ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧)

ವಿಕಿಸೋರ್ಸ್ದಿಂದ

ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧)[ಸಂಪಾದಿಸಿ]

<ಕುಮಾರವ್ಯಾಸ ಭಾರತ

<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೧ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಸೂಚನೆ~ ಶಲ್ಯನವಸಾನದಲಿ ಕೌರವ
ಮಲ್ಲ ದಳಪತಿಯಾಗಿ ರಣದಲಿ
ನಿಲ್ಲದಡಗಿದನಿತ್ತ ಸಂಜಯ ಬಂದನಾಹವಕೆ [ಸೂ.]

ಪದವಿಭಾಗ-ಅರ್ಥ: (ಸೂ-ಸಂಧಿಯ ತಾತ್ಪರ್ಯ)) ಶಲ್ಯನ+ ಅವಸಾನದಲಿ(ಸಾವಿನಲ್ಲಿ) ಕೌರವಮಲ್ಲ ದಳಪತಿಯಾಗಿ ರಣದಲಿ ನಿಲ್ಲದೆ+ ಅಡಗಿದನು+ ಇತ್ತ ಸಂಜಯ ಬಂದನು+ ಆಹವಕೆ (ಆಹವ= ಯುದ್ಧ)
ಅರ್ಥ:ಶಲ್ಯನು ಕೌರವನ ಸೇನಾಧಿಪತಿಯಾಗಿ ಯುದ್ಧಮಾಡಿ ಮರಣಹೊಂದಲು, ಕೌರವಮಲ್ಲನು/ ಶೂರ ಕೌರವನು ತಾನೇ ದಳಪತಿಯಾಗಿ ತನ್ನನ್ನೇ ನೇಮಿಸಿಕೊಂಡನು. ಅದರೆ ರಣದಲ್ಲಿ ಯುದ್ಧಕ್ಕೆ ನಿಲ್ಲದೆ ಕೆರೆಯ ನೀರಿನಲ್ಲಿ ಅಡಗಿದನು. ಇತ್ತ ಸಂಜಯ ಯುದ್ಧಕ್ಕೆ ಬಂದನು. [೧][೨]

~~ಓಂ~~

ಕುರುಸೇನೆಯೊಡನೆ ಅರ್ಜುನನ ಯುದ್ಧ[ಸಂಪಾದಿಸಿ]

ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತರ್ಜುನನು ಸೇನಾ
ಜಾಲವನು ಸಂತೈಸಿ ದೊರೆ ಸುಯ್ದಾನವೆಂದೆನುತ |
ಆಳೊಡನೆ ಬೆರೆಸಿದನು ಕುರುಭೂ
ಪಾಲಕನ ಥಟ್ಟಿನಲಿ ಶಸ್ತ್ರ
ಜ್ವಾಲೆಗಳ ಕೆದರಿದನು ಹೊದರಿನ ಹಿಂಡ ಹರೆಗಡಿದ || ೧ ||
ಪದವಿಭಾಗ-ಅರ್ಥ: ಕೇಳು ಧೃತರಾಷ್ಟ್ರ+ ಅವನಿಪ ಸಿರಿಲೋಲ ಸಹಿತ+ ಅರ್ಜುನನು ಸೇನಾಜಾಲವನು ಸಂತೈಸಿ ದೊರೆ ಸುಯ್ದಾನವೆಂದು+ ಎನುತ ಆಳೊಡನೆ ಬೆರೆಸಿದನು ಕುರುಭೂಪಾಲಕನ ಥಟ್ಟಿನಲಿ ಶಸ್ತ್ರಜ್ವಾಲೆಗಳ ಕೆದರಿದನು ಹೊದರಿನ (ಒಟ್ಟಾಗಿ ಸೇರಿದ್ದ) ಹಿಂಡ ಹರೆಗಡಿದ.
  • ಸುಯ್ದಾನ: ಸುಯಿಧಾನ,ಕಾಪು,ಕಾವಲು,ರಕ್ಷಣೆ ,ಜೋಪಾನ, ಎಚ್ಚರಿಕೆ, ಜಾಗರೂಕತೆ (ವಿಕ್ಷನರಿ)
ಅರ್ಥ: ಯುದ್ಧದ ಸಮಾಚಾರವನ್ನು ಸಂಜಯನು ದೊರೆಗೆ ಹಾಳುತ್ತಾ, 'ಕೇಳು ಧೃತರಾಷ್ಟ್ರ ರಾಜನೇ, ಕೃಷ್ಣನ ಸಹಿತ ಅರ್ಜುನನು ತನ್ನ ಸೇನಾಜಾಲವನನ್ನು ಸಂತೈಸಿ, ದೊರೆ ಧರ್ಮಜನ ರಕ್ಷಣೆಗೆ ಎಚ್ಚರಿಕೆ ಜೋಪಾನ ಎಂದು ತನ್ನವರಿಗೆ ಹೇಳಿ, ತನ್ನ ಸೇನೆಯಯೊಡನೆ ಸೇರಿಕೊಂಡು ಕುರುಭೂಪಾಲಕನ ಸೈನ್ಯದಲ್ಲಿ ಒಟ್ಟಾಗಿ ಸೇರಿದ್ದ ಸೇನೆಯ ದಳಗಳ ಸಮೂಹವನ್ನು ಮರದ ಹೆರೆ ಕಡಿದಂತೆ ತನ್ನ ಅಸ್ತ್ರಗಳಿಂದ ಶಸ್ತ್ರಜ್ವಾಲೆಗಳನ್ನು ಉಂಟುಮಾಡಿ ಬಲವನ್ನು ಕುಂದಿಸಿದನು.
ಎಲವೊ ಕಪಟದ್ಯೂತಕೇಳೀ
ಕಲುಷಿತಾಂತಃಕರಣ ನಿನ್ನೀ
ಬಲಕೆ ಪತಿ ನೀನೋ ಕೃಪಾಚಾರಿಯನೊ ಗುರುಸುತನೊ |
ಖಳ ಸುಶರ್ಮನೊ ಶಕುನಿಯೋ ನಿ
ನ್ನುಳಿದವೊಡವುಟ್ಟಿದರೊ ರಾಜಾ
ವಳಿಯೊಳಾರಳಲಿಗರೆನುತ ತೆಗೆದೆಚ್ಚನಾ ಪಾರ್ಥ || ೨ ||
ಪದವಿಭಾಗ-ಅರ್ಥ: ಎಲವೊ ಕಪಟದ್ಯೂತಕೇಳೀ ಕಲುಷಿತ+ ಅಂತಃಕರಣ ನಿನ್ನ+ ಈ ಬಲಕೆ(ಸೈನ್ಯಕ್ಕೆ) ಪತಿ ನೀನೋ ಕೃಪಾಚಾರಿಯನೊ ಗುರುಸುತನೊ(ಅಶ್ವತ್ಥಾಮ) ಖಳ(ದುಷ್ಟ) ಸುಶರ್ಮನೊ ಶಕುನಿಯೋ ನಿನ್ನ+ ಉಳಿದ+ ವೊಡವುಟ್ಟಿದರೊ ರಾಜಾವಳಿಯೊಳು+ ಆರು+ ಅಳಲಿಗರು+ ಎನುತ ತೆಗೆದೆಚ್ಚನು+ ಆ ಪಾರ್ಥ.
ಅರ್ಥ:ಅರ್ಜುನನು ಕೌರವನನ್ನು ಕುರಿತು, 'ಎಲವೊ ಕಪಟದ್ಯೂತದ ಆಟದಲ್ಲಿ ಕೆಟ್ಟ ಅಂತಃಕರಣದಮನಸ್ಸುಳ್ಳವನೇ ನಿನ್ನ ಈ ಸೈನ್ಯಕ್ಕೆ ದಳಪತಿ ನೀನೋ? ಕೃಪಾಚಾರ್ಯನೊ? ಗುರುಸುತ ಅಶ್ವತ್ಥಾಮನೋ? ಖಳ ಸುಶರ್ಮನೊ? ಶಕುನಿಯೋ? ಅಥವಾ ನಿನ್ನ ಸಾಯದೆ ಉಳಿದ ಒಡಹುಟ್ಟಿದವರೊ? ರಾಜ ವಂಶದಲ್ಲಿ ಯಾರು ಸಾಯುವವರು?' ಎನ್ನುತ್ತಾ ಆ ಪಾರ್ಥನು ಬಾಣವನ್ನು ತೆಗೆದು ಹೊಡೆದನು.
ಅರಸ ಕೇಳೈ ಮೂರು ಸಾವಿರ
ಕರಿಘಟೆಗಳಿಪ್ಪತ್ತು ಸಾವಿರ
ತುರಗದಳ ರಥವೆರಡುಸಾವಿರ ಲಕ್ಷ ಕಾಲಾಳು |
ಅರಸುಗಳು ಮೂನೂರು ನಿಂದುದು
ಕುರುಬಲದ ವಿಸ್ತಾರ ಕೌರವ
ಧರಣಿಪತಿಯೇಕಾದಶಾಕ್ಷೋಹಿಣಿಯ ಶೇಷವಿದು || ೩ ||
ಪದವಿಭಾಗ-ಅರ್ಥ: ಅರಸ ಕೇಳೈ ಮೂರು ಸಾವಿರ ಕರಿಘಟೆಗಳು+ ಇಪ್ಪತ್ತು ಸಾವಿರ ತುರಗದಳ ರಥವು+ ಎರಡುಸಾವಿರ ಲಕ್ಷ ಕಾಲಾಳು ಅರಸುಗಳು ಮೂನೂರು ನಿಂದುದು ಕುರುಬಲದ ವಿಸ್ತಾರ ಕೌರವ ಧರಣಿಪತಿಯ+ ಏಕಾದಶಾಕ್ಷೋಹಿಣಿಯ ಶೇಷವಿದು.
ಅರ್ಥ:ಅರಸ ಧೃತರಾಷ್ಟ್ರನೇ, ಕೇಳಯ್ಯಾ, ನಿನ್ನ ಮಗ ಕೌರವನ ಬಳಿ ಮೂರು ಸಾವಿರ ಆನೆಗಳು, ಇಪ್ಪತ್ತು ಸಾವಿರ ಅಶ್ವದಳ, ರಥವು ಎರಡುಸಾವಿರ, ಒಂದು ಲಕ್ಷ ಕಾಲಾಳು, ಅರಸುಗಳು ಮೂರುನೂರು- ಅತ್ಜುನನ್ನು ಎದುರಿಸಿ ನಿಂದಿತ್ತು. ಕೌರವ ಧರಣಿಪತಿಯ - ನಿಮ್ಮ ಕುರುಬಲದ ವಿಸ್ತಾರವು, ಒಟ್ಟು ಸಂಖ್ಯೆ. ಇದು ಮೊದಲಿದ್ದ ಹನ್ನೊಂದು ಅಕ್ಷೋಹಿಣಿ ಸೈನ್ಯದಲ್ಲಿ ಬದುಕಿ ಉಳಿದ ಶೇಷ.
ಕರಿಘಟೆಗಳೈನೂರು ಮೂವ
ತ್ತೆರಡು ಸಾವಿರ ಪಾಯದಳ ಸಾ
ವಿರದ ನೂರು ವರೂಥ ವಂಗಡದವನಿಪರು ಸಹಿತ |
ತುರುಕ ಬರ್ಬರ ಪಾರಸೀಕರ
ತುರಗವೈಸಾವಿರ ಸಹಿತ ಮೋ
ಹರಿಸಿ ನಿಂದನು ಶಕುನಿ ಥಟ್ಟಿನ ಬಲದ ಬಾಹೆಯಲಿ || ೪ ||
ಪದವಿಭಾಗ-ಅರ್ಥ: ಕರಿಘಟೆಗಳು (ಆನೆಯ ಹಿಂಡು)+ ಐನೂರು, ಮೂವತ್ತೆರಡು ಸಾವಿರ ಪಾಯದಳ(ಕಾಲಾಳುಗಳ ಮೂಲದಂಡು. ರಾಜನ ಕಾವಲು ಸೈನ್ಯ), ಸಾವಿರದ ನೂರು ವರೂಥ ವಂಗಡದ+ ಅವನಿಪರು ಸಹಿತ ತುರುಕ ಬರ್ಬರ ಪಾರಸೀಕರ ತುರಗವು+ ಐಸಾವಿರ ಸಹಿತ ಮೋಹರಿಸಿ (ಮುತ್ತಿಗೆ ಹಾಕಿ) ನಿಂದನು ಶಕುನಿ ಥಟ್ಟಿನ ಬಲದ ಬಾಹೆಯಲಿ (ಪಕ್ಕದಲ್ಲಿ)
ಅರ್ಥ:ಐನೂರು ಆನೆಯ ಹಿಂಡು, ಮೂವತ್ತೆರಡು ಸಾವಿರ ಭಟರ ಕಾಲಾಳುಗಳ ಆಪತ್‍ಸೈನ್ಯ ದಂಡು., ರಥಗಳು ಸಾವಿರದ ನೂರು ವಂಗಡಗಳ ಸಾಮಂತ ರಾಜರು ಸಹಿತ, ತುರುಕರು, ಬರ್ಬರರು ಮತ್ತು ಪಾರಸೀಕರ ಕುದುರೆಗಳು ಐದು ಸಾವಿರ ಸಹಿತ ಮುತ್ತಿಗೆ ಹಾಕಿ ಶಕುನಿಯು ಸೈನ್ಯದ ಬಲಪಕ್ಕದ ಭಾಗದಲ್ಲಿ ನಿಂತನು.
ನೂರು ರಥವಿನ್ನೂರು ಗಜವೈ
ನೂರು ಹಯವೈಸಾಸಿರದ ಮೂ
ನೂರು ಸುಭಟರು ಸಹಿತ ಮೋಹರದೆರಡು ಬಾಹೆಯಲಿ |
ತೋರಿದರು ಕೃತವರ್ಮ ಕೃಪರೈ
ನೂರುಗಜ ಗುರುತನುಜ ಸಹಿತೀ
ಮೂರುದಳಕೊತ್ತಾಗಿ ನಿಂದನು ಕೌರವರರಾಯ || ೫ ||
ಪದವಿಭಾಗ-ಅರ್ಥ: ನೂರು ರಥವು+, ಇನ್ನೂರು ಗಜವು+ ಐನೂರು ಹಯವು+ ಐಸಾಸಿರದ ಮೂನೂರು ಸುಭಟರು ಸಹಿತ, ಮೋಹರದ+ ಎರಡು ಬಾಹೆಯಲಿ ತೋರಿದರು ಕೃತವರ್ಮ, ಕೃಪರು, ಐನೂರು ಗಜ ಗುರುತನುಜ ಸಹಿತ+ ಈ ಮೂರು ದಳಕೆ+ ಒತ್ತಾಗಿ ನಿಂದನು ಕೌರವರರಾಯ.
ಅರ್ಥ: ನೂರು ರಥಗಳು, ಇನ್ನೂರು ಗಜಗಳು, ಐನೂರು ಕುದುರೆಗಳು, ಐದು ಸಾವಿರದ ಮೂನೂರು ಸುಭಟರ ಸಹಿತ, ಸೈನ್ಯದ ಎರಡು ಪಕ್ಕಗಳಲ್ಲಿ ನಿಂತರು. ಕೃತವರ್ಮ, ಕೃಪರು, ಐನೂರು ಆನೆ ಗುರುತನುಜ ಅಶ್ವತ್ಥಾಮ, ಸಹಿತ ಈ ಮೂರು ದಳಕ್ಕೆ ಒತ್ತಾಸೆಯಾಗಿ ಕೌರವರರಾಯನು ನಿಂತನು.
ಕವಿದುದಿದು ದುವ್ವಾಳಿಸುತ ರಥ
ನಿವಹ ಬಿಟ್ಟವು ಕುದುರೆ ಸೂಠಿಯ
ಲವಗಡಿಸಿ ತೂಳಿದವು ಹೇರಾನೆಗಳು ಸಂದಣಿಸಿ |
ಸವಡಿವೆರಳಲಿ ಸೇದುವಂಬಿನ
ತವಕಿಗರು ತರುಬಿದರು ಬಲುಬಿ
ಲ್ಲವರು ಮೊನೆಮುಂತಾಗಿ ಮೋಹಿತು ಮಿಕ್ಕ ಸಬಳಿಗರು || ೬ ||
ಪದವಿಭಾಗ-ಅರ್ಥ: ಕವಿದುದಿದು ದುವ್ವಾಳಿಸುತ (ತೀವ್ರಗತಿಯಿಂದ) ರಥನಿವಹ, ಬಿಟ್ಟವು ಕುದುರೆ ಸೂಠಿಯಲಿ (ವೇಗದಿಂದ)+ ಅವಗಡಿಸಿ ತೂಳಿದವು(ನುಗ್ಗಿ ಹೊಡೆದವು) ಹೇರಾನೆಗಳು ಸಂದಣಿಸಿ ಸವಡಿವೆರಳಲಿ (ಸವಡಿ- ಕೂಡಿಸು. 3. ಹೊಂದಾಣಿಕೆ ಮಾಡು.) ಸೇದುವ+ ಅಂಬಿನ ತವಕಿಗರು (ಬಾಣಬಿಡುವ ಬಿಲ್ಲುಗಾರರು) ತರುಬಿದರು (ಮುತ್ತಿದರು) ಬಲುಬಿಲ್ಲವರು ಮೊನೆಮುಂತಾಗಿ ಮೋಹಿತು (ಒಟ್ಟಾಗಿ) ಮಿಕ್ಕ ಸಬಳಿಗರು.
ಅರ್ಥ:ತೀವ್ರಗತಿಯಿಂದ ರಥಸಮೂಹವು ಅರ್ಜುನನ್ನು ಕವಿದು ಮುತ್ತಿತು. ಕುದುರೆಗಳು ಸಹ ಆಕ್ರಮಿಸಿ ವೇಗವಾಗಿ ಬಿಡಲ್ಪಟ್ಟವು. ದೊಡ್ಡ ಆನೆಗಳು ಸಹ ಸಂದಣಿಸಿ/ ಒಟ್ಟಾಗಿ ನುಗ್ಗಿದವು. ಇವು ಹೊಂದಾಣಿಕೆ ಮಾಡಿಕೊಂಡು ಬಾಣಬಿಡುವ ಬಿಲ್ಲುಗಾರರು ತರುಬಿದರು. ಬಲುಜಾಣ ಬಿಲ್ಲುಗಾರರು ಸೇನೆಯ ಮುಂದೆ ಒಟ್ಟಾಗಿ ಸೇರಿದರು. ಉಳಿದ ಸಬಳಿಗರು/ಈಟಿ ಹಿಡಿದ ಕಾಲಾಳುಗಳು ಸಹ ಸೇರಿಕೊಂಡರು.
ರಣ ಪರಿಚ್ಚೇದಿಗಳು ಮಿಗೆ ಸಂ
ದಣಿಸಿತೋ ಕುರುಸೇನೆ ವಾದ್ಯದ
ರಣಿತವದ್ರಿಯನೊದೆದುದದುಭುತ ಬೊಬ್ಬೆಗಳ ಲಳಿಯ |
ಕುಣಿದವರ್ಜುನನುರುರಥದ ಮುಂ
ಕಣಿಯಲಾರೋಹಕರು ರಥ ಹಯ
ಹೆಣಗಿದವು ಹಯದೊಡನೆ ಕಂದದ ಖುರದ ಹೊಯ್ಲಿನಲಿ || ೭ ||
ಪದವಿಭಾಗ-ಅರ್ಥ: ರಣ ಪರಿಚ್ಚೇದಿಗಳು (ವಿಭಾಗಗಳು) ಮಿಗೆ ಸಂದಣಿಸಿತೋ ಕುರುಸೇನೆ ವಾದ್ಯದರಣಿತವು+ ಅದ್ರಿಯನು+ ಒದೆದುದ+ ಅದುಭುತ ಬೊಬ್ಬೆಗಳ ಲಳಿಯ ಕುಣಿದವು+ ಅರ್ಜುನನ ಉರುರಥದ ಮುಂಕಣಿಯಲಿ+ ಆರೋಹಕರು ರಥ ಹಯ ಹೆಣಗಿದವು ಹಯದೊಡನೆ ಕಂದದ(ಸೈನ್ಯ, ಉತ್ಸಾಹ.) ಖುರದ ಹೊಯ್ಲಿನಲಿ
ಅರ್ಥ: ಯುದ್ಧದ ಸೇನೆಯ ವಿಭಾಗಗಳು ಬಹಳ ಸಂದಣಿಸಿದಾಗ/ ಒಟ್ಟಾದಾಗ ಕುರುಸೇನೆಯ ವಾದ್ಯದ ರಣಭೇರಿಗಳ ಸದ್ದು ಬೆಟ್ಟವನ್ನು ಒದೆದಂತೆ ಅದ್ಭುತ ಬೊಬ್ಬೆಗಳ- ಆರ್ಭಟದ ಕಲ್ಲೋಲದಲ್ಲಿ ಕುಣಿದವು. ಅರ್ಜುನನ ದೊಡ್ಡ ರಥದ ಮುಂದಿನ ಭಾಗದಲ್ಲಿ, ಸವಾರರು, ರಥ. ಹಯ/ಕುದುರೆ ಖುರಪುಟದ ಸದ್ದಿನೊಡನೆ, ಶತ್ರು ಸೈನ್ಯದ ಹಯದೊಡನೆ ಹೆಣಗಿದವು.
ಸುತ್ತುವಲಗೆಯ ಮೇಲೆ ಕಣೆಗಳ
ತೆತ್ತಿಸಿದರೀಚಿನಲಿ ಸಬಳಿಗ
ರೆತ್ತಿದರು ರಾವುತರು ಕೀಲಿಸಿದರು ರಥಧ್ವಜವ |
ಮುತ್ತಿದವು ಗಜಸೇನೆ ಪಾರ್ಥನ
ತೆತ್ತಿಗರ ಬರಹೇಳು ವೇಢೆಯ
ಕಿತ್ತು ಮಗುಚುವರಾರೆನುತ ಮುಸುಕಿತ್ತು ಕುರುಸೇನೆ || ೮ ||
ಪದವಿಭಾಗ-ಅರ್ಥ: ಸುತ್ತುವಲಗೆಯ ಮೇಲೆ ಕಣೆಗಳ ತೆತ್ತಿಸಿದರು+ ಈಚಿನಲಿ ಸಬಳಿಗರು+ ಎತ್ತಿದರು, ರಾವುತರು ಕೀಲಿಸಿದರು, ರಥಧ್ವಜವ ಮುತ್ತಿದವು ಗಜಸೇನೆ, ಪಾರ್ಥನ ತೆತ್ತಿಗರ ಬರಹೇಳು, ವೇಢೆಯ ಕಿತ್ತು ಮಗುಚುವರು+ ಆರೆನುತ ಮುಸುಕಿತ್ತು ಕುರುಸೇನೆ.
  • ವೇಢೆ:(<ಸಂ. ವೇಷ್ಟ > ಪ್ರಾ. ವೇಢ) ೧ ಆಕ್ರ ಮಣ ೨ ಆವರಣ ೩ ಬಂಧನ ೪ ಬಲೆ, ಜಾಲ ೫ ಕುದುರೆಯ ಒಂದು ಬಗೆಯ ಓಟ
ಅರ್ಥ:ಕೌರವನ ಪಾದಳದವರು ಸುತ್ತುವರಿದು ಪಾರ್ಥನ ಸೇನೆಗೆ ಲಗ್ಗೆ ಇಟ್ಟರು. ಅದರಮೇಲೆ ಬಾಣಗಳನ್ನು ಹೊಡೆದರು. ಈಚೆ ಸಬಳವನ್ನು ಹಿಡಿದವರು ತಮ್ಮ ಆಯುಧವನ್ನು ಎತ್ತಿದರು. ರಾವುತರು ಮುಂದೆ ಹೋಗಲಅರದೆ ಅಲ್ಲಿಯೇ ಕೀಲಿಸಿ ನಿಂತರು. ಅರ್ಜುನನ ರಥವನ್ನೂ ಧ್ವಜವನ್ನೂ ಗಜಗಳ ಸೇನೆ ಮುತ್ತಿದವು. ಆಗ ಕೌರವನು ಪಾರ್ಥನನ್ನು ರಕ್ಷಿಸುವವರ ಬರಹೇಳು ಎಂದು ಕೂಗಿದರು. ಈ ಆಕ್ರಮಣವನ್ನು ಕಿತ್ತು ಮಗುಚುವ ಶೂರರು ಯಾರು, ಎನ್ನತ್ತಾ, ಕುರುಸೇನೆಯು ಅರ್ಜುನನ್ನು ಮುಸುಕಿತ್ತು(ಮುತ್ತಿತ್ತು).
ಅರಸ ಕೇಳೈ ಬಳಿಕ ಪಾರ್ಥನ
ಕೆರಳಿಚಿದರೋ ಕಾಲರುದ್ರನ
ಸರಸವಾಡಿದರೋ ಪ್ರಚಂಡಪ್ರಳಯಭೈರವನ |
ಪರಿಭವಿಸಿದರೊ ಲಯಕೃತಾಂತನ
ಕರೆದರೋ ಮೂದಲಿಸಿ ನಾವಿ
ನ್ನರಿಯೆವರ್ಜುನನೆಸುಗೆಯಭಿವರ್ಣನೆಯ ನಿರ್ಣಯವ || ೯ ||
ಪದವಿಭಾಗ-ಅರ್ಥ:ಅರಸ ಕೇಳೈ ಬಳಿಕ ಪಾರ್ಥನ ಕೆರಳಿಚಿದರೋ, ಕಾಲರುದ್ರನ ಸರಸವಾಡಿದರೋ, ಪ್ರಚಂಡ ಪ್ರಳಯಭೈರವನ ಪರಿಭವಿಸಿದರೊ, ಲಯಕೃತಾಂತನ ಕರೆದರೋ, ಮೂದಲಿಸಿ ನಾವಿನ್ನರಿಯೆವು+ ಅರ್ಜುನನ+ ಎಸುಗೆಯ+ ಅಭಿವರ್ಣನೆಯ ನಿರ್ಣಯವ.
ಅರ್ಥ: ಅರಸನೇ ಕೇಳು, ಆ ಬಳಿಕ ಕುರುಸೇನೆ ಸ್ಥಿತಿ ಹೇಗಿತ್ತೆಂದರೆ, ಪಾರ್ಥನನ್ನು ಕೆರಳಿಸಿದರೋ, ಪ್ರಳಯಕಾಲದ ಕಾಲರುದ್ರನೊಡನೆ ಸರಸವಾಡಿದರೋ, ಅಥವಾ ಪ್ರಚಂಡ ಪ್ರಳಯಭೈರವನನ್ನು ಎದುರಿಸಿದರೊ, ಜಗತ್ತನ್ನುಲಯ ಮಾಡುವ ಕೃತಾಂತನ(ರುದ್ರ) ಕರೆದರೋ ಎನ್ನುವುದನ್ನು ನಾವು ಇನ್ನು ಅರಿಯೆವು, ಎನ್ನುವ ಹಾಗೆ ಕುರು ಸೇನೆಯನ್ನು ಮೂದಲಿಸಿ ಅರ್ಜುನನು ಮಾಡಿದ ಬಾಣಪ್ರಯೋಗ ಅಭಿವರ್ಣನೆಯ ನಿರ್ಣಯವನ್ನು ಮಾಡಲು ಸಾಧ್ಯವಿಲ್ಲ ಎಂದ.
ಎಡದಲೌಕಿದ ಭಟರನಾ ವಂ
ಗಡದ ರಾವ್ತರ ಸಮ್ಮುಖದೊಳವ
ಗಡಿಸಿದಾನೆಯ ಥಟ್ಟಿನಾ ತೇರುಗಳ ಸಮರಥರ |
ಕಡಿದನೊಂದೇ ಸರಳಿನಲಿ ಚಿನ
ಕಡಿಗಳೆದು ರುಧಿರಾಂಬುರಾಶಿಯೊ
ಳಡಿಗಿಸಿದ ಚತುರಂಗಬಲವನದೊಂದು ನಿಮಿಷದಲಿ || ೧೦ ||
ಪದವಿಭಾಗ-ಅರ್ಥ: ಎಡದಲಿ+ ಔಕಿದ ಭಟರನು+ ಆ ವಂಗಡದ ರಾವ್ತರ ಸಮ್ಮುಖದೊಳು+ ಅವಗಡಿಸಿದ(ನು)+ ಆನೆಯ ಥಟ್ಟಿನ+ ಆ ತೇರುಗಳ ಸಮರಥರ ಕಡಿದನು+ ಒಂದೇ ಸರಳಿನಲಿ, ಚಿನಕಡಿಗಳೆದು (ಚಿನಕಡಿ= ತುಂಡರಿಸು;) ರುಧಿರಾಂಬು(ರಕ್ತಜಲ) ರಾಶಿಯೊಳು+ ಅಡಿಗಿಸಿದ/ ಮುಳುಗಿಸಿದ; ಚತುರಂಗ ಬಲವನು+ ಅದೊಂದು ನಿಮಿಷದಲಿ
ಅರ್ಥ:ಅರ್ಜುನನು ತನ್ನ ಎಡದಲ್ಲಿ ನುಗ್ಗಿದ ಭಟರನ್ನು, ಆ ವಂಗಡದ ರಾವುತರ ಸಮ್ಮುಖದಲ್ಲಿ ಸೋಲಿಸಿದನು. ಆನೆಯ ಹಿಂಡಿನ ಸೇನೆಯನ್ನೂ, ಆ ತೇರುಗಳುಳ್ಳ ಸಮರಥರನ್ನೂ ಒಂದೇ ಸರಳಿನಲಿ/ ಬಾಣದಿಂದ ಕಡಿದನು. ಅದರಿಂದ ಅವರು ಕತ್ತರಿಸಲ್ಪಟ್ಟು ತುಂಡರಿಸಿದ ಗಾಯದಿಂದ ರುಧಿರಾಂಬು/ರಕ್ತಜಲದ ಪ್ರವಾಹದಲ್ಲಿ ಅದೊಂದು ನಿಮಿಷದಲಿ ಕೌರವನ ಚತುರಂಗ ಬಲವನ್ನು ಮುಳುಗಿಸಿದನು.
ಅಳಿದವಿನ್ನೂರಾನೆ ಸರಳ
ಚ್ಚಳಿಸಿದವು ಮೂನೂರು ಪುನರಪಿ
ಮಲಗಿದವು ನೂರಾನೆ ಕೆಡೆದವು ತಾರುಥಟ್ಟಿನಲಿ |
ಬಳಿಕ ನೂರು ನಿರಂತರಾಸ್ತ್ರಾ
ವಳಿ ವಿಘಾತಿಗೆ ನೂರು ಲೆಕ್ಕವ
ಕಳೆದವಿನ್ನೂರಾನೆ ಪಾರ್ಥನ ಕೋಲ ತೋಹಿನಲಿ || ೧೧ ||
ಪದವಿಭಾಗ-ಅರ್ಥ: ಅಳಿದವು+ ಇನ್ನೂರು ಅನೆ, ಸರಳು+ ಅಚ್ಚ+ ಅಳಿಸಿದವು(ಅಳಿಸು - ನಾಶಮಾಡು) ಮೂನೂರು, ಪುನರಪಿ ಮಲಗಿದವು, ನೂರಾನೆ ಕೆಡೆದವು ತಾರು ಥಟ್ಟಿನಲಿ, ಬಳಿಕ ನೂರು ನಿರಂತರ+ ಅಸ್ತ್ರ+ ಆವಳಿ ವಿಘಾತಿಗೆ ನೂರು ಲೆಕ್ಕವ ಕಳೆದವು+ ಇನ್ನೂರು+ ಆನೆ ಪಾರ್ಥನ ಕೋಲ(ಬಾಣದ) ತೋಹಿನಲಿ(ಬೇಟೆಯಲ್ಲಿ).
ಅರ್ಥ: ಪಾರ್ಥನ ಬಾಣದ ಹೊಡೆತಕ್ಕೆ ಇನ್ನೂರು ಅನೆ ಅಳಿದವು/ ಸತ್ತವು; ಬಾಣಗಳು ನಾಶಮಾಡಿದವು ಮತ್ತೆ ಮುನ್ನೂರು ಆನೆ ಸತ್ತು ಮಲಗಿದವು; ನೂರು ಆನೆ ತಾರು ಸೈನ್ಯದಲ್ಲಿ ಕೆಡೆದವು/ಸತ್ತುಬಿದ್ದವು; ಬಳಿಕ ನೂರು ನಿರಂತರವಾಗಿ ಬಿಟ್ಟ ಅಸ್ತ್ರಗಳ ಸಮೂಹದ ವಿಘಾತಿಗೆ/ ಹೊಡೆತಕ್ಕೆ ಒಟ್ಟು ಲೆಕ್ಕದಲ್ಲಿ ನೂರು ಕಳೆದವು/ಸತ್ವು. ಪಾರ್ಥನ ಬಾಣದ ಹೊಡೆತಕ್ಕೆ ಪುನಃ ಇನ್ನೂರು ಆನೆ ಸತ್ತವು.
ರಥ ಮುರಿದವೈನೂರು ತತ್ಸಾ
ರಥಿಗಳಳಿದುದು ನೂರು ಮಿಕ್ಕುದು
ರಥವನಿಳಿದೋಡಿದುದು ಸಮರಥರೆಂಟುನೂರೈದು |
ಪೃಥುವಿಗೊರಗಿದುವೆಂಟು ಸಾವಿರ
ಪೃಥುಳ ಹಯ ನುಗ್ಗಾಯ್ತು ಗಣನೆಯ
ರಥ ಪದಾತಿಯೊಳಿತ್ತಲೆನೆ ಸವರಿದನು ಪರಬಲವ || ೧೨ ||
ಪದವಿಭಾಗ-ಅರ್ಥ: ರಥ ಮುರಿದವು+ ಐನೂರು ತತ್+ ಸಾರಥಿಗಳು+ ಅಳಿದುದು ನೂರು, ಮಿಕ್ಕುದು ರಥವನು+ ಇಳಿದು+ ಓಡಿದುದು ಸಮರಥರೆಂಟು ನೂರೈದು ಪೃಥುವಿಗ+ ಒರಗಿದುವು+ ಎಂಟು ಸಾವಿರ ಪೃಥುಳ (ದೊಡ್ಡ, ವಿಶಾಲವಾದ. ದೊಡ್ಡದಾದ.)ಹಯ ನುಗ್ಗಾಯ್ತು ಗಣನೆಯ ರಥ ಪದಾತಿಯೊಳು+ ಇತ್ತಲು+ ಎನೆ ಸವರಿದನು ಪರಬಲವ (ಶತ್ರುಸೈನ್ಯವ).
ಅರ್ಥ:ಅರ್ಜುನನ ಬಾಣಗಳ ಹೊಡೆತದಿಂದ ಐದುನೂರು ರಥಗಳು ಮುರಿದವು. ಅದರ ನೂರು ಸಾರಥಿಗಳು ಸತ್ತರು, ಮಿಕ್ಕವರು ರಥವನ್ನು ಇಳಿದು ಓಡಿದರು. ಸಮರಥರು ಎಂಟು ನೂರಾ ಐದು ಪೃಥುವಿಗೆ/ ಭೂಮಿಗೆ ಸತ್ತು ಒರಗಿದರು. ಎಂಟು ಸಾವಿರ ದೊಡ್ಡಕುದುರೆಗಳು ನುಗ್ಗಾಯ್ತು; ಶತ್ರುಸೈನ್ಯವಲ್ಲಿ ಗಣನೆಯ/ಬಹಳಷ್ಟು ರಥ ಪದಾತಿ ಮೊದಲು ಇತ್ತೇ- ಎನ್ನುವಂತೆ (ಎಂದು ಅನುಮಾನ ಬರುವಂತೆ) ಪಾರ್ಥನು ಸೈನ್ಯವನ್ನು ಸವರಿದನು.

ಪಾರ್ಥನ ಬಾಣಗಳ ಹೊಡೆತಕ್ಕೆ ರಥಿಕರು- ಭಟರು ಹೆದರಿ ಓಡಿದರು[ಸಂಪಾದಿಸಿ]

ಒದೆದು ರಥವನು ಸೂತರಿಳಿದೋ
ಡಿದರು ಚಾಪವನಿಳುಹಿ ಸಮರಥ
ರೆದೆಯ ನೀವಿತು ದೂರದಲಿ ಕರಿಕಂಧರವನಿಳಿದು |
ಕೆದರಿತಾರೋಹಕರು ವಿಕ್ರಮ
ವಿದಿತ ವಿಪುಳ ಪದಸ್ಥಭೂಪರು
ಹುದುಗಿತಲ್ಲಿಯದಲ್ಲಿ ಪಾರ್ಥನ ಸರಳ ಘಾತಿಯಲಿ || ೧೩ ||
ಪದವಿಭಾಗ-ಅರ್ಥ: ಒದೆದು ರಥವನು ಸೂತರು+ ಇಳಿದೋಡಿದರು ಚಾಪವನು+ ಇಳುಹಿ ಸಮರಥರು+ ಎದೆಯ ನೀವಿತು ದೂರದಲಿ ಕರಿಕಂಧರವನು (ಆನೆಯ ಕುತ್ತಿಗೆಯಿಂದ )+ ಇಳಿದು ಕೆದರಿತು(ಚಲ್ಲಾಪಲೆಯಾದರು)+, ಆರೋಹಕರು ವಿಕ್ರಮ ವಿದಿತ ವಿಪುಳ ಪದಸ್ಥ ಭೂಪರು ಹುದುಗಿತು+ ಅಲ್ಲಿಯದು+ ಅಲ್ಲಿ ಪಾರ್ಥನ ಸರಳ(ಬಾಣದ) ಘಾತಿಯಲಿ (ಹೊಡೆತದಲ್ಲಿ).
ಅರ್ಥ: ಒದೆದು ರಥವನು ಬಿಟ್ಟು ಭಯದಿಂದ ಸೂತರು/ಸಾರಥಿಗಳು ಇಳಿದು ಓಡಿದರು. ಸಮರಥರು ಚಾಪವನು/ಬಿಲ್ಲನ್ನು ಇಳಿಸಿ, ದೂರದಲ್ಲಿ ನಿಂತು ಎದೆಯನ್ನು ನೀವಿಕೊಳ್ಳುತ್ತಿದ್ದರು. ಆರೋಹಕರು/ಸವಾರರು ಆನೆಯ ಕುತ್ತಿಗೆಯಿಂದ ಇಳಿದು ಚಲ್ಲಾಪಲೆಯಾದರು. ಪರಾಕ್ರಮ ಉಳ್ಳ ಬಹಳ ಎದುರುನಿಂತ ಭೂಪರು/ರಾಜರು ಪಾರ್ಥನ ಬಾಣದ ಹೊಡೆತದಲ್ಲಿ ಅಲ್ಲಿ ಅಲ್ಲಿಯೇ ಅಡಗಿದರು.
ಬಿರುದ ಬಿಸುಟರು ಧ್ವಜದ ಕಂಬವ
ಹರಿಯ ಹೋಯ್ದರು ಕಾಲ ತೊಡರನು
ಧರೆಗೆ ಬಿಸುಟರು ಹಡಪ ಬಾಹಿಯ ಚಮರಧಾರಿಗರ |
ದೊರೆಗಳುಳಿದರು ಬೆದರಿ ರಥದಲಿ
ಕರಿಗಳಲಿ ವಾರುವದಿನಿಳೆಗು
ಪ್ಪರಿಸಿದರು ಹರಹಿನಲಿ ಹಾಯ್ದರು ಹೊತ್ತ ದುಗುಡದಲಿ || ೧೪ ||
ಪದವಿಭಾಗ-ಅರ್ಥ: ಬಿರುದ ಬಿಸುಟರು; ಧ್ವಜದ ಕಂಬವ ಹರಿಯ ಹೋಯ್ದರು; ಕಾಲ ತೊಡರನು ಧರೆಗೆ ಬಿಸುಟರು; ಹಡಪ (ಚೀಲ) ಬಾಹಿಯ ಚಮರಧಾರಿಗರ ದೊರೆಗಳು+ ಉಳಿದರು ಬೆದರಿ ರಥದಲಿ; ಕರಿಗಳಲಿ ವಾರುವದಿಂ (ಕುದುರೆಯಿಂದ)+ ಇಳೆಗೆ+ ಉಪ್ಪರಿಸಿದರು (ಹಾರಿದರು) ಹರಹಿನಲಿ/ದೂರ ಹಾಯ್ದರು ಹೊತ್ತ ದುಗುಡದಲಿ (ದುಗುಡದಿಂದ= ಚಿಂತೆಯಿಂದ).
ಅರ್ಥ:ಕೌರವಸೇನೆಲ್ಲಿದ್ದ ರಾಜರು ಭಟರು ಬಿರುದಾವಳಿಯ ಪಟಗಳನ್ನು ಬಿಸುಟರು; ಧ್ವಜದ ಕಂಬವ ಹರಿಯ/ಹಗ್ಗವನ್ನು ಕಿತ್ತರು; ಕಾಲಿಗೆ ಹಾಕಿದ್ದ ರಕ್ಷಕ ತೊಡಿಗೆಪಟ್ಟಿಯನ್ನು ಭೂಮಿಗೆ ಬಿಸುಟರು; ಚೀಲಗಳನ್ನು ಹೊತ್ತ ಅಕ್ಕಪಕ್ಕದ ಚಮರಧಾರಿಗಳನ್ನು (ಬಿಟ್ಟರು). ದೊರೆಗಳು ಬೆದರಿ ರಥದಲ್ಲಿ ಉಳಿದರು; ಆನೆಯ ಮೇಲಿದ್ದವರು, ಕುದುರೆಯಮೇಲಿದ್ದವರು ಭೂಮಿಗೆ ಹಾರಿದರು. ಮನಸ್ಸಿನಲ್ಲಿ ಹೊತ್ತ ಚಿಂತೆಯಿಂದ ದೂರದೂರಕ್ಕೆ ಚದುರಿ ಓಡಿದರು.
ಗೌರವವನ್ನು ತೋರಿಸಲು ಸಿಖ್ ಧರ್ಮಗ್ರಂಥಕ್ಕೆ ಗಾಳಿ ಬೀಸುವ ಚೌರಿ (ಚಾಮರ) ಆಚರಣೆ, ಗ್ರಂಥಕ್ಕೆ ಗಾಳಿ ಬೀಸಿ ಹೆಗಲಮೇಲೆ ಇಟ್ಟುಕೊಂಡಿರುವುದು - "ಕೂದಲ ಗೊಂಡೆ"
ಮನಾಲಿಯಲ್ಲಿನ ಬಿಳಿಕೂದಲಿನ ಚಮರಿಮೃಗ- ಇದರ ಕೂದಲಿನಿಂದ ಚಾಮರ ಅಥವಾ ಬೀಸಣಿಗೆ ಮಾಡುವರು
ಟಿಬೆಟ್‌ನ ಯಾಂಡ್ರೋಕ್ ಸರೋವರದ ಹತ್ತಿರ ಸಾಕು ಚಮರೀಮೃಗ
ಬೆದರಿ ಗಜ ಮುಂಡಾಸನದಲೋ
ಡಿದವು ಚಮರೀಮೃಗದವೊಲು ಬಲು
ಗುದುರೆ ಹಾಯ್ದವು ಕಂದದಲಿ ಬಲನೊಗನನಸಬಡಿದು |
ಕುದುರೆಯೆಳೆದವು ಬರಿರಥವನೋ
ಡಿದ ಪದಾತಿಯ ಬಿಸುಟ ಕೈದುವ
ಹೊದೆದುದಿಳೆ ಕಳನಗಲದಲಿ ಕಂಡೆನು ಮಹಾದ್ಭುತವ || ೧೫ ||
ಪದವಿಭಾಗ-ಅರ್ಥ: ಬೆದರಿ ಗಜ ಮುಂಡಾಸನದಲಿ (ಮಂಡಿಯನ್ನೂರಿ?)+ ಓಡಿದವು ಚಮರೀಮೃಗದವೊಲು ಬಲು ಗುದುರೆ ಹಾಯ್ದವು ಕಂದದಲಿ ಬಲನೊಗನ ನಸಬಡಿದು ಕುದುರೆಯೆಳೆದವು ಬರಿ ರಥವ ನೋಡಿದ ಪದಾತಿಯ ಬಿಸುಟ ಕೈದುವ ಹೊದೆದುದು+ ಇಳೆ (ಭೂಮಿ) ಕಳನ (ರಣರಂಗದ)+ ಅಗಲದಲಿ ಕಂಡೆನು ಮಹಾದ್ಭುತವ.
ಅರ್ಥ: ಆನೆಗಳು ಬೆದರಿ ಚಮರೀಮೃಗದಂತೆ ಮುಂಡಾಸನದಲ್ಲಿ ಓಡಿದವು. ಬಹಳಷ್ಟು ಕುದುರೆಗಳು ಕಂದಕಗಳಲ್ಲಿ ಹಾಯ್ದು ಓಡಿದವು, ಬಲನೊಗವನ್ನು ನಸ-ಬಡಿದು(ಮೂತಿಯಿಂದ, ಸುಂಡಿಯಿಂದ ಬಡಿದು?) ಕುದುರೆಗಳು ಬರಿ ರಥಗಳನ್ನು ಎಳೆದವು. ಇವನ್ನು ನೋಡಿದ ಪದಾತಿಗಳು/ ಕಾಲಾಳು ಸೈನಿಕರು ಬಿಸುಟ ಆಯುಧಗಳನ್ನು ಭೂಮಿಯು ಹೊದೆದುಕೊಂಡಿತು/ ಭಟರು ಎಸೆದ ಆ ಆಯಧಗಳಿಂದ ಇಡೀ ರಣರಂಗದ ಭೂಮಿಯೆಲ್ಲವೂ ಮುಚ್ಚಿಹೋಯಿತು. ಈ ಮಹಾ ಮಹಾದ್ಭುತವನ್ನು ಕಂಡೆನು ಎಂದು ಸಂಜಯನು ದೃತರಾಷ್ಟ್ರನಿಗೆ ಹೇಳಿದನು.
ಮರಳಿ ವಾಘೆಯ ಕೊಂಡು ರಾವ್ತರು
ತಿರುಗಿದರು ಹಮ್ಮುಗೆಯ ನೇಣ್ಗಳ
ಹರಿದು ಹಕ್ಕರಿಕೆಗಳ ಬಿಸುಟರು ಹಾಯ್ಕಿ ಖಂಡೆಯವ
ಬಿರುದ ಸಂಭಾಳಿಸುವ ಭಟ್ಟರ
ನಿರಿದರಾರೋಹಕರು ಕರಿಗಳ
ತಿರುಹಿ ಗುಳ ರೆಂಚೆಗಳ ಕೊಯ್ದೀಡಾಡಿದರು ನೆಲಕೆ || ೧೬ ||
ಪದವಿಭಾಗ-ಅರ್ಥ: ಮರಳಿ ವಾಘೆಯ ಕೊಂಡು ರಾವ್ತರು (ರಾವುತರು) ತಿರುಗಿದರು ಹಮ್ಮುಗೆಯ ನೇಣ್ಗಳ ಹರಿದು ಹಕ್ಕರಿಕೆಗಳ ಬಿಸುಟರು ಹಾಯ್ಕಿ ಖಂಡೆಯವ(ಕತ್ತಿ) ಬಿರುದ ಸಂಭಾಳಿಸುವ ಭಟ್ಟರನು+ ಇರಿದರು+ ಆರೋಹಕರು ಕರಿಗಳ ತಿರುಹಿ ಗುಳ ರೆಂಚೆಗಳ ಕೊಯ್ದೀಡಾಡಿದರು ನೆಲಕೆ
ಅರ್ಥ:ಚಲ್ಲಾಪಿಲ್ಲಿಯಾದ ಭಟರು ಮತ್ತೆ ಕುದುರೆಯ ವಾಘೆಯನ್ನು/ ಹಗ್ಗವನ್ನು ಕೈಗೆತೆಗೆದುಕೊಂಡು ರಾವುತರು ತಿರುಗಿ ಯುದ್ಧಕ್ಕೆ ಬಂದರು. ಅವರು ಹಮ್ಮುಗೆಯ ನೇಣುಗಳನ್ನು ಹರಿದು ಹಕ್ಕರಿಕೆಗಳ- ಹೇಕರಿಕೆ/ ಭಯವನ್ನು ಬಿಸುಟರು/ ಬಿಟ್ಟರು. ಕತ್ತಿಯನ್ನು ಹಾಕಿ ಶೂರರ ಬಿರುದನ್ನು ಹೊಗಳುವ ಹೊಗಳುಭಟ್ಟರನ್ನೇ (ಕತ್ತಿಯಿಂದ) ಇರಿದರು. ಆರೋಹಕರು./ ಅನೆಯ ಮಾವುತರು ಆನೆಗಳನ್ನು ಹಿಂತಿರುಗಿಸಿ ಗುಳ (ಯುದ್ಧದ) ರೆಂಚೆಗಳ/ಆನೆಗಳ ಕಿವಿರಕ್ಕೆಯ ತುದಿಗಳನ್ನು (?)ನೆಲಕ್ಕೆ ಬೀಳುವಂತೆ ಅಂಕುಶದಿಂದ ಕೊಯ್ದು ಈಡಾಡಿದರು.
ರಾಯ ಕೇಳೈ ಬಲದ ಬಾಹೆಯ
ನಾಯಕರು ಜಾರಿದರು ವಾಮದ
ಜೇಯ ಸುಭಟರು ಸಿಡಿದು ತರಹರಿಸಿದರು ದೂರದಲಿ |
ರಾಯ ಕಂಡನು ಬಳಿಕ ಬಲದ ಪ
ಲಾಯನದ ಪರಿವಿಡಿಯನಸುವಿನ
ಬೀಯಕಿವರಂಜಿದರೆನುತ ಮೂದಲಿಸಿದನು ನೃಪರ || ೧೭ ||
ಪದವಿಭಾಗ-ಅರ್ಥ:ರಾಯ ಕೇಳೈ ಬಲದ ಬಾಹೆಯ ನಾಯಕರು ಜಾರಿದರು ವಾಮದ ಜೇಯ ಸುಭಟರು ಸಿಡಿದು ತರಹರಿಸಿದರು ದೂರದಲಿ ರಾಯ ಕಂಡನು ಬಳಿಕ ಬಲದ ಪಲಾಯನದ ಪರಿವಿಡಿಯನು+ ಅಸುವಿನ ಬೀಯಕೆ (ಯುದ್ಧ, ಮುಡಿದ ಕಾಳಗ)+ ಇವರಂಜಿದರು+ ಎನುತ ಮೂದಲಿಸಿದನು ನೃಪರ.
ಅರ್ಥ:ಯುದ್ಧವನ್ನು ನೋಡಿಬಂದ ಸಂಜಯನು ಧೃತರಾಷ್ಟ್ರನಿಗೆ ಹೇಳಿದ, 'ರಾಯನೇ ಕೇಳಯ್ಯಾ, ಬಲದ ಭಾಗದಲ್ಲಿದ್ದ ನಾಯಕರು ಓಡಿದರು. ಎಡದ ಯುದ್ಧಮಾಡುತ್ತಿದ್ದ ಸುಭಟರು ಸಿಡಿದು/ ಚದುರಿಹೋಗಿ ತರಹರಿಸಿದರು/ ಆಯಾಸಗೊಂಡರು. ಇದನ್ನು ದೂರದಲ್ಲಿದ್ದ ಕೌರವರಾಯ ಕಂಡನು. ಬಳಿಕ ಅವನು ಬಲದಲ್ಲಿದ್ದವರ ಪಲಾಯನದ ರೀತಿಯನ್ನು ಕಂಡು, ಜೀವಬಿಡುವ ಯುದ್ಧಕ್ಕೆ ಇವರು ಅಂಜಿದರು/ಭಯಪಟ್ಟರು, ಎನ್ನುತ್ತಾ ಪಲಾಯನ ಮಾಡುತ್ತಿದ್ದ ರಾಜರನ್ನು ಮೂದಲಿಸಿದನು/ ಹಂಗಿಸಿದನು.

ಓಡಿದ ರಥಿಕರು ಮತ್ತು ಭಟರನ್ನು ಕೌರವನು ಮೂದಲಿಸಿ ಕರೆದನು[ಸಂಪಾದಿಸಿ]

ಎಲೆ ಮಹೀಪತಿಗಳಿರ ಪುಣ್ಯ
ಸ್ಥಳ ಕುರುಕ್ಷೇತ್ರವು ಮಹಾಸ
ತ್ಕುಲದಿ(ಪಾ- ದೊಳಗೆ) ಜನನವು ನಿಮಗೆ ವೀರಕ್ಷತ್ರಿಯೋತ್ತಮರು |
ಅಳುಕದಂಘೈಸಿದಡೆ ಸುರಸಂ
ಕುಲದ ಸೇರುವೆ ತಪ್ಪಿದರೆ ನೀ
ವಿಳಿವಿರೈ ರೌರವದೊಳಾವುದು ಲಾಗು ನಿಮಗೆಂದ || ೧೮ ||
ಪದವಿಭಾಗ-ಅರ್ಥ: ಎಲೆ ಮಹೀಪತಿಗಳಿರ ಪುಣ್ಯಸ್ಥಳ ಕುರುಕ್ಷೇತ್ರವು, ಮಹಾಸತ್ಕುಲದಿ ಜನನವು ನಿಮಗೆ, ವೀರಕ್ಷತ್ರಿಯೋತ್ತಮರು ಅಳುಕದೆ+ ಅಂಘೈಸಿದಡೆ ಸುರಸಂಕುಲದ ಸೇರುವೆ, ತಪ್ಪಿದರೆ ನೀವು+ ಇಳಿವಿರೈ ರೌರವದೊಳು+ ಆವುದು ಲಾಗು ನಿಮಗೆಂದ.
ಅರ್ಥ:ಕೌರವನು ಓಡುವ ರಾಜರನ್ನ ಕುರಿತು,'ಎಲೆ ಭೂಮಿಗೆ ಒಡೆಯರಾದ ರಾಜರುಗಳಿರಾ, ಈ ಕುರುಕ್ಷೇತ್ರ ರಣರಂಗವು ಪುಣ್ಯಸ್ಥಳವು. ನಿಮಗೆ ಮಹಾಸತ್ಕುಲದಲ್ಲಿ ಜನನವಾಗಿದೆ. ನೀವು ವೀರಕ್ಷತ್ರಿಯರಲ್ಲಿ ಉತ್ತಮರು; ನೀವು ಅಳುಕದೆ/ ಅಂಜದೆ ಶತ್ರುವನ್ನು ಎದುರಿಸಿ ಮರಣಹೊಂದಿದರೆ ನಿಮಗೆ ದೇವತೆಗಳ ಸಂಕುಲದಲ್ಲಿ/ ಸಮೂದಲ್ಲಿ ಸೇರುವೆಯಾಗುವುದು/ ನೀವು ಸೇರಿಕೊಳ್ಳುವಿರಿ. ಅದಕ್ಕೆ ತಪ್ಪಿದರೆ ನೀವು ರೌರವ ನರಕದಲ್ಲಿ ಇಳಿಯುವಿರಯ್ಯಾ. ನಿಮಗೆ ಯಾವುದು ಲಾಗು/ ಒಪ್ಪಿಗೆ ಎಂದ.
ವೀರಮಾತೆಯರೆಂದು ತಾಯ್ಗಳ
ನಾರು ಕೊಂಡಾಡುವರು ಸತಿಯರು
ವೀರಪತ್ನಿಯರೆಂದು ನುಡಿವರೆ ನಿಮ್ಮ ರಾಣಿಯರ |
ವೀರಸಿರಿ ನಿಮಗೆಂದು ವಂದಿಗ
ಳೋರೆ ಕಟಕಿಯಲೆನ್ನರೇ ಕೈ
ವಾರಿಸುವ ಕವಿನಿಕರ ನಾಚದೆ ಶಿವಶಿವಾ ಎಂದ || ೧೯ ||
ಪದವಿಭಾಗ-ಅರ್ಥ:ವೀರಮಾತೆಯರು+ ಎಂದು ತಾಯ್ಗಳನು+ ಆರು ಕೊಂಡಾಡುವರು, ಸತಿಯರು ವೀರಪತ್ನಿಯರೆಂದು ನುಡಿವರೆ, ನಿಮ್ಮ ರಾಣಿಯರ ವೀರಸಿರಿ ನಿಮಗೆಂದು ವಂದಿಗಳೋರೆ ಕಟಕಿಯಲಿ+ ಎನ್ನರೇ ಕೈವಾರಿಸುವ(ಕೈವಾರಿಸು= 1. ಹೊಗಳು. 2. ಬೆಂಬಲಿಸು) ಕವಿ ನಿಕರ ನಾಚದೆ ಶಿವಶಿವಾ ಎಂದ.
ಅರ್ಥ:'ಎಲೈ ರಾಜರೇ, ಯುದ್ಧದಲ್ಲಿ ಅಂಜಿ ಓಡಿದರೆ ವೀರಮಾತೆಯರು ಎಂದು ನಿಮ್ಮ ತಾಯಂದಿರನ್ನು ಯಾರು ಕೊಂಡಾಡುವರು? ನಿಮ್ಮ ಸತಿಯರು ವೀರಪತ್ನಿಯರೆಂದು ನುಡಿವರೆ, 'ನಿಮ್ಮ ರಾಣಿಯರ ವೀರಸಿರಿ ನಿಮಗೆ' ಎಂದು ವಂದಿಮಾಗಧರು ಕಟಕಿಯಿಂದ ಎನ್ನುವುದಿಲ್ಲವೇ? ನಿಮ್ಮನ್ನು ಹೊಗಳಿದ ಕವಿ ಸಮೂಹ ನೋಡಿ ನಾಚದೆ? ಶಿವಶಿವಾ ಎಂದ,' ಎಂದ ಕೌರವ.
ಸೆರೆನರದ ದರ್ಭೆಗಳ ಮಿದುಳಿನ
ಚರುವಿನೆಲುವಿನ ಸಮಿಧೆಗಳ ಬಿಲು
ದಿರುರವದ ಚತುರಂಗರಭಸದ ಸಾಮವೇದಿಗಳ |
ಅರುಣಜಲದಾಜ್ಯದ ಸ್ರುವಾದಿಯ
ಶಿರಕಪಾಲದ ವೈರಿಪಶುಬಂ
ಧುರದ ಸಂಗರಯಜ್ಞ ದೀಕ್ಷೆಯ ಮರೆದಿರಕಟೆಂದ || ೨೦ ||
ಪದವಿಭಾಗ-ಅರ್ಥ: ಸೆರೆ (ಹುಲ್ಲಿನದಳದಂತಿರುವ, ಒಂದು ಮುಷ್ಠಿ) ನರದ ದರ್ಭೆಗಳ ಮಿದುಳಿನ ಚರುವಿನ+ ಎಲುವಿನ ಸಮಿಧೆಗಳ ಬಿಲುದಿರು ರವದ (ಸದ್ದಿನ) ಚತುರಂಗ ರಭಸದ ಸಾಮವೇದಿಗಳ ಅರುಣಜಲದ(ಕೆಂಪು- ರಕ್ತವೇ ಜಲ)+ ಆಜ್ಯದ ಸ್ರುವಾದಿಯ ಶಿರಕಪಾಲದ ವೈರಿಪಶು ಬಂಧುರದ ಸಂಗರ (ಯುದ್ಧವು) ಯಜ್ಞ ದೀಕ್ಷೆಯ ಮರೆದಿರಿ+ ಅಕಟ+ ಎಂದ
ಅರ್ಥ:(ಯುದ್ಧವೆಂಬ ಯಜ್ಞದಲ್ಲಿ,) ಒಂದು ಮುಷ್ಠಿ ಹುಲ್ಲಿನದಳದಂತಿರುವ ನರದ ದರ್ಭೆಗಳಿಂದ, ಮಿದುಳಿನ ಹೋಮಕ್ಕೆ ಹಾಕುವ ಅನ್ನದ ಚರುವಿನ, ಎಲುಬುಗಳೇ ಸಮಿಧೆಯಾಗಿರುವ ಬಿಲ್ಲುಗಳ ಜೇಕಾರ ಸದ್ದಿನ ಮಂತ್ರದ, ನಾಲ್ಕು ವೇದಗಳಂತಿರುವ ಚತುರಂಗಸೇನೆಯ ರಭಸದ,ಅಥರ್ವ, ಋಕ್ ಯಜುಸ್, ಸಾಮವೇದಗಳನ್ನು ಪಠಿಸುವ ವೇದಿಗಳ ಅರುಣಜಲದ/ರಕ್ತಜಲ ಆಜ್ಯದ/ಹೋಮಕ್ಕೆ ಹಾಕುವ ತುಪ್ಪದ, ಸ್ರುವಾದಿಯ ಶಿರಕಪಾಲದ/ ಪಾತ್ರೆಯ, ಯಜ್ಞಕ್ಕೆ ವೈರಿಯೇ ಪಶುವಾಗಿರುವ, ಬಂಧುರದ/ ಹೀಗೆ ವ್ಯವಸ್ಥೆಯ ಸಂಗರ/ಯುದ್ಧವೆಂಬ ಯಜ್ಞದೀಕ್ಷೆಯಲ್ಲಿರುವ ನೀವು ಅದನ್ನು ಮರೆತಿರಿ. ಅಕಟ! ಎಂದ ಕೌರವ.
ಇಲ್ಲಿ ಮನುಜಸ್ತ್ರೀಯ ಮೇಳವ
ವಲ್ಲಿ ಸುರನಾರಿಯರ ರತಿ ನಿವ
ಗಿಲ್ಲಿ ಭೌಮವಿಭನ್ನರಸ ಪೀಯೂಷರಸವಲ್ಲಿ |
ಇಲ್ಲಿಯಧ್ರುವ ವಿಭವವಮರತೆ
ಯಲ್ಲಿ ಕಿಲ್ಬಿಷವಿಲ್ಲಿ ಶಿವಮಯ
ವಲ್ಲಿ ನೀವಿಂದೇನ ನೆನದಿರಿ ಶಿವಶಿವಾ ಎಂದ || ೨೧ ||
ಪದವಿಭಾಗ-ಅರ್ಥ: ಇಲ್ಲಿ ಮನುಜ ಸ್ತ್ರೀಯ ಮೇಳವು+ ಅವು+ ಅಲ್ಲಿ ಸುರನಾರಿಯರ(ದೇವಕನ್ಯೆಯರ) ರತಿ, ನಿವಗೆ+ ಇಲ್ಲಿ ಭೌಮವಿಭನ್ನರಸ, ಪೀಯೂಷರಸವು+ ಅಲ್ಲಿ ಇಲ್ಲಿ+(ಯ) ಅಧ್ರುವ ವಿಭವವ ಅಮರತೆಯಲ್ಲಿ ಕಿಲ್ಬಿಷವು+ ಇಲ್ಲಿ; ಶಿವಮಯವು+ ಅಲ್ಲಿ ನೀವು+ ಇಂದು+ ಏನ ನೆನದಿರಿ ಶಿವಶಿವಾ ಎಂದ.
ಅರ್ಥ:ಇದು ರಣರಂಗ ಭುಮಿಯು: ಇಲ್ಲಿ ಪುರುಷ ಮತ್ತು ಸ್ತ್ರೀಯ ಮೇಳವು; ಅವು ಅಲ್ಲಿ- ವೀರಸ್ವರ್ಗದಲ್ಲಿ ದೇವಕನ್ಯೆಯರೊಡನೆ ರತಿ, ನಿಮಗೆ ಇಲ್ಲಿ ಭೌಮವಿಭನ್ನರಸ- ಭೂಮಿಯ ವಿವಿಧ ರಸಪಾಕದ ಊಟ, ಯುದ್ಧದಲ್ಲಿ ಸತ್ತರೆ ಅಲ್ಲಿ ವೀರಸ್ವರ್ಗದಲ್ಲಿ ಅಮರತರಸವು; ಇಲ್ಲಿಯ ಅಧ್ರುವ/ಅನಿಶ್ಚಿತದ/ ಕ್ಷಣಿಕವಾದ ವಿಭವವ/ಸೋಲಿನ (ಅಮರತೆ= ದೇವತಾಸ್ತ್ರೀ )- ಮರತೆಯಲ್ಲಿ/ಮಾನವಸ್ತ್ರೀಯಲ್ಲಿ ಕಿಲ್ಬಿಷವು/ಇಲ್ಲಿ ಕಳಂಕ ದೋಷವು; ಅಲ್ಲಿ ವೀರಸ್ವರ್ಗದಲ್ಲಿ ಶಿವಮಯವು; ನೀವು ಇಂದು ಏನನ್ನು ನೆನದಿರಿ? ವೀರಸ್ವರ್ಗವನ್ನು ಮರೆತು, ಅಲ್ಪವಾದ ಭೂಮಿಯ ಸುಖವನ್ನುನೆನೆದಿರಿ! ಶಿವಶಿವಾ ಎಂದ ಕೌರವ.
ಆವ ಭವದಲಿ ನಿಮ್ಮ ರಾಜ್ಯವ
ದಾವ ಭವದಲಿ ಪುತ್ರಮಿತ್ರರ
ದಾವ ಜನ್ಮಂಗಳ ಸಮಾಗಮ ನಿಮ್ಮ ರಾಣಿಯರು |
ಈ ವಿಡಂಬನ ದೈಹಿಕವ ಸಂ
ಭಾವಿಸುತ ಪರಲೋಕಹಿತವನು
ನೀವು ನೆನೆಯದೆ ಕೆಟ್ಟುದಕೆ ಬೆರಗಾದೆ ನಾನೆಂದ || ೨೨ ||
ಪದವಿಭಾಗ-ಅರ್ಥ: ಆವ ಭವದಲಿ(ಭವ= ಪಾಪ.) ನಿಮ್ಮ ರಾಜ್ಯವು+ ಅದಾವ ಭವದಲಿ ಪುತ್ರಮಿತ್ರರು+ ಅದು+ ಆವ ಜನ್ಮಂಗಳ ಸಮಾಗಮ ನಿಮ್ಮ ರಾಣಿಯರು ಈ ವಿಡಂಬನ, ದೈಹಿಕವ ಸಂಭಾವಿಸುತ (ಕಾಪಾಡುತ್ತಾ) ಪರಲೋಕ ಹಿತವನು ನೀವು ನೆನೆಯದೆ ಕೆಟ್ಟುದಕೆ ಬೆರಗಾದೆ ನಾನೆಂದ.
  • ವಿಡಂಬನೆ= 1.ಅಪಹಾಸ್ಯ. 2. ಕೇಡು. 3. ಗೊಂದಲ. 4. ಮರುಳು. 5. ಮೋಸ.
ಅರ್ಥ:ಕ್ಷತ್ರಿಯರು ಯುದ್ಧದಲ್ಲಿ ಪಲಾಯನ ಮಾಡಿದರೆ, ನಿಮ್ಮ ರಾಜ್ಯವು ಅದು ಯಾವ ಪಾಪದಲ್ಲಿ ಬೀಳುವುದು?. ಪುತ್ರಮಿತ್ರರು- ಅದು ಯಾವವುದೋ ಜನ್ಮಗಳ ಸಮಾಗಮ? (ಆದನ್ನು ನೆನೆಯುವುದೇ?) ನಿಮ್ಮ ರಾಣಿಯರು ಮಾಡುವ ಈ ಅಪಹಾಸ್ಯವನ್ನು ಸಹಿಸಿ ನಿಮ್ಮ ದೇಹ ಇಟ್ಟುಕೊಂಡು ಸಂಭಾವಿಸುತ್ತಾ ಹೇಗೆ ಇರುವಿರಿ? ಪರಲೋಕ ಹಿತವನ್ನು ನೀವು ನೆನೆಯದೆ ಓಡಿ ಅಪಮಾನ ಎದುರಿಸುವ ಕೆಟ್ಟುದಕ್ಕೆ ಮನಸ್ಸುಕೊಟ್ಟುದನ್ನು ನೋಡಿ ನಾನು ಬೆರಗಾದೆ ಎಂದ ಕೌರವ.
ನೃಪನ ಮೂದಲೆ ನಿಜಕುಲಕ್ರಮ
ಕಪಯಶೋಭಯ ಪಾರಲೌಕಿಕ
ದುಪಹತಿ ಪ್ರತಿಭಟರ ನಗೆ ಸೌಭಟಪರಿತ್ಯಾಗ |
ಕೃಪಣತೆಯ ದುಷ್ಕೀರ್ತಿ ಭುಜಬಲ
ದಪದಶಾವಿರ್ಭಾವವೀ ಭೂ
ಮಿಪರ ಮರಳಿಚಿತೇನನೆಂಬೆನು ಭೂಪ ಕೇಳೆಂದ || ೨೩ ||
ಪದವಿಭಾಗ-ಅರ್ಥ: ನೃಪನ ಮೂದಲೆ ನಿಜಕುಲಕ್ರಮಕೆ+ ಅಪಯಶೋಭಯ, ಪಾರಲೌಕಿಕದ+ ಉಪಹತಿ (ಕೇಡು), ಪ್ರತಿಭಟರ ನಗೆ, ಸೌಭಟಪರಿತ್ಯಾಗ, ಕೃಪಣತೆಯ ದುಷ್ಕೀರ್ತಿ ಭುಜಬಲದ+ ಅಪದಶಾ+ ಅವಿರ್ಭಾವವು+ ಈ ಭೂಮಿಪರ ಮರಳಿಚಿತು+ ಏನನು+ ಎಂಬೆನು ಭೂಪ ಕೇಳೆಂದ
ಅರ್ಥ:ಕೌರವ ನೃಪನ ಮೂದಲಿಕೆಯೂ, ತಮ್ಮ ಕುಲಕ್ರಮಕ್ಕೆ ಅಪಯಶಸ್ಸಿನ ಭಯವೂ, ಪರಲೋಕದ ಕೇಡು, ಶತ್ರುಭಟರ ನಗೆ, ಸೌಭಟ/ಉತ್ತಮ ಭಟರಂತೆ ಯುದ್ಧಮಾಡದೆ ಯುದ್ಧದ ಪರಿತ್ಯಾಗ, ಕೃಪಣತೆಯ/ ಜೀವಗಳ್ಳತನದ ದುಷ್ಕೀರ್ತಿ, ತಮ್ಮ ಭುಜಬಲದ ಅಪದಶೆಯ ಪ್ರದರ್ಶನ/ಅವಿರ್ಭಾವವು, ಈ ಎಲ್ಲವೂ ಒಟ್ಟಾಗಿ ರಾಜರನ್ನು/ ಭೂಮಿಪರನ್ನು ಯುದ್ಧಕ್ಕೆ ಮರಳಿಸಿತು, ಏನನ್ನು ಹೇಳಲಿ ರಾಜನೇ ಕೇಳು, ಎಂದ ಧೃತರಾಷ್ಟ್ರನಿಗೆ ಮಂತ್ರಿ ಸಂಜಯ.

ಓಡುತ್ತಿದ್ದ ಕೌರವನ ಪರ- ರಾಜರ ಪುನರಾಗಮನ[ಸಂಪಾದಿಸಿ]

ಕರೆದರೊಬ್ಬರನೊಬ್ಬರುರೆ ಧಿ
ಕ್ಕರಿಸಿದರು ತಮ್ಮೊಬ್ಬರೊಬ್ಬರ
ಬಿರುದ ಹಿಡಿದರು ಬಯ್ದರಪಮಾನಾನುತಾಪದಲಿ |
ತಿರುಗಹೇಳೋ ರಾವುತರ ರಥಿ
ಕರ ಗಜಾರೋಹಕರನೆಂದ
ಬ್ಬರಿಸಿ ಚೌರಿಯ ಬೀಸಿ ಮರಳಿತು ಭೂಪತಿವ್ರಾತ || ೨೪ ||
ಪದವಿಭಾಗ-ಅರ್ಥ: ಕರೆದರು+ ಒಬ್ಬರನು+ ಒಬ್ಬರು+ ಉರೆ(ಮತ್ತೆ) ಧಿಕ್ಕರಿಸಿದರು ತಮ್ಮ+ ಒಬ್ಬರೊಬ್ಬರ ಬಿರುದ ಹಿಡಿದರು ಬಯ್ದರು+ ಅಪಮಾನ+ ಅನುತಾಪದಲಿ ತಿರುಗ ಹೇಳೋ ರಾವುತರ ರಥಿಕರ ಗಜಾರೋಹಕರನೆಂದು+ ಅಬ್ಬರಿಸಿ ಚೌರಿಯ ಬೀಸಿ ಮರಳಿತು ಭೂಪತಿವ್ರಾತ
  • ಚೌರಿ: ಚಮರೀಮೃಗದ(Yaks) ಕೂದಲ ಬೀಸಣಿಗೆ;ಚೌರಿಯ ಕೂದಲಿನಿಂದ ಮಾಡಿದ ಚಾಮರ
ಅರ್ಥ:ಯುದ್ಧದಲ್ಲಿ ಪಾರ್ಥನನ್ನು ಎದುರಿಸಿ ನಿಲ್ಲಲಾರದೆ ಓಡುತ್ತಿದ್ದ ಕೌರವನ ಕಡೆ ರಾಜ ಸಮೂಹವು ಕೌರವನ ಮೂದಲಿಕೆ ಕೇಳಿ, ಒಬ್ಬರನ್ನು ಒಬ್ಬರು ಕರೆದರು; ಮತ್ತೆ ಅವರು ತಮ್ಮಲ್ಲಿಯೇ ಒಬ್ಬರನ್ನೊಬ್ಬರು ಧಿಕ್ಕರಿಸಿದರು. ತಮ್ಮ ಶೌರ್ಯದ ಬಿರುದನ್ನು ಹಿಡಿದರು. ಓಡಿದಕ್ಕೆ ಅಪಮಾನ ಅನುತಾಪದಿಂದ/ದುಃಖದಿಂದ ಪರಸ್ಪರ ಬಯ್ದರು. 'ತಿರುಗ ಹೇಳೋ ರಾವುತರ ರಥಿಕರ ಗಜಾರೋಹಕರನು' ಎಂದು ಕೂಗಿ ಅಬ್ಬರಿಸಿ, ತಮ್ಮ ಚೌರಿಯ ಬೀಸಿ ಭೂಪತಿಗಳ ಸಮೂಹ ಮರಳಿ ಯುದ್ಧಕ್ಕೆ ಬಂದಿತು.
ವಾರುವಂಗಳ ಬಿಗುಹನೇರಿಸಿ
ವಾರಣಂಗಳ ಗುಳವ ಜೋಡಿಸಿ
ತೇರುಗಳ ಕೀಲಚ್ಚು ಕೂಬರಯುಗವನಾರೈದು |
ವೀರಪಟ್ಟವ ರಚಿಸಿ ಕಂಕಣ
ದಾರವನು ಕಟ್ಟಿದರು ಸಂಗರ
ವೀರಸಿರಿಯ ವಿವಾಹಸಮಯದ ಸೌಮನಸ್ಯದಲಿ || ೨೫ ||
ಪದವಿಭಾಗ-ಅರ್ಥ: ವಾರುವಂಗಳ (ಕುದುರೆಗಳ) ಬಿಗುಹನು+ ಏರಿಸಿ ವಾರಣಂಗಳ(ಆನೆ) ಗುಳವ ಜೋಡಿಸಿ ತೇರುಗಳ ಕೀಲಚ್ಚು ಕೂಬರಯುಗವನು+ ಆರೈದು(ಸರಿಪಡಿಸಿ) ವೀರಪಟ್ಟವ ರಚಿಸಿ ಕಂಕಣ ದಾರವನು ಕಟ್ಟಿದರು ಸಂಗರ ವೀರಸಿರಿಯ ವಿವಾಹಸಮಯದ ಸೌಮನಸ್ಯದಲಿ
  • ಸೌಮನಸ್ಯ :(ಸಂ) ೧ ಒಳ್ಳೆಯ ಮನಸ್ಸಿನಿಂದ ಕೂಡಿರುವಿಕೆ ೨ ಸಂತೋಷ
ಅರ್ಥ: ಕುದುರೆಗಳ ಜೀನುಗಳನ್ನು ಏರಿಸಿ ಕಟ್ಟಿದರು. ಆನೆಗಳಿಗೆ ಗುಳಗಳನ್ನು ಜೋಡಿಸಿದರು ತೇರುಗಳ/ರಥಗಳ ಕೀಲಚ್ಚು ಕೂಬರ ಜೋಡಿಗಳನ್ನು ಸರಿಪಡಿಸಿ ವೀರಪಟ್ಟವನ್ನು ರಚಿಸಿಕೊಂಡು, ಕಂಕಣ ದಾರವನು ಕಟ್ಟಿಕೊಂಡರು, ಹೀಗೆ ಯುದ್ಧದ ವೀರಸಿರಿಯ ವಿವಾಹ ಸಮಯದ ಸಂತೋಷದಲ್ಲಿ ಮತ್ತೆ ಯುದ್ಧಕ್ಕೆ ಸಿದ್ಧರಾದರು.
ದೂಪಿಸಿದ ಬಿಳಿದುಗುಳನುಟ್ಟನು
ಲೇಪನಂಗಳ ಹೂಸಿ ಮಧುರಾ
ಳಾಪದಲೆ ಬೋಳೈಸಿ ಸಾರಥಿ ಗಜ ಹಯಾವಳಿಯ |
ಭೂಪತಿಯ ರಣಯಜ್ಞಮುಖಕೆ ನಿ
ಜಾಪಘನಪೂರ್ಣಾಹುತಿಯಲೇ
ಶ್ರೀಪತಿಯ ಸಾಯುಜ್ಯವೆನುತಿದಿರಾಯ್ತು ನೃಪಕಟಕ || ೨೬ ||
ಪದವಿಭಾಗ-ಅರ್ಥ: ದೂಪಿಸಿದ ಬಿಳಿ ದುಗುಳನು(ದುಕೂಲವನ್ನು)+ ಉಟ್ಟನು ಲೇಪನಂಗಳ ಹೂಸಿ ಮಧುರಾಳಾಪದಲೆ(ಮಧುರ ಆಲಾಪದಲೆ- ಮೃದುವಾದ ಮಾತಿನಿಂದ) ಬೋಳೈಸಿ(ಸಮಾಧಾನ ಪಡಿಸಿ) ಸಾರಥಿ ಗಜ ಹಯಾವಳಿಯ ಭೂಪತಿಯ ರಣಯಜ್ಞಮುಖಕೆ ನಿಜ+ ಅಪಘನ(ಶರೀರ, ೩ ಅಸ್ಥಿರ) ಪೂರ್ಣಾಹುತಿಯಲೇ ಶ್ರೀಪತಿಯ ಸಾಯುಜ್ಯವೆನುತ+ ಇದಿರಾಯ್ತು ನೃಪಕಟಕ (ರಾಜರ ದಂಡು).
  • ಹೂಸಿ: ಮಾಸಿದ; ಸವೆದ; (ಬಟ್ಟೆ) ಜೂಲು ಜೂಲಾಗಿರುವ, ಆಡಂಬರ.ಹೂಸು= ಪೂಸು, ಸವರು, ಲೇಪಿಸು
ಅರ್ಥ: ದೂಪದಿಂದ ಪರಿಮಳಗೊಂಡ ಬಿಳಿ ಪಂಚೆಯನ್ನ ಉಟ್ಟರು; ಮೈಗೆ ಸುವಾಸನೆಯ ಲೇಪನಗಳನ್ನು ಸವರಿ ಮೃದುವಾದ ಮಾತಿನಿಂದ ಸಮಾಧಾನ ಪಡಿಸಿ ಸಾರಥಿ ಆನೆ ಕುದುರೆಗಳಸಮೂಹವನ್ನು ಕೌರವಭೂಪತಿಯ ರಣಯಜ್ಞ ಮುಖಕ್ಕೆ ತಮ್ಮ ಶರೀರಗಳ ಪೂರ್ಣಾಹುತಿಯು ಎಂದು, ಸತ್ತರೆ ಶ್ರೀಪತಿಯ ಸಾಯುಜ್ಯವು' ಎನ್ನ್ನುತ್ತಾ ರಾಜರ ದಂಡು ಅರ್ಜುನನಿಗೆ ಇದಿರಾಯ್ತು.
ಅರಿಯಬಹುದೈ ಭಾವಮೈದುನ
ಮೆರೆ ಭುಜಾಟೋಪವನು ಹಿಂದಣ
ಕೊರತೆಯನು ಕಳೆ ಮಗನೆ ಬೊಪ್ಪಕುಲಕ್ರಮಾಗತವ ||
ಮುರಿಯದಿರು ಮುಂಗಲಿತನಕೆ ತಾ
ನಿರಿವೆ ನಾ ಮುನ್ನೆಂದು ತಮ್ಮೊಳು
ಜರೆದರೊಡವುಟ್ಟಿದರು ಬಂಧವ ಮಿತ್ರ ಭೂಮಿಪರು || ೨೭ ||
ಪದವಿಭಾಗ-ಅರ್ಥ:ಅರಿಯಬಹುದೈ ಭಾವಮೈದುನ ಮೆರೆ ಭುಜಾಟೋಪವನು, ಹಿಂದಣ ಕೊರತೆಯನು ಕಳೆ ಮಗನೆ, ಬೊಪ್ಪಕುಲ ಕ್ರಮಾಗತವ ಮುರಿಯದಿರು, ಮುಂಗಲಿತನಕೆ ತಾನು+ ಇರಿವೆ (ಸುಮ್ಮನಿರದೆ) ನಾ ಮುನ್ನೆಂದು ತಮ್ಮೊಳು ಜರೆದರು+ ಒಡವುಟ್ಟಿದರು ಬಂಧವ ಮಿತ್ರ ಭೂಮಿಪರು.
ಅರ್ಥ:ರಾಜರು ತಮ್ಮತಮ್ಮಲ್ಲಿ ಹೇಳಿಕೊಂಡರು. 'ಭಾವಮೈದುನರಾದ ಕೃಷ್ಣಾರ್ಜುನರ ಮೆರೆಯುವ ಭುಜಾಟೋಪವನ್ನು/ ಶೌರ್ಯವನ್ನು ಈ ಯುದ್ಧದಲ್ಲಿ ಅರಿಯಬಹುದಯ್ಯಾ!, ಹಿಂದಿನ ನಮ್ಮ ಸೋಲನ್ನು, ಶೌರ್ಯದ ಕೊರತೆಯನು ಕಳೆ/ ಬಿಡು ಮಗನೆ! ತಂದೆಯಕುಲ ವಂಶದ ಕ್ರಮಾಗತವನ್ನು ಮುರೆಯಬೇಡ'. ಮುಂದೆ ನುಗ್ಗಿ ಕಲಿತನವನ್ನು ತೋರಿಸಲು ತಾನಿರಿವೆ/ ಅವಸರದಿಂದ, ಬಂಧುಗಳು ಮಿತ್ರರು ಆದ ಭೂಮಿಪರು/ ರಾಜರು ನಾ ಮುಂದು ತಾಮುಂದು ಎಂದು ಒಡವುಟ್ಟಿದರು ತಮ್ಮೊಳು ಜರೆದರು/ಮತ್ತೊಬ್ಬರನ್ನು ನಿಂದಿಸಿದರು.
ನೂಕಿತೊಂದೇ ವಾಘೆಯಲಿ ಹಯ
ನಾಕು ಸಾವಿರ ರಥದ ಜೋಡಿಯ
ಜೋಕೆ ಕವಿದುದು ಮೂರು ಸಾವಿರ ರಾಜಪುತ್ರರಲಿ |
ತೋಕುವಂಬಿನ ಜೋದರೊಗ್ಗಿನೊ
ಳೌಕಿದವು ಸಾವಿರ ಮದೇಭಾ
ನೀಕ ಬೊಬ್ಬೆಯ ಲಳಿಯಲೌಕಿತು ಲಕ್ಕ ಪಾಯದಳ || ೨೮ ||
ಪದವಿಭಾಗ-ಅರ್ಥ:ನೂಕಿತು+ ಒಂದೇ ವಾಘೆಯಲಿ (ಕುದುರೆಯ ಹಿಡಿದ ಹಗ್ಗ) ಹಯನಾಕು ಸಾವಿರ ರಥದ ಜೋಡಿಯ ಜೋಕೆ ಕವಿದುದು ಮೂರು ಸಾವಿರ ರಾಜಪುತ್ರರಲಿ ತೋಕುವು+ ಅಂಬಿನ ಜೋದರು (ಯೋದರು)+ ಒಗ್ಗಿನೊಳು+ ಔಕಿದವು ಸಾವಿರ ಮದೇಭ+ ಆನೀಕ ( ಸೈನ್ಯ. ಸಮೂಹ) ಬೊಬ್ಬೆಯ ಲಳಿಯಲಿ/ಸಂದಣಿಸಿ+ ಔಕಿತು ಲಕ್ಕ(ಲಕ್ಷ) ಪಾಯದಳ
  • ತೋಕು= 1.(ಬಾಣ ಮೊದಲಾದುವನ್ನು) ಎಸೆ. 2. ಸುರಿಸು. 3. ಹೊರಹಾಕು.
  • ಲಳಿಯಲಿ: ಗುಂಪು (ಗುಂಪುಕೂಡು; ಗುಂಪುಕಟ್ಟು; ಗುಂಪು ಸೇರು- ಸೇರಿಕೊಂಡು),
ಅರ್ಥ: ಒಂದೇ ಸಾರಿ ವಾಘೆಯನ್ನು ಓಡಲು ಸನ್ನೆಮಾಡಿ ಎಳೆದಾಗ ನೂಕಿತು/ ಕುದುರೆಗಳು/ ಓಡಿತು/ ಓಡಿದವು. ನಾಕು ಸಾವಿರ ರಥದ ಜೋಡಿಯ ಜೋಕೆ/ ಸಿದ್ಧಸೈನ್ಯ ಅರ್ಜುನನ್ನು ಕವಿದುದು/ ಮುತ್ತಿತು. ಮೂರು ಸಾವಿರ ರಾಜಪುತ್ರರಲ್ಲಿ ಬಿಲ್ಲಗಾರ ಯೋಧರು ಬಾಣಗಳನ್ನು ಬಿಟ್ಟರು. ಸಾವಿರ ಮದೇಭ/ ಆನೆಗಳು, ಸೇನೆ, ಬೊಬ್ಬೆಯನ್ನು ಹಾಕುತ್ತಾ ಲಕ್ಷ ಪಾಯದಳ ಸೇರಿಕೊಂಡು ಒಟ್ಟಾಗಿ ಮುಂದುವರಿದು ಆಕ್ರಮಿಸಿತು.
ಸುರಿದುದಂಬಿನ ಸೋನೆ ರಥಿಕರ
ಕರಿಘಟೆಯ ಥಟ್ಟಂದ ಕಕ್ಕಡೆ
ಪರಶು ಶೂಲ ಮುಸುಂಡಿ ಸೆಲ್ಲೆಹ ಸಬಳ ಶಕ್ತಿಗಳು |
ಅರಿಬಲಾಬ್ಧಿಯನೀಸಿದವು ತ
ತ್ತುರಗ ರಥವನು ಬೀಸಿದವು ಮದ
ಕರಿಗಳಿಕ್ಕಡಿಘಾಯಕೊದಗಿತು ರಾಯರಾವುತರು || ೨೯ ||
ಪದವಿಭಾಗ-ಅರ್ಥ: ಸುರಿದುದು+ ಅಂಬಿನ ಸೋನೆ(ಮಳೆ) ರಥಿಕರ ಕರಿಘಟೆಯ ಥಟ್ಟಂದ ಕಕ್ಕಡೆ (ದೀವಟಿಗೆ, ಕಕ್ಕಡ, ಪಂಜು) ಪರಶು ಶೂಲ ಮುಸುಂಡಿ ಸೆಲ್ಲೆಹ ಸಬಳ (ಕತ್ತಿ), ಶಕ್ತಿಗಳು ಅರಿಬಲ+ ಅಬ್ಧಿಯನು+ ಈಸಿದವು(ಈಜಿದವು - ಎದುರಿಸಿ ಹೋರಾಡಿದವು) ತತ್+ ತುರಗ (ಕುದುರೆ) ರಥವನು ಬೀಸಿದವು (ಪುಡಿಮಾಡಿದವು) ಮದಕರಿಗಳು (ಆನೆಗಳು) ಇಕ್ಕಡಿ (ಎರಡು ಕಡೆಯ) ಘಾಯಕ್ಕೆ ಒದಗಿತು ರಾಯ ರಾವುತರು.
ಅರ್ಥ:ಕೌರವ ಸೇನೆಯು ಪಾಂಡವ ಸೇನೆಯನ್ನು ಮತ್ತೆ ಎದುರಿಸಲು, ಬಾಣಗಳ ಮಳೆ ಸರಿಯಿತು. ರಥಿಕರ ಕರಿಘಟೆಯ ಥಟ್ಟಂದ ದೀವಟಿಗೆ, ಕಕ್ಕಡ, ಪಂಜು, ಪರಶು, ಶೂಲ, ಮುಸುಂಡಿ, ಸೆಲ್ಲೆಹ, ಕತ್ತಿ, ಶಕ್ತಿಗಳು ಶತ್ರುಸೇನೆಯ ಸಮುದ್ರವನ್ನು ಎದುರಿಸಿ ಹೋರಾಡಿದವು. ಅಲ್ಲಿಯ ಕುದುರೆ ರಥಗಳನ್ನು ಪುಡಿಮಾಡಿದವು. ಆನೆಗಳು, ರಾಜರು, ರಾವುತರು ಎರಡು ಕಡೆಯ ಸೈನ್ಯದಲ್ಲಿ ಘಾಯಕ್ಕೆ ಒಳಗಾದರು.
ನೆರೆ ಪರಿಚ್ಛೇದಿಸಿದ ಬಲ ಮು
ಕ್ಕರಿಸಿತೋ ನಿಜಸೈನ್ಯಸಾಗರ
ಬರತುದೋ ಬಲಗೈಗಳೆದಗಳ ಕೆಚ್ಚು ಕರಗಿತಲಾ |
ಮುರಿದು ಬರುತಿದೆ ಸೃಂಜಯರು ಕೈ
ಮುರಿದರೇ ಪಾಂಚಾಲಭಟರೆಂ
ದೊರೆಲಿದುದು ಮಂತ್ರಿಗಳು ರಾಯನ ರಥದ ಬಳಸಿನಲಿ || ೩೦ ||
ಪದವಿಭಾಗ-ಅರ್ಥ: ನೆರೆ ಪರಿಚ್ಛೇದಿಸಿದ ಬಲ(ಸೇನೆ) ಮುಕ್ಕರಿಸಿತೋ (ಮೂರು ಪಟ್ಟು ಆಯಿತೋ), ನಿಜಸೈನ್ಯಸಾಗರ ಬರತುದೋ, ಬಲಗೈಗಳ+ ಎದಗಳ ಕೆಚ್ಚು ಕರಗಿತಲಾ, ಮುರಿದು ಬರುತಿದೆ ಸೃಂಜಯರು ಕೈಮುರಿದರೇ, ಪಾಂಚಾಲಭಟರೆಂದು+ ಒರೆಲಿದುದು(ಕೂಗಿದರು) ಮಂತ್ರಿಗಳು ರಾಯನ ರಥದ ಬಳಸಿನಲಿ.
  • ಪರಿಚ್ಛೇದ=ನಡೆಸುವ, ವಿಧಿಸುವ ಯಾ ನಿರ್ಣಯಿಸುವ ಶಕ್ತಿ;೧ ಕತ್ತರಿಸುವುದು, ತುಂಡು ಮಾಡುವುದು ೨ ದೃಢನಿರ್ಧಾರ ೩ ಎಲ್ಲೆ; ಮೇರೆ
ಅರ್ಥ: ಧರ್ಮರಾಯನ ಮಂತ್ರಿಗಳು ಕೂಗಿಕೊಂಡರು, 'ಬಹಳ ಸೋತು ಛಿದ್ರವಾದ ಕೌರವ ಸೇನೆ ಮೂರು ಪಟ್ಟು ಆಯಿತೋ , ತನ್ನ ಸೈನ್ಯಸಾಗರ ಬತ್ತಿತೋ, ಬಲಗೈಗಳಾದ ಪಾಂಚಾಲರ ಎದೆಗಳ ಕೆಚ್ಚು ಕರಗಿತಲಾ,ಕೌರವನ ಸೇನೆ ತಮ್ಮ ಸೇನೆಯನ್ನು ಮುರಿದು ಬರುತ್ತಿದೆ, ಪಾಂಚಾಲ ಭಟರು, ಅವರ ಮಿತ್ರರು ಸೃಂಜಯರು ಕೈಮುರಿದು ಕೊಂಡರೇ?, ಎಂದು ಧರ್ಮರಾಯನ ರಥದ ಬಳಿಯಲ್ಲಿ ಮಂತ್ರಿಗಳು ಒರೆಲಿದರು.
ಅರಸ ಕೇಳು ಯುಧಿಷ್ಠಿರನ ಮೇ
ಲುರವಣಿಸಿತೀ ಸೇನೆ ಭೀಮನ
ಬಿರುದ ತಡೆದವು ಸಾವಿರಾನೆಗಳೊಂದು ಬಾಹೆಯಲಿ |
ಅರರೆ ರಾವುತೆನುತ್ತ ಕವಿದುದು
ತುರಗ ಸಾವಿರ ನಕುಲ ಸಹದೇ
ವರಿಗೆ ಸಾತ್ಯಕಿಗಾಗಿ ಬಿಟ್ಟನು ರಥವನಾ ದ್ರೌಣಿ || ೩೧ ||
ಪದವಿಭಾಗ-ಅರ್ಥ:ಅರಸ ಕೇಳು ಯುಧಿಷ್ಠಿರನ ಮೇಲೆ+ ಉರವಣಿಸಿತು+ ಈ ಸೇನೆ, ಭೀಮನ ಬಿರುದ ತಡೆದವು ಸಾವಿರಾನೆಗಳು+ ಒಂದು ಬಾಹೆಯಲಿ ಅರರೆ ರಾವುತ+ ಎನುತ್ತ ಕವಿದುದು(ಮುತ್ತಿತು) ತುರಗ ಸಾವಿರ, ನಕುಲ ಸಹದೇವರಿಗೆ ಸಾತ್ಯಕಿಗಾಗಿ ಬಿಟ್ಟನು ರಥವನು+ ಆ ದ್ರೌಣಿ.
ಅರ್ಥ: ಅರಸನೇ ಕೇಳು, ಹೀಗೆ ಪುನಃ ಒಟ್ಟುಗೂಡಿದ ಈ ಕೌರವನ ಸೇನೆ, ಯುಧಿಷ್ಠಿರನ ಮೇಲೆ ಆಕ್ರಮಣಮಾಡಲು ಹೊರಟಿತು. ಆ ಸೇನೆ ಭೀಮನ ಪರಾಕ್ರಮದ ಬಿರುದನ್ನು ತಡೆದವು. ಅದರಲ್ಲಿ ಸಾವಿರ ಆನೆಗಳು ಒಂದು ಬದಿಯಲ್ಲಿ, ಮತ್ತೊಂದು ಬದಿಯಿಂದ 'ಅರರೆ ರಾವುತರೇ ನುಗ್ಗಿ ಎನುತ್ತಾ' ಸಾವಿರ ತುರಗದ ಸೇನೆ ಮುತ್ತಿತು, ಆ ದ್ರೌಣಿ- ಅಶ್ವತ್ಥಾಮನು ತನ್ನ ರಥವನ್ನು ನಕುಲ ಸಹದೇವರಿದ್ದ ಕಡೆಗೆ ಮತ್ತು ಸಾತ್ಯಕಿಗೆ ಎದುರಾಗಿ ಬಿಟ್ಟನು.
ರಾಯದಳದಲೆ ಚಾತುರಂಗದ
ಬೀಯ ಬೆದರಿಸಿತದಟರನು ಬಲು
ನಾಯಕರಿಗಿದಿರೊಡ್ಡಿದರು ಕೃಪ ಭೋಜ ಗುರುಸುತರು
ಆಯಿತೀ ರಣವೆನುತ ಪಾಂಡವ
ರಾಯ ಹೊಕ್ಕನು ಬಳಿಕಲಾ ಕ
ರ್ಣಾಯತಾಸ್ತ್ರನು ಕಂಡನರ್ಜುನನಾ ಮಹಾದ್ಭುತವ ೩೨
ಪದವಿಭಾಗ-ಅರ್ಥ: ರಾಯದಳದಲೆ ಚಾತುರಂಗದ ಬೀಯ(ಅಳಿದುಳಿದ ಸೇನೆ) ಬೆದರಿಸಿತು+ ಅದಟರನು (ಶೂರರನ್ನು) ಬಲು ನಾಯಕರಿಗೆ+ ಇದಿರೊಡ್ಡಿದರು ಕೃಪ ಭೋಜ ಗುರುಸುತರು, ಆಯಿತು+ ಈ ರಣವೆನುತ ಪಾಂಡವರಾಯ ಹೊಕ್ಕನು, ಬಳಿಕಲಿ+ ಆ ಕರ್ಣಾಯತಾಸ್ತ್ರನು (ಕಿವಿಯವರೆಗೆ ಎಳೆದು ಬಾಣಬಿಡುವ ಅರ್ಜುನನು) ಕಂಡನು+ ಅರ್ಜುನನು+ ಆ ಮಹಾದ್ಭುತವ.
  • ಬೀಯ:(ಸಂ. ಬೀಜ) ೧ ತೌಡನ್ನು ತೆಗೆದ ಅಕ್ಕಿ, ಉಳಿದಿದ್ದು, ಕೊನೆಗೊಳಿಸು, ಮುಗಿಸು (ಮುಕ್ತಾಯಗೊಳಿಸು), ಬೀಯಿಸು (ಬೀಯಿ ಸದ ಕೆಲಸ), ವ್ಯಯ, ನಷ್ಟ,
ಅರ್ಥ:ಕೌರವರಾಯನ ಚತುರಂಗಸೇನೆಯ ದಳದಲ್ಲಿ ಅಳಿದುಳಿದ ಸೇನೆ ಧರ್ಮಜನ ಕಡೆಯ ಶೂರರನ್ನು ಬೆದರಿಸಿತು. ಬಲು ಸಮರ್ಥ ನಾಯಕರಿಗೆ ಹಿಂತಿರುಗೆ ಬಂದ ಕೌರವನ ಕಡೆಯ ರಾಜರು, ನಾಯಕರು ಇದಿರು ನಿಂತು ಕಾದಿದರು. ಕೃಪ ಭೋಜ ಗುರುಸುತ ಅಶ್ವತ್ಥಾಮರು ಯುದ್ಧಕ್ಕೆ ನಿಂತರು. ಆಗ ಪಾಂಡವರಾಯ ಧರ್ಮಜನು ಆಯಿತು ಈ ರಣವು,(ನಾವು ಸೋತೆವು ಎನುತ್ತಾ) ತನ್ನ ಸೇನೆಯ ಹಿಂದೆ ಹೊಕ್ಕನು. ಬಳಿಕ ಆ ಕರ್ಣಾಯತಾಸ್ತ್ರ ಅರ್ಜುನನು ಆ ಮಹಾದ್ಭುತವಾದ ತನ್ನವರು ಹಿಮ್ಮೆಟ್ಟಿದುದನ್ನು ಕಂಡನು.
ಮೇಲುಲೋಕವ ಬಯಸಿ ಕುರುಬಲ
ಮೇಲೆ ಬಿದ್ದುದು ಜೀಯ ಜಡಿದು ನೃ
ಪಾಲನೇಕಾಂಗದಲಿ ಹೊಕ್ಕನು ಹೊದರನೊಡೆಬಡಿದು |
ಮೇಲುದಾಯದಲವನಿಪನ ಸಂ
ಭಾಳಿಸುವೆನೆನೆ ನಗುತ ಲಕ್ಷ್ಮೀ
ಲೋಲ ಚಪ್ಪರಿಸಿದನು ನರನುದ್ದಂಡವಾಜಿಗಳ || ೩೩ ||
ಪದವಿಭಾಗ-ಅರ್ಥ: ಮೇಲುಲೋಕವ(ಸ್ವರ್ಗ) ಬಯಸಿ ಕುರುಬಲ ಮೇಲೆ ಬಿದ್ದುದು ಜೀಯ, ಜಡಿದು (ಭದ್ರವಾಗಿ) ನೃಪಾಲನು+ ಏಕಾಂಗದಲಿ ಹೊಕ್ಕನು ಹೊದರುನು(ಹೊದರು, ಪೊದೆ, ಅಡಗುತಾಣ)+ ಒಡೆಬಡಿದು ಮೇಲುದಾಯದಲಿ/ ಅವಸರದ ಮುಖ್ಯಕಾರ್ಯವಾಗಿ+ ಅವನಿಪನ(ರಾಜನನ್ನು) ಸಂಭಾಳಿಸುವೆನು (ರಕ್ಷಿಸುವೆನು)+ ಎನೆ ನಗುತ ಲಕ್ಷ್ಮೀಲೋಲ ಚಪ್ಪರಿಸಿದನು ನರನ+ ಉದ್ದಂಡವಾಜಿಗಳ(ಶ್ರೇಷ್ಠ ಬಲಿಷ್ಟ ಪ್ರಚಂಡವಾದ).
ಅರ್ಥ:ಸ್ವರ್ಗದ ಸುಖವನ್ನು ಬಯಸಿ ಜೀವದಾಸೆ ಬಿಟ್ಟು ಕುರುಸೇನೆಯು ಧರ್ಮರಾಯನ ಕಾವಲು ಸೈನ್ಯದ ಮೇಲೆ ಆಕ್ರಮಿಸಿತು, ಜೀಯ/ ಒಡೆಯ ಕೃಷ್ಣಾ!, ಜಡಿದು ನೃಪಾಲ ಧರ್ಮರಾಯನು ಭದ್ರೆತೆಗಾಗಿ ಅಡಗುತಾಣವನ್ನು ಏಕಾಂಗಿಯಾಗಿ ಹೊಕ್ಕಿರುವನು. ಒಡನೆ ಶತ್ರುಗಳನ್ನು ಬಡಿದು ಅವಸರದ ಮುಖ್ಯಕಾರ್ಯವಾಗಿ ಧರ್ಮರಾಜನನ್ನು ರಕ್ಷಿಸುವೆನು, ಎನ್ನಲು ನಗುತ್ತಾ ಲಕ್ಷ್ಮೀಲೋಲ ಕೃಷ್ನನು ಶ್ರೇಷ್ಠವಾದ ಪ್ರಚಂಡವಾದ ರಥದ ಕುದುರೆಗಳನ್ನು ಚಪ್ಪರಿಸಿದನುಓಡಿಸಿದನು.

ಧರ್ಮರಾಯನ ರಕ್ಷಣೆ[ಸಂಪಾದಿಸಿ]

ಅರಸ ಕೇಳೈ ನಿಮಿಷದಲಿ ನೃಪ
ವರನ ರಥದಿಂ ಮುನ್ನ ಪಾರ್ಥನ
ತಿರುವಿನಬ್ಬರ ಕೇಳಲಾದುದು ಕಳನ ಚೌಕದಲಿ |
ಅರರೆ ದೊರೆಯೋ ಕೊಳ್ಳಿವನ ಕೈ
ಮರೆಯದಿರಿ ಕುರುಧರಣಿಪನ ಹಗೆ
ಹರಿಯಲೆಂದುರವಣಿಸಿ ಕವಿದುದು ಕೂಡೆ ಕುರುಸೇನೆ || ೩೪ ||
ಪದವಿಭಾಗ-ಅರ್ಥ: ಅರಸ ಕೇಳೈ ನಿಮಿಷದಲಿ ನೃಪವರನ ರಥದಿಂ ಮುನ್ನ ಪಾರ್ಥನ ತಿರುವಿನ+ ಅಬ್ಬರ ಕೇಳಲಾದುದು ಕಳನ ಚೌಕದಲಿ(ರಣರಂಗದಲ್ಲಿ); ಅರರೆ ದೊರೆಯೋ ಕೊಳ್ಳಿ+ ಇವನ ಕೈಮರೆಯದಿರಿ ಕುರುಧರಣಿಪನ ಹಗೆಹರಿಯಲಿ+ ಎಂದು+ ಉರವಣಿಸಿ ಕವಿದುದು ಕೂಡೆ ಕುರುಸೇನೆ.
  • ಕೈಮರೆ= 1) (ವಸ್ತುವನ್ನು) ಕೈಮರೆತಿಡು, ನೆನಪಿಗೆ ಬರದಿರು 2) ಕಳೆದುಕೊ, ನಷ್ಟಮಾಡಿಕೊ
ಅರ್ಥ: ಧೃತರಾಷ್ಟ್ರ ಅರಸನೇ ಕೇಳಯ್ಯಾ ಎಂದ ಸಂಜಯ, ಪಾರ್ಥನು ಹೇಳಿದ ಕೂಡಲೆ (ಕೃಷ್ಣನು ರಥವನ್ನು ಅಲ್ಲಿಗೆ ಓಡಿಸಿದನು), ನಿಮಿಷದಲ್ಲಿ ನೃಪವರ ಕೌರವನ ರಥಕ್ಕಿಂತ ಮೊದಲೇ ಪಾರ್ಥನ ರಥದ ಗಾಲಿಗಳ ತಿರುವಿನ ಅಬ್ಬರ ರಣರಂಗದಲ್ಲಿ ಕೇಳಿಬಂತು. ಅರರೆ ಅರ್ಜುನ ನಮಗೆ ದೊರೆತನೇ! ಇವನನ್ನು (ಹಿಡಿದು)ಕೊಳ್ಳಿರಿ, ಕೈಮರೆಯದಿರಿ- ಗುರಿಯಲ್ಲಿ ಕೈತಪ್ಪಬೇಡಿ; ಅರ್ಜುನನ ಸಾವಿನಿಂದ ಕುರುಧರಣಿಪ ಕೌರವನ ಹಗೆಯು/ ಶತ್ರುವು ಹರಿದು/ಸತ್ತು-ತೊಲಗಿ ಹೋಗಲಿ ಎಂದು, ಕೂಡಲೆ ಕುರುಸೇನೆ ಪರಾಕ್ರಮದಿಂದ ಪಾರ್ಥನನ್ನು ಕವಿಯದು ಮುತ್ತಿತು.
ಮೋಹಿದವು ಬರಿ ಕೈಗಳನು ರಥ
ವಾಹತತಿಗಾನೆಗಳು ವಂಶ
ದ್ರೋಹಿ ಸಿಲುಕಿದನೆನುತ ತಡೆದರು ರಥಿಕರೆಡಬಲನ |
ಗಾಹಿಸಿತು ದೂಹತ್ತಿ ಲೌಡೆಯ
ರಾಹುತರು ಕಟ್ಟಳವಿಯಲಿ ಕವಿ
ದೋಹಡಿಸದೌಂಕಿತು ಪದಾತಿ ಧನಂಜಯನ ರಥವ ೩೫
ಪದವಿಭಾಗ-ಅರ್ಥ: ಮೋಹಿದವು ಬರಿ ಕೈಗಳನು ರಥವಾಹತತಿಗೆ+ ಆನೆಗಳು ವಂಶದ್ರೋಹಿ ಸಿಲುಕಿದನು+ ಎನುತ ತಡೆದರು ರಥಿಕರು+ ಎಡಬಲನ ಗಾಹಿಸಿತು (ಮುತ್ತಿತು) ದೂಹತ್ತಿ (ಒಂದು ಬಗೆಯ ಉದ್ದವಾದ ಕತ್ತಿ,- ಖಡ್ಗ.) ಲೌಡೆಯ(ಒಂದು ಬಗೆಯ ಕಬ್ಬಿಣದ ಆಯುಧದ) ರಾಹುತರು ಕಟ್ಟಳವಿಯಲಿ(ಪೂರ್ಣ ಶಕ್ತಿಯಿಂದ) ಕವಿದು+ ಓಹಡಿಸದೆ+ ಔಂಕಿತು (ಒತ್ತಿತು) ಪದಾತಿ ಧನಂಜಯನ ರಥವ.
ಅರ್ಥ: ಬರಿ ಕೈಗಳನ್ನು ಸೇರಿಸಿ ಸೈನ್ಯಗಳು ಯುದ್ಧದಲ್ಲಿ ತೊಡಗಿದವು; ಅದಕ್ಕೆ ರಥ, ವಾಹನ ಸಮೂಹ ಆನೆಗಳು ಸೇರಿಕೊಂಡವು; ವಂಶದ್ರೋಹಿ ಅರ್ಜುನ ಸಿಕ್ಕಿದನು ಎನ್ನುತ್ತಾ ರಥಿಕರು ತಡೆದರು; ಎಡಬಲಗಳಲ್ಲಿ ಮುತ್ತಿತು; ಉದ್ದವಾದ ಕತ್ತಿ,ಖಡ್ಗಗಳನ್ನು ಹಿಡಿದ, ಕಬ್ಬಿಣದ ಸಲಾಕಿಯ ಆಯುಧದ ರಾಹುತರು ಪೂರ್ಣ ಶಕ್ತಿಯಿಂದ ಕವಿದು ಹಿಂಜರಯದೆ ಧನಂಜಯನ ರಥವನ್ನು ಪದಾತಿದಳ ಔಕಿ ಮುತ್ತಿತು.
ಏನನೆಂಬೆನು ಜೀಯ ಕುರುಬಲ
ದಾನೆಗಳ ವಿಕ್ರಮವನತಿರಥ
ರೇನ ನಿಲುವರು ಕೆಲಬಲನ ಚತುರಂಗದುಪಹತಿಗೆ |
ಭಾನುಮಂಡಲವಕಟ ತಿಮಿರಾಂ
ಭೋನಿಧಿಯಲಕ್ಕಾಡಿತೆಂಬವೊ
ಲಾ ನಿರಂತರ ದಳದ ಥಟ್ಟಣೆ ಧೂಳಿಪಟವಾಯ್ತು || ೩೬ ||
ಪದವಿಭಾಗ-ಅರ್ಥ: ಏನನೆಂಬೆನು ಜೀಯ, ಕುರುಬಲದ+ ಆನೆಗಳ ವಿಕ್ರಮವನು+ ಅತಿರಥರು+ ಏನ ನಿಲುವರು ಕೆಲಬಲನಚತುರಂಗದ+ ಉಪಹತಿಗೆ ಭಾನುಮಂಡಲವು+ ಅಕಟ ತಿಮಿರಾಂಭೋನಿಧಿಯಲಿ (ತಿಮಿರ+ ಅಂಭೋನಿಧಿಯಲಿ- ಕತ್ತಲೆಯ ಸಮುದ್ರದಲ್ಲಿ)+ ಅಕ್ಕಾಡಿತೆಂಬವೊಲು (ತೊಳಲಾಡಿತು ಎನ್ನವಂತೆ) + ಆ ನಿರಂತರ (ವಿಶಾಲ) ದಳದ ಥಟ್ಟಣೆ ಧೂಳಿಪಟವಾಯ್ತು
ಅರ್ಥ: ಏನನ್ನು ಹೇಳಲಿ ಒಡೆಯನೇ, ಕುರುಸೈನ್ಯದ ಆನೆಗಳ ವಿಕ್ರಮ ಸಾಹಸಗಳನ್ನು; ಅತಿರಥರು ಏನ ನಿಲ್ಲುವರು? - ಅರ್ಜುನನ ಎದುರು ನಿಲ್ಲಲಾರರು. ಅಕ್ಕಪಕ್ಕದ ಚತುರಂಗ ಸೈನ್ಯದ ಹೊಡೆತಕ್ಕೆಗೆ ಆಕಾಶವು, ಅಕಟ ಕತ್ತಲೆಯ ಸಮುದ್ರದಲ್ಲಿ ತೊಳಲಾಡಿತು ಎನ್ನವಂತೆ, ಆ ವಿಶಾಲ ಸೇನೆಯ ಥಟ್ಟಣೆ- ಸಮೂಹವು ಧೂಳಿಪಟವಾಯಿತು/ ಣಾಶವಾಯಿತು.
ಮುಂಕುಡಿಯ ಹಿಡಿದಾನೆಗಳನೆಡ
ವಂಕಕೌಕಿದ ರಥಚಯವ ಬಲ
ವಂಕಕೊತ್ತಿದ ರಾವುತರನುಬ್ಬೆದ್ದ ಪಯದಳವ |
ಶಂಕೆಯನು ನಾ ಕಾಣೆ ಬಲನೆಡ
ವಂಕವನು ತರಿದೊಟ್ಟಿದನು ಮಾ
ರಂಕ ನಿಲುವುದೆ ಪಾರ್ಥ ಮುನಿದಡೆ ಭೂಪ ಕೇಳೆಂದ || ೩೭ ||
ಪದವಿಭಾಗ-ಅರ್ಥ: ಮುಂಕುಡಿಯ ಹಿಡಿದು+ ಆನೆಗಳನು+ ಎಡ ವಂಕಕೆ+ ಔಕಿದ ರಥಚಯವ ಬಲ ವಂಕಕೆ+ ಒತ್ತಿದ ರಾವುತರನು+ ಉಬ್ಬೆದ್ದ ಪಯದಳವ ಶಂಕೆಯನು ನಾ ಕಾಣೆ ಬಲನ (ಬಲ= ಸೇನೆ)+ ಎಡವಂಕವನು(ಎಡವಂಕ= ಎಡಭಾಗ.) ತರಿದೊಟ್ಟಿದನು ಮಾರಂಕ (ಮಾರಾಂಕ= ಪ್ರತಿಯುದ್ಧ)ನಿಲುವುದೆ ಪಾರ್ಥ ಮುನಿದಡೆ ಭೂಪ ಕೇಳೆಂದ.
ಅರ್ಥ:ಮುಂದಿನ ಕುಡಿಯ ಸೇನೆಯನ್ನು ಹಿಡಿದು (ನಿಲ್ಲಿಸಿ), ಆನೆಗಳನ್ನು ಎಡ ಭಾಗಕ್ಕೆ ಒತ್ತಿ ಓಡಿಸಿದನು. ರಥಗಳನ್ನು ಹೊಡೆದು ಬಲಬಾಗಕ್ಕೆ ಹಿಂದೆಸರಿಯುವಂತೆ ಮಾಡಿದನು. ಕುದುರೆಸೈನ್ಯದ ರಾವುತರನ್ನೂ ಪಾಯದಳವನ್ನೂ ಉಬ್ಬೇಳುವಂತೆ (ಓಡುವಂತೆ) ಹೊಡೆದೋಡಿಸಿದನು. ಇದರಲ್ಲಿ ಶಂಕೆಯನ್ನು ನಾನು ಕಾಣೆನು/ ಸಂಶಯವಿಲ್ಲ. ಸೈನ್ಯದ ಎಡಭಾಗವನ್ನು ಕತ್ತರಿಸಿ ರಾಶಿಹಾಕಿದನು. ಪಾರ್ಥನು ಮುನಿದರೆ ಅವನನ್ನು ಎದುರಿಸಿ ಪ್ರತಿಯುದ್ಧಮಾಡಲು ಸಾದ್ಯವೇ? ಸಾಧ್ಯವಿಲ್ಲ. ರಾಜನೇ ಕೇಳು ಎಂದ ಸಂಜಯ.
ಉಡಿಯ ಮೋರೆಯ ಜೋಡು ಜೋದರ
ಕೊಡಹಿ ಹಾಯ್ದವು ದಂತಿಘಟೆ ಖುರ
ಕಡಿವಡೆಯೆ ಕುದುರೆಗಳು ಹಾಯ್ದವು ಹಾಯ್ಕಿ ರಾವುತರ |
ಮಡಿಯೆ ಸಾರಥಿ ಮಗ್ಗಿದವು ರಥ
ನಡೆದು ಕಾದಿ ಮಹಾರಥರು ಮೆದೆ
ಗೆಡೆದುದುಳಿದ ಪದಾತಿಪತನವನರಿಯೆ ನಾನೆಂದ || ೩೮ ||
ಪದವಿಭಾಗ-ಅರ್ಥ: ಉಡಿಯ ಮೋರೆಯ (ಗಂಟು ಮುಖದ) ಜೋಡು ಜೋದರ (ಯೋಧರ) ಕೊಡಹಿ ಹಾಯ್ದವು ದಂತಿಘಟೆ ಖುರ+ ಕಡಿವಡೆಯೆ ಕುದುರೆಗಳು ಹಾಯ್ದವು ಹಾಯ್ಕಿ ರಾವುತರ ಮಡಿಯೆ ಸಾರಥಿ ಮಗ್ಗಿದವು ರಥನಡೆದು ಕಾದಿ ಮಹಾರಥರು ಮೆದೆಗೆಡೆದುದು+ ಉಳಿದ ಪದಾತಿ ಪತನವನು+ ಅರಿಯೆ ನಾನೆಂದ.ಉಡಿಯ ಮೋರೆಯ (ಗಂಟು ಮುಖದ) ಜೋಡು ಜೋದರ (ಯೋಧರ) ಕೊಡಹಿ ಹಾಯ್ದವು ದಂತಿಘಟೆ ಖುರ+ ಕಡಿವಡೆಯೆ ಕುದುರೆಗಳು ಹಾಯ್ದವು ಹಾಯ್ಕಿ ರಾವುತರ ಮಡಿಯೆ ಸಾರಥಿ ಮಗ್ಗಿದವು (ಮಗ್ಗು= ೧ ಬದಿ, ಮಗ್ಗುಲು ೨ ಹತ್ತಿರ, ಸಾಮೀಪ್ಯ) ರಥನಡೆದು ಕಾದಿ ಮಹಾರಥರು ಮೆದೆಗೆಡೆದುದು+ ಉಳಿದ ಪದಾತಿ ಪತನವನು+ ಅರಿಯೆ ನಾನೆಂದ.
ಅರ್ಥ: ಉಗ್ರಗಂಟು ಮುಖದವರು ಸೇರಿರುವ ಯೋಧರನ್ನು ತಳ್ಳಿ ದಂತಿಘಟೆ ನುಗ್ಗಿದವು; ಖುರಗಳನ್ನು(ಗೊರಸು) ನೆಲವನ್ನು ಕಡಿವಂತೆ ಕುದುರೆಗಳು ಹಾಯ್ದವು/ ಓಡಿದವು; ಕುದುರೆಗಳು ಸಾರಥಿ ಸಾಯಲು ಕೆಡವಿ ಓಡಿದವು. ರಾವುತರನ್ನು ಪಕ್ಕಕ್ಕೆ ಕೆಡೆವಿದವು. ಮಹಾರಥರು ರಥವನ್ನು ಮುಂದಕ್ಕೆ ನುಗ್ಗಿಸಿ ಹೋರಾಡಿ ಶಕ್ತಿಗುಂದಿದರು. ಉಳಿದ ಪದಾತಿಗಳು ಎಷ್ಟು ಜನ ಸತ್ತರೋ ನಾನು ಅರಿಯೆನು ಎಂದ ಧೃತರಾಷ್ಟ್ರನ ಮಂತ್ರಿ ಸಂಜಯ.
ಕರಿಘಟೆಗಳೈನೂರು ರಥ ಸಾ
ವಿರದ ಮೂನೂರೆರಡು ಸಾವಿರ
ತುರಗದಳವೆಂಬತ್ತು ಸಾವಿರ ವಿಗಡ ಪಾಯದಳ |
ತೆರಳಿತಂತಕಪುರಿಗೆ ಪುನರಪಿ
ತುರಗ ಸಾವಿರ ನೂರು ರಥ ಮದ
ಕರಿಗಳಿನ್ನೂರೆಂಟು ಸಾವಿರಗಣಿತ ಪಾಯದಳ || ೩೯ ||
ಪದವಿಭಾಗ-ಅರ್ಥ: ಕರಿಘಟೆಗಳು+ ಐನೂರು, ರಥ ಸಾವಿರದ ಮೂನೂರೆರಡು, ಸಾವಿರ ತುರಗದಳವು+ ಎಂಬತ್ತು ಸಾವಿರ ವಿಗಡ ಪಾಯದಳ, ತೆರಳಿತು+ ಅಂತಕಪುರಿಗೆ, ಪುನರಪಿ ತುರಗ ಸಾವಿರ, ನೂರು ರಥ, ಮದಕರಿಗಳು+ ಇನ್ನೂರೆಂಟು, ಸಾವಿರ ಗಣಿತ ಪಾಯದಳ.
ಅರ್ಥ: ಅರ್ಜುನನ ಬಾಣಕ್ಕೆ, ಆನೆಗಳು ಐನೂರು, ರಥ ಸಾವಿರದ ಮೂರು ನೂರಾ ಎರಡು, ಸಾವಿರ ತುರಗದಳವು, ಎಂಬತ್ತು ಸಾವಿರ ಶೂರ ಪಾಯ/ಕಾಲಾಳು ಸೈನ್ಯ, ಯಮನ ನಗರಕ್ಕೆ ತೆರಳಿತು (ಹೊಯಿತು - ಸತ್ತಿತು). ಹೀಗೆಯೇ ಪುನರಪಿ ಮುಂದುವರಿದ ಯುದ್ಧಲ್ಲಿ ಸಾವಿರ ಕುದುರೆ, ನೂರು ರಥ, ಆನೆಗಳು ಇನ್ನೂರಾ ಎಂಟು, ಸಾವಿರ ಲಕ್ಕದ ಕಾಲಾಳು ದಳ (ನಾಶಹೊಂದಿತು).
ಮತ್ತೆ ಮೇಲೊಡಗವಿದ ನೂರರು
ವತ್ತು ಗಜ ರಥಯೂಥ ನೂರಿ
ಪ್ಪತ್ತು ಮೂನೂರಶ್ವಚಯ ಸಾವಿರದ ನಾನೂರು |
ಪತ್ತಿ ಮರಳೈವತ್ತು ಗಜ ಮೂ
ವತ್ತು ಶರವಿನ್ನೂರು ಹಯವರು
ವತ್ತು ನಾನೂರಿಂದ ಮೇಲಾಯ್ತುಳಿದ ಪಾಯದಳ || ೪೦ ||
ಪದವಿಭಾಗ-ಅರ್ಥ: ಮತ್ತೆ ಮೇಲೆ+ ಒಡೆ+ ಗ+ ಕವಿದ (ಮುತ್ತಿದ) ನೂರ+ ಅರುವತ್ತು ಗಜ, ರಥಯೂಥ ನೂರಿಪ್ಪತ್ತು, ಮೂನೂರಶ್ವ+ ಚಯ ಸಾವಿರದ ನಾನೂರು ಪತ್ತಿ ಮರಳಿ+ ಐವತ್ತು ಗಜ. ಮೂವತ್ತು ಶರವು+ ಇನ್ನೂರು ಹಯವು+ ಅರುವತ್ತು ನಾನೂ(ರ)+ ರಿಂದ ಮೇಲಾಯ್ತು+ ಉಳಿದ ಪಾಯದಳ
ಅರ್ಥ: ಮತ್ತೆ ಅರ್ಜುನನ ಮೇಲೆ ಒಡೆನೆಯೇ ಕವಿದ ನೂರ ಅರುವತ್ತು ಆನೆಗಳು, ನೂರಿಪ್ಪತ್ತು ರಥ ಸಮೂಹಗಳು , ಮೂನೂರು ಅಶ್ವಗಳ ಗುಂಪು, ಸಾವಿರದ ನಾನೂರು ಆಪತ್ತಿನ ಸೇನೆ ಅರ್ಜುನಿಂದ ಕೊಲ್ಲಲ್ಪಟ್ಟವು. ಉಳಿದವು ಬಂದು ಅವನನ್ನು ಮುತ್ತಿದಾಗ ಮರಳಿ ಐವತ್ತು ಗಜ, ಮೂವತ್ತು ಇನ್ನೂರು ಕುದುರೆಗಳು ಸತ್ತುಹೋದವು, ಉಳಿದ ಪಾಯದಳ ಸುಮಾರು ನಾನೂರ ಅರುವತ್ತಕ್ಕಿಂಸ ಮೇಲೆ ಆಯಿತು.
ಬಿರುದು ಪಾಡಿನ ಭಾಷೆಗಳ ನಿ
ಷ್ಠುರದ ನುಡಿಗಳ ರಾಜವರ್ಗದ
ಮರುಳದಲೆಯನೆ ಕಾಣೆನರ್ಜುನನಾಹವಾಗ್ರದಲಿ |
ಹರಿವ ರಕುತದ ತಳಿತ ಖಂಡದ
ಶಿರದ ಹರಹಿನ ಕುಣಿವ ಮುಂಡದ
ಕರಿ ತುರಗ ಪಯದಳದ ಹೆಣಮಯವಾಯ್ತು ರಣಭೂಮಿ ||೪೧ ||
ಪದವಿಭಾಗ-ಅರ್ಥ: ಬಿರುದು ಪಾಡಿನ ಭಾಷೆಗಳ ನಿಷ್ಠುರದ ನುಡಿಗಳ ರಾಜವರ್ಗದ ಮರುಳದ (ಮರುಳ = ಹುಚ್ಚ - ಜ್ಞಾನ ತಪ್ಪುವುದು)+ ಅಲೆಯನೆ ಕಾಣೆನು+ ಅರ್ಜುನನು+ ಆಹವ+ ಅಗ್ರದಲಿ (ಮುಂದೆ, ಎದುರಲ್ಲಿ) ಹರಿವ ರಕುತದ ತಳಿತ ಖಂಡದ ಶಿರದ ಹರಹಿನ ಕುಣಿವ ಮುಂಡದ ಕರಿ ತುರಗ ಪಯದಳದ ಹೆಣಮಯವಾಯ್ತು ರಣಭೂಮಿ.
  • ಮರುಳ= 1. ಬೇರೆಯವರಿಗೆ ಅಧೀನವಾಗಿರುವಿಕೆ. 2. ಮೈ ಮರೆವು. 3. ತನ್ಮಯತೆ. 4. ಜ್ಞಾನ ತಪ್ಪುವುದು. 5. ಇನ್ನೊಬ್ಬರ ವಶದಲ್ಲಿರುವವನು. 6. ಮಾರುಹೋದವನು. 7. ಮೂರ್ಛೆ ಹೋದವನು.XX ->ಮರುಳದ(ಮರುಳು-ತನದ ಅಲೆ)
ಅರ್ಥ:ರಣರಂಗದಲ್ಲಿ ತಮ್ಮ ಬಿರುದನ್ನು ಹಾಡಿದರು; ಭಾಷೆಗಳನ್ನೂ ಪ್ರತಜ್ಞೆಗಳನ್ನು ಮಾಡಿದರು; ನಿಷ್ಠುರದ ನುಡಿಗಳನ್ನು ನುಡಿದರು. ನಂತರ ಅಲ್ಲಿ ರಾಜವರ್ಗದವರು ಸೋಲದೆ ಇರುವ, ಮೂರ್ಛೆಹೋಗದೆ ಇರುವವರು ಇರಲಿಲ್ಲ, ಎಲ್ಲರ ಮೈ ಮರೆವಿನ ಅಲೆಯನ್ನು ಕಾಣುವಂತಾಯಿತು. (ಎಲ್ಲರೂ ಸೋತು ಮೂರ್ಛೆಹೋದರು ಇಲ್ಲವೇ ಸತ್ತರು) ಅರ್ಜುನನು ಯುದ್ಧಮಾಡಿದ ಎದುರಿನ ಪ್ರದೇಶದವು, ಹರಿವ ರಕ್ತದ, ನೆಲಕ್ಕೆ ಬಿದ್ದು ಹತ್ತಿದ ಖಂಡದ ಮತ್ತು ಎಲ್ಲೆಡೆ ಬಿದ್ದ ಹರಡಿದ ಶಿರ/ತಲೆಗಳ ದೃಶ್ಯ, ಕುಣಿಯುವ ಮುಂಡದ ನೋಟ, ರಣಭೂಮಿಯಲ್ಲಿ ಬಿದ್ದ ಆನೆ, ಕುದುರೆ, ಕಾಲುದಳ ಇವುಗಳಿಂದ ತುಂಬಿ ಹೆಣಮಯವಾಯ್ತು.
ಮುರಿದುದೆಡಬಲವಂಕ ಪಾರ್ಥನ
ತರುಬಿದನು ನಿನ್ನಾತ ಸೈರಿಸಿ
ಹರಿದಳವ ಕೂಡಿದನು ಕಲಿಮಾಡಿದನು ಕಾಲಾಳ
ಒರಲಿದವು ಬಹುವಿಧದ ವಾದ್ಯದ
ಬಿರುದನಿಗಳುಬ್ಬೆದ್ದು ಮಾರಿಯ
ಸೆರಗ ಹಿಡಿದನು ಕೌರವೇಶ್ವರನರ್ಜುನನ ಕೆಣಕಿ ೪೨
ಪದವಿಭಾಗ-ಅರ್ಥ: ಮುರಿದುದು+ ಎಡಬಲವಂಕ, ಪಾರ್ಥನ ತರುಬಿದನು ನಿನ್ನಾತ, ಸೈರಿಸಿ ಹರಿದಳವ ಕೂಡಿದನು, ಕಲಿಮಾಡಿದನು ಕಾಲಾಳ, ಒರಲಿದವು ಬಹುವಿಧದ ವಾದ್ಯದ ಬಿರುದನಿಗಳು+ ಉಬ್ಬೆದ್ದು ಮಾರಿಯ ಸೆರಗ ಹಿಡಿದನು ಕೌರವೇಶ್ವರನು+ ಅರ್ಜುನನ ಕೆಣಕಿ
ಅರ್ಥ:ಧೃತರಾಷ್ಟ್ರನಿಗೆ ಸಂಜಯ ಹೇಳಿದ, ಕೌರವನ ಎಡ ಮತ್ತು ಬಲದ ಸೇನೆಗಳು ಮುರಿದುಹೋಯಿತು (ನಾಶವಾಯಿತು). (ನಿನ್ನವ) ಕೌರವನು ಪಾರ್ಥನನ್ನು ತರುಬಿ ಅಡ್ಡಹಾಕಿದನು, ಸೈರಿಸಿಕೊಂಡು ಸಾವಧಾನದೀಂದ ಹರಿದ ದಳವನ್ನು ಕೂಡಿಸಿದನು. ಅವರಿಗೆ ಧೈರ್ಯ ಹೇಳಿ ಕಾಲಾಳುಗಳನ್ನು ಕಲಿಮಾಡಿದನು. ಬಹುವಿಧದ ವಾದ್ಯದ ಬಿರುದನಿಗಳು ಉಬ್ಬೆದ್ದು ಒರಲಿದವು- ದೊಡ್ಡದಾಗಿ ಘರ್ಜಿಸಿದವು. ಕೌರವೇಶ್ವರನು ಅರ್ಜುನನನ್ನು ಕೆಣಕಿ- ಮಾನವರನ್ನು ತಿಂದು ತೇಗುವ 'ಮಾರಿಯ ಸೆರಗ ಹಿಡಿದು ಎಳೆದನು'- ಸಾವಿನ ದೇವತೆಯ ಕೂಡೆ ಸರಸವಾಡಿದಂತೆ ಮಾಡಿದನು.
ಕೊಲುವಡನುಚಿತವಿಂದು ಭೀಮಗೆ
ಕಳೆದ ಮೀಸಲು ನಿನ್ನ ತನು ನೀ
ನೊಲಿದ ಪರಿಯೆಂದೆಸು ವಿಭಾಡಿಸು ರಚಿಸು ಭಾಷೆಗಳ |
ಅಳುಕಿದೆವು ನಿನಗೆಂದು ರಾಯನ
ಬಳಿಯ ಜೋದರ ರಾವುತರ ರಥಿ
ಗಳ ಪದಾತಿಯನಿಕ್ಕಿದನು ಸೆಕ್ಕಿದನು ಸರಳುಗಳ || ೪೩ ||
ಪದವಿಭಾಗ-ಅರ್ಥ: ಕೊಲುವಡೆ+ ಅನುಚಿತವು+ ಇಂದು ಭೀಮಗೆ ಕಳೆದ ಮೀಸಲು ನಿನ್ನ ತನು(ದೇಹ), ನೀನು+ ಒಲಿದ(ಇಷ್ಟವಾದ) ಪರಿಯೆಂದ+ ಎಸು(ಹೊಡಿ) ವಿಭಾಡಿಸು(ಯುದ್ಧಮಾಡು) ರಚಿಸು ಭಾಷೆಗಳ ಅಳುಕಿದೆವು ನಿನಗೆ+ ಎಂದು ರಾಯನ ಬಳಿಯ ಜೋದರ ರಾವುತರ ರಥಿಗಳ ಪದಾತಿಯನು+ ಇಕ್ಕಿದನು(ಇಕ್ಕು- ಹೊಡೆ) ಸೆಕ್ಕಿದನು (ಸಿಕ್ಕಿಸು, ಚುಚ್ಚು) ಸರಳುಗಳ
ಅರ್ಥ:ಅರ್ಜುನನು ಕೌರವನನ್ನು ಕುರಿತು,'ನಿನ್ನನ್ನು ಕೊಲ್ಲುವುದು ಇಂದು ಅನುಚಿತವು- ಉಚಿತವಲ್ಲ. ಏಕೆಂದರೆ ನಿನ್ನ ದೇಹವನ್ನು ಭೀಮನಿಗೆ (ಕಳೆದ- ನನ್ನ ಲೆಕ್ಕದಿಂದ ಕಳೆದಿದ್ದೇನೆ) ಆಗಲೆ ಕೊಟ್ಟಾಗಿದೆ. ಅದು ಅವನಿಗೆ ಮೀಸಲು. ನೀನು ಇಷ್ಟವಾದ ರೀತಿಯಲ್ಲಿ ಹೊಡಿ, ಯುದ್ಧಮಾಡು. ಪ್ರತಿಜ್ಞೆಮಾಡು; ನಿನಗೆ ಬಲವಾಗಿ ಹೊಡೆಯಲು, ಕೊಲ್ಲಲು ನಾವು ಅಳುಕಿದೆವು, ಎಂದು ಹೇಳಿ, ಕೌರವರಾಯನ ಹತ್ತಿರವಿದ್ದ ಯೋಧರನ್ನೂ, ರಾವುತರನ್ನೂ, ರಥಿಗಳನ್ನೂ, ಪದಾತಿಗಳನ್ನೂ ತನ್ನ ಬಾನಗಳಿಂದ ಹೊಡೆದನು. ಸರಳುಗಳನ್ನು ಅವರ ದೇಹದಲ್ಲಿ ನೆಟ್ಟನು.
ಜನಪ ಕೇಳೈ ನಿನ್ನ ಮಗನ
ರ್ಜುನನನೆಚ್ಚನು ಫಲುಗುಣಾಸ್ತ್ರವ
ಚಿನಕಡಿದು ಮಗುಳೆಚ್ಚು ಪಾರ್ಥನೊಳೇರ ತೋರಿಸಿದ
ಮನದ ಮದ ಮೀರಿತು ಕಿರೀಟಿಯ
ಮೊನೆಗಣೆಯ ಮನ್ನಿಸದೆ ದುರ್ಯೋ
ಧನನು ದುವ್ವಾಳಿಸಿದನವನೀಪತಿಯ ಮೋಹರಕೆ ೪೪
ಪದವಿಭಾಗ-ಅರ್ಥ: ಜನಪ ಕೇಳೈ ನಿನ್ನ ಮಗನು+ ಅರ್ಜುನನನು+ ಎಚ್ಚನು(ಹೊಡೆದನು) ಫಲುಗುಣಾಸ್ತ್ರವ ಚಿನಕಡಿದು ಮಗುಳೆ+ ಎಚ್ಚು ಪಾರ್ಥನೊಳು+ ಏರ ತೋರಿಸಿದ ಮನದ ಮದ ಮೀರಿತು, ಕಿರೀಟಿಯ ಮೊನೆಗಣೆಯ ಮನ್ನಿಸದೆ ದುರ್ಯೋಧನನು ದುವ್ವಾಳಿಸಿದನು+ ಅವನೀಪತಿಯ ಮೋಹರಕೆ
ಅರ್ಥ: ಧೃತರಾಷ್ಟ್ರ ರಾಜನೇ ಕೇಳಯ್ಯಾ, ನಿನ್ನ ಮಗನು ಅರ್ಜುನನನ್ನು ಹೊಡೆದನು. ಫಲ್ಗುಣನು ಬಿಟ್ಟ ಅಸ್ತ್ರವನ್ನು ಚೂರಾಗಿ ಕಡಿದು ಪುನಃ ಹೊಡೆದು, ಪಾರ್ಥನೊಡನೆ ತನ್ನ ಹಿರಿಮೆಯನ್ನು ತೋರಿಸಿದನು. ಅವನಿಗೆ ಅದರಿಂದ ಮನದ ಮದ ಹೆಚ್ಚಿತು. ಅರ್ಜುನನ ಮೊನಚಾದ ಬಾಣಗಳನ್ನು ಲೆಕ್ಕಿಸದೆ ದುರ್ಯೋಧನನು ಧರ್ಮಜನ ಸೇನೆಯಮೇಲೆ ಪರಾಕ್ರಮ ತೋರಿದನು.
ಅರಸುಮೋಹರ ಸಿಲುಕಿದುದು ದೊರೆ
ಬೆರಸಿ ಹೊಯ್ದನು ಬೇಹ ಸುಭಟರು
ಮರಳಿಯೆನೆ ಮುಂಚಿದರು ಪಂಚದ್ರೌಪದೀಸುತರು |
ಧರಣಿಪತಿಯ ವಿಘಾತಿಗೊಪ್ಪಿಸಿ
ಶಿರವನೆನುತುಬ್ಬೆದ್ದು ಪಾಂಚಾ
ಲರು ಪ್ರಬುದ್ಧಕ ಸೃಂಜಯರು ರಂಜಿಸಿತು ಚೂಣಿಯಲಿ || ೪೫ ||
ಪದವಿಭಾಗ-ಅರ್ಥ: ಅರಸು ಮೋಹರ ಸಿಲುಕಿದುದು ದೊರೆ ಬೆರಸಿ ಹೊಯ್ದನು ಬೇಹ/ ಕಾವಲಿನ ಸುಭಟರು ಮರಳಿಯೆನೆ ಮುಂಚಿದರು ಪಂಚ ದ್ರೌಪದೀಸುತರು ಧರಣಿಪತಿಯ ವಿಘಾತಿಗೆ+ ಒಪ್ಪಿಸಿ ಶಿರವನೆನುತ+ ಉಬ್ಬೆದ್ದು ಪಾಂಚಾಲರು ಪ್ರಬುದ್ಧಕ ಸೃಂಜಯರು ರಂಜಿಸಿತು ಚೂಣಿಯಲಿ.
  • ಮುಂಚು= 1. ಮುಂದೆ ಹೋಗು ಚಲಿಸು. 2. ಮುಂಚಿತವಾಗಿ ಹೋಗು. 3. ಮೊದಲಿನದಾಗು. 4. ಮುನ್ನುಗ್ಗು.
ಅರ್ಥ:ಅರಸ ಧರ್ಮಜನ ಸೇನೆ ದುರ್ಯೋಧನನ ಸೇನಯ ಆಕ್ರಮಣದಲ್ಲಿ ಸಿಕ್ಕಿಕೊಂಡಿತು. ದೊರೆಯನ್ನೂ ಬೆರಸಿ ದುರ್ಯೋಧನನು ಆಕ್ರಮಿಸಿ ಹೊಡೆದನು. ಕಾವಲಿನ ಸುಭಟರು ಮರಳಿ/ ಮತ್ತೆ ದ್ರೌಪದಿಯ ಐದು ಮಕ್ಕಳೂ ಪಾಂಚಾಲರು ಧರಣಿಪತಿ ಧರ್ಮಜನ ವಿಘಾತಿಗೆ/ಅಪಾಯಕ್ಕೆ ಸಿಲುಕಿದಾಗ ರಕ್ಷಿಸಲು ಶಿರವನ್ನು ಒಪ್ಪಸಿ, ಪ್ರಾಣ ಕೊಟ್ಟಾದರೂ ರಕ್ಷಿಸಿ ಎನ್ನತ್ತಾ ಉಬ್ಬೆದ್ದು/ ಉತ್ಸಾಹದಿಂದ ಆರ್ಭಟಿಸಿ ಪ್ರಬುದ್ಧಕನೂ ಸೃಂಜಯರೂ ಮುಂದೆ ನುಗ್ಗಿದರು. ಹೀಗೆ ಯುದ್ಧವು ರಾಜನ ಮುಂಭಾಗದಲ್ಲಿ ರಂಜಿಸಿತು (ನೋಡಲು ಸೊಗಸಾಯಿತು). (ಯುದ್ಧಸ್ಯ ಕಥಾರಮ್ಯಂ - ಆದರೆ ನಿಜಯುದ್ಧ ಭಯಾನಕ, ಭೀಬತ್ಸ- ಹೇವರಿಕೆಯದು).
ಇತ್ತ ಪಡಿಬಲವಾಗಿ ಸಾವಿರ
ಮತ್ತಗಜಘಟೆ ಕೌರವೇಂದ್ರನ
ತೆತ್ತಿಗರ ತೂಳಿದರು ಪಾಂಚಾಲಪ್ರಬುದ್ಧಕರ |
ಹತ್ತು ಸಾವಿರ ಪಾಯದಳ ಹೊಗ
ರೆತ್ತಿದಲಗಿನ ಹೊಳಹಿನಂತಿರೆ
ಮುತ್ತಿತವನೀಪತಿಯ ಮೋಹರದೆರಡು ಬಾಹೆಯಲಿ || ೪೬ ||
ಪದವಿಭಾಗ-ಅರ್ಥ: ಇತ್ತ ಪಡಿಬಲವಾಗಿ (ಬೆಂಬಲ ಪಡೆ) ಸಾವಿರ ಮತ್ತಗಜಘಟೆ ಕೌರವೇಂದ್ರನ ತೆತ್ತಿಗರ (1. ಬಂಧು. 2. ಸೇವಕ. 3. ಹೊಣೆಗಾರ.) ತೂಳಿದರು (ಬೆನ್ನಟ್ಟು, ತೂಳು- ಆವೇಶ) ಪಾಂಚಾಲ ಪ್ರಬುದ್ಧಕರ (ಬಲಿಷ್ಠರ) ಹತ್ತು ಸಾವಿರ ಪಾಯದಳ ಹೊಗರುತ್ತಿದ (ಪ್ರಕಾಶಿಸು)+ ಅಲಗಿನ ಹೊಳಹಿನಂತಿರೆ ಮುತ್ತಿತು+ ಅವನೀಪತಿಯ ಮೋಹರದ+ ಎರಡು ಬಾಹೆಯಲಿ
ಅರ್ಥ: ಮತ್ತೊಂದುಕಡೆ ಇತ್ತ ಬೆಂಬಲ ಪಡೆಯು ಸಾವಿರ ಮತ್ತಾನೆಗಳ ಕೌರವೇಂದ್ರನ ಕಡೆಯ ಭಟರನ್ನು ಬೆನ್ನಟ್ಟಿದರು. ಪಾಂಚಾಲ ಪ್ರಬುದ್ಧಕ ಬಲಿಷ್ಠರ ಪ್ರಕಾಶಿಸುವ ಅಲಗಿನ ಹೊಳಹಿನಂತಿರುವ ಹತ್ತು ಸಾವಿರ ಪಾಯದಳದವರು ಕೌರವನ ಸೇನೆಯ ಎರಡು ಬದಿಯಲ್ಲಿ ಮುತ್ತಿದರು.
ನೂರುರಥದಲಿ ಬಲುಗುದುರೆ ನಾ
ನೂರರಲಿ ಕುರುರಾಯ ಸೂಠಿಯ
ಲೇರಿದನು ಧರ್ಮಜನ ದಳ ನುಗ್ಗಾಯ್ತು ನಿಮಿಷದಲಿ |
ವೀರಿದವು ಗಜಘಟೆಗಳಾವೆಡೆ
ತೋರು ದೊರೆಗಳನೆನುತ ಬೊಬ್ಬಿರಿ
ದೇರಿಸಿದರರಿಭಟರು ನೃಪತಿಗೆ ಜೋದರಂಬುಗಳ || ೪೭ ||
ಪದವಿಭಾಗ-ಅರ್ಥ:ನೂರುರಥದಲಿ ಬಲುಗುದುರೆ ನಾನೂರರಲಿ ಕುರುರಾಯ ಸೂಠಿಯಲಿ(ವೇಗದಲಿ) ಏರಿದನು ಧರ್ಮಜನ ದಳ ನುಗ್ಗಾಯ್ತು ನಿಮಿಷದಲಿ ವೀರಿದವು ಗಜಘಟೆಗಳು+ ಆವೆಡೆ ()ಆವೆಡೆ ಎಲ್ಲಿದ್ದಾನೆ) ತೋರು ದೊರೆಗಳನು ಎನುತ ಬೊಬ್ಬಿರಿದು+ ಎರಿಸಿದರು+ ಅರಿಭಟರು ನೃಪತಿಗೆ ಜೋದರು+ ಅಂಬುಗಳ
ಅರ್ಥ: ಕುರುರಾಯನು ವೇಗದಿಂದ ನೂರು ರಥದಲ್ಲಿರುವ ರಾಜರೊಡನೆ ಬಲಿಷ್ಠ ಕುದುರೆಸವಾರರು ನಾನೂರು ಭಟರೊಡನೆ ಧರ್ಮಜನ ಮೇಲೆ ಏರಿಹೋದನು. ಧರ್ಮಜನ ದಳ ನಿಮಿಷದಲ್ಲಿ ನುಗ್ಗಾಯಿತು. ವೀರಾವೇಶದಿಂದ ಆನೆಗಳೊಡನೆ ಬಂದು ದೊರೆಗಳನ್ನು ತೋರಿಸು, ಆವೆಡೆ ಎಲ್ಲಿದ್ದಾನೆ ಎನ್ನುತ್ತ ಬೊಬ್ಬಿರಿದು ಶತ್ರು ಭಟರು ಯೋಧರು ನೃಪತಿಗೆ ಬಾಣಗಳನ್ನು ಬಿಟ್ಟರು.
ಏನು ಹೇಳುವೆನವನಿಪತಿ ಯಮ
ಸೂನುವಿನ ಸುಕ್ಷಾತ್ರವನು ನಿ
ನ್ನಾನೆಗಳನಗ್ಗಳೆಯ ರಾವ್ತರ ರಥಪದಾತಿಗಳ |
ಭಾನುಬಿಂಬವ ತೆಗೆವ ತಮದ ವಿ
ತಾನದಂತಿರೆ ವಿರಸವಾಯ್ತು ಶ
ರಾನುಗತಶರಜಾಲ ಜನದ ವಿಡಾಯ್ಲತನವೆಂದ || ೪೮ ||
ಪದವಿಭಾಗ-ಅರ್ಥ: ಏನು ಹೇಳುವೆನು+ ಅವನಿಪತಿ ಯಮ ಸೂನುವಿನ ಸುಕ್ಷಾತ್ರವನು(ಸು+ ಕ್ಷಾತ್ರ = ಶೌರ್ಯ) ನಿನ್ನ+ ಆನೆಗಳನು+ ಅಗ್ಗಳೆಯ ರಾವ್ತರ ರಥಪದಾತಿಗಳ ಭಾನುಬಿಂಬವ ತೆಗೆವ ತಮದ ವಿತಾನದಂತೆ ಇರೆ (ವಿತಾನ= 1. ಮಂಡಲ. 2. ಗುಂಪು. 3. ಬೆಟ್ಟದ ತುದಿ,- ಶೃಂಗ. 4. ಧ್ವಜ.) ವಿರಸವಾಯ್ತು (ಪ್ರಯೋಜನವಿಲ್ಲದಂತಾಯಿತು) ಶರಾನುಗತ(ಭಾಣಗಳ ಪ್ರಯೋಗ?) ಶರಜಾಲ ಜನದ ವಿಡಾಯ್ಲತನವು+ ಎಂದ (ವಿಡಾಯಿಗ= ಸೊಕ್ಕು ಅಡಗು.)
ಅರ್ಥ:ಏನು ಹೇಳಲಿ ಅವನಿಪತಿ ಧೃತರಾಷ್ಟ್ರನೇ, ಧರ್ಮಜನ ಸುಕ್ಷಾತ್ರವನು/ ಶೌರ್ಯವನ್ನು. ನಿನ್ನ ಆನೆಗಳನು, ಶೂರ ರಾವುತರನ್ನು, ರಥಪದಾತಿಗಳನ್ನು ಭಾನುಬಿಂಬವನ್ನು ತೆಗೆಯುವ ತಮ/ ಕತ್ತಲೆಯ ಸಾಹಸದಂತೆ ಆಯಿತು. ಕೈಲಾದವ ಬೆಟ್ಟ ಹತ್ತಿ ದಂತೆ ಪ್ರಯೋಜನವಿಲ್ಲದಂತಾಯಿತು. ಧರ್ಮಜನು ಬಾಣಗಳನ್ನ ಬಿಟ್ಟಾಗ ಅವನ ಶರಜಾಲದಿಂದ ಕೌರವನ ಕಡೆಯ ಜನದ ಸೊಕ್ಕು ಅಡಗಿತು, ಎಂದ. (ಪದ್ಯದಲ್ಲಿ ಸ್ವಲ್ಪ ಅಸ್ಪಷ್ಟತೆ ಇದೆ)
ಆಳ ಕೊಂದನು ನೂರ ಪುನರಪಿ
ಸೀಳಿದನು ಮೂನೂರನುಕ್ಕಿನ
ಬೋಳೆಯಂಬಿಗೆ ಬೀರಿದನು ನಾಲ್ಕೈದು ಸಾವಿರವ |
ಮೇಲೆ ಮೂಸಾವಿರದ ಸವಡಿಯ
ಸೀಳಿಸಿದನಿನ್ನೂರು ಕುದುರೆಗೆ
ಕಾಲನೂರಲಿ ಲಾಯ ನೀಡಿತು ನೃಪತಿ ಕೇಳೆಂದ || ೪೯ ||
ಪದವಿಭಾಗ-ಅರ್ಥ: ಆಳ ಕೊಂದನು ನೂರ ಪುನರಪಿ, ಸೀಳಿದನು ಮೂನೂರನು+ ಉಕ್ಕಿನ ಬೋಳೆಯಂಬಿಗೆ (ಒಂದು ಬಗೆಯ ಹರಿತವಾದ ಬಾಣ) ಬೀರಿದನು, ನಾಲ್ಕೈದು ಸಾವಿರವ ಮೇಲೆ ಮೂಸಾವಿರದ ಸವಡಿಯ (ಜೊತೆ.) ಸೀಳಿಸಿದನು+ ಇನ್ನೂರು ಕುದುರೆಗೆ ಕಾಲನ+ ಊರಲಿ ಲಾಯ ನೀಡಿತು ನೃಪತಿ ಕೇಳೆಂದ
ಅರ್ಥ:ಧರ್ಮಜನು ಪುನಃ ನೂರು ಭಟರನ್ನು ಕೊಂದನು. ಅವನು ಮೂರುನೂರು ಸೈನಿಕರನ್ನು ಉಕ್ಕಿನ ಬೋಳೆಯ/ ಹರಿತವಾದ ಬಾಣಗಳನ್ನು ಬೀರಿದನು/ಚಲ್ಲಪಿಆಲ್ಲಿ ಮಾಡಿದನು . ನಾಲ್ಕೈದು ಸಾವಿರವ ಮೇಲೆ ಮೂರುಸಾವಿರ ಜೋಡಿಯನ್ನೂ ಸೀಳಿಸಿದನು. ಅವನ ಬಾಣಗಳು ಇನ್ನೂರು ಕುದುರೆಗೆ ಯಮನ ಊರಿನಲ್ಲಿ ಲಾಯ ನೀಡಿತು (ಸತ್ತವು) ನೃಪತಿ/ ರಾಜನೇ ಕೇಳು ಎಂದ ಸಂಜಯ.
ಚೆಲ್ಲಿದವು ರಥ ಗಾಲಿ ಮುರಿದವು
ಗೆಲ್ಲೆಗೆಡೆದವು ಕೂಡೆ ಕಂಬುಗೆ
ಯಲ್ಲಿ ಕಾಣೆನು ಕೊಚ್ಚಿದಚ್ಚಿನ ಕಡಿದ ಕೀಲುಗಳ |
ಎಲ್ಲಿಯವು ರಥವಾಜಿ ವಾಜಿಗೆ
ತೆಲ್ಲಟಿಯಲೇ ರಥಿಕ ಸೂತರು
ಬಲ್ಲಿದರು ಕುರುಳಿಂಗೆ ಹಾಯ್ದರು ಸುರರ ಸೂಳೆಯರ || ೫೦ ||
ಪದವಿಭಾಗ-ಅರ್ಥ: ಚೆಲ್ಲಿದವು ರಥ ಗಾಲಿ ಮುರಿದವು ಗೆಲ್ಲೆ+ ಗೆ+ ಕೆಡೆದವು ಕೂಡೆ ಕಂಬುಗೆಯಲ್ಲಿ (ಆಯುಧಗಳನ್ನು ತುಂಬುವ- ರಥದ ಒಂದು ಭಾಗ) ಕಾಣೆನು ಕೊಚ್ಚಿದ+ ಅಚ್ಚಿನ ಕಡಿದ ಕೀಲುಗಳ ಎಲ್ಲಿಯವು ರಥವಾಜಿ ವಾಜಿಗೆ ತೆಲ್ಲಟಿಯಲೇ (ಬಳುವಳಿ) ರಥಿಕ ಸೂತರು ಬಲ್ಲಿದರು ಕುರುಳಿಂಗೆ ಹಾಯ್ದರು ಸುರರ ಸೂಳೆಯರ (ದೇವ ಕನ್ಯೆಯರ ).
ಅರ್ಥ:ಆ ಯುದ್ಧದಲ್ಲಿ ರಥದ ಗಾಲಿಗಳು ಮುರಿದವು, ಎಲ್ಲೆಡೆ ಚೆಲ್ಲಿ ಬಿದ್ದವು; ರಥಗಳು ಗೆಲ್ಲಲು ಹೋಗಿ, ಆಗದೆ ಬಿದ್ದವು ಮತ್ತೆ ಅವಗಳ ಆಯುಧಗಳನ್ನು ತುಂಬುವ ರಥದ ಕಂಬುಗೆಯಲ್ಲಿ (ಶಸ್ತ್ರಗಳನ್ನು) ಕಾಣೆನು; ಕೊಚ್ಚಿಹಾಕಿದ ಗಾಡಿ ಅಚ್ಚಿನ, ಕಡಿದ ಕೀಲುಗಳು ಎಲ್ಲಿಯವು- ಎಲ್ಲಿಯೂ ಇರಲಿಲ್ಲ. ರಥವಾಜಿಗಯು ಕುದುರೆಯೇ/ವಾಜಿಗೆ ಬಳುವಳಿ-ತೆಲ್ಲಟಿಯಲೇ; ರಥಿಕರು, ಸೂತರು, ಬಲ್ಲಿದರು, ಎಲ್ಲರೂ ದೇವ ಕನ್ಯೆಯರ ಕುರುಳಿಗೆ ಮರುಳಾಗಿ ಅಲ್ಲಿಗೆ/ಸ್ವರ್ಗಕ್ಕೆ ಓಡಿದರು.
ಉಳಿಗಡಿಯ ನಾನೂರು ಕುದುರೆಗ
ಳಳಿದವರಸನ ಶರಹತಿಗೆ ಮು
ಮ್ಮುಳಿತವಾದುದು ಹತ್ತು ಸಾವಿರ ವಿಗಡ ಪಾಯದಳ |
ಕಳಚಿ ಕೆಡೆದವು ನೂರು ರಥ ವೆ
ಗ್ಗಳೆಯತನವರಿರಾಯರಲಿ ಹೆ
ಕ್ಕಳಿಸೆ ಕಳವಳಿಸಿದನು ಕೌರವರಾಯ ಖಾತಿಯಲಿ || ೫೧ ||
ಪದವಿಭಾಗ-ಅರ್ಥ: ಉಳಿಗಡಿಯ ನಾನೂರು ಕುದುರೆಗಳು+ ಉಳಿದವು+ ಅರಸನ ಶರಹತಿಗೆ ಮುಮ್ಮುಳಿತವಾದುದು (ಮುಮ್+ ಉಳಿತವಾದುದು) ಹತ್ತು ಸಾವಿರ ವಿಗಡ(ಶೂರ) ಪಾಯದಳ (ಆಪತ್-ಪದಾತಿಸೇನೆ) ಕಳಚಿ ಕೆಡೆದವು ನೂರು ರಥ ವೆಗ್ಗಳೆಯತನವು (ಪರಾಕ್ರಮವು)+ ಅರಿರಾಯರಲಿ ಹೆಕ್ಕಳಿಸೆ ಕಳವಳಿಸಿದನು ಕೌರವರಾಯ ಖಾತಿಯಲಿ(ಸಿಟ್ಟು)
ಅರ್ಥ: ಧರ್ಮರಾಯನ ಪ್ರತಿರೋಧ ಯುದ್ಧದಲ್ಲಿ ಕೌರವನ ಸೇನೆಗೆ ಬಹಳ ನಷ್ಟವಾಯಿತು; ಉಳಿತಾಯಲೆಕ್ಕದಲ್ಲಿ ನಾನೂರು ಕುದುರೆಗಳು ಉಳಿದವು. ಧರ್ಮಜ ಅರಸನ ಬಾಣಗಲ ಹೊಡೆತಕ್ಕೆ ಮುಮ್ಮುಳಿತವಾದುದು (ಮುಂದೆ/ ನಂತರ ಉಳಿತವಾದದ್ದು) ಹತ್ತು ಸಾವಿರ ಶೂರ ಆಪತ್-ಪದಾತಿಸೇನೆ. ನೂರು ರಥಗಳು ಒಡೆದು ಪುಡಿಯಾಗಿ ಬಿದ್ದವು. ಹೀಗೆ ಪರಾಕ್ರಮವು ತನ್ನ ಶತ್ರು ರಾಯರಲ್ಲಿ ಹೆಚ್ಚಲು ಕೌರವರಾಯನು ಸಿಟ್ಟಿನಿಂದ ಕಳವಳಕ್ಕೆ ಒಳಗಾದನು.
ಜೋಡಿಸಿದ ಸಾವಿರ ಗಜಂಗಳ
ನೀಡಿರಿದರಂಕುಶದಿ ನೆತ್ತಿಯ
ತೋಡಿಬಿಟ್ಟರು ನೃಪನ ಮತದಲಿ ದೊರೆಯ ಸಮ್ಮುಖಕೆ |
ಜೋಡಿಸಿದ ಬರಿಕಯ್ಯ ಪರಿಘದ
ಲೌಡಿಗಳ ಪಟ್ಟೆಯದಲೊಬ್ಬುಳಿ
ಗೂಡಿ ತೂಳಿದವಾನೆಗಳು ಯಮಸುತನ ಪಡಿಮುಖಕೆ || ೫೨ ||
ಪದವಿಭಾಗ-ಅರ್ಥ: ಜೋಡಿಸಿದ ಸಾವಿರ ಗಜಂಗಳನು+ ಈಡಿ+ ಇರಿದರು(ಹಾಯಿಸು. ಚಾಚು.)+ ಅಂಕುಶದಿ ನೆತ್ತಿಯ ತೋಡಿಬಿಟ್ಟರು ನೃಪನ ಮತದಲಿ (ಆದೇಶದಂತೆ) ದೊರೆಯ ಸಮ್ಮುಖಕೆ ಜೋಡಿಸಿದ ಬರಿಕಯ್ಯ ಪರಿಘದಲಿ+ ಔಡಿಗಳ ಪಟ್ಟೆಯದಲಿ (ಆನೆಗೆ ತಲೆಯಿಂದ ಸೊಂಡಿಲ ವರೆಗೆ ಇಳಿಬಿಡುವ ಅಲಂಕಾರದ ವಸ್ತ್ರ.)+ ಒಬ್ಬುಳಿಗೂಡಿ ತೂಳಿದವು (ನುಗ್ಗಿದವು)+ ಅನೆಗಳು ಯಮಸುತನ ಪಡಿಮುಖಕೆ(ಹತ್ತಿರ).
ಅರ್ಥ:ಕೌರವನು ಪುನಃ ಸಾವಿರ ಆನೆಗಳನ್ನು ತರಿಸಿ ಸೇನೆಗೆ ಜೋಡಿಸಿದನು. ಆ ಆನೆಗಳಿಗೆ ಅಂಕುಶದಿಂದ ನೆತ್ತಿಯ ಮೇಲೆ ಆಳವಾಗಿ ಚುಚ್ಚಿ ನೃಪ ಕೌರವನ ಆದೇಶದಂತೆ ಬರಿಕಯ್ಯಲ್ಲಿ ಹಿಡಿದ ಪರಿಘವನ್ನು ಆನೆಯ ತಲೆಗೆ ಕಟ್ಟಿದ ಪಟ್ಟೆಯಕ್ಕೆ ಜೋಡಿಸಿ ಒಟ್ಟಾಗಿ ಸೇರಿಸಿ ದೊರೆ ಧರ್ಮಜನ ಸಮ್ಮುಖಕ್ಕೆ ಬಿಟ್ಟರು. ಅನೆಗಳು ಯಮಸುತ ಧರ್ಮಜನ ಪಡಿಮುಖಕ್ಕೆ ನುಗ್ಗಿದವು.
ಎಲೆಲೆ ಭೂಪತಿ ಸಿಕ್ಕಿದನು ಗಜ
ಬಲದ ಭಾರಣೆ ಬಲುಹೆನುತ ಬಲ
ಕಳವಳಿಸೆ ಕೇಳಿದನಲೈ ಕಲಿಭೀಮನಾಚೆಯಲಿ |
ಪ್ರಳಯ ದಿವಸದಿ ಶಿಖಿಯ ಡಾವರ
ದೊಳಗೆ ಶ್ರವಮಾಡಿದನೆನಲು ಮಿಗೆ
ಮೊಳಗಿ ಮಂಡಿಯನಿಕ್ಕಿ ಮಲೆತನು ಸಿಂಹನಾದದಲಿ || ೫೩ ||
ಪದವಿಭಾಗ-ಅರ್ಥ: ಎಲೆಲೆ ಭೂಪತಿ ಸಿಕ್ಕಿದನು ಗಜಬಲದ ಭಾರಣೆ ಬಲುಹು+ ಎನುತ ಬಲ ಕಳವಳಿಸೆ ಕೇಳಿದನಲೈ ಕಲಿ ಭೀಮನು+ ಆಚೆಯಲಿ ಪ್ರಳಯ ದಿವಸದಿ ಶಿಖಿಯ ಡಾವರದೊಳಗೆ ಶ್ರವ ಮಾಡಿದನು+ ಎನಲು ಮಿಗೆ ಮೊಳಗಿ ಮಂಡಿಯನು+ ಇಕ್ಕಿ ಮಲೆತನು ಸಿಂಹನಾದದಲಿ
  • ಭಾರಣೆ= ಹೊರೆ. 2. ಆಧಿಕ್ಯ. 3. ಹಿರಿಮೆ.; ಬಲುಹು = ಹೆಚ್ಚಿನದು,ಶಕ್ತಿ; ಬಲ= ಸೇನೆ; ಶಿಖಿಯ= ಅಗ್ನಿಯ; ಡಾವರ= ತೀವ್ರತೆ. ಪ್ರತಾಪ.; ಶ್ರವ = ವಾಗ್ದಾನ; ಮಲೆತನು= ಪ್ರತಿಭಟಿಸಿದನು.
ಅರ್ಥ: ಎಲೆಲೆ ಭೂಪತಿ ಧರ್ಮಜನು ಕೌರವನ ಆನೆಯ ದಳಕ್ಕೆ ಸಿಕ್ಕಿದನು. ಗಜಬಲದ ಬಲುಹು/ಬಲ ಹೆಚ್ಚಿನದು ಎನ್ನುತ್ತಾ ಧರ್ಮಜನ ಸೇನೆ ಚಿಂತೆಗೆ ಒಳಗಾಗಲು, ಇದನ್ನು ಆಚೆಯಲ್ಲಿದ್ದ ಕಲಿಭೀಮನು ಕೇಳಿದನಲ್ಲಾ; ಕೂಡಲೆ ಅವನು ಪ್ರಳಯ ದಿವಸದ ಬಡಬಾಗ್ನಿಯ ಪ್ರತಾಪದಿಂದ ಧರ್ಮಜನನ್ನು ರಕ್ಷಿಸಲು ವಾಗ್ದಾನ ಮಾಡಿದನು ಎನ್ನುವಂತೆ, ಬಹಳ ಆರ್ಭಟಿಸಿ ಮಂಡಿಯನು ಊರಿ ಸಿಂಹನಾದಮಾಡಿ ಪ್ರತಿಭಟಿಸಿದನು.
ಚೆಲ್ಲಿದವು ಗಜಯೂಥವಪ್ರತಿ
ಮಲ್ಲ ಭೀಮನಗದೆಯ ಘಾತಿಯ
ಘಲ್ಲಣೆಗೆ ಕಂಠಣಿಸಿದವು ಟೆಂಠಣಿಸುವಾನೆಗಳು |
ಸೆಲ್ಲೆಹದ ಮಳೆಗರೆದು ಭೀಮನ
ಘಲ್ಲಿಸಿದರಾರೋಹಕರು ಬಲು
ಬಿಲ್ಲ ಜಂತ್ರದ ನಾಳಿಯಿಂಬಿನ ಸರಳ ಸಾರದಲಿ || ೫೪ ||
ಪದವಿಭಾಗ-ಅರ್ಥ: ಚೆಲ್ಲಿದವು ಗಜಯೂಥವ ಪ್ರತಿಮಲ್ಲ ಭೀಮನ ಗದೆಯ ಘಾತಿಯ ಘಲ್ಲಣೆಗೆ ಕಂಠಣಿಸಿದವು ಟೆಂಠಣಿಸುವ+ ಆನೆಗಳು ಸೆಲ್ಲೆಹದ ಮಳೆಗರೆದು ಭೀಮನ ಘಲ್ಲಿಸುದರು+ ಆರೋಹಕರು ಬಲುಬಿಲ್ಲ ಜಂತ್ರದ ನಾಳಿಯಿಂಬಿನ ಸರಳ ಸಾರದಲಿ
  • ಟೆಂಠಣಿಸು=ವಿರೋಧಿಸು. 2. ಅಂಜು; ಕಂಠಣಿಸು= 1. ಕುಗ್ಗು. 2. ಗೋಳಾಡು.;ಘಾತಿ= ಕೊಲ್ಲುವ ಹೊಡೆತ; ಘಲ್ಲಣೆ= 1. ಕಾಟ. 2. ಗಾಬರಿಗೊಳಿಸುವ ಧ್ವನಿ.; ಸೆಲ್ಲೆಹ= ಒಂದು ಬಗೆಯ ಆಯುಧ, ಬಾಣ, ಈಟಿ.; ಘಲ್ಲಿಸು= ಪೀಡಿಸು; ಜಂತ್ರ= ಮೇಳವಾದನ.; ನಾಳಿಯಿಂಬು= ಉದ್ದಬಾಣ ಈಟಿ,;ಸರಳು= ಬಾಣ; ಸಾರ= ಅತಿಶಯವಾದ ಸತ್ತ್ವದಿಂದ ಕೂಡಿದ.
ಅರ್ಥ: ಚೆಲ್ಲಿದವು ಗಜಯೂಥವ ಪ್ರತಿಮಲ್ಲನಾದ ಭೀಮನ ಗದೆಯ ಹೊಡೆತದ ಹಿಂಸೆಗೆ ಟೆಂಠಣಿಸುವ/ ಎದುರುಬಿದ್ದ ಆನೆಗಳು ಕುಗ್ಗಿ ಕೆಳಗೆ ಬಿದ್ವವು. ಬಾಣ ಭರ್ಚಿಗಳ ಮಳೆಯನ್ನು ಭೀಮನನ್ನು ಆನೆಯ ಮೆಲಿನ ಆರೋಹಕರು/ ಮಾವುತರು ಬಹಳ ಬಿಲ್ಲುಗಳ ಠೇಂಕಾರ ಶಬ್ದದ ಮೇಳವಾದನದ ಉದ್ದ ಅಂಬಿನ- ಸರಳ(ಬಾಣದ ಸಂಗೀತ) ಸಾರದ ವಾದ್ಯದಿಂದ ಹಿಂಸಿದಸಿದರು.
ಜನಪ ಕೇಳೈ ಜಡಿವ ತುಂತು
ರ್ವನಿಗಳನು ಬಿರುಗಾಳಿ ಮೊಗೆವವೊ
ಲನಿತು ಸೆಲ್ಲೆಹ ಶರವಳೆಯ ಗದೆಯಿಂದ ಘಟ್ಟಿಸಿದ |
ಜಿನುಗುವಳೆಯಲಿ ಪರ್ವತದ ಶಿಲೆ
ನೆನೆವುದೇ ಗಜಸೇನೆ ಕದಳೀ
ವನವಲೇ ಕಲಿಭೀಮದಿಗ್ಗಜ ಗಾಢ ಪದಹತಿಗೆ || ೫೫ ||
ಪದವಿಭಾಗ-ಅರ್ಥ: ಜನಪ ಕೇಳೈ ಜಡಿವ ತುಂತುರ್+ ವ+ ಹನಿಗಳನು ಬಿರುಗಾಳಿ ಮೊಗೆವವೊಲ್ (ಮೊಗೆದು ತೆಗೆ)+ ಅನಿತು(ಎಲ್ಲಾ) ಸೆಲ್ಲೆಹ ಶರವಳೆಯ ಗದೆಯಿಂದ ಘಟ್ಟಿಸಿದ ಜಿನುಗುವಳೆಯಲಿ ಪರ್ವತದ ಶಿಲೆ ನೆನೆವುದೇ ಗಜಸೇನೆ ಕದಳೀವನವಲೇ ಕಲಿಭೀಮದಿಗ್ಗಜ ಗಾಢ ಪದಹತಿಗೆ.
ಅರ್ಥ:ರಾಜನೇ ಕೇಳು, ಜಡಿದು ಸುರಿಯುವ ತುಂತುರು ಹನಿಗಳನ್ನು ಬಿರುಗಾಳಿ ಮೊಗೆದು ತೆಗೆಯುವಂತೆ ಆ ಎಲ್ಲ ಅ ಸೆಲ್ಲೆಹ, ಬಾಣಗಳ ಮಳೆಯನ್ನು ಭೀಮನು ಗದೆಯಿಂದ ಹೊಡೆದು ಹಾಕಿದನು. ಜಿನುಗುಮಳೆಯಲ್ಲಿ ಪರ್ವತದ ಬಂಡೆ ನೆನೆದು ಮೆತ್ತಗಾಗುವುದೇ? ಕಲಿ ಭೀಮನೆಂಬ ದಿಗ್ಗಜದ ಬಲವಾದ ಪಾದಗಳ ಘಟ್ಟನೆಗೆ ಕೌರವನ ಗಜಸೇನೆಯು ಬಾಳೆಯ ತೋಟವಾಯಿತಲ್ಲಾ!
ಅವನಿಪನ ಹಿಂದಿಕ್ಕಿ ಗಜಯೂ
ಥವ ವಿಭಾಡಿಸಿ ಹಿಂಡ ಕೆದರಿದ
ನವಗಡಿಸಿದನು ಹಾರಲೂದಿದನೊದೆದು ಬೊಬ್ಬಿರಿದ |
ತಿವಿದನಣಸಿನಲೂರಿ ಮೊನೆಯಲಿ
ಸವಡಿಯಾನೆಯನೆತ್ತಿದನು ಬಲ
ಬವರಿಯೆಡಬವರಿಯಲಿ ತಡೆಗಾಲ್ವೊಯ್ದನಾ ಭೀಮ || ೫೬ ||
ಪದವಿಭಾಗ-ಅರ್ಥ: ಅವನಿಪನ ಹಿಂದಿಕ್ಕಿ ಗಜಯೂಥವ (ಆನೆಯ ಹಿಂಡು) ವಿಭಾಡಿಸಿ ಹಿಂಡ ಕೆದರಿದನು+ ಅವಗಡಿಸಿದನು(ಸೋಲಿಸು) ಹಾರಲು+ ಊದಿದನು+ ಒದೆದು ಬೊಬ್ಬಿರಿದ, ತಿವಿದನು+ ಅಣಸಿನಲಿ( ಆಯುಧದ ಮೊನೆ - ತುದಿ.) + ಊರಿ ಮೊನೆಯಲಿ ಸವಡಿಯ(ಜೊತೆಯಲ್ಲಿದ್ದ)+ ಆನೆಯನು+ ಎತ್ತಿದನು ಬಲಬವರಿಯ+ ಎಡಬವರಿಯಲಿ ತಡೆಗಾಲ್ವೊಯ್ದನು+ ಆ ಭೀಮ
ಅರ್ಥ: ಆ ಭೀಮನು ಅವನಿಪ ಧರ್ಮಜನನ್ನು ಹಿಂದಕ್ಕೆ ಇಟ್ಟು, ಆನೆಯ ಹಿಂಡನ್ನು ಹೊಡೆದು ಆ ಹಿಂಡನ್ನು ಚೆಲ್ಲಾಪಿಲ್ಲಿಮಾಡಿದನು; ಸೋಲಿಸಿದನು. ಅವು ಹಾರುವಂತೆ ಊದಿದನು, ಮತ್ತೆ ಅವನ್ನು ಒದೆದು ಬೊಬ್ಬಿರಿದನು. ಅವುಗಳನ್ನು ತಿವಿದನು; ಆಯುಧದ ಮೊನೆಯನ್ನು ಊರಿ, ಮೊನೆಯಲ್ಲಿ ಜೊತೆಯಲ್ಲಿದ್ದ ಆನೆಯನ್ನು ಎತ್ತಿದನು. ಬಲಗಡೆಯ ಹೋರಾಟ ಮತ್ತು ಎಡಭಾಗದ ಹೋರಾಟಗಳಲ್ಲಿ ತಡೆಗಾಲಿನಿಂದ ಹೊಯ್ದನು/ ಒದ್ದನು.
ಒರಲಿ ತಿವಿದನು ಕರಿಯ ಬರಿಯೆಲು
ಮುರಿಯಲೊದೆದನು ಸದೆದು ದಾಡೆಯ
ತಿರುಹಿ ಕಿತ್ತನು ಬಿಕ್ಕಿದನು ಬಿದುವಿನಲಿ ಬಲುಗದೆಯ |
ಜರೆದನಾರೋಹಕರ ತಲೆಗಳ
ತರಿದು ಬಿಸುಟನು ಗಜಘಟೆಯ ಥ
ಟ್ಟೊರಗಿದವು ದಡಿಸಹಿತ ನವರುಧಿರಾಂಬುಪೂರದಲಿ || ೫೭ ||
ಪದವಿಭಾಗ-ಅರ್ಥ: ಒರಲಿ ತಿವಿದನು ಕರಿಯ(ಆನೆ) ಬರಿಯೆಲು ಮುರಿಯಲು+ ಒದೆದನು ಸದೆದು (ಬಡಿದು) ದಾಡೆಯ ತಿರುಹಿ ಕಿತ್ತನು ಬಿಕ್ಕಿದನು ಬಿದುವಿನಲಿ ಬಲುಗದೆಯ ಜರೆದನು+ ಆರೋಹಕರ (ಮಾವುತರನ್ನು) ತಲೆಗಳ ತರಿದು(ಕತ್ತರಿಸಿ) ಬಿಸುಟನು, ಗಜಘಟೆಯ ಥಟ್ಟು+ ಒರಗಿದವು ದಡಿಸಹಿತ(ಹೊದಿಸಿದ ಬಟ್ಟೆಯ ಸಹಿತ) ನವ+ ರುಧಿರಾಂಬು (ರಕ್ತ) ಪೂರದಲಿ.
ಅರ್ಥ:ಆರ್ಭಟಿಸಿ ಆನೆಗಲನ್ನು ತಿವಿದನು; ಅವುಗಳ ಬರಿಯೆಲುಬು ಮುರಿಯುವಂತೆ ಒದೆದನು; ಅವುಗಳನ್ನು ಬಡಿದು ದಾಡೆಯನ್ನು ತಿರುಹಿಸಿ ಕಿತ್ತನು; ಗುಂಪಿನಲ್ಲಿ ದೊಡ್ಡಗದೆಯನ್ನು ಬಿಕ್ಕಿದನು/ ತೂರಾಡಿಸಿದನು; ಮಾವುತರನ್ನು ಜರೆದನು/ ಹಂಗಿಸಿದನು; ಅವರ ತಲೆಗಳನ್ನು ತರಿದು ಬಿಸುಟನು; ಗಜಘಟೆಯ ಸಮೂಹ ದಡಿಸಹಿತ ಹೊಸದಾಗಿ ಚಿಲ್ಲಿದ ರಕ್ತದ ಪೂರದಲ್ಲಿ ಸತ್ತು ನೆಲಕ್ಕೆ ಒರಗಿದವು.
ಗುಳವನುಗಿದಾರೋಹಕರ ಮುಂ
ದಲೆಯ ಸೆಳೆದೊಡಮೆಟ್ಟಿದನು ಮಂ
ಡಳಿಸಿದೊಡ್ಡಿನ ಮೇಲೆ (ತಾ ಹರಿ)ಹಾಯ್ದನುರವಣಿಸಿ |
ಕಳಚಿದನು ದಾಡೆಗಳ ಬರಿಕೈ
ಗಳನು ತುಂಡಿಸಿ ವಾಲಧಿಯ ಬರ
ಸೆಳೆದು ಕೊಡಹಿದನಾನೆಗಳ ನಾನಾವಿಧಾನದಲಿ || ೫೮ ||
ಪದವಿಭಾಗ-ಅರ್ಥ: ಗುಳವನುಗಿದು (ಕಿರುನಾಲಗೆಯ ಪ್ರದೇಶ.)+ ಆರೋಹಕರ ಮುಂದಲೆಯ ಸೆಳೆದು+ ಒಡಮೆಟ್ಟಿದನು ಮಂಡಳಿಸಿದ+ ಒಡ್ಡಿನ ಮೇಲೆ (ತಾ ಹರಿ)ಹಾಯ್ದನು+ ಉರವಣಿಸಿ (ಪರಾಕ್ರಮದಿಂದ) ಕಳಚಿದನು ದಾಡೆಗಳ ಬರಿಕೈಗಳನು ತುಂಡಿಸಿ ವಾಲಧಿಯ (ಕೂದಲಿನಿಂದ ತುಂಬಿದ ಬಾಲ.) ಬರಸೆಳೆದು ಕೊಡಹಿದನು+ ಆನೆಗಳ ನಾನಾ ವಿಧಾನದಲಿ
ಅರ್ಥ: ಆನೆಗಳ ಕಿರುನಾಲಗೆಯನ್ನು ಉಗಿದು, ಮಾವುತರ ಮುಂದಲೆಯನ್ನು ಸೆಳೆದು, ಒಡಲನ್ನು ಮೆಟ್ಟಿದನು. ಮಂಡಳಿಸಿ/ ಆವರಿಸಿ ಸುತ್ತುವರಿದು ಬಂದ ಆನೆಗಳ ಒಡ್ಡಿನ/ಗುಂಪಿನ ಮೇಲೆ ಅವನು ಹರಿಹಾಯ್ದನು ಆಕ್ರಮಿಸಿದನು; ಪರಾಕ್ರಮದಿಂದ ಆನೆಗಳ ದಾಡೆಗಳನ್ನು ಕಳಚಿದನು; ಬರಿಕೈಗಳನು ತುಂಡಿಸಿ/ ಸೇರಿಸಿ ಕೂದಲಿನಿಂದ ತುಂಬಿದ ಅವುಗಳ ಬಾಲಗಳನ್ನು ಬರಸೆಳೆದು ಆನೆಗಳನ್ನು ನಾನಾ ವಿಧಾನದಲ್ಲಿ ಕೊಡಹಿ ಕೆಡಗಿದನು.
ಕೋಡ ಕಿತ್ತನು ನೂರು ಗಜವ ವಿ
ಭಾಡಿಸಿದನಿನ್ನೂರ ನಡಹಾ
ಯ್ದೋಡಿದವು ನೂರಾನೆ ಭೀಮನ ಗದೆಯ ಗಾಳಿಯಲಿ |
ಜೋಡಿಗೆಡೆದವು ನೂರು ಮಗ್ಗುಲ
ನೀಡಿದವು ನಾನೂರು ಪುನರಪಿ
ಕೇಡುಗಂಡವು ನೂರು ಭೀಮನ ಗದೆಯ ಘಾಯದಲಿ || ೫೯ ||
ಪದವಿಭಾಗ-ಅರ್ಥ: ಕೋಡ ಕಿತ್ತನು ನೂರು ಗಜವ ವಿಭಾಡಿಸಿದನು+ ಇನ್ನೂರ, ನಡಹಾಯ್ದು+ ಒಡಿದವು ನೂರಾನೆ, ಭೀಮನ ಗದೆಯ ಗಾಳಿಯಲಿ (ಬೀಸುವಿಕೆಯಲ್ಲಿ) ಜೋಡಿಗೆಡೆದವು ನೂರು, ಮಗ್ಗುಲ ನೀಡಿದವು ನಾನೂರು, ಪುನರಪಿ ಕೇಡುಗಂಡವು ನೂರು, ಭೀಮನ ಗದೆಯ ಘಾಯದಲಿ
ಅರ್ಥ: ಭೀಮನು ನೂರು ಆನೆಗಳ ದಂತದಕೋಡುಗಳನ್ನು ಕಿತ್ತನು; ಇನ್ನೂರು ಗಜಗಳನ್ನು ಹೊಡೆದುಹಾಕಿದನು. ನೂರು ಆನೆಗಳು ಹೆದರಿ ಅಡ್ಡಹಾಯ್ದು ಒಡಿದವು, ಭೀಮನ ಗದೆಯ ಬೀಸುವಿಕೆಯ ಗಾಳಿಯಲ್ಲಿ ನೂರು ಆನೆಗಳು ಜೋಡಿತಪ್ಪಿ ನೆಡೆದವು; ನಾನೂರು ಆನೆಗಳು ಪೆಟ್ಟುತಿಂದು ನೆಲಕ್ಕೆ ಮಗ್ಗುಲ ನೀಡಿದವು; ಭೀಮನ ಗದೆಯ ಘಾಯದಲ್ಲಿ ಪುನರಪಿ/ ಮತ್ತೆ ನೂರು ಆನೆಗಳು ಪಟ್ಟುತಿಂದು ಕೇಡುಗಂಡವು/ ನರಳಿದವು.
ಧರಣಿಪತಿ ಕೇಳ್ ಭೀಮಸೇನನ
ಧರಧುರದ ದೆಖ್ಖಾಳದಲಿ ನ
ಮ್ಮರಸ ನಿಂದನು ಕಾದಿದನು ನೂರಾನೆಯಲಿ ಮಲೆತು |
ಸರಳ ಸಾರದಲನಿಲಜನ ರಥ
ತುರಗವನು ಸಾರಥಿಯನಾತನ
ಭರವಸವ ನಿಲಿಸಿದನು ನಿಮಿಷಾರ್ಧದಲಿ ಕುರುರಾಯ || ೬೦ ||
ಪದವಿಭಾಗ-ಅರ್ಥ: ಧರಣಿಪತಿ ಕೇಳ್ ಭೀಮಸೇನನ ಧರಧುರದ ದೆಖ್ಖಾಳದಲಿ ನಮ್ಮ+ ಅರಸ ನಿಂದನು, ಕಾದಿದನು ನೂರಾನೆಯಲಿ ಮಲೆತು, ಸರಳ(ಬಾಣ) ಸಾರದಲಿ+ ಅನಿಲಜನ ರಥ ತುರಗವನು ಸಾರಥಿಯನು+ ಆತನ ಭರವಸವ ನಿಲಿಸಿದನು ನಿಮಿಷಾರ್ಧದಲಿ ಕುರುರಾಯ.
ಅರ್ಥ: ಧರಣಿಪತಿ ಧೃತರಾಷ್ಟ್ರನೇ ಕೇಳು, ಭೀಮಸೇನನ ಧರಣಿಯ ಯುದ್ಧದ ಉಗ್ರತೆಯಲ್ಲಿ ನಮ್ಮ ಅರಸ ಕೌರವನು ಎದುರು ನಿಂತನು. ಅವನು ನೂರು ಆನೆಯ ಪಡೆಯಲ್ಲಿ ಮಲೆತು/ಪರಾಕ್ರಮದಿಂದ ಯುದ್ಧಮಾಡಿದನು. ಬಿಲ್ಲು ಯುದ್ಧದಲ್ಲಿ ಅನಿಲಜ ಭೀಮನ ರಥವನ್ನೂ ಕುದುರೆಯನ್ನೂ ಸಾರಥಿಯನ್ನೂ ಹೊಡೆದು ಆತನ ಭರವಸವ/ ಗೆಲುವಿನ ಭರವಸೆಯನ್ನು ಕುರುರಾಯನು ನಿಮಿಷಾರ್ಧದಲಿ ನಿಲ್ಲಿಸಿದನು.
ಒದೆದು ರಥವನು ಧರೆಗೆ ಧುಮ್ಮಿ
ಕ್ಕಿದನು ಕೌರವರಾಯ ಮೈದೋ
ರಿದೆಯಲಾ ಕಲಿಯಾಗು ಪಾಲಿಸದಿರು ಪಲಾಯನವ |
ರದನಿಗಳ ರೌದ್ರಾಹವಕೆ ಕೋ
ವಿದನಲೇ ಕೊಳ್ಳೆನುತ ಕರಿಗಳ
ಕೆದರಿದನು ಕಲಿಜೋದರಂಬಿನ ಸರಿಯ ಸೈರಿಸುತ || ೬೧ ||
ಪದವಿಭಾಗ-ಅರ್ಥ: ಒದೆದು (ಬಿಟ್ಟು) ರಥವನು ಧರೆಗೆ ಧುಮ್ಮಿಕ್ಕಿದನು ಕೌರವರಾಯ ಮೈದೋರಿದೆಯಲಾ ಕಲಿಯಾಗು ಪಾಲಿಸದಿರು(ಅನುಸರಿಸಬೇಡ) ಪಲಾಯನವ ರದನಿಗಳ (ಹಲ್ಲುಗಳ) ರೌದ್ರಾಹವಕೆ ಕೋವಿದನಲೇ (ಕೋವಿದ- ಪಂಡಿತ) ಕೊಳ್ಳು+ ಎನುತ ಕರಿಗಳ ಕೆದರಿದನು ಕಲಿಜೋದರ (ಶೂರ ಯೋಧರ)+ ಅಂಬಿನ ಸರಿಯ ಸೈರಿಸುತ.
ಅರ್ಥ: ಆಗ ಭೀಮನು ರಥವನು ಬಿಟ್ಟು ಭೂಮಿಗೆ ಧುಮ್ಮಿಕ್ಕಿದನು; ಕೌರವನನ್ನು ಕುರಿತು ಮೈದೋರಿದೆಯಲಾ/ ನನ್ನ ಎದುರಿಗೆ ಸಿಕ್ಕಿದೆಯಲ್ಲವೇ, ಕಲಿಯಾಗು/ಶುರನಂತೆ ಹೋರಾಡು; ಪಲಾಯನ ಮಾಡಬೇಡ ಎಂದನು. ಆಗ ಕೌರವನು ಹಲ್ಲುಕಡಿದು ರೌದ್ರತರ ಯುದ್ಧಕ್ಕೆ ನೀನು ಜಾಣನಲ್ಲವೇ! ಇಗೋ ತೆಗೆದುಕೋ ಎನ್ನತ್ತಾ, ಬೀಮನ ಕಡೆಯ ಶೂರ ಯೋಧರ ಬರುವ ಅಂಬಿನ ಏಟನ್ನು ಸೈರಿಸುತ್ತಾ ಆನೆಗಳನ್ನು ಕೆದರಿ/ರೇಗಿಸಿ ಅವನ ಮೇಲೆ ಬಿಟ್ಟನು.
ಏನ ಹೇಳುವೆನವನಿಪನ ಮದ
ದಾನೆ ಮುರಿದವು ಭೀಮಸೇನನೊ
ವೈನತೇಯನೊ ಕರಿಗಳೋ ಕಾಳೋರಗನ ದಳವೊ |
ಮಾನನಿಧಿ ಮುರಿವಡೆದನೈ ವೈ
ರಾನುಬಂಧದ ಬೇಗುದಿಯ ದು
ಮ್ಮಾನ ದಳವೇರಿದುದು ಹೇರಿತು ಭೀತಿ ಭೂಪತಿಗೆ || ೬೨ ||
ಪದವಿಭಾಗ-ಅರ್ಥ: ಏನ ಹೇಳುವೆನು+ ಅವನಿಪನ ಮದದಾನೆ ಮುರಿದವು ಭೀಮಸೇನನೊ, ವೈನತೇಯನೊ ಕರಿಗಳೋ ಕಾಳೋರಗನ ದಳವೊ, ಮಾನನಿಧಿ ಮುರಿವಡೆದನೈ ವೈರ+ ಅನುಬಂಧದ ಬೇಗುದಿಯ ದುಮ್ಮಾನದ+ ಅಳವು (ಶಕ್ತಿ)+ ಏರಿದುದು ಹೇರಿತು ಭೀತಿ ಭೂಪತಿಗೆ.
ಅರ್ಥ: ಏನನ್ನು ಹೇಳಲಿ! ಅವನಿಪ ಕೌರವನ ಮದದಾನೆಗಳು ಭೀಮಸೇನನ್ನು ಬಡಿದವೇ; ಭೀಮನನ್ನು ಆಕ್ರಮಿಸಿದ ಅವು ವೈನತೇಯನೊ/ ಸೋಲಿಲ್ಲದ ಪರಾಕ್ರಮದ ಗರುಡನೋ, ಅಥವಾ ಆನೆಗಳೋ, ಅಥವಾ ಕಾಳೋರಗನ ದಳವೊ/ ಘಟಸರ್ಪಗಳ ಸೇನೆಯೋ ಎಂಬಂತಿತ್ತು. ಮಾನನಿಧಿಯಾದ ಭೀಮನು ಮುರಿವಡೆದನೈ/ ನೊಂದು ಹಿಮ್ಮಟ್ಟಿದನೇ? ಈ ದಾಯಾದಿ ವೈರವು ಸೋದರನಾದ ಭೀಮನ ಅನುಬಂಧದಲ್ಲಿ ಅವನಿಗಾದ ನೋವಿನ ಬೇಗುದಿಯ/ ಸಂಕಟದ, ದುಮ್ಮಾನದ/ ದುಃಖದ, ಅಳವು/ ತೀವ್ರ ಪರಿಣಾಮವು ಧರ್ಮಜನಲ್ಲಿ ಏರಿದುದು/ ಹೆಚ್ಚಿತು. ಭೂಪತಿ ಧರ್ಮಜನಿಗೆ, ಭೀಮನಿಗೆ ಏನಾಗುವುದೋ ಎಂಬ ಭೀತಿ- ಚಿಂತೆ ಮನಸ್ಸಿಗೆ ಹೇರಿತು/ ಹತ್ತಿತು. ಆದರೆ ಕೌರವನೂ ಸೈನ್ಯವೆಲ್ಲಾ ನಷ್ಟವಾಗಿ ಏಕಾಂಗಿಯಾಗಿದ್ದನು.
ನೂರು ಗಜವಕ್ಕಾಡಲವನಿಪ
ನೇರಿದನು ವಾರುವನನೆಡದಲಿ
ಜಾರಿದನು ಸೂಠಿಯಲಿ ದುವ್ವಾಳಿಸಿ ತುರಂಗಮವ |
ಅರು ಸಾವಿರ ಕುದುರೆ ರಥವೈ
ನೂರು ಗಜಘಟೆ ನೂರು ಮೂವ
ತ್ತಾರು ಸಾವಿರ ಪಾಯದಳದಲಿ ಬಂದನಾ ಶಕುನಿ || ೬೩ ||
ಪದವಿಭಾಗ-ಅರ್ಥ: ನೂರು ಗಜವು+ ಅಕ್ಕಾಡುಲು(ಪೂರ್ತಿ ನಷ್ಟವಾಗು.) + ಅವನಿಪನು+ ಏರಿದನು ವಾರುವನನು (ವಾರುವ= ಕುದುರೆ)+ ಎಡದಲಿ ಜಾರಿದನು ಸೂಠಿಯಲಿ(ವೇಗವಾಗಿ) ದುವ್ವಾಳಿಸಿ(ನಾಗಾಲೋಟದಲ್ಲಿ) ತುರಂಗಮವ ಅರು ಸಾವಿರ ಕುದುರೆ ರಥವು+ ಐನೂರು ಗಜಘಟೆ ನೂರು ಮೂವತ್ತಾರು ಸಾವಿರ ಪಾಯದಳದಲಿ ಬಂದನು+ ಆ ಶಕುನಿ
ಅರ್ಥ:ಆದರೆ ಭೀಮನು ಕೌರವನ ಗಜ ಸೇನೆಯನ್ನೂ ನಾಶಮಾಡಿದನು. ಕೌರವನ ಕಡೆಯ ನೂರು ಆನೆಗಳು ಪೂರ್ತಿ ನಷ್ಟವಾಗಲು ಅವನಿಪ ಕೌರವನು ಕುದುರೆಯನ್ನು ಏರಿದನು. ನಂತರ ಎಡಕ್ಕೆ ವೇಗವಾಗಿ ಕುದುರೆಯ ನಾಗಾಲೋಟದಲ್ಲಿ ಜಾರಿಹೋದನು. ಅರು ಸಾವಿರ ಕುದುರೆಗಳು, ರಥವು ಐನೂರು, ಗಜಘಟೆ(ಆನೆಗಳು) ನೂರು, ಮೂವತ್ತಾರು ಸಾವಿರ ಪಾಯದಳದ/ ಕಾಲುದಳದೊಡನೆ ಆ ಶಕುನಿ ಬಂದನು.
ಶಕುನಿ ಕಂಡನು ಕೌರವೇಂದ್ರನ
ನಕಟನೀನೇಕಾಂಗದಲಿ ಹೋ
ರಿಕೆಗೆ ಬಂದೈ ಗರುವ ಗುರುಸುತ ಭೋಜ ಗೌತಮರು |
ಸಕಲಬಲ ನುಗ್ಗಾಯ್ತೆ ಸಮಸ
ಪ್ತಕರು ನಿನ್ನಯ ಮೂಲಬಲವಿದೆ
ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ || ೬೪ ||
ಪದವಿಭಾಗ-ಅರ್ಥ: ಶಕುನಿ ಕಂಡನು ಕೌರವೇಂದ್ರನನು+ ಅಕಟ ನೀನು+ ಏಕಾಂಗದಲಿ ಹೋರಿಕೆಗೆ ಬಂದೈ ಗರುವ ಗುರುಸುತ ಭೋಜ ಗೌತಮರು ಸಕಲಬಲ ನುಗ್ಗಾಯ್ತೆ ಸಮಸಪ್ತಕರು ನಿನ್ನಯ ಮೂಲಬಲವಿದೆ ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ
ಅರ್ಥ: ಅಷ್ಟು ಹೊತ್ತಿಗೆ ಶಕುನಿ ಏಕಾಂಗಿಯಾದ ಕೌರವೇಂದ್ರನನ್ನು ಕಂಡನು. ಅವನು, 'ಅಕಟ ನೀನು ಏಕಾಂಗಿಯಾಗಿ ಹೋರಾಟಕ್ಕೆ ಬಂದೆಯಾ! ಗರುಕೃಪ, ಗುರುಸುತ ಅಶ್ವತ್ಥಾಮ, ಭೋಜ, ಗೌತಮರು, ಸಕಲಬಲವೂ ನುಗ್ಗಾಗಿ/ ನಾಶವಾಗಿ ಹೋಯಿತೆ? ಸಮಸಪ್ತಕರು ಮತ್ತು ನಿನ್ನ ಮೂಲಬಲವು ಇನ್ನೂ ಇದೆ ಹೆದರಬೇಡ ಎಂದು ಕುರುಪತಿಯನ್ನು ಸಂತೈಸಿದನು.

ತಪ್ಪಸಿಕೊಂಡ ಕೌರವನನ್ನು ಭೀಮಾದಿಗಳು ಹುಡುಕಿದರು.[ಸಂಪಾದಿಸಿ]

ದಳಪತಿಯು ಪವಡಿಸಿದನರಸನ
ಸುಳಿವು ಸಿಲುಕಿತು ಭಯದ ಬಲೆಯಲಿ
ಮೊಳಗುತದೆ ನಿಸ್ಸಾಳ ಸುಮ್ಮಾನದಲಿ ರಿಪುಬಲದ |
ಉಳಿದರೋ ಗುರುಸೂನು ಕೃಪರೇ
ನಳಿದರೋ ಪಾಳೆಯದೊಳಗೆ ರಥ
ವಿಳಿದರೋ ತಾನೇನೆನುತ ಚಿಂತಿಸಿತು ಕುರುಸೇನೆ || ೬೫ ||
ಪದವಿಭಾಗ-ಅರ್ಥ: ದಳಪತಿಯು ಪವಡಿಸಿದನು(ಪವಡಿಸು= ಮಲಗು, ಮಲಗಿದನು)+ ಅರಸನ ಸುಳಿವು ಸಿಲುಕಿತು ಭಯದ ಬಲೆಯಲಿ ಮೊಳಗುತದೆ ನಿಸ್ಸಾಳ (ವಾದ್ಯಗಳು)ಸುಮ್ಮಾನದಲಿ ರಿಪುಬಲದ, ಉಳಿದರೋ ಗುರುಸೂನು ಕೃಪರೇನು+ ಅಳಿದರೋ ಪಾಳೆಯದೊಳಗೆ ರಥವಿಳಿದರೋ ತಾನ್ + ಎನೆನುತ ಚಿಂತಿಸಿತು ಕುರುಸೇನೆ.
ಅರ್ಥ:ಅಳಿದುಳಿದ ಕೌರವನ ಸೇನೆಯು, ತಮ್ಮ ದಳಪತಿಯು ಮಡಿದನು; ಅರಸನಾದ ಕೌರವನ ಸುಳಿವು ಇಲ್ಲ, ಅವನ ಸುಳಿವು ಭಯದ ಬಲೆಯಲಿ ಸಿಕ್ಕಿಕೊಂಡಿದೆ. ಹಾಗಾಗಿ ಕಾಣದಂತೆ ಹೋಗಿದ್ದಾನೆ. ಶತ್ರು ಸೇನೆಯ ವಾದ್ಯಗಳು ಸುಮ್ಮಾನದಿಂದ/ ಸಂತಸದಿಮ ಮೊಳಗುತ್ತದೆ. ಉಳಿದರೋ ಗುರುಸೂನು ಅಶ್ವತ್ಥಾಮನು, ಕೃಪರು ಏನು ಮಡಿದರೋ? ಹಿಂತಿರುಗಿ ಪಾಳೆಯದೊಳಕ್ಕೆ ಹೋಗಿ ತಾವು ರಥವಿಳಿದರೋ? ಎನೋ ಎನ್ನತ್ತಾ, ಕುರುಸೇನೆ ಚಿಂತಿಸಿತು.
ಕೂಡೆ ಹರಿಹಂಚಾದ ಸುಭಟರು
ಕೂಡಿಕೊಂಡುದು ನೊಂದು ನಸಿದವ
ರೋಡಿದವರೊಗ್ಗಾಯ್ತು ಕುರುರಾಯನ ಪರೋಕ್ಷದಲಿ |
ನೋಡಲಹುದಾಹವದೊಳಗೆ ಕೈ
ಮಾಡಿಸಿದ ವಸುಧಾಂಗನೆಗೆ ಬೆಲೆ
ಮಾಡುವುದು ಮತವೆಂದು ಕವಿದುದುದು ಮತ್ತೆ ಕುರುಸೇನೆ || ೬೬ ||
ಪದವಿಭಾಗ-ಅರ್ಥ: ಕೂಡೆ ಹರಿಹಂಚಾದ ಸುಭಟರು ಕೂಡಿಕೊಂಡುದು ನೊಂದು ನಸಿದವರು (ನಸಿ- ನಸಿಸು= ದುರ್ಬಲವಾಗು)+ ಓಡಿದವು+ ಒಗ್ಗಾಯ್ತು ಕುರುರಾಯನ ಪರೋಕ್ಷದಲಿ (ಇಲ್ಲದೆ) ನೋಡಲಹುದು+ ಆಹವದೊಳಗೆ (ಯುದ್ಧದಲ್ಲಿ) ಕೈಮಾಡಿಸಿದ ವಸುಧಾಂಗನೆಗೆ (ರಾಜ್ಯಕ್ಕೆ) ಬೆಲೆಮಾಡುವುದು ಮತವೆಂದು (ಸರಿ, ಉತ್ತಮ) ಕವಿದುದುದು (ಮುತ್ತಿತು) ಮತ್ತೆ ಕುರುಸೇನೆ.
ಅರ್ಥ: ಹೀಗೆ ನಾಯಕನಿಲ್ಲದೆ ಹರಿಹಂಚಾದ ಸುಭಟರ ಕುರುಸೇನೆ ಕೂಡಲೆ ಒಟ್ಟಾಗಿ ಕೂಡಿಕೊಂಡಿತು. ನೊಂದು ದುರ್ಮಲವಾದವರು, ಓಡಿದವರು, ಒಗ್ಗಟ್ಟಾಗಿ ಮತ್ತೆ ಕೌರವನು ಇಲ್ಲದಿದ್ದರೂ ಪರೋಕ್ಷವಾಗಿ ಸೇರಿದರು. ಯುದ್ಧದಲ್ಲಿ ರಾಜ್ಯಕ್ಕಾಗಿ ಕೈಯ್ಯಲ್ಲಾದ ಪ್ರಯತ್ನ ಮಾಡುವುದು ಸರಿಯಾದುದು ಎಂದು ಮತ್ತೆ ಕುರುಸೇನೆ ಪಾಂಡವ ಸೇನೆಯನ್ನು ಮುತ್ತಿತು.
ಬಿಡದಲಾ ಕುರುಸೈನ್ಯ ಹಕ್ಕಲು
ಗಡಿಯ ಭಟರೊಗ್ಗಾಯ್ತಲಾ ದೊರೆ
ಮಡಿದನೋ ಬಳಲಿದನೊ ಮಿಗೆ ಪೂರಾಯಘಾಯದಲಿ |
ಪಡೆಯ ಜಂಜಡ ನಿಲಲಿ ಕೌರವ
ರೊಡೆಯನಾವೆಡೆ ನೋಡು ನೋಡೆಂ
ದೊಡನೊಡನೆ ಪವಮಾನಸುತನರಸಿದನು ಕುರುಪತಿಯ || ೬೭ ||
ಪದವಿಭಾಗ-ಅರ್ಥ: ಬಿಡದಲೆ+ ಆ ಕುರುಸೈನ್ಯ ಹಕ್ಕಲುಗಡಿಯ (ಹಕ್ಕಲು= ಬಯಲು, ದಿಕ್ಕಿಲ್ಲದ)ಭಟರ+ ಒಗ್ಗಾಯ್ತಲಾ, ದೊರೆ ಮಡಿದನೋ (ಸತ್ತನೊ)ಬಳಲಿದನೊ ಮಿಗೆ (ಮತ್ತೆ) ಪೂರಾಯ(ದೊಡ್ಡ) ಘಾಯದಲಿ, ಪಡೆಯ ಜಂಜಡ ನಿಲಲಿ, ಕೌರವರೊಡೆಯನು+ ಆವೆಡೆ ನೋಡು ನೋಡೆಂದು,+ ಒಡನೊಡನೆ ಪವಮಾನಸುತನು (ಭೀಮನು)+ ಅರಸಿದನು ಕುರುಪತಿಯ
ಅರ್ಥ:ಕುರುಸೇನೆ ಬಿಡದೆ ಒಗ್ಗಟ್ಟಾಗಿ ಬರುತ್ತಿದೆಯಲ್ಲಾ, ಆ ಕುರುಸೈನ್ಯ ದಿಕ್ಕಿಲ್ಲದ ಭಟರ ಗುಂಪಾಯಿತಲ್ಲಾ; ದೊರೆ ಕೌರವ ಮಡಿದನೋ ಅಥವಾ ದೊಡ್ಡ ಘಾಯದಿಂದ ಬಳಲಿದನೊ, ಈ ಉಳಿದ ಕೌರವ ಸೇನೆಯ ಜಂಜಡ ಹಾಗಿರಲಿ; ಕೌರವರ ಒಡೆಯ ದುರ್ಯೋಧನನು ಯಾವಕಡೆ ಇದ್ದಾನೆ ನೋಡು ನೋಡೆಂದು, ಮತ್ತೆ ಮತ್ತೆ ಪವಮಾನಸುತ ಭೀಮನು ಕುರುಪತಿ ಕೌರವನನ್ನು ಹುಡುಕಿದನು.
ಅರಸ ಕೇಳೈ ಕೌರವೇಂದ್ರನ
ನರಸುತರ್ಜುನ ಭೀಮ ಸಾತ್ಯಕಿ
ಧರಣಿಪತಿ ಸಹದೇವ ನಕುಲರು ಕೂಡೆ ಕಳನೊಳಗೆ |
ತಿರುಗಿದರು ಬಳಿಕಿತ್ತಲೀ ಮೋ
ಹರವ ಧೃಷ್ಟದ್ಯುಮ್ನ ಸೃಂಜಯ
ರೊರಸಿದರು ನಿಶ್ಯೇಷ ಕೌರವನೃಪಚತುರ್ಬಲವ || ೬೮ ||
ಪದವಿಭಾಗ-ಅರ್ಥ: ಅರಸ ಕೇಳೈ ಕೌರವೇಂದ್ರನನು+ ಅರಸುತ+ ಅರ್ಜುನ ಭೀಮ ಸಾತ್ಯಕಿ ಧರಣಿಪತಿ ಸಹದೇವ ನಕುಲರು ಕೂಡೆ ಕಳನೊಳಗೆ(ಕಳ= ರಣರಂಗ) ತಿರುಗಿದರು; ಬಳಿಕ+ ಇತ್ತಲು+ ಈ ಮೋಹರವ ಧೃಷ್ಟದ್ಯುಮ್ನ ಸೃಂಜಯರು+ ಒರಸಿದರು ನಿಶ್ಯೇಷ ಕೌರವನೃಪ ಚತುರ್ಬಲವ.
ಅರ್ಥ:ಅರಸನೇ ಕೇಳು, ಕೌರವೇಂದ್ರನನ್ನು ಹುಡುಕುತ್ತಾ ಅರ್ಜುನ, ಭೀಮ, ಸಾತ್ಯಕಿ, ಧರಣಿಪತಿ ಧರ್ಮಜ, ಸಹದೇವ, ನಕುಲರು ಕೂಡಿಕೊಂಡು ಕುರುಕ್ಷೇತ್ರ ರಣರಂಗಲ್ಲಿ ತಿರುಗಿದರು. ಬಳಿಕ ಇತ್ತ ಈ ಉಳಿದ ಕೌರವನೃಪನ ಚತುರ್ಬಲವನ್ನು ಧೃಷ್ಟದ್ಯುಮ್ನ, ಸೃಂಜಯರು, ನಿಶ್ಯೇಷವಾಗಿ ನಾಶಮಾಡಿದರು.
ಧರಣಿಪತಿ ಕೇಳಿನ್ನುಮೇಲಣ
ಧುರದ ವೃತ್ತಾಂತವನು ಕುರುಪತಿ
ಯಿರವನರಿಯೆನು ಕಂಡುಬಹೆನೇ ನೇಮವೇ ತನಗೆ |
ಗುರುಸುತನು ಕೃಪ ಭೋಜ ಶಕುನಿಗ
ಳರಸನನು ಪರಿವೇಷ್ಟಿಸಿದರದ
ನರಿದು ಬಹೆನೆನೆ ಕಳುಹಿದನು ಧೃತರಾಷ್ಟ್ರ ಸಂಜಯನ || ೬೯ ||
ಪದವಿಭಾಗ-ಅರ್ಥ:ಧರಣಿಪತಿ ಕೇಳು+ ಇನ್ನುಮೇಲಣ ಧುರದ ವೃತ್ತಾಂತವನು ಕುರುಪತಿಯ+ ಇರವನು+ ಅರಿಯೆನು ಕಂಡು ಬಹೆನೇ, ನೇಮವೇ(ಆಜ್ಞೆಯೇ?) ತನಗೆ, ಗುರುಸುತನು ಕೃಪ ಭೋಜ ಶಕುನಿಗಳು+ ಅರಸನನು ಪರಿವೇಷ್ಟಿಸಿದರಿ+ ಅದನು+ ಅರಿದು ಬಹೆನು+ ಎನೆ ಕಳುಹಿದನು ಧೃತರಾಷ್ಟ್ರ ಸಂಜಯನ.
ಅರ್ಥ:ಧರಣಿಪತಿ ಜನಮೇಜಯನೇ, ಇನ್ನು ಮೇಲಿನ ಯುದ್ಧದ ವೃತ್ತಾಂತವನ್ನು; ಧೃತರಾಷ್ಟ್ರನನ್ನು ಕುರಿತು ಸಂಜಯನು ಕುರುಪತಿ ಕೌರವನು ಎಲ್ಲಿ ಇರುವನು ಎಂಬುದನ್ನು ತಾನು ತಿಳಿದಿಲ್ಲ. 'ನಾನು ಹೋಗಿ ಅವನನ್ನು ಕಂಡು ಬರಲೇ?, ನನಗೆ ನೀವು ಆಜ್ಞೆ ಮಾಡುವಿರಾ? (ತನಗೆ ಅನುಮತಿ ಕೊಡುವಿರಾ?), ಗುರುಸುತನು ಕೃಪ ಭೋಜ ಶಕುನಿಗಳು ಅರಸನನ್ನು ಸುತ್ತುವರಿದಿದ್ದರೆ ಅದನ್ನು ತಿಳಿದು ಬರುವೆನು, ಎಂದು ಸಂಜಯನು ಹೇಳಲು, ಧೃತರಾಷ್ಟ್ರನು ಸಂಜಯನನ್ನು ರಣಭೂಮಿಗೆ ಕಳುಹಿದನು.
♠♠♠
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

  1. *ಕುಮಾರವ್ಯಾಸ ಭಾರತ
  2. * ಕುಮಾರವ್ಯಾಸಭಾರತ-ಸಟೀಕಾ

ಸಂಧಿಗಳು[ಸಂಪಾದಿಸಿ]


ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.