ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧೧)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೧೧ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ರಾಯನಯ್ಯನ ತಿಳುಹಿದನು ದ್ವೈ
ಪಾಯನನು ಸಾಮದಲಿ ಕಮಳದ
ಳಾಯತಾಕ್ಷಿಯು ಶಾಪವಿತ್ತಳು ಮುಳಿದು ಗಾಂಧಾರಿ||ಸೂಚನೆ||

ಪದವಿಭಾಗ-ಅರ್ಥ:ರಾಯನ+ ಅಯ್ಯನ(ಕೌರವರಾಯನ ತಂದೆ ಧೃತರಾಷ್ಟ್ರನಿಗೆ) ತಿಳುಹಿದನು ದ್ವೈಪಾಯನನು (ವ್ಯಾಸ ಮಹರ್ಷಿಯು) ಸಾಮದಲಿ, ಕಮಳದಳಾಯತಾಕ್ಷಿಯು(ಗಾಂಧಾರಿಯು) ಶಾಪವಿತ್ತಳು ಮುಳಿದು (ಕೋಪಿಸಿ) ಗಾಂಧಾರಿ
ಅರ್ಥ:ಕೌರವರಾಯನ ತಂದೆ ಧೃತರಾಷ್ಟ್ರನಿಗೆ ವ್ಯಾಸ ಮಹರ್ಷಿಯು ಕೋಪ ತಾಪಗಳನ್ನು ಮಾಡದೆ ಪಾಂಡವರೊಡನೆ ಸಾಮದಲ್ಲಿರುವಂತೆ ತಿಳುಹಿಸಿದನು. ಆದರೆ ಕಮಳದಳಾಯತಾಕ್ಷಿಯಾದ ಗಾಂಧಾರಿಯು ಸಿಟ್ಟುಮಾಡಿಕೊಂಡು ಧರ್ಮಜನಿಗೆ ಶಾಪವನ್ನಿತ್ತಳು.[೧][೨] [೩]

ಧರ್ಮವೆಲ್ಲಿಹುದು ಅಲ್ಲಿ ಜಯ- ವೇದವ್ಯಾಸ ಮುನಿ[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ವಿಳಯವಾರ್ತಾ
ವ್ಯಾಳವಿಷ ವೇಢೈಸಿದುದು ಗಜಪುರದ ಜನಮನವ |
ಹೂಳಿದುಬ್ಬಿನ ಹುದಿದ ಮೋನದ
ಸೂಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಕುರುಪತಿ ವಿಳಯವಾರ್ತಾ(ವಿಳಯ-ವಿಲಯ- ನಾಶ) ವ್ಯಾಳವಿಷ (ಸರ್ಪವಿಷ) ವೇಢೈಸಿದುದು(ತುಂಬಿತು, ಆವರಿಸು,ಬಳಸು) ಗಜಪುರದ ಜನಮನವ ಹೂಳಿದ+ ಉಬ್ಬಿನ ಹುದಿದ(ಆವೃತವಾಗು.ಹೆಚ್ಚಾಗು.ತುಂಬಿಸು.) ಮೋನದ ಸೂಳು (ಸರದಿಯ ಪ್ರಕಾರ ಮಾತನಾಡು, ಸಂಭಾಷಿಸು, ಕೂಡುಮಾತು) ಚಿಂತೆಯ ಬಲಿದ ಭೀತಿಯ ಮೇಲುದುಗುಡದ ದಡಿಯ ವದನದಲಿದ್ದುದು+ ಅಖಿಳ ಜನ.
ಅರ್ಥ:ವೈಶಂಪಾಯನು,'ರಾಜ ಜನಮೇಜಯನೇ ಕೇಳು ಕುರುಪತಿ ಕೌರವನ ಸಾವಿನ ಸರ್ಪವಿಷವಾರ್ತೆ ವೇಢೈಸಿದುದು(ತುಂಬಿತು, ಆವರಿಸು,ಬಳಸು) ಹಸ್ತಿನಾಪುರದ ಜನರಮನವನ್ನು ಹೆಚ್ಚಿ, ಬಹಳವಾಗಿ ತುಂಬಿತು. ಆ ಸಾವಿನಲ್ಲಿ ನೆಡೆದ ಮೋನದ ಮಾತು ಮತ್ತು ಚಿಂತೆಯಿಂದ ತುಂಬಿದ ಭೀತಿಯ ಮತ್ತು ಬಹಳ ದುಗುಡದ ಲಕ್ಷಣದ ಮುಖವನ್ನು ಅಖಿಲ ಜನರೂ ಹೊತ್ತಿದ್ದರು ಎಂದನು.
ಆ ಸಮಯದಲಿ ದೇವ ವೇದ
ವ್ಯಾಸಮುನಿ ಬಂದನು ಗತಾಕ್ಷಮ
ಹೀಶನನು ಚರಣದಲಿ ಹೊರಳಿದಡೆತ್ತಿದನು ಹಿಡಿದು |
ಆ ಸತಿಯ ಕರಸಿದನು ರಾಣೀ
ವಾಸವೆಲ್ಲವ ಬರಿಸಿ ಧರ್ಮವಿ
ಲಾಸವನು ವಿಸ್ತರಿಸಿದನು ವೈದಿಕ ವಿಧಾನದಲಿ || ೨ ||
ಪದವಿಭಾಗ-ಅರ್ಥ: ಆ ಸಮಯದಲಿ ದೇವ ವೇದವ್ಯಾಸಮುನಿ ಬಂದನು ಗತ+ಅಕ್ಷ+ಮಹೀಶನನು(ಕುರುಡು ದೊರೆ) ಚರಣದಲಿ(ಪಾದಗಳ) ಹೊರಳಿದಡೆ+ ಎತ್ತಿದನು ಹಿಡಿದು ಆ ಸತಿಯ ಕರಸಿದನು ರಾಣೀ ವಾಸವೆಲ್ಲವ ಬರಿಸಿ ಧರ್ಮವಿಲಾಸವನು ವಿಸ್ತರಿಸಿದನು ವೈದಿಕ ವಿಧಾನದಲಿ.
ಅರ್ಥ: ಆ ಸಮಯದಲ್ಲಿ ದೇವ ವೇದವ್ಯಾಸಮುನಿಯು ಅಲ್ಲಿಗೆ ಬಂದನು. ಆಗ ದುಃಖದಿಂದ ಕುರುಡು ದೊರೆಯು ಮುನಿಯ ಚರಣದ ಮೇಲೆ ಹೊರಳಿದಾಗ ಮುನಿಯು ಅವನನ್ನು ಹಿಡಿದು ಎತ್ತಿದನು. ನಂತರ ಆ ಸತಿ ಗಾಂಧಾರಿಯನ್ನು ಕರಸಿದನು ಮತ್ತು ರಾಣೀವಾಸದ ಎಲ್ಲರನ್ನು ಅಲ್ಲಿಗೆ ಬರಿಸಿಕೊಂಡು ಧರ್ಮದ ವಿಚಾರವನ್ನು ವೇದಸಮ್ಮತವಾದ ವಿಧಾನದಲ್ಲಿ ವಿಸ್ತರಿಸಿ ಹೇಳಿದನು.
ನಿನ್ನ ಸುತನುದ್ದಂಡತನದಲಿ
ನಿನ್ನ ತಮ್ಮನ ತನುಜರನು ಪರಿ
ಖಿನ್ನರನು ಮಾಡಿದನು ಕಪಟದ್ಯೂತಕೇಳಿಯಲಿ |
ನಿನ್ನ ಮತ ವಿದುರೋಕ್ತಿಗಳ ಮೇಣ್
ಮನ್ನಿಸಿದನೇ ಜಗವರಿಯೆ ಸಂ
ಪನ್ನ ಶಠನಹನೈ ಸುಯೋಧನನೆಂದನಾ ಮುನಿಪ || ೩ ||
ಪದವಿಭಾಗ-ಅರ್ಥ: ನಿನ್ನ ಸುತನು+ ಉದ್ದಂಡತನದಲಿ(ಉದ್ಧಟ- ದುರಹಂಕಾರದಿಂದ) ನಿನ್ನ ತಮ್ಮನ ತನುಜರನು(ಮಕ್ಕಳನ್ನು) ಪರಿಖಿನ್ನರನು(ದುಃಖಿಗಳನ್ನಾಗಿ) ಮಾಡಿದನು ಕಪಟದ್ಯೂತ ಕೇಳಿಯಲಿ(ಆಟದಲ್ಲಿ); ನಿನ್ನ ಮತ(ಅಭಿಪ್ರಾಯ) ವಿದುರ+ ಉಕ್ತಿಗಳ ಮೇಣ್‍, ಮನ್ನಿಸಿದನೇ ಜಗವು+ ಅರಿಯೆ ಸಂಪನ್ನ ಶಠನು+ ಅಹನೈ(ಹಠಗೇಡಿ ಆಗಿರುವನು) ಸುಯೋಧನನು+ ಎಂದನು+ ಆ ಮುನಿಪ.
ಅರ್ಥ:ವ್ಯಾಸನು ಧೃತರಾಷ್ಟ್ರನಿಗೆ,'ನಿನ್ನ ಮಗನು, ಉದ್ದಂಡತನದಿಂದ ನಿನ್ನ ತಮ್ಮ ಪಾಂಡುವಿನ ಮಕ್ಕಳನ್ನು ಕಪಟದ್ಯೂತದ ಆಟದಲ್ಲಿ ಸೊಲಿಸಿ ದುಃಖಿಗಳನ್ನಾಗಿ ಮಾಡಿದನು; ನಿನ್ನ ಅಭಿಪ್ರಾಯವನ್ನಾಗಲಿ, ವಿದುರನ ಮಾತುಗಳನ್ನಾಗಲಿ ಮತ್ತೆ ಮನ್ನಿಸಿದನೇ? ಗೌರವಿಸಿನೆಡೆದನೇ? ಇಲ್ಲ. ಅವನು - ಸುಯೋಧನನು ಜಗತ್ತೇ ತಿಳಿದಂತೆ ಸಂಪನ್ನ ಶಠನಾಗಿದ್ದನು. ಎಂದನು.
ಸೈರಿಸಿದರೇ ಪಾಂಡುಸುತರಂ
ಭೋರುಹಾಕ್ಷಿ ರಜಸ್ವಲೆಯ ಸುಲಿ
ಸೀರೆಯಲಿ ತತ್ಪೂರ್ವಕೃತ ಜತುಗೇಹದಾಹದಲಿ |
ವೈರಬಂಧದ ವಿವಿಧ ವಿಷಮ ವಿ
ಕಾರದಲಿ ವಿಗ್ರಹಮುಖವ ವಿ
ಸ್ತಾರಿಸಿದರೇ ಪಾಂಡುಸುತರುತ್ತಮರೆ ಹೇಳೆಂದ || ೪ ||
ಪದವಿಭಾಗ-ಅರ್ಥ: ಸೈರಿಸಿದರೇ ಪಾಂಡುಸುತರ+ ಅಂಭೋರುಹಾಕ್ಷಿ ರಜಸ್ವಲೆಯ ಸುಲಿ ಸೀರೆಯಲಿ ತತ್+ ಪೂರ್ವಕೃತ ಜತುಗೇಹದಾಹದಲಿ (ಮೊದಲೇ ಕಟ್ಟಿದ ಅರಗಿನ ಮನೆಯ ಬೆಂಕಿಯಲ್ಲಿ ದಹಿಸಲಿಲ್ಲವೇ?), ವೈರಬಂಧದ ವಿವಿಧ ವಿಷಮ ವಿಕಾರದಲಿ (ಕಷ್ಟಸ್ಥಿತಿಯಲ್ಲಿ), ವಿಗ್ರಹಮುಖವ ವಿಸ್ತಾರಿಸಿದರೇ (ಯುದ್ಧಕ್ಕೆ ಇಳಿದರೇ?) ಪಾಂಡುಸುತರು; + ಉತ್ತಮರೆ ಹೇಳೆಂದ.
ಅರ್ಥ:ವ್ಯಾಸನು ಧೃತರಾಷ್ಟನಿಗೆ ,'ನಿನ್ನ ಮಕ್ಕಳು ಪಾಂಡುಸುತರನ್ನು ಸೈರಿಸಿದರೇ- ಸಹಿಸಿಕೊಂಡರೇ? ಇಲ್ಲ. ಅಣ್ನನ ಪತ್ನಿ ಕಮಲನಯನೆಯಾದ ದ್ರೌಪದಿಯು ರಜಸ್ವಲೆಯಾದರೂ ಸಭೆಗೆ ಎಳೆತಂದು ಸಭೆಯಲ್ಲಿ ಅವಳ ಸೀರೆಯನ್ನು ಸುಲಿ- ಬಿಚ್ಚು ಎಂದು ಕೌರವನು ಹೇಳಲಿಲ್ಲವೇ? ಮೊದಲೇ ಕಟ್ಟಿದ ಅರಗಿನ ಮನೆಯ ಬೆಂಕಿಯಲ್ಲಿ ದಹಿಸಲಿಲ್ಲವೇ? ಕೌರವನ ವೈರಸಾಧನೆಯ ವಿವಿಧ ವಿಷಮ ಕಷ್ಟಸ್ಥಿತಿಯಲ್ಲಿ ಬಾಳಿದರೇ ವಿನಃ, ಪಾಂಡುಸುತರು ಯುದ್ಧಕ್ಕೆ ಇಳಿದರೇ? ನಿನ್ನವರು ಉತ್ತಮರೆ? ಹೇಳು,' ಎಂದ.
ಅವರು ಸುಚರಿತರೆಂದಲೇ ಮಾ
ಧವನು ನೆರೆ ಮರುಳಾದನವರಿಗೆ
ಶಿವನು ಮೆಚ್ಚಿದು ಶರವನಿತ್ತನು ನರನ ಪರಿಕರಿಸಿ |
ಭುವನವೆರಡಾದಲ್ಲಿ ಸಾಧುಗ
ಳವರ ದೆಸೆ ದುಸ್ಸಾಧುಗಳು ನಿ
ನ್ನವರ ದೆಸೆಯಾಯ್ತರ್ಜುನನ ಸೂತಜನ ಸಮರದಲಿ || ೫ ||
ಪದವಿಭಾಗ-ಅರ್ಥ: ಅವರು ಸುಚರಿತರೆಂದಲೇ(ನೀತಿವಂತರು) ಮಾಧವನು(ಮಾ-ಲಕ್ಷ್ಮಿ, ಧವ- ಪತಿ= ವಿಷ್ನು / ಕೃಷ್ಣ) ನೆರೆ(ಬಹಳ) ಮರುಳಾದನು,+ ಅವರಿಗೆ, ಶಿವನು ಮೆಚ್ಚಿದು ಶರವನು+ ಇತ್ತನು ನರನ (ಅರ್ಜುನನ)ಪರಿಕರಿಸಿ, ಭುವನವು (ರಾಜ್ಯ)+ ಎರಡಾದಲ್ಲಿ ಸಾಧುಗಳು+ ಅವರ ದೆಸೆ(ರೀತಿ), ದುಸ್ಸಾಧುಗಳು ನಿನ್ನವರ ದೆಸೆಯಾಯ್ತ+ ಅರ್ಜುನನ ಸೂತಜನ ಸಮರದಲಿ.
ಅರ್ಥ:ವ್ಯಾಸನು,'ಅವರು- ಪಾಂಡವರು ಸುಚರಿತರೆಂದೇ ಕೃಷ್ಣನು ಅವರಿಗೆ ಬಹಳ ಮರುಳಾದನು- ಒಲಿದನು. ಅರ್ಜುನನ್ನು ಪರಿಗ್ರಹಿಸಿ ಒಲಿದು ಶಿವನು ಮೆಚ್ಚಿ ಪಾಶುಪತ ಶರವನ್ನು ಕೊಟ್ಟನು. ರಾಜ್ಯವು ಎರಡು ಬಾಗವಾದಾಗ ಅವ ರೀತಿ ನೀತಿ ಸಾಧುತರವಾಗಿತ್ತು. ನಿನ್ನವರು ಅಸೂಯೆಯಿಂದ ದುಸ್ಸಾಧುಗಳ ರೀತಿಯಾಯಿತು. ಅರ್ಜುನನ ಮತ್ತು ಸೂತಜನಾದ ಕರ್ಣನ ಯುದ್ಧದಲ್ಲಿ ನಿನ್ನ ಮತ್ತು ಅವರ ದೆಸೆಯ- ಧರ್ಮದ ಜಯ ನಿರ್ಣಯವಾಯಿತು,' ಎಂದನು.
ಅಹುದು ನಿಮ್ಮ ಯುಧಿಷ್ಠಿರನು ಗುಣಿ
ಯಹನು ಭೀಮಾರ್ಜುನರು ಬಲ್ಲಿದ
ರಹರು ಕೃಷ್ಣನ ಕೂರ್ಮೆಯಲ್ಲಿ ಕಪರ್ದಿಯೊಲವಿನಲಿ |
ಕುಹಕಿಯೆನ್ನವನವನೊಳಗೆ ನಿ
ಸ್ಪೃಹರು ವಿದುರಪ್ರಮುಖ ಸುಜನರು
ವಿಹಿತವೆನಗಿನ್ನಾವುದದ ನೀವ್ ಬೆಸಸಿ ಸಾಕೆಂದ || ೬ ||
ಪದವಿಭಾಗ-ಅರ್ಥ: ಅಹುದು ನಿಮ್ಮ ಯುಧಿಷ್ಠಿರನು ಗುಣಿಯು+ ಅಹನು ಭೀಮಾರ್ಜುನರು ಬಲ್ಲಿದರಹರು ಕೃಷ್ಣನ ಕೂರ್ಮೆಯಲ್ಲಿ ಕಪರ್ದಿಯ (ಕಪರ್ದಿ= ಶಿವ)+ ಒಲವಿನಲಿ, ಕುಹಕಿಯು+ ಎನ್ನವನು+ ಅವನೊಳಗೆ ನಿಸ್ಪೃಹರು ವಿದುರ ಪ್ರಮುಖ ಸುಜನರು ವಿಹಿತವು+ ಎನಗೆ+ ಇನ್ನಾವುದು+ ಅದ ನೀವ್ ಬೆಸಸಿ(ಹೇಳಿ) ಸಾಕು+ ಎಂದ
ಅರ್ಥ:ಅದಕ್ಕೆ ಧೃತರಾಷ್ಟ್ರನು,'ಅಹುದು- ನಿಜ ನಿಮ್ಮ ಯುಧಿಷ್ಠಿರನು ಗುಣವಂತನೇ, ಭೀಮಾರ್ಜುನರು ಕೃಷ್ಣನ ಕೂರ್ಮೆ/ ಪ್ರೀತಿಯಿಂದ ಶಿವನ ಒಲವಿನಿಂದ ಬಲಿಷ್ಠರಾದರು. ನನ್ನವನು / ನನ್ನ ಮಗ ಕುಹಕಿಯು, ಒಪ್ಪಿದೆ. ನನ್ನವರಲ್ಲಿ ನಿಸ್ಪೃಹರು ವಿದುರ ಭೀಷ್ಮ ಪ್ರಮುಖ ಸುಜನರು.ಆ ವಿಷಯ ಹಾಗಿರಲಿ. ಸಾಕು. ನನಗೆ ವಿಹಿತವವು- ಮುಂದೆ ನಾನು ಎಲ್ಲಿ, ಹೇಗೆ ಇರಬೇಕು? ಇನ್ನು ಯಾವುದು ನನಗೆ ಹಿತ ಅದನ್ನು ನೀವು ಹೇಲಿದರೆಸಾಕು,' ಸಾಕು ಎಂದ.
ಧರ್ಮವೆಲ್ಲಿಹುದಲ್ಲಿ ಜಯ ಸ
ತ್ಕರ್ಮವೆಲ್ಲಿಹುದಲ್ಲಿ ಸಿರಿ ಸ
ದ್ಧರ್ಮಸಂರಕ್ಷಕರು ಹರಿ ಧೂರ್ಜಟಿ ಪಿತಾಮಹರು |
ಧರ್ಮದೂರನು ನಿನ್ನವನು ಸ
ತ್ಕರ್ಮಬಾಹಿರನಾತ್ಮರಚಿತ ವಿ
ಕರ್ಮದೋಷದಲಳಿದನಿನ್ನೇನೆಂದನಾ ಮುನಿಪ || ೭ ||
ಪದವಿಭಾಗ-ಅರ್ಥ: ಧರ್ಮವು+ ಎಲ್ಲಿ+ ಇಹುದು+ ಅಲ್ಲಿ ಜಯ ಸತ್ಕರ್ಮವು+ ಎಲ್ಲಿಹುದು+ ಅಲ್ಲಿ ಸಿರಿ ಸದ್ಧರ್ಮ- ಸಂರಕ್ಷಕರು ಹರಿ-ವಿಷ್ಣು, ಧೂರ್ಜಟಿ-ಹರ, ಪಿತಾಮಹರು- ಬ್ರಹ್ಮ, ಧರ್ಮದೂರನು ನಿನ್ನವನು ಸತ್ಕರ್ಮಬಾಹಿರನು+ ಆತ್ಮರಚಿತ(ತಾನೇ ಮಾಡಿದ) ವಿಕರ್ಮ-ದೋಷದಲಿ+ ಅಳಿದನು(ಗತಿಸಿದನು, ಮರಣಹೊಂದಿದನು)+ ಇನ್ನೇನು+ ಎಂದನು+ ಆ ಮುನಿಪ
ಅರ್ಥ: ಆ ಮುನಿಪ ವ್ಯಾಸನು,'ಧರ್ಮವು ಎಲ್ಲಿ ಇರುವುದೊ, ಅಲ್ಲಿ ಜಯವು; ಸತ್ಕರ್ಮವು ಎಲ್ಲಿ ಇರುವುದೊ ಅಲ್ಲಿ ಸಿರಿ- ಸಂಪತ್ತು ಇರುವುದು. ಹರಿ ಹರ,ಬ್ರಹ್ಮರು ಸದ್ಧರ್ಮದ ಸಂರಕ್ಷಕರು. ನಿನ್ನವನಾದ ಕೌರವನು ಧರ್ಮದೂರನು, ಧರ್ಮವನ್ನು ದೂರೀಕರಿಸಿದವನು; ಸತ್ಕರ್ಮಬಾಹಿರನು- ಉತ್ತಮ ಕರ್ಮಗಳನ್ನು ಬಿಟ್ಟವನು. ಆತ್ಮರಚಿತ- ತಾನೇ ಮಾಡಿದ ಕೆಟ್ಟ ಕರ್ಮದೋಷದಿಂದ ಮರಣಹೊಂದಿದನು; ಇನ್ನೇನು ಹೇಳಲಿ, ಎಂದನು.
ಎನಲು ಬಿದ್ದನು ನೆಲಕೆ ಸಿಂಹಾ
ಸನದಿನಾ ಮುನಿವಚನಶರ ಮರು
ಮೊನೆಗೆ ಬಂದುದು ಬಹಳ ಮೂರ್ಛಾ ಪಾರವಶ್ಯದಲಿ
ಜನಪನಿರೆ ಗಾಂಧಾರಿ ನೃಪ ಮಾ
ನಿನಿಯರೊರಲಿತು ರಾಜಗೃಹ ರೋ
ದನ ಮಹಾಧ್ವನಿ ಮೀರಿ ಮೊಗೆದುದು ಹಸ್ತಿನಾಪುರವ ೮
ಪದವಿಭಾಗ-ಅರ್ಥ: ಎನಲು ಬಿದ್ದನು ನೆಲಕೆ ಸಿಂಹಾಸನದಿಂ+ ನಾ+ ಆ ಮುನಿವಚನ+ ಶರ ಮರುಮೊನೆಗೆ ಬಂದುದು ಬಹಳ ಮೂರ್ಛಾ ಪಾರವಶ್ಯದಲಿ ಜನಪನು (ರಾಜನು)+ ಇರೆ ಗಾಂಧಾರಿ ನೃಪ ಮಾನಿನಿಯರು+ ಒರಲಿತು(ಗೋಳಿಟ್ಟರು) ರಾಜಗೃಹ ರೋದನ ಮಹಾಧ್ವನಿ ಮೀರಿ ಮೊಗೆದುದು ಹಸ್ತಿನಾಪುರವ
ಅರ್ಥ: ನಿನ್ನವನಾದ ಕೌರವನು ಧರ್ಮದೂರನು, ಧರ್ಮವನ್ನು ದೂರೀಕರಿಸಿದವನು; ಸತ್ಕರ್ಮಬಾಹಿರನು- ಉತ್ತಮ ಕರ್ಮಗಳನ್ನು ಬಿಟ್ಟವನು. ಆತ್ಮರಚಿತ- ತಾನೇ ಮಾಡಿದ ಕೆಟ್ಟ ಕರ್ಮದೋಷದಿಂದ ಮರಣಹೊಂದಿದನು ಎನ್ನಲು ಧೃತರಾಷ್ಟ್ರನು ಸಿಂಹಾಸನದಿಂದ ನೆಲಕ್ಕೆ ಬಿದ್ದನು. ಆ ಮುನಿವಚನದ ಬಾಣದ ಮರುಮೊನೆಗೆ- ಬಹಳ ಹರಿತಕ್ಕೆ ತಡೆಯಲಾರದೆ ಮೂರ್ಛೆಯು ಬಂದಿತು. ಅದರ ಪರವಶತೆಯಲ್ಲಿ ರಾಜನು ಬಿದ್ದಿರಲು, ಗಾಂಧಾರಿಯೂ ನೃಪನ ಸತಿಯರೂ ಗೋಳಿಟ್ಟರು. ರಾಜಗೃಹ ರೋದನ ಮಹಾಧ್ವನಿ ಮೀರಿ ಮೊಗೆದುದು ಹಸ್ತಿನಾಪುರವ.
ಆರು ಸಂತೈಸುವರು ಲೋಚನ
ವಾರಿ ಹೊನಲಾಯ್ತರಮನೆಯ ನೃಪ
ನಾರಿಯರ ಬಹಳಪ್ರಳಾಪವ್ಯಥೆಯ ಬೇಳುವೆಗೆ |
ಆರು ಮರುಗರು ಶೋಕಪನ್ನಗ
ಘೋರವಿಷ ಮುನಿವರನ ಹೃದಯವ
ಗೋರಿತೇನೆಂಬೆನು ಲತಾಂಗಿಯರಳಲ ಕಳವಳವ || ೯ ||
ಪದವಿಭಾಗ-ಅರ್ಥ:ಆರು (ಯಾರು) ಸಂತೈಸುವರು ಲೋಚನ ವಾರಿ(ಕಣ್ಣಿನ ನೀರು) ಹೊನಲು+ ಆಯ್ತು+ ಅರಮನೆಯ ನೃಪನಾರಿಯರ ಬಹಳ ಪ್ರಳಾಪ ವ್ಯಥೆಯ ಬೇಳುವೆಗೆ(ಸಂಕಟಕ್ಕೆ) ಆರು ಮರುಗರು ಶೋಕಪನ್ನಗ ಘೋರವಿಷ(ಶೋಕವೆಂಬ ಹಾವಿನ ವಿಷ) ಮುನಿವರನ ಹೃದಯವ ಗೋರಿತು+ ಏನೆಂಬೆನು ಲತಾಂಗಿಯರ+ ಅಳಲ ಕಳವಳವ(ದುಃಖ).
ಅರ್ಥ: ರಾಜನ ದುಃಖವನ್ನು ಸಂತೈಸುವರು ಯಾರು ಇದ್ದಾರೆ? ಯಾರೂ ಇಲ್ಲ. ಲೋಚನ ವಾರಿ(ಕಣ್ಣಿನ ನೀರು) ಹೊನಲು+ ಆಯ್ತು+ ಅರಮನೆಯ ರಾಜವನಿತೆಯರ ಬಹಳ ಪ್ರಲಾಪ ವ್ಯಥೆಯ ಸಂಕಟಕ್ಕೆ ಯಾರು ತಾನೆ ಮರುಗದೆ ಇರುವರು? ಶೋಕವೆಂಬ ಹಾವಿನ ವಿಷ ಮುನಿಶ್ರೇಷ್ಠನ ಹೃದಯವನ್ನೂ ಸಹ ಗೋಗರಿಸಿತು. ಲತಾಂಗಿಯರ ಅಳುವುದ್ನ್ನೂ ಅವರ ದುಃಖವನ್ನೂ ಏನೆಂದು ಹೇಳಲಿ!
ಎತ್ತಿದರು ಧರಣಿಪನ ಕಂಗಳೊ
ಳೊತ್ತಿದರು ಪನ್ನೀರನುಸುರಿನ
ತತ್ತಳವನಾರೈದರೊಯ್ಯನೆ ತಾಳವೃಂತದಲಿ
ಬಿತ್ತಿ ತಂಗಾಳಿಯನು ಶೋಕದ
ಹತ್ತಿಗೆಗೆ ಹೊರೆದೆಗೆದು ಮರವೆಯ
ಚಿತ್ತವನು ಚೇತರಿಸಿ ಮೆಲ್ಲನೆ ನುಡಿಸಿದನು ಮುನಿಪ ೧೦
ಪದವಿಭಾಗ-ಅರ್ಥ: ಎತ್ತಿದರು ಧರಣಿಪನ(ರಾಜನ) ಕಂಗಳೊಳು+ ಒತ್ತಿದರು ಪನ್ನೀರನು, ಸುರಿನತ+ ಅತ್ತಳು+ ಅವನ+ ಆರೈದರು+ ಒಯ್ಯನೆ(ಕೂಡಲೆ) ತಾಳವೃಂತದಲಿ (ತಾಳಿಮರದ ಎಲೆಯ ಬೀಸಣಿಕೆ) ಬಿತ್ತಿ (ಗಾಳಿ ಹಾಕಿ) ತಂಗಾಳಿಯನು ಶೋಕದ ಹತ್ತಿಗೆಗೆ (ದುಃಖದ ಬೆಂಕಿಯಲ್ಲಿ ಸುಟ್ಟು ಹತ್ತಿದ) ಹೊರೆದೆಗೆದು ಮರವೆಯ ( ಎಚ್ಚರತಪ್ಪಿದ) ಚಿತ್ತವನು ಚೇತರಿಸಿ ಮೆಲ್ಲನೆ ನುಡಿಸಿದನು ಮುನಿಪ.
ಅರ್ಥ:ಎಚ್ಚರತಪ್ಪಿ ಬಿದ್ದ ರಾಜನನ್ನು ಎತ್ತಿದರು. ಕಣ್ಣುಗಳಿಗೆ ಪನ್ನೀರನ್ನು ಚಿಉಮುಕಿಸಿ ಸುರಿನತ್ತಾ ಒತ್ತಿದರು. ಅತ್ತಲಾಗಿ- ಜೊತೆಗೇ ಅವನನ್ನು ಆರೈದರು- ಉಪಚರಿಸಿದರು. ಕೂಡಲೆ ತಾಳವೃಂತದ ಬೀಸಣಿಕೆಯಲ್ಲಿ ತಂಗಾಳಿಯನ್ನು ಹಾಕಿದರು. ಮನಸ್ಸಿಗೆ ಮುಚ್ಚಿದ ಶೋಕವೆಂಬ ಹೊಗೆಯ ಹತ್ತಿಗೆಯನ್ನು ಹೊರ ತೆಗೆದು, ಎಚ್ಚರತಪ್ಪಿದ ಚಿತ್ತವನ್ನು ಚೇತರಿಸುವಂತೆ ಮಾಡಿ, ವ್ಯಾಸ ಮುನಿಪನು ಅರಸನನ್ನು ಮೆಲ್ಲನೆ ಮಾನಾಡಿಸಿದನು.
ಏನನೆಂದೆವು ಹಿಂದೆ ಧರ್ಮ ನಿ
ಧಾನವನು ಕಯ್ಯೊಡನೆ ಮರೆದೆಯಿ
ದೇನು ನಿನ್ನಯ ಮತಿಯ ವಿಭ್ರಮೆ ನಮ್ಮ ಹೇಳಿಕೆಗೆ |
ಭಾನುಮತಿಯನು ತಿಳುಹು ನಿನ್ನಯ
ಮಾನಿನಿಯ ಸಂತೈಸು ಸಂಸಾ
ರಾನುಗತಿ ತಾನಿದು ಚತುರ್ದಶಜಗದ ಜೀವರಿಗೆ || ೧೧ ||
ಪದವಿಭಾಗ-ಅರ್ಥ: ಏನನು+ ಎಂದೆವು ಹಿಂದೆ ಧರ್ಮ ನಿಧಾನವನು(ನಿಧಾನ - ಸಾರಾಸಾರ ವಿಚಾರ, ವಿಷಯದ ಅಂತಿಮ ಗತಿ) ಕಯ್ಯೊಡನೆ ಮರೆದೆ+ ಯಿ+ ಇದೇನು ನಿನ್ನಯ ಮತಿಯ ವಿಭ್ರಮೆ ನಮ್ಮ ಹೇಳಿಕೆಗೆ ಭಾನುಮತಿಯನು ತಿಳುಹು ನಿನ್ನಯ ಮಾನಿನಿಯ ಸಂತೈಸು ಸಂಸಾರ+ ಅನುಗತಿ ತಾನಿದು ಚತುರ್ದಶ(ಹದಿನಾಲ್ಕು ಲೋಕದ ಜೀವಿಗಳಿಗೆ) ಜಗದ ಜೀವರಿಗೆ.
ಅರ್ಥ:ವ್ಯಾಸ ಮಹರ್ಷಿಯು,'ನಾವು ಏನನ್ನು ಹೇಳಬಾರದ್ದನ್ನು ಹೇಳಿದೆವು? ಇದ್ದ ವಿಚಾರವನ್ನು ಹೇಳಿದ್ದೇವೆ. ಹಿಂದೆ ಮಾಡಬೇಕಾದ ಧರ್ಮದ ಅಂತಿಮ ನಿರ್ಧಾರವನ್ನು ನಿನ್ನ ಕಯ್ಯಾರ ಮರೆತೆ. ನಮ್ಮ ಹೇಳಿಕೆಗೆ ಈಗ ಇದೇನು ನಿನ್ನಯ ಬುದ್ದಿಯ ವಿಭ್ರಮೆ. ಭಾನುಮತಿಗೆ ಆದ ತಪ್ಪನ್ನು ತಿಳುಹಿಇ, ನಿನ್ನ ಮಾನಿನಿ- ಪತ್ನಿಯನನು ಸಮಾಧಾನ ಪಡಿಸು. ಚತುರ್ದಶ ಜಗದ ಜೀವರಿಗೆ ಇದು ತಾನೇ- ಹುಟ್ಟು ಸಾವು, ಸಂಸಾರದ ಅನುಗತಿ- ರೀತಿ, ಕೊನೆಯ ಗತಿ, ಎಂದನು.
ಬಹ ವಿಪತ್ತಿನ ಶರಕೆ ಜೋಡೆಂ
ದಿಹುದಲಾ ಸುವಿವೇಕಗತಿ ನಿ
ರ್ದಹಿಸದೇ ಶೋಕಾಗ್ನಿ ಧರ್ಮದ್ರುಮದ ಬೇರುಗಳ |
ಅಹಿತರೇ ಜನಿಸಿದಡೆ ಸುತರೆನ
ಬಹುದೆ ದುರ್ಯೋಧನನು ಹಗೆ ನಿನ
ಗಿಹಪರದ ಸುಖಗತಿಗೆ ಸಾಧನ ಧರ್ಮಸುತನೆಂದ || ೧೨ ||
ಪದವಿಭಾಗ-ಅರ್ಥ:ಬಹ(ಬರಬಹುದಾದ) ವಿಪತ್ತಿನ(ಕಷ್ಟದ) ಶರಕೆ(ಬಾಣ) ಜೋಡೆಂದು(ಎದುರು ಜೋಡುಬಾಣ,ಪರಿಹಾರ)+ ಇಹುದಲಾ, ಸುವಿವೇಕಗತಿ ನಿರ್ದಹಿಸದೇ ಶೋಕಾಗ್ನಿ ಧರ್ಮದ್ರುಮದ(ಧರ್ಮದ ಮರದ) ಬೇರುಗಳ, ಅಹಿತರೇ ಜನಿಸಿದಡೆ ಸುತರು (ಮಕ್ಕಳು)+ ಎನಬಹುದೆ ದುರ್ಯೋಧನನು ಹಗೆ, ನಿನಗೆ+ ಇಹಪರದ ಸುಖಗತಿಗೆ ಸಾಧನ ಧರ್ಮಸುತನು+ ಎಂದ.
ಅರ್ಥ:ಬರಬಹುದಾದ ವಿಪ್ಪತ್ತಿನ ಬಾಣಕ್ಕೆ ಎದುರು ಅಸ್ತ್ರದಬಾಣ ಪರಿಹಾರವು ಇರುವುದಲ್ಲವೇ! ಹಾಗೆಯೇ, ಧರ್ಮವೆಂಬ ಮರದ ಬೇರುಗಳಂತಿರುವ ಸುವಿವೇಕದ ನಡೆಯು ಶೋಕದ ಅಗ್ನಿಯನ್ನು ಶಮನಗೊಳಿಸುವ ಕಾರ್ಯವನ್ನು ನಿರ್ದಹಿಸುವುದಿಲ್ಲವೆ? ಶತ್ರುಗಳಂತಿರವ ಅಹಿತರಾದ ಮಕ್ಕಳೇ ಹುಟ್ಟಿದರೆ ಜನಿಸಿದಡೆ ಅವರನ್ನು ಮಕ್ಕಳು ಎಂದು ಹೇಳಬಹುದೇ? ಅರಸನೇ ನಿನಗೆ ದುರ್ಯೋಧನನು ಶತ್ರು ಎಂದು ತಿಳಿ., ನಿನಗೆ ಇಹಕ್ಕೂ ಪರಲೋಕದ ಸುಖಗತಿಗೆ ಸಾಧನ ಧರ್ಮಸುತನು,' ಎಂದ.

ವಿದುರನ ಸಲಹೆ[ಸಂಪಾದಿಸಿ]

ಕೇಳು ಮುನಿಭಾಷಿತವ ನೃಪ ನೀ
ನಾಲಿಸುವುದಾತ್ಮಜರನಿಲ್ಲಿಂ
ಮೇಲೆ ಸಲಿಲಾಂಜಲಿಗಳನು ವೈದಿಕವಿಧಾನದಲಿ |
ಪಾಲಿಸುವುದಾ ಪಾಂಡುಸುತರ ಸ
ಮೇಳದಲಿ ಸೇರುವುದು ಚಿತ್ತಕೆ
ತಾಳದಿರು ರಾಜಸ ವಿಕಾರವನೆಂದನಾ ವಿದುರ || ೧೩ ||
ಪದವಿಭಾಗ-ಅರ್ಥ: ಕೇಳು ಮುನಿಭಾಷಿತವ (ಮುನಿ ಹೇಳಿದುದನ್ನು) ನೃಪ ನೀನು+ ಆಲಿಸುವುದು(ಕಿವಿಗೊಟ್ಟು ಕೇಳು),+ ಆತ್ಮಜರನು (ಮಕ್ಕಳು)+ ಇಲ್ಲಿಂ ಮೇಲೆ(ಇನ್ನು ಮುಂದೆ) ಸಲಿಲ+ ಅಂಜಲಿಗಳನು (ಜಲ ತರ್ಪಣಗಳನ್ನು) ವೈದಿಕವಿಧಾನದಲಿ ಪಾಲಿಸುವುದು,+ ಆ ಪಾಂಡುಸುತರ ಸಮೇಳದಲಿ(ಜೊತೆಯಲ್ಲಿ) ಸೇರುವುದು, ಚಿತ್ತಕೆ (ಮನಸ್ಸಿಗೆ) ತಾಳದಿರು ರಾಜಸ ವಿಕಾರವನು,+ ಎಂದನಾ ವಿದುರ
ಅರ್ಥ:ವಿದುರನು ಧೃತರಾಷ್ಟ್ರನಿಗೆ,'ನೃಪನೇ, ಮುನಿ ಹೇಳಿದುದನ್ನು ಕಿವಿಗೊಟ್ಟು ಕೇಳು, ಅದರಂತೆ ನೆಡೆದುಕೊ. ಇನ್ನು ಮುಂದೆ ನಿನ್ನ ಮಕ್ಕಳನ್ನು ಸ್ವರ್ಗಲೊಕಕ್ಕೆ ಸೇರಿಸಲು ಜಲ ತರ್ಪಣಾದಿಗಳನ್ನು ವೈದಿಕವಿಧಾನದಲ್ಲಿ ಮಾಡುವ ನಿಯಮಗಳನ್ನು ಪಾಲಿಸುವುದು. ಆ ಪಾಂಡುವಿನ ಮಕ್ಕಳ ಜೊತೆಯಲ್ಲಿ ಸೇರಿಕೊಳ್ಳುವುದು; ನಿನ್ನ ಮನಸ್ಸಿನಲ್ಲಿ ರಾಜಸ ವಿಕಾರವಾದ ದ್ವೇಷ, ಕೋಪ, ಅಸೂಯೆ ಮೊದಲಾದ ಕೆಟ್ಟ ವಿಚಾರಗಳನ್ನು ತಾಳಬೇಡ,' ಎಂದನು.

ಗಾಂಧಾರಿಗೆ ಮುನಿಯ ಹಿತವಚನ[ಸಂಪಾದಿಸಿ]

ತಾಯೆ ಹದುಳಿಸು ದೇವಲೋಕದ
ಲಾಯದಲಿ ಸಲಿಸಾ ಕುಮಾರರ
ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ
ರಾಯನಲಿ ಸೊಸೆಯರಿಗೆ ಮಿಕ್ಕಬು
ಜಾಯತಾಕ್ಷಿಯರಿಗೆ ವಿಶೋಕದ
ಬಾಯಿನವ ಕೊಡಿಸೆಂದನಾ ಮುನಿ ಸುಬಲನಂದನೆಗೆ ೧೪
ಪದವಿಭಾಗ-ಅರ್ಥ: ತಾಯೆ ಹದುಳಿಸು(ಸಮಾಧಾನಗೊಳ್ಳು. ಚೇತರಿಸಿಕೊಳ್ಳು. ನಿಯಂತ್ರಿಸು.), ದೇವಲೋಕದ ಲಾಯದಲಿ ಸಲಿಸು+ ಆ ಕುಮಾರರನು+ ಆಯುಷದ ಲಿಪಿ ಹಣೆಯಲಿ+ ಒರಸಿದಡೆ (ತೆಗೆದರೆ, ಮುಗಿದರೆ)+ ಆರ(ಯಾರ) ವಶವು + ಇದಕೆ ರಾಯನಲಿ ಸೊಸೆಯರಿಗೆ ಮಿಕ್ಕ+ ಅಬುಜಾಯತಾಕ್ಷಿಯರಿಗೆ (ವನಿತೆಯರಿಗೆ) ವಿಶೋಕದ(ಶೋಕ ಹೋಗುವ) ಬಾಯಿನವ(ಬಾಯಿನ ಮಾತು) ಕೊಡಿಸು+ ಎಂದನು+ ಆ ಮುನಿ ಸುಬಲನಂದನೆಗೆ (ಗಾಂಧಾರಿ, ಸುಬಲನ ಮಗಳು).
ಅರ್ಥ:ಆಗ ವ್ಯಾಸನು ಗಾಂಧಾರಿಗೆ,'ತಾಯೆ, ಚೇತರಿಸಿಕೊಂಡು ಮನಸ್ಸನ್ನು ನಿಯಂತ್ರಿಸು, ಸಮಾಧಾನಮಅಡಿಕೊ. ಯುದ್ಧದಲ್ಲಿ ಮರಣಹೊಂದಿದ, ಆ ನಿನ್ನ ಕುಮಾರರನ್ನು ದೇವಲೋಕದ ಅರಮನೆಗೆ ಸಲ್ಲಿಸು- ಕಳಿಸು. ಆಯುಷ್ಯದ ಲಿಪಿ ಹಣೆಯಲ್ಲಿ ಬರೆದಿದ್ದು ಮುಗಿದರೆ, ಬದುಕಿಸುವುದು ಯಾರ ವಶವದಲ್ಲಿದೆ? ಆದ್ದರಿಂದ ಇದಕ್ಕೆ ಧೃತರಾಷ್ಟ್ರರಾಯನಿಂದ ಸೊಸೆಯರಿಗೆ ಉಳಿದ ವನಿತೆಯರಿಗೆ ಶೋಕವನ್ನು ನಿವಾರಿಸುವ ಮಾತುಗಳನ್ನು ಹೇಳಿಸು,' ಎಂದನು.

ಧೃತರಾಷ್ಟ್ರನು ಅರಮನೆಯಿಂದ ಹೊರಟನು[ಸಂಪಾದಿಸಿ]

ಧರಣಿಪತಿ ಹೊರವಂಟನಂತಃ
ಪುರವ ಬಿಸುಟರು ಭಾನುಮತಿ ಸಹಿ
ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ ||
ಕರದಬಸುರಿನ ಹೊಯ್ಲ ಕಜ್ಜಳ
ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷೆಯರು ನೆರೆದುದು ಲಕ್ಕ ಸಂಖ್ಯೆಯಲಿ || ೧೫ ||
ಪದವಿಭಾಗ-ಅರ್ಥ: ಧರಣಿಪತಿ ಹೊರವಂಟನು+ ಅಂತಃಪುರವ ಬಿಸುಟರು ಭಾನುಮತಿ ಸಹಿತ+ ಅರಸಿಯರು ಹೊರವಂಟರು+ ಏಕಾಂಬರದ ಬಿಡುಮುಡಿಯ ಕರದ(ಕೈಯಲ್ಲಿ) ಬಸುರಿನ (ಹೊಟ್ಟೆಯ) ಹೊಯ್ಲ (ಬಡಿತ) ಕಜ್ಜಳ(ಕಾಡಿಗೆ), ಪರಿಲುಳಿತ(ಉರುಳಿ ಬಿದ್ದ), ನಯನಾಂಬುಗಳ ಕಾತರಿಪ ಕಮಲಾಕ್ಷೆಯರು ನೆರೆದುದು ಲಕ್ಕ ಸಂಖ್ಯೆಯಲಿ.
ಅರ್ಥ: ಧರಣಿಪತಿ ಧೃತರಾಷ್ಟ್ರನುಅರಮನೆಯಿಂದ ಹೊರಹೊರಟನು. ಭಾನುಮತಿ ಸಹಿತ ಕೌರವರ ಅರಸಿಯರೂ ಸಹ ಅಂತಃಪುರವ ಬಿಟ್ಟು ಹೊರಹೊರಟರು. ಅವರ ಜೊತೆ ಅಲಂಕಾರವಿಲ್ಲದೆ ಏಕಾಂಬರದಲ್ಲಿ ಬಿಚ್ಚಿದ ಬಿಡುಮುಡಿಯನ್ನು ಬಿಟ್ಟುಕೊಂಡು, ಕೈಯಲ್ಲಿ ಹೊಟ್ಟೆಯನ್ನು ಬಡಿದುಕೊಳ್ಳುತ್ತಾ ಕಣ್ಣಿಗೆ ಹಚ್ಚಿದ ಕಾಡಿಗೆಯು ಕರಗಿ ಉರುಳಿ ಬೀಳುತ್ತಿರುವ ಕಣ್ಣೀರಿನ ಹನಿಗಳೊಡನೆ ಕಾತರ ಸಂಕಟಗಳಿಂದ ಕೂಡಿದ ಕಮಲಾಕ್ಷೆಯರು ಲಕ್ಷ ಸಂಖ್ಯೆಯಲ್ಲಿ ಸೇರಿಕೊಂಡರು.
ವಣಿಜಸತಿಯರು ಶಿಲ್ಪಿಜನವುಪ
ವಣಿಜದಬಲಾಜನವಘಾಟದ
ಗಣಿಕೆಯರು ನಾನಾದಿಗಂತದ ರಾಜಪತ್ನಿಯರು |
ಹಿಣಿಲ ಕಬರಿಯ ಹೊಲೆವ ಮುಂದಲೆ
ವಣಿಯ ಮುಕುರ ಮುಖಾಂಬುಜದ ಪದ
ಝಣಝಣತ್ಕೃತಿ ಜಡಿಯೆ ನಡೆದುದು ಬೀದಿಬೀದಿಯಲಿ || ೧೬ ||
ಪದವಿಭಾಗ-ಅರ್ಥ: ವಣಿಜಸತಿಯರು(ವಣಿಜ= ವರ್ತಕ) ಶಿಲ್ಪಿಜನವು ಪವಣಿಜದ(ಮಣಿ ಜೋಡಿಸುವವರು)+ ಅಬಲಾಜನವು(ಅಬಲೆ= ಹೆಣ್ಣು)+ ಅಘಾಟದ(ಅಘಾಟ= ಅದ್ಭುತ) ಗಣಿಕೆಯರು (ವೇಶ್ಯೆಯರು) ನಾನಾದಿಗಂತದ(ದಿಕ್ಕಿನ) ರಾಜಪತ್ನಿಯರು, ಹಿಣಿಲ(ಜಡೆ) ಕಬರಿಯ(ತಲೆಕೂದಲು, ತುರುಬು ) ಹೊಲೆವ ಮುಂದಲೆ ವಣಿಯ ಮುಕುರ ಮುಖಾಂಬುಜದ(ಕಮಲಮುಖಿಯರ) ಪದ ಝಣಝಣತ್ಕೃತಿ ಜಡಿಯೆ ನಡೆದುದು ಬೀದಿಬೀದಿಯಲಿ.
ಅರ್ಥ:ಅರಮನೆಯಿಂದ ಹೊರಟ ಧರತರಾಷ್ಟ್ರನ ಜೊತೆಯಲ್ಲಿ, ವರ್ತಕರ ಹೆಂಡಿರು,ಶಿಲ್ಪಿಗಳ ಕುಟುಂಬದವರು, ಮಣಿ ಜೋಡಿಸುವ ಅಲಂಕಾರ ಮಾಡುವ ಸ್ತ್ರೀಯರು ಅದ್ಭುತ ಸುಂದರ ಗಣಿಕೆಯರು, ನಾನಾ ದಿಕ್ಕಿನ ರಾಜ್ಯಗಳ ರಾಜಪತ್ನಿಯರು, ಜಡೆ ಹಾಕಿದವರು, ಮುಂದಲೆಯ ಹೊಲೆವ ಕಬರಿಯ- ತುರಿಬಿನವರು, ಮಣಿಯನ್ನೂ, ಮುಕುರವನ್ನೂ ಹಿಡಿದ ಕಮಲಮುಖಿಯರ ಸಮೂಹದ ಪಾದಗಳ ನೆಡಿಗೆಯ ಝಣಝಣತ್ಕೃತಿ ನೆಲಕ್ಕೆ ಜಡಿಯೆ- ತಾಗುತ್ತಿರಲು, ಅವರು ಹಸ್ತಿನಾವತಿಯ ಬೀದಿಬೀದಿಯಲ್ಲಿ ನಡೆದರು.
ಎಸಳುಗಂಗಳ ಬೆಳಗನಶ್ರು
ಪ್ರಸರ ತಡೆದುದು ಶೋಕಮಯಶಿಖಿ
ಮುಸುಡಕಾಂತಿಯ ಕುಡಿದುದೊಸರುವ ಬಿಸಿಲ ಬೇಗೆಗಳು |
ಮಿಸುಪ ಲಾವಣ್ಯಾಂಬುವನು ಬ
ತ್ತಿಸಿದವಂಗುಲಿಯುಪಹತಿಯ ಕೇ
ಣಸರ ಸೆಳೆದುದು ಕುಚದ ಚೆಲುವನು ಕೋಮಲಾಂಗಿಯರ || ೧೭ ||
ಪದವಿಭಾಗ-ಅರ್ಥ: ಎಸಳುಗಂಗಳ ಬೆಳಗನು+ ಅಶ್ರು ಪ್ರಸರ ತಡೆದುದು, ಶೋಕಮಯ ಶಿಖಿ(ಬೆಂಕಿಯಜ್ವಾಲೆ) ಮುಸುಡ(ಮುಖದ)ಕಾಂತಿಯ ಕುಡಿದುದು,+ ಉಸರುವ ಬಿಸಿಲ ಬೇಗೆಗಳು ಮಿಸುಪ(ಶೋಭಿಸುವ) ಲಾವಣ್ಯಾಂಬುವನು (ಅಂಬು= ನೀರು, ಕಮಲದ ಕೊಳ) ಬತ್ತಿಸಿದವು,+ ಅಂಗುಲಿಯ(ಬೆರಳು, ಕಾಲಿನ ಬೆರಳು, ತುದಿಗಾಲು)+ ಉಪಹತಿಯ(ಪೆಟ್ಟು) ಕೇಣಸರ (ಹೊಟ್ಟೆಕಿಚ್ಚು) ಸೆಳೆದುದು ಕುಚದ ಚೆಲುವನು ಕೋಮಲಾಂಗಿಯರ(ಸುಂದರಿಯರ)
ಅರ್ಥ:ವಿಶಾಲವಾದ ಕಮಲದ ಎಸಳಿನಂತಿರುವ ಕಣ್ನುಗಳ ಬೆಳಕನ್ನು ಆ ಪತಿ- ಪುತ್ರರನ್ನು ಕಳೆದುಕೊಂಡ ಸನ್ನಿವೇಶದಲ್ಲಿ ಅಶ್ರುಜಲ- ಕಣ್ಣೀರು ತಡೆಯಿತು; ಶೋಕಮಯ ಶಿಖಿ- ಬೆಂಕಿಯಜ್ವಾಲೆ ಮುಖದ ಕಾಂತಿಯನ್ನು ಕುಡಿಯಿತು; ಉಸರುವ ಬಿಸಿಲಿನಂತಿರುವ ಬೇಗೆಗಳು- ನಿಟ್ಟಸಿರುಗಳು ಶೋಭಿಸುವ ಹೆಣ್ಣಿನ ಲಾವಣ್ಯದ ಕೊಳವನ್ನೇ ಬತ್ತಿಸಿದವು; ನೆಡೆಯುವಾಗ ಅಂಗುಲಿಯ- ಕಾಲುಬೆರಳ ಪೆಟ್ಟಿನನೋವು ಕೋಮಲಾಂಗಿಯರ ಕುಚದ ಚೆಲುವನ್ನು ಸೆಳೆಯಿತು.
ತಮ್ಮೊಳೇಕತ್ವದ ಸಖಿತ್ವದ
ಸೊಮ್ಮಿನಲಿ ಶ್ರುತಿಯಶ್ರುಜಲವನು
ನಿರ್ಮಿಸಿದವೆನೆ ಕರ್ಣಪೂರದ ಮುತ್ತು ಸೂಸಿದವು ||
ನೆಮ್ಮಿತತಿಶಯ ಶೋಕವಹ್ನಿಯ
ರೊಮ್ಮಿಗೆಯ ಕರಣಂಗಳಲಿ ನೃಪ
ಧರ್ಮಪತ್ನಿಯರಳುತ ಹೊರವಂಟರು ಪುರಾಂತರವ || ೧೮ ||
ಪದವಿಭಾಗ-ಅರ್ಥ: ತಮ್ಮೊಳು+ ಏಕತ್ವದ ಸಖಿತ್ವದ ಸೊಮ್ಮಿನಲಿ(ಸೊಂಪಿನಲ್ಲಿ) ಶ್ರುತಿಯ(ಶ್ರುತಿ (ಸಂ) ಕೇಳುವಿಕೆ, ಒಂದೇ ರಾಗ )+ ಅಶ್ರುಜಲವನು (ಕಣ್ಣೀರನ್ನು) ನಿರ್ಮಿಸಿದವು+ ಎನೆ ಕರ್ಣಪೂರದ (ಕಿವಿಯನ್ನು ತುಂಬಿದ) ಮುತ್ತು ಸೂಸಿದವು ನೆಮ್ಮಿತು (ಅವಲಂಬಿಸು, ಆಶ್ರಯಿಸು - ತಂಬು)+ ಅತಿಶಯ ಶೋಕವಹ್ನಿಯರು(ವಹ್ನಿ= ಬೆಂಕಿ)+ ಒಮ್ಮಿಗೆಯ (ಆ ಕೂಡಲೆ) ಕರಣಂಗಳಲಿ(ಮನಸ್ಸಿನಲ್ಲಿ) ನೃಪಧರ್ಮಪತ್ನಿಯರು+ ಅಳುತ ಹೊರವಂಟರು ಪುರ+ ಅಂತರವ.
ಅರ್ಥ:ಆ ವನಿತೆಯರು ಪತಿ ಪುತ್ರವಿಯೋಗ ವಿಚಾರದಲ್ಲಿ ತಮ್ಮೊಲ್ಲಿ ಏಕತ್ವದ ಸಖಿತ್ವದ ಸೊಂಪಿನಲ್ಲಿ ದುಃಖಿಸುವಾಗ ಒಂದೇ ದನಿಯ ಶ್ರುತಿಯ ಅಶ್ರುಜಲಧಾರೆಯನ್ನು ನಿರ್ಮಿಸಿದವು ಎನ್ನುವಂತೆ ಕಿವಿಯನ್ನು ತುಂಬಿದ ಆ ಜಲದಾರೆಯಲ್ಲಿ, ಕಣ್ಣೀರು ಹನಿಗಳ ಮುತ್ತುಗಳು ಸೂಸಿದವು- ಚೆಲ್ಲಿತು. ಅವರನ್ನು ಅತಿಶಯವಾದ ಶೋಕವೆಂಬ ಬೆಂಕಿಯು ಅವರ ಮನಸ್ಸನ್ನು ಆ ಕೂಡಲೆ ಆವರಿಸಿ ತುಂಬಿತು; ಹೀಗೆ (ಮರಣಹೊಂದಿದ) ರಾಜರ ಧರ್ಮಪತ್ನಿಯರು ಅಳುತ್ತಾ ಹಸ್ತಿನಾಪುರವನ್ನು ಬಿಟ್ಟು ಹೊರಹೊರಟರು.
ಉಡಿದು ಬಿದ್ದವು ಸೂಡಗವು ಬಿಗು
ಹಡಗಿ ಕಳೆದವು ತೋಳ ಬಂದಿಗ
ಳೊಡನೊಡನೆ ಚೆಲ್ಲಿದವು ಮುತ್ತಿನ ಹಾರಚಯ ಹರಿದು |
ಬಿಡುಮುಡಿಯ ಕಡುತಿಮಿರ ಕಾರಿದು
ದುಡುಗಣವನೆನೆ ಸೂಸಕದ ಮು
ತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ ||೧೯ ||
ಪದವಿಭಾಗ-ಅರ್ಥ: ಉಡಿದು(ತಿರುಚಿ) ಬಿದ್ದವು ಸೂಡಗವು(ಕೈ ಕಡಗ, ಹೂವಿನದಂಡೆ), ಬಿಗುಹು+ ಅಡಗಿ (ಬಿಗಿತಪ್ಪಿ ಸಡಿಲವಾಗಿ) ಕಳೆದವು ತೋಳ ಬಂದಿಗಳು+ ಒಡನೊಡನೆ ಚೆಲ್ಲಿದವು ಮುತ್ತಿನ ಹಾರಚಯ(ಹಾರಗಳು) ಹರಿದು ಬಿಡುಮುಡಿಯ(ಬಿಚ್ಚಿದ ಕೂದಲಿನ) ಕಡುತಿಮಿರ (ಕತ್ತಲೆ) ಕಾರಿದುದು (ಚಿಮ್ಮಿಹಬ್ಬಿತು)+ ಉಡುಗಣವನು(ನಕ್ಷತ್ರ ಸಮೂಹ)+ ಎನೆ ಸೂಸಕದ (ಬೈತಲೆ ಬಟ್ಟು) ಮುತ್ತಡಿಸಿ ಸುರಿದವು ನೆಲಕೆ ನೃಪವನಿತಾ ಕದಂಬದಲಿ(ಜನಕದಂಬ - ಜನರ ಗುಂಪು)
ಅರ್ಥ: ಈ ರಾಜವನಿತೆಯರು ನೆಡೆಯುವಾಗ ಕೈ ಕಡಗ, ಹೂವಿನದಂಡೆಗಳು ತಿರುಚಿಕೊಂಡು ಬಿದ್ದವು. ತೋಳ ಬಂದಿಗಳು ಸಡಿಲವಾಗಿ ಒಡನೊಡನೆ ನೆಲಕ್ಕೆ ಚೆಲ್ಲಿ ಬಿದ್ದವು. ಹಾಗೆಯೇ ಮುತ್ತಿನ ಹಾರಗಳು ಹರಿದು ಬಿದ್ದವು. ಬಿಚ್ಚಿ ಹರಡಿದ ತಲೆಕೂದಲಿನ ದಟ್ಟಕತ್ತಲೆ ಚಿಮ್ಮಿ ನಕ್ಷತ್ರಗಳ ಸಮೂಹಕ್ಕೆ ಹಬ್ಬಿತು, ಎನ್ನುವಂತಿರಲು, ಬೈತಲೆಯ ಬೊಟ್ಟಿನ ಮುತ್ತುಗಳು ಅಡಿಸಿ- ಒಂದಕ್ಕೊಂದು ಒತ್ತಿ ನೆಲಕ್ಕೆ ಸುರಿದವು. ಹೀಗೆ ನೃಪವನಿತೆಯರ ಗುಂಪು ಹಸ್ತಿನಾವತಿಯಿಂದ ಚಲಿಸಿತು.
ಗಾಳಿಯರಿಯದು ಮುನ್ನ ರವಿಕಿರ
ಣಾಳಿ ಸೋಂಕದಪೂರ್ವರೂಪಿನ
ಮೇಲೆ ಬೀಳುವವೆಂಬವೊಲು ಕಡುವಿಸಿಲು ಬಿರುಗಾಳಿ |
ತೂಳಿದವು ತರುಣಿಯರನಾವವ
ರಾಲಿಯರಿಯದ ನೆಲೆಯನಾ ಚಾಂ
ಡಾಲಜನ ಪರಿಯಂತ ಕಂಡುದು ರಾಯ ರಾಣಿಯರ || ೨೦ ||
ಪದವಿಭಾಗ-ಅರ್ಥ:ಗಾಳಿಯು+ ಅರಿಯದು ಮುನ್ನ ರವಿಕಿರಣಾಳಿ ಸೋಂಕದ, ಪೂರ್ವರೂಪಿನ ಮೇಲೆ ಬೀಳುವವೆಂಬವೊಲು ಕಡುವಿಸಿಲು ಬಿರುಗಾಳಿ ತೂಳಿದವು, ತರುಣಿಯರನು+ ಆವವರ+ ಆಲಿಯ (ಅಪ್ಪಿಕೊಳ್ಳುವುದು, ತಬ್ಬುಗೆ)+ ಅರಿಯದ ನೆಲೆಯನು+ ಆ ಚಾಂಡಾಲಜನ ಪರಿಯಂತ ಕಂಡುದು ರಾಯ ರಾಣಿಯರ.
ಅರ್ಥ:ಈ ವನಿತೆಯರ ಸೌಂದರ್ಯವನ್ನು ಮುಖವನ್ನೂ, ಈ ಮೊದಲು ಮುನ್ನ ಹೊರಗಿನ ಗಾಳಿಯೂ ಅರಿತಿರಲಿಲ್ಲ; ಸೂರ್ಯನ ಕಿರಣಗಳ ಸಮೂಹವೂ ಸೋಕಿರಲಿಲ್ಲ; ಈಗ ಆ ಸೇಡಿಗಾಗಿ ಹಿಂದಿನ ಪೂರ್ವರೂಪಿನ ಮೇಲೆ ಬೀಳುವವು ಎಂಬಂತೆ, ಕಡುಬಿಸಿಲು, ಬಿರುಗಾಳಿ, ಆ ತರುಣಿಯರನ್ನು ಯಾವ ಅವರು ಮುಟ್ಟದ, ತಬ್ಬದ, ತಿಳಿಯದ ಸ್ತ್ರೀಯರ ನೆಲೆಯನ್ನು ಊರಜನ ಪರಿಯಂತ ಆ ಚಾಂಡಾಲ ಜನರೂ, ಎಲ್ಲರೂ ತೂಳಿ- ನುಗ್ಗಿಬಂದು ರಾಜಪರಿವಾರದ ರಾಣಿಯರನ್ನು ಕಂಡರು.
ಅರಸ ಚಿತ್ತೈಸವರು ಹಸ್ತಿನ
ಪುರವ ಹೊರವಡೆ ದೂರದಲಿ ಕೃಪ
ಗುರುಜ ಕೃತವರ್ಮಕರು ಕಂಡರು ಕೌರವೇಶ್ವರನ |
ಅರಸಿಯರ ನಾನಾದಿಗಂತದ
ಧರಣಿಪರ ಭಗದತ್ತ ಮಾದ್ರೇ
ಶ್ವರ ಜಯದ್ರಥ ಕರ್ಣ ದುಶ್ಶಾಸನರ ರಾಣಿಯರ || ೨೧ ||
ಪದವಿಭಾಗ-ಅರ್ಥ: ಅರಸ ಚಿತ್ತೈಸು(ಕೇಳು)+ ಅವರು ಹಸ್ತಿನಪುರವ ಹೊರವಡೆ ದೂರದಲಿ ಕೃಪಗುರುಜ ಕೃತವರ್ಮಕರು ಕಂಡರು ಕೌರವೇಶ್ವರನ ಅರಸಿಯರ ನಾನಾದಿಗಂತದ ಧರಣಿಪರ (ರಾಜರ) ಭಗದತ್ತ ಮಾದ್ರೇಶ್ವರ ಜಯದ್ರಥ ಕರ್ಣ ದುಶ್ಶಾಸನರ ರಾಣಿಯರ.
ಅರ್ಥ: ಅರಸ ಜಬನಮೇಜಯನೇ ಚಿತ್ತೈಸು, ರಾಣೀವಾಸದ ಅವರು ಹಸ್ತಿನಾಪುರವ ಹೊರಗಡೆ ಬಂದಾಗ ದೂರದಲ್ಲಿದ್ದ ಕೃಪ, ಗುರುಜ- ಅಶ್ವತ್ಥಾಮ, ಕೃತವರ್ಮಕರು ಅವರನ್ನು ನೋಡಿದರು. ಅವರಲ್ಲಿ ಕೌರವೇಶ್ವರನ ರಾಣಿಯರನ್ನೂ, ನಾನಾದಿಕ್ಕಿನ ದೇಶದ ರಾಜರಾದ ಭಗದತ್ತ, ಮಾದ್ರೇಶ್ವರ, ಜಯದ್ರಥ, ಕರ್ಣ, ದುಶ್ಶಾಸನರ ರಾಣಿಯರನ್ನು ಕಂಡರು.
ಗಣಿಕೆಯರನೇಕಾದಶಾಕ್ಷೋ
ಹಿಣಿಯ ನೃಪರಾಣಿಯರನಾ ಪ
ಟ್ಟಣ ಜನದ ಪರಿಜನದ ಬಹುಕಾಂತಾ ಕದಂಬಕವ |
ರಣಮಹೀದರುಶನಕೆ ಬಹು ಸಂ
ದಣಿಯ ಕಂಡರು ಧರ್ಮಸುತನಿ
ನ್ನುಣಲಿ ಧರಣಿಯನೆಂದು ಸುಯ್ದರು ಬಯ್ದು ಕಮಲಜನ || ೨೨ ||
ಪದವಿಭಾಗ-ಅರ್ಥ: ಗಣಿಕೆಯರನು(ವೇಶ್ಯೆಯರನ್ನು), ಏಕಾದಶ+ ಅಕ್ಷೋಹಿಣಿಯ (ಸೇನೆಯ) ನೃಪರಾಣಿಯರನು+ ಆ ಪಟ್ಟಣ ಜನದ ಪರಿಜನದ ಬಹುಕಾಂತಾ ಕದಂಬಕವ (ಸಮೂಹ), ರಣಮಹೀ (ರಣಭೂಮಿ ಕುರುಕ್ಷೇತ್ರ) ದರುಶನಕೆ ಬಹು ಸಂದಣಿಯ ಕಂಡರು; ಧರ್ಮಸುತನು+ ಇನ್ನು+ ಉಣಲಿ ಧರಣಿಯನೆಂದು(ರಾಜ್ಯವನ್ನು) ಸುಯ್ದರು (ನಿಟ್ಟುಸಿರುಬಿಟ್ಟರು) ಬಯ್ದು ಕಮಲಜನ(ಬ್ರಹ್ಮ).
ಅರ್ಥ:ಕೃಪಾದಿಗಳು ಕುರುಕ್ಷೇತ್ರ ರಣಭೂಮಿಯನ್ನು ನೋಡಲು ಬರತ್ತಿರುವ, ವೇಶ್ಯೆಯರನ್ನು, ಹನ್ನೊಂದು ಅಕ್ಷೋಹಿಣಿ ಸೇನೆಯ ರಾಜನ ರಾಣಿಯರನ್ನು ಆ ಪಟ್ಟಣದ ಜನರನ್ನು, ಅವರ ಪರಿಜನರನ್ನು, ಬಹುಸಂಖ್ಯೆಯ ವಿಧವೆಯರಾದ ಕಾಂತೆಯರ ಸಮೂಹವನ್ನು, ಇಂತಹ ಬಹು ವನಿತೆಯರ ಸಂದಣಿಯನ್ನು ಕಂಡರು. ಅವರು ಧರ್ಮಸುತ ಯುಧಿಷ್ಟಿರನು ಈ ವಿಧವೆಯರು ತುಂಬಿದ ರಾಜ್ಯವನ್ನು ಇನ್ನು ಅನುಭವಿಸಲಿ ಎಂದು ಕಮಲಜನಾದ ವಿಧಾತನನ್ನು ಬಯ್ದು ನಿಟ್ಟುಸಿರುಬಿಟ್ಟರು.
ಬಂದು ಧೃತರಾಷ್ಟ್ರಾವನೀಶನ
ಮುಂದೆ ನಿಂದರು ರಾಯಕಟಕವ
ಕೊಂದ ರಜನಿಯ ರಹವನಭಿವರ್ಣಿಸಿದರರಸಂಗೆ ||
ಸಂದುದೇ ಛಲವೆನ್ನ ಮಗನೇ
ನೆಂದನೈ ಹರಿಬದಲಿ ಹರುಷವ
ತಂದಿರೈ ತಮಗಿನ್ನು ಲೇಸಾಯ್ತೆಂದನಂಧನೃಪ || ೨೩ ||
ಪದವಿಭಾಗ-ಅರ್ಥ: ಬಂದು ಧೃತರಾಷ್ಟ್ರ+ ಅವನೀಶನ(ರಾಜ) ಮುಂದೆ ನಿಂದರು, ರಾಯಕಟಕವ ಕೊಂದ ರಜನಿಯ ರಹವನು+ ಅಭಿವರ್ಣಿಸಿದರು+ ಅರಸಂಗೆ, ಸಂದುದೇ ಛಲವು+ ಎನ್ನ ಮಗನು+ ಏನೆಂದನೈ, ಹರಿಬದಲಿ(ಕಷ್ಟ) ಹರುಷವ ತಂದಿರೈ ತಮಗೆ+ ಇನ್ನು ಲೇಸಾಯ್ತು+ ಎಂದನು+ ಅಂಧನೃಪ.
ಅರ್ಥ:ಕೃಪಾದಿಗಳು ಬಂದು ಧೃತರಾಷ್ಟ್ರ ರಾಜನ ಮುಂದೆ ನಿಂತರು. ಅವರು ಧರ್ಮರಾಯನ ಸೇನೆಯನ್ನೂ ಪಾಂಡವರ ಪಾಂಚಾಲರ ಮಕ್ಕಳನ್ನೂ ಕೊಂದ ರಾತ್ರಿಯ ಕಾರ್ಯಾಚರಣೆಯನ್ನು ಅರಸನಿಗೆ ಅಭಿವರ್ಣಿಸಿ ತಿಳಿಸಿದರು. ಆಗ ಧೃತರಾಷ್ಟ್ರನು ನಮ್ಮ ಛಲವು ಮತ್ತು ಸೇಡು ಸಂದಿತೇ- ತೀರಿತೇ, ಒಳ್ಳೆಯದಾಯಿತು. ನನ್ನ ಮಗ ಕೌರವನು ಏನೆಂದನು?, ಅಂಧನೃಪ ಧೃತರಾಷ್ಟ್ರನು,'ನಮ್ಮ ಕಷ್ಟ ಮತ್ತ ಚಿಂತೆಯ ಸಮಯದಲ್ಲಿ ಹರ್ಷದ ವಾರ್ತೆಯನ್ನು ತಂದಿರಯ್ಯಾ! ಲೇಸಾಯ್ತು ಒಳ್ಲೆಯದಾಯಿತು, ತಮಗೆ ಇನ್ನು ಮನಸ್ಸಿಗೆ ಸಮಾಧಾನವಾಯಿತು,' ಎಂದನು.
ಪತಿಕರಿಸಿದನು ನಮ್ಮನಹಿತ
ಸ್ಥಿತಿಯನೆಲ್ಲವ ತಿಳಿದನಮರಾ
ವತಿಯ ಸತಿಯರ ಸೋಂಕಿನಲಿ ಸೇರಿದನು ನಿಮಿಷದಲಿ |
ಕ್ಷಿತಿಪನಂತ್ಯದೊಳಲ್ಲಿ ಶಸ್ತ್ರ
ಚ್ಯುತಿಯಮಾಡಿ ವಿರಾಗದಲಿ ವನ
ಗತಿಕರಾವೈತಂದೆವೆಂದರು ಗುರುಸುತಾದಿಗಳು ೨೪
ಪದವಿಭಾಗ-ಅರ್ಥ: ಪತಿಕರಿಸಿದನು ನಮ್ಮನು+ ಅಹಿತಸ್ಥಿತಿಯನು+ ಎಲ್ಲವ ತಿಳಿದನು+ ಅಮರಾವತಿಯ ಸತಿಯರ ಸೋಂಕಿನಲಿ ಸೇರಿದನು ನಿಮಿಷದಲಿ ಕ್ಷಿತಿಪನ+ ಅಂತ್ಯದೊಳು ಅಲ್ಲಿ ಶಸ್ತ್ರ ಚ್ಯುತಿಯಮಾಡಿ ವಿರಾಗದಲಿ ವನಗತಿಕರಾವು+ ಐತಂದೆವು+ ಎಂದರು ಗುರುಸುತ+ ಆದಿಗಳು.
ಅರ್ಥ:ಗುರುಸುತ ಕೃಪಾದಿಗಳು ಧೃತರಾಷ್ಟ್ರನಿಗೆ, ನಿಮ್ಮ ಮಗನು ನಮ್ಮನ್ನು ದಯೆತೋರಿ ಅನುಗ್ರಹಿಸಿದನು. ನಮ್ಮ ಕಷ್ಟದ ಸ್ಥಿತಿಯನ್ನು ಎಲ್ಲವನ್ನೂ ತಿಳಿದುಕೊಂಡನು. ನಂತರ ಅವನು ನಿಮಿಷದಲ್ಲಿ, ಸ್ವರ್ಗದ ನಗರ ಅಮರಾವತಿಯಲ್ಲಿರುವ ದೇವಕನ್ಯೆಯರ ಹತ್ತಿರಕ್ಕೆ ಸೇರಿದನು. ರಾಜನ ಮರಣದ ನಂತರ ಅಲ್ಲಿಯೇ ಶಸ್ತ್ರಗಳನ್ನು ತ್ಯಾಗಮಾಡಿ ವೈರಾಗದಿಂದ ವನವಾಸಕ್ಕೆ ಹೋಗಲು ನಿರ್ದರಿಸಿ, ನಾವು ಬಂದೆವು,'ಎಂದರು.
ಲೇಸು ಮಾಡಿದಿರಿನ್ನು ನಿಮಗಿ
ನ್ನೈಸಲೇ ಕರ್ತವ್ಯವೆನೆ ಧರ
ಣೀಶನನು ಬೀಳ್ಕೊಂಡರವರಗಲಿದರು ತಮ್ಮೊಳಗೆ |
ವ್ಯಾಸಮುನಿಯಾಶ್ರಮದ ಗಂಗಾ
ದೇಶವನು ತದ್ದ್ವಾರಕಿಯ ಸಂ
ವೇಶಸಿದರೈ ಗುರುಜ ಕೃಪ ಕೃತವರ್ಮರೊಲವಿನಲಿ || ೨೫ ||
ಪದವಿಭಾಗ-ಅರ್ಥ: ಲೇಸು ಮಾಡಿದಿರಿ+ ಇನ್ನು ನಿಮಗಿನ್ನು+ ಐಸಲೇ ಕರ್ತವ್ಯವೆನೆ, ಧರಣೀಶನನು ಬೀಳ್ಕೊಂಡರು+ ಅವರು+ ಅಗಲಿದರು ತಮ್ಮೊಳಗೆ ವ್ಯಾಸಮುನಿಯ+ ಆಶ್ರಮದ ಗಂಗಾ ದೇಶವನು ತದ್+ ದ್ವಾರಕಿಯ ಸಂವೇಶಸಿದರೈ (ಸಂ+ ವೇಶ= ಪ್ರವೇಶ) ಗುರುಜ ಕೃಪ ಕೃತವರ್ಮರು+ ಒಲವಿನಲಿ.
ಅರ್ಥ:ಧೃತರಾಷ್ಟ್ರನು ಅವರಗೆ,'ಪಾಂಡವರ ಮಕ್ಕಳನ್ನೂ ಪಾಂಚಾಲರನ್ನೂ, ಅವರ ಎಲ್ಲ ಸೇನೆಯನ್ನೂ ಕೊಂದು ಒಳ್ಳೆಯಕೆಲಸ ಮಾಡಿದಿರಿ. ಇನ್ನು ನಿಮಗೆ ಅದೇ- ತಪೋವನಕ್ಕೆ ಹೋಗುವುದೇ ಕರ್ತವ್ಯವು ಎನ್ನಲು,ಅವರು ರಾಜನನ್ನು ಬೀಳ್ಕೊಂಡು ಅವನನ್ನು ಅಗಲಿದರು. ಗುರುಜ ಕೃಪ ಕೃತವರ್ಮರು ತಮ್ಮೊಳಗೆ ನಿರ್ಧರಿಸಿ ಆ ದ್ವಾರಕಿಯನ್ನು ಪ್ರವೇಶಮಾಡಿ ಮುಂದೆ ವ್ಯಾಸಮುನಿಯ ಆಶ್ರಮದ ಗಂಗಾ ಪ್ರದೇಶವನ್ನು ಒಲವಿನಿಂದ ಸೇರಿದರು.
ತಿರುಗಿದನು ಬಳಿಕಿತ್ತಲೀ ಮೋ
ಹರದ ಕಾಂತಾಕೋಟಿ ಬಂದುದು
ಹರಳುಮುಳ್ಳುಗಳೊತ್ತುಗಾಲಿನ ದೂರತರಪಥರ ||
ಉರಿಯ ಜಠರದ ಬಿಸಿಲ ಝಳದಲಿ
ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬನೀನಿಕರ || ೨೬ ||
ಪದವಿಭಾಗ-ಅರ್ಥ: ತಿರುಗಿದನು ಬಳಿಕ+ ಇತ್ತಲು+ ಈ ಮೋಹರದ(ದಂಡು) ಕಾಂತಾಕೋಟಿ(ಮಹಿಳೆಯರ ಸಮೂಹ) ಬಂದುದು ಹರಳು ಮುಳ್ಳುಗಳ+ ಒತ್ತುಗಾಲಿನ ದೂರತರ ಪಥರ(ದಾರಿಗರ), ಉರಿಯ ಜಠರದ ಬಿಸಿಲ ಝಳದಲಿ ಹುರಿದ ಕದಪುಗಳ(ಕೆನ್ನೆಗಳ)+ ಎರಡು ಕಡೆಯಲಿ ಸುರಿವ ನಯನ+ ಅಂಬುಗಳ(ಯನ= ಕಣ್ಣು, ಅಂಬು= ನೀರು) ರಾಜನಿತಂಬನೀ (ದೊfಡ ನಿತಂಬದವರು ವನಿತೆಯರು) ನಿಕರ (ಸಮೂಹ).
ಅರ್ಥ:ಧೃತರಾಷ್ಟ್ರನು,ಕೃಪಾದಿಗಲನ್ನು ಕಳುಹಿಸಿ, ಬಳಿಕ ಇತ್ತ ರಣರಂಗಕ್ಕೆ ಹೋಗುವ ವನಿತೆಯರ ಕಡೆಗೆ ತಿರುಗಿದನು. ಈ ಮಹಿಒಳೆಯರ ಮೋಹರ- ದಂಡು, ಈ ಪತಿವಿಹೀನ ಕಾಂತಾಕೋಟಿಯು ದಾರಿಯಲ್ಲಿ ಹರಳು ಮುಳ್ಳುಗಳ ಒತ್ತುಗಾಲಿನ ನೋವಿನಲ್ಲಿ ದೂರತರದ ನೆಡೆಯುವ-ಪಥರ/ ದಾರಿಗರ, ಸಂಕಟದ, ಉರಿಯು ತುಂಬಿದ ಜಠರದ, ಬಿಸಿಲ ಝಳದಲ್ಲಿ ಹುರಿದು ಸುಟ್ಟ ಕೆನ್ನೆಗಳ, ಆ ಕೆನ್ನೆಗಳ ಎರಡು ಕಡೆಯಲ್ಲಿ ಸುರಿಯುವ ಕಣ್ಣೀರನ ರಾಜನಿತಂಬನಿಯರ/ ರಾಜಪತ್ನಿಯರ ಸಮೂಹ ಮುಂದೆ ಮುಂದೆ ಬಂದಿತು.
ಬಂದುದೀ ಗಜಪುರದ ನಾರೀ
ವೃಂದ ಧೃತರಾಷ್ಟ್ರಾವನೀಶನ
ಮುಂದೆ ವೇದವ್ಯಾಸ ಸಂಜಯ ವಿದುರ ಪೌರಜನ |
ಮುಂದಣಾಹವರಂಗಧಾರುಣಿ
ಯೊಂದು ಕೆಲದುಪವನದ ನೆಳಲಲಿ
ನಿಂದುದಿವರಾಗಮನವನು ಕೇಳಿದನು ಯಮಸೂನು || ೨೭ ||
ಪದವಿಭಾಗ-ಅರ್ಥ: ಬಂದುದು+ ಈ ಗಜಪುರದ(ಹಸ್ತಿನಾವತಿ) ನಾರೀವೃಂದ(ಮಹಿಳೆಯರಸಮೂಹ) ಧೃತರಾಷ್ಟ್ರ+ ಅವನೀಶನ ಮುಂದೆ ವೇದವ್ಯಾಸ ಸಂಜಯ ವಿದುರ ಪೌರಜನ ಮುಂದಣ+ ಆಹವರಂಗಧಾರುಣಿಯೊಂದು(ಯುದ್ಧರಂಗಭೂಮಿ) ಕೆಲದ+ ಉಪವನದ ನೆಳಲಲಿ ನಿಂದುದು+ ಇವರ+ ಆಗಮನವನು ಕೇಳಿದನು ಯಮಸೂನು.
ಅರ್ಥ:ಹಸ್ತಿನಾವತಿಯ ಈ ಮಹಿಳೆಯರಸಮೂಹ ಧೃತರಾಷ್ಟ್ರ ರಾಜನ ಜೊತೆಗೆ ಬಂದಿತು. ಅವರ ಮುಂದೆ ವೇದವ್ಯಾಸ, ಸಂಜಯ, ವಿದುರ, ಪೌರಜನರು ಇದ್ದರು. ಮುಂದಿರುವ ಯುದ್ಧರಂಗಭೂಮಿ ಕೆಲದಲ್ಲಿ- ಹತ್ತಿರದಲ್ಲಿ ಇದ್ದ ಉಪವನದ ನೆಳಲಲ್ಲಿ ಅವರು ನಿಂತರು. ಇವರ ಆಗಮನವನ್ನು ಯಮಸೂನು ಧರ್ಮಜನು ಕೇಳಿದನು.

ಧೃತರಾಷ್ಟ್ರ- ಪಾಂಡವರ ಸಮಾಗಮ[ಸಂಪಾದಿಸಿ]

ಮುರಮಥನ ಸಾತ್ಯಕಿ ಯುಧಿಷ್ಠಿರ
ಧರಣಿಪತಿ ನರ ಭೀಮ ಮಾದ್ರೇ
ಯರುಗಳೈವರ ಸಾರಥಿಗಳು ಯುಯುತ್ಸು ದಾರುಕರು |
ತೆರಳಿತೇಳಕ್ಷೋಹಿಣಿಯ ನೃಪ
ರರಸಿಯರು ದ್ರೌಪದಿಯ ರೋದನ
ಸರದ ಗಾನದ ಜಠರತಾಡನ ತಾಳಮೇಳದಲಿ || ೨೮ ||
ಪದವಿಭಾಗ-ಅರ್ಥ: ಮುರಮಥನ(ಕೃಷ್ಣ), ಸಾತ್ಯಕಿ, ಯುಧಿಷ್ಠಿರ ಧರಣಿಪತಿ, ನರ(ಅರ್ಜುನ), ಭೀಮ, ಮಾದ್ರೇಯರುಗಳ+ ಐವರ ಸಾರಥಿಗಳು, ಯುಯುತ್ಸು, ದಾರುಕರು, ತೆರಳಿತು+ ಏಳಕ್ಷೋಹಿಣಿಯ ನೃಪರ+ ಅರಸಿಯರು ದ್ರೌಪದಿಯ ರೋದನ(ಅಳು) ಸರದ ಗಾನದ ಜಠರ(ಹೊಟ್ಟೆ) ತಾಡನ(ಬಡಿಯುವುದು) ತಾಳಮೇಳದಲಿ.
ಅರ್ಥ:ಧೃತರಾಷ್ಟ್ಟ ಮೊದಲಾದವರನ್ನು ಕಾಣಲು, ಕೃಷ್ಣ, ಸಾತ್ಯಕಿ, ಯುಧಿಷ್ಠಿರ ಧರಣಿಪತಿ, ಅರ್ಜುನ, ಭೀಮ, ಮಾದ್ರೇಯರುಗಳಾದ ನಕುಲ ಸಹದೇವರುಗಳು, ಇವರ ಐವರ ಸಾರಥಿಗಳು, ಯುಯುತ್ಸು, ದಾರುಕರು ಮತ್ತು ಏಳು ಕ್ಷೋಹಿಣಿಯ ರಾಜರ ಅರಸಿಯರು, ಜೊತೆಗೆ ದ್ರೌಪದಿಯು ಅಳುವ ಸ್ವರದ ಗಾನದಲ್ಲಿ, ಹೊಟ್ಟೆಯನ್ನು ಬಡಿದುಕೊಳ್ಳುವ ತಾಳಮೇಳದಲ್ಲಿ ಧೃತರಾಷ್ಟ್ರನನ್ನು ಕಾಣಲು ತೆರಳಿತು.
ಇವರು ಬಂದರು ದೂರದಲಿ ಮಾ
ದವನ ಮತದಲಿ ನಿಂದರಾಚೆಯ
ಯುವತಿಜನ ಗಾಂಧಾರಿ ಕುಂತೀ ಭಾನುಮತಿ ಸಹಿತ ||
ವಿವಿಧವಿಕೃತವಿಳಾಸನಯನೋ
ದ್ಭವಪಯಸ್ತಿಮಿರಾಂಶುಕೆಯರಂ
ದವನಿಯಲಿ ಕೆಡೆದೊರಲುತಿರ್ದರು ತಾರು ಥಟ್ಟಿನಲಿ || ೨೯ ||
ಪದವಿಭಾಗ-ಅರ್ಥ: ಇವರು ಬಂದರು ದೂರದಲಿ ಮಾದವನ ಮತದಲಿ(ಕೃಷ್ಣನ ಅಭಿಪ್ರಾಯದಂತೆ) ನಿಂದರಾಚೆಯ ಯುವತಿಜನ ಗಾಂಧಾರಿ ಕುಂತೀ ಭಾನುಮತಿ ಸಹಿತ ವಿವಿಧ ವಿಕೃತ ವಿಳಾಸ ನಯನ+ ಉದ್ಭವ(ಕಣ್ಣಿನಿಂದ ಉಕ್ಕಿದ) ಪಯಸ್(ನೀರು)+ ತಿಮಿರ(ಶೋಕ, ಖಿನ್ನತೆ)+ ಅಂಶುಕೆಯರಂದು(ಸಿಲುಕಿದವರು)+ ಅವನಿಯಲಿ()ಅವನಿ- ಭೂಮಿ ಕೆಡೆದು(ಬಿದ್ದು)+ ಒರಲುತಿರ್ದರು(ಒರಲು- ಅಳು, ಬೊಬ್ಬೆ,ಗಟ್ಟಿಯಾದ ಅಳು), ತಾರು(ತಾರುಮಾರು, ಚೆಲ್ಲಾಪಿಲ್ಲಿ, ದಾರಿ) ಥಟ್ಟಿನಲಿ( ಗುಂಪು,).
ಅರ್ಥ: ಇವರು- ಈ ಪಾಂಡವರು ಮತ್ತು ಸಮೂಹ ಧೃತರಾಷ್ಟ್ರನು ಇದ್ದಲ್ಲಿಗೆ ಬಂದರು. ಆದರೆ ಕೃಷ್ಣನ ಅಭಿಪ್ರಾಯದಂತೆ ಅವರು ಸ್ವಲ್ಪ ದೂರದಲ್ಲಿಯೇ ನಿಂತರು. ಆಚೆಯ ಯುವತಿಜನರು, ಗಾಂಧಾರಿ, ಕುಂತೀ, ಭಾನುಮತಿ ಸಹಿತ ನಾನಾರೀತಿಯ ಅಂದಗೆಟ್ಟ ಲಕ್ಷಣದ ಕಣ್ಣಿನಿಂದ ಉಕ್ಕುತ್ತಿರುವ ನೀರುಳ್ಳ, ಶೋಕದ, ಖಿನ್ನತೆಯಲ್ಲಿ ಸಿಲುಕಿದವರು, ಚೆಲ್ಲಾಪಿಲ್ಲಿಯಾಗಿ ಗುಂಪು ಗುಂಪಾಗಿ ಭೂಮಿಯಲ್ಲಿ ಕೆಡೆದುಬಿದ್ದು ಗಟ್ಟಿಯಗಿ ಅಳುತ್ತಿದ್ದರು.
ಅರಸ ಕೇಳ್ ಧೃತರಾಷ್ಟ್ರ ಸಂಜಯ
ವರಮುನಿಪ ವಿದುರಾದಿ ಪರಿಜನ
ಪುರಜನಾವಳಿಯಿದ್ದುದುಪವನದೊಂದು ಬಾಹೆಯಲಿ |
ನೆರೆದುದೀಚೆಯಲೊಂದೆಸೆಯಲು
ತ್ತರೆ ಸುಭದ್ರೆಯರಾದಿ ಯಾದವ
ರರಸಿಯರು ಸಹಿತೊರಲುತಿರ್ದಳ್ ದ್ರೌಪದೀದೇವಿ || ೩೦ ||
ಪದವಿಭಾಗ-ಅರ್ಥ:ಅರಸ ಕೇಳ್ ಧೃತರಾಷ್ಟ್ರ ಸಂಜಯ, ವರಮುನಿಪ, ವಿದುರಾದಿ ಪರಿಜನ, ಪುರಜನಾವಳಿ,+ ಯಿ+ ಇದ್ದುದು+ ಉಪವನದ+ ಒಂದು ಬಾಹೆಯಲಿ(ಬದಿಯಲ್ಲಿ) ನೆರೆದುದು+ ಈಚೆಯಲಿ+ ಒಂದೆಸೆಯಲಿ+ ಉತ್ತರೆ ಸುಭದ್ರೆಯರಾದಿ ಯಾದವರ+ ಅರಸಿಯರು ಸಹಿತ+ ಒರಲುತಿರ್ದಳ್ ದ್ರೌಪದೀದೇವಿ.
ಅರ್ಥ: ಅರಸ ಜನಮೇಜಯನೇ ಕೇಳು, ಧೃತರಾಷ್ಟ್ರ ಸಂಜಯ, ವರಮುನಿಪ ವ್ಯಾಸನೂ, ವಿದುರಾದಿ ಪರಿಜನರೂ, ಪುರಜನರ ಸಮೂಹವೂ, ಉಪವನದ ಒಂದು ಬದಿಯಲ್ಲಿ ಇದ್ದಿತು. ಈಚೆಯಲ್ಲಿ ಒಂದು ದಿಕ್ಕಿನಲ್ಲಿ ಉತ್ತರೆ, ಸುಭದ್ರೆಯರೇ ಮೊದಲಾದವರು, ಯಾದವರ ಅರಸಿಯರು ಸಹಿತ ನೆರೆದಿದ್ದು ದ್ರೌಪದೀದೇವಿಯು ಐದೂ ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ಶೋಕಿಸುತ್ತಿದ್ದಳು.
ಹರಿಸಹಿತ ಪಾಂಡವರದೊಂದೆಸೆ
ಯಿರೆ ಚತುರ್ವಿಧವಾದುದೀ ಮೋ
ಹರದೊಳಾಯ್ತೆಡೆಯಾಟ ವೇದವ್ಯಾಸ ವಿದುರರಿಗೆ
ಧರಣಿಪನ ಕಾಣಿಸುವುದಂಧನ
ನಿರುಪಮಿತ ಶೋಕಾನಳನ ಸಂ
ಹರಿಸುವುದು ನಯವೆಂದು ವೇದವ್ಯಾಸಮುನಿ ನುಡಿದ ೩೧
ಪದವಿಭಾಗ-ಅರ್ಥ:ಹರಿಸಹಿತ ಪಾಂಡವರು+ ಅದು+ ಒಂದೆಸೆಯಿರೆ, ಚತುರ್ವಿಧವಾದುದು+ ಈ ಮೋಹರದೊಳು+ ಆಯ್ತೆ+ ಎಡೆಯಾಟ, ವೇದವ್ಯಾಸ ವಿದುರರಿಗೆ ಧರಣಿಪನ ಕಾಣಿಸುವುದು+ ಅಂಧನ ನಿರುಪಮಿತ ಶೋಕಾನಳನ(ಶೋಕ+ ಅನಳ= ಶೋಕದ ಬೆಂಕಿ) ಸಂಹರಿಸುವುದು(ಶಮನಗೊಳಿಸುವುದು,) ನಯವೆಂದು(ನೀತಿಯೆಂದು) ವೇದವ್ಯಾಸಮುನಿ ನುಡಿದ.
ಅರ್ಥ:ಕೃಷ್ಣನ ಸಹಿತ ಪಾಂಡವರು ಅದು ಒಂದು ದಿಕ್ಕಿನಲ್ಲಿ ಇದ್ದಿರಲು, ಚತುರ್ವಿಧವಾದುದು+ ಈ ಎರಡುಸಮೂಹದ ಎಡೆಯಾಟ- ನೆಡೆ ನಾಲ್ಕುವಿಧವಾಯಿತು. ವೇದವ್ಯಾಸಮುನಿ ಮತ್ತು ವಿದುರರಿಗೆ ಧರ್ಮರಾಯನನ್ನು ಬೇಟಿ ಮಾಡಿಸುವುದು ನಂತರ ಅವನನ್ನು ಧೃತರಾಷ್ಟ್ರನಿಗೆ ಕಾಣಿಸುವುದು. ಅದಕ್ಕೆ ವೇದವ್ಯಾಸಮುನಿಯು ಅಂಧರಾಜನ ಮಿತಿಮೀರಿದ ಶೋಕದ ಬೆಂಕಿಯನ್ನು ಶಮನಗೊಳಿಸುವುದು ಮೊದಲು ಮಾಡಬೇಕಾದ ನೀತಿಯೆಂದು ನುಡಿದನು. (ನಂತರ ಭಾನುಮತಿಯನ್ನು ಸಮಾಧಾನಪಡಿಸುವುದು)
ಇದಕೆ ಸಂಶಯವೇನು ಬೊಪ್ಪನ
ಪದಯುಗವ ಕಾಣಿಸುವುದೆಮ್ಮನು
ಹದುಳವಿಡುವುದು ಹಸ್ತಿನಾಪುರದರಸುತನ ತನಗೆ |
ಒದೆದು ನೂಕಿದ ಹದನ ಮಕುಟಾ
ಗ್ರದಲಿ ಧರಿಸುವೆವೆಂದು ಬಿನ್ನವಿ
ಪುದು ಮಹೀಪತಿಗೆಂದು ಮುನಿಗರುಹಿದನುಯಮಸೂನು || ೩೨ ||
ಪದವಿಭಾಗ-ಅರ್ಥ:ಇದಕೆ ಸಂಶಯವೇನು ಬೊಪ್ಪನ ಪದಯುಗವ ಕಾಣಿಸುವುದು,+ ಎಮ್ಮನು ಹದುಳವಿಡುವುದು, ಹಸ್ತಿನಾಪುರದ+ ಅರಸುತನ ತನಗೆ ಒದೆದು ನೂಕಿದ (ತನಗೆ ದೊಡ್ಡಪ್ಪನು ಕೊಟ್ಟರೆ ಮಾತ್ರಾ ಸ್ವೀಕರಿಸುವನೆಂಬ ಹದನ- ವಿಚಾರವನ್ನು)ಹದನ ಮಕುಟಾಗ್ರದಲಿ(ತಲೆಯಲ್ಲಿ) ಧರಿಸುವೆವೆಂದು ಬಿನ್ನವಿಪುದು ಮಹೀಪತಿಗೆ+ ಎಂದು ಮುನಿಗೆ+ ಅರುಹಿದನು(ಹೇಳಿದನು) ಯಮಸೂನು.
ಅರ್ಥ:ಯಮಸೂನು ಧರ್ಮಜನು ಹೇಳಿದ,'ಇದಕ್ಕೆ ಸಂಶಯವು ಏಕೆ? ತನಗೆ ದೊಡ್ಡಪ್ಪನ ಪಾದಗಳನ್ನು ಕಾಣಿಸುವುದು- ಭೇಟಿಮಾಡಿಸುವುದು. ತಾನು ಅವನಿಗೆ ತಮ್ಮನ್ನು ವಿಶ್ವಾಸ, ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಪ್ರಾರ್ಥಿಸಿ, ನೀವೇ ಹಸ್ತಿನಾಪುರದ ಅರಸರು, ಆ ಅರಸುತನವನ್ನು ತನಗೆ ದೊಡ್ಡಪ್ಪನು (ಕಾಲಲ್ಲಿ ಒದೆದು) ಕೊಟ್ಟರೆ ಮಾತ್ರಾ ಸ್ವೀಕರಿಸಿ ಮಕುಟಾಗ್ರದಲ್ಲಿ ಧರಿಸುವೆವು ಎಂದು ಮಹೀಪತಿ ಧೃತರಾಷ್ಟ್ರನಿಗೆ ಬಿನ್ನಹ ಮಾಡಿಕೊಳ್ಳಲಾಗುವುದು ಎಂದು ಮುನಿಗೆ ಹೇಳಿದನು.
ಲೇಸನಾಡಿದೆ ಮಗನೆ ಧರ್ಮದ
ಮೀಸಲಲ್ಲಾ ನಿನ್ನ ಮತಿ ಬಳಿ
ಕೈಸಲೇಯೆನುತವರು ಬಂದರು ಭೂಪತಿಯ ಹೊರೆಗೆ |
ಆ ಸುಯೋಧನ ನಿನ್ನ ಮಗನ
ಲ್ಲೀ ಸಮಂಜಸ ಧರ್ಮಜನ ಹಿಡಿ
ದೀಸುವುದು ಭವಜಲನಿಧಿಯನೆಂದಮಳಮುನಿ ನುಡಿದ || ೩೩ ||
ಪದವಿಭಾಗ-ಅರ್ಥ:ಲೇಸನು+ ಆಡಿದೆ ಮಗನೆ ಧರ್ಮದ ಮೀಸಲಲ್ಲಾ ನಿನ್ನ ಮತಿ(ಬುದ್ಧಿ); ಬಳಿಕ+ ಐಸಲೇಯೆನುತ+ ಅವರು ಬಂದರು ಭೂಪತಿಯ ಹೊರೆಗೆ; ಆ ಸುಯೋಧನ ನಿನ್ನ ಮಗನಲ್ಲ+ ಈ ಸಮಂಜಸ(ನೀತಿವಂತ) ಧರ್ಮಜನ ಹಿಡಿದ+ ಈಸುವುದು ಭವಜಲನಿಧಿಯನು(ಸಂಸಾರದ ಸಾಗರವನ್ನು)+ ಎಂದು+ ಅಮಳ ಮುನಿ ನುಡಿದ.
ಅರ್ಥ:ಆಗ ಮುನಿಯು,'ಒಳ್ಳೆಯಮಾತನ್ನು ಆಡಿದೆ ಮಗನೆ; ನೀನು, ನಿನ್ನ ಬುದ್ಧಿಯು ಧರ್ಮಕ್ಕೆ ಮೀಸಲಲ್ಲವೇ! ಎಂದನು. ಬಳಿಕ+ ಹಾಗಿದ್ದರೆ ಸರಿಯೆನುತ್ತಾ ಅವರು ರಾಜನ ಬಳಿಗೆ ಬಂದರು; ಅಮಲ- ಪೂಜ್ಯಮುನಿಯು ಧೃತರಾಷ್ಟ್ರನಿಗೆ,'ಆ ಸುಯೋಧನನು ನಿನ್ನ ಮಗನಲ್ಲ ಈ ನೀತಿವಂತ ಧರ್ಮಜನನ್ನು ಹಿಡಿದು ಸಂಸಾರದ ಸಾಗರವನ್ನು ಈಸುವುದು ಎಂದು ನುಡಿದನು.
ನೃಪನ ಕಾಣಿಸಿಕೊಂಬುದನಿಬರ
ನುಪಚರಿಸುವುದು ನಿನ್ನ ಮಕ್ಕಳ
ಕೃಪಣತೆಯನಾರೈವರಲ್ಲವರೈವರುತ್ತಮರು |
ಉಪಹತಿಯ ನೆನೆಯದಿರು ದುರ್ಜನ
ರಪಕೃತಿಗೆ ಫಲವಾಯ್ತು ಧರ್ಮವೆ
ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳೆಂದ || ೩೪ ||
ಪದವಿಭಾಗ-ಅರ್ಥ: ನೃಪನ ಕಾಣಿಸಿಕೊಂಬುದು+ ಅನಿಬರನು+ ಉಪಚರಿಸುವುದು, ನಿನ್ನ ಮಕ್ಕಳ ಕೃಪಣತೆಯನು+ ಆರೈವರಲ್ಲ(ಅನುಸರಿಸುವುದಿಲ್ಲ)+ ಅವರು+ ಐವರು+ ಉತ್ತಮರು ಉಪಹತಿಯ(ಕೆಡುಕನ್ನು- ತೊಂದರೆ) ನೆನೆಯದಿರು ದುರ್ಜನರ+ ಅಪಕೃತಿಗೆ ಫಲವಾಯ್ತು ಧರ್ಮವೆ+ ರಪಣವು((<ಸಂ. ರೈ+ ದೇ.ಪಣ= ಆಸ್ತಿ, ರಕ್ಷಿಸುವ ಸಾಧನ,ಕುಣಿಕೆ, ಕೊಂಡಿ)+ ಇಹಪರ ಲೋಕಕೆ+ ಎಲೆ ಧೃತರಾಷ್ಟ್ರ ಕೇಳೆಂದ
ಅರ್ಥ:ವ್ಯಾಸನು, ಎಲೆ ಧೃತರಾಷ್ಟ್ರನೇ ಕೇಳು,'ನೀನು ಯುಧಿಷ್ಟಿರ ನೃಪನನ್ನು ಕರೆಸಿ ಅವನನ್ನು ನೋಡು. ಪಾಂಡವರೆಲ್ಲರನ್ನೂ ಉಪಚರಿಸು. ನಿನ್ನ ಮಕ್ಕಳ ಕೃಪಣತೆಯನ್ನು ಅವರು ಅನುಸರಿಸುವುದಿಲ್ಲ. ಅವರು ಐವರೂ ಉತ್ತಮರು. ಅವರಿಗೆ ಕೆಡುಕನ್ನು ನೆನೆಯಬೇಡ. ದುರ್ಜನರಾದ ನಿನ್ನ ಮಕ್ಕಳ ಅಪಕೃತಿಗೆ- ಕೆಟ್ಟಕೆಲಸಕ್ಕೆ ಅವರಿಗೆ ತಕ್ಕ ಫಲವಾಯ್ತು. ಇಹಪರ ಲೋಕಗಳಿಗೆ ಧರ್ಮವೆ ಸಾಧನ,' ಎಂದ.
ಹೈ ಹಸಾದವು ನಿಮ್ಮ ಚಿತ್ತಕೆ
ಬೇಹ ಹದನೇ ಕಾರ್ಯಗತಿ ಸಂ
ದೇಹವೇ ಪಾಂಡುವಿನ ಮಕ್ಕಳು ಮಕ್ಕಳವರೆಮಗೆ |
ಕಾಹುರರು ಕಲ್ಮಷರು ಬಂಧು
ದ್ರೋಹಿಗಳು ಗತವಾಯ್ತು ನಿಷ್ಪ್ರ
ತ್ಯೂಹವಿನ್ನೇನವರಿಗೆಂದನು ಮುನಿಗೆ ಧೃತರಾಷ್ಟ್ರ || ೩೫ ||
ಪದವಿಭಾಗ-ಅರ್ಥ:ಅದಕ್ಕೆ ಧೃತರಾಷ್ಟ್ರನು ಮುನಿಗೆ,'ಹೈ ಹಸಾದವು-ಒಪ್ಪಿಗೆ, ನಿಮ್ಮ ಚಿತ್ತಕೆ ಬೇಹ(ಅಪರಾಧದ ಪತ್ತೆ ಬೇಹುಗಾರಿಕೆ) ಹದನೇ(ಸರಿಯಾದುದು, ಮನಸ್ಸಿಗೆ ಬೇರೆ ವಿಚಾರವೇ?) ಕಾರ್ಯಗತಿ ಸಂದೇಹವೇ, ಪಾಂಡುವಿನ ಮಕ್ಕಳು ಮಕ್ಕಳು+ ಅವರು+ ಎಮಗೆ, ಕಾಹುರರು ಕಲ್ಮಷರು ಬಂಧು ದ್ರೋಹಿಗಳು ಗತವಾಯ್ತು(ಹೊಯಿತು); ನಿಷ್ಪ್ರತ್ಯೂಹವಿನ್ನೇನು (ನಿಷ್ಪ್ರತಿ+ ವ್ಯೂಹವು+ ಇನ್ನೇನು- ಅವರಿಗಾಗಿ ಇನ್ನು ಪ್ರತೀಕಾರ ಭಾವನೆ ಇಲ್ಲ)+ ಅವರಿಗೆ+ ಎಂದನು .
ಅರ್ಥ:ಅದಕ್ಕೆ ಧೃತರಾಷ್ಟ್ರನು ಮುನಿಗೆ,'ಹೈ ಹಸಾದವು-ಒಪ್ಪಿದೆನು, ನಿಮ್ಮ ಮನಸ್ಸಿನಲ್ಲಿರುವ ಮಕ್ಕಳ ದುಷ್ಟಗುಣದ ವಿಚಾರ ಸರಿಯಾದುದು. ಧರ್ಮದ ಕಾರ್ಯಗತಿಯಲ್ಲಿ ಸಂದೇಹವೇ? ನನಗೆ ಇಲ್ಲ. ಪಾಂಡುವಿನ ಮಕ್ಕಳು ನಮಗೆ ಮಕ್ಕಳೇ. ನಮ್ಮವರು ಕಾಹುರರು- ಕೆಟ್ಟವರು, ಕಲ್ಮಷರು, ಬಂಧು ದ್ರೋಹಿಗಳು, ಗತವಾಯ್ತು- ಅವರೆಲ್ಲಾ ತೀರಿಕೊಂಡರು, ಪಾಪವು ಅವರೊಡನೆಯೇ ಹೊಯಿತು. ಅವರಿಗಾಗಿ ಇನ್ನು ಪ್ರತೀಕಾರ ಭಾವನೆ ಇಲ್ಲ,' ಎಂದನು .
ಖಳನ ಹೃದಯದ ಕಾಳಕೂಟದ
ಗುಳಿಗೆಗಳನಿವರೆತ್ತ ಬಲ್ಲರು
ತಿಳುಹಿ ನುಡಿದೊಡಬ ಡಿಸಿದರು ನಾನಾಪ್ರಕಾರದಲಿ |
ಘಳಿಲನೀಚೆಗೆ ಬಂದು ಹದನನು
ನಳಿನನಾಭಂಗರುಹೆ ನಸುನಗು
ತೊಳಗೊಳಗೆ ಹರಿ ವಿಶ್ವಕರ್ಮನ ನೆನೆದು ನೇಮಿಸಿದ || ೩೬ ||
ಪದವಿಭಾಗ-ಅರ್ಥ: ಖಳನ(ನೀಚನ) ಹೃದಯದ ಕಾಳಕೂಟದ ಗುಳಿಗೆಗಳನು+ ಇವರು+ ಎತ್ತ ಬಲ್ಲರು; ತಿಳುಹಿ ನುಡಿದು+ ಒಡಬಡಿಸಿದರು ನಾನಾಪ್ರಕಾರದಲಿ ಘಳಿಲನೆ (ಕೂಡಲೆ)+ ಈಚೆಗೆ ಬಂದು ಹದನನು ನಳಿನನಾಭಂಗೆ+ ಅರುಹೆ ನಸುನಗುತ+ ಒಳಗೊಳಗೆ ಹರಿ ವಿಶ್ವಕರ್ಮನ ನೆನೆದು ನೇಮಿಸಿದ.
ಅರ್ಥ: ನೀಚನ ಹೃದಯದ ಕಾಳಕೂಟದ ವಿಷದ ಗುಳಿಗೆಗಳನ್ನು ಇವರು ಹೇಗ ತಿಳಿಯಬಲ್ಲರು? ನೀತಿಯನ್ನು ತಿಳಿಯುವಂತೆ ನಾನಾಪ್ರಕಾರದಲ್ಲಿ ಹೇಳಿ ರಾಜನನ್ನು ಒಡಂಬಡಿಸಿದರು- ಒಪ್ಪಿಸಿದರು. ಕೂಡಲೆ ವ್ಯಾಸಮುನಿ ಈಚೆಗೆ ಬಂದು ಧೃತರಾಷ್ಟ್ರನು ಪ್ರೀತಿಯಿಂದ ಪಾಂಡವರನ್ನು ಬರಮಾಡಿಕೊಳ್ಳಲು ಒಪ್ಪಿದ ಹದನನು- ವಿಚಾರವನ್ನು ನಳಿನನಾಭ- ಕೃಷ್ನನಿಗೆ ಹೇಳಲು, ಅವನು ನಸುನಗುತ್ತಾ ಒಳಗೊಳಗೆ- ರಹಸ್ಯವಾಗಿ ವಿಶ್ವಕರ್ಮನನ್ಉ ನೆನೆದು ಅವನಿಗೆ ಮುಂದಿನ ಕಾರ್ಯವನ್ನು ನೇಮಿಸಿದ.
ನೆನೆದ ಘಳಿಗೆಯೊಳಾತ ಕಟ್ಟು
ಕ್ಕಿನಲಿ ಸರ್ವಾವಯವವನು ಸಂ
ಜನಿಸಿದನು ಪ್ರತಿರೂಪವನು ಪವಮಾನನಂದನನ |
ದನುಜರಿಪುಸಹಿತವರು ಬಂದರು
ಮುನಿಯೊಡನೆ ಬಳಿಕಂಧನೃಪತಿಗೆ
ವಿನಯದಲಿ ಮೆಯ್ಯಿಕ್ಕಿದನು ಭಕ್ತಿಯಲಿ ಯಮಸೂನು || ೩೭ ||
ಪದವಿಭಾಗ-ಅರ್ಥ: ನೆನೆದ ಘಳಿಗೆಯೊಳು+ ಆತ ಕಟ್ಟುಕ್ಕಿನಲಿ (ಗಟ್ಟಿ ಉಕ್ಕಿನಲ್ಲಿ) ಸರ್ವಾವಯವವನು ಸಂಜನಿಸಿದನು(ಸೃಷ್ಟಿಸಿದನು) ಪ್ರತಿರೂಪವನು ಪವಮಾನನಂದನನು(ಪವಮಾನ = ವಾಯು; ಭೀಮನನ್ನು) ಅದನು ಜರಿಪು(ಜರುಗಿಸುತ್ತಾ) ಸಹಿತವರು ಬಂದರು ಮುನಿಯೊಡನೆ ಬಳಿಕ+ ಅಂಧನೃಪತಿಗೆ ವಿನಯದಲಿ ಮೆಯ್ಯಿಕ್ಕಿದನು ಭಕ್ತಿಯಲಿ ಯಮಸೂನು.
ಅರ್ಥ:ಕೃಷ್ಣನು ನೆನೆದ ಘಳಿಗೆಯಲ್ಲಿ ವಿಶ್ವಕರ್ಮನು ಕಟ್ಟುಕ್ಕಿನಲ್ಲಿ ಸರ್ವ ಅವಯವವನ್ನೂ ಭೀಮನನ್ನು ಹೋಲುವ ಪ್ರತಿರೂಪವನು ಸೃಷ್ಟಿಸಿದನು. ಅದನ್ನು ಜರುಗಿಸುತ್ತಾ ಅದರ ಸಹಿತ ಪಾಂಡವರು ಮುನಿಯೊಡನೆ ಧೃತರಾಷ್ಟ್ರನ ಬಳಿಗೆ ಬಂದರು. ಬಳಿಕ ಅಂಧನೃಪನಿಗೆ ಧರ್ಮಜನು ವಿನಯದಿಂದ ಭಕ್ತಿಯಲ್ಲಿ ಮೆಯ್ಯಿಕ್ಕಿದನು- ಕಾಲಿಗೆಬಿದ್ದು ನಮಸ್ಕರಿಸಿದನು.

ಧೃತರಾಷ್ಟ್ರನ ಕ್ರೋಧ ಮತ್ತು ಉಪಶಮನ[ಸಂಪಾದಿಸಿ]

ಬಾ ಮಗನೆ ಕುರುರಾಜವಂಶ ಶಿ
ರೋಮಣಿಯೆ ನಿರ್ಧೂತ ರಾಜಸ
ತಾಮಸನೆ ಸತ್ಯೈಕನಿಧಿ ಬಾ ಕಂದ ಬಾ ಎನುತ ||
ಭೂಮಿಪನ ತೆಗೆದಪ್ಪಿ ಬಹಳ
ಪ್ರೇಮದಲಿ ಮುಂಡಾಡಿದನು ಕಲಿ
ಭೀಮನೋ ಬಾ ಮಗನೆ ಬಾರೈ ಕಂದ ಬಾ ಎಂದ || ೩೮ ||
ಪದವಿಭಾಗ-ಅರ್ಥ: ಬಾ ಮಗನೆ ಕುರುರಾಜವಂಶ ಶಿರೋಮಣಿಯೆ ನಿರ್ಧೂತ(ನಿವಾರಿಸಿದ) ರಾಜಸ-ತಾಮಸನೆ ಸತ್ಯೈಕನಿಧಿ ಬಾ ಕಂದ ಬಾ ಎನುತ ಭೂಮಿಪನ ತೆಗೆದಪ್ಪಿ ಬಹಳ ಪ್ರೇಮದಲಿ ಮುಂಡಾಡಿದನು ಕಲಿಭೀಮನೋ ಬಾ ಮಗನೆ ಬಾರೈ ಕಂದ ಬಾ ಎಂದ
ಅರ್ಥ:ಕುರುಡ ಧೃತರಾಷ್ಟ್ರ ರಾಜನು, ಧರ್ಮಜನನ್ನು ಕುರಿತು,'ಬಾ ಮಗನೆ ಕುರುರಾಜವಂಶದ ಶಿರೋಮಣಿಯೆ, ರಾಜಸ-ತಾಮಸ ಗುಣಗಳನ್ನು ನಿವಾರಿಸಿದವನೆ, ಸತ್ಯ ಒಂದನ್ನೇ ನಿಧಿಯೆಂದು ತಿಳಿದವನೇ, ಬಾ ಕಂದ, ಬಾ ಎನ್ನುತ್ತಾ ಭೂಮಿಪ ಧರ್ಮಜನನ್ನು ಬರಸೆಳೆದು ಅಪ್ಪಿ ಬಹಳ ಪ್ರೇಮದಿಂದ ಮುಂಡಾಡಿದನು, ತಲೆ- ಮೈಯನ್ನ ಸವರಿದನು. ನಂತರ ಭೀಮನ್ನು ಕರೆದು,'ಕಲಿಭೀಮನೋ ಬಾ ಮಗನೆ ಬಾರೈ ಕಂದ ಬಾ ಎಂದು,' ಕರೆದನು.
ಭೀಮನನು ಹಿಂದಿಕ್ಕಿ ಲೋಹದ
ಭೀಮನನು ಮುಂದಿರಿಸಿದಡೆ ಸು
ಪ್ರೇಮನಪ್ಪಿದಡೇನನೆಂಬೆನು ಮೋಹವನು ಮಗನ |
ಆ ಮಹಾವಜ್ರಾಯತಪ್ರೋ
ದ್ದಾಮದಾಯಸ ಭೀಮತನು ನಿ
ರ್ನಾಮವೆನೆ ನುಗ್ಗಾಗಿ ಬಿದ್ದುದು ನೃಪನ ತಕ್ಕೆಯಲಿ || ೩೯ ||
ಪದವಿಭಾಗ-ಅರ್ಥ:ಭೀಮನನು ಹಿಂದಿಕ್ಕಿ ಲೋಹದ ಭೀಮನನು ಮುಂದಿರಿಸಿದಡೆ ಸುಪ್ರೇಮನು+ ಅಪ್ಪಿದಡೆ+ ಏನನೆಂಬೆನು ಮೋಹವನು ಮಗನ ಆ ಮಹಾವಜ್ರಾಯತ ಪ್ರೋದ್ದಾಮದಾಯಸ ಭೀಮತನು ನಿರ್ನಾಮವು+ ಎನೆ ನುಗ್ಗಾಗಿ ಬಿದ್ದುದು ನೃಪನ ತಕ್ಕೆಯಲಿ.
ಅರ್ಥ:ವೈಶಂಪಾಯನು ಹೇಳಿದ,'ಆಗ ಕೃಷ್ನನ ಸೂಚನೆಯಂತೆ, ಭೀಮನನ್ನು ಹಿಂದಿಕ್ಕೆ ಇರಿಸಿ, ಲೋಹದ ಭೀಮನನ್ನು ಕುರುಡುರಾಜನ ಮುಂದಿರಿಸಿದಾಗ, ಸುಪ್ರೇಮನಾದ ಧೃತರಾಷ್ಟ್ರನು ಅಪ್ಪಿದರೆ, ಏನನ್ನು ಹೇಳಲಿ ಆ ರಾಜನ ಮಗನ ಮೇಲಿನ ಮೋಹವನ್ನು, ಆ ಮಹಾವಜ್ರಾಯತವಾಗಿದ್ದ ಪ್ರೋದ್ದಾಮದಾಯಸ ಉಕ್ಕಿನ ಗಟ್ಟಿಯಾಗಿರುವ ಭೀಮದೇಹ ನಿರ್ನಾಮವು ಎನ್ನುಂವಮತೆ ಧೃತರಾಷ್ಟ್ರ ನೃಪನ ತಕ್ಕೆಯಲಿ ನುಗ್ಗಾಗಿ ಬಿದ್ದಿತು.
ಮಗನೆ ಹಾ ಹಾ ಭೀಮ ನೊಂದೈ
ಮಗನೆ ಕೆಟ್ಟೆನು ಕೆಟ್ಟೆನಕಟೆಂ
ದೊಗುಮಿಗೆಯ ಶೋಕದಲಿ ನೆರೆ ಮರುಗಿದನು ಧೃತರಾಷ್ಟ್ರ |
ದುಗುಡ ಬೇಡೊಮ್ಮಿಂಗೆ ನಿಮ್ಮಯ
ಮಗನುಳಿದ ನಿಮ್ಮಧಿಕರೋಷದ
ಹಗರಣದ ಹಗೆ ಹೋಯಿತೆಂದನು ನಗುತ ಮುರವೈರಿ || ೪೦ ||
ಪದವಿಭಾಗ-ಅರ್ಥ: ಮಗನೆ ಹಾ ಹಾ ಭೀಮ ನೊಂದೈ ಮಗನೆ ಕೆಟ್ಟೆನು ಕೆಟ್ಟೆನು+ ಅಕಟ+ ಎಂದು+ ಒಗುಮಿಗೆಯ(ಅತಿಯಾದ) ಶೋಕದಲಿ ನೆರೆ(ಬಹಳ) ಮರುಗಿದನು ಧೃತರಾಷ್ಟ್ರ ದುಗುಡ(ದುಃಖ) ಬೇಡ+ ಒಮ್ಮಿಂಗೆ ನಿಮ್ಮಯ ಮಗನು+ ಉಳಿದ ನಿಮ್ಮ+ ಅಧಿಕರೋಷದ ಹಗರಣದ ( ತೊಂದರೆ ಕೊಡುವ) ಹಗೆ ಹೋಯಿತು+ ಎಂದನು ನಗುತ ಮುರವೈರಿ.
ಅರ್ಥ:ಆಗ ಧೃತರಾಷ್ಟ್ರನು ಭೀಮನು ಸತ್ತನೆಂದೇ ಯೋಚಿಸಿ,'ಮಗನೆ ಹಾ! ಹಾ! ಭೀಮ, ನೊಂದಯಾ ಮಗನೆ, ನಾನು (ಮಗನನ್ನು ಕೊಂದು) ಕೆಟ್ಟೆನು ಕೆಟ್ಟೆನು! ಅಕಟ! ಎಂದು ಅತಿಯಾದ ಶೋಕದಿಂದ ಬಹಳ ಮರುಗಿದನು. ಆಗ ಮುರವೈರಿ ಕೃಷ್ಣನು ನಗುತ್ತಾ, 'ರಾಜನೇ ದುಃಖಿಸಬೇಡ; ನಿಮ್ಮ ಮಗನು ಉಳಿದಿದ್ದಾನೆ; ಒಂದೇ ಸಾರಿಗೆ ನಿಮ್ಮ ಅಧಿಕರೋಷದ ತೊಂದರೆಕೊಡುತ್ತಿದ್ದ ದ್ವೇಷದ ಹಗೆ ಹೋಯಿತು,'ಎಂದನು.
ತ್ರಾಣವಿಮ್ಮಡಿಸಿತ್ತು ಕೋಪದ
ಕೇಣವೆಚ್ಚರಿಸಿದಡೆ ನೃಪ ಸ
ತ್ರಾಣದಲಿ ತನಿಬಗಿಯೆ ನುಗ್ಗಾಯ್ತಾಯಸ ಪ್ರತಿಮೆ |
ಮಾಣು ಭಯವನು ಭೀಮ ಭೂಪನ
ಕಾಣು ಹೋಗೆನೆ ನಡುಗಿ ಭುವನ
ಪ್ರಾಣನಾತ್ಮಜ ಬಿದ್ದನಾ ಧೃತರಾಷ್ಟ್ರನಂಘ್ರಿಯಲಿ || ೪೧ ||
ಪದವಿಭಾಗ-ಅರ್ಥ:ತ್ರಾಣವು+ ಇಮ್ಮಡಿಸಿತ್ತು ಕೋಪದ ಕೇಣವ(ಪುರುಡು, ಹೊಟ್ಟೆಕಿಚ್ಚು,)+ ಎಚ್ಚರಿಸಿದಡೆ ನೃಪ ಸತ್ರಾಣದಲಿ ತನಿಬಗಿಯೆ (ದೇಹವನ್ನು ಒತ್ತಲು) ನುಗ್ಗಾಯ್ತು ಆಯಸ(ಕಬ್ಬಿಣದ) ಪ್ರತಿಮೆ, ಮಾಣು ಭಯವನು ಭೀಮ ಭೂಪನಕಾಣು ಹೋಗೆನೆ ನಡುಗಿ ಭುವನಪ್ರಾಣನ+ ಆತ್ಮಜ(ಭೀಮನು) ಬಿದ್ದನು+ ಆ ಧೃತರಾಷ್ಟ್ರನ+ ಅಂಘ್ರಿಯಲಿ(ಪಾದ).
ಅರ್ಥ:ಕೃಷ್ನನು ಭೀಮನಿಗೆ ಹೇಳಿದ, 'ಧೃತರಾಷ್ಟ್ರನಿಗೆ ದ್ವೇಷದ ಕೋಪದಲ್ಲಿ ತ್ರಾಣವು ಇಮ್ಮಡಿಯಾಯಿತು. ಭೀಮನು ಬಂದನೆಂದು ಹೇಳಿದರೆ ರಾಜನು ಸತ್ರಾಣದಿಂದ ದೇಹವನ್ನು ಒತ್ತಲು ಕಬ್ಬಿಣದ ಪ್ರತಿಮೆ ನುಗ್ಗಾಗಿಹೋಯಿತು. ಇನ್ನು ಭೀಮ ಭಯವನನ್ನು ಮಾಣು- ಬಿಡು. ಧೃತರಾಷ್ಟ್ರ ಭೂಪನನ್ನು ಕಾಣು ಹೋಗು ಎನ್ನಲು, ಭೀಮನು ನಡುಗಿ ಆ ಧೃತರಾಷ್ಟ್ರನ ಪಾದಗಳಿಗೆ ಬಿದ್ದನು.
ಪವನಸುತನೇ ಬಾ ಎನುತ ತ
ಕ್ಕವಿಸಿದನು ಬಳಿಕೆರಗಿದಡೆ ವಾ
ಸವನ ಸುತ ಬಾ ಕಂದ ಎಂದಪ್ಪಿದನು ಫಲುಗುಣನ |
ತವಕದಿಂದೆರಗಿದಡೆ ಮಾದ್ರಿಯ
ಜವಳಿಮಕ್ಕಳನಪ್ಪಿದನು ಕೌ
ರವಕುಲಾಗ್ರಣಿಗಳಿರ ಕುಳ್ಳಿರಿಯೆಂದನಂಧನೃಪ || ೪೨ ||
ಪದವಿಭಾಗ-ಅರ್ಥ: ಪವನಸುತನೇ (ಭೀಮನೇ), ಬಾ ಎನುತ ತಕ್ಕವಿಸಿದನು; ಬಳಿಕ+ ಎರಗಿದಡೆ ವಾಸವನ ಸುತ ಬಾ ಕಂದ ಎಂದು+ ಅಪ್ಪಿದನು ಫಲುಗುಣನ ತವಕದಿಂದ+ ಎರಗಿದಡೆ ಮಾದ್ರಿಯ ಜವಳಿಮಕ್ಕಳು+ ಅಪ್ಪಿದನು ಕೌರವಕುಲಾಗ್ರಣಿಗಳಿರ ಕುಳ್ಳಿರಿಯೆಂದನು+ ಅಂಧನೃಪ
ಅರ್ಥ:ಭೀಮನು ದೊಡ್ಡಪ್ಪನಿಗೆ ನಮಸ್ಕರಿಸಲು ಹೋದಾಗ ಅವನು,'ಭೀಮನೇ, ಬಾ ಎನ್ನತ್ತಾ ಪ್ರೀತಿ ತೋರಿಸಿದನು; ಬಳಿಕ ಅರ್ಜುನನು ನಮಿಸಲು ಇಂದ್ರನ ಸುತನೇ, ಬಾ ಕಂದ ಎಂದು ಅವನನ್ನು ಅಪ್ಪಿದನು. ತವಕದಿಂದ ಮಾದ್ರಿಯ ಜವಳಿಮಕ್ಕಳಾದ ನಕುಲ ಸಹದೇವರು ನಮಿಸಿದಾಗ ಅವರನ್ನು ಅಪ್ಪಿದನು. ನಂತರ ಅಂಧನೃಪ ಧೃತರಾಷ್ಟ್ರನು ಕೌರವಕುಲಾಗ್ರಣಿಗಳಿರೇ- ಕುರುಕುಲದ ಶ್ರೇಷ್ಠರೇ ಕುಳಿತುಕೊಳ್ಳಿಯೆಂದನು.
ಕುರುಮಹೀಪತಿ ನಮ್ಮ ಪೂರ್ವಕ
ರರಸು ತತ್ಸಂತಾನಪಾರಂ
ಪರೆಯನಳಿವಡೆ ಕೆಲಬರಾದರು ಹೋದರವರಿಂದು |
ಭರತಕುಲವನು ಹೊರೆದು ಮಿಗೆ ವಿ
ಸ್ತರಿಸು ಮಗನೆ ಸುಯೋಧನಾದ್ಯರ
ದುರುಳತನದವಗುಣವನೆಮ್ಮನು ನೋಡಿ ಮರೆಯೆಂದ || ೪೩ ||
ಪದವಿಭಾಗ-ಅರ್ಥ: ಕುರುಮಹೀಪತಿ ನಮ್ಮ ಪೂರ್ವಕರರಸು ತತ್+ ಸಂತಾನ ಪಾರಂಪರೆಯನು+ ಉಳಿವಡೆ ಕೆಲಬರಾದರು ಹೋದರವರಿಂದು ಭರತಕುಲವನು ಹೊರೆದು ಮಿಗೆ(ಚೆನ್ನಾಗಿ) ವಿಸ್ತರಿಸು ಮಗನೆ ಸುಯೋಧನ+ ಆದ್ಯರ ದುರುಳತನದ+ ಅವಗುಣವನು+ ಎಮ್ಮನು ನೋಡಿ ಮರೆಯೆಂದ.
ಅರ್ಥ:ಕುರುಮಹೀಪತಿಯಾದ ಧೃತರಾಷ್ಟ್ರನು ಧರ್ಮಜನಿಗೆ,'ನಮ್ಮ ಪೂರ್ವದ ಅರಸುಗಳ ಆ ಸಂತಾನ ಪಾರಂಪರೆಯನ್ನು ಉಳಿಸುವಲ್ಲಿ ಕೆಲವರು ಸಫಲರಾಗಿ ಹೋದರು. ಮಗನೆ ಇಂದು ಭರತಕುಲವನ್ನು ಹೊರೆದು- ಕಾಪಾಡಿ ಚೆನ್ನಾಗಿ ವಿಸ್ತರಿಸು. ಸುಯೋಧನ ಮೊದಲಾದವರ ದುರುಳತನದ ಕೆಟ್ಟತನವನ್ನು ನಮ್ಮನ್ನು ನೋಡಿ ಮರೆತುಬಿಡು, ಎಂದ.
ಅವರೊಳವಗುಣವೇ ಚಿರಂತನ
ಭವದ ಕಿಲ್ಬಿಷ ಕರ್ಮಪಾಕ
ಪ್ರವರ ದುರಿಯೋಧನನ ಸವ್ಯಪದೇಶಮಾತ್ರದಲಿ |
ಎವಗೆ ರಚಿಸಿತು ರಾಜ್ಯವಿಭ್ರಂ
ಶವನು ತತ್ಸುಕೃತೋದಯಪ್ರಾ
ಭವವೆ ತಿರುಗಿಸಿತೆಂದು ನಯದಲಿ ಧರ್ಮಸುತ ನುಡಿದ || ೪೪ ||
ಪದವಿಭಾಗ-ಅರ್ಥ: ಅವರೊಳು+ ಅವಗುಣವೇ? ಚಿರಂತನ ಭವದ(ಈ ಜನ್ಮದ) ಕಿಲ್ಬಿಷ ಕರ್ಮಪಾಕಪ್ರವರ ದುರಿಯೋಧನನ ಸವ್ಯಪದೇಶಮಾತ್ರದಲಿ (ಸವ್ಯ- ಸುತ್ತುಬಳಸಿ, ಅಪದೇಶ- ಬೇರೆಯವರ ಮೂಲಕ)ಎವಗೆ(ನಮಗೆ) ರಚಿಸಿತು ರಾಜ್ಯವಿಭ್ರಂಶವನು(ರಾಜ್ಯ ಭ್ರಷ್ಟರಾಗಿ ಅಲೆಯುವ ಕೆಟ್ಟ ಕರ್ಮಫಲ) ತತ್- ಅದು+ ಸುಕೃತೋದಯ ಪ್ರಾಭವವೆ ತಿರುಗಿಸಿತು+ ಎದು ನಯದಲಿ ಧರ್ಮಸುತ ನುಡಿದ
ಅರ್ಥ:ಅದಕ್ಕೆ ಧರ್ಮಸುತನು ವಿನಯದಿಂದ,'ಅವರಲ್ಲಿದ್ದ ಅವಗುಣವೇ? ನಜಕ್ಕೂಅದು ನಮ್ಮ ಚಿರಂತನವಾದ ಭವದ ಕಿಲ್ಬಿಷವಾಗಿತ್ತು.ಅದು ನಮ್ಮ ಅನೇಕ ಜನ್ಮದ ಕು-ಕರ್ಮಪಾಕದ ಪ್ರವರ- ಸರಣಿಯು; ದುರ್ಯೋಧನನ ಮೂಲಕ ಅಪದೇಶ ಮಾರ್ಗದಲ್ಲಿ ನಮಗೆ ರಾಜ್ಯ ಭ್ರಷ್ಟರಾಗಿ ಅಲೆಯುವ ಕೆಟ್ಟ ಕರ್ಮಫಲವನ್ನು ನೀಡಿತು. ಅದೇ ಕೊನೆಯಲ್ಲಿ ನಮ್ಮ ಪೂರ್ವ ಜನ್ಮದ ಸುಕೃತದ ಉದಯದ ಪ್ರಭಾವವೇ ನಮ್ಮನ್ನು ವಿಜಯಕ್ಕೆ ತಿರುಗಿಸಿತು,' ಎಂದನು.

ಗಾಂಧಾರಿಗೆ ಮುನಿಯ ಹಿತವಚನ- ಅವಳ ಕೋಪ[ಸಂಪಾದಿಸಿ]

ಸಾಕಿದಂತಿರಲಬಲೆಯರೊಳು
ದ್ರೇಕಿ ನಿಮ್ಮಯ ಹಿರಿಯ ತಾಯು
ದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ |
ಆಕೆ ಸೈರಿಸಲರಿಯಳರಿವಿನೊ
ಳಾಕೆವಾಳರು ತಿಳಿಹಿ ತಮ್ಮನ
ನಾಕೆಯನು ಕಾಣಿಸುವುದೆಂದನು ವ್ಯಾಸ ವಿದುರರಿಗೆ || ೪೫ ||
ಪದವಿಭಾಗ-ಅರ್ಥ: ಸಾಕು+ ಅದಂತಿರಲಿ+ ಅಬಲೆಯರೊಳು(ಹೆಂಗಸರಲ್ಲಿ)+ ಉದ್ರೇಕಿ ನಿಮ್ಮಯ ಹಿರಿಯ ತಾಯ+ ಉದ್ರೇಕವನು ಪರಿಹರಿಸು; ಶೋಕ ಕ್ರೋಧದ+ ಉಪಟಳಕೆ(ಕಷ್ಟ) ಆಕೆ ಸೈರಿಸಲು+ ಅರಿಯಳು+ ಅರಿವಿನೊಳು(ವಿವೇಕದಿಂದ)+ ಅಕೆವಾಳರು ತಿಳಿಹಿ ತಮ್ಮನನು (ಧರ್ಮಜನನ್ನು)+ ಅಕೆಯನು ಕಾಣಿಸುವುದು+ ಎಂದನು ವ್ಯಾಸ ವಿದುರರಿಗೆ.
ಅರ್ಥ:ಆಗ ವ್ಯಾಸನು, ಧರ್ಮಜನಿಗೆ, ಸಾಕು ಅದು ಹಾಗಿರಲಿ, ಹೆಂಗಸರಲ್ಲಿ ನಿಮ್ಮಯ ಹಿರಿಯ ತಾಯಿಯು- ದೊಡ್ಡಮ್ಮ- ಗಾಂಧಾರಿ ಬಹಳ ಸಿಟ್ಟಿನವಳು. ಉದ್ರೇಕಿ. ಅವಳ ಉದ್ರೇಕವನ್ನು ಪರಿಹರಿಸು,' ಎಂದನು. ವ್ಯಾಸನು ಧರತರಾಷ್ಟ್ರ ವಿದುರರಿಗೆ, 'ಶೋಕ ಕ್ರೋಧದ ಭಾವನೆಯ ಕಷ್ಟವನ್ನು ಆಕೆ ವಿವೇಕದಿಂದ ಯೋಚಿಸಿ ಸಹಿಸಿಕೊಳ್ಳಲು ತಿಳಿದಿಲ್ಲ. ಅಕೆವಾಳರಾದ ತಿಳುವಳಿಕೆಯುಳ್ಳ ನೀವು ಅವಳಿಗೆ ತಿಳುವಳಿಕೆಯನ್ನು ಹೇಳಿ, ಧರ್ಮಜನನ್ನು ಅಕೆಯ ಬಳಿ ಕೆರೆತಂದು ಕಾಣಿಸುವುದು,' ಎಂದನು.
ವಿದುರ ವೇದವ್ಯಾಸ ಮುನಿಯೀ
ಹದನನರುಹುವೆವೆಂದು ರಾಯನ
ಸುದತಿಯಲ್ಲಿಗೆ ಬಂದು ನುಡಿದರು ಮಧುರವಚನದಲಿ |
ಕದಪನಂಗೈಗಿತ್ತು ತಲೆಗು
ತ್ತಿದಳು ನಯನೋದಕದ ಪರಿವಾ
ಹದಲಿ ನನೆದಳು ಮಹಿಳೆಯಿದ್ದಳು ಬಹಳ ಮೋನದಲಿ || ೪೬ ||
ಪದವಿಭಾಗ-ಅರ್ಥ:ವಿದುರ ವೇದವ್ಯಾಸ ಮುನಿಯ+ ಈ ಹದನನು+ ಅರುಹುವೆವು+ ಎಂದು ರಾಯನ ಸುದತಿಯಲ್ಲಿಗೆ(ಪತ್ನಿ) ಬಂದು ನುಡಿದರು ಮಧುರವಚನದಲಿ; ಕದಪನು(ಕೆನ್ನೆಯನ್ನು)+ ಅಂಗೈಗಿತ್ತು ತಲೆಗುತ್ತಿದಳು ನಯನ+ ಉದಕದ ಪರಿವಾಹದಲಿ ನನೆದಳು ಮಹಿಳೆಯಿದ್ದಳು ಬಹಳ ಮೋನದಲಿ(ಮೌನ, ಕೋಪ).
ಅರ್ಥ: ವಿದುರನು ವೇದವ್ಯಾಸ ಮುನಿಯು ಹೇಳಿದ ಈ ವಿಚಾರವನ್ನು ಧೃತರಾಷ್ಟ್ರರಾಯನ ಸುದತಿಯು ಇದ್ದಲ್ಲಿಗೆ ಬಂದು ಹೇಳುವೆವು ಎಂದು ಬಂದರು. ಅವಳಿಗೆ ಮಧುರವಚನದಲ್ಲಿ ಧರ್ಮರಾಯ ಪಾಂಡವರನ್ನು ಆಸಿರ್ವದಿಸುವ ವಿಷಯವನ್ನು ಹೇಳಿದರು; ಆದರೆ ಗಾಂಧಾರಿಯು ತನ್ನ ಕೆನ್ನೆಯನ್ನು ಅಂಗೈಮೇಲೆ ಇಟ್ಟು ಮುಖವನ್ನು ಪಕ್ಕಕ್ಕೆ ತಿರುಗಿಸಿ ತಲೆತಗ್ಗಿಸಿದಳು. ಆಕೆಯು ಕಣ್ಣಿನಲ್ಲಿ ನೀರಿನ ಪ್ರವಾಹ ಹರಿಸಿ ನೆನೆದಳು. ಆ ಮಹಿಳೆ ಬಹಳ ಮೌನ ಮತ್ತು ಕೋಪದಲ್ಲಿದ್ದಳು.
ದುಗುಡವನು ಬಿಡು ಮೋಹಬಂಧ
ಸ್ಥಗಿತ ಚಿತ್ತದ ಕದಡು ಹಣಿಯಲಿ
ಮಗಳೆ ಮರುಲಾದೌ ವಿಳಾಸದ ವಿಹಿತವಿಹಪರಕೆ |
ಅಗಡುಮಕ್ಕಳ ತಾಯ್ಗೆ ತಪ್ಪದು
ಬೆಗಡುಬೇಗೆ ಸುಯೋಧನಾದ್ಯರ
ವಿಗಡತನವನು ನೆನೆದು ನೀ ನೋಡೆಂದನಾ ಮುನಿಪ || ೪೭ ||
ಪದವಿಭಾಗ-ಅರ್ಥ: ದುಗುಡವನು ಬಿಡು ಮೋಹಬಂಧ ಸ್ಥಗಿತ ಚಿತ್ತದ ಕದಡು (ಮನಸ್ಸಿನ ಉದ್ರೇಕದ ಅಲ್ಲೋಲ ಕಲ್ಲೋಲ) ಹಣಿಯಲಿ(ಶಾಂತವಾಗಲಿ, ಶುದ್ಧವಾಗಲಿ) ಮಗಳೆ, ಮರುಲಾದೌ ವಿಳಾಸದ(ಗುರುತು, ಸುಳಿವು,- ಒಂದೇಕಡೆಇರುವ, ಅಭಿಪ್ರಾಯ, ಭಾಷಣ/ ವಿಲಾಸದ?= ಸಂತೋಷದ) ವಿಹಿತವು+ ಇಹಪರಕೆ ಅಗಡುಮಕ್ಕಳ(ಅಗಡು= ಹಟಮಾರಿ) ತಾಯ್ಗೆ ತಪ್ಪದು ಬೆಗಡುಬೇಗೆ, ಸುಯೋಧನಾದ್ಯರ ವಿಗಡತನವನು(ಉಗ್ರತೆ) ನೆನೆದು ನೀ ನೋಡೆಂದನು,+ ಆ ಮುನಿಪ.
  • ಉದಾ:ಕೆಸರಿನಿಂದ ಕದಡಿದ ನೀರು ಹಣಿತಿದೆ.
ಅರ್ಥ:ವೇದವ್ಯಾಸ ಮುನಿಯು ಗಾಂಧಾರಿಗೆ,'ಗಾಂಧಾರಿ ಕೋಪವನ್ನೂ ದುಗುಡವನ್ನೂ ಬಿಡು. ಮೋಹದ ಬಂಧನದಿಂದ ಸ್ಥಗಿತವಾದ ಮನಸ್ಸನ ಕದಡು- ಗೊಂದಲ ಶಾಂತವಾಗಲಿ; ಮಗಳೆ, ಮರುಳಾದೆಯಾ, ಮರುಳಾಗಬೇಡ ಸ್ಥಿರವಾದ ವಿಶೇಷವಾದ ಹಿತವು-ಇಹಕ್ಕೂ ಪರಕ್ಕೂ ಒಳ್ಳೆಯದು. ಹಟಮಾರಿ ಮಕ್ಕಳ ತಾಯಂದಿರಿಗೆ ದುಃಖ ಬೇಗೆ ತಪ್ಪದು. ಸುಯೋಧನ ಮತ್ತು ಅವನ ತಮ್ಮಂದಿರ ಉಗ್ರ ಸ್ವಭಾವವನ್ನು ನೆನೆದು ನೀನು ನೋಡು,' ಎಂದನು.
ಮುನಿಯದಿರು ಗಾಂಧಾರಿ ದಿಟ ನಿ
ನ್ನನುಜನಿಕ್ಕಿದ ಸಾರಿ ನಿನ್ನಯ
ತನುಜರನು ನಿನ್ನಖಿಳಮಿತ್ರಜ್ಞಾತಿಬಾಂಧವರ |
ಮನುಜಪತಿಗಳನಂತವನು ರಿಪು
ಜನಪ ಶರವಹ್ನಿಯಲಿ ಬೇಳಿದು
ದಿನಿತು ಶೋಕೋದ್ರೇಕ ನಿನಗೇಕೆಂದನಾ ಮುನಿಪ || ೪೮ ||
ಪದವಿಭಾಗ-ಅರ್ಥ: ಮುನಿಯದಿರು ಗಾಂಧಾರಿ ದಿಟ(ನಿಜ) ನಿನ್ನ+ ಅನುಜನು (ಸೋದರ)+ ಇಕ್ಕಿದ ಸಾರಿ(ಇಟ್ಟನು, ಬಂದು) ನಿನ್ನಯ ತನುಜರನು(ಮಕ್ಕಳನ್ನು) ನಿನ್ನ+ ಅಖಿಳ ಮಿತ್ರಜ್ಞಾತಿಬಾಂಧವರ ಮನುಜಪತಿಗಳನಂತೆ(ಮನುಜಪತಿ- ಜನಪತಿ- ರಾಜ)+ ಅವನು(ದುರ್ಯೋದನನೂ) ರಿಪುಜನಪ ಶರವಹ್ನಿಯಲಿ ಬೇಳಿದುದು+ ಇನಿತು ಶೋಕ+ ಉದ್ರೇಕ ನಿನಗೇಕೆ+ ಎಂದನು+ ಆ ಮುನಿಪ.
ಅರ್ಥ:ಮುನಿಯು, 'ಗಾಂಧಾರಿ ಮುನಿಯಬೇಡ- ಕೋಪವನ್ನು ಬಿಡು; ನಿಜ ನಿನ್ನ ಅಣ್ಣ ಶಕುನಿಯು ಇಲ್ಲಿಗೆ ಬಂದು ನಿನ್ನ ಮಕ್ಕಳನ್ನು ತನಗೆಬೇಕಾದಂತೆ ತಿದ್ದಿ ಇಟ್ಟನು- ಬೆಳೆಸಿದನು. ಅಖಿಲ ಮಿತ್ರರು ಜ್ಞಾತಿಬಾಂಧವರು ಮತ್ತು ರಾಜರಂತೆ, ದುರ್ಯೋದನನೂ ಶತ್ರುರಾಜರ ಶರವಹ್ನಿಯಲಿ- ಬಾಣಗಳ ಬೆಂಕಿಯಲ್ಲಿ ಬೆಂದುಹೋದನು. ಎಲ್ಲರಂತೆ ಅವನು ಎಂದು ತಿಳಿ. ಹೀಗಿರುವಾಗ ಇಷ್ಟೊಂದು ಶೋಕ, ಉದ್ರೇಕ, ನಿನಗೆ ಏಕೆ,' ಎಂದನು.
ಅಳಿದವರಿಗಳಲುವುದು ಸಲ್ಲದು
ನಿಲಲಿ ಸಾಕದು ನಿಮ್ಮ ಚಿತ್ತದ
ನೆಲೆಯ ಬಯಕೆಯ ಬೆಸಸಿರೇ ಕರ್ತವ್ಯವೇನೆಮಗೆ |
ಕಳವಳಿಪ ಕುಂತೀಸುತರ ಕಣು
ವಳೆಗವಗ್ರಹವಾಗು ನಿರ್ಜರ
ರೊಳಗೆ ಮಕ್ಕಳ ಮಾನ್ಯರನು ಮಾಡೆಂದನಾ ಮುನಿಪ || ೪೯ ||
ಪದವಿಭಾಗ-ಅರ್ಥ: ಅಳಿದವರಿಗೆ+ ಅಳಲುವುದು ಸಲ್ಲದು, ನಿಲಲಿ ಸಾಕದು, ನಿಮ್ಮ ಚಿತ್ತದನೆಲೆಯ ಬಯಕೆಯ ಬೆಸಸಿರೇ ಕರ್ತವ್ಯವೇನು ಎಮಗೆ, ಕಳವಳಿಪ ಕುಂತೀಸುತರ ಕಣುವಳೆಗೆ (ಕಣ್ಣೀರಿನ ಮಳೆ) + ಅವಗ್ರಹವಾಗು(ನಿಲ್ಲಿಸು,ಹತೋಟಿ, ಅನಾವೃಷ್ಟಿ), ನಿರ್ಜರರೊಳಗೆ(ದೇವತೆಗಳು) ಮಕ್ಕಳ ಮಾನ್ಯರನು ಮಾಡೆಂದನು+ ಆ ಮುನಿಪ
ಅರ್ಥ:ಮುನಿಯು ಮುಂದುವರಿದು,'ಮರಣಿಸಿದವರಿಗೆ ಅಳುವುದು ಸಲ್ಲದು. ಗಾಂಧಾರಿಯು, 'ನಿಮ್ಮ ಸಮಾಧಾನದ ಮಾತು ನಿಲ್ಲಲಿ, ಆ ಮಾತು ಸಾಕು, ನಿಮ್ಮ ಮನಸ್ಸಿನ ಉದ್ದೇಶ ಬಯಕೆ ಏನು? ನನ್ನ ಕರ್ತವ್ಯ ಏನು? ಅದನ್ನು ನಮಗೆ ಹೇಳಿರೇ,' ಎಂದಳು. ಅದಕ್ಕೆ ಮುನಿಯು,'ಚಿಂತೆಯಿಂದ ಕಳವಳಿಸುತ್ತಿರುವ ಕುಂತೀಸುತರನ್ನು ಕರುಣೆಯಿಂದ ನೋಡು. ನಿನ್ನ ಕಣ್ಣೀರಿನ ಮಳೆಯನ್ನು ಹತೋಟಿಗೆ ತಂದು ನಿಲ್ಲಿಸು. ನಿನ್ನ ಮಕ್ಕಳನ್ನು ದೇವಲೋಕದಲ್ಲಿ ದೇವತೆಗಳಿಗೆ ಮಾನ್ಯರಾನಗುವಮತೆ ಮಾಡು,' ಎಂದನು.
ನಂಬಿಸುವುದೈವರನು ಕಾಣಿಸಿ
ಕೊಂಬುದನಿಬರ ಕರಣವೃತ್ತಿಗೆ
ತುಂಬುವುದು ತನಿಹರುಷವನು ಸೌಹಾರ್ದಶೋಭೆಯಲಿ |
ಝೊಂಬಿಸಲಿ ಕೌರವರು ನಾಕ ನಿ
ತಂಬಿನಿಯರಳಕವನು ಮಗಳೆ ವಿ
ಡಂಬಿಸುವ ಖಳರಭಿಮತಕೆ ಮನವೀಯಬೇಡೆಂದ || ೫೦ ||
ಪದವಿಭಾಗ-ಅರ್ಥ:ನಂಬಿಸುವುದು+ ಐವರನು, ಕಾಣಿಸಿಕೊಂಬುದು+ ಅನಿಬರ(ಎಲ್ಲರ) ಕರಣವೃತ್ತಿಗೆ ತುಂಬುವುದು ತನಿಹರುಷವನು ಸೌಹಾರ್ದಶೋಭೆಯಲಿ, ಝೊಂಬಿಸಲಿ(ಸುಖವಾಗಿರಲಿ) ಕೌರವರು ನಾಕ ನಿತಂಬಿನಿಯರ(ದೇವ ಕನ್ಯೆಯರ)+ ಅಳಕವನು(ಮುಂಗುರುಳು) ಮಗಳೆ, ವಿಡಂಬಿಸುವ ಖಳರ+ ಅಭಿಮತಕೆ ಮನವ+ ಈಯಬೇಡ,' ಎಂದ.
ಅರ್ಥ:ವ್ಯಾಸ ಮುನಿಯು ಗಾಂಧಾರಿಗೆ,'ನೀನು ಪಾಂಡವರು ಐವರನ್ನೂ ಸಮಾಧಾನ ಪಡಿಸುವುದು; ಅವರಿಗೆ ನೀನು ಕಾಣಿಸಿಕೊಳ್ಲಬೆಕು, ದರ್ಶನ ಕೊಡಬೇಕು. ಅವರೆಲ್ಲರ ಮನಸ್ಸಿಗೆ ತನಿಹರ್ಷವನ್ನು ಸೌಹಾರ್ದದಿಂದ ಶೋಭೆಯಿಂದ ತುಂಬುವುದು. ನಿನ್ನ ಮಕ್ಕಳು ಕೌರವರು ಅವರಿಂದ ತರ್ಪಣಾದಿಗಳನ್ನು ಪಡೆದು ಸ್ವರ್ಗದಲ್ಲಿ ದೇವಕನ್ಯೆಯರ ಮುಂಗುರುಳನ್ನು ಸವರಲಿ, ಮಗಳೆ; ಅಣಕವಾಡುವ ನೀಚರ ಮಾತುಗಳಿಗೆ ಮನಸ್ಸನ್ನು ಕೊಡಬೇಡ,' ಎಂದ.
ರಾಯನನು ಕಾಣಿಸಿದಿರೇ ಪ್ರ
ಜ್ಞಾಯತಾಕ್ಷನ ತಿಳಿಹಿ ಬಂದಿರೆ
ತಾಯಿಗಳು ನಾವೈಸಲೇ ಬಲುಹುಂಟೆ ನಮಗಿನ್ನು |
ಸಾಯೆ ಸಾವೆನು ಕುರುಕುಲಾಗ್ರಣಿ
ನೋಯೆ ನೋವೆನು ತನಗೆ ದುರಭಿ
ಪ್ರಾಯವುಂಟೇ ಮಾವ ಎಂದಳು ಮುನಿಗೆ ಗಾಂಧಾರಿ || ೫೧ ||
ಪದವಿಭಾಗ-ಅರ್ಥ:ರಾಯನನು ಕಾಣಿಸಿದಿರೇ, ಪ್ರಜ್ಞಾಯತಾಕ್ಷನ(ಪ್ರಜ್ಞೆಯೇ ಎಂದರೆ ಬುದ್ಧಿಯೇ- ಅಕ್ಷಿ- ಕಣ್ಣಾಗಿ ಉಳ್ಳವನು- ಕುರುಡ) ತಿಳಿಹಿ ಬಂದಿರೆ, ತಾಯಿಗಳು ನಾವು+ ಐಸಲೇ (ಅಷ್ಟೆಲ್ಲಾ) ಬಲುಹುಂಟೆ ನಮಗೆ,+ ಇನ್ನು ಸಾಯೆ ಸಾವೆನು ಕುರುಕುಲಾಗ್ರಣಿ ನೋಯೆ ನೋವೆನು, ತನಗೆ ದುರಭಿಪ್ರಾಯವುಂಟೇ ಮಾವ ಎಂದಳು ಮುನಿಗೆ ಗಾಂಧಾರಿ.
ಅರ್ಥ: ಗಾಂಧಾರಿಯು ಮುನಿಯನ್ನು ಕುರಿತು,'ಧೃತರಾಷ್ಟ್ರರಾಯನನ್ನು ಪಾಂಡವರಿಗೆ ಕಾಣಿಸಿದಿರೇ? (ಪಾಂಡವರು ತನ್ನ ಪತಿಯನ್ನು ಕಂಡರೆ?) ನನ್ನ ಪತಿ ಧೃತರಾಷ್ಟ್ರನಿಗೆ ಈ ಭೇಟಿಯ ವಿಷಯ ತಿಳುಹಿಸಿ ಬಂದಿದ್ದೀರಾ? (ಶಿಷ್ಟಾಚಾರ: ಹಿರಿಯರಿಗೆ ನಮಿಸಿ ನಂತರ ಕಿರಿಯರಿಗೆ ನಮಸ್ಕರಿಸಬೇಕು. ಪತಿಯ ನಂತರ ಸತಿಗೆ) ನಾವು ತಾಯಿಗಳು- ಹೆಂಗಸರು ನಾವು, ನಮಗೆ ಅವರಷ್ಟೆಲ್ಲಾ ಅಧಿಕಾರಬಲ ಇದೆಯೇ? ಇನ್ನು ಅವನು ಸಾಯೆ ಎಂದರೆ ಸಾವೆನು- ಸಾಯುವೆನು. ಕುರುಕುಲಾಗ್ರಣಿ ಪತಿಯು ನೋಯೆ ಎಂದರೆ ನೋಯುವೆನು. ತನಗೆ ಅವರಿಗಿಂತ ಬೇರೆ ದುರಭಿಪ್ರಾಯವುಂಟೇ ಮಾವ? ಎಂದಳು.
  • ಟಿಪ್ಪಣಿ:-ಇಲ್ಲಿ ವ್ಯಾಸಮುನಿಗೆ ಗಾಂಧಾರಿ 'ಮಾವ' ಎಂದಳು; ನಿಜವಾಗಿ ವ್ಯಾಸ ಮುನಿಯೇ ಧೃತರಾಷ್ಟ್ರನ ತಂದೆ, ಗಾಂಧಾರಿಗೆ ಮಾವ. ವಿಚಿತ್ರವೀರ್ಯನು ಸತ್ತ ನಂತರ ಕುರುಕುಲದ ಪರಂಪರೆ ಮಕ್ಕಳಿಲ್ಲದೆ ನಿಲ್ಲವುದೆಂದು, ವಿಚಿತ್ರವೀರ್ಯನ ತಾಯಿ ಸತ್ಯವತಿ ತನ್ನ ಮೊದಲ ಮಗ ವ್ಯಾಸನನ್ನು ಕರೆದು ನಿಯೋಗ ಪದ್ದತಿಯಿಂದ ಪುತ್ರಸಂತಾನ ಮಾಡುವಂತೆ ಕೇಳಿಕೊಂಡಳು. ಅದರಂತೆ ಅವನು ತಾಯಿಯ ಮಾತಿಗೆ ಒಪ್ಪಿ ವಿಚಿತ್ರವೀರ್ಯನ ಮೊದಲ ಪತ್ನಿ ಅಂಬಿಕೆಯನ್ನು ಕೂಡಿ ಪುತ್ರಸಂತಾನವನ್ನು ಕರುಣಿಸಿದನು. ಹಾಗಾಗಿ ಗಾಂಧಾರಿಗೆ ವ್ಯಾಸನೇ ಮಾವ,-ಮತ್ತು ಧೃತರಾಷ್ಟ್ರನ ತಂದೆ. ಹಾಗೆಯೇ ಎರಡನೆಯ ಪತ್ನಿ ಅಂಬಾಲಿಕೆಯ ಮಗ ಪಾಂಡು ವ್ಯಾಸರ ನಿಯೋಗದಿಂದ ಹುಟ್ಟಿದವನು. ಪಾಂಡವರು, ಕೌರವರು ವ್ಯಾಸರಿಗೆ ಮೊಮ್ಮಕ್ಕಳು.
ಐಸಲೇ ಗುಣಮಯವಚೋವಿ
ನ್ಯಾಸವಿದು ಸಾರೆನುತ ಮರಳಿದು
ಭೂಸುರಾಗ್ರಣಿ ಬಂದು ನುಡಿದನು ಧರ್ಮನಂದನಗೆ |
ರೋಷವಹ್ನಿಯನುಪಶಮಾಂಬುವಿ
ಲಾಸದಲಿ ನಿಲಿಸೇಳು ನೃಪನ ಮ
ಹಾಸತಿಯ ಖತಿ ಹಿರಿದು ನಮಗೊಳಗಾಗಿ ಭಯವೆಂದ || ೫೨ ||
ಪದವಿಭಾಗ-ಅರ್ಥ:ಐಸಲೇ(ಇದು ಸರಿ, ಹಾಗೇ ಸರಿ) ಗುಣಮಯ ವಚೋವಿನ್ಯಾಸವು (ಮಾತಿನ ವಿಧಾನ)+ ಇದು, ಸಾರು+ ಎನುತ, ಮರಳಿದು ಭೂಸುರಾಗ್ರಣಿ (ವ್ಯಾಸನು) ಬಂದು ನುಡಿದನು ಧರ್ಮನಂದನಗೆ ರೋಷವಹ್ನಿಯನು+ ಉಪಶಮಾಂಬು(ಉಪಶಮ+ ಅಂಬು= ನೀರು) ವಿಲಾಸದಲಿ(ಆಟ, ಜಾಣತನದ ನೆಡೆ) ನಿಲಿಸು+ ಏಳು ನೃಪನ ಮಹಾಸತಿಯ ಖತಿ ಹಿರಿದು ನಮಗೆ+ ಒಳಗಾಗಿ ಭಯವೆಂದ.
ಅರ್ಥ:ವ್ಯಾಸನು ಗಾಂಧಾರಿಗೆ, 'ಒಳ್ಳೆಯದು, ಗುಣಯುಕ್ತವಾದ ಮಾತಿನ ಕ್ರಮವು ಇದು. ಗಾಂಧಾರಿಯೇ ಪತಿಯ ಬಳಿಗೆ ಸಾರು- ಹೋಗು,' ಎಂದು ಹೇಳಿ, ಪುನಃ ಧರ್ಮಜನ ಬಳಿಗೆ ವ್ಯಾಸನು ಬಂದು ಹೇಳಿದನು,'ಗಾಂಧಾರಿಯ ರೋಷದ ಬೆಂಕಿಯನ್ನು ಉಪಶಮನದ ಮಾತಿನ ಜಲದ ವಿಲಾಸದಲ್ಲಿ ನಿಲ್ಲಿಸು ಏಳು,' ಎಂದನು ಅದಕ್ಕೆ ಧರ್ಜನು,'ನೃಪನ ಮಹಾಸತಿ ಗಾಂಧಾರಿಯ ರೋಷ ಬಹಳ ಹಿರಿದು, ನಮಗೆ ಒಳಗೇ ಭಯವು,' ಎಂದ.

ಪಾಂಡವರ - ಗಾಂಧಾರಿಯ ಸಮಾಗಮ[ಸಂಪಾದಿಸಿ]

ಹರಿ ವಿದುರ ಪಾರಾಶರಾತ್ಮಜ
ವರ ಮಹೀಪತಿ ಭೀಮ ಮಾದ್ರೇ
ಯರು ಧನಂಜಯ ಸಹಿತ ಬಂದರು ಬಹಳ ವಿನಯದಲಿ |
ಚರಣದಲಿ ಮೆಯ್ಯಿಕ್ಕಿದರೆ ನೃಪ
ವರನ ನೆಗಹಿದಳನಿಲಸುತ ಸಿತ
ತುರಗ ಮಾದ್ರೀಸುತರು ಪದಕೆರಗಿದರು ಭೀತಿಯಲಿ || ೫೩ ||
ಪದವಿಭಾಗ-ಅರ್ಥ: ಹರಿ ವಿದುರ ಪಾರಾಶರಾತ್ಮಜ(ವ್ಯಾಸ), ವರ ಮಹೀಪತಿ(ಧರ್ಮಜ) ಭೀಮ, ಮಾದ್ರೇಯರು(ನಕುಲ ಸಹದೇವರು) ಧನಂಜಯ ಸಹಿತ ಬಂದರು ಬಹಳ ವಿನಯದಲಿ, ಚರಣದಲಿ ಮೆಯ್ಯಿಕ್ಕಿದರೆ ನೃಪವರನ ನೆಗಹಿದಳು+ ಅನಿಲಸುತ(ಭೀಮ) ಸಿತತುರಗ(ಅರ್ಜುನ) ಮಾದ್ರೀಸುತರು ಪದಕೆ+ ಎರಗಿದರು ಭೀತಿಯಲಿ.
ಅರ್ಥ:ಗಾಂಧಾರಿಯ ಬಳಿಗೆ, ಕೃಷ್ಣ, ವಿದುರ, ವ್ಯಾಸ, ವರ ಧರ್ಮಜ, ಭೀಮ, ನಕುಲ ಸಹದೇವರು, ಧನಂಜಯನ ಸಹಿತ ಬಹಳ ವಿನಯದಲ್ಲಿ ಬಂದರು, ಅವರು ಗಾಂಧಾರಿಯ ಚರಣಗಳಿಗೆ ಮೆಯ್ಯಿಕ್ಕಿ ನಮಸ್ಕಾರ ಮಾಡಿದರು. ಮೊದಲು ಕಾಲಿಗೆ ಬಿದ್ದ ನೃಪವರ ಧರ್ಮಜನನ್ನು ಎತ್ತಿದಳು. ನಂತರ ಭೀಮ, ಅರ್ಜುನ, ನಕುಲ ಸಹದೇವರು ಅವಳ ಪಾದಕ್ಕೆ ಭಯದಿಂಲೇ ನಮಿಸಿದರು.
ಏಳಿರೈ ಸಾಕೇಳಿ ಮಕ್ಕಳಿ
ರೇಳಿರೈ ದೇಸಿಗರು ನಾವ್ ಭೂ
ಪಾಲಕರು ನೀವೀಸು ನಮ್ಮಲಿ ಭೀತಿ ನಿಮಗೇಕೆ |
ಬಾಲೆಯರು ನಾವಂಧಕರು ನಿ
ಮ್ಮಾಳಿಕೆಯೊಳೇ ನಿಮ್ಮ ಹಂತಿಯ
ಕೂಳಿನಲಿ ಬೆಂದೊಡಲ ಹೊರೆವವರೆಂದಳಿಂದುಮುಖಿ || ೫೪ ||
ಪದವಿಭಾಗ-ಅರ್ಥ: ಏಳಿರೈ ಸಾಕು+ ಏಳಿ, ಮಕ್ಕಳಿರಾ+ ಏಳಿರೈ, ದೇಸಿಗರು ನಾವ್, ಭೂಪಾಲಕರು ನೀವು+ ಈಸು ನಮ್ಮಲಿ ಭೀತಿ ನಿಮಗೇಕೆ, ಬಾಲೆಯರು ನಾವು+ ಅಂಧಕರು ನಿಮ್ಮ+ ಆಳಿಕೆಯೊಳೇ ನಿಮ್ಮ ಹಂತಿಯ ಕೂಳಿನಲಿ ಬೆಂದ+ ಒಡಲ ಹೊರೆವವರು+ ಎಂದಳು+ ಇಂದುಮುಖಿ.
ಅರ್ಥ:ಗಾಂಧಾರಿಯು ಪಾಂಡವರಿಗೆ, 'ಏಳಿರಯ್ಯಾ ಸಾಕು, ಏಳಿ, ಮಕ್ಕಳಿರಾ ಏಳಿರಯ್ಯಾ, ನಾವು ಪರದೇಸಿಗಳು, ನೀವು ಭೂಪಾಲಕರು; ನಮ್ಮಲ್ಲಿ ಇಷ್ಟೊಂದು ಭಯ ಭೀತಿ ನಿಮಗೆ ಏಕೆ? ಎಷ್ಟಾದರು ಹೆಂಗಸರು ನಾವು; ಮತ್ತೆ ಅಂಧಕರು- ಕಣ್ಣುಕಾಣದ ಕುರುಡರು. ಇನ್ನು ನಿಮ್ಮ ಆಳಿಕೆಯಲ್ಲೇ, ನಿಮ್ಮ ಹಂಗಿನ ಕೂಳಿನಲ್ಲಿ ಬೆಂದ ಒಡಲನ್ನು ಹೊರೆಯುವವರು,' ಎಂದಳು.(ಗಾಂಧಾರಿಯೂ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದಳು)
ತಾಯೆ ಖತಿಬೇಡಿನ್ನು ಧರಣಿಗೆ
ರಾಯನೇ ಧೃತರಾಷ್ಟ್ರನಾತನ
ಬಾಯ ತಂಬುಲ ಬೀಳುಡೆಯ ಬಲದಿಂದ ಬದುಕುವೆವು |
ತಾಯೆ ನೀವಿನ್ನೆಮಗೆ ಕುಂತಿಯ
ತಾಯಿತನವಂತಿರಲಿ ಕರುಣಿಸಿ
ಕಾಯಬೇಕೆಂದರಸ ಮಗುಳೆರಗಿದನು ಚರಣದಲಿ || ೫೫ ||
ಪದವಿಭಾಗ-ಅರ್ಥ:ತಾಯೆ ಖತಿಬೇಡ+ ಇನ್ನು ಧರಣಿಗೆ ರಾಯನೇ ಧೃತರಾಷ್ಟ್ರನು+ ಆತನಬಾಯ ತಂಬುಲ ಬೀಳುಡೆಯ ಬಲದಿಂದ ಬದುಕುವೆವು ತಾಯೆ ನೀವು+ ಇನ್ನು+ ಎಮಗೆ ಕುಂತಿಯ ತಾಯಿತನವು+ ಅಂತಿರಲಿ ಕರುಣಿಸಿ ಕಾಯಬೇಕೆಂದು+ ಅರಸ ಮಗುಳು+ ಎರಗಿದನು ಚರಣದಲಿ
ಅರ್ಥ:ಗಾಂಧಾರಿಯು ನಾವು ಹಂಗಿನವರು ಎಂದಾಗ, ಅದಕ್ಕೆ ಧರ್ಮಜನು, 'ತಾಯೆ ಕೋಪ ಬೇಡ, ಇನ್ನು ಈ ರಾಜ್ಯಕ್ಕೆ ಧೃಥರಾಷ್ಟ್ರನೇ ರಾಜನು. ಆತನ ಬಾಯ ತಾಂಬೂಲ ಬೀಳುಡೆಯ- ಬಿದ್ದಚೂರಿನ ಬಲದಿಂದ ನಾವು ಬದುಕುವೆವು. ತಾಯೆ! ನೀವು ಇನ್ನು ನಮಗೆ ಕುಂತಿಯ ತಾಯಿಯಂತೆಯೇ ಸರಿ. ಅದು ಹಾಗಿರಲಿ ನಮ್ಮನ್ನು ಕರುಣಿ ತೋರಿಸಿ ಕಾಯಬೇಕು ಎಂದು ಧರ್ಮಜನು ಪುನಃ ಅವಳ ಕಾಲಿಗೆ ಬಿದ್ದನು.
ಧರ್ಮ ನಿಮ್ಮದು ಮಗನೆ ಬರಿಯ ವಿ
ಕರ್ಮವೆಮ್ಮದು ತನ್ನ ಮಕ್ಕಳು
ದುರ್ಮತಿಗಳನ್ಯಾಯಶೀಲರಸಾಧುಸಂಗತರು |
ನಿರ್ಮಳರು ನೀವೈವರಾಹವ
ಧರ್ಮಕುಶಲರು ಲೋಕ ಮೆಚ್ಚಲು
ಧರ್ಮ ನಿಮಗಿನ್ನೆನುತ ತಲೆಗುತ್ತಿದಳು ಗಾಂಧಾರಿ || ೫೬ ||
ಪದವಿಭಾಗ-ಅರ್ಥ: ಧರ್ಮ ನಿಮ್ಮದು ಮಗನೆ ಬರಿಯ ವಿಕರ್ಮವು+ ಎಮ್ಮದು ತನ್ನ ಮಕ್ಕಳು ದುರ್ಮತಿಗಳು+ ಅನ್ಯಾಯಶೀಲರು+ ಅಸಾಧುಸಂಗತರು, ನಿರ್ಮಳರು ನೀವೈವರು+ ಆಹವ(ಯುದ್ಧ) ಧರ್ಮಕುಶಲರು ಲೋಕ ಮೆಚ್ಚಲು ಧರ್ಮ ನಿಮಗೆ+ ಇನ್ನು+ ಎನುತ ತಲೆಗುತ್ತಿದಳು ಗಾಂಧಾರಿ.
ಅರ್ಥ:ಗಾಂಧಾರಿಯು ಸಂಕಟದಿಂದ ಧರ್ಮಜನಿಗೆ,' ಮಗನೆ ನಿಮ್ಮದು ಧರ್ಮಮಾರ್ಗ; ಬರಿಯ ವಿಕರ್ಮವು ನಮ್ಮದು. ತನ್ನ ಮಕ್ಕಳು ದುರ್ಮತಿಗಳು, ಅನ್ಯಾಯಶೀಲರು, ಅಸಾಧುಗಳಾದ ದುಷ್ಟರ ಸಂಗಾತಿಗಳು; ನೀವು ಐವರೂ ನಿರ್ಮಲ ಬುದ್ಧಿಯವರು. ನೀವು ಯುದ್ಧಧರ್ಮ ಕುಶಲರು. ಇನ್ನು ನಿಮಗೆ ಲೋಕವೇ ಮೆಚ್ಚುವುದು,'ಎಂದು ತನ್ನ ಮಗನನ್ನು ತೊಡೆಮುರಿದು ಸಾಯಿಸಿದುದನ್ನು ವ್ಯಂಗ್ಯವಾಗಿ .ನಿಮ್ಮದು ಧರ್ಮಯುದ್ಧ'ಎಂದು ಧರ್ಮಜನಿಗೆ ಹೇಳಿ ತಲೆಯನ್ನು ತಗ್ಗಿಸಿದಳು.
ಧರ್ಮವಾಗಲಿ ಮೇಣು ರಣದಲ
ಧರ್ಮವಾಗಲಿ ಖಾತಿಯಲಿ ಪರ
ಮರ್ಮಘಾತಕವಾಯ್ತು ಸಾಕಿನ್ನೆಂದು ಫಲವೇನು |
ನಿರ್ಮಳಾಂತಃಕರಣಕೃತಪರಿ
ಕರ್ಮವಿಳಸಿತೆ ತಾಯೆ ಸೈರಿಪು
ದುಮ್ಮಳವು ಬೇಡೆಂದು ಮೆಯ್ಯಿಕ್ಕಿದನು ಕಲಿಭೀಮ || ೫೭ ||
ಪದವಿಭಾಗ-ಅರ್ಥ:ಧರ್ಮವಾಗಲಿ ಮೇಣು ರಣದಲಿ+ ಅಧರ್ಮವಾಗಲಿ ಖಾತಿಯಲಿ ಪರ-ಮರ್ಮಘಾತಕವಾಯ್ತು ಸಾಕು+ ಇನ್ನು+ ಎಂದು(ಬೈದು) ಫಲವೇನು ನಿರ್ಮಳ+ ಅಂತಃಕರಣ+ ಕೃತಪರಿಕರ್ಮವು (ಮಾಡಿದ ಪ್ರತಿಕಾರಕಾರ್ಯ)+ ಎಳಸಿತೆ(ಕಾರಣವಾಯಿತೆ?) ತಾಯೆ ಸೈರಿಪುದು+ ಉಮ್ಮಳವು(ದುಃಖದ ಸಂಕಟ) ಬೇಡ+ ಎಂದು ಮೆಯ್ಯಿಕ್ಕಿದನು ಕಲಿಭೀಮ.
ಅರ್ಥ:ಗಾಂಧಾರಿಯ ವ್ಯಂಗಕ್ಕೆ, ಭೀಮನು,'ಧರ್ಮವೋ ಆಥವಾ ಯುದ್ಧದಲ್ಲಿ ಅಧರ್ಮವೋ, ಸಿಟ್ಟುಬಂದಾಗ ಪರ- ಎದುರಿನವನ ಮರ್ಮಘಾತಕವಾಯ್ತು, ತೊಡಗೆ ಹೊಡೆತ ಬಿತ್ತು. ತಾಯೀ,ಸಾಕು ಇನ್ನು ಬೈದು ಫಲವೇನು? ನಿರ್ಮಲ ಅಂತಃಕರಣದಿಂದ ಮಾಡಿದ ಪ್ರತೀಕಾರ ಕಾರ್ಯ ಕಾರಣವಾಯಿತೆ? ಇರಬಹುದು. ತಾಯೆ ನಮ್ಮ ತಪ್ಪು ಇದ್ದರೆ ಸೈರಿಸಬೇಕು. ದುಃಖದಿಂದ ಸಂಕಟ ಪಡುವುದು ಬೇಡ,' ಎಂದು ಕಲಿಭೀಮನು ಗಾಂಧಾರಿಯ ಕಾಲಿಗೆಬಿದ್ದನು.
ಏಳು ತಮ್ಮ ವೃಥಾ ವಿಡಂಬನ
ದಾಳಿಯಾಟವಿದೇಕೆ ಸೈರಿಸ
ಹೇಳಿದೈ ಸೈರಿಸದೆ ಮುನಿದಡೆ ನಿಮಗೆ ಕೇಡಹುದೆ |
ಕಾಳೆಗದ ಕೃತಸಮಯಸತ್ಯವ
ಪಾಲಿಸಿದವರು ನೀವಲೇ ದಿಟ
ಖೂಳರಾವೈಸಲೆ ಎನುತ ಗಜರಿದಳು ಗಾಂಧಾರಿ || ೫೮ ||
ಪದವಿಭಾಗ-ಅರ್ಥ:ಏಳು ತಮ್ಮ ವೃಥಾ ವಿಡಂಬನ ದಾಳಿಯಾಟವು+ ಇದೇಕೆ, ಸೈರಿಸ ಹೇಳಿದೈ ಸೈರಿಸದೆ, ಮುನಿದಡೆ(ಸಿಟ್ಟು ಮಾಡಿದರೆ) ನಿಮಗೆ ಕೇಡಹುದೆ? ಕಾಳೆಗದ ಕೃತಸಮಯ ಸತ್ಯವ ಪಾಲಿಸಿದವರು ನೀವಲೇ? ದಿಟ ಖೂಳರಾವೈ, ಸಲೆ, ಎನುತ ಗಜರಿದಳು ಗಾಂಧಾರಿ.
ಅರ್ಥ:ಅದಕ್ಕೆ ಗಾಂಧಾರಿ ಸಿಡುಕಿನಿಂದ,'ಏಳು ತಮ್ಮಾ, ವೃಥಾ ವಿಡಂಬನೆ- ಅಪಹಾಸ್ಯ ಮಾಡುವ ದಾಳಿಯಾಟವು-ಪಗಡೆಯಾಟ- ಹುಡುಗಾಟ ಇದೇಕೆ? ಸೈರಿಸಲು ಹೇಳಿದೆಯಲ್ಲಾ ಆಯಿತು,ನಾನು ಸೈರಿಸದೆ, ಸಹಿಸಿಕೊಳ್ಳದೆ ಸಿಟ್ಟು ಮಾಡಿದರೆ ನಿಮಗೇನು ಕೇಡಾಗುವುದೇ? ನನ್ನ ಸಿಟ್ಟು ನಿಮಗೆ ಯಾವ ಲೆಕ್ಕ. ಕಾಳೆಗವನ್ನು ಮಾಡುವ ಸಮಯದಲ್ಲಿ ಸತ್ಯವನ್ನು ಪಾಲಿಸಿದವರು ನೀವಲ್ಲವೇ? ದಿಟ- ನಿಜ ನಾವೇ ಖೂಳರು- ಕಡುಕಿಗಳು, ಹೆಚ್ಚೇನು? ಎನ್ನುತ್ತಾ ಗಜರಿದಳು.
ಹೊರಿಸುವಡೆ ದುಷ್ಕೀರ್ತಿ ನಮ್ಮಲಿ
ಹೊರಿಗೆಯಾಯಿತು ನಾಭಿಯಿಂದ ಕೆಳ
ಗೆರಗುವುದು ಗದೆಯಿಂದ ಸಲ್ಲದು ಶಸ್ತ್ರವಿದ್ಯೆಯಲಿ |
ಅರಿಕೆಯಿಂದನ್ಯಾಯವೀ ಜಗ
ವರಿಯೆ ನಮ್ಮದು ತಾಯೆ ನೀ ಮನ
ಮುರಿಯದವಧರಿಸುವಡೆ ಬಿನ್ನಹವೆಂದನಾ ಭೀಮ || ೫೯ ||
ಪದವಿಭಾಗ-ಅರ್ಥ:ಹೊರಿಸುವಡೆ ದುಷ್ಕೀರ್ತಿ ನಮ್ಮಲಿ ಹೊರಿಗೆಯಾಯಿತು (ಹೊರೆ - ಭಾರ) ನಾಭಿಯಿಂದ (ನಾಭಿ= ಹೊಕ್ಕಳು) ಕೆಳಗೆ+ ಎರಗುವುದು(ಹೊಡಯುವುದು) ಗದೆಯಿಂದ ಸಲ್ಲದು(ಕೂಡದು) ಶಸ್ತ್ರವಿದ್ಯೆಯಲಿ, ಅರಿಕೆಯಿಂದ(ನೀತಿಯಿಂದ)+ ಅನ್ಯಾಯವು+ ಈ ಜಗವರಿಯೆ ನಮ್ಮದು, ತಾಯೆ ನೀ ಮನ ಮುರಿಯದೆ(ಕೋಪಿಸದೆ)+ ಅವವಧರಿಸುವಡೆ (ಕೇಳಿಸಿಕೊಳ್ಳುವುದಾದರೆ) ಬಿನ್ನಹವು+ ಎಂದನು+ ಆ ಭೀಮ.
ಅರ್ಥ:ಭೀಮನು,'ಅಪಕೀರ್ತಿಯನ್ನು ಹೊರಿಸುವುದಾದರೆ, ನಮ್ಮಿಂದ ತಪ್ಪು ಘಟಿಸಿ ಅದರ ಹೊರೆಬಿತ್ತು. ಗದೆಯಿಂದ ನಾಭಿಯಿಂದ ಕೆಳಗೆ ಹೊಡಯುವುದು ಶಸ್ತ್ರವಿದ್ಯೆಯಲ್ಲಿ ಕೂಡದು. ನೀತಿನಿಯಮದಂತೆ ಅನ್ಯಾಯವು. ಈ ಜಗತ್ತು ತಿಳಿದಂತೆ ನಮ್ಮದು ತಪ್ಪು. ತಾಯೆ, ನೀವು ಮನಸ್ಸು ಮುರಿಯದೆ, ಕೋಪಿಸದೆ, ಕೇಳಿಸಿಕೊಳ್ಳುವುದಾದರೆ ನಾನು ನಿಮ್ಮಲ್ಲಿ ಬಿನ್ನಹ ಮಾಡಿಕೊಳ್ಳುತ್ತೇನೆ,' ಎಂದನು.
ಅರಗಿನರಮನೆ ಕೊಂಡವೆಮ್ಮೈ
ವರು ಸಮಿತ್ತುಗಳಾ ಸುಯೋಧನ
ಪರಮಯಜಮಾನರು ಜಯಾಧ್ವರವಿಧಿಯಪೂರ್ವವನು |
ಕುರುನೃಪತಿಯನುಭವಿಸಿದನು ತ
ಚ್ಚರಿತವೇನನ್ಯಾಯಪಥವೇ
ಧುರದೊಳೆಮಗನ್ಯಾಯವೈಸಲೆ ದೈವಕೃತವೆಂದ || ೬೦ ||
ಪದವಿಭಾಗ-ಅರ್ಥ: ಅರಗಿನರಮನೆ ಕೊಂಡವು+ ಎಮ್ಮ+ ಐವರು ಸಮಿತ್ತುಗಳು+ ಆ ಸುಯೋಧನ ಪರಮ ಯಜಮಾನರು, ಜಯಾಧ್ವರ (ಯಜ್ಞದ- ಯಜಮಾನಿಕೆಯ, ನಮ್ಮನು ಸುಟ್ಟು ಜಯ ಪಡೆಯುವ ಅಭಿಲಾಷೆಯ ) ವಿಧಿಯ ಪೂರ್ವವವನು ಕುರುನೃಪತಿಯು+ ಅನುಭವಿಸಿದನು ತಚ್ಚರಿತವೇನು (ತತ್=ಆ ಚರಿತವೇನು)+ ನ್ಯಾಯಪಥವೇ? ಧುರದೊಳು+ ಎಮಗೆ+ ಅನ್ಯಾಯವು+ ಐಸಲೆ ದೈವಕೃತವೆಂದ.
ಅರ್ಥ:ಅರಗಿನ ಅರಮನೆಲ್ಲಿ ನಮ್ಮ ಐದು ಜನರನ್ನು ಸಮಿತ್ತುಗಳಾಗಿ ಬೆಂಕಿಯ ಜ್ವಾಲೆಗಳು ಕೋಡವು. ಆ ಸುಯೋಧನನು ಆ ಯಜ್ಞಕ್ಕೆ ಪರಮ ಯಜಮಾನರು, ಆ ಜಯದ ಯಜ್ಞದ- ಯಜಮಾನಿಕೆಯ ಫಲವನ್ನು ವಿಧಿಯ ನಿಯಮದಂತೆ ಪೂರ್ವದ ಕರ್ಮ ಫಲವನ್ನು ಕುರುನೃಪತಿ ದುರ್ಯೋಧನನು ಗದಾ ಯುದ್ಧದಲ್ಲಿ ಅನುಭವಿಸಿದನು. ಆ ನೆಡತೆ ನ್ಯಾಯದ ಮಾರ್ಗವೇ? ಯುದ್ಧದಲ್ಲಿ ನಮಗೆ ಅನ್ಯಾಯದ ಅಪವಾದವು ಬಂದಿತಲ್ಲವೇ? ಅದು ದೈವಕೃತವು, ಅವನ ಕು-ಕರ್ಮಫಲವು ನಮ್ಮಿಂದ ಆ ನಿಯಮವಿರೋದದ ಕಾರ್ಯವನ್ನು ಮಾಡಿಸಿತು,' ಎಂದ.
ಕಪಟದಲಿ ಜೂಜಾಡಿ ರಾಜ್ಯವ
ನಪಹರಿಸಿದಡೆ ಧರ್ಮ ನಿಮ್ಮದು
ಕೃಪಣತೆಯ ನಾನೇನ ಹೇಳುವೆನಾ ಸುಯೋಧನನ |
ದ್ರುಪದಪುತ್ರಿಯ ಗಾಢ ಗರುವಿಕೆ
ಗುಪಹತಿಯ ಮಾಡುವುದು ಧರ್ಮದ
ವಿಪುಳ ಪಥ ನಿಮ್ಮದು ಮಹಾಧರ್ಮಜ್ಞರಹಿರೆಂದ || ೬೧ ||
ಪದವಿಭಾಗ-ಅರ್ಥ:ಕಪಟದಲಿ ಜೂಜಾಡಿ ರಾಜ್ಯವನು+ ಅಪಹರಿಸಿದಡೆ ಧರ್ಮ ನಿಮ್ಮದು, ಕೃಪಣತೆಯ(ಅಲ್ಪತನವನ್ನು) ನಾನು+ ಏನ ಹೇಳುವೆನು+ ಆ ಸುಯೋಧನನ, ದ್ರುಪದಪುತ್ರಿಯ ಗಾಢ ಗರುವಿಕೆಗೆ+ ಉಪಹತಿಯ(ಧಕ್ಕೆ, ತೊಂದರೆ ) ಮಾಡುವುದು ಧರ್ಮದ ವಿಪುಳ ಪಥ(ದಾರಿ) ನಿಮ್ಮದು, ಮಹಾಧರ್ಮಜ್ಞರು+ ಅಹಿರಿ (ಆಗಿರುವಿರಿ)+ ಎಂದ
ಅರ್ಥ:ಭೀಮನು ಮುಂದುವರಿದು,'ಕಪಟದಿಂದ ಜೂಜಾಡಿ ನಮ್ಮ ರಾಜ್ಯವನ್ನು ಅಪಹರಿಸಿದರೆ,- ನಿಮ್ಮದು ಧರ್ಮ. ಆ ಸುಯೋಧನನ ಅಲ್ಪತನವನ್ನು ನಾನು ಏನೆಂದು ಹೇಳಲಿ, ಪಟ್ಟದ ರಾಣಿ ದ್ರುಪದಪುತ್ರಿಯ ದೊಡ್ಡ ಗೌರವಕ್ಕೆ ಧಕ್ಕೆ ಮಾಡುವುದು, ಧರ್ಮದ ಮಹಾಪಥ ನಿಮ್ಮದು. ನೀವು ಮಹಾಧರ್ಮಜ್ಞರಾಗಿರುವಿರಿ,' ಎಂದ.
ಲಲನೆ ಋತುಮತಿಯೆಂದಡೆಯು ಸಭೆ
ಗೆಳೆದು ತಂದವರಧಿಕಸಜ್ಜನ
ರಳಿಕುಳಾಳಿಕೆಯುಟ್ಟ ಸೀರೆಯನೂರುಮಧ್ಯದಲಿ |
ಸುಲಿಸಿದರು ಧಾರ್ಮಿಕರು ತಾವೇ
ಖಳರು ನೀವೇ ಸುಜನರೆಮ್ಮೀ
ಸ್ಖಲಿತವನು ನೀವಿನ್ನು ಸೈರಿಸಿ ತಾಯೆ ನಮಗೆಂದ || ೬೨ ||
ಪದವಿಭಾಗ-ಅರ್ಥ:ಲಲನೆ ಋತುಮತಿ+ ಯೆಂದಡೆಯು ಸಭೆಗೆ+ ಎಳೆದು ತಂದವರು+ ಅಧಿಕಸಜ್ಜನರು+ ಅಳಿಕುಳಾಳಿಕೆಯು+ ಉಟ್ಟ ಸೀರೆಯನು+ ಊರು ಮಧ್ಯದಲಿ(ಊರು- ತೊಡೆ, ಸೊಂಟದ ಕೆಳಗೆ ) ಸುಲಿಸಿದರು ಧಾರ್ಮಿಕರು, ತಾವೇ ಖಳರು ನೀವೇ ಸುಜನರು+ ಎಮ್ಮ+ ಈ ಸ್ಖಲಿತವನು (ತಪ್ಪು ಮಾತನ್ನು) ನೀವು+ ಇನ್ನು ಸೈರಿಸಿ ತಾಯೆ ನಮಗೆ+ ಎಂದ.
ಅರ್ಥ:ಭೀಮನು ವ್ಯಂಗ್ಯವಾಗಿ,' ಹೆಣ್ಣುಹೆಂಗಸು ತಾನು ಋತುಮತಿಯೆಂದರೂ, ಬಿಡದೆ ರಾಜಸಭೆಗೆ ಎಳೆದು ತಂದವರು ಅಧಿಕ ಸಜ್ಜನರು! ದುಃಖದಿಂದ ಅಳುತ್ತಿರುವವಳು ಉಟ್ಟ ಸೀರೆಯನ್ನು ಸೊಂಟದ ಕೆಳಗೆ ಸುಲಿಸಿದರು, ಬಿಚ್ಚಿಸಿದವರು ಧಾರ್ಮಿಕರು! ಪಾಂಡವರು ತಾವೇ ಖಳರು; ನೀವೇ ಸುಜನರು, ಸಜ್ಜನರು. ನಮ್ಮ ಈ ತಪ್ಪು ಮಾತನ್ನು ನಮಗಾಗಿ ನೀವು ಇನ್ನು ಸೈರಿಸಬೇಕು ತಾಯೆ,' ಎಂದ.
ಕದನವಿಜಯದ ಭಂಗಿ ತಲೆಗೇ
ರಿದುದೊ ಮೇಲಂಕಣದಲೊಡವು
ಟ್ಟಿದನ ನೆತ್ತರುಗುಡಿಹಿ ನಿನ್ನೊಡನೆನಗೆ ಮಾತೇನು |
ಇದಿರಲಿರದಿರು ಸಾರು ಕರೆ ಧ
ರ್ಮದ ವಿಡಂಬದ ಧರ್ಮಪುತ್ರನ
ಹದನ ಕೇಳುವೆನೆನುತ ಕಳವಳಿಸಿದಳು ಗಾಂಧಾರಿ || ೬೩ ||
ಪದವಿಭಾಗ-ಅರ್ಥ:ಕದನ ವಿಜಯದ ಭಂಗಿ ತಲೆಗೇರಿದುದೊ, ಮೇಲ್ (ಅಥವಾ)+ ಅಂಕಣದಲಿ+ ಒಡವುಟ್ಟಿದನ ನೆತ್ತರು+ ಗು+ ಕುಡಿಹಿ ನಿನ್ನೊಡನೆ+ ಎನಗೆ ಮಾತೇನು ಇದಿರಲಿ+ ಇರದಿರು(ಇರಬೇಡ) ಸಾರು(ಹೊರಟುಹೋಗು), ಕರೆ ಧರ್ಮದ ವಿಡಂಬದ(ನಟನೆಯ) ಧರ್ಮಪುತ್ರನ ಹದನ ಕೇಳುವೆನು+ ಎನುತ ಕಳವಳಿಸಿದಳು ಗಾಂಧಾರಿ.
ಅರ್ಥ:ಭೀಮನ ವಿಡಂಬದ ಮಾತಿಗೆ ಗಾಂಧಾರಿಯು ಸಿಡುಕಿ,'ನಿನಗೆ ಯುದ್ಧದ ವಿಜಯದ ಭಂಗಿ ತಲೆಗೇರಿರುವುದೊ ಹೇಗೆ? ಅಥವಾ ರಣರಂಗದಲ್ಲಿ ಒಡವುಟ್ಟಿದವ ದುಶ್ಶಾಸನನ ನೆತ್ತರನ್ನು ಕುಡಿದಿದ್ದು ನೆತ್ತಿಗೇರಿದೆಯೋ? ಅಂಥ ನಿನ್ನೊಡನೆ ನನಗೆ ಮಾತೇನು? ಇದು ಹಾಗಿರಲಿ, ನೀನು ನನ್ನೆದುರು ಇರಬೇಡ ಹೊರಟುಹೋಗು. ನಿನ್ನ ಅಣ್ನನನ್ನು ಕರೆ; ಅವನ- ಧರ್ಮಪುತ್ರನ ಧರ್ಮದ ನಟನೆಯ ಧರ್ಮದ ಕ್ರಮವನ್ನು ಕೇಳುವೆನು, ಎನ್ನುತ್ತಾ ದುಃಖಿತಳಾದಳು.

ಗಾಂದಾರಿಯ ಶಾಪ[ಸಂಪಾದಿಸಿ]

ಧರಣಿಪತಿ ಕೇಳ್ ಸುಬಲಜೆಯ ನಿ
ಷ್ಠುರದ ನುಡಿಯಲಿ ನಡುಗಿ ಭೂಪತಿ
ಕರವ ಮುಗಿದತಿವಿನಯಭರದಲಿ ಬಾಗಿ ಭೀತಿಯಲಿ |
ಕರುಣಿಸೌ ಗಾಂಧಾರಿ ನಿರ್ಮಳ
ಕುರುಕುಲಾನ್ವಯಜನನಿ ಕೋಪ
ಸ್ಫುರಣದಲಿ ಶಪಿಸೆನಗೆ ಶಾಪಾರುಹನು ತಾನೆಂದ || ೬೪ ||
ಪದವಿಭಾಗ-ಅರ್ಥ:ಧರಣಿಪತಿ ಕೇಳ್ ಸುಬಲಜೆಯ ನಿಷ್ಠುರದ ನುಡಿಯಲಿ ನಡುಗಿ ಭೂಪತಿ ಕರವ ಮುಗಿದು+ ಅತಿವಿನಯ ಭರದಲಿ ಬಾಗಿ ಭೀತಿಯಲಿ ಕರುಣಿಸೌ ಗಾಂಧಾರಿ ನಿರ್ಮಳ ಕುರುಕುಲಾನ್ವಯ ಜನನಿ ಕೋಪಸ್ಫುರಣದಲಿ(ಮಿಂಚು, ಥಟ್ಟನೆದ್ದ ಉರಿ, ಉದ್ರೇಕ) ಶಪಿಸು+ ಎನಗೆ ಶಾಪಾರುಹನು ತಾನು+ ಎಂದ.
ಅರ್ಥ:ಜನಮೇಜಯನೇ ಕೇಳು, ಭೀಮನು ಗಾಂಧಾರಿಯ ಅಸಮಾಧಾನವನ್ನು ತಿಳಿಸಿ, ದರ್ಮಜನನ್ನು ಕರೆಯಲು ಅವನು ಬಂದು, ಸುಬಲಮಗಳು ಗಾಂಧಾರಿಯ, ನಿಷ್ಠುರದ ಮಾತಿಗೆ ನಡುಗಿ, ಭಯದಿಂದ ಕೈಯನ್ನು ಮುಗಿದು, ಮಾತಿನಲ್ಲಿ ಅತಿವಿನಯವನ್ನು ಭರಿಸಿ ತಲೆಬಗ್ಗಿಸಿ ಭೀತಿಯಿಂದ,'ಗಾಂಧಾರಿ ಮಾತೆ ಕರುಣಿಸಮ್ಮಾ ನಿರ್ಮಲ ಕುರುಕುಲವಂಶದ ತಾಯಿಯೇ, ಕೋಪಸ್ಫುರಣದಲ್ಲಿ ನನಗೆ ಶಪಿಸಿಬಿಡು, ನಾನು ಶಾಪಕ್ಕೆ ಅರ್ಹನು,' ಎಂದನು.
ಶಾಪವನು ನೀ ಹೆಸರಿಸೌ ಸ
ರ್ವಾಪರಾಧಿಗಳಾವು ನಿಮ್ಮಯ
ಕೋಪ ತಿಳಿಯಲಿ ತಾಯೆ ಫಲಿಸಲಿ ಬಂಧುವಧೆ ನಮಗೆ |
ನೀ ಪತಿವ್ರತೆ ನಿನ್ನ ಖತಿ ಜೀ
ವಾಪಹಾರವು ತಮಗೆ ನಿಮ್ಮನು
ತಾಪವಡಗಲಿ ತನ್ನನುರುಹೆಂದೆರಗಿದನು ಪದಕೆ || ೬೫ ||
ಪದವಿಭಾಗ-ಅರ್ಥ:ಶಾಪವನು ನೀ ಹೆಸರಿಸೌ, ಸರ್ವಾಪರಾಧಿಗಳಾವು, ನಿಮ್ಮಯ ಕೋಪ ತಿಳಿಯಲಿ, ತಾಯೆ ಫಲಿಸಲಿ ಬಂಧುವಧೆ ನಮಗೆ, ನೀ ಪತಿವ್ರತೆ ನೀನು ಪತಿವ್ರತೆ; ನಿನ್ನ ಖತಿ ಜೀವಾಪಹಾರವು ತಮಗೆ ನಿಮ್ಮ+ ಅನುತಾಪವು+ ಅಡಗಲಿ ತನ್ನನು+ ಅರುಹೆಂದು(ಶಾಪವನ್ನು ಹೇಳು)+ ಎರಗಿದನು ಪದಕೆ
ಅರ್ಥ: ಧರ್ಮಜನು,'ತಾಯಿಯೇ ನೀನು ಶಾಪವು ಏನೆಂದು ಹೆಸರಿಸವ್ವಾ, ಸರ್ವಾಪರಾಧಿಗಳು ನಾವು. ನಿಮ್ಮ ಕೋಪವು ಅದರಿಂದ ಇಳಿದು ನಿಮ್ಮ ಮನಸ್ಸು ತಿಳಿಯಾಗಲಿ. ತಾಯೆ, ಬಂಧುವಧೆಯ ಫಲ ನಮಗೆ ಫಲಿಸಲಿ! ನೀನು ಪತಿವ್ರತೆ; ನಿನ್ನ ಕೋಪ ತಮ್ಮ ಜೀವವನ್ನೇ ಅಪಹರಿಸುವಂತಹುದು. ನಿಮ್ಮ ಅನುತಾಪ- ಸಂಕಟ ಅಡಗಲಿ ತನ್ನನ್ನು ಕುರಿತು ನಿನ್ನ ಶಾಪವನ್ನು ಹೇಳು!' ಎಂದು ಅವಳ ಪಾದಕ್ಕೆ ಬಿದ್ದನು.
ನನೆದುದಂತಃಕರಣ ಕರುಣಾ
ವಿನುತರಸದಲಿ ಖತಿಯ ಝಳ ಝೊ
ಮ್ಮಿನಲಿ ಜಡಿದುದು ಜಾರಿತಗ್ಗದ ಪುತ್ರಶತಶೋಕ |
ಜನಪ ಕೇಳೈ ರಾಜಸದ ಸಂ
ಜನಿತ ತಾಮಸಬೀಜಶೇಷದ
ವನಜಮುಖಿ ನೋಡಿದಳು ನಖಪಂಕ್ತಿಗಳನವನಿಪನ ೬೬
ಪದವಿಭಾಗ-ಅರ್ಥ:ಆಗ ಗಾಂಧಾರಿಗೆ,'ನನೆದುದು+ ಅಂತಃಕರಣ, ಕರುಣಾ+ ವಿನುತ(ಸ್ತುತಿಗೊಂಡ)+ ರಸದಲಿ ಖತಿಯ(ಕೋಪ) ಝಳ ಝೊಮ್ಮಿನಲಿ ಜಡಿದುದು, ಜಾರಿತು+ ಅಗ್ಗದ(ಹೆಚ್ಚಿನ, ದೊಡ್ಡ) ಪುತ್ರಶತಶೋಕ(ನೂರು ಪುತ್ರರ ಸಾವಿನ ಶೋಕ), ಜನಪ ಕೇಳೈ ರಾಜಸದ ಸಂಜನಿತ (ಹುಟ್ಟಿದ) ತಾಮಸಬೀಜ(ಕ್ರೋಧ)+ ಶೇಷದ ವನಜಮುಖಿ ನೋಡಿದಳು ನಖಪಂಕ್ತಿಗಳನು+ ಅವನಿಪನ.
ಅರ್ಥ:ಆಗ ಗಾಂಧಾರಿಯು, ಧರ್ಮಜನ ವಿನಯ ವಿಧೇಯತೆಯನ್ನು ಕಂಡು ಅವಳ ಅಂತಃಕರಣವು ತಂಪಾಗಿ, ಕರುಣೆಯಿಂದ ಕೂಡಿದ ಭಾವರಸದಲ್ಲಿ ಕೋಪದಝಳ ಝಂ-ಎಂದು ಜಡಿದಾಗ, ಅದು ತಣ್ಣಗಾಗಿ ದೊಡ್ಡ ಪುತ್ರ-ಶತ-ಶೋಕ ಜಾರಿತು. ರಾಜನೇ ಕೇಳು ಕೇಳಯ್ಯಾ, ಸಿಟ್ಟಿನ ರಾಜಸದಿಂದ ಹುಟ್ಟಿದ ತಾಮಸಬೀಜದ ಶೇಷ ಅವಳಲ್ಲಿ ಇನ್ನೂ ಉಳಿದಿತ್ತು. ಆ ಉಳಿದ ಸಿಟ್ಟಿನ ದೃಷ್ಟಿಯಲ್ಲಿ ಗಾಂಧಾರಿ ಕಟ್ಟಿದ ಕಣ್ಣಿನ ಬಟ್ಟೆಯನ್ನು ಸರಿಸಿ ಧರ್ಮಜನ ಉಗುರುಗಳನ್ನು ನೋಡಿದಳು.
ಉರಿದವರಸನ ನಖನಿಕರ ಹೊಗೆ
ವೆರಸಿ ಕೌರಿಡಲೋಡಿ ಹೊಕ್ಕರು
ನರವೃಕೋದರರಸುರರಿಪುವಿನ ಪಶ್ಚಿಮಾಂಗದಲಿ |
ಹರಿಯಭಯಕರವೆತ್ತಿ ಯಮಜಾ
ದ್ಯರನು ಸಂತೈಸಿದನು ರೋಷ
ಸ್ಫುರಣವಡಗಿತು ಸುಬಲಸುತೆಗಿನ್ನಂಜಬೇಡೆಂದ || ೬೭ ||
ಪದವಿಭಾಗ-ಅರ್ಥ:ಉರಿದವು+ಅರಸನ ನಖನಿಕರ ಹೊಗೆವೆರಸಿ ಕೌರಿಡಲು(ಕರಿಕಲಾಗುವಂತೆ)+ ಓಡಿ ಹೊಕ್ಕರು ನರವೃಕೋದರರು(ಅರ್ಜುನ, ಭೀಮ)+ ಸುರರಿಪುವಿನ(ಕೃಷ್ಣನ) ಪಶ್ಚಿಮಾಂಗದಲಿ, ಹರಿಯು+ ಅಭಯಕರವೆತ್ತಿ ಯಮಜ+ ಆದ್ಯರನು ಸಂತೈಸಿದನು, ರೋಷಸ್ಫುರಣವು+ ಅಡಗಿತು ಸುಬಲಸುತೆಗೆ+ ಇನ್ನು+ ಅಂಜಬೇಡ, ಎಂದ.
ಅರ್ಥ:ಗಾಂಧಾರಿಯ ದೃಷ್ಟಿ ತಾಗಿದಾಗ, ದರ್ಮಜ ಅರಸನ ಉಗುರುಗಳು ಹೊಗೆಯೆದ್ದು ಕರಿಕಾಗುವಂತೆ ಉರಿದವು. ಅರ್ಜುನ, ಭೀಮ ಇವರು ಓಡಿಹೊಗಿ ಕೃಷ್ಣನ ಹಿಂಭಾಗಕ್ಕೆ ಹೊಕ್ಕು ಅಡಗಿದರು. ಕೃಷ್ಣನು ತನ್ನ ಅಭಯ ಹಸ್ತವನ್ನು ಎತ್ತಿ ಧರ್ಮಜ ಮೊದಲಾದವರನ್ನು ಸಮಾಧಾನಪಡಿಸಿದನು. ಅವನು,'ಸುಬಲಸುತೆಯಾದ ಗಾಂಧಾರಿಗೆ ರೋಷದ ಆವೇಗ ಅಡಗಿತು. ಇನ್ನು ಅಂಜುವುದು ಬೇಡ,' ಎಂದ.
ಕೃತಕ ಭೀಮನ ಕೊಂಡು ಮುಳುಗಿತು
ಕ್ಷಿತಿಪತಿಯ ರೋಷ್ಗ್ನಿ ಯಾತನ
ಸತಿಯ ಖತಿ ಮಗ್ಗಿತು ಮಹೀಶನ ನಖಮರೀಚಿಯಲಿ |
ಜಿತವಿರೋಧವ್ಯಾಪ್ತಿ ಬಹಳ
ವ್ಯತಿಕರದೊಳಾಯ್ತೆಂದು ಲಕ್ಷ್ಮೀ
ಪತಿ ನರೇಂದ್ರನ ಸಂತವಿಟ್ಟನು ಸಾರವಚನದಲಿ || ೬೮ ||
ಪದವಿಭಾಗ-ಅರ್ಥ:ಕೃತಕ ಭೀಮನ ಕೊಂಡು ಮುಳುಗಿತು ಕ್ಷಿತಿಪತಿಯ(ರಾಜನ- ಧೃತರಾಷ್ಟ್ರನ) ರೋಷ್ಗ್ನಿಯು+ ಆತನ ಸತಿಯ ಖತಿ ಮಗ್ಗಿತು ಮಹೀಶನ ನಖಮರೀಚಿಯಲಿ (ನಖ= ಉಗುರು), ಜಿತವಿರೋಧವ್ಯಾಪ್ತಿ ಬಹಳ ವ್ಯತಿಕರದೊಳಾಯ್ತು (ಪರಸ್ಪರ ಕೊಡುಕೊಳ್ಳುವುದು) + ಎಂದು ಲಕ್ಷ್ಮೀಪತಿ(ಕೃಷ್ಣ) ನರೇಂದ್ರನ(ಧರ್ಮಜನ) ಸಂತವಿಟ್ಟನು ಸಾರವಚನದಲಿ.
ಅರ್ಥ:ಕೃಷ್ಣನು,'ಕೃತಕ ಭೀಮನನ್ನು ಅಪ್ಪಿ ನುಗ್ಗುಮಾಡಿಕೊಂಡು ಧೃತರಾಷ್ಟ್ರನ ರೋಷ ಮುಳುಗಿ ಇಲ್ಲವಾಯಿತು. ಆತನ ಸತಿ ಗಾಂಧಾರಿಯ ಸಿಟ್ಟು ಮಹೀಶ ಧರ್ಮಜನ ಉಗುರು ಸಿಟ್ಟಿನ ಝಳದ ಉರಿಯಲ್ಲಿ ಕೊನೆಗೊಂಡು ತಗ್ಗಿತು. ಕೊನೆಯಲ್ಲಿ ಉಳಿದ ವಿರೋಧಿಗಳ ಗೆಲುವಿನ ವ್ಯಾಪ್ತಿ ಬಹಳಮಟ್ಟಿಗೆ ಪರಸ್ಪರ ಕೊಡುಕೊಳ್ಳುವುದರಲ್ಲಿ ಮುಗಿಯಿತು. ಎಂದು ಧರ್ಮಜನನ್ನು ಸಾರವತ್ತಾದ ಮಾತಿನಿಂದ ಸಂತೈಸಿದನು.
ಭೀತಿ ಬೇಡೆಲೆ ಮಕ್ಕಳಿರ ನಿ
ರ್ಧೂತಧರ್ಮಸ್ಥಿತಿಗಳನ್ವಯ
ಘಾತಕರು ತಮ್ಮಿಂದ ತಾವಳಿದರು ರಣಾಗ್ರದಲಿ |
ನೀತಿಯಲಿ ನೀವಿನ್ನು ಪಾಲಿಸಿ
ಭೂತಳವನುರೆ ಕಳಿದ ಬಂಧು
ವ್ರಾತಕುದಕವನೀವುದೆಂದಳು ನೃಪಗೆ ಗಾಂಧಾರಿ || ೬೯ ||
ಪದವಿಭಾಗ-ಅರ್ಥ: ಭೀತಿ ಬೇಡೆಲೆ ಮಕ್ಕಳಿರ ನಿರ್ಧೂತ ಧರ್ಮಸ್ಥಿತಿಗಳನ್ವಯ ಘಾತಕರು ತಮ್ಮಿಂದ ತಾವೇ+ ಅಳಿದರು(ಮರಣಹೊಂದಿದರು.) ರಣಾಗ್ರದಲಿ(ಯುದ್ಧದಲ್ಇ, ರಣರಂಗದಲ್ಲಿ) ನೀತಿಯಲಿ ನೀವು+ ಇನ್ನು ಪಾಲಿಸಿ ಭೂತಳವನು(ರಾಜ್ಯ)+ ಉರೆ(ಮತ್ತೆ, ಹೆಚ್ಚು) ಕಳಿದ (ಮರಣಹೊಂದಿದ) ಬಂಧುವ್ರಾತಕೆ+ ಉದಕವನ್ನು+ ಈವುದು+ ಎಂದಳು ನೃಪಗೆ ಗಾಂಧಾರಿ
ಅರ್ಥ: ಗಾಂಧಾರಿಯು ಧರ್ಮಜ ನೃಪನಿಗೆ ತ್ತು ಇತರರಿಗೆ, 'ಎಲೆ ಮಕ್ಕಳಿರಾ, ಇನ್ನು ಭಯ ಬೇಡ. ದುಷ್ಟನಿವಾರಣೆಯ ಧರ್ಮಸ್ಥಿತಿಗಳ ಅನ್ವಯಾನುಸಾರ ಘಾತಕರು/ ದುಷ್ಟರು ತಮ್ಮಿಂದ ತಾವೇ ರಣರಂಗದಲ್ಲಿ ಮರಣಹೊಂದಿದರು. ಇನ್ನು ನೀವು ನೀತಿಯಿಂದ ರಾಜ್ಯವನ್ನು ಪಾಲಿಸಿ. ಮತ್ತೆ ಮುಖ್ಯವಾಗಿ ಮರಣಹೊಂದಿದ ಬಂಧುಗಳ ಸಮೂಹಕ್ಕೆ ತರ್ಪಣಗಳನ್ನು ಕೊಡುವುದು, ಉಳಿದ ಅಂತ್ಯಕ್ರಿಯೆಗಳನ್ನು ಮಾಡುವುದು,'ಎಂದಳು.

ತಾಯಿ ಕುಂತಿಗೆ ನಮನ: ಉಳಿದವರ ಸ್ವಾಂತನ[ಸಂಪಾದಿಸಿ]

ಅನುನಯವ ರಚಿಸಿದಳು ಕೌರವ
ಜನನಿ ಲೇಸಾಯ್ತೆನುತ ಬಂದರು
ವಿನಯದಲಿ ಮೆಯ್ಯಿಕ್ಕಿದರು ನಿಜ ಮಾತೆಯಂಘ್ರಿಯಲಿ |
ನನೆದಳಕ್ಷಿಪಯಃಪ್ರವಾಹದೊ
ಳನಿಬರನು ತೆಗೆದಪ್ಪಿ ಕುಂತೀ
ವನಿತೆ ಸಂತೈಸಿದಳು ನಯದಲಿ ತನ್ನ ನಂದನರ || ೭೦ ||
ಪದವಿಭಾಗ-ಅರ್ಥ:ಅನುನಯವ ರಚಿಸಿದಳು ಕೌರವ ಜನನಿ ಲೇಸಾಯ್ತು+ ಎನುತ ಬಂದರು ವಿನಯದಲಿ ಮೆಯ್ಯಿಕ್ಕಿದರು ನಿಜ ಮಾತೆಯ+ ಅಂಘ್ರಿಯಲಿ ನನೆದಳು+ ಅಕ್ಷಿಪಯಃ ಪ್ರವಾಹದೊಳು (ಕಣ್ಣೀರು ಸುರಿಸುತ್ತಾ)+ ಅನಿಬರನು ತೆಗೆದಪ್ಪಿ ಕುಂತೀವನಿತೆ ಸಂತೈಸಿದಳು ನಯದಲಿ ತನ್ನ ನಂದನರ.
ಅರ್ಥ:ಸಿಟ್ಟು ತಣಿದ ನಂತರ ಕೌರವ ಜನನಿ ಗಾಂಧಾರಿಯು ಅನುನಯ ಮತ್ತು ಪ್ರೀತಿಯಿಂದ ಪಾಂಡವರೊಡನೆ ವರ್ತಿಸಿದಳು. ಪಾಂಡವರು ವಿನಯದಿಂದ ಒಳ್ಳೆಯದಾಯಿತು ಎಂದು ಹೇಳುತ್ತಾ, ಒಟ್ಟು ಹದಿಮೂರು ವರ್ಷದ ವನವಾಸ ಮತ್ತು ಅಜ್ಞಾತವಾಸದ ಕಾಲದಲ್ಲಿ ವಿದುರನ ಮನೆಯಲ್ಲಿದ್ದು ಈಗ ಧೃತರಾಷ್ಟ್ರ ಗಾಂಧಾರಿಯ ಅರಮನೆಗೆ ಮಕ್ಕಳನ್ನು ಎದುರುಗೊಳ್ಳಲು ಬಂದಿದ್ದ, ತಮ್ಮ ತಾಯಿ ಕುಂತಿಯ ಬಳಿಗೆ ಬಂದರು. ಕುಂತಿಯ ಪಾದಗಳಿಗೆ ವಿನಯದಿಂದ ಅಡ್ಡಬಿದ್ದರು.ಅವಳು ಬಹಲವರ್ಷಗಳನಂತರ ಕಂಡ ಮಕ್ಕಳನ್ನು ನೋಡಿ ಅವರೆಲ್ಲರನ್ನೂ ಕಣ್ಣೀರು ಸುರಿಸುತ್ತಾ ಅದರಲ್ಲಿ ನೆನೆಸಿದಳು. ಅವರನ್ನು ಎಳೆದು ಅಪ್ಪಿ ಕುಂತೀವನಿತೆ ತನ್ನ ನಂದನರನ್ನು ನಯವಾಗಿ ಸಂತೈಸಿದಳು.
ಏಳು ಧರ್ಮಜ ಪುತ್ರಶೋಕ
ವ್ಯಾಳವಿಷಮೂರ್ಛಿತೆಯಲಾ ಪಾಂ
ಚಾಲಸುತೆಯನು ತಿಳುಹಿ ಕಾಣಿಸು ಸುಬಲನಂದನೆಯ |
ಬಾಲೆಯರನಾ ಭಾನುಮತಿಯ ಛ
ಡಾಳದುಃಖವನಪಹರಿಸು ಪಡಿ
ತಾಳ ಬೇಡೆನೆ ಬಂದರನಿಬರು ದ್ರೌಪದಿಯ ಹೊರೆಗೆ || ೭೧ ||
ಪದವಿಭಾಗ-ಅರ್ಥ:ಏಳು ಧರ್ಮಜ ಪುತ್ರಶೋಕ ವ್ಯಾಳ(ಸರ್ಪ) ವಿಷಮೂರ್ಛಿತೆಯಲಾ ಪಾಂಚಾಲ ಸುತೆಯನು ತಿಳುಹಿ, ಕಾಣಿಸು ಸುಬಲನಂದನೆಯ ಬಾಲೆಯರನು(ಜಯದ್ರಥನ ಪತ್ನಿ ದುಶ್ಶಳೆ ಮತ್ತು ಅವಳ ಸವತಿಯರು.) ಆ ಭಾನುಮತಿಯ ಛಡಾಳ(ಹೆಚ್ಚು) ದುಃಖವನು+ ಅಪಹರಿಸು ಪಡಿತಾಳ(ಆಕ್ರಮಣ, ಅಸಮಾಧಾನ) ಬೇಡೆನೆ ಬಂದರು+ ಅನಿಬರು(ಎಲ್ಲರೂ) ದ್ರೌಪದಿಯ ಹೊರೆಗೆ
ಅರ್ಥ:ಕುಂತಿಯು ಮಕ್ಕಳನ್ನು ಸಂತೈಸಿ, ಧರ್ಮಜನಿಗೆ, 'ಏಳು ಧರ್ಮಜ ಪುತ್ರಶೋಕಬೆಂಬ ಸರ್ಪದ ವಿಷದಿಂದ ನೊಂದು ಎಚ್ಚರವಿಲ್ಲದಂತಿರುವ ಪಾಂಚಾಲ ಸುತೆ ದ್ರೌಪದಿಯನ್ನು ವಿವೇಕ ಹೇಳಿ ಸಮಾಧಾನ ಪಡಿಸು. ಆಮೇಲೆ ಗಾಂಧಾರಿಯ ಮಗಳು ಜಯದ್ರಥನ ಪತ್ನಿ ನಿನ್ನ ತಂಗಿ ದುಶ್ಶಳೆಯನ್ನು ನೋಡಿ ಸಮಾಧಾನ ಹೇಳು, ಸುಯೋಧನನ ಪತ್ನಿ ಆ ಭಾನುಮತಿಯ ತೀವ್ರವಾದ ದುಃಖವನ್ನು ಪರಿಹರಿಸು. ಅದರ ಬಗೆಗೆ ಸಂಕೋಚ, ಅಸಮಾಧಾನ ಬೇಡ,' ಎನ್ನಲು ಪಾಂಡವರೆಲ್ಲರೂ ದ್ರೌಪದಿಯ ಇದ್ದಲ್ಲಿಗೆ ಬಂದರು.
ಕರೆದು ತಂದರು ವಿಗತಲೋಚನ
ನರಸಿಯನು ಕಾಣಿಸಿದರತ್ತೆಯ
ಚರಣಯುಗಳದೊಳೆರಗೆ ಹಿಡಿದೆತ್ತಿದಳು ಗಾಂಧಾರಿ |
ಮರುಳು ಮಗಳೆ ಕುಮಾರ ವರ್ಗದ
ಮರಣ ಸೊಸೆಯತ್ತೆಯರಿಗೊಂದೇ
ಪರಿ ವೃಥಾ ವ್ಯಥೆಯೇಕೆನುತ ಸಂತೈಸಿದಳು ಸತಿಯ || ೭೨ ||
ಪದವಿಭಾಗ-ಅರ್ಥ: ಕರೆದು ತಂದರು ವಿಗತಲೋಚನನ+ ಅರಸಿಯನು(ವಿಗತ ಲೋಚನ- ಕಣ್ಣು ಕಾಣದ, ಧೃತರಾಷ್ಟ್ರನ ಅರಸಿ ಗಾಂಧಾರಿ) ಕಾಣಿಸಿದರು+ ಅತ್ತೆಯ ಚರಣಯುಗಳದೊಳು+ ಎರಗೆ ಹಿಡಿದೆತ್ತಿದಳು ಗಾಂಧಾರಿ ಮರುಳು ಮಗಳೆ ಕುಮಾರ ವರ್ಗದ ಮರಣ ಸೊಸೆಯತ್ತೆಯರಿಗೆ+ ಒಂದೇ ಪರಿ; ವೃಥಾ ವ್ಯಥೆಯೇಕೆ+ ಎನುತ ಸಂತೈಸಿದಳು ಸತಿಯ.
ಅರ್ಥ:ಪಾಂಡವರು ಕುಂತಿ ಮಅತಿನಂತೆ ಪುನಃ ಗಾಂಧಾರಿಯ ಬಳಿಗೆ ಬಂದು ಭಾನುಮತಿಯನ್ನು ಕಂಡರು. ಭಾನುಮತಿಯನ್ನ ಗಾಂಧಾರಿ ಕರೆಸಿದಳು. ಕುರುಡ ಅರಸನ ಪತ್ನಿ ಗಾಂಧಾರಿಯಬಳಿಗೆ ಭಾನುಮತಿಯನ್ನು ಕರೆದು ತಂದು ಕಾಣಿಸಿದರು. ಭಾನುಮತಿಯು ಅತ್ತೆಯ ಪಾದಗಳಿಗೆ ನಮಿಸಲು, ಅವಳನ್ನು ಭಾನುಮತಿ ಹಿಡಿದು ಎತ್ತಿದಳು. ಗಾಂಧಾರಿಯು ಸೊಸೆಗೆ ಮರುಳು ಮಗಳೆ, ಮಕ್ಕಳ ವರ್ಗದ ಮರಣವು ಸೊಸೆಯಾದ ನಿನಗೂ ಅತ್ತೆಯಾದ ನನಗೂ ಒಂದೇ ಪರಿಯಾಗಿದೆ; ವೃಥಾ ವ್ಯಥೆಯೇಕೆ? ಎನ್ನತ್ತಾ ಅವಳನ್ನು ಸಂತೈಸಿದಳು.
ಸರಿಯಲೌ ಸುತಶೋಕ ನಮ್ಮಿ
ಬ್ಬರಿಗೆ ನಮ್ಮೊಳುವೆರೆಸಿ ವೈರೋ
ತ್ಕರವಿಸಂಸ್ಥುಳರಣವಿಧಾನವ ನಮ್ಮೊಳಗೆ ರಚಿಸಿ |
ಎರಡು ಬಲದಲಿ ಸಕಲ ಭೂಮೀ
ಶ್ವರರ ಚಾತುರ್ಬಲವನುಪಸಂ
ಹರಿಸಿದಾತನು ತಾನೆ ಗದುಗಿನ ವೀರನಾರಯಣ || ೭೩ ||
ಪದವಿಭಾಗ-ಅರ್ಥ:ಸರಿಯಲೌ ಸುತಶೋಕ ನಮ್ಮಿಬ್ಬರಿಗೆ, ನಮ್ಮೊಳು+ ವೆರೆಸಿ ವೈರೋತ್ಕರ ವಿಸಂಸ್ಥ+ ಉಳರಣ ವಿಧಾನವ ನಮ್ಮೊಳಗೆ ರಚಿಸಿ, ಎರಡು ಬಲದಲಿ ಸಕಲ ಭೂಮೀಶ್ವರರ ಚಾತುರ್ಬಲವನು+ ಉಪಸಂಹರಿಸಿದಾತನು ತಾನೆ ಗದುಗಿನ ವೀರನಾರಯಣ.
ಅರ್ಥ:ಗಾಂಧಾರಿಯು ಸೊಸೆ ಭಾನುಮತಿಗೆ ಮಕ್ಕಳ ವಿಯೋಗದ ಶೋಕವು ನಮ್ಮಿಬ್ಬರಿಗೂ ಸರಿಯಲ್ಲವೇ?, ನೀನೂ ನಮ್ಮಲ್ಲಿ ಸೇರಿಕೊಂಡು ಹಿಂದನ ವೈರದಿಂದ ಅತಿಯಾದ ರಣರಂಗದ ವಿನಾಶವನ್ನು ಸಹಿಸಿಕೊಳ್ಳುವ ವಿಧಾನವನ್ನು ನಮ್ಮೊಳಗೆ ವಿಚಾರಮಾಡಿ ರಚಿಸಿಕೊಳ್ಳಬೇಕು, ಎಂದು ಸೊಸೆಯನ್ನು ಸಂತೈಸಿದಳು. ಕವಿಯು ಹೇಳುವುದು: ಎರಡೂ ಸೈನ್ಯದಲ್ಲಿ ಸಕಲ ಭೂಮೀಶ್ವರರ ಚಾತುರ್ಬಲವನ್ನೂ ಉಪಸಂಹರಿಸಿದಾತನು ಗದುಗಿನ ವೀರನಾರಯಣನು ತಾನೇ ಸರಿ, ಬೇರೆಯವರಲ್ಲ.
♠♠♠

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
  3. ಸಿರಿಗನ್ನಡ ಅರ್ಥಕೋಶ- ಕೊ.ಶಿ.ಕಾ.