ವಿಷಯಕ್ಕೆ ಹೋಗು

ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೫)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೫ ನೆಯ ಸಂಧಿ

[ಸಂಪಾದಿಸಿ]

ಸೂಚನೆ

[ಸಂಪಾದಿಸಿ]
ಸೂಚನೆ~
ಮುತ್ತಿಮೂದಲಿಸಿದರು ಕುರುರಾ
ಜೋತ್ತಮನನುದಕದಲಿ ಹೊರವಡಿ
ಸುತ್ತ ಕಂಡರು ಪಾಂಡುತನುಜರು ರೋಹಿಣೀಸುತನ ||ಸೂ||

ಪದವಿಭಾಗ-ಅರ್ಥ: ಮುತ್ತಿ ಮೂದಲಿಸಿದರು ಕುರುರಾಜೋತ್ತಮನನು+ ಉದಕದಲಿ ಹೊರವಡಿಸುತ್ತ ಕಂಡರು ಪಾಂಡುತನುಜರು ರೋಹಿಣೀಸುತನ
ಅರ್ಥ:ಪಾಂಡವರು ವೈಶಂಪಾಯಬನ ಸರೋವರವನ್ನು ಮುತ್ತಿ ಕುರುರಾಜ ಕೌರವನನ್ನು ನೀರಿನಲ್ಲಿ ಅಡಗಿರುವುದಕ್ಕೆ ಅಪಹಾಸ್ಯಮಾಡಿ ಮೂದಲಿಸಿದರು. ಅವನನ್ನು ನೀರಿನಿಂದ ಹೊರವಡಿಸುವ ಸಮಯದಲ್ಲಿ ಪಾಂಡವರು ರೋಹಿಣೀಸುತ ಬಲರಾಮನುನು ಬರುತ್ತಿರುವುದನ್ನು ಕಂಡರು.[][]

ವೈಶಂಪಾಯನ ಸರಸ್ಸಿನ ತೀರದಲ್ಲಿ ಪಾಂಡವರು

[ಸಂಪಾದಿಸಿ]
ಕೇಳು ಧೃತರಾಷ್ಟ್ರಾವನಿಪ ರಿಪು
ಜಾಲ ಜಡಿದುದು ಕೊಳನ ತಡಿಯಲಿ
ತೂಳಿದುದು ಬಲುಬೊಬ್ಬೆಯಬ್ಬರವಭ್ರಮಂಡಲವ |
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳ ಬಹುವಿಧ ವಾದ್ಯರವ ಹೆ
ಗ್ಗಾಳೆಗಳು ಚೀರಿದವು ಬೈಸಿಕೆ ಬಿಡೆ ಕುಲಾದ್ರಿಗಳ || ೧ ||
ಪದವಿಭಾಗ-ಅರ್ಥ: ಕೇಳು ಧೃತರಾಷ್ಟ್ರ+ ಅವನಿಪ ರಿಪುಜಾಲ ಜಡಿದುದು ಕೊಳನ ತಡಿಯಲಿ ತೂಳಿದುದು(ತೂಳು= ಹರಡು), ಬಲುಬೊಬ್ಬೆಯ+ ಅಬ್ಬರವ+ ಅಭ್ರಮಂಡಲವ(ಅಭ್= ಆಕಾಶ) ಸೂಳವಿಸಿದವು(ಸೂಳು= ಹಲವು ವಾದ್ಯಗಳ ಜೋರಾದ ಧ್ವನಿ,- ಶಬ್ದ.ಆರ್ಭಟಿಸಿದವು) ಲಗ್ಗೆಯಲಿ ನಿಸ್ಸಾಳ (ರಣವಾದ್ಯ) ಬಹುವಿಧ ವಾದ್ಯರವ ಹೆಗ್ಗಾಳೆಗಳು (ದೊಡ್ಡ ಕಹಳೆ) ಚೀರಿದವು ಬೈಸಿಕೆ (ಬೈಸಿಕೆ= ದೃಢತೆ.) ಬಿಡೆ ಕುಲಾದ್ರಿಗಳ.
ಅರ್ಥ:ವೈಶಂಪಾಯನನು ಜನಮೇಜಯನಿಗೆ, ಸಂಜಯನು ಧೃತರಾಷ್ಟ್ರನಿಗೆ ಹೇಳಿದುದನ್ನು ಹೇಳಿದ, 'ಕೇಳು ಧೃತರಾಷ್ಟ್ರ ರಾಜನೇ, ಅವನಿಪ ಧರ್ಮಜನ ಶತ್ರುಸೇನೆಯು ಕೊಳದ ತಡಿಯಲ್ಲಿ ಜಡಿದು ಸೇರಿಕೊಂಡಿತು. ಎಲ್ಲಾ ಕಡೆ ಬಲು ಬೊಬ್ಬೆಯ/ಗದ್ದಲ ತುಂಬಿತು. ಹಲವು ವಾದ್ಯಗಳ ಜೋರಾದ ಧ್ವನಿಯ ಅಬ್ಬರವು ಆಕಾಶ ಮಂಡಲವನ್ನು ತುಂಬಿತು. ಸೇನೆಯ ಲಗ್ಗೆಯಲ್ಲಿ/ಆಕ್ರಮಣದಲ್ಲಿ ರಣವಾದ್ಯದ ಬಹುವಿಧದ ವಾದ್ಯರವ ದೊಡ್ಡ ಕಹಳೆಗಳು ಗಟ್ಟಿ ಕುಲಾದ್ರಿಗಳು ಬಿರುಕು ಬಿಡುವಂತೆ ಚೀರಿದವು.'
ತಳಮಳಲ ಮೊಗೆಮೊಗೆದು ಕದಡಿತು
ಕೊಳನ ಜಲಚರನಿಚಯವೀ ಬೊ
ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ |
ದಳವ ಬಿಗಿದಂಬುಜದೊಳಡಗಿದ
ವಳಿನಿಕರ ಹಾರಿದವು ಹಂಸಾ
ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು || ೨ ||
ಪದವಿಭಾಗ-ಅರ್ಥ: ತಳಮಳಲ ಮೊಗೆಮೊಗೆದು ಕದಡಿತು ಕೊಳನ ಜಲಚರ ನಿಚಯವು (ಸಮೂಹ)+ ಈ ಬೊಬ್ಬುಳಿಕೆ ಮಿಗಲು+ ಒಬ್ಬುಳಿಕೆ(ಒಬ್ಬುಳಿ= ಗುಂಪು.) ನೆಗೆದವು ವಿಗತ(ಇಲ್ಲದೆ- ಬಿಟ್ಟು) ವೈರದಲಿ ದಳವ ಬಿಗಿದ+ ಅಂಬುಜದೊಳು+ ಅಡಗಿದವು+ ಅಳಿನಿಕರ (ದುಂಬಿಗಳು), ಹಾರಿದವು ಹಂಸಾವಳಿ (ಹಂಸ+ ಆವಳಿ- ಸಮೂಹ) ಜವಾಯಿಲ-ತನದಿ(ಜವ= ವೇಗ ವೇಗವಾಗಿ;) ಜಗುಳ್ದವು (ಜುಗುಳು= ಜಾರು, ತಪ್ಪಿಸಿಕೊಳ್ಳುವುದು)ಜಕ್ಕವಕ್ಕಿಗಳು.
ಅರ್ಥ: ಸೇನೆಯ,ವಾದ್ಯಘೋಷಗಳ ಗದ್ದಲಕ್ಕೆ ಸರೋವರದ ತಳದಲ್ಲಿದ್ದ ಮಳಲು/ಮರಳು ಮೊಗೆಮೊಗೆದು ಸರೋವರವನ್ನು ಕದಡಿತು. ಕೊಳದಲ್ಲಿದ್ದ ಜಲಚರ ಸಮೂಹವು ಈ ಬೊಬ್ಬುಳಿಕೆ/ಅಲ್ಲೋಲಕಲ್ಲೋಲ ಹೆಚ್ಚಲು ಜೀವಚರಗಳು ಪಕ್ಷಿಗಳ ಗುಂಪು ಪರಸ್ಪರ ವೈರವನ್ನು ಬಿಟ್ಟು ಮೇಲಕ್ಕೆ ನೆಗೆದವು. ದುಂಬಿಗಳು ಹೂವಿನ ಬಿಗಿದ/ಮುಚ್ಚಿದ ಕಮಲದಲ್ಲಿ ಅಡಗಿದವು. ಹಂಸದ ಸಮೂಹವು ವೇಗವಾಗಿ ಹಾರಿದವು. ಜಕ್ಕವಕ್ಕಿಗಳು ಗದ್ದಲಕ್ಕೆ ಹೆದರಿ ತಪ್ಪಿಸಿಕೊಳ್ಳಳು ಹಾರಿಹೋದವು.
ಬಂದುದರಿಬಲ ಕೊಳನ ತೀರದ
ಲಂದು ವೇಢೈಸಿದರು ಸರಸಿಯ
ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ
ಅಂದಣದಲೈತಂದು ಧರ್ಮಜ
ನಿಂದನರ್ಜುನ ಭೀಮ ಯಮಳ ಮು
ಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ || ೩ ||
ಪದವಿಭಾಗ-ಅರ್ಥ: ಬಂದುದು+ ಅರಿಬಲ ಕೊಳನ ತೀರದಲಿ+ ಅಂದು ವೇಢೈಸಿದರು ಸರಸಿಯ ಬಂದಿಕಾರರು ಬೊಬ್ಬಿರಿದು+ ಅಬ್ಬರಕೆ ಧರೆ (ಭೂಮಿ) ಬಿರಿಯೆ ಅಂದಣದಲಿ+ ಐತಂದು ಧರ್ಮಜ ನಿಂದನು+ ಅರ್ಜುನ ಭೀಮ ಯಮಳ(ನಕುಲ ಸಹದೇವ) ಮುಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ.
ಅರ್ಥ:ಸರೋವರದ ತೀರಕ್ಕೆ ಕೌರವನ ಶತ್ರುಸೇನೆಯಾದ ಪಾಂಡವರ ಸೇನೆ ಬಂದಿತು. ಅಂದು ಅವರು ಸರೋವರವನ್ನು ಸುತ್ತುವರಿದರು. ಹೀಗೆ ಸರಸ್ಸನ ಆಕ್ರಮಣಕಾರರು ಬೊಬ್ಬಿರಿದು ಆರ್ಭಟಿಸಿದರು. ಈ ಅಬ್ಬರಕ್ಕೆ ಭೂಮಿ ಬಿರಿಯುವಂತಿತ್ತು. ಆಗ ಪಲ್ಲಕ್ಕಿಯಲ್ಲಿ ಧರ್ಮಜನು ಬಂದು ಅಲ್ಲಿ ನಿಂತನು. ಅವನ ಜೊತೆ ಅರ್ಜುನ ಭೀಮ ನಕುಲ, ಸಹದೇವ, ಕೃಷ್ಣ, ಸಾತ್ಯಕಿ, ದ್ರುಪದನಮಗ ದೃಷ್ಟದ್ಯುಮ್ನ ಶಿಖಂಡಿಗಳು ಜೊತೆಗೆ ಬಂದರು.
ವರ ಯುಧಾಮನ್ಯೂತ್ತಮೌಂಜಸ
ರಿರಲು ಪಂಚದ್ರೌಪದೀಸುತ
ರರಸ ನಿಮ್ಮ ಯುಯುತ್ಸು ಸೃಂಜಯ ಸೋಮಕಾದಿಗಳು |
ಕರಿಗಳೈನೂರೈದು ಸಾವಿರ
ತುರಗಪಯದಳವೆಂಟು ಸಾವಿರ
ವೆರಡು ಸಾವಿರ ರಥವಿದರಿಮೋಹರದ ಪರಿಶೇಷ || ೪ ||
ಪದವಿಭಾಗ-ಅರ್ಥ: ವರ ಯುಧಾಮನ್ಯು+ ಉತ್ತಮೌಂಜಸರು+ ಇರಲು ಪಂಚದ್ರೌಪದೀಸುತರ+ ಅರಸ ನಿಮ್ಮ ಯುಯುತ್ಸು ಸೃಂಜಯ ಸೋಮಕಾದಿಗಳು ಕರಿಗಳು+ ಐನೂರೈದು ಸಾವಿರ ತುರಗಪಯದಳವು+ ಎಂಟು ಸಾವಿರವು+ ಎರಡು ಸಾವಿರ ರಥವು+ ಇದು+ ಅರಿ ಮೋಹರದ ಪರಿಶೇಷ.
ಅರ್ಥ:ಸಂಜಯನು ಹೇಳಿದ,'ಅಲ್ಲಿ ಶ್ರೇಷ್ಠ ಯುಧಾಮನ್ಯು, ಉತ್ತಮೌಂಜಸರು, ಇದ್ದರು; ಜೊತೆಗೆ ದ್ರೌಪದಿಯ ಮಕ್ಕಳು ಐವರು; ಅರಸನೇ ಪಾಂಡವರ ಕಡೆ ಹೋದ ನಿಮ್ಮ ಮಗ ಯುಯುತ್ಸು, ಸೃಂಜಯ, ಸೋಮಕ ಮೊದಲಾದವರು. ಆನೆಗಳು ಐನೂರೈದು ಸಾವಿರ, ಕುದುರೆಯ ಪಾಯದಳ ಎಂಟು ಸಾವಿರವು, ಎರಡು ಸಾವಿರ ರಥವು, ಇದು ನಮ್ಮ ಶತ್ರು ಸೇನೆಯ- ಪಾಂಡವರ ಸೇನೆಯ ಪರಿಶೇಷ/ ಉಳಿದ ಭಾಗ'.
ದೇವ ಕಂಡಿರೆ ಕುರುಪತಿಯ ಮಾ
ಯಾವಿಡಂಬನವಿದ್ಯೆಯನು ನಿ
ಷ್ಠೀವನಾವಿರ್ಭೂತ ಸಲಿಲಸ್ತಂಭ ಡಂಬರವ |
ಆವುದಿಲ್ಲಿಯ ವಿಧಿಯ ಸಮರ
ವ್ಯಾವಹಾರಿಕ ವಿಷಯ ತಪ್ಪದೆ
ನೀವು ಬೆಸಸುವುದೆಂದನರಸನು ದೇವಕೀಸುತನ || ೫ ||
ಪದವಿಭಾಗ-ಅರ್ಥ: ದೇವ ಕಂಡಿರೆ ಕುರುಪತಿಯ ಮಾಯಾವಿಡಂಬನ ವಿದ್ಯೆಯನು, ನಿಷ್ಠೀವನು (ನಿಷ್ಠಾವಂತ)+ ಆವಿರ್ಭೂತ(ಹುಟ್ಟಿದ, ಸೃಷ್ಠಿಸಿದ; ಕಣ್ಣಿಗೆಕಾಣುವಂತಹ, ಸ್ವಯಂವ್ಯಕ್ತ ) ಸಲಿಲಸ್ತಂಭ ಡಂಬರವ(ತೋರಿಕೆ, ಢಂಭ ೨ ಹೆಮ್ಮೆ, ಅಹಂಕಾರ) ಆವುದು+ ಇಲ್ಲಿಯ ವಿಧಿಯ ಸಮರ(ಯುದ್ಧ) ವ್ಯಾವಹಾರಿಕ ವಿಷಯ(ಅನುಸರಿಸಬೇಕಾದ ಕ್ರಮ) ತಪ್ಪದೆ ನೀವು ಬೆಸಸುವುದೆಂದನು+ ಅರಸನು ದೇವಕೀಸುತನ
ಅರ್ಥ:ಯುಧಿಷ್ಠಿರನು ದೇವಕೀಸುತ ಕೃಷ್ನನನ್ನು ಕುರಿತು,'ದೇವ ಕುರುಪತಿ ಕೌರವನ ಮಾಯಾವಿಡಂಬನ ವಿದ್ಯೆಯೆನ್ನು ಕಂಡಿರಾ! ಕ್ಷತ್ರಿಯ ನಿಷ್ಠೆಯುಳ್ಳ ಕೌರವನು, ತಾನು ಕಲಿತು ಕಣ್ಣಿಗೆಕಾಣುವಂತಹ, ಜಲಸ್ತಂಭದ ಢಂಭ ವಿದ್ಯೆಯನ್ನು ನೋಡಿದಿರಾ? ಈಗ ಇಲ್ಲಿ ವ್ಯಾವಹಾರಿಕವಾಗಿ ಅನುಸರಿಸಬೇಕಾದ ಸಮರ ಕ್ರಮ ಯಾವುದು, ತಪ್ಪದೆ ನೀವು ಹೇಳುವುದು,' ಎಂದನು.

ಕೃಷ್ಣನ ಯುದ್ಧ ನೀತಿ

[ಸಂಪಾದಿಸಿ]
ಭರತವಂಶಲಲಾಮ ಕೇಳ್ ನೃಪ
ವರರ ಪದ್ಧತಿ ಕಂಟಕದಿನು
ತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ |
ಪರಿಹರಿಸುವುದು ಮಾಯೆಯಿಂ ಪ್ರತಿ
ಗರಳದಲಿ ಗರಳವನು ಮಾಯಾ
ಪರರು ಮಾಯೋಪಾಯವಧ್ಯರು ಭೂಪ ಕೇಳೆಂದ || ೬ ||
ಪದವಿಭಾಗ-ಅರ್ಥ: ಭರತವಂಶಲಲಾಮ(ಲಲಾಮ= ಶ್ರೇಷ್ಠ) ಕೇಳ್ ನೃಪವರರ ಪದ್ಧತಿ ಕಂಟಕದಿಂ+ ನ+ ಉತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ ಪರಿಹರಿಸುವುದು ಮಾಯೆಯಿಂ; ಪ್ರತಿಗರಳದಲಿ ಗರಳವನು(ಗರಳ= ವಿಷ) ಮಾಯಾಪರರು ಮಾಯೋಪಾಯವಧ್ಯರು ಭೂಪ ಕೇಳೆಂದ.
ಅರ್ಥ:ಕೃಷ್ನನು,'ಭರತವಂಶ ಶ್ರೇಷ್ಠನಾದ ಧರ್ಮಜನೇ ಕೇಳು, ಶ್ರೇಷ್ಠರಾಜರ ಪದ್ಧತಿ ಕಂಟಕವನ್ನು ಕಂಟಕದಿಂದ ಉತ್ತರಿಸುವುದು. ಮಾಯಾವಿಗಳ ವಿದ್ಯೆಗಳನ್ನು ಮಾಯೆಯಿಂದ ಪರಿಹರಿಸುವುದು; ವಿಷವನ್ನು ಪ್ರತಿವಿಷದಿಂದ ತೆಗೆಯಬೇಕು. ಮಾಯಾಪರರಾದವರು ಮಾಯ ಉಪಾಯದಿಂದ ವಧ್ಯರು/ಸಾಯಿಸಲು ಅರ್ಹರು, ರಾಜನೇ ಕೇಳು ಎಂದ.
ಮರಣವೆಂದಿಂಗಾಗದಂತಿರೆ
ವರವ ಕೊಂಡು ಹಿರಣ್ಯಕಾಸುರ
ಸುರನರೋರಗರನು ವಿಭಾಡಿಸಿ ಧರ‍್ಮಪದ್ಧತಿಗೆ |
ಧರಧುರವ ಮಾಡಿದಡೆ ನರಕೇ
ಸರಿಯ ರೂಪಿನೊಳಾದಿವಿಶ್ವಂ
ಭರನು ಗೆಲಿದನು ಮಾಯೆಯನು ಮಾಯಾಭಿಯೋಗದಲಿ || ೭||
ಪದವಿಭಾಗ-ಅರ್ಥ: ಮರಣವೆಂದಿಂಗೂ+ ಆಗದಂತಿರೆ ವರವ ಕೊಂಡು ಹಿರಣ್ಯಕ+ ಅಸುರ ಸುರ ನರ+ ಓರಗರನು ವಿಭಾಡಿಸಿ(ಆಕ್ರಮಿಸಿ) ಧರ್ಮಪದ್ಧತಿಗೆ ಧರಧುರವ (ಆರ್ಭಟ,ಕೋಲಾಹಲ) ಮಾಡಿದಡೆ ನರಕೇಸರಿಯ ರೂಪಿನೊಳು+ ಆದಿವಿಶ್ವಂಭರನು ಗೆಲಿದನು ಮಾಯೆಯನು ಮಾಯಾಭಿಯೋಗದಲಿ.
ಅರ್ಥ:ಕೃಷ್ಣನ ಹೇಳಿದನು,'ಅಸುರ ಹಿರಣ್ಯಕಶಿಪುವು ಮರಣವು ತನಗೆ ಎಂದಿಂಗೂ ಆಗದಂತೆ ವರವನ್ನು ಪಡದುಕೊಂಡು, ಸುರರು ನರರು ನಾಗರುಗಳನ್ನು ಆಕ್ರಮಿಸಿ, ಧರ್ಮಪದ್ಧತಿಗೆ ಆರ್ಭಟ,ಕೋಲಾಹಲದಿಂದ ಅಡ್ಡಿ ಮಾಡಿದಾಗ, ಆದಿವಿಶ್ವಂಭರನು/ ವಿಷ್ಣುವು ಅವನ ಮಾಯೆಯನ್ನು ನರಸಿಂಹ ರೂಪಿನಲ್ಲಿ ಮಾಯೆಯ ಅಭಿಯೋಗದಲ್ಲಿ/ ಮಾಯಾರೂಪದ ಆಕ್ರಮಣದಿಂದ ಗೆದ್ದನು.'
ಲಲಿತ ವೈದಿಕ ಧರ್ಮಮಾರ್ಗವ
ನಳಿದು ಹೆಚ್ಚಿದ ಕಾಲನೇಮಿಯ
ತಲೆಯ ಕೊಂಡನು ಚಕ್ರದಲಿ ದೈತ್ಯಾರಿ ಪೂರ್ವದಲಿ
ಬಲನ ಜಂಭನ ವೃತ್ರನನು ಶೃಂ
ಖಳಿತ ಮಾಯರ ಮಾಯೆಯಿಂದವೆ
ಬಲವಿರೋಧಿ ವಿಭಾಡಿಸಿದನವನೀಶ ಕೇಳೆಂದ ೮
ಪದವಿಭಾಗ-ಅರ್ಥ: ಲಲಿತ (ಮನಸ್ಸಿಗೆ ಆನಂದವನ್ನುಂಟು ಮಾಡುವ) ವೈದಿಕ ಧರ್ಮಮಾರ್ಗವನು+ ಅಳಿದು ಹೆಚ್ಚಿದ ಕಾಲನೇಮಿಯ ತಲೆಯ ಕೊಂಡನು ಚಕ್ರದಲಿ ದೈತ್ಯಾರಿ ಪೂರ್ವದಲಿ ಬಲನ ಜಂಭನ ವೃತ್ರನನು ಶೃಂಖಳಿತ ಮಾಯರ ಮಾಯೆಯಿಂದವೆ ಬಲವಿರೋಧಿ ವಿಭಾಡಿಸಿದನು+ ಅವನೀಶ (ರಾಜನೇ) ಕೇಳೆಂದ.
ಅರ್ಥ:ಕೃಷ್ಣನು,ರಾಜನೇ,'ಮನಸ್ಸಿಗೆ ಆನಂದವನ್ನುಂಟು ಮಾಡುವ ವೈದಿಕ ಧರ್ಮಮಾರ್ಗವನ್ನು ನಾಶಮಾಡಿ ಹೆಚ್ಚಿಕೊಂಡ/ಅಹಂಕಾರಿಯಾದ ಕಾಲನೇಮಿಯ ತಲೆಯನ್ನು ದೈತ್ಯಾರಿ ವಿಷ್ನುವು ಚಕ್ರದಿಂದ ಕತ್ತರಿಸಿ ಕೊಂದನು. ಪೂರ್ವದಲ್ಲಿ/ಹಿಂದೆ ತಾರಕಾಸುರನ ಪ್ರಧಾನಿ ಬಲನನ್ನೂ, ಜಂಭನನ್ನೂ, ವೃತ್ರನನ್ನೂ ಶೃಂಖಲಿತ/ಕಟ್ಟುವ ಸರಪಳಿಯಂತಿರುವ ಮಾಯಗಾರರ ಮಾಯೆಯಿಂದವಲೆ ಬಲವಿರೋಧಿ ಇಂದ್ರನು ಆಕ್ರಮಿಸಿ ಸೋಲಿಸಿದನು,' ಕೇಳು ಎಂದ.
ಹರನ ವರದಲಿ ಹೆಚ್ಚಿ ಭಸ್ಮಾ
ಸುರನು ಶಿವನ ವಿರೋಧಿಸಿದನು
ಬ್ಬರದವನನುರುಹಿದನು ಹರಿ ಮಾಯಾಪ್ರಯೋಗದಲಿ
ಸುರರನರೆಯಾಳಿದನು ಭುವನವ
ನೊರಲಿಸಿದ ರಾವಣನ ರೂಢಿಯ
ಶಿರವ ನರರೂಪಿನಲಿ ಖತಿಯಲಿ ರಾಮ ಖಂಡಿಸಿದ ೯
ಪದವಿಭಾಗ-ಅರ್ಥ: ಹರನ ವರದಲಿ ಹೆಚ್ಚಿ ಭಸ್ಮಾಸುರನು ಶಿವನ ವಿರೋಧಿಸಿದನು+ ಉಬ್ಬರದವನನು+ ಉರುಹಿದನು (ಉರುಹು= ಸುಡು) ಹರಿ ಮಾಯಾಪ್ರಯೋಗದಲಿ ಸುರರನು+ ಅರೆಯೆ (ಅರೆಯೆ= ಅರೆಯಲು, ಅರೆ= ಹಿಂಸಿಸು, ತಿಕ್ಕು, ಪುಡಿಮಾಡು)+ ಆಳಿದನು ಭುವನವನ+ ಒರಲಿಸಿದ ರಾವಣನ ರೂಢಿಯ ಶಿರವ ನರರೂಪಿನಲಿ ಖತಿಯಲಿ ರಾಮ ಖಂಡಿಸಿದ.
ಅರ್ಥ:ಭಸ್ಮಾಸುರನು ಶಿವನ ವರದಿಂದ ಹೆಚ್ಚಿಕೊಂಡು/ಸೊಕ್ಕಿ ಶಿವನನ್ನೇ ವಿರೋಧಿಸಿದನು ಸೊಕ್ಕಿದ ಅವನನ್ನು ಹರಿ ಮಾಯಾಪ್ರಯೋಗದಿಂದ/ ಮೋಸದಿಂದ ಸುಟ್ಟನು. ದೇವತೆಗಳನ್ನು ಹಿಂಸಿಸಿ ಆಳಿದನು ಭುವನವನವನ್ನು ಶೋಕದಿಂದ ಒರಲಿಸಿದ/ಅಳುವಂತೆಮಾಡಿದ ರಾವಣನ ರೂಢಿಯ ಶಿರವ- ರೂಢಿಯಲ್ಲಿ ಹೇಳುವ ಹತ್ತು ಶಿರಗಳನ್ನು ಮನುಷ್ಯರೂಪಿನಿಂದ ಬಂದು ಕೋಪದಿಂದ ರಾಮ ಖಂಡಿಸಿದ/ಕತ್ತರಿಸಿದನು.
ಎಮಗೆ ತಾಯೊಡಹುಟ್ಟಿದನು ನಿ
ರ್ಮಮತೆಯಲಿ ನಿರ್ದಾಟಿಸಿದನಾ
ಕ್ರಮದಲೇ ಕಂಸಂಗೆ ಹಿಂಸಾಕೃತಿಯ ರಚಿಸಿದೆವು |
ಸಮರದೊಳಗೆ ಸೃಗಾಲನೃಪನಾ
ಕ್ರಮಿಸಿದನು ಠಕ್ಕಿನಲಿ ಮಾಯಾ
ತಿಮಿರವನು ಮಾಯೆಯಲಿ ಗೆಲಿದೆವು ಭೂಪ ಕೇಳೆಂದ || ೧೦||
ಪದವಿಭಾಗ-ಅರ್ಥ: ಎಮಗೆ ತಾಯ+ ಒಡಹುಟ್ಟಿದನು ನಿರ್ಮಮತೆಯಲಿ ನಿರ್ದಾಟಿಸಿದನು(ನಿರ್+ ದಾಟಿಸಿದೆನು)+ ಆಕ್ರಮದಲೇ ಕಂಸಂಗೆ ಹಿಂಸಾಕೃತಿಯ ರಚಿಸಿದೆವು ಸಮರದೊಳಗೆ, ಸೃಗಾಲನೃಪನು ಆಕ್ರಮಿಸಿದನು ಠಕ್ಕಿನಲಿ ಮಾಯಾ ತಿಮಿರವನು ಮಾಯೆಯಲಿ ಗೆಲಿದೆವು ಭೂಪ ಕೇಳೆಂದ.
ಅರ್ಥ:ಕೃಷ್ಣನು,'ಕಂಸನು ನಮಗೆ ತಾಯಿಯ ಒಡಹುಟ್ಟಿದವನು. ಆದರೆ ದುಷ್ಟನೂ ಮಾಯಾತಂತ್ರದವನೂ ಆದ ಅವನನ್ನು ಕರುಣೆತೋರದೆ ನಿರ್ದಯವಾಗಿ ಈ ಲೋಕದಿಂದ ದಾಟಿಸಿದೆನು. ಆ ಮಾಯಾ ಕ್ರಮದಿಂದಲೇ ಕಂಸನಿಗೆ ಯುದ್ಧದಲ್ಲಿ ಸಂಹಾರವನ್ನು ರಚಿಸಿದೆವು. ಸೃಗಾಲನೃಪನು ಠಕ್ಕಿನಲ್ಲಿ ನಮ್ಮನ್ನು ಆಕ್ರಮಿಸಿದನು; ಆ ಮಾಯಾ ತಿಮಿರವನು ಮಾಯೆಯಿಂದಲೇ ಗೆದ್ದೆವು. ಭೂಪನೇ ಕೇಳು,' ಎಂದ. (ಶೃಗಾಲವಾಸುದೇವ ನೃಪ, ಕರವೀರಪುರದ ರಾಜ, ಸೂರ್ಯನ ವರದಿಂದ ದಿವ್ಯ ರಥ,ಅಕ್ಷಯಬತ್ತಳಿಕೆ ಪಡೆದಿದ್ದನು. ಕೃಷ್ಣನ ಚಕ್ರಾಯುಧದಿಂದ ಹತನಾದನು.)[]
ಕಾಲಯವನನ ದಂತವಕ್ರನ
ಸಾಲುವನ ಮಾಗಧನ ನರಕನ
ಸೀಳಿದೆವು ಕೃತಮಾಯರನು ಮಾಯಾಪ್ರಪಂಚದಲಿ |
ಢಾಳರನು ಢವಳರನು ಠಕ್ಕಿನ
ಠೌಳಿಕಾರರನವರ ವಿದ್ಯೆಯ
ಲಾಳಿಗೊಂಡಡೆ ದೋಷವಿಲ್ಲವನೀತ ಕೇಳೆಂದ || ೧೧ ||
ಪದವಿಭಾಗ-ಅರ್ಥ: ಕಾಲಯವನನ, ದಂತವಕ್ರನ, ಸಾಲುವನ, ಮಾಗಧನ, ನರಕನ, ಸೀಳಿದೆವು ಕೃತಮಾಯರನು ಮಾಯಾಪ್ರಪಂಚದಲಿ ಢಾಳರನು( ಮೋಸಗಾರ.) ಢವಳರನು(ವಂಚಕ) ಠಕ್ಕಿನ ಠೌಳಿಕಾರರನು(ಸುಳ್ಳುಗಾರ)+ ಅವರ ವಿದ್ಯೆಯಲಿ+ ಆಳಿಗೊಂಡಡೆ ದೋಷವಿಲ್ಲ+ ಅವನೀತ ಕೇಳೆಂದ
ಅರ್ಥ: ಅವನೀಶ- ಧರ್ಮಜನೇ ಕೇಳು,'ಕಾಲಯವನನ್ನೂ, ದಂತವಕ್ರನನ್ನೂ, ಸಾಲುವನ, ಮಾಗಧನನ್ನೂ, ನರಕಾಸುರನನ್ನೂ, ನಾವು ಸಂಹಾರಮಅಡಿದೆವು. ಮಾಯಕೃತಿಕಾರರನ್ನು ಮಾಯಾಪ್ರಪಂಚದಿಂದಲೇ, ಮೋಸಗಾರರನ್ನು ವಂಚಕರನ್ನು, ಠಕ್ಕಿನ ಸುಳ್ಳುಕಾರರನ್ನು ಅವರ ವಿದ್ಯೆಯಲ್ಲಿ ಕೊಂದರೆ ದೋಷವಿಲ್ಲ'ಎಂದ
ದ್ಯೂತ ಮೃಗಯಾವ್ಯಸನವಿವು ನೃಪ
ಜಾತಿಗಾದ ವಿನೋದ ಕಪಟ
ದ್ಯೂತವಿದು ನೃಪಧರ್ಮವೇ ಮಾಯಾಭಿಯೋಗದಲಿ |
ಸೋತಿರಿಳೆಯನದಂತಿರಲಿ ನಿ
ರ್ಭೀತಿಯಲಿ ನಿಮ್ಮರಸಿಯುಟ್ಟುದ
ನೀತ ಸುಲಿಸಿದನಿವನು ಸುಜನನೆ ಭೂಪ ಹೇಳೆಂದ || ೧೨ ||
ಪದವಿಭಾಗ-ಅರ್ಥ: ದ್ಯೂತ ಮೃಗಯಾದಿ+ ವ್ಯಸನವು+ ಇವು ನೃಪಜಾತಿಗೆ+ ಆದ ವಿನೋದ; ಕಪಟ ದ್ಯೂತವು+ ಇದು ನೃಪಧರ್ಮವೇ, ಮಾಯಾ+ ಅಭಿಯೋಗದಲಿ (ಆಕ್ರಮಣ) ಸೋತಿರಿ+ ಇಳೆಯನು(ಭೂಮಿ)+ ಅದಂತಿರಲಿ, ನಿರ್ಭೀತಿಯಲಿ ನಿಮ್ಮ+ ಅರಸಿಯು+ ಉಟ್ಟುದನು+ ಈತ ಸುಲಿಸಿದನು+ ಇವನು ಸುಜನನೆ ಭೂಪ ಹೇಳೆಂದ.
ಅರ್ಥ:ಕೃಷ್ಣನು,'ದ್ಯೂತ, ಮೃಗಬೇಟೆ ವ್ಯಸನವು/ಅಭ್ಯಾಸವು- ಇವು ರಾಜರಿಗೆ ಕೇವಲ ವಿನೋದ ಆದ ಕ್ರೀಡೆ. ದುರುದ್ದೇಶದಿಂದ ಕೂಡಿದ ಕಪಟ ದ್ಯೂತವು/ಪಗಡೆಯಾಟವು- ಇದು ರಾಜಧರ್ಮವೇ? ಮಾಯಾ/ಮೋಸದ ಆಕ್ರಮಣದಲ್ಲಿ ನೀವು ರಾಜ್ಯವನ್ನು ಸೋತಿರಿ. ಅದು ಹಾಗಿರಲಿ, ನಿರ್ಭೀತಿಯಿಂದ/ನಾಚಿಕ ಇಲ್ಲದೆ ರಾಜಸಭೆಯಲ್ಲಿ ನಿಮ್ಮ ಅರಸಿ ದ್ರೌಪದಿಯು ಉಟ್ಟ ಸೀರೆಯನ್ನು ಈತ ಬಿಚ್ಚಿಸಿದನು. ಇವನು ಸುಜನನೆ/ಸಜ್ಜನನೇ?' ರಾಜನೇ ಹೇಳು ಎಂದ.
ಐಹಿಕದ ಸಂಭಾವನೆಯ ಸ
ಮ್ಮೋಹನಕೆ ಮರುಳಾಗಿ ಸುಕೃತ
ದ್ರೋಹವಾಗದಲೇ ಸುಯೋಧನವಧೆಯ ದೆಸೆಯಿಂದ |
ಈ ಹದನ ಬಿನ್ನೈಸಿದೆವು ನೀ
ವಾಹವಕೆ ಧರ‍್ಮಾರ್ಥಶಾಸ್ತ್ರವ
ನೂಹಿಸಿದಿರೆಂದರಸ ನುಡಿಸಿದನಿತ್ತ ಕುರುಪತಿಯ || ೧೩ ||
ಪದವಿಭಾಗ-ಅರ್ಥ: ಐಹಿಕದ ಸಂಭಾವನೆಯ ಸಮ್ಮೋಹನಕೆ ಮರುಳಾಗಿ ಸುಕೃತ ದ್ರೋಹವಾಗದಲೇ! ಸುಯೋಧನವಧೆಯ ದೆಸೆಯಿಂದ ಈ ಹದನ ಬಿನ್ನೈಸಿದೆವು ನೀವು+ ಆಹವಕೆ ಧರ್ಮಾರ್ಥ ಶಾಸ್ತ್ರವನು+ ಊಹಿಸಿದಿರಿ+ ಎಂದು+ ಅರಸ ನುಡಿಸಿದನು+ ಇತ್ತ ಕುರುಪತಿಯ
ಅರ್ಥ: ಈ ಲೋಕದ ಲಾಭ- ಸುಖದ ಸಮ್ಮೋಹನಕ್ಕೆ/ಆಸೆಗೆ ಮರುಳಾಗಿ ಸುಯೋಧನನ ವಧೆಯ ದೆಸೆಯಿಂದ ಸುಕೃತವಾದ ಧರ್ಮಕ್ಕೆ ದ್ರೋಹವಾಗಬಾರದಲ್ಲವೇ! ಈ ವಿಚಾರವನ್ನು ತಿಳಿಯಲು ಕೃಷ್ಣಾ ನಿಮಗೆ ದರ್ಮ ಮಾರ್ಗ ತಿಳಿಸಲು ಬೇಡಿಕೊಂಡೆವು. ನೀವು ಯುದ್ಧಮಾಡಲು ಧರ್ಮಾರ್ಥ ಶಾಸ್ತ್ರವನ್ನು ಯೋಚಿಸಿ ತಿಳಿಸಿದಿರಿ.' ಎಂದು ಅರಸ ಧರ್ಮಜನು ಹೇಳಿದನು. ನಂತರ ಕೃಷ್ಣನು ಇತ್ತ ನೀರಿನಲ್ಲಿ ಅಡಗಿದ್ದ ಕುರುಪತಿ ಕೌರವನನ್ನು ಮಾತನಾಡಿಸಿದನು.

ನೀರಿನಿಂದ ಹೊರಬರಲು ಕೃಷ್ಣನ ಕರೆ

[ಸಂಪಾದಿಸಿ]
ಏಳು ಕೌರವರಾಯ ಸಲಿಲ
ವ್ಯಾಳನೇ ನೀನಕಟ ಜಲದೊಳ
ಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ |
ಕಾಳೆಗದೊಳದ್ದಿದೆ ಸಹೋದರ
ಜಾಲ ಪುತ್ರಜ್ಞಾತಿ ಬಂಧು ನೃ
ಪಾಲರನು ನೀ ನೀರೊಳಡಗಿದೆ ಕಷ್ಟವಾಯ್ತೆಂದ || ೧೪ ||
ಪದವಿಭಾಗ-ಅರ್ಥ: ಏಳು ಕೌರವರಾಯ ಸಲಿಲ ವ್ಯಾಳನೇ(ನೀರುಹಾವೇ) ನೀನು+ ಅಕಟ ಜಲದೊಳಗೆ+ ಆಳುವರೆ ಕಾಳಾಯ್ತು ನಿನ್ನಲಿ ಗರುವ (ದೊಡ್ಡ) ಶಶಿವಂಶ ಕಾಳೆಗದೊಳು+ ಅದ್ದಿದೆ ಸಹೋದರಜಾಲ ಪುತ್ರಜ್ಞಾತಿ ಬಂಧು ನೃಪಾಲರನು ನೀ ನೀರೊಳು+ ಅಡಗಿದೆ ಕಷ್ಟವಾಯ್ತೆಂದ.
ಅರ್ಥ:ಕೃಷ್ಣನು, 'ನೀರಿನಿಂದ ಏಳು ಕೌರವರಾಯನೇ ನೀನು ನೀರುಹಾವೇ ಅಕಟ! ಜಲದೊಳಗೆ ರಾಜ್ಯವನ್ನು ಆಳುವರೆ? ನಿನ್ನಿಂದ ದೊಡ್ಡ ಚಂದ್ರವಂಶ ಕೆಟ್ಟಹೆಸರು ಪಡೆಯಿತು. ನೀನು ಸಹೋದರಸಮೂಹವನ್ನೂ, ಪುತ್ರಜ್ಞಾತಿಗಳನ್ನೂ, ಬಂಧುಗಳನ್ನೂ, ನೃಪಾಲರನ್ನೂ,ನಿನ್ನ ಯುದ್ಧದಲ್ಲಿ ಮುಳುಗಿಸಿ ಸಾಯಿಸಿದೆ. ನೀನು ಮಾತ್ರಾ ನೀರಿನಲ್ಲಿ ಅಡಗಿದಕೊಂಡೆ. ಇದು- ನೀರಿನಲ್ಲಿ ವಾಸ ನಿನಗೆ ಕಷ್ಟವು ಮೇಲೆ ಬಾ,' ಎಂದನು.
ಜಾತಿಮಾತ್ರದ ಮೇಲೆ ಬಂದ
ಖ್ಯಾತಿವಿಖ್ಯಾತಿಗಳು ನಮಗೆನೆ
ಜಾತರಾದೆವು ನಾವು ನಿರ್ಮಳಸೋಮವಂಶದಲಿ |
ಭೀತಿಯಲಿ ನೀ ನೀರ ಹೊಕ್ಕಡೆ
ಮಾತು ತಾಗದೆ ತಮ್ಮನಕಟಾ
ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ || ೧೫ ||
ಪದವಿಭಾಗ-ಅರ್ಥ: ಜಾತಿಮಾತ್ರದ ಮೇಲೆ ಬಂದ ಖ್ಯಾತಿವಿಖ್ಯಾತಿಗಳು ನಮಗೆ+ ಎನೆ ಜಾತರಾದೆವು(ಹುಟ್ಟಿದೆವು) ನಾವು ನಿರ್ಮಳ ಸೋಮವಂಶದಲಿ, ಭೀತಿಯಲಿ ನೀ ನೀರ ಹೊಕ್ಕಡೆ ಮಾತು ತಾಗದೆ ತಮ್ಮನು (ತಮ್ಮನ್ನು- ನಿಮಗೆ)+ ಅಕಟಾ ಬೂತುಗಳ (ನಾಚಕೆಗೆಟ್ಟ ಮಾತು, ವಂಚಕ,ಮೋಸಗಾರ, ಭಂಡ) ಕೈಬಾಯ್ಗೆ ಬಂದೈ ತಂದೆ ಕುರುರಾಯ
ಅರ್ಥ:ಕೃಷ್ಣನು ಮುಂದುವರಿದು,'ಕೇವಲ ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದ ಮಾತ್ರದ ಮೇಲೆ ಬಂದ ಖ್ಯಾತಿವಿಖ್ಯಾತಿಗಳು ನಮಗೆ ಬರುವುದು ಎನ್ನುವಂತೆ ನಾವು ನಿರ್ಮಲವಾದ ಚಂದ್ರವಂಶದಲ್ಲಿ ಹುಟ್ಟಿದೆವು. ಹೀಗಿರುವಾಗ ನೀನು ಯುದ್ಧಮಾಡದೆ ಪ್ರಾಣಭೀತಿಯಿಂದ ನೀರೊಳಗೆ ಹೊಕ್ಕರೆ, ಅಕಟಾ! ನಾಚಕೆಗೆಟ್ಟವನು, ಭಂಡ ಎಂಬ ಮಾತು ತಮ್ಮನ್ನು/ನಿನಗೆ ತಾಗದೆ? ಲೋಕದ ಜನರ ಕೈಬಾಯಿಗೆ ಬಂದೆಯಲ್ಲಾ (ನಿಂದೆಗೆ ಸಿಕ್ಕಿದೆಯಲ್ಲಾ) ತಂದೆ ಕುರುರಾಯ' ಎಂದನು.
ನಾಡೊಳರ್ಧವ ಕೊಡದೆ ಹೋದಡೆ
ಬೇಡಿದೈದೂರುಗಳ ಕೊಡುಯೆನ
ಲೇಡಿಸಿದಲೈ ಸೂಚಿಯಗ್ರಪ್ರಮಿತಧಾರುಣಿಯ |
ಕೂಡೆ ನೀ ಕೊಡೆನೆಂದು ದರ್ಪವ
ಮಾಡಿ ಸಕಲ ಮಹೀತಳವ ಹೋ
ಗಾಡಿ ಹೊಕ್ಕೈ ಜಲವನಾವೆಡೆ ನಿನ್ನ ಛಲವೆಂದ || ೧೬ ||
ಪದವಿಭಾಗ-ಅರ್ಥ: ನಾಡೊಳು+ ಅರ್ಧವ ಕೊಡದೆ ಹೋದಡೆ ಬೇಡಿದ+ ಐದು+ ಊರುಗಳ ಕೊಡು+ ಯೆ+ ಎನಲು+ ಏಡಿಸಿದಲೈ (ಏಡಿಸು=ಅವಹೇಳನ ಮಾಡು.) "ಸೂಚಿಯಗ್ರಪ್ರಮಿತಧಾರುಣಿಯ ಕೂಡೆ" ನೀ ಕೊಡೆನೆಉ+ ಎಂದು ದರ್ಪವಮಾಡಿ ಸಕಲ ಮಹೀತಳವ ಹೋಗಾಡಿ ಹೊಕ್ಕೈ ಜಲವನು+ ಆವೆಡೆ (ಯಾವೆಡೆ - ಎಲ್ಲಿ)ನಿನ್ನ ಛಲ? + ಎಂದ?
ಅರ್ಥ: ಕೃಷ್ನನು,'ನಾನು ಸಂಧಿಗಾಗಿ ನಿಮ್ಮಲ್ಲಿಗೆ ಬಂದು ರಾಜ್ಯದಲ್ಲಿ ಅರ್ಧವನ್ನು ಕೊಡು ಎಂದಾಗ, ನೀನು ಆಗದು ಎಂದೆ; ಅದನ್ನು ಕೊಡದೆ ಹೋದರೆ ಬೇಡಿದ ಐದು ಊರುಗಳನ್ನಾದರೂ ಕೊಡು ಎಂದು ನಾನು ಎನ್ನಲು ನನಗೆ ಅವಹೇಳನ ಮಅಡಿ "ಸೂಚಿಯಗ್ರಪ್ರಮಿತಧಾರುಣಿಯ ಕೂಡೆ" (ಸೂಜಿಯಮೊಯಷ್ಟು ಭೂಮಿಯನ್ನೂ ನೀನು ಕೊಡೆನು" ಎಂದು ದರ್ಪವಮಾಡಿದ. ಈಗ ಸಕಲ ರಾಜ್ಯವನ್ನೂ ಕೈಬಿಟ್ಟು ನೀರನ್ನು ಹೊಕ್ಕೆಯಲ್ಲಾ! ಈಗ ನಿನ್ನ ಆ ಛಲ ಎಲ್ಲಿ ಹೋಯಿತು?' ಎಂದ?

ಧರ್ಮಜನ ಕರೆ

[ಸಂಪಾದಿಸಿ]
ಹೇಳಿದರಲಾ ಭೀಷ್ಮವಿದುರರು
ಮೇಲುದಾಯದ ತಾಗುಥಟ್ಟನು
ಕೇಳದಖಿಳಾ ಕ್ಷೋಹಿಣಿಯ ಕ್ಷತ್ರಿಯರ ತಡೆಗಡಿಸಿ ||
ಕಾಳೆಗದೊಳೊಟ್ಟೈಸಿ ನೀರೊಳು
ಬೀಳುವುದ ನಿನಗಾರು ಬುದ್ಧಿಯ
ಹೇಳಿದರು ನುಡಿ ನುಡಿ ಸುಯೋಧನ ಎಂದನಾ ಭೂಪ || ೧೭ ||
ಪದವಿಭಾಗ-ಅರ್ಥ: ಹೇಳಿದರಲಾ ಭೀಷ್ಮವಿದುರರು ಮೇಲುದಾಯದ(ಸತ್+ ಸಂ+ ಪ್ರ+ ದಾಯ: ಉತ್ತಮವಾದ ಸಮ್ಪ್ರ ದಾಯ ಉತ್ತಮವಾದ ಸಂಪ್ರದಾಯ; ದಾಯ- ಪಾಲು) ತಾಗುಥಟ್ಟನು(ಥಟ್ಟು- ಸೇನೆ- ತಾಗು-ಯುದ್ಗ) ಕೇಳದೆ+ ಅಖಿಳ+ ಆಕ್ಷೋಹಿಣಿಯ ಕ್ಷತ್ರಿಯರ ತಡೆಗಡಿಸಿ(ತಡೆ+ ಕಡಿಸಿ; ತಡೆದು ತಂದು ನಿಲ್ಲಿಸಿ+ ಕಡಿಸಿ) ಕಾಳೆಗದೊಳು+ ಒಟ್ಟೈಸಿ ನೀರೊಳು ಬೀಳುವುದ ನಿನಗಾರು ಬುದ್ಧಿಯ ಹೇಳಿದರು ನುಡಿ ನುಡಿ ಸುಯೋಧನ ಎಂದನಾ ಭೂಪ.
ಅರ್ಥ: ಧರ್ಮಜನು,'ಕೌರವನೇ, ಭೀಷ್ಮವಿದುರರು ನಿನಗೆ ಉತ್ತಮ ಸಂಪ್ರದಾಯವನ್ನೂ,ಯುದ್ಧದ ಪರಿಣಾಮವನ್ನೂ ಹೇಳಿದರಲ್ಲವೇ, ಅದನ್ನು ಕೇಳದೆ ಎಲ್ಲಾ ಹನ್ನೊಂದು ಆಕ್ಷೋಹಿಣಿಯ ದೊಡ್ಡ ಸೇನೆಯನ್ನೂ, ಕ್ಷತ್ರಿಯರನ್ನೂ ಕಾಳೆಗದಲ್ಲಿ ಒಟ್ಟುಗೂಡಿಸಿ ತಂದು ಕಡಿಸಿ/ ಕೊಲ್ಲಿಸಿ, ಈಗ ನೀರಲ್ಲಿ ಬೀಳುವ ಬುದ್ಧಿಯನ್ನು ನಿನಗೆ ಯಾರು ಹೇಳಿದರು? ಸುಯೋಧನಾ, ನುಡಿ ನುಡಿ/ ಹೇಳು ಹೇಳು' ಎಂದನು.
ಕಂಡೆವಂದೊಬ್ಬನ ಪಲಾಯನ
ಪಂಡಿತನನುತ್ತರನನಾತನ
ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ |
ಭಂಡರಿಬ್ಬರು ಭೂಮಿಪರೊಳಾ
ಭಂಡನಿಗೆ ನೀ ಮಿಗಿಲು ಸಲಿಲದ
ಕೊಂಡದಲಿ ಹೊಕ್ಕನೆ ವಿರಾಟಜನೆಂದನಾ ಭೂಪ || ೧೮ ||
ಪದವಿಭಾಗ-ಅರ್ಥ: ಕಂಡೆವು+ ಅಂದು+ ಒಬ್ಬನ ಪಲಾಯನ ಪಂಡಿತನನು+ ಉತ್ತರನನು+ ಆತನ ಗಂಡ (ಯಜಮಾನ, ಮಿಗಿಲು) ನೀನಾದೈ ಪಲಾಯನ ಸಿರಿಯ (ಸಂಪತ್ತು) ಸೂರೆಯಲಿ ಭಂಡರು+ ಇಬ್ಬರು ಭೂಮಿಪರೊಳು(ರಾಜವಂಶದವರು)+ ಆ ಭಂಡನಿಗೆ ನೀ ಮಿಗಿಲು ಸಲಿಲದ ಕೊಂಡದಲಿ ಹೊಕ್ಕನೆ ವಿರಾಟಜನು+ ಎಂದನು+ ಆ ಭೂಪ.
ಅರ್ಥ:ಧರ್ಮಜನು,'ಅಯ್ಯಾ ಕೌರವಾ, ಹಿಂದೆ ಒಬ್ಬನ ಪಲಾಯನ ಪಂಡಿತನಾದ ಉತ್ತರನನ್ನು ಕಂಡಿದ್ದೆವು. ಈಗ ಆತನ ಗಂಡ ನೀನಾದೆಯಲ್ಲಾ! ಪಲಾಯನವೆಂಬ ಸಂಪತ್ತನ್ನು ಸೂರೆಹೊಡೆಯವುದರಲ್ಲಿ ರಾಜವಂಶದ ಭಂಡರು ಇಬ್ಬರು; ಆ ಮೊದಲ ಭಂಡ ಉತ್ತರನಿಗಿಂತ ನೀನು ಹಚ್ಚಿನ ಭಂಡ! ಏಕೆಂದರೆ ವಿರಾಟಜ ಉತ್ತರನು ನೀರಿನ ಹೊಂಡದಲ್ಲಿ ಹೊಕ್ಕನೆ? ಇಲ್ಲ. ಎಂದನು,'
ಅಡವಿಯೇ ನೆಲೆ ಪಾಂಡುಸುತರಿಗೆ
ಕೊಡೆನು ಧರಣಿಯನೆಂದು ಖಡುಗವ
ಜಡಿದೆಲಾ ನಿನ್ನೋಲಗದ ನಾರಿಯರ ಸಮ್ಮುಖದಿ |
ಖಡುಗವನು ಕಳನೊಳಗೆ ಹಾಯಿಕಿ
ನಡುಗೊಳನ ನೀನೋಡಿ ಹೊಕ್ಕಡೆ
ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ || ೧೯ ||
ಪದವಿಭಾಗ-ಅರ್ಥ: ಅಡವಿಯೇ ನೆಲೆ ಪಾಂಡುಸುತರಿಗೆ ಕೊಡೆನು ಧರಣಿಯನೆಂದು ಖಡುಗವ ಜಡಿದೆಲಾ ನಿನ್ನ+ ಓಲಗದ(ಸಭೆ) ನಾರಿಯರ ಸಮ್ಮುಖದಿ ಖಡುಗವನು ಕಳನೊಳಗೆ ಹಾಯಿಕಿ ನಡುಗೊಳನ ನೀನು+ ಓಡಿ ಹೊಕ್ಕಡೆ ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ(ಅಂಗೈ + ಅಂಗೈ, ಹೊಯ್ದು = ತಟ್ಟಿ)
ಅರ್ಥ:ಧರ್ಮಜನು,'ಪಾಂಡುವಿನ ಮಕ್ಕಳಿಗೆ ಅಡವಿಯೇ ನೆಲೆ- ವಾಸ; ಅವರಿಗೆ ಭೂಮಿಯನ್ನು ಕೊಡುವುದಿಲ್ಲ ಎಂದು ಪೌರುಷದಿಂದ ನಿನ್ನ ರಾಜಸಭೆಯ ನಾರಿಯರ ಎದುರಿಗೆ ಖಡ್ಗವನು ಜಡಿದೆಲಾ/ಕುಟ್ಟಿದೆಯಲ್ಲಾ! ಈಗ ಖಡ್ಗವನ್ನು ರಣರಂಗದಲ್ಲಿ ಎಸೆದು, ನೀನು ಓಡಿಹೊಗಿ ಕೊಳದ ನಡುವೆ ಹೊಕ್ಕು ಅಡಗಿದರೆ ನಿನ್ನ ಮಡದಿಯರು ತಮ್ಮ ತಮ್ಮಲ್ಲಿಯೇ ಕೈ ಕೈತಟ್ಟಿ ಚಪ್ಪಾಳೆ ತಟ್ಟಿ ನಗವುದಿಲ್ಲವೇ? ' ಎಂದನು.
ಜೀವಸಖ ರಾಧೇಯನಾತನ
ಸಾವಿನಲಿ ನೀನುಳಿದೆ ಸೋದರ
ಮಾವ ಶಕುನಿಯ ಸೈಂಧವನ ದುಶ್ಶಾಸನಾದಿಗಳ |
ಸಾವಿನಲಿ ಹಿಂದುಳಿದ ಜೀವನ
ಜೀವನವೆ ಜೀವನನಿವಾಸವಿ
ದಾವ ಗರುವಿಕೆ ಕೊಳನ ಹೊರವಡು ಕೈದುಗೊಳ್ಳೆಂದ || ೨೦ ||
ಪದವಿಭಾಗ-ಅರ್ಥ:ಜೀವಸಖ ರಾಧೇಯನು+ ಆತನ ಸಾವಿನಲಿ ನೀನು+ ಉಳಿದೆ ಸೋದರಮಾವ ಶಕುನಿಯ, ಸೈಂಧವನ, ದುಶ್ಶಾಸನಾದಿಗಳ ಸಾವಿನಲಿ ಹಿಂದುಳಿದ ಜೀವನ ಜೀವನವೆ, ಜೀವನನಿವಾಸವು+ ಇದಾವ ಗರುವಿಕೆ (ಘನತೆ) ಕೊಳನ ಹೊರವಡು ಕೈದುಗೊಳ್ಳು (ಕೈದು= ಆಯುಧ, ಕೊಳ್ಳು= ತೆಗೆದುಕೊ)+ ಎಂದ.
ಅರ್ಥ:ಧರ್ಮಜನು ಕೌರವನಿಗೆ,'ರಾಧೇಯ ಕರ್ಣನು ನಿನ್ನ ಜೀವಸಖನು. ಆತನ ಸಾವನ್ನು ನೋಡಿಯೂ ನೀನು ಬದುಕಿ ಉಳಿದೆ. ಸೋದರಮಾವನಾದ ಶಕುನಿಯನ್ನು, ನಿನ್ನ ತಂಗಿಯ ಗಂಡ ಸೈಂಧವನನ್ನು, ದುಶ್ಶಾಸನ ಮೊದಲಾದವರನ್ನು ಸಾವಿನಲ್ಲಿ ನೂಕಿ ನೀನು ಹಿಂದೆ ಉಳಿದುಕೊಂಡೆ; ಆ ಜೀವನ ಒಂದು ಜೀವನವೆ? ಜೀವನದ ನಿವಾಸವು- ಹೀಗೆ ಬದುಕಿರುವುದು ಇದು ಯಾವ ಗೌರವವುಳ್ಳದ್ದು? ಹೀನಾಯ ಜೀವನವು. ಕೌರವಾ ಕೊಳದಿಂದ ಹೊರಹೊರಡು; ಆಯುಧ ತೆಗೆದುಕೊ,' ಎಂದ.
ಓಡಿ ಕೈದುವ ಹಾಯ್ಕಿ ಕಳನೊಳು
ಹೇಡಿಗರ ಹಿಡಿದಳುಕಿ ಬದುಕಿದ
ಗೂಡಿಹುದೆ ಗರುವಾಯಿಯಲಿ ಕಲ್ಪಾಂತಪರಿಯಂತ |
ಓಡಿ ಪಾತಾಳವನು ಹೊಕ್ಕಡೆ
ಕೂಡೆ ಸಂಧಿಸಿ ನಿನ್ನ ಬೇಂಟೆಯ
ನಾಡದಿಹ ಠಾವುಂಟೆ ಕುರುಪತಿ ಕೈದುಗೊಳ್ಳೆಂದ || ೨೧ ||
ಪದವಿಭಾಗ-ಅರ್ಥ:ಓಡಿ ಕೈದುವ ಹಾಯ್ಕಿ(ಆಯುಧವನ್ನು ಹಾಕಿ) ಕಳನೊಳು(ರಣರಂಗದಲ್ಲಿ) ಹೇಡಿಗರ ಹಿಡಿದು+ ಅಳುಕಿ(ಹೆದರಿ) ಬದುಕಿದ ಗೂಡಿಹುದೆ, ಗರುವಾಯಿಯಲಿ ಕಲ್ಪಾಂತ ಪರಿಯಂತ ಓಡಿ ಪಾತಾಳವನು ಹೊಕ್ಕಡೆ ಕೂಡೆ ಸಂಧಿಸಿ ನಿನ್ನ ಬೇಂಟೆಯನು+ ಆಡದಿಹ ಠಾವು+ ಉಂಟೆ (ಸ್ಥಳ ಇದೆಯೇ) ಕುರುಪತಿ ಕೈದುಗೊಳ್ಳು+ ಎಂದ
ಅರ್ಥ: ಧರ್ಮಜನು,'ಕೌರವಾ, ನೀನು ಆಯುಧವನ್ನು ನೆಲಕ್ಕೆ ಹಾಕಿ ಓಡಿ, ಯುದ್ಧಭೂಮಿಯಲ್ಲಿ ಹೇಡಿಗರಂತೆ ಹೆದರಿ ಓಡುಹೋಗಿ ಬದುಕಲು ಹಿಡಿಯುವ ಗೂಡು ಇರುವುದೆ? ದೊಡ್ಡತನವಿದ್ದೂ ನಾಲ್ಕುಯುಗಗಳ ಕಲ್ಪದ ಅಂತ್ಯದ ಪರ್ಯಂತ ಓಡಿಹೋಗಿ, ಪಾತಾಳವನ್ನು ಹೊಕ್ಕರೆ, ನಿನ್ನನ್ನು ಕೂಡಲೆ ಹುಡುಕಿ ಸಂಧಿಸಿ, ನಿನ್ನನ್ನು ಬೇಟೆಯನ್ನು ಆಡದಿರುವ ಸ್ಥಳ ಇದೆಯೇ? ಕುರುಪತಿಯೇ ಆಯುಧವನ್ನು ಹಿಡಿ, ಎಂದ.
ಭರತ ನಹುಷ ಯಯಾತಿ ನಳ ಸಂ
ವರಣ ಸಗರ ದಿಳೀಪ ನೃಗ ರಘು
ವರ ಪುರೂರವ ದುಂದುಮಾರ ಭಗೀರಥಾದಿಗಳು |
ಧರಣಿಪಾಲರನಂತಸಮರದೊ
ಳರಿಬಲವ ಸವರಿದರು ನಿನ್ನವೊ
ಲುರುಳಿದವರಾರುದಕದಲಿ ನೃಪ ಕೈದುಗೊಳ್ಳೆಂದ || ೨೨ ||
ಪದವಿಭಾಗ-ಅರ್ಥ: ಭರತ ನಹುಷ ಯಯಾತಿ ನಳ ಸಂವರಣ ಸಗರ ದಿಳೀಪ ನೃಗ ರಘುವರ ಪುರೂರವ ದುಂದುಮಾರ ಭಗೀರಥ+ ಆದಿಗಳು ಧರಣಿಪಾಲರು+ ಅನಂತ(ಬಹುಕಾಲ) ಸಮರದೊಳು+ ಅರಿಬಲವ ಸವರಿದರು ನಿನ್ನವೊಲು+ ಉರುಳಿದವರು+ ಆರು+ ಉದಕದಲಿ(ನೀರಿನಲ್ಲಿ) ನೃಪ ಕೈದುಗೊಳ್ಳು+ ಎಂದ.
ಅರ್ಥ: ಭರತ, ನಹುಷ, ಯಯಾತಿ, ನಳ, ಸಂವರಣ, ಸಗರ, ದಿಲೀಪ, ನೃಗ, ರಘುವರ, ಪುರೂರವ, ದುಂದುಮಾರ, ಭಗೀರಥ, ಮೊದಲಾದ ಧರಣಿಪಾಲರು/ರಾಜರು ಅನಂತ ಯುದ್ಧದಲ್ಲಿ ಶತ್ರುಸೈನ್ಯವನ್ನು ಸವರಿದರು. ಆದರೆ ನಿನ್ನಂತೆ ನೀರಿನಲ್ಲಿ ಉರುಳಿದವರು/ ಬಿದ್ದವರು ಯಾರು?ರಾಜನೇ ಕೈದುವನ್ನು ಕೈಗೆ ತೆಗೆದುಕೋ, ಮೇಲೆ ಬಾ, ಎಂದ.
ಕೊಳನ ಬಿಡು ಕಾದೇಳು ಹಿಂದಣ
ಹಳಿವ ತೊಳೆ ಹೇರಾಳ ಬಾಂಧವ
ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ |
ಅಳಿದ ಕೀರ್ತಿಯ ಕೆಸರ ತೊಳೆ ಭೂ
ವಳಯಮಾನ್ಯನು ದೈನ್ಯವೃತ್ತಿಯ
ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ || ೨೩ ||
ಪದವಿಭಾಗ-ಅರ್ಥ: ಕೊಳನ ಬಿಡು ಕಾದು(ಯುದ್ಧಮಾಡು)+ ಏಳು ಹಿಂದಣ ಹಳಿವ(ತೆಗಳು, ಅವಮಾನ) ತೊಳೆ ಹೇರಾಳ(ಬಹಳ) ಬಾಂಧವ ಬಳಗ ಭೂಮೀಶ್ವರರ ಬಹಳ+ ಅಕ್ಷೋಹಿಣೀ ದಳವ ಅಳಿದ (ಕೊಂದ) ಕೀರ್ತಿಯ ಕೆಸರ ತೊಳೆ, ಭೂವಳಯ ಮಾನ್ಯನು ದೈನ್ಯವೃತ್ತಿಯ ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳು+ ಎಂದ
ಅರ್ಥ:ಧರ್ಮಜನು ಕೊನೆಯದಾಗಿ,ಕೌರವಾ, ಕೊಳವನ್ನು ಬಿಟ್ಟು ಮೇಲೆಬಂದು ಯುದ್ಧಮಾಡು. ಏಳು. ಹಿಂದಿನ ಬಾಂಧವನ್ನು ಕೊಂದ ದೋಷವನ್ನು ತೊಳೆದುಕೊ. ಹೇರಾಳ ಬಾಂಧವರನ್ನೂ, ಬಂಧುಬಳಗದವರನ್ನೂ, ಭೂಮೀಶ್ವರರನ್ನೂ, ಬಹಳ ಅಕ್ಷೋಹಿಣೀ ಸೈನಿಕರನ್ನೂ ಯುದ್ಧದಲ್ಲಿ ಕೊಲ್ಲಿಸಿದ ಕೀರ್ತಿಯಕೆಸರನ್ನು/ ಅಪಕೀರ್ತಿಯನ್ನು ಯುದ್ಧಮಾಡಿ ತೊಳೆದುಹಾಕು. ಭೂವಲಯದಲ್ಲಿ ಮಾನ್ಯನು/ ಗೌರವವುಳ್ಳವನು, ಹೀಗೆ ದೈನ್ಯವೃತ್ತಿಯನ್ನು ಹೊಂದುವರೆ? ಸುಡು ಈ ಹೇಡಿತನದ ಬಾಳನ್ನು! ಮರುಳೆ ಕುರುಪತಿ ಕೈದುವನ್ನು ಕೈಗೆ ತೆಗೆದುಕೊ,' ಎಂದ.

ಭೀಮನ ಮೂದಲಿಕೆ ಮತ್ತು ಆರ್ಭಟ

[ಸಂಪಾದಿಸಿ]
ವಿಷವನಿಕ್ಕಿದೆ ಹಾವಿನಲಿ ಬಂ
ಧಿಸಿದೆ ಮಡುವಿನೊಳಿಕ್ಕಿ ಬಳಿಕು
ಬ್ಬಸವ ಮಾಡಿದೆ ಹಿಂದೆ ಮನಮುನಿಸಾಗಿ ಬಾಲ್ಯದಲಿ |
ವಸತಿಯಲಿ ಬಳಿಕಗ್ನಿದೇವರ
ಪಸರಿಸಿದೆ ಪುಣ್ಯದಲಿ ನಾವ್ ಜೀ
ವಿಸಿದೆವಡಗಿದಡಿನ್ನು ಬಿಡುವೆನೆಯೆಂದನಾ ಭೀಮ || ೨೪ ||
ಪದವಿಭಾಗ-ಅರ್ಥ: ವಿಷವನು+ ಇಕ್ಕಿದೆ(ಇಕ್ಕು- ಹಾಕು) ಹಾವಿನಲಿ ಬಂಧಿಸಿದೆ ಮಡುವಿನೊಳು+ ಇಕ್ಕಿ ಬಳಿಕ+ ಉಬ್ಬಸವ (ಉಸಿರುಕಟ್ಟು) ಮಾಡಿದೆ ಹಿಂದೆ ಮನಮುನಿಸಾಗಿ (ದ್ವೇಷ ಮುನಿಸು=ಸಿಟ್ಟು) ಬಾಲ್ಯದಲಿ, ವಸತಿಯಲಿ(ಮನೆಯಲ್ಲಿ) ಬಳಿಕ+ ಅಗ್ನಿದೇವರ ಪಸರಿಸಿದೆ, ಪುಣ್ಯದಲಿ ನಾವ್ ಜೀವಿಸಿದೆವು+ ಅಡಗಿದಡೆ+ ಇನ್ನು ಬಿಡುವೆನೆ? ಯೆಂದನು+ ಆ ಭೀಮ
ಅರ್ಥ:ಭೀಮನು ಕೌರವನನ್ನು ಕುರಿತು,'ಹಿಂದೆ ಬಾಲ್ಯದಲ್ಲಿ ಮನಸ್ಸುಕೆಟ್ಟು ಸಿಟ್ಟಿನಿಂದ ನನಗೆ ವಿಷವನ್ನು ಹಾಕಿದೆ; ಬಳಿಕ ನನ್ನನ್ನು ಬಂಧಿಸಿ ಹಾವಿನ ಮಡುವಿನಲ್ಲಿ ಹಾಕಿದೆ. ಕೈಕಾಲು ಕಟ್ಟಿ ಮಡುವಿಗೆ ಹಾಕಿ ಉಸಿರುಕಟ್ಟುವಂತೆ ಮಾಡಿದೆ. ನಂತರ ನಾವು ಇದ್ದ ಅರಗಿನ ಮನಯಲ್ಲಿ ಅಗ್ನಿದೇವರ/ ಬೆಂಕಿಯನ್ನು ಮನೆಗೆ ಹಚ್ಚಿಸಿದೆ. ನಮ್ಮ ಪುಣ್ಯದಿಂದ ನಾವವು ಬದುಕಿದೆವು. ಈಗ ಅಡಗಿದರೆ ಇನ್ನು ಬಿಡುವೆನೆ?' ಎಂದನು.
ಎಲವೊ ರಾಯನ ಪಟ್ಟದರಸಿಯ
ಸುಲಿಸಿದಾ ಛಲವೆಲ್ಲಿ ಹಗೆಗಳ
ಹಳುವದಲಿ ಹೊಗಿಸಿದೆನೆನಿಪ ಸುಮ್ಮಾನ ತಾನೆಲ್ಲಿ |
ಖಳ ಶಿರೋಮಣಿ ನಿನ್ನ ತಲೆಗೂ
ದಲಲಿ ಕೈಗಳ ಕಟ್ಟಿ ಖೇಚರ
ನೆಳೆಯೆ ಬಿಡಿಸಿದರಾರು ಕೌರವ ಎಂದನಾ ಭೀಮ || ೨೫ ||
ಪದವಿಭಾಗ-ಅರ್ಥ: ಎಲವೊ ರಾಯನ ಪಟ್ಟದ+ ಅರಸಿಯ ಸುಲಿಸಿದ+ ಆ ಛಲವೆಲ್ಲಿ, ಹಗೆಗಳ ಹಳುವದಲಿ ಹೊಗಿಸಿದೆನು+ ಎನಿಪ ಸುಮ್ಮಾನ ತಾನೆಲ್ಲಿ, ಖಳ(ದುಷ್ಟ) ಶಿರೋಮಣಿ (ಶ್ರೇಷ್ಠ, ದುಷ್ಠರಲ್ಲಿ ಶ್ರೇಷ್ಠನೇ) ನಿನ್ನ ತಲೆಗೂದಲಲಿ ಕೈಗಳ ಕಟ್ಟಿ ಖೇಚರನು(ಗಂಧರ್ವ)+ ಎಳೆಯೆ ಬಿಡಿಸಿದರು+ ಆರು ಕೌರವ, ಎಂದನು+ ಆ ಭೀಮ.
ಅರ್ಥ:ಕೌರವನು ಧರ್ಮಜನ ಮಾತಿಗೆ ಹೊರಗೆ ಬಾರದಿರಲು, ಅಲ್ಲಿದ್ದ ಭೀಮನು, 'ಎಲವೊ ಧರ್ಮರಾಯನ ಪಟ್ಟದ ರಾಣಿಯ ಸೀರೆಯನನು ಸುಲಿಸಿದ/ಬಿಚ್ಚಲು ಯತ್ನಿಸಿದ ಆ ಛಲವು ಎಲ್ಲಿ ಹೋಯಿತು? ನಿನ್ನ ಶತ್ರುಗಳನ್ನು ಕಾಡಿನಲ್ಲಿ ಹೊಗಿಸಿದೆನು ಎನ್ನುವ ಸುಮ್ಮಾನ/ಅಹಂಕಾರ ತಾನು ಎಲ್ಲಿ ಹೋಯಿತು? ಖಳ ಶಿರೋಮಣಿಯೇ, ನಿನ್ನ ತಲೆಗೂದಲಲ್ಲಿ ಕೈಗಳನ್ನು ಹಿಂದಕ್ಕೆ ಕಟ್ಟಿ, ಗಂಧರ್ವನು ಎಳೆದುಕೊಂಉ ಹೋದಾಗ ಬಿಡಿಸಿದರು ಯಅರು ಕೌರವ? ಎಂದನು.
ಭೀಮನೆನೆ ಭುಗಿಲೆಂಬ ರೋಷದ
ತಾಮಸವ ಬೀಳ್‌ಕೊಟ್ಟೆಲಾ ನಿ
ರ್ನಾಮವಾದುದೆ ಬಿರುದು ಪಾಂಡವತಿಮಿರರವಿಯೆಂಬ |
ಭೀಮವನದಾವಾಗ್ನಿ ಹೊರವಡು
ಭೀಮಭಾಸ್ಕರರಾಹು ಹೊರವಡು
ಭೀಮಗರ್ಜನೆ ಮಧುರಗೀತವೆ ನೃಪತಿಯೇಳೆಂದ || ೨೬ ||
ಪದವಿಭಾಗ-ಅರ್ಥ: ಭೀಮನು+ ಎನೆ ಭುಗಿಲೆಂಬ ರೋಷದ ತಾಮಸವ ಬೀಳ್‌-ಕೊಟ್ಟೆಲಾ (ಬಿಟ್ಟುಕೊಟ್ಟೆಯಲ್ಲಾ), ನಿರ್ನಾಮವಾದುದೆ ಬಿರುದು ಪಾಂಡವತಿಮಿರರವಿಯೆಂಬ; ಭೀಮವನ-ದಾವಾಗ್ನಿ ಹೊರವಡು, ಭೀಮಭಾಸ್ಕರರಾಹು ಹೊರವಡು, ಭೀಮಗರ್ಜನೆ ಮಧುರಗೀತವೆ ನೃಪತಿಯೆ+ ಏಳು+ ಎಂದ
ಅರ್ಥ:ಭೀಮನು,'ಕೌರವಾ, ಭೀಮ ಎಂದರೆ ಬೆಂಕಿಯಂತೆ ಭುಗಿಲೆಂದು ರೋಷಪಡುತ್ತಿದ್ದ ತಾಮಸ ಗುಣವನ್ನು ಬೀಳುಕೊಟ್ಟೆಯಲಾ! ಪಾಂಡವತಿಮಿರರವಿಯೆಂಬ- ಪಾಂಡವರೆಂಬ ಕತ್ತಲೆಗೆ ಸೂರ್ಯನು ಎಂಬ ನಿನ್ನ ಬಿರುದು ನಿರ್ನಾಮವಾದುದೆ- ಇಲ್ಲವಾಯಿತೇ?; ಭೀಮವನ-ದಾವಾಗ್ನಿ ಹೊರವಡು- ಭೀಮನೆಂಬ ವನವನ್ನು ಸುಡುವ ಕಾಢುಕಿಚ್ಚೇ, ಹೊರಗೆ ಬಾ! ಭೀಮಭಾಸ್ಕರರಾಹು ಹೊರವಡು- ಭೀಮನೆಂಬ ಸೂರ್ಯನಿಗೆ ರಾಹು ಎಂದು ಕೊಚ್ಚಿಕೊಳ್ಳುವ ಕೌರವನೇ ಹೊರಗೆ ಬಾ!, ಭೀಮಗರ್ಜನೆ ಮಧುರಗೀತವೆ ನೃಪತಿಯೆ- ಭೀಮನ ಗರ್ಜನೆಯನ್ನು ಅಲಕ್ಷದಿಂದ ಮಧುರ ಗೀತೆ ಎನ್ನುವ ನೃಪತಿಯೇ ನೀರಿನಿಂದ ಮೇಲೆ ಏಳು,' ಎಂದ.
ಕೆಡಹಿ ದುಶ್ಶಾಸನನ ರಕುತವ
ಕುಡಿದವನು ತಾನಲ್ಲಲೇ ನಿ
ನ್ನೊಡನೆ ಹುಟ್ಟಿದ ನೂರ ನುಂಗಿದ ಕಾಲಯಮನಲ್ಲಾ |
ಅಡಗಿದಡೆ ಬಿಡುವೆನೆ ಭಯಜ್ವರ
ಹಿಡಿದ ನಿನ್ನನು ಸೆಳೆದು ರಣದಲಿ
ತೊಡೆಯ ಕಳುಚವ ಮೃತ್ಯು ಭೀಮನ ಕಯ್ಯ ನೋಡೆಂದ || ೨೭ ||
ಪದವಿಭಾಗ-ಅರ್ಥ: ಕೆಡಹಿ ದುಶ್ಶಾಸನನ ರಕುತವ ಕುಡಿದವನು ತಾನಲ್ಲಲೇ, ನಿನ್ನೊಡನೆ ಹುಟ್ಟಿದ ನೂರ ನುಂಗಿದ ಕಾಲಯಮನಲ್ಲಾ (ಮೃತ್ಯು), ಅಡಗಿದಡೆ ಬಿಡುವೆನೆ ಭಯಜ್ವರ ಹಿಡಿದ ನಿನ್ನನು ಸೆಳೆದು ರಣದಲಿ(ಯುದ್ಧದಲ್ಲಿ) ತೊಡೆಯ ಕಳುಚವ ಮೃತ್ಯು ಭೀಮನ ಕಯ್ಯ ನೋಡೆಂದ.
ಅರ್ಥ:ಭೀಮನು,'ದುರ್ಯೋಧನಾ, ನಿನ್ನ ತಮ್ಮ ದುಶ್ಶಾಸನನನ್ನು ರಣರಂಗದಲ್ಲಿ ಕೆಡವಿಕೊಂದು, ಅವನ ರಕ್ತವನ್ನು ಕುಡಿದವನು ತಾನಲ್ಲವೇನೋ-ಲೇ! ನಿನ್ನೊಡನೆ ಹುಟ್ಟಿದ ನೂರಜನ ನಿನ್ನ ತಮ್ಮಂದಿರನ್ನು ನುಂಗಿದ ಕಾಲಯಮನು ನಾನಲ್ಲವಾ!, ಅಡಗಿದರೆ ಬಿಡುವೆನೆ? ಭಯದ ಜ್ವರಹಿಡಿದ ನಿನ್ನನ್ನು ಸೆಳೆದು ಯುದ್ಧದಲ್ಲಿ ತೊಡೆಯನ್ನು ಕಳುಚವ ಮೃತ್ಯು ಭೀಮನ ಕಯ್ಯನ್ನು ನೋಡು,' ಎಂದ.
ಜಲವಹೊಕ್ಕನ ಹುಲ್ಲ ಕಚ್ಚಿದ
ಖಳನ ತರುಗಿರಿಶಿಖರದಲಿ ಕಾ
ಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ
ಕೊಲುವುದನುಚಿತವೆಂಬ ಶಾಸ್ತ್ರವ
ತಿಳಿದು ನಂಬಿದೆ ನಿನ್ನನೊಬ್ಬನ
ಕೊಲುವುದಕೆ ಶ್ರುತಶಾಸ್ತ್ರರಾವಲ್ಲೆಂದನಾ ಭೀಮ ೨೮
ಪದವಿಭಾಗ-ಅರ್ಥ: ಜಲವಹೊಕ್ಕನ, ಹುಲ್ಲ ಕಚ್ಚಿದ ಖಳನ, ತರುಗಿರಿ ಶಿಖರದಲಿ ಕಾಲ್ದೊಳಸಿದನ, ವಲ್ಮೀಕ (ಹುತ್ತ) ಸಂಗತನನು, ನಿರಾಯುಧನ ಕೊಲುವುದು+ ಅನುಚಿತವೆಂಬ ಶಾಸ್ತ್ರವ ತಿಳಿದು ನಂಬಿದೆ, ನಿನ್ನನು+ ಒಬ್ಬನ ಕೊಲುವುದಕೆ ಶ್ರುತಶಾಸ್ತ್ರರು(=ಶಾಸ್ತ್ರ+ ಶ್ರುತರು= ಕೇಳಿ ತಿಳಿದವರು)+ ಆವಲ್ಲ(ನಾವಲ್ಲ)+ ಎಂದನು ಆ ಭೀಮ.
ಅರ್ಥ: ಭೀಮನು,'ನೀರಿನಲ್ಲಿ ಹೊಕ್ಕವನನ್ನು, ಹುಲ್ಲನ್ನು ಕಚ್ಚಿಕೊಂಡ ದುಷ್ಟನನ್ನು, ಮರ ಬೆಟ್ಟಗಳಲ್ಲಿ ಶಿಖರದಲ್ಲಿ ಕಾಲು ಸಿಕ್ಕಿಸಿಕೊಂಡವನನ್ನು. ಹುತ್ತದಲ್ಲಿ ಇದ್ದವನನ್ನು, ನಿರಾಯುಧನಾದವನನ್ನು ಕೊಲ್ಲುವುದು ಅನುಚಿತವು- ಯೋಗ್ಯವಲ್ಲ, ಅಧರ್ಮವು ಎಂಬ ಶಾಸ್ತ್ರವನ್ನು ನೀನು ತಿಳಿದು ಅದನ್ನು ನಂಬಿದೆ - ನೀಇನಲ್ಲ ಹೊಕ್ಕಿರುವೆ. ನಿನ್ನ ಒಬ್ಬನನ್ನು ಕೊಲ್ಲುವುದಕ್ಕೆ ಮಾತ್ರಾ ಆ ಶಾಸ್ತ್ರಗಳನ್ನು (ಶ್ರುತ)ಕೇಳಿತಿಳಿದವರು ನಾವಲ್ಲ.' (ನಿನ್ನನ್ನು ಕೊಲ್ಲಲು ಆ ನಿಯಮಗಳು ನಮಗಿಲ್ಲ) ಎಂದನು.

ರನ್ನನ ಗದಾಯುದ್ಧದ ಭಾಗ

[ಸಂಪಾದಿಸಿ]
ಕೌರವನಿಗೆ ಭೀಮನ ಮೂದಲಿಕೆ
ಜಳದೊಳ್ ಮೀನಿರ್ಪವೊಲ್ ನೀಂ ಕೊಳದೊಳೆ ಮುಳುಗಿರ್ದಕಟಾ ಕೋಡಸೇಡಿಂ
ಗೊಳಗಾದಯ್ ನಿನ್ನ ದುರ್ಯೋಧನವೆಸರ್ಗಿದು ಲಜ್ಜಾಕರಂ ತೋಱಿದಯ್ ನಿ
ನ್ನಳವಂ ಚಿಃ ಸತ್ತರೇಂ ಪುಟ್ಟರೆ ಪೊಱಮಡು ನೀಂ ಕಯ್ದುಗೊಳ್ ಕೌರವೇಂದ್ರಾ
ಚಳವಜ್ರಂ ಬಂದನೀಗಳ್ ಕುರುಕುಲಮಥನೋದ್ಭೀಕರಂ ಭೀಮಸೇನಂ॥೧೩॥

ಪದವಿಭಾಗ-ಅರ್ಥ:-ಜಳದೊಳ್ ಮೀನಿರ್ಪವೊಲ್+ನಿಂ ಕೊಳದೊಳೆ ಮುಳುಗಿರ್ದು = ನೀರಿನಲ್ಲಿ ಮೀನುಗಳಿರುವಂತೆ ನೀನೂ ಕೊಳದಲ್ಲಿ ಮುಳುಗಿಕೊಂಡು, ಅಕ್ಕಟಾ= ಅಯ್ಯೋ ಕಷ್ಟವೇ ! ಕೋಡಸೇಡಿಂಗೆ ಒಳಗಾದಯ್=ಕೋಡು-ತಣ್ಣಗಿರು; ಚಳಿಯ ಬಾಧೆಗೆ ಒಳಗಾದೆಯಲ್ಲಾ! ನಿನ್ನ ದುರ್ಯೋಧನ ಪೆಸರ್ಗೆ ಇದು ಲಜ್ಜಾಕರಂ= ದುರ್ಯೋಧನನೆಂಬ ನಿನ್ನ ಹೆಸರಿಗೇ ಇದು ಅಪಮಾನವು. ನಿನ್ನ ಅಳವಂ ತೋಱಿದಯ್= ನಿನ್ನ ಸಾಮರ್ಥ್ಯವನ್ನು ತೋರಿಸಿದೆಯಲ್ಲಾ! ಚಿಃ =ನಿನ್ನ ಪೌರುಷಕ್ಕೆ ಧಿಕ್ಕಾರ! ಸತ್ತರ್ ಏಂ ಪುಟ್ಟರೇ= ಸತ್ತರೇನಂತೆ, ಮತ್ತೆ ಹುಟ್ಟುವುದಿಲ್ಲವೇ ? ಪೊಱಮಡು=ಹೊರಕ್ಕೆ ಬಾ, ನೀಂ ಕಯ್ದುಗೊಳ್= ನೀನು ಆಯುಧವನ್ನು ಹಿಡಿ, ಈಗಳ್= ಈಗಲಾದರೋ, ಕೌರವೇಂದ್ರಾಚಳವಜ್ರಂ ಬಂದಂ, ಕೌರವೇಂದ್ರ+ ಅಚಳ+ ವಜ್ರಂ, ಕುರುಕುಲ+ ಮಥನೋದ್ಭೀಕರಂ ಭೀಮಸೇನಂ ಬಂದಂ= ಕೌರವೇಂದ್ರನೆಂಬ ಪರ್ವತಕ್ಕೆ ವಜ್ರಾಯುಧದಂತಿರುವವನೂ, ಕುರುವಂಶವನ್ನು ಮಥನ+ ಉಧ್ಬೀಕರಂ- ಕಡೆಯುವ ಅತಿಭಯಂಕರನಾದವನೂ ಆದ ಭೀಮಸೇನನು ಬಂದಿದ್ದಾನೆ.(ಱ= ರ,)
ತಾತ್ಪರ್ಯ ;- ನೀರಿನಲ್ಲಿ ಮೀನುಗಳು ಇರುವಂತೆ ನಿನ್ನಂಥವನೂ ಕೊಳದಲ್ಲಿ ಮುಳುಗಿ ಕೊಂಡು ಚಳಿಯಿಂದ ಮುದುರಿಕೊಳ್ಳುವಂತಾಯಿತೇ ! ಅಯ್ಯೋ ಕಷ್ಟವೇ ! ದುರ್ಯೋಧನನೆಂಬ ನಿನ್ನ ಹೆಸರಿಗೆ ಇದು ನಾಚಿಕೆಗೇಡಲ್ಲವೇ? ನೀನು ಎಂಥ ಪರಾಕ್ರಮಿ ಎಂಬುದನ್ನು ತೋರಿಸಿಕೊಟ್ಟೆಯಲ್ಲಾ ! ಚಿಃ ನಿನಗೆ ಧಿಕ್ಕಾರ! ಸತ್ತವರೇನು? ಮತ್ತೆ ಹುಟ್ಟುವುದಿಲ್ಲವೇ? ಶೂರನಾದ ನೀನೂ ಜೀವಗಳ್ಳನಾಗುವುದೇ! ಕೊಳದಿಂದ ಹೊರಟು ಬಾ. ಆಯುಧವನ್ನು ಹಿಡಿದುಕೋ. ಕೌರವೇಂದ್ರನೆಂಬ ಪರ್ವತವನ್ನು ಪುಡಿಗುಟ್ಟುವ ವಜ್ರಾಯುಧದಂತಿರುವ ಕುರುಕುಲವನ್ನು ಮಥಿಸುವ/ಕಡೆಯುವ ಭಯಂಕರನಾದ ಭೀಮಸೇನನು ಬಂದಿದ್ದಾನೆ. ಮೇಲೇಳು.

ಹರಿಸಂಧಾನಕ್ಕೆ ವಂದಂದವಗಡಿಸಿದಹಂಕಾರಮೇನಾಯ್ತೊ ಕೃಷ್ಣಾಂ
ಬರಕೇಶಾಕೃಷ್ಟಿಯಂ ಮಾಡಿಸಿದ ಮದಮದೇನಾಯ್ತೊ ಕೌಂತೇಯರಂ ಮ
ಚ್ಚರದಿಂ ಕಾಂತಾರದೊಳ್ ತಿಱ್ರನೆ ತಿರಿಪಿದ ಸೊರ್ಕೀಗಳೇನಾದುದೆಂದಾ
ಕುರುವಂಶಾಧೀಶನಂ ಮೂದಲಿಸಿದನದಟಂ ಭೀಮನುದ್ದಾಮಭೀಮಂ ॥೧೪॥

ಪದವಿಭಾಗ ಅರ್ಥ;- ಹರಿ= ಶ್ರೀಕೃಷ್ಣನು, ಸಂಧಾನಕ್ಕೆ ವಂದಂದು= ಸಂಧಿಗಾಗಿ ಬಂದ ಆ ದಿನ, ಅವಗಡಿಸಿದ= ಮೇಲೆಬಿದ್ದ, ಅಹಂಕಾರಂ= ಗರ್ವ, ಏನಾಯ್ತೊ= ಏನಾಯಿತು = ಎಲ್ಲಿಗೆ ಹೋಯಿತೋ? ಕೃಷ್ಣಾ= ದ್ರೌಪದಿಯ, ಅಂಬರ=ಸೀರೆ, ಕೇಶ=ತುರುಬು, ಆಕೃಷ್ಟಿಯಂ= ಸೆಳೆಯುವಿಕೆಯನ್ನು, ಮಾಡಿಸಿದ, ಮದಂ= ದರ್ಪ, ಅದೇನಾಯ್ತೊ=ಅದು ಏನಾಯಿತೋ ? ಕೌಂತೇಯರಂ= ಪಾಂಡವರನ್ನು, ಮಚ್ಚರದಿಂ= ಮತ್ಸರದಿಂದ, ಕಾಂತಾರದೊಳ್ ತಿಱ್ರನೆ ತಿರಿಪಿದ= ಕಾಡುಗಳಲ್ಲಿ ಅಲೆದಾಡುವಂತೆ ಮಾಡಿದ, ಸೊರ್ಕು=ಸೊಕ್ಕು, ಈಗಳೇನಾದುದು= ಈಗ ಏನಾಯಿತೋ? ಎಂದು= ಎಂಬುದಾಗಿ, ಕುರುವಂಶಾಧೀಶನಂ= ದುರ್ಯೋಧನನನ್ನು, ಅದಟಂ= ಪರಾಕ್ರಮಿಯೂ, ಉದ್ದಾಮಭೀಮಂ= ಅತಿ ಶ್ರೇಷ್ಠನಾದ, ಭೀಮಂ= ಭೀಮಸೇನನು, ಮೂದಲಿಸಿದಂ= ಹೀಯಾಳಿಸಿದನು.
ತಾತ್ಪರ್ಯ :-ಭೀಮನು ಗರ್ಜಿಸಿದ, “ ಎಲಾ ಮದಾಂಧನೇ ! ಶ್ರೀಕೃಷ್ಣನು ಸಂಧಿಮಾಡುವುದಕ್ಕಾಗಿ ಬಂದಿದ್ದಾಗ ಅವನ ಮೇಲೆ ಬಿದ್ದು ಬಂಧಿಸಲು ಯತ್ನಿಸಿದ ಆ ಅಹಂಕಾರ ಈಗ ಎಲ್ಲಿಗೆ ಹೋಯಿತು? ದ್ರೌಪದಿಯ ಸೀರೆಯನ್ನೂ ಕೇಶಪಾಶವನ್ನೂ ತಮ್ಮನಿಂದ ಸೆಳೆಯುವಂತೆ ಮಾಡಿಸಿದ ಮದ ಎಲ್ಲಿ ಅಡಗಿತು? ಪಾಂಡವರನ್ನು ಮತ್ಸರದಿಂದ ಕಾಡಿನಿಂದ ಕಾಡಿಗೆ ಅಲೆಯುವಂತೆ ಮಾಡಿದ ಸೊಕ್ಕು ಏನಾಯ್ತು?“ ಈ ಪ್ರಕಾರವಾಗಿ ಅತಿ ಭೀಷಣನೂ, ಮಹಾಪರಾಕ್ರಮಿಯೂ, ಶ್ರೇಷ್ಠನೂ ಆದ ಭೀಮನು ದುರ್ಯೋಧನನನ್ನು ಮೂದಲಿಸಿದನು.

ಎನಿತುಂ ಪೊಕ್ಕಿರ್ದಪಯ್ ನೀಂ ಪೊಱಮಡು ಕೊಳದಿಂ ದ್ರೌಷದೀದ್ರೋಹದುಶ್ಯಾ
ಸನದುಷ್ಟಜ್ಯೇಷ್ಠ ಭೀಷ್ಮಪ್ರಮುಖನಿಖಿಲಬಂಧುಕ್ಷಯೋತ್ಪನ್ನದುಃಖ
ಧ್ವನಿವಾರಿಚ್ಛಿನ್ನಧೈರ್ಯದ್ರುಮ ಯಮಸುತ ನಿಷ್ಕರಣ ದ್ವೇಷಿ ಭೀಮ
ಧ್ವನಿಯಂ ಕೇಳ್ದಿನ್ನುಮಿರ್ದಯ್ ಕುರುಕುಲವಿಲಯೋತ್ಪಾತನೋತ್ಪಾತಕೇತೂ ॥೧೫॥

ಪದವಿಭಾಗ ಅರ್ಥ:-(ಎನಿತುಂ ಪೊಕ್ಕಿರ್ದಪಯ್ ನೀಂ ಪೊಱಮಡು ಕೊಳದಿಂ->) ದ್ರೌಪದೀ ದ್ರೋಹ= ದ್ರೌಪದಿಗೆ ಕೇಡನ್ನು ಬಗೆದವನೇ, ದುಶ್ಯಾಸನ ದುಷ್ಟ ಜ್ಯೇಷ್ಟ= ದುಶ್ಯಾಸನನೆಂಬ ದುಷ್ಟನ ಅಣ್ಣನೇ, ಭೀಷ್ಮ ಪ್ರಮುಖ+ ನಿಖಿಲಬಂಧು+ ಕ್ಷಯೋತ್ಪನ್ನ+ ದುಃಖಧ್ವನಿವಾರಿ+ ಚ್ಛಿನ್ನಧೈರ್ಯದ್ರುಮ(ಚ್ಛಿನ್ನ+ ಧೈರ್ಯದ್ರುಮ= ಮುರಿದು ಬಿದ್ದ ಧೈರ್ಯವೆಂಬ ವೃಕ್ಷವೇ)= ಭೀಷ್ಮರೇ ಮೊದಲಾದ ಸಮಸ್ತ ಪ್ರಮುಖ ಬಂಧುಗಳ ನಾಶದಿಂದುಂಟಾದ ಆರ್ತನಾದವೆಂಬ (ವಾರಿ=)ಪ್ರವಾಹದಿಂದ ಮುರಿದು ಬಿದ್ದ ಧೈರ್ಯವೆಂಬ ವೃಕ್ಷವೇ, ಕುರುಕುಲ ವಿಲಯ+ ಉತ್ಪಾತನ+ ಉತ್ಪಾತಕೇತೂ= ಕುರುವಂಶವನ್ನು ನಾಶಗೊಳಿಸುವುದರಲ್ಲಿ ಪ್ರಳಯಕಾಲದಲ್ಲಿ ಕಾಣಿಸಿಕೊಳ್ಳುವ ಧೂಮಕೇತುವಿನಂತಿರುವವನೇ; ನೀಂ ಎನಿತುಂ ಪೊಕ್ಕಿರ್ದಪೆಯ್= ನೀನು ಎನಿತುಂ (ಕಾಲ)= ಎಷ್ಟು ಹೊತ್ತು, ನೀರಿನಲ್ಲಿ ಹೊಕ್ಕಿರುವೆ! ಪೊರಮಡು ಕೊಳದಿಂ= ಕೊಳದಿಂದ ಹೊರಟು ಬಾ. ಭೀಮಧ್ವನಿಯಂ ಕೇಳ್ದಿನುಮಿರ್ದಯ್(ಕೇಳ್ದಿನುಂ+ ಇರ್ದಯ್)= ಭೀಮನ ಭಯಂಕರ ಧ್ವನಿಯನ್ನು ಕೇಳಿಯೂ ಇನ್ನು ಅಲ್ಲೇ ಇರುವೆಯಾ?
ತಾತ್ಪರ್ಯ:-ಎಲೋ ದ್ರೌಪದೀ ದ್ರೋಹನೇ! ದುಷ್ಟ ದುಶ್ಯಾಸನನ ದುಷ್ಟ ಅಣ್ಣನೇ! ಭೀಷ್ಮರೇ ಮೊದಲಾದ ಪ್ರಮುಖ ಬಂಧುಗಳ ನಾಶದ ಶೋಕದ ಪ್ರವಾಹದಿಂದ ಮುರಿದುಬಿದ್ದ ಧೈರ್ಯವೆಂಬ ಮರವೇ! ಧರ್ಮರಾಯನನ್ನು ನಿಷ್ಕಾರಣ ದ್ವೇಷಿಸುವವನೇ! ಕುರುವಂಶನಾಶಕ ಪ್ರಳಯಕಾಲದ ಧೂಮಕೇತುವೇ? ಎಷ್ಟು ಹೊತ್ತು ನೀರಿನಲ್ಲಿ ಅಡಗಿ ಕುಳಿತುಕೊಳ್ಳುವೆ? ಹೊರಕ್ಕೆ ಬಾ! ಭೀಮನ ಗರ್ಜನೆಯನ್ನು ಕೇಳಿಯೂ ಇನ್ನೂ ಕೊಳದಲ್ಲೇ ಇರುವೆಯಾ ?

ಭೀಮನ ಮೂದಲಿಕೆ

[ಸಂಪಾದಿಸಿ]
ಅರಸನಲಿ ಹಗೆಯಿಲ್ಲ ಯಮಳರು
ತರಳರಲಿ ಮುನಿಸಿಲ್ಲ ಫಲುಗುಣ
ನರೆವಿರೋಧಿ ಸಗರ್ವಿ ಭೀಮನ ಬಾಡ ಕೊಯ್‌ಕೊಯ್ದು |
ಮರುಳ ಬಳಗವ ತಣಿಸಿದಡೆ
ಹಿರಿಯರಸರಲಿ ಸಂಧಾನವೆಂಬೈ
ಕುರುಪತಿಯೆ ನೆರೆ ವೈರಿ ಭೀಮನ ಸೀಳಲೇಳೆಂದ || ೨೯ ||
ಪದವಿಭಾಗ-ಅರ್ಥ: ಅರಸನಲಿ ಹಗೆಯಿಲ್ಲ ಯಮಳರು ತರಳರಲಿ(ಚಿಕ್ಕವರು) ಮುನಿಸು+ ಇಲ್ಲ ಫಲುಗುಣನ+ ಅರೆವಿರೋಧಿ ಸಗರ್ವಿ ಭೀಮನ ಬಾಡ(ಮಾಂಸ) ಕೊಯ್‌ ಕೊಯ್ದು ಮರುಳ ಬಳಗವ(ಬಳಗ= ಗುಂಪು) ತಣಿಸಿದಡೆ ಹಿರಿಯ+ ಅರಸರಲಿ ಸಂಧಾನವೆಂಬೈ ಕುರುಪತಿಯೆ ನೆರೆ(ಹೆಚ್ಚು, ದೊಡ್ಡ) ವೈರಿ ಭೀಮನ ಸೀಳಲು+ ಏಳು+ ಎಂದ
ಅರ್ಥ:ಭೀಮನು,'ಕೌರವನೇ ನಿನಗೆ ಅರಸ ಧರ್ಮಜನಲ್ಲಿ ವೈರತ್ವವಿಲ್ಲ; ಚಿಕ್ಕವರಾದ ಯಮಳರು- ನಕುಲ ಸಹದೇವರಮೇಲೆ ಸಿಟ್ಟಿಲ್ಲ. ಫಲುಗುಣನನುನಿನಗೆ ಅರೆವಿರೋಧಿ; ಗರ್ವಿಷ್ಠನಾದ ಭೀಮನ ಮಾಂಸವನ್ನು ಕೊಯ್ದು ಕೊಯ್ದು ಮರುಳ/ಕ್ರೇತಗಳ ಬಳಗವನ್ನು ತೃಪ್ತಿಪಡಿಸಿದರೆ ನಂತರ ಮಾತ್ರಾ, ಹಿರಿಯ ಅರಸ ಧರ್ಮಜನೊಡನೆ ಸಂಧಾನವೆಂಬೆಯಲ್ಲವೇ? ಈಗ ಕುರುಪತಿಯೆ/ಕೌರವನೇ ದೊಡ್ಡ ವೈರಿ ಭೀಮನನ್ನು ಸೀಳಲು ಏಳು,' ಎಂದ.
ತನತನಗೆ ಸಾತ್ಯಕಿ ಯಮಳ ಫಲು
ಗುಣರು ಪಂಚದ್ರೌಪದೀನಂ
ದನರು ಧೃಷ್ಟದ್ಯುಮ್ನ ಸೃಂಜಯ ಸೋಮಕಾದಿಗಳು |
ಅನುಚಿತವು ಸಲಿಲಪ್ರವೇಶವು
ಜನಪತಿಗೆ ಕರ್ತವ್ಯವೆಂಬುದು
ಜನಜನಿತವೆಂದುಲಿದುದೈದೆ ಸಮುದ್ರಘೋಷದಲಿ || ೩೦ ||
ಪದವಿಭಾಗ-ಅರ್ಥ: ತನತನಗೆ (ತಾವು ತಾವೇ - ಹೇಳಿದರು) ಸಾತ್ಯಕಿ ಯಮಳ ಫಲುಗುಣರು ಪಂಚದ್ರೌಪದೀ ನಂದನರು(ದ್ರೌಪದಿಯ ಐದುಮಕ್ಕಳು) ಧೃಷ್ಟದ್ಯುಮ್ನ ಸೃಂಜಯ ಸೋಮಕಾದಿಗಳು- ಅನುಚಿತವು ಸಲಿಲಪ್ರವೇಶವು (ನೀರಿನಲ್ಲಿ ಹೊಗುವುದು) ಜನಪತಿಗೆ ಕರ್ತವ್ಯವೆಂಬುದು ಜನಜನಿತವೆಂದು+ ಉಲಿದುದು (ಹೇಳಿದರು)+ ಐದೆ (ಬರಲು, ಬಂದು) ಸಮುದ್ರಘೋಷದಲಿ
ಅರ್ಥ:ಭೀಮನ ಜೊತೆಗೇ ಅಲ್ಲಿದ್ದ,ಸಾತ್ಯಕಿ, ಯಮಳನಕುಲಸಹದೇವರು, ಫಲುಗುಣನು, ದ್ರೌಪದಿಯ ಐದುಮಕ್ಕಳು, ಧೃಷ್ಟದ್ಯುಮ್ನ, ಸೃಂಜಯ, ಸೋಮಕ ಮೊದಲಾದವರು (ಐದೆ-ಬರಲು) ಬಂದು ನೀರಿನಲ್ಲಿ ಹೊಗಿ ಅಡಗುವುದು ರಾಜನಿಗೆ ಅನುಚಿತ ತಾರ್ಯವೆಂಬುದು ಜನಜನಿತವಾಗಿದೆ- ಪ್ರಸಿದ್ಧವಾಗಿದೆ ಎಂದು ತಾವು ತಾವೇ ಸಮುದ್ರಘೋಷದಂತೆ ಗಟ್ಟಿಯಾಗಿ ಹೇಳಿದರು.

ಕೌರವನು ಭೀಮನ ಮೂದಲಿಕೆಗೆ ಕೋಪಗೊಂಡು ಮಂತ್ರವನ್ನು ಮರೆತನು

[ಸಂಪಾದಿಸಿ]
ಅರಸ ಕೇಳೈ ನಿನ್ನ ಮಗನು
ಬ್ಬರಿಸಿದನು ರೋಮಾಂಚದಲಿ ಗ
ಬ್ಬರಿಸುತಧಿಕಕ್ರೋಧಶಿಖಿ ಕರಣೇಂದ್ರಿಯಾದಿಗಳ |
ತುರುಗಿದಂತಃಖೇದ ಮಂತ್ರಾ
ಕ್ಷರಕೆ ಜವನಿಕೆಯಾದುದೈ ನಿ
ರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ || ೩೧ ||
ಪದವಿಭಾಗ-ಅರ್ಥ: ಅರಸ ಕೇಳೈ ನಿನ್ನ ಮಗನು+ ಉಬ್ಬರಿಸಿದನು(ಉಬ್ಬರಿಸು- ಹೆಚ್ಚು ಹಿಗ್ಗು, ಉಕ್ಕು,) ರೋಮಾಂಚದಲಿ ಗಬ್ಬರಿಸುತ(ಗಬ್ಬರಿಸು= ನೆಲವನ್ನು ಅಗೆ,- ತೋಡು. ಆರ್ಭಟಿಸು) + ಅಧಿಕಕ್ರೋಧಶಿಖಿ (ಶಿಖಿ=ಬೆಂಕಿ) ಕರಣೇಂದ್ರಿಯಾದಿಗಳ ತುರುಗಿದ (ತುಂಬಿದ)+ ಅಂತಃಖೇದ ಮಂತ್ರಾಕ್ಷರಕೆ ಜವನಿಕೆಯಾದುದೈ(ಜವನಿಕೆ= ತೆರೆ;ಪರದೆ;) ನಿರ್ಭರದ (1. ವೇಗ. 2. ಕ್ರೌರ್ಯ. 3. ಪೂರ್ಣವಾದುದು) ವೀರಾವೇಶದಲಿ ಪಲ್ಲಟಿಸಿದನು(ಚಂಚಲವಾದನು, ತಿರಿಚು, ಬಲವಂತವಾಗಿ ತಿರುಗಿಸು, ನುಲಿ, ಹಿಂಡು) ಭೂಪ.
ಅರ್ಥ: ಸಂಜಯನು ಧೃತರಾಷ್ಟ್ರನಿಗೆ,'ಅರಸನೇ ಕೇಳಯ್ಯಾ, ಭೀಮನ ಮಾತನ್ನು ಕೇಳಿ, ನಿನ್ನ ಮಗನು ರೋಮಾಂಚನ ಹೊಂದಿ ಉಬ್ಬರಿಸಿದನು- ಮೈ ಉಬ್ಬಿತು; ಅವನು ನೆಲವನ್ನು ಕಾಲಲ್ಲಿ ಅಪ್ಪಳಿಸುತ್ತಾ ಅಧಿಕವಾದ ಕ್ರೋಧದ ಬೆಂಕಿಯಲ್ಲಿ ಕರಣೇಂದ್ರಿಯಾದಿಗಳಲ್ಲಿ- ತನ್ನ ಅಂತಃ ಕರಣದಲ್ಲಿ ತುಂಬಿದ ಕ್ರೋಧದಿಂದ- ಅಂತಃಖೇದದಿಂದ ಜಲಸ್ಥಂಬದ ಮಂತ್ರಾಕ್ಷರಕ್ಕೆ ಅಡ್ಡ ತೆರೆಬಂದಿತು. ಮನಸ್ಸು ಕೆಟ್ಟು ಮಂತ್ರವೂ ಕೆಟ್ಟಿತು. ಸಿಟ್ಟಿನ ಆವೇಗದ ವೀರಾವೇಶದಲ್ಲಿ ರಾಜ ಕೌರವನ ಮನಸ್ಸು ಚಂಚಲವಾಯಿತು.
ಮರೆದುದುದಕಸ್ತಂಭ ಸಲಿಲದ
ಹೊರಗೆ ಬೊಬ್ಬುಳಿಕೆಗಳ ತೆರೆ ನೊರೆ
ದುರುಗಿದವು ಘುಳುಘುಳಿಸಿ ಜಲಬುದ್ಬುದದ ಚೂಣಿಯಲಿ |
ದುರುದುರಿಪ ಬಿಸುಸುಯ್ಲ ಸೆಕೆಯಲಿ
ಮರುಗಿ ಕುದಿದುದು ನೀರು ಭೀಮನ
ಬಿರುನುಡಿಯ ಬೇಳಂಬದಲಿ ಬೆಂಡಾದನಾ ಭೂಪ || ೩೨ ||
ಪದವಿಭಾಗ-ಅರ್ಥ: ಮರೆದುದು+ ಉದಕಸ್ತಂಭ, ಸಲಿಲದ ಹೊರಗೆ ಬೊಬ್ಬುಳಿಕೆಗಳ ತೆರೆ ನೊರೆದು+ ಉರುಗಿದವು ಘುಳುಘುಳಿಸಿ, ಜಲಬುದ್ಬುದದ ಚೂಣಿಯಲಿ ದುರುದುರಿಪ ಬಿಸುಸುಯ್ಲ ಸೆಕೆಯಲಿ ಮರುಗಿ ಕುದಿದುದು ನೀರು, ಭೀಮನ ಬಿರುನುಡಿಯ ಬೇಳಂಬದಲಿ (ವಿಡಂಬನೆ.) ಬೆಂಡಾದನು ಆ ಭೂಪ.
ಅರ್ಥ:ಸಂಜಯ ಹೇಳಿದ,'ಕೌರವನಿಗೆ ಜಲಸ್ತಂಭ ಮಂತ್ರವು ಮರೆತುಹೋಯಿತು. ಸರೋವರದ ನೀರಿನ ಹೊರಗೆ ಬೊಬ್ಬುಳಿಕೆಗಳ-ಕೌರವನ ಉಸುರಿನ ಗುಳ್ಳೆಗಳ ತೆರೆ ನೊರೆ ನೊರೆಯಾಗಿ ಘುಳುಘುಳಿಸಿ ಹೊರಹೊಮ್ಮಿದವು. ಜಲ ಬುದ್ಬುದದ/ ಉಕ್ಕುವಿಕೆಯ ಎದುರಲ್ಲಿಲ ಸಿಟ್ಟಿನಿಂದ ದುರುದುರಿಯುವ ಬಿಸುಸುಯ್ಲ/ ಬಿಸಿ ಉಸುರಿನ ಸೆಕೆಯಲ್ಲಿ ಮರುಳುತ್ತಾ ನೀರು ಕುದಿಯಿತು. ಹೀಗೆ ಭೀಮನ ಬಿರುನುಡಿಯ ವಿಡಂಬನೆಯಲ್ಲಿ ಆ ಭೂಪ ಕೌರವನು ಬೆಂದು ಬೆಂಡಾದನು.
ಜ್ಞಾನವಳಿದುದು ವೀರಪಣದಭಿ
ಮಾನ ಮಸೆದುದು ಮಮತ್ರನಿಷ್ಠೆಯ
ಮೌನ ಹಿಂಬೆಳೆಯಾಯ್ತು ಮೋಹಿದುದಾಹವವ್ಯಸನ |
ದೀನಮನ ಹೊರಗಳೆದುದುದಕ
ಸ್ಥಾನಭಾವಕೆ ನಾಚಿದನು ತವ
ಸೂನು ತಳವೆಳಗಾದನಹಿತವಚೋವಿಘಾತದಲಿ || ೩೩ ||
ಪದವಿಭಾಗ-ಅರ್ಥ: ಜ್ಞಾನವು+ ಅಳಿದುದು(ಅಳಿ= ನಾಶ), ವೀರಪಣದ+ ಅಭಿಮಾನ ಮಸೆದುದು(ಮಸೆ= ಹುಟ್ಟು), ಮಮತ್ರನಿಷ್ಠೆಯ (ಮಮ-ಸಂ,= ನನ್ನದು, ನಾನು, ಸ್ವನಿಷ್ಠೆ) ಮೌನ ಹಿಂಬೆಳೆಯಾಯ್ತು(ಹಿಂಬೆಳೆ= ಸಕಾಲದಲ್ಲಿ ಫಲವಿಲ್ಲ,ಮೌನ- ಇಲ್ಲವಾಯಿತು;), ಮೋಹಿದುದು(ಮನಸ್ಸನ್ನು ಆವರಿಸಿತು)+ ಆಹವ(ಯುದ್ಧ)+ ವ್ಯಸನ, ದೀನಮನ ಹೊರಗಳೆದುದು(ಹೊರಗ+ ಅಳೆದು)+ ಉದಕಸ್ಥಾನಭಾವಕೆ(ನೀರಿನಲ್ಲಿ ಇರುವ ಸ್ಥಿತಿಗೆ) ನಾಚಿದನು ತವ+ಸೂನು ತಳವೆಳಗಾದನು (ತತ್ತರಿಸು, ದಿಗಿಲುಗೊಳ್ಳು. ಬೆರಗಾಗು. ಕಳವಳಿಸು. ಉದ್ರಿಕ್ತವಾಗು)+ ಅಹಿತ(ಕೆಟ್ಟ)+ವಚೋ(ಮಾತು)+ವಿಘಾತದಲಿ()ಹೊಡೆತ.
ಅರ್ಥ:ಸಂಜಯನು ಧೃತರಾಷ್ಟ್ರನಿಗೆ ಹೇಳಿದ,'ಕೌರವನ ತಿಳುವಳಿಕೆ ನಷ್ಟವಾಯಿತು. ವೀರಫಣದ- ಪ್ರತಿಜ್ಞೆಯ ಅಭಿಮಾನ ಹುಟ್ಟಿತು; ಅಂತರಂಗದ ಸ್ವ-ನಿಷ್ಠೆಯ ಮೌನ ಇಲ್ಲವಾಯಿತು, ಯುದ್ಧಮಾಡಬೇಕೆಂಬ ವ್ಯಸನ/ ಪ್ರಬಲ ಆಸೆ ಮನಸ್ಸನ್ನು ಆವರಿಸಿತು. ಮೂದಲಿಕೆ ಕೇಳಿ ದೀನವಾದ ಮನಸ್ಸು ಅವನನ್ನು ನೀರಿನಿಂದ ಹೊರಗೆ ಇರುವ ಸ್ಥಿತಿಯನ್ನು ಅಳೆದು ನೋಡಿತು. ನೀರಿನಲ್ಲಿ ತಾನು ಇರುವ ಸ್ಥಿತಿಗೆ ನಿನ್ನ ಮಗ ಕೌರವನು ನಾಚಿದನು. ಅವನು ಭೀಮನ ಕಠೋರವಾದ ಹಿತವಲ್ಲದ ಮೂದಲಿಕೆಯ ಮಾತಿನ ಹೊಡೆತದಿಂದ ತತ್ತರಿಸಿ ಉದ್ರಿಕ್ತನಾದನು.

ಕೌರವನು ನೀರಿನಿಂದ ಹೊರ ಹೊರಟನು

[ಸಂಪಾದಿಸಿ]
ಜಲಧಿ ಮಧ್ಯದೊಳೇಳ್ವ ವಡಬಾ
ನಲನವೊಲು ತವಕದಲಿ ತಡಿಗ
ವ್ವಳಿಸಿದನು ತತ್ಕ್ರೋಧಶಿಖಿ ಕಿಡಿಮಸಗೆ ಕಂಗಳಲಿ |
ಹೊಳೆವ ಭಾರಿಯ ಹೆಗಲ ಗದೆ ಕರ
ತಳದ ವಿಪುಳ ಸಘಾಡಗರ್ವದ
ಚಳನಯನದ ಛಡಾಳಛಲದ ನೃಪಾಲ ಹೊರವಂಟ || ೩೪ ||
ಪದವಿಭಾಗ-ಅರ್ಥ: ಜಲಧಿ(ಸಮುದ್ರ- ಸರೋವರ) ಮಧ್ಯದೊಳು+ ಏಳ್ವ ವಡಬಾನಲನವೊಲು ತವಕದಲಿ(ಅವಸರದಿಂದ) ತಡಿಗೆ(ದಡಕ್ಕೆ )+ ಅವ್ವಳಿಸುದನು(ಕಾಲುಗಳನ್ನು ನೆಲಕ್ಕೆ ಅಪ್ಪಳಿಸಿ) ತತ್ಕ್ರೋಧಶಿಖಿ(ತತ್+ಕ್ರೋಧ+ ಶಿಖಿ- ಅಗ್ನಿ) ಕಿಡಿಮಸಗೆ ಕಂಗಳಲಿ ಹೊಳೆವ ಭಾರಿಯ ಹೆಗಲ ಗದೆ ಕರತಳದ ವಿಪುಳ ಸಘಾಡ ಗರ್ವದ ಚಳನಯನದ(ಚಳ-ಹೆಚ್ಚಳ+ ನಯನದ) ಛಡಾಳಛಲದ(ಛಡಾಳ= ಆಧಿಕ್ಯ;) ನೃಪಾಲ ಹೊರವಂಟ.
  • ಮಸಗು= ಹರಡು. ಪ್ರಕಟವಾಗು. ರಭಸವನ್ನು ಹೊಂದು.
ಅರ್ಥ: ಕೌರವನು ಸಮುದ್ರದ ಮಧ್ಯದಲ್ಲಿ ಏಳುವ ವಡಬಾನಲದಂತೆ- ಪ್ರಳಯಾಗ್ನಿಯಂತೆ ಅವಸರದಿಂದ ಸರೋವರದ ದಡದಲ್ಲಿ ಕಾಲುಗಳನ್ನು ನೆಲಕ್ಕೆ ಅಪ್ಪಳಿಸುತ್ತಾ ಮೇಲೆದ್ದನು. ಕ್ರೋಧದಿಂದ ಅಗ್ನಿಯ ಕಿಡಿಗಳು ಅವನ ಕಣ್ಣುಗಳಲ್ಲಿ ಸೂಸುತ್ತಿರಲು ಹೊಳೆಯುತ್ತಿರುವ ಭಾರಿದೊಡ್ಡ ಹೆಗಲಮೇಲಿದ್ದ ಗದೆಯನ್ನು ಮುಷ್ಟಿಯಲ್ಲಿ ಹಿಡಿದು ಅತಿ ಗರ್ವದಿಂದ ತುಂಬಿ ಅರಳಿದ ಕಣ್ಣಿನ, ಅತಿಛಲದ ಕೌರವನು ಸರೋವರದಿಂದ ಹೊರಹೊರಟು ದಡಕ್ಕೆ ಬಂದನು.
ಅರಳಿತರಸನ ವದನ ಭೀಮನ
ಹರುಷವುಕ್ಕಿತು ಪಾರ್ಥನುಬ್ಬಿದ
ನುರುಮುದದಿನುರೆ ನಕುಲನುಬ್ಬರಿಸಿದನು ಸಹದೇವ |
ಹರಕೆಯಲಿ ದೈವಂಗಳಿತ್ತವು
ವರವನೆಂದರು ದ್ರೌಪದೀಸುತ
ರುರು ಶಿಖಂಡಿ ದ್ರುಪದಸುತ ಸಾತ್ಯಕಿಗಳೊಲವಿನಲಿ || ೩೫ ||
ಪದವಿಭಾಗ-ಅರ್ಥ: ಅರಳಿತು+ ಅರಸನ ವದನ(ಮುಖ) ಭೀಮನ ಹರುಷವುಕ್ಕಿತು ಪಾರ್ಥನು+ ಉಬ್ಬಿದನು+ ಉರು(ಬಹಳ), ಮುದದಿಂ+ನ+ ಉರೆ ನಕುಲನು+ ಉಬ್ಬರಿಸಿದನು ಸಹದೇವ ಹರಕೆಯಲಿ ದೈವಂಗಳು+ ಇತ್ತವು(ಕೊಟ್ಟವು) ವರವನೆಂದರು ದ್ರೌಪದೀಸುತ ರುರು ಶಿಖಂಡಿ ದ್ರುಪದಸುತ ಸಾತ್ಯಕಿಗಳು+ ಒಲವಿನಲಿ.
ಅರ್ಥ:ಕವರವನು ಹೊರ ಬರಲು, ಅರಸ ಧರ್ಮಜನ ಮುಖ ಸಂತಸದಿಂದ ಅರಳಿತು. ಭೀಮನ ಹರುಷವು ಉಕ್ಕಿತು. ಪಾರ್ಥನು ಬಹಳ ಸಂತೋಷದಿಂದ ಉಬ್ಬಿದನು. ನಕುಲನು ಸಹ ಮುದದಿಂದ ಹಿಗ್ಗಿದನು. ಸಹದೇವನು ಹರಕೆಯ ಬಲದಿಂದ ಕೌರವನು ಸಿಕ್ಕಿದನು ಎಂದನು. ದ್ರೌಪದೀ ಮಕ್ಕಳು, ರುರು, ಶಿಖಂಡಿ, ದ್ರುಪದಸುತ ದೃಷ್ಟದ್ಯಮ್ನ ಸಾತ್ಯಕಿಗಳು,ಸಂತದಿಂದ ದೈವಬಲವು ವರವನ್ನು ಕೊಟ್ಟಿತು ಎಂದರು.

ರನ್ನನ ಗದಾಯುದ್ಧದ ಭಾಗ

[ಸಂಪಾದಿಸಿ]
ನೀರಿನಿಂದ ಕೌರವನ ನಿರ್ಗಮನ
ಆರವಮಂನಿರ್ಜಿತಕಂ
ಠೀರವರವಮಂ ನಿರಸ್ತಘನರವಮಂ ಕೋ |
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುರಗಪತಾಕಂ ॥೨೨॥
ಪದವಿಭಾಗ-ಅರ್ಥ:ನಿರ್ಜಿತ(ಮೀರಿಸಿದ)+ ಕಂಠೀರವ (ಸಿಂಹ)+ ರವಮಂ(ಸದ್ದು ಗರ್ಜನೆ)= ಸಿಂಹಗರ್ಜನೆಯನ್ನು ಮೀರಿಸಿದ, ನಿರಸ್ತಘನ(ಮೇಘವನ್ನು ಮೀರಿಸಿದ)+ ರವಮಂ= ಮೇಘಗರ್ಜನೆಯನ್ನು ಸೋಲಿಸಿದ, ಆ ರವಮಂ= ಆ ಗರ್ಜನೆಯನ್ನು, ಕೋಪಾರುಣನೇತ್ರಂ= ಕೋಪದಿಂದ ಕೆಂಪಾದ ಕಣ್ಣುಗಳುಳ್ಳ, ಉರಗಪತಾಕಂ= ಪನ್ನಗಕೇತನನು, (ದುರ್ಯೋಧನನು) ನೀರೊಳಗಿರ್ದುಂ= ನೀರಿನಲ್ಲಿದ್ದರೂ, ಬೆಮರ್ತಂ= ಬೆವರಿದನು.
ತಾತ್ಪರ್ಯ :- ಸಿಂಹಗರ್ಜನೆಯನ್ನೂ ಗುಡುಗಿನ ಸದ್ದನ್ನೂ ಮೀರೀಸಿದ ಭೀಮನ ಆರ್ಭಟವನ್ನು ಕೇಳಿ ಆ ಸಿಂಹನಾದವನ್ನು ಕೇಳಿ ಅಭಿಮಾನಧನನಾದ ದುರ್ಯೋಧನನು ಕೆರಳಿ ಕೆಂಡವಾದನು. ಅವನ ಕಣ್ಣುಗಳು ಕೆಂಪಾದುವು. ಕೋಪೋದ್ರೇಕದಿಂದ ಶೀತಲವಾದ ನೀರಿನಲ್ಲಿದ್ದರೂ ಸರ್ಪಧ್ವಜನ ಮೈಬೆವರಿತು.
“ನೀರೊಳಗಿರ್ದುಂ ಬೆಮರ್ತನುರಗಪತಾಕಂ “ ಎಂಬ ರನ್ನನ ಈ ನುಡಿ ಪ್ರಸಿದ್ಧವಾಗಿದೆ, ಉರಗಪತಾಕಂ ಎನ್ನುವ ಪದವೂ ಇಲ್ಲಿ ಅರ್ಥವತ್ತಾಗಿ ಸೇರಿದೆ.
ನಿಜಮಕುಟಸ್ಫುರನ್ಮಣಿಗಣಚ್ಛವಿಯಿಂ ಸುರಚಾಪಲೀಲೆ ಪಂ
ಕಜವನದೊಳ್ ಮನಂಗೊಳಿಸೆ ತನ್ನಯ ಮೇಗೊಗೆದಿರ್ದ ನೀಲನೀ |
ರಜವನದಿಂ ಕಱಂಗಿ ಕಮಲಾಕರದಿಂ ಪೊಱಮಟ್ಟನಾಗಳಾ
ಭುಜಯುಗತೋರಣಾಯಿತಗದಾಪರಿಘಂ ಫಣಿರಾಜಕೇತನಂ॥೨೭॥
ಪದವಿಭಾಗ-ಅರ್ಥ:ನಿಜಮಕುಟ= ತನ್ನ ಕಿರೀಟದಲ್ಲಿ, ಸ್ಫುರತ್=ಪ್ರಕಾಶಿಸುವ, ಮಣಿಗಣ+ ಚ್ಛವಿಯಂ=ನವರತ್ನಗಳ ಕಾಂತಿಯಿಂದ. ಪಂಕಜ+ ವನದೊಳ್= ತಾವರೆಗಳ ಸಮೂಹದಲ್ಲಿ, ಸುರಚಾಪ+ ಲೀಲೆ= ಕಾಮನಬಿಲ್ಲಿನ ಸೊಗಸು, ಮನಂಗೊಳಿಸೆ= ಮನೋಹರವಾಗಿ ತೋರುತ್ತಿರಲು, ತನ್ನಯ ಮೇಗೆ ಒಗೆದಿರ್ದ= ತನ್ನ ಮೇಲ್ಭಾಗದಲ್ಲಿದ್ದ, ನೀಲನೀರಜ ವನದಿಂ= ಕನ್ನೈದಿಲೆಗಳ ಸಮೂಹದಿಂದ, ಕಱಂಗಿ=ಕಪ್ಪಾಗಿ, ಆ ಭುಜಯುಗ ತೋರಣಾಯಿತ ಗದಾಪರಿಘಂ= ಪರಿಘ ಸದೃಶವಾದ ತನ್ನ ಗದೆಯನ್ನು ತೋರಣದಂತೆ ಆ ಎಡು ತೋಳುಗಳಲ್ಲಿ ಎತ್ತಿ ಹಿಡಿದು, ಫಣಿರಾಜಕೇತನಂ= ಸರ್ಪಧ್ವಜ ದುರ್ಯೋಧನನು, ಕಮಲಾಕರದಿಂ= ಸರೋವರದಿಂದ, ಆಗಳ್ (ಆಗ-ಕೂಡಲೆ) ಪೊರಮಟ್ಟಂ= ಆಗ ಹೊರಬಂದನು.
ತಾತ್ಪರ್ಯ :- ತನ್ನ ಕಿರೀಟದಲ್ಲಿ ಹೊಳೆಯುತ್ತಿದ್ದ ನವರತ್ನಗಳ ನವವಿಧ ಕಾಂತಿಯಿಂದ ಆ ಸರೋವರದಲ್ಲಿದ್ದ ತಾವರೆಗಳ ಸಮೂಹದಲ್ಲಿ ಇಂದ್ರಚಾಪದ ಸೊಬಗು ಮನೋಹರವಾಗಿ ಕಾಣುತ್ತಿರಲು, ತನ್ನ ಮೇಲ್ಗಡೆಯಲ್ಲಿದ್ದ ಕನ್ನೈದಿಲೆಗಳ ಕಾಂತಿಯು ಪ್ರತಿಫಲಿಸಿದುದರಿಂದ ಕ್ಷಣಕಾಲ ಕಪ್ಪಾಗಿ ತೋರುತ್ತಿರಲು, ತನ್ನ ಎರಡು ತೋಳುಗಳಲ್ಲಿ ಪರಿಘಸದೃಶವಾದ ಗದೆಯನ್ನು ತೋರಣದಂತೆ ಎತ್ತಿಹಿಡಿದುಕೊಂಡು, ಸರ್ಪಧ್ಜಜನು ಕೂಡಲೇ ಕೊಳದಿಂದ ಹೊರಬಿದ್ದನು.

ಕೌರವ ಮತ್ತು ಪಾಂಡವರು ಸರೋವರದ ತಡಿಯಲ್ಲಿ

[ಸಂಪಾದಿಸಿ]
ನಗೆ ಮಸಗಿ ಕರತಳವ ಹೊಯ್‌ಹೊ
ಯ್ದೊಗುಮಿಗೆಯ ಹರುಷದಲಿ ನಕುಲಾ
ದಿಗಳು ಬೊಬ್ಬಿರಿದಾರಿದರು ಬಹುವಾದ್ಯರವದೊಡನೆ |
ಅಗಿದು ಗುಡಿಗಟ್ಟಿದವು ಮುಂಗಾ
ಲುಗಳ ಹೊಯ್ಲಲಿ ತೇಜಿಗಳು ಕೈ
ನೆಗಹಿ ಜಯಸೂಚನೆಯಲೊಲೆದವು ಪಟ್ಟದಾನೆಗಳು || ೩೬ ||
ಪದವಿಭಾಗ-ಅರ್ಥ: ನಗೆ ಮಸಗಿ ಕರತಳವ (ಅಂಗೈ) ಹೊಯ್‌ಹೊಯ್ದು (ತಟ್ಟಿ ತಟ್ಟಿ)+ ಒಗುಮಿಗೆಯ(ಹೆಚ್ಚಾದ) ಹರುಷದಲಿ ನಕುಲಾದಿಗಳು ಬೊಬ್ಬಿರಿದು+ ಆರಿದರು(ಆರು= ಆರ್ಭಟ, ಗಟ್ಟಿಯಾದ ಕೂಗು) ಬಹುವಾದ್ಯರವದೊಡನೆ ಅಗಿದು ಗುಡಿಗಟ್ಟಿದವು (ಗುಡಿ+ ಕಟ್ಟು; ಗುಡಿ= ಬಾವುಟ) ಮುಂಗಾಲುಗಳ ಹೊಯ್ಲಲಿ ತೇಜಿಗಳು(ಕುದುರೆಗಳು) ಕೈನೆಗಹಿ(ಆನೆಯ ಕೈ, ಸೊಂಡಿಲು ಎತ್ತಿ) ಜಯಸೂಚನೆಯಲಿ+ ಒಲೆದವು ಪಟ್ಟದಾನೆಗಳು
ಅರ್ಥ:ಕೌರವನು ಕೊಳದಿಂದ ಮೇಲೆಬಂದಾಗ, ಪಾಂಡವರ ಕಡೆ ತಮ್ಮ ಪ್ರಯತ್ನ ಸಫಲವಾದುದಕ್ಕೆ ಅವರಲ್ಲಿ ಸಂತಸದ ನಗೆ ಹಬ್ಬಿತು. ಅವರು- ನಕುಲಾದಿಗಳು ಅಂಗೈ ತಟ್ಟಿ ಚಪ್ಪಾಳೆ ಹೊಡೆದು ಹೊಡೆದು ಅತ್ಯಂತ ಹರ್ಷದಲ್ಲಿ ಬೊಬ್ಬಿರಿದು ಕೂಗಿದರು. ಅವರೊಡನೆ ಬಹುವಾದ್ಯದ ಧ್ವನಿ ಸೇರಿತು. ಅಲ್ಲಲ್ಲಿ ಅಗಿದು ಗೂಟಹಾಕಿ ಬಾವುಟ ಕಟ್ಟಿ ಹಾರಿಸಿದರು. (ಕುದುರೆಗಳು ಮುಂಗಾಲುಗಳನ್ನು ಎತ್ತಿ ಹಾಕಿ, ಪಟ್ಟದಾನೆಗಳು ಸೊಂಡಿಲು ಎತ್ತಿ ಜಯಸೂಚನೆಯಲ್ಲಿ ಒಲಾಡಿದವು.
ಧರಣಿಪತಿ ಕೇಳ್ ಕೊಳನ ತಡಿಯಲಿ
ಕುರುಕುಲಾಗ್ರಣಿ ನಿಂದು ನೋಡಿದ
ನರಿಭಟರ ಸುಮ್ಮಾನವನು ಸಂಭ್ರಾಂತಚೇತನವ |
ಉರಿದುದಾ ಮಸ್ತಕದ ರೋಷೋ
ತ್ಕರದ ಝಳಝಾಡಿಸಿತು ಶುಭ್ರ
ಸ್ಫುರಣದಂತನಿಪೀಡಿತಾಧರನಾದನಾ ಭೂಪ || ೩೭ ||
ಪದವಿಭಾಗ-ಅರ್ಥ: ಧರಣಿಪತಿ ಕೇಳ್ ಕೊಳನ ತಡಿಯಲಿ ಕುರುಕುಲಾಗ್ರಣಿ(ಕುರುಕುಲ+ ಅಗ್ರಣಿ- ಮುಖ್ಯ ಹಿರಿಯ) ನಿಂದು ನೋಡಿದನು+ ಅರಿಭಟರ ಸುಮ್ಮಾನವನು ಸಂಭ್ರಾಂತಚೇತನವ ಉರಿದುದು+ ಆ ಮಸ್ತಕದ ರೋಷೋತ್ಕರದ (ರೋಷ+ ಉತ್ಕರದ- ಹೆಚ್ಚಿನ) ಝಳ (ಬಿಸಿ) ಝಾಡಿಸಿತು, ಶುಭ್ರ ಸ್ಫುರಣ ದಂತ ನಿಪೀಡಿತ(ಬಿಳಿಯ ಹಲ್ಲುಗಳು ಕಟಕಟನೆ ನಿಪೀಡಿತ= ಕಡಿದವು)+ ಅಧರನಾದನು(ಪೀಡಿತ+ ಅಧರನಾದ -ತುಟಿಕಚ್ಚಿದವನಾದ)+ ಆ ಭೂಪ- ಕೌರವ.
ಅರ್ಥ: ಧರಣಿಪತಿ ಧೃತರಾಷ್ಟ್ರನೇ ಕೇಳು,'ಕೊಳದ ದಡದಲ್ಲಿ ಕುರುಕುಲ ಮುಖ್ಯನಾದ ಕವರವನು ನಿಂತು ಶತ್ರುಭಟರಾದ ಪಾಂಡವರಮತ್ತು ಅವರ ಜೊತೆಯವರ ಸಂತೋಷವನ್ನೂ, ಸಂಭ್ರಮದ ಉತ್ಸಾಹವನ್ನೂ ನೋಡಿದನು. ಅವನ ಮೈಉರಿಯಿತು. ಆ ಕೌರವನ ನತ್ತಿಯಲ್ಲಿ ಅತಿಯಾದ ರೋಷದ ಝಳ ಉಕ್ಕಿತು. ಆತನ ಬಿಳಿಯ ಹಲ್ಲುಗಳು ಕಟಕಟನೆ ಕಡಿದವು. ಆ ಭೂಪನು ತುಟಿಕಚ್ಚಿ ನಿಂತನು. (ಸಿಟ್ಟಿನಿಂದ ಹಲ್ಲುಮಟ್ಟೆಕಚ್ಚಿ ನಿಲ್ಲವುದು- ರೂಡಿಯ ಮಾತು).
ಪೂತು ಮಝ ಕುರುಪತಿಯ ಘನಸ
ತ್ವಾತಿಶಯವೈ ಕೌರವಾನ್ವಯ
ಜಾತನಲ್ಲಾ ಬುಧ ಪುರೂರವಶಕ್ರಮಾಗತರ |
ಖ್ಯಾತನಲ್ಲಾ ಬಂದುದೊಂದ
ಖ್ಯಾತಿ ಸಲಿಲದ ಗಾಹವುಳಿದಂ
ತೀತನೊಳು ದೊರೆಯಾರು ಸರಿಯೆಂದನು ಮಹೀಪಾಲ || ೩೮ ||
ಪದವಿಭಾಗ-ಅರ್ಥ: ಪೂತು ಮಝ(ಆನಂದಕರ) ಕುರುಪತಿಯ ಘನಸತ್ವಾತಿಶಯವೈ, ಕೌರವಾನ್ವಯಜಾತನಲ್ಲಾ(ಕು+ ಅನ್ವಯ+ ಜಾತನು- ಕುರುವಂಶದಲ್ಲಿ ಹುಟ್ಟಿದವನಲ್ಲವೇ), ಕುರುವಂಶಲ್ಲಿ ಬುಧ, ಪುರೂರವ, ಶಕ್ರ(ಇಂದ್ರ) ಆಗತರ(ಬಂದವರು- ವಂಶದವರು) ಖ್ಯಾತನಲ್ಲಾ, ಬಂದುದೊಂದು+ ಅಖ್ಯಾತಿ(ಅಪಖ್ಯಾತಿ), ಸಲಿಲದ (ನೀರು) ಗಾಹ (ಗಮನ -ಅವಗಾಹನೆ)- ವುಳಿದಂತೆ+ ಈತನೊಳು ದೊರೆಯಾರು(ದೊರೆ= ಸಮಾನ) ಸರಿಯೆಂದನು ಮಹೀಪಾಲ(ಧರ್ಮಜ).
ಅರ್ಥ:ಧರ್ಮಜನು ಕೌರವನನ್ನು ಕರಿತು, 'ಪೂತು/ಬಲೇ, ಮಝ! ಕುರುಪತಿ ಕೌರವನದು ಘನವಾಧ ಅತಿಶಯ ಸತ್ವನೇ ಸರಿ. ಕುರುವಂಶದಲ್ಲಿ ಹುಟ್ಟಿದವನಲ್ಲವೇ! ಬುಧ, ಪುರೂರವ, ಇಂದ್ರವಂಶದಲ್ಲಿ ಬಂದ ಖ್ಯಾತನಲ್ಲವೇ? ಆದರೆ, ಒಂದು ಅಪಖ್ಯಾತಿ ಬಂದಿತು. ಅದು ನೀರಿನಲ್ಲಿ ಅಡಗಿದ್ದು. ಉಳಿದಂತೆ ಈತನಿಗೆ ಸಮಾನರು ಯಅರ ಇದ್ದಾರೆ' ಎಂದ ದೊರೆಯಾರು ಸರಿಯೆಂದನು ಮಹೀಪಾಲ.
ಅರಸ ತೊಡು ಕವಚವನು ಚಾಮೀ
ಕರ ಪರಿಷ್ಕೃತ ವಜ್ರಮಯ ಬಂ
ಧುರದ ಸೀಸಕವಿದೆ ದುಕೂಲವರಾನುಲೇಪನವ |
ಪರಿಹರಿಸಬೇಡೊಲವಿನಲಿ ಪತಿ
ಕರಿಸೆನುತ ಪೆಟ್ಟಿಗೆಯ ಮುಚ್ಚಳ
ತೆರೆದು ಮುಂದಿರಿಸಿದನು ಸೌಹಾರ್ದದಲಿ ಯಮಸೂನು || ೩೯ ||
ಪದವಿಭಾಗ-ಅರ್ಥ: ಅರಸ ತೊಡು ಕವಚವನು ಚಾಮೀಕರ(ಬಂಗಾರದ) ಪರಿಷ್ಕೃತ ವಜ್ರಮಯ ಬಂಧುರದ(ಸುಂದರವಾದುದು) ಸೀಸಕವಿದೆ(ಲೋಹದ ಟೊಪ್ಪಿಗೆ, ಶಿರಸ್ತ್ರಾಣ) ದುಕೂಲ (ರೇಷ್ಮೆ ಬಟ್ಟೆ, ದೊತರ ಪಂಚೆ)+ ವರ+ ಅನುಲೇಪನವ(ಗಂಧ, ಮೊ. ಸುಗಂಧದ್ರವ್ಯಗಳ) ಪರಿಹರಿಸಬೇಡ (ನಿವಾರಿಸು,)+ ಒಲವಿನಲಿ ಪತಿಕರಿಸು (ಪ್ರೀತಿಯಿಂದ ಸ್ವೀಕರಿಸು)+ ಎನುತ ಪೆಟ್ಟಿಗೆಯ ಮುಚ್ಚಳ ತೆರೆದು ಮುಂದಿರಿಸಿದನು ಸೌಹಾರ್ದದಲಿ ಯಮಸೂನು.
ಅರ್ಥ: ಧರ್ಮಜನು ಕೌರವನನ್ನು ಗೌರವದಿಂದ ಕರೆದು ಅವನಿಗೆ,'ಅರಸನೇ ಕವಚವನು ತೊಡು. ಬಂಗಾರದ ಪರಿಷ್ಕೃತವಾದ ವಜ್ರಮಯ ಸುಂದರವಾದ ಕಿರೀಟವಿದೆ. ರೇಷ್ಮೆ ಬಟ್ಟೆ, ಉತ್ತಮ ಸುಗಂಧದ್ರವ್ಯಗಳನ್ನು ನಿರಾಕರಿಸಬೇಡ. ಪ್ರೀತಿಯಿಂದ ಸ್ವೀಕರಿಸು ಎನ್ನತ್ತಾ, ಪೆಟ್ಟಿಗೆಯ ಮುಚ್ಚಳ ತೆರೆದು ಅವನ ಮುಂದಿರಿಸಿದನು.
ಸೌಹಾರ್ದದಲಿ ಯಮಸೂನು
ಪೂರವಿಸಿದನು ಗಂಧವನು ಸರ
ಳೋರೆಪೋರೆಯ ಮೈಯ ಘಾಯದ
ಹೇರುಗಳ ಹೂಳಿದನು ವರಕಸ್ತುರಿಯ ಸಾರದಲಿ |
ಸಾರತರ ಸಾದಿನ ಜವಾಜಿಯ
ಭೂರಿ ಪರಿಮಳದಿಂದ ನವಕ
ಸ್ತೂರಿ ತಿಲಕವ ರಚಿಸಿ ಗೆಲಿದನು ತಿಗುರ ತವಕದಲಿ || ೪೦ ||
ಪದವಿಭಾಗ-ಅರ್ಥ: ಸೌಹಾರ್ದದಲಿ ಯಮಸೂನು(ಧರ್ಮಜನು) ಪೂರವಿಸಿದನು ಗಂಧವನು ಸರಳ (ಬಾಣದ)+ ಓರೆಪೋರೆಯ ಮೈಯ ಘಾಯದ ಹೇರುಗಳ(ರಾಶಿ,ಭಾರ, ಹೊರೆ) ಹೂಳಿದನು(ಮುಚ್ಚಿದನು) ವರಕಸ್ತುರಿಯ ಸಾರದಲಿ, ಸಾರತರ(ಉತ್ತಮ) ಸಾದಿನ(ಸಾದು= ತಿಲಕ, ಸಾದುಬೊಟ್ಟು, ಬಿರುಸಾದುದು, ಶ್ರೇಷ್ಠವಾದುದು) ಜವಾಜಿಯ(ಸುಗಂಧ ದ್ರವ್ಯ) ಭೂರಿ (ಉತ್ತಮ ) ಪರಿಮಳದಿಂದ ನವಕಸ್ತೂರಿ ತಿಲಕವ ರಚಿಸಿ ಗೆಲಿದನು ತಿಗುರ (ತಿಗುರು= ಲೇಪ,ಲೇಪನ ದ್ರವ್ಯ,ಮುಲಾಮು) ತವಕದಲಿ.
ಅರ್ಥ:ಧರ್ಮಜನು ಸೌಹಾರ್ದದಿಂದ ಗಂಧವನ್ನು ಹಚ್ಚಿಸಿದನು. ಬಾಣದಿಂದ ಓರೆಪೋರೆಯಾಗಿ ಆದ ಮೈಮೇಲಿನ ರಾಶಿ ಘಾಯಗಳನ್ನು ವರಕಸ್ತೂರಿಯ ಸಾರದಿಂ ಮುಚ್ಚಿದನು. ಉತ್ತಮ ಶ್ರೇಷ್ಠವಾದ ಪುನುಗು ಸುಗಂಧ ದ್ರವ್ಯವನ್ನು ಹಚ್ಚಿಸಿದನು. ಉತ್ತಮ ಪರಿಮಳದಿಂದ ಕೂಡಿದ ನವಕಸ್ತೂರಿಯ ತಿಲಕವನ್ನು ಹಣೆಯಲ್ಲಿ ರಚಿಸಿ ಮುಖದಲ್ಲಿ ಗೆಲುವು ಕಾಣುವಂತೆ ತವಕ ಆಸಕ್ತಿಯಿಂದ ಲೇಪನ ದ್ರವ್ಯವನ್ನು ಹಚ್ಚಿಸಿದನು.
ತೆಗೆದು ವಜ್ರಾಂಗಿಯನು ಮೈಯಲಿ
ಬಿಗಿದು ಹೊಂಬರಹದ ಸುರತ್ನಾ
ಳಿಗಳ ಬಲುಸೀಸಕವನಳವಡಿಸಿದನು ಸಿರಿಮುಡಿಗೆ |
ಝಗಝಗಿಪ ಬೆಳುದಿಂಗಳಿನ ತೆಳು
ದಗಡೆನಲು ತೊಳಗುವ ದುಕೂಲವ
ಬಿಗಿದು ಮೊನೆಮುಂಜೆರಗನಳವಡಿಸಿದನು ದೇಸಿಯಲಿ || ೪೧ ||
ಪದವಿಭಾಗ-ಅರ್ಥ: ತೆಗೆದು ವಜ್ರಾಂಗಿಯನು ಮೈಯಲಿ ಬಿಗಿದು ಹೊಂ-ಬರಹದ ಸುರತ್ನಾಳಿಗಳ ಬಲು ಸೀಸಕವನು+ ಅಳವಡಿಸಿದನು, ಸಿರಿಮುಡಿಗೆ ಝಗಝಗಿಪ ಬೆಳುದಿಂಗಳಿನ ತೆಳು+ ದ+ ತಗಡೆನಲು ತೊಳಗುವ ದುಕೂಲವ (ಉದ್ದ ಪೇಟದ ಬಟ್ಟೆ) ಬಿಗಿದು ಮೊನೆಮುಂಜೆರಗ+ ಅನಳವಡಿಸಿದನು ದೇಸಿಯಲಿ (ದೇಸಿ- ಗ್ರಾಮ್ಯ; ಗ್ರಾಮೀಣ ಜನರು ಕುಡಿ ಎದ್ದು ಕಾಣುವಂತೆ ಪೇಟಕ್ಕೆ ಸಿಕ್ಕಿಸುವುದು).
ಅರ್ಥ:ಕೌರವನು ಧರ್ಮಜನು ಕೊಟ್ಟ ವಜ್ರಾಂಗಿ ಕವಚವನ್ನ ತೆಗೆದು ಮೈಯಲ್ಲಿ ಬಿಗಿದು ಅದರಮೇಲೆ ಹೊನ್ನಿನ- ಚಿತ್ರ ಬರಹದ ಸುರತ್ನಗಳ ಬಲುಗಟ್ಟಿ ಸೀಸಕದ ಕವಚವನ್ನು ಅಳವಡಿಸಿದನು. ಅವನ ಸಿರಿಮುಡಿಗೆ/ ತಲೆಗ ಝಗಝಗಿಸುವ ಬೆಳುದಿಂಗಳಿನ ಬಣ್ಣದ ತೆಳುವಾದ ತಗಡು ಎನ್ನುವಂತಿರುವ ಶೋಭಿಸುವ ದುಕೂಲವನ್ನು ಬಿಗಿದು ಕೂದಲನ್ನು ಕಟ್ಟಿದನು. ಆ ಬಟ್ಟೆಯ ಮೊನೆಯ/ಕುಡಿ ಮುಂಜೆರಗನ್ನು ದೇಸಿಯ ಕ್ರಮದಲ್ಲಿ ಅನಳವಡಿಸಿದನು.
ಘೋಳಿಸಿದ ಕರ್ಪೂರ ಕಸ್ತುರಿ
ವೀಳೆಯವ ಕೊಂಡೆದ್ದು ಸಮರಾ
ಭೀಳ ಗದೆಯನು ತಿರುಹಿದನು ಪಯಪಾಡನಾರೈದು |
ಆಳು ಕವಿಯಲಿ ರಾವುತರ ಸಮ
ಪಾಳಿಯಲಿ ಬಿಡಿ ಜೋದರಾನೆಯ
ತೂಳಿಸಲಿ ಸಮರಥರು ಸರಳಿಸಿಯೆಂದನಾ ಭೂಪ || ೪೨ ||
ಪದವಿಭಾಗ-ಅರ್ಥ: ಘೋಳಿಸಿದ (ಗೋಳ-ಗೋಳಿಸು?,ಗ್ರಾಮ್ಯ= ಒಟ್ಟುಮಾಡು, ಜೋಡಿಸಿ ಸುತ್ತಿ ಇಟ್ಟ)ಕರ್ಪೂರ ಕಸ್ತುರಿ ವೀಳೆಯವ ಕೊಂಡು+ ಎದ್ದು ಸಮರಾಭೀಳ(ಸಮರ= ಯುದ್ಧ ಆಭೀಳ= ಭಯಂಕರ.) ಗದೆಯನು ತಿರುಹಿದನು ಪಯಪಾಡುನು(ಹೆಜ್ಜೆಯಿಡುವ ಕ್ರಮ,- ರೀತಿ. ಕಾಳಗದಲ್ಲಿ ಒಂದು ವರಸೆ, ಪಟ್ಟು.)+ ಆರೈದು(ಅನುಸರಿಸಿ) ಆಳು ಕವಿಯಲಿ(ಯೋದರು ಬಂದು ಮುತ್ತಲಿ) ರಾವುತರ ಸಮಪಾಳಿಯಲಿ ಬಿಡಿ ಜೋದರು(ಮಾವುತರು)+ ಆನೆಯ ತೂಳಿಸಲಿ(ನುಗ್ಗಿಸಲಿ) ಸಮರಥರು ಸರಳಿಸಿ (ಸರಳು= ಬಾಣ, ಬಾಣವನ್ನು ಹೂಡಿ ಯುದ್ಧಸನ್ನದ್ಧರಾಗಿ)+ಯ+ ಎಂದನು+ ಆ ಭೂಪ.
ಅರ್ಥ:ಆ ಭೂಪ ಕೌರವನು, ಜೋಡಿಸಿ ಸುತ್ತಿ ಇಟ್ಟ ಕರ್ಪೂರ ಕಸ್ತೂರಿ ವೀಳೆಯವನ್ನು ಬಾಯಿಗೆ ಹಾಕಿಕೊಂಡು, ಎದ್ದು ಕಾಳಗದಲ್ಲಿ ಅನುಸರಿಸುವ ವರಸೆ ಮತ್ತು ಪಟ್ಟು ಕ್ರಮದಲ್ಲಿ ಹೆಜ್ಜೆಗಳನ್ನು ಇಡುತ್ತಾ, ಭಯಂಕರವಾದ ಅವನ ಯುದ್ದದ ಆಯುಧ ಗದೆಯನ್ನು ತಿರುಗಿಸಿದನು. ಅವನು, 'ಎಲ್ಲಿ ಯೋಧರು ಬಂದು ಮುತ್ತಲಿ, ಕುದುರೆಯ ರಾವುತರನ್ನು ಸಮಸಾಲಿನಲ್ಲಿ ಬಿಡಿ, ಮಾವುತರು ಆನೆಯನ್ನು ನುಗ್ಗಿಸಲಿ, ಸಮರಥರು ಬಾಣವನ್ನು ಹೂಡಿ ಯುದ್ಧಸನ್ನದ್ಧರಾಗಿ,' ಎಂದು ಯುದ್ಧ ಸನ್ನದ್ಧನಾದನು.
ಹಿಡಿ ಧನುವನೆಲೆ ಭೂಪ ಪವನಜ
ತುಡುಕು ಗದೆಯನು ಪಾರ್ಥ ಸಮರಕೆ
ತಡೆಯದಿರು ಮಾದ್ರೀಕುಮಾರಕರೇಳಿ ಕಾಳೆಗಕೆ |
ಮಿಡುಕು ಧೃಷ್ಟದ್ಯುಮ್ನ ಸಾತ್ಯಕಿ
ಹೊಡಕರಿಸು ಪಾಂಚಾಲ ನೀ ವಂ
ಗಡದೊಳೆಮ್ಮೊಡನೇಳ್ವುದೊಬ್ಬನೆ ನಿಲುವೆ ತಾನೆಂದ || ೪೩ |
ಪದವಿಭಾಗ-ಅರ್ಥ: ಹಿಡಿ ಧನುವನ+ ಎಲೆ ಭೂಪ, ಪವನಜ(ಭೀಮ) ತುಡುಕು ಗದೆಯನು, ಪಾರ್ಥ ಸಮರಕೆ ತಡೆಯದಿರು, ಮಾದ್ರೀಕುಮಾರಕರು+ ಏಳಿ ಕಾಳೆಗಕೆ, ಮಿಡುಕು(ಪರಾಕ್ರಮ ತೋರು) ಧೃಷ್ಟದ್ಯುಮ್ನ, ಸಾತ್ಯಕಿ ಹೊಡಕರಿಸು (ಚಲಿಸು.), ಪಾಂಚಾಲ(ಶಿಖಂಡಿ) ನೀ ವಂಗಡದೊಳು (ವಂಗಡ= ಪಂಗಡ ಗುಂಪು)+ ಎಮ್ಮೊಡನೆ+ ಏಳ್ವುದು,+ ಒಬ್ಬನೆ ನಿಲುವೆ ತಾನೆಂದ.
ಅರ್ಥ:ಕೌರವನು ಯುದ್ಧಕ್ಕೆ ಸಿದ್ಧನಾಗಿ ನಿಂತು, 'ಎಲೆ ಭೂಪ ಧರ್ಮಜನೇ ಧನುವನ್ನು ಹಿಡಿದು ಯುದ್ಧಕ್ಕೆ ಬಾ, ಭೀಮಾ ಗದೆಯನ್ನು ಕೈಗ ತೆಗೆದುಕೊ, ಅರ್ಜುನಾ ನನ್ನೊಡನೆ ಯುದ್ಧಕ್ಕೆ ಬರಲು ತಡಮಾಡಬೇಡ,, ಮಾದ್ರೀಕುಮಾರಕರೇ- ನಕುಲಸಹದೇವರೇ ಕಾಳೆಗಕ್ಕೆ ಏಳಿ, ಧೃಷ್ಟದ್ಯುಮ್ನಾ ಪರಾಕ್ರಮವನ್ನು ತೋರು, ಸಾತ್ಯಕಿಯೇ ಸಿದ್ಧನಾಗು,, ಪಾಂಚಾಲನೇ ನೀನು ಗುಂಪಾಗಿ ಬಂದು ನಮ್ಮೊಡನೆ ಹೋರಾಡವುದು. ನಾನು ನಿಮ್ಮೆಲ್ಲರ ಎದುರು ಒಬ್ಬನೇ ಹೋರಾಡಲು ನಿಲ್ಲುವೆನು,' ತಾನು ಎಂದ.
ದಿಟ್ಟನೈ ನೃಪರಾವು ಮಝ ಜಗ
ಜಟ್ಟಿಯಲ್ಲಾ ದೊರೆಧಿಗಳೊಡನೀ
ಥಟ್ಟಿಗೊಬ್ಬನೆ ನಿಲುವೆನೆಂದನದಾವ ಸತ್ವನಿಧಿ |
ಹುಟ್ಟಿದವರಿಗೆ ಸಾವು ಹಣೆಯಲಿ
ಕಟ್ಟಿಹುದು ವಿಧಿಯೆಂದಡೀ ಪರಿ
ಮುಟ್ಟೆ ದೀವಸಿಯಾವನೆಂದುದು ನಿಖಿಳ ಪರಿವಾರ || ೪೪ ||
ಪದವಿಭಾಗ-ಅರ್ಥ: ದಿಟ್ಟನೈ, ನೃಪರು+ ಆವು(ನಾವು) ಮಝ ಜಗಜಟ್ಟಿಯಲ್ಲಾ, ದೊರೆಧಿಗಳೊಡನೆ(ದೊರೆಧಿ= ದೊರೆಗಳ ಸಮೂಹ)+ ಈ ಥಟ್ಟಿಗೆ (ಸೇನೆಗೆ)+ ಒಬ್ಬನೆ ನಿಲುವೆನೆಂದನು+ ಅದು+ ಆವ ಸತ್ವನಿಧಿ(ಸತ್ವಶಾಲಿ), ಹುಟ್ಟಿದವರಿಗೆ ಸಾವು ಹಣೆಯಲಿ ಕಟ್ಟಿಹುದು ವಿಧಿಯೆಂದಡೆ+ ಈ ಪರಿಮುಟ್ಟೆ ದೀವಸಿಯು(ಧೈರ್ಯವು)+ ಆವನು+ ಎಂದುದು ನಿಖಿಳ ಪರಿವಾರ.
  • ದೀವಸ: ನಾಮಪದ=(<ಸಂ. ಧೀವಶ) ೧ ಅಲೋಚನೆ, ಅಭಿಪ್ರಾಯ, ಧೈರ್ಯ, ಕೆಚ್ಚು.
ಅರ್ಥ:ಕೌರವನ ಮಾತ ಕೇಳಿ,ಪಾಂಡವರ ಪರಿವಾರದವರು,'ಕೌರವನು ದಿಟ್ಟನೇಸರಿ, ಧೀರನು, ನಾವು ನೃಪರು ಮಝ ಜಗಜಟ್ಟಿಗಳಲ್ಲವೇ! ಈ ದೊರೆಗಳ ಸಮೂಹದ ಈ ವೀರರ ಸೇನೆಗೆ ಒಬ್ಬನೆ ಎದುರಿಸಿ ನಿಲ್ಲುವೆನು ಎಂದನು. ಅದನ್ನು, ಇನ್ನು ಯಾವ ಸತ್ವಶಾಲಿ ಹೀಗೆ ಹೇಳಬಲ್ಲನು!, ಹುಟ್ಟಿದವರಿಗೆ ಸಾವು ಹಣೆಯಲಿ ಕಟ್ಟಿರುವುದು ನಿಜ. ಆದರೆ ಜಯವು ವಿಧಿಯೆಂದ ಮಾತ್ರಕ್ಕೆ, ಆವನು ಈ ಪರಿ/ಮಟ್ಟಕ್ಕೆ ಮುಟ್ಟಲು ಎಷ್ಟು ಧೈರ್ಯ!,' ಎಂದಿತು.

ಧರ್ಮಜನ ಉದಾರತೆಯ ಪಂಥಾಹ್ವಾನ

[ಸಂಪಾದಿಸಿ]
ಮೆಚ್ಚಿದನು ಯಮಸೂನು ಛಲ ನಿನ
ಗೊಚ್ಚತವಲೈ ವೈರಿಭಟರಲಿ;
ಬೆಚ್ಚಿದಾಡಿದೆಯಾದಡೇನದು ನಮ್ಮೊಳೈವರಲಿ |
ಮೆಚ್ಚಿದರ ನೀ ವರಿಸಿ ಕಾದುವು
ದಚ್ಚರಿಯ ಮಾತೇನು ಗೆಲವಿನ
ನಿಚ್ಚಟನೆ ನೆಲಕೊಡೆಯನಹುದಿದು ಸಮಯಕೃತವೆಂದ || ೪೫ ||
ಪದವಿಭಾಗ-ಅರ್ಥ: ಮೆಚ್ಚಿದನು ಯಮಸೂನು, ಛಲ ನಿನಗೆ+ ಒಚ್ಚತವಲೈ(ಒಚ್ಚತ: ನಾಮಪದ(ದೇ) ಮೀಸಲು, ಮುಡಿಪು) ವೈರಿಭಟರಲಿ ಬೆಚ್ಚಿದಾಡಿದೆಯೆ+ ಆದಡೆ (ಬೆಚ್ಚು- ಹೆದರು)+ ಏನದು ನಮ್ಮೊಳು+ ಐವರಲಿ ಮೆಚ್ಚಿದರ ನೀ ವರಿಸು(ಸ್ವೀಕರಿಸು.) ಕಾದುವುದು(ಯುದ್ಧಮಾಡುವುದು)+ ಅಚ್ಚರಿಯ ಮಾತೇನು ಗೆಲವಿನ ನಿಚ್ಚಟನೆ(ನಿರ್ಧರಿತವಾದುದು,ಸ್ಪಷ್ಟವಾದುದು, ನಿಶ್ಚಲ, ನಿರ್ಧಾರ) ನೆಲಕೆ+ ಒಡೆಯನು(ಈ ರಾಜ್ಯಕ್ಕೆ ಒಡೆಯನು)+ ಅಹುದು+ ಇದು ಸಮಯ ಕೃತವೆಂದ
ಅರ್ಥ: ಧರ್ಮಜನು ಕೌರವನ ದೈರ್ಯಕ್ಕೆ ಮೆಚ್ಚಿದನು. ಈ ಬಗೆಯ ಛಲವು ನಿನಗೇ ಮೀಸಲು. ನಿನ್ನ ವೈರಿಭಟರೊಡನೆ ಬೆಚ್ಚಿ ಮಾತನಾಡಿದೆಯೆ? ಅದೇನೂ ಇಲ್ಲ. ನಮ್ಮ ಐದು ಜನರಲ್ಲಿ ಮೆಚ್ಚಿದವರ/ ಇಷ್ಟಪಟ್ಟವರನ್ನು ನೀನು ಆರಿಸಿಕೊಂಡು ಕಾದುವುದು; ಇದು ಅಚ್ಚರಿಯ ಮಾತು ಅಲ್ಲ. ಗೆಲವಿನ ನಿರ್ಧಾರದಂತೆ ಗೆದ್ದವನು ಈ ರಾಜ್ಯಕ್ಕೆ ಒಡೆಯನು. ಇದು ನಿಜ; ಕಾಲ- ವಿಧಿಯ ಕೃತವು,' ಎಂದ.
ನಿನಗೆ ಸೋಲವೆ ನಾವು ಭೂಕಾ
ಮಿನಿಯನಾಳ್ವೆವು ನಮ್ಮೊಳೊಬ್ಬರು
ನಿನಗೆ ಸೋತಡೆ ಮಿಕ್ಕ ನಾಲ್ವರು ನಿನಗೆ ಕಿಂಕರರು |
ನಿನಗೆ ಹಸ್ತಿನಪುರದ ಸಿರಿ ಸಂ
ಜನಿತವೀ ಸಂಕೇತವೇ ಸಾ
ಧನ ನಿನಗೆ ನಮಗೆಂದು ನುಡಿದನು ಧರ್ಮಸುತ ನಗುತ || ೪೬ ||
ಪದವಿಭಾಗ-ಅರ್ಥ:ನಿನಗೆ ಸೋಲವೆ(ಸೋಲಾದರೆ) ನಾವು ಭೂಕಾಮಿನಿಯನು(ಭೂದೇವಿ, ರಾಜ್ಯಲಕ್ಷ್ಮಿ, ರಾಜ್ಯ)+ ಆಳ್ವೆವು ನಮ್ಮೊಳೊಬ್ಬರು ನಿನಗೆ ಸೋತಡೆ ಮಿಕ್ಕ ನಾಲ್ವರು ನಿನಗೆ ಕಿಂಕರರು(ಸೇವಕರು) ನಿನಗೆ ಹಸ್ತಿನಪುರದ ಸಿರಿ ಸಂಜನಿತವು+ ಈ ಸಂಕೇತವೇ ಸಾಧನ ನಿನಗೆ ನಮಗೆಂದು ನುಡಿದನು ಧರ್ಮಸುತ ನಗುತ.
ಅರ್ಥ: ಧರ್ಮಜನು ನಗುತ್ತಾ,'ಈ ದ್ವಂದ್ವ ಯುದ್ಧದಲ್ಲಿ ನಿನಗೆ ಸೋಲಾದರೆ ನಾವು ಈ ರಾಜ್ಯವನ್ನು ಆಳುವೆವು. ನಮ್ಮಲ್ಲಿ ಒಬ್ಬರು ನಿನಗೆ ಸೋತರೆ ಉಳಿದ ನಾಲ್ವರು ನಿನಗೆ ಸೇವಕರಾಗಿರುತ್ತೇವೆ. ನಿನಗೆ ಹಸ್ತಿನಾಪುರದ ಸಿರಿ-ಸಂಪತ್ತು ಸಿಗುವುದು. ಈ ಸಂಕೇತವೇ/ ಆಡಿದಮಾತೇ, ನಿಬಂದನೆಯೇ ನಿನಗೆ ನಮಗೆ ಸಾಧನ,' ಎಂದು ನುಡಿದನು. (*ಈ ಷರತ್ತಿನಲ್ಲಿ ಧರ್ಮಜನ ನೀತಿ ಸರಿಯೇ ಎಂಬ ವಿಚಾರ ಚರ್ಚೆಗೆ ಆಸ್ಪದ, ನಂತರ ಕೃಷ್ಣನು ಈ ಷರತ್ತನ್ನು ಹಾಕಿದ್ದು ಆತ್ಮಘಾತಕವಾಗಿತ್ತೆಂದು ಹೇಳಿದ್ದನು ಎಂಬ ವಿಚಾರವು ಪದ್ಯ ೪೯ರಲ್ಲಿ ಇದೆ.)
ಹಾ ಯುಧಿಷ್ಠಿರ ನಿಮ್ಮ ಕೂಡೆಮ
ಗಾಯಛಲವಿಲ್ಲರ್ಜುನನು ಮಗು
ವೀ ಯಮಳರಿಗೆ ಕೈದುಗೊಳ್ಳೆನು ಹೊಯ್ದು ಕೆಣಕಿದಡೆ |
ಬಾಯಿಬಡಿಕನು ಸತ್ವದಲಿ ನಾ
ಗಾಯುತದ ಬಲವೆಂಬ ಡೊಂಬಿನ
ವಾಯುವಿನ ಮಗನೆನ್ನೊಡನೆ ಮಾರಾಂತಡಹುದೆಂದ || ೪೭ ||
ಪದವಿಭಾಗ-ಅರ್ಥ: ಹಾ(ಎಲೆ, ಎಲವೋ) ಯುಧಿಷ್ಠಿರ ನಿಮ್ಮ ಕೂಡೆ+ ಎಮಗೆ+ ಆಯಛಲವಿಲ್ಲ(ಆಯ- ವಿಶೇಷ)+ ಅರ್ಜುನನು ಮಗುವು, ಯಮಳರಿಗೆ ಕೈದು+ಗೊ+ ಕೊಳ್ಳೆನು ಹೊಯ್ದು ಕೆಣಕಿದಡೆ ಬಾಯಿಬಡಿಕನು, ಸತ್ವದಲಿ ನಾಗಾಯುತದ(ನಾಗ= ಆನೆ, ಆನೆಯಂಥ ಬಲಶಾಲಿ) ಬಲವೆಂಬ ಡೊಂಬಿನ ವಾಯುವಿನ ಮಗನೆ+ ಎನ್ನೊಡನೆ ಮಾರಾಂತಡೆ (ಹೋರಾಡಿದರೆ)+ ಅಹುದು+ ಎಂದ.
ಅರ್ಥ:ಧರ್ಮಜನ ಆಹ್ವಾನಕ್ಕೆ ಕೌರವನು,' ಆಹಾ! ಯುಧಿಷ್ಠಿರನೇ ನಿಮ್ಮ ಬಗೆಗೆ ನಮಗೆ ಯಾವ ಛಲವಿಲ್ಲ; ಅರ್ಜುನನು ಚಿಕ್ಕವನು, ನಕುಲ ಸಹದೇವ- ಈ ಯಮಳರ ಮೇಲೆ ಆಯುಧವನ್ನು ಎತ್ತಲು ಇಷ್ಟವಿಲ್ಲ. ಹೊಯ್ದಾಟದಲ್ಲಿ ಕೆಣಕಿದರೆ ಸತ್ವದಲ್ಲಿಯೂ ಆನೆಯಂಥ ಬಲಶಾಲಿ, ಬಲಿಷ್ಠನೆಂಬ ಡೊಂಬಿನ- ಆಡಂಬರದ ಈ ಬಾಯಿಬಡಿಕ ವಾಯುವಿನ ಮಗ ಭೀಮನೇ ನನ್ನೊಡನೆ ಹೋರಾಡಿದರೆ ಅದು ಸರಿಯಾದುದು,'ಎಂದ.
ವರಿಸಿದೆನು ಭೀಮನನು ನೀವಾ
ದರಿಸುವಡೆ ಧರ್ಮವನು ದುರ್ಜನ
ಸರಣಿಯಲಿ ನೀವ್ ಬಹಡೆ ದಳಸಹಿತೈವರಿದಿರಹುದು |
ತೆರಳುವವರಾವಲ್ಲ ನೀವ್ ಪತಿ
ಕರಿಸಿದುದೆ ನಿಮ್ಮಿಷ್ಟವೆನೆ ಮುರ
ಹರ ಯುಧಿಷ್ಠಿರನೃಪನನೆಕ್ಕಟಿಗರೆದು ಗರ್ಜಿಸಿದ || ೪೮ ||
ಪದವಿಭಾಗ-ಅರ್ಥ: ವರಿಸಿದೆನು ಭೀಮನನು ನೀವು+ ಆದರಿಸುವಡೆ ಧರ್ಮವನು ದುರ್ಜನ ಸರಣಿಯಲಿ ನೀವ್ ಬಹಡೆ ದಳ(ಸೇನೆ)ಸಹಿತ+ ಐವರಿದಿರು+ ಅಹುದು(ಆಗಬಹುದು) ತೆರಳುವವರು+ ಆವಲ್ಲ ನೀವ್ ಪತಿಕರಿಸಿದುದೆ (ಅಪೇಕ್ಷಿಸಿದುದೆ) ನಿಮ್ಮಿಷ್ಟವು+ ಎನೆ ಮುರಹರ ಯುಧಿಷ್ಠಿರ ನೃಪನನು+ ಎಕ್ಕಟಿ+ ಗ+ ಕರೆದು ಗರ್ಜಿಸಿದ.
ಅರ್ಥ:ಕೌರವನು ಹೇಳಿದ,'ಯುದ್ಧಕ್ಕೆ ಭೀಮನನ್ನು ಆರಿಸಿಕೊಂಡಿದ್ದೇನೆ. ನೀವು ಅದನ್ನು ಆದರಿಸಿ ಧರ್ಮವನ್ನುಅನುಸರಿಸಿ ಒಪ್ಪುವುದಾದರೆ ಒಪ್ಪಿರಿ . ಇಲ್ಲವೇ, ದುರ್ಜನರಂತೆ ನೀವೆಲ್ಲರೂ ಸರಣಿಯಲ್ಲಿ ಯುದ್ಧಕ್ಕೆ ಬಂದರೆ, ಅಥವಅ ದಳಸಹಿತ ಐದೂ ಜನರೂ ಯುದ್ಧಕ್ಕೆ ಬಂದರೂ ಆಗಬಹುದು. ಹಿಮ್ಮಟ್ಟುವವರು ನಾವಲ್ಲ. ನಿಮ್ಮ ಇಷ್ಟವು. ನೀವು ಅಪೇಕ್ಷಿಸಿದಂತೆ ಆಗಲಿ; ಎನ್ನಲು ಮುರಹರ ಕೃಷ್ಣನು ಯುಧಿಷ್ಠಿರ ನೃಪನನ್ನು ಏಕಾಂತಕ್ಕೆ ಕರೆದು ಅವನ ಅನಗತ್ಯ ಉದಾರತೆಗೆ ಗದರಿಸಿದನು.
ಮರುಳೆ ನೀ ಹೆಚ್ಚಾಳುತನಕು
ಬ್ಬರಿಸಿ ನುಡಿದೆ ಸುಯೋಧನನ ನೀ
ನರಿಯಲಾಗದೆ ಕೈಗೆ ಬಂದರೆ ಕದನಭೂಮಿಯಲಿ |
ಸರಿಸದಲಿ ಮಲೆ ತವನು ಜೀವಿಸಿ
ಮರಳಲರಿವನೆ ನಮ್ಮೊಳೊಬ್ಬನ
ವರಿಸು ವಿಗ್ರಹಕೆಂದು ನಮ್ಮನು ಕೊಂದೆ ನೀನೆಂದ || ೪೯ ||
ಪದವಿಭಾಗ-ಅರ್ಥ: ಮರುಳೆ ನೀ ಹೆಚ್ಚಾಳುತನಕೆ+ ಉಬ್ಬರಿಸಿ ನುಡಿದೆ, ಸುಯೋಧನನ ನೀನು+ ಅರಿಯಲಾಗದೆ(, ಅರ್ಥಮಾಡಿಕೊಳ್ಳಲಾಗದೆ, ಅರಿ= ಕೊಲ್ಲು ಅರಿದುಹಾಕು) ಕೈಗೆ ಬಂದರೆ ಕದನ ಭೂಮಿಯಲಿ ಸರಿಸದಲಿ (ನೇರ,ನೆಟ್ಟಗೆ, ಆಕ್ರಮಿಸಿ) ಮಲೆತವನು(ಗರ್ವಿಸಿದ, ಸೊಕ್ಕಿದ; ಪ್ರತಿಭಟಿಸಿದ) ಜೀವಿಸಿ ಮರಳಲು ಅರಿವನೆ ನಮ್ಮೊಳೊಬ್ಬನ ವರಿಸು(ಆರಿಸಿಕೊ) ವಿಗ್ರಹಕೆಂದು(ಯುದ್ಧಕ್ಕೆ ಎಂದು ಹೇಳಿ) ನಮ್ಮನು ಕೊಂದೆ ನೀನೆಂದ.
ಅರ್ಥ: ಕೃಷ್ನನು,ಧರ್ಮಜ, ನಿನಗೆ ಮರುಳೆ! ನಿನ್ನ ದೊಡ್ಡಸ್ತಿಕೆ ತೋರಿಸಲು ಉಬ್ಬರಿಸಿ/ಅಗತ್ಯಕ್ಕಿಂತ ಹೆಚ್ಚು ಮಾತನಾಡಿದೆ. ಸುಯೋಧನನ್ನು ನೀನು ಅರ್ಥಮಾಡಿಕೊಳ್ಳಲಾಗದೆ ನಿನ್ನ ಕೈಗೆ ಕದನ ಬಂದರೆ/ ನೀನು ಅವನನ್ನು ಯುದ್ಧದಲ್ಲಿ ಎದುರಿಸುವ ಪರಿಸ್ಥಿತಿ ಬಂದರೆ, ಭೂಮಿಯಲ್ಲಿ ಸರಿಸದಲಿ ಮಲೆತವನು/ ಪ್ರಾಣದ ಅಸೆಬಿಟ್ಟು ಹೋರಾಡುವವನನ್ನು ಎದುರಿಸಿ ಜೀವಿಸಿ ಮರಳಲು ಯಾರಿಗಾದರೂ ಅರಿವನೆ/ಗೊತ್ತೇ? ಸಾದ್ಯವೇ? ಅಸಾದ್ಯ. ನಮ್ಮಲ್ಲಿ ಒಬ್ಬನನ್ನು ಆರಿಸಿಕೊ ಯುದ್ಧಕ್ಕೆ ಎಂದು ಹೇಳಿ ನೀನು ನಮ್ಮನು ಕೊಂದೆ,' ಎಂದ.
ಗೆಲಿದಡೈವರೊಳೊಬ್ಬನನು ಮಿ
ಕ್ಕುಳಿದವರು ಕಿಂಕರರು ಗಡ ನೀ
ತಿಳಿದು ನುಡಿದಾ ನಿನ್ನನಾಹವಮುಖಕೆ ವರಿಸಿದಡೆ |
ಗೆಲಲು ಬಲ್ಲಾ ನೀನು ಫಲುಗುಣ
ಗೆಲುವನೇ ನಿನ್ನುಳಿದರಿಬ್ಬರು
ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ || ೫೦ ||
ಪದವಿಭಾಗ-ಅರ್ಥ: ಗೆಲಿದಡೆ+ ಐವರೊಳು+ ಒಬ್ಬನನು ಮಿಕ್ಕುಳಿದವರು ಕಿಂಕರರು ಗಡ! ನೀ ತಿಳಿದು ನುಡಿದಾ ನಿನ್ನನು ಆಹವಮುಖಕೆ ವರಿಸಿದಡೆ ಗೆಲಲು ಬಲ್ಲಾ ನೀನು? ಫಲುಗುಣ ಗೆಲುವನೇ? ನಿನ್ನ+ ಉಳಿದರಿಬ್ಬರು ನಿಲುವರೇ ಕುರುಪತಿಯ ಘಾಟದ ಗದೆಯ ಘಾಯದಲಿ (ಘಾಯ= ದೀರ್ಘಾಯುಸ್ಸು, ಬಲಿಷ್ಠ )?
ಅರ್ಥ:ಕೃಷ್ಣನು ಧರ್ಮಜನಿಗೆ ಸಿಟ್ಟಿನಿಂದ ಕೇಳಿದ,'ಏನು ಹೇಳಿದೆ, ಐವರಲ್ಲಿ ಒಬ್ಬನನ್ನು ಗೆದ್ದರೆ ಮಿಕ್ಕ ಉಳಿದವರು ಕೌರವನಿಗೆ ಸೇವಕರು ಗಡ! ನೀನು ತಿಳಿದು/ಯೋಚಿಸಿ ಈ ಮಾತನ್ನು ನುಡಿದೆಯಾ? ನಿನ್ನನು ಯುದ್ಧದ ಮುಖಕ್ಕೆ ಒಪ್ಪಿಸಿದರೆ, ಅವನನ್ನು ಗೆಲ್ಲಬಲ್ಲೆಯಾ ನೀನು?, ಆಗದು; ಫಲುಗುಣ ಗೆಲ್ಲುವನೇ? ಅವನಿಂದಲೂ ಆಗದು: ನಿನ್ನ ಉಳಿದರಿಬ್ಬರು ತಮ್ಮಂದಿರು ಅವನನ್ನು ಎದುರಿಸಿ ನಿಲ್ಲುವರೇ? ಅಸಾದ್ಯ. ಕುರುಪತಿಯ ಚತುರ ಗದೆಯ ಬಲಿಷ್ಠ ಹೊಡೆತದಲ್ಲಿ ಬದುಕುವರೆ? ಇಲ್ಲ.' ಎಂದ.
ಇಂದು ನಮ್ಮಯ ಭಾಗ್ಯಲಕ್ಷ್ಮಿಯ
ಕಂದೆರೆವೆಯಲಿ ಭೀಮ ಕಾದುವು
ದೆಂದು ಜಾರಿಸಿ ನಿಮ್ಮ ಬಿಟ್ಟನು ನಮ್ಮ ಪುಣ್ಯದಲಿ |
ಇಂದಿನೀ ಸಮರದಲಿ ಪವನಜ
ನಿಂದಡೇನಹುದೆಂಬ ಚಿತ್ತದ
ಸಂದೆಯವು ನಮಗುಂಟು ಕೌರವನೈಸು ಬಲುಹೆಂದ || ೫೧ ||
ಪದವಿಭಾಗ-ಅರ್ಥ: ಇಂದು ನಮ್ಮಯ ಭಾಗ್ಯಲಕ್ಷ್ಮಿಯ ಕಂದೆರೆವೆಯಲಿ(ಕಣ್ಣು ತರೆಯುವಲ್ಲಿ- ತೆರೆದಿದ್ದರಿಂದ) ಭೀಮ ಕಾದುವುದೆಂದು ಜಾರಿಸಿ ನಿಮ್ಮ ಬಿಟ್ಟನು ನಮ್ಮ ಪುಣ್ಯದಲಿ ಇಂದಿನ+ ಈ ಸಮರದಲಿ ಪವನಜ ನಿಂದಡೆ+ ಏನಹುದೆಂಬ ಚಿತ್ತದ ಸಂದೆಯವು ನಮಗುಂಟು ಕೌರವನು+ ಐಸು ಬಲುಹು+ ಎಂದ.
ಅರ್ಥ:ಕೃಷ್ನನು,'ಇಂದು ನಮ್ಮ ಭಾಗ್ಯಲಕ್ಷ್ಮಿಯ ಕಣ್ಣು ತೆರೆದಿದ್ದರಿಂದ, ಭೀಮನು ಅವನೊಡನೆ ಯುದ್ಧಮಾಡುವುದೆಂದು ಹೇಳಿ, ಉಳಿದ ನಿಮ್ಮನ್ನು ನಮ್ಮ ಪುಣ್ಯದಿಂದ ಜಾರಿಸಿ ಬಿಟ್ಟನು. ಇಂದಿನ ಈ ಸಮರದಲ್ಲಿ ಪವನಜನಾದ ಭೀಮನು ಸಹ ಅವನೆದುರು ನಿಂತರೆ, ಏನಾಗಬಹುದೋ ಎಂಬ ಸಂದೇಹವು ನಮಗೆ ಚಿತ್ತದಲ್ಲಿ/ ಮನಸ್ಸಿನಲ್ಲಿ ಉಂಟು! ಕೌರವನು ಅಷ್ಟು ಬಲುಹು/ಸಾಮರ್ಥ್ಯ ಉಳ್ಳವನು,' ಎಂದ.
ಎಲೆ ಮುರಾಂತಕ ನಿಮ್ಮ ಮುಂದ
ಗ್ಗಳೆಯತನವೆಮಗಿಲ್ಲ ನಿಮ್ಮಡಿ
ಗಳ ಸುಧಾಕರುಣಾವಧಾನವೆ ವಜ್ರಕವಚವಲಾ |
ಮಲೆತ ಹಗೆವನ ಪಡಿಮುಖದ ಬಲು
ವಲಗೆಯಲಿ ಗದೆಯಿಂದ ರಾಯನ
ಬಲುಹ ಬಿರುದಾವಳಿಯ ಬರೆವೆನು ಕೃಷ್ಣ ಕೇಳೆಂದ || ೫೨ ||
ಪದವಿಭಾಗ-ಅರ್ಥ:ಎಲೆ ಮುರಾಂತಕ ನಿಮ್ಮ ಮುಂದೆ+ ಅಗ್ಗಳೆಯತನವು+ ಎಮಗಿಲ್ಲ ನಿಮ್ಮಡಿಗಳ ಸುಧಾಕರುಣ+ ಅವಧಾನವೆ (ಸ್ಮರಣೆ,) ವಜ್ರಕವಚವಲಾ, ಮಲೆತ (ವಿರೋಧಿಸಿ ನಿಂತ) ಹಗೆವನ ಪಡಿಮುಖದ(ಎದುರಾದವನ) ಬಲುವ(ಶಕ್ತಿ)ಅ/ಹ/ಲಗೆಯಲಿ ಗದೆಯಿಂದ ರಾಯನ ಬಲುಹ(ಶಕ್ತಿ) ಬಿರುದಾವಳಿಯ ಬರೆವೆನು ಕೃಷ್ಣ ಕೇಳೆಂದ.
ಅರ್ಥ:ಧರ್ಮಜನು,'ಎಲೆ ಮುರಾಂತಕ ಕೃಷ್ಣಾ, ನಿಮ್ಮ ಮುಂದೆ ನಮ್ಮ ದೊಡ್ಡತನ ತೋರಿಸುವ ಶಕ್ತಿ ನಮಗಿಲ್ಲ. ನಿಮ್ಮಡಿಗಳ ಸುಧಾಕರುಣ- ಅನುಕಂಪದ ಸ್ಮರಣೆಯೇ ವಜ್ರಕವಚವದಂತೆ ನಮಗೆ ರಕ್ಷೆ. ಅದು ಹಾಗಿರಲಿ, ನಮಗೆ ವಿರೋಧಿಸಿ ನಿಂತು, ನಮ್ಮ ಭೀಮನು ಹೊಡೆಯುವ ಗದೆಯಿಂದ, ಈಗ ಅವನಿಗೆ ಎದುರಾದ ಕೌರವರಾಯನ ಶಕ್ತಿಯನ್ನೂ ಬಿರುದಾವಳಿಯನ್ನೂ ಹಲಗೆಯಲ್ಲಿ ಬರೆಯುವೆನು- (ಅವನ ಕೀರ್ತಿಯು ಶಾಶ್ವತವಾಗಿ ಉಳಿಯುವುದನ್ನು ತೋರಿಸುವೆನು), ಕೃಷ್ಣನೇ ಕೇಳು ಎಂದ. (ಭೀಮನನ್ನು ಎದುರಿಸಿ ಹೋರಾಡುವ ಕೌರವನ ಕೀರ್ತಿಯನ್ನೂ ಸಾಹಸವನ್ನೂ, ನಾನು ಭೀಮನ ಗದೆಯಿಂದ ಹಲಗೆಯಮೇಲೆ ಬರೆದಿಡುತ್ತೇನೆ/ ಬರೆಯುತ್ತಿದ್ದೇನೆ, ಎಂದು ಭಾವ; ಕವಿಯ ಆಶಯ: ಕೌರವನ ಸಾಹಸ ಮತ್ತು ಛಲದ ಬಗ್ಗೆ ಮೆಚ್ಚುಗೆ ತೋರಿಸಲು ಇರಬಹುದು)

ಕೌರವನೊಡನೆ ಯುದ್ಧಮಾಡಲು ಭೀಮನಿಗೆ ಪಾಂಡವರಕಡೆಯಿಂದ ಪ್ರೋತ್ಸಾಹ

[ಸಂಪಾದಿಸಿ]
ಪೂತು ಮಝ ಭಟ ಎನುತ ಕಂಸಾ
ರಾತಿ ಕೊಂಡಾಡಿದನು ಸಾತ್ಯಕಿ
ಭೂತಳಾಧಿಪ ಪಾರ್ಥ ಯಮಳಾದಿಗಳು ನಲವಿನಲಿ |
ವಾತಜನ ಹೊಗಳಿದರು ಸುಭಟ
ವ್ರಾತಸೌಹಾರ್ದದಲಿ ಶೌರ್ಯ
ಖ್ಯಾತಿಯನು ಬಣ್ಣಿಸಿದುದವನೀಪಾಲ ಕೇಳೆಂದ || ೫೩ ||
ಪದವಿಭಾಗ-ಅರ್ಥ: ಪೂತು(ಭಲೇ) ಮಝ! ಭಟ! ಎನುತ ಕಂಸಾರಾತಿ(ಕಂಸನ+ ಆರಾತಿ- ಶತ್ರು= ಕೃಷ್ಣ) ಕೊಂಡಾಡಿದನು, ಸಾತ್ಯಕಿ, ಭೂತಳಾಧಿಪ ()ರಾಜ- ಧರ್ಮಜ (ದೃಷ್ಟದ್ಯುಮ್ನ?), ಪಾರ್ಥ, ನಕುಲ ಸಹದೇವ-ಯಮಳ+ ಆದಿಗಳು (ಇತರರು) ನಲವಿನಲಿ (ಸಂತೋಷದಿಂದ) ವಾತಜನ(ವಾತ= ವಾಯು+ ಜ- ಜನಿಸಿಸಿದವ= ಭೀಮನನ್ನು) ಹೊಗಳಿದರು ಸುಭಟವ್ರಾತ ಸೌಹಾರ್ದದಲಿ(ಪ್ರೀತಿಯಿಂದ) ಶೌರ್ಯಖ್ಯಾತಿಯನು ಬಣ್ಣಿಸಿದುದು+ ಅವನೀಪಾಲ ಕೇಳೆಂದ.
ಅರ್ಥ: ಕೃಷ್ಣನು ಭೀಮನನನ್ನು, ಪೂತು(ಭಲೇ) ಮಝ! ಭಟ! ಎನ್ನುತ್ತಾ ಕೃಷ್ಣ) ಕೊಂಡಾಡಿದನು. ಸಾತ್ಯಕಿ, ಧರ್ಮಜ, ದೃಷ್ಟದ್ಯುಮ್ನ, ಪಾರ್ಥ, ನಕುಲ ಸಹದೇವ ಮೊದಲಾದರು ಸಂತೋಷದಿಂದ ಭೀಮನನ್ನು ಹೊಗಳಿದರು. ಅಲ್ಲಿದ್ದ ಸುಭಟರ ಸಮೂಹವು ಪ್ರೀತಿಯಿಂದ ಭೀಮ ಶೌರ್ಯ ಮತ್ತು ಖ್ಯಾತಿಯನ್ನು ಬಣ್ಣಿಸಿದರು, ಅವನೀಪಾಲ- ಧೃತರಾಷ್ಟ್ರನೇ ಕೇಳು ಎಂದ ಅವನ ಮಂತ್ರಿ ಸಂಜಯ.
ಗದೆಯ ಕೊಂಡನು ಕೌರವೇಂದ್ರನ
ನಿದಿರುಗೊಂಡನು ಬೀಮ ಬಲವಂ
ಕದಲಿ ವಾಮಾಂಗದಲಿ ಬಳಸಿದರಗ್ರಜಾನುಜರು
ಕದನಭೂಮಿಯ ಬಿಡವರಿದು ನಿಂ
ದುದು ಚತುರ್ಬಲ ಸುತ್ತಿ ಗಗನದೊ
ಳೊದಗಿದುದು ಸುರನಿಕರ ತೀವಿ ವಿಮಾನವೀಥಿಯಲಿ ೫೪
ಪದವಿಭಾಗ-ಅರ್ಥ: ಗದೆಯ ಕೊಂಡನು ಕೌರವೇಂದ್ರನನು+ ಇದಿರುಗೊಂಡನು ಬೀಮ, ಬಲವಂಕದಲಿ(ಬಲಗಡೆ) ವಾಮಾಂಗದಲಿ(ಎಡಗಡೆ) ಬಳಸಿದರು+ ಅಗ್ರಜ+ ಅನುಜರು(ಭೀಮನ ಅಣ್ಣ ತಮ್ಮಂದಿರು) ಕದನಭೂಮಿಯ ಬಿಡವರಿದು(ಬಿಡವು-ಖಾಲಿಸ್ಥಳ++ ಅರಿದು(ಕಾಣದು, ಅರಿಯದು, ತಿಳಿಯದಂತ) ನಿಂದುದು ಚತುರ್ಬಲ ಸುತ್ತಿ (ಸುತ್ತುವರಿದು.), ಗಗನದೊಳು+ ಒದಗಿದುದು ಸುರನಿಕರ(ದೇವತೆಗಳ ಸಮೂಹ) ತೀವಿ(ತುಂಬಿ ಬಿಡುವು ಇಲ್ಲದೆ ಇಕ್ಕಟ್ಟಾಗಿ) ವಿಮಾನ ಮತ್ತು ವೀಥಿಯಲಿ.
ಅರ್ಥ: ಭೀಮ ದುರ್ಯೋಧನರು ಯುದ್ಧಕ್ಕೆ ಎದುರಾದರು. ಭೀಮನು ಗದೆಯನ್ನು ಕೈಗೆ ತೆಗೆದುಕೊಂಡು ಕೌರವೇಂದ್ರನನ್ನು ಎದುರಿಸಿ ನಿಂತನು. ಅವನ ಬಲಗಡೆ ಎಡಗಡೆ, ಅಣ್ಣ ಧರ್ಮರಾಯ ಮತ್ತು ಅವನ ತಮ್ಮಂದಿರು ಯುದ್ಧಭೂಮಿಯನ್ನು ಸುತ್ತುವರಿದು ನಿಂತರು. ಉಳಿದವರೂ ಅಲ್ಲಿ ಬಿಡವು ಕಾಣದಂತೆ ಕಿಕ್ಕಿರಿದು ನಿಂತರು. ಧರ್ಮಜನ ಚತುರ್ಬಲವೂ ಸುತ್ತುವರಿದು ನಿಂತಿತು. ಆಕಾಶದ ವೀಥಿಯಲಿ/ಬೀದಿಯಲ್ಲಿ ದೇವತೆಗಳ ಸಮೂಹ ವಿಮಾನದಲ್ಲಿ ತುಂಬಿ ಬಿಡುವು ಇಲ್ಲದಂತೆ ಇಕ್ಕಟ್ಟಾಗಿ ಈ ಯುದ್ಧವನ್ನು ನೋಡಲು ಬಂದು ನಿಂತಿತು.

ಯದ್ಧದ ಆರಂಭದ ಸಮಯದಲ್ಲಿ ಬಲರಾಮನ ಆಗಮನ

[ಸಂಪಾದಿಸಿ]
ಚಟುಳತರ ಭಾರಂಕದಂಕದ
ಭಟರು ತರುಬಿದರುಬ್ಬೆಯಲಿ ಲಟ
ಕಟಿಸಿದವು ಕಣ್ಣಾಲಿ ಬದ್ಧಭ್ರುಕುಟಿಭಂಗದಲಿ |
ಕಟುವಚನ ವಿಕ್ಷೇಪರೋಷ
ಸ್ಫುಟನವೇಲ್ಲಿತವಾಕ್ಯಭಂಗೀ
ಘಟನವಿಘಟನದಿಂದ ಮೂದಲಿಸಿದರು ಮುಳಿಸಿನಲಿ || ೫೫ ||
ಪದವಿಭಾಗ-ಅರ್ಥ:ಚಟುಳತರ(ಚಟುಲ= ತ್ವರಿತ) ಭಾರಂಕದ (ಘೋರವಾದ ಯುದ್ಧ. 2. ವೀರಯೋಧ,- ಸೈನಿಕ.)+ ಅಂಕದ(ರಣರಂಗದ) ಭಟರು ತರುಬಿದರು+ ಉಬ್ಬೆಯಲಿ(ವೀರಾವೇಶದಿಂದ) ಲಟಕಟಿಸಿದವು(ಉದ್ರೇಕಗೊಳ್ಳು) ಕಣ್ಣಾಲಿ ಬದ್ಧಭ್ರುಕುಟಿ (ಹುಬ್ಬುಗಂಟಿಕ್ಕಿದ) ಭಂಗದಲಿ ಕಟುವಚನ ವಿಕ್ಷೇಪ(ಚಲನೆ, ಚೆಲ್ಲುವಿಕೆ- ಉದುರಿಸು) ರೋಷ- ಸ್ಫುಟನವೇಲ್ಲಿತ+ ವಾಕ್ಯ ಭಂಗೀಘಟನ ವಿಘಟನದಿಂದ ಮೂದಲಿಸಿದರು ಮುಳಿಸಿನಲಿ(ಸಿಟ್ಟಿನಿಂದ).
ಅರ್ಥ:ಪರಸ್ಪರ ಯುದ್ಧಕ್ಕೆ ಸನ್ನದ್ಧರಾದ ಮತ್ತು ಚುರುಕಿನ ಪ್ರಸಿದ್ಧ ವೀರಯೋಧರಾದ ಭೀಮ ದುರ್ಯೋಧನ ಇಬ್ಬರೂ ಅಂಕದ ರಣರಂಗದಲ್ಲಿ ವೀರಾವೇಶದಿಂದ ಎದುರಿಸಿ ನಿಂತರು. ಅವರ ಕಣ್ಣಾಲಿಗಳು ಉದ್ರೇಕಗೊಂಡವು. ಹುಬ್ಬುಗಂಟಿಕ್ಕಿದ ಭಂಗಿಯಲ್ಲಿ ಕಟುವಚನಗಳನ್ನು ಉದುರಿಸುತ್ತಾ ರೋಷದಿಂದ ಕೂಡಿದ ವಾಕ್ಯಗಳಿಂದ ಅಣಕಿಸುವ ಭಂಗೀಘಟನೆಯಲ್ಲಿ ಮತ್ತು ಅದಕ್ಕೆ ವಿರೋಧಿಯ ಪ್ರತಿ ವಿಘಟನೆಗಳಿಂದ ಒಬ್ಬರನ್ನೊಬ್ಬರು ಸಿಟ್ಟಿನಿಂದ ಮೂದಲಿಸಿದರು. (ಭಂಗೀಘಟನೆ ವಿಘಟನೆಗಳಿಂದ- ನಿಂದಿಸುವಾಗ ಹಿಂದಿನ ಘಟನೆಗಳನ್ನು ಅಭಿನಯ ಪೂರ್ವಕ ಹೇಳುವುದು)
ಅರಸ ಕೇಳಿವರಿಬ್ಬರುಬ್ಬಿನ
ಧುರದ ಥಟ್ಟಣೆ ಪಸರಿಸಿತು ಸುರ
ನರರನಾ ಸಮಯದಲಿ ಪೂರ್ವೋತ್ತರದ ದೆಸೆಯಿಂದ
ವರ ಮುನಿಸ್ತೋಮದ ನಡುವೆ ಕಂ
ಧರದ ಮುಸಲದ ವಿಮಳ ನೀಲಾಂ
ಬರದ ರಾಮನ ಸುಳಿವ ಕಂಡರು ಕೃಷ್ಣ ಪಾಂಡವರು ೫೬
ಪದವಿಭಾಗ-ಅರ್ಥ: ಅರಸ ಕೇಳು+ ಇವರು+ ಇಬ್ಬರ+ ಉಬ್ಬಿನ ಧುರದ(ಯುದ್ಧ) ಥಟ್ಟಣೆ(ಥಟ್ಟನೆ= ಕೂಡಲೆ; ಥಟ್ಟು= ಸೈನ್ಯ, ಪಡೆ) ಪಸರಿಸಿತು ಸುರನರರನು+ ಆ ಸಮಯದಲಿ ಪೂರ್ವೋತ್ತರದ ದೆಸೆಯಿಂದ+ ಅವರ ಮುನಿಸ್ತೋಮದ ನಡುವೆ ಕಂಧರದ (ಕಂಧರ= ಕುತ್ತಿಗೆ) ಮುಸಲದ(ಗದೆ) ವಿಮಳ ನೀಲಾಂಬರದ ರಾಮನ ಸುಳಿವ ಕಂಡರು ಕೃಷ್ಣ ಪಾಂಡವರು.
ಅರ್ಥ: ಧೃತರಾಷ್ಟ್ರ ಅರಸನೇ ಕೇಳು,'ಇವರು ಇಬ್ಬರ ಉಬ್ಬಿನ/ಉತ್ಸಾಹದ ಯುದ್ಧದ ವಿಚಾರ ಕೂಡಲೆ ದೇವತೆಗಳಲ್ಲೂ ನರರು/ಜನರಲ್ಲೂ ಆ ಸಮಯದಲ್ಲಿ ಹರಡಿತು. ಅದೇ ಸಮಯದಲ್ಲಿ ಪೂರ್ವದ-ಉತ್ತರದ ದಿಕ್ಕಿನಿಂದ ಅವರ ಮುನಿಗಲ ಸಮೂಹದ ನಡುವೆ ಕುತ್ತಿಗೆಯಬಳಿ ಹೆಗಲ ಮೇಲೆ ಗದೆಯನ್ನು ಹೊತ್ತ ಶುಬ್ರ ನೀಲಾಂಬರವನ್ನು ಉಟ್ಟ ಬಲರಾಮನು ಬರುತ್ತಿರುವ ಸುಳಿವನ್ನು ಕೃಷ್ಣ ಮತ್ತು ಪಾಂಡವರು ಕಂಡರು.
ಆ ನಿಖಿಳ ಪರಿವಾರದನುಸಂ
ಧಾನ ದೃಷ್ಟಿಗಳತ್ತ ತಿರುಗಿದ
ವೇನನೆಂಬೆನು ಮುಸಲಧರನಾಗಮನ ಸಂಗತಿಯ |
ಈ ನರೇಂದ್ರನ ಸುಮುಖತೆಯ ಸು
ಮ್ಮಾನ ಹೊಳೆದುದು ಭಯದಿ ಕುಂತೀ
ಸೂನುಗಳು ಮರೆಗೊಳುತಲಿರ್ದುದು ವೀರನರಯಣನ || ೫೭ ||
ಪದವಿಭಾಗ ಅರ್ಥ:-ಆ ನಿಖಿಳ(ಎಲ್ಲಾ) ಪರಿವಾರದ+ ಅನುಸಂಧಾನ ದೃಷ್ಟಿಗಳು+ ಅತ್ತ ತಿರುಗಿದವು,+ ಏನನು+ ಎಂಬೆನು ಮುಸಲಧರನ+ ಆಗಮನ ಸಂಗತಿಯ, ಈ ನರೇಂದ್ರನ ಸುಮುಖತೆಯ ಸುಮ್ಮಾನ ಹೊಳೆದುದು, ಭಯದಿ ಕುಂತೀಸೂನುಗಳು ಮರೆಗೊಳುತಲಿ+ ಇರ್ದುದು ವೀರನರಯಣನ.
ಅರ್ಥ:-ಬಲರಾಮನು ಬರುತ್ತಿರುವುದನ್ನು ಕಂಡು ಆ ಎಲ್ಲಾ ಪರಿವಾರದ ಗಮನ- ದೃಷ್ಟಿಗಳು ಬಲರಾಮನ ಕಡೆ ತಿರುಗಿದವು. ಬಲರಾಮನ ಆಗಮನ ಸಂಗತಿಯ ವಿಚಾರದಲ್ಲಿ ಏನನ್ನು ಹೇಳಲಿ, ಈ ಕೌರವ ನರೇಂದ್ರನ ನೋಟದಲ್ಲಿ ಸಂತೋಷ ಹೊಳೆಯಿತು. ಬಲರಾಮನು ಕೌರವನಲ್ಲಿ ಅನುಕಂಪ ಉಳ್ಳವನಾದುದರಿಂದ ಕುಂತೀಮಕ್ಕಳಾದ ಧರ್ಮಜ ಮೊದಲಾದವರು ಭಯದಿಂದ ವೀರನಾರಯಣನಾದ ಕೃಷ್ಣನೇ ಕಾಪಾಡಬೇಕೆಂದು ಅವನ ಮರೆಹೋಗುತ್ತಾ ಇದ್ದರು.
♠♠♠

ಸಂಧಿಗಳು

[ಸಂಪಾದಿಸಿ]

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
  3. ಮಹಾಭಾರತ ಶಾಂತಿ ಪರ್ವ.