ವಿಷಯಕ್ಕೆ ಹೋಗು

ಜೈಮಿನಿ ಭಾರತ/ಇಪ್ಪತ್ನಾಲ್ಕನೆಯ ಸಂಧಿ

ವಿಕಿಸೋರ್ಸ್ದಿಂದ

ಇಪ್ಪತ್ತುನಾಲ್ಕನೆಯ ಸಂಧಿ

[ಸಂಪಾದಿಸಿ]

ಪದ್ಯ:-:ಸೂಚನೆ:

[ಸಂಪಾದಿಸಿ]

ಸೂಚನೆ :|| ಪತ್ನಿಯರ ದೆಸೆಯಿಂದ ಮಡಿದಿರ್ದ ಪ್ರಾರ್ಥಂ ಪ್ರ |
ಯತ್ನದಿಂ ನಿಜಸುತಂ ತಂದ ಸಂಜೀವಕದ |
ರತ್ನದಿಂ ಕೃಷ್ಣಪ್ರಸಾದದಿಂ ಜೀವಿಸಿದನುರ್ವಿಗಾಶ್ವರ್ಯಮೆನಲು ||

ಪದವಿಭಾಗ-ಅರ್ಥ:
ಸೂಚನೆ:ಪತ್ನಿಯರ ದೆಸೆಯಿಂದ ಮಡಿದಿರ್ದ ಪ್ರಾರ್ಥಂ ಪ್ರಯತ್ನದಿಂ ನಿಜಸುತಂ ತಂದ ಸಂಜೀವಕದ ರತ್ನದಿಂ ಕೃಷ್ಣಪ್ರಸಾದದಿಂ ಜೀವಿಸಿದನು ಉರ್ವಿಗೆ ಆಶ್ವರ್ಯಮೆನಲು=[ಉಲೂಪಿ ಮತ್ತು ಚಿತ್ರಾಂಗದೆ ಈ ಪತ್ನಿಯರ ಕಾರಣದಿಂದ ಮರಣಹೊಂದಿದ (ವೃಷಕೇತು ಮತ್ತು) ಪ್ರಾರ್ಥನು ಅವನ ಮಗ ಬಭ್ರುವಾಹನನು ಸಾಹಸದಿಂದ ತಂದ ಸಂಜೀವಕ ರತ್ನ ಮತ್ತು ಕೃಷ್ಣನ ಅನುಗ್ರಹದಿಂದ ಭೂಮಿಯ ಜನರಿಗೆ ಆಶ್ವರ್ಯವೆನ್ನುವಂತೆ ಜೀವಿಸಿದನು.]
  • ತಾತ್ಪರ್ಯ:ಉಲೂಪಿ ಮತ್ತು ಚಿತ್ರಾಂಗದೆ ಈ ಪತ್ನಿಯರ ಕಾರಣದಿಂದ ಮರಣಹೊಂದಿದ (ವೃಷಕೇತು ಮತ್ತು) ಪ್ರಾರ್ಥನು ಅವನ ಮಗ ಬಭ್ರುವಾಹನನು ಸಾಹಸದಿಂದ ತಂದ ಸಂಜೀವಕ ರತ್ನ ಮತ್ತು ಕೃಷ್ಣನ ಅನುಗ್ರಹದಿಂದ ಭೂಮಿಯ ಜನರಿಗೆ ಆಶ್ವರ್ಯವೆನ್ನುವಂತೆ ಜೀವಿಸಿದನು.
  • (ಪದ್ಯ-ಸೂಚನೆ)XII-XI

ಪದ್ಯ:-:೧:

[ಸಂಪಾದಿಸಿ]

ರಾಯ ಕೇಳಿಲ್ಲಿಗಸುರಾಂತಕಂ ಬಂದು ಕೌಂ |
ತೇಯನಂ ನೋಡದಿರನನ್ನೆಗಂ ಸೈರಿಪುದು |
ಪಾಯಮುಳ್ಳೊಡೆ ನರನ ಜೀವಮಂ ಪಡೆವುದಿಂತಗ್ನಿಪ್ರವೇಶದಿಂದೆ ||
ಸಾಯಲೇನಹುದೆಂದಳಲ್ದು ಸುತನಂ ಬೈದು |
ಬಾಯಾರಿ ಚೀರಿ ಚಿತ್ರಾಂಗದೆ ಹಲುಬಲೊಂದು |
ಪಾಯಮಂ ಕಂಡು ನುಡಿದಳ್ ಪನ್ನಗೇಂದ್ರಸಂಭವೆ ಬಭ್ರುವಾಹನಂಗೆ ||1||

ಪದವಿಭಾಗ-ಅರ್ಥ:
ರಾಯ ಕೇಳ್ ಇಲ್ಲಿಗೆ ಅಸುರಾಂತಕಂ ಬಂದು ಕೌಂತೇಯನಂ ನೋಡದಿರನು ಅನ್ನೆಗಂ ಸೈರಿಪುದು ಉಪಾಯಮ್ ಉಳ್ಳೊಡೆ ನರನ ಜೀವಮಂ ಪಡೆವುದಿಂತು ಅಗ್ನಿಪ್ರವೇಶದಿಂದೆ=[ಜನಮೇಜಯ ರಾಯನೇ ಕೇಳು, ಇಲ್ಲಿಗೆ ಕೃಷ್ಣನು ಬಂದು ಅರ್ಜುನನ್ನು ನೋಡದೆ ಇರುವುದಿಲ್ಲ. ಅಲ್ಲಿಯವರೆಗೆ ಸಹಿಸುವುದು; ಏನಅದರೂ ಉಪಾಯವಿದ್ದರೆ ಅರ್ಜುನನ ಜೀವವನ್ನು ಮರಳಿ ಪಡೆಯುವುದು. ಅದಲ್ಲದೆ ಅಗ್ನಿಪ್ರವೇಶದಿಂದ]; ಸಾಯಲೇನಹುದು ಎಂದ ಅಳಲ್ದು ಸುತನಂ ಬೈದು ಬಾಯಾರಿ ಚೀರಿ ಚಿತ್ರಾಂಗದೆ ಹಲುಬಲು ಒಂದು ಉಪಾಯಮಂ ಕಂಡು ನುಡಿದಳ್ ಪನ್ನಗೇಂದ್ರಸಂಭವೆ(ಆದಿಶೇಷನ ಮಗಳು) ಬಭ್ರುವಾಹನಂಗೆ=[ಸಾಯಲು ಏನು ಪ್ರಯೋಜನ ಆಗುವುದು? ಎಂದ ಅತ್ತು, ಮಗನನ್ನುನಂ ಬೈದು, ಬಾಯಾರಿ ದುಃಖದಿಂದ ಕೂಗಿ, ಚಿತ್ರಾಂಗದೆ ಗೋಳಿಡುತ್ತಿರಲು, ಉಲೂಪಿಯು ಒಂದು ಉಪಾಯವನ್ನು ಕಂಡುಕೊಂಡು ಬಭ್ರುವಾಹನನಿಗೆ ಹೇಳಿದಳು.]
  • ತಾತ್ಪರ್ಯ:ಜನಮೇಜಯ ರಾಯನೇ ಕೇಳು, ಇಲ್ಲಿಗೆ ಕೃಷ್ಣನು ಬಂದು ಅರ್ಜುನನ್ನು ನೋಡದೆ ಇರುವುದಿಲ್ಲ. ಅಲ್ಲಿಯವರೆಗೆ ಸಹಿಸುವುದು; ಏನಅದರೂ ಉಪಾಯವಿದ್ದರೆ ಅರ್ಜುನನ ಜೀವವನ್ನು ಮರಳಿ ಪಡೆಯುವುದು. ಅದಲ್ಲದೆ ಅಗ್ನಿಪ್ರವೇಶದಿಂದ ಸಾಯಲು ಏನು ಪ್ರಯೋಜನ ಆಗುವುದು? ಎಂದ ಅತ್ತು, ಮಗನನ್ನು ಬೈದು, ಬಾಯಾರಿ ದುಃಖದಿಂದ ಕೂಗಿ, ಚಿತ್ರಾಂಗದೆ ಗೋಳಿಡುತ್ತಿರಲು, ಉಲೂಪಿಯು ಒಂದು ಉಪಾಯವನ್ನು ಕಂಡುಕೊಂಡು, ಬಭ್ರುವಾಹನನಿಗೆ ಹೇಳಿದಳು.]
  • (ಪದ್ಯ-೧)

ಪದ್ಯ:-:೨:

[ಸಂಪಾದಿಸಿ]

ಮಗನೆ ಮಡಿದರ್ಜುನಂ ಮಗುಳೇಳ್ವತೆರನಂ ನಿ |
ನಗೆ ಪೇಳ್ವೆ ನಾನೀಗ ಪಾತಾಳ ಲೋಕದೊಳ್ |
ಖಗರಾಜನೊರಸಿದಹಿ ನಿಕರದಸು ಮರಳ್ವಂತೆ ಫಣಿವರಂ ಬೇಡಿಕೊಳಲು ||
ಅಗಜಾರಮಣನಿತ್ತ ಸಂಜೀವಕದ ಮಣಿಯು |
ರಗಪತಿಯೊಳಿದದಂ ಸತ್ವದಿಂ ತರಬಲ್ಲ |
ವಿಗಡರಂ ಕಾಣೆನೀ ಮೂಜಗದೊಳೆನೆ ಬಭ್ರುವಾಹನಂ ಖತಿಗೊಂಡನು||2||

ಪದವಿಭಾಗ-ಅರ್ಥ:
ಉಲೂಪಿಯು,ಮಗನೆ ಮಡಿದ ಅರ್ಜುನಂ ಮಗುಳ್ ಏಳ್ವತೆರನಂ ನಿನಗೆ ಪೇಳ್ವೆ ನಾನೀಗ,=[ಉಲೂಪಿಯು, ಮಗನೆ ಮಡಿದಿರುವ ಅರ್ಜುನನು ಮತ್ತೆ ಬದುಕಿಏಳುವ ಬಗೆಯನ್ನು ನಿನಗೆ ನಾನು ಈಗ ಹೇಳುವೆನು.];; ಪಾತಾಳ ಲೋಕದೊಳ್ ಖಗರಾಜನು ಒರಸಿದ ಅಹಿ ನಿಕರದ ಅಸು ಮರಳ್ವಂತೆ ಫಣಿವರಂ ಬೇಡಿಕೊಳಲು=[ಪಾತಾಳ ಲೋಕದಲ್ಲಿ ಗರುಡನು ಕೊಂದ ನಾಗಗಳ ಸಮೂಹದ ಜೀವಗಳನ್ನು ಮರಳಿ ಪಡೆಯಲು ನಾಗರಾಜನು ಬೇಡಿಕೊಳ್ಳಲು, ];; ಅಗಜಾರಮಣನು (ಅಗಜೆ-ಪಾರ್ವತಿ + ರಮಣ-ಶಿವ) ಇತ್ತ ಸಂಜೀವಕದ ಮಣಿಯು ಉರಗಪತಿಯೊಳು ಇದೆ.=[ಶಿವನು ಕೊಟ್ಟ ಸಂಜೀವಕದ ಮಣಿಯು ನಾಗರಾಜನಾದ ಮಹಾಶೇಷನ ಹತ್ತಿರ ಇದೆ];; ಅದಂ ಸತ್ವದಿಂ ತರಬಲ್ಲ ವಿಗಡರಂ ಕಾಣೆನು ಈ ಮೂಜಗದೊಳೆನೆ ಬಭ್ರುವಾಹನಂ ಖತಿಗೊಂಡನು=[ಅದರಿಂದ ಸತ್ತವರನ್ನು ಬದುಕಿಸಬಹುದು, ಆದರೆ ಅದನ್ನು ಸಾಹಸದಿಂದ ತರಬಲ್ಲ ವೀರರು ಈ ಮೂರು ಜಗತ್ತಿನಲ್ಲಿ ಯಾರಿದ್ದಾರೆ? ಅವರನ್ನ್ನು ಕಾಣೆನು ಎಂದಳು. ಅದನ್ನು ಕೇಳಿ ಬಭ್ರುವಾಹನನು ಪೌರಷಗೊಂಡನು].
  • ತಾತ್ಪರ್ಯ:ಉಲೂಪಿಯು, ಮಗನೆ ಮಡಿದಿರುವ ಅರ್ಜುನನು ಮತ್ತೆ ಬದುಕಿಏಳುವ ಬಗೆಯನ್ನು ನಿನಗೆ ನಾನು ಈಗ ಹೇಳುವೆನು. ಪಾತಾಳ ಲೋಕದಲ್ಲಿ ಗರುಡನು ಕೊಂದ ನಾಗಗಳ ಸಮೂಹದ ಜೀವಗಳನ್ನು ಮರಳಿ ಪಡೆಯಲು ನಾಗರಾಜನು ಬೇಡಿಕೊಳ್ಳಲು, ಶಿವನು ಕೊಟ್ಟ ಸಂಜೀವಕದ ಮಣಿಯು ನಾಗರಾಜನಾದ ಮಹಾಶೇಷನ ಹತ್ತಿರ ಇದೆ. ಅದರಿಂದ ಸತ್ತವರನ್ನು ಬದುಕಿಸಬಹುದು, ಆದರೆ ಅದನ್ನು ಸಾಹಸದಿಂದ ತರಬಲ್ಲ ವೀರರು ಈ ಮೂರು ಜಗತ್ತಿನಲ್ಲಿ ಯಾರಿದ್ದಾರೆ? ಅವರನ್ನ್ನು ಕಾಣೆನು ಎಂದಳು. ಅದನ್ನು ಕೇಳಿ ಬಭ್ರುವಾಹನನು ಪೌರಷಗೊಂಡನು.
  • (ಪದ್ಯ-೨)

ಪದ್ಯ:-:೩:

[ಸಂಪಾದಿಸಿ]

ಸಂಜೀವಕದ ಮಣಿಯನೀಗ ತಾರದೊಡೆ ತ |
ನ್ನಂ ಜನನಿ ಪೆತ್ತಳೇತಕೆ ಮತ್ತೆ ಮಡಿದಿಹ ಧ |
ನಂಜಯನ ಹರಣಮಂ ಪಡೆವೆ ನವನೀಯದೊಡೆ ಫಣಿಲೋಕಮಂ ಸುಡುವೆನು ||
ಕಂಜಜ ಕಪರ್ದಿಗಳ್ ತೊಡಕಿದೊಡೊರಲ್ಚುವೆಂ |
ಭಂಜಿಸುವೆನಖಿಳ ದಿಕ್ಪಾಲರಂ ಸೆಣಸಿದೊಡೆ |
ಸಂಜಾತನಾದುದಕೆ ಸಫಲಮಾಯ್ತೆನುತುಬ್ಬಿದಂ ಬಭ್ರುವಾಹನಂದು ||3||

ಪದವಿಭಾಗ-ಅರ್ಥ:
ಸಂಜೀವಕದ ಮಣಿಯನು ಈಗ ತಾರದೊಡೆ ತನ್ನಂ ಜನನಿ ಪೆತ್ತಳೇತಕೆ ಮತ್ತೆ ಮಡಿದಿಹ ಧನಂಜಯನ ಹರಣಮಂ ಪಡೆವೆನು ಅವನು ಈಯದೊಡೆ ಫಣಿಲೋಕಮಂ ಸುಡುವೆನು=[ಸಂಜೀವಕದ ಮಣಿಯನು ಈಗ ತರದಿದ್ದರೆ ತನ್ನನ್ನು ತಾಯಿ ಹೆತ್ತಳೇಕೆ- ಹೆತ್ತಿದ್ದು ವ್ಯರ್ಥ! ಮತ್ತೆ ಮಡಿದಿರುವ ಅರ್ಜುನನ ಪ್ರಾಣವನ್ನು ಪಡೆಯುವೆನು; ಅವನು ಮಣಿಯನ್ನು ಕೊಡದಿದ್ದರೆ ನಾಗಲೋಕವನ್ನೇ ಸುಡುವೆನು];; ಕಂಜಜ ಕಪರ್ದಿಗಳ್ ತೊಡಕಿದೊಡೆ ಒರಲ್ಚುವೆಂ (ಹೊರಳಿಸುವೆನು) ಭಂಜಿಸುವೆನು ಅಖಿಳ ದಿಕ್ಪಾಲರಂ ಸೆಣಸಿದೊಡೆ ಸಂಜಾತನು ಆದುದಕೆ ಸಫಲಮಾಯ್ತೆನುತ ಉಬ್ಬಿದಂ ಬಭ್ರುವಾಹನ ಅಂದು=[ಕಂಜಜ ಬ್ರಹ್ಮ ರುದ್ದರು ಅಡ್ಡಬಂದರೆ ಅವರನ್ನು ಹಿಂತಿರುಗುವಂತೆ ಮಾಡುವೆನು; ಭಂಜಿಸುವೆನು ಅಖಿಲ ಯುದ್ಧಕ್ಕೆ ಬಂದರೆ ದಿಕ್ಪಾಲಕರನ್ನು ಭಂಗಿಸುವೆನು; ನಾನು ಪಾರ್ಥ- ಚಿತ್ರಾಂದೆಯರ ಮಗನಾದುದು ಸಫಲವಯಿತು, ತಂದೆಯ ಜೀವ ಉಳಿಸಲು ಒಂದು ಮಾರ್ಗ ಸಿಕ್ಕಿತಲ್ಲಾ ಎಂದು ಬಭ್ರುವಾಹನ ಅಂದು ಉತ್ಸಾಹದಿಂದ ಉಬ್ಬಿದನು].
  • ತಾತ್ಪರ್ಯ:ಸಂಜೀವಕದ ಮಣಿಯನು ಈಗ ತರದಿದ್ದರೆ ತನ್ನನ್ನು ತಾಯಿ ಹೆತ್ತಳೇಕೆ- ಹೆತ್ತಿದ್ದು ವ್ಯರ್ಥ! ಅದನ್ನು ತಂದೇತರುವೆನು. ಮಡಿದಿರುವ ಅರ್ಜುನನ ಪ್ರಾಣವನ್ನು ಮತ್ತೆ ಪಡೆಯುವೆನು; ಅವನು ಮಣಿಯನ್ನು ಕೊಡದಿದ್ದರೆ ನಾಗಲೋಕವನ್ನೇ ಸುಡುವೆನು. ಬ್ರಹ್ಮ ರುದ್ದರು ಅಡ್ಡಬಂದರೆ ಅವರನ್ನು ಹಿಂತಿರುಗುವಂತೆ ಮಾಡುವೆನು; ಭಂಜಿಸುವೆನು ಅಖಿಲ ಯುದ್ಧಕ್ಕೆ ಬಂದರೆ ದಿಕ್ಪಾಲಕರನ್ನು ಭಂಗಿಸುವೆನು; ನಾನು ಪಾರ್ಥ- ಚಿತ್ರಾಂದೆಯರ ಮಗನಾದುದು ಸಫಲವಯಿತು, ತಂದೆಯ ಜೀವ ಉಳಿಸಲು ಒಂದು ಮಾರ್ಗ ಸಿಕ್ಕಿತಲ್ಲಾ ಎಂದು ಬಭ್ರುವಾಹನ ಅಂದು ಉತ್ಸಾಹದಿಂದ ಉಬ್ಬಿದನು].
  • (ಪದ್ಯ-೩)

ಪದ್ಯ:-:೪:

[ಸಂಪಾದಿಸಿ]

ಮರುಳಾಟಮೇಕೆ ನಿನ್ನದಟು ಕೊಳ್ಳದು ಮಗನೆ |
ಗರಳಮಯದುರಿಯೊಳೆವೆ ಸೀವುದು ಕಣಾ ನೋಡ |
ಲುರಗಪತಿ ಶೇಷರಾಜನ ಕೋಶದೆಡೆಯೊಳಿಹ ಸಂಜೀವಕದ ಮಣಿಯನು ||
ತರಬಲ್ಲನಾವವಂ ಗುಳಿಕ ವಾಸುಕಿ ತಕ್ಷ |
ಕರ ಶಂಖ ಪದ್ಮ ಕರ್ಕೋಟಕಾದಿಗಳ ಭೀ |
ಕರ ವಿಷೋತ್ಕರಿದಿಂದೆ ಕಾಹು ಬಲಿದಿಹುದೆನಲುಲೂಪಿಗವ ನಿಂತೆಂದನು ||4||

ಪದವಿಭಾಗ-ಅರ್ಥ:
ಮರುಳಾಟಂ ಏಕೆ ನಿನ್ನ ಅದಟು ಕೊಳ್ಳದು ಮಗನೆ ಗರಳಮಯದ ಉರಿಯೊಳು ಎವೆ ಸೀವುದು ಕಣಾ ನೋಡಲು=[ಮರುಳಾಟವು ಏಕೆ?(ನಿನ್ನದು ಹುಚ್ಚು ಪ್ರಯತ್ನ) ಮಗನೆ, ನಿನ್ನ ಶೌರ್ಯ ಅಲ್ಲಿ ನೆಡೆಯುವುದಿಲ್ಲ. ಏಕೆಂದರೆ ಅಲ್ಲಿ ವಿಷಮಯ; ಆ ವಿಷದ ಬೆಂಕಿಯಲ್ಲಿ ಕಣ್ನುಬಿಟ್ಟು ನೋಡಿದರೆ ಕಣ್ಣು ಸುಟ್ಟು ಸೀದುಹೋಗುವುದು ಕಣಾ ];; ಉರಗಪತಿ ಶೇಷರಾಜನ ಕೋಶದ ಎಡೆಯೊಳು ಇಹ ಸಂಜೀವಕದ ಮಣಿಯನು ತರಬಲ್ಲನು ಆವವಂ=[ನಾಗರ ಅಧಿಪತಿ ಶೇಷರಾಜನ ಕೋಶದ/ ಭಂಡಾರದ ಸ್ಥಳದಲ್ಲಿ ಇರುವ ಸಂಜೀವಕದ ಮಣಿಯನ್ನು ತರಬಲ್ಲನು ಯಾವನು? ಯಾರನ್ನೂ ಕಾನೆನು.];; ಗುಳಿಕ ವಾಸುಕಿ ತಕ್ಷಕರ ಶಂಖ ಪದ್ಮ ಕರ್ಕೋಟಕಾದಿಗಳ ಭೀಕರ ವಿಷೋತ್ಕರಿದಿಂದೆ ಕಾಹು ಬಲಿದಿಹುದು ಎನಲು ಉಲೂಪಿಗೆ ಅವನು ಇಂತೆಂದನು=[ಅಲ್ಲಿ ಕಾವಲಿಗೆ ಮಹಾವಿಷದ ನಾಗಗಳಾದ ಗುಳಿಕ, ವಾಸುಕಿ, ತಕ್ಷಕರು, ಶಂಖ, ಪದ್ಮ, ಕರ್ಕೋಟಕಾದಿಗಳ ಭೀಕರ ಅಧಿಕ ವಿಷದ ನಾಗಗಳಿಂದ ಕಾವಲು ಕಟ್ಟಿರುವುದು, ಎನ್ನಲು ಉಲೂಪಿಗೆ ಅವನು ಹೀಗೆಂದನು].
  • ತಾತ್ಪರ್ಯ:ಮರುಳಾಟವು ಏಕೆ?(ನಿನ್ನದು ಹುಚ್ಚು ಪ್ರಯತ್ನ) ಮಗನೆ, ನಿನ್ನ ಶೌರ್ಯ ಅಲ್ಲಿ ನೆಡೆಯುವುದಿಲ್ಲ. ಏಕೆಂದರೆ ಅಲ್ಲಿ ವಿಷಮಯ; ಆ ವಿಷದ ಬೆಂಕಿಯಲ್ಲಿ ಕಣ್ನುಬಿಟ್ಟು ನೋಡಿದರೆ ಕಣ್ಣು ಸುಟ್ಟು ಸೀದುಹೋಗುವುದು ಕಣಾ! ನಾಗರ ಅಧಿಪತಿ ಶೇಷರಾಜನ ಕೋಶದ/ ಭಂಡಾರದ ಹತ್ತಿರದಲ್ಲಿ ಇರುವ ಸಂಜೀವಕದ ಮಣಿಯನ್ನು ತರಬಲ್ಲನು ಯಾವನು? ಯಾರನ್ನೂ ಕಾನೆನು. ಅಲ್ಲಿ ಕಾವಲಿಗೆ ಮಹಾವಿಷದ ನಾಗಗಳಾದ ಗುಳಿಕ, ವಾಸುಕಿ, ತಕ್ಷಕರು, ಶಂಖ, ಪದ್ಮ, ಕರ್ಕೋಟಕಾದಿಗಳ ಭೀಕರ ಅಧಿಕ ವಿಷದ ನಾಗಗಳಿಂದ ಕಾವಲು ಕಟ್ಟಿರುವುದು, ಎನ್ನಲು ಉಲೂಪಿಗೆ ಅವನು ಹೀಗೆಂದನು.
  • (ಪದ್ಯ-೪)

ಪದ್ಯ:-:೫:

[ಸಂಪಾದಿಸಿ]

ಈ ಮಹಾಹಿಗಳ ವಿಷಕಳಕುವೆನೆ ಯೆನ್ನ ಮಾ |
ತಾಮಹಂ ಹರಿಗೆ ಹಾಸಿಗೆಯಾದವಂ ಮೇಲೆ |
ಭೂಮಿಯಂ ಪೊತ್ತವಂ ಶೇಷರಾಜಂ ಗಾಸಿಯಹನೆಂಬ ಭಯಮಲ್ಲದೆ ||
ಆ ಮಣಿಯನೀಯದೊಡೆ ಸಪ್ತ ಪಾತಾಳಮಂ |
ಸಾಮರ್ಥ್ಯದಿಂದ ಭೇದಿಸಿಕೊಂಡು ಬಂದು ಸು |
ತ್ರಾಮಸುತನಂ ಬರ್ದುಕಿಸದೆ ಮಾಣ್ದಪೆನೆ ತಾಯೆ ಹೇಳೆಂದೊಡಿಂತೆಂದಳು ||5||

ಪದವಿಭಾಗ-ಅರ್ಥ:
ಈ ಮಹಾ ಅಹಿಗಳ ವಿಷಕೆ ಅಳಕುವೆನೆ ಯೆನ್ನ ಮಾತಾಮಹಂ ಹರಿಗೆ ಹಾಸಿಗೆಯಾದವಂ ಮೇಲೆ ಭೂಮಿಯಂ ಪೊತ್ತವಂ ಶೇಷರಾಜಂ ಗಾಸಿಯಹನು ಎಂಬ ಭಯಮಲ್ಲದೆ=[ಈ ಮಹಾ ನಾಗಗಳ ವಿಷಕ್ಕೆ ಅಂಜುವೆನೆ? ನನ್ನ ಮಾತಾಮಹಂ/ ತಾಯಿಯ(ಉಲೂಪಿಯ) ತಂದೆಯಾದ ಶೇಷನು ವಿಷ್ಣುವಿಗೆ ಹಾಸಿಗೆಯಾಗಿರುವನು; ಮತ್ತೆ ತಲೆಯ ಮೇಲೆ ಭೂಮಿಯನ್ನು ಹೊತ್ತಿರುವ ಶೇಷರಾಜನು ಗಾಯಹೊಂದುವನು, ಎಂಬ ಭಯವಲ್ಲದೆ, ನನಗೆ ತೊಂದರೆಯಾಗುವುದೆಂದು ಭಯಪಡುವುದಿಲ್ಲ.];;ಆ ಮಣಿಯನು ಈಯದೊಡೆ ಸಪ್ತ ಪಾತಾಳಮಂ ಸಾಮಥ್ರ್ಯದಿಂದ ಭೇದಿಸಿಕೊಂಡು ಬಂದು ಸುತ್ರಾಮಸುತನಂ ಬರ್ದುಕಿಸದೆ ಮಾಣ್ದಪೆನೆ ತಾಯೆ ಹೇಳೆಂದೊಡೆ ಇಂತೆಂದಳು=[ಆ ಮಣಿಯನ್ನು ಕೊಡದಿದ್ದರೆ ಸಪ್ತ ಪಾತಾಳಗಳನ್ನೂ ಸಾಮರ್ಥ್ಯದಿಂದ ಭೇದಿಸಿಕೊಂಡು ಬಂದು ಅರ್ಜುನನ್ನು ಬದುಕಿಸದೆ ಬಿಡುವೆನೆ! ತಾಯೆ ಹೇಳು ಎಂದಾಗ ಉಲೂಪಿ ಹೀಗೆ ಹೇಳಿದಳು].
  • ತಾತ್ಪರ್ಯ:ಈ ಮಹಾ ನಾಗಗಳ ವಿಷಕ್ಕೆ ನಾನು ಅಂಜುವೆನೆ? ನನ್ನ ತಾಯಿಯ (ನಿನ್ನ) ತಂದೆಯಾದ ಶೇಷನು ವಿಷ್ಣುವಿಗೆ ಹಾಸಿಗೆಯಾಗಿರುವನು; ಮತ್ತೆ ತಲೆಯ ಮೇಲೆ ಭೂಮಿಯನ್ನು ಹೊತ್ತಿರುವ ಶೇಷರಾಜನು ಗಾಯಹೊಂದುವನು, ಎಂಬ ಭಯವಲ್ಲದೆ, ನನಗೆ ತೊಂದರೆಯಾಗುವುದೆಂದು ಭಯಪಡುವುದಿಲ್ಲ. ಆ ಮಣಿಯನ್ನು ಕೊಡದಿದ್ದರೆ ಸಪ್ತ ಪಾತಾಳಗಳನ್ನೂ ಸಾಮರ್ಥ್ಯದಿಂದ ಭೇದಿಸಿಕೊಂಡು ಬಂದು ಅರ್ಜುನನ್ನು ಬದುಕಿಸದೆ ಬಿಡುವೆನೆ! ತಾಯೆ ಹೇಳು, ಎಂದಾಗ ಉಲೂಪಿ ಹೀಗೆ ಹೇಳಿದಳು.
  • (ಪದ್ಯ-೫)

ಪದ್ಯ:-:೬:

[ಸಂಪಾದಿಸಿ]

ಒಂದು ಮೊದಲೊಂಬತ್ತು ನೂರು ಕಡೆಯಾದ ಪೆಡೆ |
ಯಿಂದೆಸೆವ ನಾಗಂಗಳತಿ ವಿಷೋಲ್ಬಣದುರಗ |
ವೃಂದ ವೋಲೈಸುವುದು ಸಾಸಿರ ಮೊಗದ ಶೇಷರಾಝನಂ ಪಾತಾಳದ |
ಮಂದಿರದೊಳೆಮ್ಮೊಮ್ಮೆ ಗರುಡನಲ್ಲಿಗೆ ಬಂದು |
ಕೊಂದಹಿಗಳಂ ಬರ್ದುಕಿಪೊಡೆ ತೋರಿಸುವವರಲ್ಲ |
ದೆಂದುಂ ತೆಗೆಯರಾ ಮಣಿಯನೆಂದುಲೂಪಿ ನುಡಿಯಲ್ಕಾತ ನಿಂತೆಂದನು ||6||

ಪದವಿಭಾಗ-ಅರ್ಥ:
(ಎಣಿಸಲಾದಷ್ಟು) ಒಂದು ಮೊದಲು ಒಂಬತ್ತು ನೂರು ಕಡೆಯಾದ ಪೆಡೆಯಿಂದ ಎಸೆವ ನಾಗಂಗಳು ಅತಿ ವಿಷೋಲ್ಬಣದ ಉರಗ ವೃಂದ ವೋಲೈಸುವುದು ಸಾಸಿರ ಮೊಗದ ಶೇಷರಾಝನಂ,=[ಒಂದರಿಂದ ಒಂಬತ್ತು ನೂರು ಕಡೆ/ಕೊನೆಯಾದಷ್ಟು (ಎಣಿಸಲಾದಷ್ಟು) ಸಂಖ್ಯೆಯ ಸಮೂಹದಿಂದ ಪ್ರಕಾಸಿಸುವ ನಾಗಗಳು ಅತಿ ವಿಷತೀವ್ರತೆಯ ಉರಗ ವೃಂದ/ಸರ್ಪಗಳ ಗುಂಪು ಸಾವಿರ ಮುಖದ ಶೇಷನ್ನು ವೋಲೈಸುವುದು.];; ಪಾತಾಳದ ಮಂದಿರದೊಳು ಒಮ್ಮೊಮ್ಮೆ ಗರುಡನಲ್ಲಿಗೆ ಬಂದು ಕೊಂದ ಅಹಿಗಳಂ ಬರ್ದುಕಿಪೊಡೆ ತೋರಿಸುವವರು ಅಲ್ಲದೆ ಎಂದುಂ ತೆಗೆಯರ ಆ ಮಣಿಯನೆಂದು ಉಲೂಪಿ ನುಡಿಯಲ್ಕೆ ಆತ ನಿಂತೆಂದನು=[ಪಾತಾಳ ಮಂದಿರದಲ್ಲಿ ಒಮ್ಮೊಮ್ಮೆ ಗರುಡನು ಅಲ್ಲಿಗೆ ಬಂದು ಕೊಂದ ಸರ್ಪಗಳನ್ನು ಬದುಕಿಸಲು ಆ ಮಣಿಯನ್ನು ತೋರಿಸುವವರು ಅದಲ್ಲದೆ ಎಂದೂ ಆ ಮಣಿಯನ್ನು ತೆಗೆಯುವುದಿಲ್ಲ, ಎಂದು ಉಲೂಪಿ ನುಡಿಯಲು, ಬಭ್ರವಾಹನನು ಹೀಗೆ ಹೇಳಿದನು].
  • ತಾತ್ಪರ್ಯ:ಒಂದರಿಂದ ಒಂಬತ್ತು ನೂರು ಕಡೆ/ಕೊನೆಯಾದಷ್ಟು (ಎಣಿಸಲಾದಷ್ಟು) ಸಂಖ್ಯೆಯ ಸಮೂಹದಿಂದ ಪ್ರಕಾಸಿಸುವ ನಾಗಗಳು ಅತಿ ವಿಷತೀವ್ರತೆಯ ಉರಗ ವೃಂದ/ಸರ್ಪಗಳ ಗುಂಪು ಸಾವಿರ ಮುಖದ ಶೇಷನ್ನು ವೋಲೈಸುವುದು. ಪಾತಾಳ ಮಂದಿರದಲ್ಲಿ ಒಮ್ಮೊಮ್ಮೆ ಗರುಡನು ಅಲ್ಲಿಗೆ ಬಂದು ಕೊಂದ ಸರ್ಪಗಳನ್ನು ಬದುಕಿಸಲು ಆ ಮಣಿಯನ್ನು ತೋರಿಸುವವರು ಅದಲ್ಲದೆ ಎಂದೂ ಆ ಮಣಿಯನ್ನು ತೆಗೆಯುವುದಿಲ್ಲ, ಎಂದು ಉಲೂಪಿ ನುಡಿಯಲು, ಬಭ್ರವಾಹನನು ಹೀಗೆ ಹೇಳಿದನು.
  • (ಪದ್ಯ-೬)

ಪದ್ಯ:-:೭:

[ಸಂಪಾದಿಸಿ]

ಲೇಸನಾಡಿದೆ ತಾಯೆ ಪಾತಾಳದಲ್ಲಿಹ ಮ |
ಹಾಸರ್ಪ ಸಂಕುಳವನೆಲ್ಲಮಂ ಕೊಂದಳಿದ |
ವಾಸವನ ಸುತನಂ ಮಡಿದ ವೀರವೃಷಕೇತುವಂ ಬಿದ್ದ ಸೈನಿಕವನು ||
ಆ ಸುಮಣಿಯಂ ಕೊಂಡು ಬಂದೆಬ್ಬಿಸಿದ ಬಳಿಕ |
ಮೀಸಲಾಗಿರ್ದ ಸಂಜೀವಕನೀವೆಂ ಗ |
ತಾಸುವಾಗಿರ್ದು ಫಣಿಗಳ್ಗೆಂದು ಪಾರ್ಥಜಂ ನುಡಿದೊಡವಳಿಂತೆಂದಳು ||7||

ಪದವಿಭಾಗ-ಅರ್ಥ:
ಲೇಸನಾಡಿದೆ ತಾಯೆ ಪಾತಾಳದಲ್ಲಿ ಇಹ ಮಹಾಸರ್ಪ ಸಂಕುಳವನು ಎಲ್ಲಮಂ ಕೊಂದು ಅಳಿದ ವಾಸವನ ಸುತನಂ ಮಡಿದ ವೀರವೃಷಕೇತುವಂ ಬಿದ್ದ ಸೈನಿಕವನು=[ಒಳ್ಳೆಯ ವಿಚಾರವನ್ನು ಹೇಳಿದ್ದೀಯೆ ತಾಯೆ! ಪಾತಾಳದಲ್ಲಿ ಇರುವ ಮಹಾಸರ್ಪ ಸಮೂಹ ಎಲ್ಲವನ್ನೂ ಕೊಂದು, ಮಡಿದ ಅರ್ಜುನನ್ನೂ, ವೀರವೃಷಕೇತುವನ್ನೂ ಬಿದ್ದ ಸೈನಿಕರನ್ನೂ,];; ಆ ಸುಮಣಿಯಂ ಕೊಂಡು ಬಂದು ಎಬ್ಬಿಸಿದ ಬಳಿಕ ಮೀಸಲಾಗಿರ್ದ ಸಂಜೀವಕನು ಈವೆಂ ಗತ ಅಸುವಾಗಿರ್ದು ಫಣಿಗಳ್ಗೆ ಎಂದು ಪಾರ್ಥಜಂ ನುಡಿದೊಡೆ ಅವಳು ಇಂತೆಂದಳು=[ಆ ಶ್ರೇಷ್ಠ ಮಣಿಯನ್ನು ತಗೆದುಕೊಂಡು ಬಂದು ಜೀವಸಹಿತ ಎಬ್ಬಿಸಿದ ಬಳಿಕ, ನಾಗಗಳಿಗೆ ಮೀಸಲಾಗಿರುವ ನನ್ನಿಂದ ನಾಗ ಯುದ್ಧದಲ್ಲಿ ಸತ್ತಿರುವ ಸರ್ಪಗಳಿಗೆ ಜೀವಕೊಡಲು, ಸಂಜೀವಕನ್ನು ಹಿಂತಿರುಗಿ ಕೊಡುವೆನು. ಎಂದು ಪಾರ್ಥಜನು ಹೇಳಿದೊಡನೆ ಅವಳು ಹೀಗೆಂದಳು ].
  • ತಾತ್ಪರ್ಯ:ಒಳ್ಳೆಯ ವಿಚಾರವನ್ನು ಹೇಳಿದ್ದೀಯೆ ತಾಯೆ! ಪಾತಾಳದಲ್ಲಿ ಇರುವ ಮಹಾಸರ್ಪ ಸಮೂಹ ಎಲ್ಲವನ್ನೂ ಕೊಂದು, ಮಡಿದ ಅರ್ಜುನನ್ನೂ, ವೀರವೃಷಕೇತುವನ್ನೂ ಬಿದ್ದ ಸೈನಿಕರನ್ನೂ, ಆ ಶ್ರೇಷ್ಠ ಮಣಿಯನ್ನು ತಗೆದುಕೊಂಡು ಬಂದು ಜೀವಸಹಿತ ಎಬ್ಬಿಸಿದ ಬಳಿಕ, ನಾಗಗಳಿಗೆ ಮೀಸಲಾಗಿರುವ ನನ್ನಿಂದ ನಾಗ ಯುದ್ಧದಲ್ಲಿ ಸತ್ತಿರುವ ಸರ್ಪಗಳಿಗೆ ಜೀವಕೊಡಲು, ಸಂಜೀವಕನ್ನು ಹಿಂತಿರುಗಿ ಕೊಡುವೆನು. ಎಂದು ಪಾರ್ಥಜನು ಹೇಳಿದೊಡನೆ ಅವಳು ಹೀಗೆಂದಳು.
  • (ಪದ್ಯ-೭)

ಪದ್ಯ:-:೮:

[ಸಂಪಾದಿಸಿ]

ತನಯ ಕೇಳನ್ಯರೊಳ್ ಕೊಳ್ವ ಕಜ್ಜದ ಮಾಳ್ಕೆ |
ವಿನಯದಿಂದೆಸಗಿದೊಡೆ ಸಲೆ ಸುಗುಣಮಾದಪುದು |
ಮೊನೆಯ ಮೇಲಪ್ಪುದಾಯಾಸಮಂತದರಿಂದೆ ನೀನತಿಕ್ರಮಿಸಬೇಡ ||
ತನಗುಂಟು ಕೆಳೆ ಪುಂಡರೀಕನೆಂಬಹಿಯೊರ್ವ |
ನನುಕೂಲನೆಮ್ಮ ತಂದೆಗೆ ಮಂತ್ರಿ ತಾನೀಗ |
ನೆನೆದೊಡಿಲ್ಲಿಗೆ ಬರ್ಪನಾತನಂ ಕಳುಹಿ ತರಿಸುವೆನಾ ಮಣಿಯನೆಂದಳು||8||

ಪದವಿಭಾಗ-ಅರ್ಥ:
ತನಯ ಕೇಳು ಅನ್ಯರೊಳ್ ಕೊಳ್ವ ಕಜ್ಜದ ಮಾಳ್ಕೆ ವಿನಯದಿಂದೆ ಎಸಗಿದೊಡೆ ಸಲೆ ಸುಗುಣಮಾದಪುದು.=[ಮಗನೇ ಕೇಳು, ಬೇರೆಯವರಿಂದ ಪಡೆಯುವ ಸಹಾಯದ ಕಾರ್ಯವನ್ನು ಮಾಳ್ಕೆ ವಿನಯದಿಂದ ಮಾಡಬೇಕು; ಹಾಗೆಮಾಡಿದರೆ ಬಹಳ ಶ್ರೇಷ್ಠವಾಗುವುದು.];; ಮೊನೆಯ ಮೇಲೆ ಅಪ್ಪುದು ಆಯಾಸಮು ಅಂತದರಿಂದೆ ನೀನು ಅತಿಕ್ರಮಿಸಬೇಡ=[ಬಾಣದ ಮೊನೆಯಿಂದ ಆಗುವ ಕಾರ್ಯದಲ್ಲಿ ಆಯಾಸ/ ಶ್ರಮವು ಆಗುವುದು, ಆದ್ದರಿಂದ ನೀನು ದುಡುಕಬೇಡ.];; ತನಗುಂಟು ಕೆಳೆ ಪುಂಡರೀಕನೆಂಬ ಅಹಿಯೊರ್ವನ ಅನುಕೂಲನು ಎಮ್ಮ ತಂದೆಗೆ ಮಂತ್ರಿ ತಾನೀಗ ನೆನೆದೊಡೆ ಅಲ್ಲಿಗೆ ಬರ್ಪನು ಆತನಂ ಕಳುಹಿ ತರಿಸುವೆನು ಆ ಮಣಿಯನು ಎಂದಳು=[ಉಲೂಪಿ ಹೇಳಿದಳು,ತನಗೆ ಪುಂಡರೀಕನೆಂಬ ನಾಗನೋಬ್ಬನಲ್ಲಿ ಗೆಳೆತನವಿದೆ; ಅವನು ನಮ್ಮ ತಂದೆಗೆ ಸಹಾಯಕನು ಮತ್ತು ಮಂತ್ರಿ, ತಾನು ಈಗ ಮನಸ್ಸಿನಲ್ಲಿ ನೆನೆದಾಗ ಅಲ್ಲಿಗೆ ಬರುವನು; ಆತನನ್ನು ಕಳುಹಿಸಿ ಆ ಮಣಿಯನ್ನು ತರಿಸುವೆನು, ಎಂದಳು].
  • ತಾತ್ಪರ್ಯ:ಮಗನೇ ಕೇಳು, ಬೇರೆಯವರಿಂದ ಪಡೆಯುವ ಸಹಾಯದ ಕಾರ್ಯವನ್ನು ಮಾಳ್ಕೆ ವಿನಯದಿಂದ ಮಾಡಬೇಕು; ಹಾಗೆಮಾಡಿದರೆ ಬಹಳ ಶ್ರೇಷ್ಠವಾಗುವುದು. ಬಾಣದ ಮೊನೆಯಿಂದ ಆಗುವ ಕಾರ್ಯದಲ್ಲಿ ಶ್ರಮವು ಆಗುವುದು, ಆದ್ದರಿಂದ ನೀನು ದುಡುಕಬೇಡ. ಉಲೂಪಿ ಹೇಳಿದಳು,ತನಗೆ ಪುಂಡರೀಕನೆಂಬ ನಾಗನೋಬ್ಬನಲ್ಲಿ ಗೆಳೆತನವಿದೆ; ಅವನು ನಮ್ಮ ತಂದೆಗೆ ಸಹಾಯಕನು ಮತ್ತು ಮಂತ್ರಿ, ತಾನು ಈಗ ಮನಸ್ಸಿನಲ್ಲಿ ನೆನೆದಾಗ ಅಲ್ಲಿಗೆ ಬರುವನು; ಆತನನ್ನು ಕಳುಹಿಸಿ ಆ ಮಣಿಯನ್ನು ತರಿಸುವೆನು, ಎಂದಳು.
  • (ಪದ್ಯ-೮)

ಪದ್ಯ:-:೯:

[ಸಂಪಾದಿಸಿ]

ಇಂತೆಂದುಲೂಪಿ ಬಳಿಕಾ ಪುಂಡರೀಕನಂ |
ಚಿಂತಿಸುವಿನಂ ಬಂದಿದೇಕೆ ಬರಿಸಿದೆಯೆನಲ |
ನಂತನಲ್ಲಿಗೆ ಪೋಗಿ ನಿನ್ನ ತನುಜೆಯ ಕರ್ಣತಾಟಂಕದುಳಿವಿಗಳಿದ ||
ಕುಂತೀಕುಮಾರಕಂ ತನ್ನ ರಮಣಂ ಬರ್ದುಕು |
ವಂತಮೃತ ಸಂಜೀವಕದಮಣಿಯನೀವುದೆಂ |
ದಂತರಿಸದಖಿಳ ವೃತ್ತಾಂತಮಂ ಪೇಳ್ದಡಂ ಕೊಂಡು ಬಾ ನಡೆಯೆಂದಳು ||9||

ಪದವಿಭಾಗ-ಅರ್ಥ:
ಇಂತೆಂದು ಉಲೂಪಿ ಬಳಿಕ ಆ ಪುಂಡರೀಕನಂ ಚಿಂತಿಸುವಿನಂ ಬಂದ ಇದೇಕೆ ಬರಿಸಿದೆಯೆನಲ್=[ಹೀಗೆ ಮಗನಿಗೆ ಹೇಳಿದ ಉಲೂಪಿ, ಬಳಿಕ ಆ ಪುಂಡರೀಕನನ್ನು ನೆನೆದಾಗ, ಅವನು ಬಂದು ಇದೇಕೆ ನನ್ನನ್ನು ಕರೆಸಿದೆ ಎನ್ನಲು,];; ಅನಂತನಲ್ಲಿಗೆ ಪೋಗಿ ನಿನ್ನ ತನುಜೆಯ ಕರ್ಣತಾಟಂಕದ ಉಳಿವಿಗೆ ಅಳಿದ ಕುಂತೀಕುಮಾರಕಂ ತನ್ನ ರಮಣಂ ಬರ್ದುಕುವಂತ ಅಮೃತ ಸಂಜೀವಕದ ಮಣಿಯನು ಈವುದೆಂದು ಅಂತರಿಸದೆ ಅಖಿಳ ವೃತ್ತಾಂತಮಂ ಪೇಳ್ದಡಂ ಕೊಂಡು ಬಾ ನಡೆಯೆಂದಳು=[ಅನಂತನ ಬಳಿಗೆ ಹೋಗಿ ನಿನ್ನ ಮಗಳ ಕಿವಿಯೋಲೆಯನ್ನು ಉಳಿಸಲು, ತನ್ನ ಪತಿಯಾದ, ಮಡಿದ ಕುಂತೀಕುಮಾರ ಅರ್ಜುನನ್ನು ಬದುಕಿಸಲು ಅಮೃತ ಸಂಜೀವಕದ ಮಣಿಯನ್ನು ಕೊಡುವುದೆಂದು, ಯಾವ ವಿಚಾರವನ್ನೂ ಬಿಡದೆ ಅಖಿಲ ವೃತ್ತಾಂತವನ್ನು ಹೇಳಿ,ಅದನ್ನು ತೆಗೆದುಕೊಂಡು ಬಾ ಹೊಗು, ಎಂದಳು.]
  • ತಾತ್ಪರ್ಯ:ಹೀಗೆ ಮಗನಿಗೆ ಹೇಳಿದ ಉಲೂಪಿ, ಬಳಿಕ ಆ ಪುಂಡರೀಕನನ್ನು ನೆನೆದಾಗ, ಅವನು ಬಂದು ಇದೇಕೆ ನನ್ನನ್ನು ಕರೆಸಿದೆ ಎನ್ನಲು,ಅನಂತನ ಬಳಿಗೆ ಹೋಗಿ ನಿನ್ನ ಮಗಳ ಕಿವಿಯೋಲೆಯನ್ನು ಉಳಿಸಲು, ತನ್ನ ಪತಿಯಾದ, ಮಡಿದ ಕುಂತೀಕುಮಾರ ಅರ್ಜುನನ್ನು ಬದುಕಿಸಲು ಅಮೃತ ಸಂಜೀವಕದ ಮಣಿಯನ್ನು ಕೊಡುವುದೆಂದು, ಯಾವ ವಿಚಾರವನ್ನೂ ಬಿಡದೆ ಅಖಿಲ ವೃತ್ತಾಂತವನ್ನು ಹೇಳಿ,ಅದನ್ನು ತೆಗೆದುಕೊಂಡು ಬಾ ಹೊಗು, ಎಂದಳು.
  • (ಪದ್ಯ-೯)XII

ಪದ್ಯ:-:೧೦:

[ಸಂಪಾದಿಸಿ]

ಆ ಪುಂಡರೀಕ ಫಣಿ ಬಳಿಕ ದುಃಖಿತೆಯಾದ |
ಲೂಪಿಯಂ ಸೈತಿಟ್ಟು ಸಂಜೀವಕದ ಮಣಿಗೆ |
ಪೋಪೆನಾ ನಹಿಪತಿಯ ಸಮಯಮಂ ಕಾಣ್ಬುದರಿದಲ್ಲಿ ತಳುವಾಗದಿರದು ||
ಈ ಪಾರ್ಥನಂಗ ಕಳಿವಾಗದಿರದನ್ನೆಗಂ |
ರೂಪು ಕೆಡದಂತೆ ಕಚ್ಚುವೆನೀಗ ಮಧ್ವಿಷಂ |
ವ್ಯಾಪಿಸಲೊಡಲ್ ಕಳಲದೆನೆ ಬಭ್ರುವಾಹನಂ ಕೇಳ್ದು ಮತ್ತಿಂತೆಂದನು ||10|||

ಪದವಿಭಾಗ-ಅರ್ಥ:
ಆ ಪುಂಡರೀಕ ಫಣಿ ಬಳಿಕ ದುಃಖಿತೆಯಾದ ಲೂಪಿಯಂ ಸೈತಿಟ್ಟು ಸಂಜೀವಕದ ಮಣಿಗೆ ಪೋಪೆ ನಾನು, ಅಹಿಪತಿಯ ಸಮಯಮಂ ಕಾಣ್ಬುದು ಅರಿದು ಅಲ್ಲಿ ತಳುವಾಗದೆ ಇರದು=[ಆ ಪುಂಡರೀಕನೆಂಬ ಸರ್ಪನು ಬಳಿಕ ದುಃಖಿತೆಯಾಗಿರುವ ಲೂಪಿಯನ್ನು ಸಂತೈಸಿ, ಸಂಜೀವಕದ ಮಣಿ ತರಲು ನಾನು ಹೋಗುವೆನು; ನಾಗರಾಜನ ಸಮಯ ಅವಕಾಶ ಕಂಡು ತಿಳಿದು,ಅಲ್ಲಿ ತಡವಾಗುವುದು; ];; ಈ ಪಾರ್ಥನ ಅಂಗಕೆ ಅಳಿವಾಗದೆ ಇರದು ಅನ್ನೆಗಂ ರೂಪು ಕೆಡದಂತೆ ಕಚ್ಚುವೆನು ಈಗ ಮಧ್ವಿಷಂ ವ್ಯಾಪಿಸಲು ಒಡಲ್ ಕಳಲದೆನೆ ಬಭ್ರುವಾಹನಂ ಕೇಳ್ದು ಮತ್ತೆ ಇಂತೆಂದನು=[ಈ ಪಾರ್ಥನ ದೇಹವು ನಾಶವಾಗದೆ ಇರದು; ಅದುವರೆಗೆ ರೂಪು ಕೆಡದಂತೆ ಕಚ್ಚುವೆನು; ಈಗ ನನ್ನ ವಿಷವು ವ್ಯಾಪಿಸಲು ದೇಹವು ಕೆಡುವುದಿಲ್ಲ, ಎನ್ನಲು, ಬಭ್ರುವಾಹನನು ಕೇಳಿ ಮತ್ತೆ ಹೀಗೆ ಹೇಳಿದನು].
  • ತಾತ್ಪರ್ಯ:ಆ ಪುಂಡರೀಕನೆಂಬ ಸರ್ಪನು ಬಳಿಕ ದುಃಖಿತೆಯಾಗಿರುವ ಲೂಪಿಯನ್ನು ಸಂತೈಸಿ, ಸಂಜೀವಕದ ಮಣಿ ತರಲು ನಾನು ಹೋಗುವೆನು; ನಾಗರಾಜನ ಸಮಯ ಅವಕಾಶ ಕಂಡು ತಿಳಿದು,ಅಲ್ಲಿ ತಡವಾಗುವುದು; ಈ ಪಾರ್ಥನ ದೇಹವು ನಾಶವಾಗದೆ ಇರದು; ಅದುವರೆಗೆ ರೂಪು ಕೆಡದಂತೆ ಕಚ್ಚುವೆನು; ಈಗ ನನ್ನ ವಿಷವು ವ್ಯಾಪಿಸಲು ದೇಹವು ಕೆಡುವುದಿಲ್ಲ, ಎನ್ನಲು, ಬಭ್ರುವಾಹನನು ಕೇಳಿ ಮತ್ತೆ ಹೀಗೆ ಹೇಳಿದನು.
  • (ಪದ್ಯ-೧೦)

ಪದ್ಯ:-:೧೧:

[ಸಂಪಾದಿಸಿ]

ಎಲೆ ಪುಂಡರೀಕ ಕೇಳೀ ಕರ್ಣಸಂಭವಂ |
ಕಲಿ ಚೆಲ್ವನತಿಬಲಂ ಶುಚಿ ಸುಗಣಿ ಕೋವಿದಂ |
ಕುಲವಿವರ್ಧನನೀತನಂಗಮಂ ಕೆಡದಂತೆ ಮೊದಲೆ ನೀ ಕಚ್ಚಿ ಬಳಿಕ ||
ಫಲುಗುಣನ ದೇಹಮಂ ಕಚ್ಕಿನಲೊಡರ್ಚಿ ಫಣಿ |
ತಿಲಕನವರಿರ್ವರ ಶರೀರಂಗಳಂ ಕಚ್ಚಿ |
ಸಲೆ ಸಂತವಿಟ್ಟು ನಂಬುಗೆಗೊಟ್ಟು ಬೀಳ್ಕೊಂಡು ಪಾತಾಳಕೈತಂದನು ||11||

ಪದವಿಭಾಗ-ಅರ್ಥ:
ಎಲೆ ಪುಂಡರೀಕ ಕೇಳು ಈ ಕರ್ಣಸಂಭವಂ ಕಲಿ ಚೆಲ್ವನು ಅತಿಬಲಂ ಶುಚಿ ಸುಗಣಿ ಕೋವಿದಂ ಕುಲವಿವರ್ಧನು,; ಈತನ ಅಂಗಮಂ ಕೆಡದಂತೆ ಮೊದಲೆ ನೀ ಕಚ್ಚಿ ಬಳಿಕ=[ಎಲೆ ಪುಂಡರೀಕ ಕೇಳು ಈ ಕರ್ಣಸಂಭವನಾದ ವೃಷಕೇತು ಶೂರ, ಚೆಲುವನು, ಅತಿಬಲಶಾಲಿ, ಶುಚಿ ಸುಗಣಿ ಧರ್ಮಜ್ನಾನಿ, ಕುಲವರ್ಧಕನು ಈತನ ದೇಹವನ್ನು ಕೆಡದಂತೆ ಮೊದಲೆ ನೀನು ಕಚ್ಚಿ ಬಳಿಕ];; ಫಲುಗುಣನ ದೇಹಮಂ ಕಚ್ಚು ಎನಲ್ ಒಡರ್ಚಿ(ಒಪ್ಪಿ,ಪ್ರಯತ್ನಿಸಿ) ಫಣಿ ತಿಲಕನವರಿರ್ವರ ಶರೀರಂಗಳಂ ಕಚ್ಚಿ ಸಲೆ ಸಂತವಿಟ್ಟು ನಂಬುಗೆಗೊಟ್ಟು ಬೀಳ್ಕೊಂಡು ಪಾತಾಳಕೆ ಐತಂದನು=[ಫಲ್ಗುಣನ ದೇಹವನ್ನು ಕಚ್ಚು ಎನ್ನಲು, ಒಪ್ಪಿ, ಸರ್ಪತಿಲಕನು ಅವರ ಇಬ್ಬರ ಶರೀರಗಳನ್ನೂ ಕಚ್ಚಿ, ಉಲೂಪಿಯನ್ನು ಬಹಳ ಸಂತೈಸಿ; ಭರವಸೆಕೊಟ್ಟು, ಬೀಳ್ಕೊಂಡು ಪಾತಾಳಕ್ಕೆ ಬಂದನು].
  • ತಾತ್ಪರ್ಯ:ಬಭ್ರುವಾಹನನು, ಎಲೆ ಪುಂಡರೀಕ ಕೇಳು ಈ ಕರ್ಣಸಂಭವನಾದ ವೃಷಕೇತು ಶೂರ, ಚೆಲುವನು, ಅತಿಬಲಶಾಲಿ, ಶುಚಿ ಸುಗಣಿ ಧರ್ಮಜ್ನಾನಿ, ಕುಲವರ್ಧಕನು ಈತನ ದೇಹವನ್ನು ಕೆಡದಂತೆ ಮೊದಲೆ ನೀನು ಕಚ್ಚಿ ಬಳಿಕ ಫಲ್ಗುಣನ ದೇಹವನ್ನು ಕಚ್ಚು ಎನ್ನಲು, ಒಪ್ಪಿ, ಸರ್ಪತಿಲಕನು ಅವರ ಇಬ್ಬರ ಶರೀರಗಳನ್ನೂ ಕಚ್ಚಿ, ಉಲೂಪಿಯನ್ನು ಬಹಳ ಸಂತೈಸಿ; ಭರವಸೆಕೊಟ್ಟು, ಬೀಳ್ಕೊಂಡು ಪಾತಾಳಕ್ಕೆ ಬಂದನು.
  • (ಪದ್ಯ-೧೧)

ಪದ್ಯ:-:೧೨:

[ಸಂಪಾದಿಸಿ]

ಅತಳದಾಶ್ಚರ್ಯಮಂ ವಿತಳದ ವಿಚಿತ್ರಮಂ |
ಸುತಳದ ಸುರುಚಿಯಂ ಮಹಾತಳದ ಮಣಿಮಯೋ |
ನ್ನತಿಯಂ ತಳಾತಳದ ತಾಣದತಿಶಯಮಂ ರಸಾತಳದ ರಂಜಿತವನು ||
ಪ್ರತಿದಿನದೊಳರಿದರಿಯುತಾ ಪುಂಡರೀಕಫಣಿ |
ಪತಿ ನೋಡಿ ನೋಡಿ ವಿಸ್ಮಿತನಾಗುತೈದಿದಂ |
ವಿತತ ರತ್ನ ಪ್ರಭಾ ಶೋಭಿತದ ಪಾತಾಳಲೋಕದಹಿರಾಜನೆಡೆಗೆ ||12||

ಪದವಿಭಾಗ-ಅರ್ಥ:
ಅತಳದ ಆಶ್ಚರ್ಯಮಂ ವಿತಳದ ವಿಚಿತ್ರಮಂ ಸುತಳದ ಸುರುಚಿಯಂ ಮಹಾತಳದ ಮಣಿಮಯೋನ್ನತಿಯಂ ತಳಾತಳದ ತಾಣದ ಅತಿಶಯಮಂ ರಸಾತಳದ ರಂಜಿತವನು=[ಅತಳದ ಆಶ್ಚರ್ಯವನ್ನೂ, ವಿತಳದ ವಿಚಿತ್ರವನ್ನೂ, ಸುತಳದ ಸುರುಚಿಯನ್ನೂ, ಮಹಾತಳದ ಮಣಿಮಯದ ಉನ್ನತಿಯನ್ನೂ ತಳಾತಳದ ಪ್ರದೇಶದ ಅತಿಶಯವನ್ನೂ, ರಸಾತಳದ ರಂಜಿತ/ಸೌಂದರ್ಯವನೂ,];; ಪ್ರತಿದಿನದೊಳು ಅರಿದು ಅರಿಯುತ ಆ ಪುಂಡರೀಕಫಣಿಪತಿ ನೋಡಿ ನೋಡಿ ವಿಸ್ಮಿತನಾಗುತ ಐದಿದಂ ವಿತತ ರತ್ನ ಪ್ರಭಾ ಶೋಭಿತದ ಪಾತಾಳಲೋಕದ ಅಹಿರಾಜನ ಎಡೆಗೆ=[ಪ್ರತಿದಿನವೂ ಅರಿದು ಅರಿಯುತ್ತಾ, ಆ ಪುಂಡರೀಕಫಣಿಪತಿ ನೋಡಿ ನೋಡಿ ಆಸ್ಚರ್ಯಪಡುತ್ತಾ ಐದಿದಂ ವಿಶಾಲವಾದ ರತ್ನ ಪ್ರಭಾ ಶೋಭಿತವಾದ ಪಾತಾಳಲೋಕದ ಸರ್ಪರಾಜನ ಬಳಿಗೆ ಬಂದನು.]
  • ತಾತ್ಪರ್ಯ:ಅತಳದ ಆಶ್ಚರ್ಯವನ್ನೂ, ವಿತಳದ ವಿಚಿತ್ರವನ್ನೂ, ಸುತಳದ ಸುರುಚಿಯನ್ನೂ, ಮಹಾತಳದ ಮಣಿಮಯದ ಉನ್ನತಿಯನ್ನೂ ತಳಾತಳದ ಪ್ರದೇಶದ ಅತಿಶಯವನ್ನೂ, ರಸಾತಳದ ರಂಜಿತ/ಸೌಂದರ್ಯವನ್ನೂ, ಪ್ರತಿದಿನವೂ ಅರಿದು ಅರಿಯುತ್ತಾ, ಆ ಪುಂಡರೀಕಫಣಿಪತಿ ನೋಡಿ ನೋಡಿ ಆಸ್ಚರ್ಯಪಡುತ್ತಾ ವಿಶಾಲವಾದ ರತ್ನ ಪ್ರಭಾ ಶೋಭಿತವಾದ ಪಾತಾಳಲೋಕದ ಸರ್ಪರಾಜನ ಬಳಿಗೆ ಬಂದನು.
  • (ಪದ್ಯ-೧೨)

ಪದ್ಯ:-:೧೩:

[ಸಂಪಾದಿಸಿ]

ಫಲಿತ ಕಾಂಚನ ವೃಕ್ಷಲತೆಗಳ ಬನಂಗಳಿಂ |
ಜ್ವಲಿತ ನವರತ್ನ ಸೌಧಂಗಳ ಪುರಂಗಳಿಂ |
ಕಲಿತ ಪೀಯೂಷ ದೀರ್ಘಿಗಳಿಂ ಕನಕಾರವಿಂದದ ಕೊಳಂಗಳಿಂದೆ ||
ಲಲಿತ ಲಾವಣ್ಯದುರಗಾಂಗನೆಯರಿಂ ಸಮಾ |
ಕುಲಿತಮಾಗಿಹ ಭೋಗವತಿಯ ನದಿಯಿಂದೆ ನಿ |
ಶ್ಚಲಿತ ಸುಖನಿಲಯಮೆನಿಸಿರ್ದ ಪಾತಾಳಕ್ಕೆ ಪೌಂಡರೀಕಂ ಬಂದನು ||13||

ಪದವಿಭಾಗ-ಅರ್ಥ:
ಫಲಿತ ಕಾಂಚನ ವೃಕ್ಷಲತೆಗಳ ಬನಂಗಳಿಂ ಜ್ವಲಿತ ನವರತ್ನ ಸೌಧಂಗಳ ಪುರಂಗಳಿಂ ಕಲಿತ (ಕೂಡಿದ) ಪೀಯೂಷ (ಹಾಲು,ಅಮೃತ) ದೀರ್ಘಿಗಳಿಂ ಕನಕ ಅರವಿಂದದ ಕೊಳಂಗಳಿಂದೆ=[ಫಲಗಳನ್ನು ಹೊಂದಿದ ಚಿನ್ನದ ಮರಬಳ್ಳಿಗಳಿಂದ,, ವನಗಳಿಂದ, ಹೊಳೆಯುವ ನವರತ್ನ ಸೌಧಗಳ ಪುರಗಳಿಂದ,ಹಾಲಿನಿಂದ ಕೂಡಿದ ಹೊಂಡಗಳಿಂದ, ಚಿನ್ನದ ಕಮಲದ ಕೊಳಗಳಿಂದ, ];; ಲಲಿತ ಲಾವಣ್ಯದ ಉರಗಾಂಗನೆಯರಿಂ ಸಮಾಕುಲಿತಮಾಗಿಹ (ಹೊಂದಿದ) ಭೋಗವತಿಯ ನದಿಯಿಂದೆ ನಿಶ್ಚಲಿತ (ಸದಾ ಇರುವ) ಸುಖನಿಲಯಂ ಎನಿಸಿರ್ದ ಪಾತಾಳಕ್ಕೆ ಪೌಂಡರೀಕಂ ಬಂದನು=[ಲಲಿತ ಲಾವಣ್ಯದ ನಾಗಕನ್ನಕೆಯರಿಂದ, ಭೋಗವತಿಯೆಂಬ ನದಿಯಿಂದ ಕೂಡಿದ, ಸದಾ ಇರುವ ಸುಖನಿಲಯ ಎನಿಸಿರುವ ಪಾತಾಳಕ್ಕೆ ಪೌಂಡರೀಕನು ಬಂದನು];
  • ತಾತ್ಪರ್ಯ:(ಪಾತಾಳ ಲೋಕದಲ್ಲಿ) ಫಲಗಳನ್ನು ಹೊಂದಿದ ಚಿನ್ನದ ಮರಬಳ್ಳಿಗಳಿಂದ,, ವನಗಳಿಂದ, ಹೊಳೆಯುವ ನವರತ್ನ ಸೌಧಗಳ ಪುರಗಳಿಂದ,ಹಾಲಿನಿಂದ ಕೂಡಿದ ಹೊಂಡಗಳಿಂದ, ಚಿನ್ನದ ಕಮಲದ ಕೊಳಗಳಿಂದ, ];; ಲಲಿತ ಲಾವಣ್ಯದ ಉರಗಾಂಗನೆಯರಿಂ ಸಮಾಕುಲಿತಮಾಗಿಹ (ಹೊಂದಿದ) ಭೋಗವತಿಯ ನದಿಯಿಂದೆ ನಿಶ್ಚಲಿತ (ಸದಾ ಇರುವ) ಸುಖನಿಲಯಂ ಎನಿಸಿರ್ದ ಪಾತಾಳಕ್ಕೆ ಪೌಂಡರೀಕಂ ಬಂದನು=[ಲಲಿತ ಲಾವಣ್ಯದ ನಾಗಕನ್ನಕೆಯರಿಂದ, ಭೋಗವತಿಯೆಂಬ ನದಿಯಿಂದ ಕೂಡಿದ, ಸದಾ ಇರುವ ಸುಖನಿಲಯ ಎನಿಸಿರುವ ಪಾತಾಳಕ್ಕೆ ಪೌಂಡರೀಕನು ಬಂದನು];
  • (ಪದ್ಯ-೧೩)

ಪದ್ಯ:-:೧೪:

[ಸಂಪಾದಿಸಿ]

ನವರತ್ನಮಯದ ಗೋಪುರದ ಕಾಂತಿಯ ದಿವ್ಯ |
ಭವನದಿಂ ನಾಗ ವಧುಗಳ ನೃತ್ತಗೀತದು |
ತ್ಸವದಿಂದ ಪುಣ್ಯ ಗಂಧೋತ್ಕರದ ಪದ್ಮವನ ಪುಷ್ಪವಾಟಿಕೆಗಳಿಂದೆ ||
ವಿವಿಧೋಪಚಾರ ಕೃತಪೂಜೆಗಳ ನಾನಾ ವಿ |
ಭವದಿಂದೆಸೆವ ಮಹಾ ಹಾಟಕೇಶ್ವರನೆಂಬ |
ಶೀವಲಿಂಗಮಿರೆ ಭೋಗವತಿಯ ತಟದೊಳ್ ಕಂಡು ಪುಂಡರೀಕಂ ಮಣಿದನು ||14||

ಪದವಿಭಾಗ-ಅರ್ಥ:
ನವರತ್ನಮಯದ ಗೋಪುರದ ಕಾಂತಿಯ ದಿವ್ಯ ಭವನದಿಂ ನಾಗ ವಧುಗಳ ನೃತ್ತಗೀತದು ತ್ಸವದಿಂದ ಪುಣ್ಯ ಗಂಧೋತ್ಕರದ (ಗಂಧ- ಪರಿಮಳ +ಉತ್ಕರ-ಹೆಚ್ಚಿನ)ಪದ್ಮವನ ಪುಷ್ಪವಾಟಿಕೆಗಳಿಂದೆ=[ನವರತ್ನಮಯದ ಗೋಪುರದ ಕಾಂತಿಯ ದಿವ್ಯವಾದ ಭವನದಿಂದ ಕೂಡಿದ, ನಾಗ ವಧುಗಳ ನೃತ್ತಗೀತದ ಉತ್ಸವದಿಂದ ತುಂಬಿದ, ಪುಣ್ಯಪ್ರದದ ಹೆಚ್ಚಿನ ಪರಿಮಳದ ಕಮಲವನದ ಪುಷ್ಪದ ತೋಟಗಳಿಂದ, ];; ವಿವಿಧೋಪಚಾರ ಕೃತಪೂಜೆಗಳ ನಾನಾ ವಿಭವದಿಂದ ಎಸೆವ ಮಹಾ ಹಾಟಕೇಶ್ವರನೆಂಬ ಶೀವಲಿಂಗ ಅಲ್ಲಿ ಇರಲು, ಭೋಗವತಿ ನದಿಯ ತಟದಲ್ಲಿ ಕಂಡು ಪುಂಡರೀಕಂ ಮಣಿದನು=[ವಿವಿಧ ಉಪಚಾರ ಪೂಜೆಗಳನ್ನು ಮಾಡಿದ ನಾನಾ ವೈಭವದಿಂದೆ ಶೋಭಿಸುವ ಮಹಾ ಹಾಟಕೇಶ್ವರನೆಂಬ ಶೀವಲಿಂಗವು ಭೋಗವತಿಯ ತಟದಲ್ಲಿ ಇರುವುದನ್ನು ಕಂಡು ಪುಂಡರೀಕನು ವಂದಿಸಿದನು].
  • ತಾತ್ಪರ್ಯ:ನವರತ್ನಮಯದ ಗೋಪುರದ ಕಾಂತಿಯ ದಿವ್ಯವಾದ ಭವನದಿಂದ ಕೂಡಿದ, ನಾಗ ವಧುಗಳ ನೃತ್ತಗೀತದ ಉತ್ಸವದಿಂದ ತುಂಬಿದ, ಪುಣ್ಯಪ್ರದದ ಹೆಚ್ಚಿನ ಪರಿಮಳದ ಕಮಲವನದ ಪುಷ್ಪದ ತೋಟಗಳಿಂದ, ವಿವಿಧ ಉಪಚಾರ ಪೂಜೆಗಳನ್ನು ಮಾಡಿದ ನಾನಾ ವೈಭವದಿಂದೆ ಶೋಭಿಸುವ ಮಹಾ ಹಾಟಕೇಶ್ವರನೆಂಬ ಶೀವಲಿಂಗವು ಭೋಗವತಿಯ ತಟದಲ್ಲಿ ಇರುವುದನ್ನು ಕಂಡು ಪುಂಡರೀಕನು ವಂದಿಸಿದನು].
  • (ಪದ್ಯ-೧೪)

ಪದ್ಯ:-:೧೫:

[ಸಂಪಾದಿಸಿ]

ದಿವ್ಯಭವನದೊಳನೇಕಾಸುರ ಸುರಾದಿ ನಿಖಿ |
ಳ ವ್ಯಾಳ ವೃತನಾಗಿ ವರ ಫಣಾಮಣಿ* ಸಹ |
ಸ್ರವ್ಯೂಹದರ್ಚಿಯಿಂದುರು ಕಾಯಕಾಂತಿಯಿಂ ದೇದಿಪ್ಯಮಾನನಾಗಿ ||
ಅವ್ಯಾಕುಲದೊಳಚ್ಯುತ ಧ್ಯಾನದಿಂದೆ ಕ |
ರ್ತವ್ಯದಿಮದವನಿಯಂ ತಾಳ್ದನರ್ಘ್ಯೋತ್ತಮ |
ದ್ರವ್ಯಕಧಿಪತಿಯಾಗಿ ರಂಜಿಸುವ ಶೇಷನೋಲಗಕುರುಗನೈತಂದನು ||15||

  • (ಘನಾಮಣಿ)
ಪದವಿಭಾಗ-ಅರ್ಥ:
ದಿವ್ಯಭವನದೊಳು ಅನೇಕ ಅಸುರ ಸುರಾದಿ ನಿಖಿಳ ವ್ಯಾಳ ವೃತನಾಗಿ ವರ ಫಣಾಮಣಿ ಸಹಸ್ರವ್ಯೂಹದ ಅರ್ಚಿಯಿಂದ ಉರು ಕಾಯಕಾಂತಿಯಿಂ ದೇದಿಪ್ಯಮಾನನಾಗಿ=[ಮಹಾಶೇಷನು, ದಿವ್ಯಭವನದಲ್ಲಿ ಅನೇಕ ಅಸುರ ಸುರಾದಿ/ರಾಕ್ಷಸರು ದೇವತೆಗಳು, ನಿಖಿಳ ಸರ್ಪಗಳಿಂದ ಸುತ್ತುವರಿದವನಾಗಿ ಶ್ರೇಷ್ಠ ಸಹಸ್ರಸಂಖ್ಯೆಗಳ ಹಣೆಯಮಣಿಹೊಂದಿ , ಬಹಳ ದೇಹಕಾಂತಿಯಿಂದ ದೇದಿಪ್ಯಮಾನನಾಗಿ]; ಅವ್ಯಾಕುಲದೊಳು(ಅ + ವ್ಯಾಕುಲ- ಚಿಂತೆ) ಅಚ್ಯುತ ಧ್ಯಾನದಿಂದೆ ಕರ್ತವ್ಯದಿಂ ಅದವನಿಯಂ ತಾಳ್ದ (ಹೊತ್ತಿರುವ) ಅನರ್ಘ್ಯೋತ್ತಮ (ಅನರ್ಘ್ಯ-ಅಪೂರ್ವ, ಬೆಲೆಕಟ್ಟಲಾಗದ + ದ್ರವ್ಯ -ಸಂಪತ್ತು) ದ್ರವ್ಯಕೆ ಅಧಿಪತಿಯಾಗಿ ರಂಜಿಸುವ ಶೇಷನೋಲಗಕೆ ಉರುಗನು ಐತಂದನು=[ನಿಶ್ಚಿಂತೆಯಿಂದ ಅಚ್ಯುತ ಧ್ಯಾನದಿಂದಿದ್ದೂ ಕರ್ತವ್ಯದ ಕಾರಣ ಭೂಮಿಯನ್ನು ಹೊತ್ತಿರುವ, ಉತ್ತಮ ಸಂಪತ್ತಿಗೆ ಅಧಿಪತಿಯಾಗಿ ರಂಜಿಸುವ ಶೇಷನ ಓಲಗಕ್ಕೆ ಪುಂಡರೀಕ ಉರುಗನು ಬಂದನು].
  • ತಾತ್ಪರ್ಯ:ಮಹಾಶೇಷನು, ದಿವ್ಯಭವನದಲ್ಲಿ ಅನೇಕ ಅಸುರ ಸುರಾದಿ/ರಾಕ್ಷಸರು ದೇವತೆಗಳು, ನಿಖಿಳ ಸರ್ಪಗಳಿಂದ ಸುತ್ತುವರಿದವನಾಗಿ ಶ್ರೇಷ್ಠ ಸಹಸ್ರಸಂಖ್ಯೆಗಳ ಹಣೆಯಮಣಿಹೊಂದಿ , ಬಹಳ ದೇಹಕಾಂತಿಯಿಂದ ದೇದಿಪ್ಯಮಾನನಾಗಿ, ನಿಶ್ಚಿಂತೆಯಿಂದ ಅಚ್ಯುತ ಧ್ಯಾನದಿಂದಿದ್ದೂ ಕರ್ತವ್ಯದ ಕಾರಣ ಭೂಮಿಯನ್ನು ಹೊತ್ತಿರುವ, ಉತ್ತಮ ಸಂಪತ್ತಿಗೆ ಅಧಿಪತಿಯಾಗಿ ರಂಜಿಸುವ ಶೇಷನ ಓಲಗಕ್ಕೆ ಪುಂಡರೀಕ ಉರುಗನು ಬಂದನು].
  • (ಪದ್ಯ-೧೫)

ಪದ್ಯ:-:೧೬:

[ಸಂಪಾದಿಸಿ]

ಪುಂಡರೀಕಂ ಸಮಯಮರಿದುರಗ ರಾಜನಂ |
ಕಂಡೆರಗಿ ನುಡಿದನವಧರಿಸೆಲೆ ಪಣೀಂದ್ರ ಭೂ |
ಮಂಡಲದ ರಾಯರೊಳ್ ಪಾಂಡುಸುತ ಕಾರವರ್ಗಾದುದಾಹವಮದರೊಳು ||
ದಿಂಡುದರಿದಹಿತರಂ ಭೀಷ್ಮನಂ ಕೊಂದನಾ |
ಖಂಡಲಾತ್ಮಜನದರ ಪಾತಕಕೆ ನೃಪತಿ ಕೈ |
ಕೊಂಡನಚ್ಯುತನಾಜ್ಞೆಯಿಂ ಕ್ರತುವನಾಯ್ತು ಗಂಗಾಶಾಪಮರ್ಜುನಂಗೆ ||16||

ಪದವಿಭಾಗ-ಅರ್ಥ:
ಪುಂಡರೀಕಂ ಸಮಯಂ ಅರಿದು ಉರಗ ರಾಜನಂ ಕಂಡು ಎರಗಿ ನುಡಿದನು ಅವಧರಿಸು ಎಲೆ ಪಣೀಂದ್ರ=[ಪುಂಡರೀಕನು ಸಮಯ ನೋಡಿ ಸರ್ಪರಾಜನನ್ನು ಕಂಡು ನಮಿಸಿ, ಹೇಳಿದನು, ಕೇಳು ಎಲೆ ಪಣೀಂದ್ರನೇ, ];; ಭೂಮಂಡಲದ ರಾಯರೊಳ್ ಪಾಂಡುಸುತ ಕೌರವರ್ಗೆ ಆದುದು ಆಹವಂ ಅದರೊಳು ದಿಂಡುದರಿದ ಅಹಿತರಂ ಭೀಷ್ಮನಂ ಕೊಂದನು ಆಖಂಡಲಾತ್ಮಜನು (ಅರ್ಜುನ),=[ಭೂಮಂಡಲದ ರಾಜರಲ್ಲಿ ಪಾಂಡುಸುತರಿಗೂ ಕೌರವರಿಗೂ ರಾಜ್ಯಕ್ಕಾಗಿ ಯುದ್ಧವಾಯಿತು, ಅದರಲ್ಲಿ ವಿರೋಧಸಿದ ‍ಶತ್ರುಗಳನ್ನೂ, ಭೀಷ್ಮನನ್ನೂ ಅರ್ಜುನನು ಕೊಂದನು.];; ಅದರ ಪಾತಕಕೆ ನೃಪತಿ ಕೈ ಕೊಂಡನು ಅಚ್ಯುತನ ಆಜ್ಞೆಯಿಂ ಕ್ರತುವನು ಆಯ್ತು ಗಂಗಾಶಾಪಂ ಅರ್ಜುನಂಗೆ=[ಅದರ ಪಾಪನಿವಾರಣೆಗೆ ನೃಪತಿ ಯುಧಿಷ್ಠಿರನು ಅಚ್ಯುತನ ಆನುಮತಿ ಪಡೆದು ಅಶ್ವಮೇಧ ಕ್ರತುವನ್ನು ಕೈಕೊಂಡನು. ಆ ನಂತರ ಅರ್ಜುನನಿಗೆ ಗಂಗಾಶಾಪವು ಬಂದಿತು ].
  • ತಾತ್ಪರ್ಯ:ಪುಂಡರೀಕನು ಸಮಯ ನೋಡಿ ಸರ್ಪರಾಜನನ್ನು ಕಂಡು ನಮಿಸಿ, ಹೇಳಿದನು, ಕೇಳು ಎಲೆ ಪಣೀಂದ್ರನೇ, ಭೂಮಂಡಲದ ರಾಜರಲ್ಲಿ ಪಾಂಡುಸುತರಿಗೂ ಕೌರವರಿಗೂ ರಾಜ್ಯಕ್ಕಾಗಿ ಯುದ್ಧವಾಯಿತು, ಅದರಲ್ಲಿ ವಿರೋಧಸಿದ ‍ಶತ್ರುಗಳನ್ನೂ, ಭೀಷ್ಮನನ್ನೂ ಅರ್ಜುನನು ಕೊಂದನು. ಅದರ ಪಾಪನಿವಾರಣೆಗೆ ನೃಪತಿ ಯುಧಿಷ್ಠಿರನು ಅಚ್ಯುತನ ಆನುಮತಿ ಪಡೆದು ಅಶ್ವಮೇಧ ಕ್ರತುವನ್ನು ಕೈಕೊಂಡನು. ಆ ನಂತರ ಅರ್ಜುನನಿಗೆ ಗಂಗಾಶಾಪವು ಬಂದಿತು.
  • (ಪದ್ಯ-೧೬)

ಪದ್ಯ:-:೧೭:

[ಸಂಪಾದಿಸಿ]

ಆ ಜಾಹ್ನವಿಯ ಶಾಪದಿಂ ಬಭ್ರುವಾಹನಂ |
ವಾಜಿಸಹಿತೈದಿದ ಧನಂಜಯನ ತಲೆಯಂ ಮ |
ಹಾಜಿಯೊಳ್‍ತರಿಯೆ ಪತಿಶೋಕಮಂ ತಾಳಲಾರದೆ ನಿನ್ನ ಮಗಳುಲೂಪಿ ||
ತೇಜದಿಂದೆಸೆವ ಸಂಜೀವಕದ ಮಣಿಯಂ ಪ್ರ |
ಯೋಜನಕೆ ತಹುದೆಂದು ಕಳುಹಿದೊಡೆ ಬಂದೆನೀ |
ವ್ಯಾಜದಿಂದೆ ನೋಡೆನುತೆ ಕೊಟ್ಟನವಳ ಕುರಹಂ ಪನ್ನಗೇಶ್ವರಂಗೆ ||17||

ಪದವಿಭಾಗ-ಅರ್ಥ:
ಆ ಜಾಹ್ನವಿಯ ಶಾಪದಿಂ ಬಭ್ರುವಾಹನಂ ವಾಜಿಸಹಿತ ಐದಿದ ಧನಂಜಯನ ತಲೆಯಂ ಮಹಾಜಿಯೊಳ್‍ ತರಿಯೆ=[ಆ ಗಂಗೆಯ ಶಾಪದಿಂದ ಬಭ್ರುವಾಹನನು ಯಜ್ಞದ ಕುದುರೆ ಸಹಿತ ಬಂದ ಧನಂಜಯನ ತಲೆಯನ್ನು ಮಹಾಯುದ್ಧದಲ್ಲಿ ಕಡಿಯೆಲು,];; ಪತಿಶೋಕಮಂ ತಾಳಲಾರದೆ ನಿನ್ನ ಮಗಳು ಉಲೂಪಿ ತೇಜದಿಂದೆಸೆವ ಸಂಜೀವಕದ ಮಣಿಯಂ ಪ್ರಯೋಜನಕೆ ತಹುದೆಂದು=[ ಪತಿಯಮರಣದ ಶೋಕವನ್ನು ತಾಳಲಾರದೆ ನಿನ್ನ ಮಗಳು ಉಲೂಪಿಯು ತೇಜಸ್ಸಿನಿಂದ ಪ್ರಕಾಶಿಸುವ ಸಂಜೀವಕದ ಮಣಿಯನ್ನು ಪುನ ಜೀವ ತರಿಸುವ ಪ್ರಯೋಜನಕ್ಕೆ ತರಬೇಕೆಂದು];; ಕಳುಹಿದೊಡೆ ಬಂದೆನೀ ವ್ಯಾಜದಿಂದೆ ನೋಡೆನುತೆ ಕೊಟ್ಟನವಳ ಕುರಹಂ ಪನ್ನಗೇಶ್ವರಂಗೆ=[ಕಳುಹಿಸಿದ್ದರಿಂದ ಈ ಉದ್ದೇಶದಿಂದ ಬಂದಿರುವೆನು, ನೋಡು ಎಂದು ಅವಳು ಕೊಟ್ಟ ಕುರಹನ್ನು ನಾಗರಾಜನಿಗೆ ಕೊಟ್ಟನು].
  • ತಾತ್ಪರ್ಯ:ಆ ಗಂಗೆಯ ಶಾಪದಿಂದ ಬಭ್ರುವಾಹನನು ಯಜ್ಞದ ಕುದುರೆ ಸಹಿತ ಬಂದ ಧನಂಜಯನ ತಲೆಯನ್ನು ಮಹಾಯುದ್ಧದಲ್ಲಿ ಕಡಿಯೆಲು, ಪತಿಯ ಮರಣದ ಶೋಕವನ್ನು ತಾಳಲಾರದೆ ನಿನ್ನ ಮಗಳು ಉಲೂಪಿಯು ತೇಜಸ್ಸಿನಿಂದ ಪ್ರಕಾಶಿಸುವ ಸಂಜೀವಕದ ಮಣಿಯನ್ನು ಪುನ ಜೀವ ತರಿಸುವ ಕ್ರಿಯೆಗೆ ತರಬೇಕೆಂದು ಕಳುಹಿಸಿದ ಈ ಉದ್ದೇಶದಿಂದ ಬಂದಿರುವೆನು, ನೋಡು ಎಂದು, ಅವಳು ಕೊಟ್ಟ ಕುರಹನ್ನು ನಾಗರಾಜನಿಗೆ ಕೊಟ್ಟನು].
  • (ಪದ್ಯ-೧೭)

ಪದ್ಯ:-:೧೮:

[ಸಂಪಾದಿಸಿ]

ಆ ಪುಂಡರೀಕನಿಂತೆಂದುರಗ ರಾಜಂಗು |
ಲೂಪಿ ಕಳುಹಿದ ಕರ್ಣಕಂಠ ಭೂಷಣದ ಸ್ವ |
ರೂಪಮಂ ಮುಂದರಿಸಿ ನಿನ್ನ ನಿಜ ಜಾಮಾತನರ್ಜುನಂ ಸುಜನದಿಳೆಗೆ |
ಶ್ರೀಪತಿಯ ಸಖನಿಂದ್ರಸೂನು ಧರ್ಮಾನುಜಂ |
ಭೂಪಾಲರೊಳ್ ಪೆಸರ್ವಡೆದವಂ ಜೀವಿಸೆ ಪ |
ರೋಪಕಾರಂ ಪೊಲ್ಲಮಲ್ಲ ನಿನಗದರಿಂದೆ ಕುಡುವುದು ಮಣಿಯನೆಂದನು ||18||

ಪದವಿಭಾಗ-ಅರ್ಥ:
ಆ ಪುಂಡರೀಕನು ಇಂತೆಂದು ಉರಗರಾಜಂಗೆ ಉಲೂಪಿ ಕಳುಹಿದ ಕರ್ಣಕಂಠ ಭೂಷಣದ ಸ್ವರೂಪಮಂ ಮುಂದರಿಸಿ ನಿನ್ನ ನಿಜ ಜಾಮಾತನು ಅರ್ಜುನಂ ಸುಜನದ ಇಳೆಗೆ=[ಆ ಪುಂಡರೀಕನು ಹೀಗೆ ಹೇಳಿ ನಾಗರಾಜನಿಗೆ ಉಲೂಪಿ ಕಳುಹಿಸಿದ ಕರ್ಣಕಂಠ ಭೂಷಣದ ವಡವೆಯ (ಆಕಾರ)ನ್ನು ಅವನ ಮುಂದೆ ಇಟ್ಟು, ನಿನ್ನ ಸ್ವಂತ ಅಳಿಯನು ಅರ್ಜುನನು ಭೂಮಿಗೆ ಸುಜನದವನು- ಸಂಪನ್ನನು, ];; ಶ್ರೀಪತಿಯ ಸಖನು ಇಂದ್ರಸೂನು ಧರ್ಮಾನುಜಂ ಭೂಪಾಲರೊಳ್ ಪೆಸರ್ ವ/ಪಡೆದವಂ ಜೀವಿಸೆ ಪರೋಪಕಾರಂ ಪೊಲ್ಲಮಲ್ಲ (ಹೊಲ್ಲ ಅಲ್ಲ) ನಿನಗೆ ಅದರಿಂದೆ ಕುಡುವುದು ಮಣಿಯನು ಎಂದನು=[ಕೃಷ್ಣನ ಸಖನು, ಇಂದ್ರನ ಮಗನು,ಧರ್ಮಜನ ತಮ್ಮ, ರಾಜರಲ್ಲಿ ಹೆಸರು ಪಡೆದವನು; ಜೀವಬರವಂತೆ ಮಾಡಿದರೆ ಪರೋಪಕಾರವಾಗುವುದು, ನಿನಗೆ ಅದರಿಂದ ದೋಷ ಬರುವುದಿಲ್ಲ! ಮಣಿಯನ್ನು ಕೊಡಬೇಕು, ಎಂದನು ].
  • ತಾತ್ಪರ್ಯ:ಆ ಪುಂಡರೀಕನು ಹೀಗೆ ಹೇಳಿ ನಾಗರಾಜನಿಗೆ ಉಲೂಪಿ ಕಳುಹಿಸಿದ ಕರ್ಣಕಂಠ ಭೂಷಣದ ವಡವೆಯ (ಆಕಾರ)ನ್ನು ಅವನ ಮುಂದೆ ಇಟ್ಟು, ನಿನ್ನ ಸ್ವಂತ ಅಳಿಯನು ಅರ್ಜುನನು ಭೂಮಿಗೆ ಸುಜನದವನು- ಸಂಪನ್ನನು, ಕೃಷ್ಣನ ಸಖನು, ಇಂದ್ರನ ಮಗನು, ಧರ್ಮಜನ ತಮ್ಮ, ರಾಜರಲ್ಲಿ ಹೆಸರು ಪಡೆದವನು; ಜೀವಬರವಂತೆ ಮಾಡಿದರೆ ಪರೋಪಕಾರವಾಗುವುದು, ನಿನಗೆ ಅದರಿಂದ ದೋಷ ಬರುವುದಿಲ್ಲ! ಮಣಿಯನ್ನು ಕೊಡಬೇಕು, ಎಂದನು.
  • (ಪದ್ಯ-೧೮)

ಪದ್ಯ:-:೧೯:

[ಸಂಪಾದಿಸಿ]

ಶೇಷರಾಜಂ ಬಳಿಕ ತನ್ನ ತನುಜೆಯ ಕರ್ಣ |
ಭೂಷಣವನಾ ಕಂಠಸೂತ್ರಮಂ ಕಂಡು ಸಂ |
ತೋಷವರ್ಜಿತನಾಗಿ ಪೊರೆಯೊಳಿಹ ತಕ್ಷಕಾದ್ಯಹಿಪತಿಗಳಂ ನೋಡುತೆ ||
ದೋಷಮೇನಿದಕೆ ಮಣಿಯಂ ಕುಡುವೆವೈಸಲೆ ವಿ |
ಶೇಷ ಫಲಮಹುದಾರ್ಜಿಸಿದ ವಸ್ತು ಲೋಗರಭಿ |
ಲಾಷೆಗಾದೊಡೆ ಪಾರ್ಥನುತ್ತಮಂ ವೈಷ್ಣವಂ ಜಾಮಾತನೆಮಗೆಂದನು ||19||

ಪದವಿಭಾಗ-ಅರ್ಥ:
ಶೇಷರಾಜಂ ಬಳಿಕ ತನ್ನ ತನುಜೆಯ ಕರ್ಣ ಭೂಷಣವನು ಆ ಕಂಠಸೂತ್ರಮಂ ಕಂಡು ಸಂತೋಷವರ್ಜಿತನಾಗಿ ಪೊರೆಯೊಳು ಇಹ ತಕ್ಷಕಾದ್ಯಹಿಪತಿಗಳಂ ನೋಡುತೆ=[ಶೇಷರಾಜನು ಬಳಿಕ ತನ್ನ ಮಗಳ ಕರ್ಣ ಭೂಷಣವನ್ನೂ, ಆ ಕಂಠಸೂತ್ರವನ್ನೂ, ಕಂಡು ದಃಖಿತನಾಗಿ ಪಕ್ಕದಲ್ಲಿ ಇರುವ ತಕ್ಷಕ ಮೊದಲಾದ ಸರ್ಪರಾಜರನ್ನು ನೋಡುತ್ತಾ,];; ದೋಷಂ ಏನಿದಕೆ ಮಣಿಯಂ ಕುಡುವೆವೈ ಸಲೆ ವಿಶೇಷ ಫಲಮಹುದು ಆರ್ಜಿಸಿದ ವಸ್ತು ಲೋಗರ ಅಭಿಲಾಷೆಗೆ ಆದೊಡೆ ಪಾರ್ಥನು ಉತ್ತಮಂ ವೈಷ್ಣವಂ ಜಾಮಾತನು ಎಮಗೆ ಎಂದನು=[ಇದರಲ್ಲಿ ದೋಷವೇನು, ಮಣಿಯನ್ನು ಕೊಡುವೆವು, ಗಳಿಸಿದ ವಸ್ತು ಬೇರೆಯವರ ಅಭಿಲಾಷೆ/ಬಯಕೆಗೆ/ ಸಹಾಯಕ್ಕೆಗೆ ಆದರೆ ಅದರಿಂದ ಬಹಳ ವಿಶೇಷ ಫಲವಾಗುವುದು; ಪಾರ್ಥನು ಉತ್ತಮನು, ವೈಷ್ಣವನು, ನನಗೆ ಅಳಿಯನು,ಎಂದನು ].
  • ತಾತ್ಪರ್ಯ:ಶೇಷರಾಜನು ಬಳಿಕ ತನ್ನ ಮಗಳ ಕರ್ಣ ಭೂಷಣವನ್ನೂ, ಆ ಕಂಠಸೂತ್ರವನ್ನೂ, ಕಂಡು ದಃಖಿತನಾಗಿ ಪಕ್ಕದಲ್ಲಿ ಇರುವ ತಕ್ಷಕ ಮೊದಲಾದ ಸರ್ಪರಾಜರನ್ನು ನೋಡುತ್ತಾ, ಇದರಲ್ಲಿ ದೋಷವೇನು, ಮಣಿಯನ್ನು ಕೊಡುವೆವು, ಗಳಿಸಿದ ವಸ್ತು ಬೇರೆಯವರ ಅಭಿಲಾಷೆ/ಬಯಕೆಗೆ/ ಸಹಾಯಕ್ಕೆಗೆ ಆದರೆ ಅದರಿಂದ ಬಹಳ ವಿಶೇಷ ಫಲವಾಗುವುದು; ಪಾರ್ಥನು ಉತ್ತಮನು, ವೈಷ್ಣವನು, ನನಗೆ ಅಳಿಯನು,ಎಂದನು.
  • (ಪದ್ಯ-೧೯)

ಪದ್ಯ:-:೨೦:

[ಸಂಪಾದಿಸಿ]

ಕೇಳಿ ದುಮ್ಮಾನದಿಂ ತಮತಮಗೆ ನಿಖಿಳ ಸ|
ರ್ಪಾಳಿ ಚಿಂತಿಸೆ ಬಳಿಕ ದೃತರಾಷ್ಟ್ರನೆಂಬ ದು|
ವ್ಯಾಳಪತಿ ನುಡಿದನೆಲೆ ನಾಗೇಂದ್ರ ತಮ್ಮವಸರಕ್ಕೆ ಬೇಹುದನನ್ಯರ||
ವೇಳೆಗಿತ್ತೊಡೆ ಮರಳಿಬಂದಪುದೆ ಮಾನವ
ರ್ಖೂಳ ಕೃತಘ್ನರುಪಕಾರಮಂ ಬಲ್ಲರೇ ವೃ|
ಥಾಲೋಚನೆಗಳೇತಕಿದಕೆ ಮಣಿಯಂಕುಡದಿರೆನೆ ಪಣಿಪನಿಂತೆಂದನು||20||

ಪದವಿಭಾಗ-ಅರ್ಥ:
ಕೇಳಿ ದುಮ್ಮಾನದಿಂ ತಮತಮಗೆ ನಿಖಿಳ ಸರ್ಪಾಳಿ ಚಿಂತಿಸೆ ಬಳಿಕ ದೃತರಾಷ್ಟ್ರನೆಂಬ ದುವ್ಯಾಳಪತಿ ನುಡಿದನು=[ಶೇಷರಾಜನು ಮಣಿಯನ್ನು ಕೊಡುವೆನು ಎಂದಾಗ, ಅದನ್ನು ಕೇಳಿ ದುಗುಡದಿಂದ ತಮತಮಗೆ ಎಲ್ಲಾ ಸರ್ಪಗಳು ಚಿಂತಿಸುತ್ತಿರಲು, ಬಳಿಕ ದೃತರಾಷ್ಟ್ರನೆಂಬ ದುಷ್ಟ ನಾಗಪತಿ ಹೇಳಿದನು];; ಎಲೆ ನಾಗೇಂದ್ರ ತಮ್ಮ ಅವಸರಕ್ಕೆ ಬೇಹುದುನು (ಬೇಹು=ಬೇಕು:ಕಾರಂತರ ಕೋಶ) ಅನ್ಯರವೇಳೆಗೆ ಇತ್ತೊಡೆ ಮರಳಿ ಬಂದಪುದೆ=[ಎಲೆ ನಾಗೇಂದ್ರ ತಮ್ಮ ಕಷ್ಟಕಾಲಕ್ಕೆ ಬೇಕಾಗಿರುವುದನ್ನು ಬೇರೆಯವರ ಕಷ್ಟಕ್ಕೆ ಕೊಟ್ಟರೆ ಅದು ಹಿಂದಕ್ಕೆ ಬರುವುದೆ?]; ಮಾನವರ್ ಖೂಳ ಕೃತಘ್ನರು (ಉಪಕಾರ ಸ್ಮರಣೆಯಿಲ್ಲದವರು) ಉಪಕಾರಮಂ ಬಲ್ಲರೇ ವೃಥಾ ಆಲೋಚನೆಗಳು ಏತಕೆ ಇದಕೆ ಮಣಿಯಂ ಕುಡದಿರು ಎನೆ ಪಣಿಪನು ಇಂತೆಂದನು=[ಮಾನವರು ಖೂಳರು, ಕೃತಘ್ನರು, ಉಪಕಾರವನ್ನು ಬಲ್ಲರೇ? ಉಪಕಾರ ಸ್ಮರಣೆಯಿಲ್ಲದವರು. ಇದಕ್ಕೆ ವೃಥಾ ಆಲೋಚನೆಗಳು ಏಕೆ? ಮಣಿಯನ್ನು ಕೊಡಬೇಡ ಎನ್ನಲು, ಪಣಿರಾಜನು ಹೀಗೆ ಹೇಳಿದನು ].
  • ತಾತ್ಪರ್ಯ:ಶೇಷರಾಜನು ಮಣಿಯನ್ನು ಕೊಡುವೆನು ಎಂದಾಗ, ಅದನ್ನು ಕೇಳಿ ದುಗುಡದಿಂದ ತಮತಮಗೆ ಎಲ್ಲಾ ಸರ್ಪಗಳು ಚಿಂತಿಸುತ್ತಿರಲು, ಬಳಿಕ ದೃತರಾಷ್ಟ್ರನೆಂಬ ದುಷ್ಟ ನಾಗಪತಿ ಹೇಳಿದನು; ಎಲೆ ನಾಗೇಂದ್ರ ತಮ್ಮ ಕಷ್ಟಕಾಲಕ್ಕೆ ಬೇಕಾಗಿರುವುದನ್ನು ಬೇರೆಯವರ ಕಷ್ಟಕ್ಕೆ ಕೊಟ್ಟರೆ ಅದು ಹಿಂದಕ್ಕೆ ಬರುವುದೆ? ಮಾನವರು ಖೂಳರು, ಕೃತಘ್ನರು, ಉಪಕಾರವನ್ನು ಬಲ್ಲರೇ? ಉಪಕಾರ ಸ್ಮರಣೆಯಿಲ್ಲದವರು. ಇದಕ್ಕೆ ವೃಥಾ ಆಲೋಚನೆಗಳು ಏಕೆ? ಮಣಿಯನ್ನು ಕೊಡಬೇಡ ಎನ್ನಲು, ಪಣಿರಾಜನು ಹೀಗೆ ಹೇಳಿದನು.
  • (ಪದ್ಯ-೨೦)XIII

ಪದ್ಯ:-:೨೧:

[ಸಂಪಾದಿಸಿ]

ನಾಡಳೂರ್ಮನೆಯೊಳೊರೋರ್ವರುಂಟು ಪರ|
ಪೀಡೆಗಳುಕದೆ ವಕ್ರಗತಿಯಿಂದ ನೆಡೆವ ಕಡು|
ಗೇಡಿರ್ ನಿನ್ನಂತೆ ಶಿವಶಿವಾ ಪ್ರಾಣಿಗಳ್ ದುಃಖಾರ್ತರಾಗಿ ಬಂದು||
ಬೇಡಿದೊಡೆ ತನಗುಳ್ಳ ವಸ್ತುವಂ ಕುಡದೆ ಕೆಡೆ|
ನೋಡುವವನಧಿಕನೆ ದಧೀತಿ ಶಿಬಿಗಳ ಮಾಳ್ಕೆ|
ಖೋಡಿಯಾದುದೆ ಮಣಿಯನೀವೆ ಕಿರೀಟಿಗೆನೆ ದೃತರಾಷ್ಟನಿಂತೆಂದನು||21||

ಪದವಿಭಾಗ-ಅರ್ಥ:
ನಾಡಳು ಊರುಮನೆಯೊಳು ಓರೋರ್ವರು ಉಂಟು ಪರಪೀಡೆಗೆ ಅಳುಕದೆ ವಕ್ರಗತಿಯಿಂದ ನೆಡೆವ ಕಡುಗೇಡಿರ್ ನಿನ್ನಂತೆ ಶಿವಶಿವಾ=[ನಾಡಲ್ಲಿ ಊರುಮನೆಗಳಲ್ಲಿ ಒಬ್ಬೊಬ್ಬರು ಉಂಟು ಪರಕಷ್ಟಕ್ಕೆ ಅಳುಕದೆ ಕೆಟ್ಟರೀತಿಯಿಂದ ನಿನ್ನಂತೆ ನೆಡೆಯುವ ಬಹಳಕೇಡಿರು ಶಿವಶಿವಾ!];; ಪ್ರಾಣಿಗಳ್ ದುಃಖಾರ್ತರಾಗಿ ಬಂದು ಬೇಡಿದೊಡೆ ತನಗೆ ಉಳ್ಳ ವಸ್ತುವಂ ಕುಡದೆ ಕೆಡೆನೋಡುವವನು ಅಧಿಕನೆ? ದಧೀತಿ ಶಿಬಿಗಳ ಮಾಳ್ಕೆಖೋಡಿಯಾದುದೆ?=[ಪ್ರಾಣಿಗಳು ದುಃಖಾರ್ತರಾಗಿ ಬಂದು ಕೇಳಿದರೆ, ತನ್ನಲ್ಲಿ ಇರುವ ವಸ್ತುವನ್ನು ಕೊಡದೆ, ಕೆಡುಕನ್ನು ನೋಡುವವನು ಅಧಿಕನೆ? ದಧೀತಿ ಶಿಬಿಗಳ ಕೊಡಿಗೆ ಕಾರ್ಯ ಕೆಟ್ಟದೆ?];; ಮಣಿಯನು ಈವೆ (ಕೊಡುವೆ) ಕಿರೀಟಿಗೆ ಎನೆ ದೃತರಾಷ್ಟನು ಇಂತೆಂದನು=[ಮಣಿಯನ್ನು ಅರ್ಜುನನಿಗಾಗಿ ಕೊಡುವೆ ಎನ್ನಲು ದೃತರಾಷ್ಟನು ಹೀಗೆ ಹೇಳಿದನು.]
  • ತಾತ್ಪರ್ಯ:ನಾಡಲ್ಲಿ ಊರುಮನೆಗಳಲ್ಲಿ ಒಬ್ಬೊಬ್ಬರು ಉಂಟು ಪರಕಷ್ಟಕ್ಕೆ ಅಳುಕದೆ ಕೆಟ್ಟರೀತಿಯಿಂದ ನಿನ್ನಂತೆ ನೆಡೆಯುವ ಬಹಳಕೇಡಿರು ಶಿವಶಿವಾ! ಪ್ರಾಣಿಗಳು ದುಃಖಾರ್ತರಾಗಿ ಬಂದು ಕೇಳಿದರೆ, ತನ್ನಲ್ಲಿ ಇರುವ ವಸ್ತುವನ್ನು ಕೊಡದೆ, ಕೆಡುಕನ್ನು ನೋಡುವವನು ಅಧಿಕನೆ? ದಧೀತಿ ಶಿಬಿಗಳ ಕೊಡಿಗೆ ಕಾರ್ಯ ಕೆಟ್ಟದೆ? ಮಣಿಯನ್ನು ಅರ್ಜುನನಿಗಾಗಿ ಕೊಡುವೆ ಎನ್ನಲು ದೃತರಾಷ್ಟನು ಹೀಗೆ ಹೇಳಿದನು.
  • (ಪದ್ಯ-೨೧)


ಪದ್ಯ:-:೨೨:

[ಸಂಪಾದಿಸಿ]

ಹೇಳಿದಂತಿರದು ಪುರುಷಾರ್ಥಮಂ ನೋಡಿದೊಡೆ|
ಕಾಳಹುದು ನಾಗಲೋಕದ ಬಾಳ್ಕೆ ಮೀರಿ ಪಾ
ತಾಳಕೆ ಮತಂಗ ಋಷಿ ಶಾಪದಿಂ ಬಾರನೈಸಲೆಗರುಡನಿಳೆಯಮೇಲೆ||
ತಾಳಬಲ್ಲನೆ ನಮ್ಮ ರತ್ನಮಂ ಕಂಡುನರ|
ರಾಳಿಕೆಗಳಲ್ಪಕಾಲಂಗಳಿಂದುಳಿದೊಡಂ|
ನಾಳೆ ಪಾಂಡವನಳಿಯದಿರ್ದಪನೆ ಮಣಿಯಂ ಕುಡದಿರೆನಲ್ಕಿಂತೆಂದನು||22||

ಪದವಿಭಾಗ-ಅರ್ಥ:
ಹೇಳಿದಂತೆ ಇರದು ಪುರುಷಾರ್ಥಮಂ ನೋಡಿದೊಡೆ ಕಾಳಹುದು ನಾಗಲೋಕದ ಬಾಳ್ಕೆ ಮೀರಿ ಪಾತಾಳಕೆ ಮತಂಗ ಋಷಿ ಶಾಪದಿಂ ಬಾರನೆ ಐಸಲೆ ಗರುಡನು ಇಳೆಯಮೇಲೆ=[ ಪುರುಷಾರ್ಥವನ್ನು (ಧರ್ಮದೃಷ್ಟಿ) ನೋಡಿದರೆ ಮೊದಲು ಹೇಳಿದಂತೆಯೇ ಇರುವುದಿಲ್ಲ, ಪರಿಸ್ಥಿತಿ ಬದಲಾಗಬಹುದು;; ನಾಗಲೋಕದ ನಮ್ಮ ಬಾಳು ಕಾಳು/ಕೆಡುಕಿಗೆ ಸಿಲುಕಬಹುದು; ಗರುಡನು ಅತಿಕ್ರಮಿಸಿ(ಮೀರಿ) ಪಾತಾಳಕ್ಕೆ ಮತಂಗ ಋಷಿಯ ಶಾಪದಿಂದ ಬರುವುದಿಲ್ಲ; ಆದರೆ ಗರುಡನು ಭುಮಿಯ ಮೇಲೆ ಬಾರದೆ ಇರುವನೇ?];ತಾಳಬಲ್ಲನೆ ನಮ್ಮ ರತ್ನಮಂ ಕಂಡು ನರರ ಆಳಿಕೆಗಳು ಅಲ್ಪಕಾಲಂಗಳು ಇಂದುಳಿದೊಡಂ ನಾಳೆ ಪಾಂಡವನು ಅಳಿಯದಿರ್ದಪನೆ ಮಣಿಯಂ ಕುಡದಿರು ಎನಲ್ಕತ ಇಂತೆಂದನು=[ಅವನು ನಮ್ಮ ರತ್ನವನ್ನು ಕಂಡು ಅಪಹರಿಸದೆ ತಾಳ್ಮೆವಹಿಸಬಲ್ಲನೆ? ಅಪಹರಿಸಬಹುದು. ಮನುಷ್ಯರ ಜೀವಿತವು ಅಲ್ಪಕಾಲದವು, ಈಗ ಜೀವ ಉಳಿಸಿದರೂ ನಾಳೆ/ಅಲ್ಪಕಾಲದಲ್ಲಿ ಪಾಂಡವನು ಸಾಯದೆ ಇರುವನೆ? ಮಣಿಯನ್ನು ಕೊಡಬೇಡ, ಎನ್ನಲು ಮತ್ತೂ ಹೀಗೆ ಹೇಳಿದನು.]
  • ತಾತ್ಪರ್ಯ:ಪುರುಷಾರ್ಥವನ್ನು (ಧರ್ಮದೃಷ್ಟಿ) ನೋಡಿದರೆ ಮೊದಲು ಹೇಳಿದಂತೆಯೇ ಇರುವುದಿಲ್ಲ, ಪರಿಸ್ಥಿತಿ ಬದಲಾಗಬಹುದು;; ನಾಗಲೋಕದ ನಮ್ಮ ಬಾಳು ಕೆಡುಕಿಗೆ ಸಿಲುಕಬಹುದು; ಗರುಡನು ಅತಿಕ್ರಮಿಸಿ ಪಾತಾಳಕ್ಕೆ ಮತಂಗ ಋಷಿಯ ಶಾಪದಿಂದ ಬರುವುದಿಲ್ಲ; ಆದರೆ ಗರುಡನು ಭುಮಿಯ ಮೇಲೆ ಬಾರದೆ ಇರುವನೇ? ಅವನು ನಮ್ಮ ರತ್ನವನ್ನು ಕಂಡು ಅಪಹರಿಸದೆ ತಾಳ್ಮೆವಹಿಸಬಲ್ಲನೆ? ಅಪಹರಿಸಬಹುದು. ಮನುಷ್ಯರ ಜೀವಿತವು ಅಲ್ಪಕಾಲದವು, ಈಗ ಜೀವ ಉಳಿಸಿದರೂ ಅಲ್ಪಕಾಲದಲ್ಲಿ ಪಾಂಡವನು ಸಾಯದೆ ಇರುವನೆ? ಮಣಿಯನ್ನು ಕೊಡಬೇಡ, ಎನ್ನಲು ಶೇಷನು ಹೀಗೆ ಹೇಳಿದನು.]
  • (ಪದ್ಯ-೨೧)

ಪದ್ಯ:-:೨೩:

[ಸಂಪಾದಿಸಿ]

ಕಷ್ಟದಿಂದಾವು ಮಣಿಯಂಕುಡದೆ ಮಾಣ್ದೊಡೇಂ|
ನಷ್ಟಮಾದಪುದೆ ಪಾರ್ಥನ ಜೀವಮಸುರಾರಿ|
ಯಿಷ್ಟನಲ್ಲವೆ ಪಾಂಡವ ಪ್ರಾಣನಾಗಿರ್ಪನಂತಲ್ಲದಾನತರ್ಗೆ||
ಸ್ಪಷ್ಟದಿಂ ಕೃಷ್ಣಕಾರುಣ್ಯ ಸಂಜೀವನಂ|
ದೃಷ್ಟವಾಗಿರಲಿದರ ಹಂಗದೇತಕೆ ನೀನ|
ರಿಷ್ಟನಾಗದಿರಿನ್ನು ಮಿಗಿಸಿಕೊಳ್ವೆವು ಲೇಸನೆಂದೊಡನವನಿಂತೆಂದನು||23||

ಪದವಿಭಾಗ-ಅರ್ಥ:
ಕಷ್ಟದಿಂದ ಆವು ಮಣಿಯಂ ಕುಡದೆ ಮಾಣ್ದೊಡೆ ಏಂ ನಷ್ಟಮಾದಪುದೆ ಪಾರ್ಥನ ಜೀವಮ್ ಅಸುರಾರಿ ಯಿಷ್ಟನಲ್ಲವೆ ಪಾಂಡವ ಪ್ರಾಣನಾಗಿರ್ಪನು=[ನಮ್ಮ ಮುಂದೆ ಒದಗಬಹುದಾದ ಕಷ್ಟವನ್ನು ಚಿಂತಿಸಿ, ನಾವು ಮಣಿಯನ್ನು ಕೊಡದೆ ನಿರಾಕರಿಸಿದರೆ, ಏನು ಪಾರ್ಥನ ಜೀವ ನಷ್ಟವಾಗುವುದೆ? ಅಸುರಾರಿ ಕೃಷ್ಣನು ಅವರಿಗೆ ಪ್ರೀತಿಯವನಲ್ಲವೆ? ಅವನು ಪಾಂಡವರ ಪ್ರಾಣಮಿತ್ರನಾಗಿನಾಗಿರುನು.];; ಅಂತಲ್ಲದೆ ಆನತರ್ಗೆಸ್ಪಷ್ಟದಿಂ ಕೃಷ್ಣಕಾರುಣ್ಯ ಸಂಜೀವನಂ ದೃಷ್ಟವಾಗಿರಲು ಇದರ ಹಂಗದೇತಕೆ ನೀನು ಅರಿಷ್ಟನಾಗದಿರು ಇನ್ನು ಮಿಗಿಸಿಕೊಳ್ವೆವು ಲೇಸನು ಎಂದ ಒಡನೆ ಅವನು ಇಂತೆಂದನು=[ಅಷ್ಟಲ್ಲದೆ ಶರಣಾಗತರಿಗೆ ಕೃಷ್ಣಕಾರುಣ್ಯವೆಂಬ ಸಂಜೀವನವು ಅಲ್ಲಿ ಸ್ಪಷ್ಟವಾಗಿ/ ಖಂಡಿತವಾಗಿ ತೋರುತ್ತಿರಲು, ಈ ಮಣಿಯ ಹಂಗೇಕೆ? ನೀನು ಈ ಲೋಕದ ನಾಗರಲ್ಲಿ ಕಷ್ಟದಲ್ಲಿ ಉಪಕಾರಮಾಡದ ಕೆಡುಕಿಯಾಗಬೇಡ/ ಅರಿಷ್ಟನಾಗಬೇಡ; ಆದರೂ, ಇನ್ನು ನಮ್ಮ ಕ್ಷೇಮಕ್ಕಾಗಿಯೇ ಮಣಿಯನ್ನು ಕೊಟ್ಟು ಉದಾರ ಗುಣವನ್ನು ಉಳಿಸಿಕೊಳ್ಳೋಣ /ಲೇಸನ್ನು/ ಒಳಿತು /ಮಿಗಿಸಿಕೊಳ್ವೆವು ಎಂದ ಕೂಡಲೆ ಮತ್ತೆ ದೃತರಾಷ್ಟನು ಹೀಗೆಂದನು].
  • ತಾತ್ಪರ್ಯ:ಮುಂದುವರಿದು, ನಮ್ಮ ಮುಂದೆ ಒದಗಬಹುದಾದ ಕಷ್ಟವನ್ನು ಚಿಂತಿಸಿ, ನಾವು ಮಣಿಯನ್ನು ಕೊಡದೆ ನಿರಾಕರಿಸಿದರೆ, ಏನು ಪಾರ್ಥನ ಜೀವ ನಷ್ಟವಾಗುವುದೆ? ಅಸುರಾರಿ ಕೃಷ್ಣನು ಅವರಿಗೆ ಪ್ರೀತಿಯವನಲ್ಲವೆ? ಅವನು ಪಾಂಡವರ ಪ್ರಾಣಮಿತ್ರನಾಗಿನಾಗಿರುನು. ಅಷ್ಟಲ್ಲದೆ ಶರಣಾಗತರಿಗೆ ಕೃಷ್ಣಕಾರುಣ್ಯವೆಂಬ ಸಂಜೀವನವು ಅಲ್ಲಿ ಸ್ಪಷ್ಟವಾಗಿ ತೋರುತ್ತಿರಲು, ಈ ಮಣಿಯ ಹಂಗೇಕೆ? ನೀನು ಈ ಲೋಕದ ನಾಗರಲ್ಲಿ ಕಷ್ಟದಲ್ಲಿ ಉಪಕಾರಮಾಡದ ಕೆಡುಕಿಯಾಗಬೇಡ, ಅರಿಷ್ಟನಾಗಬೇಡ; ಆದರೂ ಇನ್ನು ನಮ್ಮ ಕ್ಷೇಮಕ್ಕಾಗಿ ಮಣಿಯನ್ನು ಕೊಟ್ಟು ಉದಾರ ಗುಣವನ್ನು ಉಳಿಸಿಕೊಳ್ಳೋಣ ಎಂದು ಶೇಷನು ಹೇಳಿದ ಕೂಡಲೆ ಮತ್ತೆ ದೃತರಾಷ್ಟನು ಹೀಗೆಂದನು
  • (ಪದ್ಯ-೨೩)

ಪದ್ಯ:-:೨೪:

[ಸಂಪಾದಿಸಿ]

ಉರಗೇಂದ್ರ ನೀನಾಡಿದವೊಲೆಂತುಮರ್ಜುನಂ |
ಮುರಹರನ ಕರುಣದಿಂ ಸಪ್ರಾಣನಪ್ಪನಿದ |
ಕುರುತರದ ಸಂಜೀವಕದ ಮಣಿಯನಿತ್ತು ನಮ್ಮೆಲ್ಲರಂ ಕೆಡಿಸಬೇಡ ||
ಗರುಡದೇವನ ಹಾವಳಿಗೆ ಜೋಕೆಯಾಗಿರಲಿ |
ತಿರುಗಿ ಕಳುಹಿಸು ಪುಂಡರೀಕನಂ ತವಸುತೆಯ |
ಪೊರೆಗೆಂದು ಧೃತರಾಷ್ಟ್ರನೆನಲೊಪ್ಪಿ ನಿಖಿಳ ಸರ್ಪಾಳಿ ಗರ್ಜಿಸುತಿರ್ದುದು ||24||

ಪದವಿಭಾಗ-ಅರ್ಥ:
ಉರಗೇಂದ್ರ ನೀನಾಡಿದವೊಲು ಎಂತುಂ ಅರ್ಜುನಂ ಮುರಹರನ ಕರುಣದಿಂ ಸಪ್ರಾಣನಪ್ಪನು ಇದಕೆ ಉರುತರದ ಸಂಜೀವಕದ ಮಣಿಯನು ಇತ್ತು ನಮ್ಮೆಲ್ಲರಂ ಕೆಡಿಸಬೇಡ=[ಆದಿಶೇಷನು ಮಣಿಯನ್ನು ಕಳಿಸೋಣವೆನ್ನಲು, ಧೃತರಾಷ್ಟ್ರನೆಂಬ ನಾಗನು, ನಾಗೇಂದ್ರ ಶೇಷನೇ, ನೀನು ಹೇಳಿದಂತೆ ಹೇಗಾದರೂ ಅರ್ಜುನನು ಕೃಷ್ಭನ ಕರುಣದಿಂದ ಜೀವಪಡೆಯುವನು; ಇದಕ್ಕೆ ಶ್ರೇಷ್ಠವಾದ ಸಂಜೀವಕದ ಮಣಿಯನ್ನು ಕೊಟ್ಟು ನಮ್ಮೆಲ್ಲರ ಗತಿ ಕೆಡಿಸಬೇಡ,];; ಗರುಡದೇವನ ಹಾವಳಿಗೆ ಜೋಕೆಯಾಗಿರಲಿ ತಿರುಗಿ ಕಳುಹಿಸು ಪುಂಡರೀಕನಂ ತವಸುತೆಯ ಪೊರೆಗೆಂದು ಧೃತರಾಷ್ಟ್ರನು ಎನಲು ಒಪ್ಪಿ ನಿಖಿಳ ಸರ್ಪಾಳಿ ಗರ್ಜಿಸುತಿರ್ದುದು =[ಗರುಡದೇವನ ಧಾಳಿಗೆ ಜೋಕೆಯಾಗಿ ಮಣಿ ಇರಲಿ; ಪುಂಡರೀಕನನ್ನು ಈ ವಿಷಯ ಹೇಳಿ ತಿರುಗಿ ಕಳುಹಿಸು ನಿನ್ನಮಗಳ ಕಡೆಗೆ, ಎಂದು ಧೃತರಾಷ್ಟ್ರನು ಹೇಳಲು, ಅದನ್ನು ಒಪ್ಪಿ ಎಲ್ಲಾ ಸರ್ಪ ಸಮೂಹ ಗರ್ಜಿಸುತಿತ್ತು.]
  • ತಾತ್ಪರ್ಯ: ಆದಿಶೇಷನು ಮಣಿಯನ್ನು ಕಳಿಸೋಣವೆನ್ನಲು, ಧೃತರಾಷ್ಟ್ರನೆಂಬ ನಾಗನು, ನಾಗೇಂದ್ರ ಶೇಷನೇ, ನೀನು ಹೇಳಿದಂತೆ ಹೇಗಾದರೂ ಅರ್ಜುನನು ಕೃಷ್ಭನ ಕರುಣದಿಂದ ಜೀವಪಡೆಯುವನು; ಇದಕ್ಕೆ ಶ್ರೇಷ್ಠವಾದ ಸಂಜೀವಕದ ಮಣಿಯನ್ನು ಕೊಟ್ಟು ನಮ್ಮೆಲ್ಲರ ಗತಿ ಕೆಡಿಸಬೇಡ; ಗರುಡದೇವನ ಧಾಳಿಗೆ ಸಿಲುಕಿದ ನಾಗರನ್ನು ಬದುಕಿಸಲು ಜೋಕೆಯಾಗಿ ಮಣಿ ಇರಲಿ; ಪುಂಡರೀಕನನ್ನು ನಿನ್ನ ಮಗಳ ಕಡೆಗೆ ಈ ವಿಷಯ ಹೇಳಿ ತಿರುಗಿ ಕಳುಹಿಸು , ಎಂದು ಧೃತರಾಷ್ಟ್ರನು ಹೇಳಲು, ಅದನ್ನು ಒಪ್ಪಿ ಎಲ್ಲಾ ಸರ್ಪ ಸಮೂಹ ಗರ್ಜಿಸುತಿತ್ತು.
  • (ಪದ್ಯ-೨೪)XIII

ಪದ್ಯ:-:೨೫:

[ಸಂಪಾದಿಸಿ]

ಭೂಪಾಲ ಕೇಳ್ ದೊರೆಗಳೊಲಿದೀವ ಕಜ್ಜಂ ಸ |
ಮೀಪದ ದುರಾತ್ಮರಿಂ ಕೆಡದೆ ಮಾಣ್ದಪುದೇ ಪೇ |
ಳಾಪನ್ನಗೇಶ್ವರಂ ಧೃತರಾಷ್ಟ್ರನೆಂದ ಮಾತಿನ ಮೇಲೆ ಖಿನ್ನನಾಗಿ ||
ಆ ಪುಂಡರೀಕನಂ ಕರೆದು ಕುಡಲೀಸರ್ ಪ |
ರೋಪಕಾರಕೆ ಮಣಿಯನೀ ಫಣಿಗಳಿಂತೆಂದು |
ಲೂಪಿಗರಿಪೆಂದು ಕಳುಹಿದೊಡವಂ ನರನಳಿದ ರಣಭೂಮಿಗೈತಂದನು ||25||

ಪದವಿಭಾಗ-ಅರ್ಥ:
ಭೂಪಾಲ ಕೇಳ್ ದೊರೆಗಳು ಒಲಿದು ಈವ ಕಜ್ಜಂ ಸಮೀಪದ ದುರಾತ್ಮರಿಂ ಕೆಡದೆ ಮಾಣ್ದಪುದೇ ಪೇಳು ಆಪನ್ನಗೇಶ್ವರಂ ಧೃತರಾಷ್ಟ್ರನೆಂದ ಮಾತಿನ ಮೇಲೆ ಖಿನ್ನನಾಗಿ=[ಜನಮೇಜಯ ಭೂಪಾಲನೇ ಕೇಳು, ದೊರೆಗಳು ಪ್ರೀತಿಯಿಂದ ಕೊಡುವ ಕಾರ್ಯಕ್ಕೆ ಸಮೀಪದ ದುರಾತ್ಮರಿಂದ ದಾನವು ತಡೆಯಲ್ಪಟ್ಟು ಕೆಡದೆ ಇರುವುದೇ ಪೇಳು; ಆ ಸರ್ಪರಾಜನು ಧೃತರಾಷ್ಟ್ರನ ಹೇಳಿದ ಮಾತಿನ ಮೇಲೆ ದಃಖಿತನಾಗಿ];; ಆ ಪುಂಡರೀಕನಂ ಕರೆದು ಕುಡಲು ಈಸರ್ ಪರೋಪಕಾರಕೆ ಮಣಿಯನು ಈ ಫಣಿಗಳು ಇಂತೆಂದು ಉಲೂಪಿಗೆ ಅರಿಪೆಂದು ಕಳುಹಿದೊಡೆ ಅವಂ ನರನು ಅಳಿದ ರಣಭೂಮಿಗೆ ಐತಂದನು=[ಆ ಪುಂಡರೀಕನನ್ನು ಕರೆದು ಮಣಿಯನ್ನು ಪರೋಪಕಾರಕ್ಕಾಗಿ ಕೊಡಲು ಕೆಲವು ನಾಗಗಳು ಬಿಡುವುದಿಲ್ಲ; ಹೀಗೆಂದು ಉಲೂಪಿಗೆ ತಿಳಿಸು,ಎಂದು ಕಳುಹಿಸಿದೊಡನೆ ಅವನು ಪಾರ್ಥನು ಮಡಿದ ರಣಭೂಮಿಗೆ ಬಂದನು].
  • ತಾತ್ಪರ್ಯ:ಜನಮೇಜಯ ಭೂಪಾಲನೇ ಕೇಳು, ದೊರೆಗಳು ಪ್ರೀತಿಯಿಂದ ಕೊಡುವ ಕಾರ್ಯಕ್ಕೆ ಸಮೀಪದ ದುರಾತ್ಮರಿಂದ ದಾನವು ತಡೆಯಲ್ಪಟ್ಟು ಕೆಡದೆ ಇರುವುದೇ ಪೇಳು; ಆ ಸರ್ಪರಾಜನು ಧೃತರಾಷ್ಟ್ರನ ಹೇಳಿದ ಮಾತಿನ ಮೇಲೆ ದಃಖಿತನಾಗಿ, ಆ ಪುಂಡರೀಕನನ್ನು ಕರೆದು ಮಣಿಯನ್ನು ಪರೋಪಕಾರಕ್ಕಾಗಿ ಕೊಡಲು ಕೆಲವು ನಾಗಗಳು ಬಿಡುವುದಿಲ್ಲ; ಹೀಗೆಂದು ಉಲೂಪಿಗೆ ತಿಳಿಸು,ಎಂದು ಕಳುಹಿಸಿದೊಡನೆ ಅವನು ಪಾರ್ಥನು ಮಡಿದ ರಣಭೂಮಿಗೆ ಬಂದನು.
  • (ಪದ್ಯ-೨೫)

ಪದ್ಯ:-:೨೬:

[ಸಂಪಾದಿಸಿ]

ಚಂದನದ ತೈಲದಿಂದುರಿವ ಬೊಂಬಾಳಂಗ |
ಳಿಂದೆ ಕರ್ಪೂರದ ಸೊಡರ್ಗಳಿಂ ಮಣಿದೀಪ |
ದಿಂದಿರುಳ್ ಕಂಗೊಳಿಸುತಿರೆ ಬಭ್ರುವಾಹನಂ ಮಂದಿಸಹಿತಾ ರಣದೊಳು ||
ನಿಂದಿರಲುಲೂಪಿ ಚಿತ್ರಾಂಗದೆಯರಮರೇಂದ್ರ |
ನಂದನನ ಬಳಿಯ ಸಂಜೀವಕದ ರತ್ನಮಂ |
ದಂದಶೂಕೇಶ್ವರಂ ಕುಡುವನೆಂಬಾಸೆಯಿಂ ಪಂಬಲಿಸುತಿರುದಿರ್ದರು ||26||

ಪದವಿಭಾಗ-ಅರ್ಥ:
ಚಂದನದ ತೈಲದಿಂದ ಉರಿವ ಬೊಂಬಾಳಂಗಳಿಂದೆ ಕರ್ಪೂರದ ಸೊಡರ್ಗಳಿಂ ಮಣಿದೀಪದಿಂದ ಇರುಳ್ ಕಂಗೊಳಿಸುತಿರೆ=[ಅರ್ಜುನನು ಬಿದ್ದ ರಣರಂಗದಲ್ಲಿ, ಚಂದನದ ತೈಲದಿಂದ ಉರಿಯುವ ದೀವಟಿಗೆಗಳಿಂದ, ಕರ್ಪೂರದ ಹಣತೆ ದೀಪಗಳಿಂದ ಮಣಿದೀಪದಿಂದ ರಾತ್ರಿಯು ಕಂಗೊಳಿಸುತತಿರಲು,];; ಬಭ್ರುವಾಹನಂ ಮಂದಿಸಹಿತ ಆ ರಣದೊಳು ನಿಂದಿರಲು=[ಬಭ್ರುವಾಹನನು ತನ್ನಜನರ ಸಹಿತ ಆ ರಣರಂಗದಲ್ಲಿ ನಿಂತಿರಲು,]; ಉಲೂಪಿ ಚಿತ್ರಾಂಗದೆಯರು ಅಮರೇಂದ್ರನಂದನನ ಬಳಿಯ ಸಂಜೀವಕದ ರತ್ನಮಂ ದಂದಶೂಕೇಶ್ವರಂ (ದಂದಶೂಕ -ಸರ್ಪ,ಹಾವು:ದಾಸ ಶಬ್ದಕೋಶ) ಕುಡುವನೆಂಬ ಆಸೆಯಿಂ ಪಂಬಲಿಸುತ ಇರುದಿರ್ದರು=[ಉಲೂಪಿ ಚಿತ್ರಾಂಗದೆಯರು ಅರ್ಜುನನ ಬಳಿಯಲ್ಲಿ ಶೇಷರಾಜನು ಸಂಜೀವಕದ ರತ್ನವನ್ನು ಕೊಡುವನೆಂಬ ಆಸೆಯಿಂದ ಹಂಬಲಿಸುತ್ತಾ ಇದ್ದರು.]
  • ತಾತ್ಪರ್ಯ:ಅರ್ಜುನನು ಬಿದ್ದ ರಣರಂಗದಲ್ಲಿ, ಚಂದನದ ತೈಲದಿಂದ ಉರಿಯುವ ದೀವಟಿಗೆಗಳಿಂದ, ಕರ್ಪೂರದ ಹಣತೆ ದೀಪಗಳಿಂದ ಮಣಿದೀಪದಿಂದ ರಾತ್ರಿಯು ಕಂಗೊಳಿಸುತತಿರಲು, ಬಭ್ರುವಾಹನನು ತನ್ನಜನರ ಸಹಿತ ಆ ರಣರಂಗದಲ್ಲಿ ನಿಂತಿದ್ದನು.ಉಲೂಪಿ ಚಿತ್ರಾಂಗದೆಯರು ಅರ್ಜುನನ ಬಳಿಯಲ್ಲಿ ಶೇಷರಾಜನು ಸಂಜೀವಕದ ರತ್ನವನ್ನು ಕೊಡುವನೆಂಬ ಆಸೆಯಿಂದ ಹಂಬಲಿಸುತ್ತಾ ಇದ್ದರು.
  • (ಪದ್ಯ-೨೬)

ಪದ್ಯ:-:೨೭:

[ಸಂಪಾದಿಸಿ]

ಅನ್ನೆಗಂ ಪುಂಡರೀಕಂ ಬಂದುಲೂಪಿಯೊಳ್ |
ಪನ್ನಗೇಂದ್ರಂ ಸುಧಾಮಣಿಯಂ ಕುಡದೆ ತಿರುಗಿ |
ತನ್ನಂ ಕಳುಹಿದ ವೃತ್ತಾಂತಮನುಸಿರಲದಂ ಚಿತ್ರಾಂಗದೆಗೆ ಸೂಚಿಸೆ ||
ಇನ್ನು ವೈಧವ್ಯದಿಂದೊಡಲಂ ಪೊರೆಯೆನೆಂದು |
ನನ್ನಿಯಿಂದಗ್ನಿಪ್ರವೇಶಮಂ ನಿಶ್ಚೈಪ |
ಳಂ ನೋಡಿ ಕೋಪದಿಂದಾ ಬಭ್ರುವಾಹನಂ ನಿಜಮಾತೆಗಿಂತೆಂದನು ||27||

ಪದವಿಭಾಗ-ಅರ್ಥ:
ಅನ್ನೆಗಂ ಪುಂಡರೀಕಂ ಬಂದು ಉಲೂಪಿಯೊಳ್ ಪನ್ನಗೇಂದ್ರಂ ಸುಧಾಮಣಿಯಂ ಕುಡದೆ ತಿರುಗಿ ತನ್ನಂ ಕಳುಹಿದ ವೃತ್ತಾಂತಮನು ಉಸಿರಲು=[ಅಷ್ಟುಹೊತ್ತಿಗೆ ಪುಂಡರೀಕನು ಬಂದು ಉಲೂಪಿಯೊಡನೆ, ನಾಗರಾಜನು ಸುಧಾಮಣಿಯನ್ನು ಕೊಡದೆ ತಿರುಗಿ ತನ್ನನ್ನು ಕಳುಹಿದ ವೃತ್ತಾಂತವನ್ನು ಹೇಳಲು];; ಅದಂ ಚಿತ್ರಾಂಗದೆಗೆ ಸೂಚಿಸೆ ಇನ್ನು ವೈಧವ್ಯದಿಂದೊಡಲಂ ಪೊರೆಯೆನೆಂದು ನನ್ನಿಯಿಂದ ಅಗ್ನಿಪ್ರವೇಶಮಂ ನಿಶ್ಚೈಪಳಂ ನೋಡಿ ಕೋಪದಿಂದ ಆ ಬಭ್ರುವಾಹನಂ ನಿಜಮಾತೆಗೆ ಇಂತೆಂದನು=[ಅದನ್ನು ಚಿತ್ರಾಂಗದೆಗೆ ಉಲೂಪತಿ ತಿಳಿಸಿದಾಗ, ಇನ್ನು ವೈಧವ್ಯದಿಂದ ಈ ದೇಹವನ್ನು,ಕಾಪಾಡಲಾರೆನು ಎಂದು, ಧರ್ಮದಿಂದ ಅಗ್ನಿಪ್ರವೇಶವನ್ನು ನಿಶ್ಚೈಸಿದ ತಾಯಿಯನ್ನು ನೋಡಿ, ಕೋಪದಿಂದ ಆ ಬಭ್ರುವಾಹನ ತನ್ನ ತಾಯಿಗೆ ಹೀಗೆ ಹೇಳಿದನು.]
  • ತಾತ್ಪರ್ಯ:ಅಷ್ಟುಹೊತ್ತಿಗೆ ಪುಂಡರೀಕನು ಬಂದು ಉಲೂಪಿಯೊಡನೆ, ನಾಗರಾಜನು ಸಂಜೀವಕಮಣಿಯನ್ನು ಕೊಡದೆ ತಿರುಗಿ ತನ್ನನ್ನು ಕಳುಹಿದ ವೃತ್ತಾಂತವನ್ನು ಹೇಳಲು, ಅದನ್ನು ಚಿತ್ರಾಂಗದೆಗೆ ಉಲೂಪತಿ ತಿಳಿಸಿದಾಗ, ಇನ್ನು ವೈಧವ್ಯದಿಂದ ಈ ದೇಹವನ್ನು,ಕಾಪಾಡಲಾರೆನು ಎಂದು, ಧರ್ಮದಿಂದ ಅಗ್ನಿಪ್ರವೇಶವನ್ನು ನಿಶ್ಚೈಸಿದ ತಾಯಿಯನ್ನು ನೋಡಿ, ಕೋಪದಿಂದ ಆ ಬಭ್ರುವಾಹನ ತನ್ನ ತಾಯಿಗೆ ಹೀಗೆ ಹೇಳಿದನು.
  • (ಪದ್ಯ-೨೭)

ಪದ್ಯ:-:೨೮:

[ಸಂಪಾದಿಸಿ]

ಚಕ್ರಿಸೇವಕನೀ ಕಿರೀಟಿ ಧರ್ಮಾನುಜಂ |
ಶಕ್ರಸುತನೆನ್ನ ತಾತಂ ಮೇಲೆ ತುರಗಮೇ |
ಧ ಕ್ರತುವಿಗೋಸುಗಂ ಮಡಿದಿರಲ್ ಬೇಡಿದೊಡೆ ಮಣಿಯಂ ಕುಡದೆ ಶೇಷನು ||
ವಕ್ರನಾದೊಡೆ ವಾಸುಕಿ ಪ್ರಮುಖ ಫಣಿಗಳ ನ |
ತಿಕ್ರಮಿಸಿ ತದ್ರತ್ನಮಂ ಕೊಂಡುಬಹೆನೆನ್ನ |
ವಿಕ್ರಮನನೀಗ ನೊಡೆನುತೆದ್ದು ಕರೆಸಿದಂ ಪಾರ್ಥಿ ನಿಜಸೈನಿಕವನು ||28||

ಪದವಿಭಾಗ-ಅರ್ಥ:
ಚಕ್ರಿಸೇವಕನು ಈ ಕಿರೀಟಿ ಧರ್ಮಾನುಜಂ ಶಕ್ರಸುತನು ಎನ್ನ ತಾತಂ ಮೇಲೆ ತುರಗಮೇಧ ಕ್ರತುವಿಗೋಸುಗಂ ಮಡಿದಿರಲ್=[ಕೃಷ್ಣನಸೇವಕನು ಈ ಅರ್ಜುನನು, ಧರ್ಮಜನ ಸೋದರ, ಇಂದ್ರನಮಗನು, ನನ್ನ ತಂದೆ, ಇಷ್ಟಲ್ಲದೆ ಅಶ್ವಮೇಧ ಕ್ರತುವಿಗಾಗಿ ಮಡಿದಿರಲು,];; ಬೇಡಿದೊಡೆ ಮಣಿಯಂ ಕುಡದೆ ಶೇಷನು ವಕ್ರನಾದೊಡೆ ವಾಸುಕಿ ಪ್ರಮುಖ ಫಣಿಗಳನು ಅತಿಕ್ರಮಿಸಿ ತದ್ ರತ್ನಮಂ ಕೊಂಡುಬಹೆನು ಎನ್ನ ವಿಕ್ರಮನು ಈಗ ನೊಡು ಎನುತ ಎದ್ದು ಕರೆಸಿದಂ ಪಾರ್ಥಿ ನಿಜಸೈನಿಕವನು=[ನಾವು ಬೇಡಿಕೊಂಡರೂ, ಮಣಿಯನ್ನು ಕೊಡದೆ ಶೇಷನು ವಿರೋಧಿಯಾದರೆ, ವಾಸುಕಿ ಪ್ರಮುಖ ನಾಗಗಳನ್ನು ಸೋಲಿಸಿ ಆ ರತ್ನವನ್ನು ತೆಗೆದುಕೊಂಡು ಬರುವೆನು. ನನ್ನ ಸಾಹಸವನ್ನು ಈಗ ನೊಡು! ಎನ್ನುತ್ತಾ ಎದ್ದು ಪಾರ್ಥನಮಗನು ತನ್ನ ಸೈನಿಕ ಸಮೂಹವನ್ನು ಕರೆಸಿದನು.]
  • ತಾತ್ಪರ್ಯ:ಕೃಷ್ಣನಸೇವಕನು ಈ ಅರ್ಜುನನು, ಧರ್ಮಜನ ಸೋದರ, ಇಂದ್ರನಮಗನು, ನನ್ನ ತಂದೆ, ಇಷ್ಟಲ್ಲದೆ ಅಶ್ವಮೇಧ ಕ್ರತುವಿಗಾಗಿ ಮಡಿದಿರಲು, ನಾವು ಬೇಡಿಕೊಂಡರೂ, ಮಣಿಯನ್ನು ಕೊಡದೆ ಶೇಷನು ವಿರೋಧಿಯಾದರೆ, ವಾಸುಕಿ ಪ್ರಮುಖ ನಾಗಗಳನ್ನು ಸೋಲಿಸಿ ಆ ರತ್ನವನ್ನು ತೆಗೆದುಕೊಂಡು ಬರುವೆನು. ನನ್ನ ಸಾಹಸವನ್ನು ಈಗ ನೊಡು! ಎನ್ನುತ್ತಾ ಎದ್ದು ಪಾರ್ಥನಮಗನು ತನ್ನ ಸೈನಿಕ ಸಮೂಹವನ್ನು ಕರೆಸಿದನು.
  • (ಪದ್ಯ-೨೮)

ಪದ್ಯ:-:೨೯:

[ಸಂಪಾದಿಸಿ]

ಫಣಿಕುಲವನಾಕ್ರಮಿಸಿಕೊಂಡು ಬಹೆನಾ ಮಹಾ |
ಮಣೆಯ ನಲ್ಲಹುದೆಂದೊಡಜ ಹರಿ ಪಿನಾಕಿಗಳ |
ಪಣೆಯಕ್ಕರಂಗಳಂ ತೊಡವೆ ನೊರಸುವೆನಷ್ಟದಿಕ್ಪಾಲರಾಯುಗಳನು ||
ಎಣಿಕೆ ಬೇಡಿದಕಿನ್ನು ವೀರ ವೃಷಕೇತು ಫ |
ಲ್ಗುಣರ ದೇಹಂಗಳತಿ ಜತನವೆಂದಾಪ್ತೆರ್ಗೆ |
ರಣದ ಸುಯ್ದಾನಮಂ ಪೇಳ್ದು ನಿಜ ಬಲಸಹಿತ ಪಾರ್ಥಸುತನನುವಾದನು ||29||

ಪದವಿಭಾಗ-ಅರ್ಥ:
ಫಣಿಕುಲವನು ಆಕ್ರಮಿಸಿಕೊಂಡು ಬಹೆನು ಆ ಮಹಾ ಮಣಿಯನು ಅಲ್ಲಹುದೆಂದೊಡೆ ಅಜ ಹರಿ ಪಿನಾಕಿಗಳ ಪಣೆಯಕ್ಕರಂಗಳಂ ತೊಡವೆನು ಒರಸುವೆನು ಅಷ್ಟದಿಕ್ಪಾಲರಾಯುಗಳನು=[ನಾಗಕುಲವನ್ನು ಆಕ್ರಮಿಸಿಕೊಂಡು ಬರುವೆನು; ಆ ಮಹಾ ಮಣಿಯನ್ನು ಅಲ್ಲ-ಅಹುದು ಎಂದರೆ,ಕೊಡಲು ಅನುಮಾನಿಸಿದರೆ, ಬ್ರಹ್ಮ, ಹರಿ ಶಿವರ ಹಣೆಯ ಬರಹಗಳನ್ನು ಅಳಿಸುವೆನು; ಅಷ್ಟದಿಕ್ಪಾಲಕರ ಆಯುಸ್ಸನ್ನು ಒರೆಸುವೆನು;];; ಎಣಿಕೆ ಬೇಡ ಇದಕಿನ್ನು ವೀರ ವೃಷಕೇತು ಫಲ್ಗುಣರ ದೇಹಂಗಳ ಅತಿ ಜತನವೆಂದು ಆಪ್ತೆರ್ಗೆ ರಣದ ಸುಯ್ದಾನಮಂ ಪೇಳ್ದು ನಿಜ ಬಲಸಹಿತ ಪಾರ್ಥಸುತನು ಅನುವಾದನು=[ಯೋಚನೆ ಮಾಡಬೇಡ; ಇದಕ್ಕೆ ಇನ್ನು ವೀರ ವೃಷಕೇತು ಫಲ್ಗುಣರ ದೇಹಗಳನ್ನು ಅತಿ ಜೋಪಾನದಿಂದ ಕಾಪಾಡಲು ಆಪ್ತರಿಗೆ ವಹಿಸಿ, ರಣದ ವಿವರವನ್ನು ಹೇಳಿ, ತನ್ನಸೈನ್ಯ ಸಹಿತ ಬಭ್ರುವಾಹನನು ಯುದ್ಧಕ್ಕೆ ಅನುವಾದನು];
  • ತಾತ್ಪರ್ಯ:ನಾಗಕುಲವನ್ನು ಆಕ್ರಮಿಸಿಕೊಂಡು ಬರುವೆನು; ಆ ಮಹಾ ಮಣಿಯನ್ನು ಅಲ್ಲ-ಅಹುದು ಎಂದರೆ,ಕೊಡಲು ಅನುಮಾನಿಸಿದರೆ, ಬ್ರಹ್ಮ, ಹರಿ ಶಿವರ ಹಣೆಯ ಬರಹಗಳನ್ನು ಅಳಿಸುವೆನು; ಅಷ್ಟದಿಕ್ಪಾಲಕರ ಆಯುಸ್ಸನ್ನು ಒರೆಸುವೆನು;ಯೋಚನೆ ಮಾಡಬೇಡ; ಇದಕ್ಕೆ ಇನ್ನು ವೀರ ವೃಷಕೇತು ಫಲ್ಗುಣರ ದೇಹಗಳನ್ನು ಅತಿ ಜೋಪಾನದಿಂದ ಕಾಪಾಡಲು ಆಪ್ತರಿಗೆ ವಹಿಸಿ, ರಣದ ವಿವರವನ್ನು ಹೇಳಿ, ತನ್ನಸೈನ್ಯ ಸಹಿತ ಬಭ್ರುವಾಹನನು ಯುದ್ಧಕ್ಕೆ ಅನುವಾದನು.
  • (ಪದ್ಯ-೨೯)

ಪದ್ಯ:-:೩೦:

[ಸಂಪಾದಿಸಿ]

ಏರಿಸಿ ಮಹಾಧನುವನಶನಿಬಾಣವನೆಚ್ಚು |
ಡೋರುಗಳೆದವನಿಯಂ ಸಪ್ತಪಾತಾಳಕ್ಕೆ |
ತೋರಿಸಿದನೊಂದು ಪೆರ್ಬಟ್ಟೆಯಂ ನಡೆದ ನಾರ್ಜುನಿ ತನ್ನ ಸೇನೆ ಸಹಿತ||
ಮೀರಿದ ಶರಾವಳಿಯ ಘಾತಿಯಂ ತವೆ ತಾಳ |
ಲಾರದೆ ಸಕಲ ಭೋಗಿತತಿ ಬಂದನಂತಂಗೆ |
ದೂರಲ್ಕೆ ಧೃತರಾಷ್ಟ್ರನಂ ಬೈದು ಫಣಿಗಳಂ ಕಾಳೆಗಕೆ ಬೀಳ್ಕೊಟ್ಟನು ||30||

ಪದವಿಭಾಗ-ಅರ್ಥ:
ಏರಿಸಿ ಮಹಾಧನುವನು ಅಶನಿಬಾಣವನು ಎಚ್ಚು ಡೋರುಗಳೆದು (ಡೋರುಗಳೆ, ಡೊಗರು +ಕಳೆದು? ದಳೆ ದು-ರಂದ್ರಮಾಡು ) ಅವನಿಯಂ ಸಪ್ತಪಾತಾಳಕ್ಕೆ ತೋರಿಸಿದನೊಂದು ಪೆರ್ಬಟ್ಟೆಯಂ ನಡೆದನು ಅರ್ಜುನಿ ತನ್ನ ಸೇನೆ ಸಹಿತ=[ಬಭ್ರವಾಹನನು ಮಹಾಧನುವನ್ನು ಹೆದೆ ಏರಿಸಿ ಅಗ್ನಿಬಾಣವನ್ನು ಪ್ರಯೋಗಿಸಿ, ಭೂಮಿಯನ್ನು ಸುರಂಗಮಾಡಿ ಸಪ್ತಪಾತಾಳಕ್ಕೆ ಒಂದು ದೊಡ್ಡ ಮಾರ್ಗವು ಕಾಣುವಂತೆ ಮಾಡಿಸದನು; ಅದರಲ್ಲಿ ಬಭ್ರುವಾಹನನು ತನ್ನ ಸೇನೆ ಸಹಿತ ನಡೆದನು.];; ಮೀರಿದ ಶರಾವಳಿಯ ಘಾತಿಯಂ ತವೆ ತಾಳಲಾರದೆ ಸಕಲ ಭೋಗಿತತಿ ಬಂದು ಅನಂತಂಗೆ ದೂರಲ್ಕೆ ಧೃತರಾಷ್ಟ್ರನಂ ಬೈದು ಫಣಿಗಳಂ ಕಾಳೆಗಕೆ ಬೀಳ್ಕೊಟ್ಟನು=[ಮಿತಿಮೀರಿದ ಬಾಣಗಳ ಧಾಳಿಯ ಪೆಟ್ಟನ್ನು ಆಗ ತಾಳಲಾರದೆ, ಸಕಲ ನಾಗಸಮೂಹ ಬಂದು ಅನಂತನಿಗೆ ದೂರಲು, ಧೃತರಾಷ್ಟ್ರನನ್ನು ಅವನ ದುರ್ಬೋದೆಗೆ ಬೈದು ನಾಗಗಳನ್ನು ಕಾಳೆಗಕ್ಕೆ ಕಳಿಸಿಕೊಟ್ಟನು.].
  • ತಾತ್ಪರ್ಯ:ಬಭ್ರವಾಹನನು ಮಹಾಧನುವನ್ನು ಹೆದೆ ಏರಿಸಿ ಅಗ್ನಿಬಾಣವನ್ನು ಪ್ರಯೋಗಿಸಿ, ಭೂಮಿಯನ್ನು ಸುರಂಗಮಾಡಿ ಸಪ್ತಪಾತಾಳಕ್ಕೆ ಒಂದು ದೊಡ್ಡ ಮಾರ್ಗವು ಕಾಣುವಂತೆ ಮಾಡಿಸದನು; ಅದರಲ್ಲಿ ಬಭ್ರುವಾಹನನು ತನ್ನ ಸೇನೆ ಸಹಿತ ನಡೆದನು.ಮಿತಿಮೀರಿದ ಬಾಣಗಳ ಧಾಳಿಯ ಪೆಟ್ಟನ್ನು ಆಗ ತಾಳಲಾರದೆ, ಸಕಲ ನಾಗಸಮೂಹ ಬಂದು ಅನಂತನಿಗೆ ದೂರಲು, ಧೃತರಾಷ್ಟ್ರನನ್ನು ಅವನ ದುರ್ಬೋಧೆಗೆ ಬೈದು ನಾಗಗಳನ್ನು ಕಾಳೆಗಕ್ಕೆ ಕಳಿಸಿಕೊಟ್ಟನು.
  • (ಪದ್ಯ-೩೦)

ಪದ್ಯ:-:೩೧:

[ಸಂಪಾದಿಸಿ]

ನಾಗ ರಥವಾಜಿಗಳ ಕಾಲಾಳ ಕೈದುಗಳ |
ನಾಗದಳಮೈದು ಯೋಜನದಗಲದಿಂದೆ ನಾ |
ನಾಗತಿಯೊಳೈತಂದುದಾರ್ಜುನಿಯ ಸೈನಿಕದಮೇಲೆ ಸನ್ನಾಹದಿಂದೆ ||
ತಾಗಿದುದು ಸರ್ಪಾವಳಿ ತಮತಮಗೆ ವಾಸಿ ಮುಂ |
ತಾಗಿ ವದನದ ವಿಷಜ್ವಾಲೆ ಮಿಗೆ ಡಾವರಿಸಿ |
ತಾ ಗಿರೀಶನಕ್ಷಿಯಿಂ ಪೊರಮಡುವ ದಳ್ಳುರಿಯ ದಾಳಿಯೆನೆ ಪರಬಲದೊಳು ||31||

ಪದವಿಭಾಗ-ಅರ್ಥ:
ನಾಗ ರಥವಾಜಿಗಳ ಕಾಲಾಳ ಕೈದುಗಳ ನಾಗದಳಮೈದು ಯೋಜನದಗಲದಿಂದೆ=[ಆನೆ ರಥ ಕುದುರೆಗಳ, ಕಾಲುದಳ ಕೈದು/ಆಯುಧಗಳ ಹೀಗಿರುವ ಸರ್ಪದಳವು ಐದು ಯೋಜನದ ಅಗಲದಲ್ಲಿ ಆವರಿಸಿ,];; ನಾನಾಗತಿಯೊಳೈತಂದುದಾರ್ಜುನಿಯ ಸೈನಿಕದಮೇಲೆ ಸನ್ನಾಹದಿಂದೆ ತಾಗಿದುದು ಸರ್ಪಾವಳಿ (ಸರ್ಪ ಆವಳಿ)ಪ=[ಆ ಅರ್ಜುನಿಯ ಸೈನ್ಯದ ಮೇಲೆ ನಾನಾಗತಿಯಲ್ಲಿ ಸರ್ಪಗಳಸಮೂಹ ಯುದ್ಧ ಸನ್ನಾಹದಿಂದ ಬಂದು ಎದುರಿಸಿತು];;ತಮತಮಗೆ ವಾಸಿ ಮುಂತಾಗಿ ವದನದ ವಿಷಜ್ವಾಲೆ ಮಿಗೆ ಡಾವರಿಸಿತು (ಸುತ್ತಿಕೊಂಡಿತು) ಆ ಗಿರೀಶನ ಅಕ್ಷಿಯಿಂ ಪೊರಮಡುವ ದಳ್ಳುರಿಯ ದಾಳಿಯೆನೆ ಪರಬಲದೊಳು=[ತಮತಮಗೆ ಹೆಸರುವಾಸಿಯಾದ ಸರ್ಪಗಳು ಮುಂದೆಬಂದು ತಾಗಿ ಮುಖದ ವಿಷಜ್ವಾಲೆ ಹೆಚ್ಚಾಗಿ ಅದು ಆ ಶಿವನ ಹಣೆಗಣ್ಣಿಂದ ಹೊರಬರುವ ದಳ್ಳುರಿಯ/ಬೆಂಕಿಯ ದಾಳಿಯಂತೆ ಶತ್ರುಸೈನ್ಯವನ್ನು (ಬಭ್ರುವಾಹನನ ಸೈನ್ಯವನ್ನು) ಸುತ್ತಿ ಆವರಿಸಿತು;].
  • ತಾತ್ಪರ್ಯ:(ಸರ್ಪಗಳ ಸೈನ್ಯವು)ಆನೆ ರಥ ಕುದುರೆಗಳ, ಕಾಲುದಳ ಕೈದು/ಆಯುಧಗಳ ಹೀಗಿರುವ ಸರ್ಪದಳವು ಐದು ಯೋಜನದ ಅಗಲದಲ್ಲಿ ಆವರಿಸಿ, ಆ ಅರ್ಜುನಿಯ ಸೈನ್ಯದ ಮೇಲೆ ನಾನಾಗತಿಯಲ್ಲಿ ಸರ್ಪಗಳಸಮೂಹ ಯುದ್ಧ ಸನ್ನಾಹದಿಂದ ಬಂದು ಎದುರಿಸಿತು; ತಮತಮಗೆ ಹೆಸರುವಾಸಿಯಾದ ಸರ್ಪಗಳು ಮುಂದೆಬಂದು ತಾಗಿ ಮುಖದ ವಿಷಜ್ವಾಲೆ ಹೆಚ್ಚಾಗಿ ಅದು ಆ ಶಿವನ ಹಣೆಗಣ್ಣಿಂದ ಹೊರಬರುವ ದಳ್ಳುರಿಯ/ಬೆಂಕಿಯ ದಾಳಿಯಂತೆ ಶತ್ರುಸೈನ್ಯವನ್ನು (ಬಭ್ರುವಾಹನನ ಸೈನ್ಯವನ್ನು) ಸುತ್ತಿ ಆವರಿಸಿತು.
  • (ಪದ್ಯ-೩೧)

ಪದ್ಯ:-:೩೨:

[ಸಂಪಾದಿಸಿ]

ಗುಳಿಕ ತಕ್ಷಕ ಶಂಖ ಕರ್ಕೋಟಕಾದಿ ಫಣಿ |
ಗಳ ತಂಡದಿಂದೆ ಧೃತರಾಷ್ಟ್ರನುರವಣಿಸಿ ಪರ |
ಬಲದೊಳಿಪ್ಪತ್ತೊಂದುಸಾಸಿರ ಭಟಾಳಿಯಂ ಕೆಡಹಲಾರ್ಜುನಿ ಕನಲ್ದು ||
ಪೊಳೆವ ಕೂರ್ಗಣೆಗಳಂ ಕರೆಯಲ್ಕೆ ಪನ್ನಗಾ |
ವಳಿಯ ತಲೆಗಳ್‍ಪರಿದು ಬೀಳುತಿರ್ದುವು ಮಹಾ |
ಪ್ರಳಯದೊಳ್ ಗಗನದಿಂದುದಿರ್ವುಡುಗಳಂತೆ ತೊಳತೊಳಪ ಪೆಡೆವಣೆಗಳೊಡನೆ ||32||

ಪದವಿಭಾಗ-ಅರ್ಥ:
ಗುಳಿಕ ತಕ್ಷಕ ಶಂಖ ಕರ್ಕೋಟಕಾದಿ ಫಣಿಗಳ ತಂಡದಿಂದೆ ಧೃತರಾಷ್ಟ್ರನು ಉರವಣಿಸಿ ಪರ ಬಲದೊಳಿಪ್ಪತ್ತೊಂದುಸಾಸಿರ ಭಟಾಳಿಯಂ ಕೆಡಹಲು=[ಗುಳಿಕ ತಕ್ಷಕ ಶಂಖ ಕರ್ಕೋಟಕ ಮೊದಲಾದ ಸರ್ಪಗಳ ತಂಡದಿಂದ, ಧೃತರಾಷ್ಟ್ರನು ಪರಾಕ್ರಮ ತೋರಿ ಶತ್ರುಸೈನ್ಯದಲ್ಲಿ ಇಪ್ಪತ್ತೊಂದು ಸಾವಿರ ಸೈನಿಕರನ್ನು ಕೊಂದುಕೆಡಗಲು,];;ರ್ಜುನಿ ಕನಲ್ದು ಪೊಳೆವ ಕೂರ್ಗಣೆಗಳಂ ಕರೆಯಲ್ಕೆ ಪನ್ನಗಾವಳಿಯ ತಲೆಗಳ್‍ ಪರಿದು ಬೀಳುತಿರ್ದುವು =[ಅರ್ಜುನಿ ಕೋಪಗೊಂಡು,ಹೊಳೆಯುವ ಚೂಪಾದ ಬಾಣಗಳನ್ನು ಅವುಗಳ ಮೇಲೆ ಸುರಿಸಲು, ಪನ್ನಗ/ ಸರ್ಪದ ಸಮೂಹಲ್ಲಿ ಅವುಗಳ ತಲೆಗಳು ಕತ್ತರಿಸಿ ಬೀಳುತ್ತಿದ್ದವು]. ಮಹಾಪ್ರಳಯದೊಳ್ ಗಗನದಿಂದ ಉದಿರ್ವ ಉಡುಗಳಂತೆ ತೊಳತೊಳಪ ಪೆಡೆವಣೆಗಳೊಡನೆ=[ಅದು ಹೇಗಿತ್ತು ಎಂದರೆ: ಮಹಾಪ್ರಳಯದಲ್ಲಿ ಆಕಾಶದಿಂದ ಹೊಳೆಹೊಳೆಯುವ ಹಡೆಹಣೆಗಳು ಒಡನೆ ಉದುರುವ ನಕ್ಷತ್ರಗಳಂತೆ ಕಾಣುತ್ತಿತ್ತು].
  • ತಾತ್ಪರ್ಯ:ಗುಳಿಕ ತಕ್ಷಕ ಶಂಖ ಕರ್ಕೋಟಕ ಮೊದಲಾದ ಸರ್ಪಗಳ ತಂಡದಿಂದ, ಧೃತರಾಷ್ಟ್ರನು ಪರಾಕ್ರಮ ತೋರಿ ಶತ್ರುಸೈನ್ಯದಲ್ಲಿ ಇಪ್ಪತ್ತೊಂದು ಸಾವಿರ ಸೈನಿಕರನ್ನು ಕೊಂದುಕೆಡಗಲು, ಅರ್ಜುನಿ ಕೋಪಗೊಂಡು,ಹೊಳೆಯುವ ಚೂಪಾದ ಬಾಣಗಳನ್ನು ಅವುಗಳ ಮೇಲೆ ಸುರಿಸಲು, ಪನ್ನಗ/ ಸರ್ಪದ ಸಮೂಹಲ್ಲಿ ಅವುಗಳ ತಲೆಗಳು ಕತ್ತರಿಸಿ ಬೀಳುತ್ತಿದ್ದವು. ಅದು ಹೇಗಿತ್ತು ಎಂದರೆ: ಮಹಾಪ್ರಳಯದಲ್ಲಿ ಆಕಾಶದಿಂದ ಹೊಳೆಹೊಳೆಯುವ ಹಡೆಹಣೆಗಳು ಒಡನೆ ಉದುರುವ ನಕ್ಷತ್ರಗಳಂತೆ ಕಾಣುತ್ತಿತ್ತು.
  • (ಪದ್ಯ-೩೨)

ಪದ್ಯ:-:೩೩:

[ಸಂಪಾದಿಸಿ]

ದರ್ವೀಕರಾವಳಿಯ ನರೆಗಡಿಯಲವು ಮತ್ತೆ |
ಸರ್ವದಳಮಂ ವಿಷಜ್ವಾಲೆಯೊಳುರಿಪಲದಕೆ |
ನಿರ್ವಾಹಮಂ ಕಂಡು ಸಾರಂಗ ಶಿಖಿ ನಕುಲ ಗೃಧ್ರಂಗಳಾಗಿ ಸೀಳ್ವ ||
ಉರ್ವ ಮಂತ್ರಾಸ್ತ್ರಂಗಳಂ ತಿರುವಿನೊಳ್ ಪೂಡಿ |
ಗೀರ್ವಾಣಪತಿ ಸುತನ ಸೂನು ಕಾಲದ ಕಡೆಯ |
ಶರ್ವನಂತಿರೆ ಕೋಪಮಂ ತಾಳ್ದು ತೆಗೆದೆಚ್ಚನೇವೇಳ್ವೆನದ್ಭುತವನು ||33||

ಪದವಿಭಾಗ-ಅರ್ಥ:
ದರ್ವೀಕರ ಆವಳಿಯನು ಅರೆಗಡಿಯಲು ಅವು ಮತ್ತೆ ಸರ್ವದಳಮಂ ವಿಷಜ್ವಾಲೆಯೊಳು ಉರಿಪಲು ಅದಕೆ ನಿರ್ವಾಹಮಂ ಕಂಡು=[ಸರ್ಪಗಳ ಸಮೂಹವನ್ನು ಅರ್ಧಕ್ಕೆ ಕಡಿಯಲು/ಕಡಿದಾಗ, ಅವು ಮತ್ತೆ ಸರ್ವಸೈನ್ಯವನ್ನು ವಿಷಜ್ವಾಲೆಯಿಂದ ಸುಡಲು, ಅದಕ್ಕೆ ಪರಿಹಾರವನ್ನು ಯೋಚಿಸಿ ಕಂಡುಕೊಂಡು,];; ಸಾರಂಗ ಶಿಖಿ ನಕುಲ ಗೃಧ್ರಂಗಳಾಗಿ ಸೀಳ್ವ ಉರ್ವ ಮಂತ್ರಾಸ್ತ್ರಂಗಳಂ ತಿರುವಿನೊಳ್ ಪೂಡಿ ಗೀರ್ವಾಣಪತಿ ಸುತನ ಸೂನು ಕಾಲದ ಕಡೆಯ ಶರ್ವನಂತಿರೆ ಕೋಪಮಂ ತಾಳ್ದು ತೆಗೆದೆಚ್ಚನೇವೇಳ್ವೆನದ್ಭುತವನು=[ಜೇನು ನವಿಲು, ಮುಂಗುಸಿ, ಹದ್ದುಗಳಾಗಿ ಸರ್ಪಗಳನ್ನು ಸೀಳುವ ಹೆಚ್ಚಿನ ಮಂತ್ರಾಸ್ತ್ರಗಳನ್ನು ತಿರುವಿನ/ಹೆದೆಯಲ್ಲಿ ಹೂಡಿ ಬಭ್ರುವಾಹನನು, ಪ್ರಳಯಕಾಲದ ಕಡೆಯ ಶಿವನಂತೆ ತೋರುತ್ತಿರಲು ಕೋಪವನ್ನು ತಾಳಿ ತೆಗೆದಹೊಡೆದನು, ಏನು ಹೇಲಲಿ ಅಧ್ಭುತವನು, ಎಂದ ಜೈಮಿನಿ.];
  • ತಾತ್ಪರ್ಯ:ಸರ್ಪಗಳ ಸಮೂಹವನ್ನು ಅರ್ಧಕ್ಕೆ ಕಡಿಯಲು/ಕಡಿದಾಗ, ಅವು ಮತ್ತೆ ಸರ್ವಸೈನ್ಯವನ್ನು ವಿಷಜ್ವಾಲೆಯಿಂದ ಸುಡಲು, ಅದಕ್ಕೆ ಪರಿಹಾರವನ್ನು ಯೋಚಿಸಿ ಕಂಡುಕೊಂಡು, ಜೇನು ನವಿಲು, ಮುಂಗುಸಿ, ಹದ್ದುಗಳಾಗಿ ಸರ್ಪಗಳನ್ನು ಸೀಳುವ ಹೆಚ್ಚಿನ ಮಂತ್ರಾಸ್ತ್ರಗಳನ್ನು ತಿರುವಿನ/ಹೆದೆಯಲ್ಲಿ ಹೂಡಿ ಬಭ್ರುವಾಹನನು, ಪ್ರಳಯಕಾಲದ ಕಡೆಯ ಶಿವನಂತೆ ತೋರುತ್ತಿರಲು ಕೋಪವನ್ನು ತಾಳಿ ತೆಗೆದಹೊಡೆದನು, ಏನು ಹೇಲಲಿ ಅಧ್ಭುತವನು, ಎಂದ ಜೈಮಿನಿ.
  • (ಪದ್ಯ-೩೩)

ಪದ್ಯ:-:೩೪:

[ಸಂಪಾದಿಸಿ]

ಇಟ್ಟಣಿಸಿ ಪದ್ದು ಸಾರಂಗ ಮುಂಗುಲಿ ನವಿಲ |
ಥಟ್ಟುರಗಸೇನೆಯಂ ಘಾತಿಸಿ ಪೊರಳ್ಚಿದುದು |
ಬಿಟ್ಟನಾರ್ಜುನಿ ಮತ್ತೆ ಮಧುಶರವನಾ ಕ್ಷತಂಗಳಮೇಲೆ ಜೇನ್ಗರೆವೊಲು ||
ತೊಟ್ಟು ತೆಗೆದೆಚ್ಚಂ ಪಿಪೀಲಿಕಾಸ್ತ್ರವನೊಡನೆ |
ಕಟ್ಟಿರುಹೆ ಮುತ್ತಿದುವು ಫಣಿಗಳಂ ಕಚ್ಚಿದುವು |
ನಿಟ್ಟಿಸುವ ಕಂಗಳಂ ತಿಂದವು ನೆಣಂಗಳಂ ಕೊರೆದು ವೊಡಲಸ್ಥಿಗಳನು ||34||

ಪದವಿಭಾಗ-ಅರ್ಥ:
ಇಟ್ಟಣಿಸಿ ಹದ್ದು, ಸಾರಂಗ ಮುಂಗುಲಿ, ನವಿಲ ಥಟ್ಟು (ಗುಂಪು) ಉರಗ ಸೇನೆಯಂ ಘಾತಿಸಿ ಪೊರಳ್ಚಿದುದು=[ಒತ್ತೊತ್ತಾಗಿ ಬಂದ ಹದ್ದು, ಸಾರಂಗ/ಜೇನು, ಮುಂಗುಲಿ, ನವಿಲು, ಇವುಗಳ ಹಿಂಡು ಉರಗ ಸೇನೆಯನ್ನು ಘಾಯಗೊಳಿಸಸಿ ಹೊರಳಿಸಿತು.];; ಬಿಟ್ಟನು ಆರ್ಜುನಿ ಮತ್ತೆ ಮಧುಶರವನು ಆ ಕ್ಷತಂಗಳಮೇಲೆ ಜೇನ್ಗರೆವೊಲು=[ ಬಭ್ರುವಾಹನನು ಮತ್ತೆ ಮಧುಶರವನು (ಜೇನು) ಆ ಘಾಯಗಳ ಮೇಲೆ ಜೇನುಸುರಿಯುವಂತೆ ಬಿಟ್ಟನು];; ತೊಟ್ಟು ತೆಗೆದೆಚ್ಚಂ ಪಿಪೀಲಿಕಾಸ್ತ್ರವನು ಒಡನೆ ಕಟ್ಟಿರುಹೆ ಮುತ್ತಿದುವು ಫಣಿಗಳಂ ಕಚ್ಚಿದುವು ನಿಟ್ಟಿಸುವ ಕಂಗಳಂ ತಿಂದವು ನೆಣಂಗಳಂ ಕೊರೆದು ವೊಡಲು ಅಸ್ಥಿಗಳನು=[ಆನಂತರ ಪಿಪೀಲಿಕಾಸ್ತ್ರವನು/ ಕಟ್ಟಿರುವೆಯ ಅಸ್ತ್ರವನ್ನು ತೊಟ್ಟು ತೆಗೆದ ಹೊಡೆದನು; ಒಡನೆಯೇ ಕಟ್ಟಿರುವೆಗಳು ನಾಗಗಳನ್ನು ಮುತ್ತಿ ದುರುಗುಟ್ಟಿ ನಿಟ್ಟಿಸುವ ಕಣ್ಣುಗಳನ್ನು ಕಚ್ಚಿದುವು; ದೇಹದ ಮಾಂಸಗಳನ್ನು ನೆಣಗಳನ್ನು ತಿಂದವು; ದೇಹದ ಅಸ್ಥಿಗಳನು ಕೊರೆದವು].
  • ತಾತ್ಪರ್ಯ:ಬಭ್ರವಾಹನನ ಅಸ್ತ್ರದಿಂದ ಇವು ಹೊರಬಂದವು; ಒತ್ತೊತ್ತಾಗಿ ಬಂದ ಹದ್ದು, ಸಾರಂಗ/ಜೇನು, ಮುಂಗುಲಿ, ನವಿಲು, ಇವುಗಳ ಹಿಂಡು ಉರಗ ಸೇನೆಯನ್ನು ಘಾಯಗೊಳಿಸಸಿ ಹೊರಳಿಸಿತು. ಬಭ್ರುವಾಹನನು ಮತ್ತೆ ಮಧುಶರವನು (ಜೇನು) ಆ ಘಾಯಗಳ ಮೇಲೆ ಜೇನುಸುರಿಯುವಂತೆ ಬಿಟ್ಟನು; ಆನಂತರ ಪಿಪೀಲಿಕಾಸ್ತ್ರವನು/ ಕಟ್ಟಿರುವೆಯ ಅಸ್ತ್ರವನ್ನು ತೊಟ್ಟು ತೆಗೆದ ಹೊಡೆದನು; ಒಡನೆಯೇ ಕಟ್ಟಿರುವೆಗಳು ನಾಗಗಳನ್ನು ಮುತ್ತಿ ದುರುಗುಟ್ಟಿ ನಿಟ್ಟಿಸುವ ಕಣ್ಣುಗಳನ್ನು ಕಚ್ಚಿದುವು; ದೇಹದ ಮಾಂಸಗಳನ್ನು ನೆಣಗಳನ್ನು ತಿಂದವು; ದೇಹದ ಅಸ್ಥಿಗಳನು ಕೊರೆದವು.
  • (ಪದ್ಯ-೩೪)

ಪದ್ಯ:-:೩೫:

[ಸಂಪಾದಿಸಿ]

ಪೋಟೆಗೊಂಬುಗಳ ಪಳಮರದಂತೆ ತಿರುಳಿಲ್ಲ |
ದೋಟೆಗಳ ತಿಂತ್ರಿಣೀಫಲದಂತೆ ಕುಳಿಕ ಕ |
ರ್ಕೋಟಕಾದಿಗಳೊಡಲ್ ಪೋಳ್ಳಾದುವಿರುಹೆಗಳ ಮುತ್ತಿಗೆಗೆ ಕಂಗೆಟ್ಟುವು ||
ತೋಟಿಯಂ ತಂದ ಧೃತರಾಷ್ಟ್ರನ ವರೂಥಮಂ |
ಘೋಟಕವನಿಷು ಕಾರ್ಮುಕಂಗಳಂ ಖಂಡಿಸಿ ಕಿ |
ರೀಟಿಸುತನುರುಬಿದೊಡೆ ಮುರಿವಡೆದುರಗಸೇನೆ ಶೇಷನಿದ್ದೆಡೆಗೋಡಿತು ||35|||

ಪದವಿಭಾಗ-ಅರ್ಥ:
ಪೋಟೆಗೊಂಬುಗಳ ಪಳಮರದಂತೆ ತಿರುಳಿಲ್ಲದ ಓಟೆಗಳ ತಿಂತ್ರಿಣೀಫಲದಂತೆ ಕುಳಿಕ ಕರ್ಕೋಟಕಾದಿಗಳ ಒಡಲ್ ಪೋಳ್ಳಾದುವು ಇರುಹೆಗಳ ಮುತ್ತಿಗೆಗೆ ಕಂಗೆಟ್ಟುವು=[ಟೊಳ್ಳಾದ ರೆಂಬೆಗಳ ಹಳೆಯ ಮರದಂತೆ, ತಿರುಳಿಲ್ಲದ ಓಟೆಗಳ ಹುಣಿಸೇ ಫಲದಂತೆ, ಕುಳಿಕ ಕರ್ಕೋಟಕಾದಿ ಸರ್ಪಗಳ ದೇಹ ಪೋಳ್ಳಾದುವು; ಆ ಸರ್ಪಗಳು ಇರುಹೆಗಳ ಮುತ್ತಿಗೆಗೆ ದಿಕ್ಕುತೋರದಂತಾದವು, ಕಂಗೆಟ್ಟುವು.];;ತೋಟಿಯಂ (ವಿರೋಧ ಜಗಳ) ತಂದ ಧೃತರಾಷ್ಟ್ರನ ವರೂಥಮಂ ಘೋಟಕವನು (ಘೋಡ- ಕುದುರೆ) ಇಷು ಕಾರ್ಮುಕಂಗಳಂ ಖಂಡಿಸಿ ಕಿರೀಟಿಸುತನು ಉರುಬಿದೊಡೆ ಮುರಿವಡೆದು ಉರಗಸೇನೆ ಶೇಷನಿದ್ದೆಡೆಗೆ ಓಡಿತು=[ಯುದ್ಧವನ್ನು ತಂದ ಧೃತರಾಷ್ಟ್ರನ ರಥವನ್ನು ಕುದುರೆಯನ್ನು ಬಾಣಗಳನ್ನೂ ಬಿಲ್ಲುಗಳನ್ನೂ ಖಂಡಿಸಿ ಬಭ್ರುವಾಹನನು ಆಕ್ರಮಿಸಿದಾಗ ಮುರಿದು ಒಡೆದು/ಸೋತು ದಿಕ್ಕುಗೆಟ್ಟು, ನಾಗರಸೈನ್ಯ ಶೇಷನಿದ್ದೆ ಕಡೆಗೆ ಓಡಿತು.]
  • ತಾತ್ಪರ್ಯ:ನಾಗ ಸೇನೆಯು, ಟೊಳ್ಳಾದ ರೆಂಬೆಗಳ ಹಳೆಯ ಮರದಂತೆ, ತಿರುಳಿಲ್ಲದ ಓಟೆಗಳ ಹುಣಿಸೇ ಫಲದಂತೆ, ಕುಳಿಕ ಕರ್ಕೋಟಕಾದಿ ಸರ್ಪಗಳ ದೇಹ ಪೋಳ್ಳಾದುವು; ಆ ಸರ್ಪಗಳು ಇರುಹೆಗಳ ಮುತ್ತಿಗೆಗೆ ದಿಕ್ಕುತೋರದಂತಾದವು, ಕಂಗೆಟ್ಟುವು. ಯುದ್ಧವನ್ನು ತಂದ ಧೃತರಾಷ್ಟ್ರನ ರಥವನ್ನು ಕುದುರೆಯನ್ನು ಬಾಣಗಳನ್ನೂ ಬಿಲ್ಲುಗಳನ್ನೂ ಖಂಡಿಸಿ ಬಭ್ರುವಾಹನನು ಆಕ್ರಮಿಸಿದಾಗ ಮುರಿದು ಒಡೆದು/ಸೋತು ದಿಕ್ಕುಗೆಟ್ಟು, ನಾಗರಸೈನ್ಯ ಶೇಷನಿದ್ದೆ ಕಡೆಗೆ ಓಡಿತು.
  • (ಪದ್ಯ-೩೫)

ಪದ್ಯ:-:೩೬:

[ಸಂಪಾದಿಸಿ]

ಕೆಟ್ಟೋಡಿ ಬಂದಹಿಗಳಾರ್ಜುನಿಗೆ ರತ್ನಮಂ |
ಕೊಟ್ಟುಳುಹಬೇಕೆಂದು ನಾಗರಾಜಂಗೆ ಮೊರೆ |
ಯಿಟ್ಟೊಡಾತಂ ಕನಲ್ದೇಕೆ ತಡೆದಿರಿಮೊದಲ್ ಮಂತ್ರಜ್ಞರಿಳೆಯ ನರರು ||
ಕಟ್ಟುಗ್ರಮಾಗಿರ್ದ ನಿಮ್ಮ ವಿಷಕಂಜರಿ |
ನ್ನಟ್ಟಿ ಸುಡದಿರನೀಗ ಪಾರ್ಥಿ ಪಾತಾಳಮಂ |
ನೆಟ್ಟನೆ ಸಮರ್ಥರ್ಗೆ ತನುವನೊಪ್ಪಿಸದೊಡುಳಿವರೇ ಕೃಶರೆಂದನು ||36||

ಪದವಿಭಾಗ-ಅರ್ಥ:
ಕೆಟ್ಟೋಡಿ ಬಂದ ಅಹಿಗಳು ಅರ್ಜುನಿಗೆ ರತ್ನಮಂ ಕೊಟ್ಟು ಉಳುಹಬೇಕೆಂದು ನಾಗರಾಜಂಗೆ ಮೊರೆಯಿಟ್ಟೊಡೆ ಆತಂ ಕನಲ್ದು ಏಕೆ ತಡೆದಿರಿ ಮೊದಲ್ ಮಂತ್ರಜ್ಞರು ಇಳೆಯ ನರರು=[ಯುದ್ಧದಲ್ಲಿ ಸೋತು, ಕೆಟ್ಟು ಓಡಿ ಬಂದ ನಾಗಗಳು ಅರ್ಜುನಿಗೆ ರತ್ನವನ್ನು ಕೊಟ್ಟು ತಮ್ಮನ್ನು ಉಳಿಸಬೇಕೆಂದು ನಾಗರಾಜನಿಗೆ ಮೊರೆಯಿಟ್ಟಾಗ ಆವನು ಸಿಟ್ಟುಮಾಡಿ ಮಣಿಯನ್ನು ಕಡುವುದನ್ನು ಏಕೆ ತಡೆದಿರಿ ಮೊದಲು? ಭೂಮಿಯ ಮಾನವರು ಮಂತ್ರಜ್ಞರು. ];; ಕಟ್ಟುಗ್ರಮ್ ಆಗಿರ್ದ ನಿಮ್ಮ ವಿಷಕೆ ಅಂಜರು ಇನ್ನಟ್ಟಿ ಸುಡದಿರನು ಈಗ ಪಾರ್ಥಿ ಪಾತಾಳಮಂ ನೆಟ್ಟನೆ ಸಮರ್ಥರ್ಗೆ ತನುವನು ಒಪ್ಪಿಸದೊಡೆ ಉಳಿವರೇ ಕೃಶರೆಂದನು=[ಬಹಳ ಉಗ್ರವಾಗಿರುವ ನಿಮ್ಮ ವಿಷಕ್ಕೆ ಅವರು ಹೆದರುವುದಿಲ್ಲ! ಇನ್ನು ನಿಮ್ಮನ್ನು ಅಟ್ಟಿಸಿಕೊಂಡು ಬಂದು ಈಗ ಪಾರ್ಥಿಯು ಪಾತಾಳವನ್ನು ನೇರವಾಗಿ ಸುಡದೆ ಇರುವುದಿಲ್ಲ! ಸಮರ್ಥರಿಗೆ ದೇಹವನ್ನು ಒಪ್ಪಿಸದಿದ್ದರೆ (ಶರಣಾಗತರಾಗದಿದ್ದರೆ) ಉಳಿವರೇ ಕೃಶರು(ಶಕ್ತಿಹೀನರು) ಎಂದನು ].
  • ತಾತ್ಪರ್ಯ:ಯುದ್ಧದಲ್ಲಿ ಸೋತು, ಕೆಟ್ಟು ಓಡಿ ಬಂದ ನಾಗಗಳು ಅರ್ಜುನಿಗೆ ರತ್ನವನ್ನು ಕೊಟ್ಟು ತಮ್ಮನ್ನು ಉಳಿಸಬೇಕೆಂದು ನಾಗರಾಜನಿಗೆ ಮೊರೆಯಿಟ್ಟಾಗ ಆವನು ಸಿಟ್ಟುಮಾಡಿ ಮಣಿಯನ್ನು ಕಡುವುದನ್ನು ಏಕೆ ತಡೆದಿರಿ ಮೊದಲು? ಭೂಮಿಯ ಮಾನವರು ಮಂತ್ರಜ್ಞರು ಎಂದನು. ಬಹಳ ಉಗ್ರವಾಗಿರುವ ನಿಮ್ಮ ವಿಷಕ್ಕೆ ಅವರು ಹೆದರುವುದಿಲ್ಲ! ಇನ್ನು ನಿಮ್ಮನ್ನು ಅಟ್ಟಿಸಿಕೊಂಡು ಬಂದು ಈಗ ಪಾರ್ಥಿಯು ಪಾತಾಳವನ್ನು ನೇರವಾಗಿ ಸುಡದೆ ಇರುವುದಿಲ್ಲ! ಸಮರ್ಥರಿಗೆ ಶರಣಾಗತರಾಗದಿದ್ದರೆ ಉಳಿಯುವರೇ ದುರ್ಬಲರು ಎಂದನು.
  • (ಪದ್ಯ-೩೬)XIV

ಪದ್ಯ:-:೩೭:

[ಸಂಪಾದಿಸಿ]

ಸಾಕದಂತಿರಲಿನ್ನು ಪಾರ್ಥಿಯ ಶರಾಗ್ನಿಯಿಂ |
ಕಾಕೋದರಾಳಿ ಬೇಯದ ಮುನ್ನಮಾರ್ಜುನಿಗೆ |
ಬೇಕಾದ ವಸ್ತುವಂ ಕೊಟ್ಟೆಮ್ಮನುಳುಹೆಂದು ಫಣಿಕುಲಂ ಬಾಯ ಬಿಡಲು ||
ಲೋಕದೊಳ್ ದಾನ ಧರ್ಮೋಪಕಾರಂಗಳ್ಗೆ |
ತಾ ಕುಡದೆ ಮಾಜಿಕೊಂಡಿರ್ದ ಲೋಭಿಯ ಧನಂ |
ಕಾಕಭಾಜನಮಪ್ಪುದಡವಿಯೊಳ್ ಬಿದ್ದ ಪೆಣನಂತೆಂದನುರಗೇಂದ್ರನು ||37||

ಪದವಿಭಾಗ-ಅರ್ಥ:
ನಾಗಗಳು ಶೇಷನನ್ನು ಕುರಿತು, ಸಾಕು ಅದಂತಿರಲಿ ಇನ್ನು ಪಾರ್ಥಿಯ ಶರಾಗ್ನಿಯಿಂ ಕಾಕೋದರ ಆಳಿ ಬೇಯದ ಮುನ್ನಂ ಆರ್ಜುನಿಗೆ ಬೇಕಾದ ವಸ್ತುವಂ ಕೊಟ್ಟು ಎಮ್ಮನು ಉಳುಹೆಂದು ಫಣಿಕುಲಂ ಬಾಯ ಬಿಡಲು=[ನಾಗಗಳು ಶೇಷನನ್ನು ಕುರಿತು, ಸಾಕು ಅದು ಹಾಗಿರಲಿ, ಇನ್ನು ಪಾರ್ಥಜನ ಆಗ್ನೇಯ ಅಸ್ತ್ರದಿಂದ ಸರ್ಪಗಳ ಸಮೂಹವನ್ನು, ಅವು ಸುಟ್ಟುಹೋಗುವುದಕ್ಕೆ ಮುಂಚೆ ಆರ್ಜುನಿಗೆ ಬೇಕಾದ ವಸ್ತುವನ್ನು/ ಮಣಿಯನ್ನು ಕೊಟ್ಟು ನಮ್ಮನ್ನು ಉಳಿಸು ಎಂದು ಸರ್ಪಸಂಕುಲವು ಹೆದರಿ ಬಾಯಿ ಬಿಡುತ್ತರಲು, ];; ಲೋಕದೊಳ್ ದಾನ ಧರ್ಮೋಪಕಾರಂಗಳ್ಗೆ ತಾ ಕುಡದೆ ಮಾಜಿಕೊಂಡಿರ್ದ ಲೋಭಿಯ ಧನಂ ಕಾಕಭಾಜನಂ ಅಪ್ಪುದು ಅಡವಿಯೊಳ್ ಬಿದ್ದ ಪೆಣನಂತೆ ಎಂದನು ಉರಗೇಂದ್ರನು=[ಲೋಕದಲ್ಲಿ ದಾನ ಧರ್ಮೋಪಕಾರಗಳಿಗೆ ತಾವು ಮನಸ್ಸುಕೊಡದೆ ಹಿಂಜರಿಯುವ ಲೋಭಿಯ ಧನವನ್ನು ವ್ಯರ್ಥವಾಗುವುದು; ಅದು ಅಡವಿಯಲ್ಲಿ ಬಿದ್ದ ಹೆಣದಂತೆ ಎಂದನು ನಾಗೇಂದ್ರನು].
  • ತಾತ್ಪರ್ಯ:ನಾಗಗಳು ಶೇಷನನ್ನು ಕುರಿತು, ಸಾಕು ಅದು ಹಾಗಿರಲಿ, ಇನ್ನು ಪಾರ್ಥಜನ ಆಗ್ನೇಯ ಅಸ್ತ್ರದಿಂದ ಸರ್ಪಗಳ ಸಮೂಹವನ್ನು, ಅವು ಸುಟ್ಟುಹೋಗುವುದಕ್ಕೆ ಮುಂಚೆ ಆರ್ಜುನಿಗೆ ಬೇಕಾದ ವಸ್ತುವನ್ನು/ ಮಣಿಯನ್ನು ಕೊಟ್ಟು ನಮ್ಮನ್ನು ಉಳಿಸು ಎಂದು ಸರ್ಪಸಂಕುಲವು ಹೆದರಿ ಬಾಯಿ ಬಿಡುತ್ತರಲು,ಲೋಕದಲ್ಲಿ ದಾನ ಧರ್ಮೋಪಕಾರಗಳಿಗೆ ತಾವು ಮನಸ್ಸುಕೊಡದೆ ಹಿಂಜರಿಯುವ ಲೋಭಿಯ ಧನವನ್ನು ವ್ಯರ್ಥವಾಗುವುದು; ಅದು ಅಡವಿಯಲ್ಲಿ ಬಿದ್ದ ಹೆಣದಂತೆ ಎಂದನು ನಾಗೇಂದ್ರನು.
  • (ಪದ್ಯ-೩೭)

ಪದ್ಯ:-:೩೮:

[ಸಂಪಾದಿಸಿ]

ಧರಣೀಧರ ನಮ್ಮ ದುರ್ನೀತಿಯಂ ನೋಡದಿರ್ |
ಮುರಹರ ಪ್ರೀತಿಯಪ್ಪಂತೆ ಕುಡು ರತ್ನಮಂ |
ನರ ಸುತಂಗರ್ಜುನಂ ಬದುಕಲೆಂದಹಿಗಳಾ ಶೇಷನಂ ಬೇಡಿಕೊಳಲು ||
ಹರಿಯ ಕಾರುಣ್ಯಸಂಜೀವನಂ ಪಾಂಡವ |
ರ್ಗಿರಲದೇಗೆಯ್ವುದಾವಿತ್ತಮಣಿ ದುಗ್ಧ ಸಾ |
ಗರಕಜಕ್ಷೀರಮಂ ಬೆರಸಿದುಪಕಾರಮಹುದೆಂದು ಮತ್ತಿಂತೆಂದನು ||38||

ಪದವಿಭಾಗ-ಅರ್ಥ:
ಧರಣೀಧರ ನಮ್ಮ ದುರ್ನೀತಿಯಂ ನೋಡದಿರ್ ಮುರಹರ ಪ್ರೀತಿಯಪ್ಪಂತೆ ಕುಡು ರತ್ನಮಂ ನರ ಸುತಂಗೆ ಅರ್ಜುನಂ ಬದುಕಲೆಂದು ಅಹಿಗಳಾ ಶೇಷನಂ ಬೇಡಿಕೊಳಲು=[ಧರಣೀಧರನಾದ ಶೇಷನೇ ನಮ್ಮ ಕೆಟ್ಟನೆಡತೆಯನ್ನು ನೋಡದಿರು; ಮುರಹರನಿಗೆ ಪ್ರೀತಿಯಾಗುವಂತೆ ಬಭ್ರವಾಹನನಿಗೆ ರತ್ನವನ್ನು ಕೊಡು; ಅರ್ಜುನನು ಬದುಕಲಿ ಎಂದು ಸರ್ಪಗಳು ಶೇಷನನ್ನು ಬೇಡಿಕೊಳ್ಳಲು ];; ಹರಿಯ ಕಾರುಣ್ಯಸಂಜೀವನಂ ಪಾಂಡವರ್ಗೆ ಇರಲು ಅದು ಏಗೆಯ್ವುದು ಆವು ಇತ್ತಮಣಿ ದುಗ್ಧ ಸಾಗರಕೆ ಅಜಕ್ಷೀರಮಂ ಬೆರಸಿದ ಉಪಕಾರಮಹುದೆಂದು ಮತ್ತೆ ಇಂತೆದನು=[ಹರಿಯ ಕರುಣೆ ಎಂಬ ಸಂಜೀವನವು ಪಾಂಡವರಿಗೆ ಇರಲು ಅದೇನು ಮಾಡುವುದು; ನಾವು ಕೊಟ್ಟ ಮಣಿ ಕ್ಷೀರ ಸಮುದ್ರಕ್ಕೆ ಆಡಿನ ಹಾಲನ್ನು ಬೆರಸಿದಂತೆ, ಈ ಉಪಕಾರವು ಆಗುವುದು, ಎಂದು ಮತ್ತೆ ಹಿಗೆ ಹೇಳಿದನು ].
  • ತಾತ್ಪರ್ಯ:ಧರಣೀಧರನಾದ ಶೇಷನೇ ನಮ್ಮ ಕೆಟ್ಟನೆಡತೆಯನ್ನು ನೋಡದಿರು; ಮುರಹರನಿಗೆ ಪ್ರೀತಿಯಾಗುವಂತೆ ಬಭ್ರವಾಹನನಿಗೆ ರತ್ನವನ್ನು ಕೊಡು; ಅರ್ಜುನನು ಬದುಕಲಿ ಎಂದು ಸರ್ಪಗಳು ಶೇಷನನ್ನು ಬೇಡಿಕೊಳ್ಳಲು, ಹರಿಯ ಕರುಣೆ ಎಂಬ ಸಂಜೀವನವು ಪಾಂಡವರಿಗೆ ಇರಲು ಅದೇನು ಮಾಡುವುದು; ನಾವು ಕೊಟ್ಟ ಮಣಿ ಕ್ಷೀರ ಸಮುದ್ರಕ್ಕೆ ಆಡಿನ ಹಾಲನ್ನು ಬೆರಸಿದಂತೆ, ಈ ಉಪಕಾರವು ಆಗುವುದು, ಎಂದು ಮತ್ತೆ ಹಿಗೆ ಹೇಳಿದನು.
  • (ಪದ್ಯ-೩೮)

ಪದ್ಯ:-:೩೯:

[ಸಂಪಾದಿಸಿ]

ಈ ಮಣಿಯುಮಂ ಕಲ್ಪತರು ಕಾಮಧೇನು ಚಿಂ |
ತಾಮಣಿಯುಮಂ ಬಯಸಲೇಕಕಟ ಯಾದವ ಶಿ |
ಖಾಮಣಿಯನುನ್ನತದ ಭಕ್ತಿಯಿಂದರಿವರ್ಗೆ ಸಾಕದಂತಿರಲಿ ನೀವು ||
ಆ ಮಣಿಯ ಧಾನಮಂ ತಡೆದ ಪಾಪಂ ಹರಿಯ |
ರಾಮಣೀಯಕ ಮೂರ್ತಿ ದರ್ಶನದೊಳಲ್ಲದುದು |
ತಾಮಣಿಯದಂಜದಿರಿ ಗರುಡಂ ಮುಳಿವನಲ್ಲ ಬನ್ನಿ ಪೋಗುವ(ವೆಂ)ಮೆಂದನು ||39||

ಪದವಿಭಾಗ-ಅರ್ಥ:
ಈ ಮಣಿಯುಮಂ ಕಲ್ಪತರು ಕಾಮಧೇನು ಚಿಂತಾಮಣಿಯುಮಂ ಬಯಸಲೇಕೆ ಅಕಟ ಯಾದವ ಶಿಖಾಮಣಿಯನು ಉನ್ನತದ ಭಕ್ತಿಯಿಂದ ಅರಿವರ್ಗೆ=[ಈ ಮಣಿಯನ್ನಾಗಲಿ, ಕಲ್ಪತರು ಕಾಮಧೇನು ಚಿಂತಾಮಣಿಗಳನ್ನಾಗಲಿ ಬಯಸುವುದೇಕೆ ಅಕಟ! ಯಾದವ ಶಿಖಾಮಣಿ ಕೃಷ್ಣನನ್ನು ಬಹಳ ಭಕ್ತಿಯಿಂದ ಅರಿಯುವವರಿಗೆ ಈ ಮಣಿ ಏಕೆ?];; ಸಾಕು ಅದಂತಿರಲಿ ನೀವು ಆ ಮಣಿಯ ಧಾನಮಂ ತಡೆದ ಪಾಪಂ ಹರಿಯ ರಾಮಣೀಯಕ ಮೂರ್ತಿ ದರ್ಶನದೊಳು ಅಲ್ಲದೆ ಅದು ತಾ ಮಣಿಯದು (ಬಗ್ಗದು,ಹೋಗದು) ಅಂಜದಿರಿ ಗರುಡಂ ಮುಳಿವನಲ್ಲ ಬನ್ನಿ ಪೋಗುವವೆಂದನು=[ಸಾಕು ಅದು ಹಾಗಿರಲಿ ನೀವು ಆ ಮಣಿಯ ದಾನವನ್ನು ತಡೆದ ಪಾಪವು, ಹರಿಯ ರಾಮಣೀಯಕ ಮೂರ್ತಿ ದರ್ಶನಮಾಡದೆ ಹೋಗುವಿದಿಲ್ಲ. ಅಂಜಬೇಡಿ, ಗರುಡನು ಕ್ರೋದಮಾಡುವಿದಿಲ್ಲ; ಹೋಗೋಣ ಬನ್ನಿ ಎಂದನು.].
  • ತಾತ್ಪರ್ಯ:ಈ ಮಣಿಯನ್ನಾಗಲಿ, ಕಲ್ಪತರು ಕಾಮಧೇನು ಚಿಂತಾಮಣಿಗಳನ್ನಾಗಲಿ ಬಯಸುವುದೇಕೆ ಅಕಟ! ಯಾದವ ಶಿಖಾಮಣಿ ಕೃಷ್ಣನನ್ನು ಬಹಳ ಭಕ್ತಿಯಿಂದ ಅರಿಯುವವರಿಗೆ ಈ ಮಣಿ ಏಕೆ? ಸಾಕು ಅದು ಹಾಗಿರಲಿ ನೀವು ಆ ಮಣಿಯ ದಾನವನ್ನು ತಡೆದ ಪಾಪವು, ಹರಿಯ ರಾಮಣೀಯಕ ಮೂರ್ತಿ ದರ್ಶನಮಾಡದೆ ಹೋಗುವಿದಿಲ್ಲ. ಅಂಜಬೇಡಿ, ಗರುಡನು ಕ್ರೋದಮಾಡುವಿದಿಲ್ಲ; ಹೋಗೋಣ ಬನ್ನಿ ಎಂದನು ಶೇಷನು.]
  • (ಪದ್ಯ-೩೯)

ಪದ್ಯ:-:೪೦:

[ಸಂಪಾದಿಸಿ]

ಇಂತೆಂದಖಿಳ ಪನ್ನಗಾವಳಿಯ ನೊಡಗೊಂಡ |
ನಂತರದೊಳಾ ಮಹಾ ಮಣಿವೆರಸಿ ಪೊರಮಟ್ಟ |
ನಂತನುರು ಕುಂಡಲ ದ್ವಿತಯಮಂ ಶತ ಶಲಾಕೆಯೊಳೆಸೆವ ಸತ್ತಿಗೆಯನು ||
ಸಂತಸದೊಳಾರ್ಜುನಿಗೆ ಕೊಟ್ಟು ಕಂಡಾತನಂ |
ಸಂತೈಸಿ ಪಾತಾಳದುತ್ತಮ ಸುವಸ್ತು ಸಹಿ |
ತಂತರಿಸುತೈದಿದಂ ಫಲುಗುಣಂ ಮಡಿದಿಹ ರಣಾವನಿಗೆ ಸಂಭ್ರಮಮೊಳು ||40||

ಪದವಿಭಾಗ-ಅರ್ಥ:
ಇಂತೆಂದು ಅಖಿಳ ಪನ್ನಗಾವಳಿಯನು ಒಡಗೊಂಡ ನಂತರದೊಳು ಆ ಮಹಾ ಮಣಿವೆರಸಿ ಪೊರಮಟ್ಟ ಅನಂತನು ಉರು ಕುಂಡಲ ದ್ವಿತಯಮಂ ಶತ ಶಲಾಕೆಯೊಳೆ ಎಸೆವ ಸತ್ತಿಗೆಯನು=[ಹೀಗೆ ಹೇಳಿ ಅಖಿಲ ಸರ್ಪಸಮೂಹವನ್ನು ಸೇರಿಸಿಕೊಂಡು, ನಂತರ ಆ ಮಹಾ ಮಣಿಯಜೊತೆ ಹೊರಟು, ಅನಂತನು ದೊಡ್ಡ ಎರಡು ಕುಂಡಲಗಳನ್ನೂ, ಶತ ಕಡ್ಡಿಗಳಿಂದ ಶೋಭಿಸುವ ಛತ್ರಯನ್ನೂ,];; ಸಂತಸದೊಳು ಆರ್ಜುನಿಗೆ ಕೊಟ್ಟು ಕಂಡು ಆತನಂ ಸಂತೈಸಿ ಪಾತಾಳದ ಉತ್ತಮ ಸುವಸ್ತು ಸಹಿತ ಅಂತರಿಸುತ ಐದಿದಂ ಫಲುಗುಣಂ ಮಡಿದಿಹ ರಣಾವನಿಗೆ ಸಂಭ್ರಮಮೊಳು=[ ಸಂತಸದಿಂದ ಬಭ್ರುವಾಹನನಿಗೆ ಕೊಟ್ಟು ಆತನನ್ನು ಕಂಡು ಸಮಾಧಾನಪಡಿಸಿ ಪಾತಾಳಲೋಕದ ಉತ್ತಮ ಸುವಸ್ತು ಸಹಿತ ತಡಮಾಡದೆ ಫಲುಗುಣನು ಮಡಿದಿದ್ದ ರಣಭೂಮಿಗೆ ಸಂಭ್ರಮದಿಂದ ಹೊರಟನು.]
  • ತಾತ್ಪರ್ಯ:ಹೀಗೆ ಹೇಳಿ ಅಖಿಲ ಸರ್ಪಸಮೂಹವನ್ನು ಸೇರಿಸಿಕೊಂಡು, ನಂತರ ಆ ಮಹಾ ಮಣಿಯಜೊತೆ ಹೊರಟು, ಅನಂತನು ದೊಡ್ಡ ಎರಡು ಕುಂಡಲಗಳನ್ನೂ, ಶತ ಕಡ್ಡಿಗಳಿಂದ ಶೋಭಿಸುವ ಛತ್ರಯನ್ನೂ, ಸಂತಸದಿಂದ ಬಭ್ರುವಾಹನನಿಗೆ ಕೊಟ್ಟು ಆತನನ್ನು ಕಂಡು ಸಮಾಧಾನಪಡಿಸಿ ಪಾತಾಳಲೋಕದ ಉತ್ತಮ ಸುವಸ್ತು ಸಹಿತ ತಡಮಾಡದೆ ಫಲುಗುಣನು ಮಡಿದಿದ್ದ ರಣಭೂಮಿಗೆ ಸಂಭ್ರಮದಿಂದ ಹೊರಟನು.
  • (ಪದ್ಯ-೪೦)

ಪದ್ಯ:-:೪೧:

[ಸಂಪಾದಿಸಿ]

ಸುಮ್ಮಾನದಿಂದೆ ಶೇಷಂ ಪೋಗುತಿರೆ ಕಂಡು |
ದುಮ್ಮಾನದಿಂದೆ ಧೃತರಾಷ್ಟ್ರಂ ನಿಜಾಲಯದೊ |
ಳುಮ್ಮಳಿಸಿ ಮಣಿವಿಜಯಮಾರ್ಜುನಿಗೆ ಪಾರ್ಥಂಗೆ ಜೀವಂ ಯುಧಿಷ್ಠರಂಗೆ ||
ತಮ್ಮನಭ್ಯುದಯಂ ಮಹಾಧ್ವರಕೆ ತುರಗ ಮಿನಿ |
ತೊಮ್ಮೆ ಸಂಜನಿಸುತಿರ್ದಪುದಕಟ ಬಹು ವಿಘ್ನ |
ಮಂ ಮಾಡಿದೆಂ ತಪ್ಪಿತೀಗಳಾನೇಗೈವೆನೆಂದು ಚಿಂತಿಸುತಿರ್ದನು ||41||

ಪದವಿಭಾಗ-ಅರ್ಥ:
ಸುಮ್ಮಾನದಿಂದೆ ಶೇಷಂ ಪೋಗುತಿರೆ ಕಂಡು ದುಮ್ಮಾನದಿಂದೆ ಧೃತರಾಷ್ಟ್ರಂ =[ಉತ್ಸಾಹದಿಂದ ಶೇಷನು ಹೋಗುತ್ತಿಲು, ಅದನ್ನು ಧೃತರಾಷ್ಟ್ರನು ಕಂಡು ದುಗುಡದಿಂದ, ];;ನಿಜ ಆಲಯದೊಳು ಉಮ್ಮಳಿಸಿ ಮಣಿವಿಜಯಂ ಆರ್ಜುನಿಗೆ ಪಾರ್ಥಂಗೆ ಜೀವಂ ಯುಧಿಷ್ಠರಂಗೆ ತಮ್ಮನಭ್ಯುದಯಂ ಮಹಾಧ್ವರಕೆ ತುರಗ ಮಿನಿತೊಮ್ಮೆ ಸಂಜನಿಸುತಿರ್ದಪುದಕಟ=[ತನ್ನ ಮನೆಯಲ್ಲಿ ದುಃಖಪಟ್ಟು, ಆರ್ಜುನಿಗೆ ಮಣಿಯನ್ನು ಪಡೆಯುವಲ್ಲಿ ಜಯವಾಯಿತು, ಪಾರ್ಥಂಗೆ ಜೀವಬರುವುದು, ಯುಧಿಷ್ಠರನಿಗೆ ತಮ್ಮನ ಅಭ್ಯುದಯ ದೊರಕಿತು, ಮಹಾಧ್ವರಕ್ಕೆ ಕುದುರೆ ಸಿಕ್ಕಿತು, ಇವು ಅಷ್ಟೂ ಸಿಕ್ಕಿತಲ್ಲಾ ಅಕಟ!];; ಬಹು ವಿಘ್ನಮಂ ಮಾಡಿದೆಂ ತಪ್ಪಿತೀಗಳಾನೇಗೈವೆನೆಂದು ಚಿಂತಿಸುತಿರ್ದನು=[ಬಹಳ ವಿಘ್ನವನ್ನು ಮಾಡಿದರೂ ಅದು ತಪ್ಪಿತು.ಈಗ ಏನುಮಾಡಲಿ ಎಂದು ಚಿಂತಿಸುತ್ತಿದ್ದನು.].
  • ತಾತ್ಪರ್ಯ:ಉತ್ಸಾಹದಿಂದ ಶೇಷನು ಅರ್ಜುನನ ಬಳಿಗೆ ಹೋಗುತ್ತಿಲು, ಅದನ್ನು ಧೃತರಾಷ್ಟ್ರನು ಕಂಡು ದುಗುಡದಿಂದ, ತನ್ನ ಮನೆಯಲ್ಲಿ ದುಃಖಪಟ್ಟು, ಆರ್ಜುನಿಗೆ ಮಣಿಯನ್ನು ಪಡೆಯುವಲ್ಲಿ ಜಯವಾಯಿತು, ಪಾರ್ಥಂಗೆ ಜೀವಬರುವುದು, ಯುಧಿಷ್ಠರನಿಗೆ ತಮ್ಮನ ಅಭ್ಯುದಯ ದೊರಕಿತು, ಮಹಾಧ್ವರಕ್ಕೆ ಕುದುರೆ ಸಿಕ್ಕಿತು, ಇವು ಅಷ್ಟೂ ಸಿಕ್ಕಿತಲ್ಲಾ ಅಕಟ! ಬಹಳ ವಿಘ್ನವನ್ನು ಮಾಡಿದರೂ ಅದು ತಪ್ಪಿತು.ಈಗ ಏನುಮಾಡಲಿ ಎಂದು ಚಿಂತಿಸುತ್ತಿದ್ದನು.
  • (ಪದ್ಯ-೪೧)

ಪದ್ಯ:-:೪೨:

[ಸಂಪಾದಿಸಿ]

ಅನ್ನೆಗಂ ದುರ್ಬುದ್ಧಿ ದುಸ್ಸ್ವಭಾವರ್ಕಳೆಂ |
ಬುನ್ನತದ ಪೆಸರುಳ್ಳ ಮಕ್ಕಳುಂಟಿರ್ವರಾ |
ಪನ್ನಗಂಗವರಾತನಂ ಸಂತವಿಟ್ಟು ನೀಂ ಬಹುದು ಫಣಿರಾಜನೊಡನೆ ||
ಮುನ್ನಮೆ ರಣಕೆ ಪೋಗಿ ಪಾರ್ಥನ ತಲೆಯನಾವು |
ಗನ್ನದಿಂ ಕೊಂಡೊಯ್ವೆವೆಮ್ಮ ಚೇಷ್ಟೆಗಳಿಂದೆ |
ಭಿನ್ನಮಾಗದೆ ನರರ್ಗೆ ಬಾಳ್ಕೆ ಬಾರದೆ ನರಕಮಂಜಬೇಡಿದಕೆಂದರು ||42||

ಪದವಿಭಾಗ-ಅರ್ಥ:
ಅನ್ನೆಗಂ ದುರ್ಬುದ್ಧಿ ದುಸ್ಸ್ವಭಾವರ್ಕಳು ಅಂಬ ಉನ್ನತದ ಪೆಸರುಳ್ಳ ಮಕ್ಕಳುಂಟು ಇರ್ವರು ಆ ಪನ್ನಗಂಗೆ ಅವರು ಅತನಂ ಸಂತವಿಟ್ಟು ನೀಂ ಬಹುದು ಫಣಿರಾಜನೊಡನೆ=[ಅಷ್ಟರಲ್ಲಿ ಬಂದರು, ದುರ್ಬುದ್ಧಿ ದುಸ್ಸ್ವಭಾವರು ಎಂಬ ಉತ್ತಮ ಹೆಸರುಳ್ಳ ಇಬ್ಬರು ಮಕ್ಕಳು ಆ ಸರ್ಪನಿಗೆ ಇದ್ದರು; ಅವರು ಅತನನ್ನು ಸಮಾಧಾನಪಡಿಸಿ, ನೀನು ಫಣಿರಾಜನ ಜೊತೆ ರಣಭೂಮಿಗೆ ಬರುವುದು, ];; ಮುನ್ನಮೆ ರಣಕೆ ಪೋಗಿ ಪಾರ್ಥನ ತಲೆಯನಾವು ಗನ್ನದಿಂ (ಗನ್ನ-ಕನ್ನ) ಕೊಂಡೊಯ್ವೆವು ಎಮ್ಮ ಚೇಷ್ಟೆಗಳಿಂದೆ ಭಿನ್ನಮಾಗದೆ ನರರ್ಗೆ ಬಾಳ್ಕೆ ಬಾರದೆ ನರಕಮಂ ಅಂಜಬೇಡ ಇದಕೆ ಎಂದರು=[ಅದಕ್ಕೆ ಮೊದಲೇ ರಣಕ್ಕೆ ನಾವು ಹೋಗಿ ಪಾರ್ಥನ ತಲೆಯನ್ನು ಕಳ್ಳತನದಿಂದ ತೆಗೆದುಕೊಂಡು ಹೋಗುವೆವು. ನಮ್ಮ ಕಾರ್ಯಗಳಿಂದ ನರನಿಗೆ ಬಾಳು ಕೆಡುಕಾಗದೆ ಬಾರದೆ ನರಕವು ಬರದೆ ಇರದು! ಇದಕ್ಕೆ ಅಂಜಬೇಡ ಎಂದರು].
  • ತಾತ್ಪರ್ಯ:ಅಷ್ಟರಲ್ಲಿ ಬಂದರು, ದುರ್ಬುದ್ಧಿ ದುಸ್ಸ್ವಭಾವರು ಎಂಬ ಉತ್ತಮ ಹೆಸರುಳ್ಳ ಇಬ್ಬರು ಮಕ್ಕಳು ಆ ಸರ್ಪನಿಗೆ ಇದ್ದರು; ಅವರು ಅತನನ್ನು ಸಮಾಧಾನಪಡಿಸಿ, ನೀನು ಫಣಿರಾಜನ ಜೊತೆ ರಣಭೂಮಿಗೆ ಬರುವುದು, ಅದಕ್ಕೆ ಮೊದಲೇ ರಣಕ್ಕೆ ನಾವು ಹೋಗಿ ಪಾರ್ಥನ ತಲೆಯನ್ನು ಕಳ್ಳತನದಿಂದ ತೆಗೆದುಕೊಂಡು ಹೋಗುವೆವು. ನಮ್ಮ ಕಾರ್ಯಗಳಿಂದ ನರನಿಗೆ ಬಾಳು ಕೆಡುಕಾಗದೆ ಬಾರದೆ ನರಕವು ಬರದೆ ಇರದು! ಇದಕ್ಕೆ ಅಂಜಬೇಡ ಎಂದರು].
  • (ಪದ್ಯ-೪೨)

ಪದ್ಯ:-:೪೩:

[ಸಂಪಾದಿಸಿ]

ಅರಸ ಕೇಳ್ ದುರ್ಬುದ್ಧಿ ದುಸ್ಸ್ವಭಾವರ್ ಮೊದಲೆ |
ಧರೆಗೆ ಬಂದರ್ಜುನನ ತಲೆಯನಪಹರಿಸಿಕೊಂ |
ಡಿರದೆ ಬಕದಾಲ್ಭ್ಯನ ಮಹಾಘೋರ ನಿರ್ಜನಾರಣ್ಯದೊಳ್ ಬಿಸುಡಲಿತ್ತ ||
ಹರಿಸದಿಂ ಶೇಷನಂ ಮುಂದಿಕ್ಕಿಕೊಂಡು ಮಣಿ |
ವೆರಸಿ ರಣಮಂಡಲಕೆ ಕಲಿ ಬಭ್ರುವಾಹನಂ |
ಬರಲಾ ಸಮಯದೊಳಾದುದು ಬಹಳ ಕಳಕಳಂ ಕಾಣದೆ ನರನ ಶಿರವನು ||43||

ಪದವಿಭಾಗ-ಅರ್ಥ:
ಅರಸ ಕೇಳ್ ದುರ್ಬುದ್ಧಿ ದುಸ್ಸ್ವಭಾವರ್ ಮೊದಲೆ ಧರೆಗೆ ಬಂದು ಅರ್ಜುನನ ತಲೆಯನು ಅಪಹರಿಸಿಕೊಂಡು ಇರದೆ ಬಕದಾಲ್ಭ್ಯನ ಮಹಾಘೋರ ನಿರ್ಜನಾರಣ್ಯದೊಳ್ ಬಿಸುಡಲು=[ಅರಸ ಕೇಳು, ದುರ್ಬುದ್ಧಿ ದುಸ್ಸ್ವಭಾವರು ಮೊದಲೆ ಭೂಮಿಗೆ ಬಂದು ಅರ್ಜುನನ ತಲೆಯನ್ನು ಅಪಹರಿಸಿಕೊಂಡು ಅಲ್ಲಿರದೆ ಬಕದಾಲ್ಭ್ಯನೆಂಬ ಮುನಿ ಇರುವ ಮಹಾಘೋರ ನಿರ್ಜನ ಅರಣ್ಯದಲ್ಲಿ ಬಿಸುಟರು;]; ಇತ್ತ ಹರಿಸದಿಂ ಶೇಷನಂ ಮುಂದಿಕ್ಕಿಕೊಂಡು ಮಣಿವೆರಸಿ ರಣಮಂಡಲಕೆ ಕಲಿ ಬಭ್ರುವಾಹನಂ ಬರಲು ಆ ಸಮಯದೊಳು ಆದುದು ಬಹಳ ಕಳಕಳಂ ಕಾಣದೆ ನರನ ಶಿರವನು=[ಇತ್ತ ಸಂತೋಷದಿಂದ ಶೇಷನನ್ನು ಮುಂದಿಟ್ಟುಕೊಂಡು ಮಣಿಸಹಿತ ರಣರಂಗದ ಭೂಮಿಗೆ ಶೂರ ಬಭ್ರುವಾಹನನು ಬರಲು, ಆ ಸಮಯದಲ್ಲಿ ಅರ್ಜುನನ ಶಿರವನ್ನು ಕಾಣದೆ ಬಹಳ ಕಳವಳ ಗಡಿಬಿಡಿ ಆಯಿತು.]
  • ತಾತ್ಪರ್ಯ:ಅರಸ ಕೇಳು, ದುರ್ಬುದ್ಧಿ ದುಸ್ಸ್ವಭಾವರು ಮೊದಲೆ ಭೂಮಿಗೆ ಬಂದು ಅರ್ಜುನನ ತಲೆಯನ್ನು ಅಪಹರಿಸಿಕೊಂಡು ಅಲ್ಲಿರದೆ ಬಕದಾಲ್ಭ್ಯನೆಂಬ ಮುನಿ ಇರುವ ಮಹಾಘೋರ ನಿರ್ಜನ ಅರಣ್ಯದಲ್ಲಿ ಬಿಸುಟರು; ಇತ್ತ ಸಂತೋಷದಿಂದ ಶೇಷನನ್ನು ಮುಂದಿಟ್ಟುಕೊಂಡು ಮಣಿಸಹಿತ ರಣರಂಗದ ಭೂಮಿಗೆ ಶೂರ ಬಭ್ರುವಾಹನನು ಬರಲು, ಆ ಸಮಯದಲ್ಲಿ ಅರ್ಜುನನ ಶಿರವನ್ನು ಕಾಣದೆ ಬಹಳ ಕಳವಳ ಗಡಿಬಿಡಿ ಆಯಿತು.
  • (ಪದ್ಯ-೪೩)

ಪದ್ಯ:-:೪೪:

[ಸಂಪಾದಿಸಿ]

ಕಾಂತೆಯರೊಡನೆ ತನ್ನ ಜನನಿಯರ್ ಕುಂಡಲದ |
ಕಾಂತಿಯಿಂದಾ ರಣಾಗ್ರದೊಳೆಸೆಯುತಿರ್ದ ನಿಜ |
ಕಾಂತನ ಶಿರವನಲ್ಲಿ ಕಾಣದೇನಾದುದಾರೊಯ್ದರೆಲ್ಲಿರ್ಪುದೆಂದು ||
ಪ್ರಾಂತದೆಣ್ದೆಸೆಗಳಂ ನೋಡಿ ಹಮ್ಮೈಸಿ ವಿ |
ಭ್ರಾಂತಿಯಿಂದರಸಿ ಹಾಹಾಯೆಂಬ ರಭಸಮಾ |
ಶಾಂತಮಂ ತೀವಲಾ ಸಮಯಕಹಿಪತಿ ಸಹಿತ ಬಭ್ರುವಾಹಂ ಬಂದನು ||44||

ಪದವಿಭಾಗ-ಅರ್ಥ:
ಕಾಂತೆಯರೊಡನೆ ತನ್ನ ಜನನಿಯರ್ ಕುಂಡಲದ ಕಾಂತಿಯಿಂದಾ ರಣಾಗ್ರದೊಳ್ ಎಸೆಯುತಿರ್ದ ನಿಜ ಕಾಂತನ ಶಿರವನಲ್ಲಿ ಕಾಣದೆ=[ಅರ್ಜುನನ ಪತ್ನಿಯರೂ, ಬಭ್ರುವಾಹನನ/ ತನ್ನ ತಾಯಂದಿರೂ ಆದ ಚಿತ್ರಾಂಗದೆ ಉಲೂಪಿಯರು, ಕುಂಡಲದ ಕಾಂತಿಯಿಂದ ಶೋಬಿಸುತ್ತಿದ್ದ ತಮ್ಮ ಕಾಂತನ ಶಿರವನ್ನು ಅಲ್ಲಿ, ಆ ರಣಾಗ್ರದಲ್ಲಿ ಒಡನೆ/ಆ ಕ್ಷಣದಲ್ಲಿ ಕಾಣದೆ];; ಏನಾದುದು ಆರೊಯ್ದರು ಎಲ್ಲಿರ್ಪುದೆಂದು ಪ್ರಾಂತದ ಎಣ್ದೆಸೆಗಳಂ ನೋಡಿ ಹಮ್ಮೈಸಿ ವಿಭ್ರಾಂತಿಯಿಂದ ಅರಸಿ=[ಏನಾಯಿತು, ಯಾರು ಒಯ್ದರು, ಎಲ್ಲಿದೆ,ಎಂದು ಆ ಪ್ರದೇಶದ ಎಂಟುದಿಕ್ಕುಗಳನ್ನೂ ನೋಡಿ ದುಃಖಿತರಾಗಿ ದಿಕ್ಕುಗಾಣದೆ ಅದನ್ನು ಹುಡುಕಿ,]; ಹಾ ಹಾಯೆಂಬ ರಭಸಂ (ಕೂಗು)ಆಶಾಂತಮಂ (ದಿಗಂತವನ್ನು) ತೀವಲು ಆ ಸಮಯಕೆ ಅಹಿಪತಿ ಸಹಿತ ಬಭ್ರುವಾಹಂ ಬಂದನು=[ ಹಾ ಹಾಯೆಂಬ ಕೂಗು ದಿಗಂತವನ್ನು ವ್ಯಾಪಿಸಲು, ಆ ಸಮಯಕ್ಕೆ ಅಹಿಪತಿಯಾದ ಶೇಷನ ಸಹಿತ ಬಭ್ರುವಾಹನನು ಬಂದನು].
  • ತಾತ್ಪರ್ಯ:ಅರ್ಜುನನ ಪತ್ನಿಯರೂ, ಬಭ್ರುವಾಹನನ/ ತನ್ನ ತಾಯಂದಿರೂ ಆದ ಚಿತ್ರಾಂಗದೆ ಉಲೂಪಿಯರು, ಕುಂಡಲದ ಕಾಂತಿಯಿಂದ ಶೋಬಿಸುತ್ತಿದ್ದ ತಮ್ಮ ಕಾಂತನ ಶಿರವನ್ನು ಅಲ್ಲಿ, ಆ ರಣಾಗ್ರದಲ್ಲಿ ಒಡನೆ/ಆ ಕ್ಷಣದಲ್ಲಿ ಕಾಣದೆ, ಏನಾಯಿತು, ಯಾರು ಒಯ್ದರು, ಎಲ್ಲಿದೆ,ಎಂದು ಆ ಪ್ರದೇಶದ ಎಂಟು ದಿಕ್ಕುಗಳನ್ನೂ ನೋಡಿ ದುಃಖಿತರಾಗಿ ದಿಕ್ಕುಗಾಣದೆ ಅದನ್ನು ಹುಡುಕಿ, ಹಾ ಹಾಯೆಂಬ ಕೂಗು ದಿಗಂತವನ್ನು ವ್ಯಾಪಿಸಲು, ಆ ಸಮಯಕ್ಕೆ ಅಹಿಪತಿಯಾದ ಶೇಷನ ಸಹಿತ ಬಭ್ರುವಾಹನನು ಬಂದನು].
  • (ಪದ್ಯ-೪೪)

ಪದ್ಯ:-:೪೫:

[ಸಂಪಾದಿಸಿ]

ಅಕ್ಕರೊಳುಲೂಪಿ ಚಿತ್ರಾಂಗದೆಯರನ್ನೆಗಂ |
ಕಕ್ಕಸದ ರಣದೊಳರ್ಜುನನ ಕಾಲ್ದೆಸೆಯೊಳೆವೆ |
ಯಿಕ್ಕದೆ ರಮಣನ ತಲೆತನುಗಳಂ ನೋಡುತಿರ್ದವರಾಗ ಪಾರ್ಥಿ ಬರಲು ||
ಇಕ್ಕೆಯೊಳ್ ಶಿರಮಿಲ್ಲದಿರೆ ಬೆದರಿ ಮೈಮರೆಯೆ |
ಮಿಕ್ಕಸತಿಯರ ನೆರವಿ ಗಜಬಜಿಸಿ ಕಂಡಿಳೆಯೊ |
ಳೊಕ್ಕನೊಡಲಂ ಬಭ್ರುವಾಹನಂ ಮೃತಕಲ್ಪನಾಗಿ ಪಲವೆಣಿಕೆಯಿಂದೆ ||45||

ಪದವಿಭಾಗ-ಅರ್ಥ:
ಅಕ್ಕರೊಳು (ಅಕ್ಕರ, ಅಕ್ಕರೆ-ಪ್ರೀತಿ)ಉಲೂಪಿ ಚಿತ್ರಾಂಗದೆಯರು ಅನ್ನೆಗಂ ಕಕ್ಕಸದ (ಕರ್ಕಶ, ಕಠಿಣ)ರಣದೊಳು ಅರ್ಜುನನ ಕಾಲ್ದೆಸೆಯೊಳು ಎವೆಯಿಕ್ಕದೆ ರಮಣನ ತಲೆತನುಗಳಂ ನೋಡುತಿರ್ದವರು=[ಪ್ರೀತಿಯಿಂದ ಉಲೂಪಿ ಚಿತ್ರಾಂಗದೆಯರು ಅಲ್ಲಿಯವರೆಗೂ, ಕಠೀನಪರಿಸ್ಥಿತಿಯ ರಣಭೂಮಿಯಲ್ಲಿ ಅರ್ಜುನನ ಕಾಲಿನಬಳಿ ಕುಳಿತು ಎವೆಯಿಕ್ಕದೆ ಪತಿಯ ತಲೆಮತ್ತು ದೇಹಗಳನ್ನು ನೋಡುತ್ತಿದ್ದರು,];; ಆಗ ಪಾರ್ಥಿ ಬರಲು ಇಕ್ಕೆಯೊಳ್ ಶಿರಮಿಲ್ಲದಿರೆ ಬೆದರಿ ಮೈಮರೆಯೆ ಮಿಕ್ಕಸತಿಯರ ನೆರವಿ ಗಜಬಜಿಸಿ ಕಂಡು=[ಆಗ ಪಾರ್ಥಿ/ಬಭ್ರುವಾಹನನು ಬರಲು ಇದ್ದಸ್ಥಳದಲ್ಲಿ ಶಿರವು ಇಲ್ಲದಿರಲು, ಹೆದರಿ ಎಚ್ಚರತಪ್ಪಿದಳು, ಆಗ ಉಳಿದ ಹೆಂಗಸರ ಗಡಿಬಿಡಿಯಿಂದ ನೆರವು ನೀಡುತ್ತರಲು, ಅದನ್ನು ಕಂಡು];; ಇಳೆಯೊಳು ಒಕ್ಕನೊಡಲಂ (ಒಕ್ಕು-ಹೊಕ್ಕು, ಇಳಿ;ಒಡಲು- ದೇಹ) ಬಭ್ರುವಾಹನಂ ಮೃತಕಲ್ಪನಾಗಿ(ಸತ್ತುಹೋದ ಭಾವ) ಪಲವು ಎಣಿಕೆಯಿಂದೆ (ಹಲವುಬಗೆಯಲ್ಲಿ ಚಿಂತಿಸಿ)=[ಬಭ್ರುವಾಹನನು ಹಲವು ಬಗೆಯಲ್ಲಿ ಚಿಂತಿಸಿ,(ದಿಕ್ಕುಗಾಣದೆ) ಸತ್ತುಹೋದ ಭಾವದಿಂದ ಭೂಮಿಯಲ್ಲಿ ದೇಹಸಮೇತ ಇಳಿದು ಹೋದಂತಾದನು].
  • ತಾತ್ಪರ್ಯ:ಪ್ರೀತಿಯಿಂದ ಉಲೂಪಿ ಚಿತ್ರಾಂಗದೆಯರು ಅಲ್ಲಿಯವರೆಗೂ, ಕಠೀನಪರಿಸ್ಥಿತಿಯ ರಣಭೂಮಿಯಲ್ಲಿ ಅರ್ಜುನನ ಕಾಲಿನಬಳಿ ಕುಳಿತು ಎವೆಯಿಕ್ಕದೆ ಪತಿಯ ತಲೆಮತ್ತು ದೇಹಗಳನ್ನು ನೋಡುತ್ತಿದ್ದರು, ಆಗ ಪಾರ್ಥಿ/ಬಭ್ರುವಾಹನನು ಬರಲು ಇದ್ದಸ್ಥಳದಲ್ಲಿ ಶಿರವು ಇಲ್ಲದಿರಲು, ಹೆದರಿ ಎಚ್ಚರತಪ್ಪಿದಳು, ಆಗ ಉಳಿದ ಹೆಂಗಸರ ಗಡಿಬಿಡಿಯಿಂದ ನೆರವು ನೀಡುತ್ತರಲು, ಅದನ್ನು ಕಂಡು ಬಭ್ರುವಾಹನನು ಹಲವು ಬಗೆಯಲ್ಲಿ ಚಿಂತಿಸಿ,(ದಿಕ್ಕುಗಾಣದೆ) ಸತ್ತುಹೋದ ಭಾವದಿಂದ ಭೂಮಿಯಲ್ಲಿ ದೇಹಸಮೇತ ಇಳಿದು ಹೋದಂತಾದನು.
  • (ಪದ್ಯ-೪೫)

ಪದ್ಯ:-:೪೬:

[ಸಂಪಾದಿಸಿ]

ಇಂತಾಗುತಿರಲಿತ್ತ ಲತ್ತಲಿಭನಗರದೊಳ್ |
ಕುಂತಿ ಪಾರ್ಥಂ ಬಿದ್ದದಿನದಿರುಳ್ ಕಂಡಳ |
ತ್ಯಂತ ಭೀಕರದ ಕನಸಂ ಪೇಳ್ದಳಸುರಾರಿ ಧರ್ಮಜ ವೃಕೋದರರ್ಗೆ ||
ಅಂತಕನ ದೆಸೆಗೆ ಸೈರಿಭವನೇರಿ (ರಾಸಭವನೇರಿ)ಪೊ |
ಪಂ ತೈಲ ವಾಪಿ ಗತನಾಗಿ ದಾಸಣದ ಪೂ |
ವಂ ತೊಡಂದಾಳ್ದು ಗೋಮಯ ವಿಲಿಪ್ತಾಂಗನಾಗಿರ್ದಪಂ ವಿಜಯನೆಂದು ||46||

ಪದವಿಭಾಗ-ಅರ್ಥ:
ಇಂತು ಆಗುತಿರಲು ಇತ್ತಲು ಅತ್ತಲು ಇಭನಗರದೊಳ್ ಕುಂತಿ ಪಾರ್ಥಂ ಬಿದ್ದದಿನದ ಇರುಳ್ ಕಂಡಳು ಅತ್ಯಂತ ಭೀಕರದ ಕನಸಂ=[ಇತ್ತ ಮಣಿಪುರದ ಬಳಿ ಹೀಗೆ ಆಗುತ್ತಿರಲು; ಅತ್ತ ಹಸ್ತಿನಾಪುರದಲ್ಲಿ ಕುಂತಿ ಪಾರ್ಥನು ರಣದಲ್ಲಿ ಬಿದ್ದ ದಿನದ ರಾತ್ರಿ ಅತ್ಯಂತ ಭೀಕರದ ಕನಸನ್ನು ಕಂಡಳು.];; ಪೇಳ್ದಳು ಅಸುರಾರಿ ಧರ್ಮಜ ವೃಕೋದರರ್ಗೆ ಅಂತಕನ ದೆಸೆಗೆ ಸೈರ (ಕೋಣ, ಮೌನ, ನೀರವತೆ; XಇಭವನೇರಿX(ಇಭ - ಆನೆ) ರಾಸಭವನೇರಿ (Ŗರಾಸಭ- ಕತ್ತೆ) ಪೊಪಂ ತೈಲವಾಪಿಗತನಾಗಿ (ಎಣ್ನೆಯಲ್ಲಿ ಮುಳುಗು) ದಾಸಣದ ಪೂವಂ ತೊಡಂದ ಆಳ್ದು (ಧರಿಸಿ) ಗೋಮಯ ವಿಲಿಪ್ತಾಂಗನಾಗಿ ಇರ್ದಪಂ ವಿಜಯನೆಂದು=[ಆಕನಸಿನ ವಿಷಯವನ್ನು ಕೃಷ್ಣ, ಧರ್ಮಜ, ವೃಕೋದರರಿಗೆ ಹೇಳಿದಳು. ಕನಸಿನಲ್ಲಿ ಅರ್ಜುನನು ಅಂತಕನ/ದಕ್ಷಿಣ ದಿಕ್ಕಿಗೆ ಕತ್ತೆಯನ್ನು ಏರಿ ಹೋಗುತ್ತಿದ್ದನು, ಎಳ್ಳುಎಣ್ನೆಯನ್ನು ಬಳಿದುಕೊಂಡಿದ್ದನು; ದಾಸವಾಳದ ಹೂವನ್ನು ಒಡೆವೆಯಾಗಿ ತೊಟ್ಟು, ಮೈಗೆ ಗೋಮಯವನ್ನು ಬಳಿದುಕೊಂಡಿದ್ದನು, ಎಂದು ಕುಂತಿ ಹೇಳಿದಳು.]
  • ತಾತ್ಪರ್ಯ:ಇತ್ತ ಮಣಿಪುರದ ಬಳಿ ಹೀಗೆ ಆಗುತ್ತಿರಲು; ಅತ್ತ ಹಸ್ತಿನಾಪುರದಲ್ಲಿ ಕುಂತಿ ಪಾರ್ಥನು ರಣದಲ್ಲಿ ಬಿದ್ದ ದಿನದ ರಾತ್ರಿ ಅತ್ಯಂತ ಭೀಕರದ ಕನಸನ್ನು ಕಂಡಳು. ಆ ಕನಸಿನ ವಿಷಯವನ್ನು ಕೃಷ್ಣ, ಧರ್ಮಜ, ವೃಕೋದರರಿಗೆ ಹೇಳಿದಳು. ಕನಸಿನಲ್ಲಿ ಅರ್ಜುನನು ಅಂತಕನ/ದಕ್ಷಿಣ ದಿಕ್ಕಿಗೆ ಕತ್ತೆಯನ್ನು ಏರಿ ಹೋಗುತ್ತಿದ್ದನು, ಎಳ್ಳುಎಣ್ನೆಯನ್ನು ಬಳಿದುಕೊಂಡಿದ್ದನು; ದಾಸವಾಳದ ಹೂವನ್ನು ಒಡೆವೆಯಾಗಿ ತೊಟ್ಟು, ಮೈಗೆ ಗೋಮಯವನ್ನು ಬಳಿದುಕೊಂಡಿದ್ದನು, ಎಂದು ಕುಂತಿ ಹೇಳಿದಳು.
  • (ಪದ್ಯ-೪೬)

ಪದ್ಯ:-:೪೭:

[ಸಂಪಾದಿಸಿ]

ಬೆಂದಪುದು ಪಡೆದೆನ್ನೊಡಲ್ ಸುಭದ್ರೆಯ ಕಂಗ |
ಳಿಂದೊಸರ್ದಪುದು ಕಂಬನಿ ಕೃಷ್ಣ ನಿನ್ನ ಸಖ |
ನಿಂದು ಜೀವಂತನಾಗಿರ್ಪುದರಿದೆಂದು ಪೃಥೆ ಹಂಬಲಿಸಿ ಮರುಗುತಿರಲು ||
ಇಂದಿರಾವಲ್ಲಭಂ ಗರುಡನಂ ನೆನೆಯಲ್ಕೆ |
ಬಂದನಾತಂ ಬಳಿಕವನ ಬೆನ್ನಡರ್ದನಿಲ |
ನಂದನ ಯಶೋದೆ ದೇವಕಿ ಕುಂತಿಯರ್ವೆರಸಿ ಮಣಿಪುರಕೆ ನಡೆತಂದನು ||47||

ಪದವಿಭಾಗ-ಅರ್ಥ:
ಬೆಂದಪುದು ಪಡೆದ ಎನ್ನೊಡಲ್ ಸುಭದ್ರೆಯ ಕಂಗಳಿಂದ ಒಸರ್ದಪುದು ಕಂಬನಿ ಕೃಷ್ಣ ನಿನ್ನ ಸಖನಿಂದು ಜೀವಂತನಾಗಿ ಇರ್ಪುದು ಅರಿದು (ತಿಳಿಯುದು) ಎಂದು ಪೃಥೆ ಹಂಬಲಿಸಿ ಮರುಗುತಿರಲು=[ಅರ್ಜುನನ್ನು ಹಡೆದ ನನ್ನ ಹೊಟ್ಟೆಯು ಬೇಯತ್ತಿದೆ, ಇನ್ನು ಸುಭದ್ರೆಯ ಕಣ್ಣಗಳಿಂದ ನೀರು ಸುರಿಯುವುದು, ಕೃಷ್ಣಾ ನಿನ್ನ ಸಖನು ಇಂದು ಜೀವಂತವಾಗಿ ಇರುವುದು ಅನುಮಾನವೆಂದು ಕುಂತಿ ಹಂಬಲಿಸಿ ಮರುಗುತ್ತಿರಲು];; ಇಂದಿರಾವಲ್ಲಭಂ ಗರುಡನಂ ನೆನೆಯಲ್ಕೆ ಬಂದನು ಆತಂ ಬಳಿಕವನ ಬೆನ್ನ ಅಡರ್ದು ಅನಿಲ ನಂದನ ಯಶೋದೆ ದೇವಕಿ ಕುಂತಿಯರ್ ವೆರಸಿ ಮಣಿಪುರಕೆ ನಡೆತಂದನು=[ಕೃಷ್ಣನು ಗರುಡನನ್ನು ನೆನೆಯಲು ಅವನು ಬಂದನು; ಕೃಷ್ನನು ಬಳಿಕ ಅವನ ಬೆನ್ನ ಏರಿಕೊಂಡು, ಭೀಮ, ಯಶೋದೆ, ದೇವಕಿ, ಕುಂತಿಯರ ಸಹಿತ ಮಣಿಪುರಕ್ಕೆ ಬಂದನು].
  • ತಾತ್ಪರ್ಯ:ಅರ್ಜುನನ್ನು ಹಡೆದ ನನ್ನ ಹೊಟ್ಟೆಯು ಬೇಯತ್ತಿದೆ, ಇನ್ನು ಸುಭದ್ರೆಯ ಕಣ್ಣಗಳಿಂದ ನೀರು ಸುರಿಯುವುದು, ಕೃಷ್ಣಾ ನಿನ್ನ ಸಖನು ಇಂದು ಜೀವಂತವಾಗಿ ಇರುವುದು ಅನುಮಾನವೆಂದು ಕುಂತಿ ಹಂಬಲಿಸಿ ಮರುಗುತ್ತಿರಲು, ಕೃಷ್ಣನು ಗರುಡನನ್ನು ನೆನೆಯಲು ಅವನು ಬಂದನು; ಕೃಷ್ನನು ಬಳಿಕ ಅವನ ಬೆನ್ನ ಏರಿಕೊಂಡು, ಭೀಮ, ಯಶೋದೆ, ದೇವಕಿ, ಕುಂತಿಯರ ಸಹಿತ ಗರಡುನ ಮೇಲೇರಿ ಮಣಿಪುರಕ್ಕೆ ಬಂದನು].
  • (ಪದ್ಯ-೪೭)

ಪದ್ಯ:-:೪೮:

[ಸಂಪಾದಿಸಿ]

ವಿಸ್ತರದ ರಾಜಭವನದ ಮಾಟಕೂಟದಯು |
ತ ಸ್ತಂಭದಿಂದೆಸೆವ ಸಭೆಯ ನವರತ್ನದ ಗ |
ಭಸ್ತಿಗಳ ಕೋಟಾವಲಯದ ಮಣಿಪುರಮಂ ಪೊರಗೆ ಕಾದಿ ಮಡಿದ ರಣದ ||
ಹಸ್ತಿಹಯ ನರವೃಂದಮಂ ಸುತ್ತುಲುರಿವ ದೀ |
ಪಸ್ತೋಮಮಂ ಬಿದ್ದ ಪಾರ್ಥನಂ ನೆರೆದಿಹ ಸ |
ಮಸ್ತ ಸತಿಯರನಭ್ರದಿಂ ಶೌರಿ ಭೀಮಂಗೆ ತೋರಿ ಮಗುಳಿಂತೆಂದನು ||48||

ಪದವಿಭಾಗ-ಅರ್ಥ:
ವಿಸ್ತರದ ರಾಜಭವನದ ಮಾಟಕೂಟದ ಅಯುತಸ್ತಂಭದಿಂದ (ಅಯುತ-ಹತ್ತುಸಾವಿರ,ಅಸಂಖ್ಯ ) ಎಸೆವ ಸಭೆಯ ನವರತ್ನದ ಗಭಸ್ತಿಗಳ ಕೋಟಾವಲಯದ ಮಣಿಪುರಮಂ=[ವಿಸ್ತಾರವಾದ ರಾಜಭವನದ ಸುಂದರವಾಗಿ ಜೋಡಿಸಿದ ಸಾವಿರಾರು ಸ್ತಂಭಗಳಿಂದ ಎಸೆವ ಸಭೆಯ, ನವರತ್ನದ ಪ್ರಕಾಶಗಳ ಕೋಟೆಯಿಂದ ಸುತ್ತುವರಿದ ಮಣಿಪುರವನ್ನೂ,];; ಪೊರಗೆ ಕಾದಿ ಮಡಿದ ರಣದ ಹಸ್ತಿ ಹಯ ನರವೃಂದಮಂ ಸುತ್ತುಲು ಉರಿವ ದೀಪಸ್ತೋಮಮಂ ಬಿದ್ದ ಪಾರ್ಥನಂ=[ಅದ ಹೊರಗೆ ಹೋರಾಡಿ ಮಡಿದ ರಣರಂಗದಲ್ಲಿರುವ ಆನೆ, ಕುದುರೆ, ಭಟರಸಮೂಹ, ಸುತ್ತುಲು ಉರಿಯುತ್ತಿರುವ ದೀಪಸ್ತೋಮವನ್ನೂ, ಬಿದ್ದ ಪಾರ್ಥನನ್ನೂ,];; ನೆರೆದಿಹ ಸಮಸ್ತ ಸತಿಯರನು ಅಭ್ರದಿಂ ಶೌರಿ ಭೀಮಂಗೆ ತೋರಿ ಮಗುಳ ಇಂತೆಂದನು=[ನೆರೆದಿರುವ ಸಮಸ್ತ ಸತಿಯರನ್ನೂ ಆಕಾಶದಿಂದ ಶೌರಿ ಭೀಮನಿಗೆ ತೋರಿಸಿ ಮತ್ತೆ ಹೀಗೆ ಹೇಳಿದನು].
  • ತಾತ್ಪರ್ಯ:ವಿಸ್ತಾರವಾದ ರಾಜಭವನದ ಸುಂದರವಾಗಿ ಜೋಡಿಸಿದ ಸಾವಿರಾರು ಸ್ತಂಭಗಳಿಂದ ಎಸೆವ ಸಭೆಯ, ನವರತ್ನದ ಪ್ರಕಾಶಗಳ ಕೋಟೆಯಿಂದ ಸುತ್ತುವರಿದ ಮಣಿಪುರವನ್ನೂ, ಅದ ಹೊರಗೆ ಹೋರಾಡಿ ಮಡಿದ ರಣರಂಗದಲ್ಲಿರುವ ಆನೆ, ಕುದುರೆ, ಭಟರಸಮೂಹ, ಸುತ್ತುಲು ಉರಿಯುತ್ತಿರುವ ದೀಪಸ್ತೋಮವನ್ನೂ, ಬಿದ್ದ ಪಾರ್ಥನನ್ನೂ, ನೆರೆದಿರುವ ಸಮಸ್ತ ಸತಿಯರನ್ನೂ ಆಕಾಶದಿಂದ ಶೌರಿ ಭೀಮನಿಗೆ ತೋರಿಸಿ ಮತ್ತೆ ಹೀಗೆ ಹೇಳಿದನು.
  • (ಪದ್ಯ-೪೮)

ಪದ್ಯ:-:೪೯:

[ಸಂಪಾದಿಸಿ]

ಭೀಮ ನೋಡಿಲ್ಲಿ ಪಾರ್ಥನ ದೇಹಮಿದೆ ವದನ |
ತಾಮರಸಮಂ ಕಾಣೆನಡಗಿದುದೊ ಬಳಸಿರ್ದು |
ಭಾನಿನಿಯ ರಾನನ ಶಶಾಂಕ ಮಂಡಲದಿಂದೆನಲ್ಕೆ ಹರಿಗನಿಲಸೂನು ||
ಶ್ರೀಮನೋಹರ ನಿನ್ನ ಮೂರ್ತಿರವಿ ಮೂಡೆ ಸು |
ತ್ರಾಮ ಸುತನಾಸ್ಯಾಬ್ಜಮಪ್ರಕಾಶೀತಮಹುದೆ |
ಭೂಮಿಯೊಳ್ ಪೇಳೆನೆ ಮುರಾರಿ ಪಕ್ಷೀಂದ್ರನಿಂದಿಳಿದನಾ ರಣದೆಡೆಯೊಳು ||49||

ಪದವಿಭಾಗ-ಅರ್ಥ:
ಭೀಮ ನೋಡಿಲ್ಲಿ ಪಾರ್ಥನ ದೇಹಮಿದೆ ವದನ ತಾಮರಸಮಂ (ಕಮಲ) ಕಾಣೆನು ಅಡಗಿದುದೊ ಬಳಸಿರ್ದು ಭಾನಿನಿಯರ ಆನನ ಶಶಾಂಕ ಮಂಡಲದಿಂದ ಎನಲ್ಕೆ,=[ಭೀಮ ನೋಡು ಇಲ್ಲಿ ಪಾರ್ಥನ ದೇಹವು ಇದೆ, ಆದರೆ ಅವನ ಮುಖ ಕಮಲವನ್ನು ಕಾಣೆನು! (ಕಾಣುತ್ತಿಲ್ಲ); ಸುತ್ತಲೂ ಬಳಸಿರವ ಹೆಂಗಸರ ಚಂದ್ರಮುಖ ಮಂಡಲದ ಮಧ್ಯೆ ಮಂಡಲದಿಂದ ಅಡಗಿರುವುದೊ ಎನಲು,];; ಹರಿಗೆ ಅನಿಲಸೂನು ಶ್ರೀಮನೋಹರ ನಿನ್ನ ಮೂರ್ತಿರವಿಮೂಡೆ ಸುತ್ರಾಮಸುತನ ಅಸ್ಯಾಬ್ಜಮು ಅಪ್ರಕಾಶೀತಮಹುದೆ ಭೂಮಿಯೊಳ್ ಪೇಳೆನೆ ಮುರಾರಿ ಪಕ್ಷೀಂದ್ರನಿಂದ ಇಳಿದನು ಆ ರಣದೆ ಎಡೆಯೊಳು=[ಕೃಷ್ಣನಿಗೆ ಗೆ ಭೀಮನು ಶ್ರೀಮನೋಹರವಾದ ನಿನ್ನ ಇರುವಿಕೆಯ ರವಿಮೂಡಲು ಇಂದ್ರನಮಗನ ಮುಖಕಮಲವು ಈ ಭೂಮಿಯಲ್ಲಿ ಕಾಣದಿರಹುದೆ? ನಿನ್ನಂಥ ಪರಮಪುರುಷನಿಗೆ ನಿನ್ನ ಮಿತ್ರನ ಮುಖ ಕಾಣದೆ ಇರುವುದೇ? ಹೇಳು ಕೃಷ್ಣ! ಎನ್ನುವಾಗ ಅವನು ಆ ರಣರಂಗದ ಪ್ರದೇಶದಲ್ಲಿ ಗರುಡನಿಂದ ಇಳಿದನು].
  • ತಾತ್ಪರ್ಯ:ಭೀಮ ನೋಡು ಇಲ್ಲಿ ಪಾರ್ಥನ ದೇಹವು ಇದೆ, ಆದರೆ ಅವನ ಮುಖ ಕಮಲವನ್ನು ಕಾಣೆನು! (ಕಾಣುತ್ತಿಲ್ಲ); ಸುತ್ತಲೂ ಬಳಸಿರವ ಹೆಂಗಸರ ಚಂದ್ರಮುಖ ಮಂಡಲದ ಮಧ್ಯೆ ಮಂಡಲದಿಂದ ಅಡಗಿರುವುದೊ ಎನ್ನಲು, ಕೃಷ್ಣನಿಗೆ ಭೀಮನು ಶ್ರೀಮನೋಹರವಾದ ನಿನ್ನ ಇರುವಿಕೆಯ ಸೂರ್ಯನುಮೂಡಲು ಇಂದ್ರನಮಗನ ಮುಖಕಮಲವು ಈ ಭೂಮಿಯಲ್ಲಿ ಕಾಣದಿರಹುದೆ? ನಿನ್ನಂಥ ಪರಮಪುರುಷನಿಗೆ ನಿನ್ನ ಮಿತ್ರನ ಮುಖ ಕಾಣದೆ ಇರುವುದೇ? ಹೇಳು ಕೃಷ್ಣ! ಎನ್ನುವಾಗ ಅವನು ಆ ರಣರಂಗದ ಪ್ರದೇಶದಲ್ಲಿ ಗರುಡನಿಂದ ಇಳಿದನು].
  • (ಪದ್ಯ-೪೯)

ಪದ್ಯ:-:೫೦:

[ಸಂಪಾದಿಸಿ]

ಲಲಿತ ರತ್ನಪ್ರದೀಪಂಗಳಿಂ ಬಳಸಿರ್ದ |
ಲಲನೆಯರ ಭೂಷಣದ ಕಾಂತಿಯಿಂ ಕಪ್ಪುರದ |
ಮಲಯಜದ ತೈಲದ ಸೋಡರ್ಗಳಿಂ ನಡುವಿರುಳ್ ಪಗಲಂತೆ ಕಾಣಿಸುತಿರೆ ||
ಕಲಿಭೀಮ ದೇವಕಿ ಯಶೋದೆ ಪೃಥೆಯರ್ವೆರಸಿ |
ನೆಲಕಿಳಿದು ಪಾರ್ಥನ ಶರೀರಮಂ ಕಂಡಾಗ |
ಜಲಜಾಂಬಕಂ ಮರುಗುತಾವನಿಂದಾದುದೈ ತಂದೆ ಮೃತಿ ನಿನಗೆಂದನು ||50||

ಪದವಿಭಾಗ-ಅರ್ಥ:
ಲಲಿತ ರತ್ನಪ್ರದೀಪಂಗಳಿಂ ಬಳಸಿರ್ದ ಲಲನೆಯರ ಭೂಷಣದ ಕಾಂತಿಯಿಂ ಕಪ್ಪುರದ ಮಲಯಜದ ತೈಲದ ಸೋಡರ್ಗಳಿಂ ನಡುವಿರುಳ್ ಪಗಲಂತೆ ಕಾಣಿಸುತಿರೆ=[ಲಲಿತ ರತ್ನದ ವಿಶೇಷ ದೀಪಂಗಳಿಂದ ಸುತ್ತುವರಿದ ಮಹಿಳೆಯರ ಭೂಷಣದ/ ಆಭರಣದ ಕಾಂತಿಯಿಂದ, ಕರ್ಪೂರದ ಶ್ರೀಗಂದದ ತೈಲದ ದೀಪಗಳಿಂದ ಅರ್ಧರಾತ್ರಿಯು ಹಗಲಿನಂತೆ ಕಾಣಿಸುತ್ತಿರಲು]; ಕಲಿಭೀಮ ದೇವಕಿ ಯಶೋದೆ ಪೃಥೆಯರ್ವೆರಸಿ ನೆಲಕಿಳಿದು ಪಾರ್ಥನ ಶರೀರಮಂ ಕಂಡಾಗ ಜಲಜಾಂಬಕಂ ಮರುಗುತ ಆವನಿಂದ ಆದುದೈ ತಂದೆ ಮೃತಿ ನಿನಗೆ ಎಂದನು=[ಕಲಿಭೀಮ, ದೇವಕಿ, ಯಶೋದೆ, ಕುಂತಿಯರು ಎಲ್ಲಅ ನೆಲಕ್ಕೆ ಇಳಿದು ಪಾರ್ಥನ ಶರೀರವನ್ನು ಕಂಡಾಗ, ಕೃಷ್ನನು ಮರುಗುತ್ತಾ, ತಂದೆ-ಪಾರ್ಥ ಯಾವನಿಂದ ಈ ಸಾವು ನಿನಗೆ ಬಂತು ಎಂದನು.]
  • ತಾತ್ಪರ್ಯ:ಲಲಿತ ರತ್ನದ ವಿಶೇಷ ದೀಪಂಗಳಿಂದ ಸುತ್ತುವರಿದ ಮಹಿಳೆಯರ ಭೂಷಣದ/ ಆಭರಣದ ಕಾಂತಿಯಿಂದ, ಕರ್ಪೂರದ ಶ್ರೀಗಂದದ ತೈಲದ ದೀಪಗಳಿಂದ ಅರ್ಧರಾತ್ರಿಯು ಹಗಲಿನಂತೆ ಕಾಣಿಸುತ್ತಿರಲು, ಕಲಿಭೀಮ, ದೇವಕಿ, ಯಶೋದೆ, ಕುಂತಿಯರು ಎಲ್ಲಅ ನೆಲಕ್ಕೆ ಇಳಿದು ಪಾರ್ಥನ ಶರೀರವನ್ನು ಕಂಡಾಗ, ಕೃಷ್ನನು ಮರುಗುತ್ತಾ, ತಂದೆ-ಪಾರ್ಥ ಯಾವನಿಂದ ಈ ಸಾವು ನಿನಗೆ ಬಂತು, ಎಂದನು.]
  • (ಪದ್ಯ-೫೦)

ಪದ್ಯ:-:೫೧:

[ಸಂಪಾದಿಸಿ]

ಬಂದೆನೇಳೈ ಪಾರ್ಥ ಕೃಷ್ಣನಾಂ ಕುಂತಿಗಭಿ |
ವಂದಿಸೈ ಮಾತೆಯಲ್ಲವೆ ನಿನಗೆ ನೀನಳಿಯ |
ನೆಂದು ಪರಸುವರಲೈ ದೇವಕಿ ಯಶೋದೆಯರ್ ಭಾವಿಸೆಯದೇಕಿವರನು ||
ಎಂದಿನಂತಗ್ರಜನ ನೀಕ್ಷಿಸೈ ಭೀಮನಂ |
ತಂದೆ ಹೇಳಿಂತು ಮಾತಾಡದಿರ್ದಪರೆ ನೀಂ |
ಮುಂದೆ ನೃಪಯಜ್ಞಮಂ ನಡೆಸುವವರಾರೆನುತೆ ಕಳವಳಿಸಿ ಹರಿ ನುಡಿದನು ||51||

ಪದವಿಭಾಗ-ಅರ್ಥ:
ಬಂದೆನು ಏಳೈ ಪಾರ್ಥ ಕೃಷ್ಣ ನಾಂ ಕುಂತಿಗೆ ಅಭಿವಂದಿಸೈ ಮಾತೆಯಲ್ಲವೆ ನಿನಗೆ ನೀನು ಅಳಿಯನೆಂದು ಪರಸುವರಲೈ ದೇವಕಿ ಯಶೋದೆಯರ್ ಭಾವಿಸೆಯೆ ಅದೇಕಿವರನು=[ಏಳು ಪಾರ್ಥ! ಕೃಷ್ಣ ನಾನು ಬಂಇದ್ದೇನೆ ಏಳಪ್ಪಾ!; ಕುಂತಿಗೆ ನಮಸ್ಕರಿಸಯ್ಯಾ, ತಾಯಿಯಲ್ಲವೆ ನಿನಗೆ; ನೀನು ಅಳಿಯನೆಂದು ಹರಸುವರು ಎಲೈ, ದೇವಕಿ ಯಶೋದೆಯರು ಇವರನ್ನು ಗೌರವಿಸದೆಯೆ ಅದೇಕೆ ಸುಮ್ಮನಿರುವೆ?];; ಎಂದಿನಂತೆ ಅಗ್ರಜನ ನೀಕ್ಷಿಸೈ ಭೀಮನಂ ತಂದೆ ಹೇಳಿಂತು ಮಾತಾಡದೆ ಇರ್ದಪರೆ ನೀಂ ಮುಂದೆ ನೃಪಯಜ್ಞಮಂ ನಡೆಸುವವರು ಆರೆನುತೆ ಕಳವಳಿಸಿ ಹರಿ ನುಡಿದನು=[ಎಂದಿನಂತೆ ಅಗ್ರಜನಾದ ಭೀಮನನ್ನು ನೋಡು ತಂದೆ! ಹೇಳು, ಹೀಗೆ ನೀನು ಮಾತಾಡದೆ ಇರಬಹುದೆರೆ? ಮುಂದೆ ಧರ್ಮಜನ ಯಜ್ಞವನ್ನು ನಡೆಸುವವರು ಯಾರು? ಎನ್ನತ್ತಾ ಕಳವಳಪಟ್ಟು ಕೃಷ್ಣನು ಹೇಳಿದನು].
  • ತಾತ್ಪರ್ಯ:ಕೃಷ್ಣನು ರಣಭೂಮಿಗೆ ಬಂದು ಅರ್ಜುನನ್ನು ನೋಡಿ, ಏಳು ಪಾರ್ಥ! ಕೃಷ್ಣ ನಾನು ಬಂಇದ್ದೇನೆ ಏಳಪ್ಪಾ!; ಕುಂತಿಗೆ ನಮಸ್ಕರಿಸಯ್ಯಾ, ತಾಯಿಯಲ್ಲವೆ ನಿನಗೆ; ನೀನು ಅಳಿಯನೆಂದು ಹರಸುವರು ಎಲೈ, ದೇವಕಿ ಯಶೋದೆಯರು ಇವರನ್ನು ಗೌರವಿಸದೆಯೆ ಅದೇಕೆ ಸುಮ್ಮನಿರುವೆ? ಎಂದಿನಂತೆ ಅಗ್ರಜನಾದ ಭೀಮನನ್ನು ನೋಡು ತಂದೆ! ಹೇಳು, ಹೀಗೆ ನೀನು ಮಾತಾಡದೆ ಇರಬಹುದೆರೆ? ಮುಂದೆ ಧರ್ಮಜನ ಯಜ್ಞವನ್ನು ನಡೆಸುವವರು ಯಾರು? ಎನ್ನತ್ತಾ ಕಳವಳಪಟ್ಟು ಕೃಷ್ಣನು ಹೇಳಿದನು.
  • (ಪದ್ಯ-೫೧)

ಪದ್ಯ:-:೫೨:

[ಸಂಪಾದಿಸಿ]

ಮರುಗಿದಂ ಮೈದುನಂಗಸುರಾರಿ ಮಾನವರ |
ತೆರದಿಂದೆ ದೇವಕಿ ಯಶೋದೆಯರ್ವೆರಸಿ ಮೈ |
ಮರೆದಳಾ ಕುಂತಿ ನಿಜ ತನಯನಿರವಂ ಕಂಡು ಶೋಕದಿಂದಾಕ್ಷಣದೊಳು ||
ಕರೆದುವಶ್ರುಗಳಾ ವೃಕೋದರನ ಕಂಗಳಿಂ |
ತುರುಗಿತಳಲೊಡಲೊಳ್ ಸಹೋದರನ ಮರಣದೊಳ್ |
ಪೊರಗೆನಿರ್ಪಂ ಕೃಷ್ಣನೆಂದು ಮನದೊಳ್ ತಿಳಿದು ಕಲಿಭೀಮನಿಂತೆಂದನು ||52||

ಪದವಿಭಾಗ-ಅರ್ಥ:
ಮರುಗಿದಂ ಮೈದುನಂಗೆ ಅಸುರಾರಿ ಮಾನವರ ತೆರದಿಂದೆ=[ಕೃಷ್ಣನು ಮೈದುನನಿಗಾಗಿ ಸಾಮಾನ್ಯ ಮಾನವರ ತರದಲ್ಲಿ ಮರುಗಿದನು.];; ದೇವಕಿ ಯಶೋದೆಯರ್ವೆರಸಿ ಮೈಮರೆದಳಾ ಕುಂತಿ ನಿಜ ತನಯನ ಇರವಂ ಕಂಡು ಶೋಕದಿಂದ ಆಕ್ಷಣದೊಳು=[ತನ್ನ ಮಗನ ಸ್ಥಿತಿಯನ್ನು ಕಂಡು ಶೋಕದಿಂದ ಆಕ್ಷಣದೊಳು ಆ ಕುಂತಿ ದೇವಕಿ ಯಶೋದೆಯರು ಎಲ್ಲರೂ ಎಚ್ಚರತಪ್ಪಿದರು,];; ಕರೆದುವು ಅಶ್ರುಗಳಾ ವೃಕೋದರನ ಕಂಗಳಿಂ ತುರುಗಿತು ಅಳಲ್ ಒಡಲೊಳ್ ಸಹೋದರನ ಮರಣದೊಳ್=[ಸಹೋದರನ ಮರಣ ನೋಡಿ ವೃಕೋದರ/ಭೀಮನ ಕಣ್ಣುಗಳಿಂದ ಕಂಬನಿಗಳು ಉದುರಿದವು; ಅವನ ಹೊಟ್ಟೆಯಲ್ಲಿ ದುಃಖದಸಂಕಟ ತುಂಬಿತು;];; ಪೊರಗೆನಿರ್ಪಂ (ಪೊರೆಗೆ +ಇರ್ಪಂ,ಹೊರಗೆ:ಹೊರುವುದಕ್ಕೆ ಇರ್ಪಂ, ಹೊಣಗಾರ ಇರ್ಪಂ) ಕೃಷ್ಣನೆಂದು ಮನದೊಳ್ ತಿಳಿದು ಕಲಿಭೀಮನಿಂತೆಂದನು=[ಕಾಪಾಡುವ ಹೊಣೆಗಾರನು ಕೃಷ್ಣನೆಂದು ಮನದಲ್ಲಿ ಅರಿತು, ಕಲಿಭೀಮನು ಹೀಗೆ ಹೇಳಿದನು.].
  • ತಾತ್ಪರ್ಯ:ಕೃಷ್ಣನು ಮೈದುನನಿಗಾಗಿ ಸಾಮಾನ್ಯ ಮಾನವರ ತರದಲ್ಲಿ ಮರುಗಿದನು. ತನ್ನ ಮಗನ ಸ್ಥಿತಿಯನ್ನು ಕಂಡು ಶೋಕದಿಂದ ಆಗ ಆ ಕುಂತಿ ದೇವಕಿ ಯಶೋದೆಯರು ಎಲ್ಲರೂ ಎಚ್ಚರತಪ್ಪಿದರು, ಸಹೋದರನ ಮರಣ ನೋಡಿ ವೃಕೋದರ/ಭೀಮನ ಕಣ್ಣುಗಳಿಂದ ಕಂಬನಿಗಳು ಉದುರಿದವು; ಅವನ ಹೊಟ್ಟೆಯಲ್ಲಿ ದುಃಖದಸಂಕಟ ತುಂಬಿತು; ಕಾಪಾಡುವ ಹೊಣೆಗಾರನು ಕೃಷ್ಣನೆಂದು ಮನದಲ್ಲಿ ಅರಿತು, ಕಲಿಭೀಮನು ಹೀಗೆ ಹೇಳಿದನು.]
  • (ಪದ್ಯ-೫೨)

ಪದ್ಯ:-:೫೩:

[ಸಂಪಾದಿಸಿ]

ದೇವ ರವಿಗಂಧಕಾರಮೆ ಮಾರ್ಗಮರ್ಜುನಂ |
ಜೀವಿಸದೆ ಮಾಣ್ದಪನೆ ಮರುಗಲೇಕೀಕ್ಷಿಸು ಕೃ |
ಪಾವಲೋಕನದಿಂದೆ ಕರ್ಣಜಂ ಬಿದ್ದಿರ್ದಪಂ ನೋಡು ಪಾರ್ಥನೊಡನೆ ||
ಭೂವಲಯದೊಳ್ ತಮ್ಮ ತುರಗಮಂ ಕಟ್ಟಿಕೊಂ |
ಡೀ ವೀರರಿರ್ವರಂ ಕೆಡಹಿದ ಪರಾಕ್ರಮಿಯ |
ದಾವನೋ ಕಾಣ್ಬೆನೈಸಲೆ ಬರಲಿ ಕದನಕೆಂದನಿಲಜಂ ಗರ್ಜಿಸಿದನು ||53||

ಪದವಿಭಾಗ-ಅರ್ಥ:
ದೇವ ರವಿಗೆ ಅಂಧಕಾರಮೆ ಮಾರ್ಗಂ, ಅರ್ಜುನಂ ಜೀವಿಸದೆ ಮಾಣ್ದಪನೆ ಮರುಗಲೇಕೆ ಈಕ್ಷಿಸು ಕೃಪಾವಲೋಕನದಿಂದೆ=[ದೇವ ಕೃಷ್ಣನೇ, ಸೂರ್ಯನಿಗೆ ಸಂಚರಿಸಲು ಅದರ ಮಾರ್ಗವನ್ನು ಅಂಧಕಾರವು/ಕತ್ತಲೆ ಕವಿಯುವುದೇ? , ಅರ್ಜುನ ಜೀವಿಸದೆ ಇರುವನೇ? ನೀನು ದಃಖಪಡುವುದೇಕೆ? ನಿನ್ನ ಕೃಪೆಯ ನೋಟವನ್ನು ಬೀರಿ ಅವನ್ನು ನೋಡು;];; ಕರ್ಣಜಂ ಬಿದ್ದಿರ್ದಪಂ ನೋಡು ಪಾರ್ಥನೊಡನೆ ಭೂವಲಯದೊಳ್ ತಮ್ಮ ತುರಗಮಂ ಕಟ್ಟಿಕೊಂಡು ಈ ವೀರರಿರ್ವರಂ ಕೆಡಹಿದ ಪರಾಕ್ರಮಿಯು ಅದಾವನೋ ಕಾಣ್ಬೆನೈ ಸಲೆ ಬರಲಿ ಕದನಕೆಂದು ಅನಿಲಜಂ ಗರ್ಜಿಸಿದನು=[ಅರ್ಜುನನು ಒಬ್ಬನೇ ಅಲ್ಲ, ಕರ್ಣಜ ವೃಷಕೇತುವು ಪಾರ್ಥನೊಡನೆ ಬಿದ್ದಿದ್ದಾನೆ ನೋಡು! ಈ ಭೂವಲಯದಲ್ಲಿ ನಮ್ಮ ಯಜ್ಞತುರಗವನ್ನು ಕಟ್ಟಿಕೊಂಡು, ಈ ಇಬ್ಬರು ಮಹಾ ವೀರರನ್ನು ಕೆಡವಿದ ಪರಾಕ್ರಮಿಯು ಅದು ಯಾವನೋ ಕಾಣಬೇಕಲ್ಲಾ! ಮಿಕ್ಕು ನನ್ನ ಮೇಲೆ ಯುದ್ಧಕ್ಕೆ ಬರಲಿ! ಎಂದು ಭೀಮನು ಗರ್ಜಿಸಿದನು].
  • ತಾತ್ಪರ್ಯ:ಭೀಮನು ಕೃಷ್ಣನಿಗೆ ಹೇಳಿದ, ದೇವ ಕೃಷ್ಣನೇ, ಸೂರ್ಯನಿಗೆ ಸಂಚರಿಸಲು ಅದರ ಮಾರ್ಗವನ್ನು ಅಂಧಕಾರವು/ಕತ್ತಲೆ ಕವಿಯುವುದೇ? , ಅರ್ಜುನ ಜೀವಿಸದೆ ಇರುವನೇ? ನೀನು ದಃಖಪಡುವುದೇಕೆ? ನಿನ್ನ ಕೃಪೆಯ ನೋಟವನ್ನು ಬೀರಿ ಅವನ್ನು ನೋಡು; ಅರ್ಜುನನು ಒಬ್ಬನೇ ಅಲ್ಲ, ಕರ್ಣಜ ವೃಷಕೇತುವು ಪಾರ್ಥನೊಡನೆ ಬಿದ್ದಿದ್ದಾನೆ ನೋಡು! ಈ ಭೂವಲಯದಲ್ಲಿ ನಮ್ಮ ಯಜ್ಞತುರಗವನ್ನು ಕಟ್ಟಿಕೊಂಡು, ಈ ಇಬ್ಬರು ಮಹಾ ವೀರರನ್ನು ಕೆಡವಿದ ಪರಾಕ್ರಮಿಯು ಅದು ಯಾವನೋ ಕಾಣಬೇಕಲ್ಲಾ! ಮಿಕ್ಕು ನನ್ನ ಮೇಲೆ ಯುದ್ಧಕ್ಕೆ ಬರಲಿ! ಎಂದು ಭೀಮನು ಗರ್ಜಿಸಿದನು].
  • (ಪದ್ಯ-೫೩)

ಪದ್ಯ:-:೫೪:

[ಸಂಪಾದಿಸಿ]

ಈಪರಿಯೊಳನಿಲಜಂ ಕೃಷ್ಣನೊಳ್ ಮಾತಾಡು |
ವಾ ಪಥದೊಳನಿರುದ್ಧ ಸಾತ್ಯಕಿ ಪ್ರದ್ಯುಮ್ನ |
ರಾಪುರದ ಮಧ್ಯದೊಳುಲೂಪಿಯ ನಿವಾಸದೊಳ್ ಚೇತರಿಸಿಕೊಂಡು ಕೂಡೆ ||
ಶಾಪ ಹತನಾಗಿ ಫಲುಗುಣನಿರ್ದ ರಣಕೆ ಬಂ |
ದೀಪಂಕಜಾಕ್ಷ ಮಾರುತಿಗಳಂ ಕಂಡು ಬಳಿ |
ಕಾ ಪಾರ್ಥನಂದನಂಗೆಚ್ಚರಿಸಿ ಕಾಣಿಸಿದರಚ್ಯುತ ವೃಕೋದರರನು ||54||

ಪದವಿಭಾಗ-ಅರ್ಥ:
ಈ ಪರಿಯೊಳು ಅನಿಲಜಂ ಕೃಷ್ಣನೊಳ್ ಮಾತಾಡುವ ಆ ಪಥದೊಳು ಅನಿರುದ್ಧ ಸಾತ್ಯಕಿ ಪ್ರದ್ಯುಮ್ನರು ಆ ಪುರದ ಮಧ್ಯದೊಳು ಉಲೂಪಿಯ ನಿವಾಸದೊಳ್ ಚೇತರಿಸಿಕೊಂಡು ಕೂಡೆ=[ಈ ರೀತಿಯಲ್ಲಿ ಭೀಮನು ಕೃಷ್ಣನೊಡನೆ ಮಾತನಾಡುವ ಆ ಸಮಯದಲ್ಲಿ, ಅನಿರುದ್ಧ, ಸಾತ್ಯಕಿ, ಪ್ರದ್ಯುಮ್ನರು, ಆ ಪುರದ ಮಧ್ಯದಲ್ಲಿದ್ದ ಉಲೂಪಿಯ ಅರಮನೆಯಲ್ಲಿ ಚೇತರಿಸಿಕೊಂಡರು; ಅವರು ಕೂಡಲೆ,];; ಶಾಪ ಹತನಾಗಿ ಫಲುಗುಣನು ಇರ್ದ ರಣಕೆ ಬಂದು ಈ ಪಂಕಜಾಕ್ಷ ಮಾರುತಿಗಳಂ ಕಂಡು ಬಳಿಕ ಆ ಪಾರ್ಥನಂದನಂಗೆ ಎಚ್ಚರಿಸಿ ಕಾಣಿಸಿದರಚ್ಯುತ ವೃಕೋದರರನು=[ಶಾಪದಿಂದ ಹತನಾಗಿ ಫಲ್ಗುಣನು ಇದ್ದ ರಣರಂಗಕ್ಕೆ ಬಂದು ಈ ಕೃಷ್ಣ ಭೀಮರನ್ನು ಕಂಡು ಬಳಿಕ, ಆ ಪಾರ್ಥನ ಮಗನಿಗೆ, ನಡೆತೆಯ ಕ್ರಮವನ್ನು ಎಚ್ಚರಿಸಿ, ಅಚ್ಯುತ ವೃಕೋದರರನ್ನು ದರ್ಶನಮಾಡಿಸಿದರು.]
  • ತಾತ್ಪರ್ಯ:ಈ ರೀತಿಯಲ್ಲಿ ಭೀಮನು ಕೃಷ್ಣನೊಡನೆ ಮಾತನಾಡುವ ಆ ಸಮಯದಲ್ಲಿ, ಅನಿರುದ್ಧ, ಸಾತ್ಯಕಿ, ಪ್ರದ್ಯುಮ್ನರು, ಆ ಪುರದ ಮಧ್ಯದಲ್ಲಿದ್ದ ಉಲೂಪಿಯ ಅರಮನೆಯಲ್ಲಿ ಚೇತರಿಸಿಕೊಂಡರು; ಅವರು ಕೂಡಲೆ, ಶಾಪದಿಂದ ಹತನಾಗಿ ಫಲ್ಗುಣನು ಇದ್ದ ರಣರಂಗಕ್ಕೆ ಬಂದು ಈ ಕೃಷ್ಣ ಭೀಮರನ್ನು ಕಂಡು ಬಳಿಕ, ಆ ಪಾರ್ಥನ ಮಗನಿಗೆ, ನಡೆತೆಯ ಕ್ರಮವನ್ನು ಎಚ್ಚರಿಸಿ, ಅಚ್ಯುತ ವೃಕೋದರರನ್ನು ದರ್ಶನಮಾಡಿಸಿದರು.
  • (ಪದ್ಯ-೫೪)

ಪದ್ಯ:-:೫೫:

[ಸಂಪಾದಿಸಿ]

ಜನಪ ಕೇಳ್ ಫಲುಗುಣನ ಕೃತ್ಯಮಂ ಬಭ್ರುವಾ |
ಹನನ ವೃತ್ತಾಂತಮಂ ಪವನಜ ಮುರಾರಿಗ |
ಳ್ಗನಿರುದ್ಧ ಸಾತ್ಯಕಿ ಪ್ರದ್ಯುಮ್ನರರಿಪಿ ಬಳಿಕಾತನಂ ಕಾಣಿಸಲ್ಕೆ ||
ಅನುಜಂಗೆ ಮುನಿದವಂ ಪಗೆಯಾಗದಿರ್ದಪನೆ |
ಜನಕನಂ ಕೊಂದವಂ ಪಾಪಿಯಲ್ಲವೆ ತನ್ನ |
ನನುವರಸದಪ್ಪಳಿಸು ಗದೆಯೊಳೆಂದೆರಗಿದಂ ಪಾರ್ಥಿ ಭೀಮನ ಪದದೊಳು ||55||

ಪದವಿಭಾಗ-ಅರ್ಥ:
ಜನಪ ಕೇಳ್ ಫಲುಗುಣನ ಕೃತ್ಯಮಂ ಬಭ್ರುವಾಹನನ ವೃತ್ತಾಂತಮಂ ಪವನಜ ಮುರಾರಿಗಳ್ಗೆ ಅನಿರುದ್ಧ ಸಾತ್ಯಕಿ ಪ್ರದ್ಯುಮ್ನರು ಅರಿಪಿ ಬಳಿಕಾತನಂ ಕಾಣಿಸಲ್ಕೆ=[ಜನಪನೇ ಕೇಳು, ಫಲ್ಗುಣನ ಮಾಡಿದ ದುಡುಕಿನ ಕೃತ್ಯವನ್ನೂ (ಮಗನನ್ನು ತಿರಸ್ಕರಿಸಿ ಕಾಲಿನಿಂದ ವದೆದುನ್ನೂ,) ಬಭ್ರುವಾಹನನ ವೃತ್ತಾಂತವನ್ನೂ, ಭೀಮ ಮತ್ತು ಕೃಷ್ಣರಿಗೆ, ಅನಿರುದ್ಧ ಸಾತ್ಯಕಿ ಪ್ರದ್ಯುಮ್ನರು ಹೇಳಿದರು. ಬಳಿಕ ಬಭ್ರುವಾಹನನ್ನು ಎದರು ಕರೆದು ತೋರಿಸಲು,];; ಅನುಜಂಗೆ ಮುನಿದವಂ ಪಗೆಯಾಗದೆ ಇರ್ದಪನೆ ಜನಕನಂ ಕೊಂದವಂ ಪಾಪಿಯಲ್ಲವೆ ತನ್ನನು ಅನುವರಸದೆ ಅಪ್ಪಳಿಸು ಗದೆಯೊಳೆಂದು ಎರಗಿದಂ ಪಾರ್ಥಿ ಭೀಮನ ಪದದೊಳು=[ಬಭ್ರುವಾಹನನು ಭೀಮನಿಗೆ ನಿನ್ನ ಅನುಜನಿಗೆ/ ತಮ್ಮನ ಮೇಲೆ ಕೋಪಿಸಿದವನು ನಿನಗೆ ವೈರಿಯಾಗದೆ ಇರುವನೇ? ತಂದೆಯನ್ನು ಕೊಂದವನು ನಾನು ಪಾಪಿಯಲ್ಲವೆ ತನ್ನನು ಕರುಣೆ ತೋರಿಸದೆ, ಗದೆಯಿಂದ ಅಪ್ಪಳಿಸು ಎಂದು ಭೀಮನ ಪದದಲ್ಲಿ ಬಿದ್ದನು, ಪಾರ್ಥಿ.]
  • ತಾತ್ಪರ್ಯ:ಜನಪನೇ ಕೇಳು, ಫಲ್ಗುಣನ ಮಾಡಿದ ದುಡುಕಿನ ಕೃತ್ಯವನ್ನೂ (ಮಗನನ್ನು ತಿರಸ್ಕರಿಸಿ ಕಾಲಿನಿಂದ ವದೆದುನ್ನೂ ಬಭ್ರುವಾಹನನ ವೃತ್ತಾಂತವನ್ನೂ), ಭೀಮ ಮತ್ತು ಕೃಷ್ಣರಿಗೆ, ಅನಿರುದ್ಧ ಸಾತ್ಯಕಿ ಪ್ರದ್ಯುಮ್ನರು ಹೇಳಿದರು. ಬಳಿಕ ಬಭ್ರುವಾಹನನ್ನು ಎದರು ಕರೆದು ತೋರಿಸಲು, ಬಭ್ರುವಾಹನನು ಭೀಮನಿಗೆ ನಿನ್ನ ಅನುಜನಿಗೆ/ ತಮ್ಮನ ಮೇಲೆ ಕೋಪಿಸಿದವನು ನಾನು ನಿನಗೆ ವೈರಿಯಾಗದೆ ಇರುವನೇ? ತಂದೆಯನ್ನು ಕೊಂದವನು ನಾನು ಪಾಪಿಯಲ್ಲವೆ ತನ್ನನು ಕರುಣೆ ತೋರಿಸದೆ, ಗದೆಯಿಂದ ಅಪ್ಪಳಿಸು ಎಂದು ಭೀಮನ ಪದದಲ್ಲಿ ಬಿದ್ದನು, ಪಾರ್ಥಿ.
  • (ಪದ್ಯ-೫೫)

ಪದ್ಯ:-:೫೫:

[ಸಂಪಾದಿಸಿ]

ಶಿಕ್ಷೆರಕ್ಷೆಗೆ ಕರ್ತೃ ವೈಷ್ಣವದ್ರೋಹಿಗ |
ಳ್ಗಕ್ಷಮಂ ನೀನದರಿನರ್ಜುನಂ ಭಾಗವತ |
ಪಕ್ಷಕಗ್ರೇಸರಂ ತನಗೆ ಪಿತನಾತನಂ ಕೊಂದ ಕತದಿಂದೆ ಕೊಲೆಗೆ ||
ದಕ್ಷನಾಂ ಮೀರಿದೊಡೆ ರಾಹುವಿನ ಕಂಠಮಂ |
ತತ್ಕ್ಷಣದೊಳರಿದಂತೆ ಕತ್ತರಿಸು ಚಕ್ರದಿಂ |
ಪಕ್ಷಿವಾಹನ ತನ್ನ ಕೊರಲನೆಂದಾ ಪಾರ್ಥಿ ಕೆಡೆದನಚ್ಯುತನಡಿಯೊಳು ||56||

ಪದವಿಭಾಗ-ಅರ್ಥ:
ಶಿಕ್ಷೆರಕ್ಷೆಗೆ ಕರ್ತೃ ವೈಷ್ಣವದ್ರೋಹಿಗಳ್ಗಕ್ಷಮಂ ನೀನದರಿನರ್ಜುನಂ ಭಾಗವತ ಪಕ್ಷಕಗ್ರೇಸರಂ ತನಗೆ ಪಿತನಾತನಂ ಕೊಂದ ಕತದಿಂದೆ ಕೊಲೆಗೆ=[ದುಷ್ಟರನ್ನು ಶಿಕ್ಷೆಮಾಡಲು ಮತ್ತು ಸಜ್ಜನರನ್ನು ರಕ್ಷೆಣೆ ಮಾಡಲು ನೀನೇ ಕರ್ತೃ; ವೈಷ್ಣವದ್ರೋಹಿಗಳಿಗೆ ಕ್ಷಮೆ ಇಲ್ಲ, ನೀನು ಅದರಿಂದ ಅರ್ಜುನನು ಭಾಗವತ (ವಿಷ್ಣುಭಕ್ತನು)ರಲ್ಲಿ ಅಗ್ರೇಸರುನು/ ಹೆಚ್ಚಿನವನು, ಅವನು ತನಗೆ ತಂದೆ, ಆತನನ್ನು ಕೊಂದ ಕೃತ್ಯದಿಂದ, ಈ ಕೊಲೆಗೆ];; ದಕ್ಷನಾಂ (ದಕ್ಷ ಸಾಮರ್ಥ್ಯ. ಕೊಲೆ, ಕಾರ್ಯಕರ್ತ) ಮೀರಿದೊಡೆ ರಾಹುವಿನ ಕಂಠಮಂ ತತ್ಕ್ಷಣದೊಳರಿದಂತೆ ಕತ್ತರಿಸು ಚಕ್ರದಿಂ ಪಕ್ಷಿವಾಹನ ತನ್ನ ಕೊರಲನೆಂದಾ ಪಾರ್ಥಿ ಕೆಡೆದನಚ್ಯುತನಡಿಯೊಳು=[ನಾನು ಕಾರಣಕರ್ತನು, ನೀತಿಯನ್ನು ಮೀರಿದ್ದರಿಂದ, ರಾಹುವಿನ ಕಂಠವನ್ನು ಕ್ಷಣಮಾತ್ರದಲ್ಲಿ ಕತ್ತರಿಸಿದಂತೆ ಪಕ್ಷಿವಾಹನನೇ ಚಕ್ರದಿಂದ ಕತ್ತರಿಸು ತನ್ನ ಕೊರಳನ್ನು ಎಂದು ಆ ಪಾರ್ಥಿಕೃಷ್ಣನಪಾದಕ್ಕೆ ಬಿದ್ದನು.];
  • ತಾತ್ಪರ್ಯ:ದುಷ್ಟರನ್ನು ಶಿಕ್ಷೆಮಾಡಲು ಮತ್ತು ಸಜ್ಜನರನ್ನು ರಕ್ಷೆಣೆ ಮಾಡಲು ನೀನೇ ಕರ್ತೃ; ವೈಷ್ಣವದ್ರೋಹಿಗಳಿಗೆ ಕ್ಷಮೆ ಇಲ್ಲ, ನೀನು ಅದರಿಂದ ಅರ್ಜುನನು ಭಾಗವತ (ವಿಷ್ಣುಭಕ್ತನು)ರಲ್ಲಿ ಅಗ್ರೇಸರುನು/ ಹೆಚ್ಚಿನವನು, ಅವನು ತನಗೆ ತಂದೆ, ಆತನನ್ನು ಕೊಂದ ಕೃತ್ಯದಿಂದ, ಈ ಕೊಲೆಗೆ ನಾನು ಕಾರಣಕರ್ತನು, ನೀತಿಯನ್ನು ಮೀರಿದ್ದರಿಂದ, ರಾಹುವಿನ ಕಂಠವನ್ನು ಕ್ಷಣಮಾತ್ರದಲ್ಲಿ ಕತ್ತರಿಸಿದಂತೆ ಪಕ್ಷಿವಾಹನನೇ ಚಕ್ರದಿಂದ ಕತ್ತರಿಸು ತನ್ನ ಕೊರಳನ್ನು ಎಂದು ಆ ಪಾರ್ಥಿಕೃಷ್ಣನಪಾದಕ್ಕೆ ಬಿದ್ದನು.(ಮೋಹಿನಿ ರೂಪದಲ್ಲಿ ಅಮೃತವನ್ನು ದೇವತೆಗಳು ಮತ್ತು ದಾನವರಿಗೆ ವಿತರಣೆ ಮಾಡುವಾಗ ದೇವತೆಗಳ ಸಾಲಿನಲ್ಲಿದ್ದ ಅಸುರ ರಾಹುವನ್ನು ವಿಷ್ಣುರೂಪ ತಾಳಿ ಚಕ್ರದಿಂದ ಕತ್ತರಿಸಿದ್ದನು)
  • (ಪದ್ಯ-೫೫)

ಪದ್ಯ:-:೫೭:

[ಸಂಪಾದಿಸಿ]

ಇಂತಾಗಳನಿಲಸುತ ಕೃಷ್ಣರ ಮನಂ ಮರುಗು |
ವಂತಳಲ್ದೊಡನೆ ದೇವಕಿಯಂ ಯಶೋದೆಯಂ |
ಕುಂತಿಯಂ ಕಂಡು ಕಡುಶೋಕದಿಮದವರವರ ಚರಣಂಗಳೊಳ್‍ಪೊರಳ್ದು ||
ಎಂತುಟಿದಕಯ್ಯನಂ ಕೊಂದೆನಾ ನಿಮಗೆ ಮೊ |
ಮ್ಮಗಂ ತನ್ನನೇಕೆ ಪರಸುವಿರಕಟ ಪಾರ್ಥ ಸೀ |
ಮಂತಿನಿಯರಿರ್ದಪರುಲೂಪಿ ಚಿತ್ರಾಂಗದೆಯರಿವರ ನೀಕ್ಷಿಪುದೆಂದನು ||57||

ಪದವಿಭಾಗ-ಅರ್ಥ:
ಇಂತಾಗಳು ಅನಿಲಸುತ ಕೃಷ್ಣರ ಮನಂ ಮರುಗುವಂತೆ ಅಳಲ್ದೊಡನೆ ದೇವಕಿಯಂ ಯಶೋದೆಯಂ ಕುಂತಿಯಂ ಕಂಡು ಕಡುಶೋಕದಿಂದ ಅವರವರ ಚರಣಂಗಳೊಳ್‍ ಪೊರಳ್ದು=[ಹೀಗಿರಲು, ಭೀಮ ಕೃಷ್ಣರ ಮನಸ್ಸು ಮರುಗುವಂತೆ ಅತ್ತೊಡನೆ, ದೇವಕಿಯನ್ನೂ ಯಶೋದೆಯನ್ನೂ ಕುಂತಿಯನ್ನೂ ಕಂಡು ಬಹಳಶೋಕದಿಂದ ಅವರವರ ಪಾದಗಳಲ್ಲಿ ಹೊರಳಿ, ];; ಎಂತುಟೆ ಇದಕೆ ಅಯ್ಯನಂ ಕೊಂದೆ ನಾ ನಿಮಗೆ ಮೊಮ್ಮಗಂ ತನ್ನನು ಏಕೆ ಪರಸುವಿರಿ ಅಕಟ ಪಾರ್ಥ ಸೀಮಂತಿನಿಯರು ಇರ್ದಪರು ಉಲೂಪಿ ಚಿತ್ರಾಂಗದೆಯರು ಇವರ ನೀಕ್ಷಿಪುದು ಎಂದನು=[ಏನುಂಟು ಇದಕ್ಕೆ ಪರಿಹಾರ, ತಂದೆಯನ್ನು ಕೊಂದೆ ನಾನು, ನಿಮಗೆ ಮೊಮ್ಮಗನು, ತನ್ನನು ಏಕೆ ಹರಸುವಿರಿ ಅಕಟ! ಪಾರ್ಥನ ಪತ್ನಿಯರು ಉಲೂಪಿ ಚಿತ್ರಾಂಗದೆಯರು ಇಲ್ಲಿದ್ದಾರೆ, ಇವರನ್ನು ನೋಡಬೇಕು ಎಂದನು];
  • ತಾತ್ಪರ್ಯ:ಹೀಗಿರಲು, ಭೀಮ ಕೃಷ್ಣರ ಮನಸ್ಸು ಮರುಗುವಂತೆ ಅತ್ತೊಡನೆ, ದೇವಕಿಯನ್ನೂ ಯಶೋದೆಯನ್ನೂ ಕುಂತಿಯನ್ನೂ ಕಂಡು ಬಹಳಶೋಕದಿಂದ ಅವರವರ ಪಾದಗಳಲ್ಲಿ ಹೊರಳಿ, ಏನುಂಟು ಇದಕ್ಕೆ ಪರಿಹಾರ, ತಂದೆಯನ್ನು ಕೊಂದೆ ನಾನು, ನಿಮಗೆ ಮೊಮ್ಮಗನು, ತನ್ನನು ಏಕೆ ಹರಸುವಿರಿ ಅಕಟ! ಪಾರ್ಥನ ಪತ್ನಿಯರು ಉಲೂಪಿ ಚಿತ್ರಾಂಗದೆಯರು ಇಲ್ಲಿದ್ದಾರೆ, ಇವರನ್ನು ನೋಡಬೇಕು ಎಂದನು.
  • (ಪದ್ಯ-೫೭)

ಪದ್ಯ:-:೫೮:

[ಸಂಪಾದಿಸಿ]

ಅನಿತರೊಳುಲೂಪಿ ಚಿತ್ರಾಂಗದೆಯರ್ಜುನನ |
ಜನನಿಯಂ ಕೃಷ್ಣಮಾತೆಯರಂ ನಿರೀಕ್ಷಿಸಿ ನ |
ರನ ಪೆಂಡಿರಾವೆಂದು ಪೇಳ್ದವರ ಚರಣಂಗಳೊಳ್ ಪೊರಳ್ದಳಲ್ದು ಕೂಡೆ ||
ವನಜಾಂಬಕಿಯರೊರಲೆ ಬಳಿಕನಿಬರೆಲ್ಲರುಂ |
ಘನಶೋಕದಿಂದೆ ಹಾಹಾರವಂಗೆಯ್ಯೆ ನಿಜ |
ತನುಜನಂಗದಮೇಲೆ ಬಿದ್ದು ದುಃಖಿತೆಯಾಗಿ ಕುಂತಿ ಹರಿಗಿಂತೆಂದಳು ||58||

ಪದವಿಭಾಗ-ಅರ್ಥ:
ಅನಿತರೊಳು ಉಲೂಪಿ ಚಿತ್ರಾಂಗದೆಯು ಅರ್ಜುನನ ಜನನಿಯಂ ಕೃಷ್ಣಮಾತೆಯರಂ ನಿರೀಕ್ಷಿಸಿ ನರನ ಪೆಂಡಿರಾವೆಂದು ಪೇಳ್ದು ಅವರ ಚರಣಂಗಳೊಳ್ ಪೊರಳ್ದು ಅಳಲ್ದು ಕೂಡೆ=[ಅಷ್ಟರಲ್ಲಿ ಉಲೂಪಿ ಚಿತ್ರಾಂಗದೆಯರು ಅರ್ಜುನನ ತಾಯಿಯನ್ನೂ ಕೃಷ್ಣಮಾತೆಯರನ್ನೂ ನೋಡಿ, ತಾವು ಅರ್ಜುನನ ಹೆಂಡಿರು ಎಂದು, ಹೇಳಿ ಅವರ ಪಾದಗಳಮೇಲೆ ಹೊರಳಿ ಅತ್ತುರು. ಕೂಡಲೆ];; ವನಜಾಂಬಕಿಯರು ಒರಲೆ ಬಳಿಕ ಅನಿಬರು ಎಲ್ಲರುಂ |ಘನಶೋಕದಿಂದೆ ಹಾಹಾರವಂಗೆಯ್ಯೆ ನಿಜ ತನುಜನ ಅಂಗದಮೇಲೆ ಬಿದ್ದು ದುಃಖಿತೆಯಾಗಿ ಕುಂತಿ ಹರಿಗಿಂತೆಂದಳು=[ವನಿತೆಯರು ಅತ್ತು ಚೀರುತ್ತಿರಲು, ಬಳಿಕ ಅವರು ಎಲ್ಲರೂ ಘನಶೋಕದಿಂದ ಹಾಹಾರವನ್ನು ಮಾಡಲು, ತನ್ನ ಮಗನ ದೇಹದಮೇಲೆ ಬಿದ್ದು ದುಃಖಿತೆಯಾಗಿ ಕುಂತಿಯು ಕೃಷ್ಣನಿಗೆ ಹೀಗೆ ಹೇಳಿದಳು,]
  • ತಾತ್ಪರ್ಯ:ಅಷ್ಟರಲ್ಲಿ ಉಲೂಪಿ ಚಿತ್ರಾಂಗದೆಯರು ಅರ್ಜುನನ ತಾಯಿಯನ್ನೂ ಕೃಷ್ಣಮಾತೆಯರನ್ನೂ ನೋಡಿ, ತಾವು ಅರ್ಜುನನ ಹೆಂಡಿರು ಎಂದು, ಹೇಳಿ ಅವರ ಪಾದಗಳಮೇಲೆ ಹೊರಳಿ ಅತ್ತುರು. ಕೂಡಲೆ ವನಿತೆಯರು ಅತ್ತು ಚೀರುತ್ತಿರಲು, ಬಳಿಕ ಅವರು ಎಲ್ಲರೂ ಘನಶೋಕದಿಂದ ಹಾಹಾರವನ್ನು ಮಾಡಲು, ತನ್ನ ಮಗನ ದೇಹದಮೇಲೆ ಬಿದ್ದು ದುಃಖಿತೆಯಾಗಿ ಕುಂತಿಯು ಕೃಷ್ಣನಿಗೆ ಹೀಗೆ ಹೇಳಿದಳು,]
  • (ಪದ್ಯ-೫೮)

ಪದ್ಯ:-:೫೯:

[ಸಂಪಾದಿಸಿ]

ಕಂಡೆಲೈ ಕೃಷ್ಣ ಫಲುಗುಣನಿರವನಿನ್ನು ಭೂ |
ಮಂಡಲದೊಳೆನಗೆ ಸುತರಿರ್ದಪರೆ ನೀನಾರ |
ಬಂಡಿಯಂ ಪೊಡೆದಪೈ ತ್ರೈಲೋಕ್ಯವೀರನೆಂದೆನಿಸಿಕೊಳ್ವವನದಾರು ||
ಖಂಡಪರಶುವಿನುತ್ತಮಾಂಗಮಂ ಪೊಯ್ದು ಕೋ |
ದಂಡಮಂ ಪಿಡಿವರಾರನುಜಾಗ್ರಜರ ನಡುವೆ |
ಚಂಡ ತೇಜದೊಳೆಸೆವರುಂಟೆ ಧರ್ಮಜನಾರನಪ್ಪುವಂ ಪೇಳೆಂದಳು ||59||

ಪದವಿಭಾಗ-ಅರ್ಥ:
ಕಂಡೆಲೈ ಕೃಷ್ಣ ಫಲುಗುಣನ ಇರವನು ಇನ್ನು ಭೂಮಂಡಲದೊಳು ಎನಗೆ ಸುತರಿರ್ದಪರೆ ನೀನಾರ ಬಂಡಿಯಂ ಪೊಡೆದಪೈ ತ್ರೈಲೋಕ್ಯವೀರನೆಂದು ಎನಿಸಿಕೊಳ್ವವನು ಅದಾರು=[ಕುಂತಿಯು ಕೃಷ್ಣನನ್ನು ಕುರಿತು, ಕಂಡೆಯಲ್ಲವೇ ಕೃಷ್ಣ ಫಲ್ಗುಣನು ಇರುವ ಸ್ಥಿತಿಯನ್ನು; ಇನ್ನು ಭೂಮಂಡಲದಲ್ಲಿ ನನಗೆ ಮಕ್ಕಳಿರುವರೆ? ನೀನು ಇನ್ನು ಯಾರ ರಥವನ್ನು ಹೊಡೆಯುವೆ? ತ್ರೈಲೋಕ್ಯವೀರನೆಂದು ಎನಿಸಿಕೊಳುವವನು ಅದು ಯಾರು ಇರುವರು?];; ಖಂಡಪರಶುವಿನ ಉತ್ತಮಾಂಗಮಂ ಪೊಯ್ದು ಕೋದಂಡಮಂ ಪಿಡಿವರ ಆರು ಅನುಜ ಅಗ್ರಜರ ನಡುವೆ ಚಂಡ ತೇಜದೊಳು ಎಸೆವರುಂಟೆ ಧರ್ಮಜನು ಅರನಪ್ಪುವಂ ಪೇಳೆಂದಳು=[ಶಿವನ ತಲೆಯಮೇಲೆ ಹೊಡೆಯುವ, ಕೋದಂಡವನ್ನು ಹಿಡಿಯುವವರು ಯಾರು? ಅಣ್ಣ ತಮ್ಮಂದಿರ ನಡುವೆ ಬಹಳ ತೇಜಸ್ಸಿನಿಂದ ಶೋಭಿಸುವವರುಂಟೆ? ಧರ್ಮಜನು ಯಾರನ್ನು ಅಪ್ಪುಇಕೊಳ್ಳವನು? ಹೇಳು, ಎಂದಳು].
  • ತಾತ್ಪರ್ಯ:ಕುಂತಿಯು ಕೃಷ್ಣನನ್ನು ಕುರಿತು, ಕಂಡೆಯಲ್ಲವೇ ಕೃಷ್ಣ ಫಲ್ಗುಣನು ಇರುವ ಸ್ಥಿತಿಯನ್ನು; ಇನ್ನು ಭೂಮಂಡಲದಲ್ಲಿ ನನಗೆ ಮಕ್ಕಳಿರುವರೆ? ನೀನು ಇನ್ನು ಯಾರ ರಥವನ್ನು ಹೊಡೆಯುವೆ? ತ್ರೈಲೋಕ್ಯವೀರನೆಂದು ಎನಿಸಿಕೊಳುವವನು ಅದು ಯಾರು ಇರುವರು? ಶಿವನ ತಲೆಯಮೇಲೆ ಹೊಡೆಯುವ, ಕೋದಂಡವನ್ನು ಹಿಡಿಯುವವರು ಯಾರು? ಅಣ್ಣ ತಮ್ಮಂದಿರ ನಡುವೆ ಬಹಳ ತೇಜಸ್ಸಿನಿಂದ ಶೋಭಿಸುವವರುಂಟೆ? ಧರ್ಮಜನು ಯಾರನ್ನು ಅಪ್ಪುಇಕೊಳ್ಳವನು? ಹೇಳು, ಎಂದಳು.
  • (ಪದ್ಯ-೫೯)

ಪದ್ಯ:-:೬೦:

[ಸಂಪಾದಿಸಿ]

ಈತನಂತಿರಲಿತ್ತನೋಡೆಲೆ ಮುಕುಂದ ವೃಷ |
ಕೇತು ಮಡಿದಿರ್ಪಪಂ ಸೈರಿಸುವೆನೆಂತಿವನ |
ತಾತನಂ ಕಂಡು ಹಿಗ್ಗುವೆನಾರುಮರಿಯದಂತಾತ್ಮಜ ಸ್ನೇಹದಿಂದೆ ||
ಆತನಂ ಕೊಂದನೀ ಪಾರ್ಥನಂದಾನೋವ |
ನೀತರಳನೇಳ್ಗೆಯಿಂ ಮರೆದಿರ್ದೆನಿನ್ನೆಗಂ |
ಬೀತುದೆನಗಿಂದು ಸಂತತಿ ಕರ್ಣಜನೊಳೆಂದಳಲ್ದಳಾ ಕುಂತಿ ಮರುಗಿ ||60||

ಪದವಿಭಾಗ-ಅರ್ಥ:
ಈತನು ಅಂತಿರಲಿ ಇತ್ತನೋಡೆಲೆ ಮುಕುಂದ ವೃಷಕೇತು ಮಡಿದಿರ್ಪಪಂ ಸೈರಿಸುವೆನು ಎಂತು, ಇವನ ತಾತನಂ^- ಕಂಡು->/ <-ಹಿಗ್ಗುವೆನು ಆರುಮ್ ಅರಿಯದಂತೆ ಆತ್ಮಜ ಸ್ನೇಹದಿಂದೆ=[ಈತ ಅರ್ಜುನನು ಹಾಗಿರಲಿ, ಇತ್ತ ನೋಡು ಎಲೆ ಕೃಷ್ಣ, ವೃಷಕೇತು ಮಡಿದಿರುವುದನ್ನು ಹೇಗೆ ಸಹಿಸಲಿ? ಯಾರನ್ನು ಕಂಡು ಹಿಗ್ಗುವೆನು? ಇವನ ತಂದೆಯನ್ನು ಯಾರೂ ಅರಿಯದಂತೆ ಮಗನೆಂಬ ಪ್ರೀತಿಯಿಂದ ಇದ್ದೆನು. ];; ಆತನಂ ಕೊಂದನು ಈ ಪಾರ್ಥನು ಅಂದು ಆ ನೋವನು ಈತರಳನ ಏಳ್ಗೆಯಿಂ ಮರೆದಿರ್ದೆನು ಇನ್ನೆಗಂ ಬೀತುದು ಎನಗಿಂದು ಸಂತತಿ ಕರ್ಣಜನೊಳು ಎಂದು ಅಳಲ್ದಳ ಆ ಕುಂತಿ ಮರುಗಿ=[ಆತನನ್ನು ಅಂದು ಈ ಪಾರ್ಥನು ಕೊಂದನು. ಆ ನೋವನ್ನು ಈ ಬಾಲಕನ ಏಳಿಗೆಯನ್ನು ನೋಡಿ, ಕರ್ಣನ ಸಂತತಿ ಮಗನಲ್ಲಿ ನೋಡಿ ಮರೆತಿದ್ದೆನು. ಇನ್ನು ನನಗೆ ಇಂದು ಅದೂ ಹೋಯಿತು. ಎಂದು ಆ ಕುಂತಿಯು ಮರುಗುತ್ತಾ ಅತ್ತಳು.].
  • ತಾತ್ಪರ್ಯ:ಈತ ಅರ್ಜುನನು ಹಾಗಿರಲಿ, ಇತ್ತ ನೋಡು ಎಲೆ ಕೃಷ್ಣ, ವೃಷಕೇತು ಮಡಿದಿರುವುದನ್ನು ಹೇಗೆ ಸಹಿಸಲಿ? ಯಾರನ್ನು ಕಂಡು ಹಿಗ್ಗುವೆನು? ಇವನ ತಂದೆಯನ್ನು ಯಾರೂ ಅರಿಯದಂತೆ ಮಗನೆಂಬ ಪ್ರೀತಿಯಿಂದ ಇದ್ದೆನು. ಆತನನ್ನು ಅಂದು ಈ ಪಾರ್ಥನು ಕೊಂದನು. ಆ ನೋವನ್ನು ಈ ಬಾಲಕನ ಏಳಿಗೆಯನ್ನು ನೋಡಿ, ಕರ್ಣನ ಸಂತತಿಯನ್ನು ಅವನ ಮಗನಲ್ಲಿ ನೋಡಿ ಮರೆತಿದ್ದೆನು. ಇನ್ನು ನನಗೆ ಇಂದು ಅದೂ ಹೋಯಿತು. ಎಂದು ಆ ಕುಂತಿಯು ಮರುಗುತ್ತಾ ಅತ್ತಳು.
  • (ಪದ್ಯ-೫೯)

ಪದ್ಯ:-:೬೧:

[ಸಂಪಾದಿಸಿ]

ಆ ಸಮಯಕೈತಂದು ಕಂಡನಹಿಪತಿ ಪೀತ |
ವಾಸನಂ ಪೊಡಮಟ್ಟನಡಿದಾವರೆಗೆ ನುಡಿದ|
ನೀಸಕಲ ಲೋಕಮಂ ಪೊರೆವ ನಿನಗೀ ನರನ ಜೀವಮಂ ಪಡೆವುದರಿದೆ ||
ಬೇಸರೇತಕೆ ದೇವ ಧರ್ಮಜನ ಕುಲಮದ್ದು |
ದೋಸರಿಸದುದ್ಧರಿಸು ನಿನ್ನ ಡಿಂಗರಿಗರ್ಗೆ |
ಲೇಸಲ್ಲದಘ ಶೋಕ ಭಯ ತಾಪ ದುಃಖಂಗಳಿರ್ದಪುವೆ ಪೇಳೆಂದನು ||61||***

ಪದವಿಭಾಗ-ಅರ್ಥ:
ಆ ಸಮಯಕೆ ಐತಂದು ಕಂಡನು ಅಹಿಪತಿ ಪೀತವಾಸನಂ ಪೊಡಮಟ್ಟನು ಅಡಿದಾವರೆಗೆ (ಪಾದ ಕಮಲಕ್ಕೆ) ನುಡಿದನು=[ಆ ಸಮಯಕ್ಕೆ ಅಹಿಪತಿ ಶೇಷನು ಮುಂದೆಬಂದು ಪೀತಾಂಬರಧರ ಕೃಷ್ಣನ್ನು ಕಂಡು ಅವನ ಅಡಿದಾವರೆಗೆ ನಮಿಸಿದನು; ನಂತರ ಹೇಳಿದನು.];; ಈ ಸಕಲ ಲೋಕಮಂ ಪೊರೆವ ನಿನಗೆ ಈ ನರನ ಜೀವಮಂ ಪಡೆವುದು ಅರಿದೆ=[ಈ ಸಕಲ ಲೋಕವನ್ನೂ ಕಾಪಾಡುವ ನಿನಗೆ ಈ ಅರ್ಜುನನನ ಜೀವವನ್ನು ಮರಳಿ ಪಡೆಯುವುದು ತಿಳಿಯದೆ? ];; ಬೇಸರ ಏತಕೆ ದೇವ ಧರ್ಮಜನ ಕುಲಮ್ ಅದ್ದುದು (ಮುಳುಗಿತು) ಓಸರಿಸದೆ (ಓಸರ-ಹಿಂಜರಿಯುವುದು) ಉದ್ಧರಿಸು=[ಬೇಸರವೇತಕ್ಕೆ? ದೇವ ಧರ್ಮಜನ ಕುಲವು ಇವನ ಸಾವಿನಿಂದ ಮುಳುಗಿತು. ಹಿಂಜರಿಯದೆ ಉದ್ಧರಿಸು.];; ನಿನ್ನ ಡಿಂಗರಿಗರ್ಗೆ ಲೇಸು ಅಲ್ಲದೆ ಅಘ ಶೋಕ ಭಯ ತಾಪ ದುಃಖಂಗಳು ಇರ್ದಪುವೆ ಪೇಳು ಎಂದನು=[ನಿನ್ನ ಸೇವೆ ಮಾಡವವರಿಗೆ ಒಳ್ಳೆಯದಲ್ಲದೆ, ಅಘ/ಪಾಪ, ಶೋಕ ಭಯ ತಾಪ ದುಃಖಗಳು ಇರುವುವೇ?ವ ಹೇಳು ಎಂದನು].
  • ತಾತ್ಪರ್ಯ:ಆ ಸಮಯಕ್ಕೆ ಅಹಿಪತಿ ಶೇಷನು ಮುಂದೆಬಂದು ಪೀತಾಂಬರಧರ ಕೃಷ್ಣನ್ನು ಕಂಡು ಅವನ ಅಡಿದಾವರೆಗೆ ನಮಿಸಿದನು; ನಂತರ ಹೇಳಿದನು. ಈ ಸಕಲ ಲೋಕವನ್ನೂ ಕಾಪಾಡುವ ನಿನಗೆ ಈ ಅರ್ಜುನನನ ಜೀವವನ್ನು ಮರಳಿ ಪಡೆಯುವುದು ತಿಳಿಯದೆ? ಬೇಸರವೇತಕ್ಕೆ? ದೇವ! ಧರ್ಮಜನ ಕುಲವು ಇವನ ಸಾವಿನಿಂದ ಮುಳುಗಿತು. ಹಿಂಜರಿಯದೆ ಉದ್ಧರಿಸು. ನಿನ್ನ ಸೇವೆ ಮಾಡವವರಿಗೆ ಒಳ್ಳೆಯದಲ್ಲದೆ, ಪಾಪ, ಶೋಕ ಭಯ ತಾಪ ದುಃಖಗಳು ಇರುವುವೇ? ಹೇಳು ಎಂದನು].
  • (ಪದ್ಯ-೬೧)

ಪದ್ಯ:-:೬೨:

[ಸಂಪಾದಿಸಿ]

ತಾತನಸುವಂ ಪಡೆಯಲೀ ಬಭ್ರುವಾಹನಂ |
ಪಾತಾಳಕೆಯ್ದಿ ಜೀವದ ರತ್ನಮಂ ಬೇಡಿ |
ಘಾತಿಸಿದ ನಹಿಗಳಮ ತಾನದಂ ಪರಿಹರಿಸಿ ನಿನ್ನ ನೀಕ್ಷಿಸುವೆನೆಂದು ||
ಭೂತಳಕೆ ಬಂದೆನಿದೆ ಮಣಿ ತನ್ನ ಕೈಯೊಳೀ |
ಶ್ವೇತವಾಹನನ ತಲೆಯಂ ತರಿಸು ಜಗದೊಳ |
ಜ್ಞಾತಮಾವುದು ನಿನಗೆ ಸರ್ವಗತನಪ್ಪೆ ನೀನೆಂದು ಫಣಿಪತಿ ನುಡಿದನು ||62||

ಪದವಿಭಾಗ-ಅರ್ಥ:
ತಾತನ ಅಸುವಂ ಪಡೆಯಲು ಈ ಬಭ್ರುವಾಹನಂ ಪಾತಾಳಕೆ ಐಯ್ದಿ ಜೀವದ ರತ್ನಮಂ ಬೇಡಿ ಘಾತಿಸಿದನು ಅಹಿಗಳಮ್=[ತಂದೆಯ ಪ್ರಾಣವನ್ನು ಪುನಃ ಪಡೆಯಲು ಈ ಬಭ್ರುವಾಹನನು ಪಾತಾಳಕ್ಕೆ ಬಂದು ಜೀವದರತ್ನವನ್ನು ಕೇಳಿ ಕೊಡದಿರಲು ಸರ್ಪಸಮೂಹವನ್ನು ಘಾಸಿಪಡಿಸಿದನು.];; ತಾನು ಅದಂ ಪರಿಹರಿಸಿ ನಿನ್ನನು ಈಕ್ಷಿಸುವೆನೆಂದು ಭೂತಳಕೆ ಬಂದೆನು ಇದೆ ಮಣಿ ತನ್ನಕೈಯೊಳು=[ತಾನು(ಶೇಷನು) ಯುದ್ಧವನ್ನು ಪರಿಹರಿಸಿ, ನಿನ್ನನು ನೋಡುವ ಅಪೇಕ್ಷೆಯಿಂದ ಭೂತಳಕ್ಕೆ ಬಂದಿರುವೆನು; ಇಲ್ಲಿದೆ ಸಂಜೀವಕಮಣಿ ತನ್ನ ಕೈಯಲ್ಲಿ.];; ಈ ಶ್ವೇತವಾಹನನ ತಲೆಯಂ ತರಿಸು ಜಗದೊಳು ಅಜ್ಞಾತಂ ಆವುದು ನಿನಗೆ ಸರ್ವಗತನು ಅಪ್ಪೆ ನೀನು ಎಂದು ಫಣಿಪತಿ ನುಡಿದನು=[ಈ ಅರ್ಜುನನ ತಲೆಯನ್ನು ತರಿಸು; ಜಗತ್ತಿನಲ್ಲಿ ಅಜ್ಞಾತ/ನೀನು ಅರಿಯದ ವಿಷಯ ಯಾವುದು, ಅವನ ಶಿರ ಎಲ್ಲಿದೆ ಎಂಬುದು ನಿನಗೆ ಗೊತ್ತು! ನೀನು ಸರ್ವಗತನಾಗಿರುವೆ. ಎಂದು ಫಣಿಪತಿ ಶೇಷನು ನುಡಿದನು].
  • ತಾತ್ಪರ್ಯ:ಶೇಷನು ಕೃಷ್ಣನಿಗೆ ಹೇಳಿದನು, ತಂದೆಯ ಪ್ರಾಣವನ್ನು ಪುನಃ ಪಡೆಯಲು ಈ ಬಭ್ರುವಾಹನನು ಪಾತಾಳಕ್ಕೆ ಬಂದು ಜೀವದರತ್ನವನ್ನು ಕೇಳಿ ಕೊಡದಿರಲು ಸರ್ಪಸಮೂಹವನ್ನು ಘಾಸಿಪಡಿಸಿದನು. ತಾನು(ಶೇಷನು) ಯುದ್ಧವನ್ನು ಪರಿಹರಿಸಿ, ನಿನ್ನನು ನೋಡುವ ಅಪೇಕ್ಷೆಯಿಂದ ಭೂತಳಕ್ಕೆ ಬಂದಿರುವೆನು; ಇಲ್ಲಿದೆ ಸಂಜೀವಕಮಣಿ ತನ್ನ ಕೈಯಲ್ಲಿ. ಈ ಅರ್ಜುನನ ತಲೆಯನ್ನು ತರಿಸು; ಜಗತ್ತಿನಲ್ಲಿ ಅಜ್ಞಾತ/ನೀನು ಅರಿಯದ ವಿಷಯ ಯಾವುದು, ಅವನ ಶಿರ ಎಲ್ಲಿದೆ ಎಂಬುದು ನಿನಗೆ ಗೊತ್ತು! ನೀನು ಸರ್ವಗತನಾಗಿರುವೆ. ಎಂದು ಫಣಿಪತಿ ಶೇಷನು ನುಡಿದನು.
  • (ಪದ್ಯ-೬೨)

ಪದ್ಯ:-:೬೩:

[ಸಂಪಾದಿಸಿ]

ಶೇಷನಿಂತೆಂದೊಡಾಲಿಸಿ ಕೃಷ್ಣನಬಲೆಯರ |
ಘೋಷಮಂ ನಿಲಿಸಿ ನೀವೆಲ್ಲರುಂ ಕೇಳ್ವುದೀ |
ಭಾಷೆಯಂ ಬ್ರಹ್ಮಚರ್ಯದೊಳಿಂದ್ರಿಯಂಗಳಂ ತಾನಿನ್ನೆಗಂ ಧರೆಯೊಳು ||
ಪೋಷಿಸಿದೆನಾದೊಡಾ ಪುಣ್ಯದಿಂ ಕುಂಡಲ ವಿ |
ಭೂಷಿತದ ಪಾರ್ಥನ ಶಿರಂ ಬರಲಿ ಕಳ್ದೊಯ್ದ |
ದೋಷಿಗಳ್ ತನ್ನಾಜ್ಞೆಯಿಂದ ಹತರಾಗಲರಿದಿಹುದು ಸಾರಿದೆನೆಂದನು ||63||

ಪದವಿಭಾಗ-ಅರ್ಥ:
ಶೇಷನು ಇಂತು ಎಂದೊಡೆ ಆಲಿಸಿ, ಕೃಷ್ಣನು ಅಬಲೆಯರ ಘೋಷಮಂ ನಿಲಿಸಿ,=[ಶೇಷನು ಹೀಗೆ ಹೇಳಿದಾಗ ಅದನ್ನು ಆಲಿಸಿದ ಕೃಷ್ಣನು, ಹೆಂಗಸರ ಅಳು-ಗೋಳಾಟವನ್ನು ನಿಲ್ಲಿಸಿ,];; ನೀವೆಲ್ಲರುಂ ಕೇಳ್ವುದು ಈ ಭಾಷೆಯಂ=[ನೀವೆಲ್ಲರೂ ನಾನು ಮಾಡುವ ಈ ಭಾಷೆಯನ್ನು ಕೇಳಿರಿ,];; 'ಬ್ರಹ್ಮಚರ್ಯದೊಳು ಇಂದ್ರಿಯಂಗಳಂ ತಾನು ಇನ್ನೆಗಂ ಧರೆಯೊಳು ಪೋಷಿಸಿದೆನು ಆದೊಡಾ ಪುಣ್ಯದಿಂ ಕುಂಡಲ ವಿಭೂಷಿತದ ಪಾರ್ಥನ ಶಿರಂ ಬರಲಿ, ಕಳ್ದೊಯ್ದ ದೋಷಿಗಳ್ ತನ್ನಾಜ್ಞೆಯಿಂದ ಹತರಾಗಲಿ, ಅರಿದಿಹುದು, ಸಾರಿದೆನು,' ಎಂದನು=['ತಾನು (ಕೃಷ್ಣನು) ಬ್ರಹ್ಮಚರ್ಯದಲ್ಲಿ ಇಂದ್ರಿಯಗಳನ್ನು ಇದುವರೆಗೂ ಈ ಭೂಮಿಯಲ್ಲಿ ಪೋಷಿಸಿದೆನಾದೊಡೆ ಆ ಪುಣ್ಯದಿಂದ ಕುಂಡಲ ಧರಿಸಿದ ಪಾರ್ಥನ ಶಿರವು ಬರಲಿ! ಕದ್ದೊಯ್ದ ದೋಷಿಗಳು ತನ್ನಾಜ್ಞೆಯಿಂದ ಹತರಾಗಲಿ,/ ಕೊಲ್ಲಲ್ಪಡಲಿ; ತಿಳಿದಿರಲಿ!, ಸಾರಿದೆನು/ ಪ್ರತಜ್ಞೆಮಾಡಿದ್ದೇನೆ!' ಎಂದನು].
  • ತಾತ್ಪರ್ಯ:ಶೇಷನು ಹೀಗೆ ಹೇಳಿದಾಗ ಅದನ್ನು ಆಲಿಸಿದ ಕೃಷ್ಣನು, ಹೆಂಗಸರ ಅಳು-ಗೋಳಾಟವನ್ನು ನಿಲ್ಲಿಸಿ, ನೀವೆಲ್ಲರೂ ನಾನು ಮಾಡುವ ಈ ಭಾಷೆಯನ್ನು ಕೇಳಿರಿ, 'ತಾನು (ಕೃಷ್ಣನು) ಬ್ರಹ್ಮಚರ್ಯದಲ್ಲಿ ಇಂದ್ರಿಯಗಳನ್ನು ಇದುವರೆಗೂ ಈ ಭೂಮಿಯಲ್ಲಿ ಪೋಷಿಸಿದೆನಾದೊಡೆ ಆ ಪುಣ್ಯದಿಂದ ಕುಂಡಲ ಧರಿಸಿದ ಪಾರ್ಥನ ಶಿರವು ಬರಲಿ! ಕದ್ದೊಯ್ದ ದೋಷಿಗಳು ತನ್ನಾಜ್ಞೆಯಿಂದ ಹತರಾಗಲಿ,/ ಕೊಲ್ಲಲ್ಪಡಲಿ; ತಿಳಿದಿರಲಿ!, ಸಾರಿದೆನು/ ಪ್ರತಜ್ಞೆಮಾಡಿದ್ದೇನೆ!' ಎಂದನು.
  • ಟೀಕೆ:ಈ ಭೂಮಿಯಲ್ಲಿ ಇದುವರೆಗೂ ಇಂದ್ರಿಯಗಳನ್ನು ಬ್ರಹ್ಮಚರ್ಯದಲ್ಲಿ ಪೋಷಿಸಿದವನು ಆದೊಡೆ: ಇಂದ್ರಿಯಗಳನ್ನು ಬ್ರಹ್ಮಚರ್ಯೆಯಲ್ಲಿ ತುಂಬುವುದು: ಅಂದರೆ ಈ ಜೀವಿತದಲ್ಲಿ, ಪಂಚ ಇಂದ್ರಿಯಗಳಾದ -ಚಕ್ಷು, ಶ್ರೋತ್ರು, ಜಿಹ್ವಾ, ಘ್ರಾಣ, ತ್ವಕ್, ಮನಸ್ಸು/ ಕಣ್ಣು, ಕಿವಿ, ನಾಲಗೆ, ಮೂಗು, ಚರ್ಮ, ಮನಸ್ಸು [ಮನಸ್ಸನ್ನು ಆರನೆಯ ಇಂದ್ರಿಯ ಎನ್ನುವರು] ಇವು ಪ್ರಾಪಂಚಿಕ ವ್ಯವಹಾರದಲ್ಲಿದ್ದರೂ, ಬ್ರಹ್ಮಪರವಾಗಿ ಅಥವಾ ಬ್ರಹ್ಮತತ್ವದಲ್ಲಿ ನೆಲೆಸಿರುವಂತೆ ಇರುವುದು - ಇದು ಜ್ಞಾನಿಗಳ ಸ್ಥಿತಿ)
  • (ಪದ್ಯ-೬೩)

ಪದ್ಯ:-:೬೪:

[ಸಂಪಾದಿಸಿ]

ಜನಪ ಕೇಳಾಶ್ಚರ್ಯಮಂ ಬಳಿಕ ಕೃಷ್ಣನಿಂ |
ತೆನೆ ದುಸ್ಸ್ವಭಾವ ದುರ್ಬುದ್ಧಿಗಳನರಿದು ಪಾ |
ರ್ಥನ ತಲೆಯನಾಕ್ಷಣಕೆ ತಂದುದು ಸುದರ್ಶನಂ ಮಣಿಪುರದ ರಣಭೂಮಿಗೆ ||
ಜನಮೈದೆ ಕೊಂಡಾಡಿತುರಗಪತಿ ಹರಿಸದಿಂ |
ವಿನುತ ಸಂಜೀವಕದ ಮಣಿಯನಿತ್ತಂ ಮುಕುಂ |
ದನ ಕೈಯೊಳಾಗ ಹರಿ ನೋಡಿದಂ ಕೃಪೆಯಿಂದೆ ಕರ್ಣಸುತ ಫಲ್ಗುಣರನು ||64||

ಪದವಿಭಾಗ-ಅರ್ಥ:
ಜನಪ ಕೇಳು ಆಶ್ಚರ್ಯಮಂ ಬಳಿಕ ಕೃಷ್ಣನು ಇಂತೆನೆ ದುಸ್ಸ್ವಭಾವ ದುರ್ಬುದ್ಧಿಗಳನು ಅರಿದು ಪಾರ್ಥನ ತಲೆಯನು ಆಕ್ಷಣಕೆ ತಂದುದು ಸುದರ್ಶನಂ ಮಣಿಪುರದ ರಣಭೂಮಿಗೆ=[ಜನಪ ಜನಮೇಜಯನೇ ಕೇಳು ಆಶ್ಚರ್ಯವನ್ನು, ಬಳಿಕ ಕೃಷ್ಣನು ಹೀಗೆ ಸಾರಲು, ದುಸ್ವಭಾವ ದುರ್ಬುದ್ಧಿ ಹೆಸರಿನ ಸರ್ಪಗಳನ್ನು ಕೊಂದು ಪಾರ್ಥನ ತಲೆಯನ್ನು ಆಕ್ಷಣದಲ್ಲಿ ಸುದರ್ಶನ ಚಕ್ರವು ಮಣಿಪುರದ ರಣಭೂಮಿಗೆ ತಂದಿತು.];; ಜನಂ ಐದೆ (ಬರಲು) ಕೊಂಡಾಡಿತು ಉರಗಪತಿ ಹರಿಸದಿಂ ವಿನುತ ಸಂಜೀವಕದ ಮಣಿಯನು ಇತ್ತಂ ಮುಕುಂದನ ಕೈಯೊಳು ಆಗ ಹರಿ ನೋಡಿದಂ ಕೃಪೆಯಿಂದೆ ಕರ್ಣಸುತ ಫಲ್ಗುಣರನು=[ಜನರು (ಐದೆ)ತಲೆಯು ಬಂದುದನ್ನು ನೋಡಿ ಕೊಂಡಾಡಿದರು; ಉರಗಪತಿ ಶೇಷನು ಹರ್ಷದಿಂದ ಶ್ರೇಷ್ಠವಾದ ಸಂಜೀವಕದ ಮಣಿಯನ್ನು ಮುಕುಂದನ ಕೈಯಲ್ಲಿ ಕೊಟ್ಟನು. ಆಗ ಹರಿ ಕರ್ಣಸುತ ಫಲ್ಗುಣರನ್ನು ಕೃಪೆಯಿಂದೆ ನೋಡಿದನು.]
  • ತಾತ್ಪರ್ಯ:ಜನಪ ಜನಮೇಜಯನೇ ಕೇಳು ಆಶ್ಚರ್ಯವನ್ನು, ಬಳಿಕ ಕೃಷ್ಣನು ಹೀಗೆ ಸಾರಲು, ತಲೆಯನ್ನು ಕದ್ದ ದುಸ್ವಭಾವ ದುರ್ಬುದ್ಧಿ ಹೆಸರಿನ ಸರ್ಪಗಳನ್ನು ಕೊಂದು ಪಾರ್ಥನ ತಲೆಯನ್ನು ಆಕ್ಷಣದಲ್ಲಿ ಸುದರ್ಶನ ಚಕ್ರವು ಮಣಿಪುರದ ರಣಭೂಮಿಗೆ ತಂದಿತು. ಜನರು ಅರ್ಜುನನ ತಲೆಯು ಬಂದುದನ್ನು ನೋಡಿ ಕೊಂಡಾಡಿದರು; ಉರಗಪತಿ ಶೇಷನು ಹರ್ಷದಿಂದ ಶ್ರೇಷ್ಠವಾದ ಸಂಜೀವಕದ ಮಣಿಯನ್ನು ಮುಕುಂದನ ಕೈಯಲ್ಲಿ ಕೊಟ್ಟನು. ಆಗ ಹರಿ ಕರ್ಣಸುತ ಫಲ್ಗುಣರನ್ನು ಕೃಪೆಯಿಂದ ನೋಡಿದನು.
  • (ಪದ್ಯ-೬೪)XVI

ಪದ್ಯ:-:೬೫:

[ಸಂಪಾದಿಸಿ]

ತದನಂತರದೊಳಂಬುರುಹ ಲೋಚನಂ ತಾನೆ |
ಮೊದಲಿನಜಸುತನ ತನುತಲೆಗಳಂ ಕೂಡಿ ಜೀ |
ವದ ಮಣಿಯನೆದೆಯಮೇಲಿರಿಸಿ ಬಳಿಕರ್ಜುನನ ಕಾಯಕೆ ಶಿರವನೊಂದಿಸಿ ||
ಹೃದಯದೆಡೆಗಾ ದಿವ್ಯರತ್ನಮಂ ಸಂಗರಿಸಿ |
ಬದುಕಲೀವರೀಶನಾಜ್ಞೆ ಯೊಳೆಂದು ಪರಸಿ ಕರು |
ಣದೊಳವರನೀಕ್ಷಿಸಿದೊಡಭವಪ್ರಸಾದದಿಂ ಜೀವಿಸಿದರಾ ಕ್ಷಣದೊಳು ||65||

ಪದವಿಭಾಗ-ಅರ್ಥ:
ತದನಂತರದೊಳು ಅಂಬುರುಹ ಲೋಚನಂ ತಾನೆ ಮೊದಲು ಇನಜಸುತನ ತನುತಲೆಗಳಂ ಕೂಡಿ ಜೀವದ ಮಣಿಯನು ಎದೆಯಮೇಲೆ ಇರಿಸಿ ಬಳಿಕ ಅರ್ಜುನನ ಕಾಯಕೆ ಶಿರವನು ಒಂದಿಸಿ=[ಆ ನಂತರ ಕೃಷ್ಣನು ತಾನೆ ಮೊದಲು ವೃಷಕೇತುವಿನ ದೇಹ ಮತ್ತು ತಲೆಗಳನ್ನು ಜೋಡಿಸಿ, ಸಂಜೀವಕದ ಮಣಿಯನ್ನು ಅವನ ಎದೆಯಮೇಲೆ ಇರಿಸಿದನು. ಬಳಿಕ ಅರ್ಜುನನ ದೇಹಕ್ಕೆ ಅವನ ಶಿರವನ್ನು ಹೊಂದಿಸಿ];; ಹೃದಯದೆಡೆಗೆ ಆ ದಿವ್ಯರತ್ನಮಂ ಸಂಗರಿಸಿ ಬದುಕಲಿ ಇವರು ಈಶನ ಆಜ್ಞೆಯೊಳು ಎಂದು ಪರಸಿ ಕರುಣದೊಳು ಅವರನು ಈಕ್ಷಿಸಿದೊಡೆ ಅಭವಪ್ರಸಾದದಿಂ (ಅಭವ-ಈಶ್ವರ, ಪ್ರಸಾದ- ಅನುಗ್ರಹ) ಜೀವಿಸಿದರು ಆ ಕ್ಷಣದೊಳು=[ಹೃದಯವಿದ್ದ ಭಾಗದಲ್ಲಿ ಆ ದಿವ್ಯರತ್ನವನ್ನು ಹೊಂದುವಂತೆ ಇರಿಸಿ, ಈಶ್ವರನ ಆಜ್ಞೆಯಂತೆ ಇವರು ಬದುಕಲಿ ಎಂದು ಹರಸಿ ಕರುಣದಿಂದ ಅವರನ್ನು ನೋಡಿದಾಗ, ಈಶ್ವರನ ಅನುಗ್ರಹದಿಂದ ಆ ಕ್ಷಣದಲ್ಲಿ ಜೀವತಳೆದರು.]
  • ತಾತ್ಪರ್ಯ:ಆ ನಂತರ ಕೃಷ್ಣನು ತಾನೇ ಮೊದಲು ವೃಷಕೇತುವಿನ ದೇಹ ಮತ್ತು ತಲೆಗಳನ್ನು ಜೋಡಿಸಿ, ಸಂಜೀವಕದ ಮಣಿಯನ್ನು ಅವನ ಎದೆಯಮೇಲೆ ಇರಿಸಿದನು. ಬಳಿಕ ಅರ್ಜುನನ ದೇಹಕ್ಕೆ ಅವನ ಶಿರವನ್ನು ಹೊಂದಿಸಿ, ಹೃದಯವಿದ್ದ ಭಾಗದಲ್ಲಿ ಆ ದಿವ್ಯರತ್ನವನ್ನು ಹೊಂದುವಂತೆ ಇರಿಸಿ, ಈಶ್ವರನ ಆಜ್ಞೆಯಂತೆ ಇವರು ಬದುಕಲಿ ಎಂದು ಹರಸಿ ಕರುಣದಿಂದ ಅವರನ್ನು ನೋಡಿದಾಗ, ಈಶ್ವರನ ಅನುಗ್ರಹದಿಂದ ಆ ಕ್ಷಣದಲ್ಲಿ ಜೀವತಳೆದರು.
  • (ಪದ್ಯ-೬೫)

ಪದ್ಯ:-:೬೬:

[ಸಂಪಾದಿಸಿ]

ಲೀಲೆಯೊಳಜಾಂಡ ಕೋಟಿಗಳಳಿವುವಾದಪುವು |
ಪಾಲಿಸಿದೊಡಿರ್ದಪುವು ಗಡ ಪರಮ ಪುರುಷನ ಕೃ |
ಪಾಲೋಕನದೊಳೇಳ್ವುದರಿದೆ ಮಡಿದರ್ಜುನಾದಿಗಳೆಂದು ಧರೆ ಪೊಗಳಲು ||
ಆಲಿಗಳರಳ್ದುವಸು ಪನರಿಸಿತೊಡಲೊಳಗೆಸೆದು |
ದಾಲಲಿತ ಮುಖಕಾಂತಿ ಪೊಗರೇರಿತವಯವಂ |
ಮೇಲೆ ಮೈಮುರಿದರೊಯ್ಯನೆ ಪಾರ್ಥ ಕರ್ಣ ಸುತರಸುರಾರಿಯಂ ಜಪಿಸುತೆ ||66||

ಪದವಿಭಾಗ-ಅರ್ಥ:
ಲೀಲೆಯೊಳು ಅಜಾಂಡ ಕೋಟಿಗಳು ಅಳಿವುವು ಆದಪುವು ಪಾಲಿಸಿದೊಡೆ ಇರ್ದಪುವು ಗಡ!=[ಆ ಪರಮ ಪುರುಷನ (ಕೃಷ್ಣನ) ಲೀಲೆಯಲ್ಲಿ ಅಜಾಂಡ/ಬ್ರಹ್ಮಾಂಡ ಕೋಟಿಗಳು ನಾಶವಾಗುವುವು, ಸೃಷ್ಟಿಯಾಗುವುವು, ಅವನು ಪಾಲಿಸಿದರೆ ಇರುಪುವು, ಗಡ!] (ಅವನ ಲೀಲೆಯಲ್ಲಿ ಲಯ-ಸೃಷ್ಟಿ-ಸ್ಥಿತಿ);; ಪರಮ ಪುರುಷನ ಕೃಪಾಲೋಕನದೊಳು ಏಳ್ವುದು ಅರಿದೆ ಮಡಿದ ಅರ್ಜುನಾದಿಗಳು ಎಂದು ಧರೆ ಪೊಗಳಲು=[ಪರಮ ಪುರುಷನ ಕೃಪಾದೃಷ್ಟಿಯಿಂದ ಮಡಿದ ಅರ್ಜುನಾದಿಗಳು ಏಳುವುದು ಅಸಾಧ್ಯವೇ! ಎಂದು ಧರೆಯಲ್ಲಿ ಜನರು ಹೊಗಳಿದರು.];; ಆಲಿಗಳು ಅರಳ್ದುವು ಅಸು (ಪ್ರಾಣ) ಪನರಿಸಿತು (ಪಸರು:ಹರಡು -ವ್ಯಾಪಿಸು) ಒಡಲೊಳಗೆ ಎಸೆದುದಾ ಲಲಿತ ಮುಖಕಾಂತಿ ಪೊಗರೇರಿತು (ಪೊಗರು:ಶಕ್ತಿ, ಸೊಕ್ಕು) ಅವಯವಂ ಮೇಲೆ ಮೈಮುರಿದರು ಒಯ್ಯನೆ ಪಾರ್ಥ ಕರ್ಣಸುತರು ಅಸುರಾರಿಯಂ ಜಪಿಸುತೆ=[ಅರ್ಜುನ ವೃಷಕೇತುವಿನ ಕಣ್ಣಿನ ಆಲಿಗಳು ಅರಳಿ ತೆರೆದವು, ದೇಹದೊಳಗೆ ಪ್ರಾಣವು ವ್ಯಾಪಿಸಿತು; ಸುಂದರ ಮುಖಕಾಂತಿ ಪ್ರಕಾಶಹೊಂದಿತು; ಅವಯವಗಳಲ್ಲಿ ಶಕ್ತಿತುಂಬಿತು; ಆಮೇಲೆ ಅಸುರಾರಿಯಾದ ಕೃಷ್ಣನ್ನು ಜಪಿಸುತ್ತಾ ಮೆಲ್ಲಗೆ ಮೈಮುರಿದರು ಪಾರ್ಥ ಮತ್ತು ಕರ್ಣಸುತರು].
  • ತಾತ್ಪರ್ಯ:ಆ ಪರಮ ಪುರುಷನ (ಕೃಷ್ಣನ) ಲೀಲೆಯಲ್ಲಿ ಅಜಾಂಡ/ಬ್ರಹ್ಮಾಂಡ ಕೋಟಿಗಳು ನಾಶವಾಗುವುವು, ಸೃಷ್ಟಿಯಾಗುವುವು, ಅವನು ಪಾಲಿಸಿದರೆ ಇರುಪುವು, ಗಡ! (ಅವನ ಲೀಲೆಯಲ್ಲಿ ಸೃಷ್ಟಿ-ಸ್ಥಿತಿ-ಲಯ ಆಗುವುದು. ಪರಮ ಪುರುಷನ ಕೃಪಾದೃಷ್ಟಿಯಿಂದ ಮಡಿದ ಅರ್ಜುನಾದಿಗಳು ಏಳುವುದು ಅಸಾಧ್ಯವೇ! ಎಂದು ಧರೆಯಲ್ಲಿ ಜನರು ಹೊಗಳಿದರು. ಅರ್ಜುನ ವೃಷಕೇತುವಿನ ಕಣ್ಣಿನ ಆಲಿಗಳು ಅರಳಿ ತೆರೆದವು, ದೇಹದೊಳಗೆ ಪ್ರಾಣವು ವ್ಯಾಪಿಸಿತು; ಸುಂದರ ಮುಖ ಕಾಂತಿಪಡೆದು ಪ್ರಕಾಶಹೊಂದಿತು; ಅವಯವಗಳಲ್ಲಿ ಶಕ್ತಿತುಂಬಿತು; ಆಮೇಲೆ ಅಸುರಾರಿಯಾದ ಕೃಷ್ಣನ್ನು ಜಪಿಸುತ್ತಾ ಮೆಲ್ಲಗೆ ಮೈಮುರಿದರು ಪಾರ್ಥ ಮತ್ತು ಕರ್ಣಸುತರು.
  • (ಪದ್ಯ-೬೬)

ಪದ್ಯ:-:೬೭:

[ಸಂಪಾದಿಸಿ]

ಇಡಿದ ಕತ್ತಲೆಯಿಂ ಜಗುಳ್ದವಾರಿಜದಂತೆ |
ಬಿಡದೆ ಮುಸುಕಿದ ಮೇಘಮಂ ಕಳೆದ ರವಿಯಂತೆ |
ತುಡುಕಿರ್ದರಾಹು ತೊಲಗಿದ ಚಂದ್ರನಂತೆ ಕರ್ಣಜ ಪಾರ್ಥರಾಸ್ಯಂಗಳು ||
ಕಡುಚೆಲ್ವಕಾಂತಿ ಕಳೆಗಳನಾಂತುವಾಗ ಪಾ |
ಲ್ಗಡಲೊಡೆಯನಂ ಮುಂದೆ ಕಂಡು ಪದ ಕಮಲದೊಳ್ |
ಪೊಡಮಡಲವರ್ಗಳಂ ತೆಗೆದಪ್ಪಿ ಚುಂಬಿಸುತೆ ಮೈದಡವಿದಂ ಕೃಪೆಯೊಳು ||67||

ಪದವಿಭಾಗ-ಅರ್ಥ:
ಇಡಿದ ಕತ್ತಲೆಯಿಂ ಜಗುಳ್ದ (ಜಗುಳು:ಬಿಚ್ಚು ,ಜಾರಿಕೊಳ್ಳು) ವಾರಿಜದಂತೆ ಬಿಡದೆ ಮುಸುಕಿದ ಮೇಘಮಂ ಕಳೆದ ರವಿಯಂತೆ ತುಡುಕಿರ್ದ ರಾಹು ತೊಲಗಿದ ಚಂದ್ರನಂತೆ=[ದಟ್ಟವಾಗಿ ತುಂಬಿದ ಕತ್ತಲೆಯಿಂದ ಹೊರಬಂದ ಕಮಲದಂತೆ, ದಟ್ಟ ಮೊಡ ಮುಸುಕಿದುದನ್ನು ದಾಟಿದ ಸೂರ್ಯನಂತೆ, ಹಿಡಿದ ರಾಹು ತೊಲಗಿದ ಚಂದ್ರನಂತೆ];; ಕರ್ಣಜ ಪಾರ್ಥರ ಆಸ್ಯಂಗಳು (ಆಸ್ಯ-ಮುಖ) ಕಡುಚೆಲ್ವಕಾಂತಿ ಕಳೆಗಳನು ಆಂತುವಾಗ=[ಕರ್ಣಜನಾದ ವೃಷಕೆತು ಪಾರ್ಥರ ಮುಖಗಳು ಬಹಳ ಚೆಲುವಾದ ಕಾಂತಿ ಮತ್ತು ಕಳೆಯನ್ನು ಆಗ ಪಡೆದವು.];; ಪಾಲ್ಗಡಲ ಒಡೆಯನಂ ಮುಂದೆ ಕಂಡು ಪದ ಕಮಲದೊಳ್ ಪೊಡಮಡಲು ಅವರ್ಗಳಂ ತೆಗೆದಪ್ಪಿ ಚುಂಬಿಸುತೆ ಮೈದಡವಿದಂ ಕೃಪೆಯೊಳು=[ಕ್ಷೀರಸಾಗರದ ಒಡೆಯನಾದ ಕೃಷ್ಣನನ್ನು ಎದುರಿನಲ್ಲಿ ಕಂಡು ಅವನ ಪದಕಮಲಕ್ಕೆ ನಮಿಸಲು, ಅವರುಗಳನ್ನು ಬರಸೆಳೆದು ಅಪ್ಪಿಕೊಂಡು ಚುಂಬಿಸುತ್ತಾ ಕೃಪೆಯಿಂದ ಮೈದಡವಿದನು].
  • ತಾತ್ಪರ್ಯ:ದಟ್ಟವಾಗಿ ತುಂಬಿದ ಕತ್ತಲೆಯಿಂದ ಹೊರಬಂದ ಕಮಲದಂತೆ, ದಟ್ಟ ಮೊಡ ಮುಸುಕಿದುದನ್ನು ದಾಟಿದ ಸೂರ್ಯನಂತೆ, ಹಿಡಿದ ರಾಹು ತೊಲಗಿದ ಚಂದ್ರನಂತೆ, ಕರ್ಣಜನಾದ ವೃಷಕೆತು ಪಾರ್ಥರ ಮುಖಗಳು ಬಹಳ ಚೆಲುವಾದ ಕಾಂತಿ ಮತ್ತು ಕಳೆಯನ್ನು ಆಗ ಪಡೆದವು. ಕ್ಷೀರಸಾಗರದ ಒಡೆಯನಾದ ಕೃಷ್ಣನನ್ನು ಎದುರಿನಲ್ಲಿ ಕಂಡು ಅವನ ಪದಕಮಲಕ್ಕೆ ನಮಿಸಲು, ಅವರುಗಳನ್ನು ಬರಸೆಳೆದು ಅಪ್ಪಿಕೊಂಡು ಚುಂಬಿಸುತ್ತಾ ಕೃಪೆಯಿಂದ ಮೈದಡವಿದನು].
  • (ಪದ್ಯ-೬೭)

ಪದ್ಯ:-:೬೮:

[ಸಂಪಾದಿಸಿ]

ದುಂದುಭಿಗಳಭ್ರದೊಳ್ ಮೊಳಗಿದುವು ಸೂಸಿದುದು |
ಮಂದಾರದರಲ ಸರಿ(ಹರಿ) ನರ ಕರ್ಣಜರ ಮೇಲೆ |
ಬಂದಪ್ಪಿದಂ ಬಳಿಕವರ್ಗಳಂ ಭೀಮನಾಲಿಂಗಿಸಿದಳಾಗ ಕುಂತಿ ||
ವಂದಿಸಲ್ ಪರಸಿದರ್ ದೇವಕಿ ಯಶೋದೆಯರ್ |
ಮುಂದಿರ್ದ ಶೇಷನಂ ಕಾಣಿಸಲ್ ಪೊಡಮಟ್ಟ |
ರಂದವರ್ ಮುದದಿಂದೆ ಹರಿ ಪಾಂಚಜನ್ಯಮಂ ಪಿಡಿದನುರುಘೋಷಮಾಗೆ ||68||

ಪದವಿಭಾಗ-ಅರ್ಥ:
ದುಂದುಭಿಗಳು ಅಭ್ರದೊಳ್ ಮೊಳಗಿದುವು ಸೂಸಿದುದು ಮಂದಾರದ ಅರಲು ಅಸರಿ ನರ ಕರ್ಣಜರ ಮೇಲೆ=[ಆಕಾಶದಲ್ಲಿ ದೇವತೆಗಳ ವಾದ್ಯ ದುಂದುಭಿಗಳು ಮೊಳಗಿದುವು; ಅರ್ಜುನ ಕರ್ಣಜರ ಮೇಲೆ ಮಂದಾರದ ಅರಲು/ ಹೂವುಗಳು ಸುರಿದವು;];; ಬಂದು ಅಪ್ಪಿದಂ ಬಳಿಕ ಅವರ್ಗಳಂ ಭೀಮನು ಆಲಿಂಗಿಸಿದಳು ಆಗ ಕುಂತಿ=[ಬಳಿಕ ಭೀಮನು ಬಂದು ಅವರುಗಳನ್ನು ಅಪ್ಪಿದನು; ಆಗ ಕುಂತಿಯು ಅವರನ್ನು ಆಲಿಂಗಿಸಿದಳು. ];; ವಂದಿಸಲ್ ಪರಸಿದರ್ ದೇವಕಿ ಯಶೋದೆಯರ್ ಮುಂದಿರ್ದ ಶೇಷನಂ ಕಾಣಿಸಲ್ ಪೊಡಮಟ್ಟರು ಅಂದು ಅವರ್ ಮುದದಿಂದೆ ಹರಿ ಪಾಂಚಜನ್ಯಮಂ ಪಿಡಿದನು ಉರುಘೋಷಮಾಗೆ=[ಅವರು ಬಂದು ವಂದಿಸಲು ದೇವಕಿ ಯಶೋದೆಯರುಹರಸಿದರು; ಮುಂದೆ ನಿಂತಿದ್ದ ಶೇಷನನ್ನು ತೋರಿಸಲು, ಅಂದು ಅವರು ಸಂತೋಷದಿಂದ ನಮಸ್ಕರಿಸಿದರು. ಕೃಷ್ಣನು ಪಾಂಚಜನ್ಯವನ್ನು ಹಿಡಿದು ದೊಡ್ಡದಾಗಿ ಘೋಷಮಾಡಿದನು/ ಊದಿದನು ].
  • ತಾತ್ಪರ್ಯ:ಅರ್ಜುನ ವೃಷಕೇತುಗಳು ಜೀವ ಪಡೆಯಸಲು, ಆಕಾಶದಲ್ಲಿ ದೇವತೆಗಳ ವಾದ್ಯ ದುಂದುಭಿಗಳು ಮೊಳಗಿದುವು; ಅರ್ಜುನ ಕರ್ಣಜರ ಮೇಲೆ ಮಂದಾರದ ಅರಲು/ ಹೂವುಗಳು ಸುರಿದವು; ಬಳಿಕ ಭೀಮನು ಬಂದು ಅವರುಗಳನ್ನು ಅಪ್ಪಿದನು; ಆಗ ಕುಂತಿಯು ಅವರನ್ನು ಆಲಿಂಗಿಸಿದಳು. ಅವರು ಬಂದು ವಂದಿಸಲು ದೇವಕಿ ಯಶೋದೆಯರುಹರಸಿದರು; ಮುಂದೆ ನಿಂತಿದ್ದ ಶೇಷನನ್ನು ತೋರಿಸಲು, ಅಂದು ಅವರು ಸಂತೋಷದಿಂದ ನಮಸ್ಕರಿಸಿದರು. ಕೃಷ್ಣನು ಪಾಂಚಜನ್ಯವನ್ನು ಹಿಡಿದು ದೊಡ್ಡದಾಗಿ ಘೋಷಮಾಡಿದನು/ ಊದಿದನು ].
  • (ಪದ್ಯ-೬೮)

ಪದ್ಯ:-:೬೯:

[ಸಂಪಾದಿಸಿ]

ಪದುಳಿಸಿದನನಿರುದ್ಧ ಸಾತ್ಯಕಿ ಪ್ರದ್ಯುಮ್ನ |
ಗದ ಸಾಂಬ ಕೃತವರ್ಮ ಶಠ ನಿಶಠ ಪ್ರಮುಖ |
ಯದುವೀರರನುಸಾಲ್ವ ಯೌವನಾಶ್ವಾಸಿತಧ್ವಜ ಹಂಸಕೇತುಗಳ್ಗೆ ||
ಮುದವೇರಿತಸುರಾರಿಯಂ ಕಂಡು ತಮತಮಗೆ |
ಪದಕೆರಗಿ ಬಿನ್ನೈಸಿದರ್ ಬಭ್ರುವಾಹನನ |
ಕದನದಾಯಾಸಮಂ ನಗರದೊಳುಲೂಪಿ ಚಿತ್ರಾಂಗದೆಯರೆಸಗಿದುದನು ||69||

ಪದವಿಭಾಗ-ಅರ್ಥ:
ಪದುಳಿಸಿದ ಅನನಿರುದ್ಧ ಸಾತ್ಯಕಿ ಪ್ರದ್ಯುಮ್ನ ಗದ ಸಾಂಬ ಕೃತವರ್ಮ ಶಠ ನಿಶಠ ಪ್ರಮುಖ ಯದುವೀರರು, ಅನುಸಾಲ್ವ ಯೌವನಾಶ್ವ ಅಸಿತಧ್ವಜ ಹಂಸಕೇತುಗಳ್ಗೆ=[ಸೌಖ್ಯವನ್ನು ಪಡೆದ ಅನನಿರುದ್ಧ, ಸಾತ್ಯಕಿ, ಪ್ರದ್ಯುಮ್ನ, ಗದ, ಸಾಂಬ, ಕೃತವರ್ಮ, ಶಠ, ನಿಶಠ, ಪ್ರಮುಖ ಯದುವೀರರರಿಗೂ; ಅನುಸಾಲ್ವ, ಯೌವನಾಶ್ವ, ಅಸಿತಧ್ವಜ, ಹಂಸಕೇತುಗಳಿಗೆ ];; ಮುದವೇರಿತು ಅಸುರಾರಿಯಂ ಕಂಡು ತಮತಮಗೆ ಪದಕೆ ಎರಗಿ ಬಿನ್ನೈಸಿದರ್ ಬಭ್ರುವಾಹನನ ಕದನದ ಆಯಾಸಮಂ ನಗರದೊಳುಉಲೂಪಿ ಚಿತ್ರಾಂಗದೆಯರು ಎಸಗಿದುದನು=[ಸಂತೋಷವುಕ್ಕಿತು ಅಸುರಾರಿಯನ್ನು ಕಂಡು ಒಬ್ಬೊರಾಗಿ ಅವನ ಪಾದಕ್ಕೆ ನಮಿಸಿ,ಬಿನ್ನೈಸಿದರ್ ಬಭ್ರುವಾಹನನೊಡನೆ ಆದ ಕಾಳಗದ ಪರಿಶ್ರಮವನ್ನೂ, ತಮ್ಮನ್ನು ನಗರದಲ್ಲಿ ಉಲೂಪಿ ಚಿತ್ರಾಂಗದೆಯರು ಉಪಚರಿಸಿದುದನ್ನೂ ಹೇಳಿದರು.].
  • ತಾತ್ಪರ್ಯ:ಸೌಖ್ಯವನ್ನು ಪಡೆದ ಅನನಿರುದ್ಧ, ಸಾತ್ಯಕಿ, ಪ್ರದ್ಯುಮ್ನ, ಗದ, ಸಾಂಬ, ಕೃತವರ್ಮ, ಶಠ, ನಿಶಠ, ಪ್ರಮುಖ ಯದುವೀರರರಿಗೂ; ಅನುಸಾಲ್ವ, ಯೌವನಾಶ್ವ, ಅಸಿತಧ್ವಜ, ಹಂಸಕೇತುಗಳಿಗೆ ಅಸುರಾರಿಯನ್ನು ಕಂಡು ಸಂತೋಷವುಕ್ಕಿತು, ಒಬ್ಬೊರಾಗಿ ಅವನ ಪಾದಕ್ಕೆ ನಮಿಸಿ, ಬಭ್ರುವಾಹನನೊಡನೆ ಆದ ಕಾಳಗದ ಪರಿಶ್ರಮವನ್ನೂ, ತಮ್ಮನ್ನು ನಗರದಲ್ಲಿ ಉಲೂಪಿ ಚಿತ್ರಾಂಗದೆಯರು ಉಪಚರಿಸಿದುದನ್ನೂ ಹೇಳಿದರು.
  • (ಪದ್ಯ-೬೯)

ಪದ್ಯ:-:೭೦:

[ಸಂಪಾದಿಸಿ]

ಹರಿ ಬಳಿಕ ಜಾಹ್ನವಿಯ ಶಾಪದಿಂದಾದುದೀ |
ಪರಿಭವಂ ನಿಮಗೆಂದು ಪಾರ್ಥನಂ ತಿಳಿಪಿದಂ |
ತರಿಸಿ ಕಾಣಿಕೆಗೊಟ್ಟುಲೂಪಿ ಚಿತ್ರಾಂಗದೆಯರಸುರಾರಿಯಂ ಕಂಡರು ||
ನೆರೆದುದುಭಯರ ಸೇನೆ ಬಹಳ ಪರಿತೋಷದಿಂ |
ಮೊರೆದುದುತ್ಸವದಿಂದೆ ನಿಖಿಳ ವಾದ್ಯ ಪ್ರತತಿ |
ಪರೆದುವು ಸಮಸ್ತ ಸಂತಾಪಂಗಳೆಲ್ಲರ್ಗೆ ಕೃಷ್ಣದರ್ಶದೊಳಂದು ||70||

ಪದವಿಭಾಗ-ಅರ್ಥ:
ಹರಿ ಬಳಿಕ ಜಾಹ್ನವಿಯ ಶಾಪದಿಂದ ಆದುದ ಈ ಪರಿಭವಂ ನಿಮಗೆಂದು ಪಾರ್ಥನಂ ತಿಳಿಪಿದಂ,=[ಕೃಷ್ಣನು ಬಳಿಕ ಗಂಗೆಯ ಶಾಪದಿಂದ ನಿಮಗೆ ಸೋಲು ಆಯಿತು ಎಂದು ಪಾರ್ಥನಿಗೆ ತಿಳಿಸಿದನು.];; ತರಿಸಿ ಕಾಣಿಕೆಗೊಟ್ಟು ಉಲೂಪಿ ಚಿತ್ರಾಂಗದೆಯರು ಅಸುರಾರಿಯಂ ಕಂಡರು=[ಅರಮನೆಯಿಂದ ತರಿಸಿ ಕಾಣಿಕೆಗಳನ್ನು ಗೊಟ್ಟು ಉಲೂಪಿ ಚಿತ್ರಾಂಗದೆಯರು ಕೃಷ್ಣನ್ನು ಕಂಡು ಗೌರವಿಸಿ ಉಪಚರಿಸಿದರು.];; ನೆರೆದುದು ಉಭಯರ ಸೇನೆ ಬಹಳ ಪರಿತೋಷದಿಂ ಮೊರೆದುದು ಉತ್ಸವದಿಂದೆ ನಿಖಿಳ ವಾದ್ಯ ಪ್ರತತಿ ಪರೆದುವು (ಪರಿಹಾರವಾಯಿತು) ಸಮಸ್ತ ಸಂತಾಪಂಗಳು ಎಲ್ಲರ್ಗೆ ಕೃಷ್ಣದರ್ಶದೊಳು ಅಂದು=[ ಇಬ್ಬರ ಸೇನೆಯೂ ಒಟ್ಟಾಗಿ ಸೇರಿತು; ಬಹಳ ಸಂತೋಷದಿಂದ ಮೊರೆದುದು ಉತ್ಸವದಿಂದೆ ಅಖಿಲ ವಾದ್ಯ ಸಮೂಹವೂ ಮೊರೆಯಿತು/ ಶಬ್ದಮಾಡಿತು; ಅಂದು ಕೃಷ್ಣದರ್ಶದಿಂದ ಸಮಸ್ತ ದುಃಖಗಳೂ ಎಲ್ಲರಿಗೂ ಪರಿಹಾರವಾಯಿತು.].
  • ತಾತ್ಪರ್ಯ:ಕೃಷ್ಣನು ಬಳಿಕ ಗಂಗೆಯ ಶಾಪದಿಂದ ನಿಮಗೆ ಸೋಲು ಆಯಿತು ಎಂದು ಪಾರ್ಥನಿಗೆ ತಿಳಿಸಿದನು. ಅರಮನೆಯಿಂದ ತರಿಸಿ ಕಾಣಿಕೆಗಳನ್ನು ಗೊಟ್ಟು ಉಲೂಪಿ ಚಿತ್ರಾಂಗದೆಯರು ಕೃಷ್ಣನ್ನು ಕಂಡು ಗೌರವಿಸಿ ಉಪಚರಿಸಿದರು. ಇಬ್ಬರ ಸೇನೆಯೂ ಒಟ್ಟಾಗಿ ಸೇರಿತು; ಬಹಳ ಸಂತೋಷದಿಂದ ಮೊರೆದುದು ಉತ್ಸವದಿಂದೆ ಅಖಿಲ ವಾದ್ಯ ಸಮೂಹವೂ ಮೊರೆಯಿತು/ ಶಬ್ದಮಾಡಿತು; ಅಂದು ಕೃಷ್ಣದರ್ಶದಿಂದ ಎಲ್ಲರಿಗೂಸ ಮಸ್ತ ದುಃಖಗಳೂ ಪರಿಹಾರವಾಯಿತು.
  • (ಪದ್ಯ-೭೦)

ಪದ್ಯ:-:೭೧:

[ಸಂಪಾದಿಸಿ]

ಪ್ರಾರ್ಥಜಂ ಬಳಿಕನಿಬರೆಲ್ಲರಂ ವಿನಯದಿಂ |
ಪ್ರಾರ್ಥಿಸಿದೊಡಲ್ಲಿಂದೆ ಮಣಿಪುರಕೆ ಬರಲಾಗಿ |
ತೀರ್ಥಸ್ವರೂಪನಹ ಕೃಷ್ಣನಂ ಶೇಷನಂ ಮಂಡಲಾಧೀಶರೆನಿಪ ||
ಪಾರ್ಥಿವರನಳಿದೆದ್ದ ವಿಜಯನಂ ಕಂಡತಿ ಕೃ|
ತಾರ್ಥರಾದಪೆವೆಂಬ ಹರ್ಷದಿಂ ತಮತಮಗೆ |
ಸಾರ್ಥ ವೈಭವದಿಂದಲಂಕರಿಸಿ ನಗರಮಂ ನಿಖಿಲಜನಮಿದಿರ್ಗೊಂಡುದು ||71||

ಪದವಿಭಾಗ-ಅರ್ಥ:
ಪ್ರಾರ್ಥಜಂ ಬಳಿಕ ಅನಿಬರು ಎಲ್ಲರಂ ವಿನಯದಿಂ ಪ್ರಾರ್ಥಿಸಿದೊಡೆ ಅಲ್ಲಿಂದೆ ಮಣಿಪುರಕೆ ಬರಲಾಗಿ=[ಪ್ರಾರ್ಥಜನಾದ ಬಭ್ರುವಾನನು, ಬಳಿಕ ಎಲ್ಲಾ ಜನರನ್ನೂ ವಿನಯದಿಂದ ನಗರಕ್ಕೆ ಬರಲು ಪ್ರಾರ್ಥಿಸಿದಾಗ, ಅಲ್ಲಿಂದ ಅವರೆಲ್ಲರೂ ಮಣಿಪುರಕ್ಕೆ ಬಂದರು];; ತೀರ್ಥಸ್ವರೂಪನಹ ಕೃಷ್ಣನಂ ಶೇಷನಂ ಮಂಡಲಾಧೀಶರು ಎನಿಪ ಪಾರ್ಥಿವರನು ಅಳಿದು ಎದ್ದ (ಸತ್ತು ಬದುಕಿದ) ವಿಜಯನಂ ಕಂಡು ಅತಿ ಕೃತಾರ್ಥರು ಆದಪೆವೆಂಬ ಹರ್ಷದಿಂ ತಮತಮಗೆ ಸಾರ್ಥ ವೈಭವದಿಂದ ಅಲಂಕರಿಸಿ ನಗರಮಂ ನಿಖಿಲಜನಂ ಇದಿರ್ಗೊಂಡುದು=[ತೀರ್ಥಸ್ವರೂಪನಾಗಿರುವ ಕೃಷ್ಣನನ್ನೂ, ಶೇಷನನ್ನೂ, ಅವನ ರಾಜ್ಯದ ಮಂಡಲಾಧೀಶರಾದ ರಾಜರನ್ನು, ಮರಣಿಸಿ ಮತ್ತೆ ಬದುಕಿದ ಅರ್ಜುನನ್ನು ನೋಡಿದರೆ ತಾವು ಅತಿ ಕೃತಾರ್ಥರು ಆಗುವೆವೆಂಬ ಹರ್ಷದಿಂದ ತಮತಮಗೆ ಸಾಧ್ಯವಾದ ರೀತಿಯಲ್ಲಿ ವೈಭವದಿಂದ ನಗರವನ್ನು ಅಲಂಕರಿಸಿ ಎಲ್ಲಾ ಜನರು ಇದಿರುಗೊಂಡರು.];
  • ತಾತ್ಪರ್ಯ:ಪ್ರಾರ್ಥಜನಾದ ಬಭ್ರುವಾನನು, ಬಳಿಕ ಎಲ್ಲಾ ಜನರನ್ನೂ ವಿನಯದಿಂದ ನಗರಕ್ಕೆ ಬರಲು ಪ್ರಾರ್ಥಿಸಿದಾಗ, ಅಲ್ಲಿಂದ ಅವರೆಲ್ಲರೂ ಮಣಿಪುರಕ್ಕೆ ಬಂದರು. ತೀರ್ಥಸ್ವರೂಪನಾಗಿರುವ ಕೃಷ್ಣನನ್ನೂ, ಶೇಷನನ್ನೂ, ಅವನ ರಾಜ್ಯದ ಮಂಡಲಾಧೀಶರಾದ ರಾಜರನ್ನು, ಮರಣಿಸಿ ಮತ್ತೆ ಬದುಕಿದ ಅರ್ಜುನನ್ನು ನೋಡಿದರೆ ತಾವು ಅತಿ ಕೃತಾರ್ಥರು ಆಗುವೆವೆಂಬ ಹರ್ಷದಿಂದ ತಮತಮಗೆ ಸಾಧ್ಯವಾದ ರೀತಿಯಲ್ಲಿ ವೈಭವದಿಂದ ನಗರವನ್ನು ಅಲಂಕರಿಸಿ ಎಲ್ಲಾ ಜನರು ಇದಿರುಗೊಂಡರು.
  • (ಪದ್ಯ-೭೧)

ಪದ್ಯ:-:೭೨:

[ಸಂಪಾದಿಸಿ]

ತಳಿತ ಗುಡಿಗಳ ಚೆಲ್ವಿನೋರಣದ ತೋರಣದ |
ಕಳಸ ಕನ್ನಡಿವಿಡಿದ ಕನ್ನೆಯರ ಮನ್ನೆಯರ |
ದಳದ ಪೊಡೆಪಿನ ಮೊರೆವ ಭೇರಿಗಳ ಭೂರಿಗಳ ಮೃದುಮೃದಂಗಧ್ವನಿಗಳ ||
ತೊಳಗಿ ಬೆಳಗುವ ಲೋಚನಾಂತೆಯರ ಕಾಂತೆಯರ |
ಲಳಿಲುಳಿಯ ನರ್ತನದ ಕೋಪುಗಳ ರೂಪುಗಳ |
ತಳಿವ ಸೇಸೆಯ ಪೂಗಳೊತ್ತುಗಳ ಮುತ್ತುಗಳ ವಿಭವದಿಂ ಪೊಳಲೆಸೆದುದು ||72||

ಪದವಿಭಾಗ-ಅರ್ಥ:
ತಳಿತ ಗುಡಿಗಳ ಚೆಲ್ವಿನ ಓರಣದ ತೋರಣದ ಕಳಸ ಕನ್ನಡಿವಿಡಿದ ಕನ್ನೆಯರ ಮನ್ನೆಯರ ದಳದ ಪೊಡೆಪಿನ ಮೊರೆವ ಭೇರಿಗಳ ಭೂರಿಗಳ ಮೃದುಮೃದಂಗ ಧ್ವನಿಗಳ=[ಚಿಗುರುಮಾವಿನ ಎಲೆಗಳಿಂದ ಓರಣವಾಗಿ ಒಪ್ಪವಾಗಿ ಚೆಲುವಿನ, ಕಟ್ಟಿದ ತೋರಣವುಳ್ಳ ಗುಡಿಗಳ, ಕಳಸ ಕನ್ನಡಿ ಹಿಡಿದ ಕನ್ಯೆಯರ ಮುತ್ತೈದೆಯರ, ಸೈನ್ಯದ ಪೊಡೆತದಿಂದ ಮೊರೆವ/ ಸದ್ದಿನ ಭೇರಿ/ ನಗಾರಿಗಳ, ದೊಡ್ಡ ಮೃದುಮೃದಂಗ ಧ್ವನಿಗಳ,];; ತೊಳಗಿ ಬೆಳಗುವ ಲೋಚನಾಂತೆಯರ ಕಾಂತೆಯರಲಳಿಲುಳಿಯ ನರ್ತನದ ಕೋಪುಗಳ ರೂಪುಗಳ ತಳಿವ ಸೇಸೆಯ ಪೂಗಳ ಒತ್ತುಗಳ ಮುತ್ತುಗಳ ವಿಭವದಿಂ ಪೊಳಲು ಎಸೆದುದು=[ಪ್ರಕಾಶದಿಂದ ಬೆಳಗುವ ಕಡೆಗಣ್ಣುನೋಟದ ವನಿತೆಯರ, ಹೆಂಗಸರ, ವೈಯಾರದ ನರ್ತನದ, ಕೋಪುಗಳ/ಸ್ಥಬ್ದಚಿತ್ರದ, ಸುಂದರ ರೂಪುಗಳ, ತಳಿವ/ಬತ್ತಳಿಕೆಯುಳ್ಳ ಸೇಸೆಯ, ಹೂವುಗಳ ಒತ್ತುದಂಡೆಗಳ, ಮುತ್ತುಗಳ ವೈಭವದಿಂದ ಮಣಿಪುರದ ನಗರ ಶೋಭಿಸಿತು.]
  • ತಾತ್ಪರ್ಯ:ಚಿಗುರುಮಾವಿನ ಎಲೆಗಳಿಂದ ಓರಣವಾಗಿ ಒಪ್ಪವಾಗಿ ಚೆಲುವಿನ, ಕಟ್ಟಿದ ತೋರಣವುಳ್ಳ ಗುಡಿಗಳ, ಕಳಸ ಕನ್ನಡಿ ಹಿಡಿದ ಕನ್ಯೆಯರ ಮುತ್ತೈದೆಯರ, ಸೈನ್ಯದ ಪೊಡೆತದಿಂದ ಮೊರೆವ/ ಸದ್ದಿನ ಭೇರಿ/ ನಗಾರಿಗಳ, ದೊಡ್ಡ ಮೃದುಮೃದಂಗ ಧ್ವನಿಗಳ, ಪ್ರಕಾಶದಿಂದ ಬೆಳಗುವ ಕಡೆಗಣ್ಣುನೋಟದ ವನಿತೆಯರ, ಹೆಂಗಸರ, ವೈಯಾರದ ನರ್ತನದ, ಕೋಪುಗಳ/ಸ್ಥಬ್ದಚಿತ್ರದ, ಸುಂದರ ರೂಪುಗಳ, ತಳಿವ/ಬತ್ತಳಿಕೆಯುಳ್ಳ ಸೇಸೆಯ, ಹೂವುಗಳ ಒತ್ತುದಂಡೆಗಳ, ಮುತ್ತುಗಳ ವೈಭವದಿಂದ ಮಣಿಪುರದ ನಗರ ಶೋಭಿಸಿತು.
  • (ಪದ್ಯ-೭೨)

ಪದ್ಯ:-:೭೩:

[ಸಂಪಾದಿಸಿ]

ಈ ಸಂಭ್ರಮದೊಳೆಸೆವ ನಗರದೊಳ್ ನಡೆತಂದು |
ವಾಸುದೇವಾದಿಗಳ್ ಬಭ್ರುವಾಹನ ಸದನ |
ದಾಸಭೆಗೆ ವಿವಧೋಚಾರ ವಿಭವಂಗಳಂ ಕೈಕೊಳುತೆ ಬಂದು ಪುಗಲು ||
ಆ ಸವ್ಯಸಾಚಿಗೆ ನಿಜಾತ್ಮಜಂ ತನ್ನ ಸಿಂ |
ಹಾಸನವನಿತ್ತಖಿಲ ರಾಜ್ಯಮಂ ಕೊಟ್ಟು ಲ |
ಜ್ಜಾಸಮನ್ವಿತನಾಗಿ ಸುಮ್ಮನಿರಲರ್ಜುನಂ ಮಾತಾಡದಿರುತಿರ್ದನು ||73||

ಪದವಿಭಾಗ-ಅರ್ಥ:
ಈ ಸಂಭ್ರಮದೊಳು ಎಸೆವ ನಗರದೊಳ್ ನಡೆತಂದು ವಾಸುದೇವಾದಿಗಳ್ ಬಭ್ರುವಾಹನ ಸದನದ ಆ ಸಭೆಗೆ ವಿವಧೋಚಾರ ವಿಭವಂಗಳಂ ಕೈಕೊಳುತೆ ಬಂದು ಪುಗಲು=[ಈ ಬಗೆಯ ಸಂಭ್ರಮದಿಂದ ಶೋಭಿಸುವ ನಗರದಲ್ಲಿ ನಡೆದುಬಂದ ವಾಸುದೇವ ಮೊದಲಾದವರು, ಬಭ್ರುವಾಹನ ಅರಮನೆಯ ಆ ರಾಜಸಭೆಗೆ ವಿವಧ ಉಪಚಚಾರಗಳ ವೈಭವಗಳನ್ನು ಸ್ವೀಕರಿಸುತ್ತಾ ಬಂದು ಒಳಹೊಗಲು,];; ಆ ಸವ್ಯಸಾಚಿಗೆ ನಿಜಾತ್ಮಜಂ ತನ್ನ ಸಿಂಹಾಸನವನು ಇತ್ತು ಅಖಿಲ ರಾಜ್ಯಮಂ ಕೊಟ್ಟು ಲಜ್ಜಾಸಮನ್ವಿತನಾಗಿ ಸುಮ್ಮನಿರಲು ಅರ್ಜುನಂ ಮಾತಾಡದೆ ಇರುತಿರ್ದನು=[ಆ ಸವ್ಯಸಾಚಿಗೆ ಮಗನಾದ ಬಭ್ರುವಾಹನನು ತನ್ನ ಸಿಂಹಾಸನವನ್ನು ಕೊಟ್ಟು ಅಖಿಲ ರಾಜ್ಯವನ್ನೂ ಕೊಟ್ಟು ನಾಚಿಕೆಯಿಂದ ಸುಮ್ಮನಿದ್ದನು; ಅರ್ಜುನನು ಆಗ ಮಾತಾಡದೆ ಮೌನದಿಂದ ಕುಳಿತಿದ್ದನು.]
  • ತಾತ್ಪರ್ಯ:ಈ ಬಗೆಯ ಸಂಭ್ರಮದಿಂದ ಶೋಭಿಸುವ ನಗರದಲ್ಲಿ ನಡೆದುಬಂದ ವಾಸುದೇವ ಮೊದಲಾದವರು, ಬಭ್ರುವಾಹನ ಅರಮನೆಯ ಆ ರಾಜಸಭೆಗೆ ವಿವಧ ಉಪಚಚಾರಗಳ ವೈಭವಗಳನ್ನು ಸ್ವೀಕರಿಸುತ್ತಾ ಬಂದು ಒಳಹೊಗಲು, ಆ ಸವ್ಯಸಾಚಿಗೆ ಮಗನಾದ ಬಭ್ರುವಾಹನನು ತನ್ನ ಸಿಂಹಾಸನವನ್ನು ಕೊಟ್ಟು ಅಖಿಲ ರಾಜ್ಯವನ್ನೂ ಕೊಟ್ಟು ನಾಚಿಕೆಯಿಂದ ಸುಮ್ಮನಿದ್ದನು; ಅರ್ಜುನನು ಆಗ ಮಾತಾಡದೆ ಮೌನದಿಂದ ಕುಳಿತಿದ್ದನು.
  • (ಪದ್ಯ-೭೩)

ಪದ್ಯ:-:೭೪:

[ಸಂಪಾದಿಸಿ]

ರಾಯ ಕೇಳರ್ಜುನಂ ಖಿನ್ನನಾಗಿರೆ ಕಂಡು |
ವಾಯುಸುತ ಶೇಷಾದಿಗಳ್ ನುಡಿದರೆಲ್ಲಿಯುಮ |
ಜೇಯನಹೆ ಧರೆಯೊಳಿಂದಾತ್ಮಜನ ದೆಸೆಯಿಂದೆ ನಿನಗಪಜಯಂ ಬಂದುದು ||
ನೋಯಲೇತಕೆ ಬರಿದೆ ಮನ್ನಿಸು ಕುಮಾರನಂ ||
ಪ್ರೀಯಮಾಗಿ (ಗ)ದೆ ಮಗನ ಮೇಲಿನ್ನು ಮಕಟಕಟ |
ಪಾಯಮಿದು ಸುರನದಿಯ ಶಾಪದಿಂದಾಯ್ತುಳಿದೆ ಕೃಷ್ಣಪ್ರಸಾದದಿಂದೆ ||74||

ಪದವಿಭಾಗ-ಅರ್ಥ:
ರಾಯ ಕೇಳು ಅರ್ಜುನಂ ಖಿನ್ನನಾಗಿರೆ ಕಂಡು ವಾಯುಸುತ ಶೇಷಾದಿಗಳ್ ನುಡಿದರು=[ಜನಮೇಜಯ ರಾಯ ಕೇಳು, ಅರ್ಜುನನು ಸಪ್ಪಗಾಗಿರುವುದನ್ನು ಕಂಡು ಭೀಮನೂ, ಶೇಷ ಮತ್ತು ಇತರ ಹಿರಿಯರು, ಹೇಳಿದರು];; ಎಲ್ಲಿಯುಮ್ ಅಜೇಯನು ಅಹೆ ಧರೆಯೊಳಿಂದು ಆತ್ಮಜನ ದೆಸೆಯಿಂದೆ ನಿನಗೆ ಅಪಜಯಂ ಬಂದುದು=[ಈ ಧರೆಯ ಮೇಲೆ ಇನ್ನೂ ನೀನು ಎಲ್ಲೆಲ್ಲಿಯು ಅಜೇಯನಾಗಿ ಇರುವೆ. ನಿನಗೆ ಮಗನಿಂದ ಮಾತ್ರಾ ಅಪಜಯವು ಬಂದಿರುವುದು. ];; ನೋಯಲೇತಕೆ ಬರಿದೆ ಮನ್ನಿಸು ಕುಮಾರನಂ ಪ್ರೀಯಂ ಆಗದೆ ಮಗನ ಮೇಲಿನ್ನು? ಮಕಟಕಟ=[ಬರಿದೆ/ವಿನಾಕಾರಣ ಸಂಕಟ ಪಡುವುದೇತಕ್ಕೆ? ನಿನ್ನ ಮಗನನ್ನು ಮನ್ನಿಸು; ಇನ್ನೂ ನಿನಗೆ ಮಗನ ಮೇಲೆ ಪ್ರೀತಿಯು ಬರಲಿಲ್ಲವೇ? ಅಕಟ ಅಕಟ!];; ಅಪಾಯಂ ಇದು ಸುರನದಿಯ ಶಾಪದಿಂದ ಆಯ್ತು ಉಳಿದೆ ಕೃಷ್ಣಪ್ರಸಾದದಿಂದೆ=[ನಿನಗೆ ಈ ಸೋಲಿನ ಮತ್ತು ಮರಣದ ಅಪಾಯವು ಗಂಗೆಯ ಶಾಪದಿಂದ ಆಯಿತು. ಆದರೂ ಕೃಷ್ಣನ ಕರುಣೆಯಿಂದ ಉಳಿದೆ! (ಎಂದರು).]
  • ತಾತ್ಪರ್ಯ:ಜನಮೇಜಯ ರಾಯ ಕೇಳು, ಅರ್ಜುನನು ಸಪ್ಪಗಾಗಿರುವುದನ್ನು ಕಂಡು ಭೀಮನೂ, ಶೇಷ ಮತ್ತು ಇತರ ಹಿರಿಯರೂ, ಹೇಳಿದರು: ಈ ಧರೆಯ ಮೇಲೆ ನೀನು ಇನ್ನೂ ಎಲ್ಲೆಲ್ಲಿಯೂ ಅಜೇಯನಾಗಿರುವೆ. ನಿನಗೆ ಮಗನಿಂದ ಮಾತ್ರಾ ಅಪಜಯವು ಬಂದಿರುವುದು. ಬರಿದೆ/ವಿನಾಕಾರಣ ಸಂಕಟ ಪಡುವುದೇತಕ್ಕೆ? ನಿನ್ನ ಮಗನನ್ನು ಮನ್ನಿಸು; ಇನ್ನೂ ನಿನಗೆ ಮಗನ ಮೇಲೆ ಪ್ರೀತಿಯು ಬರಲಿಲ್ಲವೇ? ಅಕಟ ಅಕಟ! ನಿನಗೆ ಈ ಸೋಲಿನ ಮತ್ತು ಮರಣದ ಅಪಾಯವು ಗಂಗೆಯ ಶಾಪದಿಂದ ಆಯಿತು. ಆದರೂ ಕೃಷ್ಣನ ಕರುಣೆಯಿಂದ ಉಳಿದೆ! (ಎಂದರು).]
  • (ಪದ್ಯ-೭೪)

ಪದ್ಯ:-:೭೫:

[ಸಂಪಾದಿಸಿ]

ಅರಸಿಯರುಲೂಪಿ ಚಿತ್ರಾಂಗದೆಯರಿವರನಾ |
ದರಿಸದೆ ನಿಜಾತ್ಮಜಂ ಬಭ್ರುವಾಹನನಿವನ |
ಸಿರಿಯನಂಗೀಕರಿಸದೀತನಂ ಮನ್ನಿಸದೆ ಫಲುಗುಣನಿದೇಕೆ ಬರಿದೆ ||
ಮರುಳಾದನಕಟ ನೀ, ಪೇಳಲಿಲ್ಲವೆ ಚಕ್ರ |
ಧರ ನಿನ್ನ ಮೈದುನಂಗೆಂದು ಪವನಜ ಫಣೀ |
ಶ್ವರ ಹಂಸಕೇತು ದೇವಕಿ ಕುಂತಿ ವರ ಯಶೋದಾದಿಗಳ್ ಪೇಳ್ದರಂದು ||75||

ಪದವಿಭಾಗ-ಅರ್ಥ:
ಅರಸಿಯರು ಉಲೂಪಿ ಚಿತ್ರಾಂಗದೆಯರು ಅವರನು ಆದರಿಸದೆ, ನಿಜಾತ್ಮಜಂ ಬಭ್ರುವಾಹನನು ಇವನ ಸಿರಿಯನು ಅಂಗೀಕರಿಸದೆ, ಈತನಂ ಮನ್ನಿಸದೆ ಫಲುಗುಣನು ಇದೇಕೆ ಬರಿದೆ

ಮರುಳಾದನು ಅಕಟ!=[' ಅರ್ಜುನನು ಇನ್ನೂ ಸುಮ್ಮನಿರಲು, "ಪತ್ನಿಯರಾದ ಉಲೂಪಿ ಚಿತ್ರಾಂಗದೆ ಅವರನ್ನು ಆದರಿಸಿ ಮಾತಾಡದೆ, ತನ್ನ ಮಗ ಬಭ್ರುವಾಹನನ್ನೂ, ಇವನ ರಾಜ್ಯ ಸಂಪತ್ತನ್ನೂ ಅಂಗೀಕರಿಸದೆ, ಈತನನ್ನು/ಮಗನನ್ನು ಮನ್ನಿಸದೆ ಫಲ್ಗುಣನು ಇದೇಕೆ ಬರಿದೆ ಮರುಳಾದನು, ಇನ್ನೂ ದುಗುಡದಿಂದ ಇರುವನು, ಅಕಟ!"];; ನೀ, ಪೇಳಲಿಲ್ಲವೆ ಚಕ್ರಧರ ನಿನ್ನ ಮೈದುನಂಗೆ ಎಂದು ಪವನಜ ಫಣೀಶ್ವರ ಹಂಸಕೇತು ದೇವಕಿ ಕುಂತಿ ವರ ಯಶೋದಾದಿಗಳ್ ಪೇಳ್ದರು ಅಂದು=[ಚಕ್ರಧರ ಕೃಷ್ಣಾ, ನೀನಾದರೂ ಹೇಳಬೇಡವೇ ನಿನ್ನ ಮೈದುನನಿಗೆ ಎಂದು ಭೀಮನೂ, ಫಣೀಶ್ವರ ಶೇಷನೂ, ಹಂಸಕೇತು, ದೇವಕಿ, ಕುಂತಿ, ಪೂಜ್ಯರಾದ ಯಶೋದಾದಿಗಳು ಅಂದು ಹೇಳಿದರು.]

  • ತಾತ್ಪರ್ಯ:ಅರ್ಜುನನು ಇನ್ನೂ ಸುಮ್ಮನಿರಲು, "ಪತ್ನಿಯರಾದ ಉಲೂಪಿ ಚಿತ್ರಾಂಗದೆ ಅವರನ್ನು ಆದರಿಸಿ ಮಾತಾಡದೆ, ತನ್ನ ಮಗ ಬಭ್ರುವಾಹನನ್ನೂ, ಇವನ ರಾಜ್ಯ ಸಂಪತ್ತನ್ನೂ ಅಂಗೀಕರಿಸದೆ, ಮಗನನ್ನು ಮನ್ನಿಸದೆ ಫಲ್ಗುಣನು ಇದೇಕೆ ಬರಿದೆ ಮರುಳಾದನು, ಇನ್ನೂ ದುಗುಡದಿಂದ ಇರುವನು, ಅಕಟ!," ಚಕ್ರಧರ ಕೃಷ್ಣಾ, ನಿನ್ನ ಮೈದುನನಿಗೆ ನೀನಾದರೂ ಹೇಳಬೇಡವೇ ಎಂದು ಭೀಮನೂ, ಫಣೀಶ್ವರ ಶೇಷನೂ, ಹಂಸಕೇತು, ದೇವಕಿ, ಕುಂತಿ, ಪೂಜ್ಯರಾದ ಯಶೋದಾದಿಗಳು ಅಂದು ಹೇಳಿದರು.
  • (ಪದ್ಯ-೭೫)

ಪದ್ಯ:-:೭೬:

[ಸಂಪಾದಿಸಿ]

ಲಜ್ಜಿಸಿದನಾ ಬಭ್ರುವಾಹನಂ ಬಳಿಕ ತ |
ನ್ನುಜ್ಜಗವನೆಲ್ಲರುಂ ಕೇಳ್ವುದೀ ರಾಜ್ಯಮಂ |
ಮಜ್ಜನಕನಂಘ್ರಿಗೊಪ್ಪಿಸಿ ನಿಜ ಶರೀರಮಂ ಕೆಡಹಿ ತುಹಿನಾಚಲದೊಳು ||
ಸಜ್ಜನರ ಗತಿವಡೆವೆನಲ್ಲದೊಡೆ ಗುರುಧರ್ಮ |
ಕೃಜ್ಜನಾರ್ದನ ಭಕ್ತನೀತನಂ ಘಾತಿಸಿದ |
ಕಜ್ಜದಿಂದೊದವಿದ ಮಹಾಪಾತಕಂ ಪೋಗದೆನೆ ಭೀಮನಿಂತೆಂದನು ||76||

ಪದವಿಭಾಗ-ಅರ್ಥ:
ಲಜ್ಜಿಸಿದನು ಆ ಬಭ್ರುವಾಹನಂ ಬಳಿಕ ತನ್ನ ಉಜ್ಜಗವನು (ಉದ್ಯೋಗ -ಮುಂದಿನ ಕ್ರಿಯೆ) ಎಲ್ಲರುಂ ಕೇಳ್ವುದು=[ಅರ್ಜುನನು ಮೌನವಹಿಸಿದ್ದನ್ನು ನೋಡಿ, ತಂದೆಯನ್ನು ಕೊಂದುದಕ್ಕಾಗಿ, ಆ ಬಭ್ರುವಾಹನನು ನಾಚಕೆಪಟ್ಟನು. ಬಳಿಕ ತಾನು ಮಾಡುವ ಮುಂದಿನ ಕಾರ್ಯವನ್ನು ಎಲ್ಲರೂ ಕೇಳಿಸಿಕೊಳ್ಳಬೇಕು ಎಂದನು.];; ಈ ರಾಜ್ಯಮಂ ಮಜ್ಜನಕನಂಘ್ರಿಗೆ ಒಪ್ಪಿಸಿ ನಿಜ ಶರೀರಮಂ ಕೆಡಹಿ ತುಹಿನ ಆಚಲದೊಳು ಸಜ್ಜನರ ಗತಿವಡೆವೆನು=[ಈ ರಾಜ್ಯವನ್ನು ನನ್ನು ಜನಕನ ಪಾದಗಳಿಗೆ ಒಪ್ಪಿಸಿ ತನ್ನ ಶರೀರವನ್ನು ಹಿಮಾಲಯ ಪರ್ವತದಲ್ಲಿ ಕೆಡಗಿ ಸಜ್ಜನರ ಗತಿಯನ್ನು ವಡೆವೆನು,'];; ಅಲ್ಲದೊಡೆ ಗುರುಧರ್ಮಕೃತ್ ಜನಾರ್ದನ ಭಕ್ತನು ಈತನಂ ಘಾತಿಸಿದ ಕಜ್ಜದಿಂದ ಒದವಿದ ಮಹಾಪಾತಕಂ ಪೋಗದು ಎನೆ ಭೀಮನು ಇಂತು ಎಂದನು=['ಹಾಗೆ ಮಾಡದಿದ್ದರೆ ಗುರುಸ್ಥಾನದಲ್ಲಿರುವ, ಧರ್ಮಕೃತನಾದ, ಜನಾರ್ದನ ಭಕ್ತನಾದ ಈತನನ್ನು/ ಅರ್ಜುನನ್ನು ಕೊಂದ ಕೃತಿಯಿಂದ ಬಂದ ಮಹಾಪಾತಕವು ಹೋಗದು,' ಎನಲು, ಭೀಮನು ಹೀಗೆ ಹೇಳಿದನು.].
  • ತಾತ್ಪರ್ಯ:ಅರ್ಜುನನು ಮೌನವಹಿಸಿದ್ದನ್ನು ನೋಡಿ, ತಂದೆಯನ್ನು ಕೊಂದುದಕ್ಕಾಗಿ, ಆ ಬಭ್ರುವಾಹನನು ನಾಚಕೆಪಟ್ಟನು. ಬಳಿಕ ತಾನು ಮಾಡುವ ಮುಂದಿನ ಕಾರ್ಯವನ್ನು ಎಲ್ಲರೂ ಕೇಳಿಸಿಕೊಳ್ಳಬೇಕು ಎಂದನು. ಈ ರಾಜ್ಯವನ್ನು ನನ್ನು ಜನಕನ ಪಾದಗಳಿಗೆ ಒಪ್ಪಿಸಿ ತನ್ನ ಶರೀರವನ್ನು ಹಿಮಾಲಯ ಪರ್ವತದಲ್ಲಿ ಕೆಡಗಿ ಸಜ್ಜನರ ಗತಿಯನ್ನು ವಡೆವೆನು,' 'ಹಾಗೆ ಮಾಡದಿದ್ದರೆ ಗುರುಸ್ಥಾನದಲ್ಲಿರುವ, ಧರ್ಮಕೃತನಾದ, ಜನಾರ್ದನ ಭಕ್ತನಾದ ಈತನನ್ನು/ ಅರ್ಜುನನ್ನು ಕೊಂದ ಕೃತಿಯಿಂದ ಬಂದ ಮಹಾಪಾತಕವು ಹೋಗದು,' ಎನಲು, ಭೀಮನು ಹೀಗೆ ಹೇಳಿದನು.
  • (ಪದ್ಯ-೭೬)

ಪದ್ಯ:-:೭೭:

[ಸಂಪಾದಿಸಿ]

ತಪ್ಪನಾಡಿದೆ ಮಗನೆ ಕೃಷ್ಣನಿರುತಿರೆ ಮುಂದೆ |
ಬಪ್ಪುದೇ ಪಾತಕಂ ಗುರು ಪಿತಾಮಹ ಮುಖ್ಯ |
ರಪ್ಪವರನೆಲ್ಲರುಂ ಕೊಂದೆಮಗೆ ನಿಂದುವೇ ದೋಷ ಲೇಶಂಗಳೀಗ ||
ಒಪ್ಪುವಾದಿತ್ಯನಂ ಕಂಡಬಳಿಕಿರ್ದಪುದೆ |
ಕಪ್ಪಿನ ತಮಂ ಮರುಳೆ ಹರಿಯನಾಶ್ರೈಸಿದರ |
ನಪ್ಪುವುದೆ ಕಲಿತಾಪ ದುಃಖ ಭಯಶೋಕ ನರಕಾದಿ ಪೀಡೆಗಳೆಂದನು ||77||

ಪದವಿಭಾಗ-ಅರ್ಥ:
ತಪ್ಪನಾಡಿದೆ ಮಗನೆ ಕೃಷ್ಣನು ಇರುತಿರೆ ಮುಂದೆ ಬಪ್ಪುದೇ ಪಾತಕಂ ಗುರು ಪಿತಾಮಹ ಮುಖ್ಯರು ಅಪ್ಪವರನೆಉ ಎಲ್ಲರುಂ ಕೊಂದ ಎಮಗೆ ನಿಂದುವೇ ದೋಷ ಲೇಶಂಗಳು=[ಮಗನೇ ಬಭ್ರುವಾಹನ, ನೀನು ಈಗ ಹೇಳಿದ ಮಾತು ತಪ್ಪು! ಕೃಷ್ಣನು ಇರುವಾಗ, ಅವನ ಕೃಪೆ ಇರಲು, ಪಾತಕವು ಮುಂದೆ ಬರುವುದೇ? ಗುರು ದ್ರೋಣ, ಪಿತಾಮಹ ಭೀಷ್ಮ ಮೊದಲಾದ ಮುಖ್ಯರಾದವರನ್ನು ಎಲ್ಲರನ್ನೂ, ಕೊಂದ ನಮಗೆ/ನಮ್ಮಮೇಲೆ ಲೇಶವಾದರೂ ದೋಷ ನಿಂತಿರೆಯೇ? ಇಲ್ಲ!];;ಈಗ ಒಪ್ಪುವ ಆದಿತ್ಯನಂ ಕಂಡಬಳಿಕ ಇರ್ದಪುದೆ ಕಪ್ಪಿನ ತಮಂ ಮರುಳೆ ಹರಿಯನು ಆಶ್ರೈಸಿದರನು ಅಪ್ಪುವುದೆ ಕಲಿತಾಪ ದುಃಖ ಭಯಶೋಕ ನರಕಾದಿ ಪೀಡೆಗಳು ಎಂದನು=[ಈಗ ಎದುರು ಕಾಣುವ ಸೂರ್ಯನನ್ನು ಕಂಡ ಬಳಿಕ ಕತ್ತಲೆಯ ಕಪ್ಪು ಇರುವುದೇ? ಮರುಳೆ! ಹರಿಯನ್ನು ಆಶ್ರಯಿಸಿದವರನ್ನು ಕಲಿಯತಾಪ/ಪಾಪ ದೋಷ, ದುಃಖ, ಭಯಶೋಕ, ನರಕಾದಿ ಪೀಡೆಗಳು ಅವರಿಸುವುದೇ? ಎಂದನು.]
  • ತಾತ್ಪರ್ಯ:ಮಗನೇ ಬಭ್ರುವಾಹನ, ನೀನು ಈಗ ಹೇಳಿದ ಮಾತು ತಪ್ಪು! ಕೃಷ್ಣನು ಇರುವಾಗ, ಅವನ ಕೃಪೆ ಇರಲು, ಪಾತಕವು ಮುಂದೆ ಬರುವುದೇ? ಗುರು ದ್ರೋಣ, ಪಿತಾಮಹ ಭೀಷ್ಮ ಮೊದಲಾದ ಮುಖ್ಯರಾದವರನ್ನು ಎಲ್ಲರನ್ನೂ, ಕೊಂದ ನಮಗೆ/ನಮ್ಮಮೇಲೆ ಲೇಶವಾದರೂ ದೋಷ ನಿಂತಿರೆಯೇ? ಇಲ್ಲ! ಈಗ ಎದುರು ಕಾಣುವ ಸೂರ್ಯನನ್ನು ಕಂಡ ಬಳಿಕ ಕತ್ತಲೆಯ ಕಪ್ಪು ಇರುವುದೇ? ಮರುಳೆ! ಹರಿಯನ್ನು ಆಶ್ರಯಿಸಿದವರನ್ನು ಕಲಿಯತಾಪ/ಪಾಪ ದೋಷ, ದುಃಖ, ಭಯಶೋಕ, ನರಕಾದಿ ಪೀಡೆಗಳು ಆವರಿಸುವುದೇ? ಎಂದನು.(ಇಲ್ಲವೇ ಇಲ್ಲ ಎಂದು ಭಾವ,)
  • (ಪದ್ಯ-೭೭)

ಪದ್ಯ:-:೭೮:

[ಸಂಪಾದಿಸಿ]

ಸಲೆ ನಿಷ್ಕೃತಿಗಳಿಲ್ಲದೈದು ಪಾಪಂಗಳಂ |
ಕಲಿಯುಗದ ಮಾನವರ ಬಹಳ ದುರಿತಂಗಳಂ |
ತೊಲಗಿಸಿ ಭವಾಂಬುಧಿಯನುತ್ತರಿಪ ಹರಿಯ ನಾಮಂಗಳಾವ ಜಿಹ್ವೆಗೆ ||
ನೆಲೆಗೊಂಬುವಾತನಂ ಕಂಡವಂ ಶುಚಿ ನಿನಗೆ |
ಜಲರುಹಾಕ್ಷಂ ಕಣ್ಣಮುಂದಿರಲ್ ಪಾತಕವೆ |
ಪಲವೆಣೆಕೆ ಬೇಡ ಪಾಲಿಸು ನೃಪನ ತುರಗಮಂ ಮಗನೆ ಸುಖಿಯಾಗೆಂದನು ||78||

ಪದವಿಭಾಗ-ಅರ್ಥ:
ಸಲೆ ನಿಷ್ಕೃತಿಗಳಿಲ್ಲದೈದು ಪಾಪಂಗಳಂ ಕಲಿಯುಗದ ಮಾನವರ ಬಹಳ ದುರಿತಂಗಳಂ ತೊಲಗಿಸಿ=[ಭೀಮನು ಬಭ್ರುವಾಹನನ್ನು ಕುರಿತು, ವಿಶೇಷ ಪ್ರಾಯಶ್ಚಿತ್ತವಿಲ್ಲದ ಬ್ರಹ್ಮಹತ್ಯೆ, ಸುರಾಪಾನ, ಗೋಹತ್ಯೆ, ದೇವಸ್ವ ಸ್ವರ್ಣಸ್ತೇಯ,ಭ್ರೂನಹತ್ತ್ಯೆ ಈ ಐದು ಪಾಪಗಳನ್ನೂ ಕಲಿಯುಗದ ಮಾನವರ ಬಹಳ ದುರಿತಗಳನ್ನೂ ತೊಲಗಿಸಿ];; ಭವಾಂಬುಧಿಯನು ಉತ್ತರಿಪ ಹರಿಯ ನಾಮಂಗಳಾವ ಜಿಹ್ವೆಗೆ ನೆಲೆಗೊಂಬುವ ಆತನಂ ಕಂಡವಂ ಶುಚಿ,=[ಭವಾಸಾಗರದ ಕಷ್ಟಗಳಿಂದ ಉದ್ದರಿಸುವ, ಯಾರ ನಾಲಿಗೆಯಲ್ಲಿ ಹರಿಯ ನಾಮಗಳು ನೆಲೆಗೊಂಡಿರುವುವೋ ಆ ನಾಮಗಳ ಪುರಷನನ್ನು ಕಂಡವನು ಶುಚಿಯಾಗುವನು,];; ನಿನಗೆ ಜಲರುಹಾಕ್ಷಂ ಕಣ್ಣಮುಂದೆ ಇರಲ್ ಪಾತಕವೆ ಪಲವೆಣೆಕೆ ಬೇಡ ಪಾಲಿಸು ನೃಪನ ತುರಗಮಂ ಮಗನೆ ಸುಖಿಯಾಗು ಎಂದನು=[ನಿನಗೆ ಜಲರುಹಾಕ್ಷ ಕೃಷ್ಣನು ಕಣ್ಣಮುಂದೆ ಇರಲು ಪಾತಕವೆಲ್ಲಿ ಬರುವುದು? ಪಾಪದಫಲದ ಲೆಕ್ಕ ಬೇಡ. ಧರ್ಮರಾಜ ನೃಪನ ಯಜ್ಞತುರಗ ರಕ್ಷಣೆಗೆ ನಿಲ್ಲು, ಮಗನೆ, ಸುಖಿಯಾಗಿ ಬಾಳು,' ಎಂದನು].
  • ತಾತ್ಪರ್ಯ:ಭೀಮನು ಬಭ್ರುವಾಹನನ್ನು ಕುರಿತು, ವಿಶೇಷ ಪ್ರಾಯಶ್ಚಿತ್ತವಿಲ್ಲದ ಬ್ರಹ್ಮಹತ್ಯೆ, ಸುರಾಪಾನ, ಗೋಹತ್ಯೆ, ದೇವಸ್ವ ಸ್ವರ್ಣಸ್ತೇಯ,ಭ್ರೂನಹತ್ತ್ಯೆ ಈ ಐದು ಪಾಪಗಳನ್ನೂ ಕಲಿಯುಗದ ಮಾನವರ ಬಹಳ ದುರಿತಗಳನ್ನೂ ತೊಲಗಿಸಿ, ಭವಾಸಾಗರದ ಕಷ್ಟಗಳಿಂದ ಉದ್ದರಿಸುವ, ಯಾರ ನಾಲಿಗೆಯಲ್ಲಿ ಹರಿಯ ನಾಮಗಳು ನೆಲೆಗೊಂಡಿರುವುವೋ ಆ ನಾಮಗಳ ಪುರಷನನ್ನು ಕಂಡವನು ಶುಚಿಯಾಗುವನು, ನಿನಗೆ ಜಲರುಹಾಕ್ಷ ಕೃಷ್ಣನು ಕಣ್ಣಮುಂದೆ ಇರಲು ಪಾತಕವೆಲ್ಲಿ ಬರುವುದು? ಪಾಪದ ಫಲದ ಲೆಕ್ಕ ಬೇಡ.ಧರ್ಮರಾಜ ನೃಪನ ಯಜ್ಞತುರಗ ರಕ್ಷಣೆಗೆ ನಿಲ್ಲು, ಮಗನೆ, ಸುಖಿಯಾಗಿ ಬಾಳು,' ಎಂದನು].
  • (ಪದ್ಯ-೭೮)

ಪದ್ಯ:-:೭೯:

[ಸಂಪಾದಿಸಿ]

n:[ಸಂಪಾದಿಸಿ]
ಇಂತೆಂದು ಭೀಮನಾಡಿದೊಡನಿಬರೆಲ್ಲರುಂ |
ಸಂತೋಷಮಂ ತಾರ್ಳದರರ್ಜುನಂ ತನಯನಂ |
ಸಂತೈಸಿ ಕುಳ್ಳಿರ್ದನಸುರಾರಿ ಪವನಜರ್ವೆರಸಿ ಸಿಂಹಾಸನದೊಳು ||
ಕುಂತಿ ನಿಜಪುತ್ರ ಪೌತ್ರರ ವಿಭವಕುಬ್ಬಿದಳ |
ನಂತರದೊಳಾದುದಾ ಮಣಿಪುರದೊಳುತ್ಸವಮ |
ನಂತನಂ ಸತ್ಕರಿಸಿ ಕಳುಹಿದರ್ ಪಾತಾಳಕಖಿಳ ಸರ್ಪಾಳಿ ಸಹಿತ ||79||

ಪದವಿಭಾಗ-ಅರ್ಥ:
n:[ಸಂಪಾದಿಸಿ]

ಇಂತು ಎಂದು ಭೀಮನು ಆಡಿದೊಡೆ ಅನಿಬರು ಎಲ್ಲರುಂ ಸಂತೋಷಮಂ ತಾಳ್ದರು=[ಹೀಗೆಂದು ಬಭ್ರುವಾಹನನಿಗೆ ಭೀಮನು ಹೇಳಿದಾಗ ಎಲ್ಲರು ಸಂತೋಷಪಟ್ಟರು.];; ಅರ್ಜುನಂ ತನಯನಂ ಸಂತೈಸಿ ಕುಳ್ಳಿರ್ದನು ಅಸುರಾರಿ ಪವನಜರ್ ವೆರಸಿ ಸಿಂಹಾಸನದೊಳು=[ಅರ್ಜುನನು ಮಗನನ್ನು ಸಂತೈಸಿ ಸಿಂಹಾಸನದಲ್ಲಿ ಕೃಷ್ಣ ಭೀಮರ ಸಹಿತ ಕುಳಿತುನು.];; ಕುಂತಿ ನಿಜಪುತ್ರ ಪೌತ್ರರ ವಿಭವಕೆ ಉಬ್ಬಿದಳು ಅನಂತರದೊಳು ಆದುದ ಆ ಮಣಿಪುರದೊಳ ಉತ್ಸವಮ್=[ಕುಂತಿಉ ತನ್ನ ಮಕ್ಕಳು ಮೊಮ್ಮಕ್ಕಳ ಏಳಿಗೆ ವೈಭವನೋಡಿ ಸಂತೋಷದಿಂದ ಉಬ್ಬಿದಳು. ಅನಂತರದಲ್ಲಿ ಆ ಮಣಿಪುರದಲ್ಲಿ ದೊಡ್ಡ ಉತ್ಸವವು ನೆಡೆಯಿತು.];; ಅನಂತನಂ ಸತ್ಕರಿಸಿ ಕಳುಹಿದರ್ ಪಾತಾಳಕೆ ಅಖಿಳ ಸರ್ಪಾಳಿ ಸಹಿತ=[ಅನಂತನನ್ನು ಸತ್ಕರಿಸಿ ಅಖಿಲ ಸರ್ಪಸಮೂಹ ಸಹಿತ ಪಾತಾಳಕ್ಕೆ ಕಳುಹಿದರು.]

  • ತಾತ್ಪರ್ಯ:ಹೀಗೆಂದು ಬಭ್ರುವಾಹನನಿಗೆ ಭೀಮನು ಹೇಳಿದಾಗ ಎಲ್ಲರು ಸಂತೋಷಪಟ್ಟರು. ಅರ್ಜುನನು ಮಗನನ್ನು ಸಂತೈಸಿ ಸಿಂಹಾಸನದಲ್ಲಿ ಕೃಷ್ಣ ಭೀಮರ ಸಹಿತ ಕುಳಿತುನು. ಕುಂತಿಉ ತನ್ನ ಮಕ್ಕಳು ಮೊಮ್ಮಕ್ಕಳ ಏಳಿಗೆ ವೈಭವನೋಡಿ ಸಂತೋಷದಿಂದ ಉಬ್ಬಿದಳು. ಅನಂತರದಲ್ಲಿ ಆ ಮಣಿಪುರದಲ್ಲಿ ದೊಡ್ಡ ಉತ್ಸವವು ನೆಡೆಯಿತು. ಅನಂತನನ್ನು ಸತ್ಕರಿಸಿ ಅಖಿಲ ಸರ್ಪಸಮೂಹ ಸಹಿತ ಪಾತಾಳಕ್ಕೆ ಕಳುಹಿದರು.
  • (ಪದ್ಯ-೭೯)

ಪದ್ಯ:-:೮೦:

[ಸಂಪಾದಿಸಿ]

n:[ಸಂಪಾದಿಸಿ]
ಸತ್ಯಭಾಮಾಕಾಂತ ಭೀಮ ನರ ಮನ್ಮಥಾ |
ದಿತ್ಯಭವಸುತ ಕುಂತಿ ದೇವಕಿ ಯಶೋದೆಯರ |
ನತ್ಯಂತ ಹರ್ಷದೊಳುಲೂಪಿ ಚಿತ್ರಾಂಗದೆಯರಾದರಿಸೆ ನೃಪಗೃಹದೊಳು ||
ನಿತ್ಯಕೃತ್ಯದ ವಿವಿಧ ಭೋಗ ವಿಭವಂಗಳಿಂ |
ನೃತ್ಯಗೀತಂಗಳ ವಿಲಾಸ ಗೋಷ್ಠಿಗಳಿಂದೆ |
ಪ್ರತ್ಯೇಕಮೆಲ್ಲರುಂ ಸಂತುಷ್ಟರಾಗಿರ್ದರೈದುದಿನಮಾಪುರದೊಳು ||80||

ಪದವಿಭಾಗ-ಅರ್ಥ:
ಸತ್ಯಭಾಮಾಕಾಂತ ಭೀಮ ನರ ಮನ್ಮಥ ಆದಿತ್ಯಭವಸುತ ಕುಂತಿ ದೇವಕಿ ಯಶೋದೆಯರನು ಅತ್ಯಂತ ಹರ್ಷದೊಳು ಉಲೂಪಿ ಚಿತ್ರಾಂಗದೆಯರು ಆದರಿಸೆ ನೃಪಗೃಹದೊಳು=[ಸತ್ಯಭಾಮಾಕಾಂತನಾದ ಕೃಷ್ಣ, ಭೀಮ. ಅರ್ಜುನ, ಮನ್ಮಥ/ಪ್ರದ್ಯಮ್ನ,ವೃಷಕೇತು, ಕುಂತಿ ದೇವಕಿ ಯಶೋದೆಯರನ್ನು ಅತ್ಯಂತ ಹರ್ಷದಿಂದ ಉಲೂಪಿ ಚಿತ್ರಾಂಗದೆಯರು ಅರಮನೆಯಲ್ಲಿ ಆದರಿಸಿದರು.];; ನಿತ್ಯಕೃತ್ಯದ ವಿವಿಧ ಭೋಗ ವಿಭವಂಗಳಿಂ ನೃತ್ಯಗೀತಂಗಳ ವಿಲಾಸ ಗೋಷ್ಠಿಗಳಿಂದೆ ಪ್ರತ್ಯೇಕಮ್ ಎಲ್ಲರುಂ ಸಂತುಷ್ಟರಾಗಿರ್ದರು ಐದುದಿನಮ್ ಆ ಪುರದೊಳು=[ದಿನನಿತ್ಯದ ಕೆಲಸ ಕಾರ್ಯದ ಜೊತೆ ವಿವಿಧ ಭೋಗ ವೈಭವಗಳಿಂದ, ನೃತ್ಯಗೀತೆಗಳ ವಿಲಾಸ ಗೋಷ್ಠಿಗಳಿಂದ, ಪ್ರತ್ಯೇಕವಾಗಿಯೂ, ಎಲ್ಲರೂ ಸೇರಿಯೂ, ಐದು ದಿನಗಳಕಾಲ ಆ ನಗರದಲ್ಲಿ ಸಂತುಷ್ಟರಾಗಿದ್ದರು].
  • ತಾತ್ಪರ್ಯ:ಸತ್ಯಭಾಮಾಕಾಂತನಾದ ಕೃಷ್ಣ, ಭೀಮ. ಅರ್ಜುನ, ಮನ್ಮಥ/ಪ್ರದ್ಯಮ್ನ,ವೃಷಕೇತು, ಕುಂತಿ ದೇವಕಿ ಯಶೋದೆಯರನ್ನು ಅತ್ಯಂತ ಹರ್ಷದಿಂದ ಉಲೂಪಿ ಚಿತ್ರಾಂಗದೆಯರು ಅರಮನೆಯಲ್ಲಿ ಆದರಿಸಿದರು.ದಿನನಿತ್ಯದ ಕೆಲಸ ಕಾರ್ಯದ ಜೊತೆ ವಿವಿಧ ಭೋಗ ವೈಭವಗಳಿಂದ, ನೃತ್ಯಗೀತೆಗಳ ವಿಲಾಸ ಗೋಷ್ಠಿಗಳಿಂದ, ಪ್ರತ್ಯೇಕವಾಗಿಯೂ, ಎಲ್ಲರೂ ಸೇರಿಯೂ, ಐದು ದಿನಗಳಕಾಲ ಆ ನಗರದಲ್ಲಿ ಸಂತುಷ್ಟರಾಗಿದ್ದರು.
  • (ಪದ್ಯ-೮೦)

ಪದ್ಯ:-:೮೧:

[ಸಂಪಾದಿಸಿ]

n:[ಸಂಪಾದಿಸಿ]
ದಿವಸಮೈದರ ಮೇಲೆ ಚಿಂತಿಪಂ ಗಜಪುರದೊ |
ಳವನೀಶನೆಂದಲ್ಲಿ ಕೂಡಿದ ಸುವಸ್ತುಗಳ |
ನಿವಹಮಂ ಕುಂತಿ ಚಿತ್ರಾಂಗದೆ ಫಣೀಂದ್ರಸುತೆ ದೇವಕಿ ಯಶೋದೆಯರನು ||
ಪವನಜನೊಡನೆ ಹಸ್ತಿನಾವತಿಗೆ ಕಳುಹಿ ಪಾ |
ರ್ಥಿವ ಪಾರ್ಥಿ ಪಾರ್ಥರಂ ಸಲೆ ಕೂಡಿಕೊಂಡು ದಾ |
ನವ ಮರ್ದನಂ ತಾನೆ ಕುದುರೆಯಂ ಬಿಡಿಸಿ ರಕ್ಷೆಗೆ ನಡೆದನದರ ಪಿಂತೆ ||81||

ಪದವಿಭಾಗ-ಅರ್ಥ:
ದಿವಸಮೈದರ ಮೇಲೆ ಚಿಂತಿಪಂ ಗಜಪುರದೊಳು ಅವನೀಶನು ಎಂದು=[ಐದು ದಿವಸದ ನಂತರ ಹಸ್ತಿನಾವತಿಯಲ್ಲಿ ಧರ್ಮರಾಜನು ಇಲ್ಲಿ ಏನಾಯಿತೋ ಎಂದು ಚಿಂತೆಗೊಳಗಾಗುವನು ಎಂದು ಕೃಷ್ಣನು,];; ಅಲ್ಲಿ ಕೂಡಿದ ಸುವಸ್ತುಗಳ ನಿವಹಮಂ ಕುಂತಿ ಚಿತ್ರಾಂಗದೆ ಫಣೀಂದ್ರಸುತೆ ದೇವಕಿ ಯಶೋದೆಯರನು ಪವನಜನೊಡನೆ ಹಸ್ತಿನಾವತಿಗೆ ಕಳುಹಿ=[ಅಲ್ಲಿ ಸಂಗ್ರಹಿಸಿದ ಉತ್ತಮ ವಸ್ತುಗಳ ರಾಶಿಯನ್ನೂ, ಕುಂತಿ ಚಿತ್ರಾಂಗದೆ, ಉಲೂಪಿ, ದೇವಕಿ, ಯಶೋದೆಯರನ್ನು, ಭೀಮನೊಡನೆ ಹಸ್ತಿನಾವತಿಗೆ ಕಳುಹಿಸಿದನು.];; ಪಾರ್ಥಿವ (ರಾಜ) ಪಾರ್ಥಿ ಪಾರ್ಥರಂ ಸಲೆ ಕೂಡಿಕೊಂಡು ದಾನವ ಮರ್ದನಂ ತಾನೆ ಕುದುರೆಯಂ ಬಿಡಿಸಿ ರಕ್ಷೆಗೆ ನಡೆದನು ಅದರ ಪಿಂತೆ=[ಪಾರ್ಥಿವರಾದ ಹಂಸಧ್ವಜಾದಿ ರಾಜರನ್ನೂ, ಬಭ್ರುವಾನನ್ನೂ, ಅರ್ಜುನನ್ನೂ, ಒಟ್ಟಾಗಿ ಕೂಡಿಕೊಂಡು ಕೃಷ್ಣನು, ತಾನೆ ಕುದುರೆಯನ್ನು ಮುಂದೆನೆಡೆಯಲು ಬಿಡಿಸಿ ರಕ್ಷಣೆಗೆ ಅದರ ಹಿಂದೆ ನಡೆದನು.]
  • ತಾತ್ಪರ್ಯ:ಐದು ದಿವಸದ ನಂತರ ಹಸ್ತಿನಾವತಿಯಲ್ಲಿ ಧರ್ಮರಾಜನು ಇಲ್ಲಿ ಏನಾಯಿತೋ ಎಂದು ಚಿಂತೆಗೊಳಗಾಗುವನು ಎಂದು ಕೃಷ್ಣನು, ಅಲ್ಲಿ ಸಂಗ್ರಹಿಸಿದ ಉತ್ತಮ ವಸ್ತುಗಳ ರಾಶಿಯನ್ನೂ, ಕುಂತಿ ಚಿತ್ರಾಂಗದೆ, ಉಲೂಪಿ, ದೇವಕಿ, ಯಶೋದೆಯರನ್ನು, ಭೀಮನೊಡನೆ ಹಸ್ತಿನಾವತಿಗೆ ಕಳುಹಿಸಿದನು. ಪಾರ್ಥಿವರಾದ ಹಂಸಧ್ವಜಾದಿ ರಾಜರನ್ನೂ, ಬಭ್ರುವಾನನ್ನೂ, ಅರ್ಜುನನ್ನೂ, ಒಟ್ಟಾಗಿ ಕೂಡಿಕೊಂಡು ಕೃಷ್ಣನು, ತಾನೆ ಕುದುರೆಯನ್ನು ಮುಂದೆನೆಡೆಯಲು ಬಿಡಿಸಿ ರಕ್ಷಣೆಗೆ ಅದರ ಹಿಂದೆ ನಡೆದನು.
  • (ಪದ್ಯ-೮೧)

ಪದ್ಯ:-:೮೨:

[ಸಂಪಾದಿಸಿ]

ಫಲಶ್ರುತಿ:
ಸಂಜೀವಕದ ಮಣಿಯ ಫಣಿಪತಿಯ ಕೃಷ್ಣನ ಧ |
ನಂಜಯನ ಪುಣ್ಯಪ್ರಸಂಗದಿಂದಪಮೃತ್ಯು |
ನಂಜು ದುಷ್ಕೃತಿ ಶತೃಪೀಡೆಗಳ್ ಪೊರ್ದವೆಂಬೀ ಮಹಾ ಮಹಿಮೆಯಿಂದೆ ||
ರಂಜಿಪೀ ಕಥೆಗೇಳ್ದೊಡಾಯುರಾರೋಗ್ಯ ಮತಿ |
ಮಂಜುಳ ಸುಕೀರ್ತಿ ಸುಖ ಸಂಪತ್ಕಳತ್ರ ಸುತ |
ಸಂಜಾತ ಹರಿಭಕ್ತಿ ಸಮನಿಪುದು ದೇವಪುರ ಲಕ್ಷ್ಮೀಶನಾಜ್ಞೆಯಿಂದೆ ||82||

ಪದವಿಭಾಗ-ಅರ್ಥ:
ಫಲಶ್ರುತಿ:
ಸಂಜೀವಕದ ಮಣಿಯ ಫಣಿಪತಿಯ ಕೃಷ್ಣನ ಧನಂಜಯನ ಪುಣ್ಯಪ್ರಸಂಗದಿಂದ ಅಪಮೃತ್ಯು ನಂಜು ದುಷ್ಕೃತಿ ಶತೃಪೀಡೆಗಳ್ ಪೊರ್ದವೆಂಬ ಈ ಮಹಾ ಮಹಿಮೆಯಿಂದೆ=[ಸಂಜೀವಕದ ಮಣಿಯ, ಆದಿಶೇಷನ, ಕೃಷ್ಣನ, ಧನಂಜಯನ, ಪುಣ್ಯಪ್ರಸಂಗದಿಂದ ಅಪಮೃತ್ಯು, ನಂಜು, ದುಷ್ಕೃತಿ, ಶತೃಪೀಡೆಗಳು, ಹೋಗುವುವು ಎಂಬ ಈ ಮಹಾ ಮಹಿಮೆಯಿಂದ,];; ರಂಜಿಪ ಈ ಕಥೇಗೇಳ್ದೊಡೆ ಆಯುರಾರೋಗ್ಯ ಮತಿ ಮಂಜುಳ ಸುಕೀರ್ತಿ ಸುಖ ಸಂಪತ್ ಕಳತ್ರ ಸುತ ಸಂಜಾತ ಹರಿಭಕ್ತಿ ಸಮನಿಪುದು ದೇವಪುರ ಲಕ್ಷ್ಮೀಶನ ಆಜ್ಞೆಯಿಂದೆ=[ಮನಸ್ಸಿಗೆ ಆನಂದಕೊಡುವ, ಈ ಕಥೆ ಕೇಳಿದರೆ, ಆಯುರಾರೋಗ್ಯ, ಬುದ್ಧಿಶಕ್ಕಿ, ಮಂಜುಳವಾದ ಉತ್ತಮಕೀರ್ತಿ, ಸುಖ, ಸಂಪತ್ತು, ಪತ್ನಿ, ಸುತ, ಸಂಜಾತ ಹರಿಭಕ್ತಿ, ಒದಗುವುದು ದೇವಪುರ ಲಕ್ಷ್ಮೀಶನ ಆಜ್ಞೆಯಿಂದ.]
  • ತಾತ್ಪರ್ಯ:ಸಂಜೀವಕದ ಮಣಿಯ, ಆದಿಶೇಷನ, ಕೃಷ್ಣನ, ಧನಂಜಯನ, ಪುಣ್ಯಪ್ರಸಂಗದಿಂದ ಅಪಮೃತ್ಯು, ನಂಜು, ದುಷ್ಕೃತಿ, ಶತೃಪೀಡೆಗಳು, ಹೋಗುವುವು ಎಂಬ ಈ ಮಹಾ ಮಹಿಮೆಯಿಂದ, ಮನಸ್ಸಿಗೆ ಆನಂದಕೊಡುವ, ಈ ಕಥೆ ಕೇಳಿದರೆ, ಆಯುರಾರೋಗ್ಯ, ಬುದ್ಧಿಶಕ್ಕಿ, ಮಂಜುಳವಾದ ಉತ್ತಮಕೀರ್ತಿ, ಸುಖ, ಸಂಪತ್ತು, ಪತ್ನಿ, ಸುತ, ಸಂಜಾತ ಹರಿಭಕ್ತಿ, ಒದಗುವುದು ದೇವಪುರ ಲಕ್ಷ್ಮೀಶನ ಆಜ್ಞೆಯಿಂದ.
  • (ಪದ್ಯ-೮೨)XIIX-XI
  • []
  • []
  • ಸಂಧಿ ೨೪ಕ್ಕೆ ಪದ್ಯಗಳು:೧೩೧೦.
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.