ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೩)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೩ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಸೂಚನೆ~ಸೂ.
ರಾಯದಳ ಸಲೆ ಸವೆಯೆ ಸಮರದ
ನಾಯಕರು ನೆರೆ ಮುರಿಯಲಾ ದ್ವೈ
ಪಾಯನ ಸರೋವರವ ಹೊಕ್ಕನು ಕೌರವರ ರಾಯ||ಸೂ.||

ಪದವಿಭಾಗ-ಅರ್ಥ: ರಾಯದಳ ಸಲೆ ಸವೆಯೆ ಸಮರದ ನಾಯಕರು ನೆರೆ ಮುರಿಯಲು+ ಆ ದ್ವೈಪಾಯನ ಸರೋವರವ ಹೊಕ್ಕನು ಕೌರವರ ರಾಯ
ಅರ್ಥ:ಕೌರವನ ಸೇನೆ ಪೂರ್ಣ ನಾಶವಾಗಲು, ಸಮರದ ನಾಯಕರು ಎಲ್ಲಾ ಸಾಯಲು, ಕೌರವರ ರಾಯನು ಆ ದ್ವೈಪಾಯನ ಸರೋವರವನ್ನು ಹೊಕ್ಕನು.[೧][೨]

ಸಂಜಯ ಕೌರವನನ್ನು ಹುಡುಕಿದುದು[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ಹೆಗಲ ಗದೆಯಲಿ
ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ |
ಆಳ ಕಾಣೆನು ಛತ್ರ ಚಮರದ
ವೀಳೆಯದ ವಿಸ್ತಾರವಿಭವವ
ಬೀಳುಕೊಟ್ಟನು ನಡೆದನಿಂದ್ರ ದಿಶಾಭಿಮುಖವಾಗಿ ೧
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಕುರುಪತಿ ಹೆಗಲ ಗದೆಯಲಿ ಕಾಲುನಡೆಯಲಿ ಹಾಯ್ದನು+ ಏಕಾಂಗದಲಿ ಕಳನೊಳಗೆ ಆಳ ಕಾಣೆನು ಛತ್ರ ಚಮರದ ವೀಳೆಯದ ವಿಸ್ತಾರವಿಭವವ ಬೀಳುಕೊಟ್ಟನು ನಡೆದನು+ ಇಂದ್ರ ದಿಶ+ ಅಭಿಮುಖವಾಗಿ.
ಅರ್ಥ:ವೈಶಂಪಾಯನ ಮುನಿ ಹೇಳಿದ, ಕೇಳು ಜನಮೇಜಯ ಧರಿತ್ರೀಪಾಲನೇ, ಕುರುಪತಿ ಕೌರವನು ಹೆಗಲ ಮೇಲೆ ಗದೆಯನ್ನು ಹೊತ್ತುಕೊಂಡು, ಕಾಲುನಡೆಯಲ್ಲಿ ಏಕಾಂಗಿಯಾಗಿ ಯುದ್ಧಭೂಮಿಯೊಳಗೆ ಹಾದುಹೋಗುತ್ತಿದ್ದನು. ಅಲ್ಲಿ ಅವನ ಆಳುಗಳನ್ನು ಕಾಣೆನು; ಛತ್ರ ಚಾಮರದ ವೀಳೆಯ ಕೊಡುವವರನ್ನೂ, ವಿಸ್ತಾರವಾದ ವೈಭವವನ್ನು ಬಿಟ್ಟುಕೊಟ್ಟನು; ಹೀಗೆ ಅವನು ಪೂರ್ವ ದಿಕ್ಕಿ ಅಭಿಮುಖವಾಗಿ ನಡೆದನು.
ಅಕಟ ನಮ್ಮಯ ಪೂರ್ವರಾಜ
ಪ್ರಕರಕೀ ವಿಧಿಯಾಯ್ತಲಾ ಕಂ
ಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು |
ಶಕುನಿಮತ ವಿಷಬೀಜವೇ ಬಾ
ಧಕವ ತಂದುದಲಾ ಯುಧಿಷ್ಠಿರ
ಸಕಲ ಬಲ ಪರಿಶೇಷವೇನೆಂದರಸ ಬೆಸೆಗೊಂಡ || ೨ ||
ಪದವಿಭಾಗ-ಅರ್ಥ: ಅಕಟ ನಮ್ಮಯ ಪೂರ್ವರಾಜಪ್ರಕರಕೆ+ ಈ ವಿಧಿಯಾಯ್ತಲಾ ಕಂಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು, ಶಕುನಿಮತ (ನೀತಿ ಅಭಿಪ್ರಾಯ) ವಿಷಬೀಜವೇ ಬಾಧಕವ ತಂದುದಲಾ ಯುಧಿಷ್ಠಿರ ಸಕಲ ಬಲ ಪರಿಶೇಷವೇನೆಂದು+ ಅರಸ ಬೆಸೆಗೊಂಡ
ಅರ್ಥ:ಜನಮೇಜಯನು ವೈಶಂಪಾಯನನ್ನು ಕುರಿತು ಹೀಗೆ ಕೇಳಿದ,'ಅಕಟ! ನಮ್ಮ ಪೂರ್ವರಾಜ ಚಂದ್ರವಂಶಕ್ಕೆ ಈ ವಿಧಿಯಾಯಿತಲ್ಲವೇ!ಕೌರವೇಶ್ವರನು ಧರ್ಮದ ಉನ್ನತಿಗೆ ಕಂಟಕನಾದನಲ್ಲಾ! ಇದಕ್ಕೆ ಶಕುನಿಯ ಕುಟಿಲ ರಾಜನೀತಿಯ ವಿಷಬೀಜವೇ ವಂಶಕ್ಕೆ ಬಾಧಕವನ್ನು ತಂದಿತಲ್ಲಾ! ಈ ಸಮಯದಲ್ಲಿ ಯುಧಿಷ್ಠಿರನ ಸಕಲ ಸೇನೆಯಲ್ಲಿ ಪರಿಶೇಷವು / ಉಳಿದದ್ದು ಏನು ಎಂದು ಜನಮೇಜಯ ಅರಸನು ವೈಶಂಪಾಯಮುನಿಯಲ್ಲು ಕೇಳಿದನು.
ಧರಣಿಪತಿ ಕೇಳ್ ಧರ್ಮಜನ ಮೋ
ಹರದೊಳುಳಿದುದು ತೇರು ಸಾವಿರ
ವೆರಡು ಗಜವೇಳ್ನೂರು ಮಿಕ್ಕುದು ಲಕ್ಕ ಪಾಯದಳ |
ತುರಗ ಸಾವಿರವೈದು ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರುರು ಶಿಖಂಡಿ ದ್ರುಪದಸೂನು ದ್ರೌಪದೀಸುತರು || ೩ ||
ಪದವಿಭಾಗ-ಅರ್ಥ: ಧರಣಿಪತಿ ಕೇಳ್, ಧರ್ಮಜನ ಮೋಹರದೊಳು+ ಉಳಿದುದು ತೇರು ಸಾವಿರವು+ ಎರಡು ಗಜವು+ ಏಳ್ನೂರು ಮಿಕ್ಕುದು ಲಕ್ಕ ಪಾಯದಳ ತುರಗ ಸಾವಿರವು+ ಐದು ಸಾತ್ಯಕಿ ವರ ಯುಧಾಮನ್ಯು+ ಉತ್ತಮೌಂಜ ರುರು ಶಿಖಂಡಿ ದ್ರುಪದಸೂನು ದ್ರೌಪದೀಸುತರು.
ಅರ್ಥ:ಧರಣಿಪತಿ ಕೇಳು, ಧರ್ಮಜನ ಸೈನ್ಯದಲ್ಲಿ ಎರಡು ಸಾವಿರ ರಥ ಉಳಿಯಿತು. ಏಳುನೂರು ಆನೆಗಳು, ಮಿಕ್ಕುದು ಲಕ್ಕ ಕಾಲಾಳುಗಳ - ಪಾಯದಳ, ಐದು ಕುದುರೆಗಳು ಸಾವಿರವು, ಮತ್ತೆ ಸಾತ್ಯಕಿ, ವರ ಯುಧಾಮನ್ಯು, ಉತ್ತಮೌಂಜ, ರುರು, ಶಿಖಂಡಿ, ದ್ರುಪದನಮಗ ದೃಷ್ಟದ್ಯುಮ್ನ ಮತ್ತು ಐದುಜನ ದ್ರೌಪದೀಸುತರು, ಉಳಿದಿದ್ದರು.
ಆ ಸುಯೋಧನ ಸೇನೆಯಲಿ ಧರ
ಣೀಶ ಕೃಪ ಕೃತವರ್ಮ ಗುರುಸುತ
ರೈಸುಬಲದಲಿ ನಾಲ್ವರುಳಿದರು ಹೇಳಲೇನದನು |
ಏಸು ಬಲವೆನಿತೈಶ್ವರಿಯವಿ
ದ್ದೇಸು ಭಟರಿನಿತಗ್ಗಳೆಯರಿ
ದ್ದೇಸರಲಿ ಫಲವೇನು ದೈವವಿಹೀನರಿವರೆಂದ || ೪ ||
ಪದವಿಭಾಗ-ಅರ್ಥ: ಆ ಸುಯೋಧನ ಸೇನೆಯಲಿ ಧರಣೀಶ ಕೃಪ ಕೃತವರ್ಮ ಗುರುಸುತರು+ ಈಸು ಬಲದಲಿ(ಇಷ್ಟೊಂದು ಸೇನೆಯಲ್ಲಿ) ನಾಲ್ವರು+ ಉಳಿದರು, ಹೇಳಲಿ+ ಏನು+ ಅದನು ಏಸು ಬಲವು+ ಎನಿತು+ ಐಶ್ವರಿಯವಿದ್ದೇಸು, ಭಟರು+ ಇನಿತು+ ಅಗ್ಗಳೆಯರಿದ್ದು+ ಏಸರಲಿ ಫಲವೇನು? ದೈವವಿಹೀನರು+ ಇವರು+ ಎಂದ.
ಅರ್ಥ:ವೈಶಂಪಅಯನು ಜನಮೇಜಯನಿಗೆ,'ಆ ಸುಯೋಧನನ ಸೇನೆಯಲ್ಲಿ ಧರಣೀಶ ಕೌರವ, ಕೃಪ, ಕೃತವರ್ಮ, ಗುರುಸುತ ಅಶ್ವತ್ಥಾಮ,ಇವರು ಮಾತ್ರಾ, ಇಷ್ಟೊಂದು ದೊಡ್ಡ ಹನ್ನೊಂದು ಅಕ್ಷೋಹಿಣಿಯ ಸೈನ್ಯದಲ್ಲಿ ಈ ನಾಲ್ವರು ಉಳಿದರು. ಅದನ್ನು ಏನೆಂದು ಹೇಳಲಿ?! ಏಸು ದುಡ್ಡ ಸೇನೆ!ಎಷ್ಟು ಐಶ್ವರ್ಯವಿದ್ದೇಸು? ಯುದ್ಧ ಮಾಡುವ ಭಟರು ಇಷ್ಟೊಂದು ಅಗ್ಗಳೆಯರಿದ್ದು/ ಶ್ರೇಷ್ಠರಿದ್ದು, ಯಾವುದು ಇದ್ದು ಫಲವೇನು? ಇವರು- ಕೌರವರು ದೈವವಿಹೀನರು,' ಎಂದ.
ಇತ್ತಲೀ ಸಂಜಯನ ತಂದುದು
ಮೃತ್ಯು ಧೃಷ್ಟದ್ಯುಮ್ನನೀತನ
ಕುತ್ತಿ ಕೆಡಹಿದಡಾಗದೇ ಕುರುಡಂಗೆ ರಣರಸವ |
ಬಿತ್ತರಿಸುವನು ಕೌರವನ ಜಯ
ದತ್ತಲೆರಕ ದುರಾತ್ಮನನು ಕೈ
ವರ್ತಿಸಾ ಯಮನಗರಿಗೆಂದನು ಸಾತ್ಯಕಿಯ ಕರೆದು || ೫ ||
ಪದವಿಭಾಗ-ಅರ್ಥ: ಇತ್ತಲು ಈ ಸಂಜಯನ ತಂದುದು ಮೃತ್ಯು, ಧೃಷ್ಟದ್ಯುಮ್ನನು+ ಈತನ ಕುತ್ತಿ ಕೆಡಹಿದಡೆ+ ಆಗದೇ ಕುರುಡಂಗೆ ರಣರಸವ ಬಿತ್ತರಿಸುವನು (ವಿಸ್ತರಿಸುವನು), ಕೌರವನ ಜಯ ದತ್ತಲಿ+ ಎರಕ (ಪ್ರೀತಿ), ದುರಾತ್ಮನನು ಕೈವರ್ತಿಸು (ವಶಪಡಿಸು, ಕೈಮಾಡು, ಎಸೆ.)+ ಆ ಯಮನಗರಿಗೆ, ಎಂದನು ಸಾತ್ಯಕಿಯ ಕರೆದು.
ಅರ್ಥ: ಈ ಕಡೆ ರಣರಂಗದಲ್ಲಿ ಈ ಸಂಜಯನಿಗೆ ವಿಧಿ ಮೃತ್ಯುವನ್ನು ತಂದಿತು, ಧೃಷ್ಟದ್ಯುಮ್ನನು ಅವನನ್ನು ನೋಡಿ, ಈತನನ್ನು ಕುತ್ತಿ/ ಕಡಿದು ಕೆಡಗಿದರೆ ಆಗದೇ? ಇವನು ಕುರುಡಂಗೆ/ ಧೃತರಾಷ್ಟ್ರನಿಗೆ ಯುದ್ಧದ ನೆಡೆಯನ್ನು ರಸವತ್ತಾಗಿ ಬಿತ್ತರಿಸುವನು. ಅವನು ಸಾತ್ಯಕಿಯನ್ನು ಕರೆದು ಇವನಿಗೆ ಕೌರವನ ಜಯದತ್ತಲೇ ಪ್ರೀತಿ, ಈ ದುರಾತ್ಮನನ್ನು ಬಡಿದು ಆ ಯಮನಗರಿಗೆ ಕಳಿಸು, ಎಂದನು.
ಸೆಳೆದಡಾಯ್ದವ ಸಂಜಯನ ಹೆಡ
ತಲೆಗೆ ಹೂಡಿದನರಿವ ಸಮಯಕೆ
ಸುಳಿದನಗ್ಗದ ಬಾದರಾಯಣನವನ ಪುಣ್ಯದಲಿ |
ಎಲೆಲೆ ಸಾತ್ಯಕಿ ಲೇಸುಮಾಡಿದೆ
ಖಳನೆ ಸಂಜಯನೆಮ್ಮ ಶಿಷ್ಯನ
ಕೊಲುವುದೇ ನೀನೆನುತ ಕೊಂಡನು ಕೊರಳಡಾಯುಧವ || ೬ ||
ಪದವಿಭಾಗ-ಅರ್ಥ: ಸೆಳೆದಡೆ ಆಯ್ದವ ಸಂಜಯನ ಹೆಡತಲೆಗೆ ಹೂಡಿದನು+ ಅರಿವ(ಕತ್ತರಿಸುವ) ಸಮಯಕೆ ಸುಳಿದನು+ ಅಗ್ಗದ (ಶ್ರೇಷ್ಠ) ಬಾದರಾಯಣನು+ ಅವನ ಪುಣ್ಯದಲಿ, ಎಲೆಲೆ ಸಾತ್ಯಕಿ ಲೇಸುಮಾಡಿದೆ, ಖಳನೆ? ಸಂಜಯನು+ ಎಮ್ಮ ಶಿಷ್ಯನ ಕೊಲುವುದೇ ನೀನು+ ಎನುತ ಕೊಂಡನು ಕೊರಳ+ ಅಡಾಯುಧವ
ಅರ್ಥ:ಸಾತ್ಯಕಿಯು ಸಂಜಯನ ಹೆಡತಲೆಗೆ ಆಯುಧವನ್ನು ಸೆಳೆದು ಹೂಡಿದನು. ಅವನ ತಲೆಯನ್ನು ಅರಿಯುವ ಸಮಯಕ್ಕೆ ಸರಿಯಾಗಿ ಪೂಜ್ಯನಾದ ಬಾದರಾಯಣನು ಅವನ ಪುಣ್ಯವಶದಿಂದ ಅಲ್ಲಿಗೆ ಬಂದನು. ವ್ಯಾಸ ಮಹರ್ಷಿಯು ಸಾತ್ಯಕಿಯನ್ನ ನೋಡಿ, 'ಎಲೆಲೆ ಸಾತ್ಯಕಿ ಒಳ್ಳೆಯ ಕೆಲಸ ಮಾಡಯತ್ತಿರುವೆ, (ಮಹಾಕೆಡುಕನ್ನು ಎಂದು ಅರ್ಥ) ಅವನು ಖಳನೆ? ಸಂಜಯನು ದುಷ್ಟನೇ? ನಮ್ಮ ಶಿಷ್ಯನನ್ನು ಕೊಲ್ಲುವುದೇ ನೀನು?' ಎನ್ನುತ್ತಾ ಸಂಜಯನ ಕೊರಳಿಗೆ ಅಡ್ಡ ಇಟ್ಟ ಆಯುಧವನ್ನು ಕೊಂಡನು/ ತಡೆದನು.
ದೇವ ನಿಮ್ಮಯ ಶಿಷ್ಯನೇ ಪರಿ
ಭಾವಿಸೆನು ತಾನರಿದೆನಾದಡೆ
ದೇವಕೀಸುತನಾಣೆ ಬಿಟ್ಟೆನು ಸಂಜಯನ ವಧೆಯ |
ನೀವು ಬಿಜಯಂಗೈವುದೆನೆ ಬದ
ರಾವಳೀಮಂದಿರಕೆ ತಿರುಗಿದ
ನಾ ವಿಗಡಮುನಿ ಖೇದಕಲುಷಿತ ಸಂಜಯನ ತಿಳುಹಿ || ೭ ||
ಪದವಿಭಾಗ-ಅರ್ಥ: ದೇವ ನಿಮ್ಮಯ ಶಿಷ್ಯನೇ ಪರಿಭಾವಿಸೆನು, ತಾನು+ ಅರಿದೆನಾದಡೆ ದೇವಕೀಸುತನಾಣೆ ಬಿಟ್ಟೆನು ಸಂಜಯನ ವಧೆಯ, ನೀವು ಬಿಜಯಂಗೈವುದು+ ಎನೆ ಬದರಾವಳೀ ಮಂದಿರಕೆ ತಿರುಗಿದನು+ ಆ ವಿಗಡಮುನಿ ಖೇದಕಲುಷಿತ ಸಂಜಯನ ತಿಳುಹಿ.
  • ಪರಿಭಾವಿಸು: ವಿಚಾರ ಮಾಡು;ಲಕ್ಷಿಸು;ಗ್ರಹಿಸು; ನೋಡು;ಪರಿಗಣಿಸು;
ಅರ್ಥ:ದೇವ, ಬಾದರಾಯಣ ಮುನಿಗಳೇ, ಇವನು ನಿಮ್ಮಯ ಶಿಷ್ಯನೇ? ಹಾಗಿದ್ದರೆ ಮತ್ತೆನೂ ವಿಚಾರಮಾಡುವುದಿಲ್ಲ; ತಾನು ಈ ವಿಷಯವನ್ನು ಅರಿತಿಲ್ಲ, ಹಾಗಾಗಿ ಇವನ ವಧೆಗೆ ಮುಂದಅದೆ. ಅರಿತಿದ್ದೆನಾದರೆ ದೇವಕೀಸುತನಾಣೆ ಇವನನ್ನು ಆಕ್ರಮಿಸುತ್ತಿರಲಿಲ್ಲ. ತಮ್ಮ ಅಪೇಕ್ಷೆಯಂತೆ ಸಂಜಯನ ವಧೆಯನ್ನು ಬಿಟ್ಟೆನು. ನೀವು ಬಿಜಯಂಗೈವುದು/ ಮುಂದೆ ಹೊಗಬಹುದು, ಎನ್ನಲು, ಆ ಮಹಾ ಮುನಿಯು ದುಃಖದಿಂದ ವ್ಯಾಕುಲುಗೊಂಡ ಸಂಜಯನಿಗೆ ತಿಳುವಳಿಕೆ ಮಅತು ಹೇಳಿ, ತನ್ನ ಬದರಿಗಿಡಗಳಿಂದ ಕೂಡಿದ ತನ್ನ ಮಂದಿರಕ್ಕೆ ಹಿಂತಿರುಗಿ ಹೋದನು.

ಸಂಜಯನು ರಣರಂಗದಲ್ಲಿ ಕೌರವನನ್ನು ಕಂಡನು[ಸಂಪಾದಿಸಿ]

ಅರಸ ಕೇಳೈ ಸಂಜಯನು ಬರ
ಬರಲು ಕಂಡನು ದೂರದಲಿ ನಿರಿ
ಗರುಳ ಕಾಲ್ದೊಡಕುಗಳ ಖಂಡದ ಜಿಗಿಯ ಜಾರುಗಳ |
ಕರಿಗಳೊಟ್ಟಿಲನೇರಿಳಿದು ಪೈ
ಸರಿಸಿ ಮಿದುಳಿನ ಜೋರು ಜೊಂಡಿನ
ತೊರಳೆಯಲಿ ದಡದಡಿಸಿ ಜಾರುತ ಬೀಳುತೇಳುವನ || ೮ ||
ಪದವಿಭಾಗ-ಅರ್ಥ: ಅರಸ ಕೇಳೈ ಸಂಜಯನು ಬರ ಬರಲು ಕಂಡನು ದೂರದಲಿ ನಿರಿಗರುಳ(ನಿರಿ+ ಕರುಳ) ಕಾಲ್ದೊಡಕುಗಳ ಖಂಡದ ಜಿಗಿಯ ಜಾರುಗಳ ಕರಿಗಳ+ ಒಟ್ಟಿಲನು+ ಏರಿ+ ಇಳಿದು ಪೈಸರಿಸಿ ಮಿದುಳಿನ ಜೋರು ಜೊಂಡಿನ ತೊರಳೆಯಲಿ ದಡದಡಿಸಿ ಜಾರುತ ಬೀಳುತೇಳುವನ.
ಅರ್ಥ:ಅರಸನೇ ಕೇಳು, ಸಂಜಯನು ಬರ ಬರುತ್ತಾ ಇರುವಾಗ, ದೂರದಲ್ಲಿ ಕೌರವನ ಕಾಲಿಗೆ ಹೊರಬಿದ್ದ ನಿರಿಯಾದ ಕರುಳುಗಳು ತೊಡರುತ್ತಿರಲು, ಖಂಡದ ಜಿಗಿಯ-ಜೌಗಿನಲ್ಲಿ ಜಾರುಗಳ ಮಧ್ಯೆ ನೆಡೆಯುತ್ತಾ, ಬಿದ್ದ ಆನೆಗಳ ಒಟ್ಟಿಲನು/ರಾಶಿಯನ್ನು ಏರಿ ಇಳಿದು ಸುಧಾರಿಸಿಕೊಂಡು, ಮಿದುಳಿನಮಜ್ಜೆ ಜೋರಿದ ಜೊಂಡಿನ ತೊರಳೆಯಲಿ/ ಕೆಸರಲ್ಲಿ ದಡಬಡಿಸುತ್ತಾ ಜಾರುತ್ತಾ ಬೀಳುತ್ತೇಳುತ್ತಾ ನೆಡೆಯುತ್ತಿದ್ದ ಕೌರವನನ್ನು ಕಂಡನು.
ಎಡಹುದಲೆಗಳ ದಾಂಟಿ ರಕುತದ
ಮಡುವಿನಲಿ ಗದೆಯೂರಿ ನೆಲೆಗಳ
ಪಡೆದು ಕಂಪಿಸಿ ಕುಣಿವ ಮುಂಡವ ಗದೆಯಲಪ್ಪಳಿಸಿ |
ಅಡಿಗಡಿಗೆ ಹೇರಾನೆಗಳ ಹೇ
ರೊಡಲ ಹತ್ತಿಳಿದೇರಿ ಝೊಂಪಿಸಿ
ಮಿಡುಕಿ ನಿಲುವನು ಬಳಲಿದೂರ್ಧ್ವಶ್ವಾಸ ಲಹರಿಯಲಿ || ೯ ||
ಪದವಿಭಾಗ-ಅರ್ಥ: ಎಡಹುದೆ+ ಅಲೆಗಳ ದಾಂಟಿ ರಕುತದ ಮಡುವಿನಲಿ, ಗದೆಯೂರಿ ನೆಲೆಗಳ ಪಡೆದು ಕಂಪಿಸಿ, ಕುಣಿವ ಮುಂಡವ ಗದೆಯಲಿ ಅಪ್ಪಳಿಸಿ ಅಡಿಗಡಿಗೆ ಹೇರಾನೆಗಳ ಹೇರೊಡಲ ಹತ್ತಿ+ ಇಳಿದು+ ಏರಿ ಝೊಂಪಿಸಿ ಮಿಡುಕಿ ನಿಲುವನು ಬಳಲಿದ+ ಊರ್ಧ್ವಶ್ವಾಸ ಲಹರಿಯಲಿ.
ಅರ್ಥ:ಸಮಜಯನು ದೂರದಲ್ಲಿ ನೋಡಿದನು; 'ಕೌರವನು ಎಡವದೆ ರಕ್ತದ ಮಡುವಿನಲ್ಲಿ ಅಲೆಗಳನ್ನು ದಾಟಿ, ಗದೆಯೂರಿ ನಿಂತು ನೆಲೆಗಳ/ ಸ್ತಿರನಿಲುವು ಪಡೆದು, ಮತ್ತೆ ಕಂಪಿಸಿ/ನಡುಗಿ ಓಲಾಡಿ, ಕುಣಿವ ಮುಂಡಗಳನ್ನು ಗದೆಯಿಂದ ಅಪ್ಪಳಿಸಿ ಕೆಡವಿ, ಅಡಿಗಡಿಗೆ/ ಮತ್ತೆ ಮತ್ತೆ ದೊಡ್ಡ ಆನೆಗಳ ಎತ್ತರದ ಒಡಲನ್ನು ಹತ್ತಿ ಇಳಿದು, ಏರಿ, ಝೊಂಪಿಸಿ/ಮೈಒಲೆದು ಮಿಡುಕಿ/ ಮೈಕೊಡವಿ ಬಳಲಿದ ಆಯಾಸದಿಮದ ಊರ್ಧ್ವಶ್ವಾಸ/ ಮೇಲುಸಿರುಬಿಡುತ್ತಾ ಲಹರಿಯಲ್ಲಿ/ ಯೋಚಿಸುತ್ತಾ ನಿಲ್ಲುವನು.
ಓಡದಿಹ ನರಿ ಹದ್ದು ಕಾಗೆಗೆ
ಕೂಡ ಗದೆಯನು ಬೀಸುವನು ಬಿಡೆ
ನೋಡುವನು ಹೆಣದಿನಿಹಿಗಳ ಹೇರಾಳ ರಕ್ಕಸರ |
ತೋಡುಗೈಗಳ ಮಿದುಳ ಬಾಯ್ಗಳ
ಬಾಡುಗರುಳಿನ ಚೀತ್ಕೃತಿಯ ತಲೆ
ಯೋಡುಗಳ ತನಿರಕುತ ಪಾನದ ಶಾಕಿನೀಜನವ || ೧೦ ||
ಪದವಿಭಾಗ-ಅರ್ಥ: ಓಡದಿಹ ನರಿ ಹದ್ದು ಕಾಗೆಗೆ ಕೂಡ ಗದೆಯನು ಬೀಸುವನು, ಬಿಡೆ ನೋಡುವನು ಹೆಣದಿನಿಹಿಗಳ (ಹೆಣವನ್ನು ತಿನ್ನುವಂತಹವು.) ಹೇರಾಳ ರಕ್ಕಸರ ತೋಡು+(ಗೈ) + ಕೈಗಳ ಮಿದುಳ ಬಾಯ್ಗಳ ಬಾಡು+ ಗ+ ಕರುಳಿನ ಚೀತ್ಕೃತಿಯ ತಲೆಯೋಡುಗಳ ತನಿರಕುತ ಪಾನದ ಶಾಕಿನೀ ಜನವ.
ಅರ್ಥ:ಕೌರವನು, ಹಾಳುನಿದ್ದ ರಣರಂಗದಲ್ಲಿ, ತನ್ನನ್ನು ಕಂಡೂ ಓಡದಿರುವ ನರಿ ಹದ್ದು ಕಾಗೆಗೆ ಕೂಡ ಗದೆಯನ್ನು ಬೀಸುವನು. ಅವು ಹೆಣಗಳನ್ನು ತಿನ್ನುವುದನ್ನು ಬಿಡಲು, ಹೆಣವನ್ನು ತಿನ್ನುವಂತಹ ಅವನ್ನು ನೋಡುವನು; ಹೇರಾಳ/ಬಹಳ ರಕ್ಕಸರ ಬಗಿದು ತಿನ್ನುವ ಕೈಗಳನ್ನೂ, ಮಿದುಳನ್ನು ತಿನ್ನುವ ಬಾಯ್ಗಳನ್ನೂ ಬಾಡು/ ಎಳೆದು ತಿನ್ನುವಾಗ ಕರುಳಿನ ಮಾಂಸದ ಚೀತ್ಕೃತಿಯ ಸದ್ದನ್ನೂ, ತಲೆಯೋಡುಗಳನ್ನೂ, ತನಿರಕ್ತಪಾನ ಮಾಡುವ ಶಾಕಿನೀ ಜನ - ಕ್ಷದ್ರದೇವತೆಗಳನ್ನೂ ನೋಡಿದನು. (ಈ ಪದ್ಯಗಳು ಭೀಭತ್ಸ ರಸಕ್ಕೆ ಉದಾಹರಣೆಗಳು)
ಕಂದ ಪಖ್ಖಲೆಗಳಲಿ ತೀವಿದ
ಮಂದ ರಕುತದ ತೋದ ತಲೆಗಳ
ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ |
ಸಂದಣಿಸಿ ಹರಿದೇರ ಬಾಯ್ಗಳೊ
ಳೊಂದಿ ಬಾಯ್ಗಳನಿಡುವ ಪೂತನಿ
ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ || ೧೧ ||
ಪದವಿಭಾಗ-ಅರ್ಥ: ಕಂದ ಪಖ್ಖಲೆಗಳಲಿ (ಕಂದಕ ಅಥವಾ ಅಗಳ, ತಗ್ಗು) ತೀವಿದ (ತುಂಬಿದ) ಮಂದ ರಕುತದ ತೋದ ತಲೆಗಳ ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ(ನೆಕ್ಕುವ) ಸಂದಣಿಸಿ ಹರಿದೇರ ಬಾಯ್ಗಳೊಳೊಂದಿ (ಬಾಯಿಗಳಲ್ಲಿ ಹೊಂದಿ, ಇಟ್ಟುಕೊಂಡು) ಬಾಯ್ಗಳನು+ ಇಡುವ ಪೂತನಿ (ರಾಕ್ಷಸಿಯರ ಗುಂಪನ್ನು) ವೃಂದವನು ಕಂಡು+ ಓಸರಿಸುವನು (ಓಕರಿಸುವನು - ವಾಂತಿ)+ ಅದೊಂದು ದೆಸೆಗಾಗಿ (ಪರಿಸ್ಥಿತಿ).
ಅರ್ಥ:ಕಂದಕ, ಅಗಳ, ತಗ್ಗುಗಳಲ್ಲಿ ತುಂಬಿದ ಮಂದ ರಕ್ತದ ತೊಯಿದ ತಲೆಗಳನ್ನು ತಿಂದು ಬಿಸುಡುವ, ಮೆದುಳಿನ ನೆಣವನ್ನು ಕಾರುವ, ಏರಿನಲ್ಲಿ ಬಹಳವಾಗಿ ಹರಿದ ಬಸೆಯ/ ಬಸಿಯುತ್ತಿರುವ ನೆಣವನ್ನು ನೆಕ್ಕುವ, ಬಾಯಿಗಳಲ್ಲಿ ಇಟ್ಟುಕೊಂಡ, (ರಕ್ತ ಮಾಂಸ ಮಜ್ಜೆಗಳಿಗೆ) ಬಾಯಿಳನ್ನು ಇಡುವ ಪೂತನಿಯಂಥ ರಾಕ್ಷಸಿಯರ ಗುಂಪನ್ನು ಕಂಡು ಆ ಒಂದು ದೆಸೆಗಾಗಿ ಕೌರವನು ಓಕರಿಸುವನು.
ಕುಣಿವ ಕರಿಗಳ ತಲೆಯ ಮಡುಹಿನ
ಲಣೆದು ಹಜ್ಜೆಯನಿಡುತ ಭೂತದ
ಹೆಣನ ತೀನಿಗೆ ತವಕಿಸುವ ವೇತಾಳ ಸಂತತಿಯ
ರಣದೊಳಂಜಿಸಿ ಸರೆನರದ ಕಾ
ವಣದೊಳಗೆಕೈಯೂರಿ ಮಿಗೆ ಹಳ
ವೆಣನ ಹೊಲಸಿಗೆ ಹೇಸಿ ಹರಿದಡಿಗಡಿಗೆ ಸುಯ್ವವನ ೧೨
ಪದವಿಭಾಗ-ಅರ್ಥ: ಕುಣಿವ ಕರಿಗಳ ತಲೆಯ ಮಡುಹಿನಲಿ+ ಅಣೆದು (ಮಡುಹು-ಮಡುವು= ಕೊಳ; ಅಣೆ=1. ತಿವಿ. 2. ಹೊಡೆ. 3. ಸೋಕು.) ಹಜ್ಜೆಯನು+ ಇಡುತ ಭೂತದ ಹೆಣನ ತೀನಿಗೆ (ತಿನಿಸಿಗೆ, ಆಧಾರವಾಗಿ ಕೊಡುವ ಕಂಬ,- ಗೂಟ.) ತವಕಿಸುವ ವೇತಾಳ ಸಂತತಿಯ ರಣದೊಳು+ ಅಂಜಿಸಿ ಸರೆನರದ(ಸರೋವರದ?) ಕಾವಣದೊಳಗೆ(ಕಾವಣ= ಚಪ್ಪರ, 1. ಹಂದರ. 2. ತೋಪು. 3. ಹೆಣಿಗೆ. 4. ಮಂಜು.) ಕೈಯೂರಿ ಮಿಗೆ ಹಳವೆಣನ ಹೊಲಸಿಗೆ ಹೇಸಿ ಹರಿದು ಅಡಿಗಡಿಗೆ ಸುಯ್ವವನ.
ಅರ್ಥ: ಕೊಳದಲ್ಲಿ ಆನೆಗಳ ತಲೆಯ ತಿವಿದು ಕುಣಿಯುವುದನ್ನು ನೋಡುತ್ತಾ, ಹಜ್ಜೆಯನು ಇಡುತ್ತಾ, ಭೂತದ ಹೆಣದ ತಿನಿಸಿಗೆ ತವಕಿಸುವ ವೇತಾಳ ಸಂತತಿಯನ್ನು ರಣದಲ್ಲಿ ಅಂಜಿಸಿ ಸರೋವರದ ಹತ್ತಿರದ ಹಂದರದಲ್ಲಿ ಕೈಯೂರಿನಿಲ್ಲುವ, ಮತ್ತು ಹಳೇ ಹೆಣದ ಹೊಲಸಿಗೆ ಹೇಸಿಕೊಳ್ಳುತ್ತಾ, ಅಲ್ಲಿಂದ ಹರಿದು/ ಸರಿದುಹೋಗುವ, ಅಡಿಗಡಿಗೆ/ ಪದೇ ಪದೇ ನಿಟ್ಟುಸಿರು ಬಿಡುವ ಕೌರವನನ್ನು ಸಂಜಯನು ನೋಡಿದನು.
ಕಡಿವಡೆದ ಹಕ್ಕರಿಕೆ ರೆಂಚೆಯ
ತಡಿಗಳಲಿ ಕುಳ್ಳಿರ್ದು ಮೊಣಕಾ
ಲ್ಗಡಿಯ ಗಾಢವ್ರಣದ ನೆಣವಸೆಗೆಸೆರ ಬಳಿಬಳಿದು |
ಗಡಣ ಹೆಣದರಹುಗಳೊಳಗೆ ಕಾ
ಲಿಡುತ ಸೋದಿಸಿ ಮುಂದೆ ಹೆಜ್ಜೆಯ
ನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ || ೧೩ ||
ಪದವಿಭಾಗ-ಅರ್ಥ:ಕಡಿವಡೆದ ಹಕ್ಕರಿಕೆ (1. ಹಲ್ಲಿನಿಂದ ಕಚ್ಚುವುದು. 2. ಕವಚ.) ರೆಂಚೆಯ (ಆನೆ, ಕುದುರೆಗಳ ಪಕ್ಕ) ತಡಿಗಳಲಿ ಕುಳ್ಳಿರ್ದು ಮೊಣಕಾಲ್ಗಡಿಯ ಗಾಢವ್ರಣದ ನೆಣವಸೆಗೆ ಸೆರ ಬಳಿಬಳಿದು ಗಡಣ ಹೆಣದರಹುಗಳ+ ಒಳಗೆ ಕಾಲಿಡುತ ಸೋದಿಸಿ ಮುಂದೆ ಹೆಜ್ಜೆಯನಿಡುತ ಪೈಸರವೋಗಿ(ಕುಗ್ಗುವುದು, ಜಾರು) ಮಾರ್ಗಶ್ರಮಕೆ ಬೆಮರುವನ
ಅರ್ಥ:ಕಡಿದು-ಒಡೆದ ಕವಚ, ಆನೆ ಕುದುರೆಗಳ ಪಕ್ಕದ ಕೆಸರ ತಡಿಗಳಲ್ಲಿ ಕುಳಿತು, ಮೊಣಕಾಲ ಮಂಡಿಯ ಗಾಢ ಹುಣ್ನಿನ ಕೀವು ವಸರಲು, ಪಂಚೆಯ ಸೆರಗಿನ ಪಟ್ಟೆ ನೆಲಕ್ಕೆ ಬಳಿಬಳಿದು, ಬಹಳ ಹೆಣದ ಸಂದಿನ ಒಳಗೆ ಕಾಲಿಡುತ, ಹೆಜ್ಜೆ ಇಡಲು ಶೋಧಿಸಿ ಮುಂದೆ ಹೆಜ್ಜೆಯನಿಡುತ್ತಾ ಜಾರುತ್ತಾ,ಕುಗ್ಗಿ, ಮಾರ್ಗಶ್ರಮಕ್ಕೆ ಬೆವರುತ್ತಿವ ಕೌರವನನ್ನು ಸಂಜಯನು ನೋಡಿದನು.
ಕಡಿದ ಕೈದುಗಳೊಟ್ಟಿಲಲಿ ತನಿ
ಗೆಡೆದ ಗಾಲಿಯ ಹಾಯ್ಕಿ ಮೆಲ್ಲಡಿ
ಯಿಡುತ ಹಜ್ಜೆಯ ನೆಣದ ಕೆಸರಿಗೆ ಛತ್ರಚಮರಿಗಳ
ಅಡಸಿ ಹೆಜ್ಜೆಯನಿಡುತ ರಕುತದ
ಮಡುವನೆಡಬಲಕಿಕ್ಕಿ ಮೆಲ್ಲನೆ
ನಡೆದು ದೈವವ ಬಯ್ದುಬಯ್ದಡಿಗಡಿಗೆ ಸುಯ್ವವನ ೧೪
ಪದವಿಭಾಗ-ಅರ್ಥ: ಕಡಿದ ಕೈದುಗಳ+ ಒಟ್ಟಿಲಲಿ ತನಿಗೆಡೆದ(ತನಿ-ಹೊಸದು, ಕೆಡೆದ- ಬಿದ್ದ) ಗಾಲಿಯ ಹಾಯ್ಕಿ ಮೆಲ್ಲಡಿಯಿಡುತ ಹಜ್ಜೆಯ ನೆಣದ (ಕೊಬ್ಬಿನ) ಕೆಸರಿಗೆ ಛತ್ರಚಮರಿಗಳ ಅಡಸಿ (1. ಬಿಗಿಯಾಗಿ ಒತ್ತು. 2. ಒತ್ತಿ ಒಳಸೇರಿಸು. 3. ಹದಿ. 4. ಒತ್ತಿ ಹಿಡಿದುಕೊಳ್ಳು.) ಹೆಜ್ಜೆಯನು(1. ಪಜ್ಜೆ. 2. ನಡಗೆಯಲ್ಲಿ ಎರಡು ಹೆಜ್ಜೆಗಳ ನಡುವಿನ ಅಂತರ.)+ ಇಡುತ ರಕುತದ ಮಡುವನು+ ಎಡಬಲಕೆ+ ಇಕ್ಕಿ ಮೆಲ್ಲನೆ ನಡೆದು ದೈವವ ಬಯ್ದು ಬಯ್ದು+ ಅಡಿಗಡಿಗೆ ಸುಯ್ವವನ.
ಅರ್ಥ:ಒಟ್ಟಾಗಿ ರಾಶಿಹಾಕಿದಂತೆ ಕಡಿದುಬಿದ್ದ ಆಯುಧಗಳನ್ನು ನೋಡಿ, ಅದಕ್ಕೆ ಹೊಸದಾಗಿ ಬಿದ್ದ ಗಾಲಿಯನ್ನು ಹಾಕಿ/ ಎಸೆದು, ಮೆಲ್ಲನೆ ದೂರ ದೂರ ಹೆಜ್ಜೆ ಹಾಕುತ್ತಾ, ಸತ್ತವರ ಕೊಬ್ಬಿನ ಕೆಸರಿಗೆ ಛತ್ರಚಾಮರಗಳನ್ನು ಬಿಗಿಯಾಗಿ ಒತ್ತಿ ಹೆಜ್ಜೆಯನ್ನು ಇಡುತ್ತಾ, ರಕ್ತದ ಮಡುವನ್ನು ಎಡಕ್ಕೆ ಬಲಕ್ಕೆ ಇರುವಂತೆ ಬಿಟ್ಟು ಮಧ್ಯದಲ್ಲಿ ಮೆಲ್ಲನೆ ನಡೆದು ದೈವವನ್ನು ಬಯ್ದು ಬಯ್ದು ಅಡಿಗಡಿಗೆ ಸುಯ್ವು/ ನಿಟ್ಟಸಿರು ಬಿಡುತ್ತಿರವ ಕೌರವನನ್ನು ಸಂಜಯ ದೂರದಿಂದ ನೋಡಿದನು.
ಭೂತರವ ಭೇತಾಳ ಕಲಹ ವಿ
ಭೂತ ಜಂಬುಕ ಘೂಕ ಕಾಕ
ರ್ವಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು ||
ಅತು ಮರಳಿದು ಹಿಂದು ನೋಡಿ ಪ
ರೇತ ವಿಭವವಲಾ ಎನುತ ಛಲ
ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ || ೧೫ ||
ಪದವಿಭಾಗ-ಅರ್ಥ: ಭೂತರವ (ಸದ್ದು) ಭೇತಾಳ ಕಲಹ ವಿಭೂತ(ವಿಭೂತ/ವಿಶಿಷ್ಠ ಭೂತ/ ಪಿಶಾಚಿ) ಜಂಬುಕ ಘೂಕ ಕಾಕರ್ವಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು(ಬಲ- ಸೇನೆ) ಅತು ಮರಳಿದು ಹಿಂದು ನೋಡಿ ಪರೇತ (ಸಾವಿನ 1. ಅಗಲಿದ. 2. ಸತ್ತ. ಸುಡುಗಾಡು.ಯಮ; ಸಾವಿನ ಒಡೆಯ.) ವಿಭವವಲಾ ಎನುತ ಛಲ ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ
ಅರ್ಥ:ಆ ರಣಾಂಗಣದಲ್ಲಿ, ಭೂತಗಳ ಸದ್ದು, ಭೇತಾಳಗಳ ಕಲಹ, ಪ್ರೇತ, ಜಂಬುಕ/ನರಿ ಘೂಕ/ಗೂಬೆ ಕಾಗೆಗಳ ಸಮೂಹಗಞಳ ಆರ್ಭಟಕ್ಕೆ ಪಾಂಡವರ ಸೇನೆಯೆಂದು ಕೌರವನು ಬೆಚ್ಚುವನು; ಅತು/ಆತು ಸುಧಾರಿಸಿಕೊಂಡು ಮರಳಿ ಹಿಂದಕ್ಕೆ ನೋಡಿ, ಪಾಂಡವ ಸೇನೆಯಲ್ಲ- ಇದು ಸಾವಿನ/ಯಮನ ವೈಭವವಲಾ, ಎನ್ನತ್ತಾ ಛಲಗಾರ ಚೇತನನಾದ ಕೌರವನು ರಣರಂಗದ ಚೌಕದಲ್ಲಿ ಬಹಳ ಕೋಪೋದ್ರೇಕಗೊಂಡನು.
ಹೇಳುವಡೆ ಕುರುಪತಿಯನೇ ನೆರೆ
ಹೋಲುವನು ಗದೆ ಹೆಗಲಲದೆ ಮೇ
ಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ |
ಹೋಲುವುದು ಜನವೊಬ್ಬರೊಬ್ಬರ
ನಾಳೊಳೊಬ್ಬನೊ ಮೇಣು ಕುರು ಭೂ
ಪಾಲಕನೊ ನೋಡುವೆನೆನುತ ಸಂಜಯನು ನಡೆತಂದ || ೧೬ ||
ಪದವಿಭಾಗ-ಅರ್ಥ: ಹೇಳುವಡೆ ಕುರುಪತಿಯನೇ ನೆರೆ ಹೋಲುವನು, ಗದೆ ಹೆಗಲಲಿ+ ಅದೆ(ಇದೆ) ಮೇಲಾಳ (ಮೇಲಾಳುಗಳನ್ನು) ಕಾಣೆನು ಚಮರ ಚಾಹಿಯ ಗಜ+ ಹಯ+ ಆವಳಿಯ, ಹೋಲುವುದು ಜನ+ ವೊ+ ಒಬ್ಬರೊಬ್ಬರನು+ ಆಳೊಳೊಬ್ಬನೊ ಮೇಣು ಕುರು ಭೂಪಾಲಕನೊ ನೋಡುವೆನು+ ಎನುತ ಸಂಜಯನು ನಡೆತಂದ.
ಅರ್ಥ:ಸಂಜಯನು ಯೋಚಿಸಿದ,'ದೂರದಿಂದ ನೋಡಿದರೆ/ ನಿಜಹೇಳುವುದಾದರೆ, ರಣರಂಗದಲ್ಲಿ ಅಲೆಯುತ್ತಿರುವವನು ಕುರುಪತಿ ಕೌರವನನ್ನೇ ಬಹಳ ಹೋಲುವನು. ಹೆಗಲಲಲ್ಲಿ ಗದೆ ಇದೆ. ರಾಜನ ಜೊತೆ ಇರಬೇಕಾದ ಸೇವಕರನ್ನು, ಚಾಮರ, ಹೊಗಳುವವರ ಕುದುರೆಗಳ ಸಮೂಹ ಇವುಗಳನ್ನು ಕಾಣೆನು; ಜನವೊ, ಒಬ್ಬರು ಮತ್ತೊಬ್ಬರನ್ನು ಹೋಲುವುದು; ಇವನು ಯೋಧರಲ್ಲಿ ಒಬ್ಬನೊ ಅಥವಾ ಕುರು ಭೂಪಾಲಕನೊ ನೋಡುವೆನು,' ಎನ್ನುತ್ತಾ ಸಂಜಯನು ಕೌರವನು ಇದ್ದಕಡೆ ನಡೆದು ಬಂದ.

ಕೌರವನಿಗೆ ಸಂಜಯನ ಮಾತು[ಸಂಪಾದಿಸಿ]

ಬಂದು ಕಂಡನು ರಾಜವನ ಮಾ
ಕಂದನನು ಧೃತರಾಷ್ಟ್ರ ರಾಯನ
ಕಂದನನು ದೌರ್ಜನ್ಯವಲ್ಲೀ ವಿಪುಳಕಂದನನು |
ಮುಂದುವರಿವ ವಿಲೋಚನಾಂಬುಗ
ಳಿಂದ ಸೈರಣೆ ಮಿಗದೆ ಸಂಜಯ
ನಂದು ದೊಪ್ಪನೆ ಕೆಡೆದು ಹೊರಳಿದನರಸನಂಘ್ರಿಯಲಿ || ೧೭ ||
ಪದವಿಭಾಗ-ಅರ್ಥ: ಬಂದು ಕಂಡನು ರಾಜವನ ಮಾಕಂದನನು(ಮಾಕಂದ= ಮಾವಿನ ಮರ.) ಧೃತರಾಷ್ಟ್ರ ರಾಯನ ಕಂದನನು ದೌರ್ಜನ್ಯವಲ್ಲೀ ವಿಪುಳ(ದೊಡ್ಡ) ಕಂದನನ್ನು ಮುಂದುವರಿವ(ಮುಂದೆಹೋಗುತ್ತಿರುವ), ವಿಲೋಚನ(ಕಣ್ಣು)+ ಅಂಬುಗಳಿಂದ(ಅಂಬು- ನೀರು) ಸೈರಣೆ ಮಿಗದೆ ಸಂಜಯನು+ ಅಂದು ದೊಪ್ಪನೆ ಕೆಡೆದು (ಬಿದ್ದು) ಹೊರಳಿದನು+ ಅರಸನ+ ಅಂಘ್ರಿಯಲಿ.
ಅರ್ಥ:ಸಂಜಯನು ಆ ರಣದಲ್ಲಿ ನೆಡೆದು ಬಂದು ಕೌರವನನ್ನು ನೋಡಿದನು; ಸಂಜಯನು ಅವನಲ್ಲಿ, ರಾಜವನದ ಮಾವಿನಮರವನ್ನು, ಧೃತರಾಷ್ಟ್ರ ರಾಯನ ಮುದ್ದಿನ ಕಂದನನ್ನು, ಮುಂದೆಹೋಗುತ್ತಿರುವ ದೌರ್ಜನ್ಯವೆಂಬ ಬಳ್ಳಿಯ ದೊಡ್ಡ ಕಂದನನ್ನು ಕಂಡನು. ಸಂಜಯನು ಅವನ ದುಃಸ್ಥಿತಿಯನ್ನು ನೋಡಿ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಸೈರಿಸಲಾಗದೆ ಆಗ ಅರಸನ ಪಾದಗಳ ಮೇಲೆ ದೊಪ್ಪನೆ ಬಿದ್ದು ಹೊರಳಿದನು.
ಕಡಲತಡಿ ಪರಿಯಂತ ರಾಯರ
ಗಡಣದಲಿ ನೀನೊಬ್ಬನೆಂಬೀ
ನುಡಿಗೆ ನಿಶ್ಚಯವೀಗಲಾಯಿತು ತಂದೆ ಕುರುರಾಯ |
ಬಿಡದೆ ಬಾಗುವ ನೃಪರ ಮಕುಟದೊ
ಳಿಡುವ ಕೋಮಲ ಚರಣವಿದರೊಳು
ನಡೆಯಲೆಂತೈ ಕಲಿತೆ ಎಂದನು ಸಂಜಯನು ನೃಪನ || ೧೮ ||
ಪದವಿಭಾಗ-ಅರ್ಥ: ಕಡಲತಡಿ ಪರಿಯಂತ ರಾಯರ ಗಡಣದಲಿ ನೀನೊಬ್ಬನುಎ+ ಎಂಬ+ ಈ ನುಡಿಗೆ ನಿಶ್ಚಯವೀಗಲಾಯಿತು ತಂದೆ ಕುರುರಾಯ ಬಿಡದೆ (ಸದಾ, ಯಾವಾಗಲೂ,) ಬಾಗುವ ನೃಪರ ಮಕುಟದೊಳಿಡುವ ಕೋಮಲ ಚರಣವಿದರೊಳು ನಡೆಯಲೆಂತೈ ಕಲಿತೆ ಎಂದನು ಸಂಜಯನು ನೃಪನ.
ಅರ್ಥ: 'ಸಮುದ್ರದಡದ ಪರಿಯಂತ ಈ ಹಿಂದೆ ಆದ, ಆಳುವ ರಾಜರ ಸಮೂಹದಲ್ಲಿ ನೀನೊಬ್ಬನು, ಎಂಬ ಈ ಹೇಳಿಕೆಗೆ ನಿಶ್ಚಯವು ಈಗ ಆಯಿತು. ತಂದೆಯೇ, ಕುರುರಾಯನೇ, ರಾಜರು ಸದಾ ಬಗ್ಗಿ ನಮಿಸುವಾಗ ಆ ನೃಪರ ಮಕುಟದಲ್ಲಿ ಇಡುವ ಕೋಮಲ ಚರಣವು ನಿನ್ನದು; ಈ ಬರಿ ಕಾಲಲ್ಲಿ ನೆಡೆದು ಗೊತ್ತಿಲ್ಲ; ರಾಜನೇ, ಇದರಿಂದ- ಈ ಬರಿಪಾದದಿಂದ ನಡೆಯಲು ಎಂತಯ್ಯಾ ಕಲಿತೆ,' ಎಂದು ಸಂಜಯನು ನೃಪನಿಗೆ ದುಃಕದಿಂದ ಹೇಳಿದನು.
ರಣಮುಖದೊಳೇಕಾದಶಾಕ್ಷೋ
ಹಿಣಿಗೆ ಹರಿವಾಯ್ತೇ ಯುಧಿಷ್ಠಿರ
ನುಣಲಿ ಧರೆಯನು ಗೋತ್ರವಧವಿನ್ಯಸ್ತ ಕಿಲ್ಬಿಷವ |
ಸೆಣಸ ಮಾಡಿದೆ ದೈವದಲಿ ಧಾ
ರುಣಿಯ ಹುದುವಿನ ಸಿರಿಗೆ ಸೇರದೆ
ಹಣಿದವಾಡಿದೆ ರಾಜವಂಶದ ಕಲ್ಪತರುವನವ || ೧೯ ||
ಪದವಿಭಾಗ-ಅರ್ಥ: ರಣಮುಖದೊಳು+ ಏಕಾದಶಾಕ್ಷೋಹಿಣಿಗೆ ಹರಿವಾಯ್ತೇ (ಹರಿವು+ ಆಯ್ತೇ- ಹರದು ಹೋಯಿತೇ- ಚೂರಾಯಿತೇ, ಹರಿಯಿತು-ಇಲ್ಲವಾಯಿತು; 1.ಓಟ. 2.ನೀರಿನ ಹರಿವು. ಸ್ಥಿತಿ. ಸೇನೆ.), ಯುಧಿಷ್ಠಿರನು+ ಉಣಲಿ ಧರೆಯನು(ಭೂಮಿ, ರಾಜ್ಯ), ಗೋತ್ರವಧ ವಿನ್ಯಸ್ತ ((ಸಂ) ಇಡಲ್ಪಟ್ಟುದು, ನೆಲೆಗೊಂಡುದು) ಕಿಲ್ಬಿಷವ(ಕೊಳೆ, ಕಳಂಕ; ಪಾಪ, ಅಪರಾಧ) ಸೆಣಸ (ಹೋರಾಟ, ಯುದ್ಧ) ಮಾಡಿದೆ ದೈವದಲಿ ಧಾರುಣಿಯ ಹುದುವಿನ (1.ಕೂಡುವಿಕೆ. 2.ಏಕಸ್ವಾಮಿತ್ವ ) ಸಿರಿಗೆ ಸೇರದೆ ಹಣಿದವಾಡಿದೆ (ಹಣಿ= ಹೊಡೆ. ಹರಿತ ಮಾಡು. ಕತ್ತರಿಸು. ನಾಶ ಗೊಳಿಸು) ರಾಜವಂಶದ ಕಲ್ಪತರು ವನವ.
ಅರ್ಥ:ಸಮಜಯನು,'ರಾಜನೇ, ರಣಮುಖದಲ್ಲಿ ಹನ್ನೊಂದು ಅಕ್ಷೋಹಿಣಿಗೆ ನಾಶ ಬಂದಿತೇ?, ಯುಧಿಷ್ಠಿರನು ರಾಜ್ಯವನ್ನು ಉಣ್ಣಲಿ/ ಅನುಭವಿಸಲಿ; ಗೋತ್ರವಧೆಯನ್ನು ನೆಡೆಸಿದ ಕಳಂಕ ಹೊರುವ ಯುದ್ಧ ಮಾಡಿದೆ; ದೈವದಲ್ಲಿ ಧಾರುಣಿಯ/ ಭೂಮಿಯ ಏಕಸ್ವಾಮಿತ್ವದ ಸಂಪತ್ತಿಗೆ ಸೇರದೆ ರಾಜವಂಶದ ಕಲ್ಪತರುಗಳಿರುವ ವನವನ್ನು ಹಣಿದವಾಡಿದೆ/ ಕತ್ತರಿಸಿ ಹಾಕಿದೆ,' ಎಂದನು.
ಶಶಿರುಚಿಗೆ ಸೈರಿಸದ ಸಿರಿಮುಡಿ
ಬಿಸಿಲ ಸೆಕೆಗಾಂತುದೆ ಸುಗಂಧ
ಪ್ರಸರಪೂರ್ಣಘ್ರಾಣವೀ ಹಳೆವೆಣನ ಹೊಲಸಿನಲಿ
ಉಸುರುದೆಗಹಾದುದೆ ಸುಗೀತದ
ರಸದ ಮಧುವಿಂಗಾಂತ ಕಿವಿ ವಾ
ಯಸ ಸೃಗಾಲಧ್ವನಿಗೆ ಸೊಗಸಿತೆ ತಂದೆ ಕುರುರಾಯ ೨೦
ಪದವಿಭಾಗ-ಅರ್ಥ: ಶಶಿರುಚಿಗೆ ಸೈರಿಸದ ಸಿರಿಮುಡಿ (ತಲೆ, ತಲೆಕೂದಲು) ಬಿಸಿಲ ಸೆಕೆಗೆ+ ಆಂತುದೆ ಸುಗಂಧ ಪ್ರಸರಪೂರ್ಣ ಘ್ರಾಣವು+ ಈ ಹಳೆವೆಣನ ಹೊಲಸಿನಲಿ ಉಸುರುದೆಗಹಾದುದೆ - ಉಸುರು+ (ದೆ)+ ತೆಗಹ+ ಆದುದೆ ಸು+ಗೀತದ (ಉತ್ತಮ ಸಂಗೀತದ) ರಸದ ಮಧುವಿಂಗೆ+ ಆಂತ(ಒಡ್ಡಿದ) ಕಿವಿ ವಾಯಸ ಸೃಗಾಲಧ್ವನಿಗೆ ಸೊಗಸಿತೆ ತಂದೆ ಕುರುರಾಯ.
ಅರ್ಥ:ಚಂದ್ರನ ಬೆಳುದಿಂಗಳಿಗೆ ಸೈರಿಸದ ನಿನ್ನ ಸಿರಿಮುಡಿಯು ಬಿಸಿಲಿನ ಸೆಕೆಗೆ ಒಳಗಾಯಿತೇ? ಸದಾ ಸುಗಂಧ ಪ್ರಸಾರಪೂರ್ಣವಾದ/ ಸುವಾಸನೆಯನ್ನೇ ಹೊಂದುವ ಮೂಗು ಈ ಹಳೆಹೆಣದ ಹೊಲಸಿನಲ್ಲಿ ಉಸಿರು ತೆಗೆದಯುವಂತೆ ಆದುದೇ? ಸು-ಗೀತಗಳ ರಸದ ಮಧುವಿಗೆ ಒಡ್ಡಿದ ನಿನ್ನ ಕಿವಿ ಕಾಗೆ ನರಿಯ ಧ್ವನಿಗೆ ಸೊಗಸಿತೆ ತಂದೆ ಕುರುರಾಯ' ಎಂದನು ಸಂಜಯ.
ಲಲಿತ ಮೃದುತರ ಹಂಸತೂಳದ
ಲುಳಿತ ಕೋಮಲ ಕಾಯ ಕೈದುಗ
ಳೆಲುಗಳೊಟ್ಟಿಲ ಹಾಸಿನಲಿ ಪೈಸರಿಸಿ ಮಲಗಿತಲಾ |
ಸುಳಿಯೆ ಕೈಗೊಡುವರಸುಗಳ ಕೆಲ
ಬಲದ ಪಾಯವಧಾರಿನವರನು
ಕಳುಹಿ ಬಂದೈ ಸಾರ್ವಭೌಮರ ಚಿಹ್ನವಿದೆಯೆಂದ || ೨೧ ||
ಪದವಿಭಾಗ-ಅರ್ಥ: ಲಲಿತ ಮೃದುತರ ಹಂಸತೂಳದ ಲುಳಿತ ಕೋಮಲ ಕಾಯ, ಕೈದುಗಳ+ ಎಲುಗಳ+ ಒಟ್ಟಿಲ(ಹಾಸಿದ, ರಾಶಿಹಾಕಿದ ಒಟ್ಟಿದ) ಹಾಸಿನಲಿ ಪೈಸರಿಸಿ (1.ಕೆಳಗೆ ಬೀಳು. 2.ಕುಸಿದು ಬೀಳು. 3.ಕುಗ್ಗು.)ಮಲಗಿತಲಾ ಸುಳಿಯೆ ಕೈಗೊಡುವ (ಸಹಾಯಮಾಡುವ)+ ಅರಸುಗಳ ಕೆಲಬಲದ(ಅಕ್ಕಪಕ್ಕದಲ್ಲಿ) ಪಾಯ+ ಅವಧಾರಿನವರನು ಕಳುಹಿ ಬಂದೈ ಸಾರ್ವಭೌಮರ ಚಿಹ್ನವಿದೆ+ ಯ+ ಎಂದ.
ಅರ್ಥ:ಕೌರವ ಭೂಪತಿಯೇ, 'ಸುಮದರ ಮೃದು ತರವಾದ ಹಂಸತೂಲಿಕಾ ಹಾಸಿಗೆಯಲ್ಲಿ ತೂಗುತ್ತಿದ್ದ ಕೋಮಲ ಕಾಯದ ನೀನು ಈಗ, ಆಯುಧಗಳನ್ನು, ಎಲುಬುಗಳುನ್ನು ಒಟ್ಟಿದ ಹಾಸಿನಲ್ಲಿ ಬಿದ್ದು ಮಲಗಿದೆಯಲ್ಲಾ! ಅಕ್ಕಪಕ್ಕದಲ್ಲಿ ಸಹಾಯಮಾಡುವ ಅರಸುಗಳು ಸುಳಿದಾಡುವಾಗ ಅಪಾಯ, ಅವಧಾರಿಸು ಎಂದು ಎಚ್ಚರಿಸುವವರನ್ನು ಕಳುಹಿಸಿ ಬಂದೆಯಲ್ಲಾ! ಸಾರ್ವಭೌಮರ ಚಿಹ್ನೆಯು ಇದೇನಾ?.' ಎಂದ.
ಎತ್ತಣೇಕಾದಶ ಚಮೂಪತಿ
ಯೆತ್ತಣೀಯೇಕಾಕಿತನ ತಾ
ನೆತ್ತ ಗಜಹಯ ರಥ ಸುಖಾಸನದತಿಶಯದ ಸುಳಿವು |
ಎತ್ತಣೀ ಕೊಳಗುಳದ ಕಾಲ್ನಡೆ
ಯೆತ್ತಣಾಹವದಭಿಮುಖತೆ ಬಳಿ
ಕೆತ್ತಣಪಜಯವಿಧಿಯೆ ಘಟನೆ ನೃಪಾಲ ನಿನಗೆಂದ || ೨೨ ||
ಪದವಿಭಾಗ-ಅರ್ಥ: ಎತ್ತಣ+ ಏಕಾದಶ (ಹನ್ನೊಂದು) ಚಮೂಪತಿಯು(ಸೇನೆಯ ಒಡೆಯ)+ ಎತ್ತಣ+ ಈ ಯೇ+ ಏಕಾಕಿತನ, ತಾನು+ ಎತ್ತ ಗಜ ಹಯ ರಥ ಸುಖಾಸನದ+ ಅತಿಶಯದ ಸುಳಿವು, ಎತ್ತಣ+ ಈ ಕೊಳಗುಳದ ಕಾಲ್ನಡೆ ಯೆತ್ತಣ+ ಆಹವದ+ ಅಭಿಮುಖತೆ ಬಳಿಕ+ ಎತ್ತಣ+ ಅಪಜಯ ವಿಧಿಯೆ ಘಟನೆ ನೃಪಾಲ ನಿನಗೆ+ ಎಂದ.
ಅರ್ಥ:ಎಲ್ಲಿಯ ಹನ್ನೊಂದು ಸೇನೆಯ ಒಡೆತನ, ಎಲ್ಲಿಯ ಈ ಏಕಾಕಿತನ; ತಾನು ಅದು ಎತ್ತ ಆನೆ, ಕುದುರೆ ರಥ ಸುಖಾಸನದ ಅತಿಶಯದ ಚಿನ್ಹೆಗಳು? ಎಲ್ಲಿಯ ಈ ಯುದ್ಧಭೂಮಿಯ ಕಾಲುನೆಡಿಗೆ? ಎಲ್ಲಿಯ ಯುದ್ಧದ ಅಭಿಮುಖತೆ/ಹೋರಾಟ- ನೃಪಾಲ/ ರಾಜನೇ, ಬಳಿಕ ಇದು ಎಲ್ಲಿಯ ಅಪಜಯ? ಈ ಘಟನೆ ನಿನಗೆ ವಿಧಿಯೆ?' ಎಂದ ಸಂಜಯ.
ಮುಳಿದಡಗ್ಗದ ಪರಶುರಾಮನ
ಗೆಲಿದನೊಬ್ಬನೆ ಭೀಷ್ಮ ಪಾಂಡವ
ಬಲದ ಸಕಲ ಮಹಾರಥರ ಸಂಹರಿಸಿದರು ದ್ರೋಣ |
ದಳಪತಿಯ ಮಾಡಿದಡೆ ಪಾರ್ಥನ
ತಲೆಗೆ ತಂದನು ಕರ್ಣನೀಯ
ಗ್ಗಳೆಯರಗ್ಗಿತು ಕಡೆಯಲೊಬ್ಬನೆ ಕೆಟ್ಟೆ ನೀನೆಂದ || ೨೩ ||
ಪದವಿಭಾಗ-ಅರ್ಥ: ಮುಳಿದಡೆ(ಕೋಪಿಸಿದರೆ)+ ಅಗ್ಗದ (ಶ್ರೇಷ್ಠ) ಪರಶುರಾಮನ ಗೆಲಿದನು+ ಒಬ್ಬನೆ ಭೀಷ್ಮ, ಪಾಂಡವ ಬಲದ ಸಕಲ ಮಹಾರಥರ ಸಂಹರಿಸಿದರು ದ್ರೋಣ, ದಳಪತಿಯ ಮಾಡಿದಡೆ ಪಾರ್ಥನತಲೆಗೆ ತಂದನು ಕರ್ಣನು+ ಈ (ಯ+) ಅಗ್ಗಳೆಯರ+ ಅಗ್ಗಿತು(ಲಯವಾಯಿತು ) ಕಡೆಯಲಿ + ಒಬ್ಬನೆ ಕೆಟ್ಟೆ ನೀನು+ ಎಂದ
ಅರ್ಥ:ಸಂಜಯನು, 'ಕೋಪಿಸಿದಾಗ ಶ್ರೇಷ್ಠರಾದ, ಮಹಾ ಪರಾಕ್ರಮಿಗಳಾದ ಪರಶುರಾಮನನ್ನು ನಿನ್ನ ಕಡೆಯಲ್ಲಿದ್ದ, ಭೀಷ್ಮನು ಒಬ್ಬನೆ ಗೆದ್ದಿದ್ದನು. ಮಹಾ ಪರಾಕ್ರಮಿ ದ್ರೋಣರು, ಪಾಂಡವ ಬಲದ ಸಕಲ ಮಹಾರಥರನ್ನು ಸಂಹರಿಸಿದರು, ಕರ್ಣನನ್ನು ದಳಪತಿಯನ್ನಾಗಿ ಮಾಡಿದರೆ ಪಾರ್ಥನ ತಲೆಗೆ ಆಪತ್ತು ತಂದನು. ಆದರೆ ಇವರಾರೂ ಗೆಲುವು ತರಲು ಆಗಲಿಲ್ಲ. ಈ ಅಸಾಧಾರಣ ಶ್ರೇಷ್ಠರ ಪರಾಕ್ರಮ ಲಯವಾಯಿತು. ಕಟ್ಟ ಕಡೆಯಲ್ಲಿ ನೀನು ಒಬ್ಬನೆ ಕೆಟ್ಟೆ,' ಎಂದ.
ಅವರು ಬದುಕಿದರೈವರೂ ನಿ
ನ್ನವರೊಳಗೆ ನೀನುಳಿಯೆ ನೂರ್ವರು
ಸವರಿತವರೈವರು ಕುಮಾರರು ಸೌಖ್ಯ ಜೀವಿಗಳು |
ಜವನ ಸಿವಡಿಗೆ ಹತ್ತಿದರು ನಿ
ನ್ನವರು ಮಕ್ಕಳು ನೂರು ದೈವವ
ನವಗಡಿಸಿ ದುಃಸ್ಥಿತಿಗೆ ಬಂದೈ ತಂದೆ ಕುರುರಾಯ || ೨೪ ||
ಪದವಿಭಾಗ-ಅರ್ಥ: ಅವರು ಬದುಕಿದರು+ ಐವರೂ ನಿನ್ನವರೊಳಗೆ ನೀನು+ ಉಳಿಯೆ, ನೂರ್ವರು ಸವರಿತವರು+ ಐವರು ಕುಮಾರರು ಸೌಖ್ಯ ಜೀವಿಗಳು, ಜವನ ಸಿವಡಿಗೆ (ಯಮನ ಲೆಕ್ಕದ ಪುಸ್ತಕ.) ಹತ್ತಿದರು ನಿನ್ನವರು ಮಕ್ಕಳು ನೂರು, ದೈವವನು+ ಅವಗಡಿಸಿ (1. ಕಡೆಗಣಿಸು. 2. ಸೋಲಿಸು. 3. ವಿರೋಧಿಸು) ದುಃಸ್ಥಿತಿಗೆ ಬಂದೈ ತಂದೆ ಕುರುರಾಯ
ಅರ್ಥ:ಸಮಜಯನು,'ಅರಸನೇ,'ಅವರು ಐವರೂ ಬದುಕಿದರು; ನೀನು ಒಬ್ಬನೇ ಉಳಿಯಲು ನಿನ್ನವರೊಳಗೆ ನೂರ್ವರು ಸವರಲ್ಪಟ್ಟರು; ಅವರು- ಪಾಂಡವರು ಐವರು ಕುಮಾರರು ಸೌಖ್ಯ ಜೀವಿಗಳು- ಸುಖವಾಗಿ ಜೀವಿಸಿದ್ದಾರೆ. ಯಮನ ಲೆಕ್ಕದ ಪುಸ್ತಕದಲ್ಲಿ ನಿನ್ನವರು ನೂರು ಮಕ್ಕಳು ಹತ್ತಿದರು. ತಂದೆ ಕುರುರಾಯ, ದೈವವನು ಕಡೆಗಣಿಸಿ ದುಃಸ್ಥಿತಿಗೆ ಬಂದೆಯಲ್ಲಾ! ಎಂದನು.(ಇಲ್ಲಿ ಪ್ರಾಸಕ್ಕಾಗಿ, ನಿನ್ನವರು ನೂರು ಜನ ಸತ್ತರು ಎಂದಿದೆ. ಅದು ೯೯.)
ಗೆಲಿದನರಸನು ಹಸ್ತಿನಾಪುರ
ದೊಳಗೆ ಕಟ್ಟಿಸು ಗುಡಿಯನೆಂಬೆನೊ
ತಲೆಬಳಿಚಿ ತಾನೋಡಿ ಬದುಕಿದನೆಂಬೆನೋ ಮೇಣು |
ಲಲನೆಯರಿಗೇನೊಸಗೆ ಕುರುಡನ
ನಳಿಸುವೆನೊ ನಗಿಸುವೆನೊ ತಾಯಿಗೆ
ಕಲಿಸು ಬುದ್ಧಿಯನೇನನೆಂಬೆನು ಭೂಪ ಕೇಳೆಂದ || ೨೫ ||
ಪದವಿಭಾಗ-ಅರ್ಥ: ಗೆಲಿದನು+ ಅರಸನು ಹಸ್ತಿನಾಪುರದೊಳಗೆ ಕಟ್ಟಿಸು ಗುಡಿಯನು (ತೋರಣ ಬಾವುಟ)+ ಎಂಬೆನೊ, ತಲೆಬಳಿಚಿ (ತಲೆಮರಸಿಕೊಂಡು) ತಾನೋಡಿ(ತಾನು+ ಓಡಿಹೋಗಿ) ಬದುಕಿದನು+ ಎಂಬೆನೋ, ಮೇಣು ಲಲನೆಯರಿಗೆ+ ಏನು+ ಒಸಗೆ, ಕುರುಡನನು+ ಅಳಿಸುವೆನೊ ನಗಿಸುವೆನೊ, ತಾಯಿಗೆ ಕಲಿಸು ಬುದ್ಧಿಯನು+ ಏನನೆಂಬೆನು ಭೂಪ ಕೇಳು+ ಎಂದ.
ಅರ್ಥ:ಸಂಜಯನು ಮುಂದುವರಿದು ಕೌರವನಿಗೆ, ಅರಸನು ಗೆದ್ದನು ಹಸ್ತಿನಾಪುರದೊಳಗೆ ತೋರಣ ಬಾವುಟಗಳನ್ನ ಕಟ್ಟಿಸು ಎಂಬೆನೊ, ತಲೆಮರಸಿಕೊಂಡು ತಾನು ಓಡಿಹೋಗಿ ನಿನ್ನ ಮಗ ಬದುಕಿದನು ಎಂಬೆನೋ? ಅದಲ್ಲದೆ ನಿನ್ನ ಪತ್ನಿ ಮತ್ತು ರಾಣೀವಾಸದವರಿಗೆ ಏನು ಸಂದೇಶ ಹೇಳಲಿ? ಕುರುಡ ರಾಜನನ್ನು ನಿನ್ನ ಮಗ ಸೋತನೆಂದು ಹೇಳಿ ಅಳಿಸುವೆನೊ, ಗೆದ್ದನೆಂದು ಹೇಳಿ ನಗಿಸುವೆನೊ? ನಿನ್ನ ತಾಯಿಗೆ, ಮಗನಿಗೆ ಬುದ್ಧಿಯನ್ನು ಕಲಿಸು ಎನ್ನಲೇ? ಏನನೆಂಬೆನು ರಾಜನೇ ಕೇಳು,' ಎಂದ.
ಏನು ಸಂಜಯ ಕೌರವೇಶ್ವರ
ನೇನ ಮಾಡಿದನಲ್ಲಿ ಕೊಂತೀ
ಸೂನುಗಳೊಳಾರಳಿದರುಳಿದರು ನಮ್ಮ ಥಟ್ಟಿನಲಿ |
ಏನು ಹದನೈ ಶಕುನಿ ರಣದೊಳ
ಗೇನ ಮಾಡಿದನೆಂದು ಬೆಸಗೊಳ
ಲೇನನೆಂಬೆನು ತಾಯಿ ಗಾಂಧಾರಿಗೆ ರಣೋತ್ಸವವ || ೨೬ ||
ಪದವಿಭಾಗ-ಅರ್ಥ: ಏನು ಸಂಜಯ ಕೌರವೇಶ್ವರನು+ ಏನ ಮಾಡಿದನು+ ಅಲ್ಲಿ ಕೊಂತೀಸೂನುಗಳೊಳು+ ಆರು+ ಅಳಿದರು+ ಉಳಿದರು ನಮ್ಮ ಥಟ್ಟಿನಲಿ ಏನು ಹದನೈ, ಶಕುನಿ ರಣದೊಳಗೆ+ ಏನ ಮಾಡಿದನೆಂದು ಬೆಸಗೊಳಲು+ ಏನನು+ ಎಂಬೆನು ತಾಯಿ ಗಾಂಧಾರಿಗೆ ರಣೋತ್ಸವವ.
ಅರ್ಥ:ಸಂಜಯನು ರಾಜನೇ, 'ಏನು ಸಂಜಯ ಅಲ್ಲಿ ಕೌರವೇಶ್ವರನು ಏನನ್ನು ಮಾಡಿದನು? ಕುಂತೀ ಮಕ್ಕಳಲ್ಲಿ ಯಾರು ಮಡಿದರು, ಯಾರು ಉಳಿದರು? ನಮ್ಮ ಸೇನೆಯ ವಿಚಾರ ಏನು? ಶಕುನಿ ರಣರಂಗದಲ್ಲಿ ಏನನ್ನು ಮಾಡಿದನು ಎಂದು ಕೇಳಲು, ರಣೋತ್ಸವವನ್ನು ಕುರಿತು ತಾಯಿ ಗಾಂಧಾರಿಗೆ ನಾನು ಏನನ್ನು ಹೇಳಲಿ? ಎಂದನು.
ಹಿಂದೆ ರಾಯನ ಪಟ್ಟದರಸಿಯ
ತಂದು ಭಾರಿಯ ಭಂಗಬಡಿಸಿದೆ
ಬಂದು ಹರಿಯೈದೂರ ಬೇಡಿದರವರ ಚಿತ್ತದಲಿ |
ಕಂದ ಬಿತ್ತಿದೆ ಕದನದಲಿ ನೀ
ನೊಂದು ನೆಳಲುಳಿಯಲು ಸಹೋದರ
ವೃಂದ ತನುಜ ಜ್ಞಾತಿ ಬಾಂಧವರಳಿದರದರಿಂದ || ೨೭ ||
ಪದವಿಭಾಗ-ಅರ್ಥ:ಹಿಂದೆ ರಾಯನ ಪಟ್ಟದರಸಿಯ ತಂದು ಭಾರಿಯ ಭಂಗಬಡಿಸಿದೆ; ಬಂದು ಹರಿಯು+ ಐದೂರ ಬೇಡಿದರೆ+ ಅವರ ಚಿತ್ತದಲಿ ಕಂದ (ಕಂದ- ಕಂದು= ಆಶೆ ಕಂದಿಹೋಯಿತು, ಕಂದುವಿಕೆ, ಕುಗ್ಗುವಿಕೆ, ನಿರಾಶೆ) ಬಿತ್ತಿದೆ; ಕದನದಲಿ ನೀನೊಂದು ನೆಳಲು+ ಉಳಿಯಲು ಸಹೋದರ ವೃಂದ ತನುಜ ಜ್ಞಾತಿ ಬಾಂಧವರು+ ಅಳಿದರು+ ಅದರಿಂದ<-.
ಅರ್ಥ:ಹಿಂದೆ ಧರ್ಮರಾಯನ ಪಟ್ಟದರಸಿಯನ್ನು ಸಭೆಗೆ ತಂದು ಅವಳಿಗೆ ಭಾರಿ ಭಂಗಬಡಿಸಿದೆ, ಅವಮಾನ ಮಾಡಿದೆ; ಹರಿಯು/ ಕೃಷ್ಣನು ಬಂದು ಐದ ಊರುಗಳನ್ನು ಬೇಡಿದರೆ, ಅವರ ಮನಸ್ಸಿನಲ್ಲಿ ನಿರಾಶೆಯನ್ನು ಬಿತ್ತಿದೆ; ಅದರಿಂದ ಈ ಮಹಾ ಕದನದಲ್ಲಿ ನೀನೊಬ್ಬನೇ ತಂದೆ ತಾಯಿಗೆ ನೆಳಲು ಉಳಿಯಲು, ನಿನ್ನ ಸಹೋದರರ ಸಮೂಹ, ಮಗ, ಜ್ಞಾತಿ ಬಾಂಧವರು ಎಲ್ಲರೂ ಮಡಿದರು.

ಕೌರವನ ಉತ್ತರ[ಸಂಪಾದಿಸಿ]

ಕೇಳು ಸಂಜಯ ಪೂರ್ವ ಸುಕೃತದ
ಶಾಳಿವನವೊಣಗಿದೊಡೆ ಭಾರಿಯ
ತೋಳಗುತ್ತಿನ ಜಯಲಕುಮಿ ಜಂಗಳವ ಜಾರಿದಡೆ |
ಭಾಳಲಿಪಿಗಳ ಲೆಕ್ಕವನು ಪ್ರತಿ
ಕೂಲವಿಧಿ ಪಲ್ಲಟಿಸಿ ಬರೆದಡೆ
ಹೇಳಿ ಫಲವೇನೆನುತ ತುಂಬಿದನರಸ ಕಂಬನಿಯ || ೨೮ ||
ಪದವಿಭಾಗ-ಅರ್ಥ: ಕೇಳು ಸಂಜಯ ಪೂರ್ವ ಸುಕೃತ ದಶಾಳಿ(ದಶೆ+ ಆಳಿ-ಸಮೂಹ) ವನವೊಣಗಿದೊಡೆ ಭಾರಿಯ ತೋಳಗುತ್ತಿನ (ಗುತ್ತು= ಗುದ್ದು.ಶಸ್ತ್ರಾಘಾತ;) ಜಯಲಕುಮಿ ಜಂಗಳವ (ಸಡಿಲವಾದುದು,) ಜಾರಿದಡೆ ಭಾಳಲಿಪಿಗಳ (ಹಣೆಯ ಬರಹ) ಲೆಕ್ಕವನು ಪ್ರತಿಕೂಲವಿಧಿ ಪಲ್ಲಟಿಸಿ (ಬದಲಾಯಿಸಿ) ಬರೆದಡೆ ಹೇಳಿ ಫಲವೇನು+ ಎನುತ ತುಂಬಿದನು+ ಅರಸ ಕಂಬನಿಯ
ಅರ್ಥ:ಕೌರವನು, 'ಕೇಳು ಸಂಜಯನೇ ಪೂರ್ವ ಸುಕೃತ/ಒಳ್ಳೆಕೆಲಸದ ದೆಶೆಗಳ ವನವು ಒಣಗಿಹೋದರೆ (ತಾನು ಎಷ್ಟೋ ಒಳ್ಳೆಯ/ಪುಣ್ಯದ ಕೆಲಸಮಾಡಿದ್ದೇನೆ, ಆದರೆ ಸುಕೃತದ ಮರ ಒಣಗೆ ಫಲ ಕೊಡಲಿಲ್ಲ, ಎಂದು ಅವನ ವಾದ), ಭಾರಿಯ ತೋಳಿನ ಹೊಡೆತದಿಂದ ಬರಬೇಕಾದ ಜಯಲಕ್ಷ್ಮಿಯು ಸಡಿಲವಾಗಿ ಕೈಯಿಂದ ಜಾರಿಹೋದರೆ, ಹಣೆಯ ಬರಹಗಳ ಲೆಕ್ಕವನ್ನು ನಮಗೆ ವಿರುದ್ಧವಾದ ವಿಧಿಯು ಬದಲಾಯಿಸಿ ಬರೆದರೆ ಏನು ಮಾಡುವುದು? ಅದನ್ನು ಹೇಳಿ ಫಲವೇನು?' ಎಂದು ಹೇಳಿದನು; ಹಾಗೆ ಹೇಳುವಾಗ ಅರಸನ ಕಣ್ಣಲ್ಲಿ ಕಂಬನಿಯ ತುಂಬಿತು.
ಕದಡಿತಂತಃಕರಣ ವಿಕ್ರಮ
ದುದಧಿ ನೆಲೆಯಾಯಿತು ನಿರರ್ಥತೆ
ಒದರಿದಡೆ ಫಲವೇನು ಸಂಜಯ ಹಿಂದನೆಣಿಸದಿರು |
ಕದನದಲಿ ದುಶ್ಯಾಸನನ ತೇ
ಗಿದನಲಾ ಬಕವೈರಿ ತಮ್ಮನ
ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ || ೨೯ ||
ಪದವಿಭಾಗ-ಅರ್ಥ: ಕದಡಿತು+ ಅಂತಃಕರಣ, ವಿಕ್ರಮದ+ ಉದಧಿ (ಸಮುದ್ರ) ನೆಲೆಯಾಯಿತು, ನಿರರ್ಥತೆ (ಉಪಯೋಗವಿಲ್ಲದ್ದು) ಒದರಿದಡೆ ಫಲವೇನು, ಸಂಜಯ ಹಿಂದನು+ ಎಣಿಸದಿರು, ಕದನದಲಿ ದುಶ್ಯಾಸನನ ತೇಗಿದನಲಾ ಬಕವೈರಿ- ತಮ್ಮನನು+ ಉದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ.
ಅರ್ಥ:ಕೌರವನ ಅಂತಃಕರಣ ಕದಡಿ ಕೋಪ ಉಕ್ಕಿತು. ಪೌರುಷದ ಸಮುದ್ರಕ್ಕೆ ಅವನ ಮನಸ್ಸು ನೆಲೆಯಾಯಿತು. ಸಂಜಯಾ, 'ಉಪಯೋಗವಿಲ್ಲದ್ದನ್ನು ಹೇಳಿದರೆ ಫಲವೇನು? ಪ್ರಯೋಜನವಿಲ್ಲ. ಸಂಜಯನೇ ಹಿಂದೆ ಆದದ್ದನ್ನೇ ಎಣಿಸಬೇಡ. ಕುರುಕ್ಷೇತ್ರದ ಕದನದಲ್ಲಿ ದುಶ್ಯಾಸನನ್ನು ಆ ಬಕವೈರಿ- ಕೊಂದು ಕರುಳು ಬಗಿದು- ರಕ್ತಕುಡಿದು ತೇಗಿದನಲಾ! ಆ ನನ್ನ ತಮ್ಮನನ್ನು ಆ ಭೀಮನ ಹೊಟ್ಟೆಯಿಂದ ಹೊರೆಗೆ ತೆಗೆಯುವೆನು; ಆ ವಿಚಿತ್ರವನ್ನು ಮುಂದೆ ನೀನು ನೋಡುವೆ,' ಎಂದ ಕೌರವ.
ನರನ ಬಸುರಲಿ ಕರ್ಣನನು ಭೂ
ವರನ ಸೀಳಿದು ಶಲ್ಯನನು ಕಾ
ತರಿಸದಿರು ಶಕುನಿಯನುಳೂಕನ ಯಮಳರಿಬ್ಬರಲಿ |
ಹರಿಬಕಿದಿರಾಗಲಿ ಮುರಾಂತಕ
ಹರಹಿಕೊಳಲಿ ಮದೀಯಬಾಹು
ಸ್ಫುರಣ ಶಕ್ತಿಗೆ ಭಂಗಬಾರದು ನೋಡು ನೀನೆಂದ || ೩೦ ||
ಪದವಿಭಾಗ-ಅರ್ಥ: ನರನ ಬಸುರಲಿ ಕರ್ಣನನು, ಭೂವರನ ಸೀಳಿದು ಶಲ್ಯನನು, ಕಾತರಿಸದಿರು ಶಕುನಿಯನು+ ಉಳೂಕನ ಯಮಳರಿಬ್ಬರಲಿ, ಹರಿಬಕೆ+ ಇದಿರಾಗಲಿ, ಮುರಾಂತಕ ಹರಹಿಕೊಳಲಿ, ಮದೀಯ (ನನ್ನಯ ತೋಳುಗಳು) ಬಾಹುಸ್ಫುರಣ ಶಕ್ತಿಗೆ ಭಂಗಬಾರದು ನೋಡು ನೀನೆಂದ.
  • ಹರಿಬ= ೧ ಕೆಲಸ, ಕಾರ್ಯ ೨ ಕರ್ತವ್ಯ, ಹೊಣೆಗಾರಿಕೆ ೩ ಕಾಳಗ, ಯುದ್ಧ ೪ ಮುಯ್ಯಿ, ಸೇಡು.
  • ಹರಹು= (ಸಂ) ೧ ವಿಸ್ತಾರ, ಹರಹು ೨ ಸುಖ ೩ ತುಂಬಿರುವುದು.
ಅರ್ಥ:ಕೌರವನು, 'ಸಂಜಯನೇ,ಅರ್ಜುನನ ಹೊಟ್ಟೆಯಿಂದ ಕರ್ಣನನ್ನು ತೆಗೆಯುತ್ತೇನೆ! ಭೂವರ ಧರ್ಮಜನ ಹೊಟ್ಟೆಯನ್ನು ಸೀಳಿ ಶಲ್ಯನನ್ನು ತೆಗೆಯುವೆನು! ಕಾತರಿಸದಿರು/ ಚಿಂತಿಸಬೇಡ, ಮಾವ ಶಕುನಿಯನ್ನೂ, ಉಲೂಕನನ್ನೂ ಅವಳಿ ಸೋದರರಾದ ನಕುಲ ಸಹದೇವರ ಈ ಇಬ್ಬರ ಬಸಿರಿನಿಂದ ಬಗೆದು ಯೆಗೆಯತ್ತೇನೆ! ಕಾಳಗಕ್ಕೆ ಎದುರಾಗಲಿ! ಮುರಾಂತಕ ಕೃಷ್ಣನು ತನ್ನವರನ್ನು ಕಾಪಾಡಿ ವಿಸ್ತರಿಸಲು ಬರಲಿ, (ಅವಕಾಶ ಕೊಡೆನು) ಅಂಜುವುದಿಲ್ಲ, ನಾನು ಬಿಡುವನೇ ನೋಡೋಣ, . ನನ್ನ ತೋಳಗಲ/ ಬಾಹುಗಳ ಬಲಾಢ್ಯ ಮಿಂಚುವ ಶಕ್ತಿಗೆ, ಭಂಗಬಾರದು,' ನೀನು ನೋಡು ಎಂದ.(ತನ್ನವರನ್ನು ಕೊಂದವರ ಮೇಲೆ ಅದೇ ರೀತಿ ಸೇಡು ತೀರಿಸುತ್ತೇನೆ, ಎಂದು ಭಾವ.)
ಕಾನನಕೆ ಕೈಯಿಕ್ಕುವರೆ ಪವ
ಮಾನನನು ಪಾವಕನು ಬಯಸುವ
ಭಾನು ಭಾರಿಯ ತಮವ ತಿವಿವನದಾರ ನೆರವಿಯಲಿ |
ಈ ನಿಭೃತ ಗದೆಯಿರಲು ಕುಂತೀ
ಸೂನುಗಳ ಕೈಕೊಂಬೆನೇ ಮನ
ಹೀನನೈ ನೀನಕಟ ಸಂಜಯ ಎಂದನಾ ಭೂಪ || ೩೧ ||
ಪದವಿಭಾಗ-ಅರ್ಥ: ಕಾನನಕೆ ಕೈಯಿಕ್ಕುವರೆ (ಸುಡಲು ಕೈಹಾಕುವಾಗ, ಆಕ್ರಮಿಸುವಾಗ) ಪವಮಾನನನು (ವಾಯು) ಪಾವಕನು (ಅಗ್ನಿ) ಬಯಸುವ, ಭಾನು (ಸೂರ್ಯ) ಭಾರಿಯ ತಮವ(ತಮ= ಕತ್ತಲೆ) ತಿವಿವನು (ಹೊಡೆದು ಓಡಿಸುವನು)+ ಅದು+ ಆರ(ಯಾರ) ನೆರವಿಯಲಿ (ನೆರವಿ= ಸಹಾಯ), ಈ ನಿಭೃತ (ಬಲವಾದ.) ಗದೆಯಿರಲು ಕುಂತೀ ಸೂನುಗಳ ಕೈಕೊಂಬೆನೇ ಮನಹೀನನೈ (ಬುದ್ಧಿಯಿಲ್ಲದ ಹೀನ ಮನಸ್ಸಿನವನು) ನೀನು+ ಅಕಟ ಸಂಜಯ ಎಂದನ+ ಆ ಭೂಪ
ಅರ್ಥ: ಕಾಡಿಗೆ ಕೈಯಿಕ್ಕಿ ಸಡಲು ವಾಯುವಿನ ಸಹಾಯವನ್ನು ಅಗ್ನಿಯು ಬಯಸುವನು; ಆದರೆ ಭಾನು/ ಸೂರ್ಯನು ದಟ್ಟವಾದ ಕತ್ತಲೆಯನ್ನ ತಿವಿವು ಓಡಿಸಲು ಅದು ಯಾರ ನೆರವಿನಿಂದ ಮಾಡುವನು, ಭಾನುವಿಗೆ ಕತ್ತಲೆಯನ್ನು ಓಡಿಸಲು ಯಾರ ನೆರವೂ ಬೇಡ; ಹಾಗೆಯೇ ಸೂರ್ಯನಂತೆ, ನನಗೆ ಮುಂದಿನ ಯುದ್ಧಕ್ಕೆ ಯಾರ ಸಹಾಯದ ಅಗತ್ಯವೂ ಇಲ್ಲ; ನನ್ನ ಬಳಿ ಈ ಬಲವಾದ ಗದೆಯಿರುವಾಗ ಕುಂತಿಯ ಮಕ್ಕಳ ಕೈಗೆ ಹೆದುರುವೆನೇ? ಸಂಜಯಾ, ನೀನು ಅಕಟ ಬುದ್ಧಿಯಿಲ್ಲದ ಹೀನ ಮನಸ್ಸಿನವನು ಎಂದನು ಆ ಭೂಪ ಕೌರವ.
ಆಳು ಬಿದ್ದುದು ಬೇಹ ನಾಯಕ
ರೋಲಗಿಸಿತಮರಿಯರನೀ ರಣ
ದೂಳಿಗಕೆ ನಾನೊಬ್ಬನೆಂದೇ ನಿನಗೆ ತೋರಿತಲಾ |
ಆಳ ಹಂಗನು ನಾಯಕರ ಬಿಲು
ಗೋಲ ಜೋಡಿನ ಬಲವ ಚಿತ್ತದೊ
ಳಾಳಿದೊಡೆ ಧೃತರಾಷ್ಟ್ರರಾಯನ ಕಂದನಲ್ಲೆಂದ || ೩೨ ||
ಪದವಿಭಾಗ-ಅರ್ಥ: ಆಳು(ಭಟರು, ಯೋಧರು) ಬಿದ್ದುದು ಬೇಹ ನಾಯಕರ+ ಓಲಗಿಸಿತು+ ಅಮರಿಯರನು(ಅಮರ- ದೇವತೆ, ಅಮರಿಯರು-ದೇವಕನ್ಯೆಯರು)+ ಈ ರಣದ+ ಊಳಿಗಕೆ ನಾನು+ ಒಬ್ಬನೆಂದೇ ನಿನಗೆ ತೋರಿತಲಾ, ಆಳ ಹಂಗನು ನಾಯಕರ ಬಿಲುಗೋಲ ಜೋಡಿನ ಬಲವ ಚಿತ್ತದೊಳು+ ಆಳಿದೊಡೆ ಧೃತರಾಷ್ಟ್ರರಾಯನ ಕಂದನಲ್ಲ,+ ಎಂದ.
ಅರ್ಥ: ಕೌರವನು,"ಯೋಧರು ಸತ್ತು ಬಿದ್ದರು, ಅ ಕಾವಲು ನಾಯಕರನ್ನು ದೇವಕನ್ಯೆಯರು ಓಲಗಿಸಿ ಸ್ವಾಗತಿಸಿದರು. ಸಂಜಯಾ, ಈ ರಣರಂಗದ ಕಾಯಕಕ್ಕೆ ನಾನು ಒಬ್ಬನೆಂದೇ ನಿನಗೆ ತೋರಿತಲಾ, ಆ ಸತ್ತ ಯೋದರ ಹಂಗನ್ನು ಹೊಂದಿದ್ದೇನೆ; ನಾಯಕರ ಬಿಲ್ಲುಕೋಲ ಜೋಡಿನ ಬಲವು ನನ್ನ ಮನದಲ್ಲಿ ನೆಟ್ಟಿದೆ; ಅದು ನನ್ನ ಚಿತ್ತದಿಂದ ಆಳಿದು ಹೋದರೆ ನಾನು ಧೃತರಾಷ್ಟ್ರರಾಯನ ಮಗನಲ್ಲ," ಎಂದ.
ಖಾತಿ ಕಂದದು ಮನದ ಧೈರ್ಯದ
ಧಾತು ಕುಂದದು ಲಜ್ಜೆಯಭಿಮತ
ಜಾತಿಗೆಡದು ವಿರೋಧ ಬಿಡದು ಯುಧಿಷ್ಠಿರಾದ್ಯರಲಿ |
ಏತಕಿದು ನಿನ್ನೀ ಪ್ರಳಾಪ ವಿ
ಧೂತರಿಪು ಕುರುರಾಯನೆಂಬೀ
ಖ್ಯಾತಿಯಲ್ಲದೆ ಬೇರೆ ರಾಜ್ಯವನೊಲ್ಲೆ ನಾನೆಂದ || ೩೩ ||
ಪದವಿಭಾಗ-ಅರ್ಥ: ಖಾತಿ ಕಂದದು(ಕಂದುವುದಿಲ್ಲ, ಕುಗ್ಗುವುದಿಲ್ಲ) ಮನದ ಧೈರ್ಯದ ಧಾತು ಕುಂದದು, ಲಜ್ಜೆಯ+ ಅಭಿಮತ ಜಾತಿಗೆಡದು, ವಿರೋಧ ಬಿಡದು ಯುಧಿಷ್ಠಿರ+ ಆದ್ಯರಲಿ(ಮೊದಲಾದವರಲ್ಲಿ), ಏತಕೆ+ ಇದು ನಿನ್ನ+ ಈ ಪ್ರಳಾಪ ವಿಧೂತರಿಪು ಕುರುರಾಯನು+ ಎಂಬ+ ಈ ಖ್ಯಾತಿಯಲ್ಲದೆ ಬೇರೆ ರಾಜ್ಯವನು+ ಒಲ್ಲೆ ನಾನೆಉ+ ಎಂದ.
  • ವಿಧೂತ= 1.ಅಲುಗಾಡುವ. 2. ತೊರೆದ. 3. ಕೆದರಿಸಲ್ಪಟ್ಟ, ಚಂಚಲ, ದುರ್ಬಲ
ಅರ್ಥ:ಕೌರವನು,"ನನ್ನ ಕೋಪವು ಕಂದುವುದಿಲ್ಲ, ಕುಗ್ಗುವುದಿಲ್ಲ; ಮನದ ಧೈರ್ಯದ ಧಾತು/ಸ್ಥೈರ್ಯ ಕಂದುವುದಿಲ್ಲ, ಲಜ್ಜೆಯ ಅಭಿಮತ ಜಾತಿಗೆಡದು/ಹೇಡಿಯಾಗಿ ನಾಚಿಕೆಗೆಟ್ಟವನಾಗಲಾರೆ, ಆ ನನ್ನ ಗುಣ ಕೆಡುವುದಿಲ್ಲ, ಯುಧಿಷ್ಠಿರ ಮೊದಲಾದವರಲ್ಲಿ ವಿರೋಧ ಬಿಡದು, ಸುಮ್ಮನೆ ಏಕೆ ಇದು ನಿನ್ನ ಈ ಪ್ರಳಾಪ? ವಿಧೂತರಿಪು/ ದುರ್ಬಲತೆಯಶತ್ರು ಕುರುರಾಯನು ಎಂಬ ಈ ಖ್ಯಾತಿಯನ್ನಲ್ಲದೆ ನಾನು ಬೇರೆ ರಾಜ್ಯವನ್ನು ಒಲ್ಲೆ," ಎಂದ.
ಜೀಯ ನಿಮ್ಮಡಿಗಳಿಗೆ ಗುರು ಗಾಂ
ಗೇಯ ವಿದುರಾದಿಗಳು ಹೇಳಿದ
ಜೋಯಿಸವ ಕೈಕೊಂಡಿರೇ ನಮ್ಮೀ ಪ್ರಳಾಪದಲಿ |
ರಾಯ ಫಲವೇನೈ ಯುಧಿಷ್ಠಿರ
ರಾಯನೊಲಿದಂತಿರಲಿ ನಿಮ್ಮಯ
ತಾಯಿತಂದೆಗೆ ಹೇಳ್ವೆನೇನನು ಬುದ್ದಿಗಲಿಸೆಂದ || ೩೪ ||
ಪದವಿಭಾಗ-ಅರ್ಥ: ಜೀಯ ನಿಮ್ಮಡಿಗಳಿಗೆ ಗುರು ಗಾಂಗೇಯ ವಿದುರಾದಿಗಳು ಹೇಳಿದ ಜೋಯಿಸವ (ಒಳಿತು ಕೆದುಕುಗಳನ್ನು ಕುರಿತು ಹೇಳಿದ ಮಾತು) ಕೈಕೊಂಡಿರೇ, ನಮ್ಮ+ ಈ ಪ್ರಳಾಪದಲಿ ರಾಯ ಫಲವೇನೈ, ಯುಧಿಷ್ಠಿರರಾಯನು+ ಒಲಿದಂತಿರಲಿ, ನಿಮ್ಮಯ ತಾಯಿತಂದೆಗೆ ಹೇಳ್ವೆನು+ ಏನನು ಬುದ್ದಿಗಲಿಸು+ ಎಂದ
  • ಜೋಯಿಸ= (ಸಂ) ಜೋಯಿಸ, ಭವಿಷ್ಯ ನುಡಿಯುವವನು
ಅರ್ಥ:ಆಗ ಸಂಜಯನು,"ಜೀಯ ನಿಮ್ಮ ಪಾದಗಳಲ್ಲಿ ನನ್ನ ಅರಿಕೆ, ಗುರು ದ್ರೋಣರು, ಗಾಂಗೇಯ ಭೀಷ್ಮ, ವಿದುರ ಮೊದಲಾದವರು ಹೇಳಿದ ಜೋಯಿಸವ/ ಹಿತವಚನವನ್ನು ನಿವು ಕೈಕೊಂಡಿರೇ? ಇಲ್ಲ ಇನ್ನು ನನ್ನ ಮಾತು ಯಾವ ಲೆಕ್ಕ. ನಮ್ಮ ಈ ವ್ಯರ್ಥ ಮಾತುಗಳಿಂದ ರಾಜನೇ ಫಲವೇನಯ್ಯಾ? ಏನೂ ಫಲವಿಲ್ಲ. ಯುಧಿಷ್ಠಿರರಾಯನು ಅವನಿಗೆ ಇಷ್ಟವಾದಂತೆ ಇರಲಿ! ಹೇಗಾದರು ಇರಲಿ! ನಾನು ನಿಮ್ಮ ತಾಯಿತಂದೆಯರಿಗೆ ಏನನ್ನು ಹೇಳಬೇಕು? ನನಗೆ ತಿಳಿಸಿಹೇಳಿ," ಎಂದ

ಕೌರವನ ಮುಂದಿನ ಯೋಜನೆ[ಸಂಪಾದಿಸಿ]

ಇದೆ ಸರೋವರವೊಂದು ಹರಿದೂ
ರದಲಿ ಭುವನಖ್ಯಾತ ತನ್ಮ
ಧ್ಯದಲಿ ಮುಳುಗಿಹೆನೊಂದುದಿನ ಪರಿಯಂತ ಸಲಿಲದಲಿ |
ಕದನದಲಿ ಕೌಂತೇಯರನು ಯಮ
ಸದನದಲಿ ತೋರುವೆನು ತಾನೆಂ
ಬುದು ರಹಸ್ಯವು ಜನನಿ ಜನಕಂಗರುಹು ನೀನೆಂದ || ೩೫ ||
ಪದವಿಭಾಗ-ಅರ್ಥ: ಇದೆ ಸರೋವರವೊಂದು ಹರಿದೂರದಲಿ (ಹರದಾರಿ ದೂರದಲ್ಲಿ?) ಭುವನಖ್ಯಾತ ತನ್ಮಧ್ಯದಲಿ (ತತ್/ ಅದರ+ ಮಧ್ಯದಲ್ಲಿ) ಮುಳುಗಿಹೆನು+ ಒಂದುದಿನ ಪರಿಯಂತ ಸಲಿಲದಲಿ(ಸರೋವರದಲ್ಲಿ), ಕದನದಲಿ ಕೌಂತೇಯರನು ಯಮಸದನದಲಿ ತೋರುವೆನು ತಾನು+ ಎಂಬುದು ರಹಸ್ಯವು ಜನನಿ ಜನಕಂಗೆ+ ಅರುಹು (ಹೇಳು) ನೀನು+ ಎಂದ
ಅರ್ಥ: ಕೌರವನು,'ಇಲ್ಲಿಂದ ಹರದಾರಿ ದೂರದಲ್ಲಿ ಒಂದು ಸರೋವರ ಇದೆ. ಅದು ಭೂಮಿಯಲ್ಲಿ ಪ್ರಸಿದ್ಧವಾದುದು. ಒಂದು ದಿನ ಪರಿಯಂತ ಆ ಸರೋವರದ ಮಧ್ಯದಲ್ಲಿ ಮುಳುಗಿರುವೆನು. ನಂತರ ತಾನು ಕದನದಲ್ಲಿ ಪಾಂಡವರನ್ನು ಕೊಂದು ಅವರನ್ನು ಯಮನ ಮನೆಯಲ್ಲಿ ತೋರಿಸವೆನು. ತನ್ನ ಈ ಮಾತು ರಹಸ್ಯವು. ನನ್ನ ತಂದೆ ತಾಯಿಗೆ ಮಾತ್ರಾ ನೀನು ಹೇಳು,' ಎಂದ.
ತೆಗೆಸು ಪಾಳೆಯವೆಲ್ಲವನು ಗಜ
ನಗರಿಗೈದಿಸು ರಾಣಿಯರ ದಂ
ಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ ||
ಹಗೆಯ ವಿಜಯವ ಹರಹದಿರು ನಂ
ಬುಗೆಯ ನುಡಿಯಲಿ ಭಾನುಮತಿಯರ
ಬಗೆಯ ಸಂತೈಸೆಂದು ಬೋಳೈಸಿದನು ಸಂಜಯನ || ೩೬ ||
ಪದವಿಭಾಗ-ಅರ್ಥ: ತೆಗೆಸು ಪಾಳೆಯವೆಲ್ಲವನು ಗಜನಗರಿಗೆ+ ಐದಿಸು(ಕಳಿಸು) ರಾಣಿಯರ ದಂಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ ಹಗೆಯ ವಿಜಯವ ಹರಹದಿರು ನಂಬುಗೆಯ ನುಡಿಯಲಿ ಭಾನುಮತಿಯರ ಬಗೆಯ (ಬಗೆ- ಮನಸ್ಸು) ಸಂತೈಸೆಂದು ಬೋಳೈಸಿದನು (ಸಮಾಧಾನಮಾಡು.) ಸಂಜಯನ.
ಅರ್ಥ:ರಣರಂಗದಲ್ಲಿ ಬೀಡು ಬಿಟ್ಟಿರುವ ಪಾಳೆಯವೆಲ್ಲವನ್ನೂ ತೆಗೆಸಿ ಅವನ್ನು ಹಸ್ತಿನಾಪುರಕ್ಕೆ ಕಳಿಸು. ಜೊತೆಗೆ ರಾಣಿಯರ ದಂಡಿಗೆಯನ್ನೂ ಕಳುಹಿಸು. ಸೂತಸುತ ಕರ್ಣನ ಮತ್ತು ದುಶ್ಯಾಸನ ಮೊದಲಾದವರನ್ನು ಶತ್ರುಗಳು ಗೆದ್ದುದನ್ನು, ಅವರ ವಿಜಯವ ಸುದ್ದಿಯನ್ನು ತನ್ನ ತಂದೆ ತಾಯಿಗೆ ಹರಡಬೇಡ/ ಹೇಳಬೇಡ. ನಂಬುಗೆಯ ನಂಬುವಹಅಗೆ ಮಾತನಾಡಿ ಭಾನುಮತಿಯರ ಮನಸ್ಸನ್ನು ಸಂತೈಸು, ಎಂದು ಸಂಜಯನನ್ನು ಸಮಾಧಾನ ಪಡಿಸಿದನು.
ಎನುತ ಸಂಜಯಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ |
ತನುವಿಗಾಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನರಿದನು ತನ್ನ ಗುಪ್ತಸ್ಥಾನ ಸಂಗತಿಯ || ೩೭ ||
ಪದವಿಭಾಗ-ಅರ್ಥ: ಎನುತ ಸಂಜಯಸಹಿತ ಕೌರವಜನಪ ಬಂದನು ತತ್(ಆ)+ ಸರೋವರಕೆ+ ಅನಿಲನು(ವಾಯು, ತಂಗಾಳಿ)+ ಇದಿರಾದನು ಸುಗಂಧದ ಶೈತ್ಯಪೂರದಲಿ ತನುವಿಗೆ+ ಆಪ್ಯಾಯನದಿಂ+(ನ) ಅಂತರ್ಮನಕೆ ಪಲ್ಲಟವಾಯ್ತು (1. ಸುತ್ತಲೂ ತಿರುಗುವಿಕೆ. 2. ಚಲನೆ.ಬದಲಾವಣೆ) ಭೀಮನಜನಕನು+ ಅರಿದನು ತನ್ನ ಗುಪ್ತಸ್ಥಾನ ಸಂಗತಿಯ.
ಅರ್ಥ:ಕೌರವನು ತಾನು ಸರೋವರದಲ್ಲಿ ಅಡಗುವೆನು ಎನ್ನತ್ತಾ, ಸಂಜಯನ ಸಹಿತ ಕೌರವರಾಯನು ಆ ಸರೋವರಕ್ಕೆಬಂದನು. ಅಲ್ಲಿ ಅವನಿಗೆ ತಂಗಾಳಿಯು ಇದಿರಾಯಿತು. ಕಮಲಪುಷ್ಪಗಳ ಸುಗಂಧದ ತಂಪಿನ ಪೂರಣದಿಂದ ಅವನ ದೇಹಕ್ಕೆ ಆಪ್ಯಾಯಮಾನವಾಗಿ(ಹಿತವಾಗಿ) ತನ್ನ ಗುಪ್ತಸ್ಥಾನ ಸಂಗತಿಯನ್ನು ಭೀಮನಜನಕ ವಾಯುದೇವನು ಮಾತ್ರಾ ಅರಿತನು ಎಂದು ಅವನ ಅಂತರ್ಮನಸ್ಸಿಗೆ ಅರಿವಾಗಿ ಚಿಂತಿತವಾಯಿತು/ ಚಂಚಲವಾಯಿತು.
ಉಲಿವ ಕೋಕಿಲ ಪಾಠಕರ ಮೊರೆ
ವಳಿಕುಳದ ಗಾಯಕರ ಹಂಸಾ
ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯರರ |
ಅಲರ್ದ ಹೊಂದಾವರೆಯ ನವಪರಿ
ಮಳದ ಸಿಂಹಾಸನದಿ ಲಕ್ಷ್ಮೀ
ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ || ೩೮ ||
ಪದವಿಭಾಗ-ಅರ್ಥ: ಉಲಿವ(ಹಾಡುವ) ಕೋಕಿಲ ಪಾಠಕರ ಮೊರೆವ+ ಅಳಿಕುಳದ ಗಾಯಕರ ಹಂಸಾವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯರರ (ಬಾಗಿಲು ಕಾಯುವವನು. ದ್ವಾರಪಾಲಕ) ಅಲರ್ದ (ಅರಳಿದ) ಹೊಂದಾವರೆಯ ನವಪರಿಮಳದ ಸಿಂಹಾಸನದಿ ಲಕ್ಷ್ಮೀಲಲನೆಯ+ ಓಲಗಶಾಲೆಯಂತಿರೆ (ರಾಜಸಭೆ) ಮೆರೆದುದು(ಶೋಭಿಸುತ್ತಿತ್ತು)+ ಆ ಸರಸಿ.
ಅರ್ಥ:ಆ ಸರೋವರವು ಹಾಡುವ ಕೋಕಿಲೆಗಳ ಗಾನದಿಂದ, ದುಂಬಿಗಳ ಝೇಂಕಾರವು ವೇದ ಪಾಠಕರ ಗಾನದಂತಿರಲು, ಗಾಯಕರಂತಿರುವ ಹಂಸಗಳ ಸಮೂಹದ ಕಲಕಲ ದ್ವನಿಯಿಂದ ಕೂಡಿ, ಕೊಳರ್ವಕ್ಕಿಗಳ ಗಡಸುದನಿಯು ಸುಭಟ ದ್ವಾರಪಾಲಕರ ಜಡಿವ ಆಯುಧದ ಸದ್ದಿನಂತಿರಲು, ಅರಳಿದ ಹೊಂದಾವರೆಯ ನವಪರಿಮಳದ ಸಿಂಹಾಸನದಲ್ಲಿ ಕುಳಿತ ಲಕ್ಷ್ಮೀದೇವಿಯ ಓಲಗಶಾಲೆಯಂತೆ ಆ ಸರೋವರವು ಶೋಭಿಸುತ್ತಿತ್ತು.
ಬಂದು ತಡಿಯಲಿ ಸಂಜಯನ ಕರೆ
ದೆಂದನೀ ಸರಸಿಯಲಿ ತಾನಿಹೆ
ನಿಂದಿನೀ ದಿವಸವನು ಕಳೆವೆನು ಕೊಳನ ಮಧ್ಯದಲಿ
ಮುಂದೆ ಪಾಂಡವರೈವರನು ಗೆಲಿ
ದಂದು ಹೊಗುವೆನು ಗಜಪುರವನಿಂ
ತೆಂದು ಜನನಿಗೆ ಜನಕವಿದುರರಿಗರುಹು ನೀನೆಂದ ೩೯
ಪದವಿಭಾಗ-ಅರ್ಥ: ಬಂದು ತಡಿಯಲಿ(ದಡದಲ್ಲಿ) ಸಂಜಯನ ಕರೆದು+ ಎಂದನು+ ಈ ಸರಸಿಯಲಿ ತಾನು+ ಇಹೆನು+ ಇಂದಿನ+ ಈ ದಿವಸವನು ಕಳೆವೆನು ಕೊಳನ ಮಧ್ಯದಲಿ, ಮುಂದೆ ಪಾಂಡವರು+ ಐವರನು ಗೆಲಿದಂದು ಹೊಗುವೆನು ಗಜಪುರವನು+ ಇಂತೆಂದು ಜನನಿಗೆ ಜನಕ, ವಿದುರರಿಗೆ+ ಅರುಹು ನೀನು+ ಎಂದ.
ಅರ್ಥ:ಕೌರವನು ಸಂಜಯನ ಜೊತೆ ಸರೋವರಕ್ಕೆ ಬಂದು ದಡದಲ್ಲಿ ನಿಂತು, ಸಂಜಯನನ್ನು ಕರೆದು ಹೇಳಿದನು,'ಈ ಸರಸ್ಸಿನಲ್ಲಿ ತಾನು ಇರುವೆನು ಇಂದಿನ ಈ ದಿವಸವನ್ನು ಇಲ್ಲಿ ಕೊಳದ ಮಧ್ಯದಲ್ಲಿ ಕಳೆಯುವೆನು. ನಂತರ ಪಾಂಡವರು ಐವರನ್ನೂ ಗೆದ್ದಾಗ ಹಸ್ತಿನಾಪುರವನ್ನು ಹೊಗುವೆನು, ಹೀಗೆಂದು ತಾಯಿಗೆ,ಜನಕತಂದೆಗೆ, ವಿದುರರಿಗೆ ನೀನು ಹೇಳು' ಎಂದ.
ಚಾರು ಚಂದ್ರೋಪಲದ ರಮ್ಯಾ
ಗಾರದಲಿ ಮಣಿಮಯದ ಬಹುವಿ
ಸ್ತಾರ ಭದ್ರೋಪರಿಯ ಭವನದ ಚಿತ್ರಶಾಲೆಯಲಿ ||
ಸಾರಮಣಿ ಪರಿಯಂಕ ಪರಿಸಂ
ಸ್ಕಾರದಲಿ ಮಲಗುವ ಮಹೀಪತಿ
ನೀರೊಳೊರಗುವನೆಂದು ಸಂಜಯನೊರಲಿದನು ಹೊರಳಿ || ೪೦ ||
ಪದವಿಭಾಗ-ಅರ್ಥ: ಚಾರು (ಸುಂದರ)ಚಂದ್ರೋಪಲದ ರಮ್ಯಾಗಾರದಲಿ(ರಮ್ಯ-ಸುಂದರ+ ಆಗಾರ- ಗೃಹ) ಮಣಿಮಯದ ಬಹುವಿಸ್ತಾರ ಭದ್ರೋಪರಿಯ ಭವನದ ಚಿತ್ರಶಾಲೆಯಲಿ ಸಾರಮಣಿ ಪರಿಯಂಕ(ಮಂಚ) ಪರಿಸಂಸ್ಕಾರದಲಿ (ಪರಿವಾರದ ಸೇವೆಯಡನೆ) ಮಲಗುವ ಮಹೀಪತಿ ನೀರೊಳು+ ಒರಗುವನೆಂದು ಸಂಜಯನು+ ಒರಲಿದನು ಹೊರಳಿ
ಅರ್ಥ:ಸುಂದರ ಚಂದ್ರಕಾಂತಿಯ ರಮ್ಯವಾದ ಮನೆಯಲ್ಲಿ ರತ್ನ-ಮಣಿಮಯದ ಬಹುವಿಶಾಲವಾದ ಭದ್ರ ಉಪ್ಪರಿಗೆಯ ಭವನದ ಚಿತ್ರಶಾಲೆಯಲ್ಲಿ ರತ್ನದಮಣಿಗಳ ಮಂಚದಲ್ಲಿ ಪರಿವಾರದ ಸೇವೆಯಡನೆ ಮಲಗುವ ಮಹೀಪತಿ ಕೌರವನು ಈಗ ನೀರಲ್ಲಿ ಮಲಗುವನೆಂದು ಸಂಜಯನು ಹೊರಳಿ ದೊಡ್ಡದಾಗಿ ಒರಲಿದನು(ಅತ್ತನು).
ಒರಲದಿರು ಸಂಜಯ ವಿರೋಧಿಗ
ಳರಿವರಾನಿದ್ದೆಡೆಯನಿಲ್ಲಿಯೆ
ಮರೆದು ಕಳೆ ಪಾಳೆಯವ ತೆಗೆಸಬುಜಾಕ್ಷಿಯರ ಕಳುಹು |
ತೆರಹುಗೊಡು ನೀ ಹೋಗೆನುತ ಮುಂ
ಜೆರಗನಳವಡೆ ಸೆಕ್ಕಿ ಪೂರ್ವದ
ಲರಿದ ಸಲಿಲಸ್ತಂಭವಿದ್ಯೆಯನರಸ ಚಿಂತಿಸಿದ || ೪೧ ||
ಪದವಿಭಾಗ-ಅರ್ಥ: ಒರಲದಿರು ಸಂಜಯ ವಿರೋಧಿಗಳು+ ಅರಿವರು+ ಆನು+ ಇದ್ದ+ ಎಡೆಯನು+ ಇಲ್ಲಿಯೆ ಮರೆದು ಕಳೆ, ಪಾಳೆಯವ ತೆಗೆಸು+ ಬುಜಾಕ್ಷಿಯರ ಕಳುಹು ತೆರಹುಗೊಡು ನೀ ಹೋಗು+ ಎನುತ ಮುಂಜೆರಗನು+ ಅಳವಡೆ ಸೆಕ್ಕಿ (ಸಿಕ್ಕಿಸಿಕೊಂಡು)ಪೂರ್ವದಲಿ+ ಅರಿದ (ತಿಳಿದ, ಕಲಿತ) ಸಲಿಲಸ್ತಂಭವಿದ್ಯೆಯನು+ ಅರಸ ಚಿಂತಿಸಿದ.
ಅರ್ಥ:ಕೌರವನು ಸಮಜಯನನ್ನು ಕುರಿತು,'ಸಂಜಯಾ, ದೊಡ್ಡದಾಗಿ ಹಾಗೆ ಅಳಬೇಡ; ವಿರೋಧಿಗಳಾದ ಶತ್ರುಗಳು ನಾನು ಇದ್ದ ಸ್ಥಳವನ್ನು ತಿಳಿಯುವರು. ದುಃಖವನ್ನು ಇಲ್ಲಿಯೆ ಮರೆತುಬಿಡು. ನೀನು ಕೂಡಲೆ ನಮ್ಮ ಬಿಡಾರ - ಸೈನ್ಯದ ಪಾಳಯಗಳನ್ನು ಕುರುಕ್ಷೇತ್ರದ ರಣರಂಗದಿಂದ ತೆಗೆಸು. ರಾಣೀವಾಸದವರನ್ನು ವಸತಿಯಿಂದ ತೆರಹುಮಾಡು,ಹಸ್ತಿನಾವತಿ ಅರಮನೆಗೆ ಕಳುಹಿಸಿಕೊಡು; ನೀನು ಈಗ ಕೂಡಲೆ ಹೋಗು, ಎನ್ನುತ್ತಾ, ಕೌರವನು ತನ್ನ ಮುಂದಿನ ಹೊದ್ದ ಸೆರಗನ್ನು ಅಳವಡಿಸಿ ಸೆಕ್ಕಿ, ಹಿಂದೆ ಕಲಿತಿದ್ದ ಜಲಸ್ತಂಭವಿದ್ಯೆಯನ್ನು ನೆನಪಿಸಿಕೊಂಡ.
ಚರಣವದನಕ್ಷಾಲನಾಂತಃ
ಕರಣಶುದ್ದಿಯಲಾಚಮನವಿ
ಸ್ತರಣದಲಿ ಸತ್ಪ್ರಣವವಂಗನ್ಯಾಸವಿಧಿಗಳಲಿ |
ವರುಣ ಮಂತ್ರಾಕ್ಷರದ ಜಪಪರಿ
ಕರಣದಲಿ ನಿರ್ಣಿಕ್ತ ಚೇತಃ
ಸ್ಪುರಣ ಸಲಿಲಸ್ತಂಭನವನವನೀಶ ಮಂತ್ರಿಸಿದ || ೪೨ ||
ಪದವಿಭಾಗ-ಅರ್ಥ: ಚರಣ ವದನಕ್ಷಾಲನು(ಕಾಲು, ಮುಖ ತೊಳೆದು)+ ಅಂತಃಕರಣ ಶುದ್ದಿಯಲಿ+ ಆಚಮನ ವಿಸ್ತರಣದಲಿ, ಸತ್ಪ್ರಣವವ+ ಅಂಗನ್ಯಾಸ ವಿಧಿಗಳಲಿ ವರುಣ ಮಂತ್ರಾಕ್ಷರದ ಜಪ ಪರಿಕರಣದಲಿ ನಿರ್ಣಿಕ್ತ ಚೇತಃಸ್ಪುರಣ ಸಲಿಲಸ್ತಂಭನವನು+ ಅವನೀಶ ಮಂತ್ರಿಸಿದ.
ಅರ್ಥ:ಕೌರವನು ಕಾಲು, ಮುಖ ತೊಳೆದು, ಅಂತಃಕರಣ ಶುದ್ಧಿಯಲ್ಲಿ ಆಚಮನ ಮೊದಲಾಗಿ ವಿಸ್ತಾರ ಕ್ರಮದಲ್ಲಿ, ಸತ್- ಪ್ರಣವ(ಓಂ ಕಾರ) ಸಹಿತ ಅಂಗನ್ಯಾಸ ವಿಧಿಗಳನ್ನು ಮಾಡಿ, ವರುಣ ಮಂತ್ರಾಕ್ಷರದ ಜಪವನ್ನು ಪರಿಕರಣದಲ್ಲಿ ಕ್ರಮ-ವಿಧಿಗಳನ್ನು ನಿರ್ಣಯಮಾಡಿದ ಕ್ರಮದಲ್ಲಿ ಚೇತಃಸ್ಪುರಣ(ಮನಸ್ಸನ್ನು ಉದ್ದೀಪನಗೊಳಿಸಿ) ಕೌರವರಾಯ ಜಲಸ್ತಂಭನವನ್ನು ಮಂತ್ರಿಸಿದನು.
ದ್ಯುಮಣಿ ಮೊದಲಾದಖಿಳ ಸುರರಿಗೆ
ನಮಿಸಿ ವರುಣಧ್ಯಾನವನು ಹೃ
ತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನಾರೈದು
ಕುಮತಿಯಿಳಿದನು ಜಾನು ಕಟಿ ಹೃ
ತ್ಕಮಲಗಳ ಮುಖ ಮೂರ್ಧ ಪರಿಯಂ
ತಮರಿದುದು ಜಲ ಕೊಳನ ಮಧ್ಯದಲರಸ ಪವಡಿಸಿದ ೪೩
ಪದವಿಭಾಗ-ಅರ್ಥ: ದ್ಯುಮಣಿ (ಸೂರ್ಯ) ಮೊದಲಾದ+ ಅಖಿಳ ಸುರರಿಗೆ(ದೇವತೆಗಳಿಗೆ) ನಮಿಸಿ ವರುಣ-ಧ್ಯಾನವನು ಹೃತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನು+ ಆರೈದು ಕುಮತಿ+(ಯಿ)+ ಇಳಿದನು ಜಾನು ಕಟಿ ಹೃತ್ಕಮಲಗಳ ಮುಖ ಮೂರ್ಧ ಪರಿಯಂತ+ (ಮೊಳಕಾಲು, ಸೊಂಟ, ಎದೆ, ಮುಖ, ನೆತ್ತಿ-ತಲೆ, ಶಿರಸ್ಸು ಪರ್ಯಂತ ಮುಳುಗಿ),+ಅಮರಿದುದು ಜಲ, ಕೊಳನ ಮಧ್ಯದಲಿ+ ಅರಸ ಪವಡಿಸಿದ (ಮಲಗಿದನು).
ಅರ್ಥ:ಸೂರ್ಯ ಮೊದಲಾದ ಅಖಿಲ ದೇವತೆಗಳಿಗೆ ನಮಸ್ಕರಿಸಿ, ವರುಣನ ಧ್ಯಾನವನ್ನು ಮಾಡಿದ; ಹೃದಯದ ಮಧ್ಯದಲ್ಲಿ ಧ್ಯಾನದಲ್ಲಿ ಕಾಣುವ ಕಮಲದಲ್ಲಿ ಮನಸ್ಸನ್ನು ನೆಲೆಗೊಳಿಸಿ, ನಾಲ್ಕು ದಿಕ್ಕುಗಳನ್ನೂ ಆರೈದು/ ಪೂಜಿಸಿ, ಕುಮತಿಯಾದ ದುರ್ಯೋಧನನು ಇಳಿದನು. ಮುಂದೆ ಮುಂದೆ ಹೋದಂತೆ ಮೊಳಕಾಲು, ಸೊಂಟ, ಎದೆ, ಮುಖ, ನೆತ್ತಿ-ತಲೆ, ಶಿರಸ್ಸು ಪರ್ಯಂತ ಮುಳುಗಿ, ಕೊಳದ/ಸರೋವರದ ಮಧ್ಯದಲ್ಲಿ ಅರಸ ಕೌರವ ಉಸಿರು ಬಿಗಿಹಿಡಿದು ಜಲಸ್ಥಂಬದಲ್ಲಿ ಸರೋವರದ ತಳದಲ್ಲಿ ನೀರಿನೊಳಗೆ ಮಲಗಿದನು).
ಕುರುಪತಿಯ ಬೀಳ್ಕೊಂಡು ಸಂಜಯ
ಮರಳಿದನು ತನಗಾದ ಹಿಂದಣ
ಪರಿಭವವ ನೆನೆದಡಿಗಡಿಗೆ ಕಂಪಿಸುತ ಮನದೊಳಗೆ |
ಧುರದ ಮಧ್ಯದೊಳೊಬ್ಬನೇ ನಡೆ
ತರುವ ಭೂತಾವಳಿಯನೀಕ್ಷಿಸಿ
ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ || ೪೪ ||
ಪದವಿಭಾಗ-ಅರ್ಥ:ಜನಮೇಜಯ ಮಹೀಪಾಲನೇ ಕೇಳು. ಕುರುಪತಿಯ ಬೀಳ್ಕೊಂಡು ಸಂಜಯ ಮರಳಿದನು, ತನಗಾದ ಹಿಂದಣ ಪರಿಭವವ ನೆನೆದು+ ಅಡಿಗಡಿಗೆ ಕಂಪಿಸುತ ಮನದೊಳಗೆ ಧುರದ ಮಧ್ಯದೊಳು+ ಒಬ್ಬನೇ ನಡೆತರುವ ಭೂತಾವಳಿಯನು+ ಈಕ್ಷಿಸಿ ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ.
ಅರ್ಥ:ಕುರುಪತಿ ಕೌರವನನ್ನು ಬೀಳ್ಕೊಂಡು ಸಂಜಯನು ಹಿಂತಿರುಗಿದನು. ಅವು ತನಗೆ ಹಿಂದೆ ಸಾತ್ಯಕಿಯಿಂದ ಆದ ಸೋಲನ್ನು ನೆನೆದು ಅಡಿಗಡಿಗೆ ನಡುಗುತ್ತಾ ಮನಸ್ಸಿನಲ್ಲಿ ಯುದ್ಧಭೂಮಿಯ ಮಧ್ಯದಲ್ಲಿ ಒಬ್ಬನೇ ನಡೆದು ಬರುವಾಗ ಭೂತಗಳ ಮೂಹವನ್ನು ನೋಡಿ ತನ್ನನ್ನು ಕಾಪಾಡಿದ ವೇದವ್ಯಾಸ ಗುರುವನ್ನು ನೆನೆದನು.
ಬರುತ ಸಂಜಯ ದೂರದಲಿ ಕೃಪ
ಗುರುಸುತರ ಕೃತವರ್ಮಕನ ಕಂ
ಡರಿರಥಿಗಳಿವರಲ್ಲಲೇ ಶಿವಶಿವ ಮಹಾದೇವ
ಭರತಕುಲ ಮೊದಲೊಂದು ಬಳಿಕಾ
ಯ್ತೆರಡುಕವಲೊಬ್ಬರಿಗೆ ಜಯವಿ
ಸ್ತರಣ ಗದುಗಿನ ವೀರನಾರಾಯಣನ ಕರುಣದಲಿ ೪೫[೧]
ಪದವಿಭಾಗ-ಅರ್ಥ: ಬರುತ ಸಂಜಯ ದೂರದಲಿ ಕೃಪ ಗುರುಸುತರ ಕೃತವರ್ಮಕನ ಕಂಡು+ ಅರಿರಥಿಗಳು+ ಇವರು+ ಅಲ್ಲಲೇ ಶಿವಶಿವ ಮಹಾದೇವ ಭರತಕುಲ ಮೊದಲೊಂದು ಬಳಿಕಾಯ್ತೆರಡು ಕವಲು+ ಒಬ್ಬರಿಗೆ ಜಯವಿಸ್ತರಣ ಗದುಗಿನ ವೀರನಾರಾಯಣನ ಕರುಣದಲಿ.
ಅರ್ಥ:ಹಾಗೆ ಸಂಜಯನು ಬರುತ್ತಾ, ದೂರದಲ್ಲಿ ಕೃಪ, ಗುರುಸುತ ಅಶ್ವತ್ಥಾಮ, ಕೃತವರ್ಮಕರನ್ನು ಕಂಡನು. ಅವನು ಇವರು ಶತ್ರು ರಥಿಕರು ಅಲ್ಲವಲ್ಲಾ! ಶಿವಶಿವಾ ಮಹಾದೇವಾ! ಎಂದು ಸಮಾಧಾನ ಹೊಂದಿದನು. ಭರತಕುಲವು ಮೊದಲು ಒಂದು ಇದ್ದು, ಬಳಿಕ ಎರಡು ಕವಲಾಯಿತು. ಅದರಲ್ಲಿ ಒಬ್ಬರಿಗೆ ಗದುಗಿನ ವೀರನಾರಾಯಣನ ಕರುಣದಿಂದ ಜಯವಿಸ್ತರಣವಾಯಿತು.
♠♠♠

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.