ನಕ್ಕುಂ ಅಯ್ಯನ ಮುಖಮ್ (ತಂದೆ ಪಾಮಡುವಿನ ಮುಖ ಸಪ್ಪಗಾಗುವುದು) ಎಂತು ಉಪೇಕ್ಷಿಸುವುದು ಈ ಮಖಮಂ ಸರಸೀರುಹೋದರಾ (ಹೇಗೆ ಈ ಯಾಗವನ್ನು ಉಪೇಕ್ಷಿಸಿ ಮಾಡದೆ ಬಿಡುವುದು ಕಮಲನಾಭನೇ, ಎಂದನು ಅರ್ಜುನ.)
- :ಪದ್ಯ-೨೫:ಅರ್ಥ:ಕಡಲು ಸುತ್ತುವರಿದ ಭೂಮಿ ಎಷ್ಟಪ್ಪಾ ಗಡ! ಅದನ್ನು ಎದುರಿಸುವ/ ಗೆದ್ದುಕೊಡುವ ವೀರನ ಹೆಸರಾವುದು? ಈ ಸಮಯದಲ್ಲಿ ಹಿಮ್ಮಟ್ಟಿ ಬಿಡಲು, ನಾರದನು ಮನಸ್ಸಿನಲ್ಲೇ ಜಿಗುಪ್ಸೆಪಡುವನು; ಇಂದ್ರನು ನಮ್ಮನ್ನು ನೋಡಿ ನಗಬಹುದು; ತಂದೆ ಪಾಮಡುವಿನ ಮುಖ ಸಪ್ಪಗಾಗುವುದು; ಹೇಗೆ ಉಪೇಕ್ಷಿಸಿ ಈ ಯಾಗವನ್ನು ಮಾಡದೆ ಬಿಡುವುದು ಕಮಲನಾಭನೇ, ಎಂದನು ಅರ್ಜುನ.)
- ವ|| ಎಂದೊಡೆ ಭೀಮಸೇನನಿಂತೆಂದಂ
- ವಚನ:ಪದವಿಭಾಗ-ಅರ್ಥ:ಎಂದೊಡೆ ಭೀಮಸೇನಂ ಇಂತೆಂದಂ
- :ವಚನ:ಅರ್ಥ:ಎಂದಾಗ ಭೀಮಸೇನನು ಹೀಗೆ ಹೇಳಿದ-
- ಕಂ||ಪನ್ನತರ ನಡುವನುಡಿಯ
- ಲ್ಕೆನ್ನ ಭುಜಾರ್ಗಳಮೆ ಸಾಲ್ಗುಮೊಸೆ ಮೇಣ್ ಮುನಿ ಮೇ|
- ಣೆನ್ನ ನುಡಿ ಟಾಠಡಾಢಣ
- ಮೆನ್ನಂ ಬೆಸಸುವುದು ರಾಜಸೂಯಂ ಬೇಳಲ್|| ೨೬||
- ಪದ್ಯ-೨೬:ಪದವಿಭಾಗ-ಅರ್ಥ:ಪನ್ನತರ (ವೀರರ) ನಡುವಂ ಉಡಿಯಲ್ಕೆ ಎನ್ನ ಭುಜಾರ್ಗಳಮೆ ಸಾಲ್ಗುಂ ಒಸೆ (ವೀರರ ಸೊಂಟವನ್ನು ಮುರಿಯಲು ಅಗುಳಿಯಂತಿರುವ ಭುಜಗಳೇ ಸಾಕು, ಮತ್ತೆ) ಒಸೆ ಮೇಣ್ ಮುನಿ ಮೇಣ್ (ಒಪ್ಪು ಇಲ್ಲ ಬಿಡು) ಎನ್ನ ನುಡಿ ಟಾಠಡಾಢಣಂ (ನನ್ನ ಮಾತು ಖಡಾ ಖಂಡಿತ) ಎನ್ನಂ ಬೆಸಸುವುದು ರಾಜಸೂಯಂ ಬೇಳಲ್ (ಯಾಗ) (ಎನ್ನಂ -ನನ್ನನ್ನು ಕುರಿತು - ನನಗೆ ರಾಜಸೂಯ ಯಾಗ ಮಾಡಲು ನೀವು- ಬೆಸಸುವುದು- ಆಜ್ಞೆ ಮಾಡುವುದು)(ಟಾಠಡಾಢಣಂ - ಇದಕ್ಕೆ ಅರ್ಥವಿಲ್ಲದ್ದೂ ಎಂಬ ಅರ್ಥವೂ ಇದೆ?)
- :ಪದ್ಯ-೨೬:ಅರ್ಥ:ಭೀಮ ಹೇಳಿದ: ವೀರರ ಸೊಂಟವನ್ನು ಮುರಿಯಲು ಅಗುಳಿಯಂತಿರುವ ಭುಜಗಳೇ ಸಾಕು, ಮತ್ತೆ, ಒಪ್ಪು ಇಲ್ಲ ಬಿಡು ನನ್ನ ಮಾತು ಖಡಾ ಖಂಡಿತ; ನನಗೆ/ನಮಗೆ ರಾಜಸೂಯ ಯಾಗ ಮಾಡಲು ನೀವು ಆಜ್ಞೆ ಮಾಡುವುದು.
- ವ||ಎಂದು ಗಜರಿಗರ್ಜಿಸುವುದಮಮಳರುಮೀಬೇಳ್ವೆಯ ಮಾತಂ ತೆಮಳೆ ನುಡಿದೊಡೆಮ್ಮ ಗಂಡಮಾತುಮಳುಂಬಂಭೃತಮಕ್ಕುಮೆಂದು ಮಯ್‍ಮೆಯ್ಗೆ ಬೆಸಸೆಂಬುದಂ ರಾಜಸೂಯಮಂ ಬೇಳ್ದಲ್ಲದಿರಿರಪ್ಪೊಡೆ ಗಂಗಾನದಿಯ ಬಡಗಣ ತಡಿಯ ಮಘಮಘಿಸುವವಾರಣಾಸಿ ಪುರನಾಳ್ವ ಬೃಹದ್ಬಳಂ ಪುತ್ರೋತ್ಪತ್ತಿನಿಮಿತ್ತಮಪ್ಪೊಂದು ದಿವ್ಯಪಿಂಡಮಂ ತನ್ನಿರ್ವರರಸಿಯರ್ಗೆ ಪಚ್ಚುಕೊಟ್ಟೊಡೆ ಪುಟ್ಟಿದೆರಡು ಪೋಳುಮನೀವೇವುವೆಂದು ಬಿಸುಡೆ ಜರೆಯೆಂಬ ರಕ್ಕಸಿ ಕಂಡು ತಿನಲೆಂದೆರಡು ಫೋಳುಮನೊಂದು ಕಯ್ಕೊಳೆ ಪಿಡಿದೊಂದೊಂದರೊಳ್ ಸಂಧಿಸಿ ಮಾನಸ ರೂಪುಗೊಂಡೊಡೆ ಚೋದ್ಯಂಬಟ್ಟು ಜರಾಸಂಧನೆಂದು ಪೆಸರನಿಟ್ಟು ಬೃಹದ್ಬಳಂಗೆ ಕೊಟ್ಟೊಡೆ ಜರಾಸಂಧನುಂ ಸಾಲ್ವಲನುಮೆಂಬ ದೈತ್ಯನುಮೊಂದಾಗಿ ಮೂವತ್ತರಡಕ್ಷೋಹಿಣಿಂಬೆರಸು ಮಧುರಾಪುರಕ್ಕೆ ವಂದೆನ್ನ ಮುತ್ತಿಕೊಂಡೊಡುಪಾಯ ಬಲದೊಳೆ ಸಾಲ್ವಲನಂ ಕೊಂದು ಜರಾಸಂಧಗಳ್ಕಿ ಮಧುರಾಪುರಮಂ ಬಿಸುಟ್ಟು ಪೋಗಿ ದ್ವಾರವತಿಯಂ ಸಮುದ್ರಮೆ ನೀರ್ಗಾದಿಗೆಯಾಗಿ ಮಾಡಿದೆನಿನ್ನುಂ ಯಾದವರ ಸರೆಗಳೆಲ್ಲಾತನಲ್ಲಿರ್ದರಾತನಂ ಭೀಮನ ಕಯ್ಯೊಳಲ್ಲದೆ ಸಾಯನೆಂಬುದಾದೇಶಮದರಿನೆಮ್ಮಿಚ್ಛೆಯುಂ ಸಮಸ್ತ ಬಲಂಬೆರಸು ಭೀಮಾರ್ಜುನರಂ ಪೇಳ್ವುದೆಂದು ಧರ್ಮಪುತ್ರನೊಡಂಬಡಿಸಿ ನುಡಿದು ಮಧುರಾಪುರಮನೆಯ್ದಿ ಬೃಹದ್ಬಳತನೂಜನಲ್ಲಿಗೆ ಧರ್ಮಯುದ್ಧಮಂ ಬೇಡಿಯಟ್ಟಿದೊಡೆ -
- ವಚನ:ಪದವಿಭಾಗ-ಅರ್ಥ: (ಭೀಮನು) ಎಂದು ಗಜರಿ ಗರ್ಜಿಸುವುದಂ ಅಮಳರುಂ (ಅವಳಿಗಳು ನಕುಲ ಸಹದೇವರು) ಈ ಬೇಳ್ವೆಯ ಮಾತಂ ತೆಮಳೆ ನುಡಿದೊಡೆ ಎಮ್ಮ ಗಂಡಮಾತುಂ ಅಳುಂಬಂ ಭೃತಮಕ್ಕುಮೆಂದು (ಈ ಯಾಗದ ಮಾತು ಜಾರಿಹೋಗದಂತೆ ಹೇಳಿದಾಗ -ಯಾಗ ಕೈಬಿಟ್ಟರೆ- ತಮ್ಮ ವೀರನುಡಿಯು ವಿಶೇಷವಾಗಿ ಕೆಡುತ್ತದೆ) ಮಯ್‍ಮೆಯ್ಗೆ ಬೆಸಸು ಎಂಬುದಂ ರಾಜಸೂಯಮಂ (ರಾಜಸೂಯಕ್ಕೆ ನಮೊಬ್ಬಬ್ಬರಿಗೂ ಕರ್ತವ್ಯವನ್ನು ಬೆಸಸು-ಹೇಳು ಎಂದಾಗ) ಬೇಳ್ದ ಅಲ್ಲದೆ ಇರಿರಪ್ಪೊಡೆ (ಯಾಗ ಅಲ್ಲದೆ ಇರಲಾರಿರಾದರೆ, ಹೀಗೆ ಮಾಡಿ,) ಗಂಗಾನದಿಯ ಬಡಗಣ ತಡಿಯ ಮಘಮಘಿಸುವ ವಾರಣಾಸಿ ಪುರನಾಳ್ವ ಬೃಹದ್ಬಳಂ (ಗಂಗಾನದಿಯ ಉತ್ತರ ತಡಿಯ ಮಘಮಘಿಸುವ/ ಪರಿಮಳಭರಿತ ವಾರಣಾಸಿ ಪುರನ್ನು ಆಳುತ್ತಿದ್ದ ಬೃಹದ್ಬಲನು) ಪುತ್ರೋತ್ಪತ್ತಿ ನಿಮಿತ್ತಮಪ್ಪೊಂದು ದಿವ್ಯಪಿಂಡಮಂ ತನ್ನಿರ್ವರರಸಿಯರ್ಗೆ ಪಚ್ಚುಕೊಟ್ಟೊಡೆ (ಮಗನನ್ನು ಪಡೆಯಲು ಒಂದು ದಿವ್ಯ ಪಿಂಡವನ್ನು ತನ್ನ ಇಬ್ಬರು ರಾಣಿಯರಿಗೆ ಹೆಚ್ಚಿ ಎರಡು ಭಾಗಮಾಡಿಕೊಟ್ಟನು; ) ತನ್ನಿರ್ವರರಸಿಯರ್ಗೆ ಪಚ್ಚುಕೊಟ್ಟೊಡೆ ಪುಟ್ಟಿದೆರಡು ಪೋಳುಮನು ಈವೇವುವೆಂದು ಬಿಸುಡೆ (ಹಾಗೆ ಹೋಳನ್ನು ತಿಂದ ಅವರಿಗೆ ಹುಟ್ಟಿದ ಎರಡು ಹೋಳು ಶಿಶುವನ್ನು ಇದರಿಂದ ಏನು ಉಪಯೋಗವಿಲ್ಲವೆಂದು ಬಿಸಾಡಲು) ಜರೆಯೆಂಬ ರಕ್ಕಸಿ ಕಂಡು ತಿನಲೆಂದೆರಡು ಫೋಳುಮನೊಂದು ಕಯ್ಕೊಳೆ ಪಿಡಿದೊಂದೊಂದರೊಳ್ ಸಂಧಿಸಿ ಮಾನಸ ರೂಪುಗೊಂಡೊಡೆ (ಜರೆಯೆಂಬ ರಾಕ್ಷಸಿಯು ಕಂಡು ತಿನ್ನಲೆಂದು ಎರಡು ಹೋಳುಗಳನ್ನು ಒಂದು ಕಯ್ಯಲ್ಲಿಹಿಡಿದು ಒಂದಕ್ಕೊಂದು ಜೊಡಿಸಿದಾಗ ಅದು ಮಾನವ ರೂಪುಗೊಂಡಿತು, ಅದನ್ನು) ಚೋದ್ಯಂಬಟ್ಟು ಜರಾಸಂಧನೆಂದು ಪೆಸರನಿಟ್ಟು ಬೃಹದ್ಬಳಂಗೆ ಕೊಟ್ಟೊಡೆ (ಅಚ್ಚರಿಪಟ್ಟು ಜರಾಸಂಧನೆಂದು ಹೆಸರನ್ನಿಟ್ಟು ಬೃಹದ್ಬಲನಿಗೆ ಕೊಟ್ಟಳು ಅವನು) ಜರಾಸಂಧನುಂ ಸಾಲ್ವಲನುಮೆಂಬ ದೈತ್ಯನುಮೊಂದಾಗಿ ಮೂವತ್ತರಡಕ್ಷೋಹಿಣಿಂಬೆರಸು (ನಂತರ ಜರಾಸಂಧನೂ ಸಾಲ್ವಲನು ಎಂಬ ದೈತ್ಯನು ಒಂದಾಗಿ ಮೂವತ್ತರಡು ಅಕ್ಷೋಹಿಣಿ ಸೈನ್ಯ ಸೇರಸಿಕೊಂಡು) ಮಧುರಾಪುರಕ್ಕೆ ವಂದೆನ್ನ ಮುತ್ತಿಕೊಂಡೊಡೆ ಉಪಾಯ ಬಲದೊಳೆ ಸಾಲ್ವಲನಂ ಕೊಂದು (ಮಧುರಾಪುರಕ್ಕೆ ಬಂದು ನಮ್ಮನ್ನು ಮುತ್ತಿದರು; ಆಗ ಉಪಾಯ ಬಲದಿಂದ ಸಾಲ್ವಲನನ್ನು ಕೊಂದು,) ಜರಾಸಂಧಗಳ್ಕಿ ಮಧುರಾಪುರಮಂ ಬಿಸುಟ್ಟು ಪೋಗಿ (ಜರಾಸಂಧನಿಗೆ ಮಧುರಾಪುರವನ್ನು ಬಿಟ್ಟು ಹೋಗಿ) ದ್ವಾರವತಿಯಂ ಸಮುದ್ರಮೆ ನೀರ್ಗಾದಿಗೆಯಾಗಿ ಮಾಡಿದೆನು (ದ್ವಾರಾವತಿಗೆ ಹೋಗಿ ಅಲ್ಲಿ ಸಮುದ್ರವನ್ನೇ ನೀರು ಕಂದಕವಾಗಿ ಮಾಡಿ ನೆಲಸಿದೆನು.) ಇನ್ನುಂ ಯಾದವರ ಸರೆಗಳೆಲ್ಲಿ ಆತನಲ್ಲಿರ್ದರು ಆತನಂ ಭೀಮನ ಕಯ್ಯೊಳಲ್ಲದೆ ಸಾಯನೆಂಬುದು ಆದೇಶಂ (ಇನ್ನೂ ಯಾದವರು ಅವನ ಸರೆಗಳೆಲ್ಲಿ ಇರುವರು; ಆತನನ್ನು ಭೀಮನ ಕಯ್ಯಲ್ಲಲ್ಲದೆ ಸಾಯಲಾರನು ಎನ್ನುವುದು ವಿಧಿಯ ಆದೇಶ.) ಅದರಿಂ ಎಮ್ಮಿಚ್ಛೆಯುಂ (ನನ್ನ ಅಪೇಕ್ಷೆಯೂ ಅದೇ.) ಸಮಸ್ತ ಬಲಂಬೆರಸು ಭೀಮಾರ್ಜುನರಂ ಪೇಳ್ವುದೆಂದು (ಸಮಸ್ತ ಸೈನ್ಯಸಮೇತ ಹೊರಡಲು ಭೀಮಾರ್ಜುನರಿಗೆ ಹೇಳುವುದೆಂದು ಕೃಷ್ನನು) ಧರ್ಮಪುತ್ರನಂ ಒಡಂಬಡಿಸಿ ನುಡಿದು ಮಧುರಾಪುರಮನ ಎಯ್ದಿ ಬೃಹದ್ಬಳ ತನೂಜನಲ್ಲಿಗೆ ಧರ್ಮಯುದ್ಧಮಂ ಬೇಡಿಯಟ್ಟಿದೊಡೆ (ಧರ್ಮಪುತ್ರನನ್ನು ಒಪ್ಪುವಂತೆ ಹೇಳಿ ಮಧುರಾಪುರವನ್ನು ಸೇರಿ ಬೃಹದ್ಬಲನ ಮಗ ಜರಾಸಂಧನೊಡನೆ ಧರ್ಮಯುದ್ಧವನ್ನು ಕೇಳಿ ದೂತರನ್ನು ಕಳಸಿದನು ಆಗ)-
- :ವಚನ:ಅರ್ಥ:ಭೀಮನು ಹೀಗೆ ಗರ್ಜಿಸಲು ಅವಳಿಗಳಾದ ನಕುಲ ಸಹದೇವರು, ಈ ಯಾಗದ ಮಾತು ಜಾರಿಹೋಗಬಾರದೆಂದು ಹೇಳಿದಾಗ -ಯಾಗ ಕೈಬಿಟ್ಟರೆ- ತಮ್ಮ ವೀರನುಡಿಯು ವಿಶೇಷವಾಗಿ ಕೆಡುತ್ತದೆ, ರಾಜಸೂಯಕ್ಕೆ ನಮೊಬ್ಬಬ್ಬರಿಗೂ ಕರ್ತವ್ಯವನ್ನು ಹೇಳು, ಎಂದಾಗ, ಯಾಗ ಅಲ್ಲದೆ ಇರಲಾರಿರಾದರೆ, ಹೀಗೆ ಮಾಡಿ-
- ಹಿಂದೆ ಗಂಗಾನದಿಯ ಉತ್ತರ ತಡಿಯ ಪರಿಮಳಭರಿತ ವಾರಣಾಸಿ ಪುರನ್ನು ಆಳುತ್ತಿದ್ದ ಬೃಹದ್ಬಲನು ಮಗನನ್ನು ಪಡೆಯಲು ಒಂದು ದಿವ್ಯ ಪಿಂಡವನ್ನು ತನ್ನ ಇಬ್ಬರು ರಾಣಿಯರಿಗೆ ಹೆಚ್ಚಿ ಎರಡು ಭಾಗಮಾಡಿಕೊಟ್ಟನು; ಹಾಗೆ ಹೋಳನ್ನು ತಿಂದ ಅವರಿಗೆ ಹುಟ್ಟಿದ ಎರಡು ಹೋಳು ಶಿಶುವನ್ನು, ಇದರಿಂದ ಏನು ಉಪಯೋಗವಿಲ್ಲವೆಂದು ಬಿಸಾಡಲು, ಜರೆಯೆಂಬ ರಾಕ್ಷಸಿ ಅವನ್ನು ಕಂಡು ತಿನ್ನಲೆಂದು ಎರಡು ಹೋಳುಗಳನ್ನು ಒಂದು ಕಯ್ಯಲ್ಲಿಹಿಡಿದು ಒಂದಕ್ಕೊಂದು ಜೊಡಿಸಿದಾಗ ಅದು ಮಾನವ ರೂಪುಗೊಂಡಿತು, ಅಚ್ಚರಿಪಟ್ಟು ಅದನ್ನು ಜರಾಸಂಧನೆಂದು ಹೆಸರನ್ನಿಟ್ಟು ಬೃಹದ್ಬಲನಿಗೆ ಕೊಟ್ಟಳು. ಅವನು ಕಾಲಾನಂತರ ಜರಾಸಂಧನೂ ಸಾಲ್ವಲನು ಎಂಬ ದೈತ್ಯನು ಒಂದಾಗಿ ಮೂವತ್ತರಡು ಅಕ್ಷೋಹಿಣಿ ಸೈನ್ಯ ಸೇರಸಿಕೊಂಡು ಮಧುರಾಪುರಕ್ಕೆ ಬಂದು ನಮ್ಮನ್ನು ಮುತ್ತಿದರು; ಆಗ ಉಪಾಯ ಬಲದಿಂದ ಸಾಲ್ವಲನನ್ನು ಕೊಂದು, ಜರಾಸಂಧನಿಗೆ ಮಧುರಾಪುರವನ್ನು ಬಿಟ್ಟುಕೊಟ್ಟು, ಅಲ್ಲಿಂದ ಹೋಗಿ ದ್ವಾರಾವತಿಗೆ ಹೋಗಿ ಅಲ್ಲಿ ಸಮುದ್ರವನ್ನೇ ನೀರು ಕಂದಕವಾಗಿ ಮಾಡಿ ನೆಲಸಿದೆನು. ಇನ್ನೂ ಯಾದವರು ಅವನ ಸರೆಗಳೆಲ್ಲಿ ಇರುವರು; ಆತನು ಭೀಮನ ಕಯ್ಯಲ್ಲಲ್ಲದೆ ಸಾಯಲಾರನು ಎನ್ನುವುದು ವಿಧಿಯ ಆದೇಶ. ನನ್ನ ಅಪೇಕ್ಷೆಯೂ ಅದೇ. ಸಮಸ್ತ ಸೈನ್ಯಸಮೇತ ಹೊರಡಲು ಭೀಮಾರ್ಜುನರಿಗೆ ಹೇಳುವುದೆಂದು ಕೃಷ್ನನು ಧರ್ಮಪುತ್ರನನ್ನು ಒಪ್ಪುವಂತೆ ಹೇಳಿ ಮಧುರಾಪುರವನ್ನು ಸೇರಿ ಬೃಹದ್ಬಲನ ಮಗ ಜರಾಸಂಧನೊಡನೆ ಧರ್ಮಯುದ್ಧವನ್ನು ಕೇಳಿ ದೂತರನ್ನು ಕಳಸಿದನು ಆಗ-
- ಮಂ|| ಕಲಿ ಮಾರ್ಕೊಳ್ಳದೆಕೊಟ್ಟು ಮಯ್ಯೊಳೆ ಸಿಡಿಲ್ ತಾಪಂತೆವೋಲ್ ತಾಗೆ ಮೆ
- ಯ್ಗಲಿ ಭೀಮಂ ಪೆರಪಿಂಗದಾಂತು ಪಲವುಂ ಬಂಧಂಗಳಿಂ ತಳ್ದು ತ|
- ತ್ಕುಲಿಶೈಲಂ ಕುಲಶೈಲದೊಳ್ ಕಲುಷದಿಂ ಪೋರ್ವಂತೆ ಪೋರ್ದು ನೆ
- ಯ್ದಿಲ ಕಾವಂ ತುದಿಗೆಯ್ದೆ ಸೀಳ್ವ ತೆರದಿಂ ಸೀಳ್ದಂ ಜರಾಸಂದನಂ||೨೭||
- ಪದ್ಯ-೨೭:ಪದವಿಭಾಗ-ಅರ್ಥ:ಕಲಿ ಮಾರ್ಕೊಳ್ಳದೆ ಕೊಟ್ಟು (ಶೂರ ಜರಾಸಂದನು ಎದುರಾಡದೆ ಧರ್ಮಯುದ್ಧವನ್ನು ಕೊಟ್ಟನು) ಮಯ್ಯೊಳೆ ಸಿಡಿಲ್ ತಾಪಂತೆವೋಲ್ ತಾಗೆ (ಏಕಾಂಗಿಯಾಗಿ ಸಿಡಿಲು ತಾಗುವ ಹಾಗೆ) ಮೆಯ್ಗಲಿ ಭೀಮಂ ಪೆರಪಿಂಗದೆ ಆಂತು (ದೈಹಿಕ ಶೂರನಾದ ಭೀಮನ ಹಿಂದೆ ಸರಿಯದೆ ಎದುರಿಸಿ) ಪಲವುಂ ಬಂಧಂಗಳಿಂ ತಳ್ದು (ಹಲವು ಪಟ್ಟುಗಳಿಂದ ಅವನೊಡನೆ ಸೇರಿ ಹೋರಾಡಿದನು) ತತ್ಕುಲಿಶೈಲಂ ಕುಲಶೈಲದೊಳ್ ಕಲುಷದಿಂ ಪೋರ್ವಂತೆ ಪೋರ್ದು (ಆ ಕುಲಪರ್ವತವು ಮತ್ತೊಂದು ಕುಲಪರ್ವತದೊಡನೆ ಹೋರಾಡುವಂತೆ ಹೋರಾಡಿ) ನೆಯ್ದಿಲ ಕಾವಂ ತುದಿಗೆಯ್ದೆ ಸೀಳ್ವ ತೆರದಿಂ ಸೀಳ್ದಂ ಜರಾಸಂದನಂ (ನೈದಿಲೆಯ ದಂಟನ್ನು ತುದಿಯಿಂದ ಬುಡದವರೆಗೂ ಸೀಳುವಂತೆ ಜರಾಸಂಧನನ್ನು ಸೀಳಿದನು.).
- :ಪದ್ಯ-೨೭:ಅರ್ಥ:ಶೂರ ಜರಾಸಂದನು ಎದುರಾಡದೆ ಧರ್ಮಯುದ್ಧವನ್ನು ಕೊಟ್ಟನು. ಏಕಾಂಗಿಯಾಗಿ ಸಿಡಿಲು ತಾಗುವ ಹಾಗೆ ಭೀಮನನ್ನು ಎದುರಿಸಿದನು. ದೈಹಿಕ ಶೂರನಾದ ಭೀಮನ ಹಿಂದೆ ಸರಿಯದೆ ಎದುರಿಸಿ ಹಲವು ಪಟ್ಟುಗಳಿಂದ ಅವನೊಡನೆ ಸೇರಿ ಹೋರಾಡಿದನು. ಆ ಕುಲಪರ್ವತವು ಮತ್ತೊಂದು ಕುಲಪರ್ವತದೊಡನೆ ಹೋರಾಡುವಂತೆ ಹೋರಾಡಿ, ಕೊನೆಗೆ ನೈದಿಲೆಯ ದಂಟನ್ನು ತುದಿಯಿಂದ ಬುಡದವರೆಗೂ ಸೀಳುವಂತೆ ಜರಾಸಂಧನನ್ನು ಸೀಳಿದನು.
- ವ|| ಅಂತು ದೃಢ ಕಠಿಣ ಹೃದಯ ಬಂಧನಂ ಜರಾಸಂಧನಂ ಕೊಂದುಮಾತನ ಮಗಂ ಕ್ಷೇಮಧೂರ್ತಿಯಂ ರಾಜ್ಯದೊಳ್ ನಿರಿಸಿ ಜರಾಸಂಧನ ರಥಮಂ ತರಿಸಿ ಸಮಸ್ತ ವಸ್ತುಗಳಂ ಕೊಂಡು ಗರುತ್ವನಂ ನೆನೆದು ಬರಿಸಿ ರಥಮಂಚೋದಿಸಲ್ವೇಳ್ದು ಯಾದವರ ಸೆರೆಗಳುಮಂ ಮುಂದಿಟ್ಟು ನಾರಾಯಣಂ ಭೀಮಾರ್ಜುನವೆರಸು ಸುಖಪ್ರಯಾಣಂಗಳಿಂದಿಂದ್ರಪ್ರಸ್ಥಕ್ಕೆ ವಂದು ಧರ್ಮಪುತ್ರನಂ ಕಂಡು-
- ವಚನ:ಪದವಿಭಾಗ-ಅರ್ಥ:ಅಂತು ದೃಢ ಕಠಿಣ ಹೃದಯಬಂಧನಂ (ಹಾಗೆ ಗಟ್ಟಿಯಾದ ಗಡಸು ಹೃದಯಬಂದವುಳ್ಳ) ಜರಾಸಂಧನಂ ಕೊಂದುಂ ಆತನ ಮಗಂ ಕ್ಷೇಮಧೂರ್ತಿಯಂ ರಾಜ್ಯದೊಳ್ ನಿರಿಸಿ ಜರಾಸಂಧನ ರಥಮಂ ತರಿಸಿ ಸಮಸ್ತ ವಸ್ತುಗಳಂ ಕೊಂಡು ಗರುತ್ವನಂ (ಗರುಡನನ್ನು) ನೆನೆದು ಬರಿಸಿ ರಥಮಂ ಚೋದಿಸಲ್ವೇಳ್ದು (ನೆಡೆಸಲು ಹೇಳಿ) ಯಾದವರ ಸೆರೆಗಳುಮಂ (ಸರೆಯಲ್ಲಿದ್ದ ಯಾದವರನ್ನು) ಮುಂದಿಟ್ಟು ನಾರಾಯಣಂ ಭೀಮಾರ್ಜುನವೆರಸು ()ಸೇರಿ ಸುಖಪ್ರಯಾಣಂಗಳಿಂದ ಇಂದ್ರಪ್ರಸ್ಥಕ್ಕೆ ವಂದು ಧರ್ಮಪುತ್ರನಂ ಕಂಡು-
- :ವಚನ:ಅರ್ಥ:ಹಾಗೆ ಗಟ್ಟಿಯಾದ ಗಡಸು ಹೃದಯಬಂದವುಳ್ಳ ಜರಾಸಂಧನನ್ನು ಕೊಂದು, ಆತನ ಮಗ ಕ್ಷೇಮಧೂರ್ತಿಯನ್ನು ರಾಜ್ಯದಲ್ಲಿ ಅಧಿಕಾರದಲ್ಲಿ ಇರಿಸಿ ಜರಾಸಂಧನ ರಥವನ್ನು ತರಿಸಿ ಸಮಸ್ತ ವಸ್ತುಗಳನ್ನೂ ತೆಗೆದುಕೊಂಡು ಗರುಡನನ್ನು ನೆನೆದು ಕರೆಸಿ ರಥವನ್ನು ನೆಡೆಸಲು ಹೇಳಿ, ಸರೆಯಲ್ಲಿದ್ದ ಯಾದವರನ್ನು ಮುಂದಿಟ್ಟುಕೊಂಡು ಕೃಷ್ಣನು ಭೀಮಾರ್ಜುನರ ಜೊತೆ ಸೇರಿ ಸುಖಪ್ರಯಾಣ ಮಾಡಿ ಇಂದ್ರಪ್ರಸ್ಥಕ್ಕೆ ಬಂದು ಧರ್ಮಪುತ್ರನನ್ನು ಕಂಡನು.-
- ಶಿಖರಿಣಿ|| ಜರಾಸಂಧಂ ಮುನ್ನ ಮಡಿದೊಡಿಳೆ ನಿಶ್ಕಂಟಕಮದ
- ರ್ಕಿರಲ್ವೇಡಿನ್ ನಾಲ್ಕು ದೆಸಗಂ ಬೆಸಸಿಂ ನಿಮ್ಮನುಜರಂ |
- ಭರಂಗಯ್ದಾಗಳ್ ನೀಂ ಪೆಸರ್ವೆಸರೊಳಾ ನಾಲ್ಕರುಮನಾ
- ದರಂಗೊಂಡಾ ನಾಲ್ಕು ದೆಸಗೆ ಬೆಸಸಿಂ ಬೆಳ್ಕುರಿವಿನಂ||೨೮||
- ಪದ್ಯ-೨೮:ಪದವಿಭಾಗ-ಅರ್ಥ:ಜರಾಸಂಧಂ ಮುನ್ನ ಮಡಿದೊಡೆ ಇಳೆ ನಿಶ್ಕಂಟಕಂ ಅದರ್ಕೆ ಇರಲ್ವೇಡ (ಜರಾಸಂಧನು ಯಾಗಕ್ಕೆ ಮೊದಲೇ ಸತ್ತಿದ್ದರಿಂದ ಭೂಮಿ ನಿರ್ಭಾದಿತವಾಯಿತು. ಅದರಿಂದ ಇನ್ನು ಸುಮ್ಮನಿರಬೇಡ/ ತಡಮಾಡುವುದು ಬೇಡ) ಇನ್ ನಾಲ್ಕು ದೆಸಗಂ ಬೆಸಸಿಂ ನಿಮ್ಮ ಅನುಜರಂ (ಇನ್ನು ನಾಲ್ಕು ದಿಕ್ಕಿಗೂ ನಿನ್ನ ತಮ್ಮಂದಿರನ್ನು) ಭರಂಗಯ್ದಾಗಳ್ (ಕಾರ್ಯ ನಿರ್ವಹಿಸುವಾಗ) ನೀಂ ಪೆಸರ್ವೆಸರೊಳು ಆ ನಾಲ್ಕರುಮನು (ನೀನು ಹೆಸರು ಹೆಸರಿನಲ್ಲಿ ನಾಲ್ಕು ತಮ್ಮಂದಿರನ್ನೂ ) ಆದರಂಗೊಂಡು ಆ ನಾಲ್ಕು ದೆಸಗೆ ಬೆಸಸಿಂ ಬೆಳ್ಕುರಿವಿನಂ (ಭಯವುಂಟಾಗುವಹಾಗೆ).(ಆದರದಿಂದ ನಾಲ್ಕು ದಿಕ್ಕುಗಳಿಗೆ ಭಯವುಂಟಾಗುವಹಾಗೆ ವಿಜಯ ಯಾತ್ರಗೆ ನೇಮಿಸಿ, ಎಂದನು ಕೃಷ್ಣ.)
- :ಪದ್ಯ-೨೮:ಅರ್ಥ:ಹಾಗೆ ಧರ್ಮಪುತ್ರನನ್ನು ಕಂಡು ಕೃಷ್ಣನು, ಜರಾಸಂಧನು ಯಾಗಕ್ಕೆ ಮೊದಲೇ ಸತ್ತಿದ್ದರಿಂದ ಭೂಮಿ ನಿರ್ಭಾದಿತವಾಯಿತು. ಅದರಿಂದ ಇನ್ನು ಸುಮ್ಮನಿರಬೇಡ/ ತಡಮಾಡುವುದು ಬೇಡ, ಇನ್ನು ನಾಲ್ಕು ದಿಕ್ಕಿಗೂ ನಿನ್ನ ತಮ್ಮಂದಿರನ್ನು, ಕಾರ್ಯ ನಿರ್ವಹಿಸಲು ನೀನು ಹೆಸರು ಹೆಸರಿನಲ್ಲಿ ನಾಲ್ಕು ತಮ್ಮಂದಿರನ್ನೂ ಆದರದಿಂದ ನಾಲ್ಕು ದಿಕ್ಕುಗಳಿಗೆ ಭಯವುಂಟಾಗುವಹಾಗೆ ವಿಜಯಯಾತ್ರಗೆ ನೇಮಿಸಿ, ಎಂದನು .)
- ವ|| ಅಂತು ಭೀಮಸೇನನಿಂದ್ರನಮೇಲೆ ವೇಳ್ವಂತೆ ಪೂರ್ವ ದಿಗ್ಭಾಗಕ್ಕೆ ವೇಳ್ದು, ನಕುಳನಂ ಯಮನನದಿರ್ಪಲ್ವೇಳ್ವಂತೆ ದಕ್ಷಿಣದಿಗವಭಾಗಕ್ಕೆ ಬೆಸಸಿ ಸಹದೆವನಂ ವರುಣನನದಿರ್ಪಲ್ ನಿಯಮಿಸುವಂತೆ ಪಶ್ಚಿಮದಿಗ್ಭಾದಕ್ಕೆ ಪೇಳ್ದು ವಿಕ್ರಮಾರ್ಜುನನಂ ಕುಬೇರನಿಂ ಕಪ್ಪಂಗೊಳಲ್ ಸಮರ್ಪಿಸುವಂತೆಉತ್ತರೋತ್ತರಮಾಗಲುತ್ತರದಿಶಾಭಾಗಕ್ಕೆ ವೇಳ್ದಾಗಲ್-
- ವಚನ:ಪದವಿಭಾಗ-ಅರ್ಥ:ಅಂತು ಭೀಮಸೇನನು ಇಂದ್ರನಮೇಲೆ ವೇಳ್ವಂತೆ ಪೂರ್ವ ದಿಗ್ಭಾಗಕ್ಕೆ ವೇಳ್ದು,(ಹಾಗೆ ಭೀಮಸೇನನ್ನು ಇಂದ್ರನಮೇಲೆ ಬೀಳುವಂತೆ ಪೂರ್ವ ದಿಗ್ಭಾಗಕ್ಕೆ ವಿಜಯ ಯಾತ್ರೆಗೆ ಹೇಳಿ,) ನಕುಳನಂ ಯಮನಂ ಇದಿರ್ಪಲ್ವೇಳ್ವಂತೆ ದಕ್ಷಿಣದಿಗವಭಾಗಕ್ಕೆ ಬೆಸಸಿ (ನಕುಲನನ್ನು ಯಮನು ಇರುವ ದಕ್ಷಿಣದಿಕ್ಕಿನ ಭಾಗಕ್ಕೆ ನೇಮಿಸಿ) ಸಹದೆವನಂ ವರುಣನನು ಅದಿರ್ಪಲ್ (ನಡುಗುವಂತೆ) ನಿಯಮಿಸುವಂತೆ ಪಶ್ಚಿಮದಿಗ್ಭಾದಕ್ಕೆ ಪೇಳ್ದು (ಸಹದೆವನನ್ನು ವರುಣನು ಇರುವ ಪಶ್ಚಿಮದಿಗ್ಭಾದಕ್ಕೆ ಕಡೆ ಶತ್ರುಗಳು ನಡುಗುವಹಾಗೆ ನಿಯಮಿಸುವಂತೆ ಹೇಳಿ) ವಿಕ್ರಮಾರ್ಜುನನಂ ಕುಬೇರನಿಂ ಕಪ್ಪಂಗೊಳಲ್ ಸಮರ್ಪಿಸುವಂತೆ ಉತ್ತರೋತ್ತರಂ ಆಗಲು ಉತ್ತರದಿಶಾ ಭಾಗಕ್ಕೆ ವೇಳ್ದಾಗಲ್ (ಅರ್ಜುನನ್ನು ಕುಬೇರನಿಂದ ಕಪ್ಪತರುವನೋ ಎನ್ನುವಂತೆ ಉತ್ತರೋತ್ತರೇಳಿಗೆಯಾಗಲು ಉತ್ತರದಿಕ್ಕಿನ ಭಾಗಕ್ಕೆ ವಿಜಯ ಯಾತ್ರೆಗೆ ಹೇಳಿದಾಗ)-
- :ವಚನ:ಅರ್ಥ:ಹಾಗೆ ಭೀಮಸೇನನ್ನು ಇಂದ್ರನಮೇಲೆ ಬೀಳುವಂತೆ ಪೂರ್ವ ದಿಗ್ಭಾಗಕ್ಕೆ ವಿಜಯ ಯಾತ್ರೆಗೆ ಹೇಳಿ, ನಕುಲನನ್ನು ಯಮನು ಇರುವ ದಕ್ಷಿಣದಿಕ್ಕಿನ ಭಾಗಕ್ಕೆ ನೇಮಿಸಿ, ಸಹದೆವನನ್ನು ವರುಣನು ಇರುವ ಪಶ್ಚಿಮದಿಗ್ಭಾದ ಕಡೆ ಶತ್ರುಗಳು ನಡುಗುವಹಾಗೆ ನಿಯಮಿಸುವಂತೆ ಹೇಳಿ, ಅರ್ಜುನನ್ನು ಕುಬೇರನಿಂದ ಕಪ್ಪತರುವನೋ ಎನ್ನುವಂತೆ ಉತ್ತರೋತ್ತರ ಏಳಿಗೆಯಾಗಲು ಉತ್ತರದಿಕ್ಕಿನ ಭಾಗಕ್ಕೆ ವಿಜಯ ಯಾತ್ರೆಗೆ ಹೇಳಿದಾಗ)-
- ಚಂ|| ಅರಿ ನರಪಾಲ ಮೌಳಿಮಣಿಯೊಳ್ ನೆಲೆಗೊಂಡುದು ಶಂಖಚಕ್ರ ಚಾ
- ಮರ ಹಳಚಿಹ್ನ ಚಿನ್ನಿತ ಪದಾಕೃತಿ ಬೀಸುವ ಚಾಮರಾಳಿ ಸುಂ|
- ದರಿಯರ ಕಯ್ಗಳಿಂ ಬರ್ದುಕಿ ಬಳ್ದುವು ಬೆಳ್ಗೊಡೆ ನೋಡೆ ನೋಡೆ ನಿಂ|
- ದುರಿದುವು ಸಾಲಭಂಜಿಕೆಗಳಳ್ತುವು ವೈರಿನರೆಂದ್ರ ಗೇಹದೊಳ್ ||೨೯||
- ಪದ್ಯ-೨೯:ಪದವಿಭಾಗ-ಅರ್ಥ:ಅರಿ ನರಪಾಲ ಮೌಳಿಮಣಿಯೊಳ್ ನೆಲೆಗೊಂಡುದು ಶಂಖಚಕ್ರ ಚಾಮರ ಹಳಚಿಹ್ನ ಚಿನ್ನಿತ ಪದಾಕೃತಿ ಬೀಸುವ ಚಾಮರಾಳಿ ಸುಂದರಿಯರ ಕಯ್ಗಳಿಂ ಬರ್ದುಕಿ ಬಳ್ದುವು ಬೆಳ್ಗೊಡೆ ನೋಡೆ ನೋಡೆ ನಿಂದುರಿದುವು ಸಾಲಭಂಜಿಕೆಗಳು ಅಳ್ತುವು ವೈರಿನರೆಂದ್ರ ಗೇಹದೊಳ್ (ಅರಮನೆಯಲ್ಲಿ)
- :ಪದ್ಯ-೨೯:ಅರ್ಥ:ಶತ್ರುರಾಜರ ಕಿರೀಟ ರತ್ನಗಳಲ್ಲಿ ಶಂಖ,ಚಕ್ರ, ಚಾಮರ, ಹಳಚಿಹ್ನ /ನೇಗಿಲು, ಈ ಗುರುತುಗಳ ಪಾದಗಳ ಆಕೃತಿ ಬೀಸುವ ಚಾಮರಾಗಳು- ಚಕ್ರವರ್ತಿಯ ಚಿಹ್ನೆಗಳು ಸುಂದರಿಯರ ಕೈಗಳಿಂದ ಬಿದ್ದವು; ನೋಡು ನೋಡುತ್ತಿದ್ದಂತೆ ಸ್ವೇಛತ್ರಗಳು ಬಿದ್ದವು, ಶತ್ರುರಾಜರ ಅರಮನೆಯ ಸಾಲಭಂಜಿಕೆಗಳು ಅತ್ತವು. ಹೀಗೆ ಅರ್ಜುನನಿಗೆ ವಿಜಯ ಚಿಹ್ನೆಗಳುಂಟಾದವು.
- ವ|| ಅಂತು ವಿಜಯಂ ತನ್ನ ದಿಗ್ವಿಜಯದೊಳಾಧ ವಿಜಯ ಚಿಹ್ನೆಗಳ್ ಮುನ್ನಮೆ ನೆಗಳೆ ವಿಜಯದ ಗುಡಿವಿಡಿಸಿ ಅರಿ ನೃಪರಂ ಬೇಧಿಸಿ ಪಾಂಚಾಳರಂ ಚಾಳಿಸಿ ಗಾಂಧರ್ವರಂ ವಿರಥರಂ ಮಾಡಿ ಕೌಳಾಧೀಶರಂ ಸಾಧಿಸಿ ಕಿಂಪುರುಷರಂ ಕಾಪುರುಷರ್ಮಾಡಿ ಬಾಹ್ಲೀಕರನನನೀಕರಿಸಿ ಮಾಳವಿಗರಂ ಕೆಳಗಿವಿಯ್ಯಲೀಯದಾಟಂದು ನಿಜ ನಾಮಾಂಕಿತ ಸಾಯಕಗಳಿಂದೆಚ್ಚು ನಚ್ಚಂ ಕಿಡಿಸಿ-
- ವಚನ:ಪದವಿಭಾಗ-ಅರ್ಥ:ಅಂತು ವಿಜಯಂ ತನ್ನ ದಿಗ್ವಿಜಯದೊಳಾಧ ವಿಜಯ ಚಿಹ್ನೆಗಳ್ ಮುನ್ನಮೆ ನೆಗಳೆ ವಿಜಯದ ಗುಡಿವಿಡಿಸಿ ಅರಿ ನೃಪರಂ ಬೇಧಿಸಿ ಪಾಂಚಾಳರಂ ಚಾಳಿಸಿ ಗಾಂಧರ್ವರಂ ವಿರಥರಂ ಮಾಡಿ ಕೌಳಾಧೀಶರಂ ಸಾಧಿಸಿ ಕಿಂಪುರುಷರಂ ಕಾಪುರುಷರ್ ಮಾಡಿ ಬಾಹ್ಲೀಕರನು ಅನನೀಕರಿಸಿ (ಸೈನ್ಯರಹಿತರನ್ನಗಿ ಮಾಡಿ) ಮಾಳವಿಗರಂ ಕೆಳಗಿವಿಯ್ಯಲು ಈಯದೆ ಆಟಂದು (ಉದಾಸೀನರಾಗಲು ಬಿಡದೆ ಮೇಲೆ ಬಿದ್ದು) ನಿಜ ನಾಮಾಂಕಿತ ಸಾಯಕಗಳಿಂದ ಎಚ್ಚು ನಚ್ಚಂ ಕಿಡಿಸಿ (ನಂಬಿಕೆ ಕೆಡಿಸಿ)-
- :ವಚನ:ಅರ್ಥ:ಹೀಗೆ ಅರ್ಜುನನು ತನ್ನ ದಿಗ್ವಿಜಯದಲ್ಲಿ ವಿಜಯ ಚಿಹ್ನೆಗಳನ್ನು ಮೊದಲೆ ಹೊಂದಲು, ವಿಜಯದ ಬಾವುಟ ಹಾರಿಸಿ, ಶತ್ರುರಾಜರನ್ನು ಬೇಧಿಸಿ, ಪಾಂಚಾಲರನ್ನು ಓಡಿಸಿ,ಸ ಗಾಂಧರ್ವರನ್ನು ರಥವಿಲ್ಲದಂತೆ ಮಾಡಿ, ಕೌಲರಾಜರನ್ನು ಸೋಲಿಸಿ, ಕಿಂಪುರುಷರನ್ನು ಕಾಪುರುಷರನ್ನಾಗಿ/ ಹೇಡಿಗಳನ್ನಾಗಿ ಮಾಡಿ ಬಾಹ್ಲೀಕರನು ಸೈನ್ಯರಹಿತರನ್ನಗಿ ಮಾಡಿ, ಮಾಳವಿಗರನ್ನು ಉದಾಸೀನರಾಗಲು ಬಿಡದೆ ಮೇಲೆ ಬಿದ್ದು, ತನ್ನ ನಾಮಾಂಕಿತ ಆಯುಧಗಳಿಂದ ಹೊಡೆದು ಆತ್ಮವಿಶ್ವಾಸ ಕೆಡಿಸಿ -
- ಮ||ಉರದಿರ್ಪಂತೆಮಗಾವ ಗರ್ವಮಿರಿಯಲ್ವೇಡೆ ಮ್ಮನುಮ್ಮುಳ್ಳುದಂ
- ನೆರೆ ಕೊಂಡೆಮ್ಮಯ ಬಾಳ್ವೆಯೊಳ್ ನಿರಿಸುವಂ ನೀನಿಂದು ತಂದಿತ್ತು ಕೆ||
- ಯ್ಸರಿಯಂ ಕೊಟ್ಟಳವಟ್ಟ ಸಾರ ಧನಮಂ ಮೂವಿಟ್ಟಿಗಂ ಪೊಣ್ದು ಕಾ
- ಲ್ಗೆರಗಿತ್ತಂತರಿಗಂಗೆ ಬೆರ್ಚಿಭಯದಿಂ ಗ್ರಾಮ ಕುಳಂ ರಾಜಕಂ||೩೦||
- ಪದ್ಯ-೩೦:ಪದವಿಭಾಗ-ಅರ್ಥ:ಉರದಿರ್ಪಂತೆ ಎಮಗಾವ ಗರ್ವಂ ಇರಿಯಲ್ವೇಡ ಎಮ್ಮನು(ನಿಮ್ಮನ್ನು ಲಕ್ಷ್ಯ ಮಾಡದಿರುವಂತೆ ನಮಗೆಯಾವ ಗರ್ವವಿದೆ? ನಮ್ಮನ್ನು ಸುಮ್ಮನೆ ಯುದ್ಧಮಾಡಬೇಡ/ ಹೊಡೆಯಬೇಡ) ಎಮ್ಮುಳ್ಳದಂ - ಎಮ್ಮ ಉಳ್ಳುದಂ ನೆರೆ ಕೊಂಡು ಎಮ್ಮಯ ಬಾಳ್ವೆಯೊಳ್ ನಿರಿಸುವಂ ನೀನು (ನಮ್ಮಲ್ಲಿರುವುದನ್ನು ಪೂರ್ಣವಾಗಿ ತೆಗೆದುಕೊಂಡು ನಮ್ಮ ಬದುಕುಗಳಲ್ಲಿ ಸ್ಥಿರತೆಯನ್ನು ಸ್ಥಾಪಿಸುವವನು ನೀನು.) ಇಂದು ತಂದಿತ್ತು ಕೆಯ್ಸರಿಯಂ ಕೊಟ್ಟು ಅಳವಟ್ಟ (ಕೈಗೆ ಸಿಕ್ಕಿದ್ದ ಸೆರೆಯಾಳುಗಳನ್ನು ಕೊಟ್ಟು ಅಲತೆಗೆ ಒಳಪಟ್ಟ) ಸಾರ ಧನಮಂ ಮೂವಿಟ್ಟಿಗಂ ಪೊಣ್ದು (ಎಲ್ಲಾಹಣವನ್ನು ಕೊಟ್ಟು, ಮೂರುವಿಧದ ಬಿಟ್ಟಿ ಕೆಲಸ ಮಾಡವೆವೆಂದು ಪೊಣ್ದು- ಭಾಷೆಕೊಟ್ಟು) ಕಾಲ್ಗೆರಗಿತ್ತಂತು ಅರಿಗಂಗೆ ಬೆರ್ಚಿ ಭಯದಿಂ ಗ್ರಾಮ ಕುಳಂ ರಾಜಕಂ (ಗ್ರಾಮದವರೂ ಕುಲದವರೂ,ರಾಜರೂ, ಅರ್ಜುನನಿಗೆ ಹೆದರಿ ಭಯದಿಂದ ಕಾಲಿಗೆ ಬಿದ್ದು ಹೀಗೆ ಕೇಳಿಕೊಂಡರು. )
- :ಪದ್ಯ-೩೦:ಅರ್ಥ:ಗ್ರಾಮದವರೂ ಕುಲದವರೂ,ರಾಜರೂ, ಅರ್ಜುನನಿಗೆ ಹೆದರಿ ಭಯದಿಂದ ಕಾಲಿಗೆ ಬಿದ್ದು ಹೀಗೆ ಕೇಳಿಕೊಂಡರು. ನಿಮ್ಮನ್ನು ಲಕ್ಷ್ಯ ಮಾಡದಿರುವಂತೆ ನಮಗೆಯಾವ ಗರ್ವವಿದೆ? ನಮ್ಮನ್ನು ಸುಮ್ಮನೆ ಯುದ್ಧಮಾಡಬೇಡ/ ಹೊಡೆಯಬೇಡ. ನಮ್ಮಲ್ಲಿರುವುದನ್ನು ಪೂರ್ಣವಾಗಿ ತೆಗೆದುಕೊಂಡು ನಮ್ಮ ಬದುಕುಗಳಲ್ಲಿ ಸ್ಥಿರತೆಯನ್ನು ಸ್ಥಾಪಿಸುವವನು ನೀನು. ಕೈಗೆ ಸಿಕ್ಕಿದ್ದ ಸೆರೆಯಾಳುಗಳನ್ನು ಕೊಟ್ಟು ಅಳತೆಗೆ ಒಳಪಟ್ಟ ಎಲ್ಲಾ ಹಣವನ್ನು ಕೊಟ್ಟು, ಮೂರುವಿಧದ ಬಿಟ್ಟಿ ಕೆಲಸ ಮಾಡವೆವೆಂದು ಪೊಣ್ದು- ಭಾಷೆಕೊಟ್ಟು ಅರ್ಜುನನಿಗೆ ಹೆದರಿ ಭಯದಿಂದ ಕಾಲಿಗೆ ಬಿದ್ದು ಹೀಗೆ ಕೇಳಿಕೊಂಡರು.
- ವ|| ಮತ್ತಮಲ್ಲಿ ಕೆಲರಂ ಮೈತ್ರಾಸನ ವೃತ್ತಿಯೊಳ್ ನಿರಿಸಿ ಕೆಲರನುದ್ಧತಾ ಪ್ರತಿಮಹಿತರ್ಮಾಡಿ ಕೆಲರನುಚ್ಛಾಟಿಸಿ ಸರ್ವಹರಣಂಗೆಯ್ದು ಕಸರಮಲ್ಲಮನಿಂದ್ರಪ್ರಸ್ಥಕ್ಕೆ ಕಳಿಪಿ ಕಾಶ್ಮೀರ ಹಿಮವಂತ ಹೇಕಕೂಟ ಕೈಳಾಸ ಪಾರಿಯಾತ್ರಸ್ವೇತಶೃಂಗ ಗಂಧಮಾದನಗಿರಿ ನಿಕಟವರ್ತಿಗಳಪ್ಪ ಪರ್ವತರಾಜರನಪಗತತೇಜರ್ಮಾಡಿ ಕಸವರಮಂ ಕೆಯ್ಗೆ ಮಅಡಿ ಮೇರುಪರ್ವತದ ತೆಂಕಣ ತಳ್ಪಲೊಳ್ ದ್ವಾದಶಯೋಜನ ಪ್ರಮಾಣಮಪ್ಪ ಜಂಬೂವೃಕ್ಷದ ಕೆಲದೊಳಡಸಿ ರಸದತೊರೆ ಪರಿವಂತೆ ಕನಕಗಿರಿಯನಲೆದು ಪರಿವ ಜಮಬೂನದಮೆಂಬ ತೊರೆಯೊಳ್ ಪುಟ್ಟಿದ ಜಾಂಬೂನದಮೆಂಬ ಪೊನ್ನ ಪಾಸರಿಗಳಂ ಕಂಡು-
- ವಚನ:ಪದವಿಭಾಗ-ಅರ್ಥ:ಮತ್ತಂ ಅಲ್ಲಿ ಕೆಲರಂ ಮೈತ್ರಾಸನ ವೃತ್ತಿಯೊಳ್ ನಿರಿಸಿ(ಮಿತ್ರರಾಗಿ ಇರಿಸಿ) ಕೆಲರನು ಉದ್ಧತಾ ಪ್ರತಿಂ ಅಹಿತರ್ಮಾಡಿ (ಉದ್ಧಟರನ್ನು ಅಹಿತರನ್ನು ಅದಕ್ಕೆ ಪ್ರತಿ- ವಿರುದ್ಧಮಾಡಿ, ಮಿತ್ರರನ್ನು ಮಾಡಿಕೊಂಡು ) ಕೆಲರನುಚ್ಛಾಟಿಸಿ (ಕೆಲವರನ್ನು ಓಡಿಸಿ,) ಸರ್ವಹರಣಂಗೆಯ್ದು ಕಸರಮಲ್ಲಮನು ಇಂದ್ರಪ್ರಸ್ಥಕ್ಕೆ ಕಳಿಪಿ (ಸರ್ವನ್ನೂ ತೆಗೆದುಕೊಂಡು ಚಿನ್ನವನ್ನೆಲ್ಲಾ ಇಂದ್ರಪ್ರಸ್ಥಕ್ಕೆ ಕಳಿಸಿದನು.-) ಕಾಶ್ಮೀರ ಹಿಮವಂತ ಹೇಕಕೂಟ ಕೈಳಾಸ ಪಾರಿಯಾತ್ರಸ್ವೇತಶೃಂಗ ಗಂಧಮಾದನಗಿರಿ ನಿಕಟವರ್ತಿಗಳಪ್ಪ ಪರ್ವತರಾಜರನು ಅಪಗತ ತೇಜರ್ಮಾಡಿ (ಕಾಶ್ಮೀರ, ಹಿಮವಂತ, ಹೇಕಕೂಟ, ಕೈಲಾಸ, ಪಾರಿಯಾತ್ರ, ಸ್ವೇತಶೃಂಗ, ಗಂಧಮಾದನಗಿರಿ, ನಿಕಟವರ್ತಿಗಳಪ್ಪ ಪರ್ವತರಾಜರನ್ನು ಸೋಲಿಸಿ) ಕಸವರಮಂ ಕೆಯ್ಗೆ ಮಾಡಿ (ಚಿನ್ನವನ್ನೆಲ್ಲಾ ಕಸಿದುಕೊಂಡು) ಮೇರುಪರ್ವತದ ತೆಂಕಣ ತಳ್ಪಲೊಳ್ (ಮೇರುಪರ್ವತದ ದಕ್ಷಿಣ ತಪ್ಪಲಿನಲ್ಲಿ) ದ್ವಾದಶಯೋಜನ ಪ್ರಮಾಣಮಪ್ಪ ಜಂಬೂವೃಕ್ಷದ ಕೆಲದೊಳು (ಹನ್ನೆರಡುಯೋಜನ ಪ್ರಮಾಣವಿರುವ ಜಂಬೂವೃಕ್ಷದ ಪಕ್ಕದಲ್ಲಿ) ಅಡಸಿ ರಸದತೊರೆ ಪರಿವಂತೆ (ಅಗೆದು ಕೊರೆದು ಪಾದರಸದ ನದಿಯುಹರಿಯುವಂತೆ) ಕನಕಗಿರಿಯನು ಅಲೆದು ಪರಿವ ಜಂಬೂನದಮೆಂಬ ತೊರೆಯೊಳ್ ಪುಟ್ಟಿದ (ಕನಕಗಿರಿಯನು ಸುತ್ತಾಡಿ ಅಲ್ಲಿ ಹರಿಯುವ ಜಂಬೂನದಮೆಂಬ ನದಿಯಲ್ಲಿ ಹುಟ್ಟಿದ) ಜಾಂಬೂನದಮೆಂಬ ಪೊನ್ನ ಪಾಸರಿಗಳಂ ಕಂಡು(ಜಾಂಬೂನದವೆಂಬ ಚಿನ್ನದ ಹಾಸುಬಂಡೆಗಳನ್ನು ನೋಡಿದನು/ ಕಂಡು)-
- :ವಚನ:ಅರ್ಥ:ಮತ್ತೆ ಅಲ್ಲಿ ಕೆಲವರನ್ನು ಮಿತ್ರರಾಗಿ ಇರಿಸಿ, ಕೆಲವು ಉದ್ಧಟರನ್ನು ಅಹಿತರನ್ನು ಮಿತ್ರರನ್ನು ಮಾಡಿಕೊಂಡು, ಕೆಲವರನ್ನು ಓಡಿಸಿ, ಸರ್ವನ್ನೂ ತೆಗೆದುಕೊಂಡು ಚಿನ್ನವನ್ನೆಲ್ಲಾ ಇಂದ್ರಪ್ರಸ್ಥಕ್ಕೆ ಕಳಿಸಿದನು. ಕಾಶ್ಮೀರ, ಹಿಮವಂತ, ಹೇಕಕೂಟ, ಕೈಲಾಸ, ಪಾರಿಯಾತ್ರ, ಸ್ವೇತಶೃಂಗ, ಗಂಧಮಾದನಗಿರಿ, ನಿಕಟವರ್ತಿಗಳಪ್ಪ ಪರ್ವತರಾಜರನ್ನು ಸೋಲಿಸಿ ಚಿನ್ನವನ್ನೆಲ್ಲಾ ಕಸಿದುಕೊಂಡು, ಮೇರುಪರ್ವತದ ದಕ್ಷಿಣ ತಪ್ಪಲಿನಲ್ಲಿ ಹನ್ನೆರಡುಯೋಜನ ಪ್ರಮಾಣವಿರುವ ಜಂಬೂವೃಕ್ಷದ ಪಕ್ಕದಲ್ಲಿ ಅಗೆದು ಕೊರೆದು ಪಾದರಸದ ನದಿಯು ಹರಿಯುವಂತೆ ಮಾಡಿ, ಕನಕಗಿರಿಯನ್ನು ಸುತ್ತಿ, ಸುತ್ತಾಡಿ ಅಲ್ಲಿ ಹರಿಯುವ ಜಂಬೂನದಮೆಂಬ ನದಿಯಲ್ಲಿ ಹುಟ್ಟಿದ ಜಾಂಬೂನದವೆಂಬ ಚಿನ್ನದ ಹಾಸುಬಂಡೆಗಳನ್ನು ನೋಡಿದನು/ ಕಂಡು)-
- ಕಂ|| ಗಾಂಡೀವದ ಕೊಪ್ಪುಗಳೊಳ್
- ಖಂಡಿಸಿ ತತ್ತಟದ ಕನಕ ರೇಣುವನವನಾ \
- ಖಂಡಲತನಯನಸುಂಗೊಳೆ
- ಖಂಡಿಸಿದಂ ನಿಶಿತ ಪರಷು ಶರಸಮಿತಿಗಳಂ||೩೧||31||
- ಪದ್ಯ-೩೧:ಪದವಿಭಾಗ-ಅರ್ಥ:ಗಾಂಡೀವದ ಕೊಪ್ಪುಗಳೊಳ್ ಖಂಡಿಸಿ (ಗಾಂಡೀವದ ತುದಿಯಿಂದ ಕತ್ತರಿಸಿ) ತತ್ತಟದ ಕನಕ ರೇಣುವನು (ಆದರ ತಡಿಯಲ್ಲಿದ್ದ ಚಿನ್ನದ ಹಾಸನ್ನು) ಆ ಖಂಡಲತನಯಂ (ಅರ್ಜುನನು) ಅಸುಂಗೊಳೆ ಖಂಡಿಸಿದಂ (ಸಚೇತನವಾಗಿ ಕತ್ತರಿಸಿದನು) ನಿಶಿತ ಪರಷು ಶರಸಮಿತಿಗಳಂ(ಹರಿತವಾದ ಕೊಡಲಿ ಬಾಣಗಳಿಂದ)
- :ಪದ್ಯ-೩೧:ಅರ್ಥ:ಅರ್ಜುನನು ಜಾಂಬೂನದವೆಂಬ ಚಿನ್ನದ ಹಾಸುಬಂಡೆಗಳನ್ನು - ಗಾಂಡೀವದ ತುದಿಯಿಂದ ಕತ್ತರಿಸಿ, ಆದರ ತಡಿಯಲ್ಲಿದ್ದ ಚಿನ್ನದ ಹಾಸನ್ನು ಹರಿತವಾದ ಕೊಡಲಿ ಬಾಣಗಳಿಂದ ಸಚೇತನವಾಗಿ ಕತ್ತರಿಸಿದನು.
- ವ|| ಅಂತು ಕನಕ ರೇಣುಗಳ್ ಪುಟ್ಟಿದ ಪಾಸರಿಗಳುಮಂ (ಹಾಗೆ ಚಿನ್ನದ ರೇಣುಗಳು ಹುಟ್ಟಿರುವ ಹಾಸುಕಲ್ಲುಗಳನ್ನು) ಕನಕದ ಪಿರಿಯ ಸಲೆಗಳುಮನೊಟ್ಟಿ ಬೆಟ್ಟಾಗಿ ಪುಂಗಿಸಿ-
- ವಚನ:ಪದವಿಭಾಗ-ಅರ್ಥ:ಅಂತು ಕನಕ ರೇಣುಗಳ್ ಪುಟ್ಟಿದ ಪಾಸರಿಗಳುಮಂ (ಹಾಗೆ ಚಿನ್ನದ ರೇಣುಗಳು ಹುಟ್ಟಿರುವ ಹಾಸುಕಲ್ಲುಗಳನ್ನು) ಕನಕದ ಪಿರಿಯ ಸಲೆಗಳುಮಂ ಒನಟ್ಟಿ ಬೆಟ್ಟಾಗಿ ಪುಂಗಿಸಿ (ಚಿನ್ನದ ದೊಡ್ಡ ಶಿಲೆಗಳನ್ನು ಒಟ್ಟು ಸೇರಿಸಿ ದೊಡ್ಡ ರಾಶ ಮಾಡಿ)-
- :ವಚನ:ಅರ್ಥ:ಹಾಗೆ ಚಿನ್ನದ ರೇಣುಗಳು ಹುಟ್ಟಿರುವ ಹಾಸುಕಲ್ಲುಗಳನ್ನು ಚಿನ್ನದ ದೊಡ್ಡ ಶಿಲೆಗಳನ್ನು ಒಟ್ಟು ಸೇರಿಸಿ ದೊಡ್ಡ ರಾಶ ಮಾಡಿ-
- ಚಂ|| ಬರಿಸಿ ಘಟೋತ್ಕಚಂ ಬೆರಸು ದಾನವಸೇನೆಯನೀಗಳೀ ಬಲಂ
- ಬೆರಸಿವನಿಂತು ಪೊತ್ತು ನೆಡ ನಮ್ಮ ಪುರಕ್ಕೆನೆ ತದ್ಗಿರೀಮದ್ರ ಕಂ |
- ದರ ಕನಕಾಚಳಂಗಳೆನಿತುಂಟನಿತಂ ತವೆ ಹೇಮ ರೇಣುಗ
- ಳ್ವರಸು ಕಡಂಗಿ ಪೊತ್ತು ನಡದತ್ತು ಘಟೋತ್ಕಚ ರೌದ್ರಸಾಧನಂ||೩೨||
- ಪದ್ಯ-೩೨:ಪದವಿಭಾಗ-ಅರ್ಥ:ಬರಿಸಿ ಘಟೋತ್ಕಚಂ ಬೆರಸು (ಸಮೇತ) ದಾನವಸೇನೆಯಂ ಈಗಳು ಈ ಬಲಂ ಬೆರಸು (ದಾನವರ ಸೇನೆಯನ್ನು ಬರಮಾಡಿಕೊಂಡು ಘಟೋತ್ಕಚನ ಸಹಿತ,) ಅವನಿಂತು ಪೊತ್ತು ನೆಡ ನಮ್ಮ ಪುರಕ್ಕೆ ಎನೆ (ನಮ್ಮ ನಗರಕ್ಕೆ ಅವೆಲ್ಲವನ್ನೂ ಹೊತ್ತುಕೊಂಡು ಹೋಗು ಎನ್ನಲು) ತದ್ಗಿರೀಮದ್ರ ಕಂದರ ಕನಕಾಚಳಂಗಳಂ (ಅಚಲ-ಬೆಟ್ಟ)) ಇನಿತುಂಟು ಅನಿತಂ(ತದ್ ಗಿರೀಂದ್ರ- ಆ ಬೆಟ್ಟದ ಕಣಿವೆಗಳಲ್ಲಿರುವ ಚಿನ್ನದ ಬೆಟ್ಟಗಳನ್ನು ಎಷ್ಟಿವೆಯೋ ಅಷ್ಟನ್ನೂ) ತವೆ ಹೇಮ ರೇಣುಗಳ್ವರಸು ಕಡಂಗಿ ಪೊತ್ತು ನಡದತ್ತು ಘಟೋತ್ಕಚ ರೌದ್ರಸಾಧನಂ (ತವೆ- ಮತ್ತೆ/ ಮುಗಿದುಹೋಗುವಷ್ಟು ಚಿನ್ನದ ರೇಣು/ಧೂಳುಗಳ ಸಮೇತ ಉತ್ಸಾಹದಿಂದ ಹೊತ್ತು ನಡೆಯಿತು ಘಟೋತ್ಕಚನ ಭಯಂಕರ ಸೈನ್ಯ)
- :ಪದ್ಯ-೩೨:ಅರ್ಥ:ಘಟೋತ್ಕಚನ ಸಹಿತ ದಾನವರ ಸೇನೆಯನ್ನು ಬರಮಾಡಿಕೊಂಡು, ಆ ಬೆಟ್ಟದ ಕಣಿವೆಗಳಲ್ಲಿರುವ ಚಿನ್ನದ ಬೆಟ್ಟಗಳನ್ನು ಎಷ್ಟಿವೆಯೋ ಅಷ್ಟನ್ನೂ, ನಮ್ಮ ನಗರಕ್ಕೆ ಅವೆಲ್ಲವನ್ನೂ ಹೊತ್ತುಕೊಂಡು ಹೋಗು ಎನ್ನಲು ಘಟೋತ್ಕಚನ ಭಯಂಕರ ಸೈನ್ಯ ಅಲ್ಲಿರುವುದು ಮುಗಿದುಹೋಗುವಷ್ಟು ಚಿನ್ನದ ರೇಣು/ಧೂಳುಗಳ ಸಮೇತ ಉತ್ಸಾಹದಿಂದ ಹೊತ್ತು ನಡೆಯಿತು.
- ವ|| ಆಗಳ್ ಪರಾಕ್ರಮ ಧವಳಂ ತನ್ನ ಪರಾಕ್ರಮಮಂ ಮೆರೆಯಲೆಂದು ಕೈಳಾಸದ ಮೇಗಣ್ಗೆ ವಂದು ಕುಬೇರನಿಂ ಕಪ್ಪಗೊಂಡು ಪೊನ್ನಂ ಜಕ್ಕರೆಕ್ಕೆಯಿಂ ಪೊತ್ತುಬರೆ ತಡೆಯದೆ ಇಂದ್ರಪ್ರಸ್ಥಕ್ಕೆ ಬಂದನಿತ್ತ ಭೀಮನುಂ ಮೂಡಣದಿಶಾ ಭಾಗಮಂ ಬಾಯ್ಕೇಳಿಸಿ ದೇವೇಂದ್ರನ ವಜ್ರಮುಮಂ ಇಂದ್ರಾಣಿಯಕೈಗನ್ನಡಿಯುಮುಳಿಯೆ ಸಮಸ್ತ ವಸ್ತುಗಳಂ ತಂದಂ. ಸಹದೇವನುಂ ಪಡುವಣದೆಸೆಯ ಮಂಡಳಿಕರನದರ್ಪಿಯುಮುದಿರ್ಪಿಯುಂ ಕೊಂಡು ವರುಣನ ಮಕರುಮಂ ವರುಣಾನಿಯ ಕೊರಲೊಳಯ್ದೆ ಮಿನುಗುಮುಳಿಯೆಯುಳಿದ ವಸ್ತಗಳೆಲ್ಲಮುಂ ತಂದು ಮುಂದಿಟ್ಟಂ ನಕಳನಂ ತೆಂಕಣದೆಸೆಯ ಮಲೆಪರಂ ಮಂಡಳಿಕರುಮನಸಿಯರಾಗೆ ಕವರ್ದುಕೊಂಡು ಲಂಕೆಯಮೇಗೆ ನೆಡೆದು ವಿಭೀಷಣಂ ತನಗೆ ಬಾಯ್ಕೇಳದಿರ್ದೊಡೆ ವಿಕ್ರಮಾರ್ಜುನಂಗೆ ಪೇಳ್ದಟ್ಟಿದೊಡೆ-
- ವಚನ:ಪದವಿಭಾಗ-ಅರ್ಥ:ಆಗಳ್ ಪರಾಕ್ರಮ ಧವಳಂ ತನ್ನ ಪರಾಕ್ರಮಮಂ ಮೆರೆಯಲೆಂದು ಕೈಳಾಸದ ಮೇಗಣ್ಗೆ ವಂದು ಕುಬೇರನಿಂ ಕಪ್ಪಗೊಂಡು ಪೊನ್ನಂ ಜಕ್ಕರು (ಯಕ್ಷರು) ಎಕ್ಕೆಯಿಂ (ಒಟ್ಟಾಗಿ) ಪೊತ್ತುಬರೆ ತಡೆಯದೆ ಇಂದ್ರಪ್ರಸ್ಥಕ್ಕೆ ಬಂದನು. ಇತ್ತ ಭೀಮನುಂ ಮೂಡಣ (ಪೂರ್ವ)ದಿಶಾ ಭಾಗಮಂ ಬಾಯ್ಕೇಳಿಸಿ (ವಿಧೇಯರನ್ನಾಗಿಸಿ) ದೇವೇಂದ್ರನ ವಜ್ರಮುಮಂ ಇಂದ್ರಾಣಿಯ ಕೈಗನ್ನಡಿಯುಂ ಉಳಿಯೆ ಸಮಸ್ತ ವಸ್ತುಗಳಂ ತಂದಂ. ಸಹದೇವನುಂ ಪಡುವಣದೆಸೆಯ (ಪಶ್ಚಿಮ) ಮಂಡಳಿಕರನು ಅದರ್ಪಿಯುಂ ಉದಿರ್ಪಿಯುಂ (ನಡುಗಿಸಿ ಉದುರಿಸಿ) ಕೊಂಡು ವರುಣನ ಮಕರುಮಂ ವರುಣಾನಿಯ ಕೊರಲೊಳು ಅಯ್ದೆ ಮಿನುಗುಂ ಉಳಿಯೆಯುಳಿದ ವಸ್ತಗಳೆಲ್ಲಮುಂ ತಂದು ಮುಂದಿಟ್ಟಂ ನಕಳನಂ ತೆಂಕಣ (ದಕ್ಷಿಣ) ದೆಸೆಯ ಮಲೆಪರಂ ಮಂಡಳಿಕರುಮನು ಅಸಿಯರಾಗೆ (ದುರ್ಬಲರಾಗಲು) ಕವರ್ದುಕೊಂಡು ಲಂಕೆಯಮೇಗೆ ನೆಡೆದು ವಿಭೀಷಣಂ ತನಗೆ ಬಾಯ್ಕೇಳದಿರ್ದೊಡೆ ವಿಕ್ರಮಾರ್ಜುನಂಗೆ ಪೇಳ್ದಟ್ಟಿದೊಡೆ-
- :ವಚನ:ಅರ್ಥ:ಆಗ ಪರಾಕ್ರಮಧವಳ ಅರ್ಜುನನು ತನ್ನ ಪರಾಕ್ರಮವನ್ನು ಮೆರೆಯಲು ಕೈಲಾಸದ ಮೇಲೆ ವಂದು ಕುಬೇರನಿಂದ ಕಪ್ಪಪಡೆದು ಯಕ್ಷರು ಒಟ್ಟಾಗಿ ಚಿನ್ನವನ್ನು ಹೊತ್ತುಬರಲ, ತಡೆಯದೆ ಇಂದ್ರಪ್ರಸ್ಥಕ್ಕೆ ಬಂದನು. ಇತ್ತ ಭೀಮನು ಪೂರ್ವದಿಕ್ಕಿನವರನ್ನು ವಿಧೇಯರನ್ನಾಗಿಸಿ, ದೇವೇಂದ್ರನ ವಜ್ರಾಯುಧವನ್ನೂ, ಇಂದ್ರಾಣಿಯ ಕೈಗನ್ನಡಿಯುನ್ನೂ ಬಿಟ್ಟು ಉಳಿದ ಸಮಸ್ತ ವಸ್ತುಗಳನ್ನು ತಂದನು. ಸಹದೇವನು ಪಶ್ಚಿಮ ಮಾಂಡಳೀಕರನ್ನು ನಡುಗಿಸಿ ಉದುರಿಸಿ/ಕೆಡವಿಕೊಂಡು ವರುಣನ ವಾಹನ ಮಕರುವನ್ನೂ ವರುಣಾನಿಯ ಕೊರಳೊಳು ಇದ್ದ ಮಿನುಗುತಾಳಿಯನ್ನೂ ಬಿಟ್ಟು ಉಳಿದ ವಸ್ತಗಳೆಲ್ಲಮುಂ ತಂದು ಮುಂದಿಟ್ಟನು. ನಕುಲನು ದಕ್ಷಿಣ ದೆಸೆಯ ವಿರೋಧಿಗಳನ್ನು ಮಂಡಳಿಕರನ್ನೂ ದುರ್ಬಲರಾಗಿಮಾಡಿ ಕಸಿದುಕೊಂಡು ಲಂಕೆಯಮೇಲೆ ನೆಡೆದನು. ಅಲ್ಲಿ ವಿಭೀಷಣನು ತನಗೆ ಅಧೀನನಾಗದಿರಲು ಅರ್ಜುನನಿಗೆ ಕರೆಕಳಿಸಿದನು ಆಗ-
- ಉ|| ತೊಂಡಿನೊಳುರ್ಕಿ ಕೆಟ್ಟದಶಕಂಠನನಕ್ಕಟಕೊಂಡ ಪೆರ್ಮರುಳ್
- ಕೊಂಡುದೆ ತನ್ನುಮಂಬಿಸುಡು ನೀಂ ಬಲಗರ್ಮವನಾ ಸಮುದ್ರ ಮೇ|
- ಬಂಡಮೊ ಪಾಯ್ದೊಡೆಂದು ನಿಜ ಸಾಯಕದೊಳ್ ಬರದೆಚ್ಚು ಕಪ್ಪಮಂ
- ಕೊಂಡನವುಂಕಿ ಲಂಕೆಯ ವಿಭೀಷಣನಂ ಪರಸೈನ್ಯಭೈರವಂ||೩೩||
- ಪದ್ಯ-೦೦:ಪದವಿಭಾಗ-ಅರ್ಥ:ತೊಂಡಿನೊಳು ಉರ್ಕಿ ಕೆಟ್ಟ ದಶಕಂಠನನು ಅಕ್ಕಟ ಕೊಂಡ (ಹಿಡಿದ ಭೂತ->) ಪೆರ್ಮರುಳ್ ಕೊಂಡುದೆ ತನ್ನುಮಂ(ದುಷ್ಟತನದಿಂದ ಸೊಕ್ಕಿ ಕೆಟ್ಟ ಆ ರಾವಣನನ್ನು ಹಿಡಿದ ಭೂತ ಹಿಡಿಯಿತೆ?) ಬಿಸುಡು ನೀಂ ಬಲಗರ್ಮವನು (ನೀನು ಗರ್ವವನ್ನು ಬಿಡು) ಆ ಸಮುದ್ರಂ ಏಂ ಬಂಡಮೊ (ಏನು ದೊಡ್ಡದೋ) ಪಾಯ್ದೊಡೆ (ಹಾಯಿದರೆ) ಎಂದು ನಿಜ ಸಾಯಕದೊಳ್ ಬರದು ಎಚ್ಚು (ತನ್ನ ಬಾಣದಲ್ಲಿ ಬರೆದು ಹೋಡೆದು) ಕಪ್ಪಮಂ ಕೊಂಡು ಅವುಂಕಿ (ಒತ್ತಿ) ಲಂಕೆಯ ವಿಭೀಷಣನಂ ಪರಸೈನ್ಯಭೈರವಂ(ಅರ್ಜುನನು)
- :ಪದ್ಯ-೦೦:ಅರ್ಥ:ದುಷ್ಟತನದಿಂದ ಸೊಕ್ಕಿ ಕೆಟ್ಟ ಆ ರಾವಣನನ್ನು ಹಿಡಿದ ಭೂತ ನಿನಗೆ ಹಿಡಿಯಿತೆ? ನೀನು ಗರ್ವವನ್ನು ಬಿಡು .ಆ ಸಮುದ್ರಂ ಹಾಯಿದರೆ ಏನು ದೊಡ್ಡದೋ! ಎಂದುತನ್ನ ಬಾಣದಲ್ಲಿ ಬರೆದು ಪರಸೈನ್ಯಭೈರವ ಅರ್ಜುನನು ಲಂಕೆಯ ವಿಭೀಷಣನನ್ನು ಹೊಡೆದು ಒತ್ತಿ ಕಪ್ಪವನ್ನು ಕೊಂಡನು.
- ವ||ಅಂತುಂ ನಾಲ್ಕು ಸಮುದ್ರಂಗಳ ನೀರುಳಿಯೆ ರತುನಂಗಳುಮಂ ದಿಶಾಗಜಂಗಳುಳಿಯೆ ಗಜಂಗಳುಮಂ ಆದಿತ್ಯನ ಕುದುರೆಗಳುಳಿಯೆ ಕುದುರೆಗಳುಮಂ ದೇವೇಂದ್ರನ ಸುರಭಿಯುಮನೀಶ್ವರನ ನಂದಿಯುಮುಳಿಯೆ ಗೋವ್ರಜಂಗಳು ಮನಿಂದ್ರಪ್ರಸ್ಥಕ್ಕೆ ತೆರಳ್ಚಿನಾರಾಯಣನ ಮತದೊಳ್ ಹಸ್ತಿನಾಪುರದೊಳಿರ್ದ ದೃತರಾಷ್ಟ್ರ ವಿದುರ ಗಾಂಗೇಯ ದ್ರೋಣಾಶ್ವತ್ಥಾಮ ಕೃಪ ಬಾಹ್ಲೀಕ ಸೋಮದತ್ತ ಭಗದತ್ತ ಭೂರಿಶ್ರವ ಕರ್ಣ ಶಲ್ಯಶಕುನಿ ಸೈಂಧವ ದುರ್ಯೋಧನ ದುಶ್ಶಾಸಾದಿಗಳ್ಗೆಲ್ಲಂ ಬಳಿಯನಟ್ಟಿ ಬರಿಸಿ ಶಿಶುಪಾಲಾದಿಗಳಪ್ಪ ನೇಕಾಧೀಶ್ವರರೆಲ್ಲರುಮಂ ಬರಿಸಿ ವ್ಯಾಸರ್ ಮೊದಲಾಗೆ ಬ್ರಹ್ಮಋಷಿಯರುರುಮೆಲ್ಲರುಮಂ ಬರಿಸಿ ತುಳಿಲ ಪರಕೆಯ ಸಮಾನ ಪ್ರತಿಪತ್ತಿಯಿಂ ಕಿರಿವಿರಿಯರರಿದು ಪೊಡಮಟ್ಟು ಪರಸಿಯಪ್ಪಿಕೊಂಡು ನುಡಿದು ನೋಡಿಯುಂ ನಕ್ಕು ಕಯ್ಯಂಪಿಡಿದು ಬಲ್ಲಿದಿರೆ ಎಂದು ಪ್ರಿಯದೊಳಂ ಬಿರ್ದಿನೊಳಂ ಸಂತಸಂಬಡಿಸಿ ಶುಭ ದಿನ ವಾರ ನಕ್ಷತ್ರ ಯೋಗ ಕರಣ ಮುಹೂರ್ತದೊಳಿಂದ್ರಪ್ರಸ್ಥಕ್ಕೆ ಉತ್ತರದಿಗ್ಭಾಗದೊಳ್ ಸಹಸ್ರ ಯೋಜನ ಪ್ರಮಾಣದೊಳ್ ಯಾಗಮಂಟಪಮಂ ಸಮೆದು ಮಯನುಕೊಟ್ಟ ಸಭಾಮಂಟಪದೊಳ್ ಬ್ರಹ್ಮಋಷಿಯರುಮನರಸುಮಕ್ಕಳುಮನೆಡೆಯಿರಿದಿರಿಸಿ ಯಜ್ಞದ್ರವ್ಯಗಳೆಲ್ಲಮುಂ ನೆರಪಿ ಮಹಾ ವಿಭವದೊಳ್ ಶಮೀಪಾರ್ಶ್ವತಳ ದಕ್ಷಿಣಶಾಲೆಯೊಳ್ ಹಿರಣ್ಯದಾನಮಂ ಮಾಡಿ ವೇದಿನಿಹಿತಂಗಳಪ್ಪಾಹವನೀಯ ದಕ್ಷಿಣಗಾರ್ಹ್ಯಪತ್ಯಂಗಗಳೆಂಬ ಮೂರು ಕೊಂಡಗಳೊಳುತ್ತರವೇದಿಯೊಳ್ ಅಗ್ನಿಸಂಧಾನಂಗಯ್ದು ವ್ಯಾಸ ಕಶ್ಯಪ ವಿಶ್ವಾಮಿತ್ರ ಭಾರದ್ವಾಜ ಬ್ರಹ್ಮಾಧ್ವರ್ಯಾಗ್ನೀದ್ರ ಮೈತ್ರಾವರುಣಾಗ್ನಿ ಪರಿಚಾರಕೋದ್ಘಾತೃ ನೇತೃ ಹೋತೃ ಜಮದಗ್ನ್ಯಾದಿಗಳಪ್ಪ ಷೋಡಶರ್ತ್ವಿಜಂಗಳಂ ಬೇಳಲ್ವೇಳ್ದು ಧರ್ಮಪುತ್ರಂ ಸಪತ್ನಿ ಯಜಮಾನನಾಗಿರ್ದಾಗಳ್-
- ವಚನ:ಪದವಿಭಾಗ-ಅರ್ಥ:ಕೆಳಗೆ ಪ್ರತಿಪದಅರ್ಥಕೊಟ್ಟಿದೆ-
- :ವಚನ:ಅರ್ಥ:ಹಾಗೆ ನಾಲ್ಕು ಸಮುದ್ರಗಳ ನೀರನ್ನು ಉಳಿಯೆ- ಬಿಟ್ಟು ಮಿಕ್ಕ ರತ್ನಗಳನ್ನೂ, ದಿಗ್ಗಜಗಳನ್ನೂ ಬಿಟ್ಟು, ಗಜಗಳನ್ನೂ ಆದಿತ್ಯನ ಕುದುರೆಗಳನ್ನು ಬಿಟ್ಟು (ಉಳಿಯೆ) ಎಲ್ಲಾ ಕುದುರೆಗಳನ್ನೂ, ದೇವೇಂದ್ರನ ಸುರಭಿಯನ್ನು ಈಶ್ವರನ ನಂದಿಯನ್ನು ಉಳಿಯೆ-ಬಿಟ್ಟು ಗೋವಿನ ಸಮೂಹಗಳನ್ನು ಇಂದ್ರಪ್ರಸ್ಥಕ್ಕೆ ತಲುಪಿಸಿದರು. ನಂತರ ನಾರಾಯಣನ/ಶ್ರೀಕೃಷ್ಣನ ಅಭಿಪ್ರಾಯದಂತೆ ಹಸ್ತಿನಾಪುರದಲ್ಲಿ ಇದ್ದ, ದೃತರಾಷ್ಟ್ರ ವಿದುರ ಗಾಂಗೇಯ ದ್ರೋಣ ಅಶ್ವತ್ಥಾಮ ಕೃಪ ಬಾಹ್ಲೀಕ ಸೋಮದತ್ತ ಭಗದತ್ತ ಭೂರಿಶ್ರವ ಕರ್ಣ ಶಲ್ಯ ಶಕುನಿ ಸೈಂಧವ ದುರ್ಯೋಧನ ದುಶ್ಶಾಸಾದಿ ಎಲ್ಲರನ್ನೂ ಬಳಿಯನು ಅಟ್ಟಿ/ದೂರನ್ನು ಕಳಿಸಿ ಕರೆಸಿಕೊಂಡರು. ಶಿಶುಪಾಲಾದಿಗಳಾದ ಅನೇಕ ಅಧೀಶ್ವರರು ಎಲ್ಲರನ್ನು ಬರಮಾಡಿಕೊಂಡರು. ವ್ಯಾಸರು ಮೊದಲಾಗಿ ಬ್ರಹ್ಮಋಷಿಗಳೆಲ್ಲರನ್ನೂ ಕರೆಸಿ ತುಳಿಲ/ನಮಸ್ಕಾರಕ್ಕೆ ಪರಕೆಯ/ ಆಶಿರ್ವಾದಕ್ಕೆ ಸಮಾನ ಪ್ರತಿಪತ್ತಿಯ/ಯೋಗ್ಯವಾದ ಸತ್ಕಾರದಿಂದ ಕಿರಿವಿರಿಯರನ್ನು ಅರಿತು ನಮಿಸಿ ಹರಸಿ- ಅಪ್ಪಿಕೊಂಡು, ಮಾತನಾಡಿಸಿ, ನೋಡಿ ನಕ್ಕು, ಕಯ್ಯನ್ನು ಹಿಡಿದು ಬಲ್ಲಿದಿರೆ/ ಕ್ಷೇಮವೇ? ಎಂದು ಪ್ರಿಯದಿಂದಕೇಳಿ, ಬಿರ್ದಿನಲ್ಲಿ/ಊಟದಲ್ಲಿ ಸಂತಸಪಡಿಸಿ, ಶುಭ ದಿನ ವಾರ ನಕ್ಷತ್ರ ಯೋಗ ಕರಣ ಮುಹೂರ್ತದಲ್ಲಿ ಇಂದ್ರಪ್ರಸ್ಥಕ್ಕೆ ಉತ್ತರದಿಗ್ಭಾಗದಲ್ಲಿ ಸಹಸ್ರ ಯೋಜನ ಪ್ರಮಾಣದಲ್ಲಿ ಯಾಗಮಂಟಪವನ್ನು ಸಮೆದು/ರಚಿಸಿ ಮಯನುಕೊಟ್ಟ ಸಭಾಮಂಟಪದಲ್ಲಿ ಬ್ರಹ್ಮಋಷಿಗಳಿಗೂ, ಅರಸುಮಕ್ಕಳಿಗೂ ತಕ್ಕ ಎಡೆಮಾಡಿ ಕೂರಿಸಿ, ಯಜ್ಞದ್ರವ್ಯಗಳೆಲ್ಲವನ್ನೂ ಒಟ್ಟುತಂದು ಇರಿಸಿ, ಮಹಾ ವೈಭವದಿಂದ ಶಮೀಪಾರ್ಶ್ವತಳ/ಬನ್ನೀ ಮರದಪಕ್ಕದಲ್ಲಿ ದಕ್ಷಿಣಶಾಲೆಯಲ್ಲಿ ಹಿರಣ್ಯ/ಚಿನ್ನದನಾಣ್ಯ ದಾನವನ್ನು ಮಾಡಿ, ವೇದಿನಿಹಿತಗಳಾದ/ವೇದೋಕ್ತ ಅಂಗಗಳಾಧ ಆಹವನೀಯ, ದಕ್ಷಿಣ, ಗಾರ್ಹ್ಯಪತ್ಯಗಳ ಮೂರು ಕುಂಡಗಳಲ್ಲಿ ಉತ್ತರ ವೇದಿಯಲ್ಲಿ ಅಗ್ನಿಸಂಧಾನವನ್ನು (ಅರುಣಿಯಿಂದ ಕಡೆದು ಅಗ್ನಿಯನ್ನು ಹುಟ್ಟಿಸುವುದು)ಮಾಡಿ, ವ್ಯಾಸ, ಕಶ್ಯಪ, ವಿಶ್ವಾಮಿತ್ರ, ಭಾರದ್ವಾಜ, ಬ್ರಹ್ಮ, ಅಧ್ವರ್ಯ, ಅಗ್ನೀದ್ರ, ಮೈತ್ರಾವರುಣ, ಅಗ್ನಿಪರಿಚಾರಕ, ಉದ್ಘಾತೃ, ನೇತೃ, ಹೋತೃ, ಜಮದಗ್ನ್ಯಿಗಳೇ ಆದಿ ಷೋಡಶ (೧೬) ಋತ್ವಿಜರನ್ನು ಬೇಳಲುವೇಳ್ದು/ ಯಜ್ಞಮಾಡಲು ಹೇಳಿ ಧರ್ಮಪುತ್ರನು ಪತ್ನಿಸಮೇತ ಯಜಮಾನನಾಗಿ ಇದ್ದನು ಆಗ--
- ಕಂ|| ಚಾರುತರ ಯಜ್ಞವಿದ್ಯಾ
- ಪಾರಗರ ರವಗಳಿಂ ಸ್ವಧಾಕಾರ ವಷ|
- ಟ್ಕಾರ ಸ್ವಾಹಾಕಾರೋಂ
- ಕಾರ ಧ್ವನಿ ನೆಗಳಿ ನೆಗಳ್ದುದಾಹುತಿಧೂಮಂ ||೩೪||
- ಪದ್ಯ-೩೪:ಪದವಿಭಾಗ-ಅರ್ಥ:ಚಾರುತರ ಯಜ್ಞವಿದ್ಯಾಪಾರಗರ ರವಗಳಿಂ (ರಮಣೀಯ ಯಜ್ಞವಿದ್ಯಯ ಪರಿಣತರ ಧ್ವನಿಗಳಿಂದ) ಸ್ವಧಾಕಾರ ವಷಟ್ಕಾರ ಸ್ವಾಹಾಕಾರ ಓಂಕಾರ ಧ್ವನಿ ನೆಗಳಿ ನೆಗಳ್ದುದು ಆಹುತಿಧೂಮಂ (ಓಂಕಾರ ಧ್ವನಿ ಉಂಟಾಗಲು ಹವಿಸ್ಸಿನ ಹೊಗೆಯೂ ಉಂಟಾಯಿತು)
- :ಪದ್ಯ-೩೪:ಅರ್ಥ:ರಮಣೀಯ ಯಜ್ಞವಿದ್ಯಯ ಪರಿಣತರ ಧ್ವನಿಗಳಿಂದ, ಸ್ವಧಾಕಾರ ವಷಟ್ಕಾರ ಸ್ವಾಹಾಕಾರ ಓಂಕಾರ ಧ್ವನಿ ಉಂಟಾಗಲು ಹವಿಸ್ಸಿನ ಹೊಗೆಯೂ ಉಂಟಾಯಿತು)
- ಕಂ|| ಬಳಸೆಮುಗಿಲ್ಗಳ್ ಕನಕಾ
- ಚಳಮಂ ಬಳಸುವೊಳಿಕ್ಕಿದಾಹುತಿಗಳ ಗೊಂ|
- ದಳದಿ ನೊಡನೊಗೆಹ(ದ) ಪೊಗೆಗಳ್
- ಬಳಸಿದುವೆಡೆವಿಡದೆ ಕನಕಯೂಪಮನಾಗಳ||೩೫||
- ಪದ್ಯ-೩೫:ಪದವಿಭಾಗ-ಅರ್ಥ:ಬಳಸೆ ಮುಗಿಲ್ಗಳ್ ಕನಕಾಚಳಮಂ ಬಳಸುವೊಳ್ (ಕನಕಾಚಲವನ್ನು ಮೊಡಗಳು ಸುತ್ತುವಂತೆ) ಇಕ್ಕಿದ ಆಹುತಿಗಳ ಗೊಂದಳದಿಂ (ಹಾಕಿದ ಅಹುತಿಗಳ ಸಮೂಹದಿಂದ) ಒಡನೆ ಒಗೆಹ(ದ) (ಕೂಡಲೆ ಹುಟ್ಟಿದ) ಪೊಗೆಗಳ್ ಬಳಸಿದುವು ಎಡೆವಿಡದೆ ಕನಕಯೂಪಮನು ಆಗಳ‍್(ಹೊಗಗಳು ಯಾಗದ ಚಿನ್ನದ ಕಂಬವನ್ನು ಬಳಸಿದವು/ ಸುತ್ತುವರಿದವು)|
- :ಪದ್ಯ-೩೫:ಅರ್ಥ:ಕನಕಾಚಲವನ್ನು ಮೊಡಗಳು ಸುತ್ತುವಂತೆ ಹಾಕಿದ ಅಹುತಿಗಳ ಸಮೂಹದಿಂದ ಕೂಡಲೆ ಹುಟ್ಟಿದ ಹೊಗಗಳು ಯಾಗದ ಚಿನ್ನದ ಕಂಬವನ್ನು ಆಗ ಬಳಸಿದವು/ ಸುತ್ತುವರಿದವು.
- ಚಂ|| ಒಡನೆ ದಿಗಂತ ದಂತಿಗಳ ಕೋಡಮೊದಲ್ಗಳೊಳಯ್ದೆ ಪೊಕ್ಕು ಸಿ
- ಪ್ಪಡಸಿದ ಮಾಳ್ಕೆಯಾದವು ಕರಂಗಳಡಂಗಿ ಕಿಲುಂಬುಗೊಂಡಕ|
- ನ್ನಡಿಗೆಣೆಯಾಯ್ತು ಭಾನುವಳಯಂ ದಿವಿಜಾಪಗೆನೋಡೆ ಕೂಡೆ ಕ
- ರ್ಪದೆಣೆಯಾದುದಾ ಯಮುನೆಗಗ್ಗದ ಯಾಗದ ಧೂಮದೇಳ್ಗೆಯೊಳ್ ||೩೬||
- ಪದ್ಯ-೦೦:ಪದವಿಭಾಗ-ಅರ್ಥ:ಒಡನೆ ದಿಗಂತ ದಂತಿಗಳ ಕೋಡ ಮೊದಲ್ಗಳೊಳು ಎಯ್ದೆ (ಹೊಗೆಯು ಕೂಡಲೆ ದಿಕ್‍ದಂತಿಗಳ ಕೊಂಬಿನ ಬುಡಗಳಲ್ಲಿ ಹೊಕ್ಕು) ಪೊಕ್ಕು ಸಿಪ್ಪಡಸಿದ ಮಾಳ್ಕೆಯಾದವು (ಚಿಪ್ಪನ್ನು ತೊಡಿಸಿದ ಮಾಟವಾಯಿತು.) ಕರಂಗಳಡಂಗಿ ಕಿಲುಂಬುಗೊಂಡಕನ್ನಡಿಗೆಣೆಯಾಯ್ತು ಭಾನುವಳಯಂ (ಭಾನುವಲಯ/ ಸೂರ್ಯಬಿಂಬವು ಕಿರಣಗಳು ಅಡಗಿ ಕಿಲುಬು ಹತ್ತಿದ ಕನ್ನಡಿಯಂತೆ ಕಾಣಿಸಿತು.) ದಿವಿಜಾಪಗೆ ನೋಡೆ ಕೂಡೆ ಕರ್ಪಡರ್ದೆಣೆಯಾದುದು (ದೇವಲೋಕದಲ್ಲಿ ಹುಟ್ಟಿ ಬಿದ್ದ ಗಂಗಾನದಿ ಕೂಡಲೆ ನೋಡಿದರೆ ಕಪ್ಪುಬಣ್ನಗೊಂದಿ ಎಣೆಯಾದುದು-ಸಮಾನವಾಯಿತು) ಆ ಯಮುನೆಗೆ ಅಗ್ಗದ ಯಾಗದ ಧೂಮದ ಏಳ್ಗೆಯೊಳ್ (ಆ ಯಮುನೆಗೆ, ಶ್ರೇಷ್ಠವಾದ ಯಜ್ಞದ ಹೊಗೆಯ ಏಳುವಿಕೆಯಿಂದ)
- :ಪದ್ಯ-೦೦:ಅರ್ಥ:ಹೊಗೆಯು ಕೂಡಲೆ ದಿಕ್‍ದಂತಿಗಳ ಕೊಂಬಿನ ಬುಡಗಳಲ್ಲಿ ಹೊಕ್ಕು, ಅಲ್ಲಿ ಚಿಪ್ಪನ್ನು ತೊಡಿಸಿದ ಮಾಟವಾಯಿತು. ಭಾನುವಲಯ/ ಸೂರ್ಯಬಿಂಬವು ಕಿರಣಗಳು ಅಡಗಿ ಕಿಲುಬು ಹತ್ತಿದ ಕನ್ನಡಿಯಂತೆ ಕಾಣಿಸಿತು. ಶ್ರೇಷ್ಠವಾದ ಯಜ್ಞದ ಹೊಗೆಯ ಏಳುವಿಕೆಯಿಂದ, ದೇವಲೋಕದಲ್ಲಿ ಹುಟ್ಟಿ ಬಿದ್ದ ಗಂಗಾನದಿ ಕೂಡಲೆ ನೋಡಿದರೆ ಕಪ್ಪುಬಣ್ನಗೊಂದಿ ಆ ಯಮುನೆಗೆ, ಸಮಾನವಾಯಿತು.
- ಕಂ|| ಗಣನಾತೀತಾಜ್ಯಾಹುತಿ
- ಗಣದಿಂದಂ ತಣಿಯೆ ಜಾತವೇದನುಮಾ ಬ್ರಾ |
- ಹ್ಮಣ ಸಮಿತಿ ಬೇಳೆದೇವರ್
- ತಣಿಯುಂಡರ‍್ ನೆರೆದು ದಿವ್ಯಹವ್ಯಾಮೃತಮಂ|| ೩೭||
- ಪದ್ಯ-೩೭:ಪದವಿಭಾಗ-ಅರ್ಥ:ಗಣನಾತೀತ ಆಜ್ಯಾಹುತಿ (ಲೆಕ್ಕವಿಲ್ಲದಷ್ಟು ತುಪ್ಪದ ಆಹುತಿ) ಗಣದಿಂದಂ (ಸಮೂಹದಿಂದ ತಣಿಯೆ (ತೃಪ್ತಿ ಹೊಂದಲು) ಜಾತವೇದನುಂ (ಅಗ್ನಿಯೂ)ಆ ಬ್ರಾಹ್ಮಣ ಸಮಿತಿ (ಬ್ರಾಹ್ಂಣರ ಸಮೂಹ) ಬೇಳೆ (ಹವಿಸ್ಸನ್ನು ಹಾಕಲು) ದೇವರ್ ತಣಿಯುಂಡರ‍್ ನೆರೆದು ದಿವ್ಯಹವ್ಯಾಮೃತಮಂ(ದೇವತೆಗಳು ನರೆದು-ಸೇರಿ ದಿವ್ಯ ಹವಿಸ್ಸೆಂಬ ಅಮೃತವನ್ನು ತಣಿಯುಂಡರು ತಣಿಯುವಂತೆ- ತೃಪ್ತಿಯಾಗುವಂತೆ ಉಂಡರು.)
- :ಪದ್ಯ-೩೭:ಅರ್ಥ:ಲೆಕ್ಕವಿಲ್ಲದಷ್ಟು ತುಪ್ಪದ ಆಹುತಿ ಸಮೂಹದಿಂದ ತೃಪ್ತಿ ಹೊಂದಲು ಅಗ್ನಿಯು, ಆ ಬ್ರಾಹ್ಮಣರ ಸಮೂಹ) ಹವಿಸ್ಸನ್ನು ಹಾಕಲು,ನೆರೆದು ದೇವತೆಗಳು ಸೇರಿ ದಿವ್ಯ ಹವಿಸ್ಸೆಂಬ ಅಮೃತವನ್ನು ತೃಪ್ತಿಯಾಗುವಂತೆ ಉಂಡರು.
- ಮ||ತ್ರಿದಶೇಂದ್ರಂಗೆ ಯುಧಿಷ್ಟಿರಾಧ್ವರದ ಮಾಸಾಮರ್ಥ್ಯಮಂ ಸೂಳು ಸೂ
- ಳದೆ ಪೇಳಲ್ ಪರಿವಂತೆ ಪೊಣ್ಮೆ ಪಲವುಂ ಧೂಮಂಗಳಾ ಹೋಮ ಧೂ|\
- ಮದ ಗಂಧಂ ನಸು ಮುಟ್ಟೆ ದಿವ್ಯಮಖಮಂ ಕಯ್ಕೊಂಡು ಸಗ್ಗಕ್ಕೆ ಪಾ
- ರಿದುವಾ ಪಾರಿವ ಜಕ್ಕವಕ್ಕಿಳದೇಂ ಪೆಂಪೋ ಮಹಾ ಯಜ್ಞದಾ ||೩೮||
- ಪದ್ಯ-೩೮:ಪದವಿಭಾಗ-ಅರ್ಥ:ತ್ರಿದಶ ಇಂದ್ರಂಗೆ ಯುಧಿಷ್ಟಿರ ಅಧ್ವರದ ಮಾಸಾಮರ್ಥ್ಯಮಂ (ಮೂವತ್ತು ದೇವತೆಗಳ ಇಂದ್ರನಿಗೆ ಯುಧಿಷ್ಠಿರನು ಮಾಡಿದ ಯಜ್ಞದ ಮಹಾ ಸಾಹಸವನ್ನು) ಸೂಳು ಸೂಳದೆ ಪೇಳಲ್ (ಕ್ರಮ ಕ್ರಮವಾಗಿ ಹೇಳಲು) ಪರಿವಂತೆ (ಹೋಗುವ ಹಾಗೆ) ಪೊಣ್ಮೆ ಪಲವುಂ ಧೂಮಂಗಳು (ಹಲವು ಧೂಮಗಳು ಮೇಲಕ್ಕೇರಲು) ಆ ಹೋಮ ಧೂಮದ ಗಂಧಂ (ಆ ಹೋಮದ ಹೊಗೆಯ ಸುವಾಸನೆ) ನಸು ಮುಟ್ಟೆ (ಸ್ವಲ್ಪ ತಾಗಲು) ದಿವ್ಯಮಖಮಂ ಕಯ್ಕೊಂಡು (ಶ್ರೇಷ್ಠಯಜ್ಞದ ದೂಮವನ್ನು ಸೇವಿಸಿ) ಸಗ್ಗಕ್ಕೆ ಪಾರಿದುವು ಆ ಪಾರಿವ ಜಕ್ಕವಕ್ಕಿಳು (ಆಹಾರುವ ಚಕ್ರವಾಕ ಪಕ್ಷಿಗಳು ಸ್ವರ್ಗಕ್ಕೆ ಹಾರಿದವು.) ಅದೇಂ ಪೆಂಪೋ ಮಹಾ ಯಜ್ಞದಾ (ಆ ಮಹಾಯಜ್ಞದ ಪೆಂಪು- ಹಿರಿಮೆ ಅದೆಷ್ಟೋ!)
- :ಪದ್ಯ-೩೮:ಅರ್ಥ:ಮೂವತ್ತು ದೇವತೆಗಳ ಇಂದ್ರನಿಗೆ ಯುಧಿಷ್ಠಿರನು ಮಾಡಿದ ಯಜ್ಞದ ಮಹಾ ಸಾಹಸವನ್ನು ಕ್ರಮ ಕ್ರಮವಾಗಿ ಹೇಳಲು ಹೋಗುವ ಹಾಗೆ ಹಲವು ಧೂಮಗಳು ಮೇಲಕ್ಕೇ ಏರಿದವು. ಆ ಹೋಮದ ಹೊಗೆಯ ಸುವಾಸನೆ ಸ್ವಲ್ಪ ತಾಗಲು ಶ್ರೇಷ್ಠಯಜ್ಞದ ದೂಮವನ್ನು ಸೇವಿಸಿ ಆ ಹಾರುವ ಚಕ್ರವಾಕ ಪಕ್ಷಿಗಳು ಸ್ವರ್ಗಕ್ಕೆ ಹಾರಿ ಹೋದವು. ಆ ಮಹಾಯಜ್ಞದ ಪೆಂಪು- ಹಿರಿಮೆ ಅದೆಷ್ಟೋ!
- ವ||ಅಂತು ಪುರೋಡಾಶ ಪವಿತ್ರೋದರನುಂ ಸೋಮಪಾನ ಕಷಾಯಿತೋದುರನುಮಾಗಿ ಮೂವತ್ತೆರಡು ದಿವಸದೊಳ್ ಕ್ರತುವಣ ನಿರ್ವರ್ತಿಸಿ ಮಹಾದಾನಂಗೆಯ್ದು ದಕ್ಷಿಣಾಕಾಲದೊಳ್
- ವಚನ:ಪದವಿಭಾಗ-ಅರ್ಥ:ಅಂತು ಪುರೋಡಾಶ ಪವಿತ್ರೋದರನುಂ ಸೋಮಪಾನ ಕಷಾಯಿತೋದುರನುಮಾಗಿ ಮೂವತ್ತೆರಡು ದಿವಸದೊಳ್ ಕ್ರತುವಣ ನಿರ್ವರ್ತಿಸಿ ಮಹಾದಾನಂಗೆಯ್ದು ದಕ್ಷಿಣಾಕಾಲದೊಳ್
- :ವಚನ:ಅರ್ಥ:ಹೀಗೆ ಹೋಮ ಮಾಡಿ ಉಳಿದ ಹುರಿದ ಹಿಟ್ಟಿನ ಹವಿಸ್ಸು ಸೇವಿಸಿ ಪವಿತ್ರ ಹೊಟ್ಟೆಯುಳ್ಳವನೂ, ಸೋಮರಸ ಪಾನಕಷಾಯಕುಡಿದ ಉದುರವುಳ್ಳವನಾಗಿ, ಮೂವತ್ತೆರಡು ದಿವಸದಲ್ಲಿ ಯಾಗವನ್ನು ಮುಗಿಸಿ ಮಹಾದಾನಗಳನ್ನು ಮಾಡಿ ದಕ್ಷಿಣಾಎಯನ್ನು ಕೊಡವ ಕಾಲದಲ್ಲಿ-
- ಉ||ಒಟ್ಟಿದ ಪೊನ್ನ ಬೆಟ್ಟುಗಳನೀವೆಡೆಗೇವುದೊ ತೂಕಮೆನ್ನ ಕೆ
- ಯ್ಗಟ್ಟಳೆ ಕೊಳ್ಳಿಮೆಂದು ಕುಡೆ ಷೋಡಶ ಋತ್ವಿಜರ್ಗಿತ್ತುದರ್ಕೆ ಬಾ|
- ವಿಟ್ಟಿರೆ ವಿಪ್ರಕೋಟಿ ಮಡಗಲ್ಕೆಡೆಇಲ್ಲದೆ ಪೊನ್ನ ರಾಶಿಯಂ
- ಬಿಟ್ಟನೆ ಬಂದು ಕಾಯೆ ಯಮನಂದನನೇನ್ ತೊದಳಿಲ್ಲದಿತ್ತನೊ||೩೯||
- ಪದ್ಯ-೩೯:ಪದವಿಭಾಗ-ಅರ್ಥ:ಒಟ್ಟಿದ ಪೊನ್ನ ಬೆಟ್ಟುಗಳನು ಈವೆಡೆಗೆ (ರಾಶಿಹಾಕಿದ ಚಿನ್ನದಬೆಟ್ಟಗಳನ್ನು ಕೊಡುವಾಗ) ಏವುದೊ ತೂಕಮ್ (ತೂಕ ಏಕೆ), ಎನ್ನ ಕೆಯ್ಗಟ್ಟಳೆ (ನನ್ನ ಕಯ್ಯೇ ಕಟ್ಟಳೆ-ತೂಕ) ಕೊಳ್ಳಿಮೆಂದು ಕುಡೆ (ತೆಗೆದುಕೊಳ್ಳಿ ಎಂದು ಕೊಡಲು,) ಷೋಡಶ ಋತ್ವಿಜರ್ಗೆ ಇತ್ತುದರ್ಕೆ ಬಾವಿಟ್ಟಿರೆ ವಿಪ್ರಕೋಟಿ (ಹದಿನಾರು ಋತ್ವಿಕ್ಕುಗಳಿಗೆ ಕೊಟ್ಟಿದ್ದಕ್ಕೆ ಕೋತ್ಯಾಂತರ ಬ್ರಾಹ್ಮಣರು ಬಾವಿಟ್ಟಿರೆ- ಆಶ್ಚರ್ಯದಿಂದ ಬಾಯಿಬಿಟ್ಟು ನೋಡುತ್ತಿರಲು) ಮಡಗಲ್ಕೆಡೆಇಲ್ಲದೆ ಪೊನ್ನ ರಾಶಿಯಂ ಬಟ್ಟನೆ ಬಂದು ಕಾಯೆ (ಚಿನ್ನದ ರಾಶಿಯನ್ನು ಸುತ್ತುವರಿದು ಕಾಯಲು) ಯಮನಂದನನು ಏನ್ ತೊದಳಿಲ್ಲದೆ ಇತ್ತನೊ (ಧರ್ಮರಾಯನು ಏನು ವಂಚನೆ ಇಲ್ಲದೆ ದಾನಮಾಡಿದಲೋ! ದಾನಮಾಡಿದನು.)
- :ಪದ್ಯ-೩೯:ಅರ್ಥ:ರಾಶಿಹಾಕಿದ ಚಿನ್ನದಬೆಟ್ಟಗಳನ್ನು ಕೊಡುವಾಗ ತೂಕ ಏಕೆ, ನನ್ನ ಕಯ್ಯೇ ಕಟ್ಟಳೆ-ತೂಕ, ತೆಗೆದುಕೊಳ್ಳಿ ಎಂದು ಕೊಡಲು, ಹದಿನಾರು ಋತ್ವಿಕ್ಕುಗಳಿಗೆ ಕೊಟ್ಟಿದ್ದಕ್ಕೆ ಕೋತ್ಯಾಂತರ ಬ್ರಾಹ್ಮಣರು ಆಶ್ಚರ್ಯದಿಂದ ಬಾಯಿಬಿಟ್ಟು ನೋಡುತ್ತಿರಲು, ಚಿನ್ನದ ರಾಶಿಯನ್ನು ಸುತ್ತುವರಿದು ಕಾಯಲು, ಧರ್ಮರಾಯನು ಏನು ವಂಚನೆ ಇಲ್ಲದೆ ದಾನಮಾಡಿದಲೋ! ವಂಚನೆ ಇಲ್ಲದೆ ದಾನಮಾಡಿದನು.
- ಸ್ರ|ದಾನಾಂಭಃ ಪೀನ ಗಂಡಸ್ಥಳ ಕರಿನಿಕರಂ ಬಾಳ್ತಿಯೋ ಮೆಚ್ಚುವೇಳಾ
- ಜಾನೇಯಾ ಶ್ವೋತ್ಕರಂ ಬಾಳ್ತಿಯೊ ಮಣಿನಿಚಯಂ ಬಾಳ್ತಿಯೋ ಪೇಳಿಮೆಂದಾ |
- ದೀನಾನಾಥರ್ಗೆ ವೃದ್ಧ ದ್ವಿಜ ಮುನಿಕರಕ್ಕಂದಡರ್ ಪೋಪಿನಂ ಕಃ
- ಕೇನಾರ್ಥಿ ಕೋ ದರಿದ್ರಃ ಎನುತುಮನಿತುಮಂ ಧರ್ಮಜಂ ಸಳಿಗೊಟ್ಟೋ|| ೪೦||
- ಪದ್ಯ-೪೦:ಪದವಿಭಾಗ-ಅರ್ಥ:ದಾನಾಂಭಃ ಪೀನ ಗಂಡಸ್ಥಳ ಕರಿನಿಕರಂ (ಮದೋದಕವುಳ್ಲ ದೊಡ್ಡ ಗಂಡಸ್ಥಳವುಳ್ಳ ಆನೆಗಳ ಸಮೂಹ) ಬಾಳ್ತಿಯೋ ಮೆಚ್ಚುವೇಳ್ (ನಿಮಗೆ ಬಾಳ್ತಿಯೋ ಪ್ರಯೋಜನವೋ ಇಷ್ಟವೋ ಅದನ್ನು ಕೇಳು) ಆಜಾನೇಯಾ ಶ್ವೋತ್ಕರಂ ಬಾಳ್ತಿಯೊ (ಉತ್ತಮವಾದ ಕುದರೆ ಪ್ರಯೋಜನವೋ)ಮಣಿನಿಚಯಂ ಬಾಳ್ತಿಯೋ ಪೇಳಿಂ ಎಂದು (ರತ್ನರಾಶಿ ಪ್ರಯೋಜನವೋ ಹೇಳಿ ಎಂದು) ಆ ದೀನ ಅನಾಥರ್ಗೆ (ದೀನರಿಗೂ ಅನಾಥರಿಗೂ) ವೃದ್ಧ ದ್ವಿಜ ಮುನಿಕರಕ್ಕೆ ಅಂದು ಅಡರ್ ಪೋಪಿನಂ (ವೃದ್ಧರು ದ್ವಿಜರು ಮುನಿಕರಕ್ಕೆ ಅಂದು ಬಡತನವು ಹೋಗುತ್ತಿರಲು) ಕಃ ಕೇನಾರ್ಥಿ ಕೋ ದರಿದ್ರಃ (ಯಾರು ಏನನ್ನು ಬೇಡುವನು? ಯಾರು ಬಡವರು,) ಎನುತುಂ ಅನಿತುಮಂ ಧರ್ಮಜಂ ಸಳಿಗೊಟ್ಟೋ (ಎಂದು ಹೇಳುತ್ತಾ ಧರ್ಮಜನು ಅಷ್ಟನ್ನೂ ಸೂರೆಯಾಗಿ ಕೊಟ್ಟನು.)
- :ಪದ್ಯ-೪೦:ಅರ್ಥ:ಮದೋದಕವುಳ್ಲ ದೊಡ್ಡ ಗಂಡಸ್ಥಳವುಳ್ಳ ಆನೆಗಳ ಸಮೂಹ, ನಿಮಗೆ ಯಾವುದು ಪ್ರಯೋಜನವೋ ಇಷ್ಟವೋ ಅದನ್ನು ಕೇಳು, ಉತ್ತಮವಾದ ಕುದರೆ ಪ್ರಯೋಜನವೋ? ರತ್ನರಾಶಿ ಪ್ರಯೋಜನವೋ ಹೇಳಿ ಎಂದು, ಆ ದೀನರಿಗೂ ಅನಾಥರಿಗೂ, ವೃದ್ಧರು ದ್ವಿಜರು ಮುನಿಕರಕ್ಕೆ ಅಂದು ಬಡತನವು ಹೋಗುತ್ತಿರಲು, ಯಾರು ಬಡವರು, ಎಂದು ಹೇಳುತ್ತಾ ಧರ್ಮಜನು ಅಷ್ಟನ್ನೂ ಸೂರೆಯಾಗಿ ಕೊಟ್ಟನು.
- ವ||ಅಂತು ನಿಜ ಧವಳಚ್ಛತ್ರ ಚಾಮರ ಸಿಂಹಾಸನಾದಿ ರಾಜ ಚಿಹ್ನೆಗಳುಳಿಯೆ ಸರ್ವಸ್ವಮೆಲ್ಲಮಂ ದಕ್ಷಿಣೆಕೊಟ್ಟು ವ್ಯಾಸಗಾಂಗೇಯ ವಿದುರ ಬಾಹ್ಲೀಕಸೋಮದತ್ತ ಭಗದತ್ತ ಧರತರಾಷ್ಟ್ರ ದ್ರೋಣ ಅಶ್ವತ್ಥಾಮ ಕೃಪ ಕುಲವೃದ್ಧರುಮಂ ದುರ್ಯೋಧನ ದುಶ್ಶಾಸನ ಕರ್ಣ ಶಲ್ಯ ಶಕುನಿಗಳುಮನು ದಾನ ಸನ್ಮಾನಾದಿಗಳೊಳಂ ಸಂತಸಂಬಡಿಸಿಧರ್ಮಪುತ್ರಂ ಪೇಳಿಮೀಸಭೆಯೊಳಗ್ರ ಪೂಜೆಗಾರ್ ತಕ್ಕರೆನೆ ಗಾಂಗೇಯನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಅಂತು ನಿಜ ಧವಳಚ್ಛತ್ರ ಚಾಮರ ಸಿಂಹಾಸನಾದಿ ರಾಜ ಚಿಹ್ನೆಗಳು ಉಳಿಯೆ ಸರ್ವಸ್ವಮೆಲ್ಲಮಂ ದಕ್ಷಿಣೆಕೊಟ್ಟು ವ್ಯಾಸಗಾಂಗೇಯ ವಿದುರ ಬಾಹ್ಲೀಕಸೋಮದತ್ತ ಭಗದತ್ತ ಧರತರಾಷ್ಟ್ರ ದ್ರೋಣ ಅಶ್ವತ್ಥಾಮ ಕೃಪ ಕುಲವೃದ್ಧರುಮಂ ದುರ್ಯೋಧನ ದುಶ್ಶಾಸನ ಕರ್ಣ ಶಲ್ಯ ಶಕುನಿಗಳುಮನು ದಾನ ಸನ್ಮಾನಾದಿಗಳೊಳಂ ಸಂತಸಂಬಡಿಸಿ ಧರ್ಮಪುತ್ರಂ (ಹೀಗೆ ತನ್ನ ಶ್ವೇತಚ್ಛತ್ರ ಚಾಮರ ಸಿಂಹಾಸನ ಆದಿ ರಾಜ ಚಿಹ್ನೆಗಳು ಉಳಸಿಕೊಂಡು, ಸರ್ವಸ್ವಮೆಲ್ಲವನ್ನೂ ದಾನಕೊಟ್ಟು, ವ್ಯಾಸರು ಗಾಂಗೇಯ, ವಿದುರ, ಬಾಹ್ಲೀಕ,ಸೋಮದತ್ತ, ಭಗದತ್ತ, ಧರತರಾಷ್ಟ್ರ, ದ್ರೋಣ, ಅಶ್ವತ್ಥಾಮ, ಕೃಪ, ಕುಲವೃದ್ಧರನ್ನೂ, ದುರ್ಯೋಧನ, ದುಶ್ಶಾಸನ, ಕರ್ಣ, ಶಲ್ಯ, ಶಕುನಿಗಳನ್ನೂ, ದಾನ ಸನ್ಮಾನಾದಿಗಳಿಂದ, ಸಂತಸಪಡಿಸಿ, ಧರ್ಮಪುತ್ರನು) ಪೇಳಿಂ ಈ ಸಭೆಯೊಳು ಅಗ್ರ ಪೂಜೆಗೆ ಆರ್ ತಕ್ಕರು ಎನೆ (ಹೇಳಿ ಈಸಭೆಗೆ ಅಗ್ರ ಪೂಜೆಗೆ ಯಾರು ತಕ್ಕವರು ಎನ್ನಲು,) ಗಾಂಗೇಯನು ಇಂತೆಂದಂ(ಭೀಷ್ಮನು ಹೀಗೆಂದನು.) -
- :ವಚನ:ಅರ್ಥ:ಹೀಗೆ ಧರ್ಮರಾಯನು ತನ್ನ ಶ್ವೇತಚ್ಛತ್ರ ಚಾಮರ ಸಿಂಹಾಸನ ಆದಿ ರಾಜ ಚಿಹ್ನೆಗಳು ಉಳಸಿಕೊಂಡು, ಸರ್ವಸ್ವಮೆಲ್ಲವನ್ನೂ ದಾನಕೊಟ್ಟು, ವ್ಯಾಸರು ಗಾಂಗೇಯ, ವಿದುರ, ಬಾಹ್ಲೀಕ,ಸೋಮದತ್ತ, ಭಗದತ್ತ, ಧರತರಾಷ್ಟ್ರ, ದ್ರೋಣ, ಅಶ್ವತ್ಥಾಮ, ಕೃಪ, ಕುಲವೃದ್ಧರನ್ನೂ, ದುರ್ಯೋಧನ, ದುಶ್ಶಾಸನ, ಕರ್ಣ, ಶಲ್ಯ, ಶಕುನಿಗಳನ್ನೂ, ದಾನ ಸನ್ಮಾನಾದಿಗಳಿಂದ, ಸಂತಸಪಡಿಸಿ, ಧರ್ಮಪುತ್ರನು, ಹೇಳಿ ಈ ಸಭೆಗೆ ಅಗ್ರ ಪೂಜೆಗೆ ಯಾರು ತಕ್ಕವರು ಎನ್ನಲು-ಭೀಷ್ಮನು ಹೀಗೆಂದನು.
- ಮ||ಬಲಿಯಂ ಕಟ್ಟಿದನಾವನೀ ಧರಣಿಯಂ ವಿಕ್ರಾಂತದಿಂದ ರಸಾ
- ತಲದಿಂದೆತ್ತಿದನಾವನಂದು ನರಸಿಂಹಾಕಾರದಿಂ ದೈತ್ನನಂ |
- ಛಲದಿಂ ಸೀಳ್ದವನಾವನಬ್ಧಿಮಥನಪ್ರಾರಂಭದೊಳ್ ಮಂದರಾ
- ಚಲಮಂ ತಂದವನಾವನಾತನೆ ವಲಂ ತಕ್ಕ ಪೆರರ್ ತಕ್ಕರೇ|| ೪೧ ||
- ಪದ್ಯ-೪೧:ಪದವಿಭಾಗ-ಅರ್ಥ:ಬಲಿಯಂ ಕಟ್ಟಿದನು ಆವನು ಈ ಧರಣಿಯಂ ವಿಕ್ರಾಂತದಿಂದ ರಸಾತಲದಿಂದ ಎತ್ತಿದನು ಆವನು ಅಂದು ನರಸಿಂಹಾಕಾರದಿಂ ದೈತ್ನನಂ ಛಲದಿಂ ಸೀಳ್ದವನು ಆವನು ಅಬ್ಧಿಮಥನ ಪ್ರಾರಂಭದೊಳ್ ಮಂದರಾಚಲಮಂ ತಂದವನು ಆವನು ಆತನೆ ವಲಂ ತಕ್ಕ ಪೆರರ್ ತಕ್ಕರೇ
- :ಪದ್ಯ-೪೧:ಅರ್ಥ:ಬಲಿಯನ್ನು ಕಟ್ಟಿದವನು ಯಾವನು, ಈ ಭೂಮಿಯನ್ನು ವಿಕ್ರಾಂತದಿಂದ ರಸಾತಲದಿಂದ ಮೇಲೆ ಎತ್ತಿದವನು ಯಾವನು, ಅಂದು ನರಸಿಂಹರೂಪದಿಂದ ದೈತ್ನನನ್ನು ಛಲದಿಂದ ಸೀಳಿದವಮು ಯಾವನು,ಸಮುದ್ರಮಥನ ಪ್ರಾರಂಭದಲ್ಲಿ ಮಂದರಾಚಲವನ್ನು ತಂದವನು ಯಾವನು, ಆತನೆ ಶ್ರೀಕೃಷ್ಣನು ವಲಂ- ನಿಜವಾಗಿಯೂ ಅಗ್ರ ಪೂಜೆಗೆ ತಕ್ಕವನು. ಬೇರೆಯವರು ತಕ್ಕವರಾಗುವರೇ? ಇಲ್ಲ! ಎಂದನು ಭೀಷ್ಮ.
- ವ|| ಎಂದು ತನ್ನಮನದೊಳಚ್ಚೊತ್ತಿದಂತೆ ನುಡಿದ ಗಾಂಗೇಯನ ಮಾತಂ ಮನದೆಗೊಂಡು ಯಮನಂನಂದನನಾಂದಂಬೆರಸಂತೆಗೆಯ್ವನೆಂದು ಪುರುಷೋತ್ತಮಂಗರ್ಘ್ಯಮೆತ್ತಿದಾಗಳ್-
- ವಚನ:ಪದವಿಭಾಗ-ಅರ್ಥ:ಎಂದು ತನ್ನಮನದೊಳು ಅಚ್ಚೊತ್ತಿದಂತೆ ನುಡಿದ ಗಾಂಗೇಯನ ಮಾತಂ ಮನದೆಗೊಂಡು ಯಮನಂದನನು ಆನಂದಂಬೆರಸು ಅಂತೆ ಗೆಯ್ವನೆಂದು ಪುರುಷೋತ್ತಮಂಗೆ ಅರ್ಘ್ಯಮೆತ್ತಿದಾಗಳ್-
- :ವಚನ:ಅರ್ಥ:ಎಂದು ತನ್ನಮನಸಿನಲ್ಲಿ ಇದ್ದುದನ್ನೇ ಅಚ್ಚೊತ್ತಿದ ಹಾಗೆ ನುಡಿದ ಭೀಷ್ಮನ ಮಾತನ್ನು ಮನಪೂರ್ವಕವಾಗಿ ಧರ್ಮರಾಯನು ಆನಂದಹೊಂದಿ ಹಾಗೆಯೇ ಮಾಡುವೆನೆಂದು ಪುರುಷೋತ್ತಮನಿಗೆ ಅಗ್ರಪೂಜೆಗೆ ಕೂರಿಸಿ ಅರ್ಘ್ಯವನ್ನು ಎತ್ತಿಕೊಟ್ಟನು-
- ಕಂ|| ಮುಳಿದು ಶಿಶುಪಾಲನಾಸಭೆ
- ಯೊಳಗೆ ಮಹಾಪ್ರಳಯ ಜಳಧಿನಾದದಿನಿರದು |
- ಚ್ಚಳಿಸಿ ನಡಿದಂ ತೆ ಕಳೆ
- ಕಳೆ ಹರಿಗೆತ್ತಿದನರ್ಘ್ಯದರ್ಘ್ಯಮಂ ಧರ್ಮಸುತಾ||೪೨||
- ಪದ್ಯ-೪೨:ಪದವಿಭಾಗ-ಅರ್ಥ:ಮುಳಿದು ಶಿಶುಪಾಲನು ಆ ಸಭೆಯೊಳಗೆ ಮಹಾಪ್ರಳಯ ಜಳಧಿ ನಾದದಿಂ (ಕೊಪದಿಂದ ಶಿಶುಪಾನು, ಸಭಯಲ್ಲಿ ಪ್ರಳಯ ಸಮುದ್ರಘೋಷದ ಧ್ವನಿಯಿಂದ) ಇರದೆ ಉಚ್ಚಳಿಸಿ (ಸುಮ್ಮನೆ ಕೂರದೆ, ಹಾರಿ - ನೆಗೆದು- ಎದ್ದುನಿಂತು) ನಡಿದಂ,(ಹೇಳಿದನು) ತೆ (ಚಿಃ) ಕಳೆ ಕಳೆ (ತೆಗೆ ತೆಗೆ) ಹರಿಗೆತ್ತಿದ ಅನರ್ಘ್ಯದ ಅರ್ಘ್ಯಮಂ ಧರ್ಮಸುತಾ! (ಧರ್ಮರಾಜನೇ! ಕೃಷ್ಣನಿಗೆ ಎತ್ತಿದ ಅಮೋಘವಾದ ಅಗ್ರೋದಕವನ್ನು ಚಿಃ ತೆಗೆ ತೆಗೆ ಎಂದು ಕರ್ಕಶವಾಗಿ ನುಡಿದನು.)
- :ಪದ್ಯ-೪೨:ಅರ್ಥ:ಶಿಶುಪಾನು ಕೊಪದಿಂದ, ಆ ಸಭಯಲ್ಲಿ ಪ್ರಳಯಕಾಲದ ಸಮುದ್ರಘೋಷದ ಧ್ವನಿಯಿಂದ ಸುಮ್ಮನೆ ಕೂರದೆ, ನೆಗೆದು, ಎದ್ದುನಿಂತು, ಧರ್ಮರಾಜನೇ! ಕೃಷ್ಣನಿಗೆ ಎತ್ತಿದ ಅಮೋಘವಾದ ಅಗ್ರೋದಕವನ್ನು ಚಿಃ! ತೆಗೆ ತೆಗೆ! ಎಂದು ಕರ್ಕಶವಾಗಿ ನುಡಿದನು.
- ಕಂ|| ತೀವಿದ ನರೆಯುಂ ಡೊಳ್ಳುಂ
- ದೇವವ್ರತನೆನಿಸಿ ನೆಗಳ್ದ ಯಶಮುಂ ಬೆರಸಿ |
- ನ್ನೀವುದು ಹರಿಗರ್ಘ್ಯಮನೆಂ
- ದಾವನುಮೀ ಭೀಷ್ಮರಂತು ನುಡಿದರುಮೊಳರೇ|| ೪೩||
- ಪದ್ಯ-೦೦:ಪದವಿಭಾಗ-ಅರ್ಥ:ತೀವಿದ ನರೆಯುಂ (ತುಂಬಿದ ನೆರೆ ಕೂದಲು) ಡೊಳ್ಳುಂ ದೇವವ್ರತನು ಎನಿಸಿ (ಡೊಳ್ಳಹೊಟ್ಟೆಯ ದೇವವ್ರತನು ಎನಿಸಿಕೊಂಡು) ನೆಗಳ್ದ ಯಶಮುಂ ಬೆರಸಿ ಇನ್ನು ಈವುದು (ಹೆಸರು ಪಡೆದು ನೆಡೆದುಬಂದ ಕೀರ್ತಿಯನ್ನು ಪಡೆದೂ ಇನ್ನು-ಈಗ ಕೊಡುವುದು) ಹರಿಗರ್ಘ್ಯಮನು ಎಂದು (ಹರಿಗೆ ಅರ್ಘ್ಯವನ್ನು ಎಂದು) ಅವನುಂ (ಯಾವನಾದರೂ) ಈ ಭೀಷ್ಮರಂತು (ಈ ಭೀಷ್ಮರ ಹಾಗೆ ) ನುಡಿದರುಮೊಳರೇ (ಹೇಳಿದವರೂ ಇರವರೇ?)
- :ಪದ್ಯ-೦೦:ಅರ್ಥ: ತುಂಬಿದ ನೆರೆ ಕೂದಲು, ಡೊಳ್ಳಹೊಟ್ಟೆಯ ದೇವವ್ರತನು ಎನಿಸಿಕೊಂಡು, ಹೆಸರು ಪಡೆದ ನೆಡೆದು ಬಂದ ಕೀರ್ತಿಯನ್ನು ಪಡೆದೂ ಇನ್ನು-ಈಗ ಹರಿಗೆ ಅರ್ಘ್ಯವನ್ನು ಕೊಡುವುದು ಎಂದು ಯಾವನಾದರೂ ಈ ಭೀಷ್ಮರ ಹಾಗೆ ಹೇಳಿದವರೂ ಇರವರೇ)
- ಕಂ|| ಕುರುವೃದ್ಧಂ ಕುಲವೃದ್ಧಂ
- ಸರಿತ್ಸುತಂ ತಕ್ಕನೆಂದು ನಂಬಿದ ಸಭೆಯೊಳ್ |
- ದೊರೆಗೆಡಿಸಿ ನುಡಿದೊಡೇನೊಲ
- ವರಮೆನ್ನದೆ ನೀನುಮದನೆ ಕೊಂಡೆಸಗುವುದೇ ||೪೪||
- ಪದ್ಯ-೪೫:ಪದವಿಭಾಗ-ಅರ್ಥ:ಕುರುವೃದ್ಧಂ ಕುಲವೃದ್ಧಂ ಸರಿತ್ಸುತಂ(ಗಂಗೆಯ ಮಗ) ತಕ್ಕನೆಂದು (ಯೋಗ್ಯನೆಂದು) ನಂಬಿದ ಸಭೆಯೊಳ್ ದೊರೆಗೆಡಿಸಿ (ಗೌರವವನ್ನು ಕೆಡಿಸಿಕೊಂಡು) ನುಡಿದೊಡೆ ಏನು ಒಲವರಮೆನ್ನದೆ (ಹೇಳಿದರೆ, ಅದು ಪಕ್ಷಪಾತವೆಂದು ಎನ್ನಿಸುವುದಿಲ್ಲವೇ) ನೀನುಂ ಅದನೆ ಕೊಂಡು ಅಸಗುವುದೇ? (ಧರ್ಮಜನೇ ನೀನು ಭೀಷ್ಮನ ಮಾತನ್ನೇ ಒಪ್ಪಿ ಅದರಂತೆ ಮಾಡುವುದೇ?)
- :ಪದ್ಯ-೪೫:ಅರ್ಥ:ಕುರುಗಳಿಗೆಲ್ಲಾ ಹಿರಿಯನು, ಆ ಕುಲಕ್ಕೇ ಹಿರಿಯನು, ಪವಿತ್ರಗಂಗೆಯ ಮಗ, ಇವನು ಯೋಗ್ಯನೆಂದು ನಂಬಿದ ಸಭೆಯಲ್ಲಿ ಗೌರವವನ್ನು ಕೆಡಿಸಿಕೊಂಡು ಹೇಳಿದರೆ, ಅದು ಪಕ್ಷಪಾತವೆಂದು ಎನ್ನಿಸುವುದಿಲ್ಲವೇ? ಧರ್ಮಜನೇ ನೀನು ಭೀಷ್ಮನ ಮಾತನ್ನೇ ಒಪ್ಪಿ ಅದರಂತೆ ಮಾಡುವುದೇ? ಎಂದನು ಶೀಶುಪಾಲ.
- ಕಂ|| ಮನದೊಲವರಮುಳ್ಳೊಡೆ ಕುಡು
- ಮನೆಯೊಳ್ ಹರಿಗಗ್ರಪೂಜೆಯಂ ಯಜ್ಞದೊಳೀ |
- ಮನುಜಾಧೀಶ್ವರ ಸಭೆಯೊಳ್
- ನೆನೆಯಲುಮಾಗದು ದುರಾತ್ಮನಂ ಬೆಸಗೊಳ್ವಾ|| ೪೫||
- ಪದ್ಯ-೪೬:ಪದವಿಭಾಗ-ಅರ್ಥ:ಮನದೆ ಒಲವರಮುಳ್ಳೊಡೆ ಕುಡು ಮನೆಯೊಳ್ ಹರಿಗಗ್ರಪೂಜೆಯಂ (ಮನಸ್ಸಿನಲ್ಲಿ ಪಕ್ಷಪಾತವಿದ್ದರೆ ಮನೆಯಲ್ಲಿ ಹರಿಗೆ ಅಗ್ರಪೂಜೆಯನ್ನು ಕೊಡು!) ಯಜ್ಞದೊಳೀ ಮನುಜಾಧೀಶ್ವರ ಸಭೆಯೊಳ್ (ಯಜ್ಞದಲ್ಲಿ ಈ ನೆರೆದ ಮಹಾರಾಜರ ಸಭೆಯಲ್ಲಿ) ನೆನೆಯಲುಮಾಗದು ದುರಾತ್ಮನಂ (ದುರಾತ್ಮನಾದ ಕೃಷ್ನನನ್ನು ನೆನೆದುಕೊಳ್ಳುವುದಕ್ಕೆ ಕೂಡಾ ಆಗದು.) ಬೆಸಗೊಳ್ವಾ (ಅವನ ವಿಚಅರ ಕೇಳುತ್ತೀಯಾ?)
- :ಪದ್ಯ-೪೬:ಅರ್ಥ:ನಿನಗೆ ಮನಸ್ಸಿನಲ್ಲಿ ಪಕ್ಷಪಾತವಿದ್ದರೆ ಹರಿಗೆ ಅಗ್ರಪೂಜೆಯನ್ನು ನಿನ್ನ ಮನೆಯಲ್ಲಿ ಕೊಡು! ಯಜ್ಞದಲ್ಲಿ, ಈ ನೆರೆದ ಮಹಾರಾಜರ ಸಭೆಯಲ್ಲಿ, ದುರಾತ್ಮನಾದ ಕೃಷ್ನನನ್ನು ನೆನೆದುಕೊಳ್ಳುವುದಕ್ಕೆ ಕೂಡಾ ಆಗದು. ಅವನ ವಿಚಾರ ಕೇಳುತ್ತೀಯಾ?
- ಕಂ|| ಅಳವರಿಯದೆಗ್ಗು ಬಳವಳ
- ಬಳೆವಿನೆಗಂ ಪಚ್ಚ ಪಸಿಯ ತುರುಕಾರಂಗ |
- ಗ್ಗಳಿಯೆನೆ ಮಾಡಿ ನೀನುಂ
- ಪಳಿಯಂಕಟ್ಟಿದೆಯೊ ಭೂಪರಿನಿಬರ ಕೊರಲೊಳ್ ||೪೬||
- ಪದ್ಯ-೪೭:ಪದವಿಭಾಗ-ಅರ್ಥ:ಅಳವರಿಯದೆ ಎಗ್ಗು, ಬಳವಳ ಬಳೆವಿನೆಗಂ (ಪ್ರಮಾಣವನ್ನು ತಿಳಿಯದಷ್ಟು ದಡ್ಡತನವು, ಅತಿಶಯವಾಗಿ ಬೆಳೆಯುತ್ತಿರಲು) ಪಚ್ಚ ಪಸಿಯ ತುರುಕಾರಂಗೆ ಅಗ್ಗಳಿಯೆನೆ ಮಾಡಿ (ಹಚ್ಚಹಸಿ ದನಕಾಯುವವನಿಗೆ ಹಿರಿಮೆಯನ್ನು ಕೊಟ್ಟು) ನೀನುಂ ಪಳಿಯಂ (ಪಳಿ- ಹಳಿ-ನಿಂದಿಸು, ನಿಂದೆ) ಕಟ್ಟಿದೆಯೊ ಭೂಪರು ಅನಿಬರ ಕೊರಲೊಳ್ (ನೀನು ಈ ರಾಜಾಧಿರಾಜರೆಲ್ಲರ ಕೊರಳಲ್ಲಿ ಅವಮಾನ ಮತ್ತು ನಿಂದೆಯನ್ನು ಕಟ್ಟಿದಯಲ್ಲಾ!)
- :ಪದ್ಯ-೪೭:ಅರ್ಥ:ಪ್ರಮಾಣ ತಿಳಿಯದಷ್ಟು ದಡ್ಡತನವು ಅತಿವಾಗಿ ಬೆಳೆಯುತ್ತಿರಲು, ಹಚ್ಚಹಸಿ ದನಕಾಯುವವನಿಗೆ ಹಿರಿಮೆಯನ್ನು ಕೊಟ್ಟು, ನೀನು ಈ ರಾಜಾಧಿರಾಜರೆಲ್ಲರ ಕೊರಳಲ್ಲಿ ಅವಮಾನ ಮತ್ತು ನಿಂದೆಯನ್ನು ಕಟ್ಟಿದಯಲ್ಲಾ!
- ಕಂ||ದೇವರನಡಿಗೆರಗಿಸಿ ಸಕ
- ಲಾವನಿತಳದದಟರಂ ಪಡಲ್ವಡಿಸಿದ ಶೌ |
- ರ್ಯಾವಷ್ಟಂಬದೊಳಾನಿರೆ
- ಗೋವಳಿಗಂಗ್ರಪೂಜೆಯಂ ನೀನ್ ಕುಡುವಾ |4೭||
- ಪದ್ಯ-೪೭:ಪದವಿಭಾಗ-ಅರ್ಥ:ದೇವರನಡಿಗೆರಗಿಸಿ (ದೇವತೆಗಳನ್ನು ನನ್ನ ಪಾದಕ್ಕೆ ನಮಸ್ಕರಿಸುವಂತೆ ಮಾಡಿ) ಸಕಲಾವನಿತಳದ ಅದಟರಂ (ಸಕಲ ಭೂಮಂಡಲದ ಶೂರರನ್ನು) ಪಡಲ್ವಡಿಸಿದ (ಹೊಡೆದು ಉರುಳಿಸಿದ) ಶೌರ್ಯಾವಷ್ಟಂಬದೊಳು ಆನಿರೆ (ಪ್ರತಾಪದ ಹಿರಿಮೆಯಲ್ಲಿ ನಾನು ಇರುವಾಗ) ಗೋವಳಿಗಂಗೆ ಅಗ್ರಪೂಜೆಯಂ ನೀನ್ ಕುಡುವಾ (ಒಬ್ಬ ದನಕಾಯುವವನಿಗೆ ನೀನು ಅಗ್ರಪೂಜೆಯನ್ನು ಕೊಡಬಹುದೇ?)
- :ಪದ್ಯ-೪೭:ಅರ್ಥ:ಮತ್ತೂ ಹೇಳುತ್ತನೆ ಶಿಶುಪಾಲ: ದೇವತೆಗಳನ್ನು ನನ್ನ ಪಾದಕ್ಕೆ ನಮಿಸುವಂತೆ ಮಾಡಿ ಸಕಲ ಭೂಮಂಡಲದ ಶೂರರನ್ನು ಹೊಡೆದು ಉರುಳಿಸಿದ, ಪ್ರತಾಪದ ಹಿರಿಮೆಯಲ್ಲಿ ನಾನು ಇರುವಾಗ, ಒಬ್ಬ ದನಕಾಯುವವನಿಗೆ ನೀನು ಅಗ್ರಪೂಜೆಯನ್ನು ಕೊಡಬಹುದೇ?)
- ಕಂ|| ಸಮಕಟ್ಟರಿಯದೆ ಹರಿಗ
- ರ್ಘ್ಯಮೆತ್ತಿ ನಿಂದಿರ್ದ ಯಜ್ಞಮದು ಮೊದಲೊಳ ತಾ |
- ನಮರ್ದುಮಮರ್ದಿರದೆ ತಣಿಯುಂ
- ಡಮರ್ದ ಗೋಮೂತ್ರದಿಂದೆ ಬಾಯ್ವೂಸಿದವೋಲ್ ||೪೮||
- ಪದ್ಯ-:೪೮:ಪದವಿಭಾಗ-ಅರ್ಥ:ಸಮಕಟ್ಟರಿಯದೆ (ಸಮಕಟ್ಟನ್ನು-ಸರಿಯಾದ ವ್ಯವಸ್ಥಯನ್ನು ತಿಳಿಯದೆ) ಹರಿಗೆ ಅರ್ಘ್ಯಮೆತ್ತಿ ನಿಂದಿರ್ದ ಯಜ್ಞಮದು (ಕೃಷ್ನನಿಗೆ ಅಗ್ರಪೂಜೆಯ ಅರ್ಘ್ಯವನ್ನು ಕೊಟ್ಟಿರುವುದು) ಮೊದಲೊಳ್ ತಾನ್ ಅಮರ್ದುಂ (ಮೊದಲಲ್ಲಿ ತಾನು ಅಮದಿದರೂ -ಬಂದು) ಅಮರ್ದ ಇರದೆ ತಣಿಯುಂಡು (ತಡಮಾಡದೆ ಅಮೃತವನ್ನು ತೃಪ್ತಿಯಾಗುವಂತೆ ಊಟಮಾಡಿ) ಅಮರ್ದ ಗೋಮೂತ್ರದಿಂದೆ ಬಾಯ್ವೂಸಿದವೋಲ್ (ಆ ಅಮೃತವನ್ನು ಉಂಡ ಬಾಯನ್ನು ಗೋಮೂತ್ರದಿಂದ ಬಾಯಿಗೆ ಹಚ್ಚಿದಂತೆ/ ಮುಕ್ಕಳಿಸಿದಂತೆ ಆಯಿತು.)
- :ಪದ್ಯ-೪೮:ಅರ್ಥ: ಸರಿಯಾದ ವ್ಯವಸ್ಥಯನ್ನು ತಿಳಿಯದೆ ಕೃಷ್ನನಿಗೆ ಅಗ್ರಪೂಜೆಯ ಅರ್ಘ್ಯವನ್ನು ಕೊಟ್ಟಿರುವುದು, ಮೊದಲಲ್ಲಿ ತಾನು ಬಂದು ತಡಮಾಡದೆ ಅಮೃತವನ್ನು ತೃಪ್ತಿಯಾಗುವಂತೆ ಊಟಮಾಡಿ, ಆ ಅಮೃತವನ್ನು ಉಂಡ ಬಾಯನ್ನು ಗೋಮೂತ್ರದಿಂದ ಬಾಯಿಮುಕ್ಕಳಿಸಿದಂತೆ ಆಯಿತು.
- ಕಂ|| ಕುಡುವೇಳ್ವನ ಕುಡುವವನ ಕುಡೆ
- ಪಡೆವನ ಪೆಂಪೇಂ ನೆಗಳ್ತಿವಡೆಗುಮೊಪೇಳ್ವಿಂ |
- ಕುಡುವೇಳ್ಗಿಮ ಕುಡುವಣ್ಣಂ
- ಕುಡುಗುಮೆ ಕುಡೆ ಕೊಳ್ವ ಕಲಿಯನರಿಯಲಕ್ಕುಂ|| ೪೯|\
- ಪದ್ಯ-೪೯:ಪದವಿಭಾಗ-ಅರ್ಥ:ಕುಡುವೇಳ್ವನ ಕುಡುವವನ ಕುಡೆ ಪಡೆವನ ಪೆಂಪು ಏಂ (ಅಗ್ರಪೂಜೆಗೆ ಅರ್ಘ್ಯವನ್ನು ಕೊಡಲು ಹೇಳುವವನ, ಕೊಡುವವನ, ಅದನ್ನು ಪಡೆಯುವವನ ಹಿರಿಮೆ) ಏಂ ನೆಗಳ್ತಿವಡೆಗುಮೊ ಪೇಳ್ವಿಂ (ಏನು ಕೀರ್ತಿಯನ್ನು ಪಡೆಯುವುದೊ ಹೇಳುತ್ತೇನೆ;) ಕುಡುವೇಳ್ಗಿಮ ಕುಡುವಣ್ಣಂ ಕುಡುಗುಮೆ ಕುಡೆ ಕೊಳ್ವ ಕಲಿಯನು ಅರಿಯಲಕ್ಕುಂ (ಕೊಡುವಂತೆ ಹೇಳಲಿ, ಕೊಡುವ ಅಣ್ಣನು ಕೊಡಲಿ, ಹಾಗೆ ಕೊಡಲು ಅದನ್ನು ತೆಗೆದುಕೊಳ್ಳುವ ಶೂರನನ್ನು ಅರಯಬೇಕು/ ತಿಳಿದುಕೊಳ್ಳಬೇಕು-
- :ಪದ್ಯ-೪೯:ಅರ್ಥ:
- ವ||ಎಂದನಿತರೊಳ್ ಮಾಣದೆಗೀರ್ವಾಣಾರಿಯ ಸುರಾರಿಯನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಎಂದು ಅನಿತರೊಳ್ (ಅಷ್ಟಕ್ಕೇ) ಮಾಣದೆ (ಬಿಡದೆ) ಗೀರ್ವಾಣಾರಿಯ (ದೇವಶತ್ರುವಾದ ಶಿಶುಪಾಲನು) ಅಸುರಾರಿಯನು ಇಂತೆಂದಂ (ಕೃಷ್ಣನ್ನು ಕುರಿತು ಹೀಗೆ ಹೇಳಿದನು)-
- :ವಚನ:ಅರ್ಥ:ಎಂದು ಅಷ್ಟಕ್ಕೇ ಬಿಡದೆ ದೇವತೆಗಳಶತ್ರುವಾದ ಶಿಶುಪಾಲನು ಕೃಷ್ಣನ್ನು ಕುರಿತು ಹೀಗೆ ಹೇಳಿದನು-
- ಕಂ||ದೊರೆಯಕ್ಕಮೆ ನಿನಗೆ ಯುಧಿ
- ಷ್ಠಿರನರ್ಘ್ಯಮನೆತ್ತೆ ಶಂಕದೊಳ್ ಪಾಲೆರದಂ |
- ತಿರೆ ಮಲಿನಮಿಲ್ಲದೊಳ್ಗುಲ
- ದರಸುಗಳಿರೆ ನೀನುಮಗ್ರಪೂಜೆಯನಾಂಪಾ ||೫೦||
- ಪದ್ಯ-೫೦:ಪದವಿಭಾಗ-ಅರ್ಥ:ದೊರೆಯಕ್ಕಮೆ - ದೊರಕಿಸಿಕೊಳ್ಳುವ ಅಕ್ಕುಮೇ?(ಅರ್ಘ್ಯ ಕೊಟ್ಟರೆ, ನಿನಗೆ ತೆಗೆದುಕೊಳ್ಳುವ ಯೋಗ್ಯತೆಇದೆಯೇ? ಅಥವಾ ತೆಗೆದುಕೊಳ್ಳಬಹುಗೇ?) ನಿನಗೆ ಯುಧಿಷ್ಠಿರನು ಅರ್ಘ್ಯಮನು ಎತ್ತೆ ಶಂಕದೊಳ್ ಪಾಲೆರದಂತಿರೆ (ಶಂಖದಲ್ಲಿ ಹಾಲು ಎರದಂತೆ ಇರುವ ) ಮಲಿನಮಿಲ್ಲದ ಒಳ್ಗುಲದ ಅರಸುಗಳಿರೆ ನೀನುಂ ಅಗ್ರಪೂಜೆಯನಾಂಪಾ (ಮಲಿನವಿಲ್ಲದ ಪರಿಶುದ್ಧವಾದ ಅರಸುಗಳಿರುವಾಗ ನೀನು ಅಗ್ರಪೂಜೆಯನ್ನು ಸ್ವೀಕರಿಸಬಹುದೇ? ಎಂದರೆ ಧರ್ಮಜನಿಗೆ -'ನೊಡು ನನಗಿಂತ ಹಿರಿಯರು ಶ್ರೇಷ್ಠರು ಅಲ್ಲಿದ್ದಾರೆ ಅವರಿಗೆ ಕೊಡು ಎನ್ನಬೇಕಾಗಿತ್ತು ಎಂದು ಭಾವ.)
- :ಪದ್ಯ-೫೦:ಅರ್ಥ:ಧರ್ಮಜನು ಅರ್ಘ್ಯ ಕೊಟ್ಟರೆ, ನಿನಗೆ ತೆಗೆದುಕೊಳ್ಳುವ ಯೋಗ್ಯತೆಇದೆಯೇ? ಅಥವಾ ತೆಗೆದುಕೊಳ್ಳಬಹುಗೇ? ಶಂಖದಲ್ಲಿ ಹಾಲು ಎರದಂತೆ ಇರುವ ಮಲಿನವಿಲ್ಲದ ಪರಿಶುದ್ಧವಾದ ಕುಲದ ಅರಸುಗಳಿರುವಾಗ ನೀನು ಅಗ್ರಪೂಜೆಯನ್ನು ಸ್ವೀಕರಿಸಬಹುದೇ? ಎಂದರೆ ಧರ್ಮಜನಿಗೆ ಕೃಷ್ಣನು ಹೇಳಬೇಕಿತ್ತು--'ನೊಡು ನನಗಿಂತ ಹಿರಿಯರು ಶ್ರೇಷ್ಠರು ಅಲ್ಲಿದ್ದಾರೆ ಅವರಿಗೆ ಅರ್ಘ್ಯವನ್ನು ಕೊಡು ಎನ್ನಬೇಕಾಗಿತ್ತು ಎಂದು ಭಾವ.)
- ಕಂ|| ಮನದೊಲವರದಿಂದೀ ಯಮ
- ತನಯನ ಕುಡುವಗ್ರಪೂಜೆ ಮತ್ಸನ್ನಧಿಯೊಳ್ |
- ನಿನಗಸನಿಯ ಮಿಳ್ತುವ ನಂ
- ಜಿನ ದೊರೆಯೆಂದೊಣರ ನಂದಗೋಪಾಲಸುತಾ ||೫೧||
- ಪದ್ಯ-೫೧:ಪದವಿಭಾಗ-ಅರ್ಥ:ಮನದೊಲವರದಿಂದೀ ಯಮತನಯನ (ಮನಸ್ಸಿನಲ್ಲಿ ನಿನ್ನ ಮೇಲಿನ ಪಕ್ಷಪಾತದಿಂದ) ಕುಡುವಗ್ರಪೂಜೆ ಮತ್ಸನ್ನಧಿಯೊಳ್ (ನನ್ನ ಎದುರಿನಲ್ಲಿ ಕೊಡುವ ಅಗ್ರಪೂಜೆ) ನಿನಗೆ ಅಸನಿಯ ಮಿಳ್ತುವ (ನಿನಗೆ ಸಿಡಿಲುಹೊಡೆದ ಸಾವಿನ) ನಂಜಿನ (ವಿಷದ) ದೊರೆಯೆಂದ ಸಮಾನವೆಂದು-ಕೊಡುಗೆಯೆಂದು) ಒಣರ್ ನಂದಗೋಪಾಲಸುತಾ (ದನಕಾಯುವ ನಂದಗೋಪಾಲಸುತನೇ ಹಾಗೆ ಭಾವಿಸು)
- :ಪದ್ಯ-೫೧:ಅರ್ಥ:ದನಕಾಯುವ ನಂದಗೋಪಾಲಸುತನೇ ಮನಸ್ಸಿನಲ್ಲಿ ನಿನ್ನ ಮೇಲಿನ ಪಕ್ಷಪಾತದಿಂದ ನನ್ನ ಎದುರಿನಲ್ಲಿ ಕೊಡುವ ಈ ಅಗ್ರಪೂಜೆ ನಿನಗೆ ಸಿಡಿಲುಹೊಡೆದ ಸಾವಿನ, ವಿಷದ ಸಮಾನವೆಂದು-ಕೊಡುಗೆಯೆಂದು ಭಾವಿಸು.
- ಕಂ|| ಮನೆ ನಿನಗೆ ನಂದಗೋಪಾ
- ಲನ ಮನೆ ತುರುಗಾರ್ತಿ ನಿನಗೆ ಮನೆವೆಂಡತಿ ಪ |
- ಚ್ಚನೆ ಪಸಿಯ ಗೋವನೈ ಕರ
- ಮನರಿಯದೆ ನಿನ್ನಳವಿಗಳವನರಿಯದೆ ನೆಗಳ್ದೈ ||೫೨||
- ಪದ್ಯ-೫೨:ಪದವಿಭಾಗ-ಅರ್ಥ:ಮನೆ ನಿನಗೆ ನಂದಗೋಪಾಲನ ಮನೆ, ತುರುಗಾರ್ತಿ (ದನಕಾಯುವವಳು) ನಿನಗೆ ಮನೆವೆಂಡತಿ, ಪಚ್ಚನೆ ಪಸಿಯ ಗೋವನೈ ಕರಮನು ಅರಿಯದೆ ನಿನ್ನಳವಿಗೆ ಅಳವನು ಅರಿಯದೆ (ನಿನ್ನ ಯೋಗ್ಯತೆಯ ಸಾಮರ್ಥ್ಯವನ್ನು/ ಆಳವನ್ನು/ ಮಟ್ಟವನ್ನು ಅರಿಯದೆ ) ನೆಗಳ್ದೈ (ನೆಡೆದುಕೊಂಡಿರುವೆ.)
- :ಪದ್ಯ-೫೨:ಅರ್ಥ:ನಿನಗೆ ಮನೆ, ನಂದಗೋಪಾಲನ ಮನೆ; ಮನೆಯ ಹೆಂಡತಿ ದನಕಾಯುವವಳು; ಹಚ್ಚ ಹಸಿಯ ಗೋವಳನೇಸೈ ನೀನು; ನಿನ್ನ ಕರುಮನು ಕರ್ಮವಾದ ಗೊಲ್ಲತನವನ್ನು ಅರಿಯದೆ, ನಿನ್ನ ಯೋಗ್ಯತೆಯ ಮಟ್ಟವನ್ನು ಅರಿಯದೆ ನೆಡೆದುಕೊಂಡಿರುವೆ.
- ಕಂ|| ಮುರನಡಸಿ ಪಿಡಿದು ಕಟ್ಟಿದ
- ಪರಿಭವಮಂ ಮರೆದೆ ನಿನ್ನ ಪೆಡೆಗಯ್ಗಟ್ಟಂ |
- ಶರದಿಂ ಬಿಡಿಸಿದನಲ್ಲನೆ
- ಸರಿತ್ಸುತಂ ಬನ್ನವಿನ್ನವೆಂಬುಮೊಳವೇ ||೫೩||
- ಪದ್ಯ-೫೩:ಪದವಿಭಾಗ-ಅರ್ಥ:ಮುರನಡಸಿ ಪಿಡಿದು ಕಟ್ಟಿದ ಪರಿಭವಮಂ ಮರೆದೆ (ಮುರನೆಂಬ ರಾಕ್ಷಸನು ನಿನ್ನನ್ನು ಕಟ್ಟಿಹಾಕಿದ ಅವಮಾನವನ್ಉ ಮರತೆಯಲ್ಲಾ!) ನಿನ್ನ ಪೆಡೆಗಯ್ಗಟ್ಟಂ ಶರದಿಂ ಬಿಡಿಸಿದನಲ್ಲನೆ ಸರಿತ್ಸುತಂ (ನಿನ್ನ ಹಿಂಗಟ್ಟು ಮುರಿಯನ್ನು ಭೀಷ್ಮನು ಬಾಣದಿಂದ ಬಿಡಿಸಿದನಲ್ಲವೇ?) ಬನ್ನವಿನ್ನವೆಂಬುಮೊಳವೇ (ನಿನಗೆ ಬನ್ನವಿನ್ನ - ಭಂಗದ ನಾಚಿಕೆ ನರ್ಯಾದೆ ಇದೆಯೇ?)
- :ಪದ್ಯ-೫೩:ಅರ್ಥ:ಮುರನೆಂಬ ರಾಕ್ಷಸನು ನಿನ್ನನ್ನು ಕಟ್ಟಿಹಾಕಿದ ಅವಮಾನವನ್ಉ ಮರತೆಯಲ್ಲಾ! ನಿನ್ನ ಹಿಂಗಟ್ಟು ಮುರಿಯನ್ನು ಭೀಷ್ಮನು ಬಾಣದಿಂದ ಬಿಡಿಸಿದನಲ್ಲವೇ? ನಿನಗೆ ಮಾನ ನರ್ಯಾದೆ ಎಂಬುವು ಇವೆಯೇ? ಎಂದನು ಶಿಶುಪಾಲ.
- ಕಂ|| ದನುಜಾಂತಕನೆಂಬೀ ನಿ
- ನ್ನ ನಚ್ಚುವೋದಂಕಮೆಲವೊಮುನ್ನೆನ್ನನ್ನಂ |
- ದನುಜಂ ಪುಟ್ಟದೆ ಸಂದುದು
- ನಿನಗೀ ಪೆಸರೆನ್ನ ಮುಂದೆಯುಂ ಸಂದುಪುದೇ ||೫೪||
- ಪದ್ಯ-೫೪:ಪದವಿಭಾಗ-ಅರ್ಥ:ದನುಜಾಂತಕನೆಂಬ ಈ ನಿನ್ನ ನಚ್ಚುವೋದ ಅಂಕಂ (ನಂಬಿಗೆಯ/ ನೆಚ್ಚಿನ ಬಿರುದು) ಎಲವೊ ಮುನ್ನ ಎನ್ನನ್ನಂ ದನುಜಂ ಪುಟ್ಟದೆ ಸಂದುದು (ಎಲವೊ ನನ್ನಂಥ ದನಜನು ಮೊದಲು ಹುಟ್ಟದೆ ಆ ಹೆಸರು ನಿನಗೆ ಬಂದಿತು) ನಿನಗೆ ಈ ಪೆಸರು ಎನ್ನ ಮುಂದೆಯುಂ ಸಂದುಪುದೇ (ನಿನಗೆ ಈ ಹೆಸರು ನನ್ನ ಎದುರಿನಲ್ಲಿಯೂ ಸಲ್ಲವುದೇ?)
- :ಪದ್ಯ-೫೪:ಅರ್ಥ:ದನುಜಾಂತಕನೆಂಬ ಈ ನಿನ್ನ ನಂಬಿಗೆಯ ನೆಚ್ಚಿನ ಬಿರುದು, ಎಲವೊ! ನನ್ನಂಥ ದನಜನು ಮೊದಲು ಹುಟ್ಟದೆ ಆ ಹೆಸರು ನಿನಗೆ ಬಂದಿತು.ನಿನಗೆ ಈ ಹೆಸರು ನನ್ನ ಎದುರಿನಲ್ಲಿಯೂ ಸಲ್ಲವುದೇ?
- ಕಂ|| ಆನಿರ್ದ ಸಭೆಯೊಳರ್ಘ್ಯಮ
- ನಾನಲ್ಕಾಟಿಸಿದ ನಿನ್ನ ಬಿಸಿ ನೆತ್ತರನಿಂ |
- ತೀ ನೆರವಿ ನೊಡೆ ಕುಡಿಯದೊ
- ಡೇನೋ ಶಿಶುಪಾಲನೆಂಬ ಪೆಸರೆಸದಪುದೇ ||೫೫||
- ಪದ್ಯ-೫೫:ಪದವಿಭಾಗ-ಅರ್ಥ:ಆನಿರ್ದ ಸಭೆಯೊಳ್ ಅರ್ಘ್ಯಮನು ಆನಲ್ಕೆ ಆಟಿಸಿದ ನಿನ್ನ ಬಿಸಿ ನೆತ್ತರನು ಇಂತು ಈ ನೆರವಿ ನೊಡೆ ಕುಡಿಯದೊಡೆ ಏನೋ ಶಿಶುಪಾಲನೆಂಬ ಪೆಸರು ಎಸದಪುದೇ
- :ಪದ್ಯ-೫೫:ಅರ್ಥ:ನಾನಿರುವ ಸಭೆಯಲ್ಲಿ ಅಗ್ರಪುಜೆಯ ಅರ್ಘ್ಯವನು ಸ್ವೀಕರಿಸುವುದಕ್ಕೆ ಬಯಸಿದ ನಿನ್ನ ಬಿಸಿ ರಕ್ತವನ್ನು ಇಲ್ಲಿ ಈ ಸಭೆಯಜನರು ನೋಡುತ್ತಿರಲುಕುಡಿಯದೆ ಇದ್ದರೆ ಏನೋ ನನಗೆ ಶಿಶುಪಾಲನೆಂಬ ಹೆಸರು ಸಲ್ಲುವುದೇ? ಖಂಡಿತ ಇಲ್ಲ!
- ಕಂ|| ಮರಿದ ಮುಚುಕುಂದನೆಂಬನ
- ಮರೆವೊಕ್ಕುದನಂದು ನೀನ್ ಜರಾಸಂಧಂಗಂ |
- ಬಿರುತೋಡಿಮದಂ ಭೂತಳ
- ಮರಿಯದೆ ನೆನೆಯೆಲವೊ ಗೋವುಗಾದುದು ಪುಸಿಯೇ||೫೬||
- ಪದ್ಯ-೫೬:ಪದವಿಭಾಗ-ಅರ್ಥ: ಮರಿದ (ಮರೆತೆಯಾ) ಮುಚುಕುಂದನೆಂಬನ ಮರೆವೊಕ್ಕುದನು ಅಂದು (ಹಿಂದೆ), ನೀನ್ ಜರಾಸಂಧಂಗಂ ಬಿರುತು ಓಡಿಂ ಅದಂ ಭೂತಳಂ ಅರಿಯದೆ ನೆನೆ ಎಲವೊ ಗೋವುಗಾದುದು ಪುಸಿಯೇ
- :ಪದ್ಯ-೫೬:ಅರ್ಥ:ಹಿಂದೆ ಮುಚುಕುಂದನೆಂಬುವವನನ್ನು ಮರೆಹೊಕ್ಕುದನ್ನು ಮರೆತೆಯಾ? ನೀನು ಜರಾಸಂಧಂಗೆ ಹೆದರಿ ಓಡಿದುದನ್ನು ಲೋಕ ತೀಯದೇ? ದನಕಾದಿದ್ದು ಸುಳ್ಳೇ? ಎಲವೋ ನೆನಪು ಮಾಡಿಕೊ!
- ಕಂ|| ಮೀನಾವೆ ಪಂದಿಯೆಂದೆನಿ
- ತಾನುಂ ತೆರನಾಗಿ ಡೊಂಬವಿದ್ದೆಯನಾಡಲ್ |
- ನೀನರಿಯುವೆಯುರದಿದಿರ್ಚಿದೊ
- ಡಾನರಿವೆಂ ನಿನ್ನನಿಲ್ಲಿ ದೆಸೆವಲಿಗೈಯಲ್ || ೫೭||
- ಪದ್ಯ-೫೭:ಪದವಿಭಾಗ-ಅರ್ಥ:ಮೀನು ಆವೆ ಪಂದಿಯೆಂದು ಎನಿತಾನುಂ ತೆರನಾಗಿ (ಎಷ್ಟೋ ಬಗೆಯಾಗಿ) ಡೊಂಬವಿದ್ದೆಯನು ಆಡಲ್ ನೀನರಿಯುವೆ ಉರದೆ (ಇರದೆ) ಇದಿರ್ಚಿದೊಡೆ (ಎದುರಿಸಿದರೆ) ಆನರಿವೆಂ ನಿನ್ನನು ಇಲ್ಲಿ ದೆಸೆವಲಿಗೈಯಲ್ (ದೆಸೆಗೆ ಬಲಿಗಯ್ಯಲು- ದಿಗ್ಬಲಿಕೊಡಲು ಆನರಿವೆಂ -ನನಗೆ ಗೊತ್ತು)|
- :ಪದ್ಯ-೫೭:ಅರ್ಥ: ಮೀನು ಅವತಾರ ಮಾಡಿದೆ; ಹಂದಿಯಾದೆ ಹೀಗೆ ಮೊದಲಾದ ಎಷ್ಟೋ ಬಗೆಯಾಗಿಡೊಂಬರ ವಿದ್ಯೆನ್ನು ತೋರಿಸುವುದನ್ನು ನೀನು ತಿಳಿದಿದ್ದೀಯೆ. ಆದರೆ ಇರದೆ ಎದುರಿಸಿದರೆ, ನಿನ್ನನ್ನು ಇಲ್ಲಿ ದಿಗ್ಬಲಿಕೊಡಲು ನಾನು ಬಲ್ಲೆ.
- ಕಂ|| ಅರಿಯದಿದಂ ಮಾಡಿದೆನೆ
- ನ್ನರಿಯಮಿಕೆಗೆ ಸೈರಿಸೆಂದು ನೀನ್ ಸಭಯೊಳ್ ಕಾ |
- ಲ್ಗೆರಗೆರಗು ಕೊಲ್ಲೆನೆಂದೆರ್ದೆ
- ತರೆವಿನಗಂ ಹರಿಯ ನೆರನನಸುರಂ ನುಡಿದಂ|| ೫೮||
- ಪದ್ಯ-೫೮:ಪದವಿಭಾಗ-ಅರ್ಥ:ಅರಿಯದೆ ಇದಂ ಮಾಡಿದೆನು ಎನ್ನ ಅರಿಯಮಿಕೆಗೆ (ಅರಿಯದ ಇರುಮಿಕೆಗೆ; ತಿಳಿಗೇಡಿತನಕ್ಕೆ) ಸೈರಿಸೆಂದು (ಸಹಿಸು ಎಂದು) ನೀನ್ ಸಭಯೊಳ್ ಕಾಲ್ಗೆರಗು ಎರಗು ಕೊಲ್ಲೆನೆಂದು ಎರ್ದೆತರೆವಿನಗಂ (ಎದೆ ಬಿರಯುವಂತೆ) ಹರಿಯ ನೆರನನು (ಮರ್ಮಸ್ಥಳವನ್ನು) ಅಸುರಂ ನುಡಿದಂ
- :ಪದ್ಯ-೫೮:ಅರ್ಥ:ಅರಿಯದೆ/ ತಿಳುವಳಿಕೆ ಇಲ್ಲದೆ ಇದನ್ನು ಮಾಡಿದೆನು (ಅರ್ಘ್ಯವನ್ನು ಸ್ವೀಕರಿಸೆದೆನು); ನನ್ನ ತಿಳಿಗೇಡಿತನವನ್ನು ನೀವು ಸಹಿಸಿಕೊಳ್ಳಿ ಎಂದು ಈ ಸಭೆಯಲ್ಲಿ ನನ್ನ ಕಾಲಿಗೆ ಎರಗು ಎರಗು- ಬೀಳು ಬೀಳು, ಎಂದು ಎದೆಬಿರಯುವಂತೆ ಕೃಷ್ನನ ಮರ್ಮಸ್ಥಾನವನ್ನು ಅಸುರ ಶಿಶುಪಾನು ಚುಚ್ಚಿ ನುಡಿದನು.
- ವ|| ಅಂತು ನುಡಿದು ಕಾಯ್ಪಿನೊಳ್ ಪಿಡುಗಿ ನಡನಡ ನಡುಗಿ-
- ವಚನ:ಪದವಿಭಾಗ-ಅರ್ಥ:ಅಂತು ನುಡಿದು ಕಾಯ್ಪಿನೊಳ್ (ಕೋಪದಲ್ಲಿ) ಪಿಡುಗಿ (ಸಿಡಿಲ ಹಾಗೆ) ನಡನಡ ನಡುಗಿ-
- :ವಚನ:ಅರ್ಥ:ಹಾಗೆ ಹೇಳಿ, ಸಿಡಿಲ ಹಾಗೆ ಆರ್ಬಟಿಸಿ ಕೋಪದಿಂದ ನಡನಡ ನಡುಗಿ-
- ಕಂ|| ಪೊಳೆದುಳ್ಳುವ ಕುಡು ದಾಡೆಯ
- ಪೊಳಪು ನೊಸಲ್ಗಡರ್ದು ಪೊಡರ್ವ ಪುರ್ವೆಸವಿನಮ |
- ವ್ವಳಿಸುವ ಮುಳಿಸಿನ ದಳ್ಳುರಿ
- ಗಳನುಗುಳ್ವ ವೊಲುಗಳ್ದಿನಸುರನುರಿವ ಪಳಿಗಳಂ ||೫೯||
- ಪದ್ಯ-೫೯:ಪದವಿಭಾಗ-ಅರ್ಥ:ಪೊಳೆದುಳ್ಳುವ ಕುಡು ದಾಡೆಯಪೊಳಪು (ಹೊಳೆದು ಮಿಂಚುವ ಕೋರೆದಾಡೆಯ ಹೊಳಪು,) ನೊಸಲ್ಗಡರ್ದು ಪೊಡರ್ವ ಪುರ್ವು ಎಸವಿನಂ (ಹಣೆಗೆ ಏರಿ ನಡುಗುವ ಹುಬ್ಬು ಶೋಭಿಸುವಿಕೆ) ಅವ್ವಳಿಸುವ ಮುಳಿಸಿನ ದಳ್ಳುರಿಗಳನು ಉಗುಳ್ವವೊಲು (ಮೇಲೆಬೀಳುವ ಕೋಪದ ದಳ್ಳುರಿ- ಬೆಂಕಿಯನ್ನು ಕಾರುವಹಾಗೆ) ಉಗಳ್ದಂ ಅಸುರನು ಉರಿವ ಪಳಿಗಳಂ(ನಿಂದೆಗಳನ್ನು)(ಶಿಶುಪಾಲನು ಉರಿಯುತ್ತಿರುವಬೆಂಕಿಯಂತಿರುವ ನಿಂದೆಗಳನ್ನು ಬಾಯಿಯಿಂದ ಉಗುಳಿದನು)
- :ಪದ್ಯ-೫೯:ಅರ್ಥ:ಉಗ್ರ ಶಿಶುಪಾಲನ ವರ್ಣನೆ: ಹೊಳೆದು ಮಿಂಚುವ ಕೋರೆದಾಡೆಯ ಹೊಳಪು, ಹಣೆಗೆ ಏರಿ ನಡುಗುವ ಹುಬ್ಬು ಶೋಭಿಸುವಿಕೆ; ಮೇಲೆಬೀಳುವ ಕೋಪದ ದಳ್ಳುರಿ- ಬೆಂಕಿಯನ್ನು ಕಾರುವಹಾಗೆ, ಅಸುರ ಶಿಶುಪಾಲನು ಉರಿಯುತ್ತಿರುವಬೆಂಕಿಯಂತಿರುವ ನಿಂದೆಗಳನ್ನು ಬಾಯಿಯಿಂದ ಉಗುಳಿದನು.
- ವ|| ಆಗಳ್ ಸಭಾಸದರೆಲ್ಲಮೆವೆ ಮಿಡುಕದೆ ಪಂದೆಯಂ ಪಾವಡರ್ದವೊಲುಸಿರದಿರೆನಾರಾಯಣಂ ಶಿಶುಪಾಲನನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಆಗಳ್ ಸಭಾಸದರೆಲ್ಲಮ ಎವೆ ಮಿಡುಕದೆ ಪಂದೆಯಂ ಪಾವಡರ್ದವೊಲುಸಿರದಿರೆನಾರಾಯಣಂ ಶಿಶುಪಾಲನನಿಂತೆಂದಂ
- :ವಚನ:ಅರ್ಥ:ಆಗ ಸಭಾಸದರ ಎಲ್ಲಮಂ ಕಣ್ಣುರೆಪ್ಪೆ ಮಿಡುಕದೆ ಹೇಡಿಯನ್ನು ಹಾವು ಅಡರಿದಂತೆ ಉಸಿರದೆ ಸುಮ್ಮನಿರಲು, ಕೃಷ್ಣನು ಶಿಶುಪಾಲನಿಗೆ ಹೀಗೆ ಹೇಳಿದನು.
- ಕಂ||ನಿನ್ನಯ ತಾಯ್ ಸಾತ್ವತಿಯುಂ
- ನಿನ್ನ ತಂದೆನ್ನ ತೊಡೆಯಮೇಲಿಳಿಪುವುದಂ |
- ನಿನ್ನ ಲಲಾಟದ ಕಣ್ಣದು
- ಮುನ್ನಮೆ ಕಿಡೆ ನಿನ್ನ ಮೃತ್ಯುವೆನ್ನಕಯ್ಯೊಳ್ ||೬೦ ||
- ಪದ್ಯ-೬೦:ಪದವಿಭಾಗ-ಅರ್ಥ: ನಿನ್ನಯ ತಾಯ್ ಸಾತ್ವತಿಯುಂ (ನಿನ್ನ ತಾಯಿ ಸಾತ್ವತಿಯು) ನಿನ್ನ ತಂದು ಎನ್ನ ತೊಡೆಯಮೇಲೆ ಇಳಿಪುವುದಂ ನಿನ್ನ ಲಲಾಟದ ಕಣ್ಣು ಅದು ಮುನ್ನಮೆ ಕಿಡೆ (ಹಣೆಯ ಮೇಲಿದ್ದ ಕಣ್ಣು - ಅದು ಕೂಡಲೆ ಇಲ್ಲವಾಗಲು) ನಿನ್ನ ಮೃತ್ಯುವು ಎನ್ನಕಯ್ಯೊಳ್ (ನಿನ್ನ ಸಾವು ನನ್ನ ಕಯ್ಯಲ್ಲಿ ಎಂದು ತಿಳಿದಳು)
- :ಪದ್ಯ-೬೦:ಅರ್ಥ:-ಶಿಶುಪಾಲನೇ ನಿನ್ನ ತಾಯಿ ಸಾತ್ವತಿಯು ನಿನ್ನನ್ನು ತಂದು ನನ್ನ ತೊಡೆಯಮೇಲೆ ಇಡಲು, ನಿನ್ನ ಹಣೆಯ ಮೇಲಿದ್ದ ಕಣ್ಣು - ಅದು ಕೂಡಲೆ ಇಲ್ಲವಾಗಲು, ನಿನ್ನ ಸಾವು ನನ್ನ ಕಯ್ಯಲ್ಲಿ ಎಂದು ತಿಳಿದು, ಕೊಲ್ಲದಿರಲು ಬೇಡಿಕೊಂಡಳು.
- ಕಂ|| ನೆರೆದುದನರಿದೀ ಕಿರಿಯವ
- ನರಿಯದೆ ಕೆಡೆ ನುಡಿದನಪ್ಪೊಡಂ ನೂರುವರಂ |
- ನರೆ ಸಲಿಸುವುದೆಂದುದನಾಂ
- ಮರೆವೆನೆ ಬಯ್ ಬಯ್ ಸಲಿಸುವೆ ನೂರುವರಂ ||೬೧
- ಪದ್ಯ-೬೧:ಪದವಿಭಾಗ-ಅರ್ಥ:ನೆರೆದುದಂ (ತುಂಬಿದುದು- ಆಯುಷ್ಯವುತುಂಬಿ ತನ್ನಸಾವು ನನ್ನ ಕೈಯಲ್ಲಿ ಎಂಬುದನ್ನು) ಅರಿದು (ತಿಳಿದೂ) ಈ ಕಿರಿಯವನು ಅರಿಯದೆ (ಈ ಚಿಕ್ಕವನು ತಿಳಿಯದೆ) ಕೆಡೆ ನುಡಿದನಪ್ಪೊಡಂ (ಕೆಟ್ಟ ಮಾತನ್ನಾಡಿದರೂ) ನೂರುವರಂ ನರೆ (ಪೂರ್ತಿ) ಸಲಿಸುವುದು ಎಂದುದಂ ಆಂ ಮರೆವೆನೆ (ನೂರು ಬೈಗುಳು ಪೂರ್ತಿಯಾಗುವವರೆಗೂ ಕೊಲ್ಲದಿರುವ ಮಾತನ್ನು ಸಲ್ಲಿಸುವೆನು ಎಂದದು ನಿನ್ನತಾಯಿಗೆ ಮಾತುಕೊಟ್ಟಿರುವುದನ್ನು ಮರೆಯುವೆನೇ? ಇಲ್ಲ!) ಬಯ್ ಬಯ್ ಸಲಿಸುವೆ ನೂರುವರಂ (ನೂರು ಬೈಗುಳು ಆಗುವವರೆಗೂ ನನ್ನ ಮಾತನ್ನು ಸಲ್ಲಿಸುವೆನು ಎಂದನು ಕೃಷ್ಣ.)
- :ಪದ್ಯ-೬೧:ಅರ್ಥ: ಆಯುಷ್ಯವು ತುಂಬಿ ತನ್ನ ಸಾವು ನನ್ನ ಕೈಯಲ್ಲಿ ಎಂಬುದನ್ನು ತಿಳಿದೂ, ಈ ಚಿಕ್ಕವನು ತಿಳಿಯದೆ ಕೆಟ್ಟ ಮಾತನ್ನಾಡಿದರೂ, ನೂರು ಬೈಗುಳು ಪೂರ್ತಿಯಾಗುವವರೆಗೂ ಕೊಲ್ಲದಿರುವ ಮಾತನ್ನು ಸಲ್ಲಿಸುವೆನು ಎಂದು ನಿನ್ನ ತಾಯಿಗೆ (ಕೃಷ್ಣನ ಸೋದರತ್ತೆ) ಮಾತುಕೊಟ್ಟಿರುವುದನ್ನು ಮರೆಯುವೆನೇ? ಇಲ್ಲ! ನೂರು ಬೈಗುಳು ಆಗುವವರೆಗೂ ನನ್ನ ಮಾತನ್ನು ಸಲ್ಲಿಸುವೆನು ಎಂದನು ಕೃಷ್ಣ.
- (ಮೂಲ ಮಹಾಭಾರತದಲ್ಲಿ ಕ್ಷಮಾರ್ಹವಾದ ನೂರು ತಪ್ಪುಗಳನ್ನು ಇವನು ಮಾಡಿದರೂ ಇವನನ್ನು ಕೊಲ್ಲುವುದಿಲ್ಲ ಎಂದು ಕೃಷ್ಣನು ಶಿಸುಪಾಲನ ತಾಯಿಗೆ ಎಂದರೆ ತನ್ನ ತಂದೆ ವಸುದೇವನ ಮತ್ತು ಕುಂತಿಯ ತಂಗಿ ಶ್ರತಶ್ರವೆಗೆ/ ಸಾತ್ವತಿಗೆ ಮಾತುಕೊಟ್ಟಿರುತ್ತಾನೆ.)
- ಕಂ||ಮುನಿಯಲನೆಗಾಗ ಗಾಂಗೇ
- ಯನಿರ್ದನಿರ್ದಂ ಘಟೋದ್ಭವಂ ನೆಗಳ್ದ ಪೃಥಾ|
- ತನಯರುಮಿರ್ದರ್ ದುರ್ಯೋ
- ಧನನಿರ್ದಂ ಕೇಳೆ ಪೇಳ್ವರಾ ಬಲ್ಲವರುಂ||೬೨ ||
- ಪದ್ಯ-೬೨:ಪದವಿಭಾಗ-ಅರ್ಥ:ಮುನಿಯಲ್ ಎನೆಗೆ (ನನಗೆ ನೀನು ಸಿಟ್ಟುಮಾಡಬೇಡ) ಆಗ ಗಾಂಗೇಯನು ಇರ್ದಂ ಇರ್ದಂ ಘಟೋದ್ಭವಂ ನೆಗಳ್ದ ಪೃಥಾತನಯರುಂ (ಕುಂತಿಯ ಮಕ್ಕಳು) ಇರ್ದರ್ ದುರ್ಯೋಧನನು ಇರ್ದಂ ಕೇಳೆ (ಅವರನ್ನು ಕೇಳಿದರೆ) ಪೇಳ್ವರಾ ಬಲ್ಲವರುಂ (ತಿಳಿದ ಅವರು ಹೇಳುತ್ತಾರೆ)
- :ಪದ್ಯ-೬೨:ಅರ್ಥ:ನನ್ನಮೇಲೆ ನೀನು ಸಿಟ್ಟುಮಾಡಬೇಡ. ಆಗ ಗಾಂಗೇಯನು ಇದ್ದನು, ದ್ರೋಣನು ಇದ್ದನು, ಪ್ರಸಿದ್ಧ ಪಾಂಡವರು ಇದ್ದರು, ದುರ್ಯೋಧನನೂ ಇದ್ದನು, ಅವರನ್ನು ಕೇಳಿದರೆ ತಿಳಿದ ಅವರು ಹೇಳುತ್ತಾರೆ.
- ಎನೆಯೆನೆ ಬಾಯ್ಗೆಬಂದನಿ
- ತನಿತುಮನಮರಾರಿ ಬಯ್ಯೆ ಸೈರಿಸಿನೂರಿಂ |
- ಬನಿತುವರಂ ಮನ್ನಿಸಿ ನಸು
- ಕಿನಿಸದೆ ಮಿಗೆ ಕಿನಿಸಿ ದಿತಿಜಕುಳದವದಹನಂ ||೬೩ ||
- ಪದ್ಯ-೬೩:ಪದವಿಭಾಗ-ಅರ್ಥ:ಎನೆಯೆನೆ (ಹೇಳುಹೇಳುತ್ತಿದ್ದಂತೆ) ಬಾಯ್ಗೆಬಂದ ಅನಿತು ಅನಿತುಮನು (ಬಾಯಿಗೆ ಬಂದೆತೆಲ್ಲಾ ಮತ್ತೂ ಮತ್ತೂ) ಅಮರಾರಿ ಬಯ್ಯೆ (ರಾಕ್ಷಸನು ಬಯ್ಯಲು) ಸೈರಿಸಿ ನೂರಿಂ ಬನಿತುವರಂ ಮನ್ನಿಸಿ (ಸಹಿಸಿ ನೋರು ಬೈಗಳು ಆಗುವವರೆಗೂ ಮನ್ನಿಸಿ) ನಸುಕಿನಿಸದೆ (ಸ್ವಲ್ಪವು ಕೋಪಿಸದೆ) ಮಿಗೆ (ಬೈಗಳು ನೂರಕ್ಕೆ ಮಿಗಲು) ಕಿನಿಸಿ ದಿತಿಜಕುಳದವದಹನಂ(ದೈತ್ಯಕುಲದಹಿಸಿದ ಕೃಷ್ಣನು ಕೋಪಿಸಿ,)
- :ಪದ್ಯ-೬೩:ಅರ್ಥ:ಹೀಗೆ ಹೇಳುಹೇಳುತ್ತಿದ್ದಂತೆ ಬಾಯಿಗೆ ಬಂದೆತೆಲ್ಲಾ ಮತ್ತೂ ಮತ್ತೂ ರಾಕ್ಷಸನು ಬಯ್ಯಲು, ಸಹಿಸಿ, ನೋರು ಬೈಗಳು ಆಗುವವರೆಗೂ ಮನ್ನಿಸಿ ಸ್ವಲ್ಪವು ಕೋಪಿಸದೆ, ಬೈಗಳು ನೂರಕ್ಕೆ ಮಿಗಲು, ದೈತ್ಯಕುಲದಹಿಸಿದ ಕೃಷ್ಣನು ಕೋಪಿಸಿ)
- ಮುಳಿದು ತನಗರ್ಘ್ಯಮೆತ್ತಿದ
- ತಳಿಗೆಯೊಳಿಡೆತಿರಿದ ತೆರದೆ ತಲೆ ಪರಿದಾಗಳ್ |
- ಕಳಕಳಿಸಿ ನಗುತಮಿರ್ದುದು
- ತಳಿಗೆಯ ಮೇಲಸುರನದಟದೇನಚ್ಚರಿಯೊ ||೬೪||
- ಪದ್ಯ-೬೪:ಪದವಿಭಾಗ-ಅರ್ಥ:ಮುಳಿದು ತನಗೆ ಅರ್ಘ್ಯಮೆತ್ತಿದ ತಳಿಗೆಯೊಳು ಇಡೆತಿರಿದ ತೆರದೆ(ಸಿಟ್ಟಾಗಿ ತನಗೆ ಅರ್ಘ್ಯಕೊಟ್ಟ ಅಗಲದ ಹರಿವಾಣ ಅತವಾ ತಟ್ಟೆಯನ್ನು ಚಕ್ರದಂತೆ ತಿರುಗಿಸಿ ಹೊಡೆಯಲು) ತಲೆ ಪರಿದಾಗಳ್ (ಶಿಶುಪಾಲನ ತಲೆ ತುಂಡಾಗಿ) ಕಳಕಳಿಸಿ ನಗುತಮಿರ್ದುದು ತಳಿಗೆಯ ಮೇಲೆ (ಆ ತಟ್ಟೆಯ ಮೇಲೆ ಗಹಗಹಿಸಿ ನಗುತ್ತಿತ್ತು) ಅಸುರನ ಅದಟು ಅದೇನಚ್ಚರಿಯೊ (ಆ ಆ ಅಸುರನ ಶೌರ್ಯ ಅದೇನು ಅಶ್ಚರ್ಯವೋ!)
- :ಪದ್ಯ-೬೪:ಅರ್ಥ:ಕೃಷ್ಣನು ಸಿಟ್ಟಾಗಿ ತನಗೆ ಅರ್ಘ್ಯಕೊಟ್ಟ ಅಗಲದ ಹರಿವಾಣ ಅತವಾ ತಟ್ಟೆಯನ್ನು ಚಕ್ರದಂತೆ ತಿರುಗಿಸಿ ಹೊಡೆಯಲು ಶಿಶುಪಾಲನ ತಲೆ ತುಂಡಾಗಿ ಆ ತಟ್ಟೆಯ ಮೇಲೆ ಗಹಗಹಿಸಿ ನಗುತ್ತಿತ್ತು. ಆ ಅಸುರನ ಶೌರ್ಯ ಅದೇನು ಅಶ್ಚರ್ಯವೋ!
- ವ||ಅಂತು ಜವನರ್ಘ್ಯಮೆತ್ತಿದಂತಿರ್ದಶಿಶುಪಾಲನ ಶಿರೋಂಬುಜಮಂ ಕಂಡಳಲ್ದಾತನ ನಂಟರಪ್ಪಶ್ವಗ್ರೀವ ವಿದ್ಯನ್ಮಾಲಿನೀಲಾದಿಗಳಪ್ಪ ಪ್ರಭುಗಳನಿಬರಾನುಂ ಮುರಾಂತಕನಂ ಬಂದು ತಾಗಿದೊಡೆ-
- ವಚನ:ಪದವಿಭಾಗ-ಅರ್ಥ:ಅಂತು ಜವನ ಅರ್ಘ್ಯಮೆತ್ತಿದಂತೆ ಇರ್ದ ಶಿಶುಪಾಲನ ಶಿರೋಂಬುಜಮಂ(ರಕ್ತಸರಿಯುತ್ತಿರುವ ಯಮನ ಅರ್ಘ್ಯದಂತಿರುವ ಕಮಲದಂತಿರುವ ಶಿಶುಪಾಲನ ಶಿರವನ್ನು ನೊಡಿ) ಕಂಡು ಅಳಲ್ದಾತನ ನಂಟರಪ್ಪ (ದುಃಖಪಟ್ಟು ಅವನ ಬಂಧುಗಳಾದ)ಅಶ್ವಗ್ರೀವ ವಿದ್ಯನ್ಮಾಲಿ ನೀಲಾದಿಗಳಪ್ಪ ಪ್ರಭುಗಳು ಅನಿಬರಾನುಂ ಮುರಾಂತಕನಂ ಬಂದು ತಾಗಿದೊಡೆ
- :ವಚನ:ಅರ್ಥ:ರಕ್ತಸರಿಯುತ್ತಿರುವ ಯಮನ ಅರ್ಘ್ಯದಂತಿರುವ ಕಮಲದಂತಿರುವ ಶಿಶುಪಾಲನ ಶಿರವನ್ನು ನೊಡಿ ದುಃಖಪಟ್ಟು ಅವನ ಬಂಧುಗಳಾದ ಅಶ್ವಗ್ರೀವ, ವಿದ್ಯನ್ಮಾಲಿ, ನೀಲಾದಿ ರಾಜರುಗಳು ಅನಿಬರಾನುಂ ಕೃಷ್ಣನನ್ನು ಬಂದು ಎದುರಿಸಿದಾಗ-
- ಕಂ|| ತಿರುಪಿ ಕರಚಕ್ರಮಂ ದನು
- ಜರ ತಲೆಗಳನಸುರ ವೈರಿಮುಳಿದಿಡೆ ಪರಿದಂ |
- ಬರತಳಮನಯ್ದಿ ಮೇಘದ
- ಪೊರೆನೊರೆಯೊಳ್ ತೊಡರ್ದು ನೆಲಕೆ ಬೀಳವೆತಲೆಗಳ‍್ ||೬೫ ||
- ಪದ್ಯ-೬೫:ಪದವಿಭಾಗ-ಅರ್ಥ:ತಿರುಪಿ ಕರಚಕ್ರಮಂ ದನುಜರ ತಲೆಗಳನು ಅಸುರವೈರಿ ಮುಳಿದು ಇಡೆ (ಕೋಪಗೊಂಡು ಹೊಡೆಯಲು) ಪರಿದಂ (ಕತ್ತರಿಸಿದನು) ಅಂಬರತಳಮನು ಐಯ್ದಿ ಮೇಘದ ಪೊರೆನೊರೆಯೊಳ್ (ಮೋಡದ ಪದರ ಪದಗಳಲ್ಲಿ) ತೊಡರ್ದು (ಸಿಕ್ಕಿಕೊಂಡು)ನೆಲಕೆ ಬೀಳವೆ ತಲೆಗಳ್
- :ಪದ್ಯ-೬೫:ಅರ್ಥ:ತಿರುಪಿ ಕೈ ಚಕ್ರಮವನ್ನು ತಿರುಗಿಸಿ ದನುಜರ ತಲೆಗಳನ್ನು ಕೃಷ್ಣನು ಕೋಪಗೊಂಡು ಹೊಡೆದು ಕತ್ತರಿಸಿದನು. ಅವು ಆಕಾಶಕ್ಕೆ ಹೊಗಿ ಮೋಡದ ಪದರ ಪದಗಳಲ್ಲಿ ಸಿಕ್ಕಿಕೊಂಡು ಆ ತಲೆಗಳು ನೆಲಕ್ಕೆ ಬೀಳವೆ- ಬೀಳುವುದಿಲ್ಲವೇ? ಇಲ್ಲ.
- ವ||ಅನಿತೊಂದು ಮಹಾಪ್ರಘಟ್ಟದೊಳ್ ಅಗ್ರಪೂಜೆಯಂ ನಾರಾಯಣಮಗೆ ಕೊಟ್ಟವಭೃತಸ್ನಾನದೊಳ್ ಪಿರಿದುಮೊಸಗೆಯಂ ಮಾಡಿ ಯಾಗವಿಧಿಯಂ ನಿರ್ವರ್ತಿಸಿ ನರೆದ ರಾಜಕುಲಮೆಲ್ಲಮಂ ಪೂಜಿಸಿ ವಿಸರ್ಜಿಸಿದಾಗಳ್ ಮುರಾಂತಕನಂತಕನಂದನನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಅನಿತೊಂದು ಮಹಾಪ್ರಘಟ್ಟದೊಳ್ ಅಗ್ರಪೂಜೆಯಂ ನಾರಾಯಣಮಗೆ ಕೊಟ್ಟು ಅವಭೃತಸ್ನಾನದೊಳ್ ಪಿರಿದುಮೊಸಗೆಯಂ ಮಾಡಿ ಯಾಗವಿಧಿಯಂ ನಿರ್ವರ್ತಿಸಿ ನರೆದ ರಾಜಕುಲಮೆಲ್ಲಮಂ ಪೂಜಿಸಿ ವಿಸರ್ಜಿಸಿದಾಗಳ್ ಮುರಾಂತಕನು ಅಂತಕನಂದನನು ಇಂತೆಂದಂ-
- :ವಚನ:ಅರ್ಥ:ಅಷ್ಟೊಂದು ದೊಡ್ಡ ಕಾರ್ಯಕ್ರಮದಲ್ಲಿ ಅಗ್ರಪೂಜೆಯನ್ನು ಶ್ರೀಕೃಷ್ಣನಿಗೆ ಕೊಟ್ಟು ಅವಭೃತಸ್ನಾನದಡನೆ ದೊಡ್ಡ ಒಸಗೆಯನ್ನು ಮಾಡಿ ಯಾಗವಿಧಿಯನ್ನು ಮುಗಿಸಿ ನರೆದ ರಾಜಕುಲವೆಲ್ಲವನ್ನೂ ಪೂಜಿಸಿ ವಿಸರ್ಜಿಸಿದಾಗ, ಮುರಾಂತಕನಂತಕನಾದ ಕೃಷ್ಣನು ಧರ್ಮಜನಿಗೆ ಹೀಗೆ ಹೇಳಿದನು-
- ಮ||ಹಿಮ ಸೇತು ಪ್ರತಿಬದ್ಧ ಭೂವಳಯಮಂ ನಿಷ್ಕಂಟಕಂಮಾಡಿ ವಿ
- ಕ್ರಮ ತೋರಿ ನಿಜಾನುಜರ ನೆರಪಿದೊಂದೈಶ್ವರ್ಯದಿಂ ರಾಜಸೂ ||
- ಯಮನಿಂದಗ್ಗಳದಗ್ಗಳಿಕ್ಕೆಯ ಮಖಂ ತಾನೆಂಬಿನಂ ನಿನ್ನ ಕೀ
- ರ್ತಿ ಮುಖಂ ಕೀರ್ತಿ ಮುಖಮೆಂಬೊಲೇನೆಸುದುದೋ ದಿಗ್ದಂತಿ ದಂತಂಗಳೊಳ್ ||೬೬ ||
- ಪದ್ಯ-೦೦೬೬:ಪದವಿಭಾಗ-ಅರ್ಥ:ಹಿಮ ಸೇತು ಪ್ರತಿಬದ್ಧ ಭೂವಳಯಮಂ ನಿಷ್ಕಂಟಕಂಮಾಡಿ ವಿಕ್ರಮ ತೋರಿ ನಿಜ ಅನುಜರ (ತನ್ನಸೋದರರ) ನೆರಪಿದ ಒಂದೈಶ್ವರ್ಯದಿಂ ರಾಜಸೂ ಯಮನು ಇಂದಗ್ಗಳದಗ್ಗಳಿಕ್ಕೆಯ ಮಖಂ ತಾನೆಂಬಿನಂ ನಿನ್ನ ಕೀರ್ತಿ ಮುಖಂ ಕೀರ್ತಿ ಮುಖಮೆಂಬೊಲೇನೆಸುದುದೋ ದಿಗ್ದಂತಿ ದಂತಂಗಳೊಳ್
- :ಪದ್ಯ-೬೬:ಅರ್ಥ:ಹಿಮಾಲಯದಿಂದ ರಾಮಸೇತುವರೆಗೆ ಪ್ರತಿಷ್ಟಿತವಾದ ಭೂಮಂಡಲವನ್ನು ವಿರೋಧಿಗಳಿಲ್ಲದಂತೆಮಾಡಿ, ಶವರ್ಯವನ್ನು ತೋರಿಸಿ, ನಿನ್ನ ಸೋದರರು ತಂದು ಕೂಡಿದ ಐಶ್ವರ್ಯದಿಂದ ರಾಜಸುಯವನ್ನು ಇಂದು ವಿಶೇಷ ಶ್ರೇಷ್ಠತೆಯಿಂದಾದ ಯಜ್ಞವು ತಾನು ಎಂಬಂತೆ ಮಾಡಿ, ನಿನ್ನ ಕೀರ್ತಿ, ಕೀರ್ತಿಯೇ ಮುಖವು ಮುಖವೇ ಕೀರ್ತಿ ಎಂಬಂತೆ ಏನು ಶೋಭಿಸಿತೊ! ದಿಗ್ದಂತಿಗಳ ದಂತಗಳಲ್ಲಿಯ ಪ್ರಕಾಶದಂತೆ ಶೂಭಿಸಿತು. (ಎಂಟು ದಿಕ್ಕಿನಲ್ಲಿಯೂ ಬೆಟ್ಟದಷ್ಟು ದೊಡ್ಡ ಆನೆಗಳು ತಮ್ಮ ಮಹಾ ದಂತದ ಕೊಂಬುಗಳಿಂದ ಭೂಮಿಯನ್ನು ಎತ್ತಿಹಿಡಿದಿವೆ ಮಬ ನಂಬುಗೆ)
- ವ|| ಎಂದು ನುಡಿದ ಮಂದರಧರನಂ ನಿನ್ನುಗ್ರದೊಳದೇವಿರಿದೆಂದು ವಸ್ತು ವಾಹನಂಗಳನಿತ್ತು ದ್ವಾರಾವತಿಗೆ ಕಳಿಸಿ ಸುಖಸಂಕಥಾವಿನೋದಂಗಳೊಳ್ ರಾಜ್ಯಲಕ್ಷ್ಮಿಯನನು ಭವಿಸುತ್ತಿರ್ಪನ್ನೆಗಮತ್ತಂ-
- ವಚನ:ಪದವಿಭಾಗ-ಅರ್ಥ:ಎಂದು ನುಡಿದ ಮಂದರಧರನಂ ನಿನ್ನ ಅನುಗ್ರದೊಳು ಅದೇವಿರಿದು ಎಂದು ವಸ್ತು ವಾಹನಂಗಳನು ಇತ್ತು ದ್ವಾರಾವತಿಗೆ ಕಳಿಸಿ ಸುಖಸಂಕಥಾವಿನೋದಂಗಳೊಳ್ ರಾಜ್ಯಲಕ್ಷ್ಮಿಯನನುಭವಿಸುತ್ತಿರ್ಪನ್ನೆಗಮತ್ತಂ-
- :ವಚನ:ಅರ್ಥ:ಎಂದು ಹೇಳಿದ ಕೃಷ್ಣನನ್ನು ನಿನ್ನ ಅನುಗ್ರದಲ್ಲಿ ಅದೇನು ಹಿರಿದಲ್ಲ, ಎಂದು ವಸ್ತು ವಾಹನಂಗಳನ್ನು ಕೊಟ್ಟು ಅವನನ್ನು ದ್ವಾರಾವತಿಗೆ ಕಳಿಸಿ ಸುಖದಿಂದ,ಸಂಕಥಾ ವಿನೋದಂಗಳಲ್ಲಿ ರಾಜ್ಯಲಕ್ಷ್ಮಿಯನ್ನು ಅನಭವಿಸುತ್ತಿದ್ದನು ಎನ್ನುವಾಗ ಅತ್ತ ಹಸ್ತಿನಾವತಿಯಲ್ಲಿ-
- ಕಂ|| ಮೇಗಿಲ್ಲದ ಬಿಲ್ಲಾಳ್ತನ
- ದಾಗರಮೆನೆ ನೆಗಳ್ದ ತತ್ಪೃಥಾನಂದನರು \
- ದ್ಯೋಗದ ಚಾಗದ ಯಾಗದ
- ಭೋಗದ ಮೈಮೆಗೆ ಸುಯೋಧನಂ ಬೆರಗಾದಂ ||೬೭ ||
- ಪದ್ಯ-೬೭:ಪದವಿಭಾಗ-ಅರ್ಥ:ಮೇಗಿಲ್ಲದ (ಸರಿಸಾಟಿ ಇಲ್ಲದ) ಬಿಲ್ಲಾಳ್ತನದ ಆಗರಂ ಎನೆ (ಪರಾಕ್ರಮದ ಆಗರ ಎನ್ನುವಂತೆ) ನೆಗಳ್ದ (ಪ್ರಸಿದ್ಧ) ತತ್ ಪೃಥಾನಂದನರು ಆ ಪಾಂಡವರು) ಉದ್ಯೋಗದ ಚಾಗದ (ದಾನದ) ಯಾಗದ ಭೋಗದ (ಸುಖದ) ಮೈಮೆಗೆ (ಮಹಿಮೆಗೆ) ಸುಯೋಧನಂ ಬೆರಗಾದಂ |
- :ಪದ್ಯ-೬೭:ಅರ್ಥ:ಇತ್ತ ಕುಂತಿಯ ಮಕ್ಕಳು ಸುಖದಿಂದಿರಲು,ಅತ್ತ ಹಸ್ತಿನಾವತಿಯಲ್ಲಿ ಸರಿಸಾಟಿ ಇಲ್ಲದ ಪರಾಕ್ರಮದ ಆಗರ ಎನ್ನುವಂತೆ, ಪ್ರಸಿದ್ಧ ಆ ಪಾಂಡವರ ಯಜ್ಞಕಾರ್ಯದ, ದಾನದ, ಯಾಗದ, ಸುಖದ, ಮಹಿಮೆಗೆ ಸುಯೋಧನನು ಬೆರಗಾದನು.
- ವ|| ಆಗಿ ದುಶ್ಸಾಸನ ಕರ್ಣ ಶಕುನಿ ಸೈಂಧವರೆಂಬ ದುಷ್ಟಚತುಷ್ಟಯದೊಳ್ ಮಂತಣಮಿರ್ದು ದಾಯಿಗರಪ್ಪೊಡೆ ಕರಂ ಪೆರ್ಚಿದರವರ ಪೆರ್ಚಿಂಗೇಗಯ್ವಂ ಬಸನಗಳಂ ಸಮಕಟ್ಟುಮಪ್ಪಡೆ ಸಪ್ತವ್ಯಸನಂಗಳೊಳಯ್ವರುಮನೊಂದುಂ ಗೆಲ್ಲುವಲ್ಲವು ರಾಷ್ಟ್ರವ್ಯಸನಮಂ ಬಳವ್ಯಸನಮಂ ಪಾರ್ವಮಪ್ಪೊಡವು ಮುನ್ನಮಿಲ್ಲ ಪರಮಂಡಳವ್ಯಸನಮನಾರಯ್ವಮಪ್ಪೊಡಿತ್ತುಂ ತೆತ್ತುಂ ಬಾಳ್ವ ಮಂಡಳಮಲ್ಲದೆ ಕೀರಿಯುಂ ಮೀರಿಯುಂ ನೆಗಳ್ವ ಮಂಡಳಮಿಲ್ಲ, ಪುರುಷಮಂ ಸಮಕಟ್ಟುವಮಪ್ಪೊಡೆ ಪೊಕ್ಕಿರಿಯಲಣ್ಮುವರಿಲ್ಲ; ರಸದಾನಾದಿಗಳೊಳ್ ಛಿದ್ರಿಸುವಮಪ್ಪೊಡವರಾಪ್ತವಂತರು, ಬುದ್ಧಿವಂತರುಮಾಗಿ ನೆಗಳ್ದರಿನ್ನಾವ ಮಾಳ್ಕೆಯೊಳ್ ಬಗೆಯಂ ಕೆಯ್ಗೆ ಮಾಡುವಂ ಪೇಳಿಮೆನೆ ಶಕುನಿಯಿಂತೆಂದಂ-
- ವಚನ:ಪದವಿಭಾಗ-ಅರ್ಥ:ಆಗಿ ದುಶ್ಸಾಸನ ಕರ್ಣ ಶಕುನಿ ಸೈಂಧವರೆಂಬ ದುಷ್ಟಚತುಷ್ಟಯದೊಳ್ ಮಂತಣಮಿರ್ದು (ಆಲೋಚನೆ) ದಾಯಿಗರಪ್ಪೊಡೆ ಕರಂ ಪೆರ್ಚಿದರು (ದಾಯಾದಿಗಳಾದರೋ ಬಹಳ ಹೆಚ್ಚಿಕೊಂಡರು) ಅವರ ಪೆರ್ಚಿಂಗೇಗಯ್ವಂ (ಏಳಿಗೆಗೆ ಪ್ರತಿಯಾಗೆ ಏಣು ಮಾಡೋಣ?) ಬಸನಗಳಂ ಸಮಕಟ್ಟುಮಪ್ಪಡೆ ಸಪ್ತವ್ಯಸನಂಗಳೊಳು ಐಯ್ವರುಮನು ಒಂದುಂ ಗೆಲ್ಲುವಲ್ಲವು ( ವ್ಯಸನ ದುರಭ್ಯಾಸವನ್ನು ಹಚ್ಚೋಣವೆಂದರೆ ಅವು ಒಂದೂ ಇಲ್ಲ- ಗೆಲುವಿಗೆ ಅವಕಾಶವಿಲ್ಲ) ರಾಷ್ಟ್ರವ್ಯಸನಮಂ ಬಳವ್ಯಸನಮಂ ಪಾರ್ವಮಪ್ಪೊಡವು ಮುನ್ನಮಿಲ್ಲ (ರಾಜ್ಯವಿಸ್ತಾರದ ವ್ಯಸನ, ಸೈನ್ಯದ ಪಿತೂರಿ ಕಟ್ಟುವ ವ್ಯಸನ ಇವುಗಳನ್ನು ನೋಡಿದರೆ , ಅದು ಮೊದಲೇ ಇಲ್ಲ.) ಪರಮಂಡಳವ್ಯಸನಮನು ಆರಯ್ವಮಪ್ಪೊಡಿತ್ತುಂ ತೆತ್ತುಂ ಬಾಳ್ವ ಮಂಡಳಂ ಅಲ್ಲದೆ ಕೀರಿಯುಂ ಮೀರಿಯುಂ ನೆಗಳ್ವ ಮಂಡಳಮಿಲ್ಲ (ಪರಶತ್ರುಮಂಡಳವನ್ನು ಎತ್ತಕಟ್ಟೋಣವೆಂದರೆ, ಎಲ್ಲಾ ಕಪ್ಪ ಕೊಡುವವರು; ಅವರ ಮೇಲೆ ರೇಗುವ, ಅವರನ್ನು ಮೀರಿಸುವ ಸಾಮಂತರಿಲ್ಲ.), ಪುರುಷಮಂ ಸಮಕಟ್ಟುವಮಪ್ಪೊಡೆ ಪೊಕ್ಕಿರಿಯಲಣ್ಮುವರಿಲ್ಲ (ಪೌರಷದಿಂದ ಹೊಡೆಯೋಣವೆಂದರೆ ಹೊಕ್ಕು ಇರಿಯುವವರು ಇಲ್ಲ.); ರಸದಾನಾದಿಗಳೊಳ್ ಛಿದ್ರಿಸುವಮಪ್ಪೊಡವರಾಪ್ತವಂತರು (ವಿಷ ಕೆಟ್ಟ ದಾನಗಳಿಂದ ಬೀಧಿಸೋಣವೆಂದರೆ ಅವರು ಬುದ್ಧಿವಂತರು.), ಬುದ್ಧಿವಂತರುಮಾಗಿ ನೆಗಳ್ದರಿನ್ನಾವ ಮಾಳ್ಕೆಯೊಳ್ ಬಗೆಯಂ ಕೆಯ್ಗೆ ಮಾಡುವಂ ಪೇಳಿಮೆನೆ (ಹೀಗೆ ಬುದ್ಧಿವಂತರಾಗಿ ಹೆಚ್ಚಿದ ಅವರನ್ನು ಯಾವ ಕೃತಿಯಿಯಿಂದ ಅವರನ್ನು ನಮ್ಮ ಮುಷ್ಠಿಯೊಳಗೆ ಮಾಡುವ ದಾರಿ ಹೇಳಿ ಎಂದರು) ಶಕುನಿಯಿಂತೆಂದಂ- (ಆಗ ಶಕುನಿಯು ಹೀಗೆಂದನು)-
- :ವಚನ:ಅರ್ಥ:ರಾಜಸೂಯ ಯಾಗವನಂತರ ಕೌರವರು ಹಸ್ತಿನಾಪುರಕ್ಕ್ ಬಂದರು. ಅದಾಗಿ ದುಶ್ಸಾಸನ ಕರ್ಣ ಶಕುನಿ ಸೈಂಧವರು, ಈ ನಾಲ್ವರು ದುಷ್ಟಕೂಟದೊಳಗೆ ಮಂತ್ರಾಲೋಚನೆ ನೆಡೆದು ದಾಯಾದಿಗಳಾದರೋ ಬಹಳ ಹೆಚ್ಚಿಕೊಂಡರು, ಅವರ ಏಳಿಗೆಗೆ ಪ್ರತಿಯಾಗೆ ಏಣು ಮಾಡೋಣ?ವ್ಯಸನ ದುರಭ್ಯಾಸವನ್ನು ಹಚ್ಚೋಣವೆಂದರೆ ಅವು ಒಂದೂ ಇಲ್ಲ- ಗೆಲುವಿಗೆ ಅವಕಾಶವಿಲ್ಲ. ರಾಜ್ಯವಿಸ್ತಾರದ ವ್ಯಸನ, ಸೈನ್ಯದಲ್ಲಿ ಪಿತೂರಿ ಕಟ್ಟುವ ವ್ಯಸನ ಇವುಗಳನ್ನು ನೋಡಿದರೆ , ಅದು ಮೊದಲೇ ಇಲ್ಲ. ಪರಶತ್ರುಮಂಡಳವನ್ನು ಎತ್ತಕಟ್ಟೋಣವೆಂದರೆ, ಎಲ್ಲಾ ಕಪ್ಪ ಕೊಡುವವರು; ಅವರ ಮೇಲೆ ರೇಗುವ, ಅವರನ್ನು ಮೀರಿಸುವ ಸಾಮಂತರಿಲ್ಲ. ಪೌರಷದಿಂದ ಹೊಡೆಯೋಣವೆಂದರೆ ಹೊಕ್ಕು ಇರಿಯುವವರು ಇಲ್ಲ; ವಿಷ ಕೆಟ್ಟ ದಾನಗಳಿಂದ ಬೀಧಿಸೋಣವೆಂದರೆ ಅವರು ಬುದ್ಧಿವಂತರು. ಹೀಗೆ ಬುದ್ಧಿವಂತರಾಗಿ ಹೆಚ್ಚಿದ ಅವರನ್ನು ಯಾವ ಕೃತಿಯಿಯಿಂದ ಅವರನ್ನು ನಮ್ಮ ಮುಷ್ಠಿಯೊಳಗೆ ಮಾಡುವ ದಾರಿ ಹೇಳಿ ಎಂದರು, ಆಗ ಶಕುನಿಯು ಹೀಗೆಂದನು-
- ಚಂ|| ಬೆಸಸಿದ ಮಾತಿನಿತುಮಂತುಟೆ ಗೆಲ್ಲವು ಪಾಂಡು ಪುತ್ರರಂ
- ಬಸನದೊಡಂಬಡಂ ಮರೆದುಮಾ ಯಮನಂದನನಲ್ತೆ ನೆತ್ತದೊಳ್ |
- ಬಸನಿಗನಾತನಂ ಬರಿಸಿ ನೆತ್ತಮನಾಡಿಸಿ ಗೆಲ್ದುಕೊಳ್ವಮೀ
- ವಸುಮತಿಯಂ ಮನಂಬಸದೆ ನೀನ್ ಬಳಿಯಟ್ಟು ಫಣೀಂದ್ರಕೇತನಾ|| ೬೮ ||
- ಪದ್ಯ-೬೮:ಪದವಿಭಾಗ-ಅರ್ಥ:ಬೆಸಸಿದ ಮಾತು ಇನಿತುಂ ಅಂತುಟೆ ಗೆಲ್ಲವು ಪಾಂಡು ಪುತ್ರರಂ (ನೀವು ಹೇಳಿದ ಅಷ್ಟೂ ವಿಚಾರ ಅಂತೆಯೇ ಸರಿ. ಅವು ಪಾಂಡವರನ್ನು ಗೆಲ್ಲಲಾರವು) ಬಸನದ ಒಡಂಬಡಂ ಮರೆದುಂ ಆ ಯಮನಂದನನಲ್ತೆ ನೆತ್ತದೊಳ್ ಬಸನಿಗನು(ವ್ಯಸನದ ತಂತ್ರಪ್ರಯೋಗದ ಒಪ್ಪಿಗೆಯನ್ನು ಮರೆತರೂ, ಧರ್ಮರಾಯನು ಲೆತ್ತದಲ್ಲಿ/ ಪಗಡೆಯಾಟದಲ್ಲಿ ವ್ಯಸನಿಗನು/ ಆಸಕ್ತಿಯುಳ್ಳವನು) ಆತನಂ ಬರಿಸಿ ನೆತ್ತಮನಾಡಿಸಿ ಗೆಲ್ದುಕೊಳ್ವಂ ಈ ವಸುಮತಿಯಂ (ಅವನನ್ನು ಕರೆಸಿ ಪಗಡೆಯಾಟವಾಡಿಸಿ ಈ ಭೂಮಿಯನ್ನು ಗೆದ್ದುಕೊಳ್ಳೋಣ) ಮನಂಬಸದೆ ನೀನ್ ಬಳಿಯಟ್ಟು ಫಣೀಂದ್ರಕೇತನಾ (ಮನದಲ್ಲಿ ಬೇರೆ ವಿಚಾರ ಮಾಡದೆ ದೂತರನ್ನು ಕಳಿಸಿ ಅವನನ್ನು ಕರೆಸು)
- :ಪದ್ಯ-೬೮:ಅರ್ಥ:ನೀವು ಹೇಳಿದ ಅಷ್ಟೂ ವಿಚಾರ ಅಂತೆಯೇ ಸರಿ. ಅವು ಪಾಂಡವರನ್ನು ಗೆಲ್ಲಲಾರವು. ವ್ಯಸನದ ತಂತ್ರಪ್ರಯೋಗದ ಒಪ್ಪಿಗೆಯನ್ನು ಮರೆತರೂ, ಧರ್ಮರಾಯನು ಪಗಡೆಯಾಟದಲ್ಲಿ ಆಸಕ್ತಿಯುಳ್ಳವನು. ಅವನನ್ನು ಕರೆಸಿ ಪಗಡೆಯಾಟವಾಡಿಸಿ ಈ ಭೂಮಿಯನ್ನು ಗೆದ್ದುಕೊಳ್ಳೋಣ. ಮನದಲ್ಲಿ ಬೇರೆ ವಿಚಾರ ಮಾಡದೆ ದೂತರನ್ನು ಕಳಿಸಿ ಅವನನ್ನು ಕರೆಸು, ಎಂದನು ಶಕುನಿ.
- ವ|| ಎಂದು ನಾಳವಾಸಗೆಗಳಂ ಮುನ್ನಮೆ ಸಮಕಟ್ಟಿ ತಾಮುಮಾಮುಂ ಕೆಲವು ದೆವಸಂ ಗೋಷ್ಠಿಯೊಳಿರ್ಪಂ ಬರ್ಕೆಂದುಬಳಿಯನಟ್ಟಿದೊಡವರ ಮನದ ಪುಲ್ವಗೆಯಂ ಪೊಲ್ಲಮನರಿಯದೆ ಸಮಸ್ತ ಬಳೋದ್ಯುಕ್ತನಾಗಿ ಶಕುನಂಗಳಮ ಕ್ರಮದಿಂ ಬಗೆಯದೆ ನಿಯತಿಃ ಕೇನ ಲಂಘ್ಯತೇ ಎಂಬ ನುಡಿಯಂ ನನ್ನಿಮಾಡಿ ಮದಗಜೇಂದ್ರಪುರಮನೈದೆ ಬರೆ ಧೃತರಾಷ್ಟ್ರಾದಿ ಕುಲವೃದ್ಧರೊಡನೆ ದುರ್ಯೋಧನನಿದಿರ್ವೋಗಿ ಧರ್ಮಪುತ್ರಂಗೆ ಪೊಡಮಟ್ಟು ಭೀಮನಂ ಸಮಾನ ಪ್ರತಿಪತ್ತಿಯೊಳ ಕಂಡು ತನಗೆ ಪಡಮಟ್ಟ ಮತ್ತಿನ ಮೂವರುಮಂ ತೆಗೆದು ತಳ್ಕೈಸಿ ಪರಸಿ ತನ್ನತಂಮ್ಮಂದಿರುಮನಯ್ವವರ್ಗಂ ಪೊಡಮಡಿಸಿ ಪೊಳಲೊಳಗಣೆವಂದು ರಾಜಮಂದಿರಮಂಪೊಕ್ಕು-
- ವಚನ:ಪದವಿಭಾಗ-ಅರ್ಥ:ಎಂದು ನಾಳವಾಸಗೆಗಳಂ (ಕಳ್ಳದಾಲಗಳನ್ನು) ಮುನ್ನಮೆ ಸಮಕಟ್ಟಿ (ಮೊದಲೇ ತಯಾರಿಸಿ) ತಾಮುಂ ಆಮುಂ ಕೆಲವು ದೆವಸಂ ಗೋಷ್ಠಿಯೊಳಿರ್ಪಂ ಬರ್ಕೆಂದು ಬಳಿಯನಟ್ಟಿದೊಡೆ ಅವರ ಮನದ ಪುಲ್ವಗೆಯಂ (ಮನಸ್ಸಿನ ಒಳಹಗೆಯನ್ನು) ಪೊಲ್ಲಮನು ಅರಿಯದೆ (ಮೋಸವನ್ನು ತೀಲಿಯದೆ) ಸಮಸ್ತ ಬಳೋದ್ಯುಕ್ತನಾಗಿ (ಸಕಲ ಸೈನ್ಯ ಸಮೇತನಾಗಿ) ಶಕುನಂಗಳಮ ಕ್ರಮದಿಂ ಬಗೆಯದೆ ನಿಯತಿಃ ಕೇನ ಲಂಘ್ಯತೇ (ವಿಧಿಯನ್ನು ಮೀರುವವರಾರು) ಎಂಬ ನುಡಿಯಂ ನನ್ನಿಮಾಡಿ (ಸತ್ಯಮಾಡಿ) ಮದಗಜೇಂದ್ರಪುರಮನು ಐದೆ,ತಲುಪಲು, ಬರೆ ಧೃತರಾಷ್ಟ್ರಾದಿ ಕುಲವೃದ್ಧರೊಡನೆ ದುರ್ಯೋಧನನು ಇದಿರ್ವೋಗಿ (ಎದುರು ಹೋಗಿ) ಧರ್ಮಪುತ್ರಂಗೆ ಪೊಡಮಟ್ಟು (ನಮಿಸಿ) ಭೀಮನಂ ಸಮಾನ ಪ್ರತಿಪತ್ತಿಯೊಳ ಕಂಡು ತನಗೆ ಪಡಮಟ್ಟ ಮತ್ತಿನ ಮೂವರುಮಂ ತೆಗೆದು ತಳ್ಕೈಸಿ ಪರಸಿ ತನ್ನತಂಮ್ಮಂದಿರುಮನು ಅಯ್ವವರ್ಗಂ ಪೊಡಮಡಿಸಿ (ನಮಿಸುವಂತೆ ಮಾಡಿ) ಪೊಳಲೊಳಗಣೆವಂದು ರಾಜಮಂದಿರಮಂಪೊಕ್ಕು-
- :ವಚನ:ಅರ್ಥ:ಧರ್ಮರಾಜನನ್ನು ಕರೆಸು ಎಂದು ಶಕುನಿ, ಕಳ್ಳದಾಳಗಳನ್ನು) ಮೊದಲೇ ತಯಾರಿಸಿ) ತಾವೂ ನಾವೂ ಕೆಲವು ದಿವಸ ಗೋಷ್ಠಿಯಲ್ಲಿ ಇರೋಣವೆಂದು ಬರಬೇಕೆಂದು, ದೂತರನ್ನು ಕಳಿಸಿದಾಗ, ಅವರ ಮನಸ್ಸಿನ ಒಳಹಗೆಯನೂ, ಮೋಸವನ್ನು ತಿಳಿಯದೆ ಸಕಲ ಸೈನ್ಯ ಸಮೇತನಾಗಿ ಶಕುನಗಳನ್ನು ಕ್ರಮದಿಂದ ಗಮನಿಸದೆ 'ನಿಯತಿಃ ಕೇನ ಲಂಘ್ಯತೇ' - ವಿಧಿಯನ್ನು ಮೀರುವವರಾರು-ಎಂಬ ನುಡಿಯಂತ ಅದನ್ನು ಸತ್ಯಮಾಡಿ) ಹಸ್ತಿನಾವತಿಗೆ ಹೊರಟು ತಲುಪಲು, ಬಂದಾಗ ಧೃತರಾಷ್ಟ್ರಾದಿ ಕುಲವೃದ್ಧರೊಡನೆ ದುರ್ಯೋಧನನು ಎದುರು ಹೋಗಿ ಧರ್ಮಪುತ್ರನಿಗೆ ನಮಿಸಿ, ಭೀಮನನ್ನು ಸಮಾನ ಗೌರವದಿಂದ ಕಂಡು, ತನಗೆ ನಮಿಸಿದ ಉಳಿದ ಮೂವರು ಪಾಂಡವರನ್ನು ತೆಗೆದು ಆದರಿಸಿ, ಹರಸಿ, ತನ್ನ ತಂಮ್ಮಂದಿರನ್ನು ಐದುಜನ ಪಾಂಡವರಿಗೂ ನಮಿಸುವಂತೆ ಮಾಡಿ' ನಗರದೊಳಗೆ ಬಂದು, ರಾಜಮಂದಿರವನ್ನು ಹೊಕ್ಕು-
- ಉ||ನೋಡಿ ಪೃಥಾತನೂಜರ ಸಭಾಗೃಹದಂದಮನಂತುಟಪ್ಪುದಂ
- ಮಾಡಿಪೆನೆಂದು ಮಾಡಿಸಿ ಸಭಾಲಯಮಂ ನಿಜ ರಾಜ ಲೀಲೆಯೊಳ್ |
- ಕೂಡಿ ಯುಧಿಷ್ಠಿರ ಪ್ರಭುಗೆ ತಾನೆ ಸುಯೋಧನನುಯ್ದು ತೋರಿದಂ
- ನೋಡಿರೆ ಸಿಂಹ ಮಾಡುವರ ಬಾಲಮನಾಡಿದರೆಂಬ ಮಾಳ್ಕೆಯಂ ||೬೯ ||
- ಪದ್ಯ-೬೯:ಪದವಿಭಾಗ-ಅರ್ಥ:ನೋಡಿ ಪೃಥಾತನೂಜರ (ಪಾಂಡವರ) ಸಭಾಗೃಹದಂದಮನು ಅಂತುಟಪ್ಪುದಂ (ಹಾಗೆಯೇ ಇರುವುದನ್ನು)ಮಾಡಿಪೆನೆಂದು ಮಾಡಿಸಿ ಸಭಾಲಯಮಂ ನಿಜ ರಾಜ ಲೀಲೆಯೊಳ್ ಕೂಡಿ ಯುಧಿಷ್ಠಿರ ಪ್ರಭುಗೆ ತಾನೆ ಸುಯೋಧನನು ಉಯ್ದು (ಕರೆದುಕೊಂಡು ಹೋಗಿ) ತೋರಿದಂ, ನೋಡಿರೆ ಸಿಂಹ ಮಾಡುವರ ಬಾಲಮನಾಡಿದರೆಂಬ ಮಾಳ್ಕೆಯಂ (ಬಾವನ್ನು ಹಿಡಿದು ಕುಣಿದರು ಎಂಬಹಾಗೆ)
- :ಪದ್ಯ-೬೯:ಅರ್ಥ: ಪಾಂಡವರ ಸಭಾಗೃಹದ ಅಂದವನ್ನು ನೋಡಿ, ತಾನೂ ಹಾಗೆಯೇ ಇರುವುದನ್ನು ಮಾಡಿಸುವೆನೆಂದು ಮಾಡಿಸಿ, ಸಭಾಲಯವನ್ನು ತನ್ನ ರಾಜವೈಭವದಿಂದ ಕೂಡಿ ಯುಧಿಷ್ಠಿರ ಪ್ರಭುವಿಗೆ, ತಾನೆ ಸುಯೋಧನನು ಕರೆದುಕೊಂಡು ಹೋಗಿ ತನ್ನ ಸಭಾಮಂಟಪವನ್ನು ತೋರಿಸಿದನು, ನೋಡಿರೋ ಹೇಗಿದೆ ಎಂದನು; ಅದು 'ಸಿಂಹದವೇಷ ಮಾಡುವರ ಬಾಲವನ್ನು ಹಿಡಿದು ಕುಣಿದರು' ಎಂಬ ನೆಡೆಯನ್ನು ಎಂಬ ಹಾಗೆ ಇತ್ತು.
- ವ|| ಅಂತು ಸುಯೋಧನಂ ತನ್ನ ವಿಭವಮುಮಂ ವಿಳಾಸಮುಮಂ ಪಾಡವರ್ಗೆ ಮೆರೆದು ಕಂದುಕ ಕ್ರೀಡಾದಿ ನಾನಾ ವಿಧ ವಿನೋದಂಗಳಿಂ ಕೆಲವುದಿವಸಮನಿರ್ದೊಂದು ದಿವಸಂ ತನಗೆ ಸವಂ ಸಮಕಟ್ಟುವಂತೆ ಪಿಂಗಾಕ್ಷನಕ್ಷಕ್ರಿಡೆಯಂ ಶಕುನಿಯೊಳ್ ಸಮಕಟ್ಟಿ ಪೂಡಲ್ವೇಳ್ದು ಪುಸಿಯೆನೆ ಪೆರರಂ ಮುನ್ನಮಾಡಲ್ಕೇಳ್ದು ತಾನುಂ ಧರ್ಮಪುತ್ರನುಂ ಕೆಲದೊಳಿರ್ದು ನೋಡುತ್ತಿರೆ ಶಕುನಿಯಿಂತೆಂದಂ-
- ವಚನ:ಪದವಿಭಾಗ-ಅರ್ಥ:ಅಂತು ಸುಯೋಧನಂ ತನ್ನ ವಿಭವಮುಮಂ ವಿಳಾಸಮುಮಂ ಪಾಡವರ್ಗೆ ಮೆರೆದು ಕಂದುಕ ಕ್ರೀಡಾದಿ ನಾನಾ ವಿಧ ವಿನೋದಂಗಳಿಂ ಕೆಲವುದಿವಸಮನು ಇರ್ದೊಂದು ದಿವಸಂ ತನಗೆ ಸಾವಂ ಸಮಕಟ್ಟುವಂತೆ ಪಿಂಗಾಕ್ಷನು (ದರ್ಯೋಧನನು) ಅಕ್ಷಕ್ರಿಡೆಯಂ ಶಕುನಿಯೊಳ್ ಸಮಕಟ್ಟಿ ಪೂಡಲ್ವೇಳ್ದು (ಸರಿಯಾಗಿ ಹೋಡುವಂತೆ ಹೇಳಿ) ಪುಸಿಯೆನೆ (ಸುಳ್ಳೇ) ಪೆರರಂ ಮುನ್ನ ಮಾಡಲ್ಕೇಳ್ದು (ಬೇರೆಯವರಿಗೆ ಆಡಲು ಹೇಳಿ) ತಾನುಂ ಧರ್ಮಪುತ್ರನುಂ ಕೆಲದೊಳಿರ್ದು ನೋಡುತ್ತಿರೆ ಶಕುನಿಯಿಂತೆಂದಂ-
- :ವಚನ:ಅರ್ಥ:ಹಾಗೆ ಸುಯೋಧನನು ತನ್ನ ವೈಭವವನ್ನೂ ವಿಲಾಸವನ್ನೂ ಪಾಡವರಿಗೆ ದೊಡ್ಡದಾಗಿ ಪ್ರದರ್ಶಿಸಿ, ಎದು ಸೆಂಡು ಮೊದಲಾದ ಕ್ರೀಡೆ ಮತ್ತು ನಾನಾ ವಿಧ ವಿನೋದಗಳನ್ನು ಕೆಲವು ದಿವಸ ನೆಡಸಿ, ಒಂದು ದಿವಸಂ ತನಗೆ ಸಾವನ್ನು ತಂದುಕೊಳ್ಳುವಂತೆ, ದ ದುರ್ಯೋಧನನು ಅಕ್ಷಕ್ರಿಡೆಯನ್ನು ಅಥವಾ ಪಗಡೆಯಾಟವನ್ನು ಶಕುನಿಯ ಹತ್ತಿರ ಸಮಕಟ್ಟಾಗಿ ಹೂಡಲು ಹೇಳಿದನು, ಹುಸಿಯಾಟಾಡುವಂತೆ ಮೊದಲು ಬೇರೆಯವರಿಗೆ ಹೇಳಿ, ತಾನು-ದುರ್ಯೋಧನನೂ, ಧರ್ಮಪುತ್ರನೂ ಪಕ್ಕದಲ್ಲಿದ್ದು ನೋಡುತ್ತಿರಲು, ಶಕುನಿ ಹೀಗೆಂದನು-
- ಕಂ|| ನೋಡುವುದರೊಳೇನಳ್ತಿಯೊ
- ಳಾಡುತ್ತಿರಲಾಗ ತಮ್ಮುತಿರ್ವರುಮೆನೆ ನಾ |
- ಮಾಡುವಮೆ ಬನ್ನಿಮೆಂಬುದು
- ಮಾಡುವ ಬಗೆ ಬಂದು ನೆತ್ತಮಂ ಧರ್ಮಸುತಂ ||೭೦|
- ಪದ್ಯ-೦೦:ಪದವಿಭಾಗ-ಅರ್ಥ:ನೋಡುವುದರೊಳ್ ಏನ್ (ನೊಡುವುದರಲ್ಲಿ ಏನಿದೆ?) ಅಳ್ತಿಯೊಳ್ ಆಡುತ್ತಿರಲಾಗ? (ಪ್ರೀತಿಯಿಂದ ಆಡಬಾರದೆ?) ತಮ್ಮುತಿರ್ವರುಂ (ತಾವು ಇಬ್ಬರೂ) ಎನೆ (ಎನ್ನಲು) ನಾಮಾಡುವಮೆ (ನಾವಿಬ್ಬರೂ ಆಡೋಣವೇ) ಬನ್ನಿಮೆಂಬುದುಂ (ಬನ್ನಿ ಎಂದಾಗ) ಆಡುವ ಬಗೆ ಬಂದು ನೆತ್ತಮಂ ಧರ್ಮಸುತಂ (ಧರ್ಮಸುತನಿಗೆ ಆಡುವ ಅಸೆ ಬಂದು- ಬಂದಿತು)
- :ಪದ್ಯ-೦೦:ಅರ್ಥ:(ಶಕುನಿಯು) ನೊಡುವುದರಲ್ಲಿ ಏನಿದೆ? ಪ್ರೀತಿಯಿಂದ ತಾವು ಇಬ್ಬರೂ ಆಡಬಾರದೆ? ಎನ್ನಲು, ನಾವಿಬ್ಬರೂ ಆಡೋಣವೇ? ಬನ್ನಿ ಎಂದಾಗ, ಧರ್ಮಸುತನಿಗೆ ಆಡುವ ಅಸೆ ಬಂದು- ಬಂದಿತು.
- ಕಂ||ಕರೆದೊಡೆ ಜೂದಿಗಂ ಧುರ
- ಭರಕಾಖೇಟಕ್ಕೆ ಭೂಭುಜಂಗಾಗದದು ಮೆ|
- ಯ್ಗರದಿರಲೆಂಬ ಪುರಾತನ
- ಗುರುವಚನಂ ತನಗೆ ನಿಟ್ಟೆಪಟ್ಟುದರಿಂದಂ ||೭೧ ||
- ಪದ್ಯ-೭೧:ಪದವಿಭಾಗ-ಅರ್ಥ:ಕರೆದೊಡೆ ಜೂದಿಗಂ (ಜೂಜಿಗೆ) ಧುರಭರಕೆ ಆಖೇಟಕ್ಕೆ (ಬೇಟೆಗೂ)ಭೂಭುಜಂಗೆ ಆಗದು ಅದು ಮೆಯ್ಗರದಿರಲ್ (ಮೈಮರೆಸಿಕೊಂಡಿರುವುದು ಅದು ಆಗದು) ಎಂಬ ಬ ಪುರಾತನ ಗುರುವಚನಂ ತನಗೆ ನಿಟ್ಟೆಪಟ್ಟುದರಿಂದಂ (ನಿಶ್ಚವಾಗಿರುವುದರಿಂದ ಧರ್ಮಜನು ಆಡಲು ಒಪ್ಪಿದನು.)
- :ಪದ್ಯ-೭೧:ಅರ್ಥ:ಕರೆದಾಗ ಜೂಜಿಗೆ, ಯುದ್ಧಕ್ಕೆ ಬೇಟೆಗೂ ಮೈಮರೆಸಿಕೊಂಡಿರುವುದು-ಬೆಡವೆನ್ನುವುದು ಅದು ಆಗದು ಎಂಬ ಬ ಪುರಾತನ ಗುರುವಚನನಿದೆ. ಇದು ತನಗೆ ನಿಶ್ಚವಾಗಿರುವುದರಿಂದ ಧರ್ಮಜನು ಆಡಲು ಒಪ್ಪಿದನು.
- ವ||ಅಂತು ಪೂಡಿಕೊಂಡು ನಾಳವಾಸಗೆಯನಿಕ್ಕಲೇಳ್ವದುಂ ಶಕುನಿ ಮುನ್ನೆ ತನ್ನ ಮಾಡಿದ ನಾಳವಾಸಗಳನರಸಾಳಂತೆಕಣ್ಣರಿದು ಮೆಟ್ಟಿ ಮುರಿದಿಕ್ಕುವಾಗಳೊಡ್ಡಮಂ ಪೀಳಿಮೆನೆ, ಪೊಳ್ತಿಪೊಗಿಂಗಮಮಳ್ತಿಗಮಾಡುವತಮ್ಮುತಿರ್ವರುಂ ಪಲಗೆಗೆ ಸಾಸಿರ ಗದ್ಯಾಣದ ಪನ್ನೇ ಸಾಲ್ಗುಮಗ್ಗಳಂ ಬೇಡೆಂದು ದುರ್ಯೋಧನನೊಕ್ಕಲಂಪುಡಿಯೊಳ್ ಪೊರಳ್ಚುವಂತೆ ಪಾಸಂಗೆಯಂ ಪೊರಳ್ಚಿ ಮುನ್ನಂ ನೆತ್ತಮಮನರಿಯದನಂತವರ ದಾಯುಮನಾಡೆ ಮಡಿಮಡಿಗುರುವುದುಮೊಂದು ಪತ್ತೆಂಟು ಪಲಗೆಯಂ ಮೆಳ್ಪಡಿಸಲೆಂದು ಸೋಲ್ತು ಸೋಲದೊಳೇವಯಿಸಿ ಯಿನ್ನೊಡ್ಡಂ ಕೊಳ್ಳಿಮೆಂದು -
- ವಚನ:ಪದವಿಭಾಗ-ಅರ್ಥ:ಅಂತು ಪೂಡಿಕೊಂಡು ನಾಳವಾಸಗೆಯನು ಇಕ್ಕಲೇಳ್ವದುಂ (ಹಾಗೆ ಸಿದ್ಧಮಾಡಿಕೊಂಡು ಕಳ್ಳ ದಾಳಗಳನ್ನು ಹಾಕಲು ಹೇಳಲು) ಶಕುನಿ ಮುನ್ನೆ ತನ್ನ ಮಾಡಿದ ನಾಳವಾಸಗಳನು ಅರಸಾಳಂತೆ ಕಣ್ಣರಿದು ( ಅರಸಿನ ಆಳಿನಂತೆ ಕಣ್ಣಿನ ಸೂಚನೆ ತಿಳಿದು ಶಕುನಿ ಮೊದಲೇ ಮಾಡಿದ ಕಳ್ಳ ದಾಳಗಳನ್ನು) ಮೆಟ್ಟ ಮುರಿದಿಕ್ಕುವಾಗಳ್ ಒಡ್ಡಮಂ ಪೀಳಿಂ ಎನೆ (ಮಟ್ಟ ನೆಲದಲ್ಲಿ ತಿರುವಿದಾಳಹಾಕುವಾಗ ಒಡ್ಡು/ ಫಣನ್ನುಹೇಳಿ ಎನ್ನಲು), ಪೊಳ್ತಿಪೊಗಿಂಗಂ ಅಳ್ತಿಗಂ ಆಡುವ ತಮ್ಮುತ ಇರ್ವರುಂ ಪಲಗೆಗೆ ಸಾಸಿರ ಗದ್ಯಾಣದ ಪನ್ನೇ ಸಾಲ್ಗುಂ (ಹೊತ್ತು ಹೋಗಲೂ, ಸ್ನೇಹಕ್ಕೂ ಆಡುವ ಸಮ್ಮತದಿಂದ ಇಬ್ಬರೂ ಒಂದು ಸಲದ ಹಲಗೆ ಆಟಕ್ಕೆ ಸಾವಿರ ಗದ್ಯಾಣದ ಚಿನ್ನವೇ ಸಾಕು) ಅಗ್ಗಳಂ ಬೇಡೆಂದು (ಹೆಚ್ಚು ಬೇಡವೆಮದು) ದುರ್ಯೋಧನನು ಒಕ್ಕಲಂ ಪುಡಿಯೊಳ್ ಪೊರಳ್ಚುವಂತೆ ಪಾಸಂಗೆಯಂ ಪೊರಳ್ಚಿ (ದುರ್ಯೋಧನನು ತನ್ನ ಕುಲವನ್ನೇದೂಳಿನಲ್ಲಿ ಹೋರಳಿಸುವಂತೆದಾಳಗಳನ್ನು ಹೊರಳಿಸಿ,) ಮುನ್ನಂ ನೆತ್ತಮಮನು ಅರಿಯದನಂತೆ ಅವರ ದಾಯುಮನು ಆಡೆ (ಮೊದಲು ಪಗಡೆಯಾಟವನ್ನು ತಿಳಿಯದವನಂತೆ ಅದರ ಗರವನ್ನು ಹಾಕಲು) ಮಡಿಮಡಿಗೆ ಉರುವುದುಂ ಒಂದು ಪತ್ತೆಂಟು ಪಲಗೆಯಂ(ಬಾರಬಾರಿಗೆ ಉರುಳಿಸಿದ ಒಂದು ಹತ್ತೆಂಟು ಆಟವನ್ನು) ಮೆಳ್ಪಡಿಸಲೆಂದು ಸೋಲ್ತು (ಮರುಳುಪಡಿಸಲು?-ಮೋಸಮಾಡಬೇಕೆಂದು ಸೋತು) ಸೋಲದೊಳು ಏವಯಿಸಿ ಯಿನ್ನೊಡ್ಡಂ ಕೊಳ್ಳಿಮೆಂದು (ಸೋಲಿನಿಂದ ಬೇಸರಿಸಿ ಇನ್ನೊಂದು ಫಣವನ್ನು ತೆಗೆದುಕೊಳ್ಳಿರಿ ಎಂದನು ದುರ್ಯೋಧನ)-
- :ವಚನ:ಅರ್ಥ:ಹಾಗೆ ಪಗಡೆಹಲಗೆಯನ್ನು ಹೂಡಿಕೊಂಡು ಕಳ್ಳ ದಾಳಗಳನ್ನು ಹಾಕಲು ಹೇಳಲು ಶಕುನಿ ಮೊದಲು ತಾನು ಮಾಡಿದ ಅರಸಿನ ಆಳಿನಂತೆ ಕಣ್ಣಿನ ಸೂಚನೆ ತಿಳಿದು ಶಕುನಿ ಮೊದಲೇ ಮಾಡಿದ ಕಳ್ಳ ದಾಳಗಳನ್ನು ಮಟ್ಟ ನೆಲದಲ್ಲಿ ತಿರುವಿದಾಳಹಾಕುವಾಗ ಒಡ್ಡು/ ಫಣನ್ನುಹೇಳಿ ಎನ್ನಲು, ಹೊತ್ತು ಹೋಗಲೂ, ಸ್ನೇಹಕ್ಕೂ ಆಡುವ ಸಮ್ಮತದಿಂದ ಇಬ್ಬರೂ ಒಂದು ಸಲದ ಹಲಗೆ ಆಟಕ್ಕೆ ಸಾವಿರ ಗದ್ಯಾಣದ ಚಿನ್ನವೇ ಸಾಕು; ಹೆಚ್ಚು ಬೇಡವೆಮದು, ದುರ್ಯೋಧನನು ತನ್ನ ಕುಲವನ್ನೇದೂಳಿನಲ್ಲಿ ಹೋರಳಿಸುವಂತೆ ದಾಳಗಳನ್ನು ಹೊರಳಿಸಿ, ಮೊದಲು ಪಗಡೆಯಾಟವನ್ನು ತಿಳಿಯದವನಂತೆ ಅದರ ಗರವನ್ನು ಹಾಕಲು- ಹಾಕಿದನು., ಬಾರಬಾರಿಗೆ ಉರುಳಿಸಿದ ಒಂದು ಹತ್ತೆಂಟು ಆಟವನ್ನು ಮೋಸಮಾಡಬೇಕೆಂದು ಸೋತು, ಸೋಲಿನಿಂದ ಬೇಸರಿಸಿ ಇನ್ನೊಂದು ಫಣವನ್ನು ತೆಗೆದುಕೊಳ್ಳಿರಿ ಎಂದನು ದುರ್ಯೋಧನ-
- ಚಂ|| ಪಲಗೆಗೆ ಪತ್ತು ಸಾಯಿರಮೆ ಗದ್ಯಣಮೆಂದಿರದೊಡ್ಡಿ ತಾಮೆರ
- ಳ್ವಲಗೆಯನಾಡಿ ಸೋಲ್ತೊಡೆ ಸುಯೋಧನನೇವದೆಧರ್ಮಪುತ್ರನಂ |
- ಕುಲಧನ ಸಂಕುಲನಂಗಳನೆ ತಂದಿಡೆ ಇಟ್ಟವನಾಡಿ ಸೋಲ್ತನಾ
- ಕುಲಮತಿ ಮುಂದೆ ಭಾರತದೊಳೊಡ್ಡುವುದು ಕಡು ನನ್ನಿ ಮಾಳ್ಪವೋಲ್ || ೭೨||
- ಪದ್ಯ-೦೦:ಪದವಿಭಾಗ-ಅರ್ಥ:ಪಲಗೆಗೆ ಪತ್ತು ಸಾಯಿರಮೆ ಗದ್ಯಣಮೆಂದು ಇರದೊಡ್ಡಿ ತಾಮ್ ಎರಳ್ವಲಗೆಯನು ಆಡಿ ಸೋಲ್ತೊಡೆ ಸುಯೋಧನನು ಏವದೆ (ಬೇಸರದಿಂದ) ಧರ್ಮಪುತ್ರನಂ (ಧರ್ಮರಾಯನೂ ನಿಯಮದಂತೆ ಅಷ್ಠ ಪಣವೊಡ್ಡಿ) ಕುಲಧನ ಸಂಕುಲನಂಗಳನೆ ತಂದಿಡೆ ಇಟ್ಟು ಅವಂ ಆಡಿ ಸೋಲ್ತನು ಆಕುಲಮತಿ (ಧರ್ಮರಾಯನ ಎದುರು ಕುಲಧನ ಸಮೂಹವನ್ನೇ ತಂದು ಫಣವಾಗಿ ಇಟ್ಟು ಅವನು ಒಡ್ಡಿ ಆಡಿ ಈಗ ಗೆದ್ದರೂ,) ಮುಂದೆ ಭಾರತದೊಳು ಒಡ್ಡುವುದು ಕಡು ನನ್ನಿ ಮಾಳ್ಪವೋಲ್ (ಮುಂದೆ ಭಾರತ ಯುದ್ಧದಲ್ಲಿ ಅದನ್ನು ಸತ್ಯ ಮಾಡುವಂತೆ )
- :ಪದ್ಯ-೦೦:ಅರ್ಥ:ಒಂದು ಹಲಗೆಯ ಆಟಕ್ಕೆ ಹತ್ತು ಸಾವಿರ ಇರಲಿ ಗದ್ಯಾಣವೆಂದು ಇರದೆ/ ತಡೆಯದೆ ಒಡ್ಡಿ ತಾವು- ಶಕುನಿ ದುರ್ಯೋಧನರು ಎರಡು ಹಲಗೆಯ ಆಟ ಆಡಿ ಸೋತರೆ, ದುರ್ಯೋಧನನು ಬೇಸರತೋರುತ್ತಾ ತನ್ನ ಕುಲಧನ ಸಮೂಹವನ್ನೇ ತಂದು ಫಣವಾಗಿ ಒಡ್ಡಲು, ಹಾಗೆ ಇಟ್ವ ಅವನು ಆಡಿ ಈಗ ಗೆದ್ದರೂ, ಮುಂದೆ ಭಾರತ ಯುದ್ಧದಲ್ಲಿ ಅದನ್ನು ಸತ್ಯ ಮಾಡುವಂತೆ ಅದನ್ನು ಇಟ್ಟು ಆಡಿದಾಗ ಆಕುಲಮತಿ -ವ್ಯತಿಥನಾದ ಧರ್ಮರಾಯನೂ ನಿಯಮದಂತೆ ಅಷ್ಟೇ ಪಣವೊಡ್ಡಿ ಅವನೆದುರು ಆಡಿ ಸೋತನು. (ಅನ್ವಯ ಅರ್ಥ ಮಾಡವಲ್ಲಿ ಸ್ವಲ್ಪ ಗೊಂದಲವಿದೆ- ಬಹಳಷ್ಟು ಅಧ್ಯಾಹಾರವಾಗಿದೆ.)
- ವ||ಅಂತು ಕಳಿಂಗಾಂಗ ವನಸಂಭವಂಗಳಪ್ಪ ಮಧಾಂಧಗಂಧಸಿಂಧುರಂಗಳು ಮನಾಜಾನೇಯಕಾಂಭೋಜ ಭೂಮಿಜಂಗಳಪ್ಪ ಜಾತ್ಯಶ್ವಂಗಳನೊಡ್ಡಿದಾಗಳ್ ದುರ್ಯೋಧನಂ ಬಂದಿಕಾರನಂತೆಸೆರೆಗಯ್ದುಂ ವ್ರಣವೈದ್ಯನಂತೆ ಕೊಡಸಾರಿಯಂ ಪಿಡಿದುಂ ಸೂಳೆಯಂತೆ ಕಳಿವುಳಿವನರಿದುಂ ರಸವಾದಿಯಂತೆ.... ಕಟ್ಟಿಯುಂ ಪೆರ್ಜೋಡೆಯಂತೆ ನುಣ್ಣಿತಂ ವೇಳ್ದುವಣುಗಾಳಂತೆ ದಾಯಂಬಡೆದುಂ ಮೇಳದಂಕದಂತೆ ಸುಳಿಯರಿದುಂ ಡೊಂಬರ ಕೋಡಗದಂತಾಡಿ ಗೆಲ್ವಾಗಳ್ ತಮ್ಮಣ್ಣನ ಸೋಲಮಂ ಕಂಡಾಗಳ್ ಭೀಮಸೇನನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಅಂತು (ಹಾಗೆ ಧರ್ಮರಾಯನು) ಕಳಿಂಗ ಅಂಗ ವನ ಸಂಭವಂಗಳು ಅಪ್ಪ ಮಧಾಂಧಗಂಧಸಿಂಧುರಂಗಳುಮನು (ಹುಟ್ಟಿದ ಮದ್ದಾನೆಗಳನ್ನೂ) ಆಜಾನೇಯ (ಉತ್ತಮಜಾತಿಯ ) ಕಾಂಭೋಜ ಭೂಮಿಜಂಗಳಪ್ಪ ಜಾತ್ಯಶ್ವಂಗಳನು (ಕುದುರೆಗಳನ್ನು) ಒಡ್ಡಿದಾಗಳ್ ದುರ್ಯೋಧನಂ ಬಂದಿಕಾರನಂತೆ ಸೆರೆಗಯ್ದುಂ (ಸರೆಹಿಡಿಯುವ ಬಂದಿಕಾರನಂತೆ ವಶಪಡಿಸಿಕೊಂಡು) ವ್ರಣವೈದ್ಯನಂತೆ ಕೊಡಸಾರಿಯಂ ಪಿಡಿದುಂ (ಹುಣ್ಣು ಚಿಕಿತ್ಸಕನಂತೆ ಕೊಡಸಾರಿ ಮೂಲಿಕೆ ಹಿಡಿದು ಹಣಪಡೆಯುವಂತೆ) ಸೂಳೆಯಂತೆ ಕಳಿವುಳಿವನು ಅರಿದುಂ (ಸೂಳೆಯರ ಹಾಗೆ ಕರೆದಿದ್ದು ಉಳಿದುದನ್ನು ತಿಳಿದು ಪಡೆದಂತೆ) ರಸವಾದಿಯಂತೆ.... ಕಟ್ಟಿಯುಂ (ಪಾದರಸದಿಂದ ಚಿನ್ನ ತೆಗೆಯುವ ರಸವಾದಿಯಂತೆ ಚಿನ್ನವನ್ನು ತೆಗದು ಕಟ್ಟಿ,) ಪೆರ್ಜೋಡೆಯಂತೆ ನುಣ್ಣಿತಂ ವೇಳ್ದುಂ (ಜಾರೆಯಮತೆ ನಯವಾಗಿ ಹೇಳಿ) ಅಣಗಾಳಂತೆ ದಾಯಂಬಡೆದುಂ (ಗೆಳೆಯನಂತೆ ತನ್ನ ಭಾಗಪಡೆದು) ಮೇಳದ ಅಂಕದಂತೆ ಸುಳಿಯರಿದುಂ (ಮೇಳದ ಆಟದಮತೆ ಸುಳಿವು ತಿಳಿದು) ಡೊಂಬರ ಕೋಡಗದಂತೆ ಆಡಿ (ಡೊಂಬರ ಕೋತಿಯಂತೆ ಚಮತ್ಕಾರದಿಂದ ಆಡಿ) ಗೆಲ್ವಾಗಳ್ (ದುರ್ಓಧನನು ಗೆದ್ದಾಗ) ತಮ್ಮಣ್ಣನ ಸೋಲಮಂ ಕಂಡಾಗಳ್ ಭೀಮಸೇನನಿಂತೆಂದಂ (ತನ್ನ ಅಣ್ಣನಸೋಲನ್ನು ಕಂಡು ಆಗ ಹೀಗೆಂದನು-)-
- :ವಚನ:ಅರ್ಥ:ಹಾಗೆ ಧರ್ಮರಾಯನು, ಕಳಿಂಗ ಅಂಗ ವನಹಳಲ್ಲಿ ಹುಟ್ಟಿದ ಮದ್ದಾನೆಗಳನ್ನೂ ಉತ್ತಮಜಾತಿಯ ಕುದುರೆಗಳನೂ, ಪಣವಾಗಿ ಒಡ್ಡಿದಾಗ ಸರೆಹಿಡಿಯುವ ಬಂದಿಕಾರನಂತೆ ವಶಪಡಿಸಿಕೊಂಡನು. ಹುಣ್ಣು ಚಿಕಿತ್ಸಕನಂತೆ ಕೊಡಸಾರಿ ಮೂಲಿಕೆ ಹಿಡಿದು ಹಣಪಡೆಯುವಂತೆ, ಸೂಳೆಯರ ಹಾಗೆ ಕಳೆದ ಉಳಿದುದನ್ನು ತಿಳಿದು ಪಡೆದಂತೆ, ಪಾದರಸದಿಂದ ಚಿನ್ನ ತೆಗೆಯುವ ರಸವಾದಿಯಂತೆ ಚಿನ್ನವನ್ನು ತೆಗದು ಕಟ್ಟಿದಂತೆ, ಜಾರೆಯಂತೆ ನಯವಾಗಿ ಹೇಳಿದಂತೆ, ಗೆಳೆಯನಂತೆ ತನ್ನ ಭಾಗಪಡೆದು ಆಡಿ, ಮೇಳದ ಆಟದಮತೆ ಸುಳಿವು ತಿಳಿದು ಗೆದ್ದನು; ಹೀಗೆ ಡೊಂಬರ ಕೋತಿಯಂತೆ ಚಮತ್ಕಾರದಿಂದ ಆಡಿ ದುರ್ಯೋಧನನು ಗೆದ್ದಾಗ, ಭೀಮಸೇನನು ತನ್ನ ಅಣ್ಣನ ಸೋಲನ್ನು ಕಂಡು ಆಗ ಹೀಗೆಂದನು-
- ಕಂ||ಭಯಮರಿಯದ ಕಲಿಯುಂ ಚಾ
- ಗಿಯಮೆನಿಸದೆ ನಾಡೆ ಲೋಭಿಯುಂ ಪಂದೆಯುಮಾ
- ಗಿಯುಮಾ ಬಾಳ್ವಂಗಲ್ಲದೆ ಸೂ
- ಳೆಯ ಕಣ್ ಪಾಸಗೆಯ ಕಣ್ಣುಮೇನುರುಗುಗುಮೇ ||೭೩ ||
- ಪದ್ಯ-೭೩:ಪದವಿಭಾಗ-ಅರ್ಥ:ಭಯಮರಿಯದ ಕಲಿಯುಂ ಚಾಗಿಯಮೆನಿಸದೆ (ಅಂಜಿಕೆಯನ್ನು ತಿಳಿಯದ ಶೂರನೂ, ದಾನಿಯೆಂದು ಎನಿಸಿಕೊಳ್ಳದೆ) ನಾಡೆ ಲೋಭಿಯುಂ ಪಂದೆಯುಂ ಆಗಿಯುಂ (ವಿಶೇಷವಾಗಿ ಲೋಭಿಯೂ, ಜಪುಣನೂ, ಹೇಡಿಯೂ ಆಗಿಯೂ ಇರುವವನ) ಆ ಬಾಳ್ವಂಗಲ್ಲದೆ ಸೂಳೆಯ ಕಣ್ ಪಾಸಗೆಯ ಕಣ್ಣುಂ ಏನುರುಗುಗುಮೇ (ಬಾಳುವೆಗಲ್ಲದೆ, ವೇಶ್ಯೆಯ ಕಣ್ಣೂ, ದಾಳಗಳ ಕಣ್ಣುಗಳೂ ಬಾಗುವುವೇ?)
- :ಪದ್ಯ-೭೩:ಅರ್ಥ:ಅಂಜಿಕೆಯನ್ನು ತಿಳಿಯದ ಶೂರನೂ, ದಾನಿಯೆಂದು ಎನಿಸಿಕೊಳ್ಳದೆ, ವಿಶೇಷವಾಗಿ ಲೋಭಿಯೂ, ಜಪುಣನೂ, ಹೇಡಿಯೂ ಆಗಿಯೂ ಇರುವವನ ಆ ಬಾಳುವೆಗಲ್ಲದೆ, ವೇಶ್ಯೆಯ ಕಣ್ಣೂ, ದಾಳಗಳ ಕಣ್ಣುಗಳೂ ಬಾಗುವುವೇ? ಎಂದನು ಭೀಮ.
- ವ|| ಎಂದು ಕಯ್ಪೆಸರಂಬೆರಸು ನುಡಿದ ಭೀಮಸೇನನ ನುಡಿಗಳ್ ಕಿಡಿಗಳಂತೆ ತನ್ನಮನಮನೊಲಿಸೆಯುಮೆರ್ದೆಯಂ ಕನಲಿಸೆಯುಮೇನುಮೆನ್ನದೆ ಮುಂತಣ ಕಜ್ಜಮನೆಬಗೆದುಸಿರದಿರ್ದ ದುರ್ಯೋಧನನಲ್ಲಿಗೆ ಗಾಂಗೇಯನುಂ ವಿದುರನುಂ ಬಂದು-
- ವಚನ:ಪದವಿಭಾಗ-ಅರ್ಥ:ಎಂದು ಕಯ್ಪೆಸರಂಬೆರಸು (ಕಹಿಬೆರಸಿ) ನುಡಿದ ಭೀಮಸೇನನ ನುಡಿಗಳ್ ಕಿಡಿಗಳಂತೆ ತನ್ನ ಮನಮನು ಒಲಿಸೆಯುಂ ಎರ್ದೆಯಂ ಕನಲಿಸೆಯುಂ ಏನುಮೆನ್ನದೆ ಮುಂತಣ ಕಜ್ಜಮನೆ ಬಗೆದು ಉಸಿರದಿರ್ದ ದುರ್ಯೋಧನಂ ಅಲ್ಲಿಗೆ ಗಾಂಗೇಯನುಂ ವಿದುರನುಂ ಬಂದು-
- :ವಚನ:ಅರ್ಥ: ಃಇಗೆ ಕಹಿಬೆರಸಿ ಹೇಳಿದ ಭೀಮಸೇನನ ನುಡಿಗಳು ಬೆಂಕಿಯ ಕಿಡುಗಳಂತೆ ಇದ್ದರೂ ಅದಕ್ಕೆ ದುರ್ಯೋಧನನು ತನ್ನ ಮನಸ್ಸನ್ನು ಕೆರಳಿಸಿಯೂ, ಕೋಪಗಳಿಸಿದರೂ ಏನೂ ಹೇಳದೆ ಮುಂದಿನ ಕಾರ್ಯವನ್ನು ಯೋಚಿಸಿ ಸುಮ್ಮನಿದ್ದ ದುರ್ಯೋಧನ ಬಳಿಗೆ ಭೀಷ್ಮನೂ ವಿದುರನೂ ಬಂದು-
- ಉ|| ಸಾಲದೆ ಜೂದು ನಿಮ್ಮೊಳಗಿದೇಂ ಗಳ ಮಾಣಿಸಿಮೆಂದೊಡನ್ಯ ಭೂ
- ಪಾಲಕಿರೀಟತಾಟಿತಪದಂ ಯಮನಂದನನಜ್ಜ ನಾಡೆಯುಂ |
- ಸೋಲದೊಳಾದಮೇವಯಿಸಿದೆಂ ನುಡಿಗಿನ್ನಡೆಯಿಲ್ಲ ಪೋಗಿಮಾ
- ತ್ಮಾಲಯಕೆಂದೊಡೆನುಮೇನಲಣ್ಮದೆ ಬಾರಿಸಲಣ್ಮದಿರ್ವರುಂ || ೭೪ ||
- ಪದ್ಯ-೦೦:ಪದವಿಭಾಗ-ಅರ್ಥ:ಸಾಲದೆ ಜೂದು ನಿಮ್ಮೊಳಗೆ ಇದೇಂಗಳ ಮಾಣಿಸಿಂ (ನಿಮ್ಮೊಳಗೆ ಇದೇನು ನಿಲ್ಲಿಸಿರಿ.) ಎಂದೊಡೆ (ಎಂದು ಹೇಳಿದರೆ) ಅನ್ಯ ಭೂಪಾಲಕಿರೀಟತಾಟಿತಪದಂ (ಶತ್ರುರಾಜರ ಕಿರೀಟ ತಾಗಿದ ಪಾದವುಳ್ಳವನು) ಯಮನಂದನನ ಅಜ್ಜ ನಾಡೆಯುಂ ಸೋಲದೊಳು(ಧರ್ಮಜನ ಅಜ್ಜ ಜೂಜಿನಲ್ಲಿ ಸೋತಿದ್ದರಲ್ಲಿ) ಅದಂ ಏವಯಿಸಿದೆಂ (ಅದರಲ್ಲಿ ನೊಂದಿದ್ದೇನೆ) ನುಡಿಗೆ ಇನ್ನಡೆಯಿಲ್ಲ ಪೋಗಿಂ ಆತ್ಮಾಲಯಕೆ (ಇನ್ನು ಬೇರೆ ಮಾತು ಬೇಡ ನಿಮ್ಮ ಮನೆಗೆ) ಎಂದೊಡೆ ಎನುಮೇನಲು ಅಣ್ಮದೆ (ಎಂದಾಗ, ಏಳಲೂ ಪ್ರಯತ್ನಿಸದೆ) ಬಾರಿಸಲು ಅಣ್ಮದೆ ಇರ್ವರುಂ (ತಡೆಯಲು ಆಗದೆ, ಇಬ್ಬರೂ)
- :ಪದ್ಯ-೦೦:ಅರ್ಥ: ಸಾಲದೆ ಜೂಜು? ನಿಮ್ಮೊಳಗೆ ಇದೇನು ನಿಲ್ಲಿಸಿರಿ. ಎಂದು ಹೇಳಿದರೆ, ಶತ್ರುರಾಜರ ಕಿರೀಟ ತಾಗಿದ ಪಾದವುಳ್ಳ ಧರ್ಮಜನ ಅಜ್ಜ ಜೂಜಿನಲ್ಲಿ ಸೋತಿದ್ದ, ಅದರಲ್ಲಿ ನೊಂದಿದ್ದೇನೆ. ಇನ್ನು ಬೇರೆ ಮಾತು ಬೇಡ ನಿಮ್ಮ ಮನೆಗೆ ಹೋಗಿರಿ. ಎಂದಾಗ, ಏಳಲೂ ಪ್ರಯತ್ನಿಸದೆ, ತಡೆಯಲು ಆಗದೆ, ಇಬ್ಬರೂ-
- ವ|| ಧರತರಾಷ್ಟ್ರನಲ್ಲಿಗೆ ಪೋಗಿ -
- ವಚನ:ಪದವಿಭಾಗ-ಅರ್ಥ:
- :ವಚನ:ಅರ್ಥ:ಧರತರಾಷ್ಟ್ರನಲ್ಲಿಗೆ ಪೋಗಿ -
- ಚಂ|| ನಿನಗ ಮಗಂ ಪುರಾಕೃತದ ಕರ್ಮಮೆ ಪುಟ್ಟುವವೊಲೆ ಪುಟ್ಟಿ ನಿ
- ನಿಬರುಮಂ ರಸಾತಳದೊಳಳ್ದಿಪಂ ಪಗೆ ಪೊಲ್ಲ ಪಾಂಡುನಂ |
- ದನರೊಳಹೀಂದ್ರಕೇತನನ ಜೂ(ಬೂ)ದಿನ ಗೆಲ್ಲಮದೆಂತುಟೆನ್ನ ನಂ
- ಜಿನ ಸವಿಯಂತುಟೆಂದೊಡಿನಿಸಂತದೊಳಂತಕನಲ್ಲಿಗಟ್ಟುಗುಂ ||೭೫||
- ಪದ್ಯ-೭೫:ಪದವಿಭಾಗ-ಅರ್ಥ:ನಿನಗ ಮಗಂ ಪುರಾಕೃತದ ಕರ್ಮಮೆ ಪುಟ್ಟುವವೊಲೆ ಪುಟ್ಟಿ (ಧರತರಾಷ್ಟ್ರನೇ ನಿನಗೆ ಮಗನು ಪೂರ್ವಜನ್ಮದ ಕೆಟ್ಟ ಕರ್ಮದ ಫಲವಾಗಿ ಹುಟ್ಟಿ) ನಿಮ್ಮಿನು ಅಬರುಮಂ ರಸಾತಳದೊಳು ಅಳ್ದಿಪಂ (ನಿಮ್ಮೆಲ್ಲರನ್ನೂ ರಸಾಳದ ನರಕದಲ್ಲಿ ಅದ್ದುತ್ತಾನೆ/ ಮುಳುಗಿಸುತ್ತಾನೆ) ಪಗೆ ಪೊಲ್ಲ ಪಾಂಡುನಂದನರೊಳು (ಪಾಂದುನಂದನರೊಡನೆ ಹಗೆತನೆ ಬೇಡದ್ದು/ ಕೆಟ್ಟದ್ದು) ಅಹೀಂದ್ರಕೇತನನ ಜೂದಿನ ಗೆಲ್ಲಮದು ಎಂತುಟೆನ್ನ (ಸರ್ಪ ಕೇತನ-ಧ್ವಜದವನ-ದುರ್ಯೋಧನನ ಜೂಜಿನ ಗೆಲುವು ಹೇಗಿದೆಎನ್ನುವೆಯೊ- ಅದು) ನಂಜಿನ ಸವಿಯಂತುಟು ಎಂದೊಡೆ ಇನಿಸು ಅಂತದೊಳ ಅಂತಕನಲ್ಲಿಗೆ ಅಟ್ಟುಗುಂ (ಅದು ವಿಷದ ಸವಿಯೂಟದಂತೆ ಇದೆ. ಸ್ವಲ್ಪ ಸಮಯದಲ್ಲೇ ಯಮನಲ್ಲಿಗೆ ಕಳಿಸುತ್ತದೆ.)
- :ಪದ್ಯ-೭೫:ಅರ್ಥ:ಭಿಷ್ಮರು ಹೇಳಿದರು, ಧರತರಾಷ್ಟ್ರನೇ ನಿನಗೆ ಮಗನು ಪೂರ್ವಜನ್ಮದ ಕೆಟ್ಟ ಕರ್ಮದ ಫಲವಾಗಿ ಹುಟ್ಟಿ, ನಿಮ್ಮೆಲ್ಲರನ್ನೂ ರಸಾಳದ ನರಕದಲ್ಲಿ ಅದ್ದುತ್ತಾನೆ/ ಮುಳುಗಿಸುತ್ತಾನೆ; ಪಾಂದುನಂದನರೊಡನೆ ಹಗೆತನೆ ಬೇಡದ್ದು/ ಕೆಟ್ಟದ್ದು. ದುರ್ಯೋಧನನ ಜೂಜಿನ ಗೆಲುವು ಹೇಗಿದೆಎನ್ನುವೆಯೊ- ಅದು ವಿಷದ ಸವಿಯೂಟದಂತೆ ಇದೆ. ಸ್ವಲ್ಪ ಸಮಯದಲ್ಲೇ ಯಮನಲ್ಲಿಗೆ ಕಳಿಸುತ್ತದೆ.
- ಕಂ|| ಪುರುಡಿಸಿಕೊಂಡೀಗಳ್ ನೀ
- ನರಸಿನ ಗರ್ವದೊಳೆ ಬೀಗಿ ಬೆಸೆಯದೆ ಮಗನಂ |
- ಕರೆದೊಪ್ಪಿಸವೇಳ ಯುಧಿ
- ಷ್ಠಿರಂಗೆ ಮುನ್ನ ಗೆಲ್ದ ವಸ್ತುವಾಹನಚಯಮಂ ||೭೬ |\
- ಪದ್ಯ-೭೬:ಪದವಿಭಾಗ-ಅರ್ಥ:ಪುರುಡಿಸಿಕೊಂಡು ಈಗಳ್ ನೀನು ಅರಸಿನ ಗರ್ವದೊಳೆ ಬೀಗಿ ಬೆಸೆಯದೆ ಮಗನಂ ಕರೆದು ಒಪ್ಪಿಸವೇಳ (ಹಿಂದಕ್ಕೆ ಕೊಡಲು- ಒಪ್ಪಿಸಲು ಹೇಳಪ್ಪಾ!)ಯುಧಿಷ್ಠಿರಂಗೆ ಮುನ್ನ ಗೆಲ್ದ ವಸ್ತುವಾಹನ ಚಯಮಂ (ಮೊದಲು ಗೆದ್ದ ವಸ್ತು ವಾಹನ ಸಮಸ್ತವನ್ನೂ)
- :ಪದ್ಯ-೭೬:ಅರ್ಥ:ಅಸೂಯೆಯಿಂದಕೂಡಿ ಈಗ ನೀನು ಅರಸೆಂಬ ಗರ್ವದಲ್ಲಿ ಉಬ್ಬಿ ಅಹಂಕಾರ ಪಡದೆ ಮಗನನ್ನು ಕರೆದು ಮೊದಲು ಗೆದ್ದ ವಸ್ತು ವಾಹನ ಸಮಸ್ತವನ್ನೂ ಹಿಂದಕ್ಕೆ ಒಪ್ಪಿಸಲು ಹೇಳಪ್ಪಾ!
- ಮ||ಸ್ರ||ಕದನಪ್ರಾರಂಭಶೌಂಡಂ ರಿಪುನೃಪಬಲದಾವಾನಲಂ ವೈರಿ ಭೂಭೃ
- ನ್ಮದವನ್ಮಾತಂಗ ಕುಂಭಸ್ಥಳ ದಳನಖರೋಗ್ರಾಸಿ ಪಂಚಾಸ್ಯ ಧೈರ್ಯಂ |
- ವಿದಿತ ಪ್ರತ್ಯಕ್ಷನಾಶಾಕರಿ ನಿಕಿಟತಟಶ್ರಾಂತ ದಾನ ಭರಂಗೆ
- ಯ್ದಿದಿರೊಳ್ ವಿಕ್ರಾಂತ ತುಂಗಂ ಹರಿಗನಿರೆ ಬಿಗುರ್ತಾಂಪನಂತಾವಗಂಡಂ|| ೭೭||
- ಪದ್ಯ-೦೦:ಪದವಿಭಾಗ-ಅರ್ಥ:ಕದನಪ್ರಾರಂಭಶೌಂಡಂ (ಯುದ್ಧದ ಉದ್ಯೋಗದಲ್ಲಿ ಆಸಕ್ತಿಯುಳ್ಳವನು,) ರಿಪುನೃಪಬಲದಾವಾನಲಂ (ಶತ್ರು ಸೈನ್ಯಕ್ಕೆ ಕಾಡು ಕಿಚ್ಚಿನಂತೆ ಇರುವವನು,) ವೈರಿ ಭೂಭೃನ್ಮದವನ್ಮಾತಂಗ ಕುಂಭಸ್ಥಳ ದಳನಖರೋಗ್ರಾಸಿ (ವೈರಿಗಳ ಮದದಿಂದ ಕೂಡಿದ ಆನೆಗಳ ಕುಂಭಸ್ಥಳವನ್ನು ಸೀಳುವ ತೀಕ್ಷಣ ಉಗ್ರ ಅಸಿ - ಕತ್ತಿಯುಳ್ಳವನು,,) ಪಂಚಾಸ್ಯ ಧೈರ್ಯಂ (ಸಿಂಹದಂತೆ ಧೈರ್ಯದವನು) ವಿದಿತ ಪ್ರತ್ಯಕ್ಷಂ ಆಶಾ - ಕರಿ (ಕಣ್ನಿಗೆ ಕಾಣುವುದನ್ನೆಲ್ಲಾ ಆಶಾ- ದಾನಂ ಆಸೆಪಟ್ಟವರಿಗೆ ಮಾಡುವವನು,) ನಿಕಿಟತಟಶ್ರಾಂತ (ಹತ್ತಿರದಲ್ಲಿ ವಿಶ್ರಾಂತನು) ದಾನ (ದಾನಿ) ಭರಂಗೆಯ್ದು (ಆರ್ಬಟಿಸಿ,) ಇದಿರೊಳ್ ವಿಕ್ರಾಂತ ತುಂಗಂ(ಉನ್ನತ ಪರಾಕ್ರಮಿ) ಹರಿಗನು ಇರೆ (ಎದುರಿನಲ್ಲಿ ಉನ್ನತ ಪರಾಕ್ರಮಿ ಅರಿಕೇಸರಿ / ಅರ್ಜುನ ಇರಲು), ಬಿಗುರ್ತು (ಹೆದರಿಸಿ) ಆಂಪ (ಎದುರಿಸುವ) ಆಂತೆ ಆವ ಗಂಡಂ (ಅಂತಹ ಶೂರನು ಯಾವನಿದ್ದಾನೆ)
- :ಪದ್ಯ-೦೦:ಅರ್ಥ:ಯುದ್ಧದ ಉದ್ಯೋಗದಲ್ಲಿ ಆಸಕ್ತಿಯುಳ್ಳವನು, ಶತ್ರು ಸೈನ್ಯಕ್ಕೆ ಕಾಡು ಕಿಚ್ಚಿನಂತೆ ಇರುವವನು, ವೈರಿಗಳ ಮದದಿಂದ ಕೂಡಿದ ಆನೆಗಳ ಕುಂಭಸ್ಥಳವನ್ನು ಸೀಳುವ ತೀಕ್ಷಣ ಉಗ್ರ ಅಸಿ - ಕತ್ತಿಯುಳ್ಳವನು, ಸಿಂಹದಂತೆ ಧೈರ್ಯದವನು, ಕಣ್ಣಿಗೆ ಕಾಣುವುದನ್ನೆಲ್ಲಾ ಆಸೆಪಟ್ಟವರಿಗೆ ಮಾಡುವವನು, ಹತ್ತಿರದಲ್ಲಿ ವಿಶ್ರಾಂತನು, ದಾನಿ, ಉನ್ನತ ಪರಾಕ್ರಮಿ ಅರಿಕೇಸರಿ / ಅರ್ಜುನ ಎದುರಿನಲ್ಲಿ ಇರಲು, ಆರ್ಬಟಿಸಿ, ಹೆದರಿಸಿ ಎದುರಿಸುವ ಅಂತಹ ಶೂರನು ಯಾವನಿದ್ದಾನೆ.
ಪಂಪಭಾರತ
[ಸಂಪಾದಿಸಿ]ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> | ಪಂಪ:ಕವಿ-ಕೃತಿ ಪರಿಚಯ | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | ಅನುಬಂಧ 16 | ಪಂಪ - ಒಂದು ಚಿಂತನೆ | ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ |
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ