ಜೈಮಿನಿ ಭಾರತ/ಮುವತ್ತನೆಯ ಸಂಧಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಮೂವತ್ತನೆಯ ಸಂಧಿ[ಸಂಪಾದಿಸಿ]

ಪದ್ಯ:-:ಸೂಚನೆ:[ಸಂಪಾದಿಸಿ]

ಸೂಚನೆ: ನಿದ್ರೆಗೈವಿಂದುಹಾಸನ ಕಂಚುಕದ ಕೊನೆಯೊ |
ಲಿರ್ದ ಪತ್ರವನೋದಿಕೊಂಡು ಚದುರಿಂದದಂ |
ತಿರ್ದ್ದಿ ತನಗಾತನಂ ಕಾಂತನಹ ದಾಯಮಂ ಮಾಡಿದಳ್ ಮಂತ್ರಿತನುಜೆ ||

ಪದವಿಭಾಗ-ಅರ್ಥ:
ಕಥಾಸಾರ:ನಿದ್ರೆಗೈವ ಇಂದುಹಾಸನ ಕಂಚುಕದ ಕೊನೆಯೊಲಿರ್ದ ಪತ್ರವನು ಓದಿಕೊಂಡು ಚದುರಿಂದ ಅದಂ ತಿರ್ದ್ದಿ ತನಗೆ ಆತನಂ ಕಾಂತನು ಅಹ ದಾಯಮಂ ಮಾಡಿದಳ್ ಮಂತ್ರಿತನುಜೆ=[ನಿದ್ದೆ ಮಾಡುತ್ತಿರುವ ಚಂದ್ರಹಾಸನ ಕವಚದ ಕೊನೆಯಲ್ಲಿ ಇದ್ದ ಪತ್ರವನ್ನು ಓದಿಕೊಂಡು ಚತುರತೆಯಿಂದ ಅದನ್ನು ತಿದ್ದಿ ತನಗೆ ಆತನನ್ನು ಕಾಂತನು ಆಗುವಂತೆ ದುಷ್ಟಬುದ್ಧಿ ಮಂತ್ರಿಯ ಮಗಳು ವಿಷಯೆ ಬದಲಾವಣೆ ಮಾಡಿದಳು].
  • ತಾತ್ಪರ್ಯ:ದುಷ್ಟಬುದ್ಧಿ ಮಂತ್ರಿಯ ಮಗಳು ವಿಷಯೆ, ನಿದ್ದೆ ಮಾಡುತ್ತಿರುವ ಚಂದ್ರಹಾಸನ ಕವಚದ ಕೊನೆಯಲ್ಲಿ ಇದ್ದ ಪತ್ರವನ್ನು ಓದಿಕೊಂಡು ಚತುರತೆಯಿಂದ ಅದನ್ನು ತಿದ್ದಿ ತನಗೆ ಆತನನ್ನು ಕಾಂತನಾಗುವಂತೆ ಒಕ್ಕಣೆಯನ್ನು ಬದಲಾವಣೆ ಮಾಡಿದಳು.
  • (ಪದ್ಯ-ಸೂಚನೆ)XV-XII

ಪದ್ಯ:-::[ಸಂಪಾದಿಸಿ]

ಕುಂತೀಕುಮಾರ ಕೇಳ್ ಚಂದ್ರಹಾಸಂ ಬನದೊ |
ಳಿಂತು ಸುಖನಿದ್ರೆಯಿಂದಿರುತಿರ್ಪ ಸಮಯದೊಳ್ |
ಕುಂತಳೇಂದ್ರಂಗೆ ಚಂಪಕಮಾಲಿನಿನಾಮದೊರ್ವ ಮಗಳುಂಟವಳ್ಗೆ ||
ಸಂತತಂ ಮಂತ್ರಿಸುತೆ ವಿಷಯೆ ಸಖಿಯಾಗಿರ್ಪ |
ಳಂತರಿಸದವರಿರ್ವರುಂ ಬಂದರಲ್ಲಿಗೆ ವ |
ಸಂತಕಾಲಂ ಪ್ರಾಪ್ತಮಾಗಿರೆ ಜಲಕ್ರೀಡೆಗಾಳಿಯರ ಗಡಣದಿಂದೆ ||1||

ಪದವಿಭಾಗ-ಅರ್ಥ:
ಕುಂತೀಕುಮಾರ ಕೇಳ್ ಚಂದ್ರಹಾಸಂ ಬನದೊ ಳಿಂತು ಸುಖನಿದ್ರೆಯಿಂದ ಇರುತಿರ್ಪ ಸಮಯದೊಳ್ ಕುಂತಳೇಂದ್ರಂಗೆ ಚಂಪಕಮಾಲಿನಿ ನಾಮದ ಓರ್ವ ಮಗಳುಂಟು ಅವಳ್ಗೆ=[ಕುಂತೀಕುಮಾರ ಅರ್ಜುನನೇ ಕೇಳು, ಚಂದ್ರಹಾಸನು ಉದ್ಯಾನವನದಲ್ಲಿ ಸುಖನಿದ್ರೆಯಿಂದ ಇರುತಿರುವ ಸಮಯದಲ್ಲಿ ಕುಂತಳರಾಜನಿಗೆ ಚಂಪಕಮಾಲಿನಿ ಹೆಸರಿನ ಒಬ್ಬ ಮಗಳು ಇರುವಳು. ಅವಳಿಗೆ ];; ಸಂತತಂ ಮಂತ್ರಿಸುತೆ ವಿಷಯೆ ಸಖಿಯಾಗಿರ್ಪಳು ಅಂತರಿಸದೆ ಅವರು ಇರ್ವರುಂ ಬಂದರು ಅಲ್ಲಿಗೆ ವಸಂತಕಾಲಂ ಪ್ರಾಪ್ತಮಾಗಿರೆ ಜಲಕ್ರೀಡೆಗೆ ಆಳಿಯರ ಗಡಣದಿಂದೆ=[ಸದಾಕಾಲವೂ ಮಂತ್ರಿಯ ಮಗಳಾದ ವಿಷಯೆ ಒಬ್ಬರನ್ನೊಬ್ಬರು ಬಿಟ್ಟಿರದ ಸಖಿಯಾಗಿದ್ದಳು. ವಸಂತಕಾಲವು ಬಂದಿರಲು ಜಲಕ್ರೀಡೆಗೆ ಗೆಳತಿಯರ ಗುಂಪಿನಜೊತೆ ಅವರು ಇಬ್ಬರೂ ಅಲ್ಲಿಗೆ ಬಂದರು].
  • ತಾತ್ಪರ್ಯ:ಕುಂತೀಕುಮಾರ ಅರ್ಜುನನೇ ಕೇಳು, ಚಂದ್ರಹಾಸನು ಉದ್ಯಾನವನದಲ್ಲಿ ಸುಖನಿದ್ರೆಯಿಂದ ಇರುತಿರುವ ಸಮಯದಲ್ಲಿ ಕುಂತಳರಾಜನಿಗೆ ಚಂಪಕಮಾಲಿನಿ ಹೆಸರಿನ ಒಬ್ಬ ಮಗಳು ಇರುವಳು. ಅವಳಿಗೆ ಸದಾಕಾಲವೂ ಮಂತ್ರಿಯ ಮಗಳಾದ ವಿಷಯೆ ಬಿಟ್ಟಿರದ ಸಖಿಯಾಗಿದ್ದಳು. ವಸಂತಕಾಲವು ಬಂದಿರಲು ಜಲಕ್ರೀಡೆಗೆ ಗೆಳತಿಯರ ಗುಂಪಿನಜೊತೆ ಅವರು ಇಬ್ಬರೂ ಅಲ್ಲಿಗೆ ಬಂದರು.
  • (ಪದ್ಯ-೧)

ಪದ್ಯ:-::[ಸಂಪಾದಿಸಿ]

ಒಚ್ಚೇರೆಗಣ್ಣ ಕೋಮಲೆಯರೊಪ್ಪಡಿ ನಡುವಿ |
ನಚ್ಛಿಗದ ಬಾಲಕಿಯರೋರಣದ ಪೊಳೆವಲ್ಲ |
ನಿಚ್ಛಳದ ಕದಪಿನ ನಿತಂಬನಿಯರೊಮ್ಮಾರುವೇಣಿಯ ವಿಲಾಸಿನಿಯರು ||
ಒಚ್ಚತದ ಚೆಲ್ವಿನೆಳೆವೆಣ್ಗಳುಳ್ಗೈಕೊಳ್ಳ |
ದಚ್ಚರಿಯ ಕಡುಗಕ್ಕಸದ ಬಟ್ಟಬಲ್ಮೊಲೆಯ |
ಪೊಚ್ಚಪೊಸಜೌವನದ ನೀರೆಯರ್ ನಡೆತಂದರೊಗ್ಗಾಗಿ ಸಂಭ್ರಮದೊಳು||2||

ಪದವಿಭಾಗ-ಅರ್ಥ:
ಒಚ್ಚೇರೆ (ಒಂದು ಶೇರೆ) ಕಣ್ಣ ಕೋಮಲೆಯರು ಒಪ್ಪಡಿ (ಒಂದು+ಹಿಡಿ ಮುಷ್ಟಿ) ನಡುವಿನ ಅಚ್ಛಿಗದ (ಆಶ್ಚರ್ಯದ)ಬಾಲಕಿಯರು ಓರಣದ ಪೊಳೆವ ಹಲ್ಲ ನಿಚ್ಛಳದ ಕದಪಿನ ನಿತಂಬನಿಯರು ಒಮ್ಮಾರುವೇಣಿಯ (ಒಂದು ಮಾರು ಜಡೆಯ) ವಿಲಾಸಿನಿಯರು=[ಅಂಗೈಅಗಲದ ಕಣ್ಣಿನ ಕೋಮಲ ಬಾಲಕಿಯರು, ಒಂದು ಮುಷ್ಟಿಯಲ್ಲಿ ಹಿಡಿಯಬಹುದಾದ ಸಣ್ಣ ನಡುವಿನ ಆಚ್ಚರಿಯ ಹುಡುಗಿಯರು, ಓರಣವಾಗಿರುವ ಹೊಳೆಯುವ ಹಲ್ಲುಳ್ಳವರು, ಹೊಳೆಯುದ ಕೆನ್ನೆಯ ನಿತಂಬನಿಯರು,ಒಂದು ಮಾರುದ್ದ ಜಡೆಯ ವಿಲಾಸಿನಿಯರು];; ಒಚ್ಚತದ (ಒಪ್ಪುವ) ಚೆಲ್ವಿನ ಎಳೆವೆಣ್ಗಳೊಳ್ (ಗ+) ಕೈಕೊಳ್ಳದ (ಕೈಯಲ್ಲಿ+ ಕೊಳ್ಳು:ತೆಗೆದುಕೊ, ಹಿಡಿದುಕೊ) ಅಚ್ಚರಿಯ ಕಡು (ಬಹಳ) ಗಕ್ಕಸದ (ಕರ್ಕಶದ : ಗಟ್ಟಿಯಾದ) ಬಟ್ಟ (ದುಂಡು) ಬಲ್ಮೊಲೆಯ (ಬಲು ಮೊಲೆ) ಪೊಚ್ಚಪೊಸ ಜೌವನದ ನೀರೆಯರ್ ನಡೆತಂದರು ಒಗ್ಗಾಗಿ ಸಂಭ್ರಮದೊಳು=[ಒಪ್ಪುವ ಚೆಲುವಿನ ಎಳೆಯ ಹೆಣ್ಣುಗಳಲ್ಲಿ ಯಾರೂ ಕೈಯಲ್ಲಿ ಮುಟ್ಟದ ಅಚ್ಚರಿಯ ಬಹಳ ಕಠಿಣವಾದ ದುಂಡನೆಯ ದಪ್ಪಮೊಲೆಯ ಹೊಚ್ಚಹೊಸ ಯೌವನದ ಹುಡುಗಿಯರು ಗುಂಪಾಗಿ ಸಂಭ್ರಮದದಿಂದ ಬಂದರು].
  • (ಒಂದು ಶೆರೆ/ಶೇರೆ ಅಂಗೈಬೆರಳುಗಳನ್ನು ಒಟ್ಟುಮಾಢಿದ ಬಟ್ಟಲುಕೈಯಷ್ಟು ದೊಡ್ಡದು)
  • ತಾತ್ಪರ್ಯ:ಅಂಗೈಅಗಲದ ಕಣ್ಣಿನ ಕೋಮಲ ಬಾಲಕಿಯರು, ಒಂದು ಮುಷ್ಟಿಯಲ್ಲಿ ಹಿಡಿಯಬಹುದಾದ ಸಣ್ಣ ನಡುವಿನ ಆಚ್ಚರಿಯ ಹುಡುಗಿಯರು, ಓರಣವಾಗಿರುವ ಹೊಳೆಯುವ ಹಲ್ಲುಳ್ಳವರು, ಹೊಳೆಯುದ ಕೆನ್ನೆಯ ನಿತಂಬನಿಯರು, ಒಂದು ಮಾರುದ್ದ ಜಡೆಯ ವಿಲಾಸಿನಿಯರು, ಒಪ್ಪುವ ಚೆಲುವಿನ ಎಳೆಯ ಹೆಣ್ಣುಗಳಲ್ಲಿ ಯಾರೂ ಕೈಯಲ್ಲಿ ಮುಟ್ಟದ ಅಚ್ಚರಿಯ ಬಹಳ ಕಠಿಣವಾದ ದುಂಡನೆಯ ದಪ್ಪಮೊಲೆಯ ಹೊಚ್ಚಹೊಸ ಯೌವನದ ಹುಡುಗಿಯರು ಗುಂಪಾಗಿ ಸಂಭ್ರಮದದಿಂದ ಆ ಉದ್ಯಾನವನಕ್ಕೆ ಬಂದರು].
  • (ಪದ್ಯ-೨)

ಪದ್ಯ:-::[ಸಂಪಾದಿಸಿ]

ಕಲಕೀರವಾಣಿಯರ್ ಕಾಲಾಹಿವೇಣಿಯರ್ |
ಕಲಭ ಮದೆಯಾನೆಯರ್ ಕಾಯಜ ನಿದಾನೆಯರ್ |
ಕಲಧೌತಗಾತ್ರೆಯರ್ ಕಂಜದಳ ನೇತ್ರೆಯರ್ ಕಳೆವೆತ್ತ ಕಾಮಿನಿಯರು ||
ಕಲಶಕುಚಯುಗಳೆಯರ್ ಕನಕ ಮಣಿನಿಗಳೆಯರ್ |
ಕಳಕಳಿಪ ವದನೆಯರ್ ಕುಲಿಶಾಭ ರದನೆಯರ್ |
ಕಳೆದುಳಿದ ರನ್ನೆಯರ್ ಕಾಂತಿಸಂಪನ್ನೆಯರ್ ನಂದನಕೆ ನಡೆತಂದರು ||3|||

ಪದವಿಭಾಗ-ಅರ್ಥ:
ಕಲಕೀರ (ಹಂಸ)ವಾಣಿಯರ್ ಕಾಲಾಹಿವೇಣಿಯರ್ (ಕಾಲ+ ಅಹಿ +ವೇಣಿ), ಕಲಭ(ಆನೆಮರಿ)ಮದೆಯ(ಹೆಣ್ಣಿನ) ಆನೆಯರ್, ಕಾಯಜ (ಮನ್ಮಥ)ನಿಧಾನೆಯರ್ ಕಲಥೌತ (ಕಲ:ನಿರ್ಮಲ, ಧೌತ:ಶುಭ್ರಬಟ್ಟೆ) ಗಾತ್ರೆಯರ್ ಗಾತ್ರ:ದೇಹ ಕಂಜದಳ ನೇತ್ರೆಯರ್ ಕಳೆವೆತ್ತ ಕಾಮಿನಿಯರು=[ಹಂಸದಂತೆ ಇಂಪಾದ ಮಾತನಾಡುವವರು, ಹಾವಿನಂತೆಉದ್ದ ಕಪ್ಪುಜಡೆಯವರು, ಆನೆಮರಿಯಂತೆ ಇರುವರು, ಮನ್ಮಥನಿಗೆ ಕಾರಣರು, ನಿರ್ಮಲ ಶುಭ್ರಬಟ್ಟೆಯಂತಿರುವ ದೇಹದವರು, ಕಮಲಪತ್ರದಂತಿರುವ ಕಣ್ಣು ಉಳ್ಳವರು, ಕಾಂತಿಯುಳ್ಳ ಕಾಮಿನಿಯರು,];;ಕಲಶಕುಚಯುಗಳೆಯರ್ ಕನಕ ಮಣಿನಿಗಳೆಯರ್ ಕಳಕಳಿಪ ವದನೆಯರ್ ಕುಲಿಶಾಭ (ಕುಲಿಶ:ವಜ್ರಾಯುಧ, ಆಭ: ಸಮನಾದ) ರದನೆಯರ್ ಕಳೆದು ಉಳಿದ ರನ್ನೆಯರ್ ಕಾಂತಿಸಂಪನ್ನೆಯರ್ ನಂದನಕೆ=[ಕಲಶದಂತೆ ಎರಡುಕುಚ ಹೊಂದಿದವರು,ಚಿನ್ನ ಮಣಿ ಆಭರಣಧರಿಸಿದವರು, ಹೊಳೆಯುವ ಮುಖವುಳ್ಳವರು, ಕುಲಿಶಾಭ (ಕುಲಿಶ:ವಜ್ರಾಯುಧ, ಆಭ: ಸಮನಾದ)ವಜ್ರಾಯುಧದಂತೆ ಹೊಳೆಯುವ ಹಲ್ಲುಗಳನ್ನುಳ್ಳವರು, ಬಾಲ್ಯಕಳೆದು, ಯೌವನ ಉಳಿದಿರುವ ಪ್ರಕಾಶಿಸುವ ರನ್ನೆಯರು, ಕಾಂತಿಯಿಂದ ಶೋಭಿಸುವ ಸಂಪನ್ನೆಯರು ನಂದನವನಕ್ಕೆ ಬಂದರು].
  • ತಾತ್ಪರ್ಯ:ಹಂಸದಂತೆ ಇಂಪಾದ ಮಾತನಾಡುವವರು, ಹಾವಿನಂತೆಉದ್ದ ಕಪ್ಪುಜಡೆಯವರು, ಆನೆಮರಿಯಂತೆ ಇರುವರು, ಮನ್ಮಥನಿಗೆ ಕಾರಣರು, ನಿರ್ಮಲ ಶುಭ್ರಬಟ್ಟೆಯಂತಿರುವ ದೇಹದವರು, ಕಮಲಪತ್ರದಂತಿರುವ ಕಣ್ಣು ಉಳ್ಳವರು, ಕಾಂತಿಯುಳ್ಳ ಕಾಮಿನಿಯರು, ಕಲಶದಂತಿರುವ ಎರಡುಕುಚ ಹೊಂದಿದವರು, ಚಿನ್ನ,ಮಣಿ ಆಭರಣಧರಿಸಿದವರು, ಹೊಳೆಯುವ ಮುಖವುಳ್ಳವರು, ವಜ್ರಾಯುಧದಂತೆ ಹೊಳೆಯುವ ಹಲ್ಲುಗಳನ್ನುಳ್ಳವರು, ಬಾಲ್ಯಕಳೆದು, ಯೌವನ ಉಳಿದಿರುವ ಪ್ರಕಾಶಿಸುವ ರನ್ನೆಯರು, ಕಾಂತಿಯಿಂದ ಶೋಭಿಸುವ ಸಂಪನ್ನೆಯರು ನಂದನವನಕ್ಕೆ ಬಂದರು].
  • (ಪದ್ಯ-೩)

ಪದ್ಯ:-::[ಸಂಪಾದಿಸಿ]

ತಳಿರಡಿಗೆ ತೊಂಡೆವಣ್ ತುಟಿಗೆ ತಾವರೆ ಮೊಗಕೆ |
ಬೆಳಗಾಯಿ ಮೊಲೆಗೆ ನೈದಿಲೆ ಕಣ್ಗೆ ಬಾಳೆ ತೊಡೆ |
ಗೆಳೆವಳ್ಳಿ ಮೈಗೆ ಸಂಪಗೆ ನಾಸಿಕಕ್ಕೆ ಮಲ್ಲಿಗೆ ನಗೆಗೆ ಮೊಲ್ಲೆ ಪಲ್ಗೆ ||
ಅಳಿ ಕುಂತಳಕೆ ನವಿಲ್ ಮುಡಿಗಂಚೆ ನಡೆಗೆ, ಕೋ |
ಗಿಲೆ ಗಿಳಿಗಳಿಂಚರಕೆ ಸೋಲ್ದವಯವಂಗಳೊಳ್ |
ನೆಲಸಿದುವು ಪೆಣ್ಗಳ್ಗೆ ಸೋಲದವರಾರೆನಲ್ ನಡೆತಂದರಂಗನೆಯರು ||4||

ಪದವಿಭಾಗ-ಅರ್ಥ:
ಹೆಣ್ಣಿನ ಅಂಗಾಂಗಳಿಗೆ ಕವಿ ಕೊಡುವ ಹೋಲಿಕಗಳು::ತಳಿರು ಅಡಿಗೆ, ತೊಂಡೆವಣ್ ತುಟಿಗೆ, ತಾವರೆ ಮೊಗಕೆ, ಬೆಳಗಾಯಿ ಮೊಲೆಗೆ, ನೈದಿಲೆ ಕಣ್ಗೆ, ಬಾಳೆ ತೊಡೆಗೆ, ಎಳೆವಳ್ಳಿ ಮೈಗೆ, ಸಂಪಗೆ ನಾಸಿಕಕ್ಕೆ, ಮಲ್ಲಿಗೆ ನಗೆಗೆ ಮೊಲ್ಲೆ ಪಲ್ಗೆ =[ಚಿಗುರುಎಲೆ ಪಾದಕ್ಕೆ, ತೊಂಡೆಹಣ್ಣು ತುಟಿಗೆ, ತಾವರೆ ಮುಖಕ್ಕೆ, ಬೇಲದಕಾಯಿ ಮೊಲೆಗೆ, ನೈದಿಲೆಯ ಎಸಳು ಕಣ್ಣಿಗೆ, ಬಾಳೆ ತೊಡೆಗೆ, ಎಳೆಬಳ್ಳಿ ಮೈಗೆ, ಸಂಪಗೆ ಮೂಗಿಗೆ, ಮಲ್ಲಿಗೆ ನಗೆಗೆ, ಮಲ್ಲಿಗೆ ಮೊಗ್ಗು ಹಲ್ಲಿಗೆ,];;ಅಳಿ ಕುಂತಳಕೆ, ನವಿಲ್ ಮುಡಿಗೆ ಅಂಚೆ ನಡೆಗೆ, ಕೋಗಿಲೆ ಗಿಳಿಗಳು ಇಂಚರಕೆ ಸೋಲ್ದ ಅವಯವಂಗಳೊಳ್ ನೆಲಸಿದುವು ಪೆಣ್ಗಳ್ಗೆ ಸೋಲದವರಾರು ಎನಲ್ ನಡೆತಂದರು ಅಂಗನೆಯರು=[ದುಂಬಿಗಳು ಗುಂಗುರು ತಲೆಕೂದಲಿಗೆ, ನವಿಲು ಜಡೆಗೆ, ಹಮಸ ನಡಿಗೆಗೆ, ಕೋಗಿಲೆ ಗಿಳಿಗಳು ಮಾತಿನ ದನಿಗೆ, ಹೀಗೆ ವಸ್ತುಗಳಿಗೆ ಸೋತು ವಶವಾಗಿ ಅಲ್ಲಿ ನೆಲಸಿದ ಅವಯವಗಳಿದ್ದವು, ಈ ಪೆಣ್ಣುಗಳಿಗೆ ಸೋಲದವರಾರು, ಎನ್ನುವಂತೆ, ಆ ಅಂಗನೆಯರು ಅಲ್ಲಿಗೆ ಬಂದರು].
  • ತಾತ್ಪರ್ಯ:ಹೆಣ್ಣಿನ ಅಂಗಾಂಗಳಿಗೆ ಕವಿ ಕೊಡುವ ಹೋಲಿಕಗಳು:: ಚಿಗುರುಎಲೆ ಪಾದಕ್ಕೆ, ತೊಂಡೆಹಣ್ಣು ತುಟಿಗೆ, ತಾವರೆ ಮುಖಕ್ಕೆ, ಬೇಲದಕಾಯಿ ಮೊಲೆಗೆ, ನೈದಿಲೆಯ ಎಸಳು ಕಣ್ಣಿಗೆ, ಬಾಳೆ ತೊಡೆಗೆ, ಎಳೆಬಳ್ಳಿ ಮೈಗೆ, ಸಂಪಗೆ ಮೂಗಿಗೆ, ಮಲ್ಲಿಗೆ ನಗೆಗೆ, ಮಲ್ಲಿಗೆ ಮೊಗ್ಗು ಹಲ್ಲಿಗೆ, ದುಂಬಿಗಳು ಗುಂಗುರು ತಲೆಕೂದಲಿಗೆ, ನವಿಲು ಜಡೆಗೆ, ಹಮಸ ನಡಿಗೆಗೆ, ಕೋಗಿಲೆ ಗಿಳಿಗಳು ಮಾತಿನ ದನಿಗೆ, ಹೀಗೆ ವಸ್ತುಗಳಿಗೆ ಸೋತು ವಶವಾಗಿ ಅಲ್ಲಿ ನೆಲಸಿದ ಅವಯವಗಳಿದ್ದವು, ಈ ಪೆಣ್ಣುಗಳಿಗೆ ಸೋಲದವರಾರು, ಎನ್ನುವಂತೆ, ಆ ಅಂಗನೆಯರು ಅಲ್ಲಿಗೆ ಬಂದರು.
  • (ಪದ್ಯ-೪)XV

ಪದ್ಯ:-::[ಸಂಪಾದಿಸಿ]

ಮಿಂಡೆದ್ದ ಹೆಣ್ಗಳುಪವನಕೆ ನಡೆತಮದು ಮುಂ |
ಕೊಂಡು ಬಹುವಿಧದ ಚೇಷ್ಟೆಗಳಿಂದೆ ಭುಲ್ಲವಿಸಿ |
ಕಂಡ ಕಂಡವನಿಜಾತಂಗಳಂ ಚಿಗುರಿಸಿದರೊಡನೆ ಪೂದೋರಿಸಿದರು ||
ತಂಡತಂಡದೊಳಲ್ಲಿ ಪರಿಪರಿಯಲರ್ಗೊಯ್ದು |
ಬೆಂಡಾಗಿ ಬಂದು ನಿರ್ಮಲ ಸರೋವರನು |
ದ್ದಂಡದೊಳ್‍ಪೊಕ್ಕರಂಬುಕ್ರೀಡೆಗಂಗಜನ ಸೊಕ್ಕಾನೆಗಳ ತೆರದೊಳು ||5||

ಪದವಿಭಾಗ-ಅರ್ಥ:
ಮಿಂಡೆದ್ದ ಹೆಣ್ಗಳು ಉಪವನಕೆ ನಡೆತಂದು ಮುಂಕೊಂಡು ಬಹುವಿಧದ ಚೇಷ್ಟೆಗಳಿಂದೆ ಭುಲ್ಲವಿಸಿ ಕಂಡ ಕಂಡವನಿಜಾತಂಗಳಂ ಚಿಗುರಿಸಿದರು ಒಡನೆ ಪೂದೋರಿಸಿದರು=[ನವ ಯೌವನದ ಹೆಣ್ಣುಗಳು ಉಪವನಕ್ಕೆ ಬಂದು ನಂತರ ನಾನಾವಿಧದ ಆಟ ವಿಹಾರ ಉತ್ಸಾಹಗೊಂಡು, ಕಂಡ ಕಂಡ ಗಿಡಮರಗಳನ್ನು ಚಿಗುರಿಸಿದರು. (ಈ ಹುಡುಗಿಯರ ಉತ್ಸಾಹ ಯೌವನ ನೋಡಿ ಅವು ಚಿಗುರಿದವು). ಒಡನೆಯೇ ಅವುಗಳಲ್ಲಿ ಹೂವುಗಳು ಮೂಡುವಂತೆಮಾಡಿದರು.]; ತಂಡತಂಡದೊಳು ಅಲ್ಲಿ ಪರಿಪರಿಯ ಅಲರ್(ಗ) ಕೊಯ್ದು ಬೆಂಡಾಗಿ ಬಂದು ನಿರ್ಮಲ ಸರೋವರನು ದ್ದಂಡದೊಳ್‍ ಪೊಕ್ಕರು ಅಂಬುಕ್ರೀಡೆಗೆ ಅಂಗಜನ ಸೊಕ್ಕಾನೆಗಳ ತೆರದೊಳು=[ತಂಡ ತಂಡಗಳಲ್ಲಿ ಅಲ್ಲಿ ಬಗೆಬಗೆಯ ಹೂವುಗಳನ್ನು ಕೊಯ್ದು ಬಳಲಿ, ಬಂದು ನಿರ್ಮಲ ಸರೋವರಕ್ಕೆ ಜಲಕ್ರೀಡೆಗೆ ಮನ್ಮಥನ ಸೊಕ್ಕಿದ ಆನೆಗಳಂತೆ ಸೊಕ್ಕಿನಿಂದ ಹೊಕ್ಕರು.]
  • (ಮಿಂಡು:1. ಶೌರ್ಯ. 3.ನವ ಯೌವನ. 4. ಪುಂಡ.)
  • ತಾತ್ಪರ್ಯ:ನವ ಯೌವನದ ಹೆಣ್ಣುಗಳು ಉಪವನಕ್ಕೆ ಬಂದರು. ನಂತರ ಉತ್ಸಾಹಗೊಂಡು ನಾನಾವಿಧದ ಆಟ ವಿಹಾರದಲ್ಲಿ ತೊಡಗಿದರು. ಕಂಡ ಕಂಡ ಗಿಡಮರಗಳನ್ನು ಚಿಗುರಿಸಿದರು. (ಈ ಹುಡುಗಿಯರ ಉತ್ಸಾಹ ಯೌವನ ನೋಡಿ ಅವು ಚಿಗುರಿದವು). ಒಡನೆಯೇ ಅವುಗಳಲ್ಲಿ ಹೂವುಗಳು ಮೂಡುವಂತೆಮಾಡಿದರು. ತಂಡ ತಂಡಗಳಲ್ಲಿ ಅಲ್ಲಿ ಬಗೆಬಗೆಯ ಹೂವುಗಳನ್ನು ಕೊಯ್ದು ಬಳಲಿ, ಬಂದು ನಿರ್ಮಲ ಸರೋವರಕ್ಕೆ ಜಲಕ್ರೀಡೆಗೆ ಮನ್ಮಥನ ಮದಬಂದ ಆನೆಗಳಂತೆ ಸೊಕ್ಕಿನಿಂದ ಹೊಕ್ಕರು.
  • (ಪದ್ಯ-೫)

ಪದ್ಯ:-::[ಸಂಪಾದಿಸಿ]

ನಿರಿ ಗುರುಳ್ಗಳ ತುಂಬಿಗಳ ಪೊಳೆವ ಲೋಚನದ |
ಮರಿಮೀನ ಮೊಗದಲರ್ದಾವರೆಯ ತ್ರಿವಳಿಗಳ |
ಕಿರುದೆರೆಯ ಕಂಧರದ ಕಂಬುವಿನ ಘನ ಕುಚಂಗಳ ಕುಂಜ ಮುಕುಳಂಗಳ ||
ಪೊರೆವಾರ ಪುಳಿನದ ತನುಚ್ಛವಿಯ ತಿಳಿನೀರ |
ಮೆರೆವ ಮಧ್ಯದ ಮೃಣಾಳದ ಬಗೆಯ ಭೇದಮಂ |
ಕುರುಪಿಡುವೊಡರಿದೆನಲ್ ಸರಿಸಿಯೊಳ್ ತದಳೆಯರ ಜಲಕೇಳಿ ಕಣ್ಗೆಗೆಸೆದುದು ||6||

ಪದವಿಭಾಗ-ಅರ್ಥ:
(ಆ ಯುವಿತಿಯರ,) ನಿರಿ ಗುರುಳ್ಗಳ ತುಂಬಿಗಳ ಪೊಳೆವ ಲೋಚನದ ಮರಿಮೀನ ಮೊಗದ ಅಲರ್ದಾವರೆಯ ತ್ರಿವಳಿಗಳ ಕಿರು (ದೆ) ತೆರೆಯ ಕಂಧರದ ಕಂಬುವಿನ ಘನ ಕುಚಂಗಳ ಕುಂಜ ಮುಕುಳಂಗಳ=[ಆ ಯುವಿತಿಯರ, ನಿರಿ ನಿರಿಯಾದ ತಲೆಕೂದಲಿನಲ್ಲಿ ಉಳ್ಳ ಕುರುಳುಗಳು ತುಂಬಿಗಳಂತೆ ಇದ್ದವು; ಹೊಳೆಯುವ ಕಣ್ಣುಗಳು ಮರಿಮೀನಿನಂತೆ; ಮುಖವು ಅರಳಿದ ತಾವರೆಯ ಹೂವಿನಂತೆ; ಅವರ ಹೊಟ್ಟೆಯಕೆಲಗಿನ ತ್ರಿವಳಿ ಗೆರೆಗಳು ಸರಸ್ಸಿನ ಕಿರು ತೆರೆಯಂತೆ; ಅವರ ಕೊರಳು ಶಂಖದಂತೆ; ಒತ್ತಾಗಿರುವ ಕುಚಗಳು ಕಮಲದ ಮೊಗ್ಗುಗಳಂತೆ;];; ಪೊರೆವಾರ ಪುಳಿನದ ತನುಚ್ಛವಿಯ ತಿಳಿನೀರ ಮೆರೆವ ಮಧ್ಯದ ಮೃಣಾಳದ ಬಗೆಯ ಭೇದಮಂ ಕುರುಪಿಡುವೊಡೆ ಅರಿದೆನಲ್ ಸರಿಸಿಯೊಳ್ ತರಳೆಯರ ಜಲಕೇಳಿ ಕರ್ಣಗೆಸೆದುದು=[ಹೊರೆವಾರ/ನಿತಂಬಗಳು ಸಣ್ಣ ಮರಳಿನ ದಿಣ್ಣೆ; ದೇಹದ ಕಾಂತಿಯು ತಿಳಿನೀರಿನಂತೆ; ಪ್ರಕಾಶಿಸುವ ಹೊಟ್ಟೆಯ ಕೆಳಗಿನ ಮಧ್ಯದ ಗೆರೆ, ಕಮಲದ ದಂಟಿನಂತಿದ್ದು ಅದರ ಬಗೆಯನ್ನು ಭೇದವನ್ನೂ ಗುರುತಿಸಲು ಅರಿಯದು ಎನ್ನುವಂತೆ ಇತ್ತು. ಆ ತರಳೆಯರು ಸರೋವರದಲ್ಲಿ ಜಲಕೇಳಿಯಾಡತ್ತಿದ್ದುದು ಕಣ್ಣಿಗೆ ಶೋಭಿಸಿತು].
  • ತಾತ್ಪರ್ಯ:ಆ ಯುವತಿಯರ ಸೌದರ್ಯ ಸರೋವರದ ಲಕ್ಷಣಗಳನ್ನು ಹೋಲುತ್ತಿತ್ತು, ಆ ಯುವಿತಿಯರ, ನಿರಿ ನಿರಿಯಾದ ತಲೆಕೂದಲಿನಲ್ಲಿ ಉಳ್ಳ ಕುರುಳುಗಳು ತುಂಬಿಗಳಂತೆ ಇದ್ದವು; ಹೊಳೆಯುವ ಕಣ್ಣುಗಳು ಮರಿಮೀನಿನಂತೆ; ಮುಖವು ಅರಳಿದ ತಾವರೆಯ ಹೂವಿನಂತೆ; ಅವರ ಹೊಟ್ಟೆಯಕೆಲಗಿನ ತ್ರಿವಳಿ ಗೆರೆಗಳು ಸರಸ್ಸಿನ ಕಿರು ತೆರೆಯಂತೆ; ಅವರ ಕೊರಳು ಶಂಖದಂತೆ; ಒತ್ತಾಗಿರುವ ಕುಚಗಳು ಕಮಲದ ಮೊಗ್ಗುಗಳಂತೆ; ಹೊರೆವಾರ/ನಿತಂಬಗಳು ಸಣ್ಣ ಮರಳಿನ ದಿಣ್ಣೆ; ದೇಹದ ಕಾಂತಿಯು ತಿಳಿನೀರಿನಂತೆ; ಪ್ರಕಾಶಿಸುವ ಹೊಟ್ಟೆಯ ಕೆಳಗಿನ ಮಧ್ಯದ ಗೆರೆ, ಕಮಲದ ದಂಟಿನಂತಿದ್ದು ಅದರ ಬಗೆಯನ್ನು ಭೇದವನ್ನೂ ಗುರುತಿಸಲು ಅರಿಯದು ಎನ್ನುವಂತೆ ಇತ್ತು. ಆ ತರಳೆಯರು ಸರೋವರದಲ್ಲಿ ಜಲಕೇಳಿಯಾಡತ್ತಿದ್ದುದು ಕಣ್ಣಿಗೆ ಶೋಭಿಸಿತು.
  • (ಪದ್ಯ-೬)

ಪದ್ಯ:-::[ಸಂಪಾದಿಸಿ]

ಲಲನೆಯರ್ ತಾವರೆದೆರದ ಮೇಲುದಿನೊಳೆಸೆವ |
ನೆಲೆಮೊಲೆಗಳಲುಗೆ ತಾವರೆದೆರೆದ ಕೈಗಳಿಂ |
ತುಡುಕಿದರ್ ಚೆಲ್ವಕಂಕಣ ರವಂ ಮಿಗೆ ಚೆಲ್ವಕಂಕಣ ರವಂಗಳೊಡನೆ ||
ವಿಲಸಿತದ ಕಾಸಾರದಂಬುಗಳನೆಸೆವ ಜೀ |
ರ್ಕೊಳವಿಗಳ ಕದನ ಸಾಸಾರದಂಬುಗಳವೋ |
ಲಳವಡಿಸಿ ಸರಸಕೇಳಿಗೆ ಪೊಕ್ಕರಡಿಗಡಿಗೆ ಸರಸಕೇಳಿಗೆಯಾಗಲು ||7||

ಪದವಿಭಾಗ-ಅರ್ಥ:
ಲಲನೆಯರ್ ತಾವರೆದೆರದ ಮೇಲುದಿನೊಳೆಉ ಎಸೆವ ನೆಲೆಮೊಲೆಗಳು ಅಲುಗೆ ತಾವರೆದೆರೆದ ಕೈಗಳಿಂ ತುಡುಕಿದರ್ ಚೆಲ್ವಕಂಕಣ ರವಂ ಮಿಗೆ ಚೆಲ್ವ ಕಂ (ನೀರು) ಕಣ ರವಂಗಳೊಡನೆ=[ಹುಡುಗಿಯರು ತಾವು ಅರೆ ತೆರದ ಮೇಲುಸೆರಗಿನಲ್ಲಿ ತೋರುವ ಅವರ(ಅವರಲ್ಲಿರುವ) ಮೊಲೆಗಳು ಅಲುಗಾಡುತ್ತಿರಲು, ತಾವರೆಯನ್ನು ತೆರೆದ ಕೈಗಳಿಂದ ಹಿಡಿದರು; ಸುಂದರ ಕೈಬಳೆಯ ಕಂಕಣದ ಸದ್ದು ನೀರಿನ ತುಂತುರು ಸದ್ದಿನೊಡನೆ ಮತ್ತೂ ಚಂದವಾಯಿತು. ];; ವಿಲಸಿತದ ಕಾಸಾರದ ಅಂಬುಗಳನು ಎಸೆವ ಜೀರ್ಕೊಳವಿಗಳ ಕದನ ಕಾಸಾರದ (ತಾಮ್ರ, ಹಿತ್ತಾಳೆ) ಅಂಬುಗಳವೋಲ್ ಅಳವಡಿಸಿ ಸರಸಕೇಳಿಗೆ ಪೊಕ್ಕರು ಅಡಿಗಡಿಗೆ ಸರಸಕೇಳಿಗೆಯಾಗಲು.=[ಶೋಭಿಸುವ ಸರೋವರದ ನೀರುಗಳನ್ನು ಚಿಮ್ಮಿಸುವ ಪಿಚಕಾರಿ-ಜೀರ್ಕೊಳವಿಗಳ ಕದನದ ತಾಮ್ರದ/ ಬಣ್ಣದ ನೀರಿನ ಅಂಬುಗಳಂತೆ ಅಳವಡಿಸಿ ಸರಸ/ ನೀರಿನ ಆಟಕ್ಕೆ ಹೊರಟರು, ಅದು ಮತ್ತೆ ಮತ್ತೆ ಸ-ಸಂತಸದ ರಸ (ಪ್ರೇಮ) ದಾಟವಾಯಿತು.]
  • ತಾತ್ಪರ್ಯ:ಹುಡುಗಿಯರು ತಾವು ಅರೆ ತೆರದ ಮೇಲುಸೆರಗಿನಲ್ಲಿ ತೋರುವ ಅವರ(ಅವರಲ್ಲಿರುವ) ಮೊಲೆಗಳು ಅಲುಗಾಡುತ್ತಿರಲು, ತಾವರೆಯನ್ನು ತೆರೆದ ಕೈಗಳಿಂದ ಹಿಡಿದರು; ಸುಂದರ ಕೈಬಳೆಯ ಕಂಕಣದ ಸದ್ದು ನೀರಿನ ತುಂತುರು ಸದ್ದಿನೊಡನೆ ಮತ್ತೂ ಚಂದವಾಯಿತು. ಶೋಭಿಸುವ ಸರೋವರದ ನೀರುಗಳನ್ನು ಚಿಮ್ಮಿಸುವ ಪಿಚಕಾರಿ-ಜೀರ್ಕೊಳವಿಗಳ ಕದನದ ತಾಮ್ರದ/ ಬಣ್ಣದ ನೀರಿನ ಅಂಬುಗಳಂತೆ ಅಳವಡಿಸಿ ಸರಸ/ ನೀರಿನ ಆಟಕ್ಕೆ ಹೊರಟರು, ಅದು ಮತ್ತೆ ಮತ್ತೆ ಸ-ಸಂತಸದ ರಸ (ಪ್ರೇಮ) ದಾಟವಾಯಿತು.
  • (ಪದ್ಯ-೭)

ಪದ್ಯ:-::[ಸಂಪಾದಿಸಿ]

ಹೊಳೆವ ಹುಬ್ಬುಗಳ ಭಾಸುರ ಚಾಪಲತೆಯ ಮಂ |
ಡಳಿಸಿದುನ್ನತ ಪಯೋಧರದ ಕಡೆಗಣ್ಣ ಚಂ |
ಚಲದ ಭೂಷಣದ ಘನರವದ ಚಿತ್ರಾಂಗಿಯರ್ ತವೆ ಹಸ್ತದೊಳ್ ತೋಯದ ||
ಮಳೆಗರೆವುದಚ್ಚರಿಯೆ ಪೇಳೆನೆ ಸುವಾರಿಯಂ |
ತುಳುಕಿದರ್ ಬಿಂಕದಿಂದೊರ್ವರೋರ್ವರ ಮೇಲೆ |
ಮೊಲೆಗೆಲದ ಕುಂಕುಮದ ಕದಡರುಣ ಗಿರಿತಟದ ಕೆಂಬೊನಲ್ಗಳವೊಲಾಗೆ ||8||

ಪದವಿಭಾಗ-ಅರ್ಥ:
ಹೊಳೆವ ಹುಬ್ಬುಗಳ ಭಾಸುರ ಚಾಪಲತೆಯ ಮಂಡಳಿಸಿದ (ಮಂಡಲದ?ದುಂಡನೆ) ಉನ್ನತ ಪಯೋಧರದ ಕಡೆಗಣ್ಣ ಚಂಚಲದ ಭೂಷಣದ ಘನರವದ ಚಿತ್ರಾಂಗಿಯರ್ ತವೆ (ತುಂಬ) ಹಸ್ತದೊಳ್ ತೋಯದ=[ ಆ ಹೆಂಗಳೆಯರು, ಹೊಳೆಯುವ ಹುಬ್ಬುಗಳ ಶೋಭೆ, ಚಪಲತೆಯನ್ನು ತೋರುವ ದುಂಡನೆಯ ಎದ್ದುಕಾಣುವ ಮೊಲೆಗಳನ್ನುಳ್ಳವರು, ಕಡೆಗಣ್ಣ ನೋಟದ ಚಂಚಲತೆಯನ್ನುಳ್ಳವರು, ಆಭರಣಗಳನ್ನಧರಿಸಿ ಅದರ ಸದ್ದಿನೊಡನೆ ಇರುವ ಸುಂದರದೇಹದವರು, ಮತ್ತೆ ಹಸ್ತದಿಂದ ನೀರನ್ನು ಹಾರಿಸಿ,ತುಂಬಾ ನೀರಿನ];; ಮಳೆಗರೆಯುವರು ಅಚ್ಚರಿಯೆ ಪೇಳೆನೆ ಸುವಾರಿಯಂ ತುಳುಕಿದರ್ ಬಿಂಕದಿಂದ ಓರ್ವರೋರ್ವರ ಮೇಲೆ ಮೊಲೆಗೆಲದ ಕುಂಕುಮದ ಕದಡ ಅರುಣ ಗಿರಿತಟದ ಕೆಂಬೊನಲ್ಗಳವೊಲ್/ ಕೆಂಪು ಹೊನಲ್ ಗಳವೊಲ್ ಆಗೆ=[ಮಳೆಗರೆವುದು ಅಶ್ಚರ್ಯವಲ್ಲ ಎನ್ನುವಂತೆ ನೀರನ್ನು ಎರಚಿದರು. ಜಂಬದಿಂದ ಒಬ್ಬರ ಮೇಲೊಬ್ಬರು ಮೊಲೆಯ ಹತ್ತಿರ ಹಚ್ಚಿದ ಕುಂಕುಮಕೇಸರವು ಕದಡಿ ನೀರು ಕೆಂಪಾಯಿತು; ಅದು ಬೆಟ್ಟದಬುಡದ ಹಳ್ಳದ ಕೆಂಪು ಪ್ರವಾಹದಂತೆ ಆಯಿತು].
  • ತಾತ್ಪರ್ಯ:ಆ ಹೆಂಗಳೆಯರು, ಹೊಳೆಯುವ ಹುಬ್ಬುಗಳ ಶೋಭೆ, ಚಪಲತೆಯನ್ನು ತೋರುವ ದುಂಡನೆಯ ಎದ್ದುಕಾಣುವ ಮೊಲೆಗಳನ್ನುಳ್ಳವರು, ಕಡೆಗಣ್ಣ ನೋಟದ ಚಂಚಲತೆಯನ್ನುಳ್ಳವರು, ಆಭರಣಗಳನ್ನಧರಿಸಿ ಅದರ ಸದ್ದಿನೊಡನೆ ಇರುವ ಸುಂದರದೇಹದವರು, ಮತ್ತೆ ಹಸ್ತದಿಂದ ನೀರನ್ನು ಹಾರಿಸಿ,ತುಂಬಾ ನೀರಿನ ಮಳೆಗರೆವುದು ಅಶ್ಚರ್ಯವಲ್ಲ ಎನ್ನುವಂತೆ ನೀರನ್ನು ಎರಚಿದರು. ಸೊಕ್ಕಿನಿಂದ ಒಬ್ಬರ ಮೇಲೊಬ್ಬರು ಮೊಲೆಯ ಹತ್ತಿರ ಹಚ್ಚಿದ ಕುಂಕುಮಕೇಸರವು ಕದಡಿ ನೀರು ಕೆಂಪಾಯಿತು; ಅದು ಬೆಟ್ಟದಬುಡದ ಹಳ್ಳದ ಕೆಂಪು ಪ್ರವಾಹದಂತೆ ಆಯಿತು].
  • (ಪದ್ಯ-೮)

ಪದ್ಯ:-::[ಸಂಪಾದಿಸಿ]

ಹರಿಯ ಲೋಚನಮಜಂ ಕುಳ್ಳಿರ್ಪ ತಾಣಮಿಂ |
ದಿರೆಯ ನಿಳಯಂ ದಿವಾಕರನ ಕೆಳೆ ಮನ್ಮಥನ |
ಸರಳಾರಡಿಗಳಿಕ್ಕೆ ಪರಿಮಳದ ಬೀಡೆನಿಸಿಕೊಂಡು ಸಂಪೂರ್ಣತೆಯೊಳು ||
ಪರಿಶೋಭಿಸಿದುವಲ್ಲಿ ನೆರೆದಿಂಗಳಂ ಪೋಲ್ವ |
ತರುಣೀಯರ ಚೆಲ್ವ ನಗೆಮೊಗದ ಮುಂದೀಗ ತಾ |
ವರೆಯಾದುವೆಂಬಂತೆ ಪೆಣ್ಗಳಾಸ್ಯಕೆ ಸೋಲ್ದುವಾ ಕೊಳದ ಕಮಲಂಗಳು ||9||

ಪದವಿಭಾಗ-ಅರ್ಥ:
ಹರಿಯ ಲೋಚನಂ ಅಜಂ ಕುಳ್ಳಿರ್ಪ ತಾಣಂ ಇಂದಿರೆಯ ನಿಳಯಂ ದಿವಾಕರನ ಕೆಳೆ ಮನ್ಮಥನ ಸರಳ ಆರಡಿಗಳು ಇಕ್ಕೆ ಪರಿಮಳದ ಬೀಡು ಎನಿಸಿಕೊಂಡು ಸಂಪೂರ್ಣತೆಯೊಳು=[ಹರಿಯ ಕಣ್ಣು, ಬ್ರಹ್ಮನು ಕುಳಿತುಕೊಳ್ಲುವ ಸ್ಥಳ; ಇಂದಿರೆಯ/ಲಕ್ಷ್ಮಿಯ ಮನೆ, ಸೂರ್ಯನ ಕಾಂತಿ, ಮನ್ಮಥನ ಬಾಣ, ದುಂಬಿಗಳು ಇರುವ ತಾಣ; ಪರಿಮಳದ ನೆಲೆ, ಎನ್ನಿಸಿಕೊಂಡು ಪರಿಪೂರ್ಣವಾಗಿ];; ಪರಿಶೋಭಿಸಿದುವಲ್ಲಿ ನೆರೆದಿಂಗಳಂ ಪೋಲ್ವ ತರುಣೀಯರ ಚೆಲ್ವ ನಗೆಮೊಗದ ಮುಂದೀಗ ತಾವರೆಯಾದುವು ಎಂಬಂತೆ ಪೆಣ್ಗಳ ಆಸ್ಯಕೆ ಸೋಲ್ದುವಾ ಕೊಳದ ಕಮಲಂಗಳು=[ಅಲ್ಲಿ ಪರಿಶೋಭಿಸಿದವು; ಹೆಚ್ಚಿನ ಬೆಳುದಿಂಗಳನ್ನು ಹೋಲುವ ಆ ತರುಣೀಯರ ಚೆಲುವು ನಗೆಮುಖಗಳು ಮುಂದೆ ಕಾಣುವ ಈ ಕೊಳದ ತಾವರೆಯಾದುವು ಎಂಬಂತೆ ಹುಡುಗಿಯರ ಮುಖಕ್ಕೆ ಆ ಕೊಳದ ಕಮಲಗಳು ಮನಸೋತವು].
  • ತಾತ್ಪರ್ಯ:ಹರಿಯ ಕಣ್ಣು, ಬ್ರಹ್ಮನು ಕುಳಿತುಕೊಳ್ಲುವ ಸ್ಥಳ; ಇಂದಿರೆಯ/ಲಕ್ಷ್ಮಿಯ ಮನೆ, ಸೂರ್ಯನ ಕಾಂತಿ,ಮನ್ಮಥನ ಬಾಣ, ದುಂಬಿಗಳು ಇರುವ ತಾಣ; ಪರಿಮಳದ ನೆಲೆ, ಎನ್ನಿಸಿಕೊಂಡು ಪರಿಪೂರ್ಣವಾಗಿ ಅಲ್ಲಿ ಪರಿಶೋಭಿಸಿದವು; ಹೆಚ್ಚಿನ ಬೆಳುದಿಂಗಳನ್ನು ಹೋಲುವ ಆ ತರುಣೀಯರ ಚೆಲುವು ನಗೆಮುಖಗಳು ಮುಂದೆ ಕಾಣುವ ಈ ಕೊಳದ ತಾವರೆಯಾದುವು ಎಂಬಂತೆ ಹುಡುಗಿಯರ ಮುಖಕ್ಕೆ ಆ ಕೊಳದ ಕಮಲಗಳು ಮನಸೋತವು.
  • (ಪದ್ಯ-೯)

ಪದ್ಯ:-:೧೦:[ಸಂಪಾದಿಸಿ]

ಮೇಲಕುಪ್ಪರಿಸಿ ತಲೆಕೆಳಗಾಗಿ ಬಿದ್ದೊಡಂ |
ಲೋಲ ಲೋಚನಕೆ ಪಾಸಟಿಯಾಗದಿರೆ ಮೀನ್ಗ |
ಳಾಳದೊಳ್ ಮುಳೂಗಿದುವು ಗತಿಗಳ ವಿಲಾಸಮಂ ಕಂಡು ಕಲಹಂಸಂಗಳು ||
ಕಾಲಿಂದ ನಡೆಯಲೊಲ್ಲದೆ ನಭಕೆ ಪಾರಿದುವು |
ಬಾಲೆಯರ ಕಣ್ಣ ಹೊಳಹಿಗೆ ಗಮನದುಜ್ಜುಗಕೆ |
ಸೋಲದವರಾರೆಂಬ ತೆರನಾಗೆ ಸಲಿಲದೊಳ್ ಕ್ರೀಡಿಸಿದರಂಗನೆಯರು ||10||

ಪದವಿಭಾಗ-ಅರ್ಥ:
ಆ ಬಾಲಕಿಯರು, ಮೇಲಕೆ ಉಪ್ಪರಿಸಿ ತಲೆಕೆಳಗಾಗಿ ಬಿದ್ದೊಡಂ ಲೋಲ ಲೋಚನಕೆ ಪಾಸಟಿಯಾಗದಿರೆ ಮೀನ್ಗಳು ಆಳದೊಳ್ ಮುಳುಗಿದುವು ಗತಿಗಳ ವಿಲಾಸಮಂ ಕಂಡು ಕಲಹಂಸಂಗಳು ಕಾಲಿಂದ ನಡೆಯಲು ಒಲ್ಲದೆ ನಭಕೆ ಪಾರಿದುವು=[ಆ ಬಾಲಕಿಯರು, ಮೇಲಕ್ಕೆ ಚಿಗಿದು ತಲೆಕೆಳಗಾಗಿ ನೀರಿಗೆ ಬಿದ್ದಾಗ, ಅವರ ಆ ಬಾಲೆಯರ ವಿಶಾಲ ಕಣ್ಣುಗಳಿಗೆ ಸರಿಸಾಟಿಯಾಗದೆ (ನಾಚಿ), ಮೀನುಗಳು ಆಳಕ್ಕೆ ಮುಳುಗಿದುವು(ಮೀನುಗಳ ಆಕಾರಕ್ಕಿಂತ ಬಾಲೆಯರ ಕಣ್ಣು ಚಂದಿತ್ತು); ಅವರ ಈಜುವ ಗತಿಗಳ ಸೊಬಗುನ್ನು ಕಂಡು ಕಲಹಂಸಗಳು ನಾಚಿ)ಕಾಲಿನಿಂದ ನಡೆಯಲು ಇಷ್ಟಪಡದೆ ಆಕಾಶಕ್ಕೆ ಹಾರಿದುವು (ಹಂಸಗಳನಡೆ/ಗತಿಗಿಂತ ಬಾಲೆಯರ ನೆಡಿಗೆ ಗತಿ ಉತ್ತಮವಿತ್ತು);];; ಬಾಲೆಯರ ಕಣ್ಣ ಹೊಳಹಿಗೆ ಗಮನದ ಉಜ್ಜುಗಕೆ ಸೋಲದವರು ಆರೆಂಬ ತೆರನಾಗೆ ಸಲಿಲದೊಳ್ ಕ್ರೀಡಿಸಿದರು ಅಂಗನೆಯರು=[ಬಾಲೆಯರ ಕಣ್ಣ ಹೊಳಪಿಗೆ, ಗಮನದ/ನೆಡೆಯುವ ಶೈಲಿಗೆ ಸೋಲದವರು ಯಾರು ಎಂಬ ರೀತಿಯಲ್ಲಿ, ಅಂಗನೆಯರು ಸರಸ್ಸಿನಲ್ಲಿ ಈಜಾಡಿದರು].
  • ತಾತ್ಪರ್ಯ:ಆ ಬಾಲಕಿಯರು, ಮೇಲಕ್ಕೆ ಚಿಗಿದು ತಲೆಕೆಳಗಾಗಿ ನೀರಿಗೆ ಬಿದ್ದಾಗ, ಅವರ ಆ ಬಾಲೆಯರ ವಿಶಾಲ ಕಣ್ಣುಗಳಿಗೆ ಸರಿಸಾಟಿಯಾಗದೆ (ನಾಚಿ), ಮೀನುಗಳು ಆಳಕ್ಕೆ ಮುಳುಗಿದುವು; ಅವರ ಈಜುವ ಗತಿಗಳ ಸೊಬಗುನ್ನು ಕಂಡು ಕಲಹಂಸಗಳು (ನಾಚಿ)ಕಾಲಿನಿಂದ ನಡೆಯಲು ಇಷ್ಟಪಡದೆ ಆಕಾಶಕ್ಕೆ ಹಾರಿದುವು; ಆ ಬಾಲೆಯರ ಕಣ್ಣ ಹೊಳಪಿಗೆ, ಗಮನದ/ನೆಡೆಯುವ ಶೈಲಿಗೆ ಸೋಲದವರು ಯಾರು ಎಂಬ ರೀತಿಯಲ್ಲಿ, ಅಂಗನೆಯರು ಸರಸ್ಸಿನಲ್ಲಿ ಈಜಾಡಿದರು.
  • (ಪದ್ಯ-೧೦)

ಪದ್ಯ:-:೧೧:[ಸಂಪಾದಿಸಿ]

ಶಿಖರಿ ದಶನ ದ್ಯುತಿಯ ಬೆಳ್ನಗೆಯ ಸೂಸಲೆನೆ |
ನಖ ರುಚಿಯ ತೆರಳಿಕೆಯ ಹೊರಳಿಯೆನೆ ಲೋಚನ ವಿ |
ಶಿಖಿದ ಮುಮ್ಮೊನೆವೊಗರ ಧಾಳಿಯೆನೆ ಹಾರಮಂ ಪರಿದು ಬೀರ್ದರೊ ಪೇಳೆನೆ ||
ಸಖಿಯರಂ ಕೂಡಿಕೊಂಡೊರ್ವರೊರ್ವರ್ಗೆ ಸ |
ಮ್ಮುಖವಾಗಿ ವಿಷಯೆ ಚಂಪಕಮಾಲಿನಿಯರಾಗ |
ಸುಖ ಜಲಕ್ರೀಡೆಯೊಳ್ ಚೆಲ್ವ ತಿಳಿನೀರ ತುಂತುರ್ವನಿಗಳೆಸೆದಿರ್ದುವು ||11||

ಪದವಿಭಾಗ-ಅರ್ಥ:
ಶಿಖರಿ (ದಾಳಿಂಬೆ ಬೀಜ) ದಶನ ದ್ಯುತಿಯ ಬೆಳ್ನಗೆಯ ಸೂಸಲು ಎನೆ ನಖ ರುಚಿಯ ತೆರಳಿಕೆಯ ಹೊರಳಿಯೆನೆ ಲೋಚನ ವಿಶಿಖಿದ ಮುಮ್ಮೊನೆವೊಗರ ಧಾಳಿಯೆನೆ ಹಾರಮಂ ಪರಿದು ಬೀರ್ದರೊ ಪೇಳೆನೆ=[ದಾಳಿಂಬೆ ಬೀಜದಂತಿರುವ ಹಲ್ಲುಗಳ ಕಾಂತಿಯ ಬಿಳಿನಗೆಯನ್ನು ಬೀರಲು ಎನ್ನುವಂತೆ, ಉಗುರಿನ ಹೊಳಪನ್ನು ಬೀರುವ ಸಾಲು ಸಾಲುಕಿರಣ ಎನ್ನುವಂತೆ, ಕಣ್ಣಿನ ನೋಟದ ಬಾಣಗಳ ತುದಿಯ ಹೊಳಪಿನ ಧಾಳಿ ಎನ್ನುವಂತೆ, ಮುತ್ತಿನ ಹಾರವನ್ನು ಹರಿದು ಬೀರಿದರೋ ಹೇಳು ಎನ್ನುವಂತೆ,];; ಸಖಿಯರಂ ಕೂಡಿಕೊಂಡು ಓರ್ವರು ಓರ್ವರ್ಗೆ ಸಮ್ಮುಖವಾಗಿ ವಿಷಯೆ ಚಂಪಕಮಾಲಿನಿಯರು ಆಗ ಸುಖ ಜಲಕ್ರೀಡೆಯೊಳ್ ಚೆಲ್ವ ತಿಳಿನೀರ ತುಂತುರ್ವನಿಗಳೆಸೆದಿರ್ದುವು=[ಸಖಿಯರನ್ನು ಕೂಡಿಕೊಂಡು ಒಬ್ಬರು ಮತ್ತೊಬ್ಬರಿಗೆ ಇರಿರುಬದಿರಾಗಿ ವಿಷಯೆ ಮತ್ತು ಚಂಪಕಮಾಲಿನಿಯರು ಆಗ ಸುಖವಾದ ಜಲಕ್ರೀಡೆಯಲ್ಲಿ ಎರಚುತ್ತಿರುವ ತಿಳಿನೀರಿನ ತುಂತುರು ಹನಿಗಳು ಹೊಳೆಯುತ್ತಿದ್ದವು.] (ಎಳೆದುಎಳೆದು ತಂದ ಉಪಮಾನ ಉಪಮೇಯಗಳು)
  • ತಾತ್ಪರ್ಯ:ದಾಳಿಂಬೆ ಬೀಜದಂತಿರುವ ಹಲ್ಲುಗಳ ಕಾಂತಿಯ ಬಿಳಿನಗೆಯನ್ನು ಬೀರಲು ಎನ್ನುವಂತೆ, ಉಗುರಿನ ಹೊಳಪನ್ನು ಬೀರುವ ಸಾಲು ಸಾಲುಕಿರಣ ಎನ್ನುವಂತೆ, ಕಣ್ಣಿನ ನೋಟದ ಬಾಣಗಳ ತುದಿಯ ಹೊಳಪಿನ ಧಾಳಿ ಎನ್ನುವಂತೆ, ಮುತ್ತಿನ ಹಾರವನ್ನು ಹರಿದು ಬೀರಿದರೋ ಹೇಳು ಎನ್ನುವಂತೆ, ಸಖಿಯರನ್ನು ಕೂಡಿಕೊಂಡು ಒಬ್ಬರು ಮತ್ತೊಬ್ಬರಿಗೆ ಇರಿರುಬದಿರಾಗಿ ವಿಷಯೆ ಮತ್ತು ಚಂಪಕಮಾಲಿನಿಯರು ಆಗ ಸುಖವಾದ ಜಲಕ್ರೀಡೆಯಲ್ಲಿ ಎರಚುತ್ತಿರುವ ತಿಳಿನೀರಿನ ತುಂತುರು ಹನಿಗಳು ಹೊಳೆಯುತ್ತಿದ್ದವು.] (ಎಳೆದುಎಳೆದು ತಂದ ಉಪಮಾನ ಉಪಮೇಯಗಳು-> ತುಂತುರು ಹನಿಗಳು)
  • (ಪದ್ಯ-೧೧)

ಪದ್ಯ:-:೧೨:[ಸಂಪಾದಿಸಿ]

ಮುದದಿಂದ ವಿಷಯೆ ಚಂಪಕಮಾಲಿನಿಯರೊಡನೆ |
ಸುದತಿಯರ್ ನಾನಾಪ್ರಕಾರಿಂದ ಕ್ರೀಡಿಸಿದ |
ರುದುಕದೊಳ್ ಬಳಿಕ ತಮ್ಮಾನನ ಶುಧಾಂಶು ಮಂಡಲ ಬೆಳ್ದಿಂಗಳಿಂದೆ ||
ಸದಮಲ ಸರೋವರದ ತೀರದೊಳ್ ಬಳಸಿ ಕ |
ಟ್ಟಿದ ಚಂದ್ರಕಾಂತ ಸೋಪಾನದೊಳೊಸರ್ವ ನೀ |
ರೊದವಿತೆನೆ ಮೈಗಳ್ಗೆ ತಣ್ಣಸಂ ತೋರಲಾ ಕೊಳದಿಂದೆ ಪೊರೆಮಟ್ಟರು ||12||

ಪದವಿಭಾಗ-ಅರ್ಥ:
ಮುದದಿಂದ ವಿಷಯೆ ಚಂಪಕಮಾಲಿನಿಯರೊಡನೆ ಸುದತಿಯರ್ ನಾನಾಪ್ರಕಾರಿಂದ ಕ್ರೀಡಿಸಿದರುದುಕದೊಳ್ ಬಳಿಕ ತಮ್ಮ ಆನನ ಶುಧಾಂಶು ಮಂಡಲ ಬೆಳ್ದಿಂಗಳಿಂದೆ=[ಸಂತೋಷದಿಂದ ವಿಷಯೆ ಮತ್ತು ಚಂಪಕಮಾಲಿನಿಯರೊಡನೆ ಬಾಲಕಿಯರು ನಾನಾಬಗೆಯಲ್ಲಿ ನೀರಿನಲ್ಲಿ ಆಡಿದರು. ಬಳಿಕ ತಮ್ಮ ಮುಖದ ಚಂದ್ರನ ಮಂಡಲದ ಬೆಳದಿಂಗಳಿಂದ ];; ಸದಮಲ ಸರೋವರದ ತೀರದೊಳ್ ಬಳಸಿ ಕಟ್ಟಿದ ಚಂದ್ರಕಾಂತ ಸೋಪಾನದೊಳೊಸರ್ವ ನೀರೊದವಿತೆನೆ ಮೈಗಳ್ಗೆ ತಣ್ಣಸಂ ತೋರಲಾ ಕೊಳದಿಂದೆ ಪೊರೆಮಟ್ಟರು=[ನಿರ್ಮಲ ಸರೋವರದ ತೀರದಲ್ಲಿ ಸುತ್ತಲೂ ಕಟ್ಟಿದ ಚಂದ್ರಕಾಂತ ಶಿಲೆಯ ಸೋಪಾನದಲ್ಲಿ ಒಸರುವ ನೀರು ಬಂದ ಹಾಗೆ ಅವರ ಮೈಗಳಿಗೆ ಚಳಿಯು ತೋರಲು ಕೊಳದಿಂದ ಹೊರೆಹೊರಟರು].
  • ತಾತ್ಪರ್ಯ:ಸಂತೋಷದಿಂದ ವಿಷಯೆ ಮತ್ತು ಚಂಪಕಮಾಲಿನಿಯರೊಡನೆ ಬಾಲಕಿಯರು ನಾನಾಬಗೆಯಲ್ಲಿ ನೀರಿನಲ್ಲಿ ಆಡಿದರು. ಬಳಿಕ ತಮ್ಮ ಮುಖದ ಚಂದ್ರನ ಮಂಡಲದ ಬೆಳದಿಂಗಳಿಂದಲೂ, ನಿರ್ಮಲ ಸರೋವರದ ತೀರದಲ್ಲಿ ಸುತ್ತಲೂ ಕಟ್ಟಿದ ಚಂದ್ರಕಾಂತ ಶಿಲೆಯ ಸೋಪಾನದಲ್ಲಿ ಒಸರುವ ನೀರು ಬಂದ ಹಾಗೆ, ಅವರ ಮೈಯ್ಯಲ್ಲಿ ಚಳಿಯು ತೋರಲು ಕೊಳದಿಂದ ಹೊರೆಹೊರಟರು].
  • (ಪದ್ಯ-೧೨)

ಪದ್ಯ:-:೧೩:[ಸಂಪಾದಿಸಿ]

ಕೂಲವನಡರ್ದು ನನೆದಂಗದೊಳ್ ಪೊತ್ತಿದ ದು |
ಕೂಲದೊಳಿರಲ್ಕೆ ತಾಪಸರ ದೃಢಮತಿಗೆ ಪ್ರತಿ |
ಕೂಲ ಕೃತಿಗಳೊ ಮೋಹನದ ರಸದೊಳಾರ್ದತೆಯನಾಂತ ಚೆಲ್ವಿನಕಣಿ(ಣೆ)ಗಳೊ ||
ಸಾಲ ಮಣಿಮಯದ ಸೋಪಾನದೊಳ್ ನಿಲಿಸಿರ್ದ |
ಸಾಲಭಂಜಿಕೆಗಳೊ ವಿಚಿತ್ರಮೆನೆ ರಂಜಿತ ರ |
ಸಾಲ ಪಲ್ಲವ ಪಾಣಿ ಪಾದ ತಳದಬಲೆಯರ ರೂಪುಗಳ್ ಕಣ್ಗೆಸೆದುವು ||13||

ಪದವಿಭಾಗ-ಅರ್ಥ:
ಕೂಲವನು ಅಡರ್ದು ನನೆದಂಗದೊಳ್ ಪೊತ್ತಿದ ದುಕೂಲದೊಳಿರಲ್ಕೆ ತಾಪಸರ ದೃಢಮತಿಗೆ ಪ್ರತಿಕೂಲ ಕೃತಿಗಳೊ ಮೋಹನದ ರಸದೊಳು ಆರ್ದತೆಯನು ಆಂತ ಚೆಲ್ವಿನಕಣೆಗಳೊ=[ಸರಸ್ಸಿನ ತೀರವನ್ನು ಸೇರಿ ನನೆದ ಮೈಯಲ್ಲಿ ಮೈಗೆ ಅಂಟಿದ ಬಟ್ಟೆಯಲ್ಲಿರಲು, ಅದು ತಪಸ್ವಿಗಳ ಗಟ್ಟಿಮನಸ್ಸಿಗೆ ಪ್ರತಿಕೂಲವಾದ ಕೃತಿಗಳೊ!, ಮೋಹನದ/ ಸೌದರ್ಯದ ರಸದ್ರವದ ಪಸೆಯನ್ನು ಹೊಂದಿರುವ ಚೆಲುವಿನ ಬಾಣಗಳೊ!(ಮನ್ಮಥನ ಬಾಣಗಳು)];; ಸಾಲ ಮಣಿಮಯದ ಸೋಪಾನದೊಳ್ ನಿಲಿಸಿರ್ದ ಸಾಲಭಂಜಿಕೆಗಳೊ ವಿಚಿತ್ರಮೆನೆ ರಂಜಿತ ರಸಾಲ ಪಲ್ಲವ ಪಾಣಿ ಪಾದ ತಳದಬಲೆಯರ ರೂಪುಗಳ್ ಕಣ್ಗೆಸೆದುವು=[ಮಣಿಮಯದ ಸೋಪಾನದಲ್ಲಿ ಸಾಲಾಗಿ ನಿಲ್ಲಿಸಿದ ಸಾಲಭಂಜಿಕೆಗಳೊ (ಶಿಲ್ಪದ ಹೆಣ್ಣು ಗೊಂಬೆಗಳು), ವಿಚಿತ್ರವೆನ್ನುವಂತೆ ಕೈಕಾಲು ಹೊಂದಿದ ಮನೋಹರವಾದ ಮಾವಿನಮರದ ಚಿಗುರಿನಂತೆ ಬಾಲಕಿಯರ ರೂಪುಗಳು ಕಣ್ಣಿಗೆ ತೋರಿದವು.]
  • ತಾತ್ಪರ್ಯ:ಸರಸ್ಸಿನ ತೀರವನ್ನು ಸೇರಿ ನನೆದ ಮೈಯಲ್ಲಿ ಮೈಗೆ ಅಂಟಿದ ಬಟ್ಟೆಯಲ್ಲಿರಲು, ಅದು ತಪಸ್ವಿಗಳ ಗಟ್ಟಿಮನಸ್ಸಿಗೆ ಪ್ರತಿಕೂಲವಾದ ಕೃತಿಗಳೊ!, ಮೋಹನದ/ ಸೌದರ್ಯದ ರಸದ್ರವದ ಪಸೆಯನ್ನು ಹೊಂದಿರುವ ಚೆಲುವಿನ ಬಾಣಗಳೊ!(ಮನ್ಮಥನ ಬಾಣಗಳು) ಮಣಿಮಯದ ಸೋಪಾನದಲ್ಲಿ ಸಾಲಾಗಿ ನಿಲ್ಲಿಸಿದ ಸಾಲಭಂಜಿಕೆಗಳೊ (ಶಿಲ್ಪದ ಹೆಣ್ಣು ಗೊಂಬೆಗಳು), ವಿಚಿತ್ರವೆನ್ನುವಂತೆ ಕೈಕಾಲು ಹೊಂದಿದ ಮನೋಹರವಾದ ಮಾವಿನಮರದ ಚಿಗುರಿನಂತೆ ಬಾಲಕಿಯರ ರೂಪುಗಳು ಕಣ್ಣಿಗೆ ತೋರಿದವು.
  • (ಪದ್ಯ-೧೩)

ಪದ್ಯ:-:೧೪:[ಸಂಪಾದಿಸಿ]

ಅದಟಿಂದೆ ಮನ್ಮಥಂ ತ್ರಿಜಗಮಂ ಗೆಲ್ವೆಡೆಯೊ |
ಳೊದವಿದ ಪಲವು ಕೈದುಗಳನಲ್ಲಿ ಜಾಡಿಸಿ ತೊ |
ಳೆದು ತೀರದೊಳ್ ನಿಲಿಸಿ ಮೇಲಣಿಂದೊರೆಗಳಂ ತುಡಿಸಿದನೊ ಪೇಳನಲ್ಕೆ ||
ಉದಕದಿಂ ಪೊರಮಟ್ಟು ನಿಂದ ನೀರೆಯರ ಕಾ |
ಯದ ಬಳಿಯೆ ನನೆದು ನಿಡಿದಾಗಿ ಮಿಡಿಪರಿಯಂತಿ |
ಳಿದು ಜೋಲ್ವ ಕೇಶಪಾಶಂಗಳಾರಾಜಿಸಿದುವೇನೆಂಬೆನಚ್ಚರಿಯನು ||14||

ಪದವಿಭಾಗ-ಅರ್ಥ:
ಅದಟಿಂದೆ ಮನ್ಮಥಂ ತ್ರಿಜಗಮಂ ಗೆಲ್ವೆ ಎಡೆಯೊಳು ಒದವಿದ ಪಲವು ಕೈದುಗಳನಲ್ಲಿ ಜಾಡಿಸಿ ತೊಳೆದು ತೀರದೊಳ್ ನಿಲಿಸಿ ಮೇಲಣಿಂದ ಒರೆಗಳಂ ತುಡಿಸಿದನೊ ಪೇಳು ಎನಲ್ಕೆ=[ಪರಾಕ್ರಮದಿಂದ ಮನ್ಮಥನು ಮೂರು ಜಗತ್ತನ್ನೂ ಗೆಲ್ಲುವ ಸಂಧರ್ಭದಲ್ಲಿ ಸಿಕ್ಕದ ಕೆಲವು ಆಯುಧಗಳನ್ನು ಇಲ್ಲಿ-ಕೊಳದಲ್ಲಿ ಜಾಲಾಡಿಸಿ ತೊಳೆದು ತೀರದಲ್ಲಿ ನಿಲ್ಲಿಸಿ ಅದರ ಮೇಲಿಂದ ಒರೆಗಳನ್ನು (ಕತ್ತಿಯ ಒರೆ/ಕೋಶ) ತೊಡಿಸಿದನೊ ಹೇಳು ಎನ್ನಲು];; ಉದಕದಿಂ ಪೊರಮಟ್ಟು ನಿಂದ ನೀರೆಯರ ಕಾಯದ ಬಳಿಯೆ ನನೆದು ನಿಡಿದಾಗಿ ಮಿಡಿ (ಹಿಮ್ಮಡಿ) ಪರಿಯಂತ ಇಳಿದು ಜೋಲ್ವ ಕೇಶಪಾಶಂಗಳು ಆರಾಜಿಸಿದುವು ಏನೆಂಬೆನು=[ನೀರಿನಿಂದ ಹೊರಬಂದು ನಿಂತ ಹುಡುಗಿಯರ ದೇಹಕ್ಕೆ ಹೊಂದಿಕೊಂಡು ನನೆದು ಉದ್ದವಾಗಿ ಹಿಮ್ಮಡಿ ಪರಿಯಂತ ಇಳಿದು ಜೋಲುವ ತಲೆಕೂದಲುಗಳು ಕಂಗೊಳಿಸಿದವು, ಏನು ಹೇಳಲಿ!].
  • ತಾತ್ಪರ್ಯ:ಪರಾಕ್ರಮದಿಂದ ಮನ್ಮಥನು ಮೂರು ಜಗತ್ತನ್ನೂ ಗೆಲ್ಲುವ ಸಂಧರ್ಭದಲ್ಲಿ ಸಿಕ್ಕದ ಕೆಲವು ಆಯುಧಗಳನ್ನು ಇಲ್ಲಿ-ಕೊಳದಲ್ಲಿ ಜಾಲಾಡಿಸಿ ತೊಳೆದು ತೀರದಲ್ಲಿ ನಿಲ್ಲಿಸಿ ಅದರ ಮೇಲಿಂದ ಒರೆಗಳನ್ನು (ಕತ್ತಿಯ ಒರೆ/ಕೋಶ) ತೊಡಿಸಿದನೊ ಹೇಳು ಎನ್ನಲು, ನೀರಿನಿಂದ ಹೊರಬಂದು ನಿಂತ ಹುಡುಗಿಯರ ದೇಹಕ್ಕೆ ಹೊಂದಿಕೊಂಡು ನನೆದು ಉದ್ದವಾಗಿ ಹಿಮ್ಮಡಿ ಪರಿಯಂತ ಇಳಿದು ಜೋಲುವ ತಲೆಕೂದಲುಗಳು ಕಂಗೊಳಿಸಿದವು, ಏನು ಹೇಳಲಿ!].(ಹುಡುಗಿಯರ ದೇಹ ಮನ್ಮಥನ ಕತ್ತಿ, ಉದ್ದ ಕೂದಲು ಅದರ ವರೆ)
  • (ಪದ್ಯ-೧೪)

ಪದ್ಯ:-:೧೫:[ಸಂಪಾದಿಸಿ]

ತೊಳಗುವ ನಿತಂಬ ಗಿರಿಯಿಂದಾಗಸಕೆ ಪರ್ಬಿ |
ದೆಳೆಯವಲ್ಲಿಯ ಮೇಲೆ ನೆಲಸಿದೆಣೆವಕ್ಕಿಗಳ್ |
ಬಳಿವಿಡಿದು ಮದನ ಶಬರನ ಬಲೆಗೆ ಸಿಕ್ಕಿ ನಭಕುಬ್ಬಿಕೊಂಡೇಳ್ವ ತೆರದೆ ||
ಸಲಿಲದೊಳ್ ನನೆದ ದೇವಾಂಗದೊಳಡರ್ದ ನೆಲೆ |
ಮೊಲೆಗಳಾರಾಜಿಸೆ ಮೃಗಾಕ್ಷಿಯರ ಚೆಲ್ವುನಿ |
ಚ್ಚಳದಿಂದೆ ಕಾಣಿಸಿತು ಕಾಸಾರ ತೀರದೊಳ್ ತೀರದೊಳ್ಪಿಂದೆ ಮೆರೆದು ||15||

ಪದವಿಭಾಗ-ಅರ್ಥ:
ತೊಳಗುವ ನಿತಂಬ ಗಿರಿಯಿಂದ ಆಗಸಕೆ ಪರ್ಬಿದ ಎಳೆಯವಲ್ಲಿಯ ಮೇಲೆ ನೆಲಸಿದ ಎಣೆವಕ್ಕಿಗಳ್ ಬಳಿವಿಡಿದು ಮದನ ಶಬರನ ಬಲೆಗೆ ಸಿಕ್ಕಿ ನಭಕೆ ಉಬ್ಬಿಕೊಂಡು ಏಳ್ವ ತೆರದೆ=[ಹೊಳೆಯುವ ನಿತಂಬದ ಗಿರಿಯಿಂದ ಆಗಸಕ್ಕೆ ಹಬ್ಬಿದ ಎಳೆಯಬಳ್ಳಿಯ ಮೇಲೆ ಇರುವ ಚಕ್ರವಾಕಪಕ್ಷಿಗಳು, ಕೆಳಗೆ ಇಳಿದು ಮದನ/ ಮನ್ಮಥನೆಂಬ ಶಬರ/ ಬೇಡನ ಬಲೆಗೆ ಸಿಕ್ಕಿ, ಆಕಾಶಕ್ಕೆ ಉಬ್ಬಿಕೊಂಡು ಏಳುವ ರೀತಿಯಲ್ಲಿ];; ಸಲಿಲದೊಳ್ ನನೆದ ದೇವಾಂಗದೊಳು ಅಡರ್ದ ನೆಲೆಮೊಲೆಗಳು ಆರಾಜಿಸೆ ಮೃಗಾಕ್ಷಿಯರ ಚೆಲ್ವು ನಿಚ್ಚಳದಿಂದೆ ಕಾಣಿಸಿತು ಕಾಸಾರ ತೀರದೊಳ್ ತೀರದ ಒಳ್ಪಿಂದೆ (ಒಳ್ಪು: ಚಲುವು,ಚಲುವಿನಿಂದ) ಮೆರೆದು=[ಕೊಳದಲ್ಲಿ ನನೆದ ದಿವ್ಯವಾದ ದೇಹದಲ್ಲಿ ಹೊಂದಿಕೊಂಡು ನೆಲೆಸಿರುವ ಮೊಲೆಗಳು ಶೋಭಿಸಲು, ಸರೋವರದ ತೀರದಲ್ಲಿ ಸಾಕೆನಿಸದ ಚಲುವಿನಿಂದ ಮೆರೆದು ಮೃಗಾಕ್ಷಿಯರ ಚೆಲುವು ಪೂರ್ಣವಾಗಿ ಕಾಣಿಸಿತು.]
  • ತಾತ್ಪರ್ಯ:ಹೊಳೆಯುವ ನಿತಂಬದ ಗಿರಿಯಿಂದ ಆಗಸಕ್ಕೆ ಹಬ್ಬಿದ ಎಳೆಯಬಳ್ಳಿಯ ಮೇಲೆ ಇರುವ ಚಕ್ರವಾಕಪಕ್ಷಿಗಳು, ಕೆಳಗೆ ಇಳಿದು ಮದನ/ ಮನ್ಮಥನೆಂಬ ಶಬರ/ ಬೇಡನ ಬಲೆಗೆ ಸಿಕ್ಕಿ, ಆಕಾಶಕ್ಕೆ ಉಬ್ಬಿಕೊಂಡು ಏಳುವ ರೀತಿಯಲ್ಲಿ ಕೊಳದಲ್ಲಿ ನನೆದ ದಿವ್ಯವಾದ ದೇಹದಲ್ಲಿ ಹೊಂದಿಕೊಂಡು ನೆಲೆಸಿರುವ ಮೊಲೆಗಳು ಶೋಭಿಸಲು, ಸರೋವರದ ತೀರದಲ್ಲಿ ಸಾಕೆನಿಸದ ಚಲುವಿನಿಂದ ಮೆರೆದು ಮೃಗಾಕ್ಷಿಯರ/ಬಾಲಕಿಯರ ಚೆಲುವು ಪೂರ್ಣವಾಗಿ ಕಾಣಿಸಿತು.
  • (ಪದ್ಯ-೧೫)XVI

ಪದ್ಯ:-:೧೬:[ಸಂಪಾದಿಸಿ]

ಹಿಮದಿಂದೆ ತಣ್ಣಸಂಪಡೆದಿರ್ದ ಮಾಗಿಯಂ |
ಕ್ರಮದಿಂದೆ ಜಾರಿಸಿ ವಸಂತರ್ತು ತಲೆದೋರ್ಪ |
ಸಮಯದವೊಲೇಣಾಕ್ಷಿಯರ್ ನನೆದ ಮೈಯೊಳಿಹ ವಸನಂಗಳಂ ಸಡಿಲ್ಚಿ ||
ರಮಣೀಯ ಚಿತ್ರಾವಲಂಬನದ ಶೋಭೆಗಳ |
ಸಮನಿಸಿದ ಚಂದ್ರಿಕೆಯ ಸೊಗಸುವೆಳೆಮಾದಳದ |
ಸುಮನೋನುರಾಗದಿಂ ಫಲವು ಬಣ್ಣಂಗಳಂ ತೆಗೆದುಟ್ಟು ರಂಜಿಸಿದರು ||16||

ಪದವಿಭಾಗ-ಅರ್ಥ:
ಹಿಮದಿಂದೆ ತಣ್ಣಸಂ ಪಡೆದಿರ್ದ ಮಾಗಿಯಂ ಕ್ರಮದಿಂದೆ ಜಾರಿಸಿ ವಸಂತರ್ತು ತಲೆದೋರ್ಪ ಸಮಯದವೊಲ್ ಏಣಾಕ್ಷಿಯರ್ ನನೆದ ಮೈಯೊಳಿಹ ವಸನಂಗಳಂ ಸಡಿಲ್ಚಿ=[ಚಳಿಗಾಲದ ಹಿಮದಿಂದ ತಂಪನ್ನು ಪಡೆದಿದ್ದ ಮಾಗಿಯಕಾಲವನ್ನು ಮೆಲ್ಲಗೆ ಹಿಂದೆಸರಿಸಿ ವಸಂತಋತು ತಲೆದೋರುವ ಸಮಯದಂತೆ ಜಿಂಕೆಯ ಕಣ್ಣಿನಬಾಲೆಯರು ನೆನೆದ ಮೈಯ್ಯಲ್ಲಿದ್ದ ಬಟ್ಟೆಗಳನ್ನು ಸಡಿಲಿಸಿ];; ರಮಣೀಯ ಚಿತ್ರಾವಲಂಬನದ ಶೋಭೆಗಳ ಸಮನಿಸಿದ ಚಂದ್ರಿಕೆಯ ಸೊಗಸುವ ಎಳೆಮಾದಳದ ಸುಮನೋನುರಾಗದಿಂ ಫಲವು ಬಣ್ಣಂಗಳಂ ತೆಗೆದುಟ್ಟು ರಂಜಿಸಿದರು=[ಮನೋಹರವಾದ ಚಿತ್ರಗಳನ್ನುಳ್ಳ ಶೋಭೆಗಳಿಂದ ಕೂಡಿದ ಬೆಳುದಿಂಗಳಂತೆ ಸೊಗಸಿನಿಂದಕೂಡಿದ ಎಳೆಮಾದಳಹಣ್ಣಿನ ಮತ್ತು ಹೂವುಗಳ ಹಲವು ಬಣ್ಣಗಳ ಬಟ್ಟೆಗಳನ್ನು ತೆಗೆದುಕೊಂಡು ಧರಿಸಿ ಚಂದಕಂಡರು.]
  • ತಾತ್ಪರ್ಯ:ಚಳಿಗಾಲದ ಹಿಮದಿಂದ ತಂಪನ್ನು ಪಡೆದಿದ್ದ ಮಾಗಿಯಕಾಲವನ್ನು ಮೆಲ್ಲಗೆ ಹಿಂದೆಸರಿಸಿ ವಸಂತಋತು ತಲೆದೋರುವ ಸಮಯದಂತೆ ಜಿಂಕೆಯ ಕಣ್ಣಿನಬಾಲೆಯರು ನೆನೆದ ಮೈಯ್ಯಲ್ಲಿದ್ದ ಬಟ್ಟೆಗಳನ್ನು ಸಡಿಲಿಸಿ ಮನೋಹರವಾದ ಚಿತ್ರಗಳನ್ನುಳ್ಳ ಶೋಭೆಗಳಿಂದ ಕೂಡಿದ ಬೆಳುದಿಂಗಳಂತೆ ಸೊಗಸಿನಿಂದಕೂಡಿದ ಎಳೆಮಾದಳಹಣ್ಣಿನ ಮತ್ತು ಹೂವುಗಳ ಹಲವು ಬಣ್ಣಗಳ ಬಟ್ಟೆಗಳನ್ನು ತೆಗೆದುಕೊಂಡು ಧರಿಸಿ ಚಂದಕಂಡರು.
  • (ಪದ್ಯ-೧೬)

ಪದ್ಯ:-:೧೭:[ಸಂಪಾದಿಸಿ]

ತಡಿಗಡರ್ದೊಡನೆ ಮಡಿವರ್ಗಮಂ ತೆಗೆದುಟ್ಟು |
ನಿಡುಗುರುಳ್ಗೆಸೆವ ಧೂಪದ ಪೊಗೆಗಳಂ ಕೊಟ್ಟು |
ತೊಡವೆಲ್ಲಮಂ ತೊಟ್ಟು ಪಣೆಗೆ ತಿಲಕಮನಿಟ್ಟು ತಿಗುರಿಂದೆ ಸೊಬಗುಮಟ್ಟು ||
ಅಡಿಗಲತಿಗೆಯನಕ್ಷಿಗಂಜನವನಲರ್ಗಳಂ |
ಮುಡಿಗೆ ನುಣ್ಗದಪಿಂಗೆ ಮಕರ ಪತ್ರಮನಾಂತು |
ಬಿಡದೆ ಮಧುಪಾನಮಂ ಮಾಡಿ ಕಪ್ಪುರವೀಳೆಯಂಗೊಂಡು ಸೊಗಯಿಸಿದರು ||17||

ಪದವಿಭಾಗ-ಅರ್ಥ:
ತಡಿಗೆ ಅಡರ್ದು ಒಡನೆ ಮಡಿವರ್ಗಮಂ (ಬಟ್ಟೆ) ತೆಗೆದುಟ್ಟು ನಿಡುಗುರುಳ್ಗೆ ಎಸೆವ ಧೂಪದ ಪೊಗೆಗಳಂ ಕೊಟ್ಟು ತೊಡವೆ ಎಲ್ಲಮಂ ತೊಟ್ಟು ಪಣೆಗೆ ತಿಲಕಮನು ಇಟ್ಟು ತಿಗುರಿಂದೆ (ಗಂಧಲೇಪನ)ಸೊಬಗುಮಟ್ಟು=[ದಡಕ್ಕೆ ಬಂದು ಕೂಡಲೆ ಬಟ್ಟೆನ್ನು ತೆಗೆದುಕೊಂಡು ಧರಿಸಿ, ಉದ್ದ ಕುರುಳಿಗೆ/ಕೂದಲಿಗೆ ಶೋಭಿಸುವ ಧೂಪದ ಹೊಗೆಕೊಟ್ಟು, ತೊಡವೆ/ ಎಲ್ಲ ಆಭರಣವನ್ನೂ ತೊಟ್ಟು, ಹಣೆಗೆ ತಿಲಕಮನ್ನು ಇಟ್ಟುಕೊಂಡು, ತಿಗುರು/ಗಂಧಲೇಪನದಿಂದ ಸೊಬಗುಪಡೆದು,];;ಅಡಿಗೆ (ಅಡಿ:ಪಾದ) ಅಲತಿಗೆಯನು ಅಕ್ಷಿಗೆ ಅಂಜನವನು ಅಲರ್ಗಳಂ ಮುಡಿಗೆ ನುಣ್(ದ) ಕದಪಿಂಗೆ ಮಕರ ಪತ್ರಮನಾಂತು ಬಿಡದೆ ಮಧುಪಾನಮಂ ಮಾಡಿ ಕಪ್ಪುರವೀಳೆಯಂಗೊಂಡು ಸೊಗಯಿಸಿದರು=[ಪಾದಕ್ಕೆ ಕೆಂಪು ಅಲತಿಗೆಯ ರಸವನ್ನು ಹಚ್ಚಿಕೊಂಡು, ಕಣ್ಣಿಗೆ ಕಾಡಿಗೆಯನ್ನು ಹಚ್ಚಿ, ಹೂವುಗಳನ್ನು ಮುಡಿಗೆ ಮುಡಿದು, ನುಣ್ಣನೆಯ ಕೆನ್ನಗೆ ಮಕರಪತ್ರವನ್ನು ಹಾಕಿ, ಮತ್ತೆ ಮಧುಪಾನವನ್ನು ಮಾಡಿ ಪಚ್ಚಕರ್ಪುರ ವೀಳೆಯಗಳನ್ನು ತಿಂದು ಸೊಗಸಾಗಿ ತೋರಿದರು ].
  • ತಾತ್ಪರ್ಯ:ದಡಕ್ಕೆ ಬಂದು ಕೂಡಲೆ ಬಟ್ಟೆನ್ನು ತೆಗೆದುಕೊಂಡು ಧರಿಸಿ, ಉದ್ದ ಕುರುಳಿಗೆ/ಕೂದಲಿಗೆ ಶೋಭಿಸುವ ಧೂಪದ ಹೊಗೆಕೊಟ್ಟು, ತೊಡವೆ/ ಎಲ್ಲ ಆಭರಣವನ್ನೂ ತೊಟ್ಟು, ಹಣೆಗೆ ತಿಲಕಮನ್ನು ಇಟ್ಟುಕೊಂಡು, ತಿಗುರು/ಗಂಧಲೇಪನದಿಂದ ಸೊಬಗುಪಡೆದು, ಪಾದಕ್ಕೆ ಕೆಂಪು ಅಲತಿಗೆಯ ರಸವನ್ನು ಹಚ್ಚಿಕೊಂಡು, ಕಣ್ಣಿಗೆ ಕಾಡಿಗೆಯನ್ನು ಹಚ್ಚಿ, ಹೂವುಗಳನ್ನು ಮುಡಿಗೆ ಮುಡಿದು, ನುಣ್ಣನೆಯ ಕೆನ್ನಗೆ ಮಕರಪತ್ರವನ್ನು ಹಾಕಿ, ಮತ್ತೆ ಮಧುಪಾನವನ್ನು ಮಾಡಿ ಪಚ್ಚಕರ್ಪುರ ವೀಳೆಯಗಳನ್ನು ತಿಂದು ಸೊಗಸಾಗಿ ತೋರಿದರು.
  • (ಪದ್ಯ-೧೭)

ಪದ್ಯ:-:೧೮:[ಸಂಪಾದಿಸಿ]

ಬಳಿಕೊರ್ವರೊರ್ವರಂ ನೋಡುತ್ತೆ ದೂಡುತ್ತೆ |
ನಲವಿಂದೆ ನೃತ್ತಮಂ ಮಾಡುತ್ತೆ ಪಾಡುತ್ತೆ |
ಬಳಸಿ ಸರಸೋಕ್ತಿಗಳನಾಡುತ್ತೆ ತೀಡುತ್ತೆ ಬೆಳ್ನಗೆಯ ಬೆಡಗುಗಳನು ||
ಅಲರ್ಗಳಂ ತೆಗೆತೆಗೆದು ನೀಡುತ್ತೆ ಸೂಡುತ್ತೆ |
ಲಲಿತ ಮಧು ಚಷಕಮಂ ಬೇಡುತ್ತೆ ಕಾಡುತ್ತೆ |
ಕಲೆಗಳ ವಿಲಾಸಮಂ ಪೂಡುತ್ತೆ ಕೂಡುತ್ತೆ ಕಣ್ಗೆಸೆದರೆಳೆವೆಣ್ಗಳು ||18||

ಪದವಿಭಾಗ-ಅರ್ಥ:
ಬಳಿಕ ಒರ್ವರು ಒರ್ವರಂ ನೋಡುತ್ತೆ ದೂಡುತ್ತೆ ನಲವಿಂದೆ ನೃತ್ತಮಂ ಮಾಡುತ್ತೆ ಪಾಡುತ್ತೆ ಬಳಸಿ ಸರಸೋಕ್ತಿಗಳನು ಆಡುತ್ತೆ ತೀಡುತ್ತೆ ಬೆಳ್ನಗೆಯ ಬೆಡಗುಗಳನು=[ಬಳಿಕ ಒಬ್ಬರು ಒಬ್ಬರನ್ನು ನೋಡುತ್ತ, ದೂಡುತ್ತ, ಸಂತಸದಿಂದ ನೃತ್ಯವನ್ನು ಮಾಡುತ್ತ, ಹಾಡುತ್ತ, ಸರಸದ ಹಾಸ್ಯದ ಮಾತುಗಳನ್ನು ಬಳಸಿ ಆಡುತ್ತಾ, ಬೆಳುನೆಗೆಯ ಬೆಡಗುಗಳನು ಪರಸ್ಪರ ತೀಡುತ್ತಾ,];; ಅಲರ್ಗಳಂ ತೆಗೆತೆಗೆದು ನೀಡುತ್ತೆ ಸೂಡುತ್ತೆ ಲಲಿತ ಮಧು ಚಷಕಮಂ ಬೇಡುತ್ತೆ ಕಾಡುತ್ತೆ ಕಲೆಗಳ ವಿಲಾಸಮಂ ಪೂಡುತ್ತೆ ಕೂಡುತ್ತೆ ಕಣ್ಗೆಸೆದರು ಎಳೆವೆಣ್ಗಳು=[ಹೂವುಗಳನ್ನು ತೆಗೆದು ತೆಗೆದು ನೀಡುತ್ತಾ, ಅವನ್ನು ಸೂಡುತ್ತಾ, ಲಲಿತ ಮಧು ಬಟ್ಟಲನ್ನು ಕೊಡು ಎಂದು ಬೇಡುತ್ತಾ - ಕಾಡುತ್ತಾ, ಕಲೆಗಳ ವಿಲಾಸವನ್ನು ಆಟವನ್ನು ಹೂಡುತ್ತಾ, ಪರಸ್ಪರ ಕೂಡುತ್ತ ಕಣ್ನಿಗೆ ಶೋಭೆಯಾಗಿ ಕಂಡರು.].
  • ತಾತ್ಪರ್ಯ:ಬಳಿಕ ಒಬ್ಬರು ಒಬ್ಬರನ್ನು ನೋಡುತ್ತ, ದೂಡುತ್ತ, ಸಂತಸದಿಂದ ನೃತ್ಯವನ್ನು ಮಾಡುತ್ತ, ಹಾಡುತ್ತ, ಸರಸದ ಹಾಸ್ಯದ ಮಾತುಗಳನ್ನು ಬಳಸಿ ಆಡುತ್ತಾ, ಬೆಳುನೆಗೆಯ ಬೆಡಗುಗಳನು ಪರಸ್ಪರ ತೀಡುತ್ತಾ, ಹೂವುಗಳನ್ನು ತೆಗೆದು ತೆಗೆದು ನೀಡುತ್ತಾ, ಅವನ್ನು ಸೂಡುತ್ತಾ, ಲಲಿತ ಮಧು ಬಟ್ಟಲನ್ನು ಕೊಡು ಎಂದು ಬೇಡುತ್ತಾ - ಕಾಡುತ್ತಾ, ಕಲೆಗಳ ವಿಲಾಸವನ್ನು ಆಟವನ್ನು ಹೂಡುತ್ತಾ, ಪರಸ್ಪರ ಕೂಡುತ್ತ ಕಣ್ನಿಗೆ ಶೋಭೆಯಾಗಿ ಕಂಡರು.].
  • (ಪದ್ಯ-೧೮)

ಪದ್ಯ:-:೧೯:[ಸಂಪಾದಿಸಿ]

ಆಳಿಯರೊಳಿಂತು ಚಂಪಕಮಾಲಿನಿಗೆ ಸರಸ |
ಕೇಳಿ ವೆಗ್ಗಳಿಸಿರ್ದ ಸಮಯದೊಳಲರ್ಗೊಯ್ವ |
ಬೇಳಂಬದಿಂದೆ ಕೆಲಸಿಡಿದು ಬಂದಾ ವಿಷಯೆ ಚೂತದ್ರುಮದ ನೆಳಲೊಳು ||
ತೋಳ ತಲೆಗಿಂಬಿನ ತಳಿರ್ವಸೆಯ ಮೇಲೆ ತಂ |
ಗಾಳಿಗೊಡ್ಡಿದ ಮೆಯ್ಯ ಸೊಗಸಿಂದೆ ಮರೆದು ನಿ |
ದ್ರಾಲೋಲನಾಗಿ ಮಲಗಿಹ ಚಂದ್ರಹಾಸನಂ ಕಂಡು ಸೈವೆರಗಾದಳು ||19||

ಪದವಿಭಾಗ-ಅರ್ಥ:
ಆಳಿಯರೊಳು (ಗೆಳತಿಯರೊಳು) ಇಂತು ಚಂಪಕಮಾಲಿನಿಗೆ ಸರಸಕೇಳಿ ವೆಗ್ಗಳಿಸಿರ್ದ (ವೆಗ್ಗಳ-ಹೆಗ್ಗಳ:ಹೆಚ್ಚು) ಸಮಯದೊಳು ಅಲರ್ಗೊಯ್ವ ಬೇಳಂಬದಿಂದೆ ಕೆಲಸಿಡಿದು ಬಂದ ಆ ವಿಷಯೆ=[ಗೆಳತಿಯರೊಳು ಹಿಗೆ ಚಂಪಕಮಾಲಿನಿಗೆ ಸರಸದ ಆಟ ಹೆಚ್ಚಾಗಿದ್ದ ಸಮಯದಲ್ಲಿ, ಹೂವು ಕೊಯ್ಯವ ಬಯಕೆಯಿಂದೆ ಅಲ್ಲಿಂದ ದೂರ ಸರಿದುಬಂದ ಆ ವಿಷಯೆ];;ಚೂತದ್ರುಮದ ನೆಳಲೊಳು ತೋಳ ತಲೆಗಿಂಬಿನ ತಳಿರ್ವಸೆಯ (ಚಿಗರುಎಲೆಯ ಹಾಸಿನ) ಮೇಲೆ ತಂಗಾಳಿಗೊಡ್ಡಿದ ಮೆಯ್ಯ ಸೊಗಸಿಂದೆ ಮರೆದು ನಿದ್ರಾಲೋಲನಾಗಿ ಮಲಗಿಹ ಚಂದ್ರಹಾಸನಂ ಕಂಡು ಸೈವೆರಗಾದಳು=[ ಮಾವಿನಮರದ ನೆರಳಲಲ್ಲಿ ತೋಳನ್ನು ತಲೆಗಿಂಬಾಗಿ ಇಟ್ಟುಕೊಂಡು ಚಿಗರುಎಲೆಯ ಹಾಸಿನ ಮೇಲೆ ತಂಗಾಳಿಗೊಡ್ಡಿದ ಮಯ್ಯ ಸೊಗಸಿನಿಂದ ಮೈಮರೆತು ನಿದ್ದೆಯಲ್ಲಿ ಮುಳುಗಿ ಮಲಗಿರುವ ಚಂದ್ರಹಾಸನನ್ನು ಕಂಡು ಅತ್ಯಾಶ್ಚರ್ಯದಿಂದ ದಿಗ್ಬ್ರಮೆಗೊಂಡಳು.]
  • ತಾತ್ಪರ್ಯ:ಗೆಳತಿಯರೊಳು ಹಿಗೆ ಚಂಪಕಮಾಲಿನಿಗೆ ಸರಸದ ಆಟ ಹೆಚ್ಚಾಗಿದ್ದ ಸಮಯದಲ್ಲಿ, ಹೂವು ಕೊಯ್ಯವ ಬಯಕೆಯಿಂದೆ ಅಲ್ಲಿಂದ ದೂರ ಸರಿದುಬಂದ ಆ ವಿಷಯೆ, ಮಾವಿನಮರದ ನೆರಳಲಲ್ಲಿ ತೋಳನ್ನು ತಲೆಗಿಂಬಾಗಿ ಇಟ್ಟುಕೊಂಡು ಚಿಗರುಎಲೆಯ ಹಾಸಿನ ಮೇಲೆ ತಂಗಾಳಿಗೊಡ್ಡಿದ ಮಯ್ಯ ಸೊಗಸಿನಿಂದ ಮೈಮರೆತು ನಿದ್ದೆಯಲ್ಲಿ ಮುಳುಗಿ ಮಲಗಿರುವ ಚಂದ್ರಹಾಸನನ್ನು ಕಂಡು ಅತ್ಯಾಶ್ಚರ್ಯದಿಂದ ದಿಗ್ಬ್ರಮೆಗೊಂಡಳು.
  • (ಪದ್ಯ-೧೯)

ಪದ್ಯ:-:೨೦:[ಸಂಪಾದಿಸಿ]

ಲೋಕತ್ರಯಂ ತನಗೆ ವಶವರ್ತಿಯಾದುದಿ |
ನ್ನೇಕೆ ಧಾವತಿಯೆಂದು ಸುಖದಿಂದೆ ಪವಡಿಸಿದ |
ನೋ ಕಬ್ಬುವಿಲ್ಲನೆನೆ ಬೇಸರದೆ ಬಾಂದಳದೊಳಾವಗಂ ನಡೆವ ಬವಣಿ ||
ಸಾಕೆಂದು ನಿದ್ರೆಗೈದನೊ ಸೋಮನೆನೆ ವನ |
ಶ್ರೀ ಕಾಮಿನಿಯರತಿಶ್ರಮದೊಳೊರಗಿದನೊ ಕುಸು |
ಮಾಕರನೆನಲ್ಕೆ ಮಲಗಿಹ ಚಂದ್ರಹಾಸನಂ ಕಂಡು ವಿಸ್ಮಿತೆಯಾದಳು ||20||

ಪದವಿಭಾಗ-ಅರ್ಥ:
ಲೋಕತ್ರಯಂ ತನಗೆ ವಶವರ್ತಿಯಾದು ಇದಿನ್ನೇಕೆ ಧಾವತಿಯೆಂದು ಸುಖದಿಂದೆ ಪವಡಿಸಿದನೋ ಕಬ್ಬುವಿಲ್ಲನು ಕಬ್ಬನ್ನು ಬಿಲ್ಲಾಗಿ ಉಳ್ಲವನು ಮನ್ಮಥ) ಎನೆ,=[ಮೂರು ಲೋಕವೂ ತನಗೆ ವಶವರ್ತಿಯಾಯಿತು, ಇದು ಇನ್ನು ಏಕೆ ಅವಸರವೆಂದು ಸುಖದಿಂದೆ ಮಲಗಿದನೋ ಮನ್ಮಥನು ಎನ್ನುವಂತೆ,];; ಬೇಸರದೆ ಬಾಂದಳದೊಳು ಆವಗಂ ನಡೆವ ಬವಣಿ ಸಾಕೆಂದು ನಿದ್ರೆಗೈದನೊ ಸೋಮನು ಎನೆ, ವನಶ್ರೀ ಕಾಮಿನಿಯ ರತಿಶ್ರಮದೊಳು ಒರಗಿದನೊ ಕುಸುಮಾಕರನು(ವಸಂತ:ವಸಂತಕಾದ ಅಧಿಪತಿ) ಎನಲ್ಕೆ=[(ಬೇಸರದಿಂದ->) ಆಕಾಶದಲ್ಲಿ ಯಾವಾಗಲೂ ಸಂಚರಿಸುವ ಶ್ರಮ ಸಾಕೆಂದು ಬೇಸರದಿಂದ ಚಂದ್ರನು ನಿದ್ದೆಮಾಡಿದನೊ ಎನ್ನುವಂತೆ, ವನಶ್ರೀ ಕಾಮಿನಿಯ/ವನದೇವತೆಯೊಡನೆ ರತಿಕ್ರೀಡೆಯಿಂದ ಆಯಾಸಪಟ್ಟು ವಸಂತನು ಮಲುಗಿರುವನೊ ಎನ್ನುವಂತೆ];; ಮಲಗಿಹ ಚಂದ್ರಹಾಸನಂ ಕಂಡು ವಿಸ್ಮಿತೆಯಾದಳು=[ಮಲಗಿರುವ ಚಂದ್ರಹಾಸನನ್ನು ಕಂಡು ವಿಷಯೆ ಆಶ್ಚರ್ಯಚಕಿತಳಾದಳು].
  • ತಾತ್ಪರ್ಯ:ಮೂರು ಲೋಕವೂ ತನಗೆ ವಶವರ್ತಿಯಾಯಿತು, ಇನ್ನು ಏಕೆ ಅವಸರವೆಂದು, ಸುಖದಿಂದೆ ಮಲಗಿದನೋ ಮನ್ಮಥನು ಎನ್ನುವಂತೆ, ಆಕಾಶದಲ್ಲಿ ಯಾವಾಗಲೂ ಸಂಚರಿಸುವ ಶ್ರಮ ಸಾಕೆಂದು ಬೇಸರದಿಂದ ಚಂದ್ರನು ನಿದ್ದೆಮಾಡಿದನೊ ಎನ್ನುವಂತೆ, ವನಶ್ರೀ ಕಾಮಿನಿಯ/ವನದೇವತೆಯೊಡನೆ ರತಿಕ್ರೀಡೆಯಿಂದ ಆಯಾಸಪಟ್ಟು ವಸಂತನು ಮಲುಗಿರುವನೊ ಎನ್ನುವಂತೆ, ಮಲಗಿರುವ ಚಂದ್ರಹಾಸನನ್ನು ಕಂಡು ವಿಷಯೆ ಆಶ್ಚರ್ಯಚಕಿತಳಾದಳು.
  • (ಪದ್ಯ-೨೦)

ಪದ್ಯ:-:೨೧:[ಸಂಪಾದಿಸಿ]

ಒರ್ವರೊರ್ವರನಗಲ್ದಶ್ವಿನೀದೇವತೆಗ |
ಳುರ್ವ ನಳಕೂಬರ ಜಯಂತಾದಿ ಸುರ ತನುಜ |
ರುರ್ವರೆಗದೇಕೆ ಬಹರಿನಸಶಿಗಳಾದೊಡಿಹವುಷ್ಣಶೀತ ದ್ಯುತಿಗಳು ||
ಗೀರ್ವಾಣ ಯಕ್ಷ ಕಿನ್ನರ ಸಿದ್ಧ ಗರುಡ ಗಂ |
ಧರ್ವರೋಲಗಾವನೋ ಮನುಜನಲ್ಲೆಂದವನ |
ಸರ್ವಾಂಗಮಂ ಬಿಡದೆ ನೋಡಿದಳ್ ವಿಷಯೆ ವಿಷಯಾಸಕ್ತೆಯಾಗಿ ಬಳಿಕ ||21||

ಪದವಿಭಾಗ-ಅರ್ಥ:
ಒರ್ವರು ಒರ್ವರನು ಅಗಲ್ದ ಅಶ್ವಿನೀದೇವತೆಗಳು ಉರ್ವ ನಳಕೂಬರ ಜಯಂತಾದಿ ಸುರ ತನುಜರು ಉರ್ವರೆಗೆ ಅದೇಕೆ ಬಹರು ಇನಸಶಿಗಳಾದೊಡೆ ಇಹವುಷ್ಣಶೀತ ದ್ಯುತಿಗಳು=[ಪುರುಷ ಸೌಂದರ್ಯದಲ್ಲಿ ಪ್ರಸಿದ್ಧರಾದ, ಒಬ್ಬರನ್ನೊಬ್ಬರು ಅಗಲಿರುವ ಭೂಮಿಗೆ ಬಂದ ಅಶ್ವಿನೀದೇವತೆಗಳಲ್ಲಿ ಒಬ್ಬನೇ? ನಳಕೂಬರ ಜಯಂತಾದಿ ದೇವತೆಗಳ ಮಕ್ಕಳು ಭೂಮಿಗೆ ಅದೇಕೆ ಬರುವರು? ಸೂರ್ಯ ಚಂದ್ರರು ಆದರೆ ಉಷ್ಣ ಶೀತ ಕಾಂತಿಗಳು ಇರುವುವುವು];;ಗೀರ್ವಾಣ ಯಕ್ಷ ಕಿನ್ನರ ಸಿದ್ಧ ಗರುಡ ಗಂಧರ್ವರೋಲಗಾವನೋ ಮನುಜನಲ್ಲೆಂದವನ ಸರ್ವಾಂಗಮಂ ಬಿಡದೆ ನೋಡಿದಳ್ ವಿಷಯೆ ವಿಷಯಾಸಕ್ತೆಯಾಗಿ ಬಳಿಕ=[ಗೀರ್ವಾಣ ಯಕ್ಷ ಕಿನ್ನರ ಸಿದ್ಧ ಗರುಡ ಗಂಧರ್ವರಲ್ಲಿ ಯಾವನೋ! ಇವನು ಮನುಷ್ಯನಲ್ಲ ಎಂದು ನಿಶ್ಚಯಿಸಿ, ಬಳಿಕ ವಿಷಯೆ ಮೋಹಕ್ಕೊಳಗಾಗಿ ಅವನ ಸರ್ವಾಂಗವನ್ನೂ ಬಿಡದೆ ನೋಡಿದಳು.]
  • ತಾತ್ಪರ್ಯ: ಮರದ ಕೆಳಗೆ ಮಲಗಿದ ಇವನು, ಪುರುಷ ಸೌಂದರ್ಯದಲ್ಲಿ ಪ್ರಸಿದ್ಧರಾದ, ಒಬ್ಬರನ್ನೊಬ್ಬರು ಅಗಲಿರುವ ಭೂಮಿಗೆ ಬಂದ ಅಶ್ವಿನೀದೇವತೆಗಳಲ್ಲಿ ಒಬ್ಬನೇ? ನಳಕೂಬರ ಜಯಂತಾದಿ ದೇವತೆಗಳ ಮಕ್ಕಳು ಭೂಮಿಗೆ ಅದೇಕೆ ಬರುವರು? ಸೂರ್ಯ ಚಂದ್ರರು ಆದರೆ ಉಷ್ಣ ಶೀತ ಕಾಂತಿಗಳು ಇರುವುವುವು; ಗೀರ್ವಾಣ ಯಕ್ಷ ಕಿನ್ನರ ಸಿದ್ಧ ಗರುಡ ಗಂಧರ್ವರಲ್ಲಿ ಯಾವನೋ! ಇವನು ಮನುಷ್ಯನಲ್ಲ ಎಂದು ನಿಶ್ಚಯಿಸಿ, ಬಳಿಕ ವಿಷಯೆ ಮೋಹಕ್ಕೊಳಗಾಗಿ ಅವನ ಸರ್ವಾಂಗವನ್ನೂ ಬಿಡದೆ ನೋಡಿದಳು.
  • (ಪದ್ಯ-೨೧)

ಪದ್ಯ:-:೨೨:[ಸಂಪಾದಿಸಿ]

ಬೆಚ್ಚೆರಳೆಗಂಗಳವನವಯವದ ಚೆಲ್ವಿನೊಳ್ |
ಬೆಚ್ಚುವಂಗಜನಾಗ ಕಿವಿವರೆಗೆ ತೆಗೆದು ತುಂ |
ಬೆಚ್ಚಲರ್ಗೋಲಂತರಂಗದೊಳ್ ನಾಂಟಿದುವು ದಾಂಟಿದುವು ಗರಿಗಳೊಡನೆ ||
ಬೆಚ್ಚನಾದೆದೆಯಿಂದೆ ಕಾತರಿಸಿ ಮುದುಡುಗೊಂ |
ಡೆಚ್ಚರಿಂದೇಳ್ವ ರೋಮಾಂಚನದೊಳಾಸೆ ಮುಂ |
ಬೆಚ್ಚೆ ಬೆವರುವ ಬಾಲೆ ಬೇಸರದೆ ನಿಂದು ನಿಟ್ಟಿಸುತಿರ್ದಳೇವೇಳ್ವೆನು ||22||

ಪದವಿಭಾಗ-ಅರ್ಥ:
ಬೆಚ್ಚ (ಬೆಚ್ಚು:ಕಂಪಿಸಿ ಹೆದರು, ಬೆಚ್ಚ:ಕಂಪಿಸದ))ಎರಳೆಗಂಗಳು (ಎರಳೆ:ಗಂಡು ಜಿಂಕೆ) ಅವನ ಅವಯವದ ಚೆಲ್ವಿನೊಳ್ ಬೆಚ್ಚುವು ಆಂಗಜನಾಗ ಕಿವಿವರೆಗೆ ತೆಗೆದು ತುಂಬ ಎಚ್ಚಲು ಅಲರ್ (ಗೋ)ಕೋಲ (ಹೂವಿನ ಬಾಣ) ಅಂತರಂಗದೊಳ್ ನಾಂಟಿದುವು ದಾಂಟಿದುವು ಗರಿಗಳೊಡನೆ=[ಕಂಪಿಸದ ಮುಚ್ಚಿದ ಜಿಂಕೆ ಕಣ್ಣುಗಳು,ಅವನ ಅವಯವದ ಚೆಲುವಿನಲ್ಲಿ ಬೆಚ್ಚುವ ಮನ್ಮಥನು,ಹೂವಿನ ಬಾಣಗಳನ್ನು ತೆಗೆದು ಆಗ ಕಿವಿಯವರೆಗೆ ಎಳೆದು ಬಲವಾಗಿ ಹೊಡೆಯಲು, ಅವು ವಿಷಯೆಯ ಅಂತರಂಗದಲ್ಲಿ ಗರಿಗಳೊಡನೆ ದಾಟಿ ನಾಟಿದುವು];; ಬೆಚ್ಚನೆ ಆದ ಎದೆಯಿಂದೆ ಕಾತರಿಸಿ ಮುದುಡುಗೊಂಡು (ಮುದ:ಸಂತಸ) ಎಚ್ಚರಿಂದ (ಎಚ್ಚು:ಹೊಡಿ ಪೆಟ್ಟು) ಏಳ್ವ ರೋಮಾಂಚನದೊಳು ಆಸೆ ಮುಂಬೆಚ್ಚೆ ಬೆವರುವ ಬಾಲೆ ಬೇಸರದೆ (ಬೇಸರ ಮಾಡದೆ) ನಿಂದು ನಿಟ್ಟಿಸುತಿರ್ದಳು ಏವೇಳ್ವೆನು=[ಬೆಚ್ಚಗಾದ ಎದೆಯಿಂದ ಕಾತರಿಸಿ ಸಂತಸಗೊಂಡು ಮನ್ಮಥನಬಾಣದ ಪಟ್ಟಿನಿಂದ ಏಳುವ ರೋಮಾಂಚನದಲ್ಲಿ ಆಸೆ ಮುಂದಾಗಿ ಹೆಚ್ಚಲು ಬೆವರುತ್ತಿರವ ವಿಷಯೆ ಬೇಸರಿಸದೆ ನಿಂತು ನಿಟ್ಟಿಸುತ್ತಿದ್ದಳು. ಏನು ಹೇಳಲಿ].
  • ತಾತ್ಪರ್ಯ:ಕಂಪಿಸದ ಮುಚ್ಚಿದ ಜಿಂಕೆ ಕಣ್ಣುಗಳು, ಅವನ ಅವಯವದ ಚೆಲುವಿನ್ನು ಕಂಡು ತನಗಿಂತ ಚೆಲುವನೆಂದು, ಬೆಚ್ಚುವ ಮನ್ಮಥನು&&, ಹೂವಿನ ಬಾಣಗಳನ್ನು ತೆಗೆದು ಆಗ ಕಿವಿಯವರೆಗೆ ಎಳೆದು ವಿಷಯೆಯ ಎದೆಗೆ ಬಲವಾಗಿ ಹೊಡೆಯಲು, ಅವು ಅವಳ ಅಂತರಂಗದಲ್ಲಿ ಗರಿಗಳೊಡನೆ ದಾಟಿ(ಗಾಢವಾಗಿ) ನಾಟಿದುವು. ಆ ಪಟ್ಟಿನಿಂದ ಬೆಚ್ಚಗಾದ ಎದೆಯಿಂದ ಕಾತರಿಸಿ ಸಂತಸಗೊಂಡು, ಮನ್ಮಥನಬಾಣದ ಪಟ್ಟಿನಿಂದ ಏಳುವ ರೋಮಾಂಚನದಲ್ಲಿ ಆಸೆ ಮುಂದಾಗಿ, ಬಯಕೆ ಹೆಚ್ಚಲು ಬೆವರುತ್ತಿರವ ವಿಷಯೆ ಬೇಸರಿಸದೆ ನಿಂತು ಚಂದ್ರಹಾಸನನ್ನು ನಿಟ್ಟಿಸುತ್ತಿದ್ದಳು. ಏನು ಹೇಳಲಿ].
  • (ಪದ್ಯ-೨೨)

ಪದ್ಯ:-:೨೩:[ಸಂಪಾದಿಸಿ]

ಸುತ್ತನೋಡುವಳೊಮ್ಮೆ ನೂಪುರವಲುಗದಂತೆ |
ಹತ್ತೆಸಾರುವಳೊಮ್ಮೆ ಸೋಂಕಲೆಂತಹುದೆಂದು |
ಮತ್ತೆ ಮುರಿದಪಳೊಮ್ಮೆ ಹೆಜ್ಜೆಹಜ್ಜೆಯಮೇಲೆ ಸಲ್ವಳಮ್ಮದೆ ನಿಲ್ವಳು ||
ಚಿತ್ತದೊಳ್ ನಿಶ್ಚೈಸಿ ನೆರೆಯಲೆಳಸುವಳೊಮ್ಮೆ |
ಹೊತ್ತಲ್ಲದನುಚಿತಕೆ ಬೆದರಿ ಹಿಂಗುವಳೊಮ್ಮೆ|
ತತ್ತಳದ ಬೇಟದೊಳ್ ಬೆಂಡಾಗಿ ವಿಷಯೆ ನಿಂದಿರ್ದಳಾತನ ಪೊರೆಯೊಳು ||23||

ಪದವಿಭಾಗ-ಅರ್ಥ:
ಸುತ್ತನೋಡುವಳು ಒಮ್ಮೆ ನೂಪುರವಲುಗದಂತೆ ಹತ್ತೆಸಾರುವಳು ಒಮ್ಮೆ ಸೋಂಕಲು ಎಂತಹುದೆಂದು ಮತ್ತೆ ಮುರಿದಪಳು ಒಮ್ಮೆ ಹೆಜ್ಜೆಹಜ್ಜೆಯಮೇಲೆ ಸಲ್ವಳು ಅಮ್ಮದೆ ನಿಲ್ವಳು=[ವಿಷಯೆ, ಸುತ್ತನೋಡುವಳು ಒಮ್ಮೆ; ನೂಪುರವು ಅಲುಗದಂತೆ ಹತ್ತಿರಹೋಗುವಳು ಒಮ್ಮೆ; ಮುಟ್ಟಿದರೆ ಏನಾಗುವುದೊ ಎಂದು ಮತ್ತೆ ಹಿಂಜರಿಯುಪಳು ಒಮ್ಮೆ; ಹೆಜ್ಜೆಹಜ್ಜೆಯಮೇಲೆ ಮುಂದುವರಿಯುವಳು, ಅಳುಕಿ ಮುದುವರಿಯಲು ಆಗದೆ ನಿಲ್ಲುವಳು!];; ಚಿತ್ತದೊಳ್ ನಿಶ್ಚೈಸಿ ನೆರೆಯಲು ಎಳಸುವಳು ಒಮ್ಮೆ ಹೊತ್ತಲ್ಲದ ಅನುಚಿತಕೆ ಬೆದರಿ ಹಿಂಗುವಳು ಒಮ್ಮೆ ತತ್ತಳದ ಬೇಟದೊಳ್ ಬೆಂಡಾಗಿ ವಿಷಯೆ ನಿಂದಿರ್ದಳು ಆತನ ಪೊರೆಯೊಳು=[ಮನಸ್ಸಿನಲ್ಲಿ ನಿಶ್ಚೈಸಿಕೊಂಡು ಅವನ ಪಕ್ಕಕ್ಕೆ ಸೇರಲು ಎಳಸುವಳು; ಮತ್ತೆ ಒಮ್ಮೆ ಹೊತ್ತಲ್ಲದ ಅನುಚಿತವಾದುದೆಂದು ಹೆದರಿ ಹಿಮ್ಮೆಟ್ಟುವಳು; ಒಮ್ಮೆ ತತ್ತರಿಸಿ ನಡುಗುತ್ತಾ ಪ್ರೇಮದಲ್ಲಿ ಬೆಂಡಾಗಿ ವಿಷಯೆ ಆತನ ಹತ್ತಿರ ನಿಂತಿದ್ದಳು.].
  • ತಾತ್ಪರ್ಯ:ವಿಷಯೆ, ಸುತ್ತನೋಡುವಳು ಒಮ್ಮೆ; ನೂಪುರವು ಅಲುಗದಂತೆ ಹತ್ತಿರಹೋಗುವಳು ಒಮ್ಮೆ; ಮುಟ್ಟಿದರೆ ಏನಾಗುವುದೊ ಎಂದು ಮತ್ತೆ ಹಿಂಜರಿಯುಪಳು ಒಮ್ಮೆ; ಹೆಜ್ಜೆಹಜ್ಜೆಯಮೇಲೆ ಮುಂದುವರಿಯುವಳು, ಅಳುಕಿ ಮುದುವರಿಯಲು ಆಗದೆ ನಿಲ್ಲುವಳು! ಮನಸ್ಸಿನಲ್ಲಿ ನಿಶ್ಚೈಸಿಕೊಂಡು ಅವನ ಪಕ್ಕಕ್ಕೆ ಸೇರಲು ಎಳಸುವಳು; ಮತ್ತೆ ಒಮ್ಮೆ ಹೊತ್ತಲ್ಲದ ಅನುಚಿತವಾದುದೆಂದು ಹೆದರಿ ಹಿಮ್ಮೆಟ್ಟುವಳು; ಒಮ್ಮೆ ತತ್ತರಿಸಿ ನಡುಗುತ್ತಾ ಪ್ರೇಮದಲ್ಲಿ ಬೆಂಡಾಗಿ ವಿಷಯೆ ಆತನ ಹತ್ತಿರ ನಿಂತಿದ್ದಳು. (ಉತ್ಕಟ ಪ್ರೇಮಕ್ಕೆ :ಶೃಂಗಾರ ರಸಕ್ಕೆ ಉದಾಹರಣೆ)
  • (ಪದ್ಯ-೨೩)

ಪದ್ಯ:-:೨೪:[ಸಂಪಾದಿಸಿ]

ದಿವಿಜೇಂದ್ರತನಯ ಕೇಳೀ ತೆರೆದೊಳಾಗ ನವ |
ಯುವತಿ ನಿಂದೀಕ್ಷಿಸುತ ಕಂಡಳವನಂಗದೊಳೆ |
ಸೆವ ರುಚಿರ ಕಂಚುಕದ ತುದಿಸೆರಗಿನೊಳ್ ಕಟ್ಟಿಕೊಂಡಿರ್ದ ಪತ್ರಿಕೆಯನು ||
ತವಕದಿಂ ಬಿಟ್ಟು ಮುದ್ರೆಯನೋಸರಿಸಿ ತೆಗೆದು |
ವಿವರದೊಳ್ ತನ್ನ ತಂದೆಯ ಹೆಸರ ಬರೆಹಮಿರೆ |
ಲವಲವಿಕೆ ಮಿಗೆ ನೋಡಿ ಹರ್ಷಪುಳಕದೊಳಂದುನಿಂದೋದಿಕೊಳುತಿರ್ದಳು ||24||

ಪದವಿಭಾಗ-ಅರ್ಥ:
ದಿವಿಜೇಂದ್ರತನಯ (ದಿವಿಜ-ದೇವತೆಗಳ ಇಂದ್ರ-ರಾಜನ ತನಯ-ಮಗ) ಕೇಳು ಈ ತೆರೆದೊಳು ಆಗ ನವಯುವತಿ ನಿಂದು ಈಕ್ಷಿಸುತ ಕಂಡಳು ಅವನ ಆಂಗದೊಳು ಎಸೆವ ರುಚಿರ ಕಂಚುಕದ ತುದಿ ಸೆರಗಿನೊಳ್ ಕಟ್ಟಿಕೊಂಡಿರ್ದ ಪತ್ರಿಕೆಯನು=[ಅರ್ಜುನನೇ ಕೇಳು ಈ ರೀತಿಯಲ್ಲಿ ಆಗ ನವಯುವತಿ ವಿಷಯೆ ನಿಂತು ನೋಡುವಾಗ ಅವನ ದೇಹದಲ್ಲಿ ತೋರುವ ಸುಂದರ ನಿಲುವಂಗಿಯ ತುದಿಯ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಪತ್ರಿಕೆಯನ್ನು ಕಂಡಳು.];; ತವಕದಿಂ ಬಿಟ್ಟು ಮುದ್ರೆಯನು ಓಸರಿಸಿ ತೆಗೆದು ವಿವರದೊಳ್ ತನ್ನ ತಂದೆಯ ಹೆಸರ ಬರೆಹಮಿರೆ ಲವಲವಿಕೆ ಮಿಗೆ ನೋಡಿ ಹರ್ಷಪುಳಕದೊಳು ಅಂದು ನಿಂದು ಓದಿಕೊಳುತಿರ್ದಳು=[ಕುತೂಲದಿಂದ ಭಯವನ್ನು ಬಿಟ್ಟು, ಅದನ್ನು ಮೆಲ್ಲಗೆ ತೆಗೆದುಕೋಡು ಮುದ್ರೆಯನ್ನು ಸರಿಸಿ ತೆಗೆದು ವಿವರದಲ್ಲಿ ತನ್ನ ತಂದೆಯ ಹೆಸರೂ ಮತ್ತು ಅವನ ಬರೆಹ ಇರಲು ಉತ್ಸುಕತೆ ಹೆಚ್ಚಲು, ನೋಡಿ ಹರ್ಷದಿಂದ ಪುಳಕಗೊಂಡು ಅಂದು ನಿಂತು ಓದಿಕೊಳ್ಳುತ್ತಿದ್ದಳು.].
  • ತಾತ್ಪರ್ಯ:ನಾರದರು ಹೇಳಿದರು,ಅರ್ಜುನನೇ ಕೇಳು, ಈ ರೀತಿಯಲ್ಲಿ ಆಗ ನವಯುವತಿ ವಿಷಯೆ ನಿಂತು ನೋಡುವಾಗ ಅವನ ದೇಹದಲ್ಲಿ ತೋರುವ ಸುಂದರ ನಿಲುವಂಗಿಯ ತುದಿಯ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಪತ್ರಿಕೆಯನ್ನು ಕಂಡಳು. ಕುತೂಲದಿಂದ ಭಯವನ್ನು ಬಿಟ್ಟು, ಅದನ್ನು ಮೆಲ್ಲಗೆ ತೆಗೆದುಕೋಡು ಮುದ್ರೆಯನ್ನು ಸರಿಸಿ ತೆಗೆದು ಒಳವಿವರದಲ್ಲಿ ತನ್ನ ತಂದೆಯ ಹೆಸರೂ ಮತ್ತು ಅವನ ಬರೆಹ ಇರಲು ಉತ್ಸುಕತೆ ಹೆಚ್ಚಲು, ನೋಡಿ ಹರ್ಷದಿಂದ ಪುಳಕಗೊಂಡು ಅಂದು ನಿಂತು ಓದಿಕೊಳ್ಳುತ್ತಿದ್ದಳು.
  • (ಪದ್ಯ-೨೪)

ಪದ್ಯ:-:೨೫:[ಸಂಪಾದಿಸಿ]

ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸು |
ಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ |
ನೇಮಿಸಿದ ಕಾರ್ಯಮೀ ಚಂದ್ರಹಾಸಂ ಮಹಾಹಿತನೆಮಗೆ ಮೇಲೆ ನಮ್ಮ ||
ಸೀಮೆಗರಸಾದಪಂ ಸಂದೇಹಮಿಲ್ಲಿದಕೆ |
ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವ |
ಥಾಮಿತ್ರನಪ್ಪನೆಂದೀತನಂ ಕಳುಹಿದೆವು ನಿನ್ನ ಬಳಿಗಿದನರಿವುದು ||25||

ಪದವಿಭಾಗ-ಅರ್ಥ:
ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸುಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ ನೇಮಿಸಿದ ಕಾರ್ಯಮೀ ಚಂದ್ರಹಾಸಂ ಮಹಾಹಿತನೆಮಗ ಮೇಲೆ ನಮ್ಮ=[ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸುಪ್ರೇಮದಿಂದ ತನ್ನ ಮಗ ಮದನನಿಗೆ ಬಹಳ ಹರಸಿ ಆಜ್ಞಾಪಸಿದ ಕಾರ್ಯವು, ಈ ಚಂದ್ರಹಾಸನು ಮಹಾ ಅಹಿತನು/ಶತ್ರುವು ನಮಗೆ, ಮೇಲೆ ನಮ್ಮ ];; ಸೀಮೆಗೆ ಅರಸಾದಪಂ ಸಂದೇಹಮಿಲ್ಲ ಇದಕೆ ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವಥ ಅಮಿತ್ರನಪ್ಪನೆಉ ಎಂದು ಈತನಂ ಕಳುಹಿದೆವು ನಿನ್ನ ಬಳಿಗೆ ಇದನು ಅರಿವುದು=[ಸೀಮೆಗೆ ಅರಸಾಗುವನು, ಸಂದೇಹವಿಲ್ಲ ಇದಕ್ಕೆ; ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವಥಾ ಶತ್ರುವು ಆಗುವನು ಎಂದು ಈತನನ್ನು ಕಳುಹಿದೆವು, ನಿನ್ನ ಬಳಿಗೆ ಇದನು ಅರಿವುದು]::{ಮತ್ತೊಂದು ಅರ್ಥ:ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸುಪ್ರೇಮದಿಂದ ತನ್ನ ಮಗ ಮದನನಿಗೆ ಬಹಳ ಹರಸಿ ಆಜ್ಞಾಪಸಿದ ಕಾರ್ಯವು, ಈ ಚಂದ್ರಹಾಸನು ಮಹಾ ಹಿತನು ನಮಗೆ ಮೇಲೆ ನಮ್ಮ ಸೀಮೆಗೆ ಅರಸಾಗುವನು, ಸಂದೇಹವಿಲ್ಲ ಇದಕ್ಕೆ; ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವಥಾ ಮಿತ್ರನು ಅಪ್ಪನು ಎಂದು ಈತನನ್ನು ಕಳುಹಿದೆವು ನಿನ್ನ ಬಳಿಗೆ ಇದನು ಅರಿವುದು}.
  • ತಾತ್ಪರ್ಯ:ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸುಪ್ರೇಮದಿಂದ ತನ್ನ ಮಗ ಮದನನಿಗೆ ಬಹಳ ಹರಸಿ ಆಜ್ಞಾಪಸಿದ ಕಾರ್ಯವು, ಈ ಚಂದ್ರಹಾಸನು ಮಹಾ ಅಹಿತನು/ಶತ್ರುವು ನಮಗೆ, ಮೇಲೆ ನಮ್ಮ ಸೀಮೆಗೆ ಅರಸಾಗುವನು, ಸಂದೇಹವಿಲ್ಲ ಇದಕ್ಕೆ; ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವಥಾ ಶತ್ರುವು ಆಗುವನು ಎಂದು ಈತನನ್ನು ಕಳುಹಿದೆವು, ನಿನ್ನ ಬಳಿಗೆ ಇದನನು ತಿಳಿದುಕೊ.
  • ಮತ್ತೊಂದು ಅರ್ಥ:ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸುಪ್ರೇಮದಿಂದ ತನ್ನ ಮಗ ಮದನನಿಗೆ ಬಹಳ ಹರಸಿ ಆಜ್ಞಾಪಸಿದ ಕಾರ್ಯವು, ಈ ಚಂದ್ರಹಾಸನು ಮಹಾ ಹಿತನು ನಮಗೆ ಮೇಲೆ ನಮ್ಮ ಸೀಮೆಗೆ ಅರಸಾಗುವನು, ಸಂದೇಹವಿಲ್ಲ ಇದಕ್ಕೆ; ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವಥಾ ಮಿತ್ರನು ಆಗುವನು ಎಂದು ಈತನನ್ನು ಕಳುಹಿದೆವು ನಿನ್ನ ಬಳಿಗೆ, ಇದನು ತಿಳಿದುಕೊ.
  • (ಪದ್ಯ-೨೫)

ಪದ್ಯ:-:೨೬:[ಸಂಪಾದಿಸಿ]

ಹೊತ್ತುಗಳೆಯದೆ ಬಂದ ಬಳಿಕಿವನ ಕುಲ ಶೀಲ |
ವಿತ್ತ ವಿದ್ಯಾವಯೋ ವಿಕ್ರಮಂಗಳ ನೀಕ್ಷಿ |
ಸುತ್ತಿರದೆ ವಿಷವ ಮೋಹಿಸುವಂತೆ ಕುಡುವುದೀತಂಗೆ ನೀನಿದರೊಳಮಗೆ ||
ಉತ್ತರೋತ್ತಮಪ್ಪುದೆಂದು ಬರೆದಿಹ ಲಿಪಿಯ |
ನೆತ್ತಿ ವಾಚಿಸಿಕೊಂಡು ತರಳಾಕ್ಷಿ ತಾನದಕೆ |
ಮತ್ತೊಂದಭಿಪ್ರಾಯಮಂ ತಿಳಿದಳುಲ್ಲಂಘಿಸುವರುಂಟೆ ವಿಧಿಕೃತವನು ||26||

ಪದವಿಭಾಗ-ಅರ್ಥ:
ಹೊತ್ತುಗಳೆಯದೆ ಬಂದ ಬಳಿಕ ಇವನ ಕುಲ, ಶೀಲ, ವಿತ್ತ, ವಿದ್ಯಾವಯೋ ವಿಕ್ರಮಂಗಳನು, ಈಕ್ಷಿಸುತ್ತಿರದೆ ವಿಷವ ಮೋಹಿಸುವಂತೆ ಕುಡುವುದು ಈತಂಗೆ ನೀನು, ಇದರೊಳು ಎಮಗೆ=[ಹೊತ್ತು ಕಳೆಯದೆ ಇವನು ಬಂದ ಬಳಿಕ, ಇವನ ಕುಲ, ಶೀಲ, ವಿತ್ತ/ಸಂಪತ್ತು, ವಿದ್ಯೆ, ವಯಸ್ಸು, ವಿಕ್ರಮ/ಶೌರ್ಯಗಳನ್ನು, ಪರೀಕ್ಷಿಸುತ್ತಿರದೆ ವಿಷವನ್ನು ಪ್ರೀತಿಯಿಂದ ತಿನ್ನುವಂತೆ ಈತನಿಗೆ ನೀನು ಕೊಡುವುದು, ಇದರೊಳು ನಮಗೆ];; ಉತ್ತರೋತ್ತಮಪ್ಪುದೆಂದು ಬರೆದಿಹ ಲಿಪಿಯನು ಎತ್ತಿ ವಾಚಿಸಿಕೊಂಡು ತರಳಾಕ್ಷಿ ತಾನು ಅದಕೆ ಮತ್ತೊಂದು ಅಭೀಪ್ರಾಯಮಂ ತಿಳಿದಳು ಉಲ್ಲಂಘಿಸುವರುಂಟೆ ವಿಧಿಕೃತವನು=[ಉತ್ತರೋತ್ತರ ಕ್ಷೇಮವಾಗುವುದು, ಎಂದು ಬರೆದಿರುವ ಲಿಪಿಯನ್ನು/ಒಕ್ಕಣೆಯನ್ನು ಪತ್ರವನ್ನು ಎತ್ತಿ ಓದಿಕೊಂಡು ತರಳಾಕ್ಷಿಯಾದ ವಿಷಯೆ ತಾನು ಅದಕ್ಕೆ ಮತ್ತೊಂದು ಅಭಿಪ್ರಾಯವನ್ನು/ಅರ್ಥವನ್ನು ತಿಳಿದುಕೊಂಡಳು, ವಿಧಿಯ ಕೃತವನ್ನು ಉಲ್ಲಂಘಿಸುವರುಂಟೆ? ಇಲ್ಲ!].
  • ತಾತ್ಪರ್ಯ:ಹೊತ್ತು ಕಳೆಯದೆ/ಕೂಡಲೆ ಇವನು ಬಂದ ಬಳಿಕ, ಇವನ ಕುಲ, ಶೀಲ, ವಿತ್ತ/ಸಂಪತ್ತು, ವಿದ್ಯೆ, ವಯಸ್ಸು, ವಿಕ್ರಮ/ಶೌರ್ಯಗಳನ್ನು, ಪರೀಕ್ಷಿಸುತ್ತಿರದೆ ವಿಷವನ್ನು ಪ್ರೀತಿಯಿಂದ ತಿನ್ನುವಂತೆ ಈತನಿಗೆ ನೀನು ಕೊಡುವುದು, ಇದರೊಳು ನಮಗೆ ಉತ್ತರೋತ್ತರ ಕ್ಷೇಮವಾಗುವುದು, ಎಂದು ಬರೆದಿರುವ ಲಿಪಿಯನ್ನು/ಒಕ್ಕಣೆಯನ್ನು ಪತ್ರವನ್ನು ಎತ್ತಿ ಓದಿಕೊಂಡು ತರಳಾಕ್ಷಿಯಾದ ವಿಷಯೆ ತಾನು ಅದಕ್ಕೆ ಮತ್ತೊಂದು ಅಭಿಪ್ರಾಯವನ್ನು/ಅರ್ಥವನ್ನು ತಿಳಿದುಕೊಂಡಳು, ವಿಧಿಯ ಕೃತವನ್ನು ಉಲ್ಲಂಘಿಸುವರುಂಟೆ? ಇಲ್ಲ!
  • (ಪದ್ಯ-೨೬)

ಪದ್ಯ:-:೨೭:[ಸಂಪಾದಿಸಿ]

ಈತಂ ತಮಗೆ ಮಹಾಹಿತನೆಂದು ತಮ್ಮ ಧರೆ |
ಗೀತನರಸಹನೆಂದು ಕುಲಶೀಲ ವಿದ್ಯೆಗಳ |
ನೀತನೊಳರಸಬೇಡವೆಂದು ಮುಂದಕೆ ಸರ್ವಥಾಮಿತ್ರನಪ್ಪನೆಂದು ||
ಈತಂಗೆ ವಿಷಯೆ ಮೋಹಿಸುವಂತೆ ಕುಡುವುದೆಂ |
ದಾ ತಾತನಣ್ಣಂಗೆ ಬರೆಸಿ ಕಳುಹಿದ ಪತ್ರ |
ವೇ ತಪ್ಪದಿದು ವರ್ಣಪಲ್ಲಟದ ಮೋಸವೆಂದಬಲೆ ಭಾವಿಸುತಿರ್ದಳು ||27||

ಪದವಿಭಾಗ-ಅರ್ಥ:
ಈತಂ ತಮಗೆ ಮಹಾಹಿತನೆಂದು ತಮ್ಮ ಧರೆ ಗೀತನರಸಹನೆಂದು ಕುಲಶೀಲ ವಿದ್ಯೆಗಳ ನೀತನೊಳರಸಬೇಡವೆಂದು ಮುಂದಕೆ ಸರ್ವಥಾಮಿತ್ರನಪ್ಪನೆಂದು=[ಈತನು ತಮಗೆ ಮಹಾ ಹಿತನೆಂದೂ, ತಮ್ಮ ರಾಜ್ಯಕ್ಕೆ ಈತನು ಅರಸನು ಆಗುವನೆಂದೂ, ಕುಲಶೀಲ ವಿದ್ಯೆಗಳನು ಈತನಲ್ಲಿ ಅರಸಬೇಡವೆಂದೂ ಮುಂದಕ್ಕೆ ಸರ್ವಥಾ ಮಿತ್ರನು ಆಗುವನೆಂದೂ];; ಈತಂಗೆ ವಿಷಯೆ ಮೋಹಿಸುವಂತೆ ಕುಡುವುದೆಂದಾ ತಾತನಣ್ಣಂಗೆ ಬರೆಸಿ ಕಳುಹಿದ ಪತ್ರವೇ ತಪ್ಪದಿದು ವರ್ಣಪಲ್ಲಟದ ಮೋಸವೆಂದು ಅಬಲೆ ಭಾವಿಸುತಿರ್ದಳು=[ಈತನಿಗೆ ವಿಷಯೆ/ತನ್ನನ್ನು ಪ್ರೀತಿಸುವಂತೆ ಕೊಡುವುದೆಂದೂ ಆ ತಾತನು/ತಂದೆಯು ಆಣ್ಣನಿಗೆ ಬರೆಸಿ ಕಳುಹಿಸಿದ ಪತ್ರವೇ/ಅಭಿಪ್ರಾಯವೇ ಸರಿ; ಇದು ತಪ್ಪದು, ನಡೆಯುವುದು, ವಿಷಯೆ ಬರೆಯುವಾಗ, 'ಯೆ' ವರ್ಣಪಲ್ಲಟವಾಗಿ ಮೋಸವಾಗಿದೆಯೆಂದು ಅಬಲೆ ಭಾವಿಸುತ್ತದ್ದಳು].
  • ತಾತ್ಪರ್ಯ:ವಿಷಯೆ ಪ್ರದ ಭಾವವನ್ನು ಹೀಗೆ ತಿಳಿದಳು: ಈತನು ತಮಗೆ ಮಹಾ ಹಿತನೆಂದೂ, ತಮ್ಮ ರಾಜ್ಯಕ್ಕೆ ಈತನು ಅರಸನು ಆಗುವನೆಂದೂ, ಕುಲಶೀಲ ವಿದ್ಯೆಗಳನು ಈತನಲ್ಲಿ ಅರಸಬೇಡವೆಂದೂ ಮುಂದಕ್ಕೆ ಸರ್ವಥಾ ಮಿತ್ರನು ಆಗುವನೆಂದೂ ಈತನಿಗೆ ವಿಷಯೆ/ತನ್ನನ್ನು ಪ್ರೀತಿಸುವಂತೆ ಕೊಡುವುದೆಂದೂ ಆ ತಾತನು/ತಂದೆಯು ಆಣ್ಣನಿಗೆ ಬರೆಸಿ ಕಳುಹಿಸಿದ ಪತ್ರವೇ/ಅಭಿಪ್ರಾಯವೇ ಸರಿ; ಇದು ತಪ್ಪದು, ನಡೆಯುವುದು, ವಿಷಯೆ ಬರೆಯುವಾಗ, 'ಯೆ' (विष -यों ಸಂಸ್ಕೃತದಲ್ಲಿ ಹೀಗೆ) ವರ್ಣಪಲ್ಲಟವಾಗಿ, ಬಿಟ್ಟುಹೋಗಿ ಮೋಸವಾಗಿದೆಯೆಂದು ಅಬಲೆ ಭಾವಿಸುತ್ತಿದ್ದಳು].
  • (ಪದ್ಯ-೨೭)

ಪದ್ಯ:-:೨೮:[ಸಂಪಾದಿಸಿ]

ಕಡುಚೆಲ್ವನಾದ ವರನಂ ಕಂಡು ನಿಶ್ಚೈಸಿ |
ತಡೆಯದಿಂದೀತಂಗೆ ವಿಷಯೆ ಮೋಹಿಸುವಂತೆ |
ಕಡುವುದೆಂದಲ್ಲಿಂದೆ ತನ್ನ ಪಿತನೀತನಂ ಕಳುಹಿದಂ ಸುತನ ಬಳಿಗೆ ||
ಒಡಗೂಡದಿರದೆನ್ನ ಮನದೆಣಿಕೆ ಪತ್ರಿಕೆಯೊ |
ಳೆಡಹಿ ಬರೆದಕ್ಕರದ ಬೀಳಿರ್ದೊಡದರಿಂದೆ |
ಕೆಡುವುದಗ್ಗದ ಕಜ್ಜಮೆಂದಾ ತರುಣಿ ತಾನದಂ ತಿದ್ದಲನುಗೈದಳು ||28||

ಪದವಿಭಾಗ-ಅರ್ಥ:
ಕಡುಚೆಲ್ವನಾದ ವರನಂ ಕಂಡು ನಿಶ್ಚೈಸಿ ತಡೆಯದೆ ಇಂದು ಈತಂಗೆ ವಿಷಯೆ ಮೋಹಿಸುವಂತೆ ಕಡುವುದೆಂದಲ್ಲಿಂದೆ ತನ್ನ ಪಿತನು ಈತನಂ ಕಳುಹಿದಂ ಸುತನ ಬಳಿಗೆ=[ತನ್ನ ತಂದೆಯು,ಬಹಳ ಚೆಲುವನಾದ ವರನನ್ನು ಕಂಡು, ವಿವಾಹ ನಿಶ್ಚೈಸಿ, ತಡಮಾಡದೆ ಇಂದು ಈತಂಗೆ ವಿಷಯೆ ಮೋಹಿಸುವಂತೆ ಕಡುವುದು ಎಂದು ಅಲ್ಲಿಂದ, ತನ್ನ ಪಿತನು ಈತನನ್ನು ಮಗನ ಬಳಿಗೆ ಕಳುಹಿಸಿರುವನು];; ಒಡಗೂಡದಿರದು ಎನ್ನ ಮನದೆಣಿಕೆ ಪತ್ರಿಕೆಯೊಳ್ ಎಡಹಿ ಬರೆದ ಅಕ್ಕರದ ಬೀಳಿರ್ದೊಡೆ ಅದರಿಂದೆ ಕೆಡುವುದು ಅಗ್ಗದ ಕಜ್ಜಮೆಂದು ಆ ತರುಣಿ ತಾನದಂ ತಿದ್ದಲು ಅನುಗೈದಳು=[ನಡೆಯದಿರದು ತನ್ನ ಮನದ ಕೋರಿಕೆ; ಪತ್ರಿಕೆಯಲ್ಲಿ ಎಡವಿ/ತಪ್ಪಾಗಿ ಬರೆದ ಅಕ್ಷರದ ತಪ್ಪಿದ್ದರೆ ಅದರಿಂದೆ ಕೆಡುವುದು ಮುಖ್ಯ ಕಾರ್ಯವೆಂದು ಆ ತರುಣಿ ತಾನು ಅದನ್ನು ತಿದ್ದಲು ಅನುವಾದಳು.]
  • ತಾತ್ಪರ್ಯ:ವಿಷಯೆ ಭಾವಿಸಿದಳು; ತನ್ನ ತಂದೆಯು, ಬಹಳ ಚೆಲುವನಾದ ವರನನ್ನು ಕಂಡು, ವಿವಾಹ ನಿಶ್ಚೈಸಿ, ತಡಮಾಡದೆ ಇಂದು ಈತಂಗೆ ವಿಷಯೆ ಮೋಹಿಸುವಂತೆ ಕಡುವುದು ಎಂದು ಅಲ್ಲಿಂದ, ತನ್ನ ಪಿತನು ಈತನನ್ನು ಮಗನ ಬಳಿಗೆ ಕಳುಹಿಸಿರುವನು ನಡೆಯದಿರದು ತನ್ನ ಮನದ ಕೋರಿಕೆ; ಪತ್ರಿಕೆಯಲ್ಲಿ ಎಡವಿ/ತಪ್ಪಾಗಿ ಬರೆದ ಅಕ್ಷರದ ತಪ್ಪಿದ್ದರೆ ಅದರಿಂದೆ ಕೆಡುವುದು ಮುಖ್ಯ ಕಾರ್ಯವೆಂದು ಆ ವಿಷಯೆ ತಾನು ಅದನ್ನು ತಿದ್ದಲು ಅನುವಾದಳು.
  • (ಪದ್ಯ-೨೮)

ಪದ್ಯ:-:೨೯:[ಸಂಪಾದಿಸಿ]

ತಪ್ಪಿರ್ದ ಲಿಪಿಯೊಳ್ ವಕಾರಮಂ ತೊಡೆದಲ್ಲಿ |
ಗೊಪ್ಪುವ ಯಕಾರಮಂ ಕೆಲಬಲದ ಮಾಮರದೊ |
ಲಿಪ್ಪ ನಿರ್ಯಾಸಮಂ ತೆಗೆದು ಕಿರುವೆರಳುಗುರ್ಗೊನೆಯಿಂದೆ ತಿದ್ದಿ ಬರೆದು ||
ಅಪ್ಪಂತೆ ಮೊದಲಿರ್ದ ಮುದ್ರೆಯಂ ಸಂಘಟಿಸಿ |
ಕುಪ್ಪಸದ ಸೆರಗಿನೊಳ್ ಕಟ್ಟಿ ಪಳೆಯವೊಲಿರಿಸಿ |
ಸಪ್ಪುಳಾಗದ ತೆರದೊಳೆದ್ದು ಮೆಲ್ಲನೆ ಮಂತ್ರಿಸುತೆ ತೊಲಗಿ ಬರುತಿರ್ದಳು ||29||

ಪದವಿಭಾಗ-ಅರ್ಥ:
ತಪ್ಪಿರ್ದ ಲಿಪಿಯೊಳ್ 'ವ'ಕಾರಮಂ ತೊಡೆದಲ್ಲಿ ಗೊಪ್ಪುವ 'ಯ'ಕಾರಮಂ ಕೆಲಬಲದ ಮಾಮರದೊಲಿಪ್ಪ ನಿರ್ಯಾಸಮಂ ತೆಗೆದು ಕಿರುವೆರಳ ಉಗುರು (ಗೊ)ಕೊನೆಯಿಂದೆ ತಿದ್ದಿ ಬರೆದು=[ತಪ್ಪು ಇದ್ದ ಅಕ್ಷರವಾದ 'ವ'ಕಾರಮನ್ನು ತೊಡೆದು ಅಲ್ಲಿಗೆ ಒಪ್ಪುವ 'ಯ'ಕಾರವನ್ನು ಹತ್ತಿರದಲ್ಲಿದ್ದ ಮಾವಿನ ಮರದಲ್ಲಿರುವ ಕೊಂಬೆಯ ರಸವನ್ನು ತೆಗೆದು ಕಿರುಬೆರಳ ಉಗುರು (ಗೊ)ಕೊನೆಯಿಂದೆ ತಿದ್ದಿ ಬರೆದು ];; ಅಪ್ಪಂತೆ ಮೊದಲಿರ್ದ ಮುದ್ರೆಯಂ ಸಂಘಟಿಸಿ ಕುಪ್ಪಸದ ಸೆರಗಿನೊಳ್ ಕಟ್ಟಿ ಪಳೆಯವೊಲ್ ಇರಿಸಿ ಸಪ್ಪುಳಾಗದ ತೆರದೊಳು ಎದ್ದು ಮೆಲ್ಲನೆ ಮಂತ್ರಿಸುತೆ ತೊಲಗಿ ಬರುತಿರ್ದಳು=[ಸರಿಯಾಗಿ ಮೊದಲಿದ್ದ ಮುದ್ರೆಯನ್ನು ಕೂಡಿಸಿ ಚಂದ್ರಹಾಸನ ಅಂಗಿಯ ಸೆರಗಿನಲ್ಲಿ ಕಟ್ಟಿ ಹಿಂದಿನಂತೆ ಇರಿಸಿ, ಸಪ್ಪಳಾಗದ ಹಾಗೆ ಎದ್ದು ಮೆಲ್ಲನೆ ಮಂತ್ರಿಸುತೆ ವಿಷಯೆ ಅಲ್ಲಿಂದ ಹೊರಟು ಬರುತ್ತಿದ್ದಳು.]
  • ತಾತ್ಪರ್ಯ:ವಿಷಯೆಯು, ತಪ್ಪು ಇದ್ದ ಅಕ್ಷರವಾದ 'ವ'ಕಾರಮನ್ನು ತೊಡೆದು ಅಲ್ಲಿಗೆ ಒಪ್ಪುವ 'ಯ'ಕಾರವನ್ನು ಹತ್ತಿರದಲ್ಲಿದ್ದ ಮಾವಿನ ಮರದಲ್ಲಿರುವ ಕೊಂಬೆಯ ರಸವನ್ನು ತೆಗೆದು ಕಿರುಬೆರಳ ಉಗುರು (ಗೊ)ಕೊನೆಯಿಂದೆ ತಿದ್ದಿ ಬರೆದು ಸರಿಯಾಗಿ ಮೊದಲಿದ್ದ ಮುದ್ರೆಯನ್ನು ಕೂಡಿಸಿ ಚಂದ್ರಹಾಸನ ಅಂಗಿಯ ಸೆರಗಿನಲ್ಲಿ ಕಟ್ಟಿ ಹಿಂದಿನಂತೆ ಇರಿಸಿ, ಸಪ್ಪಳಾಗದ ಹಾಗೆ ಎದ್ದು ಮೆಲ್ಲನೆ ಮಂತ್ರಿಸುತೆ ವಿಷಯೆ ಅಲ್ಲಿಂದ ಹೊರಟು ಬರುತ್ತಿದ್ದಳು.
  • (ಪದ್ಯ-೨೯)

ಪದ್ಯ:-:೩೦:[ಸಂಪಾದಿಸಿ]

ದಿಟ್ಟಿ ಮುರಿಯದು ಕಾಳ್ಗಳಿತ್ತಬಾರವು ಮನಂ |
ನಟ್ಟು ಬೇರೂರಿದುದು ಕಾಮನಂಬಿನ ಗಾಯ |
ವಿಟ್ಟಣಿಸಿತಂಗಲತೆ ಕಾಹೇರಿತೊಡಲೊಳಗೆ ವಿರಹದುರಿ ತಲೆದೋರಿತು ||
ಬಟ್ಟೆವಿಡಿದೊಡನೊಡನೆ ತಿರುತಿರುಗಿ ನೋಡುತಡಿ |
ಯಿಟ್ಟಳೀಚೆಗೆ ಬಳಿಕ ಬೆರಸಿದಳ್ ಕೆಳದಿಯರ |
ತಟ್ಟಿನೊಳ್ ಸಂಭ್ರಮದ ಸಂತಾಪದೆಡೆಯಾಟದಂತರಂಗದ ಬಾಲಿಕೆ ||30||

ಪದವಿಭಾಗ-ಅರ್ಥ:
ದಿಟ್ಟಿ ಮುರಿಯದು ಕಾಲ್ಗಳು ಇತ್ತಬಾರವು ಮನಂನಟ್ಟು ಬೇರೂರಿದುದು ಕಾಮನ ಅಂಬಿನ ಗಾಯವು ಇಟ್ಟಣಿಸಿತು ಅಂಗಲತೆ ಕಾಹೇರಿತು ಒಡಲೊಳಗೆ ವಿರಹದುರಿ ತಲೆದೋರಿತು=[ಚಂದ್ರಹಾಸನ ಮೇಲೆ ಇಟ್ಟ ದೃಷ್ಟಿಯನ್ನು ತೆಗೆಯಲು ಅವಳಿಂದ ಆಗದು; ಕಾಲುಗಳು ಈ ಕಡೆಗೆ ಬಾರವು; ಮನವು ಅವನಲ್ಲಿ ನೆಟ್ಟು ಬೇರೂರಿರುವುದು; ಕಾಮನ ಅಂಬಿನ ಗಾಯವು ಅಧಿಕವಾಯಿತು; ಲತೆಯಂತಿರುವ ದೇಹ ಕಾವೇರಿತು; ದೇಹದಲ್ಲಿ ವಿರಹದ ಉರಿ/ಬೆಂಕಿ ತಲೆದೋರಿತು];; ಬಟ್ಟೆವಿಡಿದೊಡನೆ ಒಡನೆ ತಿರುತಿರುಗಿ ನೋಡುತ ಅಡಿಯಿಟ್ಟಳು ಈಚೆಗೆ ಬಳಿಕ ಬೆರಸಿದಳ್ ಕೆಳದಿಯರ ತಟ್ಟಿನೊಳ್ ಸಂಭ್ರಮದ ಸಂತಾಪದ ಎಡೆಯಾಟದ ಅಂತರಂಗದ ಬಾಲಿಕೆ=[ದಾರಿ ಹಿಡಿದು ಬರುವಾಗ ಪದೇ ಪದೇ ತಿರುಗಿ ತಿರುಗಿ ನೋಡುತ್ತಾ ಹೆಜ್ಜೆಯಿಟ್ಟಳು ಗೆಳತಿಯರ ಕಡೆಗೆ; ಬಳಿಕ ಹಿಗ್ಗಿನ ಸಂಭ್ರಮದಲ್ಲಿ ಮತ್ತೆ ವಿಯೋಗದ ಸಂತಾಪದಲ್ಲಿ ಹೀಗೆ ಅಂತರಂಗದ ಹೊಯ್ದಾಟದ ಬಾಲಿಕೆ ಕೆಳದಿಯರ ಗುಂಪಿನಲ್ಲಿ ಬೆರತು ಸೇರಿದಳು].
  • ತಾತ್ಪರ್ಯ:ಚಂದ್ರಹಾಸನ ಮೇಲೆ ಇಟ್ಟ ದೃಷ್ಟಿಯನ್ನು ತೆಗೆಯಲು ಅವಳಿಂದ ಆಗದು; ಕಾಲುಗಳು ಈ ಕಡೆಗೆ ಬಾರವು; ಮನವು ಅವನಲ್ಲಿ ನೆಟ್ಟು ಬೇರೂರಿರುವುದು; ಕಾಮನ ಅಂಬಿನ ಗಾಯವು ಅಧಿಕವಾಯಿತು; ಲತೆಯಂತಿರುವ ದೇಹ ಕಾವೇರಿತು; ದೇಹದಲ್ಲಿ ವಿರಹದ ಉರಿ/ಬೆಂಕಿ ತಲೆದೋರಿತು. ತಿರುಗಿ ದಾರಿ ಹಿಡಿದು ಬರುವಾಗ ಪದೇ ಪದೇ ಹಿಂತಿರುಗಿ ತಿರುಗಿ ನೋಡುತ್ತಾ ಹೆಜ್ಜೆಯಿಟ್ಟಳು ಗೆಳತಿಯರ ಕಡೆಗೆ; ಬಳಿಕ ಹಿಗ್ಗಿನ ಸಂಭ್ರಮದಲ್ಲಿ ಮತ್ತೆ ವಿಯೋಗದ ಸಂತಾಪದಲ್ಲಿ ಹೀಗೆ ಅಂತರಂಗದ ಹೊಯ್ದಾಟದ ಬಾಲಿಕೆ ಕೆಳದಿಯರ ಗುಂಪಿನಲ್ಲಿ ಬೆರತು ಸೇರಿದಳು].
  • (ಪದ್ಯ-೩೦)XVII

ಪದ್ಯ:-:೩೧:[ಸಂಪಾದಿಸಿ]

ಆಳಿಯರ್ ಕಂಡರೀಕೆಯ ಮೊಗದ ಭಾವಮಂ |
ಕೇಳಿದರಿದೇನೆಲೆ ಮೃಗಾಕ್ಷಿ ತಳುವಿದೆ ಮನದ |
ಬೇಳಂಬಮಾವುದುಕ್ಕುವಹರ್ಷರಸದೊಡನೆ ಬೆರಸಿಹುದು ಬೆಮರುವೊನಲು ||
ಗಾಳಿ ಪರಿಮಳವನಡಗಿಪುದುಂಟೆ ತನು ಚಿತ್ತ |
ದಾಳಾಪಮಂ ಮಾಜಲರಿದಪುದೆ ಸಾಕಿನ್ನು |
ಹೇಳದೊಡೆ ಮಾಣಲಂತಸ್ಥಮದು ತಾನೆವುಬ್ಬುವುದೆಂದು ನಗುತಿರ್ದರು ||31||

ಪದವಿಭಾಗ-ಅರ್ಥ:
ಆಳಿಯರ್ (ಆಳಿಯರು:ಗೆಳತಿಯರು) ಕಂಡರು ಈಕೆಯ ಮೊಗದ ಭಾವಮಂ ಕೇಳಿದರು ಇದೇನೆಲೆ ಮೃಗಾಕ್ಷಿ (ಜಿಂಕೆಯಕಣ್ಣಿನವಳು) ತಳುವಿದೆ ಮನದ ಬೇಳಂಬಮ್ ಆವುದು ಉಕ್ಕುವ ಹರ್ಷರಸದೊಡನೆ ಬೆರಸಿಹುದು ಬೆಮರುವೊನಲು=[ವಿಷಯೆಯ ಗೆಳತಿಯರು ಇವಳ ಮುಖದಲ್ಲಿ ಉಕ್ಕುವ ಹರ್ಷದ ಭಾವವನ್ನು ಕಂಡರು. ಅವರು ಕೇಳಿದರು,'ಇದೇನು ಎಲೆ ಮೃಗಾಕ್ಷಿ ತಡವಾಗಿ ಬಂದೆ ಮನಸ್ಸಿನ ಗಲಿಬಿಲಿ ಯಾವುದು, ನಿನ್ನ ಮುಖದಲ್ಲಿ ಉಕ್ಕುವ ಹರ್ಷರಸದಜೊತೆ ಬೆವರಿನಪ್ರವಾಹ ಸೇರಿದೆ?' ];; ಗಾಳಿ ಪರಿಮಳವನಡಗಿಪುದುಂಟೆ ತನು ಚಿತ್ತದ ಆಳಾಪಮಂ ಮಾಜಲು ಅರಿದಪುದೆ ಸಾಕಿನ್ನು ಹೇಳದೊಡೆ ಮಾಣಲು ಅಂತಸ್ಥಮದು ತಾನೆ ವುಬ್ಬುವುದೆಂದು ನಗುತಿರ್ದರು=[ಗಾಳಿ ಪರಿಮಳವನ್ನು ಅಡಗಿಪುದು ಸಾಧ್ಯವೇ! ದೇಹ ಮನಸ್ಸಿನ ಹೊಯಿದಾಟವನ್ನು ಮುಚ್ಚಲು ತಿಳಿದಿರುವುದೇ? 'ಸಾಕಿನ್ನು ಹೇಳದಿದ್ದರೆ, ಮನಸ್ಸಿನ ಒಳಗಿರುವುದು ತಾನೇ ಉಬ್ಬಿ ಹೊರಬರುವುದು,' ಎಂದು ನಗುತ್ತಿದ್ದರು].
  • ತಾತ್ಪರ್ಯ:ವಿಷಯೆಯ ಗೆಳತಿಯರು ಇವಳ ಮುಖದಲ್ಲಿ ಉಕ್ಕುವ ಹರ್ಷದ ಭಾವವನ್ನು ಕಂಡರು. ಅವರು ಕೇಳಿದರು,'ಇದೇನು ಎಲೆ ಮೃಗಾಕ್ಷಿ ತಡವಾಗಿ ಬಂದೆ ಮನಸ್ಸಿನ ಗಲಿಬಿಲಿ ಯಾವುದು, ನಿನ್ನ ಮುಖದಲ್ಲಿ ಉಕ್ಕುವ ಹರ್ಷರಸದ ಜೊತೆ ಬೆವರಿನಪ್ರವಾಹ ಸೇರಿದೆ?' ಗಾಳಿ ಪರಿಮಳವನ್ನು ಅಡಗಿಸುವುದು ಸಾಧ್ಯವೇ! ದೇಹ ಮನಸ್ಸಿನ ಹೊಯಿದಾಟವನ್ನು ಮುಚ್ಚಲು ತಿಳಿದಿರುವುದೇ? 'ಸಾಕಿನ್ನು ಹೇಳದಿದ್ದರೆ, ಮನಸ್ಸಿನ ಒಳಗಿರುವುದು ತಾನೇ ಉಬ್ಬಿ ಹೊರಬರುವುದು,' ಎಂದು ನಗುತ್ತಿದ್ದರು.
  • (ಪದ್ಯ-೩೧)

ಪದ್ಯ:-:೩೨:[ಸಂಪಾದಿಸಿ]

ಕೆಳದಿಯರ ನುಡಿಗೆ ನಸುನಗುತ ನಿಜ ಭಾವಮಂ |
ಮೊಳೆಗಾಣಿಸದೆ ಪುಸಿಗೆ ಸರಸವಾಡುತೆ ಪೊತ್ತು |
ಗಳೆವ ಮಂತ್ರಿಜೆ ಸಹಿತ ತಿರುಗಿದಳ್ ಬನದಿಂದೆ ಮನೆಗೆ ಚಂಪಕಮಾಲಿನಿ ||
ಪೊಳಲೊಳ್ ವಿವಾಹೋತ್ಸವಂಗಳಾ ಸಮಯದೊಳ್ |
ಸುಳಿದುವಗ್ಗದ ಗೀತ ನೃತ್ಯ ವಾದ್ಯಂಗಳಿಂ |
ಕಳಸ ಕನ್ನಡಿಗಳ ವಿಲಾಸದ ಪುರಂಧ್ರಿಯರ ಶೋಭನದ ಸುಸ್ವರದೊಳು ||32||

ಪದವಿಭಾಗ-ಅರ್ಥ:
ಕೆಳದಿಯರ ನುಡಿಗೆ ನಸುನಗುತ ನಿಜ ಭಾವಮಂ ಮೊಳೆ (ಗ) ಕಾಣಿಸದೆ ಪುಸಿಗೆ ಸರಸವಾಡುತೆ ಪೊತ್ತುಗಳೆವ ಮಂತ್ರಿಜೆ ಸಹಿತ ತಿರುಗಿದಳ್ ಬನದಿಂದೆ ಮನೆಗೆ ಚಂಪಕಮಾಲಿನಿ=[ವಿಷಯೆಯು, ಗೆಳತಿಯರ ಮಾತಿಗೆ ನಸುನಗುತ್ತಾ ತನ್ನ ಭಾವವನ್ನು ಅಡಗಿಸಿ ಹೊರಗೆ ಕಾಣಿಸದೆ ಹುಸಿನಗು ತೋರಿ ಸರಸವಾಡುತ್ತಾ ಹೊತ್ತು ಕಳೆದು ಮಂತ್ರಿಯ ಮಗಳು ಚಂಪಕಮಾಲಿನಿ ಮತ್ತು ಗೆಳತಿಯರ ಸಹಿತ ಉದ್ಯಾನವನದಿಂದ ಮನೆಗೆ ತಿರುಗಿಬಂದಳು.];; ಪೊಳಲೊಳ್ ವಿವಾಹೋತ್ಸವಂಗಳು ಆ ಸಮಯದೊಳ್ ಸುಳಿದುವು ಅಗ್ಗದ ಗೀತ ನೃತ್ಯ ವಾದ್ಯಂಗಳಿಂ ಕಳಸ ಕನ್ನಡಿಗಳ ವಿಲಾಸದ ಪುರಂಧ್ರಿಯರ ಶೋಭನದ ಸುಸ್ವರದೊಳು=[ಆಗಲೆ ನಗರದಲ್ಲಿ ಆ ಸಮಯದಲ್ಲಿ ವಿಸೇಷವಾದ ಗೀತ ನೃತ್ಯ ವಾದ್ಯಂಗಳಿದ, ಕಳಸ ಕನ್ನಡಿಗಳ ಸಂಭ್ರಮದ ಮುತ್ತೈದೆಯರ ಶೋಭನದ ಸುಸ್ವರದ ಜೊತೆ ವಿವಾಹೋತ್ಸವಗಳು ಕಾಣುತ್ತಿದ್ದವು.]
  • ತಾತ್ಪರ್ಯ:ವಿಷಯೆಯು, ಗೆಳತಿಯರ ಮಾತಿಗೆ ನಸುನಗುತ್ತಾ ತನ್ನ ಭಾವವನ್ನು ಅಡಗಿಸಿ ಹೊರಗೆ ಕಾಣಿಸದೆ ಹುಸಿನಗು ತೋರಿ ಸರಸವಾಡುತ್ತಾ ಹೊತ್ತು ಕಳೆದು ಮಂತ್ರಿಯ ಮಗಳು ಚಂಪಕಮಾಲಿನಿ ಮತ್ತು ಗೆಳತಿಯರ ಸಹಿತ ಉದ್ಯಾನವನದಿಂದ ಮನೆಗೆ ತಿರುಗಿಬಂದಳು. ಆಗಲೆ ನಗರದಲ್ಲಿ ಆ ಸಮಯದಲ್ಲಿ ವಿಸೇಷವಾದ ಗೀತ ನೃತ್ಯ ವಾದ್ಯಂಗಳಿದ, ಕಳಸ ಕನ್ನಡಿಗಳ ಸಂಭ್ರಮದ ಮುತ್ತೈದೆಯರ ಶೋಭನದ ಸುಸ್ವರದ ಜೊತೆ ವಿವಾಹೋತ್ಸವಗಳು ಕಾಣುತ್ತಿದ್ದವು.
  • (ಪದ್ಯ-೩೨)

ಪದ್ಯ:-:೩೩:[ಸಂಪಾದಿಸಿ]

ಪದುಳದಿಂದೈತಂದು ಬಾಲಿಕೆಯರಂ ಕಳುಹಿ |
ಸದನಮಂ ಪೊಕ್ಕಳವನೀಶ್ವರಾತ್ಮಜೆ ಬಳಿಕ |
ಮದುವೆಗಳ ಮಂಗಳೋತ್ಸವದ ಮಧುರ ಸ್ವರಂಗಳನಾಲಿಸುತೆ ಮನದೊಳು ||
ಇದು ಶುಭ ನಿಮಿತ್ತಮಿಂದೆನಗೆ ವೈವಾಹದ |
ಭ್ಯುದಯಮಾದಪುದು ಕಾಂತನೊಳಂಬೆಣಿಕೆಯಿಂದೆ |
ಮದನ ಶರದಿಂದೆ ಪೀಡಿತೆಯಾದ ಮಂತ್ರಿಸುತೆ ಮನೆಗೆ ಬರುತಿರ್ದಳಂದು ||33||

ಪದವಿಭಾಗ-ಅರ್ಥ:
ಪದುಳದಿಂದ ಐತಂದು ಬಾಲಿಕೆಯರಂ ಕಳುಹಿ ಸದನಮಂ ಪೊಕ್ಕಳು ಅವನೀಶ್ವರಾತ್ಮಜೆ ಬಳಿಕ ಮದುವೆಗಳ ಮಂಗಳೋತ್ಸವದ ಮಧುರ ಸ್ವರಂಗಳನಾಲಿಸುತೆ ಮನದೊಳು=[ಸಂತೋಷದಿಂದ ಹಿಂತಿರುಗಿಬಂದು ಬಾಲಿಕೆಯರನ್ನು ಕಳುಹಿಸಿ ಅರಮನೆಯನ್ನು ಪ್ರವೇಶಿಸಿದಳು ರಾಜನಮಗಳಾದ ಚಂಪಕಮಾಲಿನಿ. ಬಳಿಕ ಇತ್ತ ವಿಷಯೆ ಮದುವೆಗಳಲ್ಲಿ ಆಗುವ ಮಂಗಳೋತ್ಸವದ ಮಧುರ ಸ್ವರಗಳನ್ನು ಆಲಿಸುತ್ತಾ, ಮನಸ್ಸಿನಲ್ಲಿ ];; ಇದು ಶುಭ ನಿಮಿತ್ತವು ಇಂದುಮಿಂದೆನಗೆ ವೈವಾಹದ ಭ್ಯುದಯಮಾದಪುದು ಕಾಂತನೊಳಂಬೆಣಿಕೆಯಿಂದೆ ಮದನ ಶರದಿಂದೆ ಪೀಡಿತೆಯಾದ ಮಂತ್ರಿಸುತೆ ಮನೆಗೆ ಬರುತಿರ್ದಳಂದು[ಇದು ಶುಭ ನಿಮಿತ್ತವು ಇಂದು ತನಗೆ ವಿವಾಹದ ಅಭ್ಯುದಯವು ಆಗುವುದು ಕಾಂತನೊಡನೆ ಎಂಬ ಯೋಚನೆಯಿಂದ ಮನ್ಮಥನ ಶರದಿಂದ ನೊಂದ ಮಂತ್ರಿಸುತೆ ಅಂದು ಮನೆಗೆ ಬರುತ್ತಿದ್ದಳು].
  • ತಾತ್ಪರ್ಯ:ಸಂತೋಷದಿಂದ ಹಿಂತಿರುಗಿಬಂದು ಬಾಲಿಕೆಯರನ್ನು ಕಳುಹಿಸಿ ಅರಮನೆಯನ್ನು ಪ್ರವೇಶಿಸಿದಳು ರಾಜನ ಮಗಳಾದ ಚಂಪಕಮಾಲಿನಿ. ಬಳಿಕ ಇತ್ತ ವಿಷಯೆ ಮದುವೆಗಳಲ್ಲಿ ಆಗುವ ಮಂಗಳೋತ್ಸವದ ಮಧುರ ಸ್ವರಗಳನ್ನು ಆಲಿಸುತ್ತಾ, ಮನಸ್ಸಿನಲ್ಲಿ ಇದು ಶುಭ ನಿಮಿತ್ತವು; ಇಂದು ತನಗೆ ವಿವಾಹದ ಅಭ್ಯುದಯವು ಆಗುವುದು ಕಾಂತನೊಡನೆ ಎಂಬ ಯೋಚನೆಯಿಂದ ಮನ್ಮಥನ ಶರದಿಂದ ನೊಂದ ಮಂತ್ರಿಸುತೆ ಅಂದು ಮನೆಗೆ ಬರುತ್ತಿದ್ದಳು].
  • (ಪದ್ಯ-೩೩)

ಪದ್ಯ:-:೩೪:[ಸಂಪಾದಿಸಿ]

ಪುರುಹೂತ ಸಂಭೂತ ಕೇಳ್ ವನದೊಳ್ ವಿಷಯೆ |
ವಿರಹ ತಾಪದೊಳೊಂದು ಗಳಿಗೆಯಂ ಪತ್ತುಸಾ |
ಸಿರ ಯುಗಕೆ ಸಮಮಾಗಿ ಭಾವಿಪಳ್ ನಿಂದಲ್ಲಿ ನಿಲ್ಲಳಾರಂ ನೋಡಳು ||
ಪರಿಚಯದಬಲೆಯರ ನಗಿಸ(ಸುವ)ಳಾಪ್ತಸಖಿ |
ಯರ ಮಾತನಾಲಿಸಳ್ ಸಂಗರಕೆ ಮೈಗುಡಳ್ |
ಕರೆವ ಪಂಜರದ ಗಿಳಿಯಂ ನುಡಿಸಳೂಡಿಸಳ್ ಸಾಕುಮಿಗಪಕ್ಷಿಗಳನು ||34||

ಪದವಿಭಾಗ-ಅರ್ಥ:
ಪುರುಹೂತ (ಇಂದ್ರ) ಸಂಭೂತ (ಮಗ) ಕೇಳ್ ಭವನದೊಳ್ ವಿಷಯೆ ವಿರಹ ತಾಪದೊಳು ಒಂದು ಗಳಿಗೆಯಂ ಪತ್ತುಸಾಸಿರ ಯುಗಕೆ ಸಮಮಾಗಿ ಭಾವಿಪಳ್ ನಿಂದಲ್ಲಿ ನಿಲ್ಲಳು ಆರಂ ನೋಡಳು=[ಅರ್ಜುನನೇ ಕೇಳು, ಎಂದರು ನಾರದರು; ಮನೆಯಲ್ಲಿ ವಿಷಯೆ ವಿರಹ ತಾಪದಿಂದ ಅವಳಿಗೆ ಒಂದು ಗಳಿಗೆಯು ಪತ್ತುಸಾವಿರ ಯುಗಕ್ಕೆ ಸಮವಾಗಿ ಕಾಣುವುದು. ನಿಂತದಲ್ಲಿ ನಿಲ್ಲಳು, ಯಾರನ್ನೂ ನೋಡಳು. ];; ಪರಿಚಯದ ಅಬಲೆಯರ ನಗಿಸಳ್ ಆಪ್ತಸಖಿಯರ ಮಾತನು ಆಲಿಸಳ್ ಸಂಗರಕೆ ಮೈಗುಡಳ್ ಕರೆವ ಪಂಜರದ ಗಿಳಿಯಂ ನುಡಿಸಳು ಊಡಿಸಳ್ (ಊಟ ಕೊಡಳು) ಸಾಕುಮಿಗಪಕ್ಷಿಗಳನು=[ಪರಿಚಯದ ವನಿತೆಯರನ್ನು ನಗಿಸಳು- ಕಂಡಾಗ ಮುಗುಳುನಗುವುದಿಲ್ಲ; ಆಪ್ತಸಖಿಯರ ಮಾತನ್ನು ಆಲಿಸುವುದಿಲ್ಲ; ಶೃಂಗಾರಕ್ಕೆ ಮೈಯನ್ನು ಒಡ್ಡುವುದಿಲ್ಲ; ಕರೆಯುವ ಪಂಜರದ ಗಿಳಿಯನ್ನು ಮಾತನಾಡಿಸುವುದಿಲ್ಲ. ಸಾಕಿದ ಮಿಗ ಪಕ್ಷಿಗಳಿಗೆ ಆಹಾರ ಕೊಡುವುದನ್ನು ಮರೆತಳು.]
  • ತಾತ್ಪರ್ಯ:ಅರ್ಜುನನೇ ಕೇಳು, ಎಂದರು ನಾರದರು; ಮನೆಯಲ್ಲಿ ವಿರಹತಾಪದಿಂದ ವಿಷಯೆಗೆ ಒಂದು ಗಳಿಗೆಯು ಪತ್ತುಸಾವಿರ ಯುಗಕ್ಕೆ ಸಮವಾಗಿ ಕಾಣುವುದು. ನಿಂತದಲ್ಲಿ ನಿಲ್ಲಳು, ಯಾರನ್ನೂ ನೋಡಳು. ಪರಿಚಯದ ವನಿತೆಯರನ್ನು ನಗಿಸಳು- ಕಂಡಾಗ ಮುಗುಳುನಗುವುದಿಲ್ಲ; ಆಪ್ತಸಖಿಯರ ಮಾತನ್ನು ಆಲಿಸುವುದಿಲ್ಲ; ಶೃಂಗಾರಕ್ಕೆ ಮೈಯನ್ನು ಒಡ್ಡುವುದಿಲ್ಲ; ಕರೆಯುವ ಪಂಜರದ ಗಿಳಿಯನ್ನು ಮಾತನಾಡಿಸುವುದಿಲ್ಲ. ಸಾಕಿದ ಮಿಗ ಪಕ್ಷಿಗಳಿಗೆ ಆಹಾರ ಕೊಡುವುದನ್ನು ಮರೆತಳು.]
  • (ಪದ್ಯ-೩೪)

ಪದ್ಯ:-:೩೫:[ಸಂಪಾದಿಸಿ]

ಉಣ್ಣಳೊರಗಳ್ ನುಡಿಯಳುಡಳಿಡಳ್ (ತು)ತೊಡಳುರಿಗೆ |
ತಣ್ಣಸವನರಸುವಳ್ ಸುಕುಮಾರ ತನು ತನಗೆ |
ತಿಣ್ಣಮೆಂದಲಸುವಳ್‍ ಬಿಸುಯ್ವಳೇನಿದೆಂದಂಡಲೆದು ಕೇಳ್ವವರೊಳು ||
ಕಣ್ಣಳವನೊದವಿಪಳ್ ಶೈತ್ಯವಸ್ತುಗಳಿಂದೆ |
ಪಣ್ಣಿದುಪಚಾರಮಂ ಹೃದಯದೊಳ್ ನೀರ್ಪೊಯ್ದ |
ಸುಣ್ಣ ಮರಳ್ವಂತಾದುದೆಂದು ಕಾತರಿಸುವಳಬಲೆ ಕಾಮತಾಪದಿಂದೆ ||35||

ಪದವಿಭಾಗ-ಅರ್ಥ:
ಉಣ್ಣಳು ಒರಗಳ್ ನುಡಿಯಳು ಉಡಳ್ ಇಡಳ್ ತೊಡಳು ಉರಿಗೆ ತಣ್ಣಸವನು ಅರಸುವಳ್ ಸುಕುಮಾರ ತನು ತನಗೆ ತಿಣ್ಣಂ (ಕಷ್ಟ) ಎಂದು ಅಲಸುವಳ್‍ ಬಿಸುಯ್ವಳು ಏನಿದೆಂದು ಅಂಡಲೆದು ಕೇಳ್ವವರೊಳು=[ಚಂದ್ರಹಾಸನನ್ನು ನೋಡಿ ಮೋಹಿಸಿ ಬಂದ ವಿಷಯೆ, ಕಾಮ ತಾಪದಿಂದ ಬೇಯುತ್ತಾ, ಊಟಮಾಡವುದಿಲ್ಲ, ಮಲಗುವುದಿಲ್ಲ, ಮಾತಾಡುವುದಿಲ್ಲ, ಬಟ್ಟೆಬದಲಾಯಿಸಿ ಉಡುವುದಿಲ್ಲ, ಕೈಯಲ್ಲಿದ್ದುದನ್ನು ಇಡಲು ಮರೆಯುವಳು, ವಡವೆಯನ್ನು ತೊಡಳು, ವಿರಹತಾಪದ ಉರಿಗೆ ತಂಪುನ್ನು ಹುಡುಕುವಳು, ತನಗೆ ಸಕುಮಾರ/ ಕೋಮಲದೇಹವು ತಡೆದುಕೊಳ್ಳಲು ಕಷ್ಟ ಎಂದು ಆಯಾಸಪಡುವಳು, ಸಂಕಟದಿಂದ ಬಿಸುಸುಯ್ಯುವಳು, ಏನು ಇದು? ಏನಾಗಿದೆ ಎಂದು ಅಂಡಲೆದು/ಅವಳ ಹಿಂದೆಯೇ ಬಂದು ಕೇಳುವವರನ್ನು];; ಕಣ್ಣ ಅಳವನು(ಅಳವು:ಶಕ್ತಿ,ಸಾಮರ್ಥ್ಯ) ಒದವಿಪಳ್ (ಒದಗಿಸು, ಕೊಡು), ಶೈತ್ಯವಸ್ತುಗಳಿಂದೆ ಪಣ್ಣಿದ (ಮಾಡಿದ)ಉಪಚಾರಮಂ ಹೃದಯದೊಳ್ ನೀರ್ ಪೊಯ್ದ ಸುಣ್ಣ ಮರಳ್ವಂತೆ ಆದುದು ಎಂದು ಕಾತರಿಸುವಳು ಅಬಲೆ ಕಾಮತಾಪದಿಂದೆ=[ಕಣ್ಣ ದೃಷ್ಟಿಯನ್ನಿಟ್ಟು ನೋಡುವಳು, ತಣ್ಣನೆಯ ವಸ್ತುಗಳಿಂದೆ ಮಾಡಿದ ಉಪಚಾರವೂ ಕೂಡ, ಹೃದಯದಲ್ಲಿ ನೀರು ಹಾಕಿದ ಸುಣ್ಣ ಕುದಿಯುವಂತೆ ಆಗುವುದು ಎಂದು ಆ ಅಬಲೆ ಕಾತರಿಸುವಳು, (<-ಕಾಮತಾಪದಿಂದ)].
  • ತಾತ್ಪರ್ಯ:ಚಂದ್ರಹಾಸನನ್ನು ನೋಡಿ ಮೋಹಿಸಿ ಬಂದ ವಿಷಯೆ, ಕಾಮ ತಾಪದಿಂದ ಬೇಯುತ್ತಾ, ಊಟಮಾಡವುದಿಲ್ಲ, ಮಲಗುವುದಿಲ್ಲ, ಮಾತಾಡುವುದಿಲ್ಲ, ಬಟ್ಟೆಬದಲಾಯಿಸಿ ಉಡುವುದಿಲ್ಲ, ಕೈಯಲ್ಲಿದ್ದುದನ್ನು ಇಡಲು ಮರೆಯುವಳು, ವಡವೆಯನ್ನು ತೊಡಳು, ವಿರಹತಾಪದ ಉರಿಗೆ ತಂಪುನ್ನು ಹುಡುಕುವಳು, ತನಗೆ ಸಕುಮಾರವಾದ/ ಕೋಮಲದೇಹವು, ತಡೆದುಕೊಳ್ಳಲು ಕಷ್ಟ ಎಂದು ಆಯಾಸ ಪಡುವಳು, ಸಂಕಟದಿಂದ ಬಿಸುಸುಯ್ಯುವಳು, ಏನು ಇದು? ಏನಾಗಿದೆ ಎಂದು ಅವಳ ಹಿಂದೆಯೇ ಬಂದು ಕೇಳುವವರನ್ನು ಕಣ್ಣ ದೃಷ್ಟಿಯನ್ನಿಟ್ಟು ನೋಡುವಳು, ತಣ್ಣನೆಯ ವಸ್ತುಗಳಿಂದೆ ಮಾಡಿದ ಉಪಚಾರವೂ ಕೂಡ, ಹೃದಯದಲ್ಲಿ ನೀರು ಹಾಕಿದ ಸುಣ್ಣ ಕುದಿಯುವಂತೆ ಆಗುವುದು, ಎಂದು ಆ ಅಬಲೆ ಕಾತರಿಸುವಳು.
  • (ಪದ್ಯ-೩೫)

ಪದ್ಯ:-:೩೬:[ಸಂಪಾದಿಸಿ]

ಜಲಯಂತ್ರದೆಡೆಯೊಳ್ ತಳಿರ್ವಸೆಯ ತಾಣದೊಳ್ |
ಮಲಯಜದ ಮಾಡದೊಳ್ ಶಶಿಕಾಂತ ವೇದಿಯೊಳ್|
ಸುಲಲಿತ ಲತಾಮಂಟಪದೊಳೆಸೆವ ತಂಗೊಳದ ತಡಿಯ ಪುಳಿನಸ್ಥಳದೊಳು ||
ಎಳೆವೆಲರ ತುಂಬಿಗಳ ಪಲ್ಲವದ ಕುಸುಮ ಸಂ |
ಕುಲದ ಹಂಸದ ಗಿಳಿಯ ಕೋಗಿಲೆಯ ಕರ್ಕಶಕೆ |
ನಿಲಲರಿಯದುಪ್ಪರಿಗೆದುದಿನೆಲೆಯ ಚಂದ್ರಶಾಲೆಗೆ ಬಂದಳಂಬುಜಾಕ್ಷಿ ||36||

ಪದವಿಭಾಗ-ಅರ್ಥ:
ಜಲಯಂತ್ರದ ಎಡೆಯೊಳ್ ತಳಿರ್ವಸೆಯ ತಾಣದೊಳ್ ಮಲಯಜದ (ಮಲಯ ಪರ್ವತದಲ್ಲಿ ಹುಟ್ಟಿದ; ಶ್ರೀಗಂಧವನ್ನು ಹಚ್ಚಿದ) ಮಾಡದೊಳ್ ಶಶಿಕಾಂತ ವೇದಿಯೊಳ್ ಸುಲಲಿತ ಲತಾಮಂಟಪದೊಳ್ ಎಸೆವ ತಂಗೊಳದ ತಡಿಯ ಪುಳಿನಸ್ಥಳದೊಳು=[ಜಲಯಂತ್ರದ ಹತ್ತಿರ ಚಿಗುರುಎಲೆಯ ಲತಾಮಂಟಪ ತಾಣದಲ್ಲಿ ತಂಪಾದ ಶ್ರೀಗಂಧದ ಗಾಳಿಯಿರುವ ಮಾಡಿನ ಶಶಿಕಾಂತವೆಂಬ ತಣ್ಣನೆಯ ಕಲ್ಲಿಹಾಸಿನ ಜಗುಲಿಯ ಸುಲಲಿತ ಲತಾಮಂಟಪದಲ್ಲಿ ಶೋಬಿಸುವ ತಂಪುಕೊಳದ ದಡದ ಮರಳಿನ ಸ್ಥಳದಲ್ಲಿ];; ಎಳೆವೆಲರ ತುಂಬಿಗಳ ಪಲ್ಲವದ ಕುಸುಮ ಸಂಕುಲದ ಹಂಸದ ಗಿಳಿಯ ಕೋಗಿಲೆಯ ಕರ್ಕಶಕೆ ನಿಲಲರಿಯದೆ ಉಪ್ಪರಿಗೆ (ದು)ತುದಿನೆಲೆಯ ಚಂದ್ರಶಾಲೆಗೆ ಬಂದಳು ಅಂಬುಜಾಕ್ಷಿ=[ತಂಗಾಳಿಯ, ತುಂಬಿಗಳೀರುವ ಅರಳಿದ ಹೂವುಗಳ ಸಮೂಹದ, ಹಂಸದ, ಗಿಳಿಯ, ಕೋಗಿಲೆಯ,ಇಂಪಾದ ದನಿಯೂ, ಸವಾಸನೆಯೂ ಹೃದಯ ತಾಪದಲ್ಲಿ ಕರ್ಕಶವಾಗಿ ಕಾಣಲು ನಿಲ್ಲಲು ಆಗದೆ ಉಪ್ಪರಿಗೆಯ ತುದಿಭಾಗದ ಚಂದ್ರಶಾಲೆಗೆ ಅಂಬುಜಾಕ್ಷಿ ವಿಷಯೆ ಬಂದಳು].
  • ತಾತ್ಪರ್ಯ: ವಿಷಯೆ ತಂಪು ತಾಣವನ್ನು ಅರಸುತ್ತಾ, ಜಲಯಂತ್ರದ ಹತ್ತಿರ ಚಿಗುರುಎಲೆಯ ಲತಾಮಂಟಪ ತಾಣದಲ್ಲಿ ತಂಪಾದ ಶ್ರೀಗಂಧದ ಗಾಳಿಯಿರುವ ಮಾಡಿನ ಶಶಿಕಾಂತವೆಂಬ ತಣ್ಣನೆಯ ಕಲ್ಲಿಹಾಸಿನ ಜಗುಲಿಯ ಸುಲಲಿತ ಲತಾಮಂಟಪದಲ್ಲಿ ಶೋಬಿಸುವ ತಂಪುಕೊಳದ ದಡದ ಮರಳಿನ ಸ್ಥಳದಲ್ಲಿ ತಂಗಾಳಿಯ, ತುಂಬಿಗಳೀರುವ ಅರಳಿದ ಹೂವುಗಳ ಸಮೂಹದ, ಹಂಸದ, ಗಿಳಿಯ, ಕೋಗಿಲೆಯ,ಇಂಪಾದ ದನಿಗಳೂ, ಸವಾಸನೆಯೂ, ಅವಳ ಹೃದಯ ತಾಪದಲ್ಲಿ ಕರ್ಕಶವಾಗಿ ಕಾಣಲು, ನಿಲ್ಲಲು ಆಗದೆ ಉಪ್ಪರಿಗೆಯ ತುದಿಭಾಗದ ಚಂದ್ರಶಾಲೆಗೆ ಅಂಬುಜಾಕ್ಷಿ ವಿಷಯೆ ಬಂದಳು.
  • (ಪದ್ಯ-೩೬)

ಪದ್ಯ:-:೩೭:[ಸಂಪಾದಿಸಿ]

ಅಲ್ಲಿ ನಿಜ ಸಖಿಯರಬಲೆಯ ಚಿತ್ತದಾಸರಂ |
ಮೆಲ್ಲಮೆಲ್ಲನೆ ಸವಿಸಲೆಂದುಪಚರಿಸಲವರ |
ಸಲ್ಲಲಿತ ಮುಖವಾಣಿ ಲೋಚನ ಭ್ರೂಕುಂತಳಾಧರಂಗಳನೀಕ್ಷಿಸಿ ||
ತಲ್ಲಣಿಸಿ ತಿಂಗಳರಗಿಳಿ ಪೂಸರಲ್ ಕಬ್ಬು |
ವಿಲ್ಲಾರಡಿಗಳೊಳ್ದಳಿರ್ಗಳೆಂದೆಣಿಸಿ ನು |
ಣ್ಗಲ್ಲದೊಳ್‍ಕೈಯಿಟ್ಟು ಬೆರಗಾಗಿ ಚಿಂತಿಸುವ ತೆರದೊಳವಳಿರುತಿರ್ದಳು||37||

ಪದವಿಭಾಗ-ಅರ್ಥ:
ಅಲ್ಲಿ ನಿಜ ಸಖಿಯರೂ ಆಬಲೆಯ ಚಿತ್ತದ ಅಸರಂ ಮೆಲ್ಲಮೆಲ್ಲನೆ ಸವಿಸಲೆಂದು(ತವಿಸು:ತಪ್ಪಿಸು?) ಊಪಚರಿಸಲು ಆವರ ಸಲ್ಲಲಿತ ಮುಖವಾಣಿ ಲೋಚನ ಭ್ರೂಕುಂತಳ ಆಧರಂಗಳನು ಈಕ್ಷಿಸಿ=[ಅಲ್ಲಿ ತನ್ನ ಸಖಿಯರು ಈ ವಿಷಯೆಯ ಮನಸ್ಸಿನ ಆಯಾಸವನ್ನು ಮೆಲ್ಲಮೆಲ್ಲಗೆ ಕಡಿಮೆಮಾಡಲೆಂದು ಊಪಚರಿಸಲಾಗಿ, ಆವರ ಸವಿಯಾದ ಮಾತು, ಕಣ್ಣು, ಹುಬ್ಬು, ತುಟಿಗಳನ್ನು ನೋಡಿ,];; ತಲ್ಲಣಿಸಿ ತಿಂಗಳು ಅರೆಗಿಳಿ ಪೂಸರಲ್ ಕಬ್ಬು ವಿಲ್ಲು ಆರಡಿಗಳು ಒಳ್ದ ಅಳಿರ್ಗಳು ಎಂದೆಣಿಸಿ ನುಣ್ಗಲ್ಲದೊಳ್‍ ಕೈಯಿಟ್ಟು ಬೆರಗಾಗಿ ಚಿಂತಿಸುವ ತೆರದೊಳು ಆವಳಿರುತಿರ್ದಳು=[ತಲ್ಲಣಿಸಿ ಬೆಳದಿಂಗಳು, ಅರೆಗಿಳಿ, ಹೂವಿನ ಬಾಣ, ಕಬ್ಬಿನಬಿಲ್ಲು ದುಂಬಿಗಳನ್ನು ಹೊಂದಿದ ಹೂವುಗಳು ಎಂದು ಭಾವಿಸಿ, ತನ್ನ ನುಣ್ಣನೆಯ ಗಲ್ಲದಮೇಲೆ ಕೈಯಿಟ್ಟು ಅಚ್ಚರಿಯಿಂದ ಚಿಂತಿಸುವರೀತಿಯಲ್ಲಿ ವಿಷಯೆ ಇದ್ದಳು.] (ಸಖಿಯರ ಮಾತುಗಳನ್ನು ಕೇಳಿ ಅಂಗಗಳನ್ನು ನೋಡಿ, ಅವಳಿಗೆ ಕಾಮೋತ್ತೇಜಕದ ಭಾವಗಳೇ ಉಂಟಾಗುತ್ತಿದ್ದವು ಎಂದು ಭಾವ)
  • ತಾತ್ಪರ್ಯ:ಅಲ್ಲಿ ತನ್ನ ಸಖಿಯರು ಈ ವಿಷಯೆಯ ಮನಸ್ಸಿನ ಆಯಾಸವನ್ನು ಮೆಲ್ಲಮೆಲ್ಲಗೆ ಕಡಿಮೆಮಾಡಲೆಂದು ಊಪಚರಿಸಲಾಗಿ, ಆವರ ಸವಿಯಾದ ಮಾತು, ಕಣ್ಣು, ಹುಬ್ಬು, ತುಟಿಗಳನ್ನು ನೋಡಿ, ವಿಷಯೆ ತಲ್ಲಣಿಸಿ, ಬೆಳದಿಂಗಳು, ಅರೆಗಿಳಿ, ಹೂವಿನ ಬಾಣ, ಕಬ್ಬಿನಬಿಲ್ಲು ದುಂಬಿಗಳನ್ನು ಹೊಂದಿದ ಹೂವುಗಳು ಎಂದು ಭಾವಿಸಿ, ತನ್ನ ನುಣ್ಣನೆಯ ಗಲ್ಲದಮೇಲೆ ಕೈಯಿಟ್ಟು ಅಚ್ಚರಿಯಿಂದ ಚಿಂತಿಸುವ ರೀತಿಯಲ್ಲಿ ವಿಷಯೆ ಇದ್ದಳು. (ಸಖಿಯರ ಮಾತುಗಳನ್ನು ಕೇಳಿ ಅಂಗಗಳನ್ನು ನೋಡಿ, ಅವಳಿಗೆ ಕಾಮೋತ್ತೇಜಕದ ಭಾವಗಳೇ ಉಂಟಾಗುತ್ತಿದ್ದವು ಎಂದು ಭಾವ)
  • (ಪದ್ಯ-೩೭)

ಪದ್ಯ:-:೩೮:[ಸಂಪಾದಿಸಿ]

ಪಾವಗದುಳಿದರುಂಟೆ ಹರನ ಕೋಪದೊಳುರಿದು |
ಜೀವಿಸಿದರುಂಟೆ ಕಾಳ್ಕಿಚ್ಚಿನೊಳ್ ಕೆಳೆಗೊಂಡು |
ಬೇವುತಸುವಿಡಿದು ಬಾಳ್ದವರುಂಟೆ ಚಂದ್ರ ಮನ್ಮಥಪವನರಬಲೆಯರ್ಗೆ ||
ಹಾವಳಿಯ ನೊದವಿಸುವೆವೆಂದು ಬದುಕಿದರಲ್ಲ |
ದಾವ ಕರುಣಿಗಳವರ್ ವಿರಹಮೀಕೆಯ ಮನವ |
ನಾವರಿಸಲೇನಹುದೊ ಶಿವಶಿವಾ ತಾಳಲರಿದೆಂದೊರ್ವ ಸಖಿ ನುಡಿದಳು ||38|||

ಪದವಿಭಾಗ-ಅರ್ಥ:
ಪಾವು ಅಗಿದು (ಅಗಿ:ಕಚ್ಚು) ಉಳಿದರುಂಟೆ ಹರನ ಕೋಪದೊಳು ಉರಿದು ಜೀವಿಸಿದರುಂಟೆ ಕಾಳ್ಕಿಚ್ಚಿನೊಳ್ ಕೆಳೆಗೊಂಡು ಬೇವುತ ಅಸುವಿಡಿದು ಬಾಳ್ದವರುಂಟೆ ಚಂದ್ರ ಮನ್ಮಥ,ಪವನರು=[ಹಾವು ಕಚ್ಚಿ ಉಳಿದದವರುಂಟೆ? ಹರನ ಕೋಪದಲ್ಲಿ ಅವನ ಹಣೆಗಣ್ಣ ಬೆಂಕಿಯಲ್ಲಿ ಸುಟ್ಟು ಜೀವಿಸಿದವರು ಇದ್ದಾರೆಯೇ? ಕಾಳ್ಕಿಚ್ಚಿನಲ್ಲಿ ಗೆಳೆಯನೆಂದು ಅದರಲ್ಲಿ ಬೇಯ್ಯುತ್ತಾ ಜೀವಹಿಡಿದುಕೊಂಡು ಬಾಳಿದವರುಂಟೆ? ಈ ಚಂದ್ರ ಮನ್ಮಥ,ವಾಯು/ಪವನರು,];; ಅಬಲೆಯರ್ಗೆ ಹಾವಳಿಯ ನೊದವಿಸುವೆವು ಎಂದು ಬದುಕಿದರಲ್ಲ ಅದಾವ ಕರುಣಿಗಳವರ್ ವಿರಹಂ ಈಕೆಯ ಮನವನು ಆವರಿಸಲು ಏನಹುದೊ ಶಿವಶಿವಾ ತಾಳಲರಿದೆಂದು ಓರ್ವ ಸಖಿ ನುಡಿದಳು=[ಅಬಲೆಯರಿಗೆ ಹಾವಳಿಯನ್ನು ಮಾಡಿ ತೊಂದರೆ ಕೊಡುವೆವು ಎಂದು/ಎನ್ನುವ ಉದ್ದೇಶದಿಂದ ಬದುಕಿದರಲ್ಲ! ಅವರು (ಈ ಮೂವರು) ಅದು ಯಾವ ಬಗೆಯ ಕರುಣೆಯುಳ್ಳವರು? ವಿರಹತಾಪವು ಈಕೆಯ ಮನಸ್ಸನ್ನು ಆವರಿಸಿರುವುದರಿಂದ ಏನಾಗುವುದೊ ಶಿವಶಿವಾ! ಸಹಿಸಲು ಸಾಧ್ಯವಿಲ್ಲ ಎಂದು ವಿಷೆಯೆಯ ಒಬ್ಬ ಸಖಿಯು ಹೇಳಿದಳು].
  • ತಾತ್ಪರ್ಯ:ಹಾವು ಕಚ್ಚಿ ಉಳಿದದವರುಂಟೆ? ಹರನ ಕೋಪದಲ್ಲಿ ಅವನ ಹಣೆಗಣ್ಣ ಬೆಂಕಿಯಲ್ಲಿ ಸುಟ್ಟು ಜೀವಿಸಿದವರು ಇದ್ದಾರೆಯೇ&&? ಕಾಳ್ಕಿಚ್ಚಿನಲ್ಲಿ ಗೆಳೆಯನೆಂದು ಅದರಲ್ಲಿ ಬೇಯ್ಯುತ್ತಾ ಜೀವಹಿಡಿದುಕೊಂಡು ಬಾಳಿದವರುಂಟೆ? ಈ ಚಂದ್ರ ಮನ್ಮಥ,ವಾಯು/ಪವನರು, ಅಬಲೆಯರಿಗೆ ಹಾವಳಿಯನ್ನು ಮಾಡಿ ತೊಂದರೆ ಕೊಡುವೆವು ಎಂದು/ಎನ್ನುವ ಉದ್ದೇಶದಿಂದ ಬದುಕಿದರಲ್ಲ! ಅವರು (ಈ ಮೂವರು) ಅದು ಯಾವ ಬಗೆಯ ಕರುಣೆಯುಳ್ಳವರು? ವಿರಹ ತಾಪವು ಈಕೆಯ ಮನಸ್ಸನ್ನು ಆವರಿಸಿರುವುದರಿಂದ ಏನಾಗುವುದೊ ಶಿವಶಿವಾ! ಸಹಿಸಲು ಸಾಧ್ಯವಿಲ್ಲ ಎಂದು ವಿಷೆಯೆಯ ಒಬ್ಬ ಸಖಿಯು ಹೇಳಿದಳು.
  • (@@ಚಂದ್ರನು ರಾಹು ಹಿಡಿದರೂ ಬದುಕಿದ, &&ಮನ್ಮಥನು ಶಿವನ ಉರಿಗಣ್ಣಿಗೆ ಸಿಕ್ಕಿ ಬೂದಿಯಾದರೂ ಬದುಕಿದ, ವಾಯುವು/ತಂಗಾಳಿ ಬೆಂಕಿಯ ಜೊತೆ ಉರಿದರೂ ಉಳಿದ; ಈ ಮೂವರೂ-ಚಂದ್ರ,ಮನ್ಮಥ,ತಂಗಾಳಿ, ಅಬಲೆಯರಿಗೆ ವಿರಹ ತಾಪ ಕೊಟ್ಟು ಸಾಯಿಸುವರು)
  • (ಪದ್ಯ-೩೮)

ಪದ್ಯ:-:೩೯:[ಸಂಪಾದಿಸಿ]

ಬೆಳವಿಗೆಗೆ ಸುರರೊಂದು ಕಳೆಯನೇ ಕುಳುಹಿದರೊ |
ಮುಳಿದಂದು ಶಿವನೇಕೆ ಮತ್ತೆ ಕರುಣಿಸಿದನೋ |
ಮೆಲುತ ಮೆಲುತೇಕೆ ಬಿಟ್ಟುವೊ ಫಣಿಗಳಂದು ಶಶಿ ಮದನ ಮಂದಾನಿಲರನು ||
ಸಲೆ ಬೈದು ಕೋಗಿಲೆಯ ತುಂಬಿಗಳ ಗಿಳಿಯ ಕಳ |
ಕಳಕೆ ವಾಯಸಮಂ ಸರೋಜಮಂ ತನ್ನ ಕರ |
ತಳಮಂ ಜರೆದು ನಿಂದಿಸಿದಳೊರ್ವ ಸಖಿ ಬಾಲೆಯಂ ನೋಡಿ ಬಿಸುಸುಯ್ಯುತೆ ||39||

ಪದವಿಭಾಗ-ಅರ್ಥ:
ಬೆಳವಿಗೆಗೆ ಸುರರೊಂದು ಕಳೆಯನೇ ಕುಳುಹಿದರೊ ಮುಳಿದಂದು ಶಿವನೇಕೆ ಮತ್ತೆ ಕರುಣಿಸಿದನೋ ಮೆಲುತ ಮೆಲುತೇಕೆ ಬಿಟ್ಟುವೊ ಫಣಿಗಳಂದು ಶಶಿ ಮದನ ಮಂದಾನಿಲರನು=[ಹದಿನಾರು ಕಳೆಯಷ್ಟು ಬೆಳೆಯುವುದಕ್ಕೆ ದೇವತೆಗಳು ಚಂದ್ರನ ಒಂದು ಕಳೆಯನ್ನು ಕುಳುಹಿಸಿದರೊ! ಸಿಟ್ಟಿನಿಂದ ಶಿವನು ಸುಟ್ಟವನು, ಮದನನಿಗೆ ಮತ್ತೆ ಏಕೆ ಜೀವವನ್ನು ಕರುಣಿಸಿದನೋ! ವಾಯುವನ್ನು (ತಂಗಾಳಿಯನ್ನು)ತಿನ್ನುತ್ತಾ ತಿನ್ನುತ್ತಾ ಏಕೆ ಬಿಟ್ಟುವೊ ಹಾವುಗಳು ಅಂದು, ಶಶಿ ಮದನ ಮಂದಾನಿಲರನ್ನು ಎಂದು];; ಸಲೆ ಬೈದು ಕೋಗಿಲೆಯ ತುಂಬಿಗಳ ಗಿಳಿಯ ಕಳ ಕಳಕೆ ವಾಯಸಮಂ ಸರೋಜಮಂ ತನ್ನ ಕರತಳಮಂ ಜರೆದು ನಿಂದಿಸಿದಳೊರ್ವ ಸಖಿ ಬಾಲೆಯಂ ನೋಡಿ ಬಿಸುಸುಯ್ಯುತೆ=[ಬಹಳ ಬೈದು, ಕೋಗಿಲೆಯ, ತುಂಬಿಗಳ, ಗಿಳಿಯ, ಕಳಕಳಕೆ/ ವಾಯಸ/ಕಾಗೆಯನ್ನು ಕೋಗಿಲೆಯನ್ನು ತಿನ್ನದೆ ಸಾಕಿದ್ದಕ್ಕೆ, ಕಮಲವನ್ನು ದುಂಬಿಗಳನ್ನು ಹಿಡಿಯದೇ ಬಿಟ್ಟಿದ್ದಕ್ಕೆ, ತನ್ನ ಕೈಯನ್ನು ಗಿಳಿಯನ್ನು ಸಾಕಿದ್ದಕ್ಕೆ ಒಬ್ಬ ವಿಷಯೆಯ ಸಖಿ, ಅವಳು ಸಂಕಟ ಪಡುವುವನ್ನು ನೋಡಿ ತಾನು ಬಿಸುಸುಯ್ಯುತ್ತ ಜರೆದು/ಬೈದು ನಿಂದಿಸಿದಳು.]
  • ತಾತ್ಪರ್ಯ:ಹದಿನಾರು ಕಳೆಯಷ್ಟು ಬೆಳೆಯುವುದಕ್ಕೆ ದೇವತೆಗಳು ಚಂದ್ರನ ಒಂದು ಕಳೆಯನ್ನು ಕುಳುಹಿಸಿದರೊ! ಸಿಟ್ಟಿನಿಂದ ಶಿವನು ಸುಟ್ಟವನು, ಮದನನಿಗೆ ಮತ್ತೆ ಏಕೆ ಜೀವವನ್ನು ಕರುಣಿಸಿದನೋ! ವಾಯುವನ್ನು (ತಂಗಾಳಿಯನ್ನು)ಅಂದು ತಿನ್ನುತ್ತಾ ತಿನ್ನುತ್ತಾ ಏಕೆ ಬಿಟ್ಟುವೊ ಹಾವುಗಳು, ಶಶಿ/ಚಂದ್ರ, ಮದನ, ಮಂದಾನಿಲರನ್ನು ಎಂದು ಬಹಳ ಬೈದು, ಕೋಗಿಲೆಯ, ತುಂಬಿಗಳ, ಗಿಳಿಯ, ಕಳಕಳಕೆ/ ವಾಯಸ/ಕಾಗೆಯನ್ನು ಕೋಗಿಲೆಯನ್ನು ತಿನ್ನದೆ ಸಾಕಿದ್ದಕ್ಕೆ, ಕಮಲವನ್ನು ದುಂಬಿಗಳನ್ನು ಹಿಡಿಯದೇ ಬಿಟ್ಟಿದ್ದಕ್ಕೆ, ತನ್ನ ಕೈಯನ್ನು ಗಿಳಿಯನ್ನು ಸಾಕಿದ್ದಕ್ಕೆ ಒಬ್ಬ ವಿಷಯೆಯ ಸಖಿ, ಅವಳು ಸಂಕಟ ಪಡುವುವನ್ನು ನೋಡಿ ತಾನು ಬಿಸುಸುಯ್ಯುತ್ತ ಜರೆದು/ಬೈದು ನಿಂದಿಸಿದಳು. (ಹಾವು ಗಾಳಿಯನ್ನು ತಿಂದು ಬದುಕಿವುವು ಎಂಬ ನಂಬುಗೆ) (ಪೂರ್ಣಚಂದ್ರ, ಮನ್ಮಥ, ಕೋಗಿಲೆಗಳ ಹಾಡು, ದುಂಬಿಗಳ ಝೇಂಕಾರ ಇವು ವಿಷೆಯೆಯ ವಿರಹ ತಾಪಕ್ಕೆ ಕಾರಣ ಎಂದು ಅವನ್ನು ನಿಂದಿಸಿದಳು)
  • (ಪದ್ಯ-೩೯)

ಪದ್ಯ:-:೪೦:[ಸಂಪಾದಿಸಿ]

ಇವಳ (ಅವಳ) ಮನದೆಣಿಕೆ ಕೈಗೂಡಲಾವೆಲ್ಲರುಂ |
ವಿವಿಧ ಕುಸುಮೋತ್ಕರ ಸುಗಂಧಾಕ್ಷತೆಗಳಿಂದೆ |
ನವ ಪಕ್ವಫಲ ಮೋದಕಾದಿ ನೈವೇದ್ಯದಿಂ ಧೂಪ ದೀಪಂಗಳಿಂದೆ ||
ಶಿವನ ವಲ್ಲಭೆಯನರ್ಚಿಸಿ ವರ್ಷವರ್ಷಕು |
ತ್ಸವದಿಂದೆ ನೋಂಪಿಯಂ ಮಾಳ್ಪಿವೆಂದಾ ಸಕಲ |
ಭುವನ ಮಾತೆಯನುಮಾದೇವಿಯಂ ಗೌರಿಯಂ ಪ್ರಾರ್ಥಿಸಿದರಾ ಸಖಿಯರು ||40||

ಪದವಿಭಾಗ-ಅರ್ಥ:
ಇವಳ (ಅವಳ) ಮನದೆಣಿಕೆ ಕೈಗೂಡಲು ಆವೆಲ್ಲರುಂ ವಿವಿಧ ಕುಸುಮೋತ್ಕರ ಸುಗಂಧಾಕ್ಷತೆಗಳಿಂದೆ ನವ ಪಕ್ವಫಲ ಮೋದಕಾದಿ ನೈವೇದ್ಯದಿಂ ಧೂಪ ದೀಪಂಗಳಿಂದೆ=[ವಿಷಯೆಯ ಮನದ ಆಸೆ ಕೈಗೂಡಿದರೆ, ತಾವೆಲ್ಲರೂ, ವಿವಿಧ ರಾಶಿ ಹೂವುಗಳಿಂದ, ಸುಗಂಧ ಅಕ್ಷತೆಗಳಿಂದ, ಹೊಸ ಕಳಿತಹಣ್ಣು ಮೋದಕ ಮೊದಲಾದದ ಖಾದ್ಯ ನೈವೇದ್ಯದಿಂದ ಧೂಪ ದೀಪಗಳಿಂದ];; ಶಿವನ ವಲ್ಲಭೇಯನು ಅರ್ಚಿಸಿ ವರ್ಷವರ್ಷಕು ಉತ್ಸವದಿಂದೆ ನೋಂಪಿಯಂ ಮಾಳ್ಪಿವು ಎಂದು ಆ ಸಕಲಭುವನ ಮಾತೆಯನು ಉಮಾದೇವಿಯಂ ಗೌರಿಯಂ ಪ್ರಾರ್ಥಿಸಿದರು ಆ ಸಖಿಯರು=[ಶಿವನ ಪತ್ನಿಯನ್ನು ಪೂಜೆಮಾಡಿ ವರ್ಷವರ್ಷಕ್ಕೂ ಉತ್ಸವಮಾಡಿ ವ್ರತವನ್ನು ಮಾಡುವೆವು, ಎಂದು ಆ ಸಕಲಭುವನ ಮಾತೆಯಾದ ಉಮಾದೇವಿಯನ್ನು ಗೌರಿಯನ್ನು ಪ್ರಾರ್ಥಿಸಿದರು, ಆ ಸಖಿಯರು].
  • ತಾತ್ಪರ್ಯ:ವಿಷಯೆಯ ಮನದ ಆಸೆ ಕೈಗೂಡಿದರೆ, ತಾವೆಲ್ಲರೂ, ವಿವಿಧ ರಾಶಿ ಹೂವುಗಳಿಂದ, ಸುಗಂಧ ಅಕ್ಷತೆಗಳಿಂದ, ಹೊಸ ಕಳಿತಹಣ್ಣು ಮೋದಕ ಮೊದಲಾದದ ಖಾದ್ಯ ನೈವೇದ್ಯದಿಂದ ಧೂಪ ದೀಪಗಳಿಂದ ಶಿವನ ಪತ್ನಿಯನ್ನು ಪೂಜೆಮಾಡಿ ವರ್ಷವರ್ಷಕ್ಕೂ ಉತ್ಸವಮಾಡಿ ವ್ರತವನ್ನು ಮಾಡುವೆವು, ಎಂದು ಆ ಸಕಲಭುವನ ಮಾತೆಯಾದ ಉಮಾದೇವಿಯನ್ನು ಗೌರಿಯನ್ನು ಪ್ರಾರ್ಥಿಸಿದರು, ಆ ಸಖಿಯರು.
  • (ಪದ್ಯ-೪೦)

ಪದ್ಯ:-:೪೧:[ಸಂಪಾದಿಸಿ]

ಪ್ರಾಸಾದದಗ್ರದೇಳನೆಯ ನೆಲೆಯೊಳ್ಚಂದ್ರ |
ಹಾಸನೈತಹ ಮಾರ್ಗಮಂ ನೋಡುತುಪಚರಿಸು |
ವಾ ಸಖೀಜನದ ನುಡಿಗಳನಾಲಿಸುತ ವಿಷಯೆ ಚಿತ್ತದೊಳ್ ತನ್ನ ಪಿತನ ||
ಶಾಸನವನಿಂದೆ ಮದನಂ ಪಾಲಿಪಂತೆ ನೀಂ |
ಸೂಸು ಕಾರುಣ್ಯ ವರ್ಷವನೆನ್ನ ಮೇಲೆಂದು |
ಮಾಸುದತಿ ಭಕ್ತಿಯಿಂಬೇಡಿಕೊಳುತಿರ್ದಳಾನತೆಯಾಗಿ ಪಾರ್ವತಿಯನು ||41||

ಪದವಿಭಾಗ-ಅರ್ಥ:
ಪ್ರಾಸಾದದ ಅಗ್ರದ ಏಳನೆಯ ನೆಲೆಯೊಳ್ ಚಂದ್ರಹಾಸನು ಐತಹ ಮಾರ್ಗಮಂ ನೋಡುತು ಉಪಚರಿಸುವ ಆ ಸಖೀಜನದ ನುಡಿಗಳನು ಆಲಿಸುತ ವಿಷಯೆ=[ ಏಳನೆಯ ಮಹಡಿಯ ತುದಿಯ ನೆಲೆಯಲ್ಲಿ/ತಾಣದಲ್ಲಿ ಚಂದ್ರಹಾಸನು ಬರುವ ಮಾರ್ಗವನ್ನು ನೋಡುತ್ತಾ, ತನ್ನನ್ನು ಉಪಚರಿಸುವ ಆ ಸಖಿಯರ ಮಾತುಗಳನ್ನು ಕೇಳುತ್ತಾ, ವಿಷಯೆ];; ಚಿತ್ತದೊಳ್ ತನ್ನ ಪಿತನ ಶಾಸನವನು ಇಂದೆ ಮದನಂ ಪಾಲಿಪಂತೆ ನೀಂ ಸೂಸು ಕಾರುಣ್ಯ ವರ್ಷವನು ಎನ್ನ ಮೇಲೆಂದುಂ ಆಸುದತಿ ಭಕ್ತಿಯಿಂ ಬೇಡಿಕೊಳುತಿರ್ದಳು ಆನತೆಯಾಗಿ ಪಾರ್ವತಿಯನು=[ ಮನಸ್ಸಿನಲ್ಲಿ ತನ್ನ ತಂದೆಯ ಆಜ್ಞೆಯನ್ನು, ಇಂದೇ ತನ್ನ ಅಣ್ಣ ಮದನನು ಪಾಲಿಸುವಂತೆ ಕಾರುಣ್ಯದ ಮಳೆಯನ್ನು ತನ್ನ ಮೇಲೆ ನೀನು ಸೂಸು ಎಂದು ಆ ಸುದತಿ/ವಿಷೆಯೆಯು ಭಕ್ತಿಯಿಂದ ನಮ್ರಳಾಗಿ ಪಾರ್ವತಿಯನ್ನು ಬೇಡಿಕೊಳ್ಳುತ್ತಿದ್ದಳು].
  • ತಾತ್ಪರ್ಯ:ಏಳನೆಯ ಮಹಡಿಯ ತುದಿಯ ನೆಲೆಯಲ್ಲಿ/ತಾಣದಲ್ಲಿ ಚಂದ್ರಹಾಸನು ಬರುವ ಮಾರ್ಗವನ್ನು ನೋಡುತ್ತಾ, ತನ್ನನ್ನು ಉಪಚರಿಸುವ ಆ ಸಖಿಯರ ಮಾತುಗಳನ್ನು ಕೇಳುತ್ತಾ, ವಿಷಯೆ ಮನಸ್ಸಿನಲ್ಲಿ ತನ್ನ ತಂದೆಯ ಆಜ್ಞೆಯನ್ನು, ಇಂದೇ ತನ್ನ ಅಣ್ಣ ಮದನನು ಪಾಲಿಸುವಂತೆ ಕಾರುಣ್ಯದ ಮಳೆಯನ್ನು ತನ್ನ ಮೇಲೆ ನೀನು ಸೂಸು ಎಂದು ಆ ಸುದತಿ/ವಿಷೆಯೆಯು ಭಕ್ತಿಯಿಂದ ನಮ್ರಳಾಗಿ ಪಾರ್ವತಿಯನ್ನು ಬೇಡಿಕೊಳ್ಳುತ್ತಿದ್ದಳು.
  • (ಪದ್ಯ-೪೧)XVIII

ಪದ್ಯ:-:೪೨:[ಸಂಪಾದಿಸಿ]

ವಿಜಯ ಕೇಳಿತ್ತ ಬನದೊಳ್ ಚಂದ್ರಹಾಸನಂ |
ಬುಜ ಮಿತ್ರನಪರಾಹ್ಣಕೈದಲ್ಕೆ ನಿದ್ರೆಯಂ |
ತ್ಯಜಿಸಿ ಮೊಗದೊಳೆದು ಮುಕ್ಕಳಿಸಿ ಕಪ್ಪುರವೀಳೆಯಂಗೊಂಡು ಬಳಿಕ ಬಿಗಿಸಿ ||
ನಿಜ ವಾಜಿಯಂ ಬಂದಡರ್ದನು ಚರರ್ವೆರಸಿ |
ಋಜುವಾದ ಶಕುನಂಗಳಂ ಕೇಳುತೊಲಿದು ಪೌ |
ರ ಜನಮಿವನಾರೆಂದು ನೋಡಲ್ಕೆ ನಗರಮಂ ಪೊಕ್ಕು ನಡೆತರುತಿರ್ದನು ||42||

ಪದವಿಭಾಗ-ಅರ್ಥ:
ವಿಜಯ ಕೇಳಿತ್ತ ಬನದೊಳ್ ಚಂದ್ರಹಾಸನು ಅಂಬುಜ ಮಿತ್ರನು ಅಪರಾಹ್ಣಕೆ ಐದಲ್ಕೆ ನಿದ್ರೆಯಂ ತ್ಯಜಿಸಿ ಮೊಗದೊಳೆದು ಮುಕ್ಕಳಿಸಿ ಕಪ್ಪುರವೀಳೆಯಂಗೊಂಡು=[ವಿಜಯ/ ಅರ್ಜುನನೇ ಕೇಳು, ಇತ್ತ ಉದ್ಯಾನವನದಲ್ಲಿ ಚಂದ್ರಹಾಸನು ಸೂರ್ಯನು ಅಪರಾಹ್ನ ಸಮಯಕ್ಕೆ ಬರಲು, ನಿದ್ರೆಯನ್ನು ಬಿಟ್ಟು ಮುಖ ತೊಳೆದು, ಬಾಯಿ ಮುಕ್ಕಳಿಸಿ ಕರ್ಪುರವೀಳೆಯವನ್ನು ತಿಂದು,];; ಬಳಿಕ ಬಿಗಿಸಿ ನಿಜ ವಾಜಿಯಂ ಬಂದು ಅಡರ್ದನು ಚರರ್ವೆರಸಿ ಋಜುವಾದ ಶಕುನಂಗಳಂ ಕೇಳುತ ಒಲಿದು ಪೌರ ಜನಮಿವನು ಆರೆಂದು ನೋಡಲ್ಕೆ ನಗರಮಂ ಪೊಕ್ಕು ನಡೆತರುತಿರ್ದನು=[ಬಳಿಕ ಬಂದು ತನ್ನ ಕುದುರೆಗೆ ಜೀನುಬಿಗಿಸಿ, ಅದನ್ನು ಏರಿದನು. ಅವನು ಚಾರರ ಜೊತೆ ಶುಭವಾದ ಶಕುನಗಳನ್ನು ಕೇಳುತ್ತಾ ಪ್ರೀತಿಯಿಂದ ಪೌರ ಜನರು ಇವನು ಯಾರೆಂದು ನೋಡುತ್ತಿರಲು, ನಗರವನ್ನು ಹೊಕ್ಕು ಮುಂದೆಬರತ್ತಿದ್ದನು.]
  • ತಾತ್ಪರ್ಯ:ಅರ್ಜುನನೇ ಕೇಳು, ಇತ್ತ ಉದ್ಯಾನವನದಲ್ಲಿ ಚಂದ್ರಹಾಸನು ಸೂರ್ಯನು ಅಪರಾಹ್ನ ಸಮಯಕ್ಕೆ ಬರಲು, ನಿದ್ರೆಯನ್ನು ಬಿಟ್ಟು ಮುಖ ತೊಳೆದು, ಬಾಯಿ ಮುಕ್ಕಳಿಸಿ ಕರ್ಪುರವೀಳೆಯವನ್ನು ತಿಂದು, ಬಳಿಕ ಬಂದು ತನ್ನ ಕುದುರೆಗೆ ಜೀನುಬಿಗಿಸಿ, ಅದನ್ನು ಏರಿದನು. ಅವನು ಚಾರರ ಜೊತೆ ಶುಭವಾದ ಶಕುನಗಳನ್ನು ಕೇಳುತ್ತಾ ಪ್ರೀತಿಯಿಂದ ಪೌರ ಜನರು ಇವನು ಯಾರೆಂದು ನೋಡುತ್ತಿರಲು, ನಗರವನ್ನು ಹೊಕ್ಕು ಮುಂದೆಬರತ್ತಿದ್ದನು.
  • (ಪದ್ಯ-೪೨)

ಪದ್ಯ:-:೪೩:[ಸಂಪಾದಿಸಿ]

ಆ ನಗರದೊಳ್ ಕುಂತಳೇಶ್ವರನು ನಿರ್ಮಲ |
ಜ್ಞಾನದಿಂ ಗಾಲವನ ಸೂಕ್ತಮಂಕೇಳುತ ಸ |
ದಾನಂದ ಯೋಗಮಂ ಕೈಕೊಂಡು ದುಷ್ಟಬುದ್ಧಿಗೆ ವಿಚಾರವನೊಪ್ಪಿಸಿ ||
ಧ್ಯಾನಪರನಾಗಿರ್ಪನದರಿಂದೆ ಪೊಳಲಂ ಪ್ರ |
ಧಾನಿ ಪಾಲಿಪನವಂ ಪೊರಮುಟ್ಟಿರಲ್ಕೆ ತ |
ತ್ಸೂನು ಮದನಂ ಧುರಂಧರತೆವೆತ್ತಾ ಸಮಯಕೋಲಗದೊಳಿರತಿರ್ದನು ||43||

ಪದವಿಭಾಗ-ಅರ್ಥ:
ಆ ನಗರದೊಳ್ ಕುಂತಳೇಶ್ವರನು ನಿರ್ಮಲ ಜ್ಞಾನದಿಂ ಗಾಲವನ ಸೂಕ್ತಮಂ ಕೇಳುತ ಸದಾನಂದ ಯೋಗಮಂ ಕೈಕೊಂಡು ದುಷ್ಟಬುದ್ಧಿಗೆ ವಿಚಾರವನು ಒಪ್ಪಿಸಿ ಧ್ಯಾನಪರನಾಗಿರ್ಪನು=[ಆ ನಗರದಲ್ಲಿ ಕುಂತಳೇಶ್ವರನು/ರಾಜನು ನಿರ್ಮಲ ಜ್ಞಾನದಿಂದ ಗಾಲವನ ಸೂಕ್ತವನ್ನು ಕೇಳುತ್ತಾ ಸದಾನಂದ ಯೋಗವನ್ನು ಕೈಕೊಂಡು ಮಂತ್ರಿ ದುಷ್ಟಬುದ್ಧಿಗೆ ರಾಜ್ಯವಿಚಾರವನ್ನು ಒಪ್ಪಿಸಿ ಧ್ಯಾನದಲ್ಲಿ ಇರುತ್ತಿದ್ದನು.];; ಅದರಿಂದೆ ಪೊಳಲಂ ಪ್ರಧಾನಿ ಪಾಲಿಪನು ಅವಂ ಪೊರಮುಟ್ಟು ಇರಲ್ಕೆ ತತ್ಸೂನು ಮದನಂ ಧುರಂಧರತೆವೆತ್ತು ಆ ಸಮಯಕೆ ಓಲಗದೊಳು ಇರತಿರ್ದನು=[ಅದರಿಂದ ರಾಜ್ಯವನ್ನು ಪ್ರಧಾನಿಯು ಪಾಲಿಸುವನು; ಅವನು ನಗರ ಬಿಟ್ಟು ಹೊರಗೆ ಇರುವುದರಿಂದ ಅವನ ಮಗ ಮದನನು ಆಡಳಿತದ ಹೊಣೆಯನ್ನು ಹೊತ್ತು, ಆ ಸಮಯಕದಲ್ಲಿ ಓಲಗದಲ್ಲಿ/ ರಾಜಸಭೆಯಲ್ಲಿ ಇದ್ದನು].
  • ತಾತ್ಪರ್ಯ:ಆ ನಗರದಲ್ಲಿ ಕುಂತಳೇಶ್ವರನು/ರಾಜನು ನಿರ್ಮಲ ಜ್ಞಾನದಿಂದ ಗಾಲವನ ಸೂಕ್ತವನ್ನು ಕೇಳುತ್ತಾ ಸದಾನಂದ ಯೋಗವನ್ನು ಕೈಕೊಂಡು ಮಂತ್ರಿ ದುಷ್ಟಬುದ್ಧಿಗೆ ರಾಜ್ಯವಿಚಾರವನ್ನು ಒಪ್ಪಿಸಿ ಧ್ಯಾನದಲ್ಲಿ ಇರುತ್ತಿದ್ದನು.ಅದರಿಂದ ರಾಜ್ಯವನ್ನು ಪ್ರಧಾನಿಯು ಪಾಲಿಸುವನು; ಅವನು ನಗರ ಬಿಟ್ಟು ಹೊರಗೆ ಇರುವುದರಿಂದ ಅವನ ಮಗ ಮದನನು ಆಡಳಿತದ ಹೊಣೆಯನ್ನು ಹೊತ್ತು, ಆ ಸಮಯಕದಲ್ಲಿ ಓಲಗದಲ್ಲಿ/ ರಾಜಸಭೆಯಲ್ಲಿ ಇದ್ದನು.
  • (ಪದ್ಯ-೪೩)

ಪದ್ಯ:-:೪೪:[ಸಂಪಾದಿಸಿ]

ಶ್ರೀ ಕಂಠನಂ ಕೆಣಕಿ ಮೈಗೆಟ್ಟ ಮದನನಂ |
ಲೋಕದೊಳ್ ಜರೆವಂತೆ ಶಂಕರ ಪ್ರಿಯನಾಗಿ |
ಸಾಕಾರದಿಂದೆಸೆವ ಮದನನಿವನೆಂಬಂತೆ ರಂಜಿಸುವ ಮಂತ್ರಿಸೂನು ||
ವ್ಯಾಕೀರ್ಣ ರತ್ನರೋಚಿಗಳ ಚಾವಡಿಯ ಚಾ |
ಮೀಕರದ ಸಿಂಹಾಸನದೊಳಿರ್ದನಿಕ್ಕೆಲದ |
ಕೋಕನದ ನೇತ್ರೆಯರ್ ಚಿಮ್ಮಿಸುವ ಚಾರು ಚಂಚಲ ಚಾಮರಂಗಳಿಂದೆ ||44||

ಪದವಿಭಾಗ-ಅರ್ಥ:
ಶ್ರೀ ಕಂಠನಂ ಕೆಣಕಿ ಮೈಗೆಟ್ಟ ಮದನನಂ ಲೋಕದೊಳ್ ಜರೆವಂತೆ ಶಂಕರ ಪ್ರಿಯನಾಗಿ ಸಾಕಾರದಿಂದೆಸೆವ ಮದನನು ಇವನೆಂಬಂತೆ ರಂಜಿಸುವ ಮಂತ್ರಿಸೂನು=[ಪರಶಿವನನ್ನು ಕೆಣಕಿ ಅವನ ಮೇಲೆ ಕುಸುಮಾಸ್ತ್ರ ಹೊಡೆದು ದೇಹವನ್ನು ಕಳೆದುಕೊಂಡ ಸಂದರಾಂಗ ಮದನನನ್ನು ಲೋಕದಲ್ಲಿ ದೂಷಿಸುವಂತೆ ಅವನ ಬದಲು ಶಂಕರನಿಗೆ ಪ್ರಿಯನಾಗಿ ಸಾಕಾರದಿಂದೆ ಪ್ರಕಾಶಿಸುವ ಹೊಸ ಮದನನು ಇವನು ಎಂಬಂತೆ ಶೋಭಿಸುವ ಮಂತ್ರಿಯಮಗ ಮದನನು];; ವ್ಯಾಕೀರ್ಣ ರತ್ನರೋಚಿಗಳ ಚಾವಡಿಯ ಚಾಮೀಕರದ (ಚಿನ್ನದ) ಸಿಂಹಾಸನದೊಳಿರ್ದನು ಇಕ್ಕೆಲದ ಕೋಕನದ(ನೈದಿಲೆ/ಕಮಲ) ನೇತ್ರೆಯರ್ ಚಿಮ್ಮಿಸುವ ಚಾರು ಚಂಚಲ ಚಾಮರಂಗಳಿಂದೆ=[ವಿಶಾಲವಾದ ರತ್ನರೋಚಿಗಳ ಚಾನಡಿಯ ಚಿನ್ನದ ಸಿಂಹಾಸನದಲ್ಲಿದ್ದನು. ಅವನ ಎರಡೂ ಕಡೆಯ ನೈದಿಲೆಯ ಕಣ್ಣಿನ ವನಿತೆಯರು ಚಿಮ್ಮಿಸುವ ಚಂದದ ಅಲುಗುವ ಚಾಮರಂಗಳಿಂದ ಗಾಳಿ ಬೀಸುತ್ತಿದ್ದರು.]
  • ತಾತ್ಪರ್ಯ:ಪರಶಿವನನ್ನು ಕೆಣಕಿ ಅವನ ಮೇಲೆ ಕುಸುಮಾಸ್ತ್ರ ಹೊಡೆದು ದೇಹವನ್ನು ಕಳೆದುಕೊಂಡ ಸಂದರಾಂಗ ಮದನನನ್ನು ಲೋಕದಲ್ಲಿ ದೂಷಿಸುವಂತೆ ಅವನ ಬದಲು ಶಂಕರನಿಗೆ ಪ್ರಿಯನಾಗಿ ಸಾಕಾರದಿಂದೆ ಪ್ರಕಾಶಿಸುವ ಹೊಸ ಮದನನು ಇವನು ಎಂಬಂತೆ ಶೋಭಿಸುವ ಮಂತ್ರಿಯಮಗ ಮದನನು ವಿಶಾಲವಾದ ರತ್ನಗಳ ಬೆಳಕಿನ ಚಾನಡಿಯ ಚಿನ್ನದ ಸಿಂಹಾಸನದಲ್ಲಿದ್ದನು. ಅವನ ಎರಡೂ ಕಡೆಯ ನೈದಿಲೆಯ ಕಣ್ಣಿನ ವನಿತೆಯರು ಚಿಮ್ಮಿಸುವ ಚಂದದ ಅಲುಗುವ ಚಾಮರಂಗಳಿಂದ ಗಾಳಿ ಬೀಸುತ್ತಿದ್ದರು.
  • (ಪದ್ಯ-೪೩)

ಪದ್ಯ:-:೪೫:[ಸಂಪಾದಿಸಿ]

ಉಚಿತದಿಂದೊಪ್ಪುವ ಮಹೀಸುರರ ಭೂಭುಜರ |
ನಿಚಯದ ನಿಯೋಗಿಗಳ ಗಣಕರ ಪುರೋಹಿತರ |
ವಚನ ಕೋವಿದರ ಕವಿ ಗಮಕಿಗಳ ವಂದಿ ಗಾಯಕ ನಟರ ನರ್ತಕಿಯರ ||
ರುಚಿರದಿಂ ಕೃಷ್ಣ ಚಾರಿತ್ರಮಂ ಸೊಗಸಾಗಿ |
ರಚಿಸುತಿಹ ಭಾವಕರ ಸಂಗೀತಗೋಷ್ಠಿಯಿಂ |
ಸಚಿವ ಸುತನೋಲಗಂ ರಮಣೀಯಮಾಗಿರ್ದದಿಂದ್ರನಾಸ್ಥಾನದಂತೆ ||45||

ಪದವಿಭಾಗ-ಅರ್ಥ:
ಉಚಿತದಿಂದ ಒಪ್ಪುವ ಮಹೀಸುರರ ಭೂಭುಜರ ನಿಚಯದ ನಿಯೋಗಿಗಳ ಗಣಕರ ಪುರೋಹಿತರ ವಚನ ಕೋವಿದರ ಕವಿ ಗಮಕಿಗಳ ವಂದಿ ಗಾಯಕ ನಟರ ನರ್ತಕಿಯರ ರುಚಿರದಿಂ=[ಯೋಗ್ಯವಾದ ಕ್ರಮದಿಂದ ಶೋಭಿಸುವ ವಿಪ್ರರ, ರಾಜರ ಸಮೂಹದ, ನಿಯೋಗಿಗಳ, ಗಣಕರ/ಶಾನುಭೋಗರ, ಪುರೋಹಿತರ, ವಚನ ಪಂಡಿತರ, ಕವಿ ಗಮಕಿಗಳ, ವಂದಿ ಗಾಯಕ ನಟರ ನರ್ತಕಿಯರ ವೈಭವದಿಂದ ];; ಕೃಷ್ಣ ಚಾರಿತ್ರಮಂ ಸೊಗಸಾಗಿ ರಚಿಸುತಿಹ ಭಾವಕರ ಸಂಗೀತಗೋಷ್ಠಿಯಿಂ ಸಚಿವ ಸುತನೋಲಗಂ ರಮಣೀಯಂ ಆಗಿರ್ದದು ಇಂದ್ರನ ಆಸ್ಥಾನದಂತೆ=[ಕೃಷ್ಣ ಚರಿತ್ರೆನ್ನು ಸೊಗಸಾಗಿ ರಚಿಸುವ ಭಾವಕರ/ಕವಿಗಳ, ಸಂಗೀತಗೋಷ್ಠಿಯಿಂದ ಮಂತ್ರಿಯಮಗನ ಓಲಗವು ಇಂದ್ರನ ಆಸ್ಥಾನದಂತೆ ರಮಣೀಯವಾಗಿತ್ತು.]
  • ತಾತ್ಪರ್ಯ:ಯೋಗ್ಯವಾದ ಕ್ರಮದಿಂದ ಶೋಭಿಸುವ ವಿಪ್ರರ, ರಾಜರ ಸಮೂಹದ, ನಿಯೋಗಿಗಳ, ಗಣಕರ/ಶಾನುಭೋಗರ, ಪುರೋಹಿತರ, ವಚನ ಪಂಡಿತರ, ಕವಿ ಗಮಕಿಗಳ, ವಂದಿ ಗಾಯಕ ನಟರ ನರ್ತಕಿಯರ ವೈಭವದಿಂದ ಕೃಷ್ಣ ಚರಿತ್ರೆನ್ನು ಸೊಗಸಾಗಿ ರಚಿಸುವ ಭಾವಕರ/ಕವಿಗಳ, ಸಂಗೀತಗೋಷ್ಠಿಯಿಂದ ಮಂತ್ರಿಯಮಗನ ಓಲಗವು ಇಂದ್ರನ ಆಸ್ಥಾನದಂತೆ ರಮಣೀಯವಾಗಿತ್ತು.
  • (ಪದ್ಯ-೪೫)

ಪದ್ಯ:-:೪೬:[ಸಂಪಾದಿಸಿ]

ಲೀಲೆ ಮಿಗೆ ಸಗರದೊಳ್ ನಡೆತಂದು ಮಂತ್ರಿಸುತ |
ನಾಲಯದ ಮುಂದೆವಾಜಿಯನಿಳಿದು ತದ್ಧ್ವಾರ |
ಪಾಲಕರ್ಗಿಂದುಹಾಸಂ ಪೇಳ್ದೊಡವರಂತರಾಂತರದೊಳೆಚ್ಚರಿಸಲು ||
ಏಳನೆಯ ಬಾಗಿಲ ವಿವೇಕನೆಂಬವನಿದಂ |
ಕೇಳಿ ತಾಂ ಪಿಡಿದ ಶ್ರದ್ಧಾಯಷ್ಟಿಸಹಿತ ಬಂ |
ದೋಲಗದೊಳಿರ್ದ ಮದನಂಗೆ ಬಿನ್ನೈಸಲ್ ಪರಾಕಾದೊಡಿಂತೆಂದನು ||46||

ಪದವಿಭಾಗ-ಅರ್ಥ:
ಲೀಲೆ ಮಿಗೆ (ಬಹಳ ಸಂತಸದಿಂದ) ಸಗರದೊಳ್ ನಡೆತಂದು ಮಂತ್ರಿಸುತನ ಆಲಯದ ಮುಂದೆ ವಾಜಿಯನು ಇಳಿದು ತದ್ ದ್ವಾರಪಾಲಕರರ್ಗೆ ಇಂದುಹಾಸಂ ಪೇಳ್ದೊಡೆ ಅವರು ಅಂತರಾಂತರದೊಳು ಎಚ್ಚರಿಸಲು=[ಚಂದ್ರಹಾಸನು, ಬಹಳ ಸಂತಸದಿಂದ ಸಗರದೊಳಗೆ ಬಂದು ಮಂತ್ರಿಯಮಗನ ಮನೆಯ ಮುಂದೆ ಕುದುರೆಯನ್ನು ಇಳಿದು ಅಲ್ಲಿಯ ದ್ವಾರಪಾಲಕರಿಗೆ ಅವನು ಮದನನ್ನು ಕಾಣಲು ರಹಸ್ಯಕಾರ್ಯವಿರುವುದೆಂದು ಹೇಳಿದಾಗ, ಅವರು ಬಾಗಿಲಿಂದ ಬಾಗಿಲಿಗೆ ಸುದ್ದಿಯ ವಿಷಯವನ್ನು ಎಚ್ಚರಿಸಲು,];; ಏಳನೆಯ ಬಾಗಿಲ ವಿವೇಕನೆಂಬವನು ಇದಂ ಕೇಳಿ ತಾಂ ಪಿಡಿದ ಶ್ರದ್ಧಾಯಷ್ಟಿಸಹಿತ ಬಂದೋಲಗದೊಳು ಇರ್ದ ಮದನಂಗೆ ಬಿನ್ನೈಸಲ್ ಪರಾಕ್ ಆದೊಡೆ ಇಂತೆಂದನು=[ ಏಳನೆಯ ಬಾಗಿಲಲ್ಲಿದ್ದ ವಿವೇಕನೆಂಬವನು ಇದನ್ನು ಕೇಳಿ ತಾನು ಹಿಡಿದ ಅಧಿಕಾರದ ಶ್ರದ್ಧಾಯಷ್ಟಿ ರಾಜದಂಡದ(ದೊಣ್ಣೆ) ಸಹಿತ ಬಂದು ಓಲಗದಲ್ಲಿ ಇದ್ದ ಮದನನಿಗೆ ಬಿನ್ನಹಮಾಡಲು, 'ಪರಾಕ್' (ಘೋಷಣೆ) ಆದ ಮೇಲೆ ಹೀಗೆ ಹೇಳಿದನು].
  • ತಾತ್ಪರ್ಯ:ಚಂದ್ರಹಾಸನು, ಬಹಳ ಸಂತಸದಿಂದ ಸಗರದೊಳಗೆ ಬಂದು, ಮಂತ್ರಿಯಮಗನ ಮನೆಯ ಮುಂದೆ ಕುದುರೆಯನ್ನು ಇಳಿದು ಅಲ್ಲಿಯ ದ್ವಾರಪಾಲಕರಿಗೆ ಅವನು ಮದನನ್ನು ಕಾಣಲು ರಹಸ್ಯಕಾರ್ಯವಿರುವುದೆಂದು ಹೇಳಿದಾಗ, ಅವರು ಬಾಗಿಲಿಂದ ಬಾಗಿಲಿಗೆ ಸುದ್ದಿಯ ವಿಷಯವನ್ನು ಎಚ್ಚರಿಸಲು, ಏಳನೆಯ ಬಾಗಿಲಲ್ಲಿದ್ದ ವಿವೇಕನೆಂಬವನು ಇದನ್ನು ಕೇಳಿ ತಾನು ಹಿಡಿದ ಅಧಿಕಾರದ ಶ್ರದ್ಧಾಯಷ್ಟಿ ರಾಜದಂಡದ(ದೊಣ್ಣೆ) ಸಹಿತ ಬಂದು ಓಲಗದಲ್ಲಿ ಇದ್ದ ಮದನನಿಗೆ ಬಿನ್ನಹಮಾಡಲು, 'ಪರಾಕ್' (ಘೋಷಣೆ) ಆದ ಮೇಲೆ ಹೀಗೆ ಹೇಳಿದನು.
  • (ಪದ್ಯ-೪೬)

ಪದ್ಯ:-:೪೭:[ಸಂಪಾದಿಸಿ]

ಅವಧರಿಸು ಜೀಯ ನಿಮ್ಮಯ್ಯಂಗೆ ಕ್ರೋಧನೆಂ |
ಬವನಾಪ್ತನಾಗಿ ಹಿಂಸಾಯುಷ್ಟಿವಿಡಿದು ಸ |
ಲ್ವವನಲಾ ಬಾಗಿಲ್ಗೆ ತನಗಾತನಂತೆ ನಿನ್ನೊಳ್ ಸಲುಗೆಯುಂಟೆ ಬರಿದೆ ||
ತವ ಭೃತ್ಯನಾಗಿಹೆಂ ಸಾಕದಂತಿರಖಿಳ |
ಭವನಕಧಿಪತಿಯಾದ ಮುರಹರನ ಭಕ್ತನ |
ಲ್ಲವೆ ಚಂದ್ರಹಾಸನಾತನ ಬರವನರಿಪಲೇತಕೆ ಸುಮ್ಮನಿಹೆಯೆಂದನು ||47||

ಪದವಿಭಾಗ-ಅರ್ಥ:
ಅವಧರಿಸು ಜೀಯ ನಿಮ್ಮಯ್ಯಂಗೆ ಕ್ರೋಧನೆಂಬವನಾಪ್ತನಾಗಿ ಹಿಂಸಾಯುಷ್ಟಿವಿಡಿದು ಸಲ್ವವನಲಾ ಬಾಗಿಲ್ಗೆ ತನಗಾತನಂತೆ ನಿನ್ನೊಳ್ ಸಲುಗೆಯುಂಟೆ=[ಜೀಯ, ದಯಮಾಡಿ ಕೇಲಿರಿ, ನಿಮ್ಮ ತಂದೆಗೆ ಕ್ರೋಧನೆಂಬವನು ಆಪ್ತನಾಗಿದ್ದು ಹಿಂಸಾಯುಷ್ಟಿ ದಂಡವನ್ನು ಹಿಡಿದು ಬಾಗಿಲು ಕಾಯುವನು; ತನಗೆ ಆತನಂತೆ ನಿನ್ನಲ್ಲಿ ಸಲುಗೆಯಿಲ್ಲ;];; ಬರಿದೆ ತವ ಭೃತ್ಯನು ಆಗಿಹೆಂ ಸಾಕು ಅದಂತಿರೆ ಅಖಿಳ ಭವನಕಧಿಪತಿಯಾದ ಮುರಹರನ ಭಕ್ತನಲ್ಲವೆ ಚಂದ್ರಹಾಸನು ಆತನ ಬರವನು ಅರಿಪಲು ಏತಕೆ ಸುಮ್ಮನಿಹೆಯೆಂದನು=[ತಾನು ಬರಿದೆ ನಿನ್ನ ಸೇವಕನಾಗಿರುವೆನು, ಸಾಕು ಅದು ಹಾಗಿರಲಿ, ಅಖಿಲ ಭವನಕ್ಕೆ ಅಧಿಪತಿಯಾದ ಮುರಹರನ ಭಕ್ತನು ಅಲ್ಲವೆ ಚಂದ್ರಹಾಸನು ಆತನು ಬಂದಿದ್ದಾನೆ, ಅವನ ಬರವಿಕೆಯನ್ನು ತಿಳಿಸಲು ಬಂದಿರುವೆನು, ನೀನು ನೋಡುವುದು ಉಚಿತವು; ಏಕೆ ಸುಮ್ಮನಿರುವೆ, ಎಂದನು.(ಉದಾಸೀನ ಬೇಡ ಬೇಗ ನೋಡು ಎಂದು ಭಾವ)].
  • ತಾತ್ಪರ್ಯ:ಜೀಯ, ದಯಮಾಡಿ ಕೇಲಿರಿ, ನಿಮ್ಮ ತಂದೆಗೆ ಕ್ರೋಧನೆಂಬವನು ಆಪ್ತನಾಗಿದ್ದು ಹಿಂಸಾಯುಷ್ಟಿ ದಂಡವನ್ನು ಹಿಡಿದು ಬಾಗಿಲು ಕಾಯುವನು; ತನಗೆ ಆತನಂತೆ ನಿನ್ನಲ್ಲಿ ಸಲುಗೆಯಿಲ್ಲ; ತಾನು ಬರಿದೆ ನಿನ್ನ ಸೇವಕನಾಗಿರುವೆನು, ಸಾಕು ಅದು ಹಾಗಿರಲಿ, ಅಖಿಲ ಭವನಕ್ಕೆ ಅಧಿಪತಿಯಾದ ಮುರಹರನ ಭಕ್ತನು ಅಲ್ಲವೆ ಚಂದ್ರಹಾಸನು ಆತನು ಬಂದಿದ್ದಾನೆ, ಅವನ ಬರವಿಕೆಯನ್ನು ತಿಳಿಸಲು ಬಂದಿರುವೆನು, ನೀನು ನೋಡುವುದು ಉಚಿತವು; ಏಕೆ ಸುಮ್ಮನಿರುವೆ, ಎಂದನು.(ಉದಾಸೀನ ಬೇಡ ಬೇಗ ನೋಡು ಎಂದು ಭಾವ).
  • (ಪದ್ಯ-೪೭)

ಪದ್ಯ:-:೪೮:[ಸಂಪಾದಿಸಿ]

ನೀತಿ ಸಮ್ಮತದಿಂ ವಿವೇಕನಿಂತೆನೆ ಕೇಳ್ದು |
ಶಾತಕುಂಭಾಲಂಕೃತಾಸನವನಿಳಿದು ಹ |
ರ್ಷಾತಿಶಯದಿಂದೆ ಮದನಂ ಚಂದ್ರಹಾಸನನಿದರ್ವಂಧು ಕಂಡು ನಗುತೆ |
ಪ್ರೀತಿಯಿಂದಪ್ಪಿ ಕೈವಿಡಿದೊಡನೆ ಸಭೆಗೆ ತಂ |
ದಾತನಂ ಸತ್ಕರಿಸಿ ಚಂದನಾವತಿಯ ತ |
ದ್ಭೂತಳದ ಮೇಧಾವಿನಿಯ ಕುಳಿಂದನ ಕುಶಲದೇಳ್ಗೆಯಂ ಬೆಸಗೊಂಡನು ||48||

ಪದವಿಭಾಗ-ಅರ್ಥ:
ನೀತಿ ಸಮ್ಮತದಿಂ ವಿವೇಕನು ಇಂತು ಎನೆ, ಕೇಳ್ದು ಶಾತಕುಂಭ (ಚಿನ್ನದಿಂದ) ಅಲಂಕೃತ ಆಸನವನು ಇಳಿದು ಹರ್ಷಾತಿಶಯದಿಂದೆ ಮದನಂ ಚಂದ್ರಹಾಸನನು ಇದರ್ವಂಧು (ಎದುರುಗೊಂಡು)=[ನೀತಿ ಸಮ್ಮತವಾಗಿ ವಿವೇಕನು ಹೀಗೆ ಹೇಳಲು, ಕೇಳಿ ತನ್ನ ಆಸನವನ್ನು ಇಳಿದು, ಬಹಳ ಹರ್ಷದಿಂದ ಮದನನು ಚಂದ್ರಹಾಸನನ್ನು ಇದಿರುಗೊಂಡನು.];; ಕಂಡು ನಗುತೆ ಪ್ರೀತಿಯಿಂದ ಅಪ್ಪಿ ಕೈವಿಡಿದು ಒಡನೆ ಸಭೆಗೆ ತಂದು ಆತನಂ ಸತ್ಕರಿಸಿ ಚಂದನಾವತಿಯ ತದ್ಭೂತಳದ ಮೇಧಾವಿನಿಯ ಕುಳಿಂದನ ಕುಶಲದ ಏಳ್ಗೆಯಂ ಬೆಸಗೊಂಡನು=[ಮದನನು ಅವನನ್ನು ಕಂಡು ನಗುತ್ತ ಪ್ರೀತಿಯಿಂದ ಅಪ್ಪಿ ಕೈಹಿಡಿದು ಕೂಡಲೆ ಸಭೆಗೆ ಕರೆತಂದು ಆತನನ್ನು ಸತ್ಕರಿಸಿ, ಚಂದನಾವತಿಯ ರಾಜ್ಯದ, ಮೇಧಾವಿನಿಯ ಮತ್ತು ಕುಳಿಂದನ ಕುಶಲದ ಉತ್ತಮ ರೀತಿಯಲ್ಲಿ ಇರುವುದರ ಬಗೆಗೆ ಕೇಳಿದನು].
  • ತಾತ್ಪರ್ಯ:ನೀತಿ ಸಮ್ಮತವಾಗಿ ವಿವೇಕನು ಹೀಗೆ ಹೇಳಲು, ಕೇಳಿ ತನ್ನ ಆಸನವನ್ನು ಇಳಿದು, ಬಹಳ ಹರ್ಷದಿಂದ ಮದನನು ಚಂದ್ರಹಾಸನನ್ನು ಇದಿರುಗೊಂಡನು. ಮದನನು ಅವನನ್ನು ಕಂಡು ನಗುತ್ತ ಪ್ರೀತಿಯಿಂದ ಅಪ್ಪಿ ಕೈಹಿಡಿದು ಕೂಡಲೆ ಸಭೆಗೆ ಕರೆತಂದು ಆತನನ್ನು ಸತ್ಕರಿಸಿ, ಚಂದನಾವತಿಯ ರಾಜ್ಯದ, ಮೇಧಾವಿನಿಯ ಮತ್ತು ಕುಳಿಂದನ ಕುಶಲದ ಉತ್ತಮ ರೀತಿಯಲ್ಲಿ ಇರುವುದರ ಬಗೆಗೆ ಕೇಳಿದನು.
  • (ಪದ್ಯ-೪೮)

ಪದ್ಯ:-:೪೯:[ಸಂಪಾದಿಸಿ]

ವಿನಯದಿಂ ಮತ್ತೆ ನಸುನಗೆವೆರಸಿ ನಿನ್ನ ದ |
ರ್ಶನಮಿಂದಪೂರ್ವಮಾದುದು ಬಂದ ಕಾರ್ಯಮಂ |
ತನಗೊರೆವುದೆಂದು ಮದನಂ ಚಂದ್ರಹಾಸನಂ ಕೇಳ್ದೊಡಾತಂಗೆ ನಿನ್ನ ||
ಜನಕನೆನ್ನಂ ನಿನ್ನ ಬಳಿಗತಿರಹಸ್ಯದಿಂ |
ದನುಮತಿಸಿ ಕಳುಹಲಾನೈತಂದೆನೆಂದು ಕುರು |
ಪಿನ ಮುದ್ರೆ ಸಹಿತ ನಿಜ ಕರೆದೊಳಿಹ ಪತ್ರಮಂ ಕೊಟ್ಟನಾತನ ಕೈಯ್ಯೊಳು ||49||

ಪದವಿಭಾಗ-ಅರ್ಥ:
ವಿನಯದಿಂ ಮತ್ತೆ ನಸುನಗೆವೆರಸಿ ನಿನ್ನ ದರ್ಶನಂ ಇಂದು ಅಪೂರ್ವಮಾದುದು ಬಂದ ಕಾರ್ಯಮಂ ತನಗೆ ಒರೆವುದೆಂದು ಮದನಂ ಚಂದ್ರಹಾಸನಂ ಕೇಳ್ದೊಡೆ=[ಮದನನು ವಿನಯದಿಂದ ಮತ್ತೆ ನಸುನಗೆಯೊಡನೆ, ಇಂದು ನಿನ್ನ ದರ್ಶನವು ಅಪೂರ್ವವಾದುದು; ಬಂದ ಕಾರ್ಯವನ್ನು ತನಗೆ ಹೇಳಬೇಕು ಎಂದು, ಮದನನು ಚಂದ್ರಹಾಸನನ್ನು ಕೇಳಿದಾಗ ];; ಆತಂಗೆ ನಿನ್ನ ಜನಕನು ಎನ್ನಂ ನಿನ್ನ ಬಳಿಗೆ ಅತಿರಹಸ್ಯದಿಂದ ಅನುಮತಿಸಿ ಕಳುಹಲು ಆನು ಐತಂದೆನು ಎಂದು ಕುರುಪಿನ ಮುದ್ರೆ ಸಹಿತ ನಿಜ ಕರೆದೊಳಿಹ ಪತ್ರಮಂ ಕೊಟ್ಟನು ಆತನ ಕೈಯ್ಯೊಳು=[ಆವನಿಗೆ ಚಂದ್ರಹಾಸನು, 'ನಿನ್ನ ತಂದೆಯು ನನ್ನನ್ನು ನಿನ್ನ ಬಳಿಗೆ ಅತಿರಹಸ್ಯ ವಿಚಾರವೆಂದು ಅಜ್ಞಾಪಿಸಿ ಕಳುಹಿಸಲು ನಾನು ಬಂದೆನು,' ಎಂದು ಕುರುಹಿನ ಮುದ್ರೆ ಸಹಿತ ತನ್ನ ಕೈಯಲ್ಲಿದ್ದ ಪತ್ರಮವನ್ನು ಮದನನ ಕೈಯಲ್ಲಿ ಕೊಟ್ಟನು.]
  • ತಾತ್ಪರ್ಯ:ಮದನನು ವಿನಯದಿಂದ ಮತ್ತೆ ನಸುನಗೆಯೊಡನೆ, ಇಂದು ನಿನ್ನ ದರ್ಶನವು ಅಪೂರ್ವವಾದುದು; ಬಂದ ಕಾರ್ಯವನ್ನು ತನಗೆ ಹೇಳಬೇಕು ಎಂದು, ಮದನನು ಚಂದ್ರಹಾಸನನ್ನು ಕೇಳಿದಾಗ ಆವನಿಗೆ ಚಂದ್ರಹಾಸನು, 'ನಿನ್ನ ತಂದೆಯು ನನ್ನನ್ನು ನಿನ್ನ ಬಳಿಗೆ ಅತಿರಹಸ್ಯ ವಿಚಾರವೆಂದು ಅಜ್ಞಾಪಿಸಿ ಕಳುಹಿಸಲು ನಾನು ಬಂದೆನು,' ಎಂದು ಕುರುಹಿನ ಮುದ್ರೆ ಸಹಿತ ತನ್ನ ಕೈಯಲ್ಲಿದ್ದ ಪತ್ರಮವನ್ನು ಮದನನ ಕೈಯಲ್ಲಿ ಕೊಟ್ಟನು.
  • (ಪದ್ಯ-೪೯)

ಪದ್ಯ:-:೫೦:[ಸಂಪಾದಿಸಿ]

ಇದ್ದವರ ನಾ ಸಭೆಯೊಳಿರಿಸಿ ಶಶಿಹಾಸನಂ |
ಗದ್ದುಗೆಗೆ ನೆಲೆಗೊಳಿಸಿ ಮದನನಾಸ್ಥಾನದಿಂ |
ದೆದ್ದಮಲನೆಂಬ ತನ್ನನುಜನಂ ಕೂಡಿಕೊಂಡೇ ಕಾಂತ ಭವನಕೈದಿ ||
ಹೊದ್ದಿಸಿದ ಮುದ್ರೆಯಂ ತೆಗೆದು ಪತ್ರವನೋದಿ |
ತಿದ್ದಿದಕ್ಕರವ ನರಿಯದೆ ನಿಜದನರೆಹಮೆಂ |
ದದ್ದನತಿ ಹರ್ಷಾರ್ಣವದೊಳಾಗ ಶತಯಾಗನತನಯಕೇಳ್ ಕೌತುಕವನು ||50||

ಪದವಿಭಾಗ-ಅರ್ಥ:
ಇದ್ದವರನು ಆ ಸಭೆಯೊಳು ಇರಿಸಿ ಶಶಿಹಾಸನಂ ಗದ್ದುಗೆಗೆ ನೆಲೆಗೊಳಿಸಿ ಮದನನು ಆಸ್ಥಾನದಿಂದೆ ಎದ್ದು ಅಮಲನೆಂಬ ತನ್ನ ಅನುಜನಂ ಕೂಡಿಕೊಂಡು ಏಕಾಂತ ಭವನಕ್ಕೆ ಐದಿ (ಹೋಗಿ)=[ಆಗ ರಾಜ ಸಭೆಯಲ್ಲಿ ಇದ್ದವರನ್ನು ಆ ಸಭೆಯಲ್ಲೇ ಇರಲುಹೇಳಿ, ಚಂದ್ರಹಾಸನನ್ನು ಪೀಠದಲ್ಲಿ ಕುಳ್ಳಿರಿಸಿ, ಮದನನು ಆಸ್ಥಾನದಿಂದ ಎದ್ದು ಅಮಲನೆಂಬ ತನ್ನ ತಮ್ಮನ ಜೊತೆಯಲ್ಲಿ ಏಕಾಂತ ಭವನಕ್ಕೆ ಹೋದನು.];; ಹೊದ್ದಿಸಿದ ಮುದ್ರೆಯಂ ತೆಗೆದು ಪತ್ರವನು ಓದಿ ತಿದ್ದಿದ ಅಕ್ಕರವನು ಅರಿಯದೆ ನಿಜದ ಬರೆಹಮೆಂದು ಅದ್ದನು ಅತಿ ಹರ್ಷಾರ್ಣವದೊಳು ಆಗ ಶತಯಾಗನತನಯ ಕೇಳ್ ಕೌತುಕವನು=[ಪತ್ರಕ್ಕೆ ಹಾಕಿರುವ ಮುದ್ರೆಯನ್ನು ತೆಗೆದು ಪತ್ರವನ್ನು ಓದಿ ತಿದ್ದಿದ ಅಕ್ಷರವನ್ನು ಅರಿಯದೆ ನಿಜವಾದ ಬರೆಹವೆಂದು ಅತಿ ಸಂತೋಷಸಾಗರದಲ್ಲಿ ಅದ್ದಲ್ಪಟ್ಟನು/ ಮುಳುಗಿದನು, ಎಲೆ ಅರ್ಜುನನೇ ಕೇಳು ಆಶ್ಚರ್ಯವನ್ನು ಎಂದನು ನಾರದ].(ಹರ್ಷದ ಆರ್ಣವ:ಸಮುದ್ರ; ಶತಯಾಗನ- ನೂರುಯಾಗ ಮಾಡಿದವನ: ಇಂದ್ರನ, ತನಯ:ಮಗ)
  • ತಾತ್ಪರ್ಯ:ಆಗ ರಾಜ ಸಭೆಯಲ್ಲಿ ಇದ್ದವರನ್ನು ಆ ಸಭೆಯಲ್ಲೇ ಇರಲುಹೇಳಿ, ಚಂದ್ರಹಾಸನನ್ನು ಪೀಠದಲ್ಲಿ ಕುಳ್ಳಿರಿಸಿ, ಮದನನು ಆಸ್ಥಾನದಿಂದ ಎದ್ದು ಅಮಲನೆಂಬ ತನ್ನ ತಮ್ಮನ ಜೊತೆಯಲ್ಲಿ ಏಕಾಂತ ಭವನಕ್ಕೆ ಹೋದನು. ಪತ್ರಕ್ಕೆ ಹಾಕಿರುವ ಮುದ್ರೆಯನ್ನು ತೆಗೆದು ಪತ್ರವನ್ನು ಓದಿ ತಿದ್ದಿದ ಅಕ್ಷರವನ್ನು ಅರಿಯದೆ ನಿಜವಾದ ಬರೆಹವೆಂದು ಅತಿ ಸಂತೋಷಸಾಗರದಲ್ಲಿ ಅದ್ದಲ್ಪಟ್ಟನು/ ಮುಳುಗಿದನು, ಎಲೆ ಅರ್ಜುನನೇ ಕೇಳು ಆಶ್ಚರ್ಯವನ್ನು ಎಂದನು ನಾರದ.
  • (ಪದ್ಯ-೫೦)

ಪದ್ಯ:-:೫೧:[ಸಂಪಾದಿಸಿ]

ಲೇಸಾದುದಯ್ಯನಿಂದೆನಗೆ ನೇಮಿಸಿ ಕಳುಹಿ |
ದೀ ಸುವೊಕ್ಕಣಿಗಳ್ ಮಹಾಹಿತಂ ತನಗೀತ |
ನೀ ಸೀಮೆಗರಸಾದಪಂ ಸರ್ವಧಾಮಿತ್ರನಪ್ಪವಂ ನಿಶ್ಚಯಮಿದು ||
ಮೋಸವೇ ಕುಲಾಚಾರಗತಿಯ ನಾರೈವೊಡೆ ವಿ |
ಲಾಸದಿಂ ವಿಷಯೆ ಮೋಹಿಸುವಂತೆ ಕುಡುವೆನಿದ |
ಕೋಸರಿಸಲೇಕೆ ತಂಗಿಗೆ ತಕ್ಕ ವರನೀತನೆಂದು ಮದನಂ ತಿಳಿದನು ||51||

ಪದವಿಭಾಗ-ಅರ್ಥ:
ಲೇಸಾದುದು ಅಯ್ಯನು ಇಂದು ಎನಗೆ ನೇಮಿಸಿ ಕಳುಹಿದ ಈ ಸುವೊಕ್ಕಣಿಗಳ್ (ಒಕ್ಕಣೆ:ಬರಹ) ಮಹಾಹಿತಂ ತನಗೆ ಈತನು ಈ ಸೀಮೆಗೆ ಅರಸಾದಪಂ ಸರ್ವಧಾ ಮಿತ್ರನು ಅಪ್ಪವಂ ನಿಶ್ಚಯಮಿದು=[ಮದನನು ಯೋಚಿಸಿದನು, ಇದು ಒಳ್ಳಯದಾಯಿತು, ತಂದಯು ಇಂದು ನನಗೆ ಆಜ್ಞೆಮಾಡಿ ಕಳುಹಿಸಿದ ಈ ಶುಭಬರಹಗಳು ಬಹಳ ಹಿತವಾದುದು ತನಗೆ; (ಪತ್ರದ ವಾಕ್ಯಗಳನ್ನು ಪುನಃ ಒಕ್ಕಣಿಸುವನು) ಈತನು ಈ ರಾಜ್ಯಕ್ಕೆ ಅರಸಾಗುವನು; ಸರ್ವಧಾ ಮಿತ್ರನು ಆಗುವನು ಇದು ನಿಶ್ಚಯವು];; ಮೋಸವೇ ಕುಲ ಆಚಾರಗತಿಯನು ಆರೈವೊಡೆ ವಿಲಾಸದಿಂ ವಿಷಯೆ ಮೋಹಿಸುವಂತೆ ಕುಡುವೆನು ಇದಕೆ ಓಸರಿಸಲು ಏಕೆ ತಂಗಿಗೆ ತಕ್ಕ ವರನೀತನೆಂದು ಮದನಂ ತಿಳಿದನು=[ಕುಲ ಆಚಾರ ಗತಿಯನ್ನು ವಿಚಾರಿಸಿದರೆ ಮೋಸವೇ/ ತಪ್ಪಾಗುವುದು; ಸಂತೋಷದಿಂದ ವಿಷಯೆಗೆ ಪ್ರೀತಿಯಾಗುವಂತೆ ಕೊಡುವೆನು; ಇದಕ್ಕೆ ಹಿಂಜರಿಯುವುದು ಏಕೆ? ತಂಗಿಗೆ ತಕ್ಕ ವರನು ಈತನು ಎಂದು ಮದನನು ತಿಳಿದನು].
  • ತಾತ್ಪರ್ಯ:ಮದನನು ಯೋಚಿಸಿದನು, ಇದು ಒಳ್ಳೆಯದಾಯಿತು, ತಂದಯು ಇಂದು ನನಗೆ ಆಜ್ಞೆಮಾಡಿ ಕಳುಹಿಸಿದ ಈ ಶುಭಬರಹಗಳು ಬಹಳ ಹಿತವಾದುದು ತನಗೆ; ಈತನು ಈ ರಾಜ್ಯಕ್ಕೆ ಅರಸಾಗುವನು; ಸರ್ವಧಾ ಮಿತ್ರನು ಆಗುವನು ಇದು ನಿಶ್ಚಯವು; ಕುಲ ಆಚಾರ ಗತಿಯನ್ನು ವಿಚಾರಿಸಿದರೆ ತಪ್ಪಾಗುವುದು; ಸಂತೋಷದಿಂದ ವಿಷಯೆಗೆ ಪ್ರೀತಿಯಾಗುವಂತೆ ಕೊಡುವೆನು; ಇದಕ್ಕೆ ಹಿಂಜರಿಯುವುದು ಏಕೆ? ತಂಗಿಗೆ ತಕ್ಕ ವರನು ಈತನು ಎಂದು ಮದನನು ತಿಳಿದನು.
  • (ಪದ್ಯ-೫೧)

ಪದ್ಯ:-:೫೨:[ಸಂಪಾದಿಸಿ]

ಮುನ್ನ ತಂದೆಯ ನಿರೂಪದ ಕಾರ್ಯಮದರ ಮೇ |
ಲೆನ್ನಮನವಿವನೊಳಕ್ಕರ್ವೆರಸುತಿದೆ ರೂಪ |
ನುನ್ನಿಸುವೊಡನುಜೆಗೀತಂಗೆ ಪಾಸಟಿ ವಿಚಾರಿಸೆ ಕೃಷ್ಣಭಕ್ತನಿವನು ||
ಇನ್ನು ಸಂಶಯವಿಲ್ಲವೀಚಂದ್ರಹಾಸಂಗೆ |
ಕನ್ನೆಯ್ದಿಲಂದದಕ್ಷಿಯ ತಂಗಿಯಂ ಕೊಟ್ಟು |
ಮನ್ನಿಸುವೆನೆಂದು ನಿಶ್ಚೈಸಿ ಮದನಂ ಮತ್ತೆ ಬಂದನೋಲಗದ ಸಭೆಗೆ ||52||

ಪದವಿಭಾಗ-ಅರ್ಥ:
ಮುನ್ನ ತಂದೆಯ ನಿರೂಪದ ಕಾರ್ಯಂ ಅದರ ಮೇಲೆ ಎನ್ನ ಮನವು ಇವನೊಳು ಅಕ್ಕರ ವೆರಸುತಿದೆ ( ಪ್ರೀತಿ ಬೆರಸುವುದು/ಸೇರುವುದು) ರೂಪನು ಉನ್ನಿಸುವೊಡೆ ಅನುಜೆಗೆ ಈತಂಗೆ ಪಾಸಟಿ ವಿಚಾರಿಸೆ ಕೃಷ್ಣಭಕ್ತನಿವನು=[ಮೊದಲೇ ತಂದೆಯ ಆಜ್ಞೆಯ ಕಾರ್ಯವು ಇದು; ಅದರ ಮೇಲೆ ನನ್ನ ಮನಸ್ಸು ಇವನಲ್ಲಿ ಪ್ರೀತಿಯನ್ನು ಹುಟ್ಟಿಸಿದೆ; ರೂಪವಂತನು; ಊಹಿಸಿದರೆ (ತಂಗಿಯ ಮನಸ್ಸನ್ನು)ತಂಗಿಗೆ ಈತನು ಸರಿಯಾದ ವರ; ಹೆಚ್ಚಾಗಿ ವಿಚಾರಿಸಿದರೆ ಇವನು ಕೃಷ್ಣಭಕ್ತನು!];; ಮದನನು ಯೋಚಿಸಿದ; 'ಇನ್ನು ಸಂಶಯವಿಲ್ಲವು ಈ ಚಂದ್ರಹಾಸಂಗೆ ಕನ್ನೆಯ್ದಿಲ ಅಂದದ ಅಕ್ಷಿಯ ತಂಗಿಯಂ ಕೊಟ್ಟು ಮನ್ನಿಸುವೆನು ಎಂದು ನಿಶ್ಚೈಸಿ ಮದನಂ ಮತ್ತೆ ಬಂದನು ಓಲಗದ ಸಭೆಗೆ=[ಇನ್ನು ಇದರ ಬಗೆಗೆ ಸಂಶಯ ಪಡುವುದುಬೇಡ; ಈ ಚಂದ್ರಹಾಸನಿಗೆ ಕನ್ನೆಯ್ದಿಲೆಯ ಅಂದದ/ಹಾಗಿರುವ ಕಣ್ಣುಳ್ಳ ತಂಗಿಯನ್ನು ಕೊಟ್ಟು ಉಪಚರಿಸುವೆನು,' ಎಂದು ನಿಶ್ಚೈಸಿ ಮದನನು ಮತ್ತೆ ಓಲಗದ ಸಭೆಗೆ ಬಂದನು].
  • ತಾತ್ಪರ್ಯ:ಮೊದಲೇ ತಂದೆಯ ಆಜ್ಞೆಯ ಕಾರ್ಯವು ಇದು; ಅದರ ಮೇಲೆ ನನ್ನ ಮನಸ್ಸು ಇವನಲ್ಲಿ ಪ್ರೀತಿಯನ್ನು ಹುಟ್ಟಿಸಿದೆ; ರೂಪವಂತನು; ಊಹಿಸಿದರೆ (ತಂಗಿಯ ಮನಸ್ಸನ್ನು) ತಂಗಿಗೆ ಈತನು ಸರಿಯಾದ ವರ; ಹೆಚ್ಚಾಗಿ ವಿಚಾರಿಸಿದರೆ ಇವನು ಕೃಷ್ಣಭಕ್ತನು! ಇನ್ನು ಇದರ ಬಗೆಗೆ ಸಂಶಯ ಪಡುವುದುಬೇಡ; ಈ ಚಂದ್ರಹಾಸನಿಗೆ ಕನ್ನೆಯ್ದಿಲೆಯ ಹಾಗಿರುವ ಕಣ್ಣುಳ್ಳ ತಂಗಿಯನ್ನು ಕೊಟ್ಟು ಉಪಚರಿಸುವೆನು,' ಎಂದು ನಿಶ್ಚೈಸಿ ಮದನನು ಮತ್ತೆ ಓಲಗದ ಸಭೆಗೆ ಬಂದನು.
  • (ಪದ್ಯ-೫೨)

ಪದ್ಯ:-:೫೩:[ಸಂಪಾದಿಸಿ]

ಗಣಿತಜ್ಞರಂ ಕರೆಸಿ ನೋಡಿಸಿದನಾಗಳನು |
ಗುಣಮಾದ ರಾಶಿಕೂಟವನಮಲ ಲಗ್ನಮಂ |
ಗುಣಿಸಿ ವಿಸ್ತಿರಿಸಿದರ್ ಬಳಿಕ ಮದನಂ ಮಾಡಿಸಿದನೊಸಗೆಯಂ ಪೊಳಲೊಳು ||
ಅಣೆದುವುಭ್ರವನೆಸೆವ ಗುಡಿ ತೋರಣಂಗಳಿ |
ಟ್ಟಣಿಸಿದುವು ಬೇಕಾದ ಮಂಗಳ ಸುವಸ್ತುಗಳ್ |
ಮಣಿಮಯದ ವೇದಿಯಂ ವಿರಚಿಸಿದರೊಳ್ಪಿನಿಂ ವೈವಾಹ ಮಂಟಪವನು ||53||

ಪದವಿಭಾಗ-ಅರ್ಥ:
ಗಣಿತಜ್ಞರಂ ಕರೆಸಿ ನೋಡಿಸಿದನು ಆಗಳು ಅನುಗುಣಮಾದ ರಾಶಿಕೂಟವನು ಅಮಲ ಲಗ್ನಮಂ ಗುಣಿಸಿ ವಿಸ್ತಿರಿಸಿದರ್ ಬಳಿಕ ಮದನಂ ಮಾಡಿಸಿದನು ಒಸಗೆಯಂ ಪೊಳಲೊಳು=[ಜ್ಯೋತಿಷ ಗಣಿತಜ್ಞರನ್ನು ಕರೆಸಿ ಆಗ ಅನುಕೂಲವಾದ ರಾಶಿಕೂಟವನ್ನು ನೋಡಿಸಿದನು; ಪವಿತ್ರ ಲಗ್ನಕಾಲವನ್ನು ಗುಣಿಸಿ ವಿಸ್ತಾರವಾಗಿ ವಿವರಿಸಿದರು; ಬಳಿಕ ಮದನನು ಶುಭ ಮಂಗಳಕಾರ್ಯದ ಆಹ್ವಾನ ಪತ್ರವನ್ನು ಮಾಡಿಸಿದನು. ನಗರದಲ್ಲಿ ];; ಅಣೆದುದು (ಕಟ್ಟಲಾಯಿತು, ಅಣೆ:ಕಟ್ಟು) ಅಭ್ರವನೆಸೆವ ಗುಡಿ ತೋರಣಂಗಳು ಇಟ್ಟಣಿಸಿದುವು ಬೇಕಾದ ಮಂಗಳ ಸುವಸ್ತುಗಳ್ ಮಣಿಮಯದ ವೇದಿಯಂ ವಿರಚಿಸಿದರು ಒಳ್ಪಿನಿಂ ವೈವಾಹ ಮಂಟಪವನು=[ಆಕಾಶದ ಎತ್ತರಕ್ಕೆ ತೋರುವ ಗುಡಿ ತೋರಣಗಳನ್ನು ಕಟ್ಟಿದರು, ಅವು ಎಲ್ಲಾಕಡೆ ತುಂಬಿಹೋಯಿತು. ಅಗತ್ಯವಾಗಿ ಬೇಕಾದ ಮಂಗಳ ಪರಿಶುದ್ಧ ವಸ್ತುಗಳನ್ನು ತರಿಸಿದನು. ಮಣಿಮಯದ ವೇದಿಕೆಯನ್ನೂ, ವಿವಾಹ ಮಂಟಪವನ್ನೂ ಒಳ್ಳೆರೀತಿಯಲ್ಲಿ ರಚಿಸಿದರು].
  • ತಾತ್ಪರ್ಯ:ಜ್ಯೋತಿಷ ಗಣಿತಜ್ಞರನ್ನು ಕರೆಸಿ ಆಗ ಅನುಕೂಲವಾದ ರಾಶಿಕೂಟವನ್ನು ನೋಡಿಸಿದನು; ಅವರು ಪವಿತ್ರ ಲಗ್ನಕಾಲವನ್ನು ಗುಣಿಸಿ ವಿಸ್ತಾರವಾಗಿ ವಿವರಿಸಿದರು; ಬಳಿಕ ಮದನನು ಶುಭ ಮಂಗಳಕಾರ್ಯದ ಆಹ್ವಾನ ಪತ್ರವನ್ನು ಮಾಡಿಸಿದನು. ನಗರದಲ್ಲಿ ಆಕಾಶದ ಎತ್ತರಕ್ಕೆ ತೋರುವ ಗುಡಿ ತೋರಣಗಳನ್ನು ಕಟ್ಟಿದರು, ಅವು ಎಲ್ಲಾಕಡೆ ತುಂಬಿಹೋಯಿತು. ಅಗತ್ಯವಾಗಿ ಬೇಕಾದ ಮಂಗಳ ಪರಿಶುದ್ಧ ವಸ್ತುಗಳನ್ನು ತರಿಸಿದನು. ಮಣಿಮಯದ ವೇದಿಕೆಯನ್ನೂ, ವಿವಾಹ ಮಂಟಪವನ್ನೂ ಒಳ್ಳೆರೀತಿಯಲ್ಲಿ ರಚಿಸಿದರು].
  • (ಪದ್ಯ-೫೩)

ಪದ್ಯ:-:೫೪:[ಸಂಪಾದಿಸಿ]

ಬಳಿಕ ಮದನನ ಹೇಳಿಕೆಯೊಳಂದು ವಿದಿತ ಮಂ |
ಗಳ ವಿವಾಹೋಚಿತ ಕ್ರಿಯೆಗಳಂ ವಿರಚಿಸಿದ |
ರಿಳೆಯ ದಿವಿಜರ್ ಪುರಂಧ್ರಿಯೆರೈದೆ ಮಜ್ಜನದ ಮಂಡನದ ಮಾಳ್ಕೆಗಳನು ||
ಆಳವಡಿಸಿದರ್ ಪಣೆಯೊಳೆಸೆವ ಬಾಸಿಗದ ಮದ |
ವಳಿಗನಾಗಿರ್ದಂ ಕುಳಿಂದಜಂ ದೇವಪುರ |
ನಿಳಯ ಲಕ್ಷ್ಮೀಕಾಂತನೊಲವಿಂದೆ ವಿಷಮಮೃತಮಹುದು ಪೊಸತೇನೆನಲ್ಕೆ ||54||

ಪದವಿಭಾಗ-ಅರ್ಥ:
ಬಳಿಕ ಮದನನ ಹೇಳಿಕೆಯೊಳು ಅಂದು ವಿದಿತ ಮಂಗಳ ವಿವಾಹೋಚಿತ ಕ್ರಿಯೆಗಳಂ ವಿರಚಿಸಿದರು ಇಳೆಯ ದಿವಿಜರ್ ಪುರಂಧ್ರಿಯೆರು ಐದೆ ಮಜ್ಜನದ ಮಂಡನದ ಮಾಳ್ಕೆಗಳನು ಆಳವಡಿಸಿದರ್ =[ಬಳಿಕ ಮದನನ ಹೇಳಿಕೆಯಲ್ಲಿ ಅಂದು ಎಲ್ಲರಿಗೂ ತಿಳಿದ ಪ್ರಸಿದ್ಧವಾದ ಮಂಗಳ ವಿವಾಹಕ್ಕೆ ಉಚಿತ ಕ್ರಿಯೆಗಳನ್ನು ಮಾಡಿದರು; ವಿಪ್ರರು ಮುತ್ತೈದೆಯರು ಬರಲು ಸ್ನಾನದ ಮಂಡನದ ಕ್ರಿಯೆಗಳನ್ನು ನೆಡೆಸಿದರು;];; ಪಣೆಯೊಳು ಎಸೆವ ಬಾಸಿಗದ ಮದವಳಿಗನು ಆಗಿರ್ದಂ ಕುಳಿಂದಜಂ ದೇವಪುರನಿಳಯ ಲಕ್ಷ್ಮೀಕಾಂತನೊಲವಿಂದೆ ವಿಷಮಮೃತಮಹುದು ಪೊಸತೇನೆನಲ್ಕೆ=[ಹಣೆಯಲ್ಲಿ ಶೋಭಿಸುವ ಬಾಸಿಗವನ್ನು ಧರಿಸಿ ಕುಳಿಂದನ ಮಗನು ಮದವಳಿಗನಾಗಿದ್ದನು; ದೇವಪುರನಿಳಯ ಲಕ್ಷ್ಮೀಕಾಂತನ ಒಲವಿಂದೆ/ಕರುಣೆಯಿಂದ ವಿಷವು ಅಮೃತವಾಗುವುದು ಹೊಸತೇನು (ಹೊಸದಲ್ಲ) ಎನ್ನುವಂತೆ ತೋರಿತು.]
  • ತಾತ್ಪರ್ಯ:ವಿಷಯೆಯ ವಿವಾಹ ಮಹೂರ್ತ ಮತ್ತು ಒಸಗೆಯಾದ ಬಳಿಕ ಮದನನ ಹೇಳಿಕೆಯಲ್ಲಿ ಅಂದು ಎಲ್ಲರಿಗೂ ತಿಳಿದ ಪ್ರಸಿದ್ಧವಾದ ಮಂಗಳ ವಿವಾಹಕ್ಕೆ ಉಚಿತ ಕ್ರಿಯೆಗಳನ್ನು ಮಾಡಿದರು; ವಿಪ್ರರು ಮುತ್ತೈದೆಯರು ಬರಲು ಸ್ನಾನದ ಮಂಡನದ ಕ್ರಿಯೆಗಳನ್ನು ನೆಡೆಸಿದರು; ಹಣೆಯಲ್ಲಿ ಶೋಭಿಸುವ ಬಾಸಿಗವನ್ನು ಧರಿಸಿ ಕುಳಿಂದನ ಮಗ ಚಂದ್ರಹಾಸನು ಮದವಳಿಗನಾಗಿದ್ದನು; ದೇವಪುರನಿಳಯ ಲಕ್ಷ್ಮೀಕಾಂತನ ಒಲವಿಂದೆ/ಕರುಣೆಯಿಂದ ವಿಷವು ಅಮೃತವಾಗುವುದು ಹೊಸತೇನು ಎನ್ನುವಂತೆ ತೋರಿತು.
  • (ಪದ್ಯ-೫೪)XIX-XII

ಟಿಪ್ಪಣಿ[ಸಂಪಾದಿಸಿ]

  • @@:ಯುವಕ ಯುವತಿಯರಿಗೆ ವಿರಹ ವೇದನೆಯನ್ನು ಹೆಚ್ಚುಮಾಡುವ ಪೂರ್ಣ ಚಂದ್ರನನ್ನು ಹಾವಿನ ರೂಪತಳೆದ ರಾಹು ಕೇತುಗಳು ನುಂಗುವುವು (ಸ್ವಲ್ಪ ಕಾಲ). ಸಮುದ್ರ ಮಥನದ ಕೊನೆಯಲ್ಲಿ ಅಮೃತ ಬಂದಿತು, ಅದನ್ನು ಸಮುದ್ರವನ್ನು ಕಡೆದ ದೇವತೆಗಳಿಗೂ ಅಸುರರಿಗೂ ಜಗಳ ತಪ್ಪಿಸಲು, ಅದನ್ನು ಹಂಚಲು ವಿಷ್ಣು ಮೋಹಿನಿ ಅವತಾರವನ್ನು ತಾಳಿ ಅಸುರರನ್ನೂ ದೇವತೆಗಳನ್ನೂ ಬೇರೆಬೇರೆ ಕೂರಿಸಿ ಮೊದಲು ಅಮೃತವನ್ನು ದೇವತೆಗಳಿಗೆ ಹಂಚಿದನು . ರಾಹು ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದನು. ತಮ್ಮ ತೇಜಸಿನಿಂದ, ಸೂರ್ಯ ಹಾಗು ಚಂದ್ರ ಇದನ್ನು ತಿಳಿದು, ಮೋಹಿನಿಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನಲ್ಲಿರುವಾಗ ಕೆಳಗಿಳಿಯುವ ಮುನ್ನ, ಮೋಹಿನಿಯು ವಿಷ್ಣು ರೂಪ ತಾಳಿ, ಸುದರ್ಶನ ಚಕ್ರದಿಂದ ರಾಹುವಿನ ತಲೆ ಕತ್ತರಿಸಿದನು. ತಲೆಯ ಭಾಗ ರಾಹು ಆಯಿತು. ಕೆಳಭಾಗ ಕೇತು ಆಯಿತು ಅಮೃತ ಸೇವಿಸಿದ್ದರಿಂದ ತಲೆ ರಾಹು, ಮುಂಡ ಕೇತು ಚಿರಂಜೀವಿ ಆದವು. ಸೇಡು-ತೀರಿಸಿಕೊಳ್ಳಲು ಹಾವಿನ ರೂಪದಲ್ಲಿ ರಾಹುಕೇತುಗಳು ಸೂರ್ಯ ಹಾಗು ಚಂದ್ರನನ್ನು ಸ್ವಲ್ಪ ಕಾಲ ನುಂಗಿ ಹಿಂಸೆ ಕೊಡುತ್ತಾರೆ. ಆಗ ಗ್ರಹಣವುಂಟಾಗುವದು ಎಂಬುದು ಪುರಾಣ ಕಥೆ.
  • &&:ಕಾಮದೇವ:ಮದನ:ಅನಂಗ:ಮನ್ಮಥ ಸುಟ್ಟು ಭಸ್ಮವಾಗಿ ಬದುಕಿದುದು; ಇಂದ್ರ ಮತ್ತು ದೇವತೆಗಳು ಶಿವನ ಮಗನ ಹೊರತುಪಡಿಸಿ ಸೋಲಿಸಲು ಸಾಧ್ಯವಿಲ್ಲದಂತೆ ವರ ಪಡೆದ ರಾಕ್ಷಸ ತಾರಕಾಸುರನಿಂದ ಬಳಲುತ್ತಿರುತ್ತಾರೆ. ಪಾರ್ವತಿ ಶಿವನನ್ನು ವಿವಾಹವಾಗಲು ಅವನ ಬಳಿ ಕೈಲಾಸದಲ್ಲಿ ತಪಸ್ಸು ಮಾಡುತ್ತಿರುತ್ತಾಳೆ. ಆದರೆ ಶಿವನು ಸದಾ ಧ್ಯಾನಮಗ್ನನಾಗಿರುವನು, ಅದನ್ನು ಭ್ರಷ್ಟಗೊಳಿಸುವಂತೆ ದೇವತೆಗಳು ಪ್ರೇಮದೇವತೆ ಮನ್ಥಥನಿಗೆ ಸಲಹೆ ನೀಡುತ್ತಾರೆ, ಏಕೆಂದರೆ ಶಿವ ಪಾರ್ತಿಯರ ಸಂತತಿಯು ಮಾತ್ರಾ ತಾರಕನನ್ನು ಸೋಲಿಸಲು ಸಾಧ್ಯವಾಗುತ್ತಿತ್ತು. ಇಂದ್ರನು ಶಿವನ ಧ್ಯಾನವನ್ನು ಮುರಿಯಲು ಕಾಮದೇವನನ್ನು ನೇಮಿಸುತ್ತಾನೆ. ಒಂದು ಹೊಂದಾಣಿಕೆಯ ವಾತಾವರಣವನ್ನು ಸೃಷ್ಟಿಸಲು, ಕಾಮದೇವ (ಮದನ) ಅಕಾಲಿಕ ವಸಂತವನ್ನು (ಅಕಾಲ-ವಸಂತ) ಸೃಷ್ಟಿಸುತ್ತಾನೆ. ಕಾಮದೇವನು ಕಬ್ಬಿನ ಬಿಲ್ಲಿನಿಂದ ಹೂವಿನ ಬಾಣದಿಂದ ಹೊಡೆದು ಶಿವವನ್ನು ಎಚ್ಚರಗೊಳಿಸಿದ ನಂತರ, ಶಿವ, ಉಗ್ರನಾಗಿ, ಅವನ ಮೂರನೆಯ ಕಣ್ಣನ್ನು ತೆರೆಯುತ್ತಾನೆ, ಅದು ಮದನನನ್ನು ತಕ್ಷಣವೇ ಸುಟ್ಟುಹಾಕುತ್ತದೆ. ಅವನು ಬೂದಿಯಾಗಿ ಮಾರ್ಪಡುತ್ತಾನೆ. ಆದರೆ ಆಗ ಶಿವ ಪಾರ್ವತಿಯನ್ನು ಗಮನಿಸುತ್ತಾನೆ ಮತ್ತು ಆಕೆಗೆ ಹೇಗೆ ಸಹಾಯ ಮಾಡಬಹುದೆಂದು ಕೇಳುತ್ತಾನೆ. ಕಾಮದೇವನನ್ನು ಪುನರುಜ್ಜೀವನಗೊಳಿಸಲು ಅವಳು ಅವನನ್ನು ಒತ್ತಾಯಿಸುತ್ತಾಳೆ, ಮತ್ತು ಮದನನ್ನು ಜೀವಿಸಿರಲು ಶಿವ ಒಪ್ಪುತ್ತಾನೆ, ಆದರೆ ದೇಹರಹಿತ ರೂಪದಲ್ಲಿ ಇರಲಿ ಎನ್ನುತ್ತಾನೆ; ಆದ್ದರಿಂದ ಕಾಮದೇವನನ್ನು ಅನಂಗ (ಅ :ಇಲ್ಲ+ಅಂಗ:ದೇಹ) ಎಂದು ಕರೆಯಲಾಗುತ್ತದೆ. ಶಿವನು ಪಾರ್ವತಿಯನ್ನು ಮದುವೆಯಾಗಿ ಕಾರ್ತಿಕೇಯನು ಜನಿಸಿ ತಾರಕಾಸುರನನ್ನು ಕೊಲ್ಲುತ್ತಾನೆ. (ಆಧಾರ:ಶಿವಪುರಾಣ.ಮಹಾಭಾರತ)
  • [೧]
  • [೨]

ಪದ್ಯಗಳು[ಸಂಪಾದಿಸಿ]

  • ಒಟ್ಟು ಪದ್ಯಗಳು: ೧೬೭೧

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.