ವಿಷಯಕ್ಕೆ ಹೋಗು

ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೯)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೯ ನೆಯ ಸಂಧಿ

[ಸಂಪಾದಿಸಿ]

ಸೂಚನೆ

[ಸಂಪಾದಿಸಿ]
ರಾಯಪರಬಲ ಮದನಹರ ರಿಪು
ರಾಯಕುವರರು ಸಹಿತ ಪಾಂಡವ
ರಾಯಕಟಕವ ಕೊಂದನಶ್ವತ್ಥಾಮ ರಜನಿಯಲಿ||ಸೂಚನೆ||

ಪದವಿಭಾಗ-ಅರ್ಥ:ರಾಯ ಪರಬಲ ಮದನಹರ(ಶಿವ, ಶಿವನ ಅಂಶದ ಅಶ್ವತ್ಥಾಮ) ರಿಪುರಾಯ ಕುವರರು(ಉಪಪಾಂಡವರು) ಸಹಿತ ಪಾಂಡವರಾಯ ಕಟಕವ(ಸೇನೆಯನ್ನು) ಕೊಂದನು+ ಅಶ್ವತ್ಥಾಮ ರಜನಿಯಲಿ (ರಾತ್ರಿ)
ಅರ್ಥ:ಕುರುರಾಯನ ಪರಬಲವಾದ ಪಾಂಡವರ ಸೇನೆಯನ್ನು ಮದನಹರನಾದ ಶಿವನ ಅಂಶದ ಅಶ್ವತ್ಥಾಮನು ತನ್ನ ಶತ್ರುಗಳಾದ ರಿಪುರಾಯರಾದ ಪಾಂಡವರ ಕುಮಾರರಾದ ಐದು ದ್ರೌಪದೀ ಮಕ್ಕಳ ಸಹಿತ ಸಹಿತ ಪಾಂಡವರಾಯನ ಸೇನಯನ್ನು ರಾತ್ರಿಯಲ್ಲಿ ಕೊಂದನು.[][] []

ಏನು ಗುರುಸುತ ಕಾರ್ಯಾದನುಸಂಧಾನ

[ಸಂಪಾದಿಸಿ]
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಚಿತ್ತದ ಚಟುಳ ಪಣದ ಚ
ಡಾಳತನವನು ಸಂಗರದೊಳುದ್ದಾಮ ನಸತ್ವದಲಿ ||
ಪಾಳೆಯವ ಸಾರಿದರು ವಿಟಪಲ
ತಾಳಿವಿಶ್ರಮ ತಿಮಿರಗಹನವಿ
ಶಾಲವಟಕುಜವಿರಲು ಕಂಡರು ನಿಲಿಸಿದರು ರಥವ || ೧ ||
ಪದವಿಭಾಗ-ಅರ್ಥ: ಕೇಳು ಧೃತರಾಷ್ಟ್ರ+ ಅವನಿಪ ನಿನ್ನ+ ಆಳ(ಯೋಧರ) ಚಿತ್ತದ ಚಟುಳ ಪಣದ ಚಡಾಳತನವನು( ಉಗ್ರತನ) ಸಂಗರದೊಳು (ಯುದ್ಧ)+ ಉದ್ದಾಮನ ಸತ್ವದಲಿ ಪಾಳೆಯವ ಸಾರಿದರು ವಿಟಪಲತಾಳಿ(ಹಣ್ಣು ಎಲೆ ತುಂಬಿದ ಆಲದಮರ)+ ವಿಶ್ರಮ ತಿಮಿರಗಹನ(ಕತ್ತಲೆಯ) ವಿಶಾಲ ವಟಕುಜವು(ಆಲದ ಮರ)+ ಇರಲು ಕಂಡರು ನಿಲಿಸಿದರು ರಥವ.
ಅರ್ಥ:ಕೇಳು ಧೃತರಾಷ್ಟ್ರ ರಾಜನೇ, ನಿನ್ನ ಯೋಧರ ಮನಸ್ಸಿನ ದೊಡ್ಡ ಪಣದ ಯುದ್ಧದಲ್ಲಿ ಉಗ್ರತನವನ್ನು ಉತ್ತಮವಾದ ಸತ್ವದಿಂದ ಸಾಧಿಸಲು ಪಾಂಡವರ ಪಾಳೆಯದ ಹತ್ತಿರಕ್ಕೆ ಹೋದರು. ಅಲ್ಲಿ ಹಣ್ಣು ಎಲೆ ತುಂಬಿದ ಆಲದಮರವನ್ನು ಕಂಡು ವಿಶ್ರಾಂತಿಗೆ ಅನುಕೂಲವಾದ ಕಗ್ಗತ್ತಲೆಯ ನೆರಳಿನ ವಿಶಾಲ ಆಲದ ಮರ ಇರಲು, ಕಂಡರು. ಅದನ್ನು ನೋಡಿದ ಅವರು ಅಲ್ಲಿಯೇ ರಥವನ್ನು ನಿಲ್ಲಿಸಿದರು.
ನಿಲುವೆವಿಲ್ಲಿ ವಿರೋಧಿಸಂತತಿ
ಯುಲುಹನಾಲಿಸಿಬಹುದು ಕೋಟಾ
ವಳಯವಿದೆ ಹತ್ತಿರೆಯೆನುತ ಗುರುಸೂನು ರಥವಿಳಿಯೆ |
ಇಳಿದರಿಬ್ಬರು ಸೂತರಿಗೆ ಕೈ
ಕೊಳಿಸಿದರು ಕುದುರೆಗಳನಾ ಕಲು
ನೆಲದೊಳೊರಗಿದರವರು ಸುಮರಶ್ರಮದ ಭಾರದಲಿ || ೨ ||
ಪದವಿಭಾಗ-ಅರ್ಥ: ನಿಲುವೆವು+ ಇಲ್ಲಿ, ವಿರೋಧಿಸಂತತಿಯ+ ಉಲುಹನು(ಸದ್ದನ್ನು)+ ಆಲಿಸಿಬಹುದು. ಕೋಟ+ ಆವಳಯವಿದೆ(ಆವರಣ) ಹತ್ತಿರೆಯೆನುತ ಗುರುಸೂನು ರಥವ+ ಇಳಿಯೆ ಇಳಿದರು+ ಇಬ್ಬರು ಸೂತರಿಗೆ ಕೈಕೊಳಿಸಿದರು ಕುದುರೆಗಳನು+ ಆ ಕಲುನೆಲದೊಳು+ ಒರಗಿದರು ಅವರು ಸುಮರಶ್ರಮದ ಭಾರದಲಿ.
ಅರ್ಥ:ಅಶ್ವತ್ಥಾಮನು,'ನಾವು ಇಲ್ಲಿ ನಿಲ್ಲೋಣ. ಇಲ್ಲಿಂದ ವಿರೋಧಿ ಜನರಸಮೂಹದ ಮಾತಿನ ಸದ್ದನ್ನು ಆಲಿಸಿಬಹುದು. ಪಾಂಡವರ ಕೋಟೆಗಳ ಆವರಣವಿದೆ ಹತ್ತಿರವೇ ಎನ್ನುತ್ತಾ, ಗುರುಸೂನು ಅಶ್ವತ್ಥಾಮನು ರಥವನ್ನು ಇಳಿಯಲು, ಉಳಿದ ಇಬ್ಬರೂ ಇಳಿದರು. ಸೂತರಿಗೆ ಕುದುರೆಗಳನ್ನು ನೋಡಿಕೊಳ್ಳಲು ಕೈಕೊಳಿಸಿದರು. ನಂತರ ಹಿಂದಿನ ಸುಮರದ ಶ್ರಮದ ಆಯಾಸದಿಂದ ಆ ಕಲ್ಲು ನೆಲದಲ್ಲೇ ಅವರು ಮಲಗಿದರು.
ಒಳಗೆ ತೊಳಲಿಕೆಯುಕ್ಕಡಕೆ ಕಳ
ವಳಿಸಿ ಹಾಯಿದರೊಮ್ಮೆ ಮತ್ತಂ
ತೆಲೆಮಿಡುಕದಾಲಿಸಿ ನಿಧಾನಿಸಿ ಸಾರಿದರು ಮರನ |
ಬಳಲಿಕೆಯ ಬೇಸರಿನೊಳಾ ಕೃಪ
ಮಲಗಿದನು ಕೃತವರ್ಮನೊಲೆದಾ
ಗುಳಿಸಿ ತೂಕಡಿಸಿದನು ತೆಗೆದುದು ನಿದ್ರೆ ತನುಮನವ || ೩ ||
ಪದವಿಭಾಗ-ಅರ್ಥ:ಒಳಗೆ ತೊಳಲಿಕೆಯ+ ಉಕ್ಕಡಕೆ(ಪಹರೆಯ ನೆಲೆ) ಕಳವಳಿಸಿ ಹಾಯಿದರು+ ಒಮ್ಮೆ (ಓಡಿದರು) ಮತ್ತಂತೆ+ ಎಲೆಮಿಡುಕದಾಲಿಸಿ ನಿಧಾನಿಸಿ ಸಾರಿದರು ಮರನ ಬಳಲಿಕೆಯ ಬೇಸರಿನೊಳು+ ಆ ಕೃಪ ಮಲಗಿದನು ಕೃತವರ್ಮನು+ ಒಲೆದು+ ಆಗುಳಿಸಿ ತೂಕಡಿಸಿದನು ತೆಗೆದುದು ನಿದ್ರೆ ತನುಮನವ.
ಅರ್ಥ:ಪಾಂಡವರ ಕೋಟೆಯ ಒಳಗೆ ನೆಡೆಯುವ ಪಹರೆಯ ನೆಲೆಯನ್ನು ಕಂಡು ಕಳವಳಗೊಂಡು ಒಮ್ಮೆ ಓಡಿದರು ಮತ್ತೆ ಬಂದು ಎಲೆಯ ಮಿಡುಕಿನ ಸದ್ದನ್ನು ಆಲಿಸಿ ನಿಧಾನಿಸಿ ಮರದ ಹತ್ತಿರ ಸಾರಿದರು. ಬಳಲಿದ ಬೇಸರದಲ್ಲಿ ಆ ಕೃಪ ಮಲಗಿದನು. ಕೃತವರ್ಮನು ಒಲೆದು ಆಕಳಿಸಿ ತೂಕಡಿಸಿದನು. ಅವರಿಗೆ ನಿದ್ರೆಯು ತನುಮನವನ್ನು ತೆಗೆದುದು- ಆವರಿಸಿತು.
ಕುಸಿದು ಜೊಮ್ಮೆನ ಜಾಡ್ಯದಲಿ ಝೊಂ
ಪಿಸಿದರಿಬ್ಬರು ರಾಯಗರುಡಿಯ
ಜಸದ ಜಹಿಯಲಿ ಸ್ವಾಮಿಕಾರ್ಯದ ಹೊತ್ತಹೊರಿಗೆಯಲಿ |
ಉಸುರು ಮಿಡುಕದೆ ನಿದ್ರೆ ನೆನಹಿನ
ಮುಸುಕನುಗಿಯದೆಯಿಷ್ಟಸಿದ್ಧಿಯ
ವಿಷಮ ಸಮಸಂಧಿಗಳ ಸರಿವಿನೊಳಿರ್ದನಾ ದ್ರೌಣಿ || ೪ ||
ಪದವಿಭಾಗ-ಅರ್ಥ: ಕುಸಿದು ಜೊಮ್ಮೆನ ಜಾಡ್ಯದಲಿ ಝೊಂಪಿಸಿದರು (ತೂಕಡಿಸು)+ ಇಬ್ಬರು ರಾಯಗರುಡಿಯ ಜಸದ(ಯಶಸ್ಸು) ಜಹಿಯಲಿ(ಜಹಿ- ಯಹಿ= ಮಾತು) ಸ್ವಾಮಿಕಾರ್ಯದ ಹೊತ್ತ ಹೊರಿಗೆಯಲಿ(ಹೊರೆ ಭಾರ) ಉಸುರು ಮಿಡುಕದೆ ನಿದ್ರೆ ನೆನಹಿನ ಮುಸುಕನು+ ಉಗಿಯದೆ (ಎಳೆದುಕೊಂಡು ಹಾಕದೆ)+ ಯಿಷ್ಟಸಿದ್ಧಿಯ+ ವಿಷಮ ಸಮಸಂಧಿಗಳ ಸರಿವಿನೊಳು(ಸರಿವು= ಜಾಡು,- ದಾರಿ.)+ ಇರ್ದನಾ(ಇದ್ದನು) ದ್ರೌಣಿ (ದ್ರೋಣನ ಮಗ).
ಅರ್ಥ:ಕೃಪ ಕೃತವರ್ಮರು ಇಬ್ಬರು, ಆ ರಾತ್ರಿಯಲ್ಲಿ ನಿದ್ದೆಯಿಂದ ಕುಸಿದು ಜೊಮ್ಮೆನೆ ತೂಕಡಿಸುವ ಜಾಡ್ಯದಲ್ಲಿ ಝೊಂಪಿಸಿದರು. ಅಶ್ವತ್ಥಾಮನು ಕೌರವರಾಯನ ಗರುಡಿಯ- ಹೋರಾಟದ ಯಶಸ್ಸಿನ ವಿಚಾರ, ಸ್ವಾಮಿಕಾರ್ಯದ ಹೊತ್ತ ಭಾರದಿಂದ ಉಸುರನ್ನು ಬಿಗಿಹಿಡಿದು ಮಿಡುಕದೆ/ ಅಲುಗದೆ ನಿದ್ರೆಯ ನೆನಪಿನ ಮುಸುಕನ್ನು ಹಾಕದೆ ಇಷ್ಟಸಿದ್ಧಿಯನ್ನು ಸಾಧಿಸಲು, ವಿಷಮ/ಕಷ್ಟ ಸಮಸಂಧಿಗಳ ಜಾಡುನ್ನು ಹುಡುಕುತ್ತಿದ್ದನು.
ಭಾಗ ಭೀತುದು ರಜನಿಯಲಿ ಸರಿ
ಭಾಗವಿದ್ದುದು ಮೇಲೆ ತತ್‌ಕ್ಷಣ
ಗೂಗೆ ಬಂದುದದೊಂದು ವಟಕುಜದಗ್ರಭಾಗದಲಿ |
ಕಾಗೆಗಳ ಗೂಡುಗಳ ಹೊಯ್ದು ವಿ
ಭಾಗಿಸಿತು ತುಂಡದಲಿ ಬಿದ್ದವು
ಕಾಗೆ ಸುಭಟನ ಸಮ್ಮುಖದಲಿ ಸಹಸ್ರಸಂಖ್ಯೆಯಲಿ || ೫ ||
ಪದವಿಭಾಗ-ಅರ್ಥ: ಭಾಗ ಭೀತುದು(ತುಂಬಿತು) ರಜನಿಯಲಿ(ರಜನಿ= ಕತ್ತಲೆ) ಸರಿ ಭಾಗವಿದ್ದುದು ಮೇಲೆ ತತ್‌ಕ್ಷಣ ಗೂಗೆ ಬಂದುದು ಅದೊಂದು ವಟಕುಜದ+ ಅಗ್ರ ಭಾಗದಲಿ ಕಾಗೆಗಳ ಗೂಡುಗಳ ಹೊಯ್ದು(ಹೊಡೆದು) ವಿಭಾಗಿಸಿತು, ತುಂಡದಲಿ(ತುಂಡಾಗಿ- ಚೂರಾಗಿ) ಬಿದ್ದವು ಕಾಗೆ ಸುಭಟನ ಸಮ್ಮುಖದಲಿ ಸಹಸ್ರಸಂಖ್ಯೆಯಲಿ.
ಅರ್ಥ: ರಾತ್ರಿಯ ಭಾಗ ತುಂಬಿ ಕತ್ತಲೆಯು ಸರಿ/ಪೂರಾಭಾಗವನ್ ಆವರಿಸಿತು. ಆಲದ ಮರದ ಮೇಲೆ ತತ್‌ಕ್ಷಣ ಒಂದು ಗೂಗೆ ಬಂದಿತು. ಅದು ಒಂದು ಆಲದ ಮರದ ತುದಿಯ ಭಾಗದಲ್ಲಿ ಕಾಗೆಗಳ ಗೂಡುಗಳನ್ನು ಹೊಡೆದು ವಿಭಾಗಿಸಿತು/ಒಡೆಯಿತು. ಸುಭಟ ಅಶ್ವತ್ಥಾಮನ ಸಮ್ಮುಖದಲ್ಲಿ ಕಾಗೆಗಳು ಸಹಸ್ರಸಂಖ್ಯೆಯಲ್ಲಿ ಚೂರಾಗಿ ಬಿದ್ದವು.
ಇದು ಮದೀಯ ಮನೋರಥದ ಸಂ
ಹೃದಯದೊಲು ಸಂಕಲ್ಪಕಾರ್ಯಾ
ಭ್ಯುದಯ ಸೂಚಕವಾಯ್ತು ನಿದ್ರಾಮುದ್ರಿತೇಕ್ಷಣರ |
ಪದವ ಹಿಡಿದಲ್ಲಾಡಿದಡೆ ಮೈ
ಬೆದರುತೇನೇನೆನುತ ನಿದ್ರಾ
ಮದವಿಘೂರ್ಣನವಡಗಿ ಕುಳ್ಳಿರ್ದರು ಮಹಾರಥರು || ೬ ||
ಪದವಿಭಾಗ-ಅರ್ಥ: ಇದು ಮದೀಯ (ನನ್ನ) ಮನೋರಥದ(ಉದ್ದೇಶ, ಅಪೇಕ್ಷೆ) ಸಂಹೃದಯದೊಲು ಸಂಕಲ್ಪಕಾರ್ಯ+ ಅಭ್ಯುದಯ ಸೂಚಕವಾಯ್ತು ನಿದ್ರಾಮುದ್ರಿತ+ ಈಕ್ಷಣರ ಪದವ(ಮರದ) ಹಿಡಿದು+ ಅಲ್ಲಾಡಿದಡೆ ಮೈಬೆದರುತೇನೇನು+ ಎನುತ ನಿದ್ರಾಮದ+ವಿಘೂರ್ಣನವ (ತೀವ್ರತೆಯನ್ನು, ರೋಷ)+ ಅಡಗಿ ಕುಳ್ಳಿರ್ದರು ಮಹಾರಥರು
ಅರ್ಥ: ಅಶ್ವತ್ಥಾಮನು,'ಇದು ನನ್ನ ಅಪೇಕ್ಷೆಯ ಸಂ- ಹೃದಯದಂತೆ ಸಂಕಲ್ಪಕಾರ್ಯದ ಅಭ್ಯುದಯಕ್ಕೆ ಸೂಚಕವಾಯ್ತು. ನಿದ್ರೆಯಿಂದ ಆವರಿಸಿದ ಈಕ್ಷಣರನ್ನು/ಜನರ ಪದವ/ ಮರದ/ಮೂಲವನ್ನು ಹಿಡಿದು ಅಲ್ಲಾಡಿಸಿದರೆ ಮೈ ಬೆದರುತ ಏನೇನು ಆಗದು- ಎಲ್ಲವೂ ಸಾಧ್ಯ,' ಎನುತ ನಿದ್ರೆಯ ಮದದ ತೀವ್ರತೆಯನ್ನು ಅಡಗಿಸಿಕೊಂಡು ಆ ಮಹಾರಥರು ಕುಳಿತಿದ್ದರು.
ಏನು ಗುರುಸುತ ಕಾರ್ಯದನುಸಂ
ಧಾನವೇನೆನೆ ವಾಯಸಂಗಳ
ನಾ ನಿಶಾಟನನಿರುವುತದೆ ಗೂಡುಗಳನಬ್ಬರಿಸಿ |
ಈ ನಿದರುಶನದಿಂದ ಪಾಂಡವ
ಸೇನೆಯನು ಕಗ್ಗೊಲೆಯೊಳಗೆ ಕೊಲ
ಲೇನು ಹೊಲ್ಲೆಹ ಮಾವ ಎಂದನು ಗುರುಸುತನು ಕೃಪಗೆ || ೭ ||
ಪದವಿಭಾಗ-ಅರ್ಥ: ಏನು ಗುರುಸುತ (ಅಶ್ವತ್ಥಾಮ)ಕಾರ್ಯದ+ ಅನುಸಂಧಾನವು+ ಏನು+ ಎನೆ, ವಾಯಸಂಗಳನು(ಕಾಗೆ)+ ಆ ನಿಶಾಟನನು(ಗೂಗೆ)+ ಇರುವುತ+ ಅದೆ ಗೂಡುಗಳನು+ ಅಬ್ಬರಿಸಿ ಈ ನಿದರುಶನದಿಂದ ಪಾಂಡವ ಸೇನೆಯನು ಕಗ್ಗೊಲೆಯೊಳಗೆ ಕೊಲಲು+ ಏನು ಹೊಲ್ಲೆಹ (ದೋಷ) ಮಾವ ಎಂದನು ಗುರುಸುತನು ಕೃಪಗೆ
ಅರ್ಥ: ಕೃಪನು, ಏನು ಅಶ್ವತ್ಥಾಮ ಮುಂದನ ಕಾರ್ಯದ ಅನುಸಂಧಾನ /ಯೊಜನೆಯು ಏನು? ಎನ್ನಲು, ಅಶ್ವತ್ಥಾಮನು, ಕೃಪನಿಗೆ,'ಕಾಗೆಗಳನ್ನು ಆ ಗೂಗೆಯು ಇರಿದಂತೆ ನಮ್ಮ ಯೋಜನೆ. ಅದೆ ಗೂಗೆಯು ಕಾಗೆಯ ಗೂಡುಗಳನ್ನು ಅಬ್ಬರಿಸಿ ಕೊಂದ, ಈ ನಿದರ್ಶನದಿಂದ ಪಾಂಡವರ ಸೇನೆಯನ್ನು ಕಗ್ಗೊಲೆಯಲ್ಲಿ ಕೊಲ್ಲಲು- ಕೊಂದರೆ ಏನು ದೋಷ, ಮಾವ,!' ಎಂದನು ಗುರುಸುತನು.(ಕೃಪನ ತಂಗಿಯ ಮಗ ಅಶ್ವತ್ಥಾಮ)

ಪಾಂಡವ ಸೇನೆಯನು ಕಗ್ಗೊಲೆಯೊಳಗೆ ಕೊಲಲು ಏನು ಹೊಲ್ಲೆಹ ಮಾವ

[ಸಂಪಾದಿಸಿ]
ಲೇಸಲೈ ಕೃತವರ್ಮ ಬಳಿಕೇ
ನಾಸುರದ ಕಗ್ಗೊಲೆಗೆ ರಾಜಾ
ದೇಶದಲಿ ನಾವ್ ಬಂದೆವೀ ಪಾಂಡವರ ಪಾಳೆಯಕೆ |
ಘಾಸಿಯಾಗರು ಪಾಂಡು ಸುತರಿಗೆ
ವಾಸುದೇವನ ಕಾಹು ಘನ ಕಾ
ಳಾಸ ತಪ್ಪಿದ ಬಳಿಕ ನಮಗಪಕೀರ್ತಿ ಬಹುದೆಂದ || ೮ ||
ಪದವಿಭಾಗ-ಅರ್ಥ: ಲೇಸಲೈ ಕೃತವರ್ಮ ಬಳಿಕ+ ಏನು+ ಆಸುರದ(ರಾಕ್ಷಸ) ಕಗ್ಗೊಲೆಗೆ ರಾಜಾದೇಶದಲಿ ನಾವ್ ಬಂದೆವು+ ಈ ಪಾಂಡವರ ಪಾಳೆಯಕೆ ಘಾಸಿಯಾಗರು, ಪಾಂಡು ಸುತರಿಗೆ ವಾಸುದೇವನ ಕಾಹು, ಘನ ಕಾಳಾಸ(,ಅಂಟಿಕೊಳ್ಳುವಿಕೆ,ಒಂದಾಗುವಿಕೆ,ಬೆಸುಗೆ) ತಪ್ಪಿದ ಬಳಿಕ ನಮಗೆ+ ಅಪಕೀರ್ತಿ ಬಹುದು+ ಎಂದ
ಅರ್ಥ:ಅಶ್ವತ್ಥಾಮನು ಕತ್ತಲೆಯಲ್ಲಿ ಪಾಂಡವರ ಕಗ್ಗೊಲೆಗೆ ಸೂಚಿಸಿದಾಗ, ಕೃಪನು ಕೃತವರ್ಮನಿಗೆ,'ಲೇಸು, ಎಲೈ ಕೃತವರ್ಮ, ಬಳಿಕ ಅದರ ಪರಿಣಾಮ ಏನು? ನಿದ್ದೆಯಲ್ಲಿದ್ದವರನ್ನು ರಾಕ್ಷಸರೀತಿಯ-ಕ್ರೂರ ಕಗ್ಗೊಲೆ ಮಾಡಲು ರಾಜನ ಆದೇಶದಲ್ಲಿ ನಾವು ಈ ಪಾಂಡವರ ಪಾಳೆಯಕ್ಕೆ ಬಂದೆವು. ಪಾಂಡವರಿಗೆ ವಾಸುದೇವನ ಕಾವಲಿದೆ. ಅವರು ಘಾಸಿಯಾಗರು/ಸಾಯುವುದಿಲ್ಲ. ಅವರಿಗೆ ಈ ದೊಡ್ಡ ಅಪಾಯ ತಪ್ಪಿದ ಬಳಿಕ ನಮಗೆ ಅಪಕೀರ್ತಿ ಬರುವುದು,'ಎಂದ.
ಕ್ರುತುಹರನ ಸಮಜೋಳಿ ಗಂಗಾ
ಸುತನ ಜಯಿಸಿದರವರ ತೂಕದ
ವಿತತಬಲರೈ ಭಾವನವರೊಗ್ಗಿದರು ದಿವಿಜರಲಿ |
ಅತಿರಥರೊಳಗ್ಗಳೆಯ ರಾಧಾ
ಸುತ ಸುಯೋಧನ ಮಾದ್ರಪತಿಯೀ
ವ್ಯತಿಕರದೊಳೇನಾದರಿದು ಮುರಹರನ ಕೃತಿಯೆಂದ || ೯ ||
ಪದವಿಭಾಗ-ಅರ್ಥ: ಕ್ರುತುಹರನ(ಕ್ರತುಹರ= ಶಿವ;) ಸಮಜೋಳಿ ಗಂಗಾಸುತನ ಜಯಿಸಿದರು+ ಅವರ ತೂಕದ ವಿತತಬಲರೈ ಭಾವನವರು+ ಒಗ್ಗಿದರು(ಸೋತರು); ದಿವಿಜರಲಿ ಅತಿರಥರೊಳು+ ಅಗ್ಗಳೆಯ(ಶ್ರೇಷ್ಠ ) ರಾಧಾಸುತ ಸುಯೋಧನ ಮಾದ್ರಪತಿಯ+ ಈ ವ್ಯತಿಕರದೊಳು( ಪ್ರಸಂಗ. 3. ಆಪತ್ತು. )+ ಏನಾದರು+ ಇದು ಮುರಹರನ ಕೃತಿ+ ಯೆಂದ
ಅರ್ಥ:ಕೃಪನು ಕರತವರಮನಿಗೆ,'ಅರ್ಜುನನು ಶಿವನ ಸಮಜೋಡಿ; ಕೃಷ್ಣಾರ್ಜುನರು ಗಂಗಾಸುತನನ್ನು ಜಯಿಸಿದರು, ಅವರ ತೂಕದ ಮತ್ತೂ ಹೆಚ್ಚನ ಬಲವಾನರು ಭಾವ ದ್ರೋಣನವರು, ಅವರೂ ಸೊತರು; ದೇವತೆಗಳಲ್ಲಿ ಅತಿರಥರಲ್ಲಿ ಶ್ರೇಷ್ಠ ರಾಧಾಸುತ ಕರ್ಣ, ಸುಯೋಧನ, ಮಾದ್ರಪತಿ ಶಲ್ಯ, ಈ ಯುದ್ಧ ಪ್ರಸಂಗದಲ್ಲಿ ಏನಾದರು? ಇದು - ಈ ಪಾಂಡವರ ಜಯ ಮುರಹರ ಕೃಷ್ನನ ಕೃತಿ- ಕಾರ್ಯ,' ಎಂದ.
ಇರಿಸನಿಲ್ಲಿ ಮುರಾರಿ ಕೌಂತೇ
ಯರನಿದೊಂದು ನಿಧಾನ ಮೇಣಿ
ಲ್ಲಿರಿಸಿದಡೆ ಕೊಲಲೀಯನಡ್ಡೈಸುವನು ಚಕ್ರದಲಿ |
ಇರುಳು ಹಗಲಡವಿಯಲಿ ಮನೆಯಲಿ
ಶರಧಿಯಲಿ ಪರ್ವತದಲಗ್ನಿಯ
ಲಿರಲಿ ತನ್ನವರಲ್ಲಿ ಹರಿಗವಧಾನ ಬಲುಹೆಂದ || ೧೦ ||
ಪದವಿಭಾಗ-ಅರ್ಥ: ಇರಿಸನು+ ಇಲ್ಲಿ ಮುರಾರಿ(ಕೃಷ್ಣ) ಕೌಂತೇಯರನು(ಕುಂತಿಮಕ್ಕಳು- ಪಾಂಡವರನ್ನು)+ ಇದೊಂದು ನಿಧಾನ; ಮೇಣ್+ ಇಲ್ಲಿರಿಸಿದಡೆ ಕೊಲಲು+ ಈಯನು (ಬಿಡುವುದಿಲ್ಲ)+ ಅಡ್ಡೈಸುವನು(ಚಕ್ರದಿಂದ ತಡೆಯುವನು) ಚಕ್ರದಲಿ; ಇರುಳು ಹಗಲು+ ಅಡವಿಯಲಿ, ಮನೆಯಲಿ, ಶರಧಿಯಲಿ(ಸಮುದ್ರ), ಪರ್ವತದಲಿ+ ಅಗ್ನಿಯಲಿ+ ಇರಲಿ ತನ್ನವರು+ ಅಲ್ಲಿ ಹರಿಗೆ(ಕೃಷ್ಣನಿಗೆ)+ ಅವಧಾನ (ಎಚ್ಚರಿಕೆ) ಬಲುಹು (ಬಲವಾದ, ಬಹಳ),+ ಎಂದ.
ಅರ್ಥ:ಕೃಪನು ಮುಂದುವರಿದು,'ಕೃಷ್ಣನು ಕೌಂತೇಯರನ್ನು ಇಲ್ಲಿ ಇರಿಸುವುದಿಲ್ಲ. ಇದೊಂದು ನಿಧಾನ; ಮತ್ತೆ ಇಲ್ಲಿ ಇರಿಸಿದರೂ ಕೊಲ್ಲಲು ಬಿಡುವುದಿಲ್ಲ. ಚಕ್ರದಿಂದ ತಡೆಯುವನು;ಹಗಲು, ರಾತ್ರಿ, ಅಡವಿಯಲ್ಲಿ, ಮನೆಯಲ್ಲಿ, ಶರಧಿಯಲ್ಲಿ, ಪರ್ವತದಲ್ಲಿ, ಅಗ್ನಿಯಲ್ಲಿ ತನ್ನವರು ಇರಲಿ, ಅಲ್ಲಿ ಕೃಷ್ಣನಿಗೆ ಬಹಳ ಎಚ್ಚರಿಕೆಇರುವುದು,' ಎಂದ.
ಮರಹಿನಲಿ ಮುಡುಹುವುದು ಧರ್ಮದ
ಹೊರಿಗೆಯಲ್ಲದು ನಿದ್ರೆಗೈದರ
ನಿರಿವುದೇನಿದು ಪಂಥವೇ ಪೌರಾಣಮಾರ್ಗದಲಿ |
ಅರಿಯದಾರಂಭಿಸಿದೆವಿದರಲಿ
ಪರಿಸಮಾಪ್ತಿಯ ಕಂಡೆವಾದಡೆ
ನೆರೆ ಕೃತಾರ್ಥರು ವಿಘ್ನಶತವಡ್ಡೈಸದಿರವೆಂದ || ೧೧ ||
ಪದವಿಭಾಗ-ಅರ್ಥ: ಮರಹಿನಲಿ(ಮರೆಯಿಂದ, ಅಡಗಿ) ಮುಡುಹುವುದು(ಕೊಲ್ಲು) ಧರ್ಮದ ಹೊರಿಗೆಯಲ್ಲ( ಭಾರ. ಹೊಣೆ ಗಾರಿಕೆ.)+ ಅದು ನಿದ್ರೆಗೈದರನು+ ಇರಿವುದು+ ಏನಿದು ಪಂಥವೇ ಪೌರಾಣಮಾರ್ಗದಲಿ? ಅರಿಯದೆ+ ಆರಂಭಿಸಿದೆವು+ ಇದರಲಿ ಪರಿಸಮಾಪ್ತಿಯ ಕಂಡೆವಾದಡೆ ನೆರೆ (ಬಹಳ)ಕೃತಾರ್ಥರು ವಿಘ್ನಶತವ+ ಅಡ್ಡೈಸದಿರವು+ ಎಂದ
ಅರ್ಥ:ಕೃಪನು,'ಮರೆಯಿಂದ, ಅಡಗಿಕೊಂಡು ಕೊಲ್ಲುವುದು ಧರ್ಮದ ಒಪ್ಪಿತ ದಾರಿಯಲ್ಲ. ಅದೂ ನಿದ್ರೆಮಾಡುವವರನ್ನು ಇರಿಯುವುದು, ಏನಿದು ಪಂಥವೇ- ಪುರಾಣದ ಮಾರ್ಗದಲ್ಲಿ ಸರಿಯಾದ ಮಾರ್ಗವೇ? ನಾವು ಅರಿಯದೆ ಆಶ್ವತ್ಥಾಮನ ಸೇನಾಧಿಪತ್ಯದಲ್ಲಿ ಹೋರಾಟ ಆರಂಭಿಸಿದೆವು. ಈಗ ಹಿಂದೆ ಹೋಗುವಂತೆಯೂ ಇಲ್ಲ. ಇದರಲ್ಲಿ ಹಿತವಾದ ಪರಿಸಮಾಪ್ತಿಯನ್ನು/ ಮುಕ್ತಾಯವನ್ನು ಕಂಡೆವಾದರೆ ನಾವು ಬಹಳ ಕೃತಾರ್ಥರು. ಈ ಕಾರ್ಯದಲ್ಲಿ ನೂರಾರು ವಿಘ್ನವನ್ನು ಎದುರಿಸದೆಯಿರೆವು,' ಎಂದ.
ತಪ್ಪದಾಚಾರಿಯನ ನುಡಿ ಮೇ
ಲಪ್ಪುದನು ದೈವಾಭಿಯೋಗದೊ
ಳೊಪ್ಪವಿಡುವುದು ರಜನಿಯಲಿ ಕಳ್ಳೇರ ಕದನದಲಿ |
ಒಪ್ಪದಿದು ಸೌಭಟ ವಿಧಾನಕೆ
ನೊಪ್ಪಿತಹುದಿದರಿಂದ ರಿಪುಗಳ
ತಪ್ಪಿಸುವನಸುರಾರಿಯೆಂದನು ನಗುತ ಕೃತವರ್ಮ || ೧೨ ||
ಪದವಿಭಾಗ-ಅರ್ಥ:ತಪ್ಪದು+ ಆಚಾರಿಯನ ನುಡಿ; ಮೇಲಪ್ಪುದನು(ಮುಂದಾಗುವುದನ್ನು) ದೈವಾಭಿಯೋಗದೊಳು+ ಒಪ್ಪವಿಡುವುದು; ರಜನಿಯಲಿ ಕಳ್ಳೇರ ಕದನದಲಿ ಒಪ್ಪದಿದು ಸೌಭಟ ವಿಧಾನಕೆ+ ಎನೆ+ ಒಪ್ಪಿತಹುದು+ ಇದರಿಂದ ರಿಪುಗಳ ತಪ್ಪಿಸುವನು+ ಅಸುರಾರಿಯೆಂದನು ನಗುತ ಕೃತವರ್ಮ.
ಅರ್ಥ:ಅದಕ್ಕೆ ಕೃತವರ್ಮನು ಕೃಪನಿಗೆ,'ಈ ಅಶ್ವತ್ಥಾಮ ಆಚಾರ್ಯನ ನುಡಿ ತಪ್ಪದು- ಅವನು ಈ ಯೋಜನೆಯಿಂದ ಹಿಂದೆಸರಿಯುವುದಿಲ್ಲ. ಮುಂದಾಗುವುದನ್ನು ನಾವು ದೈವಾಭಿಯೋಗದಲ್ಲಿ/ ದೈವೇಚ್ಛೆಗೆ ಒಪ್ಪಿಸಿಬಿಡುವುದು; ಕತ್ತಲೆಯಲ್ಲಿ ಕಳ್ಳರಂತೆ ಕದನದಲ್ಲಿ ತೊಡಗುವುದು- ಇದು ಸುಭಟರ- ಉತ್ತಮ ಯೋಧರ ವಿಧಾನಕ್ಕೆ ಒಪ್ಪದ ಮಾತು ಎಂದ ಅವನು,ಸೇನಾಧಿಪತಿಗೆ ವಿರೋಧವಾಗಿ ನೆಡೆಯುವಂತಿಲ್ಲ, ಈ ನಮ್ಮ ಯೋಜನೆಯನ್ನು ಒಪ್ಪಿ ಮಾಡೋಣ- ಮಾಡುವುದು. ಏಕೆಂದರೆ ಇದರಿಂದ- ಈ ನಮ್ಮ ತಂತ್ರದಿಂದ ಅಸುರಾರಿ ಕೃಷ್ಣನು ರಿಪುಗಳಾದ ಪಾಂಡವರನ್ನು ಹೇಗಾದರೂ ತಪ್ಪಿಸುವನು, ಎಂದನು ನಗುತ್ತಾ ಕೃತವರ್ಮ.
ಆದಡಿರಿ ನೀವಿಬ್ಬರಿಲ್ಲಿ ವಿ
ವಾದ ನಿಮ್ಮೊಡನೇಕೆ ಜನಪರಿ
ವಾದ ಭಯವೆಮಗಿಲ್ಲ ಸಾರಥಿ ರಥವ ತಾಯೆನುತ |
ಕೈದುಗಳ ಸಂವರಿಸಿ ರಥದಲಿ
ಹಾಯ್ದು ಹೊರವಡೆ ಭೋಜಕೃಪರನು
ವಾದಡೆಮಗೇನೆನುತ ಬಂದರು ಪಾಳೆಯದ ಹೊರಗೆ || ೧೩ ||
ಪದವಿಭಾಗ-ಅರ್ಥ: ಆದಡೆ+ ಇರಿ ನೀವಿಬ್ಬರು+ ಇಲ್ಲಿ ವಿವಾದ ನಿಮ್ಮೊಡನೆ+ ಏಕೆ ಜನಪರಿವಾದ ಭಯವು+ ಎಮಗಿಲ್ಲ, ಸಾರಥಿ ರಥವ ತಾ+ ಯೆನುತ ಕೈದುಗಳ ಸಂವರಿಸಿ (ಆಯುಧಗಳನ್ನು ಸಿದ್ಧಮಾಡಿಕೊಂಡು) ರಥದಲಿ ಹಾಯ್ದು ಹೊರವಡೆ, ಭೋಜಕೃಪರು (ಭೋಜ= ಕೃತವರ್ಮ)+ ಅನುವಾದಡೆ+ ಎಮಗೇನು+ ಎನುತ ಬಂದರು ಪಾಳೆಯದ ಹೊರಗೆ
ಅರ್ಥ: ಆಗ ಅಶ್ವತ್ಥಾಮನು,'ನಿಮಗೆ ಬೇಸರ ಆದರೆ ನೀವಿಬ್ಬರು ಇಲ್ಲಿ ಇರಿ. ನಿಮ್ಮೊಡನೆ ವಿವಾದ ನನಗೇಕೇ ಬೇಕು? ಜನರ ಅಪವಾದದ ಭಯವು ನಮಗಿಲ್ಲ,' ಎಂದು ಹೇಳಿ ಅವನು,'ಸಾರಥಿಯೇ ರಥವನ್ನು ತಾ,' ಯನ್ನುತ್ತಾ ಆಯುಧಗಳನ್ನು ಸಿದ್ಧಮಾಡಿಕೊಂಡು ರಥದಲ್ಲಿ ಹೊರಟು ಮರದ ನೆರಳಿಂದ ಹೊರಗಡೆಗೆ ಬಂದನು ಕೃತವರ್ಮ ಕೃಪರು ನಾವೂ ಸಿದ್ಧರಾಗೋಣ ಎಂದು ಅನುವಾದರೆ ನಮಗೇನು ತೊಂದರೆ ಎನ್ನುತ್ತಾ ಪಾಂಡವರು ಇರುವ ಪಾಳೆಯದ ಹೊರಗಡೆಗೆ ಬಂದರು.

ಪಾಂಡವರ ಪಾಳಯದೊಳಗೆ ಗುರು ಸುತ ಕೃಪ ಅಶ್ವತ್ಥಾಮರು

[ಸಂಪಾದಿಸಿ]
ಮುರಿದು ಕೋಟೆಯನೊಂದು ಕಡೆಯಲಿ
ತೆರಹುಮಾಡಿ ಮಹಾರಥರು ಜನ
ವರಿಯದವೊಲೊಳಹೊಕ್ಕು ಹೆಬ್ಬಾಗಿಲಲಿ ರಥವಿಳಿದು ||
ತರವಳರ ತೊಳಲಿಯ ಮೇಲೆ
ಚ್ಚರಿಕೆ ಮಸುಳಿಸೆ ಮಧ್ಯರಾತ್ರಿಯೊ
ಳಿರಿತದಂಘವಣೆಯಲಿ ಪರುಠವಿಸಿದನು ಗುರುಸೂನು || ೧೪ ||
ಪದವಿಭಾಗ-ಅರ್ಥ: ಮುರಿದು ಕೋಟೆಯನು+ ಒಂದು ಕಡೆಯಲಿ ತೆರಹುಮಾಡಿ ಮಹಾರಥರು ಜನವು+ ಅರಿಯದವೊಲು+ ಒಳಹೊಕ್ಕು ಹೆಬ್ಬಾಗಿಲಲಿ ರಥವಿಳಿದು ತರವಳರ ತೊಳಲಿಯ (ತಳವರ- ತಳವಾರರ/ ಕಾವಲುಗಾರರ, ಕಾವಲು ತಿರುಗಾಟ) ಮೇಲೆ+ ಎಚ್ಚರಿಕೆ ಮಸುಳಿಸೆ ಮಧ್ಯರಾತ್ರಿಯೊಳು+ ಇರಿತದ+ ಅಂಘವಣೆಯಲಿ(ಪರಾಕ್ರಮ) ಪರುಠವಿಸಿದನು (ಸಿದ್ಧಗೊಳಿಸಿದನು) ಗುರುಸೂನು.
  • ಮಸುಳಿಸು=: ಮಂಕಾಗು. 2. ಮಂಕಾಗುವಂತೆ ಮಾಡು. 3. ಅಡಗು. 4. ಕುಗ್ಗು. 5. ನಾಶಮಾಡು.
ಅರ್ಥ:ಪಾಂಡವರ ಪಾಳಯದ ಕೋಟೆಯನ್ನು ಮುರಿದು, ಒಂದು ಕಡೆಯಲ್ಲಿ ತೆರಹುಮಾಡಿಕೊಂಡು ಮಹಾರಥರಾದ ಗುರುಸುತ, ಕೃಪ, ಕೃತವರ್ಮರು ಜನರು ತಿಳಿಯದಂತೆ ಒಳಹೊಕ್ಕು, ಹೆಬ್ಬಾಗಿಲಲಿ ರಥವಿಳಿದು, ಕಾವಲುಗಾರರ ಕಾವಲುನೆಡಿಗೆಯಲ್ಲಿ ಅವರಿಗೆ ತಿಳಿಯದಂತೆ ಮೇಲೆ ಎಚ್ಚರಿಕೆವಹಿಸಿ, ಅಶ್ವತ್ಥಾಮನು ಮಧ್ಯರಾತ್ರಿಯಲ್ಲಿ ಪರಾಕ್ರಮದ ಸಾಹಸಕ್ಕೆ ಸಿದ್ಧಗೊಂಡನು.
ಎರಡು ಬಾಗಿಲ ಪಾಳೆಯಕೆ ಕೃಪ
ನಿರಲಿ ಮೂಡಲು ಪಶ್ಚಿಮಾಂಗದೊ
ಳಿರಲಿ ಕೃತವರ್ಮಕನು ಬಾಗಿಲೊಳಾಂತ ರಿಪುಜನವ |
ಕರಿ ತುರಗ ರಥ ಪತ್ತಿಗಳ ಸಂ
ಹರಿಸುವುದು ನೀವಿಲ್ಲಿ ಮಧ್ಯದೊ
ಳರಸು ಮೊತ್ತಕೆ ಮಿತ್ತು ತಾನಹೆನೆಂದು ಕೈಗೊಂಡ || ೧೫ ||
ಪದವಿಭಾಗ-ಅರ್ಥ: ಎರಡು ಬಾಗಿಲ ಪಾಳೆಯಕೆ(ಸೇನೆಯ ವಸತಿಗೆ) ಕೃಪನು+ ಇರಲಿ ಮೂಡಲು (ಪೂರ್ವ) ಪಶ್ಚಿಮಾಂಗದೊಳು+ ಇರಲಿ ಕೃತವರ್ಮಕನು ಬಾಗಿಲೊಳು+ ಆಂತ(=ಎದುರಿಸಿದ, ಆಕ್ರಮಿಸಿದ) ರಿಪುಜನವ (ಶತ್ರುಜನರನ್ನೂ)- ಕರಿ ತುರಗ ರಥ ಪತ್ತಿಗಳ(ಗುಂಪು) ಸಂಹರಿಸುವುದು ನೀವಿಲ್ಲಿ, ಮಧ್ಯದೊಳು+ ಅರಸು ಮೊತ್ತಕೆ(ಅರಸುಗಳ ಗುಂಪಿಗೆ) ಮಿತ್ತು (ಮೃತ್ಯು), ತಾನು+ ಅಹೆನೆಂದು(ಆಗಿರುವೆನು) ಕೈಗೊಂಡ
ಅರ್ಥ:ಅಶ್ವತ್ಥಾಮನು ತನ್ನ ಅನುಚರರನ್ನು ಕಾವಲಿಗೆ 'ಎರಡು ಬಾಗಿಲ ಪಾಳೆಯಕ್ಕೆ ಹೀಗೆ ನೇಮಿಸಿದ, ಪೂರ್ವದ ಕೃಪನು ಕಾವಲು ಇರಲಿ; ಪಶ್ಚಿಮಾಂಗದಲ್ಲಿ ಕೃತವರ್ಮನು ಬಾಗಿಲಲ್ಲಿ ಇರಲಿ; ಆಕ್ರಮಿಸಿದ ಶತ್ರುಜನರನ್ನೂ ಕರಿ/ ಆನೆ ತುರಗ/ ಕುದುರೆ, ರಥ ಗುಂಪುಗಳನ್ನು ನೀವಿಲ್ಲಿ ಸಂಹರಿಸುವುದು. ಮಧ್ಯದಲ್ಲಿ ಅರಸುಗಳ ಸಮುಹಕ್ಕೆ ತಾನು ಮೃತ್ಯುವಾಗಿದ್ದು ಕೊಲ್ಲವೆನು,' ಎಂದು ಅಶ್ವತ್ಥಾಮನು ಸೇನಾಧಿಪತ್ಯದ ಕಾರ್ಯವನ್ನು ಕೈಗೊಂಡನು.
ಎರಡು ಬಾಗಿಲೊಳಿವರನಿಬ್ಬರ
ನಿರಿಸಿ ಚಾಪವ ಮಿಡಿದು ಬಾಣವ
ತಿರುಹುತೊಬ್ಬನೆ ರಥವ ಬಿಟ್ಟನು ರಾಜಬೀದಿಯಲಿ |
ಅರಸ ಕೇಳದುಭುತವನಾ ನಡು
ವಿರುಳು ನೃಪವೀಥಿಯಲಿ ನಿಂದುದು
ಧರೆಗೆ ಗಗನಕೆ ಕೀಲನಿಕ್ಕಿದವೊಲು ಮಹಾಭೂತ || ೧೬ ||
ಪದವಿಭಾಗ-ಅರ್ಥ: ಎರಡು ಬಾಗಿಲೊಳು+ ಇವರನು+ ಇಬ್ಬರನು+ ಇರಿಸಿ ಚಾಪವ ಮಿಡಿದು ಬಾಣವ ತಿರುಹುತ+ ಒಬ್ಬನೆ ರಥವ ಬಿಟ್ಟನು ರಾಜಬೀದಿಯಲಿ ಅರಸ ಕೇಳದುಭುತವನು ಆ ನಡುವಿರುಳು ನೃಪವೀಥಿಯಲಿ ನಿಂದುದು ಧರೆಗೆ ಗಗನಕೆ ಕೀಲನಿಕ್ಕಿದವೊಲು ಮಹಾಭೂತ.
ಅರ್ಥ:ಹೀಗೆ ಅಶ್ವತ್ಥಾಮನು ಆ ಪಾಳಯದ ಕೋಟೆಯ ಎರಡು ಬಾಗಿಲಲ್ಲಿ ಕೃಪ ಕೃತವರ್ಮ ಇವರು ಇಬ್ಬರನ್ನು ನಿಲ್ಲಿಸಿ, ತಾನು ಬಿಲ್ಲನ್ನು ಮಿಡಿದು ಬಾಣವನ್ನು ಕೈಯಲ್ಲಿ ಹಿಡಿದು ತಿರುಗಿಸುತ್ತಾ ಒಬ್ಬನೆ ರಥವನ್ನು ರಾಜಬೀದಿಯಲಿ ಬಿಟ್ಟನು. ಅರಸನೇ ಕೇಳು, ಅದ್ಭುತವನ್ನು, ಆ ನಡುರಾತ್ರಿಯಲ್ಲಿ ರಾಜಬೀದಿಯಲ್ಲಿ, ಭೂಮಿಗೂ- ಆಕಾಶಕ್ಕೂ ಕೀಲನನ್ನು ಹೊಡೆದಂತೆ ಹಣೆಯಲ್ಲಿ ಬಿಟ್ಟ ಕಣ್ಣಿನ ಜಟೆಯನ್ನು ಬಿಟ್ಟ ಒಂದು ಮಹಾಭೂತ ನಿಂತಿತ್ತು.

ಅಶ್ವತ್ಥಾಮನಿಗೆ ಎದುರಾದ ಭೂತ

[ಸಂಪಾದಿಸಿ]
ನಿಟಿಲನಯನದ ಜಡಿವ ಜೂಟದ
ಜಟೆಯ ಪೂತ್ಕೃತಿಯುರಿಯ ನಾಸಾ
ಪುಟದ ವೈಕಕ್ಷಕದ ವಿಷಧರಪತಿಯ ವಾಸುಗಿಯ |
ಚಟುಳ ಚಪಳಪ್ರಭೆಯ ಘನಸಂ
ಘಟಿತವೆನೆ ಗರ್ಗರದ ಘೋರ
ಸ್ಫುಟರವದ ರೌದ್ರಾಭಿರತಿಯಲಿ ರಂಜಿಸಿತು ಭೂತ || ೧೭ ||
ಪದವಿಭಾಗ-ಅರ್ಥ: ನಿಟಿಲನಯನದ(ಹಣೆಯಲ್ಲಿ ಕಣ್ಣಿನ) ಜಡಿವ ಜೂಟದ(ಶಿಖೆ, ಜುಟ್ಟು, ) ಜಟೆಯ ಪೂತ್ಕೃತಿಯ+ ಉರಿಯ(ಬೆಂಕಿಯ) ನಾಸಾಪುಟದ(ಮೂಗಿನ ಹೊಳ್ಳೆ) ವೈಕಕ್ಷಕದ (ಕಕ್ಷೆ- ಪಥ; ವೈಕಕ್ಷಕ= ವಿಚಿತ್ರಗತಿಯುಳ್ಳ?) ವಿಷಧರಪತಿಯ(ಸರ್ಪದ ರಾಜ) ವಾಸುಗಿಯ(ವಾಸುಕಿಯನ್ನು) ಚಟುಳ ಚಪಳಪ್ರಭೆಯ(ಪ್ರಕಾಶದಿಂ ಹೊಳೆಯುವ) ಘನಸಂಘಟಿತವು+ ಎನೆ ಗರ್ಗರದ(ದೊಡ್ಡಗೆಜ್ಜಯ ಸದ್ದಿನ) ಘೋರಸ್ಫುಟ ರವದ(ಸದ್ದು) ರೌದ್ರಾಭಿರತಿಯಲಿ(ರೂಪದಲ್ಲಿ) ರಂಜಿಸಿತು ಭೂತ.
ಅರ್ಥ:ರಾತ್ರಿಯ ಆ ರಾಜಬೀದಿಯಲ್ಲಿ, ಹಣೆಯಕಣ್ಣಿನ, ಕಟ್ಟಿದ ಜುಟ್ಟಿನ, ಜಟೆಯುಳ್ಳ, ಬೆಂಕಿಯನ್ನು ಉಗುಳುವ ಮೂಗಿನ ಹೊಳ್ಳೆಗಳ ವಿಚಿತ್ರಗತಿಯುಳ್ಳ(?)ಕಂಠದಲ್ಲಿ ಸರ್ಪರಾಜ ವಾಸುಕಿಯನ್ನು ಹೊಂದಿದ ಪ್ರಕಾಶದಿಂ ಹೊಳೆಯುವ ಘನಸಂಘಟಿತವೋ ಎನ್ನುವಂತೆ, ದೊಡ್ಡಗೆಜ್ಜಯ ಸದ್ದಿನ ಘೋರಸ್ಫುಟ ರೌದ್ರ ರೂಪದಲ್ಲಿ ಭೂತವು ರಂಜಿಸಿತು- ಶೋಭಿಸಿತು.
ಬೆಚ್ಚಿದನೆ ಭಾರಣೆಯ ಭೂತವ
ನೆಚ್ಚು ಬೊಬ್ಬಿರಿದಾರಿದನು ಮಗು
ಳೆಚ್ಚನೈದಾರೇಳುನೂರೈನೂರು ಸಾವಿರವ |
ಎಚ್ಚು ಹಾಯ್ದಂಬುಗಳು ಭೂತದ
ಬಿಚ್ಚುಗಂಗಳ ಕೊಂಡದುರಿಯಲಿ
ಬಚ್ಚಿಸಿದ ಗರಿ ಸೀದು ಸೀಕರಿಯೋಗಿ ನಿಮಿಷದಲಿ || ೧೮ ||
ಪದವಿಭಾಗ-ಅರ್ಥ:ಬೆಚ್ಚಿದನೆ ಭಾರಣೆಯ(ಆಧಿಕ್ಯ) ಭೂತವನ+ ಎಚ್ಚು (ಹೊಡೆದು)ಬೊಬ್ಬಿರಿದು ಆರಿದನು ಮಗುಳೆಚ್ಚನು+ ಐದಾರೇಳು ನೂರೈನೂರು ಸಾವಿರವ ಎಚ್ಚು ಹಾಯ್ದಂಬುಗಳು ಭೂತದ ಬಿಚ್ಚುಗಂಗಳ ಕೊಂಡದು+ ಉರಿಯಲಿ ಬಚ್ಚಿಸಿದ ಗರಿ ಸೀದು ಸೀಕರಿಯೋಗಿ ನಿಮಿಷದಲಿ.
ಅರ್ಥ:ಆಸ್ವತ್ಥಾಮನು ಬೆಚ್ಚಿದನೆ? ಇಲ್ಲ, ಹೆದರಲಿಲ್ಲ. ಮಹಾದ್ಭುತವಾದ ಭೂತವನ್ನು ಬಾಣಗಳಿಂದ ಹೊಡೆದು ಬೊಬ್ಬಿರಿದು ಆರ್ಭಟಿಸಿದನು; ಮತ್ತೆಮತ್ತೆ ಹೊಡದನು,ಐದಾರು ಏಳು ನೂರು ಐನೂರು ಸಾವಿರವ ಬಾಣಗಳಿಂದ ಹೊಡದನು. ಹೀಗೆ ಹೊಡೆದು ಹಾಯ್ದ ಬಾನಗಳು ಭೂತದ ಬಿಚ್ಚುಕಣ್ಣುಗಳನ್ನು ಸೇರತು. ಅವು ಬೆಂಕಿಯಲ್ಲಿ ಬಚ್ಚಿಸಿದ/ಸುಟ್ಟ ಗರಿ ನಿಮಿಷದಲಿ ಸೀದು ಸೀಕರಿ/ಕರುಕಲಾಗಿಹೋಯಿತು.
ಉಗಿದು ಮಂತ್ರಾಸ್ತ್ರವನು ತಿರುವಿಂ
ದುಗುಳಿಚಿದಡಾ ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾಧಿದೇವಿಯರು |
ಉಗಿದನೊರೆಯಲಡಾಯುಧವನು
ಬ್ಬೆಗದಲಪ್ಪಳಿಸಿದಡೆ ಕಯ್ಯಿಂ
ಜಗುಳ್ದುಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ || ೧೯ ||
ಪದವಿಭಾಗ-ಅರ್ಥ: ಉಗಿದು ಮಂತ್ರಾಸ್ತ್ರವನು ತಿರುವಿಂದ (ನಾಣಿನಿಂದ)+ ಉಗುಳಿಚಿದಡೆ+ ಆ ಭೂತದಂಘ್ರಿಗೆ ಮುಗಿದ ಕೈಗಳಲಿ ಎರಗಿದರು ಶಸ್ತ್ರಾಧಿದೇವಿಯರು ಉಗಿದನು+ ಒರೆಯಲಿ+ ಅಡಾಯುಧವನು(ಕತ್ತಿ?) ಅಬ್ಬೆಗದಲಿ (ಉದ್ವೇಗ)+ ಅಪ್ಪಳಿಸಿದಡೆ ಕಯ್ಯಿಂ ಜಗುಳ್ದು(ಜಾರಿ) ಬಿದ್ದುದು ಝಂಕೆಯದ್ದುದು(ಅಬ್ಬರಿಕೆ; ಧ್ವನಿ) ಭಯದ ಝಾಡಿಯಲಿ(ಹೆಚ್ಚಳ, ಆವರಿಸಿದ ಝಾಡಿಸು- ಹೊಡೆತ).
ಅರ್ಥ:ಆಗ ಅಶ್ವತ್ಥಾಮನು ಮಂತ್ರಾಸ್ತ್ರವನ್ನು ಬತ್ತಳಿಕೆಯಿಂದ ಉಗಿದು ಬಿಲ್ಲಿನ ನಾಣಿನಿಂದ ಉಗುಳಿಚಿ/ ಜಾರಿಸಿ ಹೊಡೆದರೆ, ಅದು ಆ ಭೂತದ ಪಾದಕ್ಕೆ ಮುಗಿದ ಕೈಗಳಲ್ಲಿ ಶಸ್ತ್ರದ ಅಧಿದೇವಿಯರು ಎರಗಿದರು/ ನಮಿಸಿದರು. ಓರೆಯಿಂದ ಕತ್ತಿಯನ್ನು ಉಗಿದು ಸಿಟ್ಟಿನಿಂದ ಅಪ್ಪಳಿಸಿದಡರೆ, ಅದು ಕಯ್ಯಿಂದ ಜಾರಿ ಬಿದ್ದಿತು. ಆಗ ಅವನಿಗೆ ಭಯ ಹೆಚ್ಚಿ ಅಬ್ಬಾ ಅಬ್ಬಾ! ಎಂಬ ಉದ್ಗಾರ ಹುಟ್ಟಿತು.
ಕಾಕಮುಖದ ಮಯೂರ ಟಿಟ್ಟಿಭ
ಕೋಕವದನದ ಹಮಸ ಕಂಕ ಬ
ಳಾಕವಕ್ತ್ರದ ಗೌಜು ಗೀಜಗ ಚಾತಕಾನನದ |
ಘೂಕಮುಖದ ಸೃಗಾಲ ಶಾರ್ದೂ
ಲಾಕೃತಿಯ ಬಹುವಿಧದ ರೂಪದ
ನೇಕ ಭೂತವ್ರಾತ ನೆರೆದುದು ಭೂಪ ಕೇಳೆಂದ || ೨೦ ||
ಪದವಿಭಾಗ-ಅರ್ಥ:ಕಾಕಮುಖದ ಮಯೂರ ಟಿಟ್ಟಿಭ ಕೋಕವದನದ ಹಮಸ ಕಂಕ ಬಳಾಕವಕ್ತ್ರದ ಗೌಜು ಗೀಜಗ ಚಾತಕಾನನದ ಘೂಕಮುಖದ ಸೃಗಾಲ ಶಾರ್ದೂಲಾಕೃತಿಯ ಬಹುವಿಧದ ರೂಪದ+ ಅನೇಕ ಭೂತವ್ರಾತ ನೆರೆದುದು ಭೂಪ ಕೇಳೆಂದ
ಅರ್ಥ:ಆ ಮಹಾ ಭೂತದ ಜೊತೆ,ಕಾಗೆಮುಖದ ಮಯೂರ/ ನವಿಲು, ಟಿಟ್ಟಿಭ, ಕೋಕ/ಕೋಗಿಲೆ ವದನದ, ಹಂಸ, ಕಂಕ/ಹದ್ದು, ಬಳಾಕವಕ್ತ್ರದ/ ಮುಖದ, ಗೌಜುಗ, ಗೀಜಗ, ಚಾತಕಪಕ್ಷಿಮುಖದ- ಆನನದ; ಘೂಗೆಮುಖದ, ಸೃಗಾಲ/ನರಿ- ಶಾರ್ದೂಲ/ಹುಲಿಯ ಆಕೃತಿಯ ಬಹುವಿಧದ ರೂಪದ ಅನೇಕ ಭೂತ ಸಮೂಹ ನೆರೆದಿತ್ತು- ಭೂಪನೇ ಕೇಳು, ಎಂದ ಸಂಜಯ.
ಇದು ವಿರೂಪಾಕ್ಷನ ಮನಃಕ್ಷೋ
ಭದ ವಿಕಾರವಲಾ ಪಿನಾಕಿಯ
ಪದವ ಹಿಡಿದೋಲೈಸುವೆನು ಸರ್ವಾಂಗಯಜ್ಞದಲಿ |
ಇದಕುಪಾಯವ ಬಲ್ಲೆನೆಂದು
ಬ್ಬಿದನು ಬೊಬ್ಬಿರಿದಾರಿ ತೋಡಿದ
ನುದರವಹ್ನಿಯನಿದಿರೊಳಗ್ನಿತ್ರಯವ ನಿರ್ಮಿಮಿಸಿದ || ೨೧ ||
ಪದವಿಭಾಗ-ಅರ್ಥ:ಇದು ವಿರೂಪಾಕ್ಷನ ಮನಃಕ್ಷೋಭದ ವಿಕಾರವಲಾ, ಪಿನಾಕಿಯ ಪದವ ಹಿಡಿದು+ ಓಲೈಸುವೆನು ಸರ್ವಾಂಗಯಜ್ಞದಲಿ ಇದಕೆ+ ಉಪಾಯವ ಬಲ್ಲೆನೆಂದು+ ಉಬ್ಬಿದನು/ ಸಂತಸಪಟ್ಟನು, ಬೊಬ್ಬಿರಿದು+ ಆರಿ ತೋಡಿದನು+ ಉದರವಹ್ನಿಯನು+ ಇದಿರೊಳು+ ಅಗ್ನಿತ್ರಯವ ನಿರ್ಮಿಮಿಸಿದ.
ಅರ್ಥ:ಆಸ್ವತ್ಥಾಮನು,'ಇದು ವಿರೂಪಾಕ್ಷ ರುದ್ರನ ಮನಃಕ್ಷೋಭದ ವಿಕಾರವಲಾ!, ಪಿನಾಕಿಯ/ರುದ್ರನ ಪದವನ್ನು ಹಿಡಿದು ಅವನನ್ನು ಸರ್ವಾಂಗಯಜ್ಞದ ಮೂಲಕ ಓಲೈಸುವೆನು/ಮೆಚ್ಚಿಸುವೆನು,' ಎಂದು, ಇದಕ್ಕೆ ಉಪಾಯವನ್ನು ತಾನು ಬಲ್ಲೆನೆಂದು ಉಬ್ಬಿದನು/ ಬೊಬ್ಬಿರಿದು ಆರ್ಭಟಿಸಿ ಉದರಅಗ್ನಿಯನ್ನು ತೆಗೆದನು. ಎದುರಿನಲ್ಲಿ ಅಗ್ನಿತ್ರಯವ ನಿರ್ಮಿಮಿಸಿದನು.
ಸೆರೆನರಂಗಳ ದರ್ಭೆ ಮಿದುಳಿನ
ಚರು ಕಪಾಲದ ಪಾತ್ರೆಯೆಲುವಿನ
ಬೆರಳ ಸಮಿಧೆ ವಿಶಾಳದನುಮಜ್ಜೆಗಳ ಪೃಷದಾಜ್ಯ |
ಅರುಣಜಲದಾಜ್ಯಾಹುತಿಯ ವಿ
ಸ್ತರವ ವಿರಚಿಸಿ ನಿಗಮಮಂತ್ರೋ
ಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ || ೨೨ ||
ಪದವಿಭಾಗ-ಅರ್ಥ:ಸೆರೆನರಂಗಳ ದರ್ಭೆ, ಮಿದುಳಿನ ಚರು(ಹೋಮಕ್ಕೆ ಅನ್ನ), ಕಪಾಲದ ಪಾತ್ರೆಯ+ ಎಲುವಿನ ಬೆರಳ ಸಮಿಧೆ, ವಿಶಾಳದ+ ಅನು ಮಜ್ಜೆಗಳ ಪೃಷದ+ ಆಜ್ಯ ಅರುಣಜಲದ (ರಕ್ತ)+ ಆಜ್ಯಾಹುತಿಯ ವಿಸ್ತರವ ವಿರಚಿಸಿ ನಿಗಮ ಮಂತ್ರ+ ಉಚ್ಚರಣೆಯಲಿ ಪೂರ್ಣಾಹುತಿಗೆ ತನ್ನ+ ಒಡಲನು(ದೇಹ)+ ಒಪ್ಪಿಸಿದ.
ಅರ್ಥ:ಅಶ್ವತ್ಥಾಮನು ತನ್ನ ಸೆರೆ- ನರಗಳನ್ನೇ ದರ್ಭೆಮಾಡಿ, ಮಿದುಳಿನ ಮಜ್ಜೆಯನ್ನು ಚರು- ಹೋಮಕ್ಕೆ ಅನ್ನಮಾಡಿ, ಕಪಾಲದ ಪಾತ್ರೆಯನ್ನು ಉಪಯೋಗಿಸಿ ಬೆರಳ ಎಲುಬನ್ನು ಸಮಿಧೆಯಾಗಿ ಉಪಯೋಗಿಸಿ, ವಿಶಾಲವಾದ ಅನು/ಜೊತೆ ಮಜ್ಜೆಗಳನ್ನೂ ಪೃಷದ/ ಪೃಷ್ಠಸ್ಥಳದ ರಕ್ತದ ಆಜ್ಯ/ತುಪ್ಪದಿಂದ ಆಜ್ಯಾಹುತಿಯನ್ನು ನೀಡಿ ವಿಸ್ತಾರವಾಗಿ ಯಜ್ಞವನ್ನು ವಿರಚಿಸಿದನು; ನಿಗಮ ಮಂತ್ರಗಳನ್ನು ಉಚ್ಚಾರಣೆ ಮಾಡುತ್ತಾ ಪೂರ್ಣಾಹುತಿಗೆ ತನ್ನ ದೇಹವನ್ನೇ ಒಪ್ಪಿಸಿದನು.
ಮೆಚ್ಚಿದನು ಮದನಾರಿ ಹೋಮದ
ಕಿಚ್ಚು ತುಡುಕದ ಮುನ್ನ ತೆಗೆದನು
ಬಿಚ್ಚುಜಡೆಗಳ ಜಹ್ನು ಸುತೆಯಲಿ ನಾದಿದನು ಭಟನ |
ಎಚ್ಚ ಶರವಿದೆ ಖಡ್ಗವಿದೆ ಕೋ
ಮುಚ್ಚು ಮರೆಯೇಕಿನ್ನು ಸುತರಲಿ
ಚೊಚ್ಚಿಲವ ನೀನೆಂದು ಮೈದಡವಿದನು ಶಶಿಮೌಳಿ || ೨೩ ||*
ಪದವಿಭಾಗ-ಅರ್ಥ: ಮೆಚ್ಚಿದನು ಮದನಾರಿ (ರುದ್ರ) ಹೋಮದ ಕಿಚ್ಚು ತುಡುಕದ(ಆಕ್ರಮಿಸುವ) ಮುನ್ನ ತೆಗೆದನು ಬಿಚ್ಚುಜಡೆಗಳ ಜಹ್ನುಸುತೆಯಲಿ(ಜಹ್ನು ಋಷಿಯ ಕಿವಿಯಲ್ಲಿ ಹುಟ್ಟಿದ ಗಂಗೆ- ಸುತೆನೀರು) ನಾದಿದನು ಭಟನ, ಎಚ್ಚ(ಹೊಡೆಯುವ) ಶರವಿದೆ ಖಡ್ಗವಿದೆ ಕೋ ಮುಚ್ಚು ಮರೆಯೇಕೆ+ ಇನ್ನು ಸುತರಲಿ ಚೊಚ್ಚಿಲವ ನೀನು+ ಎಂದು ಮೈದಡವಿದನು ಶಶಿಮೌಳಿ(ಇಂದುಧರ)
ಅರ್ಥ:ಮದನಾರಿಯಾದ ರುದ್ರನು ಅಶ್ವತ್ಥಾಮನ ಭಕ್ತಿಗೆ ಮೆಚ್ಚಿದನು. ಯಜ್ಞಕುಂಡಕ್ಕೆ ಹಾರಿದ ಅವನನ್ನು ಹೋಮದ ಬೆಂಕಿ ಆವರಿಸುವ ಮೊದಲೇ ಅವನನ್ನು ಅಲ್ಲಿಂದ ಎತ್ತಿದನು. ರುದ್ರನು ತನ್ನ ಬಿಚ್ಚುಜಡೆಗಳಲ್ಲಿ ಸುರಿಯುವ ಗಂಗಾಜಲದಿಂದ ಭಟ ಅಶ್ವತ್ಥಾಮನನ್ನು ನಾದಿದನು/ ಸವರಿದನು. ಅವನು ತನ್ನಭಕ್ತ ಮತ್ತು ಮಗನಿಗೆ ಹೊಡೆಯುವ ಶರವಿದೆ/ಬಾಣವಿದೆ, ಖಡ್ಗವಿದೆ, ತೆಗೆದುಕೋ, ಇನ್ನು ಮುಚ್ಚು ಮರೆಯೇಕೆ? ನನ್ನ ಮಕ್ಕಳಲ್ಲಿ ಚೊಚ್ಚಿಲವನು ನೀನು,' ಎಂದು ಶಿವನು ಅವನ ಮೈದಡವಿದನು.
ಸಾರಥಿಗಳೊಳಗೆನಿಸಿದನು ಭೂ
ಭಾರಭಂಜಕನಸುರಹರನೀ
ಭಾರ ಬಿದ್ದುದು ನಮಗೆ ಪಾಂಚಾಲಪ್ರಬದ್ಧಕರ |
ತೀರಿತಿದು ನಿಮ್ಮಲ್ಲಿ ನಮ್ಮ ವಿ
ಹಾರವೊಡಬೆಚ್ಚಿತು ರಿಪುವ್ರಜ
ಮಾರಣಾಧ್ವರಕೃತಿಯ ನೀ ಕೈಕೊಳಿಸು ಹೋಗೆಂದ || ೨೪ ||
ಪದವಿಭಾಗ-ಅರ್ಥ: ಸಾರಥಿಗಳೊಳಗೆ+ ಎನಿಸಿದನು ಭೂಭಾರಭಂಜಕನು+ ಅಸುರಹರನು+ ಈ ಭಾರ ಬಿದ್ದುದು ನಮಗೆ ಪಾಂಚಾಲಪ್ರಬದ್ಧಕರ ತೀರಿತು+ ಇದು ನಿಮ್ಮಲ್ಲಿ ನಮ್ಮ ವಿಹಾರವೊಡ (ಸಂಚಾರ) ಬೆಚ್ಚಿತು(ಬೆದರು) ರಿಪುವ್ರಜಮಾರಣಾಧ್ವರ(ಶತ್ರು ಜನರ ಸಂಹಾರ ಅಧ್ವರ - ಯಜ್ಞದ ಯಜಮಾನಿಕೆ) ಕೃತಿಯ(ಕಾರ್ಯವನ್ನು) ನೀ ಕೈಕೊಳಿಸು ಹೋಗು+ ಎಂದ
ಅರ್ಥ:ರುದ್ರನು ಅಶ್ವತ್ಥಾಮನಿಗೆ,'ಅಸುರಹರ ಕೃಷ್ಣನು ಸಾರಥಿಗಳಲ್ಲಿ ಭೂಭಾರಭಂಜಕನು ಎನಿಸಿಕೊಂಡನು. ಅದರಲ್ಲಿ ಪಾಂಚಾಲ ಪ್ರಬದ್ಧಕರ/ನಾಯಕರ ಸಂಹಾರದ- ಈ ಭಾರ ನಮಗೆ ಬಿದ್ದಿತು. ಇದು ನಿಮ್ಮಲ್ಲಿ/ ನಿನ್ನ ಸಹಾಯದಿಂದ ತೀರಿತು. ನಮ್ಮ ವಿಹಾರವು ಕಂಡೊಡನೆ ಬೆದರಿಹೋಗುವರು. ಆದ್ದರಿಂದ ರಿಪುವ್ರಜಮಾರಣಾಧ್ವರ- ಈ ಸಂಹಾರ ಯಜ್ಞ ಕಾರ್ಯವನ್ನು ನೀನು ಕೈಕೊಂಡು ಪೂರ್ಣಗೊಳಿಸು ಹೋಗು,' ಎಂದನು.
ಎನೆ ಪುರಾರಿಯ ಪದಯುಗಕೆ ಗುರು
ತನುಜ ಮೈಯಿಕ್ಕಿದನು ಬೀಳ್ಕೊಂ
ಡನು ತಿರೋಹಿತನಾದನೀಶ್ವರನೀತನನು ಕಳುಹಿ |
ಧನುವ ಕೊಂಡನು ಧೂರ್ಜಟಿಯ ರೂ
ಹಿನ ಮಹಾರಥ ರಥವನೇರಿದ
ನನುವರದ ರೌರವವನಂಘೈಸಿದನು ರಜನಿಯಲಿ || ೨೫ ||
ಪದವಿಭಾಗ-ಅರ್ಥ: ಹೀಗೆ ಶಿವನು ಹೇಳಲು,'ಎನೆ ಪುರಾರಿಯ(ತ್ರಿಪುರಗಳನ್ನು ಸುಟ್ಟ ಶಿವ) ಪದಯುಗಕೆ ಗುರುತನುಜ ಮೈಯಿಕ್ಕಿದನು ಬೀಳ್ಕೊಂಡನು ತಿರೋಹಿತನಾದನು(ನಾಶವಾಗದವ)+ ಈಶ್ವರನು+ ಈತನನು ಕಳುಹಿ ಧನುವ ಕೊಂಡನು ಧೂರ್ಜಟಿಯ ರೂಹಿನ(ರುದ್ರನ ಲಕ್ಷಣದ) ಮಹಾರಥ ರಥವನೇರಿದನು+ ಅನುವರದ(ಯುದ್ಧದ) ರೌರವವನು+ ಅಂಘೈಸಿದನು ರಜನಿಯಲಿ(ರಾತ್ರಿ ಕತ್ತಲೆ).
ಅರ್ಥ:ತ್ರಿಪುರಗಳನ್ನು ಸುಟ್ಟ ಶಿವನು ಹೀಗೆ ಹೇಳಲು,'ಎನೆ ಶಿವ ಪಾದಯುಗಕ್ಕೆ ಗುರುತನುಜ ಅಶ್ವತ್ಥಾಮನು ಮೈಯಿಕ್ಕಿ ನಮಸ್ಕರಿಸಿದನು. ತಿರೋಹಿತನಾದ ಈಶ್ವರನು ಅಶ್ವತ್ಥಾಮನನ್ನು ಬೀಳ್ಕೊಂಡು ಹೊರಟುಹೋದನು. ಅಶ್ವತ್ಥಾಮನು ಶಿವನನ್ನು ಕಳುಹಿಸಿ ಧನುಸ್ಸನ್ನು ತೆಗೆದುಕೊಂಡನು. ಅವನು ರುದ್ರನ ಲಕ್ಷಣದ ಮಹಾರಥ ರಥವನ್ನು ಏರಿದನು. ಯುದ್ಧದ ರೌರವ ಕಾರ್ಯವನ್ನು ಆ ರಾತ್ರಿಯ ಕತ್ತಲೆಯಲ್ಲಿ ಅಂಗೀಕರಿಸಿದನು.

ಪಾಂಡವರ ಪಾಳಯದೊಳಗೆ ಅಶ್ವತ್ಥಾಮನ ರೌದ್ರಸಂಹಾರ

[ಸಂಪಾದಿಸಿ]
ಧರಣಿಪತಿ ಕೇಳ್ ರಾಜಬೀದಿಯೊ
ಳುರವಣಿಸಿ ಗುರುಸೂನು ರಥದಲಿ
ಬರುತ ಕಂಡನಲೈ ಯುಧಿಷ್ಠಿರ ರಾಜಮಂದಿರವ |
ಇರರು ಪಾಂಡವರಿಲ್ಲಿ ಮೇಣವ
ರಿರಲಿ ಬಳಿಕಾರೈವೆನಯ್ಯನ
ಹರಿಬ ಹೋಗಲಿ ಮುನ್ನ ಕೊಲುವೆನು ದ್ರುಪದನಂದನನ || ೨೬ ||
ಪದವಿಭಾಗ-ಅರ್ಥ: ಧರಣಿಪತಿ ಕೇಳ್, ರಾಜಬೀದಿಯೊಳು+ ಉರವಣಿಸಿ ಗುರುಸೂನು ರಥದಲಿ ಬರುತ ಕಂಡನಲೈ ಯುಧಿಷ್ಠಿರ ರಾಜಮಂದಿರವ, ಇರರು ಪಾಂಡವರಿಲ್ಲಿ ಮೇಣವರಿರಲಿ ಬಳಿಕ+ ಆರೈವೆನು, ಅಯ್ಯನ ಹರಿಬ(ಋಣ) ಹೋಗಲಿ ಮುನ್ನ ಕೊಲುವೆನು ದ್ರುಪದನಂದನನ.
ಅರ್ಥ:ಧರಣಿಪತಿಧೃತರಾಷ್ಟ್ರನೇ ಕೇಳು, ಗುರುಸೂನು ಅಶ್ವತ್ಥಾಮನು ರಾಜಬೀದಿಯಲಿ ಶೌರ್ಯದಿಂದ ರಥದಲ್ಲಿ ಬರುತ್ತಾ ಯುಧಿಷ್ಠಿರನ ರಾಜಮಂದಿರವನ್ನು ಕಂಡನು. 'ಪಾಂಡವರು ಇಲ್ಲಿ ಇರಲಾರರು. ಮೇಣ್/ ಅಥವಾ, ಇದ್ದರೂ ಅವರಿರಲಿ ಬಳಿಕ ಅವರನ್ನು ವಿಚಾರಿಸುವೆನು, ತನ್ನ ತಂದೆಯ ಋಣವು ತೀರಿ ಹೋಗಲಿ, ಆದ್ದರಿಂದ ನನ್ನ ತಂದೆಯನ್ನು ಕೊಂದ ದ್ರುಪದನಂದನ ದೃಷ್ದ್ಯಮ್ನನನ್ನು ಮೊದಲು ಕೊಲ್ಲುವೆನು.' ಎಂದುಕೊಂಡನು.
ಎಂದು ರಾಯನ ಗುಡಿಯ ಗೂಢದ
ಮಂದಿರದ ಬಲವಂಕವೀಧಿಯ
ಮುಂದೆ ಧೃಷ್ಟದ್ಯುಮ್ನನರಮನೆಗಾಗಿ ವಹಿಲದಿ |
ಬಂದು ಬಾಗಿಲ ಮುರಿದು ಕಾಹಿನ
ಮಂದಿಯನು ನಿಡುನಿದ್ರೆಗೈಸಿದ
ನಂದು ಮಿಣ್ಣನೆ ಹೊಕ್ಕನಾತನ ಸೆಜ್ಜೆಯೋವರಿಯ || ೨೭ ||
ಪದವಿಭಾಗ-ಅರ್ಥ: ಎಂದು ರಾಯನ ಗುಡಿಯ ಗೂಢದ ಮಂದಿರದ ಬಲವಂಕವೀಧಿಯ ಮುಂದೆ ಧೃಷ್ಟದ್ಯುಮ್ನನ+ ಅರಮನೆಗಾಗಿ ವಹಿಲದಿ(ಬೇಗ) ಬಂದು ಬಾಗಿಲ ಮುರಿದು ಕಾಹಿನ ಮಂದಿಯನು ನಿಡುನಿದ್ರೆಗೈಸಿದ(ಸಾಯಿಸಿದ) ನಂದು ಮಿಣ್ಣನೆ ಹೊಕ್ಕನಾತನ ಸೆಜ್ಜೆಯೋವರಿಯ
ಅರ್ಥ:ಅಶ್ವತ್ಥಾಮನು ಹಾಗೆ ಯೋಚಿಸಿ, ಧರ್ಮರಾಯನ ಬಿಡಾರದ ಗೂಢವಾದ ಮಂದಿರದ ಬಲಗಡೆಯ ಬೀದಿಯ ಮುಂದೆ ಧೃಷ್ಟದ್ಯುಮ್ನನ ಅರಮನೆಗೆ ಬೇಗ ಬಂದು ಬಾಗಿಲ ಮುರಿದು ಕಾವಲಿನ ಮಂದಿಯನ್ನು ದೀರ್ಘನಿದ್ರೆಗೆ ಕಳಿಸಿದನು. ನಂತರ ಮಿಣ್ಣನೆ/ಸದ್ದಿಲ್ಲದೆ ದೃಷ್ದ್ಯಮ್ನನ ಸೆಜ್ಜೆಮನೆಯನ್ನು ಹೊಕ್ಕನು.
ತೊಳತೊಳಗುವಿಕ್ಕೆಲದ ದೀಪದ
ಬೆಳಗಿನಲಿ ಮಣಿರಚಿಯು ಚಿತ್ರಾ
ವಳಿಯ ಮೇಲ್ಕಟ್ಟಿನಲಿ ಲಲಿತಸ್ತರಣ ಮಧ್ಯದಲಿ |
ಹೊಳೆಹೊಳೆವ ನವರತ್ನಭೂಷಣ
ಕಳಿತಕಾಯನ ಕಂಡು ರೋಷ
ಪ್ರಳಯ ಭೈರವರೂಪನೊದೆದನು ವಾಮಪಾದದಲಿ || ೨೮ ||
ಪದವಿಭಾಗ-ಅರ್ಥ: ತೊಳತೊಳಗುವ+ ಇಕ್ಕೆಲದ ದೀಪದ ಬೆಳಗಿನಲಿ ಮಣಿರಚಿಯು ಚಿತ್ರಾವಳಿಯ ಮೇಲ್ಕಟ್ಟಿನಲಿ ಲಲಿತಸ್ತರಣ ಮಧ್ಯದಲಿ ಹೊಳೆಹೊಳೆವ ನವರತ್ನಭೂಷಣಕಳಿತಕಾಯನ(ಚೆನ್ನಾಗಿ ಬೆಳೆದ, ಪ್ರೌಢವಾದ -ಕಾಯನ- ದೇಹದ) ಕಂಡು ರೋಷಪ್ರಳಯ ಭೈರವರೂಪನು+ ಒದೆದನು ವಾಮಪಾದದಲಿ(ಎಡಕಾಲಿನಿಂದ ಎಡಪಾದದಿಂದ).
ಅರ್ಥ:ಸಜ್ಜೆ ಮನೆಯಲ್ಲಿ,'ಪ್ರಕಾಶಿಸುವ+ ಎರಡು ದಿಕ್ಕಿನಲ್ಲೂ ಇರುವ ದೀಪದ ಬೆಳಕಿನಲ್ಲಿ ಮಣಿಗಳರಚನೆಯುಳ್ಳ ಚಿತ್ರಾವಳಿಯಿಂದ ಕೂಡಿದ ಮೇಲ್ಕಟ್ಟಿನಲ್ಲಿ ಲಲಿತ/ಸುಂದರ ಮೇಲು ಹಾಸಿನ ರತ್ನಗಂಬಳಿಯ ಮಧ್ಯದಲ್ಲಿ ಹೊಳೆಹೊಳೆವ ನವರತ್ನಭೂಷಣದಿಂದ ತುಂಬಿದ ಸುಂದರದೇಹದ ಪ್ರದ್ಯುಮ್ನನನ್ನು ಕಂಡು ರೋಷದಿಂದ ಪ್ರಳಯ ಭೈರವರೂಪನಾದ ಅಶ್ವತ್ಥಾಮನು ಎಡಕಾಲಿನಿಂದ ಅವನನ್ನು ಒದ್ದನು.
ಘಳಿಲನೆದ್ದನಿದಾರು ನಿದ್ರೆಯ
ನಳಿದವನ ತಿವಿಯೆನುತ ಮುಂದಣ
ವಿಳಯರುದ್ರನ ರಹಿಯ ರೌದ್ರದ ರಣಭಯಂಕರನ
ನಿಲವ ಕಂಡನಡಾಯುಧವ ತಾ
ಹಲಗೆಯಾವೆಡೆಯೆಂಬವನ ಮುಂ
ದಲೆಯ ಹಿಡಿದಡಗೆಡಹಿ ಕುಸುಕಿರಿದರಿಯನಸಬಡಿದ ೨೯
ಪದವಿಭಾಗ-ಅರ್ಥ: ಘಳಿಲನೆದ್ದನು+ ಇದಾರು ನಿದ್ರೆಯನು+ ಅಳಿದು+ ಅವನ ತಿವಿಯೆನುತ ಮುಂದಣ(ಎದುರು ) ವಿಳಯರುದ್ರನ ರಹಿಯ ರೌದ್ರದ ರಣಭಯಂಕರನ+ ನಿಲವ(ನಿಲುವು) ಕಂಡನು+ ಅಡಾಯುಧವ ತಾ ಹಲಗೆಯಾವೆಡೆ(ಗುರಾಣಿಎಲ್ಲಿದೆ)+ ಯೆಂಬವನ ಮುಂದಲೆಯ ಹಿಡಿದು+ ಅಡಗೆಡಹಿ ಕುಸುಕಿ+ ಇರಿದು+ ಅರಿಯನು+ ಅಸು+ ಬಡಿದ(ಪ್ರಾಣಹೋಗುವಂತೆ ಬಡಿದ)
ಅರ್ಥ:ದೃಷ್ಟದ್ಯುಮ್ನನು ದಡಕ್ಕನೆ ಎದ್ದನು. ಇದು ಯಾರು ನಿದ್ರೆಯನ್ನು ಕೆಡಿಸಿದ ಅವನನ್ನು ತಿವಿ, ಎನ್ನುತ್ತಾ ನೋಡಿದಾಗ ಎದುರು ಪ್ರಳಯ ರುದ್ರನ ರೂಪದ ರೌದ್ರ ತರದ ರಣಭಯಂಕರನ ನಿಲುವನ್ನು ಕಂಡನು. ಅಡಾಯುಧವ/ಕತ್ತಿಯನ್ನು ತಾ ಗುರಾಣಿಎಲ್ಲಿದೆ ಎನ್ನುತ್ತಿದ್ದವನ ಮುಂದಲೆಯನ್ನು ಅಶ್ವತ್ಥಾಮನು ಹಿಡಿದು ಅಡ್ಡ ಕೆಡಹಿ ಕುಸುಕಿ ಇರಿದು ಶತ್ರುವನ್ನು ಸದೆ ಬಡಿದನು.
ಉಗಿದು ಬಿಲ್ಲಿನ ತಿರುವ ಕೊರಳಲಿ
ಬಿಗಿಯೆ ಭಯದಲಿ ದ್ರುಪದಸುತ ಬೆರ
ಳುಗಳ ಬಾಯಲಿ ಬೇಡಿಕೊಂಡನು ದ್ರೋಣನಂದನನ |
ಉಗಿದಡಾಯ್ದದಲೆನ್ನ ಶಿರವನು
ತೆಗೆದು ಕಳೆಯೈ ಶಸ್ತ್ರಘಾತದಿ
ನುಗುಳಿಸಸುವನು ತನಗೆ ವೀರಸ್ವರ್ಗವಹುದೆಂದ || ೩೦ ||
ಪದವಿಭಾಗ-ಅರ್ಥ: ಉಗಿದು ಬಿಲ್ಲಿನ ತಿರುವ ಕೊರಳಲಿ ಬಿಗಿಯೆ ಭಯದಲಿ ದ್ರುಪದಸುತ ಬೆರಳುಗಳ ಬಾಯಲಿ ಬೇಡಿಕೊಂಡನು ದ್ರೋಣನಂದನನ, ಉಗಿದ+ ಅಡಾಯ್ದದಲಿ ಎನ್ನ ಶಿರವನು ತೆಗೆದು ಕಳೆಯೈ; ಶಸ್ತ್ರಘಾತದಿ+ ನುಗುಳಿಸಸುವನು ತನಗೆ ವೀರಸ್ವರ್ಗವು+ ಅಹುದು+ ಎಂದ
ಅರ್ಥ:ಅಶ್ವತ್ಥಾಮನು ಬಿಲ್ಲಿನ ನಾಣಿನ ತಿರುವನ್ನು ಕೊರಳಲ್ಲಿ ಹಾಕಿ ಉಗಿದು/ಎಳೆದು ಬಿಗಿಯಲು, ದ್ರುಪದಸುತ ದೃಷ್ಟದ್ಯುಮ್ನನು ಭಯದಿಂದ ಬೆರಳುಗಳನ್ನು ಬಾಯಲ್ಲಿ ಇಟ್ಟುಕೊಂಡು ದ್ರೋಣನಂದನಾದ ಅಶ್ವತ್ಥಾಮನನ್ನು ಬೇಡಿಕೊಂಡನು. 'ಒರೆಯಿಂದ ಉಗಿದ ಕತ್ತಿಯಿಂದ ನನ್ನ ಶಿರವನ್ನು ತೆಗೆದು ಈ ಜೀವವನ್ನು ಕಳೆಯಪ್ಪಾ! ಶಸ್ತ್ರಘಾತದಿಂದ ಸಾಯುವವನು ವೀರಸ್ವರ್ಗವನ್ನು ಸೇರುವನು, ತನಗೆ ಅದು ಒಪ್ಪಿಗೆ, ಎಂದ.
ಅಕಟ ಗುರುಹತ್ಯಾಮಹಾಪಾ
ತಕಿಯೆ ನಿನಗೇ ಸ್ವರ್ಗ ದೇವ
ಪ್ರಕರ ನಿನ್ನನು ಹೊಗಿಸಿದಡೆ ಸುಡುವೆನು ಸುರಾಲಯವ |
ಕ್ರಕಚ ಕುಂಭೀಪಾಕಮುಖ ನಾ
ರಕದೊಳರಮನೆ ನಿನಗೆ ಕೌಕ್ಷೇ
ಯಕದ ಹತಿ ಗಡ ತನಗೆನುತ ಕಟ್ಟಿದನು ತಿರುವಿನಲಿ || ೩೧ ||
ಪದವಿಭಾಗ-ಅರ್ಥ:ಅಕಟ ಗುರುಹತ್ಯಾ ಮಹಾಪಾತಕಿಯೆ, ನಿನಗೇ ಸ್ವರ್ಗ ದೇವಪ್ರಕರ ನಿನ್ನನು ಹೊಗಿಸಿದಡೆ ಸುಡುವೆನು ಸುರಾಲಯವ, ಕ್ರಕಚ ಕುಂಭೀಪಾಕಮುಖ ನಾರಕದೊಳು (ನರಕದಲ್ಲಿರುವ ) + ಅರಮನೆ ನಿನಗೆ ಕೌಕ್ಷೇಯಕದ(ಕತ್ತಿ, ಖಡ್ಗ) ಹತಿ ಗಡ ತನಗೆ+ ಎನುತ ಕಟ್ಟಿದನು ತಿರುವಿನಲಿ.
ಅರ್ಥ:ಅದಕ್ಕೆ ಅಶ್ವತ್ಥಾಮನು,'ಅಕಟ ಗುರುಹತ್ಯಾ ಮಹಾಪಾತಕಿಯೆ, ನೀನು ಗುರು ದ್ರೋಣರನ್ನು ಕೊಂದವನು. ನಿನಗೇ ಸ್ವರ್ಗವೇ? ದೇವಪ್ರಕರ/ದೇವತೆಗಳು ನಿನ್ನನು ಸ್ವರ್ಗಕ್ಕೆ ಹೊಗಿಸಿದರೆ ಇಂದ್ರನ ಸುರಲೋಕವನ್ನೇ ಸುಡುವೆನು,' ಎಂದನು. ನಿನಗೆ ನರಕದಲ್ಲಿರುವ ಕ್ರಕಚ ಕುಂಭೀಪಾಕಮುಖದಲ್ಲಿ ಅರಮನೆ, ಎಂದು ಹೇಳಿ, ಖಡ್ಗದ ಹತಿ/ಸಾವು ಗಡ ತನಗೆ,' ಎನ್ನುತ್ತಾ ಬಿಲ್ಲಿನ ದಾರದ ತಿರುವಿನಲ್ಲಿ ಅವನನ್ನು ಕಟ್ಟಿದನು.
ಉರಲ ಹತ್ತಿಸಿ ಸೆಳೆಯೆ ಗೋಣಲಿ
ಗುರುಗುರಿಸಲಸು ಜಾರಿದುದು ಬೊ
ಬ್ಬಿರಿದು ಹೊಕ್ಕನು ಕದವನೊದೆದು ಶಿಖಂಡಿಯರಮನೆಯ ||
ತರಿದನಾತನನುತ್ತಮೌಂಜಸ
ನರಸಿ ಹೊಯ್ದನು ಹೊಕ್ಕು ಬಾಗಿಲ
ಮುರಿದು ಮೈಯರಿಹಿಸಿ ಯುಧಾಮನ್ಯುವ ವಿದಾರಿಸಿದ || ೩೨ ||
ಪದವಿಭಾಗ-ಅರ್ಥ:ಉರಲ ಹತ್ತಿಸಿ ಸೆಳೆಯೆ ಗೋಣಲಿ(ಕುತ್ತಿಗೆ) ಗುರುಗುರಿಸಲಸು ಜಾರಿದುದು ಬೊಬ್ಬಿರಿದು ಹೊಕ್ಕನು ಕದವನೊದೆದು ಶಿಖಂಡಿಯ+ ಅರಮನೆಯ ತರಿದನು(ಕತ್ತರಿಸಿದನು)+ ಆತನನು+ ಉತ್ತಮೌಂಜಸನು+ ಅರಸಿ ಹೊಯ್ದನು ಹೊಕ್ಕು(ನುಗ್ಗಿ) ಬಾಗಿಲ ಮುರಿದು ಮೈಯ+ ಅರಿಹಿಸಿ ಯುಧಾಮನ್ಯುವ ವಿದಾರಿಸಿದ
ಅರ್ಥ:ಆಶ್ವತ್ಥಾಮನು ಬಿಲ್ಲಿನ ದಾರದೀದ ದೃಷ್ಟದ್ಯಮ್ನನ ಕುತ್ತಿಗೆಗೆ ಉರಲನ್ನು ಹತ್ತಿಸಿ/ ಹಾಕಿ ಸೆಳೆಯಲು ಉಸಿರುಕಟ್ಟಿ ಕುತ್ತಿಗೆಯಲ್ಲಿ ಗುರುಗುರ ಸದ್ದು ಹೊರಟು ದೃಷ್ಟದ್ಯಮ್ನನು ಮೃತನಾದನು. ಆಗ ಆಶ್ವತ್ಥಾಮನು ಬೊಬ್ಬಿರಿದು ಕದವನ್ನು ಒದೆದು ಶಿಖಂಡಿಯ ಅರಮನೆಯನ್ನು ಹೊಕ್ಕನು. ಆತನನ್ನು ತರಿದನು. ಉತ್ತಮೌಂಜಸನ್ನು ಹುಡುಕಿ ಅವನನ್ನು ಹೊಡೆದು ಕೊಂದನು. ನಂತರ ಯುಧಾಮನ್ಯುವಿನ ಮನೆಗೆ ಬಾಗಿಲ ಮುರಿದು ನುಗ್ಗಿ ಅವನ ಮೈಯನ್ನು ಅರಿದು/ಕತ್ತರಿಸಿ ಕೊಂದ.
ಗಜಬಜವಿದೇನೆನುತ ನಿದ್ರೆಯ
ಮಜಡರೊಳಗೊಳಗರಿದರೀತನ
ಭುಜಬಲಕೆ ಮಲೆತವರ ಕಾಣೆನು ಸೃಂಜಯಾದಿಗಳ
ರಜನಿಯಲಿ ರೌಕುಳವ ಮಾಡಿದ
ನಜಿತಸಾಹಸನಿತ್ತ ದ್ರುಪದಾ
ತ್ಮಜೆಯ ಭವನದ ಹೊರೆಗೆ ಬಂದನು ಪಾಂಡವರನರಸಿ ೩೩
ಪದವಿಭಾಗ-ಅರ್ಥ: ಗಜಬಜವು+ ಇದೇನು+ ಎನುತ ನಿದ್ರೆಯ ಮಜಡರು+ ಒಳಗೊಳಗೆ+ ಅರಿದರು(ತಿಳಿದರು)+ ಈತನ ಭುಜಬಲಕೆ ಮಲೆತವರ (ಪರಾಕ್ರಮಕ್ಕೆ ಎದುರಾದವರ/ ಹೋರಾಡಿದವರ) ಕಾಣೆನು ಸೃಂಜಯಾದಿಗಳ ರಜನಿಯಲಿ (ಕತ್ತಲೆಯಲ್ಲಿ) ರೌಕುಳವ(ಕತ್ತಿಯ) ಮಾಡಿದನು+ ಅಜಿತಸು+ ಆಹಸನು+ ಇತ್ತ ದ್ರುಪದಾತ್ಮಜೆಯ ಭವನದ ಹೊರೆಗೆ ಬಂದನು ಪಾಂಡವರನು+ ಅರಸಿ
ಅರ್ಥ:ಸೃಂಜಯ ಮೊದಲಾದರು ರಾತ್ರಿಯಲ್ಲಿ ಇದೇನು ಗಜಬಜ ಗದ್ದಲ ಎಂದು ನಿದ್ರೆಯ ಮಜಡದಲ್ಲಿ/ ಮಂಪರಿನೊಳಗ ಒಳಗೆ ಶತ್ರುವಿನ ಧಾಳಿಯನ್ನು ತಿಳಿದರು. ಆದರೆ (ಈತನ) ಈ ಅಶ್ವತ್ಥಾಮನ ಪರಾಕ್ರಮಕ್ಕೆ ಎದುರಾಗಿ ಜಯಿಸಿದವರನ್ನು ಕಾಣೆನು, ಜಯಿಸಿದವರಿಲ್ಲ. ಸೃಂಜಯಾದಿಗಳನ್ನು ಕತ್ತಲೆಯಲ್ಲಿ ಖಡ್ಗದಿಂದ ಸಂಹಾರ ಮಾಡಿದನು. ಅಜಿತಸಾದ- ಸೋಲಿಲ್ಲದ ಸಾಹಸನಾದ ಅವನು ಇತ್ತ ದ್ರುಪದಾತ್ಮಜೆಯಾದ ದ್ರೌಪದಿಯ ಭವನದ ದಿಕ್ಕಿಗೆ ಪಾಂಡವರನ್ನು ಹುಡುಕುತ್ತಾ ಬಂದನು.
ಇದು ಯುಧಿಷ್ಠಿರ ರಾಜಗೃಹವೆಂ
ದೊದೆದು ಕದವನು ಕಾಹಿನವರನು
ಸದೆದು ಹೊಕ್ಕನು ಸಜ್ಜೆಯಲಿ ಧರ್ಮಜನ ನಂದನನ |
ಒದೆದಡೆದ್ದನು ಸುರಗಿಯಲಿ ಕಾ
ದಿದನು ಖಡುಗವ ಜಡಿದು ನಿಮಿಷಾ
ರ್ಧದಲಿ ತಲೆಯನು ನೆಹಗಿ ಪ್ರತಿವಿಂಧ್ಯಕನನಸುಗಳೆದ || ೩೪ ||
ಪದವಿಭಾಗ-ಅರ್ಥ: ಇದು ಯುಧಿಷ್ಠಿರ ರಾಜಗೃಹವೆಂದು+ ಒದೆದು ಕದವನು, ಕಾಹಿನವರನು (ಕಾವಲಿನವರನ್ನು) ಸದೆದು(ಬಡಿದು ಕೊಂದು), ಹೊಕ್ಕನು ಸಜ್ಜೆಯಲಿ ಧರ್ಮಜನ ನಂದನನ ಒದೆದಡೆ+ ಎದ್ದನು ಸುರಗಿಯಲಿ(ಕತ್ತಿಯಿಂದ) ಕಾದಿದನು, ಖಡುಗವ ಜಡಿದು ನಿಮಿಷಾರ್ಧದಲಿ ತಲೆಯನು ನೆಹಗಿ ಪ್ರತಿವಿಂಧ್ಯಕನನು+ ಅಸುಗಳೆದ(ಅಸು= ಪ್ರಾಣ)
ಅರ್ಥ:ಅಶ್ವತ್ಥಾಮನು, ಇದು ಯುಧಿಷ್ಠಿರ ರಾಜಗೃಹವೆಂದು, ಬಾಗಿಲನ್ನು ಒದೆದು ಕದವನ್ನು ಮರಿದು, ಕಾವಲಿನವರನ್ನು ಬಡಿದು ಕೊಂದು, ಸಜ್ಜೆಯಮನೆಯನ್ನು -ಮಲಗುವ ಮನೆಯನ್ನು ಹೊಕ್ಕನು. ಅಲ್ಲಿ ಧರ್ಮಜನ ಮಗನನ್ನು ಒದ್ದಾಗ ಅವನು ಎದ್ದು ಕತ್ತಿಯಿಂದ ಹೋರಾಡಿದನು. ಆದರೆ ಅಶ್ವತ್ಥಾಮನು ಅವನನ್ನು ಖಡ್ಗದಿಂದ ಹೊಡೆದು ನಿಮಿಷಾರ್ಧದಲ್ಲಿ ಅವನ ತಲೆಯನ್ನು ಹಾರಿಸಿ, ಪ್ರತಿವಿಂಧ್ಯಕನ ಪ್ರಾಣವನ್ನು ತೆಗೆದನು.
ಜನಪ ಕೇಳೈ ಬಳಿಕ ಸುತಸೋ
ಮನನು ಶ್ರುತಕೀರ್ತಿಯ ಶತಾನೀ
ಕನನು ಶ್ರುವರ್ಮನನು ತರಿದನು ದ್ರೌಪದೀಸುತರ |
ಜನಪರೈವರ ತಲೆಗಳೆಂದೇ
ಕರನರಥದೊಳಗಿರಿಸಿ ಹೊಕ್ಕನು
ಮನೆಮನೆಗಳಲಿ ಸವರಿದನು ಸೋಮಪ್ರಬದ್ಧಕರ || ೩೫ ||
ಪದವಿಭಾಗ-ಅರ್ಥ:ಜನಪ ಕೇಳೈ ಬಳಿಕ ಸುತಸೋಮನನು ಶ್ರುತಕೀರ್ತಿಯ ಶತಾನೀಕನನು ಶ್ರುವರ್ಮನನು ತರಿದನು (ಕತ್ತರಿಸಿದನು), ದ್ರೌಪದೀ ಸುತರ ಜನಪರ(ಪಾಂಡವರ)+ ಐವರ ತಲೆಗಳು+ ಎಂದು+ (ಕರನ-ಕೃತಿ?) ರಥದೊಳಗಿರಿಸಿ ಹೊಕ್ಕನು ಮನೆಮನೆಗಳಲಿ ಸವರಿದನು ಸೋಮಪ್ರಬದ್ಧಕರ.
ಅರ್ಥ: ಸಂಜಯನು ಜನಪನೇ ಕೇಳು,'ಬಳಿಕ ದ್ರೌಪದೀ ಸುತರಾದ ಸುತಸೋಮನನ್ನೂ, ಶ್ರುತಕೀರ್ತಿಯನ್ನೂ, ಶತಾನೀಕನನ್ನೂ, ಶ್ರುವರ್ಮನನ್ನೂ ಕತ್ತರಿಸಿದನು. ದ್ರೌಪದೀ ಸುತರನ್ನು ಪಾಂಡವರು ಐವರ ತಲೆಗಳು ಎಂದು ಅವನ್ನು ರಥದೊಳಗಿಟ್ಟು ಅಶ್ವತ್ಥಾನು ಮನೆಮನೆಗಳನ್ನು ಹೊಕ್ಕನು. ಅಲ್ಲಿ ಸೋಮಕನನ್ನೂ ಇತರ ಪ್ರಬದ್ಧಕರನ್ನೂ ಕೊಂದನು.
ಸೀಳ ಬಡಿದನು ಸಮರಥರ ಪಾಂ
ಚಾಳ ರಾವುತರನು ಮಹಾರಥ
ಜಾಲವನು ಜೋಧರನು ಭಾರಿಯ ಪಾರಕವ್ರಜವ |
ಸಾಲ ಹೊಯ್ದನು ಹುಯ್ಯಲಿಗೆ ಹೊಗು
ವಾಳ ತರಿದನು ಖಡ್ಗಮುಷ್ಟಿಯ
ಕಾಲಭೈರವ ಬೀದಿವರಿದನು ಕೇರಿಕೇರಿಯಲಿ || ೩೬ ||
ಪದವಿಭಾಗ-ಅರ್ಥ:ಸೀಳ ಬಡಿದನು ಸಮರಥರ ಪಾಂಚಾಳ ರಾವುತರನು ಮಹಾರಥ ಜಾಲವನು ಜೋಧರನು ಭಾರಿಯ ಪಾರಕವ್ರಜವ (ಪಠಕರ ಸಮೂಹ?) ಸಾಲ ಹೊಯ್ದನು ಹುಯ್ಯಲಿಗೆ(ಕೂಗಿಗೆ) ಹೊಗುವ+ ಆಳ ತರಿದನು ಖಡ್ಗಮುಷ್ಟಿಯ ಕಾಲಭೈರವ ಬೀದಿವರಿದನು ಕೇರಿಕೇರಿಯಲಿ
ಅರ್ಥ:ಅಶ್ವತ್ಥಾಮನು, ಸೀಳ ಬಡಿದನು ಸಮರಥರನ್ನೂ, ಪಾಂಚಲರನ್ನೂ, ರಾವುತರನ್ನೂ, ಮಹಾರಥ ಜಾಲವನ್ನೂ, ಯೋಧರನ್ನೂ, ಭಾರಿಯ ಪಾರಕವ್ರಜವ- ಪರಿವಾರದ ಸಮೂಹವನ್ನೂ, ಸಾಲಾಗಿ ಬಂದವರನ್ನು ಹೊಡೆದುಕೊಂದನು. ಮುಷ್ಠಿಯಲ್ಲಿ ಹಿಡಿದ ಖಡ್ಗದಿಂದ ಕಾವಲಿನ ಕೂಗುವ ಜನರನ್ನೂ ತರಿದನು/ಕತ್ತರಿಸಿದನು. ಕಾಲಭೈರವನಾದ ಅಶ್ವತ್ಥಾಮನು ಕೇರಿಕೇರಿಗಳಲ್ಲಿ ಬೀದಿಗಳಲ್ಲಿ ಅರಿದನು/ ಕಂಜನರನ್ನ ಕತ್ತರಿಸಿದನು.
ಎಲೆಲೆ ಕವಿ ಕಳ್ಳೇರುಕಾರನ
ತಲೆಯ ಹೊಯ್‌ಹೊಯ್ಯೆನಬುತ ನಿದ್ರಾ
ಕುಳರು ಗರ್ಜಿಸುತಾಗುಳಿಸಿ ತೂಕಡಿಸಿದರು ಮರಳಿ |
ಕೆಲಕೆಲಬರರೆನಿದ್ರೆಗಳ ಕಳ
ವಳಿಗರೊರೆಗಳ ಕೊಂಡಡಾಯ್ದವ
ನೆಲಕೆ ಬಿಸುಟರು ಬತ್ತಳಿಕೆಯಲಿ ಹೂಡಿದರು ಧನುವ || ೩೭ ||
ಪದವಿಭಾಗ-ಅರ್ಥ: 'ಎಲೆಲೆ ಕವಿ (ಆಕ್ರಮಿಸು) ಕಳ್ಳ+ ಏರುಕಾರನ ತಲೆಯ ಹೊಯ್‌- ಹೊಯ್ಯೆನುತ ನಿದ್ರಾಕುಳರು (ನಿದ್ರೆಯಿಂದ ಆವರಿಸಿದವರು ) ಗರ್ಜಿಸುತ+ ಆಗುಳಿಸಿ ತೂಕಡಿಸಿದರು ಮರಳಿ ಕೆಲಕೆಲಬರು+ ಅರೆನಿದ್ರೆಗಳ ಕಳವಳಿಗರು(ಚಿಂತಿತರು, ಹೆದರಿದವರು)+ ಒರೆಗಳ ಕೊಂಡಡೆ+ ಆಯ್ದವ ನೆಲಕೆ ಬಿಸುಟರು ಬತ್ತಳಿಕೆಯಲಿ ಹೂಡಿದರು ಧನುವ
ಅರ್ಥ: ಆಶ್ವತ್ಥಾಮನನ್ನು ಕಂಡು, ಜನರು,'ಎಲೆಲೆ, ಹಿಡಿದುಕೊಳ್ಳಿ ಅವನನ್ನು, ಕದ್ದು ಬಂದು ಅಕ್ರಮಿಸುವವನನ್ನು, ತಲೆಯ ಹೊಡೆ, ಕತ್ತರಿಸು,- ಹೊಯ್ಯ್- ಹೊಡೆ ಎನ್ನತ್ತಾ ನಿದ್ರೆಯಿಂದ ಆವರಿಸಿದವರು ಗರ್ಜಿಸುತ್ತಾ ಎದ್ದರು; ಮತ್ತೆ ಆಕಳಿಸಿ ತೂಕಡಿಸಿದರು. ಮರಳಿ- ಪುನಃ ಕೆಲ-ಕೆಲವರು ಅರೆನಿದ್ರೆಗಳಲ್ಲಿ ಹೆದರಿದವರು, ಒರೆಗಳಿಂದ ಕತ್ತಿಗಳನ್ನು ತೆಗದು ನಿಂತರೆ, ಮತ್ತೆ ಕೆಲವರು ಆಯುಧವನ್ನು ನೆಲಕ್ಕೆ ಬಿಸುಟರು. ನಿದ್ದೆಯಲ್ಲಿ ಧನುವನ್ನು ಬತ್ತಳಿಕೆಯಲ್ಲಿ ಹೂಡಿದರು. ಬತ್ತಳಿಕೆಯಿಂದ ಬಾಣವನ್ನು ತೆಗೆದು ಧನುಸ್ಸಿನಲ್ಲಿ ಹೂಡುವ ಬದಲು, ನಿದ್ದೆಗಣ್ಣಿನಲ್ಲಿ ಧನುಸ್ಸನ್ನು ಬತ್ತಳಿಕೆಯಲ್ಲಿ ಇಟ್ಟರು.
ಗಜವ ಹಲ್ಲಣಿಸಿದರು ವಾಜಿ
ವ್ರಜಕೆ ರೆಂಚೆಯ ಹಾಯ್ಕಿದರು ಗಜ
ಬಜವಿದೇನೇನೆನುತ ಗಾಲಿಗೆ ಬಿಗಿದು ಕುದುರೆಗಳ |
ರಜನಿ ಬಂದುದೆ ಹಗಲು ಹೋಯಿತೆ
ಗಜಬಜದೊಳಕಟೆನುತ ಸುಭಟ
ವ್ರಜಸುವಿಹ್ವಳಕರಣರಿರಿದಾಡಿದರು ತಮ್ಮೊಳಗೆ || ೩೮ ||
ಪದವಿಭಾಗ-ಅರ್ಥ:ಗಜವ ಹಲ್ಲಣಿಸಿದರು ವಾಜಿ(ಕುದುರೆ) ವ್ರಜಕೆ(ಸಮೂಹಕ್ಕೆ) ರೆಂಚೆಯ(ಆನೆಯ ಬೆನ್ನುಹಾಸು) ಹಾಯ್ಕಿದರು ಗಜಬಜವಿದೇನು+ ಏನು+ ಎನುತ ಗಾಲಿಗೆ ಬಿಗಿದು ಕುದುರೆಗಳ ರಜನಿ(ಕತ್ತಲೆ) ಬಂದುದೆ ಹಗಲು ಹೋಯಿತೆ ಗಜಬಜದೊಳು+ ಅಕಟ+ ಎನುತ ಸುಭಟ ವ್ರಜ ಸುವಿಹ್ವಳಕರಣರು (ಭಯ ಗಾಬರಿ ಮನಸ್ಸಿನವರು)+ ಇರಿದಾಡಿದರು ತಮ್ಮೊಳಗೆ
ಅರ್ಥ: ನಿದ್ದೆಗಣ್ಣಿನಲ್ಲಿ ಆನೆಗೆ ಹಲ್ಲಣ- ಜೀನನ್ನು ಹಾಕಿದರು.ಸುದರು ಕುದುರೆಗಳ ಸಮೂಹಕ್ಕೆ ಆನೆಯ ರೆಂಚೆಯನ್ನು ಹಾಕಿದರು. ಗಜಬಜವಿದೇನ ಏನು? ಎನ್ನುತ್ತಾ ಗಡಿಬಿಡಿ ಮತ್ತು ನಿದ್ದೆಯಲ್ಲಿ- ಚರ್ಮದನೊಗದ ಬದಲಿಗೆ ಗಾಲಿಗೆ ಕುದುರೆಗಳನ್ನು ಬಿಗಿದರು. ಹಗಲು ಹೋಯಿತೆ ರಾತ್ರಿ ಬಂದಿತೆ, ಎಂದು ಗಜಬಜದಲ್ಲಿ ಅಕಟ! ಎನ್ನುತ್ತಾ ಸುಭಟರಸಮೂಹ ಭಯ ಗಾಬರಿ ಮನಸ್ಸಿನವರಾಗಿ ತಮ್ಮೊಳಗೆ ಇರಿದಾಡಿದರು/ ಹೊಡದಾಡಿದರು.
ಲಾಯದಲಿ ಹೊಕ್ಕಿರಿದು ಕುದುರೆಯ
ಬೀಯ ಮಾಡಿದನಂತಕಂಗೆಯ
ಡಾಯುಧದ ಧಾರೆಯಲಿ ಕೊಟ್ಟನು ಕುಂಜವ್ರಜವ |
ರಾಯದಳ ಧರೆಯಂತೆ ನವಖಂ
ಡಾಯಮಾನವಿದಾಯ್ತು ಪಾಂಡವ
ರಾಯ ಕಟಕವ ಕೊಂದನಶ್ವತ್ಥಾಮ ಬೇಸರದೆ || ೩೯ ||
ಪದವಿಭಾಗ-ಅರ್ಥ: ಲಾಯದಲಿ ಹೊಕ್ಕು+ ಇರಿದು ಕುದುರೆಯ ಬೀಯ(ಇಲ್ಲದಂತೆ) ಮಾಡಿದನು+ ಅಂತಕಂಗೆಯಡಾಯುಧದ ಧಾರೆಯಲಿ ಕೊಟ್ಟನು ಕುಂಜವ್ರಜವ ರಾಯದಳ ಧರೆಯಂತೆ ನವಖಂಡಾಯ ಮಾನವು+ ಇದು ಆಯ್ತು ಪಾಂಡವರಾಯ ಕಟಕವ ಕೊಂದನು+ ಅಶ್ವತ್ಥಾಮ ಬೇಸರದೆ.
ಅರ್ಥ:ಅಶ್ವತ್ಥಾಮನು, ಲಾಯದಲಲಿ ಹೊಕ್ಕು ಕುದುರೆಗಳನ್ನು ಇರಿದು ಸರ್ವನಾಶ ಮಾಡಿದನು. ಅಂತಕನಾದ ಯಮನಿಗೆ ಅಡಾಯುಧದ/ಕತ್ತಿಯ ಧಾರೆಯಲ್ಲಿ ಕುಂಜವ್ರಜವ/ಆನೆಗಳ ಸಮೂಹವನ್ನು ಕೊಟ್ಟನು. ಆನೆಗಳನ್ನೆಲ್ಲಾ ಸಾಯಿಸಿದನು. ಧರ್ಮರಾಯನ ದಳವು ಭೂಮಿಯಂತೆ ನವಖಂಡಾಯ/ ಒಂಭತ್ತು ತುಂಡಾಯಿತು. ಚೂರುಚೂರಾಯಿತು. ಇದು ಮಾನವು/ಗಮನಿಸಬೇಕಾದ ವಿಚಾರವು. ಆಯ್ತು ಅಶ್ವತ್ಥಾಮನು ಬೇಸರವಿಲ್ಲದೆ ಪಾಂಡವರಾಯನ ಸೇನೆಯನ್ನು ಕೊಂದನು.
ದೊರೆಗಳೇನಾದರೊ ಯುಧಿಷ್ಠಿರ
ನರ ವೃಕೋದರ ನಕುಲ ಸಹದೇ
ವರು ಮುರಾಂತಕ ಸಾತ್ಯಕಿಗಳೊಳಗಿಹರೆ ರೌರವಕೆ |
ಹರನ ಖತಿಯೋ ಲಯಕೃತಾಂತನ
ವಿರಸಕೃತಿಯೋ ಸರ್ವದಳಸಂ
ಹರಣಕೇನು ನಿಮಿತ್ತವೆಂದುದು ಭೂಸುರವ್ರಾತ || ೪೦ ||
ಪದವಿಭಾಗ-ಅರ್ಥ: ದೊರೆಗಳೇನಾದರೊ ಯುಧಿಷ್ಠಿರ ನರ ವೃಕೋದರ(ಅರ್ಜುನ, ಭೀಮ,) ನಕುಲ ಸಹದೇವರು, ಮುರಾಂತಕ(ಕೃಷ್ಣ) ಸಾತ್ಯಕಿಗಳು+ ಒಳಗೆ+ ಇಹರೆ? ರೌರವಕೆ(ನರಕದ ಭೀಕರತೆಗೆ) ಹರನ ಖತಿಯೋ(ಶಿವನ ಕೋಪವೋ) ಲಯಕೃತಾಂತನ ವಿರಸ-ಕೃತಿಯೋ ಸರ್ವದಳ ಸಂಹರಣಕೆ+ ಏನು ನಿಮಿತ್ತವು+ ಎಂದುದು ಭೂಸುರವ್ರಾತ(ವಿಪ್ರರ ಸಮೂಹ).
ಅರ್ಥ:ಅಲ್ಲಿದ್ದ ವಿಪ್ರರ ಸಮೂಹವು,'ಯುಧಿಷ್ಠಿರ, ಅರ್ಜುನ, ಭೀಮ, ನಕುಲ ಸಹದೇವರು ಈ ದೊರೆಗಳು ಏನಾದರೊ, ಕೃಷ್ಣ ಸಾತ್ಯಕಿಗಳು ಸೇನಾ ಬೀಡಿನಲ್ಲಿ ಇರುವರೇ? ಈ ಭೀಕರತೆಗೆ ಕಾರಣ ಶಿವನ ಕೋಪವೋ? ಲಯಕೃತಾಂತನಾದ ರುದ್ರನ ವಿರಸವಾದ ಕೄರ-ಕೃತಿಯೋ ಸರ್ವದಳಗಳನ್ನೂ ಸಂಹಾರ ಮಾಡಲು ಏನು ಕಾರಣ ಎಂದಿತು
ಉಳಿದುದೇಳಕ್ಷೋಹಿಣೀದಳ
ದೊಳಗೆ ನಾರೀನಿಕರ ವಿಪ್ರಾ
ವಳಿ ಕುಶೀಲವ ಸೂತ ಮಾಗಧ ವಂದಿಸಂದೋಹ |
ಸುಳಿವ ಕಾಣೆನು ಕೈದುವಿಡಿದರ
ನುಳಿದು ಜೀವಿಸಿದಾನೆ ಕುದುರೆಗ
ಳೊಳಗೆ ಜವಿಯಿಲ್ಲೇನನೆಂಬೆನು ಜನಪ ಕೇಳೆಂದ || ೪೧ ||
ಪದವಿಭಾಗ-ಅರ್ಥ:ಉಳಿದುದು+ ಏಳಕ್ಷೋಹಿಣೀ ದಳದೊಳಗೆ ನಾರೀನಿಕರ (ಮಹಿಳೆಯರ ಸಮೂಹ), ವಿಪ್ರಾವಳಿ, ಕುಶೀಲವ(ಕೆಳವರ್ಗದ) ಸೂತ ಮಾಗಧ ವಂದಿಸಂದೋಹ, ಸುಳಿವ ಕಾಣೆನು ಕೈದುವಿಡಿದರನು (ಆಯುಧ ಹಿಇದವರು)+ ಉಳಿದು ಜೀವಿಸಿದ+ ಆನೆ ಕುದುರೆಗಳೊಳಗೆ ಜವಿಯಿಲ್ಲ (ಜವಿ- ಜವ= ವೇಗ ಚೇತನ)+ ಏನನೆಂಬೆನು ಜನಪ ಕೇಳೆಂದ
ಅರ್ಥ:ಪಾಂಡವರ ಏಳಕ್ಷೋಹಿಣೀ ದಳದಲ್ಲಿ ಉಳಿದವರು, ಮಹಿಳೆಯರ ಸಮೂಹ, ವಿಪ್ರರ ಸಮೂಹ, ಕೆಳವರ್ಗದ ಸೂತರು, ವಂದಿಮಾಗಧರ ಸಮೂಹ. ಅಲ್ಲಿ ಆಯುಧ ಹಿಇದವರ ಸುಳಿವನ್ನು ಕಾಣೆನು- ನಾನು ಕಾಣಲಿಲ್ಲ. ಉಳಿದು ಜೀವಿಸಿದ ಆನೆ ಕುದುರೆಗಳಲ್ಲಿ ಚುರುಕು ಚೇತನವಿಲ್ಲ ಏನನ್ನು ಹೇಳಲಿ? ರಾಜನೇ ಕೇಳು, ಎಂದ ಸಂಜಯ.
ಕೂಡೆ ಕಟ್ಟಿತು ಕಿಚ್ಚು ತೆರಪಿನ
ಲೋಡುವಡೆ ಗುರುಸುತನ ಶರ ಮಿ
ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ |
ಕೂಡೆ ಮುಮ್ಮಳಿಯೋದುದೀ ಶರ
ಝಾಡಿಯಲಿ ಚತುರಂಗಬಲವ
ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ || ೪೨ ||
ಪದವಿಭಾಗ-ಅರ್ಥ: ಕೂಡೆ ಕಟ್ಟಿತು ಕಿಚ್ಚು ತೆರಪಿನಲಿ (ಬಿಡುವು ಇದ್ದಲ್ಲಿ, ಎಲ್ಲಾಕಡೆ)+ ಓಡುವಡೆ ಗುರುಸುತನ ಶರ, ಮಿಕ್ಕಿ+ ಓಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರ+ ಎಸುಗೆ, ಕೂಡೆ ಮುಮ್ಮಳಿಯೋದುದು(ಈ ಶರಗಳ ಹೊಡೆತದಲ್ಲಿ ಮೂರು ಪಟ್ಟು ನಷ್ಟವಾಯಿತು)+ ಈ ಶರಝಾಡಿಯಲಿ ಚತುರಂಗಬಲವು+ ಅಕ್ಕಾಡಿತು+ ಏನ+ ಎಂಬೆನು ಯುಧಿಷ್ಠಿರನೃಪನ ಪರಿವಾರ
ಅರ್ಥ: ಈ ಅಶ್ವತ್ಥಾಮನ ಸಂಹಾರದ ಜೊತೆಯೇ ಕಿಚ್ಚು/ಬೆಂಕಿ ಅಲ್ಲಲ್ಲಿ ಹುಟ್ಟಿಕೊಂಡಿತು. ಓಡುವುದಾದರೆ ಗುರುಸುತ ಅಶ್ವತ್ಥಾಮನ ಬಾಣ, ಅದನ್ನು ದಾಟಿ ಮಿಕ್ಕಿ ಒಡಿದರೆ ಕೋಟೆಯ ಬಾಗಿಲುಗಳಲ್ಲಿ ಕೃತವರ್ಮ ಮತ್ತು ಕೃಪರ ಬಾಣದ ಹೊಡೆತ. ಇವು ಕೂಡಿ ಚತುರಂಗಬಲವು ಮೂರು ಪಟ್ಟು ನಷ್ಟವಾಯಿತು. ಯುಧಿಷ್ಠಿರನೃಪನ ಪರಿವಾರ ಚೆಲ್ಲಪಿಲ್ಲಿಯಾಗಿ ಬಿದ್ದಿತು ಏನನ್ನು ಹೇಳಲಿ,' ಎಂದನು ಸಂಜಯ.
ಬಸಿವ ರಕುತದಡಾಯುಧದ ನೆಣ
ವಸೆಯ ತೊಂಗಲುಗರುಳ ಬಂಧದ
ವಸನ ಕೈಮೈಗಳ ಕಠೋರಭ್ರುಕುಟಿ ಭೀಷಣದ |
ಮುಸುಡ ಹೊಗರಿನ ದಂತದಂಶಿತ
ದಶನವಾಸದ ವೈರಿಹಿಂಸಾ
ವ್ಯಸನ ವೀರಾವೇಶಿ ಬಂದನು ಕೃಪನ ಸಮ್ಮುಖಕೆ || ೪೩ ||
ಪದವಿಭಾಗ-ಅರ್ಥ: ಬಸಿವ ರಕುತದ+ ಅಡಾಯುಧದ (ಒಂದು ಬಗೆಯ ಚಿಕ್ಕ ಆಯುಧ - ಕತ್ತಿ.) ನೆಣವು+ ಎಸೆಯ (ಮಜ್ಜೆ ತೋರಲು) ತೊಂಗಲು+ ಗ+ ಕರುಳ ಬಂಧದ ವಸನ ಕೈಮೈಗಳ ಕಠೋರ-ಭ್ರುಕುಟಿ(ಹುಬ್ಬು) ಭೀಷಣದ ಮುಸುಡ (ಭಯಂಕರ ಮುಖದ) ಹೊಗರುನ( ಕಾಂತಿಯ) ದಂತದಂಶಿತ (ಹಲ್ಲುಕಡಿಯುತ್ತಿರುವ) ದಶನವಾಸದ((ಸಂ-ದಶನ= ೧ ಹಲ್ಲು, ದಂತ ೨ ಕಚ್ಚುವುದು, ಕಡಿಯುವುದು) ವೈರಿ+ ಹಿಂಸಾ+ ವ್ಯಸನ (ಅದೇ ಯೋಚನೆಯ) ವೀರಾವೇಶಿ ಬಂದನು ಕೃಪನ ಸಮ್ಮುಖಕೆ.
ಅರ್ಥ:ಮಜ್ಜೆ ಮಾಂಸಗಳೂ, ತೊಂಗಲು-ಜೋಲುವ ಕರುಳನ್ನು ಹೊಂದಿದ ಕಟ್ಟಿದ ಉಡುಪಿನ ಕೈಮೈಗಳಿಂದ ಕೂಡಿದ, ಬಸಿಯುತ್ತಿರುವ ರಕ್ತಪೂರಿತ ಖಡ್ಗವನ್ನು ಹಿಡಿದ, ಕಠೋರವಾಗಿ ಹುಬ್ಬು ಗಂಟಿಕ್ಕಿದ ಭೀಷಣವಾದ ಮುಖದ ಕಾಂತಿಯುಳ್ಳ ಹಲ್ಲುಕಚ್ಚಿದ, ಆಗಾಗ ಹಲ್ಲುಕಡಿಯುತ್ತಿರುವ ಮತ್ತು ವೈರಿಗಳನ್ನು ಕೊಲ್ಲುವ ಉದ್ದೇಶದವನಾದ ವೀರಾವೇಶದಿಂದ ಕೂಡಿದ ಅಶ್ವತ್ಥಾಮನು ಕೃಪನ ಎದುರಿಗೆ ಬಂದು ನಿಂತನು.
ಹೇಳಿದನು ಸೃಂಜಯವಧೆಯ ಪಾಂ
ಚಾಲ ರಾಜಕುಮಾರವರ್ಗದ
ಮೌಳಿಗಳ ಬಲಿಗೊಟ್ಟ ಪರಿಯನು ಖಡ್ಗಪೂತನಿಗೆ |
ಪಾಳೆಯದೊಳರಸಿದೆನು ಪಾಂಡುನೃ
ಪಾಲತನುಜರನವರು ಕೆಡುವರೆ
ಮೇಲುಗಾಹಿನ ವೀರನಾರಾಯಣನ ಕರುಣದಲಿ || ೪೪ ||
ಪದವಿಭಾಗ-ಅರ್ಥ:ಹೇಳಿದನು ಸೃಂಜಯವಧೆಯ, ಪಾಂಚಾಲ ರಾಜಕುಮಾರ ವರ್ಗದ ಮೌಳಿಗಳ ಬಲಿಗೊಟ್ಟ ಪರಿಯನು, ಖಡ್ಗಪೂತನಿಗೆ ಪಾಳೆಯದೊಳು+ ಅರಸಿದೆನು ಪಾಂಡುನೃಪಾಲತನುಜರನು+ ಅವರು ಕೆಡುವರೆ ಮೇಲುಗಾಹಿನ ವೀರನಾರಾಯಣನ ಕರುಣದಲಿ.
ಅರ್ಥ:ಅಶ್ವತ್ಥಾಮನು ಕೃಪನಿಗೆ ಪಾಳೆಯದಲ್ಲಿ ಸೃಂಜಯರನ್ನು ವಧೆ ಮಾಡಿದುದನ್ನೂ,, ಪಾಂಚಾಲ ರಾಜಕುಮಾರ ವರ್ಗದವರ ತಲೆಗಳನ್ನು ಖಡ್ಗಪೂತನಿಗೆ ಬಲಿಗೊಟ್ಟ ಪರಿಯನ್ನೂ ಹೇಳಿ, ನಂತರ ಪಾಂಡುರಾಜನ ಮಕ್ಕಳನ್ನು ಹುಡುಕಿದೆನು ಎಂದು ಹೇಳಿದನು. ಆದರೆ ವೀರನಾರಾಯಣನ ಕರುಣದಲ್ಲಿ ಹಾಗೂ ಮೇಲುಕಾವಲಿನಲ್ಲಿರುವ ಅವರು ಕೆಡುವರೆ?(ಇಲ್ಲ).
♠♠♠

ಸಂಧಿಗಳು

[ಸಂಪಾದಿಸಿ]

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
  3. ಸಿರಿಗನ್ನಡ ಅರ್ಥಕೋಶ- ಕೊ.ಶಿ.ಕಾ.