ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧೩)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೧೩ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ದೇವಸಂತತಿ ನಲಿಯೆ ಪಾಂಡವ
ಜೀವಿ ಹರಿಯೆಂಬೀ ಪ್ರತಿಜ್ಞಾಯ
ಭಾವ ಸಂದುದು ಧರ್ಮಜನ ಪಟ್ಟಾಭಿಷೇಕದಲಿ ||ಸೂ||

ಪದವಿಭಾಗ-ಅರ್ಥ: ದೇವಸಂತತಿ ನಲಿಯೆ ಪಾಂಡವಜೀವಿ(ಪಾಂಡವರೇ ನನ್ನ ಜೀವ ಎಂದ ಕೃಷ್ಣ) ಹರಿಯೆಂಬೀ ಪ್ರತಿಜ್ಞಾಯ ಭಾವ ಸಂದುದು ಧರ್ಮಜನ ಪಟ್ಟಾಭಿಷೇಕದಲಿ
ಅರ್ಥ:ದೇವತೆಗಳ ಸಮೂಹ ಆನಂದ ಪಡುತ್ತಿರಲು, ಪಾಂಡವರೇ ನನ್ನ ಜೀವ ಎಂದು ಹೇಳಿದ ಕೃಷ್ಣನ ಪ್ರತಿಜ್ಞೆಯ ಭಾವವು ಧರ್ಮಜನ ಪಟ್ಟಾಭಿಷೇಕ ಮಾಡಿದಾಗ ಸಂದಿತು- ಆ ಪ್ರತಿಜ್ಞೆಯನ್ನು ನೆರವೇರಿಸಿದಂತಾಯಿತು.[೧][೨] [೩]

ಧರ್ಮಜನ ಪಟ್ಟಾಭಿಷೇಕ[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಗಿರಿ ತೊಡಗಿ ಸಾಗರ
ವೇಲೆ ಪರಿಯಂತಖಿಳ ನಗರ ಗ್ರಾಮ ಪುರವರದ |
ಮೇಲುವರ್ಣಪ್ರಮುಖವಾಚಾಂ
ಡಾಲರವಧಿ ಸಮಸ್ತ ಭೂಜನ
ಜಾಲ ಹಸ್ತಿನಪುರಿಗೆ ಬಂದುದು ಕಂಡುದವನಿಪನ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಹಿಮಗಿರಿ ತೊಡಗಿ ಸಾಗರವೇಲೆ ಪರಿಯಂತ+ ಅಖಿಳ ನಗರ ಗ್ರಾಮ ಪುರ+ ವರದ(ಉತ್ತಮ) ಮೇಲುವರ್ಣ+ ಪ್ರಮುಖ+ ವಾ+ ಚಾಂಡಾಲರ+ ಅವಧಿ-ಆದಿ? ಸಮಸ್ತ ಭೂಜನಜಾಲ ಹಸ್ತಿನಪುರಿಗೆ ಬಂದುದು ಕಂಡುದು ಅವನಿಪನ.
ಅರ್ಥ:ಜನಮೇಜಯ ರಾಜನೇ ಕೇಳು, 'ಹಿಮಗಿರಿಯಿಂದ ತೊಡಗಿ ಸಾಗರಗಳ ಗಡಿಯ ಪರಿಯಂತ ಸಮಸ್ತ ಧರಿತ್ರೀಪಾಲರು- ರಾಜರು, ಅಖಿಲ ನಗರ, ಗ್ರಾಮ, ಪುರದವರು, ಉತ್ತಮ ಮೇಲುವರ್ಣದ ಪ್ರಮುಖರು, ಅಲ್ಲದೆ ಚಾಂಡಾಲರೇ ಆದಿಯಾಗಿ ಸಮಸ್ತ ಭೂ-ಜನಜಾಲವೂ ಹಸ್ತಿನಪುರಕ್ಕೆ ಬಂದಿತು ಹಾಗೆ ಬಂದವರು ರಾಜನಾದ ಧರ್ಮಜನನ್ನು ದರ್ಶನ ಮಾಡಿದರು.
ಚ್ಯವನ ಮುದ್ಗಲ ಕಣ್ವ ಕಠ ಭಾ
ರ್ಗವ ಭರದ್ವಾಜಾಂಗಿರಸ ಗಾ
ಲವ ಪುಲಸ್ತ್ಯ ರುಮಣ್ವ ಗೌತಮ ಯಾಜ್ಞವಲ್ಕ್ಯಮುನಿ |
ಧ್ರುವ ವಿಭಾಂಡಕ ಗಾರ್ಗ್ಯ ಘಟಸಂ
ಭವ ಮೃಕಂಡುಸುತಾದಿ ಭೂಮಿ
ಪ್ರವರ ಮುನಿಗಳು ಬಂದು ಕಂಡರು ಧರ್ಮನಂದನನ || ೨ ||
ಪದವಿಭಾಗ-ಅರ್ಥ: ಚ್ಯವನ, ಮುದ್ಗಲ, ಕಣ್ವ, ಕಠ, ಭಾರ್ಗವ, ಭರದ್ವಾಜ, ಆಂಗಿರಸ, ಗಾಲವ, ಪುಲಸ್ತ್ಯ, ರುಮಣ್ವ, ಗೌತಮ, ಯಾಜ್ಞವಲ್ಕ್ಯಮುನಿ, ಧ್ರುವ, ವಿಭಾಂಡಕ, ಗಾರ್ಗ್ಯ, ಘಟಸಂಭವ/ ಅಗಸ್ತ್ಯಋಷಿ, ಮೃಕಂಡುಸುತ+ ಆದಿ ಭೂಮಿಪ್ರವರ (ಪ್ರವರ= ಮೂಲಪುರುಷ, ವಿಖ್ಯಾತ) ಮುನಿಗಳು ಬಂದು ಕಂಡರು ಧರ್ಮನಂದನನ.
ಅರ್ಥ: ಚ್ಯವನ, ಮುದ್ಗಲ, ಕಣ್ವ, ಕಠ, ಭಾರ್ಗವ, ಭರದ್ವಾಜ, ಆಂಗಿರಸ, ಗಾಲವ, ಪುಲಸ್ತ್ಯ, ರುಮಣ್ವ, ಗೌತಮ, ಯಾಜ್ಞವಲ್ಕ್ಯಮುನಿ, ಧ್ರುವ, ವಿಭಾಂಡಕ, ಗಾರ್ಗ್ಯ, ಘಟಸಂಭವ/ ಅಗಸ್ತ್ಯಋಷಿ, ಮೃಕಂಡುಸುತ+ ಆದಿ ಭೂಮಿಯಲ್ಲಿ ಪ್ರಖ್ಯಾತ ಮೂಲಪುರುಷ ಮುನಿಗಳು ಬಂದು ಧರ್ಮನಂದನನ್ನು ಕಂಡರು.
ಜಲಧಿ ಮಧ್ಯದ ಕುರುವ ಘಟ್ಟಾ
ವಳಿಯ ಕೊಳ್ಳದ ಕುಹರ ಕುಂಜದ
ನೆಲೆಯ ಗಿರಿಸಾನುಗಳ ಶಿಖರದ ದುರ್ಗವೀಥಿಗಳ |
ನೆಲನಶೇಷಪ್ರಜೆ ನಿಖಿಳ ಮಂ
ಡಳಿಕ ಮನ್ನೆಯ ವಂದಿಜನ ಸಂ
ಕುಲ ಮತಂಗಜಪುರಿಗೆ ಬಂದುದು ನೃಪನ ಕಾಣಿಕೆಗೆ || ೩ ||
ಪದವಿಭಾಗ-ಅರ್ಥ: ಜಲಧಿ ಮಧ್ಯದ ಕುರುವ(= ದ್ವೀಪ, ನಡುಗಡ್ಡೆ) ಘಟ್ಟ+ ಆವಳಿಯ(ಸಮೂಹ) ಕೊಳ್ಳದ ಕುಹರ(=ಗವಿ,) ಕುಂಜದ ನೆಲೆಯ(= ಲತಾಗೃಹ ೩ ಗವಿ, ಗುಹೆ) ಗಿರಿಸಾನುಗಳ ಶಿಖರದ ದುರ್ಗವೀಥಿಗಳ, ನೆಲನ ಶೇಷಪ್ರಜೆ ನಿಖಿಳ ಮಂಡಳಿಕ ಮನ್ನೆಯ ವಂದಿಜನ ಸಂಕುಲ ಮತಂಗಜಪುರಿಗೆ(ಹಸ್ತಿನಾವತಿಗೆ) ಬಂದುದು ನೃಪನ ಕಾಣಿಕೆಗೆ.
ಅರ್ಥ: ಸಮುದ್ರ ಮಧ್ಯದ ದ್ವೀಪ, ನಡುಗಡ್ಡೆಗಳಿಂದ, ಘಟ್ಟಗಳಿಂದ, ಕೊಳ್ಳದ ಗವಿಗಳಿಂದ, ಗುಹೆಯ -ಕುಂಜದ ನೆಲೆಯ ಲತಾಗೃಹಗಳಿಂದ, ಗಿರಿಗಳಿಂದ, ಶಿಖರದಿಂದ, ದುರ್ಗಬೀದಿಗಳಿಂದ, ನೆಲದಲ್ಲಿ ವಾಸಮಾಡುವ ಶೇಷಪ್ರಜೆಗಳು ಅಖಿಲ ಮಾಂಡಳಿಕರಾಜರು, ಮನ್ನೆಯರು, ವಂದನೆಗೆ ಯೋಗ್ಯರಾದವರು, ಈ ಎಲ್ಲಾ ಜನ ಸಮೂಹ ಹಸ್ತಿನಾವತಿಗೆ ಧರ್ಮಜ ನೃಪನನ್ನು ನೋಡಿ ಅವನಿಗೆ ಕಾಣಿಕೆ ಕೊಡಲು ಬಂದರು.
ವ್ಯಾಸ ನಾರದ ಕೃಷ್ಣ ಮೊದಲಾ
ದೀ ಸಮಸ್ತ ಮುನೀಂದ್ರನಿಕರ ಮ
ಹೀಶನನು ಪಟ್ಟಾಭಿಷೇಕಕೆ ಮನವನೊಡಬಡಿಸಿ |
ದೋಷರಹಿತ ಮುಹೂರ್ತ ಲಗ್ನ ದಿ
ನೇಶವಾರ ಶುಭಗ್ರಹೋದಯ
ಲೇಸೆನಲು ನೋಡಿದರು ಮಿಗೆ ಗಾರ್ಗ್ಯಾದಿ ಜೋಯಿಸರು || ೪ ||
ಪದವಿಭಾಗ-ಅರ್ಥ: ವ್ಯಾಸ, ನಾರದ, ಕೃಷ್ಣ, ಮೊದಲಾದ+ ಈ ಸಮಸ್ತ ಮುನೀಂದ್ರ ನಿಕರ(ಸಮೂಹ) ಮಹೀಶನನು ಪಟ್ಟಾಭಿಷೇಕಕೆ ಮನವನು+ ಒಡಬಡಿಸಿ(ಒಪ್ಪುವಂತೆ ಮಾಡು), ದೋಷರಹಿತ ಮುಹೂರ್ತ ಲಗ್ನ ದಿನೇಶವಾರ, ಶುಭಗ್ರಹ+ ಉದಯ ಲೇಸು+ ಎನಲು ನೋಡಿದರು ಮಿಗೆ ಗಾರ್ಗ್ಯ+ ಆದಿ ಜೋಯಿಸರು
ಅರ್ಥ: ವ್ಯಾಸರು, ನಾರದ, ಕೃಷ್ಣ, ಮೊದಲಾದ ಈ ಸಮಸ್ತ ಮುನೀಂದ್ರರ ಸಮೂಹವು ಮಹೀಶ ಧರ್ಮಜನನ್ನು ಪಟ್ಟಾಭಿಷೇಕ ಮಾಡಿಸಿಕೊಳ್ಳಲು ಅವನ ಮನಸ್ಸನ್ನು ಒಡಬಡಿಸಿದರು. ದೋಷರಹಿತವಾದ ಮುಹೂರ್ತ, ಲಗ್ನ, ರವಿವಾರ, ಶುಭಗ್ರಹದ ಉದಯವನ್ನು ನೋಡಿ ಎಲ್ಲರೂ ಅದು ಲೇಸು- ಉತ್ತಮ ಎನ್ನವ ಹಾಗೆ ಶ್ರೇಷ್ಠ ಗಾರ್ಗ್ಯರೇ ಆದಿಯಾಗಿ ಜೋಯಿಸರು ನೋಡಿದರು.
ತರಿಸಿ ಮಂಗಳ ವಸ್ತುಗಳ ಸಂ
ವರಿಸಿ ಬಹುವಿಧವಾದ್ಯರವ ವಿ
ಸ್ತರದ ಪಂಚಮಹಾನಿನಾದದ ಸಸರ್ವಜನಮನದ |
ಹರುಷಪೂರದ ವೇದಮಂತ್ರೋ
ಚ್ಚರಣಸಾರದ ನೃಪನ ಪಟ್ಟಾ
ಧ್ವರವೆಸೆಯಲುತ್ಸವವನೆಸಗಿದನಸುರರಿಪುವಂದು || ೫ ||
ಪದವಿಭಾಗ-ಅರ್ಥ: ತರಿಸಿ ಮಂಗಳ ವಸ್ತುಗಳ ಸಂವರಿಸಿ(ಜೋಡಿಸಿ) ಬಹುವಿಧ ವಾದ್ಯರವ ವಿಸ್ತರದ ಪಂಚಮಹಾ ನಿನಾದದ ಸರ್ವಜನ- ಮನದ ಹರುಷಪೂರದ ವೇದಮಂತ್ರ+ ಉಚ್ಚರಣ ಸಾರದ ನೃಪನ ಪಟ್ಟಾಧ್ವರವು+ ಎಸೆಯಲು+ ಉತ್ಸವವನು+ ಎಸಗಿದನು+ ಅಸುರರಿಪುವು(ಕೃಷ್ಣನು)+ ಅಂದು
ಅರ್ಥ:ಕೃಷ್ಣನು ಬಹುವಿಧ ಮಂಗಳ ವಸ್ತುಗಳನ್ನು ತರಿಸಿ ಜೋಡಿಸಿ, ವಾದ್ಯಘೋಷಗಳ ವಿಸ್ತಾರವಾದ ಪಂಚಮಹಾ ನಿನಾದದೊಡನೆ ಸರ್ವಜನರ ಮನದಲ್ಲಿಯೂ ಹರುಷ ತುಂಬಿರಲು, ವೇದಮಂತ್ರಗಳ ಘೋಷದ ಸಾರಸತ್ವದೊಂದಿಗೆ ಧರ್ಮಜನೃಪನ "ಪಟ್ಟಾಭಿಷೇಕದ ಅಧ್ವರವು"-ಯಜ್ನ- ಹೋಮ- ಹವನಗಳೊಂದಿಗೆ ಶೋಭಿಸಲು, ಕೃಷ್ಣನು ಈ ಉತ್ಸವವನ್ನು ಮುಂದೆನಿಂತು ಆ ದಿನದ ಮಹೂರ್ತದಲ್ಲಿ ನೆರವೇರಿಸಿದನು.
ಆದುದಾ ಪಟ್ಟಾಭಿಷೇಕದೊ
ಳಾ ದುರಾತ್ಮಕ ಬಾಷ್ಕಳನ ಪರಿ
ವಾದವನು ಮುನಿನಿಕರ ಕೇಳಿದು ಖತಿಯ ಭಾರದಲಿ |
ಭೇದಿಸಿದರವನಸುರನೆಂದು ವಿ
ಷಾದ ವಹ್ನಿಯಲುರುಹಿದರು ಬಳಿ
ಕಾದರಿಸಿ ಧರ್ಮಜನ ಸಂತೈಸಿದನು ಮುರವೈರಿ || ೬ ||
ಪದವಿಭಾಗ-ಅರ್ಥ: ಆದುದು+ ಆ ಪಟ್ಟಾಭಿಷೇಕದೊಳು+ ಆ ದುರಾತ್ಮಕ ಬಾಷ್ಕಳನ ಪರಿವಾದವನು(ನಿಂದೆ, ತೆಗೆಳಿಕೆ) ಮುನಿನಿಕರ ಕೇಳಿದು ಖತಿಯ ಭಾರದಲಿ ಭೇದಿಸಿದರು+ ಅವನು+ ಅಸುರನೆಂದು ವಿಷಾದ(ಅಸಮಾಧಾನವೆಂಬ) ವಹ್ನಿಯಲಿ(ವಹ್ನಿ= ಬೆಂಕಿ)+ ಉರುಹಿದರು ಬಳಿಕ+ ಆದರಿಸಿ ಧರ್ಮಜನ ಸಂತೈಸಿದನು ಮುರವೈರಿ.
  • ಟಿಪ್ಪಣಿ:-ಪಿಲ ಮಹರ್ಷಿ ಋಗ್ವೇದವನ್ನು ಎರಡು ರುಕ್ಸಮಿಹಿತಗಳಾಗಿ ವಿಂಗಡಿಸಿ ಇಂದ್ರಪ್ರಮಿತಿ ಮತ್ತು ಭಾಷ್ಕಲರಿಗೆ ಕಲಿಸಿದರು. ಭಾಷ್ಕಲನು ಮತ್ತೆ ತನ್ನ ಭಾಗವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಬೌದ್ಧ, ಅಗ್ನಿಮಾಧಾರ, ಯಜ್ಞವಲ್ಕ್ಯ ಮತ್ತು ಪರಾಶರರಿಗೆ ಕೊಟ್ಟನು. ಅವರು ಈ ಸಂಹಿತೆಗಳನ್ನು ಶಿಷ್ಯರ ಸಂಖ್ಯೆಯ ಮೂಲಕ ಪ್ರಚಾರ ಮಾಡಿದರು. "ಬಾಷ್ಕಳನ ಪರಿವಾದವನು- ಬಾಷ್ಕಳ ಮುನಿಯು ಧರ್ಮಜನ ಗೋತ್ರವಧೆಯ ಯುದ್ಧವನ್ನು ಖಂಡಿಸಿದನು? [೪]
ಅರ್ಥ: ಆದುದು+ ಆ ಪಟ್ಟಾಭಿಷೇಕದಲ್ಲಿ ಆ ದುರಾತ್ಮಕನಾದ ಬಾಷ್ಕಳನೆಂಬ ಮುನಿಯು ಧರ್ಮಜನಿಗೆ ನಿಂದಿಸಿದನು. ಅದನ್ನು ಕೇಳಿದ ಉಳಿದ ಮುನಿ ಸಮೂಹ ಸಿಟ್ಟಿನಿಂದ ಅವನ ಖಂಡನೆಯ ವಾದವನ್ನು ಭಾರದಲ್ಲಿ- ಪ್ರಬಲವಾಗಿ ಖಂಡಿಸಿ ಭೇದಿಸಿದರು. ಅವನ ವಾದ ತಪ್ಪೆಂದು ಸಾಧಿಸಿದರು. ಅವನು ದೇವತೆಗಳ ವಿರೋದಿಯೆಂದು ವಿಷಾದವೆಂಬ ಬೆಂಕಿಯಲ್ಲಿ ಸುಟ್ಟರು. ಬಳಿಕ ಮುರವೈರಿ ಕೃಷ್ಣನು ಧರ್ಮಜನನ್ನು ಆದರದಿಂದ ಕಂಡು ಗೌರವಿಸಿ ಸಂತೈಸಿದನು.

ಧರ್ಮಜನ ಆಡಳಿತದಲ್ಲಿ ಅಧಿಕಾರಗಳ ಹಂಚಿಕೆ[ಸಂಪಾದಿಸಿ]

ಅರಸ ಕೇಳೈ ಪಟ್ಟವದು ಹಿರಿ
ಯರಸನದು ಯುವರಾಜಪಟ್ಟವೆ
ಹರಿತನೂಜನೊಳಾಯ್ತು ಸೇನಾಪತಿ ಧನಂಜಯನು |
ವರ ಕುಮಾರರು ಯಮಳರಲ್ಲಿಗೆ
ಹಿರಿಯಸಚಿವನು ವಿದುರನವನಿಪ
ಪರುಠವಿಸಿದ ಯುಯುತ್ಸುವನು ಸರ್ವಾಧಿಕಾರದಲಿ || ೭ ||
ಪದವಿಭಾಗ-ಅರ್ಥ:ಅರಸ ಕೇಳೈ ಪಟ್ಟವದು ಹಿರಿಯ+ ಅರಸನದು ಯುವರಾಜಪಟ್ಟವೆ ಹರಿ(ಪೂಜ್ಯನಾದ) ತನೂಜನೊಳು+ ಆಯ್ತು ಸೇನಾಪತಿ ಧನಂಜಯನು ವರ ಕುಮಾರರು ಯಮಳರು+ ಅಲ್ಲಿಗೆ ಹಿರಿಯ ಸಚಿವನು ವಿದುರನು+ ಅವನಿಪ ಪರುಠವಿಸಿದ(ಅಣಿಗೊಳಿಸಿದನು) ಯುಯುತ್ಸುವನು ಸರ್ವಾಧಿಕಾರದಲಿ
ಅರ್ಥ:ವೈಶಂಪಾಯ ಮುನಿ ಹೇಳಿದ,'ಅರಸನೇ ಕೇಳು ರಾಜಪಟ್ಟವು ಹಿರಿಯ ಅರಸ ಧರ್ಮಜನಿಗೆ ಆಯಿತು. ಯುವರಾಜಪಟ್ಟವು ಪೂಜ್ಯನಾದ ತಮ್ಮ ಭೀಮನಿಗೆ ಆಯಿತು. ಸೇನಾಪತಿಯಾಗಿ ಧನಂಜಯನು ನೇಮಕವಾದನು. ಶ್ರೇಷ್ಠ ನಕುಲ ಸಹದೇವ ಕುಮಾರರು ಯಮಳರು ಧರ್ಮಜನಿಗೆ ಸಚಿವರು ಆದರು. ಅಲ್ಲಿಗೆ ಹಿರಿಯ ಸಚಿವನಾಗಿ ವಿದುರನು ಇದ್ದನು. ಪಾಂಡವರ ಕಡೆಗೆ ಸೇರಿಕೊಂಡಿದ್ದ ಧೃತರಾಷ್ಟ್ರನ ಮಗ ಯುಯುತ್ಸುವನ್ನು ವಿಶೇಷ ಸರ್ವಾಧಿಕಾರಿಯಾಗಿ ನೇಮಿಸಿದನು. ಈ ರೀತಿ ಅವನಿಪ ಧರ್ಮಜನು ಅಧಿಕಾರವನ್ನು ಹಂಚಿ ರಾಜಕಾರ್ಯವನ್ನು ಅಣಿಗೊಳಿಸಿದನು.

ಧರ್ಮಜನ ಆಡಳಿತ ವ್ಯವಸ್ಥೆ[ಸಂಪಾದಿಸಿ]

ವರ ಮುನೀಂದ್ರರ ನಿಖಿಳ ದೇಶಾಂ
ತರದ ಭೂಸುರವರ್ಗವನು ಸ
ತ್ಕರಿಸಿದನು ಗೋ ಭೂಮಿ ವಸನ ಹಿರಣ್ಯದಾನದಲಿ |
ಪರಿಜನವ ಪುರಜನವ ರತ್ನಾ
ಕರ ಪರೀತ ಮಹೀಜನವನಾ
ದರಿಸಿದನು ವೈಭವವಿಹಿತ ಸನ್ಮಾನ ದಾನದಲಿ || ೮ ||
ಪದವಿಭಾಗ-ಅರ್ಥ: ವರ ಮುನೀಂದ್ರರ ನಿಖಿಳ ದೇಶಾಂತರದ ಭೂಸುರವರ್ಗವನು ಸತ್ಕರಿಸಿದನು ಗೋ ಭೂಮಿ ವಸನ ಹಿರಣ್ಯದಾನದಲಿ, ಪರಿಜನವ(= ಸೇವಕ ವರ್ಗ, ದಾಸೀ ಸಮೂಹ,) ಪುರಜನವ ರತ್ನಾಕರ (ಸಮುದ್ರ) ಪರೀತ ((ಮಿತಿ, ಎಲ್ಲೆ,)) ಮಹೀಜನವನು ಆದರಿಸಿದನು ವೈಭವವಿಹಿತ (ವಿಹಿತ= ಯೋಗ್ಯ)ಸನ್ಮಾನ ದಾನದಲಿ.
ಅರ್ಥ:ಪಟ್ಟಾಭಿಷೇಕ ಸಮಾರಂಭಕ್ಕೆ ಬಂದಿದ್ದ ಮುನೀಂದ್ರರರನ್ನೂ, ಅನೇಕ ದೇಶಾಂತರದಿಂದ ಆಗಮಿಸಿದ್ದ ಬ್ರಾಹ್ಮಣವರ್ಗವನ್ನೂ ಸತ್ಕರಿಸಿದನು ಗೋವು, ಭೂಮಿ, ವಸನ- ಬಟ್ಟೆ, ಹಣದ ದಾನಗಳನ್ನು ಕೊಟ್ಟು ಸನ್ಮಾನಿಸಿದನು. ನಗರದ ಪರಿಜನರನ್ನೂ ಪುರಜನರನ್ನೂ, ಆಗಮಿಸಿದ್ದ ಸಮುದ್ರ ಪರ್ಯಂತ ಇರುವ ಆಗಮಿಸಿದ ಜನರನ್ನೂ ವೈಭವದಿಂದ ಯೋಗ್ಯವಾದ ಸನ್ಮಾನ ದಾನಗಳನ್ನು ಕೊಟ್ಟು ಆದರಿಸಿದನು.
ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು
ಶ್ಶಾಸನನ ಸದನವನು ಪಾರ್ಥಗೆ ಕರ್ಣಭವನದಲಿ |
ವಾಸವಾದುದು ಯಮಳರಿಗೆ ದು
ಶ್ಶಾಸನಾನುಜರರಮನೆಗಳುಳಿ
ದೈಸುಮನೆ ಭಂಡಾರವಾದುದು ಭೂಪ ಕೇಳೆಂದ || ೯ ||
ಪದವಿಭಾಗ-ಅರ್ಥ:ಆ ಸುಯೋಧನನ+ ಅರಮನೆಯನು+ ಅವನೀಶ ಹೊಕ್ಕನು, ಪವನಸುತ ದುಶ್ಶಾಸನನ ಸದನವನು, ಪಾರ್ಥಗೆ ಕರ್ಣಭವನದಲಿ ವಾಸವಾದುದು ಯಮಳರಿಗೆ ದುಶ್ಶಾಸನ+ ಅನುಜರರ ಮನೆಗಳು+ ಉಳಿದ+ ಏಸುಮನೆ ಭಂಡಾರವಾದುದು ಭೂಪ ಕೇಳೆಂದ.
ಅರ್ಥ:ಭೂಪ ಕೇಳು,'ಅವನೀಶನಾದ ಧರ್ಮಜನು ಆ ಸುಯೋಧನನ ಅರಮನೆಯನ್ನು ಪ್ರವೇಶಮಾಡಿ ಅಲ್ಲಿ ವಾಸಿಸಿದನು. ಪವನಸುತನಾದ ಭೀಮನು ದುಶ್ಶಾಸನನ ಅರಮನೆಯಲ್ಲಿ ವಾಸಮಾಡಿದನು., ಪಾರ್ಥನಿಗೆ ಕರ್ಣನ ಭವನದಲ್ಲಿ ವಾಸದ ವ್ಯವಸ್ಥೆಯಾಯಿತು. ಯಮಳರಾದ ನಕುಲಸಹದೇವರುಗ ದುಶ್ಶಾಸನ ನಂತರದ ಎರಡು ತಮ್ಮಂದಿರ ಮನೆಗಳನ್ನು ಪ್ರವೇಶಿಸಿದರು. ಉಳಿದ ಎಲ್ಲಾ ಅಷ್ಟೂ ಅರಮನೆಗಳು ರಾಜ್ಯದ ಭಂಡಾರವಾಯಿತು,' ಎಂದ.
ಮನ್ನಣೆಯಲಿ ಯುಯುತ್ಸು ಹೊಕ್ಕನು
ತನ್ನ ಮನೆಯನು ಭೀಷ್ಮ ಗುರುಕೃಪ
ರುನ್ನತಾಲಯವಾಯ್ತು ನೃಪನ ಪಸಾಯ್ತಸಂತತಿಗೆ |
ಮುನ್ನಿನವರೇ ಮಂತ್ರಿ ಸಚಿವರು
ಮುನ್ನದಾವಂಗಾವ ಪರುಠವ
ಭಿನ್ನವಿಲ್ಲದೆ ಪೌರಜನವೆಸೆದಿರ್ದುದಿಭಪುರಿಯ || ೧೦ ||
ಪದವಿಭಾಗ-ಅರ್ಥ: ಮನ್ನಣೆಯಲಿ ಯುಯುತ್ಸು ಹೊಕ್ಕನು ತನ್ನ ಮನೆಯನು, ಭೀಷ್ಮ ಗುರು, ಕೃಪರ,+ ಉನ್ನತಾಲಯವಾಯ್ತು ನೃಪನ ಪಸಾಯ್ತ(ಉಡುಗೊರೆ, ಬಹುಮಾನ) ಸಂತತಿಗೆ ಮುನ್ನಿನವರೇ ಮಂತ್ರಿ ಸಚಿವರು ಮುನ್ನದಾವ+ ಅಂಗ+ ಆಂವ ಪರುಠವ(ವಿಸ್ತಾರ, ಹರಹು, ಹೆಚ್ಚಳ, ಆಧಿಕ್ಯ, ಶ್ರೇಷ್ಠತೆ, ಭದ್ರತೆ, ಸಿದ್ಧತೆ, ಏರ್ಪಾಟು) ಭಿನ್ನವಿಲ್ಲದೆ ಪೌರಜನವು+ ಎಸೆದಿರ್ದುದು+ ಇಭಪುರಿಯ.
ಅರ್ಥ:ಮರ್ಯಾದೆಪೂರ್ವಕ ಯುಯುತ್ಸುವು ತನ್ನ ಮನೆಯನ್ನು ಹೊಕ್ಕನು. ಭೀಷ್ಮ ಗುರು, ಕೃಪರ, ಉನ್ನತವಾದ ಮನೆಗಳು ಯುಧಿಷ್ನಠಿರ ನೃಪನ ಸಂತತಿಗೆ ವಾಸಕ್ಕಾಯಿತು. ಮೊದಲಿದ್ದವರೇ ಉಳಿದ ಮಂತ್ರಿ ಸಚಿವರಾದರು. ಮೊದಲು ಯಾವ ಅಂಗ, ಯಾವ ವ್ಯವಸ್ಥೆ ಇದ್ದಿತೋ ಅದೇ ಭಿನ್ನವಿಲ್ಲದೆ ಮುಂದುವರಿಯಿತು. ಹೀಗೆ ಹಸ್ತಿನಾ ನಗರದ ಪೌರಜನರು ಶೋಭಿಸಿದ್ದರು.
ಅರಸು ಧರ್ಮಜನಾದ ನಮಗಿ
ನ್ನುರವಣಿಪ ಮನ ಬೇಡ ಬೇಡು
ತ್ತರಿಸುವಿಹಪರವೆರಡ ಪಡೆದವು ನಿಖಿಳ ಜಗ ಹೊಗಳೆ |
ಪರಿಮಿತದ ಜನ ತಮ್ಮ ಸುಬಲವ
ನಿರದೆ ಮಾಡುವೆನೆಂದು ಮುನಿಜನ
ಧರಣಿಸುರರೊಳಗಾದ ಪುರಜನರೊಲಿದು ಹರಸಿದರು || ೧೧ ||
ಪದವಿಭಾಗ-ಅರ್ಥ:ಅರಸು ಧರ್ಮಜನು+ ಆದ, ನಮಗೆ+ ಇನ್ನು+ ಉರವಣಿಪ ಮನ ಬೇಡ, ಬೇಡ+ ಉತ್ತರಿಸುವ+ ಇಹಪರವು+ ಎರಡ ಪಡೆದವು, ನಿಖಿಳ ಜಗ ಹೊಗಳೆ, ಪರಿಮಿತದ (ಸುತ್ತುವರಿದ) ಜನ ತಮ್ಮ (ಪಾಂಡವರ) ಸುಬಲವನು(ಏಳಿಗೆಯನ್ನು)+ ಇರದೆ(ನಿಶ್ಛಯವಾಗಿ) ಮಾಡುವೆನು+ ಎಂದು ಮುನಿಜನ ಧರಣಿಸುರರು+ ಒಳಗಾದ ಪುರಜನರು+ ಒಲಿದು ಹರಸಿದರು.
ಅರ್ಥ: 'ಧರ್ಮಜನು ಅರಸನಾದನು. ಇನ್ನು ನಮಗೆ ಯುದ್ದ ಮಅಡುವ ಮನಸ್ಸು ಬೇಡ ಬೇಡ. ನಮಗೆ ಉತ್ತರೋತ್ತರ ಇಹ-ಪರ ಈ ಎರಡನ್ನೂ ಪಡೆದಂತಾಯಿತು. ಜಗತ್ತಿನ ಎಲ್ಲಾ ಜನ ಹೊಗಳುವಂತೆ ಆಳುವನು. ಪರಿಮಿತದ ಜನರು ತಮ್ಮ ಏಳಿಗೆಯನ್ನು ನಿಶ್ಚಯವಾಗಿ ಮಾಡುವೆವು ಎಂದು ಮುನಿಜನರು, ಧರಣಿಸುರರು, ಮೊದಲಾದ ಪುರಜನರು ಒಲಿದು ಪಾಂಡವರನ್ನು ಹರಸಿದರು.

ಶಾಂತಿ ಪರ್ವದ ಸಾರ[ಸಂಪಾದಿಸಿ]

ಬಳಿಕ ಭೀಷ್ಮನ ಬಾಣಶಯನ
ಸ್ಥಳಕೆ ಧರ್ಮಜ ಬಂದು ಧರ್ಮಂ
ಗಳನು ಕೇಳಿದು ರಾಜಧರ್ಮ ಸಮಸ್ತಧರ್ಮವನು |
ತಿಳಿದನಗ್ಗದ ದಾನಧರ್ಮಾ
ವಳಿಯನಾತನ ರಾಜ್ಯಪಾಲನ
ನಳ ನಹುಷ ಭರತಾದಿ ಭೂಪರ ಗತಿಗೆ ಗುರುವಾಯ್ತು || ೧೨ ||
ಪದವಿಭಾಗ-ಅರ್ಥ: ಬಳಿಕ ಭೀಷ್ಮನ ಬಾಣಶಯನ ಸ್ಥಳಕೆ ಧರ್ಮಜ ಬಂದು ಧರ್ಮಂಗಳನು ಕೇಳಿದು ರಾಜಧರ್ಮ ಸಮಸ್ತ ಧರ್ಮವನು ತಿಳಿದನು+ ಅಗ್ಗದ (ಶ್ರೇಷ್ಠ)ದಾನಧರ್ಮ+ ಆವಳಿಯನು+ ಆತನ ರಾಜ್ಯಪಾಲನ, ನಳ ನಹುಷ ಭರತಾದಿ ಭೂಪರ ಗತಿಗೆ ಗುರುವಾಯ್ತು.
  • ಟಿಪ್ಪಣಿ:- ಈ ಒಂದೇಪದ್ಯದಲ್ಲಿ ಮೂಲ ಮಹಾಭಾರತದ ಶಾಂತಿಪರ್ವದ ಸಾರವನ್ನು ಕವಿ ಹೇಳಿದ್ದಾನೆ.
ಅರ್ಥ:ಬಳಿಕ ಭೀಷ್ಮನು ಬಾಣಶಯನದಲ್ಲಿ ಮಲಗಿದ್ದ ಸ್ಥಳಕ್ಕೆ ಧರ್ಮಜನು ಬಂದು ಭೀಷ್ಮನಿಂದ ಧರ್ಮ- ನೀತಿಗಳನ್ನು ಕೇಳಿ, ರಾಜಧರ್ಮ ಮತ್ತು ಇತರ ಸಮಸ್ತ ಧರ್ಮವನ್ನೂ ಕೇಳಿ ತಿಳಿದುಕೊಂಡನು.ಶ್ರೇಷ್ಠವಾದ ದಾನಧರ್ಮಗಳ ಸ್ವರುಪವನ್ನೂ ತಿಳಿದನು. ಆತನ ರಾಜ್ಯಪಾಲನಕ್ಕೆ ನಳ, ನಹುಷ, ಭರತ ಮೊದಲಾದ ಅರಸರ ನೀತಿಗಳು ಧರ್ಮಜನಿಗೆ ಗುರುವಿನಂತಾಯಿತು.

ದ್ವಾರಾವತಿಗೆ ಕೃಷ್ನನ ನಿರ್ಗಮನ[ಸಂಪಾದಿಸಿ]

ಕದನದಲಿ ಕಯ್ಯಾರೆ ದೈತ್ಯರ
ಸದೆದು ಭೂಭಾರವನು ಪರಹ
ಸ್ತದಲಿ ಕಟ್ಟಿಸಿ ಕೊಟ್ಟಭಾಷೆಯನುತ್ತರಾಯೆನಿಸಿ |
ನದಿಯ ನಂದನನನು ಪರಾನಂ
ದದಲಿಸೇರಿಸಿ ಪರಮ ಪರಿತೋ
ಷದಲಿ ಪಯಣವ ಮಾಡಿದನು ಮುರವೈರಿ ನಿಜಪುರಿಗೆ || ೧೩ ||
ಪದವಿಭಾಗ-ಅರ್ಥ:ಕದನದಲಿ ಕಯ್ಯಾರೆ ದೈತ್ಯರ ಸದೆದು ಭೂಭಾರವನು ಪರಹಸ್ತದಲಿ ಕಟ್ಟಿಸಿ(ಕಟ್ಟಿಸು = ಮಾಡಿಸು), ಕೊಟ್ಟಭಾಷೆಯನು+ ಉತ್ತರಾಯೆನಿಸಿ, ನದಿಯ ನಂದನನನು (ಭೀಷ್ಮನನ್ನು) ಪರಾನಂದದಲಿ ಸೇರಿಸಿ ಪರಮ ಪರಿತೋಷದಲಿ ಪಯಣವ ಮಾಡಿದನು ಮುರವೈರಿ ನಿಜಪುರಿಗೆ.
ಅರ್ಥ:ಯುದ್ಧದಲ್ಲಿ ಕಯ್ಯಾರೆ ದೈತ್ಯರನ್ನು ಸಂಹರಿಸಿ, ಭೂಭಾರವನ್ನು ಪರರ ಹಸ್ತದಲ್ಲಿ ಮಾಡಿಸಿ, ಪಾಂಡವರಿಗೆ ಕೊಟ್ಟಭಾಷೆಯನ್ನು ಪೂರ್ನವಾಯಿತು ಎನ್ನಿಸಿ, ಭೀಷ್ಮನನ್ನು ಪರಲೊಕದ ಆನಂದದಲಿ ಸೇರಿಸಿ, ಪರಮ ಸಂತೋಷದಲ್ಲಿ ಮುರವೈರಿ ಕೃಷ್ನನು ತನ್ನ ನಗರವಾದ ದ್ವಾರಾವತಿಗೆ ಪಯಣವನ್ನು ಮಾಡಿದನು.
ಯಮಸುತನ ತಕ್ಕೈಸಿ ಭೀಮನ
ಮಮತೆಯನು ಭುಲ್ಲೈಸಿ ಪಾರ್ಥನ
ನಮಿತ ಮಕುಟವ ನೆಗಹಿ ಪುಳಕಾಶ್ರುಗಳ ಪೂರದಲಿ |
ಯಮಳರನು ಬೋಳೈಸಿ ರಾಯನ
ರಮಣಿಯನು ಸಂತೈಸಿ ವಿದುರ
ಪ್ರಮುಖರನು ಬೀಳ್ಕೊಟ್ಟು ಬಿಜಯಂಗೈದನಸುರಾರಿ || ೧೪ ||
ಪದವಿಭಾಗ-ಅರ್ಥ: ಯಮಸುತನ ತಕ್ಕೈಸಿ ಭೀಮನ ಮಮತೆಯನು ಭುಲ್ಲೈಸಿ, ಪಾರ್ಥನ+ ನಮಿತ ಮಕುಟವ ನೆಗಹಿ, ಪುಳಕಾಶ್ರುಗಳ ಪೂರದಲಿ ಯಮಳರನು ಬೋಳೈಸಿ, ರಾಯನ ರಮಣಿಯನು ಸಂತೈಸಿ, ವಿದುರ ಪ್ರಮುಖರನು ಬೀಳ್ಕೊಟ್ಟು ಬಿಜಯಂಗೈದನು(ಹೋದನು)+ ಅಸುರಾರಿ
ಅರ್ಥ:ಕೃಷ್ನನು ದ್ವಾರಕೆಗೆ ಹೊರದುವಾಗ, ಯಮಸುತನಾದ ಧರ್ಜನನ್ನು ಗೌರವಿಸಿ, ಭೀಮನ ಪ್ರೀತಿ ಭಕ್ತಿಯನ್ನು ಹೊಗಳಿ, ಪಾರ್ಥನು ನಮಿಸಿದಾಗ ಅವನ ಮಕುಟವಿದ್ದ ತಲೆಯನ್ನು ನೆಗಹಿ ಸ್ನೇಹವನ್ನು ತೋರಿಸಿ, ದೇಹದಲ್ಲಿ ಪುಳಕವೂ ಕಣ್ಣಿನಲ್ಲಿ ಆನಂದದ ಅಶ್ರುಗಳೂ ತುಂಬಿರಲು ಯಮಳರಾದ ನಕುಲ ಸಹದೇವರನ್ನು ಪ್ರೀತಿಯಿಂದ ಅಪ್ಪಿ ಸವರಿ, ಅತಿಯಾಗಿ ಕಷ್ಟ ಕೋಟಲೆಯಿಂದ ನೊಂದ ಧರ್ಮರಾಯನ ರಮಣಿ ದ್ರೌಪದಿಯನ್ನು ಸಂತೈಸಿ, ವಿದುರನೇ ಮೊದಲಾದ ಪ್ರಮುಖರನ್ನು ಬೀಳ್ಕೊಟ್ಟು ಅಸುರಾರಿ ಕೃಷ್ನನು ದ್ವಾರವತಿಗೆ ತನ್ನವರೊಡನೆ ಬಿಜಯಂಗೈದನು.
ದೇವ ದುಂದುಭಿರವದ ಗಗನದ
ಹೂವಳೆಯ ಪೂರದ ಸಮಸ್ತ ಜ
ನಾವಳಿಯ ಜಯಜೀಯ ನಿರ್ಘೋಷದ ಗಡಾವಣೆಯ |
ದೇವಕಿಯ ವಸುದೇವ ರುಕುಮಿಣಿ
ದೇವಿಯಾದಿಯ ಹರುಷದಾವಿ
ರ್ಭಾವ ಮಿಗೆ ನಿಜಪುರವ ಹೊಕ್ಕನು ವೀರನಾರಯಣ || ೧೫ ||
ಪದವಿಭಾಗ-ಅರ್ಥ: ದೇವ ದುಂದುಭಿರವದ ಗಗನದ ಹೂವಳೆಯ ಪೂರದ ಸಮಸ್ತ ಜನಾವಳಿಯ ಜಯಜೀಯ ನಿರ್ಘೋಷದ ಗಡಾವಣೆಯ, ದೇವಕಿಯ ವಸುದೇವ ರುಕುಮಿಣಿ ದೇವಿಯಾದಿಯ ಹರುಷದ+ ಆವಿರ್ಭಾವ ಮಿಗೆ ನಿಜಪುರವ ಹೊಕ್ಕನು ವೀರನಾರಯಣ.
ಅರ್ಥ:ದೇವತೆಗಳು ಭೇರಿಯನ್ನು ಬಾರಿಸಿದರು; ಅವರು ಗಗನದಿಂದ ಹೂಮಳೆಯನ್ನು ಸುರಿಸಿದರು; ಸಮಸ್ತ ಜನಸಮೂಹವು 'ಜಯ ಜೀಯ!' ಎಂದು ಮಾಡುತ್ತಿದ್ದ ನಿರ್ಘೋಷದ ಗದ್ದಲದಲ್ಲಿ, ದೇವಕಿಯೂ ವಸುದೇವನೂ ರುಕ್ಮಿಣಿ ದೇವಿ, ಮೊದಲಾದ ಯಾದವರ ಹರ್ಷದ ಆವಿರ್ಭಾವವು ಹೆಚ್ಚುತ್ತಿರಲು ವೀರನಾರಯಣನಾದ ಕೃಷ್ಣನು ತನ್ನ ನಗರ ದ್ವಾರಕೆಯನ್ನು ಹೊಕ್ಕನು.

ಕಾವ್ಯದ ಫಲಶ್ರುತಿ[ಸಂಪಾದಿಸಿ]

ಭವದುರಿತಹರವಕಟ ಹರಿನಾ
ಮವನು ನೆನೆವರು ಕಾಲಚಕ್ರದ
ಜವನ ಬೇಗೆಯ ಜುಣುಗಿ ಜಾರುವರಖಿಳ ಮಾನವರು |
ಕವಿ ಕುಮಾರವ್ಯಾಸಸೂಕ್ತದ
ಸವೆಯದಮೃತವನೊಲಿದೊಲಿದು ಸು
ಶ್ರವಣದಲಿ ಕುಡಿಕುಡಿದು ಪದವಿಯ ಪಡೆವುದೀ ಲೋಕ || ೧೬ ||
ಪದವಿಭಾಗ-ಅರ್ಥ:ಭವದುರಿತ ಹರವು+ ಅಕಟ ಹರಿನಾಮವನು ನೆನೆವರು ಕಾಲಚಕ್ರದ ಜವನ(ಯಮನ) ಬೇಗೆಯ ಜುಣುಗಿ ಜಾರುವರು+ ಅಖಿಳ ಮಾನವರು ಕವಿ ಕುಮಾರವ್ಯಾಸ ಸೂಕ್ತದ( ಮಂತ್ರ, ಸೂಕ್ತಿ) ಸವೆಯದ+ ಅಮೃತವನು+ ಒಲಿದು+ ಒಲಿದು ಸುಶ್ರವಣದಲಿ(ಚೆನ್ನಾಗಿ ಆಲಿಸಿ ಕೇಳಿ) ಕುಡಿಕುಡಿದು ಪದವಿಯ ಪಡೆವುದು+ ಈ ಲೋಕ
ಅರ್ಥ:ಮಹಾಭಾರತ ಕಥೆಯ ಶ್ರವಣವು ಈ ಲೋಕದಲ್ಲಿ ಮಾಡಿದ ಕೆಟ್ಟ ಕರ್ಮದ ಫಲವನ್ನು ಪರಿಹರಿಸುವುದು- ಅಕಟ! ಹರಿನಾಮವನ್ನು ನೆನೆಯುವವರು ಕಾಲಚಕ್ರದ ಮೃತ್ಯುವಿನ ಬೇಗೆಯಿಂದ ತಪ್ಪಿಸಿಕೊಂಡು ಜಾರುವರು. ಅಖಿಲ ಮಾನವರೂ ಕವಿ ಕುಮಾರವ್ಯಾಸನ ಸೂಕ್ತಿಯಾಗಿರುದ ಈ ಕಾವ್ಯದ ಸವೆಯದ ಅಮೃತವನ್ನು ಒಲಿದು- ಒಲಿದು, ಚೆನ್ನಾಗಿ ಆಲಿಸಿ ಕೇಳಿ, ಕುಡಿದು ಕುಡಿದು, ಈ ಲೋಕವು - ಈ ಲೋಕದ ಜನರು ಉತ್ತಮ ಪದವಿಯನ್ನು ಪಡೆಯುವರು.
ಶ್ರೀಮದಮರಾಧೀಶ ನುತಗುಣ
ತಾಮರಸಪದ ವಿಪುಳನಿರ್ಮಳ
ನಾಮನನುಪಮ ನಿಖಿಳಯತಿಪತಿದಿವಿಜವಂದಿತನು |
ರಾಮನೂರ್ಜಿತನಾಮ ಸುಧೆಯಾ
ರಾಮನಾಹವಭೀಮ ರಘುಕುಲ
ರಾಮ ಪಾಲಿಸುವೊಲಿದು ಗದುಗಿನ ವೀರನಾರಯಣ || ೧೭ ||
ಪದವಿಭಾಗ-ಅರ್ಥ: ಶ್ರೀಮದ್+ ಅಮರಾಧೀಶ(ಸ್ವರ್ಗದ ದೊರೆ) ನುತಗುಣ ತಾಮರಸ(ಕಮಲ, ತಾವರೆ, ಪಾದಪದ್ಮ) ಪದ(ಪಾದ) ವಿಪುಳ(ಬಹಳ) ನಿರ್ಮಳ(ನಿರ್ಮಲ) ನಾಮನ+ ಅನುಪಮ ನಿಖಿಳ(ಎಲ್ಲಾ) ಯತಿಪತಿ ದಿವಿಜ(ದೇವತೆಗಳು) ವಂದಿತನು ರಾಮನು+ ಊರ್ಜಿತನಾಮ(ಶಕ್ತಿಯಿಂದ ಕೂಡಿದ) ಸುಧೆಯ(ಹಾಲು)+ ಆರಾಮನು(ಮನೋಹರನು, ಉದ್ಯಾನವನದಂರುವವನು)+ ಆಹವಭೀಮ (ಯುದ್ಧದಲ್ಲಿ ಶಕ್ತಿಶಾಲಿ) ರಘುಕುಲರಾಮ ಪಾಲಿಸು+ವೊಲಿದು ಗದುಗಿನ ವೀರನಾರಯಣ.
ಅರ್ಥ: ಶ್ರೀಮತ್ ಅಮರಾಧೀಶ, ಹೊಗಳಿಕೆಯ ಗುಣಶಾಲಿ, ಕಮಲದಮತಿರುವ ಪಾದಗಳನ್ನು ಹೋದಿರುವವನು, ವಿಪುಲವಾದ ನಿರ್ಮಲ ಹೆಸರಿನವನು, ಅನುಪಮ ನಿಖಿಲ ಯತಿಗಳಿಗೂ ಪತಿಯಂತೆ ಒಡೆಯನು; ದೇವತೆಗಳಿಂದ ವಂದಿತನು; ಶ್ರೀ ರಾಮನು; ಶಕ್ತಿಯಿಂದ ಕೂಡಿದ ಹೆಸರುಳ್ಳವನು; ಹಾಲಿನಂತೆ ಮನೋಹರನು,, ಯುದ್ಧದಲ್ಲಿ ಶಕ್ತಿಶಾಲಿ ಪರಾಕ್ರಮಿ, ರಘುಕುಲರಾಮ ಒಲಿದು ಪ್ರೀತಿಯಿಂದ ನಮ್ಮನ್ನು ಪಾಲಿಸು ಗದುಗಿನ ವೀರನಾರಯಣ.
ಅರಸ ವೈಶಂಪಾಯನಿಗೆ ನಿಜ
ಕರವ ಮುಗಿದು ಸುವರ್ಣವಸ್ತ್ರಾ
ಭರಣ ಗೋವ್ರಜ ಭೂಮಿ ಕನ್ಯಾದಾನ ಮಣಿಗಣದಿ |
ಹಿರಿದು ಪರಿಯಲಿ ಮನದಣಿವವೋ
ಲುರುತರದ ದ್ರವ್ಯಾದಿಗಳ ಭೂ
ಸುರರಿಗಿತ್ತನು ರಾಯ ಜನಮೇಜಯಮಹೀಪಾಲ || ೧೮ ||
ಪದವಿಭಾಗ-ಅರ್ಥ: ಅರಸ, ವೈಶಂಪಾಯನಿಗೆ ನಿಜ(ತನ್ನ) ಕರವ ಮುಗಿದು, ಸುವರ್ಣವಸ್ತ್ರಾಭರಣ ಗೋವ್ರಜ(ದನಗಳ ಹಿಂಡು) ಭೂಮಿ ಕನ್ಯಾದಾನ ಮಣಿಗಣದಿಹಿರಿದು ಪರಿಯಲಿ ಮನದಣಿವವೋಲು+ ಉರುತರದ ದ್ರವ್ಯಾದಿಗಳ ಭೂಸುರರಿಗೆ+ ಇತ್ತನು(ಕೊಟ್ಟನು) ರಾಯ ಜನಮೇಜಯ ಮಹೀಪಾಲ
ಅರ್ಥ:ರಾಜ ಜನಮೇಜಯನು ತನ್ನ ಪೂರ್ವಜರ ಮಹಾಭಾರತದ ಕಥೆಯನ್ನು ಕೇಳಿದ ನಂತರ, ಅದನ್ನು ಹೇಳಿದ ವೈಶಂಪಾಯನ ಮುನಿಗೆ ಕೈಮುಗಿದು, ಸುವರ್ಣ/ಚಿನ್ನವನ್ನೂ, ವಸ್ತ್ರಾಭರಣಗಳನ್ನೂ ಗೋವುಗಳನ್ನೂ ಭೂಮಿಯನ್ನೂ ಕೊಟ್ಟು, ಕನ್ಯಾದಾನವನ್ನೂ ಮಾಡಿದನು. ಮಣಿ ಮತ್ತು ರತ್ನಗಳನ್ನು ಹಿರಿದಾದ ರೀತಿಯಲ್ಲಿ, ಮನಸ್ಸು ತಣಿಯುವಂತೆ, ಬಹಳ ತರದ ದ್ರವ್ಯಾದಿಗಳನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು.
ಸರ್ಪಯಾಗದೊಳಾದ ಕರ್ಮದ
ದರ್ಪವನು ಕೆಡೆಯೊದೆದು ಬೆಳಗಿದ
ನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ |
ತಪ್ಪದೀ ಭಾರತವ ಕೇಳ್ದಂ
ಗಪ್ಪುದಮರಸ್ತ್ರೀ ಕದಂಬದೊ
ಳೊಪ್ಪುವಿಂದ್ರನ ಪದವಿಯೆಂದನು ಸೂತ ಕೈಮುಗಿದು || ೧೯ ||
ಪದವಿಭಾಗ-ಅರ್ಥ: ಸರ್ಪಯಾಗದೊಳು+ ಆದ ಕರ್ಮದ ದರ್ಪವನು ಕೆಡೆಯೆ (ಕೆಡವಿ -ಹೋಗಿಸು, ಕಳೆದುಕೊಂಡು)+ ಒದೆದು ಬೆಳಗಿದನು;+ ಉಪ್ಪರದ (ಹೆಚ್ಚಿನ) ರವಿತೇಜದಲಿ ಸುರನರರು ಬೆರಗಾಗೆ ತಪ್ಪದು+ ಈ ಭಾರತವ ಕೇಳ್ದಂಗೆ+ ಅಪ್ಪುದು (ಆಗುವುದು)+ ಅಮರಸ್ತ್ರೀ (ದೇವಕನ್ಯೆಯರು) ಕದಂಬದೊಳು(ಸಮೂಹದಲ್ಲಿ)+ ಒಪ್ಪುವ+ ಇಂದ್ರನ ಪದವಿಯೆಂದನು ಸೂತ ಕೈ ಮುಗಿದು.
ಅರ್ಥ:ಸರ್ಪಯಾಗದಿಂದ ಆದ ಕರ್ಮದ ಬಲವಾದ ದೋಷವು ಹೋಗಲು ಅದನ್ನು ಕಳೆದುಕೊಂಡು ಜನಮೇಜಯನು ಸೂರ್ಯನಂತೆ ಹೆಚ್ಚಿನ ತೇಜಸ್ಸಿನಿಂದ ಶೋಭಿಸಿದನು. ಅವನ ತೇಜಸ್ಸನ್ನು ನೊಡಿ ದೇವಲೊಕದ ಸುರರು, ಈ ಲೋಕದ ಜನರು ಬೆರಗಾದರು. ಈ ಕಥೆಯನ್ನು ಸೂತಪುರಾಣಿಕನು ಶೌನಿಕ ಮುನಿಗಳ ಆಸ್ರಮದಲ್ಲಿ ಹೇಳಿದ ನಂತರ, ಅದನ್ನು ಕೇಳಿದ ಎಲ್ಲಾ ಮುನಿಗಳಿಗೆ ಜನರಿಗೆ ಕೈ ಮುಗಿದು, ಈ ಭಾರತವನ್ನು ಕೇಳಿದವನಿಗೆ ಅಮರಸ್ತ್ರೀಯರ ಸಮೂಹದಲ್ಲಿ ಪ್ರಿಯವಾದ ಇಂದ್ರನ ಪದವಿಯು ಆಗುವುದು ಎಂದನು.
ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ |
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ || ೨೦ ||
ಪದವಿಭಾಗ-ಅರ್ಥ: ವೇದಪಾರಾಯಣದ ಫಲ, ಗಂಗಾದಿ ತೀರ್ಥಸ್ನಾನಫಲ, ಕೃಚ್ಛ್ರಾದಿ ತಪಸಿನ ಫಲವು, ಜ್ಯೋತಿಷ್ಟೋಮ ಯಾಗಫಲ, ಮೇದಿನಿಯನು(ಭೂಮಿ)+ ಒಲಿದು+ ಇತ್ತ ಫಲ ವಸ್ತ್ರಾದಿ ಕನ್ಯಾದಾನಫಲವು+ ಅಹುದು+ ಆದರಿಸಿ ಭಾರತದೊಳೊಂದು+ ಅಕ್ಷರವ ಕೇಳ್ದರಿಗೆ.
ಅರ್ಥ:ಈ ಮಹಾಭಾರತವನ್ನು ಆದರದಿಂದ ಕೇಳಿದವರಿಗೆ ಅಥವಾ ಅದರಲ್ಲಿ ಒಂದು ಅಕ್ಷರವನ್ನಾದರೂ ಕೇಳಿದರಿಗೆ, ವೇದಪಾರಾಯಣದ ಫಲವೂ, ಗಂಗೆ ಮೊದಲಾದ ತೀರ್ಥಸ್ನಾನಫಲವೂ, ಕೃಚ್ಛ್ರವೆಂಬ ಆಹಾರ ಸೇವನೆ ವ್ರತ, ಮೊದಲಾದ ತಪಸ್ಸಿನ ಫಲವೂ, ಜ್ಯೋತಿಷ್ಟೋಮ ಯಾಗವನ್ನು ಮಾಡಿ ಫಲವೂ, ವಸ್ತ್ರವೇ ಮೊದಲಾದ, ಮತ್ತು ಭೂಮಿಯನ್ನು ಪ್ರೀತಿಯಿಂದ ದಾನಮಾಡಿದ ಫಲವೂ, ಕನ್ಯಾದಾನವನ್ನುಮಾಡಿ ಫಲವೂ ಅಗುವುದು.
ಟಿಪ್ಪಣಿ:- ಈ ಪದ್ಯವನ್ನು ಬಾರತದ ಯಾವುದೇ ಭಾಗವನ್ನು ವಾಚನ ಮಾಡಿದಾಗ ಕೊನೆಯಲ್ಲಿ ಹೇಳಿ ನಂತರ ಕೆಳಗಿನ ಪ್ರಾರ್ಥನೆಯ ಪದ್ಯ ಓದಿ ಮುಕ್ತಾಯ ಮಾಡುವರು.

ಕಾವ್ಯ ವಾಚನ ಮುಕ್ತಾಯದ ಕೊನಯಲ್ಲಿ ಮಾಡುವ ಪ್ರಾರ್ಥನೆ[ಸಂಪಾದಿಸಿ]

ವೇದ ಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜ ಬಲದಿ |
ಕಾದಿ ಗೆಲಿದನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ||
(ಅರ್ಥ:-ಕುಮಾರವ್ಯಾಸನ ಮುಂಡಿಗೆಗಳು)

♠♠♠
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ ವೀರನಾರಾಯಣ ಚರಣಾರವಿಂದ
ಮಕರಂದ ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಗದಾಪರ್ವಂ ಸಮಾಪ್ತಮಾದುದು*
@@@@@@@**@@@@@@@
♠♠♠

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
  3. ಸಿರಿಗನ್ನಡ ಅರ್ಥಕೋಶ- ಕೊ.ಶಿ.ಕಾ.
  4. Who wrote the Rigveda? Who wrote the Rigveda? - Quora