ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧೦)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೧೦ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ರಾಯಕಟಕವನಿರಿದ ಗುರುಸುತ
ನಾಯುಧದ ವಿಗ್ರಹದೊಳಗೆ ಹರಿ
ಕಾಯಿದನು ಕೃಪೆಯಿಂದಲಭಿಮನ್ಯುವಿನ ನಂದನನ||ಸೂಚನೆ||

ಪದವಿಭಾಗ-ಅರ್ಥ:ರಾಯಕಟಕವನು (ಕಟಕ = ಸೇನೆ)+ ಇರಿದ ಗುರುಸುತನ+ ಆಯುಧದ ವಿಗ್ರಹದೊಳಗೆ ಹರಿಕಾಯಿದನು ಕೃಪೆಯಿಂದಲಿ+ ಅಭಿಮನ್ಯುವಿನ ನಂದನನ.
ಅರ್ಥ:ಧರ್ಮರಾಯನ ಸೇನೆಯನ್ನು ಇರಿದು ಕೊಂದ ಗುರುಸುತ ಅಶ್ವತ್ಥಾಮನ ಆಯುಧವನ್ನು ಚಕ್ರಾಯುಧದ ಮೂಲಕ ನಿಗ್ರಹ ಮಾಡುವುದರಿಂದ ಹರಿ- ಕೃಷ್ನನು ಕೃಪೆಯಿಂದ ಅಭಿಮನ್ಯುವಿನ ಮಗನನ್ನು ಕಾಪಾಡಿದನು.[೧][೨] [೩]

ಹರಿಬವನು ಗುರುಸೂನುವೇ ಮರಳಿಚಿದನೆಂದನು ಕೌರವರರಾಯ[ಸಂಪಾದಿಸಿ]

ಕೇಳು ಧೃತರಾಷ್ಟ್ರಾವನಿಪ ರಿಪು
ಜಾಲಗೀರ್ವಾಣೀ ಕದಂಬ
ಸ್ಥೂಲವಕ್ಷನು ಬಂದು ಕಂಡನು ಭೋಜಗೌತಮರ |
ಲೀಲೆಯಲಿ ರಥವೇರಿ ಕುರುಭೂ
ಪಾಲನಲ್ಲಿಗೆ ಬಂದರುಬ್ಬಿನ
ಮೇಲುಮದದ ಜಯಪ್ರಚಂಡರು ಕಂಡರವನಿಪನ || ೧ ||
ಪದವಿಭಾಗ-ಅರ್ಥ: ಕೇಳು ಧೃತರಾಷ್ಟ್ರ+ ಅವನಿಪ ರಿಪುಜಾಲ ಗೀರ್ವಾಣೀ ಕದಂಬಸ್ಥೂಲವಕ್ಷನು ((ಶತ್ರುಗಳಿಗೆ ದೇವಲೋಕದ ಮರದಂತೆ ದಪ್ಪ ಎದೆಯವನು / ಅಶ್ವತ್ಥಾಮನು) ಬಂದು ಕಂಡನು ಭೋಜ(ಕೃತವರ್ಮ) ಗೌತಮರ(ಕೃಪ) ಲೀಲೆಯಲಿ(ಸಂತಸದಿಂದ), ರಥವೇರಿ ಕುರುಭೂಪಾಲನು+ ಅಲ್ಲಿಗೆ ಬಂದರು+ ಉಬ್ಬಿನ- (ಆನಂದದ) ಮೇಲುಮದದ (ಅತಿಯಾಗಿ ಮದವೇರಿದ) ಜಯಪ್ರಚಂಡರು ಕಂಡರು+ ಅವನಿಪನ
ಅರ್ಥ: ಧೃತರಾಷ್ಟ್ರ ರಾಜನೇ ಕೇಳು, ಅಶ್ವತ್ಥಾಮನು ಕೃತವರ್ಮ, ಕೃಪರನ್ನು ಕಾರ್ಯ ಸಾಧಿಸಿದ ಸಂತಸದಿಂದ ಬಂದು ಬಂದು ಕಂಡನು. ನಂತರ ಅವರು ರಥವೇರಿ ಕುರುಭೂಪಾಲನು ಇರುವ ಸ್ಥಳಕ್ಕೆ ಬಂದರು. ಅಲ್ಲಿ ಆನಂದದ ಉಬ್ಬಿ ಅತಿಯಾದ ಮದದಿಂದ ಕೂಡಿದ ಜಯಪ್ರಚಂಡರಾದ ಅಶ್ವತ್ಥಾಮ, ಕೃತವರ್ಮ, ಕೃಪರು ಕೌರವನನ್ನು ಕಂಡರು.
ಬಲಿದ ಮರವೆಯ ಕರಣವೃತ್ತಿಯ
ಕಳವಳದ ಪಂಚೇಂದ್ರಿಯದ ಪರಿ
ಚಲನಸಂಚದ ಶಿಥಿಲಮೂಲಾಧಾರಮಾರುತನ |
ಅಲಘುತರಪರಿವೇದನಾವಿ
ಹ್ವಳಿತಕಂಠಗತಾತ್ಮನುರ್ಧ್ವ
ಸ್ಖಲಿತ ದೀರ್ಘಶ್ವಾಸನಿದ್ದನು ಕೌರವರ ರಾಯ || ೨ ||
ಪದವಿಭಾಗ-ಅರ್ಥ:ಬಲಿದ ಮರವೆಯ ಕರಣವೃತ್ತಿಯ(ಮನ ಚಿತ್ತಗಳು ದುರ್ಬಲವಾಗಿದ್ದವ), ಕಳವಳದ ಪಂಚೇಂದ್ರಿಯದ (ಪಂಚೇಂದ್ರಿಯಗಳೂ ಚಿಂತಾಜನಕವಾಗಿದ್ದ), ಪರಿಚಲನಸಂಚದ(ಏಳಲಾರದ ನಡೆಯಲಾರದ), ಶಿಥಿಲಮೂಲಾಧಾರ ಮಾರುತನ(ಮೂಲಾಧಾರ- ಕೆಳಗಿನ ಉಸಿರುದುರ್ಬಲ; ಉಸಿರನ್ನು ತೆಗೆದುಕೊಳ್ಳಲಾಗದ), ಅಲಘುತರ ಪರಿವೇದನಾ ವಿಹ್ವಳಿತ(ಅಲಘು-ಅತಿ ನೋವಿನಿಂದ ಸಂಕಟಪಡುವ ) ಕಂಠಗತಾತ್ಮನ,(ಜೀವವು ಕುತ್ತಿಗೆಯವರೆಗೆ ಬಂದವನ)+ ಉರ್ಧ್ವಸ್ಖಲಿತ(ಮೇಲುಸಿರುಬಿದುವ) ದೀರ್ಘಶ್ವಾಸನು (ಮೆಲ್ಲಗೆ- ಉದ್ದವಾಗಿ ಉಸಿರಾದುತ್ತಿರುವ)+ ಇದ್ದನು ಕೌರವರ ರಾಯ.
ಅರ್ಥ:ಮನಸ್ಸು ಚಿತ್ತಗಳು ದುರ್ಬಲವಾಗಿದ್ದ, ಪಂಚೇಂದ್ರಿಯಗಳೂ ಚಿಂತಾಜನಕವಾಗಿದ್ದ, ಏಳಲಾರದ ನಡೆಯಲಾರದ, ಕೆಳಗೆ ಉಸಿರನ್ನು ಎಳೆದು ಕೊಳ್ಳಲಾಗದ, ಅತಿ ನೋವಿನಿಂದ ಸಂಕಟಪಡುವ, ಜೀವವು ಎದೆಯಿಂದ ಕುತ್ತಿಗೆಯವರೆಗೆ ಬಂದ, ಮೇಲುಸಿರು ಬಿದುವ, ಮೆಲ್ಲಗೆ ಉಸಿರಾದುತ್ತಿರುವ ಸ್ಥಿತಿಯಲ್ಲಿ ಕೌರವರರಾಯನು ಇದ್ದನು.
ಕಂಡು ಕಂಬನಿದುಂಬಿದರು ಭೂ
ಮಂಡಲಾಧಿಪ ವೈರಿಮದವೇ
ತಂಡ ಕೇಸರಿಯಿರವಿದೇ ಮಝ ಪೂತು ವಿಧಿಯೆನುತ ||
ಗಂಡುಗಲಿಯವಧಾನ ರಿಪುಬಲ
ದಂಡಧರನವಧಾನ ಕುರುಕುಲ
ಚಂಡಕರನವಧಾನವೆನುತೆಚ್ಚರಿಸಿದರು ನೃಪನ || ೩ ||
ಪದವಿಭಾಗ-ಅರ್ಥ: ಕಂಡು ಕಂಬನಿದುಂಬಿದರು (ಅವರ ಕಣ್ಣಲ್ಲಿ ನೀರು ತುಂಬಿತು), ಭೂಮಂಡಲಾಧಿಪ ವೈರಿಮದವ+ ಏತಂಡಕೇಸರಿಯ+ ಇರವು+ ಇದೇ ಮಝ ಪೂತು ವಿಧಿಯೆನುತ ಗಂಡುಗಲಿಯು+ ಅವಧಾನ (ಆಲಿಸುವುದು) ರಿಪುಬಲ ದಂಡಧರನು (ಶತ್ರುಸೇನೆಯನ್ನು ಶಿಕ್ಷಿಸುವಶಕ್ತಿಶಾಲಿಯು )+ ಅವಧಾನ ಕುರುಕುಲಚಂಡಕರನು(ಕುರುಕುಲಕ್ಕೆ ಸೂರ್ಯನಾದವನು)+ ಅವಧಾನವೆನುತ+ ಎಚ್ಚರಿಸಿದರು ನೃಪನ
ಅರ್ಥ: ಆ ಕರಣಾಜನಕ ಸ್ಥಿತಿಯಲ್ಲಿ ಕೌರವನನ್ನು ಕೃಪಾದಿಗಳು ಕಂಡಾಗ ಅವರ ಕಣ್ಣಲ್ಲಿ ನೀರು ತುಂಬಿತು, ಭೂಮಂಡಲಾಧಿಪನಾದ ವೈರಿಮದವನ್ನು ಇಳಿಸುವ ಕೇಸರಿಯ ಇರವು (ಸ್ಥಿತಿ) ಇದೇನೇ? 'ಮಝ ಪೂತು ವಿಧಿ!' ಎನ್ನುತ್ತಾ, ಗಂಡುಗಲಿಯು ಅವಧಾನ (ಆಲಿಸುವುದು), ರಿಪುಬಲ ದಂಡಧರನು ಅವಧಾನ ಕುರುಕುಲಚಂಡಕರನು ಅವಧಾನ- ನಾವು ಹೇಳುವುದನ್ನು ಕೇಳಿಸಿಕೊಳ್ಳಿ ವೆನ್ನತ್ತಾ ರಾಜನನ್ನು ಎಚ್ಚರಿಸಿದರು.
ಕೆದರಿದುದು ಕುಡಿನೋಟ ಕರಣದ
ಕದಡು ಹರೆದುದು ಇಂದ್ರಿಯಾವಳಿ
ತುದಿಗೊಳಿಸಿದುದು ಪವನ ನಟಿಸಿತು ನಾಭಿಪರಿಯಂತ |
ವದನವನು ನಸು ನೆಗಹಿ ನೃಪ ನುಡಿ
ಸಿದನಿದಾರಸ್ಮತ್ಪುರೋಭಾ
ಗದಲಿ ಸೇವಾಮಧುರವಚನವಿಳಾಸಪರರೆಂದ || ೪ ||
ಪದವಿಭಾಗ-ಅರ್ಥ:ಕೆದರಿದುದು ಕುಡಿನೋಟ, ಕರಣದ ಕದಡು ಹರೆದುದು, ಇಂದ್ರಿಯಾವಳಿ ತುದಿಗೊಳಿಸಿದುದು, ಪವನ ನಟಿಸಿತು ನಾಭಿಪರಿಯಂತ, ವದನವನು (ವದನ = ಮುಖ) ನಸು ನೆಗಹಿ (ಮುಖವನ್ನು ಸ್ವಲ್ಪ ಎತ್ತಿ) ನೃಪ ನುಡಿಸಿದನು,ಇದು+ ಆರು+ ಅಸ್ಮತ್+ ಪುರೋಭಾಗದಲಿ ಸೇವಾ+ ಮಧುರ+ ವಚನ+ ವಿಳಾಸ+ ಪರರು(ವಿನಯದ ಸೇವೆಯ ಮಧುರ ವಚನ- ಮಾತು ಆಡುವವರು!')+ ಎಂದ.
ಅರ್ಥ:ಕೃಪಾದಿಗಳು ತಮ್ಮ ರಾಜನನ್ನು ಹೊಗಳಿ ಕರೆದಾಗ, ಕೌರವನ ಕುಡಿನೋಟ ಅಲುಗಾಡಿತು. ಮನಸ್ಸಿನ ಕಲ್ಲೋಲ ಹರಿಯಿತು/ ಹೋಯಿತು, ಪಂಚ ಇಂದ್ರಿಯಗಳ ಸಮೂಹ ಮೊನಚಾಯಿತು, ನಾಭಿಯವರಗೂ ಉಸಿರು ಬಂದಿತು. ಮುಖವನ್ನು ಸ್ವಲ್ಪ ಎತ್ತಿ, ರಾಜನು ನುಡಿದನು, 'ಇದು ಯಾರು? ನನ್ನ ಎದುರುಭಾಗದಲ್ಲಿ ವಿನಯದ ಸೇವೆಯ ಮಧುರ ವಚನ- ಮಾತು ಆಡುವವರು!' ಎಂದ.
ನಾವು ನಿಮ್ಮವರೆಮ್ಮ ಬೊಪ್ಪನ
ಭಾವ ಕೃಪ ಕೃತವರ್ಮನೀತನು
ದೇವರವಧರಿಸುವುದು ರಜನಿಯ ರಾಜಕಾರಿಯವ |
ನೀವು ಬಿನ್ನಹಮಾಡಬೇಹುದು
ಮಾವ ರಣಸಂಗತಿಯನಾತ್ಮ
ಸ್ತಾವಕರು ನಾವಲ್ಲವೆಂದನು ಕೃಪಗೆ ಗುರುಸೂನು || ೫ ||
ಪದವಿಭಾಗ-ಅರ್ಥ: ನಾವು ನಿಮ್ಮವರು+ ಎಮ್ಮ ಬೊಪ್ಪನ(ತಂದೆಯ) ಭಾವ ಕೃಪ, ಕೃತವರ್ಮನು+ ಈತನು; ದೇವರು (ರಾಜನು)+ ಅವಧರಿಸುವುದು (ಕೇಳಿಸಿಕೊಳ್ಳುವುದು)- ರಜನಿಯ(ಕತ್ತಲೆಯರಾತ್ರಿಯ) ರಾಜಕಾರಿಯವ ನೀವು (ಕೃಪನು) ಬಿನ್ನಹ (ಹೇಳಬೇಕು) ಮಾಡಬೇಹುದು ಮಾವ- ರಣಸಂಗತಿಯನು,+ ಆತ್ಮಸ್ತಾವಕರು (ಆತ್ಮಸ್ತುತಿ ಮಾಡಿಕೊಳ್ಳುವುದು) ನಾವಲ್ಲವು+ ಎಂದನು ಕೃಪಗೆ ಗುರುಸೂನು(ಅಶ್ವತ್ಥಾಮ).
ಅರ್ಥ:ಕೌರವನ ಪ್ರಶ್ನೆಗೆ ಅಶ್ವತ್ಥಾಮನು,'ನಾವು ನಿಮ್ಮವರು, ನನ್ನ ತಂದೆಯ ಭಾವ ಕೃಪನು ಇವನು; ಇವನು ಕೃತವರ್ಮನು. ದೇವರು (ರಾಜನು) ಕೇಳಿಸಿಕೊಳ್ಳುವುದು,' ಎಂದು ಹೇಳಿ, ಅಶ್ವತ್ಥಾಮನು ಕೃಪನಿಗೆ,'ಈ ದಿನದ ಕತ್ತಲೆ-ರಾತ್ರಿಯ ರಾಜಕಾರ್ಯದ ರಣಸಂಗತಿಯನ್ನು ಮಾವ- ನೀವು (ಕೃಪನು)ರಾಜನಿಗೆ ಹೇಳಬೇಕು. ನಾವು (ಅಶ್ವತ್ಥಾಮನು) ಆತ್ಮಸ್ತುತಿ ಮಾಡಿಕೊಳ್ಳುವವರು ಅಲ್ಲವು,' ಎಂದನು. (ನನ್ನ ಪೌರುಷವನ್ನು ನಾನೇ ಕೊಚ್ಚಿಕೊಳ್ಳುವುದಿಲ್ಲ)
ಏನನೆಂಬೆನು ಜೀಯ ದ್ರುಪದನ
ಸೂನು ಪಂಚದ್ರೌಪದೇಯರ
ಹಾನಿಯನು ಸೃಂಜಯ ಶಿಖಂಡಿ ಪ್ರಮುಖರುಪಹತಿಯ |
ವೈನತೇಯನ ಲಳಿಯಲಹಿಕುಲ
ವಾನುವುದೆ ಪಾಂಚಾಲಕದಳೀ
ಕಾನನವ ನಿನ್ನಾನೆ ಸವರಿತು ಹೇಳಲೇನೆಂದ || ೬ ||
ಪದವಿಭಾಗ-ಅರ್ಥ: ಏನನೆಂಬೆನು ಜೀಯ, ದ್ರುಪದನಸೂನು(ಅಶ್ವತ್ಥಾಮನು) ಪಂಚದ್ರೌಪದೇಯರ ಹಾನಿಯನು(ಸಾವನ್ನು) ಸೃಂಜಯ ಶಿಖಂಡಿ ಪ್ರಮುಖರ+ ಉಪಹತಿಯ(ನಾಶವನ್ನು) ವೈನತೇಯನ(ಗರುಡನ) ಲಳಿಯಲಿ(ಸಂಚಾರದಲ್ಲಿ)+ ಅಹಿಕುಲವು(ಸರ್ಪ)+ ಅನುವುದೆ (ಉಳಿಯುವುದೆ?) ಪಾಂಚಾಲ+ ಕದಳೀ+ ಕಾನನವ (ಬಾಳೆಯತೋಟವನ್ನು) ನಿನ್ನ+ ಆನೆ ಸವರಿತು ಹೇಳಲಿ ಏನು+ ಎಂದ
ಅರ್ಥ:ಆಗ ಕೃಪನು ಕೌರವನಿಗೆ, ಏನನ್ನು ಹೇಳಲಿ ಒಡೆಯನೇ?, ಅಶ್ವತ್ಥಾಮನು ದ್ರೌಪದಿಯ ಐದು ಮಕ್ಕಳನ್ನೂ ನಾಶಮಾಡಿದನು. ಜೊತೆಗೆ ಸೃಂಜಯ ಶಿಖಂಡಿ ಪ್ರಮುಖರರ ನಾಶವನ್ನು ಮಾಡಿದನು. ಗರುಡನ ಸಂಚಾರದಲ್ಲಿ ಸರ್ಪಗಳ ಕುಲವು ಉಳಿಯುವುದೆ? ಪಾಂಚಾಲರ ಬಾಳೆಯತೋಟವನ್ನು ನಿನ್ನ ಆನೆ ಸವರಿತು ಏನು ಹೇಳಲಿ,' ಎಂದನು.
ದೈವಕೃಪೆಜವನಿಕೆಯ ಮರೆಗೊಂ
ಡೈವರುಳಿದರು ಮೇಲೆ ಸಾತ್ಯಕಿ
ದೈವದೊಡಹುಟ್ಟಿದನಲೇ ತಾನಿಲ್ಲ ಶಿಬಿರದಲಿ |
ದೈವಬಲವಿನಿತಕ್ಕೆ ಕೇಳ್ ನಿ
ರ್ದೈವಬಲನಿಶ್ಶೇಷವಿನಿತೇ
ದೈವವೆತ್ತಿದ ಛಲದ ವಾಸಿಗೆ ರಾಯ ಕೇಳೆಂದ || ೭ ||
ಪದವಿಭಾಗ-ಅರ್ಥ:ದೈವಕೃಪೆ ಜವನಿಕೆಯ(ಯೌವನವ) ಮರೆಗೊಂಡು(ಮರೆಮಾಡಿ ರಕ್ಷಿಸಿದ್ದರಿಂದ)+ ಐವರು+ ಉಳಿದರು ಮೇಲೆ ಸಾತ್ಯಕಿ ದೈವದ+ ಒಡಹುಟ್ಟಿದನಲೇ ತಾನಿಲ್ಲ ಶಿಬಿರದಲಿ ದೈವಬಲವು+ ಇನಿತಕ್ಕೆ ಕೇಳ್ ನಿರ್ದೈವಬಲ+ ನಿಶ್ಶೇಷವು ಇನಿತೇ ದೈವವು+ ಎತ್ತಿದ ಛಲದವಾಸಿಗೆ (ವಾಸಿ= ಇಳುವರಿ, ಫಲ) ರಾಯ ಕೇಳೆಂದ.
ಅರ್ಥ:ಕೃಪನು,'ದೈವಕೃಪೆಯು ಬಲಿಷ್ಠವಾಗಿದ್ದು ಮರೆಮಾಡಿ ರಕ್ಷಿಸಿದ್ದರಿಂದ ಐವರು ಪಾಂಡವರು ಉಳಿದರು. ಅದರ ಮೇಲೆ ಸಾತ್ಯಕಿಯು ದೈವದ ಒಡಹುಟ್ಟಿದನವನು- ಕೃಷ್ಣನಿಗೆ ಪ್ರೀತಿಪಾತ್ರನು ಉಳಿದನು. ಅವನೂ ಶಿಬಿರದಲ್ಲಿ ಇರಲಿಲ್ಲ. ನಮಗೆ ದೈವಬಲವು ಇಷ್ಟಕ್ಕೇ ಸೀಮಿತ. ಕೇಳು! ನಿರ್ದೈವಬಲವಾದವರು ನಿಶ್ಶೇಷವಾದರು. ನಿನ್ನ ಎತ್ತಿದ-ಹೆಚ್ಚಿನ ಛಲದವಾಸಿಗೆ ದೈವ ಬಲವು ಇಷ್ಟೇ ಸರಿ, ರಾಯನೇ ಕೇಳು,' ಎಂದ.
ಎಲೆ ಕೃಪಾಚಾರಿಯ ವಿರೋಧಿಗ
ಳುಳಿದರೈವರು ಬಲ್ಲೆನದನಸ
ದಳದ ಕೃಪೆಯಲಿ ಬಸಿದು ಬೀಳುವನವರಿಗಸುರಾರಿ |
ಅಳಿದುದೇ ನಿಶ್ಶೇಷ ಪಾಂಡವ
ದಳ ಕುಮಾರರು ಸಹಿತವಿನ್ನ
ಗ್ಗಳೆಯನಶ್ವತ್ಥಾಮನಹನೆಂದನು ಮಹೀಪಾಲ || ೮ ||
ಪದವಿಭಾಗ-ಅರ್ಥ: ಎಲೆ ಕೃಪಾಚಾರಿಯ, ವಿರೋಧಿಗಳು+ ಉಳಿದರು+ ಐವರು ಬಲ್ಲೆನು+ ಅದನು+ ಅಸದಳದ(ಅತಿಶಯ) ಕೃಪೆಯಲಿ ಬಸಿದು ಬೀಳುವನು+ ಅವರಿಗೆ+ ಅಸುರಾರಿ (ಕೃಷ್ನನು), ಅಳಿದುದೇ (ನಾಶವಾಯಿತೇ) ನಿಶ್ಶೇಷ ಪಾಂಡವದಳ, ಕುಮಾರರು ಸಹಿತವು, ಇನ್ನು+ ಅಗ್ಗಳೆಯನು (ಶ್ರೇಷ್ಠನು)+ ಅಶ್ವತ್ಥಾಮನು+ ಅಹನು()+ ಎಂದನು ಮಹೀಪಾಲ.
ಅರ್ಥ:ಕೌರವನು,'ಎಲೆ ಕೃಪಾಚಾರ್ಯರೇ, ಐವರು ವಿರೋಧಿಗಳು ಉಳಿದರು ಎನ್ನುವುದನ್ನು ಬಲ್ಲೆನು- ತಿಳಿದಿದ್ದೇನೆ. ಅದನು- ಕೃಷ್ನನು ಅತಿಶಯವಾದ ಕೃಪೆಯನ್ನು ಅವರಿಗೆ ಬಸಿದು-ಸುರಿಸಿ ಬೀಳುವನು/ತ್ಯಾಗಮಾಡುವನು. ಪಾಂಡವರದಳ ದ್ರೌಪದಿಯ ಕುಮಾರರ ಸಹಿತ ನಿಶ್ಶೇಷವಾಗಿ ನಾಶವಾಯಿತೇ? ಇನ್ನು ನನಗೆ ಅಶ್ವತ್ಥಾಮನು ಶ್ರೇಷ್ಠನಾಗಿರುವನು,' ಎಂದನು.
ಏನನೊದಗಿದ ನಮಗೆ ಗಂಗಾ
ಸೂನು ಭಾರದ್ವಾಜ ನಮಗೊಲಿ
ದೇನ ಮಾಡಿದ ನಮ್ಮ ಥಟ್ಟಿನ ಭದ್ರಗಜವೆಂಬ |
ಮಾನನಿಧಿ ರಾಧಾತನುಜನಿಂ
ದೇನು ಹರಿದುದು ಹರಿಬವನು ಗುರು
ಸೂನುವೇ ಮರಳಿಚಿದನೆಂದನು ಕೌರವರರಾಯ || ೯ ||
ಪದವಿಭಾಗ-ಅರ್ಥ:ಏನನು+ ಒದಗಿದ ನಮಗೆ ಗಂಗಾಸೂನು(ಭೀಷ್ಮ), ಭಾರದ್ವಾಜ(ದ್ರೋಣ) ನಮಗೆ+ ಒಲಿದು+ ಏನ ಮಾಡಿದ? ನಮ್ಮ ಥಟ್ಟಿನ(ಸೇನೆಯ) ಭದ್ರಗಜವೆಂಬ (ಬಲಿಷ್ಠ ಆನೆ) ಮಾನನಿಧಿ ರಾಧಾತನುಜನಿಂದ+ ಏನು ಹರಿದುದು(ಸಾಧನೆ ಆಯಿತು)? ಹರಿಬವನು(ಕರ್ತವ್ಯ, ಹೊಣೆಗಾರಿಕೆ, ಸಲ್ಲಬೇಕಾದ ಋಣ) ಗುರುಸೂನುವೇ ಮರಳಿಚಿದನೆಂದನು ಕೌರವರರಾಯ
ಅರ್ಥ:ಸಾಯುವ ಅಂಚಿನಲ್ಲಿದ್ದ ಕೌರವರರಾಯ,'ಮಹಾವೀರ ಗಂಗಾಸೂನು ಭೀಷ್ಮನು ನಮಗೆ ಏನನ್ನು ಒದಗಿಸಿದ, ಹತ್ತು ದಿನ ಯುದ್ಧಮಾಡಿದ ಅಷ್ಟೇ; ಭಾರದ್ವಾಜನಾದ ದ್ರೋಣನು ನಮಗೆ ಒಲಿದು ಏನನ್ನು ಮಾಡಿದ? ಐದು ದಿನ ಯುದ್ಧಮಾಡಿದ ಅಷ್ಟೇ! ನಮ್ಮ ಸೇನಯ ಭದ್ರಗಜವೆಂಬ ಮಾನನಿಧಿ ರಾಧಾತನಯ ಕರ್ಣನಿಂದ ಏನು ಸಾದನೆಯಾಯಿತು? (ಧನಕನಕ ಕೊಟ್ಟು ಸಾಕಿದ್ದಕ್ಕೆ- ಮಿತ್ರನಾಗಿದ್ದಕ್ಕೆ, ರಾಜನಿಗೆ ಅವನ ಯೋಧನಾಗಿ) ನಮಗೆ ಸಲ್ಲಬೇಕಾದ ಋಣವನ್ನು ಗುರುಸೂನು ಅಶ್ವತ್ಥಾಮನೇ ಮರಳಿಸಿದನು,' ಎಂದನು.

ಕೌರವ ಜನಪ ಮರೆದೊರಗಿದನಲಾ[ಸಂಪಾದಿಸಿ]

ಹರಿಬ ಬಂದುದೆ ಪಾಂಡುಸುತರುಳಿ
ದಿರಲಿ ಸಾಕಂತಿರಲಿ ನಿಮ್ಮಡಿ
ಪುರಕೆ ಬಿಜಯಂಗೆಯ್ಯಿರೇ ಚೈತನ್ಯಗತಿಯೆಂತು |
ಹರಣವುಳಿದಡೆ ಪಾಂಡುತನುಜರ
ಶಿರವ ಕೇವಣಿಸುವೆನಲೈ ಕೇ
ಸರಿಯ ಪೀಠದೊಳೆಂದನಶ್ವತ್ಥಾಮ ಕೈಮುಗಿದು || ೧೦ ||
ಪದವಿಭಾಗ-ಅರ್ಥ: ಹರಿಬ ಬಂದುದೆ ಪಾಂಡುಸುತರು+ ಉಳಿದಿರಲಿ ಸಾಕು+ ಅಂತಿರಲಿ (ಸಾಕು ಅವರ ವಿಷಯ); ನಿಮ್ಮ+ ಅಡಿ ಪುರಕೆ ಬಿಜಯಂಗೆಯ್ಯಿರೇ(ಹಸ್ತಿನಾಪರಕ್ಕೆ ಬನ್ನಿರೇ) ಚೈತನ್ಯಗತಿಯೆಂತು ಹರಣ+ ವು+ ಉಳಿದಡೆ (ನಿಮ್ಮ ಜೀವ ಉಳಿದರೆ) ಪಾಂಡುತನುಜರ ಶಿರವ ಕೇವಣಿಸುವೆನು(ಕೇವಣಿಸು= ಕೆಚ್ಚುವುದು, ಜೋಡಿಸಿವುದು, ಕೂಡಿಸುವೆನು)+ ಎಲೈ ಕೇಸರಿಯಪೀಠದೊಳು (ನಿನ್ನ ಸಿಂಹಾಸನದಲ್ಲಿ ಜೋಡಿಸುವೆನು)+ ಎಂದನು+ ಅಶ್ವತ್ಥಾಮ ಕೈಮುಗಿದು. (ಕೇಸರಿಯಪೀಠ = ಸಿಂಹಾಸನ)
ಅರ್ಥ: ಕೌರವನಿಗೆ ಅಶ್ವತ್ಥಾಮನು ಕೈಮುಗಿದು , 'ನಮ್ಮ ಋಣ ಸಂದಾಯವಾಯಿತೇ? ಪಾಂಡುಸುತರು ಉಳಿದಿರಲಿ ಸಾಕು ಅವರ ವಿಷಯ. ನೀವು(ನಿಮ್ಮ ಪಾದವು) ಹಸ್ತಿನಾಪುರಕ್ಕೆ ಹಸ್ತಿನಾಪರಕ್ಕೆ ಬನ್ನಿರೇ- ಬನ್ನಿರಿ. ನಿಮ್ಮ ಚೈತನ್ಯಗತಿ ಹೇಗಿದೆಯೊ- ನಿಮ್ಮ ಜೀವ ಉಳಿದರೆ ಪಾಂಡುವರ ಶಿರಗಳನ್ನು ತಂದು ನಿಮ್ಮ ಸಿಂಹಾಸನದಲ್ಲಿ ಅಲಂಕಾರವಾಗಿ ಜೋಡಿಸುವೆನು.' ಎಂದು ಹೇಳಿದನು.
ಸಾಕದಂತಿರಲಿನ್ನು ವೈರಿ
ವ್ಯಾಕರಣಪಾಂಡಿತ್ಯದಲ್ಲಿ ವಿ
ವೇಕಶೂನ್ಯರು ನಾವು ಮೊದಲಾದೌರ್ಧ್ವದೈಹಿಕವ |
ಆಕೆವಾಳರಿಗರುಹಿ ನೀವ
ಸ್ತೋಕಪುಣ್ಯರ ತಿಳುಹಿ ವಿಗಳಿತ
ಶೋಕರೆನಿಸುವುದಂಧನೃಪ ಗಾಂಧಾರಿದೇವಿಯರ || ೧೧ ||
ಪದವಿಭಾಗ-ಅರ್ಥ:ಸಾಕು+ ಅದಂತಿರಲಿ+ ಇನ್ನು ವೈರಿವ್ಯಾಕರಣಪಾಂಡಿತ್ಯದಲ್ಲಿ ವಿವೇಕಶೂನ್ಯರು (ವಿವೇಕ ವಿಲ್ಲದವರು) ನಾವು; ಮೊದಲು+ ಆದೌರ್ಧ್ವ-ದೈಹಿಕವ ಆಕೆವಾಳರಿಗೆ(ಭಟರಿಂದ)+ ಅರುಹಿ (ಹೇಳಿ) ನೀವಸ್ತೋಕ(ಸ್ತೋಕ= ಅಲ್ಪಕಾಲಿಕವಾದ; ಶಾಶ್ವತವಾದ ಸ್ವರ್ಗವನ್ನು )+ ಪುಣ್ಯರ ತಿಳುಹಿ ವಿಗಳಿತ+ ಶೋಕರು (ಶೋಕವಿಲ್ಲದವರು)+ ಎನಿಸುವುದು (ಅವರ ಶೋಕವನ್ನು ಶಮನಗೊಳಿಸುವುದು.)+ ಅಂಧನೃಪ ಗಾಂಧಾರಿದೇವಿಯರ.
ಅರ್ಥ:ಅದಕ್ಕೆ ಕೌರವನು, 'ಸಾಕು ಅದು ಹಾಗಿರಲಿ. ಇನ್ನು ವೈರಿಗಳನ್ನು ಕುರಿತು ಕಾವ್ಯದ ಅಲಂಕಾರದ- ವ್ಯಾಕರಣ ಪಾಂಡಿತ್ಯದಲ್ಲಿ ನಾವು ವಿವೇಕ ವಿಲ್ಲದವರು ಆಗಿದ್ದೇವೆ; ಮೊದಲು ಆಗಬೇಕಾದ ಕಾರ್ಯ, ಆದಿ- ಔರ್ಧ್ವ-ದೈಹಿಕವು- ಸತ್ತ ಬಂಧುಗಳ (ತನ್ನ ತಮ್ಮಂದಿರು ಮತ್ತು ಇತರರು) ಅಂತ್ಯಕ್ರಿಯೆ; ಅದಕ್ಕೆ ಯೋಗ್ಯ ಭಟರಿಗೆ ಹೇಳಿ ಮೃತರ ದೇಹಗಳನ್ನು ತರಿಸಿ ಅಂತ್ಯಕ್ರಿಯೆಮಾಡಿಸಿ, ಮೃತರಾದ ಅವರನ್ನು ನೀವು ಶಾಶ್ವತ ಪುಣ್ಯರನ್ನಾಗಿಮಾಡಿ; ಅದನ್ನು ಅಂಧನೃಪ ಧೃತರಾಷ್ಟ್ರನಿಗೂ ಗಾಂಧಾರಿದೇವಿಯರಿಗೂ ತಿಳುಹಿಸಿ ಅವರ ಶೋಕವನ್ನು ಶಮನಗೊಳಿಸುವುದು,'ಎಂದನು
ಎನುತ ಕಣ್ ಮುಚ್ಚಿದನು ಜೀವಾ
ತ್ಮನು ಜವಾಯಿಲತನದಲೊಡೆಹಾ
ಯ್ದನು ಸುನಾಸಾಲಂಬಿತಶ್ವಾಸದ ಸಮಾಪ್ತಿಯಲಿ |
ಜನಪ ಮರೆದೊರಗಿದನಲಾ ಹಾ
ಯೆನುತ ವದನಾಂಜುಳಿಪುಟದ ತಾ
ಡನದಲಿವರಳಲಿದರು ಕುರುರಾಜಾವಸಾನದಲಿ || ೧೨ ||
ಪದವಿಭಾಗ-ಅರ್ಥ: ಎನುತ ಕಣ್ ಮುಚ್ಚಿದನು ಜೀವಾತ್ಮನು ಜವಾಯಿಲತನದಲಿ (ವೇಗವಾಗಿ)+ ಒಡೆಹಾಯ್ದನು(ಹೊರಟುಹೋದನು) ಸು+ನಾಸ+ ಆಲಂಬಿತ+ ಶ್ವಾಸದ ಸಮಾಪ್ತಿಯಲಿ(ಮೂಗಿನಿಂದ ಉದ್ದವಾದ ಕೊನೆಯ ಉಸಿರುಬಿಟ್ಟು); ಜನಪ ಮರೆದು (ಎಚ್ಚರವಿಲ್ಲದೆ)+ ಒರಗಿದನಲಾ ಹಾ! +ಯೆನುತ ವದನಾಂಜುಳಿ+ ಪುಟದ ತಾಡನದಲಿ (ಹಣೆಯನ್ನು ಬಡಿದುಕೊಂಡು.)+ ಇವರು+ ಅಳಲಿದರು(ದುಃಖಿಸಿದರು) ಕುರುರಾಜ+ ಅವಸಾನದಲಿ.
ಅರ್ಥ: ಕೌರವನು ಕೃಪಾದಿಗಳಿಗೆ ಮುಂದಿನ ಕರ್ತವ್ಯವನ್ನು ಹೇಳುತ್ತಿದ್ದಂತೆ ಕೌರವನು ಕಣ್ಣು ಮುಚ್ಚಿದನು. ಅವನ ಜೀವಾತ್ಮನು ದೇಹದಿಂದ ವೇಗವಾಗಿ ಹೊರಟುಹೋದನು. ಅವನು ಮೂಗಿನಿಂದ ಉದ್ದವಾದ ಕೊನೆಯ ಉಸಿರುಬಿಟ್ಟನು. ಜನಪ ಕೌರವನು ಎಚ್ಚರವಿಲ್ಲದೆ/ಜೀವತ್ಯಜಿಸಿ ಮಲಗಿದನಲಾ ಹಾ! ಎನ್ನುತ್ತಾ ಹಣೆಯನ್ನು ಬಡಿದುಕೊಂಡು, ಇವರು ಕುರುರಾಜನ ಅವಸಾನದ ಸಮಯದಲ್ಲಿ ದುಃಖಿಸಿದರು.

ಮಹಾಸ್ತ್ರವನು - ತೃಣದಿಂದ ಇಟ್ಟನಾ ದ್ರೌಣಿ[ಸಂಪಾದಿಸಿ]

ತಿರುಗಿದರು ಕೈದುವ ಬಿಸುಟು ಮೂ
ವರು ಮಹಾರಥರಂಧತಿಮಿರಕೆ
ತರಣಿಕಿರಣದ ಧಾಳಿ ಹರಿದುದು ಕೂಡೆ ದೆಸೆದೆಸೆಗೆ |
ಅರಸನುಪ್ಪವಡಿಸಿ ಮುರಾರಿಯ
ಸಿರಿಮೊಗವ ನೋಡಿದನು ತಮ್ಮಂ
ದಿರು ಸಹಿತ ಹೊರವಂಟನಾ ಕುರುಪತಿಯ ಪಾಳೆಯವ || ೧೩ ||
ಪದವಿಭಾಗ-ಅರ್ಥ: ತಿರುಗಿದರು ಕೈದುವ (ಆಯುಧಗಳನ್ನು ) ಬಿಸುಟು ಮೂವರು ಮಹಾರಥರು+ ಅಂಧತಿಮಿರಕೆ ತರಣಿ (ರಾತ್ರಿಯ ಕತ್ತಲೆಗೆ ಸೂರ್ಯನ) ಕಿರಣದ ಧಾಳಿ ಹರಿದುದು ಕೂಡೆ ದೆಸೆದೆಸೆಗೆ ಅರಸನು+ ಉಪ್ಪವಡಿಸಿ(ಎದ್ದು) ಮುರಾರಿಯ ಸಿರಿಮೊಗವ ನೋಡಿದನು ತಮ್ಮಂದಿರು ಸಹಿತ ಹೊರವಂಟನಾ ಕುರುಪತಿಯ ಪಾಳೆಯವ
ಅರ್ಥ:ಕೃಪಾದಿ ಮೂವರು ಮಹಾರಥರು ಆಯುಧಗಳನ್ನು ಬಿಸುಟು ಹಿಂತಿರುಗಿದರು. ರಾತ್ರಿಯ ಕತ್ತಲೆಗೆ ಸೂರ್ಯನ ಕಿರಣದ ಧಾಳಿಯಿಂದ ಕತ್ತಲೆ ಕೂಡಲೆ ದಿಕ್ಕುದಿಕ್ಕಿಗೆ ಹರಿದು ಹೋಯಿತು. ಕೌರವನ ಬಿಡಾರದಲ್ಲಿದ್ದ ಅರಸ ಧರ್ಮಜನು ಎದ್ದು ಕೃಷ್ನನ ಸಿರಿಮುಖವನ್ನು ನೋಡಿದನು. ಅವನು ತಮ್ಮಂದಿರು ಸಹಿತ ಕುರುಪತಿಯ ಪಾಳೆಯದಿಂದ ಹೊರಹೊರಟನು.
ಪಾಳೆಯದಲಿ ಕುಮಾರರನು ಪಾಂ
ಚಾಲರನು ನೋಡುವೆವೆನುತ ಭೂ
ಪಾಲ ನಡೆತರಲಿದಿರುವಂದುದು ಯುವತಿನಿಕುರುಂಬ |
ಸೂಳುವೊಯ್ಲಿನ ತೆಳುವಸುರ ಕರ
ತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ ಬಂದಳು ದ್ರೌಪದೀದೇವಿ || ೧೪ ||
ಪದವಿಭಾಗ-ಅರ್ಥ: ಪಾಳೆಯದಲಿ ಕುಮಾರರನು (ಮಕ್ಕಳನ್ನೂ) ಪಾಂಚಾಲರನು ನೋಡುವೆವೆನುತ ಭೂಪಾಲ ನಡೆತರಲ(ಬರಲು)+ ಇದಿರುವಂದುದು (ಎದುರಿಗೆ ಬಂದಿತು) ಯುವತಿನಿಕುರುಂಬ(ಹೆಂಗಸರ ಸಮೂಹ) ಸೂಳುವೊಯ್ಲಿನ (ಬೊಬ್ಬೆ ರೋದನ) ತೆಳುವಸುರ(ಸಣ್ನ ಉಸಿರಾಟದ) ಕರತಾಳದಲಿ (ಕೈಕೈ ಬಡಿಯುತ್ತಾ) ಹಾಹಾವಿರಾವದ (ಹಾಹಾಕಾರದ ವಿಕೃತ ರಾವದ- ರವದ ಸದ್ದಿನಲ್ಲಿ ) ಮೇಳವದ(ಒಟ್ಟಾಗಿ) ಗೀತದಲಿ ಬಂದಳು ದ್ರೌಪದೀದೇವಿ
ಅರ್ಥ:ಭೂಪಾಲ ಧರ್ಮಜನೇ ಮೊದಲಾದವರು ತಮ್ಮ ಪಾಳೆಯದಲ್ಲಿ ಕುಮಾರರನ್ನೂ ಪಾಂಚಾಲರನ್ನೂ ನೋಡಬೇಕು ಎಂದು ಅಲ್ಲಿಗೆ ಬರಲು, ಎದುರಿನಲ್ಲಿ ಬೊಬ್ಬೆಯ ರೋದನಮಾಡುತ್ತಾ ಉಸಿರುಸಿಕ್ಕಿದಂತೆ ಸಂಕಟದಲ್ಲಿ ಕೈಕೈ ಬಡಿಯುತ್ತಾ ಹಾಹಾಕಾರದ ವಿಕೃತ ಸದ್ದಿನಲ್ಲಿ ಒಟ್ಟಾಗಿ ರೋದನಗೀತೆಯನ್ನು ಹೇಳುತ್ತಾ ಬರುತ್ತದ್ದ ಹೆಂಗಸರ ಸಮೂಹದೊಡನೆ ದ್ರೌಪದೀದೇವಿ ಬಂದಳು.
ಏನಿದೇನದುಭುತವೆನುತ ದು
ಮ್ಮಾನದಲಿ ಹರಿತಂದು ಹಿಡಿದನು
ಮಾನಿನಿಯ ಕೈಗಳನು ಕಂಬನಿದೊಡೆದು ಸೆರಗಿನಲಿ |
ಹಾನಿಯೇನೆನೆ ಮಡಿದರೆನ್ನಯ
ಸೂನುಗಳು ತನ್ನನುಜರೆನೆ ಪವ
ಮಾನಸುತ ಕೇಳಿದನು ಕೋಳಾಹಳವ ಗುರುಸುತನ || ೧೫ ||
ಪದವಿಭಾಗ-ಅರ್ಥ: ಏನಿದು+ ಏನದುಭುತವು+ ಎನುತ ದುಮ್ಮಾನದಲಿ (ಚಿಂತೆಯಿಂದ) ಹರಿತಂದು(ಬೇಗನೆ ಬಂದು) ಹಿಡಿದನು ಮಾನಿನಿಯ ಕೈಗಳನು, ಕಂಬನಿ+ ದೊ+ ತೊಡೆದು (ಒರೆಸಿ) ಸೆರಗಿನಲಿ ಹಾನಿಯು(ಕೆಡುಕು)+ ಏನೆನೆ ಮಡಿದರು+ ಎನ್ನಯ ಸೂನುಗಳು(ಮಕ್ಕಳು), ತನ್ನ+ ಅನುಜರು(ಸೋದರರು)+ ಎನೆ ಪವಮಾನಸುತ (ಭೀಮ) ಕೇಳಿದನು ಕೋಳಾಹಳವ ಗುರುಸುತನ.
ಅರ್ಥ:ಭೀಮನು ಬಂದು, 'ಇದೇನು ಅದ್ಭುತ ಹಾನಿ?' ಎನ್ನುತ್ತಾ ಚಿಂತೆಯಿಂದ ಬೇಗನೆ ಬಂದು ಮಾನಿನಿದ್ರೌಪದಿಯ ಕೈಗಳನ್ನು ಹಿಡಿದುಕೊಂಡನು, ಅವಳ ಕಣ್ಣೀರನ್ನು ಸೆರಗಿನಿಂದ ಒರೆಸಿ, ಏನು ಅನಾಹುತ -ಹಾನಿ ಆಗಿದೆ ಎನ್ನಲು; ಅವಳು ನನ್ನು ಮಕ್ಕಳು ಸಾವಿಗೀಡಾದರು ಮತ್ತು ತನ್ನ ಸೋದರರೂ ಮಡಿದರು,' ಎನ್ನಲು, ಆಗ ಪವಮಾನಸುತನಾದ ಭೀಮನು ಗುರುಸುತ ಅಶ್ವತ್ಥಾಮನು ಮಾಡಿದ ಕೋಲಾಹಲವನ್ನು- ಅನಾಹುತವನ್ನು ದ್ರೌಪದಿಯಿಂದ ಕೇಳಿ ತಿಳಿದನು.
ಸುತರ ತಲೆಯೈದಕ್ಕೆ ರಿಪುಗುರು
ಸುತನ ತಲೆಯೇ ಹೊಣೆ ಕಣಾ ಬಿಡು
ಸತಿಯೆ ಶೋಕವನೆನುತ ಬಿಟ್ಟನು ಸೂಠಿಯಲಿ ರಥವ
ವೈತಿಕರವಿದವಗಡ ಸಮೀರನ
ಸುತಗೆ ಹರಿಯದು ಬವರ ನಡೆಯೆಂ
ದತಿರಥನ ಬಳಿಸಲಿಸಿದರು ನೃಪ ಹರಿ ಧನಂಜಯರು ೧೬
ಪದವಿಭಾಗ-ಅರ್ಥ: ಸುತರ ತಲೆಯ+ ಐದಕ್ಕೆ ರಿಪುಗುರುಸುತನ ತಲೆಯೇ ಹೊಣೆ ಕಣಾ, ಬಿಡುಸತಿಯೆ ಶೋಕವನು+ ಎನುತ ಬಿಟ್ಟನು ಸೂಠಿಯಲಿ (ಸೂಠಿ= ವೇಗ) ರಥವ ವೈತಿಕರವು+ ಇದು+ ಅವಗಡ ಸಮೀರನಸುತಗೆ(ಸಮೀರ= ವಾಯು) ಹರಿಯದು(ಆಗದು), ಬವರ (ಯುದ್ಧ), ನಡೆಯೆಂದು+ ಅತಿರಥನ ಬಳಿ ಸಲಿಸಿದರು ನೃಪ ಹರಿ ಧನಂಜಯರು.
ಅರ್ಥ:ಭೀಮನು ಸುತರಾದ ಉಪಪಾಂಡವರ ಐದು ತಲೆಗೆ ಶತ್ರು ಗುರುಸುತ ಅಶ್ವತ್ಥಾಮನ ತಲೆಯೇ ಹೊಣೆ- ಅದನ್ನು ತೆಗೆಯಬೇಕು ಕಣಾ! ಎಮದು ನಿರ್ಧರಿಸಿ ಬೀಮನು ದ್ರೌಪದಿಗೆ ಸತಿಯೆ ಶೋಕವನ್ನು ಬಿಡು, ಇದರ ಸೇಡು ತೀರಿಸುವೆನು ಎನ್ನತ್ತಾ ವೇಗವಾಗಿ ತನ್ನ ರಥವನ್ನು ಬಿಟ್ಟನು. ಆಗ ನೃಪ ಧರ್ಮಜ, ಕೃಷ್ಣ ಧನಂಜಯರು ಅಶ್ವತ್ಥಾಮನನ್ನು ಭೀಮನೊಬ್ಬನೇ ಎದುರಿಸುವುದು ಆಪತ್ತು ತರಬಹುದು. ಇದು ಹೋರಾಟದ ಅವಗಡ- ಆಪತ್ತು ಭೀಮನಬ್ಬನಿಗೆ ಎದುರಿಸಿ ಯುದ್ಧ ನಡೆಸಲು ಆಗದು ಎಂದು ಅತಿರಥ ಅಶ್ವತ್ನಥಾಮನ ಬಳಿ ಯುದ್ಧಕ್ಕೆ ಅವರೂ ಹೋದರು.
ನಿಲ್ಲು ಗುರುಸುತ ಶೌರ್ಯಪಣ ನ
ಮ್ಮಲ್ಲಿಯೇ ಹುಲುಜೀವರಿಗೆ ಜವ
ನಲ್ಲಿ ಮೇಳವೆ ಉಗುಳು ಪಂಚದ್ರೌಪದೀಸುತರ |
ಬಿಲ್ಲ ಗುರು ನೀನಾದಡೆಮಗೇ
ನಿಲ್ಲಿ ದ್ರೌಪದಿಯಕ್ಷಿಜಲಕೃಪೆ
ಯಲ್ಲಿ ಲಂಬಿಸಬೇಕೆನುತ ಮೂದಲಿಸಿದನು ಭೀಮ || ೧೭ ||
ಪದವಿಭಾಗ-ಅರ್ಥ: ನಿಲ್ಲು ಗುರುಸುತ ಶೌರ್ಯ ಪಣ ನಮ್ಮಲ್ಲಿಯೇ ಹುಲುಜೀವರಿಗೆ ಜವನಲ್ಲಿ ಮೇಳವೆ, ಉಗುಳು ಪಂಚದ್ರೌಪದೀಸುತರ ಬಿಲ್ಲಗುರು ನೀನಾದಡೆ+ ಎಮಗೇನು+ ಇಲ್ಲಿ ದ್ರೌಪದಿಯ+ ಅಕ್ಷಿಜಲ (ಕಣ್ಣೀರು) ಕೃಪೆಯಲ್ಲಿ ಲಂಬಿಸಬೇಕು(ಉದ್ದವಾಗು- ಮುಂದೆ ಜೀವಂತ ಸಾಗಬೇಕು)+ ಎನುತ ಮೂದಲಿಸಿದನು ಭೀಮ.
ಅರ್ಥ:ಭೀಮನು ಅಸ್ವತ್ಥಾಮನನ್ನು ಕುರುಕ್ಷೇತ್ರ ರಣರಂಗದಲ್ಲಿ ಹುಡುಕಿ ಅವನಿಗೆ,'ನಿಲ್ಲು ಗುರುಸುತನೇ! ಶೌರ್ಯವನ್ನೂ ಪಣವನ್ನೂ ನಮ್ಮಲ್ಲಿಯೇ ತೋರಿಸಬೇಕು. ದ್ರೌಪದೀ ಮಕ್ಕಳಾಧ ಬಾಲಕಜೀವರು ಯಮನಜೊತೆ ಸೇರಲು ಯೋಗ್ಯರೇ? ನಿನ್ನ ಹೊಟ್ಟೆಯಿಂದ ಪಂಚದ್ರೌಪದೀಸುತರನ್ನು ಉಗುಳು. ಬಿಲ್ಲಗುರುವು ನೀನಾಗಿರಬಹುದು, ಆದರೆ ಅರಿಂದ ನಮಗೇನು? ಇಲ್ಲಿ ದ್ರೌಪದಿಯ ಕಣ್ಣೀರಿನ ಕೃಪೆಯಲ್ಲಿ ನೀನು ಜೀವಿಸಬೇಕು,' ಎನ್ನುತ್ತಾ ಅಸ್ವತ್ಥಾಮನನ್ನು ಭೀಮನು ಮೂದಲಿಸಿದನು.
ಎಲವೊ ಶರಸಂನ್ಯಾಸವನು ಕುರು
ತಿಲಕನವಸಾನದಲಿ ಮಾಡಿದೆ
ನಳಲಿದಡೆ ಫಲವೇನು ನಿಮ್ಮೀ ಸ್ವಾಮಿ ಕಾರ್ಯದಲಿ |
ತಲೆಯ ಹೊಯ್ದೆನು ನಿನ್ನವರ ನೀ
ವಳುಕಿ ರಣದೊಳಗಡಗಿ ಜೀವವ
ನುಳುಹಿಕೊಂಡಿರಿ ಕೊಲುವೆನಲ್ಲದೊಡೆಂದನಾ ದ್ರೌಣಿ || ೧೮ ||
ಪದವಿಭಾಗ-ಅರ್ಥ: ಎಲವೊ ಶರಸಂನ್ಯಾಸವನು ಕುರುತಿಲಕನ+ ಅವಸಾನದಲಿ(ಸಾವಿನಲ್ಲಿ) ಮಾಡಿದೆನು+ ಅಳಲಿದಡೆ ಫಲವೇನು, ನಿಮ್ಮ ಈ ಸ್ವಾಮಿ ಕಾರ್ಯದಲಿ (ಕೌರವನ ಸೇವೆಯ ಕಾರ್ಯದಲ್ಲಿ) ತಲೆಯ ಹೊಯ್ದೆನು ನಿನ್ನವರ, ನೀವು+ ಅಳುಕಿ ರಣದೊಳಗೆ+ ಅಡಗಿ ಜೀವವನು+ ಉಳುಹಿಕೊಂಡಿರಿ ಕೊಲುವೆನು+ ಅಲ್ಲದೊಡೆ+ ಎಂದನಾ ದ್ರೌಣಿ.
ಅರ್ಥ: ಅದಕ್ಕೆ ದ್ರೌಣಿ- ಅಶ್ವತ್ಥಾಮನು,'ಎಲವೊ ಭೀಮ, ತಾನು ಕುರುತಿಲಕ ದುರ್ಯೋಧನನ ಸಾವಿನ ಸಮಯದಲ್ಲಿ ಶರ ಸಂನ್ಯಾಸವನ್ನು ಮಾಡಿದ್ದೇನೆ, ನಿನ್ನಡನೆ ಯುದ್ಧ ಮಾಡಲಾರೆ. ಈಗ ನೀನು ಅತ್ತರೆ ಫಲವೇನು? 'ಎಂದನು. ನಮ್ಮ ಈ ಸ್ವಾಮಿಕಾರ್ಯದಲ್ಲಿ ನಿನ್ನವರ ತಲೆಯನ್ನು ಕಡಿದೆನು. ನೀವು ಹೆದರಿ ರಣರಂಗದಲ್ಲಿ ಅಡಗಿಕೊಂಉ ಜೀವವನ್ನು ಉಳುಹಿಕೊಂಡಿರಿ. ಇಲ್ಲದಿದ್ದರೆ ನಿಮ್ಮನ್ನೂ ಕೊಲ್ಲುತ್ತಿದ್ದೆ,'ಎಂದನು.
ಮರುಳಲಾ ಗುರುಸುತ ಯುಧಿಷ್ಠಿರ
ನಿರೆ ವಿಭಾಡಿಸುವಾ ಮೃಗೇಂದ್ರನ
ಗರವಟಿಗೆಯಲಿ ಬಡಸೃಗಾಲನ ಬಾಧೆ ಬಲುಹು ಗಡಾ |
ಕುರುನೃಪತಿಯಾಸ್ಥಾನವಲ್ಲು
ಬ್ಬರಿಸಿ ಬೊಬ್ಬಿಡಲಾಹವಾಂತ
ಸ್ಸರಣಿ ಗುರುಸುತ ನಿನಗೆ ಸದರವೆಯೆಂದನಸುರಾರಿ || ೧೯ ||
ಪದವಿಭಾಗ-ಅರ್ಥ:ಮರುಳಲಾ ಗುರುಸುತ ಯುಧಿಷ್ಠಿರನು ಇರೆ ವಿಭಾಡಿಸುವ(ಶೌರ್ಯತೋರುವ)+ ಆ ಮೃಗೇಂದ್ರ ನಗರ(ಹಸ್ತಿನಾವತಿ)+ ಅರವಟಿಗೆಯಲಿ ಬಡಸೃಗಾಲನ(ನರಿ) ಬಾಧೆ ಬಲುಹು ಗಡಾ! ಕುರುನೃಪತಿಯ ಆಸ್ಥಾನವಲ್ಲ+ ಉಬ್ಬರಿಸಿ ಬೊಬ್ಬಿಡಲು+ ಆಹವಾಂತಸ್ಸರಣಿ (ಆಹವ (ಯುದ್ಧ)+ ಅಂತಸ್ಪುರಣೆ) ಗುರುಸುತ (ಅಶ್ವತ್ಥಾಮನೇ) ನಿನಗೆ ಸದರವೆಯೆಂದನು+ ಅಸುರಾರಿ
ಅರ್ಥ:ಅದಕ್ಕೆ ಕೃಷ್ಣನು,'ಗುರುಸುತ ನೀನು ಮರುಳಲಾ! ಸಿಂಹದಂತಿರುವ ಯುಧಿಷ್ಠಿರನು ಹಸ್ತಿನಾವತಿಯಲ್ಲಿ ಇದ್ದಾಗ ಹೆಂಗಸರು ನೀರುಕೊಡುವ ಅರವಟಿಗೆ ಮನೆಯಲ್ಲಿ ನಿನ್ನದು ಶೌರ್ಯತೋರುವ ಬಡನರಿಯ ಪರಾಕ್ರಮದ ಬಾಧೆ ಗಡಾ! ಉಬ್ಬರಿಸಿ ಬೊಬ್ಬಿಡಲು ಕುರುಕ್ಷೇತ್ರವು ಕುರುನೃಪತಿಯ ಆಸ್ಥಾನವಲ್ಲ. ಗುರುಸುತನೇ ಯುದ್ಧಮಾಡುವ ಅಂತಃಶಕ್ತಿ ನಿನಗೆ ಅಲ್ಪವು/ ಇಲ್ಲ.' ಎಂದನು.
ಕಾಯಬಲ್ಲೈ ಪಾಂಡವರನು ನಿ
ರಾಯುಧರು ನಾವೆಂದು ನೀ ನಿ
ರ್ದಾಯದಲಿ ನಿನ್ನವರು ಹೊಗುವರೆ ಹಸ್ತಿನಾಪುರವ |
ಸಾಯಕವ ಪರಿಹರಿಸು ಪಾಂಡವ
ರಾಯಜೀವಿ ಗಡೆನುತ ವರ ಚ
ಕ್ರಾಯುಧನ ಬೋಳೈಸಿ ತೃಣದಿಂದಿಟ್ಟನಾ ದ್ರೌಣಿ || ೨೦||
ಪದವಿಭಾಗ-ಅರ್ಥ:ಕಾಯಬಲ್ಲೈ ಪಾಂಡವರನು ನಿರಾಯುಧರು ನಾವೆಂದು ನೀ ನಿರ್ದಾಯದಲಿ(ಅಖಂಡತೆಯಲ್ಲಿ ತೊಂದರೆ ಇಲ್ಲದೆ . ನಿರ್ಧಾರ.) ನಿನ್ನವರು ಹೊಗುವರೆ ಹಸ್ತಿನಾಪುರವ ಸಾಯಕವ (ಅಸ್ತ್ರವನ್ನು) ಪರಿಹರಿಸು ಪಾಂಡವ ರಾಯಜೀವಿ ಗಡ+ ಎನುತ ವರ ಚಕ್ರಾಯುಧನ ಬೋಳೈಸಿ (ಅಣಕಿಸುತ್ತಾ ಸಮಾಧಾನ ಪಡಿಸಿ, ಹೊಗಳಿ) ತೃಣದಿಂದಿಟ್ಟನಾ ದ್ರೌಣಿ.
  • (ನೀನು ಪಾಂಡವರಾಯರ ಜೀವಿ ಗಡ! -- ಕೃಷ್ಣನ ಮಾತು- ಮಮ ಪ್ರಾಣಾ ಹಿ ಪಾಂಡವಾಃ)
ಅರ್ಥ:ಅಶ್ವತ್ಥಾಮನು,'ಕೃಷ್ಣನೇ, ನೀನು ಪಾಂಡವರನ್ನು ಕಾಯಬಲ್ಲೆಯಯ್ಯಾ! ನಾವು ನಿರಾಯುಧರು ಎಂದು ನೀನು ನಿನ್ನವರು ತೊಂದರೆ ಇಲ್ಲದೆ ಹಸ್ತಿನಾಪುರವನ್ನು ಹೊಗುವರೆ? ಈಗ ನಾನು ಬಿಡುವ ಅಸ್ತ್ರವನ್ನು ಪರಿಹರಿಸು ನೋಡೋಣ. ನೀನು ಪಾಂಡವರಾಯರ ಜೀವಿ ಗಡ! ಎನ್ನತ್ತಾ ಮಹಿಮನಾದ ಚಕ್ರಾಯುಧ ಕೃಷ್ಣನನ್ನು ವ್ಯಂಗವಾಗಿ ಹೊಗಳಿ, ಕೈಯಲ್ಲಿದ್ದ ದರ್ಭೆಯಿಂದ ಮಹಾಸ್ತ್ರವನ್ನು ಆವಾಹನೆ ಮಾಡಿ ಪಾಂಡವಕುಲವನ್ನೇ ಗುರಿಯಾಗಿ ಇಟ್ಟನು ಆ ದ್ರೌಣಿ-ಅಶ್ವತ್ಥಾಮನು.
ಆ ಮಹಾಮಂತ್ರಾಭಿಮಂತ್ರಿತ
ಭೀಮವಿಕ್ರಮತೃಣವನಶ್ವ
ತ್ಥಾಮನಿಡೆ ಲೋಕತ್ರಯಕ್ಷೋಭಪ್ರಭಂಜನವ |
ವ್ಯೋಮಕೇಶಲಲಾಟ ವಿಶ್ರುತ
ಧೂಮಕೇತುಶಿಖಾವಿಸಂಸ್ಥುಳ
ಧೂಮಚುಂಬಿತ ಖಚರಚಯ ಭೂರಿಸಿತು ರಿಪುನೃಪರ || ೨೧ ||
ಪದವಿಭಾಗ-ಅರ್ಥ: ಆ ಮಹಾಮಂತ್ರ+ ಅಭಿಮಂತ್ರಿತ ಭೀಮವಿಕ್ರಮ(ಮಹಾಪರಾಕ್ರಮದ)-ತೃಣವನು(ದರ್ಭೆಯನ್ನು)+ ಅಶ್ವತ್ಥಾಮನು+ಇಡೆ(ಪ್ರಯೋಗಿಸಲು) ಲೋಕತ್ರಯ- ಕ್ಷೋಭಪ್ರಭಂಜನವ (ಕ್ಷೋಭೆಗೊಳಿಸುವ) ವ್ಯೋಮಕೇಶಲಲಾಟ (ಶಿವನ ಹಣೆಕಣ್ಣಿನ) ವಿಶ್ರುತ ಧೂಮಕೇತುಶಿಖಾ+ ವಿಸಂಸ್ಥುಳ ಧೂಮಚುಂಬಿತ(ಆಕಾಶದ ಮೋಡವನ್ನೂ ಆವರಿದಂತೆ) ಖಚರಚಯ(ಆಕಾಶಗಾನಿಗಳಾದ ದೇವಗಂಧರ್ವರ ಸಮೂಹ) ಭೂರಿಸಿತು ರಿಪುನೃಪರ(ಶತ್ರುರಾಜರನ್ನು)(ಭೂರಿ = ದೊಡ್ಡ, ಹೆಚ್ಚಾದ, ಅಧಿಕವಾದ ೨ ವಿಸ್ತಾರವಾದ, ವಿಶಾಲವಾದ)
ಅರ್ಥ:ಆ ಮಹಾಮಂತ್ರದಿಂದ ಅಭಿಮಂತ್ರಿತವಾದ ಮಹಾಪರಾಕ್ರಮದ - ತೃಣವನ್ನು ಅಶ್ವತ್ಥಾಮನು ಪ್ರಯೋಗಿಸಲು, ಮೂರುಲೋಕಗಳನ್ನು ಕ್ಷೋಭೆಗೊಳಿಸುವ ಶಿವನ ಹಣೆಕಣ್ಣಿನ ವಿಶ್ರುತವಾದ ಧೂಮಕೇತುವಿನ ಶಿಖೆಯಂತೆ ಆಕಾಶವನ್ನೂ ಮೋಡವನ್ನೂ ಆವರಿದಾಗ ಆಕಾಶಗಾಮಿಗಳಾದ ದೇವಗಂಧರ್ವರ ಸಮೂಹವನ್ನೂ ಧರ್ಮಜ ಮೊದಲಾದ ಶತ್ರುರಾಜರನ್ನೂ ಭೂರಿಸಿತು ಆವರಿಸಿತು.

ಮಹಾ ಸುದರ್ಶನ ಬಿಗಿದು ಸುತ್ತಲು ವೇಢೆಯಾಯ್ತು ಉತ್ತರೆಯ ಗರ್ಭದಲಿ[ಸಂಪಾದಿಸಿ]

ಅವನಿಪತಿ ಕೇಳೈ ಮಹಾವೈ
ಷ್ಣವದ ಸತ್ರಾಣವನು ಗುರುಸಂ
ಭವನ ಮಂತ್ರದ ಪಾಡಿ ನಡಪಾಡಿಸಿತು ಪಾಂಡವರ |
ತವಕದಲಿ ತೃಣಬಾಣವಭಿಮ
ನ್ಯುವಿನ ರಾಣೀವಾಸದುದರೋ
ದ್ಭವದ ಗರ್ಭಕೆ ಮುರಿದು ಹರಿದುದು ಸೂಕ್ಷ್ಮರೂಪದಲಿ || ೨೨ ||
ಪದವಿಭಾಗ-ಅರ್ಥ: ಅವನಿಪತಿ ಕೇಳೈ ಮಹಾವೈಷ್ಣವದ ಸತ್ರಾಣವನು (ಮಹಾಶಕ್ತಿಯನ್ನು) ಗುರುಸಂಭವನ(ಅಶ್ವತ್ಥಾಮನ) ಮಂತ್ರದ ಪಾಡಿ((ಸಂ) ೧ ಬ್ರಾಹ್ಮಣನಿಗೆ ಯೋಗ್ಯ ವಲ್ಲದ ವರ್ತನೆ, ಕಟ್ಟುಪಾಡಿಗೆ ಒಳ ಪಡದ, ಸ್ವೈರ ವೃತ್ತಿಯುಳ್ಳ ಕಾರ್ಯ) ನಡಪಾಡಿಸಿತು(ನಡೆ - ಆನೆಯ ನಡೆ) ಪಾಂಡವರ ತವಕದಲಿ (ಹಾತೊರೆದು, ವೇಗ, ಸಂ- ವಿಸ್ಮಯ, ಸಂಕಟಕ್ಕೆ) ತೃಣಬಾಣವು (ದರ್ಭೆಹುಲ್ಲಿನ ಬಾಣ, ತೃಣ= ದರ್ಭೆ)+ ಅಭಿಮನ್ಯುವಿನ ರಾಣೀವಾಸದ+ ಉದರ+ ಉದ್ಭವದ (ಬೆಳೆಯುತ್ತಿದ್ದ) ಗರ್ಭಕೆ ಮುರಿದು ಹರಿದುದು ಸೂಕ್ಷ್ಮರೂಪದಲಿ.
ಅರ್ಥ:ಸಂಜಯನು ಹೇಳಿದ,'ಧೃತರಾಷ್ಟ್ರನೇ ಕೇಳು, ಆ ಮಹಾವೈಷ್ಣವದ ಮಹಾಶಕ್ತಿಯನ್ನು, ಅಶ್ವತ್ಥಾಮನ ಮಂತ್ರದ ಅದ್ಭುತ ನೆಡೆ, ಮತ್ತು ಬ್ರಾಹ್ಮಣನಿಗೆ ಯೋಗ್ಯ ವಲ್ಲದ ವರ್ತನೆಯ ಸ್ವೈರ ವೃತ್ತಿಯುಳ್ಳ ಕಾರ್ಯ, ಪಾಂಡವರ ವಿಸ್ಮಯ ಸಂಕಟಕ್ಕೆಕಾರಣವಾಗಿ ತೃಣಬಾಣವು ವೇಗವಾಗಿ ಅಭಿಮನ್ಯುವಿನ ರಾಣೀವಾಸದ/ಪತ್ನಿಯಾದ ಉತ್ತರೆಯ ಉದರದಲ್ಲಿ ಬೆಳೆಯುತ್ತಿದ್ದ ಗರ್ಭಕ್ಕೆ ಸೂಕ್ಷ್ಮರೂಪದಲ್ಲಿ ಮುರಿದು- ದಾರಿಮಾಡಿಕೊಂಡು ನುಗ್ಗಿತು.
ಜಗವ ಹೂಡುವ ಮೇಣ್ ಚತುರ್ದಶ
ಜಗದ ಜೀವರನೂಡಿಯುಣಿಸುವ
ಜಗವನಂತರ್ಭಾವದಲಿ ಬಲಿಸುವ ಗುಣತ್ರಯದ |
ಸೊಗಡು ತನ್ನ ಸಹಸ್ರಧಾರೆಯ
ಝಗೆಯೊಳೆನಿಪ ಮಹಾಸುದರ್ಶನ
ಬಿಗಿದು ಸುತ್ತಲು ವೇಢೆಯಾಯ್ತುತ್ತರೆಯ ಗರ್ಭದಲಿ || ೨೩ ||
ಪದವಿಭಾಗ-ಅರ್ಥ: ಜಗವ ಹೂಡುವ(ವ್ಯವಸ್ಥೆಗೊಳಿಸುವ) ಮೇಣ್ ಚತುರ್ದಶ ಜಗದ ಜೀವರನು+ ಊಡಿಯು(ಆಹಾರ ನೀಡುವ)+ ಉಣಿಸುವ ಜಗವನು+ ಅಂತರ್ಭಾವದಲಿ ಬಲಿಸುವ ಗುಣತ್ರಯದ ಸೊಗಡು (ವಾಸನೆ,ಅಂಶವನ್ನು) ತನ್ನ ಸಹಸ್ರಧಾರೆಯ ಝಗೆಯೊಳು+ ಎನಿಪ ಮಹಾಸುದರ್ಶನ ಬಿಗಿದು ಸುತ್ತಲು ವೇಢೆಯಾಯ್ತು(ಗೋಡೆ? ಆವರಣ, ಬಂಧನ, ಬಲೆ)+ ಉತ್ತರೆಯ ಗರ್ಭದಲಿ
ಅರ್ಥ:ಆಗ ಅದನ್ನು ತಿಳಿದ ಕೃಷ್ಣನು ತನ್ನ ಆಯುಧ ಸುದರ್ಶನ ಚಕ್ರವನ್ನು ಪಾಂಡವರ ರಕ್ಷಣೆಗೆ ನಿಯೋಜಿಸಿದನು; ಜಗವನ್ನು ವ್ಯವಸ್ಥೆಗೊಳಿಸುವ ಮತ್ತೆ ಚತುರ್ದಶ ಜಗದ ಜೀವರನ್ನು ಆಹಾರ ನೀಡಿ ಉಣಿಸುವ, ಜಗವನ್ನು ಅಂತರ್ಭಾವದಲ್ಲಿ ಬಲಗೊಳಿಸುವ ಗುಣತ್ರಯದ ಅಂಶವನ್ನು ತನ್ನ ಸಹಸ್ರಧಾರೆಯ ಕಿರಣದಲ್ಲಿ ಹೊಂದಿದ ಶಕ್ತಿ ಎನ್ನುವ ಮಹಾಸುದರ್ಶನ ಚಕ್ರವು, ಅದು ಅಶ್ವತ್ಥಾಮನ ಆ ಮಹಾ ಅಸ್ತ್ರವನ್ನು ಹಿಂಬಾಲಿಸಿ ಮುಂದೆ ಹೋಗಿ ಉತ್ತರೆಯ ಗರ್ಭದಲ್ಲಿ ಸುತ್ತ ರಕ್ಷಣೆಯನ್ನು ಬಂಧನವನ್ನು ಬಿಗಿದು ರಕ್ಷಣೆಯ ಗೋಡೆಯಾಗಿ ನಿಂತಿತು.
ಸೆಳೆದುಕೊಂಡನು ಮಿತ್ತುವಿನ ಗಂ
ಟಲಲಿ ಮಾರ್ಕಂಡೇಯನನು ರಣ
ದೊಳಗೆ ಭಗದತ್ತಾಂಕುಶದಿ ನಾರಾಯಣಾಸ್ತ್ರದಲಿ |
ಉಳುಹಿದನು ಪಾರ್ಥನನು ಗುರುಸುತ
ಕಳುಪಿದೀ ಕುಶಿಕಾಸ್ತ್ರದಲಿ ಶಶಿ
ಕುಲದ ರಾಜಾಂಕುರವ ಕರುಣಿಸಿ ಕಾಯ್ದನಸುರಾರಿ || ೨೪||
ಪದವಿಭಾಗ-ಅರ್ಥ:ಸೆಳೆದುಕೊಂಡನು ಮಿತ್ತುವಿನ ಗಂಟಲಲಿ ಮಾರ್ಕಂಡೇಯನನು ರಣದೊಳಗೆ ಭಗದತ್ತ+ ಅಂಕುಶದಿ ನಾರಾಯಣಾಸ್ತ್ರದಲಿ ಉಳುಹಿದನು ಪಾರ್ಥನನು ಗುರುಸುತ ಕಳುಪಿದೀ ಕುಶಿಕಾಸ್ತ್ರದಲಿ ಶಶಿಕುಲದ ರಾಜಾಂಕುರವ ಕರುಣಿಸಿ ಕಾಯ್ದನು + ಅಸುರಾರಿ.
ಅರ್ಥ: ಕೃಷ್ಣನು ಮೃತ್ಯವನ್ನು ತನ್ನ ಚಕ್ರದ ಮೂಲಕ ಸೆಳೆದುಕೊಂಡನು. ಮಾರ್ಕಂಡೇಯನನ್ನು ಮೃತ್ಯವವಿನ ಗಂಟಲಿನಿಂದ ಶಿವನು ಉಳಿಸಿದಂತೆ, ಯುದ್ಧದೊಳಗೆ ಭಗದತ್ತನ ಅಂಕುಶದಿಂದ ಮತ್ತು ಗುರುಸುತ ಅಶ್ವತ್ಥಾಮನ ನಾರಾಯಣಾಸ್ತ್ರದಿಂದ ಪಾರ್ಥನನ್ನು ಉಳಿಸಿದನು. ಹಾಗೆ ಈಗ ಕಳುಹಿಸಿದ ಅಶ್ವತ್ಥಾಮನ ಕುಶಿಕಾಸ್ತ್ರದಿಂದ ಚಂದ್ರಕುಲದ ರಾಜಾಂಕುರವಾದ ಉತ್ತರೆಯ ಗರ್ಭವನ್ನು, ಕರುಣೆ ತೋರಿ ಕೃಷ್ಣನು ಕಾಯ್ದನು.
ತೀರಿತೈ ಕುಶಿಕಾಸ್ತ್ರಘಾತಿ ಮು
ರಾರಿ ಗುರುಸುತರೊಬ್ಬರೊಬ್ಬರ
ವೀರಪಣವಾಸಿಯಲಿ ಶಪಿಸಿದರಧಿಕರೋಷದಲಿ |
ನಾರಿಯಂತಸ್ತಾಪವಹ್ನಿ ನಿ
ವಾರಣಕೆ ಜಲವೀತನೆಂದಾ
ಚಾರಿಯನ ನಂದನನ ಹಿಡಿದರು ಭೀಮಫಲುಗುಣರು || ೨೫ ||
ಪದವಿಭಾಗ-ಅರ್ಥ: ತೀರಿತೈ(ಪರಿಹಾರವಾಯಿತು) ಕುಶಿಕ+ ಅಸ್ತ್ರಘಾತಿ (ಘಾತಿ- ಹೊಡೆತ) ಮುರಾರಿ ಗುರುಸುತರು+ ಒಬ್ಬರು+ ಒಬ್ಬರ ವೀರ+ ಪಣವಾಸಿಯಲಿ (ಫಣ- ಪ್ರತಿಜ್ಞೆ ಸಾಧನೆಯಲ್ಲಿ) ಶಪಿಸಿದರು (ನಿಂದಿಸಿದರು)+ ಅಧಿಕರೋಷದಲಿ ನಾರಿಯ+ ಅಂತಸ್ತಾಪ+ ವಹ್ನಿ (ಮಕ್ಕಳನ್ನು ಕಳೆದುಕೊಂಡ ದ್ರೌಪದಿಯ ಸಂಕಟದ ಬೆಂಕಿಯನನು) ನಿವಾರಣಕೆ(ನಿವಾರಿಸಲು ನಂದಿಸಲು) ಜಲವೀತನು(ಈ ಅಶ್ವತ್ಥಾಮನ ಪ್ರಾಣವೇ ಜಲ- ನೀರು) ಎಂದು+ ಆಚಾರಿಯನ ನಂದನನ(ಗುರುದ್ರೋಣನ ಮಗ) ಅಶ್ವತ್ಥಾಮನನ್ನು ಹಿಡಿದರು ಭೀಮ- ಫಲುಗುಣರು.
ಅರ್ಥ: ಕುಶಧರ್ಭೆಯ ಅಸ್ತ್ರದ ಹೊಡೆತದ ಅಪಾಯ ತೀರಿತು- ಪರಿಹಾರವಾಯಿತು. ಕೃಷ್ಣ ಮತ್ತು ಅಶ್ವತ್ಥಾಮರು, ಒಬ್ಬರು ಮತ್ತೊಬ್ಬರ ವೀರ ಪಣದ ಸಾಧನೆಯಲ್ಲಿ ಪರಸ್ಪರ ಅಧಿಕ ರೋಷದಿಂದ ನಿಂದಿಸಿದರು. ಮಕ್ಕಳನ್ನು ಕಳೆದುಕೊಂಡ ದ್ರೌಪದಿಯ ಹೊಟ್ಟೆಯಳಗಿನ ಸಂಕಟದ ಬೆಂಕಿಯನ್ನು ನಂದಿಸಲು ಈ ಅಶ್ವತ್ಥಾಮನ ಪ್ರಾಣವೇ ಜಲ ಎಂದು, ಪ್ರಾಣವನ್ನು ತೆಗೆಯಲು ಗುರುದ್ರೋಣನ ಮಗ ಅಶ್ವತ್ಥಾಮನನ್ನು ಭೀಮ ಮತ್ತು ಫಲುಗುಣರು ಹಿಡಿದರು.

ಬಂದಳಾ ದ್ರೌಪದಿಯು ಅಹಹ ಗುರು ನಂದನನ ಕೊಲಬಾರದು[ಸಂಪಾದಿಸಿ]

ಬಂದಳಾ ದ್ರೌಪದಿಯಹಹ ಗುರು
ನಂದನನ ಕೊಲಬಾರದಕಟೀ
ನಂದನರ ಮರಣದ ಮಹಾವ್ಯಥೆಯೀತನಳಿವಿನಲಿ |
ಕೊಂದುಕೂಗದೆ ಕೃಪೆಯನಬಲಾ
ವೃಂದ ಸಮಸುಖದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ || ೨೬||
ಪದವಿಭಾಗ-ಅರ್ಥ: ಬಂದಳಾ ದ್ರೌಪದಿಯು+ ಅಹಹ ಗುರುನಂದನನ ಕೊಲಬಾರದು+ ಅಕಟ+ ಈ ನಂದನರ ಮರಣದ ಮಹಾವ್ಯಥೆಯ+ ಈತನ+ ಅಳಿವಿನಲಿ(ಸಾವಿನಲ್ಲಿ) ಕೊಂದುಕೂಗದೆ ಕೃಪೆಯನು+ ಅಬಲಾವೃಂದ (ನಾರೀ ಸಮೂಹ) ಸಮ+ ಸುಖದುಃಖಿಗಳು ಸಾರು+ ಎಂದು(ಹೋಗಿ, ಸರಿಯಿರಿ ದೂರ ಸಾರಿರಿ) ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ.
ಅರ್ಥ:ಪಾಂಡವರೈವರ ಮತ್ತು ದ್ರೌಪದಿಯ ಮಕ್ಕಳ್ಳನ್ನು ಕೊಂದ ಪರಿಹಾರಕ್ಕೆ ಅಶ್ವತ್ಥಾಮನ ತಲೆಯನ್ನು ತೆಗೆಯಬೇಕೆಂದು ಭೀಮಾರ್ಜುನರು ತೊಡಗಿದಾಗ, ಅಹಹ! ಅವಸರದಿಂದ ಆ ದ್ರೌಪದಿಯು ಬಂದಳು. ಗುರುನಂದನ ಅಶ್ವತ್ಥಾಮನನ್ನು ಕೊಲ್ಲಬಾರದು, ಕೊಲ್ಲುವುದು ಬೇಡ ಎಂದಳು. ಅಕಟ! ಈ ನನ್ನ ನಂದನರ/ಮಕ್ಕಳ ಮರಣದ ಮಹಾವ್ಯಥೆಯನ್ನು ಈತನ ಸಾವಿನಲ್ಲಿ ಮರೆಯಲೇ? ಅಶ್ವತ್ಥಾಮನ ತಾಯಿ ಕೃಪೆಯನ್ನು ಇವನ ಸಾವು ಕೊಂದುಕೂಗದೆ, ಅವಳಿಗೆ ಪುತ್ರವಿಯೋಗ ದುಃಖ ಕೊಡದೆ? ಸಂಕಟಪಡಿಸದೇ ಇರುವುದೇ? ನಮ್ಮ ಪಾಳಯದಲ್ಲಿ ಇರುವ ನಾರೀ ಸಮೂಹವು ತಮ್ಮ ಮಕ್ಕಳನ್ನೂ ಕಳೆದುಕೊಂಡಿರುವರು. ನಾವು ಸಮ ಸುಖದುಃಖಿಗಳು. ಭೀಮಾರ್ಜುನರೇ ಗುರುಪತ್ರನನ್ನು ಬಿಟ್ಟು ದೂರ ಸರಿಯಿರಿ,'ಎಂದು ಬಳಿಕ ಪಾಂಚಾಲಿ ಅವರನ್ನು ಗುರುಪುತ್ರನ ವಧೆಯಿಂದ ತೆಗೆದಳು/ ಬಿಡಿಸಿದಳು.
ತಲೆಯ ಕೊಂಬವಗಡದ ಭಾಷೆಯ
ಸಲಿಸಲೆಂದಾ ದ್ರೋಣತನುಜನ
ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ |
ಗೆಲಿದು ತಿರುಗಿದರಿವರು ಸಾಹಸ
ವಳುಕಿಸದೆ ಮೂಜಗವ ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ || ೨೭ ||
ಪದವಿಭಾಗ-ಅರ್ಥ: ತಲೆಯ ಕೊಂಬ(ತಲೆಯನ್ನು ತೆಗೆದುಕೊಳ್ಳುವ)+ ಅವಗಡದ ಭಾಷೆಯ ಸಲಿಸಲೆಂದು+ ಆ ದ್ರೋಣತನುಜನ ಹೊಳೆವ ಮಕುಟದ ಮಾಣಿಕವ(ತಲೆಯಲ್ಲಿದ್ದ ರತ್ನ) ಕೊಂಡು+ ಉತ್ತರಾಯದಲಿ ಗೆಲಿದು ತಿರುಗಿದರು+ ಇವರು ಸಾಹಸವ+ ಅಳುಕಿಸದೆ ಮೂಜಗವ ಯದುಕುಲ ತಿಲಕ ಗದುಗಿನ ವೀರನಾರಾಯಣನ ಕರುಣದಲಿ
ಅರ್ಥ:ಅಥ್ವತ್ಥಾನನ್ನು ಕೊಲ್ಲುವೆನೆಂಉ ನುಡಿದ ಪ್ರತಿಜ್ಞೆಗೆ ಧಕ್ಕೆ ಬಾರದಂತೆ ಅವನ ತಲೆಯನ್ನು ತೆಗೆಯುವ ಅಪಾಯದ ಭಾಷೆಯನ್ನು ಸಲ್ಲಿಸಲು ಆ ದ್ರೋಣನ ಮಗ ಅಶ್ವತ್ಥಾಮನ ತಲೆಯಲ್ಲಿ ಹುಟ್ಟುವಾಗಲೇ ಇದ್ದ ಹೊಳೆಯುವ ರತ್ನವನ್ನು ಕತ್ತರಿಸಿ ಕಿತ್ತುಕೊಂಡು ಉತ್ತರ ಯುದ್ಧದಲ್ಲಿ ಗೆದ್ದು ಇವರು- ಈ ಪಾಂಡವರು ಪಾಳಯಕ್ಕೆ ತಿರುಗಿ ಹೊರಟರು. ಇವರು ತಮ್ಮ ಸಾಹಸದಿಂದ ಮೂರು ಜಗತ್ತನ್ನೂ ಅಳುಕಿಸದೆ/ ನೋಯಿಸದೆ ಯದುಕುಲತಿಲಕ ಗದುಗಿನ ವೀರನಾರಾಯಣನ ಕರುಣದಿಂದ ಮಹಾಯುದ್ಧದಲ್ಲಿ ಗೆದ್ದು ಪಾಳಯವನ್ನು ಸೇರಿದರು.
♠♠♠

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
  3. ಸಿರಿಗನ್ನಡ ಅರ್ಥಕೋಶ- ಕೊ.ಶಿ.ಕಾ.