ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೬)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೬ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಸೂಚನೆ~
ರಂಜಿಸಿತು ತ್ರೈಭುವನವನು ರಿಪು
ಭಂಜನದ ಭಾರವಣೆ ಸುಭಟರ
ನಂಜಿಸಿತು ಕಲಿಭೀಮದುರಿಯೋಧನರ ಸಂಗ್ರಾಮ ||ಸೂ.||

ಪದವಿಭಾಗ-ಅರ್ಥ:ರಂಜಿಸಿತು ತ್ರೈಭುವನವನು(ಮೂರು ಲೋಕವನ್ನು) ರಿಪುಭಂಜನದ (ಶತ್ರು ನಾಶದ) ಭಾರವಣೆ(ಆಟಾಟೋಪ) ಸುಭಟರನು+ ಅಂಜಿಸಿತು ಕಲಿಭೀಮ ದುರಿಯೋಧನರ ಸಂಗ್ರಾಮ.
ಅರ್ಥ:ಕಲಿಭೀಮ ಮತ್ತು ದುರ್ಯೋಧನರ ಯುದ್ಧವು ಮೂರು ಲೋಕವನ್ನು ವಿನೋದಪಡಿಸಿ ರಂಜಿಸಿತು; ಶತ್ರು ನಾಶದ ಆಟಾಟೋಪ ಸುಭಟರನ್ನು ಸಹ ಅಂಜಿಸಿತು/ ಹೆದರುವಂತೆ ಮಾಡಿತು.[೧][೨]

ಯುದ್ಧದ ಪರಿಣಾಮಕ್ಕೆ ಬಲರಾಮನ ವಿಷಾದ[ಸಂಪಾದಿಸಿ]

ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲ ಸಹಿತ ಯುಧಿಷ್ಠಿರಾದಿ ನೃ
ಪಾಲಕರು ಕಾಣಿಕೆಯನಿತ್ತರು ನಮಿಸಿ ಹಲಧರಗೆ |
ಮೇಲುದುಗುಡದ ಮುಖದ ನೀರೊರೆ
ವಾಲಿಗಳ ಕಕ್ಷದ ಗದೆಯ ಭೂ
ಪಾಲ ಬಂದನು ನೊಸಲ ಚಾಚಿದನವರ ಚರಣದಲಿ || ೧ ||
ಪದವಿಭಾಗ-ಅರ್ಥ: ಕೇಳು ಧೃತರಾಷ್ಟ್ರ+ ಅವನಿಪ ಸಿರಿಲೋಲ ಸಹಿತ ಯುಧಿಷ್ಠಿರಾದಿ ನೃಪಾಲಕರು ಕಾಣಿಕೆಯನು+ ಇತ್ತರು ನಮಿಸಿ ಹಲಧರಗೆ ಮೇಲು ದುಗುಡದ ಮುಖದ ನೀರು+ ಒರೆವ+ ಆಲಿಗಳ ಕಕ್ಷದ(ಕಂಕುಳಲ್ಲಿ) ಗದೆಯ ಭೂಪಾಲ ಬಂದನು ನೊಸಲ(ಹಣೆಯ) ಚಾಚಿದನು+ ಅವರ ಚರಣದಲಿ.
ಅರ್ಥ:ಸಂಜಯನು ಹೇಳಿದ,'ಅವನಿಪ ಧೃತರಾಷ್ಟ್ರನೇ ಕೇಳು, ಸಿರಿಲೋಲ ಕೃಷ್ಣನ ಸಹಿತ ಯುಧಿಷ್ಠಿರ ಮೊದಲಾದ ನೃಪಾಲಕರು ಕಾಣಿಕೆಯನ್ನು ಕೊಟ್ಟು, ಹಲಧರ ಬಲರಾಮನಿಗೆ ನಮಿಸಿದರು. ಬಹಳ ದುಗುಡದಿಂದ ತುಂಬಿದ ಮುಖದವನೂ, ನೀರು ತುಂಬಿದ ಕಣ್ಣಾಲಿಗಳಿಂದ ಕೂಡಿದ, ಕಂಕುಳಲ್ಲಿ ಗದೆಯನ್ನು ಇಟ್ಟುಕೊಂಡು ಭೂಪಾಲ ಕೌರವನು ಬಂದನು. ಅವನು ತನ್ನ ಹಣೆಯನ್ನು ತನ್ನ ಗುರು ಬಲರಾಮನ ಚರಣದಲಿ ಚಾಚಿದನು.
ಇಳಿದು ಗಜಹಯರಥವ ಸುಭಟಾ
ವಳಿ ಕೃತಾಂಜಲಿ ನೊಸಲೊಳಿರೆ ಕೆಲ
ಬಲಕೆ ಸಾರ್ದರು ನೋಡಿದನು ಪಾಂಡವ ಪತಾಕಿನಿಯ |
ಉಳಿದುದೀಚೆಯಲೀಸು ಬಲವಿವ
ನುಳಿದನೊಬ್ಬನೆ ದೈವಗತಿಗಾ
ರಳಲಿ ಮಾಡುವುದೇನೆನುತ ನುಡಿಸಿದನು ಕುರುಪತಿಯ || ೨||
ಪದವಿಭಾಗ-ಅರ್ಥ: ಇಳಿದು ಗಜ, ಹಯ, ರಥವ ಸುಭಟ+ ಆವಳಿ ಕೃತಾಂಜಲಿ(ಎರಡು ಸೇರಿದ ಕೈಹಸ್ತ) ನೊಸಲೊಳು+ ಇರೆ (ನಿಂತಿರಲು) ಕೆಲಬಲಕೆ ಸಾರ್ದರು (ಸಾರಿದವರು- ಹತ್ತಿರ ನಿಂತವರು) ನೋಡಿದನು ಪಾಂಡವ ಪತಾಕಿನಿಯ (ಬಾವುಟ), ಉಳಿದುದು+ ಈಚೆಯಲ+ ಈಸು ಬಲವು+ ಇವನು+ ಉಳಿದನು+ ಒಬ್ಬನೆ ದೈವಗತಿಗೆ+ ಆರು+ ಅಳಲಿ ಮಾಡುವುದೇನ+ ಎನುತ ನುಡಿಸಿದನು (ಮಾತನಾಡಿಸಿದನು) ಕುರುಪತಿಯ.
ಅರ್ಥ: ಆನೆ, ಕುದುರೆ,ರಥವದಲ್ಲಿ ಸುಭಟರು ಇಳಿದು ನಿಂತಿದ್ದರು. ಆಗ ಎರಡೂ ಹಸ್ತಗಳನ್ನು ಸೇರಿಸಿ ಕೃತಾಂಜಲಿ ಬದ್ಧನಾಗಿ ಹಣೆಯಬಳಿ ಇಟ್ಟುಕೊಂಡು ಕೌರವನು ಬಲರಾಮನ ಎದರಲ್ಲಿ ಬಗ್ಗಿ ನಿಂತಿರಲು, ಬಲರಾಮನು ಕೆಲಬಲಕೆ- ಸುತ್ತಲೂ ನಿಂತವರನ್ನು ನೋಡಿದನು. ಅಲ್ಲಿ ಕೇವಲ ಪಾಂಡವರ ಕಡೆಯ ಬಾವುಟಗಳು ಉಳಿದಿದ್ದವು. ಈಚೆಯಲ್ಲಿ ಕೌರವನ ಕಡೆ ಇಷ್ಠೇ ಬಲವು- ಇವನು ಒಬ್ಬನೇ ಉಳಿದವನು. ಇದು ದೈವಗತಿಗೆ ಯಾರು ದುಃಖಿಸಿ ಮಾಡುವುದೇನನ್ನು? ಎನ್ನುತ್ತಾ ಕುರುಪತಿ ಕೌರವನನ್ನು ನುಡಿಸಿದನು.
ಗುರುವೊ ಗಂಗಾಸುತನೊ ಮಾದ್ರೇ
ಶ್ವರನೊ ಕರ್ಣನೊ ಸೈಂಧವನೊ ಸೋ
ದರರ ಶತಕವೊ ಪುತ್ರ ಮಿತ್ರ ಜ್ಞಾತಿ ಬಾಂಧವರೊ |
ಹರಸಿ ಕುರಿಗಳನಿಕ್ಕಿದಡೆ ಗೋ
ಚರಿಸದೇ ರಣವಿಜಯನಿಧಿ ಹರ
ಹರ ಎನುತ ಕರಗಿದನು ಕಡು ಕರುಣದಲಿ ಬಲರಾಮ || ೩ ||
ಪದವಿಭಾಗ-ಅರ್ಥ: ಗುರುವೊ ಗಂಗಾಸುತನೊ ಮಾದ್ರೇಶ್ವರನೊ ಕರ್ಣನೊ ಸೈಂಧವನೊ ಸೋದರರ ಶತಕವೊ(ನೂರು) ಪುತ್ರ ಮಿತ್ರ ಜ್ಞಾತಿ ಬಾಂಧವರೊಹರಸಿ ಕುರಿಗಳನು+ ಇಕ್ಕಿದಡೆ(ಇಕ್ಕು= ಹೊಡೆ, ಕೊಡು, ಬಲಿಕೊಟ್ಟರೇ) ಗೋಚರಿಸದೇ (ಕಾಣದೇ) ರಣವಿಜಯ ನಿಧಿ(ಯುದ್ಧದ ವಿಜಯ ಸಂಪತ್ತು), ಹರಹರ ಎನುತ ಕರಗಿದನು ಕಡು(ಅತಿ) ಕರುಣದಲಿ ಬಲರಾಮ.
ಅರ್ಥ: ಬಲರಾಮನು,'ಹರಕೆಯ ಕುರಿಗಳಂತೆ, ಗುರು ದ್ರೋಣರೂ, ಗಂಗಾಸುತಭೀಷ್ಮನೂ, ಮಾದ್ರೇಶ್ವರ ಶಲ್ಯನೂ, ಕರ್ಣನೂ, ಸೈಂಧವನೂ, ನೂರು ಸೋದರರೂ, ಪುತ್ರರೂ, ಮಿತ್ರರೂ, ಜ್ಞಾತಿ ಬಾಂಧವರೂ ಯುದ್ಧದಲ್ಲಿ ಬಲಿಯಾದರು ಎನ್ನುವುದೂ, ರಣವಿಜಯ- ವಿಜಯಲಕ್ಷ್ಮಿ ಯಾರಿಗೆ ಒಲಿದಳು ಎನ್ನುವುದು, ನೋಡಿದರೇ ಕಾಣುವುದಲ್ಲವೇ? ಎನ್ನುತ್ತಾ ಬಲರಾಮನು ಹರಹರ ಎನ್ನುತ್ತಾ ಬಲರಾಮನು ಕೌರವನ ಬಗೆಗೆ ಕರುಣದಿಂದ ಕರಗಿದನು.
ಆಹವದಿ ಪಾಂಡವ ಮಮ ಪ್ರಾ
ಣಾ ಹಿ ಎಂಬೀ ನುಡಿಯ ಸಲಿಸಿದೆ
ಬೇಹವರನುಳುಹಿದೆ ಕುಮಾರರ ನಿನ್ನ ಮೈದುನರ |
ಗಾಹುಗತಕದಲೆಮ್ಮ ಶಿಷ್ಯಂ
ಗೀ ಹದನ ವಿರಚಿಸಿದೆ ನಿನ್ನಯ
ಮೋಹದವರೇ ಗೆಲಲಿಯೆಂದನು ಹರಿಗೆ ಬಲರಾಮ || ೪ ||
ಪದವಿಭಾಗ-ಅರ್ಥ: ಆಹವದಿ (ಯುದ್ಧದಲ್ಲಿ) 'ಪಾಂಡವ ಮಮ ಪ್ರಾಣಾ ಹಿ', ಎಂಬ+ ಈ ನುಡಿಯ ಸಲಿಸಿದೆ; ಬೇಹವರನು+ ಉಳುಹಿದೆ ಕುಮಾರರ ನಿನ್ನ ಮೈದುನರ, ಗಾಹುಗತಕದಲಿ (ಮೋಸಗಾರಿಕೆ)+ ಎಮ್ಮ ಶಿಷ್ಯಂಗೆ+ ಈ ಹದನ (ಪರಿಸ್ಥಿತಿಯನ್ನು)ವಿರಚಿಸಿದೆ (ಮಾಡು, ನಿರ್ಮಿಸು), ನಿನ್ನಯ ಮೋಹದವರೇ ಗೆಲಲಿಯೆಂದನು ಹರಿಗೆ ಬಲರಾಮ.
ಅರ್ಥ:ಬಲರಾಮನು ಕೃಷ್ನನಿಗೆ,'ಯುದ್ಧದಲ್ಲಿ 'ಪಾಂಡವ ಮಮ ಪ್ರಾಣಾ ಹಿ', ಎಂಬ ಈ ನುಡಿಯನ್ನು ನೀನು ಸಲ್ಲಿಸಿಬಿಟ್ಟೆ; ನಿನಗೆ ಬೇಕಾದವರನ್ನು, ಪಾಂಡುಕುಮಾರರಾದ ನಿನ್ನ ಮೈದುನರನು ಉಳುಹಿಸಿದೆ. ಮೋಸಗಾರಿಕೆಯಿಂದ ನಮ್ಮ ಶಿಷ್ಯನಿಗೆ ಈ ಪರಿಸ್ಥಿತಿಯನ್ನು ತಂದಿಟ್ಟೆ;, ಬಲರಾಮನು ಕೃಷ್ಣನಿಗೆ ನಿನ್ನ ಪ್ರೀತಿಯವರೇ ಗೆಲ್ಲಲಿಯೆಂದನು.
ತಿಳಿದು ನೋಡಿರೆ ರಾಮ ಧರ್ಮ
ಸ್ಥಳಕೆ ನೀವು ಸಹಾಯವಿನಿಬರ
ಗೆಲವು ನಿರ್ಮಳ ಧರ್ಮಮೂಲವೊ ಧರ್ಮವಿರಹಿತವೊ |
ಛಲವ ಬಿಡಿರೇ ನಿಮ್ಮ ಶಿಷ್ಯನು
ಕಲಿವೃಕೋದರನಲ್ಲವೇ ತವೆ
ಬಳಸಬಹುದೇ ಪಕ್ಷಪಾತದೊಳೆಂದನಸುರಾರಿ || ೫ ||
ಪದವಿಭಾಗ-ಅರ್ಥ: ತಿಳಿದು ನೋಡಿರೆ ರಾಮ, ಧರ್ಮಸ್ಥಳಕೆ ನೀವು ಸಹಾಯವು+ ಇನಿಬರ ಗೆಲವು ನಿರ್ಮಳ ಧರ್ಮಮೂಲವೊ ಧರ್ಮವಿರಹಿತವೊ ಛಲವ ಬಿಡಿರೇ ನಿಮ್ಮ ಶಿಷ್ಯನು ಕಲಿ ವೃಕೋದರನಲ್ಲವೇ? ತವೆ ಬಳಸಬಹುದೇ ಪಕ್ಷಪಾತದೊಳು+ ಎಂದನು+ ಅಸುರಾರಿ
ಅರ್ಥ:ಆಗ ಅಸುರಾರಿ ಕೃಷ್ಣನು ಬಲರಾಮನಿಗೆ,'ಬಲರಾಮ ನೀವು ವಿಚಾರಮಾಡಿ ನೋಡಿರಿ; ನೀವು ಧರ್ಮವನ್ನು ನೋಡಿರಿ. ಧರ್ಮವಿದ್ದಲ್ಲಿ ಸಹಾಯವು ಸಹಜವಾದುದು. ಇಬ್ಬರಲ್ಲಿ ಈ ಗೆಲವು ನಿರ್ಮಲವಾದ ಧರ್ಮಮೂಲವೊ ಅಥವಾ ಧರ್ಮವಿರಹಿತವೊ ವಿಚಾರಮಾಡಿ. ಸುಯೋಧನ ನಿಮ್ಮ ಶಿಷ್ಯನೆಂಬ ಛಲವನ್ನು ಬಿಡಿರೇ! ಕಲಿ ವೃಕೋದರನು ನಿಮ್ಮ ಶಿಷ್ಯನಲ್ಲವೇ? ತಾವು ಪಕ್ಷಪಾತದ ನೀತಿಯನ್ನು ಬಳಸಬಹುದೇ',ಎಂದನು.
ನಿವಗೆ ಪಾಂಡವ ಪಕ್ಷಪಾತ
ವ್ಯವಹರಣೆ ಹುಸಿ ನಾವಲೇ ಕೌ
ರವನ ಪಕ್ಷಾವೇಶಿಗಳು ಸಾಕಿನ್ನದಂತಿರಲಿ |
ಎವಗೆ ಸರಿಯಿಬ್ಬರು ಗದಾಭ್ಯಾ
ಸವನು ನಮ್ಮಲಿ ಮಾಡಿದರು ತಾ
ವಿವರು ಕಾದಲಿ ನಾವು ನೋಡುವೆವೆಂದನಾ ರಾಮ || ೬ ||
ಪದವಿಭಾಗ-ಅರ್ಥ: ನಿವಗೆ ಪಾಂಡವ ಪಕ್ಷಪಾತ ವ್ಯವಹರಣೆ ಹುಸಿ, ನಾವಲೇ ಕೌರವನ ಪಕ್ಷಾವೇಶಿಗಳು, ಸಾಕು+ ಇನ್ನು+ ಅದಂತಿರಲಿ ಎವಗೆ ಸರಿಯಿಬ್ಬರು, ಗದಾಭ್ಯಾಸವನು ನಮ್ಮಲಿ ಮಾಡಿದರು, ತಾವಿವರು ಕಾದಲಿ ನಾವು ನೋಡುವೆವು+ ಎಂದನು+ ಆ ರಾಮ
ಅರ್ಥ:ಆಗ ಬಲರಾಮನು,'ನಿನಗೆ ಪಾಂಡವ ಪಕ್ಷಪಾತದ ವ್ಯವಹಾರವು ಇರುವುದು ಹುಸಿ ಎನ್ನುವೆ; ಆದರೆ ನಾವಾದರೋ ಕೌರವನ ಪಕ್ಷದ ಆವೇಶಿಗಳು- ಪಕ್ಷಪಾತದಿಂದ ತುಂಬಿದವರು! ಸಾಕು ಇನ್ನು ಈ ವಿವಾದ. ಅದು ಹಾಗಿರಲಿ; ನಮಗೆ ಇಬ್ಬರೂ ಸರಿ- ಒಂದೇ, ಅವರಿಬ್ಬರೂ ಗದಾಭ್ಯಾಸವನ್ನು ನಮ್ಮಲ್ಲಿ ಮಾಡಿದವರು. ಈಗ ಇವರು ತಾವು ತಾವೆ ಕಾದಲಿ- ಯುದ್ಧಮಾಡಲಿ. ನಾವು ತಟಸ್ಥರಾಗಿ ನೋಡುವೆವು,' ಎಂದನು.
ಎಲೆ ಮುನೀಶ್ವರ ಪೂರ್ವವದಲಿ ಯದು
ಬಲ ವಿಭಾಗದಲಿವರ ದೆಸೆಯಲಿ
ಹಲಧರನು ಕೃತವರ್ಮನಾ ಪಾಂಡವರಿಗಸುರಾರಿ |
ಬಳಿಕ ಸಾತ್ಯಕಿಯೀ ಹಸುಗೆಯ
ಸ್ಖಲಿತವಿದರಲಿ ರಾಮನೀ ಕುರು
ಬಲವ ಬಿಟ್ಟನದೇಕೆನುತ ಜನಮೇಜಯನು ನುಡಿದ || ೭ ||
ಪದವಿಭಾಗ-ಅರ್ಥ: ಎಲೆ ಮುನೀಶ್ವರ ಪೂರ್ವವದಲಿ ಯದುಬಲ ವಿಭಾಗದಲಿ+ ಇವರ ದೆಸೆಯಲಿ ಹಲಧರನು ಕೃತವರ್ಮನು+ ಆ ಪಾಂಡವರಿಗೆ+ ಅಸುರಾರಿ ಬಳಿಕ ಸಾತ್ಯಕಿಯು+ ಈ ಹಸುಗೆಯ ಸ್ಖಲಿತವು(ಜಾರಿದ) + ಇದರಲಿ ರಾಮನು+ ಈ ಕುರುಬಲವ ಬಿಟ್ಟನು+ ಅದೇಕೆ+ ಎನುತ ಜನಮೇಜಯನು ನುಡಿದ.
ಅರ್ಥ: ಜನಮೇಜಯನು,'ಎಲೆ ವೈಶಂಪಾಯನ ಮುನೀಶ್ವರನೇ ಹಿಂದೆ ಯಾದವರ ಬಲವನ್ನು ಕುರುಕ್ಷೇತ್ರ ಯುದ್ಧಕ್ಕೆ ವಿಭಾಗಮಾಡುವಾಗ ಇವರ- ಕೌರವರ ದೆಸೆಯಲಿ/ ಕಡೆಗೆ ಹಲಧರ ಬಲರಾಮನು ಮತ್ತು ಯಾದವರ ಸೇನಾಧಿಪತಿ ಕೃತವರ್ಮನು, ಜೊತೆಗೆ ಯಾದವಸೇನೆ ಸೇರಿದರು. ಆ ಪಾಂಡವರಿಗೆ ಅಸುರಾರಿ ಕೃಷ್ಣ ಬಳಿಕ ಸಾತ್ಯಕಿಯು ಸೇರಿದರು. ಈ ವಿಭಾಗವಾದಾಗ ಇದರಲ್ಲಿ ರಾಮನು ಇದರಿಂದ ಜಾರಿ, ಈ ಕುರುಬಲವನು ಬಿಟ್ಟನು. ಅದೇಕೆ?' ಎಂದು ಕೇಳಿದ.
ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷ್ಮೀ
ಲೋಲ ಬಿಜಯಂಗೈಯನೇ ಕುರುಪತಿಯನವಗಡಿಸಿ
ತಾಳಹಳವಿಗೆಯವನು ಯಾದವ
ಜಾಲ ಸಹಿತೈತಂದು ಕಾರ್ಯದ
ಮೇಲುದಾಗಿನ ಹದನನರಿದನು ಕೃಷ್ಣನಭಿಮತವ ೮
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಸಂಧಿಯ ಮುರಿದು ಲಕ್ಷ್ಮೀಲೋಲ ಬಿಜಯಂಗೈಯನೇ ಕುರುಪತಿಯನು+ ಅವಗಡಿಸಿತು (ಸೇರಿತು) ಆಳ (ಸೇನೆಯ) ಹಳವಿಗೆಯವನು(ಹಳಯಿಗೆ ಪೞಯಿಗೆ= ಪತಾಕೆ,ಬಾವುಟ ) ಯಾದವಜಾಲ ಸಹಿತ+ ಐತಂದು (ಬಂದು) ಕಾರ್ಯದ ಮೇಲುದಾಗಿನ (ಮುಖ್ಯ) ಹದನನು+ ಅರಿದನು ಕೃಷ್ಣನ+ ಅಭಿಮತವ
ಅರ್ಥ:ಮುನಿ ಹೇಳಿದ,'ಕೇಳು ಜನಮೇಜಯ ಧರಿತ್ರೀಪಾಲ,ಕೌರವ ಪಾಂಡವರ ನಡುವೆ ಕೃಷ್ನನ ಸಂಧಿಯು ಮುರಿದುಹೋಗಲು, ಲಕ್ಷ್ಮೀಲೋಲ ಕೃಷ್ಣನು ಪಾಂಡವರ ಕಡೆ ಸೇರಿದನು. ಕುರುಪತಿ ಕೌರವನನ್ನು ಯಾದವಜಾಲ ಸೇನೆಯು ಪತಾಕೆ ಸಹಿತ ಹಸ್ತಿನಾವತಿಗೆ ಬಂದು ಸೇರಿತು. ಈ ಕಾರ್ಯದ ಮುಖ್ಯವಾದ ಅಂತರಂಗದ ವಿಚಾರ- ಪಾಂಡವರು ಜಯಿಸಬೇಕೆಂಬ ಕೃಷ್ಣನ ಅಭಿಮತವನ್ನು ಬಲರಾಮನು ಅರಿತನು.
ಎವಗೆ ಸರಿಯಿತ್ತಂಡ ನೀ ಕೌ
ರವನ ಮುರಿವೆ ಯುಧಿಷ್ಠಿರನನಾ
ಹವವ ಗೆಲಿಸುವೆ ಸಾಕು ನೃಪರಿಬ್ಬರಲಿ ಸಂವಾದ |
ಎವಗೆ ತೀರ್ಥಕ್ಷೇತ್ರ ಯಾತ್ರಾ
ವ್ಯವಸಿತಕೆ ಮನವಾದುದೆಂದು
ತ್ಸವದಿನಸುರಾರಿಯನುಪಪ್ಲವ್ಯದಲಿ ಬೀಳ್ಕೊಂಡ || ೯ ||
ಪದವಿಭಾಗ-ಅರ್ಥ: ಎವಗೆ ಸರಿ ಯಿತ್ತಂಡ ನೀ ಕೌರವನ ಮುರಿವೆ, ಯುಧಿಷ್ಠಿರನನು+ ಆಹವವ (ಯುದ್ಧ) ಗೆಲಿಸುವೆ; ಸಾಕು ನೃಪರಿಬ್ಬರಲಿ ಸಂವಾದ (ಚರ್ಚೆ); ಎವಗೆ ತೀರ್ಥಕ್ಷೇತ್ರ ಯಾತ್ರಾವ್ಯವಸಿತಕೆ ಮನವಾದುದು+ ಎಂದು+ ಉತ್ಸವದಿಂ+ನ+ ಅಸುರಾರಿಯನು+ ಉಪಪ್ಲವ್ಯದಲಿ ಬೀಳ್ಕೊಂಡ.
ಅರ್ಥ:ಮಿನಿಯು ಮುಂದುವರಿದು,'ಬಲರಾಮನು ನಮಗೆ ಪಾಂಡವ- ಕೌರವ ಯಿತ್ತಂಡ ಕೆಡೆಯೂ ಸರಿಸಮಾನರು. ಕೃಷ್ಣಾ ನೀನು ಕೌರವನನ್ನು ಮುರಿಯುವೆ. ನೃಪರು ಇಬ್ಬರಲ್ಲಿ ಯುಧಿಷ್ಠಿರನನ್ನು ಯುದ್ಧದಲ್ಲಿ ಗೆಲ್ಲಿಸುವೆ; ಸಾಕು, ಹೆಚ್ಚಿನ ಮಾತು ಚರ್ಚೆ ಬೇಡ; ನಮಗೆ ಈಗ ತೀರ್ಥಕ್ಷೇತ್ರ ಯಾತ್ರೆಯ ವ್ಯವಸ್ಥೆಯಲ್ಲಿ ಮನಸ್ಸಾಗಿದೆ, ಎಂದು ಹೇಳಿ, ಜನರನ್ನು ಸೇರಿಸಿ ಯಾತ್ರೆಯಉತ್ಸವವವನ್ನು ಏರ್ಪಡಿಸಿಕೊಂಡು, ಉಪಪ್ಲಾವ್ಯ ನಗರದಲ್ಲಿ ಬೀಳ್ಕೊಂಡು ಯಾತ್ರೆಗೆ ಹೊರಟನು.
ರಾಮ ಕಳುಹಿಸಿಕೊಂಡು ವಿಪ್ರ
ಸ್ತೋಮಸಹಿತ ಸಮಸ್ತ ಋಷಿಗಳು
ರಾಮಣೀಯಕವಸ್ತು ದಾನವ್ಯಯದ ವೈಭವಕೆ |
ಸೌಮನಸ್ಯನು ರಾಗಹರದ ಮ
ಹಾಮಹಿಮ ತೀರ್ಥಾಭಿರತಿಯಲಿ
ಗೋ ಮಹಿಷ ಧನ ವಸ್ತ್ರದಿಂ ದ್ವಿಜವರರನರ್ಚಿಸಿದ || ೧೦ ||
ಪದವಿಭಾಗ-ಅರ್ಥ: ರಾಮ ಕಳುಹಿಸಿಕೊಂಡು ವಿಪ್ರಸ್ತೋಮ ಸಹಿತ ಸಮಸ್ತ ಋಷಿಗಳು ರಾಮಣೀಯಕ ವಸ್ತು ದಾನವ್ಯಯದ ವೈಭವಕೆ ಸೌಮನಸ್ಯ+ ಅನುರಾಗಹರದ ಮಹಾಮಹಿಮ ತೀರ್ಥಾಭಿ ರತಿಯಲಿ ಗೋ ಮಹಿಷ ಧನ ವಸ್ತ್ರದಿಂ ದ್ವಿಜವರರನು+ ಅರ್ಚಿಸಿದ
ಅರ್ಥ: ಬಲರಾಮನು ಕೃಷ್ಣನನ್ನು ಬೀಳ್ಕೊಂಡು ವಿಪ್ರರ ಸಮೂಹ ಸಹಿತ ಸಮಸ್ತ ಋಷಿಗಳನ್ನೂ ಕೂಡಿಕೊಂಡು, ಸುಂದರ ವಸ್ತುಗಳ ದಾನ ನೀಡುವ ವೈಭವದಿಂದ ಸುಮನಸ್ಸಿನಿಂದ ಮೋಹವಿಲ್ಲದ ಮಹಾಮಹಿಮ ತೀರ್ಥಗಳ ಸನ್ನಿಧಿಯಲ್ಲಿ ಗೋವು, ಮಹಿಷ, ಧನ, ವಸ್ತ್ರಗಳಿಂದ ಬ್ರಾಹ್ಮಣರನ್ನು ಪೂಜಿಸಿದ.
ಗಂಗೆ ಮೊದಲಾದಮಳತರ ತೀ
ರ್ಥಂಗಳಲಿ ತದ್ವಾರಣಾಖ್ಯಾ
ನಂಗಳಲಿ ತತ್ತದ್ವಿಶೇಷವಿಧಾನ ದಾನದಲಿ |
ತುಂಗವಿಕ್ರಮನೀ ಸಮಸ್ತ ಜ
ನಂಗಳೊಡನೆ ಸುತೀರ್ಥಯಾತ್ರಾ
ಸಂಗತಿಯಲೇ ಬಳಸಿದನು ಭೂಮಿಪ್ರದಕ್ಷಿಣವ || ೧೧ ||
ಪದವಿಭಾಗ-ಅರ್ಥ: ಗಂಗೆ ಮೊದಲಾದ+ ಅಮಳತರ(ಪವಿತ್ರ) ತೀರ್ಥಂಗಳಲಿ ತದ್+ ವಾರಣಾಖ್ಯಾನಂಗಳಲಿ(ದೋಷ ನಿವಾರಣೆ) ತತ್+ ತದ್+ ವಿಶೇಷವಿಧಾನ ದಾನದಲಿ ತುಂಗವಿಕ್ರಮನು+ ಈ ಸಮಸ್ತ ಜನಂಗಳೊಡನೆ ಸುತೀರ್ಥಯಾತ್ರಾ ಸಂಗತಿಯಲೇ ಬಳಸಿದನು ಭೂಮಿಪ್ರದಕ್ಷಿಣವ.
ಅರ್ಥ:ಬಲರಾಮನು ಗಂಗೆ ಮೊದಲಾದ ಪವಿತ್ರ ತೀರ್ಥಗಳಲ್ಲಿ ಆ ದೋಷ ನಿವಾರಣೆಗಳ ಆಯಾ ಅದೇ ವಿಶೇಷವಿಧಾನ ದಾನದಲ್ಲಿ ತುಂಗವಿಕ್ರಮ ಬಲರಾಮನು ಈ ಸಮಸ್ತ ಜನಗಳೊಡನೆ ಸುತೀರ್ಥಯಾತ್ರೆಯನ್ಉ ಮಾಡುವ ನೆವದಲ್ಲಿಯೇ ಭೂಮಿಪ್ರದಕ್ಷಿಣೆಯನ್ನೂ ಮಾಡಿದನು.
ಅವನಿಪತಿ ಕೇಳ್ ಪುಷ್ಯದಲಿ ಸಂ
ಭವಿಸಿದುದು ನಿರ್ಗಮನ ಬಳಿಕಾ
ಶ್ರವಣನಕ್ಷತ್ರದಲಿ ಕಂಡನು ಕೃಷ್ಣಪಾಂಡವರ |
ಅವರು ನೊಟಕರಾದರೀ ಕೌ
ರವ ವೃಕೋದರರಂಕ ಮಸೆದು
ತ್ಸವದಿ ಕಳನೇರಿದರು ಹಾಯಿಕಿ ಹಿಡಿದು ನಿಜಗದೆಯ || ೧೨ ||
ಪದವಿಭಾಗ-ಅರ್ಥ: ಅವನಿಪತಿ ಕೇಳ್ ಪುಷ್ಯದಲಿ ಸಂಭವಿಸಿದುದು ನಿರ್ಗಮನ ಬಳಿಕ ಆ ಶ್ರವಣನಕ್ಷತ್ರದಲಿ ಕಂಡನು ಕೃಷ್ಣಪಾಂಡವರ ಅವರು ನೊಟಕರು+ ಆದರು ಈ ಕೌರವ ವೃಕೋದರರ+ ಅಂಕ (ಯುದ್ಧ) ಮಸೆದ(ಉಂಟಾದ)+ ಉತ್ಸವದಿ ಕಳನ (ರಣರಂಗ)+ ಏರಿದರು ಹಾಯಿಕಿ(ಕೈ ಹಾಕಿ) ಹಿಡಿದು ನಿಜಗದೆಯ
ಅರ್ಥ:ಮುನಿ ಹೇಳಿದ, ರಾಜನೇ ಕೇಳು ಪುಷ್ಯ ನಕ್ಷತ್ರದಲ್ಲಿ ಬಲರಾಮನ ಯಾತ್ರೆಯ ನಿರ್ಗಮನ ಆರಂಭವಾಯಿತು. ಬಳಿಕ ಆ ಶ್ರವಣ ನಕ್ಷತ್ರದಲ್ಲಿ ಯಾತ್ರೆಯಿಂದ ಹಿಂತಿರುಗಿ ಬಂದು ಕೃಷ್ಣ ಮತ್ತು ಪಾಂಡವರನ್ನು ಕಂಡನು. ಅವರು ಹೀಗೆ ಈ ಕೌರವ ಮತ್ತು ವೃಕೋದರರ ಯುದ್ಧವನ್ನು ನೋಡುವ ಪ್ರೇಕ್ಷರಾದರು. ಭೀಮ ದುರ್ಯೋಧನರು ಯುದ್ಧ ಮಸೆದ ಉತ್ಸವದಲ್ಲಿ ತಮ್ಮತಮ್ಮ ಗದೆಯನ್ನು ಹಿಡಿದು ರಣರಂಗದ ಭೂಮಿಯನ್ನು ಏರಿದರು.

ಭೀಮ ದುರ್ಯೋಧನರ ಮಾತು[ಸಂಪಾದಿಸಿ]

ಧಾರುಣೀಪತಿ ಕುಳ್ಳಿರೈ ಪರಿ
ವಾರ ಕುಳ್ಳಿರಿ ಪಾರ್ಥ ಸಾತ್ಯಕಿ
ವೀರ ಧೃಷ್ಟದ್ಯುಮ್ನ ಯಮಳ ಶಿಖಂಡಿ ಸೃಂಜಯರು |
ವೀರ ಭಟರೆಮ್ಮಾಹವದ ವಿ
ಸ್ತಾರವನು ಸಮ ವಿಷಮ ಪಯಗತಿ
ಯೋರೆಪೋರೆಯನರಿವುದೆಂದನು ನಗುತ ಕುರುರಾಯ || ೧೩ ||
ಪದವಿಭಾಗ-ಅರ್ಥ: ಧಾರುಣೀಪತಿ ಕುಳ್ಳಿರೈ ಪರಿವಾರ ಕುಳ್ಳಿರಿ ಪಾರ್ಥ ಸಾತ್ಯಕಿ ವೀರ ಧೃಷ್ಟದ್ಯುಮ್ನ ಯಮಳ ಶಿಖಂಡಿ ಸೃಂಜಯರು ವೀರ ಭಟರೆ + ಎಮ್ಮ+ ಆಹವದ ವಿಸ್ತಾರವನು, ಸಮ ವಿಷಮ ಪಯಗತಿಯ+ ಓರೆಪೋರೆಯನು+ ಅರಿವುದೆಂದನು ನಗುತ ಕುರುರಾಯ.
ಅರ್ಥ: ಕುರುರಾಯನು ನಗತ್ತಾ, ಧಾರುಣೀಪತಿ ಧರ್ಮಜನೇ ಕುಳಿತುಕೋ, ಪರಿವಾರದವರೇ ಕುಳ್ಳಿರಿ, ಪಾರ್ಥ ಸಾತ್ಯಕಿ ವೀರ ಧೃಷ್ಟದ್ಯುಮ್ನ ಯಮಳ ನಕುಲ ಸಹದೇವರೇ, ಶಿಖಂಡಿ ಸೃಂಜಯರು ವೀರ ಭಟರೆ ಕುಳಿತು ನಮ್ಮ ಯುದ್ಧದ ವಿಸ್ತಾರವನ್ನೂ, ಸಮ ವಿಷಮ ಪಾಯಗತಿಯನ್ನೂ, ಓರೆಪೋರೆಯನ್ನೂ, ನೋಡಿ ತಿಳಿಯಿರಿ,' ಎಂದನು.
ಚಿತ್ತವಿಸು ಬಲರಾಮ ರಿಪುಗಳ
ತೆತ್ತಿಗನೆ ಲೇಸಾಗಿ ನೋಡು ನೃ
ಪೋತ್ತಮರು ಪಾಂಚಾಲ ಸೃಂಜಯ ಸೋಮಕಾದಿಗಳು |
ಇತ್ತಲಭಿಮುಖವಾಗಿ ರಥಿಕರು
ಮತ್ತಗಜದಾರೋಹಕರು ರಾ
ವುತ್ತರೀಕ್ಷಿಸಿ ನಮ್ಮ ಸಮರವನೆಂದನವನೀಶ || ೧೪ ||
ಪದವಿಭಾಗ-ಅರ್ಥ: ತೆತ್ತಿಗನೆ (ಬಂಧುವೇ) ಲೇಸಾಗಿ ನೋಡು ನೃಪೋತ್ತಮರು ಪಾಂಚಾಲ ಸೃಂಜಯ ಸೋಮಕಾದಿಗಳು ಇತ್ತಲು+ ಅಭಿಮುಖವಾಗಿ ರಥಿಕರು ಮತ್ತಗಜದ+ ಆರೋಹಕರು ರಾವುತ್ತರು+ ಈಕ್ಷಿಸಿ(ನೋಡಿ) ನಮ್ಮ ಸಮರವನು+ ಎಂದನು+ ಅವನೀಶ
ಅರ್ಥ:ಅವನೀಶ ಕೌರವನು,'ಬಲರಾಮ ಬಂಧುವೇ ಮನಗೊಟ್ಟು ನೋಡು; ರಾಜೋತ್ತಮರು ,ಪಾಂಚಾಲರು, ಸೃಂಜಯನು, ಸೋಮಕಾದಿಗಳು, ಇತ್ತ- ಈ ಕಡೆ ತಿರುಗಿರಿ; ರಥಿಕರು, ಮತ್ತಗಜದ ಮಾವುತರು ಸವಾರರು, ಕುದುರೆ ರಾವುತರು ನಮ್ಮ ಯುದ್ಧವನ್ನು ನೋಡಿ,' ಎಂದನು.
ಓಡಿ ಜಲದಲಿ ಮುಳುಗಿದವರಿಗೆ
ಖೋಡಿಯುಂಟೇ ರಥವಿಳಿದ ರಣ
ಖೇಡ ಕಾಲಾಳಿಂಗೆ ಪಯಗತಿಯೋರೆಪೋರೆಗಳೆ |
ನೋಡುತಿದೆ ಪರಿವಾರ ನೀ ಕೈ
ಮಾಡಿ ತೋರಾ ಬರಿಯ ಕಂಠದ
ಮೂಡಿಗೆಯ ಡಾವರದ ಲೇಸಹುದೆಂದನಾ ಭೀಮ || ೧೫ ||
ಪದವಿಭಾಗ-ಅರ್ಥ: ಓಡಿ ಜಲದಲಿ ಮುಳುಗಿದವರಿಗೆ ಖೋಡಿಯುಂಟೇ (ಸಂಕೋಚ) ರಥವಿಳಿದ ರಣಖೇಡ ಕಾಲಾಳಿಂಗೆ ಪಯಗತಿಯ+ ಓರೆಪೋರೆಗಳೆ? ನೋಡುತಿದೆ ಪರಿವಾರ ನೀ ಕೈಮಾಡಿ ತೋರಾ, ಬರಿಯ ಕಂಠದ ಮೂಡಿಗೆಯ(ನಡುಕ, ಬತ್ತಳಿಕೆ) ಡಾವರದ( ದುಂಡಾವರ್ತಿ) ಲೇಸಹುದು+ ಎಂದನು+ ಆ ಭೀಮ.
ಅರ್ಥ: ಆಗ ಭೀಮನು,'ಓಡಿಹೋಗಿ ನೀರಿನಲ್ಲಿ ಮುಳುಗಿ ಅಡಗಿದವರಿಗೆ ಮಾತಿಗೆ ಸಂಕೋಚವಿದೆಯೇ? ರಥವನ್ನು ಇಳಿದ ರಣಹೇಡಿ ಕಾಲಾಳಿಗೆ ಪಥಗತಿಗಳು- ಯುದ್ಧದ ನೆಡಿಗೆಯ ಗತ್ತುಇರುವುದೇ ಅವು ಓರೆಪೋರೆಗಳೆ ಸರಿ. ಕೌರವಾ ನೀನು ಹೇಳುವುದೇನು? ಪರಿವಾರವು ನೋಡುತ್ತಿದೆ. ನೀನು ಕೈಮಾಡಿ- ಕೈವರಸೆಯನ್ನು ತೋರಿಸೋ!, ಬರಿಯ ಗಂಟಲಿನ ಬತ್ತಳಿಕೆಯ ಆರ್ಬಟ ಚೆನ್ನಾಗಿದೆ.' ಎಂದನು.
ಆಟವಿಕ ಸಂಗದಲಿ ಬಹುವಾ
ಚಾಟ ನೀನಹೆ ನಿನ್ನ ಪುಣ್ಯದ
ತೋಟವನು ತರಿದೊಟ್ಟಿ ನಿಮ್ಮೈವರನು ಯಮಪುರದ |
ಗೋಟಿನಲಿ ಗುರಿಮಾಡುವೆನು ಜೂ
ಜಾಟದಲಿ ನೀವರಿಯಿರೇ ಬೊ
ಬ್ಬಾಟವಂದೇನಾಯಿತೆಂದನು ಜರೆದು ಕುರುರಾಯ || ೧೬ ||
ಪದವಿಭಾಗ-ಅರ್ಥ:ಆಟವಿಕ(ಆಡವಿಜನರ) ಸಂಗದಲಿ ಬಹುವಾಚಾಟ ನೀನು+ ಅಹೆ(ಆಗಿರುವೆ), ನಿನ್ನ ಪುಣ್ಯದ ತೋಟವನು ತರಿದು+ ಒಟ್ಟಿ ನಿಮ್ಮ+ ಐವರನು ಯಮಪುರದ ಗೋಟಿನಲಿ (ಗೋಟು= ಮೂಲೆ,ದಿಕ್ಕು) ಗುರಿಮಾಡುವೆನು; ಜೂಜಾಟದಲಿ ನೀವರಿಯಿರೇ ಬೊಬ್ಬಾಟವು+ ಅಂದು+ ಏನಾಯಿತು ಏಂದನು, ಜರೆದು (ನಿಂದಿಸಿ) ಕುರುರಾಯ.
ಅರ್ಥ:ಅದಕ್ಕೆ ಭೀಮನನ್ನು ಜರೆದು ಕುರುರಾಯನು, 'ಭೀಮನೇ ಕಾಡು ಅಲೆದು ಆಡವಿಜನರ ಸಹವಾಸದಲ್ಲಿದ್ದು ಬಹುವಾಚಾಳಿ ನೀನೇ ಆಗಿರುವೆ. ನಿನ್ನ ಪುಣ್ಯದ ತೋಟವನ್ನು ಕತ್ತರಿಸಿ ರಾಶಿಹಾಕಿ, ನಿಮ್ಮ ಐದೂ ಜನರನ್ನೂ ಯಮನ ಪುರದ ದಿಕ್ಕಿಗೆ ಕಳಿಸುವೆನು. ಜೂಜಾಟದಲ್ಲಿ ನೀವು ಅರಿತಿಲ್ಲವೇ? ಅಂದು ನಿಮ್ಮ ಬೊಬ್ಬಾಟವು ಏನಾಯಿತು?' ಎಂದನು.
ಶಕುನಿ ಕಲಿಸಿದ ಕಪಟದಲಿ ಕೌ
ಳಿಕದಲುಬ್ಬಿದಿರಿದರ ವಿಸ್ತಾ
ರಕರಲೇ ನಾವಿಂದಿನಲಿ ದುಶ್ಶಾಸನಾದಿಗಳ |
ರಕುತಪಾನ ಭವತ್ಸಹೋದರ
ನಿಕರನಾಶನವರುಹದೇ ಸು
ಪ್ರಕಟವಿದು ಜಗಕೆಂದು ಗದೆಯನು ತೂಗಿದನು ಭೀಮ || ೧೭ ||
ಪದವಿಭಾಗ-ಅರ್ಥ: ಶಕುನಿ ಕಲಿಸಿದ ಕಪಟದಲಿ ಕೌಳಿಕದಲಿ (ಮೋಸ.)+ ಉಬ್ಬಿದಿರಿ+ ಇದರ ವಿಸ್ತಾರಕರಲೇ ನಾವು+ ಇಂದಿನಲಿ ದುಶ್ಶಾಸನಾದಿಗಳ ರಕುತಪಾನ ಭವತ್+ ಸಹೋದರ ನಿಕರನಾಶನವ+ ಅರುಹದೇ (ಹೇಳುವುದೇ) ಸುಪ್ರಕಟವಿದು ಜಗಕೆಂದು ಗದೆಯನು ತೂಗಿದನು ಭೀಮ'
ಅರ್ಥ:ಅದಕ್ಕೆ ಭೀಮನು, ಶಕುನಿಯು ಕಲಿಸಿದ ಕಪಟದಿಂದ ಮೋಸಮಾಡಿ ಸಂತೋಷದಿಂದ ಉಬ್ಬಿದಿರಿ. ಅದರ ವಿಸ್ತಾರದ ಫಲವೇ, ನಾವು ಇಂದು ಇಲ್ಲಿ ನಿಂತಿರುವುದು; ಅದರ ಫಲವಾಗಿ ಈಗಾಗಲೇ ದುಶ್ಶಾಸನಾದಿಗಳ ರಕ್ತಪಾನವನ್ನು ಮಾಡಿದ್ದನ್ನೂ, ನಿನ್ನ ಸಹೋದರರ ಸಮೂಹವನ್ನೇ ನಾಶನವನ್ನೂ ಹೇಳುವುದು ಅಗತ್ಯವೇ? ಎಲ್ಲರಿಗೂ ಜಗತ್ತಿಗೂ ಇದು ಸುಪ್ರಕಟವಾಗಿದೆ ಎಂದು ಭೀಮನು ಗದೆಯನ್ನು ತೂಗಿದನು.'

ಯುದ್ಧ[ಸಂಪಾದಿಸಿ]

ಸಾಯಲಾಗದೆ ಸುಭಟರಾಚಂ
ದ್ರಾಯತವೆ ತನು ವಿಧಿಯ ಟಿಪ್ಪಣ
ದಾಯುಷವು ತೀರಿದಡೆ ಸಾವರು ನಿನ್ನಲೇನಹುದು |
ಕಾಯಲಳವೇ ನಿನಗೆ ಮುನಿದಡೆ
ನೋಯಿಸುವಡಳವಲ್ಲ ಫಡ ದೈ
ವಾಯತಕೆ ನೀನೇಕೆ ಬೆರೆತಿಹೆಯೆಂದನಾ ಭೂಪ || ೧೮ ||
ಪದವಿಭಾಗ-ಅರ್ಥ: ಸಾಯಲಾಗದೆ ಸುಭಟರು+ ಆಚಂದ್ರಾಯತವೆ (ಚಂದ್ರನು ಇರುವವರೆಗೆ ಇರುವರೆ? ಆಚಂದ್ರಾರ್ಕ= ಸೂರ್ಯ ಚಂದ್ರು ಇರುವವರೆಗೆ.) ತನು(ದೇಹ) ವಿಧಿಯ ಟಿಪ್ಪಣದ+ ಆಯುಷವು ತೀರಿದಡೆ ಸಾವರು ನಿನ್ನಲಿ+ ಏನಹುದು ಕಾಯಲು+ ಅಳವೇ(ಸಾಧ್ಯಬೇ?) ನಿನಗೆ ಮುನಿದಡೆ ನೋಯಿಸುವಡೆ+ ಅಳವಲ್ಲ(ಸಾದ್ಯವಿಲ್ಲ) ಫಡ ದೈವಾಯತಕೆ ನೀನೇಕೆ ಬೆರೆತಿಹೆ(ಸೇರು)+ ಯೆಂ+ ಎಂದನು+ ಆ ಭೂಪ.
ಅರ್ಥ:ಕೌರವನು,'ಸುಭಟರು ಸಾಯಬಾರದೇನು? ಅವರು ಆಚಂದ್ರಾರ್ಕವಾಗಿ ಶಾಶ್ವತ ಇರುವರೇ? ದೇಹವು ವಿಧಿಯ ಬರೆದ ಆಯುಷ್ಯವು ತೀರಿದರೆ ಸಾಯುವರು. ನಿನ್ನಿಂದ ಏನಾಗುವುದು? ನಿನಗೆ ಸಾಯುವವರನ್ನು ಕಾಯಲುಸಾಧ್ಯವೇ? ವಿಧಿ ಬರೆಯದಿದ್ದರೆ ನಿನಗೆ ಸಿಟ್ಟುಬಂದರೆ ನೋಯಿಸಲೂ ಸಾದ್ಯವಿಲ್ಲ! ಫಡ! ದೈವನಿಯಮಕ್ಕೆ ನೀನೇಕೆ ಸೇರಿಕೊಳ್ಳುವೆ?,'ಎಂದನು.
ಎಲವೊ ದುರ್ಮತಿ ನಿನ್ನ ಕೌರವ
ಕುಲದ ಶಿಕ್ಷಾರಕ್ಷೆಗಿನ್ನಾ
ರೊಳರು ಹೊರಬಿಗ ದೈವವುಂಟೇ ತಾನೆ ದೈವ ಕಣಾ |
ಕಳಚಿದೆನಲಾ ಕೊಂದು ನೂರ್ವರ
ತಲೆಯನಿನ್ನರೆಘಳಿಯಲಿ ಹೆಡ
ತಲೆಯನೊದೆವೆನು ಹೋಗೆನುತ ಹೊಯ್ದನು ಸುಯೋಧನನ || ೧೯ ||
ಪದವಿಭಾಗ-ಅರ್ಥ:ಎಲವೊ ದುರ್ಮತಿ ನಿನ್ನ ಕೌರವಕುಲದ ಶಿಕ್ಷಾ+ ರಕ್ಷೆಗೆ+ ಇನ್ನಾರು+ ಒಳರು ಹೊರಬಿಗ ದೈವವುಂಟೇ, ತಾನೆ ದೈವ ಕಣಾ, ಕಳಚಿದೆನಲಾ ಕೊಂದು ನೂರ್ವರ ತಲೆಯನು, ಇನ್ನು ಅರೆಘಳಿಯಲಿ ಹೆಡ ತಲೆಯನು+ ಒದೆವೆನು ಹೋಗು, ಎನುತ ಹೊಯ್ದನು ಸುಯೋಧನನ.
ಅರ್ಥ: ಭೀಮನು,'ಎಲವೊ ದುರ್ಮತಿ, ನಿನ್ನ ಕೌರವ ಕುಲದ ಶಿಕ್ಷೆ ರಕ್ಷೆಗೆ ಇನ್ನಾರು ಇದ್ದಾರೆ? ಹೊರಗಿನ ದೈವವುಂಟೇ? ತಾನೇ(ಭೀಮನೇ) ದೈವ ಕಣಾ! ನಿನ್ನ ತಮ್ಮಂದಿರು ನೂರು ಜನರನ್ನು(೯೯) ಕೊಂದು ಅವರ ತಲಯನ್ನು ಕಳಚಿದ್ದೇನಲ್ಲಾ, ಇನ್ನು ಅರೆಘಳಿಯಲ್ಲಿ ನಿನ್ನ ಹೆಡ ತಲೆಯನ್ನೂ ಒದೆಯುವೆನು ಹೋಗು,' ಎನ್ನುತ್ತಾ ಸುಯೋಧನನ್ನು ಗದೆಯಿಂದ ಹೊಯ್ದನು/ಹೊಡೆದನು.
ಬಿಡಸಿದಡೆ ಗದೆಯಿಂದ ಹೊಯ್ಗುಳ
ತಡೆದು ತಿವಿದನು ನಿನ್ನ ಮಗನವ
ಗಡದ ಘಾಯಕೆ ಗದೆಯನೊಡ್ಡಿ ಸಗಾಢ ಕೋಪದಲಿ |
ತುಡುಕಿದನು ಕಲಿಭೀಮ ಹಜ್ಜೆಯೊ
ಳೆಡೆಮುರಿದು ನಿನ್ನಾತನೌಕಿದ
ರೊಡನೊಡನೆ ಗಾಹಿಸಿದರುಚಿತದ ಗತಿಯ ಗಮಕದಲಿ || ೨೦ ||
ಪದವಿಭಾಗ-ಅರ್ಥ:ಬಿಡಸಿದಡೆ (ಬಿಡಸು= ?ಬೀಸಿ ಹೊಡೆ) ಗದೆಯಿಂದ ಹೊಯ್ಗುಳ(ಹೊಡೆತಗಳನ್ನು) ತಡೆದು ತಿವಿದನು ನಿನ್ನ ಮಗನು+ ಅವಗಡದ ಘಾಯಕೆ ಗದೆಯನೊಡ್ಡಿ ಸಗಾಢ (ಬಹಳ ) ಕೋಪದಲಿ ತುಡುಕಿದನು ಕಲಿಭೀಮ ಹಜ್ಜೆಯೊಳು+ ಎಡೆಮುರಿದು ನಿನ್ನಾತನ+ ಔಕಿದರೆ(ಒತ್ತಿದರೆ)+ ಒಡನೊಡನೆ ಗಾಹಿಸಿದರು(ಗಾಹಿಸು= 1. ಹರಡು. 2. ಮುಳುಗು (ಬಗ್ಗಿ ?). 3. ಮೋಸಮಾಡು.)+ ಉಚಿತದ ಗತಿಯ ಗಮಕದಲಿ.
ಅರ್ಥ:ಸಂಜಯನು ಧೃತರಾಷ್ಟ್ರನಿಗೆ,'ಭೀಮನು ಗದೆಯಿಂದ ಬೀಸಿ ಹೊಡೆದರೆ, ಆ ಹೊಡೆತಗಳನ್ನು ತಡೆದು ನಿನ್ನ ಮಗನು ತಿವಿದನು. ನಿನ್ನ ಮಗನು ಅವಗಡದ/ಅಪಾಯದ ಘಾಯಕ್ಕೆ/ಹೊಡೆತಕ್ಕೆ ಗದೆಯನ್ನು ಒಡ್ಡಿ ಸಗಾಢ/ ಬಹಳ ಕೋಪದಿಂದ ಆಕ್ರಮಿಸಿಕದನು. ಕಲಿಭೀಮ ಹಜ್ಜೆಯಲ್ಲಿ ಎಡೆಮುರಿದು ತಪ್ಪಸಿಕೊಂಡು ನಿನ್ನಾತನ ಗದೆಯಿಂದ ಒತ್ತಿದರೆ, ಒಡನೊಡನೆ/ ಕೂಡಲೆ ಉಚಿತವಾದ ಗತಿಯ ಗಮಕದಲ್ಲಿ/ಗತ್ತಿನಲ್ಲಿ ಬಗ್ಗಿ ಮೋಸದಿಂದ ತಪ್ಪಸಿಕೊಳ್ಳುವರು .
ಹೊಯ್ದು ಬಿಡಿಸಿದಡನಿಲಜನ ಮೇ
ಲ್ವಾಯ್ದನವನಿಪನೊಡ್ಡಿ ಗದೆಯಲಿ
ಕಾಯ್ದು ತಿವಿದನು ಭೀಮಸೇನನ ನೃಪತಿ ವಂಚಿಸಿದ |
ಮೆಯ್ದೆಗೆದಡಿಟ್ಟಣಿಸಿ ಪವನಜ
ಹೊಯ್ದಡೊಲೆದನು ಭೂಪನಿಬ್ಬರ
ಕಯ್ದುಕಾರತನಕ್ಕೆ ಬೆರಗಾದುದು ಸುರಸ್ತೋಮ || ೨೧ ||
ಪದವಿಭಾಗ-ಅರ್ಥ: ಹೊಯ್ದು ಬಿಡಿಸಿದಡೆ+ ಅನಿಲಜನ(ಭೀಮನ) ಮೇಲ್ವಾಯ್ದನು+ ಅವನಿಪನು;+ ಒಡ್ಡಿ ಗದೆಯಲಿ ಕಾಯ್ದು (ಕಾದುನೋಡಿ) ತಿವಿದನು ಭೀಮಸೇನನ, ನೃಪತಿ ವಂಚಿಸಿದ ಮೆಯ್ದೆಗೆದು+ ಅಡಿಟ್ಟಣಿಸಿ ಪವನಜ ಹೊಯ್ದಡೆ+ ಒಲೆದನು ಭೂಪನು+ ಇಬ್ಬರ ಕಯ್ದುಕಾರತನಕ್ಕೆ (ಆಯುಧಪ್ರಯೋಗ ಕೌಶಲಕ್ಕೆ ಕನ್ನಡ ಪ್ರಯೋಗ- ಕಯ್ದುಕಾರತನ) ಬೆರಗಾದುದು ಸುರಸ್ತೋಮ.
ಅರ್ಥ:ಕೌರವನನ್ನು ಹೊಡೆದು ತನ್ನಿಂದ ಬಿಡಿಸಿದಾಗ(?) ಕೌರವನು ಭೀಮನ ಮೇಲೆ ಹಾಯ್ದನು ನಂತರ ನೃಪತಿ ಗದೆಯನ್ನು ಒಡ್ಡಿ ಸಮಯ ಕಾದು ಭೀಮಸೇನನ್ನು ತಿವಿದನು. ಅವನು ಮೆಯ್ದೆಗೆದು/ಮಯ್ ತೆಗೆದು ತಪ್ಪಿಸಿಕೊಂಡು ವಂಚಿಸಿ ಅಡಿಯ/ ಹೆಜ್ಜೆಯ ಇಟ್ಟಣಿಸಿ/ ಗುರಿಇಟ್ಟು ಪವನಜ ಭಿಮನು ಹೊಯ್ದಡೆ/ ಹೊಡೆದಾಗ, ಕವರವ ಭೂಪನು ಹೊಡೆತಕ್ಕೆ ಒಲೆದನು. ಇಬ್ಬರ ಆಯುಧಪ್ರಯೋಗ ಕೌಶಲಕ್ಕೆ ದೇವತಗಳ ಸಮೂಹವೂ ಬೆರಗಾಯಿತು.
ಸುಳಿದರೆಡಬಲ ಚಾರಿಯಲಿ ಚಾ
ಪಳದ ಪಯಪಾಡಿನಲಿ ಚಿತ್ರದ
ಚಳಗತಿಯ ಚೇತನದ ಚಡ್ಡಣೆಗಳ ಚಡಾಳದಲಿ
ಹೊಳೆದರಾವರ್ತದಲಿ ಪರಿಮಂ
ಡಳಿಸಿದರು ಠಾಣದಲಿ ಜಂಘೆಯ
ಲುಳಿಯ ಲವಠಾಣದಲಿ ಮರೆದರು ಭೀಮ ಕೌರವರು ೨೨
ಪದವಿಭಾಗ-ಅರ್ಥ: ಸುಳಿದರು+ ಎಡಬಲ ಚಾರಿಯಲಿ (ಚಲಿಸಿ ಸುಳಿದರು), ಚಾಪಳದ (ಚುರುಕಿನ) ಪಯಪಾಡಿನಲಿ (ಪಟ್ಟುಗಳಲ್ಲಿ, ಗತ್ತಿನಲ್ಲಿ), ಚಿತ್ರದ ಚಳಗತಿಯ ( ಚಿತ್ರವಿಚಿತ್ರ ಚುರಿಕಿನ ನೆಡೆಯ) ಚೇತನದ(ಶಕ್ತಿಯ) ಚಡ್ಡಣೆಗಳ(ಹೊಡೆತದಲ್ಲಿ) ಚಡಾಳದಲಿ (ಉಗ್ರವಾಗಿ), ಹೊಳೆದರು(ಶೋಭಿಸಿದರು) ಆವರ್ತದಲಿ(ಸುತ್ತುವುದು)+ ಆವರ್ತದಲಿ ಪರಿಮಂಡಳಿಸಿದರು (ಸುತ್ತಿ ಸುತ್ತಿ ಓಡಾಡಿ ಹೋರಾಡಿದರು) ಠಾಣದಲಿ (ರಣದಲ್ಲಿ), ಜಂಘೆಯ (ಮೊಣಕಾಲು) ಲುಳಿಯ (ದೇಸಿಪದ) ದೊಣ್ಣೆ, ಗುದಿಗೆ, ಬಡಿಗೋಲು;೧ ರಭಸ, ವೇಗ ೨ ) ಲವಠಾಣದಲಿ(ಲವಲವಿಕೆಯಿಂದ ರಣದಲ್ಲಿ) ಮರೆದರು, ಭೀಮ ಕೌರವರು
ಅರ್ಥ: ಭೀಮ ಕೌರವರು ದ್ವಂದ್ವ ಯುದ್ಧದಲ್ಲಿ ಎಡಬಲಗಳಲ್ಲಿ ಚಲಿಸಿ ಸುಳಿದರು. ಚಾಪಳದ/ ಚುರುಕಿನ ಪಟ್ಟುಗಳಲ್ಲಿ ಗತ್ತಿನಲ್ಲಿ ಚಲಿಸಿದರು; ಚೇತನದ ಚಿತ್ರವಿಚಿತ್ರ ಚುರಿಕಿನ ನೆಡೆಯಲ್ಲಿ, ಶಕ್ತಿಯ ಹೊಡೆತದಲ್ಲಿ ಉಗ್ರವಾಗಿ ತೋರಿ ಶೋಭಿಸಿದರು; ರಣದಲ್ಲಿ ಸುತ್ತುವರಿದು ಸುತ್ತಿ ಸುತ್ತಿ ಓಡಾಡಿ ಹೋರಾಡಿದರು; ಭೀಮ ಕೌರವರು -ಮೊಣಕಾಲು ಮಂಡಿಯೋರಿ ಲವಲವಿಕೆ ಮತ್ತು ರಭಸದಿಂದ ರಣದಲ್ಲಿ ಗದೆಯಿಂದ ಹೋರಾಡಿದರು.
ಒಳಹೊಗುವ ಹೆರತೆಗೆವ ಘಾಯವ
ಕಳಚುವವಧಾನದಲಿ ದೃಷ್ಟಿಯ
ಬಳಿಗೆ ಕೈಮಾಡುವ ವಿಘಾತಿಗೆ ಜಗುಳ್ವ ಝಾಡಿಸುವ |
ಸುಳಿವ ಸಂತೈಸುವ ಸುಸಂಚದೊ
ಳಳವರಿವ ವಂಚಿಸುವ ಗಮನಿಕೆ
ಯಳಬಳವನಾರೈವ ಭಟರೊದಗಿದರು ಸಮರದಲಿ || ೨೩||
ಪದವಿಭಾಗ-ಅರ್ಥ: ಒಳಹೊಗುವ ಹೆರತೆಗೆವ ಘಾಯವ ಕಳಚುವ(ಪಡೆಯದಂತೆ )+ ಅವಧಾನದಲಿ(ಎಚ್ಚರಿಕೆಯಲ್ಲಿ, ಜಾಗರೂಕತೆ) ದೃಷ್ಟಿಯ ಬಳಿಗೆ ಕೈಮಾಡುವ (ಹೊಡೆಯುವ), ವಿಘಾತಿಗೆ ಜಗುಳ್ವ(ಘಾಯವಾಗುವಂತಹ ಹೊಡೆತದಿಂದ ಜಾರಿಕೊಳ್ಳುವ) ಝಾಡಿಸುವ(ರಭಸದಿಂದ ಹೊಡೆಯುವ ) ಸುಳಿವ ಸಂತೈಸುವ ಸುಸಂಚದೊಳು( ಹಿಡಿತ,ವಶ ಕೂಟ,ಸಂಪರ್ಕ)+ ಅಳವರಿವ(ಅಳವು- ಶಕ್ತಿ, ಅರಿವ) ವಂಚಿಸುವ ಗಮನಿಕೆಯ+ ಅಳಬಳವನು+ ಆರೈವ ಭಟರು+ ಒದಗಿದರು ಸಮರದಲಿ(ಈ ದ್ವಂದ್ವಯುದ್ಧದಲ್ಲಿ).
ಅರ್ಥ: ಈ ದ್ವಂದ್ವಯುದ್ಧದಲ್ಲಿ ರಕ್ಷಣೆಯ ಒಳಹೊಗುವ,ಶತ್ರುವಿನ ಹಿಡಿತಕ್ಕೆ ಸಿಕ್ಕಿಕೊಂಡಾಗ ಹೊರತೆಗೆದು ತಪ್ಪಿಸಿಕೊಳ್ಳುವ, ಘಾಯವನ್ನು ಪಡೆಯದಂತೆ ಜಾಗರೂಕತೆ ವಹಿಸುವಲ್ಲಿ, ಗುರಿಯಿಟ್ಟ ದೃಷ್ಟಿಯ ಬಳಿಗೆ ಹೊಡೆಯುವ, ಘಾಯವಾಗುವಂತಹ ಹೊಡೆತದಿಂದ ಜಾರಿಕೊಳ್ಳುವ, ರಭಸದಿಂದ ಹೊಡೆಯುವ, ಅತ್ತ ಇತ್ತ ಸುಳಿವ, ಸಂತೈಸುವ, ಹಿಡಿತದಲ್ಲಿ, ವಿರೋಧಿಯ ಶಕ್ತಿಯನ್ನು ಅರಿಯುವವ, ಶತ್ರುವನ್ನು ವಂಚಿಸಿ ಹೊಡಯುವ, ವಿರೋಧಿವನ್ನು ಗಮನಿಸುವ, ಅವನ ಗಮನ - ನಡೆಯನ್ನು ತಿಳಿಯುವ, ಅಕ್ಕ ಪಕ್ಕವನ್ನು ಎಚ್ಚರಿಕೆಯಿಂದ ಗಮನಿಸಿ ರಕ್ಷಿಸಿಕೊಳ್ಳುವ, ಈ ಕಲೆಗಳಲ್ಲಿ ಭೀಮ ದುರ್ಯೋಧನರು ಸಮರದಲಿ (ಸಮವಾಗಿ)ಕಂಡುಬಂದರು.
ಬಿಡುವ ಬಿಡಿಸುವ ಪರರ ಘಾಯವ
ತಡೆವ ಗೋಮೂತ್ರಕದ ಚಿತ್ರದ
ಝಡಪದವಧಾನದ ವಿಧಾನದ ಘಾಯಖಂಡಿಗಳ |
ತುಡುಕುವವ್ವಳಿಸುವ ವಿಸಂಧಿಯ
ಹಿಡಿವ ಬಿಚ್ಚುವ ಬಿಗಿವ ಸೆಳೆವವ
ಗಡಿಸುವೌಕುವ ಕುಶಲದಲಿ ಕಾದಿದರು ಸಮರದಲಿ || ೨೪ ||
ಪದವಿಭಾಗ-ಅರ್ಥ: ಬಿಡುವ ಬಿಡಿಸುವ ಪರರ ಘಾಯವ ತಡೆವ ಗೋಮೂತ್ರಕದ ಚಿತ್ರದ ಝಡಪದ(ಝಾಡಿಸು, ಕೊಡವು, ಝಾಡಿಸಿ ಒದೆಯುವುದು)+ ಅವಧಾನದ(ಎಚ್ಚರಿಕೆಯ) ವಿಧಾನದ, ಘಾಯಖಂಡಿಗಳ ತುಡುಕುವ (ಹಿಡಿ)+ ಅವ್ವಳಿಸುವ(ಪಕ್ಕನೆ ಎದ್ದು ನಿಲ್ಲುವ, ನಿಮುರು, ಅವ್ವಾ ಎಂದು ಬಾಯಿಬಿಟ್ಟು ಸಂಕಟ ಪಡುವ) ವಿಸಂಧಿಯ ಹಿಡಿವ (ಶತ್ರುವಿನ ದುರ್ಬಲತೆಯನ್ನು ಹಿಡಿಯುವ) ಬಿಚ್ಚುವ ಬಿಗಿವ ಸೆಳೆವ+ ಅವಗಡಿಸುವ(ಅವಗಡ, ಪೆಟ್ಟುಮಾಡುವ)+ ಔಕುವ ಕುಶಲದಲಿ ಕಾದಿದರು ಸಮರದಲಿ.
ಅರ್ಥ:ಹತ್ತಿರಬಂದು ಹೊಡೆದು ಬಿಟ್ಟುಬಿಡುವುದು, ಹೊಡದು ತೆಕ್ಕಯಲ್ಲಿದ್ದಾಗ ಬಿಡಿಸಿಕೊಳ್ಳುವುದು, ಶತ್ರುವಿನ(ಪರರ) ಘಾಯವನ್ನು ತಡೆಯುವುಕ್ಕೆ ಗೋಮೂತ್ರಕದ, ಉಪಚಾರ ಮಾದುವುದು, ಚಿತ್ರಮೂಲದ ಚಿಕಿತ್ಸೆಗೆ ಬಿಡುವುದು, ಒದೆಯುವಾಗ ಎಚ್ಚರಿಕೆಯ ವಿಧಾನಗಳಲ್ಲಿ, ಘಾಯ ಖಂಡಿಗಳನ್ನು/ಸ್ಥಳಗಳನ್ನು ಹಿಡಿಯುವ, ಪೆಟ್ಟಿನಿಂದ ಸಾವರಿಸಿಕೊಂಡು ಎದ್ದು ನಿಲ್ಲವ, ಶತ್ರುವಿನ ದುರ್ಬಲತೆಯನ್ನು ಹಿಡಿಯುವ, ಬಿಗಿದ ಪಟ್ಟನ್ನು ಬಿಚ್ಚುವ, ಸೆಳೆದುಕೊಳ್ಳುವ, ಪೆಟ್ಟುಮಾಡುವ, ಕೌಶಲ್ಯದಿಂದ ಔಕುವ ಭೀಮ ದುರ್ಯೋಧನರು ಯುದ್ಧದಲ್ಲಿ ಕಾದಿದರು.
ಬವರಿ ಮತ್ಸ್ಯೋದ್ಗತಿ ವಿಲಂಘನ
ವಿವಳಿತಾಂಗ ವರಾಹಮತ ಸಂ
ಪ್ಲವನ ಪಾರಿಷ್ಟವ ಗದಾವಪರಿರಂಭ ವಿಕ್ಷೇಪ |
ಲವಣಿ ಲಹರಿಯುದಂಚ ನವ ವಿ
ದ್ರವಣ ಲಘುವಿನ್ಯಸ್ತವೆಂಬೀ
ವಿವರದಲಿ ಕಾದಿದರು ಕೌತುಕವೆನಲು ಸುರನಿಕರ || ೨೫ ||
ಪದವಿಭಾಗ-ಅರ್ಥ: ಬವರಿ(ತಿರುಗುವುದು) ಮತ್ಸ್ಯೋದ್ಗತಿ, ವಿಲಂಘನ, ವಿವಳಿತಾಂಗ, ವರಾಹಮತ, ಸಂಪ್ಲವನ, ಪಾರಿಷ್ಟವ ಗದಾವಪರಿರಂಭ, ವಿಕ್ಷೇಪ, ಲವಣಿ, ಲಹರಿಯುದಂಚ, ನವ ವಿದ್ರವಣ, ಲಘುವಿನ್ಯಸ್ತವು+ ಎಂಬ+ ಈ ವಿವರದಲಿ ಕಾದಿದರು, ಕೌತುಕವೆನಲು ಸುರನಿಕರ(ದೇವತಗಳೂ ಆಶ್ಚರ್ಯ ಪಡುವಂತೆ).
ಅರ್ಥ:ದೇವತಗಳೂ ಆಶ್ಚರ್ಯ ಪಡುವಂತೆ ಗದಾಯುದ್ಧದಲ್ಲಿ ತಿರುಗುವುದು, ಮತ್ಸ್ಯೋದ್ಗತಿ, ವಿಲಂಘನ, ವಿವಳಿತಾಂಗ, ವರಾಹಮತ, ಸಂಪ್ಲವನ, ಪಾರಿಷ್ಟವ ಗದಾವಪರಿರಂಭ, ವಿಕ್ಷೇಪ, ಲವಣಿ, ಲಹರಿಯುದಂಚ, ನವ ವಿದ್ರವಣ, ಲಘುವಿನ್ಯಸ್ತವು, ಎಂಬ ಈ ಗದಾಯುದ್ಧ ವಿದ್ಯೆಯ ವಿವರದಕ್ರಮದಲ್ಲಿ ಕಾದಿದರು/ ಯುದ್ಧಮಾದಿದರು.
ನೂಕಿದರೆ ಹೆರತೆಗೆವ ಹೆರತೆಗೆ
ದೌಕುವೌಕಿದಡೊತ್ತು ವೊತ್ತಿದ
ಡಾಕೆಯಲಿ ಪಂಠಿಸುವ ಪಂಠಿಸೆ ಕೂಡೆ ಸಂಧಿಸುವ |
ಆ ಕಠೋರದ ಕಯ್ದು ಕಿಡಿಗಳ
ನೋಕರಿಸೆ ಖಣಿಖಟಿಲ ಝಾಡಿಯ
ಜೋಕೆಯಲಿ ಕಾದಿದರು ಸಮಬಲರಾಹವಾಗ್ರದಲಿ || ೨೬ ||
ಪದವಿಭಾಗ-ಅರ್ಥ: ನೂಕಿದರೆ ಹೆರತೆಗೆವ(ಹಿಂದೆಸರಿದು, ಹಿಮ್ಮೆಟ್ಟಿ) ಹೆರತೆಗೆದು+ ಔಕುವ,(ಹಿಸುಕು)+ ಔಕಿದಡೆ+ ಒತ್ತು ವೊತ್ತಿದಡೆ+ ಆಕೆಯಲಿ ಪಂಠಿಸುವ(ಪಂಠಿಸುವರು, ಪಂಟಿಸು = ಲಾಗಹಾಕು), ಪಂಠಿಸೆ ಕೂಡೆ ಸಂಧಿಸುವ, ಆ ಕಠೋರದ ಕಯ್ದು(ಆಯುಧ) ಕಿಡಿಗಳನ+ ಓಕರಿಸೆ(ಹೊರಚೆಲ್ಲಲು- ವಾಂತಿಮಾಡು) ಖಣಿಖಟಿಲ ಝಾಡಿಯ (ಹೊಡೆತದ)ಜೋಕೆಯಲಿ ಕಾದಿದರು (ಹೋರಾಡಿದರು) ಸಮಬಲರು(ಇಬ್ಬರೂ ಸಮಾನ ಬಲವುಳ್ಳವರು)+ ಆಹವ (ಯುದ್ಧ)+ ಆಗ್ರದಲಿ[ಆಗ್ರ(ಹ)ಅಧ್ಯಾಹಾರ; ಆಗ್ರಹ= ಸಿಟ್ಟು].
ಅರ್ಥ: ಒಬ್ಬರನ್ನೊಬ್ಬರು ನೂಕಿದಾಗ ಹಿಂದೆಸರಿಯುವರು; ಕಿಸುಕುವರು, ಕಿಸುಕಿದರೆ ಒಬ್ಬರನ್ನೊಬ್ಬರು ಒತ್ತುವರು; ವೊತ್ತಿದರೆ ದೂರದಲ್ಲಿ ದೂರ ಲಾಗಹಾಕಿ ಹಾರುವರು, ಹಾರಿದವರು ಕೂಡಲೆ ಸಂಧಿಸಿ ಹೋರಾಡುವರು, ಆ ಕಠೋರವಾದ ಗದೆಗಳ ಬಡಿತದಿಂದ ಕಿಡಿಗಳನ್ನು ಹೊರಚೆಲ್ಲಲು ಖಣಿಖಟಿಲ ಎಂಬ ಹೊಡೆತದ ತಪ್ಪಿಸಿಕೊಳ್ಳುವ ಜೋಕೆಯಲ್ಲಿ ಸಮಬಲರು ಯುದ್ಧದಲ್ಲಿ ಸಿಟ್ಟಿನಿಂದ ಕಾದಿದರು.
ಮರಹ ಪಡೆಯರು ಘಾಯ ಖಂಡಿಗೆ
ತೆರಹುಗಾಣರು ಹೊಯ್ಲಹೋರಟೆ
ಹೊರಗೆ ಬಿದ್ದವು ಕದ್ದವಿಬ್ಬರ ದೃಷ್ಟಿ ಮನಮನವ |
ಇರಿವ ಗದೆ ನೆಗ್ಗಿದವು ರೋಷದಿ
ಜರೆವ ನುಡಿ ತಾಗಿದವು ಹೊಗಳುವ
ಡರಿಯೆನಗ್ಗದ ಭೀಮ ದುರಿಯೋಧನರ ರಣರಸವ || ೨೭ ||
ಪದವಿಭಾಗ-ಅರ್ಥ: ಮರಹ(ಮುಚ್ಚುಮರೆ) ಪಡೆಯರು, ಘಾಯ ಖಂಡಿಗೆ(ಖಮಡ= ತುಂಡು, ಬಿಡುವು) ತೆರಹುಗಾಣರು, ಹೊಯ್ಲಹೋರಟೆ(ಕೂಗಾಟ ಹೋರಾಟ) ಹೊರಗೆ ಬಿದ್ದವು, ಕದ್ದವಿಬ್ಬರ ದೃಷ್ಟಿ ಮನಮನವ, ಇರಿವ ಗದೆ ನೆಗ್ಗಿದವು, ರೋಷದಿ ಜರೆವ ನುಡಿ ತಾಗಿದವು, ಹೊಗಳುವಡೆ+ ಅರಿಯೆನು(ತಿಳಿಯೆನು)+ ಅಗ್ಗದ(ಪ್ರಸಿದ್ಧ) ಭೀಮ ದುರಿಯೋಧನರ ರಣರಸವ
ಅರ್ಥ: ಸಮಜಯನು ಧೃತರಾಷ್ಟ್ರನಿಗೆ,'ಇಬ್ಬರೂ ಯುದ್ಧದಲ್ಲಿ ಹಿಮ್ಮೆಟ್ಟಿ ಅಡಗಿ ಬಿಡುವನ್ನು ಪಡೆಯುವುದಿಲ್ಲ, ಘಾಯ ಸೀಳುಗಳಿಗೆ ಮೈಮೇಲೆ ಮತ್ತೆ ತೆರಪನ್ನು ಕಾಣರು, (ಮೈಯೆಲ್ಲಾ ಘಾಯ) ಇವರ ಕೂಗಾಟ- ಆರ್ಭಟ ಹೋರಾಟಗಳು ಹೊರಗಿನ ಜನರ ಗಮನಕ್ಕ ಬಿದ್ದವು. ಇವರಿಬ್ಬರ ಹೋರಾಟದ ನೋಟವು ಜನರ ಮನಸ್ಸನ್ನು ಕದ್ದವು- ಆಕರ್ಷಿಸಿದವು. ಗದೆಯಿಂದ ಒಬ್ಬರನ್ನೊಬ್ಬರು ಇರಿದಾಗ ಅವು ನೆಗ್ಗಿದವು. ಅವರು ರೋಷದಿಂದ ನಿಂದಿಸುವ ನುಡಿಗಳು ಮನಸ್ಸಿಗೆ ತಾಗಿದವು, ಹೀಗೆ ಭೀಮ ದುರ್ಯೋಧನರ ಪ್ರಸಿದ್ಧ ಯುದ್ಧವು ಬೀಕರವೂ ರಂಜನೀಯವೂ ಆಗಿತ್ತು ಅದರ ಸ್ವಾರಸ್ಯವನ್ನು/ ರಣರಸವನ್ನು ಹೇಗೆ ಹೊಗಳಬೇಕೆಂದು ಅರಿಯೆನು,' ಎಂದನು.
ಗಾಹಿನಲಿ ಗಾಢಿಸಿದ ಗದೆ ಹೊರ
ಬಾಹೆಯಲಿ ಹಿಂಗಿದವು ಠಾಣದ
ಲೂಹಿಸಿದ ಮನ ಮುಗ್ಗಿದುದು ಕಂದೊಳಲ ತೋಹಿನಲಿ |
ಕಾಹುರದ ಹೊಯ್ಲುಗಳು ನೋಟದ
ಕಾಹಿನಲಿ ಕಿಡಿಗೆದರೆ ಘಾಯದ
ಸೋಹೆಯರಿವ ಸುಜಾಣರೊದಗಿದರರಸ ಕೇಳೆಂದ || ೨೮ ||
ಪದವಿಭಾಗ-ಅರ್ಥ: ಗಾಹಿನಲಿ (ಗಾಹು= ಮೋಸ, ವಂಚನೆ; ಆಳ, ಅತಿಶಯ) ಗಾಢಿಸುದ (ಗಾಢಿಸು= 1. ಬಿಗಿಯಾಗು. 2. ಹರಡು. 3. ಮೇಲೆ ಬೀಳು.) ಗದೆ ಹೊರಬಾಹೆಯಲಿ(ಬಾಹೆ= ಪಕ್ಕ) ಹಿಂಗಿದವು( ಹಿಮ್ಮೆಟ್ಟು ಜಾರು) ಠಾಣದಲಿ(ರಣ)+ ಊಹಿಸಿದ ಮನ ಮುಗ್ಗಿದುದು. ಕಂದೊಳಲ(ಭ್ರಮಿಸು) ತೋಹುನಲಿ (ಮರಗಳ ಗುಂಪು, ಸಮೂಹ, ತೋಪು; ಮೋಸ, ತೋಹು, ಚದಿ, ಉಕ್ಕಿವ, ಮುಸುಳು, ಕುಲ್ಲಿ) ಗಾಹು ಕಾಹುರದ(ಕಾೞ್ಪೂರ,ಕಾಡಿನ ಪ್ರವಾಹ) ಹೊಯ್ಲುಗಳು(ಹೊಡೆತ ಕೂಗು) ನೋಟದ ಕಾಹಿನಲಿ(ಕಾಹು ಜಾಗರಣೆ,ಎಚ್ಚರಿಕೆ,ಆತ್ಮರಕ್ಷಣೆ) ಕಿಡಿಗೆದರೆ ಘಾಯದ ಸೋಹೆಯ(ಸುಳಿವು, ಸೋಹೆ, ಕುರುಹು)+ ಅರಿವ ಸುಜಾಣರು+ ಒದಗಿದರು+ ಅರಸ ಕೇಳೆಂದ.
  • ಟಿಪ್ಪಣಿ:(ಇಲ್ಲಿ ಉಪಯೋಗಿಸಿರುವ ಪದಗಳು ಅವನಿದ್ದ ಕುಂದಗೋಳ, ನಂತರ ಗದುಗಿನ ಪ್ರದೇಶದಲ್ಲಿ ಆಗ ಉಪಯೋಗದಲ್ಲಿದ್ದ ಗ್ರಾಮ್ಯ ದೇಸಿ ಪದಗಳಾಗಿರಬಹುದು.)
ಅರ್ಥ:ಸಂಜಯನು,'ಮೋಸದಿಂದ ವಂಚಿಸಿ ಮೇಲೆ ಬೀಳುವಾಗ, ಗದೆಯನ್ನು ಪಕ್ಕದಲ್ಲಿ ಜಾರಿಸಿ ತಪ್ಪಸಿಕೊಂಡರು(?). ರಣರಂಗದಲ್ಲಿ ಊಹಿಸಿದ ಹೊಡೆತ ತಪ್ಪಿ ಮನ ಮುಗ್ಗಿದುದು/ ಕುಗ್ಗಿತು. ಭ್ರಮೆಯ ತೋಪಿನಲ್ಲಿ ಮೋಸದ ಪ್ರವಾಹದಂತೆ ಹೊಡೆತಗಳುನ್ನು ನೋಟದಲ್ಲಿಯೇ ಅರಿತು ಆತ್ಮರಕ್ಷಣೆ ಮಾಡಿಕೊಂಡಾಗ ಗದೆಗಳ ಗಟ್ಟಣೆಗೆ ಕಿಡಿಗಳು ಕೆದರಲು/ ಹಾರಲು, ಹೊಡೆತಗಳಿಂದ ಆದ ಘಾಯದ ಕುರುಹು ಕಾಣದಿದ್ದರೂ ಅದನ್ನು ಅರಿಯಬಲ್ಲ ಬಹಳ ಜಾಣರು ಅಲ್ಲಿದ್ದರು,' ಅರಸನೇ ಕೇಳು ಎಂದ.
ನೆನಹು ನೆಗ್ಗಿದುದುಪ್ಪರದ ಕೈ
ಮನವ ಕಬಳಿಸಿ ತೆರಹು ಬಿರುಬಿ
ಮ್ಮಿನಲಿ ಬಿಗಿದುದು ತೆಗೆದವಿಬ್ಬರ ಘಾಯಘಾತಿಗಳು |
ಕೊನರ್ವ ಕೋಪದ ಕುದಿವ ಕರಣದ
ತನುವಿಗುಪ್ತಿಯ ಜಯದ ತವಕದ
ತನಿಮನದ ಕಡುತೋಟಿಕಾರರು ಕಾದಿದರು ಕಡುಗಿ || ೨೯ ||
ಪದವಿಭಾಗ-ಅರ್ಥ: ನೆನಹು ನೆಗ್ಗಿದುದು+ ಉಪ್ಪರದ(ಎತ್ತರ,ಉನ್ನತಿ ಅತಿಶಯ) ಕೈಮನವ ಕಬಳಿಸಿ (ಆವರಿಸಿ- ತಿಂದು) ತೆರಹು(ಬಿಡುವು) ಬಿರುಬಿಮ್ಮಿನಲಿ ಬಿಗಿದುದು(ಅತಿಯಾದ ಅಭಿಮಾನದಿಂದ ಬಿಡುವಿಲ್ಲದಂತೆ ಹೋರಾಡಿದರು) ತೆಗೆದವು+ ಇಬ್ಬರ ಘಾಯಘಾತಿಗಳು(ಘಾತ= ಶಾರೀರದ-ಹೊಡೆತ); ಕೊನರ್ವ ಕೋಪದ ಕುದಿವ ಕರಣದ(ಮನಸ್ಸು) ತನುವಿಗುಪ್ತಿಯ(ತನು= ದೇಹ, ಗುಪ್ತಿ= ಕಾಪು. ಮುಚ್ಚಿಡುವುದು) ಜಯದ ತವಕದ ತನಿಮನದ(ತನಿ= ದೊಡ್ಡ-ಪಕ್ವ,ಬಲಿತ,ಮಾಗಿದ ) ಕಡುತೋಟಿಕಾರರು (ತೋಟಿ= ಕಲಹ,ಜಗಳ,ಕಾದಾಟ) ಕಾದಿದರು ಕಡುಗಿ(ಕಡುಗು= ಗಟ್ಟಿಯಾಗು,ಗಡಸುಮಾಡು ಕಠಿನವಾಗಿಸು).ಕಾದಿದರು= ಹೋರಾಡಿದರು.
ಅರ್ಥ:ಪೆಟ್ಟು ಘಾಯಗಳಿಂದ ನೆನಪಿನ/ ಬುದ್ಧಿಶಕ್ತಿ ಕುಗ್ಗಿತು; ಅತಿಶಯವಾದ ಜಯದ ಬಯಕೆ ಕೈಯನ್ನೂ ಮನಸ್ಸನ್ನೂ ಕಬಳಿಸಿ, ಯುದ್ಧದಲ್ಲಿ ಬಿಡುವು- ಬಿರುಬಿಮ್ಮಿನಲಿ- ಗಟ್ಟಿಯಾದ ಸ್ವಾಭಿಮಾನದಲ್ಲಿ ಬಿಗಿದು ಕಟ್ಟಿಹಾಕಿ ಬಿಡುವಿಲ್ಲದಂತೆ ಹೋರಾಡಿದರು. ಇಬ್ಬರ ಘಾಯಗಳು ಪೆಟ್ಟುಗಳು ಉಕ್ಕುವ ಕೋಪದ, ಕುದಿವ ಮನಸ್ಸಿನ, ಜಯದ ತವಕದಲ್ಲಿ ದೇಹವನ್ನು ಮರೆಯುವ, ಬಲಿಷ್ಠ ಮನಸ್ಸಿನ ಕಠಿನ ಹೋರಾಟಗಾರರು ತೀವ್ರವಾಗಿ ಕಾದಿದರು.
ಜಾಣು ಜಗುಳಿತು ಹೊಯ್ಲ ಮೊನೆ ಮುಂ
ಗಾಣಿಕೆಗೆ ಲಟಕಟಿಸಿದುದು ಬರಿ
ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ |
ತ್ರಾಣ ತಳವೆಳಗಾಯ್ತು ಶ್ರವ ಬಿ
ನ್ನಾಣ ಮೇಲಾಯಿತ್ತು ಕುಶಲದ
ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ || ೩೦ ||
ಪದವಿಭಾಗ-ಅರ್ಥ: ಜಾಣು ಜಗುಳಿತು(ಜಾರು,) ಹೊಯ್ಲ (ಹೊಡೆತದ) ಮೊನೆ ಮುಂಗಾಣಿಕೆಗೆ ಲಟಕಟಿಸಿದುದು(ಬಳಲು. ಆತುರಪಡು. ಉದ್ರೇಕಗೊಳ್ಳು.ಅಬ್ಬರಿಸು.ತಗ್ಗು.) ಬರಿ ರೇಣುಜನನದ(ರೇಣು= ಸೂಕ್ಷ್ಮ ಭಾಗ) ಜಾಡ್ಯವೇ ಪಡಪಾಯ್ತು ಪಯಗತಿಗೆ, ತ್ರಾಣ(ಶಕ್ತಿ) ತಳವೆಳಗಾಯ್ತು ಶ್ರವ ಬಿನ್ನಾಣ (ಕೇಳುವಿಕೆ, ಶ್ರವಣ- ಹುಡುಗಾಟದ ಕೆಣಕು ) ಮೇಲಾಯಿತ್ತು, ಕುಶಲದ ಕೇಣದಲಿ(ಛಲ ಜಿದ್ದು,ದ್ವೇಷ, ಯೋಜನಾಬದ್ಧವಾಗಿ, ) ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ.
ಅರ್ಥ: ಕೌರವ- ಭೀಮರು ಹೋರಾಡುತ್ತಾ ಸಿಟ್ಟಿನಲ್ಲಿ ತಮ್ಮ ಯುದ್ಧದ ಜಾಣತನವನ್ನು ಜಾರಿಸಿ ಬಿಟ್ಟರು. ಹೊಡೆತದ ಮೊನೆಯಲ್ಲಿ ಮುಂದಾಲೋಚನೆ ತಗ್ಗಿತು. ಬರಿಯ ಸೂಕ್ಷ್ಮ ಭಾಗದ ಹೊಡೆತಗಳ ಜಾಡ್ಯವೇ ಯುದ್ಧದ ಗತ್ತಿನಪಾದಗತಿ- ನೆಡೆ ದಾರಿತಪ್ಪಿತು; ಶಕ್ತಿ ಕುಗ್ಗುತ್ತಾ ಬಂದಿತು. ಕೆಣಕು ಮಾತಿನ ಶ್ರವಣದ ಬಿನ್ನಾಣ- ಹುಡುಗಾಟ ಮೇಲಾಯಿತು. ಆದರೂ ಅವು ಜಿದ್ದಿನಲ್ಲಿ ಛಲದಿಂದ ಕಾದಿದರು/ ಹೋರಾಡಿದರು. ಅವರ ಕಾದಾಟದಲ್ಲಿ ಗದೆಗಳ ಗಟ್ಟನೆಯಿಂದ ಕಿಡಿಯಿಂದ ಕಿಡಿಗಳು ಸಿಡಿದು ಪರಸ್ಪರ ತಿವಿದವು. (ಕೊನೆಯ ಸಾಲಿನಲ್ಲಿ ಮೊದಲಿನ ಐದು ಸಾಲುಗಳ ವ್ಯತಿರಿಕ್ತ ಭಾವವಿದೆ.)
ವಿಲಸದಪಸವ್ಯದಲಿ ರಿಪು ಮಂ
ಡಳಿಸಿ ಹೊಯ್ದನು ಸವ್ಯಮಂಡಲ
ವಲಯದಿಂದಾ ಭೀಮಸೇನನ ಹೊಯ್ಲ ಹೊರಬೀಸಿ |
ಒಳಬಗಿದು ಕಿಬ್ಬರಿಯ ಕಂಡ
ಪ್ಪಳಿಸಿದನು ನಿನ್ನಾತನಾಚೆಯ
ದಳದ ಭಟತತಿ ಹಾಯೆನಲು ಝೋಂಪಿಸಿದನಾ ಭೀಮ || ೩೧ ||
ಪದವಿಭಾಗ-ಅರ್ಥ: ವಿಲಸದ (ಸಂಭ್ರಮದಿಂದ)+ ಅಪಸವ್ಯದಲಿ((ಸಂ) ೧ ಬಲಗಡೆ) ರಿಪು ಮಂಡಳಿಸಿ(ಸುತ್ತಿ ) ಹೊಯ್ದನು ಸವ್ಯಮಂಡಲ ವಲಯದಿಂದ,+ ಆ ಭೀಮಸೇನನ ಹೊಯ್ಲ ಹೊರಬೀಸಿ, ಒಳಬಗಿದು ಕಿಬ್ಬರಿಯ ಕಂಡು+ ಅಪ್ಪಳಿಸಿದನು ನಿನ್ನಾತನು+ ಅಚೆಯ ದಳದ ಭಟತತಿ ಹಾಯೆನಲು ಝೋಂಪಿಸಿದನು+ ಆ ಭೀಮ
ಅರ್ಥ:ಸಂಜಯನು ಧೃತರಾಷ್ಟ್ರನಿಗೆ,'ಸಂಭ್ರಮದಿಂದ ಬಲಭಾಗಕ್ಕೆ ರಿಪು- ಭೀಮನು ಗದೆಯನ್ನು ಎಡ ವಲಯದಿಂದ ಮಂಡಲಾಕಾರದಲ್ಲಿ ಸುತ್ತಿ ಹೊಡೆದನು. ಕೌರವನು ಆ ಭೀಮಸೇನನ ಹೊಡೆತವನ್ನು ತಪ್ಪಿಸಿಕೊಂಡು ಹೊರಬೀಸುವಂತೆಮಾಡಿ, ಒಳಬಗಿದು ಭೀಮನ ಕಿಬ್ಬದಿಯನ್ನು ಕಂಡು ಗುರಿಮಾಡಿ ನಿನ್ನಾತನು ಅಪ್ಪಳಿಸಿದನು. ಅಚೆಯ ದಳದ ಭಟರ ಸಮೂಹವು ಹಾ! ಎಂದಿತು. ಆ ಹೊಡತಕ್ಕೆ ಆ ಭೀಮನು ತಲೆತಿರುಗಿ ಒಲೆದನು- ಝೋಂಪಿಸಿದನು, ಎಂದನು.
ಆಗಳೇ ಸಂತೈಸಿ ರಿಪು ಕೈ
ದಾಗಿಸಿದನರಸನನು ಘಾಯದ
ಬೇಗಡೆಯಲುಚ್ಚಳಿಸಿದುದು ಬಿಸಿರಕುತ ಹುಡಿ ನನೆಯೆ |
ಆ ಗರುವನದ ಬಗೆವನೇ ಸರಿ
ಭಾಗರಕುತವನನಿಲಸುತನಲಿ
ತೂಗಿ ತೆಗೆದವೊಲಾಯ್ತು ಹೊಯ್ದನು ಪವನನಂದನನ || ೩೨ ||
ಪದವಿಭಾಗ-ಅರ್ಥ: ಆಗಳೇ ಸಂತೈಸಿ ರಿಪು(ಭೀಮನು) ಕೈದು+ ಆಗಿಸಿದನು(ಪ್ರಯೋಗಿಸಿದನು) (ಗದೆಯಿಯಿಂದ ಹೊಡೆದನು)+ ಅರಸನನು(ಕೌರವನನ್ನು), ಘಾಯದ ಬೇಗಡೆಯಲಿ(ಅಲಂಕಾರಕ್ಕಾಗಿ ಬಳಸುವ ಹೊಳಪಿನ ತಗಡು,ಡೌಲು.)+ ಉಚ್ಚಳಿಸಿದುದು ಬಿಸಿರಕುತ ಹುಡಿ ನನೆಯೆ ಆ ಗರುವನು(ಗರುವ- ಗರ್ವಿ, ಶ್ರೇಷ್ಠ ವೀರ)+ ಅದ ಬಗೆವನೇ(ಶ್ರೇಷ್ಟನಾದವ ಅದನ್ನು ಲೆಕ್ಕಿಸುವನೇ?), ಸರಿಭಾಗ (ಅಷ್ಟೇ) ರಕುತವನು+ ಅನಿಲಸುತನಲಿ ತೂಗಿ ತೆಗೆದವೊಲಾಯ್ತು ಹೊಯ್ದನು ಪವನನಂದನನ (ಭೀಮನನ್ನು)
ಅರ್ಥ:ಹೀಗೆ ಕೌರವನು ಹೊಡೆಯಲು, ಕೂಡಲೇ ಸಂತೈಸಿಕೊಂಡು ಭೀಮನು ಕೈದುವನ್ನು ಉಪಯೋಗಿ ಕೌರವನನ್ನು ಹೊಡೆದನು. ಘಾಯದ ಅಲಂಕಾರ ಬೇಗಡೆ ಹೊಳೆಯುವ ಬಣ್ಣದ ರಕ್ತದಲ್ಲಿ ಬಿಸಿರಕ್ತ ಉಚ್ಚಳಿಸಿ ಹೊರಬಂದಿತು. ನೆಲದ ಧೂಳಿನ ಹುಡಿ ರಕ್ತದಲ್ಲಿ ನನೆಯಿತು. ಆ ವೀರ ಶ್ರೇಷ್ಠನು ಅದನ್ನು ಲೆಕ್ಕಿಸುವನೇ? ಇಲ್ಲ!, ಅಷ್ಟೇ ರಕ್ತವನ್ನು ಅನಿಲಸುತ ಭೀಮನಿಂದ ತೂಗಿ ತೆಗೆಯುವಹಾಗೆ ಭೀಮನನ್ನು ಕೌರವನು ಹೊಡೆದನು.
ಸೈರಿಸಿದವೆರಡಂಕ ತೆಗೆದವು
ದೂರದಲಿ ದುರುದುರಿಪ ರಕುತದ
ಧಾರೆಗಳ ತೊಳೆದೊರಸಿದರು ಸಿರಿಖಂಡ ಕರ್ದಮವ |
ವೀರಕೇಳೀಶ್ರಮವಡಗೆ ಕ
ರ್ಪೂರ ವೀಳೆಯಗೊಂಡು ಮತ್ತೆ ಮ
ಹಾರುಭಟೆಯಲಿ ಸುಭಟರೆದ್ದರು ತೂಗಿ ನಿಜಗದೆಯ || ೩೩ ||
ಪದವಿಭಾಗ-ಅರ್ಥ: ಸೈರಿಸಿದವು(ಸುಧಾಇಸಿಕೊಂಡವು- ವಿಶ್ರಾಂತಿ ಪಡೆದವು)+ ಎರಡು+ ಅಂಕ(ಯುದ್ಧ - ಯುದ್ಧಂಡುತ್ತಿದ್ದ) ತೆಗೆದವು (ಯುದ್ಧವನ್ನು ತೆಗೆ- ನಿಲ್ಲಿಸಿದರು.) ದೂರದಲಿ, ದುರುದುರಿಪ ರಕುತದ ಧಾರೆಗಳ ತೊಳೆದು+ ಒರಸಿದರು ಸಿರಿಖಂಡ ಕರ್ದಮವ(ಕೆಸರು,ಕದಡು), ವೀರಕೇಳೀ(ಸಾಹಸದ ಆಟ) ಶ್ರಮವು+ ಅಡಗೆ ಕರ್ಪೂರ ವೀಳೆಯಗೊಂಡು ಮತ್ತೆ ಮಹಾ+ ಆರುಭಟೆಯಲಿ ಸುಭಟರು+ ಎದ್ದರು ತೂಗಿ ನಿಜಗದೆಯ(ನಿಜ = ತನ್ನ).
ಅರ್ಥ:ರಾಜನೇ ಕೇಳು,'ಎರಡು ಅಂಕದ ಯೋಧರಾದ ಭೀಮ ದುರ್ಯೋಧನರು ವಿಶ್ರಾಂತಿ ಪಡೆಯಲು, ಯುದ್ಧವನ್ನು ನಿಲ್ಲಿಸಿದರು. ಅವರು ದೂರದೂರ ಸರಿದು ಹೋದರು. ಅವರ ಮೈಯಿಂದ ದುರುದುರಿಸಿ ಹರಿಯುವ ರಕ್ತದ ಧಾರೆಗಳನ್ನೂ, ಸಿರಿಖಂಡವನ್ನೂ ರಕ್ತದ ಕೆಸರನ್ನೂ, ತೊಳೆದು ಒರಸಿದರು. ವೀರ ಸಾಹಸದ ಹೋರಾಟದ ಶ್ರಮವು ಅಡಗಲು, ಆ ಸುಭಟರು ಕರ್ಪೂರ ಮತ್ತು ವೀಳೆಯವನ್ನು ಸೇವಿಸಿ, ಮತ್ತೆ ಮಹಾ ಆರ್ಭಟೆಯಿಂದ ತಮ್ಮ ಗದೆಯನ್ನು ತೂಗತ್ತಾ ಎದ್ದರು.
ಮತ್ತೆ ಹೊಕ್ಕರು ದಿಗ್ಗಜಕೆ ಮದ
ಮತ್ತದಿಗ್ಗಜ ಮಲೆತವೊಲು ಮಿಗೆ
ಹತ್ತಿದರು ಶತಮನ್ಯು ಜಂಭನ ಜೋಡಿಯಂದದಲಿ |
ತತ್ತರಿಬ್ಬರು ಮೂಕದನುಜನ
ಕೃತ್ತಿವಾಸನವೋಲು ರಣಧೀ
ರೋತ್ತಮರು ಕಯ್ಯಿಕ್ಕಿದರು ಕೌರವ ವೃಕೋದರರು || ೩೪ ||
ಪದವಿಭಾಗ-ಅರ್ಥ: ಮತ್ತೆ ಹೊಕ್ಕರು ದಿಗ್ಗಜಕೆ ಮದಮತ್ತ ದಿಗ್ಗಜ ಮಲೆತವೊಲು(ಹೋರಾಡಿದಂತೆ) ಮಿಗೆ ಹತ್ತಿದರು ಶತಮನ್ಯು(ಇಂದ್ರ) ಜಂಭನ ಜೋಡಿಯಂದದಲಿ ತತ್ತರ (ತತ್ (ಅದು)+ ತರ= ಅದೇರೀತಿ)+ ಇಬ್ಬರು ಮೂಕದನುಜನ ಕೃತ್ತಿವಾಸನವೋಲು ರಣಧೀರೋತ್ತಮರು ಕಯ್ಯಿಕ್ಕಿದರು(ಕೈಮಾಡಿದರು- ಹೋರಾಡಿದರು) ಕೌರವ ವೃಕೋದರರು.
  • ಅಷ್ಟ ದಿಗ್ಗಜಗಳು :- ೧.ಐರಾವತ, ೨.ಪುಂಡರೀಕ, ೩.ವಾಮನ, ೪.ಕುಮುದ, ೫.ಅಚಿಜನ, ೬.ಪುಷ್ಪದಂತ, ೭.ಸಾರ್ವಭೌಮ, ೮.ಸುಪ್ರತೀಕ, ಇವು ಅತ್ಯಂತ ಬಲಷ್ಠವಾಗಿದ್ದು ಎಂಟು ದಿಕ್ಕುಗಳಲ್ಲಿ ಭೂಮಿಯನ್ನು ಮಹಾದೈತ್ಯ ಆನೆಗಳು ಹೊತ್ತು ನಿಂತಿವೆ ಎಂಬ ಕಥೆಯಿದೆ(ಭಾಗವತ).
  • ಶತಮನ್ಯು ಎಂದರೆ ಇಂದ್ರನು ತಾರಕಾಸುರನ ಮಂತ್ರಿ ಜಂಬನೊಡನೆ/ ಜಂಭಾಸರನೊಡನೆ ಹೋರಾಡಿದಂತೆ. ಕೊನೆಗೆ ಜಂಬನನ್ನು ವಿಷ್ಣು ಕೊಲ್ಲುತ್ತಾನೆ(ಮಹಾಭಾರತ ವನಪರ್ವ; ಭಾಗವತ)
ಅರ್ಥ:ಕೌರವ ವೃಕೋದರರು ಮತ್ತೆ ರಣರಂಗವನ್ನು ಹೊಕ್ಕರು. ದಿಗ್ಗಜಕ್ಕೆ ಮದಮತ್ತವಾದ- ಮದಿಸಿದ ಮತ್ತೊಂದು ದಿಗ್ಗಜ ಹೋರಾಡಿದಂತೆಯೂ, ಅದಕ್ಕೂ ಹೆಚ್ಚಾಗಿ ಶತಮನ್ಯು/ ಇಂದ್ರನು ತಾರಕಾಸುರನ ಮಂತ್ರಿ ಜಂಬನೊಡನೆ ಮತ್ತು ಜಂಭಾಸರನ ಜೋಡಿಯ ರೀತಿಯಲ್ಲಿ ಹೋರಾಡ ಹತ್ತಿದರು. ಕೌರವ ವೃಕೋದರರು ಇಬ್ಬರು ರಣಧೀರೋತ್ತಮರು ಮೂಕ ರಾಕ್ಷಸ ಮತ್ತು ಕೃತ್ತಿವಾಸನಂತೆ ಹೋರಾಡಿದರು.
ಏನನೆಂಬೆನು ಜೀಯ ಕುರುಪತಿ
ಯಾನುವನು ಕಲಿಭೀಮನುಬ್ಬೆಯ
ನಾನುವನು ದುರಿಯೋಧನನ ಥಟ್ಟಣೆಯನಾ ಭೀಮ |
ದಾನವರು ಮಾನವರೊಳಿನ್ನು ಸ
ಘಾನರಾರಿವರಂತೆ ಪಾಂಡವ
ರ್ಗೇನಸಾಧ್ಯವು ವೀರನಾರಾಯಣನ ಕರುಣದಲಿ || ೩೫ ||
ಪದವಿಭಾಗ-ಅರ್ಥ:ಏನನು+ ಎಂಬೆನು ಜೀಯ ಕುರುಪತಿಯು+ ಆನುವನು(ತಾಳು, ಪಕ್ಕಕ್ಕೆ ಬಾಗು) ಕಲಿಭೀಮನ+ ಉಬ್ಬೆಯನು+ ಆನುವನು ದುರಿಯೋಧನನ ಥಟ್ಟಣೆಯನು+ ಆ ಭೀಮ ದಾನವರು ಮಾನವರೊಳು+ ಇನ್ನು ಸಘಾನರು+ ಆರು+ ಇವರಂತೆ ಪಾಂಡವರ್ಗೆ+ ಏನು+ ಅಸಾಧ್ಯವು ವೀರನಾರಾಯಣನ ಕರುಣದಲಿ.
ಅರ್ಥ:ಸಂಜಯನು ಹೇಳಿದ, 'ಜೀಯ ಧೃತರಾಷ್ಟ್ರನೇ ಏನನ್ನು ಹೇಳಲಿ, ಕುರುಪತಿ ಕೌರವನು ಕಲಿಭೀಮನ ಉಬ್ಬೆಯನು/ ಆರ್ಭಟವನ್ನು ತಾಳಿಕೊಳ್ಳುವನು. ದುರಿಯೋಧನನ ಥಟ್ಟಣೆಯನು/ಹೊಡೆತವನ್ನು ಆ ಭೀಮನು ಸಹಿಸಿಕೊಳ್ಳುವನು. ದಾನವರು ಮತ್ತು ಮಾನವರಲ್ಲಿ ಇವರಂತೆ ಇನ್ನು ಸಘಾನರು/ಬಲಾಢ್ಯರು ಯಾರು ಇದ್ದಾರೆ? ಮತ್ತೆ ವೀರನಾರಾಯಣನ ಕರುಣೆ ಇರುವಾಗ ಪಾಂಡವರಿಗೆ ಏನು ತಾನೆ ಅಸಾಧ್ಯವು!

</poem>

♠♠♠

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.