ಅರ್ಥ:ದ್ರೋಣಸುತನಾದ ಅಶ್ವತ್ಥಾಮನು ಕುರುಪತಿ ಕೌರವನ ಯುದ್ಧಕ್ಕೆ ಬಾಣಗಾರ- ಪರಿಣತ. ಇದನ್ನು ನಾವು ಬಲ್ಲೆವು. ಇದರಲ್ಲಿ ಬಾಣವಿದ್ಯೆಯನ್ನು ಬೀರಿ/ ಕಲಿಸಿ ಬಿಡುವವರು. ಇವರು ಸಂಜಯನನ್ನು ಕಾಣಲುಬಹುದು. ಅದು ಅಂತಿರಲಿ ನಿಮಗೆ ಈ ಯುದ್ಧದಲ್ಲಿ ಫಲವಿಲ್ಲ. ಕೃಪರೇ ತನ್ನಾಣೆ ನೀವು ಮರುಳರು ಎಂದು, ಸಾತ್ಯಕಿಯು ಬಾನಗಳ ಮಳೆಯನ್ನು ಸುರಿದನು.
ಕೋಡಕಯ್ಯಲಿ ತಿರುಗಿ ಕೃಪ ಕೈ
ಮಾಡಿದನು ಕೃತವರ್ಮನೆಸುಗೆಯ
ತೋಡುಬೀಡಿನ ಭರವ ಬಲ್ಲವನಾರು ಸಮರದಲಿ
ನೋಡಲೀತನ ಗರುಡಿಯಲಿ ಶ್ರವ
ಮಾಡಿದವರೇ ಮೂರು ಜಗವ ವಿ
ಭಾಡಿಸುವರೆನೆ ಹೊಗಳ್ವನಾವನು ದ್ರೋಣನಂದನನ ೬
ಪದವಿಭಾಗ-ಅರ್ಥ: ಕೋಡ (ಬಾಣದ ಹಿಳುಕು. ) ಕಯ್ಯಲಿ ತಿರುಗಿ ಕೃಪ ಕೈಮಾಡಿದನು ಕೃತವರ್ಮನ+ ಎಸುಗೆಯ(ಬಾಣ ಪ್ರಯೋಗದ) ತೋಡುಬೀಡಿನ ಭರವ ಬಲ್ಲವನಾರು ಸಮರದಲಿ, ನೋಡಲು+ ಈತನ ಗರುಡಿಯಲಿ ಶ್ರವಮಾಡಿದವರೇ ಮೂರು ಜಗವ ವಿಭಾಡಿಸುವರು+ ಎನೆ ಹೊಗಳ್ವನಾವನು ದ್ರೋಣನಂದನನ
ಅರ್ಥ:ಸಾತ್ಯಕಿಗೆ, ಬಾಣದ ತುದಿಯನ್ನು ಕಯ್ಯಲಿ ತಿರುಗಿಸಿ ಕೃಪನು ಕೈಮಾಡಿದನು/ ಹೊಡೆದನು. ಅವನ ಜೊತೆ ಕೃತವರ್ಮನ ಬಾಣ ಪ್ರಯೋಗದ ತೋಡುಬೀಡಿನ/ ಏರು- ಇಳಿತದ ವೇಗವನ್ನು ಸಮರದಲ್ಲಿ ಯಾರು ಬಲ್ಲರು? ಬಲ್ಲವರು ಇಲ್ಲ. ನೋಡಲು ಈತನ/ ಕೃಪನ ಗರುಡಿಯಲ್ಲಿ ಅಭ್ಯಾಸಮಾಡಿದವರೇ ಮೂರು ಜಗವನ್ನೂ ಆಕ್ರಮಿಸುವರು ಎನ್ನಲು, ದ್ರೋಣನಂದನ ಅಶ್ವತ್ಥಾಮನನ್ನು ಹೊಗಳುವವನು ಯಾವನು, ಎಂದನು ಸಾತ್ಯಕಿ. (ಅಶ್ವತ್ಥಾಮನು ಕೃಪನ ತಂಗಿಯ ಮಗ- ಅವನಿಗೆ ಗುರುವೂ ಅಹುದು.)
ಎಚ್ಚನಶ್ವತ್ಥಾಮನಾ ಕೃಪ
ನೆಚ್ಚನಾ ಕೃತವರ್ಮಕನು ಕವಿ
ದೆಚ್ಚನೀ ಶರಜಾಲ ಜಡಿದವು ಕಿಡಿಯ ಗಡಣದಲಿ |
ಬೆಚ್ಚಿದನೆ ಬೆದರಿದನೆ ಕೈಕೊಂ
ಡೆಚ್ಚು ಸಾತ್ಯಕಿ ರಿಪುಶರಾಳಿಯ
ಕೊಚ್ಚಿದನು ಕೊಡಹಿದನು ಮಿಗೆ ಭಂಗಿಸಿ ವಿಭಾಡಿಸಿದ || ೭ ||
ಪದವಿಭಾಗ-ಅರ್ಥ: ಎಚ್ಚನು+ ಅಶ್ವತ್ಥಾಮನು+ ಆ ಕೃಪನು+ ಎಚ್ಚನು+ ಆ ಕೃತವರ್ಮಕನು ಕವಿದು+ ಎಚ್ಚನು+ ಈ ಶರಜಾಲ ಜಡಿದವು ಕಿಡಿಯ ಗಡಣದಲಿ. ಬೆಚ್ಚಿದನೆ ಬೆದರಿದನೆ ಕೈಕೊಂಡು (ಎದುರಿಸಿ)+ ಎಚ್ಚು ಸಾತ್ಯಕಿ ರಿಪು ಶರಾಳಿಯ ಕೊಚ್ಚಿದನು ಕೊಡಹಿದನು ಮಿಗೆ(ಮತ್ತೆ, ಹೆಚ್ಚಾಗಿ) ಭಂಗಿಸಿ ವಿಭಾಡಿಸಿದ.
ಅರ್ಥ:ಸಾತ್ಯಕಿಗೆ ಅಶ್ವತ್ಥಾಮನು ಬಾಣಗಳಿಂದ ಹೊಡೆದನು; ಆ ಕೃಪನೂ ಹೊಡೆದನು; ಆ ಕೃತವರ್ಮಕನೂ ಆಕ್ರಮಿಸಿ ಹೊಡೆದನು. ಈ ಶರಜಾಲ/ ಬಾಣಗಳಜಾಲ ಸಾತ್ಯಕಿಯ ಬಾಣಗಳಿಗೆ ಜಡಿದವು, ಆಗ ಘಟ್ಟಣೆಯಿಂದ ಕಿಡಿಗಳ ರಾಶಿಯಲ್ಲಿ ರಣರಂಗ ತುಂಬಿತು. ಸಾತ್ಯಕಿಯು ಈ ಮೂವರು ವೀರರು ಆಕ್ರಮಿಸಿ ಹೊಡೆಯಲು, ಬೆಚ್ಚಿದನೆ? ಬೆದರಿದನೆ? ಇಲ್ಲ! ಅದನ್ನು ಸಾತ್ಯಕಿಯು ಎದುರಿಸಿ ಹೊಡದು, ಶತ್ರುಗಳ ಶರಗಳ ಸಮೂಹವನ್ನು ಕೊಚ್ಚಿದನು, ಪುಡಿಮಾಡಿ ಕೆಡಗಿದನು, ಅದನ್ನು ಮೀರಿಸಿ ಅವರ ಬಾಣಗಳನ್ನು ಭಂಗಿಸಿ ಕತ್ತರಿಸಿದನು.
ಅರ್ಥ:ಎಲೆಲೆ ಸಾತ್ಯಕಿಗೆ ಯುದ್ಧದಲ್ಲಿ ಯುದ್ಧದ-ಕಠಿನತೆ ಎದುರಾಯಿತು ಎನ್ನಲು, ಅವನ ಕಡೆಯ ಸೃಂಜಯರು ಸೋಮಕ, ಅವನ ಸೇನೆ, ಶಿಖಂಡಿ ದ್ರುಪದನಂದನಾದ ದೃಷ್ಟದ್ಯಮ್ನ, ಐದು ಜನ ಪಾಂಡವರ ಮಕ್ಕಳು ಬಂದು ಸೇರಿದರು. ಅವರು ಹಾರುತ್ತಿರುವ ಪತಾಕೆಯ, ವಿವಿಧವಾದ್ಯದ ಕಳಕಳದ ಸದ್ದಿನೊಂದಿಗೆ, ಆಯುಧಗಳನ್ನು ಹೊಳೆಯುವಂತೆ ಝಳಪಿಸುತ್ತಾ ಅವನ್ನು ಒಟ್ಟುಮಾಡಿಕೊಂಡು ಸಾತ್ಯಕಿಯ ಸುತ್ತ ಜೋಡಿಸಿಕೊಂಡು ನಿಂತರು.
ಹರಿಯದಿಲ್ಲಿಯ ಬವರ ರಾಯನ
ನರಸಬೇಹುದು ಕುರುಪತಿಯ ಮುಂ
ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲ ಶರರಚನೆ |
ಅರಿವೆವೀ ಸಾತ್ಯಕಿಯ ಸಮರದ
ಮುರುಕವನು ಬಳಿಕೆನುತ ಕೌರವ
ನರಿಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು || ೯ ||
ಪದವಿಭಾಗ-ಅರ್ಥ: ಹರಿಯದು ಇಲ್ಲಿಯ ಬವರ ರಾಯನನು+ ಅರಸಬೇಹುದು, ಕುರುಪತಿಯ ಮುಂದೆ+ ಇರಿದು ಮೆರೆವುದು ಕೀರ್ತಿ, ನಿಷ್ಫಲವಿಲ್ಲ ಶರರಚನೆ, ಅರಿವೆವು+ ಈ ಸಾತ್ಯಕಿಯ ಸಮರದ ಮುರುಕವನು ಬಳಿಕ+ ಎನುತ ಕೌರವನ+ ಅರಿಕೆಯಲಿ (ಅರಸುವ ಕಲಸದಲ್ಲಿ) ತಿರುಗಿದರು ಕೃಪ ಕೃತವರ್ಮ ಗುರುಸುತರು.
ಅರ್ಥ:ಇಲ್ಲಿಯ ಯುದ್ಧವು ಬಗೆಹರಿಯದು. ಏನಅದನೋ ಅ ಕೌರವರಾಯನನ್ನು ಹುಡುಕಬೇಕು. ಕೌರವನ ಎದುರು ಇರಿದು / ಯುದ್ಧಮಾಡಿ ಮೆರೆಯುವುದು ಕೀರ್ತಿ ತರುವುದು. ಅದು ನಿಷ್ಫಲವಿಲ್ಲ. ಈ ಸಾತ್ಯಕಿಯ ಶರರಚನೆ/ ಬಿಲ್ಲವಿದ್ಯೆಯನ್ನೂ ಸಮರದ ಕುಶಲೆಯನ್ನೂ ನಂತರ ತಿಳಿದರಾಯಿತು, ಎನ್ನುತ್ತಾ ಕೌರವನನ್ನು ಅರಸುವ ಕಲಸದಲ್ಲಿ ಕೃಪ, ಕೃತವರ್ಮ, ಗುರುಸುತ ಅಶ್ವತ್ಥಾಮರು ಹಿಂತಿರುಗಿ ಹೊರಟುಹೋದರು.
ಅರ್ಥ:ಧರ್ಮರಾಯನು ನಗುತ್ತಾ 'ಗುರುನಂದನ ಮತ್ತು ಜೊತೆಯವರು ತೆರಳಿದರು. ನಾವು ಅರಿನೃಪಾಲ ದುರ್ಯೋದನನ್ನು ಕಾಣೆವು. ಆತನನ್ನು ಹುಡುಕಲೇಬೇಕು. ಶಕುನಿ ದುರ್ಯೋಧನ ಸುಶರ್ಮಕರು ಈ ಮೂವರು ಕೌರವ ದೊರೆಗೆ ಅಳಿದು-ಉಳಿದ ಪರಿಶಿಷ್ಟರು. ಈಗ ಅವರ ಸಂಹಾರವೇ ನಮ್ಮ ಕರ್ತವ್ಯವು. ಇದು ಕಷ್ಟದಿಂದ ಸಾದ್ಐವಅಗುವ ಶ್ರಮಫಲವು', ಎಂದು ಹೇಳಿದನು.
ಅರ್ಥ: ಕೌರವನ ಪರಿವಾರ ಅವನ ಅರಸುವ ಕಾರ್ಯದಲ್ಲಿ ಆತುರದಿಂದ ಎಲ್ಲೆಡೆ ಹುಡುಕಿತು. ಅವನ ಸೇನೆಯು ಕುರುಕ್ಷೇತ್ರದ ಎಲ್ಲಾಕಡೆ ಹರಡಿಕೊಂಡು ಬಿಡದೆ ಹುಡುಕಿ ರಣರಂಗದ ಮೂಲೆಯಲ್ಲಿ ಶೋಭಿಸುವ ಸಿಂಧದ ಬಾವುಟವನ್ನು ಕಂಡರು. ಅಲ್ಲಿ ಪ್ರಸಿದ್ಧ ಝಳಪಿಸುವ ಪ್ರಸರಿಸಿ ಹಾರುತ್ತಿರುವ ಶ್ವೇತಛತ್ರವನ್ನು ಮತ್ತು ಹೊಳೆಹೊಳೆಯುತ್ತಿರುವ ಶಕುನಿಯ ದೊಡ್ಡ ಸೇನೆಯನ್ನೂ ಕಂಡರು.
ಉಬ್ಬಣ = 1. ಬಾಗಿಲನ್ನು ಭದ್ರಪಡಿಸಲು ಹಾಕುವ ಮರದ ತುಂಡು. 2. ಒಂದು ಬಗೆಯ ಆಯುಧ. 3. ಅತಿಶಯ.; ಅಮ್ಮದ = ಸಾಧ್ಯವಾಗದ, ಬೇಡವಾದ
ಮಸಳು= ೧ ಮಂಕಾಗು, ನಿಸ್ತೇಜಗೊಳ್ಳು ೨ ಮಂಕಾಗುವಂತೆ ಮಾಡು;; ಬೆಗಡು= 1. ಆಶ್ಚರ್ಯಪಡು. 2. ಭಯಪಡು (ಬೆಡಗು?)
ಅರ್ಥ:ಹೆಗಲಮೇಲಿದ್ದ ದೊಡ್ಡ ಉಬ್ಬಣವೆಂಬ ಆಯುಧ ಹಿಡಿದ ಕೈತಳ ದುರ್ಬಲವಾಗಲು ಹಿಡಯಲಾಗದ ಕುದುರೆಯ ವಾಘೆಯಲ್ಲಿ ಕೈಬಿಗಿದು ಹಗ್ಗವನ್ನು ಎಳೆಯದಂತಾಯಿತು. ರಥದ ಕಾಲಿಡುವ ಅಂಕಣೆದ ಒಡಕಿನಲ್ಲಿ ಪಾದಗಳು ಚಲಿಸಲಾರದೆ ಮರಗಟ್ಟಿದವು. ಮನಸ್ಸಿನ ಮಡಿ/ ರೀತಿ ಮಂಕಾಯಿತು. ವೀರಸ್ವಭಾವಕ್ಕೆ ಭಯ ವಾಸದಮನೆಯಾಯ್ತು. ಕೌರವ ರಾಯನ ರಾವುತರು ಒಬ್ಬರಿಗೆ ಒಬ್ಬರು ಕೈ ಕೈಹಿಡಿದು ಧಯರ್ಯತಂದುಕೊಂಡು ಕವರವನ ನಂಬುಗೆಗೆ ಮರಳಿ ಯುದ್ಧಕ್ಕೆ ಅನುವಾದರು. (ಈ ಪದ್ಯದ ಅರ್ಥ ಸಂದಿಗ್ಧವಾಗಿದೆ)
ಬಂದುದಾ ಮೋಹರ ಸಘಾಡದಿ
ನಿಂದುದೀ ಬಲ ಸೂಠಿಯಲಿ ಹಯ
ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ |
ನೊಂದುದಾಚೆಯ ಭಟರು ಘಾಯದೊ
ಳೊಂದಿತೀಚೆಯ ವೀರರುಭಯದ
ಮಂದಿ ಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ || ೧೪ ||
ಪದವಿಭಾಗ-ಅರ್ಥ: ಬಂದುದ ಆ ಮೋಹರ (ಸೇನೆ) ಸಘಾಡದಿ (ರಭಸ.ಸಶಕ್ತವಾಗಿ) ನಿಂದುದು+ ಈ ಬಲ ಸೂಠಿಯಲಿ(ಸೂಠಿ= ವೇಗ) ಹಯವೃಂದ ಬಿಟ್ಟವು, ತೂಳಿದವು(ನುಗ್ಗಿದವು) ಹೇರಾನೆ ಸರಿಸದಲಿ ನೊಂದುದು+ ಆಚೆಯ ಭಟರು ಘಾಯದೊಳೊಂದಿತು+ ಈಚೆಯ ವೀರರು ಭಯದ ಮಂದಿ ಬಿದ್ದುದು ಚೂಣಿಯು (ಮುಂದಿನ)+ ಅದ್ದುದು ರುಧಿರಜಲಧಿಯಲಿ
ಅರ್ಥ:ಕೌರವನ ಆ ಸೇನೆ ಸಶಕ್ತವಾಗಿ ವೀರಾವೇಶದಿಂದ ನಿಂತಿತು. ಈ ಪಾಂಡವರ ಸೇನೆಯ ರಾವುತರು ವೇಗವಾಗಿ ಕುದುರೆಗಳನ್ನು ಅವರ ಮೇಲೆ ಬಿಟ್ಟರು. ಒಬ್ಬರ ಮೇಲೆ ಒಬ್ಬರು ನುಗ್ಗಿದವು. ರಾವುತರ ಆನೆಗಳು ಸೆಣಸಾಟದಲ್ಲಿ ನೊಂದುವು. ಆಚೆಯ ಕೌರವನ ಭಟರು ಘಾಯದೊಳು ನೊಂದಿತು. ಈಚೆಯ ವೀರರು ಭಯದಿಂದ ಬಹಳ ಮಂದಿ ಬಿದ್ದುದು. ಎದರು ಇದ್ದ ಚೂಣಿಯ ಸೇನೆ ರಕ್ತದ ಸಮುದ್ರದಲ್ಲಿ ಅದ್ದಿತು - ಮಳುಗಿತು.
ಅರ್ಥ:ಕೌರವನು ಮತ್ತೆ ಜಾರಿ ಹೋದನೆ, ಅಕಟ! ನಮಗೆ ಅವನು ಮೈದೋರನೇ? ಅವನು ತನ್ನ ತೊಡೆಗಳನ್ನು ಪುಡಿಗೈಯಲು ಕೊಡಲಾರದೇ, ಒಮ್ಮೆ ಕಾಳೆಗವನ್ನು ಕೊಟ್ಟವನು ಮತ್ತೆ ಅಡಗಿಕೊಂಡನಲ್ಲಾ; ಅವನು ತನ್ನ ಖಡ್ಗದ ಶೌರ್ಯವನ್ನು ತೋರಿಸನೆ? ಕೌರವನಿಗೆ ಅವನ ಸಿರಿ-ಮೈಯನ್ನು ತೋರಿಸಲು ಹೇಳೋ! ಕರೆಯೆನ್ನುತ್ತಾ ಭೀಮಾರ್ಜುನರು ಶಕುನಿಯ ಸೇನೆಯ ಎದುರು ಬಂದರು.
ಅರ್ಥ:ಫಡಫಡ! ಎಲವೋ! ಪಾರ್ಥ ಕೌರವ ಕುರುಪತಿಯು ಅಡಗುವನೆ? ನಿನ್ನ ಶಕ್ತಿ- ಶೌರ್ಯಗಳನ್ನು ಮೀರಿಸಿ, ನಿನ್ನನ್ನು ತರಿದು/ಕತ್ತರಿಸಿ ಬೇತಾಳಗಳಿಗೆ ಉಣಬಡಿಸುವನು. ಗಡಬಡಿಸಿ ಗದ್ದಲ ಮಾಡಲು ನೀನು ವೈತಾಳಿಕನೇ? ಪರರ ಉನ್ನತಿಗೆ ಕೆಡುಕು ನುಡಿದು ಫಲವೇನು? ಎನ್ನತ್ತಾ ಅಂದು ಸುಶರ್ಮ ಸಮಸಪ್ತಕರ ದಳ/ಸೇನೆ ಸಹಿತ ಪಾರ್ಥನನ್ನು ತಡೆದನು.
ಮುತ್ತಿದವು ರಥವೇಳುನೂರರು
ವತ್ತು ಹಯವೈನೂರು ಸಾವಿರ
ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ
ತೆತ್ತಿಸದವಂಬುರವಣಿಸಿ ದೂ
ಹತ್ತಿ ಹೊಳೆದವು ಸಮರದಲಿ ಮುಖ
ಕೆತ್ತುದನೆ ಕೈದುಗಳ ರುಚಿ ವೇಢೈಸಿತರ್ಜುನನ ೧೭
ಪದವಿಭಾಗ-ಅರ್ಥ:ಮುತ್ತಿದವು ರಥವು+ ಏಳುನೂರರುವತ್ತು ಹಯವು+ ಐನೂರು ಸಾವಿರ ಮತ್ತಗಜವು+ ಇಪ್ಪತ್ತು ಸಾವಿರ ಪಾಯದಳ ಸಹಿತ ತೆತ್ತಿಸದವು+ ಅಂಬು+ ಉರವಣಿಸಿ ದೂಹತ್ತಿ ಹೊಳೆದವು ಸಮರದಲಿ ಮುಖ ಕೆತ್ತುದನೆ ಕೈದುಗಳ ರುಚಿ ವೇಢೈಸಿತು+ ಅರ್ಜುನನ.
ದೂಹತ್ತಿ= ಒಂದು ಬಗೆಯ ಉದ್ದವಾದ ಕತ್ತಿ,- ಖಡ್ಗ.ವೇಢೆ: ವೇಷ್ಟನ, ಸುತ್ತುವರಿ, (ಸುತ್ತಿರುವ ಪೇಟ); ತೆತ್ತಿಸು: ಹೊಂದಿಸು.
ಅರ್ಥ:ಮುತ್ತಿದವು ಏಳುನೂರರುವತ್ತು ರಥಗಳು, ಐನೂರು ಸಾವಿರ ಕುದುರೆ, ಇಪ್ಪತ್ತು ಸಾವಿರ ಮತ್ತಗಜಗಳು, ಪಾಯದಳ ಸಹಿತ ಹೊಂದಿಕೊಂಡವು; ಪರಾಕ್ರಮದಿಂದ ಬಾಣಗಳು ಬಿಡಲ್ಪಟ್ಟವು;ಆ ಸಮರದಲ್ಲಿ ದೂಹತ್ತಿಯೆಮಬ ಕತ್ತಿಗಳು ಝಳಪಿಸಲು ಹೊಳೆದವು, ಮುಖವನ್ನು ಮುಚ್ಚುವಂತೆ ಆಯುಧಗಳ ರುಚಿತೊರಿಸಲು ಅರ್ಜುನನನ್ನು ಮುತ್ತಿದವು.
ಪದವಿಭಾಗ-ಅರ್ಥ: ಏರಿದರು ಸಮಸಪ್ತಕರು ಕೈದೋರಿದರು ಫಲುಗುಣನ ಜೋಡಿನೊಳ+ ಏರು ತಳಿತುದು ನೊಂದವು+ ಅಡಿಗಡಿಗೆ+ ಆತನ+ ಅಶ್ವಚಯ ನೂರು ಶರದಲಿ ಬಳಿ ವಿಶಿಖ(ಬಾಣ) ನಾನೂರರಲಿ ಬಳಿಶರಕೆ ಬಳಿಶರವ+ ಆರು ಸಾವಿರದಿಂದ ತರಿದನು ಪಾರ್ಥನು+ ಅರಿಬಲವ
ಅರ್ಥ:ಕೌರವನ ಕಡೆಯ ಸಮಸಪ್ತಕರು ಪರಾಕ್ರಮ ತೋರಿದರು; ತಮ್ಮ ಕೈಚಳಕವನ್ನು ತೋರಿದರು; ಫಲ್ಗುಣನ ಎದುರು ಯುದ್ಧದ ಜೋಡಿನಲ್ಲಿ ತೀವ್ರವಾದ ಯುದ್ಧ ನೆಡೆಯಿತು. ಅರ್ಜುನನ ಅಶ್ವಗಳು ಅಡಿಗಡಿಗೆ/ ಮತ್ತೆಮತ್ತೆ ನೊಂದವು. ಪಾರ್ಥನು ನೂರು ಬಾಣಗಳಿಂದ ಬಳಿಕ ನಾನೂರು ಬಾಣಗಳಿಂದ, ಬಳಿಕ ಅವರ ಶರಕ್ಕೆ ಬಳಿಕ ಆರು ಸಾವಿರ ಬಾಣಗಳಿಂದ ಶತ್ರು ಸೇನೆಯನ್ನು ತರಿದನು/ ಕತ್ತರಿಸಿದನು.
ಅರ್ಥ:ಕುರುಕ್ಷೇತ್ರದಲ್ಲಿ ಏಳ್ನೂರು ರಥಗಳು ಕಡಿದು ಒಡೆದವು, ಮುರಿದು ಒಡೆದವು ಐನೂರು ಅಶ್ವಗಳ ಗುಂಪು/ ಅಶ್ವಪಡೆ; ಅಂದು ಮುಂದೆ ಕೆಡೆದು ಬಿದ್ದವು ಐನೂರು ಗಜಗಳು/ ಆನೆಗಳು; ತ್ರಿಗರ್ತರ ಪಡೆಯಲ್ಲಿ ಇಪ್ಪತ್ತು ಸಾವಿರದ ಕಡುಗಲಿಗಳು ಉದುರಿತು- ಸತ್ತುಬಿದ್ದರು. ಕುರುಕ್ಷೇತ್ರದಲ್ಲಿ ಪಾರ್ಥನನ್ನು ಬಿಡದೆ ಬಳಲುವಂತೆ ಮಾಡಿಯೂ, ಅವರಲ್ಲಿ ಅಷ್ಟು ಜನ ಕುದುರೆ ಆನೆ ಅಳಿದುದು/ ನಾಶವಾದವು, ಭೂಪನೇ ಕೇಳು ಎಂದ ವೈಶಂಪಾಯನ ಮುನಿ.
ದೊರೆಗಳವರಲಿ ಸತ್ಯಕರ್ಮನು
ವರ ಸುಶರ್ಮನು ದ್ರೋಣಸಮರದೊ
ಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ
ಧುರದ ಶಪಥದೊಳರ್ಜುನನ ಸಂ
ಗರಕೆ ಬೇಸರಿಸಿದ ಪರಾಕ್ರಮ
ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ ೨೧
ಪದವಿಭಾಗ-ಅರ್ಥ: ದೊರೆಗಳು+ ಅವರಲಿ ಸತ್ಯಕರ್ಮನು, ವರ ಸುಶರ್ಮನು, ದ್ರೋಣಸಮರದೊಳು+ ಎರಡನೆಯ ದಿವಸದಲಿ ರಚಿಸಿದರು+ ಅಗ್ನಿ ಸಾಕ್ಷಿಕವ ಧುರದ ಶಪಥದೊಳು+ ಅರ್ಜುನನ ಸಂಗರಕೆ ಬೇಸರಿಸಿದ ಪರಾಕ್ರಮ ಪರಿಗತರು ಪವಡಿಸಿದರು+ ಅಂದು ಧನಂಜಯ+ ಅಸ್ತ್ರದಲಿ
ಅರ್ಥ:ಅವರು ಸಂಸಪ್ತಕ ದೊರೆಗಳು. ಅವರಲ್ಲಿ ಸತ್ಯಕರ್ಮನು, ಶ್ರೇಷ್ಠಸುಶರ್ಮನು, ದ್ರೋಣನ ಯುದ್ಧದಲ್ಲಿ ಎರಡನೆಯ ದಿವಸದಲ್ಲಿ ರಚಿಸಿದರು ಅಗ್ನಿ ಸಾಕ್ಷಿಕವಾಗಿ ಯುದ್ಧದ ಜಯ ಇಲ್ಲವೇ ಮರಣ ಎಂಬ ಶಪಥದಲ್ಲಿ, ಅರ್ಜುನನೊಡನೆ ಯುದ್ಧಕ್ಕೆ ಬೇಸರಿಸಿದೆ ಪರಾಕ್ರಮ ತೋರಿ ಅಂದು ಧನಂಜಯನ ಅಸ್ತ್ರದಲ್ಲಿ ಮಡಿಸದರು.
ತರಿದನಗ್ಗದ ಸತ್ಯಕರ್ಮನ
ಧುರವ ಸಂತೈಸುವ ತ್ರಿಗರ್ತರ
ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ
ಒರಸಿದನು ಕುರುರಾಯನಾವೆಡೆ
ಬರಲಿ ತನ್ನಾಪ್ತರಿಗೆ ಕೊಟ್ಟೆನು
ಹರುವನಿನ್ನಾಹವ ವಿಲಂಬವ ಮಾಡಬೇಡೆಂದ ೨೨
ಪದವಿಭಾಗ-ಅರ್ಥ: ತರಿದನು+ ಅಗ್ಗದ ಸತ್ಯಕರ್ಮನ, ಧುರವ ಸಂತೈಸುವ ತ್ರಿಗರ್ತರ ದೊರೆ ಸುಶರ್ಮನನು, ಅವನ ಸಹಭವ ಗೋತ್ರ ಬಾಂಧವರ ಒರಸಿದನು, ಕುರುರಾಯನು+ ಆವೆಡೆ ಬರಲಿ ತನ್ನ+ ಆಪ್ತರಿಗೆ ಕೊಟ್ಟೆನು ಹರುವನು (ಬಿಡುಗಡೆ)+ ಇನ್ನು+ ಆಹವ (ಯುದ್ಧ) ವಿಲಂಬವ ಮಾಡಬೇಡೆಂದ
ಅರ್ಥ:ಬಲಾಢ್ಯನಾದ ಸತ್ಯಕರ್ಮನನ್ನು ಕತ್ತರಿಸಿದನು., ಯುದ್ಧದಲ್ಲಿ ಸಂತೈಸುವ ತ್ರಿಗರ್ತರ ದೊರೆ ಸುಶರ್ಮನನ್ನೂ, ಅವನ ಸಹೋದರ ಗೋತ್ರ ಬಾಂಧವರನ್ನೂ ಸಂಹರಿಸಿದನು. ಕುರುರಾಯನು ಯಾವಕಡೆ ಇದ್ದಾನೆ? ಇಲ್ಲಿ ಬರಲಿ, ಅವನ ಆಪ್ತರಿಗೆ ಮುಕ್ತಿಯನ್ನು ಕೊಟ್ಟೆನು, ಇನ್ನು ಯುದ್ಧವನ್ನು ವಿಲಂಬಿಸುವ ಕಾರ್ಯ ಮಾಡಬೇಡ, ಎಂದು ಕೌರವನಿಗೆ ಅರ್ಜುನನಿಗೆ ಹೇಳಿದ.
ಅರ್ಥ:ಸೊಕ್ಕಿದ ಆನೆಯ ಕೈಯಲ್ಲಿ ಸಿಕ್ಕಿದ ಬಾಳೆಯನ್ನು ಆನೆಗೆ ಇಕ್ಕಿ/ ಹೊಡೆದು ಬಿಡಿಸುವನಾರು? ಆದರೆ ಪವನಜ ಭೀಮನು ಪರಾಕ್ರಮದಿಂದ ಅಮೋಘವಾಗಿ ದಂತಿಘಟೆಗಳನ್ನು ಮುರಿದು ಕೊಂದನು. ಪರಾಕ್ರಮಿಸಿ ಎರಡುಕಡೆಯ ಹೊಟ್ಟೆಯ ಅಚ್ಚುಗಳನ್ನು ಅವುಗಳ ನರಸುಕ್ಕುಗಳನ್ನು ನಾಟಕದಲ್ಲಿ ಮಾಡುವಂತೆ ವಾಸ್ತವವಾಗಿ ಭೀಮನು ಕೈಯಿಕ್ಕಿದ/ ಹೊಡೆದ ಆನೆಯ ಹಿಂಡು ನಿಮಿಷಮಾತ್ರದಲ್ಲಿ ನಾಶವಾಯಿತು.
ಅರ್ಥ:ಭೀಮನು ದುರ್ಯೋಧನನ ತಮ್ಮನನ್ನು ಕೆಡಹಿ ನಡುವನ್ನು ಮುರಿದು ಪುಡಿ ಮಾಡಿದನು. ನಕುಲನು ಉಳೂಕನನ್ನು ಕತ್ತಿಯುದ್ಧದಲ್ಲಿ ಕಡಿದು ಬಿಸುಟನು. ಸಹದೇವನು ಇಪ್ಪತ್ತೈದು ಬಾಣದಲಿ ಜಾಲದಲ್ಲಿ ಸೌಬಲ- ಶಕುನಿಯ ಸೇನೆಯನ್ನು ಹೊಡೆದನು. ಅವನು ಶರಜಾಲ ಝಂಕೃತಿಯ ಕಡಲನ್ನು ಮೊಗೆದಂತೆ ಬಾಣಗಳಬಲೆಯನ್ನು ಮಾಡಿ ಸೇನೆಯನ್ನು ಹೊಡೆದುಹಾಕಿದನು.
ಎಲವೊ ಕಪಟದ್ಯೂತ ಬಂಧದೊ
ಳಳಲಿಸಿದಲಾ ಪಾಪಿ ಕೌರವ
ಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ |
ಸಿಲುಕಿದೆಯಲಾ ನಮ್ಮ ಬಾಣದ
ಬಲೆಗೆ ನಿನ್ನನು ಕಾವನಾವವ
ನೆಲೆ ಕುಠಾರ ಎನುತ್ತ ನುಡಿದನು ನಗುತ್ತ ಸಹದೇವ || ೨೬ ||
ಪದವಿಭಾಗ-ಅರ್ಥ: ಎಲವೊ ಕಪಟದ್ಯೂತ ಬಂಧದಳು+ ಅಳಲಿಸಿದಲಾ (ಸಂಕಟಪಡಿಸಿದೆಯಲ್ಲಾ), ಪಾಪಿ, ಕೌರವಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ (ಮತ್ ಅಗ್ರಜ - ನನ್ನ ಅಣ್ನ) ಸಿಲುಕಿದೆಯಲಾ ನಮ್ಮ ಬಾಣದ ಬಲೆಗೆ ನಿನ್ನನು ಕಾವನಾವವನು+ ಎಲೆ ಕುಠಾರ ಎನುತ್ತ ನುಡಿದನು ನಗುತ್ತ ಸಹದೇವ.
ಅರ್ಥ:ಎಲವೊ ಶಕುನಿ, ನೀನು ಕಪಟದ್ಯೂತದ ಬಲೆಯಲ್ಲಿ ನಮ್ಮನ್ನು ಸಿಕ್ಕಿಸಿ ಅಳಲಿಸಿದೆಯಲ್ಲವೇ? ಪಾಪಿ! ಕೌರವಕುಲದ ತಲೆಗಳನ್ನು ಕಡಿದು ಚೆಂಡಾಡಿದವನು ನೀನೋ ಅಥವಾ ನನ್ನ ಅಣ್ಣ ಭೀಮನೋ? ಈಗ ನನ್ನ ಕೈಗೆ ಸಿಕ್ಕಿದೆಯಲಾ! ನಮ್ಮ ಬಾಣದ ಬಲೆಗೆ ನಿನ್ನನ್ನು ಹಾಕುವೆನು. ನಿನ್ನನ್ನು ಈಗ ಕಾಯುವವನು ಅದು ಯಾವನು ಇದ್ದಾನೆ? ಎಲೆ ಕುಠಾರ/ ಪಾಪಿ! ಎನ್ನುತ್ತಾ ಸಹದೇವನು ನಗುತ್ತ ನುಡಿದನು.
ಅರ್ಥ:ಸಹದೇವ ನಿನ್ನ ಕಥಿಥ/ ಧೋರಣೆಗೆ - ನೀತಿಗೆ ಫಲವಿಲ್ಲ. ನನ್ನನ್ನು ಕೊಲ್ಲಲಾರೆ; ವ್ಯರ್ಥವು ಎಲೆ ಸಹದೇವ, ನೀನು ಹೇಳಿದಹಾಗೆ ಮಾಡುವವನೆ ದಿಟವಾದರೆ, ನಿನ್ನ ಬಾಹುವಿಕ್ರಮವನ್ನು/ ತೋಳಿನ ಪರಾಕ್ರಮವನ್ನು ತೋರಿಸು. ಪಾರ್ಥ ಮತ್ತು ಭೀಮರ ಮರೆಯಲ್ಲಿ ಇದ್ದುಕೊಂಡು ಯುದ್ಧಮಾಡುವ ನೀನು ನಿರರ್ಥಕರನ್ನು ಇರಿದು, ಇರಿದು ಜಯವನ್ನು ಪಡೆದೆನೆಂದು ಸಮರ್ಥಿಸುವೆ. ಫಡ! ಹೋಗೋ, ಎನ್ನತ್ತಾ ಆ ಶಕುನಿ ತೆಗೆದು ಹೊಡೆದನು.
ಅರ್ಥ:ಶಕುನಿಯೇ ಚಿಂತೆ ಮಾಡಬೇಡ. ನಿನ್ನ ಎರಡು ಬದಿಯನ್ನೂ ಕತ್ತರಿಸಿ ತುಂಡುಮಾಡಿ ಸೀಳುವೆನು. ತಾನು ಮರೆವನೇ ನಿನ್ನ ರಚಿಸಿದ ಕೆಟ್ಟ ವಿಜೃಂಭಣೆಯನ್ನು. ಬಹಳಷ್ಟು ಬಾಣಗಳಿವೆ; ಬಾಣಗಳಿಗೆ ನಿನಗಾಗಿ ಹೆಸರಿಟ್ಟು ಕಾದಿದೆ ನಿನಗೆ, ಇವರ ಕೇಣಿಗೆ/ಗೆಳೆತನಕ್ಕೆ ನೀನು ತೆರಹುಗೊಡು/ ಅವಕಾಶಕೊಡು (ಈ ಬಾಣಗಳು ನಿನ್ನ ಪ್ರಾಣದ ಕೇಣಿ/ಗುತ್ತಿಗೆ ಹಿಡಿದಿವೆ) ಎಂದು ಮಾದ್ರಿಯ ಮಗ ಸಹದೇವ ತಿರುಗಿ ಹೊಡೆದ.
ಖಳನ+ ಎದೆಯನೊದೆದು ಅಪರಭಾಗಕೆ(ಹಿಂಭಾಗ, ಬೆನ್ನು) ನಿಲುಕಿತು+ ಅದು ಗಾಂಧಾರ ಬಲ ಕಳವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ
ಅರ್ಥ:ಬಳಿಕ ಶಕುನಿಯು ಕಾಲಾಳಾಗಿ ಖಡ್ಗವನ್ನು ಹಿಡಿದು ಝಳಪಿಸುತ್ತಾ ಬರಲು, ಸಹದೇವನು ಹತ್ತಿರ ನುಗ್ಗಿ ಬಂದ ಸುಬಲನ ಮಗನಾದ ಖಳ ಶಕುನಿಯ ಎದೆಯನ್ನು ಒದೆದು ಬಹಳ ಕೈಚಳಕದಿಂದ ಶಕ್ತಿ-ಆಯುಧವನ್ನು ಅವನ ಎದೆಗೆ ಇಟ್ಟನು/ ಚುಚ್ಚಲು ಅದು ಶಕುನಿಯ ಬೆನ್ನಲ್ಲಿ ಹೊರಟಿತು. ಅದನ್ನು ಕಂಡು ಗಾಂಧಾರ ಸೇನೆ ನಾಯಕನನ್ನು ಕಳೆದುಕೊಂಡು ಕಳವಳಗೊಂಡಿತು. ಹೀಗೆ ಶಕುನಿಯು ಸುರತರುಣಿಯರ/ ಸ್ವರ್ಗಕ್ಕೆ ಸೇರಿ ದೇವಲೋಕದ ತರುಣಿಯರ ತೋಳಿನಲ್ಲಿ ಸಿಕ್ಕಿಕೊಂಡನು.
ಅರ್ಥ:ಆಗ ಶಕುನಿಯ ಸೇನೆ ಕವಿದುದು ಬೆಂಕಿತಾಗಿದ ತುಂಬಿಗಳಂತೆ/ ಜೇನುಹುಳುಗಳಂತೆ ಶಕುನಿಯ ಸೈನಿಕರು ಸಹದೇವನನ್ನು ಸುತ್ತುವರಿಯಲು ಅವನು ರಥದಲ್ಲಿ ಮುಂದೆ ನಿಂತು ಗುಂಪಾಗಿ ಬಂದ ಅವರೆಲ್ಲರನ್ನೂ, ಚತುರಂಗ ಸೈನ್ಯವನ್ನೂ ನಿಮಿಷಾರ್ಧದಲ್ಲಿ ನಾಶಪಡಿಸಿದನು. ಹೀಗೆ ಸಹದೇವನು ಸೌಬಲನ ಸೇನೆಯನ್ನು ಕೊಂದನು. ಪಾಂಡವಸೇನೆಯನ್ನು ಸಂತವಿಸಿದನು/ ಸಂತೈಸಿದನು.
ಹರಿಬದಲಿ ಹೊಕ್ಕೆರಡು ಸಾವಿರ
ತುರುಗ ಬಿದ್ದವು ನೂರು ಮದಸಿಂ
ಧುರಕೆ ಗಂಧನವಾಯ್ತು ಪಯದಳವೆಂಟು ಸಾವಿರದ |
ಬರಹ ತೊಡೆದುದು ನೂರು ರಥ ರಿಪು
ಶರದೊಳಕ್ಕಾಡಿತು ವಿಡಂಬದ
ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ || ೩೩ ||
ಪದವಿಭಾಗ-ಅರ್ಥ: ಹರಿಬದಲಿ(ಕಾಳಗ,ಯುದ್ಧ) ಹೊಕ್ಕು (ಪದಾತಿ ಸೈನ್ಯ. ಸೈನ್ಯದ ವ್ಯೂಹ)+ ಎರಡು ಸಾವಿರ ತುರುಗ ಬಿದ್ದವು, ನೂರು ಮದಸಿಂಧುರಕೆ ಗಂಧನವಾಯ್ತು, ಪಯದಳವೆಂಟು ಸಾವಿರದ ಬರಹ ತೊಡೆದುದು, ನೂರು ರಥ ರಿಪುಶರದೊಳಕ್ಕಾಡಿತು, ವಿಡಂಬದ ಕುರುಬಲಾಂಬುಧಿ (ಕುರುಸೇನೆಯ ಸಮುದ್ರ) ಕೂಡೆ ಬರತುದು ನೃಪತಿ ಕೇಳೆಂದ.
ಅರ್ಥ:ಈ ಸಹದೇವ ಶಕುನಿಯ ಯುದ್ಧದಲ್ಲಿ ಕೌರವ ಚತುರಂಗ ಸೈನ್ಯದಲ್ಲಿ, ಎರಡು ಸಾವಿರ, ಕುದುರೆಗಳ ಸತ್ತು ಬಿದ್ದವು, ನೂರು ಆನೆಗಳು ನಾಶವಾಯ್ತು, ಪಾಯದಳವು ಎಂಟು ಸಾವಿರದ ಲೆಕ್ಕದಲ್ಲಿ ತೊಡೆದುದು/ ಇಲ್ಲವಾಯಿತು. ನೂರು ರಥಗಳು ಶತ್ರುವಿನ ಬಾಣಕ್ಕೆ ನಾಶವಾಯಿತು, ಆಡಂಬರದ ಕುರುಸೇನೆಯ ಸಮುದ್ರ ಪೂರಾ ಬತ್ತಿತು, ರಾಜನೇ ಕೇಳು ಎಂದ.
ಪದವಿಭಾಗ-ಅರ್ಥ: ಓಡಿದವರು+ ಅಲ್ಲಲ್ಲಿ ಧೈರ್ಯವ ಮಾಡಿ ಹರಿಹಂಚಾದ ಸುಭಟರು ಕೂಡಿಕೊಂಡುದು, ನೂರು ಮದದಾನೆಯಲಿ ಕುರುಪತಿಯ ಓಡಲೇಕೆ+ ಇನ್ನೊಂದು ಹಲಗೆಯನು (ಪಗಡೆಯಾಟದ ಮನೆಯ ಹಲಗೆ)+ ಆಡಿ ನೋಡುವೆನೆಂಬವೊಲು ಕೈಮಾಡಿದನು ಕುರುರಾಯನು+ ಆ ಸಹದೇವನ+ ಇದಿರಿನಲಿ.
ಅರ್ಥ:ಕೌರವನ ಸೇನೆಯಲ್ಲಿ ಓಡಿದವರು ಅಲ್ಲಲ್ಲಿ ಸೇರಿ, ಧೈರ್ಯವ ಮಾಡಿ ಹರಿಹಂಚಾದ ಸುಭಟರು ಮತ್ತೆ ಕೂಡಿಕೊಂಡರು. ಕುರುಪತಿಯ ನೂರು ಮದದಾನೆಯ ಜೊತೆ ಓಡುವುದು ಏಕೆ? ಇನ್ನೊಂದು ಹಲಗೆಯ ಪಗಡೆಯ ಆಟವನ್ನು ಆಡಿ ನೋಡುವೆನು ಎಂಬಂತೆ ಆ ಸಹದೇವನ ಇದಿರಿನಲ್ಲಿ ಕೈಕೊಡವಿ- ಕುರುರಾಯನು ಕೈಮಾಡಿದನು.
ಅರ್ಥ:ರಾಜ ಕೌರವನ ಕೈಮಾಡಿ ಯುದ್ಧದ ಕೈಸನ್ನೆಗೆ ನಿಲ್ಲದೆ ಸಹದೇವನು ಅಲ್ಲಿಂದ ತೆರಳಿದನು. ಆತನ ಹಿರಿಯನಾದ ಧರ್ಮಜನು ಅಡ್ಡಗಟ್ಟಿದಾಗ ಕೌರವನು ಹರಿತಬಾಣಗಳಿಂದ ಉತ್ತರ ಕೊಟ್ಟನು. ಆ ಬಾಣಗಳ ಹೊಡೆತಕ್ಕೆ ಆ ನಕುಲನು ಸೆಟೆದು ನಿಂತು ಹಿಮ್ಮೆಟ್ಟಿಸಿದನು. ಆಗ ಧೀರ ಕುರುರಾಯನು ನೂರು ಆನೆಗಳೊಡನೆ ಧರ್ಮಜನ ದಳದಲ್ಲಿ ಆರ್ಭಟಿಸಿದನು.
ಅರ್ಥ:ಭೀಮನು ಕೌರವನ ಗಜ ಸೇನೆಯನ್ನು ನಾಶ ಮಾಡಿದ ನಂತರ ಎದುರಿನಲ್ಲಿ ಉಳಿದದ್ದು ಯಾವುವೆಂದರೆ, ಛತ್ರ ಚಾಮರ ಬೀಸುವ ಸಮೂಹ; ಅಗತ್ಯ ವಸ್ತು ತರುವ ಚೀಲಹೊತ್ತ ಹಡಪಿಗರು; ಬಿರುದುಗಳನ್ನು ಕೂಗುವವರು; ಸ್ವಸ್ತಿ ಪಾಠಕರು; ವಾದ್ಯದ ಮಲ್ಲಗಾಯಕರು; ಆನೆ ಕುದುರೆ ಕುಲದವಕ್ಕೆ ನೀರು, ತಿಂಡಿ ಮೇವು ಕೊಡುವವರು; ಅವುಗಳ ರಕ್ಷಣೆಗೆ ಹುಣ್ಣು- ಗಾಯಗಳ ವ್ರಣಚಿಕಿತ್ಸಕರು; ಗಾಯಗೊಂಡ ರಥಚಾರಕರು; ಕಾರ್ಮುಕ ಬಾಣದಾಯಕರು/ ಯುದ್ಧದಲ್ಲಿ ಅಗತ್ಯವಾದಾಗ ಬಾಣಗಳನ್ನು ಒದಗಿಸುವವರು.
↑ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
↑ಪೀಠಿಕೆ - ತೋರಣನಾಂದಿ: ಕುವೆಂಪು; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.