ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೩)

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ/ಸಟೀಕಾ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೩)[ಸಂಪಾದಿಸಿ]

ಸೂಚನೆ:[ಸಂಪಾದಿಸಿ]

ಸೂ: ರಾಯ ಕುರುಬಲ ವಿಲಯ ಹರನಬು
ಜಾಯತಾಕ್ಷಿಯ ಸಲಹಿ ಕೀಚಕ
ರಾಯ ವಂಶಾರಣ್ಯವನು ಸವರಿದನು ಕಲಿಭೀಮ||
ಪದವಿಭಾಗ-ಅರ್ಥ:ರಾಯ ಕುರುಬಲ= ಕುರುರಾಜರ ಸಮೂಹ ವಿಲಯಹರನು(ನಾಶಮಾಡುವ ರುದ್ರನು)+ ಅಬುಜಾಯತಾಕ್ಷಿಯ(ಅಬುಜ-ಅಂಬುಜ- ಕಮಲ, ಆಯತ= ಅಗಲವಾದ, ವಿಶಾಲವಾದ) ಕಮಲದಳದಂತೆ ವಿಶಾಲ ಕಣ್ಣಿನ ದ್ರೌಪದಿಯನ್ನು, ಸಲಹಿ= ಕುರುರಾಜರ ಸಮೂಹವನ್ನು ನಾಶಮಾಡುವ ರುದ್ರನು ಕಮಲದಳದಂತೆ ವಿಶಾಲ ಕಣ್ಣಿನ ದ್ರೌಪದಿಯನ್ನು ಸಲಹಿ, ; ಕೀಚಕರಾಯ ವಂಶ+ ಅರಣ್ಯವನು ಸವರಿದನು= ಕಡಿದು ಹಾಕಿದನು ಕಲಿಭೀಮ= ಶೂರ ಭೀಮನು ಕೀಚಕನ ವಂಶವೆಂಬ ಅರಣ್ಯವನ್ನ್ನುನಾಶಮಾಡಿದನು.
ಅರ್ಥ:ಕುರುರಾಜರ ಸಮೂಹವನ್ನು ನಾಶಮಾಡುವ ರುದ್ರನಂತಿರುವ ಭೀಮನು ಕಮಲದಳದಂತೆ ವಿಶಾಲ ಕಣ್ಣಿನ ದ್ರೌಪದಿಯನ್ನು ಸಲಹಿ, ಕೀಚಕನ ವಂಶವೆಂಬ ಅರಣ್ಯವನ್ನ್ನುನಾಶಮಾಡಿದನು.[೧] [೨] [೩]
~~ಓಂ~~

ದ್ರೌಪದಿ ಕೀಚಕನ ಅರಮನೆಯಲ್ಲಿ[ಸಂಪಾದಿಸಿ]

ಬಯಸಿದಳು ಮೃತ್ಯುವನು ಕಡು ಪಾ
ಪಿಯ ಮನೋಧರ್ಮವನು ಜನಮೇ
ಜಯ ಮಹೀಪತಿ ಕೇಳು ಪಾಂಚಾಲಿಯನು ಕರೆಸಿದಳು |
ನಯವಿಹೀನೆ ಸುದೇಷ್ಣೆ ಬಂದಾ
ಕೆಯನು ಬೆಸಸಿದಳೆಲೆಗೆ ಅನುಜಾ
ಲಯದಲುತ್ತಮ ಮಧುವ ನೀ ಝಡಿತೆಯಲಿ ತಹುದೆಂದು || ೧ ||
ಪದವಿಭಾಗ-ಅರ್ಥ: ಬಯಸಿದಳು ಮೃತ್ಯುವನು ಕಡು ಪಾಪಿಯ ಮನೋಧರ್ಮವನು ಜನಮೇಜಯ ಮಹೀಪತಿ ಕೇಳು ಪಾಂಚಾಲಿಯನು ಕರೆಸಿದಳು= ಕಡುಪಾಪಿಯ ಮನೋಧರ್ಮವನ್ನು ಜನಮೇಜಯ ಮಹೀಪತಿ ಕೇಳು, ಸುದೀಷ್ಣೆಯು ತಮ್ಮನಿಗೆ ಮೃತ್ಯುವನ್ನೇ ಬಯಸಿದಳು ಎಂಬಂತೆ ಪಾಂಚಾಲಿಯನು ಕರೆಸಿದಳು.; ನಯವಿಹೀನೆ = ನಯಸ್ವಭಾವವಿಲ್ಲದ ಸುದೇಷ್ಣೆ ಬಂದ+ ಆಕೆಯನು= ದ್ರೌಪದಿಯನ್ನು, ಬೆಸಸಿದಳು (ಆಜ್ಞಾಪಿಸಿದಳು)+ ಎಲೆಗೆ ಅನುಜ+ ಆಲಯದಲಿ(ತಮ್ಮನ ಮನೆಯಲ್ಲಿ)+ ಉತ್ತಮ ಮಧುವ ನೀ ಝಡಿತಿಯಲಿ ತಹುದು(ಬೇಗ, ಅವಸರದಲ್ಲಿ ತರಬೇಕು)+ ಎಂದು= ನಯಸ್ವಭಾವವಿಲ್ಲದ ಸುದೇಷ್ಣೆ ಬಂದ ದ್ರೌಪದಿಯನ್ನು ಕುರಿತು,'ಎಲೆಗೆ ನನ್ನ ತಮ್ಮನ ಮನೆಯಲ್ಲಿ ಉತ್ತಮ ಮಧುವನ್ನು ನೀನು ಬೇಗ ತರಬೇಕು,' ಎಂದು ಆಜ್ಞಾಪಿಸಿದಳು.
ಅರ್ಥ: ಕಡುಪಾಪಿಯ ಸುದೀಷ್ಣೆಯ ಮನೋಧರ್ಮವನ್ನು ಜನಮೇಜಯ ಮಹೀಪತಿ ಕೇಳು, ಸುದೀಷ್ಣೆಯು ತಮ್ಮನಿಗೆ ಮೃತ್ಯುವನ್ನೇ ಬಯಸಿದಳು ಎಂಬಂತೆ ಪಾಂಚಾಲಿಯನು ಕರೆಸಿದಳು.; ನಯಸ್ವಭಾವವಿಲ್ಲದ ಸುದೇಷ್ಣೆಯು ಬಂದ ದ್ರೌಪದಿಯನ್ನು ಕುರಿತು,'ಎಲೆಗೆ ನನ್ನ ತಮ್ಮನ ಮನೆಯಲ್ಲಿ ಉತ್ತಮ ಮಧುವನ್ನು ನೀನು ಬೇಗ ತರಬೇಕು,' ಎಂದು ಆಜ್ಞಾಪಿಸಿದಳು.
ಅಮ್ಮೆನಲ್ಲಿಗೆ ದೇವಿ ನಿಮ್ಮಯ
ತಮ್ಮ ದುರುಳನು ಲೇಸು ಹೊಲ್ಲೆಹ
ವೆಮ್ಮ ತಾಗುವದಾತನಳಿದರೆ ಬಳಿಕ ಹಳಿವೆಮಗೆ |
ನಿಮ್ಮ ನಾವೋಲೈಸಿ ನಿಮಗೆ ವಿ
ಕರ್ಮವನು ಮಾಡುವದು ನಮಗದು
ಧರ್ಮವಲ್ಲುಳಿದವರ ಕಳುಹುವದೆಂದಳಿಂದುಮುಖಿ || ೨ ||
ಪದವಿಭಾಗ-ಅರ್ಥ: ಅಮ್ಮೆನು (ಒಲ್ಲೆನು)+ ಅಲ್ಲಿಗೆ ದೇವಿ ನಿಮ್ಮಯ ತಮ್ಮ ದುರುಳನು= ದೇವಿ ಅಲ್ಲಿಗೆ ಹೋಗಲು ಇಷ್ಟವಿಲ್ಲ; ನಿಮ್ಮ ತಮ್ಮನು ದುರುಳನು. ; ಲೇಸು= ಒಳಿತು, ಹೊಲ್ಲೆಹೆವು= ಎಮ್ಮ ತಾಗುವದು+ ಆತನು+ ಅಳಿದರೆ(ಸತ್ತರೆ)= ಒಳಿತು- ಒಳ್ಳೆಯದನ್ನು ಹೇಳುವೆ; ಅವನು ಸತ್ತರೆ ನಮಗೆ ಕೆಟ್ಟಹೆಸರು ನಮ್ಮನ್ನು ತಾಗುವದು. ಬಳಿಕ ಹಳಿವು+ ಎಮಗೆ= ನಮಗೆ ಅದರದೋಷಬರುವುದು ಏಕೆಂದರೆ,; ನಿಮ್ಮ ನಾವು+ ಓಲೈಸಿ ನಿಮಗೆ ವಿಕರ್ಮವನು ಮಾಡುವದು ನಮಗೆ+ ಅದು ಧರ್ಮವಲ್ಲ+= ನಿಮ್ಮನ್ನು ನಾವು ಸೇವೆಮಾಡುವವರಾಗಿದ್ದು, ನಿಮಗೆ ಕೆಟ್ಟದ್ದನ್ನು ಮಾಡುವದು ನಮಗೆ ಅದು ಧರ್ಮವಲ್ಲ; ಧರ್ಮವಲ್ಲ+ ಉಳಿದವರ ಕಳುಹುವದು+ ಎಂದಳು+ ಇಂದುಮುಖಿ(ಚಂದ್ರವದನೆ)= ಉಳಿದವರಲ್ಲಿ ಒಬ್ಬರನ್ನು ಕಳುಹಿಸಿ, ಎಂದಳು ದ್ರೌಪದಿ.
ಅರ್ಥ:ದೇವಿ, ಅಲ್ಲಿಗೆ ಹೋಗಲು ಇಷ್ಟವಿಲ್ಲ; ನಿಮ್ಮ ತಮ್ಮನು ದುರುಳನು. ಒಳ್ಳೆಯದನ್ನು ಹೇಳುವೆ; ಅವನು ಸತ್ತರೆ ನಮಗೆ ಕೆಟ್ಟಹೆಸರು ನಮ್ಮನ್ನು ತಾಗುವದು. ಬಳಿಕ ನಮಗೆ ಅದರ ದೋಷಬರುವುದು. ಏಕೆಂದರೆ, ನಿಮ್ಮನ್ನು ನಾವು ಸೇವೆಮಾಡುವವರಾಗಿದ್ದು, ನಿಮಗೆ ಕೆಟ್ಟದ್ದನ್ನು ಮಾಡುವದು ನಮಗೆ ಅದು ಧರ್ಮವಲ್ಲ. ಉಳಿದವರಲ್ಲಿ ಒಬ್ಬರನ್ನು ಕಳುಹಿಸಿ, ಎಂದಳು ದ್ರೌಪದಿ.
ಎನಗೆ ಭುಗಿಲೆಂದಳು ಸುಡೇತಕೆ
ಮನದ ಗರ್ವವ ನುಡಿವೆ ನಿನ್ನಿಂ
ದೆನಗೆ ಮೇಣೆನ್ನವರಿಗುಂಟೇ ಹಾನಿ ಹರಿಬಗಳು |
ಅನುಜನಾರೆಂದರಿಯೆ ಸಾಕಾ
ತನ ಸಮೀಪಕೆ ಹೋಗಿ ಬಾ ನಡೆ
ಯೆನಲು ಕೈಕೊಂಡಬಲೆ ಹೊರವಂಟಳು ನಿಜಾಲಯವ || ೩ ||
ಪದವಿಭಾಗ-ಅರ್ಥ: ಎನಗೆ ಭುಗಿಲು+ ಎಂದಳು ಸುಡು+ ಏತಕೆ ಮನದ ಗರ್ವವ ನುಡಿವೆ= ನನಗೆ ಆಡಂಬರದ ಎದುರು ಮಾತನಾಡಬೇಡ ಎಂದಳು. ಸುಡು ನಿನ್ನ ನೆಡತೆಯ, ಏಕೆ ನಿನ್ನ ಮನಸ್ಸಿನ ಗರ್ವಹೊಂದಿ ಮಾತನಾಡುವೆ.; ನಿನ್ನಿಂದ+ ಎನಗೆ ಮೇಣ್+ ಎನ್ನವರಿಗೆ+ ಉಂಟೇ ಹಾನಿ ಹರಿಬಗಳು= ಕೆಲಸಗಳು - ಮುಖ್ಯ; ಅನುಜನು=ತಮ್ಮನು+ ಆರೆಂದು+ ಅರಿಯೆ(ತಿಳಿಯೆ - ನಿನಗೆ ತಿಳಿದಿಲ್ಲ.)= ನಿನ್ನಿಂದ ನನಗೆ ಮತ್ತು ನನ್ನವರಿಗೆ ಹಾನಿಯಾಗುವುದೇ? ಕೆಲಸಗಳನ್ನು ಹೇಳಿದಾಗ ಮಾಡುವುದು ಮುಖ್ಯ. ನನ್ನ ತಮ್ಮನು ಎಂತಹ ಶೂರನೆಂದು ನಿನಗೆ ಗೊತ್ತಿಲ್ಲ.; ಸಾಕು+ ಆತನ ಸಮೀಪಕೆ ಹೋಗಿ ಬಾ ನಡೆಯೆನಲು ಕೈಕೊಂಡು+ ಅಬಲೆ ಹೊರವಂಟಳು ನಿಜ+ ಆಲಯವ= 'ಸಾಕು ನಿನ್ನ ಮಾತು, ಆತನ ಸಮೀಪಕ್ಕೆ ಹೋಗಿ ಬಾ ನಡೆ' ಎನ್ನಲು, ಅವಳ ಆಜ್ಞೆಯನ್ನ ಕೈಕೊಂಡು ಸೈರಂದ್ರಿ ತನ್ನ ವಸತಿಯಿಂದ ಹೊರವಂಟಳು.
ಅರ್ಥ: ನನಗೆ ಆಡಂಬರದ ಎದುರು ಮಾತನಾಡಬೇಡ ಎಂದಳು. ಸುಡು ನಿನ್ನ ನೆಡತೆಯ, ಏಕೆ ನಿನ್ನ ಮನಸ್ಸಿನ ಗರ್ವಹೊಂದಿ ಮಾತನಾಡುವೆ. ನಿನ್ನಿಂದ ನನಗೆ ಮತ್ತು ನನ್ನವರಿಗೆ ಹಾನಿಯಾಗುವುದೇ? ಕೆಲಸಗಳನ್ನು ಹೇಳಿದಾಗ ಮಾಡುವುದು ಮುಖ್ಯ. ನನ್ನ ತಮ್ಮನು ಎಂತಹ ಶೂರನೆಂದು ನಿನಗೆ ಗೊತ್ತಿಲ್ಲ. 'ಸಾಕು ನಿನ್ನ ಮಾತು, ಆತನ ಸಮೀಪಕ್ಕೆ ಹೋಗಿ ಬಾ ನಡೆ' ಎನ್ನಲು, ಅವಳ ಆಜ್ಞೆಯನ್ನ ಕೈಕೊಂಡು ಸೈರಂದ್ರಿಯು ತನ್ನ ವಸತಿಯಿಂದ ಹೊರವಂಟಳು.
  • ಪಾಂಡವರ ಪತ್ನಿ- ದ್ರೌಪದಿ, ಕೀಚಕನ ಆಲಯಕ್ಕೆ ಪಾನೀಯಗಳನ್ನು ಸಾಗಿಸಲು ಮನವಿಲ್ಲದೆ ಹೋಗುವಳು. ರಾಜಾ ರವಿವರ್ಮನ ಕೃತಿ-ಚಿತ್ರ
ದೇವಿ ನೇಮಿಸಲರಿಯೆನೆಂದೊಡಿ
ದಾವ ಧರ್ಮವು ಶಿವ ಶಿವೀ ಹದ
ನಾವನವರಿಗೆ ತಹುದು ಬದ್ಧ ವಿಘಾತಿಯಿದು ಬಲುಹು |(ಸಾವನವರಿಗೆ)
ಸೇವಿಸುವದೇ ಕಷ್ಟವೆಂಬುದು
ಕೋವಿದರ ಮತ ಶಿವ ಶಿವಾ ರಾ
ಜೀವಲೋಚನ ಕೃಷ್ಣ ಬಲ್ಲನೆನುತ್ತ ಗಮಿಸಿದಳು || ೪ ||
ಪದವಿಭಾಗ-ಅರ್ಥ: ದೇವಿ ನೇಮಿಸಲು+ ಅರಿಯೆನೆಂದೊಡೆ+ ಇದಾವ ಧರ್ಮವು= ದೇವಿ ಸುದೇಷ್ಣೆಯು ಆಜ್ಞಾಪಿಸಲು, ಅದನ್ನು ಮಾಡಲು ಅರಿಯೆನು ಮಾಡಲಾರೆನು ಎಂದರೂ, ಒತ್ತಾಯಿಸುವುದು ಧರ್ಮವೇ? ನ್ಯಾಯವೇ?.; ಶಿವ ಶಿವ+ ಈ ಹದನು+ ಆವನ+ ಅವರಿಗೆ ತಹುದು ಬದ್ಧ (ಅಸಂಬದ್ಧವಾದ ನುಡಿ, ತಿಳಿದೂ ತಂದಕೊಂಡ) ವಿಘಾತಿಯಿದು (ಅನಾಹುತ) ಬಲುಹು= ಶಿವ ಶಿವ ಎಂದಳು ದ್ರೌಪದಿ, ಈ ಕಾರ್ಯ ಯಾವನನ್ನು ಅವರಿಗೆ ಎಲ್ಲಿಗೆ ತರುವುದು ಎನ್ನಲು ಬಾರದು? ಅವರಿಗೆ ಸಾವನ್ನು ತರಬಹುದು. ಬದ್ಧತೆಯಿಂದ ತಾವಾಗಿ ತಂದುಕೊಂಡ ದೊಡ್ಡ ಅನಾಹುತ ಇದು.; ಸೇವಿಸುವದೇ ಕಷ್ಟವೆಂಬುದು ಕೋವಿದರ ಮತ= ಸೇವೆಮಾಡುವುದೇ ಕಷ್ಟವೆನ್ನುವುದು ತಿಳಿದವರ ಅಭಿಪ್ರಾಯ. ಶಿವ ಶಿವಾ! ರಾಜೀವಲೋಚನ (ಕಮಲದಂತೆ ಕಣ್ಣುಳ್ಳವನು) ಕೃಷ್ಣ ಬಲ್ಲನು+ ಎನುತ್ತ ಗಮಿಸಿದಳು= ಶಿವ ಶಿವಾ! ಕೃಷ್ಣನೇ ಇದರ ರಹಸ್ಯ ಬಲ್ಲನು, ಎನ್ನುತ್ತಾ ಹೊರಟಳು.
ಅರ್ಥ: ದೇವಿ ಸುದೇಷ್ಣೆಯು ಆಜ್ಞಾಪಿಸಲು, ಅದನ್ನು ಮಾಡಲಾರೆನು ಎಂದರೂ, ಒತ್ತಾಯಿಸುವುದು ಧರ್ಮವೇ? ನ್ಯಾಯವೇ?. ಶಿವ ಶಿವ ಎಂದಳು ದ್ರೌಪದಿ, ಈ ಕಾರ್ಯ ಯಾವನನ್ನು ಅವರಿಗೆ ಎಲ್ಲಿಗೆ ತರುವುದು ಎನ್ನಲು ಬಾರದು? ಅವರಿಗೆ ಸಾವನ್ನು ತರಬಹುದು. ಬದ್ಧತೆಯಿಂದ ತಾವಾಗಿ ತಂದುಕೊಂಡ ದೊಡ್ಡ ಅನಾಹುತ ಇದು. ಸೇವೆಮಾಡುವುದೇ ಕಷ್ಟವೆನ್ನುವುದು ತಿಳಿದವರ ಅಭಿಪ್ರಾಯ. ಶಿವ ಶಿವಾ! ಕೃಷ್ಣನೇ ಇದರ ರಹಸ್ಯ ಬಲ್ಲನು, ಎನ್ನುತ್ತಾ ಹೊರಟಳು.
ಹರಿ ಹರಿ ಶ್ರೀಕಾಂತ ದಾನವ
ಹರ ಮುರಾರಿ ಮುಕುಂದ ಗತಿಶೂ
ನ್ಯರಿಗೆ ನೀನೇ ಗತಿಯೆಲೈ ಗರುವಾಯಿಗೆಟ್ಟೆನಲೈ |
ಕುರುಕುಲಾಗ್ರಣಿ ಸೆಳೆದ ವಸ್ತ್ರಾ
ಕರುಷಣದ ಭಯ ಮತ್ತೆ ಬಂದಿದೆ
ಕರುಣಿ ನೀನೇ ಬಲ್ಲೆಯೆನುತಡಿಯಿಟ್ಟಳಬುಜಾಕ್ಷಿ || ೫ ||
ಪದವಿಭಾಗ-ಅರ್ಥ: ಹರಿ ಹರಿ ಶ್ರೀಕಾಂತ ದಾನವಹರ ಮುರಾರಿ ಮುಕುಂದ ಗತಿಶೂನ್ಯರಿಗೆ= ಗತಿಇಲ್ಲದವರಿಗೆ; ನೀನೇ ಗತಿಯೆಲೈ ಗರುವಾಯಿಗೆಟ್ಟೆನಲೈ (ಮಾನಕ್ಕೆ ಕುಂದು ಬಂದಿದೆ, ಹಿರಿಮೆ ಕುಂದಿದೆನು ಎಲೈ) = ಕುರುಕುಲಾಗ್ರಣಿ= ದುರ್ಯೋಧನ, ಸೆಳೆದ ವಸ್ತ್ರಾಕರುಷಣದ ಭಯ ಮತ್ತೆ ಬಂದಿದೆ ಕರುಣಿ ನೀನೇ ಬಲ್ಲೆಯೆನುತ+ ಅಡಿಯಿಟ್ಟಳು+ ಅಬುಜಾಕ್ಷಿ
ಅರ್ಥ: ದ್ರೌಪದಿಯು ಕೃಷ್ನನ್ನ್ಉ ನೆನೆದಳು,'ಹರಿ ಹರಿ ಶ್ರೀಕಾಂತ ದಾನವಹರ ಮುರಾರಿ ಮುಕುಂದ ಗತಿಇಲ್ಲದವರಿಗೆ ನೀನೇ ಗತಿಯಪ್ಪಾ, ಮಾನಕ್ಕೆ ಕುಂದು ಬಂದಿದೆ, ದುರ್ಯೋಧನನು ಸೆಳೆದ ವಸ್ತ್ರಾಪಹರಣದ ಭಯ ಮತ್ತೆ ಬಂದಿದೆ; ಕರುಣಿ ನೀನೇ ಇದಕ್ಕೆ ಪರಿಹಾರ ಬಲ್ಲೆ,' ಎನ್ನುತ್ತಾ ಮುಂದೆ ನೆಡೆದಳು.
ಸುರಪ ಶಿಖಿ ಯಮ ನಿರುತಿ ವರುಣಾ
ದ್ಯರಿಗೆ ವಂದಿಸಿ ಕಣ್ಣೆವೆಯ ಬಿಗಿ
ದರೆಗಳಿಗೆ ನಿಂದಬುಜಮಿತ್ರನ ಭಜಿಸಿ ಕಂದೆರೆಯೆ |
ಮುರಿವ ದೈತ್ಯನ ಕಾಹ ಕೊಟ್ಟನು
ತರಣಿ ತರುಣಿಗೆ ಮಂದ ಮಂದೋ
ತ್ತರದ ಗಮನದಲಬಲೆ ಬಂದಳು ಕೀಚಕನ ಮನೆಗೆ || ೬ |
ಪದವಿಭಾಗ-ಅರ್ಥ: ಸುರಪ= ಇಂದ್ರ, ಶಿಖಿ= ಅಗ್ನಿ, ಯಮ ನಿರುತಿ ವರುಣ+ ಆದ್ಯರಿಗೆ ವಂದಿಸಿ= ಇಂದ್ರ, ಅಗ್ನಿ, ಯಮ ನಿರುತಿ ವರುಣ ಮೊದಲಾದ ದೇವತೆಗಳಿದೆ ನಮಿಸಿ, ; ಕಣ್ಣೆವೆಯ ಬಿಗಿದು+ ಅರೆಗಳಿಗೆ ನಿಂದು+ ಅಬುಜಮಿತ್ರನ (ಕಮಲದ ಮಿತ್ರ-ಸೂರ್ಯನನ್ನು) ಭಜಿಸಿ= ಕಣ್ಣೆರೆಪ್ಪೆಯನ್ನು ಮುಚ್ಚಿ ಅರೆಗಳಿಗೆ ನಿಂತು ಸೂರ್ಯನನ್ನು ಭಜಿಸಿ,; ಕಂದೆರೆಯೆ ಮುರಿವ ದೈತ್ಯನ (ಯಾರನ್ನೂ ಸೋಲಿಸಬಲ್ಲ ರಾಕ್ಷಸನ) ಕಾಹ= ಕಾವಲನ್ನು ಕೊಟ್ಟನು ತರಣಿ= ಸೂರ್ಯ ತರುಣಿಗೆ/ ದ್ರೌಪದಿಗೆ ಮಂದ= ಮೆಲ್ಲ ಮಂದೋತ್ತರದ ಗಮನದಲಿ+ ಅಬಲೆ ಬಂದಳು ಕೀಚಕನ ಮನೆಗೆ= ಕಣ್ಣು ತೆರೆಯಲು ಯಾರನ್ನೂ ಸೋಲಿಸಬಲ್ಲ ರಾಕ್ಷಸನ ಕಾವಲನ್ನು ಕೊಟ್ಟನು ಸೂರ್ಯ ತರುಣಿಗೆ/ ದ್ರೌಪದಿಗೆ ಮೆಲ್ಲಮೆಲ್ಲನೆ ನೆಡೆದು ದ್ರೌಪದಿ ಬಂದಳು ಕೀಚಕನ ಮನೆಗೆ.
ಅರ್ಥ:ಇಂದ್ರ, ಅಗ್ನಿ, ಯಮ ನಿರುತಿ ವರುಣ ಮೊದಲಾದ ದೇವತೆಗಳಿದೆ ನಮಿಸಿ, ಕಣ್ಣೆರೆಪ್ಪೆಯನ್ನು ಮುಚ್ಚಿ ಅರೆಗಳಿಗೆ ನಿಂತು ಸೂರ್ಯನನ್ನು ಭಜಿಸಿ, ಕಣ್ಣು ತೆರೆಯಲು ಸೂರ್ಯನು ಯಾರನ್ನೂ ಸೋಲಿಸಬಲ್ಲ ರಾಕ್ಷಸನ ಕಾವಲನ್ನು ದ್ರೌಪದಿಗೆ ಕೊಟ್ಟನು; ಅವಳು ಮೆಲ್ಲಮೆಲ್ಲನೆ ನೆಡೆದು ಕೀಚಕನ ಮನೆಗೆ ಬಂದಳು.
ಚಾರು ನೂಪುರ ಝಣಝಣದ ಝೇಂ
ಕಾರ ರವದುಬ್ಬಿನಲಿ ಭವನ ಮ
ಯೂರ ಕುಣಿದವು ವರಕಟಾಕ್ಷದ ಮಿಂಚು ಥಳಥಳಿಸೆ
ಆರು ಹೊಗಳುವರಂಗವಟ್ಟದ
ಸೌರಭದ ಭಾರಣೆಗೆ ತುಂಬಿಯ
ಸಾರ ಕಟ್ಟಿತು ಬಂದಳಂಗನೆ ಕೀಚಕಾಲಯಕೆ ೭
ಪದವಿಭಾಗ-ಅರ್ಥ: ಚಾರು ನೂಪುರ(ಸುಂದರ ಕಾಲು ಕಡಗ,ಸರಪಳಿ) ಝಣಝಣದ ಝೇಂಕಾರ ರವದ(ಸದ್ದಿನ)+ ಉಬ್ಬಿನಲಿ ಭವನ= ಅರಮನೆಯ, ಮಯೂರ= ನವಿಲು, ಕುಣಿದವು= ವರಕಟಾಕ್ಷದ ಮಿಂಚು ಥಳಥಳಿಸೆ= ಕಣ್ಣಂಚಿನ ಮಿಂಚು ಹೊಳೆದಾಗ, (ಎಲ್ಲರೂ ಹೊಗಳುವರು-->) ಆರು ಹೊಗಳುವರು+ ಅಂಗವಟ್ಟದ ಸೌರಭದ ಭಾರಣೆಗೆ ತುಂಬಿಯಸಾರ ಕಟ್ಟಿತು= ದೇಹದ ಸುಗಂಧ ಪರಿಮಳಕ್ಕೆ ದುಂಬಿಗಳು ಸಾಲು ಸಾರದಂತೆ(ಸಂಕ - ಹಳ್ಳ ದಾಟಲು ಮರದ ಸಾರ ಇದೆ) ಕಟ್ಟಿತು, ಬಂದಳು+ ಅಂಗನೆ ಕೀಚಕ+ ಆಲಯಕೆ= ಅರಮನೆಗೆ.
ಅರ್ಥ:ಸುಂದರ ಕಾಲು ಸರಪಳಿಯ ಝಣಝಣದ ಝೇಂಕಾರ ಸದ್ದಿನ ಸಂತಸದಲ್ಲಿ ಅರಮನೆಯನವಿಲುಗಳು ಕುಣಿದವು. ಅವಳ ಕಣ್ಣಂಚಿನ ಮಿಂಚು ಹೊಳೆದಾಗ, ಎಲ್ಲರೂ ಹೊಗಳುವರು. ಅವಳ ದೇಹದ ಸುಗಂಧ ಪರಿಮಳಕ್ಕೆ ದುಂಬಿಗಳು ಸಾಲಾಗಿ ಬಂದವು. ಹೀಗೆ ದ್ರೌಪದಿ ಕೀಚಕನ ಅರಮನೆಗೆ ಬಂದಳು.
ಮನುಮಥನ ಮದದಾನೆ ಕಂದ
ರ್ಪನ ಮಹಾಮಂತ್ರಾಧಿದೇವತೆ
ಜನವು ಮರುಳಹ ಮದ್ದು ಸಂಸೃತಿಸುಖದ ಸಾಕಾರೆ |
ಮನಸಿಜನ ಮಸೆದಲಗು ಮುನಿ ಮೋ
ಹನತಿಲಕ ಲಾವಣ್ಯಸಾಗರ
ಜನಿತ ಲಕ್ಷ್ಮಿ ಲತಾಂಗಿ ಬಂದಳು ಕೀಚಕನ ಮನೆಗೆ || ೮ ||
ಪದವಿಭಾಗ-ಅರ್ಥ: ಮನುಮಥನ= ಮನ್ಮಥನ ಮದದಾನೆ. ಕಂದರ್ಪನ=ಮನ್ಮಥನ, ಮದನನ ಮಹಾಮಂತ್ರದ ಅಧಿದೇವತೆ; ಜನವು ಮರುಳಹ ಮದ್ದು= ಜನರು ಮರುಳಾಗುವಂತಹ ಮದ್ದು/ ಔಷಧಿ; ಸಂಸೃತಿ(ಐಹಿಕ ಜೀವನ, ಸಂಸಾರ ೨ ಜನನ ಹಾಗೂ ಮರಣಗಳ ಚಕ್ರ,) ಸುಖದ ಸಾಕಾರೆ= ಐಹಿಕ ಜೀವನದ ಸುಖವು ಆಕಾರ ತಳೆದಂತೆ ಇರುವವಳು. ಮನಸಿಜನ ಮಸೆದಲಗು= ಮದನನ ಹರಿತವಾದ ಕತ್ತಿ; ಮುನಿ ಮೋಹನ ತಿಲಕ ಲಾವಣ್ಯಸಾಗರಜನಿತ ಲಕ್ಷ್ಮಿ= ಮುನಿಗಳನ್ನೂ ಮೋಹಪಡಿಸಬಲ್ಲ ಲಾವಣ್ಯಸಮುದ್ರದಲ್ಲಿ ಹುಟ್ಟಿದಲಕ್ಷ್ಮಿಯಂತಿದ್ದಳು; ಲತಾಂಗಿ ಬಂದಳು ಕೀಚಕನ ಮನೆಗೆ= ಈ ಬಗೆಯ ಲಾವನ್ಯವತಿ ದ್ರೌಪದಿಯು ಕೀಚಕನ ಮನೆಗೆ ಬಂದಳು.
ಅರ್ಥ: ಮನ್ಮಥನ ಮದದಾನೆ. ಮದನನ ಮಹಾಮಂತ್ರದ ಅಧಿದೇವತೆ; ಜನರು ಮರುಳಾಗುವಂತಹ ಮದ್ದು; ಈ ಜಗತ್ತಿನ / ಐಹಿಕ ಜೀವನದ ಸುಖವು ಆಕಾರ ತಳೆದಂತೆ ಇರುವವಳು; ಮದನನ ಹರಿತವಾದ ಕತ್ತಿ; ಮುನಿಗಳನ್ನೂ ಮೋಹಪಡಿಸಬಲ್ಲ ಲಾವಣ್ಯಸಮುದ್ರದಲ್ಲಿ ಹುಟ್ಟಿದಲಕ್ಷ್ಮಿಯಂತಿದ್ದಳು; ಈ ಬಗೆಯ ಲಾವಣ್ಯವತಿ ದ್ರೌಪದಿಯು ಕೀಚಕನ ಅರಮನೆಗೆ ಬಂದಳು.
ಕುಡಿತೆಗಂಗಳ ಚಪಲೆಯುಂಗುರ
ವಿಡಿಯ ನಡುವಿನ ನೀರೆ ಹಂಸೆಯ
ನಡೆಯ ಗಮನದ ಮೌಳಿಕಾತಿ ಪಯೋಜ ಪರಿಮಳದ |
ಕಡುಚೆಲುವೆ ಬರಲವನ ತನು ನಡ
ನಡುಗಿ ನಿಂದುನದಾವ ಹೆಂಗಸು
ಪಡೆದಳೀ ಚೆಲುವಿಕೆಯನೆನುತೀಕ್ಷಿಸಿದನಂಗನೆಯ || ೯ ||
ಪದವಿಭಾಗ-ಅರ್ಥ: ಕುಡಿತೆಗಂಗಳ ಚಪಲೆಯ+ ಉಂಗುರವಿಡಿಯ(ತೋರು ಬೆರಳು ಹೆಬ್ಬೆರಳು ಸೇರಿಸಿ ಉಂಗುರ ಮಾಡಿದರೆ ಅಷ್ಟು ಚಿಕ್ಕ) ನಡುವಿನ(ಸೊಂಟ) ನೀರೆ= ಬೊಗಸೆಯಷ್ಟು ದೊಡ್ಡ ಕಣ್ಣುಗಳ ಮಿಂಚಿನಂತಿರುವ, ಒಂದು ಮುಷ್ಟಿಯಷ್ಟು ಸೊಂಟದ ಹೆಣ್ಣು,; ಹಂಸೆಯ ನಡೆಯ ಗಮನದ= ಹಂಸದಂತೆ ನೆಡಿಗೆಯಂತೆ ನೆಡೆಯುವವಳು,; ಮೌಳಿಕಾತಿ ((ಮೌಳಿ-ತಲೆ ನವಿಲಿನಂತೆ ಎತ್ತಿದ ತಲೆಯುಳ್ಳವಳು)) ಪಯೋಜ ಪರಿಮಳದ ಕಡುಚೆಲುವೆ= ಕಮಲದ ಪರಿಮಳದ ಅತಿಚೆಲುವೆ,; ಬರಲು+ ಅವನ ತನು ನಡನಡುಗಿ ನಿಂದುನು+ ಅದು+ ಆವ ಹೆಂಗಸು ಪಡೆದಳು+ ಈ ಚೆಲುವಿಕೆಯನು+ ಎನುತ+ ಈಕ್ಷಿಸಿದನು+ ಅಂಗನೆಯ= ಃಇಗಿರುವ ಸೈರಂದ್ರಿ ಬರಲು ಕೀಚಕನ ದೇಹ ದಿಗ್ಭ್ರಮೆಯಿಂದ ನಡನಡುಗಿ ಕ್ಷಣ ಸ್ಥಬ್ಧನಾಗಿ ನಿಂತನು. ಅದು ಇನ್ನು ಬೇರೆಯಾವ ಹೆಂಗಸು ಈ ಬಗೆಯ ಚೆಲುವಿಕೆಯನ್ನು ಪಡೆಯಲು ಸಾದ್ಯ ಎನ್ನುತ್ತಾ ಅವಳನ್ನು ದಿಟ್ಟಿಸಿ ನೋಡಿದನು.(stunned - bewildered)
ಅರ್ಥ: ಬೊಗಸೆಯಷ್ಟು ದೊಡ್ಡ ಕಣ್ಣುಗಳ ಒಂದು ಮುಷ್ಟಿಯಷ್ಟು ಸೊಂಟದ ಮಿಂಚಿನಂತಿರುವ ಹೆಣ್ಣು, ಹಂಸದಂತೆ ನೆಡಿಗೆಯಂತೆ ನೆಡೆಯುವವಳು, ನವಿಲಿನಂತೆ ತಲೆಯೆತ್ತಿನೆಡೆಯವ ಕಮಲದ ಪರಿಮಳದ ಅತಿಚೆಲುವೆ, ಹೀಗಿರುವ ಸೈರಂದ್ರಿ ಬರಲು ಅವಳನ್ನು ನೋಡಿ ಕೀಚಕನ ದೇಹ ದಿಗ್ಭ್ರಮೆಯಿಂದ ನಡನಡುಗಿ ಕ್ಷಣ ಸ್ಥಬ್ಧನಾಗಿ ನಿಂತನು. ಅದಿನ್ನಾವ ಹೆಂಗಸು ತಾನೆ ಈ ಬಗೆಯ ಚೆಲುವಿಕೆಯನ್ನು ಪಡೆಯಲು ಸಾದ್ಯ ಎನ್ನುತ್ತಾ ಅವಳನ್ನು ದಿಟ್ಟಿಸಿ ನೋಡಿದನು.
ಅರಿದು ನೆತ್ತರುಗಾಣದಲಗಿದು
ನೆರೆ ಬಿಗಿಯೆ ಮೈ ಬಾಸುಳೇಳದ
ಹುರಿ ಬಲಿದ ನೇಣ್ಸೋಂಕಿದೊಡೆ ಹೊಗೆ ಮಸಗದೆದೆಗಿಚ್ಚು |
ಅರರೆ ಕಂಗಳ ಧಾರೆ ಯಾವನ
ಕೊರಳ ಕೊಯ್ಯದದಾವನರಿಕೆಯ
ಹುರುಳುಗೆಡಿಸದಿದಾವ ನಿಲುವನು ಶಿವ ಶಿವಾಯೆಂದ || ೧೦ ||
ಪದವಿಭಾಗ-ಅರ್ಥ: ಅರಿದು= ಕತ್ತರಿಸಿ, ನೆತ್ತರುಗಾಣದಲಗಿದು= ಗಾಯಮಾಡಿಯೂ ರಕ್ತಬರಿಸದ ಕತ್ತಿಯಬಾಯಿ ಇದು. ನೆರೆ ಬಿಗಿಯೆ ಮೈ ಬಾಸುಳೇಳದ ಹುರಿ= ಉರಿಯಾಗುವಂತೆ ಮೈಗೆ ಬಿಗಿಯಾಗಿ ಹೊಡೆತ ಬಿದ್ದರೂ ಬಾಸುಂಡೆ ಬರದ ಹುರಿಯ ಚಾಟಿ ಇವಳು. ಬಲಿದ ನೇಣ್ಸೋಂಕಿದೊಡೆ= ಬಲಿದ+ ನೇಣ್+ ಸೋಂಕಿದೊಡೆ, ಹೊಗೆ ಮಸಗದೆ+ ಎದೆಗೆ+ ಕಿಚ್ಚು= ಕುತ್ತಿಗೆಗೆ ಬಲವಾಗಿ ಸುತ್ತಿದ ನೇಣು ಇವಳು, ಹೊಗೆಬರದ ಎದೆಗೆ ಹತ್ತಿದ ಬೆಂಕಿ ಇವಳು.; ಅರರೆ ಕಂಗಳ ಧಾರೆ ಯಾವನ ಕೊರಳ ಕೊಯ್ಯದು+ ಅದಾವನ+ ಅರಿಕೆಯ ಹುರುಳುಗೆಡಿಸದು+ ಅದಾವ ನಿಲುವನು ಶಿವ ಶಿವಾ+ ಯೆಂದ= ಅರರೆ ಇವಳ ಕಣ್ನುಗಳ ಧಾರೆಯ ನೋಟ ಯಾವನ ಕೊರಳ ಕೊಯ್ಯದೆ ಬಿಡುವುದು. ಅದು ಯಾವನ ಬುದ್ಧಿಯ ಸ್ಥಿಮಿತವನ್ನು ಕೆಡಿಸದೆ ಅದು ಯಾರುತಾನೆ ಸ್ಥಿರವಾಗಿ ನಿಲ್ಲುವನು, ಶಿವ ಶಿವಾ ಯೆಂದ ಕೀಚಕ.
ಅರ್ಥ: ದ್ರೌಪದಿಯನ್ನು ನೋಡಿ ಅವಳ ಅಂದಕ್ಕೆ ಬೆಚ್ಚಿದ ಕೀಚಕ, (ಇವಳು) ಗಾಯಮಾಡಿಯೂ ರಕ್ತಬರಿಸದ ಕತ್ತಿಯಬಾಯಿ ಇದು. ಮೈಗೆ ಬಿಗಿಯಾಗಿ ಅಪ್ಪಿದರೆ ಉರಿಯಾಗುವಂತೆ ಮೈಗೆ ಬಿಗಿಯಾಗಿ ಹೊಡೆತ ಬಿದ್ದರೂ ಬಾಸುಂಡೆ ಬರದ ಹುರಿಯ ಚಾಟಿ ಇವಳು. ಕುತ್ತಿಗೆಗೆ ಬಲವಾಗಿ ಸುತ್ತಿದ ನೇಣು ಇವಳು, ಹೊಗೆಬರದ ಎದೆಗೆ ಹತ್ತಿದ ಬೆಂಕಿ ಇವಳು. ಅರರೆ ಇವಳ ಕಣ್ನುಗಳ ಧಾರೆಯ ನೋಟ ಯಾವನ ಕೊರಳ ಕೊಯ್ಯದೆ ಬಿಡುವುದು. ಅದು ಯಾವನ ಬುದ್ಧಿಯ ಸ್ಥಿಮಿತವನ್ನು ಕೆಡಿಸದೆ ಇರುವುದು! ಇವಳ ರೂಪದ ಮುಂದೆ ಅದು ಯಾರುತಾನೆ ಸ್ಥಿರವಾಗಿ ನಿಲ್ಲುವನು, ಶಿವ ಶಿವಾ! ಯೆಂದ ಕೀಚಕ.
ಆವ ಜನ್ಮದ ಸುಕೃತ ಫಲ ನೆರೆ
ದೀ ವಧುವ ಸೇರಿದರೊ ಧನ್ಯರು
ತಾವಲಾ ಬಳಿಕೇನು ಪೂರ್ವದ ಸುಖದ ಸರ್ವಸ್ವ |
ಭಾವಿಸಲು ಸುಕೃತಾವಳಿಗಳಿಂ
ದೀ ವನಿತೆಯಲ್ಲಿಂದ ಮೇಣಿ
ನ್ನಾವುದತಿಶಯವುಂಟೆನುತ ಖಳರಾಯನಿದಿರೆದ್ದ || ೧೧ ||
ಪದವಿಭಾಗ-ಅರ್ಥ: ಆವ ಜನ್ಮದ ಸುಕೃತ ಫಲ ನೆರೆದು+ ಈ ವಧುವ ಸೇರಿದರೊ ಧನ್ಯರು ತಾವಲಾ= ಯಾವ ಜನ್ಮದ ಸುಕೃತ ಫಲದಿಂದ ಹಿರಿಮೆಗಳಿಸಿ ಈ ವಧುವ ಸೇರಿದರೊ ಅವರೇ (ತಾವು) ಧನ್ಯರು ಅಲ್ಲವೇ!; ಬಳಿಕ+ ಏನು ಪೂರ್ವದ ಸುಖದ ಸರ್ವಸ್ವ,= ಮತ್ತೇನಿದೆ ಇವಳು ಹಿಂದಿನ ಜನ್ಮಗಳ ಪುಣ್ಯದಿಂದ ಒದಗಿದ ಸುಖದ ಸರ್ವಸ್ವ; ಭಾವಿಸಲು ಸುಕೃತ+ ಆವಳಿಗಳು+ ಇಂದು+= ಯೋಚಿಸಿದರೆ ಇಂದು ಆ ಪುಣ್ಯದ ದುಪ್ಪಟ್ಟು ಒದಗಿದಂತಿದೆ. ಈ ವನಿತೆಯು+ ಎಲ್ಲಿಂದ/ ವನಿತೆಯಲ್ಲಿಂದ (ವನಿತೆಗಿಂತ) ಮೇಣಿನ್ನಾವುದು+ ಅತಿಶಯವುಂಟೆನುತ ಖಳರಾಯನು+ ಇದಿರು+ ಎದ್ದ= ಈ ವನಿತೆಗಿಂತ ಮತ್ತೆ ಇನ್ನಾವುದು ಅತಿಶಯವಾದುದು ಉಂಟೇ, ಇಲ್ಲವೇ ಇಲ್ಲ; ಎನ್ನುತ್ತಾ ಖಳರಾಯನು ಅವಳನ್ನು ಎದುರುಗೊಳ್ಲಲು ಎದ್ದು ನಿಂತ.
ಅರ್ಥ: ಯಾವ ಜನ್ಮದ ಸುಕೃತ ಫಲದಿಂದ ಹಿರಿಮೆಗಳಿಸಿ ಈ ವಧುವನ್ನು ಸೇರಿದರೊ ಅವರೇ ಧನ್ಯರು ಅಲ್ಲವೇ! ಅಷ್ಟರ ಮೇಲೆ ಅದಕ್ಕೂ ಹೆಚ್ಚಿನದು ಮತ್ತೇನಿದೆ! ಇವಳು ಹಿಂದಿನ ಜನ್ಮಗಳ ಪುಣ್ಯದಿಂದ ಒದಗಿದ ಸುಖದ ಸರ್ವಸ್ವ; ಯೋಚಿಸಿದರೆ ಇಂದು ತನಗೆ ಆ ಪುಣ್ಯದ ದುಪ್ಪಟ್ಟು ಒದಗಿದಂತಿದೆ. ಈ ವನಿತೆಗಿಂತ ಮತ್ತೆ ಇನ್ನಾವುದು ಅತಿಶಯವಾದುದು ಉಂಟೇ, ಇಲ್ಲವೇ ಇಲ್ಲ. ಎನ್ನುತ್ತಾ ಕೀಚಕನು ಅವಳನ್ನು ಎದುರುಗೊಳ್ಲಲು ಎದ್ದು ನಿಂತ.
ತರುಣಿ ಬಾ ಕುಳ್ಳಿರು ಮದಂತಃ
ಕರಣದೆಡರಡಗಿತ್ತು ಕಾಮನ
ದುರುಳತನಕಿನ್ನಂಜುವೆನೆ ನೀನೆನಗೆ ಬಲವಾಗೆ |
ಬಿರುದ ಕಟ್ಟುವೆನಿಂದುವಿಗೆ ಮಧು
ಕರಗೆ ಕೋಗಿಲೆಗೆಂದು ಖಳನ
ಬ್ಬರಿಸಿ ನುಡಿಯಲು ಖಾತಿಗೊಂಡಿಂತೆಂದಳಿಂದುಮುಖಿ || ೧೨ ||
ಪದವಿಭಾಗ-ಅರ್ಥ: ತರುಣಿ ಬಾ ಕುಳ್ಳಿರು ಮದಂತಃಕರಣದ (ಮತ್-ನನ್ನ ಅಂತಃಕರಣ)+ ಎಡರು+ ಅಡಗಿತ್ತು= 'ತರುಣಿ ಬಾ ಕುಳಿತುಕೊ. ನನ್ನ ಮನಸ್ಸಿನ ಎಡರುದುಗುಡ- ಆತಂಕ ಅಡಗಿತು ಪರಿಹಾರವಾಯಿತು.; ಕಾಮನ ದುರುಳತನಕೆ+ ಇನ್ನಂಜುವೆನೆ ನೀನು+ ಎನಗೆ ಬಲವಾಗೆ ಬಿರುದ ಕಟ್ಟುವೆನು(ಹಾರಿಸುತ್ತೇನೆ)+ ಇಂದುವಿಗೆ= ಕಾಮನ ಕಾಟಕ್ಕೆ ಇನ್ನು ಅಂಜುವುದಿಲ್ಲ, ನೀನು ನನಗೆ ಬೆಂಬಲಕೊಟ್ಟರೆ ಬಿರುದಿನ ಧ್ವಜವನ್ನು ಹಾರಿಸುತ್ತೇನೆ, ಇಂದುವಿಗೆ ಮಧುಕರಗೆ ಕೋಗಿಲೆಗೆಂದು ಖಳನು+ ಅಬ್ಬರಿಸಿ ನುಡಿಯಲು= ಕಾಮನ ಸಂಗಾತಿಗಳಾದ ಚಂದ್ರನಿಗೆ, ದುಂಬಿಗೆ, ಕೋಗಿಲೆಗಗಳನ್ನು ಎದುರಿಸಿ ಗೆಲ್ಲವೆ,' ಎಂದು ಕೀಚಕನು ಅಬ್ಬರಿಸಿ ಹೇಳಿದನು.; ಖಾತಿಗೊಂಡು+ ಇಂತೆಂದಳು+ ಇಂದುಮುಖಿ= ಆಗ ಸಿಟ್ಟಾಗಿ ಹೀಗೆಂದಳು ದ್ರೌಪದಿ.
ಅರ್ಥ: ಕೀಚಕನು ಎದ್ದು ಆದರದಿಂದ, 'ತರುಣಿ ಬಾ ಕುಳಿತುಕೊ. ನನ್ನ ಮನಸ್ಸಿನ ಆತಂಕ ಅಡಗಿತು ಪರಿಹಾರವಾಯಿತು. ಕಾಮನ ಕಾಟಕ್ಕೆ ಇನ್ನು ಅಂಜುವುದಿಲ್ಲ, ನೀನು ನನಗೆ ಬೆಂಬಲಕೊಟ್ಟರೆ ಬಿರುದಿನ ಜಯದ ಧ್ವಜವನ್ನು ಹಾರಿಸುತ್ತೇನೆ, ಕಾಮನ ಸಂಗಾತಿಗಳಾದ ಚಂದ್ರನಿಗೆ, ದುಂಬಿಗೆ, ಕೋಗಿಲೆಗಗಳಿಗೆ ಎದುರುನಿಂತು ಗೆಲ್ಲವೆ,' ಎಂದು ಕೀಚಕನು ಅಬ್ಬರಿಸಿ ಹೇಳಿದನು. ಆಗ ದ್ರೌಪದಿ ಸಿಟ್ಟಾಗಿ ಹೀಗೆಂದಳು.
ಬಾಯಿ ಹುಳುವುದು ಬಯಲ ನುಡಿದೊಡೆ
ನಾಯಿತನ ಬೇಡೆಲವೊ ಕೆಡದಿರು
ರಾಯರಂಗನೆ ಕಳುಹೆ ಬಂದೆನು ಮಧುವ ತರಲೆಂದು |
ಸಾಯಬೇಕೇ ಹಸಿದ ಶೂಲವ
ಹಾಯಿ ಹೋಗೆನೆ ನಿನ್ನ ಬೈಗಳು
ನೋಯಿಸುವವೇ ತನ್ನನೆನುತವೆ ತುಡುಕಿದನು ಸತಿಯ || ೧೩ ||
ಪದವಿಭಾಗ-ಅರ್ಥ: ಬಾಯಿ ಹುಳುವುದು ಬಯಲ(ಇಲ್ಲದ್ದು- ಸಲ್ಲದ್ದನ್ನು) ನುಡಿದೊಡೆ ನಾಯಿತನ ಬೇಡೆಲವೊ ಕೆಡದಿರು= ಬಾಯಿಯಲ್ಲಿ ಹುಳು ಬೀಳುವುದುಸಲ್ಲದ ಮಾತನ್ನು ಆಡಿದರೆ.; ನಾಯಿತನ ಬೇಡೆಲವೊ ಕೆಡದಿರು ರಾಯರಂಗನೆ ಕಳುಹೆ ಬಂದೆನು ಮಧುವ ತರಲೆಂದು= ನಾಯಿಯಬುದ್ಧಿಯನ್ನು ಮಾಡಬೇಡ; ಎಲವೊ ಕೆಟ್ಟು ಹಾಳಾಗಬೇಡ; ನಾನು ನಿನ್ನನ್ನು ಬಯಸಿ ಬಂದಿಲ್ಲ, ಮಧುವ ತರಲಿಕ್ಕಾಗಿ ರಾಣಿ ಕಳುಹುಹಿಸಲು ಬಂದೆ. ಸಾಯಬೇಕೇ ಹಸಿದ ಶೂಲವಹಾಯಿ ಹೋಗೆನೆ, ನಿನ್ನ ಬೈಗಳು ನೋಯಿಸುವವೇ ತನ್ನನೆನುತವೆ ತುಡುಕಿದನು ಸತಿಯ= ನಿನಗೆ ಸಾಯಬೇಕೆಂದಿದ್ದರೆ ಶೂಲವನ್ನು ಹುಗಿದು ಆ ಹಸಿದ ಶೂಲವನ್ನು ಹಾಯಿದು ಸಾಯಿ ಹೋಗು, ಎನ್ನಲು, ನಿನ್ನ ಬೈಗಳು ನನ್ನನ್ನು ನೋಯಿಸುತ್ತವೆಯೇ ಎನ್ನತ್ತಾ, ಅವಳನ್ನು ಕೈಹಿಡಿದು ಎಳೆದುಕೊಂಡನು.
ಅರ್ಥ: ಕೀಚಕ, ಸಲ್ಲದ ಮಾತನ್ನು ಆಡಿದರೆ ನಿನ್ನ ಬಾಯಿಯಲ್ಲಿ ಹುಳು ಬೀಳುವುದು.; ನಾಯಿಯ ಬುದ್ಧಿಯನ್ನು ಮಾಡಬೇಡ; ಎಲವೊ ಕೆಟ್ಟು ಹಾಳಾಗಬೇಡ; ನಾನು ನಿನ್ನನ್ನು ಬಯಸಿ ಬಂದಿಲ್ಲ, ಮಧುವ ತರಲಿಕ್ಕಾಗಿ ರಾಣಿ ಕಳುಹುಹಿಸಲು ಬಂದೆ. ನಿನಗೆ ಸಾಯಬೇಕೆಂದಿದ್ದರೆ ಶೂಲವನ್ನು ಹುಗಿದು ಆ ಹಸಿದ ಶೂಲವನ್ನು ಹಾಯ್ದು ಸಾಯಿ, ಹೋಗು, ಎನ್ನಲು, ನಿನ್ನ ಬೈಗಳು ನನ್ನನ್ನು ನೋಯಿಸುತ್ತವೆಯೇ ಎನ್ನತ್ತಾ, ಅವಳನ್ನು ಕೈಹಿಡಿದು ಎಳೆದುಕೊಂಡನು.

ಕೀಚಕನ ಆಕ್ರಮಣ[ಸಂಪಾದಿಸಿ]

ಕರವನೊಡೆಮುರುಚಿದಳು ಬಟ್ಟಲ
ಧರೆಯೊಳೀಡಾಡಿದಳು ಸತಿ ಮೊಗ
ದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ
ತರಳೆ ಹಾಯ್ದಳು ಮೊಲೆಯ ಜಘನದ
ಭರದಿ ಬಡನಡು ಮುರಿಯದಿಹುದೇ
ವರ ಸಭಾಗ್ಯತೆಗೆನಲು ರಭಸದೊಳೋಡಿದಳು ಸಭೆಗೆ ೧೪
ಪದವಿಭಾಗ-ಅರ್ಥ: ಕರವನೊಡೆಮುರುಚಿದಳು= ಕೈಯನ್ನು ಕೂಡಲೆ ತಿರುಚಿ ಬಿಡಿಸಿಕೊಂಡು,; ಬಟ್ಟಲಧರೆಯೊಳೀಡಾಡಿದಳು= ಮಧುವಿಗಾಗಿ ತಂದಿದ್ದ ಬಟ್ಟಲನ್ನು ನೆಲ್ಲೆ ಎಸೆದಳು, ಸತಿ ಮೊಗದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ ತರಳೆ ಹಾಯ್ದಳು= ಅವಳು ಮುಖವನ್ನು ತಿರುಗಿಸಿ ಬಾಗಿಲ ದಾಟಿ ಭಯದಿಂದ ನಡುಗಿ ದುಃಖಿಸುತ್ತಾ, ಹೆಣ್ಣು ಓಡಿದಳು. ಮೊಲೆಯ ಜಘನದ ಭರದಿ ಬಡನಡು ಮುರಿಯದಿಹುದೇ ವರ ಸಭಾಗ್ಯತೆಗೆ+ ಎನಲು ರಭಸದೊಳು+ ಓಡಿದಳು ಸಭೆಗೆ= ಎದೆ ನಿತಂಬಗಳ ಭಾರದಿಂದ ಅವಳ ಬಡನಡು- ಸಣ್ಣ ಸೊಂಟ ಮುರಿಯದಿದ್ದುಹದೇ ಅವಳ ದೊಡ್ಡ ಸಭಾಗ್ಯವು ಎನ್ನುವಂತೆ ರಭಸದಿಂದ ವಿರಾಟ ರಾಯನ ಸಭೆಗೆ ಓಡಿದಳು.
ಅರ್ಥ: ಕೈಯನ್ನು ಕೂಡಲೆ ತಿರುಚಿ ಬಿಡಿಸಿಕೊಂಡು, ಮಧುವಿಗಾಗಿ ತಂದಿದ್ದ ಬಟ್ಟಲನ್ನು ಅಲ್ಲೆ ಎಸೆದಳು, ಅವಳು ಮುಖವನ್ನು ತಿರುಗಿಸಿ ಬಾಗಿಲ ದಾಟಿ ಭಯದಿಂದ ನಡುಗಿ ದುಃಖಿಸುತ್ತಾ ಓಡಿದಳು. ಅವಳ ಎದೆ ನಿತಂಬಗಳ ಭಾರದಿಂದ ಅವಳ ಸಣ್ಣ ಸೊಂಟ ಮುರಿಯದಿದ್ದುಹದೇ ಅವಳ ದೊಡ್ಡ ಸಭಾಗ್ಯವು ಎನ್ನುವಂತೆ ರಭಸದಿಂದ ವಿರಾಟ ರಾಯನ ಸಭೆಗೆ ಓಡಿದಳು.
ಒಡನೆ ಬೆಂಬತ್ತಿದನು ತುರುಬನು
ಹಿಡಿದು ತೊತ್ತಿನ ಮಗಳೆ ಹಾಯ್ದರೆ
ಬಿಡುವೆನೇ ಫಡಯೆನುತ ಹೊಯ್ದನು ಕಾಲಲೊಡೆಮೆಟ್ಟಿ
ಕೆಡೆದು ರಕುತವ ಕಾರಿ ಹುಡಿಯಲಿ
ಮುಡಿ ಹೊರಳಿ ಬಿರುಗಾಳಿಯಲಿ ಸೈ
ಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು ೧೫
ಪದವಿಭಾಗ-ಅರ್ಥ: ಒಡನೆ ಬೆಂಬತ್ತಿದನು ತುರುಬನು ಹಿಡಿದು ತೊತ್ತಿನ ಮಗಳೆ ಹಾಯ್ದರೆ ಬಿಡುವೆನೇ= ಕೂಡಲೆ ಕೀಚಕನು ಬೆನ್ನಟ್ಟಿ ಹೋದನು; ಅವಳ ತುರುಬನ್ನು ಹಿಡಿದು, ತೊತ್ತಿನ ಮಗಳೆ ಓಡಿದರೆ ಬಿಡುತ್ತೇನೆಯೇ!; ಫಡ ಯೆನುತ ಹೊಯ್ದನು ಕಾಲಲೊಡೆಮೆಟ್ಟಿ ಕೆಡೆದು, ರಕುತವ ಕಾರಿ ಹುಡಿಯಲಿ ಮುಡಿ ಹೊರಳಿ ಬಿರುಗಾಳಿಯಲಿ ಸೈಗೆಡೆದ (ಮುರಿದುಬಿದ್ದ) ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು= ಫಡ ಎಂದು ಆರ್ಭಟಿಸಿ, ಕೆಡವಿ ಕಾಲಲ್ಲಿ ಒಡನೆಯೇ ಮೆಟ್ಟಿ ಹೊಡೆದನು. ಅವಳು ಬಿದ್ದು ರಕ್ತವನ್ನು ಕಾರಿ ಧೂಳಿನ ಹುಡಿಯಲ್ಲಿ ಅವಳ ಬಿಚ್ಚದ ಮುಡಿ ಹೊರಳಾಡುತ್ತಿತ್ತು. ಅದು ಬಿರುಗಾಳಿಯಲ್ಲಿ ಮುರಿದುಬಿದ್ದ ಬಾಳಿಯಗಿಡದಂತೆ ಕಾಣುತ್ತಿರಲು ದ್ರೌಪದಿ ಹೊರಳಾಡಿದಳು.
ಅರ್ಥ: ಕೂಡಲೆ ಕೀಚಕನು ಬೆನ್ನಟ್ಟಿ ಹೋದನು; ಅವಳ ತುರುಬನ್ನು ಹಿಡಿದು, ತೊತ್ತಿನ ಮಗಳೆ ಓಡಿದರೆ ಬಿಡುತ್ತೇನೆಯೇ! ಫಡ ಎಂದು ಆರ್ಭಟಿಸಿ, ಕೆಡವಿ ಕಾಲಲ್ಲಿ ಒಡನೆಯೇ ಮೆಟ್ಟಿ ಹೊಡೆದನು. ಅವಳು ಬಿದ್ದು ರಕ್ತವನ್ನು ಕಾರಿ ಧೂಳಿನ ಹುಡಿಯಲ್ಲಿ ಅವಳ ಬಿಚ್ಚದ ಮುಡಿ ಹೊರಳಾಡುತ್ತಿತ್ತು. ಅದು ಬಿರುಗಾಳಿಯಲ್ಲಿ ಮುರಿದುಬಿದ್ದ ಬಾಳಿಯಗಿಡದಂತೆ ಕಾಣುತ್ತಿರಲು ದ್ರೌಪದಿ ಹೊರಳಾಡಿದಳು.
ಕರುಳ ತೆಗೆ ತಿನ್ನಡಗನೆನುತ
ಬ್ಬರಿಸಿ ಸೂರ್ಯನು ಕೊಟ್ಟ ದಾನವ
ನುರವಣಿಸಿ ಕೀಚಕನ ಹೊಯ್ದನು ಹಿಡಿದು ಕುಸುಬಿದನು |
ದುರುಳನಡೆಗೆಡೆದೆದ್ದು ನಿಮಿಷದೊ
ಳೊರಲುತೋಡಿದನಾಲಯಕೆ ಬಳಿ
ಕರಸ ಮೊದಲಾದಖಿಳಜನ ನಡುಗಿತ್ತು ಭಯ ಹೊಯ್ದು || ೧೬ ||
ಪದವಿಭಾಗ-ಅರ್ಥ: ಕರುಳ ತೆಗೆ ತಿನ್ನಡಗನು(ತಿನ್ನು+ ಅಡಗನು- ಮಾಂಸವನ್ನು)+ ಎನುತ+ ಅಬ್ಬರಿಸಿ ಸೂರ್ಯನು ಕೊಟ್ಟ ದಾನವನು+ ಉರವಣಿಸಿ(ಮುನ್ನುಗ್ಗಿ, ಪರಾಕ್ರಮಿಸಿ) ಕೀಚಕನ ಹೊಯ್ದನು ಹಿಡಿದು ಕುಸುಬಿದನು= 'ಕರುಳ ತೆಗೆ' 'ತಿನ್ನು ಮಾಂಸವನ್ನು ಎನ್ನುತ್ತಾ ಅಬ್ಬರಿಸಿ ಸೂರ್ಯನು ದ್ರೌಪದಿಯ ರಕ್ಷಣೆಗೆ ಕೊಟ್ಟ ದೈತ್ಯನು ಮುನ್ನುಗ್ಗಿ ಕೀಚಕನನ್ನು ಹೊಡೆದನು ಮತ್ತೆ ಅವನನ್ನು ಹಿಡಿದು ಕುಸುಗರಿದನು/ ಕುಕ್ಕರಿಸಿದನು. ; ದುರುಳ ನಡೆಗೆಡೆದು(ಬಿದ್ದು)+ ಎದ್ದು ನಿಮಿಷದೊಳು+ ಒರಲುತ+ ಓಡಿದನು+ ಆಲಯಕೆ, ಬಳಿಕ+ ಅರಸ ಮೊದಲಾದ+ ಅಖಿಳಜನ ನಡುಗಿತ್ತು ಭಯ ಹೊಯ್ದು= ದುಷ್ಟ ಕೀಚಕನು ಬಿದ್ದು ನಿಮಿಷದಲ್ಲಿ ಎದ್ದು ನೋವಿನಿಂದ ಒರಲುತ್ತಾ ತನ್ನ ಮನೆಗೆ ಓಡಿಹೋದನು. ಬಳಿಕ ಸಭೆಯಲ್ಲಿದ್ದ ಅರಸ ವಿರಾಟ ಮೊದಲಾದ ಜನರೆಲ್ಲರೂ, ಭಯಪಟ್ಟು ನಡುಗಿದರು..
ಅರ್ಥ: 'ಕರುಳ ತೆಗೆ' 'ಮಾಂಸವನ್ನು ತಿನ್ನು' ಎನ್ನುತ್ತಾ ಅಬ್ಬರಿಸಿ ಸೂರ್ಯನು ದ್ರೌಪದಿಯ ರಕ್ಷಣೆಗೆ ಕೊಟ್ಟ ದೈತ್ಯನು ಮುನ್ನುಗ್ಗಿ ಕೀಚಕನನ್ನು ಹೊಡೆದನು ಮತ್ತೆ ಅವನನ್ನು ಹಿಡಿದು ಕುಸುಗರಿದನು. ದುಷ್ಟ ಕೀಚಕನು ಬಿದ್ದು ನಿಮಿಷದಲ್ಲಿ ಎದ್ದು ನೋವಿನಿಂದ ಒರಲುತ್ತಾ ತನ್ನ ಮನೆಗೆ ಓಡಿಹೋದನು. ಬಳಿಕ ಸಭೆಯಲ್ಲಿದ್ದ ಅರಸ ವಿರಾಟ ಮೊದಲಾದ ಜನರೆಲ್ಲರೂ, ಭಯಪಟ್ಟು ನಡುಗಿದರು.
ಹೊಡೆ ಮರಳಿ ಮುರಿದೆದ್ದು ತುರುಬಿನ
ಹುಡಿಯ ಕೊಡಹುತ ಮೊಲೆಗೆ ಮೇಲುದು
ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿ ಮಿಡಿದು |
ನುಡಿಯಲಾಗದೆ ಖಳನು ಹೆಂಗುಸ
ಬಡಿಯೆ ನೋಡುತ್ತಿಹರೆ ಹಿರಿಯರು
ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು || ೧೭ ||
ಪದವಿಭಾಗ-ಅರ್ಥ: ಹೊಡೆ ಮರಳಿ= ಮಗ್ಗುಲಾಗಿ, ಮುರಿದೆದ್ದು ತುರುಬಿನ ಹುಡಿಯ ಕೊಡಹುತ= ದ್ರೌಪದಿಯು ಮಗ್ಗುಲಾಗಿ ಮೈಮುರಿದು ಎದ್ದು ತುರುಬಿಗ ಹತ್ತಿದ ಧೂಳನ್ನು ಕೊಡವಿದಳು,; ಮೊಲೆಗೆ ಮೇಲುದು ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿ ಮಿಡಿದು= ಎದೆಗೆ ಮೇಲುಸೆರಗನ್ನು ಹೊದೆದು, ಗಲ್ಲಕ್ಕೆ ಹರಿದ ರಕ್ತವನ್ನು ಬೆರಳಿಂದ ಮಿಡಿ ಮಿಡಿದು ತೆಗೆದು ಕೊಡವಿದಳು.; ನುಡಿಯಲಾಗದೆ ಖಳನು ಹೆಂಗುಸ ಬಡಿಯೆ ನೋಡುತ್ತಿಹರೆ ಹಿರಿಯರು,= ದುಷ್ಟನು ಹೆಂಗುಸನ್ನು ಬಡಿಯುತ್ತಿದ್ದರೆ ಮಾತನ್ನಾಡಲು ಆಗದೆ ಹಿರಿಯರಾದವರು ನೋಡುತ್ತಿರಬಹುದೆ; ಹಿಡಿದ ಮೌನವ ಹೊತ್ತು ಲೇಸೆಂದು+ ಅಬಲೆ ಹಲುಬಿದಳು (ಮೌನವ ಹಿಡಿದ ಹೊತ್ತು ಲೇಸು ಎಂದು) = ಈ ಸಂದರ್ಭದಲ್ಲಿ ಮೌನವ್ರತವನ್ನು ಆಚರಿಸಲುಆರಿಸಿಕೊಂಡ- ಹಿಡಿದ ಈ ಹೊತ್ತು ಲೇಸು - ಪ್ರಶಸ್ತವಾಗಿದೆ ಎಂದು ದ್ರೌಪದಿ ದುಃಖಿಸಿದಳು.
ಅರ್ಥ: ದ್ರೌಪದಿಯು ಮಗ್ಗುಲಾಗಿ ಮೈಮುರಿದು ಎದ್ದು ತುರುಬಿಗ ಹತ್ತಿದ ಧೂಳನ್ನು ಕೊಡವಿದಳು; ಎದೆಗೆ ಮೇಲುಸೆರಗನ್ನು ಹೊದೆದು ಮುಚ್ಚಿಕೊಂಡಳು; ಗಲ್ಲಕ್ಕೆ ಹರಿದ ರಕ್ತವನ್ನು ಬೆರಳಿಂದ ಮಿಡಿ ಮಿಡಿದು ತೆಗೆದು ಕೊಡವಿದಳು; ದುಷ್ಟನು ಹೆಂಗುಸನ್ನು ಬಡಿಯುತ್ತಿದ್ದರೆ ಮಾತನ್ನಾಡಲು ಆಗದೆ ಹಿರಿಯರಾದವರು ನೋಡುತ್ತಿರಬಹುದೆ; ಈ ಸಂದರ್ಭದಲ್ಲಿ ಹಿರಿಯರಾದವರು ಮೌನವ್ರತವನ್ನು ಆಚರಿಸಲು ಆರಿಸಿಕೊಂಡ ಈ ಹೊತ್ತು ಪ್ರಶಸ್ತವಾಗಿದೆ ಎಂದು ದ್ರೌಪದಿ ದುಃಖಿಸಿದಳು.
ಶಿವ ಶಿವಾ ಪಾಪಿಗಳು ಪತಿಯಾ
ದವರ ತಾಗಲಿ ಸುಯ್ಲಕಟ ನಾ
ಲುವರ ನಡುವಣ ಹಾವು ಸಾಯದು ನಿರಪರಾಧಿಯನು |
ಅವಗಡಿಸಿದನು ಖಳನು ಧರ್ಮದ
ವಿವರ ಸುದ್ದಿಯನಾಡದೀ ಜನ
ನಿವಹ ಘೋರಾರಣ್ಯವಾಯ್ತೆಂದೊರಲಿದಳು ತರಳೆ || ೧೮ ||
ಪದವಿಭಾಗ-ಅರ್ಥ: ಶಿವ ಶಿವಾ ಪಾಪಿಗಳು ಪತಿಯಾದವರ ತಾಗಲಿ ಸುಯ್ಲು+ ಅಕಟ= ಶಿವ ಶಿವಾ ಪಾಪಿಗಳಾದ ಪತಿಯಾದವರನ್ನು ಈ ಸುಯ್ಲು - ನಿಟ್ಟುಸಿರು ತಾಗಲಿ, ಅಕಟ; ನಾಲುವರ ನಡುವಣ ಹಾವು ಸಾಯದು= ನಾಲ್ಕು ಜನರ ನಡುವೆ ಇದ್ದ ಹಾವು ಸಾಯದು - ಪ್ರತಿಯೊಬ್ಬರೂ ಮತ್ತೊಬ್ಬನ ಕಡೆ ನೋಡುತ್ತಾರೆ; ನಿರಪರಾಧಿಯನು ಅವಗಡಿಸಿದನು ಖಳನು, ಧರ್ಮದ ವಿವರ ಸುದ್ದಿಯನು+ ಆಡದ+ ಈ ಜನನಿವಹ(ಸಮೂಹ) ಘೋರಾರಣ್ಯವಾಯ್ತು+ ಎಂದು ಒರಲಿದಳು ತರಳೆ= ನಿರಪರಾಧಿಯಾದ ನನ್ನನ್ನು ದುಷ್ಟನು ಹೊಡೆದನು. ಧರ್ಮದ ವಿವರ ವಿಚಾರವನ್ನು ಆಡದ ಈ ಜನಸಮೂಹವು ಘೋರಾರಣ್ಯವೇ ಸರಿ ಎಂದು ಗೋಳಿಟ್ಟಳು ತರಳೆ.
ಅರ್ಥ: ಶಿವ ಶಿವಾ! ಪಾಪಿಗಳಾದ ಪತಿಯಾದವರನ್ನು ಈ ನನ್ನ- ನಿಟ್ಟುಸಿರು ತಾಗಲಿ, ಅಕಟ ನಾಲ್ಕು ಜನರ ನಡುವೆ ಇದ್ದ ಹಾವು ಸಾಯದು - ಪ್ರತಿಯೊಬ್ಬರೂ ಮತ್ತೊಬ್ಬನ ಕಡೆ ನೋಡುತ್ತಾರೆ; ನಿರಪರಾಧಿಯಾದ ನನ್ನನ್ನು ದುಷ್ಟನು ಹೊಡೆದನು. ಧರ್ಮದ ವಿವರ ವಿಚಾರವನ್ನು ಆಡದ ಈ ಜನಸಮೂಹವು ಘೋರಾರಣ್ಯವೇ ಸರಿ ಎಂದು ಗೋಳಿಟ್ಟಳು ತರಳೆ.
ಎಲವೊ ದೇಶಿಗ ಕಂಕ ಭಟ್ಟನೆ
ಹಲವು ಧರ್ಮವ ಬಲ್ಲೆ ಗಡ ನೃಪ
ತಿಲಕಗರುಹುವದೇನು ಸನ್ಯಾಸಿಗಳಿಗುಚಿತವಿದು |
ತಿಳಿಯೆ ದೇಶಿಗರಿಂಗೆ ದೇಶಿಗ
ರೊಲವು ಸಮನಿಸಬೇಕು ಸಭೆಯಲಿ
ಬಲವಿಹೀನರಿಗಾಪ್ತರಿಲ್ಲೆಂದೆಬಲೆಯೊರಲಿದಳು || ೧೯ ||
ಪದವಿಭಾಗ-ಅರ್ಥ: ಎಲವೊ ದೇಶಿಗ ಕಂಕ ಭಟ್ಟನೆ ಹಲವು ಧರ್ಮವ ಬಲ್ಲೆ ಗಡ= ದ್ರೌಪದಿಯು ಕಂಕಭಟ್ಟನ ವೇಶದಲ್ಲಿದ್ದ ಪತಿ ಧರ್ಮಜನನ್ನು ಕುರಿತು, 'ಎಲವೊ ಪರದೇಶಿ ಕಂಕಭಟ್ಟನೆ ಎಲ್ಲಾ ಧರ್ಮವನ್ನು ಬಲ್ಲೆಯಲ್ಲವೇ, ಗಡ! ನೃಪತಿಲಕಗೆ ಅರುಹುವದೇನು(ಹೇಳುವುದು ) ಸನ್ಯಾಸಿಗಳಿಗೆ+ ಉಚಿತವು+ ಇದು ತಿಳಿಯೆ= ರಾಜನಿಗೆ ಧರ್ನವನ್ನು ಹೇಳುವುದು ಏನಯ್ಯಾ ಸನ್ಯಾಸಿಗಳಿಗೆ ಉಚಿತವಾದದ್ದು; ಇದನ್ನು ತಿಳಿಯಯ್ಯಾ; ದೇಶಿಗರಿಂಗೆ ದೇಶಿಗರ+ ಒಲವು ಸಮನಿಸಬೇಕು (ಕೊಡು ಸಹಕರಿಸು ಬೆಂಬಲಿಸು) ಸಭೆಯಲಿ ಬಲವಿಹೀನರಿಗೆ+ ಆಪ್ತರಿಲ್ಲೆಂದು+ ಅಬಲೆಯು+ ಒರಲಿದಳು= ಪರದೇಶಿಗರಿಗೆ ಪರದೇಶಿಗರು ಬೆಂಬಲವನ್ನು ಕೊಡಬೇಕು; ಈ ಸಭೆಯಲ್ಲಿ ಬಲವಿಹೀನರಿಗೆ ಆಪ್ತರಿಲ್ಲವಲ್ಲಾ ಎಂದು ಸೈರಂದ್ರಿಯು ಗೋಳಿಟ್ಟಳು.
ಅರ್ಥ: ದ್ರೌಪದಿಯು ರಾಜಸಭೆಯಲ್ಲಿದ್ದ ಕಂಕಭಟ್ಟನ ವೇಶದ ಪತಿ ಧರ್ಮಜನನ್ನು ಕುರಿತು, 'ಎಲವೊ ಪರದೇಶಿ ಕಂಕಭಟ್ಟನೆ ಎಲ್ಲಾ ಧರ್ಮವನ್ನು ಬಲ್ಲೆಯಲ್ಲವೇ, ಗಡ! ಏನಯ್ಯಾ ರಾಜನಿಗೆ ಧರ್ನವನ್ನು ಹೇಳುವುದು ಸನ್ಯಾಸಿಗಳಿಗೆ ಉಚಿತವಾದದ್ದು, ಇದನ್ನು ತಿಳಿಯಯ್ಯಾ; ಸುಮ್ಮನಿರುವೆಯಲ್ಲಾ!; (ತಾನೂ ಪರದೇಶಿ- ಅವನೂ ಪರದೇಸಿ) ಪರದೇಶಿಗರಿಗೆ ಪರದೇಶಿಗರು ಬೆಂಬಲವನ್ನು ಕೊಡಬೇಕು; ಈ ಸಭೆಯಲ್ಲಿ ಬಲಹೀನರಿಗೆ ಆಪ್ತರಿಲ್ಲವಲ್ಲಾ ಎಂದು ಹೇಳಿ, ಸೈರಂದ್ರಿಯು ಗೋಳಿಟ್ಟಳು.
ಧೈರ್ಯವನು ನೆರೆ ಬಲಿದು ಮೇಲಣ
ಕಾರ್ಯಭಾಗವನರಿದು ನೃಪಜನ
ವರ್ಯ ನೋಡದೆ ನುಡಿಸದಿದ್ದನು ಧರ್ಮನಂದನನು |
ಶೌರ್ಯಕವಸರವಲ್ಲ ನಮಗೀ
ಯಾರ್ಯನಾಜ್ಞೆಯೆನುತ್ತ ಬಳಿಕಾ
ತುರ್ಯರಿದ್ದರು ಪಾರ್ಥ ಯಮಳರು ಬಲಿದ ದುಗುಡದಲಿ || ೨೦ ||
ಪದವಿಭಾಗ-ಅರ್ಥ: ಧೈರ್ಯವನು ನೆರೆ ಬಲಿದು ಮೇಲಣ ಕಾರ್ಯಭಾಗವನು+ ಅರಿದು= ಧರ್ಮಜನು ಎದೆಗುಂದದೆ ಧೈರ್ಯವನು ಹೆಚ್ಚು ಗಟ್ಟಿಮಾಡಿಕೊಂದು, ಮುಂದಿನ ಕಾರ್ಯಭಾಗವಾದ ಒಂದುವರ್ಷದ ಅಡಗುವಿಕೆಯ ಗಡುವನ್ನು ಮುಗಿಸುವ ಅಗತ್ಯವನ್ನು ಅರಿತುಕೊಂಡು; ನೃಪಜನವರ್ಯ ನೋಡದೆ ನುಡಿಸದೆ+ ಇದ್ದನು ಧರ್ಮನಂದನನು= ಅಲ್ಲಿದ್ದ ನೃಪರನ್ನೂ, ಜನವರ್ಯರನ್ನೂ ನೋಡದೆ ಯಾರನ್ನೂ ಗಮನಿಸದಂತೆ ಇದ್ದನು.; ಶೌರ್ಯಕೆ+ ಅವಸರವಲ್ಲ(ಸುಸಮಯವಲ್ಲ) ನಮಗೆ+ ಈಯ (ಈಯನು- ಕೊಡನು)+ ಆರ್ಯನು+ ಅಜ್ಞೆಯ+ ಎನುತ್ತ, ಬಳಿಕ+ ಆತುರ್ಯರಿದ್ದರು ಪಾರ್ಥ ಯಮಳರು ಬಲಿದ ದುಗುಡದಲಿ= ಶೌರ್ಯವನ್ನು ತೋರಿಸಲು ಇದು ಅವಸರವಲ್ಲ ನಮಗೆ ಆರ್ಯನಾದ ಹಿರಿಯನು ಆಜ್ಞೆಯನ್ನು ಕೊಡಲಿಲ್ಲ ಎನುತ್ತ, ಆ ಘಟನೆಯ ಬಳಿಕ ಶಿಕ್ಷಿಸಲು ಆತುರಪಡುತ್ತಿದ್ದ ಧರ್ಮಜನ ತಮ್ಮಂದಿರಾದ ಪಾರ್ಥನೂ ನಕುಲ ಸಹದೇವರೂ ಉಕ್ಕಿದ ಸಿಟ್ಟಿನಲ್ಲಿ ಸುಮ್ಮನಿದ್ದರು.
ಅರ್ಥ: ಧರ್ಮಜನು ಎದೆಗುಂದದೆ ಧೈರ್ಯವನು ಹೆಚ್ಚು ಗಟ್ಟಿಮಾಡಿಕೊಂದು, ಮುಂದಿನ ಕಾರ್ಯಭಾಗವಾದ ಒಂದುವರ್ಷದ ಅಡಗುವಿಕೆಯ ಗಡುವನ್ನು ಮುಗಿಸುವ ಅಗತ್ಯವನ್ನು ಅರಿತುಕೊಂಡು, ಅಲ್ಲಿದ್ದ ನೃಪರನ್ನೂ, ಜನವರ್ಯರನ್ನೂ ನೋಡದೆ ಯಾರನ್ನೂ ಗಮನಿಸದಂತೆ ಇದ್ದನು. ಶೌರ್ಯವನ್ನು ತೋರಿಸಲು ಇದು ಅವಸರವಲ್ಲ ನಮಗೆ ಆರ್ಯನಾದ ಹಿರಿಯನು ಆಜ್ಞೆಯನ್ನು ಕೊಡಲಿಲ್ಲ ಎನುತ್ತ, ಆ ಘಟನೆಯ ಬಳಿಕ ಶಿಕ್ಷಿಸಲು ಆತುರಪಡುತ್ತಿದ್ದ ಧರ್ಮಜನ ತಮ್ಮಂದಿರಾದ ಪಾರ್ಥನೂ ನಕುಲ ಸಹದೇವರೂ ಉಕ್ಕಿದ ಸಿಟ್ಟಿನಲ್ಲಿ ಸುಮ್ಮನಿದ್ದರು.
ನೊಂದಳಕಟಾ ಸತಿಯೆನುತ ಮನ
ನೊಂದು ಸೈವೆರಗಾಗಿ ಖತಿಯಲಿ
ಕಂದಿ ನಸು ಮೈಬಾಗಿ ರೋಷದೊಳೌಡನೊಡೆಯವುಚಿ |
ಮಂದಿಯರಿಯದವೊಲು ಕುಚೇಷ್ಟೆಯೊ
ಳೊಂದಿ ಮೆಲ್ಲನೆ ಬಾಗಿ ನೋಡಿದ
ನಂದು ರಾಜಾಲಯದ ಮುಂದಣ ಮರನನಾ ಭೀಮ || ೨೧ ||
ಪದವಿಭಾಗ-ಅರ್ಥ: ನೊಂದಳು(ಸಂಕಟಪಡುತ್ತಿದ್ದಾಳಲ್ಲಾ)+ ಅಕಟಾ ಸತಿ(ದ್ರೌಪದಿಯು )+ ಯೆನುತ ಮನನೊಂದು ಸೈವೆರಗಾಗಿ ಖತಿಯಲಿ(ಸಿಟ್ಟಿನಲ್ಲಿ) ಕಂದಿ= ಆದರೆ ಭೀಮನು ಅಕಟಾ ದ್ರೌಪದಿಯು ಸಂಕಟಪಡುತ್ತಿದ್ದಾಳಲ್ಲಾ ಎನ್ನುತ್ತಾ ಮನಸ್ಸಿನಲ್ಲಿ ನೊಂದುಕೊಂಡು, ಎಲ್ಲರೆದುರು ಆಕ್ರಮಣದ ಘಟನೆಯನ್ನು ಕಂಡು ಬಹಳ ಬೆರಗಾಗಿ ಸಿಟ್ಟಿನಿಂದ ಮುಖ ಕಪ್ಪಾಯಿತು, ಕಂದಿತು, ಆಗ ನಸು ಮೈಬಾಗಿ ರೋಷದೊಳು+ ಔಡನು+ ಒಡೆಯವುಚಿ ಮಂದಿಯು+ ಅರಿಯದವೊಲು ಕುಚೇಷ್ಟೆಯೊಳು+ ಒಂದಿ ಮೆಲ್ಲನೆ ಬಾಗಿ ನೋಡಿದನು+ ಅಂದು ರಾಜಾಲಯದ ಮುಂದಣ ಮರನನು+ ಆ ಭೀಮ= ಆಗ ಭೀಮನು ಮೈಬಗ್ಗಿ ರೋಷದಿಂದ ಔಡನು- ದವಡೆಯನ್ನು ಒಡೆಯವುಚಿ ಕಚ್ಚಿ, ಜನರು ತಿಳಿಯದಂತೆ ಕುಚೇಷ್ಟೆಯೊಳೋ ಎಂಬಂತೆ ಒಂದುಸ್ವಲ್ಪ ಮೆಲ್ಲನೆ ಬಾಗಿ ಅರಮನೆಯ ಮುಂದಿನ ಮರವನ್ನು ನೋಡಿದನು. (ಮರವನ್ನೇ ಕಿತ್ತು ಕೀಚಕನನ್ನು ಬಡಿಯಲೋ ಎಂದು ಯೋಚಿಸಿದನು)
ಅರ್ಥ: ಆದರೆ ಭೀಮನು, ಅಕಟಾ, ದ್ರೌಪದಿಯು ಸಂಕಟಪಡುತ್ತಿದ್ದಾಳಲ್ಲಾ ಎನ್ನುತ್ತಾ ಮನಸ್ಸಿನಲ್ಲಿ ನೊಂದುಕೊಂಡು, ಎಲ್ಲರೆದುರು ಆಕ್ರಮಣದ ಘಟನೆಯನ್ನು ಕಂಡು ಬಹಳ ಬೆರಗಾಗಿ ಸಿಟ್ಟಿನಿಂದ ಮುಖ ಕಪ್ಪಾಗಿ ಕಂದಿತು. ಆಗ ಭೀಮನು ಮೈಬಗ್ಗಿ ರೋಷದಿಂದ ದವಡೆಯನ್ನು ಒಡೆಯವುಚಿ ಕಚ್ಚಿ, ಜನರು ತಿಳಿಯದಂತೆ ಕುಚೇಷ್ಟೆಯೊಳೋ ಎಂಬಂತೆ ಒಂದುಸ್ವಲ್ಪ ಮೆಲ್ಲನೆ ಬಾಗಿ ಅರಮನೆಯ ಮುಂದಿನ ಮರವನ್ನು ನೋಡಿದನು. (ಮರವನ್ನೇ ಕಿತ್ತು ಕೀಚಕನನ್ನು ಬಡಿಯಲೋ ಎಂದು ಯೋಚಿಸಿದನು)
ಒಳಗೆ ನಿಶ್ಚೈಸಿದನು ಮೊದಲಲಿ
ಹಿಳಿದು ಹಿಂಡುವೆನಿವಳ ಬಡಿದೀ
ಖಳನನಿವನೊಡಹುಟ್ಟಿದರನಿವನಖಿಳ ಬಾಂಧವರ |
ಬಳಿಕ ವಿಗಡ ವಿರಾಟ ರಾಯನ
ಕೊಲುವೆನರಿಯದ ಮುನ್ನ ಕೌರವ
ಕುಲವ ಸವರುವೆನೆಂದು ಕಿಡಿಕಿಡಿಯಾದನಾ ಭೀಮ || ೨೨ ||
ಪದವಿಭಾಗ-ಅರ್ಥ: ಒಳಗೆ ನಿಶ್ಚೈಸಿದನು ಮೊದಲಲಿ ಹಿಳಿದು( ಗಟ್ಟಿಯಾಗಿ ಹಿಸುಕಿ) ಹಿಂಡುವೆನು+ ಇವಳ ಬಡಿದ+ ಈ+ ಖಳನನು+ ಇವನ+ ಒಡಹುಟ್ಟಿದರನು+ ಇವನ+ ಅಖಿಳ ಬಾಂಧವರ,= ಮನಸ್ಸಿನ ಒಳಗೇ ನಿಶ್ಚೈಸಿದನು, 'ಮೊದಲು ಇವಳನ್ನು ಬಡಿದ ಈ ಕೀಚಕನನ್ನು ಅವನ ಒಡಹುಟ್ಟಿದವರನ್ನು ಗಟ್ಟಿಯಾಗಿ ಹಿಸುಕಿ ಹಿಂಡುವೆನು; ನಂತರ ಇವನ ಎಲ್ಲಾ ಬಾಂಧವರನ್ನೂ ಕೊಂದು;; ಬಳಿಕ ವಿಗಡ ವಿರಾಟ ರಾಯನ ಕೊಲುವೆನು+ ಅರಿಯದ ಮುನ್ನ ಕೌರವಕುಲವ ಸವರುವೆನೆಂದು ಕಿಡಿಕಿಡಿಯೋದನು+ ಆ ಭೀಮ= 'ಬಳಿಕ ವೀರ ವಿರಾಟರಾಜನನ್ನು ಕೊಲ್ಲವೆನು, ಈ ವಿಷಯವನ್ನು ಕೌರವರು ತಿಳಿಯುವ ಮೊದಲೇ ಅವರಕುಲವನ್ನೆ ಸವರಿಹಾಕುತ್ತೇನೆ', ಎಂದು ಆ ಭೀಮನು ಸಿಟ್ಟಿನಿಂದ ಬೆಂಕಿಯಂತಾದನು.
ಅರ್ಥ: ಭೀಮನು ಮನಸ್ಸಿನ ಒಳಗೇ ನಿಶ್ಚೈಸಿದನು, 'ಮೊದಲು ಇವಳನ್ನು ಬಡಿದ ಈ ಕೀಚಕನನ್ನು ಅವನ ಒಡಹುಟ್ಟಿದವರನ್ನು ಗಟ್ಟಿಯಾಗಿ ಹಿಸುಕಿ ಹಿಂಡುವೆನು; ನಂತರ ಇವನ ಎಲ್ಲಾ ಬಾಂಧವರನ್ನೂ ಕೊಂದು, ಬಳಿಕ ವೀರ ವಿರಾಟರಾಜನನ್ನು ಕೊಲ್ಲವೆನು, ಈ ವಿಷಯವನ್ನು ಕೌರವರು ತಿಳಿಯುವ ಮೊದಲೇ ಅವರಕುಲವನ್ನೆ ಸವರಿಹಾಕುತ್ತೇನೆ', ಎಂದುಕೊಂಡು ಆ ಭೀಮನು ಸಿಟ್ಟಿನಿಂದ ಬೆಂಕಿಯಂತಾದನು.
ಆತನಿಂಗಿತದನುವನರಿತು ಮ
ಹೀತಳಾಧಿಪ ಧರ್ಮಸುತನತಿ
ಕಾತರಿಸದಿರು ವಲಲ ಸೈರಿಸು ಸೈರಿಸಕಟೆನುತ |
ಈ ತರುವ ಮುರಿಯದಿರು ಸುಜನ
ವ್ರಾತಕಾಶ್ರಯವೂರ ಹೊರಗೆ ಮ
ಹಾತಿಶಯ ತರುವುಂಟು ನಿನ್ನಯ ಬಾಣಸಿನ ಮನೆಗೆ || ೨೩ ||
ಪದವಿಭಾಗ-ಅರ್ಥ: ಆತನ+ ಇಂಗಿತದ+ ಅನುವನು+ ಅರಿತು ಮಹೀತಳಾಧಿಪ ಧರ್ಮಸುತನು+ ಅತಿಕಾತರಿಸದಿರು ವಲಲ,= ಭೀಮನ/ ಆತನ ಉದ್ದೇಶದ ಯೋಜನೆಯನ್ನು ಅರಿತು ರಾಜ ಧರ್ಮಜನು ಭೀಮನಿಗೆ ಸೂಚ್ಯವಾಗಿ ಹೇಳಿದನು, 'ಅತಿಅವಸರ ಮಾಡಬೇಡ, ವಲಲ;; ಸೈರಿಸು ಸೈರಿಸು+ ಅಕಟ+ ಎನುತ ಈ ತರುವ ಮುರಿಯದಿರು ಸುಜನ ವ್ರಾತಕೆ+ ಆಶ್ರಯ+ ವೂ/ ಊರ ಹೊರಗೆ ಮಹಾತಿಶಯ ತರುವುಂಟು ನಿನ್ನಯ ಬಾಣಸಿನ ಮನೆಗೆ= ವಲಲ, ಸೈರಿಸು ಸಹನೆಹೊಂದು, ಅಕಟಾ, ಎನ್ನುತ್ತಾ, ಈ ಮರವನ್ನು ಮುರಿಯಬೇಡ, ಸುಜನಸಮೂಹಕ್ಕೆ ಅದು ನೆರಳಿನ ಆಶ್ರಯವು. ಊರ ಹೊರಗೆ ದೊಡ್ಡ ಮರವುಂಟು ನಿನ್ನಯ ಅಡಿಗೆಯಮನೆಗೆ ಬೇಕಾದರೆ ಅದನ್ನು ಉಪಯೋಗಿಸು' ಎಂದನು.
ಅರ್ಥ:ಭೀಮನ ಉದ್ದೇಶದ ಯೋಜನೆಯನ್ನು ಅರಿತು ರಾಜ ಧರ್ಮಜನು ಭೀಮನಿಗೆ ಸೂಚ್ಯವಾಗಿ ಹೇಳಿದನು, 'ಅತಿಅವಸರ ಮಾಡಬೇಡ, ವಲಲ, ಸೈರಿಸು ಸಹನೆಹೊಂದು, ಅಕಟಾ, ಎನ್ನುತ್ತಾ, ಈ ಮರವನ್ನು ಮುರಿಯಬೇಡ, ಸುಜನಸಮೂಹಕ್ಕೆ ಅದು ನೆರಳಿನ ಆಶ್ರಯವು. ಊರ ಹೊರಗೆ ದೊಡ್ಡ ಮರವುಂಟು ನಿನ್ನಯ ಅಡಿಗೆಯಮನೆಗೆ ಬೇಕಾದರೆ ಅದನ್ನು ಉಪಯೋಗಿಸು' ಎಂದನು.
ಧರ್ಮಮಯ ತರುವಿದನು ಮುರಿಯದಿ
ರೆಮ್ಮ ಮಾತನು ಕೇಳೆನಲು ಮಿಗೆ
ಸುಮ್ಮನೋಲಗದಿಂದ ಸರಿದನು ಭೀಮ ದುಗುಡದಲಿ |
ಕರ್ಮಫಲವಿದು ನಿನಗೆ ಮಾನಿನಿ
ನಿಮ್ಮ ಭವನಕೆ ಹೋಗು ಶಿಕ್ಷಿಸ
ಲಮ್ಮದೀ ಸಭೆ ಬಗೆಯನಾತನು ಮತ್ಸ್ಯಭೂಪತಿಯ || ೨೪ ||
ಪದವಿಭಾಗ-ಅರ್ಥ: ಧರ್ಮಮಯ ತರುವು+ ಇದನು ಮುರಿಯದಿರೆಮ್ಮ ಮಾತನು ಕೇಳೆನಲು= ಧರ್ಮಜನು, 'ನೆರಳು ಕೊಡುವ ಧರ್ಮತುಂಬಿದ ಈ ಮರವನ್ನು ಮುರಿಯಬೇಡ ನಮ್ಮ ಮಾತನ್ನು ಕೇಳು,' ಎನ್ನಲು,; ಮಿಗೆ ಸುಮ್ಮನೆ+ ಓಲಗದಿಂದ ಸರಿದನು ಭೀಮ ದುಗುಡದಲಿ= ತನಗೆ ಕೈ ಮೀರಿದ ಸ್ಥಿತಿ ಎಂದು ಸುಮ್ಮನೆ ಸಭೆಯಿಂದ ಭೀಮನು ದುಗುಡದಿಂದ - ದುಃಖ ಮತ್ತು ಕೋಪದಿಂದ ಸರಿದನು/ ಹೊರಟು ಹೋದನು.;; ಕರ್ಮಫಲವಿದು ನಿನಗೆ ಮಾನಿನಿ ನಿಮ್ಮ ಭವನಕೆ ಹೋಗು, ಶಿಕ್ಷಿಸಲು+ ಅಮ್ಮದು+ ಈ ಸಭೆ ಬಗೆಯನು (ಲಕ್ಷಿಸುವುದಿಲ್ಲ)+ ಆತನು ಮತ್ಸ್ಯಭೂಪತಿಯ= ಸೈರಂದ್ರೀ, ಇದು ನಿನ್ನ ಹಿಂದಿನ ಕರ್ಮಫಲವು, ನಿನಗೆ ಸಂದಿದೆ ಎಂದು ತಿಳಿ, ಮಾನವಂತ ಸೈರಂದ್ರೀ ನಿನ್ನ ಮನೆಗೆ ಹೋಗು; ಈ ಸಭೆ ಅವನನ್ನು ಶಿಕ್ಷಿಸಲು ಆಗದು -ಆ ಶಕ್ತಿ ಇಲ್ಲ, ಆತನು ಮತ್ಸ್ಯರಾಜನನ್ನು ಲಕ್ಷಿಸುವುದಿಲ್ಲ,' ಎಂದು ಧರ್ಮಜನು ಹೇಳಿದನು.
ಅರ್ಥ: ಧರ್ಮಜನು,'ನೆರಳು ಕೊಡುವ ಧರ್ಮತುಂಬಿದ ಈ ಮರವನ್ನು ಮುರಿಯಬೇಡ ನಮ್ಮ ಮಾತನ್ನು ಕೇಳು,' ಎನ್ನಲು, ತನಗೆ ಕೈ ಮೀರಿದ ಸ್ಥಿತಿ ಎಂದು ಸುಮ್ಮನೆ ಸಭೆಯಿಂದ ಭೀಮನು ದುಗುಡದಿಂದ ಹೊರಟು ಹೋದನು. ಸೈರಂದ್ರೀ, ಇದು ನಿನ್ನ ಹಿಂದಿನ ಕರ್ಮಫಲವು, ನಿನಗೆ ಸಂದಿದೆ ಎಂದು ತಿಳಿ, ಮಾನವಂತ ಸೈರಂದ್ರೀ ನಿನ್ನ ಮನೆಗೆ ಹೋಗು; ಈ ಸಭೆ ಅವನನ್ನು ಶಿಕ್ಷಿಸಲು ಆಗದು -ಆ ಶಕ್ತಿ ಇಲ್ಲ, ಆತನು ಮತ್ಸ್ಯರಾಜನನ್ನು ಲಕ್ಷಿಸುವುದಿಲ್ಲ,' ಎಂದು ಧರ್ಮಜನು ಹೇಳಿದನು.
ಕೋಪಕವಸರವಲ್ಲ ಪತಿಗಳು
ಕಾಪುರುಷರೇ ನಿನ್ನವರು ಪರಿ
ತಾಪವನು ಬೀಳ್ಕೊಡು ಪತಿವ್ರತೆ ಪುಣ್ಯವಧು ನೀನು |
ದೀಪವಲ್ಲಾ ಕ್ಷಮೆಯಖಿಳ ದೋ
ಷಾಪಹಾರವು ಶೌರ್ಯ ಧರ್ಮದ
ರೂಪು ನೆಲೆಯಾ ಕ್ಷಮೆಯೆನಲು ಬಳಿಕೆಂದುಳಿಂದುಮುಖಿ || ೨೫ ||
ಪದವಿಭಾಗ-ಅರ್ಥ: ಕೋಪಕೆ+ ಅವಸರವಲ್ಲ ಪತಿಗಳು ಕಾಪುರುಷರೇ ನಿನ್ನವರು= ಈ ಸಮಯ ಕೋಪಮಾಡಿಕೊಳ್ಳುವ ಸಂಧರ್ಭವಲ್ಲ. ನಿನ್ನವರಾದ ಪತಿಗಳು ಸಾಮಾನ್ಯ ಅಲ್ಪಪುರುಷರೇ, ವೀರರು.; ಪರಿತಾಪವನು ಬೀಳ್ಕೊಡು= ಸಂಕಟಪಡುವುದನ್ನು ಬಿಡು.; ಪತಿವ್ರತೆ ಪುಣ್ಯವಧು ನೀನು ದೀಪವಲ್ಲಾ ಕ್ಷಮೆಯು+ ಅಖಿಳ ದೋಷ+ ಅಪಹಾರವು= ನೀನು ಪತಿವ್ರತೆ, ಪುಣ್ಯವಂತೆ ನೀನು, ಕ್ಷಮೆಯು ಕತ್ತಲೆಯನ್ನು ಕಳೆಯುವ ದೀಪವಲ್ಲವೇ! ಅದು ಎಲ್ಲಾ ದೋಷಗಳನ್ನೂ ಕಳೆಯುವುದು; ಶೌರ್ಯ ಧರ್ಮದ ರೂಪು ನೆಲೆಯು+ ಆ ಕ್ಷಮೆ+ ಯೆನಲು ಬಳಿಕ+ ಎಂದುಳು+ ಇಂದುಮುಖಿ= ಶೌರ್ಯವು ಧರ್ಮದ ರೂಪವು- ಅದಕ್ಕಾಗಿ ಉಪಯೋಗಿಸಿದಾಗ ಮಾತ್ರಾ ಅದು ಶೌರ್ಯ, ಅಲ್ಲದಿದ್ದರೆ ಅದು ಕ್ರೌರ್ಯ. ಧರ್ಮದ ನೆಲೆಯು ಆ ಕ್ಷಮೆ,' ಎನ್ನಲು, ದ್ರೌಪದಿ ಬಳಿಕ ಹೀಗೆಂದಳು.
ಅರ್ಥ:ಧರ್ಮಜನು, ಈ ಸಮಯ ಕೋಪಮಾಡಿಕೊಳ್ಳುವ ಸಂಧರ್ಭವಲ್ಲ. ನಿನ್ನವರಾದ ಪತಿಗಳು ಸಾಮಾನ್ಯ ಅಲ್ಪಪುರುಷರೇ, ವೀರರು.ಸಂಕಟಪಡುವುದನ್ನು ಬಿಡು. ನೀನು ಪತಿವ್ರತೆ, ಪುಣ್ಯವಂತೆ ನೀನು, ಕ್ಷಮೆಯು- ಕತ್ತಲೆಯನ್ನು ಕಳೆಯುವ ದೀಪವಲ್ಲವೇ! ಅದು ಎಲ್ಲಾ ದೋಷಗಳನ್ನೂ ಕಳೆಯುವುದು; ಶೌರ್ಯವು ಧರ್ಮದ ರೂಪವು- ಅದಕ್ಕಾಗಿ ಉಪಯೋಗಿಸಿದಾಗ ಮಾತ್ರಾ ಅದು ಶೌರ್ಯ, ಅಲ್ಲದಿದ್ದರೆ ಅದು ಕ್ರೌರ್ಯ. ಧರ್ಮದ ನೆಲೆಯು ಆ ಕ್ಷಮೆ,' ಎನ್ನಲು, ದ್ರೌಪದಿ ಬಳಿಕ ಹೀಗೆಂದಳು.
ನೀರು ಹೊರಗಿಕ್ಕುವದು ಮೂರೇ
ಬಾರಿ ಬಳಿಕದು ಪಾಪಿ ಜಾಡಿಸೆ
ಸೈರಿಸದು ಅನ್ಯಾಯ ಬಹುಳತೆಗೇನ ಮಾಡುವೆನು |
ಸೈರಣೆಗೆ ತಾನವಧಿಯಿಲ್ಲಾ
ಪೌರುಷವು ಕಡು ಬಂಜೆಯಾಯಿತು
ಆರಯಿಕೆಯಲಿ ಜುಣುಗಿ ಜಾರುವಿರೆಂದಳಿಂದುಮುಖಿ || ೨೬ ||
ಪದವಿಭಾಗ-ಅರ್ಥ: 'ನೀರು ಹೊರಗೆ+ ಇಕ್ಕುವದು ಮೂರೇ ಬಾರಿ= ನೀರು ಮುಳುಗಿದವನನ್ನು ಮೂರೇ ಬಾರಿಮಾತ್ರಾ ಮೇಲಕ್ಕೆ ತಳ್ಳುವುದು.; ಬಳಿಕ+ಅದು ಪಾಪಿ ಜಾಡಿಸೆ ಸೈರಿಸದು= ಬಳಿಕ ಅದು ನೀರಿಗೆ ಬಿದ್ದ ಪಾಪದವನು ಕೈಕಾಲು ಜಾಡಿಸಿದರೂ- ಬಡಿದರೂ ಸೈರಿಸದೆ ಅವನನ್ನು ಮುಳುಗಿಸುವುದು. ಅನ್ಯಾಯ ಬಹುಳತೆಗೆ+ ಏನ ಮಾಡುವೆನು= ಅನ್ಯಾಯ ಬಹುಳ ಮಿತಿ ಮೀರಿದಾಗ ಏನನ್ನು ಮಾಡಲಿ,; ಸೈರಣೆಗೆ ತಾನು+ ಅವಧಿಯಿಲ್ಲಾ= ಸಹನೆಗೂ ಒಂದು ಮಿತಿ ಇಲ್ಲವೇ? ಪೌರುಷವು ಕಡು ಬಂಜೆಯಾಯಿತು= ಪೌರುಷವು ಪೂರ್ಣ ಬಂಜೆಯಾಯಿತು/ ಬತ್ತಿಹೋಯಿತು; ಆರಯಿಕೆಯಲಿ(ಧರ್ಮವಿಮರ್ಶೆ ನೆವದಲ್ಲಿ), ಜುಣುಗಿ=ಉಡುಗಿ ಜಾರುವಿರಿ+ ಎಂದಳು+ ಇಂದುಮುಖಿ= ಅದರಿಂದ ಧರ್ಮವಿಮರ್ಶೆ ನೆವದಲ್ಲಿ ಉಡುಗಿ ಜಾರಿಕೊಳ್ಳುವಿರಿ,' ಎಂದಳು ಅವಳು.
ಅರ್ಥ: 'ನೀರು ಮುಳುಗಿದವನನ್ನು ಮೂರೇ ಬಾರಿಮಾತ್ರಾ ಮೇಲಕ್ಕೆ ತಳ್ಳುವುದು. ಬಳಿಕ ಅದು ನೀರಿಗೆ ಬಿದ್ದ ಪಾಪದವನು ಕೈಕಾಲು ಜಾಡಿಸಿದರೂ- ಬಡಿದರೂ ಸೈರಿಸದೆ ಅವನನ್ನು ಮುಳುಗಿಸುವುದು. ಅನ್ಯಾಯ ಬಹುಳ ಮಿತಿ ಮೀರಿದಾಗ ಏನನ್ನು ಮಾಡಲಿ, ಸಹನೆಗೂ ಒಂದು ಮಿತಿ ಇಲ್ಲವೇ? ನಿಮ್ಮ ಪೌರುಷವು ಪೂರ್ಣ ಬತ್ತಿಹೋಯಿತು; ಅದರಿಂದ ಧರ್ಮವಿಮರ್ಶೆ ನೆವದಲ್ಲಿ ಉಡುಗಿ ಜಾರಿಕೊಳ್ಳುವಿರಿ,' ಎಂದಳು ಅವಳು.
ಅರರೆ ಹೆಂಗಸು ದಿಟ್ಟೆ ಮೋನದೊ
ಳಿರಲಿದಾವಂತರವು ರಾಯನ
ಹೊರೆಯಲೀ ಬಾಯ್ಬಡಿಕತನ ಗರುವಾಯಿಯೇನೆನಲು |
ಕೆರಳಿದಳು ಲಲಿತಾಂಗಿಯಿಲ್ಲಿಯ
ಹಿರಿಯರಲಿ ಹುರುಳಿಲ್ಲ ಮಾರುತಿ
ಗರುಹುವೆನು ಬಳಿಕಾದುದಾಗಲಿಯೆನುತ ತಿರುಗಿದಳು || ೨೭ ||
ಪದವಿಭಾಗ-ಅರ್ಥ: ಅರರೆ ಹೆಂಗಸು ದಿಟ್ಟೆ ಮೋನದೊಳಿರಲಿ+ ಇದಾವ+ ಅಂತರವು= ಅಬ್ಬಾ ಈ ಹೆಂಗಸು ದಿಟ್ಟೆ - ಗಯ್ಯಾಳಿ, ಬುದ್ಧಿಯ ಮಾತು ಹೇಳಿದರೆ ಮೌನದಲ್ಲಿ ಇರಬೇಕು. ಇದಾವ ಬಗೆಯ ವಿರೋಧ!;; ರಾಯನ ಹೊರೆಯಲೀ ಬಾಯ್ಬಡಿಕತನ ಗರುವಾಯಿಯ+ (ದೊಡ್ಡತನ)ಏನು+ ಎನಲು ಕೆರಳಿದಳು= ರಾಜನ ಎದುರಲ್ಲಿ ಇದೇನು ಬಾಯ್‍ಬಡಿಕತನ - ಅತಿ ಮಾತು, ದೊಡ್ಡಸ್ತಿಕೆ - ಏನು ಅಹಂಕಾರ, ಎಂದು ಜನ ಹೇಳಲು ಅವಳು ಸಿಟ್ಟಾದಳು/ ಕೆರಳಿದಳು;; ಲಲಿತಾಂಗಿ+ ಯಿ, ಇಲ್ಲಿಯ ಹಿರಿಯರಲಿ ಹುರುಳಿಲ್ಲ(ಸತ್ವ) ಮಾರುತಿಗೆ+ ಅರುಹುವೆನು(ಹೇಳುವೆನು) ಬಳಿಕ+ ಆದುದಾಗಲಿ+ ಯೆ- ಎನುತ ತಿರುಗಿದಳು= ಆಗ ದ್ರೌಪದಿಯು ಯಿಲ್ಲಿಯ ಹಿರಿಯರಲ್ಲಿ ಸತ್ವವಿಲ್ಲ ಮಾರುತಿಗೆ / ಭೀಮನಿಗೆ ಹೇಳುವೆನು, ಬಳಿಕ ಆದದ್ದು ಆಯಿತು, ಏನು ಬೇಕಾದರೂ ಆಗಲಿ, ಎನ್ನುತ್ತಾ ತಿರುಗಿ ಹೊರಟಳು.
ಅರ್ಥ: ಅಬ್ಬಾ ಈ ಹೆಂಗಸು ದಿಟ್ಟೆ - ಗಯ್ಯಾಳಿ, ಬುದ್ಧಿಯ ಮಾತು ಹೇಳಿದರೆ ಮೌನದಲ್ಲಿ ಇರಬೇಕು. ಇದಾವ ಬಗೆಯ ವಿರೋಧ!; ರಾಜನ ಎದುರಲ್ಲಿ ಇದೇನು ಬಾಯ್‍ಬಡಿಕತನ - ಅತಿ ಮಾತು, ದೊಡ್ಡಸ್ತಿಕೆ - ಏನು ಅಹಂಕಾರ, ಎಂದು ಜನ ಹೇಳಲು ಅವಳು ಸಿಟ್ಟಾದಳು; ಆಗ ದ್ರೌಪದಿಯು ಯಿಲ್ಲಿಯ ಹಿರಿಯರಲ್ಲಿ ಸತ್ವವಿಲ್ಲ ಭೀಮನಿಗೆ ಹೇಳುವೆನು, ಬಳಿಕ ಆದದ್ದು ಆಯಿತು, ಏನು ಬೇಕಾದರೂ ಆಗಲಿ, ಎನ್ನುತ್ತಾ ತಿರುಗಿ ಹೊರಟಳು.
ಆ ಸುದೇಷ್ಣೆಯ ಮನೆಗೆ ಬರಲವ
ಳೀ ಸತಿಯ ನುಡಿಸಿದಳು ತಂಗಿ ವಿ
ಳಾಸವಳಿದಿದೆ ಮುಖದ ದುಗುಡವಿದೇನು ಹದನೆನಲು |
ಈಸು ಮರವೆಯಿದರಸುತನದ ಮ
ಹಾ ಸಗಾಢಿಕೆಯೆಮ್ಮ ನೀವಪ
ಹಾಸ ಮಾಡುವಿರೆನುತ ದುರುಪದಿ ನುಡಿದಳೊಡತಿಯನು || ೨೮ ||
ಪದವಿಭಾಗ-ಅರ್ಥ: ಆ ಸುದೇಷ್ಣೆಯ ಮನೆಗೆ ಬರಲವಳು+ ಈ ಸತಿಯ ನುಡಿಸಿದಳು= ದ್ರೌಪದಿಯು ವಿರಾಟನ ಸಭೆಯಿಂದ ಅವಮಾನಿತಳಾಗಿ ಆ ಸುದೇಷ್ಣೆಯ ಮನೆಗೆ ಬರಲವಳು+ ಈ ಸತಿಯ ನುಡಿಸಿದಳು= ಆ ಸುದೇಷ್ಣೆಯ ಮನೆಗೆ ಬರಲು ಅವಳೇ ಈ ಸೈರಂದ್ರಿಯನ್ನು ಮಾತನಾಡಿಸಿದಳು.; ತಂಗಿ ವಿಳಾಸವಳಿದಿದೆ ಮುಖದ ದುಗುಡವಿದೇನು ಹದನೆನಲು= ತಂಗಿ ಮುಖವು ಕುಂದಿದೆ ನಿನ್ನ ಮುಖದಲ್ಲಿ ದುಃಖವಿದೇನು, ವಿಚಾರವೇನು ಎನ್ನಲು,;; ಈಸು ಮರವೆಯು+ ಇದು+ ಅರಸುತನದ ಮಹಾ ಸಗಾಢಿಕೆ+ ಯೆ+ ಎಮ್ಮ ನೀವು+ ಅಪಹಾಸ ಮಾಡುವಿರಿ+ ಎನುತ ದುರುಪದಿ ನುಡಿದಳು ಒಡತಿಯನು= ಇಷ್ಟೊಂದು ಮರೆವೆಯೇ? ಇದು ತಮ್ಮ ಅರಸುತನದ ಅಹಂಕಾರ, ನಮ್ಮನ್ನು ನೀವು ಅಪಹಾಸ್ಯ ಮಾಡುತ್ತಿರುವಿರಿ ಎಂದು ದ್ರೌಪದಿ ಒಡತಿಗೆ ಹೇಳಿದಳು.
ಅರ್ಥ: ದ್ರೌಪದಿಯು ವಿರಾಟನ ಸಭೆಯಿಂದ ಅವಮಾನಿತಳಾಗಿ ಆ ಸುದೇಷ್ಣೆಯ ಮನೆಗೆ ಬರಲು ಅವಳೇ ಈ ಸೈರಂದ್ರಿಯನ್ನು ಮಾತನಾಡಿಸಿದಳು. ತಂಗಿ ತಂಗಿ ಮುಖವು ಕುಂದಿದೆ ನಿನ್ನ ಮುಖದಲ್ಲಿ ದುಃಖವಿದೇನು, ವಿಚಾರವೇನು ಎನ್ನಲು, ಇಷ್ಟೊಂದು ಮರೆವೆಯೇ? (ಸಭೆಯಲ್ಲಿ ರಾಣಿಯೂ ಇದ್ದಳು?) ಇದು ತಮ್ಮ ಅರಸುತನದ ಅಹಂಕಾರ, ನಮ್ಮನ್ನು ನೀವು ಅಪಹಾಸ್ಯ ಮಾಡುತ್ತಿರುವಿರಿ ಎಂದು ದ್ರೌಪದಿ ಒಡತಿಗೆ ಹೇಳಿದಳು.
ದುರುಳ ನಿಮ್ಮೊಡಹುಟ್ಟಿದನು ನೀ
ವರಸುಗಳು ತಿರುಕುಳಿಗಳಾವಿ
ನ್ನಿರಲು ಬಾರದು ನೃಪತಿ ತಪ್ಪಿದೊಡಾರು ಕಾವವರು |
ಕರೆಸಿ ಬುದ್ಧಿಯ ಹೇಳಿ ಎನ್ನನು
ಹೊರೆಯಲಾಪರೆ ಹೊರೆಯಿರಲ್ಲದ
ಡರಸಿ ಕಳಹುವದೆನ್ನನೆನಲಿಂತೆಂದಳಾ ರಾಣಿ || ೨೯ ||
ಪದವಿಭಾಗ-ಅರ್ಥ: ದುರುಳ ನಿಮ್ಮ+ ಒಡಹುಟ್ಟಿದನು ನೀವು+ ಅರಸುಗಳು ತಿರುಕುಳಿಗಳು+ ಆವು+ ಇನ್ನಿರಲು ಬಾರದು,= ದುಷ್ಟನಾದ ನಿಮ್ಮ ತಮ್ಮ (ಕಾರಣನು) ನೀವೋ ಅರಸುಗಳು, ನಾವು ತಿರುಕುಳಿಗಳು- ಭಿಕ್ಷುಕರು, ಇಲ್ಲಿ ಇನ್ನಿರಲು ಸಾದ್ಯವಾಗದು;; ನೃಪತಿ ತಪ್ಪಿದೊಡೆ+ ಆರು ಕಾವವರು ಕರೆಸಿ ಬುದ್ಧಿಯ ಹೇಳಿ,= ರಾಜನೇ ತಪ್ಪಿನೆಡೆದರೆ ಯಾರು ಕಾಯುವವರು? ನೀವು ಅವನನ್ನು ಕರೆಸಿ ಬುದ್ಧಿಯನ್ನು ಹೇಳಿ,;; ಎನ್ನನು ಹೊರೆಯಲು+ ಆಪರೆ(ಕಾಪಾಡಲು ಸಾಧ್ಯವಾದೆರೆ) ಹೊರೆಯಿರಿ+ ಇಲ್ಲದಡೆ+ ಅರಸಿ(ಸೂಕ್ತ ಸ್ಥಳ ಅರಸಿ-ಹುಡುಕಿ) ಕಳಹುವದು+ ಎನ್ನನು+ ಎನಲು+ ಇತೆಂದಳು+ ಆ ರಾಣಿ= ನನ್ನನ್ನು ನೀವು ಕಾಪಾಡಬಲ್ಲವರಾದೆರೆ ಕಾಪಾಡಿರಿ. ಸಾಧ್ಯವಿಲ್ಲವಾದರೆ, ಸೂಕ್ತ ಸ್ಥಳ ಹುಡುಕಿ ನನ್ನನ್ನು ಅಲ್ಲಿಗೆ ಕಳಹುಹಿಸುವದು; ಎನಲು+ ಇತೆಂದಳು+ ಆ ರಾಣಿ= ಎನ್ನಲು ಆ ರಾಣಿಯು ಹೀಗೆ ಹೇಳಿದಳು.
ಅರ್ಥ: ದುಷ್ಟನಾದ ನಿಮ್ಮ ತಮ್ಮ ನನ್ನ ದುಃಖಕ್ಕೆ ಕಾರಣನು. ನೀವೋ ಅರಸುಗಳು, ನಾವು ಭಿಕ್ಷುಕರು, ಇಲ್ಲಿ ಇನ್ನಿರಲು ಸಾದ್ಯವಾಗದು; ರಾಜನೇ ತಪ್ಪಿನೆಡೆದರೆ ಯಾರು ಕಾಯುವವರು? ನೀವು ಅವನನ್ನು ಕರೆಸಿ ಬುದ್ಧಿಯನ್ನು ಹೇಳಿ; ನನ್ನನ್ನು ನೀವು ಕಾಪಾಡಬಲ್ಲವರಾದೆರೆ ಕಾಪಾಡಿರಿ. ಸಾಧ್ಯವಿಲ್ಲವಾದರೆ, ಸೂಕ್ತ ಸ್ಥಳ ಹುಡುಕಿ ನನ್ನನ್ನು ಅಲ್ಲಿಗೆ ಕಳಹುಹಿಸುವದು, ಎನ್ನಲು ಆ ರಾಣಿಯು ಹೀಗೆ ಹೇಳಿದಳು.
ಲಲನೆ ಕೇಳನ್ಯಾಯದವರನು
ಕೊಲಿಸುವೆನು ಭಯ ಬೇಡ ಪರ ಸತಿ
ಗಳುಪಿದವನೊಡಹುಟ್ಟಿದನೆ ಕಡುಪಾಪಿ ಹಗೆಯೆನಲು |
ಕೊಲಿಸುವಡೆ ನೀವೇಕೆ ತಪ್ಪಿನ
ಬಳಿಯಲೆನ್ನಾತಗಳು ಕೀಚಕ
ಕುಲವ ಸವರುವರೆನಗೆ ಕಾರಣವಿಲ್ಲ ಸಾರಿದೆನು || ೩೦ ||
ಪದವಿಭಾಗ-ಅರ್ಥ: ಲಲನೆ ಕೇಳು, ಅನ್ಯಾಯದವರನು ಕೊಲಿಸುವೆನು ಭಯ ಬೇಡ; ಪರ ಸತಿಗೆ ಅಳುಪಿದವನು (ಮನಸೋತವನು)+ ಒಡಹುಟ್ಟಿದನೆ ಕಡುಪಾಪಿ ಹಗೆ+ ಯೆನಲು; ಕೊಲಿಸುವಡೆ ನೀವೇಕೆ; ತಪ್ಪಿನ ಬಳಿಯಲಿ (ತಪ್ಪು ಮಾಡಿದ ಕಾರಣ)+ ಎನ್ನಾತಗಳು(ನನ್ನವರು) ಕೀಚಕಕುಲವ ಸವರುವರು(ಕೊಲ್ಲುವರು)+ ಎನಗೆ ಕಾರಣವಿಲ್ಲ ಸಾರಿದೆನು= ಅವರ ಸಾವಿಗೆ ನಾನು ಹೊಣೆಯಲ್ಲ- ಇದನ್ನು ಸಾರಿಸಾರಿ ಹೇಳುತ್ತೇನೆ; (ನಾನು ಹೊರಡುವೆನು ಎಂದಳು.)
ಅರ್ಥ: ಸತಿಯೇ ಕೇಳು, ಅನ್ಯಾಯದವರನ್ನು ಕೊಲ್ಲಿಸುವೆನು ಭಯ ಬೇಡ; ಪರರ ಸತಿಗೆ ಮನಸೋತವನು ಒಡಹುಟ್ಟಿದವನೆ? ಅವನು ಕಡುಪಾಪಿ ಶತ್ರು, ಎನ್ನಲು; ದ್ರೌಪದಿಯು 'ನೀವೇಕೆ ಕೊಲಿಸುವಿರಿ'? ತಪ್ಪು ಮಾಡಿದ ಕಾರಣ ನನ್ನವರು ಕೀಚಕಕುಲವನ್ನು ಕೊಲ್ಲುವರು; ಅವರ ಸಾವಿಗೆ ನಾನು ಹೊಣೆಯಲ್ಲ- ಇದನ್ನು ಸಾರಿಸಾರಿ ಹೇಳುತ್ತೇನೆ; ಇನ್ನು ನಾನು ಹೊರಡುವೆನು ಎಂದಳು.

ಭೀಮನಲ್ಲಿ ದ್ರೌಪದಿಯ ಮೊರೆ[ಸಂಪಾದಿಸಿ]

ಎಂದು ಬೀಳ್ಕೊಂಡಬಲೆ ತನ್ನಯ
ಮಂದಿರಕೆ ಬಂದೊಳಗೊಳಗೆ ಮನ
ನೊಂದು ಸೈವೆರಗಾಗಿ ಚಿಂತಿಸಿ ನೂಕಿದಳು ಹಗಲ
ಕೊಂದುಕೊಂಬೆನೆ ಆತ್ಮಘಾತಕ
ಹಿಂದೆ ಹತ್ತದೆ ಮಾಣದೇಗುವೆ
ನೆಂದು ದ್ರೌಪದಿ ತನ್ನ ಮನದಲಿ ಹಿರಿದು ಮರುಗಿದಳು ೩೧
ಪದವಿಭಾಗ-ಅರ್ಥ: ಎಂದು (ಹೇಳಿ- ಉತ್ತರಿಸಿ) ಬೀಳ್ಕೊಂಡು+ ಅಬಲೆ ತನ್ನಯ ಮಂದಿರಕೆ ಬಂದು+ ಒಳಗೊಳಗೆ (ಅಂತರಂಗದಲ್ಲಿ) ಮನನೊಂದು ಸೈವೆರಗಾಗಿ(ದಿಕ್ಕುತೋಚದೆ) ಚಿಂತಿಸಿ ನೂಕಿದಳು ಹಗಲ= ಹೀಗೆ ಸುದೀಷ್ಣೆಗೆ ಉತ್ತರಿಸಿ ಅವಳನ್ನು ಬೀಳ್ಕೊಂಡು ಅಬಲೆಯಾದ ದ್ರೌಪದಿ ತನ್ನ ವಸತಿಗೆ ಬಂದಳು; ಅವಳು ಒಳಗೊಳಗೆ ಸಂಕಟಪಟ್ಟು ದಿಕ್ಕುತೋಚದೆ ಚಿಂತಿಸುತ್ತಾ ಹಗಲನ್ನು ಕಳೆದಳು.; ಕೊಂದುಕೊಂಬೆನೆ ಆತ್ಮಘಾತಕ ಹಿಂದೆ ಹತ್ತದೆ(ಪಾಪವು ಬೆನ್ನು ಹತ್ತುವುದು) ಮಾಣದೆ(ಹಾಗೆ ಮಾಡದೆ, ಅದಲ್ಲದೆ)+ ಏಗುವೆನೆ+ ಎಂದು ದ್ರೌಪದಿ ತನ್ನ ಮನದಲಿ ಹಿರಿದು ಮರುಗಿದಳು= 'ಆತ್ಮಹತ್ಯೆ ಮಾಡಿಕೊಳ್ಲಲೆ? ಆತ್ಮಘಾತಕದ ಪಾಪವು ಬೆನ್ನು ಹತ್ತುವುದು; ಹಾಗೆ ಮಾಡದೆ ಹೀಗೇ ಕಷ್ಟ, ಅಪಮಾನ ಸಹಿಸಬೇಕೆ?,' ಎಂದು ದ್ರೌಪದಿ ತನ್ನ ಮನಸ್ಸಿನಲ್ಲಿ ಚಿಂತಿಸುತ್ತಾ ಬಹಳ ಸಂಕಟಪಟ್ಟಳು
ಅರ್ಥ: ಹೀಗೆ ಸುದೀಷ್ಣೆಗೆ ಉತ್ತರಿಸಿ ಅವಳನ್ನು ಬೀಳ್ಕೊಂಡು ಅಬಲೆಯಾದ ದ್ರೌಪದಿ ತನ್ನ ವಸತಿಗೆ ಬಂದಳು; ಅವಳು ಒಳಗೊಳಗೆ ಸಂಕಟಪಟ್ಟು ದಿಕ್ಕುತೋಚದೆ ಚಿಂತಿಸುತ್ತಾ ಹಗಲನ್ನು ಕಳೆದಳು. 'ಆತ್ಮಹತ್ಯೆ ಮಾಡಿಕೊಳ್ಲಲೆ? ಆತ್ಮಘಾತಕದ ಪಾಪವು ಬೆನ್ನು ಹತ್ತುವುದು; ಹಾಗೆ ಮಾಡದೆ ಹೀಗೇ ಕಷ್ಟ, ಅಪಮಾನ ಸಹಿಸಬೇಕೆ?,' ಎಂದು ದ್ರೌಪದಿ ತನ್ನ ಮನಸ್ಸಿನಲ್ಲಿ ಚಿಂತಿಸುತ್ತಾ ಬಹಳ ಸಂಕಟಪಟ್ಟಳು.
ಆರಿಗುಸುರುವೆನಾರ ಸಾರುವೆ
ನಾರಿಗೊರಲುವೆನಾರಿಗರುಹುವೆ
ನಾರ ಬೇಡುವೆನಕಟ ಹೆಂಗಸು ಜನ್ಮವನು ಸುಡಲಿ |
ಘೋರ ಪಾತಕಿಯೆನ್ನವೊಲು ಮು
ನ್ನಾರು ನವೆದವರುಂಟು ಮರಣವು
ಬಾರದೆಂದೊರಲಿದಳು ಬಸುರನು ಹೊಯ್ದು ಶಶಿವದನೆ || ೩೨ ||
ಪದವಿಭಾಗ-ಅರ್ಥ: ಆರಿಗೆ+ ಉಸುರುವೆನು(ಹೇಳಲಿ)+ರ ಸಾರುವೆನು(ಬಳಿ ಹೋಗಲಿ) ಆರಿಗೆ+ ಒರಲುವೆನು(ಯಾರ ಹತ್ತಿರ ಗೋಳಿಟ್ಟುಕೊಳ್ಳಲಿ)+ ಆರಿಗೆ+ ಅರುಹುವೆನು(ತಿಳಿಸಲಿ)+ ಆರ ಬೇಡುವೆನು(ಸಹಾಯಕ್ಕಾಗಿ ಬೇಡಲಿ)+ "ಅಕಟ ಹೆಂಗಸು ಜನ್ಮವನು ಸುಡಲಿ, ಘೋರ ಪಾತಕಿ+ಯೆ +ಎನ್ನವೊಲು ಮುನ್ನಾರು ನವೆದವರುಂಟು= ಮಹಾ ಪಾಪಿಯಾಗಿ ನನ್ನಂತೆ ಗೋಳು ಪಟ್ಟವರು ಹಿಂದೆ ಯಾರಾದರೂ ಇದ್ದಾರೆಯೇ? ಮರಣವು ಬಾರದು (ತನಗೆ ಸಾವೂ ಬರುವುದಿಲ್ಲ ಎಂದು)+ ಎಂದು+ ಒರಲಿದಳು(ಗೋಳಿಟ್ಟಳು) ಬಸುರನು ಹೊಯ್ದು(ಹೊಟ್ಟೆಯನ್ನು ಬಡಿದುಕೊಂಡು) ಶಶಿವದನೆ= ಚಂದ್ರನಂತೆ ಮುಖವುಳ್ಳವಳು- ದ್ರೌಪದಿ.
ಅರ್ಥ:ಯಾರಿಗೆ ಹೇಳಲಿ, ಯಾರ ಬಳಿ ಹೋಗಲಿ, ಯಾರ ಹತ್ತಿರ ಗೋಳಿಟ್ಟುಕೊಳ್ಳಲಿ,ಯಾರಿಗೆ ತಿಳಿಸಲಿ, ಯಾರ ಹತ್ತಿರ ಸಹಾಯಕ್ಕಾಗಿ ಬೇಡಲಿ, "ಅಕಟ ಹೆಂಗಸು ಜನ್ಮವನು ಸುಡಲಿ," ಮಹಾ ಪಾಪಿಯಾಗಿ ನನ್ನಂತೆ ಗೋಳು ಪಟ್ಟವರು ಹಿಂದೆ ಯಾರಾದರೂ ಇದ್ದಾರೆಯೇ? ತನಗೆ ಸಾವೂ ಬರುವುದಿಲ್ಲ ಎಂದು ದ್ರೌಪದಿ ಹೊಟ್ಟೆಯನ್ನು ಬಡಿದುಕೊಂಡು ಗೋಳಿಟ್ಟಳು.
ಯಮಸುತಂಗರಹುವೆನೆ ಧರ್ಮ
ಕ್ಷಮೆಯ ಗರ ಹೊಡೆದಿಹುದು ಪಾರ್ಥನು
ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ |
ಭ್ರಮಿತನಾಗಿಹನುಳಿದರಿಬ್ಬರು
ರಮಣರಿವರೀ ನಾಯ ಕೊಲಲ
ಕ್ಷಮರು ನಿಸ್ಸಂದೇಹವೆಂದಳು ತನ್ನ ಮನದೊಳಗೆ || ೩೩ ||
ಪದವಿಭಾಗ-ಅರ್ಥ: ಯಮಸುತಂಗೆ (ಧರ್ಮಜನಿಗೆ)+ ಅರಹುವೆನೆ (ಹೇಳಲೇ?) ಧರ್ಮಕ್ಷಮೆಯ ಗರ (ಸರ್ಪರಾಜ. ಸರ್ಪದ ವಿಷ ಸರ್ಪಕಚ್ಚಿದಂತೆ ನಿಷ್ಕ್ರಿಯ) ಹೊಡೆದಿಹುದು), ಪಾರ್ಥನು ಮಮತೆಯುಳ್ಳವನು+ ಎಂಬೆನೇ ತಮ್ಮ+ ಅಣ್ಣನಾಜ್ಞೆಯಲಿ ಭ್ರಮಿತನಾಗಿ+ ಇಹನು+ ಉಳಿದರು+ ಇಬ್ಬರು ರಮಣರು+ ಇವರು+ ಈ ನಾಯ (ನಾಯಿಯ, ನಾಯಿಯನ್ನು, ಕೀಚಕನನ್ನು) ಕೊಲಲು+ ಅಕ್ಷಮರು(ಅಶಕ್ತರು) ನಿಸ್ಸಂದೇಹವು+ ಎಂದಳು ತನ್ನ ಮನದೊಳಗೆ
ಅರ್ಥ: ಧರ್ಮಜನಿಗೆ ಹೇಳಲೇ? ಅವನಿಗೆ ಧರ್ಮ ಕ್ಷಮೆ ಎಂಬ ಸರ್ಪದ ವಿಷ ಏರಿ, ಸರ್ಪಕಚ್ಚಿದವರಂತೆ ನಿಷ್ಕ್ರಿಯನಾಗಿರುವನು. ಪಾರ್ಥನು ನನ್ನ ಮೇಲೆ ಮಮತೆಯುಳ್ಳವನು ಎನ್ನಲೇ, ತನ್ನ ಅಣ್ಣನ ಆಜ್ಞೆಯಲ್ಲಿ ಭ್ರಮಿತನಾಗಿ ಸುಮ್ಮನಿರುವನು,ಉಳಿದ ಇಬ್ಬರು ಗಂಡರು- ಇವರು ಈ ನಾಯಿಯನ್ನು - ಕೀಚಕನನ್ನು ಕೊಲ್ಲಲು ಅವರ ಶಕ್ತಿ ಸಾಲದು. ನಿಸ್ಸಂದೇಹವಾಗಿ ಇದು ವಾಸ್ತವ ಎಂದು ದ್ರೌಪದಿ ತನ್ನ ಮನಸ್ಸಿನೊಳಗೇ ಎಂದುಕೊಂಡಳು.
ಎಲ್ಲರೊಳು ಕಲಿಭೀಮನೇ ಮಿಡು
ಕುಳ್ಳ ಗಂಡನು ಹಾನಿ ಹರಿಬಕೆ
ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು |
ಖುಲ್ಲನಿವನುಪಟಳವನಾತಂ
ಗೆಲ್ಲವನು ಹೇಳುವೆನು ಬಳಿಕವ
ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ || ೩೪ ||
ಪದವಿಭಾಗ-ಅರ್ಥ: ಎಲ್ಲರೊಳು ಕಲಿಭೀಮನೇ ಮಿಡುಕು+ ಉಳ್ಳ ಗಂಡನು= ಎಲ್ಲ ಐವರಲ್ಲಿ ಕಲಿಭೀಮನೇ ಶೌರ್ಯ- ಧೈರ್ಯವುಳ್ಳ ಗಂಡನು.; ಹಾನಿ ಹರಿಬಕೆ ನಿಲ್ಲದೆ (ಹೆದರಿ ನಿಲ್ಲದೆ)+ ಅಂಗೈಸುವನು (ಕೈಜೋಡಿಸುವನು)= ಮುಂದೆಬರುವ ಹಾನಿ ಕಷ್ಟಗಳನ್ನು ಯೋಚಿಸುತ್ತಾ ಹೆದರಿ ನಿಲ್ಲದೆ ಸಹಾಯಕ್ಕೆ ನಿಲ್ಲುವನು.; ಕಡು ಹೀಹಾಳಿಯುಳ್ಳವನು (ಅವಮಾನವನ್ನು ಸಹಿಸದವನು), ಖುಲ್ಲನು(ಈ ದುಷ್ಟನ-) ಇವನ+ ಉಪಟಳವನು+ ಆತಂಗೆ+ ಎಲ್ಲವನು ಹೇಳುವೆನು= ಅತಿ ಅಭಿಮಾನಿ, (ಅವಮಾನವನ್ನು ಸಹಿಸದವನು; ಈ ದುಷ್ಟನ ಕಿರುಕಿಳವನ್ನು ಎಲ್ಲವನ್ನೂ ಆತನಿಗೆ ಹೇಳುವೆನು;; ಬಳಿಕ+ ಅವನಲ್ಲಿ ಹುರುಳಿಲ್ಲದೊಡೆ (ಹುರುಳು= ಸತ್ತ್ವ. ಶಕ್ತಿ.) ಕುಡಿವೆನು ಘೋರತರ ವಿಷವ= ಬಳಿಕ+ ಅವನಲ್ಲಿಯೂ ಕೀಚಕನನ್ನು ಎದುರಿಸುವ ಸತ್ವ ಇಲ್ಲದಿದ್ದರೆ ಘೋರತರ ವಿಷವನ್ನು ಕುಡಿವೆನು ಎಂದು ದ್ರೌಪದಿ ನಿರ್ಧರಿಸಿದಳು.
ಅರ್ಥ:ಎಲ್ಲ ಐವರಲ್ಲಿ ಕಲಿಭೀಮನೇ ಶೌರ್ಯ- ಧೈರ್ಯವುಳ್ಳ ಗಂಡನು. ಮುಂದೆಬರುವ ಹಾನಿ ಕಷ್ಟಗಳನ್ನು ಯೋಚಿಸುತ್ತಾ ಹೆದರಿ ನಿಲ್ಲದೆ ಸಹಾಯಕ್ಕೆ ನಿಲ್ಲುವನು. ಅತಿ ಅಭಿಮಾನಿ, ಅವಮಾನವನ್ನು ಸಹಿಸದವನು; ಈ ದುಷ್ಟನ ಕಿರುಕುಳ ಎಲ್ಲವನ್ನೂ ಆತನಿಗೆ ಹೇಳುವೆನು; ಬಳಿಕ ಅವನಲ್ಲಿಯೂ ಕೀಚಕನನ್ನು ಎದುರಿಸುವ ಸತ್ವ ಇಲ್ಲದಿದ್ದರೆ ಘೋರತರ ವಿಷವನ್ನು ಕುಡಿವೆನು ಎಂದು ದ್ರೌಪದಿ ನಿರ್ಧರಿಸಿದಳು.
ನಿಳಯವನು ಹೊರವಂಟು ಕಂಗಳ
ಬೆಳಗು ತಿಮಿರವ ಕೆಡಿಸೆ ಕಂಕಣ
ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ |
ಒಲಿದು ಮೇಲುದು ನೂಕಿ ನಡುಗುವ
ಮೊಲೆಯ ಭರದಲಿಯಡಿಯಿಡುತ ಕಳ
ವಳದ ಕರಣದ ಮುಗುದೆ ಬಂದಳು ಬಾಣಸಿನ ಮನೆಗೆ || ೩೫ ||
ಪದವಿಭಾಗ-ಅರ್ಥ: ನಿಳಯವನು ಹೊರವಂಟು ಕಂಗಳ ಬೆಳಗು ತಿಮಿರವ(ಕತ್ತಲೆಯನ್ನು) ಕೆಡಿಸೆ(ಹೋಗಲಾಡಿಸಲು)= ದ್ರೌಪದಿ ತನ್ನ ಮನೆಯಿಂದ ರಾತ್ರಿಯಲ್ಲಿ ಹೊರಟಳು; ಅವಳ ಕಣ್ಣುಗಳ ಕಾಂತಿ ಕತ್ತಲೆಯನ್ನು ಹೋಗಲಾಡಿಸುವಂತಿತ್ತು. ಕಂಕಣ ಲಲಿತ-=ಇಂಪಾದ, ಝೇಂಕೃತಿಯಿಂದ ತೂಗುವ ವಾಮಭುಜಲತೆಯ= ಎಡಭಜ- ಬಳ್ಳಿಯಂತಿರುವ ತೋಳನ್ನು ತೂಗುತ್ತಾ- ಬೀಸುತ್ತಾ, ಒಲಿದು(ಇಷ್ಟಪಟ್ಟು) ಮೇಲುದು ನೂಕಿ= ಮೇಲುಸೆರಗನ್ನು ಇಷ್ಟಪಟ್ಟುಎಡಭುಜದ ಮೇಲೆ ಹಾಕಿಕೊಂಡು, ನಡುಗುವ ಮೊಲೆಯ ಭರದಲಿ+ ಯ+ ಅಡಿಯಿಡುತ= ವೇಗವಾಗಿ ನೆಡಯುವಾಗ ಎದೆನಡುಗುತ್ತಿತ್ತು, ಕಳವಳದ ಕರಣದ(ಮನಸ್ಸಿನ)= ಮುಗುದೆ= ಮುಗ್ಧೆ- ಹೆಣ್ಣು ಬಂದಳು ಬಾಣಸಿನ ಮನೆಗೆ= ಅಡುಗೆಮನೆಗೆ
ಅರ್ಥ: ದ್ರೌಪದಿ ತನ್ನ ಮನೆಯಿಂದ ರಾತ್ರಿಯಲ್ಲಿ ಹೊರಟಳು; ಅವಳ ಕಣ್ಣುಗಳ ಕಾಂತಿ ಕತ್ತಲೆಯನ್ನು ಹೋಗಲಾಡಿಸುವಂತಿತ್ತು, ಅವಳಿಗೆ ಅದೇ ಬೆಳಕು. ಅವಳ ಕೈ ಕಂಕಣದಿಂದ ಇಂಪಾದ ಝೇಂಕೃತಿಯೊಡನರ ಬಳ್ಳಿಯಂತಿರುವ ತೋಳನ್ನು ಬೀಸುತ್ತಾ, ಮೇಲು ಸೆರಗನ್ನು ಇಷ್ಟಪಟ್ಟು ಎಡಭುಜದ ಮೇಲೆ ಹಾಕಿಕೊಂಡು, ವೇಗವಾಗಿ ನೆಡಯುವಾಗ ಎದೆ ನಡುಗುತ್ತಿರಲು, ದುಃಖ ತುಂಬಿದ ಮನಸ್ಸಿನ ಮುಗ್ಧೆ- ಹೆಣ್ಣುಮಗಳು ಅರಮನೆಯ ಅಡುಗೆಮನೆಗೆ ಬಂದಳು.
ಕೆಲದಲೊಟ್ಟಿದ ಪತ್ರ ಶಾಕಾ
ವಳಿಯ ಫಲರಾಸಿಗಳ ಕಳವೆಯ
ಹೊಳೆವುತಿಹ ರಾಜಾನ್ನದಕ್ಕಿಯ ಸಾಲ ಹರಿಯಣದ |
ಕೆಲಬಲದ ಸಂಭಾರ ಚೂರ್ಣದ
ಲಲಿತ ಬೋನದ ವಿವಿಧ ಭಕ್ಷ್ಯಾ
ವಳಿಯ ಬಾಣಸದೊಳಗೆ ಬಂದಳು ಮತ್ತಗಜಗಮನೆ || ೩೬ ||
ಪದವಿಭಾಗ-ಅರ್ಥ: ಕೆಲದಲಿ (ಅಡುಗೆಮನೆಯ- ಬದಿಗಳಲ್ಲಿ)+ ಒಟ್ಟಿದ= ರಾಶಿಹಾಕಿದ; ಪತ್ರ= ಬಾಳೆಲೆ. ಶಾಕಾವಳಿಯ= ತರಕಾರಿಗಳು, ಫಲರಾಸಿಗಳ=ಹಣ್ಣಿನ ರಾಶಿಗಳು, ಕಳವೆಯ ಹೊಳೆವುತಿಹ ರಾಜಾನ್ನದಕ್ಕಿಯ=ಬಿದುರಿನ ಹೊಳೆಯುವ ರಾಜಾನ್ನದ ಅಕ್ಕಿಯ ರಾಶಿಗಳು,; ಸಾಲ ಹರಿಯಣದ ಕೆಲಬಲದ ಸಂಭಾರ ಚೂರ್ಣದಲಲಿತ ಬೋನದ= ಸಾಲಾಗಿ ಇಟ್ಟ ಹರಿವಾಣಗಳು, ಕೆಲಬಲದ ಸಂಭಾರ ಚೂರ್ಣದ= ಅಲ್ಲಲ್ಲಿ ಇಟ್ಟಿರುವ ಸಾಂಭಾರದ ಪುಡಿಗಳು, ಲಲಿತ ಬೋನದ= ಸುಂದರವಾದ ಅನ್ನದ ರಾಶಿಯ ; ವಿವಿಧ ಭಕ್ಷ್ಯಾವಳಿಯ(ಆವಳಿ ರಾಶಿ)= ವಿವಿಧ ಭಕ್ಷ್ಯಗಳ ರಾಶಿಗಳು ಇದ್ದ, ಬಾಣಸದೊಳಗೆ ಬಂದಳು ಮತ್ತಗಜಗಮನೆ= ಈ ರೀತಿ ಇದ್ದ ಅಡುಗೆಮನೆಗೆ ಬಂದಳು ಮದದಾನೆಯ ನೆಡಿಗೆಯುಳ್ಳ ದ್ರೌಪದಿ.
ಅರ್ಥ: ಅಡುಗೆಮನೆಯ- ಬದಿಗಳಲ್ಲಿ ರಾಶಿಹಾಕಿದ ಬಾಳೆಲೆ, ತರಕಾರಿಗಳು, ಹಣ್ಣಿನ ರಾಶಿಗಳು, ಬಿದುರಿನ ಹೊಳೆಯುವ ರಾಜಾನ್ನದ ಅಕ್ಕಿಯ ರಾಶಿಗಳು, ಸಾಲಾಗಿ ಇಟ್ಟ ಹರಿವಾಣಗಳು, ಅಲ್ಲಲ್ಲಿ ಇಟ್ಟಿರುವ ಸಾಂಭಾರದ ಪುಡಿಗಳು, ಸುಂದರವಾದ ಅನ್ನದ ರಾಶಿಯ; ವಿವಿವಿಧ ಭಕ್ಷ್ಯಗಳ ರಾಶಿಗಳು ಇದ್ದ ಅಡುಗೆಮನೆಗೆ ಮದದಾನೆಯ ನೆಡಿಗೆಯುಳ್ಳ ದ್ರೌಪದಿ ಬಂದಳು .
ತರಿದ ಕುರಿಗಳ ಹಂದಿಯಡಗಿನ
ಜುರಿತ ರಕುತದ ಮೊಲನ ಖಂಡದ
ತಿರಿದ ಗುಬ್ಬಿಯ ಕೀಸಿ ಸೀಳಿದ ನವಿಲ ಲಾವುಗೆಯ |
ತುರುಗಿದೆಲುವಿನ ಸಾಲ ಸುಂಟಿಗೆ
ಮೆರೆವ ಮಾಂಸದ ರಾಸಿಗಳ ಹರ
ದೆರಕೆಗಳ ಕಂಡಬಲೆ ಹೊಗಳಿದಳಡಬಳದ ಮನೆಯ || ೩೭ ||
ಪದವಿಭಾಗ-ಅರ್ಥ: ತರಿದ(ಕತ್ತರಿಸಿದ) ಕುರಿಗಳ ಹಂದಿಯ+ ಅಡಗಿನ(ಮಾಂಸದ) ಜುರಿತ(ಗುಳ್ಳೆಗಳೆದ್ದ) ರಕುತದ, ಮೊಲನ ಖಂಡದ (ಮಾಂ), ತಿರಿದ(ನುಲಿದ ರೆಕ್ಕೆತೆಗೆದ?) ಗುಬ್ಬಿಯ, ಕೀಸಿ(ಸಿಗಿದು) ಸೀಳಿದ ನವಿಲ ಲಾವುಗೆಯ(ಹಕ್ಕಿ), ತುರುಗಿದ(ರಾಶಿಹಾಕಿದ)+ ಎಲುವಿನ ಸಾಲ ಸುಂಟಿಗೆ(ಸೌಟಿನಲ್ಲಿತೆಗೆದ ಮಾಂಸ; 1. ಸುಂಟಗೆ. 2. ಸಲಾಕಿ ಯಲ್ಲಿಟ್ಟು ಸುಡಲು (ಮುಖ್ಯವಾಗಿ) ತೆಗೆದುಕೊಳ್ಳುವ ದೇಹದ ಭಾಗ.) ಮೆರೆವ ಮಾಂಸದ ರಾಸಿಗಳ, ಹರದ+ ಎರಕೆಗಳ(ಹಾಸಿದ ಹುಲ್ಲುಗಳು) ಕಂಡು+ ಅಬಲೆ ಹೊಗಳಿದಳು+ ಅಡಬಳದ ಮನೆಯ
ಅರ್ಥ: ಕತ್ತರಿಸಿದ ಕುರಿಗಳ ಹಂದಿಯ ಮಾಂಸದ ರಾಶಿಗಳನ್ನೂ, ಗುಳ್ಳೆಗಳೆದ್ದ ರಕುತದ ಹರಿವನ್ನೂ,, ಮೊಲಗಳ ಮಾಂಸ ರಾಶಿಗಳನ್ನೂ, ನುಲಿದ ರೆಕ್ಕೆತೆಗೆದ ಗುಬ್ಬಿಯ ರಾಶಿಗಳನ್ನೂ, ಸಿಗಿದು ಸೀಳಿದ ನವಿಲ ಮತ್ತು ಲಾವುಗೆ ಹಕ್ಕಿಗಳನ್ನೂ, ರಾಶಿಹಾಕಿದ ಎಲುವಿನ ಸಾಲುಗಳನ್ನೂ, ಸುಂಟಿಗೆಯಲ್ಲಿರುವ ದೇಹದ ಭಾಗಗಳನ್ನೂ, ಮೆರೆವ ಮಾಂಸದ ರಾಸಿಗಳನ್ನೂ, ಹಾಸಿದ ಹುಲ್ಲುಗಳನ್ನೂ ಕಂಡು, ದ್ರೌಪದಿ ಭೀಮನ ಅಡುಗೆಮನೆಯನ್ನ ಹೊಗಳಿದಳು.
ಆರಲರಿದನೊ ಭೀಮನೀ ಸೂ
ವಾರ ವಿದ್ಯೆಯ ಭಾಪು ವಿಧಿ ಮುನಿ
ದಾರನಾವಂಗದಲಿ ಬರಿಸದು ಶಿವಶಿವಾಯೆನುತ |
ನಾರಿ ನಸುನಗುತೊಳಗೆ ಹೊಕ್ಕು ಬ
ಕಾರಿ ಮಂಚದೊಳಿರಲು ನಿದ್ರಾ
ಭಾರ ವಿಹ್ವಲಕರಣನನು ಹೊದ್ದಿದಳು ಲಲಿತಾಂಗಿ || ೩೮ ||
ಪದವಿಭಾಗ-ಅರ್ಥ: ಆರಲಿ+ ಅರಿದನೊ(ಯಾರಿಂದ ಕಲಿತನೋ) ಭೀಮನು+ ಈ ಸೂವಾರ ವಿದ್ಯೆಯ= ಭೀಮನು ಈ ಅಡುಗೆಯ ವಿದ್ಯೆಯನ್ನು ಯಾರಿಂದ ಕಲಿತನೋ! ;;ಭಾಪು ವಿಧಿ ಮುನಿದು+ ಆರನು+ ಆವ+ ಅಂಗದಲಿ(ಸ್ಥಾನದಲ್ಲಿ ಬರವಂತೆ ಮಾಡುವುದು) ಬರಿಸದು ಶಿವಶಿವಾ+ ಯೆ+ ಎನುತ ನಾರಿ ನಸುನಗುತ+ ಒಳಗೆ ಹೊಕ್ಕು= ಭಾಪು! ವಿಧಿ ಮುನಿದು- ಕೋಪಗೊಂಡು, ಯಾರನ್ನು ಯಾವ ಸ್ಥಾನದಲ್ಲಿ ಬರವಂತೆ ಮಾಡುವುದು- ಹೇಳಲಾಗದು; 'ಶಿವಶಿವಾ' ಎನ್ನುತ್ತ ದ್ರೌಪದಿ ನಸುನಗುತ್ತಾ ಒಳಗೆ ಹೊಕ್ಕು;; ಬಕ+ ಅರಿ(ಬಕನ ಶತ್ರು) ಮಂಚದೊಳಿರಲು ನಿದ್ರಾಭಾರ ವಿಹ್ವಲಕರಣನನು( ದುಃಖಿತ. ಗೊಂದಲದಲ್ಲಿ ಬಿದ್ದ, ಕರಣ-ಮನಸ್ಸಿನವನು) ಹೊದ್ದಿದಳು-ಸಮೀಪಿಸಿದಳು ಲಲಿತಾಂಗಿ= ಭೀಮ ಮಂಚದಲ್ಲಿ ಇರುವಾಗ ಆಯಾಸಗೊಂಡು ನಿದ್ರೆಯಭಾರದಲ್ಲಿ ಇರುವ ಅವನ ಹತ್ತಿರ ದ್ರೌಪದಿ ಹೋದಳು.
ಅರ್ಥ: ಭೀಮನು ಈ ಅಡುಗೆಯ ವಿದ್ಯೆಯನ್ನು ಯಾರಿಂದ ಕಲಿತನೋ! ಭಾಪು! ವಿಧಿ ಮುನಿದು- ಕೋಪಗೊಂಡು, ಯಾರನ್ನು ಯಾವ ಸ್ಥಾನದಲ್ಲಿ ಬರವಂತೆ ಮಾಡುವುದು- ಹೇಳಲಾಗದು; 'ಶಿವಶಿವಾ' ಎನ್ನುತ್ತ ದ್ರೌಪದಿ ನಸುನಗುತ್ತಾ ಒಳಗೆ ಹೊಕ್ಕು. ಭೀಮನು ಆಯಾಸಗೊಂಡು ನಿದ್ರೆಯಭಾರದಲ್ಲಿ ಮಂಚದಲ್ಲಿ ಇರುವಾಗ ಅವನ ಹತ್ತಿರ ದ್ರೌಪದಿ ಹೋದಳು.
ಎಬ್ಬಿಸಲು ಭುಗಿಲೆಂಬನೋ ಮೇ
ಣೊಬ್ಬಳೇತಕೆ ಬಂದೆ ಮೋರೆಯ
ಮಬ್ಬಿದೇಕೆಂದೆನ್ನ ಸಂತೈಸುವನೊ ಸಾಮದಲಿ |
ತುಬ್ಬುವದೊ ತಾ ಬಂದ ಬರವಿದು
ನಿಬ್ಬರವಲಾ ಜನದ ಮನಕಿ
ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ || ೩೯ ||
ಪದವಿಭಾಗ-ಅರ್ಥ: ಎಬ್ಬಿಸಲು ಭುಗಿಲೆಂಬನೋ (ಭುಗಿಲು- ಬೆಂಕಿಯಂತೆ, ಸಿಟ್ಟು ಮಾಡುವನೋ) ಮೇಣ್+ ಒಬ್ಬಳೇತಕೆ ಬಂದೆ ಮೋರೆಯ ಮಬ್ಬು+ ಇದು+ ಏಕೆಂದು+ ಎನ್ನ ಸಂತೈಸುವನೊ= ಇವನನ್ನು ನಿದ್ದೆಯಿಂದ ಎಬ್ಬಿಸಿದರ ಭುಗಿಲೆಂದು ಸಿಟ್ಟು ಮಾಡುವನೋ! ಅಥವಾ ಒಬ್ಬಳೇ ಏತಕೆ ಬಂದೆ? ಮುಖದಲ್ಲಿ ಬಾಡಿದ ಕಳೆ ಏಕೆ ಎಂದು ತನ್ನನ್ನು ಸಂತೈಸುವನೊ.; ಸಾಮದಲಿ/ ಪ್ರೀತಿಯಿಂದ ಶಾಂತವಾಗಿ, ತುಬ್ಬುವದೊ(ಅಪ್ಪಿಕೊಳ್ಳುವುದೋ) ತಾ ಬಂದ ಬರವು+ ಇದು ನಿಬ್ಬರವಲಾ(ನಿಬ್ಬೆರಗು -ಆಕಸ್ಮಿಕ ಮತ್ತು ಆಶ್ಚರ್ಯವಲ್ಲವೇ) ಜನದ ಮನಕೆ+; - ಇನ್ನು+ ಎಬ್ಬಿಸಿಯೆ ನೋಡುವೆನ+ ಎನುತ ಸಾರಿದಳು ವಲ್ಲಭನ(ಗಂಡನ)= ಪ್ರೀತಿಯಿಂದ ಅಪ್ಪಿಕೊಳ್ಳುವುದೋ ತಾನು ಬಂದ ಈ ಬರುವಿನ ಕ್ರಮ ಜನರ ದೃಷ್ಠಿಯಲ್ಲಿ ಆಕಸ್ಮಿಕ ಮತ್ತು ಆಶ್ಚರ್ಯವಲ್ಲವೇ? (ಜನದ ಮನಕೆ); ಇನ್ನು ಇವನನ್ನು ಎಬ್ಬಿಸಿಯೆ ನೋಡುವೆನು ಎನ್ನತ್ತಾ ಗಂಡನ ಬಳಿಗೆ ಸಾರಿದಳು. ಹೋದಳು.
ಅರ್ಥ: ಇವನನ್ನು ನಿದ್ದೆಯಿಂದ ಎಬ್ಬಿಸಿದರ ಭುಗಿಲೆಂದು ಸಿಟ್ಟು ಮಾಡುವನೋ! ಅಥವಾ ಒಬ್ಬಳೇ ಏತಕೆ ಬಂದೆ? ಮುಖದಲ್ಲಿ ಬಾಡಿದ ಕಳೆ ಏಕೆ ಎಂದು ತನ್ನನ್ನು ಸಂತೈಸುವನೊ? ಪ್ರೀತಿಯಿಂದ ಅಪ್ಪಿಕೊಳ್ಳುವುದೋ ತಾನು ಬಂದ ಈ ಬರುವಿನ ಕ್ರಮ ಜನರ ದೃಷ್ಠಿಯಲ್ಲಿ ಆಕಸ್ಮಿಕ ಮತ್ತು ಆಶ್ಚರ್ಯವಲ್ಲವೇ? ಇನ್ನು ಇವನನ್ನು ಎಬ್ಬಿಸಿಯೆ ನೋಡುವೆನು ಎನ್ನತ್ತಾ ಗಂಡನ ಬಳಿಗೆ ಸಾರಿದಳು. ಹೋದಳು.
ಮೆಲ್ಲ ಮೆಲ್ಲನೆ ಮುಸುಕ ಸಡಿಲಿಸಿ
ಗಲ್ಲವನು ಹಿಡಿದಲುಗಲಪ್ರತಿ
ಮಲ್ಲನೆದ್ದನು ನೋಡಿದನು ಪಾಂಚಾಲನಂದನೆಯ |
ವಲ್ಲಭೆಯೆ ಬರವೇನು ಮುಖದಲಿ
ತಲ್ಲಣವೆ ತಲೆದೋರುತಿದೆ ತಳು
ವಿಲ್ಲದುಸುರಿರುಳೇಕೆ ಬಂದೆ ಲತಾಂಗಿ ಹೇಳೆಂದ || ೪೦ ||
ಪದವಿಭಾಗ-ಅರ್ಥ: ಮೆಲ್ಲ ಮೆಲ್ಲನೆ ಮುಸುಕ ಸಡಿಲಿಸಿ ಗಲ್ಲವನು ಹಿಡಿದು+ ಅಲುಗಲು+ ಅಪ್ರತಿಮಲ್ಲನು(ಸರಿಸಾಟಿಯಿಲ್ಲದ ಜಟ್ಟಿಯು)+ ಎದ್ದನು,= ದ್ರೌಪದಿಯು ಗಂಡನ ಮುಸುಕನ್ನು ಮೆಲ್ಲ ಮೆಲ್ಲನೆ ಸಡಿಲಿಸಿ ತೆಗೆದು ಪ್ರೀತಿಯಿಂದ ಗಲ್ಲವನು ಹಿಡಿದು ಅಲುಗಿಸಲು, ಸರಿಸಾಟಿಯಿಲ್ಲದ ಜಟ್ಟಿ ಭೀಮನು ಎಚ್ಚರಾದನು.; ನೋಡಿದನು ಪಾಂಚಾಲನಂದನೆಯ= ಭೀಮನು ಕಣ್ಣುಬಿಟ್ಟು ಪಾಂಚಾಲನಂದನೆ ದ್ರೌಪದಿಯನ್ನು ನೋಡಿದನು. ವಲ್ಲಭೆಯೆ ಬರವು+ ಏನು ಮುಖದಲಿ ತಲ್ಲಣವೆ ತಲೆದೋರುತಿದೆ= ವಲ್ಲಭೆಯೆ/ ಪತ್ನಿ/ ರಾಣಿಯವರು ಇಲ್ಲಿಗೆ ಬರಲು ಕಾರಣವೇನು? ನಿನ್ನ ಮುಖದಲ್ಲಿ ತಲ್ಲಣ/ದುಃಖವೇ ಎದ್ದು ಕಾಣುತ್ತಿದೆ,; ತಳುವು+ ಇಲ್ಲದೆ(ತಡ ಮಾಡದೆ)+ ಉಸುರು(ಹೇಳು)+ ಇರುಳು (ರಾತ್ರಿ)+ ಏಕೆ ಬಂದೆ ಲತಾಂಗಿ ಹೇಳೆಂದ= ತಡ ಮಾಡದೆ ಹೇಳು, ಈ ರಾತ್ರಿಯಲ್ಲಿ ಏಕೆ ಬಂದೆ ಕೋಮಲೆ, ಹೇಳು ಎಂದ.
ಅರ್ಥ: ದ್ರೌಪದಿಯು ಗಂಡನ ಮುಸುಕನ್ನು ಮೆಲ್ಲ ಮೆಲ್ಲನೆ ಸಡಿಲಿಸಿ ತೆಗೆದು ಪ್ರೀತಿಯಿಂದ ಗಲ್ಲವನು ಹಿಡಿದು ಅಲುಗಿಸಲು, ಸರಿಸಾಟಿಯಿಲ್ಲದ ಜಟ್ಟಿ ಭೀಮನು ಎಚ್ಚರಾದನು. ಭೀಮನು ಕಣ್ಣುಬಿಟ್ಟು ಪಾಂಚಾಲನಂದನೆ ದ್ರೌಪದಿಯನ್ನು ನೋಡಿದನು. ರಾಣಿಯವರು ಇಲ್ಲಿಗೆ ಬರಲು ಕಾರಣವೇನು? ನಿನ್ನ ಮುಖದಲ್ಲಿ ದುಃಖವೇ ಎದ್ದು ಕಾಣುತ್ತಿದೆ, ತಡ ಮಾಡದೆ ಹೇಳು, ಈ ರಾತ್ರಿಯಲ್ಲಿ ಏಕೆ ಬಂದೆ ಕೋಮಲೆ, ಹೇಳು ಎಂದ.
ಸೈರಿಸರು ಬಾಣಸದ ಭವನದ
ಲನಾರಿಯರು ದುರ್ಜನರು ಖುಲ್ಲ ಕು
ಠಾರರಿವರರಮನೆಯ ನಾಯ್ಗಳು ನಾವು ದೇಶಿಗರು |
ಭಾರವಿದು ಕೆಲರರಿಯದಂತಿರೆ
ನಾರಿ ನೀ ಹೇಳೆನುತ ದುಗುಡವಿ
ದಾರ ದೆಸೆಯಿಂದಾಯಿತೆನಲಿಂತೆಂದಳಿಂದುಮುಖಿ || ೪೧ ||
ಪದವಿಭಾಗ-ಅರ್ಥ: ಸೈರಿಸರು ಬಾಣಸದ ಭವನದ ನಾರಿಯರು ದುರ್ಜನರು ಖುಲ್ಲ(ಅಲ್ಪವಾದ) ಕುಠಾರರು(ಒರಟು ವ್ಯಕ್ತಿಗಳು)+ ಇವರು+ ಅರಮನೆಯ ನಾಯ್ಗಳು= ಈ ಅಡುಗೆಯಮನೆಯ ನಾರಿಯರು ನನ್ನ ಬರುವಿಕೆಯನ್ನು ನೋಡಿ ಸೈರಿಸಲಾರರುರು. ಇವರೆಲ್ಲ ದುರ್ಜನರು, ಅಲ್ಪರಾದ ಇವರು+ ಅರಮನೆಯ ನಾಯಿಯಂಥ ಜನರು;; ನಾವು ದೇಶಿಗರು ಭಾರವಿದು (ಬಹಳಕಷ್ಟ) ಕೆಲರು(ಹತ್ತಿರದ ಯಾರೂ)+ ಅರಿಯದಂತಿರೆ(ಪರಿಚಯವಾಗದಂತೆ),= ನಾವು ಪರದೇಶದವರು; ಹತ್ತಿರದ ಯಾರಿಗೂ ಪರಿಚಯವಾಗದಂತೆ ಇರುವುದು ಬಹಳಕಷ್ಟ, ಅದಕ್ಕಾಗಿ ರಾತ್ರಿ ಬಂದೆ ಎಂದಳು.;; ನಾರಿ ನೀ ಹೇಳೆನುತ ದುಗುಡವು+ ಇದು+ ಆರ ದೆಸೆಯಿಂದ+ ಆಯಿತು+ ಎನಲು+ ಇಂತೆಂದಳು+ ಇಂದುಮುಖಿ= ಹೆಣ್ಣೇ ಈ ದುಃಕವು ಯಾರ ದೆಸೆಯಿಂದ ಆಯಿತು, ಎನ್ನಲು, ಅವಳು ಹೀಗೆ ಹೇಳಿದಳು.
ಅರ್ಥ: ಈ ಅಡುಗೆಯಮನೆಯ ನಾರಿಯರು ನನ್ನ ಬರುವಿಕೆಯನ್ನು ನೋಡಿ ಸೈರಿಸಲಾರರುರು. ಇವರೆಲ್ಲ ದುರ್ಜನರು, ಅಲ್ಪರಾದ ಇವರು ಅರಮನೆಯ ನಾಯಿಯಂಥ ಜನರು;; ನಾವು ಪರದೇಶದವರು; ಹತ್ತಿರದ ಯಾರಿಗೂ ಪರಿಚಯವಾಗದಂತೆ ಇರುವುದು ಬಹಳಕಷ್ಟ, ಅದಕ್ಕಾಗಿ ರಾತ್ರಿ ಬಂದೆ ಎಂದಳು. ಪ್ರಿಯೇ ಈ ದುಃಕವು ಯಾರ ದೆಸೆಯಿಂದ ಆಯಿತು, ಎನ್ನಲು, ಅವಳು ಹೀಗೆ ಹೇಳಿದಳು.
ನಿನ್ನೆ ಹಗಲರೆಯಟ್ಟಿ ಕೀಚಕ
ಕುನ್ನಿಯೊದೆದನು ರಾಜಸಭೆಯಲಿ
ನಿನ್ನ ವಂದಿಗರಿರಲು ಪರಿಭವವುಚಿತವೇ ತನಗೆ |
ಎನ್ನನವ ಬೆಂಬಳಿಯ ಬಿಡ ನಾ
ನಿನ್ನು ಬದುಕುವಳಲ್ಲ ಪಾತಕ
ನಿನ್ನ ತಾಗದೆ ಮಾಣದೆನಲಾ ಭೀಮ ಖತಿಗೊಂಡ || ೪೨ ||
ಪದವಿಭಾಗ-ಅರ್ಥ: ನಿನ್ನೆ ಹಗಲು+ ಅರೆಯಟ್ಟಿ ಕೀಚಕ ಕುನ್ನಿಯು+ ಒದೆದನು ರಾಜಸಭೆಯಲಿ= ನಿನ್ನೆ ಹಗಲು ನನ್ನನ್ನು ತುಡುಕಿ ಅಟ್ಟಿಸಿಕೊಂಡು ಬಂದು ರಾಜಸಭೆಯಲ್ಲಿ ಆ ಕೀಚಕ ಕುನ್ನಿಯು ನನಗೆ ಒದ್ದನು.;; ಆಗ ರಾಜಸಭೆಯಲಿ ನಿನ್ನ ವಂದಿಗರು(ಒಡಹುಟ್ಟಿದವರು)+ ಇರಲು ಪರಿಭವವು(ಅವಮಾನವು)+ ಉಚಿತವೇ(ಯೋಗ್ಯವೇ) ತನಗೆ= ಆಗ ರಾಜಸಭೆಯಲ್ಲಿ ನಿನ್ನ ಒಡಹುಟ್ಟಿದವರು ಇದ್ದರೂ ಈ ಅವಮಾನವು ತನಗೆ ಯೋಗ್ಯವೇ ;; ಎನ್ನನು+ ಅವ ಬೆಂಬಳಿಯ(ಬೆನ್ನುಹತ್ತದೆ) ಬಿಡ, ನಾನು+ ಇನ್ನು ಬದುಕುವಳಲ್ಲ ಪಾತಕ ನಿನ್ನ ತಾಗದೆ ಮಾಣದು+ ಎನಲು+ ಆ ಭೀಮ ಖತಿಗೊಂಡ= ನನ್ನನ್ನು ಅವನು ಬೆನ್ನುಹತ್ತದೆ ಬಿಡುವುದಿಲ್ಲ, ನಾನು ಇನ್ನು ಬದುಕಿ ಇರುವಳಲ್ಲ- ಸಾಯವೆನು, ಆ ಪಾತಕ- ಪಾಪವು ನಿನ್ನನ್ನು ತಾಗದೆ ಬಿಡುವುದಿಲ್ಲ ಎನ್ನಲು, ಆ ಭೀಮ ಸಿಟ್ಟಾದನು.
ಅರ್ಥ: ದ್ರೌಪದಿ ಹೇಳಿದಳು, ನಿನ್ನೆ ಹಗಲು ನನ್ನನ್ನು ತುಡುಕಿ ಅಟ್ಟಿಸಿಕೊಂಡು ಬಂದು ರಾಜಸಭೆಯಲ್ಲಿ ಆ ಕೀಚಕ ಕುನ್ನಿಯು ನನಗೆ ಒದ್ದನು. ಆಗ ರಾಜಸಭೆಯಲ್ಲಿ ನಿನ್ನ ಒಡಹುಟ್ಟಿದವರು ಇದ್ದರೂ ಈ ಅವಮಾನವು ತನಗೆ ಯೋಗ್ಯವೇ? ನನ್ನನ್ನು ಅವನು ಬೆನ್ನುಹತ್ತದೆ ಬಿಡುವುದಿಲ್ಲ, ನಾನು ಇನ್ನು ಬದುಕಿ ಇರುವಳಲ್ಲ- ಸಾಯವೆನು, ಆ ಪಾಪವು ನಿನ್ನನ್ನು ತಾಗದೆ ಬಿಡುವುದಿಲ್ಲ ಎನ್ನಲು, ಆ ಭೀಮನು ಸಿಟ್ಟಾದನು.
ಉಸುರಲಾಗದು ನಿನ್ನ ಹರಿಬಕೆ
ಮಿಸುಕುವವರಾವಲ್ಲ ಹೆಂಡಿರ
ಗಸಣಿಗೊಂಬವರಲ್ಲ ಹುದುವಿನ ಗಂಡತನವಿದನು |
ಶಶಿವದನೆ ಸುಡು ಕಷ್ಟವೀಯಪ
ದೆಸೆಯವರು ನಾವಲ್ಲ ನಿನ್ನವ
ರಸಮ ಸಾಹಸರುಳಿದ ನಾಲ್ವರಿಗರಹು ಹೋಗೆಂದ || ೪೩ ||
ಪದವಿಭಾಗ-ಅರ್ಥ: ಉಸುರಲಾಗದು(ಹೆಚ್ಚು ಮಾತನಾಡುವಂತಿಲ್ಲ,) ನಿನ್ನ ಹರಿಬಕೆ(ಕಷ್ಟಕ್ಕೆ) ಮಿಸುಕುವವರು(ಸ್ಪಂದಿಸುವವರು ಒದಗುವವರು,)+ ಆವಲ್ಲ(ನಾವಲ್ಲ)= ಹೆಚ್ಚು ಮಾತನಾಡುವಂತಿಲ್ಲ, ನಿನ್ನ ಕಷ್ಟಕ್ಕೆ ಸ್ಪಂದಿಸುವವರು ಒದಗುವವರು ನಾವಲ್ಲ);; ಹೆಂಡಿರ ಗಸಣಿಗೊಂಬವರಲ್ಲ(ಗೋಜಿಗೆ ಹೋಗುವವರಲ್ಲ),= ಹೆಂಡಿರ ಗೋಜಿಗೆ ಹೋಗುವವರಲ್ಲ),;; ಹುದುವಿನ(ಏಕಸ್ವಾಮಿತ್ವಕ್ಕೆ ಒಳಪಟ್ಟ) ಗಂಡತನವು+ ಇದನು ಶಶಿವದನೆ ಸುಡು, ಕಷ್ಟವು+ ಈಯಪದೆಸೆಯವರು ನಾವಲ್ಲ= ಅಣ್ನನ ಆಜ್ಞೆಯ ಏಕಸ್ವಾಮಿತ್ವಕ್ಕೆ ಒಳಪಟ್ಟ ಗಂಡಸುತನವು ಇದನದು, ಸುಂದರಿ, ಈ ಗಂಡುತನವನ್ನು ಸುಡು! ನಾವು ಈ ನಿನ್ನ ಕಷ್ಟದ ಅಪದೆಸೆಯುನ್ನು ಪರಿಹರಿಸುವವರು ನಾವಲ್ಲ.// ನಿನ್ನವರು+ ಅಸಮ ಸಾಹಸರು+ ಉಳಿದ ನಾಲ್ವರಿಗೆ+ ಅರಹು ಹೋಗು+ ಏಂದ= ನಿನ್ನ ಉಳಿದ ಪತಿಯಾದವರು ಅಸಮ ಸಾಹಸರು, ಉಳಿದ ನಾಲ್ವರಿಗೆ ಹೇಳು ಹೋಗು, ಏಂದನು ಭೀಮ.
ಅರ್ಥ: ಹೆಚ್ಚು ಮಾತನಾಡುವಂತಿಲ್ಲ, ನಿನ್ನ ಕಷ್ಟಕ್ಕೆ ಒದಗುವವರು ನಾವಲ್ಲ; ಹೆಂಡಿರ ಗೋಜಿಗೆ ಹೋಗುವವರಲ್ಲ, ಅಣ್ನನ ಆಜ್ಞೆಯ ಏಕಸ್ವಾಮಿತ್ವಕ್ಕೆ ಒಳಪಟ್ಟ ಗಂಡಸುತನವು ಇದನದು, ಸುಂದರಿ, ಈ ಗಂಡುತನವನ್ನು ಸುಡು! ನಾವು ಈ ನಿನ್ನ ಕಷ್ಟದ ಅಪದೆಸೆಯುನ್ನು ಪರಿಹರಿಸುವವರು ನಾವಲ್ಲ. ನಿನ್ನ ಉಳಿದ ಪತಿಯಾದ ನಾಲ್ವರು ಅಸಮ ಸಾಹಸರು, ಉಳಿದ ನಾಲ್ವರಿಗೆ ಹೇಳು ಹೋಗು, ಏಂದನು ಭೀಮ.
ರಮಣ ಕೇಳುಳಿದವರು ತನ್ನನು
ರಮಿಸುವರು ಮಾನಾರ್ಥವೆನೆ ನಿ
ರ್ಗಮಿಸುವರು ನೀನಲ್ಲದುಳಿದವರುಚಿತಬಾಹಿರರು |
ಮಮತೆಯಲಿ ನೀ ನೋಡು ಚಿತ್ತದ
ಸಮತೆಯನು ಬೀಳ್ಕೊಡು ಕುಠಾರನ
ಯಮನ ಕಾಣಿಸಿ ಕರುಣಿಸೆಂದಳು ಕಾಂತೆ ಕೈಮುಗಿದು || ೪೪ ||
ಪದವಿಭಾಗ-ಅರ್ಥ: ರಮಣ ಕೇಳು+ ಉಳಿದವರು ತನ್ನನು ರಮಿಸುವರು ಮಾನಾರ್ಥವೆನೆ ನಿರ್ಗಮಿಸುವರು= ರಮಣ ಕೇಳು ಉಳಿದವರೋ ತನ್ನನು ಮರ್ಯಾದೆಯ ಅರ್ಥ-ಧರ್ಮಕ್ಕಾಗಿ ರಮಿಸಿ ಸುಖಪಡುವರು. ಬಯಕೆ ತೀರಿದ ನಂತರ ಹೊರಡುವರು, ನಿರ್ಗಮಿಸುವರು.// ನೀನಲ್ಲದೆ+ ಉಳಿದವರು+ ಉಚಿತ ಬಾಹಿರರು ಮಮತೆಯಲಿ ನೀ ನೋಡು ಚಿತ್ತದ+ ಅಸಮತೆಯನು ಬೀಳ್ಕೊಡು ಕುಠಾರನ/ಕತ್ತಿಯಂತಿರುವ ಕ್ರೂರನನ್ನು ಯಮನ ಕಾಣಿಸಿ ಕರುಣಿಸು+ ಎಂದಳು ಕಾಂತೆ ಕೈಮುಗಿದು= ನೀನಲ್ಲದೆ ಉಳಿದವರು ಉಚಿತವಾದ ಕೆಲಕ್ಕ ಬರವವರಲ್ಲ, ನನ್ನನ್ನು ಸ್ವಲ್ಪ ಮಮತೆಯಿಂದ/ ಪ್ರೀತಿಯಿಂದ ನೀನು ನೋಡು, ಮನಸ್ಸಿನ ಗೊಂದಲವನ್ನು ತೊಲಗಿಸು, ಕತ್ತಿಯಂತಿರುವ ಕ್ರೂರ ಕೀಚಕನನ್ನು ಯಮನ ಮನೆಗೆ ಕಳುಹಿಸಿ ನನಗೆ ಕರುಣೆತೋರಿಸು, ಎಂದು ದ್ರೌಪದಿ ಕೈಮುಗಿದಳು.
ಅರ್ಥ: ರಮಣ ಕೇಳು ಉಳಿದವರೋ ತನ್ನನು ಮರ್ಯಾದೆಯ ಅರ್ಥ-ಧರ್ಮಕ್ಕಾಗಿ ರಮಿಸಿ ಸುಖಪಡುವರು. ಬಯಕೆ ತೀರಿದ ನಂತರ ಹೊರಡುವರು, ನಿರ್ಗಮಿಸುವರು. ನೀನಲ್ಲದೆ ಉಳಿದವರು ಉಚಿತವಾದ ಕೆಲಕ್ಕ ಬರವವರಲ್ಲ, ನನ್ನನ್ನು ಸ್ವಲ್ಪ ಮಮತೆಯಿಂದ/ ಪ್ರೀತಿಯಿಂದ ನೀನು ನೋಡು, ಮನಸ್ಸಿನ ಗೊಂದಲವನ್ನು ತೊಲಗಿಸು, ಕತ್ತಿಯಂತಿರುವ ಕ್ರೂರ ಕೀಚಕನನ್ನು ಯಮನ ಮನೆಗೆ ಕಳುಹಿಸಿ ನನಗೆ ಕರುಣೆತೋರಿಸು, ಎಂದು ದ್ರೌಪದಿ ಕೈಮುಗಿದಳು.
ಕಲಹಕಾದೊಡೆ ನಾವು ರಮಿಸುವ
ರುಳಿದವರು ಬಳಿಕೇನು ಗಾದೆಯ
ಬಳಕೆ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು |
ಅಳುಕಿ ನಡೆವವರಲ್ಲ ನಿನ್ನಯ
ಹಳಿವು ಹರಿಬವ ಹೇಳಿ ಚಿತ್ತವ
ತಿಳುಹಿಕೊಂಬದು ನಾವು ಭೀತರು ಧರ್ಮಜನ ಹೊರೆಗೆ || ೪೫ ||
ಪದವಿಭಾಗ-ಅರ್ಥ: ಕಲಹಕೆ+ ಆದೊಡೆ ನಾವು ರಮಿಸುವರು+ ಉಳಿದವರು ಬಳಿಕ+ ಏನು= ಹೋರಾಡುವುದು ಅಗತ್ಯವಿದ್ದಾಗ ನಾವು ಹೊಗಬೇಕು; ಪತ್ನಿಯೊಡನೆ ಸುಖಪಡುವವರು ಮಾತ್ರಾ ಉಳಿದವರು; ಬಳಿಕ ಏನು ನಾವು ದೂರ;// ಗಾದೆಯ ಬಳಕೆ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು= ಗಾದೆಯ ಬಳಕೆಯೂ ಅದೇ ರೀತಿಯಿದೆ; 'ಕೆಲವರು ಗಳಿಸಿದರೆ ಕೆಲವರು ಉಂಟ ಮಾಡಿ ಜಾರಿ ಹೋಗುವರು.'// ಅಳುಕಿ ನಡೆವವರಲ್ಲ ನಿನ್ನಯ ಹಳಿವು ಹರಿಬವ ಹೇಳಿ ಚಿತ್ತವ ತಿಳುಹಿಕೊಂಬದು ನಾವು= ಇದು ತಾನು ಕೀಚಕನಿಗೆ ಹೆದರಿಕೊಂಡು ಮಾಡುತ್ತಿರುವ ನೆಡವಳಿಯಲ್ಲ;// ಭೀತರು ಧರ್ಮಜನ ಹೊರೆಗೆ= ಆದರೆ ನಾವು ಧರ್ಮಜನ ಹೊರೆ- ವಿಚಾರವಾಗಿ ಹೆದರುತ್ತೇವೆ ಎಂದ ಭೀಮ.
ಅರ್ಥ: ಹೋರಾಡುವುದು ಅಗತ್ಯವಿದ್ದಾಗ ನಾವು ಬೇಕು; ಪತ್ನಿಯೊಡನೆ ಸುಖಪಡುವವರು ಮಾತ್ರಾ ಉಳಿದವರು; ಬಳಿಕ ಏನು ನಾವು ದೂರ;/ಗಾದೆಯ ಬಳಕೆಯೂ ಅದೇ ರೀತಿಯಿದೆ; 'ಕೆಲವರು ಗಳಿಸಿದರೆ ಕೆಲವರು ಊಟಮಾಡಿ ಜಾರಿ ಹೋಗುವರು.' ಇದು ತಾನು ಕೀಚಕನಿಗೆ ಹೆದರಿಕೊಂಡು ಮಾಡುತ್ತಿರುವ ನೆಡವಳಿಯಲ್ಲ; ಆದರೆ ನಾವು ಧರ್ಮಜನ ಹೊರೆ- ವಿಚಾರವಾಗಿ ಹೆದರುತ್ತೇವೆ ಎಂದ ಭೀಮ.
ಹೆಂಡತಿಯ ಹರಿಬದಲಿಯೊಬ್ಬನೆ
ಗಂಡುಗೂಸೆ ವೈರಿಯನು ಕಡಿ
ಖಂಡವನು ಮಾಡುವನು ಮೇಣ್ ತನ್ನೊಡಲನಿಕ್ಕುವನು |
ಗಂಡರೈವರು ಮೂರು ಲೋಕದ
ಗಂಡರೊಬ್ಬಳನಾಳಲಾರಿರಿ
ಗಂಡರೋ ನೀವ್ ಭಂಡರೋ ಹೇಳೆಂದಳಿಂದುಮುಖಿ || ೪೬ ||
ಪದವಿಭಾಗ-ಅರ್ಥ: ಹೆಂಡತಿಯ ಹರಿಬದಲಿಯು(ಹರಿಬ= ರಕ್ಷಣೆ)+ ಒಬ್ಬನೆ ಗಂಡುಗೂಸೆ, ವೈರಿಯನು ಕಡಿಖಂಡವನು ಮಾಡುವನು= ಲೋಕದಲ್ಲಿ ಹೆಂಡತಿಯ ರಕ್ಷಣೆಯನ್ನು ಒಬ್ಬನೇ ಗಂಡುಗೂಸು ಮಾಡುತ್ತಾನೆ, ವೈರಿಯನು ತುಂಡುತುಂಡಾಗಿ ಮಾಡುವನು. ಪತ್ನಿಯ ರಕ್ಷಣೆಗಾಗಿ ತನ್ನ ಜೀವವನ್ನೇ ಬಲಿಕೊಡುವನು. ಗಂಡರೈವರು ಮೂರು ಲೋಕದ ಗಂಡರೊಬ್ಬಳನಾಳಲಾರಿರಿ ಗಂಡರೋ ನೀವ್ ಭಂಡರೋ ಹೇಳೆಂದಳಿಂದುಮುಖಿ= ಆದರೆ ಇಲ್ಲಿಯೋ ಐವರು ಗಂಡರು, ಅವರೋ ಮಹಾ ಶೂರರು, ಹೆಸರಿಗೆ ಮೂರು ಲೋಕದ ಗಂಡರು, ಆದರೆ ಒಬ್ಬಳನ್ನು ರಕ್ಷಣೆ ಮಾಡಿ ಆಳಲಾರಿರಿ. ಹೀಗಿರುವಾಗ ನೀವು ಗಂಡರೋ ಅಥವಾ ಭಂಡರೋ ಹೇಳು, ಎಂದಳು ದ್ರೌಪದಿ.
ಅರ್ಥ: ಲೋಕದಲ್ಲಿ ಹೆಂಡತಿಯ ರಕ್ಷಣೆಯನ್ನು ಒಬ್ಬನೇ ಗಂಡುಗೂಸು ಮಾಡುತ್ತಾನೆ, ವೈರಿಯನು ತುಂಡುತುಂಡಾಗಿ ಮಾಡುವನು. ಪತ್ನಿಯ ರಕ್ಷಣೆಗಾಗಿ ತನ್ನ ಜೀವವನ್ನೇ ಬಲಿಕೊಡುವನು. ಆದರೆ ಇಲ್ಲಿಯೋ ಐವರು ಗಂಡರು, ಅವರೋ ಮಹಾ ಶೂರರು, ಹೆಸರಿಗೆ ಮೂರು ಲೋಕದ ಗಂಡರು, ಆದರೆ ಒಬ್ಬಳನ್ನು ರಕ್ಷಣೆ ಮಾಡಿ ಆಳಲಾರಿರಿ. ಹೀಗಿರುವಾಗ ನೀವು ಗಂಡರೋ ಅಥವಾ ಭಂಡರೋ ಹೇಳು, ಎಂದಳು ದ್ರೌಪದಿ.
ಅಂದು ಕೌರವ ನಾಯಿ ಸಭೆಯಲಿ
ತಂದು ತೋರಿದನುನ್ನತಿಯ ಬಳಿ
ಕಿಂದು ಕೀಚಕ ಕುನ್ನಿಯೊದೆದನು ರಾಜಸಭೆಯೊಳಗೆ
ಅಂದು ಮೇಣಿಂದಾದ ಭಂಗಕೆ
ಕುಂದದಾವುದು ನೀವು ಬಲ್ಲಿದ
ರೆಂದು ಹೊಕ್ಕರೆ ಹೆಣ್ಣ ಕೊಂದಿರಿಯೆಂದಳಿಂದುಮುಖಿ ೪೭
ಪದವಿಭಾಗ-ಅರ್ಥ: ಅಂದು ಕೌರವ ನಾಯಿ ಸಭೆಯಲಿ ತಂದು ತೋರಿದನು+ ಉನ್ನತಿಯ= ಅಂದು ಜೂಜಿನಲ್ಲಿ ಸೋತ ನಂತರ ಕೌರವ ನಾಯಿ ಸಭೆಯಲ್ಲಿ ತನ್ನನ್ನು ಎಳೆದು ತಂದು ತನ್ನ ಸೊಕ್ಕಿನಹಿರಿಮೆಯನ್ನ ತೋರಿಸಿದನು.// ಬಳಿಕ+ ಇಂದು ಕೀಚಕ ಕುನ್ನಿಯ+ ಒದೆದನು ರಾಜಸಭೆಯೊಳಗೆ= ಬಳಿಕ ಇಂದು ಕೀಚಕ ಕುನ್ನಿಯು ನನ್ನನ್ನ್ನುರಾಜಸಭೆಯೊಳಗೇ ಒದ್ದನು.// ಅಂದು ಮೇಣ+ ಇಂದು+ ಆದ ಭಂಗಕೆ(ಅವಮಾನಕ್ಕೆ) ಕುಂದು+ ಅದು+ ಆವುದು( ತಾನೇ ಕಡಿಮೆ) ನೀವು ಬಲ್ಲಿದರು+ ಎಂದು ಹೊಕ್ಕರೆ ಹೆಣ್ಣ ಕೊಂದಿರಿಯೆಂದಳು+ ಇಂದುಮುಖಿ= ಅಂದು ಮತ್ತೆ ಇಂದು ಆದ ಅವಮಾನಕ್ಕೆ, ಯಾವುದು ತಾನೇ ಕುಂದು- ಅದು ಯಾವುದು ತಾನೇ ಕಡಿಮೆ; ನೀವು ಬಲ್ಲಿದರು+ ಎಂದು ಹೊಕ್ಕರೆ ಹೆಣ್ಣ ಕೊಂದಿರಿಯೆಂದಳು+ ಇಂದುಮುಖಿ= 'ನೀವು ಬಲಾಡ್ಯರು ಎಂದು ಸ್ವಯಂವರದಲ್ಲಿ ಆರಿಸಿ ನಿಮ್ಮ ಮನೆಯನ್ನು ನಾನು ಹೊಕ್ಕರೆ, ನೀವು ಮನೆಗೆ ಬಂದ ಹೆಣ್ಣನ್ನು ಕೊಂದಿರಿ' ಎಂದಳು ದ್ರೌಪದಿ.
ಅರ್ಥ: ಅಂದು ಜೂಜಿನಲ್ಲಿ ಸೋತ ನಂತರ ಕೌರವ ನಾಯಿ ಸಭೆಯಲ್ಲಿ ತನ್ನನ್ನು ಎಳೆದು ತಂದು ತನ್ನ ಸೊಕ್ಕಿನ ಹಿರಿಮೆಯನ್ನ ತೋರಿಸಿದನು. ಬಳಿಕ ಇಂದು ಕೀಚಕ ಕುನ್ನಿಯು ನನ್ನನ್ನ್ನುರಾಜಸಭೆಯೊಳಗೇ ಒದ್ದನು. ಅಂದು ಮತ್ತೆ ಇಂದು ಆದ ಅವಮಾನಕ್ಕೆ, ಯಾವುದು ತಾನೇ ಕುಂದು- ಅದು ಯಾವುದು ತಾನೇ ಕಡಿಮೆ; 'ನೀವು ಬಲಾಡ್ಯರು ಎಂದು ಸ್ವಯಂವರದಲ್ಲಿ ಆರಿಸಿ ನಿಮ್ಮ ಮನೆಯನ್ನು ನಾನು ಹೊಕ್ಕರೆ, ನೀವು ಮನೆಗೆ ಬಂದ ಹೆಣ್ಣನ್ನು ಕೊಂದಿರಿ' ಎಂದಳು ದ್ರೌಪದಿ.
ದಾನವರು ಮಾನವರೊಳೆನ್ನಭಿ
ಮಾನವನು ಕೊಂಬವನ ಹೆಸರನ
ದೇನನೆಂಬೆನು ನೊಂದು ನುಡಿದೊಡೆ ಖಾತಿಯಿಲ್ಲೆಮಗೆ |
ಈ ನಪುಂಸಕರೊಡನೆ ಹುಟ್ಟಿದ
ನಾನು ಮೂಗುಳ್ಳವನೆ ಮಾನಿನಿ
ನೀನು ತೋರಿದ ಪರಿಯಲೆಂಬುದು ಭೀತಿ ಬೇಡೆಂದ || ೪೮ ||
ಪದವಿಭಾಗ-ಅರ್ಥ: ದಾನವರು ಮಾನವರೊಳು+ ಎನ್ನ+ ಅಭಿಮಾನವನು ಕೊಂಬವನ(ಚುಚ್ಚುವವನ- ತೆಗೆಳುವವನ) ಹೆಸರನು+ ಅದು+ ಏನನು+ ಎಂಬೆನು= ದಾನವರಾಗಲಿ ಮಾನವರಾಗಲಿ ನನ್ನ ಅಭಿಮಾನವನ್ನು ಚುಚ್ಚುವವನ - ತೆಗಳುವವನ ಹೆಸರು ಅದು ಏನುಮಾಡವೆನೆಂದು ಹೇಳಲಿ - (ಅದು ಇಲ್ಲದಂತೆ ಮಾಡಟುವೆನು).//ನೊಂದು ನುಡಿದೊಡೆ (ತೆಗಳಿದರೆ) ಖಾತಿಯಿಲ್ಲ+ ಎಮಗೆ(ನಮಗೆ ಸಿಟ್ಟಿಲ್ಲ); ಈ ನಪುಂಸಕರೊಡನೆ ಹುಟ್ಟಿದ ನಾನು ಮೂಗುಳ್ಳವನೆ- ಮಾನ ಉಳ್ಳವನೇ -ಇಲ್ಲ. ಮಾನಿನಿ ನೀನು ತೋರಿದ ಪರಿಯಲಿ(ರೀತಿಯಲ್ಲಿ ತೆಗಳು)+ ಎಂಬುದು(ಹೇಳಬಹುದು - ) ಭೀತಿ ಬೇಡ+ ಎಂದ= ನೀನು ನೊಂದು ತೆಗಳಿದರೆ ನಮಗೆ ಸಿಟ್ಟಿಲ. ಈ ನಪುಂಸಕರೊಡನೆ ಹುಟ್ಟಿದ ನಾನು ಮಾನ ಉಳ್ಳವನೇ -ಇಲ್ಲ. ಮಾನಿನಿ ನೀನು ತೋರಿದ ರೀತಿಯಲ್ಲಿ ತೆಗಳಬಹುದು, ಹೆದರಬೇಡ, ಸಹಿಸಿಕೊಳ್ಳುವೆ, ಎಂದ
ಅರ್ಥ: ದಾನವರಾಗಲಿ ಮಾನವರಾಗಲಿ ನನ್ನ ಅಭಿಮಾನವನ್ನು ಚುಚ್ಚುವವನ - ತೆಗಳುವವನ ಹೆಸರು- ಅದು ಏನು ಮಾಡವೆನೆಂದು ಹೇಳಲಿ - ಅದು ಇಲ್ಲದಂತೆ ಮಾಡುವೆನು. ನೀನು ನೊಂದು ತೆಗಳಿದರೆ ನಮಗೆ ಸಿಟ್ಟಿಲ್ಲ. ಈ ನಪುಂಸಕರೊಡನೆ ಹುಟ್ಟಿದ ನಾನು ಮಾನ ಉಳ್ಳವನೇ -ಅಲ್ಲ. ಮಾನಿನಿ ನೀನು ತೋರಿದ ರೀತಿಯಲ್ಲಿ ತೆಗಳಬಹುದು, ಹೆದರಬೇಡ, ಸಹಿಸಿಕೊಳ್ಳುವೆ, ಎಂದ.
ಅಂದು ದುಶ್ಶಾಸನನ ಕರುಳನು
ತಿಂದಡಲ್ಲದೆ ತಣಿವು ದೊರಕೊಳ
ದೆಂದು ಹಾಯ್ದೊಡೆ ಹಲುಗಿರಿದು ಮಾಣಿಸಿದನಾ ವ್ಯಥೆಯ |
ಇಂದು ಕೀಚಕ ನಾಯನೆರಗುವೆ
ನೆಂದು ಮರನನು ನೋಡಿದರೆ ಬೇ
ಡೆಂದ ಹದನನು ಕಂಡೆ ನೀನೆನಗುಂಟೆಯಪರಾಧ || ೪೯ ||
ಪದವಿಭಾಗ-ಅರ್ಥ: ಅಂದು ದುಶ್ಶಾಸನನ ಕರುಳನು ತಿಂದಡೆ+ ಅಲ್ಲದೆ ತಣಿವು-ತೃಪ್ತಿ ದೊರಕೊಳದು (ಸಿಗದು)+ ಎಂದು ಹಾಯ್ದೊಡೆ (ನುಗ್ಗಿದರೆ) ಹಲುಗಿರಿದು ಮಾಣಿಸಿದನು(ಮಾಣು-ಬೇಡ- ಬೇಡವೆಂದನು)+= ಅಂದು ಜೂಜಿನಲ್ಲಿ ಸೋತು ದುಶ್ಶಾಸನನ ಕರುಳನ್ನು ಬಗೆದು ತಿನ್ನದೆ ಇದ್ದರೆ ತೃಪ್ತಿ ಸಿಗದು ಎಂದು ಎದ್ದರೆ/ನುಗ್ಗಿದರೆ ಹುಸಿನಗು ನಕ್ಕು ಬೇಡವೆಂದು ತಡೆದನು+// ಆ ದುಃಖವನ್ನು ಇಂದು ಕೀಚಕ ನಾಯನು+ ಎರಗುವೆನು+ ಎಂದು ಮರನನು ನೋಡಿದರೆ ಬೇಡೆಂದ ಹದನನು ಕಂಡೆ ನೀನು+ ಎನಗೆ+ ಉಂಟೆ ಅಪರಾಧ= ಆ ವ್ಯಥೆಯನ್ನು ಕಳೆಯಲು, ಇಂದು ಕೀಚಕ ನಾಯಿಯನ್ನು ಎರಗಿ- ಆಕ್ರಮಿಸಿ ಬಡಿಯುವೆನು ಎಂದು ಮರವನ್ನು ಕೀಳಲು ನೋಡಿದರೆ ಧರ್ಮಜನು ಬೇಡ, ಎಂದ ವಿಚಾರವನ್ನು ನೀನೇ ಕಂಡೆ ನೀನು; ನನಗೆ, ನಿನಗೆ ಸಹಾಯಮಾಡದ ಅಪರಾಧ ಇದೆಯೇ ಹೇಳು, ಎಂದ ಭೀಮ.
ಅರ್ಥ: ಅಂದು ಜೂಜಿನಲ್ಲಿ ಸೋತು ದುಶ್ಶಾಸನನ ಕರುಳನ್ನು ಬಗೆದು ತಿನ್ನದೆ ಇದ್ದರೆ ತೃಪ್ತಿ ಸಿಗದು ಎಂದು ಎದ್ದರೆ ಹುಸಿನಗು ನಕ್ಕು ಬೇಡವೆಂದು ತಡೆದನು. ಆ ವ್ಯಥೆಯನ್ನು ಕಳೆಯಲು, ಇಂದು ಕೀಚಕ ನಾಯಿಯನ್ನು ಎರಗಿ- ಆಕ್ರಮಿಸಿ ಬಡಿಯುವೆನು ಎಂದು ಮರವನ್ನು ಕೀಳಲು ನೋಡಿದರೆ ಧರ್ಮಜನು ಬೇಡ, ಎಂದ ವಿಚಾರವನ್ನು ನೀನೇ ಕಂಡೆ; ನಿನಗೆ ಸಹಾಯಮಾಡದ ಅಪರಾಧ ನನಗೆ ಇದೆಯೇ ಹೇಳು ಎಂದ ಭೀಮ.
ಹೆಣ್ಣ ಹರಿಬಕ್ಕೋಸುಗವೆ ತ
ಮ್ಮಣ್ಣನಾಜ್ಞೆಯ ಮೀರಿ ಕುಂತಿಯ
ಚಿಣ್ಣ ಬದುಕಿನೆಂದು ನುಡಿವರು ಕುಜನರಾದವರು |
ಅಣ್ಣನವರಿಗೆ ದೂರುವುದು ನಾ
ವುಣ್ಣದುರಿಯಿವು ರಾಯನಾಜ್ಞೆಯ
ಕಣ್ಣಿನಲಿ ಬಿಗಿವಡೆದು ಕೆಡೆದೆವು ಕಾಂತೆ ಕೇಳೆಂದ || ೫೦ ||
ಪದವಿಭಾಗ-ಅರ್ಥ: ಹೆಣ್ಣ ಹರಿಬಕ್ಕೋಸುಗವೆ ತಮ್ಮಣ್ಣನ+ ಆಜ್ಞೆಯ ಮೀರಿ ಕುಂತಿಯಚಿಣ್ಣ ಬದುಕಿನೆಂದು ನುಡಿವರು ಕುಜನರಾದವರು= ಒಂದು ಹೆಣ್ಣಿನ ರಕ್ಷಣೆಗಾಗಿ ತನ್ನ ಅಣ್ಣನ ಆಜ್ಞೆಯನ್ನು ಮೀರಿ ಕುಂತಿಯಚಿಣ್ಣ - ಮಗ ಭೀಮ ಬದುಕಿದ, ಎಂದು ಕೇಡಿಗ ಜನರು ಹೇಳುವರು.// ಅಣ್ಣನವರಿಗೆ ದೂರುವುದು ನಾ ವುಣ್ಣದ+ ಉರಿಯಿವು ರಾಯನ+ ಆಜ್ಞೆಯ ಕಣ್ಣಿನಲಿ ಬಿಗಿವಡೆದು(ಕಟ್ಟಿನಲ್ಲಿ ) ಕೆಡೆದೆವು(ಬಿದ್ದಿರುವೆವು- ಬಿದ್ದಿದ್ದೇವೆ) ಕಾಂತೆ ಕೇಳೆಂದ= ಅಣ್ಣನವರನ್ನು ತೆಗಳುವುದು - ದೂರುವುದು ನಾನು ಅನುಭಿಸುತ್ತಿರುವ ವುಣ್ಣದ ಉರಿ, ಇವು ಪಾಪದ ಕೆಲಸದ ನೋವು. ರಾಜನ ಕಣ್ಣಸನ್ನೆಯ ಆಜ್ಞೆಯ ಕಟ್ಟಿನಲ್ಲಿ ಬಿದ್ದಿರುವೆವು- ಬಿದ್ದಿದ್ದೇವೆ ಕಾಂತೆ ಕೇಳು ಎಂದ
ಅರ್ಥ: ಒಂದು ಹೆಣ್ಣಿನ ರಕ್ಷಣೆಗಾಗಿ ತನ್ನ ಅಣ್ಣನ ಆಜ್ಞೆಯನ್ನು ಮೀರಿ ಕುಂತಿಯಚಿಣ್ಣ - ಮಗ ಭೀಮ ಬದುಕಿದ, ಎಂದು ಕೇಡಿಗ ಜನರು ಹೇಳುವರು. ಅಣ್ಣನವರನ್ನು ತೆಗಳುವುದು - ದೂರುವುದು ನಾನು ಅನುಭಿಸುತ್ತಿರುವ ವುಣ್ಣದ ಉರಿ, ಇವು ಪಾಪದ ಕೆಲಸದ ನೋವು. ರಾಜನ ಕಣ್ಣಸನ್ನೆಯ ಆಜ್ಞೆಯ ಕಟ್ಟಿನಲ್ಲಿ ನಾವು ಬಿದ್ದಿರುವೆವು, ಕಾಂತೆ ಕೇಳು ಎಂದ.
ಹೊದ್ದುವುದು ಫಲುಗುಣನ ಪಾದಕೆ
ಬಿದ್ದು ಯಮನಂದನನ ಮನವನು
ತಿದ್ದುವದು ಸಹದೇವ ನಕುಲರ ಕೈಯಲೆನಿಸುವದು |
ಗೆದ್ದು ಕೊಡುವರು ನಿನ್ನ ಪಾಲಿಸ
ದಿದ್ದರಾದೊಡೆ ದೋಷವವರನು
ಹೊದ್ದುವುದು ನೀನೆನ್ನ ಬರಿದೇ ಕಾಡಬೇಡೆಂದ || ೫೧ ||
ಪದವಿಭಾಗ-ಅರ್ಥ: ಹೊದ್ದುವುದು ಫಲುಗುಣನ= ಈಗ ನೀನು ಮಾಡಬೇಕಾದ ಕೆಲಸ, ಅರ್ಜುನನ ಬಳಿಗೆ ನೀನು ಹೋಗುವುದು;// ಪಾದಕೆ ಬಿದ್ದು ಯಮನಂದನನ ಮನವನು ತಿದ್ದುವದು= ಧರ್ಮಜನ ಪಾದಕ್ಕೆಬಿದ್ದು ಅವನ ಮನಸ್ಸನನ್ನು ತಿದ್ದಿ ಕೀಚಕನನ್ನು ಶಿಕ್ಷಿಸವುದು,// ಸಹದೇವ ನಕುಲರ ಕೈಯಲಿ+ಎನಿಸುವದು ಗೆದ್ದು ಕೊಡುವರು= ಸಹದೇವ ನಕುಲರ ಕೈಯಲಿ ಧರ್ಮಜ, ಅರ್ಜುನರಿಗೆ ಕೀಚಕನನ್ನು ಕೊಲ್ಲಲು ಬುದ್ಧಿಹೇಳಿಸುವುದು; ನಿನ್ನ ಪಾಲಿಸದಿದ್ದರಾದೊಡೆ ದೋಷವು+ ಅವರನು ಹೊದ್ದುವುದು= ಆಗಲೂ ನಿನ್ನನ್ನು ಅವರು ಕಾಪಾಡದಿದ್ದರೆ ಆ ದೋಷ ಅವರಿಗೆ ಬರುವುದು.// ನೀನು+ ಎನ್ನ ಬರಿದೇ ಕಾಡಬೇಡೆಂದ= ನೀನು ನನ್ನನ್ನು ಬರಿದೇ- ಸುಮ್ಮನೇ- ಕಾಡಬೇಡ- ಕಾಟಕೊಡಬೇಡ, ಅದರಿಂದ ಪ್ರಯೋಜನವಿಲ್ಲ, ಎಂದ
ಅರ್ಥ: ಈಗ ನೀನು ಮಾಡಬೇಕಾದ ಕೆಲಸ, ಅರ್ಜುನನ ಬಳಿಗೆ ನೀನು ಹೋಗುವುದು; ಧರ್ಮಜನ ಪಾದಕ್ಕೆಬಿದ್ದು ಅವನ ಮನಸ್ಸನನ್ನು ತಿದ್ದಿ ಕೀಚಕನನ್ನು ಶಿಕ್ಷಿಸಲು ಹೇಳುವುದು, ಸಹದೇವ ನಕುಲರ ಕೈಯಲಿ ಧರ್ಮಜ, ಅರ್ಜುನರಿಗೆ ಕೀಚಕನನ್ನು ಕೊಲ್ಲಲು ಬುದ್ಧಿಹೇಳಿಸುವುದು; ಆಗಲೂ ನಿನ್ನನ್ನು ಅವರು ಕಾಪಾಡದಿದ್ದರೆ ಆ ದೋಷ ಅವರಿಗೆ ಬರುವುದು. ನೀನು ನನ್ನನ್ನು ಸುಮ್ಮನೇ ವ್ಯರ್ಥವಾಗಿ ಕಾಟಕೊಡಬೇಡ, ಅದರಿಂದ ಪ್ರಯೋಜನವಿಲ್ಲ, ಎಂದ ಭೀಮ.
ಗಂಡ ಗರ್ವವ ನುಡಿಯೆವೆಮ್ಮಯ
ದಂಡಿ ತಾನದು ಬೇರೆ ನಾವೀ
ಭಂಡತನದಲಿ ಬದುಕಲರಿಯೆವು ಧರ್ಮಗಿರ್ಮವನು
ಕೊಂಡು ಕೊನರುವರಲ್ಲ ರಾಯನ
ನಂಡಲೆದು ಕೀಚಕನ ತಲೆಯನು
ಚೆಂಡನಾಡಿಸು ರಮಣಿ ಮೇಣರ್ಜುನಗೆ ಹೇಳೆಂದ ೫೨
ಪದವಿಭಾಗ-ಅರ್ಥ: ಗಂಡ (ಪೌರುಷದ) ಗರ್ವವ ನುಡಿಯೆವು+ ಎಮ್ಮಯ ದಂಡಿ ತಾನದು ಬೇರೆ= ಸುಮ್ಮನೆ ಗರ್ವದಿಂದ ಪೌರುಷದ ಮಾತನ್ನು ಹೇಳುವುದಿಲ್ಲ.// ನಾವು+ ಈ ಭಂಡತನದಲಿ ಬದುಕಲು+ ಅರಿಯೆವು ಧರ್ಮಗಿರ್ಮವನು ಕೊಂಡು(ಅನುಸರಿಸಿ) ಕೊನರುವರಲ್ಲ (ಚಿಗುರು, ಬೆಳೆಯುವವರು- ಏಳಿಗೆಹೊಂದು, ಅದ್ದಾರವಾಗುವವರು)= ನಾವು ನಿನಗಾದ ಅನ್ಯಾಯವನ್ನು ನೋಡಿಯೂ ಅವಮಾನವನ್ನು ಸಹಿಸಿಕೊಂಡು ಈ ಭಂಡತನದಲ್ಲಿ ಬದುಕಲು ತಿಳಿಯೆವು, ಧರ್ಮಗಿರ್ಮವನು ಧರ್ಮಶಾಸ್ತ್ರವನ್ನು ಅನುಸರಿಸಿಕೊಂಡು ಅದ್ದಾರವಾಗುವವರಲ್ಲ.// ರಾಯನನ+ ಅಂಡಲೆದು(ಕಾಡಿಬೇಡಿ) ಕೀಚಕನ ತಲೆಯನು ಚೆಂಡನಾಡಿಸು ರಮಣಿ ಮೇಣ್+ ಅರ್ಜುನಗೆ ಹೇಳೆಂದ= ಧರ್ಮರಾಯನನ್ನು ಕಾಡಿಬೇಡಿ ಕೀಚಕನ ತಲೆಯನ್ನು ಚೆಂಡಾಡಿಸು; ರಮಣಿ ಮೇಣ್+ ಅರ್ಜುನಗೆ ಹೇಳೆಂದ= ರಮಣಿ ವಿಶೇಷವಾಗಿ ಅರ್ಜುನನಿಗೆ ಹೇಳು, ಎಂದ ಭೀಮ.
ಅರ್ಥ: ಪ್ರಿಯೆ, ಸುಮ್ಮನೆ ಗರ್ವದಿಂದ ಪೌರುಷದ ಮಾತನ್ನು ಹೇಳುವುದಿಲ್ಲ. ನಾವು ನಿನಗಾದ ಅನ್ಯಾಯವನ್ನು ನೋಡಿಯೂ ಅವಮಾನವನ್ನು ಸಹಿಸಿಕೊಂಡು ಈ ಭಂಡತನದಲ್ಲಿ ಬದುಕಲು ತಿಳಿಯೆವು, ಧರ್ಮಗಿರ್ಮವನು ಧರ್ಮಶಾಸ್ತ್ರವನ್ನು ಅನುಸರಿಸಿಕೊಂಡು ಅದ್ದಾರವಾಗುವವರಲ್ಲ. ಧರ್ಮರಾಯನನ್ನು ಕಾಡಿಬೇಡಿ ಕೀಚಕನ ತಲೆಯನ್ನು ಚೆಂಡಾಡಿಸು; ರಮಣಿ ವಿಶೇಷವಾಗಿ ಅರ್ಜುನನಿಗೆ ಹೇಳು, ಎಂದ ಭೀಮ.
ತರುಣಿ ದಿಟ ಕೇಳಿಂದು ಮೊದಲಾ
ಗರಸಿ ನೀ ನಾಲ್ವರಿಗೆ ನಾವೆಡೆ
ಮುರಿದವರು ಬಿಟ್ಟವರು ನಿನ್ನಯ ಸೂಳು ಪಾಳೆಯವ |
ಅರಸನನು ಪ್ರಾರ್ಥಿಸುವುದರ್ಜುನ
ವರ ನಕುಲ ಸಹದೇವರಿಗೆ ವಿ
ಸ್ತರಿಸಿ ಹೇಳ್ವುದು ನಮ್ಮೊಡನೆ ಫಲಸಿದ್ಧಿಯಿಲ್ಲೆಂದ || ೫೩ ||
ಪದವಿಭಾಗ-ಅರ್ಥ: ತರುಣಿ, ದಿಟ ಕೇಳು+ ಇಂದು ಮೊದಲಾಗಿ+ ಅರಸಿ ನೀ ನಾಲ್ವರಿಗೆ, ನಾವು+ ಎಡೆಮುರಿದವರು ಬಿಟ್ಟವರು ನಿನ್ನಯ ಸೂಳು ಪಾಳೆಯವ= ತರುಣಿ, ಇರುವ ಸತ್ಯವನ್ನು ಹೇಳುತ್ತೇನೆ ಕೇಳು; ಇಂದು ಮೊದಲಾಗಿ. ಇಂದಿನಿಂದ- ಅರಸಿ ನೀನು ನನ್ನನ್ನು ಬಿಟ್ಟು ಉಳಿದ ನಾಲ್ಕುಜನ ಪಾಂಡುಪುತ್ರರಿಗೆ ಮಾತ್ರಾ ಪತ್ನಿ; ನಾವ ಎಡೆಮುರಿದವರು- ನಮ್ಮ ಪತಿಸ್ಥಾನವನ್ನು ಬಿಟ್ಟವರು- ಮತ್ತು ನಿನ್ನ ಸೂಳು ಏನುಂಟು- ರತಿ ಸುಖದ ಸರದಿ ಪಾಳೆಯವನ್ನು ಆ ಸರದಿಸ್ಥಾನವನ್ನು ಬಿಟ್ಟಿದ್ದೇನೆ. ಒಬ್ಬೊಬ್ಬರೊಡನೆ ಒಂದೊಂದು ವರ್ಷದಂತೆ ಐದುಜನ ಪತಿಯರೊಡನೆ ಸರದಿಯ 'ನಿನ್ನ ಸೂಳು' ಏನಿತ್ತೋ ಅದನ್ನು ನಾವು ಬಿಟ್ಟವರು.// ಅರಸನನು ಪ್ರಾರ್ಥಿಸುವುದು+ ಅರ್ಜುನ ವರ ನಕುಲ ಸಹದೇವರಿಗೆ ವಿಸ್ತರಿಸಿ ಹೇಳ್ವುದು ನಮ್ಮೊಡನೆ ಫಲಸಿದ್ಧಿಯಿಲ್ಲ+ ಎಂದ= ಅರಸ ಧರ್ಮಜನನ್ನು ಪ್ರಾರ್ಥಿಸು; ಅರ್ಜುನ ಮತ್ತು ಶ್ರೇಷ್ಠರಾದ ನಕುಲ ಸಹದೇವರಿಗೆ ವಿವರವಾಗಿ ನಿನ್ನ ಕಷ್ಟ ಹೇಳು; ನಮ್ಮೊಡನೆ ಫಲಸಿದ್ಧಿಯಿಲ್ಲ- ಇನ್ನ ಮಮಗೆ ಹೇಳಿ ಏನೂ ಫಲಸಿಗುವುದಿಲ್ಲ, ಎಂದ.
ಅರ್ಥ:ತರುಣಿ, ಇರುವ ಸತ್ಯವನ್ನು ಹೇಳುತ್ತೇನೆ ಕೇಳು; ಇಂದು ಮೊದಲಾಗಿ. ಇಂದಿನಿಂದ- ಅರಸಿ ನೀನು ನನ್ನನ್ನು ಬಿಟ್ಟು ಉಳಿದ ನಾಲ್ಕುಜನ ಪಾಂಡುಪುತ್ರರಿಗೆ ಮಾತ್ರಾ ಪತ್ನಿ; ನಾವ ಎಡೆಮುರಿದವರು- ನಮ್ಮ ಪತಿಸ್ಥಾನವನ್ನು ಬಿಟ್ಟವರು- ಮತ್ತು ನಿನ್ನ ಸೂಳು ಏನುಂಟು- ರತಿ ಸುಖದ ಸರದಿ ಪಾಳೆಯವನ್ನು ಆ ಸರದಿಸ್ಥಾನವನ್ನು ಬಿಟ್ಟಿದ್ದೇನೆ. ಒಬ್ಬೊಬ್ಬರೊಡನೆ ಒಂದೊಂದು ವರ್ಷದಂತೆ ಐದುಜನ ಪತಿಯರೊಡನೆ ಸರದಿಯಾಗಿ ಇರುವ 'ನಿನ್ನ ಸೂಳು' (ಸರದಿ ನಿಯಮ) ಏನಿತ್ತೋ ಅದನ್ನು ನಾವು ಬಿಟ್ಟವರು.(ಇನ್ನಮುಂದೆ ನಾನು ನಿನ್ನ ಗಂಡ ಅಲ್ಲ)// ಅರಸ ಧರ್ಮಜನನ್ನು ಪ್ರಾರ್ಥಿಸು; ಅರ್ಜುನ ಮತ್ತು ಶ್ರೇಷ್ಠರಾದ ನಕುಲ ಸಹದೇವರಿಗೆ ವಿವರವಾಗಿ ನಿನ್ನ ಕಷ್ಟ ಹೇಳು; ನಮ್ಮೊಡನೆ ಫಲಸಿದ್ಧಿಯಿಲ್ಲ- ಇನ್ನ ಮಮಗೆ ಹೇಳಿ ಏನೂ ಫಲಸಿಗುವುದಿಲ್ಲ, ಎಂದ.

ದ್ರೌಪದಿಯ ವಿಲಾಪ[ಸಂಪಾದಿಸಿ]

ಕೇಳುತಿದ್ದಳು ಕೊರಳ ಸೆರೆ ಗೋ
ನಾಳಿಗೌಕಿತು ಬಿಕ್ಕಿ ಬಿಕ್ಕಿ ವಿ
ಲೋಲಲೋಚನೆಯಕಟ ನೆನೆದಳು ಬಾಷ್ಪವಾರಿಯಲಿ |
ಶೂಲ ಮರುಮೊನೆಗೊಂಡವೊಲು ಸುಳಿ
ವಾಳೆ ಝಳ ತಾಗಿದವೊಲುದರ
ಜ್ವಾಲೆ ನೆತ್ತಿಗೆ ನಿಲುಕೆ ಹಲುಬಿದಳಬಲೆ ಬಿಸುಸುಯ್ದು || ೫೪ ||
ಪದವಿಭಾಗ-ಅರ್ಥ: ಕೇಳುತಿದ್ದಳು ಕೊರಳ ಸೆರೆ ಗೋನಾಳಿಗೆ(ಗಂಟಲುಮಣಿ) + ಔಕಿತು(ಒತ್ತಿತು) ಬಿಕ್ಕಿ ಬಿಕ್ಕಿ ವಿಲೋಲಲೋಚನೆ+ ಯ+ ಅಕಟ ನೆನೆದಳು ಬಾಷ್ಪವಾರಿಯಲಿ(ಕಣ್ಣೀರಿನಿಂದ)= ದ್ರೌಪದಿ ಭೀಮ ಹೇಳುವುದನ್ನು ಕೇಳುತ್ತಿದ್ದಳು, ಕೇಳುತ್ತಿದ್ದಂತೆ ಅವಳ ಕೊರಳ ಸೆರೆ-ನಾಳಗಳು ದುಃಖದಿಂದ ಉಬ್ಬಿ ಗಂಟಲುಮಣಿಗೆ ಒತ್ತಿತು, ಸುಂದರ ಚಂಚಲಕಣ್ಣಿನ ಅವಳು ಬಿಕ್ಕಿ ಬಿಕ್ಕಿ, ಅಕಟಾ ಅತ್ತು ಕಣ್ಣೀರಿನಿಂದ ನೆನೆದಳು- ಒದ್ದೆಯಾದಳು. // ಶೂಲ ಮರುಮೊನೆಗೊಂಡವೊಲು= ಈಟಿಯ ತುದಿಯನ್ನು ದೇಹ ಕೊಂಡಂತೆ, ಅವಳ ದೇಹಕ್ಕೆ ಶೂಲ ಚುಚ್ಚಿದಂತೆ; ಸುಳಿವಾಳೆ(ಎಳೆಯಬಾಳೆ) ಝಳ(ಬೆಂಕಿಯ ಶಾಖ) ತಾಗಿದವೊಲು- (ಬಾಡಿಹೋದಳು)+ ಉದರ ಜ್ವಾಲೆ(ಹೊಟ್ಟೆಯಲ್ಲಿ ಉರಿ) ನೆತ್ತಿಗೆ ನಿಲುಕೆ ಹಲುಬಿದಳು+ ಅಬಲೆ ಬಿಸುಸುಯ್ದು= ಈಟಿಯ ತುದಿಯನ್ನು ದೇಹ ಕೊಂಡಂತೆ, ಅವಳ ದೇಹಕ್ಕೆ ಶೂಲ ಚುಚ್ಚಿದಂತೆ; ಎಳೆಯ ಬಾಳೆಗೆ ಬೆಂಕಿಯ ಶಾಖ ತಾಗಿದಂತೆ ಅವಳ ಹೊಟ್ಟೆಯಲ್ಲಿ ಉರಿ ನೆತ್ತಿಗೆ ಏರಿ ತಲುಪಲು ಅಬಲೆಯಾದ ದ್ರೌಪದಿ ನಿಟ್ಟುಸಿರುಬಿಡುತ್ತಾ ಹಲುಬಿದಳು- ಹೋಳಿಟ್ಟಳು.
ಅರ್ಥ: ದ್ರೌಪದಿ ಭೀಮ ಹೇಳುವುದನ್ನು ಕೇಳುತ್ತಿದ್ದಳು, ಕೇಳುತ್ತಿದ್ದಂತೆ ಅವಳ ಕೊರಳ ಸೆರೆ-ನಾಳಗಳು ದುಃಖದಿಂದ ಉಬ್ಬಿ ಗಂಟಲುಮಣಿಗೆ ಒತ್ತಿತು, ಸುಂದರ ಚಂಚಲಕಣ್ಣಿನ ಅವಳು ಬಿಕ್ಕಿ ಬಿಕ್ಕಿ, ಅಕಟಾ ಅತ್ತು ಕಣ್ಣೀರಿನಿಂದ ನೆನೆದು ಒದ್ದೆಯಾದಳು. ಅವಳ ದೇಹಕ್ಕೆ ಶೂಲ ಚುಚ್ಚಿದಂತೆ, ಎಳೆಯ ಬಾಳೆಗೆ ಬೆಂಕಿಯ ಶಾಖ ತಾಗಿದಂತೆ ಬಾಡಿಹೋದಳು; ಅವಳ ಹೊಟ್ಟೆಯಲ್ಲಿ ಉರಿ ನೆತ್ತಿಗೆ ಏರಿ ತಲುಪಲು ಅಬಲೆಯಾದ ದ್ರೌಪದಿ ನಿಟ್ಟುಸಿರುಬಿಡುತ್ತಾ ಹಲುಬಿದಳು- ಹೋಳಿಟ್ಟಳು.
ಕೆಂದಳದ ಸೆಕೆಯಲಿ ಕಪೋಲವು
ಕಂದಿ ಕಸರಿಕೆಯಾಯ್ತು ನಿಡುಸುಯಿ
ಲಿಂದ ಸೀಕರಿಯೋದವೇಕಾವಳಿಯ ಮುತ್ತುಗಳು
ಸಂದಣಿಸಿದೆವೆಗಳಲಿ ಬಾಷ್ಪದ
ಬಿಂದು ತಳಿತುದು ನಟ್ಟ ದೃಷ್ಟಿಯೊ
ಳಿಂದುಮುಖಿ ಸೈಗರೆದು ತೂಗಿದಳಡಿಗಡಿಗೆ ಶಿರವ ೫೫
ಪದವಿಭಾಗ-ಅರ್ಥ: ಕೆಂದಳದ(ಕೆಂಪು ಚಿಗುರೆಲೆಯಂತೆ ಕೆಂಪಾದ) ಸೆಕೆಯಲಿ ಕಪೋಲವು ಕಂದಿ ಕಸರಿಕೆಯಾಯ್ತು(ಸೊರಗುವಿಕೆಯಾಯಿತು)= ಕೆಂಪು ಚಿಗುರೆಲೆಯಂತೆ ಕೆಂಪಾದ ಸೆಕೆಯಲಿ ಕಪೋಲವು ಕಂದಿ ಸೊರಗಿತು. //ನಿಡುಸುಯಿಲಿಂದ(ಉದ್ದ ನಿಟ್ಟುಸಿರಿನಿಂದ) ಸೀಕರಿಯೋದವು+ ಏಕಾವಳಿಯ(ಸರದ) ಮುತ್ತುಗಳು(ಸುಟ್ಟು ಸೀಕರಿಸಿ ಹೋದವು)= ಅವಳ ಉದ್ದ ನಿಟ್ಟುಸಿರಿನಿಂದ ಏಕಾವಳಿ ಸರದ ಮುತ್ತುಗಳು ಸುಟ್ಟು ಸೀಕರಿಸಿ ಹೋದವು.// ಸಂದಣಿಸಿದ+ ಎವೆಗಳಲಿ ಬಾಷ್ಪದಬಿಂದು ತಳಿತುದು= ಉಬ್ಬಿ ಕೂಡಿದ ಎದೆಗಳಲ್ಲಿ ಕಣ್ಣಿರಿನ ಹನಿಗಳು ತಳಿದು ಒದ್ದೆಯಾಯಿತು.// ನಟ್ಟ ದೃಷ್ಟಿಯೊಳು+ ಇಂದುಮುಖಿ ಸೈಗರೆದು ತೂಗಿದಳು+ ಅಡಿಗಡಿಗೆ(ಮತ್ತೆ ಮತ್ತೆ) ಶಿರವ= ನೇರ ದೃಷ್ಟಿಯಿಂದ ದಿಟ್ಟಿಸುತ್ತಾ ದ್ರೌಪದಿ ದೀರ್ಘವಾಗಿ ಉಸ್ಸಪ್ಪಾ ಎಂದು ಸೈಗರೆದು, ಸಂಕಟದಿಂದ ಹಿಂದಕ್ಕೂ ಮುಂದಕ್ಕೂ ಕುಳಿತಂತೆ ಮತ್ತೆ ಮತ್ತೆ ತಲೆಯನ್ನು ತೂಗಿದಳು.
ಅರ್ಥ: ಕೆಂಪು ಚಿಗುರೆಲೆಯಂತೆ ಕೆಂಪಾದ ಸೆಕೆಯಲಿ ಕಪೋಲವು ಕಂದಿ ಸೊರಗಿತು. ಅವಳ ಉದ್ದ ನಿಟ್ಟುಸಿರಿನಿಂದ ಏಕಾವಳಿ ಸರದ ಮುತ್ತುಗಳು ಸುಟ್ಟು ಸೀಕರಿಸಿ ಹೋದವು. ಉಬ್ಬಿ ಕೂಡಿದ ಎದೆಗಳಲ್ಲಿ ಕಣ್ಣಿರಿನ ಹನಿಗಳು ತಳಿದು ಒದ್ದೆಯಾಯಿತು. ನೇರ ದೃಷ್ಟಿಯಿಂದ ದಿಟ್ಟಿಸುತ್ತಾ ದ್ರೌಪದಿ ದೀರ್ಘವಾಗಿ ಉಸ್ಸಪ್ಪಾ ಎಂದು ಸೈಗರೆದು, ಸಂಕಟದಿಂದ ಹಿಂದಕ್ಕೂ ಮುಂದಕ್ಕೂ ಕುಳಿತಂತೆ ಮತ್ತೆ ಮತ್ತೆ ತಲೆಯನ್ನು ತೂಗಿದಳು.
ಆವ ಹೆಂಗುಸನಳಲಿಸಿದೆನಿ
ನ್ನಾವ ಧರ್ಮವನಳಿದೆನೊ ತಾ
ನಾವ ಪಾಪದ ಫಲಕೆ ಪಿಡಿದೆನೊ ಸಂಚಕಾರವನು |
ಆವ ಹೆಂಗಸು ನವೆದಳೆನ್ನವೊ
ಲಾವಳಳಲಿದು ಮರುಗಿದಳು ಮ
ತ್ತಾವಳೆನ್ನಂದದಲಿ ಪಡೆದವಳುಂಟೆ ಲೋಕದಲಿ || ೫೬ ||
ಪದವಿಭಾಗ-ಅರ್ಥ: ಆವ ಹೆಂಗುಸನು+ ಅಳಲಿಸಿದೆನೊ+ ಇನ್ನಾವ ಧರ್ಮವನು+ ಅಳಿದೆನೊ(ಅಳಿ ನಾಶವಾಗು) ತಾನು+ ಆವ ಪಾಪದ ಫಲಕೆ ಪಿಡಿದೆನೊ ಸಂಚಕಾರವನು(ಮಾಡುವೆನೆಂದು ಭರವಸೆಕೊಟ್ಟು ಕಾಣಿಕೆ ಪಡೆಯುವುದು.)= (ಹಿಂದಿನ ಜನ್ಮದಲ್ಲಿ) ನಾನು ಯಾವ ಹೆಂಗುಸನ್ನು ಅಳುವಹಾಗೆ ಮಾಡಿದ್ದೇನೋ, ಇನ್ನಾವ ಧರ್ಮವನ್ನು ತಪ್ಪಿನಡೆದೆನೊ, ತಾನು ಯಾವ ಪಾಪದ ಫಲಕ್ಕಾಗಿ ಈ ಕಷ್ಟವನ್ನು ಅನುಭವಿಸಲು ಸಂಚಕಾರವನ್ನು ಹಿಡಿದೆನೊ! // ಆವ ಹೆಂಗಸು ನವೆದಳು+ ಎನ್ನವೊಲು+ ಆವಳು+ ಅಳಲಿದು ಮರುಗಿದಳು, ಮತ್ತಾವಳು+ ಎನ್ನಂದದಲಿ ಪಡೆದವಳುಂಟೆ ಲೋಕದಲಿ= ಹಿಂದೆ ಯಾವ ಹೆಂಗಸು ಈ ರೀತಿ ಕಷ್ಟ ಅನುಭವಿಸಿ ನವೆದಿದ್ದಾಳೆ! ನನ್ನಂತೆ ಯಾವಳು ಅತ್ತಳೊ! ಮರುಗಿ- ದುಃಖವನ್ನು ಅನುಭವಿಸಿದಳೊ! ಮತ್ತೆ ಯಾವಳಾದರೂ ನನ್ನ ರೀತಿಯಲ್ಲಿ ಸಂಕಟ- ಕಷ್ಟಗಳನ್ನು ಈ ಲೋಕದಲ್ಲಿ ಪಡೆದವಳು ಇದ್ದಾಳೆಯೇ- ಇಲ್ಲ, ಎಂದು ಗೋಳಿಟ್ಟಳು.
ಅರ್ಥ: ಹಿಂದಿನ ಜನ್ಮದಲ್ಲಿ ನಾನು ಯಾವ ಹೆಂಗುಸನ್ನು ಅಳುವಹಾಗೆ ಮಾಡಿದ್ದೇನೋ, ಇನ್ನಾವ ಧರ್ಮವನ್ನು ತಪ್ಪಿನಡೆದೆನೊ, ತಾನು ಯಾವ ಪಾಪದ ಫಲಕ್ಕಾಗಿ ಈ ಕಷ್ಟವನ್ನು ಅನುಭವಿಸಲು ಸಂಚಕಾರವನ್ನು ಹಿಡಿದೆನೊ! ಹಿಂದೆ ಯಾವ ಹೆಂಗಸು ಈ ರೀತಿ ಕಷ್ಟ ಅನುಭವಿಸಿ ನವೆದಿದ್ದಾಳೆ! ನನ್ನಂತೆ ಯಾವಳು ಅತ್ತಿದ್ದಾಳೆ! ದುಃಖವನ್ನು ಅನುಭವಿಸಿದ್ದಾಳೆ! ಮತ್ತೆ ಯಾವಳಾದರೂ ನನ್ನ ರೀತಿಯಲ್ಲಿ ಸಂಕಟ- ಕಷ್ಟಗಳನ್ನು ಪಡೆದವಳು ಈ ಲೋಕದಲ್ಲಿ ಇದ್ದಾಳೆಯೇ- ಇಲ್ಲ, ಎಂದು ಗೋಳಿಟ್ಟಳು.
ಇನ್ನು ಹುಟ್ಟದೆಯಿರಲಿ ನಾರಿಯ
ರೆನ್ನವೊಲು ಭಂಗಿತರು ಭುವನದೊ
ಳಿನ್ನು ಜನಿಸಲು ಬೇಡ ಗಂಡರು ಭೀಮಸನ್ನಿಭರು ||
ಎನ್ನವೊಲು ಪಾಂಡವರವೊಲು ಸಂ
ಪನ್ನ ದುಃಖಿಗಳಾರು ನವೆದರು
ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು || ೫೭ ||
ಪದವಿಭಾಗ-ಅರ್ಥ: ಇನ್ನು ಹುಟ್ಟದೆಯಿರಲಿ ನಾರಿಯರು+ ಎನ್ನವೊಲು ಭಂಗಿತರು ಭುವನದೊಳು+ ಇನ್ನು ಜನಿಸಲು ಬೇಡ= ದ್ರೌಪದಿ ಸಣ್ಣಗೆ ತನಗೆ ತಾನೇ ಹಲುಬುತ್ತಾಳೆ; 'ಇನ್ನು ಮುಂದೆ ಹುಟ್ಟದೆಯಿರಲಿ ನನ್ನಂತೆ ಕಷ್ಟ ಅನುಬವಿಸುವ ಹೆಂಗಸರು;// ಭಂಗಿತರು ಭುವನದೊಳು+ ಇನ್ನು ಜನಿಸಲು ಬೇಡ= ನನ್ನಂತೆ ಭಂಗಪಡುವಂತ ಹೆಣ್ಣುಗಳು ಈ ಭೂಮಿಯಮೇಲೆ ಇನ್ನು ಜನಿಸುವುದೇ ಬೇಡ.// ಗಂಡರು ಭೀಮಸನ್ನಿಭರು= ಅವರಿಗೆ ಭೀಮ ಮತ್ತು ಅವನ ಸಹೋದರರಂತೆ (ಇರುವ ಗಂಡರು ಸಿಗದೆ ಇರಲಿ).// ಎನ್ನವೊಲು ಪಾಂಡವರವೊಲು ಸಂಪನ್ನ(ಧನ ಸಂಪನ್ನ= ಧನವನ್ನು ಹೊಂದಿದವನು - ಪಡೆದವರು) ದುಃಖಿಗಳಾರು ನವೆದರು(ಸತತ ದುಃಖ ಕಷ್ಟಗಳನ್ನು ಅನುಭವಿಸಿದವರು) ಮುನ್ನಿನ+ ಅವರೊಳಗೆ(ಹಿಂದಿನ ಜನರಲ್ಲಿ)+ ಎಂದು= ನನ್ನಂತೆ ಹಾಗೂ ಪಾಂಡವರಂತೆ ಸಂಪನ್ನರಾದ ದುಃಖಿಗಳು ಯಾರು ಇದ್ದಾರೆ? ಹೀಗೆ ಸತತ ದುಃಖ ಕಷ್ಟಗಳನ್ನು ಅನುಭವಿಸಿದವರು ಹಿಂದಿನ ಜನರಲ್ಲಿ ಯಾರಿದ್ದಾರೆ? ಎಂದು ದ್ರೌಪದಿ ಹಿರಿದು= ಬಹಳ ಹಲುಬಿದಳು
ಅರ್ಥ: ದ್ರೌಪದಿ ಸಣ್ಣಗೆ ತನಗೆ ತಾನೇ ಹಲುಬುತ್ತಾಳೆ; 'ಇನ್ನು ಮುಂದೆ ಹುಟ್ಟದೆಯಿರಲಿ ನನ್ನಂತೆ ಕಷ್ಟ ಅನುಬವಿಸುವ ಹೆಂಗಸರು; ನನ್ನಂತೆ ಭಂಗಪಡುವಂತ ಹೆಣ್ಣುಗಳು ಈ ಭೂಮಿಯಮೇಲೆ ಇನ್ನು ಜನಿಸುವುದೇ ಬೇಡ. ಅವರಿಗೆ ಭೀಮ ಮತ್ತು ಅವನ ಸಹೋದರರಂತೆ ಇರುವ ಗಂಡರು ಸಿಗದೆ ಇರಲಿ. ನನ್ನಂತೆ ಹಾಗೂ ಪಾಂಡವರಂತೆ ದುಃಖಸಂಪನ್ನರಾದವರು; ಹೀಗೆ ಸತತ ದುಃಖ ಕಷ್ಟಗಳನ್ನು ಅನುಭವಿಸಿದವರು ಹಿಂದಿನ ಜನರಲ್ಲಿ ಯಾರಿದ್ದಾರೆ? ಎಂದು ದ್ರೌಪದಿ ಬಹಳವಾಗಿ ಹಲುಬಿದಳು.
ಆವ ಗರಳವ ಕುಡಿವೆನೋ ಮೇ
ಣಾವ ಬೆಟ್ಟವನಡರಿ ಬೀಳ್ವೆನೊ
ಯಾವ ಮಡುವನು ಹೊಗುವೆನೋ ಹಾಸರೆಯ ಗುಂಪಿನಲಿ |
ಆವ ಕುಂತವ ಹಾಯ್ವೆನೋ ಮೇ
ಣಾವ ಪಾವಕನೊಳಗೆ ಹೊಗುವೆನೊ
ಸಾವು ಸಮನಿಸದೆನಗೆನುತ ಮರುಗಿದಳು ನಳಿನಾಕ್ಷಿ || ೫೮ ||
ಪದವಿಭಾಗ-ಅರ್ಥ: ಆವ(ಯಾವ) ಗರಳವ(ವಿಷವನ್ನು) ಕುಡಿವೆನೋ, ಮೇಣ್+ ಆವ ಬೆಟ್ಟವನು+ ಅಡರಿ(ಹತ್ತಿ) ಬೀಳ್ವೆನೊ, ಯಾವ ಮಡುವನು(ನೀರಿನ ಹೊಂಡವನ್ನು) ಹೊಗುವೆನೋ, ಹಾಸರೆಯ(ಕಲ್ಲುಹಾಸು) ಗುಂಪಿನಲಿ ಆವ ಕುಂತವ(ಆಯಧ- ) ಹಾಯ್ವೆನೋ, ಮೇಣ್+ ಆವ ಪಾವಕನೊಳಗೆ(ಬೆಂಕಿಯೊಳಗೆ) ಹೊಗುವೆನೊ, ಸಾವು ಸಮನಿಸದೆ(ಬರಬಾರದೇ)+ ಎನಗೆ+ ಎನುತ ಮರುಗಿದಳು ನಳಿನಾಕ್ಷಿ
ಅರ್ಥ: ಯಾವ ವಿಷವನ್ನು ಕುಡಿಯಲಿ,, ಅಥವಾ ಯಾವ ಬೆಟ್ಟವನ್ನು ಹತ್ತಿ ಬೀಳಲಿ, ಯಾವ ನೀರಿನ ಹೊಂಡಕ್ಕೆ ಹಾರಲಿ, ಕಲ್ಲುಹಾಸು ರಾಸಿಯಲ್ಲಿ ಯಾವ ಆಯಧ- ಕತ್ತಿಯೋ ಶೂಲವೋ ಯಾವುದನ್ನು ಹಾಯಲಿ,, ಅಥವಾ ಯಾವ ಬೆಂಕಿಯೊಳಗೆ ಹೊಗಲಿ, ನನಗೆ ಸಾವು ತಾನಾಗಿ ಬರಬಾರದೇ, ಎನ್ನುತ್ತಾ ಸಂಕಟದಿಂದಮರುಗಿದಳು ದ್ರೌಪದಿ.
ಮಂದೆಗೆಳಸಿದ ಪಾಪಿ ಕೌರವ
ನಂದು ಮುಂದಲೆವಿಡಿದು ಸೈಂಧವ
ಬಂದು ಬಳಿಕಾರಣ್ಯವಾಸದೊಳೆನ್ನನೆಳದೊಯ್ದ |
ಇಂದು ಕೀಚಕ ನಾಯ ಕಾಲಲಿ
ನೊಂದೆ ನಾನೀ ಮೂರು ಬಾರಿಯೆ
ಬಂದ ಭಂಗವೆ ಸಾಕೆನುತ ಬಸವಳಿದಳಿಂದುಮುಖಿ || ೫೯ ||
ಪದವಿಭಾಗ-ಅರ್ಥ: ಮಂದೆಗೆ (ಜನರಮಂದೆಗೆ- ಗುಂಪಿಗೆ- ನೀತಿಧರ್ಮಕ್ಕೆ ಬೆಂಬಲಿಸದ ಸಬೆ- ಜನರಮಂದೆ, ಸಭೆಯ ಎದುರಿಗೆ)+ ಎಳಸಿದ ಪಾಪಿ ಕೌರವನು+ ಅಂದು ಮುಂದಲೆವಿಡಿದು, ಸೈಂಧವಬಂದು ಬಳಿಕ+ ಅರಣ್ಯವಾಸದೊಳು+ ಎನ್ನನು+ ಎಳದೊಯ್ದ, ಇಂದು ಕೀಚಕ ನಾಯ ಕಾಲಲಿ ನೊಂದೆ(ನೋವುತಿಂದೆ), ನಾನು+ ಈ ಮೂರು ಬಾರಿಯೆ ಬಂದ ಭಂಗವೆ(ಅವಮಾನ) ಸಾಕು+ ಎನುತ ಬಸವಳಿದಳು(ಶಕ್ತಿಗುಂದಿದಳು)+ ಇಂದುಮುಖಿ
ಅರ್ಥ: ಆಂದು ಜೂಜಿನಲ್ಲಿ ಧರ್ಮಜ ಸೋತಾಗ ಸಭೆಯ ಎದುರಿಗೆ ತನ್ನನ್ನು ಪಾಪಿ ಕೌರವನು ಅಂದು ಮುಂದಲೆ ಹಿಡಿದು ಎಳಸಿದನು; ಬಳಿಕ ಅರಣ್ಯವಾಸದಲ್ಲಿ ಸೈಂಧವನು ಬಂದು ನನ್ನನು ಎಳೆದುಕೊಂಡುಹೋದ, ಇಂದು ಕೀಚಕ ನಾಯಿಯ ಕಾಲಲ್ಲಿ ಒದೆಸಿಕೊಂಡು ನೋವುತಿಂದೆ, ನಾನು ಅನುಭವಿಸಿದ ಈ ಮೂರು ಬಾರಿಯಲ್ಲಿ ಬಂದ ಅವಮಾನ ಸಾಕು, ಆ ಕೀಚಕ ಕಾದಿದ್ದಾನೆ,ಆದರೆ ಇನ್ನು ಅನುಭವಿಸಲಾರೆ ಎನ್ನುತ್ತಾ ಶಕ್ತಿಗುಂದಿದಳು ದ್ರೌಪದಿ.
ಜನನವೇ ಪಾಂಚಾಲರಾಯನ
ಮನೆ ಮನೋವಲ್ಲಭರದಾರೆನೆ
ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು |
ಎನಗೆ ಬಂದೆಡರೀ ವಿರಾಟನ
ವನಿತೆಯರುಗಳ ಮುಡಿಯ ಕಟ್ಟುವ
ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ || ೬೦ ||
ಪದವಿಭಾಗ-ಅರ್ಥ: ಜನನವೇ ಪಾಂಚಾಲರಾಯನ ಮನೆ ಮನೋವಲ್ಲಭರು+ ಅದು+ ಆರು+ ಎನೆ(= ಗಂಡರು ಅದು ಯಾರು ಎಂದರೆ) ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು(= ಮನುಜಗಿನುಜರು- ಸಾಮಾನ್ಯ ಮನುಷ್ಯರು ಲೆಕ್ಕವೇ- ಇಲ್ಲ, ದೇವತೆಗಳಿಗಿಂತ ಹೆಚ್ಚಿನವರು೦) ಎನಗೆ ಬಂದ+ ಎಡರು (ಕಷ್ಟ)+ ಈ) ವಿರಾಟನ ವನಿತೆಯರುಗಳ ಮುಡಿಯ ಕಟ್ಟುವ, ತನುವ ತಿಗುರುವ(ದೇಹಕ್ಕೆ ಎಣ್ನ ಹಚ್ಚುವ) ಕಾಲನೊತ್ತುವ ಕೆಲಸದ+ ಉತ್ಸಾಹ (ಸಂಭ್ರಮ)
ಅರ್ಥ: ದ್ರೌಪದಿ ಹೇಳುವಳು, ಹುಟ್ಟಿದ್ದೊ ವೇಪಾಂಚಾಲರಾಜನ ಮನೆಯಲ್ಲಿ, ಗಂಡರು ಅದು ಯಾರು ಎಂದರೆ ಸಾಮಾನ್ಯ ಮನುಷ್ಯರು ಲೆಕ್ಕವೇ- ಇಲ್ಲ, ದೇವತೆಗಳಿಗಿಂತ ಹೆಚ್ಚಿನವರು; ಆದರೆ ನನಗೆ ಬಂದ ಕಷ್ಟದ ಗತಿಯೊ, ಈ ವಿರಾಟ ರಾಜನ ಹೆಂಡಿರುಗಳ ತಲೆ ಬಾಚಿ ಮುಡಿಯ ಕಟ್ಟುವ ಕೆಲಸ, ಅವರ ಮೈಗೆ ಪರಿಮಳದ ಎಣ್ಣೆ ಹಚ್ಚುವ ಮತ್ತು ಕಾಲನೊತ್ತುವ ಕೆಲಸದಲ್ಲಿ ಸಂಭ್ರಮ ಪಡುವ ಉದ್ಯೋಗ.
ಹಗೆಗಳಿಗೆ ತಂಪಾಗಿ ಬದುಕುವ
ಮುಗುದರಿನ್ನಾರುಂಟು ಭಂಗಕೆ
ಹೆಗಲ ಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ |
ವಿಗಡ ಬಿರುದನು ಬಿಸುಟು ಬಡಿಹೋ
ರಿಗಳು ಪಾಂಡವರಂತೆ ಮೂಗು
ರ್ಚಿಗಳದಿನ್ನಾರುಂಟೆನುತ ಮರುಗಿದಳು ನಳಿನಾಕ್ಷಿ || ೬೧ ||
ಪದವಿಭಾಗ-ಅರ್ಥ: ಹಗೆಗಳಿಗೆ ತಂಪಾಗಿ ಬದುಕುವ ಮುಗುದರು+ ಇನ್ನಾರುಂಟು ಭಂಗಕೆ ಹೆಗಲ ಕೊಟ್ಟು+ ಆನುವ ವಿರೋಧಿಗಳುಂಟೆ ಲೋಕದಲಿ= ಶತ್ರುಗಳಿಗೆ ತಂಪಾಗಿ ಬದುಕುವ ಮುಗ್ಧರು ಇನ್ನಾರು ಇದ್ದಾರೆ ಈ ಲೋಕದಲ್ಲಿ. ಅವಮಾನ ಮಾಡಿದ್ದನ್ನು ಹೆಗಲ ಮೇಲೆ ಹೊತ್ತು ಅದಕ್ಕೆ ಆಶ್ರಯಕೊಡುವ ವಿರೋಧಿಗಳೂ ಇದ್ದಾರೆಯೇ? // ವಿಗಡ ಬಿರುದನು ಬಿಸುಟು ಬಡಿಹೋರಿಗಳು ಪಾಂಡವರಂತೆ ಮೂಗುರ್ಚಿಗಳು+ ಅದಿನ್ನಾರುಂಟು+ ಎನುತ ಮರುಗಿದಳು ನಳಿನಾಕ್ಷಿ= ಪರಾಕ್ರಮದ ಬಿರುದನು ಬಿಸುಟು ಬಡಹೋರಿಗಳಂತಿರುವ ಮತ್ತು ಪಾಂಡವರಂತೆ ಮೂಗುದಾರ ಹಾಕಿಸಿಕೊಂಡ ಶೂರರು ಅದಿನ್ನು - ಮತ್ತಿನ್ನು ಯಾರಿದ್ದಾರೆ ಎನ್ನತ್ತಾ ಶೋಕಿಸಿ ಸಂಕಟಪಟ್ಟಳು ದ್ರೌಪದಿ.
ಅರ್ಥ:ಪಾಂಡವರನ್ನು ಬಿಟ್ಟರೆ ಶತ್ರುಗಳಿಗೆ ತಂಪಾಗಿ ಬದುಕುವ ಮುಗ್ಧರು ಇನ್ನಾರು ಇದ್ದಾರೆ ಈ ಲೋಕದಲ್ಲಿ. ಅವಮಾನ ಮಾಡಿದ್ದನ್ನು ಹೆಗಲ ಮೇಲೆ ಹೊತ್ತು ಅದಕ್ಕೆ ಆಶ್ರಯಕೊಡುವ ವಿರೋಧಿಗಳೂ ಇದ್ದಾರೆಯೇ? ಪರಾಕ್ರಮದ ಬಿರುದನು ಬಿಸುಟು ಬಡಹೋರಿಗಳಂತಿರುವ ಮತ್ತು ಪಾಂಡವರಂತೆ ಮೂಗುದಾರ ಹಾಕಿಸಿಕೊಂಡ ಶೂರರು ಅದಿನ್ನು - ಮತ್ತಿನ್ನು ಯಾರಿದ್ದಾರೆ ಎನ್ನತ್ತಾ ಶೋಕಿಸಿ ಸಂಕಟಪಟ್ಟಳು ದ್ರೌಪದಿ.
ಕಾಲನನು ಕೆರಳಿದೊಡೆ ಮುರಿವೆ
ಚ್ಚಾಳುತನದವರೆನ್ನನೊಬ್ಬಳ
ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲ |
ತೋಳ ಹೊರೆ ನಿಮಗೇಕೆ ಭೂಮೀ
ಪಾಲ ವಂಶದೊಳುದಿಸಲೇತಕೆ
ಕೂಳುಗೇಡಿಂಗೊಡಲ ಹೊರುವಿರಿಯೆಂದಳಿಂದುಮುಖಿ || ೬೨ ||
ಪದವಿಭಾಗ-ಅರ್ಥ: ಕಾಲನನು(ಯಮ) ಕೆರಳಿದೊಡೆ(ಸಿಟ್ಟಾದರೆ) ಮುರಿವ(ಸೋಲಿಸುವ)+ ಎಚ್ಚಾಳುತನದವರು(ವೀರರು)+ ಎನ್ನನೊಬ್ಬಳನು+ ಆಳಲಾರಿರಿ= ಕೋಪಗೊಂಡರೆ ಯಮನನ್ನು ಸೋಲಿಸುವ ಶೌರ್ಯ ಉಳ್ಳವರು, ಪತ್ನಿಯಾದ ಆದರೆ ನನ್ನನೊಬ್ಬಳನ್ನು ರಕ್ಷಿಸಿ ಆಳಲಾರಿರಿ.// ಪಾಪಿಗಳಿರ+ ಅಪಕೀರ್ತಿಗೆ+ ಅಳುಕಿರಲ ತೋಳ ಹೊರೆ ನಿಮಗೇಕೆ= ಪಾಪಿಗಳಿರಾ (ಧರ್ಮನೀತಿಗೆ ತಪ್ಪುವ) ಅಪಕೀರ್ತಿಗೆ ಅಳುಕುವಿರಲ್ಲಾ!// ತೋಳ ಹೊರೆ(ಭಾರ) ನಿಮಗೇಕೆ ಭೂಮೀಪಾಲ(ರಾಜ) ವಂಶದೊಳು+ ಉದಿಸಲು +ಏತಕೆ= ಶೌರ್ಯದ ತೋಳುಗಳ ಭಾರವನ್ನು ಹೊರವ ಕೆಲಸ ನಿಮಗೇಕೆ ಬೇಕು? ರಾಜ ವಂಶದಲ್ಲಿ ಹುಟ್ಟಿರುವುದೇತಕ್ಕೆ?// ಕೂಳುಗೇಡಿಂಗೆ+ ಒಡಲ(ದೇಹ, ಹೊಟ್ಟೆ) ಹೊರುವಿರಿ+ ಯ+ ಎಂದಳು+ ಇಂದುಮುಖಿ= ಕೂಳುಗೇಡಿಗೆ ಆಹಾರವನ್ನು ವ್ಯರ್ಥವಾಗಿ ನಾಶಮಾಡಲು ಹೊಟ್ಟೆ ಹೊರೆಯುವಿರಿ, ಎಂದಳು ಇಂದುಮುಖಿ.
ಅರ್ಥ: ಕೋಪಗೊಂಡರೆ ಯಮನನ್ನು ಸೋಲಿಸುವ ಶೌರ್ಯ ಉಳ್ಳವರು ನೀವು; ಆದರೆ ಪತ್ನಿಯಾದ ನನ್ನನೊಬ್ಬಳನ್ನು ರಕ್ಷಿಸಿ ಆಳಲಾರಿರಿ. ಪಾಪಿಗಳಿರಾ ಧರ್ಮನೀತಿಗೆ ತಪ್ಪುವ ಅಪಕೀರ್ತಿಗೆ ಅಳುಕುವಿರಲ್ಲಾ! ಶೌರ್ಯದ ತೋಳುಗಳ ಭಾರವನ್ನು ಹೊರವ ಕೆಲಸ ನಿಮಗೇಕೆ ಬೇಕು? ರಾಜ ವಂಶದಲ್ಲಿ ಹುಟ್ಟಿರುವುದೇತಕ್ಕೆ? ಕೂಳುಗೇಡಿಗೆ- ಆಹಾರವನ್ನು ವ್ಯರ್ಥವಾಗಿ ನಾಶಮಾಡಲು ಹೊಟ್ಟೆ ಹೊರೆಯುವಿರಿ,(ಕೂಳುದಂಡಕ್ಕೆ ಮೈ ಬೆಳಸಿರುವುದು- ಗಾದೆ) ಎಂದಳು ದ್ರೌಪದಿ.
ಧರೆಯ ಭಂಡಾರವನು ಪುರವನು
ಕರಿತುರಗ ರಥ ಪಾಯದಳವನು
ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ |
ದುರುಳ ಕೀಚಕಗೆನ್ನ ಕೊಟ್ಟಿರಿ
ಪರಿಮಿತದಲಿರವಾಯ್ತು ನಿಮ್ಮೈ
ವರಿಗೆ ಲೇಸಾಯ್ತಕಟಯೆಂದಬುಜಾಕ್ಷಿ ಹಲುಬಿದಳು || ೬೩ ||
ಪದವಿಭಾಗ-ಅರ್ಥ:ಧರೆಯ(ರಾಜ್ಯವನ್ನು) ಭಂಡಾರವನು ಪುರವನು ಕರಿತುರಗ ರಥ ಪಾಯದಳವನು ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ= ರಾಜ್ಯವನ್ನು ಸಂಪತ್ತನ್ನು, ರಾಜಧಾನಿಯನ್ನು, ಆನೆ ಕುದುರೆ ರಥಗಳನ್ನು, ಕಾವಲಿನ ಪಾಯದಳವನ್ನು ಕುರುಕುಲದ ಹಿರಿಯ ದುರ್ಯೋಧನ ನಿಮ್ಮನ್ನು ಹೊರಹೊರಡಿಸಿ ಕಸಿದುಕೊಂಡನು; ದುರುಳ ಕೀಚಕಗೆ+ ಎನ್ನ ಕೊಟ್ಟಿರಿ ಪರಿಮಿತದಲಿ+ ಇರವಾಯ್ತು ನಿಮ್ಮ+ ಐವರಿಗೆ ಲೇಸಾಯ್ತು+ ಅಕಟ+ ಯ+ ಎಂದು+ ಅಬುಜಾಕ್ಷಿ ಹಲುಬಿದಳು= ದುರುಳನಾದ ಕೀಚಕನಿಗೆ ನನ್ನನ್ನು ಕೊಟ್ಟಿರಿ; ಸ್ವತಂತ್ರವಿಲ್ಲದ ಪರಿಮಿತವಾದ ಪರಾಶ್ರಯದಲ್ಲಿ ನಿಮಗೆ ಇರುವ ಸ್ಥಿತಿ ಆಯ್ತು; ನಿಮ್ಮ ಐವರಿಗೆ ಅದೇ ಲೇಸಾಯ್ತು ಅಲ್ಲವೇ - ಅಕಟ! ಎಂದು ಅವಳು ಹಲುಬಿ- ಗೋಳಿಟ್ಟಳು.
ಅರ್ಥ: ರಾಜ್ಯವನ್ನು ಸಂಪತ್ತನ್ನು, ರಾಜಧಾನಿಯನ್ನು, ಆನೆ ಕುದುರೆ ರಥಗಳನ್ನು, ಕಾವಲಿನ ಪಾಯದಳವನ್ನು ಕುರುಕುಲದ ಹಿರಿಯ ದುರ್ಯೋಧನ ನಿಮ್ಮನ್ನು ಹೊರಹೊರಡಿಸಿ ಕಸಿದುಕೊಂಡನು; ದುರುಳನಾದ ಕೀಚಕನಿಗೆ ನನ್ನನ್ನು ಕೊಟ್ಟಿರಿ; ಸ್ವತಂತ್ರವಿಲ್ಲದ ಪರಿಮಿತವಾದ ಪರಾಶ್ರಯದಲ್ಲಿ ನಿಮಗೆ ಇರುವ ಸ್ಥಿತಿ ಆಯ್ತು; ನಿಮ್ಮ ಐವರಿಗೆ ಅದೇ ಲೇಸಾಯ್ತು ಅಲ್ಲವೇ - ಅಕಟ! ಎಂದು ಅವಳು ಹಲುಬಿ- ಗೋಳಿಟ್ಟಳು.
ಭಾವ ಭಾಗ್ಯಾಧಿಕನು ಕೌರವ
ದೇವನರಸುಗಳೊಡೆಯತನವನು
ನೀವು ಕೃಷ್ಣನ ಕೂರ್ಮೆ ಧರ್ಮದಿ ಪಾಲಿಸಿದಿರೀಗ |
ನೀವು ತಟತಟವಾಗಿ ಲೋಗರ
ಸೇವೆಯಲಿ ಬೆಂದೊಡಲ ಹೊರುವಿರಿ
ಸಾವವಳು ನಿಮಗಂಜಲೇಕೆಂದಬಲೆಯೊರಲಿದಳು || ೬೪ ||
ಪದವಿಭಾಗ-ಅರ್ಥ: ಭಾವ ಭಾಗ್ಯಾಧಿಕನು, ಕೌರವ ದೇವನು+ ಅರಸುಗಳೊಡೆಯತನವನು ನೀವು ಕೃಷ್ಣನ ಕೂರ್ಮೆ ಧರ್ಮದಿ ಪಾಲಿಸಿದಿರರಿ+= ಭಾವನಾದ ಕೃಷ್ಣನೋ ಮಹಾಭಾಗ್ಯಶಾಲಿ ಅಧಿಕನು, ಮತ್ತೆ ಕೌರವ ದೇವನು ಅರಸುಗಳೊಡೆಯತನವನು ಪಡೆದವನು - ನಿಮಗೆ ಸೋದರ; ನೀವು ಇಂದ್ರಪ್ರಸ್ಥದಲ್ಲಿ ಕೃಷ್ಣನ ಪ್ರೀತಿಯನ್ನು ಪಡೆದು ಧರ್ಮದಿಂದ ರಾಜ್ಯವನ್ನು ಪಾಲಿಸಿದಿರರಿ.// ಈಗ ನೀವು ತಟತಟವಾಗಿ ಲೋಗರ(ಸಾಮಾನ್ಯರ, ಅಲ್ಪರ) ಸೇವೆಯಲಿ ಬೆಂದು+ ಒಡಲ ಹೊರುವಿರಿ= ಈಗ ನೀವು ತಟತಟವಾಗಿ- ಶಕ್ತಿಹೀನರಾಗಿ ದೀನರಾಗಿ ಸಾಮಾನ್ಯರ ಸೇವೆಯಲ್ಲಿ ಬೆಂದು ಸಂಕಟಪಡುತ್ತಾ ಹೊಟ್ಟೆಹೊರೆದುಕೊಳ್ಳುತ್ತಿದ್ದೀರಿ;// ಸಾವವಳು ನಿಮಗೆ+ ಅಂಜಲೇಕೆ ಎಂದು+ ಅಬಲೆಯು+ ಒರಲಿದಳು= ನಾನು ಹೇಗಿದ್ದರೂ ಸಾಯುವವಳು, ನಿಮಗ ಏಕೆ ಅಂಜಲಿ, ಸತ್ಯವನ್ನು ಹೇಳಿಯೇ ಸಾಯುತ್ತೇನೆ ಎಂದು ಅಬಲೆ ದ್ರೌಪದಿಯಯು ಅಳುತ್ತಾ ಹೇಳಿದಳು.
ಅರ್ಥ: ನಿಮಗೆ ಭಾವನಾದ ಕೃಷ್ಣನೋ ಮಹಾಭಾಗ್ಯಶಾಲಿಯು, ಅಧಿಕನು, ಮತ್ತೆ ಕೌರವ ದೇವನು ಅರಸುಗಳೊಡೆಯತನವನು ಪಡೆದವನು - ನಿಮಗೆ ಸೋದರ; ನೀವು ಇಂದ್ರಪ್ರಸ್ಥದಲ್ಲಿ ಕೃಷ್ಣನ ಪ್ರೀತಿಯನ್ನು ಪಡೆದು ಧರ್ಮದಿಂದ ರಾಜ್ಯವನ್ನು ಪಾಲಿಸಿದಿರರಿ. ಈಗ ನೀವು ತಟತಟವಾಗಿ- ಶಕ್ತಿಹೀನರಾಗಿ ದೀನರಾಗಿ ಸಾಮಾನ್ಯರ ಸೇವೆಯಲ್ಲಿ ಬೆಂದು ಸಂಕಟಪಡುತ್ತಾ ಹೊಟ್ಟೆಹೊರೆದುಕೊಳ್ಳುತ್ತಿದ್ದೀರಿ; ನಾನು ಹೇಗಿದ್ದರೂ ಸಾಯುವವಳು, ನಿಮಗ ಏಕೆ ಅಂಜಲಿ, ಸತ್ಯವನ್ನು ಹೇಳಿಯೇ ಸಾಯುತ್ತೇನೆ ಎಂದು ಅಬಲೆ ದ್ರೌಪದಿಯಯು ಅಳುತ್ತಾ ಹೇಳಿದಳು.
ಭೀಮ ಕೊಟ್ಟೈ ತನಗೆ ಸಾವಿನ
ನೇಮವನು ನಿಮ್ಮಣ್ಣನಾಜ್ಞೆ ವಿ
ರಾಮವಾಗದೆ ಬದುಕಿ ಧರ್ಮದ ಮೈಸಿರಿಯನರಿದು |
ಕಾಮಿನಿಯ ಕೇಳಿಯಲಿ ನೆನೆವುದು
ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವದೆಂದೆರಗಿದಳು ಚರಣದಲಿ || ೬೫ ||
ಪದವಿಭಾಗ-ಅರ್ಥ:ಭೀಮ ಕೊಟ್ಟೈ ತನಗೆ ಸಾವಿನ ನೇಮವನು (ನಿಯಮ ಮಾಡು- ಆಜ್ಞೆನೀಡು), ನಿಮ್ಮಣ್ಣನ+ ಆಜ್ಞೆ ವಿರಾಮವಾಗದೆ(ವಿರಾಮ- ನಿಲ್ಲ, ನಿಲ್ಲದಂತೆ, ತಪ್ಪದಹಾಗೆ, ತುಂಡಾಗದಂತೆ ) ಬದುಕಿ, ಧರ್ಮದ ಮೈಸಿರಿಯನು(ಅಂಗ-ಸಂಪದವನ್ನು)+ ಅರಿದು;= ಭೀಮನೇ ನನ್ನನ್ನು ಇನ್ನ ಹೆಂಡತಿಯಲ್ಲವೆಂದು ತಿರಸ್ಕರಿಸಿ, ನೀನು ನನಗೆ ಸಾಯಲು ಆಜ್ಞೆಯನ್ನು ಕೊಟ್ಟೆ; ನಿಮ್ಮಣ್ಣನ ಆಜ್ಞೆಗೆ ಭಂಗವಾಗದಂತೆ ಧರ್ಮದ ಅಂಗ-ಸಂಪದವನ್ನು ಅರಿತು ಬದುಕಿ.// ಕಾಮಿನಿಯ ಕೇಳಿಯಲಿ ನೆನೆವುದು= ನನ್ನನ್ನು ನೀನು ನಿನ್ನ ಇನ್ನೊಬ್ಬಳು ಪತ್ನಿಯೊಡನೆ ಸುಖದ-ಕೇಳಿಯಲ್ಲಿದ್ದಾಗ ನೆನೆಪು ಮಾಡಿಕೊ.// ತಾಮಸದಿ(ಸಿಟ್ಟಿನಿಂದ) ತಾ ಮೀರಿ ನುಡಿದು+ ಉದ್ದಾಮತೆಯ (ಉದ್ಧಟತನವನ್ನು) ಸೈರಿಸುವದೆಂದು(ಸಹಿಸಿಕೊ ಎಂದು)+ ಎರಗಿದಳು(ನಮಿಸಿದಳು) ಚರಣದಲಿ= ನಾನು ಸಿಟ್ಟಿನಿಂದ ಮಿತಿಮೀರಿ ಮಾತನಾಡಿದ ಉದ್ಧಟತನವನ್ನು ಸಹಿಸಿಕೊ ಎಂದು ಭೀಮನ ಪಾದಗಳಿಗೆ ದ್ರೌಪದಿ ನಮಿಸಿದಳು.
ಅರ್ಥ: ಭೀಮನೇ ಅಣ್ನನ ಮಾತನ್ನು ಮೀರಲಾರೆನೆಂದೂ, ನನ್ನನ್ನು ಇನ್ನು ಹೆಂಡತಿಯಲ್ಲವೆಂದು ತಿರಸ್ಕರಿಸಿ, ನೀನು ನನಗೆ ಸಾಯಲು ಆಜ್ಞೆಯನ್ನು ಕೊಟ್ಟೆ; ನಿಮ್ಮಣ್ಣನ ಆಜ್ಞೆಗೆ ಭಂಗವಾಗದಂತೆ ಧರ್ಮದ ಅಂಗ-ಸಂಪದವನ್ನು ಅರಿತು ಬದುಕಿ. ನನ್ನನ್ನು ನೀನು ನಿನ್ನ ಇನ್ನೊಬ್ಬಳು ಪತ್ನಿಯೊಡನೆ ಸುಖದ-ಕೇಳಿಯಲ್ಲಿದ್ದಾಗ ನೆನೆಪು ಮಾಡಿಕೊ. ನಾನು ಸಿಟ್ಟಿನಿಂದ ಮಿತಿಮೀರಿ ಮಾತನಾಡಿದ ಉದ್ಧಟತನವನ್ನು ಸಹಿಸಿಕೊ, ಎಂದು ಭೀಮನ ಪಾದಗಳಿಗೆ ದ್ರೌಪದಿ ನಮಿಸಿದಳು.

ಕೀಚಕನ ವಧೆಗೆ ಭೀಮನ ನಿರ್ಧಾರ[ಸಂಪಾದಿಸಿ]

ಎನಲು ಕಂಬನಿದುಂಬಿದನು ಕಡು
ನೆನೆದುದಂತಃಕರಣ ರೋಷದ
ಘನತೆ ಹೆಚ್ಚಿತು ಹಗೆಗಳನು ಹಿಂಡಿದನು ಮನದೊಳಗೆ |
ತನುಪುಳಕವುಬ್ಬರಿಸಿ ಮೆಲ್ಲನೆ
ವನಿತೆಯನು ತೆಗೆದಪ್ಪಿದನು ಕಂ
ಬನಿಯದೊಡೆದನು ಸೆರಗಿನಲಿ ಕಲಿಭೀಮ ಮಾನಿನಿಯ || ೬೬ ||
ಪದವಿಭಾಗ-ಅರ್ಥ:ದ್ರೌಪದಿಯು, ಎನಲು- ಎನ್ನಲು, ಭೀಮಾ ನೀನು ನನಗೆ ಸಾಯಲು ಅಪ್ಪಣೆ ಕೊಟ್ಟೆ ಎಂದು ಅವನ ಪಾದಕ್ಕೆ ಬಿದ್ದು ಹೇಳಿದಾಗ- ಎನಲು ಕಂಬನಿ ದುಂಬಿದನು= ಭೀಮನ ಕಣ್ಣಿನಲ್ಲಿ ನೀರು ತುಂಬಿತು.// ಕಡು ನೆನೆದುದು+ ಅಂತಃಕರಣ= ಅವನ ಮನಸ್ಸು ಅಂತಃಕರನ ಬಹಳ ಅದರಿಂದ ನೆನೆದುಹೊಯಿತು.// ರೋಷದ ಘನತೆ ಹೆಚ್ಚಿತು= ಸಿಟ್ಟಿನ ಅಧಿಕತೆ ಹೆಚ್ಚಿತು;// ಹಗೆಗಳನು ಹಿಂಡಿದನು ಮನದೊಳಗೆ= ಶತ್ರುಗಳನ್ನು ಮನಸ್ಸಿನಲ್ಲೇ ಹಿಂಡಿನುಚ್ಚುಮಾಡಿದನು.// ತನು ಪುಳಕ+ ವು+ ಉಬ್ಬರಿಸಿ ಮೆಲ್ಲನೆ ವನಿತೆಯನು ತೆಗೆದಪ್ಪಿದನು= ದೇಹದಲ್ಲಿ ದ್ರೌಪದಿಯಬಗೆಗೆ ಪ್ರೀತಿಯಿಂದ ಪುಳಕ- ರೋಮಾಂಚನವಾಗಿ ಮೈ ಉಬ್ಬಿತು. ಆಗ ಭೀಮನು ಅವಳನ್ನು ಎಬ್ಬಿಸಿ ಅಪ್ಪಿಕೊಂಡು ಸಮಾಧಾನ ಪಡಿಸಿದನು.// ಕಂಬನಿಯ+ ದ+ ತೊಡೆದನು ಸೆರಗಿನಲಿ ಕಲಿಭೀಮ ಮಾನಿನಿಯ= ಮಾನಿನಿಯಾದ ದ್ರೌಪದಿಯ ಕಂಬನಿಯನ್ನು ತನ್ನ ಹೊದೆದ ಬಟ್ಟೆಯ ಸೆರಗಿನಿಂದ ಒರಸಿದನು.
ಅರ್ಥ: ದ್ರೌಪದಿಯು, ಭೀಮಾ ನೀನು ನನಗೆ ಸಾಯಲು ಅಪ್ಪಣೆ ಕೊಟ್ಟೆ ಎಂದು ಅವನ ಪಾದಕ್ಕೆ ಬಿದ್ದು ಹೇಳಿದಾಗ ಭೀಮನ ಕಣ್ಣಿನಲ್ಲಿ ನೀರು ತುಂಬಿತು. ಅವನ ಮನಸ್ಸು- ಅಂತಃಕರಣ ಕಂಬನಿಯಿಂದ ಬಹಳ ನೆನೆದುಹೊಯಿತು. ಮನಸ್ಸಿನಲ್ಲಿ ಸಿಟ್ಟಿನ ಅಧಿಕತೆ ಹೆಚ್ಚಿತು; ಹಾಗೆಯೇ ಶತ್ರುಗಳನ್ನು ಮನಸ್ಸಿನಲ್ಲೇ ಹಿಂಡಿ ನುಚ್ಚುಮಾಡಿದನು. ದ್ರೌಪದಿಯಬಗೆಗೆ ಪ್ರೀತಿಯಿಂದ ದೇಹದಲ್ಲಿ ರೋಮಾಂಚನವಾಗಿ ಮೈ ಉಬ್ಬಿತು. ಆಗ ಭೀಮನು ಅವಳನ್ನು ಎಬ್ಬಿಸಿ ಅಪ್ಪಿಕೊಂಡು ಸಮಾಧಾನ ಪಡಿಸಿದನು. ಮಾನಿನಿಯಾದ ದ್ರೌಪದಿಯ ಕಣ್ಣೀರನ್ನು ತನ್ನ ಹೊದೆದ ಬಟ್ಟೆಯ ಸೆರಗಿನಿಂದ ಒರಸಿದನು.
ಕುರುಳ ನೇವರಿಸಿದನು ಗಲ್ಲವ
ನೊರಸಿ ಮುಂಡಾಡಿದನು ಮಂಚದ
ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ |
ಅರಸಿ ಬಿಡು ಬಿಡು ಖಾತಿಯನು ವಿ
ಸ್ತರಿಸಲೇಕೆಮ್ಮಣ್ಣನಾಜ್ಞೆಯ
ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ || ೬೭ ||
ಪದವಿಭಾಗ-ಅರ್ಥ: ಕುರುಳ ನೇವರಿಸಿದನು ಗಲ್ಲವನು+ ಒರಸಿ ಮುಂಡಾಡಿದನು= ದ್ರೌಪದಿಯ ಸಂಕಟಪಡುತ್ತಿರುವ ಕುರುಳನ್ನು ಸವರಿ ನೇವರಿಸಿದನು; ಕಣ್ಣೀರು ಇಳಿದ ಗಲ್ಲವನ್ನು ಒರಸಿ ತಲೆಯನ್ನ ಸವರಿ ಎದೆಗೆ ಅವಚಿಕೊಂಡು ಮುಂಡಾಡಿದನು.// ಮಂಚದ ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ(ಮುಖ+ ಅಂಬುಜ- ಕಮಲ)= ಮಂಚದ ಬದಿಯಲ್ಲಿದ್ದ ಗಿಂಡಿಯ(ಉದ್ದವಾದ ನೀರು ಕುಡಿಯುವ ಸಣ್ಣ ಕಂಠದ ಚೊಂಬು) ನೀರಿನಿಂದ ಅತ್ತು ಅತ್ತು ರಾಡಿಯಾಗಿದ್ದ ಅವಳ ಕಮಲದಂತಹ ಮುಖವನ್ನು ತೊಳೆದನು.// ಅರಸಿ ಬಿಡು ಬಿಡು ಖಾತಿಯನು ವಿಸ್ತರಿಸಲೇಕೆ+ ಎಮ್ಮಣ್ಣನ+ ಆಜ್ಞೆಯ ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ= ನನ್ನ ರಾಣಿ, ಸಿಟ್ಟನ್ನು ಬಿಡು ಬಿಡು, ವಿಸ್ತರಿಸಿ ಹೇಳುವುದು ಏಕೆ ಬೇಕು, ನನ್ನ ಅಣ್ಣನ ಆಜ್ಞೆಯ ಗೆರೆಯನ್ನ ದಾಟಿದೆನು ದಾಟಿಯೇಬಿಟ್ಟೆ, ಮನಶ್ಶಾಂತಿಯಿಂದ ಹೊಗು ಎಂದನು ಆ ಭೀಮ.
ಅರ್ಥ:ದ್ರೌಪದಿಯ ಸಂಕಟಪಡುತ್ತಿರುವ ಕುರುಳನ್ನು ಸವರಿ ನೇವರಿಸಿದನು; ಕಣ್ಣೀರು ಇಳಿದ ಗಲ್ಲವನ್ನು ಒರಸಿ ತಲೆಯನ್ನ ಸವರಿ ಎದೆಗೆ ಅವಚಿಕೊಂಡು ಮುಂಡಾಡಿದನು.ಮಂಚದ ಬದಿಯಲ್ಲಿದ್ದ ಗಿಂಡಿಯ ನೀರಿನಿಂದ ಅತ್ತು ಅತ್ತು ರಾಡಿಯಾಗಿದ್ದ ಅವಳ ಕಮಲದಂತಹ ಮುಖವನ್ನು ತೊಳೆದನು. ನನ್ನ ರಾಣಿ, ಸಿಟ್ಟನ್ನು ಬಿಡು ಬಿಡು, ವಿಸ್ತರಿಸಿ ಹೇಳುವುದು ಏಕೆ ಬೇಕು, ನನ್ನ ಅಣ್ಣನ ಆಜ್ಞೆಯ ಗೆರೆಯನ್ನ ದಾಟಿದೆನು ದಾಟಿಯೇಬಿಟ್ಟೆ, ಮನಶ್ಶಾಂತಿಯಿಂದ ಹೊಗು ಎಂದನು ಆ ಭೀಮ.
ಬಸುರ ಬಗಿವೆನು ಕೀಚಕನ ನಸು
ಮಿಸುಕಿದೊಡೆ ವೈರಾಟ ವಂಶದ
ಹೆಸರ ತೊಡೆವೆನು ನಮ್ಮನರಿದೊಡೆ ಕೌರವವ್ರಜವ |
ಕುಸುರಿದರಿವೆನು ಭೀಮ ಕಷ್ಟವ
ನೆಸಗಿದನು ಹಾಯೆಂದರಾದೊಡೆ
ಮುಸುಡನಮರಾದ್ರಿಯಲಿ ತೇವೆನು ದೇವಸಂತತಿಯ || ೬೮ ||
ಪದವಿಭಾಗ-ಅರ್ಥ:ಬಸುರ ಬಗಿವೆನು ಕೀಚಕನ ನಸು(ಅಲ್ಪ) ಮಿಸುಕಿದೊಡೆ ವೈರಾಟ ವಂಶದ ಹೆಸರ ತೊಡೆವೆನು= ಇಗೋ, ಕೀಚಕನ ಹೊಟ್ಟೆಯನ್ನು ಬಗೆಯುವೆನು; ಅವನ ಕಡೆಯವರು ಸ್ವಲ್ಪ ಮಿಸುಕಾಡಿ ವಿರೋಧಿಸಿದರೆ, ವಿರಾಟ ವಂಶದ ಹೆಸರೇ ಇಲ್ಲದಂತೆ ತೊಡೆದುಹಾಕುವೆನು; ನಮ್ಮನು+ ಅರಿದೊಡೆ ಕೌರವವ್ರಜವ ಕುಸುರಿದರಿವೆನು= ನಮ್ಮನ್ನು ಕೌರವರು ಅರಿತರೆ, ಕೌರವವಂಶವನ್ನ ಕುಸುರಿದು-= ಸಣ್ಣ ಸಿಗಿದು, ಅರಿವೆನು= ಕತ್ತರಿಸುವೆನು;// ಭೀಮ ಕಷ್ಟವನು+ ಎಸಗಿದನು ಹಾ ಯೆಂದು+ ಆರಾದೊಡೆ= ಭೀಮನು ಅತಿಹಿಂಸೆ ಮಾಡಿದನು ಹಾ! ಅಯ್ಯೋ! ಎಂದರೆ ದೇವತೆಗಳಾಗಿರಲಿ,; ಮುಸುಡನು+ ಅಮರಾದ್ರಿಯಲಿ ತೇವೆನು ದೇವಸಂತತಿಯ= ಅವರ ಮುಖವನ್ನು ದೇವಗಿರಿ ಪರ್ವತದಲ್ಲಿ ತೆಯಿದು/ ತಿಕ್ಕಿ ಹಾಕುವೆನು, ಎಂದನು
ಅರ್ಥ:ಇಗೋ, ಕೀಚಕನ ಹೊಟ್ಟೆಯನ್ನು ಬಗೆಯುವೆನು; ಅವನ ಕಡೆಯವರು ಸ್ವಲ್ಪ ಮಿಸುಕಾಡಿ ವಿರೋಧಿಸಿದರೆ, ವಿರಾಟ ವಂಶದ ಹೆಸರೇ ಇಲ್ಲದಂತೆ ತೊಡೆದುಹಾಕುವೆನು; ನಮ್ಮನ್ನು ಕೌರವರು ಅರಿತರೆ, ಕೌರವವಂಶವನ್ನ ಸಣ್ಣ ಸಿಗಿದು ಕತ್ತರಿಸುವೆನು. ಭೀಮನು ಅತಿಹಿಂಸೆ ಮಾಡಿದನು ಹಾ! ಅಯ್ಯೋ! ಎಂದರೆ ದೇವತೆಗಳಾಗಿರಲಿ, ಅವರ ಮುಖವನ್ನು ದೇವಗಿರಿಪರ್ವತದಲ್ಲಿ ತೆಯಿದು -ತಿಕ್ಕಿ ಹಾಕುವೆನು, ಎಂದನು.
ಮುನಿದನಾದೊಡೆಯಣ್ಣ ತನವಿಂ
ದಿನಲಿ ಹರಿಯಲಿ ಪಾರ್ಥ ನಕುಲರು
ಕನಲಿದೊಡೆ ಕೈದೋರುವೆನು ಸಹದೇವನಿವರುಗಳ |
ಅನುಜನೆಂಬೆನೆ ಕೃಷ್ಣ ಹಾಯ್ದೆರೆ
ಘನಮುರಾರಿಯ ಮೀರುವೆನು ಬಳಿ
ಕೆನಗೆ ಸಮಬಲರಾರು ತರಿವೆನು ಕೀಚಕಾನ್ವಯವ || ೬೯ ||
ಪದವಿಭಾಗ-ಅರ್ಥ: ಮುನಿದನಾದೊಡೆ+ ಯ+ ಅಣ್ಣತನವು+ ಇಂದಿನಲಿ ಹರಿಯಲಿ= ಧರ್ಮಜನು ಸಿಟ್ಟುಮಾಡಿದರೆ ಅಣ್ಣತನದ ಸಂಬಂಧ ಇಂದಿಗೇ ಹರಿದುಹೋಗಲಿ.// ಪಾರ್ಥ ನಕುಲರು ಕನಲಿದೊಡೆ ಕೈದೋರುವೆನು ಸಹದೇವನು ಇವರುಗಳ ಅನುಜನು+ ಎಂಬೆನೆ= ಪಾರ್ಥನು ನಕುಲರು ಸಿಟ್ಟಾಗಿ ಎದುರಿಸಲು ಬಂದರೆ, ಅವರಿಗೆ ನನ್ನ ಕೈಚಳಕ ತೋರುವೆನು; (ವಿರೋಧಿಸಿದರೆ) ಸಹದೇವ ಇವನನ್ನು ಸಹೋದರ ಎಂದು ಭಾವಿಸುವೆನೆ? ಇಲ್ಲ! .// ಕೃಷ್ಣ ಹಾಯ್ದೆರೆ ಘನಮುರಾರಿಯ ಮೀರುವೆನು= ಕೃಷ್ಣನೇ ಬಂದು ಅಡ್ಡನಿಂತರೂ ಅವನನ್ನು ಮೀರಿ ಹೋಗುವೆನು.// ಬಳಿಕ+ ಎನಗೆ ಸಮಬಲರಾರು ತರಿವೆನು ಕೀಚಕ+ಅನ್ವಯವ(ವಂಶವನ್ನು)= ಇದರಮೇಲೆ ನನಗೆ ಸಮಬಲವಾಗಿ ಎದುರಿಸುವವರು ಯಾರು ಇದ್ದಾರೆ- ಇಲ್ಲ; ಕೀಚಕನ ವಂಶವನ್ನು ತರಿದು - ಕತ್ತರಿಸಿ ಹಾಕುತ್ತೇನೆ, ಎಂದನು ಭೀಮ.
ಅರ್ಥ: ಮುನಿದನಾದೊಡೆ+ ಯ+ ಅಣ್ಣತನವು+ ಇಂದಿನಲಿ ಹರಿಯಲಿ= ಧರ್ಮಜನು ಸಿಟ್ಟುಮಾಡಿದರೆ ಅಣ್ಣತನದ ಸಂಬಂಧ ಇಂದಿಗೇ ಹರಿದುಹೋಗಲಿ.// ಪಾರ್ಥ ನಕುಲರು ಕನಲಿದೊಡೆ ಕೈದೋರುವೆನು ಸಹದೇವನು ಇವರುಗಳ ಅನುಜನು+ ಎಂಬೆನೆ= ಪಾರ್ಥನು ನಕುಲರು ಸಿಟ್ಟಾಗಿ ಎದುರಿಸಲು ಬಂದರೆ, ಅವರಿಗೆ ನನ್ನ ಕೈಚಳಕ ತೋರುವೆನು; (ವಿರೋಧಿಸಿದರೆ) ಸಹದೇವ ಇವನನ್ನು ಸಹೋದರ ಎಂದು ಭಾವಿಸುವೆನೆ? ಇಲ್ಲ! .// ಕೃಷ್ಣ ಹಾಯ್ದೆರೆ ಘನಮುರಾರಿಯ ಮೀರುವೆನು= ಕೃಷ್ಣನೇ ಬಂದು ಅಡ್ಡನಿಂತರೂ ಅವನನ್ನು ಮೀರಿ ಹೋಗುವೆನು.// ಬಳಿಕ+ ಎನಗೆ ಸಮಬಲರಾರು ತರಿವೆನು ಕೀಚಕ+ಅನ್ವಯವ(ವಂಶವನ್ನು)= ಇದರಮೇಲೆ ನನಗೆ ಸಮಬಲವಾಗಿ ಎದುರಿಸುವವರು ಯಾರು ಇದ್ದಾರೆ- ಇಲ್ಲ; ಕೀಚಕನ ವಂಶವನ್ನು ತರಿದು - ಕತ್ತರಿಸಿ ಹಾಕುತ್ತೇನೆ, ಎಂದನು ಭೀಮ.
ಈಸು ದಿನವೆಮ್ಮಣ್ಣನಾಜ್ಞೆಯ
ಪಾಶದಲಿ ಸಿಕ್ಕಿರ್ದೆ ಸಿಂಹದ
ಕೂಸ ನರಿ ಕೆಣುಕುವವೊಲೀ ಕುರು ಕೀಚಕಾದಿಗಳು |
ಗಾಸಿಯಾದರು ಕೆಣಕಿ ನಾಯ್ಗಳ
ವೀಸ ಬಡ್ಡಿಯಲಸುವ ಕೊಂಬೆನು
ವಾಸಿ ಧರ್ಮದ ಮೇರೆದಪ್ಪಿತು ಕಾಂತೆ ಕೇಳೆಂದ || ೭೦ ||
ಪದವಿಭಾಗ-ಅರ್ಥ: ಈಸು ದಿನ ವೆಮ್ಮಣ್ಣನಾಜ್ಞೆಯ ಪಾಶದಲಿ ಸಿಕ್ಕಿರ್ದೆ ಸಿಂಹದ ಕೂಸ ನರಿ ಕೆಣಕುವವಲೀ ಕುರು ಕೀಚಕಾದಿಗಳು ಗಾಸಿಯಾದರು ಕೆಣಕಿ ನಾಯ್ಗಳವೀಸ ಬಡ್ಡಿಯಲಸುವ ಕೊಂಬೆನು ವಾಸಿ ಧರ್ಮದ ಮೇರೆದಪ್ಪಿತು ಕಾಂತೆ ಕೇಳೆಂದ;--// ಈಸು ದಿನವು (ಇಷ್ಟುದಿನ) + ಎಮ್ಮಣ್ಣನ+ ಆಜ್ಞೆಯ ಪಾಶದಲಿ ಸಿಕ್ಕಿರ್ದೆ= ಈಸುದಿನವು = ಇಷ್ಟುದಿನವು ಎಮ್ಮಣ್ಣನ= ನಮ್ಮ ಅಣ್ಣನ ಆಜ್ಞೆಯ ಪಾಶದಲ್ಲಿ ಸಿಕ್ಕಿದ್ದೆ; // ಸಿಂಹದ ಕೂಸ ನರಿ ಕೆಣಕುವವಲಿಉ+ ಈ ಕುರು ಕೀಚಕಾದಿಗಳು ಗಾಸಿಯಾದರು ಕೆಣಕಿ= ಸಿಂಹದ ಕೂಸ=ಮರಿಯನ್ನು ನರಿ ಕೆಣಕುವಂತೆ ಈ ಕುರು ಕೀಚಕ ಮೊದಲಾದವರು ಗಾಸಿಯಾದರುಪಟ್ಟುತಿಂದರು- ನಾಶವಾದರು ನನ್ನನ್ನು ಕೆಣಕಿ;// ನಾಯ್ಗಳವೀಸ ಬಡ್ಡಿಯಲಸುವ ಕೊಂಬೆನು= ನಾಯ್ಗಳ ವೀಸ ಬಡ್ಡಿಯಲಿ+ ಅಸುವ ಕೊಂಬೆನು- ನಾಯಿಗಳನ್ನು ್ಗಒಂದಕ್ಕೆ ಐದರಷ್ಟು (ವೀಸ –ಐದು ಸೇರು) ಬಡ್ಡಿಯನ್ನು ಪಡೆಯುವಂತೆ ಅವರ ಅಸುವ- ಪ್ರಾಣವನ್ನು, ಕೊಂಬೆನು- ತೆಗೆದುಕೊಳ್ಳುತ್ತೇನೆ- ತೆಗೆಯುವೆನು;// ವಾಸಿ ಧರ್ಮದ ಮೇರೆದಪ್ಪಿತು ಕಾಂತೆ ಕೇಳೆಂದ= ವಾಸಿ(ಉತ್ತಮವಾದ) ಧರ್ಮದ ಮೇರೆದಪ್ಪಿತು – ಮೇರೆ + ತಪ್ಪಿತು – ಮುಂದಿನ ನೆಡೆ ಧರ್ಮದ ಗಡಿಯನ್ನು ದಾಟಿಹೋಯಿತು, ಕಾಂತೆ ಯೇ ಕೇಳು ಎಂದ
ಅರ್ಥ: ಇಷ್ಟು ದಿನವು ನಮ್ಮ ಅಣ್ಣನ ಆಜ್ಞೆಯ ಪಾಶದಲ್ಲಿ ಸಿಕ್ಕಿದ್ದೆ. ಸಿಂಹದ ಮರಿಯನ್ನು ನರಿ ಕೆಣಕುವಂತೆ ಈ ಕುರು ಕೀಚಕ ಮೊದಲಾದವರು ನನ್ನನ್ನು ಕೆಣಕಿ ನಾಶವಾದರು(ನಾಶವಾಗುವರು). ಈ ನಾಯಿಗಳನ್ನು ಒಂದಕ್ಕೆ ಐದರಷ್ಟು ಬಡ್ಡಿಯನ್ನು ಪಡೆಯುವಂತೆ ಅವರ ಪಾಪಕ್ಕೆ ಪ್ರಾಣವನ್ನು ತೆಗೆಯುವೆನು. ನನ್ನ ಮುಂದಿನ ನೆಡೆಯು ಉತ್ತಮವಾದ ಧರ್ಮದ ಗಡಿಯನ್ನು ದಾಟಿಹೋಯಿತು, ಕಾಂತೆಯೇ ಕೇಳು ಎಂದ ಭೀಮ.
ತರುಣಿ ಕೀಚಕ ಕೌರವೇಂದ್ರರ
ಹರಣಕಿದ ಕೋ ಸಂಚಕಾರವ
ಕೆರಳಿದೊಡೆಯೀ ಭೀಮ ಬಗೆವನೆ ನೀತಿಗೀತಿಗಳ |
ಕೆರಳಿಚಿದೆಯಿನ್ನೇನು ನಿನ್ನಯ
ಹರಿಬವೆನ್ನದು ನಾಯಿ ಜಾರನ
ಕರೆದು ಸಂಕೇತದಲಿ ಸೂಚಿಸು ನಾಟ್ಯಮಂದಿರವ || ೭೧ ||
ಪದವಿಭಾಗ-ಅರ್ಥ: ತರುಣಿ ಕೀಚಕ ಕೌರವೇಂದ್ರರ ಹರಣಕೆ (ಜೀವ- ತೆಗೆದುಕೊಳ್ಳುವುದಕ್ಕೆ)+ ಇದಕೋ ಸಂಚಕಾರವ (ಮುಂಗಡ, ಈ ಮಾತೇ- ಮುಂಗಡ), //ಕೆರಳಿದೊಡೆ (ಸಿಟ್ಟುಬಂದರೆ)+ ಯ+ ಈ ಭೀಮ ಬಗೆವನೆ(ಯೋಚಿಸುವನೇ) ನೀತಿಗೀತಿಗಳ+ ಕೆರಳಿಚಿದೆ (ನನ್ನನ್ನು ಕೆರಳಿಸಿದೆ)+ಯ+ ಇನ್ನೇನು ನಿನ್ನಯ ಹರಿಬವು(ಕಷ್ಟವು)+ ಎನ್ನದು; ನಾಯಿ ಜಾರನ (ಕೀಚಕನ) ಕರೆದು ಸಂಕೇತದಲಿ (ಬರುವುದಕ್ಕೆ)ಸೂಚಿಸು ನಾಟ್ಯಮಂದಿರವ.
ಅರ್ಥ: ತರುಣಿ- ಪ್ರಿಯೇ, ಕೀಚಕ ಮತ್ತು ಕೌರವೇಂದ್ರರ ಜೀವ- ತೆಗೆದುಕೊಳ್ಳುವುದಕ್ಕೆ ಇದಕೋ- ಸಂಚಕಾರವಾಗಿ ಈ ಮಾತೇ- ಮುಂಗಡವು, ಇದೊ ತೆಗೆದುಕೊಂಡೆನು (- ಅಥವಾ ಸೂತ್ರಧಾರಳಾಗಿ ತೆಗೆದುಕೋ ). ಸಿಟ್ಟುಬಂದರೆ ಈ ಭೀಮ ನೀತಿಗೀತಿಗಳನ್ನು ಯೋಚಿಸುವನೇ? ನನ್ನನ್ನು ಕೆರಳಿಸಿದೆ; ಇನ್ನೇನು ನಿನ್ನ ಕಷ್ಟವು ನನ್ನದು; ನಾಯಿ ಜಾರ ಕೀಚಕನನ್ನು ಕರೆದು ಸಂಕೇತದಲ್ಲಿ ನಾಟ್ಯಮಂದಿರಕ್ಕೆ ಬರುವಂತೆ ಸೂಚಿಸು, ಎಂದನು ಭೀಮ.
ಅಲ್ಲಿಗಿರುಳೈತಂದು ಮರೆಯಲಿ
ಖುಲ್ಲನುದರವ ಬಗಿದು ರಕುತವ
ಚೆಲ್ಲುವೆನು ಶಾಕಿನಿಯರಿಗೆ ಸಂದೇಹ ಬೇಡಿದಕೆ |
ಅಲ್ಲಿ ಕೆಲಬಲನರಿದುದಾದೊಡೆ
ಬಲ್ಲೆನದಕೌಷಧಿಯ ಕರೆ ಮರೆ
ಯಿಲ್ಲ ಮಾನಿನಿ ಹೋಗೆನುತ ಬೀಳ್ಕೊಟ್ಟನಂಗನೆಯ || ೭೨ ||
ಪದವಿಭಾಗ-ಅರ್ಥ: ಅಲ್ಲಿಗೆ+ ಇರುಳು+ ಐತಂದು ಮರೆಯಲಿ ಖುಲ್ಲನ+ ಉದರವ ಬಗಿದು ರಕುತವ ಚೆಲ್ಲುವೆನು ಶಾಕಿನಿಯರಿಗೆ ಸಂದೇಹ ಬೇಡಿದಕೆ= ಅಲ್ಲಿಗೆ- ನಾಟ್ಯ ಮಂದಿರಕ್ಕೆ+ ಇರುಳು- ರಾತ್ರಿಯಲ್ಲಿ,+ ಐತಂದು- ಬಂದು, ಮರೆಯಲಿ ಖುಲ್ಲನ(ನೀಚನ)+ ಉದರವ(ಹೊಟ್ಟೆಯನ್ನು) ಬಗಿದು ರಕುತವ ಚೆಲ್ಲುವೆನು- ಶಾಕಿನಿಯರಿಗೆ, ಸಂದೇಹ ಬೇಡ+ ಇದಕೆ- ಇದಕ್ಕೆ;//ಅಲ್ಲಿ ಕೆಲಬಲನ (ಉಳಿದ ಕೆಲವರು)-ನು+ ಅರಿದುದಾದೊಡೆ- ಅದನ್ನು ತಿಳಿದರೆ, ಬಲ್ಲೆನು+ ಅದಕೆ+ ಔಷಧಿಯ= ಬಲ್ಲೆನು+ ಅದಕ್ಕೆ ಪರಿಹಾರವನ್ನು ಬಲ್ಲೆನು.// ಕರೆ ಮರೆಯಿಲ್ಲ ಮಾನಿನಿ ಹೋಗು+ ಎನುತ ಬೀಳ್ಕೊಟ್ಟನು+ ಅಂಗನೆಯ= ಕೀಚಕನನ್ನು ನಾಟ್ಯ ಮಂದಿರಕ್ಕೆ ಕರೆ; ಮರೆಯಿಲ್ಲ- ತಪ್ಪುವುದಿಲ್ಲ, ಮಾನಿನಿ-ದ್ರೌಪದಿ, ಹೋಗು+ ಎನುತ (ಭೀಮನು) ಬೀಳ್ಕೊಟ್ಟನು+ ಅಂಗನೆಯ- ವನಿತೆಯ.
ಅರ್ಥ: ನಾಟ್ಯ ಮಂದಿರಕ್ಕೆ ರಾತ್ರಿಯಲ್ಲಿ ಬಂದು, ಮರೆಯಲ್ಲಿ ನೀಚನ ಹೊಟ್ಟೆಯನ್ನು ಬಗೆದು, ಅದನ್ನು ಸ್ಮಶಾನದ ಪಿಶಾಚಿಗಳಾದ ಶಾಕಿನಿಯರಿಗೆ ರಕ್ತವನ್ನು ಚೆಲ್ಲುವೆನು . ಇದರ ಬಗೆಗೆ ಸಂದೇಹ ಬೇಡ; ಅಲ್ಲಿರುವ ಉಳಿದ ಕೆಲವರು ಅದನ್ನು ತಿಳಿದರೆ, ಅದಕ್ಕೆ ಪರಿಹಾರವನ್ನು ಬಲ್ಲೆನು. ಕೀಚಕನನ್ನು ನಾಟ್ಯಮಂದಿರಕ್ಕೆ ಕರೆ; ತಪ್ಪುವುದಿಲ್ಲ, ದ್ರೌಪದಿ ಹೋಗು ಎನ್ನುತ್ತಾ ಭೀಮನು ಅವಳನ್ನು ಬೀಳ್ಕೊಟ್ಟನು.
ಹರುಷದಲಿ ಹೆಚ್ಚಿದಳು ಪುರುಷರ
ಪುರುಷನಲ್ಲಾ ಭೀಮ ತನ್ನಯ
ಪರಮ ಸುಕೃತೋದಯವಲಾ ನೀನೊಬ್ಬನೆಂದೆನುತ
ಅರಸಿ ಕಾಂತನ ಬೀಳುಕೊಂಡಳು
ತಿರುಗಿದಳು ನಿಜಭವನಕಿತ್ತಲು
ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ ೭೩
ಪದವಿಭಾಗ-ಅರ್ಥ: ಹರುಷದಲಿ ಹೆಚ್ಚಿದಳು= ದ್ರೌಪದಿಯು ಸಂತೋಷದಿಂದ ಉಬ್ಬಿಹೋದಳು; ಪುರುಷರ ಪುರುಷನಲ್ಲಾ ಭೀಮ ತನ್ನಯ ಪರಮ ಸುಕೃತೋದಯವಲಾ ನೀನೊಬ್ಬನು+ ಎಂದು+ ಎನುತ ಅರಸಿ ಕಾಂತನ ಬೀಳುಕೊಂಡಳು= ಭೀಮಾ ನೀನು ಪುರುಷರಲ್ಲಿ ಪುರುಷನಲಾ -ಪುರುಷನಲ್ಲವೇ! ನೀನೊಬ್ಬನು ತನ್ನಯ ಪರಮ ಪುಣ್ಯದ ಉದಯವಲಾ! ಎಂದು ಹೇಳುತ್ತಾ ಭೀಮನ ಅರಸಿ ಗಂಡನ ಬೀಳ್ಕೊಂಡಳು. ತಿರುಗಿದಳು, ನಿಜಭವನಕೆ+ ಇತ್ತಲು ತರಣಿ(ಸೂರ್ಯ) ತೆಗೆದನು ತಾವರೆಯ ಬಾಗಿಲಿನ ಬೀಯಗವ= ತನ್ನ ವಸತಿಗೆ ಹಿಂತಿರುಗಿ ಬಂದಳು. ನಂತರ ಇತ್ತ ಪೂರ್ದದಲ್ಲಿ ಮುಚ್ಚಿದ ತಾವರೆಯ ಹೂವಿನ ಬಾಗಿಲ ಬೀಗವನ್ನು ತನ್ನ ಕಿರಣಗಳ ಬೀಗದಕೈಯಿಂದ ತೆಗೆದು ಅರಳುಂತೆ ಮಾಡಿದನು. ಸೂರ್ಯೊದಯವಾಯಿತು; ಕಮಲದ ಹೂವುಗಳು ಅರಳಿದವು.
ಅರ್ಥ: ದ್ರೌಪದಿಯು ಸಂತೋಷದಿಂದ ಉಬ್ಬಿಹೋದಳು; ಭೀಮಾ ನೀನು ಪುರುಷರಲ್ಲಿ ಪುರುಷನಲಾ -ಪುರುಷನಲ್ಲವೇ! ನೀನೊಬ್ಬನು ತನ್ನ ಪರಮ ಪುಣ್ಯದ ಉದಯವಲಾ!- ಉದಯವು, ಎಂದು ಹೇಳುತ್ತಾ ಭೀಮನ ರಾಣಿ ಗಂಡನನ್ನು ಬೀಳ್ಕೊಂಡಳು. ಅವಳು ತನ್ನ ವಸತಿಗೆ ಹಿಂತಿರುಗಿ ಬಂದಳು. ನಂತರ ಇತ್ತ ಪೂರ್ದದಲ್ಲಿ ಸೂರ್ಯೊದಯವಾಯಿತು; ಕಮಲದ ಹೂವುಗಳು ಅರಳಿದವು.
ಆ ದಿವಸವರಮನೆಗೆ ಬರುತ ವೃ
ಕೋದರನ ವಲ್ಲಭೆಯ ಕಂಡನು
ಕೈದುಡುಕಲಂಜಿದನು ಮಾತಾಡಿಸಿದನಂಗನೆಯ ||
ಹೋದಿರುಳು ಯುಗವಾಗಿ ಸವೆದುದು
ನೀ ದಯಾಂಬುಧಿ ಕುಸುಮಶರ ಯಮ
ನಾದನದ ನೀ ಬಲ್ಲೆಯೆಂದನು ಕೀಚಕನು ನಗುತ || ೭೪ ||
ಪದವಿಭಾಗ-ಅರ್ಥ: ಆ ದಿವಸವು+ ಅರಮನೆಗೆ ಬರುತ ವೃಕೋದರನ ವಲ್ಲಭೆಯ ಕಂಡನು ಕೈದುಡುಕಲು+ ಅಂಜಿದನು ಮಾತಾಡಿಸಿದನು+ ಅಂಗನೆಯ= ಬೀಮನ ಭರವಸೆಯ ಮರುದಿನ, ಆ ದಿನ ಕೀಚಕನು ಅರಮನೆಗೆ ಬರುವಾಗ ವೃಕೋದರನ ಪತ್ನಿಯನ್ನು ಕಂಡನು. ಅವನು ಕೈದುಡುಕಿ ಕೆಣಕಲು ಅಂಜಿದನು. ಆದರೆ ನಯವಾಗಿ ಅವಳನ್ನು ಮಾತನಾಡಿಸಿದನು. // ಹೋದ+ ಇರುಳು ಯುಗವಾಗಿ ಸವೆದುದು ನೀ ದಯಾಂಬುಧಿ(ದಯೆಯ ಸಮುದ್ರ) ಕುಸುಮಶರ(ಕಾಮನು) ಯಮನಾದನು+ ಅದ ನೀ ಬಲ್ಲೆಯೆಂದನು ಕೀಚಕನು ನಗುತ= ಸೈರಂದ್ರೀ ಹೋದ ರಾತ್ರಿಯು ನಿದ್ದೆಬರದೆ ಯುಗವಾಗಿ ಕಳೆಯಿತು. ನೀನು ದಯೆಯ ಸಮುದ್ರ; ನನಗೆ ಕಾಮನು ಯಮನಾದನು. ಅವನಿಂದ ಸಾಯುವಷ್ಟು ವಿರಹತಾಪದ ಸಂಕಟವಾಯಿತು. ಅದನ್ನು ನೀನು ಬಲ್ಲೆಯೆಂದನು ಕೀಚಕನು ನಗುತ್ತಾ.
ಅರ್ಥ: ಬೀಮನು ಭರವಸೆಯನ್ನು ಕೊಟ್ಟ ಮರುದಿನ, (ಆ ದಿನ) ಕೀಚಕನು ಅರಮನೆಗೆ ಬರುವಾಗ ವೃಕೋದರನ ಪತ್ನಿ ದ್ರೌಪದಿಯನ್ನು ಕಂಡನು. ಅವನು ಕೈದುಡುಕಿ ಕೆಣಕಲು ಅಂಜಿದನು. ಆದರೆ ನಯವಾಗಿ ಅವಳನ್ನು ಮಾತನಾಡಿಸಿದನು. ಸೈರಂದ್ರೀ ಹೋದ ರಾತ್ರಿಯು ನಿದ್ದೆಬರದೆ ಯುಗವಾಗಿ ಕಳೆಯಿತು. ನೀನು ದಯೆಯ ಸಮುದ್ರ; ನನಗೆ ಕಾಮನು ಯಮನಾದನು. ಅವನಿಂದ ಸಾಯುವಷ್ಟು ವಿರಹತಾಪದ ಸಂಕಟವಾಯಿತು. ಅದನ್ನು ನೀನು ಬಲ್ಲೆಯೆಂದನು ಕೀಚಕನು ನಗುತ್ತಾ.
ಕುಸುಮಶರ ಯಮನಹನು ಅಮೃತವು
ವಿಷವಹುದು ಬಳಿಕಾಲಿಕಲುಗಳು
ಬಿಸಿಯಹವು ಬಾಂಧವರು ವೈರಿಗಳಹರು ನಿಮಿಷದಲಿ |
ಒಸೆದರೊಲ್ಲದರಹರು ಲೋಗರ
ಶಶಿವದನೆಗಳುಪಿದ ದುರಾತ್ಮನ
ವಸುಧೆ ಹೊರದೆಲೆ ಪಾಪಿ ಕೀಚಕಯೆಂದಳಿಂದುಮುಖಿ || ೭೫ ||
ಪದವಿಭಾಗ-ಅರ್ಥ: ಕುಸುಮಶರ= ಕಾಮನು, ಯಮನು+ ಅಹನು= ಆಗುವನು, ಅಮೃತವು ವಿಷವಹುದು ಬಳಿಕ+ ಆಲಿಕಲುಗಳು ಬಿಸಿಯಹವು, ಬಾಂಧವರು ವೈರಿಗಳಹರು ನಿಮಿಷದಲಿ, ಒಸೆದರೆ(ಹೇಳಿದರೆ)+ ಒಲ್ಲದರಹರು(ವಿರೋಧಿಗಳಾಗುವರು;) ಲೋಗರ ಶಶಿವದನೆಗೆ (ಸ್ತ್ರೀಯರಿಗೆ ಪತ್ನಿಯರಿಗೆ)+ ಅಳುಪಿದ(ಆಸೆಪಟ್ಟ) ದುರಾತ್ಮನ ವಸುಧೆ(ಭೂಮಿ) ಹೊರದು+ ಎಲೆ ಪಾಪಿ ಕೀಚಕಯೆಂದಳು+ ಇಂದುಮುಖಿ
ಅರ್ಥ: ಕಾಮುಕರಿಗೆ ಕಾಮನು ಯಮನೇ ಆಗುವನು, ಅಮೃತವು ವಿಷವಾಗುವುದು, ಬಳಿಕ ಆಲಿಕಲ್ಲುಗಳು ಬಿಸಿಯಾಗುವುದು, ನಿಮಿಷದಲಿ ಬಾಂಧವರು ವೈರಿಗಳಾಗುವರು, ಅವರಿಗೆ ಬುದ್ಧಿ ಹೇಳಿದರೆ ಹೇಳಿದವರೇ ವಿರೋಧಿಗಳಾಗುವರು; ಹೀಗೆ ಕಂಡವರ ಪತ್ನಿಯರಿಗೆ ಆಸೆಪಟ್ಟ ದುರಾತ್ಮನ ಭೂಮಿ ಹೊರದು, ಎಲೆ ಪಾಪಿ ಕೀಚಕನೇ ಎಂದಳು ಸೈರಂದ್ರಿ.
ಬಳಿಕ ನಿನ್ನ ಪುರಾಣ ಧರ್ಮವ
ತಿಳಿದುಕೊಂಬೆನಿದೊಮ್ಮೆ ನಿನ್ನಯ
ಲಲಿತ ಕರುಣ ಕಟಾಕ್ಷಕವಚವ ತೊಡಿಸಿ ತನ್ನೊಡಲ |
ಅಳುಕದೆಸುವ ಮನೋಜನಂಬಿನ
ಹುಳುಕ ಮುರಿ ಡಿಂಗರಿಗನಹೆನೆಂ
ದಳಿಮನದಲಾ ಖೂಳನಬುಜಾನನೆಗೆ ಕೈಮುಗಿದ || ೭೬ ||
ಪದವಿಭಾಗ-ಅರ್ಥ:ಬಳಿಕ ನಿನ್ನ ಪುರಾಣ ಧರ್ಮವ ತಿಳಿದುಕೊಂಬೆನು+ ಇದೊ+ ಒಮ್ಮೆ ನಿನ್ನಯ ಲಲಿತ ಕರುಣ ಕಟಾಕ್ಷಕವಚವ(ಕರುಣೆಯ ಕಣ್ಣು ನೋಟದ) ತೊಡಿಸಿ ತನ್ನ+ ಒಡಲ ಅಳುಕದೆ(ಕರುಣೆ ಇಲ್ಲದೆ)+ ಎಸುವ ಮನೋಜನಂಬಿನ(ಕಾಮನ ಬಾಣದ ಹೊಡೆತವ) ಹುಳುಕ(ನೋವ) ಮುರಿ (ತೆಗಿ) ಡಿಂಗರಿಗನು(ಭಕ್ತಸೇವಕನು)+ ಅಹೆನೆಂದು (ಆಗುವೆನು)+ ಅಳಿಮನದಲಿ (ಸೋತಮನಸ್ಸಿನಲ್ಲಿ)+ ಆ ಖೂಳನು+ ಅಬುಜ+ ಆನನೆಗೆ (ಕಮಲ ಮುಖಿಗೆ) ಕೈಮುಗಿದ.
(ಹುಳುಕ ಮುರಿ= ಉಳುಕ ಮುರಿ- ಉಳುಕು ತೆಗೆ- ಉಳುಕಿ ನೋವಾಗಿದ್ದರೆ ಕೆಲವರು 'ಉಳುಕು ಮರಿಯುವುದು' ಎಂಬ ಕ್ರಿಯೆಯಿಂದ ಉಳುಕನ್ನು ಅದನ್ನು ತೆಗೆಯುವ ಕ್ರಮ ಇತ್ತು- ಈಗಲೂ ಇರಬಹುದು, ಉಳಕಿದ ಕಾಲಿಗೆ ಅಥವಾ ಆಭಾಗಕ್ಕೆ ಮನಸ್ಸಿನಲ್ಲ ಮಂತ್ರಹೇಳುತ್ತಾ ಸವರಿ- ಕೊಡವಿ, ಉಳುಕು ತೆಗೆಯುವರು- ಕಾಲು ಉಳುಕಿದ್ದರೆ ಹೆಜ್ಜೆಹೆಜ್ಜೆಗೆ ತಾಳಲಾರದ ನೋವು- ಕೀಚಕ ತನ್ನ ಮನಸ್ಸಿಗೆ ಆದ ಉಳುಕಿನಂತಹ ನೋವನ್ನು, ತನ್ನೊಡನೆ ಸೇರಿ ಆ ನೋವನ್ನು ನಿವಾರಿಸು ಎಂಬ ಭಾವ )
ಅರ್ಥ: 'ಆ ನಂತರ ನಿನ್ನ ಪುರಾಣವನ್ನೂ, ಧರ್ಮವನ್ನೂ ತಿಳಿದುಕೊಳ್ಳುವೆನು; ಇದೊ! ಒಮ್ಮೆ ನಿನ್ನ ಲಲಿತ ಕರುಣ ಕರುಣೆಯ ಕಣ್ಣು ನೋಟವನ್ನು ನನಗೆ ತೊಡಿಸಿ ತನ್ನ ದೇಹದ ಕರುಣೆ ಇಲ್ಲದೆ ಹೊಡೆಯುತ್ತಿರುವ, ಕಾಮನ ಬಾಣದ ಹೊಡೆತದಿಂದಾದ ಉಳುಕಿದ ನೋವನ್ನು ತೆಗಿ. ನಾನು ನಿನ್ನ ಭಕ್ತಸೇವಕನಾಗುವೆನು ಎಂದು' ಆ ಖೂಳನು ಸೋತಮನಸ್ಸಿನಿಂದ ದ್ರೌಪದಿಗೆ ಕೈಮುಗಿದ.
ಅರಿದರಾದೊಡೆ ನಿನ್ನ ವಂಶವ
ತರಿವರೆನ್ನವರೆಲವೊ ಕೆಲಬಲ
ನರಿಯದಂದದಿ ಬಂದು ನಾಟ್ಯದ ಗರುಡಿಯೊಳಗಿಹುದು |
ನೆರೆದುದಾಯುಷ ನಿನಗೆ ಕತ್ತಲೆ
ಮನೆಯೊಳಾನೈತಹೆನುಯೆನ್ನನು
ಮರೆದು ನೀ ಬಿಡೆಯಾದುದಾಗಲಿಯೆಂದಳಿಂದುಮುಖಿ || ೭೭ ||
ಪದವಿಭಾಗ-ಅರ್ಥ: ಅರಿದರಾದೊಡೆ- ಅರಿತರು - ಅರಿತವರು+ ಆದೊಡೆ- (ನೀನು ನನ್ನೊಡನೆ ಸೇರುವುದು ಅವರಿಗೆ ತಿಳಿದರೆ) ನಿನ್ನ ವಂಶವ ತರಿವರು+ ಎನ್ನವರು+ ಎಲವೊ ಕೆಲಬಲನು ಅರಿಯದಂದದಿ(ಆಚೆ ಈಚೆಯವರು ತಿಳಿಯದಂತೆ) ಬಂದು ನಾಟ್ಯದ ಗರುಡಿಯೊಳಗೆ ಇಹುದು- ನೀನು ಇರುವುದು, ನೆರೆದುದು(ತುಂಬಿದೆ) ಆಯುಷ ನಿನಗೆ, ಕತ್ತಲೆಮನೆಯೊಳು + ಆನು+ ಐತಹೆನು+ ಯ+ ಎನ್ನನು ಮರೆದು (ಮರೆತು) ನೀ ಬಿಡೆ+ ಯ+ ಆದುದಾಗಲಿ+ ಯ+ ಎಂದಳು+ ಇಂದುಮುಖಿ, ಚಂದ್ರನಂತೆ ಮುಖವುಳ್ಳವಳು- ದ್ರೌಪದಿ.
ಅರ್ಥ: ನೀನು ನನ್ನೊಡನೆ ಸೇರುವುದು ಅವರಿಗೆ(ನನ್ನ ಪತಿಗಳಿಗೆ) ತಿಳಿದರೆ, ನನ್ನವರು ನಿನ್ನ ವಂಶವನ್ನು ತರಿವು ಹಾಕುವರು. ಎಲವೊ ಆಚೆ ಈಚೆಯವರು ಯಾರೂ ತಿಳಿಯದಂತೆ ಬಂದು ನಾಟ್ಯದ ಗರುಡಿಯೊಳಗೆ ನೀನು ಇರು; ನಿನಗೆ ಆಯುಷ ತುಂಬಿದೆ ಕತ್ತಲೆಮನೆಯೊಳು ನಾನು ಬರುವೆನು. ನನ್ನನ್ನು ಮರೆತುಬಿಡು ಎಂದರೂ ನೀನು ಬಿಡೆ, ಬಿಡುವುದಿಲ್ಲ. ಆದುದಾಗಲಿ ಎಂದಳು ದ್ರೌಪದಿ.
ಖಳ ಹಸಾದವ ಹಾಯ್ಕಿ ತನ್ನಯ
ನಿಳಯಕೈದಿದನಬುಜ ಬಾಂಧವ
ನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ |
ನಳಿನಮುಖಿ ನಲವೇರಿ ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ಕಂಗಳ
ಬೆಳಗು ಬಟ್ಟೆಯ ತೋರೆ ಬಂದಳು ಬಾಣಸಿನ ಮನೆಗೆ || ೭೮ ||
ಪದವಿಭಾಗ-ಅರ್ಥ: ಖಳ ಹಸಾದವ ಹಾಯ್ಕಿ ತನ್ನಯ ನಿಳಯಕೆ+ ಐದಿದನು+ ಅಬುಜ ಬಾಂಧವ ನಿಳಿದನು+ ಅಸ್ತಾಚಲದ ತಪ್ಪಲ ತಾವರೆಯ ಬನಕೆ= ಖಳ ಕೀಚಕನು ಹಸಾದವ ಹಾಯ್ಕಿ-ಒಪ್ಪಿಗೆಯ ವಚನಹಾಕಿ, ಆಯಿತು- ಅಪ್ಪಣೆ ಪಡೆದೆನು ಎಂದು ಹೇಳಿ, ತನ್ನಯ ನಿಳಯಕೆ(ಅರಮನೆಗೆ)+ ಐದಿದನು(ಹೋದನು)+ ಅಬುಜ ಬಾಂಧವನು(ಕಮಲದ ಪತಿ -ಸೂರ್ಯ)+ ಇಳಿದನು+ ಅಸ್ತಾಚಲದ ತಪ್ಪಲ ತಾವರೆಯ ಬನಕೆ(ಅಸ್ತ-ಮುಳುಗುವ+ ಆಚಲ- ಪರ್ವತ- ಪಶ್ಚಿಮ ಪರ್ವತದ ತಪ್ಪಲಿನ ಸರೋವರಕ್ಕೆ)// ನಳಿನಮುಖಿ- ಕಮಲಮುಖಿ- ದ್ರೌಪದಿ, ನಲವೇರಿ- ನಲವು + ಏರಿ- ಹೆಚ್ಚಿ - ಸಂತೋಷದಿಂದ, ಕಗ್ಗತ್ತಲೆಯ ಹಬ್ಬುಗೆಯೊಳಗೆ (ಹಬ್ಬಿದ ಕತ್ತಲೆಯಲ್ಲಿ) ಕಂಗಳ ಬೆಳಗು ಬಟ್ಟೆಯ(ದಾರಿಯನ್ನು) ತೋರೆ ಬಂದಳು ಬಾಣಸಿನ ಮನೆಗೆ= ಅಡುಗೆಯಮನೆಗೆ.
ಅರ್ಥ: ಖಳ ಕೀಚಕನು ಒಪ್ಪಿಗೆಯ ವಚನಹಾಕಿ, ಆಯಿತು- ಎಂದು ಅಪ್ಪಣೆ ಪಡೆದೆನು ಎಂದು ಹೇಳಿ, ತನ್ನ ಅರಮನೆಗೆ ಹೋದನು. ಸೂರ್ಯನು ಪಶ್ಚಿಮ ಪರ್ವತದ ತಪ್ಪಲಿನ ಸರೋವರಕ್ಕೆ + ಇಳಿದನು. ದ್ರೌಪದಿಯು ಸಂತೋಷದಿಂದ, ಹಬ್ಬಿದ ಕತ್ತಲೆಯಲ್ಲಿ ತನ್ನ ಕಣ್ಣುಗಳ ಬೆಳಕು ದಾರಿಯನ್ನು ತೋರಿಸಲು ಬಂದಳು ಭೀಮನಿದ್ದ ಅಡುಗೆಯ ಮನೆಗೆ.
ಭೀಮ ನಿಂದಿರು ನಾಟ್ಯನಿಲಯವ
ನಾ ಮದಾಂಧಗೆ ನುಡಿದು ಬಂದೆನು
ತಾಮಸವ ಮಾಡದಿರು ಹೂಡದಿರಲ್ಪಬುದ್ಧಿಗಳ |
ಕಾಮುಕನನಡೆಗೆಡಹಿ ನಿಜ ಸು
ಪ್ರೇಮವನು ತೋರೆನಲು ನಗುತು
ದ್ದಾಮನೆದ್ದನು ಘಳಿಯನುಟ್ಟನು ಮಲ್ಲಗಂಟಿನಲಿ || ೭೯ ||
ಪದವಿಭಾಗ-ಅರ್ಥ: ಭೀಮ ನಿಂದಿರು ನಾಟ್ಯನಿಲಯವನು+ ಆ ಮದಾಂಧಗೆ ನುಡಿದು ಬಂದೆನು= ಭೀಮಾ ನೀನು ನಾಟ್ಯಮಂದಿರವನ್ನು ಸೇರಿ ಅಲ್ಲಿ ನಿಂತಿರು. ಆ ಮದಾಂಧಗೆ- ಸೊಕ್ಕಿನ ಅಹಂಕಾರಿಗೆ ನುಡಿದು= ಹೇಳಿ ಬಂದೆನು= ಬಂದಿದ್ದೇನೆ.//ತಾಮಸವ(ತಡ) ಮಾಡದಿರು ಹೂಡದಿರು+ ಅಲ್ಪಬುದ್ಧಿಗಳ= ತಡ ಮಾಡಬೇಡ ಹೋಗಲೇ ಬೇಡವೋ, ಎಂದು ಸಣ್ಣ ಸಣ್ಣ ವಿಚಾರ ಮಾಡಬೇಡ. // ಕಾಮುಕನನು+ ಅಡೆಗೆಡಹಿ ನಿಜ ಸುಪ್ರೇಮವನು ತೋರು+ ಎನಲು ನಗುತ+ ಉದ್ದಾಮನು+ ಎದ್ದನು ಘಳಿಯನು (ಮಡಿಕೆ ಮಾಡಿದ ಮಲ್ಲಯುದ್ಧದ ಬಟ್ಟೆಯನ್ನು)+ ಉಟ್ಟನು ಮಲ್ಲಗಂಟಿನಲಿ= ಕಾಮುಕ ಕೀಚಕನನ್ನು ಸಾಯಿಸಿ ಅಡ್ಡಕೆಡಗಿ- ಅಡಿಗೆ- ಕೆಳಗೆ ಕೆಡಹಿ- ಕೆಡಗಿ, ನಿಜ=ತನ್ನ- ನಿನ್ನ ಸುಪ್ರೇಮವನು ತೋರಿಸು ಎನ್ನಲು ನಗುತ+ ಉದ್ದಾಮನು- ಶ್ರೇಷ್ಠನಾದ ಭೀಮನು ಎದ್ದನು, ಘಳಿಯನು(ಬಟ್ಟೆ- ಮಡಿಕೆ- ಘಳಿಗೆಮಾಡಿಟ್ಟ ಬಟ್ಟೆ)= ಮಡಿಕೆ ಮಾಡಿದ ಮಲ್ಲಯುದ್ಧದ ಬಟ್ಟೆಯನ್ನು ಮಲ್ಲಗಂಟನ್ನು ಹಾಕಿ ಉಟ್ಟನು.
ಅರ್ಥ:ಭೀಮಾ ನೀನು ನಾಟ್ಯಮಂದಿರವನ್ನು ಸೇರಿ ಅಲ್ಲಿ ನಿಂತಿರು. ಸೊಕ್ಕಿನ ಅಹಂಕಾರಿಗೆ ನೀನು ಹೇಳಿದಂತೆ ಹೇಳಿ ಬಂದಿದ್ದೇನೆ. ತಡ ಮಾಡಬೇಡ ಹೋಗಲೇ ಬೇಡವೋ, ಎಂದು ಸಣ್ಣ ಸಣ್ಣ ವಿಚಾರ ಮಾಡಬೇಡ. ಕಾಮುಕ ಕೀಚಕನನ್ನು ಸಾಯಿಸಿ ಅಡ್ಡಕೆಡಗಿ ಕೆಳಗೆ ಕೆಡಗಿ , ನಿನ್ನ ಸುಪ್ರೇಮವನ್ನು ತೋರಿಸು, ಎನ್ನಲು ನಗುತ್ತಾ ಶ್ರೇಷ್ಠನಾದ ಭೀಮನು ಎದ್ದನು; ಮಡಿಕೆ ಮಾಡಿಟ್ಟಿದ್ದ ಮಲ್ಲಯುದ್ಧದ ಬಟ್ಟೆಯನ್ನು ಮಲ್ಲಗಂಟನ್ನು ಹಾಕಿ ಉಟ್ಟನು.
ಖಳನ ಮುರಿಯೆಂದಬಲೆ ನೊಸಲಲಿ
ತಿಲಕವನು ರಚಿಸಿದಳು ಸೇಸೆಯ
ತಳಿದಳೇರಿಸಿ ತಿಗುರ ಗೆಲಿದಳು ಹಿಣಿಲ ಹೊಸ ಪರಿಯ |
ಬಲುಭುಜನ ಹರಸಿದಳು ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ನಾಟ್ಯದ
ನಿಳಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ || ೮೦ ||
ಪದವಿಭಾಗ-ಅರ್ಥ: ಖಳನ ಮುರಿಯೆಂದು+ ಅಬಲೆ ನೊಸಲಲಿ ತಿಲಕವನು ರಚಿಸಿದಳು, ಸೇಸೆಯ ತಳಿದಳು+ ಏರಿಸಿ ತಿಗುರ ಗೆಲಿದಳು ಹಿಣಿಲ ಹೊಸ ಪರಿಯ ಬಲುಭುಜನ ಹರಸಿದಳು.// ಕಗ್ಗತ್ತಲೆಯ ಹಬ್ಬುಗೆಯೊಳಗೆ ನಾಟ್ಯದ ನಿಳಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ. // ಖಳನ ಮುರಿಯೆಂದು= ನೀಚನನ್ನು ಕೊಲ್ಲು ಎಂದು, ಅಬಲೆ= ದ್ರೌಪದಿ, ನೊಸಲಲಿ ತಿಲಕವನು ರಚಿಸಿದಳು= (ಭೀಮನ) ಹಣೆಯಲ್ಲಿ ತಿಕವನ್ನು ಹಚ್ಚಿದಳು, ಸೇಸೆಯ ತಳಿದಳು(ಮಂಗಳಾಕ್ಷತೆಯನ್ನು ಅವನ ಮೇಲೆ ಹಾಕಿದಳು.)+ ಏರಿಸಿ ತಿಗುರ= ಪರಿಮಳದ್ರವ್ಯವನ್ನು ಹಚ್ಚಿ, ಗೆಲಿದಳು ಹಿಣಿಲ= ತಲೆಕೂದಲನ್ನು ಎತ್ತಿಕಟ್ಟಿದಳು, ಹೊಸ ಪರಿಯ ಬಲುಭುಜನ ಹರಸಿದಳು.= ಹೊಸರೀತಿಯಲ್ಲಿ ಕಾಣುವ ಭೀಮನನ್ನು ಗೆಲುವಾಗಲಿ ಎಂದು ಹರಸಿದಳು.// ಕಗ್ಗತ್ತಲೆಯ ಹಬ್ಬುಗೆಯೊಳಗೆ ನಾಟ್ಯದ ನಿಳಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ= ರಾತ್ರಿಯಲ್ಲಿ ಬಂದು ಹಬ್ಬಿದ ಕತ್ತಲೆಯಲ್ಲಿ ನಾಟ್ಯದ ಮನೆಯ ಮಣಿಮಂಚದ ಮೇಲೆ ಮಲಗಿದ.
ಅರ್ಥ: ನೀಚ ಕೀಚಕನನ್ನು ಕೊಲ್ಲು ಎಂದು ದ್ರೌಪದಿ, ಭೀಮನ ಹಣೆಯಲ್ಲಿ ತಿಕವನ್ನು ಹಚ್ಚಿದಳು, ಮಂಗಳಾಕ್ಷತೆಯನ್ನು ಅವನ ಮೇಲೆ ಹಾಕಿದಳು.ಪರಿಮಳದ್ರವ್ಯವನ್ನು ಮೈಗೆ ಹಚ್ಚಿ, ತಲೆಕೂದಲನ್ನು ಎತ್ತಿಕಟ್ಟಿದಳು, ಹೊಸರೀತಿಯಲ್ಲಿ ಕಾಣುವ ಭೀಮನನ್ನು ಗೆಲುವಾಗಲಿ ಎಂದು ಹರಸಿದಳು. ರಾತ್ರಿಯಲ್ಲಿ ಬಂದು ಹಬ್ಬಿದ ಕತ್ತಲೆಯಲ್ಲಿ ನಾಟ್ಯದ ಮನೆಯ ಮಣಿಮಂಚದ ಮೇಲೆ ಮಲಗಿದ.

ಕೀಚಕನ ವಧೆ[ಸಂಪಾದಿಸಿ]

ಉರಿವ ಮಾರಿಯ ಬೇಟದಾತನು
ತುರುಗಿದನು ಮಲ್ಲಿಗೆಯ ಮೊಗ್ಗೆಯ
ನಿರಿಕಿ ತಾ ಪೂಸಿದನು ಸಾದು ಜವಾಜಿ ಕತ್ತುರಿಯ |
ಮೆರೆವ ಗಂಡುಡಿಗೆಯನು ರಚಿಸಿದ
ಸೆರಗಿನೊಯ್ಯಾರದಲಿ ಸುರಗಿಯ
ತಿರುಹಿತಿರುಳೊಬ್ಬನೆ ನಿಜಾಲಯದಿಂದ ಹೊರವಂಟ || ೮೧ ||
ಪದವಿಭಾಗ-ಅರ್ಥ: ಉರಿವ ಮಾರಿಯ ಬೇಟದಾತನು ತುರುಗಿದನು ಮಲ್ಲಿಗೆಯ ಮೊಗ್ಗೆಯ ನಿರಿಕಿ ತಾ ಪೂಸಿದನು ಸಾದು ಜವಾಜಿ ಕತ್ತುರಿಯ ಮೆರೆವ ಗಂಡು+ ಉಡಿಗೆಯನು ರಚಿಸಿದ ಸೆರಗಿನ+ ಒಯ್ಯಾರದಲಿ ಸುರಗಿಯ ತಿರುಹಿತ+ ಇರುಳು+ ಒಬ್ಬನೆ ನಿಜಾಲಯದಿಂದ ಹೊರವಂಟ.
ಉರಿವ ಮಾರಿಯ ಬೇಟದಾತನು= ಬೆಂಕಿಯಂತೆ ಉರಿಯುವ ಮಾರಿಯೊಡನೆ ಕಾಮದಾಟವಾಡುವ ಕೀಚಕನು;/ ತುರುಗಿದನು ಮಲ್ಲಿಗೆಯ ಮೊಗ್ಗೆಯ ನಿರಿಕಿ (ಒತ್ತಿ)= ತುರುಗಿದನು(ಒತ್ತಿ ತುಂಬು) ಮಲ್ಲಿಗೆಯ ಮೊಗ್ಗೆಗಳನ್ನು ತಲೆ ಕುತ್ತಿಗೆಗೆ, ದೇಹಕ್ಕೆ ತುರಕಿ ಒತ್ತಿ ಧರಿಸಿಕೊಂಡು; ತಾ ಪೂಸಿದನು ಸಾದು (ಹಣೆಗೆ ರಕ್ತಚಂದನದ ಗಂಧದ ತಿಲಕ) ಜವಾಜಿ ಕತ್ತುರಿಯ = ತಾನು ಮೈಗೆ ಸಾದು ಜವಾಜಿ ಕಸ್ತೂರಿ ಪರಿಮಳದ್ರವ್ಯಗಳನ್ನು ಪೂಸಿದನು(ಮೈತುಂಬಾ ಹಚ್ಚಿಕೊಳ್ಳುವುದು).// ಮೆರೆವ ಗಂಡು+ ಉಡಿಗೆಯನು ರಚಿಸಿದ ಸೆರಗಿನ+ ಒಯ್ಯಾರದಲಿ ಸುರಗಿಯ ತಿರುಹಿತ+ ಇರುಳು+ ಒಬ್ಬನೆ ನಿಜಾಲಯದಿಂದ(ತನ್ನ ಮನೆಯಿಂದ) ಹೊರವಂಟ= ಶೋಭಿಸುವ ಗಂಡು ಉಡಿಗೆಯನ್ನು ಉಟ್ಟು ಹೊದೆದ ಶಲ್ಯದ ಸೆರಗನ್ನು ಒಯ್ಯಾರದಿಂದ ಬೀಸುತ್ತಾ, ಪರಿಮಳದ ಸುರಗಿಯ ಹೂವಿನ ದಂಡೆಯನ್ನು ಕೈಯಲ್ಲಿ ತಿರುಗಿಸುತ್ತಾ,ರಾತ್ರಿಯಲ್ಲಿ ಒಬ್ಬನೆ ನಿಜಾಲಯದಿಂದ ಹೊರಹೊರಟನು.
ಅರ್ಥ: ಬೆಂಕಿಯಂತೆ ಉರಿಯುವ ಮಾರಿಯೊಡನೆ ಕಾಮದಾಟವಾಡಲು ಕೀಚಕನು ಮಲ್ಲಿಗೆಯ ಮೊಗ್ಗೆಗಳನ್ನು ತಲೆ ಕುತ್ತಿಗೆಗೆ, ದೇಹಕ್ಕೆ ತುರಕಿ ಒತ್ತಿ ಧರಿಸಿಕೊಂಡು, ತಾನು ಮೈಗೆ ಸಾದು, ಜವಾಜಿ, ಕಸ್ತೂರಿ ಪರಿಮಳದ್ರವ್ಯಗಳನ್ನು ಪೂಸಿದನು. ಶೋಭಿಸುವ ಗಂಡು ಉಡಿಗೆಯನ್ನು ಉಟ್ಟು ಸೆರಗನ್ನು ಒಯ್ಯಾರದಿಂದ ಬೀಸುತ್ತಾ, ಪರಿಮಳದ ಸುರಗಿಯ ಹೂವಿನ ದಂಡೆಯನ್ನು ಕೈಯಲ್ಲಿ ತಿರುಗಿಸುತ್ತಾ ರಾತ್ರಿಯಲ್ಲಿ ಒಬ್ಬನೆ ನಿಜಾಲಯದಿಂದ ಹೊರಹೊರಟನು.
ಕಾಲಪಾಶದಲೆಳಸಿಕೊಂಬ ಕ
ರಾಳಮತಿ ಸುಡುಗಾಡಲೈತಂ
ದಾಲಯವ ಹೊಕ್ಕನು ಕೃತಾಂತನ ಬಾಯ ಹೊಗುವಂತೆ |
ಮೇಲೆ ಮೇಲವಶಕುನ ಶತಕವ
ನಾಲಿಸದೆ ಸುಮ್ಮಾನದಲಿ ಕೇ
ಡಾಳಿ ಬಂದನು ಮಂಚವಿದ್ದೆಡೆಗಾಗಿ ತಡವರಿಸಿ || ೮೨ ||
ಪದವಿಭಾಗ-ಅರ್ಥ: ಕಾಲಪಾಶದಲಿ+ ಎಳಸಿಕೊಂಬ ಕರಾಳಮತಿ ಸುಡುಗಾಡಲಿ+ ಐತಂದು+ ಆಲಯವ ಹೊಕ್ಕನು ಕೃತಾಂತನ ಬಾಯ ಹೊಗುವಂತೆ ಮೇಲೆ ಮೇಲ+ ಅವಶಕುನ ಶತಕವನು+ ಆಲಿಸದೆ ಸುಮ್ಮಾನದಲಿ ಕೇಡಾಳಿ ಬಂದನು ಮಂಚವಿದ್ದ+ ಎಡೆಗಾಗಿ ತಡವರಿಸಿ.
ಕಾಲಪಾಶದಲಿ= ಯಮಪಾಶದಿಂದ ಎಳಸಿಕೊಂಬ= ಎಲಸಿಕೊಳ್ಳುವ, ಕರಾಳಮತಿ= ಕೆಟ್ಟಬುದ್ಧಿಯ, ಸುಡುಗಾಡಲಿ+ ಐತಂದು+ ಆಲಯವ ಹೊಕ್ಕನು= ಸ್ಮಶಾನದಲ್ಲಿ ಬಂದು ನಾಟ್ಯಶಾಲೆಯದ ಮನೆಯನ್ನುಹೊಕ್ಕನು, ಕೃತಾಂತನ ಬಾಯ ಹೊಗುವಂತೆ= ಯಮನ ಬಾಯನ್ನು ಹೊಗುವಂತೆ, ಮೇಲೆ ಮೇಲೆ+ ಅವಶಕುನ ಶತಕವನು+ ಆಲಿಸದೆ= ಮತ್ತೆಮತ್ತೆ ಒದಗಿದ ಅಪಶಕುನವನ್ನು ಕೇಳಿಸಿಕೊಳ್ಲದೆ, ಸುಮ್ಮಾನದಲಿ ಕೇಡಾಳಿ ಬಂದನು ಮಂಚವಿದ್ದ+ ಎಡೆಗಾಗಿ= ಸ್ಥಳಕ್ಕಾಗಿ, ತಡವರಿಸಿ= ಅಹಂಕಾರದಿಂದ ತಿಳಿಗೇಡಿ (ಕೇಡುಬುದ್ಧಿಯವ) ತಡವರಿಸುತ್ತಾ ಮಂಚವಿದ್ದ ಕಡೆಗೆ ಬಂದನು.
ಅರ್ಥ: ಯಮಪಾಶದಿಂದ ಎಳಸಿಕೊಳ್ಳುವ ಕೆಟ್ಟಬುದ್ಧಿಯವನು ಸ್ಮಶಾನದಲ್ಲಿ ಬಂದು ಯಮನ ಬಾಯನ್ನು ಹೊಗುವಂತೆ ನಾಟ್ಯಶಾಲೆಯ ಮನೆಯನ್ನು ಹೊಕ್ಕನು. ಮತ್ತೆಮತ್ತೆ ಒದಗಿದ ಅಪಶಕುನವನ್ನು ಕೇಳಿಸಿಕೊಳ್ಲದೆ, ಅಹಂಕಾರದಿಂದ ತಿಳಿಗೇಡಿ (ಕೇಡುಬುದ್ಧಿಯವ) ತಡವರಿಸುತ್ತಾ ಮಂಚವಿದ್ದ ಕಡೆಗೆ ಬಂದನು.
ವನಜಮುಖಿ ವೀಳೆಯವನನುಲೇ
ಪನವ ಮಲ್ಲಿಗೆಯರಳ ತೊಡಿಗೆಯ
ನನುಪಮಾಂಬರವಿದೆ ಮನೋಹರವಹರೆ ಚಿತ್ತೈಸು |
ನಿನಗೆ ಪಾಸಟಿಯಾನುಯೆನ್ನವೊ
ಲನಿಮಿಷರೊಳರಾರುಂಟು ಚೆಲುವರು
ಮನುಜರೆನ್ನನು ಹೋಲುವರೆ ಸೈರಂಧ್ರಿ ಕೇಳೆಂದ || ೮೩ ||
ಪದವಿಭಾಗ-ಅರ್ಥ: ವನಜಮುಖಿ ವೀಳೆಯವನು+ ಅನುಲೇಪನವ ಮಲ್ಲಿಗೆಯರಳ, ತೊಡಿಗೆಯನು+ ಅನುಪಮ+ ಅಂಬರವಿದೆ ಮನೋಹರವು+ ಅಹರೆ ಚಿತ್ತೈಸು ನಿನಗೆ ಪಾಸಟಿಯು+ ಆನು+ ಯೆ+ ಎನ್ನವೊಲು+ ಅನಿಮಿಷರೊಳು+ ಆರಾರುಂಟು ಚೆಲುವರು ಮನುಜರು+ ಎನ್ನನು ಹೋಲುವರೆ ಸೈರಂಧ್ರಿ ಕೇಳೆಂದ.
ವನಜಮುಖಿ (ಕಮಲದಂತೆ ಮುಖವುಳ್ಳವಳು), ವೀಳೆಯವನು+ ಅನುಲೇಪನವ ಮಲ್ಲಿಗೆಯರಳ(ಮಲ್ಲಿಗೆ ಹೂವಿನ) ತೊಡಿಗೆಯನು+ ಅನುಪಮ (ಅತ್ಯುತ್ತಮ)+ ಅಂಬರವಿದೆ(ಬಟ್ಟೆಯಿದೆ) ಮನೋಹರವು+ ಅಹರೆ(ಆಗಿದ್ದರೆ) ಚಿತ್ತೈಸು(ಕೇಳು) ನಿನಗೆ ಪಾಸಟಿಯು+ ಅನು(ತಕ್ಕವನು ನಾನು)+ ಯೆ+ ಎನ್ನವೊಲು+ ಅನಿಮಿಷರೊಳು(ದೇವತೆಗಳಲ್ಲಿ)+ ಆರಾರುಂಟು(ಆರು+ ಆರು+ ಉಂಟು- ಯಾರು ಯಾರು ಇದ್ದಾರೆ) ಚೆಲುವರು ಮನುಜರು+ ಎನ್ನನು(ನನ್ನನ್ನು) ಹೋಲುವರೆ ಸೈರಂಧ್ರಿ ಕೇಳೆಂದ.
ಅರ್ಥ: ಕೀಚಕ ನಾಟ್ಯಶಾಲೆಯ ಬಳಿಗೆ ಬಂದು, 'ಕಮಲದಂತೆ ಮುಖವುಳ್ಳ ಸುಂದರಿ, ವೀಳೆಯವನು, ಪರಿಮಳದ ಅನುಲೇಪನವನ್ನೂ ಮಲ್ಲಿಗೆ ಹೂವಿನ್ನೂ ಅತ್ಯುತ್ತಮ ತೊಡಿಗೆಯನ್ನೂ, ಮನೋಹರವಾದ ಬಟ್ಟೆಯಿದೆ ಒಪ್ಪಿಗೆ ಆಗಿದ್ದರೆ ತೆಗೆದುಕೊ. ಕೇಳು ನಿನಗೆ ತಕ್ಕವನು ನಾನು.ನನ್ನಂತೆ ದೇವತೆಗಳಲ್ಲಿ ಯಾರಾದರೂ ಚೆಲುವರು ಇದ್ದಾರೆಯೇ? ಮನುಷ್ಯರಲ್ಲಿ ನನ್ನನ್ನು ಹೋಲುವ ಚೆಲುವರು ಯಾರಾದರೂ ಇರುವರೆ? ಸೈರಂಧ್ರಿ ಕೇಳು ಎಂದ.
ಎನ್ನವೋಲ್ ಪುರುಷರಲಿ ಚೆಲುವರ
ಮುನ್ನ ನೀ ಕಂಡರಿದೆಯಾದೊಡೆ
ಯೆನ್ನ ಮೇಲಾಣೆಲೆಗೆ ಹುಸಿಯದೆ ಹೇಳು ಹೇಳೆಂದು
ಮುನ್ನ ನಿನ್ನಂತಪ್ಪ ಸತಿಯರು
ಎನ್ನನೇ ಬಯಸುವರು ನಾರಿಯ
ರೆನ್ನ ಕಂಡರೆ ಸೋಲದವರಿಲ್ಲೆಲೆಗೆ ನಿನ್ನಾಣೆ ೮೪
ಪದವಿಭಾಗ-ಅರ್ಥ: ಎನ್ನವೋಲ್ ಪುರುಷರಲಿ ಚೆಲುವರ ಮುನ್ನ ನೀ ಕಂಡು+ ಅರಿದೆಯಾದೊಡೆ+ಯೆ+ ಎನ್ನ ಮೇಲಾಣೆ+ ಎಲೆಗೆ ಹುಸಿಯದೆ ಹೇಳು ಹೇಳೆಂದು ಮುನ್ನ ನಿನ್ನಂತಪ್ಪ ಸತಿಯರು ಎನ್ನನೇ ಬಯಸುವರು ನಾರಿಯರು+ ಎನ್ನ ಕಂಡರೆ ಸೋಲದವರಿಲ್ಲ+ ಎಲೆಗೆ ನಿನ್ನಾಣೆ
ಎನ್ನವೋಲ್(ನನ್ನಂತೆ) ಪುರುಷರಲಿ ಚೆಲುವರ ಮುನ್ನ(ಈ ಮುಂಚೆ) ನೀ ಕಂಡು+ ಅರಿದೆಯಾದೊಡೆ (ತಿಳಿದಿರುವೆಯಾದರೆ)+ಯೆ+ ಎನ್ನ ಮೇಲಾಣೆ+ ಎಲೆಗೆ ಹುಸಿಯದೆ(ಸುಳ್ಲು ನುಡಿಯದೆ) ಹೇಳು ಹೇಳೆಂದು ಮುನ್ನ ನಿನ್ನಂತಪ್ಪ(ನಿನ್ನ ಹಾಗಿರುವ) ಸತಿಯರು ಎನ್ನನೇ ಬಯಸುವರು ನಾರಿಯರು+ ಎನ್ನ ಕಂಡರೆ ಸೋಲದವರಿಲ್ಲ+ ಎಲೆಗೆ ನಿನ್ನಾಣೆ
ಅರ್ಥ:ನನ್ನಂತೆ ಪುರುಷರಲ್ಲಿ ಚೆಲುವರು ಈ ಮುಂಚೆ ನೀನು ಕಂಡು ತಿಳಿದಿರುವೆಯಾದರೆ ನನ್ನ ಮೇಲಾಣೆ!(ನೋಡಿರಲು ಸಾಧ್ಯವೇ ಇಲ್ಲ); ಎಲೆಗೆ ಸೈರಂದ್ರಿ ಸುಳ್ಳು ನುಡಿಯದೆ, ಹೇಳು ಹೇಳೆಂದು ಒತ್ತಾಯಿಸಿ; ಮೊದಲಿಂದಲೂ ನಿನ್ನ ಹಾಗಿರುವ ವನಿತೆಯರು ನನ್ನನೇ ಬಯಸುವರು; ನಾರಿಯರು+ ನನ್ನನ್ನು ಕಂಡರೆ ಮನ ಸೋಲದವರಿಲ್ಲ! ಎಲೆಗೆ ನಿನ್ನಾಣೆ! ಇದು ಸತ್ಯ. ಎಂದನು ಕೀಚಕ.
ಎಲವೊ ಕೀಚಕ ನಿನ್ನ ಹೋಲುವ
ಚೆಲುವರಿಲ್ಲಂತಿರಲಿ ಲೋಕದ
ಲಲನೆಯರ ಪರಿಯಲ್ಲ ತನ್ನಯ ರೂಪು ಬೇರೊಂದು |
ಇಳೆಯೊಳೆನಗೆಣೆಯಿಲ್ಲ ನಿನಗಾ
ನೊಲಿದು ಬಂದೆನು ತನ್ನ ಪರಿಯನು
ಬಳಿಕ ನೋಡಾ ಬೇಗ ತೋರುವೆನೆಂದನಾ ಭೀಮ || ೮೫ ||
ಪದವಿಭಾಗ-ಅರ್ಥ:ಎಲವೊ ಕೀಚಕ ನಿನ್ನ ಹೋಲುವ ಚೆಲುವರ+ ಇಲ್ಲ+ ಅಂತಿರಲಿ ಲೋಕದ ಲಲನೆಯರ ಪರಿಯಲ್ಲ ತನ್ನಯ ರೂಪು; ಬೇರೊಂದು ಇಳೆಯೊಳು+ ಎನಗೆ+ ಎಣೆಯಿಲ್ಲ ನಿನಗೆ+ ಆನು+ ಒಲಿದು ಬಂದೆನು ತನ್ನ ಪರಿಯನು ಬಳಿಕ ನೋಡಾ ಬೇಗ ತೋರುವೆನೆಂದನು+ ಆ ಭೀಮ.
(ಭೀಮನು ಹೆಣ್ನಿನ ದನಿಯನ್ನು ಅನಕರಿಸಿ ಸಣ್ಣಗೆ ಹೇಳಿದನು), ಎಲವೊ ಕೀಚಕ ನಿನ್ನ ಹೋಲುವ ಚೆಲುವರು+ ಇಲ್ಲ+ ಅಂತಿರಲಿ= ಎಲವೊ ಕೀಚಕ ನಿನ್ನನ್ನು ಹೋಲುವ ಚೆಲುವರು ಇಲ್ಲ, ನಿಜ. ಅದು ಅಂತಿರಲಿ= ಹಾಗಿರಲಿ, ಲೋಕದ ಲಲನೆಯರ= ಸುಂದರಿಯ, ಪರಿಯಲ್ಲ= ರೀತಿಯಲ್ಲ, ತನ್ನಯ/ತನ್ನ ರೂಪು; ಬೇರೊಂದು= ಬೇರೆ ರೀತಿಯದು;// ಇಳೆಯೊಳು+ ಎನಗೆ+ ಎಣೆಯಿಲ್ಲ= ಭೂಮಿಯಲ್ಲಿ, ನಿನಗೆ+ ಆನು= ನಾನು+ ಒಲಿದು ಬಂದೆನು; ತನ್ನ ಪರಿಯನು= ರೀತಿಯನ್ನು, ಬಳಿಕ- ನಂತರ, ನೋಡಾ= ನೋಡುವಿಯೆಂತೆ, ಬೇಗ ತೋರುವೆನು+ ಎಂದನು+ ಆ ಭೀಮ.
ಅರ್ಥ:ಭೀಮನು ಹೆಣ್ನಿನ ದನಿಯನ್ನು ಅನಕರಿಸಿ ಸಣ್ಣಗೆ ಹೇಳಿದನು, ಎಲವೊ ಕೀಚಕ ನಿನ್ನನ್ನು ಹೋಲುವ ಚೆಲುವರು ಇಲ್ಲ, ನಿಜ. ಅದು ಹಾಗಿರಲಿ, ಲೋಕದ ಸುಂದರಿಯ ರೀತಿಯಲ್ಲ ತನ್ನ ರೂಪು; ಅದು ಬೇರೆ ರೀತಿಯದು; ಭೂಮಿಯಲ್ಲಿ ನಿನಗೆ ನಾನು ಒಲಿದು ಬಂದೆನು; ತನ್ನ ರೀತಿಯನ್ನು ನಂತರ ನೋಡುವಿಯೆಂತೆ, ಬೇಗ ತೋರಿಸುತ್ತೇನೆ, ಎಂದನು ಆ ಭೀಮ.
ಎನಗೆ ಪುರುಷರು ಸೋಲದವರಿ
ಲ್ಲೆನಗೆ ಪಾಸಟಿ ನೀನು ನಿನಗಾ
ಮನವೊಲಿದೆ ನೀ ನೋಡು ತನ್ನಯ ಹೆಣ್ಣುತನದನುವ |
ಎನಲು ಹರುಷದಲುಬ್ಬಿ ಕೀಚಕ
ನನಿಲಜನ ಮೈದಡವಿ ವೃತ್ತ
ಸ್ತನವ ಕಾಣದೆ ಹೆದರಿ ಬಳಿಕಿಂತೆಂದನವ ನಗುತ || ೮೬ ||
ಪದವಿಭಾಗ-ಅರ್ಥ: ಎನಗೆ ಪುರುಷರು ಸೋಲದವರಿಲ್ಲ+ ಎನಗೆ ಪಾಸಟಿ ನೀನು= ನಿನಗೆ+ ಆ ಮನವೊಲಿದೆ ನೀ ನೋಡು ತನ್ನಯ ಹೆಣ್ಣುತನದನುವ ಎನಲು ಹರುಷದಲಿ+ ಉಬ್ಬಿ ಕೀಚಕನು+ ಅನಿಲಜನ ಮೈದಡವಿ ವೃತ್ತಸ್ತನವ ಕಾಣದೆ ಹೆದರಿ ಬಳಿಕಿಂತೆಂದನು+ ಅವ ನಗುತ.
ಎನಗೆ ಪುರುಷರು ಸೋಲದವರಿಲ್ಲ+ ಎನಗೆ ಪಾಸಟಿ ನೀನು= ನನಗೆ ಸೋಲದ ಪುರುಷರು ಇಲ್ಲ, ನನಗೆ ನೀನು ಸರಿ ಸಮನು; ನಿನಗೆ+ ಆ ಮನವೊಲಿದೆ= ನಿನಗೆ ಆ- ಆಂ= ನಾನು ಮನಸಾಒಲಿದಿದ್ದೇನೆ. ನೀ ನೋಡು ತನ್ನಯ ಹೆಣ್ಣುತನ+ ದ+ ತನುವ ಎನಲು= ಭೀಮನು, ನೀನು ನೋಡು ತನ್ನಯ ಹೆಣ್ಣುತನ ದೇಹವನ್ನು ಎನ್ನಲು;// ಹರುಷದಲಿ+ ಉಬ್ಬಿ ಕೀಚಕನು+ ಅನಿಲಜನ ಮೈದಡವಿ ವೃತ್ತಸ್ತನವ (ದುಂಡಾದ ಮೊಲೆಯನ್ನು) ಕಾಣದೆ ಹೆದರಿ ಬಳಿಕ+ ಇಂತೆಂದನು+ ಅವ ನಗುತ= ಹರ್ಷದಿಂದ ಉಬ್ಬಿಹೋದ ಕೀಚಕನು ಅನಿಲಜನ- ಭೀಮನ ಮೈದಡವಿ- ಮೈಯನ್ನು ತಡವಿ ನೋಡಿದನು; ಆದರೆ ವೃತ್ತಸ್ತನವನ್ನು ಕಾಣದೆ ಹೆದರಿದನು. ಬಳಿಕ ಹೀಗೆ ಹೇಳಿದನು ಅವನು ನಗುತ್ತಾ.
ಅರ್ಥ:ನನಗೆ ಸೋಲದ ಪುರುಷರೇ ಇಲ್ಲ, ನನಗೆ ನೀನು ಸರಿ ಸಮನು; ನಿನಗೆ ನಾನು ಮನಸಾ ಒಲಿದಿದ್ದೇನೆ. ಭೀಮನು, ನೀನು ನೋಡು ತನ್ನ ಹೆಣ್ಣುತನದ ದೇಹವನ್ನು ಎನ್ನಲು, ಕೀಚಕನು ಹರ್ಷದಿಂದ ಉಬ್ಬಿಹೋದನು; ಕೀಚಕನು ಭೀಮನ ಮೈಯನ್ನು ತಡವಿ ನೋಡಿದನು; ಆದರೆ ವೃತ್ತಸ್ತನವನ್ನು ಕಾಣದೆ ಹೆದರಿದನು. ಬಳಿಕ ಅವನು ನಗುತ್ತಾ ಹೀಗೆ ಹೇಳಿದನು.
ಎಲೆಗೆ ಕಲುಮೈಯಾದೆ ಕಡುಗೋ
ಮಲತೆಯೆತ್ತಲು ಕರ್ಕಶಾಂಗದ
ಬಲುಹಿದೆತ್ತಲು ಮಾಯ ವೇಷವ ಧರಿಸಿದೆಯೊ ಮೇಣು |
ತಿಳುಹೆನಲು ಕೇಳೆಲವೊ ಪರ ಸತಿ
ಗಳುಪಿದಾತಂಗಮೃತ ವಿಷ ಕೋ
ಮಲತೆ ಕರ್ಕಶವಹುದೆನುತ ತುಡುಕಿದನು ಮುಂದಲೆಯ || ೮೭ ||
ಪದವಿಭಾಗ-ಅರ್ಥ: ಎಲೆಗೆ ಕಲುಮೈಯಾದೆ ಕಡು+ಗೋ+ ಕೋಮಲತೆ ಯೆ+ ಎತ್ತಲು ಕರ್ಕಶಾಂಗದ ಬಲುಹು+ ಇದೆತ್ತಲು, ಮಾಯ ವೇಷವ ಧರಿಸಿದೆಯೊ ಮೇಣು ತಿಳುಹೆನಲು, ಕೇಳು+ ಎಲವೊ ಪರಸತಿಗೆ+ ಅಳುಪಿದಾತಂಗೆ+ ಅಮೃತ ವಿಷ, ಕೋಮಲತೆ ಕರ್ಕಶವು+ ಅಹುದು+ ಎನುತ ತುಡುಕಿದನು ಮುಂದಲೆಯ.
ಎಲೆಗೆ ಕಲುಮೈಯಾದೆ ಕಡು+ಗೋ+ ಕೋಮಲತೆ ಯೆ+ ಎತ್ತಲು ಕರ್ಕಶಾಂಗದ ಬಲುಹು+ ಇದೆತ್ತಲು= ಎಲೆಗೆ- ಎಲೆ ಸೈರಂದ್ರಿ, ಕಲ್ಲು ಮೈಯಾದೆಯಲ್ಲಾ, ಕಡು= ಬಹಳ, ಗೋ+ ಕೋಮಲತೆ ಯೆ+ ಎತ್ತಲು- ಎಲ್ಲಿ ಈ ಕರ್ಕಶಾಂಗದ ಕಠಿಣವಾದ ಬಲುಹು+ ಇದೆತ್ತಲು= ಕಡು= ಬಹಳ ಕೋಮಲತೆ ಎಲ್ಲಿ, ಈ ಕರ್ಕಶಾಂಗದ- ಕಠಿಣವಾದ ಬಲುಹು+ ಇದೆತ್ತಲು= ಬಲಿಷ್ಠತೆ ಎಲ್ಲಿಯದು;, ಮಾಯ ವೇಷವ ಧರಿಸಿದೆಯೊ ಮೇಣು-ಮತ್ತೆ ತಿಳುಹು ಎನಲು= ನೀನು ಮಾಯ ವೇಷವನ್ನು ಧರಿಸಿದೆಯೊ ಹೇಗೆ? ಮತ್ತೆ ಅದೇನು ಹೇಖು ಎನ್ನಲು, ಭೀಮನು,ಎಲವೊ ಕೀಚಕ ಕೇಳು ಪರಸತಿಗೆ ಪರರ ಪತ್ನಿಗೆ ಮನಸೋತವನಿಗೆ ಅಮೃತವೂ ವಿಷ, ಕೋಮಲತೆಯು ಕರ್ಕಶವು+- ಕಠಿಣವಾಗುವುದು ಎನುತ ತುಡುಕಿದನು ಮುಂದಲೆಯ= ಎಂದು ಹೇಳುತ್ತಾ ಅವನ ಮುಂದಲೆಯ ಕೂದಲನ್ನು ಹಿಡಿದನು.
ಅರ್ಥ:ಕೀಚಕನು, ಎಲೆಗೆ- ಎಲೆ ಸೈರಂದ್ರಿ, ಕಲ್ಲು ಮೈಯಾದೆಯಲ್ಲಾ, ನಿನ್ನ ಬಹಳ ಕೋಮಲತೆ ಎಲ್ಲಿ? ಈ ಕಠಿಣವಾದ ಬಲಿಷ್ಠತೆ ಎಲ್ಲಿಯದು; ನೀನು ಮಾಯ ವೇಷವನ್ನು ಧರಿಸಿದೆಯೊ ಹೇಗೆ? ಮತ್ತೆ ಅದೇನು ಹೇಳು ಎನ್ನಲು, ಭೀಮನು, ಎಲವೊ ಕೀಚಕ ಕೇಳು ಪರರ ಪತ್ನಿಗೆ ಮನಸೋತವನಿಗೆ ಅಮೃತವೂ ವಿಷ, ಕೋಮಲತೆಯು ಕಠಿಣವಾಗುವುದು ಎಂದು ಹೇಳುತ್ತಾ ಅವನ ಮುಂದಲೆಯ ಕೂದಲನ್ನು ಹಿಡಿದನು.
ಚಪಳೆ ಫಡ ಹೋಗೆನುತ ಹಾಯ್ದನು
ಕೃಪಣಮತಿ ಮುಂಗೈಯಲನಿಲಜ
ನಪರ ಭಾಗಕೆ ಹಾಯ್ದು ಹಿಡಿದನು ಕೀಚಕನ ತುರುಬ |
ವಿಪುಳಬಲ ಕಳವಳಿಸಿದನು ಕಡು
ಕುಪಿತನಾದನು ಹೆಂಗುಸಲ್ಲಿವ
ನಪಸದನು ತೆಗೆ ಕರುಳನೆನುತೊಳಹೊಕ್ಕು ಹೆಣಗಿದನು || ೮೮ ||
ಪದವಿಭಾಗ-ಅರ್ಥ: ಚಪಳೆ ಫಡ ಹೋಗು+ ಎನುತ ಹಾಯ್ದನು ಕೃಪಣಮತಿ ಮುಂಗೈಯಲಿ+ ಅನಿಲಜನು+ ಅಪರ ಭಾಗಕೆ ಹಾಯ್ದು ಹಿಡಿದನು ಕೀಚಕನ ತುರುಬ, ವಿಪುಳಬಲ ಕಳವಳಿಸಿದನು ಕಡು-ಕುಪಿತನಾದನು ಹೆಂಗುಸಲ್ಲ+ ಇವನು+ ಅಪಸದನು ತೆಗೆ ಕರುಳನು+ ಎನುತ+ ಒಳಹೊಕ್ಕು ಹೆಣಗಿದನು.
ಚಪಳೆ ಫಡ ಹೋಗು+ ಎನುತ ಹಾಯ್ದನು ಕೃಪಣಮತಿ= ಚಪಲ ಹೆಣ್ಣೆ ಹೋಗು ಎಂದು ಹಿಂದಕ್ಕೆ ಆ ದುಷ್ಟನು ಹಾರಿದನು; ಮುಂಗೈಯಲಿ+ ಅನಿಲಜನು+ ಅಪರ ಭಾಗಕೆ(ಹಿಂಭಾಗ) ಹಾಯ್ದು ಹಿಡಿದನು= ಮುಂಗೈಯಲ್ಲಿ ಭೀಮನು ಕೀಚಕನ ಹಿಂಭಾಗಕ್ಕೆ ಕೈಹಾಕಿ ಬೆನ್ನಟ್ಟಿ ಕೀಚಕನ ತುರುಬನ್ನು ಹಿಡಿದನು.(ಹಿಂದೆ ಗಂಡಸರೂ ಉದ್ದ ಕೂದಲನ್ನು ಬಿಡುತ್ತಿದ್ದು ಗಂಟುಹಾಕಿ ಕಟ್ಟುತ್ತಿದ್ದರು). ವಿಪುಳಬಲ ಕಳವಳಿಸಿದನು ಕಡು-ಕುಪಿತನಾದನು= ಅತಿಬಲಶಾಲಿಯಾದ ಕೀಚಕನು ಚಿಂತಿತನಾಗಿ ನಂತರ ಕೋಪಗೊಂಡನು. ಹೆಂಗುಸಲ್ಲ+ ಇವನು+ ಅಪಸದನು(ದುಷ್ಟನು) ತೆಗೆ ಕರುಳನ+ ಎನುತ+ ಒಳಹೊಕ್ಕು ಹೆಣಗಿದನು= ಇದು ಹೆಂಗುಸಲ್ಲ, ಇವನು ದುಷ್ಟನು, ತೆಗೆಯುವೆನು ಇವನ ಕರುಳನ್ನು ಎನ್ನುತ್ತಾ ಒಳಹೊಕ್ಕು ಭೀಮನನ್ನು ಹಿಡಿದು ಹೆಣಗಿದನು.
ಅರ್ಥ: ಚಪಲ ಹೆಣ್ಣೆ ಹೋಗು ಎಂದು ಹಿಂದಕ್ಕೆ ಆ ದುಷ್ಟನು ಹಾರಿದನು; ಭೀಮನು ಮುಂಗೈಯಲ್ಲಿ ಕೀಚಕನ ಹಿಂಭಾಗಕ್ಕೆ ಕೈಹಾಕಿ ಬೆನ್ನಟ್ಟಿ ಕೀಚಕನ ತುರುಬನ್ನು ಹಿಡಿದನು. ಅತಿಬಲಶಾಲಿಯಾದ ಕೀಚಕನು ಚಿಂತಿತನಾಗಿ ನಂತರ ಕೋಪಗೊಂಡನು. ಇದು ಹೆಂಗುಸಲ್ಲ, ಇವನು ಯಾವನೋ ದುಷ್ಟನು, ತೆಗೆಯುವೆನು ಇವನ ಕರುಳನ್ನು ಎನ್ನುತ್ತಾ ಒಳಹೊಕ್ಕು ಭೀಮನನ್ನು ಹಿಡಿದು ಹೆಣಗಿದನು.
ತಿವಿದನವನುರವಣಿಸಿ ಮಾರುತಿ
ಕವಿದು ಹೆಣಗಿದನಡಸಿ ಹೊಯ್ದೊಡೆ
ಬವರಿಯಲಿ ಟೊಣದೌಕಿದೊಡೆ ಮಡ ಮುರಿಯದೊಳಹೊಕ್ಕು
ಸವಡಿ ಮಂದರದಂತೆ ಕೀಚಕ
ಪವನಸುತರೊಪ್ಪಿದರು ಭೀಮನ
ಯುವತಿ ನಗುತಾಲಿಸುತಲಿದ್ದಳು ಹೊಯ್ಲ ಹೋರಟೆಯ ೮೯
ಪದವಿಭಾಗ-ಅರ್ಥ:ತಿವಿದನು+ ಅವನು+ ಉರವಣಿಸಿ, ಮಾರುತಿ ಕವಿದು ಹೆಣಗಿದನು ಅಡಸಿ ಹೊಯ್ದೊಡೆ ಬವರಿಯಲಿ ಟೊಣದು ಔದೊಡೆ ಮಡ ಮುರಿಯದೆ+ ಒಳಹೊಕ್ಕು ಸವಡಿ (ಜೊತೆ) ಮಂದರದಂತೆ ಕೀಚಕ ಪವನಸುತರು+ ಒಪ್ಪಿದರು ಭೀಮನ ಯುವತಿ ನಗುತ+ ಆಲಿಸುತಲಿದ್ದಳು ಹೊಯ್ಲ ಹೋರಟೆಯ
ತಿವಿದನು+ ಅವನು+ ಉರವಣಿಸಿ, ಮಾರುತಿ ಕವಿದು ಹೆಣಗಿದನು= ಕೀಚಕನು ಶೌರ್ಯದಿಂದ- ಉರವಣಿಸಿ ಭೀಮನನ್ನು ತಿವಿದನು, ಮಾರುತಿ- ಭೀಮನು ಕವಿದು- ಆಕ್ರಮಿಸಿ ಹೆಣಗಿದನು- ಹೋರಾಡಿದನು, ಅಡಸಿ-ಆಕ್ರಮಿಸಿ, ಹೊಯ್ದೊಡೆ-ಹೊಡೆದರೆ, ಬವರಿಯಲಿ- ಯುದ್ಧದಲ್ಲಿ ಟೊಣದು-ವಂಚಿಸು- ತಪ್ಪಸಿಕೊಂಡು, ಔದೊಡೆ- ಅಮುಕಿದರೆ, ಮಡ = ಸೊಂಟ- ಮಡಿಲು-, ಮುರಿಯದೆ,//+ ಒಳಹೊಕ್ಕು ಸವಡಿ (ಜೊತೆ) ಮಂದರದಂತೆ ಕೀಚಕ ಪವನಸುತರು+ ಒಪ್ಪಿದರು= ಹೋರಾಟದಲ್ಲಿ ಒಳಹೊಕ್ಕು ಜೊತೆ- ಎರಡು ಮಂದರದಂತೆ ಕೀಚಕ ಪವನಸುತರು+ ಒಪ್ಪಿದರು ಹೋರಾಡಿದರು; ಭೀಮನ ಯುವತಿ- ದ್ರೌಪದಿ, ನಗುತ+ ಆಲಿಸುತಲಿದ್ದಳು ಹೊಯ್ಲ ಹೋರಟೆಯ= ಭೀಮನ ರಾಣಿ ದ್ರೌಪದಿ ನಗುತ್ತಾ ಕತ್ತಲಲ್ಲಿ ಹೋರಟೆಯನ್ನು- ಹೋರಾಟದ ಹೊಯಿಲನ್ನು- ಸದ್ದನ್ನು ಆಲಿಸುತ್ತಿದ್ದಳು- ಕೇಳುತ್ತಿದ್ದಳು.
ಅರ್ಥ: ಕೀಚಕನು ಶೌರ್ಯದಿಂದ- ಉರವಣಿಸಿ ಭೀಮನನ್ನು ತಿವಿದನು, ಭೀಮನು ಆಕ್ರಮಿಸಿ ಹೋರಾಡಿದನು; ಆಕ್ರಮಿಸಿ ಹೊಡೆದರೆ ಯುದ್ಧದಲ್ಲಿ ತಪ್ಪಸಿಕೊಂಡು, ತಿರುಗಿ ಅಮುಕಿದರೆ ಸೊಂಟ ಮುರಿಯದೆ; ಜೋಡಿ ಹೋರಾಟದಲ್ಲಿ ಪರಸ್ಪರ ಒಳಹೊಕ್ಕು ಎರಡು ಮಂದರದಂತೆ ಕೀಚಕ ಭೀಮರು ಹೋರಾಡಿದರು; ಭೀಮನ ರಾಣಿ ದ್ರೌಪದಿ ನಗುತ್ತಾ ಕತ್ತಲಲ್ಲಿ ಹೋರಾಟದ ಸದ್ದನ್ನು ನಗುತ್ತಾ ಆಲಿಸುತ್ತಿದ್ದಳು
ಎರಗಿದೊಡೆ ಕೀಚಕನ ಗಾಯಕೆ
ತರವರಿಸಿ ಕಲಿಭೀಮ ಮಂಡಿಸಿ
ಮರೆವಡೆದು ಮುರಿದೆದ್ದು ರೋಷದಲೌಡನೊಡೆಯಗಿದು |
ಬರಸಿಡಿಲು ಪರ್ವತದ ಶಿಖರವ
ನೆರಗುವಂತಿರೆ ಖಳನ ನೆತ್ತಿಯ
ನೆರಗಿದನು ರಣಧೀರನುನ್ನತ ಬಾಹುಸತ್ವದಲಿ || ೯೦ ||
ಪದವಿಭಾಗ-ಅರ್ಥ: ಎರಗಿದೊಡೆ ಕೀಚಕನ ಗಾಯಕೆ ತರವರಿಸಿ ಕಲಿಭೀಮ ಮಂಡಿಸಿ ಮರೆವಡೆದು ಮುರಿದೆದ್ದು ರೋಷದಲಿ+ ಔಡನೊಡೆಯಗಿದು ಬರಸಿಡಿಲು ಪರ್ವತದ ಶಿಖರವನು+ ಎರಗುವಂತಿರೆ ಖಳನ ನೆತ್ತಿಯ ನೆರಗಿದನು ರಣಧೀರನು+ ಉನ್ನತ ಬಾಹುಸತ್ವದಲಿ;
ಎರಗಿದೊಡೆ= ಕೀಚಕನು ಆಕ್ರಮಿಸಿದಾಗ, ಕೀಚಕನ ಗಾಯಕೆ ತರವರಿಸಿ= ಕೀಚಕನ ಹೊಡತಕ್ಕೆತಡವರಿಸಿ,// ಕಲಿಭೀಮ ಮಂಡಿಸಿ ಮರೆವಡೆದು ಮುರಿದೆದ್ದು ರೋಷದಲಿ= ಕಲಿಭೀಮ ವಿರೋಧಿಸಿ, ಔಡನೊಡೆಯಗಿದು= ಸಿಟ್ಟಿನಿಂದ ದವಡೆಯನ್ನು ಕಚ್ಚಿ,// ಬರಸಿಡಿಲು ಪರ್ವತದ ಶಿಖರವನು+ ಎರಗುವಂತಿರೆ= ಬರಸಿಡಿಲು ಪರ್ವತದ ಶಿಖರವನ್ನು ಎರಗುವಂತೆ- ಹೊಡೆಯುವಂತೆ,// ಖಳನ ನೆತ್ತಿಯನ+ ಎರಗಿದನು ರಣಧೀರನು+ ಉನ್ನತ ಬಾಹುಸತ್ವದಲಿ= ಖಳ ಕೀಚಕನ ನೆತ್ತಿಯಮೇಲೆ ಎರಗಿ ಹೊಡೆದನು ರಣಧೀರ ಭೀಮನು ತನ್ನ ಹೆಚ್ಚಿನ ಶಕ್ತಿಯನ್ನು ಉಪಯೋಗಿಸಿ.
ಅರ್ಥ: ಕೀಚಕನು ಆಕ್ರಮಿಸಿದಾಗ, ಕೀಚಕನ ಹೊಡತಕ್ಕೆ ತಡವರಿಸಿ, ಕಲಿಭೀಮ ವಿರೋಧಿಸಿ ಸಿಟ್ಟಿನಿಂದ ದವಡೆಯನ್ನು ಕಚ್ಚಿ, ಬರಸಿಡಿಲು ಪರ್ವತದ ಶಿಖರವನ್ನು ಎರಗಿ ಹೊಡೆಯುವಂತೆ, ರಣಧೀರಭೀಮನು ಖಳ ಕೀಚಕನ ನೆತ್ತಿಯಮೇಲೆ ತನ್ನ ಹೆಚ್ಚಿನ ಶಕ್ತಿಯನ್ನು ಉಪಯೋಗಿಸಿ ಎರಗಿ ಹೊಡೆದನು.
ಅರಿಯ ಮುಷ್ಟಿಯ ಗಾಯದಲಿ ತಲೆ
ಬಿರಿಯೆ ತನು ಡೆಂಡಣಿಸಿ ಕಂಗಳು
ತಿರುಗಿ ಜೋಲಿದು ಮೆಲ್ಲ ಮೆಲ್ಲನೆಯಸುವ ಪಸರಿಸುತ |
ಕೆರಳಿ ಕರಿ ಕೇಸರಿಯ ಹೊಯ್ದುರೆ
ತಿರುಗುವಂತಿರೆ ಭೀಮಸೇನನ
ಬರಿಯ ತಿವಿದನು ಬೀಳೆನುತ ಖಳುರಾಯ ಹಲು ಮೊರೆದ || ೯೧ ||
ಪದವಿಭಾಗ-ಅರ್ಥ: ಅರಿಯ ಮುಷ್ಟಿಯ ಗಾಯದಲಿ ತಲೆ ಬಿರಿಯೆ ತನು ಡೆಂಡಣಿಸಿ ಕಂಗಳು ತಿರುಗಿ ಜೋಲಿದು ಮೆಲ್ಲ ಮೆಲ್ಲನೆಯ+ ಅಸುವ ಪಸರಿಸುತ ಕೆರಳಿ ಕರಿ ಕೇಸರಿಯ ಹೊಯ್ದುರೆ ತಿರುಗುವಂತಿರೆ ಭೀಮಸೇನನ ಬರಿಯ ತಿವಿದನು ಬೀಳೆನುತ ಖಳುರಾಯ ಹಲು ಮೊರೆದ.
ಅರಿಯ= ಶತ್ರುವಿನ ಮುಷ್ಟಿಯ ಗಾಯದಲಿ ತಲೆ ಬಿರಿಯೆ- ಒಡೆಯಲು,/ ತನು ಡೆಂಡಣಿಸಿ= ದೇಹ ಓಲಾಡಿ, ಕಂಗಳು ತಿರುಗಿ= ಕಣ್ಣಾಲಿಗಳು ತಿರುಗಿದವು,/ ಜೋಲಿದು ಮೆಲ್ಲ ಮೆಲ್ಲನೆಯ+ ಅಸುವ ಪಸರಿಸುತ= ಜೋಲಿಹೊಡೆಯುತ್ತಾ,/ ಕೆರಳಿ ಕರಿ ಕೇಸರಿಯ ಹೊಯ್ದುರೆ ತಿರುಗುವಂತಿರೆ= ಸಿಟ್ಟಿನಿಂದ ಆನೆ ಸಿಂಹವನ್ನು ಹೊಡೆದರೆ ಅದು ತಿರುಗುವಹಾಗೆ ,/ ಭೀಮಸೇನನ ಬರಿಯ ತಿವಿದನು ಬೀಳೆನುತ ಖಳುರಾಯ ಹಲು ಮೊರೆದ= ಭೀಮಸೇನನನ್ನು ಬರಿಯ- ಮೆಲ್ಲಗೆ ತಿವಿದು ಬೀಳು ಎಂದು ಹೇಳುತ್ತಾ ಕೀಚಕನು ಹಲ್ಲಕಡಿದನು.
ಅರ್ಥ:ಶತ್ರುವಿನ ಮುಷ್ಟಿಯ ಗಾಯದಿಂದ ಕೀಚಕನ ತಲೆ ಬಿರಿಯಲು, ಅವನ ದೇಹ ಓಲಾಡಿ,ಕಣ್ಣಾಲಿಗಳು ತಿರುಗಿದವು. ಜೋಲಿಹೊಡೆಯುತ್ತಾ, ಸಿಟ್ಟಿನಿಂದ ಆನೆ ಸಿಂಹವನ್ನು ಹೊಡೆದರೆ ಅದು ತಿರುಗುವ ಹಾಗೆ ಭೀಮಸೇನನನ್ನು ಮೆಲ್ಲಗೆ ತಿವಿದು ಬೀಳು- ಎಂದು ಹೇಳುತ್ತಾ ಕೀಚಕನು ಹಲ್ಲಕಡಿದನು.
ತಿರುಗಿ ಪೈಸರವೋಗಿ ಪವನಜ
ಮರಳಿ ತಿವಿದನು ಕೀಚಕನ ಪೇ
ರುರವನೆದೆ ಜರ್ಝರಿತವಾಗಲು ಕಾರಿದನು ಕರುಳ |
ಬಿರಿದವಾಲಿಗಳೊಲೆದೊಲೆದು ಕ
ಣ್ಣುರುಗಿ ಧೊಪ್ಪನೆ ಕೆಡೆದು ನಿಮಿಷಕೆ
ಹೊರಳಿ ಹರಣವ ಕಳುಹಿ ಕಳೆದುದು ಕಾಯ ಕೀಚಕನ || ೯೨ ||
ಪದವಿಭಾಗ-ಅರ್ಥ: ತಿರುಗಿ ಪೈಸರವೋಗಿ ಪವನಜ ಮರಳಿ ತಿವಿದನು ಕೀಚಕನ ಪೇರು+ ಉರವನು, ಎದೆ ಜರ್ಝರಿತವಾಗಲು ಕಾರಿದನು ಕರುಳ ಬಿರಿದವು ಆಲಿಗಳು+ ಒಲೆದೊಲೆದು ಕಣ್ಣು+ ಉರುಗಿ ಧೊಪ್ಪನೆ ಕೆಡೆದು ನಿಮಿಷಕೆ ಹೊರಳಿ ಹರಣವ ಕಳುಹಿ ಕಳೆದುದು ಕಾಯ ಕೀಚಕನ.
ತಿರುಗಿ ಪೈಸರವೋಗಿ= ಹೀದಕ್ಕೆ ಹೋಗಿ ಮತ್ತೆ ತಿರುಗಿ ಬಂದು (ಮಲ್ಲಯುದ್ಧದ ಒಂದು ಪಟ್ಟು, ಕುಗ್ಗುವುದು, ಜಾರುವುದು), ಪವನಜ ಮರಳಿ ತಿವಿದನು ಕೀಚಕನ ಪೇರು+ ಉರವನು,= ಭಿಮನು ಪುನಃ ಕೀಚಕನ ಉಬ್ಬಿದ ಎದೆಯನ್ನು ತಿವಿದನು - ಗುದ್ದಿದನು,/ ಎದೆ ಜರ್ಝರಿತವಾಗಲು ಕಾರಿದನು ಕರುಳ ಬಿರಿದವಾಲಿಗಳು= ಕೀಚಕನ ಎದೆ ಜರ್ಝರಿತವಾಗಲು ಅವನು ರಕ್ತ ಮತ್ತು ಕರುಳನ್ನು ಕಾರಿಕೊಂಡನು./ ಬಿರಿದವು+ ಆಲಿಗಳು ಒಲೆದೊಲೆದು ಕಣ್ಣು+ ಉರುಗಿ ಧೊಪ್ಪನೆ ಕೆಡೆದು ನಿಮಿಷಕೆ ಹೊರಳಿ ಹರಣವ ಕಳುಹಿ ಕಳೆದುದು ಕಾಯ ಕೀಚಕನ= ಅವನ ಕಣ್ಣಿನ ಆಲಿಗಳು ಬಿರಿದು ಹೊರಕ್ಕೆ ಬಂದವು. ಅವನು ಓಲಾಡುತ್ತಾ ಕಣ್ಣು ದೃಷ್ಠಿತಿರುಗಿ ಕತ್ತಲೆಗಟ್ಟಿ ಧೊಪ್ಪನೆ ನೆಲಕ್ಕೆ ಕೆಡೆದುಬಿದ್ದನು. ಅವನು ಹೊರಳಿದಾಗ ಕೀಚಕನ ಕಾಯ- ಕಾಯದಿಂದ- ದೇಹದಿಂದ ತಕ್ಷಣ ಜೀವ ಹೊರಟುಹೋಯಿತು.
ಅರ್ಥ: ಭೀಮನು ಹೀದಕ್ಕೆ ಹೋಗಿ ಮತ್ತೆ ತಿರುಗಿ ಬಂದು ಪುನಃ ಕೀಚಕನ ಉಬ್ಬಿದ ಎದೆಯನ್ನು ತಿವಿದನು - ಗುದ್ದಿದನು, ಕೀಚಕನ ಎದೆ ಜರ್ಝರಿತವಾಗಲು ಅವನು ರಕ್ತ ಮತ್ತು ಕರುಳನ್ನು ಕಾರಿಕೊಂಡನು. ಅವನ ಕಣ್ಣಿನ ಆಲಿಗಳು ಬಿರಿದು ಹೊರಕ್ಕೆ ಬಂದವು. ಅವನು ಓಲಾಡುತ್ತಾ ಕಣ್ಣು ದೃಷ್ಠಿತಿರುಗಿ ಕತ್ತಲೆಗಟ್ಟಿ ಧೊಪ್ಪನೆ ನೆಲಕ್ಕೆ ಕೆಡೆದುಬಿದ್ದನು. ಅವನು ಹೊರಳಿದಾಗ ಕೀಚಕನ ದೇಹದಿಂದ ತಕ್ಷಣ ಜೀವ ಹೊರಟುಹೋಯಿತು.
ತಲೆಯನೆದೆಯೊಳಗಿಕ್ಕಿ ಕೈ ಕಾ
ಲ್ಗಳನು ಬಸುರೊಳು ಸಿಕ್ಕಿ ದೂರಕೆ
ತೊಲಗಿದನು ತೋರಿದನು ರಮಣಿಗೆ ಕೀಚಕನ ಹದನ |
ಖಳನ ಕಾಲನ ಕೋಣ ತುಳಿದಂ
ತಿಳೆಯೊಳೊರಗಿರೆ ಕಂಡು ಕಾಮಿನಿ
ಕಳಕಳಿಸಿದಳು ಭೀಮಸೇನನಪ್ಪಿ ಮುಂಡಾಡಿ || ೯೩ ||
ಪದವಿಭಾಗ-ಅರ್ಥ: ತಲೆಯನು+ ಎದೆಯೊಳಗೆ+ ಇಕ್ಕಿ, ಕೈ ಕಾಲ್ಗಳನು ಬಸುರೊಳು ಸಿಕ್ಕಿ, ದೂರಕೆ ತೊಲಗಿದನು, ತೋರಿದನು ರಮಣಿಗೆ ಕೀಚಕನ ಹದನ, ಖಳನ ಕಾಲನ ಕೋಣ ತುಳಿದಂತೆ+ ಇಳೆಯೊಳು+ ಒರಗಿರೆ ಕಂಡು ಕಾಮಿನಿ ಕಳಕಳಿಸಿದಳು ಭೀಮಸೇನನು+ ಅಪ್ಪಿ ಮುಂಡಾಡಿ.
ತಲೆಯನು+ ಎದೆಯೊಳಗೆ+ ಇಕ್ಕಿ, ಕೈ ಕಾಲ್ಗಳನು ಬಸುರೊಳು ಸಿಕ್ಕಿ= ಭೀಮನು ಕೀಚಕನ ತಲೆಯನ್ನು ಎದೆಯೊಳಗೆ ನೂಕಿ ಇಟ್ಟನು, ಕೈ ಕಾಲುಗಳನ್ನು ಬಸುರೊಳು- ಹೊಟ್ಟೆಯಲ್ಲಿ ಸಿಕ್ಕಿಸಿ ದೂರ ಸರಿದು ನಿಂತನು. ನಂತರ ದ್ರೌಪದಿಗೆ, ತೋರಿದನು ರಮಣಿಗೆ ಕೀಚಕನ ಹದನ= ಕೀಚಕನ ಸ್ಥತಿಯನ್ನು ತೋರಿಸಿದನು., ಖಳನ ಕಾಲನ ಕೋಣ ತುಳಿದಂತೆ+ ಇಳೆಯೊಳು+ ಒರಗಿರೆ ಕಂಡು= ದುಷ್ಟನನ್ನು ಯಮನ ವಾಹನ ಕೋಣ ತುಳಿದಂತೆ ಇದ್ದುದನ್ನು ದ್ರೌಪದಿ ನೋಡಿ./ ಕಾಮಿನಿ ಕಳಕಳಿಸಿದಳು ಭೀಮಸೇನನು+ ಅಪ್ಪಿ ಮುಂಡಾಡಿ= ಭೀಮನನ್ನು ಅಪ್ಪಿ ಮುದ್ದುಮಾಡಿ ಸಮಾಧಾನಪಡಿಸಿ ಸಂತಸಪಟ್ಟಳು.
ಅರ್ಥ:ಭೀಮನು ಕೀಚಕನ ತಲೆಯನ್ನು ಎದೆಯೊಳಗೆ ನೂಕಿ ಇಟ್ಟನು, ಕೈ ಕಾಲುಗಳನ್ನು ಹೊಟ್ಟೆಯಲ್ಲಿ ಸಿಕ್ಕಿಸಿ ದೂರ ಸರಿದು ನಿಂತನು. ನಂತರ ದ್ರೌಪದಿಗೆ, ಕೀಚಕನ ಸ್ಥತಿಯನ್ನು ತೋರಿಸಿದನು. ದುಷ್ಟನನ್ನು ಯಮನ ವಾಹನ ಕೋಣವು ತುಳಿದಂತೆ ಇದ್ದುದನ್ನು ದ್ರೌಪದಿ ನೋಡಿ, ಭೀಮನನ್ನು ಅಪ್ಪಿ ಮುದ್ದುಮಾಡಿ ಸಮಾಧಾನಪಡಿಸಿ ಸಂತಸಪಟ್ಟಳು.

ಕೀಚಕನ ಸೋದರರ ವಧೆ[ಸಂಪಾದಿಸಿ]

ತರುಣಿ ಬಿಡು ಸಾರೆನುತ ಪವನಜ
ಸರಿದನತ್ತಲು ದ್ರುಪದನಂದನೆ
ಕರೆದು ನುಡಿದಳು ಕಾಹಿನವರಿಗೆ ಕೀಚಕನ ಹದನ |
ದುರುಳ ಬಲುಹಿಂದೆನ್ನನೆಳೆದೊಡೆ
ಕೆರಳಿದರು ಗಂಧರ್ವರೀತಗೆ
ಹರುವ ಕಂಡರು ನೋಡಿಯೆನೆ ಹರಿತಂದರವಳೊಡನೆ || ೯೪ ||
ಪದವಿಭಾಗ-ಅರ್ಥ: ತರುಣಿ ಬಿಡು ಸಾರೆನುತ ಪವನಜ ಸರಿದನು+ ಅತ್ತಲು ದ್ರುಪದನಂದನೆ ಕರೆದು ನುಡಿದಳು ಕಾಹಿನವರಿಗೆ ಕೀಚಕನ ಹದನ ದುರುಳ ಬಲುಹಿಂದ+ ಎನ್ನನು+ ಎಳೆದೊಡೆ ಕೆರಳಿದರು ಗಂಧರ್ವರು+ ಈತಗೆ ಹರುವ ಕಂಡರು ನೋಡಿಯೆನೆ ಹರಿತಂದರು+ ಅವಳೊಡನೆ.
ತರುಣಿ ಬಿಡು ಸಾರೆನುತ ಪವನಜ ಸರಿದನು ಅತ್ತಲು= ಭೀಮನ ಅಪ್ಪಿದ ದ್ರೌಪದಿಯನ್ನು ಬಿಡು, ನೀನು ಹೊರಟುಹೋಗು ಎಂದು ಅವನು ತನ್ನ ಬಿಡಾರಕ್ಕೆ ಹೋದನು./ ದ್ರುಪದನಂದನೆ ಕರೆದು ನುಡಿದಳು ಕಾಹಿನವರಿಗೆ ಕೀಚಕನ ಹದನ ದುರುಳ ಬಲುಹಿಂದೆನ್ನನು+ ಎಳೆದೊಡೆ ಕೆರಳಿದರು ಗಂಧರ್ವರು+ ಈತಗೆ ಹರುವ ಕಂಡರು ನೋಡಿಯೆನೆ ಹರಿತಂದರು+ ಅವಳೊಡನೆ= ದ್ರುಪದನಂದನೆ ದ್ರೌಪದಿಯು, ಕಾವಲಿನವರಿಗೆ ಕರೆದು ಹೇಳಿದಳು ಕೀಚಕನ ಸಾವಿನ ವಿಷಯವನ್ನು. ದುರುಳ ಬಲುಹಿಂದೆನ್ನನು+ ಎಳೆದೊಡೆ ಕೆರಳಿದರು ಗಂಧರ್ವರು+ ಈತಗೆ ಹರುವ ಕಂಡರು ನೋಡಿಯೆನೆ= ದುಷ್ಟನು ಬಲವಂತವಾಗಿ ನನ್ನನು ಎಳೆದಾಗ ಗಂಧರ್ವರು ಕೆರಳಿದರು- ಕೋಪಗೊಂಡರು. ಈತನಿಗೆ ಹರುವು-ದಾರಿ, ಮಾರ್ಗ ಕೊನೆಯನ್ನು, ಕಂಡರು-ಕಾಣಿಸಿದರು- ತೋರಿದರು, ನೋಡಿಯೆನ್ನಲು ಅವಳೊಡನೆ ಹರಿತಂದರು- ಓಡಿಬಂದರು.
ಅರ್ಥ: ಭೀಮನ ಅಪ್ಪಿದ ದ್ರೌಪದಿಯನ್ನು ಬಿಡು, ನೀನು ಹೊರಟುಹೋಗು ಎಂದು ಹೇಳಿ ಅವನು ತನ್ನ ಬಿಡಾರಕ್ಕೆ ಹೋದನು. ದ್ರುಪದನಂದನೆ ದ್ರೌಪದಿಯು, ಕಾವಲಿನವರಿಗೆ ಕರೆದು ಕೀಚಕನ ಸಾವಿನ ವಿಷಯವನ್ನು ಹೇಳಿದಳು. ದುಷ್ಟನು ಬಲವಂತವಾಗಿ ನನ್ನನು ಎಳೆದಾಗ ಗಂಧರ್ವರು ಕೆರಳಿದರು- ಕೋಪಗೊಂಡರು. ಈತನಿಗೆ ಕೊನೆಯನ್ನು ಕಾಣಿಸಿದರು, ನೋಡಿಯೆನ್ನಲು, ಅವಳೊಡನೆ ಅವರು ಓಡಿಬಂದರು.
ಅರಸಿ ಕೈದೀವಿಗೆಯಲವನಿಹ
ಪರಿಯ ಕಂಡರು ಕಾಹಿನವದಿರು
ಹರಿದು ಹೇಳಿದರಾತನನುಜಾತರಿಗೆ ಬೇಗದಲಿ |
ಕರದಿ ಬಾಯ್ಗಳ ಹೊಯ್ದು ಹೃದಯದೊ
ಳುರಿ ಚಡಾಳಿಸೆ ಬಿಟ್ಟ ಮಂಡೆಯೊ
ಳಿರದೆ ಬಂದರು ಕೀಚಕನ ಸೋದರರು ಬಾಯ್ವಿಡುತ ||೯೫ ||
ಪದವಿಭಾಗ-ಅರ್ಥ: ಅರಸಿ ಕೈದೀವಿಗೆಯಲಿ+ ಅವನು+ ಇಹ ಪರಿಯ ಕಂಡರು ಕಾಹಿನವದಿರು ಹರಿದು ಹೇಳಿದರು+ ಆತನ+ ಅನುಜಾತರಿಗೆ ಬೇಗದಲಿ ಕರದಿ ಬಾಯ್ಗಳ ಹೊಯ್ದು ಹೃದಯದೊಳು+ ಉರಿ ಚಡಾಳಿಸೆ ಬಿಟ್ಟ ಮಂಡೆಯೊಳು+ ಇರದೆ ಬಂದರು ಕೀಚಕನ ಸೋದರರು ಬಾಯ್ವಿಡುತ.
ಅರಸಿ= ಹುಡುಕಿ, ಕೈದೀವಿಗೆಯಲಿ+ ಅವನು+ ಇಹ=ಇರುವ, ಪರಿಯ= ರೀತಿಯನ್ನು, ಕಂಡರು ಕಾಹಿನವದಿರು= ಕಾವಲಿನವರು, ಹರಿದು= ಓಡಿಹೋಗಿ ಹೇಳಿದರು+ ಆತನ+ ಅನುಜಾತರಿಗೆ= ಸೋದರರಿಗೆ- ತಮ್ಮಂದಿರಿಗೆ ಬೇಗದಲಿ,// ಕರದಿ ಬಾಯ್ಗಳ ಹೊಯ್ದು ಹೃದಯದೊಳು+ ಉರಿ ಚಡಾಳಿಸೆ ಬಿಟ್ಟ ಮಂಡೆಯೊಳು+ ಇರದೆ ಬಂದರು ಕೀಚಕನ ಸೋದರರು ಬಾಯ್ವಿಡುತ= ಕರದಿ ಬಾಯ್ಗಳ ಹೊಯ್ದು- ಕೈಯಿಂದ ಬಾಯಿಯನ್ನು ಬಡಿದುಕೊಳ್ಳುತ್ತಾ, ಹೃದಯದೊಳು+ ಉರಿ ಚಡಾಳಿಸೆ- ಎದೆಯಲ್ಲಿ ಉರಿ ತುಂಬಲು, ಬಿಟ್ಟ ಮಂಡೆಯೊಳು+ ಇರದೆ(ಬೇಗ) ಬಂದರು ಕೀಚಕನ ಸೋದರರು ಬಾಯ್ವಿಡುತ- ತಲೆಯನ್ನು ಕೆದರಿರಲು ಬಾಯಿ ಬಡಿದುಕೊಳ್ಳುತ್ತಾ ಕೀಚಕನ ಸೋದರರು ಬೇಗ ಬೇಗ ಬಂದರು.
ಅರ್ಥ:ಕಾವಲಿನವರು ಕೈದೀವಿಗೆಯಲಿ ಹುಡುಕಿ,ಅವನು ಇರುವ ರೀತಿಯನ್ನು ಕಂಡರು. ಅವರು ಬೇಗ ಓಡಿಹೋಗಿ ಆತನ ಸೋದರರಿಗೆ- ತಮ್ಮಂದಿರಿಗೆ ಹೇಳಿದರು. ಕೈಯಿಂದ ಬಾಯಿಯನ್ನು ಬಡಿದುಕೊಳ್ಳುತ್ತಾ, ಹೃದಯದೊಳು ಉರಿ ಎದೆಯಲ್ಲಿ ಉರಿ ತುಂಬಲು, ಬಿಟ್ಟ ಮಂಡೆಯಲ್ಲಿ ಕೀಚಕನ ಸೋದರರು ಬಂದರು. ಕೀಚಕನ ಸೋದರರು, ತಲೆಯು ಕೆದರಿರಲು ಬಾಯಿ ಬಡಿದುಕೊಳ್ಳುತ್ತಾ ಬೇಗ ಬೇಗ ಬಂದರು.
ಆರು ಗತಿಯೆಮಗಕಟ ಕೀಚಕ
ವೀರ ದೇಶಿಗರಾದೆವಾವಿ
ನ್ನಾರ ಸೇರುವೆವೆನುತ ಹಲುಬಿದರವನ ತಕ್ಕೈಸಿ |
ಕ್ರೂರಕರ್ಮರು ನಿನ್ನ ಕೊಂದವ
ರಾರು ಹಾ ಹಾಯೆನುತ ಹಲುಬಲು
ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ || ೯೬ ||
ಪದವಿಭಾಗ-ಅರ್ಥ: ಆರು ಗತಿಯೆಮಗೆ+ ಅಕಟ ಕೀಚಕ ವೀರ ದೇಶಿಗರು+ ಆದೆವು+ ಆವು+ ಇನ್ನಾರ ಸೇರುವೆವು+ ಎನುತ ಹಲುಬಿದರು+ ಅವನ ತಕ್ಕೈಸಿ ಕ್ರೂರಕರ್ಮರು ನಿನ್ನ ಕೊಂದವರು+ ಆರು ಹಾ ಹಾಯೆನುತ ಹಲುಬಲು ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ.
ಆರು ಗತಿಯೆಮಗೆ+ ಅಕಟ ಕೀಚಕ ವೀರ ದೇಶಿಗರು+ ಆದೆವು+ ಆವು+ ಇನ್ನಾರ ಸೇರುವೆವು+ ಎನುತ ಹಲುಬಿದರು= ನಮಗೆ ಯಾರು ಗತಿ, ಅಕಟ! ಕೀಚಕ ವೀರ ಹೋದನು;// ದೇಶಿಗರು+ ಆದೆವು+ ಆವು- ನಾವು+ ಇನ್ನಾರ ಸೇರುವೆವು+ ಎನುತ ಹಲುಬಿದರು ಅವನ ತಕ್ಕೈಸಿ= ನಾವು ಪರದೇಶಿಗಳಾದೆವು ಇನ್ನಾರನ್ನು ಆಶ್ರಯಿಸಿ ಸೇರುವೆವು! ಎನ್ನುತ್ತಾ ಸತ್ತ ಕೀಚಕನನ್ನು ಉಪಚರಿಸಿ ಹಲುಬಿದರು- ಗೋಳಿಟ್ಟರು; / ಕ್ರೂರಕರ್ಮರು ನಿನ್ನ ಕೊಂದವರು ಆರು ಹಾ ಹಾಯೆನುತ ಹಲುಬಲು ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ= ಕ್ರೂರಕರ್ಮಿಗಳು ನಿನ್ನನ್ನು ಕೊಂದವರು ಯಾರು ಹಾ! ಹಾ! ಯೆನ್ನುತ್ತಾ ಹಲುಬಲು- ಗೋಳಿಡಲು, ವಾರಿಜಾನನೆ- ದ್ರೌಪದಿ ಮುಗುಳುನಗೆಯಲಿ ನೋಡಿದಳು ಖಳರ- ಆ ದುಷ್ಟರನ್ನು ಮುಗುಳು ನಗುತ್ತಾ ನೋಡುತ್ತದ್ದಳು.
ಅರ್ಥ:ನಮಗೆ ಇನ್ನು ಯಾರು ಗತಿ, ಅಕಟ! ಕೀಚಕ ವೀರ ಹೋದನು; ನಾವು ಪರದೇಶಿಗಳಾದೆವು ಇನ್ನಾರನ್ನು ಆಶ್ರಯಿಸಿ ಸೇರುವೆವು! ಎನ್ನುತ್ತಾ ಸತ್ತ ಕೀಚಕನನ್ನು ಉಪಚರಿಸಿ ಗೋಳಿಟ್ಟರು; ಕ್ರೂರಕರ್ಮಿಗಳು ನಿನ್ನನ್ನು ಕೊಂದವರು ಯಾರು ಹಾ! ಹಾ! ಯೆನ್ನುತ್ತಾ ಹಲುಬಲು- ಗೋಳಿಡಲು, ದ್ರೌಪದಿಯು ಆ ದುಷ್ಟರನ್ನು ಮುಗುಳು ನಗುತ್ತಾ ನೋಡುತ್ತದ್ದಳು.
ಇವಳಿಗೋಸುಗವಳಿದನೇ ಸಹ
ಭವನು ತಪ್ಪೇನೆನುತ ನಡುವಿರು
ಳವದಿರೈತಂದರುಹಿದರು ವೈರಾಟ ರಾಯಂಗೆ
ಅವಳನಾತನ ಕೂಡೆ ಕಳಹುವೊ
ಡೆವಗೆ ನೇಮವೆಯೆಂದು ಬೀಳ್ಕೊಂ
ಡವರು ಮರಳಿದು ಬಂದು ಹಿಡಿದರು ಕಮಲಲೋಚನೆಯ ೯೭
ಪದವಿಭಾಗ-ಅರ್ಥ: ಇವಳಿಗೋಸುಗವೆ+ ಅಳಿದನೇ ಸಹಭವನು ತಪ್ಪೇನು+ ಎನುತ ನಡುವಿರುಳು+ ಅವದಿರು+ ಐತಂದು+ ಅರುಹಿದರು ವೈರಾಟ ರಾಯಂಗೆ ಅವಳನು+ ಆತನ ಕೂಡೆ ಕಳಹುವೊಡ+ ಅವಗೆ ನೇಮವೆಯೆಂದು ಬೀಳ್ಕೊಂಡವರು ಮರಳಿದು ಬಂದು ಹಿಡಿದರು ಕಮಲಲೋಚನೆಯ.
ಇವಳಿಗೋಸುಗವೆ+ ಅಳಿದನೇ ಸಹಭವನು ತಪ್ಪೇನು+ ಎನುತ ನಡುವಿರುಳು+ ಅವದಿರು+ ಐತಂದು+ ಅರುಹಿದರು ವೈರಾಟ ರಾಯಂಗೆ= ಇವಳಿಗೋಸ್ಕರವೇ+ ಅಳಿದನೇ= ಸತ್ತನೇ, ಸಹಭವನು= ಸೋದರನು, ತಪ್ಪೇನು+ ಎನುತ ನಡುವಿರುಳು= ನಡು ರಾತ್ರಿಯಲ್ಲಿ+ ಅವದಿರು= ಅವರು,+ ಐತಂದು= ಬಂದು+ ಅರುಹಿದರು= ಹೇಳಿದರು ವೈರಾಟ ರಾಯಂಗೆ= ವಿರಾಟರಾಜನಿಗೆ,// ಅವಳನು+ ಆತನ ಕೂಡೆ ಕಳಹುವೊಡ= (ಯಮಲೋಕಕ್ಕೆ)ಕಳುಹಿಸಿದರೆ+ ಅವಗೆ ನೇಮವೆಯೆಂದು(ಅವನಿಗೆ ಅಂತಿಮ ಕ್ರಿಯೆಯ ನಿಯಮಕ್ಕೆ ಸಲ್ಲುವುದೆಂದು) ಬೀಳ್ಕೊಂಡವರು ಮರಳಿದು= ಹಿಂತಿರುಗಿಬಂದು, ಬಂದು ಹಿಡಿದರು ಕಮಲಲೋಚನೆಯ= ಕಮಲದಂತೆ ಕಣ್ಣುಳ್ಳ ದ್ರೌಪದಿಯನ್ನು.
ಅರ್ಥ:ಇವಳಿಗೋಸ್ಕರವೇ ಸತ್ತನೇ ಸೋದರನು, ತಪ್ಪೇನು ಎನುತ್ತಾ ನಡು ರಾತ್ರಿಯಲ್ಲಿ ಅವರು ಬಂದು ವಿರಾಟರಾಜನಿಗೆ ಹೇಳಿದರು. ಅವಳನ್ನೂ ಆತನ ಜೊತೆ ಯಮಲೋಕಕ್ಕೆ ಕಳುಹಿಸಿದರೆ ಅವನಿಗೆ ಅಂತಿಮ ಕ್ರಿಯೆಯ ನಿಯಮಕ್ಕೆ ಸಲ್ಲುವುದೆಂದು ರಾಜನನ್ನು ಬೀಳ್ಕೊಂಡು ಅವರು ಹಿಂತಿರುಗಿಬಂದು ಬಂದು ದ್ರೌಪದಿಯನ್ನು ಹಿಡಿದರು.
ತೆಗೆದು ಮಂಚದಲವನ ಹೆಣನನು
ಬಿಗಿದರವಳನು ಕಾಲ ದೆಸೆಯಲಿ
ನಗುವುದಿನ್ನೊಮ್ಮೆನುತ ಕಟ್ಟಿದರವರು ಕಾಮಿನಿಯ
ಬೆಗಡುಗೊಂಡಂಭೋಜಮುಖಿಯು
ಬ್ಬೆಗದೊಳೊದರಿದಳಕಟಕಟ ಪಾ
ಪಿಗಳಿರಾ ಗಂಧರ್ವರಿರ ಹಾಯೆನುತ ಹಲುಬಿದಳು ೯೮
ಪದವಿಭಾಗ-ಅರ್ಥ:ತೆಗೆದು ಮಂಚದಲಿ+ ಅವನ ಹೆಣನನು ಬಿಗಿದರು+ ಅವಳನು ಕಾಲ ದೆಸೆಯಲಿ ನಗುವುದು+ ಇನ್ನೊಮ್ಮೆ+ ಎನುತ ಕಟ್ಟಿದರು+ ಅವರು ಕಾಮಿನಿಯ, ಬೆಗಡುಗೊಂಡು+ ಅಂಭೋಜಮುಖಿಯು+ ಉಬ್ಬೆಗದೊಳು+ ಒದರಿದಳು+ ಅಕಟಕಟ ಪಾಪಿಗಳಿರಾ ಗಂಧರ್ವರಿರ ಹಾಯೆನುತ ಹಲುಬಿದಳು.
ತೆಗೆದು ಮಂಚದಲಿ+ ಅವನ ಹೆಣನನು ಬಿಗಿದರು+ ಅವಳನು ಕಾಲ ದೆಸೆಯಲಿ ನಗುವುದು+ ಇನ್ನೊಮ್ಮೆ+ ಎನುತ ಕಟ್ಟಿದರು+ ಅವರು ಕಾಮಿನಿಯ= ಕೀಚಕನನ್ನು ತೆಗೆದೆತ್ತಿ ಮಂಚದಲ್ಲ್ಲಿ ಅವನ ಹೆಣವನ್ನು ಬಿಗಿದರು. + ಅವಳನು- ದ್ರೌಪದಿಯನ್ನು ಅವನ ಕಾಲಿನ ಕಡೆಯಲ್ಲಿ ಬಿಗಿದು, ನಗುವುದು+ ಇನ್ನೊಮ್ಮೆ+ ಎನುತ= ಈಗ ಮತ್ತೊಮ್ಮೆ ನಗು ಎನ್ನುತ್ತಾ ಅವರು ಕಾಮಿನಿಯ- ದ್ರೌಪದಿಯನ್ನು ಕಟ್ಟಿದರು./ + ಬೆಗಡುಗೊಂಡು+ ಅಂಭೋಜಮುಖಿಯು+ ಉಬ್ಬೆಗದೊಳು+ ಒದರಿದಳು+ ಅಕಟಕಟ ಪಾಪಿಗಳಿರಾ ಗಂಧರ್ವರಿರ ಹಾಯೆನುತ ಹಲುಬಿದಳು= ಬೆಗಡುಗೊಂಡು+ ಅಂಭೋಜಮುಖಿಯು- ಕಮಲಮುಖಿ- ದ್ರೌಪದಿಯು+ ಉಬ್ಬೆಗದೊಳು-ಉದ್ವೇಗಗೊಂಡು ಒದರಿದಳು- ಕೂಗಿಕೊಂಡಳು+ ಅಕಟಕಟ ಪಾಪಿಗಳಿರಾ ಗಂಧರ್ವರಿರ (ಕಾಪಾಡಿ- ಕಾಪಾಡಿ)ಹಾಯೆನುತ ಹಲುಬಿದಳು- ಗೋಳಿಟ್ಟಳು.
ಅರ್ಥ: ಕೀಚಕನನ್ನು ತೆಗೆದೆತ್ತಿ ಮಂಚದಲ್ಲ್ಲಿ ಅವನ ಹೆಣವನ್ನು ಬಿಗಿದರು.ದ್ರೌಪದಿಯನ್ನು ಅವನ ಕಾಲಿನ ಕಡೆಯಲ್ಲಿ ಬಿಗಿದು, ಈಗ ಮತ್ತೊಮ್ಮೆ ನಗು ಎನ್ನುತ್ತಾ, ಅವರು ದ್ರೌಪದಿಯನ್ನು ಕಟ್ಟಿದರು. ದ್ರೌಪದಿಯು ಉದ್ವೇಗಗೊಂಡು ಕೂಗಿಕೊಂಡಳು, ಅಕಟಕಟ ಪಾಪಿಗಳಿರಾ, ಗಂಧರ್ವರೇ ಕಾಪಾಡಿ- ಕಾಪಾಡಿ ಹಾಯೆನುತ ಹಲುಬಿ ಗೋಳಿಟ್ಟಳು.
ಕೇಳಕಟ ಜಯನೇ ಜಯಂತನೆ
ಕೇಳು ವಿಜಯ ಜಯೋದ್ಭವನೆ ನೀ
ಕೇಳು ಜಯಸೇನನೆ ದುರಾತ್ಮಕರೆನ್ನನೆಳೆದೊಯ್ದು |
ಬೀಳಿಸುವರಗ್ನಿಯಲಿ ನೀವಕ
ಟೇಳಿ ತಡವೇಕೆನುತ ಮೊರೆಯಿಡೆ
ಕೇಳಿದನು ಕಲಿಭೀಮ ಸತಿಯಾಕ್ರಂದನ ಧ್ವನಿಯ || ೯೯ ||
ಪದವಿಭಾಗ-ಅರ್ಥ:ಕೇಳು+ ಅಕಟ ಜಯನೇ ಜಯಂತನೆ ಕೇಳು, ವಿಜಯ ಜಯೋದ್ಭವನೆ ನೀ ಕೇಳು, ಜಯಸೇನನೆ- ದುರಾತ್ಮಕರು+ ಎನ್ನನು+ ಎಳೆದೊಯ್ದು ಬೀಳಿಸುವರು+ ಅಗ್ನಿಯಲಿ ನೀವು+ ಅಕಟ+ ಏಳಿ ತಡವೇಕೆ+ ಎನುತ ಮೊರೆಯಿಡೆ, ಕೇಳಿದನು ಕಲಿಭೀಮ ಸತಿಯ+ ಆಕ್ರಂದನ ಧ್ವನಿಯ.
ಕೇಳು+ ಅಕಟ ಜಯನೇ ಜಯಂತನೆ ಕೇಳು, ವಿಜಯ ಜಯೋದ್ಭವನೆ ನೀ ಕೇಳು, ಜಯಸೇನನೆ- ದುರಾತ್ಮಕರು+ ಎನ್ನನು (ನನ್ನನ್ನು)+ ಎಳೆದೊಯ್ದು ಬೀಳಿಸುವರು+ ಅಗ್ನಿಯಲಿ ನೀವು+ ಅಕಟ+ ಏಳಿ ತಡವೇಕೆ+ ಎನುತ ಮೊರೆಯಿಡೆ, ಕೇಳಿದನು ಕಲಿಭೀಮ ಸತಿಯ+ ಆಕ್ರಂದನ(ಗೋಳಿಡುವ) ಧ್ವನಿಯ.
ಅರ್ಥ:ದ್ರೌಪದಿಯು ದೊಡ್ಡದಾಗಿ ಕೂಗಿ, ಕೇಳು, ಅಕಟ ಜಯನೇ, ಜಯಂತನೆ ಕೇಳು, ವಿಜಯ ಜಯೋದ್ಭವನೇ ನೀನೂ ಕೇಳು, ಜಯಸೇನನೆ- ಕೇಡಿಗರು ನನ್ನನ್ನು ಎಳೆದೊಯ್ದು ಅಗ್ನಿಯಲ್ಲಿ ಹಾಕುವರು. ಅಕಟಾ! ನೀವು ಏಳಿ ತಡವೇಕೆ, ಎನ್ನುತ್ತಾ ಮೊರೆಯಿಡಲು, ಕಲಿಭೀಮನು ತನ್ನ ಸತಿಯ ಗೋಳಿಡುವ ಧ್ವನಿಯನ್ನು ಕೇಳಿದನು.
ಈ ದುರಾತ್ಮರಿಗಗ್ರಜನ ಸಾ
ವೈದದೇ ತಮ್ಮಣ್ಣನಲ್ಲಿಗೆ
ಹೊಯ್ದು ಕಳುಹಲುಬೇಕಲಾ ಕುನ್ನಿಗಳನೀ ಕ್ಷಣಕೆ |
ಬೈಯ್ದು ಫಲವೇನೆಂದು ಮಾರುತಿ
ಹಾಯ್ದು ಝಂಕಿಸಿ ರುದ್ರಭೂಮಿಯ
ನೆಯ್ದಿದನು ಫಡಯೆನುತ ಕೊಂಡನು ಮುರಿದು ಹೆಮ್ಮರನ || ೧೦೦ ||
ಪದವಿಭಾಗ-ಅರ್ಥ: ಈ ದುರಾತ್ಮರಿಗೆ+ ಅಗ್ರಜನ ಸಾವು+ ಐದದೇ ತಮ್ಮಣ್ಣನಲ್ಲಿಗೆ ಹೊಯ್ದು ಕಳುಹಲುಬೇಕಲಾ, ಕುನ್ನಿಗಳನು+ ಈ ಕ್ಷಣಕೆ ಬೈಯ್ದು ಫಲವೇನೆಂದು ಮಾರುತಿ ಹಾಯ್ದು ಝಂಕಿಸಿ ರುದ್ರಭೂಮಿಯನು+ ಯ್ದಿ+ ಐದಿದನು ಫಡಯೆನುತ ಕೊಂಡನು ಮುರಿದು ಹೆಮ್ಮರನ.
ಈ ದುರಾತ್ಮರಿಗೆ+ ಅಗ್ರಜನ ಸಾವು+ ಐದದೇ ತಮ್ಮಣ್ಣನಲ್ಲಿಗೆ ಹೊಯ್ದು ಕಳುಹಲುಬೇಕಲಾ, ಕುನ್ನಿಗಳನು+ ಈ ಕ್ಷಣಕೆ ಬೈಯ್ದು ಫಲವೇನೆಂದು ಮಾರುತಿ= ಈ ದುಷ್ಟರಿಗೆ ಅಗ್ರಜನ- ಅವರ ಅಣ್ಣನ ಸಾವು+ ಐದದೇ-ಬರುವುದಲ್ಲದೇ ಬೇರೆ ಏನಿದೆ? ತಮ್ಮಣ್ಣನಲ್ಲಿಗೆ ಹೊಯ್ದು ಕಳುಹಲುಬೇಕಲಾ,- ಅವರ ಅಣ್ಣನಬಳಿಗೆ ಹೊಡೆದು ಕಳಿಸಬೇಕಲ್ಲವೇ! ಕುನ್ನಿಗಳನು+ ಈ ಕ್ಷಣಕೆ ಬೈಯ್ದು ಫಲವೇನೆಂದು ಮಾರುತಿ ಹಾಯ್ದು - ಓಡಿಹೋಗಿ ಝಂಕಿಸಿ- ಗದರಿಸಿ, ರುದ್ರಭೂಮಿಯನು+ ಯ್ದಿ+ ಐದಿದನು- ತಲುಪಿದನು, ಫಡಯೆನುತ ಕೊಂಡನು ಮುರಿದು ಹೆಮ್ಮರನ- ಫಡ ಎಂದು ವೀರ ಘೋಷಣೆ ಮಾಡಿ ದೊಡ್ಡ ಮರವನ್ನು ಮುರಿದುಕೊಂಡನು.
ಅರ್ಥ: ಈ ದುಷ್ಟರಿಗೆ ಅವರ ಅಣ್ಣನ ಸಾವು ಬರುವುದಲ್ಲದೇ ಬೇರೆ ಏನಿದೆ? ಅವರ ಅಣ್ಣನಬಳಿಗೆ ಹೊಡೆದು ಕಳಿಸಬೇಕಲ್ಲವೇ! ಈ ಕುನ್ನಿಗಳನ್ನು ಈಗ ಬೈಯ್ದು ಫಲವಿಲ್ಲ ಎಂದು, ಭೀಮನು ಓಡಿ ಹೋಗಿ ಗದರಿಸಿ, ರುದ್ರಭೂಮಿಯನ್ನು ತಲುಪಿದನು. ಫಡ ಎಂದು ವೀರ ಘೋಷಣೆ ಮಾಡಿ ದೊಡ್ಡ ಮರವನ್ನು ಮುರಿದುಕೊಂಡನು.
ಎಲೆಲೆ ಗಂಧರ್ವಕನ ಹೆಂಗುಸ
ಕಳಚಿ ಬಿಡಿರೊ ಪಾಪಿ ಹೋಗಲಿ
ಕೊಲೆಗಡಿಗನಿವನೆನುತ ಹೆಣನನು ಬಿಸುಟು ದೆಸೆದೆಸೆಗೆ
ತಲೆಗೆದರಿ ತೆಗೆದೋಡೆ ನಕ್ಕನು
ಕಳಕಳಸಿ ಕಲಿಭೀಮನೆಲೆ ನಾ
ಯ್ಗಳಿರ ಹೋದೊಡೆ ಬಿಡುವೆನೇ ಹಾಯೆನುತ ಕೈಕೊಂಡ ೧೦೧
ಪದವಿಭಾಗ-ಅರ್ಥ: ಎಲೆಲೆ ಗಂಧರ್ವಕನ ಹೆಂಗುಸ- ಹೆಂಡತಿಯನ್ನು, ಕಳಚಿ ಬಿಡಿರೊ ಪಾಪಿ ಹೋಗಲಿ ಕೊಲೆಗಡಿಗನು+ ಇವನು+ ಎನುತ ಹೆಣನನು ಬಿಸುಟು ದೆಸೆದೆಸೆಗೆ ತಲೆಗೆದರಿ ತೆಗೆದೋಡೆ ನಕ್ಕನು ಕಳಕಳಸಿ ಕಲಿಭೀಮನು+ ಎಲೆ ನಾಯ್ಗಳಿರ ಹೋದೊಡೆ ಬಿಡುವೆನೇ ಹಾ ಯೆನುತ ಕೈಕೊಂಡ.
ಎಲೆಲೆ - ಸೋದರರೆ, 'ಗಂಧರ್ವನ ಹೆಂಡತಿಯನ್ನು ಕಳಚಿ ಬಿಡಿರೊ, ಪಾಪಿ ಹೋಗಲಿ ಕೊಲೆಗಡಿಗನು+ ಇವನು+ ಎನುತ ಹೆಣನನು- ಹೆಣವನ್ನು, ಬಿಸುಟು ದೆಸೆದೆಸೆಗೆ- ದಿಕ್ಕು ದಿಕ್ಕಿಗೆ ತಲೆಗೆದರಿ ತೆಗೆದು+ ಓಡೆ- ಭರದಿಂದ ಓಡಲು, ನಕ್ಕನು ಕಳಕಳಸಿ- ಸಂತಸದಿಂದ, ಕಲಿಭೀಮನು+ ಎಲೆ ನಾಯ್ಗಳಿರ- ನಾಯಿಗಳಿರಾ, ಹೋದೊಡೆ- ಓಡಿಹೋದರೆ ಬಿಡುವೆನೇ, ಹಾ ಯೆನುತ' ಭೀಮನು ಅವರನ್ನು ಕೊಲ್ಲಲು ನಿಶ್ಚಯವನು ಕೈಕೊಂಡ-.
ಅರ್ಥ: 'ಎಲೆಲೆ - ಸೋದರರೆ, ಗಂಧರ್ವನ ಹೆಂಡತಿಯನ್ನು ಕಳಚಿ ಬಿಡಿರೊ, ಪಾಪಿ ಹೋಗಲಿ ಇವನು ಕೊಲೆಗಡಿಗನು,' ಎನ್ನುತ್ತಾ ಹೆಣವನ್ನು ಬಿಸುಟು ದಿಕ್ಕು ದಿಕ್ಕಿಗೆ ಕೀಚಕನ ಸೋದರರು ತಲೆಗೆದರಿಕೊಂಡು ಭರದಿಂದ ಓಡಿದರು. ಕಲಿಭೀಮನು ಸಂತಸದಿಂದ ನಕ್ಕನು,'ಎಲೆ ನಾಯಿಗಳಿರಾ,ಓಡಿಹೋದರೆ ಬಿಡುವೆನೇ, ಹಾ ಯೆನ್ನುತ್ತಾ' ಅವರನ್ನು ಕೊಲ್ಲಲು ನಿಶ್ಚಯವನು ಕೈಕೊಂಡನು.
ತಿರುಹಿದನು ಹೆಮ್ಮರನನವದಿರ
ನರೆದು ನಿಟ್ಟೊರೆಸಿದನು ದೆಸೆ ದೆಸೆ
ಗೊರಲಿ ಚಿಮ್ಮುವ ಚಪಲರನು ಬೆಂಬತ್ತಿ ಬರಿಕೈದು
ಕುರಿದರಿದು ಮಾಡಿದನು ನೂರೈ
ವರನು ಕೊಂದನು ಮರನ ಹಾಯಿಕಿ
ಮರಳಿ ಮಿಣ್ಣನೆ ಬಂದು ಹೊಕ್ಕನು ಬಾಣಸದ ಮನೆಯ ೧೦೨
ಪದವಿಭಾಗ-ಅರ್ಥ: ತಿರುಹಿದನು ಹೆಮ್ಮರನನು+ ಅವದಿರ ನರೆದು ನಿಟ್ಟೊರೆಸಿದನು ದೆಸೆ ದೆಸೆಗೆ+ ಒರಲಿ ಚಿಮ್ಮುವ ಚಪಲರನು ಬೆಂಬತ್ತಿ ಬರಿಕೈದು ಕುರಿದರಿದು ಮಾಡಿದನು ನೂರೈವರನು ಕೊಂದನು ಮರನ ಹಾಯಿಕಿ ಮರಳಿ ಮಿಣ್ಣನೆ ಬಂದು ಹೊಕ್ಕನು ಬಾಣಸದ ಮನೆಯ.
ಭೀಮನು ತಿರುಹಿದನು ಹೆಮ್ಮರನನು - ದೊಡ್ಡ ಮರವನ್ನು ಅವರ ಮೇಲೆ ತಿರುಗಿಸಿ ತಿರುಗಿಸಿ ಹೊಡೆದನು.+ ಅವದಿರ ನರೆದು ನಿಟ್ಟೊರೆಸಿದನು- ಅವರನ್ನು ಪುಡಿಮಾಡಿ ನಿಟ್+ ಒರೆಸಿದನು- ಇನ್ನಿಲ್ಲದಂತೆ ಒರೆಸಿಹಾಕಿದನು. ದೆಸೆ ದೆಸೆಗೆ+ ಒರಲಿ ಚಿಮ್ಮುವ(ಓಡುವ) ಚಪಲರನು(ಚುರುಕಿನ ವೀರರನ್ನು) ಬೆಂಬತ್ತಿ ಬರಿಕೈದು (ಇಲ್ಲದಮತೆ ಮಾಡಿ)- ದಿಕ್ಕುದಿಕ್ಕಿಗೆ ಒರಲುತ್ತಾ ಕೂಗುತ್ತಾ ಓಡುವ ಚುರುಕಿನ ವೀರರನ್ನು ಅಟ್ಟಿಸಿಕೊಂಡು ಹೋಗಿ ನಾಶಮಾಡಿದನು. ಕುರಿದರಿದು ಮಾಡಿದನು- ಕುರಿಯನ್ನು ಕಡಿಯುವಂತೆ,ನೂರಾ ಐವರನ್ನೂ ಕೊಂದನು. ನಂತರ, ಮರನ ಹಾಯಿಕಿ ಮರಳಿ ಮಿಣ್ಣನೆ ಬಂದು ಹೊಕ್ಕನು ಬಾಣಸದ ಮನೆಯ= ಮರವನ್ನು ಅಲ್ಲಿಯೇ ಹಾಕಿ ಮರಳಿ- ಪುನಃ, ಮಿಣ್ಣನೆ- ಸದ್ದಿಲ್ಲದಂತೆ ಬಂದು ಹೊಕ್ಕನು ಬಾಣಸದ ಮನೆಯ- ಅಡುಗೆಮನೆಯನ್ನು ಸೇರಿಕೊಂಡನು.
ಅರ್ಥ:ಭೀಮನು ಮುರಿದು ತಂದ ದೊಡ್ಡ ಮರವನ್ನು ಅವರ ಮೇಲೆ ತಿರುಗಿಸಿ ತಿರುಗಿಸಿ ಹೊಡೆದನು. ಅವರನ್ನು ಪುಡಿಮಾಡಿ ಇನ್ನಿಲ್ಲದಂತೆ ಒರೆಸಿಹಾಕಿದನು. ದಿಕ್ಕುದಿಕ್ಕಿಗೆ ಒರಲುತ್ತಾ ಕೂಗುತ್ತಾ ಓಡುವ ಚುರುಕಿನ ವೀರರನ್ನು ಅಟ್ಟಿಸಿಕೊಂಡು ಹೋಗಿ ನಾಶಮಾಡಿದನು. ಕುರಿಯನ್ನು ಕಡಿಯುವಂತೆ,ನೂರಾ ಐವರನ್ನೂ ಕೊಂದನು. ನಂತರ ಮುರಿದ ಮರವನ್ನು ಅಲ್ಲಿಯೇ ಹಾಕಿ ಸದ್ದಿಲ್ಲದಂತೆ ಬಂದು ಅಡುಗೆಮನೆಯನ್ನು ಸೇರಿಕೊಂಡನು.
ಸುಳಿಯಲಮ್ಮದು ಪೌರಜನವಿವ
ರಳಿವ ವಚನಿಸಲಮ್ಮದೀಕೆಯ
ನಲುಕಲಮ್ಮದು ನೋಡಲಮ್ಮದು ಮಂದಿ ಗುಜುಗುಜಿಸಿ |
ನಳಿನಮುಖಿ ನಸುನಗುತ ತಿಳಿಗೊಳ
ದೊಳಗೆ ಹೊಕ್ಕಳು ಮಿಂದು ಬೀದಿಗ
ಳೊಳಗೆ ಬರುತಿರೆ ಕಂಡು ಕೈಗಳ ಮುಗಿದುದಖಿಳ ಜನ || ೧೦೩ ||
ಪದವಿಭಾಗ-ಅರ್ಥ: ಸುಳಿಯಲು+ ಅಮ್ಮದು ಪೌರಜನವು+ ಇವರ+ ಅಳಿವ ವಚನಿಸಲು+ ಅಮ್ಮದು ಈಕೆಯ ನಲುಕಲು+ ಅಮ್ಮದು ನೋಡಲು+ ಅಮ್ಮದು ಮಂದಿ ಗುಜುಗುಜಿಸಿ ನಳಿನಮುಖಿ ನಸುನಗುತ ತಿಳಿಗೊಳದೊಳಗೆ ಹೊಕ್ಕಳು ಮಿಂದು ಬೀದಿಗಳೊಳಗೆ ಬರುತಿರೆ ಕಂಡು ಕೈಗಳ ಮುಗಿದುದು+ ಅಖಿಳ ಜನ.
ಸುಳಿಯಲು+ ಅಮ್ಮದು- ಆಗದು, ಪೌರಜನವು+ ಇವರ+ ಅಳಿವ- ಸಾವನ್ನು, ವಚನಿಸಲು- ಹೇಳಲು+ ಅಮ್ಮದು ಈಕೆಯ ನಲುಕಲು-ನಲುಕು- ಅಲುಗಿಸಲು+ ಅಮ್ಮದು, ನೋಡಲು+ ಅಮ್ಮದು ಮಂದಿ ಗುಜುಗುಜಿಸಿ ಮೆಲ್ಲಗೆ ಗುಸುಗುಸನೆ ಮಾತನಾಡಿ, ನಳಿನಮುಖಿ ನಸುನಗುತ ತಿಳಿಗೊಳದೊಳಗೆ ಹೊಕ್ಕಳು ಮಿಂದು ಬೀದಿಗಳೊಳಗೆ ಬರುತಿರೆ ಕಂಡು ಕೈಗಳ ಮುಗಿದುದು+ ಅಖಿಳ- ಎಲ್ಲ, ಜನ.
ಅರ್ಥ:ಜನರು ಹೆದರಿ ಹೀಗೆ ಮಾತನಾಡಿ ಕೊಂಡರು, ಇವಳ ಹತ್ತಿರ ಸುಳಿಯಲು ಆಗದು, ಪೌರಜನರು ಹೇಳಿಕೊಂಡರು- ಕೀಚಕ ಕುಲದವರ ಸಾವನ್ನು ವಿವರಿಸಿ ಹೇಳಲು ಆಗದು, ಈಕೆ ಸೈರಂದ್ರಿಯನ್ನು ಅಲುಗಿಸಲು ಆಗದು, ಇವಳನ್ನು ನೋಡಲುಆಗದು, ಮಂದಿ- ಊರಜನರು ಗುಜುಗುಜಿಸಿ ಮೆಲ್ಲಗೆ ಗುಸುಗುಸನೆ ಮಾತನಾಡಿಕೊಂಡರು. ದ್ರೌಪದಿ ನಸುನಗುತ್ತಾ ತಿಳಿಗೊಳದಲ್ಲಿ ಇಳಿದು ಮಿಂದು- ಸ್ನಾನಮಾಡಿ ಬೀದಿಗಳಲ್ಲಿ ನೆಡೆದು ಬರುತ್ತಿರಲು ಅವಳನ್ನು ಕಂಡು ಎಲ್ಲ ಜನರು ಕೈಗಳನ್ನು ಮುಗಿದರು.
ಈಕೆಗೋಸುಗವಳಿದನಕಟವಿ
ವೇಕಿ ಕೀಚಕನೆಂದು ಕೆಲಬರಿ
ದೇಕೆ ನಮಗೀ ಚಿಂತೆ ಶಿವ ಶಿವಯೆಂದು ಕೆಲಕೆಲರು |
ನೂಕಿ ಕವಿದುದು ಮಂದಿ ಮಧ್ಯದೊ
ಳೀಕೆ ಮೆಲ್ಲನೆ ಬರುತಲಾ ಲೋ
ಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ || ೧೦೪ ||
ಪದವಿಭಾಗ-ಅರ್ಥ: ಈಕೆಗೋಸುಗವೆ+ ಅಳಿದನು+ ಅಕಟ+ ಅವಿವೇಕಿ ಕೀಚಕನು+ ಎಂದು ಕೆಲಬರು+ ಇದೇಕೆ ನಮಗೆ+ ಈ ಚಿಂತೆ ಶಿವ ಶಿವಯೆಂದು ಕೆಲಕೆಲರು ನೂಕಿ ಕವಿದುದು ಮಂದಿ ಮಧ್ಯದೊಳು+ ಈಕೆ ಮೆಲ್ಲನೆ ಬರುತಲಿ+ ಆ ಲೋಕೈಕ ವೀರನ ಕಂಡಳು+ ಆ ಬಾಣಸಿನ ಬಾಗಿಲಲಿ.
ಈಕೆಗೋಸುಗವೆ+ ಅಳಿದನು+ ಅಕಟ+ ಅವಿವೇಕಿ ಕೀಚಕನೆಂದು ಕೆಲಬರು+= ಈಕೆಗೋಸುಗವೆ= ಈಕೆಗೋಸ್ಕರವೇ+ ಅಳಿದನು= ಸತ್ತನು+ ಅಕಟ+ ಅವಿವೇಕಿ ಕೀಚಕನು+ ಎಂದು ಕೆಲಬರು= ಕೆಲವರು ಹೇಳಿದರೆ,// (ಕೆಲವರು)- ಇದೇಕೆ ನಮಗೆ+ ಈ ಚಿಂತೆ ಶಿವ ಶಿವಯೆಂದು ಕೆಲಕೆಲರು, ನೂಕಿ- ಒತ್ತೊತ್ತಾಗಿ ಕವಿದುದು - ಸೇರಿದರು, ಮಂದಿ- ಜನರು/ ಈ ಮಧ್ಯದೊಳು- ಮಧ್ಯದಲ್ಲಿ+ ಈಕೆ- ದ್ರೌಪದಿ ಮೆಲ್ಲನೆ ಬರುತಲಿ+್ತಿರಲು ಆ ಲೋಕೈಕ ವೀರನ- ಭಿಮನ, ಕಂಡಳು+ ಆ ಬಾಣಸಿನ ಬಾಗಿಲಲಿ
ಅರ್ಥ:ಜನರು, ಕೀಚಕನು ಈಕೆಗೋಸ್ಕರವೇ ಸತ್ತನು, ಅಕಟ! ಅವಿವೇಕಿ, ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ನಮಗೆ ಈ ಚಿಂತೆ ಏಕೆ ಬೇಕು, ಶಿವ ಶಿವಯೆಂದು ಹೇಳಿದರು; ಕೆಲಕೆಲವರು ಜನರು ದ್ರೌಪದಿಯನ್ನು ನೋಡಲು ಒತ್ತೊತ್ತಾಗಿ ಗುಂಪುಗೂಡಿದರು. ಈ ಮಧ್ಯದಲ್ಲಿ ದ್ರೌಪದಿ ಮೆಲ್ಲನೆ ಬರುತ್ತಿರಲು ಆ ಲೋಕೈಕ ವೀರ ಭೀಮನನ್ನು ಆ ಅಡುಗೆಯಮನೆಯ ಬಾಗಿಲಲ್ಲಿ ಕಂಡಳು.
ಮುಗುಳು ನಗೆಯಲಿ ಕಣ್ಣ ಕಡೆಯಲಿ
ವಿಗಡ ಭೀಮನ ನೋಡಿ ಕೈಗಳ
ಮುಗಿದೆವಾವ್ ಗಂಧರ್ವಪತಿಗೆ ನಮೋ ನಮೋಯೆನುತ ||
ಹೊಗರಿಡುವ ಹರುಷದಲಿ ರೋಮಾ
ಳಿಗಳ ಗುಡಿಯಲಿ ತನ್ನ ನಿಳಯಕೆ
ಮುಗುದೆ ಬಂದಳು ಸೂರ್ಯನಡರಿದನುದಯ ಪರ್ವತವ || ೧೦೫ ||
ಪದವಿಭಾಗ-ಅರ್ಥ: ಮುಗುಳು ನಗೆಯಲಿ ಕಣ್ಣ ಕಡೆಯಲಿ ವಿಗಡ ಭೀಮನ ನೋಡಿ ಕೈಗಳ ಮುಗಿದೆವು+ ಆವ್ ಗಂಧರ್ವಪತಿಗೆ ನಮೋ ನಮೋಯೆನುತ ಹೊಗರಿಡುವ ಹರುಷದಲಿ ರೋಮಾಳಿಗಳ ಗುಡಿಯಲಿ ತನ್ನ ನಿಳಯಕೆ ಮುಗುದೆ ಬಂದಳು ಸೂರ್ಯನು+ ಅಡರಿದನು+ ಉದಯ ಪರ್ವತವ.
ಮುಗುಳು ನಗೆಯಲಿ ಕಣ್ಣ ಕಡೆಯಲಿ ವಿಗಡ ಭೀಮನ ನೋಡಿ ಕೈಗಳ ಮುಗಿದೆವು+ ಆವ್ ಗಂಧರ್ವಪತಿಗೆ ನಮೋ ನಮೋಯೆನುತ= ದ್ರೌಪದಿಯು ಮುಗುಳು ನಗೆಯಲ್ಲಿ ಕಣ್ಣ-ಕಡೆಯಲ್ಲಿ ವಿಗಡ ಭೀಮನನ್ನು ನೋಡಿ, ಕೈಗಳ ಮುಗಿದೆವು+ ಆವ್- ನಾವು ಗಂಧರ್ವಪತಿಗೆ ನಮೋ ನಮೋಯೆನುತ ಬಂದಳು.// ಹೊಗರಿಡುವ - ಪ್ರಕಾಶಿಸುವ ಹರುಷದಲಿ ರೋಮಾಳಿಗಳ ಗುಡಿಯಲಿ(ಬಾವುಟಗಳು)- ಅವಳಿಗೆ ಭೀಮನ್ನು ನೋಡಿ ಆನಂದದಿಂದ ರೋಮಾಂಚನವಾಗಿ ಅವು- ರೋಮಗಳು ಬಾವುಟಗಳಂತೆ ಎದ್ದು ನಿಂತವು. ಹಾಗೆಯೇ ತನ್ನ ನಿಳಯಕೆ- ವಸತಿಗೆ ಮುಗುದೆ- ಮುಗ್ಧೆ ಬಂದಳು. ಅಷ್ಟುಹೊತ್ತಿಗೆ ಸೂರ್ಯನು+ ಅಡರಿದನು- ಏರಿದನು,+ ಉದಯ ಪರ್ವತವ- ಪರ್ವತವನ್ನು= ಅಷ್ಟುಹೊತ್ತಿಗೆ ಸೂರ್ಯೋದಯವಾಯಿತು..
ಅರ್ಥ: ದ್ರೌಪದಿಯು ಮುಗುಳುನಗೆಯಲ್ಲಿ ಕಣ್ಣ-ಕಡೆಯಿಂದ ವೀರ ಭೀಮನನ್ನು ನೋಡಿ, ನಾವು ಗಂಧರ್ವಪತಿಗೆ ಕೈಗಳ ಮುಗಿದೆವು ನಮೋ ನಮೋ ಎನುತ್ತಾ ಬಂದಳು. ಅವಳಿಗೆ ಭೀಮನ್ನು ನೋಡಿ ಆನಂದದಿಂದ- ಎದ್ದುಕಾಣುವ ಬೆಳಗುವ ಹರ್ಷದಿಂದ ರೋಮಾಂಚನವಾಗಿ ಅವು ಬಾವುಟಗಳಂತೆ ಎದ್ದು ನಿಂತವು. ಹಾಗೆಯೇ ಅವಳು- ಮುಗ್ಧೆ ತನ್ನ ವಸತಿಗೆ ಬಂದಳು. ಅಷ್ಟುಹೊತ್ತಿಗೆ ಸೂರ್ಯೋದಯವಾಯಿತು.
ಊರೊಳಗೆ ಗುಜುಗುಜಿಸಿ ವಾರ್ತಾ
ಭಾರ ಮಸಗಿತು ನೆರೆದ ನೆರವಿಯೊ
ಳಾರ ಬಾಯ್ಗಳೊಳಾದೊಡೆಯು ಜಪವಾಯ್ತು ಜನಜನಿತ |
ಭೂರಿ ಚಿಂತಾತುರ ವಿರಾಟನು
ಮಾರಿಯೋ ಸೈರಂಧ್ರಿಯೋ ಈ
ನಾರಿಯಿರಬೇಡೆಂದು ತನ್ನಯ ಸತಿಗೆ ನೇಮಿಸಿದ || ೧೦೬ ||
ಪದವಿಭಾಗ-ಅರ್ಥ: ಊರೊಳಗೆ ಗುಜುಗುಜಿಸಿ ವಾರ್ತಾಭಾರ ಮಸಗಿತು ನೆರೆದ ನೆರವಿಯೊಳು+ ಆರ ಬಾಯ್ಗಳೊಳು+ ಆದೊಡೆಯು ಜಪವಾಯ್ತು ಜನಜನಿತ ಭೂರಿ ಚಿಂತಾತುರ ವಿರಾಟನು ಮಾರಿಯೋ ಸೈರಂಧ್ರಿಯೋ ಈ ನಾರಿಯಿರಬೇಡೆಂದು ತನ್ನಯ ಸತಿಗೆ ನೇಮಿಸಿದ.
ಊರೊಳಗೆ ಗುಜುಗುಜಿಸಿ ವಾರ್ತಾಭಾರ ಮಸಗಿತು(ಹಬ್ಬಿತು)= ವಿರಾಟನಗದಲ್ಲಿ ಗುಜುಗುಜು ಎಂದು ಎಲ್ಲೆಡೆ ಅದೇ ಸುದ್ದಿ ದಟ್ಟವಾಗಿ ಹಬ್ಬಿತು. ನೆರೆದ ನೆರವಿಯೊಳು(ಜನರು ಗುಂಪುಗೂಡಿದ ಕಡೆಯೆಲ್ಲಾ+, ಆರ ಬಾಯ್ಗಳೊಳು+ ಆದೊಡೆಯು ಜಪವಾಯ್ತು ಜನಜನಿತ = ಯಾರ ಬಾಯಲ್ಲಿ ಕೇಳಿದರೂ ಅದೇಸುದ್ದಿಯ ಜಪವಾಗಿತ್ತು- ಹೀಗೆ ಸೋದರರೊಡನೆ ಕೀಚಕನ ವಧೆಯ ಸುದ್ದಿ ಜನಜನಿತವಾಯಿತು.; ಭೂರಿ(ಬಹಳ) ಚಿಂತಾತುರ ವಿರಾಟನು ಮಾರಿಯೋ ಸೈರಂಧ್ರಿಯೋ ಈ ನಾರಿಯಿರಬೇಡೆಂದು ತನ್ನಯ ಸತಿಗೆ ನೇಮಿಸಿದ= ಬಹಳ ಚಿಂತಾತುರನಾದ -ಚಿಂತೆಯಲ್ಲಿ ಮುಳುಗಿದ, ವಿರಾಟನು (ಇವಳು) 'ಮಾರಿಯೋ ಸೈರಂಧ್ರಿಯೋ' ಈ ನಾರಿಯಿರಬೇಡೆಂದು ತನ್ನಯ ಸತಿಗೆ ನೇಮಿಸಿದ= ಈ ಹೆಂಗಸನ್ನು ಇಲ್ಲಿ ಇಟ್ಟುಕೊಳ್ಳುವುದು ಬೇಡ ಎಂದು ತನ್ನ ರಾಣಿಗೆ ಆಜ್ಞಾಪಿಸಿದನು.
ಅರ್ಥ: ವಿರಾಟನಗದಲ್ಲಿ ಗುಜುಗುಜು ಎಂದು ಎಲ್ಲೆಡೆ ಅದೇ ಸುದ್ದಿ ದಟ್ಟವಾಗಿ ಹಬ್ಬಿತು. ಯಾರ ಬಾಯಲ್ಲಿ ಕೇಳಿದರೂ ಅದೇ ಸುದ್ದಿಯ ಜಪವಾಗಿತ್ತು. ಹೀಗೆ ಸೋದರರೊಡನೆ ಕೀಚಕನ ವಧೆಯ ಸುದ್ದಿ ಜನಜನಿತವಾಯಿತು. ಬಹಳ ಚಿಂತೆಯಲ್ಲಿ ಮುಳುಗಿದ, ವಿರಾಟನು ಇವಳು 'ಮಾರಿಯೋ ಸೈರಂಧ್ರಿಯೋ' ಈ ಹೆಂಗಸನ್ನು ಇಲ್ಲಿ ಇಟ್ಟುಕೊಳ್ಳುವುದು ಬೇಡ ಎಂದು ತನ್ನ ರಾಣಿಗೆ ಆಜ್ಞಾಪಿಸಿದನು.
ಅಳಲು ಕೈಮಿಗಲಾ ವಿರಾಟನ
ಲಲನೆ ಸೈರಂಧ್ರಿಯನು ಕರೆಸಿದ
ಳೆಲೆ ಮಹಾತುಮೆ ತಾಯೆ ನಿಮಗಂಜುವೆವು ಶರಣೆನುತ |
ಹೊಳಲೊಳಿದ್ದರೆ ಭೀತಿ ಘನ ನೀ
ವೊಲಿದ ಠಾವಿಗೆ ಬಿಜಯ ಮಾಡುವು
ದುಳುಹ ಬೇಹುದು ತಮ್ಮನೆನಲಿಂತೆಂದಳಿಂದುಮುಖಿ ||೧೦೭ ||
ಪದವಿಭಾಗ-ಅರ್ಥ: ಅಳಲು ಕೈಮಿಗಲು+ ಆ ವಿರಾಟನ ಲಲನೆ ಸೈರಂಧ್ರಿಯನು ಕರೆಸಿದಳು+ ಎಲೆ ಮಹಾತುಮೆ ತಾಯೆ ನಿಮಗೆ+ ಅಂಜುವೆವು ಶರಣೆನುತ ಹೊಳಲೊಳು+ ಇದ್ದರೆ ಭೀತಿ ಘನ ನೀ ವೊಲಿದ ಠಾವಿಗೆ ಬಿಜಯ ಮಾಡುವುದು+ ಉಳುಹ ಬೇಹುದು ತಮ್ಮನು+ ಎನಲು+ ಇಂತೆಂದಳು+ ಇಂದುಮುಖಿ.
ಅಳಲು ಕೈಮಿಗಲು+ ಆ ವಿರಾಟನ ಲಲನೆ ಸೈರಂಧ್ರಿಯನು ಕರೆಸಿದಳು+= (ತಮ್ಮಂದಿರು ಸತ್ತ)ದುಃಖವು ಕೈಮಿಗಲು- ಮಿತಿಮೀರಲು,+ ಆ ವಿರಾಟನ ಲಲನೆ- ರಾಣಿ, ಸೈರಂಧ್ರಿಯನ್ನು ಕರೆಸಿದಳು+// ಎಲೆ ಮಹಾತುಮೆ- ಮಹಾತ್ಮಳೆ, ತಾಯೆ, ನಿಮಗೆ+ ಅಂಜುವೆವು- ನಾವು ಭಯಪಡುತ್ತೇವೆ,/ ಶರಣು+ ಎನುತ= ನಿನಗೆ ನಮಸ್ಕಾರ ಎಂದು ಹೇಳಿ,/ ಹೊಳಲೊಳು+ ಇದ್ದರೆ ಭೀತಿ ಘನ ನೀ ವೊಲಿದ ಠಾವಿಗೆ ಬಿಜಯ ಮಾಡುವುದು+= ನೀನು ಹೊಳಲೊಳು- ನಗರದಲ್ಲಿ ಇದ್ದರೆ ಭೀತಿ- ನಮಗೆ ಭಯ, ಘನ ನೀ ವೊಲಿದ ಠಾವಿಗೆ- ಶ್ರೇಷ್ಟಳೇ, ನೀನು ಇಷ್ಟಪಟ್ಟ ಕಡೆಗೆ, ಬಿಜಯ ಮಾಡುವುದು- ಹೊರಟುಹೋಗುವುದು,/ ಉಳುಹ ಬೇಹುದು ತಮ್ಮನು+ ಎನಲು+= ನಮ್ಮನ್ನು ಉಳಿಸಬೇಕು- ಕಾಪಾಡಬೇಕು ಎನ್ನಲು;/ ಇಂತೆಂದಳು+ ಇಂದುಮುಖಿ- ಚಂದ್ರನಂತೆ ಮುಖವುಳ್ಳ ದ್ರೌಪದಿ ಹೀಗೆ ಹೇಳಿದಳು.
ಅರ್ಥ: ತಮ್ಮಂದಿರು ಸತ್ತ ದುಃಖವು ಮಿತಿಮೀರಲು, ಆ ವಿರಾಟನ ರಾಣಿ ಸೈರಂಧ್ರಿಯನ್ನು ಕರೆಸಿದಳು. ಎಲೆ ಮಹಾತ್ಮಳೆ, ತಾಯೆ, ನಾವು ನಿನಗೆ ಭಯಪಡುತ್ತೇವೆ, ನಿನಗೆ ನಮಸ್ಕಾರ, ಎಂದು ಹೇಳಿ, ನೀನು ಈ ನಗರದಲ್ಲಿ ಇದ್ದರೆ ನಮಗೆ ಭಯ ಭೀತಿ, ಶ್ರೇಷ್ಟಳೇ, ನೀನು ಇಷ್ಟಪಟ್ಟ ಕಡೆಗೆ ಹೊರಟುಹೋಗುವುದು, ನಮ್ಮನ್ನು ಕಾಪಾಡಬೇಕು ಎನ್ನಲು, ದ್ರೌಪದಿಯು ಹೀಗೆ ಹೇಳಿದಳು.
ಎಮ್ಮದೇನಪರಾಧ ದೇವಿಯೆ
ನಿಮ್ಮ ತಮ್ಮನು ತಪ್ಪಿ ನಡೆದೊಡೆ
ಯೆಮ್ಮ ರಮಣರು ಸೈರಿಸದೆ ಸೀಳಿದರು ದುರ್ಜನರ
ನಿಮ್ಮ ನಾವೋಲೈಸಿ ಮರಳಿದು
ನಿಮ್ಮ ಕೆಡಿಸುವರಲ್ಲ ಧೂರ್ತರು
ತಮ್ಮ ಮತದಲಿ ತಾವೆ ಕೆಟ್ಟರು ನೀತಿ ಬಾಹಿರರು ೧೦೮
ಪದವಿಭಾಗ-ಅರ್ಥ:ಎಮ್ಮದೇನು+ ಅಪರಾಧ, ದೇವಿಯೆ ನಿಮ್ಮ ತಮ್ಮನು ತಪ್ಪಿ ನಡೆದೊಡೆ+ ಯೆ+ ಎಮ್ಮ ರಮಣರು ಸೈರಿಸದೆ ಸೀಳಿದರು ದುರ್ಜನರ, ನಿಮ್ಮ ನಾವು+ ಓಲೈಸಿ ಮರಳಿದು, ನಿಮ್ಮ ಕೆಡಿಸುವರಲ್ಲ ಧೂರ್ತರು ತಮ್ಮ ಮತದಲಿ ತಾವೆ ಕೆಟ್ಟರು ನೀತಿ ಬಾಹಿರರು.
ಎಮ್ಮದೇನು+ ಅಪರಾಧ= ಇದರಲ್ಲಿ ನಮ್ಮದು ಏನು ಅಪರಾಧ- ನಮ್ಮ ಅಪರಾಧವಿಲ್ಲ./ ದೇವಿಯೆ ನಿಮ್ಮ ತಮ್ಮನು ತಪ್ಪಿ ನಡೆದೊಡೆ+ ಯೆ+ ಎಮ್ಮ ರಮಣರು ಸೈರಿಸದೆ ಸೀಳಿದರು ದುರ್ಜನರ= ದೇವಿಯೇ, ನಿಮ್ಮ ತಮ್ಮನು ತಪ್ಪಿ ನಡೆದಿದ್ದರಿಂದ, ನಮ್ಮ ಪತಿಗಳು ಸಹಿಸಲಾರದೆ ಕೊಂದರು.// ನಿಮ್ಮ ನಾವು+ ಓಲೈಸಿ ಮರಳಿದು,= ನಿಮ್ಮನ್ನು ನಾವು ಸೇವೆಮಾಡಿ, ಅವಧಿಯನಂತರ ಮರಳಿಹೋಗುವೆವು.//ನಿಮ್ಮ ಕೆಡಿಸುವರಲ್ಲ- ನಿಮಗೆ ಕೇಡು ಮಾಡವುದಿಲ್ಲ;// ಧೂರ್ತರು ತಮ್ಮ ಮತದಲಿ ತಾವೆ ಕೆಟ್ಟರು ನೀತಿ ಬಾಹಿರರು.= ನಿಮ್ಮ ತಮ್ಮಂದಿರು ಕೆಟ್ಟಬುದ್ಧಿಯವರು ತಮ್ಮ ದಾರಿಯಲ್ಲೇ ನೆಡೆದು ತಾವೆ ಕೆಟ್ಟರು, ಅವರು ನೀತಿ ಬಾಹಿರರು- ತಪ್ಪಿದವರು, ಎಂದಳು ದ್ರೌಪದಿ.
ಅರ್ಥ:ಇದರಲ್ಲಿ ನಮ್ಮದು ಏನು ಅಪರಾಧ? ನಮ್ಮ ಅಪರಾಧವಿಲ್ಲ. ದೇವಿಯೇ, ನಿಮ್ಮ ತಮ್ಮನು ತಪ್ಪಿ ನಡೆದಿದ್ದರಿಂದ, ನಮ್ಮ ಪತಿಗಳು ಸಹಿಸಲಾರದೆ ಕೊಂದರು. ನಿಮ್ಮನ್ನು ನಾವು ಸೇವೆಮಾಡಿ, ಅವಧಿಯನಂತರ ಮರಳಿಹೋಗುವೆವು. ನಿಮಗೆ ಕೇಡು ಮಾಡವುದಿಲ್ಲ; ನಿಮ್ಮ ತಮ್ಮಂದಿರೋ ಕೆಟ್ಟಬುದ್ಧಿಯವರು ತಮ್ಮ ದಾರಿಯಲ್ಲೇ ನೆಡೆದು ತಾವೆ ಕೆಟ್ಟರು, ಅವರು ನೀತಿ ತಪ್ಪಿದವರು, ಎಂದಳು ದ್ರೌಪದಿ.
ತಾವು ತಮ್ಮಿಂದಳಿದರದು ಸಾ
ಕಾವು ನಿಮಗಂಜುವೆವು ನಿಮ್ಮಲಿ
ಯಾವುದೂ ತಪ್ಪಿಲ್ಲ ನೀವಿಲ್ಲಿರಲು ಬೇಡೆನಲು |
ನಾವು ಮುನ್ನಿಹರಲ್ಲ ನಿಮ್ಮಯ
ಸೇವೆಯಲಿ ಹದಿಮೂರು ದಿವಸವು
ನೀವು ನೂಕಿದೊಡಿರದೆ ಮಾಣೆವು ದೇವಿ ಚಿತ್ತೈಸು || ೧೦೯ ||
ಪದವಿಭಾಗ-ಅರ್ಥ: ತಾವು ತಮ್ಮಿಂದ+ ಅಳಿದರು+ ಅದು ಸಾಕು,+ ಆವು ನಿಮಗೆ+ ಅಂಜುವೆವು, ನಿಮ್ಮಲಿ ಯಾವುದೂ ತಪ್ಪಿಲ್ಲ, ನೀವು+ ಇಲ್ಲಿರಲು ಬೇಡ+ ಎನಲು, ನಾವು ಮುನ್ನ+ ಇಹರಲ್ಲ, ನಿಮ್ಮಯ ಸೇವೆಯಲಿ ಹದಿಮೂರು ದಿವಸವು, ನೀವು ನೂಕಿದೊಡಿ+ ಇರದೆ ಮಾಣೆವು ದೇವಿ ಚಿತ್ತೈಸು.
ರಾಣಿ ಸುದೇಷ್ಣೆ ಹೇಳಿದಳು, ತಾವು ತಮ್ಮಿಂದ+ ಅಳಿದರು+ ಅದು ಸಾಕು= ಒಪ್ಪುತ್ತೇನೆ ನನ್ನ ತಮ್ಮಂದಿರು ತಾವೇ ತಮ್ಮಿಂದ ಮರಣಹೊಂದಿದರು; ಅದು ಸಾಕು,- ಆ ಮಾತು ಸಾಕು //+ ಆವು ನಿಮಗೆ+ ಅಂಜುವೆವು= ನಾವು ನಿಮಗೆ ಅಂಜುತ್ತೇವೆ - ನಮಗೆ ನಿಮ್ಮಬಗೆಗೆ ಭಯ!/ (ಒಪ್ಪಿದೆ) ನಿಮ್ಮಲಿ ಯಾವುದೂ ತಪ್ಪಿಲ್ಲ.// ನೀವು+ ಇಲ್ಲಿರಲು ಬೇಡ+ ಎನಲು= ಆದರೆ ನೀವು ಇಲ್ಲಿರುವುದು ಬೇಡ ಹೊರಟುಹೋಗಿ, ಎಂದಳು ರಾಣಿ.// ನಾವು ಮುನ್ನ(ಮುಂದೆ)+ ಇಹರಲ್ಲ= ಅದಕ್ಕೆ ದ್ರೌಪದಿ ನಾವು ಇಲ್ಲಿ ಮುಂದೆ ಇರುವುದಿಲ್ಲ.// ನಿಮ್ಮಯ ಸೇವೆಯಲಿ ಹದಿಮೂರು ದಿವಸವು= ನಿಮ್ಮ ಸೇವೆಯಲ್ಲಿ ಇನ್ನು ಹದಿಮೂರು ದಿವಸ ಮಾತ್ರಾ ಇರುವೆವು.// ನೀವು ನೂಕಿದೊಡಿ+ ಇರದೆ ಮಾಣೆವು(ಬಿಡೆವು) ದೇವಿ ಚಿತ್ತೈಸು(ದೇವಿಯೇ ಕೇಳು)= ದೇವಿಯೇ ಕೇಳು, ನೀವು ನೂಕಿದರೂ ಇಲ್ಲಿ ಇರದೆ ಬಿಡೆವು- ಬಿಟ್ಟು ಹೋಗುವುದಿಲ್ಲ, ಎಂದಳು ದ್ರೌಪದಿ. ನಂತರ ಅವಳು ತನ್ನ ವಸತಿಗೆ ಹೋದಳು.
ಅರ್ಥ: ರಾಣಿ ಸುದೇಷ್ಣೆ ಹೇಳಿದಳು, ಒಪ್ಪುತ್ತೇನೆ ನನ್ನ ತಮ್ಮಂದಿರು ತಾವೇ ತಮ್ಮಿಂದ ಮರಣಹೊಂದಿದರು; ಆ ಮಾತು ಸಾಕು. ನಾವು ನಿಮಗೆ ಅಂಜುತ್ತೇವೆ - ನಮಗೆ ನಿಮ್ಮ ಬಗೆಗೆ ಭಯ! ಒಪ್ಪಿದೆ, ನಿಮ್ಮಲಿ ಯಾವುದೂ ತಪ್ಪಿಲ್ಲ. ಆದರೆ ನೀವು ಇಲ್ಲಿರುವುದು ಬೇಡ ಹೊರಟುಹೋಗಿ, ಎಂದಳು ರಾಣಿ. ಅದಕ್ಕೆ ದ್ರೌಪದಿ ನಾವು ಇಲ್ಲಿ ಮುಂದೆ ಇರುವುದಿಲ್ಲ. ನಿಮ್ಮ ಸೇವೆಯಲ್ಲಿ ಇನ್ನು ಹದಿಮೂರು ದಿವಸ ಮಾತ್ರಾ ಇರುವೆವು. ದೇವಿಯೇ ಕೇಳು, ನೀವು ನೂಕಿದರೂ ಇಲ್ಲಿ ಇರದೆ ಬಿಟ್ಟು ಹೋಗುವುದಿಲ್ಲ, ಎಂದಳು ದ್ರೌಪದಿ. ನಂತರ ಅವಳು ತನ್ನ ವಸತಿಗೆ ಹೋದಳು.
ಅಳುಕದಿರಿ ಹದಿಮೂರು ದಿವಸವ
ಕಳೆದ ಬಳಿಕೆಮಗೆಲ್ಲ ಲೇಸಹು
ದಳಿದು ಹೋದರು ದುಷ್ಟರಾದವರಿನ್ನು ಭಯ ಬೇಡ |
ಕಲಹದವರಾವಲ್ಲೆನುತ ನಿಜ
ನಿಳಯವನು ಸಾರಿದಳು ದುರುಪದಿ
ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ ಪಸರಿಸಿತು ||೧೧೦||
ಪದವಿಭಾಗ-ಅರ್ಥ: ಅಳುಕದಿರಿ ಹದಿಮೂರು ದಿವಸವ ಕಳೆದ ಬಳಿಕ+ ಎಮಗೆಲ್ಲ ಲೇಸಹುದು+ ಅಳಿದು ಹೋದರು ದುಷ್ಟರಾದವರು+ ಇನ್ನು ಭಯ ಬೇಡ ಕಲಹದವರ+ ಆವಲ್ಲ+ ಎನುತ ನಿಜ ನಿಳಯವನು ಸಾರಿದಳು ದುರುಪದಿ ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ ಪಸರಿಸಿತು.
ಅಳುಕದಿರಿ ಹದಿಮೂರು ದಿವಸವ ಕಳೆದ ಬಳಿಕ+ ಎಮಗೆಲ್ಲ ಲೇಸಹುದು= ರಾಣಿಯವರೇ ಹೆದರಬೇಡಿ, ಹದಿಮೂರು ದಿವಸಗಳು ಕಳೆದ ಬಳಿಕ ನಮಗೆಲ್ಲ ಓಳಿತಾಗುವುದು.// ಅಳಿದು ಹೋದರು ದುಷ್ಟರಾದವರು+ ಇನ್ನು ಭಯ ಬೇಡ= ದುಷ್ಟರಾದವರು ಮಾತ್ರಾ ಅಳಿದು ಹೋದರು- ಮರಣಹೊಂದಿದರು. ಇನ್ನು ಭಯ ಬೇಡ,// ಕಲಹದವರು+ ಆವಲ್ಲ+ ಎನುತ ನಿಜ ನಿಳಯವನು ಸಾರಿದಳು ದುರುಪದಿ= ಕಲಹಮಾಡುವವರು ನಾವಲ್ಲ. ಎನುತ- ಎಂದು ಹೇಳುತ್ತಾ, ನಿಜ- ತನ್ನ, ನಿಳಯವನು ಸಾರಿದಳು ದುರುಪದಿ- ದ್ರೌಪದಿ ತನ್ನು ವಸತಿಗೆ ಸಾರಿದಲು - ಹೋದಳು.// ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ(ಸುದ್ದಿ) ಪಸರಿಸಿತು= ಗಂದರ್ವರಿಂದ ಕೀಚಕನ ಮತ್ತು ಅವನ ಸಹೋದರರ ಮರಣವಾದ ಸುದ್ದಿ ಕ್ಷಣ ಕ್ಷಣಕ್ಕೂ ದೇಶ ದೇಶಗಳಿಗೆ ಹರಡಿತು.
ಅರ್ಥ: ರಾಣಿಯವರೇ ಹೆದರಬೇಡಿ, ಹದಿಮೂರು ದಿವಸಗಳು ಕಳೆದ ಬಳಿಕ ನಮಗೆಲ್ಲ ಓಳಿತಾಗುವುದು. ದುಷ್ಟರಾದವರು ಮಾತ್ರಾ ಮರಣಹೊಂದಿದರು. ಇನ್ನು ಭಯ ಬೇಡ, ಕಲಹಮಾಡುವವರು ನಾವಲ್ಲ, ಎಂದು ಹೇಳುತ್ತಾ,ದ್ರೌಪದಿ ತನ್ನು ವಸತಿಗೆ ಹೋದಳು. ಗಂದರ್ವರಿಂದ ಕೀಚಕನ ಮತ್ತು ಅವನ ಸಹೋದರರು ಮರಣಹೊಂದಿದ ಸುದ್ದಿ, ಕ್ಷಣ ಕ್ಷಣಕ್ಕೂ ದೇಶ ದೇಶಗಳಿಗೆ ಹರಡಿತು.
♦♦♦
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

  1. *ಕುಮಾರವ್ಯಾಸ ಭಾರತ
  2. *ಕುಮಾರವ್ಯಾಸಭಾರತ-ಸಟೀಕಾ
  3. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧)
  4. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೨)
  5. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೩)
  6. *೪ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೪)
  7. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೫)
  8. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೬)
  9. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೭)
  10. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೮)
  11. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
  12. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕನ್ನಡದ ಪದಗಳಿಗೆ ಅರ್ಥ - ಸಾಹಿತ್ಯ ಪರಿಷತ್ ನಿಘಂಟು,
  2. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  3. ದಾಸ ಸಾಹಿತ್ಯ ನಿಘಂಟು