ಜೈಮಿನಿ ಭಾರತ/ಇಪ್ಪತ್ತೊಂಭತ್ತನೆಯ ಸಂಧಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಇಪ್ಪತ್ತೊಂಭತ್ತನೆಯ ಸಂಧಿ[ಸಂಪಾದಿಸಿ]

ಪದ್ಯ:-:ಸೂಚನೆ:[ಸಂಪಾದಿಸಿ]

ಸೂಚನೆ:ಮಂತ್ರಿ ಮತ್ಸರದಿಂದೆ ಮುಂದೆ ತಪ್ಪುವ ದೈವ |
ಯಂತ್ರಭೇದವನರಿಯದಿಂದುಹಾಸನ ಮೇಲೆ |
ತಂತ್ರಮಂ ಪಣ್ಣಿ ಕೊಲಿಸುವೆನೆಂದು ಕಳುಹಿದಂ ಕುಂತಳೇಂದ್ರನ ನಗರಿಗೆ ||

ಪದವಿಭಾಗ-ಅರ್ಥ:
ಮಂತ್ರಿ ಮತ್ಸರದಿಂದೆ ಮುಂದೆ ತಪ್ಪುವ ದೈವ ಯಂತ್ರಭೇದವನು ಅರಿಯದೆ ಇಂದುಹಾಸನ ಮೇಲೆ ತಂತ್ರಮಂ ಪಣ್ಣಿ ಕೊಲಿಸುವೆನೆಂದು ಕಳುಹಿದಂ ಕುಂತಳೇಂದ್ರನ ನಗರಿಗೆ=[ದುಷ್ಟಬುದ್ಧಿ ಮಂತ್ರಿಯು ಹೊಟ್ಟೆಕಿಚ್ಚಿನಿಂದ ಮುಂದೆ ತಪ್ಪುವ ದೈವಯಂತ್ರದ ಭೇದ ನೀತಿಯನ್ನು ಅರಿಯಲಾರದೆ ಚಂದ್ರಹಾಸನ ಮೇಲೆ ಕುತಂತ್ರವನ್ನು ಹೂಡಿ ಕೊಲ್ಲಿಸುವೆನೆಂದು ಭಾವಿಸಿ ಅವನನ್ನು ಕುಂತಳ ನಗರಕ್ಕೆ ಕಳುಹಿಸಿದನು.]
  • ತಾತ್ಪರ್ಯ:ದುಷ್ಟಬುದ್ಧಿ ಮಂತ್ರಿಯು ಹೊಟ್ಟೆಕಿಚ್ಚಿನಿಂದ ಮುಂದೆ ತಪ್ಪುವ ದೈವಯಂತ್ರದ ಭೇದ ನೀತಿಯನ್ನು ಅರಿಯಲಾರದೆ ಪ್ರಯಕ್ಕೆ ಬಂದ ಚಂದ್ರಹಾಸನ ಮೇಲೆ ಕುತಂತ್ರವನ್ನು ಹೂಡಿ ಅವನನ್ನು ಕೊಲ್ಲಿಸಬೇಕೆಂದು ಅವನನ್ನು ಕುಂತಳ ನಗರಕ್ಕೆ ಕಳುಹಿಸಿದನು.
  • (ಪದ್ಯ-ಸೂಚನೆ)XI-XII

ಪದ್ಯ:-::[ಸಂಪಾದಿಸಿ]

ಧ್ರುವನಂಬರಸ್ಥಳದೊ ಳಸ್ಮತ್ಪಿತಾಮಹಂ |
ದಿವದೊಳ್ ಭೀಷಣಂ ಲಂಕೆಯೊಳ್ ಪಾತಾಳ |
ಭುವನದೊಳ್ ಬಲಿ ವಿಷ್ಣುಭಕ್ತರಂ ಕಾಣ್ಬರಾರೀ ಚಂದ್ರಹಾಸನಿಂದೆ ||
ಅವನಿ ಪಾವನಮಪ್ಪುದಾತನಂ ಸಂಧಿಸುವ |
ಲವಲವಿಕೆಯಾಗಿರ್ಪುದೆಲೆ ತಪೋಧನ ತನಗೆ |
ವಿವರಿಸೀತನ ಕಥೇಯನೆಂದರ್ಜುನಂ ಕೇಳ್ದೊಡಾ ಮುನಿಪನಿಂತೆಂದನು ||1||

ಪದವಿಭಾಗ-ಅರ್ಥ:
ಧ್ರುವನು ಅಂಬರಸ್ಥಳದೊಳು ಅಸ್ಮತ್ಪಿತಾಮಹಂ ದಿವದೊಳ್(ಸ್ವರ್ಗ) ಭೀಷಣಂ ಲಂಕೆಯೊಳ್ ಪಾತಾಳ ಭುವನದೊಳ್ ಬಲಿ ವಿಷ್ಣುಭಕ್ತರಂ ಕಾಣ್ಬರು ಆರು=[ವಿಷ್ಣುವನ್ನು ಕಂಡ ಧ್ರುವನು ಆಕಾಶದಲ್ಲಿರುವನು; ನನ್ನ ಪಿತಾಮಹ ವಿಚಿತ್ರವೀರ್ಯನು ಸ್ವರ್ಗದಲ್ಲಿರುವನು; ಶ್ರೀರಾಮನನ್ನು ಕಂಡ ವಿಭೀಷಣನು ಲಂಕೆಯಲ್ಲಿರುವನು; ಪಾತಾಳದಲ್ಲಿ ಬಲಿ ಇರುವನು; ಈ ಮಹಾ ವಿಷ್ಣುಭಕ್ತರನ್ನು ಭೂಮಿಯಮೇಲೆ ಕಾಣುವವರು ಯಾರು? ಕಾಣಲ ಸಾಧ್ಯವಿಲ್ಲ.];; ಈ ಚಂದ್ರಹಾಸನಿಂದೆ ಅವನಿ ಪಾವನಮಪ್ಪುದು ಆತನಂ ಸಂಧಿಸುವ ಲವಲವಿಕೆಯಾಗಿ ಇರ್ಪುದು ಎಲೆ ತಪೋಧನ ತನಗೆ ವಿವರಿಸು ಈತನ ಕಥೇಯನೆಂದು ಅರ್ಜುನಂ ಕೇಳ್ದೊಡೆ ಆ ಮುನಿಪನು ಇಂತೆಂದನು=[ಈ ವಿಷ್ಣುಭಕ್ತನಾದ ಚಂದ್ರಹಾಸನಿಂದ ಭೂಮಿಯು ಪಾವನವಾಗುವುದು. ಆತನನ್ನು ನೋಡುವ ಲವಲವಿಕೆಯಾಗಿದೆ. ಎಲೆ ತಪೋಧನ ನಾರದನೇ ತನಗೆ ಈತನ ಕಥೇಯನು ವಿವರಿಸು ಎಂದು ಅರ್ಜುನನು ಕೇಳಿದಾಗ ಆ ಮುನಿಪನು ಹೀಗೆ ಹೇಳಿದನು].
  • ತಾತ್ಪರ್ಯ:ವಿಷ್ಣುವನ್ನು ಕಂಡ ಭಕ್ತ ಧ್ರುವನು ಆಕಾಶದಲ್ಲಿರುವನು; ನನ್ನ ಪಿತಾಮಹ ವಿಚಿತ್ರವೀರ್ಯನು ಸ್ವರ್ಗದಲ್ಲಿರುವನು; ಶ್ರೀರಾಮನನ್ನು ಕಂಡ ವಿಷ್ಣುಭಕ್ತ ವಿಭೀಷಣನು ಲಂಕೆಯಲ್ಲಿರುವನು; ಪಾತಾಳದಲ್ಲಿ ಬಲಿ ಇರುವನು; ಈ ಮಹಾ ವಿಷ್ಣುಭಕ್ತರನ್ನು ಭೂಮಿಯಮೇಲೆ ಕಾಣುವವರು ಯಾರು? ಕಾಣಲ ಸಾಧ್ಯವಿಲ್ಲ. ಈ ವಿಷ್ಣುಭಕ್ತನಾದ ಚಂದ್ರಹಾಸನಿಂದ ಭೂಮಿಯು ಪಾವನವಾಗುವುದು. ಆತನನ್ನು ನೋಡುವ ಲವಲವಿಕೆಯಾಗಿದೆ. ಎಲೆ ತಪೋಧನ ನಾರದನೇ ತನಗೆ ಈತನ ಕಥೇಯನು ವಿವರಿಸು ಎಂದು ಅರ್ಜುನನು ಕೇಳಿದಾಗ ಆ ಮುನಿಪನು ಹೀಗೆ ಹೇಳಿದನು.
  • (ಪದ್ಯ-೧)

ಪದ್ಯ:-::[ಸಂಪಾದಿಸಿ]

ಆಲಿಸೆಲೆ ಫಲುಗುಣ ಕುಳಿಂದಕನ ಭವನದೊಳ್ |
ಬಾಲಕಂ ಪೆರ್ಚುವ ಸುಧಾಂಶುಕಳೆಯಿಂ ನಗುವ |
ಲೀಲೆಯಿಂ ಚಂದ್ರಹಾಸಂ ತಪ್ಪನೆಂಬಂತೆ ದಿನದಿನಕೆ ವರ್ಧಿಸುತಿರೆ ||
ಮೇಲೆ ಮೇಲೆಸೆದುದಾ ಪೊಳಲ ಸಿರಿ ವಿಮಲ ಗುಣ |
ಶೀಲದಿಂ ಮೆರೆದುದೆಲ್ಲಾ ಜನಂ ಬಿಡದೆ ಕೊಡ |
ವಾಳಂ ಕರೆದುವಾಕಳುತ್ತು ಬಿತ್ತದೆ ಬೆಳೆಯತೊಡಗಿತಿಳೆ ಮಳೆಗಳಿಂದೆ ||2||

ಪದವಿಭಾಗ-ಅರ್ಥ:
ಆಲಿಸು ಎಲೆ ಫಲುಗುಣ ಕುಳಿಂದಕನ ಭವನದೊಳ್ ಬಾಲಕಂ ಪೆರ್ಚುವ ಸುಧಾಂಶುಕಳೆಯಿಂ ನಗುವ ಲೀಲೆಯಿಂ ಚಂದ್ರಹಾಸಂ ತಪ್ಪನೆಂಬಂತೆ ದಿನದಿನಕೆ ವರ್ಧಿಸುತಿರೆ=[ಕೇಳು ಎಲೆ ಫಲ್ಗುಣ ಕುಳಿಂದಕನ ಭವನದಲ್ಲಿ ಬಾಲಕನು ಹೆಚ್ಚುತ್ತಿರುವ ಚಂದ್ರನ ಕಳೆಯಿಂದ, ನಗುವ ವಿಲಾಸದಿಂದ ಚಂದ್ರಹಾಸನು ತಪ್ಪನು ಎಂಬಂತೆ ದಿನದಿನಕ್ಕೆ ವರ್ಧಿಸುತ್ತಾ ಇರಲು];; ಮೇಲೆ ಮೇಲೆಸೆದುದು ಆ ಪೊಳಲ ಸಿರಿ ವಿಮಲ ಗುಣ ಶೀಲದಿಂ ಮೆರೆದುದೆಲ್ಲಾ ಜನಂ ಬಿಡದೆ ಕೊಡವಾಳಂ ಕರೆದುವಾಕಳು ಉತ್ತು ಬಿತ್ತದೆ ಬೆಳೆಯತೊಡಗಿತು ಇಳೆ ಮಳೆಗಳಿಂದೆ=[ಆ ನಗರದ ಸಂಪತ್ತು ವರ್ಷ ವರ್ಷಕ್ಕೆ ಏರುತ್ತಿತ್ತು. ನಿರ್ಲವಾದ ಗುಣ ಶೀಲಗಳಿಂದ ಅಲ್ಲಿಯ ಜನರು ಶೋಭಿಸಿದರು. ಕಡಿಮೆ ಇಲ್ಲದಂತೆ ಆಕಳುಗಳು ಕೊಡಹಾಲನ್ನು ಕರೆದವು; ಭೂಮಿ ಉತ್ತು ಬಿತ್ತದೆ ಮಳೆಗಳಿಂದ ಬೆಳೆಯತೊಡಗಿತು].
  • ತಾತ್ಪರ್ಯ:ಕೇಳು ಎಲೆ ಫಲ್ಗುಣ, ಕುಳಿಂದಕನ ಭವನದಲ್ಲಿ ಬಾಲಕನು ಚಂದ್ರನ ಹೆಚ್ಚುತ್ತಿರು ವಕಳೆಯಿಂದ, ನಗುವ ವಿಲಾಸದಿಂದ ಚಂದ್ರಹಾಸನು ತಪ್ಪನು ಎಂಬಂತೆ ದಿನದಿನಕ್ಕೆ ವರ್ಧಿಸುತ್ತಾ ಇರಲು, ಆ ನಗರದ ಸಂಪತ್ತು ವರ್ಷ ವರ್ಷಕ್ಕೆ ಏರುತ್ತಿತ್ತು. ನಿರ್ಲವಾದ ಗುಣ ಶೀಲಗಳಿಂದ ಅಲ್ಲಿಯ ಜನರು ಶೋಭಿಸಿದರು. ಕಡಿಮೆ ಇಲ್ಲದಂತೆ ಆಕಳುಗಳು ಕೊಡಹಾಲನ್ನು ಕರೆದವು; ಭೂಮಿ ಉತ್ತು ಬಿತ್ತದೆ ಮಳೆಗಳಿಂದ ಬೆಳೆ ಬೆಳೆಯತೊಡಗಿತು.
  • (ಪದ್ಯ-೨)

ಪದ್ಯ:-::[ಸಂಪಾದಿಸಿ]

ಸೂಚಿತದ ಪೂರ್ವಜನ್ಮದ ಪುಣ್ಯಫಲದಿಂದೆ |
ಯಾಚಿತದೊಳನುಪಮದ ಶಿಶು ನಿಧಾನಂ ತನಗೆ |
ಗೋಚರಿಸಿತೆಂದು ನಲಿದಾ ಕುಳಿಂದನುಮವನ ರಾಣಿಯಂ ದಿನದಿನದೊಳು ||
ಲೋಚನಂ ತಣಿಯೆ ನೋಡುತ ಹರ್ಷ ವಾರಿಧಿಯ |
ವೀಚಿಯೊಳ್ ಮುಳುಗಾಡಿ ಪುತ್ರವಾತ್ಸಲ್ಯದಿಂ |
ದಾ ಚಂದ್ರಹಾಸನಭ್ಯುದಯದೊಳ್ ಪೆರ್ಚಿದರನೇಕ ಸಂಪದಮೊದವಲು||3||

ಪದವಿಭಾಗ-ಅರ್ಥ:
ಸೂಚಿತದ ಪೂರ್ವಜನ್ಮದ ಪುಣ್ಯಫಲದಿಂದೆ ಯಾಚಿತದೊಳು ಅನುಪಮದ ಶಿಶು ನಿಧಾನಂ ತನಗೆ ಗೋಚರಿಸಿತೆಂದು ನಲಿದಾ ಕುಳಿಂದನುಂ ಅವನ ರಾಣಿಯಂ ದಿನದಿನದೊಳು=[ಗಳಿಸಿದ ಪೂರ್ವಜನ್ಮದ ಪುಣ್ಯಫಲದಿಂದೆ ತಾನಾಗಿಯೇ ಬಹಳ ಉತ್ತಮ ಶಿಶುವೆಂಬ ಧನವು ತನಗೆ ಸಿಕ್ಕಿತು ಎಂದು ನಲಿದು ಆ ಕುಳಿಂದಕನೂ ಅವನ ರಾಣಿಯೂ ಪ್ರತಿದಿನವೂ ಅವನನ್ನು,];; ಲೋಚನಂ ತಣಿಯೆ ನೋಡುತ ಹರ್ಷ ವಾರಿಧಿಯ ವೀಚಿಯೊಳ್ ಮುಳುಗಾಡಿ ಪುತ್ರವಾತ್ಸಲ್ಯದಿಂದ ಆ ಚಂದ್ರಹಾಸನ ಅಭ್ಯುದಯದೊಳ್ ಪೆರ್ಚಿದರು ಅನೇಕ ಸಂಪದಂ ಒದವಲು=[ಕಣ್ಣು ತಣಿಯುವಷ್ಟು ನೋಡುತ್ತಾ ಸಂತೋಷ ಸಾಗರವ ಅಲೆಯಲ್ಲಿ ಮುಳುಗಾಡಿ ಪುತ್ರವಾತ್ಸಲ್ಯದಿಂದ ಆ ಚಂದ್ರಹಾಸನ ಅಭ್ಯುದಯದಲ್ಲಿ ಅನೇಕ ಸಂಪದಗಳು ಒದಗಲು ಏಳಿಗೆಪಡೆದರು].
  • ತಾತ್ಪರ್ಯ:ಗಳಿಸಿದ ಪೂರ್ವಜನ್ಮದ ಪುಣ್ಯಫಲದಿಂದೆ ತಾನಾಗಿಯೇ ಬಹಳ ಉತ್ತಮ ಶಿಶುವೆಂಬ ಧನವು ತನಗೆ ಸಿಕ್ಕಿತು, ಎಂದು ನಲಿದು ಆ ಕುಳಿಂದಕನೂ ಅವನ ರಾಣಿಯೂ ಪ್ರತಿದಿನವೂ, ಅವನನ್ನು ಕಣ್ಣು ತಣಿಯುವಷ್ಟು ನೋಡುತ್ತಾ ಸಂತೋಷ ಸಾಗರವ ಅಲೆಯಲ್ಲಿ ಮುಳುಗಾಡಿ ಪುತ್ರವಾತ್ಸಲ್ಯದಿಂದ ಆ ಚಂದ್ರಹಾಸನ ಅಭ್ಯುದಯದಲ್ಲಿ ಅನೇಕ ಸಂಪದಗಳು ಒದಗಲು ಏಳಿಗೆಪಡೆದರು.
  • (ಪದ್ಯ-೩)XI

ಪದ್ಯ:-::[ಸಂಪಾದಿಸಿ]

ಲಕ್ಷಣದೊಳೆಸೆವ ಸುಕುಮಾರನಂ ನಗರಿಗ |
ಧ್ಯಕ್ಷನಾಗಿಹ ಕುಳಿಂದಂ ಕೆಲವು ದಿನದ ಮೇ |
ಲಕ್ಷರಾಭ್ಯಾಸಕಿರಿಸಿದೊಡೆ ಹರಿಯೆಂಬೆರಡು ವರ್ಣಮಲ್ಲದೆ ಪೆರತನು ||
ಅಕ್ಷಿಯಿಂದೀಕ್ಷಿಸದೆ ವಾಚಿಸದಿರಲ್ಕೆ ಗುರು |
ಶಿಕ್ಷಿಸಿ ಕನಲ್ದು ಬರೆಯೆಂದೊಡಂ ಕೇಳದಿರೆ |
ತತ್ಕ್ಷಣದೊಳಾತನೈತಂದವನ ತಾತಂಗದಂ ಪೇಳ್ದೊಂಡಿಂತೆಂದನು ||4||

ಪದವಿಭಾಗ-ಅರ್ಥ:
ಲಕ್ಷಣದೊಳು ಎಸೆವ ಸುಕುಮಾರನಂ ನಗರಿಗೆ ಅಧ್ಯಕ್ಷನಾಗಿಹ ಕುಳಿಂದಂ ಕೆಲವು ದಿನದ ಮೇಲೆ ಅಕ್ಷರಾಭ್ಯಾಸಕೆ ಇರಿಸಿದೊಡೆ ಹರಿಯೆಂಬ ಎರಡು ವರ್ಣಮಲ್ಲದೆ ಪೆರತನು=[ರಾಜಲಕ್ಷಣದಿಂದ ಶೋಭಿಸುವ ಸುಕುಮಾರ ಚಂದ್ರಹಾಸನನ್ನು ಚಂದನಾವತಿ ನಗರಿಗೆ ಅಧ್ಯಕ್ಷ/ ರಾಜನಾಗಿರುವ ಕುಳಿಂದಕನು ಕೆಲವು ದಿನದ ಮೇಲೆ ಅಕ್ಷರಾಭ್ಯಾಸಕ್ಕೆ ಆರಂಭಿಸಿದಾಗ ಅವನು ಹರಿಯೆಂಬ ಎರಡು ಅಕ್ಷರವಲ್ಲದೆ ಬೇರೆಯದನ್ನು];; ಅಕ್ಷಿಯಿಂದ ಈಕ್ಷಿಸದೆ ವಾಚಿಸದಿರಲ್ಕೆ ಗುರು ಶಿಕ್ಷಿಸಿ ಕನಲ್ದು ಬರೆಯೆಂದೊಡಂ ಕೇಳದಿರೆ ತತ್ಕ್ಷಣದೊಳು ಆತನು ಐತಂದು ಅವನ ತಾತಂಗೆ ಅದಂ ಪೇಳ್ದೊಂಡೆ ಇಂತೆಂದನು=[ಕಣ್ಣಿನಿಂದ ಕೂಡಾ ನೋಡದೆ ಓದದೆ ಇರಲು, ಅವನ ಗುರು ಶಿಕ್ಷಿಸಿ ಸಿಟ್ಟಿನಿಂದ ಬರೆಯೆಂದು ಹೇಳಿದಾಗ, ಅವನು ಕೇಳದಿರಲು ಆ ಕ್ಷಣದಲ್ಲಿ ಆತನು ತಂದೆಯ ಬಳಿಗೆ ಬಂದು ಅದನ್ನು ಹೇಳಿದಾಗ ಅವನು ಹೀಗೆ ಹೇಳಿದನು.]
  • ತಾತ್ಪರ್ಯ:ರಾಜಲಕ್ಷಣದಿಂದ ಶೋಭಿಸುವ ಸುಕುಮಾರ ಚಂದ್ರಹಾಸನನ್ನು ಚಂದನಾವತಿ ನಗರಿಗೆ ಅಧ್ಯಕ್ಷ/ ರಾಜನಾಗಿರುವ ಕುಳಿಂದಕನು ಕೆಲವು ದಿನದ ಮೇಲೆ ಅಕ್ಷರಾಭ್ಯಾಸಕ್ಕೆ ಆರಂಭಿಸಿದಾಗ ಅವನು ಹರಿಯೆಂಬ ಎರಡು ಅಕ್ಷರವಲ್ಲದೆ ಬೇರೆಯದನ್ನು ಕಣ್ಣಿನಿಂದ ಕೂಡಾ ನೋಡದೆ ಓದದೆ ಇರಲು, ಅವನ ಗುರು ಶಿಕ್ಷಿಸಿ ಸಿಟ್ಟಿನಿಂದ ಬರೆಯೆಂದು ಹೇಳಿದಾಗ, ಅವನು ಕೇಳದಿರಲು ಆ ಕ್ಷಣದಲ್ಲಿ ಆತನು ತಂದೆಯ ಬಳಿಗೆ ಬಂದು ಅದನ್ನು ಹೇಳಿದಾಗ ಅವನು ಹೀಗೆ ಹೇಳಿದನು.]
  • (ಪದ್ಯ-೪)

ಪದ್ಯ:-::[ಸಂಪಾದಿಸಿ]

ಈತನೇಕಾದಶಿಯೊಳುಪವಾಸಮಂ ಮಾಳ್ಪ |
ನೀತಂ ಕಂಡು ನಾವೆಲ್ಲರುಮನುಷ್ಠಿಸುವೆ |
ವೀತನಚ್ಯುತಭಕ್ತ ನೀತನಿಂದೆನಗಪ್ಪುದಭ್ಯುದಯಮಿಹಪರದೊಳು ||
ಈತನಲ್ಲದೆ ಬೇರೆ ತನುಜಾತರಿಲ್ಲ ತನ |
ಗೀತನಲ್ಲಿಯೆ ಜೀವಮಾಗಿರ್ಪೆನಾನದರಿ |
ನೀತನೆಂತಾದೊಡಿರಲೀತಂಗೆ ಶಿಕ್ಷೆ ಬೇಡೆಂದಂ ಕುಳಿಂದನಂದು ||5||

ಪದವಿಭಾಗ-ಅರ್ಥ:
ಈತನು ಏಕಾದಶಿಯೊಳು ಉಪವಾಸಮಂ ಮಾಳ್ಪನು ಈತಂ ಕಂಡು ನಾವೆಲ್ಲರುಂ ಅನುಷ್ಠಿಸುವೆವು ಈತನು ಅಚ್ಯುತಭಕ್ತನು ಈತನಿಂದೆ ಎನಗಪ್ಪುದು ಅಭ್ಯುದಯಂ ಇಹಪರದೊಳು=[ಈತನು ಏಕಾದಶಿಯಲ್ಲಿ ಉಪವಾಸವನ್ನು ಮಾಡುವನು; ಈತನನ್ನು ಕಂಡು ನಾವೆಲ್ಲರೂ ಅದನ್ನು ಅನುಸರಿಸುವೆವು; ಈತನು ಅಚ್ಯುತಭಕ್ತನು; ಈತನಿಂದ ನನಗೆ ಇಹಪರದಲ್ಲಿ ಅಭ್ಯುದಯವು ಆಗುವುದು ];; ಈತನಲ್ಲದೆ ಬೇರೆ ತನುಜಾತರಿಲ್ಲ ತನಗೆ ಈತನಲ್ಲಿಯೆ ಜೀವಮಾಗಿರ್ಪೆನು ಆನು ಅದರಿನಿಂ ಈತನೆಉ ಎಂತಾದೊಡು ಇರಲಿ ಈತಂಗೆ ಶಿಕ್ಷೆ ಬೇಡೆಂದಂ ಕುಳಿಂದನಂದು=[ಈತನು ಅಲ್ಲದೆ ತನಗೆ ಬೇರೆ ಮಕ್ಕಳಿಲ್ಲ ತನಗೆ; ನಾನು ಈತನಲ್ಲಿಯೇ ಜೀವವನ್ನು ಇಟ್ಟುಕೊಂಡಿರುವೆನು; ಅದರಿಂದ ಈತನು ಹೇಗಾದರೂ ಇರಲಿ ಈತನಿಗೆ ಶಿಕ್ಷೆ ಬೇಡ ಎಂದನು ಕುಳಿಂದಕನು.]
  • ತಾತ್ಪರ್ಯ:ಈತನು ಏಕಾದಶಿಯಲ್ಲಿ ಉಪವಾಸವನ್ನು ಮಾಡುವನು; ಈತನನ್ನು ಕಂಡು ನಾವೆಲ್ಲರೂ ಅದನ್ನು ಅನುಸರಿಸುವೆವು; ಈತನು ಅಚ್ಯುತಭಕ್ತನು; ಈತನಿಂದ ನನಗೆ ಇಹಪರದಲ್ಲಿ ಅಭ್ಯುದಯವು ಆಗುವುದು; ಈತನಲ್ಲದೆ ತನಗೆ ಬೇರೆ ಮಕ್ಕಳಿಲ್ಲ ತನಗೆ; ನಾನು ಈತನಲ್ಲಿಯೇ ಜೀವವನ್ನು ಇಟ್ಟುಕೊಂಡಿರುವೆನು; ಅದರಿಂದ ಈತನು ಹೇಗಾದರೂ ಇರಲಿ ಈತನಿಗೆ ಶಿಕ್ಷೆ ಬೇಡ ಎಂದನು ಕುಳಿಂದಕನು.
  • (ಪದ್ಯ-೫)

ಪದ್ಯ:-::[ಸಂಪಾದಿಸಿ]

ಅಂದು ಮೊದಲಾಗಿ ತನ್ನಿಚ್ಛೆಯಿಂ ಚಂದ್ರಹಾ |
ಸಂ ದಾನವಾರಿಯಂ ಬಿಡದೆ ಬಾಲಕ್ರೀಡೆ |
ಯಿಂದುತ್ಸವಂಗಳಂ ಮಾಡಿ ಕೆಳೆಯರ್ವೆರಸಿ ಕೊಂಡಾಡಿ ಭಕ್ತಿಯಿಂದೆ ||
ತಂದು ಫಲ ವರ್ಗಮಂ ಪೂಜೆಗೈದುಪವಾಸ |
ದಿಂದ ಜಾಗರಣದಿಂದೇಕಾದಶೀ ವ್ರತವ |
ನಂದದಿಂದಾಚರಿಪನಖಿಳ ಜನಕುಪದೇಶಿಪಂತೆ ಹರಿ ಮಹಿಮೆಗಳನು ||6||

ಪದವಿಭಾಗ-ಅರ್ಥ:
ಅಂದು ಮೊದಲಾಗಿ ತನ್ನಿಚ್ಛೆಯಿಂ ಚಂದ್ರಹಾಸಂ ದಾನವಾರಿಯಂ ಬಿಡದೆ ಬಾಲಕ್ರೀಡೆಯಿಂದ ಉತ್ಸವಂಗಳಂ ಮಾಡಿ ಕೆಳೆಯರ್ವೆರಸಿ ಕೊಂಡಾಡಿ ಭಕ್ತಿಯಿಂದೆ=[ಅಂದಿನಿಂದ ಚಂದ್ರಹಾಸನು ತನ್ನಿಚ್ಛೆಯಿದಲೇ ಹರಿಯನ್ನು ಬಿಡದೆ ನೆನೆಯತ್ತಾ ಬಾಲಕ್ರೀಡೆಯಿಂದ ಉತ್ಸವಂಗಳನ್ನು ಮಾಡಿ ಗೆಳೆಯರಜೊತೆಗೂಡಿ, ಹರಿಯನ್ನು ಭಕ್ತಿಯಿಂದೆ ಕೊಂಡಾಡಿ];; ತಂದು ಫಲ ವರ್ಗಮಂ ಪೂಜೆಗೈದು ಉಪವಾಸದಿಂದ ಜಾಗರಣದಿಂದ ಏಕಾದಶೀ ವ್ರತವನಂದದಿಂದ ಆಚರಿಪನ ಅಖಿಳ ಜನಕುಪದೇಶಿಪಂತೆ ಹರಿ ಮಹಿಮೆಗಳನು=[ ನಾನಾ ಫಲಗಳನ್ನು ತಂದು ಪೂಜೆಮಾಡಿ ಉಪವಾಸ ಮತ್ತು ಜಾಗರಣದಿಂದ ಏಕಾದಶೀ ವ್ರತವನ್ನು ಹರಿ ಮಹಿಮೆಗಳನ್ನು ಅಖಿಲ ಜನರಿಗೂ ಉಪದೇಶಿಸುವಂತೆ ಚೆನ್ನಾಗಿ ಆಚರಿಸುವನು].
  • ತಾತ್ಪರ್ಯ:ಅಂದು ಮೊದಲಾಗಿ ತನ್ನಿಚ್ಛೆಯಿಂ ಚಂದ್ರಹಾಸಂ ದಾನವಾರಿಯಂ ಬಿಡದೆ ಬಾಲಕ್ರೀಡೆಯಿಂದ ಉತ್ಸವಂಗಳಂ ಮಾಡಿ ಕೆಳೆಯರ್ವೆರಸಿ ಕೊಂಡಾಡಿ ಭಕ್ತಿಯಿಂದೆ=[ಅಂದಿನಿಂದ ಚಂದ್ರಹಾಸನು ತನ್ನಿಚ್ಛೆಯಿದಲೇ ಹರಿಯನ್ನು ಬಿಡದೆ ನೆನೆಯತ್ತಾ ಬಾಲಕ್ರೀಡೆಯಿಂದ ಉತ್ಸವಂಗಳನ್ನು ಮಾಡಿ ಗೆಳೆಯರಜೊತೆಗೂಡಿ, ಹರಿಯನ್ನು ಭಕ್ತಿಯಿಂದೆ ಕೊಂಡಾಡಿ];; ತಂದು ಫಲ ವರ್ಗಮಂ ಪೂಜೆಗೈದು ಉಪವಾಸದಿಂದ ಜಾಗರಣದಿಂದ ಏಕಾದಶೀ ವ್ರತವನಂದದಿಂದ ಆಚರಿಪನ ಅಖಿಳ ಜನಕುಪದೇಶಿಪಂತೆ ಹರಿ ಮಹಿಮೆಗಳನು=[ ನಾನಾ ಫಲಗಳನ್ನು ತಂದು ಪೂಜೆಮಾಡಿ ಉಪವಾಸ ಮತ್ತು ಜಾಗರಣದಿಂದ ಏಕಾದಶೀ ವ್ರತವನ್ನು ಹರಿ ಮಹಿಮೆಗಳನ್ನು ಅಖಿಲ ಜನರಿಗೂ ಉಪದೇಶಿಸುವಂತೆ ಚೆನ್ನಾಗಿ ಆಚರಿಸುವನು].
  • (ಪದ್ಯ-೬)

ಪದ್ಯ:-::[ಸಂಪಾದಿಸಿ]

ಮೆಲ್ಲನಿಂತಿರಲೆಂಟನೆಯ ವರುಷಮಾಗಲ್ಕೆ |
ನಿಲ್ಲದುಪನಯನಮಂ ವಿರಚಿಸಿ ಕುಳಿಂದಂ ಸ |
ಮುಲ್ಲಾಸಮಂ ತಾಳ್ದನಂಗ ಸಹಿತಖಿಳ ವೇದಂಗಳಂ ನೀತಿಗಳನು ||
ಸಲ್ಲಲಿತ ಶಬ್ದಾದಿ ಶಾಸ್ತ್ರಸಿದ್ಧಾಂತಂಗ |
ಳೆಲ್ಲಮಂ ಗುರುಮುಖದೊಳಧಿಕರಿಸಿ ಬೇಕಾದ |
ಬಿಲ್ಲವಿದ್ಯೆಯನರಿದು ಗಜ ತುರಗದೇರಾಟದೊಳ್ ಚತುರನಾದನವನು ||7||

ಪದವಿಭಾಗ-ಅರ್ಥ:
ಮೆಲ್ಲನೆ ಇಂತಿರಲು ಎಂಟನೆಯ ವರುಷಮಾಗಲ್ಕೆ ನಿಲ್ಲದೆ ಉಪನಯನಮಂ ವಿರಚಿಸಿ ಕುಳಿಂದಂ ಸಮುಲ್ಲಾಸಮಂ ತಾಳ್ದನು ಅಂಗ ಸಹಿತಖಿಳ ವೇದಂಗಳಂ ನೀತಿಗಳನು=[ಹೀಗಿರುವಾಗ ಮೆಲ್ಲನೆ ದಿನಕಳೆದು ಎಂಟನೆಯ ವರುಷವಾಗಲು,ತಡಮಾಡದೆ ಉಪನಯನವನ್ನು ಮಾಡಿ ಕುಳಿಂದನು ಸಂತಸತಾಳಿದನು. ಅಂಗಗಳಾಧ ಶಿಕ್ಷೆಗಳಾದವ್ಯಾಕರಣಾದಿಗಳ ಸಹಿತ ಎಲ್ಲಾ ವೇದಗಳನ್ನೂ ನೀತಿಗಳನೂ ಕಲಿಸಿದನು.];; ಸಲ್ಲಲಿತ ಶಬ್ದಾದಿ ಶಾಸ್ತ್ರಸಿದ್ಧಾಂತಂಗಳ ಎಲ್ಲಮಂ ಗುರುಮುಖದೊಳು ಅಧಿಕರಿಸಿ ಬೇಕಾದ ಬಿಲ್ಲವಿದ್ಯೆಯನು ಅರಿದು ಗಜ ತುರಗದೇರಾಟದೊಳ್ ಚತುರನಾದನು ಅವನು=[ಅವನು ಉತ್ತಮ ಲಲಿತಕಲೆಗಳನ್ನೂ ಶಬ್ದಾದಿ ಶಾಸ್ತ್ರಸಿದ್ಧಾಂತಂಗಳು ಈ ಎಲ್ಲವನ್ನೂ ಗುರುಮುಖದಿಂದ ಸಂಗ್ರಹಿಸಿಕಲಿಸಿದನು; ಮತ್ತೆ ಬೇಕಾದ ಬಿಲ್ಲವಿದ್ಯೆಯನ್ನು ಕಲಿತು ಗಜ ತುರಗ ರಥದ ವಿದ್ಯೆಗಳಲ್ಲಿ ಚತುರನಾದನು].
  • ತಾತ್ಪರ್ಯ:ಹೀಗಿರುವಾಗ ಮೆಲ್ಲನೆ ದಿನಕಳೆದು ಎಂಟನೆಯ ವರುಷವಾಗಲು,ತಡಮಾಡದೆ ಉಪನಯನವನ್ನು ಮಾಡಿ ಕುಳಿಂದನು ಸಂತಸತಾಳಿದನು. ಅಂಗಗಳಾಧ ಶಿಕ್ಷೆಗಳಾದವ್ಯಾಕರಣಾದಿಗಳ ಸಹಿತ ಎಲ್ಲಾ ವೇದಗಳನ್ನೂ ನೀತಿಗಳನೂ ಕಲಿಸಿದನು.ಅವನು ಉತ್ತಮ ಲಲಿತಕಲೆಗಳನ್ನೂ ಶಬ್ದಾದಿ ಶಾಸ್ತ್ರಸಿದ್ಧಾಂತಂಗಳು ಈ ಎಲ್ಲವನ್ನೂ ಗುರುಮುಖದಿಂದ ಸಂಗ್ರಹಿಸಿಕಲಿಸಿದನು; ಮತ್ತೆ ಬೇಕಾದ ಬಿಲ್ಲವಿದ್ಯೆಯನ್ನು ಕಲಿತು ಗಜ ತುರಗ ರಥದ ವಿದ್ಯೆಗಳಲ್ಲಿ ಚತುರನಾದನು.
  • (ಪದ್ಯ-೭)

ಪದ್ಯ:-::[ಸಂಪಾದಿಸಿ]

ವಿದಿತ ವೇದಾರ್ಥಮಂ ವಿಷ್ಣುವೆಂದರಿದು ಬಹು |
ವಿಧ ಶಾಸ್ತ್ರತತಿಗೆ ಹರಿ ಗತಿಯೆಂದು ತಿಳಿದು ತಾ |
ನಧಿಕರಿಸಿ ಬಳಿಕ ನಿಜಭಕ್ತಿಚಾಪಕೆ ಸತ್ವಗುಣವನಳವಡಿಸಿ ತನ್ನ ||
ಸುಧಿಯ ಶರಮಂ ಪೂಡಿ ಕೃಷ್ಣನಂ ಗುರಿಮಾಡಿ |
ವಿಧುಹಾಸನನುಪಮ ಧನುರ್ವಿದ್ಯಯಂ ಜಗದೊ |
ಳಧಿಕತರಮಾಗೆ ಸಾಧಿಸಿ ಪರಮ ಭಾಗವತ ಕಲೆಗಳಿಂದೆಸೆದಿರ್ದನು ||8||

ಪದವಿಭಾಗ-ಅರ್ಥ:
ವಿದಿತ ವೇದಾರ್ಥಮಂ ವಿಷ್ಣುವೆಂದು ಅರಿದು ಬಹುವಿಧ ಶಾಸ್ತ್ರತತಿಗೆ ಹರಿ ಗತಿಯೆಂದು ತಿಳಿದು ತಾನು ಅಧಿಕರಿಸಿ ಬಳಿಕ ನಿಜಭಕ್ತಿಚಾಪಕೆ ಸತ್ವಗುಣವನು ಅಳವಡಿಸಿ ತನ್ನ=[ವೇದದಲ್ಲಿ ಹೇಳಿರುವ ವೇದಾರ್ಥವನ್ನು ವಿಷ್ಣುವೆಂದು ತಿಳಿದುಕೊಂಡು, ಬಹುವಿಧ ಶಾಸ್ತ್ರಗಳಿಗೆ ಹರಿಯೇ ಗತಿಯೆಂದು ತಿಳಿದು; ತಾನು ಸರಿಯಾಗಿ ತಿಳಿದು ಬಳಿಕ ತನ್ನ ಅಂತರಂಗದಲ್ಲಿ ನಿಜಭಕ್ತಿಯೆಂಬ ಬಿಲ್ಲಿಗೆ ಸತ್ವಗುಣವೆಂಬ ಹಗ್ಗವನ್ನು ಅಳವಡಿಸಿ ತನ್ನ];; ಸುಧಿಯ ಶರಮಂ ಪೂಡಿ ಕೃಷ್ಣನಂ ಗುರಿಮಾಡಿ ವಿಧುಹಾಸನು ಅನುಪಮ ಧನುರ್ವಿದ್ಯಯಂ ಜಗದೊಳು ಅಧಿಕತರಮಾಗೆ ಸಾಧಿಸಿ ಪರಮ ಭಾಗವತ ಕಲೆಗಳಿಂದೆ ಎಸೆದಿರ್ದನು=[ಸುಜ್ಞಾನವೆಂಬ ಶರವನ್ನು ಹೂಡಿ ಕೃಷ್ಣನನ್ನು/ ಹರಿಯನ್ನು ಗುರಿಮಾಡಿ ವಿಧು/ ಚಂದ್ರಹಾಸನು ಅನುಪಮವಾದ ಧನುರ್ವಿದ್ಯೆಯನ್ನು ಜಗದಲ್ಲಿ ಅಧಿಕತರದಿಂದ ಸಾಧಿಸಿ ಪರಮ ಭಾಗವತ ಲಕ್ಷಣಗಳಿಂದ ಶೋಭಿಸುತ್ತಿದ್ದನು].
  • ತಾತ್ಪರ್ಯ:ವೇದದಲ್ಲಿ ಹೇಳಿರುವ ವೇದಾರ್ಥವನ್ನು ವಿಷ್ಣುವೆಂದು ತಿಳಿದುಕೊಂಡು, ಬಹುವಿಧ ಶಾಸ್ತ್ರಗಳಿಗೆ ಹರಿಯೇ ಗತಿಯೆಂದು ತಿಳಿದು; ತಾನು ಸರಿಯಾಗಿ ತಿಳಿದು ಬಳಿಕ ತನ್ನ ಅಂತರಂಗದಲ್ಲಿ ನಿಜಭಕ್ತಿಯೆಂಬ ಬಿಲ್ಲಿಗೆ ಸತ್ವಗುಣವೆಂಬ ಹಗ್ಗವನ್ನು ಅಳವಡಿಸಿ ತನ್ನ ಸುಜ್ಞಾನವೆಂಬ ಶರವನ್ನು ಹೂಡಿ ಹರಿಯನ್ನು ಗುರಿಮಾಡಿ ಚಂದ್ರಹಾಸನು ಅನುಪಮವಾದ ಧನುರ್ವಿದ್ಯೆಯನ್ನು ಜಗದಲ್ಲಿ ಅಧಿಕತರದಿಂದ ವಿಶೇಷ ರೀತಿಯಿಂದ ಸಾಧಿಸಿ ಪರಮ ಭಾಗವತ ಲಕ್ಷಣಗಳಿಂದ ಶೋಭಿಸುತ್ತಿದ್ದನು.
  • (ಪದ್ಯ-೮)

ಪದ್ಯ:-::[ಸಂಪಾದಿಸಿ]

ಷೋಡಶ ಪ್ರಾಯದೊಳವರಂ ಪ್ರಬಲ ಭಟನಾಗಿ |
ಮೂಡಿದಗ್ಗಳಿಕೆಯಿಂದೈದೆ ರಥಿಕರ್ಕಳಂ |
ಕೂಡಿಕೊಂಡೈದಿ ನಿಜ ತಾತಂಗೆ ಮಲೆವ ಮನ್ನೆಯರೆಲ್ಲರಂ ಘಾತಿಸಿ ||
ಮಾಡಿದಂ ದಿಗ್ವಿಜಯಮಂ ಕುಳಿಂದಕನಾಳ್ವ |
ನಾಡಲ್ಲದೆಣ್ಣೆಸೆಯ ಸೀಮೆಗಳನೊತ್ತಿದಂ |
ಪೂಡಿಸಿದನವರವರ ಮನೆಗಳ ಸುವಸ್ತುಜಾಲಂಗಳ ತನ್ನ ಪುರಕೆ ||9||

ಪದವಿಭಾಗ-ಅರ್ಥ:
ಷೋಡಶ ಪ್ರಾಯದೊಳು ಅವಂ ಪ್ರಬಲ ಭಟನಾಗಿ ಮೂಡಿದ ಅಗ್ಗಳಿಕೆಯಿಂದ ಐದೆ ರಥಿಕರ್ಕಳಂ ಕೂಡಿಕೊಂಡು ಐದಿ ನಿಜ ತಾತಂಗೆ ಮಲೆವ ಮನ್ನೆಯರೆಲ್ಲರಂ ಘಾತಿಸಿ=[ಹರಿನಾರು ಪ್ರಾಯದಲ್ಲಿ ಚಂದ್ರಹಾಸನು ಪ್ರಬಲ ಯೋಧನಾಗಿ ಮೂಡಿದನು. ತನ್ನ ಸಾಮರ್ಥ್ಯದಿಂದ ಕೂಡಿದವನಾಗಿ ರಥಿಕ ವೀರರನ್ನು ಕೂಡಿಕೊಂಡು ಹೊಗಿ ತನ್ನ ತಂದೆಗೆ ವಿರೋಧಿಸುವ ಶೂರರೆಲ್ಲರನ್ನೂ ಹೊಡೆದು ಸೋಲಿಸಿ ];; ಮಾಡಿದಂ ದಿಗ್ವಿಜಯಮಂ ಕುಳಿಂದಕನು ಆಳ್ವ ನಾಡಲ್ಲದೆ ಎಣ್ಣೆಸೆಯ ಸೀಮೆಗಳನು ಒತ್ತಿದಂ ಪೂಡಿಸಿದನು (ಹೂಡಿಸು) ಅವರವರ ಮನೆಗಳ ಸುವಸ್ತುಜಾಲಂಗಳ ತನ್ನ ಪುರಕೆ=[ದಿಗ್ವಿಜಯವನ್ನು ಮಾಡಿದನು. ಕುಳಿಂದಕನು ಆಳುವ ನಾಡಲ್ಲದೆ ಅದರ ಎಂಟು ದಿಕ್ಕಿನ ಸೀಮೆಗಳನ್ನೂ ವಿಸ್ತರಿಸಿ, ಅವರವರ ಮನೆಗಳ ಸುವಸ್ತು ರಾಶಿಗಳನ್ನು ತನ್ನ ಪುರಕ್ಕೆ ಸಾಗಿಸಿದನು.].
  • ತಾತ್ಪರ್ಯ:ಹರಿನಾರು ಪ್ರಾಯದಲ್ಲಿ ಚಂದ್ರಹಾಸನು ಪ್ರಬಲ ಯೋಧನಾಗಿ ಮೂಡಿದನು. ತನ್ನ ಸಾಮರ್ಥ್ಯದಿಂದ ಕೂಡಿದವನಾಗಿ ರಥಿಕ ವೀರರನ್ನು ಕೂಡಿಕೊಂಡು ಹೊಗಿ ತನ್ನ ತಂದೆಗೆ ವಿರೋಧಿಸುವ ಶೂರರೆಲ್ಲರನ್ನೂ ಹೊಡೆದು ಸೋಲಿಸಿ ದಿಗ್ವಿಜಯವನ್ನು ಮಾಡಿದನು. ಕುಳಿಂದಕನು ಆಳುವ ನಾಡಲ್ಲದೆ ಅದರ ಎಂಟು ದಿಕ್ಕಿನ ಸೀಮೆಗಳನ್ನೂ ವಿಸ್ತರಿಸಿ, ಅವರವರ ಮನೆಗಳ ಸುವಸ್ತು ರಾಶಿಗಳನ್ನು ತನ್ನ ಪುರಕ್ಕೆ ಸಾಗಿಸಿದನು.].
  • (ಪದ್ಯ-೯)

ಪದ್ಯ:-:೧೦:[ಸಂಪಾದಿಸಿ]

ಹರಿಯನಾರಾಧಿಸದೆ ರಾಜ್ಯಮದದಿಂ ಸೊಕ್ಕಿ |
ದರಿ ಭೂಪರಂ ಗೆಲ್ದು ಮಣಿ ಕನಕ ಮುಕ್ತಾಳಿ |
ಕರಿ ತುರಗ ಮೊದಲಾದ ಮುಖ್ಯ ವಸ್ತು ಪ್ರತತಿ ಸಹಿತ ಪಟ್ಟಣಕೆ ಬರಲು ||
ಪುರದ ಸಿಂಗರದ ಮಂಗಳ ವಾದ್ಯರವದಬಲೆ |
ಯರ ಸೊಡರ್ವೆಳಗಿನಾರತಿಗಳ ಮಹೋತ್ಸವದ |
ಸಿರಿಯೊಳ್ ಕುಳಿಂದಂ ಕುಮಾರನನಿದಿರ್ಗೊಳಿಸಿ ಮತ್ತೆ ಕಾಣಿಸಿಕೊಂಡನು ||10||

ಪದವಿಭಾಗ-ಅರ್ಥ:
ಹರಿಯನು ಆರಾಧಿಸದೆ ರಾಜ್ಯಮದದಿಂ ಸೊಕ್ಕಿದ ಅರಿಭೂಪರಂ ಗೆಲ್ದು ಮಣಿಕನಕ ಮುಕ್ತಾಳಿ ಕರಿ ತುರಗ ಮೊದಲಾದ ಮುಖ್ಯ ವಸ್ತು ಪ್ರತತಿ ಸಹಿತ ಪಟ್ಟಣಕೆ ಬರಲು=[ಹರಿಯನ್ನು ಆರಾಧಿಸದೆ ರಾಜ್ಯಮದದಿದ ಸೊಕ್ಕಿದ ಶತ್ರು ರಾಜರನ್ನು ಚಂದ್ರಹಾಸನು, ಗೆದ್ದು ಮಣಿ,ಕನಕ, ಮುಕ್ತಾಳಿ, ಕರಿ, ತುರಗ, ಮೊದಲಾದ ಮುಖ್ಯ ವಸ್ತು ಸಣಗ್ರಹ ಸಹಿತ ಪಟ್ಟಣಕ್ಕೆ ಬರಲು];; ಪುರದ ಸಿಂಗರದ ಮಂಗಳವಾದ್ಯ ರವದ ಅಬಲೆಯರ ಸೊಡರ್ವೆಳಗಿನ ಆರತಿಗಳ ಮಹೋತ್ಸವದ ಸಿರಿಯೊಳ್ ಕುಳಿಂದಂ ಕುಮಾರನನು ಇದಿರ್ಗೊಳಿಸಿ ಮತ್ತೆ ಕಾಣಿಸಿಕೊಂಡನು=[ನಗರದಲ್ಲಿ ಸಿಂಗರಿಸಿದ ಮಂಗಳವಾದ್ಯ ಸದ್ದಿನೊಂದಿಗೆ ವನಿತೆಯರ ದೀಪದ ಬೆಳಕಿನ ಆರತಿಗಳ ಮಹೋತ್ಸವದ ಸಂಪತ್ತಿನೊಂದಿಗೆ ಕುಳಿಂದಕನು ಕುಮಾರನನ್ನು ಬರಮಾಡಿಕೊಂಡು ಮತ್ತೆ ಅವನು ಚಂದ್ರಹಾಸನಿಗೆ ಕಾಣಿಸಿಕೊಂಡನು].
  • ತಾತ್ಪರ್ಯ:ಹರಿಯನ್ನು ಆರಾಧಿಸದೆ ರಾಜ್ಯಮದದಿದ ಸೊಕ್ಕಿದ ಶತ್ರು ರಾಜರನ್ನು ಚಂದ್ರಹಾಸನು, ಗೆದ್ದು ಮಣಿ,ಕನಕ, ಮುಕ್ತಾಳಿ, ಕರಿ, ತುರಗ, ಮೊದಲಾದ ಮುಖ್ಯ ವಸ್ತು ಸಣಗ್ರಹ ಸಹಿತ ಪಟ್ಟಣಕ್ಕೆ ಬರಲು ನಗರದಲ್ಲಿ ಸಿಂಗರಿಸಿದ ಮಂಗಳವಾದ್ಯ ಸದ್ದಿನೊಂದಿಗೆ ವನಿತೆಯರ ದೀಪದ ಬೆಳಕಿನ ಆರತಿಗಳ ಮಹೋತ್ಸವದ ಸಂಪತ್ತಿನೊಂದಿಗೆ ಕುಳಿಂದಕನು ಕುಮಾರನನ್ನು ಬರಮಾಡಿಕೊಂಡು ಮತ್ತೆ ಅವನು ಚಂದ್ರಹಾಸನಿಗೆ ಕಾಣಿಸಿಕೊಂಡನು].
  • (ಪದ್ಯ-೧೦)

ಪದ್ಯ:-:೧೧:[ಸಂಪಾದಿಸಿ]

ತಾಯಿತಂದೆಗಳೀಗಳಿಂದಿರಾದೇವಿ ನಾ |
ರಾಯಣರ್ ತನಗೆಂದು ಭಾವಿಸಿ ನಮಿಸಲವರ್ |
ಪ್ರೀಯದಿಂ ತನಯನಂ ತೆಗೆದಪ್ಪಿದರ್ ಬಳಿಕ ಪುರವೀಧಿಯೊಳ್ ಬರುತಿರೆ ||
ಆಯತಾಕ್ಷಿಯರಾಗಳಲರ್ಗಳಂ ಚೆಲ್ಲಿದರ್ |
ಕಾಯಜಾಕೃತಿಯೊಳೈತಹ ಚಂದ್ರಹಾಸನ ವಿ |
ಡಾಯಮಂ ನೋಡುವ ಕಟಾಕ್ಷದ ಮರೀಚಿಗಳ ವೀಚಿಗಳ ವಿಕಿರದೊಡನೆ ||11||

ಪದವಿಭಾಗ-ಅರ್ಥ:
ತಾಯಿತಂದೆಗಳು ಈಗಳು ಇಂದಿರಾದೇವಿ ನಾರಾಯಣರ್ ತನಗೆಂದು ಭಾವಿಸಿ ನಮಿಸಲು ಅವರ್ ಪ್ರೀಯದಿಂ ತನಯನಂ ತೆಗೆದಪ್ಪಿದರ್ ಬಳಿಕ ಪುರವೀಧಿಯೊಳ್ ಬರುತಿರೆ=[ತಾಯಿತಂದೆಗಳು ಈಗ ತನಗೆ ಇಂದಿರಾದೇವಿ ಮತ್ತು ನಾರಾಯಣರು ಎಂದು ಭಾವಿಸಿ ಅವರಿಗೆ ನಮಸ್ಕರಿಸಲು, ಅವರು ಪ್ರೀತಿಯಿಂದ ಮಗನನ್ನು ಕರೆದು ಅಪ್ಪಿಕೊಂಡರು. ಬಳಿಕ ನಗರದ ಬೀದಿಯಲ್ಲಿ ಬರುತ್ತಿರಲು ];; ಆಯತಾಕ್ಷಿಯರು (ಅಗಲವಾದ ಕಣ್ಣುಳ್ಳವರು) ಆಗಳು ಅಲರ್ಗಳಂ ಚೆಲ್ಲಿದರ್ ಕಾಯಜ(ಮನ್ಮಥ) ಆಕೃತಿಯೊಳು ಐತಹ ಚಂದ್ರಹಾಸನ ವಿಡಾಯಮಂ ನೋಡುವ ಕಟಾಕ್ಷದ ಮರೀಚಿಗಳ ವೀಚಿಗಳ ವಿಕಿರದೊಡನೆ=[ ಮನ್ಮಥನಂತೆ ಇರುವ ಚಂದ್ರಹಾಸನು ಬರುವ ವೈಭವವನ್ನು ನೋಡುವ ನೋಟದ ಕಿರಣಗಳ ತರಂಗಗಳ ವಿಕಿರಣದೊಡನೆ, ಅಗಲವಾದ ಕಣ್ಣುಳ್ಳ ಹೆಂಗಸರು ಆಗ ಅವನ ಮೇಲೆ ಹೂವುಗಳನ್ನು ಚೆಲ್ಲಿದರು.].
  • ತಾತ್ಪರ್ಯ:ತಾಯಿತಂದೆಗಳು ಈಗ ತನಗೆ ಇಂದಿರಾದೇವಿ ಮತ್ತು ನಾರಾಯಣರು ಎಂದು ಭಾವಿಸಿ ಅವರಿಗೆ ನಮಸ್ಕರಿಸಲು, ಅವರು ಪ್ರೀತಿಯಿಂದ ಮಗನನ್ನು ಕರೆದು ಅಪ್ಪಿಕೊಂಡರು. ಬಳಿಕ ನಗರದ ಬೀದಿಯಲ್ಲಿ ಬರುತ್ತಿರಲು ಮನ್ಮಥನಂತೆ ಇರುವ ಚಂದ್ರಹಾಸನು ಬರುವ ವೈಭವವನ್ನು ನೋಡುವ ನೋಟದ ಕಿರಣಗಳ ತರಂಗಗಳ ವಿಕಿರಣದೊಡನೆ, ಅಗಲವಾದ ಕಣ್ಣುಳ್ಳ ಹೆಂಗಸರು ಆಗ ಅವನ ಮೇಲೆ ಹೂವುಗಳನ್ನು ಚೆಲ್ಲಿದರು.
  • (ಪದ್ಯ-೧೧)

ಪದ್ಯ:-:೧೨:[ಸಂಪಾದಿಸಿ]

ನಿಳಯಕೈತಂದನುತ್ಸವದಿಂ ಕುಳಿಂದಕಂ |
ಬಳಿಕ ತನ್ನಾಧಿಪತ್ಯವನಾತ್ಮಜಂಗೆ ಮಂ |
ಗಳ ಮುಹೂರ್ತದೊಳಿತ್ತನಂದಿನಿಂ ಚಂದ್ರಹಾಸಂ ಪಾಲಿಸುವನಿಳೆಯನು ||
ತುಳುಕಾಡಿತಾನಾಡ ಸಿರಿ ಚಂದನಾವತಿಯ |
ಪೊಳಲ ಸೌಭಾಗ್ಯಮಭಿವರ್ಧಿಸಿತು ವೈಷ್ಣವದ |
ಬೆಳೆವಳಿಗೆಯಾದುದೆಲ್ಲಾ ಜನದೊಳಾಚಾರ ಗುಣ ದಾನ ಧರ್ಮದಿಂದೆ ||12||***

ಪದವಿಭಾಗ-ಅರ್ಥ:
ನಿಳಯಕೆ ಐತಂದನು ಉತ್ಸವದಿಂ ಕುಳಿಂದಕಂ ಬಳಿಕ ತನ್ನಾಧಿಪತ್ಯವನು ಆತ್ಮಜಂಗೆ ಮಂಗಳ ಮುಹೂರ್ತದೊಳು ಇತ್ತನು ಅಂದಿನಿಂ ಚಂದ್ರಹಾಸಂ ಪಾಲಿಸುವನು ಇಳೆಯನು=[ಕುಳಿಂದಕನು ಉತ್ಸವದೊಡನೆ ಅರಮನೆಗೆ ಬಂದನ. ಬಳಿಕ ತನ್ನ ಆಧಿಪತ್ಯವನನ್ನು ಮಗನಿಗೆ ಮಂಗಳ ಮುಹೂರ್ತದಲ್ಲಿ ವಹಿಸಿಕೊಟ್ಟನು. ಅಂದಿನಿಂದ ಚಂದ್ರಹಾಸನು ಆರಾಜ್ಯವನ್ನು ಪಾಲಿಸುವನು.];; ತುಳುಕಾಡಿತು ಆನಾಡ ಸಿರಿ ಚಂದನಾವತಿಯ ಪೊಳಲ ಸೌಭಾಗ್ಯಂ ಅಭಿವರ್ಧಿಸಿತು ವೈಷ್ಣವದ ಬೆಳೆವಳಿಗೆಯಾದುದು ಎಲ್ಲಾ ಜನದೊಳು ಆಚಾರ ಗುಣ ದಾನ ಧರ್ಮದಿಂದೆ=[ಅವನ ಆಡಳಿತದಲ್ಲಿ ಆ ನಾಡಿನ ಸಿರಿ ಸಂಪತ್ತ ತುಂಬಿ ತುಳುಕಾಡಿತು. ಚಂದನಾವತಿಯ ನಾಡಿನ ಸೌಭಾಗ್ಯವು ಬಹಳ ಏಳಿಗೆಹೊಂದಿತು. ಎಲ್ಲಾ ಜನರಲ್ಲಿ ಆಚಾರ ಗುಣ ದಾನ ಧರ್ಮದಿಂದೆ ಅಲ್ಲಿ ವೈಷ್ಣವ ಭಕ್ತಿಯ ಬೆಳೆವಳಿಗೆಯಾಯಿತು.]
  • ತಾತ್ಪರ್ಯ:ಕುಳಿಂದಕನು ಉತ್ಸವದೊಡನೆ ಅರಮನೆಗೆ ಬಂದನ. ಬಳಿಕ ತನ್ನ ಆಧಿಪತ್ಯವನನ್ನು ಮಗನಿಗೆ ಮಂಗಳ ಮುಹೂರ್ತದಲ್ಲಿ ವಹಿಸಿಕೊಟ್ಟನು. ಅಂದಿನಿಂದ ಚಂದ್ರಹಾಸನು ಆರಾಜ್ಯವನ್ನು ಪಾಲಿಸುವನು. ಅವನ ಆಡಳಿತದಲ್ಲಿ ಆ ನಾಡಿನ ಸಿರಿ ಸಂಪತ್ತ ತುಂಬಿ ತುಳುಕಾಡಿತು. ಚಂದನಾವತಿಯ ನಾಡಿನ ಸೌಭಾಗ್ಯವು ಬಹಳ ಏಳಿಗೆಹೊಂದಿತು. ಎಲ್ಲಾ ಜನರಲ್ಲಿ ಆಚಾರ ಗುಣ ದಾನ ಧರ್ಮದಿಂದೆ ಅಲ್ಲಿ ವೈಷ್ಣವ ಭಕ್ತಿಯ ಬೆಳೆವಳಿಗೆಯಾಯಿತು.
  • (ಪದ್ಯ-೧೨)

ಪದ್ಯ:-:೧೩:[ಸಂಪಾದಿಸಿ]

ದಶಮಿಯ ಮಹೋತ್ಸವಂ ಪೆರ್ಚಿತೇಕಾದಶಿಯೊ |
ಳಶನಮಂ ತೊರೆದರಚ್ಯುತ ಪರಾಯಣರಾಗಿ |
ನಿಶೆಯೊಳ್ ನಿರಂತರಂ ನಿದ್ರೆಯಂ ಬಿಟ್ಟರಾ ಮರುದಿನಂ ದ್ವಾದಸಿಯೊಳು ||
ಕುಶಶಯನ ಪೂಜೆಯಂ ಮಾಡಿ ಭುಂಜಿಪರಿಂತ |
ತಿಶಯಮಾದುದು ಮೇಲೆ ಮೇಲೆ ಮಾಧವ ಶಕ್ತಿ |
ವಿಶದ ಗುಣನಿಧಿ ಚಂದ್ರಹಾಸನಾಜ್ಞೆ ಯೊಳವನ ದೇಶದ ಸಮಸ್ತ ಜನಕೆ ||13||

ಪದವಿಭಾಗ-ಅರ್ಥ:
ದಶಮಿಯ ಮಹೋತ್ಸವಂ ಪೆರ್ಚಿತು ಏಕಾದಶಿಯೊಳು ಅಶನಮಂ ತೊರೆದರು ಅಚ್ಯುತ ಪರಾಯಣರಾಗಿ ನಿಶೆಯೊಳ್ ನಿರಂತರಂ ನಿದ್ರೆಯಂ ಬಿಟ್ಟರು ಆ ಮರುದಿನಂ ದ್ವಾದಸಿಯೊಳು=[ಚಂದನಾವತಿಯ ರಾಜ್ಯದಲ್ಲಿ ದಶಮಿಯ ದಿನ ಮಹೋತ್ಸವ ನಡೆಸುವುದು ಹೆಚ್ಚಿತು. ಮರುದಿನ ಏಕಾದಶಿಯಂದು ಊಟವನ್ನು ತೊರೆದರು; ಆದಿನ ಅಚ್ಯುತ ಪರಾಯಣರಾಗಿ ರಾತ್ರಿಯಲ್ಲಿ ನಿರಂತರ ನಿದ್ರೆಯನ್ನು ಬಿಟ್ಟರು; ಆ ಮರುದಿನನ ದ್ವಾದಸಿಯಲ್ಲಿ];; ಕುಶಶಯನ ಪೂಜೆಯಂ ಮಾಡಿ ಭುಂಜಿಪರು ಇಂತು ಅತಿಶಯಮಾದುದು ಮೇಲೆ ಮೇಲೆ ಮಾಧವ ಶಕ್ತಿ ವಿಶದ ಗುಣನಿಧಿ ಚಂದ್ರಹಾಸನ ಆಜ್ಞೆಯೊಳು ಅವನ ದೇಶದ ಸಮಸ್ತ ಜನಕೆ=[ರಾಮಚಂದ್ರನ ಪೂಜೆಯನ್ನು ಮಾಡಿ ಊಟಮಾಡುವರು. ಮೇಲಿಂದ ಮೇಲೆ ಮಾಧವ ಶಕ್ತಿ ಶುಭ್ರ ಗುಣನಿಧಿಯಾದ ಚಂದ್ರಹಾಸನ ಆಜ್ಞೆಯಲ್ಲಿ ಅವನ ದೇಶದ ಸಮಸ್ತ ಜನಕ್ಕೆ ಹೀಗೆ ಮಾಧವ ಭಕ್ತಿ ಅತಿಶಯವಾಯಿತು].
  • ತಾತ್ಪರ್ಯ:ಚಂದನಾವತಿಯ ರಾಜ್ಯದಲ್ಲಿ ದಶಮಿಯ ದಿನ ಮಹೋತ್ಸವ ನಡೆಸುವುದು ಹೆಚ್ಚಿತು. ಮರುದಿನ ಏಕಾದಶಿಯಂದು ಊಟವನ್ನು ತೊರೆದರು; ಆದಿನ ಅಚ್ಯುತ ಪರಾಯಣರಾಗಿ ರಾತ್ರಿಯಲ್ಲಿ ನಿರಂತರ ನಿದ್ರೆಯನ್ನು ಬಿಟ್ಟರು; ಆ ಮರುದಿನನ ದ್ವಾದಸಿಯಲ್ಲಿ ರಾಮಚಂದ್ರನ ಪೂಜೆಯನ್ನು ಮಾಡಿ ಊಟಮಾಡುವರು. ಮೇಲಿಂದ ಮೇಲೆ ಮಾಧವ ಶಕ್ತಿ ಶುಭ್ರ ಗುಣನಿಧಿಯಾದ ಚಂದ್ರಹಾಸನ ಆಜ್ಞೆಯಲ್ಲಿ ಅವನ ದೇಶದ ಸಮಸ್ತ ಜನಕ್ಕೆ ಹೀಗೆ ಮಾಧವ ಭಕ್ತಿ ಅತಿಶಯವಾಯಿತು. (ಶ್ರೀ ರಾಮಚಂದ್ರನು ಸೀತಾ ಪರಿತ್ಯಾಗದ ನಂತರ ನೆಲದ ಮೇಲೆ ದರ್ಭೆಯನ್ನ ಹಾಸಿ ಅದರ ಮೇಲೆ ಮಲಗುತ್ತಿದ್ದನು, ಹಾಗಾಗಿ ದರ್ಭೆ-ಕುಶ ಶಯನ)
  • (ಪದ್ಯ-೧೩)

ಪದ್ಯ:-:೧೪:[ಸಂಪಾದಿಸಿ]

ಜಲಜಾಕ್ಷ ಭಕ್ತಿಯಿಂ ಪ್ರಹ್ಲಾದನಾಗಿ ನಿ |
ಶ್ಚಲ ಹರಿಧ್ಯಾನದಿಂ ಧೃವನಾಗಿ ಸತ್ವದಿಂ |
ಬಲಿಯಾಗಿ ಶಾಂತತ್ವದಿಂ ವಿಭೀಷಣನಾಗಿ ವೈಷ್ಣವಾಭರಣನೆಂಬ ||
ಕಲೆಯಿಂದೆ ಮಹಿಗೆ ರುಕ್ಮಾಂಗದಂ ತಾನಾಗಿ |
ಸಲೆ ಕೀರ್ತಿಯಿಂ ಪುಂಡರೀಕನಾಗಿರುತಿಹಂ |
ಸುಲಲಿತ ಚರಿತ ಭಾಗವತ ಶಿರೋಮಣಿ ಚಂದ್ರಹಾಸನುರ್ವೀತಳದೊಳು ||14||

ಪದವಿಭಾಗ-ಅರ್ಥ:
ಜಲಜಾಕ್ಷ ಭಕ್ತಿಯಿಂ ಪ್ರಹ್ಲಾದನಾಗಿ ನಿಶ್ಚಲ ಹರಿಧ್ಯಾನದಿಂ ಧೃವನಾಗಿ ಸತ್ವದಿಂ ಬಲಿಯಾಗಿ ಶಾಂತತ್ವದಿಂ ವಿಭೀಷಣನಾಗಿ ವೈಷ್ಣವಾಭರಣನೆಂಬ=[ಹರಿ ಭಕ್ತಿಯಿಂದ ಪ್ರಹ್ಲಾದನಾಗಿ, ನಿಶ್ಚಲ ಹರಿಧ್ಯಾನದಿಂದ ಧೃವನಾಗಿ, ಸತ್ವದಿಂದ ಬಲಿಯಾಗಿ, ಶಾಂತತ್ವದಿಂದ ವಿಭೀಷಣನಾಗಿ, ವೈಷ್ಣವಾಭರಣನೆಂಬ ];; ಕಲೆಯಿಂದೆ ಮಹಿಗೆ ರುಕ್ಮಾಂಗದಂ ತಾನಾಗಿ ಸಲೆ ಕೀರ್ತಿಯಿಂ ಪುಂಡರೀಕನಾಗಿರುತಿಹಂ ಸುಲಲಿತ ಚರಿತ ಭಾಗವತ ಶಿರೋಮಣಿ ಚಂದ್ರಹಾಸನುರ್ವೀತಳದೊಳು=[ವೈಷ್ಣವ ಭಕ್ತಿಯೇ ಆಭರಣವೆಂಬ ಕಲೆಯಿಂದ ಈ ಭೂಮಿಗೆ ರುಕ್ಮಾಂಗದನು ತಾನಾಗಿ ಚಂದ್ರಹಾಸನು ತನ್ನ ಸುಲಲಿತ ಚರಿತ ಭಾಗವತ ಶಿರೋಮಣಿ ಭೂತಳದಲ್ಲಿ ಸಲೆ ಕೀರ್ತಿಯಿಂ ಪುಂಡರೀಕನಾಗಿರುವನು,]
  • ತಾತ್ಪರ್ಯ:ಹರಿ ಭಕ್ತಿಯಿಂದ ಪ್ರಹ್ಲಾದನಾಗಿ, ನಿಶ್ಚಲ ಹರಿಧ್ಯಾನದಿಂದ ಧೃವನಾಗಿ, ಸತ್ವದಿಂದ ಬಲಿಯಾಗಿ, ಶಾಂತತ್ವದಿಂದ ವಿಭೀಷಣನಾಗಿ, ವೈಷ್ಣವಾಭರಣನೆಂಬ, ವೈಷ್ಣವ ಭಕ್ತಿಯೇ ಆಭರಣವೆಂಬ ಕಲೆಯಿಂದ ಈ ಭೂಮಿಗೆ ರುಕ್ಮಾಂಗದನು ತಾನಾಗಿ ಚಂದ್ರಹಾಸನು ತನ್ನ ಸುಲಲಿತ ಚರಿತ ಭಾಗವತ ಶಿರೋಮಣಿ ಭೂತಳದಲ್ಲಿ ಸಲೆ ಕೀರ್ತಿಯಿಂ ಪುಂಡರೀಕನಾಗಿರುವನು,
  • (ಪದ್ಯ-೧೪)

ಪದ್ಯ:-:೧೫:[ಸಂಪಾದಿಸಿ]

ರೂಪಿಂದೆ ಮದನನುಂ ನಾರಿಯರುಮಮಿತ ಪ್ರ |
ತಾಪದಿಂ ದಿನಪನುಂ ಪರ ಮಹೀಪಾಲರುಂ |
ವ್ಯಾಪಿಸಿದ ಕೀರ್ತಿಯಿಂ ಪೀಯೂಷ ಕಿರಣನುಂ ತಾರೆಗಳು ಮಭಿವರ್ಧಿಪ ||
ಶ್ರೀಪತಿಯ ಭಕ್ತಿಯಿಂ ಗರುಡನಂ ಸನಕಾದಿ |
ತಾಪಸರುಮೈದೆ ಸೋಲ್ದಪರೆಂದೊಡಿನ್ನುಳಿದ |
ಕಾಪುರುಷರೀ ಚಂದ್ರಹಾಸನಂ ಪೋಲ್ದಪರೆ ಪೇಳೆಂದು ಮುನಿ ನುಡಿದನು ||15||

ಪದವಿಭಾಗ-ಅರ್ಥ:
ರೂಪಿಂದೆ ಮದನನುಂ ನಾರಿಯರುಂ ಅಮಿತ ಪ್ರತಾಪದಿಂ ದಿನಪನುಂ ಪರ ಮಹೀಪಾಲರುಂ ವ್ಯಾಪಿಸಿದ ಕೀರ್ತಿಯಿಂ ಪೀಯೂಷ-ಕಿರಣನುಂ(ಚಂದ್ರ) ತಾರೆಗಳು ಮಭಿವರ್ಧಿಪ=[ರೂಪದಲ್ಲಿ ಮಮನ್ಮಥನನ್ನೂ, ನಾರಿಯರನ್ನೂ, ಅಪರಿಮಿತ ಪ್ರತಾಪದಿಂದ ಸೂರ್ಯನನ್ನೂ, ಶತ್ರುರಾಜರನ್ನೂ ವ್ಯಾಪಿಸಿದ ಕೀರ್ತಿಯಿಂದ ಚಂದ್ರನನ್ನೂ, ತಾರೆಗಳನ್ನು ಅಭಿವರ್ಧಿಸುವ];; ಶ್ರೀಪತಿಯ ಭಕ್ತಿಯಿಂ ಗರುಡನಂ ಸನಕಾದಿ ತಾಪಸರುಮೈದೆ ಸೋಲ್ದಪರೆಂದೊಡಿನ್ನುಳಿದ ಕಾಪುರುಷರೀ ಚಂದ್ರಹಾಸನಂ ಪೋಲ್ದಪರೆ ಪೇಳೆಂದು ಮುನಿ ನುಡಿದನು=[ಶ್ರೀಪತಿಯ ಭಕ್ತಿಯಲ್ಲಿ ಗರುಡನನ್ನೂ, ಸನಕಾದಿ ತಪಸ್ವಿಗಳು ಬರಲು ಇವನಿಗೆ ಭಕ್ತಿಯಲ್ಲಿ ಸೋಲುವರು, ಇನ್ನು ಉಳಿದ ಸಾಮನ್ಯ ಪುರುಷರು ಚಂದ್ರಹಾಸನನ್ನು ಹೋಲುವರೇ? ಇಲ್ಲ! ಹೇಳು ಎಂದು ನಾರದಮುನಿ ನುಡಿದನು.
  • ತಾತ್ಪರ್ಯ:ರೂಪದಲ್ಲಿ ಮಮನ್ಮಥನನ್ನೂ, ನಾರಿಯರನ್ನೂ, ಅಪರಿಮಿತ ಪ್ರತಾಪದಿಂದ ಸೂರ್ಯನನ್ನೂ, ಶತ್ರುರಾಜರನ್ನೂ ವ್ಯಾಪಿಸಿದ ಕೀರ್ತಿಯಿಂದ ಚಂದ್ರನನ್ನೂ, ತಾರೆಗಳನ್ನು ಅಭಿವರ್ಧಿಸುವ ಶ್ರೀಪತಿಯ ಭಕ್ತಿಯಲ್ಲಿ ಗರುಡನನ್ನೂ, ಸನಕಾದಿ ತಪಸ್ವಿಗಳು ಬರಲು ಇವನಿಗೆ ಭಕ್ತಿಯಲ್ಲಿ ಸೋಲುವರು, ಇನ್ನು ಉಳಿದ ಸಾಮನ್ಯ ಪುರುಷರು ಚಂದ್ರಹಾಸನನ್ನು ಹೋಲುವರೇ? (ಇಲ್ಲ!) ಹೇಳು ಎಂದು ನಾರದಮುನಿ ನುಡಿದನು.
  • (ಪದ್ಯ-೧೫)XII

ಪದ್ಯ:-:೧೬:[ಸಂಪಾದಿಸಿ]

ಈತೆರದೊಳಿರೆ ಕುಳಿಂದಂ ಚಂದ್ರಹಾಸನಂ |
ಪ್ರೀತಿಯಿಂದಂ ಕರೆದು ನುಡಿದನೆಲೆ ಮಗನೆ ವಿ |
ಖ್ಯಾತಮಾಗಿಹ ರಾಜಧಾನಿ ಕುಂತಳಮಿಲ್ಲಿಗಾರುಯೋಜನದೊಳಿಹುದು ||
ಭೂತಳಮಿದಾನಗರದರಸಿನದು ನಮಗೊಡೆಯ |
ನಾತನ ಶಿರಃಪ್ರಧಾನಂ ದುಷ್ಟಬುದ್ಧಿ ಸಂ |
ಜಾತ ವಸ್ತುಗಳ ಸಿದ್ಧಾಯಮಂ ಕುಡುವೇಳ್ಪುದರಸಂಗೆ ನಾವೆಂದನು ||16||

ಪದವಿಭಾಗ-ಅರ್ಥ:
ಈ ತೆರದೊಳು ಇರೆ ಕುಳಿಂದಂ ಚಂದ್ರಹಾಸನಂ ಪ್ರೀತಿಯಿಂದಂ ಕರೆದು ನುಡಿದನು ಎಲೆ ಮಗನೆ ವಿಖ್ಯಾತಂ ಆಗಿಹ ರಾಜಧಾನಿ ಕುಂತಳಂ ಇಲ್ಲಿಗೆ ಆರುಯೋಜನದೊಳು ಇಹುದು=[ಈ ರೀತಿಯಲ್ಲಿ ಇರಲು ಕುಳಿಂದಕನು ಚಂದ್ರಹಾಸನನ್ನು ಪ್ರೀತಿಯಿಂದ ಕರೆದು ಹೇಳೀದನು, 'ಎಲೆ ಮಗನೆ ವಿಖ್ಯಾತವಾಗಿರುವ ರಾಜಧಾನಿ ಕುಂತಳವು ಇಲ್ಲಿಗೆ ಆರು ಯೋಜನ ದೂರದಲ್ಲಿ ಇದೆ. ];; ಭೂತಳಮಿದು ಆ ನಗರದ ಅರಸಿನದು ನಮಗೊಡೆಯ ನಾತನ ಶಿರಃಪ್ರಧಾನಂ ದುಷ್ಟಬುದ್ಧಿ ಸಂಜಾತ ವಸ್ತುಗಳ ಸಿದ್ಧಾಯಮಂ ಕುಡುವೇಳ್ಪುದು ಅರಸಂಗೆ ನಾವೆಂದನು=[ ಈ ಭೂಮಿಯು/ ರಾಜ್ಯವು ಆ ನಗರದ ಅರಸನಿಗೆ ಸೇರಿದ್ದು. ಅವನು ನಮಗೆ ಒಡೆಯನು ಆತನ ಮುಖ್ಯಮಂತ್ರಿ ದುಷ್ಟಬುದ್ಧಿಯು. ನಮ್ಮ ಆದಾಯ ವಸ್ತುಗಳ ಸಿದ್ಧಾಯ/ಒಂದು ಪಾಲನ್ನು ಆ ಅರಸನಿಗೆ ನಾವು ಕೊಡಬೇಕಾಗುವುದು,'ಎಂದನು.]
  • ತಾತ್ಪರ್ಯ:ಈ ರೀತಿಯಲ್ಲಿ ಇರಲು ಕುಳಿಂದಕನು ಚಂದ್ರಹಾಸನನ್ನು ಪ್ರೀತಿಯಿಂದ ಕರೆದು ಹೇಳೀದನು, 'ಎಲೆ ಮಗನೆ ವಿಖ್ಯಾತವಾಗಿರುವ ರಾಜಧಾನಿ ಕುಂತಳವು ಇಲ್ಲಿಗೆ ಆರು ಯೋಜನ ದೂರದಲ್ಲಿ ಇದೆ.ಈ ಭೂಮಿಯು/ ರಾಜ್ಯವು ಆ ನಗರದ ಅರಸನಿಗೆ ಸೇರಿದ್ದು. ಅವನು ನಮಗೆ ಒಡೆಯನು ಆತನ ಮುಖ್ಯಮಂತ್ರಿ ದುಷ್ಟಬುದ್ಧಿಯು. ನಮ್ಮ ಆದಾಯ ವಸ್ತುಗಳ ಸಿದ್ಧಾಯ/ಒಂದು ಪಾಲನ್ನು ಆ ಅರಸನಿಗೆ ನಾವು ಕೊಡಬೇಕಾಗುವುದು,'ಎಂದನು.
  • (ಪದ್ಯ-೧೬)

ಪದ್ಯ:-:೧೭:[ಸಂಪಾದಿಸಿ]

ರಾಯಂಗೆ ವರ್ಷವರ್ಷಕೆ ನಾವು ಕುಡುವ ಸಿ |
ದ್ಧಾಯಮಂ ದುಷ್ಟಬುದ್ಧಿಗೆ ಸಲಿಸಿ ಬರ್ಪ ನಿ |
ಷ್ಕಾಯುತ ದ್ರವ್ಯಮಂ ನೃಪನ ರಾಣಿಗೆ ಪುರೋಹಿತನಾದ ಗಾಲವಂಗೆ ||
ಪ್ರೀಯದಿಂದುಪಚರಿಸುವರ್ಥಮಂ ತತ್ಕಾಲ |
ಕೀಯಬೇಕೆಲೆ ಮಗನೆ ಧನವನೊದವಿಸಿ ಕಳುಹ |
ಸೂಯೆಗೀಡಾಗಬೇಡೆಂದು ನಿಜನಂದನಂಗಾ ಕುಳಿಂದಂ ಪೇಳ್ದನು ||17||

ಪದವಿಭಾಗ-ಅರ್ಥ:
ರಾಯಂಗೆ ವರ್ಷವರ್ಷಕೆ ನಾವು ಕುಡುವ ಸಿದ್ಧಾಯಮಂ ದುಷ್ಟಬುದ್ಧಿಗೆ ಸಲಿಸಿ ಬರ್ಪ ನಿಷ್ಕಾಯುತ (ನಿಷ್ಕ:ದ್ರವ್ಯ, ಆಯತ:ಹತ್ತು ಸಾವಿರ) ದ್ರವ್ಯಮಂ ನೃಪನ ರಾಣಿಗೆ ಪುರೋಹಿತನಾದ ಗಾಲವಂಗೆ=[ಕುಂತಳದ ರಾಜನಿಗೆ ವರ್ಷವರ್ಷಕ್ಕೂ/ ಪ್ರತಿ ವರ್ಷವೂ ನಾವು ಕೊಡುವ ಸಿದ್ಧಾಯವಾಗಿ ಆದಾಯದ ಒಂದು ಪಾಲು ಕಪ್ಪವನ್ನು ದುಷ್ಟಬುದ್ಧಿಗೆ ಸಲ್ಲಿಸಿ, ಬರುವ ಆದಾಯದಲ್ಲಿ ಹತ್ತು ಸಾವಿರ ದ್ರವ್ಯವನ್ನು ರಾಜನ ಪತ್ನಿ ರಾಣಿಗೆ, ಪುರೋಹಿತನಾದ ಗಾಲವನಿಗೆ];; ಪ್ರೀಯದಿಂದ ಉಪಚರಿಸುವ ಅರ್ಥಮಂ ತತ್ಕಾಲಕೆ ಈಯಬೇಕು ಎಲೆ ಮಗನೆ ಧನವನು ಒದವಿಸಿ ಕಳುಹು ಅಸೂಯೆಗೆ ಈಡಾಗಬೇಡ ಎಂದು ನಿಜ ನಂದನಂಗೆ ಆ ಕುಳಿಂದಂ ಪೇಳ್ದನು=[ಪ್ರೀತಿಯಿಂದ ಮರ್ಯಾದೆಯಾಗಿ ಕಾಲಕಾಲಕ್ಕೆ ಕೊಡಬೇಕು. ಎಲೆ ಮಗನೆ ಧನವನ್ನು ಸಿದ್ಧಪಡಿಸಿ ಕಳುಹಿಸು; ಈ ವಿಚಾರವಾಗಿ ಅಸೂಯೆ/ ಅಸಮಾಧಾನ ಪಡಬೇಡ ಎಂದು ತನ್ನ ಮಗನಿಗೆ ಆ ಕುಳಿಂದಕನು ಹೇಳಿದನು.]
  • ತಾತ್ಪರ್ಯ:ಕುಂತಳದ ರಾಜನಿಗೆ ವರ್ಷವರ್ಷಕ್ಕೂ/ ಪ್ರತಿ ವರ್ಷವೂ ನಾವು ಕೊಡುವ ಸಿದ್ಧಾಯವಾಗಿ ಆದಾಯದ ಒಂದು ಪಾಲು ಕಪ್ಪವನ್ನು ದುಷ್ಟಬುದ್ಧಿಗೆ ಸಲ್ಲಿಸಿ, ಬರುವ ಆದಾಯದಲ್ಲಿ ಹತ್ತು ಸಾವಿರ ದ್ರವ್ಯವನ್ನು ರಾಜನ ಪತ್ನಿ ರಾಣಿಗೆ, ಪುರೋಹಿತನಾದ ಗಾಲವನಿಗೆ ಪ್ರೀತಿಯಿಂದ ಮರ್ಯಾದೆಯಾಗಿ ಕಾಲಕಾಲಕ್ಕೆ ಕೊಡಬೇಕು. ಎಲೆ ಮಗನೆ ಧನವನ್ನು ಸಿದ್ಧಪಡಿಸಿ ಕಳುಹಿಸು; ಈ ವಿಚಾರವಾಗಿ ಅಸೂಯೆ/ ಅಸಮಾಧಾನ ಪಡಬೇಡ ಎಂದು ತನ್ನ ಮಗನಿಗೆ ಆ ಕುಳಿಂದಕನು ಹೇಳಿದನು.
  • (ಪದ್ಯ-೧೭)

ಪದ್ಯ:-:೧೮:[ಸಂಪಾದಿಸಿ]

ಪಿತನ ಮಾತಂ ಕೇಳ್ದು ಚಂದ್ರಹಾಸಂ ಮಹೀ |
ಪತಿಗೆ ಮಹಿಷಿಗೆ ಮಂತ್ರಿದುಷ್ಟಬುದ್ಧಿಗೆ ಪುರೋ |
ಹಿತ ಗಾಲವಂಗೆ ಸಲಿಸುವ ಧನವನದರ ಸಂಗಡಕೆ ತಾನಾಹವದೊಳು ||
ಪ್ರತಿಭೂಪರಂ ಜಯಿಸಿ ತಂದ ವಸ್ತುಗಳನಂ |
ಕಿತದಿಂದೆ ಕಟ್ಟಿ ಶಕಟೋಷ್ಪ್ರಕರಿ ಭಾರಗಳ |
ಶತ ಸಂಖ್ಯೆಯಿಂದೆ ಕಳುಹಿದನಾಪ್ತರಂ ಕೂಡಿಕೊಟ್ಟು ಕುಂತಳ ನಗರಿಗೆ ||18||

ಪದವಿಭಾಗ-ಅರ್ಥ:
ಪಿತನ ಮಾತಂ ಕೇಳ್ದು ಚಂದ್ರಹಾಸಂ ಮಹೀಪತಿಗೆ ಮಹಿಷಿಗೆ ಮಂತ್ರಿದುಷ್ಟಬುದ್ಧಿಗೆ ಪುರೋ ಹಿತ ಗಾಲವಂಗೆ ಸಲಿಸುವ ಧನವನು ಅದರ ಸಂಗಡಕೆ ತಾನು ಆಹವದೊಳು=[ತಂದೆಯ ಮಾತನ್ನು ಕೇಳಿದ ಚಂದ್ರಹಾಸನು ಕುಂತಳದ ರಾಜನಿಗೆ, ರಾಣಿಗೆ, ಮಂತ್ರಿದುಷ್ಟಬುದ್ಧಿಗೆ, ಪುರೋಹಿತ ಗಾಲವನಿಗೆ, ಸಲ್ಲಿಸಬೇಕಾದ ಧನವನ್ನೂ, ಅದರ ಸಂಗಡವೇ ತಾನು ಯುದ್ಧದಲ್ಲಿ];; ಪ್ರತಿಭೂಪರಂ ಜಯಿಸಿ ತಂದ ವಸ್ತುಗಳನು ಅಂಕಿತದಿಂದೆ ಕಟ್ಟಿ ಶಕಟ ಉಷ್ಪ್ರ ಕರಿ (ಗಾಡಿ,ಒಂಟೆ, ಆನೆ) ಭಾರಗಳ ಶತ ಸಂಖ್ಯೆಯಿಂದೆ ಕಳುಹಿದನು ಆಪ್ತರಂ ಕೂಡಿಕೊಟ್ಟು ಕುಂತಳ ನಗರಿಗೆ=[ಪ್ರತಿರಾಜರನ್ನು ಜಯಿಸಿ ತಂದ ವಸ್ತುಗಳನ್ನು ರಾಜಮುದ್ರೆಯ ಅಂಕಿತದಿಂದ ಕಟ್ಟಿ, ಗಾಡಿ,ಒಂಟೆ, ಆನೆ ಹೊರುವಷ್ಟು ಭಾರಗಳ, ನೂರರ ಸಂಖ್ಯೆಯಲ್ಲಿ,ಆಪ್ತರನ್ನು ಕೂಡಿಸಿ, ಅವನ್ನು ಕೊಟ್ಟು ಕುಂತಳ ನಗರಿಗೆ ಕಳುಹಿದನು].
  • ತಾತ್ಪರ್ಯ:ತಂದೆಯ ಮಾತನ್ನು ಕೇಳಿದ ಚಂದ್ರಹಾಸನು ಕುಂತಳದ ರಾಜನಿಗೆ, ರಾಣಿಗೆ, ಮಂತ್ರಿದುಷ್ಟಬುದ್ಧಿಗೆ, ಪುರೋಹಿತ ಗಾಲವನಿಗೆ, ಸಲ್ಲಿಸಬೇಕಾದ ಧನವನ್ನೂ, ಅದರ ಸಂಗಡವೇ ತಾನು ಯುದ್ಧದಲ್ಲಿ ಪ್ರತಿರಾಜರನ್ನು ಜಯಿಸಿ ತಂದ ವಸ್ತುಗಳನ್ನು ರಾಜಮುದ್ರೆಯ ಅಂಕಿತದಿಂದ ಕಟ್ಟಿ, ಗಾಡಿ,ಒಂಟೆ, ಆನೆ ಹೊರುವಷ್ಟು ಭಾರಗಳ, ನೂರರ ಸಂಖ್ಯೆಯಲ್ಲಿ, ಆಪ್ತರನ್ನು ಕೂಡಿಸಿ, ಅವನ್ನು ಕೊಟ್ಟು ಕುಂತಳ ನಗರಿಗೆ ಕಳುಹಿದನು].
  • (ಪದ್ಯ-೧೮)

ಪದ್ಯ:-:೧೯:[ಸಂಪಾದಿಸಿ]

ಹಸ್ತಿ ಹಯ ರತ್ನ ವಸ್ತ್ರಾಭರಣ ಕರ್ಪೂರ |
ಕಸ್ತೂರಿ ಮಲಯಜ ಸುವರ್ಣ ರಜತಾದ್ಯಖಿಳ |
ವಸ್ತುಚಯಮಂ ಕೊಂಡು ಚಂದ್ರಹಾಸನ ಚರ್‍ರೆ ಬಂದು ಕುಂತಳ ನಗರಿಗೆ ||
ವಿಸ್ತಾರದಿಂದೆಸೆವ ನಗರೋಪಕಂಠದ ಸ |
ರಸ್ತೀರದೊಳ್ ಮಿಂದು ಚಕ್ರಿಯಂ ಪೂಜೆಗೈ |
ದಸ್ತಮಯ ಸಮಯದೊಳ್ ಪೋಕ್ಕರಾ ಪಟ್ಟಣವನತಿಶುಚಿರ್ಭೂತರಾಗಿ||19||

ಪದವಿಭಾಗ-ಅರ್ಥ:
ಹಸ್ತಿ ಹಯ ರತ್ನ ವಸ್ತ್ರಾಭರಣ ಕರ್ಪೂರ ಕಸ್ತೂರಿ ಮಲಯಜ ಸುವರ್ಣ ರಜತ ಆದಿ ಅಖಿಳ ವಸ್ತುಚಯಮಂ ಕೊಂಡು ಚಂದ್ರಹಾಸನ ಚರ್‍ರೆ ಬಂದು ಕುಂತಳ ನಗರಿಗೆ=[ಹಸ್ತಿ, ಹಯ, ರತ್ನ, ವಸ್ತ್ರಾಭರಣ, ಕರ್ಪೂರ, ಕಸ್ತೂರಿ, ಮಲಯಜ/ಶ್ರೀಗಂಧ, ಸುವರ್ಣ/ಚಿನ್ನ, ರಜತ/ ಬೆಳ್ಳಿ ಮೊದಲಾದ ಅಖಿಲ ವಸ್ತುಗಳನ್ನು ತೆಗೆದುಕೊಂಡು ಚಂದ್ರಹಾಸನ ಚಾರರು ಕುಂತಳ ನಗರಿಗೆ ಬಂದರು.];; ವಿಸ್ತಾರದಿಂದ ಎಸೆವ ನಗರ ಉಪಕಂಠದ ಸರಸ್ ತೀರದೊಳ್ ಮಿಂದು ಚಕ್ರಿಯಂ ಪೂಜೆಗೈದು ಅಸ್ತಮಯ ಸಮಯದೊಳ್ ಪೋಕ್ಕರು ಆ ಪಟ್ಟಣವನು ಅತಿ ಶುಚಿರ್ಭೂತರಾಗಿ=[ವಿಸ್ತಾರವಾಗಿ ಶೋಭಿಸುವ ನಗರದ ಸಮೀಪದ ಸರೋವರದ ತೀರದಲ್ಲಿ ಮಿಂದು ವಿಷ್ಣುವನ್ನು ಪೂಜೆಮಾಡಿ ಸೂರ್ಯ ಅಸ್ತಮಯ ಸಮಯದಲ್ಲಿ ಆ ಪಟ್ಟಣವನ್ನು ಅತಿಶುಚಿಯುಳ್ಳವರಾಗಿ ಪ್ರವೇಶಿಸಿದರು.]
  • ತಾತ್ಪರ್ಯ:ಹಸ್ತಿ, ಹಯ, ರತ್ನ, ವಸ್ತ್ರಾಭರಣ, ಕರ್ಪೂರ, ಕಸ್ತೂರಿ, ಮಲಯಜ/ಶ್ರೀಗಂಧ, ಸುವರ್ಣ/ಚಿನ್ನ, ರಜತ/ ಬೆಳ್ಳಿ ಮೊದಲಾದ ಅಖಿಲ ವಸ್ತುಗಳನ್ನು ತೆಗೆದುಕೊಂಡು ಚಂದ್ರಹಾಸನ ಚಾರರು ಕುಂತಳ ನಗರಿಗೆ ಬಂದರು. ವಿಸ್ತಾರವಾಗಿ ಶೋಭಿಸುವ ನಗರದ ಸಮೀಪದ ಸರೋವರದ ತೀರದಲ್ಲಿ ಮಿಂದು ವಿಷ್ಣುವನ್ನು ಪೂಜೆಮಾಡಿ ಸೂರ್ಯ ಅಸ್ತಮಯ ಸಮಯದಲ್ಲಿ ಆ ಪಟ್ಟಣವನ್ನು ಅತಿಶುಚಿಯುಳ್ಳವರಾಗಿ ಪ್ರವೇಶಿಸಿದರು.
  • (ಪದ್ಯ-೧೯)

ಪದ್ಯ:-:೨೦:[ಸಂಪಾದಿಸಿ]

ನೊಸಲೊಳೆಸೆವೂಧ್ರ್ವಪುಂಡ್ರದ ಸುಧೌತಾಂಬರದ |
ಮಿಸುಪ ತುಳಸಿಯ ದಂಡೆಗಳ ಕೊರಳ ನಿಶ್ಚಳದ |
ದಶನಪಂಕ್ತಿ ವಿಕಿಲ್ಬಿಷಗಾತ್ರದಚ್ಛಸಾತ್ವಿಕ ಭಾವದಿಂದೆ ಮೆರೆವ ||
ಶಶಿಹಾಸನನುಚರರ್ ಬಂದು ಕಾಣಲ್ಕಿದೇಂ |
ಪೊಸತಕಟ ನಿಮಗೀಗಳೇಕೆ ಶುದ್ಧಿ ಸ್ನಾನ |
ಮಸುವಿಡಿದಿಹನೆ ಕುಳಿಂದಕನೆಂದು ಶಂಕೆಯಿಂ ಕೇಳ್ದನಾ ದುಷ್ಟಬುದ್ಧಿ ||20||

ಪದವಿಭಾಗ-ಅರ್ಥ:
ನೊಸಲೊಳು ಎಸೆವ ಊಧ್ರ್ವಪುಂಡ್ರದ ಸುಧೌತಾಂಬರದ ಮಿಸುಪ ತುಳಸಿಯ ದಂಡೆಗಳ ಕೊರಳ ನಿಶ್ಚಳದ ದಶನಪಂಕ್ತಿ ವಿಕಿಲ್ಬಿಷಗಾತ್ರದ ಅಚ್ಛಸಾತ್ವಿಕ ಭಾವದಿಂದೆ ಮೆರೆವ ಶಶಿಹಾಸನ ಅನುಚರರ್=[ಹಣೆಯಲ್ಲಿ ಎದ್ದುಕಾಣುವ ಉದ್ದನಾಮದ, ಶುದ್ಧವಾದ ಬಿಳಿಯ ಬಟ್ಟೆಯನ್ನು ಧರಿಸಿದ, ಹೊಳೆಯುವ ತುಳಸಿಯ ಹಾರಗಳನ್ನು ಕೊರಳಲ್ಲಿ ಧರಿಸಿದ, ಶುದ್ಧವಾದ ಬಿಳಿಹಲ್ಲುಗಳ, ಸ್ವಲ್ಪವೂ ಕೊಳಕಿಲ್ಲದ ಅಚ್ಚ ಸಾತ್ವಿಕ ಭಾವದಿಂದ ತೋರುತ್ತಿರುವ ಚಂದ್ರಹಾಸನ ಅನುಚರರು];; ಬಂದು ಕಾಣಲ್ಕೆ ಇದೇಂ ಪೊಸತು ಅಕಟ ನಿಮಗೀಗಳು ಏಕೆ ಶುದ್ಧಿ ಸ್ನಾನಂ ಅಸುವು (ಪ್ರಾಣ) ಹಿಡಿದಿಹನೆ ಕುಳಿಂದಕನು ಎಂದು ಶಂಕೆಯಿಂ ಕೇಳ್ದನಾ ದುಷ್ಟಬುದ್ಧಿ=[ಬಂದು ದುಷ್ಟಬುದ್ಧಿಯನ್ನು ಕಾಣಲು,ಇದೇನು ಹೊಸತು ಅಕಟ! ನಿಮಗೆ ಈಗ ಸ್ನಾನ ಶುದ್ಧಿ ಏಕೆ,ಕುಳಿಂದಕನು ಜೀವದಿಮದ ಇರುವನೇ? ಎಂದು ಶಂಕೆಯಿಂದ ದುಷ್ಟಬುದ್ಧಿಯು ಕೇಳಿದನು.]
  • ತಾತ್ಪರ್ಯ:ಹಣೆಯಲ್ಲಿ ಎದ್ದುಕಾಣುವ ಉದ್ದನಾಮದ, ಶುದ್ಧವಾದ ಬಿಳಿಯ ಬಟ್ಟೆಯನ್ನು ಧರಿಸಿದ, ಹೊಳೆಯುವ ತುಳಸಿಯ ಹಾರಗಳನ್ನು ಕೊರಳಲ್ಲಿ ಧರಿಸಿದ, ಶುದ್ಧವಾದ ಬಿಳಿಹಲ್ಲುಗಳ, ಸ್ವಲ್ಪವೂ ಕೊಳಕಿಲ್ಲದ ಅಚ್ಚ ಸಾತ್ವಿಕ ಭಾವದಿಂದ ತೋರುತ್ತಿರುವ ಚಂದ್ರಹಾಸನ ಅನುಚರರು, ಬಂದು ದುಷ್ಟಬುದ್ಧಿಯನ್ನು ಕಾಣಲು,ಇದೇನು ಹೊಸತು ಅಕಟ! ನಿಮಗೆ ಈಗ ಸ್ನಾನ ಶುದ್ಧಿ ಏಕೆ,ಕುಳಿಂದಕನು ಜೀವದಿಮದ ಇರುವನೇ? ಎಂದು ಶಂಕೆಯಿಂದ ದುಷ್ಟಬುದ್ಧಿಯು ಕೇಳಿದನು.
  • (ಪದ್ಯ-೨೦)

ಪದ್ಯ:-:೨೧:[ಸಂಪಾದಿಸಿ]

ಅಶುಭಕೋಟಿಯನೊರಸುವೇಕಾದಶೀ ವ್ರತಕೆ |
ವಿಶದ ಸಲಿಲಸ್ಥಾನಮಿಂದೆಮಗೆ ಸಮನಿಸಿತು |
ಕುಶಲದಿಂ ಬಾಳ್ವ ಕುಳಿಂದನಾತನ ಸೂನು ಚಂದ್ರಹಾಸಂಗೆ ನಾಡು ||
ವಶವರ್ತಿಯಾಗಿರ್ಪುದವನಾಜ್ಞೆಯಿಂದುಭಯ |
ದಶಮಿಯೊಳ್ ನಡೆವುದುತ್ಸವವಚ್ಯುತಂಗೆ ಕ |
ರ್ಕಶಮಿಲ್ಲದಖಿಳ ಜನಮಂ ಬಿಡದೆ ಪಾಲಿಪಂ ಹರಿಭಕ್ತಿ ನಿರತನಾಗಿ ||21||

ಪದವಿಭಾಗ-ಅರ್ಥ:
ಅಶುಭಕೋಟಿಯನು ಒರಸುವ ಏಕಾದಶೀ ವ್ರತಕೆ ವಿಶದ ಸಲಿಲಸ್ಥಾನಂ ಇಂದೆಮಗೆ ಸಮನಿಸಿತು ಕುಶಲದಿಂ ಬಾಳ್ವ ಕುಳೀಂದನು ಆತನ ಸೂನು ಚಂದ್ರಹಾಸಂಗೆ ನಾಡು ವಶವರ್ತಿಯಾಗಿರ್ಪುದು=[ಕೋಟಿಯಷ್ಟು ಅಶುಭವನ್ನು ಕಳೆಯುವ ಏಕಾದಶೀ ವ್ರತ ಆಚರಣೆಗಾಗಿ ಈ ವಿಶೇಷವಾದ ಸರೋವರದ ನೀರಿನ ಸ್ನಾನಮಾಡುವುದು ಇಂದು ನಮಗೆ ಅಗತ್ಯವಾಯಿತು. ಕುಳಿಂದಕನು ಕುಶಲವಾಗಿ ಬಾಳುವೆ ನೆಡೆಸುತ್ತಿದ್ದಾನೆ. ಈಗ ಆತನ ಮಗ ಚಂದ್ರಹಾಸನಿಗೆ ನಾಡು ಅಧೀನವಾಗಿದೆ];; ಅವನಾಜ್ಞೆಯಿಂದ ಉಭಯ ದಶಮಿಯೊಳ್ ನಡೆವುದು ಉತ್ಸವವ ಅಚ್ಯುತಂಗೆ ಕರ್ಕಶಮಿಲ್ಲದೆ ಅಖಿಳ ಜನಮಂ ಬಿಡದೆ ಪಾಲಿಪಂ ಹರಿಭಕ್ತಿ ನಿರತನಾಗಿ=[ ಅವನ ಆಜ್ಞೆಯಿಂದ ತಿಂಗಳಿನ ಎರಡೂ ದಶಮಿಯದಿನ ಅಚ್ಯುತನಿಗೆ ಉತ್ಸವವು ಕಷ್ಟವಿಲ್ಲದೆ ನಡೆಯವುದು. ಅವನು ಎಲ್ಲಾ ಜನರನ್ನೂ ನಿಯಮ ಬಿಡದೆ ಹರಿಭಕ್ತಿ ನಿರತನಾಗಿ ಪಾಲಿಸುವನು.]
  • ತಾತ್ಪರ್ಯ:ಕೋಟಿಯಷ್ಟು ಅಶುಭವನ್ನು ಕಳೆಯುವ ಏಕಾದಶೀ ವ್ರತ ಆಚರಣೆಗಾಗಿ ಈ ವಿಶೇಷವಾದ ಸರೋವರದ ನೀರಿನ ಸ್ನಾನಮಾಡುವುದು ಇಂದು ನಮಗೆ ಅಗತ್ಯವಾಯಿತು. ಕುಳಿಂದಕನು ಕುಶಲವಾಗಿ ಬಾಳುವೆ ನೆಡೆಸುತ್ತಿದ್ದಾನೆ. ಈಗ ಆತನ ಮಗ ಚಂದ್ರಹಾಸನಿಗೆ ನಾಡು ಅಧೀನವಾಗಿದೆ];; ಅವನಾಜ್ಞೆಯಿಂದ ಉಭಯ ದಶಮಿಯೊಳ್ ನಡೆವುದು ಉತ್ಸವವ ಅಚ್ಯುತಂಗೆ ಕರ್ಕಶಮಿಲ್ಲದೆ ಅಖಿಳ ಜನಮಂ ಬಿಡದೆ ಪಾಲಿಪಂ ಹರಿಭಕ್ತಿ ನಿರತನಾಗಿ=[ ಅವನ ಆಜ್ಞೆಯಿಂದ ತಿಂಗಳಿನ ಎರಡೂ ದಶಮಿಯ ದಿನ ಅಚ್ಯುತನಿಗೆ ಉತ್ಸವವು ಕಷ್ಟವಿಲ್ಲದೆ ನಡೆಯವುದು. ಅವನು ಎಲ್ಲಾ ಜನರನ್ನೂ ನಿಯಮ ಬಿಡದೆ ಹರಿಭಕ್ತಿ ನಿರತನಾಗಿ ಪಾಲಿಸುವನು.]
  • (ಪದ್ಯ-೨೧)

ಪದ್ಯ:-:೨೨:[ಸಂಪಾದಿಸಿ]

ಸುತ್ತಲುಂ ದಿಗ್ವಿಜಯಮಂ ಮಾಡಿ ರಿಪು ನೃಪರ |
ನೊತ್ತಿ ಭುಜಬಲದಿಂದೆ ಕಪ್ಪಮಂ ಕೊಂಡು ಬಂ |
ದುತ್ತಮ ಸುವಸ್ತುಗಳನೆಂದುಮೀವರ್ಥಮಂ ಚಂದ್ರಹಾಸಂ ಕಳುಹಲು ||
ಪೆÇತ್ತು ತಂದಿಹೆವನೇಕ ದ್ರವ್ಯವರಮನೆಗೆ |
ಹತ್ತು ನಿನಗೊಂದರೆಣಿಕೆಯೊಳೆಂದು ಲೇಖನವ |
ನಿತ್ತೊಡೆ ಕುಳಿಂದಕನ ಸೇವಕರ್ಗಾ ದುಷ್ಟಬುದ್ಧಿ ಮಗುಳಿಂತೆಂದನು ||22||

ಪದವಿಭಾಗ-ಅರ್ಥ:
ಸುತ್ತಲುಂ ದಿಗ್ವಿಜಯಮಂ ಮಾಡಿ ರಿಪು ನೃಪರನೊತ್ತಿ ಭುಜಬಲದಿಂದೆ ಕಪ್ಪಮಂ ಕೊಂಡು ಬಂದುತ್ತಮ ಸುವಸ್ತುಗಳನು ಎಂದುಂ ಈವ ಅರ್ಥಮಂ ಚಂದ್ರಹಾಸಂ ಕಳುಹಲು ಪೊತ್ತು ತಂದಿಹೆವು=[ರಾಜ್ಯದ ಸುತ್ತಲೂ ದಿಗ್ವಿಜಯವನ್ನು ಮಾಡಿ ಶತ್ರು ರಾಜರನ್ನು ಸೋಲಿಸಿ, ಭುಜಬಲಪರಾಕ್ರಮದಿಂದ ಕಪ್ಪವನ್ನು ತೆಗೆದುಕೊಂಡು ಬಂದು, ಉತ್ತಮ ಸು-ವಸ್ತುಗಳನ್ನು ಮತ್ತು ಯಾವಾಗಲೂ ಕೊಡುವ ಧನವನ್ನೂ ಚಂದ್ರಹಾಸನು ಕಳುಹಿಸಲು ನಾವು ಸವನ್ನು ಹೊತ್ತುತಂದಿದ್ದೇವೆ.];; ಅನೇಕ ದ್ರವ್ಯವ ಅರಮನೆಗೆ ಹತ್ತು ನಿನಗೆ ಒಂದರ ಎಣಿಕೆಯೊಳು ಎಂದು ಲೇಖನವನು ಇತ್ತೊಡೆ ಕುಳಿಂದಕನ ಸೇವಕರ್ಗೆ ಆ ದುಷ್ಟಬುದ್ಧಿ ಮಗುಳ್ ಇಂತೆಂದನು=[ಹತ್ತು ಸಾವಿರ ದ್ರವ್ಯವು ಅರಮನೆಗೆ, ಒಂದು ಸಾವಿ ರಎಣಿಕೆಯಲ್ಲಿ ನಿನಗೆ, ಎಂದು ಲೇಖನವನ್ನು ಕೊಟ್ಟಾಗ ಕುಳಿಂದಕನ ಸೇವಕರಿಗೆ ಆ ದುಷ್ಟಬುದ್ಧಿ ತಿರುಗಿ ಹೀಗೆ ಹೇಳಿದನು.]
  • ತಾತ್ಪರ್ಯ:ರಾಜ್ಯದ ಸುತ್ತಲೂ ದಿಗ್ವಿಜಯವನ್ನು ಮಾಡಿ ಶತ್ರು ರಾಜರನ್ನು ಸೋಲಿಸಿ, ಭುಜಬಲಪರಾಕ್ರಮದಿಂದ ಕಪ್ಪವನ್ನು ತೆಗೆದುಕೊಂಡು ಬಂದು, ಉತ್ತಮ ಸು-ವಸ್ತುಗಳನ್ನು ಮತ್ತು ಯಾವಾಗಲೂ ಕೊಡುವ ಧನವನ್ನೂ ಚಂದ್ರಹಾಸನು ಕಳುಹಿಸಲು ನಾವು ಸವನ್ನು ಹೊತ್ತುತಂದಿದ್ದೇವೆ. ಹತ್ತು ಸಾವಿರ ದ್ರವ್ಯವು ಅರಮನೆಗೆ, ಒಂದು ಸಾವಿ ರಎಣಿಕೆಯಲ್ಲಿ ನಿನಗೆ, ಎಂದು ಲೇಖನವನ್ನು ಕೊಟ್ಟಾಗ ಕುಳಿಂದಕನ ಸೇವಕರಿಗೆ ಆ ದುಷ್ಟಬುದ್ಧಿ ತಿರುಗಿ ಹೀಗೆ ಹೇಳಿದನು.]
  • (ಪದ್ಯ-೨೨)

ಪದ್ಯ:-:೨೩:[ಸಂಪಾದಿಸಿ]

ಏನಿದೆತ್ತಣ ಕೌತುಕದ ನುಡಿ ಕುಳಿಂದಂಗೆ |
ಸೂನು ಜನಿಸಿರ್ದಪನೆ ಬಂಜೆಯಾಗಿಹಳವನ |
ಮಾನಿಸಿ ವಿಚಿತ್ರಮೆನಲಾಚರರ್ ಜೀಯ ಪುಸಿಯಲ್ಲವಂ ಬೇಂಟೆಗೈದೆ ||
ಕಾನನದ ಮಧ್ಯದೊಳನಾಥನಾಗಿಹ ಶಿಶು ನಿ |
ಧಾನಮಿರೆ ಕಂಡೆತ್ತಿಕೊಂಡು ಬಂದನಾತ್ಮಜ ವಿ |
ಧಾನದಿಂದೋವಿದಂ ಪ್ರೀತಿ ಮಿಗೆ ಚಂದ್ರಹಾಸಾಭಿಧಾನದೊಳೆಂದರು ||23|

ಪದವಿಭಾಗ-ಅರ್ಥ:
ಏನಿದೆತ್ತಣ ಕೌತುಕದ ನುಡಿ ಕುಳಿಂದಂಗೆ ಸೂನು ಜನಿಸಿರ್ದಪನೆ ಬಂಜೆಯಾಗಿಹಳು ಅವನ ಮಾನಿಸಿ ವಿಚಿತ್ರಮೆನಲು ಆ ಚರರ್ ಜೀಯ ಪುಸಿಯಲ್ಲ ಅವಂ ಬೇಂಟೆಗೈದೆ=[ದುಷ್ಟಬುದ್ಧಿಯು, ಏನು ಇದು ಎಲ್ಲಿಯದು, ಆಶ್ಚರ್ಯದ ಮಾತು, ಕುಳಿಂದನಿಗೆ ಮಗ ಹುಟ್ಟಿರುವನೇ? ಅವನ ಪತ್ನಿ ಬಂಜೆಯಾಗಿರುವಳು; ಇದು ವಿಚಿತ್ರವು ಎನ್ನಲು, ಆ ಚಾರರು ಒಡೆಯನೇ ಇದು ಸುಳ್ಳಲ್ಲ; ಅವನು ಬೇಟೆಗ ಹೋದಾಗ];;ಕಾನನದ ಮಧ್ಯದೊಳು ಅನಾಥನಾಗಿಹ ಶಿಶು ನಿಧಾನಮಿರೆ ಕಂಡು ಎತ್ತಿಕೊಂಡು ಬಂದನು ಆತ್ಮಜ ವಿಧಾನದಿಂದ ಓವಿದಂ ಪ್ರೀತಿ ಮಿಗೆ ಚಂದ್ರಹಾಸ ಅಭಿಧಾನದೊಳು ಎಂದರು=[ಕಾಡಿನ ಮಧ್ಯದಲ್ಲಿ ಒಂದು ಅನಾಥವಾಗಿದ್ದ ಶಿಶು ನಿಧಿಯಂತೆ ಇರಲು, ಕಂಡು ಅದನ್ನು ಎತ್ತಿಕೊಂಡು ಬಂದನು. ಅವನನ್ನು ಬಹಳ ಪ್ರೀತಿಯಿಂದ ಮಗನ ರೀತಿಯಲ್ಲಿ ಚಂದ್ರಹಾಸನೆಂಬ ಹೆಸರಿನಲ್ಲಿ ಪಾಲಿಸಿದಮು, ಎಂದರು].
  • ತಾತ್ಪರ್ಯ:ದುಷ್ಟಬುದ್ಧಿಯು, 'ಏನು ಇದು ಎಲ್ಲಿಯದು, ಆಶ್ಚರ್ಯದ ಮಾತು, ಕುಳಿಂದನಿಗೆ ಮಗ ಹುಟ್ಟಿರುವನೇ? ಅವನ ಪತ್ನಿ ಬಂಜೆಯಾಗಿರುವಳು; ಇದು ವಿಚಿತ್ರವು,' ಎನ್ನಲು, ಆ ಚಾರರು ಒಡೆಯನೇ ಇದು ಸುಳ್ಳಲ್ಲ; ಅವನು ಬೇಟೆಗ ಹೋದಾಗ ಕಾಡಿನ ಮಧ್ಯದಲ್ಲಿ ಒಂದು ಅನಾಥವಾಗಿದ್ದ ಶಿಶು ನಿಧಿಯಂತೆ ಇರಲು, ಕಂಡು ಅದನ್ನು ಎತ್ತಿಕೊಂಡು ಬಂದನು. ಅವನನ್ನು ಬಹಳ ಪ್ರೀತಿಯಿಂದ ಮಗನ ರೀತಿಯಲ್ಲಿ ಚಂದ್ರಹಾಸನೆಂಬ ಹೆಸರಿನಲ್ಲಿ ಪಾಲಿಸಿದಮು, ಎಂದರು.
  • (ಪದ್ಯ-೨೩)

ಪದ್ಯ:-:೨೪:[ಸಂಪಾದಿಸಿ]

ಕೇಳಿ ವಿಸ್ಮಿತನಾದನಾ ದುಷ್ಟಬುದ್ಧಿ ನಾಂ |
ಪಾಳಡವಿಯೊಳ್‍ ಪಸುಳೆಯಂ ಕೊಂದು ಬಹುದೆಂದು |
ಹೇಳಿದೊಡೆ ಚಂಡಾಲರಂದುಳುಹಿ ಬಂದರಹುದೆಂದು ನಿಶ್ಚೈಸಿ ಬಳಿಕ ||
ತಾಳಿದಂ ದ್ವೇಷಮಂ ಚಿತ್ತದೊಳ್ ಪೊರಗೆ ಕರು |
ಣಾಳುಗಳ ತೆರದಿಂದವರ್ಗಳಂ ಮನ್ನಿಸಿ ನಿ |
ಜಾಲಯಕೆ ತೆಗೆಸಿದಂ ಚಂದ್ರಹಾಸಂ ಕಳುಹಿದಗಣಿತ ಸುವಸ್ತುಗಳನು ||24||

ಪದವಿಭಾಗ-ಅರ್ಥ:
ಕೇಳಿ ವಿಸ್ಮಿತನಾದನು ಆ ದುಷ್ಟಬುದ್ಧಿ ನಾಂ ಪಾಳಡವಿಯೊಳ್‍ ಪಸುಳೆಯಂ ಕೊಂದು ಬಹುದೆಂದು ಹೇಳಿದೊಡೆ ಚಂಡಾಲರಂದು ಉಳುಹಿ ಬಂದುರು, ಅಹುದು, ಎಂದು ನಿಶ್ಚೈಸಿ ಬಳಿಕ=[ಕುಳಿಂದಕನ ಚಾರರು ಹೇಳಿದುದನ್ನು ಕೇಳಿ, ಆ ದುಷ್ಟಬುದ್ಧಿಯು ಆಶ್ಚರ್ಯ ಪಟ್ಟನು. ನಂತರ ತಾನು ಹಿಂದೆ ಹಾಳು ಅಡವಿಯಲ್ಲಿ ಮಗುವನ್ನು ಕೊಂದುಬರಬೇಕೆಂದು ಹೇಳಿದಾಗ, ಚಂಡಾಲರು ಅಂದು ಆ ಮಗುವನ್ನು ಜೀವಸಹಿತ ಉಳಿಸಿ ಬಂದುರು; ಇದೇ ಅಹುದು/ನಿಜ ಎಂದು ಅವನು ನಿಶ್ಚೈಸಿದನು. ಬಳಿಕ];; ತಾಳಿದಂ ದ್ವೇಷಮಂ ಚಿತ್ತದೊಳ್ ಪೊರಗೆ ಕರುಣಾಳುಗಳ ತೆರದಿಂದ ಅವರ್ಗಳಂ ಮನ್ನಿಸಿ ನಿಜಾಲಯಕೆ ತೆಗೆಸಿದಂ ಚಂದ್ರಹಾಸಂ ಕಳುಹಿದ ಅಗಣಿತ ಸುವಸ್ತುಗಳನು=[ದುಷ್ಟಬುದ್ಧಿಯು ಮನಸ್ಸಿನಲ್ಲಿ ದ್ವೇಷವನ್ನು ತಾಳಿದನು; ಹೊರಗೆ ಅದನ್ನು ತೋರದೆ, ಕರುಣಾಳುಗಳ ರೀತಿಯಿಂದ ಅವರನ್ನು ಸತ್ಕರಿಸಿ, ಚಂದ್ರಹಾಸನು ಕಳುಹಿದ ಅಗಣಿತ ಉತ್ತಮ ವಸ್ತುಗಳನ್ನು ತನ್ನ ಮನೆಗೆ ಕಳಿಸಿದನು.]
  • ತಾತ್ಪರ್ಯ:ಕುಳಿಂದಕನ ಚಾರರು ಹೇಳಿದುದನ್ನು ಕೇಳಿ, ಆ ದುಷ್ಟಬುದ್ಧಿಯು ಆಶ್ಚರ್ಯ ಪಟ್ಟನು. ನಂತರ ತಾನು ಹಿಂದೆ ಹಾಳು ಅಡವಿಯಲ್ಲಿ ಮಗುವನ್ನು ಕೊಂದುಬರಬೇಕೆಂದು ಹೇಳಿದಾಗ, ಚಂಡಾಲರು ಅಂದು ಆ ಮಗುವನ್ನು ಜೀವಸಹಿತ ಉಳಿಸಿ ಬಂದುರು; ಇದೇ ಅಹುದು/ನಿಜ ಎಂದು ಅವನು ನಿಶ್ಚೈಸಿದನು. ಬಳಿಕ ದುಷ್ಟಬುದ್ಧಿಯು ಮನಸ್ಸಿನಲ್ಲಿ ದ್ವೇಷವನ್ನು ತಾಳಿದನು; ಹೊರಗೆ ಅದನ್ನು ತೋರದೆ, ಕರುಣಾಳುಗಳ ರೀತಿಯಿಂದ ಅವರನ್ನು ಸತ್ಕರಿಸಿ, ಚಂದ್ರಹಾಸನು ಕಳುಹಿದ ಅಗಣಿತ ಉತ್ತಮ ವಸ್ತುಗಳನ್ನು ತನ್ನ ಮನೆಗೆ ಕಳಿಸಿದನು.
  • (ಪದ್ಯ-೨೪)

ಪದ್ಯ:-:೨೫:[ಸಂಪಾದಿಸಿ]

ಇಂದುಹಾಸನ ದೂತರುಪವಾಸವಿರಬಾರ |
ದೆಂದು ಬಾಣಸಿಗರಂ ಕರೆಸಿ ಬಹುವಿಧ ಪಾಕ |
ದಿಂದೆ ಷಡ್ರಸ ಭೋಜ್ಯಮಂ ಮಾಡಿಸಿದೊಡೂಟಕವರೊಲ್ಲೆವೆನೆ ಕನಲ್ದು ||
ಎಂದಿನಂತಲ್ಲ ಗರ್ವಿಸಿದಂ ಕುಳಿಂದನವ |
ನಿಂದೆ ಸೊಕ್ಕಿದರವನ ಭೃತ್ಯರವರೆಲ್ಲರಂ |
ತಂದು ಕಾರಾಗಾರದೊಳ್‍ ನಿಗಳಮಂ ಪೂಡಿಸುವೆನೆಂದನಾ ಸಚಿವನು ||25||

ಪದವಿಭಾಗ-ಅರ್ಥ:
ಇಂದುಹಾಸನ ದೂತರು ಉಪವಾಸವಿರಬಾರದು ಎಂದು ಬಾಣಸಿಗರಂ ಕರೆಸಿ ಬಹುವಿಧ ಪಾಕದಿಂದೆ ಷಡ್ರಸ ಭೋಜ್ಯಮಂ ಮಾಡಿಸಿದೊಡೆ ಊಟಕೆ ಅವರೊಲ್ಲೆವು ಎನೆ ಕನಲ್ದು=[ಚಂದ್ರಹಾಸನ ದೂತರು ಉಪವಾಸವಿರಬಾರದು ಎಂದು ಅಡಿಗೆಯವರನ್ನು ಕರೆಸಿ ಬಹುವಿಧದ ಪಾಕದ ಷಡ್ರಸದ ಅಡಿಗೆ ಮಾಡಿಸಿದರೆ, ಅವರು ಊಟ ಮಾಡುವುದಿಲ್ಲ ಎನ್ನಲು, ಅವನು ಸಿಟ್ಟುಗೊಂಡು,];; ಎಂದಿನಂತಲ್ಲ ಗರ್ವಿಸಿದಂ ಕುಳಿಂದನು ಅವನಿಂದೆ ಸೊಕ್ಕಿದರು ಅವನ ಭೃತ್ಯರು ಅವರೆಲ್ಲರಂ ತಂದು ಕಾರಾಗಾರದೊಳ್‍ ನಿಗಳಮಂ ಪೂಡಿಸುವೆನು ಎಂದನು ಆ ಸಚಿವನು=[ಇವರು ಎಂದಿನಂತೆ ಇಲ್ಲ, ಕುಳಿಂದನು ಗರ್ವಪಡುತ್ತಿದ್ದಾನೆ, ಅವನಿಂದ ಅವನ ಚಾರರು ಸೊಕ್ಕು ಮಾಡುತ್ತಿದ್ದಾರೆ. ಅವರೆಲ್ಲರನ್ನೂ ತಂದು ಕಾರಾಗ್ರಹದಲ್ಲಿ ಸಂಕೊಲೆ ಹಾಕಿಸುವೆನು, ಎಂದನು ಆ ಸಚಿವನು].
  • ತಾತ್ಪರ್ಯ:ಚಂದ್ರಹಾಸನ ದೂತರು ಉಪವಾಸವಿರಬಾರದು ಎಂದು ಅಡಿಗೆಯವರನ್ನು ಕರೆಸಿ ಬಹುವಿಧದ ಪಾಕದ ಷಡ್ರಸದ ಅಡಿಗೆ ಮಾಡಿಸಿದರೆ, ಅವರು ಊಟ ಮಾಡುವುದಿಲ್ಲ ಎನ್ನಲು, ಅವನು ಸಿಟ್ಟುಗೊಂಡು, ಇವರು ಎಂದಿನಂತೆ ಇಲ್ಲ, ಕುಳಿಂದನು ಗರ್ವಪಡುತ್ತಿದ್ದಾನೆ, ಅವನಿಂದ ಅವನ ಚಾರರು ಸೊಕ್ಕು ಮಾಡುತ್ತಿದ್ದಾರೆ. ಅವರೆಲ್ಲರನ್ನೂ ತಂದು ಕಾರಾಗ್ರಹದಲ್ಲಿ ಸಂಕೊಲೆ ಹಾಕಿಸುವೆನು, ಎಂದನು ಆ ಸಚಿವನು.
  • (ಪದ್ಯ-೨೫)

ಪದ್ಯ:-:೨೬:[ಸಂಪಾದಿಸಿ]

ಕಷ್ಟಮೇತಕೆ ಜೀಯ ಹರಿವಾಸರ ವ್ರತ |
ಭ್ರಷ್ಟರಾದಪೆವೆಂಬ ಭಯಕೆ ನಿನ್ನಾಲಯದ |
ಮೃಷ್ಟಾನ್ನಮಾವೊಲ್ಲೆದಿರ್ದೆವೈಸಲೆ ಗರ್ವದಿಂ ಬೇರೆಯಲ್ಲವೆಂದು ||
ದುಷ್ಟಬುದ್ಧಿಯ ಚಿತ್ತಮಂ ತಿಳುಹಿ ಮರುದಿನದೊ |
ಳಿಷ್ಟಭೋಜನದಿಂದೆ ಸನ್ಮಾನಮಂ ತಳೆದು |
ಹೃಷ್ಟಮಾನಸರಾಗಿ ಬೀಳ್ಕೊಂಡು ತಿರುಗಿದರ್ ಚಂದ್ರಹಾಸನ ದೂತರು ||26||

ಪದವಿಭಾಗ-ಅರ್ಥ:
ಕಷ್ಟಮೇತಕೆ ಜೀಯ ಹರಿವಾಸರ ವ್ರತಭ್ರಷ್ಟರಾದಪೆವು ಎಂಬ ಭಯಕೆ ನಿನ್ನಾ ಆಲಯದ ಮೃಷ್ಟಾನ್ನಮಂ ಆವು ಒಲ್ಲೆದಿರ್ದೆವು ಐಸಲೆ ಗರ್ವದಿಂ ಬೇರೆಯಲ್ಲವೆಂದು=[ಒಡೆಯನೇ ನಮಗೆ ಊಟಮಾಡಲು ಕಷ್ಟವೇಕೆ? ಕಷ್ಟವೂ ಇಲ್ಲ,ಬೇಸರವೂ ಇಲ್ಲ. ಆದರೆ ಹರಿವಾಸರವಾದರಿಂದ ವ್ರತಭ್ರಷ್ಟರಾಗುವೆವು ಎಂಬ ಭಯಕ್ಕಾಗಿ ನಿನ್ನ ಅರಮನೆಯ ಮೃಷ್ಟಾನ್ನವನ್ನು ನಾವು ಬೇಡವೆಂದೆವು. ಅಷ್ಟೇ ವಿನಃ ಬೇರೆ ಗರ್ವದಿಂದಲ್ಲ ಎಂದು ];; ದುಷ್ಟಬುದ್ಧಿಯ ಚಿತ್ತಮಂ ತಿಳುಹಿ ಮರುದಿನದೊಳು ಇಷ್ಟಭೋಜನದಿಂದೆ ಸನ್ಮಾನಮಂ ತಳೆದು ಹೃಷ್ಟಮಾನಸರಾಗಿ ಬೀಳ್ಕೊಂಡು ತಿರುಗಿದರ್ ಚಂದ್ರಹಾಸನ ದೂತರು=[ತಿಳಿಸಿ, ದುಷ್ಟಬುದ್ಧಿಯ ಮನಸ್ಸನು ಶಾಂತಗೊಳಿಸಿ ಮರುದಿನ ಇಷ್ಟಭೋಜನಮಾಡಿ ಸನ್ಮಾನ ಪಡೆದು ಸಂತೋಷದ ಮಾನಸರಾಗಿ ಬೀಳ್ಕೊಂಡು, ಚಂದ್ರಹಾಸನ ದೂತರು ಹಿಂತಿರುಗಿದರು.].
  • ತಾತ್ಪರ್ಯ:ಒಡೆಯನೇ ನಮಗೆ ಊಟಮಾಡಲು ಕಷ್ಟವೇಕೆ/ ಬೇಸರವೇಕೆ? ಕಷ್ಟವೂ ಇಲ್ಲ,ಬೇಸರವೂ ಇಲ್ಲ. ಆದರೆ ಹರಿವಾಸರವಾದರಿಂದ ವ್ರತಭ್ರಷ್ಟರಾಗುವೆವು ಎಂಬ ಭಯಕ್ಕಾಗಿ ನಿನ್ನ ಅರಮನೆಯ ಮೃಷ್ಟಾನ್ನವನ್ನು ನಾವು ಬೇಡವೆಂದೆವು. ಅಷ್ಟೇ ವಿನಃ ಬೇರೆ ಗರ್ವದಿಂದಲ್ಲ ಎಂದು ];; ದುಷ್ಟಬುದ್ಧಿಯ ಚಿತ್ತಮಂ ತಿಳುಹಿ ಮರುದಿನದೊಳು ಇಷ್ಟಭೋಜನದಿಂದೆ ಸನ್ಮಾನಮಂ ತಳೆದು ಹೃಷ್ಟಮಾನಸರಾಗಿ ಬೀಳ್ಕೊಂಡು ತಿರುಗಿದರ್ ಚಂದ್ರಹಾಸನ ದೂತರು=[ತಿಳಿಸಿ, ದುಷ್ಟಬುದ್ಧಿಯ ಮನಸ್ಸನು ಶಾಂತಗೊಳಿಸಿ ಮರುದಿನ ಇಷ್ಟಭೋಜನಮಾಡಿ ಸನ್ಮಾನ ಪಡೆದು ಸಂತೋಷದ ಮಾನಸರಾಗಿ ಬೀಳ್ಕೊಂಡು, ಚಂದ್ರಹಾಸನ ದೂತರು ಹಿಂತಿರುಗಿದರು.].
  • (ಪದ್ಯ-೨೬)

ಪದ್ಯ:-:೨೭:[ಸಂಪಾದಿಸಿ]

ಮನ್ನಿಸಿ ಕುಳಿಂದಕನ ಚರರಂ ಕಳುಹಿ ಮಂತ್ರ |
ಭಿನ್ನಮಾಗದವೊಲರಮನೆಗೆ ಬಂದಾಗ ತಾ |
ನುನ್ನಿಸಿದ ಬಗೆಯನಾಳೋಚಿಸಿ ನೃಪಾಲನಂ ಬೀಳ್ಕೊಂಡು ಮದನನೆಂಬ ||
ತನ್ನ ತನಯನ ಮೇಲೆ ರಾಜಕಾರ್ಯದ ಭಾರ |
ಮನ್ನಿಯೊಜಿಸಿ ದುಷ್ಟಬುದ್ಧಿ ಪೊರಮಡುತಿರ್ದ |
ನನ್ನೆಗಂ ವಿಷಯಾಭಿಧಾನದಿಂದೆಸೆವ ನಿಜಸುತೆ ಭರದೊಳೈತಂದಳು ||27||

ಪದವಿಭಾಗ-ಅರ್ಥ:
ಮನ್ನಿಸಿ ಕುಳಿಂದಕನ ಚರರಂ ಕಳುಹಿ ಮಂತ್ರ (ತನ್ನ ಆಲೋಚನೆ) ಭಿನ್ನಂ (ಯಾರಿಗೂ ತಿಳಿಯದಂತೆ) ಆಗದವೊಲು ಅರಮನೆಗೆ ಬಂದು ಆಗ ತಾನು ಉನ್ನಿಸುದ (ತೀರ್ಮಾನಿಸು, ನೆನೆ) ಬಗೆಯನು ಆಳೋಚಿಸಿ ನೃಪಾಲನಂ ಬೀಳ್ಕೊಂಡು=[ದುಷ್ಟಬುದ್ಧಿಯು ಕುಳಿಂದಕನ ಚಾರರನ್ನು ಉಪಚರಿಸಿ ಕಳುಹಿಸಿದನು. ನಂತರ ತನ್ನ ಆಲೋಚನೆಯು ಯಾರಿಗೂ ತಿಳಿಯದ ಹಾಗೆ ಇರುವಂತೆ ಅರಮನೆಗೆ ಬಂದು ಆಗ ತಾನು ತೀರ್ಮಾನಿಸಿದ ಯೊಜನೆಯನ್ನು ಆಲೋಚಿಸಿ, ನೃಪಾಲನನ್ನು ಕಂಡು ಅವನಿಂದ ಬೀಳ್ಕೊಂಡು ಹೊರಟು];; ಮದನನೆಂಬ ತನ್ನ ತನಯನ ಮೇಲೆ ರಾಜಕಾರ್ಯದ ಭಾರಮಂ ನಿಯೊಜಿಸಿ ದುಷ್ಟಬುದ್ಧಿ ಪೊರಮಡುತಿರ್ದನು ಅನ್ನೆಗಂ ವಿಷಯಾ ಅಭಿಧಾನದಿಂದ ಎಸೆವ ನಿಜಸುತೆ ಭರದೊಳು ಐತಂದಳು.=[ಮದನನೆಂಬ ತನ್ನ ಮಗನ ಮೇಲೆ ರಾಜಕಾರ್ಯದ ಭಾರವನ್ನು ನಿಯೊಜಿಸಿ ದುಷ್ಟಬುದ್ಧಿಯು ಹೊರಡಲು ಸಿದ್ಧನಾದನು, ಆ ಸಮಯಕ್ಕೆ ವಿಷಯಾ ಎಂಬ ಹೆಸರಿನಿಂದ ಶೋಭಿಸುವ ಅವನ ಮಗಳು ಓಡಿ ಬಂದಳು.]
  • ತಾತ್ಪರ್ಯ:ದುಷ್ಟಬುದ್ಧಿಯು ಕುಳಿಂದಕನ ಚಾರರನ್ನು ಉಪಚರಿಸಿ ಕಳುಹಿಸಿದನು. ನಂತರ ತನ್ನ ಆಲೋಚನೆಯು ಯಾರಿಗೂ ತಿಳಿಯದ ಹಾಗೆ ಇರುವಂತೆ ಅರಮನೆಗೆ ಬಂದು ಆಗ ತಾನು ತೀರ್ಮಾನಿಸಿದ ಯೊಜನೆಯನ್ನು ಆಲೋಚಿಸಿ, ನೃಪಾಲನನ್ನು ಕಂಡು ಅವನಿಂದ ಬೀಳ್ಕೊಂಡು ಹೊರಟು, ಮದನನೆಂಬ ತನ್ನ ಮಗನ ಮೇಲೆ ರಾಜಕಾರ್ಯದ ಭಾರವನ್ನು ನಿಯೊಜಿಸಿ ದುಷ್ಟಬುದ್ಧಿಯು ಹೊರಡಲು ಸಿದ್ಧನಾದನು, ಆ ಸಮಯಕ್ಕೆ ವಿಷಯಾ ಎಂಬ ಹೆಸರಿನಿಂದ ಶೋಭಿಸುವ ಅವನ ಮಗಳು ಓಡೋಡಿ ಬಂದಳು.
  • (ಪದ್ಯ-೨೭)

ಪದ್ಯ:-:೨೮:[ಸಂಪಾದಿಸಿ]

ತನು ಸೊಂಪಡರ್ದು ನುಂಪಿಡಿದು ಕಂಪೊಗೆಯೆ ಲೋ |
ಚನದ ನೋಟದ ಹೊಳಹು ಹೊಡಕರಿಸೆ ಚೆಲ್ವ ಕದ |
ಪಿನ ಕಾಂತಿ ಕಳಕಳಿಸೆ ನಸುಲಜ್ಜೆ ನಗೆಮೊಗದೊಳಂಕುರಿಸೆ ತನಿ ಸೊಬಗಿನ ||
ವನಜ ಕುಟ್ಮಲದಂತೆ ಕುಚಯುಗಂ ಪೊಣ್ಮೆ ಬಡ |
ತನದಿಂದೆ ನಡುವೆಸೆಯೆ ಗತಿ ಮಂದಮಾಗೆ ಜೌ |
ವನದೇಳ್ಗೆಯಿಂದೆಸೆವ ವಿಷಯೆ ನಿಜತಾತನ ಸಮೀಪಕೈತರುತಿರ್ದಳು ||28||

ಪದವಿಭಾಗ-ಅರ್ಥ:
ತನು ಸೊಂಪಡರ್ದು ನುಂಪಿಡಿದು ಕಂಪೊಗೆಯೆ ಲೋಚನದ ನೋಟದ ಹೊಳಹು ಹೊಡಕರಿಸೆ ಚೆಲ್ವ ಕದಪಿನ ಕಾಂತಿ ಕಳಕಳಿಸೆ ನಸುಲಜ್ಜೆ ನಗೆಮೊಗದೊಳು ಅಂಕುರಿಸೆ ತನಿ ಸೊಬಗಿನ=[ಆ ಮಂತ್ರಿಯ ಮಗಳ ದೇಹದಲ್ಲಿ ಸೊಂಪು ತುಂಬಿ, ಅಂಗಗಳು ನುಣುಪಾಗಿ ಕಂಪು ಹೊಮ್ಮಿತು, ಕಣ್ಣಿನ ನೋಟದಲ್ಲಿ ಹೊಳಪು ಕಂಡಿತು, ಚೆಲುವಾದ ಕೆನ್ನಯಲ್ಲಿ ಕಾಂತಿ ಕಳಕಳಿಸಿತು, ಸ್ವಲ್ಪನಾಚಿಕೆಯ ಮುಗುಳುನಗೆಯು ನಗೆಮುಖದಲ್ಲಿ ತೋರುತ್ತಿರಲು, ತುಂಬಿದ ಸೊಬಗಿನ];; ವನಜ ಕುಟ್ಮಲದಂತೆ ಕುಚಯುಗಂ ಪೊಣ್ಮೆ ಬಡತನದಿಂದೆ ನಡುವೆಸೆಯೆ ಗತಿ ಮಂದಮಾಗೆ ಜೌವನದ ಏಳ್ಗೆಯಿಂದ ಎಸೆವ ವಿಷಯೆ ನಿಜತಾತನ ಸಮೀಪಕೆ ಐತರುತಿರ್ದಳು=[ಕಮಲದ ಮೊಗ್ಗಿನಂತಿರುವ ಕುಚಯುಗಗಳು ಹೊರಹೊಮ್ಮಲು, ಸೊಂಟವು ಬಡಕಲಾಗಿ ಶೋಭಿಸಲು, ನಡೆಯುವ ಗತಿ ಮಂದವಾಯಿತು, ಹೀಗೆ ಯೌವನದ ಬೆಳವಣಿಗೆಯಿಂದ ಶೋಭಿಸುವ ವಿಷಯೆ ತನ್ನ ತಂದೆಯ ಸಮೀಪಕ್ಕೆ ಬರುತ್ತಿದ್ದಳು].
  • ತಾತ್ಪರ್ಯ:ಆ ಮಂತ್ರಿಯ ಮಗಳ ದೇಹದಲ್ಲಿ ಸೊಂಪು ತುಂಬಿ, ಅಂಗಗಳು ನುಣುಪಾಗಿ ಕಂಪು ಹೊಮ್ಮಿತು, ಕಣ್ಣಿನ ನೋಟದಲ್ಲಿ ಹೊಳಪು ಕಂಡಿತು, ಚೆಲುವಾದ ಕೆನ್ನಯಲ್ಲಿ ಕಾಂತಿ ಕಳಕಳಿಸಿತು, ಸ್ವಲ್ಪನಾಚಿಕೆಯ ಮುಗುಳುನಗೆಯು ನಗೆಮುಖದಲ್ಲಿ ತೋರುತ್ತಿರಲು, ತುಂಬಿದ ಸೊಬಗಿನ ಕಮಲದ ಮೊಗ್ಗಿನಂತಿರುವ ಕುಚಯುಗಗಳು ಹೊರಹೊಮ್ಮಲು, ಸೊಂಟವು ಸಣ್ಣಗಾಗಿ ಶೋಭಿಸಲು, ನಡೆಯುವ ಗತಿ ಮಂದವಾಯಿತು, ಹೀಗೆ ಯೌವನದ ಬೆಳವಣಿಗೆಯಿಂದ ಶೋಭಿಸುವ ವಿಷಯೆ ತನ್ನ ತಂದೆಯ ಸಮೀಪಕ್ಕೆ ಬರುತ್ತಿದ್ದಳು].
  • (ಪದ್ಯ-೨೮)

ಪದ್ಯ:-:೨೯:[ಸಂಪಾದಿಸಿ]

ಎಸಳ್ಗಂಗಳ(ಎಸಳುಗಂಗಳ) ದಿಟ್ಟಿ ಮನ್ಮಥನ ಕರದಿಟ್ಟಿ |
ಮಿಸುವ ಪುರ್ಬಿನ ಗಾಡಿ ದರ್ಪಕನ ಸಿಂಗಾಡಿ |
ಲಲಿತ (ಲಸಿತ)ಮಂದಸ್ಮಿತಂ ಮುನಿಜನಕೆ ವಿಸ್ಮಿತಂ ಕುರುಳು ವಿಟ ನಿಕರದುರುಳು ||
ಅಸಿಯ ಕೋಮಲ ಕಾಯಮಂಗಜೋತ್ಸವ ಕಾಯ |
ಮೆಸೆವ ನವ ಯೌವನಂ ಸ್ಮರನ ಕೇಳೀವನಂ |
ಪೊಸತಿದೆನಲಾ ವಿಷಯೆ ಜನಿತ ಮೋಹನ ವಿಷಯೆ ಪಿತನೆಡೆಗೆ ನಡೆತಂದಳು ||29||

ಪದವಿಭಾಗ-ಅರ್ಥ:
ಎಸಳ್ಗಂಗಳ(ಎಸಳುಗಂಗಳ) ದಿಟ್ಟಿ (ದೃಷ್ಟಿ) ಮನ್ಮಥನ ಕರದಿಟ್ಟಿ (ಕರದ ಇಟ್ಟಿ:ಬಾಣ) ಮಿಸುವ ಪುರ್ಬಿನ ಗಾಡಿ(ಸೌದರ್ಯ) ದರ್ಪಕನ (ಮನ್ಮಥ) ಸಿಂಗಾಡಿ (ಬತ್ತಳಿಕೆ) ಲಲಿತ((ಸಂ.ಲಲಿತ: ೧ ಚೆಲುವಾದ, ಸುಂದರವಾದ ೨ ಕೋಮಲವಾದ ೩ ವಿನೋದದ, ಲೀಲೆಯ) (ಲಸಿತ:ಅರಳಿದ)ಮಂದಸ್ಮಿತಂ ಮುನಿಜನಕೆ ವಿಸ್ಮಿತಂ ಕುರುಳು ವಿಟ ನಿಕರದುರುಳು==[ಎಸಳಾದ ಕಮಲ ದಳದಂತಿರುವ ಕಣ್ಣುಗಳ ನೋಟವು ಮನ್ಮಥನ ಕೈಯಲ್ಲಿನ ಬಾಣವು, ಶೋಭೀಸುವ ಹುಬ್ಬಿನ ಗಾಡಿ/ಚಂದವು ದರ್ಪಕನ ಬತ್ತಳಿಕೆ, ಚೆಲುವಾದ, ಮುಖದಲ್ಲಿ ಅರಳಿದ ಮಂದಸ್ಮಿತವು ಮುನಿಜನರಿಗೆ ಅಚ್ಚರಿಯು, ಮುಂಗರುಳು ವಿಟಸಮೂಕ್ಕೆ ಬಲೆ, ಪ್ರಾಣಸಂಕಟ ಕೊಡುವುದು];; ಅಸಿಯ ಕೋಮಲ ಕಾಯಂ ಅಂಗಜೋತ್ಸವಕೆ ಆಯ ಮೆಸೆವ ನವ ಯೌವನಂ ಸ್ಮರನ ಕೇಳೀವನಂ ಪೊಸತಿದೆನಲಾ ವಿಷಯೆ ಜನಿತ ಮೋಹನ ವಿಷಯೆ ಪಿತನೆಡೆಗೆ ನಡೆತಂದಳು=[ಹೊಳೆಯುವ ಪ್ರಾಯದ ಕೋಮಲ ದೇಹ, ಮನ್ಮಥನ ಉತ್ಸವಕ್ಕೆ/ ಆಟಕ್ಕೆ ಯೋಗ್ಯವಾಗಿದೆ; ಹೀಗೆ ಪ್ರಕಾಶಿಸುವ ನವಯೌವನವು ಮನ್ಮಥನ ವಿಹಾರದ ತೋಟ; ಇದು ಹೊಸತು ಎನ್ನುವಂತೆ ಆ ಮೋಹಕ್ಕೆ ತಕ್ಕವಳಾದ ವಿಷಯೆ ತಂದೆಯ ಬಳಿಗೆ ಬಂದಳು.]
  • ತಾತ್ಪರ್ಯ:ವಿಷಯೆ ಹೇಗಿದ್ದಳೆಂದರೆ: ಎಸಳಾದ ಕಮಲ ದಳದಂತಿರುವ ಕಣ್ಣುಗಳ ನೋಟವು ಮನ್ಮಥನ ಕೈಯಲ್ಲಿನ ಬಾಣವು, ಶೋಭೀಸುವ ಹುಬ್ಬಿನ ಗಾಡಿ/ಚಂದವು ದರ್ಪಕನ ಬತ್ತಳಿಕೆ, ಚೆಲುವಾದ, ಮುಖದಲ್ಲಿ ಅರಳಿದ ಮಂದಸ್ಮಿತವು ಮುನಿಜನರಿಗೆ ಅಚ್ಚರಿಯು, ಮುಂಗರುಳು ವಿಟಸಮೂಕ್ಕೆ ಬಲೆ, ಪ್ರಾಣಸಂಕಟ ಕೊಡುವುದು; ಹೊಳೆಯುವ ಪ್ರಾಯದ ಕೋಮಲ ದೇಹ, ಮನ್ಮಥನ ಉತ್ಸವಕ್ಕೆ/ ಆಟಕ್ಕೆ ಯೋಗ್ಯವಾಗಿದೆ; ಹೀಗೆ ಪ್ರಕಾಶಿಸುವ ನವಯೌವನವು ಮನ್ಮಥನ ವಿಹಾರದ ತೋಟ; ಇದು ಹೊಸತು ಎನ್ನುವಂತೆ ಆ ಮೋಹಕ್ಕೆ ತಕ್ಕವಳಾದ ವಿಷಯೆ ತಂದೆಯ ಬಳಿಗೆ ಬಂದಳು.
  • (ಪದ್ಯ-೨೯)

ಪದ್ಯ:-:೩೦:[ಸಂಪಾದಿಸಿ]

ಕನ್ನೆ ವೆಣ್ಗಳ ಕೆಳದಿಯರ ಕೂಡೆ ಶೈಶವೋ |
ದ್ಭಿನ್ನಯೌವನೆಯಾದ ವಿಷಯೆ ಬರೆ ಕಂಡಿವ |
ಳ್ಗಿನ್ನು ವರನಾಗಬೇಕೆಂದು ಚಿಂತಿಸಿ ಮನದೊಳಾ ದುಷ್ಟಬುದ್ಧಿ ಬಳಿಕ ||
ತನ್ನ ಮಗಳಂ ತೆಗೆದು ತಕ್ಕೈಸಿ ವಾತ್ಸಲ್ಯ |
ದಿನ್ನಾಳೆ ಬಂದಪೆಂ ಪೊಗು ನಿಜ ಭವನಕೆನೆ |
ಸನ್ನುತ ವಸಂತದೊಳ್‍ ಬಾಯ್ದೆರೆವ ಕೋಗಿಲೆಯ ಮರಿವೊಲವಳಿಂತೆಂದಳು ||30||

ಪದವಿಭಾಗ-ಅರ್ಥ:
ಕನ್ನೆ ವೆಣ್ಗಳ ಕೆಳದಿಯರ ಕೂಡೆ ಶೈಶವ (ಬಾಲ್ಯ) ಉದ್ಭಿನ್ನ (ಅದರಿಂದ ಭಿನ್ನ-ಬೇರೆ) ಯೌವನೆಯಾದ ವಿಷಯೆ ಬರೆ ಕಂಡಿವಳ್ಗಿನ್ನು ವರನಾಗಬೇಕೆಂದು ಚಿಂತಿಸಿ ಮನದೊಳಾ ದುಷ್ಟಬುದ್ಧಿ ಬಳಿಕ=[ಕನ್ಯೆಯರಾದ ಹೆಣ್ಣುಮಕ್ಕಳ ಗೆಳತಿಯರ ಜೊತೆ ಬೆಳೆದು ಇವಳು ಬಾಲ್ಯವನ್ನು ದಾಟಿ ಅದರಿಂದ ಬೇರೆಯಾದ ಯೌವನೆಯಾದ ವಿಷಯೆಯು ಬರಲು ಕಂಡು ಇವಳಿಗೆ ಇನ್ನು ವರನನ್ನು ಹುಡಕಬೇಕು ಎಂದು ಮನಸ್ಸಿನಲ್ಲಿ ದುಷ್ಟಬುದ್ಧಿ ಯೋಚಿಸಿದನು. ಬಳಿಕ];; ತನ್ನ ಮಗಳಂ ತೆಗೆದು ತಕ್ಕೈಸಿ ವಾತ್ಸಲ್ಯದಿಂ ನಾಳೆ ಬಂದಪೆಂ ಪೊಗು ನಿಜ ಭವನಕೆ ಎನೆ ಸನ್ನುತ ವಸಂತದೊಳ್‍ ಬಾಯ್ದೆರೆವ ಕೋಗಿಲೆಯ ಮರಿವೊಲ್ ಅವಳು ಇಂತೆಂದಳು=[ತನ್ನ ಮಗಳನ್ನು ಕರೆದು ಉಪಚರಿಸಿ, ಪ್ರೀತಿಯಿಂದ ನಾಳೆ ಬರುವೆನು, ನಮ್ಮ ಭವನಕ್ಕೆ ಹೋಗು, ಎನ್ನಲು, ಮೆಚ್ಚಿನ ವಸಂತಮಾಸದಲ್ಲಿ ಬಾಯಿತೆರೆದು ಹಾಡುವ ಕೋಗಿಲೆಯ ಮರಿಯಂತೆ ಅವಳು ಹೀಗೆ ಹೇಳಿದಳು];
  • ತಾತ್ಪರ್ಯ:ಕನ್ಯೆಯರಾದ ಹೆಣ್ಣುಮಕ್ಕಳ ಗೆಳತಿಯರ ಜೊತೆ ಬೆಳೆದು ಇವಳು ಬಾಲ್ಯವನ್ನು ದಾಟಿ ಅದರಿಂದ ಬೇರೆಸೊಬಗಿನ ಯೌವನೆಯಾದ ವಿಷಯೆಯು ಬರಲು ಕಂಡು, ಇವಳಿಗೆ ಇನ್ನು ವರನನ್ನು ಹುಡಕಬೇಕು ಎಂದು ಮನಸ್ಸಿನಲ್ಲಿ ದುಷ್ಟಬುದ್ಧಿ ಯೋಚಿಸಿದನು. ಬಳಿಕ ತನ್ನ ಮಗಳನ್ನು ಕರೆದು ಉಪಚರಿಸಿ, ಪ್ರೀತಿಯಿಂದ ನಾಳೆ ಬರುವೆನು, ನಮ್ಮ ಭವನಕ್ಕೆ ಹೋಗು, ಎನ್ನಲು, ಶೋಬೆಯ ವಸಂತಮಾಸದಲ್ಲಿ ಬಾಯಿತೆರೆದು ಹಾಡುವ ಕೋಗಿಲೆಯ ಮರಿಯಂತೆ ಅವಳು ಹೀಗೆ ಹೇಳಿದಳು];
  • (ಪದ್ಯ-೩೦)

ಪದ್ಯ:-:೩೧:[ಸಂಪಾದಿಸಿ]

ತಾತ ನಂದನದೊಳಾಂ ನೀರ್ವೊಯ್ದು ಬೆಳೆಯಿಸಿದ |
ಚೂತಲತೆ ಪೂತುದಿನ್ನುದ್ಯಾಪನಂಗೈಸ |
ದೇತಕಿರ್ದಪೆ ರಾಜಕಾರ್ಯಮೇನೆಂದು ತಲೆವಾಗಿ ನಸು ಲಜ್ಜೆಯಿಂದೆ ||
ಮಾತನಾಡುವ ಮಗಳ ಭಾವವಂ ಕಂಡು ಸಂ |
ಪ್ರೀತಿಯಿಂ ತಿಳಿಪಿ ಮೈದಡವಿ ಮುದ್ದಿಸಿ ತನ್ನ |
ಜಾತ ಮದನಂಗಿವಳ ನೋಂಪಿಯಂ ಮಾಡಿಸೆಂದಾ ಮಂತ್ರಿ ನೇಮಿಸಿದನು ||31||

ಪದವಿಭಾಗ-ಅರ್ಥ:
ತಾತ ನಂದನದೊಳು ಆಂ ನೀರ್ ಒಯ್ದು ಬೆಳೆಯಿಸಿದ ಚೂತಲತೆ ಪೂತುದು ಇನ್ನು ಉದ್ಯಾಪನಂಗೈಸದೆ ಏತಕೆ ಇರ್ದಪೆ ರಾಜಕಾರ್ಯಂ ಏನೆಂದು ತಲೆವಾಗಿ ನಸು ಲಜ್ಜೆಯಿಂದೆ=[ತಂದೆಯೇ, ಹೂತೋಟದಲ್ಲಿ ನಾನು ನೀರು ಹೊಯಿದು ಬೆಳೆಸಿದ ಚೂತಬಳ್ಳಿಯು ಹೂವುಬಿಟ್ಟಿದೆ ಇನ್ನು ವೃತಸಮಾಪ್ತಿ ಮಾಡಿಸದೆ ಏಕೆ ಸುಮ್ಮನಿರುವೆ? ಆ ದೊಡ್ಡ ರಾಜಕಾರ್ಯ ಏನು? ಎಂದು ತಲೆತಗ್ಗಿಸಿ ನಾಚಿಕೆಪಡುತ್ತಾ] ಮಾತನಾಡುವ ಮಗಳ ಭಾವವಂ ಕಂಡು ಸಂಪ್ರೀತಿಯಿಂ ತಿಳಿಪಿ ಮೈದಡವಿ ಮುದ್ದಿಸಿ ತನ್ನ ಜಾತ ಮದನಂಗೆ ಇವಳ ನೋಂಪಿಯಂ ಮಾಡಿಸೆಂದು ಆ ಮಂತ್ರಿ ನೇಮಿಸಿದನು=[ಮಾತನಾಡುವ ಮಗಳ ಭಾವನೆಯನ್ನು ಕಂಡು, ಬಹಳಪ್ರೀತಿಯಿಂದ ತಿಳಿಸಿ ಮೈತಡವಿ, ಮುದ್ದಿಸಿ, ತನ್ನ ಮಗ ಮದನನಿಗೆ ಇವಳ ವೃತವನ್ನು ಮಾಡಿಸು ಎಂದು ಆ ಮಂತ್ರಿ ಆಜ್ಞಾಪಿಸಿದನು ].
  • ತಾತ್ಪರ್ಯ:ತಂದೆಯೇ, ಹೂತೋಟದಲ್ಲಿ ನಾನು ನೀರು ಹೊಯಿದು ಬೆಳೆಸಿದ ಚೂತಬಳ್ಳಿಯು ಹೂವುಬಿಟ್ಟಿದೆ ಇನ್ನು ವೃತಸಮಾಪ್ತಿ ಮಾಡಿಸದೆ ಏಕೆ ಸುಮ್ಮನಿರುವೆ? ಆ ದೊಡ್ಡ ರಾಜಕಾರ್ಯ ಏನು? ಎಂದು ತಲೆತಗ್ಗಿಸಿ ನಾಚಿಕೆಪಡುತ್ತಾ ಮಾತನಾಡುವ ಮಗಳ (ತನಗೆ ಪ್ರಾಯ ಬಂದಿದೆ ಎಂಬ) ಭಾವನೆಯನ್ನು ಕಂಡು, ಬಹಳಪ್ರೀತಿಯಿಂದ ತಿಳಿಸಿ ಮೈತಡವಿ, ಮುದ್ದಿಸಿ, ತನ್ನ ಮಗ ಮದನನಿಗೆ ಇವಳ ವೃತವನ್ನು ಮಾಡಿಸು ಎಂದು ಆ ಮಂತ್ರಿ ಆಜ್ಞಾಪಿಸಿದನು.
  • (ಪದ್ಯ-೩೧)

ಪದ್ಯ:-:೩೨:[ಸಂಪಾದಿಸಿ]

ಮನೆಗೆ ಮಗಳಂ ಕಳುಹಿ ರಾಜಕಾರಿಯಕೆ ಮದ |
ನನನಿರಿಸಿ ತನ್ನ ಪರಿಜನ ಸಹಿತ ಪೊರಮಟ್ಟು |
ದಿನವೆರಡಕೈತಂದು ಮುನ್ನಿರ್ದ ಕಾಡೆಲ್ಲಮೆಸೆವ ನಾಡಾಗಿರಲ್ಕೆ ||
ಮನದೊಳ್ ಕರುಬನಾಂತು ಮೆಚ್ಚಿದವನಾಗಿ ಲೇ |
ಸಿನೋಲಾ ಕುಳಿಂದಕನಿದಿರ್ವಂದು ಸತ್ಕರಿಸೆ |
ಘನವಿಭವದಿಂದೆ ರಾಜಿಪ ಚಂದನಾವತಿಗೆ ಬಂದನಾ ದುಷ್ಟಬುದ್ಧಿ ||32||

ಪದವಿಭಾಗ-ಅರ್ಥ:
ಮನೆಗೆ ಮಗಳಂ ಕಳುಹಿ ರಾಜಕಾರಿಯಕೆ ಮದನನನು ಇರಿಸಿ ತನ್ನ ಪರಿಜನ ಸಹಿತ ಪೊರಮಟ್ಟು ದಿನವೆರಡಕೆ ಐತಂದು ಮುನ್ನಿರ್ದ ಕಾಡೆಲ್ಲಂ ಎಸೆವ ನಾಡು ಆಗಿರಲ್ಕೆ=[ಮನೆಗೆ ಮಗಳನ್ನು ಕಳುಹಿಸಿ, ರಾಜಕಾರ್ಯಕ್ಕೆ ಮದನನನ್ನು ನೇಮಿಸಿ, ತನ್ನ ಪರಿವಾರ ಸಮೇತ ಹೊರಟು, ಎರಡು ದಿನಕ್ಕೆ ಚಂದನಾವತಿಗೆ ಬಂದನು. ಅಲ್ಲಿ ಮೊದಲ್ಲಿದ್ದ ಕಾಡೆಲ್ಲವೂ ಶೋಭಿಸುವ ನಾಡು ಆಗಿರುವುದನ್ನು ಕಂಡು,];; ಬಂದನು ಆ ದುಷ್ಟಬುದ್ಧಿ=[ಮನದೊಳ್ ಕರುಬನು ಆಂತು ಮೆಚ್ಚಿದವನಾಗಿ ಲೇಸಿನೋಲು ಆ ಕುಳಿಂದಕನು ಇದಿರ್ವಂದು ಸತ್ಕರಿಸೆ ಘನವಿಭವದಿಂದೆ ರಾಜಿಪ ಚಂದನಾವತಿಗೆ ಬಂದನು ಆ ದುಷ್ಟಬುದ್ಧಿ=[ಮನಸ್ಸಿನಲ್ಲಿ ಕರುಬು/ಅಸೂಯೆಯನ್ನು ಹೊಂದಿ,ಎದುರಿಗೆ ಮೆಚ್ಚಿದವನಂತೆ ಒಳ್ಳೆರೀತಿಯಲ್ಲಿ ತೋರಿಸಿಕೊಂಡನು. ಅಲ್ಲಿ ಆ ಕುಳಿಂದಕನು ಎದುರುಗೊಂಡು ಸತ್ಕರಿಸಲು ಘನವೈಭವದಿಂದ ಶೋಭಿಸುವ ಚಂದನಾವತಿಗೆ ಆ ದುಷ್ಟಬುದ್ಧಿ ಬಂದನು].
  • ತಾತ್ಪರ್ಯ:ಮನೆಗೆ ಮಗಳನ್ನು ಕಳುಹಿಸಿ, ರಾಜಕಾರ್ಯಕ್ಕೆ ಮದನನನ್ನು ನೇಮಿಸಿ, ತನ್ನ ಪರಿವಾರ ಸಮೇತ ಹೊರಟು, ಎರಡು ದಿನಕ್ಕೆ ಚಂದನಾವತಿಗೆ ಬಂದನು. ಅಲ್ಲಿ ಮೊದಲ್ಲಿದ್ದ ಕಾಡೆಲ್ಲವೂ ಶೋಭಿಸುವ ನಾಡು ಆಗಿರುವುದನ್ನು ಕಂಡು,ಮನಸ್ಸಿನಲ್ಲಿ ಕರುಬು/ಅಸೂಯೆಯನ್ನು ಹೊಂದಿ,ಎದುರಿಗೆ ಮೆಚ್ಚಿದವನಂತೆ ಒಳ್ಳೆರೀತಿಯಲ್ಲಿ ತೋರಿಸಿಕೊಂಡನು. ಅಲ್ಲಿ ಆ ಕುಳಿಂದಕನು ಎದುರುಗೊಂಡು ಸತ್ಕರಿಸಲು ಘನವೈಭವದಿಂದ ಶೋಭಿಸುವ ಚಂದನಾವತಿಗೆ ಆ ದುಷ್ಟಬುದ್ಧಿ ಬಂದನು].
  • (ಪದ್ಯ-೩೨)

ಪದ್ಯ:-:೩೩:[ಸಂಪಾದಿಸಿ]

ರಿಪುಮಥನ ಕೇಳ್‍ಕುಳಿಂದಂ ಬಹಳ ವೈಭವದೊ |
ಳುಪಚರಿಸಿ ತನ್ನ ನಂದನ ಚಂದ್ರಹಾಸನಂ |
ವಿಪುಲ ಪರಿತೋಷದಿಂದೊಡೆಯಂಗೆ ಕಾಣಿಕೆಯನಿಡಿಸಿ ಕಾಣಿಸಿದ ಬಳಿಕ ||
ವಿಪಿನದೊಳ್‍ ತನಗೀ ಕುಮಾರಕಂ ಮುಂಗೈದ |
ತಪದ ಫಲದಿಂ ತಾನೆ ದೊರೆಕೊಂಡನೀತನಂ |
ಕೃಪೆಯಿಂದೆ ನೀವೆ ಪಾಲಿಸವೇಳ್ವುದೆಂದು ನಿಜಪತಿಗೆ ಕೈವರ್ತಿಸಿದನು ||33||

ಪದವಿಭಾಗ-ಅರ್ಥ:
ರಿಪುಮಥನ ಕೇಳ್‍ ಕುಳಿಂದಂ ಬಹಳ ವೈಭವದೊಳು ಉಪಚರಿಸಿ ತನ್ನ ನಂದನ ಚಂದ್ರಹಾಸನಂ ವಿಪುಲ ಪರಿತೋಷದಿಂದ ಒಡೆಯಂಗೆ ಕಾಣಿಕೆಯನು ಇಡಿಸಿ ಕಾಣಿಸಿದ ಬಳಿಕ=[ರಿಪುಮಥನ ಅರ್ಜುನನೇ ಕೇಳು, ಕುಳಿಂದನು ಬಹಳ ವೈಭವದಿಂದ ದುಷ್ಟಬುದ್ಧಿಯನ್ನು ಉಪಚರಿಸಿ, ಒಡೆಯ ದುಷ್ಟಟಬುದ್ಧಿಗೆ ಕಾಣಿಕೆಯನ್ನು ಒಪ್ಪಿಸಿ, ತನ್ನ ಮಗ ಚಂದ್ರಹಾಸನನ್ನು ಬಹಳ ಆನಂದದಿಂದ ತೋರಿಸಿ, ಬಳಿಕ ];; ವಿಪಿನದೊಳ್‍ ತನಗೀ ಕುಮಾರಕಂ ಮುಂಗೈದ ತಪದ ಫಲದಿಂ ತಾನೆ ದೊರೆಕೊಂಡನು ಈತನಂ ಕೃಪೆಯಿಂದೆ ನೀವೆ ಪಾಲಿಸವೇಳ್ವುದು ಎಂದು ನಿಜಪತಿಗೆ ಕೈವರ್ತಿಸಿದನು=[ಕಾಡಿನಲ್ಲಿ ತನಗೆ ಈ ಕುಮಾರನು ಹಿಂದಿನ ತಪದ ಫಲದಿಂದ ತಾನಾಗಿಯೇ ಸಿಕ್ಕಿದನು; ಈತನನ್ನು ಕೃಪೆಯಿಂದೆ ನೀವೇ ಪಾಲಿಸಬೇಕು, ಎಂದು ತನ್ನ ಒಡೆಯನಿಗೆ ಅವನ ಕೈಮೇಲೆ ಮಗನ ಕೈ ಇಡಿಸಿ ಒಪ್ಪಿಸಿದನು.].
  • ತಾತ್ಪರ್ಯ:ರಿಪುಮಥನ ಅರ್ಜುನನೇ ಕೇಳು, ಕುಳಿಂದನು ಬಹಳ ವೈಭವದಿಂದ ದುಷ್ಟಬುದ್ಧಿಯನ್ನು ಉಪಚರಿಸಿ,ಅವನಿಗೆ ಕಾಣಿಕೆಯನ್ನು ಒಪ್ಪಿಸಿ, ತನ್ನ ಮಗ ಚಂದ್ರಹಾಸನನ್ನು ಬಹಳ ಆನಂದದಿಂದ ತೋರಿಸಿ, ಬಳಿಕ ಕಾಡಿನಲ್ಲಿ ತನಗೆ ಈ ಕುಮಾರನು ಹಿಂದಿನ ತಪದ ಫಲದಿಂದ ತಾನಾಗಿಯೇ ಸಿಕ್ಕಿದನು; ಈತನನ್ನು ಕೃಪೆಯಿಂದೆ ನೀವೇ ಪಾಲಿಸಬೇಕು, ಎಂದು ತನ್ನ ಒಡೆಯನಿಗೆ ಅವನ ಕೈಮೇಲೆ ಮಗನ ಕೈ ಇಡಿಸಿ ಒಪ್ಪಿಸಿದನು.].
  • (ಪದ್ಯ-೩೨)

ಪದ್ಯ:-:೩೪:[ಸಂಪಾದಿಸಿ]

ಗಾಡಿಸಿದ ನೃಪಲಕ್ಷಣದ ಚಂದ್ರಹಾಸನಂ |
ನೋಡಿ ವಿಸ್ಮಿತನಾಗಿ ತನ್ನ ಮನದೊಳ್‍ಪಿಂತೆ |
ಮಾಡಿಸಿದ ಕೃತ್ಯಮಂ ನೆನೆದು ವಂಚಿಸಿದರೇ ಚಂಡಾಲರೆಮ್ಮನೆಂದು ||
ಕೂಡೆ ಮಮ್ಮಲಮರುಗಿ ಪುಸಿಗೆ ನಸು ನಗುತ ಕೊಂ |
ಡಾಡಿ ಮನ್ನಿಸಿ ತನಗೆ ನಿನ್ನ ಸುತನಂ ಕಂಡು |
ಮೂಡಿತುತ್ಸವಮೆಂದನಾ ದುಷ್ಟಬುದ್ಧಿವಿನಯದೊಳಾ ಕುಳಿಂದನೊಡನೆ ||34||

ಪದವಿಭಾಗ-ಅರ್ಥ:
ಗಾಡಿಸಿದ ನೃಪಲಕ್ಷಣದ ಚಂದ್ರಹಾಸನಂ ನೋಡಿ ವಿಸ್ಮಿತನಾಗಿ ತನ್ನ ಮನದೊಳ್‍ ಪಿಂತೆ ಮಾಡಿಸಿದ ಕೃತ್ಯಮಂ ನೆನೆದು ವಂಚಿಸಿದರೇ ಚಂಡಾಲರು ಎಮ್ಮನು ಎಂದು=[ದುಷ್ಟಬುದ್ಧಿಯು ಎದ್ದುಕಾಣುವ ರಾಜಲಕ್ಷಣದ ಚಂದ್ರಹಾಸನನ್ನು ನೋಡಿ ಚಕಿತನಾಗಿ, ತನ್ನ ಮನಸ್ಸಿನಲ್ಲಿ ಹಿಂದೆ ಮಾಡಿಸಿದ (ಕೊಲೆಯಯೋಜನೆ) ಕೃತ್ಯವನ್ನು ನೆನಪಸಿಕೊಂಡು, 'ಹಾಗಾದರೆ ಚಂಡಾಲರು ನಮ್ಮನು ವಂಚಿಸಿದರೇ' ಎಂದು ಚಿಂತಿಸಿದನು.];; ಕೂಡೆ ಮಮ್ಮಲಮರುಗಿ ಪುಸಿಗೆ ನಸು ನಗುತ ಕೊಂಡಾಡಿ ಮನ್ನಿಸಿ ತನಗೆ ನಿನ್ನ ಸುತನಂ ಕಂಡು ಮೂಡಿತುತ್ಸವಂ ಎಂದನು ಆ ದುಷ್ಟಬುದ್ಧಿ ವಿನಯದೊಳು ಆ ಕುಳಿಂದನೊಡನೆ=[ಆ ಯೋಚನೆಯಿಂದ ತಕ್ಷಣ ಯೊಜನೆ ಕೈತಪ್ಪಿದ್ದಕ್ಕೆ ಮಮ್ಮಲಮರುಗಿ, ಕುಳಿಂದನ ಎದುರು, ತೋರಿಕೆಗಗೆ ನಸುನಗುತ್ತಾ ಅವನನ್ನು ಹೊಗಳಿ, ಉಪಚರಿಸಿ, ಆ ದುಷ್ಟಬುದ್ಧಿಯು ವಿನಯವಾಗಿ ಆ ಕುಳಿಂದನೊಡನೆ ತನಗೆ ನಿನ್ನ ಮಗನನ್ನು ಕಂಡು ಆನಂದವಾಯಿತು ಎಂದನು].
  • ತಾತ್ಪರ್ಯ:ದುಷ್ಟಬುದ್ಧಿಯು ಎದ್ದುಕಾಣುವ ರಾಜಲಕ್ಷಣದ ಚಂದ್ರಹಾಸನನ್ನು ನೋಡಿ ಚಕಿತನಾಗಿ, ತನ್ನ ಮನಸ್ಸಿನಲ್ಲಿ ಹಿಂದೆ ಮಾಡಿಸಿದ (ಕೊಲೆಯಯೋಜನೆ) ಕೃತ್ಯವನ್ನು ನೆನಪಸಿಕೊಂಡು, 'ಹಾಗಾದರೆ ಚಂಡಾಲರು ನಮ್ಮನು ವಂಚಿಸಿದರೇ' ಎಂದು ಚಿಂತಿಸಿದನು. ತಕ್ಷಣದ ಆ ಯೋಚನೆಯಿಂದ ಯೊಜನೆ ಕೈತಪ್ಪಿದ್ದಕ್ಕೆ ಮಮ್ಮಲಮರುಗಿ, ಕುಳಿಂದನ ಎದುರು, ತೋರಿಕೆಗಗೆ ನಸುನಗುತ್ತಾ ಅವನನ್ನು ಹೊಗಳಿ, ಉಪಚರಿಸಿ, ಆ ದುಷ್ಟಬುದ್ಧಿಯು ವಿನಯವಾಗಿ ಆ ಕುಳಿಂದನೊಡನೆ ತನಗೆ ನಿನ್ನ ಮಗನನ್ನು ಕಂಡು ಆನಂದವಾಯಿತು ಎಂದನು.
  • (ಪದ್ಯ-೩೪)

ಪದ್ಯ:-:೩೫:[ಸಂಪಾದಿಸಿ]

ವ್ಯಾಳದಂಗದ ನಯವೊ ಗರ್ತಸಂಭಾದಿತ ತೃ |
ಣಾಳಿಗಳೊ ಮಕರದಿಕ್ಕೆಯ ಮಡುವಿನಂಬುಜವೊ |
ಬಾಳ ಧಾರೆಗೆ ಲೇಪಿಸಿದ ಮಧುವೊ ಕಮಲಾಂಬಕಿಯರ ಕೃತಕದ ಬೇಟವೊ ||
ಕಾಳಕೂಟಂಬೆರಸಿದಮೃತಾನ್ನಭೋಜನವೊ |
ಪೇಳಲರಿದೆನೆ ಸೊಗಸಿತಾ ದುಷ್ಟಬುದ್ಧಿ ಘಾ |
ತಾಳಿಕೆಯನೊಳವುದುಗಿ ಹರ್ಷಲಾಂಚನದಿಂದೆ ನಸುನಗುತ ನುಡಿದ ಮಾತು ||35||

ಪದವಿಭಾಗ-ಅರ್ಥ:
ವ್ಯಾಳದಂಗದ (ವ್ಯಾಳ:ಸರ್ಪ) ನಯವೊ ಗರ್ತಸಂಭಾದಿತ (ಗರ್ತ:ಗುಂಡಿ, ಸಂಭಾದಿತ:ಮುಚ್ಚಿದ) ತೃಣಾಳಿಗಳೊ, ಮಕರದಿಕ್ಕೆಯ (ಮಕರ: ಮೊಸಳೆ, ಇಕ್ಕೆ: ಇರುವ) ಮಡುವಿನ ಅಂಬುಜವೊ, ಬಾಳ ಧಾರೆಗೆ (ಬಾಳ:ಕತ್ತಿ, ಧಾರೆ:ಅದರಬಾಯಿ) ಲೇಪಿಸಿದ ಮಧುವೊ, ಕಮಲಾಂಬಕಿಯರ ಕೃತಕದ ಬೇಟವೊ,=[ವಿಷಸರ್ಪದ ನಯವಾದ ದೇಹಲಕ್ಷಣವೋ, ಬೇಟೆಗೆ ತೆಗೆದ ಗುಂಡಿಯ ಮೇಲೆ ಮುಚ್ಚಿದ ಹುಲ್ಲು ಹೊದೆಕೆಯೊ, ಮೊಸಳೆ ಇರುವ ಶಾಂತವಾದ ನೀರಿನ ಮಡುವಿನಲ್ಲಿರುವ ಕಮಲವೊ, ಕತ್ತಿಯಬಾಯಿಗೆ ಸವರಿದ ಮಧುವೊ, ಸುಂದರಿಯರ ಕೃತಕದ/ಮೋಸದ ಕಣ್ಣಿನ ಬೇಟವೊ,];;ಕಾಳಕೂಟಂ ಬೆರಸಿದ ಅಮೃತಾನ್ನಭೋಜನವೊ, ಪೇಳಲು ಅರಿದೆನೆ ಸೊಗಸಿತು ಆ ದುಷ್ಟಬುದ್ಧಿ ಘಾತಾಳಿಕೆಯನು ಒಳವುದುಗಿ, ಹರ್ಷಲಾಂಚನದಿಂದೆ ನಸುನಗುತ ನುಡಿದ ಮಾತು=[ಕಾಳಕೂಟವೆಂಬ ಮಹಾ ವಿಷವನ್ನು ಬೆರಸಿದ ಅಮೃತಾನ್ನದ ಭೋಜನವೊ, ಹೀಗಿರುವ ಆ ದುಷ್ಟಬುದ್ಧಿಯು ಕೊಲೆಯಸಂಚನ್ನು ಒಳಗೆ ಅಡಗಿಸಿ, ಸಂತಸದ ಮುಖಮುದ್ರೆಯಿಂದ ನಸುನಗುತ್ತಾ ನುಡಿದ ಮಾತು ವಿವರಿಸಲು ಆಗದುಎನ್ನುವಂತೆ ಸೊಗಸು ಹೊಂದಿತ್ತು].
  • ತಾತ್ಪರ್ಯ:(ದುಷ್ಟಬುದ್ಧಿಯ ಅಂತರಂಗ ಹೆಗಿತ್ತೆಂದರೆ:) ವಿಷಸರ್ಪದ ನಯವಾದ ದೇಹಲಕ್ಷಣವೋ, ಬೇಟೆಗೆ ತೆಗೆದ ಗುಂಡಿಯ ಮೇಲೆ ಮುಚ್ಚಿದ ಹುಲ್ಲು ಹೊದೆಕೆಯೊ, ಮೊಸಳೆ ಇರುವ ಶಾಂತವಾದ ನೀರಿನ ಮಡುವಿನಲ್ಲಿರುವ ಕಮಲವೊ, ಕತ್ತಿಯಬಾಯಿಗೆ ಸವರಿದ ಜೇನುತುಪ್ಪವೊ, ಸುಂದರಿಯರ ಕೃತಕದ/ಮೋಸದ ಕಣ್ಣಿನ ಬೇಟವೊ, ಕಾಳಕೂಟವೆಂಬ ಮಹಾ ವಿಷವನ್ನು ಬೆರಸಿದ ಅಮೃತಾನ್ನದ ಭೋಜನವೊ, ಹೀಗಿರುವ ಆ ದುಷ್ಟಬುದ್ಧಿಯು ಕೊಲೆಯಸಂಚನ್ನು ಒಳಗೆ ಅಡಗಿಸಿ, ಸಂತಸದ ಮುಖಮುದ್ರೆಯಿಂದ ನಸುನಗುತ್ತಾ ನುಡಿದ ಮಾತು ವಿವರಿಸಲು ಆಗದು ಎನ್ನುವಂತೆ ಸೊಗಸು ಹೊಂದಿತ್ತು].
  • (ಪದ್ಯ-೩೫)

ಪದ್ಯ:-:೩೬:[ಸಂಪಾದಿಸಿ]

ಎತ್ತ ಬಲ್ಲರ್ ಸುಜನರೆಲೆ ಪಾರ್ಥ ಕಪಟಿಗಳ |
ಚಿತ್ತದೊಳ್‍ಪುದುಗಿರ್ದ ಮಾಟಮಂ ವೀಳಯವ |
ನಿತ್ತು ಮನ್ನಿಸಿ ಮಂತ್ರಿಪತಿ ಚಂದ್ರಹಾಸನಂ ಕರೆದು ಕುಳ್ಳಿರಿಸಿಕೊಂಡು ||
ಮತ್ತೆ ಮನದೊಳ್ ಮುನ್ನ ಭೂಸುರರ್ ತನಗೆಂದ |
ವೃತ್ತಾಂತಮಂ ನೆನೆದು ತನ್ನ ಸುತರಾಳ್ಕೆಗಾ |
ಯಿತ್ತು ಕಂಟಕಮಕಟ ಪಗೆಯಾದನಿವನೊರ್ವನೆಂದು ಚಿಂತಿಸುತಿರ್ದನು ||36||

ಪದವಿಭಾಗ-ಅರ್ಥ:
ಎತ್ತ ಬಲ್ಲರ್ ಸುಜನರೆಲೆ ಪಾರ್ಥ ಕಪಟಿಗಳ ಚಿತ್ತದೊಳ್‍ ಪುದುಗಿರ್ದ ಮಾಟಮಂ ವೀಳಯವನು ಇತ್ತು ಮನ್ನಿಸಿ ಮಂತ್ರಿಪತಿ ಚಂದ್ರಹಾಸನಂ ಕರೆದು ಕುಳ್ಳಿರಿಸಿಕೊಂಡು=[ನಾರದರು ಹೇಳಿದರು, ಎಲೆ ಪಾರ್ಥನೇ, ಕಪಟಿಗಳ ಮನಸ್ಸಿನಲ್ಲಿ ಹುದುಗಿರುವ ಕುತಂತ್ರವನ್ನು ಸಜ್ಜನರು ಹೇಗೆ ತಿಳಿಯಬಲ್ಲರು? ಮುಖ್ಯಮಂತ್ರಿಯು ಚಂದ್ರಹಾಸನನ್ನು ಕರೆದು ಕುಳ್ಳಿರಿಸಿಕೊಂಡು ತಾಂಬೂಲವನ್ನು ಕೊಟ್ಟು ಸತ್ಕರಿಸಿ,];; ಮತ್ತೆ ಮನದೊಳ್ ಮುನ್ನ ಭೂಸುರರ್ ತನಗೆ ಎಂದ ವೃತ್ತಾಂತಮಂ ನೆನೆದು ತನ್ನ ಸುತರ ಆಳ್ಕೆಗೆ ಆಯಿತ್ತು ಕಂಟಕಂ ಅಕಟ ಪಗೆಯಾದನು (ಪಗೆ-ಹಗೆ:ಶತ್ರು) ಇವನು ಓರ್ವನು ಎಂದು ಚಿಂತಿಸುತಿರ್ದನು=[ಮತ್ತೆ ಮನಸ್ಸಿನಲ್ಲಿ ಹಿಂದೆ ವಿಪ್ರರು ತನಗೆ ಹೇಳಿದ ವಿಚಾರವನ್ನು ನೆನೆದು ತನ್ನ ಮಗನ ಆಳ್ವಿಕಗೆ ಆಪತ್ತು ಆಯಿತಲ್ಲಾ ಅಕಟ! ಶತ್ರುವಾದನು ಇವನೊಬ್ಬ, ಎಂದು ಚಿಂತಿಸುತ್ತಿದ್ದನು].
  • ತಾತ್ಪರ್ಯ:ನಾರದರು ಹೇಳಿದರು, ಎಲೆ ಪಾರ್ಥನೇ, ಕಪಟಿಗಳ ಮನಸ್ಸಿನಲ್ಲಿ ಹುದುಗಿರುವ ಕುತಂತ್ರವನ್ನು ಸಜ್ಜನರು ಹೇಗೆ ತಿಳಿಯಬಲ್ಲರು? ಮುಖ್ಯಮಂತ್ರಿಯು ಚಂದ್ರಹಾಸನನ್ನು ಕರೆದು ಕುಳ್ಳಿರಿಸಿಕೊಂಡು ತಾಂಬೂಲವನ್ನು ಕೊಟ್ಟು ಸತ್ಕರಿಸಿ, ಮತ್ತೆ ಮನಸ್ಸಿನಲ್ಲಿ ಹಿಂದೆ ವಿಪ್ರರು ತನಗೆ ಹೇಳಿದ ವಿಚಾರವನ್ನು ನೆನೆದು ತನ್ನ ಮಗನ ಆಳ್ವಿಕಗೆ ಆಪತ್ತು ಆಯಿತಲ್ಲಾ ಅಕಟ! ಶತ್ರುವಾದನು ಇವನೊಬ್ಬ, ಎಂದು ಚಿಂತಿಸುತ್ತಿದ್ದನು.
  • (ಪದ್ಯ-೩೬)

ಪದ್ಯ:-:೩೭:[ಸಂಪಾದಿಸಿ]

ಬಂಜೆಯಾಗದು ವಿಪ್ರರಂದೆನ್ನೊಳೆಂದ ನುಡಿ |
ರಂಜಿಸುವ ರಾಜಲಕ್ಷಣದೊಳೊಪ್ಪುವ ನಿವಂ |
ಭಂಜಿಸದೊಡೀ ಧರಣಿಗೀತನರಸಾದಪಂ ಬಳಿಕ ತನ್ನಾತ್ಮಜರ್ಗೆ ||
ಸಂಜನಿಸಲರಿದು ಭೂಪಾಲತ್ವಮಗ್ಗಳಿಕೆ |
ಗಂಜುವವನಲ್ಲ ಬಲವಂತನಹನೀತಂಗೆ |
ನಂಜನೂಡಿಸಿ ಕೊಲ್ವುಪಾಯಂ ಮಾಳ್ಪೆನೆಂದೆಣಿಸಿದಂ ದುಷ್ಟಬುದ್ಧಿ ||37||

ಪದವಿಭಾಗ-ಅರ್ಥ:
ಬಂಜೆಯಾಗದು ವಿಪ್ರರು ಅಂದು ಎನ್ನೊಳು ಎಂದ ನುಡಿ ರಂಜಿಸುವ ರಾಜಲಕ್ಷಣದೊಳು ಒಪ್ಪುವನು ಇವಂ ಭಂಜಿಸದೊಡೆ (ಭಂಜಿಸದೆ/ ಕೊಲ್ಲದೆ ಇದ್ದರೆ) ಈ ಧರಣಿಗೆ ಈತನು ಅರಸಾದಪಂ ಬಳಿಕ ತನ್ನ ಆತ್ಮಜರ್ಗೆ (ಆತ್ಮಜ: ಮಗ)=[ಸುಳ್ಳಾಗದು ಹಿಂದೆ ವಿಪ್ರರು ನನ್ನಲ್ಲಿ ಹೇಳಿದ ಮಾತು; ಇವನು ಪ್ರಕಾಶಿಸುವ ರಾಜಲಕ್ಷಣದಲ್ಲಿ ತೋರುತ್ತಿರುವನು; ಕೊಲ್ಲದಿದ್ದರೆ ಈ ರಾಜ್ಯಕ್ಕೆ ಇವನು ಅರಸನಾಗುವನು; ಬಳಿಕ ತನ್ನ ಮಗನಿಗೆ];; ಸಂಜನಿಸಲು (ದೊರಕು) ಅರಿದು(ಅರಿದು: ಆಗದು) ಭೂಪಾಲತ್ವಂ ಅಗ್ಗಳಿಕೆಗೆ ಅಂಜುವವನಲ್ಲ ಬಲವಂತನು ಅಹನು ಈತಂಗೆ ನಂಜನು ಊಡಿಸಿ ಕೊಲ್ವ ಉಪಾಯಂ ಮಾಳ್ಪೆನು ಎಂದು ಎಣಿಸಿದಂ ದುಷ್ಟಬುದ್ಧಿ=[ಭೂಪಾಲತ್ವವು ದೊರಕುವುದು ಅಸಾಧ್ಯ; ಪರಾಕ್ರಮಕ್ಕೆ ಇವನು ಅಂಜುವವನಲ್ಲ; ಇವನು ಬಲಶಾಲಿಯಾಗಿರುವನು. ಈತನಿಗೆ ವಿಷವನ್ನು ಕೊಡಿಸಿ/ತಿನ್ನಿಸಿ ಕೊಲ್ಲುವ ಉಪಾಯವನ್ನು ಮಾಡುವೆನು, ಎಂದು ದುಷ್ಟಬುದ್ಧಿಯು ಯೋಚಿಸಿದನು.]
  • ತಾತ್ಪರ್ಯ:ದುಷ್ಟಬುದ್ಧಿಯು ಯೋಚಿಸುವನು: ಸುಳ್ಳಾಗದು ಹಿಂದೆ ವಿಪ್ರರು ನನ್ನಲ್ಲಿ ಹೇಳಿದ ಮಾತು; ಇವನು ಪ್ರಕಾಶಿಸುವ ರಾಜಲಕ್ಷಣದಲ್ಲಿ ತೋರುತ್ತಿರುವನು; ಕೊಲ್ಲದಿದ್ದರೆ ಈ ರಾಜ್ಯಕ್ಕೆ ಇವನು ಅರಸನಾಗುವನು; ಬಳಿಕ ತನ್ನ ಮಗನಿಗೆ ಭೂಪಾಲತ್ವವು ದೊರಕುವುದು ಅಸಾಧ್ಯ; ಪರಾಕ್ರಮಕ್ಕೆ ಇವನು ಅಂಜುವವನಲ್ಲ; ಇವನು ಬಲಶಾಲಿಯಾಗಿರುವನು. ಈತನಿಗೆ ವಿಷವನ್ನು ಕೊಡಿಸಿ/ತಿನ್ನಿಸಿ ಕೊಲ್ಲುವ ಉಪಾಯವನ್ನು ಮಾಡುವೆನು, ಎಂದು ದುಷ್ಟಬುದ್ಧಿಯು ಯೋಚಿಸಿದನು.
  • (ಪದ್ಯ-೩೭)

ಪದ್ಯ:-:೩೮:[ಸಂಪಾದಿಸಿ]

ರಾಕಾಶಶಾಂಕನಭ್ಯುದಯಮಂ ಕೆಡಿಸಿ ತ |
ನ್ನಾಕಾರಮಂ ತೋರಿಸುವೆನೆಂಬ ಕತ್ತಲೆವೊ |
ಲಾ ಕಮಲಲೋಚನನ ಭೃತ್ಯನಂ ಕೊಲಿಸಿ ತಾಂ ಬಾಳ್ವೆನೆಂಬುಜ್ಜುಗದೊಳು ||
ಆ ಕುಮತಿಯಹಮಂತ್ರಿ ಬಳಿಕೊಂದು ಲೇಖನವ |
ನೇಕಾಂತದೊಳ್ ಬರೆದು ಮೇಣದಕೆ ಮುದ್ರೆಯಂ |
ಜೋಕೆಯಿಂದಳವಡಿಸಿ ಶಶಿಹಾಸನಂ ನೋಡಿ ನಸುನಗುತಲಿಂತೆಂದನು ||38||

ಪದವಿಭಾಗ-ಅರ್ಥ:
ರಾಕಾಶಶಾಂಕನ (ರಾಕಾ ಶಶಾಂಕ; ಪೂರ್ಣಚಂದ್ರ) ಅಭ್ಯುದಯಮಂ ಕೆಡಿಸಿ ತನ್ನ ಆಕಾರಮಂ (ಬಲಶಾಲಿ ರೂಪ) ತೋರಿಸುವೆನು ಎಂಬ ಕತ್ತಲೆವೊಲು ಆ ಕಮಲಲೋಚನನ ಭೃತ್ಯನಂ ಕೊಲಿಸಿ ತಾಂ ಬಾಳ್ವೆನೆಂಬ ಉಜ್ಜುಗದೊಳು(ಉದ್ಯೋಗ)=[ಪೂರ್ಣಚಂದ್ರನ ಏಳಿಗೆಯನ್ನು ಕೆಡಿಸಿ ತನ್ನ ಶಕ್ತಿಯನ್ನು ತೋರಿಸುವೆನು ಎಂಬ ಕತ್ತಲೆಯಂತೆ, ಆ ಹರಿಯ ಭಕ್ತನನ್ನು ಕೊಲ್ಲಿಸಿ ತಾನು ಬಾಳುವೆನು, ಎಂಬ ಕಾರ್ಯದಲ್ಲಿ];; ಆ ಕುಮತಿಯಹ ಮಂತ್ರಿ ಬಳಿಕೊಂದು ಲೇಖನವನು ಏಕಾಂತದೊಳ್ ಬರೆದು ಮೇಣ್ ಅದಕೆ ಮುದ್ರೆಯಂ ಜೋಕೆಯಿಂದ ಅಳವಡಿಸಿ ಶಶಿಹಾಸನಂ ನೋಡಿ ನಸುನಗುತಲಿ ಇಂತೆಂದನು=[ಆ ಕೆಟ್ಟ ಮನಸ್ಸಿನ ಮಂತ್ರಿಯು ಆನಂತರ ಒಂದು ಲೇಖನವನ್ನು ಏಕಾಂತದಲ್ಲಿ ಬರೆದು, ಮತ್ತೆ ಅದಕ್ಕೆ ರಾಜಮುದ್ರೆಯನ್ನು ಜೋಕೆಯಿಂದ ಹಾಕಿ,ಚಂದ್ರಹಾಸನನ್ನು ನೋಡಿ ನಸುನಗುತ್ತಾ ಹೀಗೆ ಹೇಳಿದನು.].
  • ತಾತ್ಪರ್ಯ:ಹುಣ್ಣಿಮೆಯ ಪೂರ್ಣಚಂದ್ರನ ಏಳಿಗೆಯನ್ನು ಕೆಡಿಸಿ ತನ್ನ ಶಕ್ತಿಯನ್ನು ತೋರಿಸುವೆನು ಎಂಬ ಕತ್ತಲೆಯಂತೆ, ಆ ಹರಿಯ ಭಕ್ತನನ್ನು ಕೊಲ್ಲಿಸಿ ತಾನು ಬಾಳುವೆನು, ಎಂಬ ಕಾರ್ಯದಲ್ಲಿ ಆ ಕೆಟ್ಟ ಮನಸ್ಸಿನ ಮಂತ್ರಿಯು ಆನಂತರ ಒಂದು ಲೇಖನವನ್ನು ಏಕಾಂತದಲ್ಲಿ ಬರೆದು, ಮತ್ತೆ ಅದಕ್ಕೆ ರಾಜಮುದ್ರೆಯನ್ನು ಜೋಕೆಯಿಂದ ಹಾಕಿ,ಚಂದ್ರಹಾಸನನ್ನು ನೋಡಿ ನಸುನಗುತ್ತಾ ಹೀಗೆ ಹೇಳಿದನು.
  • (ಪದ್ಯ-೩೮)

ಪದ್ಯ:-:೩೯:[ಸಂಪಾದಿಸಿ]

ಉರ್ವ ಮಂತ್ರದ ಕಜ್ಜಮಿದು ಚಂದ್ರಹಾಸ ನೀ |
ನೊರ್ವನೆ ಹಯಾರೂಢನಾಗಿನಾಲ್ವರ್ ಸೇವ |
ಕರ್ವೆರಸಿ ರಾಜಧಾನಿಗೆ ಪೋಗಿ ತನ್ನ ಮಗ ಮದನಂಗೆ ಮುದ್ರೆಸಹಿತ ||
ಸರ್ವಜನಮರಿಯದಂತೀವುದೀ ಪತ್ರಿಕೆಯ |
ನುರ್ವರೆಯೊಳಾವೆಸಗಿದತಿಶಯದ ಮಾಳ್ಕೆ ನ |
ಮ್ಮಿರ್ವರೊಳ್ ಗುಪ್ತಮಾಗಿರಲೆಂದು ಕೊಟ್ಟನಾ ಮಂತ್ರಿ ತಲ್ಲೇಖನವನು ||39||

ಪದವಿಭಾಗ-ಅರ್ಥ:
ಉರ್ವ (ಊರ್ವಿ:ಭೂಮಿ /ದೇಶ ರಾಜ್ಯದ) ಮಂತ್ರದ ಕಜ್ಜಂ ಇದು ಚಂದ್ರಹಾಸ ನೀನು ಓರ್ವನೆ ಹಯಾರೂಢನಾಗಿ ನಾಲ್ವರ್ ಸೇವಕರ್ ವೆರಸಿ ರಾಜಧಾನಿಗೆ ಪೋಗಿ ತನ್ನ ಮಗ ಮದನಂಗೆ ಮುದ್ರೆಸಹಿತ=[ದುಷ್ಟಬುದ್ಧಿಯು ಚಂದ್ರಹಾಸನನ್ನು ಕರೆದು, ರಾಜ್ಯದವಿಚಾರದ ಕಾರ್ಯವು ಇದು, ಚಂದ್ರಹಾಸನೇ, ನೀನು ಒಬ್ಬನೆ ಕುದುರೆಯನ್ನು ಹತ್ತಿ ನಾಲ್ವರು ಸೇವಕರ ಜೊತೆಯಲ್ಲಿ ರಾಜಧಾನಿಗೆ ಹೋಗಿ ತನ್ನ ಮಗ ಮದನನಿಗೆ ಮುದ್ರೆಸಹಿತ ];; ಸರ್ವಜನಂ ಅರಿಯದಂತೆ ಈವುದು ಈ ಪತ್ರಿಕೆಯನು ಉರ್ವರೆಯೊಳು (ಭೂಮಿಯಲ್ಲಿ) ಆವು ಎಸಗಿದ ಅತಿಶಯದ ಮಾಳ್ಕೆ ನಮ್ಮಿರ್ವರೊಳ್ ಗುಪ್ತಮಾಗಿರಲಿ ಎಂದು ಕೊಟ್ಟನು ಆ ಮಂತ್ರಿ ತಲ್ಲೇಖನವನು=[ಯಾವ ಜನರಿಗೂ ಅರಿಯದಂತೆ ಈ ಪತ್ರಿಕೆಯನ್ನು ಕೊಡಬೇಕು. ಈ ಭೂಮಿಯಲ್ಲಿ ನಾವು ಮಾಡಿದ ಈ ಅತಿಶಯದ ಕಾರ್ಯ ನಮ್ಮಿಬ್ಬರಲ್ಲಿ ಗುಪ್ತವಾಗಿರಲಿ, ಎಂದು ಆ ಮಂತ್ರಿ ಆ ಲೇಖನವನ್ನು ಅವನಿಗೆ ಕೊಟ್ಟನು].
  • ತಾತ್ಪರ್ಯ:ದುಷ್ಟಬುದ್ಧಿಯು ಚಂದ್ರಹಾಸನನ್ನು ಕರೆದು, ರಾಜ್ಯದವಿಚಾರದ ಕಾರ್ಯವು ಇದು, ಚಂದ್ರಹಾಸನೇ, ನೀನು ಒಬ್ಬನೆ ಕುದುರೆಯನ್ನು ಹತ್ತಿ ನಾಲ್ವರು ಸೇವಕರ ಜೊತೆಯಲ್ಲಿ ರಾಜಧಾನಿಗೆ ಹೋಗಿ ತನ್ನ ಮಗ ಮದನನಿಗೆ ಮುದ್ರೆಸಹಿತ ಯಾವ ಜನರಿಗೂ ಅರಿಯದಂತೆ ಈ ಪತ್ರಿಕೆಯನ್ನು ಕೊಡಬೇಕು. ಈ ಭೂಮಿಯಲ್ಲಿ ನಾವು ಮಾಡಿದ ಈ ಅತಿಶಯದ ಕಾರ್ಯ ನಮ್ಮಿಬ್ಬರಲ್ಲಿ ಗುಪ್ತವಾಗಿರಲಿ, ಎಂದು ಆ ಮಂತ್ರಿ ಆ ಲೇಖನವನ್ನು ಅವನಿಗೆ ಕೊಟ್ಟನು.
  • (ಪದ್ಯ-೩೯)

ಪದ್ಯ:-:೪೦:[ಸಂಪಾದಿಸಿ]

ಪ್ರೀತಿಯಿಂ ಪೇಳ್ದನಂತಸ್ಥಮಂ ತನ್ನೊಳೀ |
ಮಾತು ನಿಶ್ಚಯವೆಂದು ನಂಬಿ ಕೈಕೊಂಡು ಹ |
ರ್ಷಾತಿಶಯದಿಂದೆ ಮಂತ್ರಿಗೆ ಮಣಿದು ಬೀಳ್ಕೊಂಡು ವಂದಿಸಿ ಕುಳಿಂದನಡಿಗೆ ||
ಆತನೊಳ್ ಪರಕೆವೆತ್ತೊಡನೆ ಕಳುಹಿಸಿಕೊಂಡು ||
ಮಾತೆ ಮೇಧಾವಿನಿಗೆ ಬಂದು ನಿರ್ಗಮವನಾ |
ಖ್ಯಾತಿಸಿ ಪದಾಂಬುಜಕೆ ಪಣೆಯಿಟ್ಟನಾ ಚಂದ್ರಹಾಸನಭ್ಯಗ್ರದಿಂದೆ ||40||

ಪದವಿಭಾಗ-ಅರ್ಥ:
ಪ್ರೀತಿಯಿಂ ಪೇಳ್ದನು ಅಂತಸ್ಥಮಂ ತನ್ನೊಳು ಈ ಮಾತು ನಿಶ್ಚಯವೆಂದು ನಂಬಿ ಕೈಕೊಂಡು ಹರ್ಷಾತಿಶಯದಿಂದೆ ಮಂತ್ರಿಗೆ ಮಣಿದು ಬೀಳ್ಕೊಂಡು ವಂದಿಸಿ ಕುಳಿಂದನಡಿಗೆ=[ರಾಜ್ಯದ ಪ್ರಧಾನಮಂತ್ರಿಯು ಪ್ರೀತಿಯಿಂದ ತನ್ನಲ್ಲಿ ಅಂತರಂಗ ವಿಷಯವನ್ನು ಹೇಳಿದನು, ಈ ಅವನ ಮಾತು ನಿಜವೆಂದು ನಂಬಿ ಆ ಕಾರ್ಯಕ್ಕೆ ಒಪ್ಪಿ, ಬಹಳ ಹರ್ಷದಿಂದ ಮಂತ್ರಿಗೆ ನಮಸ್ಕಾರ ಮಾಡಿ ಬೀಳ್ಕೊಂಡನು. ನಂತರ ಕುಳಿಂದನ ಪಾದಕ್ಕೆ ವಂದಿಸಿ];; ಆತನೊಳ್ ಪರಕೆವೆತ್ತು ಒಡನೆ ಕಳುಹಿಸಿಕೊಂಡು ಮಾತೆ ಮೇಧಾವಿನಿಗೆ ಬಂದು ನಿರ್ಗಮವನು ಆಖ್ಯಾತಿಸಿ ಪದಾಂಬುಜಕೆ ಪಣೆಯಿಟ್ಟನು ಆ ಚಂದ್ರಹಾಸನು ಅಭ್ಯಗ್ರದಿಂದೆ (ಅವಸರ,ವೇಗ,ಗಡಿಬಿಡಿ)=[ಆತನ ಹರಕೆ ಪಡೆದು, ಕೂಡಲೆ ತಾಯಿ ಕಳುಹಿಸಿಕೊಂಡು ಮೇಧಾವಿನಿ ಬಳಿಗೆ ಬಂದು ಹೋಗುತ್ತಿರುವ ವಿಷಯ ತಿಳಿಸಿ ಆ ಚಂದ್ರಹಾಸನು ಅವಸರದಲ್ಲಿ ಅವಳ ಕಾಲಿಗೆ ಹಣೆಯಿಟ್ಟನು.]
  • ತಾತ್ಪರ್ಯ: ರಾಜ್ಯದ ಪ್ರಧಾನಮಂತ್ರಿಯು ಪ್ರೀತಿಯಿಂದ ತನ್ನಲ್ಲಿ ಅಂತರಂಗ ವಿಷಯವನ್ನು ಹೇಳಿದನು, ಈ ಅವನ ಮಾತು ನಿಜವೆಂದು ನಂಬಿ ಆ ಕಾರ್ಯಕ್ಕೆ ಒಪ್ಪಿ, ಬಹಳ ಹರ್ಷದಿಂದ ಮಂತ್ರಿಗೆ ನಮಸ್ಕಾರ ಮಾಡಿ ಬೀಳ್ಕೊಂಡನು. ನಂತರ ಕುಳಿಂದನ ಪಾದಕ್ಕೆ ವಂದಿಸಿ, ಆತನ ಹರಕೆ ಪಡೆದು, ಕೂಡಲೆ ತಾಯಿ ಮೇಧಾವಿನಿ ಬಳಿಗೆ ಬಂದು ಹೋಗುತ್ತಿರುವ ವಿಷಯ ತಿಳಿಸಿ ಆ ಚಂದ್ರಹಾಸನು ಅವಸರದಲ್ಲಿ ಅವಳ ಕಾಲಿಗೆ ಹಣೆಯಿಟ್ಟನು.
  • (ಪದ್ಯ-೪೦)

ಪದ್ಯ:-:೪೧:[ಸಂಪಾದಿಸಿ]

ಆ ಸುದತಿ ಪಣಿವಿಡಿದು ನೆಗಪಿ ಸುಕುಮಾರಂಗೆ |
ಸೇಸೆದಳೆದಾರತಿಯನೆತ್ತಿ ತಿಲಕವನಿಟ್ಟು |
ಭಾಸುರ ಸುಲಾಜ ದಧಿ ದೂರ್ವಾಕ್ಷತೆಗಳೊಡನೆ ತಳಿಗೆದಂಬುಲವನಿತ್ತು ||
ಲೇಸೊದವಲಧ್ವದೊಳ್ ನಿನ್ನವಯವಂಗಳಂ |
ವಾಸುದೇವಂ ಕಾಯಲನುಕೂಲೆಯಾಗಿಹ ವ |
ಧೂ ಸಮನ್ವಿತನಾಗಿ ರಾಜ್ಯಮಂ ಪಡೆಯೆಂದು ಪರಸಿ ಬೀಳ್ಕೊಟ್ಟಳಂದು ||41||

ಪದವಿಭಾಗ-ಅರ್ಥ:
ಆ ಸುದತಿ ಪಣಿವಿಡಿದು ನೆಗಪಿ ಸುಕುಮಾರಂಗೆ ಸೇಸೆದಳೆದು, ಆರತಿಯನೆತ್ತಿ, ತಿಲಕವನಿಟ್ಟು, ಭಾಸುರ ಸುಲಾಜ ದಧಿ ದೂರ್ವಾಕ್ಷತೆಗಳೊಡನೆ ತಳಿಗೆದಂಬುಲವನು ಇತ್ತು,=[ಆ ಸುದತಿ ಮೇಧಾವಿನಿಯು, ಚಂದ್ರಹಾಸನನ್ನು ಹಣಿಹಿಡಿದು ಎತ್ತಿ ಸುಕುಮಾರನಿಗೆ ಸೇಸೆ ತಳೆದು, ಆರತಿಯನ್ನು ಎತ್ತಿ, ಹಣೆಗೆ ತಿಲಕವನಿಟ್ಟು, ಪ್ರಕಾಶಿಸುವ ಸು-ಅರಳು ಮೊಸರು, ದೂರ್ವಾಕ್ಷತೆಗಳ ಜೊತೆ ತಟ್ಟೆ ತಾಂಬೂಲವನ್ನು ಕೊಟ್ಟು,];; ಲೇಸು ಒದವಲಿ ಅಧ್ವದೊಳ್ ನಿನ್ನವಯವಂಗಳಂ ವಾಸುದೇವಂ ಕಾಯಲಿ ಅನುಕೂಲೆಯಾಗಿಹ ವಧೂ ಸಮನ್ವಿತನಾಗಿ ರಾಜ್ಯಮಂ ಪಡೆಯೆಂದು ಪರಸಿ ಬೀಳ್ಕೊಟ್ಟಳಂದು=[ ದಾರಿಯಲ್ಲಿ ಒಳ್ಳೆಯದಾಗಲಿ!, ನಿನ್ನ ಅವಯವಗಳನ್ನು ವಾಸುದೇವನು ಕಾಯಲಿ! ಅನುಕೂಲೆಯಾಗಿರುವ ಹೆಣ್ಣಿನ ಜೊತೆಗೂಡಿ ರಾಜ್ಯವನ್ನು ಪಡೆ! ಎಂದು ಹರಸಿ ಅವನ ತಾಯಿ ಅಂದು ಬೀಳ್ಕೊಟ್ಟಳು,]
  • &:(ಸೇಸೆ ಎಂಬ ದೃಷ್ಟಿಯ ಉಂಡೆಯನ್ನು ತಲೆಯ ಸುತ್ತ ಸುಳಿಯುವುದು)
  • ತಾತ್ಪರ್ಯ:ಆ ಸುದತಿ ಮೇಧಾವಿನಿಯು, ಚಂದ್ರಹಾಸನನ್ನು ಹಣಿಹಿಡಿದು ಎತ್ತಿ ಸುಕುಮಾರನಿಗೆ ಸೇಸೆ ತಳೆದು&, ಆರತಿಯನ್ನು ಎತ್ತಿ, ಹಣೆಗೆ ತಿಲಕವನಿಟ್ಟು, ಪ್ರಕಾಶಿಸುವ ಸು-ಅರಳು ಮೊಸರು, ದೂರ್ವಾಕ್ಷತೆಗಳ ಜೊತೆ ತಟ್ಟೆ ತಾಂಬೂಲವನ್ನು ಕೊಟ್ಟು, ದಾರಿಯಲ್ಲಿ ಒಳ್ಳೆಯದಾಗಲಿ!, ನಿನ್ನ ಅವಯವಗಳನ್ನು ವಾಸುದೇವನು ಕಾಯಲಿ! ಅನುಕೂಲೆಯಾಗಿರುವ ಹೆಣ್ಣಿನ ಜೊತೆಗೂಡಿ ರಾಜ್ಯವನ್ನು ಪಡೆ! ಎಂದು ಹರಸಿ ಅವನ ತಾಯಿ ಅಂದು ಬೀಳ್ಕೊಟ್ಟಳು,
  • (ಪದ್ಯ-೪೧)

ಪದ್ಯ:-:೪೨:[ಸಂಪಾದಿಸಿ]

ಕ್ರಮದಿಂದೆ ಮಾತೆಯಂ ಬೀಳ್ಕೊಂಡು ಪೊರಮಡುವ |
ಸಮಯದೊಳ್ ಚಂದ್ರಹಾಸಂ ಕಂಡನಿದಿರೆ ಕುಂ |
ಕುಮ ಸುರಂಜಿತ ಹರಿದ್ರಾಂಗದಿಂ ಕಂಗೊಳಿಪ ನೂತನ ವಧೂವರರನು ||
ಸಮ ಸದಾಕಾರದಿಂ ಬರುತಿರ್ದ ಭೂಸುರೋ |
ಸ್ತಮಯುಗವ ನೆಳಗರುವೆರಸಿ ಬರ್ಪ ಗೃಷ್ಟಿಯಂ |
ರಮಣೀಯ ಕುಸುಮ ಫಲಮಂಕೊಂಡುತನಗೀಯಲೈತಹ ವನಾಧಿಪರನು ||42||

ಪದವಿಭಾಗ-ಅರ್ಥ:
ಕ್ರಮದಿಂದೆ ಮಾತೆಯಂ ಬೀಳ್ಕೊಂಡು ಪೊರಮಡುವ ಸಮಯದೊಳ್ ಚಂದ್ರಹಾಸಂ ಕಂಡನು ಇದಿರೆ ಕುಂಕುಮ ಸುರಂಜಿತ ಹರಿದ್ರಾಂಗದಿಂ ಕಂಗೊಳಿಪ ನೂತನ ವಧೂವರರನು=[ಕ್ರಮವಾಗಿ ತಾಯಿಯನ್ನು ಬೀಳ್ಕೊಂಡು ಹೊರಡುವ ಸಮಯದಲ್ಲಿ ಚಂದ್ರಹಾಸನು ಎದುರಿನಲ್ಲಿ ಶೋಭಾಯಮಾನವಾಗಿ ಕುಂಕುಮ ಅರಿಶಿನ ಹಚ್ಚಿದ ದೇಹದಿಂದ ಕಂಗೊಳಿಸುವ ನೂತನ ವಧೂವರರನ್ನು ಕಂಡನು.];; ಸಮ ಸದಾಕಾರದಿಂ ಬರುತಿರ್ದ ಭೂಸುರೋಸ್ತಮ ಯುಗವನು ಎಳಗರುವೆರಸಿ ಬರ್ಪ ಗೃಷ್ಟಿಯಂ ರಮಣೀಯ ಕುಸುಮ ಫಲಮಂಕೊಂಡುತನಗೀಯಲೈತಹ ವನಾಧಿಪರನು=[ಸರಿಯಾದ ಧಾರ್ಮಿಕ ರೀತಿಯಲ್ಲಿ ವಿಭೂತಿ ತಿಲಕದಿಂದ ಕೂಡಿ ಬರುತಿರುವ ಇಬ್ಬರು ವಿಪ್ರರನ್ನು ಎಳೆ ಆಕಳಕರುವಿನ ಜೊತೆ ಬರುತ್ತಿರುವ ಹಸುವನ್ನೂ, ರಮಣೀಯವಾದ ಹೂವು ಹಣ್ಣು ತೆಗೆದುಕೊಂಡು ತನಗೆ ಕೊಡಲು ಬರುತ್ತಿರುವ ಬೇಡನಾಯಕರನ್ನು ಎದುರಿನಲ್ಲಿ ಕಂಡನು. ಹೀಗೆ ಅವನಿಗೆ ಶುಬ ಶಕುನಗಳಾದವು.].
  • ತಾತ್ಪರ್ಯ:ಕ್ರಮವಾಗಿ ತಾಯಿಯನ್ನು ಬೀಳ್ಕೊಂಡು ಹೊರಡುವ ಸಮಯದಲ್ಲಿ ಚಂದ್ರಹಾಸನು ಎದುರಿನಲ್ಲಿ ಶೋಭಾಯಮಾನವಾಗಿ ಕುಂಕುಮ ಅರಿಶಿನ ಹಚ್ಚಿದ ದೇಹದಿಂದ ಕಂಗೊಳಿಸುವ ನೂತನ ವಧೂವರರನ್ನು ಕಂಡನು. ಸರಿಯಾದ ಧಾರ್ಮಿಕ ರೀತಿಯಲ್ಲಿ ವಿಭೂತಿ ತಿಲಕದಿಂದ ಕೂಡಿ ಬರುತಿರುವ ಇಬ್ಬರು ವಿಪ್ರರನ್ನು ಎಳೆ ಆಕಳಕರುವಿನ ಜೊತೆ ಬರುತ್ತಿರುವ ಹಸುವನ್ನೂ, ರಮಣೀಯವಾದ ಹೂವು ಹಣ್ಣು ತೆಗೆದುಕೊಂಡು ತನಗೆ ಕೊಡಲು ಬರುತ್ತಿರುವ ಬೇಡನಾಯಕರನ್ನು ಎದುರಿನಲ್ಲಿ ಕಂಡನು. ಹೀಗೆ ಅವನಿಗೆ ಶುಬ ಶಕುನಗಳಾದವು.
  • (ಪದ್ಯ-೪೨)

ಪದ್ಯ:-:೪೩:[ಸಂಪಾದಿಸಿ]

ಸೂಡಿದಂ ಪರಿಪರಿಯೊಳೆಸೆವ ಕುಸುಮಂಗಳಿಂ |
ಮಾಡಿದ ಸುಮೌಳಿಯಂ ತಲೆಗೊರ್ವನೊರ್ವನೆಡೆ |
ಗೂಡಿ ಸೇರಿಸಿ ಕಟ್ಟಿದಚ್ಚ ಸಂಪಗೆಯ ಮಾಲೆಯನಿಕ್ಕಿದಂ ಕೊರಳ್ಗೆ ||
ನೀಡಿದಂ ಮತ್ತೊರ್ವನೊಪ್ಪುವ ಕರಾಂಬುಜಕೆ |
ದಾಡಿಮದ ಫಲವನಿವನೆಲ್ಲಮಂ ಕೈಕೊಂಡು |
ಗಾಡಿ ಮಿಗೆ ಮೆರೆವ ನವ ವರನಂತೆ ಪೊರಮಟ್ಟನಾ ಚಂದ್ರಹಾಸನಂದು ||43||

ಪದವಿಭಾಗ-ಅರ್ಥ:
ಸೂಡಿದಂ ಪರಿಪರಿಯೊಳು ಎಸೆವ ಕುಸುಮಂಗಳಿಂ ಮಾಡಿದ ಸುಮೌಳಿಯಂ ತಲೆಗೆ ಓರ್ವನು ಓರ್ವನು ಎಡೆಗೂಡಿ ಸೇರಿಸಿ ಕಟ್ಟಿದಚ್ಚ ಸಂಪಗೆಯ ಮಾಲೆಯನಿಕ್ಕಿದಂ ಕೊರಳ್ಗೆ=[ ನಾನಾವಿಧದಿಂದ ಮಾಡಿದ ಶೋಭಿಸುವ ಹೂವುಗಳನ್ನು ಸೂಡಿದನು; ಮಾಡಿದ ಹೂವಿನಕುಚ್ಚನ್ನು ತಲೆಗೆ ಓರ್ವನು ಹಾಕಿದನು, ಓರ್ವನು ಎಲ್ಲಾಸೇರಿಸಿ ಕಟ್ಟಿದ ಹೊಸಸಂಪಗೆಯ ಮಾಲೆಯನ್ನು ಕೊರಳಿಗೆ ಹಾಕಿದನು,];;ನೀಡಿದಂ ಮತ್ತೊರ್ವನು ಒಪ್ಪುವ ಕರಾಂಬುಜಕೆ ದಾಡಿಮದ ಫಲವನು ಇವನು ಎಲ್ಲಮಂ ಕೈಕೊಂಡು ಗಾಡಿ ಮಿಗೆ ಮೆರೆವ ನವ ವರನಂತೆ ಪೊರಮಟ್ಟನಾ ಚಂದ್ರಹಾಸನಂದು =[ಮತ್ತೊರ್ವನು ಒಪ್ಪುವ ಕೈಗೆ ದಾಡಿಮದ ಹಣ್ಣನ್ನು ನೀಡಿದನು; ಇವನು ಎಲ್ಲವನ್ನೂ ತೆಗೆದುಕೊಂಡು ಅವನ ಶೋಭೆ ಹೆಚ್ಚಲು ಪ್ರಕಾಶಿಸುವ ನವ ವರನಂತೆ ಅಂದು ಆ ಚಂದ್ರಹಾಸನು ಹೊರಹೊರಟನು].
  • ತಾತ್ಪರ್ಯ: ನಾನಾವಿಧದಿಂದ ಮಾಡಿದ ಶೋಭಿಸುವ ಹೂವುಗಳನ್ನು ಸೂಡಿದನು; ಮಾಡಿದ ಹೂವಿನ ಕುಚ್ಚನ್ನು ತಲೆಗೆ ಓರ್ವನು ಹಾಕಿದನು, ಓರ್ವನು ಎಲ್ಲಾಸೇರಿಸಿ ಕಟ್ಟಿದ ಹೊಸಸಂಪಗೆಯ ಮಾಲೆಯನ್ನು ಕೊರಳಿಗೆ ಹಾಕಿದನು, ಮತ್ತೊರ್ವನು ಒಪ್ಪುವ ಕೈಗೆ ದಾಡಿಮದ ಹಣ್ಣನ್ನು ನೀಡಿದನು; ಇವನು ಎಲ್ಲವನ್ನೂ ತೆಗೆದುಕೊಂಡು ಅವನ ಶೋಭೆ ಹೆಚ್ಚಲು ಪ್ರಕಾಶಿಸುವ ನವ ವರನಂತೆ ಅಂದು ಆ ಚಂದ್ರಹಾಸನು ಹೊರಹೊರಟನು].
  • (ಪದ್ಯ-೪೩)

ಪದ್ಯ:-:೪೪:[ಸಂಪಾದಿಸಿ]

ಹಯವರ ಸಮಾರೂಢನಾಗಿ ಸೇವಕ ಚತು |
ಷ್ಧಯದೊಡನೆ ಸೂಚಿತ ಶುಭೋದಯದ ಶಕುನಾವ |
ಳೀಯನಾಲಿಸುತ ಬಟ್ಟೆವಿಡಿದು ಕುಂತಳಪುರದ ಬಾಹ್ಯೋಪವನಕೆ ಬರಲು ||
ನಯಸರದ ಕೋಗಿಲಯ ಸಾದರದ ನುಡಿಯೊಳತಿ |
ಶಯ ಫಲೋತ್ಕರದ ತರು ಶಾಖೆಗಳ ಕೈಗಾಣೆ |
ಕೆಯೊಳಿದಿರ್ಗೊಳ್ವವೊಲಾ ವನಂ ಚಂದ್ರಹಾಸನ ಮುಂದೆ ಕಣ್ಗೆಸೆದುದು ||44||

ಪದವಿಭಾಗ-ಅರ್ಥ:
ಹಯವರ (ವರ ಹಯ)ಸಮಾರೂಢನಾಗಿ ಸೇವಕ ಚತುಷ್ಧಯದೊಡನೆ ಸೂಚಿತ ಶುಭೋದಯದ ಶಕುನಾವಳೀಯನು ಆಲಿಸುತ ಬಟ್ಟೆವಿಡಿದು (ಬಟ್ಟೆ:ದಾರಿ ಹಿಡಿದು) ಕುಂತಳಪುರದ ಬಾಹ್ಯೋಪವನಕೆ ಬರಲು=[ಉತ್ತಮ ಕುದುರೆಯನ್ನು ಏರಿ ನಾಲ್ಕು ಸೇವಕರೊಡನೆ, ಕಾಣುತ್ತರುವ ಶುಭವನ್ನು ಕೊಡುವ ಶಕುನಗಳನ್ನು ನೋಡುತ್ತ/ಕೇಳುತ್ತಾ ದಾರಿಹಿಡಿದು ಕುಂತಳಪುರದ ಹೊರವಲಯದ ಉಪವನಕ್ಕೆ ಬರಲು];; ನಯಸರದ ಕೋಗಿಲಯ ಸಾದರದ ನುಡಿಯೊಳು ಅತಿಶಯ ಫಲೋತ್ಕರದ ತರು ಶಾಖೆಗಳ ಕೈಗಾಣೆಕೆಯೊಳು ಇದಿರ್ಗೊಳ್ವವೊಲು ಆ ವನಂ ಚಂದ್ರಹಾಸನ ಮುಂದೆ ಕಣ್ಗೆಸೆದುದು=[ಇಂಪಾದದನಿಯ ಕೋಗಿಲಯ ಸ್ವಾಗತದ ಕೂಗಿನ ಜೊತೆ, ಬಹಳ ಹಣ್ಣುಗಳಿಂದ ತುಂಬಿದ ಮರ ಗಿಡಗಳು, ಕೊಂಬೆಗಳು ಕೈಗಾಣೆಕೆ/ಕೈಚಾಚಿ ಕಾಣಿಕೆಕೊಟ್ಟು ಸ್ವಾಗತ/ಇದಿರುಗೊಳ್ಳುವಂತೆ ಆ ಉದ್ಯಾನವನವು ಚಂದ್ರಹಾಸನ ಮುಂದೆ ಕಣ್ಗಿಗೆ ಶೋಬಾಯಮಾನವಾಗಿ ಕಂಡಿತು.]
  • ತಾತ್ಪರ್ಯ:ಉತ್ತಮ ಕುದುರೆಯನ್ನು ಏರಿ ನಾಲ್ಕು ಸೇವಕರೊಡನೆ, ಕಾಣುತ್ತರುವ ಶುಭವನ್ನು ಕೊಡುವ ಶಕುನಗಳನ್ನು ನೋಡುತ್ತ/ಕೇಳುತ್ತಾ ದಾರಿಹಿಡಿದು ಕುಂತಳಪುರದ ಹೊರವಲಯದ ಉಪವನಕ್ಕೆ ಬರಲು ಇಂಪಾದದನಿಯ ಕೋಗಿಲಯ ಸ್ವಾಗತದ ಕೂಗಿನ ಜೊತೆ, ಬಹಳ ಹಣ್ಣುಗಳಿಂದ ತುಂಬಿದ ಮರ ಗಿಡಗಳು, ಕೊಂಬೆಗಳು ಕೈಗಾಣೆಕೆ/ಕೈಚಾಚಿ ಕಾಣಿಕೆಕೊಟ್ಟು ಸ್ವಾಗತಮಾಡುವಂತೆ/ಇದಿರುಗೊಳ್ಳುವಂತೆ ಆ ಉದ್ಯಾನವನವು ಚಂದ್ರಹಾಸನ ಮುಂದೆ ಕಣ್ಗಿಗೆ ಶೋಬಾಯಮಾನವಾಗಿ ಕಂಡಿತು.]
  • (ಪದ್ಯ-೪೪)

ಪದ್ಯ:-:೪೫:[ಸಂಪಾದಿಸಿ]

ತಳಿರ್ದುರುಗಿದೆಳೆಮಾವುಗಳ ನೆಳಲ್ ಕವಿದ ನಿ |
ರ್ಮಲ ಪುಳಿನ ತಳದಿಂ ತೊಡೆರ್ದಡರ್ದಲರ್ವಳ್ಳಿ |
ಗಳ ಮಂಟಪಂಗಳಿಂ ವಿವಿಧ ಮಣಿಮಯ ಕೃತಕ ಗಿರಿ ಕಂದರಂಗಳಿಂದೆ ||
ತೊಳೆಪ ರನ್ನದ ಪಾಸರೆಗಳಿಂದೆ ರಂಜಿಸುವ |
ನಳಿನೋತ್ಪಲ ಪ್ರಕರ ಶೋಭಿತ ಸರೋವರಂ |
ಗಳ ರಮ್ಯಸೋಪಾನದಿಂದೆ ತದ್ರಾಜ ಕೇಳೀವನಂ ಕಣ್ಗೆಸೆದುದು ||45||

ಪದವಿಭಾಗ-ಅರ್ಥ:
ತಳಿರ್ದು ಉರುಗಿದ (ಬಾಗು) ಎಳೆಮಾವುಗಳ ನೆಳಲ್ ಕವಿದ ನಿರ್ಮಲ ಪುಳಿನ ತಳದಿಂ ತೊಡೆರ್ದ ಅಡರ್ದ ಅಲರ್ವಳ್ಳಿಗಳ ಮಂಟಪಂಗಳಿಂ ವಿವಿಧ ಮಣಿಮಯ ಕೃತಕ ಗಿರಿ ಕಂದರಂಗಳಿಂದೆ=[ಚಿಗುರಿದ ಎಲೆಗಳ ಬಾಗಿದ ಎಳೆಮಾವುಗಳ ನೆಳಲು ಕವಿದ ನಿರ್ಮಲ ಮರಳಿನ ನಲದ, ಒಂದಕ್ಕೊಂದು ತೊಡರಿಕೊಂಡು ಹಬ್ಬಿರುವ ಹೂವಿನ ಬಳ್ಳಿಗಳ ಮಂಟಪಂಗಳಿಂದ, ನಾನಾಬಗೆಯ ಮಣಿಮಯ ಕೃತಕವಾದ ಗುಡ್ಡ ಕಣಿವೆ ಕೊಳ್ಳಗಳಿಂದ,];; ತೊಳೆಪ ರನ್ನದ ಪಾಸರೆಗಳಿಂದೆ ರಂಜಿಸುವ ನಳಿನೋತ್ಪಲ ಪ್ರಕರ ಶೋಭಿತ ಸರೋವರಂಗಳ ರಮ್ಯಸೋಪಾನದಿಂದೆ ತದ್ರಾಜ ಕೇಳೀವನಂ ಕಣ್ಗೆಸೆದುದು=[ಶೋಭಿಸುವ ರತ್ನಮಯವಾದ ಚಪ್ಪಡಿಕಲ್ಲುಗಳಿಂದೆ ರಮಣೀಯವಾದ ಕಮಲ ನೈದಿಲೆಗಳ ದಂಟುಗಳಿಂದ ಶೋಭಿಸುವ ಸರೋವರಗಳನ್ನು ಹೊಂದಿ ಸುಂದರ ಮಟ್ಟಿಲುಗಳಿಂದ ಆ ರಾಜವಿಹಾರವನವು ಚಂದ್ರಹಾಸನ ಕಣ್ಗಿಗೆ ಗೋಚರಿಸಿತು.]
  • ತಾತ್ಪರ್ಯ:ಚಿಗುರಿದ ಎಲೆಗಳ ಬಾಗಿದ ಎಳೆಮಾವುಗಳ ನೆಳಲು ಕವಿದ ನಿರ್ಮಲ ಮರಳಿನ ನಲದ, ಒಂದಕ್ಕೊಂದು ತೊಡರಿಕೊಂಡು ಹಬ್ಬಿರುವ ಹೂವಿನ ಬಳ್ಳಿಗಳ ಮಂಟಪಂಗಳಿಂದ, ನಾನಾಬಗೆಯ ಮಣಿಮಯ ಕೃತಕವಾದ ಗುಡ್ಡ ಕಣಿವೆ ಕೊಳ್ಳಗಳಿಂದ,ಶೋಭಿಸುವ ರತ್ನಮಯವಾದ ಚಪ್ಪಡಿಕಲ್ಲುಗಳಿಂದೆ ರಮಣೀಯವಾದ ಕಮಲ ನೈದಿಲೆಗಳ ದಂಟುಗಳಿಂದ ಶೋಭಿಸುವ ಸರೋವರಗಳನ್ನು ಹೊಂದಿ ಸುಂದರ ಮಟ್ಟಿಲುಗಳಿಂದ ಆ ರಾಜವಿಹಾರವನವು ಚಂದ್ರಹಾಸನ ಕಣ್ಗಿಗೆ ಗೋಚರಿಸಿತು.
  • (ಪದ್ಯ-೪೫)XIV-XII

ಪದ್ಯ:-:೪೬:[ಸಂಪಾದಿಸಿ]

ಸರಸಿಯೊಳ್ ನಲಿದಾಡುವಂಚೆಗಳ ಕೊಂಚೆಗಳ |
ಬೆರಸಿ ರಮಿಸುವ ಕುಣಿವ ಕೋಕಿಗಳ ಕೇಕಿಗಳ |
ನೆರೆನೆರೆದು ಮೊರೆವ ಮರಿದುಂಬಿಗಳ ದೊಂಬಿಗಳ ಚೀರ್ವ ಗಿಳಿ ಕೋಗಿಲೆಗಳ ||
ತರುಲತೆಯ ತುರುಗಲ ರಸಾಲ ಪ್ರವಾಳ ಪ್ರ |
ಕರದ ಶೋಭೆಗಳ ಕುಸುಮಾಳಿಗಳ ಗಾಳಿಗಳ |
ಪರಿಮಳದ ಮನಕಿಂಪನೊಗೆಯಿಸುವ ರಾಜೋಪವನಮೆಸೆದುದು ||46||

ಪದವಿಭಾಗ-ಅರ್ಥ:
ಸರಸಿಯೊಳ್ ನಲಿದಾಡುವ ಅಂಚೆಗಳ ಕೊಂಚೆಗಳ ಬೆರಸಿ ರಮಿಸುವ ಕುಣಿವ ಕೋಕಿಗಳ ಕೇಕಿಗಳ ನೆರೆನೆರೆದು ಮೊರೆವ ಮರಿದುಂಬಿಗಳ ದೊಂಬಿಗಳ ಚೀರ್ವ ಗಿಳಿ ಕೋಗಿಲೆಗಳ=[ಆ ವನದಲ್ಲಿ ಸರೋವರದಲ್ಲಿ ನಲಿದಾಡುವ ಹಂಸಗಳು, ಕ್ರೌಂಚಗಳು ಒಂದರೊಡನೆ ಮತ್ತೊಂದು ಸೇರಿ ರಮಿಸುವ, ಕುಣಿವ, ಕೋಗಿಲೆಗಳು, ನವಿಲುಗಳು, ನೆರೆನೆರೆದು/ಒಟ್ಟಾಗಿ ಸೇರಿ ಗುಂಪಿನಲ್ಲಿ ಮೊರೆವ ಮರಿದುಂಬಿಗಳು, ಗುಂಪಾಗಿ ಕೂಗುವ ಗಿಳಿ ಕೋಗಿಲೆಗಳು ಅಲ್ಲಿ ಕಂಡವು.];; ತರುಲತೆಯ ತುರುಗಲ ರಸಾಲ ಪ್ರವಾಳ ಪ್ರಕರದ ಶೋಭೆಗಳ ಕುಸುಮಾಳಿಗಳ ಗಾಳಿಗಳ ಪರಿಮಳದ ಮನಕಿಂಪನೊಗೆಯಿಸುವ ರಾಜೋಪವನಮೆಸೆದುದು=[ಮರಬಳ್ಳಿಗಳ ತುಂಬಿದ್ದವು, ಸಿಹಿಮಾವಿನ ಮರದ ಚಿಗುರು ತುಂಬಿದ ಶೋಭೆಯಿಂದ ಬಹಳಬಗೆಯ ಹೂವುಗಳ ಪರಿಮಳದ ಗಾಳಿಗಳು ಬೀಸುತ್ತಿತ್ತು. ಹೀಗೆ ಮನಸ್ಸಿಗೆ ಇಂಪನ್ನು ಕೊಡುವ ರಾಜ ಉಪವನವು ಕಂಗೊಳಿಸಿತು].
  • ತಾತ್ಪರ್ಯ:ಆ ವನದಲ್ಲಿ ಸರೋವರದಲ್ಲಿ ನಲಿದಾಡುವ ಹಂಸಗಳು, ಕ್ರೌಂಚಗಳು ಒಂದರೊಡನೆ ಮತ್ತೊಂದು ಸೇರಿ ರಮಿಸುವ, ಕುಣಿವ, ಕೋಗಿಲೆಗಳು, ನವಿಲುಗಳು, ನೆರೆನೆರೆದು/ಒಟ್ಟಾಗಿ ಸೇರಿ ಗುಂಪಿನಲ್ಲಿ ಮೊರೆವ ಮರಿದುಂಬಿಗಳು, ಗುಂಪಾಗಿ ಕೂಗುವ ಗಿಳಿ ಕೋಗಿಲೆಗಳು ಅಲ್ಲಿ ಕಂಡವು. ಮರಬಳ್ಳಿಗಳ ತುಂಬಿದ್ದವು, ಸಿಹಿಮಾವಿನ ಮರದ ಚಿಗುರು ತುಂಬಿದ ಶೋಭೆಯಿಂದ ಬಹಳಬಗೆಯ ಹೂವುಗಳ ಪರಿಮಳದ ಗಾಳಿಗಳು ಬೀಸುತ್ತಿತ್ತು. ಹೀಗೆ ಮನಸ್ಸಿಗೆ ಇಂಪನ್ನು ಕೊಡುವ ರಾಜ ಉಪವನವು ಕಂಗೊಳಿಸಿತು.
  • (ಪ್ರಕರ:ಕಾಂಡ ಹೆಸರುಪದ(ಸಂ) ೧ ದಂಟು, ದೇಟು, ತಾಳು ೨ ಮರದ ಕೆಳಭಾಗ ೩ ಅಧ್ಯಾಯ, ಪ್ರಕರಣ ೪ ಬಾಣ, ಶರ)
  • (ಪದ್ಯ-೪೬)

ಪದ್ಯ:-:೪೭:[ಸಂಪಾದಿಸಿ]

ಹೃದ್ಯಮಾಗಿಹ ಶೈತ್ಯ ಸೌರಭ್ಯ ಮಾಂದ್ಯದಿಂ |
ದುದ್ಯಾನ ಮಾರುತಂ ಬೀಸಿ ಮಾರ್ಗಶ್ರಮಂ |
ಸದ್ಯಃ ಪ್ರಶಮನಮಗಲ್ಕೆ ಹರ್ಷದೊಳಲ್ಲಿ ಕೃಷ್ಣನಂ ಪೂಜೆಗೈವ ||
ಉದ್ಯೋಗದಿಂದಿಳಿದು ತಣ್ಣೆಳಲ ತರುಮೂಲ |
ಕುದ್ಯುತ್ತುರಂಗಮಂ ನೀರ್ಗುಡಿಸಿ ಕಟ್ಟಿ ನಿರ |
ವದ್ಯ ಗುಣನಿಧಿ ಚಂದ್ರಹಾಸನೆಳವುಲ್ಗಳಂ ತಿರಿತರಿಸಿ ಮುಂದಿಟ್ಟನು ||47||

ಪದವಿಭಾಗ-ಅರ್ಥ:
ಹೃದ್ಯಮ್ ಆಗಿಹ ಶೈತ್ಯ ಸೌರಭ್ಯ ಮಾಂದ್ಯದಿಂದ ಉದ್ಯಾನ ಮಾರುತಂ ಬೀಸಿ ಮಾರ್ಗಶ್ರಮಂ ಸದ್ಯಃ ಪ್ರಶಮನಂ ಆಗಲ್ಕೆ ಹರ್ಷದೊಳ್ ಅಲ್ಲಿ ಕೃಷ್ಣನಂ ಪೂಜೆಗೈವ=[ಮನಸ್ಸಿಗೆ ಸಂತಸಕೊಡುವ ತಂಪಿನ ಮತ್ತು ಸುವಾಸನೆಯ ಉದ್ಯಾನವನದ ಮಂದಮಾರುತವು ಬೀಸಿ ಮಾರ್ಗಶ್ರಮವು ಆಗ ಶಮನವಾಗಲು, ಹರ್ಷದಿಂದ ಅಲ್ಲಿ ಕೃಷ್ಣನನ್ನು ಪೂಜೆಮಾಡವ];; ಉದ್ಯೋಗದಿಂದ ಇಳಿದು ತಣ್ ನೆಳಲ ತರುಮೂಲಕೆ ಉದ್ಯುತ್ ತುರಂಗಮಂ ನೀರ್ ಕುಡಿಸಿ ಕಟ್ಟಿ ನಿರವದ್ಯ ಗುಣನಿಧಿ ಚಂದ್ರಹಾಸನು ಎಳವುಲ್ಗಳಂ ತಿರಿತರಿಸಿ ಮುಂದಿಟ್ಟನು=[ಕಾರ್ಯಕ್ಕಾಗಿ ಇಳಿದು, ಸುಂದರವಾಗಿ ಪ್ರಕಾಶಿಸುವ ಕುದುರೆಗೆ ನೀರು ಕುಡಿಸಿ, ತಂಪು ನೆಳಲಿರುವ ಮರದ ಬುಡಕ್ಕೆ ಕಟ್ಟಿ, ದೋಷರಹಿತನಾದ ಗುಣನಿಧಿ ಚಂದ್ರಹಾಸನು ಎಳೆಹುಲ್ಲನ್ನು ಕೊಯಿದುತರಿಸಿ ಅದರ ಮುಂದಿಟ್ಟನು].
  • (ತಿರಿ: ಎಸಕಪದ(ದೇ) ೧ ಸುತ್ತಾಡು, ತಿರುಗಾಡು, ಅಲೆ ೨ ಭಿಕ್ಷೆ ಬೇಡು ಯಾಚಿಸು ೩ (ಹೂವು, ಹಣ್ಣು ಮೊ.ವನ್ನು) ಕೀಳು, ಕೊಯ್ಯು ೪ ಎಸೆ,)
  • ತಾತ್ಪರ್ಯ:ಮನಸ್ಸಿಗೆ ಸಂತಸಕೊಡುವ ತಂಪಿನ ಮತ್ತು ಸುವಾಸನೆಯ ಉದ್ಯಾನವನದ ಮಂದಮಾರುತವು ಬೀಸಿ ಮಾರ್ಗಶ್ರಮವು ಆಗ ಶಮನವಾಗಲು, ಹರ್ಷದಿಂದ ಅಲ್ಲಿ ಕೃಷ್ಣನನ್ನು ಪೂಜೆಮಾಡವ ಕಾರ್ಯಕ್ಕಾಗಿ ಇಳಿದು, ಸುಂದರವಾಗಿ ಪ್ರಕಾಶಿಸುವ ಕುದುರೆಗೆ ನೀರು ಕುಡಿಸಿ, ತಂಪು ನೆಳಲಿರುವ ಮರದ ಬುಡಕ್ಕೆ ಕಟ್ಟಿ, ದೋಷರಹಿತನಾದ ಗುಣನಿಧಿ ಚಂದ್ರಹಾಸನು ಎಳೆಹುಲ್ಲನ್ನು ಕೊಯಿದುತರಿಸಿ ಅದರ ಮುಂದಿಟ್ಟನು.
  • (ಪದ್ಯ-೪೭)

ಪದ್ಯ:-:೪೮:[ಸಂಪಾದಿಸಿ]

ತೇಜಿಯಂ ಕಟ್ಟಿದೆಡೆಯೊಳ್ ಸೇವಕರನಿರಿಸಿ |
ರಾಜವನದೊಳ್ ಪೊಕ್ಕು ಶಶಿಹಾಸನಲ್ಲಿ ವಿ |
ಭ್ರಾಜಿಸುವ ನಿರ್ಮಲಸರಸ್ತೀರದೊಳ್‍ಮಿಂದು ಶುಚಿಯಾಗಿ ಸುಸ್ಥಳದೊಳು ||
ರಾಜೀವಮಾದಿಯಾದಲರ್ಗಳಂ ತಿರಿದು ಹರಿ |
ಪೂಜೆಯಂ ಮಾಡಿ ತಾಂ ತಂದ ಪಾಥೇಯಮಂ |
ಭೋಜನಂಗೈದು ವಿಶ್ರಮನಾಗಿ ತಳಿತ ಮಾಮರನ ನೆಳಲಂ ಸಾರ್ಧನು ||48||

ಪದವಿಭಾಗ-ಅರ್ಥ:
ತೇಜಿಯಂ ಕಟ್ಟಿದೆಡೆಯೊಳ್ ಸೇವಕರನು ಇರಿಸಿ ರಾಜವನದೊಳ್ ಪೊಕ್ಕು ಶಶಿಹಾಸನು ಅಲ್ಲಿ ವಿಭ್ರಾಜಿಸುವ ನಿರ್ಮಲ ಸರಸ್ತೀರದೊಳ್‍ಮಿಂದು ಶುಚಿಯಾಗಿ ಸುಸ್ಥಳದೊಳು=[ಕುದುರೆಯನ್ನು ಕಟ್ಟಿದ ಕಡೆ ಸೇವಕರನ್ನು ಕಾವಲಿಗೆ ಇಟ್ಟು, ರಾಜವನದಲ್ಲಿ ಪ್ರವೇಶಿಸಿ ಚಂದ್ರಹಾಸನು ಅಲ್ಲಿ ಶೋಭಿಸುವ ನಿರ್ಮಲ ಸರಸ್ಸಿನ ದಡದಲ್ಲಿ ಮಿಂದು ಶುಚಿಯಾಗಿ ಉತ್ತಮ ಸ್ಥಳದಲ್ಲಿ];; ರಾಜೀವಂ ಆದಿಯಾದ ಅಲರ್ಗಳಂ ತಿರಿದು ಹರಿಪೂಜೆಯಂ ಮಾಡಿ ತಾಂ ತಂದ ಪಾಥೇಯಮಂ ಭೋಜನಂ ಗೈದು ವಿಶ್ರಮನಾಗಿ ತಳಿತ ಮಾಮರನ ನೆಳಲಂ ಸಾರ್ಧನು=[ಕಮಲವೇ ಮೊದಲಾದ ಹೂವುಗಳನ್ನು ಕೊಯಿದು ಹರಿಪೂಜೆಯನ್ನು ಮಾಡಿದನು. ತಾನು ತಂದ ದಾರಿಬುತ್ತಿಯನ್ನು ಭೋಜನಮಾಡಿದನು. ನಂತರ ವಿಶ್ರಂತಿಗಾಗಿ ಚಿಗುರಿದ ಮಾವಿನಮರದ ನೆರಳನ್ನು ಸೇರಿದನು].
  • ತಾತ್ಪರ್ಯ:ಚಂದ್ರಹಾಸನು ಕುದುರೆಯನ್ನು ಕಟ್ಟಿದ ಕಡೆ ಸೇವಕರನ್ನು ಕಾವಲಿಗೆ ಇಟ್ಟು, ರಾಜವನದಲ್ಲಿ ಪ್ರವೇಶಿಸಿ ಚಂದ್ರಹಾಸನು ಅಲ್ಲಿ ಶೋಭಿಸುವ ನಿರ್ಮಲ ಸರಸ್ಸಿನ ದಡದಲ್ಲಿ ಮಿಂದು ಶುಚಿಯಾಗಿ ಉತ್ತಮ ಸ್ಥಳದಲ್ಲಿ ಕಮಲವೇ ಮೊದಲಾದ ಹೂವುಗಳನ್ನು ಕೊಯಿದು ಹರಿಪೂಜೆಯನ್ನು ಮಾಡಿದನು. ತಾನು ತಂದ ದಾರಿಬುತ್ತಿಯನ್ನು ಭೋಜನಮಾಡಿದನು. ನಂತರ ವಿಶ್ರಾಂತಿಗಾಗಿ ಚಿಗುರಿದ ಮಾವಿನಮರದ ನೆರಳನ್ನು ಸೇರಿದನು.
  • (ಪದ್ಯ-೪೮)

ಪದ್ಯ:-:೪೯:[ಸಂಪಾದಿಸಿ]

ತಿರಿದೆಳೆದಳಿರ್ಗಳಂ ಪಾಸಿ ಕುಳ್ಳಿರ್ದೊಯ್ಯ |
ನೊರಗಲ್ಕೆ ನಡುವಗಲ ಬಿಸಿಲಿಂದೆ ಮಾರ್ಗದೊಳ್ |
ನೆರೆ ಬಳಲ್ದಿಹಚಂದ್ರಹಾಸಂಗೆ ತಣ್ಣೆಲರ ಸೊಗಸಿಂದ ಕಣ್ಣಿವೆಗಳು ||
ಸೆರೆಗೊಂಡುವಾಲಿಗಳನಾತ್ಮೀಯ ಕೃತ್ಯಮಂ |
ಮರೆದು ನಿದ್ರಾಲೋಲನಾಗಿ ಮಲಗಿದವನಂ |
ಮಿರುಗುವಹಿತಲ್ಪದೊಳ್ ದೇವಪುರನಿ ಲಯಲಕ್ಷ್ಮೀವರಂ ಪವಡಿಪವೊಲು ||49||

ಪದವಿಭಾಗ-ಅರ್ಥ:
ತಿರಿದು ಎಳೆ ತಳಿರ್ಗಳಂ ಪಾಸಿ ಕುಳ್ಳಿರ್ದು ಒಯ್ಯನೆ ಒರಗಲ್ಕೆ ನಡುವಗಲ ಬಿಸಿಲಿಂದೆ ಮಾರ್ಗದೊಳ್ ನೆರೆ ಬಳಲ್ದಿಹ ಚಂದ್ರಹಾಸಂಗೆ ತಣ್ಣೆಲರ ಸೊಗಸಿಂದ ಕಣ್ಣಿವೆಗಳು=[ಚಂದ್ರಹಾಸನು, ಕಿತ್ತು ಎಳೆಯ ಎಲೆಗಳನ್ನು, ಅವನ್ನು ಹಾಸಿ ಕುಳಿತು, ಮೆಲ್ಲನೆ ಒರಗಲು, ನಡುಹಗಲ ಬಿಸಿಲಿನಿಂದ ಬರುವ ದಾರಿಯಲ್ಲಿ ಬಹಳ ಬಳಲಿದ ಚಂದ್ರಹಾಸನಿಗೆ ತಂಪಿನಗಾಳಿಯ ಸೊಗಸಿನಿಂದ ಕಣ್ಣಿವೆಗಳು/ರೆಪ್ಪೆಗಳು];; ಸೆರೆಗೊಂಡುವು ಆಲಿಗಳನು ಆತ್ಮೀಯ ಕೃತ್ಯಮಂ ಮರೆದು ನಿದ್ರಾಲೋಲನಾಗಿ ಮಲಗಿದವನಂ ಮಿರುಗುವ ಅಹಿತಲ್ಪದೊಳ್ ದೇವಪುರನಿ ಲಯಲಕ್ಷ್ಮೀವರಂ ಪವಡಿಪವೊಲು=[ಕಣ್ಣನ್ನು ಮುಚ್ಚಿದವು, ತನ್ನು ಕರ್ತವ್ಯವನ್ನು ಮರೆತು ಅವನು ನಿದ್ರಾಲೋಲನಾಗಿ ಮಲಗಿದನು ಮಿರುಗುವ ಅಹಿತಲ್ಪದೊಳ್ ದೇವಪುರನಿ ಲಯಲಕ್ಷ್ಮೀವರಂ ಪವಡಿಪವೊಲು].
  • ತಾತ್ಪರ್ಯ:ಚಂದ್ರಹಾಸನು, ಎಳೆಯ ಎಲೆಗಳನ್ನು ಕಿತ್ತು, ಅವನ್ನು ಹಾಸಿ ಕುಳಿತು, ಮೆಲ್ಲನೆ ಒರಗಲು, ನಡುಹಗಲ ಬಿಸಿಲಿನಿಂದ ಬರುವ ದಾರಿಯಲ್ಲಿ ಬಹಳ ಬಳಲಿದ ಚಂದ್ರಹಾಸನಿಗೆ ತಂಪಿನಗಾಳಿಯ ಸೊಗಸಿನಿಂದ ಕಣ್ಣಿವೆಗಳು/ರೆಪ್ಪೆಗಳು ಕಣ್ಣನ್ನು ಮುಚ್ಚಿದವು, ತನ್ನು ಕರ್ತವ್ಯವನ್ನು ಮರೆತು ಅವನು ನಿದ್ರಾಲೋಲನಾಗಿ ಮಲಗಿದನು. ಹೇಗೆಂದರೆ ಮಿರುಗುವ ಸರ್ಪದ ಹಾಸಿಗೆಯಲ್ಲಿ ದೇವಪುರನಿ ಲಯಲಕ್ಷ್ಮೀವರನು ಪವಡಿಸುವಂತೆ ಕಾಣುತ್ತಿತ್ತು.
  • (ಪದ್ಯ-೪೯)XV XII
  • ಸಂಧಿ ೨೯ ಕ್ಕೆ ಪದ್ಯಗಳು:೧೬೧೭.

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.