ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೮)

ವಿಕಿಸೋರ್ಸ್ ಇಂದ
Jump to navigation Jump to search
<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೮ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಸೂಚನೆ~
ಕೆಡೆದ ಕೌರವನೃಪನ ನೇಮವ
ಪಡೆದು ಕೃಪ ಕೃತವರ್ಮ ಗುರುಸುತ
ರೊಡನೆ ಬಂದರು ಸಾರಿದರು ಪಾಂಡವರ ಪಾಳೆಯವ ||ಸೂ.||

ಪದವಿಭಾಗ-ಅರ್ಥ:ಕೆಡೆದ ಕೌರವನೃಪನ ನೇಮವ ಪಡೆದು ಕೃಪ ಕೃತವರ್ಮ ಗುರುಸುತರೊಡನೆ ಬಂದರು ಸಾರಿದರು ಪಾಂಡವರ ಪಾಳೆಯವ.
ಅರ್ಥ:ಕೃಪ ಕೃತವರ್ಮ ಗುರುಸುತ ಅಶ್ವತ್ಥಾಮ ಇವರು ತೊಡೆಮುರಿದು ಬಿದ್ದ ಕೌರವನೃಪನ ಆಜ್ಞೆಯನ್ನು ಪಡೆದು ಬಂದವರು ಪಾಂಡವರ ಪಾಳೆಯವನ್ನು ತಲುಪಿದರು.[೧][೨]

ಕೌರವರಾಯ ರುಧಿರದ ತಿಲಕವಾದನಲೈ ಧರಾಂಗನೆಗೆ[ಸಂಪಾದಿಸಿ]

ಕೇಳು ಧೃತರಾಷ್ಟ್ರಾವನೀಶ ಕ
ರಾಳ ಲೋಹಗದಾಭಿಹತಿಗೆ ನೃ
ಪಾಲಬಿದ್ದನು ಭಾರತದ ದುಸ್ಸಂಗ ಭಂಗದಲಿ |
ಮೇಲೆ ಚಾರಣ ಸೂತ ಮಾಗಧ
ಜಾಲ ಹೊಗಳಿತು ಗರುವ ಕುರುಭೂ
ಪಾಲ ಗಂಡಿಗನಕಟೆನುತ ಕೊಂಡಾಡಿತಮರಗಣ || ೧ ||
ಪದವಿಭಾಗ-ಅರ್ಥ:ಕೇಳು ಧೃತರಾಷ್ಟ್ರ+ ಅವನೀಶ ಕರಾಳ ಲೋಹಗದಾ+ ಅಭಿಹತಿಗೆ ನೃಪಾಲಬಿದ್ದನು ಭಾರತದ ದುಸ್ಸಂಗ ಭಂಗದಲಿ(ದುಷ್ಟರ ಸಂಗದ ಪರಿಣಾವಾಗಿ); ಮೇಲೆ ಚಾರಣ (ಸಂಚರಿಸುವ) ಸೂತ ಮಾಗಧಜಾಲ ಹೊಗಳಿತು ಗರುವ ಕುರುಭೂಪಾಲ ಗಂಡಿಗನು+ ಅಕಟ+ ಎನುತ ಕೊಂಡಾಡಿತು+ ಅಮರಗಣ(ದೇವತೆಗಳು).
ಅರ್ಥ:ಕೇಳು ಧೃತರಾಷ್ಟ್ರ ರಾಜನೇ,'ಭಯಂಕರವಾದ ಕಬ್ಬಿಣದ ಗದೆಯ ಬಲವಾದ ಹೊಡೆತಕ್ಕೆ ನೃಪಾಲ ಕೌರವನು ಭಾರತಯುದ್ಧದಲ್ಲಿ ದುಷ್ಟರ ಸಂಗದ ಪರಿಣಾವಾಗಿ ರಣರಂಗದಲ್ಲಿ ಸೋತು ತೊಡೆಮುರಿದು ಬಿದ್ದನು. ಮೇಲೆ ದೇವಲೋಕದಲ್ಲಿ ಸಂಚರಿಸುವ ಯುದ್ಧದಲ್ಲಿ ವೀರಮರಣಹೊಂದಿದ ಸೂತರೂ ಮಾಗಧರೂ ಮೊದಲಾದವರ ಸಮೂಹವು ಕೌರವನನ್ನು ಹೊಗಳಿತು. ದೇವತೆಗಳು ಶ್ರೇಷ್ಠ ಕುರುಭೂಪಾಲನು ಗಂಡಿಗನು/ವೀರನು ಅಕಟ! ಎನ್ನುತ್ತಾ ಕೊಂಡಾಡಿತು.
ಏನನೆಂಬೆನು ಜೀಯ ಮಹಿಯಲಿ
ಮಾನನಿಧಿ ಮಲಗಿದನಲೈ ತವ
ಸೂನು ರುಧಿರದ ತಿಲಕವಾದನಲೈ ಧರಾಂಗನೆಗೆ |
ಭಾನುಮತಿ ವೈಧವ್ಯ ವಿಧಿಗಿ
ನ್ನೇನ ನೋಂತಳೊ ರಾಜರವಿಯವ
ಸಾನಸಮಯದೊಳಾದುದದ್ಭು ತವರಸ ಕೇಳೆಂದ || ೨ ||
ಪದವಿಭಾಗ-ಅರ್ಥ: ಏನನು+ ಎಂಬೆನು ಜೀಯ ಮಹಿಯಲಿ(ಭೂಮಿಯಲ್ಲಿ) ಮಾನನಿಧಿ ಮಲಗಿದನಲೈ, ತವಸೂನು (ನಿನ್ನ ಮಗ) ರುಧಿರದ ತಿಲಕವಾದನಲೈ ಧರಾಂಗನೆಗೆ, ಭಾನುಮತಿ ವೈಧವ್ಯ ವಿಧಿಗೆ+ ಇನ್ನೇನ ನೋಂತಳೊ ರಾಜರವಿಯ+ ಅವಸಾನ (ಸಾವು)+ ಸಮಯದೊಳಾದುದು+ ಅದ್ಭುತವು+ ಅರಸ ಕೇಳೆಂದ.
ಅರ್ಥ:ಸಂಜಯನು,'ಏನನ್ನು ಹೇಳಲಿ ಜೀಯ- ಒಡೆಯನೇ, ಮಾನನಿಧಿ ಕೌರವನು ಭೂಮಿಯಲ್ಲಿ ಮಲಗಿದನಲ್ಲಾ! ನಿನ್ನ ಮಗ ಧರಾಂಗನೆಗೆ ರುಧಿರದ ತಿಲಕವಾದನಲ್ಲಾ! ಅವನು ಭೂದೇವಿಗೆ ರಕ್ತದ ತಿಲಕವಾದನು. ಭಾನುಮತಿಯು ವೈಧವ್ಯ ವಿಧಿಗೆ ತುತ್ತಾದಳು. ಅವಳು ಇನ್ನೇನು ವೃತವನ್ನು ನೋಂತಳೊ/ಮಾಡಿದಳೋ! ರಾಜರವಿಯಾದ ಕೌರವನ ಸಾವಿನ(ಭೀಳುವ) ಸಮಯದಲ್ಲಿ ಆದ ಅದ್ಭುತವನ್ನು ಅರಸನೇ ಕೇಳು,'ಎಂದ.
ನಡುಗಿತಿಳೆ ನಿರ್ಘಾತದಲಿ ಬರ
ಸಿಡಿಲು ಸುಳಿದುದು ನೆಣನ ಬಸೆಸಹಿ
ತಡಗು ಸುರಿದುದು ಕದಡಿ ಹರಿದುದು ರಕುತದರೆವೊನಲು |
ಸಿಡಿದವರೆಗಳು ಕೆರೆಗಳುಕ್ಕಿದ
ವಡಿಗಡಿಗೆ ಹೆಮ್ಮರ ನಿವಾತದ
ಲುಡಿದು ಬಿದ್ದವು ಕೌರವೇಂದ್ರನ ಪತನ ಕಾಲದಲಿ || ೩ ||
ಪದವಿಭಾಗ-ಅರ್ಥ:ನಡುಗಿತು+ ಇಳೆ(ಭೂಮಿ) ನಿರ್ಘಾತದಲಿ(ಬಲವಾಗಿ) ಬರಸಿಡಿಲು ಸುಳಿದುದು, ನೆಣನ ಬಸೆಸಹಿತ+ ಅಡಗು ಸುರಿದುದು ಕದಡಿ ಹರಿದುದು ರಕುತದ+ ಅರೆವೊನಲು(ಹನಲು ಹಳ್ಳ) ಸಿಡಿದವು+ ಅರೆಗಳು, ಕೆರೆಗಳು+ ಉಕ್ಕಿದವು+ ಅಡಿಗಡಿಗೆ ಹೆಮ್ಮರ ನಿವಾತದಲಿ(ಬಿರುಗಾಳಿ)+ ಉಡಿದು ಬಿದ್ದವು ಕೌರವೇಂದ್ರನ ಪತನ ಕಾಲದಲಿ.
 • ನಿರ್ಘಾತ= 1. ಬಿರುಗಾಳಿ. 2. ಭೂಕಂಪ. 3. ಸಿಡಿಲು. 4. ಜೋರಾದ ಏಟು,- ಹೊಡೆತ. 5. ಖಡ್ಗಯುದ್ಧದ ಒಂದುಪಟ್ಟು.
 • ನೆಣ= ಕೊಬ್ಬು,ಮೇದಸ್ಸು,ಜಿಡ್ಡು,ಚರ್ಬಿ;
 • ಬಸೆ= ನೆಣ.
 • ಅಡಗು= 1. ಮಾಂಸ. 2. ಮಾಂಸದ ಪಿಂಡ,- ಮುದ್ದೆ. 3. ಮೊಟ್ಟೆ. 4. ಸ್ನಾಯು.
 • ಅರೆ= ಬಂಡೆ- ಪ್ರೊ. ಜಿ. ವೆಂ.ನಿಘಂಟು
ಅರ್ಥ:ಕೌರವೇಂದ್ರನ ಪತನ/ ಬೀಳುವ ಸಮಯದಲ್ಲಿ ಭೂಮಿ ನಡುಗಿತು, ಬಲವಾಗಿ ಬರಸಿಡಿಲು ಹೊಡೆಯಿತು. ಕೊಬ್ಬು, ನೆಣ ಸಹಿತ ಮಾಂಸ ಸುರಿಯಿತು. ರಕ್ತದ ಹಳ್ಳ ಕದಡಿ ಹರಿಯಿತು. ಬಂಎಗಳು ಸಿಡಿದವು.ಕೆರೆಗಳು ಉಕ್ಕಿದವು; ಆಗಾಗ ಹೆಮ್ಮರಗಳು ಬಿರುಗಾಳಿಗೆ ಮುರಿದು ಬಿದ್ದವು, ಎಂದನು ಸಂಜಯ.
ಬೀಸಿದುದು ಬಿರುಗಾಳಿ ಕತ್ತಲೆ
ಸೂಸಿದುದು ದಿಗುವಳಯದಲಿ ಪರಿ
ವೇಷದಲಿ ಗ್ರಹ ನೆರೆದವೈದಾರೇಳು ರವಿಯೊಡನೆ |
ಸೂಸಿದವು ಹಗಲುಳುಕು ಮೃಗಗಣ
ವಾಸುರದಲೊದರಿದವು ಕಂದಿತು
ವಾಸರಪ್ರಭೆ ಕೌರವೇಂದ್ರನ ಪತನ ಕಾಲದಲಿ || ೪ ||
ಪದವಿಭಾಗ-ಅರ್ಥ:ಬೀಸಿದುದು ಬಿರುಗಾಳಿ ಕತ್ತಲೆ ಸೂಸಿದುದು ದಿಗುವಳಯದಲಿ ಪರಿ ವೇಷದಲಿ ಗ್ರಹ ನೆರೆದವು+ ಐದು+ಆರು+ ಏಳು ರವಿಯೊಡನೆ ಸೂಸಿದವು ಹಗಲು ಉಳುಕು(ಕುಗ್ಗು) ಮೃಗಗಣ ವಾಸುರದಲಿ(ವಾಸರ,ಏರುಪೇರು)+ ಒದರಿದವು(ಕೂಗಿದವು) ಕಂದಿತು+ ವಾಸರಪ್ರಭೆ(ವಾಸರ= ದಿನ) ಕೌರವೇಂದ್ರನ ಪತನ ಕಾಲದಲಿ
ಅರ್ಥ:'ಕೌರವೇಂದ್ರನ ಪತನ ಕಾಲದಲ್ಲಿ ಬಿರುಗಾಳಿ ಬೀಸಿತು, ಕತ್ತಲೆ ಆವರಿಸಿತು; ದಿಕ್ಕುಗಳ ವಲಯದಲ್ಲಿ ವಿಚಿತ್ರ ಪರಿ ರೀತಿಯಲ್ಲಿ ರವಿಯೊಡನೆ ಐದು-ಆರು- ಏಳು ಗ್ರಹಗಳು ಸೇರಿದವು. ಹಗಲು ಕುಗ್ಗಿದ ಬೆಳಕನ್ನು ಸೂಸಿದವು. ಮೃಗ ಸಮೂಹ ಏರುಪೇರು ಒದರಿದವು/ ಕೂಗಿದವು. ದಿನದಪ್ರಭೆ ಕಂದಿತು, ಎಂದನು ಸಂಜಯ.
ಒರೆ ಸಹಿತ ಕಯ್ದುಗಳು ಕರದಿಂ
ಮುರಿದು ಬಿದ್ದವು ಗಜಹಯದ ಕ
ಣೊರತೆಯೆದ್ದವು ಕಡಿದು ಬಿದ್ದವು ಧ್ವಜಪತಾಕೆಗಳು |
ತುರುಗಿದಂತಸ್ತಾಪದಲಿ ಮನ
ಮರುಗಿತಾ ಪರಿವಾರ ಸುಭಟರಿ
ಗರುಹಿತಾಕಸ್ಮಿಕದ ಭಯವವನೀಶ ಕೇಳೆಂದ || ೫ ||
ಪದವಿಭಾಗ-ಅರ್ಥ: ಒರೆ ಸಹಿತ ಕಯ್ದುಗಳು(ಆಯುಧಗಳು) ಕರದಿಂ(ಕೈಯಿಂದ) ಮುರಿದು ಬಿದ್ದವು ಗಜಹಯದ ಕಣ್+ ಒರತೆಯೆದ್ದವು, ಕಡಿದು ಬಿದ್ದವು ಧ್ವಜಪತಾಕೆಗಳು, ತುರುಗಿದ(ತುಂಬಿದ)+ ಅಂತಸ್ತಾಪದಲಿ ಮನಮರುಗಿತು+ ಆ ಪರಿವಾರ ಸುಭಟರಿಗೆ+ ಅರುಹಿತು+ ಆಕಸ್ಮಿಕದ ಭಯವ+ ಅವನೀಶ ಕೇಳು+ ಎಂದ.
ಅರ್ಥ:ಸಂಜಯನು ಮುಂದುವರಿದು,'ಆಗ, ಒರೆ ಸಹಿತ ಆಯುಧಗಳು ಕೈಯಿಂದ ಮುರಿದು ಬಿದ್ದವು. ಗಜ ಕುದುರೆಗಳ ಕಣ್ಣಲ್ಲಿ ನೀರಿನ ಒರತೆಯೆದ್ದವು, ಧ್ವಜಪತಾಕೆಗಳು ಕಡಿದು ಬಿದ್ದವು, ತುರುಗಿದ+ ಅಂತಸ್ತಾಪದಲಿ ಮನಮರುಗಿತು+ ಆ ಪರಿವಾರ ಸುಭಟರಿಗೆ+ ಅರುಹಿತು+ ಆಕಸ್ಮಿಕದ ಭಯವ+ ಅವನೀಶ ಕೇಳು ಎಂದ.
ದ್ರುಪದತನುಜ ಶಿಖಂಡಿ ಸೃಂಜಯ
ನೃಪ ಯುದಾಮನ್ಯೂತ್ತಮೌಂಜಸ
ಚಪಳಪಂಚದ್ರೌಪದೀಸುತ ಸೋಮಕಾದಿಗಳು |
ಅಪದಶಾವಿರ್ಭೂತಚೇತ:
ಕೃಪಣರತಿಚಿಂತಿಸಿದರಂದಿರು
ಳುಪಹತಿಯ ಸೂಚಿಸುವ ವಾಮಭುಜಾಕ್ಷಿಕಂಪದಲಿ || ೬ ||
ಪದವಿಭಾಗ-ಅರ್ಥ: ದ್ರುಪದತನುಜ ಶಿಖಂಡಿ ಸೃಂಜಯನೃಪ ಯುದಾಮನ್ಯು, ಉತ್ತಮೌಂಜಸ, ಚಪಳಪಂಚದ್ರೌಪದೀಸುತ(ದ್ರೌಪದಿಯ ಪಂಚ ಚುರುಕಿನ ಮಕ್ಕಳು), ಸೋಮಕಾದಿಗಳು ಅಪದಶ+ ಆವಿರ್ಭೂತಚೇತ: ಕೃಪಣರು(ಅಪದಶ= ಕಡುಕು;+ ಆವಿರ್ಭೂತ=ಹುಟ್ಟಿದ; ಚೇತಃ= ಮನಸ್ಸುಳ್ಳವರು)+ ಅತಿಚಿಂತಿಸಿದರು+ ಅಂದು+ ಇರುಳು+ ಉಪಹತಿಯ(ಅಪಾಯ) ಸೂಚಿಸುವ ವಾಮಭುಜ+ ಅಕ್ಷಿಕಂಪದಲಿ (ಎಡ ಭುಜ ಕಣ್ಣು ಅದರುವಿಕೆಯಲ್ಲಿ.).
ಅರ್ಥ:ದ್ರುಪದತನುಜ ದೃಷ್ಟದ್ಯುಮ್ನ, ಶಿಖಂಡಿ, ಸೃಂಜಯನೃಪ, ಯುದಾಮನ್ಯು, ಉತ್ತಮೌಂಜಸ, ದ್ರೌಪದಿಯ ಪಂಚ ಚುರುಕಿನ ಮಕ್ಕಳು, ಸೋಮಕಮೊದಲಾದವರಿಗೆ, ಅಪಾಯ ಸೂಚಿಸುವ ಎಡ ಭುಜ ಮತ್ತು ಕಣ್ಣು ಅದರುವಿಕೆಯಾಯಿತು. ಅಂದು ರಾತ್ರಿಯಲ್ಲಿ ಮುಂದೆ ಆಗುವ ಕಡುಕಿನ ಸೂಚನೆಯು ಮನಸ್ಸಿನಲ್ಲಿ ಹುಟ್ಟಲು, ಬಹಳ ಚಿಂತಿಸಿದರು.

ಬಿದ್ದ ಕೌರವನೊಡನೆ ಭೀಮನ ಮಾತು[ಸಂಪಾದಿಸಿ]

ಅವನಿಪತಿ ಕೇಳೀಚೆಯಲಿ ಕೌ
ರವನಹೊರಗೈ ತಂದು ನಿಂದನು
ಸವಡಿಗೈಗದೆಯಣಸುಗಲ್ಲದ ಗಾಢಗರ್ವದಲಿ |
ಪವನುಸುತ ನುಡಿಸಿದನಲೈ ನಿ
ನ್ನವನಸೇನ್ಯೆ ಭೂಪ ಕುಡುವೈ
ನವಗೆ ನೆಲನರ್ಧವನು ಸಾಚಿಕೆಯೇಕೆ ನುಡಿಯೆಂದ || ೭ ||
ಪದವಿಭಾಗ-ಅರ್ಥ:ಅವನಿಪತಿ ಕೇಳು+ ಈಚೆಯಲಿ ಕೌರವನಹೊರಗೆ+ ಐತಂದು ನಿಂದನು ಸವಡಿ(ಜೊತೆ)+ ಗೈ+ ಕೈಗದೆಯ+ ಅಣಸುಗಲ್ಲದ ಗಾಢಗರ್ವದಲಿ ಪವನುಸುತ ನುಡಿಸಿದು+ ಎಲೈ ನಿನ್ನವನನು+ ಏನ್ಯೆ ಭೂಪ ಕುಡುವೈ+ ನವಗೆ(ನಮಗೆ) ನೆಲನ+ ಅರ್ಧವನು ಸಾಚಿಕೆಯೇಕೆ ನುಡಿ+ ಯೆ+ ಎಂದ
ಅರ್ಥ:ರಾಜನೇ ಕೇಳು, ಈಚೆಯಲ್ಲಿ ಕೌರವನ ಬಳಿಗೆ ಅಣಕಿಸುವ ಗಲ್ಲದ ಗಾಢಗರ್ವದಲ್ಲಿ ಪವನುಸುತ ಭೀಮನು ಬಂದು ನಿಂತನು. ಅವನು ಜೊತೆಗೆ ಕೈಯಲ್ಲಿ ಗದೆಯನ್ಉ ಹಿಡಿದುಕೊಂಡು ನಿನ್ನವನನ್ನು ಮಾತನಾಡಿಸಿನು,'ಎಲೈ, ಏನಯ್ಯಾ ಭೂಪ! ಕುಡುವೆಯಾ ನಮಗೆ ರಾಜ್ಯದ ಅರ್ಧವನ್ನು? ಸಾಚಿಕೆಯೇಕೆ ಮಾತನಾಡು, ಎಂದ.
ಊರ ಬೇಡಿದಡೈದ ನಾವೆರ
ಡೂರುಗಳನೇ ಕೊಂಡೆವೈ ನಿಜ
ಧಾರುಣಿಯ ಕೊಡೆನೆಂದಲೈ ಸೂಚ್ಯಾಗ್ರಸಮ್ಮಿತವ |
ನಾರಿ ಋತುಮತಿಯೆಂದಡೆಯು ಸುಲಿ
ಸೀರೆಗಳನೆಂಬಗ್ಗಳಿಕೆ ಕಾ
ಸಾರದಲಿ ಕರಗಿತೆ ಸುಯೋಧನ ಎಂದನಾ ಭೀಮ || ೮ ||
ಪದವಿಭಾಗ-ಅರ್ಥ: ಊರ ಬೇಡಿದಡೆ+ ಐದ ನಾವು+ ಎರಡೂರುಗಳನೇ ಕೊಂಡೆವೈ, ನಿಜ(ತನ್ನ) ಧಾರುಣಿಯ ಕೊಡೆನೆಂದಲೈ ಸೂಚ್ಯಾಗ್ರ (ಸೂಜಿಯಮೊನೆಯಷ್ಟೂ)+ ಸಮ್ಮಿತವ, ನಾರಿ ಋತುಮತಿಯೆಂದಡೆಯು ಸುಲಿ+ ಸೀರೆಗಳನೆಂಬ+ ಅಗ್ಗಳಿಕೆ ಕಾಸಾರದಲಿ(ಸರೋವರದಲ್ಲಿ) ಕರಗಿತೆ ಸುಯೋಧನ ಎಂದನು+ ಆ ಭೀಮ.
ಅರ್ಥ:ಆ ಭೀಮನು ಕೌರವನನ್ನು ಕುರಿತು,'ನಾವು ಐದು ಊರ ಬೇಡಿದರೆ, ನೀನುಕೊಡಲಿಲ್ಲ, ಎರಡೂ (ನಮ್ಮದು ಮತ್ತು ನಿನ್ನದು) ಊರುಗಳನ್ನೇ ಕೊಂಡೆವಯ್ಯಾ. ಆಗ ನಿನ್ನ ರಾಜ್ಯವನ್ನಲ್ಲ ಸೂಜಿಯ ಮೊನೆಯಷ್ಟೂ ಕೊಡುವುದು ಸಮ್ಮತವಿಲ್ಲ, ಕೊಡೆನು ಎಂದೆಯಲ್ಲಾ, ನಾರಿ ದ್ರೌಪದಿ ತಾನು ಋತುಮತಿಯು ಎಂದರೂ ಸುಲಿ/ ಬಿಚ್ಚು ಸೀರೆಯನ್ನು ಎಂಬ ನಿನ್ನ ದೊಡ್ಡಸ್ತಿಕೆ ಆ ಸರೋವರದಲ್ಲಿ ಕರಗಿತೆ ಸುಯೋಧನಾ?' ಎಂದನು.
ಎತ್ತಿ ಕಳೆದೈ ಬನಕೆ ನಾವ್ ನಿ
ಮ್ಮೆತ್ತುಗಳಲೈ ಬೆರಳಲೇಡಿಸಿ
ದೆತ್ತುಗಳ ಕೂಡೇಕೆ ಸರಿನುಡಿ ಸಾರ್ವಭೌಮರಿಗೆ |
ಇತ್ತಲೇತಕೆ ಬಿಜಯಮಾಡಿದಿ
ರೊತ್ತದೇ ಕಲುನೆಲನು ಪವಡಿಸಿ
ಮತ್ತೆ ತೊಡೆಗಳ ತಿವಿಯ ಬೇಕೇ ಎಂದನಾ ಭೀಮ || ೯ ||
ಪದವಿಭಾಗ-ಅರ್ಥ:ಎತ್ತಿ ಕಳೆದೈ ಬನಕೆ(ವನಕೆ) ನಾವ್ ನಿಮ್ಮ+ ಎತ್ತುಗಳಲೈ ಬೆರಳಲು+ ಏಡಿಸಿದ(ಅವಹೇಳನ ಮಾಡು.) ಎತ್ತುಗಳ ಕೂಡೇಕೆ ಸರಿನುಡಿ ಸಾರ್ವಭೌಮರಿಗೆ, ಇತ್ತಲು+ ಏತಕೆ ಬಿಜಯಮಾಡಿದಿರಿ+ ಒತ್ತದೇ ಕಲುನೆಲನು ಪವಡಿಸಿ ಮತ್ತೆ ತೊಡೆಗಳ ತಿವಿಯ ಬೇಕೇ ಎಂದನು+ ಆ ಭೀಮ
ಅರ್ಥ:ಆ ಭೀಮನು ಮತ್ತೆ, 'ನಮ್ಮನ್ನು ಊರಿನಿಂದ ವನಕ್ಕೆ ಎತ್ತಿಹಾಕಿ ಕಳೆದಯಲ್ಲಾ, ನಾವು ನಿಮ್ಮ ಜಾನುವಾರು ಎತ್ತುಗಳಲ್ಲವೇ? ನೀನು ಬೆರಳನ್ನು ಆಡಿಸಿ ಅವಹೇಳನ ಮಾಡಿದ ಎತ್ತುಗಳಕೂಡೆ ಸಾರ್ವಭೌಮರಿಗೆ ಏಕೆ ಸರಿಸಮಾನತೆ? ಇತ್ತ ರಣರಂಗಕ್ಕೆ ಏತಕ್ಕೆ ಆಗಮಿಸಿದಿರಿ? ಪವಡಿಸಿದ/ಮಲಗಿದ ಕಲ್ಲುನೆಲವು ನಿಮ್ಮ ಮೈಗೆ ಒತ್ತುವುದಿಲ್ಲದೇ? ಮತ್ತೆ ಏಳಲು, ತೊಡೆಗಳನ್ನು ತಿವಿಯ ಬೇಕೇ? ಎಂದನು.
ಕೃತ್ರಿಮವ ನಿರ್ಮಿಸಿದ ಫಲ ಕೈ
ವರ್ತಿಸಿತೆ ನೀವರಗುಮನೆಯಲಿ
ಹೊತ್ತಿಸಿದ ಫಲ ಬಂದುದೇ ವ್ಯವಧಾನವಾದುದಲೆ
ಬಿತ್ತಿದಿರಿ ವಿಷಬೀಜವನು ನೆರೆ
ದತ್ತ ಫಲ ಕೈಸಾರ್ವದಾದಡೆ
ಕೆತ್ತು ಕೊಂಡಿರಲೇಕೆ ನುಡಿ ತನ್ನಾಣೆ ನುಡಿಯೆಂದ ೧೦
ಪದವಿಭಾಗ-ಅರ್ಥ:ಕೃತ್ರಿಮವ (ಮೋಸದ ಯೋಜನೆ) ನಿರ್ಮಿಸಿದ ಫಲ ಕೈವರ್ತಿಸಿತೆ? ನೀವು+ ಅರಗು-ಮನೆಯಲಿ ಹೊತ್ತಿಸಿದ ಫಲ ಬಂದುದೇ? ವ್ಯವಧಾನವಾದುದಲೆ (ವ್ಯವಧಾನ= (ಸಂ)ಜಾಗರೂಕತೆ, ,ಅವಧಿ,ಕಾಲಾವಧಿ,ಗಡುವು,) ಬಿತ್ತಿದಿರಿ ವಿಷಬೀಜವನು, ನೆರೆದತ್ತ ಫಲ ಕೈಸಾರ್ವದಾದಡೆ ಕೆತ್ತುಕೊಂಡಿರಲೇಕೆ (ಕೆತ್ತು= ಉಬ್ಬುಚಿತ್ರ ಪ್ರತಿಮೆಯಂತೆ ಸುಮ್ಮನಿರುವುದೇಕೆ?) ನುಡಿ ತನ್ನಾಣೆ ನುಡಿ+ (ಯೆ) ಎಂದ.
ಅರ್ಥ:ಭೀಮನು,'ಕೃತ್ರಿಮದಿಂದ ಮೋಸದ ಯೋಜನೆಯನ್ನು ನಿರ್ಮಿಸಿದ ಫಲ ನಿನಗೆ ಕೈಗೂಡಿತೆ? ನೀವು ನಮ್ಮನ್ನು ಅರಗು ಮನೆಯಲ್ಲಿ ಇರಿಸಿ ಬೆಂಕಿ ಹೊತ್ತಿಸಿದ ಫಲ ಬಂದಿತೇ? ಜಾಗರೂಕತೆಯಿಂದ ಅವಧಿಯ ಗಡುವು ಇಟ್ಟು ಜೂಜಿನ ವಿಷಬೀಜವನ್ನು ಬಿತ್ತಿದಿರಿ. ಅದರ ಪ್ರತಿಫಲ- ನೆರೆದ/ಹಣ್ಣಾದ ಫಲ ನಿನ್ನ ಕೈಸಾರಿದ್ದಾದರೆ ಕೆತ್ತಿದ ಪ್ರತಿಮೆಯಂತೆ ಸುಮ್ಮನಿರುವುದೇಕೆ? ಮಾತನಾಡೋ ಕೌರವ, ನುಡಿ ತನ್ನಾಣೆ ನುಡಿ!,' ಎಂದ.
ಸಂದುದೇ ನೀ ಮೆಚ್ಚೆ ಸಭೆಯಲಿ
ಹಿಂದೆ ಮಾಡಿದ ಭಾಷೆ ಕುರುಡನ
ನಂದನರನಿಮ್ಮಡಿಸಿದೈವತ್ತನು ರಣಾಗ್ರದಲಿ |
ಕೊಂದು ದುಶ್ಯಾಸನನ ಖಂಡವ
ತಿಂದು ರಕುತವ ಕುಡಿದು ಬಲುಗದೆ
ಯಿಂದ ನಿನ್ನಯ ತೊಡೆಯನುಡಿದೆನೆ ಭೂಪ ಹೇಳೆಂದ || ೧೧ ||
ಪದವಿಭಾಗ-ಅರ್ಥ:'ಸಂದುದೇ ನೀ ಮೆಚ್ಚೆ ಸಭೆಯಲಿ ಹಿಂದೆ ಮಾಡಿದ ಭಾಷೆ, ಕುರುಡನ ನಂದನರನು(ಮಕ್ಕಳನ್ನು)+ ಇಮ್ಮಡಿಸಿದ+ ಐವತ್ತನು ರಣಾಗ್ರದಲಿ ಕೊಂದು ದುಶ್ಯಾಸನನ ಖಂಡವ ತಿಂದು ರಕುತವ ಕುಡಿದು ಬಲುಗದೆಯಿಂದ ನಿನ್ನಯ ತೊಡೆಯನು+ ಉಡಿದೆನೆ, ಭೂಪ ಹೇಳು, ಎಂದ
ಅರ್ಥ:ಭೀಮನು ಹಿಂದಿನ ಪ್ರತಿಜ್ಞೆಯನ್ನು ನೆಪಿಸುತ್ತಾ, ಮುಂದುವರಿದು,'ನೀನು ಮೆಚ್ಚುವಂತೆ ಸಭೆಯಲ್ಲಿ ನಾನು ಹಿಂದೆ ಮಾಡಿದ ಭಾಷೆ ಈಗ ಸಂದಿತೇ? (ನಿನ್ನ ತಂದೆ)ಕುರುಡನ ನಂದನರನ್ನು- ಐವತ್ತರ ಎರಡರಷ್ಟು- ನೂರು ಮಕ್ಕಳನ್ನು ರಣಾಗ್ರದಲ್ಲಿ ಕೊಂದು, ನಿನ್ನ ತಮ್ಮ ದುಶ್ಯಾಸನನ ಖಂಡವನ್ನು ತಿಂದು, ರಕ್ತವನ್ನು ಕುಡಿದು, ಬಲವಾದ ಈ ಗದೆಯಿಂದ ನಿನ್ನಯ ತೊಡೆಗಳನ್ನು ಪುಡಿಮಾಡಿದೆನೆ? ಪ್ರತಿಜ್ಞೆ ಈಡೇರಿತೇ? ಭೂಪನೇ ಹೇಳು, ಎಂದ.
ರಾಯನಾಸ್ಥಾನದಲಿ ಖೂಳದ
ರಾಯ ನೀನೇ ಭಂಗಪಡಿಸಿ ನ
ವಾಯಿಯಲಿ ನಿಮ್ಮೂರಿಗೆಮ್ಮೈವರನು ನೀ ಕರಸಿ |
ವಾಯದಲಿ ಸೋಲಿಸಿ ಯುಧಿಷ್ಠಿರ
ರಾಯನರಸಿಯ ಸುಲಿಸಿತಕೆ ಫಲವಾಯ್ತೆ ಹೇಳೆಂದ || ೧೨ ||
ಪದವಿಭಾಗ-ಅರ್ಥ:ರಾಯನ+ ಆಸ್ಥಾನದಲಿ ಖೂಳದ ರಾಯ ನೀನೇ ಭಂಗಪಡಿಸಿ,(ಭಂಗ-ಅವಮಾನ) ನವಾಯಿಯಲಿ (ನೆವದಲ್ಲಿ? ಪ್ರಾಸಕ್ಕಾಗಿ ನವಾಯಿ)ನಿಮ್ಮೂರಿಗೆ+ ಎಮ್ಮ+ ಐವರನು ನೀ ಕರಸಿ ವಾಯದಲಿ (ಉಪಾಯದಲಿ) ಸೋಲಿಸಿ ಯುಧಿಷ್ಠಿರ ರಾಯನ+ ಅರಸಿಯ ಸುಲಿಸಿತಕೆ ಫಲವಾಯ್ತೆ ಹೇಳು+ ಎಂದ
 • ನವಾಯಿ=1. ಹೊಸತನ. 2. ಚೆಲುವು. 3. ದರ್ಪ. 4. ಅಬ್ಬರ. 5. ಹೆಚ್ಚಳ. 6. ವೇಗ.
ಅರ್ಥ:ಭೀಮನು ಕೌರವನಿಗೆ,'(ಇಂದ್ರಪ್ರಸ್ಥದ) ಧರ್ಮರಾಜನ ಆಸ್ಥಾನದಲ್ಲಿ, ಖೂಳನೂ ದುಷ್ಟನೂ ಆದ ರಾಜ ನೀನೇ (ಬಿದ್ದು) ಬಂಗಪಟ್ಟು, ನಂತರ ಹಿಂತಿರುಗಿ ಹೋದವನು ಸುಳ್ಳು ಸತ್ಕಾರದ ನೆವದಲ್ಲಿ ನಿಮ್ಮೂರಿಗೆ ನಮ್ಮ ಐವರನ್ನೂ ನೀನು ಕರಸಿ, (ಮೋಸದ ಪಗಡೆಯಾಟದಲ್ಲಿ) ಸೋಲಿಸಿ, ಯುಧಿಷ್ಠಿರ ರಾಯನ ಅರಸಿಯ ಸೀರೆಯನ್ನು ಸುಲಿಸಿತಕೆ/ ಸೆಳೆದುದಕ್ಕೆ ತಡೆಮುರಿದ ಫಲವಾಯ್ತೆ ಹೇಳು?' ಎಂದ.
ಹಳವದಲಿ ನಾನಾ ಪ್ರಕಾರದ
ಲಳಲಿಸಿದ ಫಲಭೋಗವನು ನೀ
ತಲೆಯಲೇ ಧರಿಸೆನುತ ವಾಮಾಂಘ್ರಿಯನು ಮಕುಟದಲಿ |
ಇಳುಹಿದನು ಗೌರ್ಗೌವೆನುತ ಬಿಡ
ದುಲಿದೆಲಾ ಎನುತೊದೆದು ಮಕುಟವ
ಕಳಚಿದನು ಕೀಲಣದ ಮಣಿಗಳು ಕೆದರೆ ದೆದೆಸೆಗೆ || ೧೩ ||
ಪದವಿಭಾಗ-ಅರ್ಥ:ಹಳವದಲಿ(ಹಳವು= ಪೊದೆ, ಕಾಡು) ನಾನಾ ಪ್ರಕಾರದ ಲಳಲಿಸಿದ(ಕೊರಗಿಸು) ಫಲಭೋಗವನು ನೀ - ತಲೆಯಲೇ ಧರಿಸೆನುತ ವಾಮಾಂಘ್ರಿಯನು (ಎಡಗಾಲನ್ನು) ಮಕುಟದಲಿ ಇಳುಹಿದನು(ಇಟ್ಟನು, ಹಾಕಿದನು, ಒದ್ದನು), ಗೌರ್ಗೌವೆನುತ ಬಿಡದೆ+ ಉಲಿದೆಲಾ(ಉಲಿ= ಹೇಳು;ಅಂದು ಅವಮಾನಿಸಿ ಹೇಳಿದೆಯಲ್ಲವೇ?) ಎನುತ+ ಒದೆದು ಮಕುಟವ ಕಳಚಿದನು, ಕೀಲಣದ(ಕೀಲಿಸಿದ) ಮಣಿಗಳು ಕೆದರೆ ದೆದೆಸೆಗೆ.
ಅರ್ಥ:ಭೀಮನು ಕೌರವನಿಗೆ, ನಮ್ಮನ್ನು ಕಾಡುಗಳಲ್ಲಿ ನಾನಾ ಪ್ರಕಾರದಲ್ಲಿ ಕೊರಗುವಂತೆ/ ಸಂಕಟಪಡುವಂತೆ ಮಾಡಿದೆಯಲ್ಲಾ; ಅದರ ಫಲಭೋಗವನ್ನು ನೀನು ತಲೆಯಲ್ಲೇ ಧರಿಸು, ಎನ್ನುತ್ತಾ ತನ್ನ ಎಡಗಾಲನ್ನು ಕೌರವನ ಮಕುಟದಲ್ಲಿ/ ಕಿರೀಟದಲ್ಲಿ ಬಲವಾಗಿ ಇಟ್ಟು ಒದ್ದನು. ಆಗ ಅವನ ಕಿರೀಟದ ಮಣಿಗಳು 'ಗೌರ್ಗೌ' ಎನ್ನುತ್ತಾ, 'ಬಿಡದೆ ಹಂಗಿಸಿ ಹೇಳಿದೆಯಲ್ಲವೇ? ಎನ್ನುತ್ತಾ ಒದೆದು ಅವನ ಕಿರೀಟವನ್ನು ಕಳಚಿದನು. ಅದಕ್ಕೆ ಕೀಲಿಸಿದ/ಜೋಡಿಸಿದ ಮಣಿಗಳು ದಿಕ್ಕುದಿಕ್ಕಿಗೆ ಕೆದರಿ ಹರಡಿದವು.
ಹಿಂದಣಪರಾಧವನು ಲೆಕ್ಕಿಸು
ತೊಂದೆರಡು ಮೂರಾಯ್ತು ನಾಲ್ಕೆ
ದೆಂದು ಮೆಟ್ಟಿದನವನಿಪಾಲನ ಮಕುಟಮಸ್ತಕವ |
ಇಂದು ಮುಖಿಯನು ಬೂತುಗೆಡೆದುದ
ಕೊಂದು ಘಾವಯ ಕೊಳ್ಳೆನುತ ಮಡ
ದಿಂದ ವದನವನೊದೆದು ಹಲುಗಳ ಕಳಚಿದನು ಭೀಮ || ೧೪ ||
ಪದವಿಭಾಗ-ಅರ್ಥ: ಹಿಂದಣ+ ಅಪರಾಧವನು ಲೆಕ್ಕಿಸುತ+ ಒಂದು+ ಎರಡು ಮೂರಾಯ್ತು ನಾಲ್ಕು+ ಎಂದೆಂದು ಮೆಟ್ಟಿದನು+ ಅವನಿಪಾಲನ ಮಕುಟಮಸ್ತಕವ; ಇಂದು ಮುಖಿಯನು ಬೂತುಗೆಡೆದುದಕೆ(ಬೂತುಗೆಡೆ= ತುಚ್ಛವಾದ ಮಾತನ್ನಾಡಿದ್ದಕ್ಕೆ)+ ಒಂದು ಘಾವಯ ಕೊಳ್ಳೆನುತ ಮಡದಿಂದ(ಮಡ= ಹಿಮ್ಮಡಿ) ವದನವನು+ ಒದೆದು ಹಲುಗಳ ಕಳಚಿದನು ಭೀಮ.
ಅರ್ಥ:ಭೀಮನು ಕೌರವನ ಹಿಂದಿನ ಅಪರಾಧವನನನು ಲೆಕ್ಕಹಾಕುತ್ತಾ, ಒಂದು, ಎರಡು, ಮೂರಾಯ್ತು, ನಾಲ್ಕು, ಎಂದೆಂದು ಕೌರವರಾಯನ ಕಿರೀಟವಿದ್ದ ತಲೆಯನ್ನ ಮೆಟ್ಟಿದನು. ಇಂದುಮುಖಿ ದ್ರೌಪದಿಗೆ ತುಚ್ಛವಾದ ಮಾತನ್ನಾಡಿದ್ದಕ್ಕೆ ಒಂದು ಘಾವಯ ತೆಗೆದುಕೊ ಎನ್ನುತ್ತಾ ಹಿಮ್ಮಡಿಯಿಂದ ಕೌರವನ ಮುಖವನ್ನು ಒದೆದು ಹಲ್ಲುಗಳನ್ನು ಕಳಚಿದನು.
ಉಚಿತವೆಂದರು ಕೆಲರು ಕೆಲರಿದ
ನುಚಿತವೆಂದು ಪೂರ್ವಜನ್ಮೋ
ಪಚಿತ ದುಷ್ಕೃತವೈಸಲೇ ಶಿವ ಎಂದು ಕೆಲಕೆಲರು
ಖಚರ ಕಿನ್ನರ ಯಕ್ಷ ನಿರ್ಜರ
ನಿಚಯ ಭೀಮನ ಬೈದು ಕುರುಪತಿ
ಯಚಳ ಬಲವನು ಬಣ್ಣಿಸುತ ಹೊಕ್ಕರು ನಿಜಾಲಯವ ೧೫
ಪದವಿಭಾಗ-ಅರ್ಥ: ಉಚಿತವೆಂದರು ಕೆಲರು ಕೆಲರು+ ಇದು+ ಅನುಚಿತವೆಂದು ಪೂರ್ವಜನ್ಮ+ ಉಪಚಿತ ದುಷ್ಕೃತವೈಸಲೇ ಶಿವ ಎಂದು ಕೆಲಕೆಲರು; ಖಚರ ಕಿನ್ನರ ಯಕ್ಷ ನಿರ್ಜರ ನಿಚಯ ಭೀಮನ ಬೈದು ಕುರುಪತಿಯ+ ಅಚಳ(ಅಚಲವಾದ ) ಬಲವನು ಬಣ್ಣಿಸುತ ಹೊಕ್ಕರು ನಿಜಾಲಯವ
ಅರ್ಥ:ಭೀಮನು ಕೌರವನನ್ನು ಅವನ ಅಪರಾಧಕ್ಕೆ ನಿಂದಿಸಿ ಒದೆದುದ್ದನ್ನು, ಕೆಲವರು ಉಚಿತವು, ಸರಿಯಾಯಿತು ಎಂದರು. ಮತ್ತೆ ಕೆಲವರು ಇದು ಅನುಚಿತವೆಂದರು. ಏಕೆಂದರೆ ಎಲ್ಲವೂ ಪೂರ್ವಜನ್ಮದ ದುಷ್ಕೃತವು ಐಸಲೇ, ಕಷ್ಟ- ಅವಮಾನ ಪೂರ್ವಜನ್ಮದ ಉಪಚಿತ/ ಕರ್ಮಫಲ, ಶಿವಾ! ಎಂದು ಕೆಲಕೆಲರು ಹೇಳಿದರು. ಖಚರರು, ಕಿನ್ನರರು, ಯಕ್ಷರು, ನಿರ್ಜರರು ನಿಚಯರು ಭೀಮನನ್ನು ಬೈದು ಕುರುಪತಿ ಕೌರವನ ಅಚಲವಾದ ಬಲವನನ್ನು ಬಣ್ಣಿಸುತ್ತಾ ತಮ್ಮ ನಿವಾಸವನ್ನು ಹೊಕ್ಕರು.

ಧರ್ಮಜನು ಸಂತೈಸಿದನು ಕುರುಪತಿಯ[ಸಂಪಾದಿಸಿ]

ಭೀಮ ಹಾ ಹಾ ಕಷ್ಟವಿದು ಸಂ
ಗ್ರಾಮಜಯವೇ ಸಾಲದೇ ಕುರು
ಭೂಮಿಪತಿಯಶ್ಲಾಘ್ಯನೇ ಲೋಕೈಕಮಾನ್ಯನಲಾ |
ನೀ ಮರುಳಲಾ ಸಾರೆನುತ ತ
ತ್ಸೀಮೆಗೈತಂದನಿಲತನುಜನ
ನಾ ಮಹೀಪತಿ ನೂಕಿ ಸಂತೈಸಿದನು ಕುರುಪತಿಯ || ೧೬ ||
ಪದವಿಭಾಗ-ಅರ್ಥ: ಭೀಮ ಹಾ ಹಾ ಕಷ್ಟವಿದು ಸಂಗ್ರಾಮಜಯವೇ ಸಾಲದೇ? ಕುರುಭೂಮಿಪತಿಯ ಶ್ಲಾಘ್ಯನೇ ಲೋಕ+ ಏಕಮಾನ್ಯನಲಾ(ಲೋಕಕ್ಕೆ ಒಬ್ಬನೇ ಗೌರವಾನ್ವಿತನು); ನೀ ಮರುಳಲಾ ಸಾರು(ಹೋಗು)+ ಎನುತ ತತ್+ ಸೀಮೆಗೆ (ಅವನಿದ್ದ ಸ್ಥಳ)+ ಐತಂದು+ ಅನಿಲತನುಜನನು+ ಆ ಮಹೀಪತಿ ನೂಕಿ ಸಂತೈಸಿದನು ಕುರುಪತಿಯ.
ಅರ್ಥ:ಆಗ ಧರ್ಮಜನು ಬಂದು, 'ಭೀಮಾ! ಹಾ! ಹಾ! ಇದು ಬಹಳ ಕಷ್ಟವಾಯಿತು ಕುರುಪತಿಗೆ. ನಮಗೆ ಸಂಗ್ರಾಮದಲ್ಲಿ ಜಯವಾಯಿತಲ್ಲವೇ; ಅದೇ ನಮಗೆ ಸಾಲದೇ? ಅದಕ್ಕೆ ತೃಪ್ತಿಪಡೋಣ, ಸಾಕು. ಕೌರವನು ಕುರುಭೂಮಿಯ ರಾಜನು, ಅವನ ಶೌರ್ಯಕ್ಕೆ ಶ್ಲಾಘ್ಯನೇ/ಹೊಗಳಿಕೆಗೆ ಯೋಗ್ಯನೇ ಸರಿ. ಅವನು ಲೋಕದಲ್ಲಿ- ಏಕಮಾನ್ಯನಲಾ! ನೀನು ಮರುಳಲಾ! ಹೋಗು ಎಂದು, ಆತನ ಬಳಿಗೆ ಬಂದು ಭೀಮನನ್ನು ಆ ಮಹೀಪತಿ ಧರ್ಮಜನು ಪಕ್ಕಕ್ಕೆ ನೂಕಿ, ಕುರುಪತಿ ಕೌರವನನ್ನು ಸಂತೈಸಿದನು.
ಗುಣನಿಧಿಯನೇಕಾದಶಾಕ್ಷೋ
ಹಿಣಿಯಪತಿಯನಶೇಷ ಪಾರ್ಥಿವ
ಮಣಿಮಕುಟ ಕಿರಣೋಪಲಾಲಿತ ಪಾದಪಲ್ಲವನ |
ರಣದೊಳನ್ಯಾಯದಲಿ ತೊಡೆಗಳ
ಹಣೆದುದಲ್ಲದೆ ಪಾದದಲಿ ನೀ
ಕೆಣಕುವರೆ ಕುರುರಾಜಮೌಳಿಯನೆಂದನಾ ಭೂಪ || ೧೭ ||
ಪದವಿಭಾಗ-ಅರ್ಥ: ಗುಣನಿಧಿಯನು (ಉತ್ತಮ ಗುಣಗಳನ್ನು ಉಳ್ಳವನು)+ ಏಕಾದಶ+ ಅಕ್ಷೋಹಿಣಿಯ ಪತಿಯನು+ ಅಶೇಷಪಾರ್ಥಿವಮಣಿಮಕುಟ ಕಿರಣ+ ಉಪಲಾಲಿತ ಪಾದಪಲ್ಲವನ (ಅಶೇಷ- ಏನೂ ಉಳಿಯದ ಪ್ರಾಪಂಚಿಕಶರೀರದಲ್ಲಿ ಧರಿಸದ ರತ್ನಗಳ ಕಿರೀಟದ ಕಿರಣಗಳಿಂದ ಶೋಭಿಸುವ ಚಿಗುರು ಎಲೆಯಂತಿರುವ ಪಾದಗಳುಳ್ಳವನನ್ನು) ರಣದೊಳು+ ಅನ್ಯಾಯದಲಿ ತೊಡೆಗಳ ಹಣೆದುದಲ್ಲದೆ ಪಾದದಲಿ ನೀ ಕೆಣಕುವರೆ ಕುರುರಾಜಮೌಳಿಯನು(ಮೌಳಿ = ತಲೆ-ಶ್ರೇಷ್ಠ)+ ಎಂದನು+ ಆ ಭೂಪ
ಅರ್ಥ:ಧರ್ಮಜನು ಭೀಮನಿಗೆ,'ಈ ಗುಣನಿಧಿಯನ್ನು, ಹನ್ನೊಂದು ಅಕ್ಷೋಹಿಣಿ ಸೇನೆಯ ನಾಯಕನನ್ನು ಅಶೇಷಪಾರ್ಥಿವ-ಮಣಿಮಕುಟ ಕಿರಣೋಪಲಾಲಿತ ಪಾದಪಲ್ಲವನನ್ನು ಯುದ್ಧದಲ್ಲಿ ಅನ್ಯಾಯದ ಕ್ರಮದಲ್ಲಿ ತೊಡೆಗಳನ್ನು ನೀನು ಹೊಡದುದಲ್ಲದೆ, ಕಾಲಿನಿಂದ ಒದೆದು ನೀನು ಕುರುರಾಜಶ್ರೇಷ್ಠನನ್ನು ಕೆಣಕುವುದೇ? + ಎಂದನು.
ಅನುಜರಳಿದುದು ನೂರು ರಣದಲಿ
ತನುಜರಳಿದುದು ಮಾವ ಗುರು ಮೈ
ದುನ ಪಿತಾಮಹ ಪುತ್ರ ಮಿತ್ರ ಜ್ಞಾತಿ ಬಾಂಧವರು |
ಅನಿಬರವನೀಶ್ವರರು ಸಮರಾ
ವನಿಯೊಳಡಗಿದುದೇಕದೇಶದ
ಜನಪತಿಯ ಮುರಿದುದುವೆ ಸಾಲದೆ ಭೀಮ ನಮಗೆಂದ || ೧೮||
ಪದವಿಭಾಗ-ಅರ್ಥ: ಅನುಜರು(ಸೋದರರು)+ ಅಳಿದುದು ನೂರು ರಣದಲಿ(ಯುದ್ಧದಲ್ಲಿ), ತನುಜರು(ಮಕ್ಕಳು)+ ಅಳಿದುದು(ಸತ್ತರು), ಮಾವ(ಶಕುನಿ), ಗುರು(ದ್ರೋಣ), ಮೈದುನ(ತಂಗಿಯ ಗಂಡ- ಜಯದ್ರಥ) ಪಿತಾಮಹ(ಭೀಷ್ಮ) ಪುತ್ರ ಮಿತ್ರ ಜ್ಞಾತಿ ಬಾಂಧವರು ಅನಿಬರು(ಎಲ್ಲರೂ)+ ಅವನೀಶ್ವರರು (ರಾಜರು), ಸಮರ+ ಅವನಿಯೊಳು (ರಣರಂಗದಲ್ಲಿ)+ ಅಡಗಿದುದು,(ಇಲ್ಲವಾದರು)+ ಏಕದೇಶದ ಜನಪತಿಯ ಮುರಿದುದುವೆ ಸಾಲದೆ ಭೀಮ ನಮಗೆಂದ.
ಅರ್ಥ:ಧರ್ಮರಾಯನು ಭೀಮನಿಗೆ,'ಕೌರವನು ಮತ್ತು ಅವನ ಸೋದರರು ಯುದ್ಧದಲ್ಲಿ ನೂರುಜನ ಸತ್ತರು. ಅವನ ಮಕ್ಕಳೂ ಹೋದರು; ಅವನ ಮಾವ ಶಕುನಿ ಹೋದ;, ಗುರುದ್ರೋಣರೂ ಸ್ವರ್ಗಕ್ಕೆ ಹೋದರು; ಅವನ ತಂಗಿಯ ಗಂಡ- ಜಯದ್ರಥ ಮರಣಹೊಂದಿದನು; ಪಿತಾಮಹ ಭೀಷ್ಮರೂ ಹೋದರು; ಹೀಗೆ ಪುತ್ರ ಮಿತ್ರ ಜ್ಞಾತಿ ಬಾಂಧವರು ಎಲ್ಲರೂ, ಅವನ ಮಿತ್ರರಾದ ರಾಜರುಗಳೂ ರಣರಂಗದಲ್ಲಿ ಅಡಗಿದರು. ಭೀಮಾ! ದೇಶದ ಏಕಾಧಿಪತ್ಯವನ್ನು ಹೊಂದಿದ ಜನಪತಿ- ರಾಜನನ್ನು ಸಾಯುವಂತೆ ಹೊಡೆದು ತೊಡೆ ಮುರಿದುದಷ್ಟೆ ನಮಗೆ ಸಾಲದೆ?' ಎಂದ.
ಅವ ಮೋರೆಯೊಳಪ್ಪ ದೇವರ
ನಾವು ನೋಡುವೆವವ್ವೆಯರ ಸಂ
ಭಾವಿಸುವೆವಾವಂಗದಲಿ ಗಾಂಧಾರಿ ಕಡುಗೋಪಿ |
ದೇವಿಯರುಗಳ ಶೋಕವಹ್ನಿಯ
ನಾವ ವಿಧದಲಿ ನಿಲಿಸುವೆವು ಕಾಂ
ತಾವಳಿಗಳೇನೆಂದು ಬಯ್ಯರು ಭೀಮ ಹೇಳೆಂದ || ೧೯ ||
ಪದವಿಭಾಗ-ಅರ್ಥ: ಅವ ಮೋರೆಯೊಳು+ ಅಪ್ಪದೇವರ ನಾವು ನೋಡುವೆವು+ ಅವ್ವೆಯರ ಸಂಭಾವಿಸುವೆವು,+ ಆವಂಗದಲಿ ಗಾಂಧಾರಿ ಕಡುಗೋಪಿ ದೇವಿಯರುಗಳ ಶೋಕವಹ್ನಿಯನು(ವಹ್ನಿ= ಬೆಂಕಿ)+ ಅವ ವಿಧದಲಿ ನಿಲಿಸುವೆವು, ಕಾಂತಾವಳಿಗಳು (ಪತ್ನಿಯರ ಸಮೂಹ)+ ಏನೆಂದು ಬಯ್ಯರು(ಏನೆಂದು ಬೈಯುವುದಿಲ್ಲ- ಬಹಳ ಬೈಯುವರು ಎಂದು ಭಾವ.) ಭೀಮ ಹೇಳೆಂದ.
ಅರ್ಥ:ಧರ್ಮಜನು ಭೀಮನಿಗೆ,'ನೀನು ಹೀಗೆ ಕೌರವನಿಗೆ ಅವಹೇಳನ ಮಾಡಿದರೆ, ನಾವು ಯಾವ ಮುಖಹೊತ್ತುಕೊಂಡು ಅಪ್ಪದೇವ ಧೃತರಾಷ್ಟ್ರನನ್ನು ನೋಡುವುದು? ಅವ್ವೆಯರ ಗಾಂಧಾರಿ ಮತ್ತು ಇತರರನ್ನು ಸಂಭಾಳಿಸುವುದು?, ಕಡುಗೋಪಿ ಗಾಂಧಾರಿ ಮತ್ತು ಇತರ (ಪತ್ನಿ)ದೇವಿಯರುಗಳ ಶೋಕದ ಬೆಂಕಿಯನ್ನು ಯಾವ ಬಗೆಯಲ್ಲಿ ನಿಲ್ಲಿಸಬಲ್ಲೆವು? ಈ ವಿಧವೆಯರಾದ ಕಾಂತೆಯರ ಸಮೂಹ ನಮ್ಮನ್ನು ಏನೆಂದು ಬಯ್ಯರು ಭೀಮನೇ ಹೇಳು?,' ಎಂದ.
ಅಳಿಲಿದತಿಭಂಗಿಸಲು ಪರಮಂ
ಡಳಿಕರೇ ನಾವ್ ಪಾಂಡುವಿನ ಮ
ಕ್ಕಳುಗಳಾ ಧೃತರಾಷ್ಟ್ರ ತನುಸಂಭವರು ಕೌರವರು |
ನೆಲನ ಹುದುವಿನ ದಾಯಭಾಗದ
ಕಳವಳದೊಳಾಯ್ತಲ್ಲದುಳಿದಂ
ತೊಳುಗು ಭಿನ್ನವೆ ಭೀಮ ಬಿಡು ಭಂಗಿಸದೆ ಸಾರೆಂದ || ೨೦ ||
ಪದವಿಭಾಗ-ಅರ್ಥ: ಅಳಿಲಿದ(ಅಳಿ= ಸಾವು; ಸಾಯುವವ)+ ಅತಿಭಂಗಿಸಲು ಪರಮಂಡಳಿಕರೇ ನಾವ್? ಪಾಂಡುವಿನ ಮಕ್ಕಳುಗಳು+ ಆ ಧೃತರಾಷ್ಟ್ರ ತನುಸಂಭವರು ಕೌರವರು, ನೆಲನ ಹುದುವಿನ ದಾಯಭಾಗದ ಕಳವಳದೊಳು(ಚಿಂತೆ, ವಿವಾದದ ರಗಳೆ)+ ಆಯ್ತು+ ಅಲ್ಲದೆ+ ಉಳಿದಂತೆ+ ಒಳುಗು ಭಿನ್ನವೆ ಭೀಮ ಬಿಡು ಭಂಗಿಸದೆ ಸಾರೆಂದ.
ಅರ್ಥ:ಧರ್ಮಜನು ಮುಂದುವರಿದು,'ಸಾಯುವವನನ್ನು ಅತಿಯಾಗಿ ಭಂಗಪಡಿಸಲು ನಾವು ಪರರಾಜ್ಯದ ಮಂಡಳಿಕರೇ/ ರಾಜರೇ? ನಾವು ಪಾಂಡುವಿನ ಮಕ್ಕಳು- ಪಾಂಡವರು; ಅವರು ಧೃತರಾಷ್ಟ್ರನ ಮಕ್ಕಳು- ಕೌರವರು. ನೆಲದ/ ರಾಜ್ಯದ ವಿಚಾರವಾಗಿ ದಾಯಭಾಗ ಪಡೆಯುವ ರಗಳೆಯಲ್ಲಿ ಯುದ್ಧವಾಯಿತು. ಅದು ಅಲ್ಲದೆ ಉಳಿದಂತೆ ನಮ್ಮ ಒಳುಗು ಕುಟುಂಬದಲ್ಲಿ ನಾವು ಅವರು ಭಿನ್ನವೆ- ಬೇರೆಬೇರೆಯೇ? ಅಲ್ಲ! ನಾವು ಅವರು ಒಂದೇ ಕುಟುಂಬದವರು. ಭೀಮ ಸಾಕು ಭಂಗಿಸದೆ/ಅವಮಾನಿಸದೆ ಬಿಡು,' ಎಂದ.
ಸೈರಿಸೆಮ್ಮ ಪರಾಧವನು ಕುರು
ವೀರ ಸಂಚಿತಪಾಪಕತ್ಮ ವಿ
ಕಾರವಿದು ಭೋಗಾದಿ ನಿನಗೆಂದರಸ ದುಗುಡದಲಿ |
ನೀರೊರೆವ ಕಣ್ಣುಗಳನೊರಸುತ
ಸೀರೆಯಲಿ ಗದಗದಿತ ಗಳದಲಿ
ಸಾರಹೃದಯ ಮಹೀಶನದ್ದನು ಖೇದಪಂಕದಲಿ || ೨೧ ||
ಪದವಿಭಾಗ-ಅರ್ಥ: ಸೈರಿಸು+ ಎಮ್ಮ+ ಅಪರಾಧವನು ಕುರುವೀರ, ಸಂಚಿತ (ಹಿಂದಿನ ಜನ್ಮದಲ್ಲಿ ಗಳಿಸಿದ)ಪಾಪಕತ್ಮ ವಿಕಾರವು+ ಇದು, ಭೋಗಾದಿ ನಿನಗೆಂದು+ ಅರಸ ದುಗುಡದಲಿ ನೀರೊರೆವ ಕಣ್ಣುಗಳನು+ ಒರಸುತ ಸೀರೆಯಲಿ(ಹಿಂದೆ ಪಂಚೆಯನ್ನೂ ಸೀರೆ ಎಂದೇ ಕರೆಯುತ್ತಿದ್ದರು.) ಗದಗದಿತ+ ಗಳದಲಿ(ಗಳ= ಕಂಠ) ಸಾರಹೃದಯ ಮಹೀಶನು+ ಅದ್ದನು(ಮುಳುಗಿದನು) ಖೇದಪಂಕದಲಿ(ದುಃಖದ ಹೊಂಡದಲ್ಲಿ ಅದ್ದನು- ಮುಳುಗಿದನು.)
ಅರ್ಥ:ಧರ್ಮಜನು ಕವರವನಿಗೆ ಹೇಳಿದನು: ಕುರುವೀರ ಕೌರವಾ ನಮ್ಮ ಅಪರಾಧವನ್ನು ಸೈರಿಸು-ಮನಸ್ಸಿನಲ್ಲಿ ಶಾಂತಗೊಳಿಸು. ಹಿಂದಿನ ಜನ್ಮದಲ್ಲಿ ಗಳಿಸಿದ ಪಾಪಕೃತ್ಯದ ವಿಕಾರವು ಇದು. ನಿನಗೆ ಈ ಭೋಗ ದುಃಖಗಳಿಗೆ ಅವೇ ಕಾರಣ. ಅರಸಧರ್ಮಜನು ದುಃಖದಿಂದ ನೀರು ಒರೆಯುತ್ತಿದ್ದ ಕೌರವನ ಕಣ್ಣುಗಳನ್ನು ತನ್ನ ಉಟ್ಟ ಪಂಚೆಯಿಂದ ಒರಸುತ್ತಾ ಗದ್ಗದಿತ ಕಂಠದಲ್ಲಿ ಹೇಳಿ, ಸತ್ವಗುಣ-ಹೃದಯದ ರಾಜ ಧರ್ಮಜನು ಶೋಕಸಾಗರದಲ್ಲಿ ಮುಳುಗಿದನು.

ಬಲರಾಮನನ ಕೋಪ[ಸಂಪಾದಿಸಿ]

ಕಂಡನೀವ್ಯತಿಕರವನರಸನ
ಮಂಡೆಯಂಘ್ರಿಯ ಭೀಮಸೇನನ
ದಂಡಿಯನು ದಟ್ಟಯಿಸೆ ಸುಯಿ ದಳ್ಳುರಿಯ ಚೂಣಿಯಲಿ
ಗಂಡುಗೆದರಿದ ರೋಷಶಿಖಿ ಹುರಿ
ಗೊಂಡುದಕ್ಷಿಗಳಲಿ ಮೃಕೋದರ
ಕೊಂಡನೇ ತಪ್ಪೇನೆನುತ ನಿಂದಿದ್ದನಾ ರಾಮ ೨೨
ಪದವಿಭಾಗ-ಅರ್ಥ:ಕಂಡನು+ ವ್ಯತಿಕರವನು(ಆಪತ್ತು. ತೊಂದರೆ.)+ ಅರಸನ ಮಂಡೆಯ+ ಅಂಘ್ರಿಯ, ಭೀಮಸೇನನ ದಂಡಿಯನು(ದಂಡಿಸುವ ದಂಡ- ಗದೆ? ), ದಟ್ಟಯಿಸೆ ಸುಯಿ ದಳ್ಳುರಿಯ(ಬೆಂಕಿಯ -ಸುಯಿ= ಉಸಿರು.) ಚೂಣಿಯಲಿ(ಸೇನೆಯ ಎದುರಿನಲ್ಲಿ) ಗಂಡುಗೆದರಿದ (ವೀರಾವೇಶ) ರೋಷಶಿಖಿ ಹುರಿಗೊಂಡುದು(ಹೆಚ್ಚಿತು)+ ಅಕ್ಷಿಗಳಲಿ ಮೃಕೋದರ (ಭೀಮನು) ಕೊಂಡನೇ (ಜಯಿಸಿದನೇ? ಜಯ ಪಡೆದುಕೊಂಡನೇ?) ತಪ್ಪೇನು (ತಪ್ಪಲ್ಲವೇ? ಎಂದು ಭಾವ)+ ಎನುತ ನಿಂದಿದ್ದನು ಆ ರಾಮ.
ಅರ್ಥ: ಬಲರಾಮನು, ಆಪತ್ತಿಗೆ ಒಳಗಾದ ಅರಸ ಕೌರವನ ತಲೆಯನ್ನೂ, ಪಾದ- ತೊಡೆಗಳನ್ನೂ, ಹಾಗೆಯೇ ಭೀಮಸೇನನ ಗದೆಯನ್ನೂ ನೋಡಿದನು. ಅವನಲ್ಲಿ ವೀರಾವೇಶ ಬೆಂಕಿಯ ಸುಯಿಲಿನ ದಳ್ಳುರಿಯು ದಟ್ಟಯಿಸಿತು-ಉಕ್ಕಿತು. ರಣರಂಗದ ಎದುರಿನಲ್ಲಿ ವೀರಾವೇಶ ರೋಷದ ಬೆಂಕಿ ಅವನ ಕಣ್ಣುಗಳಲ್ಲಿ ಹುರಿಗೊಂಡಿತು. ಮೃಕೋದರ ಭೀಮನು ಕೊಂಡನೇ/ ಜಯಿಸಿದನೇ? ತಪ್ಪೇನು? (ಜಯಿಸಿದ್ದು ನಿಜ ಅದರೆ ಮೋಸ ಎಂದು ಅವನ ರೋಷ) ಎನ್ನುತ್ತಾ ಕೋಪದಿಂದ ನಿಂತಿದ್ದನು.
ಎಲವೆಲವೊ ಪಾಂಡವರಿರಾ ನೀ
ವಳಿಪಿದಿರಲಾ ನಾಭಿಯಿಂದವೆ
ಕೆಳಗೆ ಕೈ ಮಾಡುವುದು ಸಲ್ಲದು ಗದೆಯ ಕದನದಲಿ |
ಚಲಿಸಲಾಗದು ಧರ್ಮನಿರ್ಣಯ
ದೊಳಗಿದೊಂದೇ ಭಾಷೆ ಮಾಡಿದಿ
ರಳಿದಿರನ್ಯಾಯದಲಿ ಕೊಂದಿರಿ ಕೌರವೇಶ್ವರನ || ೨೩ ||
ಪದವಿಭಾಗ-ಅರ್ಥ: ಎಲವೆಲವೊ ಪಾಂಡವರಿರಾ ನೀವು+ ಅಳಿಪಿದಿರಲಾ(ತಪ್ಪುಮಾಡಿದಿರಿ)! ನಾಭಿಯಿಂದವೆ ಕೆಳಗೆ ಕೈ ಮಾಡುವುದು ಸಲ್ಲದು(ಕೂಡದು ಮಾಡಬಾರದ್ದು) ಗದೆಯ ಕದನದಲಿ! ಚಲಿಸಲಾಗದು(ಮೀರಿ ನೆಡೆಯುವಂತಿಲ್ಲ) ಧರ್ಮನಿರ್ಣಯದೊಳಗೆ+ ಇದು+ ಒಂದೇ ಭಾಷೆ ಮಾಡಿದಿರಿ+ ಅಳಿದಿರಿ (ಅಳಿದಿರಿ= ಕೊಂದಿರಿ- ಅಳಿ= ಸಾಯಿ; ನ್ಯಾಯವನ್ನು ಧರ್ಮವನ್ನು ಅಳಿದಿರಿ- ಕೊಂದಿರಿ= ತಪ್ಪಿದಿರಿ)+ ಆನ್ಯಾಯದಲಿ ಕೊಂದಿರಿ ಕೌರವೇಶ್ವರನ.
ಅರ್ಥ:ಬಲರಾಮನು ಕೋಪದಿಂದ,'ಎಲವೆಲವೊ ಪಾಂಡವರಿರಾ ನೀವು ತಪ್ಪಿದಿರಲಾ! ಗದೆಯ ಕದನದಲ್ಲಿ ನಾಭಿಯಿಂದ ಕೆಳಗೆ ಕೈಮಾಡುವುದು- ಹೊಡೆಯುವುದು ಕೂಡದು. ಧರ್ಮನಿರ್ಣಯವನ್ನು ಮೀರುವಂತಿಲ್ಲ. ಧರ್ಮಯುದ್ಧಕ್ಕೆ ಇರುವುದೊಂದೇ ಭಾಷೆ, ಆ ಭಾಷೆ ಮಾಡಿ ತಪ್ಪಿದಿರಿ. ಕೌರವೇಶ್ವರನನ್ನು ಆನ್ಯಾಯದಲ್ಲಿ ಕೊಂದಿರಿ,'ಎಂದು ಗರ್ಜಿಸಿದನು.
ನೀವು ಮಾಡಿದ ಸತ್ಯಭಾಷೆಗೆ
ನೀವಲಾ ತಪ್ಪಿದಿರಿ ನೋಟಕ
ರಾವು ಮಧ್ಯಸ್ಠಿತರಲೇ ಧರ್ಮರಕ್ಷಕರು |
ನಾವು ಸಾಕ್ಷಿಗಳಬಳರೆಂದೇ
ನೀವು ನೃಪತಿಯ ತೊಡೆಯನುಡಿದಿರಿ
ಡಾವಾರವೆ ಸಾಕೈಸೆ ಕಾಲಿಕ್ಕಿದಿರಿ ಸಿರಿಮುಡಿಗೆ || ೨೪ ||
ಪದವಿಭಾಗ-ಅರ್ಥ: ನೀವು ಮಾಡಿದ ಸತ್ಯಭಾಷೆಗೆ ನೀವಲಾ ತಪ್ಪಿದಿರಿ; ನೋಟಕರು+ ಆವು(ನಾವು) ಮಧ್ಯಸ್ಠಿತರಲೇ, ಧರ್ಮರಕ್ಷಕರು ನಾವು ಸಾಕ್ಷಿಗಳು+ ಅಬಳರೆಂದೇ ನೀವು ನೃಪತಿಯ ತೊಡೆಯನು+ ಉಡಿದಿರಿ (ಮುರಿದಿರಿ). ಡಾವಾರವೆ(ಢಾವರ= ಅತಿಯಾಗಿ ಬಯಸು; ಆರ್ಭಟಿಸು,ಅಬ್ಬರಿಸು) ಸಾಕೈಸೆ (ಸಾಕಾಗದೆ, ಅಷ್ಟಲ್ಲದೆ) ಕಾಲ+ ಇಕ್ಕಿದಿರಿ ಸಿರಿಮುಡಿಗೆ.
 • ಸಿರಿಮುಡಿ= ಪವಿತ್ರವಾದ ಶಿರಸ್ಸು (ಸಾ.ಪ.ನಿಘಂಟು))
ಅರ್ಥ:ಬಲರಾಮನು ಪಾಂಂಡವರನ್ನು ಕುರಿತು,'ನೀವು ಮಾಡಿದ ಸತ್ಯಭಾಷೆಗೆ ನೀವೇ ತಪ್ಪಿದಿರಲ್ಲಾ; ನಾವು ನೋಟಕರು, ಆದರೂ ನಾವು ಮಧ್ಯಸ್ಠಿತರು, ಧರ್ಮರಕ್ಷಕರು; ಸಾಕ್ಷಿಗಳಾದ ನಾವು ದುರ್ಬಲರೆಂದೇ ಭಾವಿಸಿ, ನೀವು ನೃಪತಿ ಕೌರವನ ತೊಡೆಯನ್ನು ಮುರಿದಿರಿ. ಅಬ್ಬರಿಸಿದಿರು ದುರಾಸೆಪಟ್ಟಿರಿ. ಅದುಸಾಲದೆ ಕೌರವನ ಪವಿತ್ರವಾದ ಶಿರಸ್ಸಿಗೆ ಕಾಲಿನಿಂದ ಒದ್ದಿರಿ, ಎಂದು ನಿಂದಿಸಿದನು.
ಎಂದು ನೇಗಿಲ ತುಡುಕಿಯೆಡಗೈ
ಯಿಂದ ನೆಗಹಿ ಮಹೋಗ್ರ ಮುಸಲವ
ನೊಂದು ಕಯ್ಯಲಿ ತಿರುಹಿ ಕೊಬ್ಬಿದ ಖತಿಯ ಭಾರದಲಿ |
ಮುಂದೆ ನಡೆತರೆ ಸಕಲಸೇನಾ
ವೃಂದ ನಡುಗಿತು ಬಹಳ ಭೀತಿಯ
ಬಂದಿಯಲಿ ಜರುಗಿದವು ಜವಳಿಯ ಜಗದ ಜೋಡಿಗಳು || ೨೫ ||
ಪದವಿಭಾಗ-ಅರ್ಥ: ಎಂದು ನೇಗಿಲ ತುಡುಕಿ+ ಯೆಡಗೈಯಿಂದ ನೆಗಹಿ ಮಹಾ+ ಉಗ್ರ ಮುಸಲವನು+ ಒಂದು ಕಯ್ಯಲಿ ತಿರುಹಿ ಕೊಬ್ಬಿದ(ಅತಿಯಾದ) ಖತಿಯ ಭಾರದಲಿ(ಖತಿಯ= ಕೋಪ ದ ಭಾರ= ) ಮುಂದೆ ನಡೆತರೆ ಸಕಲಸೇನಾ ವೃಂದ ನಡುಗಿತು; ಬಹಳ ಭೀತಿಯ ಬಂದಿಯಲಿ ಜರುಗಿದವು ಜವಳಿಯ ಜಗದ ಜೋಡಿಗಳು
ಅರ್ಥ:ಭಲರಾಮನು ಹೀಗೆ ಹೇಳಿ ಕೋಪದಿಂದ, ತನ್ನ ಆಯುಧ ನೇಗಿಲಿಗೆ ಕೈಹಾಕಿ ಎಡಗೈಯಿಂದ ಅದನ್ನು ಎತ್ತಿ ಮಹಾ ಉಗ್ರವಾದ ಒನಕೆಯನ್ನು ಒಂದು ಕಯ್ಯಲ್ಲಿ ತಿರುಗಿಸಿ ಅತಿಯಾದ ಸಿಟ್ಟಿನಲ್ಲಿ ಉದ್ರೇಕದಿಂದ, ಮುಂದೆ ನಡೆದು ಬರಲು ಸಕಲ ಸೇನಾಸಮೂಹವೂ ಬಹಳ ಭೀತಿಯ ಬಂಧನದಲ್ಲಿ ಸಿಕ್ಕಿ ನಡುಗಿತು. ಅವನ ಸಿಟ್ಟಿಗೆ ಜಗತ್ತಿನ ಅವಳಿಜವಳಿಯ ಜೋಡಿಗಳಾದ ಮೇರುಪರ್ವತ ಮಂದರಪರ್ವತಗಳು ಜರುಗಿದವು-ಹೆದರಿ ಸರಿದವು.
ಬಿಲ್ಲ ಮಿಡಿದನು ಪಾರ್ಥ ಭಾರತ
ಮಲ್ಲ ಕೊಂಡನು ಗದೆಯ ನೃಪ ನಿಂ
ದಲ್ಲಿ ಬೆರಗಾದನು ರಣೋತ್ಸವವಾಯ್ತು ಯಮಳರಿಗೆ |
ತಲ್ಲಣಿಸಿತುಳಿದರಸುಮಕ್ಕಳು
ಚಲ್ಲಿತಾ ಸುಭಟೌಘ ವಿಜಯದ
ಭುಲ್ಲವಣೆ ಪಲ್ಲಟಿಸಿತವರಿಗೆ ಖೇಡತನದೊಡನೆ || ೨೬ ||
ಪದವಿಭಾಗ-ಅರ್ಥ:ಬಿಲ್ಲ ಮಿಡಿದನು ಪಾರ್ಥ, ಭಾರತಮಲ್ಲ ಕೊಂಡನು ಗದೆಯ, ನೃಪ ನಿಂದಲ್ಲಿ ಬೆರಗಾದನು, ರಣೋತ್ಸವವಾಯ್ತು ಯಮಳರಿಗೆ, ತಲ್ಲಣಿಸಿತು+ ಉಳಿದ+ ಅರಸುಮಕ್ಕಳು ಚಲ್ಲಿತು+ ಆ ಸುಭಟ+ ಓಘ(ಗುಂಪು,ಸಮೂಹ ) ವಿಜಯದ ಭುಲ್ಲವಣೆ(ಅಉತ್ಸಾಹ, ಸಡಗರ,ಸಂಭ್ರಮ ) ಪಲ್ಲಟಿಸಿತು (ಘಾಸಿಗೊಂಡಿತ)+ ಅವರಿಗೆ ಖೇಡತನದೊಡನೆ(ಹೆದರಿಕೆ).
ಅರ್ಥ:ಬಲರಾಮನು ಸಿಟ್ಟಿನಿಂದ ತನ್ನ ಮುಸಲಾಯುಧವನ್ನು ತಿರುಗಿಉತ್ತಾ ಮುಂದೆ ಬರಲು, ಪಾರ್ಥನು ಯುದ್ಧಕ್ಕೆ ಸಿದ್ಧನಾಗಿ ಬಿಲ್ಲನ್ನು ಮಿಡಿದನು. ಭಾರತಮಲ್ಲ ಭೀಮನು ಗದೆಯನನು ತನ್ನ ಕೈಗೆ ತೆಗೆದುಕೊಂಡನು. ನೃಪ ಧರ್ಮಜನುಇದೇನು ಹೀಗಾಯಿತಲ್ಲಾ ಎಂದು ನಿಂತಲ್ಲಿಯೇ ಬೆರಗಾದನು, ಯಮಳರಾದ ನಕುಲಸಹದೇವರಿಗೆ ರಣೋತ್ಸವವಾಯ್ತು. ಉಳಿದ ಅರಸುಮಕ್ಕಳು ತಲ್ಲಣಗೋಡು ಬೆದರಿದರು. ಆ ಸುಭಟರ ಸಮೂಹ ವಿಜಯದ ಅಉತ್ಸಾಹ ಸಡಗರ,ಸಂಭ್ರಮಗಳು ಪಲ್ಲಟವಾಗಿ/ ಬದಲಾಗಿ ಅವರಿಗೆ ಹೆದರಿಕೆ ಆವರಿಸಿತು.
ಹಲಧರನ ಖತಿಬಲಹು ಕದನಕೆ
ಮಲೆತನಾದಡೆ ಹಾನಿ ತಪ್ಪದು
ಗೆಲವಿನಲಿ ಸೋಲದಲಿ ತಾನೌಚಿತ್ಯವೇನಿದಕೆ |
ಒಳಗೆ ಬಿದ್ದ ವಿಘಾತಿ ಮುರರಿಪು
ತಿಳಿವನೋ ತವಕಿಸುವನೋ ನಾ
ವಳಿದೆವಿನ್ನೇನೆನುತ ನಡುಗಿದನಂದು ಯಮಸೂನು || ೨೭ ||
ಪದವಿಭಾಗ-ಅರ್ಥ:ಹಲಧರನ ಖತಿಬಲಹು ಕದನಕೆ(ಕದನ=ಯುದ್ಧ) ಮಲೆತನಾದಡೆ ಹಾನಿ ತಪ್ಪದು; ಗೆಲವಿನಲಿ ಸೋಲದಲಿ ತಾನು ಔಚಿತ್ಯವೇನು+ ಇದಕೆ | ಒಳಗೆ ಬಿದ್ದ ವಿಘಾತಿ ಮುರರಿಪು ತಿಳಿವನೋ ತವಕಿಸುವನೋ ನಾವು+ ಅಳಿದೆವು+ ಇನ್ನೇನು+ ಎನುತ ನಡುಗಿದನಂದು ಯಮಸೂನು
ಅರ್ಥ: ಧರ್ಮಜನು ಚಿಂತಿಸಿದನು,'ಹಲಧರನಾದ ಬಲರಾಮನು ಖತಿಯಿಂದ ಮತ್ತು ಅವನ ಬಲಹು/ಸಾಮರ್ಥ್ಯದಿಮದ ಯುದ್ಧಕ್ಕೆ ಮಲೆತು ವಿರೋಧಿಸಸಿ ನಿಂತನಾದರೆ, ತಮಗೆ ಹಾನಿ ತಪ್ಪುವುದಿಲ್ಲ. ಅವನೊಡನೆ ಯುದ್ಧದಲ್ಲಿ ಗೆಲವಾಗಲಿ ಸೋಲಾಗಲಿ. ಇದಕ್ಕೆ ಬಲರಾಮನ ವಿರೋಧಕ್ಕೆ ತಾನು ಅನುಸರಿಸಬೇಕಾದ ಉಚಿತವಾದ ಕರ್ತವ್ಯವೇನು?ನಮ್ಮ ಒಳಗೇ ಬಿದ್ದ ವಿಘಾತಿಯನ್ನು ಮುರರಿಪುಕೃಷ್ಣನು ತಿಳಿವನೋ, ಇಲ್ಲವೊ? ಕೃfXನು ತವಕದಿಂದ/ ಆಸಕ್ತಿಯಿಂದ ಬೇಗ ಕಾರ್ಯ ಪ್ರವರ್ತನಾಗುವನೋ - ಇಲ್ಲವೂ ಎಂದು ಯೋಚಿಸುತ್ತಾ ಧರ್ಮಜನು, 'ನಾವು ಹೋದೆವು ಇನ್ನೇನು ದಾರಿ ಇದೆ, ಎನ್ನುತ್ತಾ ಅಂದು ಯಮನಮಗ ಧರ್ಮಜನು ನಡುಗಿದನು.

ಬಲಿಮಥನ ಹಿಡಿದನು ಬಲನ ಬಲಗಯ್ಯ[ಸಂಪಾದಿಸಿ]

ಹಲಧರನ ಮಸಕವನು ಪಾಂಡವ
ಬಲದ ದುಶ್ಚೇಷ್ಟೆಯನು ಭೀಮನ
ಫಲುಗುಣನ ಧರ್ಮಜರ ಯಮಳರ ಚಿತ್ತವಿಭ್ರಮವ |
ಬಲಿಮಥನನೀಕ್ಷಿಸುತ ರಜತಾ
ಚಲವ ತರುಬುವ ನೀಲಗಿರಿಯವೊ
ಲಳುಕದಿದಿರಲಿ ನಿಂದು ಹಿಡಿದನು ಬಲನ ಬಲಗಯ್ಯ || ೨೮ ||
ಪದವಿಭಾಗ-ಅರ್ಥ: ಹಲಧರನ(ಹಲಾಯುಧವನ್ನು ಹಿಡಿದ ಬಲರಾಮ) ಮಸಕವನು(ಮಸಕ= ಅಬ್ಬರ) ಪಾಂಡವಬಲದ ದುಶ್ಚೇಷ್ಟೆಯನು ಭೀಮನ ಫಲುಗುಣನ ಧರ್ಮಜರ ಯಮಳರ ಚಿತ್ತವಿಭ್ರಮವ (ಮನಸ್ಸಿನ ತಾಕಲಾಟ) ಬಲಿಮಥನನ(ವಾಮನಾವತಾರದಲ್ಲಿ ಬಲಿಯನ್ನು ಸೋಲಿಸಿದ)+ ಈಕ್ಷಿಸುತ (ಈಕ್ಷಿಸು= ನೋಡು) ರಜತಾಚಲವ(ಬೆಳ್ಳಿಯಂತೆ ಬೆಳಗುವ ಹಿಮಾಚಲ ಬೆಟ್ಟ) ತರುಬುವ(ಆವರಿಸುವ) ನೀಲಗಿರಿಯವೊಲು(ನೀಲವಾದ ಬೆಟ್ಟಂದಂತೆ)+ ಅಳುಕದೆ (ಹೆದರದೆ)+ ಇದಿರಲಿ ನಿಂದು ಹಿಡಿದನು ಬಲನ ಬಲಗಯ್ಯ.
ಅರ್ಥ:ಬಲರಾಮನ ಅಬ್ಬರವನ್ನೂ, ಪಾಂಡವಸೇನೆಯ ದುಶ್ಚೇಷ್ಟೆಯನ್ನೂ, ಭೀಮ, ಫಲ್ಗುಣ, ಧರ್ಮಜ ಮತ್ತು ಯಮಳ- ನಕುಲಸಹದೇವರ ಮನಸ್ಸಿನ ತಾಕಲಾಟವನ್ನು ಬಲಿಯನ್ನು ಗೆದ್ದ ಕೃಷ್ಣನು ನೋಡಿ, ಬೆಳ್ಳಿಯಂತೆ ಬೆಳಗುವ ಹಿಮಾಚಲ ಬೆಟ್ಟವನ್ನು ಆವರಿಸುವ ನೀಲವಾದ ಬೆಟ್ಟಂದಂತೆ(ಮೋಡದಂತೆ?) ಹೆದರದೆ ಅವನ ಎದುರಿನಲ್ಲಿ ನಿಂತು ಬಲರಾಮನ ಬಲಗಯ್ಯನ್ನು ಹಿಡಿದನು. (ಬಲರಾಮನು ರಜತಗಿರಿಯಂತೆ ಬೆಳ್ಳಗಿದ್ದಾನೆ, ಕೃಷ್ಣು ನೀಲಗಿರಿಯಂತೆ ಶ್ಯಾಮಲ ಬಣ್ಣದವನು. ನೀಲಮೇಘಶ್ಯಾಮ)
ಚಿತ್ತವಿಸಿರೇ ಬರಿಯ ರೋಷಕೆ
ತೆತ್ತಡೇನಹುದಂತರಂಗವ
ನುತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥನಿಶ್ಚಯವ |
ಬಿತ್ತರಿಸುವುದು ಕೌರವೇಂದ್ರನ
ಕಿತ್ತಡವ ನೀವರಿಯಿರೇ ನಿಮ
ಗೆತ್ತಿದಾಗ್ರಹ ನಿಲಲಿ ತಿಳುಹುವೆನೆಂದನಸುರಾರಿ || ೨೯ ||
ಪದವಿಭಾಗ-ಅರ್ಥ: ಚಿತ್ತವಿಸಿರೇ (ದಯವಿಟ್ಟು ಮನಸ್ಸಿಟ್ಟು ಕೇಳಿ) ಬರಿಯ ರೋಷಕೆ ತೆತ್ತಡೆ(ಕೊಟ್ಟರೆ)+ ಏನಹುದು+ ಅಂತರಂಗವನು+ ಉತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥ ನಿಶ್ಚಯವ ಬಿತ್ತರಿಸುವುದು; ಕೌರವೇಂದ್ರನ ಕಿತ್ತಡವ( ಮೋಸವ) ನೀವು+ ಅರಿಯಿರೇ, ನಿಮಗೆ+ ಎತ್ತಿದ+ ಆಗ್ರಹ ನಿಲಲಿ ತಿಳುಹುವೆನು+ ಎಂದನು+ ಅಸುರಾರಿ
ಅರ್ಥ:ಕೃಷ್ಣನು ಅಣ್ಣ ಬಲರಾಮನಿಗೆ,'ಚಿತ್ತವಿಸಿರೇ ಬರಿಯ ಸಿಟ್ಟಿಗೆ ಮನಸ್ಸನ್ನು ಕೊಟ್ಟರೆ ಏನು ಪ್ರಯೋಜನ? ಉತ್ತಮರ ಅಂತರಂಗವನ್ನೂ ರೂಢಿಯ ಪದ್ಧತಿಗಳಲ್ಲಿ ಶಾಸ್ತ್ರಾರ್ಥದ ನಿಶ್ಚಯವನ್ನು ವಿಸ್ತರಿಸಬೇಕು. ಕೌರವೇಂದ್ರನ ಮೋಸವನ್ನು ನೀವು ತಿಳಿದಿಲ್ಲವೇ? ನಿಮಗೆ ಏರಿದ ಕೋಪ ನಿಲ್ಲಲಿ. ನಾನು ವಿವರವಾಗಿ ತಿಳಿಸುವೆನು' ಎಂದನು.
ಏನ ತಿಳುಹುವೆ ನೀನು ಶಾಸ್ತ್ರದೊ
ಳೇನ ನಡೆದರು ನಿನ್ನವರು ಯಮ
ಸೂನು ನುಡಿಯನೆ ಸಮಯವನು ಶಾಸ್ತ್ರೌಘಸಂಗತಿಯ |
ಹೀನಗತಿ ಪಡಿತಳದ ಹೊಯ್ಲು
ತ್ತಾನ ಘಾಯದಲೊದಗಬೇಕೆಂ
ಬೀ ನಿಬಂಧನವಾರಲಳಿದುದು ಕೃಷ್ಣ ಹೇಳೆಂದ || ೩೦ ||
ಪದವಿಭಾಗ-ಅರ್ಥ:ಏನ ತಿಳುಹುವೆ ನೀನು ಶಾಸ್ತ್ರದೊಳು+ ಏನ ನಡೆದರು ನಿನ್ನವರು ಯಮಸೂನು ನುಡಿಯನೆ ಸಮಯವನು ಶಾಸ್ತ್ರೌಘ (ಔಘ= ಪಾಪ, ದೋಷ) ಸಂಗತಿಯ ಹೀನಗತಿ ಪಡಿತಳದ(ಕೆಳಗಿನ) ಹೊಯ್ಲ+ ಉತ್ತಾನ ಘಾಯದಲಿ+ ಒದಗಬೇಕೆಂಬ+ ಈ ನಿಬಂಧನವು(ನಿಯಮ)+ ಆರಲಿ+ ಅಳಿದುದು (ಅಳಿ- ನಾಶ) ಕೃಷ್ಣ ಹೇಳೆಂದ
ಅರ್ಥ: ಅದಕ್ಕೆ ಬಲರಾಮನು,'ನೀನು ಏನನ್ನು ತಿಳಿಸುವೆ? ನಿನ್ನವರು ಶಾಸ್ತ್ರದ ಪ್ರಕಾರ ಏನು-ಎಲ್ಲಿ ನಡೆದರು? ಯಮಸೂನು ಧರ್ಮಜನು ಸಮಯವನು ಶಾಸ್ತ್ರದಲ್ಲಿ ಔಘವಾದ-ತಪ್ಪಾದ ಸಂಗತಿಯನ್ನು ನುಡಿಯನೆ? ಹೊಕ್ಕಳಿನ ಕೆಳಗಿನ ಹೊಯಲು- ಹೊಡೆತ ಹೀನವಾದದ್ದು. ಉತ್ತಾನ/ಅದರ ಮೇಲಿನ ಘಾಯದಲ್ಲಿ ಜಯ ಒದಗಬೇಕೆಂಬ ಈ ನಿಬಂಧನವು, ಯಾರಿಂದ ನಾಶವಾಯಿತು? ಕೃಷ್ಣಾ ಹೇಳು,' ಎಂದ.
ಅದರಿನೀ ಕೌರವನ ತೊಡೆಗಳ
ಸದೆದನನ್ಯಾಯದಲಿ ನಿನ್ನವ
ನಿದಕೆ ಸೈರಿಸಬಹುದೆ ಹೇಳೈ ಧರ್ಮನಿರ್ಣಯವ
ಮದಮುಖನ ಭುಜಬಲವ ನೋಡುವ
ವಿದು ವಿಕಾರವಲಾ ಎನುತ ಮುರು
ಚಿದನು ಬಲ ಬಲಗಯ್ಯನುರವಣಿಸಿದನು ಖಾತಿಯಲಿ ೩೧
ಪದವಿಭಾಗ-ಅರ್ಥ:ಅದರಿನು(ಅದರಿಂದ- ನಿಯಮ ಮೀರಿದ್ದರಿಂದ)+ ಈ ಕೌರವನ ತೊಡೆಗಳ ಸದೆದನು(ಸದೆ= ಹೊಡೆ)+ ಅನ್ಯಾಯದಲಿ ನಿನ್ನವನು+ ಇದಕೆ ಸೈರಿಸಬಹುದೆ ಹೇಳೈ ಧರ್ಮನಿರ್ಣಯವ; ಮದಮುಖನ(ಗೆದ್ದ ಮದದಿಂದ ಕೂಡಿದ ಮುಖವಳ್ಳವನ) ಭುಜಬಲವ ನೋಡುವ+ ವಿ+ ಇದು ವಿಕಾರವಲಾ(ಕೆಟ್ಟದ್ದು) ಎನುತ ಮುರುಚಿದನು ಬಲ ಬಲಗಯ್ಯನು+ ಉರವಣಿಸಿದನು(ಪರಾಕ್ರಮ ತೋರಿದನು) ಖಾತಿಯಲಿ.
ಅರ್ಥ:ಬಲರಾಮನು, ಭೀಮನು- ನಿನ್ನವನು ನಿಯಮ ಮೀರಿದ್ದು, ಈ ಕೌರವನ ತೊಡೆಗಳನ್ನು ಅನ್ಯಾಯದಿಂದ ಹೊಡೆದನು. ಇದಕ್ಕೆ ಸೈರಿಸಬಹುದೆ ಧರ್ಮನಿರ್ಣಯವನ್ನು ಹೇಳಯ್ಯಾ. ಮದಮುಖ ಬೀಮನ ಭುಜಬಲವನ್ನು ಸುಮ್ಮನೆ ನೋಡುವ- ಇದು- ಈ ಸನ್ನಿವೇಶ ಕೆಟ್ಟದ್ದು- ವಿಕಾರವಲಾ,' ಎನ್ನತ್ತಾ ಬಲರಾಮನು ತನ್ನ ಹಿಡಿದ ಬಲ ಕೈಯನ್ನು ಬಿಇಸಿಕೊಳ್ಳಲು ಮುರುಚಿದನು ಮತ್ತು ಸಿಟ್ಟಿನಿಂದ ಉರವಣಿಸಿದನು.
ಹರಿದು ಹಿಡಿದನು ಮತ್ತೆ ನೀಲಾಂ
ಬರನ ಸೆರಗನು ನಿಮ್ಮ ಕುರುಪತಿ
ಚರಿಸಿದನಲಾ ಧರ್ಮವಿಸ್ತರವನು ವಿಭಾಡಿಸದೆ |
ಕರಸಿ ಕಪಟದ್ಯೂತದಲಿ ನೃಪ
ವರನ ಸೋಲಿಸಿ ಪಟ್ಟದರಸಿಯ
ಕರಸಿ ಸುಲಿಸುವುದಾವ ಋಷಿಮತವೆಂದನಸುರಾರಿ || ೩೨ ||
ಪದವಿಭಾಗ-ಅರ್ಥ: ಹರಿದು(ಹರಿ= ಚಲಿಸು;ಮುಂದೆ ಹೋಗಿ) ಹಿಡಿದನು ಮತ್ತೆ ನೀಲಾಂಬರನ ಸೆರಗನು; ನಿಮ್ಮ ಕುರುಪತಿ ಚರಿಸಿದನಲಾ ಧರ್ಮವಿಸ್ತರವನು; ವಿಭಾಡಿಸದೆ (ಪರಾಕ್ರಮ ತೋರದೆ; ಕ್ಷತ್ರಿಯನಾಗಿ ರಾಜ್ಯ ಪಡೆಯಲು ಪರಾಕ್ರಮ ತೋರದೆ) ಕರಸಿ ಕಪಟದ್ಯೂತದಲಿ ನೃಪವರನ ಸೋಲಿಸಿ ಪಟ್ಟದರಸಿಯ ಕರಸಿ ಸುಲಿಸುವುದು+ ಆವ ಋಷಿಮತವೆಂದನು+ ಅಸುರಾರಿ
ಅರ್ಥ: ಬಲರಾಮನು ಕೈಬಿಡಿಸಿಕೊಂಡು ಮುಂದೆ ಹೊಗಲು, ಕೃಷ್ಣನು ಮುಂದೆ ಹೋಗಿ ಮತ್ತೆ ನೀಲಾಂಬರ ಉಟ್ಟ ಬಲರಾಮನ ಸೆರಗನ್ನು ಹಿಡಿದನು; ಅವನು 'ನಿಮ್ಮ ಕುರುಪತಿ ಕೌರವ ಆಚರಿಸಿದನಲ್ಲವೇ ಧರ್ಮವಿಸ್ತಾರವನ್ನು?(ಹೇಗೆಂದರೆ:) ಕ್ಷತ್ರಿಯನಾಗಿ ರಾಜ್ಯ ಪಡೆಯಲು ಪರಾಕ್ರಮ ತೋರದೆ ಪಾಂಡವರನ್ನು ಸತ್ಕಾರಕ್ಕೆಂದು ಕರಸಿ, ಕಪಟದ್ಯೂತದಲ್ಲಿ ಮೋಸದಿಂದ ನೃಪವರ ಧರ್ಮಜನನ್ನು ಸೋಲಿಸಿ, ಅವನ ಪಟ್ಟದರಸಿಯನ್ನು ರಾಜಸಭೆಗೆ ಕರಸಿ ಅವಳ ಸೀರೆಯನ್ನು ಸುಲಿಸುವುದು(ಬಿಚ್ಚುವುದು) ಯಾವ ಋಷಿಮತವು (ಯಾವ ಧರ್ಮಸಮ್ಮತ),' ಎಂದನು (ಅಸುರಾರಿ ಕೃಷ್ಣ).
ಎಣಿಸಬಹುದೇ ನಿಮ್ಮ ನೃಪನವ
ಗುಣವನನ್ಯಾಯ ಪ್ರಬಂಧಕೆ
ಗಣನೆಯುಂಟೇ ಭೀಮಗಡ ಖಂಡಿಸಿದ ತೊಡೆಗಳನು |
ಕೆಣಕಿದನು ಮೈತ್ರೇಯನನು ನೃಪ
ನಣಕಿಸಲು ಶಪಿಸಿದನು ತೊಡೆಗಳ
ಹಣಿದವಾಡಲಿಯೆಂದನದು ತಪ್ಪುವುದೆ ಋಷಿವಚನ || ೩೩ ||
ಪದವಿಭಾಗ-ಅರ್ಥ: ಎಣಿಸಬಹುದೇ ನಿಮ್ಮ ನೃಪನ+ ಅವಗುಣವನು+ ಅನ್ಯಾಯ ಪ್ರಬಂಧಕೆ ಗಣನೆಯುಂಟೇ, ಭೀಮಗಡ ಖಂಡಿಸಿದ ತೊಡೆಗಳನು ಕೆಣಕಿದನು ಮೈತ್ರೇಯನನು ನೃಪನು+ ಅಣಕಿಸಲು ಶಪಿಸಿದನು ತೊಡೆಗಳ ಹಣಿದವಾಡಲಿಯೆಂದನು+ ಅದು ತಪ್ಪುವುದೆ ಋಷಿವಚನ
ಅರ್ಥ:ಕೃಷ್ನನು ಮುಂದುವರಿದು,'ಎಣಿಸಬಹುದೇ ನಿಮ್ಮ ನೃಪ ಕೌರವನ ಅವಗುಣಗಳನ್ನು ಅನ್ಯಾಯಗಳನ್ನು ಹೇಳುವ ಪ್ರಬಂಧಕ್ಕೆ- ವಿವರಿಸಿದರೆ ಅದಕ್ಕೆ ಲೆಕ್ಕವುಂಟೇ? ಭೀಮಗಡ! ತೊಡೆಗಳನ್ನು ಮುರಿದ; ಕಾರಣವೇನೆಂದರೆ ಕೌರವನು ಋಷಿ ಮೈತ್ರೇಯನನ್ನು ಕೆಣಕಿದನು. ಕೌರವನೃಪನು ಅವನನ್ನು ಅಣಕಿಸಲು, ಆ ಋಷಿಯು ಕೌರವನಿಗೆ "ನಿನ್ನ ತೊಡೆಗಳ ಹಣಿದವಾಡಲಿ/ಮುರಿಯಲಿ" ಎಂದು ಶಪಿಸಿದನು. ಅದು ಋಷಿವಚನ,- ತಪ್ಪುವುದೆ? ಎಂದನು.
ಆ ಪತಿವ್ರತೆ ಬಯ್ದಳೀ ಕುರು
ಭೂಪ ತೊಡೆಗಳ ತೋರಿ ಜರೆಯಲು
ದ್ರೌಪದಿಯ ನುಡಿ ತಪ್ಪುವುದೆ ಋಷಿವಚನದನುಗತಿಗೆ |
ಕೋಪ ಕುಡಿಯಿಡಲೀ ವೃಕೋದರ
ನಾಪನಿತುಡಿದನು ಪ್ರತಿಜ್ಞಾ
ಸ್ಥಾಪನಕೆ ಬಳಿಕೇನ ಮಾಡುವುದೆಂದನಸುರಾರಿ || ೩೪ ||
ಪದವಿಭಾಗ-ಅರ್ಥ: ಆ ಪತಿವ್ರತೆ ಬಯ್ದಳು+ ಈ ಕುರುಭೂಪ ತೊಡೆಗಳ ತೋರಿ ಜರೆಯಲು(ನಿಂದಿಸಲು), ದ್ರೌಪದಿಯ ನುಡಿ ತಪ್ಪುವುದೆ ಋಷಿವಚನದ+ ಅನುಗತಿಗೆ ಕೋಪ ಕುಡಿಯಿಡಲು+ ಈ ವೃಕೋದರನು+ ಆಪನಿತು(ಶಾಪ ನೆರವೇರುವಂತೆ )+ ಉಡಿದನು ಪ್ರತಿಜ್ಞಾ ಸ್ಥಾಪನಕೆ ಬಳಿಕ+ ಏನ ಮಾಡುವುದು+ ಎಂದನು+ ಅಸುರಾರಿ
ಅರ್ಥ:ಬಲರಾಮನನ್ನು ಕುರಿತು ಕೃಷ್ನನು,'ಈ ಕುರುಭೂಪ ಕೌರವನು ತನ್ನ ತೊಡೆಗಳ ತೋರಿಸಿ ಅವಮಾನಿಸಲು ಆ ಪತಿವ್ರತೆ ದ್ರೌಪದಿಯು ಬಯ್ಗು ಅವನಿಗೆ " ತೊಡೆಮುರಿದು ಸಾಯಿ" ಎಂದು ಶಾಪಹಾಕಿದಳು;, ದ್ರೌಪದಿಯ ನುಡಿ ತಪ್ಪುವುದೆ? ಋಷಿವಚನದ ಅನುಗತಿಗೆ- ಅನುಸಾರ ನೆಡೆಯುವ ಗತಿಗೆ- ಕಾರ್ಯಕ್ಕೆ, ಭೀಮನಿಗೆ ಕೋಪ ಕುಡಿಯಿಡಲು- ಬುಗಿಲೇಳಲು, ಈ ವೃಕೋದರನು ಶಾಪ ನೆರವೇರುವಂತೆ ತೊಡೆಯನ್ನು ಮುರಿದನು, ಅದು ವಿಧಿಯ ನಿಯಮದಂತೆ- ಪ್ರತಿಜ್ಞಾ ಸ್ಥಾಪನಕೆ ನೆಡೆಯಿತು. ಶಾಪದ ಪ್ರಭಾವದಿಂದ ಭಿಮನು ತೊಡೆಗೆ ಹೊಡೆದ ಬಳಿಕ ಏನ ಮಾಡುವುದು? ಎಂದನು.
ಎಂದು ರಾಮನ ಮನವ ನಯನುಡಿ
ಯಿಂದ ತಿಳುಹಿದನೈಸಲೇ ಬಳಿ
ಕಂದು ದುಗುಡದಲವರು ನಡೆದರು ದ್ವಾರಕಾಪುರಿಗೆ |
ಬಂದ ಕಂಟಕ ಬಳಿಚಿತೇ ಸಾ
ಕೆಂದು ಹರಿ ಕುರುಪತಿಯ ಹೊರೆಗೈ
ತಂದು ಬೋಳೈಸಿದನು ಭೀಮಾರ್ಜುನ ಯುಧಿಷ್ಠಿರರ || ೩೫ ||
ಪದವಿಭಾಗ-ಅರ್ಥ: ಎಂದು(ಹೇಳಿ) ರಾಮನ ಮನವ ನಯನುಡಿಯಿಂದ ತಿಳುಹಿದನು ಐಸಲೇ (ವಿಷಯ ಹೀಗಿದೆಯೇ)ಬಳಿಕಂದು ದುಗುಡದಲಿ+ ಅವರು ನಡೆದರು ದ್ವಾರಕಾಪುರಿಗೆ; ಬಂದ ಕಂಟಕ ಬಳಿಚಿತೇ(ಬಳಿಚು= ಜಾರು) ಸಾಕೆಂದು ಹರಿ ಕುರುಪತಿಯ ಹೊರೆಗೆ+ ಐತಂದು(ಬಳಿಗೆ ಬಂದು) ಬೋಳೈಸಿದನು(ಸ್ವಾಂತನ ಹೇಳಿದನು) ಭೀಮಾರ್ಜುನ ಯುಧಿಷ್ಠಿರರ
ಅರ್ಥ:ಕೃಷ್ಣನು ಊರುಭಂಗಕ್ಕೆ ಕಾರಣ ಹಿನ್ನೆಲೆಗಳನ್ನು ಹೇಳಿ, ಬಲರಾಮನ ಮನವವನ್ನು ನಯನುಡಿಯಿಂದ ತಿಳುಹಿಸಿ ಸಮಾಧಾನ ಪಡಿಸಿದನು. ಅವನು ಬಳಿಕ ವಿಷಯ ಹೀಗಿದೆಯೇ ಎಂದು ಹೇಳಿ, ಅದೇ ವ್ಯಥೆಯಲ್ಲಿ ಅವರು ದ್ವಾರಕಾಪುರಿಗೆ ಹೊರಟು ಹೋದರು. ಬಂದ ಕಂಟಕ ಜಾರಿಹೋಯಿತಲ್ಲಾ, ಅದೇ ಸಾಕೆಂದು ಕುರುಪತಿ ಕೌರವನ ಸಮೀಪ ನಿಂತಿದ್ದ ಭೀಮನ ಬಳಿಗೆ ಕೃಷ್ಣನು ಬಂದು ಭೀಮಾರ್ಜುನ ಮತ್ತು ಯುಧಿಷ್ಠಿರರಿಗೆ ಸ್ವಾಂತನ ಹೇಳಿದನು.
ಈಸುದಿನ ಪರಿಯಂತ ಧರ್ಮದ
ಮೀಸಲಳಿಯದೆ ಬಳಸಿ ಬಹಳಾ
ಯಾಸವನು ಸೈರಿಸಿದಿರಿಂದಿನ ಯುದ್ಧಕೇಳಿಯಲಿ |
ಘಾಸಿಯಾದುದು ಧರ್ಮಗತಿ ಬುಧ
ರೇಸು ಮನಗಾಣರು ವೃಥಾಭಿನಿ
ವೇಶವಾದುದು ಮಕುಟಭಂಗದೊಳೆಂದನಾ ಭೂಪ || ೩೬ ||
ಪದವಿಭಾಗ-ಅರ್ಥ: ಈಸುದಿನ ಪರಿಯಂತ (ಇಷ್ಟು ದಿನಗಳ ಕಾಲ) ಧರ್ಮದ ಮೀಸಲು+ ಅಳಿಯದೆ(ಅಳಿ= ನಾಶ; ಮುರಿಯದೆ) ಬಳಸಿ ಬಹಳ+ ಆಯಾಸವನು ಸೈರಿಸಿದಿರಿ+ ಇಂದಿನ ಯುದ್ಧ ಕೇಳಿಯಲಿ ಘಾಸಿಯಾದುದು ಧರ್ಮಗತಿ; ಬುಧರು (ಜ್ಞಾನಿಗಳು)+ (ಏ) ಈಸು ಮನಗಾಣರು ವೃಥಾ+ ಆಭಿನಿವೇಶವಾದುದು ಮಕುಟಭಂಗದೊಳು+ ಎಂದನು+ ಆ ಭೂಪ.
 • ಪಂಚ ಕ್ಲೇಶಗಳು :- ೧.ಅವಿದ್ಯೆ, ೨.ಅಸ್ಮಿತೆ, ೩.ರಾಗ, ೪.ದ್ವೇಷ, ೫.ಆಭಿನಿವೇಶ. (ಮುಂಡಕ); ೩೫.; (ಅಭಿನಿವೇಶ = ಅಬಿ=ಸಮೀಪ ನಿವೇಶ =ಸ್ಥಾನ, ಅಧರ್ಮದ ಸಾಮೀಪ್ಯದ ದೋಷ)
ಅರ್ಥ:ಕೃಷ್ಣನು ಪಾಂಡವರಿಗೆ,'ಇಷ್ಟುದಿನ ಹದಿಮೂರು ವರ್ಷಗಳ ಕಾಲ ಧರ್ಮದ ನಿಯಮ ಅಳಿಯದಂತೆ ಧರ್ಮವನ್ನೇ ಬಳಸಿ- ಅನುಸರಿಸಿ ಬಹಳ ಆಯಾಸವನ್ನೂ ಕಷ್ಟವನ್ನೂ ಸೈರಿಸಿದಿರಿ ಎಂದು ಕೃಷ್ನನು ಅವರನ್ನು ಸಂತೈಸಿದನು. ಆಗ ಧರ್ಮಜನು,'ಆದರೆ ವಿಧಿನಿಯಮದಂತೆ ಇಂದಿನ ಯುದ್ಧದ ಹೊಡೆದಾಟದಲ್ಲಿ ಧರ್ಮಗತಿಗೆ ದೋಷತಾಗಿತು. ತಿಳಿದವರೂ ಇದರ ಸತ್ಯವನ್ನು ಮನಗಾಣರು. ಭೀಮನು ಒದೆದು ಮಾಡಿದ, ಕೌರವನ ಮಕುಟಭಂಗದಲ್ಲಿ ವೃಥಾ ಕೆಟ್ಟಹೆಸರು ಬಂದಿತು,'ಎಂದನು.
ಅರಸ ತಲೆಗುತ್ತಿದನು ದೃಗುಜಲ
ವುರವಣಿಸಿ ಮೌನದಲಿ ಫಲುಗುಣ
ನಿರೆ ಮುರಾರಿ ಸುಯೋಧನನ ಸರ್ವಾವಗುಣ ಗಣವ |
ಪರಿಪರಿಯಲೆಚ್ಚರಿಸಿ ದುಗುಡವ
ಪರಿಹರಿಸಿ ಸಂತೈಸಿದಡೆ ಮುರ
ಹರನ ಬೈದನು ನಿನ್ನ ಮಗ ನಾನಾ ವಿಡಂಬದಲಿ || ೩೭ ||
ಪದವಿಭಾಗ-ಅರ್ಥ: ಅರಸ ತಲೆಗುತ್ತಿದನು(ತಲೆತಗ್ಗಿಸಿದನು) ದೃಗುಜಲ(ಕಣ್ಣೀರು) ವುರವಣಿಸಿ(ಉಕ್ಕಿ ಹೊಮ್ಮಿತು) ಮೌನದಲಿ ಫಲುಗುಣನಿರೆ ಮುರಾರಿ ಸುಯೋಧನನ ಸರ್ವಾವಗುಣ (ಸರ್ವ+ ಅವಗುಣ) ಗಣವ(ಸಮೂಹವ) ಪರಿಪರಿಯಲಿ+ ಎಚ್ಚರಿಸಿ ದುಗುಡವ ಪರಿಹರಿಸಿ ಸಂತೈಸಿದಡೆ, ಮುರಹರನ ಬೈದನು ನಿನ್ನ ಮಗ ನಾನಾ ವಿಡಂಬದಲಿ.
ಅರ್ಥ:ಸಂಜಯನು, ದೃತರಾಷ್ಟ್ರನೇ ಕೇಳು, 'ಅರಸ ಧರ್ಮಜನು (ದಾಯಾದಿಗಳ ಹತ್ಯೆಗಾಗಿ) ದುಃಖದಿಂದ ತಲೆತಗ್ಗಿಸಿದನು; ಅವನಿಗೆ ಕಣ್ಣೀರು ವುರವಣಿಸಿ ಹೊಮ್ಮಿತು. ಫಲ್ಗುಣನು ಮೌನವಹಿಸಿದನು. ಆಗ ಕೃಷ್ಣನು ಸುಯೋಧನನ ಸರ್ವ ಅವಗುಣಗಳ ರಾಶಿಯನ್ನು ಪರಿಪರಿಯಲ್ಲಿ ಎಚ್ಚರಿಸಿ ಹೇಳಿ ಧರ್ಮಜನ ದುಗುಡವನ್ನು ಪರಿಹರಿಸಿ ಸಂತೈಸಿದಾಗ, ಅಲ್ಲಿಯೇ ತೊಡೆ ಮುರಿಉ ಬಿದ್ದಿದ್ದ ನಿನ್ನ ಮಗ ಕೌರವನು ಕೃಷ್ಣನನ್ನು ನಾನಾರೀತಿ ಅಪಹಾಸ್ಯಮಾಡಿ ವಿಡಂಬದಲಿ ಬೈದನು, ಎಂದನು.

ಬೈದನು ನಿನ್ನ ಮಗ ಮುರಾರಿಯನು[ಸಂಪಾದಿಸಿ]

ಆರ ಬಸುರಲಿ ಬಂದು ಮೊಲೆಯುಂ
ಡಾರ ಮಡಲಲಿ ಬೆಳೆದು ಬಳಿಕಿನೊ
ಳಾರ ಹೆಂಡಿರ ಕೊಂಡು ಕರು ತುರುಗಾದು ಕಳವಿನಲಿ |
ವೀರ ದೈತ್ಯನ ಸದೆಬಡಿದು ಕುರು
ವೀರವಂಶದ ರಾಯರೆಮ್ಮೊಳು
ವೈರಬಂಧವ ಬಿತ್ತಿ ಕೊಂದವ ಕೃಷ್ಣ ನೀನೆಂದ || ೩೮ ||
ಪದವಿಭಾಗ-ಅರ್ಥ: ಆರ(ಯಾರ) ಬಸುರಲಿ ಬಂದು ಮೊಲೆಯುಂಡು+ ಆರ ಮಡಲಲಿ ಬೆಳೆದು, ಬಳಿಕಿನೊಳು+ ಆರ ಹೆಂಡಿರ ಕೊಂಡು, ಕರು ತುರುಗಾದು(ತುರು= ಹಸು), ಕಳವಿನಲಿ (ಮೋಸದಿಂದ) ವೀರ ದೈತ್ಯನ ಸದೆಬಡಿದು, ಕುರುವೀರವಂಶದರಾಯರು+ ಎಮ್ಮೊಳು ವೈರಬಂಧವ (ವೈರ ಸಂಬಂಧ) ಬಿತ್ತಿ ಕೊಂದವ ಕೃಷ್ಣ ನೀನು+ ಎಂದ.
ಅರ್ಥ:ಕೌರವನ ಅಪರಾಧಗಳನ್ನು ಕೃಷ್ಣನು ಧರ್ಮಜನಿಗೆ ವಿವರಿಸಿದ್ದನ್ನು ಕೇಳಿ ಕೋಪಗೊಂಡು, ತೊಡೆ ಮುರಿದು ಪಕ್ಕದಲ್ಲಿ ಬಿದ್ದಿದ್ದ ಕೌರವನು ಅವನನ್ನು ಹೀಗೆ ನಿಂದಿಸಿದನು; ಕೃಷ್ಣಾ ನೀನು ಯಾರದೋ ಹೊಟ್ಟೆಯಲ್ಲಿ ಹುಟ್ಟಿಬಂದು ಯಾರದ್ದೋ ಮೊಲೆಯುಂಡು, ಯಾರದ್ದೋ ಮಡಲಲ್ಲಿ ಬೆಳೆದವನು. ಬಳಿಕ ದೊಡ್ಡವನಾದ ಮೇಲೆ ಯಾರ ಹೆಂಡಿರನ್ನೊ ಅಪಹರಿಸಿಕೊಂಡು ಬಂದವನು.(ಶಿಶುಪಾಲನಿಗೆ ಗೊತ್ತಾದ ರುಕ್ಮಿಣಿಯನ್ನು ಅಪಹರಿಸಿದವನು), ಚಿಕ್ಕಂದಿನಲ್ಲಿ ದನ ಕರುಗಳನ್ನು ಕಾದು, ಮೋಸದಿಂದ ವೀರದೈತ್ಯ ಮಾವ ಕಂಸನನ್ನು ಸದೆಬಡಿದು, ಈಗ ಕುರುವೀರ ವಂಶದರಾಯರಾದ ನಮ್ಮಲ್ಲಿ ವೈರ ಸಂಬಂಧವನ್ನು ಬಿತ್ತಿ ನಮ್ಮನ್ನು ಕೊಂದವನು ಕೃಷ್ಣ ನೀನು. ಪಾಂಡವರಲ್ಲ' ಎಂದನು.
ಬಣಗುಗಳು ಭೀಮಾರ್ಜುನರು ಕಾ
ರಣಿಕ ನೀ ನಡುವಾಯಿ ಧರ್ಮದ
ಕಣಿ ಯುಧಿಷ್ಠಿರನೆತ್ತಬಲ್ಲನು ನಿನ್ನ ಮಾಯೆಗಳ |
ಸೆಣಸನಿಕ್ಕಿದೆ ನಮ್ಮೊಳಗೆ ಧಾ
ರುಣಿಯ ಭಾರವ ಬಿಡಿಸಲೋಸುಗ
ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆಯೆಂದ || ೩೯ ||
ಪದವಿಭಾಗ-ಅರ್ಥ: ಬಣಗುಗಳು (ಅಲ್ಪರು- ಹುಲುಮಾನವರು) ಭೀಮಾರ್ಜುನರು ಕಾರಣಿಕ (ಮಹಿಮಾಪುರುಷ) ನೀ ನಡುವಾಯಿ(ನಡುವೆ ಬಂದವನು) ಧರ್ಮದ ಕಣಿ(ಕೊರವ- ಬಾಯಲ್ಲಿ ಹೇಳುವವ) ಯುಧಿಷ್ಠಿರನು+ ಎತ್ತಬಲ್ಲನು ನಿನ್ನ ಮಾಯೆಗಳ ಸೆಣಸನು+ ಇಕ್ಕಿದೆ (ಹೋರಾಟವನ್ನು ತಂದಿಟ್ಟೆ) ನಮ್ಮೊಳಗೆ ಧಾರುಣಿಯ (ಭೂಮಿಯ) ಭಾರವ ಬಿಡಿಸಲೋಸುಗ(ಇಳಿಸಲು) ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆ, ಯ+ ಎಂದ
ಅರ್ಥ:ದುರ್ಯೋಧನನು ಕೃಷ್ನನಿಗೆ,'ಈ ಭೀಮಾರ್ಜುನರು ಕೈಲಾಗದ ಅಲ್ಪರು, ನೀನೇ ಕಾರಣಿಕನಾಗಿ ನಮ್ಮ ನಡುವೆ ಬಂದವನು. ಧರ್ಮದ ಕೊರವ ಯುಧಿಷ್ಠಿರನು ನಿನ್ನ ಮಾಯೆಗಳನ್ನು ಏನುಬಲ್ಲನು? ನಮ್ಮೊಳಗೆ ಹೋರಾಟವನ್ನು ತಂದಿಟ್ಟೆ. ಈ ಭೂಮಿಯ ಭಾರವನ್ನು ಇಳಿಸಲುವುದಕ್ಕಾಗಿ ರಣವ/ಯುದ್ಧದ ಬೆಂಕಿಯನ್ನು ಹೊತ್ತಿಸಿ ನಮ್ಮನ್ನು ಬೇಟೆಯಾಡಿಸಿದೆ,' ಎಂದ.
ಪಾಪ ನಿನಗೀ ಗೋತ್ರವಧೆಯ ವಿ
ಳಾಪ ನಿನ್ನನು ತಾಗಲೀ ಸ
ರ್ವಾಪರಾಧವು ನಿನ್ನದೀ ಕೌರವರ ಪಾಂಡವರ |
ಕೋಪವನು ಕೊನರಿಸುವ ನೃಪರನು
ತಾಪವನು ತೂಳುವ ಕುಬುದ್ಧಿ
ವ್ಯಾಪಕನು ನೀ ವೈರಿಯಲ್ಲದೆ ಭೀಮನಲ್ಲೆಂದ || ೪೦ ||
ಪದವಿಭಾಗ-ಅರ್ಥ: ಪಾಪ ನಿನಗ+ ಈ ಗೋತ್ರವಧೆಯ ವಿಳಾಪ ನಿನ್ನನು ತಾಗಲೀ, ಸರ್ವಾಪರಾಧವು ನಿನ್ನದು+ ಈ ಕೌರವರ ಪಾಂಡವರ ಕೋಪವನು ಕೊನರಿಸುವ ನೃಪರನು ತಾಪವನು ತೂಳುವ(ಹೊರಹೊಮ್ಮಿಸು, ಹರಡು) ಕುಬುದ್ಧಿ ವ್ಯಾಪಕನು ನೀ ವೈರಿಯಲ್ಲದೆ ಭೀಮನು+ ಅಲ್ಲ+ ಎಂದ
ಅರ್ಥ:ತೊಡೆ ಮುರಿದು ಬಿದ್ದ ಕೌರವನು ಸಿಟ್ಟಿನಿಂದ ಕೃಷ್ಣನಿಗೆ,'ಈ ಗೋತ್ರವಧೆಯ ಪಾಒವೂ, ವಿಲಾಪ- ದುಃಖ ನಿನ್ನನು ತಾಗಲೀ! ಸರ್ವಾಪರಾಧವು ನಿನ್ನದು. ಈ ಕೌರವರ ಪಾಂಡವರ ಕೋಪವನ್ನು ಕೊನರಿಸುವ, ನೃಪರನ್ನು ತಾಪವನ್ನೂ ಹೊರಹೊಮ್ಮಿಸಿ ಹರಡುವ ಕುಬುದ್ಧಿ ವ್ಯಾಪಕನು ನೀನು; ನೀನು ವೈರಿಯಲ್ಲದೆ ತನಗೆ ಭೀಮನು ವೈರಿ ಅಲ್ಲ.' ಎಂದ. (ದುಷ್ಟರು, ಮೊಸಗಾರರು, ತಮ್ಮ ಸ್ವಾರ್ಥ ಫಲಿಸದೆ ಇದ್ದಾಗ, ಅವರು ತಮ್ಮ ತಪ್ಪನ್ನು ಎಂದೂ ಒಪ್ಪಿಕೊಳ್ಲುವುದಿಲ್ಲ, ಬೇರೆಯವರ ಮೇಲೆ ಹಾಕುತ್ತಾರೆ; ಕೊನೆಗೆ ತಪ್ಪೆಲ್ಲವನ್ನೂ ಮಧ್ಯನಿಂತು ಸತ್ಯವನ್ನು ಹೇಳಿದವರ ಮೇಲೆ, ಸತ್ಯವನ್ನೂ ನ್ಯಾಯವನ್ನೂ ಎತ್ತಿಹಿಡಿದವರ ಮೇಲೆ ಹಾಕಿ ದೂಷಣೆ ಮಾಡುವರು ಎಂಬ ಲೋಕ ನೀತಿ ಇಲ್ಲಿ ಕಾಣುವುದು.)
ರಣಮುಖದೊಳೀ ಕ್ಷತ್ರಧರ್ಮದ
ಕುಣಿಕೆ ತಪ್ಪದೆ ವೇದಶಾಸ್ತ್ರದ
ಭಣಿತೆ ನೋಯದೆ ವೀರವೃತ್ತಿಯ ಪದದ ಪಾಡರಿದು |
ಸೆಣಸು ಸೋಂಕಿದ ಛಲದ ವಾಸಿಯೊ
ಳಣುವ ಹಿಂಗದೆ ಜೀವದಾಸೆಗೆ
ಮಣಿಯದಳಿದುದನೆಲ್ಲ ಬಲ್ಲರು ಕೃಷ್ಣ ಕೇಳೆಂದ || ೪೧ ||
ಪದವಿಭಾಗ-ಅರ್ಥ: ರಣಮುಖದೊಳು+ ಈ ಕ್ಷತ್ರಧರ್ಮದ ಕುಣಿಕೆ ತಪ್ಪದೆ, ವೇದಶಾಸ್ತ್ರದ ಭಣಿತೆ(ಮಾತು, ಉಕ್ತಿ) ನೋಯದೆ(ಮೀರದೆ) ವೀರವೃತ್ತಿಯ ಪದದ ಪಾಡ (ಪದದ ಪಾಡು= ಪದದಅರ್ಥವನ್ನು)+ ಅರಿದು ಸೆಣಸು ಸೋಂಕಿದ(ಹೋರಾಡುವ ಗುಣದ) ಛಲದ ವಾಸಿಯೊಳು (ಸ್ಥಿತಿಯಲ್ಲಿ)+ ಅಣುವ ಹಿಂಗದೆ(ಕಡಿಮೆಯಾಗದೆ) ಜೀವದಾಸೆಗೆ ಮಣಿಯದೆ+ ಅಳಿದುದನು(ಸತ್ತುದನ್ನು)+ ಎಲ್ಲ ಬಲ್ಲರು ಕೃಷ್ಣ ಕೇಳೆಂದ.
ಅರ್ಥ:ಕೃಷ್ಣಾ ಕೇಳು,'ಈ ಕೌರವನು ರಣರಂಗದಲ್ಲಿ ಯುದ್ಧಮಾಡುವಾಗ ಈನನ್ನ ಕ್ಷತ್ರಿಯಧರ್ಮದ ಕುಣಿಕೆಯನ್ನು- ಕಟ್ಟನ್ನು ತಪ್ಪದೆ ಪಾಲಿಸಿಕೊಂಡು ಬಂದವನು; ವೇದಶಾಸ್ತ್ರದ ಉಕ್ತಿಯನ್ನು ಮೀರದೆ ವೀರವೃತ್ತಿಯೆಂಬ ಪದದ ಅರ್ಥವನ್ನು ತಿಳಿದು ಹೋರಾಡುವ ಗುಣದ ಛಲದಲ್ಲಿ ಸ್ಥಿತಿಯಲ್ಲಿ ಅಣುವಷ್ಟು- ಲೇಶಮಾತ್ರವೂ ಕಡಿಮೆಯಾಗದೆ ಜೀವದಾಸೆಗಾಗಿ ಮಣಿಯದೆ- ಶರಣಾಗದೆ ಮರಣಹೊಂದಿದ್ದನ್ನು ಎಲ್ಲರೂ ಬಲ್ಲರು, ಕೇಳು,' ಎಂದ.
 • ಟಿಪ್ಪಣಿ:ಆದರೆ ಅರ್ಧ ರಾಜ್ಯದ ಬದಲು, ಕೌರವ ಇಡೀ-ರಾಜ್ಯದ ತನ್ನ ದುರಾಸೆಗಾಗಿ (ಐದು ಗ್ರಾಮಗಳನ್ನೂ ಪಾಂಡವರಿಗೆ ಕೊಡಲು ಒಪ್ಪದೆ) ಬಂಧು-ಬಾಂಧವರ ಕುಲನಾಶವನ್ನೂ ಮಾಡಿ, ಅನೇಕ ನಿರಪರಾದಿಗಳನ್ನೂ ಸಾವಿಗೆ ನೂಕಿ, ಸಾವಿರಾರು ಸಂಸಾರಗಳನ್ನು ಅನಾಥವನ್ನಾಗಿ ಮಾಡಿ, ಲಕ್ಷ ಲಕ್ಷ ಸತಿಯರನ್ನು ವಿಧವಾ ಸ್ಥಿತಿಗೆ ನೂಕಿದ್ದನ್ನು ಹೇಳುವುದಿಲ್ಲ; ಪಶ್ಚಾತಪಪಡುವುದಿಲ್ಲ. ಸತ್ಯಸಂಧರನ್ನು ನಿಂದಿಸಿ, ತನ್ನ ಪೌರುಷವನ್ನು ಮಾತ್ರಾ ಹೊಗಳಿಕೊಂಡು ಸಮರ್ಥನೆ ಮಾಡಿಕೊಳ್ಳತ್ತಾನೆ. ಅವನಿಗೆ ಪಾಂಡವರಿಗಿಂತ ಹೆಚ್ಚು ಜನ ಬೆಂಬಲಿಗರು. ಹನ್ನೊಂದು ಅಕ್ಷೋಹಿಣಿ ಸೇನೆ ಮತ್ತು ರಾಜರು; ಆದರೆ ಧರ್ಮಜನ ಕಡೆ ಕೇವಲ ಏಳು ಅಕ್ಷೋಹಿಣಿ ಸೇನೆ.. ಅದೂ ಸಾಲದೆ ನಕುಲಹದೇವರ ಸೋದರಮಾವ ಮಾದ್ರದೇಶದ ಶಲ್ಯನನ್ನು ಮೋಸದಿಂದ ವಚನಪಾಲನೆಗೆ- ಕಟ್ಟಿಹಾಕಿ ತನ್ನ ಕಡೆ ಸೇರಿಸಿಕೊಳ್ಳುತ್ತಾನೆ. ಸತ್ಯಸಂಧರನ್ನು ನಿಂದಿಸಿ, ತನ್ನ ಪೌರುಷವನ್ನು ಮಾತ್ರಾ ಹೊಗಳಿಕೊಂಡು ಸಮರ್ಥನೆ ಮಾಡಿಕೊಳ್ಳುವುದು- ಇದು ಇಂದಿಗೂ ಇರುವ ಮೋಸಗಾರರ ಮತ್ತು ದುಷ್ಟರ ನೀತಿ. ಮೋಸಗಾರರೂ ದುಷ್ಟರೂ ಸಹ ತಮ್ಮನ್ನು ಸಮರ್ಥನೆ ಮಾಡಿಕೊಳ್ಳಬಲ್ಲರು. ಜನರನ್ನು ಮರುಳುಮಾಡಬಲ್ಲರು, ಜನರ ಬೆಂಬಲವನ್ನೂ ಗಳಿಸಬಲ್ಲರು - ಇದು ಭಾರತಕಥೆ ಹೇಳುವ ಒಂದು ನೀತಿ ಮತ್ತು ದೃಷ್ಟಾಂತ.
ಮತ್ತೆ ಹೂವಿನ ಮಳೆಗಳಾತನ
ನೆತ್ತಿಯಲಿ ಸುರಿದವು ಮುರಾಂತಕ
ನತ್ತ ತಿರುಗಿದನವನಿಪತಿ ಕರತಳವ ತಳುಕಿಕ್ಕಿ |
ಮುತ್ತಿದರು ಮಾಗಧರು ವಂದಿಗ
ಳೆತ್ತಣದು ನಾನರಿಯೆನರಸ ವಿ
ಯತ್ತಳವನಳ್ಳಿರಿದುದಾ ಸ್ತುತಿಪಾಠಕರ ರಭಸ || ೪೨ ||
ಪದವಿಭಾಗ-ಅರ್ಥ: ಮತ್ತೆ ಹೂವಿನ ಮಳೆಗಳು+ ಅತನ ನೆತ್ತಿಯಲಿ ಸುರಿದವು ಮುರಾಂತಕನು+ ಅತ್ತ ತಿರುಗಿದನು+ ಅವನಿಪತಿ ಕರತಳವ ತಳುಕಿಕ್ಕಿ (ಕೈಕೈ ಹಿಡಿದು ) ಮುತ್ತಿದರು ಮಾಗಧರು ವಂದಿಗಳು+ ಎತ್ತಣದು ನಾನರಿಯೆನು+ ಅರಸ ವಿಯತ್ತಳವನು(ಆಕಾಶವನ್ನು)+ ಅಳ್ಳಿರಿದುದು+ ಆ ಸ್ತುತಿಪಾಠಕರ ರಭಸ.
ಅರ್ಥ:ಕೌರವನ ವೀರಾವೇಶದ ಮಾತಿಗೆ, ಆಕಾಶದಿಂದ ಮತ್ತೆ ಹೂವಿನ ಮಳೆಗಳು ಕೌರವನ ನೆತ್ತಿಯ ಮೇಲೆ ಸುರಿದವು. ಕೃಷ್ನನು ಬೇರೆಕಡೆ ತಿರುಗಿದನು. ಅವನಿಪತಿ ಧರ್ಮಜನು, ಉಳಿದವರು ಕೃಷ್ಣನ ಕೈಕೈ ಹಿಡಿದು ಅವನನ್ನು ಮುತ್ತಿದರು. ವಂದಿ-ಮಾಗಧರು ಹೊಗಳುಭಟರು ಹೋಗಳಿದರು. ಅವರ ಘೋಷಣೆ ಹೇಗಿತ್ತೆಂದು ನಾನು ಅರಿಯೆನು. ಅರಸ ಧೃತರಾಷ್ಟ್ರನೇ ಅದು- ಆ ಸ್ತುತಿಪಾಠಕರ ರಭಸ ಆಕಾಶವನ್ನೇ ಒಡೆಯುವಂತಿತ್ತು.

ಪಾಳಯಕ್ಕೆ ಪಾಂಚಾಲ ಸೃಂಜಯ ಧರಣಿಪರು- ಕೌರವೇಂದ್ರನ ಪಾಳೆಯಕೆ ಉಳಿದವರು[ಸಂಪಾದಿಸಿ]

ಗರುವ ಸುಭಟರು ಘಾಸಿಯಾದಿರಿ
ತುರಗ ಗಜ ಬಳಲಿದವು ಸೂರ್ಯನ
ತುರಗ ಬಿಡುತದೆ ಪಶ್ಚಿಮಾದ್ರಿಯ ತಡಿಯ ತಪ್ಪಲಲಿ |
ತ್ವರಿತದಲಿ ಪಾಂಚಾಲ ಸೃಂಜಯ
ಧರಣಿಪರು ನೀವ್ ಹೋಗಿ ನಿದ್ರೆಯೊ
ಳಿರುಳ ನೂಕುವುದೆಂದು ನುಡಿದನು ದೈತ್ಯರಿಪು ನಗುತ || ೪೩ ||
ಪದವಿಭಾಗ-ಅರ್ಥ: ಗರುವ (ಶ್ರೇಷ್ಠ) ಸುಭಟರು ಘಾಸಿಯಾದಿರಿ, ತುರಗ ಗಜ ಬಳಲಿದವು ಸೂರ್ಯನ ತುರಗ ಬಿಡುತದೆ ಪಶ್ಚಿಮಾದ್ರಿಯ ತಡಿಯ ತಪ್ಪಲಲಿ ತ್ವರಿತದಲಿ(ವೇಗವಾಗಿ;) ಪಾಂಚಾಲ ಸೃಂಜಯ ಧರಣಿಪರು ನೀವ್ ಹೋಗಿ ನಿದ್ರೆಯೊಳು+ ಇರುಳ ನೂಕುವುದೆಂದು ನುಡಿದನು ದೈತ್ಯರಿಪು ನಗುತ.
ಅರ್ಥ:ದೈತ್ಯರಿಪು ಕೃಷ್ನನು ನಗುತ್ತಾ,'(ಕೌರವನ ಸೋಲಿನೊಂದಿಗೆ ಶತ್ರಗಳ ನಾಶವಾಯಿತು; ಯುದ್ಧ ಮುಗಿಯಿತು.) ಶ್ರೇಷ್ಠರಾದ ವೀರರು ನೀವು, ಯುದ್ಧದಲ್ಲಿ ಬಹಳ ನೊಂದಿದ್ದೀರಿ, ಕುದುರೆ ಗಜಗಳೂ ಸಹ ಆಯಾಸ ಗೊಂಡಿವೆ. ಈಗ ಸೂರ್ಯನ ಕುದುರೆಗಳು ಪಶ್ಚಿಮ ಬೆಟ್ಟಗಳ ತಡಿಯ ತಪ್ಪಲಲ್ಲಿ ಕೆಳಗೆ ವೇಗವಾಗಿ ಹೋಗುತ್ತಿವೆ (ಸೂರ್ಯ ಮುಳುಗಿ ಕತ್ತಲಾಗುತ್ತಿದೆ). ಪಾಂಚಾಲರು, ಸೃಂಜಯರು, ಉಳಿದ ರಾಜರು, ನೀವು ಎಲ್ಲರೂ ಹೋಗಿ ಸುಖವಾಗಿ ನಿದ್ರೆಯಲ್ಲಿ ರಾತ್ರಿಯನ್ನ (ನಿಶ್ಚಿಂತೆಯಿಂದ) ಕಳೆಯಿರಿ, ಎಂದು ನುಡಿದನು.
ನಡೆಯಿ ಪಂಚದ್ರೌಪದೇಯರ
ಗಡಣ ಧೃಷ್ಟದ್ಯುಮ್ನ ನಿಳಯಕೆ
ನಡೆ ಯುಧಾಮನ್ಯೂತ್ತಮೌಂಜಸ ಕಲಿ ಶಿಖಂಡಿಗಳು |
ತಡೆಯಿದಿರಿ ಭಟರೇಳಿ ವಾದ್ಯದ
ಗಡೆಬಡಿಗರೀ ಸಕಲಜನ ನೀವ್
ಕಡು ಬಳಲಿದಿರಿ ಹೋಗಿ ಪಾಳೆಯಕೆಂದು ನೃಪ ನುಡಿದ || ೪೪ ||
ಪದವಿಭಾಗ-ಅರ್ಥ:ನಡೆಯಿ(ನಡೆಯಿರಿ) ಪಂಚದ್ರೌಪದೇಯರ ಗಡಣ(ಸಮೂಹ- ಎಲ್ಲರೂ) ಧೃಷ್ಟದ್ಯುಮ್ನ ನಿಳಯಕೆ ನಡೆ ಯುಧಾಮನ್ಯು+ ಉತ್ತಮೌಂಜಸ ಕಲಿ ಶಿಖಂಡಿಗಳು ತಡೆಯಿದಿರಿ ಭಟರೇಳಿ ವಾದ್ಯದ ಗಡೆಬಡಿಗರು+ ಈ ಸಕಲಜನ ನೀವು+ ಕಡು(ಬಹಳ) ಬಳಲಿದಿರಿ ಹೋಗಿ ಪಾಳೆಯಕೆಂದು ನೃಪ ನುಡಿದ.
ಅರ್ಥ:ನೃಪ ಧರ್ಮಜನೂ ಸಹ,'ದ್ರೌಪದಿಯ ಪಂಚ ಮಕ್ಕಳೇ ಎಲ್ಲರೂ ಧೃಷ್ಟದ್ಯುಮ್ನ ನಿಲಯಕ್ಕೆ ನಡೆಯಿರಿ,' ಎಂದ. ಯುಧಾಮನ್ಯು, ಉತ್ತಮೌಂಜಸ, ಶೂರರಾದ ಶಿಖಂಡಿಗಳು, ಎಲ್ಲರೂ ತಡೆಯಿದೆ ಕೂಡಲೆ ಹೋಗಿ,' ಎಂದ, ಸೇನೆಯ ಭಟರೇ ವಾದ್ಯದ ಗಡೆಬಡಿಗರೇ ಏಳಿ, ಈ ಸಕಲಜನರೂ ಏಳಿ, ನೀವು ಬಹಳ ಬಳಲಿದ್ದೀರಿ, ಪಾಳೆಯಕ್ಕೆ ಹೋಗಿ'ಎಂದು ಹೇಳಿದ.
ಬೀಳುಕೊಂಡುದು ಸಕಲಬಲ ಪಾಂ
ಚಾಲ ಪಂಚದ್ರೌಪದೇಯರು
ಪಾಳೆಯವ ಹೊಕ್ಕರು ಯುಧಿಷ್ಠಿರನೃಪನ ನೇಮದಲಿ |
ಏಳಿ ನಾವೀ ಕೌರವೇಂದ್ರನ
ಪಾಳೆಯವ ನೋಡುವೆವೆನುತ ವನ
ಮಾಲಿ ರಥವೇಽರಿದನಿವರು ತಂತಮ್ಮ ರಥವೇರೆ || ೪೫ ||
ಪದವಿಭಾಗ-ಅರ್ಥ:ಬೀಳುಕೊಂಡುದು ಸಕಲಬಲ(ಬಲ= ಸೇನೆ) ಪಾಂಚಾಲ ಪಂಚದ್ರೌಪದೇಯರು ಪಾಳೆಯವ ಹೊಕ್ಕರು ಯುಧಿಷ್ಠಿರನೃಪನ ನೇಮದಲಿ(ಆಜ್ನೆಯಂತೆ) ಏಳಿ ನಾವು+ ಈ ಕೌರವೇಂದ್ರನ ಪಾಳೆಯವ ನೋಡುವೆವು ಎನುತ ವನಮಾಲಿ ರಥವೇರಿದನು ಇವರು ತಂತಮ್ಮ ರಥವೇರೆ.
ಅರ್ಥ:ಹೀಗೆ ಎಲ್ಲರೂ ಪಾಂಡವರು ಕೃಷ್ಣ ಇವರನ್ನು ಬೀಳ್ಕೊಂಡು ಸಕಲಸೇನೆಯೂ ಪಾಂಚಾಲರು ಪಂಚದ್ರೌಪದೇಯರು ಯುಧಿಷ್ಠಿರನೃಪನ ಆಜ್ನೆಯಂತೆ ತಮ್ಮ ಪಾಳೆಯವ ಹೊಕ್ಕರು. ವನಮಾಲಿ ಕೃಷ್ಣನು,'ಏಳಿ ನಾವು ಈ ಬಿದ್ದಿರುವ ಕೌರವೇಂದ್ರನ ಪಾಳೆಯವನ್ನು ನೋಡೋಣ,' ಎನ್ನುತ್ತಾ, ರಥವನ್ನು ಏರಿದನು; ಉಳಿದವರು ತಂತಮ್ಮ ರಥವನ್ನು ಏರಿ ಹೊರಟರು.
ನರ ಯುಧಿಷ್ಠಿರ ಭೀಮ ಸಹದೇ
ವರು ನಕುಲ ಸಾತ್ಯಕಿಸಹಿತ ಮುರ
ಹರನು ಹೊಕ್ಕನು ಕೌರವೇಂದ್ರನ ಶೂನ್ಯ ಶಿಬಿರವನು |
ಅರಸ ಕರ್ಣ ದ್ರೋಣ ಮಾದ್ರೇ
ಶ್ವರನ ಭಗದತ್ತನ ನದೀಜಾ
ದ್ಯರ ನಿವಾಸಂಗಳನು ಕಂಡಳಲಿದನು ಯಮಸೂನು || ೪೬ ||
ಪದವಿಭಾಗ-ಅರ್ಥ: ನರ(ಅರ್ಜುನ), ಯುಧಿಷ್ಠಿರ, ಭೀಮ, ಸಹದೇವರು, ನಕುಲ ಸಾತ್ಯಕಿಸಹಿತ ಮುರಹರನು ಹೊಕ್ಕನು ಕೌರವೇಂದ್ರನ ಶೂನ್ಯ ಶಿಬಿರವನು. ಅರಸ ಕರ್ಣ ದ್ರೋಣ ಮಾದ್ರೇಶ್ವರನ ಭಗದತ್ತನ ನದೀಜಾದ್ಯರ ನಿವಾಸಂಗಳನು ಕಂಡು+ ಅಳಲಿದನು ಯಮಸೂನು
ಅರ್ಥ: ಅರ್ಜುನ, ಯುಧಿಷ್ಠಿರ, ಭೀಮ, ಸಹದೇವರು, ನಕುಲ, ಸಾತ್ಯಕಿಸಹಿತ ಮುರಹರ ಕೃಷ್ಣ ಇವರು ರಥದಲ್ಲಿ ಹೋಗುತ್ತಾ ಕೌರವೇಂದ್ರನ ಶೂನ್ಯ ಶಿಬಿರವನ್ನು ಹೊಕ್ಕನು. ಅರಸಕೌರವ, ಕರ್ಣ, ದ್ರೋಣ, ಮಾದ್ರೇಶ್ವರ ಶಲ್ಯನ, ಭಗದತ್ತನ, ನದೀಜ ಭೀಷ್ಮ ಮೊದಲಾದವರ ನಿವಾಸಗಳನ್ನು ನೋಡಿ ಯಾರೂ ಇಲ್ಲದಿರುವುದನ್ನು ಕಂಡು, ಯಮಸೂನು ಧರ್ಮಜನು ದುಃಖಿಸಿದನು.
ಸೂತನಿಳಿದನು ಮುನ್ನ ರಥವನು
ಭೂತಳಾಧಿಪನಿಳಿದನಶ್ವ
ವ್ರಾತವನು ಕಡಿಯಣದ ನೇಣಲಿ ತೆಗೆದು ಬಂಧಿಸಿದ |
ವಾತಜನ ಸಾತ್ಯಕಿಯ ಯಮಳರ
ಸೂತರಿಳಿದರು ಮುನ್ನ ತುರಗವ
ನಾತಗಳು ಸಂತೈಸಿದರು ಸಂಗರಪರಿಶ್ರಮವ || ೪೭ ||
ಪದವಿಭಾಗ-ಅರ್ಥ:ನಂತರ ರಥದಲ್ಲಿ ಹೋಗುತ್ತಾ ಸೂತನು(ಸೂತ = ಸಾರಥಿ) ಇಳಿದನು ಮುನ್ನ ರಥವನು ಭೂತಳಾಧಿಪನು ಇಳಿದನು+ ಅಶ್ವವ್ರಾತವನು (ಕುದುರೆಗಳನ್ನು) ಕಡಿಯಣದ ನೇಣಲಿ ತೆಗೆದು ಬಂಧಿಸಿದ ವಾತಜನ ಸಾತ್ಯಕಿಯ ಯಮಳರ ಸೂತರು+ ಇಳಿದರು ಮುನ್ನ (ಮೊದಲೇ) ತುರಗವನು ಆತಗಳು(ಅವರು) ಸಂತೈಸಿದರು ಸಂಗರ (ಯುದ್ಧ) ಪರಿಶ್ರಮವ (ಆಯಾಸ)
ಅರ್ಥ:ನಂತರ ಧರ್ಮಜನ ಸೂತನು ಮೊದಲು ರಥದಿಂದ ಇಳಿದನು ನಂತರ ಭೂತಳಾಧಿಪ ಧರ್ಮಜನು ರಥದಿಂದ ಇಳಿದನು. ಕುದುರೆಗಳ ಕಡಿವಾಣದ ನೇಣನ್ನು ತೆಗೆದು ಕಟ್ಟಿದನು. ವಾತಜ- ಭೀಮನ, ಸಾತ್ಯಕಿಯ, ಯಮಳರಾದ ನಕುಲಸಹದೇವರ ಸೂತರು ಮೊದಲೇ ರಥದಿಂದ ಇಳಿದರು. ಅವರು ಕುದುರೆಗಳ ಯುದ್ಧದ ಪರಿಶ್ರಮವನ್ನು ಸಂತೈಸಿದರು.

ಅಗ್ನಿ ಕೊಟ್ಟ ಅರ್ಜುನನ ದಿವ್ಯ ರಥ- ಅಗ್ನಿಗೆ ಆಹುತಿ[ಸಂಪಾದಿಸಿ]

ಇಳಿ ರಥವನೆಲೆ ಪಾರ್ಥ ಬಳಿಕಾ
ನಿಳಿವೆನೆಂದನು ಶೌರಿ ನೀವ್ ಮು
ನ್ನಿಳಿವುದೆಂದನು ಪಾರ್ಥನಾಯ್ತು ವಿವಾದವಿಬ್ಬರಿಗೆ ||
ಎಲೆ ಮರುಳೆ ನಾ ಮುನ್ನಿಳಿಯೆ ನೀ
ನುಳಿವೆಲಾ ಸಾಕಿನ್ನು ಗರ್ವದ
ಗಳಹತನವನು ಬಳಿಕ ತೋರುವೆ ರಥವನಿಳಿಯೆಂದ || ೪೮ ||
ಪದವಿಭಾಗ-ಅರ್ಥ:ಇಳಿ ರಥವನು+ ಎಲೆ ಪಾರ್ಥ ಬಳಿಕ+ ಆನು+ ಇಳಿವೆನು+ ಎಂದನು ಶೌರಿ(ಕೃಷ್ನ), ನೀವ್ ಮುನ್ನ+ ಇಳಿವುದು+ ಎಂದನು ಪಾರ್ಥನು+ ಆಯ್ತು ವಿವಾದವು+ ಇಬ್ಬರಿಗೆ, ಎಲೆ ಮರುಳೆ ನಾ ಮುನ್ನ+ ಇಳಿಯೆ ನೀನು+ ಉಳಿವೆಲಾ ಸಾಕು+ ಇನ್ನು ಗರ್ವದ ಗಳಹತನವನು(ವ್ಯರ್ಥಮಾತುಗಳನ್ನು) ಬಳಿಕ ತೋರುವೆ ರಥವನು+ ಇಳಿ+ ಯೆಂದ.
ಅರ್ಥ:ಕೊನೆಯಲ್ಲಿ ಕೃಷ್ನನು ಅರ್ಜುನನಿಗೆ, ಎಲೆ ಪಾರ್ಥ, ರಥದಿಂದ ಇಳಿ, ಬಳಿಕ ನಾನು ಇಳಿವೆನು ಎಂದನು. ಅದಕ್ಕೆ ಅರ್ಜುನನು ನೀವು ಮೊದಲು ಇಳಿಯುವುದು, ಸಾರಥಿ ಮೊದಲು ಇಳಿಯುವುದು ಸಂಪ್ರದಾಯ ಎಂದನು. ಹೀಗೆ ಇಬ್ಬರಿಗೆ ವಿವಾದವಾಯಿತು. ಕೊನೆಗೆ ಕೃಷ್ಣನು,'ಎಲೆ ಮರುಳೆ ನಾನು ಮೊದಲೇ ಇಳಿದರೆ, ನೀನು ಜೀವಸಹಿತ ಉಳಿಯುವೆಯಾ? ಇನ್ನು ಗರ್ವದ ವ್ಯರ್ಥಮಾತುಗಳನ್ನು ಸಾಕುಮಾಡು. ನೀನು ಇಳಿದ ಬಳಿಕ ತೋರಿಸುವೆನು. ಇಳಿ ರಥವನ್ನು,' ಎಂದನು.
ಬಳಿಕ ಫಲುಗುಣ ರಥದ ಮೇಳಿಂ
ದಿಳೆಗೆ ಹಾಯ್ದನು ಕೃಷ್ಣ ನೀನಿ
ನ್ನಿಳಿಯೆನಲು ಚಮ್ಮಟಿಗೆ ವಾಘೆಯ ನೇಣ ರಥದೊಳಗೆ |
ಇಳುಹಿ ನಗುತ ಮುಕುಂದ ರಥದಿಂ
ದಿಳಿಯೆ ಛಟಛಟಿಲೆಂದು ಕಿಡಿಯು
ಚ್ಚಳಿಸಲುರಿದುದು ತೇರು ಕೇಸುರಿ ನಭವನಪ್ಪಳಿಸೆ || ೪೯ ||
ಪದವಿಭಾಗ-ಅರ್ಥ: ಬಳಿಕ ಫಲುಗುಣ ರಥದ ಮೇಳಿಂದ+ ಇಳೆಗೆ ಹಾಯ್ದನು ಕೃಷ್ಣ ನೀನು+ ಇನ್ನು+ ಇಳಿಯೆನಲು, ಚಮ್ಮಟಿಗೆ ವಾಘೆಯ(ಕುದುರೆಯ ಹಗ್ಗ) ನೇಣ (ಕುಣಿಕೆ) ರಥದೊಳಗೆ ಇಳುಹಿ, ನಗುತ ಮುಕುಂದ ರಥದಿಂದ+ ಇಳಿಯೆ ಛಟಛಟಿಲೆಂದು ಕಿಡಿಯು+ ಉಚ್ಚಳಿಸಲು(ಜ್ವಾಲೆಯನ್ನು ಸೂಸಿ)+ ಉರಿದುದು ತೇರು ಕೇಸುರಿ(ಕೇಸು- ಕೆಂಪು, ಉರಿ- ಬೆಂಕಿ) ನಭವನು(ನಭ= ಆಕಾಶ)+ ಅಪ್ಪಳಿಸೆ
ಅರ್ಥ:ಕೃಷ್ಣನು ವತ್ತಾಯಿಸಿದ ಬಳಿಕ ಫಲ್ಗುಣನು ರಥದ ಮೇಲಿಂದ ನೆಲಕ್ಕೆ ಹಾರಿದನು. (ಸಾರಥಿ ಕೃಷ್ಣನು ಇದ್ದುರಿಂದ ಎದುರಿನಿಂದ ಇಳಿಯುವುದು ಆಗಲಿಲ್ಲ, ಹಿಂದಿನಿಂದ ಇಳಿಯುವುದು ಕ್ರಮವಲ್ಲ. ಪಕ್ಕದಿಂದ ಹಾರಬೇಕಾಯಿಯತು.) ನಂತರ ಅರ್ಜುನನು,'ಕೃಷ್ಣ ಇನ್ನು ನೀನು ಇಳಿ,' ಎನ್ನಲು,ಮುಕುಂದ ಕೃಷ್ನನು ಚಮ್ಮಟಿಗೆ/ಚಾವಟಿಯನ್ನೂ ಕಡಿವಾಣದ ವಾಘೆಯನ್ನೂ ನೇಣನ್ನೂ ರಥದೊಳಗೇ ಇಟ್ಟು, ನಗುತ್ತಾ ರಥದಿಂದ ಇಳಿಯಲು, ರಥವು ಛಟಛಟಿಲೆಂದು ಕಿಡಿಯನ್ನು ಕಾರುತ್ತಾ ಉಚ್ಚಳಿಸಿ ಬೆಂಕಿ ಹತ್ತಿ ಉರಿದುಹೋಯಿತು. ಈ ಕೆಂಪು ಜ್ವಾಲೆ ಆಕಾಶವನ್ನು ಅಪ್ಪಳಿಸಿತು.
ಧ್ವಜದ ಹಲಗೆಯನೊದೆದು ಹಾಯ್ದನು
ನಿಜನಿವಾಸಕೆ ಹನುಮ ಧೂಮ
ಧ್ವಜನಮಯವಾದುದು ರಥಾಶ್ವರಥಾಂಗ ರಾಜಿಯಲಿ |
ವಿಜಯ ಭೀಮಾದಿಗಳು ಕಂಡ
ಕ್ಕಜದೊಳಾಕಸ್ಮಿಕದ ಕಿಚ್ಚಿನ
ಗಜಬಜವಿದೇನೆನುತ ನೆರೆ ಬೆಚ್ಚಿದರು ಭೀತಿಯಲಿ || ೫೦ ||
ಪದವಿಭಾಗ-ಅರ್ಥ: ಧ್ವಜದ ಹಲಗೆಯನು+ ಒದೆದು ಹಾಯ್ದನು ನಿಜನಿವಾಸಕೆ ಹನುಮ, ಧೂಮ ಧ್ವಜನ-ಮಯವಾದುದು ರಥ+ ಅಶ್ವ+ ರಥಾಂಗ+ ರಾಜಿಯಲಿ (ದೂರದಲ್ಲಿ) ವಿಜಯ ಭೀಮಾದಿಗಳು ಕಂಡು+ ಅಕ್ಕಜದೊಳು(ಆಶ್ಚರ್ಯದಿಂದ)+ ಆಕಸ್ಮಿಕದ ಕಿಚ್ಚಿನ(ಬೆಂಕಿಯ) ಗಜಬಜವಿದೇನು+ ಎನುತ ನೆರೆ (ಬಹಳ) ಬೆಚ್ಚಿದರು ಭೀತಿಯಲಿ.
ಅರ್ಥ:ಧ್ವಜದ ಹಲಗೆಪೀಠದ ಮೇಲೆ ಕುಳಿತಿದ್ದ ಹನುಮನು ಹಲಗೆಯನ್ನು ಒದೆದು ತನ್ನ ನಿವಾಸಕ್ಕೆ ಹಾರಿಹೋದನು. ರಥ, ಕುದುರೆಗಳು, ರಥಾಂಗದ ವಸ್ತುಗಳು ಧ್ವಜವು ಉರಿದು ಧೂಮ/ಹೊಗೆಯು ಮಯವಾಯಿತು. ದೂರದಲ್ಲಿ ನಿಂತಿದ್ದ ವಿಜಯ/ಅರ್ಜುನ ಭೀಮಾದಿಗಳು ಇದನ್ನು ಕಂಡು, ಆಶ್ಚರ್ಯದಿಂದ ಆಕಸ್ಮಿಕದ ಕಿಚ್ಚಿನ ಗಜಬಜವು ಇದೇನು? (ಆಕಸ್ಮಿಕ ಬೆಂಕಿ) ಎನ್ನುತ್ತಾ ಭೀತಿಯಿಂದ ಬಹಳ ಬೆಚ್ಚಿಬಿದ್ದರು.
ಹರಿಯಿದೇನಾಕಸ್ಮಿಕದ ದ
ಳ್ಳುರಿಯೊಳದ್ದುದು ತೇರು ನಮಗೀ
ಯರಿಯ ಭಯ ಭಾರಿಸಿತಿದೇನು ನಿಮಿತ್ತವಿದಕೆನಲು |
ಉರಿವುದಂದೇ ತೇರು ಕರ್ಣನ
ಗುರು ನದೀನಂದನನ ದೈವಿಕ
ಶರಹತಿಯೊಳೆಮ್ಮಿಂದ ನಿಂದುದು ಪಾರ್ಥ ಕೇಳೆಂದ || ೫೧ ||
ಪದವಿಭಾಗ-ಅರ್ಥ: ಹರಿ+ ಯಿ+ ಇದೇನು+ ಆಕಸ್ಮಿಕದ ದಳ್ಳುರಿಯೊಳು+ ಅದ್ದುದು ತೇರು ನಮಗೆ+ ಈ ಯ+ ಅರಿಯ ಭಯ(ಶತ್ರುವಿನ ಬಯ; ಉರಿಯ? ಇರಬಹುದೇ?) ಭಾರಿಸಿತು(ಹೊಡೆಯಿತು)+ ಇದೇನು ನಿಮಿತ್ತವು+ ಇದಕೆ+ ಎನಲು ಉರಿವುದು (ಉರಿದುಹೋಗುತ್ತಿತ್ತು)+ ಅಂದೇ ತೇರು ಕರ್ಣನ, ಗುರು, ನದೀನಂದನನ, ದೈವಿಕ-ಶರಹತಿಯೊಳು (ಮಂತ್ರಾಸ್ತ್ರದಿಂದ),+ ಎಮ್ಮಿಂದ ನಿಂದುದು, ಪಾರ್ಥ ಕೇಳೆಂದ
ಅರ್ಥ:ರಥವು ಹತ್ತಿ ಉರಿದುದನ್ನು ನೋಡಿ ಪಾಂಡವು, 'ಹರಿ- ಕೃಷ್ಣಾ, ಇದೇನು ಆಕಸ್ಮಿಕದ ದಳ್ಳುರಿಯಲ್ಲಿ ರಥವು ಮುಳುಗಿತು. ನಮಗೆ ಬೆಂಕಿಯರೂಪದಲ್ಲಿ- ಶತ್ರುವಿನ ಭಯ ಹೊಡೆದು ಆವರಿಸಿತು. ಇದಕ್ಕೆ ಏನು ಕಾರಣ? - ಇದೇನು ನಿಮಿತ್ತವು?' ಎನ್ನಲು; ಕೃಷ್ಣನು,'ಪಾರ್ಥ, ನದೀನಂದನ ಭೀಷ್ಮನ, ಗುರುದ್ರೋಣನ, ಕರ್ಣನ ಮಂತ್ರಾಸ್ತ್ರಗಳಿಂದ ರಥವು ಅಂದೇ ಉರಿದುಹೋಗುತ್ತಿತ್ತು, ಅದರೆ ನಮ್ಮಿಂದ ಅದು ಸುಡುವುದು ನಿಂತಿತು, ಕೇಳು,' ಎಂದ.
ನಾವಿಳಿದ ಬಳಿಕೀ ರಥದೊಳಿರ
ಲಾವ ಹದನೋ ನಿನಗೆ ಕಂಡೈ
ದೈವಿಕಾಸ್ತ್ರದ ಮಹಿಮೆಗಳನೆನೆ ಪಾರ್ಥ ತಲೆವಾಗಿ |
ನೀವು ಬಲ್ಲಿರಿ ದೇವ ನೀ ಮಾ
ಯಾವಿ ಮಾಯಾಪಾಶಬದ್ಧರು
ನಾವು ಬಲ್ಲೆವೆ ನಿಮ್ಮನೆಂದೆರಗಿದನು ಚರಣದಲಿ || ೫೨ ||
ಪದವಿಭಾಗ-ಅರ್ಥ: ನಾವು+ ಇಳಿದ ಬಳಿಕ+ ಈ ರಥದೊಳು+ ಇರಲು(ಇದ್ದರೆ)+ ಆವ ಹದನೋ(ಕಾರಣ - ವಿಚಾರ) ನಿನಗೆ ಕಂಡೈ ದೈವಿಕಾಸ್ತ್ರದ ಮಹಿಮೆಗಳನು,+ ಎನೆ (ಎನ್ನಲು) ಪಾರ್ಥ ತಲೆವಾಗಿ ನೀವು ಬಲ್ಲಿರಿ ದೇವ ನೀ ಮಾಯಾವಿ ಮಾಯಾಪಾಶ-ಬದ್ಧರು ನಾವು ಬಲ್ಲೆವೆ ನಿಮ್ಮನು+ ಎಂದು+ ಎರಗಿದನು ಚರಣದಲಿ.
ಅರ್ಥ:ಕೃಷ್ನನು ಅರ್ಜುನನಿಗೆ,'ನಾವು ಇಳಿದ ಬಳಿಕ ಈ ರಥದಲ್ಲಿ ನೀನು ಇದ್ದರೆ ಯಾವ ಪರಿಣಾಮವು ನಿನಗೆ ಆಗುತ್ತಿತ್ತು ಎಂಬುದನ್ನು ಕಂಡೆಯಾ! ದೈವಿಕಾಸ್ತ್ರದ ಮಹಿಮೆಗಳನ್ನು ತಿಳಿದೆಯಾ?' ಎನ್ನಲು, ಪಾರ್ಥನು ಕೃಷ್ನನಿಗೆ ತಲೆಬಾಗಿ,'ದೈವಿಕಾಸ್ತ್ರದ ರಹಸ್ಯವನ್ನು ನೀವು ಬಲ್ಲಿರಿ ದೇವ, ನೀನು ಮಾಯಾವಿ! ನಾವು ಮಾಯಾಪಾಶ-ಬದ್ಧರು, ನಿಮ್ಮನ್ನು ನಾವು ತಿಳಿಯಬಲ್ಲೆವೆ,' ಎಂದು ಪಾರ್ಥನು ಕೃಷ್ಣನ ಪಾದಕ್ಕೆ ಎರಗಿದನು.

ಕೃಪ ಗುರುತನುಜ ಕೃತವರ್ಮಕರು ಕಂಡರು ಕುರುಪತಿಯ[ಸಂಪಾದಿಸಿ]

ಧರಣಿಪತಿ ಕೇಳೀಚೆಯಲಿ ಕೃಪ
ಗುರುತನುಜ ಕೃತವರ್ಮಕರು ನ
ಮ್ಮರಸನೇನಾದನೊ ವಿರೋಧಿಯ ದಳದ ವೇಢೆಯಲಿ |
ತರಣಿ ತಿಮಿರಕೆ ತೆರಹುಗೊಟ್ಟನು
ಭರತಖಂಡವನಿನ್ನು ರಾಯನ
ಪರಿಗತಿಯನಾರೈವೆವೆನುತೇರಿದರು ನಿಜರಥವ || ೫೩ ||
ಪದವಿಭಾಗ-ಅರ್ಥ: ಧರಣಿಪತಿ ಕೇಳು+ ಈಚೆಯಲಿ ಕೃಪ, ಗುರುತನುಜ, ಕೃತವರ್ಮಕರು ನಮ್ಮರಸನು+ ಏನಾದನೊ ವಿರೋಧಿಯ ದಳದ ವೇಢೆಯಲಿ (ವೇಡೆ= ಆಕ್ರಮಣ) ತರಣಿ ತಿಮಿರಕೆ (ಸೂರ್ಯನು ಕತ್ತಲೆಗೆ)ತೆರಹುಗೊಟ್ಟನು ಭರತಖಂಡವನು+ ಇನ್ನು ರಾಯನ ಪರಿಗತಿಯನು+ ಆರೈವೆವು+ ಎನುತ+ ಎರಿದರು ನಿಜರಥವ
ಅರ್ಥ:ಧರಣಿಪತಿ ಧೃತರಾಷ್ಟ್ರನೇ ಕೇಳು, ಈಚೆ- ಈ ಕಡೆ ಕೃಪ, ಗುರುತನುಜ ಆಶ್ವತ್ಥಾಮ, ಕೃತವರ್ಮಕರು ನಮ್ಮ ಅರಸನು ವಿರೋಧಿಯವರ ದಳದ ಆಕ್ರಮಣದಲ್ಲಿ ಏನಾದನೊ, ಎಂದು ಚಿಂತಿಸಿ, ಸೂರ್ಯನು ಭರತಖಂಡಕ್ಕೆ ಕತ್ತಲೆ ಆವರಿಸಲು ಅವಕಾಶ ಕೊಟ್ಟನು, ಸೂರ್ಯ ಮುಳುಗಿ ಕತ್ತಲಾಯಿತು. ಇನ್ನು ಕೌರವರಾಯನ ಮುಂದಿನ ಪರಿಸ್ಥಿತಿಯನ್ನು ನೋಡಿಕೊಳ್ಳವೆವು ಎಂದು ತಮ್ಮ ರಥವನ್ನು ಹತ್ತಿದರು.
ಭರದಲಿವರು ನೃಪಾಲನಡಗಿದ
ಸರಸಿಗೈತಂದಿಳಿದು ತಡಿಯಲಿ
ತುರಗವನು ಬಿಡಿಸಿದರು ಸಾರಥಿ ಹೊಗಿಸಿದನು ಕೊಳನ |
ತ್ವರಿತದಲಿ ಶೌಚಾಚಮನ ವಿ
ಸ್ತಾರಣ ಸಂಧ್ಯಾವಂದನಾದಿಯ
ವಿರಚಿಸಿದರರಸಿದರು ಕೊಳನಲಿ ಕೌರವೇಶ್ವರನ || ೫೪ ||
ಪದವಿಭಾಗ-ಅರ್ಥ:ಭರದಲಿ+ ಇವರು ನೃಪಾಲನು+ ಅಡಗಿದ ಸರಸಿಗೆ+ ಐತಂದು+ ಇಳಿದು ತಡಿಯಲಿ ತುರಗವನು ಬಿಡಿಸಿದರು ಸಾರಥಿ ಹೊಗಿಸಿದನು ಕೊಳನ, ತ್ವರಿತದಲಿ ಶೌಚಾಚಮನ ವಿಸ್ತಾರಣ ಸಂಧ್ಯಾವಂದನೆ+ ಆದಿಯ ವಿರಚಿಸಿದರು+ ಅರಸಿದರು ಕೊಳನಲಿ ಕೌರವೇಶ್ವರನ.
ಅರ್ಥ:ಕೃಪ, ಗುರುತನುಜ ಆಶ್ವತ್ಥಾಮ, ಕೃತವರ್ಮಕ, ಇವರು ನೃಪಾಲಕೌರವನು ಅಡಗಿದ ಸರಸ್ಸಿಗೆ ಬಂದು ರಥದಿಂದ ಇಳಿದು ತಡಿಯಲ್ಲಿ/ದಡದಲ್ಲಿ ಕುದುರೆಗಳನ್ನು ಬಿಡಿಸಿದರು. ಸಾರಥಿಯು ಅವುಗಳನ್ನು ಕೊಳದಲ್ಲಿ ಹೊಗಿಸಿ ಮೈತೊಳೆದನು. ಇವರು ಅವಸರದಲ್ಲಿ ಶೌಚಾಚಮನ ವಿಸ್ತಾರಗಳನ್ನು ಸಂಧ್ಯಾವಂದನೆ ಮೊದಲಾದವುಗಳನ್ನು ಆಚರಿಸಿದರು. ನಂತರ ಕೌರವೇಶ್ವರನನ್ನು ಕೊಳದಲ್ಲಿ ಹುಡುಕಿದರು.
ಬಳಸಿ ಜಂಬುಕ ಘೂಕ ಕಾಕಾ
ವಳಿಗಳೆದ್ದವು ಮೇಲುವಾಯ್ದ
ವ್ವಳಿಸಲಮ್ಮದೆ ಗಾಢತರ ಗರ್ಜನೆಗೆ ಕುರುಪತಿಯ |
ಕರಳಕಳವಿದೆತ್ತಣದೆನುತ ಕಳ
ವಳಿಸಿ ಬಂದು ಮಹಾರಥರು ನೃಪ
ತಿಲಕನಿರವನು ಕಂಡು ಧೊಪ್ಪನೆ ಕೆರಡದರವನಿಯಲಿ || ೫೫ ||
ಪದವಿಭಾಗ-ಅರ್ಥ: ಬಳಸಿ ಜಂಬುಕ (ನರಿ), ಘೂಕ(ಗೂಬೆ), ಕಾಕಾವಳಿಗಳು+ ಎದ್ದವು ಮೇಲುವಾಯ್ದು+ ಅವ್ವಳಿಸುಲು+ ಅಮ್ಮದೆ (ಆಗದೆ) ಗಾಢತರ ಗರ್ಜನೆಗೆ ಕುರುಪತಿಯ ಕರಳಕಳವು(ಕರ್ಕಶ ಧ್ವನಿಗಳು)+ ಇದೆತ್ತಣದು+ ಎನುತ ಕಳವಳಿಸಿ ಬಂದು ಮಹಾರಥರು ನೃಪತಿಲಕನ+ ಇರವನು(ಸ್ಥಿತಿ) ಕಂಡು ಧೊಪ್ಪನೆ ಕೆರಡದರು+ ಅವನಿಯಲಿ(ಭೂಮಿಯಲ್ಲಿ ಬಿದ್ದರು).
ಅರ್ಥ:ಕುರುಪತಿ ಕೌರವನ ದೊಡ್ಡ ಗರ್ಜನೆಯ ಸದ್ದಿಗೆ ಅವನನ್ನು ಬಳಸಿ -ಸುತ್ತುವರಿದ ನರಿ, ಗೂಬೆ, ಕಾಗೆಗಳ ಗುಂಪು ಮೇಲೆಹಾರಲಾಗದೆ ಕೂಗಿದಾಗ ಈ ಕರ್ಕಶ ಧ್ವನಿಗಳು ಇದೆಲ್ಲಿಯದು ಎಂದು ಮಹಾರಥರು ಕಳವಳದಿಂದ ಬಂದು ನೃಪತಿಲಕ ಕೌರವನ ಸ್ಥಿತಿಯನ್ನು ಕೃಪಾದಿಗಳು ಕಂಡು ಧೊಪ್ಪನೆ ಭೂಮಿಯಲ್ಲಿ ಬಿದ್ದರು.
ಉಡಿದ ತೊಡೆಗಳ ಮಗ್ಗುಲಲಿ ಹೊನ
ಲಿಡುವ ರಕುತದ ಭೀಮಸೇನನ
ಮಡದ ಹೊಯ್ಲಲಿ ಕೆಲಕೆ ಸೂಸಿದ ಮಕುಟಮಣಿಮಯದ ||
ಕೆಡೆದು ಮೈವೇದನೆಗೆ ನರಳುವ
ನಿಡುಸರದ ಖಗ ಜಂಬುಕೌಘವ
ನಿಡುವ ಕೈಗಲ್ಲುಗಳ ನೃಪತಿಯ ಕಂಡರಿವರಂದು || ೫೬ ||
ಪದವಿಭಾಗ-ಅರ್ಥ: ಉಡಿದ ತೊಡೆಗಳ ಮಗ್ಗುಲಲಿ ಹೊನಲಿಡುವ ರಕುತದ ಭೀಮಸೇನನ ಮಡದ ಹೊಯ್ಲಲಿ ಕೆಲಕೆ ಸೂಸಿದ ಮಕುಟಮಣಿಮಯದ ಕೆಡೆದು ಮೈವೇದನೆಗೆ ನರಳುವ ನಿಡುಸರದ ಖಗ ಜಂಬುಕೌಘವನು+ ಇಡುವ ಕೈಗಲ್ಲುಗಳ ನೃಪತಿಯ ಕಂಡರು+ ಅವರು+ ಅಂದು.
ಅರ್ಥ:ಕೃಪನೇ ಮೊದಲಾದವರು, ಮುರಿದ ತೊಡೆಗಳ ಮಗ್ಗುಲಲ್ಲಿ ಹರಿಯುವ ರಕ್ತದ, ಮತ್ತು ಭೀಮಸೇನನ ಪಾದದ ಹೊಡೆತಕ್ಕೆ ಅತ್ತಿತ್ತ ಹಾರಿದ ಕಿರೀಟದ ಮಣಿಮಯದ ನೆಲವನ್ನೂ ಕೆಡೆದು ಬಿದ್ದು ಮೈಯ ವೇದನೆಗೆ ನರಳುವ ನಿಡಿದಾದ ಸ್ವರದಲ್ಲಿ ನರಳುವ ಮತ್ತು ಕಾಗೆ ಮೊದಲಾದ ಹಕ್ಕಿಗಳ ನರಿಗಳ ಗುಂಪನ್ನೂ, ಕೈಗಲ್ಲುಗಳಿಂದ ಹೊಡೆಯುವ ನೃಪತಿಯನ್ನು ಅಂದು ಕಂಡರು.
ಒರಲಿದರು ಧರೆ ಬಿರಿಯೆ ಹುಡಿಯಲಿ
ಹೊರಳಿದರು ಬಾಯ್ಗಳನು ಹೊಯ್ ಹೊ
ಯ್ದರಿಚಿ ಕೆಡೆದರು ಕುಂದಿದರು ಕಾತರಿಸಿ ಕಳವಳಿಸಿ ||
ಮರುಗಿದರು ಮನಗುಂದಿದರು ಮೈ
ಮರೆದರದ್ದರು ಶೋಕಜಲಧಿಯೊ
ಳರಲುಗೊಂಡರು ತಳ್ಳಬಾರಿದರವರು ನಿಮಿಷದಲಿ || ೫೭ ||
ಪದವಿಭಾಗ-ಅರ್ಥ: ಒರಲಿದರು(ಗೋಳಿಟ್ಟರು) ಧರೆ ಬಿರಿಯೆ, ಹುಡಿಯಲಿ ಹೊರಳಿದರು, ಬಾಯ್ಗಳನು ಹೊಯ್ ಹೊಯ್ದು+ ಅರಿಚಿ ಕೆಡೆದರು(ಬಿದ್ದರು), ಕುಂದಿದರು (ಬಾಡಿದು) ಕಾತರಿಸಿ ಕಳವಳಿಸಿ ಮರುಗಿದರು, ಮನಗುಂದಿದರು, ಮೈಮರೆದರು(ಎಚ್ಚತಪ್ಪಿದರು)+ ಅದ್ದರು(ಮುಳುಗಿದರು) ಶೋಕಜಲಧಿಯೊಳು+ ಅರಲುಗೊಂಡರು ತಳ್ಳಬಾರಿದರು (ಬಾಡಿಹೋದರು?)+ ಅವರು ನಿಮಿಷದಲಿ
ಅರ್ಥ: ಕೌರವನ ಸ್ಥತಿ ನೋಡಿ ಕೃಪಾದಿಗಳು, ಭೀಮಿ ಬಿರಿಯುವಂತೆ ಒರಲಿದರು; ಮಣ್ಣಿನ ಹುಡಿಯಲ್ಲಿ ಹೊರಳಿದರು; ಬಾಯ್ಗಳನ್ನು ಹೊಯ್ ಹೊಯ್ದು/ ಬಡಿದುಕೊಂಡು ಅರಿಚಿ ಬಿದ್ದರು, ಕುಂದಿದರು, ಕಾತರದಿಂದ ಕಳವಳಪಟ್ಟು ಮರುಗಿದರು; ಅವರ ಮನಸ್ಸು ಕುಂದಿಹೋಯಿತು, ಮೈಮರೆದರು, ಶೋಕಸಾಗರದಲ್ಲಿ ಮುಳುಗಿದರು. ಅವರು ಅವನನ್ನು ನೋಇದ ನಿಮಿಷದಲ್ಲಿ ಹುಚ್ಚರಂತಾದು ತಳ್ಳಬಾರಿದರು.
ಹದುಳಿಸಿರೆ ಸಾಕೇಳಿ ಸಾಕಿ
ನ್ನಿದರಲಿನ್ನೇನಹುದು ದೈವದ
ಕದಡು ಮನಗಾಣಿಸಿತು ನಮಗೀ ಕಂಟಕವ್ಯಥೆಯ |
ಉದಯದಲಿ ನಾವೀ ಶರೀರವ
ನೊದೆದು ಹಾಯ್ವೆವು ನೀವು ನಿಜಮಾ
ರ್ಗದಲಿ ಬಿಜಯಂಗೈವುದೆಂದನು ನಗುತ ಕುರುರಾಯ || ೫೮ ||
ಪದವಿಭಾಗ-ಅರ್ಥ: ಹದುಳಿಸಿರೆ (ಸಮಾಧಾನಗೊಳ್ಳಿರೇ- ಸಮಾಧಾನಗೊಳ್ಳಿರಿ) ಸಾಕು+ ಏಳಿ ಸಾಕು ಇನ್ನು+ ಇದರಲಿ+ ಇನ್ನೇನು+ ಅಹುದು ದೈವದ ಕದಡು ಮನಗಾಣಿಸಿತು(ತೋರಿಕೊಂಡಿತು); ನಮಗೀ ಕಂಟಕವ್ಯಥೆಯ ಉದಯದಲಿ ನಾವು+ ಈ ಶರೀರವನು+ ಒದೆದು ಹಾಯ್ವೆವು(ಹೋಗುವೆವು) ನೀವು ನಿಜಮಾರ್ಗದಲಿ(ನಿಜ= ನಿಮ್ಮ) ಬಿಜಯಂಗೈವುದು (ಹೋಗಬುಹುದು)+ ಎಂದನು ನಗುತ ಕುರುರಾಯ
 • ಹದುಳಿಸು: ಸಮಾಧಾನಗೊಳಿಸು,ಸಾಂತ್ವನಗೊಳಿಸು,ಸಂತೈಸು,ದುಃಖಶಮನ ಮಾಡು,ಸಾಂತ್ವನ ಹೇಳು
ಅರ್ಥ:ಕೌರವನು ಪ್ರೀತಿಯಿಂದ ಮಿತ್ರರೇ ಸಮಾಧಾನಗೊಳ್ಳಿರಿ, ದುಃಖಪಟ್ಟಿದ್ದು ಸಾಕು ಏಳಿ; ಇಲ್ಲಗೆ ಮುಗಿಯಿತು ಸಾಕು, ಇನ್ನು ಇದರಲ್ಲಿ- ಈ ಸ್ಥಿತಿಯಲ್ಲಿ ಇನ್ನೇನು ಆಗುವುಹುದು? ದೈವ ಕೆಟ್ಟಫಲವನ್ನು ನಮಗೆ ತೋರಿಸಿತು,' ಎಂದನು. ಕುರುರಾಯನು ನಗುತ್ತಾ,'ಈ ದೈವಕಂಟಕದ ವ್ಯಥೆಯು ಹುಟ್ಟಿದಮೇಲೆ ನಾವು(ನಾನು) ಇರಲಾರೆವು. ಈ ಶರೀರವನ್ನು ಒದೆದು- ಬಿಟ್ಟುಹಾಕಿ ಮೇಲೆ ಹೋಗುವೆವು. ನೀವು ನಿಮ್ಮ ದಾರಿಯಲ್ಲಿ ಬಿಜಯಗೈವುದು,' ಎಂದನು.

ಪಾಂಡವರ-ತಲೆಗಳನು ತಹೆನು ಎಂದನು ಅಶ್ವತ್ಥಾಮ[ಸಂಪಾದಿಸಿ]

ಶೋಕವಡಗಿದುದವರಿಗಂತ
ರ್ವ್ಯಾಕುಳತೆ ಬೀಳ್ಕೊಂಡುದಹುದಿ
ನ್ನೇಕೆ ಸಂವೇಶಾನುಭೂತಾನುಭವ ದುರ್ವ್ಯಸನ |
ಸಾಕದಂತಿರಲಿನ್ನು ಬಿಡು ನೀ
ಸಾಕಿತಕೆ ಫಲವೆನಿಸಿ ರಜನಿಯೊ
ಳಾ ಕುಠಾರರ ತಲೆಗಳನು ತಹೆನೆಂದನಾ ದ್ರೌಣಿ || ೫೯ ||
ಪದವಿಭಾಗ-ಅರ್ಥ: ಶೋಕವು+ ಅಡಗಿದುದು+ ಅವರಿಗೆ+ ಅಂತರ್+ ವ್ಯಾಕುಳತೆ ಬೀಳ್ಕೊಂಡುದು+ ಅಹುದು+ ಇನ್ನೇಕೆ ಸಂವೇಶ+ ಅನುಭೂತಾ+ ಅನುಭವ ದುರ್ವ್ಯಸನ, ಸಾಕು+ ಅದಂತಿರಲಿ+ ಇನ್ನು ಬಿಡು ನೀ ಸಾಕಿತಕೆ (ಸಾಕಿದ್ದಕ್ಕೆ) ಫಲವು+ ಎನಿಸಿ ರಜನಿಯೊಳು(ರಜನಿ = ಕತ್ತಲೆ, ರಾತ್ರಿ)+ ಆ ಕುಠಾರರ ತಲೆಗಳನು ತಹೆನೆಂದನು+ ಆ ದ್ರೌಣಿ.
ಅರ್ಥ: ಅವರು ಕೌರವನ ಮಾತಿಗೆ ಸ್ವಾಂತನಗೊಂಡರು. ಅವರ ಶೋಕವು ಅಡಗಿತು. ಅವರಿಗೆ ಮನದೊಳಗಿನ ವ್ಯಾಕುಲತೆಯೂ ಹೋಯಿತು. ಅವರು ಕೌರವನಿಗೆ,'ಅಹುದು, ಇನ್ನೇಕೆ ಆವೇಶದ ಅನುಭೂತಿಯ ಸಂಕಟದ ಅನುಭವ ದುರ್ವ್ಯಸನ. ಸಾಕು. ಅದು ಹಾಗಿರಲಿ, ಇನ್ನು ಬಿಡು, ಮಾತು ಸಾಕು. ನೀನು ಸಾಕಿದ್ದಕ್ಕೆ ಫಲವಾಗಿ ಈ ರಾತ್ರಿಯಲ್ಲಿ ಆ ಕ್ರೂರ ಪಾಂಡವರ ತಲೆಗಳನ್ನು ತರವೆನು, ಎಂದನುಆ ದ್ರೌಣಿ- ಅಶ್ವತ್ಥಾಮ.
ಅಕಟ ಮರುಳೇ ಗುರುಸುತನ ಮತಿ
ವಿಕಳತನವನು ಕೃಪನು ಕೃತವ
ರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ
ಬಕನ ಧರ್ಮಸ್ಥಿತಿಯವೊಲು ದೇ
ವಕಿಯ ಮಗ ಕಾದಿಹನಲೇ ಕೌ
ಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದೆಂದ ೬೦
ಪದವಿಭಾಗ-ಅರ್ಥ: ಅಕಟ ಮರುಳೇ ಗುರುಸುತನ ಮತಿವಿಕಳತನವನು(ಹುಚ್ಚುತನವನ್ನು) ಕೃಪನು ಕೃತವರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ ಬಕನ ಧರ್ಮಸ್ಥಿತಿಯವೊಲು(ಬಕಪಕ್ಷಿಯಂತೆಧ; ಧರ್ಮಸ್ಥಿತಿ= ಸ್ವಭಾವ) ದೇವಕಿಯ ಮಗ ಕಾದಿಹನಲೇ ಕೌಳಿಕದ ಸಿದ್ಧನ(ಕೌಳಿಕದ ಸಿದ್ಧ= ಮಾಯಾವಿ ಕೃಷ್ಣ- ಸಿದ್ಧಪುರುಷ; ವಂಚಕ ವಿಧಿ) ಕೃತಿಯನು+ ಆರಿಗೆ (ಯಾರಿಗೆ) ಮೀರಬಹುದೆಂದ.
 • ಕೌಳಿಕ=(<ಸಂ. ಕೌಟಿಕ) ೧ ಕಟುಕ, ಕಸಾಯಿಗಾರ ೨ ಮೋಸ, ವಂಚನೆ ೩ ಮೋಸಗಾರ, ವಂಚಕ ೪ ಜನರ ಆಡಿಕೆ, ಬೀದಿಮಾತು
ಅರ್ಥ:ಕೌರವನು ಕೃಪಾದಿಗಳನ್ನು ಕುರಿತು,'ಅಕಟ ಮರುಳೇ ಗುರುಸುತ ಅಶ್ವತ್ಥಾಮನ ಹುಚ್ಚುತನವನ್ನು, ಕೃಪನು ಕೃತವರ್ಮಕರು ಕಂಡಿರೇ? ನೋಡಿದಿರಾ? ಪಾಂಡವರ ತಲೆ ಇವನಿಗೆ ಗೋಚರವಾಗುವುದೇ? ಸಿಗುವುದೇ? ಬಕಪಕ್ಷಿಯಂತೆ ದೇವಕಿಯ ಮಗ ಕಾದಿರುವನಲ್ಲಾ! ಆ ಕೌಳಿಕದ ಸಿದ್ಧನಾದ ಮಾಯಾವಿ ಕೃಷ್ಣನ ಕಟ್ಟಳೆಯನ್ನು ಯಾರಿಗೆ ಮೀರಲು ಸಾಧ್ಯವಾಗಬಹುದು,' ಎಂದ.
ಹರಿಹರಬ್ರಹ್ಮಾದಿದೇವರು
ವೆರಸಿ ಕಾಯಲಿ ರಾತ್ರಿಯಲಿ ರಿಪು
ಶಿರವ ತಹೆನಿದಕೇಕೆ ಸಂಶಯವೆನ್ನ ಕಳುಹುವುದು |
ಇರಲಿ ಕೃಪಕೃತವರ್ಮಕರು ಹ
ತ್ತಿರೆ ರಣಾಧ್ಯಕ್ಷದಲಿ ಭಾಷಾ
ಚರಣ ಪೈಸರಿಸಿದಡೆ ದ್ರೋಣನ ತನಯನಲ್ಲೆಂದ || ೬೧||
ಪದವಿಭಾಗ-ಅರ್ಥ:ಹರಿಹರಬ್ರಹ್ಮಾದಿದೇವರು+ ವೆರಸಿ(ಸೇರಿ) ಕಾಯಲಿ ರಾತ್ರಿಯಲಿ ರಿಪುಶಿರವ ತಹೆನು+ ಇದಕೆ+ ಏಕೆ ಸಂಶಯವು+ ಎನ್ನ ಕಳುಹುವುದು; ಇರಲಿ ಕೃಪ- ಕೃತವರ್ಮಕರು ಹತ್ತಿರೆ, ರಣ+ ಅಧ್ಯಕ್ಷದಲಿ(ಯುದ್ಧದ ಅಧ್ಯಕ್ಷತೆಯಲ್ಲಿ - ಸೇನಾಧಿಪತ್ಯದಲ್ಲಿ) ಭಾಷಾಚರಣ ಪೈಸರಿಸಿದಡೆ(ಪೈಸರಿಸು= ಹಿಮ್ಮೆಟ್ಟು, ಹಿಂಜರಿ) ದ್ರೋಣನ ತನಯನಲ್ಲ+ ಎಂದ.
ಅರ್ಥ:ಅದಕ್ಕೆ ಅಶ್ವತ್ಥಾಮನು ಹರಿಹರಬ್ರಹ್ಮಾದಿದೇವರುಗಳು ಸೇರಿಕೊಂಡು ಪಾಂಡವರನ್ನು ಕಾಯಲಿ. ಈ ರಾತ್ರಿಯಲ್ಲಿ ಪಾಂಡವ ರಿಪುಶಿರಗಳನ್ನು ತರುವೆನು. ಇದಕ್ಕೆ ಸಂಶಯವು ಏಕೆ? ಕೌರವಾ ನೀನು ಆಜ್ಞೆ ಮಾಡಿ ನನ್ನನ್ಉ ಕಳುಹಿಸು; ಕೃಪ- ಕೃತವರ್ಮಕರು ಹತ್ತಿರವೇ ಇರಲಿ. ನನ್ನ ಸೇನಾಧಿಪತ್ಯದಲ್ಲಿ ಭಾಷೆಕೊಟ್ಟು ಆಚರಣೆಯಲ್ಲಿ ಹಿಮ್ಮೆಟ್ಟಿದರೆ ತಾನು ದ್ರೋಣನ ಮಗನೇ ಅಲ್ಲ,'ಎಂದ.

ಅಶ್ವತ್ಥಾಮನನ್ನು ಸೇನಾಧಿಪತಿಯಾಗಿ ನೇಮಿಸಿದ[ಸಂಪಾದಿಸಿ]

ಆಗಲಾ ಪಾಂಡವರ ವಧೆ ನಿನ
ಗಾಗಲರಿಯದು ನಿನ್ನ ಭುಜಬಲ
ವಾಗುರಿಯ ವೇಢೆಯಲಿ ಬೀಳದು ಕೃಷ್ಣಬುದ್ಧಿಮೃಗ |
ಈಗಳೀ ನಿರ್ಬಂಧವಚನವಿ
ರಾಗಮೆವಗೇಕಾರಿಗಾವುದು
ಭಾಗಧೇಯವದಾಗಲೆಂದನು ಕೌರವರರಾಯ || ೬೨ ||
ಪದವಿಭಾಗ-ಅರ್ಥ:ಆಗಲಿ+ ಆ ಪಾಂಡವರ ವಧೆ ನಿನಗೆ+ ಆಗಲು+ ಅರಿಯದು; ನಿನ್ನ ಭುಜಬಲವು+ ಆ+ ಗುರಿಯ ವೇಢೆಯಲಿ(ಆಕ್ರಮಣದಲ್ಲಿ) ಬೀಳದು ಕೃಷ್ಣಬುದ್ಧಿಮೃಗ; ಈಗಳು+ ಈ ನಿರ್ಬಂಧವಚನ ವಿರಾಗಮ್+ ಎವಗೆ+ ಏಕೆ+ ಆರಿಗೆ+ ಆವುದು ಭಾಗಧೇಯವು+ ಅದಾಗಲಿ+ ಎಂದನು ಕೌರವರರಾಯ.
ಅರ್ಥ:ಅದಕ್ಕೆ ಕೌರವರರಾಯನು,'ನಿನಗೆ ಸಾಧ್ಯವಾದರೆ ಆ ಪಾಂಡವರ ವಧೆ ಆಗಲಿ. ಆದರೆ ನಿನಗೆ ಅದು ಆಗಲಾರದು; ನಿನ್ನ ಭುಜಬಲವು ಮತ್ತು ನಿನ್ನ ಆ ಗುರಿಯ ಆಕ್ರಮಣದಲ್ಲಿ ಕೃಷ್ಣಬುದ್ಧಿಮೃಗ ಬೀಳದು; ಈಗ "ಕೊಲ್ಲಲು ಆಜ್ಞೆಕೊಡು" ಎಂಬ ನಿನ್ನ ಈ ನಿರ್ಬಂಧವಚನದ ಬಗ್ಗೆ ನಮಗೆ ವೈರಾಗ್ಯ ಏಕೆ? (ಆಜ್ಞೆ ಕೊಡು ಎಂದರೆ- ನಾನ 'ಇಲ್ಲ' ಎನ್ನುವುದಿಲ್ಲ) ಯಾರಿಗೆ ಯಾವುದು ಭಾಗಧೇಯವೋ ಅದಾಗಲಿ, (ಯಾರಿಗೆ ಯಾವುದನ್ನು ವಿಧಿಯು ಬರೆದಿದೆಯೋ ಅದು ಆಗಲಿ),'ಎಂದನು.
ವರ ಚಮೂಪತಿ ನೀನು ಬಳಿಕಿ
ಬ್ಬರು ಚಮೂವಿಸ್ತಾರವೆನೆ ವಿ
ಸ್ತರಿಸಿ ರಚಿಸುವುದೆಂದು ರಥಿಕತ್ರಯಕೆ ನೇಮಿಸಿದ |
ಗುರುಜ ಕೃಪ ಕೃತವರ್ಮರೀ ಮೂ
ವರು ನರೇಂದ್ರನ ಬೀಳುಕೊಂಡರು
ಕರೆದು ಸೂತರ ಸನ್ನೆಯಲಿ ಬಂದೇರಿದರು ರಥವ || ೬೩ ||
ಪದವಿಭಾಗ-ಅರ್ಥ: 'ವರ ಚಮೂಪತಿ ನೀನು; ಬಳಿಕ+ ಇಬ್ಬರು ಚಮೂವಿಸ್ತಾರವು+' ಎನೆ, ವಿಸ್ತರಿಸಿ ರಚಿಸುವುದೆಂದು ರಥಿಕತ್ರಯಕೆ ನೇಮಿಸಿದ (ಆಜ್ಞಾಪಿಸಿದ). ಗುರುಜ ಕೃಪ ಕೃತವರ್ಮರು+ ಈ ಮೂವರು ನರೇಂದ್ರನ ಬೀಳುಕೊಂಡರು, ಕರೆದು ಸೂತರ ಸನ್ನೆಯಲಿ ಬಂದು+ ಏರಿದರು ರಥವ
ಅರ್ಥ:ಕೌರವನು ಅಶ್ವತ್ಥಾಮನನ್ನು ಕರೆದು, ಅವನನ್ನು ಸೇನಾಧಿಪತಿ ಮಾಡಿ, ಹೀಗೆಂದನು,'ನೀನು ನನ್ನ ಸೇನಯ ಶ್ರೇಷ್ಠ ಸೇನಾಧಿಪತಿ ಪಟ್ಟಕಟ್ಟದ್ದೇನೆ.; ಬಳಿಕ, 'ಈ ಕೃಪ ಕೃತವರ್ಮ ಇಬ್ಬರು ನಿನ್ನ ದೊಡ್ಡಸೇನೆ,' ಎನ್ನಲು, ಹೀಗೆ ತನ್ನ ಉಳಿದ ಮೂವರು ಯೋಧರನ್ನು- 'ರಥಿಕತ್ರಯರ ಸೇನೆಯನ್ನು' ವಿಸ್ತರಿಸಿ ರಚಿಸಿ, ಆಜ್ಞಾಪಿಸಿದ. ಗುರುಜನಾದ ಅಶ್ವತ್ಥಾಮ, ಕೃಪ, ಕೃತವರ್ಮರು ಈ ಮೂವರೂ ರಾಜನನ್ನು ಬೀಳ್ಕೊಂಡರು. ನಂತರ ಸೂತರನ್ನು ಸನ್ನೆಯಲ್ಲಿ ಕರೆದು ಬಂದು ರಥವನ್ನು ಏರಿದರು.
ಇವರು ಬಂದರು ದಕ್ಷಿಣದ ದೆಸೆ
ಗವರ ಪಾಳೆಯಕಾಗಿ ಸುತ್ತಲು
ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ
ಇವರು ಮನದಲಿ ಕುಡಿದರಹಿತಾ
ರ್ಣವವರಿವರಿಗೆ ಗೋಚರವೆ ಪಾಂ
ಡವರು ಗದುಗಿನ ವೀರನಾರಾಯಣನ ಕರುಣದಲಿ ೬೪
ಪದವಿಭಾಗ-ಅರ್ಥ: ಇವರು ಬಂದರು ದಕ್ಷಿಣದ ದೆಸೆಗೆ+ ಅವರ ಪಾಳೆಯಕಾಗಿ ಸುತ್ತಲು ಸವಡಿ+ ಗ+ ಕತ್ತಲೆಯಾಯ್ತು ಘನರೋಷಾಂಧಕಾರದಲಿ. ಇವರು (ಕೃಪಾದಿಗಳು) ಮನದಲಿ ಕುಡಿದರು+ ಅಹಿತಾರ್ಣವ(ಅಹಿತ - ದ್ವೇಷ+ ಆರ್ಣವ ಆರ್= ನೀರನ್ನು ವ= ಹೊಂದಿರುವುದು= ಸಮುದ್ರ-> ಸಿರಿಗನ್ನಡ ಅರ್ಥಕೋಶ)+ ಅವರು+ ಇವರಿಗೆ(ಕೃಪಾದಿಗಳಿಗೆ) ಗೋಚರವೆ ಪಾಂಡವರು ಗದುಗಿನ ವೀರನಾರಾಯಣನ ಕರುಣದಲಿ.
ಅರ್ಥ:ಅಶ್ವತ್ಥಾಮ, ಕೃಪ, ಕೃತವರ್ಮರು- ಇವರು ಪಾಂಡವವರ ಪಾಳೆಯಕ್ಕಾಗಿ ದಕ್ಷಿಣದ ದಿಕ್ಕಿಗ ಬಂದರು. ಸುತ್ತಲೂ ದಟ್ಟವಾದ ಕತ್ತಲೆಯು ಘನರೋಷವೆಂಬಂತೆ ಅಂಧಕಾರದಲ್ಲಿ ಆವರಿಸಿತ್ತು. ಕೃಪಾದಿಗಳು ಮನಸ್ಸಿನಲ್ಲಿ ದ್ವೇಷದ ಸಾಗರವನ್ನೇ ಕುಡಿದರು. ಗದುಗಿನ ವೀರನಾರಾಯಣನ ಕರುಣದಲ್ಲಿರುವ ಅವರು- ಪಾಂಡವರು ಕೃಪಾದಿಗಳಿಗೆ ಕಾಣುವರೇ?
♠♠♠

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

 1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
 2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.