ಜೈಮಿನಿ ಭಾರತ/ಇಪ್ಪತ್ತನೆಯ ಸಂಧಿ

ವಿಕಿಸೋರ್ಸ್ ಇಂದ
Jump to navigation Jump to search

ಇಪ್ಪತ್ತನೆಯ ಸಂಧಿ[ಸಂಪಾದಿಸಿ]

ಪದ್ಯ :ಸೂಚನೆ:[ಸಂಪಾದಿಸಿ]

ಸೂಚನೆ: ರಘುವರನ ತುರಗಮೇಧಾಧ್ವರದ ಕುದುರೆಯನ | ಲಘು ಪರಾಕ್ರಮಿ ಲವಂ ತರಳತನದಿಂ ಕಟ್ಟ | ಲಘಟಿತಮೆನಿಸಿತು ಶತ್ರುಘ್ನಲಕ್ಷ್ಮಣರ ತಳತಂತ್ರಕ್ಕೆ ಬಿಡಿಸಿಕೊಳಲು ||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ರಘುವರನ ತುರಗಮೇಧ ಆಧ್ವರದ ಕುದುರೆಯನು ಅಲಘು (ಲಘುವಲ್ಲದ -ಬಹಳ) ಪರಾಕ್ರಮಿ ಲವಂ=[ರಘುವರನಾದ ರಾಮನ ಅಶ್ವಮೇಧ ಯಜ್ಞದ ಕುದುರೆಯನ್ನು ಬಹಳ ಪರಾಕ್ರಮಿಯಾದ ಲವನು]; ತರಳತನದಿಂ ಕಟ್ಟಲು ಅಘಟಿತಮೆನಿಸಿತು (ಅಸಾಧ್ಯವಾಯಿತು) ಶತ್ರುಘ್ನಲಕ್ಷ್ಮಣರ ತಳತಂತ್ರಕ್ಕೆ ಬಿಡಿಸಿಕೊಳಲು=[ಹುಡುಗಾಟಿಕೆಯಿಂದ ಕಟ್ಟಿದಾಗ ಶತ್ರುಘ್ನ ಮತ್ತು ಲಕ್ಷ್ಮಣರ ಶೌರ್ಯಸಾಹಸಕ್ಕೆ ಬಿಡಿಸಿಕೊಳ್ಳಲು ಅಸಾಧ್ಯವಾಯಿತು].
 • ತಾತ್ಪರ್ಯ-: ರಘುವರನಾದ ರಾಮನ ಅಶ್ವಮೇಧ ಯಜ್ಞದ ಕುದುರೆಯನ್ನು ಬಹಳ ಪರಾಕ್ರಮಿಯಾದ ಲವನು ಹುಡುಗಾಟಿಕೆಯಿಂದ ಕಟ್ಟಿದಾಗ, ಶತ್ರುಘ್ನ ಮತ್ತು ಲಕ್ಷ್ಮಣರ ಶೌರ್ಯಸಾಹಸಕ್ಕೆ ಅದನ್ನು ಬಿಡಿಸಿಕೊಳ್ಳಲು ಅಸಾಧ್ಯವಾಯಿತು].
 • (ಪದ್ಯ-ಸೂಚನೆ )

ಪದ್ಯ :೧:[ಸಂಪಾದಿಸಿ]

ಹಿಮಕರಕುಲೇಂದ್ರ ಕೇಳ್ ವಾಲ್ಮೀಕಿ ಮುನಿಪನಾ | ಶ್ರಮದೊಳ್ ಸಮಸ್ತಕಲೆಗಳನರಿದು ಕಾಕ ಪ | ಕ್ಷಮನಾಂತು ಜಾನಕಿಯ ಶುಶ್ರೂಷೆಯೊಳ್ ಸಂದು ಋಷಿಯ ಚಿತ್ತಕ್ಕೆಬಂದು ||
ಯಮಳರಿರೆ ಕಂಡು ಸಂಪ್ರೀತಿಯಿಂ ತಾಪಸೋ | ತ್ತಮನಿತ್ತನಿಷು ಚಾಪ ಚರ್ಮ ಖಡ್ಗಂಗಳಂ | ರಮಣೀಯ ಕವಚ ಕುಂಡಲ ಕಿರೀಟಂಗಳಂ ತನ್ನಯ ತಪೋಬಲದೊಳು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಹಿಮಕರಕುಲೇಂದ್ರ (ಹಿಮಕರ=ಚಂದ್ರ,ಕುಲ=ವಂಶದ,ಇಂದ್ರ=ರಾಜ) ಕೇಳ್ ವಾಲ್ಮೀಕಿ ಮುನಿಪನ ಆಶ್ರಮದೊಳ್ ಸಮಸ್ತಕಲೆಗಳನು ಅರಿದು ಕಾಕಪಕ್ಷಮನು (ಜುಟ್ಟು,ಚಂಡಿಕೆ) ಆಂತು=[ಜಮಮೇಜಯ ರಾಜನೇ ಕೇಳು, ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಸಮಸ್ತ ವಿದ್ಯೆಗಳನ್ನೂ ಕಲಿತು ಜುಟ್ಟು,ಚಂಡಿಕೆ ಹೊಂದಿ ]; ಜಾನಕಿಯ ಶುಶ್ರೂಷೆಯೊಳ್ ಸಂದು ಋಷಿಯ ಚಿತ್ತಕ್ಕೆಬಂದು ಯಮಳರು ಇರೆ ಕಂಡು ಸಂಪ್ರೀತಿಯಿಂ ತಾಪಸೋತ್ತಮನು=[ಜಾನಕಿಯ ಆರೈಕೆಯಲ್ಲಿ ಇದ್ದುಕೊಂಡಿರುವ, ಅವರ ನಡತೆಯು ಋಷಿಯ ಮನಸ್ಸಿಗೆ ತೃಪ್ತಿಯಾಗುವಂತೆ ಅವಳಿಮಕ್ಕಳು ಇರಲು, ಅದನ್ನು ಕಂಡು ಬಹಳಪ್ರೀತಿಯಿಂದ ತಾಪಸೋತ್ತಮನು]; ಇತ್ತನು ಇಷು ಚಾಪ ಚರ್ಮ ಖಡ್ಗಂಗಳಂ ರಮಣೀಯ ಕವಚ ಕುಂಡಲ ಕಿರೀಟಂಗಳಂ ತನ್ನಯ ತಪೋಬಲದೊಳು=[ತನ್ನಯ ತಪೋಬಲದಿಂದ ಬಾಣ-ಬತ್ತಳಿಕೆ, ಬಿಲ್ಲು, ಚರ್ಮದಫಲಕ, ಖಡ್ಗಂಗಳನ್ನು ಮತ್ತು ರಮಣೀಯವಾದ ಕವಚ ಕುಂಡಲ ಕಿರೀಟಗಳನ್ನು ಕೊಟ್ಟನು].
 • ತಾತ್ಪರ್ಯ-: ಜಮಮೇಜಯ ರಾಜನೇ ಕೇಳು, ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಸಮಸ್ತ ವಿದ್ಯೆಗಳನ್ನೂ ಕಲಿತು ಜುಟ್ಟು,ಚಂಡಿಕೆ ಹೊಂದಿ, ಜಾನಕಿಯ ಆರೈಕೆಯಲ್ಲಿ ಇದ್ದುಕೊಂಡಿರುವ, ಅವರ ನಡತೆಯು ಋಷಿಯ ಮನಸ್ಸಿಗೆ ತೃಪ್ತಿಯಾಗುವಂತೆ ಅವಳಿಮಕ್ಕಳು ಇರಲು, ಅದನ್ನು ಕಂಡು ಬಹಳಪ್ರೀತಿಯಿಂದ ತಾಪಸೋತ್ತಮನು, ತನ್ನಯ ತಪೋಬಲದಿಂದ ಬಾಣ-ಬತ್ತಳಿಕೆ, ಬಿಲ್ಲು, ಚರ್ಮದಫಲಕ, ಖಡ್ಗಂಗಳನ್ನು ಮತ್ತು ರಮಣೀಯವಾದ ಕವಚ ಕುಂಡಲ ಕಿರೀಟಗಳನ್ನು ಕೊಟ್ಟನು].
 • (ಪದ್ಯ-೧)

ಪದ್ಯ :೨:[ಸಂಪಾದಿಸಿ]

ಅವರ್ಗಳಂತಿರಲಯೋಧ್ಯಾಪುರದೊಳಿತ್ತ ರಾ | ಘವನಖಿಳ ಧರಣಿಯಂ ಪಾಲಿಸುತ ಸೌಖ್ಯಾನು | ಭವದೊಳೊಂದಿಸದೆ ರಾವಣವಧೆಯೊಳಂದು ಬಂದಾ ಬ್ರಹ್ಮಹತಿ ತನ್ನನು ||
ಅವಗಡಿಸಲದಕೆ ನಿಷ್ಕೃತಿ ಯಾವುದೆಂದು ಸಾ | ರುವ ನಿಗಮದರ್ಥಮಂ ತಿಳಿದು ಹಯಮೇಧಮಂ | ತವ ನೆಗಳ್ಚುವನಾಗಿ ನಿಶ್ಚೈಸಿ ಕರೆಸಿದಂ ವರವಸಿಷ್ಠಾದಿಗಳನು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅವರ್ಗಳು ಅಂತಿರಲು ಅಯೋಧ್ಯಾಪುರದೊಳು ಇತ್ತ ರಾಘವನು ಅಖಿಳ ಧರಣಿಯಂ ಪಾಲಿಸುತ ಸೌಖ್ಯಾನುಭವದೊಳು ಒಂದಿಸದೆ=[ಲವಕುಶ ಅವರು ಆಶ್ರಮದಲ್ಲಿ ಹಾಗಿರಲು, ಇತ್ತ ಅಯೋಧ್ಯಾಪುರದಲ್ಲಿ ರಾಘವನು ಅಖಿಲ ಭೂಮಿಯನ್ನು ಪಾಲಿಸುತ್ತಾ ಸೌಖ್ಯಾನುಭವ ಹೊಂದದೆ ]; ರಾವಣವಧೆಯೊಳು ಅಂದು ಬಂದ ಆ ಬ್ರಹ್ಮಹತಿ ತನ್ನನು ಅವಗಡಿಸಲು ಅದಕೆ ನಿಷ್ಕೃತಿ ಯಾವುದೆಂದು ಸಾರುವ ನಿಗಮದ ಅರ್ಥಮಂ ತಿಳಿದು=[ರಾವಣವಧೆಯಲ್ಲಿ ಅಂದು ಬಂದ ಆ ಬ್ರಹ್ಮಹತ್ಯಾದೋಷದಿಂದ ತನ್ನನ್ನು ಮುಕ್ತಗೊಳಿಸಲು, ಅದಕ್ಕೆ ಪರಿಹಾರ ಯಾವುದೆಂದು ಹೇಳುವ ವೇದಶಾಸ್ತ್ರದ ನೀತಿಯನ್ನು ತಿಳಿದು]; ಹಯಮೇಧಮಂ ತವ ನೆಗಳ್ಚುವನಾಗಿ ನಿಶ್ಚೈಸಿ ಕರೆಸಿದಂ ವರವಸಿಷ್ಠಾದಿಗಳನು=[ಅಶ್ವಮೇಧ ಯಾಗವನ್ನು ತಾನು ಮಾಡಲು ನಿಶ್ಚೈಸಿ ಪೂಜ್ಯ ವಸಿಷ್ಠಾದಿ ಪುರೋಹಿತರನ್ನು ಕರೆಸಿದನು.]
 • ತಾತ್ಪರ್ಯ-:ಲವಕುಶ ಅವರು ಆಶ್ರಮದಲ್ಲಿ ಹಾಗಿರಲು, ಇತ್ತ ಅಯೋಧ್ಯಾಪುರದಲ್ಲಿ ರಾಘವನು ಅಖಿಲ ಭೂಮಿಯನ್ನು ಪಾಲಿಸುತ್ತಾ ಸೌಖ್ಯಾನುಭವ ಹೊಂದದೆ, ರಾವಣವಧೆಯಲ್ಲಿ ಅಂದು ಬಂದ ಆ ಬ್ರಹ್ಮಹತ್ಯಾದೋಷದಿಂದ ತನ್ನನ್ನು ಮುಕ್ತಗೊಳಿಸಲು, ಅದಕ್ಕೆ ಪರಿಹಾರ ಯಾವುದೆಂದು ಹೇಳುವ ವೇದಶಾಸ್ತ್ರದ ನೀತಿಯನ್ನು ತಿಳಿದು, ಅಶ್ವಮೇಧ ಯಾಗವನ್ನು ತಾನು ಮಾಡಲು ನಿಶ್ಚೈಸಿ ಪೂಜ್ಯ ವಸಿಷ್ಠಾದಿ ಪುರೋಹಿತರನ್ನು ಕರೆಸಿದನು.
 • (ಪದ್ಯ-೨)XνΙΙΙ

ಪದ್ಯ :೩:[ಸಂಪಾದಿಸಿ]

ವಾಮದೇವಾತ್ರಿ ಗಾಲವ ಗುರು ವಸಿಷ್ಠ ವಿ | ಶ್ವಾಮಿತ್ರರಂ ಕರೆಸಿ ಹಯಮೇಧಲಕ್ಷಣವ | ನಾ ಮುನಿಗಳಂ ಕೇಳ್ದನುಜ್ಞೆಗೊಳಲವರಿದಕೆ ನಿಜಪತ್ನಿವೇಳ್ವು(ಳ್ಕುಮೆ)ದೆನಲು ||
ಹೇಮ ನಿರ್ಮಿತವಾದ ಜಾನಕಿಯನಿರಿಸಿಕೊಂ | ಡೀ ಮಹಾಯಜ್ಞಮಂ ನಡೆಸುವೆಂ ತಾನೆಂದು | ರಾಮಚಂದ್ರಂ ನಿಖಿಳಋಷಿಗಳನೊಡಂಬಡಿಸಿ ಶಾಲೆಯಂ ಮಾಡಿಸಿದನು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ರಾಮನು, ವಾಮದೇವ ಅತ್ರಿ ಗಾಲವ ಗುರು ವಸಿಷ್ಠ ವಿಶ್ವಾಮಿತ್ರರಂ ಕರೆಸಿ ಹಯಮೇಧ ಲಕ್ಷಣವನು ಆ ಮುನಿಗಳಂ ಕೇಳ್ದು ಅನುಜ್ಞೆಗೊಳಲು=[ವಾಮದೇವ, ಅತ್ರಿ, ಗಾಲವ, ಗುರು ವಸಿಷ್ಠ, ವಿಶ್ವಾಮಿತ್ರರನ್ನು ಕರೆಯಿಸಿಕೊಂಡು ಅಶ್ವಮೇಧ ಯಾಗದ ವಿಧಿ-ವಿಧಾನವನ್ನು ಆ ಮುನಿಗಳಿಂದ ಕೇಳಿ ಅನುಮತಿಸಬೇಕೆಂದು ಕೇಳಲು,]; ಅವರಿದಕೆ ನಿಜಪತ್ನಿವೇಳ್ವು(ಳ್ಕುಮೆ)ದೆನಲು ಹೇಮ ನಿರ್ಮಿತವಾದ ಜಾನಕಿಯನಿರಿಸಿಕೊಂಡು ಈ ಮಹಾಯಜ್ಞಮಂ ನಡೆಸುವೆಂ ತಾನೆಂದು ರಾಮಚಂದ್ರಂ ನಿಖಿಳ ಋಷಿಗಳನು ಒಡಂಬಡಿಸಿ ಶಾಲೆಯಂ ಮಾಡಿಸಿದನು=[ಅವರು ಇದಕ್ಕೆ ಯಜ್ಞಮಾಡುವವನ ಪತ್ನಿಅಗತ್ಯವೆಂದು ಹೇಳಲು, ಅದಕ್ಕೆ ಚಿನ್ನದಿಂದ ನಿರ್ಮಿತವಾದ ಜಾನಕಿಯನ್ನು ಇರಿಸಿಕೊಂಡು ಈ ಮಹಾಯಜ್ಞವನ್ನು ತಾನು ನಡೆಸುವುದಾಗಿ ರಾಮಚಂದ್ರನು ಎಲ್ಲಾ ಋಷಿಗಳನ್ನು ಒಪ್ಪಿಸಿ ಯಜ್ಞಶಾಲೆಯ ಮಾಡಿಸಿದನು].
 • ತಾತ್ಪರ್ಯ-:ವಾಮದೇವ, ಅತ್ರಿ, ಗಾಲವ, ಗುರು ವಸಿಷ್ಠ, ವಿಶ್ವಾಮಿತ್ರರನ್ನು ಕರೆಯಿಸಿಕೊಂಡು ಅಶ್ವಮೇಧ ಯಾಗದ ವಿಧಿ-ವಿಧಾನವನ್ನು ಆ ಮುನಿಗಳಿಂದ ಕೇಳಿ ಅನುಮತಿಸಬೇಕೆಂದು ಕೇಳಲು, ಅವರು ಇದಕ್ಕೆ ಯಜ್ಞಮಾಡುವವನ ಪತ್ನಿ ಅಗತ್ಯವೆಂದು ಹೇಳಲು, ಅದಕ್ಕೆ ಚಿನ್ನದಿಂದ ನಿರ್ಮಿತವಾದ ಜಾನಕಿಯನ್ನು ಇರಿಸಿಕೊಂಡು ಈ ಮಹಾಯಜ್ಞವನ್ನು ತಾನು ನಡೆಸುವುದಾಗಿ ರಾಮಚಂದ್ರನು ಎಲ್ಲಾ ಋಷಿಗಳನ್ನು ಒಪ್ಪಿಸಿ ಯಜ್ಞಶಾಲೆಯನ್ನು ಮಾಡಿಸಿದನು].
 • (ಪದ್ಯ-೩)

ಪದ್ಯ :೪:[ಸಂಪಾದಿಸಿ]

ಬಳಿಕ ವೇದೋಕ್ತ ಪ್ರಕಾರದಿಂ ದೀಕ್ಷೆಯಂ | ತಳೆದು ರಘುನಾಂಥ ತುರಂಗಮಂ ಪೂಜೆಗೈ | ದಿಳೆಯೊಳ್ ಚರಿಸಲದರ ಪಣೆಗೆ ತನ್ನಗ್ಗಳಿಕೆಯಂ ಬರೆದ ಪತ್ರಿಕೆಯನು ||
ಅಳವಡಿಸಿ ಕೂಡೆಮೂರಕ್ಷೌಹಿಣೀಮೂಲ | ಬಲಸಹಿತ ವೀರಶತ್ರುಘ್ನನಂ ಕಾವಲ್ಗೆ | ಕಳುಹಿಬಿಡಲಾ ಹಯಂತಿರುಗುತಿರ್ದುದು ಧರೆಯಮೇಲಖೀಳ ದೆಸೆದೆಸೆಯೊಳು ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಳಿಕ ವೇದೋಕ್ತ ಪ್ರಕಾರದಿಂ ದೀಕ್ಷೆಯಂ ತಳೆದು ರಘುನಾಂಥ ತುರಂಗಮಂ ಪೂಜೆಗೈದು ಇಳೆಯೊಳ್ ಚರಿಸಲು=[ಬಳಿಕ ವೇದದಲ್ಲಿ ಹೇಳಿದ ಪ್ರಕಾರದಲ್ಲಿ ದೀಕ್ಷೆಯನ್ನು ಪಡೆದುಕೊಂಡು, ರಘುನಾಥನು ಅದನ್ನು ಪೂಜೆ ಮಾಡಿ, ಆ ಕುದುರೆಯನ್ನು ಭೂಮಿಯಲ್ಲಿ ಮನಬಂದಂತೆ ಸಂಚರಿಸಲು ಬಿಡಲಾಯಿತು.]; ಅದರ ಪಣೆಗೆ ತನ್ನ ಅಗ್ಗಳಿಕೆಯಂ ಬರೆದ ಪತ್ರಿಕೆಯನು ಅಳವಡಿಸಿ ಕೂಡೆಮೂರಕ್ಷೌಹಿಣೀಮೂಲಬಲ ಸಹಿತ ವೀರಶತ್ರುಘ್ನನಂ ಕಾವಲ್ಗೆ ಕಳುಹಿಬಿಡಲ ಆ ಹಯಂತಿರುಗುತಿರ್ದುದು ಧರೆಯಮೇಲೆ ಅಖೀಳ ದೆಸೆದೆಸೆಯೊಳು=[ಅದರ ಹಣೆಗೆ ರಾಮನು, ತನ್ನ ಶೌರ್ಯ, ಹಿರಿಮೆಗಳನ್ನು ಬರೆದ ಪತ್ರಿಕೆಯನ್ನು, ಪಟ್ಟಿಯನ್ನ ಅಳವಡಿಸಿ ಕಟ್ಟಿ, ಅದರಜೊತೆ ಮೂರು ಅಕ್ಷೌಹಿಣೀಸೈನ್ಯದ ಸಹಿತ ವೀರಶತ್ರುಘ್ನನ ಕಾವಲಲ್ಲಿ ದೇಶಸಂಚಾರಕ್ಕೆ ಕಳಿಸಲು ಬಿಡಲಾಯಿತು. ಆ ಕುದುರೆಯು ತಿರುಗುತಿರ್ದುದು ಭೂಮಿಯ ಮೇಲೆ ಮನ ಬಂದಂತೆ ಅಖಿಲದಿಕ್ಕುಗಳಲ್ಲಿಯೂ ಸಂಚರಿಸುತ್ತಿತ್ತು.]
 • ತಾತ್ಪರ್ಯ-:ಬಳಿಕ ವೇದದಲ್ಲಿ ಹೇಳಿದ ಪ್ರಕಾರದಲ್ಲಿ ದೀಕ್ಷೆಯನ್ನು ಪಡೆದುಕೊಂಡು, ರಘುನಾಥನು ಅದನ್ನು ಪೂಜೆ ಮಾಡಿ, ಆ ಕುದುರೆಯನ್ನು ಭೂಮಿಯಲ್ಲಿ ಮನಬಂದಂತೆ ಸಂಚರಿಸಲು ಬಿಡಲಾಯಿತು. ಅದರ ಹಣೆಗೆ ರಾಮನು, ತನ್ನ ಶೌರ್ಯ, ಹಿರಿಮೆಗಳನ್ನು ಬರೆದ ಪತ್ರಿಕೆಯನ್ನು, ಪಟ್ಟಿಯನ್ನ ಅಳವಡಿಸಿ ಕಟ್ಟಿ, ಅದರಜೊತೆ ಮೂರು ಅಕ್ಷೌಹಿಣೀಸೈನ್ಯದ ಸಹಿತ ವೀರಶತ್ರುಘ್ನನ ಕಾವಲಲ್ಲಿ ದೇಶಸಂಚಾರಕ್ಕೆ ಕಳಿಸಲು ಬಿಡಲಾಯಿತು. ಆ ಕುದುರೆಯು ಭೂಮಿಯ ಮೇಲೆ ಮನ ಬಂದಂತೆ ಅಖಿಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಿತ್ತು.]
 • (ಪದ್ಯ-೪)

ಪದ್ಯ :೫:[ಸಂಪಾದಿಸಿ]

ಬಲ್ಗಯ್ಯ ನೃಪರಂಜಿ ತಡೆಯದೆ ರಘೂದ್ವಹನ | ಸೂಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ | ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು ||
ಪುಲ್ಗಳ ಪಸುರ್ಗೆಳಸಿ ಪೊಕ್ಕೊಡಾ ತೋಟಗಾ | ವಲ್ಗೆ ತನ್ನೊಡನಾಡಿಗಳ ಕೂಡಿ ಲೀಲೆ ಮಿಗೆ | ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಜಿಯಿಂ ವೀರ ಲವನು||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಲ್ಗಯ್ಯ (ಬಲ್+ಕೈಯ- ಶಕ್ತಿಶಾಲಿ) ನೃಪರು ಅಂಜಿ ತಡೆಯದೆ ರಘೂದ್ವಹನ ಸೂಲ್ ಕೇಳಿ ನಮಿಸಲು=[ಶಕ್ತಿಶಾಲಿಗಳಾದ ರಾಜರೂ ಹೆದರಿ ಕುದುರೆಯನ್ನು ತಡೆಯದೆ ರಾಮನ ಹೆಸರು ಕೇಲಿ ಕೇಳಿ ಅವನಿಗೆ ನಮಿಸಿ ಶರಣರಾದರು.]; ಇಳೆಯೊಳ್ ಚರಿಸುತ ಅಧ್ವರದ ನಲ್ ಕುದುರೆ ಬಂದು ವಾಲ್ಮೀಕಿಯ ನಿಜ ಆಶ್ರಮದ ವಿನಿಯೋಗದ ಉಪವನದೊಳು ಪುಲ್ಗಳ ಪಸುರ್ಗೆ ಎಳಸಿ ಪೊಕ್ಕೊಡೆ=[ಹೀಗೆ ಭೂಮಿಯಲ್ಲರುವ ರಾಜ್ಯಗಳಲ್ಲಿ ಸಂಚರಿಸುತ್ತಾ ಯಜ್ಞದ ಸುಂದರ ಕುದುರೆ ಬಂದು ವಾಲ್ಮೀಕಿಯ ಆಶ್ರಮದವರು ಉಪಯೋಗಿಸುತ್ತಿದ್ದ ಉಪವನದಲ್ಲಿ ಹುಲ್ಲಿನ ಹಸುರಿಗೆ ಆಸೆಪಟ್ಟು ಅಲ್ಲಿಗೆ ಬಂದಾಗ]; ಆ ತೋಟ ಕಾವಲ್ಗೆ ತನ್ನ ಒಡನಾಡಿಗಳ ಕೂಡಿ ಲೀಲೆ ಮಿಗೆ ಬಿಲ್ಗೊಂಡು ನಡೆತಂದು ಅವಂ ಕಂಡನು ಅರ್ಚಿತ ಸುವಾಜಿಯಿಂ ವೀರ ಲವನು=[ವೀರ ಲವನು, ಆ ತೋಟದ ಕಾವಲಿಗೆ ತನ್ನ ಒಡನಾಡಿಗಳ ಜೊತೆ ಆಡುತ್ತಾ ಬಿಲ್ಲಿನ್ನು ಹಿಡಿದುಕೊಂಡು ಬಂದ ಅವನು ಯಜ್ಞದ ಕುದುರೆಯನ್ನು ಕಂಡನು].
 • ತಾತ್ಪರ್ಯ-:ಶಕ್ತಿಶಾಲಿಗಳಾದ ರಾಜರೂ ಹೆದರಿ ಕುದುರೆಯನ್ನು ತಡೆಯದೆ ರಾಮನ ಹೆಸರು ಕೇಲಿ ಕೇಳಿ ಅವನಿಗೆ ನಮಿಸಿ ಶರಣರಾದರು. ಹೀಗೆ ಭೂಮಿಯಲ್ಲಿ (ರಾಜ್ಯಗಳಲ್ಲಿ) ಸಂಚರಿಸುತ್ತಾ ಯಜ್ಞದ ಸುಂದರ ಕುದುರೆ ಬಂದು ವಾಲ್ಮೀಕಿಯ ಆಶ್ರಮದವರು ಉಪಯೋಗಿಸುತ್ತಿದ್ದ ಉಪವನದಲ್ಲಿ ಹುಲ್ಲಿನ ಹಸುರಿಗೆ ಆಸೆಪಟ್ಟು ಅಲ್ಲಿಗೆ ಬಂದಾಗ, ವೀರ ಲವನು, ಆ ತೋಟದ ಕಾವಲಿಗೆ ತನ್ನ ಒಡನಾಡಿಗಳ ಜೊತೆ ಆಡುತ್ತಾ ಬಿಲ್ಲಿನ್ನು ಹಿಡಿದುಕೊಂಡು ಬಂದ ಅವನು ಯಜ್ಞದ ಕುದುರೆಯನ್ನು ಕಂಡನು].
 • (ಪದ್ಯ-೫)

ಪದ್ಯ :೬:[ಸಂಪಾದಿಸಿ]

ಎತ್ತಣ ತುರಂಗಮಿದು ಪೊಕ್ಕು ಪೂದೋಟಮಂ | ತೊತ್ತಳದುಳಿವು*ದು ವಾಲ್ಮೀಕಿಮುನಿನಾಥ ನೇ | ಪೊತ್ತು ಮಾರೈವುದೆಂದೆನಗೆ ನೇಮಿಸಿ ಪೋದನಬ್ಧಿಪಂ ಕರೆಸಲಾಗಿ ||
ಮತ್ತೆ ವರುಣನ ಲೋಕದಿಂ ಬಂದು ಮುಳಿದಪನೆ | ನುತ್ತ ಹಯದೆಡೆಗೆ ನಡೆತಂದು ನೋಡಲ್ಕದರ | ನೆತ್ತಿಯೊಳ್ ಮೆರೆವ ಪಟ್ಟದ ಲಿಖಿತಮಂ ಕಂಡು ಲವನೋದಿಕೊಳುತಿರ್ದನು ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಎತ್ತಣ ತುರಂಗಂ ಇದು ಪೊಕ್ಕು ಪೂದೋಟಮಂ ತೊತ್ತಳದು ಉಳಿವುದು ವಾಲ್ಮೀಕಿಮುನಿನಾಥನೇ ಪೊತ್ತು ಮಾರೈವುದೆಂದು ಎನಗೆ ನೇಮಿಸಿ ಪೋದನು ಅಬ್ಧಿಪಂ (ವರುಣ) ಕರೆಸಲಾಗಿ=[ಲವನು ಕುದುರೆಯನ್ನು ನೋಡಿ, ಎಲ್ಲಿಯ ಕುದುರೆ ಇದು? ಹೂದೋಟವನ್ನು ಹೊಕ್ಕು ಅಲೆಯುತ್ತಾ ಇರುವುದು! ವಾಲ್ಮೀಕಿ ಮುನಿನಾಥನು ಎಲ್ಲಾ ಸಮಯದಲ್ಲಿ ತೋಟವನ್ನು ಕಾಪಾಡುವುದೆಂದು ತನಗೆ ನೇಮಿಸಿ ವರುಣನು ಕರೆಸಲಾಗಿ ಹೋಗಿರುವನು.]; ಮತ್ತೆ ವರುಣನ ಲೋಕದಿಂ ಬಂದು ಮುಳಿದಪನು ಎನುತ್ತ ಹಯದೆಡೆಗೆ ನಡೆತಂದು ನೋಡಲ್ಕೆ=[ಮತ್ತೆ ವರುಣನ ಲೋಕದಿಂದ ಬಂದು ತೋಟವನ್ನು ಕಾಯಲಿಲ್ಲವೆಂದು ಸಿಟ್ಟುಮಾಡುವನು, ಎನ್ನುತ್ತ ಕುದುರೆಯ ಬಳಿಗೆ ಬಂದು ನೋಡಲು,]; ಅದರ ನೆತ್ತಿಯೊಳ್ ಮೆರೆವ ಪಟ್ಟದ ಲಿಖಿತಮಂ ಕಂಡು ಲವನು ಓದಿಕೊಳುತಿರ್ದನು=[ಅದರ ಹಣೆಯಲ್ಲಿ ಶೋಭಿಸುವ ಪಟ್ಟದ ಬರಹವನ್ನು ಕಂಡು ಲವನು ಓದಿಕೊಂಡನು.]
 • ತಾತ್ಪರ್ಯ-: ಲವನು ಕುದುರೆಯನ್ನು ನೋಡಿ, ಎಲ್ಲಿಯ ಕುದುರೆ ಇದು? ಹೂದೋಟವನ್ನು ಹೊಕ್ಕು ಅಲೆಯುತ್ತಾ ಇರುವುದು! ವಾಲ್ಮೀಕಿ ಮುನಿನಾಥನು ಎಲ್ಲಾ ಸಮಯದಲ್ಲಿ ತೋಟವನ್ನು ಕಾಪಾಡುವುದೆಂದು ತನಗೆ ನೇಮಿಸಿ ವರುಣನು ಕರೆಸಲಾಗಿ ಹೋಗಿರುವನು. ಮತ್ತೆ ವರುಣನ ಲೋಕದಿಂದ ಬಂದು ತೋಟವನ್ನು ಕಾಯಲಿಲ್ಲವೆಂದು ಸಿಟ್ಟುಮಾಡುವನು, ಎನ್ನುತ್ತ ಕುದುರೆಯ ಬಳಿಗೆ ಬಂದು ನೋಡಲು, ಅದರ ಹಣೆಯಲ್ಲಿ ಶೋಭಿಸುವ ಪಟ್ಟದ ಬರಹವನ್ನು ಕಂಡು ಲವನು ಓದಿಕೊಂಡನು.
 • (ಪದ್ಯ-೬)

ಪದ್ಯ :೭:[ಸಂಪಾದಿಸಿ]

ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ | ನೊರ್ವನೇ ವೀರನಾತನ ಯಜ್ಞ ತುರಗಮಿದು | ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ ||
ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ | ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ | ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಉರ್ವಿಯೊಳ್ (ಭೂಮಿಯಲ್ಲಿ) ಕೌಸಲ್ಯೆ ಪಡೆದ ಕುವರಂ ರಾಮನು ಓರ್ವನೇ ವೀರನು ಆತನ ಯಜ್ಞ ತುರಗಂ ಇದು=['ಭೂಮಿಯಲ್ಲಿ ಕೌಸಲ್ಯೆಯು ಪಡೆದ ಮಗ ರಾಮನು ಒಬ್ಬನೇ ವೀರನು; ಆತನ ಅಶ್ವಮೇಧ ಯಜ್ಞದ ಕುದುರೆಯು ಇದು;]; ನಿರ್ವಹಿಸಲು ಆರ್ಪರು ಆರಾದೊಡಂ ತಡೆಯಲೆಂದು ಇರ್ದ ಲೇಖನವನು ಓದಿ ಗರ್ವಮಂ ಬಿಡಿಸದೆ ಇರ್ದೊಡೆ ತನ್ನ ಮಾತೆಯಂ ಸರ್ವಜನಮುಂ ಬಂಜೆ ಎನ್ನದಿರ್ದಪುದೆ=[ಅವನನ್ನು ಎದುರಿಸಿ ಯುದ್ಧಮಾಡಲು ಶಕ್ತಿ ಇರುವವರು ಯಾರಾದರೂ ಇದನ್ನು ತಡೆದು ಕಟ್ಟಬಹುದು', ಎಂದು ಇದ್ದ ಲೇಖನವನ್ನು ಲವನು ಓದಿ, ಗರ್ವವನ್ನು ಬಿಡಿಸದೆ ಇದ್ದರೆ ತನ್ನ ತಾಯಿಯನ್ನು ಸರ್ವಜನರೂ ಬಂಜೆ ಎನ್ನದಿರುವರೇ! ತಾನು ಇದ್ದೂ ಇಲ್ಲದಂತೆ.]; ತನಗೆ ಉರ್ವತೋಳ್ಗಳು ಇವು ಏತಕೆ ಎಂದು ಸಲೆ (ಸರಿಯಾಗಿ) ವಾಸಿಯಂ (ತೋಡ, ಕಡಗ, ಕವಚ) ತೊಟ್ಟು ಲವನು ಉರಿದೆದ್ದನು=[ತನಗೆ ಎರಡು ತೋಳುಗಳು ಉಪಯೋಗಿಸದಿದ್ದರೆ ಇವು ಏತಕ್ಕೆ? ಎಂದು ಸರಿಯಾಗಿ ಕವಚವನ್ನು ತೊಟ್ಟು ಲವನು (ರಾಮನು ಒಬ್ಬನೇ ವೀರನೇ ಎಂದು)) ಸಿಟ್ಟುಗೊಂಡನು].
 • ತಾತ್ಪರ್ಯ-:ಯಜ್ಞದ ಕುದುರೆಯ ಹಣೆಯ ಪಟ್ಟೆಯಲ್ಲಿ, 'ಭೂಮಿಯಲ್ಲಿ ಕೌಸಲ್ಯೆಯು ಪಡೆದ ಮಗ ರಾಮನು ಒಬ್ಬನೇ ವೀರನು; ಆತನ ಅಶ್ವಮೇಧ ಯಜ್ಞದ ಕುದುರೆಯು ಇದು;ಅವನನ್ನು ಎದುರಿಸಿ ಯುದ್ಧಮಾಡಲು ಶಕ್ತಿ ಇರುವವರು ಯಾರಾದರೂ ಇದನ್ನು ತಡೆದು ಕಟ್ಟಬಹುದು', ಎಂದು ಇದ್ದ ಲೇಖನವನ್ನು ಲವನು ಓದಿ, ಗರ್ವವನ್ನು ಬಿಡಿಸದೆ ಇದ್ದರೆ ತನ್ನ ತಾಯಿಯನ್ನು ಸರ್ವಜನರೂ ಬಂಜೆ ಎನ್ನದಿರುವರೇ! ತಾನು ಇದ್ದೂ ಇಲ್ಲದಂತೆ. ತನಗೆ ಎರಡು ತೋಳುಗಳು ಉಪಯೋಗಿಸದಿದ್ದರೆ ಇವು ಏತಕ್ಕೆ? ಎಂದು ಸರಿಯಾಗಿ ಕವಚವನ್ನು ತೊಟ್ಟು ಲವನು (ರಾಮನು ಒಬ್ಬನೇ ವೀರನೇ ಎಂದು)) ಸಿಟ್ಟುಗೊಂಡನು].
 • (ಪದ್ಯ-೭)

ಪದ್ಯ :೮:[ಸಂಪಾದಿಸಿ]

ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ | ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್ | ಮಿಗೆ ನಡುಗಿ ಬೇಡಬೇಡರಸುಗ ವಾಜಿಯಂ ಬಿಡು ಬಡಿವರೆಮ್ಮನೆನಲು ||
ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ | ಮಗನಿದಕೆ ಬೆದುವನೆ ಪೋಗಿ ನೀವೆಂದು ಲವ | ನಗಡುತದಿಂದೆ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ತೆಗೆದು ಉತ್ತರೀಯಮಂ ಮುರಿದು ಕುದುರೆಯ ಗಳಕೆ ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ=[ಲವನು, ಹೊದೆದ ಉತ್ತರೀಯವನ್ನು (ಶಾಲು) ಸುರಳಿಸುತ್ತಿ ಹುರಿಮಾಡಿ ಕುದುರೆಯ ಕುತ್ತಿಗೆಗೆ ಬಿಗಿದು ಬಾಳೆಯಮರಕ್ಕೆ ಕಟ್ಟಲು,]; ಮುನಿಸುತರ್ ಮಿಗೆ ನಡುಗಿ ಬೇಡಬೇಡ ಅರಸುಗಳ ವಾಜಿಯಂ ಬಿಡು ಬಡಿವರು ಎಮ್ಮನು ಎನಲು=[ಮುನಿಕುಮಾರರು ಬಹಳಹೆದರಿ ನಡುಗುತ್ತಾ, 'ಬೇಡಬೇಡ ರಾಜರ ಕುದುರೆಯನ್ನು ಬಿಡು; ಅವರು ನಮ್ಮನ್ನು ಹೊಡೆಯುವರು ಎನ್ನಲು,]; ನಗುತೆ ಪಾರ್ವರ ಮಕ್ಕಳು ಅಂಜಿದೊಡೆ ಜಾನಕಿಯ ಮಗನು ಇದಕೆ ಬೆದರುವನೆ ಪೋಗಿ ನೀವ್ ಎಂದು ಲವನು ಅಗಡುತದಿಂದೆ ಬಿಲ್ದಿರುವನು ಏರಿಸಿ ತೀಡಿ ಜೇಗೈದು ನಿಂತಿರ್ದನು=[ನಗುತ್ತಾ ಹಾರುವರ/ಬ್ರಾಹ್ಮಣರ ಮಕ್ಕಳು ಹೆದರಿದರೆ, ಕ್ಷತ್ರಿಯನಾದ ಜಾನಕಿಯ ಮಗನು ಇದಕ್ಕೆ ಹೆದರುವನೆ! ನೀವು ಹೋಗಿ ಎಂದು ಲವನು ಶೌರ್ಯದಿಂದ ಬಿಲ್ಲಿನ ದಾರವನ್ನು ಏರಿಸಿ ತೀಡಿ ಜೇಂಕಾರ ಮಾಡಿ ನಿಂತಿದ್ದನು.]
 • ತಾತ್ಪರ್ಯ-:ಲವನು, ಹೊದೆದ ಉತ್ತರೀಯವನ್ನು (ಶಾಲು) ಸುರಳಿಸುತ್ತಿ ಹುರಿಮಾಡಿ ಕುದುರೆಯ ಕುತ್ತಿಗೆಗೆ ಬಿಗಿದು ಬಾಳೆಯಮರಕ್ಕೆ ಕಟ್ಟಲು,ಮುನಿಕುಮಾರರು ಬಹಳಹೆದರಿ ನಡುಗುತ್ತಾ, 'ಬೇಡಬೇಡ ರಾಜರ ಕುದುರೆಯನ್ನು ಬಿಡು; ಅವರು ನಮ್ಮನ್ನು ಹೊಡೆಯುವರು ಎನ್ನಲು, ನಗುತ್ತಾ ಹಾರುವರ/ಬ್ರಾಹ್ಮಣರ ಮಕ್ಕಳು ಹೆದರಿದರೆ, ಕ್ಷತ್ರಿಯನಾದ ಜಾನಕಿಯ ಮಗನು ಇದಕ್ಕೆ ಹೆದರುವನೆ! ನೀವು ಹೋಗಿ ಎಂದು, ಲವನು ಶೌರ್ಯದಿಂದ ಬಿಲ್ಲಿನ ದಾರವನ್ನು ಏರಿಸಿ ತೀಡಿ ಜೇಂಕಾರ ಮಾಡಿ ನಿಂತಿದ್ದನು.
 • (ಪದ್ಯ-೮)

ಪದ್ಯ :೯:[ಸಂಪಾದಿಸಿ]

ಕುದುರೆಗಾವಲ ಸುಭಟರನಿತರೊಳೊದಗಿ ಬಂದು | ಕದಳೀದ್ರುಮಕೆ ಕಟ್ಟಿದ ತುರಂಗಮಂ ಕಂಡು | ಸದಮಲ ಬ್ರಹ್ಮಚಾರಿಗಳನಾರ್ಭಟಿಸಿ ವಾಜಿಯನೇಕೆ ಬಿಗಿದಿರೆನಲು ||
ಬೆದರಿ ನಾವಲ್ಲಿವಂ ಬೇಡಬೇಡೆನೆ ಬಂಧಿ | ಸಿದನೆಂದು ಲವನಂ ಕರಾಗ್ರದಿಂ ತೋರಿಸಿದ | ರದಟರೀತಂ ತರಳ ನರಿಯದೆಸೆಗಿದನೆಂದು ಬಿಡಹೇಳಿ ಗರ್ಜಿಸಿದರು ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕುದುರೆಗಾವಲ ಸುಭಟರು ಅನಿತರೊಳು ಒದಗಿ ಬಂದು ಕದಳೀದ್ರುಮಕೆ ಕಟ್ಟಿದ ತುರಂಗಮಂ ಕಂಡು ಸದ್ ಅಮಲ ಬ್ರಹ್ಮಚಾರಿಗಳನು ಆರ್ಭಟಿಸಿ ವಾಜಿಯನು ಏಕೆ ಬಿಗಿದಿರೆನಲು=[ಕುದುರೆಯ ಕಾವಲ ವೀರಭಟರು ಅಷ್ಟರಲ್ಲಿ ಒಟ್ಟಾಗಿ ಬಂದು ಬಾಳೆಯಮರಕ್ಕೆ ಕಟ್ಟಿದ ಕುದುರೆಯನ್ನು ಕಂಡು, ಪರಿಶುದ್ಧ ಬ್ರಹ್ಮಚಾರಿಗಳನ್ನು ಕುರಿತು ಆರ್ಭಟಿಸಿ, ಕುದುರೆಯನ್ನು ಏಕೆ ಕಟ್ಟಿದಿರಿ ಎನ್ನಲು,]; ಬೆದರಿ ನಾವಲ್ಲ ಇವಂ ಬೇಡಬೇಡೆನೆ ಬಂಧಿಸಿದನು ಎಂದು ಲವನಂ ಕರಾಗ್ರದಿಂ (ಕರ+ಅಗ್ರ=ಕೈತುದಿ) ತೋರಿಸಿದರು ಅದಟರು ಈತಂ ತರಳನು ಅರಿಯದೆ ಎಸೆಗಿದನು ಎಂದು ಬಿಡಹೇಳಿ ಗರ್ಜಿಸಿದರು=[ಮುನಿ ಬಾಲಕರು ಹೆದರಿ 'ನಾವಲ್ಲ ಇವನು ಕಟ್ಟಿದನು, ಬೇಡಬೇಡವೆಂದರೂ ಬಂಧಿಸಿದನು', ಎಂದು ಲವನನ್ನು ಬೆರಳು ತುದಿಯಿಂದ ತೋರಿಸಿದರು. ಆ ವೀರರು, ಈತನು ಹುಡುಗನು ತಿಳಿಯದೆ ಕುದುರೆಯನ್ನು ಕಟ್ಟಿದ್ದಾನೆ, ಎಂದು ಬಿಡಲು ಹೇಳಿ ಗರ್ಜಿಸಿದರು].
 • ತಾತ್ಪರ್ಯ-:ಕುದುರೆಯ ಕಾವಲ ವೀರಭಟರು ಅಷ್ಟರಲ್ಲಿ ಒಟ್ಟಾಗಿ ಬಂದು ಬಾಳೆಯಮರಕ್ಕೆ ಕಟ್ಟಿದ ಕುದುರೆಯನ್ನು ಕಂಡು, ಪರಿಶುದ್ಧ ಬ್ರಹ್ಮಚಾರಿಗಳನ್ನು ಕುರಿತು ಆರ್ಭಟಿಸಿ, ಕುದುರೆಯನ್ನು ಏಕೆ ಕಟ್ಟಿದಿರಿ ಎನ್ನಲು, ಮುನಿ ಬಾಲಕರು ಹೆದರಿ 'ನಾವಲ್ಲ ಇವನು ಕಟ್ಟಿದನು, ಬೇಡಬೇಡವೆಂದರೂ ಬಂಧಿಸಿದನು', ಎಂದು ಲವನನ್ನು ಬೆರಳು ತುದಿಯಿಂದ ತೋರಿಸಿದರು. ಆ ವೀರರು, ಈತನು ಹುಡುಗನು, ತಿಳಿಯದೆ ಕುದುರೆಯನ್ನು ಕಟ್ಟಿದ್ದಾನೆ, ಎಂದು ಬಿಡಲು ಹೇಳಿ ಗರ್ಜಿಸಿದರು.
 • (ಪದ್ಯ-೯)

ಪದ್ಯ :೧೦:[ಸಂಪಾದಿಸಿ]

ವಿಕ್ರಮವಿದೇಕೆ ಬಿಡೆನಶ್ವಮಂ ಮೇಣ್ಬಿಡಲು | ಪಕ್ರಮಿಸಿದವರ್ಗಳ ಕರಮನರಿವೆನೆನಲವರ | ತಿಕ್ರಮಿಸಿ ವಾಜಿಯಂ ಬಿಡುವೊಡೈತರಲವರ ಕೈಗಳಂ ಕೋಪದಿಂ ||
ವಕ್ರಮಿಲ್ಲದೆ ಕೋಲ್ಗಳಿಂದೆಚ್ಚು ಕಡಿದೊಡನೆ | ಶಕ್ರನದ್ರಿಯ ಮೇಲೆ ಮಳೆಗೆರವೊಲಾ ಸೈನ್ಯ | ಚಕ್ರಮಂ ಮುಸುಕಿದಂ ವೀರ ಲವನಾಕ್ಷಣದೊಳೇನೆಂಬೆನದ್ಭುತವನು ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ವಿಕ್ರಮವು ಇದೇಕೆ ಬಿಡೆನು ಅಶ್ವಮಂ ಮೇಣ್ ಬಿಡಲು ಉಪಕ್ರಮಿಸಿದ ಅವರ್ಗಳ ಕರಮನು ಅರಿವೆನು ಎನಲು=[ಲವನು, 'ನೀವು ಆರ್ಭಟಿಸುವುದು ಏಕೆ? ಕುದುರೆಯನ್ನು ಬಿಡುವುದಿಲ್ಲ. ಕಟ್ಟಿದ ಕುದುರೆಯನ್ನು ಬಿಡಿಸಲು ಬಂದರೆ ಅವರ ಕೈಗಳನ್ನು ಕತ್ತರಿಸುವೆನು', ಎನ್ನಲು]; ಅವರು ಅತಿಕ್ರಮಿಸಿ ವಾಜಿಯಂ ಬಿಡುವೊಡೆ ಐತರಲು ಅವರ ಕೈಗಳಂ ಕೋಪದಿಂ ವಕ್ರಮಿಲ್ಲದೆ ಕೋಲ್ಗಳಿಂದ ಎಚ್ಚು ಕಡಿದೊಡನೆ=[ಅವರು ಮಾತು ಮೀರಿ,ಅತಿಕ್ರಮಿಸಿ ಕುದುರೆಯನ್ನು ಬಿಡಲು ಬರಲು, ಕೋಪದಿಂದ, ವ್ಯತ್ಯಾಸವಿಲ್ಲದೆ ಅವರ ಕೈಗಳನ್ನು ಮಾತ್ರಾ ಬಾಣಗಳಿಂದ ಹೊಡೆದು ಕತ್ತರಿಸಲು]; ಶಕ್ರನು ಅದ್ರಿಯ ಮೇಲೆ ಮಳೆಗೆರವೊಲ್ ಆ ಸೈನ್ಯ ಚಕ್ರಮಂ ಮುಸುಕಿದಂ ವೀರ ಲವನು ಆಕ್ಷಣದೊಳು ಏನೆಂಬೆನು ಅದ್ಭುತವನು=[ಇಂದ್ರನು ಬೆಟ್ಟಗಳಮೇಲೆ ಮೇಲೆ ಮಳೆಸುರಿಸಿದಂತೆ, ಆ ಸೈನ್ಯಸಮೂಹವನ್ನು ವೀರ ಲವನು ಆಕ್ಷಣದಲ್ಲಿ ಬಾಣದಿಂದ ಮುಚ್ಚಿದನು, ಏನು ಹೇಳಲಿಬೆನು ಅದ್ಭುತವನು, ಎಂದನು ಜೈಮಿನಿ ಜನಮೇಜಯನಿಗೆ.]
 • ತಾತ್ಪರ್ಯ-:ಲವನು, 'ನೀವು ಆರ್ಭಟಿಸುವುದು ಏಕೆ? ಕುದುರೆಯನ್ನು ಬಿಡುವುದಿಲ್ಲ. ಕಟ್ಟಿದ ಕುದುರೆಯನ್ನು ಬಿಡಿಸಲು ಬಂದರೆ ಅವರ ಕೈಗಳನ್ನು ಕತ್ತರಿಸುವೆನು', ಎನ್ನಲು, ಅವರು ಮಾತು ಮೀರಿ,ಅತಿಕ್ರಮಿಸಿ ಕುದುರೆಯನ್ನು ಬಿಡುವುದಕ್ಕೆ ಬರಲು, ಕೋಪದಿಂದ, ವ್ಯತ್ಯಾಸವಿಲ್ಲದೆ ಅವರ ಕೈಗಳನ್ನು ಮಾತ್ರಾ ಬಾಣಗಳಿಂದ ಹೊಡೆದು ಕತ್ತರಿಸಲು, ಇಂದ್ರನು ಬೆಟ್ಟಗಳಮೇಲೆ ಮೇಲೆ ಮಳೆಸುರಿಸಿದಂತೆ, ಆ ಸೈನ್ಯಸಮೂಹವನ್ನು ವೀರ ಲವನು ಆಕ್ಷಣದಲ್ಲಿ ಬಾಣದಿಂದ ಮುಚ್ಚಿದನು, ಏನು ಹೇಳಲಿ ಅದ್ಭುತವನು, ಎಂದನು ಜೈಮಿನಿ ಜನಮೇಜಯನಿಗೆ.]
 • (ಪದ್ಯ-10)

ಪದ್ಯ :೧೧:[ಸಂಪಾದಿಸಿ]

ಬಾಲಕನ ಮೇಲೆ ಕವಿದುದು ಬಳಿಕ ಮುಳಿದು ಹಯ | ಪಾಲಕಬಲಂ ಕರಿ ತುರಗ ರಥ ಪದಾತಿಗಳ | ಜಾಲಕವನೋರ್ವನೆನ್ನದೆ ಬಾಣ ಪರಶು ತೋಮರ ಶಕ್ತಿ ಸುರಗಗಿಳೊಳು ||
ಕಾಲಕಖಿಳ ಪ್ರಾಣಿಗಳನೈದೆ ಸಂಹರಿಪ | ಶೂಲಕರನೆನೆಲವಂ ಕೊಲುತಿರ್ದನನಿಬರಂ | ಕೋಲ ಕಡುವಳೆಗರೆದು ಮುನಿಪನಿತ್ತಕ್ಷಯ ನಿಷಂಗಮೆಸೆದಿರೆ ಬೆನ್ನೊಳು ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಾಲಕನ ಮೇಲೆ ಕವಿದುದು ಬಳಿಕ ಮುಳಿದು ಹಯಪಾಲಕ ಬಲಂ=[ಬಳಿಕ ಬಾಲಕ ಲವನ ಮೇಲೆ ಕುದುರೆ ಕಾವಲಿನ ಸೈನ್ಯ ಸಿಟ್ಟಿನಿಂದ ಮುತ್ತಿತು;]; ಕರಿ ತುರಗ ರಥ ಪದಾತಿಗಳ ಜಾಲಕವನು ಓರ್ವನು ಎನ್ನದೆ ಬಾಣ ಪರಶು ತೋಮರ ಶಕ್ತಿ ಸುರಗಗಿಳೊಳು=[ಅವು ಆನೆ,ಕುದುರೆ, ರಥ ಪದಾತಿಗಳ ಸಮೂಹವು, ಒಬ್ಬನೇ ಎನ್ನದೆ ಬಾಣ ಪರಶು ತೋಮರ ಶಕ್ತಿ ಸುರಗಗಿಳಿಂದ ಧಾಳಿಮಾಡಿದವು;]; ಕಾಲಕಖಿಳ (ಪ್ರಳಯಕಾಲಕ್ಕೆ) ಪ್ರಾಣಿಗಳನೈದೆ ಸಂಹರಿಪ ಶೂಲಕರನೆನೆಲವಂ ಕೊಲುತಿರ್ದನನಿಬರಂ ಕೋಲ ಕಡುವಳೆಗರೆದು ಮುನಿಪನಿತ್ತಕ್ಷಯ ನಿಷಂಗಮೆಸೆದಿರೆ ಬೆನ್ನೊಳು=[ಪ್ರಳಯ ಕಾಲದಲ್ಲಿ ಎಲ್ಲಾ ಪ್ರಾಣಿಗಳು ಬಂದಾಗ ಸಂಹರಿಸುವ ರುದ್ರನು ಎನ್ನುವಂತೆ ಮುನಿಯು ಕೊಟ್ಟ ಅಕ್ಷಯ ಬತ್ತಳಿಕೆಯು ಬೆನ್ನಿನಲ್ಲಿ ಶೋಭಿಸುತ್ತಿರಲು ಲವನು ಎಲ್ಲರನ್ನೂ ಬಾಣಗಳ ಮಳೆಕರೆದು ಕೊಲ್ಲುತ್ತಿದ್ದನು.
 • ತಾತ್ಪರ್ಯ-:ಬಳಿಕ ಬಾಲಕ ಲವನ ಮೇಲೆ ಕುದುರೆ ಕಾವಲಿನ ಸೈನ್ಯ ಸಿಟ್ಟಿನಿಂದ ಮುತ್ತಿತು; ಅವು ಎಂದರೆ, ಆನೆ,ಕುದುರೆ, ರಥ ಪದಾತಿಗಳ ಸಮೂಹವು, ಒಬ್ಬನೇ ಎನ್ನದೆ ಬಾಣ ಪರಶು ತೋಮರ ಶಕ್ತಿ ಸುರಗಗಿಳಿಂದ ಧಾಳಿ ಮಾಡಿದವು, ಪ್ರಳಯ ಕಾಲದಲ್ಲಿ ಎಲ್ಲಾ ಪ್ರಾಣಿಗಳು ಬಂದಾಗ ಸಂಹರಿಸುವ ರುದ್ರನು ಎನ್ನುವಂತೆ ಮುನಿಯು ಕೊಟ್ಟ ಅಕ್ಷಯ ಬತ್ತಳಿಕೆಯು ಬೆನ್ನಿನಲ್ಲಿ ಶೋಭಿಸುತ್ತಿರಲು ಲವನು ಎಲ್ಲರನ್ನೂ ಬಾಣಗಳ ಮಳೆಕರೆದು ಕೊಲ್ಲುತ್ತಿದ್ದನು.
 • (ಪದ್ಯ-೧೧)XXIII

ಪದ್ಯ :೧೨:[ಸಂಪಾದಿಸಿ]

ಸಂಖ್ಯೆಯಿಲ್ಲದೆ ಮೇಲೆ ಬೀಳ್ವಕೈದುಗಳೆಲ್ಲ | ಮಂ ಖಂಡಿಸುತ್ತೊಡನೆ ಮುತ್ತಿದರಿ ಚತುರಂಗ | ಮಂ ಖಾತಿಯಿಂದೆ ಸಂಹರಿಸುತೊಂದೊಂದು ರಿಪುಬಾಣಕೈದಂಬುಗಳನು ||
ಪುಂಖಾನುಪುಂಖದಿಂದಿಸುವ ಬಾಲಕನಿಸುಗೆ | ಯಿಂ ಖಿಲಪ್ರಾಯಮಾಗಿರ್ದ ನಿಜಬಲಜಾಲ | ಮಂ ಖರಾಂತಕನನುಜನೀಕ್ಷಿಸಿ ಕನಲ್ದೇರಿದಂ ಮಹಾಮಣಿರಥವನು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಸಂಖ್ಯೆಯಿಲ್ಲದೆ ಮೇಲೆ ಬೀಳ್ವ ಕೈದುಗಳ ಎಲ್ಲಮಂ ಖಂಡಿಸುತ್ತ ಒಡನೆ ಮುತ್ತಿದ ಅರಿ ಚತುರಂಗಮಂ ಖಾತಿಯಿಂದೆ ಸಂಹರಿಸುತ ಒಂದೊಂದು ರಿಪುಬಾಣಕೆ ಐದಂಬುಗಳನು=[ಲೆಕ್ಕವಿಲ್ಲದಷ್ಟು ಸಂಖ್ಯೆಯಿಂದ ಮೇಲೆ ಬೀಳುವ ಆಯುಧಗಳೆಲ್ಲವನ್ನೂ ಖಂಡಿಸುತ್ತ,ಕೂಡಲೆ ತನ್ನನ್ನು ಮುತ್ತಿದ ಶತ್ರು ಚತುರಂಗಸೈನ್ಯವನ್ನೂ ಶೌರ್ಯದಿಂದ ಸಂಹರಿಸುತ್ತಾ ಒಂದೊಂದು ಶತ್ರುಬಾಣಕ್ಕೆ ಐದು ಬಾನಗಳನ್ನು]; ಪುಂಖಾನುಪುಂಖದಿಂದ ಇಸುವ ಬಾಲಕನ ಇಸುಗೆಯಿಂ =[ಪುಂಖಾನುಪುಂಖದಿಂದ/ ಒಂದಾದಮೇಲೆ ಒಂದರಂತೆ ಹೊಡೆಯುವ ಬಾಲಕನ ಬಾಣಪ್ರಯೋಗದಿಂದ ];ಖಿಲಪ್ರಾಯಂ (ಖಿಲ=ನಾಶ) ಆಗಿರ್ದ ನಿಜಬಲಜಾಲಮಂ ಖರಾಂತಕನ (ಖರನ+ಅಂತಕ=ಕೊಂದವನು ರಾಂನ ಆನುಜ=ತಮ್ಮ) ಅನುಜನು ಈಕ್ಷಿಸಿ ಕನಲ್ದು ಏರಿದಂ ಮಹಾಮಣಿರಥವನು=[ನಾಶವಾದಂತೆ ಇದ್ದ ತನ್ನ ಸೈನ್ಯಸಮೂಹವನ್ನು ಶತ್ರುಘ್ನನು ನೋಡಿ ಸಿಟ್ಟುಗೊಂಡು ತನ್ನ ದೊಡ್ಡ ಮಣಿರಥವನ್ನು ಹತ್ತಿದನು.]
 • ತಾತ್ಪರ್ಯ-:ಲೆಕ್ಕವಿಲ್ಲದಷ್ಟು ಸಂಖ್ಯೆಯಿಂದ ಮೇಲೆ ಬೀಳುವ ಆಯುಧಗಳೆಲ್ಲವನ್ನೂ ಲವನು ಖಂಡಿಸುತ್ತ,ಕೂಡಲೆ ತನ್ನನ್ನು ಮುತ್ತಿದ ಶತ್ರು ಚತುರಂಗಸೈನ್ಯವನ್ನೂ ಶೌರ್ಯದಿಂದ ಸಂಹರಿಸುತ್ತಾ ಒಂದೊಂದು ಶತ್ರುಬಾಣಕ್ಕೆ ಐದು ಬಾಣಗಳನ್ನು ಪುಂಖಾನುಪುಂಖದಿಂದ/ ಒಂದಾದಮೇಲೆ ಒಂದರಂತೆ ಹೊಡೆಯುವ ಬಾಲಕನ ಬಾಣಪ್ರಯೋಗದಿಂದ ನಾಶವಾದಂತೆ ಇದ್ದ ತನ್ನ ಸೈನ್ಯಸಮೂಹವನ್ನು, ಶತ್ರುಘ್ನನು ನೋಡಿಸಿಟ್ಟುಗೊಂಡು ತನ್ನ ದೊಡ್ಡ ಮಣಿರಥವನ್ನು ಹತ್ತಿದನು.
 • (ಪದ್ಯ-೧೨)

ಪದ್ಯ :೧೩:[ಸಂಪಾದಿಸಿ]

ದುರಿತ ಗಣಮಿರ್ದಪುದೆ ಗೌತಮಿಯೊಳಾಳ್ದಂಗೆ | ಪರಮಯೋಗಿಗೆ ಭವದ ಬಂಧನಂ ಬಂದಪುದೆ | ಪರಸೈನ್ಯದುರುಬೆ ರಘುಕುಲಜರ್ಗೆ ತೋರುವುದೆ ಪೇ(ಕೇ)ಳವನಿಪಾಲತಿಲಕ ||
ತರಳನಾದೊಡೆ ಲವಂ ಬೆದರುವನೆ ನಿಮಿಷದೊಳ್ | ಪರಿ(ರೆ)ಗಡಿದನನಿತು ಚತುರಂಗಮಂ ಶತು ಘ್ನ | ನುರವಣಿಸೆ ತಡೆದನೆರಗುವ ಸಿಡಿಲ ಗರ್ಜನೆಗೆ ಮಲೆವ ಮರಿಸಿಂಗದಂತೆ ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ದುರಿತ ಗಣಂ (ಪಾಪ ಸಮೂಹ) ಇರ್ದಪುದೆ ಗೌತಮಿಯೊಳು (ಗೋದಾವರಿಯಲ್ಲಿ) ಆಳ್ದಂಗೆ (ಮುಳುಗಿದವನಿಗೆ), ಪರಮಯೋಗಿಗೆ ಭವದ ಬಂಧನಂ ಬಂದಪುದೆ=[ಪಾಪ ರಾಶಿಯು ಇರುಪುದೆ ಗೋದಾವರಿ ನದಿಯಲ್ಲಿ ಮುಳುಗಿದವನಿಗೆ, ಪರಮಯೋಗಿಗೆ ಸಂಸಾರದ ಬಂಧನವು ಬರುವುದೆ? ಬರಲಾರದು.] ಪರಸೈನ್ಯದ ಉರುಬೆ ರಘುಕುಲಜರ್ಗೆ ತೋರುವುದೆ ಪೇ(ಕೇ)ಳವನಿಪಾಲತಿಲಕ, ತರಳನು ಆದೊಡೆ ಲವಂ ಬೆದರುವನೆ=[ಶತ್ರು ಸೈನ್ಯದ ಪ್ರತಾಪ ರಘುಕುಲದಲ್ಲಿ ಜನಿಸಿದವರಿಗೆ ಭಯವನ್ನು ತೋರಿಸುವುದೆ? ಇಲ್ಲ! ಜನಮೇಜಯನೇ ಹೇಳು, ಹುಡುಗನು ಆದಮಾತ್ರಕ್ಕೆ ಲವನು ಹೆದರುವನೆ?]; ನಿಮಿಷದೊಳ್ ಪರಿ (ರೆ)ಗಡಿದನು ಅನಿತು ಚತುರಂಗಮಂ ಶತುಘ್ನನು ಉರವಣಿಸೆ ತಡೆದನು ಎರಗುವ ಸಿಡಿಲ ಗರ್ಜನೆಗೆ ಮಲೆವ ಮರಿಸಿಂಗದಂತೆ=[ನಿಮಿಷದಲ್ಲಿ ಸವರಿದನು ಅಷ್ಟೂ ಚತುರಂಗ ಸೈನ್ಯವನ್ನು, ಶತುಘ್ನನು ಶೌರ್ಯದಿಂದ ಮೇಲೆಬೀಳಲು ಅವನನ್ನೂ ತಡೆದನು. ಹೊಡೆಯವ ಸಿಡಿಲ ಗರ್ಜನೆಗೆ ಎದುರು ಬೀಳುವ ಮರಿಸಿಂಹದಂತೆ ಶತ್ರುಘ್ನನನ್ನು ಎದುರಿಸಿದನು.]
 • ತಾತ್ಪರ್ಯ-: ಗೋದಾವರಿ ನದಿಯಲ್ಲಿ ಮುಳುಗಿದವನಿಗೆ ಪಾಪ ರಾಶಿಯು ಇರುಪುದೆ, ಪರಮಯೋಗಿಗೆ ಸಂಸಾರದ ಬಂಧನವು ಬರುವುದೆ? ಬರಲಾರದು.ಶತ್ರು ಸೈನ್ಯದ ಪ್ರತಾಪ ರಘುಕುಲದಲ್ಲಿ ಜನಿಸಿದವರಿಗೆ ಭಯವನ್ನು ತೋರಿಸುವುದೆ? ಇಲ್ಲ! ಜನಮೇಜಯನೇ ಹೇಳು, ಹುಡುಗನು ಆದಮಾತ್ರಕ್ಕೆ ಲವನು ಹೆದರುವನೆ? ನಿಮಿಷದಲ್ಲಿ ಸವರಿದನು ಅಷ್ಟೂ ಚತುರಂಗ ಸೈನ್ಯವನ್ನು, ಶತುಘ್ನನು ಶೌರ್ಯದಿಂದ ಮೇಲೆಬೀಳಲು ಅವನನ್ನೂ ತಡೆದನು. ಹೊಡೆಯವ ಸಿಡಿಲ ಗರ್ಜನೆಗೆ ಎದುರು ಬೀಳುವ ಮರಿಸಿಂಹದಂತೆ ಶತ್ರುಘ್ನನನ್ನು ಎದುರಿಸಿದನು.
 • (ಪದ್ಯ-೧೩)

ಪದ್ಯ :೧೪:[ಸಂಪಾದಿಸಿ]

ಒತ್ತಿಬಹ ಶತ್ರುಘ್ನನುರುಬೆಗೆ ಲವಂ ತನ್ನ | ಚಿತ್ತದೊಳ್ ಮಾಹೇಶಮಂತ್ರಮಂ ಸ್ಮರಿಸುತ್ತೆ | ಮತ್ತೆ ನಿರ್ಭಯನಾಗಿ ಮಾರಾಂತನಾತನೆಲವೆಲವೊ ನೀಂ ಪಸುಳೆ ನಿನಗೆ ||
ತೆತ್ತಿಗರದಾರಕಟ ಸಾಯದಿರ್ ಪೋಗೆನುತೆ | ಹತ್ತುಶರದಿಂದೆಚ್ಚೊಡವನ ಬಾಣಂಗಳಂ | ಕತ್ತರಿಸಿ ಕೂಡೆ ಭರತಾನುಜನ ಕಾರ್ಮುಕದ ಹೆದೆಯನಿಕ್ಕಡಿಗೆಯ್ದನು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಒತ್ತಿಬಹ ಶತ್ರುಘ್ನನ ಉರುಬೆಗೆ ಲವಂ ತನ್ನ ತತ್ತದೊಳ್ ಮಾಹೇಶಮಂತ್ರಮಂ ಸ್ಮರಿಸುತ್ತೆ ಮತ್ತೆ ನಿರ್ಭಯನಾಗಿ ಮಾರಾಂತನು=[ಮುಂದೆ ನುಗ್ಗಿ ಬರುತ್ತಿರುವ ಶತ್ರುಘ್ನನ ಪ್ರತಾಪಕ್ಕೆ ಲವನು ತನ್ನ ಮನಸ್ಸಿನಲ್ಲಿ ಶಿವನ ಮಂತ್ರವನ್ನು ಸ್ಮರಿಸುತ್ತ ಮತ್ತೆ ಹೆದರಿಕೆ ಇಲ್ಲದೆ ಎದುರಿಸಿದನು]; ಆತನು ಎಲವೆಲವೊ ನೀಂ ಪಸುಳೆ ನಿನಗೆ ತೆತ್ತಿಗರು ಅದಾರು ಅಕಟ ಸಾಯದಿರ್ ಪೋಗೆನುತೆ ಹತ್ತುಶರದಿಂದ ಎಚ್ಚೊಡೆ=[(ಆತನು)ಶತ್ರುಘ್ನನು ಎಲವೋ ಎಲವೊ ನೀನು ಚಿಕ್ಕ ಹುಡುಗ,ನಿನಗೆ ತಂದೆತಾಯಿಗಳುಅದು ಅದು ಯಾರು ಅಕಟ! ಸಾಯದಿರು ಹೋಗು ಎನ್ನುತ್ತಾ ಹತ್ತುಶರದಿಂದ ಹೊಡೆದನು.]; ಅವನ ಬಾಣಂಗಳಂ ಕತ್ತರಿಸಿ ಕೂಡೆ ಭರತ ಆನುಜನ ಕಾರ್ಮುಕದ ಹೆದೆಯನೂ ಇಕ್ಕಡಿಗೆಯ್ದನು=[ಅವನ ಬಾಣಗಳನ್ನು ಲವನು ಕತ್ತರಿಸಿ ಕೂಡೆಜೊತೆಗೆ ಕೂಡಲೇ ಭರತನ ತಮ್ಮನ ಬಿಲ್ಲಿನ ಹೆದೆಯನ್ನು ಎರಡುತುಂಡಾಗಿ ಕತ್ತರಿಸಿದನು].
 • ತಾತ್ಪರ್ಯ-: ಮುಂದೆ ನುಗ್ಗಿ ಬರುತ್ತಿರುವ ಶತ್ರುಘ್ನನ ಪ್ರತಾಪಕ್ಕೆ ಲವನು ತನ್ನ ಮನಸ್ಸಿನಲ್ಲಿ ಶಿವನ ಮಂತ್ರವನ್ನು ಸ್ಮರಿಸುತ್ತ ಮತ್ತೆ ಹೆದರಿಕೆ ಇಲ್ಲದೆ ಎದುರಿಸಿದನು. (ಆತನು) ಶತ್ರುಘ್ನನು ಎಲವೋ ಎಲವೊ ನೀನು ಚಿಕ್ಕ ಹುಡುಗ, ನಿನಗೆ ತಂದೆತಾಯಿಗಳು ಅದು ಅದು ಯಾರು ಅಕಟ! ಸಾಯದಿರು ಹೋಗು ಎನ್ನುತ್ತಾ ಹತ್ತುಶರದಿಂದ ಹೊಡೆದನು. ಅವನ ಬಾಣಗಳನ್ನು ಲವನು ಕತ್ತರಿಸಿ ಜೊತೆಗೆ ಕೂಡಲೇ ಭರತನ ತಮ್ಮ ಶತ್ರುಘ್ನನ ಬಿಲ್ಲಿನ ಹೆದೆಯನ್ನು ಎರಡುತುಂಡಾಗಿ ಕತ್ತರಿಸಿದನು.
 • (ಪದ್ಯ-೧೪)

ಪದ್ಯ :೧೫:[ಸಂಪಾದಿಸಿ]

ತರಳನ ಪರಾಕ್ರಮಕೆ ಮೆಚ್ಚಿದಂ ಮತ್ತೊಂದು | ತಿರುವನಳವಡಿಸಿದಂ ಕಾರ್ಮುಕಕೆ ಶತ್ರುಘ್ನ | ನಿರದೆ ಕಣೆಮೂರರಿಂ ಬಾಲಕನ ಪಣೆಯನೆಚ್ಚೊಡೆ ನಗುತೆಪರಿಮಳಿಸುತೆ ||
ವಿರಹಿಗಳನಂಜಿಸುವ ಪೂಗಣೆವೊಲಾಯ್ತು ನಿ | ನ್ನುರವಣೆಯ ಬಾಣಂಗಳೆನುತ ಭರತಾನುಜನ | ತುರಗ ಸಾರಥಿ ವರೂಥ ಧ್ವಜ ಶರಾಸನಂಗಳನವಂ ತಡೆಗಡಿದನು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ತರಳನ ಪರಾಕ್ರಮಕೆ ಮೆಚ್ಚಿದಂ ಮತ್ತೊಂದು ತಿರುವನು ಅಳವಡಿಸಿದಂ ಕಾರ್ಮುಕಕೆ ಶತ್ರುಘ್ನನು ಇರದೆ ಕಣೆ ಮೂರರಿಂ ಬಾಲಕನ ಪಣೆಯನು ಎಚ್ಚೊಡೆ=[ಬಾಲಕನ ಪರಾಕ್ರಮಕ್ಕೆ ಮೆಚ್ಚಿದನು. ಶತ್ರುಘ್ನನು ಮತ್ತೊಂದು ದಾರವನ್ನು ಬಿಲ್ಲಿಗೆ ಅಳವಡಿಸಿದನು. ಶತ್ರುಘ್ನನು ಕೂಡಲೆ ಕಣೆ ಮೂರು ಬಾಣಗಳಿಂದ ಬಾಲಕನ ಹಣೆಗೆ ಗುರಿಮಾಡಿ ಹೊಡೆದನು.ಆಗ]; ನಗುತೆ ಪರಿಮಳಿಸುತೆ ವಿರಹಿಗಳನು ಅಂಜಿಸುವ ಪೂಗಣೆವೊಲಾಯ್ತು ನಿನ್ನ ಉರವಣೆಯ ಬಾಣಂಗಳು ಎನುತ ಭರತಾನುಜನ ತುರಗ ಸಾರಥಿ ವರೂಥ ಧ್ವಜ ಶರಾಸನಂಗಳನು ಅವಂ ತಡೆಗಡಿದನು=[ಭರತಾನುಜನ ತುರಗ ಸಾರಥಿ ವರೂಥ ಧ್ವಜ ಶರಾಸನಂಗಳನು (ಶರಕ್ಕೆ ಆಸನ=ಬಿಲ್ಲು) ಅವಂ ತಡೆಗಡಿದನು].ಲವನು ನಗುತ್ತಾ ಪರಿಮಳಕೊಡುವ ವಿರಹಿಗಳನ್ನು ಹೆದರಿಸುವ ಅಂಜಿಸುವ ಪುಷ್ಪಬಾಣಗಳಂತೆ ಆಯಿತು ನಿನ್ನ ಪರಾಕ್ರಮದ ಬಾಣಗಳು ಎನ್ನುತ್ತಾ ಶತ್ರುಘ್ನನ ಕುದುರೆ, ಸಾರಥಿ, ರಥ, ಧ್ವಜ, ಬಿಲ್ಲುಗಳನ್ನು ಹೊಡೆದನು.]
 • ತಾತ್ಪರ್ಯ-: ಬಾಲಕನ ಪರಾಕ್ರಮಕ್ಕೆ ಮೆಚ್ಚಿದನು. ಶತ್ರುಘ್ನನು ಮತ್ತೊಂದು ದಾರವನ್ನು ಬಿಲ್ಲಿಗೆ ಅಳವಡಿಸಿದನು. ಶತ್ರುಘ್ನನು ಕೂಡಲೆ ಕಣೆ ಮೂರು ಬಾಣಗಳಿಂದ ಬಾಲಕನ ಹಣೆಗೆ ಗುರಿಮಾಡಿ ಹೊಡೆದನು.ಆಗ ಲವನು ನಗುತ್ತಾ ಪರಿಮಳಕೊಡುವ ವಿರಹಿಗಳನ್ನು ಹೆದರಿಸುವ ಪುಷ್ಪಬಾಣಗಳಂತೆ ಆಯಿತು ನಿನ್ನ ಪರಾಕ್ರಮದ ಬಾಣಗಳು ಎನ್ನುತ್ತಾ ಶತ್ರುಘ್ನನ ಕುದುರೆ, ಸಾರಥಿ, ರಥ, ಧ್ವಜ, ಬಿಲ್ಲುಗಳನ್ನು ಹೊಡೆದನು.
 • (ಪದ್ಯ-೧೫)

ಪದ್ಯ :೧೬:[ಸಂಪಾದಿಸಿ]

ಕೋಪದಿಂ ಪೊಸರಥಕಡರ್ದು ಶತ್ರುಘ್ನನುರು | ಚಾಪಮಂ ಕೊಂಡು ದಿವ್ಯಾಸ್ತ್ರದಿಂತೆಸುತ ಬರ | ಲಾಪಥದೊಳೆಣಿಕೆಗೆಯ್ದಣ್ಣನಂ ಮಾತೆಯಂ ನೆನೆದು ಮನದೊಳು ಮರುಗುತ ||
ಆ ಪಸುಳೆ ಮತ್ತೆ ಕಡುಧೈರ್ಯಮಂ ತವೆ ತಾಳ್ದಿ | ನೋಪಮದೊಳೆಯ್ದುವ ಪಗೆಯ ಶರವನೆಡೆಯೊಳ್ ಪ್ರ | ತಾಪದಿಂ ಕತ್ತಿರಿಸಿ ಕೆಡಹಲ್ಕೆ ಬಯಲಾಯ್ತು ಕೂಟಸಾಕ್ಷಿಯ ಸಿರಿವೊಲು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕೋಪದಿಂ ಪೊಸರಥಕೆ ಅಡರ್ದು ಶತ್ರುಘ್ನನು ಉರುಚಾಪಮಂ ಕೊಂಡು ದಿವ್ಯಾಸ್ತ್ರದಿಂದ ಎಸುತ ಬರಲು =[ಶತ್ರುಘ್ನನು ಕೋಪದಿಂದ ಹೊಸರಥಕ್ಕೆ ಹತ್ತಿ ಹೊಸ ಬಿಲ್ಲನ್ನು ತೆಗೆದುಕೊಂಡು ದಿವ್ಯಾಸ್ತ್ರದಿಂದ ಹೊಡೆಯುತ್ತಾ ಬರಲು];ಆಪಥದೊಳು ಎಣಿಕೆಗೆಯ್ದಣ್ಣನಂ ಮಾತೆಯಂ ನೆನೆದು ಮನದೊಳು ಮರುಗುತ ಆ ಪಸುಳೆ ಮತ್ತೆ ಕಡುಧೈರ್ಯಮಂ ತವೆ ತಾಳ್ದಿ=[ಆ ಅಸ್ತ್ರಗಳು ಬರುವ ದಾರಿಯನ್ನು ಲೆಕ್ಕವಿಟ್ಟು, ಅಣ್ಣನನ್ನೂ ಮಾತೆಯನ್ನೂ ಮನಸ್ಸಿನಲ್ಲಿ ನೆನೆದು, ಮರುಗುತ್ತಾ ಆ ಬಾಲಕನು ಮತ್ತೆ ವಿಶೇಷ ಧೈರ್ಯವನ್ನು ಹೊಂದಿ]; ಇನ ಉಪಮದೊಳು ಐಯ್ದುವ ಪಗೆಯ ಶರವನು ಎಡೆಯೊಳ್ ಪ್ರತಾಪದಿಂ ಕತ್ತಿರಿಸಿ ಕೆಡಹಲ್ಕೆ ಬಯಲಾಯ್ತು ಕೂಟಸಾಕ್ಷಿಯ ಸಿರಿವೊಲು=[ಸೂರ್ಯನಂತೆ ಬರುವ ಶತ್ರುವಿನ ಶರವನ್ನು ಮಧ್ಯದಲ್ಲೇ ಪ್ರತಾಪದಿಂದ ಕತ್ತಿರಿಸಿ ಕೆಡಗಲು ಬಯಲಾಯ್ತು ಕೂಟಸಾಕ್ಷಿಯನ್ನು (ಕೂಟಸಾಕ್ಷಿ) ಸುಳ್ಳು ಹೇಳುವವನು)ಹೇಳುವವನ ಸಂಪತ್ತಿನಂತೆ ನಾಶವಾಯಿತು.]
 • ತಾತ್ಪರ್ಯ-:ಶತ್ರುಘ್ನನು ಕೋಪದಿಂದ ಹೊಸರಥಕ್ಕೆ ಹತ್ತಿ ಹೊಸ ಬಿಲ್ಲನ್ನು ತೆಗೆದುಕೊಂಡು ದಿವ್ಯಾಸ್ತ್ರದಿಂದ ಹೊಡೆಯುತ್ತಾ ಬರಲು, ಆ ಅಸ್ತ್ರಗಳು ಬರುವ ದಾರಿಯನ್ನು ಲೆಕ್ಕವಿಟ್ಟು, ಅಣ್ಣನನ್ನೂ ಮಾತೆಯನ್ನೂ ಮನಸ್ಸಿನಲ್ಲಿ ನೆನೆದು ಮರುಗುತ್ತಾ, ಆ ಬಾಲಕನು ಮತ್ತೆ ವಿಶೇಷ ಧೈರ್ಯವನ್ನು ಹೊಂದಿ, ಸೂರ್ಯನಂತೆ ಬರುವ ಶತ್ರುವಿನ ಶರಗಳನ್ನು ಮಧ್ಯದಲ್ಲೇ ಪ್ರತಾಪದಿಂದ ಕತ್ತಿರಿಸಿ ಕೆಡಗಲು ಬಯಲಾಯ್ತು ಕೂಟಸಾಕ್ಷಿಯನ್ನು (ಕೂಟಸಾಕ್ಷಿ) ಸುಳ್ಳು ಸಾಕ್ಷಿ ಹೇಳುವವನು)ಹೇಳುವವನ ಸಂಪತ್ತಿನಂತೆ ಬಾಣಗಳು ನಾಶವಾದವು.
 • (ಪದ್ಯ-೧೬)XXIV

ಪದ್ಯ :೧೭:[ಸಂಪಾದಿಸಿ]

ವಿಸ್ಮಯಾನ್ವಿತನಾದನಂದು ಶತ್ರುಘ್ನ ನಾ | ಕಸ್ಮಿಕದ ಪಸುಳೆಯ ಪರಾಕ್ರಮಕೆ ಬಳಿಕ ವಿಲ | ಯಸ್ಮರಾಂತಕನ ಪಣೆಗಣ್ಣಿಂದ ಪೊರಮಡುವೆ ದಳ್ಳುರಿಯತೆರದೊಳೆಸೆವ ||
ರಶ್ಮಿಗಳುನುಗುಳ್ವಮೋಘದ ಬಾಣಮಂ ಪೊಡು | ತಸ್ಮದಿಷುಘಾತಮಂ ನೋಡೆನುತಿರಲ್ಕೆ ಮಂ | ದಸ್ಮಿತದೊಳಾಸರಳನೆಚ್ಚು ಲವನೆಡೆಯೊಳಿಕ್ಕಡಿಗೆಯ್ದ ನೇವೇಳ್ವೆನು ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ವಿಸ್ಮಯಾನ್ವಿತನಾದನು (ವಿಸ್ಮಯ+ಆನ್ವಿತನಾದನು) ಅಂದು ಶತ್ರುಘ್ನನ ಆಕಸ್ಮಿಕದ ಪಸುಳೆಯ ಪರಾಕ್ರಮಕೆ=[ಅಂದು ಶತ್ರುಘ್ನನು ಆಕಸ್ಮಿಕದ/ಕಂಡರಿಯದ ಬಾಲಕನ ಪರಾಕ್ರಮಕ್ಕೆ ವಿಸ್ಮಯ/ಆಶ್ಚರ್ಯ ಹೊಂದಿದವನಾದನು.]; ಬಳಿಕ ವಿಲಯಸ್ಮರಾಂತಕನ (ವಿಲಯ+ಪ್ರಳಯ,ಸ್ಮರ ಮನ್ಮಥ+ಅಮತಕ=ರುದ್ರ) ಪಣೆಗಣ್ಣಿಂದ ಪೊರಮಡುವ ದಳ್ಳುರಿಯ ತೆರದೊಳು ಎಸೆವ ರಶ್ಮಿಗಳುನು ಉಗುಳ್ವ ಅಮೋಘದ ಬಾಣಮಂ ಪೊಡುತ ಅಸ್ಮದ್/ತ್ ಇಷುಘಾತಮಂ ನೋಡೆನುತ ಇರಲ್ಕೆ=[ನಂತರ ಪ್ರಳಯರುದ್ರನ ಹಣೆಗಣ್ಣಿಂದ ಹೊರಮಡುವ ದೊಡ್ಡಬೆಂಕಿಯ ತೆರದಲ್ಲಿ ಹೊಳೆಯುವ ಕಿರಣಗಳುನ್ನು ಹೊರಸೂಸುವ ಅಮೋಘವಾದ ಬಾಣವನ್ನು ಬಿಲ್ಲಿಗೆ ಹೂಡುತ್ತಾ ನಮ್ಮ ಈ ಬಾಣದ ಹೊಡೆತವನ್ನು ನೋಡು ಎನುತ ಇರಲು,]; ಮಂದಸ್ಮಿತದೊಳು ಆಸರಳನು ಎಚ್ಚು(ಹೊಡೆದು) ಲವನು ಎಡೆಯೊಳು (ಮಧ್ಯದಲ್ಲಿ) ಇಕ್ಕಡಿಗೆಯ್ದನು ಏವೇಳ್ವೆನು= [ಲವನು ಮುಗುಳುನಗುತ್ತಾ ಆ ಬಾಣವನ್ನು ಮಧ್ಯದಲ್ಲಿಯೇ ಹೊಡೆದು ಎರಡು ತುಂಡು ಮಾಡಿದನು. ಏನು ಹೇಳಲಿ!].
 • ತಾತ್ಪರ್ಯ-:ಅಂದು ಶತ್ರುಘ್ನನು ಆಕಸ್ಮಿಕದ/ಕಂಡರಿಯದ ಬಾಲಕನ ಪರಾಕ್ರಮಕ್ಕೆ ವಿಸ್ಮಯ/ಆಶ್ಚರ್ಯ ಹೊಂದಿದವನಾದನು. ನಂತರ ಪ್ರಳಯರುದ್ರನ ಹಣೆಗಣ್ಣಿಂದ ಹೊರಮಡುವ ದೊಡ್ಡಬೆಂಕಿಯ ತೆರದಲ್ಲಿ ಹೊಳೆಯುವ ಕಿರಣಗಳುನ್ನು ಹೊರಸೂಸುವ ಅಮೋಘವಾದ ಬಾಣವನ್ನು ಬಿಲ್ಲಿಗೆ ಹೂಡುತ್ತಾ ನಮ್ಮ ಈ ಬಾಣದ ಹೊಡೆತವನ್ನು ನೋಡು ಎನುತ ಇರಲು, ಲವನು ಮುಗುಳುನಗುತ್ತಾ ಆ ಬಾಣವನ್ನು ಮಧ್ಯದಲ್ಲಿಯೇ ಹೊಡೆದು ಎರಡು ತುಂಡು ಮಾಡಿದನು. ಏನು ಹೇಳಲಿ!.
 • (ಪದ್ಯ-೧೭)

ಪದ್ಯ :೧೮:[ಸಂಪಾದಿಸಿ]

ಅರಸ ಕೇಳಾಶರದೊಳರ್ಧಮವನಿಗೆ ಕೆಡೆದು | ದಿರದೆ ಮೇಲ್ವಾಯ್ದರ್ಧಮೀ ಲವನ ಕಾರ್ಮುಕವ | ನರಿದುಕೊಂಡೆರ್ದೆಯನುಚ್ಚಳಿಸೆ ಮೈಮರೆದೊರಗಿದಂ ಪಸುಳೆ ಮೂರ್ಛೆಯಿಂದೆ ||
ಹರುಷದಿಂದಾರ್ದುದುಳಿದರಿಬಲಂ ನಡೆತಂದು | ಕರುಣದಿಂ ತರಳನಂ ನೋಡಿ ರಾಮಾಕೃತಿವೊ | ಲಿರೆ ಮೋಹದಿಂ ತನ್ನ ರಥದ ಮೇಲಿರಿಸಿಕೊಂಡೈದಿದಂ ಶತ್ರುಘ್ನನು ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅರಸ ಕೇಳು ಆ ಶರದೊಳು ಅರ್ಧಂ ಅವನಿಗೆ ಕೆಡೆದುದು ಇರದೆ ಮೇಲ್ವಾಯ್ದ ಅರ್ಧಂ ಈ ಲವನ ಕಾರ್ಮುಕವನು ಅರಿದುಕೊಂಡು ಎರ್ದೆಯನು ಉಚ್ಚಳಿಸೆ ಮೈಮರೆದು ಒರಗಿದಂ ಪಸುಳೆ ಮೂರ್ಛೆಯಿಂದೆ=[ಜನಮೇಜಯ ಅರಸನೇ ಕೇಳು, ಆ ಬಾಣದಲ್ಲಿ ಅರ್ಧವು ಭೂಮಿಗೆ ಬಿದ್ದಿತು; ಉಳಿದ ಅರ್ಧವು ನಿಲ್ಲದೆ ಮುಂದುವರಿದು ಈ ಲವನ ಬಿಲ್ಲನ್ನು ಬೇಧಿಸಿಕೊಂಡು ಅವನ ಎದೆಗೆ ಹೊಡೆಯಲು ಬಾಲಕ ಲವನು ಮೈಮರೆತು ಮೂರ್ಛೆಹೋಗಿ ನೆಲಕ್ಕೆ ಬಿದ್ದನು.]; ಹರುಷದಿಂದ ಆರ್ದುದು ಉಳಿದ ಅರಿಬಲಂ ನಡೆತಂದು ಕರುಣದಿಂ ತರಳನಂ ನೋಡಿ ರಾಮಾಕೃತಿವೊಲ್ ಇರೆ ಮೋಹದಿಂ ತನ್ನ ರಥದ ಮೇಲಿರಿಸಿಕೊಂಡು ಐದಿದಂ ಶತ್ರುಘ್ನನು=[ಉಳಿದ ಶತ್ರುಸೈನ್ಯದವರು ಸಂತೋಷದಿಂದ ಗರ್ಜಿಸಿದರು. ಅವರು ಅವನ ಹತ್ತಿರ ನಡೆದುಬಂದು ಕರುಣದಿದ ಬಾಲಕನನ್ನು ನೋಡಿ ರಾಮನ ಹೋಲಿಕೆಯ ಆಕೃತಿ/ ರೂಪದಲ್ಲಿ ಇರಲು ಶತ್ರುಘ್ನನು ಪ್ರೀತಿಯಿಂದ ತನ್ನ ರಥದ ಮೇಲಿರಿಸಿಕೊಂಡು ಹೋದನು].
 • ತಾತ್ಪರ್ಯ-:ಜನಮೇಜಯ ಅರಸನೇ ಕೇಳು, ಆ ಬಾಣದಲ್ಲಿ ಅರ್ಧವು ಭೂಮಿಗೆ ಬಿದ್ದಿತು; ಉಳಿದ ಅರ್ಧವು ನಿಲ್ಲದೆ ಮುಂದುವರಿದು ಈ ಲವನ ಬಿಲ್ಲನ್ನು ಬೇಧಿಸಿಕೊಂಡು ಅವನ ಎದೆಗೆ ಹೊಡೆಯಲು ಬಾಲಕ ಲವನು ಮೈಮರೆತು ಮೂರ್ಛೆಹೋಗಿ ನೆಲಕ್ಕೆ ಬಿದ್ದನು.ಉಳಿದ ಶತ್ರುಸೈನ್ಯದವರು ಸಂತೋಷದಿಂದ ಗರ್ಜಿಸಿದರು. ಅವರು ಅವನ ಹತ್ತಿರ ನಡೆದುಬಂದು ಕರುಣದಿದ ಬಾಲಕನನ್ನು ನೋಡಿ ರಾಮನ ಹೋಲಿಕೆಯ ಆಕೃತಿ/ ರೂಪದಲ್ಲಿ ಇರಲು ಶತ್ರುಘ್ನನು ಪ್ರೀತಿಯಿಂದ ತನ್ನ ರಥದ ಮೇಲಿರಿಸಿಕೊಂಡು ಹೋದನು.
 • (ಪದ್ಯ-೧೮)

ಪದ್ಯ :೧೯:[ಸಂಪಾದಿಸಿ]

ಕದಳಿಯೊಳ್ ಕಟ್ಟಿರ್ದ ಕುದುರೆಯಂ ಬಿಡಿಸಿ ನಗ | ರದ ಕಡೆಗೆ ಪಡೆವೆರಸಿ ತಿರುಗಿದಂ ಶತ್ರುಘ್ನ | ನುದಧಿಘೋಷದೊಳಿತ್ತ ಲೋಡಿದರ್ ತಾಪಸವಟುಗಳವನಿಸುತೆಯ ಪೊರೆಗೆ ||
ಕದನದೊಳ್ ನಡೆದ ವೃತ್ತಾಂತಮಂ ಪೇಳಲ್ಕೆ | ರುದಿತದಿಂ ಕೈವೆರಳ್ಗಳನೊತ್ತಿಕೊಳುತ ನಿಜ | ಸದನಮಂ ಪೊರಮಟ್ಟು ಹಲುಬಿದಳ್ ಸುತನ ಗುಣಶೀಲರೂಪಗಳನೆಣಿಸಿ ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕದಳಿಯೊಳ್ ಕಟ್ಟಿರ್ದ ಕುದುರೆಯಂ ಬಿಡಿಸಿ ನಗರದ ಕಡೆಗೆ ಪಡೆವೆರಸಿ ತಿರುಗಿದಂ ಶತ್ರುಘ್ನನು ಉದಧಿಘೋಷದೊಳ್=[ಬಾಳೆಯ ಮರಕ್ಕೆ ಕಟ್ಟಿದ್ದ ಕುದುರೆಯನ್ನು ಬಿಡಿಸಿಕೊಂಡು, ಶತ್ರುಘ್ನನು ನಗರದ ಕಡೆಗೆ ಸೈನ್ಯಸಮೇತ ಸಮುದ್ರಘೋಷದೊಂದಿಗೆ ಹಿಂತಿರುಗಿದನು.];ಲೋಡಿದರ್ ತಾಪಸವಟುಗಳು ಅವನಿಸುತೆಯ ಪೊರೆಗೆ ಕದನದೊಳ್ ನಡೆದ ವೃತ್ತಾಂತಮಂ ಪೇಳಲ್ಕೆ =[ಇತ್ತಲಾಗಿ ಋಷಿಗಳ ವಟುಗಳು ಜಾನಕಿಯ ಹತ್ತಿರಕ್ಕೆ ಓಡಿಬಂದು ಯುದ್ಧದ ಸಮಾಚಾರವನ್ನು ಹೇಳಲು];, ರುದಿತದಿಂ (ಅಳುತ್ತಾ) ಕೈವೆರಳ್ಗಳನು ಒತ್ತಿಕೊಳುತ ನಿಜ ಸದನಮಂ ಪೊರಮಟ್ಟು ಹಲುಬಿದಳ್ ಸುತನ ಗುಣಶೀಲರೂಪಗಳನು ಎಣಿಸಿ=[ಅವಳು ಅಳುತ್ತಾ ಕೈಬೆರುಳುಗಳನ್ನು ಹಿಸುಕಿಕೊಳ್ಳತ್ತಾ ತನ್ನ ಕುಟೀರದಿಂದ ಹೊರಬಂದು ಮಗನ ಗುಣಶೀಲರೂಪಗಳನ್ನು ಬಣ್ಣಿಸಿ ಹಲುಬಿ ದುಃಖಿಸುತ್ತಿದ್ದಳು.].
 • ತಾತ್ಪರ್ಯ-:ಬಾಳೆಯ ಮರಕ್ಕೆ ಕಟ್ಟಿದ್ದ ಕುದುರೆಯನ್ನು ಬಿಡಿಸಿಕೊಂಡು, ಶತ್ರುಘ್ನನು ನಗರದ ಕಡೆಗೆ ಸೈನ್ಯಸಮೇತ ಸಮುದ್ರಘೋಷದೊಂದಿಗೆ ಹಿಂತಿರುಗಿದನು.];ಲೋಡಿದರ್ ತಾಪಸವಟುಗಳು ಅವನಿಸುತೆಯ ಪೊರೆಗೆ ಕದನದೊಳ್ ನಡೆದ ವೃತ್ತಾಂತಮಂ ಪೇಳಲ್ಕೆ =[ಇತ್ತಲಾಗಿ ಋಷಿಗಳ ವಟುಗಳು ಜಾನಕಿಯ ಹತ್ತಿರಕ್ಕೆ ಓಡಿಬಂದು ಯುದ್ಧದ ಸಮಾಚಾರವನ್ನು ಹೇಳಲು];, ರುದಿತದಿಂ (ಅಳುತ್ತಾ) ಕೈವೆರಳ್ಗಳನು ಒತ್ತಿಕೊಳುತ ನಿಜ ಸದನಮಂ ಪೊರಮಟ್ಟು ಹಲುಬಿದಳ್ ಸುತನ ಗುಣಶೀಲರೂಪಗಳನು ಎಣಿಸಿ=[ಅವಳು ಅಳುತ್ತಾ ಕೈಬೆರುಳುಗಳನ್ನು ಹಿಸುಕಿಕೊಳ್ಳತ್ತಾ ತನ್ನ ಕುಟೀರದಿಂದ ಹೊರಬಂದು ಮಗನ ಗುಣಶೀಲರೂಪಗಳನ್ನು ಬಣ್ಣಿಸಿ ಹಲುಬಿ ದುಃಖಿಸುತ್ತಿದ್ದಳು.
 • (ಪದ್ಯ-೧೯)

ಪದ್ಯ :೨೦:[ಸಂಪಾದಿಸಿ]

ಒಸರಿದುವು ಕಂಬನಿಗಳಂಗಲತೆ ಕಂಪಿಸಿತು | ಪೊಸೆದಳೊಡಲಂ ಕೂಡೆ ಕೂಡೆ ಸುತಮೋಹದಿಂ | ದಸವಳಿದು ಕಂದನೆಲ್ಲಿರ್ದಪಂ ಕಾದಿದನೆ ಪಗೆಯ ಕೈಗೊಳಗಾದನೇ ||
ಪಸುಳೆಗೇನಾಯ್ತೊ ಮಗನೆಂತು ನೊಂದನೊ ತರಳ | ನಸುವಿಡಿದಿಹನೊ ಬಾಲಕನ ಮುದ್ದುಮೊಗಮೆನ್ನ | ದೆಸೆಗೆ ಸೈರಿಸದೊ ಜೀವಿಸಿ ಕೆಟ್ಟೆನೆಂದು ಹಲುಬಿದಳಂಬುಜಾಕ್ಷಿ ಮರುಗಿ ||20|

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಒಸರಿದುವು ಕಂಬನಿಗಳು ಅಂಗಲತೆ ಕಂಪಿಸಿತು ಪೊಸೆದಳು ಒಡಲಂ ಕೂಡೆ,=[ಕಣ್ಣೀರು ಸುರಿಯಿತು; ಬಳ್ಳಿಯಂತಿರುವ ದೇಹ ಕಂಪಿಸಿತು; ಮತ್ತೆ ಹೊಟ್ಟೆಯನ್ನು ಸಂಕಟದಿಂದ ತಿಕ್ಕಿಕೊಂಡಳು]; ಕೂಡೆ ಸುತಮೋಹದಿಂದ ಅಸವಳಿದು ಕಂದನು ಎಲ್ಲಿರ್ದಪಂ ಕಾದಿದನೆ ಪಗೆಯ ಕೈಗೊಳಗಾದನೇ=[ಮತ್ತೆ ಮಗನ ಮೇಲಿನ ಪ್ರೀತಿಯಿಂದ ಶಕ್ತಿಗುಂದಿ, ಕಂದನು ಎಲ್ಲಿರುವನೋ, ಯುದ್ಧಮಾಡಿದನೆ ಶತ್ರುವಿನ ಕೈಗೆ ಸೆರೆಗೆ ಸಿಕ್ಕಿದನೇ?]; ಮಗುವಿಗೆ ಏನಾಯ್ತೊ ಮಗನು ಎಷ್ಟು ನೊಂದನೊ ಬಾಲಕನು ಪ್ರಾಣದಿಂದಿರುವನೋ? ಬಾಲಕನ ಮುದ್ದು ಎನ್ನ ದೆಸೆಗೆ ಸೈರಿಸದೊ ಜೀವಿಸಿ ಕೆಟ್ಟೆನೆಂದು ಹಲುಬಿದಳು ಅಂಬುಜಾಕ್ಷಿ ಮರುಗಿ=[ಪಸುಳೆಗೆ ಏನಾಯ್ತೊ ಮಗನೆಂತು ನೊಂದನೊ ತರಳನು ಅಸುವಿಡಿದಿಹನೊ ಬಾಲಕನ ಮುದ್ದಮುಖವು ತನ್ನ ಕಷ್ಟದದೆಸೆಗೆ ಸೈರಿಸದೊ? ಬದುಕಿದ್ದು ಕೆಟ್ಟೆನು ಎಂದು ದುಃಖದಿಂದ ಹಲುಬಿದಳು ಅಂಬುಜಾಕ್ಷಿಯಾದ ಜಾನಕಿ].
 • ತಾತ್ಪರ್ಯ-:ಸೀತೆಗೆ, ಕಣ್ಣೀರು ಸುರಿಯಿತು; ಬಳ್ಳಿಯಂತಿರುವ ದೇಹ ಕಂಪಿಸಿತು; ಮತ್ತೆ ಹೊಟ್ಟೆಯನ್ನು ಸಂಕಟದಿಂದ ತಿಕ್ಕಿಕೊಂಡಳು; ಮತ್ತೆ ಮಗನ ಮೇಲಿನ ಪ್ರೀತಿಯಿಂದ ಶಕ್ತಿಗುಂದಿ, ಕಂದನು ಎಲ್ಲಿರುವನೋ, ಯುದ್ಧಮಾಡಿದನೆ ಶತ್ರುವಿನ ಕೈಗೆ ಸೆರೆಗೆ ಸಿಕ್ಕಿದನೇ? ಪಸುಳೆಗೆ ಏನಾಯ್ತೊ ಮಗನೆಂತು ನೊಂದನೊ ತರಳನು ಅಸುವಿಡಿದಿಹನೊ ಬಾಲಕನ ಮುದ್ದಮುಖವು ತನ್ನ ಕಷ್ಟದದೆಸೆಗೆ ಸೈರಿಸದೊ? ಬದುಕಿದ್ದು ಕೆಟ್ಟೆನು ಎಂದು ದುಃಖದಿಂದ ಹಲುಬಿದಳು ಅಂಬುಜಾಕ್ಷಿಯಾದ ಜಾನಕಿ.
 • (ಪದ್ಯ-೨೦)

ಪದ್ಯ :೨೧:[ಸಂಪಾದಿಸಿ]

ಅನ್ನೆಗಂ ಬಂದನಗ್ಗದ ಸಮಿತ್ಪುಷ್ಪಂಗ | ಳನ್ನೆತ್ತಿಯೊಳ್ ಪೊತ್ತುಕೊಂಡು ಕುಶನಳುತಿರ್ಪ | ತನ್ನ ತಾಯಂ ಕಂಡಿದೇನದ್ಭುತಪ್ರಳಾಪಂ ನಿನಗೆ ಪೇಳೆನಲ್ಕೆ ||
ಬನ್ನಮಂ ಕೇಳ್ ಮಗನೆ ಹಯಮೊಂದು ಬರಲದಂ | ನಿನ್ನ ತಮ್ಮಂ ಕಟ್ಟಲರಸುಗಳ್ ಪಿಡಿದೊಯ್ದ | ರಿನ್ನೇವೆನೆಂದು ಜಾನಕಿ ನುಡಿಯೆ ರೋಷದಿಂದಾ ಕುವರನಿಂತೆಂದನು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅನ್ನೆಗಂ ಬಂದನು ಅಗ್ಗದ ಸಮಿತ್ ಪುಷ್ಪಂಗಳನು ನೆತ್ತಿಯೊಳ್ ಪೊತ್ತುಕೊಂಡು ಕುಶನು ಅಳುತಿರ್ಪ ತನ್ನ ತಾಯಂ ಕಂಡು ಇದೇನು ಅದ್ಭುತ ಪ್ರಳಾಪಂ ನಿನಗೆ ಪೇಳು ಎನಲ್ಕೆ=[ಆ ಸಮಯಕ್ಕೆ ಉತ್ತಮವಾದ ಸಮಿತ್ತು ಹೂವುಗಳನ್ನು ನೆತ್ತಿಯಮೇಲೆ ಹೊತ್ತುಕೊಂಡು ಕುಶನು ಬಂದನು. ಅವನು ಅಳುತ್ತಿರವ ತನ್ನ ತಾಯಿಯನ್ನು ಕಂಡು, ಇದೇನು ಇಷ್ಟೊಂದು ಅಳು ನಿನಗೆ? ಹೇಳು ಎನಲು]; ಬನ್ನಮಂ ಕೇಳ್ ಮಗನೆ ಹಯಂ ಒಂದು ಬರಲು ಅದಂ ನಿನ್ನ ತಮ್ಮಂ ಕಟ್ಟಲು ಅರಸುಗಳ್ ಪಿಡಿದು ಒಯ್ದರು ಇನ್ನೇವೆನು ಎಂದು ಜಾನಕಿ ನುಡಿಯೆ ರೋಷದಿಂದ ಆ ಕುವರನು ಇಂತೆಂದನು=[ಸಂಕಷ್ಟ ಬಂದಿದೆ ಕೇಳು ಮಗನೆ, ಒಂದು ಕುದುರೆಯು ತಪೋವನದಲ್ಲಿ ಬರಲು ಅದನ್ನು ನಿನ್ನ ತಮ್ಮನು ಕಟ್ಟಲು, ಅರಸರು ಬಂದು ಲವನನ್ನು ಸೆರೆಹಿಡಿದುಕೊಂಡು ಹೋದರು! ಇನ್ನೇನು! ಎಂದು ಜಾನಕಿ ಹೇಳಲು, ರೋಷದಿಂದ ಆ ಕುಮಾರ ಕುಶನು ಹೀಗೆ ಹೇಳಿದನು.].
 • ತಾತ್ಪರ್ಯ-:ಆ ಸಮಯಕ್ಕೆ ಉತ್ತಮವಾದ ಸಮಿತ್ತು ಹೂವುಗಳನ್ನು ನೆತ್ತಿಯಮೇಲೆ ಹೊತ್ತುಕೊಂಡು ಕುಶನು ಬಂದನು. ಅವನು ಅಳುತ್ತಿರವ ತನ್ನ ತಾಯಿಯನ್ನು ಕಂಡು, ಇದೇನು ಇಷ್ಟೊಂದು ಅಳು ನಿನಗೆ? ಹೇಳು ಎನ್ನಲು; ಸಂಕಷ್ಟ ಬಂದಿದೆ ಕೇಳು ಮಗನೆ, ಒಂದು ಕುದುರೆಯು ತಪೋವನದಲ್ಲಿ ಬರಲು ಅದನ್ನು ನಿನ್ನ ತಮ್ಮನು ಕಟ್ಟಲು, ಅರಸರು ಬಂದು ಲವನನ್ನು ಸೆರೆಹಿಡಿದುಕೊಂಡು ಹೋದರು! ಇನ್ನೇನು! ಎಂದು ಜಾನಕಿ ಹೇಳಲು, ರೋಷದಿಂದ ಆ ಕುಮಾರ ಕುಶನು ಹೀಗೆ ಹೇಳಿದನು.
 • (ಪದ್ಯ-೨೧)

ಪದ್ಯ :೨೨:[ಸಂಪಾದಿಸಿ]

ಶೋಕಮೇಕಿದಕೆ ಹರಣವನೊಯ್ದೊಡಂತಕನ | ಲೋಕವಂ ಸುಡುವೆನಲ್ಲಹುದೆಂದೊಡಜ ಹರಿ ಪಿ | ನಾಕಿಗಳನುರಿಪುವೆಂ ಮಿಕ್ಕರಸುಗಿರಸುಗಳ ಪಾಡಾವುದೀಗ ತನಗೆ ||
ಆ ಕವಚ ಖಡ್ಗ ಧನು ಶರ ಮಕುಟಂಗಳಂ | ತಾ ಕಳವಳಿಸದಿರೆಂದವನಿಜೆಗೆ ನುಡಿದೊಡವ | ಳಾಕುಶಂಗೊಳಗಣಿಂದಂಗಿಯಂ ತಂದಳವಡಿಸಿ ಪರಸಿ ಬೀಳ್ಕೊಟ್ಟಳು ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಶೋಕಂ ಏಕೆ ಇದಕೆ ಹರಣವನು ಒಯ್ದೊಡೆ ಅಂತಕನ ಲೋಕವಂ ಸುಡುವೆನು=[ ಇದಕ್ಕೆ ಶೋಕವು ಏಕೆ? ದುಃಖಪಡಬೇಡ; ಲವನ ಜೀವವನ್ನು ಯಮನು ತೆಗೆದುಕೊಂಡು ಹೋದರೆ ಅವನ (ಅಂತಕನ) ಲೋಕವನ್ನೇ ಸುಡುವೆನು.]; ಅಲ್ಲ ಅಹುದು ಎಂದೊಡೆ ಅಜ ಹರಿ ಪಿನಾಕಿಗಳನು ಉರಿಪುವೆಂ ಮಿಕ್ಕರಸುಗಿರಸುಗಳ ಪಾಡು ಆವುದು=['ಅಲ್ಲ ಅಹುದು ಎಂದೊಡೆ' ಅಲ್ಲಿ ಅನುಮಾನಿಸಿ,ಪರಿಹಾರ ಸಿಗದಿದ್ದರೆ, ಬ್ರಹ್ಮ ಹರಿ ರುದ್ರರುಗಳನ್ನು ಉರಿಸುವೆನು/ಸುಡುವೆನು. ಉಳಿದ ಅರಸು-ಗಿರಸುಗಳ ಪಾಡು ನನಗೆ ಯಾವ ಲೆಕ್ಕ!]; ಈಗ ತನಗೆ ಆ ಕವಚ ಖಡ್ಗ ಧನು ಶರ ಮಕುಟಂಗಳಂ ತಾ ಕಳವಳಿಸದಿರು ಎಂದು ಅವನಿಜೆಗೆ ನುಡಿದೊಡೆ ಅವಳು ಆ ಕುಶಂಗೆ ಒಳಗಣಿಂದ ಅಂಗಿಯಂ ತಂದು ಅಳವಡಿಸಿ ಪರಸಿ ಬೀಳ್ಕೊಟ್ಟಳು=[ಈಗ ತನಗೆ ತನ್ನ ಆ ಕವಚ, ಖಡ್ಗ, ಧನು, ಶರ, ಕಿರೀಟಗಳನ್ನು ತಂದುಕೊಡು; ಚಿಂತೆಮಾಡಬೇಡ ಎಂದು ತಾಯಿ ಸೀತೆಗೆ ಹೇಳಿದಾಗ, ಅವಳು ಆ ಕುಶನಿಗೆ ಒಳಗಿನಿಂದ ಕವಚವನ್ನು ತಂದು ಅಳವಡಿಸಿ, ಅವನು ಹೇಳಿದದೆಲ್ಲವನ್ನೂ ಕೊಟ್ಟು ಹರಸಿ ಬೀಳ್ಕೊಟ್ಟಳು.]
 • ತಾತ್ಪರ್ಯ-:ಕುಶನು ತಾಯಿಗೆ ಧೈರ್ಯ ಹೇಳಿದನು; ಇದಕ್ಕೆ ಶೋಕವು ಏಕೆ? ದುಃಖಪಡಬೇಡ; ಲವನ ಜೀವವನ್ನು ಯಮನು ತೆಗೆದುಕೊಂಡು ಹೋದರೆ ಅವನ (ಅಂತಕನ) ಲೋಕವನ್ನೇ ಸುಡುವೆನು. 'ಅಲ್ಲ ಅಹುದು ಎಂದರೆ' ಅಲ್ಲಿ ಅನುಮಾನಿಸಿ,ಪರಿಹಾರ ಸಿಗದಿದ್ದರೆ, ಬ್ರಹ್ಮ ಹರಿ ರುದ್ರರುಗಳನ್ನು ಉರಿಸುವೆನು/ಸುಡುವೆನು. ಉಳಿದ ಅರಸು-ಗಿರಸುಗಳ ಪಾಡು ನನಗೆ ಯಾವ ಲೆಕ್ಕ! ಈಗ ತನಗೆ ತನ್ನ ಆ ಕವಚ, ಖಡ್ಗ, ಧನು, ಶರ, ಕಿರೀಟಗಳನ್ನು ತಂದುಕೊಡು; ಚಿಂತೆಮಾಡಬೇಡ ಎಂದು ತಾಯಿ ಸೀತೆಗೆ ಹೇಳಿದಾಗ, ಅವಳು ಆ ಕುಶನಿಗೆ ಒಳಗಿನಿಂದ ಕವಚವನ್ನು ತಂದು ಅಳವಡಿಸಿ, ಅವನು ಹೇಳಿದದೆಲ್ಲವನ್ನೂ ಕೊಟ್ಟು ಹರಸಿ ಬೀಳ್ಕೊಟ್ಟಳು.
 • (ಪದ್ಯ-೨೨)

ಪದ್ಯ :೨೩:[ಸಂಪಾದಿಸಿ]

ರಾಯ ಕೇಳ್ ಕುಶನ ವಿಕ್ರಮವನಭಿವರ್ಣಿಸಲ | ಜಾಯುವುಳ್ಳನ್ನೆಗಂ ತನಗೆ ತೀರದು ಬಳಿಕ | ತಾಯಂಘ್ರಿಗೆರಗಿ ಬೀಳ್ಕೊಂಡು ತಾರಕನ ಪೆರ್ಬಡೆಗೆ ಗುಹನೆಯ್ದುವಂತೆ ||
ವಾಯುವೇಗದೊಳೊದಗಿ ವೀರಭರತಾನುಜನ | ಪಾಯದಳಮಂ ಪೋಗಬೇಡ ಬೇಡೆನುತ ಸಲೆ | ಸಾಯಕದ ಮಳೆಗಳಂ ಕರೆಯಲ್ಕೆ ತಿರುಗಿದುದು ಮತ್ತೆ ಶತ್ರುಘ್ನ ಸೇನೆ ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಜನಮೇಜಯ ರಾಯನೇ ಕೇಳ್ ಕುಶನ ವಿಕ್ರಮವನು ಅಭಿವರ್ಣಿಸಲು ಅಜ ಆಯುವುಳ್ಳ ಅನ್ನೆಗಂ ತನಗೆ ತೀರದು=[ರಾಜನೇ ಕೇಳು, ಕುಶನ ಪರಾಕ್ರಮವನ್ನು ಸರಿಯಾಗಿ ವರ್ಣಿಸಲು ಬ್ರಹ್ಮನುಕೊಟ್ಟ ಆಯುಸ್ಸು ಇರುವವರೆಗೂ ಹೇಳಿದರೂ ತನಗೆ ಮುಗಿಸಲು ಆಗದು.]; ಬಳಿಕ ತಾಯ ಅಂಘ್ರಿಗೆ ಎರಗಿ ಬೀಳ್ಕೊಂಡು ತಾರಕನ ಪೆರ್ಬಡೆಗೆ ಗುಹನು ಐಯ್ದುವಂತೆ=[ಕುಶನು ಬಳಿಕ ತಾಯ ಪಾದಕ್ಕೆ ನಮಸ್ಕರಿಸಿ, ಅವಳನ್ನು ಬೀಳ್ಕೊಂಡು ತಾರಕಾಸುರನ ಸೈನ್ಯಕ್ಕೆ ಎದುರಾಗಿ ಕುಮಾರನು (ಗುಹನು) ಹೋಗುವಂತೆ]; ವಾಯುವೇಗದೊಳು ಒದಗಿ ವೀರಭರತಾನುಜನ ಪಾಯದಳಮಂ ಪೋಗಬೇಡ ಬೇಡ ಎನುತ ಸಲೆ ಸಾಯಕದ ಮಳೆಗಳಂ ಕರೆಯಲ್ಕೆ ತಿರುಗಿದುದು ಮತ್ತೆ ಶತ್ರುಘ್ನ ಸೇನೆ=[ವಾಯುವೇಗದಲ್ಲಿ ಬಂದು ವೀರಭರತಾನುಜನಾದ ಶತ್ರುಘ್ನನ ಮುಖ್ಯ ಸೈನ್ಯವನ್ನುಸಮೀಪಿಸಿ, ಹೋಗಬೇಡ - ಬೇಡ ಎನ್ನುತ್ತಾ, ಬಹಳ ಬಾಣಗಳ ಮಳೆಯನ್ನು ಸುರಿಸಿದನು. ಆಗ ಶತ್ರುಘ್ನನ ಸೇನೆಯು ಮತ್ತೆ ಯುದ್ಧಕ್ಕೆ ತಿರುಗಿ ನಿಂತಿತು].
 • ತಾತ್ಪರ್ಯ-:ಜನಮೇಜಯ ರಾಜನೇ ಕೇಳು, ಕುಶನ ಪರಾಕ್ರಮವನ್ನು ಸರಿಯಾಗಿ ವರ್ಣಿಸಲು ಬ್ರಹ್ಮನುಕೊಟ್ಟ ಆಯುಸ್ಸು ಇರುವವರೆಗೂ ಹೇಳಿದರೂ ತನಗೆ ಮುಗಿಸಲು ಆಗದು. ಕುಶನು ಬಳಿಕ ತಾಯ ಪಾದಕ್ಕೆ ನಮಸ್ಕರಿಸಿ, ಅವಳನ್ನು ಬೀಳ್ಕೊಂಡು ತಾರಕಾಸುರನ ಸೈನ್ಯಕ್ಕೆ ಎದುರಾಗಿ ಕುಮಾರನು (ಗುಹನು) ಹೋಗುವಂತೆ, ವಾಯುವೇಗದಲ್ಲಿ ಬಂದು ವೀರ ಭರತಾನುಜನಾದ ಶತ್ರುಘ್ನನ ಮುಖ್ಯ ಸೈನ್ಯವನ್ನು ಸಮೀಪಿಸಿ, ಹೋಗಬೇಡ - ಬೇಡ ಎನ್ನುತ್ತಾ, ಬಹಳ ಬಾಣಗಳ ಮಳೆಯನ್ನು ಸುರಿಸಿದನು. ಆಗ ಶತ್ರುಘ್ನನ ಸೇನೆಯು ಮತ್ತೆ ಯುದ್ಧಕ್ಕೆ ತಿರುಗಿ ನಿಂತಿತು.
 • (ಪದ್ಯ-೨೩)

ಪದ್ಯ :೨೪:[ಸಂಪಾದಿಸಿ]

ಪದ್ದೆರಗಿದುವು ಭಟರ ಮಂಡೆಗಳ ಮೇಲುಡಿದು | ಬಿದ್ದುವು ಚಲಧ್ವಜಪತಾಕೆಗಳ್ ಕೂಡೆ ದೂ | ಳೆದ್ದು ಬಿರುಗಾಳಿ ಬೀಸಿದುದು ಕಂಬನಿ ಕರೆದುವಂದಾನೆಕುದುರೆಗಳ್ಗೆ ||
ಪೊದ್ದಿ ದುತ್ಪಾತಭಯಕಾ ಬಲಂ ಗಜಬಿಜಿಸು | ತಿದ್ದುದೀಚೆಯೊಳೀ ಕುಶಂ ಪೋಗದಿರಿ ನಿಲ್ಲ | ಕದ್ದೈದುವರೇ ತುರಗಸಹಿತ ಲವನಂ ಬಿಟ್ಟು ನಡೆಯಿಂ ನೀವೆನುತೆಚ್ಚನು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಪದ್ದು ಎರಗಿದುವು ಭಟರ ಮಂಡೆಗಳ ಮೇಲೆ, ಉಡಿದು ಬಿದ್ದುವು ಚಲಧ್ವಜಪತಾಕೆಗಳ್ ಕೂಡೆ ದೂಳೆದ್ದು ಬಿರುಗಾಳಿ ಬೀಸಿದುದು=[ಹದ್ದುಗಳು ಭಟರ ತಲೆಗಳ ಮೇಲೆ ಎರಗಿದುವು;ಗಾಳಿಗೆ ಚಲಿಸುವ ಧ್ವಜಪತಾಕೆಗಳು ಮುರಿದು (ಉಡಿದು) ಬಿದ್ದವು. ಅದರ ಜೊತೆಯಲ್ಲಿ ದೂಳೆದ್ದು ಬಿರುಗಾಳಿ ಬೀಸಿತು.]; ಕಂಬನಿ ಕರೆದುವಂದು ಆನೆ ಕುದುರೆಗಳ್ಗೆ ಪೊದ್ದಿದ ಉತ್ಪಾತಭಯಕೆ ಆ ಬಲಂ ಗಜಬಿಜಿಸುತಿದ್ದುದು=[ ಆನೆ ಕುದುರೆಗಳು ಕಂಬನಿ ಕರೆದವು. ಅಂದು ಸಂಭವಿಸಿದ ಉತ್ಪಾತಭಯಕ್ಕೆ ಆ ಸೈನ್ಯಗಲಿಬಿಲಿಗೊಂಡು ಗಜಬಿಜಿಸುತ್ತಿತ್ತು.]; ಈಚೆಯೊಳು ಈ ಕುಶಂ ಪೋಗದಿರಿ ನಿಲ್ಲಿ ಕದ್ದು ಐದುವೊರೆ ತುರಗಸಹಿತ ಲವನಂ ಬಿಟ್ಟು ನಡೆಯಿಂ ನೀವೆನುತೆಚ್ಚನು=[ಈಕಡೆಯಲ್ಲಿ ಬಂದ ಈ ಕುಶನು ಹೋಗಬೇಡಿ ನಿಲ್ಲಿ! ಕದ್ದು ಹೋಗುವರೆ ಕುದುರೆ ಸಹಿತ! ಲವನನ್ನು ಬಿಟ್ಟು ನಡೆಯಿರಿ ನೀವು ಎನ್ನುತ್ತಾ ಬಾಣಗಳಿಂದ ಹೊಡೆದನು].
 • ತಾತ್ಪರ್ಯ-:ಹದ್ದುಗಳು ಭಟರ ತಲೆಗಳ ಮೇಲೆ ಎರಗಿದುವು;ಗಾಳಿಗೆ ಚಲಿಸುವ ಧ್ವಜಪತಾಕೆಗಳು ಮುರಿದು (ಉಡಿದು) ಬಿದ್ದವು. ಅದರ ಜೊತೆಯಲ್ಲಿ ದೂಳೆದ್ದು ಬಿರುಗಾಳಿ ಬೀಸಿತು. ಆನೆ ಕುದುರೆಗಳು ಕಂಬನಿ ಕರೆದವು. ಅಂದು ಸಂಭವಿಸಿದ ಉತ್ಪಾತಭಯಕ್ಕೆ ಆ ಸೈನ್ಯ ಗಲಿಬಿಲಿಗೊಂಡು ಗಜಬಿಜಿಸುತ್ತಿತ್ತು. ಈ ಕಡೆಯಲ್ಲಿ ಬಂದ ಈ ಕುಶನು ಹೋಗಬೇಡಿ ನಿಲ್ಲಿ! ಕದ್ದು ಹೋಗುವರೆ ಕುದುರೆ ಸಹಿತ! ಲವನನ್ನು ಬಿಟ್ಟು ನಡೆಯಿರಿ ನೀವು ಎನ್ನುತ್ತಾ ಬಾಣಗಳಿಂದ ಹೊಡೆದನು].
 • (ಪದ್ಯ-೨೪)

ಪದ್ಯ :೨೫:[ಸಂಪಾದಿಸಿ]

ಆ ಬಾಲಕನ ಬಾಣಘಾತದಿಂದಳವಳಿದು | ದೀಬಲದ ಮಂದಿ ಮತ್ತೀಗಳಿವನೊರ್ವನಿದೆ | ಕೋ ಬಂದನೆಂದಿಸುವ ಬೆಸೆಗಳ್ಗೆ ದೆಸೆಗೆಟ್ಟು ಸೇನೆ ಗಜಬಜಿಸೆ ಕಂಡು |
ಶಾಬಮೃಗಮಂಜಿಪುದು ಗಡ ಪುಲಿಯನೆನುತಾ ಮ | ಹಾಬಾಹು ಶತ್ರುಘ್ನನಾಗ ನಿಜದಳಪತಿಯ | ನೇ ಬೇಗ ಕಳುಹಿದೊಡವಂ ಸಕಲಸೇನೆಸಹಿತೈದಿದಂ ಕುಶನಮೇಲೆ ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಆ ಬಾಲಕನ ಬಾಣಘಾತದಿಂದ ಅಳವಳಿದುದು ಈ ಬಲದ ಮಂದಿ ಮತ್ತೆ ಈಗಳು ಇವನೊರ್ವನು ಇದೆಕೋ ಬಂದನೆಂದು ಎಸುವ ಬೆಸೆಗಳ್ಗೆ ದೆಸೆಗೆಟ್ಟು ಸೇನೆ ಗಜಬಜಿಸೆ ಕಂಡು=[ಆ ಬಾಲಕನ ಬಾಣದ ಹೊಡೆತದಿಂದ ಈ ಸೈನ್ಯದ ಭಟರರ ಶಕ್ತಿಗುಂದಿತು; ಮತ್ತೆ ಈಗ ಇವನೊಬ್ಬನೇ ಬಂದನು ಇದೆನೋಡಿ ಎಂದು, ಅವನು ಬಿಡುವ ಬಾಣಗಳಿಗೆ ದಿಕ್ಕುಗೆಟ್ಟು ಸೇನೆ ಗಾಬರಿಯಿಂದ ಗಜಬಜಿಸಿತು. ಅದನ್ನು ಕಂಡು ]; ಶಾಬಮೃಗಂ (ಎಳೆ ಜಿಂಕೆ) ಅಂಜಿಪುದು ಗಡ ಪುಲಿಯನು ಎನುತಾ ಮಹಾಬಾಹು ಶತ್ರುಘ್ನನಾಗ ನಿಜದಳಪತಿಯನೇ ಬೇಗ ಕಳುಹಿದೊಡೆ ಅವಂ ಸಕಲಸೇನೆಸಹಿತ ಐದಿದಂ ಕುಶನಮೇಲೆ=[ಎಳೆ ಜಿಂಕೆಮರಿ ಹುಲಿಯನ್ನು ಅಂಜಿಸುವುದು ಗಡ! ಎನ್ನುತ್ತಾ ಮಹಾಬಾಹು ಶತ್ರುಘ್ನನು ಆಗ ತನ್ನ ದಳಪತಿಯನ್ನೇ ಬೇಗ ಕಳುಹಿಸಿದನು. ಅವನು ಸಕಲಸೇನೆಸಹಿತ ಕುಶನಮೇಲೆ ಯುದ್ಧಕ್ಕೆ ಬಂದನು.]
 • ತಾತ್ಪರ್ಯ-:ಆ ಬಾಲಕನ ಬಾಣದ ಹೊಡೆತದಿಂದ ಈ ಸೈನ್ಯದ ಭಟರರ ಶಕ್ತಿಗುಂದಿತು; ಮತ್ತೆ ಈಗ ಇವನೊಬ್ಬನೇ ಬಂದನು ಇದೆನೋಡಿ ಎಂದು, ಅವನು ಬಿಡುವ ಬಾಣಗಳಿಗೆ ದಿಕ್ಕುಗೆಟ್ಟು ಸೇನೆ ಗಾಬರಿಯಿಂದ ಗಜಬಜಿಸಿತು. ಅದನ್ನು ಕಂಡು, ಎಳೆ ಜಿಂಕೆಮರಿ ಹುಲಿಯನ್ನು ಅಂಜಿಸುವುದು ಗಡ! ಎನ್ನುತ್ತಾ ಮಹಾಬಾಹು ಶತ್ರುಘ್ನನು ಆಗ ತನ್ನ ದಳಪತಿಯನ್ನೇ ಬೇಗ ಕಳುಹಿಸಿದನು. ಅವನು ಸಕಲ ಸೇನೆ ಸಹಿತ ಕುಶನಮೇಲೆ ಯುದ್ಧಕ್ಕೆ ಬಂದನು.
 • (ಪದ್ಯ-೨೫)

ಪದ್ಯ :೨೬:[ಸಂಪಾದಿಸಿ]

ಬಳಿಕ ಶತ್ರುಘ್ನನ ನಿರೂಪದಿಂ ತಿರುಗಿದಂ | ದಳಪತಿ ಸಮಸ್ತಬಲಸಹಿತಾ ಕುಮಾರನಂ | ಬಳಸಿದಂ ತಮತಮಗೆ ವಿವಿಧಾಯುಧಂಗಳಂ ಜಾಳಿಸುತೆ ವಹಿಲದಿಂದೆ ||
ಅಳವಿಯೊಳ್ ತೀವಿದುವು ಕುದುರೆ ತೇರಾನೆಯಾಳ್ | ಕೊಳುಗುಳದೊಳನಿತುಮಂ ಸವರಿ ಸೇನಾನಿಯಂ | ಕಳುಹಿದಂ ಜವವೊಳಲ್ಗವನ ಸಾರಥಿ ರಥಾಶ್ವಂವೆರಸಿ ವೀರಕುಶನು ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಳಿಕ ಶತ್ರುಘ್ನನ ನಿರೂಪದಿಂ ತಿರುಗಿದಂ ದಳಪತಿ ಸಮಸ್ತಬಲ ಸಹಿತ ಆ ಕುಮಾರನಂ ಬಳಸಿದಂ=[ಬಳಿಕ ಶತ್ರುಘ್ನನ ಆಜ್ಞೆಯಂತೆ ದಳಪತಿಯು ಸಮಸ್ತ ಸೈನ್ಯ ಸಹಿತ ತಿರುಗಿನಿಂತು ಆ ಕುಮಾರನನ್ನು ಸುತ್ತುವರಿದನು.]; ತಮತಮಗೆ ವಿವಿಧ ಆಯುಧಂಗಳಂ ಜಾಳಿಸುತೆ ವಹಿಲದಿಂದೆ ಅಳವಿಯೊಳ್ (ಶಕ್ತಿ) ತೀವಿದುವು ಕುದುರೆ ತೇರಾನೆಯಾಳ್ ಕೊಳುಗುಳದೊಳು=[ತಮ್ಮತಮ್ಮಲ್ಲಿ ವಿವಿಧ ಆಯುಧಗಳನ್ನು ಝಳುಪಿಸುತ್ತಾ ವೇಗವಾಗಿ ತಮ್ಮ ಪೂರ್ಣ ಶಕ್ತಿಯಿಂದ ಕುದುರೆ, ರಥ,ಆನೆ ಆಳುಗಳು ಯುದ್ಧದಲ್ಲಿ ತೊಡಗಿ ಮುತ್ತಿದುವು]; ಅನಿತುಮಂ ಸವರಿ ಸೇನಾನಿಯಂ ಕಳುಹಿದಂ ಜವವೊಳಲ್ಗೆ (ಜವ+ಒಳಲು,ಯಮನ ಪುರ)ಅವನ ಸಾರಥಿ ರಥಾಶ್ವಂವೆರಸಿ ವೀರಕುಶನು=[ವೀರಕುಶನು ಅಷ್ಟೂ ಸೈನ್ಯವನ್ನು ಸವರಿ ಸೇನಾಧಿಪತಿಯನ್ನು, ಅವನ ಸಾರಥಿ ರಥ,ಅಶ್ವ ಎಲ್ಲವನ್ನೂ ಸೇರಿಸಿ ಯಮನ ಪುರಕ್ಕೆ ಕಳುಹಿದನು].
 • ತಾತ್ಪರ್ಯ-:ಬಳಿಕ ಶತ್ರುಘ್ನನ ಆಜ್ಞೆಯಂತೆ ದಳಪತಿಯು ಸಮಸ್ತ ಸೈನ್ಯ ಸಹಿತ ತಿರುಗಿನಿಂತು ಆ ಕುಮಾರನನ್ನು ಸುತ್ತುವರಿದನು. ತಮ್ಮತಮ್ಮಲ್ಲಿ ವಿವಿಧ ಆಯುಧಗಳನ್ನು ಝಳುಪಿಸುತ್ತಾ ವೇಗವಾಗಿ ತಮ್ಮ ಪೂರ್ಣ ಶಕ್ತಿಯಿಂದ ಕುದುರೆ, ರಥ,ಆನೆ ಆಳುಗಳು ಯುದ್ಧದಲ್ಲಿ ತೊಡಗಿ ಮುತ್ತಿದುವು; ವೀರಕುಶನು ಅಷ್ಟೂ ಸೈನ್ಯವನ್ನು ಸವರಿ ಸೇನಾಧಿಪತಿಯನ್ನು, ಅವನ ಸಾರಥಿ ರಥ,ಅಶ್ವ ಎಲ್ಲವನ್ನೂ ಸೇರಿಸಿ ಯಮನ ಪುರಕ್ಕೆ ಕಳುಹಿದನು.
 • (ಪದ್ಯ-೨೬)

ಪದ್ಯ :೨೭:[ಸಂಪಾದಿಸಿ]

ಆ ದಳಪತಿಯ ತಮ್ಮನೋರ್ವ ನಗನೆಂಬವಂ | ಕಾದಿ ಮಡಿದಣ್ಣನಂಕಾಣುತ್ತ ಖತಿಯಿಂ ಮ | ಹಾದಂತಿಯಂಕುಶನ ಮೇಲೆಯಂಕುಶದಿಂದಿರಿದು ನೂಕಿದಂ ಕುಶಲದ ||
ಜೋದಗಾಳಗದಿಂದೆ ಬಳಿಕೆರಡುಸೀಳಾಗಿ | ಮೇದಿನಿಗೆ ಬೀಳ್ವಂತಿಭವ ನೆಚ್ಚವನ ಧನು | ಚ್ಛೇದಮಂ ಮಾಡಲಾತಂ ಪಲಗೆ ಕಡುಗಮಂ ಕೊಂಡವಂಗಿದಿರಾದನು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಆ ದಳಪತಿಯ ತಮ್ಮನು ಓರ್ವ ನಗನೆಂಬವಂ ಕಾದಿ ಮಡಿದ ಅಣ್ಣನಂ ಕಾಣುತ್ತ ಖತಿಯಿಂ ಮಹಾದಂತಿಯಂ ಕುಶನ ಮೇಲೆಯಂಕುಶದಿಂದ ಇರಿದು ನೂಕಿದಂ=[ಆ ದಳಪತಿಯ ತಮ್ಮನು ಒಬ್ಬ ನಗನೆಂಬವವನು, ಯುದ್ಧಮಾಡಿ ಸತ್ತ ಅಣ್ಣನನ್ನು ಕಂಡು ಸಿಟ್ಟಿನಿಂದ ಮಹಾಆನೆಯನ್ನು ಕುಶನ ಮೇಲೆ ಅಂಕುಶದಿಂದ ಇರಿದು ನೂಕಿದನು.]; ಕುಶಲದ (ಚಮತ್ಕಾರದ) ಜೋದಗಾಳಗದಿಂದೆ (ಜೋದ=ಮಾವಟಿಗ;ವಿಷ್ಣು, ಯೋಧರ ಕಾಳಗದಿಂದ) ಬಳಿಕೆ ಎರಡು ಸೀಳಾಗಿ ಮೇದಿನಿಗೆ ಬೀಳ್ವಂತೆ ಇಭವನು ಎಚ್ಚಿ ಅವನ ಧನುಚ್ಛೇದಮಂ ಮಾಡಲು=[ಬಳಿಕ ಚಮತ್ಕಾರದ ಜೋದ-ಕಾಳಗದಿಂದ ಆನೆಯನ್ನು ಎರಡು ಸೀಳಾಗಿ ಭೂಮಿಗೆ ಬೀಳುವಂತೆ,ಆನೆಯನ್ನು ಹೊಡೆದು ಅವನ ಬಿಲ್ಲನ್ನು ತುಂಡು ಮಾಡಲು]; ಆತಂ ಪಲಗೆ ಕಡುಗಮಂ ಕೊಂಡು ಅವಂಗೆ ಇದಿರಾದನು=[ಆತನು ಹಲಗೆ ಖಡ್ಗವನ್ನು ತೆಗೆದುಕೊಂಡು ಅವನಿಗೆ (ಕುಶನಿಗೆ) ಇದಿರಾದನು].
 • ತಾತ್ಪರ್ಯ-:ಆ ದಳಪತಿಯ ತಮ್ಮನು ಒಬ್ಬ ನಗನೆಂಬವವನು, ಯುದ್ಧಮಾಡಿ ಸತ್ತ ಅಣ್ಣನನ್ನು ಕಂಡು ಸಿಟ್ಟಿನಿಂದ ಮಹಾಆನೆಯನ್ನು ಕುಶನ ಮೇಲೆ ಅಂಕುಶದಿಂದ ಇರಿದು ನೂಕಿದನು. ಬಳಿಕ ಚಮತ್ಕಾರದ ಜೋದ-ಕಾಳಗದಿಂದ ಆನೆಯನ್ನು ಎರಡು ಸೀಳಾಗಿ ಭೂಮಿಗೆ ಬೀಳುವಂತೆ,ಆನೆಯನ್ನು ಹೊಡೆದು ಅವನ ಬಿಲ್ಲನ್ನು ತುಂಡು ಮಾಡಲು]; ಆತಂ ಪಲಗೆ ಕಡುಗಮಂ ಕೊಂಡು ಅವಂಗೆ ಇದಿರಾದನು=[ಆತನು ಹಲಗೆ ಖಡ್ಗವನ್ನು ತೆಗೆದುಕೊಂಡು ಅವನಿಗೆ (ಕುಶನಿಗೆ) ಇದಿರಾದನು].
 • (ಪದ್ಯ-೨೬)

ಪದ್ಯ :೨೮:[ಸಂಪಾದಿಸಿ]

ಕಿತ್ತಡಾಯುಧದೊಳೈದುವನ ಘನ ಹಸ್ತಮಂ | ಕತ್ತರಿಸಲೆಡಗೈಯೊಳೊಂದು ಗದೆಯಂ ಕೊಂಡು | ಮತ್ತೆ ಮೇಲ್ವಾಯ್ದೊಡಾ ಕರಮಂ ಕಡಿಯೆ ಬಾಹುಗಳಿಂದೆ ಪೊಯ್ವೆನೆಂದು ||
ಒತ್ತಿ ನಡೆತರಲೆರಡು ತೋಳ್ಗಳಂ ಕೂರ್ಗಣೆಯೊ | ಳುತ್ತರಿಸೆ ಕಾಲ್ಗಳಿಂದೊದೆದು ಕೆಡಪುವ ಭರದೊ | ಳೆತ್ತಲಾ ತೊಡೆಗಳನವಂ ಬೇಗದಿಂದೆಯ್ದೆ ಕುಶನೆಚ್ಚು ತುಂಡಿಸಿದನು ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕಿತ್ತಡ ಆಯುಧದೊಳು ಐದುವನ ಘನ ಹಸ್ತಮಂ ಕತ್ತರಿಸಲು=[ಅಪಾಯಕರ (ಉದ್ದ ಕತ್ತಿ)ಆಯುಧ ಹಿಡಿದು ಬರವ ನಗನ ಹಸ್ತವನ್ನು ಕತ್ತರಿಸಲು]; ಎಡಗೈಯೊಳು ಒಂದು ಗದೆಯಂ ಕೊಂಡು ಮತ್ತೆ ಮೇಲ್ವಾಯ್ದೊಡೆ ಆ ಕರಮಂ ಕಡಿಯೆ ಬಾಹುಗಳಿಂದೆ ಪೊಯ್ವೆನೆಂದು=[ಅವನು ಎಡಗೈಯಲ್ಲಿ ಒಂದು ಗದೆಯನ್ನು ತೆಗೆದುಕೊಂಡು ಮತ್ತೆ ಕುಶನ ಮೇಲೆ ಹಾಯ್ದು ಧಾಳಿಮಾಡಿದಾಗ, ಆ ಕೈಯನ್ನೂ ಕಡಿಯಲು, ತೋಳುಗಳಿಂದ ಹೊಡೆಯುವೆನೆಂದು]; ಒತ್ತಿ ನಡೆತರಲು ಎರಡು ತೋಳ್ಗಳಂ ಕೂರ್ಗಣೆಯೊಳು ಉತ್ತರಿಸೆ ಕಾಲ್ಗಳಿಂದ ಒದೆದು ಕೆಡಪುವ ಭರದೊಳು ಎತ್ತಲು ಆ ತೊಡೆಗಳನು ಅವಂ ಬೇಗದಿಂದ ಎಯ್ದೆ ಕುಶನು ಎಚ್ಚು ತುಂಡಿಸಿದನು=[ಮುಂದೆ ನುಗ್ಗಿ ಬರಲು ಅವನ ಎರಡು ತೋಳುಗಳನ್ನೂ ಹರಿತ ಬಾಣಗಳಿಂದ ಕತ್ತರಿಸಲು, ಕಾಲುಗಳಿಂದ ಒದೆದು ಕೆಡಗುವುದಕ್ಕಾಗಿ ಭರದಿಂದ ಎತ್ತಲು, ಆ ತೊಡೆಗಳನ್ನು ಎತ್ತಿ ಅವನು ಬೇಗದಿಂದ ಬರಲು ಕುಶನು ಹೊಡೆದು ತುಂಡರಿಸಿದನು.].
 • ತಾತ್ಪರ್ಯ-:ಅಪಾಯಕರ (ಉದ್ದ ಕತ್ತಿ)ಆಯುಧ ಹಿಡಿದು ಬರವ ನಗನ ಹಸ್ತವನ್ನು ಕತ್ತರಿಸಲು, ಅವನು ಎಡಗೈಯಲ್ಲಿ ಒಂದು ಗದೆಯನ್ನು ತೆಗೆದುಕೊಂಡು ಮತ್ತೆ ಕುಶನ ಮೇಲೆ ಹಾಯ್ದು ಧಾಳಿಮಾಡಿದಾಗ, ಆ ಕೈಯನ್ನೂ ಕಡಿಯಲು, ತೋಳುಗಳಿಂದ ಹೊಡೆಯುವೆನೆಂದು, ಮುಂದೆ ನುಗ್ಗಿ ಬರಲು ಅವನ ಎರಡು ತೋಳುಗಳನ್ನೂ ಹರಿತ ಬಾಣಗಳಿಂದ ಕತ್ತರಿಸಲು, ಕಾಲುಗಳಿಂದ ಒದೆದು ಕೆಡಗುವುದಕ್ಕಾಗಿ ಭರದಿಂದ ಆ ತೊಡೆಗಳನ್ನು ಎತ್ತಿ ಅವನು ಬೇಗದಿಂದ ಬರಲು ಕುಶನು ಹೊಡೆದು ತುಂಡರಿಸಿದನು.
 • (ಪದ್ಯ-೨೮)

ಪದ್ಯ :೨೯:[ಸಂಪಾದಿಸಿ]

ಬಾಹುಯುಗಮೂರುದ್ವಯಂ ಪೋದ ಕಾಯದಿಂ | ಸಾಹಸಂಗೈದವಂ ಮೇಲ್ವಾಯ್ದು ಚಂದ್ರಂಗೆ | ರಾಹುವಂಗೈಸುವಂತುರವಣಿಸೆ ಕುಶನಳುಕದೆಚ್ಚವನ ತಲೆಯನರಿಯೆ ||
ಮಾಹೇಶ್ವರಾಭರಣದೊಳ್ ಮೆರೆದುದಾ ಶಿರಂ | ಕಾಹುರದ ಕುವರನದಟಂ ಕಂಡು ಖಾತಿಯಿಂ | ದಾಹವಕೆ ಬಿಲ್ದುಡುಕಿ ತರಳನಂ ಕೆಣಕಿದಂ ಬಂದು ಕಲಿ ಶತ್ರುಘ್ನನು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಾಹುಯುಗಂ ಊರುದ್ವಯಂ ಪೋದ ಕಾಯದಿಂ ಸಾಹಸಂ ಗೈದವಂ ಮೇಲ್ವಾಯ್ದು ಚಂದ್ರಂಗೆ ರಾಹುವು ಅಂಗೈಸುವಂತೆ=[ಎರಡು ತೋಳುಗಳು, ಎರಡು ತೊಡೆಗಳು, ಹೋದ ದೇಹದಿಂದ ಸಾಹಸವನ್ನು ಮಾಡಿಮೇಲೆ ಬೀಳಲು ಬರಲು, ಚಂದ್ರನಿಗೆ ರಾಹುವು ನುಂಗುವಂತೆ]; ಉರವಣಿಸೆ ಕುಶನು ಅಳುಕದೆ ಎಚ್ಚು ಅವನ ತಲೆಯನು ಅರಿಯೆ (ಅರಿ=ಕತ್ತರಿಸು) ಮಾಹೇಶ್ವರಾಭರಣದೊಳ್ ಮೆರೆದುದಾ ಶಿರಂ=[ಪರಾಕ್ರಮ ತೋರಲು, ಕುಶನು ಅಳುಕದೆ ಹೊಡೆದು ಅವನ ತಲೆಯನ್ನು ಬಾಣದಿಂದ ಕಡಿಯಲು, ಅದು ಶಿವನ ಕುತ್ತಿಗೆಯ ರುಣಡಮಾಲೆಯಲ್ಲಿ ಸೇರಿಕೊಂಡು ಪ್ರಕಾಶಿಸುತ್ತಿತ್ತು]; ಕಾಹುರದ ಕುವರನ ಅದಟಂ ಕಂಡು ಖಾತಿಯಿಂದ ಆಹವಕೆ ಬಿಲ್ ತುಡುಕಿ ತರಳನಂ ಕೆಣಕಿದಂ ಬಂದು ಕಲಿ ಶತ್ರುಘ್ನನು=[ಪೌರುಷದ ಬಾಲಕನ ಪರಾಕ್ರಮವನ್ನು ಕಂಡು, ಸಿಟ್ಟಿನಿಂದ ಯುದ್ಧಕ್ಕೆ ಬಿಲ್ಲು ಹಿಡಿದು ಬಂದು ಕಲಿ ಶತ್ರುಘ್ನನು, ಬಾಲಕ ಕುಶನನ್ನು ಕೆಣಕಿದನು].
 • ತಾತ್ಪರ್ಯ-:ಎರಡು ತೋಳುಗಳು, ಎರಡು ತೊಡೆಗಳು, ಹೋದ ದೇಹದಿಂದ ಸಾಹಸವನ್ನು ಮಾಡಿಮೇಲೆ ಬೀಳಲು ಬರಲು, ಚಂದ್ರನಿಗೆ ರಾಹುವು ನುಂಗುವಂತ; ಪರಾಕ್ರಮ ತೋರಲು, ಕುಶನು ಅಳುಕದೆ ಹೊಡೆದು ಅವನ ತಲೆಯನ್ನು ಬಾಣದಿಂದ ಕಡಿಯಲು, ಅದು ಶಿವನ ಕುತ್ತಿಗೆಯ ರುಣಡಮಾಲೆಯಲ್ಲಿ ಸೇರಿಕೊಂಡು ಪ್ರಕಾಶಿಸುತ್ತಿತ್ತು; ಪೌರುಷದ ಬಾಲಕನ ಪರಾಕ್ರಮವನ್ನು ಕಂಡು, ಸಿಟ್ಟಿನಿಂದ ಯುದ್ಧಕ್ಕೆ ಬಿಲ್ಲು ಹಿಡಿದು ಬಂದು ಕಲಿ ಶತ್ರುಘ್ನನು, ಬಾಲಕ ಕುಶನನ್ನು ಕೆಣಕಿದನು].
 • (ಪದ್ಯ-೨೯)

ಪದ್ಯ :೩೦:[ಸಂಪಾದಿಸಿ]

ಕಡುಮುಳಿದು ಶತ್ರುಘ್ನನೊಂಬತ್ತು ಬಾಣದಿಂ | ಬಿಡದೆಚ್ಚೊಡಾ ಕುಶಂ ಕೋಪದಿಂದವನ ತೇ | ರ್ಪುಡಿಯಾಗೆ ಸಾರಥಿರಥಾಶ್ವಂಗಳೆಡೆಗೆಡೆಯೆ ಬಿಲ್ಲುಡಿಯೆ ಪೇರುರದೊಳು ||
ನಿಡುಸರಳ್ಕೀಲಿಸಲ್ ಕರೆದನಂಬುಗಳನೊಡ | ನೊಡನೆ ಕೂರ್ಗಣೆಗಳಾರಂ ಮತ್ತೆ ವಕ್ಷದೊಳ್ | ತುಡಿಸಿದಂ ಕುಶನದರ ಘಾತಿಗೆ ವರೂಥದಿಂ ಭರತಾನುಜಂ ಬಿದ್ದನು ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕಡುಮುಳಿದು ಶತ್ರುಘ್ನನು ಒಂಬತ್ತು ಬಾಣದಿಂ ಬಿಡದೆ ಎಚ್ಚೊಡೆ=[ಬಹಳ ಸಿಟ್ಟಿನಿಂದ ಶತ್ರುಘ್ನನು ಒಂಬತ್ತು ಬಾಣದಿಂದ ಬಿಡದೆ ಹೊಡೆದಾಗ,]; ಆ ಕುಶಂ ಕೋಪದಿಂದ ಅವನ ತೇರ್ ಪುಡಿಯಾಗೆ ಸಾರಥಿ ರಥ ಅಅಶ್ವಂಗಳ್ ಎಡೆಗೆಡೆಯೆ ಬಿಲ್ಲು ಉಡಿಯೆ ಪೇರು ಉರದೊಳು ನಿಡುಸರಳ್ ಕೀಲಿಸಲ್=[ಆ ಕುಶನು ಕೋಪದಿಂದ ಅವನ ರಥ ಪುಡಿಯಾಗುವಂತೆ, ಸಾರಥಿ ರಥ ಅಶ್ವಗಳು ದಿಕ್ಕುತಪ್ಪುವಂತೆ, ಬಿಲ್ಲು (ಹುಡಿ)ತುಂಡಾಗುವಂತೆ, ಬಾಣಗಳನ್ನು ಬಿಟ್ಟು, ಅವನ ವಿಶಾಲ ಎದೆಯಲ್ಲಿ ಉದ್ದಸರಳು (ಬಾಣವು) ಚುಚ್ಚುವಂತೆ ಮಾಡಲು,]; ಕರೆದನು ಅಂಬುಗಳನು ಒಡನೊಡನೆ ಕೂರ್ಗಣೆಗಳ ಆರಂ ಮತ್ತೆ ವಕ್ಷದೊಳ್ ತುಡಿಸಿದಂ ಕುಶನು ಅದರ ಘಾತಿಗೆ ವರೂಥದಿಂ ಭರತಾನುಜಂ ಬಿದ್ದನು=[ಮತ್ತೂ ಬಿಡದೆ ಮೆಲಿಂದ ಮೇಲೆ ಬಾಣಗಳ ಮಳೆಯನ್ನು ಸುರಿಸಿದನು; ಮೊನಚಾದ ಆರು ಬಾಣಗಳನ್ನು ಮತ್ತೆ ಕುಶನು ಅವನ ಎದೆಗೆ ಹೊಡೆದನು. ಅದರ ಹೊಡೆತಕ್ಕೆ ಭರತಾನುಜ ಶತ್ರುಘ್ನನು ರಥದಿಂದ ಕೆಳಗೆ ಬಿದ್ದನು].
 • ತಾತ್ಪರ್ಯ-:ಬಹಳ ಸಿಟ್ಟಿನಿಂದ ಶತ್ರುಘ್ನನು ಒಂಬತ್ತು ಬಾಣದಿಂದ ಬಿಡದೆ ಹೊಡೆದಾಗ, ಆ ಕುಶನು ಕೋಪದಿಂದ ಅವನ ರಥ ಪುಡಿಯಾಗುವಂತೆ, ಸಾರಥಿ ರಥ ಅಶ್ವಗಳು ದಿಕ್ಕುತಪ್ಪುವಂತೆ, ಬಿಲ್ಲು (ಉಡಿ-ಹುಡಿ)ತುಂಡಾಗುವಂತೆ, ಬಾಣಗಳನ್ನು ಬಿಟ್ಟು, ಅವನ ವಿಶಾಲ ಎದೆಯಲ್ಲಿ ಉದ್ದಸರಳು (ಬಾಣವು) ಚುಚ್ಚುವಂತೆ ಮಾಡಲು, ಮತ್ತೂ ಬಿಡದೆ ಮೆಲಿಂದ ಮೇಲೆ ಬಾಣಗಳ ಮಳೆಯನ್ನು ಸುರಿಸಿದನು; ಮೊನಚಾದ ಆರು ಬಾಣಗಳನ್ನು ಮತ್ತೆ ಕುಶನು ಅವನ ಎದೆಗೆ ಹೊಡೆದನು. ಅದರ ಹೊಡೆತಕ್ಕೆ ಭರತಾನುಜ ಶತ್ರುಘ್ನನು ರಥದಿಂದ ಕೆಳಗೆ ಬಿದ್ದನು.
 • (ಪದ್ಯ-೩೦)

ಪದ್ಯ :೩೧:[ಸಂಪಾದಿಸಿ]

ಗಿರಿತಟದೊಳೊಂದೊಂದರೊಳ್ ಪೆಣಗಿ ಸೋಲ್ತ ಮದ | ಕರಿ ಧರೆಗುರುಳ್ವಂತೆ ಪೂರಾಯ ಗಾಯದಿಂ | ದಿರದೆ ಶತ್ರುಘ್ನಂ ಮಹೀತಳಕೆ ರಥದಿಂದೆ ಬೀಳ್ವನಿತರೊಳ್ ಪಡೆಯೊಳು ||
ದೊರೆದೊರೆಗಳೆಲ್ಲರುಂ ಕೈಕೊಂಡು ಕಾದಿ ಸಂ | ಗರದೊಳ್ ಪತಿತರಾದರಾ ಕುಶನ ಬಾಣದಿಂ | ಪಿರಿದು ಕನ್ಯಾವಿಕ್ರಯಂಗೈದು ಜೀವಿಸುವ ಮಾನವನ ಪಿತೃಗಳಂತೆ ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಗಿರಿತಟದೊಳ್ ಒಂದೊಂದರೊಳ್ ಪೆಣಗಿ (ಹೆಣಗಿ) ಸೋಲ್ತ ಮದಕರಿ ಧರೆಗೆ ಉರುಳ್ವಂತೆ ಪೂರಾಯ ಗಾಯದಿಂದ ಇರದೆ ಶತ್ರುಘ್ನಂ ಮಹೀತಳಕೆ ರಥದಿಂದೆ ಬೀಳ್ವ ಅನಿತರೊಳ್=[ಬೆಟ್ಟದ ತಪ್ಪಲಲ್ಲಿ ಒಂದಕ್ಕೊಂದು ಹೋರಾಡಿ ಸೋತ ಮದ್ದಾನೆ ಭೂಮಿಗೆ ಬೀಳುವಂತೆ, ಪೂರಾ ಮೈ ಗಾಯದಿಂದ ಶತ್ರುಘ್ನನ್ನು ನೆಲಕ್ಕೆ ರಥದಿಂದೆ ಬೀಳುವಷ್ಟರಲ್ಲಿ ಇರದೆ]; ಪಡೆಯೊಳು ದೊರೆದೊರೆಗಳೆಲ್ಲರುಂ ಕೈಕೊಂಡು ಕಾದಿ ಸಂಗರದೊಳ್ ಪತಿತರು ಆದರು ಆ ಕುಶನ ಬಾಣದಿಂ ಪಿರಿದು ಕನ್ಯಾವಿಕ್ರಯಂ ಗೈದು ಜೀವಿಸುವ ಮಾನವನ ಪಿತೃಗಳಂತೆ=[ಸೈನ್ಯದಲ್ಲಿದ್ದ ರಾಜರೆಲ್ಲರೂ, ತಾವೂ ಯುದ್ಧವನ್ನು ಮಾಡಿ, ಯದ್ಧದಲ್ಲಿ ಸೋತು ಪತಿತರಾದರು. ಆ ಕುಶನ ಬಾಣದಿಂದ ಬಹಳ ಹಣಕ್ಕೆ ಕನ್ಯಾವಿಕ್ರಯವನ್ನುಮಾಡಿ ಜೀವಿಸುವ ಕನ್ಯೆಯರ ತಂದೆಯರ ಪಿತೃಗಳು ಪಿತೃಲೋಕದಿಂದ ಕೆಳಗೆ ಬೀಳುವಂತೆ ಭೂಮಿಯಲ್ಲಿ ಬಿದ್ದರು.]
 • ತಾತ್ಪರ್ಯ-:ಬೆಟ್ಟದ ತಪ್ಪಲಲ್ಲಿ ಒಂದಕ್ಕೊಂದು ಹೋರಾಡಿ ಸೋತ ಮದ್ದಾನೆ ಭೂಮಿಗೆ ಬೀಳುವಂತೆ, ಶತ್ರುಘ್ನನ್ನು ನೆಲಕ್ಕೆ ರಥದಿಂದೆ ಬೀಳುವಷ್ಟರಲ್ಲಿ ಇರದೆ, ಪೂರಾ ಮೈ ಗಾಯದಿಂದ ಸೈನ್ಯದಲ್ಲಿದ್ದ ರಾಜರೆಲ್ಲರೂ, ತಾವೂ ಯುದ್ಧವನ್ನು ಮಾಡಿ, ಆ ಕುಶನ ಬಾಣದಿಂದ ಯದ್ಧದಲ್ಲಿ ಸೋತು ಪತಿತರಾದರು. ಬಹಳ ಹಣಕ್ಕೆ ಕನ್ಯಾವಿಕ್ರಯವನ್ನುಮಾಡಿ ಜೀವಿಸುವ ಕನ್ಯೆಯರ ತಂದೆಯರ ಪಿತೃಗಳು ಪಿತೃಲೋಕದಿಂದ ಕೆಳಗೆ ಬೀಳುವಂತೆ ಭೂಮಿಯಲ್ಲಿ ಬಿದ್ದರು.]
 • (ಪದ್ಯ-೩೧)

ಪದ್ಯ :೩೨:[ಸಂಪಾದಿಸಿ]

ಬಹುದುರಿತಮಂ ಸ್ವಧರ್ಮದೊಳೊರಸುವಂತೆ ಕುಶ | ನಹಿತರಂ ತನ್ನ ಭುಜಬಲದಿಂದೆ ಸವರಿದಂ | ಮಹದಾಹವದ ಮೂರ್ಛೆ ತಿಳಿದನಿತರೊಳ್ ಕಂಡನಣ್ಣನಂ ಬಳಿಕಲವನು ||
ಸಹಜಾತರಿರ್ವರುಂ ಕೂಡಿದರ್ ಪವನ ಹುತ | ವಹರಂತೆ ಮತ್ತೆ ಹಯಮಂ ಕಟ್ಟಿಕೊಂಡು ವಿ | ಗ್ರಹಕೆ ನಿಲಲರಸನಲ್ಲಿಗೆ ದೂತರಂ ಕಳುಹಿದರ್ ಬಲದೊಳುಳಿದಭಟರು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಹುದುರಿತಮಂ ಸ್ವಧರ್ಮದೊಳ್ ಒರಸುವಂತೆ ಕುಶನು ಅಹಿತರಂ ತನ್ನ ಭುಜಬಲದಿಂದೆ ಸವರಿದಂ=[ಬಹಳ ಪಾಪದೋಷಗಳನ್ನು ಸ್ವಧರ್ಮದ ಆಚರಣೆಯಿಂದ ಪರಿಹರಿಸುವಂತೆ, ಕುಶನು ಶತ್ರುಗಳನ್ನು ತನ್ನ ಭುಜಬಲ ಪರಾಕ್ರಮದಿಂದ ಸವರಿದನು/ಸೋಲಿಸಿದನು.]; ಮಹದ್/ತ್ ಆಹವದ ಮೂರ್ಛೆ ತಿಳಿದ ಅನಿತರೊಳ್ ಕಂಡನು ಅಣ್ಣನಂ ಬಳಿಕ ಲವನು ಸಹಜಾತರು ಈರ್ವರುಂ ಕೂಡಿದರ್ ಪವನ ಹುತವಹರಂತೆ=[ಈ ಮಹಾ ಯುದ್ಧದ ಅಂತ್ಯವಾಗುವಷ್ಟಲ್ಲಿ, ಮೂರ್ಛೆಯಿಂದ ಎಚ್ಚೆತ್ತು ಅಣ್ಣನನ್ನು ಲವನು ಕಂಡನು. ಬಳಿಕ ಲವನು ಕುಶ ಸಹಜಾತರು ಇಬ್ಬರೂ ಕೂಡಿಕೊಂಡರು.ಅದು ಗಾಳಿ ಮತ್ತು ಬೆಂಕಿ ಸೇರಿದಂತೆ ಆಯಿತು.]; ಮತ್ತೆ ಹಯಮಂ ಕಟ್ಟಿಕೊಂಡು ವಿಗ್ರಹಕೆ ನಿಲಲು ಅರಸನಲ್ಲಿಗೆ ದೂತರಂ ಕಳುಹಿದರ್ ಬಲದೊಳು ಉಳಿದಭಟರು=[ಪುನಃ ಕುದುರೆಯನ್ನು ಕಟ್ಟಿಕೊಂಡು ಯುದ್ಧಕ್ಕೆ ಬಾಲಕರು ನಿಲ್ಲಲು, ಸೈನ್ಯದಲ್ಲಿ ಉಳಿದಭಟರು ಅರಸ ರಾಮನ ಬಳಗೆ ದೂತರನ್ನು ವಿಚಾರತಿಳಿಸಲು ಕಳುಹಿಸಿದರು.].
 • ತಾತ್ಪರ್ಯ-:ಬಹಳ ಪಾಪದೋಷಗಳನ್ನು ಸ್ವಧರ್ಮದ ಆಚರಣೆಯಿಂದ ಪರಿಹರಿಸುವಂತೆ, ಕುಶನು ಶತ್ರುಗಳನ್ನು ತನ್ನ ಭುಜಬಲ ಪರಾಕ್ರಮದಿಂದ ಸವರಿದನು/ಸೋಲಿಸಿದನು. ಈ ಮಹಾ ಯುದ್ಧದ ಅಂತ್ಯವಾಗುವಷ್ಟಲ್ಲಿ, ಮೂರ್ಛೆಯಿಂದ ಲವನು ಎಚ್ಚೆತ್ತು ಅಣ್ಣನನ್ನು ಕಂಡನು. ಬಳಿಕ ಲವ ಕುಶ ಸಹಜಾತರು ಇಬ್ಬರೂ ಕೂಡಿಕೊಂಡರು.ಅದು ಗಾಳಿ ಮತ್ತು ಬೆಂಕಿ ಸೇರಿದಂತೆ ಆಯಿತು. ಪುನಃ ಕುದುರೆಯನ್ನು ಕಟ್ಟಿಕೊಂಡು ಯುದ್ಧಕ್ಕೆ ಬಾಲಕರು ನಿಲ್ಲಲು, ಸೈನ್ಯದಲ್ಲಿ ಉಳಿದಭಟರು ಅರಸ ರಾಮನ ಬಳಗೆ ದೂತರನ್ನು ವಿಚಾರತಿಳಿಸಲು ಕಳುಹಿಸಿದರು.
 • (ಪದ್ಯ-೩೨)

ಪದ್ಯ :೩೩:[ಸಂಪಾದಿಸಿ]

ಚರು ಪುರೋಡಾಶ ತಂಡುಲ ತಿಲ ವ್ರೀಹಿ ಘೃತ | ದುರು ಹವಿರ್ಧೂಮದಿಂದರುಣಲೋಚನನಾಗಿ | ಪರಿಮೇಖಲಾಶೃಂಗ ಮೃಗಚರ್ಮಧರನಾಗಿ ನವನೀತಲಿಪ್ತನಾಗಿ ||
ಪರಮ ಮುನಿಗಳ್ವೆರಸಿ ಕನಕಜಾನಕಿ ಸಹಿತ | ಭರತಲಕ್ಷ್ಮಣರೊಡನೆ ಕೃತಯಜ್ಞಶಾಲೆಯೊಳ್ | ವರದೀಕ್ಷೆಯಿಂದೆ ಕುಳ್ಳಿರ್ದೆಸೆವ ರಾಮನಂ ಕಂಡು ಚರರಿಂತೆಂದರು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಚರು(ಅನ್ನ), ಪುರೋಡಾಶ (ಹಿಟ್ಟು), ತಂಡುಲ(ಅಕ್ಕಿ), ತಿಲ(ಎಳ್ಳು), ವ್ರೀಹಿ (ಭತ್ತ), ಘೃತ(ತುಪ್ಪ)ದ ಉರು ಹವಿರ್ಧೂಮದಿಂದ ಅರುಣಲೋಚನನಾಗಿ=[ಯಜ್ಞಕ್ಕೆಹಾಕುವ ಪಕ್ವಾನ್ನ, ಚರು(ಅನ್ನ), ಹಿಟ್ಟು, ಅಕ್ಕಿ, ಎಳ್ಳು, ಭತ್ತ), ತುಪ್ಪದ ಮತ್ತು ಬಹಳ ಹವಿರ್ಧೂಮದಿಂದ(ಹೊಗೆ) ಕೆಂಪಾದ ಕಣ್ಣುಳ್ಳವನಾಗಿ,]; ಪರಿಮೇಖಲಾಶೃಂಗ ಮೃಗಚರ್ಮಧರನಾಗಿ ನವನೀತಲಿಪ್ತನಾಗಿ ಪರಮ ಮುನಿಗಳ್ವೆರಸಿ ಕನಕಜಾನಕಿ ಸಹಿತ ಭರತಲಕ್ಷ್ಮಣರೊಡನೆ=[ಪರಿಮೇಖಲಾಶೃಂಗವೆಂಬ ಉಡುದಾರ ಕಟ್ಟಿಕೊಂಡು, ಜಿಂಕೆಯಚರ್ಮಧರಿಸಿ, ಬೆಣ್ಣೆಪೂಸಿದವನಾಗಿ, ಪರಮ ಮುನಿಗಳ ಜೊತೆ ಇದ್ದು, ಚಿನ್ನದಜಾನಕಿ ಸಹಿತ ಭರತಲಕ್ಷ್ಮಣರೊಡನೆ]; ಕೃತಯಜ್ಞಶಾಲೆಯೊಳ್ ವರದೀಕ್ಷೆಯಿಂದೆ ಕುಳ್ಳಿರ್ದು ಎಸೆವ ರಾಮನಂ ಕಂಡು ಚರರು ಇಂತು ಎಂದರು=[ಹೊಸದಾಗಿ ನಿರ್ಮಿಸಿದ ಯಜ್ಞಶಾಲೆಯಲ್ಲಿ ಶ್ರೇಷ್ಠದೀಕ್ಷೆಹೊಂದಿ ಕುಳಿತಿದ್ದ ಶೋಭಿಸುವ ರಾಮನನ್ನು ಕಂಡು ದೂತರು ಇಂತು ಎಂದರು].
 • ತಾತ್ಪರ್ಯ-:ಯಜ್ಞಕ್ಕೆಹಾಕುವ ಪಕ್ವಾನ್ನ, ಚರು(ಅನ್ನ), ಹಿಟ್ಟು, ಅಕ್ಕಿ, ಎಳ್ಳು, ಭತ್ತ), ತುಪ್ಪದ ಮತ್ತು ಬಹಳ ಹವಿರ್ಧೂಮದಿಂದ(ಹೊಗೆ) ಕೆಂಪಾದ ಕಣ್ಣುಳ್ಳವನಾಗಿ, ಪರಿಮೇಖಲಾಶೃಂಗವೆಂಬ ಉಡುದಾರ ಕಟ್ಟಿಕೊಂಡು, ಜಿಂಕೆಯಚರ್ಮಧರಿಸಿ, ಬೆಣ್ಣೆಪೂಸಿದವನಾಗಿ, ಪರಮ ಮುನಿಗಳ ಜೊತೆ ಇದ್ದು, ಚಿನ್ನದಜಾನಕಿ ಸಹಿತ ಭರತಲಕ್ಷ್ಮಣರೊಡನೆ ಹೊಸದಾಗಿ ನಿರ್ಮಿಸಿದ ಯಜ್ಞಶಾಲೆಯಲ್ಲಿ ಶ್ರೇಷ್ಠದೀಕ್ಷೆಹೊಂದಿ ಕುಳಿತಿದ್ದ ಶೋಭಿಸುವ ರಾಮನನ್ನು ಕಂಡು ದೂತರು ಇಂತು ಎಂದರು.
 • (ಪದ್ಯ-೩೩)

ಪದ್ಯ :೩೪:[ಸಂಪಾದಿಸಿ]

ಅವಧರಿಸು ಜೀಯ ನಿನ್ನಧ್ವರದ ಚಾರು ಹಯ | ಮವನಿಯೊಳವಿಘ್ನದಿ ತಿರುಗಿ ಬಂದುದು ಬಳಿಕ | ಲವನೆಂಬ ಬಾಲಕಂ ಕಟ್ಟಿದಂ ಕಡುಗಿದೊಡೆ ಬಲಮೆಲ್ಲಮಂ ಕೊಂದನು ||
ಬವರದೊಳ್ ಶತ್ರುಘ್ನನಾತನಂ ಪಿಡಿದು ತರ | ಲವನ ಬಳಿವಿಡಿದೊರ್ವನೆಯ್ತಂದು ನಿನ್ನನುಜ | ನವಗಡಿಸೆ ಕೆಡೆಯೆಚ್ಚು ಬೀಳ್ಚಿದಂ ಪೇಳಲಂಜುವೆವೆದು ಕೈಮುಗಿದರು ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅವಧರಿಸು(ಕೇಳು) ಜೀಯ ನಿನ್ನ ಅಧ್ವರದ ಚಾರು ಹಯಮ್ ಅವನಿಯೊಳ‍ ಅವಿಘ್ನದಿ ತಿರುಗಿ ಬಂದುದು=[ಅವಧರಿಸು ಜೀಯ/ಒಡೆಯ ರಾಜನೇ ಕೇಳು, ನಿನ್ನ ಯಜ್ಞದ ಸುಂದರ ಕುದುರೆ ಭೂಮಿಯಲ್ಲಿ ಸುತ್ತಿ ತೊಂದರೆ ಇಲ್ಲದೆ ಹಿಂತಿರುಗಿ ಬಂದಿತು.]; ಬಳಿಕ ಲವನೆಂಬ ಬಾಲಕಂ ಕಟ್ಟಿದಂ ಕಡುಗಿದೊಡೆ ಬಲಮೆಲ್ಲಮಂ ಕೊಂದನು=[ಬಳಿಕ ಲವನೆಂಬ ಬಾಲಕನು ಅದನ್ನು ಕಟ್ಟಿದನು; ಗದರಿಸಿದರೆ ನಮ್ಮ ಸೈನ್ಯವೆಲ್ಲವನ್ನೂ ಕೊಂದನು]; ಬವರದೊಳ್ ಶತ್ರುಘ್ನನಾತನಂ ಪಿಡಿದು ತರಲು ಅವನ ಬಳಿವಿಡಿದು ಓರ್ವನೆ ಐಯ್ತಂದು ನಿನ್ನನುಜನು ಅವಗಡಿಸೆ ಕೆಡೆಯೆಚ್ಚು ಬೀಳ್ಚಿದಂ ಪೇಳಲು ಅಂಜುವೆವೆಂದು ಕೈಮುಗಿದರು=[ಯುದ್ಧದಲ್ಲಿ ಶತ್ರುಘ್ನನು ಆತನನ್ನು ಹಿಡಿದು ತರಲು, ಅವನ ದಾರಿತಿಳಿದು, ಒಬ್ಬನೇ ಬಂದು, ನಿನ್ನ ತಮ್ಮನು ಎದುರಿದರೆ, ಕೆಡೆಯುವಂತೆ ಹೊಡೆದು ಯೆಚ್ಚು ಬೀಳಿಸಿದನು! ಎಂದು ಹೇಳಲು ಪೇಳಲು ಅಂಜುವೆವೆಂದು ಕೈಮುಗಿದರು.]
 • ತಾತ್ಪರ್ಯ-:ಅವಧರಿಸು ಜೀಯ/ಒಡೆಯ ರಾಜನೇ ಕೇಳು, ನಿನ್ನ ಯಜ್ಞದ ಸುಂದರ ಕುದುರೆ ಭೂಮಿಯಲ್ಲಿ ಸುತ್ತಿ ತೊಂದರೆ ಇಲ್ಲದೆ ಹಿಂತಿರುಗಿ ಬಂದಿತು. ಬಳಿಕ ಲವನೆಂಬ ಬಾಲಕನು ಅದನ್ನು ಕಟ್ಟಿದನು; ಗದರಿಸಿದರೆ ನಮ್ಮ ಸೈನ್ಯವೆಲ್ಲವನ್ನೂ ಕೊಂದನು; ಯುದ್ಧದಲ್ಲಿ ಶತ್ರುಘ್ನನು ಆತನನ್ನು ಹಿಡಿದು ತರಲು, ಅವನ ದಾರಿತಿಳಿದು, ಒಬ್ಬನೇ ಬಂದು, ನಿನ್ನ ತಮ್ಮನು ಎದುರಿದರೆ, ಕೆಡೆಯುವಂತೆ ಹೊಡೆದು ಬೀಳಿಸಿದನು! ಎಂದು ಹೇಳಲು ಅಂಜುವೆವು ಎಂದು ಕೈಮಗಿದರು.
 • (ಪದ್ಯ-೩೪)

ಪದ್ಯ :೩೫:[ಸಂಪಾದಿಸಿ]

ಕೇಳುತೆ ಕನಲ್ದೆಲವೊ ಶತ್ರುಘ್ನನಂ ಜಯಿಸು | ವಾಳುಂಟೆ ಲೋಕದೊಳ್ ಪೋಗಿವರ್ ಮರುಳರೆಂ | ದಾಳವಾಡಲ್ ಜೀಯ ನಿಮ್ಮಡಿಗಳಾಣೆ ಪುಸಿಯಲ್ಲೆಂದು ಮತ್ತೆ ಚರರು ||
ಪೇಳಲ್ಕೆ ಬೆರಗಾಗಿ ಮರುಗಿ ಲವಣಾಸುರಂ | ಕಾಳಗದೊಳೀತನಿಂದಳಿದನಾ ಬಾಲಕರ | ತೋಳ ಬಲ್ವೆಂತೊ ಲಕ್ಷ್ಮಣ ಸೇನೆಸಹಿತ ನಡೆಯೆಂದು ರಘುಪತಿ ನುಡಿದನು ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕೇಳುತೆ ಕನಲ್ದು ಎಲವೊ ಶತ್ರುಘ್ನನಂ ಜಯಿಸುವ ಆಳುಂಟೆ ಲೋಕದೊಳ್ ಪೋಗಿವರ್ ಮರುಳರೆಂದು ಆಳವಾಡಲ್=[ಯಜ್ಞದ ಕುದುರೆಕಾವಲಿನ ಶತ್ರುಘ್ನನು ಬಾಲಕರೊಡನೆ ಯುದ್ಧಲ್ಲಿ ಸೋತು ಮೂರ್ಛಿತನಾದನು ಎಂಬುದನ್ನು, ರಾಮನು ಕೇಳಿ ಸಿಟ್ಟಿನಿಂದ 'ಎಲವೊ ಶತ್ರುಘ್ನನನ್ನು ಜಯಿಸುವ ವೀರರು ಉಂಟೇ? ಲೋಕದಲ್ಲಿ ಹೋಗಿ ಇವರು ಮರುಳರು' ಎಂದು ಬಿರುಸಾಗಿ ಗದರಿಸಲು]; ಜೀಯ ನಿಮ್ಮಡಿಗಳಾಣೆ ಪುಸಿಯಲ್ಲ ಎಂದು ಮತ್ತೆ ಚರರು ಪೇಳಲ್ಕೆ ಬೆರಗಾಗಿ ಮರುಗಿ ಲವಣಾಸುರಂ ಕಾಳಗದೊಳು ಈತನಿಂದ ಅಳಿದನು=[ಜೀಯ, 'ನಿಮ್ಮ ಪಾದಗಳ ಆಣೆ ಸುಳ್ಳಲ್ಲ' ಎಂದು ಮತ್ತೆ ಚರರು ಹೇಳಲು, ಬೆರಗಾಗಿ ದುಃಖದಿಂದ ಲವಣಾಸುರನು ಕಾಳಗದಲ್ಲಿ ಈತನಿಂದ ಸಾವುಕಂಡನು;]; ಆ ಬಾಲಕರ ತೋಳ ಬಲ್ವೆಂತೊ ಲಕ್ಷ್ಮಣ ಸೇನೆಸಹಿತ ನಡೆಯೆಂದು ರಘುಪತಿ ನುಡಿದನು=[ಆ ಬಾಲಕರ ತೋಳ ಬಲ ಎಂಥಹುದೋ! 'ಲಕ್ಷ್ಮಣಾ ಸೇನೆಸಹಿತ ಯುದ್ಧಕ್ಕೆ ನಡೆ'ಯೆಂದು ರಘುಪತಿ ಹೇಳಿದನು].
 • ತಾತ್ಪರ್ಯ-:ಯಜ್ಞದ ಕುದುರೆಕಾವಲಿನ ಶತ್ರುಘ್ನನು ಬಾಲಕರೊಡನೆ ಯುದ್ಧಲ್ಲಿ ಸೋತು ಮೂರ್ಛಿತನಾದನು ಎಂಬುದನ್ನು, ರಾಮನು ಕೇಳಿ ಸಿಟ್ಟಿನಿಂದ 'ಎಲವೊ ಶತ್ರುಘ್ನನನ್ನು ಜಯಿಸುವ ವೀರರು ಲೋಕದಲ್ಲಿ ಉಂಟೇ? ಹೋಗಿ ಇವರು ಮರುಳರು' ಎಂದು ಬಿರುಸಾಗಿ ಗದರಿಸಲು; ಜೀಯ,'ನಿಮ್ಮ ಪಾದಗಳ ಆಣೆ ಸುಳ್ಳಲ್ಲ' ಎಂದು ಮತ್ತೆ ಚರರು ಹೇಳಲು, ಬೆರಗಾಗಿ ದುಃಖದಿಂದ ಲವಣಾಸುರನು ಕಾಳಗದಲ್ಲಿ ಈತನಿಂದ ಸಾವುಕಂಡನು; ಆ ಬಾಲಕರ ತೋಳ ಬಲ ಎಂಥಹುದೋ! 'ಲಕ್ಷ್ಮಣಾ ಸೇನೆಸಹಿತ ಯುದ್ಧಕ್ಕೆ ನಡೆ'ಯೆಂದು ರಘುಪತಿ ಹೇಳಿದನು.
 • (ಪದ್ಯ-೩೫)

ಪದ್ಯ :೩೬:[ಸಂಪಾದಿಸಿ]

ಬಳಿಕ ರಾಘವನಂಘ್ರಿಗೆರಗಿ ಕಳುಹಿಸಿಕೊಂಡ | ತುಳತಂತ್ರ*ಸನ್ನಾಹದಿಂ ಕಾಲಜಿತುವೆಂಬ | ದಳಪತಿಸಹಿತ ಸುಮಿತ್ರಾತ್ಮಜಂ ನಗರಮಂ ಪೊರಮಟ್ಟು ನಡೆವ ಭರಕೆ ||
ಇಳೆ ಸವೆದುದೇಳ್ವ ಕೆಂದೂಳ್ಗಳಿಂದಂಬರ | ಸ್ಥಳಮೈದುತಿರಲ್ ಪತಾಕಾ ಧ್ವಜಂಗಳ್ಗೆ ದಿ | ಗ್ವಳಯಮಿಂಬಿಲ್ಲ ಘೀಳಿಡುವ ವಾದ್ಯಧ್ವನಿಗೆ ಪೊಸತಿದೆಂಬಂತಾಗಲು||36||

 • (ಪಾಠ೨:ತಳತಂತ್ರ*ಸನ್ನಾಹದಿಂ= ೧ ಕಾಲಾಳುಗಳ - ಪಡೆ, ಸೈನ್ಯ; ಪದಾತಿ ಬಲ ೨ ಸೈನ್ಯ ೩ ಕೈ ಚಳಕ, ಮೋಸಗಾರಿಕೆ :ಬರಹ/ಜಿ.ವಂ.ಸು.ನಿಘಂಟು)
ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಳಿಕ ರಾಘವನ ಅಂಘ್ರಿಗೆ ಎರಗಿ ಕಳುಹಿಸಿಕೊಂಡ ಅತುಳತಂತ್ರ ಸನ್ನಾಹದಿಂ ಕಾಲಜಿತುವೆಂಬ ದಳಪತಿಸಹಿತ ಸುಮಿತ್ರಾತ್ಮಜಂ ನಗರಮಂ ಪೊರಮಟ್ಟು ನಡೆವ ಭರಕೆ ಇಳೆ ಸವೆದುದು=[ಬಳಿಕ ಲಕ್ಷ್ಮಣನು, ರಾಘವನ ಪಾದಗಲಿಗೆ ನಮಸ್ಕರಿಸಿ ಯುದ್ಧಕ್ಕೆ ಅಪ್ಪಣೆಪಡೆದು ಎಲ್ಲಾ ವಿಶಿಷ್ಟತಂತ್ರದ ಕಾಲಾಳುಗಳ - ಪಡೆ, ಸೈನ್ಯ ಸನ್ನಾಹದಿಂದ ಕಾಲಜಿತುವೆಂಬ ದಳಪತಿಸಹಿತ ಲಕ್ಷ್ಮಣನು ನಗರದಿಂದ ಹೊರಟನು; ಅವನ ಸೈನ್ಯ ನಡೆವ ಭರಾಟೆಗೆ ಭೂಮಿ ಸವೆಯಿತು,]; ಏಳ್ವ ಕೆಂದೂಳ್ಗಳಿಂದ ಅಂಬರ ಸ್ಥಳಮ್ ಐದುತಿರಲ್ ಪತಾಕಾ ಧ್ವಜಂಗಳ್ಗೆ ದಿಕ್ ವಳಯಂ ಇಂಬಿಲ್ಲ ಘೀಳಿಡುವ ವಾದ್ಯಧ್ವನಿಗೆ ಪೊಸತು ಇದೆಉ ಎಂಬಂತೆ ಆಗಲು=[ಅದರಿಂದ ಏಳುವ ಕೆಂದೂಳುಗಳಿಂದ ಆಕಾಶ ಸ್ಥಳವು ತುಂಬಿರಲು, ಪತಾಕೆ ಧ್ವಜಂಗಳಿಗೆ ದಿಕ್ಕಗಳ ಪ್ರದೇಶಗಳಲ್ಲಿ ಸ್ಥಳವಿಲ್ಲವಾಯಿತು; ಘೀಳ್ ಎಂಬ ವಾದ್ಯಧ್ವನಿಗೆಹೊಸತು ಬಗೆ ಇದು ಎಂಬಂತೆ ಆಯಿತು.]
 • ತಾತ್ಪರ್ಯ-:ಬಳಿಕ ಲಕ್ಷ್ಮಣನು, ರಾಘವನ ಪಾದಗಳಿಗೆ ನಮಸ್ಕರಿಸಿ ಯುದ್ಧಕ್ಕೆ ಅಪ್ಪಣೆಪಡೆದು ಎಲ್ಲಾ ವಿಶಿಷ್ಟತಂತ್ರದ ಕಾಲಾಳುಗಳ - ಪಡೆ, ಸೈನ್ಯ ಸನ್ನಾಹದಿಂದ ಕಾಲಜಿತುವೆಂಬ ದಳಪತಿಸಹಿತ ಲಕ್ಷ್ಮಣನು ನಗರದಿಂದ ಹೊರಟನು; ಅವನ ಸೈನ್ಯ ನಡೆವ ಭರಾಟೆಗೆ ಭೂಮಿ ಸವೆಯಿತು; ಅದರಿಂದ ಏಳುವ ಕೆಂದೂಳುಗಳಿಂದ ಆಕಾಶ ಸ್ಥಳವು ತುಂಬಿರಲು, ಪತಾಕೆ ಧ್ವಜಂಗಳಿಗೆ ದಿಕ್ಕಗಳ ಪ್ರದೇಶಗಳಲ್ಲಿ ಸ್ಥಳವಿಲ್ಲವಾಯಿತು; ಘೀಳ್ ಎಂಬ ವಾದ್ಯಧ್ವನಿಗೆ ಇದು ಹೊಸತು ಬಗೆ ಎಂಬಂತೆ ಆಯಿತು.
 • (ಪದ್ಯ-೩೬)

ಪದ್ಯ :೩೭:[ಸಂಪಾದಿಸಿ]

ಪೊಡವಿಯಗಲದೊಳೆಯ್ದುವಾನೆಗಳ ಸೇನೆಗಳ | ಕಡುಗಿ ಮುಂಬರಿವ ರಥರಾಜಿಗಳ ತೇಜಿಗಳ | ಬಿಡದೆ ಗಗನದೊಳಿಡಿದ ಸತ್ತಿಗೆಯ ಮುತ್ತಿಗೆಯ ಢಾಳಿಸುವ ಚಮರಂಗಳ ||
ನಿಡುಪತಾಕೆಯ ವಿವಿಧ ಧಾತುಗಳ ಕೇತುಗಳ | ಜಡಿವ ಕೈದುಗಳ ಪೊಸರೊಚಿಗಳ ವೀಚಿಗಳ | ಪೊಡೆವ ತಂಬಟ ಪಟಹ ಭೇರಿಗಳ ಭೂರಿಗಳ ಪದಪಿಂದೆ ಪಡೆ ನಡೆದುದು ||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಪೊಡವಿಯ ಅಗಲದೊಳು ಐಯ್ದುವ ಆನೆಗಳ ಸೇನೆಗಳ ಕಡುಗಿ ಮುಂಬರಿವ ರಥರಾಜಿಗಳ ತೇಜಿಗಳ ಬಿಡದೆ ಗಗನದೊಳು ಇಡಿದ ಸತ್ತಿಗೆಯ ಮುತ್ತಿಗೆಯ ಢಾಳಿಸುವ ಚಮರಂಗಳ=[ಭೂಮಿಯ ಅಗಲಕ್ಕೂ ಆವರಿಕೊಂಡು ಬರುವ ಆನೆಗಳನ್ನೂ, ಸೇನೆಗಳನ್ನೂ ಮತ್ತು ಒಟ್ಟಾಗಿ ಮುಂದುವರಿವ ರಥ ಸಾಲುಗಳ, ಕುದುರೆಗಳ, ಮತ್ತೆ ಆಕಾಶದಲ್ಲಿ ತುಂಬಿದ ಇಡಿದ ಸತ್ತಿಗಗಳು (ಬಿಳಿ ಛತ್ರಿ), ಮುತ್ತಿನ ಆಲಂಕಾರದ ಎದ್ದು ಕಾಣುವ ಚಾಮರಗಳ, ]; ನಿಡುಪತಾಕೆಯ ವಿವಿಧ ಧಾತುಗಳ ಕೇತುಗಳ ಜಡಿವ ಕೈದುಗಳ ಪೊಸ ರೊಚಿಗಳ ವೀಚಿಗಳ ಪೊಡೆವ ತಂಬಟ ಪಟಹ ಭೇರಿಗಳ ಭೂರಿಗಳ ಪದಪಿಂದೆ ಪಡೆ ನಡೆದುದು=[ಉದ್ದಪತಾಕೆಯ ವಿವಿಧ ಬಣ್ಣಗಳ ಬಾವುಟಗಳ, ಬೀಸುತ್ತಿರುವ ಆಯುಧಗಳ, ಹೊಸ ರೊಚಿ (ಕಾಂತಿ?)ಗಳ, ಜನರ ಅಲೆಗಳ, ಹೊಡೆಯುತ್ತಿರುವ ತಮಟೆ, ಪಟಹ(ಢಕ್ಕೆ), ಭೇರಿಗಳ, ಅತಿಯಾದ ಸಂಖ್ಯೆಯಿಂದ, ಎಲ್ಲಾಸೇರಿದ ಸೊಗಸಿನಿಂದ ಲಕ್ಷ್ಮಣನ ಪಡೆ ಮುಂದೆ ನಡೆಯಿತು.]
 • ತಾತ್ಪರ್ಯ-:ಭೂಮಿಯ ಅಗಲಕ್ಕೂ ಆವರಿಕೊಂಡು ಬರುವ ಆನೆಗಳನ್ನೂ, ಸೇನೆಗಳನ್ನೂ ಮತ್ತು ಒಟ್ಟಾಗಿ ಮುಂದುವರಿವ ರಥ ಸಾಲುಗಳ, ಕುದುರೆಗಳ, ಮತ್ತೆ ಆಕಾಶದಲ್ಲಿ ತುಂಬಿದ ಇಡಿದ ಸತ್ತಿಗಗಳು (ಬಿಳಿ ಛತ್ರಿ), ಮುತ್ತಿನ ಆಲಂಕಾರದ ಎದ್ದು ಕಾಣುವ ಚಾಮರಗಳ, ಉದ್ದಪತಾಕೆಯ ವಿವಿಧ ಬಣ್ಣಗಳ ಬಾವುಟಗಳ, ಬೀಸುತ್ತಿರುವ ಆಯುಧಗಳ, ಹೊಸ ರೊಚಿ (ಕಾಂತಿ?)ಗಳ, ಜನರ ಅಲೆಗಳ, ಹೊಡೆಯುತ್ತಿರುವ ತಮಟೆ, ಪಟಹ(ಢಕ್ಕೆ), ಭೇರಿಗಳ, ಅತಿಯಾದ ಸಂಖ್ಯೆಯಿಂದ, ಎಲ್ಲಾಸೇರಿದ ಸೊಗಸಿನಿಂದ ಲಕ್ಷ್ಮಣನ ಪಡೆ ಮುಂದೆ ನಡೆಯಿತು.
 • (ಪದ್ಯ-೩೭)

ಪದ್ಯ :೩೮:[ಸಂಪಾದಿಸಿ]

ಪ್ರಾಣಮಿಲ್ಲದೆ ಚೇತರಿಸಿಕೊಳಲ್ ತನುವಿನೊಳ್ | ತ್ರಾಣಮಿಲ್ಲದೆ ನೊಂದು ಗಾಯದಿಂ ಮರವೆಯಂ | ಕೇಣಿಗೊಂಡೊರಗಿ ಶತ್ರುಘ್ನನಳಿದುಳಿದ ಬಲದೊಡನೆ ರಾಹುಗ್ರಸ್ತದ ||
ಏಣಧರನಂತಿರಲ್ ಪಡೆಸಹಿತ ಲಕ್ಷ್ಮಣಂ | ಕ್ಷೋಣಿಪತಿ ಕೇಳ್ ಬಂದು ಕಂಡು ಸೈತಿಟ್ಟಿನ್ನು | ಕಾಣಬಹುದೆನುತೆ ಕೈವೀಸಿದಂ ಕಾಲಜಿತು ಮುಖ್ಯಸೇನಾನಿಗಳ್ಗೆ ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ರಾಜನೇ ಕೇಳು, ಪ್ರಾಣಂ (ಉಸಿರು-ಗಾಳಿ) ಇಲ್ಲದೆ ಚೇತರಿಸಿಕೊಳಲ್ ತನುವಿನೊಳ್ ತ್ರಾಣಂ ಇಲ್ಲದೆ ನೊಂದು ಗಾಯದಿಂ ಮರವೆಯಂ ಕೇಣಿಗೊಂಡು(ಕೇಣಿ= ತಾತ್ಕಾಲಿಕ ಒಪ್ಪಂದ, ನಡೆ)) ಒರಗಿ ಶತ್ರುಘ್ನನು ಅಳಿದು ಉಳಿದ ಬಲದೊಡನೆ ರಾಹುಗ್ರಸ್ತದ ಏಣಧರನಂತೆ (ಗಂಡು ಜಿಂಕೆಯ ಧರ-ಚಂದ್ರ) ಇರಲ್=[ಉಸಿರು ಆಡಲಾರದೆ ಚೇತರಿಸಿಕೊಳ್ಳಲು ದೇಹದಲ್ಲಿ ತ್ರಾಣವಿಲ್ಲದೆ ನೊಂದು ಗಾಯದಿಂದ ಸ್ವಲ್ಪಕಾಲ ಮೂರ್ಛೆಗೊಂಡು ನೆಲಕ್ಕೆ ಒರಗಿದ್ದು ,ಎಚ್ಚರಾಗಿ ಶತ್ರುಘ್ನನು ಅಳಿದುಳಿದ ಸೈನ್ಯದೊಡನೆ ರಾಹುಹಿಡಿದ ಚಂದ್ರನಂತೆ ಇರುವಾಗ; ಪಡೆಸಹಿತ ಲಕ್ಷ್ಮಣಂ ಕ್ಷೋಣಿಪತಿ ಕೇಳ್ ಬಂದು ಕಂಡು ಸೈತಿಟ್ಟು ಇನ್ನು ಕಾಣಬಹುದು ಎನುತೆ ಕೈವೀಸಿದಂ (ಯುದ್ಧಕ್ಕೆ ಕೈಸನ್ನೆ ಮಾಡಿದನು) ಕಾಲಜಿತು ಮುಖ್ಯಸೇನಾನಿಗಳ್ಗೆ=[ಸೈನ್ಯಸಹಿತ ಲಕ್ಷ್ಮಣನು ಬಂದು ಶತ್ರುಘ್ನನ್ನು ಕಂಡು ಸಮಾಧಾನ ಪಡಿಸಿ, ಇನ್ನು ತನ್ನ ಪರಾಕ್ರಮವನ್ನು ಕಾಣಬಹುದು ಎನುತ್ತಾ, ಕಾಲಜಿತು ಮತ್ತು ಇತರ ಮುಖ್ಯಸೇನಾನಿಗಳಿಗೆ ಯುದ್ಧವನ್ನು ಆರಂಭಿಸಲು ಕೈಸನ್ನೆ ಮಾಡಿದನು.(<-ಕ್ಷೋಣಿಪತಿ/ರಾಜನೇ ಕೇಳು).]
 • ತಾತ್ಪರ್ಯ-:ರಾಜನೇ ಕೇಳು, ಉಸಿರು ಆಡಲಾರದೆ ಚೇತರಿಸಿಕೊಳ್ಳಲು ದೇಹದಲ್ಲಿ ತ್ರಾಣವಿಲ್ಲದೆ ನೊಂದು ಗಾಯದಿಂದ ಸ್ವಲ್ಪಕಾಲ ಮೂರ್ಛೆಗೊಂಡು ನೆಲಕ್ಕೆ ಒರಗಿದ್ದು ,ಎಚ್ಚರಾಗಿ ಶತ್ರುಘ್ನನು ಅಳಿದುಳಿದ ಸೈನ್ಯದೊಡನೆ ರಾಹುಹಿಡಿದ ಚಂದ್ರನಂತೆ ಇರುವಾಗ; ಸೈನ್ಯಸಹಿತ ಲಕ್ಷ್ಮಣನು ಬಂದು ಶತ್ರುಘ್ನನ್ನು ಕಂಡು ಸಮಾಧಾನ ಪಡಿಸಿ, ಇನ್ನು ತನ್ನ ಪರಾಕ್ರಮವನ್ನು ಕಾಣಬಹುದು ಎನುತ್ತಾ, ಕಾಲಜಿತು ಮತ್ತು ಇತರ ಮುಖ್ಯಸೇನಾನಿಗಳಿಗೆ ಯುದ್ಧವನ್ನು ಆರಂಭಿಸಲು ಕೈಸನ್ನೆ ಮಾಡಿದನು.
 • (ಪದ್ಯ-೩೮)

ಪದ್ಯ :೩೯:[ಸಂಪಾದಿಸಿ]

ಕಂಡರೀಚೆಯೊಳರಿಬಲವ್ಯೂಹಮಂ ಬರಲಿ | ಖಂಡಿಸುವೆನೆಂದೊರ್ವರೊರ್ವರೊಳ್ ಮಾತಾಡಿ | ಕೊಂಡರವರೊಳ್ ತನ್ನ ಬಿಲ್ಮುರಿದುದಾಹವದೊಳೆಂದು ಲವನಗ್ರಜಂಗೆ ||
ಚಂಡಮುನಿಪತಿ ಮಾಡಿದುಪದೇಶದಿಂದೆ ಕೋ | ದಂಡಮಂ ಪಡೆವೆನೀಕ್ಷಣದೊಳೆಂದೊರೆದು ರವಿ | ಮಂಡಲವನೀಕ್ಷಿಸುತೆ ತರಣಿಯಂ ಪ್ರಾರ್ಥಿಸಿದನನುಪಮ ಸ್ತುತಿಗಳಿಂದೆ ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕಂಡರು ಈಚೆಯೊಳ್ ಅರಿಬಲವ್ಯೂಹಮಂ ಬರಲಿ ಖಂಡಿಸುವೆನೆಂದು ಒರ್ವರೊರ್ವರೊಳ್ ಮಾತಾಡಿ ಕೊಂಡರು=[ಈ ಕಡೆಯಲ್ಲಿ ಕುಶಲವರು ಶತ್ರುಸೈನ್ಯದ ವ್ಯೂಹರಚನೆಯನ್ನು ನೋಡಿದರು. ;ಬರಲಿ ಸದೆಬಡಿಯುವೆನು', ಎಂದು ಒಬ್ಬರಿಗೊಬ್ಬರು ಮಾತನಾಡಿ ಕೊಂಡರು]; ಅವರೊಳ್ ತನ್ನ ಬಿಲ್ಮುರಿದುದು ಆಹವದೊಳು ಎಂದು ಲವನು ಅಗ್ರಜಂಗೆ=[ಅವರಲ್ಲಿ ಲವನು ತನ್ನ ಬಿಲ್ಲು ಯುದ್ಧದಲ್ಲಿ ಮುರಿಯಿತು ಎಂದು ಅಣ್ಬನಿಗೆ ಹೇಳಲು,]; ಚಂಡಮುನಿಪತಿ ಮಾಡಿದ ಉಪದೇಶದಿಂದೆ ಕೋದಂಡಮಂ ಪಡೆವೆನು ಈಕ್ಷಣದೊಳೆಂದು ಒರೆದು ರವಿಮಂಡಲವನು ಈಕ್ಷಿಸುತೆ ತರಣಿಯಂ ಪ್ರಾರ್ಥಿಸಿದನು ಅನುಪಮ ಸ್ತುತಿಗಳಿಂದೆ=[ಉಗ್ರತಪಸ್ವಿ ವಾಲ್ಮೀಕಿ ಮುನಿಪತಿ ಮಾಡಿದ ಉಪದೇಶದಿಂದ ಹೊಸ ಬಿಲ್ಲನ್ನು ಪಡೆಯುವೆನು ಈ ಕ್ಷಣದಲ್ಲಿ ಎಂದು ಹೇಳಿ, ರವಿಮಂಡಲವನ್ನು ನೋಡುತ್ತಾ ಅನುಪಮ ಸ್ತುತಿಗಳಿಂದ ಸೂರ್ಯನನ್ನು ಪ್ರಾರ್ಥಿಸಿದನು].
 • ತಾತ್ಪರ್ಯ-:ಈ ಕಡೆಯಲ್ಲಿ ಕುಶಲವರು ಶತ್ರುಸೈನ್ಯದ ವ್ಯೂಹರಚನೆಯನ್ನು ನೋಡಿದರು. 'ಬರಲಿ ಸದೆಬಡಿಯುವೆನು', ಎಂದು ಒಬ್ಬರಿಗೊಬ್ಬರು ಮಾತನಾಡಿ ಕೊಂಡರು; ಅವರಲ್ಲಿ ಲವನು ತನ್ನ ಬಿಲ್ಲು ಯುದ್ಧದಲ್ಲಿ ಮುರಿಯಿತು ಎಂದು ಅಣ್ಬನಿಗೆ ಹೇಳಲು, ಉಗ್ರತಪಸ್ವಿ ವಾಲ್ಮೀಕಿ ಮುನಿಪತಿ ಮಾಡಿದ ಉಪದೇಶದಿಂದ ಹೊಸ ಬಿಲ್ಲನ್ನು ಈ ಕ್ಷಣದಲ್ಲಿ ಪಡೆಯುವೆನು ಎಂದು ಹೇಳಿ, ರವಿಮಂಡಲವನ್ನು ನೋಡುತ್ತಾ ಅನುಪಮ ಸ್ತುತಿಗಳಿಂದ ಸೂರ್ಯನನ್ನು ಪ್ರಾರ್ಥಿಸಿದನು.
 • (ಪದ್ಯ-೩೯)

ಪದ್ಯ :೪೦,೪೦,೪೨:[ಸಂಪಾದಿಸಿ]

ಮಿತ್ರಾಯ ಸೂರ್ಯಾಯ ಹಂಸಾಯ ಪೂಷ್ಣೇ ಸ | ವಿತ್ರೇ ಜಗಚ್ಚಕ್ಷುಷೇ ಚಂಡಘೃಣಯೇ ಪ | ವಿತ್ರಾಯ ಪಿಂಗಾಯ ಪುರುಷಾಯ ಭಾನುವೇ ಜ್ಯೋತಿಷೇ ಭಾಸ್ಕರಾಯ ||
ಸತ್ರೈಕರೂಪಾಯ ವಿಮಲಾಯ (ಸಾಕ್ಷಿಣೇ| ಕ್ಷೇತ್ರಿಣೇ*) ವಿಶ್ವರ | ಕ್ಷಿತ್ರೇ,* ಸಹಸ್ರಕಿರಣಾಯ ರವಯೇ ಮಂದ | ಪಿತ್ರೇ ದಿವಾಕರಾಯ ಬ್ರಹ್ಮ ವಿಷ್ಣು ರುದ್ರಾತ್ಮನೇ ತುಭ್ಯಂ ನಮಃ ||40||

ಜಗಕೆ ನೀನೊಂದು ಕಣ್ಣಾಗಿರ್ಪೆ ಮೇಣೆರಡು | ಬಗೆಯ ಪಥದೊಳ್ ನಡೆವೆ ತಿಳಿಯಲ್ಕೆ ಮೂರು ಮೂ | ರ್ತಿಗಳನೊಳಗೊಂಡಿರ್ಪೆ ಸಲೆ ಸಂದ ನಾಲ್ಕುವೇದಂಗಳೊಡಲಾಗಿ ತೋರ್ಪೆ ||
ಅಗಲದೈದಂಗದೊಳ್ ಕಾನಿಸುವೆ ಪರಿಪರಿಯೊ | ಳೊಗೆದಾರು ಋತುಗಳೊಳ್ ವರ್ತಿಸುವೆ ಸಂತತಂ | ಗಗನಕೇಳಶ್ವನಂ ಕೊಂಡೇಳ್ವೆ ದೇವ ಬಿಲ್ಗೊಟ್ಟುಳುಹಬೇಕೆಂದನು ||41||

ಪತ್ತು ದೆಸೆಯಂ ಬೆಳಗಿಸುವೆ ಪನ್ನೆರಡು ರಾಶಿ | ಗೊತ್ತಾಸೆಯಾಗಿರ್ಪೆ ಶತಪತ್ರಮಿತ್ರನಹೆ | ಮತ್ತೆ ಸಾಸಿರಕಿರಣದಿಂದೆಸೆವೆ ಲಕ್ಷಯೋಜನದಳತೆಯೊಳ್ ತೊಳಗುವೆ ||
ಬಿತ್ತರದನಂತರದೊಳ್ ಸಂಚರಿಪೆ ದೇವ ನಿ | ನ್ನುತ್ತಮ ಗುಣಾವಳಿಯನೆಣೆಸಲೆನ್ನಳವೆ ಬಿ | ಲ್ಲಿತ್ತುಳುಹಬೇಕೆಂದು ದಿನಮಣಿಯನಾ ಲವಂ ನುತಿಸಿದಂ ಭಕ್ತಿಯಿಂದೆ ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ರವಿಸ್ತುತಿ:೧:ಮಿತ್ರಾಯ (ಜೀವಿಗಳಿಗೆಲ್ಲಾ ಮಿತ್ರನು), ಸೂರ್ಯಾಯ (ಪ್ರೇರಕನು), ಹಂಸಾಯ (ಹಂ- ಸಃ =ಆತ್ಮ ರೂಪನು), ಪೂಷ್ಣೇ(ಪುಷ್ಟಿ ಕೊಡುವವನು), ಸವಿತ್ರೇ (ವೇದ ಮಾತೆ ಸಾವಿತ್ರೀ ರೂಪನು), ಜಗಚ್ಚಕ್ಷುಷೇ (ಜಗತ್ತಿಗೆ ಕಣ್ಣಿನಂತಿರುವವನು- ಬೆಳಕು), ಚಂಡಘೃಣಯೇ(ತೀಕ್ಷ್ಣ ಕಿರಣದವನು), ಪವಿತ್ರಾಯ(ಪವಿತ್ರನು), ಪಿಂಗಾಯ(ಕೇಸರಿಯ ಬಣ್ಣದವನು), ಪುರುಷಾಯ(ಮೂಲ ಪುರುಷನು), ಭಾನುವೇ(ಪ್ರಕಾಶ ರೂಪನು), ಜ್ಯೋತಿಷೇ(ಜ್ಯೋತಿ ರೂಪನು), ಭಾಸ್ಕರಾಯ(ಕಾತಿ ರೂಪನು), ಸತ್ರೈಕರೂಪಾಯ(ಸತ್ರ-ಯಜ್ಞ ರೂಪನು), ವಿಮಲಾಯ(ಪರಿಶುದ್ಧನು), ಸಾಕ್ಷಿಣೇ,(ಕ್ಷೇತ್ರಿಣೇ ಸರ್ವ ಸಾಕ್ಷಿಭೂತನು (ವಿಶ್ವರ | ಕ್ಷಿತ್ರೇ,)* ಸಹಸ್ರಕಿರಣಾಯ (ಸಾವಿರಾರು ಕಿರಣಗಳುಳ್ಳವನು), ರವಯೇ(ಸ್ತೋತ್ರಿಸಲ್ಪಡುವವನು), ಮಂದ ಪಿತ್ರೇ(ಶನಿಯ ತಂದೆಯೇ) ದಿವಾಕರಾಯ (ದಿವ-ಹಗಲು ಮಾಡುವವನು), ಬ್ರಹ್ಮ ವಿಷ್ಣು ರುದ್ರಾತ್ಮನೇ(ಬ್ರಹ್ಮ ವಿಷ್ಣು ರುದ್ರರನ್ನು ಹೊಂದಿದವನೇ! ತುಭ್ಯಂ ನಮಃ(ನಿನಗೆ ನಮಸ್ಕಾರ!)
 • ೨:ಜಗಕೆ ನೀನೊಂದು ಕಣ್ಣಾಗಿರ್ಪೆ ಮೇಣೆರಡು ಬಗೆಯ ಪಥದೊಳ್ ನಡೆವೆ ತಿಳಿಯಲ್ಕೆ ಮೂರು ಮೂರ್ತಿಗಳನೊಳಗೊಂಡಿರ್ಪೆ=[ಜಗಕತ್ತಿಗೆ ನೀನೊಂದು ಕಣ್ಣಾಗಿರುವೆ, ಮತ್ತೆ ಎರಡು ಬಗೆಯ ದಾರಿಯಲ್ಲಿ ದಕ್ಷಿಣ-ಉತ್ತರ ಅಯನ-ಮಾರ್ಗ) ನಡೆಯುವೆ, ತಿಳಿಯಲು ಬ್ರಹ್ಮ ವಿಷ್ಣು ರುದ್ರ ಈ ಮೂರು ಮೂರ್ತಿಗಳನ್ನು ಒಳಗೊಂಡಿರುವೆ]; ಸಲೆ ಸಂದ ನಾಲ್ಕುವೇದಂಗಳೊಡಲಾಗಿ ತೋರ್ಪೆ ಅಗಲದೈದಂಗದೊಳ್ ಕಾಣಿಸುವೆ ಪರಿಪರಿಯೊಳು ಒಗೆದು ಆರು ಋತುಗಳೊಳ್ ವರ್ತಿಸುವೆ=[ಮತ್ತೂಹೆಚ್ಚಾಗಿ, ಇರುವ ನಾಲ್ಕುವೇದಗಳ ದೇಹವಾಗಿ ತೋರುವೆ, ಅಗಲದೆ ಐದು ವೇದಾಂಗದಲ್ಲಿ ಕಾಣಿಸುವೆ, ಪರಿಪರಿಯಾಗಿ ಕಂಡು ಆರು ಋತುಗಳಲ್ಲಿ ವರ್ತಿಸುವೆ]; ಸಂತತಂ ಗಗನಕೇಳಶ್ವನಂ ಕೊಂಡೇಳ್ವೆ ದೇವ ಬಿಲ್ಗೊಟ್ಟುಳುಹಬೇಕೆಂದನು=[ಯಾವಾಗಲೂ ಗಗನಕ್ಕೆ ಏಳು ಅಶ್ವಗಳ ರಥವನ್ನು ಕೊಂಡು ಉದಯವಾಗುವೆ! ದೇವ ಬಿಲ್ಗನ್ನು ಕೊಟ್ಟು ಉಳಿಸಬೇಕು ಎಂದನು!];
 • ೩:ಪತ್ತು ದೆಸೆಯಂ ಬೆಳಗಿಸುವೆ ಪನ್ನೆರಡು ರಾಶಿ ಗೊತ್ತಾಸೆಯಾಗಿರ್ಪೆ ಶತಪತ್ರಮಿತ್ರನಹೆ=[ಹತ್ತು ದಿಕ್ಕನ್ನು ಬೆಳಗಿಸುವೆ, ಹನ್ನೆರಡು ರಾಶಿಗಳಿಗೆ ಒತ್ತಾಸೆಯಾಗಿ ಇರುವೆ, ಶತಪತ್ರಕ್ಕೆ -ಕಮಲಕ್ಕೆ ಮಿತ್ರನಾಗಿರುವೆ]; ಮತ್ತೆ ಸಾಸಿರಕಿರಣದಿಂದೆಸೆವೆ ಲಕ್ಷಯೋಜನದಳತೆಯೊಳ್ ತೊಳಗುವೆ=[ಮತ್ತೆ ಸಾವಿರಕಿರಣದಿಂದ ಪ್ರಕಾಸಿಸುವೆ, ಲಕ್ಷಯೋಜನದ ಅಳತೆಯಲ್ಲಿ ಸಂಚರಿಸುವೆ]; ಬಿತ್ತರದ ಅನಂತದೊಳ್ ಸಂಚರಿಪೆ ದೇವ ನಿನ್ನುತ್ತಮ ಗುಣಾವಳಿಯನು ಎಣೆಸಲು ಎನ್ನಳವೆ ಬಿಲ್ಲಿತ್ತು ಉಳುಹಬೇಕು ಎಂದು ದಿನಮಣಿಯನು ಆ ಲವಂ ನುತಿಸಿದಂ ಭಕ್ತಿಯಿಂದೆ=[ವಿಸ್ತಾರವಾದ ಆಕಾಶದಲ್ಲಿ ಸಂಚರಿಸುವೆ, ದೇವ ನಿನ್ನ ಉತ್ತಮ ಗುಣಾವಳಿಯನು ಎಣೆಸಲು ನನಗೆ ಶಕ್ತಿ ಇಲ್ಲ; ಬಿಲ್ಲನ್ನು ಕೊಟ್ಟು ಕಾಪಾಡಬೇಕೆಂದು ದಿನಮಣಿಯನ್ನು ಲವನು ಭಕ್ತಿಯಿಂದ ನುತಿಸಿದನು/ಸ್ತುತಿಸಿದನು.]
 • ತಾತ್ಪರ್ಯ: :೪೦:ಸೂರ್ಯನ ನಾಮಾವಳಿಗಳನ್ನು ಹೇಳಿ ಸ್ತುತಿ; -:೪೧: ಸೂರ್ಯನ ಗುಣಗಳನ್ನೂ ಮಹತ್ತನ್ನೂ ಹೇಳಿ ಸ್ತುತಿ ಮತ್ತು ಬಿಲ್ಲು ಕರುಣಿಸಲು ಪ್ರಾರ್ಥನೆ; -;೪೨:ಸೂರ್ಯನನ್ನು ಹೊಗಳಿ ಬಿಲ್ಲು ಕೊಡೆಂದು ಪ್ರಾರ್ಥನೆ.
 • (ಪದ್ಯ-೪೦;೪೧;೪೨.)

ಪದ್ಯ :೪೩:[ಸಂಪಾದಿಸಿ]

ಅವನೀಶ ಕೇಳ್ ಬಳಿಕಲವನ ವಿಮಲಸ್ತುತಿಗೆ | ರವಿ ಮೆಚ್ಚಿ ಕೊಟ್ಟನಾತನ ಕೈಗೆ ದಿವ್ಯಚಾ | ಪವನದಂ ಕೊಂಡಗ್ರಜಂಗೆ ತೋರಿಸಿ ಮುನಿಪ ವಾಲ್ಮೀಕಿ ಬಾಳುಗೆನುತೆ ||
ಪವಣನಾರೈದು ಬಿಲ್ದಿರುವನೊದರಿಸಿದನು | ತ್ಸವದಿಂದೆ ಕುಶನುಗ್ರಕೋದಂಡಮಂ ಪಿಡಿದ | ನವರೀರ್ವರುಂ ಮತ್ತೆ ಪವನ ಪಾವಕರಂತೆ ಪೊಕ್ಕರರಿಬಲವನುರುಬಿ ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅವನೀಶ ಕೇಳ್ ಬಳಿಕ ಲವನ ವಿಮಲಸ್ತುತಿಗೆ ರವಿ ಮೆಚ್ಚಿ ಕೊಟ್ಟನು ಆತನ ಕೈಗೆ ದಿವ್ಯಚಾಪವನು=[ರಾಜನೇ ಕೇಳು, ಬಳಿಕ ಲವನ ಪಾವನವಾದ ಸ್ತುತಿಗೆ ರವಿಯು ಮೆಚ್ಚಿ ಆತನ ಕೈಗೆ ದಿವ್ಯಚಾಪವನ್ನು ಕೊಟ್ಟನು ]; ಅದಂ ಕೊಂಡು ಅಗ್ರಜಂಗೆ ತೋರಿಸಿ ಮುನಿಪ ವಾಲ್ಮೀಕಿ ಬಾಳುಗೆನುತೆ ಪವಣನು ಆರೈದು (ನಿಯಮಗಳನ್ನು ಅನುಸರಿಸಿ) ಬಿಲ್ದಿರುವನು ಒದರಿಸಿದನು ಉತ್ಸವದಿಂದೆ=[ಅದನ್ನು ಪಡೆದುಕೊಂಡು ಅಣ್ಣನಿಗೆ ತೋರಿಸಿ ಮುನಿಪ ವಾಲ್ಮೀಕಿ ಬಾಳಲಿ' ಎನ್ನುತ್ತಾ ನಿಯಮಗಳನ್ನು ಅನುಸರಿಸಿ ಬಿಲ್ಲಿನ ನಾಣನ್ನು ಸಂತೋಷದಿಂದ ಝೇಂಕರಿಸಿದನು]; ಕುಶನು ಗ್ರಕೋದಂಡಮಂ ಪಿಡಿದನು ಅವರು ಈರ್ವರುಂ ಮತ್ತೆ ಪವನ ಪಾವಕರಂತೆ ಪೊಕ್ಕರೂ ಆರಿಬಲವನು ಉರುಬಿ=[ಕುಶನು ತನ್ನ ಉಗ್ರವಾದ ಬಿಲ್ಲನ್ನು ಹಿಡಿದುಕೊಂಡನು. ಅವರು ಇಬ್ಬರೂ ಮತ್ತೆ ಬೆಂಕಿ-ಗಾಳಿಗಳಂತೆ ಶತ್ರು ಸೈನ್ಯವನ್ನು ಉತ್ಸಾಹದಿಂದ ಹೊಕ್ಕರು.]
 • ತಾತ್ಪರ್ಯ:ರಾಜನೇ ಕೇಳು, ಬಳಿಕ ಲವನ ಪಾವನವಾದ ಸ್ತುತಿಗೆ ರವಿಯು ಮೆಚ್ಚಿ ಆತನ ಕೈಗೆ ದಿವ್ಯಚಾಪವನ್ನು ಕೊಟ್ಟನು. ಅದನ್ನು ಪಡೆದುಕೊಂಡು ಅಣ್ಣನಿಗೆ ತೋರಿಸಿ ಮುನಿಪ ವಾಲ್ಮೀಕಿ ಬಾಳಲಿ' ಎನ್ನುತ್ತಾ ನಿಯಮಗಳನ್ನು ಅನುಸರಿಸಿ ಬಿಲ್ಲಿನ ನಾಣನ್ನು ಏರಿಸಿ ಸಂತೋಷದಿಂದ ಝೇಂಕರಿಸಿದನು; ಕುಶನು ತನ್ನ ಉಗ್ರವಾದ ಬಿಲ್ಲನ್ನು ತೆಗೆದುಕೊಂಡನು. ಅವರು ಇಬ್ಬರೂ ಮತ್ತೆ ಬೆಂಕಿ-ಗಾಳಿಗಳಂತೆ ಶತ್ರು ಸೈನ್ಯವನ್ನು ಉತ್ಸಾಹದಿಂದ ಹೊಕ್ಕರು.
 • (ಪದ್ಯ-೪೩.)

ಪದ್ಯ :೪೪:[ಸಂಪಾದಿಸಿ]

ನೂರಾಳಿಗೊಂದು ಹಯಮಿರುತಿರ್ಪುದಾ ಹಯಂ | ನೂರಕಿರುತಿಹುದು ಮೇಣೊಂದು ರಥ ಮಾರಥಂ | ನೂರಕಿಭವೊಂದಿರ್ಪುದಿಂತಿಭ ಸಹಸ್ರಮಿರೆ ಭ್ರಮಿಯೆಂದೆನಿಸಿಕೊಳ್ವುದು ||
ಮೀರಿ ಯೋಜನದಗಲದೊಳ್ ಭ್ರಮಿಗಳೀರೈದು | ನೂರಿಟ್ಟಣಿಸಿ ನಡೆದು ಬಂದೊಡಾ ಸೇನೆಯಂ | ತಾರು ತಟ್ಟಾಗಿ ಕೆಡಹಿದರೊಂದುನಿಮಿಷದೊಳ್ ಕುಶಲವರದೇವೇಳ್ವೆನು ||44||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ನೂರು ಆಳಿಗೆ ಒಂದು ಹಯಂ ಇರುತಿರ್ಪುದು ಆ ಹಯಂ ನೂರಕೆ ಇರುತಿಹುದು ಮೇಣೊಂದು ರಥಂ ಆ ರಥಂ ನೂರಕೆ ಇಭವೊಂದಿರ್ಪುದು=[ನೂರು ಆಳಿಗೆ ಒಂದು ಕುದುರೆ; ಹೀಗಿರುವ ಆ ಹಯ ನೂರಕ್ಕೆ ಇರುವುದು ಒಂದು ರಥ; ಆ ರಥ ನೂರಕ್ಕೆ ಇಭ/ಆನೆ ಒಂದು ಇರುವುದು]; ಇಂತು ಇಭ ಸಹಸ್ರಂ ಇರೆ 'ಭ್ರಮಿ'ಯೆಂದೆನಿಸಿಕೊಳ್ವುದು ಮೀರಿ ಯೋಜನದ ಅಗಲದೊಳ್ ಭ್ರಮಿಗಳು ಈರೈದು ನೂರು ಇಟ್ಟಣಿಸಿ ನಡೆದು ಬಂದೊಡೆ=[ಹೀಗೆ ಇಭ ಸಹಸ್ರ ಇದ್ದರೆ ಅದು 'ಭ್ರಮಿ'ಯೆಂದೆನಿಸಿಕೊಳ್ಳವುದು; ಯೋಜನದ ಅಗಲಕ್ಕೂ ಮೀರಿ ಭ್ರಮಿಗಳು, ಎರಡು-ಐದು ನೂರು ಒಟ್ಟಾಗಿ ನಡೆದು ಬಂದರೆ]; ಆ ಸೇನೆಯಂ ತಾರುತಟ್ಟಾಗಿ ಕೆಡಹಿದರು ಒಂದುನಿಮಿಷದೊಳ್ ಕುಶಲವರು ಅದು ಏವೇಳ್ವೆನು=[ಆ ಸೇನೆಯನ್ನು ತಾರುತಟ್ಟಾಗಿ/ತಲೆಕೆಳಗಾಗಿ/ಸಂಪೂರ್ಣವಾಗಿ ಒಂದು ನಿಮಿಷದಲ್ಲಿ ಕುಶಲವರು ಸೋಲಿಸಿದರು; ಅದು ಏನಂದು ಹೇಳಲಿ.]
 • ತಾತ್ಪರ್ಯ:ನೂರು ಆಳಿಗೆ ಒಂದು ಕುದುರೆ; ಹೀಗಿರುವ ಆ ಹಯ ನೂರಕ್ಕೆ ಇರುವುದು ಒಂದು ರಥ; ಆ ರಥ ನೂರಕ್ಕೆ ಇಭ/ಆನೆ ಒಂದು ಇರುವುದು; ಹೀಗೆ ಇಭ ಸಹಸ್ರ ಇದ್ದರೆ ಅದು 'ಭ್ರಮಿ'ಯೆಂದೆನಿಸಿಕೊಳ್ಳವುದು; ಯೋಜನದ ಅಗಲಕ್ಕೂ ಮೀರಿ ಭ್ರಮಿಗಳು, ಎರಡು-ಐದು ನೂರು ಒಟ್ಟಾಗಿ ನಡೆದು ಬಂದರೆ, ಆ ಸೇನೆಯನ್ನು ತಾರುತಟ್ಟಾಗಿ/ತಲೆಕೆಳಗಾಗಿ/ಸಂಪೂರ್ಣವಾಗಿ ಒಂದು ನಿಮಿಷದಲ್ಲಿ ಕುಶಲವರು ಸೋಲಿಸಿದರು; ಅದು ಏನಂದು ಹೇಳಲಿ.]
 • (ಪದ್ಯ-೪೩.)

ಪದ್ಯ :೪೫:[ಸಂಪಾದಿಸಿ]

ಹೂಣೆವೊಕ್ಕಿಸುತ ಬಾಲಕರೈದೆ ಲಕ್ಷ್ಮಣಂ | ಕಾಣುತಿದಿರಾದಂ ಕುಶಂಗಖಿಳವಾಹಿನೀ | ಶ್ರೇಣಿಸಹಿತುರುಬಿದಂ ಕಾಲಜಿತುವಾ ಲವನ ಮೇಲೆ ವಡಬಾಗ್ನಿಯೆಡೆಗೆ ||
ಮಾಣದೆರಗುವ ಕಡಲಜಲದಂತೆ ಕವಿದುದು ಕೃ | ಪಾಣ ತೋಮರ ಪರಶು ಕುಂತ ಮುದ್ಗರ ಚಕ್ರ | ಬಾಣ ಶಕ್ತಿಗಳ ಘೋರಪ್ರಹಾರಂಗಳಿಂದಾ ಸಕಲಸೇನೆ ಮುಳಿದು ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಹೂಣೆವೊಕ್ಕಿಸುತ (ಹೂಣೆ=ಪರಾಕ್ರಮದಿಂದ ನುಗ್ಗು/ ಸಿರಿಗನ್ನಡ ಅರ್ಥಕೋಶ:ಶಿ.ಕಾರಂತ; ಒಕ್ಕು= ಪುಡಿಮಾಡು; ಭತ್ತದ ಮೆದೆಯನ್ನು ಒಕ್ಕು)ಬಾಲಕರು ಐದೆ ಲಕ್ಷ್ಮಣಂ ಕಾಣುತ ಇದಿರಾದಂ ಕುಶಂಗೆ=[ಪರಾಕ್ರಮದಿಂದ ನುಗ್ಗಿ ಸೈನ್ಯವನ್ನು ಪುಡಿಮಾಡುತ್ತಾ ಬಾಲಕರು ಬರಲು ಲಕ್ಷ್ಮಣನು ಅವರನ್ನು ನೋಡಿ, ಕುಶನಿಗೆ ಎದುರಾದನು.]; ಅಖಿಳವಾಹಿನೀ ಶ್ರೇಣಿಸಹಿತ ಉರುಬಿದಂ ಕಾಲಜಿತುವು ಆ ಲವನ ಮೇಲೆ ವಡಬಾಗ್ನಿಯೆಡೆಗೆ ಮಾಣದೆ ಎರಗುವ ಕಡಲಜಲದಂತೆ ಕವಿದುದು=[ ಸೇನಾಧಿಪತಿ ಕಾಲಜಿತುವೂ ಅವನ ಎಲ್ಲಾ ಸೈನ್ಯವೂ, ಶ್ರೇಣಿಸಹಿತ ಪರಾಕ್ರನದಿಂದ ಆ ಲವನ ಮೇಲೆ ಬಡಬಾಗ್ನಿಯ ಕಡೆಗೆ ನಿಲ್ಲದೆ ಎರಗುವ ಕಡಲಜಲದಂತೆ ಕವಿಯಿತು.]; ಕೃಪಾಣ ತೋಮರ ಪರಶು ಕುಂತ ಮುದ್ಗರ ಚಕ್ರ ಬಾಣ ಶಕ್ತಿಗಳ ಘೋರ ಪ್ರಹಾರಂಗಳಿಂದ ಆ ಸಕಲಸೇನೆ ಮುಳಿದು=[ಹೇಗೆಂದರೆ, ಕೃಪಾಣ ತೋಮರ ಪರಶು ಕುಂತ ಮುದ್ಗರ ಚಕ್ರ ಬಾಣ ಶಕ್ತಿ ಮೊದಲಾದ ನಾನಾ ಆಯುಧಗಳ ಘೋರ ಪ್ರಹಾರಗಳಿಂದ ಆ ಸಕಲಸೇನೆ ಸಿಟ್ಟಿನಿಂದ ಆಕ್ರಮಿಸಿತು.]
 • ತಾತ್ಪರ್ಯ:ಪರಾಕ್ರಮದಿಂದ ನುಗ್ಗಿ ಸೈನ್ಯವನ್ನು ಪುಡಿಮಾಡುತ್ತಾ ಬಾಲಕರು ಬರಲು ಲಕ್ಷ್ಮಣನು ಅವರನ್ನು ನೋಡಿ, ಕುಶನಿಗೆ ಎದುರಾದನು. ಸೇನಾಧಿಪತಿ ಕಾಲಜಿತುವೂ ಅವನ ಎಲ್ಲಾ ಸೈನ್ಯವೂ, ಶ್ರೇಣಿಸಹಿತ ಪರಾಕ್ರನದಿಂದ ಆ ಲವನ ಮೇಲೆ ಬಡಬಾಗ್ನಿಯ ಕಡೆಗೆ ನಿಲ್ಲದೆ ಎರಗುವ ಕಡಲಜಲದಂತೆ ಕವಿಯಿತು. ಹೇಗೆಂದರೆ, ಕೃಪಾಣ ತೋಮರ ಪರಶು ಕುಂತ ಮುದ್ಗರ ಚಕ್ರ ಬಾಣ ಶಕ್ತಿ ಮೊದಲಾದ ನಾನಾ ಆಯುಧಗಳ ಘೋರ ಪ್ರಹಾರಗಳಿಂದ ಆ ಸಕಲಸೇನೆ ಸಿಟ್ಟಿನಿಂದ ಆಕ್ರಮಿಸಿತು.
 • (ಪದ್ಯ-೪೫.)

ಪದ್ಯ :೪೬:[ಸಂಪಾದಿಸಿ]

ಏಸು ಭಟರಂಬುಗಳನಿಸುವರೈಸಂಬುಗಳ | ನಾಸುಭಟರಂಗದೊಳ್ ಕಾಣಿಸಿದನಾ ಬಲದೊ | ಳೇಸು ಕೈದುಗಳೊಳೊದಗಿದರೈಸು ಕೈದುಗಳನೆಲ್ಲಮಂ ತಡೆಗಡಿದನು ||
ಏಸಾನೆಕುದುರೆಗಳ್ ಕವಿದುವೈಸಂ ಸೀಳ್ದ | ನೇಸು ತೇರುರವಣಿಸಿತೈಸುರಥಮಂ ಮುರಿದ | ನೇಸುಮಂದಿಗಳುರುಬಿತೈಸುಮಂ ಕೊಂದ ನಿನ್ನೇಸು ಸಾಹಸಿಯೊ ಲವನು ||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಏಸು ಭಟರು ಅಂಬುಗಳನು ಇಸುವರೊ ಐಸಂಬುಗಳನು ಆ ಸುಭಟರ ಅಂಗದೊಳ್ ಕಾಣಿಸಿದನು=[ಎಷ್ಟು ಭಟರು ಅಂಬುಗಳನು ಹೊಡೆದರೊ, ಅಷ್ಟು ಅಂಬುಗಳನು ಆ ಸುಭಟರ ಅಂಗದಲ್ಲಿ ಕಾಣಿಸಿದನು] ಆ ಬಲದೊಳು ಏಸು ಕೈದುಗಳು ಒಳೊದಗಿದರು ಐಸು ಕೈದುಗಳನು ಎಲ್ಲಮಂ ತಡೆಗಡಿದನು=[ ಆ ಸೈನ್ಯದಲ್ಲಿ ಎಷ್ಟು ಕೈದುಗಳೊಳು ಒದಗಿದರು ಅಷ್ಟು ಕೈದುಗಳನು ಎಲ್ಲವನ್ನೂ ತಡೆದು ಕಡಿದನು]; ಏಸು ಆನೆ ಕುದುರೆಗಳ್ ಕವಿದುವೊ ಐಸಂ ಸೀಳ್ದನು ಏಸು ತೇರು ಉರವಣಿಸಿತೊ ಐಸುರಥಮಂ ಮುರಿದನು=[ಎಷ್ಟು ಆನೆ ಕುದುರೆಗಳು ಕವಿದುವೊ ಅಷ್ಟು ಸೀಳಿದನು ಎಷ್ಟು ತೇರು ಉರವಣಿಸಿತೊ ಅಷ್ಟು ರಥವನು ಮುರಿದನು]; ಏಸು ಮಂದಿಗಳು ಉರುಬಿತೊ ಐಸುಮಂ ಕೊಂದ ನಿನ್ನೇಸು ಸಾಹಸಿಯೊ ಲವನು=[ಎಷ್ಟು ಮಂದಿಗಳು ನುಗ್ಗಿದರೋ ಅಷ್ಟನ್ನೂ ಕೊಂದನು ಇನ್ನೇಸು ಸಾಹಸಿಯೊ ಲವನು].
 • ತಾತ್ಪರ್ಯ:ಎಷ್ಟು ಭಟರು ಅಂಬುಗಳನು ಹೊಡೆದರೊ, ಅಷ್ಟು ಅಂಬುಗಳನು ಆ ಸುಭಟರ ಅಂಗದಲ್ಲಿ ಕಾಣಿಸಿದನು. ಆ ಸೈನ್ಯದಲ್ಲಿ ಎಷ್ಟು ಕೈದುಗಳೊಳು ಒದಗಿದರು ಅಷ್ಟು ಕೈದುಗಳನು ಎಲ್ಲವನ್ನೂ ತಡೆದು ಕಡಿದನು. ಎಷ್ಟು ಆನೆ ಕುದುರೆಗಳು ಕವಿದುವೊ ಅಷ್ಟು ಸೀಳಿದನು ಎಷ್ಟು ತೇರು ಉರವಣಿಸಿತೊ ಅಷ್ಟು ರಥವನು ಮುರಿದನು. ಎಷ್ಟು ಮಂದಿಗಳು ನುಗ್ಗಿದರೋ ಅಷ್ಟನ್ನೂ ಕೊಂದನು; ಇನ್ನೇಸು ಸಾಹಸಿಯೊ ಲವನು.
 • (ಪದ್ಯ-೪೬.)

ಪದ್ಯ :೪೭:[ಸಂಪಾದಿಸಿ]

ಜಾನಕಿಯ ಸುತನ ಬಾಣಾವಳಿಯ ಹಾವಳಿಯ | ನೇನೆಂಬೆನಹಿತರಂ ಕವರಿದುವು ಸವರಿದುವು | ಬಾನೆಡೆಯೊಳಿಟ್ಟಣಿಸಿ ಹರಿದುವು ತರಿದುವು ಕೊಂದುವರಿದುವು ಪರಿದುವು ||
ಆನೆ ಕುದುರೆಗಳನುರೆ ಸೀಳಿದುವು ತೂಳಿದುವು | ನಾನಾ ಪ್ರಕಾರದಿಂ ಕೆಡಹಿದುವು ಕೊಡಹಿದುವು | ಸೇನೆಗಳೊಡಲ್ಗಳಂ ಪಚ್ಚಿದುವು ಕೊಚ್ಚಿದುವು ತಲೆಗಳಂ ತತ್‍ಕ್ಷಣದೊಳು ||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಜಾನಕಿಯ ಸುತನ ಬಾಣಾವಳಿಯ ಹಾವಳಿಯನು ಏನೆಂಬೆನು=[ಜಾನಕಿಯ ಸುತ ಲವನ ಬಾಣಗಳ ಸುರಿಮಳೆಯ ಹಾವಳಿಯನ್ನು ಏನು ಹೇಳಲಿ!]; ಅಹಿತರಂ ಕವರಿದುವು ಸವರಿದುವು ಬಾನೆಡೆಯೊಳು ಇಟ್ಟಣಿಸಿ ಹರಿದುವು ತರಿದುವು ಕೊಂದುವು ಅರಿದುವು ಪರಿದುವು=[ಶತ್ರುಗಳನ್ನು ಕವರಿ/ಸುತ್ತಿದುವು ಸವರಿದುವು; ಆಕಾಶದಲ್ಲಿ ದಟ್ಟೈಸಿ ಹರಿದಾಡಿದುವು; ತರಿದುವು ಕೊಂದುವು ಅರಿದುವು ಹರಿದುವು ]; ಆನೆ ಕುದುರೆಗಳನು ಉರೆ ಸೀಳಿದುವು ತೂಳಿದುವು ನಾನಾ ಪ್ರಕಾರದಿಂ ಕೆಡಹಿದುವು ಕೊಡಹಿದುವು ಸೇನೆಗಳ ಒಡಲ್ಗಳಂ ಪಚ್ಚಿದುವು ಕೊಚ್ಚಿದುವು ತಲೆಗಳಂ ತತ್‍ಕ್ಷಣದೊಳು[ಆನೆ ಕುದುರೆಗಳನ್ನು ಬಹಳ ಸೀಳಿದುವು ತೂಳಿದುವು/ತಳ್ಳಿದವು; ನಾನಾ ಪ್ರಕಾರದಿಂದ ಕೆಡವಿದುವು, ಕೊಡಹಿದುವು/ಜಾಡಿಸಿದವು; ಸೇನೆಗಳ ದೇಹಗಳನ್ನು ಹೆಚ್ಚಿದುವು/ಸೀಳಿದವು, ತಲೆಗಳನ್ನು ತತ್‍ಕ್ಷಣದಲ್ಲಿ ಕೊಚ್ಚಿದುವು;]
 • ತಾತ್ಪರ್ಯ:ಜಾನಕಿಯ ಸುತ ಲವನ ಬಾಣಗಳ ಸುರಿಮಳೆಯ ಹಾವಳಿಯನ್ನು ಏನು ಹೇಳಲಿ! ಅವು ಶತ್ರುಗಳನ್ನು ಕವರಿ/ಸುತ್ತಿದುವು ಸವರಿದುವು; ಆಕಾಶದಲ್ಲಿ ದಟ್ಟೈಸಿ ಹರಿದಾಡಿದುವು; ತರಿದುವು ಕೊಂದುವು ಅರಿದುವು ಹರಿದುವು ಆನೆ ಕುದುರೆಗಳನ್ನು ಬಹಳ ಸೀಳಿದುವು ತೂಳಿದುವು/ತಳ್ಳಿದವು; ನಾನಾ ಪ್ರಕಾರದಿಂದ ಕೆಡವಿದುವು, ಕೊಡಹಿದುವು/ಜಾಡಿಸಿದವು; ಸೇನೆಗಳ ದೇಹಗಳನ್ನು ಹೆಚ್ಚಿದುವು/ಸೀಳಿದವು, ತಲೆಗಳನ್ನು ತತ್‍ಕ್ಷಣದಲ್ಲಿ ಕೊಚ್ಚಿದುವು.
 • (ಪದ್ಯ-೪೭.)XXVII

ಪದ್ಯ :೪೮:[ಸಂಪಾದಿಸಿ]

ಭೂರಿಬಾಣದೊಳಹಿತಸೇನೆಯೊಳ್ ಮುಳಿದ ಚ | ತ್ವಾರಿಂಶದನುಪಮ ಭ್ರಮಿಗಳಂ ತಡೆಗಡಿದು | ವೀರ ಲವನಲ್ಲಿ ಕುಶನಂ ಕಾಣದೆಡಬಲದೊಳರಸೆ ರುಧಿರಾಕ್ಷನೆಂಬ ||
ಶೂರಾಸುರಂ ಲವಣ ದಾನವನ ಮಾತುಲಂ | ಶ್ರೀರಾಮ ಚರಣ ಶರಣಾಗತಂ ಸೀತಾಕು | ಮಾರಕನ ಕರದ ಕೋದಂಡಮಂ ತುಡುಕಿದಂ ಮೇಲ್ವಾಯ್ದು ರೋಷದಿಂದೆ ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಭೂರಿಬಾಣದೊಳು ಅಹಿತಸೇನೆಯೊಳ್ ಮುಳಿದ ಚತ್ವಾರಿಂಶದ ಅನುಪಮ ಭ್ರಮಿಗಳಂ ತಡೆಗಡಿದು ವೀರ ಲವನಲ್ಲಿ ಕುಶನಂ ಕಾಣದೆ ಎಡಬಲದೊಳು ಅರಸೆ=[ಹೇರಳ ಸಂಖ್ಯೆಯ ಬಾಣಗಳಲ್ಲಿ ಶತ್ರುಸೇನೆಯಲ್ಲಿ ಕ್ರೋಧಗೊಂಡ ಚತ್ವಾರಿಂಶದ/ ನಲವತ್ತು ಸಂಖ್ಯೆಯ ಅನುಪಮ ಭ್ರಮಿಗಳನ್ನು (ಸೈನ್ಯದ ಸಮೂಹವನ್ನು) ತಡೆದು ಕೊಂದು, ವೀರ ಲವನು ಅಲ್ಲಿ ಕುಶನನ್ನು ಕಾಣದೆ ಎಡಬಲದಿಕ್ಕಿನಲ್ಲಿ ಹುಡುಕುತ್ತಿರಲು,]; ರುಧಿರಾಕ್ಷನೆಂಬ ಶೂರಾಸುರಂ ಲವಣ ದಾನವನ ಮಾತುಲಂ ಶ್ರೀರಾಮ ಚರಣ ಶರಣಾಗತಂ ಸೀತಾ ಕುಮಾರಕನ ಕರದ ಕೋದಂಡಮಂ ತುಡುಕಿದಂ ಮೇಲ್ವಾಯ್ದು ರೋಷದಿಂದೆ=[ರುಧಿರಾಕ್ಷನೆಂಬ ಶೂರನಾದ ರಾಕ್ಷಸನು, ಲವಣ ದಾನವನ ಮಾವನು, ಶ್ರೀರಾಮನ ಚರಣಕ್ಕೆ ಶರಣಾಗತನಾಗಿ ಬಂದವನು, ಸೀತಾ ಕುಮಾರನ ಕೈಯಲ್ಲಿದ್ದ ಬಿಲ್ಲನ್ನು ತುಡುಕಿದಂ ರೋಷದಿಂದ ಮೇಲೆ ಬಿದ್ದು ಕಸಿದುಕೊಂಡನು.]
 • ತಾತ್ಪರ್ಯ:ಹೇರಳ ಸಂಖ್ಯೆಯ ಬಾಣಗಳಿಂದ ಶತ್ರುಸೇನೆಯಲ್ಲಿ ಕ್ರೋಧಗೊಂಡ ಚತ್ವಾರಿಂಶದ/ ನಲವತ್ತು ಸಂಖ್ಯೆಯ ಅನುಪಮ ಭ್ರಮಿಗಳನ್ನು (ಸೈನ್ಯದ ಸಮೂಹವನ್ನು) ತಡೆದು ಕೊಂದು, ವೀರ ಲವನು ಅಲ್ಲಿ ಕುಶನನ್ನು ಕಾಣದೆ ಎಡಬಲದಿಕ್ಕಿನಲ್ಲಿ ಹುಡುಕುತ್ತಿರಲು, ರುಧಿರಾಕ್ಷನೆಂಬ ಶೂರನಾದ ರಾಕ್ಷಸನು, ಲವಣ ದಾನವನ ಮಾವನು, ಶ್ರೀರಾಮನ ಚರಣಕ್ಕೆ ಶರಣಾಗತನಾಗಿ ಬಂದವನು, ಸೀತಾ ಕುಮಾರನ ಕೈಯಲ್ಲಿದ್ದ ಬಿಲ್ಲನ್ನು ರೋಷದಿಂದ ಮೇಲೆ ಬಿದ್ದು ಕಸಿದುಕೊಂಡನು.
 • (ಪದ್ಯ-೪೮.)

ಪದ್ಯ :೪೯:[ಸಂಪಾದಿಸಿ]

ಕರದ ಬಿಲ್ಲಂ ಕಿತ್ತು ಕೊಂಡೋಡುವಸುರನಂ | ಭರದಿಂದೆ ಬೆಂಬತ್ತಿ ಪೋಗದಿರ್ ಪೋಗದಿರ್ | ತಿರುಗೆನುತ ವಾಲ್ಮೀಕಿಮುನಿಪನಿತ್ತಗ್ನಿ ಮಂತ್ರಧ್ಯಾನಮಂ ಮಾಡಲು ||
ದೊರೆಕೊಂಡುದೊಂದು ಚಕ್ರಂ ಬಳಿಕ ಲವನದಂ | ಧರಿಸಿ ಚಕ್ರಾಯುಧಂ ತಾನೆನಲ್ ಕಂಗೊಳಿಸು | ತುರವಣಿಸಿ ರುಧಿರಾಕ್ಷನಂ ಗಗನದೊಳ್ ಪಿಡಿಯೆ ಕಂಡವನ ಪಡೆ ಕವಿದುದು||49||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಲವನ ಕರದ ಬಿಲ್ಲಂ ಕಿತ್ತು ಕೊಂಡೋಡುವ ಅಸುರನಂ ಭರದಿಂದೆ ಬೆಂಬತ್ತಿ ಪೋಗದಿರ್ ಪೋಗದಿರ್ ತಿರುಗೆನುತ ವಾಲ್ಮೀಕಿಮುನಿಪನು ಇತ್ತ ಅಗ್ನಿ ಮಂತ್ರಧ್ಯಾನಮಂ ಮಾಡಲು=[ಕೈಯಲ್ಲಿದ್ದ ಬಿಲ್ಲನ್ನು ಕಿತ್ತು ಕೊಂಡು ಓಡುತ್ತಿರುವ ಅಸುರನನ್ನು ವೇಗವಾಗಿ ಬೆನ್ನುಹತ್ತಿ ಹೋಗಬೇಡ ಹೋಗದಿರು ತಿರುಗು ಎನ್ನುತ್ತಾ, ವಾಲ್ಮೀಕಿಮುನಿಯು ಉಪದೇಶಿಸಿದ ಅಗ್ನಿ ಮಂತ್ರಧ್ಯಾನವನ್ನು ಮಾಡಲು]; ದೊರೆಕೊಂಡುದು ಒಂದು ಚಕ್ರಂ ಬಳೀಕ ಲವನು ಅದಂ ಧರಿಸಿ ಚಕ್ರಾಯುಧಂ ತಾನೆನಲ್ ಕಂಗೊಳಿಸುತ ಉರವಣಿಸಿ ರುಧಿರಾಕ್ಷನಂ ಗಗನದೊಳ್ ಪಿಡಿಯೆ ಕಂಡವನ ಪಡೆ ಕವಿದುದು=[ದೊರೆಕೊಂಡುದು ಒಂದು ಚಕ್ರವು ಅವನ ಕೈಗೆ ಬಂದಿತು. ಬಳಿಕ ಲವನು ಅದನ್ನು ಧರಿಸಿ ಚಕ್ರಾಯುಧಂನಾದ ವಿಷ್ಣುವೇ ತಾನು ಎನ್ನುವಂತೆ ಕಂಗೊಳಿಸುತ್ತಾ ಪರಾಕ್ರಮದಿಂದ ರುಧಿರಾಕ್ಷನನ್ನು ಗಗನದಲ್ಲಿ ಹಿಡಿಯಲು, ಅದನ್ನು ಕಂಡು ಅವನ ಸೈನ್ನಯ ಲವನನ್ನು ಮುತ್ತಿತು.]
 • ತಾತ್ಪರ್ಯ:ಲವನ ಕೈಯಲ್ಲಿದ್ದ ಬಿಲ್ಲನ್ನು ಕಿತ್ತು ಕೊಂಡು ಓಡುತ್ತಿರುವ ಅಸುರನನ್ನು ವೇಗವಾಗಿ ಬೆನ್ನುಹತ್ತಿ ಹೋಗಬೇಡ ಹೋಗದಿರು ತಿರುಗು ಎನ್ನುತ್ತಾ, ವಾಲ್ಮೀಕಿಮುನಿಯು ಉಪದೇಶಿಸಿದ ಅಗ್ನಿ ಮಂತ್ರಧ್ಯಾನವನ್ನು ಮಾಡಲು, ಒಂದು ಚಕ್ರವು ಅವನ ಕೈಗೆ ಬಂದಿತು. ಬಳಿಕ ಲವನು ಅದನ್ನು ಧರಿಸಿ ಚಕ್ರಾಯುಧಂನಾದ ವಿಷ್ಣುವೇ ತಾನು ಎನ್ನುವಂತೆ ಕಂಗೊಳಿಸುತ್ತಾ ಪರಾಕ್ರಮದಿಂದ ರುಧಿರಾಕ್ಷನನ್ನು ಗಗನದಲ್ಲಿ ಹಿಡಿಯಲು, ಅದನ್ನು ಕಂಡು ಅವನ ಸೈನ್ನಯ ಲವನನ್ನು ಮುತ್ತಿತು.
 • (ಪದ್ಯ-೪೯.)

ಪದ್ಯ :೫೦:[ಸಂಪಾದಿಸಿ]

ಮತ್ತುರುಬಿದನಿತು ಬಲಮಂ ಕರದ ಚಕ್ರದಿಂ | ತತ್ತರದರಿದು* ರಾಕ್ಷಸೇಂದ್ರನಂ ಬಿಡದೆ ಲವ | ನೊತ್ತಾಯಮಂ ಮಾಡುತಿರೆ ಕಂಡು ದಶರಥ ನೃಪತಿಯ ಮಂತ್ರಿಯತನುಜರು ||
ಹತ್ತು ಮಂದಿ ಪ್ರಸಿದ್ಧಪ್ರಧಾನಿಗಳಾಗ | ಹತ್ತು ಹತ್ತಂಬುಗಳನೋರೊರ್ವರೆಚ್ಚು ಕಡಿ | ಹತ್ತು ಹತ್ತಾಗೆ ಬಾಲಕನ ಪಾರುಂಬಳೆಯನಾಕ್ಷಣಂ ಖಂಡಿಸಿದರು ||50||

 • (ತತ್ತರಿವರಿದು)
ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಮತ್ತೆ ಉರುಬಿದ ಅನಿತು ಬಲಮಂ ಕರದ ಚಕ್ರದಿಂ ತತ್ತರದಿ(ಅವಸರದಿ) ಅರಿದು(ಕತ್ತರಿಸಿ) ರಾಕ್ಷಸೇಂದ್ರನಂ ಬಿಡದೆ ಲವನು ಒತ್ತಾಯಮಂ ಮಾಡುತಿರೆ ಕಂಡು=[ಮತ್ತೆ ಮೇಲೆಬಿದ್ದ ಅಷ್ಟೂ ಸೈನ್ಯವನ್ನು ಕೈಯಲ್ಲಿದ್ದ ಚಕ್ರದಿಂದ ಅವಸರದಲ್ಲಿ ಕತ್ತರಿಸಿ ರಾಕ್ಷಸೇಂದ್ರನನ್ನು ಬಿಡದೆ ಲವನು ಬಿಲ್ಲು ಪಡೆಯಲು ಒತ್ತಾಯ ಮಾಡುತ್ತಿರಲು ಕಂಡು,]; ದಶರಥ ನೃಪತಿಯ ಮಂತ್ರಿಯ ತನುಜರು ಹತ್ತು ಮಂದಿ ಪ್ರಸಿದ್ಧ ಪ್ರಧಾನಿಗಳಾಗ ಹತ್ತು ಹತ್ತಂಬುಗಳನು ಓರೊರ್ವರು ಎಚ್ಚು ಕಡಿ ಹತ್ತು ಹತ್ತಾಗೆ ಬಾಲಕನ ಪಾರುಂಬಳೆಯನು ಆಕ್ಷಣಂ ಖಂಡಿಸಿದರು=[ದಶರಥ ರಾಜನ ಮಂತ್ರಿಯ ಮಕ್ಕಳು, ಹತ್ತು ಜನರು ಪ್ರಸಿದ್ಧ ಪ್ರಧಾನಿಗಳು, ಆಗ ಹತ್ತು ಹತ್ತು ಬಾಣಗಳನ್ನು ಓಬ್ಬೊಬ್ಬರು ಹೊಡೆದು ಸೇರಿ ಹತ್ತು ಹತ್ತಾಗೆ ನೂರು ಬಾಣದಿಂದ ಲವನ ಚಕ್ರವನ್ನು ಆಕ್ಷಣದಲ್ಲಿ ತುಂಡುಮಾಡಿದರು];
 • ತಾತ್ಪರ್ಯ:ಮತ್ತೆ ಮೇಲೆಬಿದ್ದ ಅಷ್ಟೂ ಸೈನ್ಯವನ್ನು ಕೈಯಲ್ಲಿದ್ದ ಚಕ್ರದಿಂದ ಅವಸರದಲ್ಲಿ ಕತ್ತರಿಸಿ ರಾಕ್ಷಸೇಂದ್ರನನ್ನು ಬಿಡದೆ ಲವನು ಬಿಲ್ಲು ಪಡೆಯಲು ಒತ್ತಾಯ ಮಾಡುತ್ತಿರಲು ಕಂಡು, ದಶರಥ ರಾಜನ ಮಂತ್ರಿಯ ಮಕ್ಕಳು, ಹತ್ತು ಜನರು ಪ್ರಸಿದ್ಧ ಪ್ರಧಾನಿಗಳು, ಆಗ ಹತ್ತು ಹತ್ತು ಬಾಣಗಳನ್ನು ಓಬ್ಬೊಬ್ಬರು ಹೊಡೆದು ಸೇರಿ ಹತ್ತು ಹತ್ತಾಗೆ ನೂರು ಬಾಣದಿಂದ ಲವನ ಚಕ್ರವನ್ನು ಆಕ್ಷಣದಲ್ಲಿ ತುಂಡುಮಾಡಿದರು.
 • (ಪದ್ಯ-೫೦.)

ಪದ್ಯ :೫೧:[ಸಂಪಾದಿಸಿ]

ಕರದ ಚಕ್ರಂ ಪೋಗೆ ಪರಿಘಮಂ ಕೊಂಡು ಲವ | ನುರವಣಿಸಿ ಹೊಯ್ದನಿಬರಂ ಕೆಡಹೆ ಮತ್ತೆ ಬಂ | ದುರು ಗದಾದಂಡಮಂ ಕೊಂಡು ರುಧಿರಾಕ್ಷನೀತನ ಪಣೆಯನಪ್ಪಳಿಸಲು ||
ಇರದೆ ಮೂರ್ಛಿತನಾಗಿ ಬಾಲಕಂ ಕೂಡೆ ಚೇ | ತರಿಸಿಕೊಂಡೆದ್ದು ಕುಂತದೊಳಾ ಮಹಾಸುರನ | ಶಿರವನರಿದಾದಿತ್ಯನಿತ್ತ ನಿಜಚಾಪಮಂ ತೆಗೆದುಕೊಂಡು ಧುರದೊಳು ||51||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕರದ ಚಕ್ರಂ ಪೋಗೆ ಪರಿಘಮಂ ಕೊಂಡು ಲವನು ಉರವಣಿಸಿ ಹೊಯ್ದು ಅನಿಬರಂ ಕೆಡಹೆ=[ಕೈಯಲ್ಲಿದ್ದ ಚಕ್ರವು ಹೋಗಲು, ಪರಿಘವೆಂಬ ಆಯುಧವನ್ನು ತೆಗೆದುಕೊಂಡು ಲವನು ಮೇಲೆಬಿದ್ದು ಎಲ್ಲರನ್ನೂ ಹೊಡೆದು ಕೆಡಗಲು,]; ಮತ್ತೆ ಬಂದು ಉರು ಗದಾದಂಡಮಂ ಕೊಂಡು ರುಧಿರಾಕ್ಷನು ಈತನ ಪಣೆಯನು ಅಪ್ಪಳಿಸಲು=[ಮತ್ತೆ ರುಧಿರಾಕ್ಷನು ಬಂದು ದೊಡ್ಡ ಗದಾದಂಡವನ್ನು ತೆಗೆದುಕೊಂಡು ಲವನನ ಹಣೆಯನ್ನು ಹೊಡೆಯಲು,]; ಇರದೆ ಮೂರ್ಛಿತನಾಗಿ ಬಾಲಕಂ ಕೂಡೆ ಚೇತರಿಸಿಕೊಂಡು ಎದ್ದು ಕುಂತದೊಳು (ಆಯುಧ) ಆ ಮಹಾಸುರನ ಶಿರವನು ಅರಿದು=[ಲವನು ಎಚ್ಚರ ಇರದೆ ಮೂರ್ಛೆಹೋಗಿ, ಆದರೆ ಕೂಡಲೆ ಬಾಲಕನು ಚೇತರಿಸಿಕೊಂಡು ಎದ್ದು ಕುಂತವೆಂಬ ಆಯುಧದಿಂದ ಆ ಮಹಾಸುರನ ತಲೆಯನ್ನು ಕತ್ತರಿಸಿ,]; ಆದಿತ್ಯನು ಇತ್ತ ನಿಜಚಾಪಮಂ ತೆಗೆದುಕೊಂಡು ಧುರದೊಳು=[ಹೀಗೆ ಯುದ್ಧದಲ್ಲಿ, ಆದಿತ್ಯನು ಕೊಟ್ಟ ತನ್ನ ಬಿಲ್ಲನ್ನು ತೆಗೆದುಕೊಂಡನು.]
 • ತಾತ್ಪರ್ಯ:ಕೈಯಲ್ಲಿದ್ದ ಚಕ್ರವು ಹೋಗಲು, ಲವನು ಪರಿಘವೆಂಬ ಆಯುಧವನ್ನು ತೆಗೆದುಕೊಂಡು ಮೇಲೆಬಿದ್ದು ಎಲ್ಲರನ್ನೂ ಹೊಡೆದು ಕೆಡಗಲು,ಮತ್ತೆ ರುಧಿರಾಕ್ಷನು ಬಂದು ದೊಡ್ಡ ಗದಾದಂಡವನ್ನು ತೆಗೆದುಕೊಂಡು ಲವನನ ಹಣೆಯನ್ನು ಹೊಡೆಯಲು, ಲವನು ಎಚ್ಚರ ಇರದೆ ಮೂರ್ಛೆಹೋಗಿ, ಆದರೆ ಕೂಡಲೆ ಬಾಲಕನು ಚೇತರಿಸಿಕೊಂಡು ಎದ್ದು ಕುಂತವೆಂಬ ಆಯುಧದಿಂದ ಆ ಮಹಾಸುರನ ತಲೆಯನ್ನು ಕತ್ತರಿಸಿ ಯುದ್ಧದಲ್ಲಿ, ಆದಿತ್ಯನು ಕೊಟ್ಟ ತನ್ನ ಬಿಲ್ಲನ್ನು ತೆಗೆದುಕೊಂಡನು.
 • (ಪದ್ಯ-೫೧.)

ಪದ್ಯ :೫೨:[ಸಂಪಾದಿಸಿ]

ಬಿಡದೆ ರುಧಿರಾಕ್ಷ ರಾಕ್ಷಸನಂ ರಣಾಗ್ರದೊಳ್ | ಕೆಡಹಿ ನಿಜಚಾಪ ಚಾಪಲಹಸ್ತನಾಗಿ ಲವ | ನಡಸಿದರಚತುರ ಚತುರಂಗಮಂ ಸಂಹರಿಸತೊಡಗಿದಂ ಮತ್ತೆ ಮುಳಿದು ||
ತೊಡವುಗಳ ಕಾಯಕಾಯತಮಾದ ಜೋಡುಗಳ್ | ಕಡಿಯೆ ಕುಣಪಕ್ಕೆ ಪಕ್ಕೆಗಳಾಗೆ ಪಟುಭಟರ್ | ಪೊಡೆಗೆಡೆದರಾಗ ರಾಗದೊಳಮರನಾರಿಯರ್ ತಕ್ಕೈಸಲಂಬರದೊಳು ||52||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಿಡದೆ ರುಧಿರಾಕ್ಷ ರಾಕ್ಷಸನಂ ರಣಾಗ್ರದೊಳ್ ಕೆಡಹಿ ನಿಜಚಾಪ ಚಾಪಲಹಸ್ತನಾಗಿ ಲವನು ಅಡಸಿದ ಅರಿಚತುರ ಚತುರಂಗಮಂ ಸಂಹರಿಸತೊಡಗಿದಂ ಮತ್ತೆ ಮುಳಿದು=[ರುಧಿರಾಕ್ಷ ರಾಕ್ಷಸನನ್ನು ಬಿಡದೆ ರಣಾಗ್ರದಲ್ಲಿ ಕೊಂದುಕೆಡಗಿ, ಮತ್ತೆ ಮುಳಿದು/ಸಿಟ್ಟುಗೊಂಡು ತನ್ನಬಿಲ್ಲನ್ನು ಹಿಡಿದು ಚಾಪಲ (ಉತ್ಸಾಹ)ಹಸ್ತನಾಗಿ ಲವನು ಅಡಸಿದ/ಮೆಟ್ಟಿದ ಚತುರಶತ್ರುಗಳ ಚತುರಂಗಸೈನ್ಯವನ್ನು ಸಂಹರಿಸತೊಡಗಿದನು (<-ಮತ್ತೆ ಮುಳಿದು/ಸಿಟ್ಟುಗೊಂಡು) ]; ತೊಡವುಗಳ ಕಾಯಕಾಯತಮಾದ ಜೋಡುಗಳ್ ಕಡಿಯೆ ಕುಣಪಕ್ಕೆ(ಹೆಣಗಳಿಗೆ) ಪಕ್ಕೆಗಳಾಗೆ ಪಟುಭಟರ್ ಪೊಡೆಗೆಡೆದರಾಗ (ಪೊಡವಿಗೆ ಕೆಡೆದರು ಆಗ) ರಾಗದೊಳು ಅಮರನಾರಿಯರ್ ತಕ್ಕೈಸಲು ಅಂಬರದೊಳು=[ಯುದ್ಧದಆಭರಣಗಳಾದ ದೇಹಕ್ಕೆ ಆಯತಮಾದ/ಹೊಂದುವ ಕವಚಾದಿಗಳು ಕಡಿಯಲು, ಹೆಣಕ್ಕೆ ಕೂಳುಗಳಾಗೆ ವೀರಭಟರು ಆಗ ಸತ್ತು ನೆಲಕ್ಕೆ ಬಿದ್ದರು. ಆ ಸಮಯದಲ್ಲಿ ವೀರಸ್ವರ್ಗದ ಅಮರನಾರಿಯರು ಪ್ರೀತಿಯಿಂದ ಅಂಬರ/ಸ್ವರ್ಗದಲ್ಲಿ ಉಪಚರಿಸಲು ಸೇರಿದರು.]
 • ತಾತ್ಪರ್ಯ: ಲವನು, ರುಧಿರಾಕ್ಷ ರಾಕ್ಷಸನನ್ನು ಬಿಡದೆ ರಣಾಗ್ರದಲ್ಲಿ ಕೊಂದುಕೆಡಗಿ, ಮತ್ತೆ ಸಿಟ್ಟುಗೊಂಡು ತನ್ನ ಬಿಲ್ಲನ್ನು ಹಿಡಿದು ಉತ್ಸಾಹ ಹಸ್ತನಾಗಿ ಲವನು ಮೆಟ್ಟಿ ಚತುರಶತ್ರುಗಳ ಚತುರಂಗಸೈನ್ಯವನ್ನು ಸಂಹರಿಸತೊಡಗಿದನು. ಯುದ್ಧದ ಆಭರಣಗಳಾದ ದೇಹಕ್ಕೆ ಆಯತಮಾದ/ಹೊಂದುವ ಕವಚಾದಿಗಳು ಕಡಿಯಲು, ಹೆಣವಾಗಿ (ಪ್ರೇತ-ಪ್ರಾಣಿಗಳಿಗೆ) ಕೂಳುಗಳಾಗಿ ವೀರಭಟರು ಆಗ ಸತ್ತು ನೆಲಕ್ಕೆ ಬಿದ್ದರು. ಆ ಸಮಯದಲ್ಲಿ ವೀರಸ್ವರ್ಗದ ಅಮರನಾರಿಯರು ಪ್ರೀತಿಯಿಂದ ಸ್ವರ್ಗದಲ್ಲಿ ಅವರನ್ನು ಉಪಚರಿಸಲು ಸೇರಿದರು.
 • (ಪದ್ಯ-೫೨.)

ಪದ್ಯ :೫೩:[ಸಂಪಾದಿಸಿ]

ಪಡೆ ಮಡಿಯುತಿರ್ದುದು ಲವಾಸ್ತ್ರದಿಂದಿತ್ತ ಕುಶ | ನೊಡನೆ ಸೌಮಿತ್ರಿಗಾದುದು ಯುದ್ಧಮಾಗ ಕಿವಿ | ಗಡಿಗೆ ತೆಗೆದೆಚ್ಚನೈದಂಬುಗಳನಿದಿರಾಗಿ ಭೂಮಿಜೆಯ ಸುತನ ಮೇಲೆ |
ಕಡುಗಿ ಖಾತಿಯೊಳೀತನೊಂದು ಸರಳಂ ಪೂಡಿ | ಬಿಡಲೂರ್ಮಿಳಾವಲ್ಲಭನ ತೇರೆರಡು ಗಳಿಗೆ | ಬಿಡದೆ ತಿರುಗಿತು ಬವಣಿಗೊಂಡು ರಥವಾಜಿಗಳ್ ಪೊಡೆಗೆಡೆದುವೇನೆಂಬೆನು ||53||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಪಡೆ ಮಡಿಯುತಿರ್ದುದು ಲವಾಸ್ತ್ರದಿಂದ ಇತ್ತ ಕುಶನೊಡನೆ ಸೌಮಿತ್ರಿಗಾದುದು ಯುದ್ಧಮ್ ಆಗ ಕಿವಿಗಡಿಗೆ ತೆಗೆದೆಚ್ಚನು ಐದಂಬುಗಳನು ಇದಿರಾಗಿ ಭೂಮಿಜೆಯ ಸುತನ ಮೇಲೆ=[ಲಕ್ಷ್ಮಣನ ಸೈನ್ಯ ನಾಶವಾಗುತ್ತಿತ್ತು ಲವನ ಅಸ್ತ್ರದಿಂದ, ಇತ್ತಲಾಗಿ ಕುಶನೊಡನೆ ಲಕ್ಷ್ಮಣನಿಗೆ ಯುದ್ಧವು ತೊಡಗಿತ್ತು. ಆಗ ಅವನು ಕಿವಿಯವರೆಗೆ ಎಳೆದು ಐದು ಬಾಣಗಳನ್ನು ಎದುರಾಗಿ ಸೀತೆಯ ಮಗನ ಮೇಲೆ ಹೊಡೆದನು]; ಕಡುಗಿ ಖಾತಿಯೊಳು ಈತನೊಂದು ಸರಳಂ ಪೂಡಿ ಬಿಡಲು ಊರ್ಮಿಳಾವಲ್ಲಭನ ತೇರು ಎರಡು ಗಳಿಗೆ ಬಿಡದೆ ತಿರುಗಿತು ಬವಣಿಗೊಂಡು ರಥವಾಜಿಗಳ್ ಪೊಡೆಗೆಡೆದುವು ಏನೆಂಬೆನು=[ಅದನ್ನು ಕಡಿದು, ಸಿಟ್ಟಿನಿಂದ ಕುಶನು ಒಂದು ಬಾಣವನ್ನು ಹೂಡಿ ಬಿಡಲು ಊರ್ಮಿಳೆಯ ಪತಿ ಲಕ್ಷ್ಮಣನ ರಥ ಎರಡು ಗಳಿಗೆ ಬಿಡದೆ ತಿರುಗಿತು. ಅದರಿಂದ ಬವಣಿಗೊಂಡು ತಲೆತಿರುಗಿ ರಥಕುದುರೆಗಳು ಪೆಟ್ಟಾಗಿ ಬಿದ್ದವು ಏನು ಹೇಳಲಿ! ]
 • ತಾತ್ಪರ್ಯ:ಲವನ ಅಸ್ತ್ರದಿಂದ,ಲಕ್ಷ್ಮಣನ ಸೈನ್ಯ ನಾಶವಾಗುತ್ತಿತ್ತು; ಇತ್ತಲಾಗಿ ಕುಶನೊಡನೆ ಲಕ್ಷ್ಮಣನಿಗೆ ಯುದ್ಧವು ತೊಡಗಿತ್ತು. ಆಗ ಅವನು ಕಿವಿಯವರೆಗೆ ಎಳೆದು ಐದು ಬಾಣಗಳನ್ನು ಎದುರಾಗಿ ಸೀತೆಯ ಮಗ ಕುಶನ ಮೇಲೆ ಹೊಡೆದನು; ಅದನ್ನು ಕಡಿದು, ಸಿಟ್ಟಿನಿಂದ ಕುಶನು ಒಂದು ಬಾಣವನ್ನು ಹೂಡಿ ಬಿಡಲು ಊರ್ಮಿಳೆಯ ಪತಿ ಲಕ್ಷ್ಮಣನ ರಥ ಎರಡು ಗಳಿಗೆ ಬಿಡದೆ ತಿರುಗಿತು. ಅದರಿಂದ ಬವಣಿಗೊಂಡು ತಲೆತಿರುಗಿ ರಥಕುದುರೆಗಳು ಪೆಟ್ಟಾಗಿ ಬಿದ್ದವು ಏನು ಹೇಳಲಿ! ]
 • (ಪದ್ಯ-೫೩.)

ಪದ್ಯ :೫೪:[ಸಂಪಾದಿಸಿ]

ಮೆಚ್ಚಿದಂ ಬಾಲಕನ ವಿಕ್ರಮಕೆ ಲಕ್ಷ್ಮಣಂ | ಪೆಚ್ಚಿದತಿರೋಷದಿಂ ಮತ್ತೊಂದು ರಥಕಡ | ರ್ದೆಚ್ಚನೆರಡಂಬಿನಿಂದೀತನ ಕಿರೀಟಮಂ ಕವಚಮಂ ಮೂರರಿಂದೆ ||
ಕೊಚ್ಚಿ ಕೆಡಹಿದನಾಗ ಜಾನಕಿಯ ಸೂನು ಪೆರೆ | ಯುಚ್ಚಿದಹಿಪತಿಯಂತೆ ಶೌರ್ಯವಿಮ್ಮಡಿಸೆ ನಗು | ತುಚ್ಚರಿಸಿದಂ ವಿನಯಪೂರ್ವಕದೊಳರಸ ಕೇಳಾ ರಾಘವಾನುಜಂಗೆ ||54||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಮೆಚ್ಚಿದಂ ಬಾಲಕನ ವಿಕ್ರಮಕೆ ಲಕ್ಷ್ಮಣಂ ಪೆಚ್ಚಿದ ಅತಿರೋಷದಿಂ ಮತ್ತೊಂದು ರಥಕೆ ಅಡರ್ದು ಎಚ್ಚನು ಎರಡಂಬಿನಿಂದ ಈತನ ಕಿರೀಟಮಂ ಕವಚಮಂ ಮೂರರಿಂದೆ=[ಲಕ್ಷ್ಮಣನು ಮೆಚ್ಚಿದನು ಬಾಲಕನ ಪರಾಕ್ರಮಕ್ಕೆ; ಮತ್ತೆ ಲಕ್ಷ್ಮಣನು ಹೆಚ್ಚಿನ ಅತಿಯಾದ ರೋಷದಿಂದ ಮತ್ತೊಂದು ರಥಕ್ಕೆ ಹತ್ತಿಕೊಂಡು, ಎಚ್ಚನು ಎರಡು ಬಾಣದಿಂದ ಕುಶನ ಕಿರೀಟವನ್ನೂ ಕವಚವನ್ನು ಮೂರು ಬಾಣದಿಂದ (ಕತ್ತರಿಸಿದನು)];ಕೊಚ್ಚಿ ಕೆಡಹಿದನಾಗ ಜಾನಕಿಯ ಸೂನು ಪೆರೆಯುಚ್ಚಿದ ಅಹಿಪತಿಯಂತೆ ಶೌರ್ಯವಿಮ್ಮಡಿಸೆ ನಗುತ ಉಚ್ಚರಿಸಿದಂ ವಿನಯಪೂರ್ವಕದೊಳು ಅರಸ ಕೇಳು ಆ ರಾಘವಾನುಜಂಗೆ=[ತುಂಡುಮಾಡಿ ಕೆಡವಿದನು. ಆಗ ಜಾನಕಿಯ ಮಗ ಪೆರೆಬಿಟ್ಟ ಸರ್ಪದಂತೆ ಶೌರ್ಯವು ಇಮ್ಮಡಿಯಾಗಲು ನಗುತ್ತಾ ಆ ರಾಘವಾನುಜಂಗೆ ವಿನಯಪೂರ್ವಕವಾಗಿ, ಹೇಳಿದನು. ಅರಸನೇ ಕೇಳು].
 • ತಾತ್ಪರ್ಯ:ಲಕ್ಷ್ಮಣನು ಬಾಲಕನ ಪರಾಕ್ರಮಕ್ಕೆ ಮೆಚ್ಚಿದನು; ಮತ್ತೆ ಲಕ್ಷ್ಮಣನು ಹೆಚ್ಚಿನ ಅತಿಯಾದ ರೋಷದಿಂದ ಮತ್ತೊಂದು ರಥಕ್ಕೆ ಹತ್ತಿಕೊಂಡು, ಎರಡು ಬಾಣದಿಂದ ಕುಶನ ಕಿರೀಟವನ್ನೂ ಕವಚವನ್ನು ಮೂರು ಬಾಣದಿಂದ ತುಂಡುಮಾಡಿ ಕೆಡವಿದನು. ಆಗ ಜಾನಕಿಯ ಮಗ ಪೆರೆಬಿಟ್ಟ ಸರ್ಪದಂತೆ ಶೌರ್ಯವು ಇಮ್ಮಡಿಯಾಗಲು ನಗುತ್ತಾ ಆ ರಾಘವಾನುಜ ಲಕ್ಷ್ಮಣನಿಗೆ ವಿನಯಪೂರ್ವಕವಾಗಿ, ಹೇಳಿದನು. ಅರಸನೇ ಕೇಳು].
 • (ಪದ್ಯ-೫೩.)

ಪದ್ಯ :೫೫:[ಸಂಪಾದಿಸಿ]

ಧುರದೊಳ್ ಕಿರೀಟ ಕವಚದ ಪೊರೆಯಿದೇಕೆಂದು | ಪರಿಹರಿಸಿದುಪಕಾರಕಪಕಾರಮಂ ಮಾಡೆ | ನುರುಸೈನ್ಯಭಾರಮಂ ನಿನಗೆ ಬಿಡಿಸುವೆನೀಗ ನೋಡಾದೊಡೆನುತೆ ಕುಶನು ||
ವರವಹ್ನಿಸೂಕ್ತದೊಳರ್ಥಮಂತ್ರದ ಪುನ | ಶ್ಚರಣೆಯಿಂದನಲಾಸ್ತ್ರಮಂ ಪೂಡಿ ತೆಗೆದಿಸ | ಲ್ಕುರಿದುದು ಚತುರ್ಬಲಮಕಾಲದೊಳ್ ಪುರಹರಂ ಪಣೆಗಣ್ದೆರೆದನೆನಲ್ಕೆ ||55||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಧುರದೊಳ್ ಕಿರೀಟ ಕವಚದ ಪೊರೆಯಿದೇಕೆಂದು ಪರಿಹರಿಸಿದ ಉಪಕಾರಕೆ ಅಪಕಾರಮಂ ಮಾಡೆನು ಉರು ಸೈನ್ಯಭಾರಮಂ ನಿನಗೆ ಬಿಡಿಸುವೆನೀಗ ನೋಡು ಆದೊಡೆನುತೆ ಕುಶನು=[ಯುದ್ಧದಲ್ಲಿ ಕಿರೀಟ ಕವಚದ ಹೊರೆ ಇದೇಕೆಂದು ಅದನ್ನು ಕಡಿದು ಪರಿಹರಿಸಿದ ಉಪಕಾರಕ್ಕೆ, ಅಪಕಾರವನ್ನು ಮಾಡುವುದಿಲ್ಲ; ದೊಡ್ಡ ಸೈನ್ಯದಭಾರವನ್ನು ನಿನಗೆ ಈಗ ಕಡಿಮೆ ಮಾಡುವೆನು, ಶಕ್ತಿ ಇದ್ದರೆ ನೋಡು ಎನುತ್ತಾ ಕುಶನು]; ವರವಹ್ನಿಸೂಕ್ತದೊಳು ಅರ್ಥಮಂತ್ರದ ಪುನಶ್ಚರಣೆಯಿಂದ ಅನಲಾಸ್ತ್ರಮಂ ಪೂಡಿ ತೆಗೆದಿಸಲ್ಕುರಿದುದು ಚತುರ್ಬಲಮ್ ಅಕಾಲದೊಳ್ ಪುರಹರಂ ಪಣೆಗಣ್ದ್ ತೆರೆದನು ಎನಲ್ಕೆ=[ಶ್ರೇಷ್ಠವಾದ ಅಗ್ನಿಸೂಕ್ತದ, ಅರ್ಥಮಂತ್ರದ ಪುನಶ್ಚರಣೆಯಿಂದ ಆಗ್ನೇಯಾಸ್ತ್ರವನ್ನು ಹೂಡಿ ತೆಗೆದು ಬಿಡಲು, ಅಕಾಲದಲ್ಲಿ ರುದ್ರನು ಹಣೆಕಣ್ಣನ್ನು ತೆರೆದನು ಎನ್ನುವಂತೆ ಚತುರಂಗ ಸೈನ್ಯದಲ್ಲಿ ಬೆಂಕಿ ಉರಿಯಿತು.].
 • ತಾತ್ಪರ್ಯ:ಯುದ್ಧದಲ್ಲಿ ಕಿರೀಟ ಕವಚದ ಹೊರೆ ಇದೇಕೆಂದು ಅದನ್ನು ಕಡಿದು ಪರಿಹರಿಸಿದ ಉಪಕಾರಕ್ಕೆ, ಅಪಕಾರವನ್ನು ಮಾಡುವುದಿಲ್ಲ; ದೊಡ್ಡ ಸೈನ್ಯದಭಾರವನ್ನು ನಿನಗೆ ಈಗ ಕಡಿಮೆ ಮಾಡುವೆನು, ಶಕ್ತಿ ಇದ್ದರೆ ನೋಡು ಎನುತ್ತಾ ಕುಶನು, ಶ್ರೇಷ್ಠವಾದ ಅಗ್ನಿಸೂಕ್ತದ, ಅರ್ಥಮಂತ್ರದ ಪುನಶ್ಚರಣೆಯಿಂದ ಆಗ್ನೇಯಾಸ್ತ್ರವನ್ನು ಹೂಡಿ ತೆಗೆದು ಬಿಡಲು, ಅಕಾಲದಲ್ಲಿ ರುದ್ರನು ಹಣೆಕಣ್ಣನ್ನು ತೆರೆದನು ಎನ್ನುವಂತೆ ಚತುರಂಗ ಸೈನ್ಯದಲ್ಲಿ ಬೆಂಕಿ ಉರಿಯಿತು.
 • (ಪದ್ಯ-೫೫.)

ಪದ್ಯ :೫೬:[ಸಂಪಾದಿಸಿ]

ಬಲಮೆಲ್ಲಮಂ ಸುಡುವ ಪಾವಕ ಜ್ವಾಲೆಯಂ | ಕಲಿಲಕ್ಷ್ಮಣಂ ಕಂಡು ವರುಣಾಸ್ತ್ರದಿಂದದಂ | ನಿಲಿಸಲ್ಕೆ ಬಾಲಕಂ ಮತ್ತೆ ನಸುನಗುತೆ ವಾಯವ್ಯಮಾರ್ಗಣವನೆಸಲು ||
ಕುಲಶೈಲಮಂ ಕಿತ್ತು ಬಿಸುಡುವಂದದ ಗಾಳಿ | ಸಲೆ ಬಡಿದು ಪಡೆಗಳಂ ಕೆಡಹುತಿರೆ ನಡೆತಂದು | ಸೆಲವುಗೊಂಡೂರ್ಮಿಳಾಕಾಂತನಂ ಪೆರಗಿಕ್ಕಿ ಕಾಲಜಿತುವಿದಿರಾದನು ||56||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಲಮೆಲ್ಲಮಂ ಸುಡುವ ಪಾವಕ ಜ್ವಾಲೆಯಂ ಕಲಿಲಕ್ಷ್ಮಣಂ ಕಂಡು ವರುಣಾಸ್ತ್ರದಿಂದ ಅದಂ ನಿಲಿಸಲ್ಕೆ ಬಾಲಕಂ ಮತ್ತೆ ನಸುನಗುತೆ ವಾಯವ್ಯ ಮಾರ್ಗಣವನು ಎಸಲು=[ಎಲ್ಲಾ ಸೈನ್ಯವನ್ನೂ ಸುಡುವ ಅಗ್ನಿಯ ಜ್ವಾಲೆಯನ್ನು ಶೂರಲಕ್ಷ್ಮಣನು ಕಂಡು ವರುಣಾಸ್ತ್ರದಿಂದ ಅದನ್ನು ನಿಲ್ಲಿಸಲು, ಬಾಲಕ ಕುಶನು ಮತ್ತೆ ನಸುನಗುತ್ತಾ ವಾಯವ್ಯ ಅಸ್ತ್ರವನ್ನು ಬಿಡಲು, ಅದರಿಂದ]; ಕುಲಶೈಲಮಂ ಕಿತ್ತು ಬಿಸುಡುವಂದದ ಗಾಳಿ ಸಲೆ ಬಡಿದು ಪಡೆಗಳಂ ಕೆಡಹುತಿರೆ ನಡೆತಂದು ಸೆಲವುಗೊಂಡ ಊರ್ಮಿಳಾಕಾಂತನಂ ಪೆರಗಿಕ್ಕಿ ಕಾಲಜಿತುವು ಇದಿರಾದನು=[ಕುಲಶೈಲಗಳನ್ನು ಕಿತ್ತು ಬಿಸುಡುವಂತೆ ಗಾಳಿ ವೇಗದಲ್ಲಿ ಬಡಿದು ಸೈನ್ಯವನ್ನು ಕೆಡವುತ್ತಿರಲು, ಆ ಬಿರುಗಾಳಿ ಮುಂದುವರಿದು ಸೆಳವುಗೊಂಡ/ಹೆಚ್ಚಿದ ಗಾಳಿಯ ವೇಗಕ್ಕೆ ಸಿಕ್ಕಿದ ಊರ್ಮಿಳಾಕಾಂತ ಲಕ್ಷ್ಮಣನನ್ನು ಹೊರಗೆ ಕಳಿಸಿ, ಕಾಲಜಿತುವು ಕುಶನಿಗೆ ಎದುರು ನಿಂತನು.]
 • ತಾತ್ಪರ್ಯ:ಎಲ್ಲಾ ಸೈನ್ಯವನ್ನೂ ಸುಡುವ ಅಗ್ನಿಯ ಜ್ವಾಲೆಯನ್ನು ಶೂರಲಕ್ಷ್ಮಣನು ಕಂಡು ವರುಣಾಸ್ತ್ರದಿಂದ ಅದನ್ನು ನಿಲ್ಲಿಸಲು, ಬಾಲಕ ಕುಶನು ಮತ್ತೆ ನಸುನಗುತ್ತಾ ವಾಯವ್ಯ ಅಸ್ತ್ರವನ್ನು ಬಿಡಲು,ಅದರಿಂದ ಕುಲಶೈಲಗಳನ್ನು ಕಿತ್ತು ಬಿಸುಡುವಂತೆ ಗಾಳಿ ವೇಗದಲ್ಲಿ ಬಡಿದು ಸೈನ್ಯವನ್ನು ಕೆಡವುತ್ತಿರಲು, ಆ ಬಿರುಗಾಳಿ ಮುಂದುವರಿದು ಹೆಚ್ಚಿದ ಗಾಳಿಯ ವೇಗಕ್ಕೆ ಸಿಕ್ಕಿದ ಊರ್ಮಿಳಾಕಾಂತ ಲಕ್ಷ್ಮಣನನ್ನು ಹೊರಗೆ ಕಳಿಸಿ, ಕಾಲಜಿತುವು ಕುಶನಿಗೆ ಎದುರು ನಿಂತನು.
 • (ಪದ್ಯ-೫೬.)

ಪದ್ಯ :೫೭:[ಸಂಪಾದಿಸಿ]

ಭುಜಬಲಕೆ ಪಾಡಲ್ಲ ತರಳನೆಂದುಳುಹಿದೊಡೆ | ವಿಜಯನಾದಪೆ ಬೇಡ ಹೋಗೆಲವೊ ಕಾರುಣ್ಯ | ರುಜುವಲ್ಲ ತಾನೆನುತ ಕಾಲಜಿತುವೆಚ್ಚೊಡಾತನ ಬಾಣಮಂ ಖಂಡಿಸಿ ||
ಅಜಗಳಸ್ತನದಂತೆಸೆವ ನಿನ್ನ ಪೌರುಷಂ | ನಿಜವಾದೊಡಾಂ ಸೈರಿಸುವೆನಲ್ಲದಿರ್ದೊಡಾ | ರಜದಿಂದೆ ಪುಸಿವೇಳ್ದ ನಾಲಗೆಯನರಿವೆನೆಂದಾಕುಶಂ ಕೋಲ್ಗರೆದನು ||57||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಭುಜಬಲಕೆ ಪಾಡಲ್ಲ ತರಳನೆಂದು ಉಳುಹಿದೊಡೆ ವಿಜಯನು ಆದಪೆ ಬೇಡ ಹೋಗೆಲವೊ ಕಾರುಣ್ಯ ರುಜುವಲ್ಲ ತಾನೆನುತ ಕಾಲಜಿತುವು ಎಚ್ಚೊಡೆ=[ನಮ್ಮ ಭುಜಬಲ ಪರಾಕ್ರಮಕ್ಕೆ ಸಮನಲ್ಲ ಬಾಲಕನು ಎಂದು, ನಿನ್ನನ್ನು ಕೊಲ್ಲದೆ ಉಳುಹಿಸಿದರೆ, ವಿಜಯನೆಂದು ಭಾವಿಸುವೆ; ಅದು ಬೇಡ ಹೋಗು ಎಲವೊ ನಿನಗೆ ತಾನು ಕರುಣೆ ತೋರುವುದು ಸರಿಯಲ್ಲ ಎನ್ನುತ್ತಾ ಕಾಲಜಿತುವು ಬಾಣದಿಂದ ಹೊಡೆದಾಗ]; ಆತನ ಬಾಣಮಂ ಖಂಡಿಸಿ ಅಜಗಳ ಸ್ತನದಂತೆ ಎಸೆವ ನಿನ್ನ ಪೌರುಷಂ ನಿಜವಾದೊಡೆ ಆಂ ಸೈರಿಸುವೆನು ಅಲ್ಲದಿರ್ದೊಡೆ ಆ ರಜದಿಂದೆ (ಆರಜ ರಜೋಗುಣ?-ಮೋಹ, ಅಹಂಕಾರ) ಪುಸಿವೇಳ್ದ ನಾಲಗೆಯನು ಅರಿವೆನೆಂದು ಆ ಕುಶಂ ಕೋಲ್ಗರೆದನು= [ಆತನ ಬಾಣವನ್ನು ಖಂಡಿಸಿ, ಆಡುಗಳ ಕುತ್ತಿಗೆಯಲ್ಲಿರುವ ಹುಸಿಸ್ತನದಂತೆ (ಹುಸಿಮೊಲೆ) ಪ್ರಕಾಶಿಸುವ ನಿನ್ನ ಪೌರುಷವು ನಿಜವಾದರೆಡ ನಾನು ಸೈರಿಸಿ ಒಪ್ಪುವೆನು; ಅಲ್ಲದಿದ್ದರೆ ಆ ಅಹಂಕಾರದಿಂದ ಸುಳ್ಳು ಹೇಳುವ ನಾಲಿಗೆಯನ್ನು ಕತ್ತರಿಸುವೆನೆಂದು ಆ ಕುಶನು ಬಾಣಗಳ ಮಳೆಕರೆದನು].
 • ತಾತ್ಪರ್ಯ:ನಮ್ಮ ಭುಜಬಲ ಪರಾಕ್ರಮಕ್ಕೆ ಸಮನಲ್ಲ ಬಾಲಕನು ಎಂದು, ನಿನ್ನನ್ನು ಕೊಲ್ಲದೆ ಉಳುಹಿಸಿದರೆ, ವಿಜಯನೆಂದು ಭಾವಿಸುವೆ; ಅದು ಬೇಡ ಹೋಗು ಎಲವೊ ನಿನಗೆ ತಾನು ಕರುಣೆ ತೋರುವುದು ಸರಿಯಲ್ಲ ಎನ್ನುತ್ತಾ ಕಾಲಜಿತುವು ಬಾಣದಿಂದ ಹೊಡೆದಾಗ; ಆತನ ಬಾಣವನ್ನು ಖಂಡಿಸಿ, ಆಡುಗಳ ಕುತ್ತಿಗೆಯಲ್ಲಿರುವ ಹುಸಿಸ್ತನದಂತೆ(ಹುಸಿಮೊಲೆ) ಪ್ರಕಾಶಿಸುವ ನಿನ್ನ ಪೌರುಷವು ನಿಜವಾದರೆಡ ನಾನು ಸೈರಿಸಿ ಒಪ್ಪುವೆನು; ಅಲ್ಲದಿದ್ದರೆ ಆ ಅಹಂಕಾರದಿಂದ ಸುಳ್ಳು ಹೇಳುವ ನಾಲಿಗೆಯನ್ನು ಕತ್ತರಿಸುವೆನೆಂದು ಆ ಕುಶನು ಬಾಣಗಳ ಮಳೆಕರೆದನು.
 • (ಪದ್ಯ-೫೭.)

ಪದ್ಯ :೫೮:[ಸಂಪಾದಿಸಿ]

ಎಸುಗೆಯೆಂತುಟೊ ಕುಶನ ಕಣೆ ರಣದೊಳಾರ್ದು ಗ | ರ್ಜಿಸುವ ನಾಲಗೆಯ ನರಿದುದು ಬಳಿಕ ಮೌನದಿಂ | ಮಸಗಿ ರೋಷದೊಳುಬ್ಬಿ ಕಾಲಜಿತುವೆಚ್ಚೊಡಾ ಜಾನಕಿಯ ಸೂನು ನಗುತೆ ||
ನಿಶಿತಾಸ್ತ್ರದಿಂದೆ ಕೈಕಾಲ್ ತಲೆಗಳಂ ಕೂಡೆ | ಕುಸುರಿದರಿಯಲ್ ಕಂಡು ಖತಿಯಿಂದೆ ಲಕ್ಷ್ಮಣಂ | ಮುಸುಕಿದಿಂ ಕೋಲ್ಗಳಂ ಬಾಲಕನಮೇಲೆ ಮೂಲೋಕದಾಲೋಕಮಡಗೆ ||58||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಎಸುಗೆಯೆಂತುಟೊ ಕುಶನ ಕಣೆ ರಣದೊಳಾರ್ದು ಗರ್ಜಿಸುವ ನಾಲಗೆಯ ನರಿದುದು=[ಕುಶನ ಬಾಣಪ್ರಯೋಗ ಹೇಗಿದೆಯೋ! ಆವನ ಬಾಣ ರಣರಂಗದಲ್ಲಿ ಶಬ್ದಮಾಡಿ ಗರ್ಜಿಸುವ ಕಾಲಜಿತುವಿನ ನಾಲಗೆಯನ್ನು ಕತ್ತರಿಸಿತು.]; ಬಳಿಕ ಮೌನದಿಂ ಮಸಗಿ ರೋಷದೊಳು ಉಬ್ಬಿ ಕಾಲಜಿತುವು ಎಚ್ಚೊಡೆ ಆ ಜಾನಕಿಯ ಸೂನು ನಗುತೆ ನಿಶಿತಾಸ್ತ್ರದಿಂದೆ ಕೈಕಾಲ್ ತಲೆಗಳಂ ಕೂಡೆ ಕುಸುರಿದ ಅರಿಯಲ್=[ಬಳಿಕ ನಿಶ್ಶಬ್ದದಿಂದ ಸಿಟ್ಟುಗೊಂಡು, ರೋಷದಲ್ಲಿ ಉಬ್ಬಿ ಕಾಲಜಿತುವು ಬಾಣಬಿಟ್ಟರೆ ಆ ಜಾನಕಿಯ ಮಗನು ನಗುತ್ತಾ ನಿಶಿತಾಸ್ತ್ರದಿಂದ ಅವನ ಕೈಕಾಲು ತಲೆಗಳನ್ನು ಎಲ್ಲವನ್ನೂ ತುಂಡರಿಸಲು;]; ಕಂಡು ಕೋಪದಿಂದ ಲಕ್ಷ್ಮಣನು ಮುಸುಕಿದಿಂ ಕೋಲ್ಗಳಂ ಬಾಲಕನ ಮೇಲೆ ಮೂಲೋಕದ ಆಲೋಕಂ ಅಡಗೆ=[ಅದನ್ನು ಕಂಡು ಕೋಪದಿಂದ ಲಕ್ಷ್ಮಣನು ಬಾಲಕನ ಮೇಲೆ ಬಾಣಗಳಿಂದ ಮುಚ್ಚಿದನು! ಮೂರು ಲೋಕದ ಬೆಳಕು ಅಡಗಿತು].
 • ತಾತ್ಪರ್ಯ:ಕುಶನ ಬಾಣಪ್ರಯೋಗ ಹೇಗಿದೆಯೋ! ಆವನ ಬಾಣ ರಣರಂಗದಲ್ಲಿ ಶಬ್ದಮಾಡಿ ಗರ್ಜಿಸುವ ಕಾಲಜಿತುವಿನ ನಾಲಗೆಯನ್ನು ಕತ್ತರಿಸಿತು. ಬಳಿಕ ನಿಶ್ಶಬ್ದದಿಂದ ಸಿಟ್ಟುಗೊಂಡು, ರೋಷದಲ್ಲಿ ಉಬ್ಬಿ ಕಾಲಜಿತುವು ಬಾಣಬಿಟ್ಟರೆ ಆ ಜಾನಕಿಯ ಮಗನು ನಗುತ್ತಾ ನಿಶಿತಾಸ್ತ್ರದಿಂದ ಅವನ ಕೈಕಾಲು ತಲೆಗಳನ್ನು ಎಲ್ಲವನ್ನೂ ತುಂಡರಿಸಲು; ಕಂಡು ಕೋಪದಿಂದ ಲಕ್ಷ್ಮಣನು ಬಾಲಕನ ಮೇಲೆ ಮೂರುಲೋಕದ ಬೆಳಕು ಅಡಗುವಂತೆ ಬಾಣಗಳಿಂದ ಮುಚ್ಚಿದನು.
 • (ಪದ್ಯ-೫೮.)XXVIII

ಪದ್ಯ :೫೯:[ಸಂಪಾದಿಸಿ]

ವೀರಲಕ್ಷ್ಮಣನಿಸುವ ಕೂರಂಬನೆಲ್ಲಮಂ | ವಾರುವಂ ನಾಲ್ಕುಮಂ ತೇರಂ ಸುಕೇತುವಂ | ನಾರಿಯಂ ಚಾಪ ತೂಣೀರಂಗಳಂ ಕೆಲದ ಚಾರರಂ ಸಾರಧಿಯನು ||
ಚಾರು ಕವಚವನೆಚ್ಚು ಧಾರಿಣಿಗೆ ಕೆಡಹಲ್ಕೆ | ತೋರಗದೆಗೊಂಡೂರ್ಮಿಳಾರಮಣ ನೈತರಲ್ | ಧೀರನಹ ಸೀತಾಕುಮಾರಕಂ ಸಾಯಕದ ಸಾರದಿಂ ಪುಡಿಗೈದನು ||59||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕುಶನು,ವೀರಲಕ್ಷ್ಮಣನು ಇಸುವ ಕೂರಂಬನು ಎಲ್ಲಮಂ ವಾರುವಂ ನಾಲ್ಕುಮಂ ತೇರಂ ಸುಕೇತುವಂ ನಾರಿಯಂ ಚಾಪ ತೂಣೀರಂಗಳಂ ಕೆಲದ ಚಾರರಂ ಸಾರಧೀಯನು=[ಕುಶನು, ವೀರಲಕ್ಷ್ಮಣನು ಬಿಡುವ ಬಾಣಗಳೆಲ್ಲವನ್ನೂ ವಾರುವಂ ನಾಲ್ಕು ಕುದುರೆಗಳನ್ನೂ ರಥವನ್ನೂ ಧ್ವಜವನ್ನೂ, ಬಿಲ್ಲಿನ ಹೆದೆಯನ್ನೂ, ಬಿಲ್ಲು ಬತ್ತಳಿಕೆಗಳನ್ನೂ, ಅಕ್ಕ ಪಕ್ಕದ ಭಟರು ಮತ್ತು ಸಾರಥಿಯನ್ನೂ,]; ಚಾರು ಕವಚವನು ಎಚ್ಚು ಧಾರಿಣಿಗೆ ಕೆಡಹಲ್ಕೆ ತೋರಗದೆಗೊಂಡು ಊರ್ಮಿಳಾರಮಣನು ಐತರಲ್ ಧೀರನು ಅಹ ಸೀತಾಕುಮಾರಕಂ ಸಾಯಕದ ಸಾರದಿಂ ಪುಡಿಗೈದನು=[ಸುಂದರ ಕವಚವನ್ನೂ, ಹೊಡೆದುಭೂಮಿಗೆ ಕೆಡವಲು,ಊರ್ಮಿಳಾರಮಣನಾದ ಲಕ್ಷ್ಮಣನು ದೊಡ್ಡಗದೆ ತೆಗೆದುಕೊಂಡು ಬರಲು ಧೀರನಾದ ಸೀತಾಕುಮಾರ ಕುಶನು ಬಾಣದ ಶಕ್ತಿಯಿಂದ ಅದನ್ನು ಪುಡಿಮಾಡಿದನು.];
 • ತಾತ್ಪರ್ಯ:ಕುಶನು, ವೀರಲಕ್ಷ್ಮಣನು ಬಿಡುವ ಬಾಣಗಳೆಲ್ಲವನ್ನೂ ವಾರುವಂ ನಾಲ್ಕು ಕುದುರೆಗಳನ್ನೂ ರಥವನ್ನೂ ಧ್ವಜವನ್ನೂ, ಬಿಲ್ಲಿನ ಹೆದೆಯನ್ನೂ, ಬಿಲ್ಲು ಬತ್ತಳಿಕೆಗಳನ್ನೂ, ಅಕ್ಕ ಪಕ್ಕದ ಭಟರು ಮತ್ತು ಸಾರಥಿಯನ್ನೂ,ಸುಂದರ ಕವಚವನ್ನೂ, ಹೊಡೆದುಭೂಮಿಗೆ ಕೆಡವಲು,ಊರ್ಮಿಳಾರಮಣನಾದ ಲಕ್ಷ್ಮಣನು ದೊಡ್ಡಗದೆ ತೆಗೆದುಕೊಂಡು ಬರಲು ಧೀರನಾದ ಸೀತಾಕುಮಾರ ಕುಶನು ಬಾಣದ ಶಕ್ತಿಯಿಂದ ಅದನ್ನು ಪುಡಿಮಾಡಿದನು.
 • (ಪದ್ಯ-೫೯.)

ಪದ್ಯ :೬೦:[ಸಂಪಾದಿಸಿ]

ಚರ್ಮಖಡ್ಗಂಗಳಿಂ ವಿವಿಧಾಯುಧಂಗಳಿಂ | ದೂರ್ಮಿಳಾಕಾಂತನೊದಗಿದೊಡನಿತನೆಲ್ಲಮಂ | ನಿರ್ಮಲಾಸ್ತ್ರಂಗಳಿಂ ಕತ್ತರಿಸಿ ವಾಲ್ಮೀಕಿ ಮುನಿವರಂ ತನಗೆ ಕೊಟ್ಟ ||
ಮರ್ಮಭೇದಿಗಳಾದುವೈದಂಬುಗಳ ನಿಸಲ್| ಸ್ವರ್ಮಣಿ ಧರಾತಳಕೆ ನಭದಿಂದುರುಳ್ವಂತೆ | ಪೆರ್ಮರವೆಗೊಂಡು ಬೀಳ್ವನಿತರೊಳ್‍ತೋಳ್ವೊಯ್ದು ಕುಶನಾರ್ದು ಬೊಬ್ಬಿರಿದನು ||60||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಚರ್ಮಖಡ್ಗಂಗಳಿಂ ವಿವಿಧಾಯುಧಂಗಳಿಂದ ಊರ್ಮಿಳಾಕಾಂತನು ಒದಗಿದೊಡೆ ಅನಿತನೆಲ್ಲಮಂ ನಿರ್ಮಲಾಸ್ತ್ರಂಗಳಿಂ ಕತ್ತರಿಸಿ=[ಚರ್ಮದ ಫಲಕ,ಖಡ್ಗಗಳು, ವಿವಿಧ ಆಯುಧಗಳಿಂದ ಊರ್ಮಿಳಾಕಾಂತ ಲಕ್ಷ್ಮಣನು ಕುಶನ ಮೇಲೆ ಪ್ರಯೋಗಿಸಲು, ಅವೆಲ್ಲವನ್ನೂ ನಿರ್ಮಲವಾದ ಅಸ್ತ್ರಗಳಿಂದ ಕತ್ತರಿಸಿ]; ವಾಲ್ಮೀಕಿ ಮುನಿವರಂ ತನಗೆ ಕೊಟ್ಟ ಮರ್ಮಭೇದಿಗಳಾದು ಐದಂಬುಗಳನು ಇಸಲ್ ಸ್ವರ್ಮಣಿ (ಸೂರ್ಯ- ಸ್ವರ್ಗದ ಮಣಿ) ಧರಾತಳಕೆ (ಕೆಳಗಿನ ಭೂಮಿಗೆ) ನಭದಿಂದ ಉರುಳ್ವಂತೆ ಪೆರ್ ಮರವೆಗೊಂಡು(ಮೂರ್ಛೆ-ಹೆಚ್ಚಿನ ಮರವೆ) ಬೀಳ್ವ ಅನಿತರೊಳ್‍ ತೋಳ್ ಒಯ್ದು ಕುಶನು ಆರ್ದು ಬೊಬ್ಬಿರಿದನು.=[ವಾಲ್ಮೀಕಿ ಮುನಿವರನು ತನಗೆ ಕೊಟ್ಟ ಮರ್ಮಭೇದಿಗಳಾದ ಐದು ಬಾಣಗಳನ್ನು ಲಕ್ಷ್ಮಣನಮೇಲೆ ಬಿಡಲು, ಸೂರ್ಯನು ಕೆಳಗಿನ ಭೂಮಿಗೆ ಆಕಾಶದಿಂದ ಉರುಳುವಂತೆ ಮೂರ್ಛೆಗೊಂಡು ಬೀಳುವ ಸಮಯದಲ್ಲಿ ತೋಳನ್ನು ತಟ್ಟಿಕೊಂಡು ಕುಶನು ಕೂಗಿ ಬೊಬ್ಬಿರಿದನು.]
 • ತಾತ್ಪರ್ಯ:ಚರ್ಮದ ಫಲಕ,ಖಡ್ಗಗಳು, ವಿವಿಧ ಆಯುಧಗಳಿಂದ ಊರ್ಮಿಳಾಕಾಂತ ಲಕ್ಷ್ಮಣನು ಕುಶನ ಮೇಲೆ ಪ್ರಯೋಗಿಸಲು, ಅವೆಲ್ಲವನ್ನೂ ನಿರ್ಮಲವಾದ ಅಸ್ತ್ರಗಳಿಂದ ಕತ್ತರಿಸಿ, ವಾಲ್ಮೀಕಿ ಮುನಿಯು ತನಗೆ ಕೊಟ್ಟ ಮರ್ಮಭೇದಿಗಳಾದ ಐದು ಬಾಣಗಳನ್ನು ಲಕ್ಷ್ಮಣನಮೇಲೆ ಬಿಡಲು, ಸೂರ್ಯನು ಕೆಳಗಿನ ಭೂಮಿಗೆ ಆಕಾಶದಿಂದ ಉರುಳುವಂತೆ ಮೂರ್ಛೆಗೊಂಡು ಬಿದ್ದನು; ಆಗ ಕುಶನು ತೋಳನ್ನು ತಟ್ಟಿಕೊಂಡು ಕೂಗಿ ಬೊಬ್ಬಿರಿದನು.
 • (ಪದ್ಯ-೬೦.)

ಪದ್ಯ :೬೧:[ಸಂಪಾದಿಸಿ]

ಆ ಘೋರತರದ ಸಂಗ್ರಾಮದೊಳ್ ತಾನೆಚ್ಚ | ಮೋಘಮಾಗಿರ್ದ ಮುನಿ ಕೊಟ್ಟ ದಿವ್ಯಾಸ್ತ್ರದ ಮ | ಹಾಘಾತಿಯಿಂದೆ ಕಡುನೊಂದು ಮೂರ್ಛಿತನಾಗಿ ಬಿದ್ದು ಭೂತಳದ ಮೇಲೆ ||
ರಾಘವಾನುಜನಿರೆ ಕುಶಂ ಬಳಿಕ ನಿಜಹಸ್ತ | ಲಾಘವದೊಳಲ್ಲಿರ್ದರಂ ಸದೆದು ಲವನಂ ಬ | ಲೌಘಮೊತ್ತಾಯದಿಂ ಮುತ್ತಿಕೊಂಡಿರ್ದ ಕೋಲಾಹಲವ ನಾಲಿಸಿದನು||61||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಆ ಘೋರತರದ ಸಂಗ್ರಾಮದೊಳ್ ತಾನು ಎಚ್ಚ ಅಮೋಘಮಾಗಿರ್ದ ಮುನಿ ಕೊಟ್ಟ ದಿವ್ಯಾಸ್ತ್ರದ ಮಹಾಘಾತಿಯಿಂದೆ ಕಡುನೊಂದು ಮೂರ್ಛಿತನಾಗಿ ಬಿದ್ದು ಭೂತಳದ ಮೇಲೆ ರಾಘವಾನುಜನು ಇರಲು=[ಆ ಘೋರವಾದ ಯುದ್ಧದಲ್ಲಿ ತಾನು ಹೊಡೆದ ಅಮೋಘವಾದ ಮುನಿ ಕೊಟ್ಟ ದಿವ್ಯಾಸ್ತ್ರದ ಮಹಾ ಪಟ್ಟಿನಿಂದ ಬಹಳ ನೋವಿನಿಂದ ರಾಘವಾನುಜ ಲಕ್ಷ್ಮಣನು ಎಚ್ಚ್ರತಪ್ಪಿ ಬಿದ್ದು ಭೂಮಿಯಮೇಲೆ ಮಲಗಿರುವಾಗ]; ಕುಶಂ ಬಳಿಕ ನಿಜಹಸ್ತಲಾಘವದೊಳು ಅಲ್ಲಿ ಇರ್ದರಂ ಸದೆದು ಲವನಂ ಬಲೌಘಮ್ ಒತ್ತಾಯದಿಂ ಮುತ್ತಿಕೊಂಡಿರ್ದ ಕೋಲಾಹಲವ ನಾಲಿಸಿದನು=[ಕುಶನು ಬಳಿಕ, ತನ್ನ ಕೈಚಳಕದಿಂದ ಅಲ್ಲಿದ್ದ ಇತರರನ್ನು ಸೋಲಿಸಿ( ಸದೆದು), ಲವನನ್ನು ದೊಡ್ಡ ಸೈನ್ಯವು ಒತ್ತಿಬಂದು ಮುತ್ತಿ ಮಾಡುತ್ತಿರುವ ಕೋಲಾಹಲವನ್ನು ಆಲಿಸಿದನು];
 • ತಾತ್ಪರ್ಯ:ಆ ಘೋರವಾದ ಯುದ್ಧದಲ್ಲಿ ತಾನು ಹೊಡೆದ ಅಮೋಘವಾದ ಮುನಿ ಕೊಟ್ಟ ದಿವ್ಯಾಸ್ತ್ರದ ಮಹಾ ಪಟ್ಟಿನಿಂದ ಬಹಳ ನೋವಿನಿಂದ ರಾಘವಾನುಜ ಲಕ್ಷ್ಮಣನು ಎಚ್ಚ್ರತಪ್ಪಿ ಬಿದ್ದು ಭೂಮಿಯಮೇಲೆ ಮಲಗಿರುವಾಗ, ಕುಶನು ಬಳಿಕ, ತನ್ನ ಕೈಚಳಕದಿಂದ ಅಲ್ಲಿದ್ದ ಇತರರನ್ನು ಸೋಲಿಸಿ( ಸದೆದು), ಲವನನ್ನು ದೊಡ್ಡ ಸೈನ್ಯವು ಒತ್ತಿಬಂದು ಮುತ್ತಿ ಮಾಡುತ್ತಿರುವ ಕೋಲಾಹಲವನ್ನು ಕೇಳಿದನು.
 • (ಪದ್ಯ-೬೧.)

ಪದ್ಯ :೬೨:[ಸಂಪಾದಿಸಿ]

ಶರ ಚಾಪ ಚರ್ಮ ಖಡ್ಗಂಗಳಂ ಕೊಂಡು ಕುಶ | ನಿರದೆ ಲವನಿದ್ದೆಡೆಗೆ ಚಿಗಿದನಲ್ಲಿಂ ಖಗೇ | ಶ್ವರನಂತೆರಗಿದನದನೇವೇಳ್ವೆ ನಳಿದುಳಿದ ರಿಪುವಾಹಿನೀ ಭ್ರಮಿಗಳು ||
ಪರಿದುವೆಣ್ದೆಸೆಗಳ್ಗೆ ಸೀತಾಕುಮಾರಕರ್ | ತಿರುಗಿದರ್ ತುರುಗಮಿಹ ಬನಕಾಗಿ ದೇವಪುರ | ದರಸ ಲಕ್ಷ್ಮೀಶ ರಾಘವನಲ್ಲಿಗೈದಿದರ್ ದೂತರತಿವೇಗದಿಂದೆ ||62||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಶರ ಚಾಪ ಚರ್ಮ ಖಡ್ಗಂಗಳಂ ಕೊಂಡು ಕುಶನು ಇರದೆ ಲವನು ಇದ್ದೆಡೆಗೆ ಚಿಗಿದನು[ಕುಶನು ಅಲ್ಲಿಯೇ ಇರದೆ, ಶರ ಚಾಪ ಚರ್ಮ ಖಡ್ಗಗಳನ್ನು ತೆಗೆದುಕೊಂಡು, ಲವನು ಇದ್ದ ಕಡೆಗೆ ವೇಗವಾಗಿ ಹೋದನು.]; ಅಲ್ಲಿಂ ಖಗೇಶ್ವರನಂತೆ ಎರಗಿದನು ಅದನು ಏವೇಳ್ವೆನು ಅಳಿದುಳಿದ ರಿಪುವಾಹಿನೀ ಭ್ರಮಿಗಳು ಪರಿದುವು ಎಣ್ದೆಸೆಗಳ್ಗೆ ಸೀತಾಕುಮಾರಕರ್ ತಿರುಗಿದರ್ ತುರುಗಮಿಹ ಬನಕಾಗಿ=[ಅಲ್ಲಿ ಗರುಡನಂತೆ ಸೈನ್ಯದಮೇಲೆ ಎರಗಿದನು, ಅದನ್ನು ಏನೆಂದು ಹೇಳಲಿ ಎಂದ ಜೈಮಿನಿ. ಅಳಿದುಳಿದ ಶತ್ರುಸೈನ್ಯವು ಭ್ರಮಿಸೈನ್ಯಸಮೂಹವು ದಿಕ್ಕು ದಿಕ್ಕಿಗೆ/ಎಂಟು ದಿಕ್ಕಿಗೆ ಚದುರಿದವು. ಸೀತೆಯ ಮಕ್ಕಳು, ಕುದುರೆ ಇದ್ದ ವನದಕಡೆ ಹೋದರು.]; ದೇವಪುರದರಸ ಲಕ್ಷ್ಮೀಶ ರಾಘವನಲ್ಲಿಗೆ ಐದಿದರ್ ದೂತರು ಅತಿವೇಗದಿಂದೆ=[ದೇವಪುರದರಸ ಲಕ್ಷ್ಮೀಶ ರಾಘವನ ಬಳಿಗೆ ದೂತರು ಅತಿವೇಗದಿಂದ ಯುದ್ಧದ ಸುದ್ದಿತಿಳಿಸಲು ಹೋದರು.]
 • ತಾತ್ಪರ್ಯ:ಕುಶನು ಅಲ್ಲಿಯೇ ಇರದೆ, ಶರ ಚಾಪ ಚರ್ಮ ಖಡ್ಗಗಳನ್ನು ತೆಗೆದುಕೊಂಡು, ಲವನು ಇದ್ದ ಕಡೆಗೆ ವೇಗವಾಗಿ ಹೋದನು. ಅಲ್ಲಿ ಗರುಡನಂತೆ ಸೈನ್ಯದಮೇಲೆ ಎರಗಿದನು, ಅದನ್ನು ಏನೆಂದು ಹೇಳಲಿ ಎಂದ ಜೈಮಿನಿ. ಅಳಿದುಳಿದ ಶತ್ರುಸೈನ್ಯವು ಭ್ರಮಿಸೈನ್ಯಸಮೂಹವು ದಿಕ್ಕು ದಿಕ್ಕಿಗೆ/ಎಂಟು ದಿಕ್ಕಿಗೆ ಚದುರಿದವು. ಸೀತೆಯ ಮಕ್ಕಳು, ಕುದುರೆ ಇದ್ದ ವನದಕಡೆ ಹೋದರು. ದೇವಪುರದ ಅರಸ ಲಕ್ಷ್ಮೀಶನಾದ ರಾಘವನ ಬಳಿಗೆ ದೂತರು ಅತಿವೇಗದಿಂದ ಯುದ್ಧದ ಸುದ್ದಿತಿಳಿಸಲು ಹೋದರು.
 • (ಪದ್ಯ-೬೨.)
 • ಇಲ್ಲಿಗೆ ಒಟ್ಟು ಪದ್ಯ:೧೦೫೦
 • [೧]
 • [೨]

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


 1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
 2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.