ಜೈಮಿನಿ ಭಾರತ/ಮುವತ್ಮೂರನೆಯ ಸಂಧಿ

ವಿಕಿಸೋರ್ಸ್ ಇಂದ
Jump to navigation Jump to search

ಮೂವತ್ತುಮೂರನೆಯ ಸಂಧಿ[ಸಂಪಾದಿಸಿ]

ಪದ್ಯ:-:ಸೂಚನೆ:[ಸಂಪಾದಿಸಿ]

ಸೂಚನೆ :ಧರಣಿಪಾಗ್ರಣಿ ಯುಧಿಷ್ಠಿರ ಮಹೀವಲ್ಲಭಂ |
ತುರಗ ಮೇಧಾಧ್ವರವನೈದೆ ವಿಸ್ತರಿಸಿದಂ |
ಭರತ ನಳ ನಹುಷಾದಿ ಪೃಥ್ವೀಶರೀತಂಗೆ ಪಾಸಟಿಯೆ ಪೇಳೆನಲ್ಕೆ ||

ಪದವಿಭಾಗ-ಅರ್ಥ:
ಕಥಾಸಾರ: ಧರಣಿಪಾಗ್ರಣಿ ಯುಧಿಷ್ಠಿರ ಮಹೀವಲ್ಲಭಂ ತುರಗ ಮೇಧಾಧ್ವರವನು ಐದೆ ವಿಸ್ತರಿಸಿದಂ ಭರತ ನಳ ನಹುಷಾದಿ ಪೃಥ್ವೀಶರು ಈತಂಗೆ ಪಾಸಟಿಯೆ ಪೇಳು ಎನಲ್ಕೆ==[ ಮಹಿಗೆ ವಲ್ಲಭನು/ ಭೂಮಿಗೆ ಒಡೆಯನಾದ, ಧರಣಿಪರಲ್ಲಿ ಅಗ್ರಣಿ/ರಾಜರಲ್ಲಿ ಶ್ರೇಷ್ಠನಾದ ಯುಧಿಷ್ಠಿರನು, ಅಶ್ವಮೇಧದ ಯಾಗವನ್ನು ವಿಸ್ತಾರವಾಗಿ ಮಾಡಿದನು. ಅದು ಈ ಬಗೆಯ ಯಾಗ ಮಾಡಿದ ಭರತ ನಳ ನಹುಷಾದಿ ರಾಜರು ಈತನಿಗೆ ಸರಿಸಮಾನವೇ ಹೇಳು ಎನ್ನುವಂತಿತ್ತು].
 • ತಾತ್ಪರ್ಯ:ಭೂಮಿಗೆ ಅಧಿಪತಿಯಾದ, ರಾಜರಲ್ಲಿ ಶ್ರೇಷ್ಠನಾದ ಯುಧಿಷ್ಠಿರನು ಅಶ್ವಮೇಧದ ಯಾಗವನ್ನು ವಿಸ್ತಾರವಾಗಿಮಾಡಿದನು. ಅದು ಈ ಬಗೆಯ ಯಾಗ ಮಾಡಿದ, ಭರತ, ನಳ, ನಹುಷಾದಿ ರಾಜರು ಈತನಿಗೆ ಸರಿಸಮಾನವೇ ಹೇಳು ಎನ್ನುವಂತಿತ್ತು.
 • (ಪದ್ಯ-ಸೂಚನೆ )XXIX-XII

ಪದ್ಯ:-::[ಸಂಪಾದಿಸಿ]

ಜನಮೇಜಯಕ್ಷಿತಿಪ ಕೇಳ್ ಬಳಿಕ ದೈತ್ಯ ಭಂ |
ಜನನಖಿಳ ಭೂಪಾಲರಂ ನಾಗಪುರಕೆ ಯೋ |
ಜನದಳತೆಯೊಳ್ ನಿಲಿಸಿ ಬೇರೆಬೇರವರವರ ಪಡೆಗಳಂ ಪಂಕ್ತಿಗೊಳಿಸಿ ||
ತನತನಗೆ ಗಂಧ ಮಾಲ್ಯಾಂಬರಾಭರಣ ನೂ |
ತನ ವಿಭವದಿಂದೆ ಬಹುದೆಂದು ನೇಮಿಸಿ ಧರ್ಮ |
ತನಯನಂ ಕಾಣಬೇಕೆಂಬ ಲವಲವಿಕೆಯಿಂ ಮುಂದೆ ಬಿಜಯಂಗೈದನು ||1||

ಪದವಿಭಾಗ-ಅರ್ಥ:
ಜನಮೇಜಯ ಕ್ಷಿತಿಪ ಕೇಳ್ ಬಳಿಕ ದೈತ್ಯಭಂಜನು (ಕೃಷ್ಣ) ನಖಿಳ ಭೂಪಾಲರಂ ನಾಗಪುರಕೆ ಯೋಜನದ ಅಳತೆಯೊಳ್ ನಿಲಿಸಿ ಬೇರೆ ಬೇರೆ ಅವರವರ ಪಡೆಗಳಂ ಪಂಕ್ತಿಗೊಳಿಸಿ==[ಜನಮೇಜಯ ರಾಜನೇ ಕೇಳು, ಬಳಿಕ ಕೃಷ್ನನು ಎಲ್ಲಾ ರಾಜರನ್ನೂ ಹಸ್ತಿನಾಪುರಕ್ಕೆ ಒಂದು ಯೋಜನದ ಅಳತೆಯಲ್ಲಿ ನಿಲ್ಲಿಸಿ, ಬೇರೆ ಬೇರೆ ಅವರವರ ಪಡೆಗಳನ್ನು ಪಂಕ್ತಿಯಾಗಿ ಇರಿಸಿ,];; ತನತನಗೆ ಗಂಧ ಮಾಲ್ಯಾಂಬರ (ಮಾಲೆ ಅಂಬರ) ಆಭರಣ ನೂತನ ವಿಭವದಿಂದೆ ಬಹುದೆಂದು ನೇಮಿಸಿ ಧರ್ಮ ತನಯನಂ ಕಾಣಬೇಕೆಂಬ ಲವಲವಿಕೆಯಿಂ ಮುಂದೆ ಬಿಜಯಂಗೈದನು=[ತನತನಗೆ/ ಪ್ರತಿಯೊಬ್ಬರಿಗೂ ಗಂಧ, ಮಾಲೆ, ಬಟ್ಟೆ, ಆಭರಣಗಳು ಹೊಸ ವೈಭವದಿಂದ ಬರುವುದೆಂದು ಹೇಳಿ, ವ್ಯವಸ್ಥೆಯನ್ನು ನಿಯಮಿಸಿ, ಧರ್ಮರಾಯನನ್ನು ಕಾಣಬೇಕೆಂದು ಅವಸರದಿಂದ ಮುಂದೆ ಹೋದನು.]
 • ತಾತ್ಪರ್ಯ:ಜನಮೇಜಯ ರಾಜನೇ ಕೇಳು, ಬಳಿಕ ಕೃಷ್ನನು ಎಲ್ಲಾ ರಾಜರನ್ನೂ ಹಸ್ತಿನಾಪುರಕ್ಕೆ ಒಂದು ಯೋಜನದ ಅಳತೆಯಲ್ಲಿ ನಿಲ್ಲಿಸಿ, ಬೇರೆ ಬೇರೆ ಅವರವರ ಪಡೆಗಳನ್ನು ಪಂಕ್ತಿಯಾಗಿ ಇರಿಸಿ, ಪ್ರತಿಯೊಬ್ಬರಿಗೂ ಗಂಧ, ಮಾಲೆ, ಬಟ್ಟೆ, ಆಭರಣಗಳು ಹೊಸ ವೈಭವದಿಂದ ಬರುವುದೆಂದು ಹೇಳಿ, ವ್ಯವಸ್ಥೆಯನ್ನು ನಿಯಮಿಸಿ, ಧರ್ಮರಾಯನನ್ನು ಕಾಣಬೇಕೆಂದು ಅವಸರದಿಂದ ಮುಂದೆ ಹೋದನು.
 • (ಪದ್ಯ-೧)

ಪದ್ಯ:-::[ಸಂಪಾದಿಸಿ]

ಸುರನದಿಯ ತಡಿಯ ಪುಣ್ಯಕ್ಷೇತ್ರದೊಳ್ ಸುವಿ |
ಸ್ತರದ ಮಣಿಮಂಟಪದೊಳಖಿಳ ಮುನಿಗಣದೊಡನೆ |
ಬರಿಸದಿಂದೊಡಲ ದಂಡಿಸಿ ನೆಲದಮೇಲೆ ಕುಳ್ಳಿರ್ದು ಯಮ ನಿಯಮದಿಂದೆ ||
ಪರಮ ದೀಕ್ಷಾವಿಧಿಯನನುಕರಿಸಿ ಸಾಧ್ವಿಯರ |
ನೆರವಿಯೊಳೆಸೆವ ಪತ್ನಿವೆರಸಿ ತೊಳಗುವ ಯುಧಿ|
ಷ್ಠಿರ ಭೂಪನಂ ಕಂಡನಸುರಾರಿ, ವಂದಿಸಿತು ತತ್ಸಭೆ ಮುರಾಂತಕಂಗೆ ||2||

ಪದವಿಭಾಗ-ಅರ್ಥ:
ಸುರನದಿಯ ತಡಿಯ ಪುಣ್ಯಕ್ಷೇತ್ರದೊಳ್ ಸುವಿಸ್ತರದ ಮಣಿಮಂಟಪದೊಳು ಅಖಿಳ ಮುನಿಗಣದೊಡನೆ ಬರಿಸದಿಂದ ಒಡಲ ದಂಡಿಸಿ ನೆಲದಮೇಲೆ ಕುಳ್ಳಿರ್ದು ಯಮ ನಿಯಮದಿಂದೆ==[ಗಂಗಾನದಿಯ ದಡದ ಪುಣ್ಯಕ್ಷೇತ್ರದಲ್ಲಿ ಬಹಳ ವಿಸ್ತಾರವಾದ ಮಣಿಮಂಟಪದಲ್ಲಿ ಎಲ್ಲಾ ಮುನಿಗಳ ಸಮುಹದೊಡನೆ ವರ್ಷದಿಂದ ದೇಹವನ್ನು ದಂಡಿಸಿ ನೆಲದಮೇಲೆ ಕುಳಿತು, ಯಮ ನಿಯಮದಿಂದ ];; ಪರಮ ದೀಕ್ಷಾವಿಧಿಯನು ಅನುಕರಿಸಿ ಸಾಧ್ವಿಯರ ನೆರವಿಯೊಳು ಎಸವ ಪತ್ನಿವೆರಸಿ ತೊಳಗುವ ಯುಧಿಷ್ಠಿರ ಭೂಪನಂ ಕಂಡನು ಅಸುರಾರಿ, ವಂದಿಸಿತು ತತ್ಸಭೆ ಮುರಾಂತಕಂಗೆ==[ಪರಮ ದೀಕ್ಷಾವಿಧಿಯನ್ನು ಅನುಸರಿಸಿ ಪತಿವ್ರತಾಸ್ತ್ರೀಯರ ಸಮೂಹದಲ್ಲಿ ಶೋಭಿಸುವ ಪತ್ನಿಯ ಜೊತೆಗೂಡಿ ಪ್ರಕಾಶಿಸುತ್ತಿರುವ ಯುಧಿಷ್ಠಿರ ಭೂಪಾಲನನ್ನು ಕೃಷ್ಣನು ಕಂಡನು. ಆ ಸಭೆ ಶ್ರೀಕೃಷ್ಣನಿಗೆ ವಂದಿಸಿತು].
 • ತಾತ್ಪರ್ಯ:ಗಂಗಾನದಿಯ ದಡದ ಪುಣ್ಯಕ್ಷೇತ್ರದಲ್ಲಿ ಬಹಳ ವಿಸ್ತಾರವಾದ ಮಣಿಮಂಟಪದಲ್ಲಿ ಎಲ್ಲಾ ಮುನಿಗಳ ಸಮುಹದೊಡನೆ ವರ್ಷದಿಂದ ದೇಹವನ್ನು ದಂಡಿಸಿ ನೆಲದಮೇಲೆ ಕುಳಿತು, ಯಮ ನಿಯಮದಿಂದ ಪರಮ ದೀಕ್ಷಾವಿಧಿಯನ್ನು ಅನುಸರಿಸಿ ಪತಿವ್ರತಾಸ್ತ್ರೀಯರ ಸಮೂಹದಲ್ಲಿ ಶೋಭಿಸುವ ಪತ್ನಿಯ ಜೊತೆಗೂಡಿ ಪ್ರಕಾಶಿಸುತ್ತಿರುವ ಯುಧಿಷ್ಠಿರ ಭೂಪಾಲನನ್ನು ಕೃಷ್ಣನು ಕಂಡನು. ಆ ಸಭೆ ಶ್ರೀಕೃಷ್ಣನಿಗೆ ವಂದಿಸಿತು.
 • (ಪದ್ಯ-೨)

ಪದ್ಯ:-::[ಸಂಪಾದಿಸಿ]

ಯದುಕುಲಾಗ್ರಣಿ ಬಳಿಕ ಭೀಮನಂ ಬಿಗಿಯಪ್ಪಿ |
ವಿದುರ ಧೃತರಾಷ್ಟ್ರ ಮಾದ್ರೇಯರಂ ತಕ್ಕೈಸಿ |
ಮುದದಿಂದೆ ದೇವಕಿ ಯಶೋದೆಯರ್ಗಭಿವಂದನಂಗೈದು ಪೃಥೆಗೆ ನಮಿಸಿ ||
ಪದುಳವಿಟ್ಟೈದೆ ಗಾಂಧಾರಿಯಂ ಬಂದು ದ್ರೌ |
ಪದಿ ಸುಭದ್ರೆಯರಂಘ್ರಿಗೆರಗಿದೊಡೆ ಮಣಿದೆತ್ತಿ |
ತದನಂತರದೊಳಖಿಳ ಮುನಿಗಳ್ಗೆ ವಂದಿಸಿ ನಗುತೆ ಸೃಪತಿಗಿಂತೆಂದನು ||3||

ಪದವಿಭಾಗ-ಅರ್ಥ:
ಯದುಕುಲಾಗ್ರಣಿ ಬಳೀಕ ಭೀಮನಂ ಬಿಗಿಯಪ್ಪಿ ವಿದುರ ಧೃತರಾಷ್ಟ್ರ ಮಾದ್ರೇಯರಂ ತಕ್ಕೈಸಿ ಮುದದಿಂದೆ ದೇವಕಿ ಯಶೋದೆಯರ್ಗೆ ಅಭಿವಂದನಂ ಗೈದು ಪೃಥೆಗೆ ನಮಿಸಿ==[ಯದುಕುಲಾಗ್ರಣಿಯಾದ ಕೃಷ್ಣನು ಬಳಿಕ ಭೀಮನನ್ನು ಪ್ರೀತಿಯಿಂದ ಬಿಗಿಯಾಗಿ ಅಪ್ಪಿಕೊಂಡು, ನಂತರ ವಿದುರ ಧೃತರಾಷ್ಟ್ರ ಮಾದ್ರೇಯರಾದ ನಕುಲಸಹದೇವರನ್ನು ಉಪಚರಿಸಿ, ಸಂತಸದಿಂದ ದೇವಕಿ ಯಶೋದೆಯರಿಗೆ ಅಭಿವಂದನೆ ಮಾಡಿ, ಪೃಥೆ-ಕುಂತಿಗೆ ನಮಸ್ಕರಿಸಿ];; ಪದುಳವಿಟ್ಟೈದೆ (ಪದುಳವಿಟ್ಟು ಐದೆ -ಕುಶಲವೇ ಕೇಳಿ, ಎದುರು ಬರಲು) ಗಾಂಧಾರಿಯಂ ಬಂದು ದ್ರೌಪದಿ ಸುಭದ್ರೆಯರು ಅಂಘ್ರಿಗೆ ಎರಗಿದೊಡೆ ಮಣಿದೆತ್ತಿ ತದನಂತರದೊಳು ಅಖಿಳ ಮುನಿಗಳ್ಗೆ ವಂದಿಸಿ ನಗುತೆ ಸೃಪತಿಗೆ ಇಂತೆಂದನು==[ಗಾಂಧಾರಿಯನ್ನು, ಅವಳು ಬರಲು ಕುಶಲ ಪ್ರಶ್ನೆಮಾಡಿ, ದ್ರೌಪದಿ ಸುಭದ್ರೆಯರು ಬಂದು ಕಾಲಿಗೆ ನಮಿಸಿದಾಗ, ಅವರನ್ನು ಬಗ್ಗಿ ಎತ್ತಿ, ತದನಂತರದಲ್ಲಿ ಎಲ್ಲಾ ಮುನಿಗಳಿಗೆ ವಂದಿಸಿ, ನಗುತ್ತಾ ಸೃಪತಿ ಧರ್ಮಜನಿಗೆ ಹೀಗೆ ಹೇಳಿದನು].
 • ತಾತ್ಪರ್ಯ:ಯದುಕುಲಾಗ್ರಣಿಯಾದ ಕೃಷ್ಣನು ಧರ್ಮಜನನ್ನು ಕಂಡ ಬಳಿಕ ಭೀಮನನ್ನು ಪ್ರೀತಿಯಿಂದ ಬಿಗಿಯಾಗಿ ಅಪ್ಪಿಕೊಂಡು, ನಂತರ ವಿದುರ ಧೃತರಾಷ್ಟ್ರ ಮಾದ್ರೇಯರಾದ ನಕುಲ ಸಹದೇವರನ್ನು ಉಪಚರಿಸಿ, ಸಂತಸದಿಂದ ದೇವಕಿ ಯಶೋದೆಯರಿಗೆ ಅಭಿವಂದನೆ ಮಾಡಿ, ಪೃಥೆ-ಕುಂತಿಗೆ ನಮಸ್ಕರಿಸಿ, ಗಾಂಧಾರಿಯನ್ನು, ಅವಳು ಬರಲು ಕುಶಲ ಪ್ರಶ್ನೆಮಾಡಿ, ದ್ರೌಪದಿ ಸುಭದ್ರೆಯರು ಬಂದು ಕಾಲಿಗೆ ನಮಿಸಿದಾಗ, ಅವರನ್ನು ಬಗ್ಗಿ ಎತ್ತಿ, ತದನಂತರದಲ್ಲಿ ಎಲ್ಲಾ ಮುನಿಗಳಿಗೆ ವಂದಿಸಿ, ನಗುತ್ತಾ ಸೃಪತಿ ಧರ್ಮಜನಿಗೆ ಹೀಗೆ ಹೇಳಿದನು.
 • (ಪದ್ಯ-೩)

ಪದ್ಯ:-::[ಸಂಪಾದಿಸಿ]

ಅರಸ ನಿನ್ನಧ್ವರದ ವಾಜಿ ಭೂವಲಯಮಂ |
ತಿರುಗಿ ಬಂದುದು ವರ್ಷಮಾತ್ರದೊಳ್ ಮೇದಿನಿಯ |
ನರಪತಿಗಳೆಲ್ಲರುಂ ನಡೆತಂದರೊಡನೆ ಪಾರ್ಥ ಪ್ರತಾಪದ ಹರಹಿಗೆ ||
ಧರಣಿ ಸಾಲದು ನೆರಪಿದೊಡವೆಗಮರಾಚಲಂ |
ಸರಿಯಲ್ಲ ಬಕದಾಲ್ಭ್ಯಕಾದಿ ಮುನಿ ನಿಕರಮಿದೆ |
ದೊರೆಯದಿಹ ಸಂಭಾರಮಿಲ್ಲ ನಡೆಸಿನ್ನು ಯಜ್ಞವನೆಂದು ಹರಿ ನುಡಿದನು ||4||

ಪದವಿಭಾಗ-ಅರ್ಥ:
ಅರಸ ನಿನ್ನ ಅಧ್ವರದ ವಾಜಿ ಭೂವಲಯಮಂ ತಿರುಗಿ ಬಂದುದು ವರ್ಷಮಾತ್ರದೊಳ್ ಮೇದಿನಿಯ ನರಪತಿಗಳು ಎಲ್ಲರುಂ ನಡೆತಂದರೊಡನೆ ಪಾರ್ಥ ಪ್ರತಾಪದ ಹರಹಿಗೆ==[ಅರಸ ಧರ್ಮಜನೇ, ನಿನ್ನ ಯಜ್ಞದ ಕುದುರೆ ಭೂವಲಯವನ್ನು ಒಂದು ವರ್ಷ ಮಾತ್ರ ಸಂಚರಿಸಿ ತಿರುಗಿ ಬಂದಿದೆ; ಭೂಮಿಯ ರಾಜರುಗಳು ಎಲ್ಲರೂ, ಅದರೊಡನೆ ಬಂದಿರುವರು; ಪಾರ್ಥನ ಪ್ರತಾಪದ ವಿಸ್ತಾರಕ್ಕೆ];; ಧರಣಿ ಸಾಲದು ನೆರಪಿದ ಒಡವೆಗೆ ಅಮರಾಚಲಂ ಸರಿಯಲ್ಲ ಬಕದಾಲ್ಭ್ಯಕ ಆದಿ ಮುನಿ ನಿಕರಮಂ ಇದೆ ದೊರೆಯದಿಹ ಸಂಭಾರಮಿಲ್ಲ ನಡೆಸಿನ್ನು ಯಜ್ಞವನೆಂದು ಹರಿ ನುಡಿದನು==[ಈ ಭೂಮಿಯೇ ಸಾಲದು; ಸಂಗ್ರಹಿಸಿದ ಒಡವೆ ವಸ್ತುಗಳಿಗೆ ಮೇರುಪರ್ತವು ಸಹ ಸರಿಯಲ್ಲ, ಅದಕ್ಕೂ ಹೆಚ್ಚು; ಬಕದಾಲ್ಭ್ಯರೇ ಮೊದಲಾದ ಮುನಿಗಳ ಸಮೂಹವೆ ಇದೆ; ಅಗತ್ಯವಾಗಿ ಬೇಕಾದ ಎಲ್ಲಾ ವಸ್ತುಗಳು ದರಕಿದೆ, ದೊರೆಯದೆ ಇರುವ ಸಂಭಾರವಿಲ್ಲ, ಇನ್ನು ನೀನು ಯಜ್ಞವನ್ನು ನಡೆಸು ಎಂದು ಶ್ರೀಹರಿ ಹೇಳಿದನು].
 • ತಾತ್ಪರ್ಯ:ಅರಸ ಧರ್ಮಜನೇ, ನಿನ್ನ ಯಜ್ಞದ ಕುದುರೆ ಭೂವಲಯವನ್ನು ಒಂದು ವರ್ಷ ಮಾತ್ರ ಸಂಚರಿಸಿ ತಿರುಗಿ ಬಂದಿದೆ; ಭೂಮಿಯ ರಾಜರುಗಳು ಎಲ್ಲರೂ, ಅದರೊಡನೆ ಬಂದಿರುವರು; ಪಾರ್ಥನ ಪ್ರತಾಪದ ವಿಸ್ತಾರಕ್ಕೆ ಈ ಭೂಮಿಯೇ ಸಾಲದು; ಸಂಗ್ರಹಿಸಿದ ಒಡವೆ ವಸ್ತುಗಳಿಗೆ ಮೇರುಪರ್ತವು ಸಹ ಸರಿಯಲ್ಲ, ಅದಕ್ಕೂ ಹೆಚ್ಚು; ಬಕದಾಲ್ಭ್ಯರೇ ಮೊದಲಾದ ಮುನಿಗಳ ಸಮೂಹವೆ ಇದೆ; ಅಗತ್ಯವಾಗಿ ಬೇಕಾದ ಎಲ್ಲಾ ವಸ್ತುಗಳು ದರಕಿದೆ, ದೊರೆಯದೆ ಇರುವ ಸಂಭಾರವಿಲ್ಲ, ಇನ್ನು ನೀನು ಯಜ್ಞವನ್ನು ನಡೆಸು ಎಂದು ಶ್ರೀಹರಿ ಹೇಳಿದನು.
 • (ಪದ್ಯ-೪)XXIX

ಪದ್ಯ:-::[ಸಂಪಾದಿಸಿ]

ಆ ಮುರಾಂತಕನ ಮಾತಂ ಕೇಳ್ದು ಹರಿಸದಿಂ |
ಭೂಮಿಪತಿ ನುಡಿದನೆಲೆ ದೇವ ತವ ಕಾರುಣ್ಯ |
ಜೀಮೂತಮಿರೆ ಬಳೆಯದಿರ್ದಪುದೆ ಪಾರ್ಥ ಪ್ರತಾಪದವೊಲಂ ತಿಳಿಯಲು||
ರೋಮ ರೋಮದೊಳಿಡಿದಜಾಂಡ ಕೋಟಿಗಳಿಹ ಮ |
ಹಾ ಮಹಿಮೆ ತಾನೆತ್ತ ನರನ ಸಂಗಡ ತಿರುಗು |
ವೀ ಮನುಜತನವೆತ್ತ ಭಕ್ತರಂ ಪಾಲಿಪುದೆ ನಿನ್ನ ಬಾಳುವೆಯೆಂದನು ||5||

ಪದವಿಭಾಗ-ಅರ್ಥ:
ಆ ಮುರಾಂತಕನ ಮಾತಂ ಕೇಳ್ದು ಹರಿಸದಿಂ ಭೂಮಿಪತಿ ನುಡಿದನು ಎಲೆ ದೇವ ತವ ಕಾರುಣ್ಯ ಜೀಮೂತಮ್ (ಮೋಡ) ಇರೆ ಬಳೆಯದೆ ಇರ್ದಪುದೆ ಪಾರ್ಥ ಪ್ರತಾಪದವೊಲಂ ತಿಳಿಯಲು==[ಆ ಮುರಾಂತಕ ಕೃಷ್ಣನ ಮಾತನ್ನು ಕೇಳಿ ಹರ್ಷದಿಂದ ಧರ್ಮರಾಜನು ಹೇಳಿದನು,'ಎಲೆ ದೇವ ನಿನ್ನ ಕರುಣೆಯೆಂಬ ಮೋಡವು ಇರಲು ಪಾರ್ಥ ಪ್ರತಾಪವೆಂಬ ಹೊಲದಲ್ಲಿ ವಿಚಾರಮಾಡಿದರೆ, ಬೆಳೆಯು ಬೆಳೆಯದೆ ಇರುವುದೆ!];; ರೋಮ ರೋಮದೊಳು ಇಡಿದಜಾಂಡಕೋಟಿಗಳು ಇಹ ಮಹಾಮಹಿಮೆ ತಾನು ಎತ್ತ ನರನ ಸಂಗಡ ತಿರುಗುವ ಈ ಮನುಜತನವೆತ್ತ ಭಕ್ತರಂ ಪಾಲಿಪುದೆ ನಿನ್ನ ಬಾಳುವೆಯೆಂದನು==[ನಿನ್ನ ರೋಮ ರೋಮದಲ್ಲಿ ತುಂಬಿದ ಅಜಾಂಡಕೋಟಿಗಳು ಇರುವ ಮಹಾಮಹಿಮೆಳ್ಳ ತಾನು/ಕೃಷ್ನ ಎತ್ತ! ನರನ ಸಂಗಡ ತಿರುಗುವ ಈ ಮನುಜತನವು ಎತ್ತ! ಭಕ್ತರನ್ನು ಪಾಲಿಸುವುದೆ ನಿನ್ನ ಬಾಳಿನನೀತಿ.'(ಎಂದನು)].
 • ತಾತ್ಪರ್ಯ:ಆ ಮುರಾಂತಕ ಕೃಷ್ಣನ ಮಾತನ್ನು ಕೇಳಿ ಹರ್ಷದಿಂದ ಧರ್ಮರಾಜನು ಹೇಳಿದನು,'ಎಲೆ ದೇವ ನಿನ್ನ ಕರುಣೆಯೆಂಬ ಮೋಡವು ಇರಲು ಪಾರ್ಥ ಪ್ರತಾಪವೆಂಬ ಹೊಲದಲ್ಲಿ ವಿಚಾರಮಾಡಿದರೆ, ಬೆಳೆಯು ಬೆಳೆಯದೆ ಇರುವುದೆ ನಿನ್ನ ರೋಮ ರೋಮದಲ್ಲಿ ತುಂಬಿದ ಅಜಾಂಡಕೋಟಿಗಳು ಇರುವ ಮಹಾಮಹಿಮೆಳ್ಳ ತಾನು/ಕೃಷ್ನ ಎತ್ತ! ನರನ ಸಂಗಡ ತಿರುಗುವ ಈ ಮನುಜತನವು ಎತ್ತ! ಭಕ್ತರನ್ನು ಪಾಲಿಸುವುದೆ ನಿನ್ನ ಬಾಳಿನನೀತಿ.'(ಎಂದನು) (ಕೃಷ್ಣ ತನ್ನಿಂದ ದಂಡಯಾತ್ರೆ ಸಫಲವಾಯಿತು ಂದು ಹೇಳಲಿಲ್ಲ)
 • (ಪದ್ಯ-೫)

ಪದ್ಯ:-::[ಸಂಪಾದಿಸಿ]

ದೇವ ಸಾಕಿನ್ನದರ ಮಾತೆಮ್ಮ ಪಂಚಕದ |
ಜೀವನಂ ನಿಮ್ಮದೈಸಲೆ ಬಾಹ್ಯವೇತಕೆ ಧ |
ರಾವಲಯದರಸುಗಳನೆಂತು ಜಯಿಸಿದಿರೆಂಬ ವಿವರಮಂ ಪೇಳ್ವುದೆಂದು ||
ಭೂವಲ್ಲಭಂ ಕೇಳ್ದೊಡಿಂದಿರಾಪತಿ ಹಸ್ತಿ |
ನಾವತಿಯ ನಗರಮಂ ಪೊರಮಟ್ಟು ಮಗುಳಲ್ಲಿ |
ಗಾ ವಾಜಿಗಳ್ ಬಂದು ಪುಗುವಿನಂ ನಡೆದ ವೃತ್ತಾಂತಮಂ ವಿವರಿಸಿದನು ||6||

ಪದವಿಭಾಗ-ಅರ್ಥ:
ದೇವ ಸಾಕಿನ್ನು ಅದರ ಮಾತು, ಎಮ್ಮ ಪಂಚಕದ ಜೀವನಂ ನಿಮ್ಮದು ಐಸಲೆ ಬಾಹ್ಯವೇತಕೆ ಧರಾವಲಯದ ಅರಸುಗಳನು ಎಂತು ಜಯಿಸಿದಿರೆಂಬ ವಿವರಮಂ ಪೇಳ್ವುದು ಎಂದು==[ಯುಧಷ್ಠಿರನು, 'ದೇವ ಇನ್ನು ಅದರ ಮಾತು ಸಾಕು, ನಮ್ಮ ಪಂಚ ಸೋದರರ ಜೀವನದ ಏಳಿಗೆ ನಿಮ್ಮದಯ್ಯಾ, ಬಹಳ ಹೊರಗಿನ ಮಾತು ಏಕೆ? ಈ ಭೂಮಿಯ ಅರಸುಗಳನ್ನು ಹೇಗೆ ಜಯಿಸಿದಿರಿ ಎಂಬ ವಿವರವನ್ನು ಹೇಳುವುದು,' ಎಂದನು.];; ಭೂವಲ್ಲಭಂ ಕೇಳ್ದೊಡೆ ಇಂದಿರಾಪತಿ ಹಸ್ತಿನಾವತಿಯ ನಗರಮಂ ಪೊರಮಟ್ಟು ಮಗುಳಲ್ಲಿಗೆ ಆ ವಾಜಿಗಳ್ ಬಂದು ಪುಗುವಿನಂ ನಡೆದ ವೃತ್ತಾಂತಮಂ ವಿವರಿಸಿದನು==[ರಾಜನು ಕೇಳಿದಾಗ ಇಂದಿರಾಪತಿ ಕೃಷ್ಣನು ಹಸ್ತಿನಾವತಿಯ ನಗರದಿಂದ ಹೊರಟು ಮತ್ತೆ ಅಲ್ಲಿಗೆ ಆ ಕುದುರೆಗಳು ಬಂದು ಹೊಗುವ ವರೆಗೆ ನಡೆದ ವೃತ್ತಾಂತವನ್ನು ವಿವರಿಸಿದನು].
 • ತಾತ್ಪರ್ಯ:ಯುಧಷ್ಠಿರನು, 'ದೇವ ಇನ್ನು ಅದರ ಮಾತು ಸಾಕು, ನಮ್ಮ ಪಂಚ ಸೋದರರ ಜೀವನದ ಏಳಿಗೆ ನಿಮ್ಮದಯ್ಯಾ, ಬಹಳ ಹೊರಗಿನ ಮಾತು ಏಕೆ? ಈ ಭೂಮಿಯ ಅರಸುಗಳನ್ನು ಹೇಗೆ ಜಯಿಸಿದಿರಿ ಎಂಬ ವಿವರವನ್ನು ಹೇಳುವುದು,' ಎಂದನು.ರಾಜನು ಕೇಳಿದಾಗ ಇಂದಿರಾಪತಿ ಕೃಷ್ಣನು ಹಸ್ತಿನಾವತಿಯ ನಗರದಿಂದ ಹೊರಟು ಮತ್ತೆ ಅಲ್ಲಿಗೆ ಆ ಕುದುರೆಗಳು ಬಂದು ಹೊಗುವ ವರೆಗೆ ನಡೆದ ವೃತ್ತಾಂತವನ್ನು ವಿವರಿಸಿದನು].
 • (ಪದ್ಯ-೬)

ಪದ್ಯ:-::[ಸಂಪಾದಿಸಿ]

ವಾಜಿ ಸಹಿತರ್ಜುನಂ ಪೊರಮಟ್ಟನಂದು ವಿ |
ಭ್ರಾಜಿಸುವ ಚೈತ್ರದೊಳ್ ಕೂಡೆ ಮಾಹಿಷ್ಮತಿಗೆ |
ರಾಜನಹ ನೀಲಧ್ವಜಂ ತುರಗಮಂ ತಡೆದನಗ್ನಿಯ ಸಹಾಯದಿಂದೆ ||
ಈ ಜಿಷ್ಣು ಸಂಗರದೊಳಾತನಂ ಜಯಿಸಲಾ |
ವ್ಯಾಜದಿಂ ಬಂದುದು ಸರಿದ್ವರೆಯ ಶಾಪಂ ಮ |
ಹಾ ಜವದೊಳಲ್ಲಿಂದೆ ಪೋಗಿ ತಿರುಗಿತು ಹಯಂ ಬಳಿಕ ವಿಂಧ್ಯಾಚಲದೊಳು ||7||

ಪದವಿಭಾಗ-ಅರ್ಥ:
ವಾಜಿ ಸಹಿತ ಅರ್ಜುನಂ ಪೊರಮಟ್ಟನು ಅಂದು ವಿಭ್ರಾಜಿಸುವ ಚೈತ್ರದೊಳ್ ಕೂಡೆ ಮಾಹಿಷ್ಮತಿಗೆ ರಾಜನಹ ನೀಲಧ್ವಜಂ ತುರಗಮಂ ತಡೆದನು ಅಗ್ನಿಯ ಸಹಾಯದಿಂದೆ==[ಕುದುರೆ ಸಹಿತ ಅರ್ಜುನನು ಅಂದು ಶೋಭಿಸುವ ಚೈತ್ರದಲ್ಲಿ ಹೊರಟು ಕೂಡಲೆ ಮಾಹಿಷ್ಮತಿಗೆ ಹೋದನು. ಅಲ್ಲಿ ರಾಜನಾಗಿರು ನೀಲಧ್ವಜನು ತುರಗವನ್ನು ಅಗ್ನಿಯ ಸಹಾಯದಿಂದೆ ತಡೆದನು.];; ಈ ಜಿಷ್ಣು ಸಂಗರದೊಳು ಆತನಂ ಜಯಿಸಲು ಆ ವ್ಯಾಜದಿಂ ಬಂದುದು ಸರಿದ್ವರೆಯ ಶಾಪಂ ಮಹಾ ಜವದೊಳು ಅಲ್ಲಿಂದೆ ಪೋಗಿ ತಿರುಗಿತು ಹಯಂ ಬಳಿಕ ವಿಂಧ್ಯಾಚಲದೊಳು==[ಈ ಅರ್ಜುನನು ಯುದ್ಧದಲ್ಲಿ ಆತನನ್ನು ಜಯಿಸಲು, ಆ ಕಾರಣದಿಂದ ಗಂಗೆಯ ಶಾಪವು ಬಂದಿತು. ಕುದುರೆ ಮಹಾ ವೇಗದಲ್ಲಿ ಅಲ್ಲಿಂದೆ ಹೋಗಿ ಬಳಿಕ ವಿಂಧ್ಯಾಚಲದಲ್ಲಿ ತಿರುಗಿತು].
 • ತಾತ್ಪರ್ಯ:ಕುದುರೆ ಸಹಿತ ಅರ್ಜುನನು ಅಂದು ಶೋಭಿಸುವ ಚೈತ್ರದಲ್ಲಿ ಹೊರಟು ಕೂಡಲೆ ಮಾಹಿಷ್ಮತಿಗೆ ಹೋದನು. ಅಲ್ಲಿ ರಾಜನಾಗಿರು ನೀಲಧ್ವಜನು ತುರಗವನ್ನು ಅಗ್ನಿಯ ಸಹಾಯದಿಂದೆ ತಡೆದನು. ಈ ಅರ್ಜುನನು ಯುದ್ಧದಲ್ಲಿ ಆತನನ್ನು ಜಯಿಸಲು, ಆ ಕಾರಣದಿಂದ ಗಂಗೆಯ ಶಾಪವು ಬಂದಿತು. ಕುದುರೆ ಮಹಾ ವೇಗದಲ್ಲಿ ಅಲ್ಲಿಂದೆ ಹೋಗಿ ಬಳಿಕ ವಿಂಧ್ಯಾಚಲದಲ್ಲಿ ತಿರುಗಿತು].
 • (ಪದ್ಯ-೭)

ಪದ್ಯ:-::[ಸಂಪಾದಿಸಿ]

ಆ ನಗದ ಪೆಣ್ಗಳಿಂ ಪಣ್ಗಗಳಿಂ ನಿರ್ಝರದ |
ಪಾನೀಯದಿಂಪಿನಿಂ ತಂಪಿನಿಂ ಕುಸುಮ ಗಂ |
ಧಾನಿಲನ ಕಂಪಿಂದೆ ಪೆಂಪಿಂದೆ ನೆಲವೇರಿ ಚಂಡಿಯ ವಿಶಾಪದಿಂದೆ ||
ಸೇನೆ ವಿಸ್ಮಯದೊಡನೆ ಹಯದೊಡನೆ ಮುಂದೆ ಸು |
ಮ್ಮಾನದಿಂ ನಡಯಲ್ಕೆ ತಡೆಯಲ್ಕೆ ಸಂಗರದೊ |
ಳೀನರಂ ಜಯಿಸಿದಂ ಚಲದಿಂದೆ ಬಲದಿಂದೆ ಹಂಸಧ್ವಜನ ಸುತರನು ||8||

ಪದವಿಭಾಗ-ಅರ್ಥ:
ಆ ನಗದ ಪೆಣ್ಗಳಿಂ ಪಣ್ಗಗಳಿಂ ನಿರ್ಝರದ ಪಾನೀಯದ ಇಂಪಿನಿಂ ತಂಪಿನಿಂ ಕುಸುಮ ಗಂಧಾನಿಲನ ಕಂಪಿಂದೆ ಪೆಂಪಿಂದೆ ನೆಲವೇರಿ ಚಂಡಿಯ ವಿಶಾಪದಿಂದೆ==[ಆ ವಿಂಧ್ಯಪರ್ವತವು ಹೆಣ್ಣುಗಳಿಂದ, ಹಣ್ಣುಗಳಿಂದ, ನೀರಿನ ಝರಿಗಳ ನೀರಿನ ಇಂಪಿನಿಂದ ತಂಪಿನಿಂದ, ಕುಸುಮಗಳ ಪರಿಮಳದ ಗಾಳಿಯ ಕಂಪಿನಿಂದ ಪೆಂಪಿಂದ, ಶೋಬಿಸುತ್ತಿತ್ತು ಅಲ್ಲಿ ಕಲ್ಲಿನಲ್ಲಿ ಶಾಪದಿಂದ ಸಿಲುಕಿದ ಕುದುರೆ ಚಂಡಿಯ ಶಾಪ ವಿಮೋಚನದದಿಂದ ಸಂತೋಷದಿಂದ ];; ಸೇನೆ ವಿಸ್ಮಯದೊಡನೆ ಹಯದೊಡನೆ ಮುಂದೆ ಸುಮ್ಮಾನದಿಂ ನಡಯಲ್ಕೆ ತಡೆಯಲ್ಕೆ ಸಂಗರದೊಳು ಈ ನರಂ ಜಯಿಸಿದಂ ಚಲದಿಂದೆ ಬಲದಿಂದೆ ಹಂಸಧ್ವಜನ ಸುತರನು==[ಸೇನೆ ವಿಸ್ಮಯಹೊಂದಿ ಕುದುರೆಯೊಡನೆ ಮುಂದೆ ಸಂತೊಷವಾಗಿ ನಡಯಲು, ಹಂಸಧ್ವಜನ ಸುತರು ತಡೆಯಲು ಯುದ್ಧದಲ್ಲಿ ಈ ಅರ್ಜುನನು ಅವರನ್ನು ಚಲದಿಂದ, ಬಲದಿಂದ ಜಯಿಸಿದನು].
 • ತಾತ್ಪರ್ಯ:ಆ ವಿಂಧ್ಯಪರ್ವತವು ಹೆಣ್ಣುಗಳಿಂದ, ಹಣ್ಣುಗಳಿಂದ, ನೀರಿನ ಝರಿಗಳ ನೀರಿನ ಇಂಪಿನಿಂದ ತಂಪಿನಿಂದ, ಕುಸುಮಗಳ ಪರಿಮಳದ ಗಾಳಿಯ ಕಂಪಿನಿಂದ ಪೆಂಪಿಂದ, ಶೋಬಿಸುತ್ತಿತ್ತು ಅಲ್ಲಿ ಕಲ್ಲಿನಲ್ಲಿ ಶಾಪದಿಂದ ಸಿಲುಕಿದ ಕುದುರೆ ಚಂಡಿಯ ಶಾಪ ವಿಮೋಚನದದಿಂದ ಸಂತೋಷದಿಂದ ಸೇನೆ ವಿಸ್ಮಯಹೊಂದಿ ಕುದುರೆಯೊಡನೆ ಮುಂದೆ ಸಂತೊಷವಾಗಿ ನಡಯಲು, ಹಂಸಧ್ವಜನ ಸುತರು ತಡೆಯಲು ಯುದ್ಧದಲ್ಲಿ ಈ ಅರ್ಜುನನು ಅವರನ್ನು ಚಲದಿಂದ, ಬಲದಿಂದ ಜಯಿಸಿದನು.
 • (ಪದ್ಯ-೮)

ಪದ್ಯ:-::[ಸಂಪಾದಿಸಿ]

ಜನಪ ಕೇಳಾ ಘರ್ಮಕಾಲದೊಳ್ ತುಹಿನ ಗಿರಿ |
ತನುಜೆಯ ತಪೋವನದ ವಿಘ್ನಂಗಳಂ ಕಳೆದು |
ವನಿತಾ ಮಯದ ರಾಜ್ಯದೊಳ್ ಪ್ರಮೀಳೆಯ ನೊಡಂಬಡಿಸಿ ಗಜಪುರಕೆ ಕಳುಹಿ ||
ದನುಜೇಂದ್ರ ಭೀಷಣನನಾಕ್ರಮಿಸಿ ಬಭ್ರುವಾ |
ಹನನ ಪಟ್ಟಣಕೆ ನಿಜ ಹಯದೊಡನೆ ಬಂದನ |
ರ್ಜುನನಬ್ದ ಋತುವಿನೋಳ್ ಮೇಘರವಮಂ ಮಿಗುವ ವಾದ್ಯ ನಿರ್ಘೋಷದಿಂದೆ ||9||

ಪದವಿಭಾಗ-ಅರ್ಥ:
ಜನಪ ಕೇಳಾ ಘರ್ಮಕಾಲದೊಳ್ ತುಹಿನ ಗಿರಿ ತನುಜೆಯ ತಪೋವನದ ವಿಘ್ನಂಗಳಂ ಕಳೆದು ವನಿತಾ ಮಯದ ರಾಜ್ಯದೊಳ್ ಪ್ರಮೀಳೆಯ ನೊಡಂಬಡಿಸಿ ಗಜಪುರಕೆ ಕಳುಹಿ==[ಜನಪ ಧರ್ಮಜ ಕೇಳು ಆ ಬೇಸಿಗೆಯಲ್ಲಿ ಗಿರಿಜೆಯ ತಪೋವನದ ವಿಘ್ನಗಳನ್ನು ಕಳೆದುಕೊಂಡು, ಮಹಿಳೆತರ ರಾಜ್ಯದಲ್ಲಿಪ್ರವೇಶಿಸಿ ಪ್ರಮೀಳೆಯನ್ನು ಒಪ್ಪಿಸಿ,ಹಸ್ತಿನಾಪುರಕ್ಕೆ ಕಳುಹಿಸಲಾಯಿತು. ];; ದನುಜೇಂದ್ರ ಭೀಷಣನನಾಕ್ರಮಿಸಿ ಬಭ್ರುವಾಹನನ ಪಟ್ಟಣಕೆ ನಿಜ ಹಯದೊಡನೆ ಬಂದನರ್ಜುನನಬ್ದ ಋತುವಿನೋಳ್ ಮೇಘರವಮಂ ಮಿಗುವ ವಾದ್ಯ ನಿರ್ಘೋಷದಿಂದೆ==[ರಾಕ್ಷಸರ ದೊರೆ ಭೀಷಣನನ್ನು ಸೋಲಿಸಿ ಬಭ್ರುವಾಹನನ ಪಟ್ಟಣಕೆ ತನ್ನ ಹಯದೊಡನೆ ವರ್ಷಋತುವಿನಲ್ಲಿ ಗುಡುಗಿಗ ಮೀರುವ ವಾದ್ಯ ಘೋಷದಿಂದ ಅರ್ಜುನನು ಬಂದನು.
 • ತಾತ್ಪರ್ಯ:ಜನಪ ಧರ್ಮಜ ಕೇಳು ಆ ಬೇಸಿಗೆಯಲ್ಲಿ ಗಿರಿಜೆಯ ತಪೋವನದ ವಿಘ್ನಗಳನ್ನು ಕಳೆದುಕೊಂಡು, ಮಹಿಳೆತರ ರಾಜ್ಯದಲ್ಲಿಪ್ರವೇಶಿಸಿ ಪ್ರಮೀಳೆಯನ್ನು ಒಪ್ಪಿಸಿ,ಹಸ್ತಿನಾಪುರಕ್ಕೆ ಕಳುಹಿಸಲಾಯಿತು. ರಾಕ್ಷಸರ ದೊರೆ ಭೀಷಣನನ್ನು ಸೋಲಿಸಿ ಬಭ್ರುವಾಹನನ ಪಟ್ಟಣಕೆ ತನ್ನ ಹಯದೊಡನೆ ವರ್ಷಋತುವಿನಲ್ಲಿ ಗುಡುಗಿಗ ಮೀರುವ ವಾದ್ಯ ಘೋಷದಿಂದ ಅರ್ಜುನನು ಬಂದನು.
 • (ಪದ್ಯ-೯)

ಪದ್ಯ:-:೧೦:[ಸಂಪಾದಿಸಿ]

ಮಣಿಪುರಕೆ ಬಂದುದಾ ಸಮಯದೊಳ್ ಕುದುರೆ ಫಲು |
ಗುಣನಲ್ಲಿ ಮಡಿದನಾತ್ಮಜನಿಂದೆ ಬಳಿಕದಂ |
ಫಣಿರಾಜ ತನುಜೆ ಪರಿಹರಿಸಿದಳ್ ಮುಂದೆ ನಡೆಯಲ್ ತಾಮ್ರಕೇತು ತಡೆದು ||
ರಣದೊಳೆಮ್ಮೆಲ್ಲರಂ ಗೆಲ್ದೊಡಾತನ ಪಿತಂ |
ಗುಣನಿಧಿ ಮಯೂರಧ್ವಜಂ ತನ್ನ ಯಜ್ಞಮಂ |
ಗಣಿಸದೆಮಗೊಪ್ಪಿಸಿ ತುರಂಗಸಹಿತೈತಂದನರಸ ಕೇಳ್ ಕೌತುಕವನು ||10||

ಪದವಿಭಾಗ-ಅರ್ಥ:
ಮಣಿಪುರಕೆ ಬಂದುದು ಆ ಸಮಯದೊಳ್ ಕುದುರೆ ಫಲುಗುಣನಲ್ಲಿ ಮಡಿದನು ಆತ್ಮಜನಿಂದೆ ಬಳಿಕ ಅದಂ ಫಣಿರಾಜ ತನುಜೆ ಪರಿಹರಿಸಿದಳ್ ಮುಂದೆ ನಡೆಯಲ್ ತಾಮ್ರಕೇತು ತಡೆದು==[ನಂತರ ಕುದುರೆ ಮಣಿಪುರಕ್ಕೆ ಬಂದಿತು; ಆ ಸಮಯದಲ್ಲಿ ಫಲ್ಗುಣನು ಅಲ್ಲಿ ಮಗನಿಂದ ಮರಣಹೊಮದಿನು; ಬಳಿಕ ಅದನ್ನು ಫಣಿರಾಜ ಶೇಷನ ಮಗಳು ಉಲೂಪಿ ಪರಿಹರಿಸಿದಳು; ಮುಂದೆ ನಡೆಯಲು ತಾಮ್ರಕೇತು ಕುದುರೆಯನ್ನು ತಡೆದನು ];; ರಣದೊಳು ನಮ್ಮೆಲ್ಲರಂ ಗೆಲ್ದೊಡೆ ಆತನ ಪಿತಂ ಗುಣನಿಧಿ ಮಯೂರಧ್ವಜಂ ತನ್ನ ಯಜ್ಞಮಂ ಗಣಿಸದೆ ಎಮಗೊಪ್ಪಿಸಿ ತುರಂಗ ಸಹಿತ ಐತಂದನು ಅರಸ ಕೇಳ್ ಕೌತುಕವನು==[ಯುದ್ಧದಲ್ಲಿ ನಮ್ಮೆಲ್ಲರನ್ನೂ ಗೆದ್ದಾಗ ಅತನ ತಂದೆ ಗುಣನಿಧಿ ಮಯೂರಧ್ವಜನು ತನ್ನ ಯಜ್ಞವನ್ನು ಗಣಿಸದೆ ಅವನ ಕುದುರೆಯನ್ನೂ ನಮಗೇ ಕೊಟ್ಟು ತುರಗ ಸಹಿತ ಇಲ್ಲಿಗೆ ಬಂದನು. ಅರಸ ಕೇಳು ಈ ಎಲ್ಲಾ ಆಶ್ಚರ್ಯಗಳನ್ನು].
 • ತಾತ್ಪರ್ಯ:ನಂತರ ಕುದುರೆ ಮಣಿಪುರಕ್ಕೆ ಬಂದಿತು; ಆ ಸಮಯದಲ್ಲಿ ಫಲ್ಗುಣನು ಅಲ್ಲಿ ಮಗನಿಂದ ಮರಣಹೊಮದಿನು; ಬಳಿಕ ಅದನ್ನು ಫಣಿರಾಜ ಶೇಷನ ಮಗಳು ಉಲೂಪಿ ಪರಿಹರಿಸಿದಳು; ಮುಂದೆ ನಡೆಯಲು ತಾಮ್ರಕೇತು ಕುದುರೆಯನ್ನು ತಡೆದನು. ಯುದ್ಧದಲ್ಲಿ ನಮ್ಮೆಲ್ಲರನ್ನೂ ಗೆದ್ದಾಗ ಅತನ ತಂದೆ ಗುಣನಿಧಿ ಮಯೂರಧ್ವಜನು ತನ್ನ ಯಜ್ಞವನ್ನು ಗಣಿಸದೆ ಅವನ ಕುದುರೆಯನ್ನೂ ನಮಗೇ ಕೊಟ್ಟು ತುರಗ ಸಹಿತ ಇಲ್ಲಿಗೆ ಬಂದನು. ಅರಸ ಕೇಳು ಈ ಎಲ್ಲಾ ಆಶ್ಚರ್ಯಗಳನ್ನು.
 • (ಪದ್ಯ-೧೦)

ಪದ್ಯ:-:೧೧:[ಸಂಪಾದಿಸಿ]

ಆ ಮಯೂರಧ್ವಜಂ ಹರಿ ಸಹಿತ ನಡೆಯೆ ನಿ |
ಸ್ಸೀಮನಹ ವೀರವರ್ಮಂ ತಡೆಯೆ *ಬಿಡಿಸಲು |
ದ್ದಾಮ ವಾಜಿಗಳೈದಿ ಚಂದ್ರಹಾಸನ ಪುರಕೆ ಕಣ್ಗೆ ಗೋಚರಿಸದಿರಲು ||
ಪ್ರೇಮದಿಂ ನಾರದ ಮುನೀಶ್ವರಂ ಬಂದು ಸು |
ತ್ರಾಮ ಸುತನೊಳ್ ಕೂಡೆ ವಿಸ್ತರದೆ ವೈಷ್ಣವ ಶಿ |
ರೋಮಣಿಯ ಕಥೆವೇಳೆಕೇಳ್ದು ತತ್ಪುರಕೈದಿ ನಲಿದೈದುದಿನಮಿರ್ದನು ||11||

ಪದವಿಭಾಗ-ಅರ್ಥ:
ಆ ಮಯೂರಧ್ವಜಂ ಹರಿ ಸಹಿತ ನಡೆಯೆ ನಿಸ್ಸೀಮನು ಅಹ ವೀರವರ್ಮಂ ತಡೆಯೆ ಬಿಡಿಸಲು ಉದ್ದಾಮ ವಾಜಿಗಳು ಐದಿ ಚಂದ್ರಹಾಸನ ಪುರಕೆ ಕಣ್ಗೆ ಗೋಚರಿಸದೆ ಇರಲು==[ಆ ಮಯೂರಧ್ವಜನು ಕುದುರೆ ಸಹಿತ ನಡೆದು ಮುಂದೆ ಬರಲು ನಿಸ್ಸೀಮನಾಗಿರುವ ವೀರವರ್ಮನು ಕುದುರೆಗಳನ್ನು ತಡೆದನು. ಕಡೆಗೆ ಅವನಿಂದ ಬಿಡಿಸಲು, ಉತ್ತಮ ಕುದುರೆಗಳು ಹೊರಟು ಚಂದ್ರಹಾಸನ ಪುರಕ್ಕೆ ಬಂದವು; ಅಲ್ಲಿ ಅವು ಕಣ್ಣಿಗೆ ಕಾನಿಸದೆ ಇರಲು ];; ಪ್ರೇಮದಿಂ ನಾರದ ಮುನೀಶ್ವರಂ ಬಂದು ಸುತ್ರಾಮ ಸುತನೊಳ್ ಕೂಡೆ ವಿಸ್ತರದೆ ವೈಷ್ಣವ ಶಿರೋಮಣಿಯ ಕಥೆ ವೇಳೆ (ವೇಳೆ:ಹೇಳೆ) ಕೇಳ್ದು ತತ್ಪುರಕೆ ಐದಿ ನಲಿದು ಐದುದಿನಂ ಇರ್ದನು==[ಪ್ರೇಮದಿಂದ ನಾರದ ಮುನೀಶ್ವರರು ಬಂದು ಅರ್ಜುನನಿಗೆ ವಿಸ್ತಾರವಾಗಿ ವೈಷ್ಣವ ಶಿರೋಮಣಿಯಾದ ಚಂದ್ರಹಾಸನ ಕಥೆಯನ್ನು ಹೇಳಲು,ಕೇಳಿ ಆ ನಗರಕ್ಕೆ ಹೋಗಿ, ಸಂತೋಷದಿಂದ ಐದು ದಿನ ಇದ್ದನು].
 • ತಾತ್ಪರ್ಯ:ಆ ಮಯೂರಧ್ವಜನು ಕುದುರೆ ಸಹಿತ ನಡೆದು ಮುಂದೆ ಬರಲು ನಿಸ್ಸೀಮನಾಗಿರುವ ವೀರವರ್ಮನು ಕುದುರೆಗಳನ್ನು ತಡೆದನು. ಕಡೆಗೆ ಅವನಿಂದ ಬಿಡಿಸಲು, ಉತ್ತಮ ಕುದುರೆಗಳು ಹೊರಟು ಚಂದ್ರಹಾಸನ ಪುರಕ್ಕೆ ಬಂದವು; ಅಲ್ಲಿ ಅವು ಕಣ್ಣಿಗೆ ಕಾನಿಸದೆ ಇರಲು ಪ್ರೇಮದಿಂದ ನಾರದ ಮುನೀಶ್ವರರು ಬಂದು ಅರ್ಜುನನಿಗೆ ವಿಸ್ತಾರವಾಗಿ ವೈಷ್ಣವ ಶಿರೋಮಣಿಯಾದ ಚಂದ್ರಹಾಸನ ಕಥೆಯನ್ನು ಹೇಳಲು,ಕೇಳಿ ಆ ನಗರಕ್ಕೆ ಹೋಗಿ, ಸಂತೋಷದಿಂದ ಐದು ದಿನ ಇದ್ದನು.
 • (ಪದ್ಯ-೧೧)

ಪದ್ಯ:-:೧೨:[ಸಂಪಾದಿಸಿ]

ಶೈಶಿರದ ಕಾಲದೊಳ್ ಕಲಿ ಚಂದ್ರಹಾಸನಂ |
ಮೈಸಿರಿಯೊಳೊಳಗೊಂಡು ಬಕದಾಲ್ಭ್ಯನಂ ಕಂಡು |
ಕೈಸಾರ್ದ ಹರಿಸದಿಂ ಸಿಂಧುದೇಶದ ಮೇಲೆ ಮಖ ಸಮಯಕಿಲ್ಲಿಗಾಗಿ ||
ಜೈಸಿ ಬಂದೆವು ನಿನ್ನನುಜ್ಞೆಯೊಳ್ ಗಡ ಕಳುಹಿ |
ದೈಸು ವೀರರ್ಕಳುಂ ಸುಖದೊಳೈತಂದರೊ |
ತ್ತೈಸಿದಗಣಿತ ವಸ್ತು ಸಹಿತಖಿಳ ನೃಪರೊಡನೆ ಬಹಳ ವಿಭವದೊಳೆಂದನು ||12||

ಪದವಿಭಾಗ-ಅರ್ಥ:
ಶೈಶಿರದ ಕಾಳದೊಳ್ ಕಲಿ ಚಂದ್ರಹಾಸನಂ ಮೈಸಿರಿಯೊಳು ಒಳಗೊಂಡು ಬಕದಾಲ್ಭ್ಯನಂ ಕಂಡು ಕೈಸಾರ್ದ ಹರಿಸದಿಂ ಸಿಂಧುದೇಶದ ಮೇಲೆ ಮಖ ಸಮಯಕೆ ಇಲ್ಲಿಗಾಗಿ==[ಶಿಶಿರ ಮಾಸದ ಚಳಿಗಾಲದಲ್ಲಿ, ಮೈಸಂಪತ್ತಾದ ಕಲಿ ಚಂದ್ರಹಾಸನನ್ನು ಸೇರಿಗೊಂಡು, ಬಕದಾಲ್ಭ್ಯನನ್ನು ಕಂಡು ಕಾರ್ಯ ಕೈಗೂಡಿದ ಸಂತಸದಿಂದ ಸಿಂಧುದೇಶದ ಮೇಲೆ ಯಜ್ಞದ ಸಮಯಕಕೆ ಇಲ್ಲಿಗಾಗಿ];; ಜೈಸಿ ಬಂದೆವು ನಿನ್ನ ಅನುಜ್ಞೆಯೊಳ್ ಗಡ ಕಳುಹಿದ ಐಸು ವೀರರ್ಕಳುಂ ಸುಖದೊಳೈತಂದರು ಒತ್ತೈಸಿದ ಅಗಣಿತ ವಸ್ತು ಸಹಿತ ಅಖಿಳ ನೃಪರೊಡನೆ ಬಹಳ ವಿಭವದೊಳೆಂದನು==[ನಿನ್ನ ಅನುಜ್ಞೆಯಲ್ಲಿ ವಿಜಯಹೊಂದಿ ಬಂದೆವು ಗಡ! ಕಳುಹಿಸಿದ ಎಲ್ಲಾ ವೀರರೂ, ಒಟ್ಟುಮಾಡಿದ ಅಗಣಿತ ವಸ್ತು ಸಹಿತ ಎಲ್ಲಾ ರಾಜರೊಡನೆ ಬಹಳ ವೈಭವದಿಂದ ಸುಖದಲ್ಲಿ ಬಂದಿರುವರು].
 • ತಾತ್ಪರ್ಯ:ಶಿಶಿರ ಮಾಸದ ಚಳಿಗಾಲದಲ್ಲಿ, ಮೈಸಂಪತ್ತಾದ ಕಲಿ ಚಂದ್ರಹಾಸನನ್ನು ಸೇರಿಗೊಂಡು, ಬಕದಾಲ್ಭ್ಯನನ್ನು ಕಂಡು ಕಾರ್ಯ ಕೈಗೂಡಿದ ಸಂತಸದಿಂದ ಸಿಂಧುದೇಶದ ಮೇಲೆ ಯಜ್ಞದ ಸಮಯಕಕೆ ಇಲ್ಲಿಗಾಗಿ ನಿನ್ನ ಅನುಜ್ಞೆಯಲ್ಲಿ ವಿಜಯಹೊಂದಿ ಬಂದೆವು ಗಡ! ಕಳುಹಿಸಿದ ಎಲ್ಲಾ ವೀರರೂ, ಒಟ್ಟುಮಾಡಿದ ಅಗಣಿತ ವಸ್ತು ಸಹಿತ ಎಲ್ಲಾ ರಾಜರೊಡನೆ ಬಹಳ ವೈಭವದಿಂದ ಸುಖದಲ್ಲಿ ಬಂದಿರುವರು].
 • (ಪದ್ಯ-೧೨)

ಪದ್ಯ:-:೧೩:[ಸಂಪಾದಿಸಿ]

ಭೂಮಂಡಲದೊಳಿಂದು ಮಖ ಹಯಂ ತಿರುಗಿದ ಮ |
ಹಾ ಮಹೀಶ್ವರರೊಡನೆ ಬಂದ ವೃತ್ತಾಂತಮಂ |
ದಾಮೋದರಂ ಪೇಳ್ದು ರಾಯನಂ ಬೀಳ್ಕೊಂಡು ತನ್ನ ಮಂದಿರಕೆ ಬಳಿಕ ||
ಭೀಮನಂ ಕೈವಿಡಿದುಕೊಂಡು ನಡೆತರೆ ಸತ್ಯ |
ಭಾಮಾದಿ ರಾಣಿವಾಸಂಗಳಿದಿರಾಗಿ ಸು |
ಪ್ರೇಮದಿಂದಾರತಿಗಳಂ ಕೊಂಡು ಬಂದು ನಗುತಾತ್ಮಪತಿಯಂ ಕಂಡರು ||13||

ಪದವಿಭಾಗ-ಅರ್ಥ:
ಭೂಮಂಡಲದೊಳಿಂದು ಮಖ ಹಯಂ ತಿರುಗಿದ ಮಹಾ ಮಹೀಶ್ವರರೊಡನೆ ಬಂದ ವೃತ್ತಾಂತಮಂ ದಾಮೋದರಂ ಪೇಳ್ದು ರಾಯನಂ ಬೀಳ್ಕೊಂಡು ತನ್ನ ಮಂದಿರಕೆ ಬಳಿಕ==[ಭೂಮಂಡಲದಲ್ಲಿ ಯಜ್ಞಾಶ್ವವು ಸಂಚರಿಸಿದ ಮತ್ತು ಮಹಾ ಭೂಮಿಪತಿಗಳೊಡನೆ ಬಂದ ವೃತ್ತಾಂತವನ್ನು ಕೇಷ್ಣನು ಹೇಳಿ ಧರ್ಮರಾಯನನ್ನು ಬೀಳ್ಕೊಂಡು, ಬಳಿಕ ತನ್ನ ಮಂದಿರಕ್ಕೆ ಹೋದನು. ];; ಭೀಮನಂ ಕೈವಿಡಿದುಕೊಂಡು ನಡೆತರೆ ಸತ್ಯಭಾಮಾದಿ ರಾಣಿವಾಸಂಗಳಿದಿರಾಗಿ ಸುಪ್ರೇಮದಿಂದಾರತಿಗಳಂ ಕೊಂಡು ಬಂದು ನಗುತಾತ್ಮಪತಿಯಂ ಕಂಡರು==[ಹೋಗುವಾಗ ಭೀಮನನ್ನು ಕೈಹಿಡಿದುಕೊಂಡು ನಡೆದು ಬರಲು, ಸತ್ಯಭಾಮಾದಿ ರಾಣಿವಾಸಗಳ ಇದಿರಾಗಿ ಸುಪ್ರೇಮದಿಂದ ಆರತಿಗಳನ್ನು ಸ್ವೀಕರಿಸಲು ಬಂದಾಗ ನಗುತ ತಮ್ಮ ಪತಿಯಂ ಕಂಡರು].
 • ತಾತ್ಪರ್ಯ:ಭೂಮಂಡಲದಲ್ಲಿ ಯಜ್ಞಾಶ್ವವು ಸಂಚರಿಸಿದ ಮತ್ತು ಮಹಾ ಭೂಮಿಪತಿಗಳೊಡನೆ ಬಂದ ವೃತ್ತಾಂತವನ್ನು ಕೇಷ್ಣನು ಹೇಳಿ ಧರ್ಮರಾಯನನ್ನು ಬೀಳ್ಕೊಂಡು, ಬಳಿಕ ತನ್ನ ಮಂದಿರಕ್ಕೆ ಹೋದನು. ಹೋಗುವಾಗ ಭೀಮನನ್ನು ಕೈಹಿಡಿದುಕೊಂಡು ನಡೆದು ಬರಲು, ಸತ್ಯಭಾಮಾದಿ ರಾಣಿವಾಸಗಳ ಇದಿರಾಗಿ ಸುಪ್ರೇಮದಿಂದ ಆರತಿಗಳನ್ನು ಸ್ವೀಕರಿಸಲು ಬಂದಾಗ ನಗುತ ತಮ್ಮ ಪತಿಯಂ ಕಂಡರು.
 • (ಪದ್ಯ-೧೩)

ಪದ್ಯ:-:೧೪:[ಸಂಪಾದಿಸಿ]

ಮಡದಿಯರ ಮಧ್ಯದೊಳ್ ಸತ್ಯಭಾಮಾ ದೇವಿ |
ನುಡಿದಳೆಲೆದೇವ ನಮಗಹಳು ಸೋದರಿ ಕುಬ್ಜೆ |
ಪೊಡವಿಯೊಳ್ ಫಲುಗುಣಂ ತುರಗ ರಕ್ಷೆಗೆ ಪೋದ ಪ್ರಮೀಳೆ ನಿಮಗೆ ||
ಒಡಹುಟ್ಟಿದವಳಾದಳಿನ್ನೇನೆನಲ್ಕವಳ |
ಮುಡಿಯಮಾತಂ ಕೇಳ್ದು ಮೊಳೆವನಸುನಗೆಯ ಬೆ |
ಳ್ಪಿಡಿಯೆ ಕಮಲಾಂಬಕಂ ಪವಮಾನ ನಂದನನ ಮೊಗನೋಡುತಿಂತೆಂದನು ||14||

ಪದವಿಭಾಗ-ಅರ್ಥ:
ಮಡದಿಯರ ಮಧ್ಯದೊಳ್ ಸತ್ಯಭಾಮಾ ದೇವಿ ನುಡಿದಳು ಎಲೆದೇವ ನಮಗೆ ಅಹಳು ಸೋದರಿ ಕುಬ್ಜೆ ಪೊಡವಿಯೊಳ್ ಫಲುಗುಣಂ ತುರಗ ರಕ್ಷೆಗೆ ಪೋದ ಪ್ರಮೀಳೆ ನಿಮಗೆ==[ಮಡದಿಯರ ಮಧ್ಯದಲ್ಲಿ ಸತ್ಯಭಾಮಾ ದೇವಿ ಹೇಳಿದಳು,'ಎಲೆದೇವ ನಮಗೆ ಒಬ್ಬ ಕುಬ್ಜೆಯಾದ ಸೋದರಿ ಇರುವಳು. ಭೂಮಿಯಲ್ಲಿ ಫಲ್ಗುಣನು ಕುದುರೆಯ ರಕ್ಷಣೆಗೆ ಹೋದಾಗ, ಪ್ರಮೀಳೆ ನಿಮಗೆ];; ಒಡಹುಟ್ಟಿದವಳು ಆದಳು ಇನ್ನೇನು ಎನಲ್ಕೆ ಅವಳ ಮುಡಿಯಮಾತಂ ಕೇಳ್ದು ಮೊಳೆವನಸುನಗೆಯ ಬೆಳ್ಪಿಡಿಯೆ ಕಮಲಾಂಬಕಂ ಪವಮಾನ ನಂದನನ ಮೊಗನೋಡುತಿಂತೆಂದನು==[ಒಡಹುಟ್ಟಿದವಳು ಆದಳು. ಇನ್ನೇನು ಎನಲ್ಕೆ ಅವಳ ಒಗಟಿನ ಮಾತನ್ನು ಕೇಳಿ,(ಅವಳು ವಿಷಕನ್ಯೆ, ನೀವು ಪೂತನಿಯ ವಿಷ ಕುಡಿದವರು; ಸೋದರ ಸೋದರಿಯರು!) ನಸುನಗೆಯು ಮೂಡಲು, ಮುಖ ಬೆಳ್ಪು ಹೊಂದಲು ಕಮಲಾಕ್ಷ ಕೃಷ್ನನು, ಭೀಮನನ್ನು ಮುಖ ನೋಡತ್ತ ಹೀಗೆ ಹೇಳಿದನು].
 • ತಾತ್ಪರ್ಯ:ಮಡದಿಯರ ಮಧ್ಯದಲ್ಲಿ ಸತ್ಯಭಾಮಾ ದೇವಿ ಹೇಳಿದಳು,'ಎಲೆದೇವ ನಮಗೆ ಒಬ್ಬ ಕುಬ್ಜೆಯಾದ ಸೋದರಿ ಇರುವಳು. ಭೂಮಿಯಲ್ಲಿ ಫಲ್ಗುಣನು ಕುದುರೆಯ ರಕ್ಷಣೆಗೆ ಹೋದಾಗ, ಪ್ರಮೀಳೆ ನಿಮಗೆ ಒಡಹುಟ್ಟಿದವಳು ಆದಳು. ಇನ್ನೇನು ಎನಲ್ಕೆ ಅವಳ ಒಗಟಿನ ಮಾತನ್ನು ಕೇಳಿ,(ಅವಳು ವಿಷಕನ್ಯೆ, ನೀವು ಪೂತನಿಯ ವಿಷ ಕುಡಿದವರು; ಸೋದರ ಸೋದರಿಯರು!) ನಸುನಗೆಯು ಮೂಡಲು, ಮುಖ ಬೆಳ್ಪು ಹೊಂದಲು ಕಮಲಾಕ್ಷ ಕೃಷ್ನನು, ಭೀಮನನ್ನು ಮುಖ ನೋಡತ್ತ ಹೀಗೆ ಹೇಳಿದನು.
 • (ಪದ್ಯ-೧೪)

ಪದ್ಯ:-:೧೫:[ಸಂಪಾದಿಸಿ]

ಸಂತತಿಗೆ ಸಂತತಿಗಳಾದು ವಿನ್ನೇನದರ |
ಚಿಂತೆ ಬಾಲ್ಯವೆ ನಮಗೆ ಭೀಮ ನೋಡೀಗ ನ |
ಮ್ಮಂತರವ ನರಿಯದಿವಳೆಂದಕಟಕಿಯ ಮಾತನೆಂದು ಮುರಹರನೊರೆದೊಡೆ ||
ಅಂತಹುದು ಪುಸಿಯಲ್ಲ ತರಳತನದೊಳ್ ಪುರುಷ |
ರೆಂತಾದೊಡಂ ನಡೆವರೀ ಧರ್ಮಜನ ಪುರದೊ |
ಳಿಂತು ಮಾರ್ಗಿಗಳಾಗದಿರಬಹುದೆ ಹೇಳೆಂದಳಾ ಸತ್ಯಭಾಮೆ ನಗುತೆ ||15||

ಪದವಿಭಾಗ-ಅರ್ಥ:
ಸಂತತಿಗೆ ಸಂತತಿಗಳು ಆದುವು ಇನ್ನೇನು ಅದರ ಚಿಂತೆ ಬಾಲ್ಯವೆ ನಮಗೆ, ಭೀಮ ನೋಡೀಗ ನಮ್ಮ ಅಂತರವನು ಅರಿಯದಿವಳೆಂದು ಕಟಕಿಯ ಮಾತನೆಂದು ಮುರಹರನು ಒರೆದೊಡೆ==['ನಮಗೆ ಮಕ್ಕಳಿಗೆ ಮಕ್ಕಳಾದವು; ಇನ್ನೇನು ಅದರ (ಹೆಣ್ಣಿನ) ಚಿಂತೆ ಬಾಲ್ಯವೆ ನಮಗೆ, ಭೀಮ ನೋಡು ಈಗ ನಮ್ಮ ವಯಸ್ಸನ್ನು; ಇವಳು ಅದನ್ನು ಅರಿಯದೆ ಕಟಕಿಯ ಮಾತನ್ನು ಹೇಳುವಳು,' ಎಂದು ಕೃಷ್ಣನು ಹೇಳಿದಾಗ];; ಅಂತಹುದು ಪುಸಿಯಲ್ಲ ತರಳತನದೊಳ್ ಪುರುಷರು ಎಂತಾದೊಡಂ ನಡೆವರು ಈ ಧರ್ಮಜನ ಪುರದೊಳು ಇಂತು ಮಾರ್ಗಿಗಳಾಗದೆ ಇರಬಹುದೆ ಹೇಳೆಂದಳು ಆಸತ್ಯಭಾಮೆ ನಗುತೆ==[ಅದು ಅಹುದು ಸುಳ್ಳಲ್ಲ, ಆದರೆ ಚಿಕ್ಕವರಿದ್ದಾಗ ಪುರುಷರು ಏನಾದರೂ ಮಾಡುವರು; ಈ ಧರ್ಮಜನ ಪುರದಲ್ಲಿ ಹೀಗೆ ನಡತೆ ಇಲ್ಲದವರಾಗದೆ ಇರಬಹುದೆ ಹೇಳು,' ಎಂದಳು ಆ ಸತ್ಯಭಾಮೆ ನಗುತ್ತ].
 • ತಾತ್ಪರ್ಯ: 'ನಮಗೆ ಮಕ್ಕಳಿಗೆ ಮಕ್ಕಳಾದವು; ಇನ್ನೇನು ಅದರ (ಹೆಣ್ಣಿನ) ಚಿಂತೆ ಬಾಲ್ಯವೆ ನಮಗೆ, ಭೀಮ ನೋಡು ಈಗ ನಮ್ಮ ವಯಸ್ಸನ್ನು; ಇವಳು ಅದನ್ನು ಅರಿಯದೆ ಕಟಕಿಯ ಮಾತನ್ನು ಹೇಳುವಳು,' ಎಂದು ಕೃಷ್ಣನು ಹೇಳಿದಾಗ ಅದು ಅಹುದು ಸುಳ್ಳಲ್ಲ, ಆದರೆ ಚಿಕ್ಕವರಿದ್ದಾಗ ಪುರುಷರು ಏನಾದರೂ ಮಾಡುವರು; ಈ ಧರ್ಮಜನ ಪುರದಲ್ಲಿ ಹೀಗೆ ನಡತೆ ಇಲ್ಲದವರಾಗದೆ ಇರಬಹುದೆ ಹೇಳು,' ಎಂದಳು ಆ ಸತ್ಯಭಾಮೆ ನಗುತ್ತ. (ಪೂತನಿಯ ವಿಷ ತೆಗೆದಂತೆ ವಿಷಕನ್ಯೆ ಪ್ರಮೀಳೆಗೂ ಎದಯ ಹಾಲು ಹೀರಿ ವಿಷ ತೆಗೆಯಬಹುದೇ ಎಂಬ ಭಾವ ಇರಬಹುದು - ಕವಿಯ ಗೂಢಭಾಷೆ)
 • (ಪದ್ಯ-೧೫)

ಪದ್ಯ:-:೧೬:[ಸಂಪಾದಿಸಿ]

ಪ್ರಾಣೇಶ್ವರಿಯ ನುಡಿಗೆ ನಸುನಗುತೆ ಮತ್ತುಳಿದ|
ರಾಣಿಯರ ಸರಸೋಕ್ತಿಗಳ ನಾಲಿಸುತೆ ಚಕ್ರ |
ಪಾಣಿ ಮಾರುತಿ ಸಹಿತ ಭವನದೊಳ್ ಕುಳ್ಳಿರ್ದು ಸುಖದೊಳಿರಲಾಪದದೊಳು ||
ಕ್ಷೋಣೀಂದ್ರರೊಡಗೂಡಿ ಫಲುಗುಣಂ ಭೂವರನ |
ಕಾಣಿಕೆಗೆ ನಗರದ ಸಮೀಪಕೈತಂದನಾ |
ವಾಣಿಯಂ ದಾರುಕಂ ಬಂದು ಬಿನ್ನೈಸಲ್ಕೆ ಪೊರಮಟ್ಟನರಮನೆಯನು ||16||

ಪದವಿಭಾಗ-ಅರ್ಥ:
ಪ್ರಾಣೇಶ್ವರಿಯ ನುಡಿಗೆ ನಸುನಗುತೆ ಮತ್ತೆ ಉಳಿದ ರಾಣಿಯರ ಸರಸೋಕ್ತಿಗಳನು ಆಲಿಸುತೆ ಚಕ್ರಪಾಣಿ ಮಾರುತಿ ಸಹಿತ ಭವನದೊಳ್ ಕುಳ್ಳಿರ್ದು ಸುಖದೊಳಿರಲು ಆಪದದೊಳು(ಸಮಯಕ್ಕೆ ಒದಗುವವನು) ==[ಪ್ರಾಣೇಶ್ವರಿ ಸತ್ಯಭಾಮೆಯ ಮಾತಿಗೆ ನಸುನಗುತ್ತ ಮತ್ತೆ ಉಳಿದ ರಾಣಿಯರ ಸರಸೋಕ್ತಿಗಳನ್ನು ಕೇಳಿಸಿಕೊಳ್ಳುತ್ತಾ ಕೃಷ್ಣನು ಭೀಮನ ಸಹಿತ ರಾಜಭವನದಲಲಿ ಕುಳಿತು ಸುಖ ಸಂತೋಷದಲ್ಲಿ ಇರಲು, ಆ ಸಮಯದಲ್ಲಿ ];; ಕ್ಷೋಣೀಂದ್ರರು (ರಾಜರು) ಒಡಗೂಡಿ ಫಲುಗುಣಂ ಭೂವರನ ಕಾಣಿಕೆಗೆ ನಗರದ ಸಮೀಪಕೆ ಐತಂದನು ಆ ವಾಣಿಯಂ ದಾರುಕಂ ಬಂದು ಬಿನ್ನೈಸಲ್ಕೆ ಪೊರಮಟ್ಟನು ಅರಮನೆಯನು==[ರಾಜರನ್ನು ಒಡಗೂಡಿಕೊಂಡು ಫಲ್ಗುಣನು ಧರ್ಮರಾಯನನ್ನು ಕಾಣಲು ನಗರದ ಸಮೀಪಕ್ಕ ಬಂದನು; ಆ ವಾರ್ತೆಯನ್ನು ದಾರುಕನು ಬಂದು ವಿನಯದಲ್ಲಿ ತಿಳಿಸಲು ಕೃಷ್ಣನು ಅರಮನೆಯಿಂದ ಹೊರಟನು].
 • ತಾತ್ಪರ್ಯ:ಪ್ರಾಣೇಶ್ವರಿ ಸತ್ಯಭಾಮೆಯ ಮಾತಿಗೆ ನಸುನಗುತ್ತ ಮತ್ತೆ ಉಳಿದ ರಾಣಿಯರ ಸರಸೋಕ್ತಿಗಳನ್ನು ಕೇಳಿಸಿಕೊಳ್ಳುತ್ತಾ ಕೃಷ್ಣನು ಭೀಮನ ಸಹಿತ ರಾಜಭವನದಲಲಿ ಕುಳಿತು ಸುಖ ಸಂತೋಷದಲ್ಲಿ ಇರಲು, ಆ ಸಮಯದಲ್ಲಿ ರಾಜರನ್ನು ಒಡಗೂಡಿಕೊಂಡು ಫಲ್ಗುಣನು ಧರ್ಮರಾಯನನ್ನು ಕಾಣಲು ನಗರದ ಸಮೀಪಕ್ಕ ಬಂದನು; ಆ ವಾರ್ತೆಯನ್ನು ದಾರುಕನು ಬಂದು ವಿನಯದಲ್ಲಿ ತಿಳಿಸಲು ಕೃಷ್ಣನು ಅರಮನೆಯಿಂದ ಹೊರಟನು.
 • (ಪದ್ಯ-೧೬)XXX

ಪದ್ಯ:-:೧೭:[ಸಂಪಾದಿಸಿ]

ಬಂದನಧ್ವರ ಶಾಲೆಗಸುರಾರಿಮತ್ತೆ ಯಮ |
ನಂದನಂಗಿಲ್ಲಿಹುದು ನೀನಖಿಳ ಭೂಪಾಲ |
ವೃಂದಮಂ ಬಕದಾಲ್ಭ್ಯಮುನಿಪನಂ ನಾವಿದಿರ್ಗೊಂಡು ಬಹೆವೆಂದುಸಿರ್ದು ||
ಮುಂದೆ ಧೃತರಾಷ್ಟ್ರವಿದುರಾದಿ ವೃದ್ಧರ್ ಮಹೀ |
ವೃಂದಾರಕ ಪ್ರತತಿ ಸಹಿತ ಪೊರಮಟ್ಟು ನಡೆ |
ತಂದನುತ್ಸವದಿಂದೆ ಬರಲೈದೆ ಸಕಲ ಜನಮೆಂದು ನೇಮಿಸಿ ಮುದದೊಳು ||17||

ಪದವಿಭಾಗ-ಅರ್ಥ:
ಬಂದನು ಅಧ್ವರಶಾಲೆಗೆ ಅಸುರಾರಿ ಮತ್ತೆ ಯಮನಂದನಂಗೆ ಇಲ್ಲಿಹುದು ನೀನು ಅಖಿಳ ಭೂಪಾಲವೃಂದಮಂ ಬಕದಾಲ್ಭ್ಯಮುನಿಪನಂ ನಾವು ಇದಿರ್ಗೊಂಡು ಬಹೆವೆಂದು ಉಸಿರ್ದು==[ ಯಜ್ಞಶಾಲೆಗೆ ಕೃಷ್ಣನು ಬಂದನು ಮತ್ತೆ ಧರ್ಮಜನಿಗೆ,'ನೀನು ಇಲ್ಲಿ ಯಜ್ಞಶಾಲೆಯಲ್ಲಿ ಇರು, ಎಲ್ಲಾ ರಾಜಮೂಹವನ್ನೂ, ಬಕದಾಲ್ಭ್ಯಮುನಿಪನನ್ನೂ, ನಾವು ಎದುರುಗೊಂಡು ಬರುವೆವು ಎಂದು ಹೇಳಿ];; ಮುಂದೆ ಧೃತರಾಷ್ಟ್ರ ವಿದುರಾದಿ ವೃದ್ಧರ್ ಮಹೀವೃಂದಾರಕ ಪ್ರತತಿ ಸಹಿತ ಪೊರಮಟ್ಟು ನಡೆತಂದನು ಉತ್ಸವದಿಂದೆ ಬರಲು ಐದೆ ಸಕಲ ಜನಮೆಂದು ನೇಮಿಸಿ ಮುದದೊಳು==[ಎದುರಿನಲ್ಲಿ ಧೃತರಾಷ್ಟ್ರ ವಿದುರಾದಿ ವೃದ್ಧರ, ವಿಪ್ರರಸಮೂಹದ, ಸಂಗಡ ಹೊರಟು ಉತ್ಸಾಹದಿಂದ ಬರಲು, ಸಕಲ ಜನರೂ ಬರಲಿ ಎಂದು ಸಂತೋಷದಿಂದ ಆಜ್ಞಾಪಿಸಿ ನಡೆದುಬಂದನು].
 • ತಾತ್ಪರ್ಯ:ಯಜ್ಞಶಾಲೆಗೆ ಕೃಷ್ಣನು ಬಂದನು, ಮತ್ತೆ ಧರ್ಮಜನಿಗೆ,'ನೀನು ಇಲ್ಲಿ ಯಜ್ಞಶಾಲೆಯಲ್ಲಿ ಇರು, ಎಲ್ಲಾ ರಾಜಮೂಹವನ್ನೂ, ಬಕದಾಲ್ಭ್ಯಮುನಿಪನನ್ನೂ, ನಾವು ಎದುರುಗೊಂಡು ಬರುವೆವು ಎಂದು ಹೇಳಿ, ಎದುರಿನಲ್ಲಿ ಧೃತರಾಷ್ಟ್ರ ವಿದುರಾದಿ ವೃದ್ಧರ, ವಿಪ್ರರಸಮೂಹದ, ಸಂಗಡ ಹೊರಟು ಉತ್ಸಾಹದಿಂದ ಬರಲು, ಸಕಲ ಜನರೂ ಬರಲಿ ಎಂದು ಸಂತೋಷದಿಂದ ಆಜ್ಞಾಪಿಸಿ ನಡೆದುಬಂದನು.
 • (ಪದ್ಯ-೧೭)

ಪದ್ಯ:-:೧೮:[ಸಂಪಾದಿಸಿ]

ಅಸುರಹರನಾಜ್ಞೆಯಿಂದಾಗ ಪಟ್ಟಣದೊಳಗೆ |
ಪೊಸತಾಯ್ತು ಗುಡಿ ತೋರಣದ ರಚನೆ ಬೀದಿಗಳೊ |
ಳೆಸೆದುವು ಸುಮಂಗಳ ದ್ರವ್ಯಂಗಳೊಪ್ಪಿದುವು ಪನ್ನೀರಚಳೆಯಂಗಳು ||
ಮುಸುಕಿದವು ಧೂಪ ವಾಸನೆಗಳಿಡಿದುದು ವಿವಿಧ |
ಕುಸುಮ ಗಂಧೋತ್ಕರಂ ಘನ ಸಾರ ಕುಂಕುಮದ |
ಕೆಸರುಗಳ ಪರಿಮಳಂ ತೀಡಿದುದು ಕಪ್ಪುರದ ಸೊಡರ್ಗಂಪು ರಂಜಿಸಿದುದು ||18||

ಪದವಿಭಾಗ-ಅರ್ಥ:
ಅಸುರಹರನು ಆಜ್ಞೆಯಿಂದ ಆಗ ಪಟ್ಟಣದೊಳಗೆ ಪೊಸತಾಯ್ತು ಗುಡಿ ತೋರಣದ ರಚನೆ ಬೀದಿಗಳೊಳು ಎಸೆದುವು ಸುಮಂಗಳ ದ್ರವ್ಯಂಗಳು ಒಪ್ಪಿದುವು ಪನ್ನೀರಚಳೆಯಂಗಳು==[ಕೃಷ್ಣನ ಆಜ್ಞೆಯಿಂದ ಆಗ ಪಟ್ಟಣದೊಳಗೆ ಹೊಸತು ಕಂಡಿತು; ಗುಡಿ ತೋರಣದ ರಚನೆಗಳು ಬೀದಿಗಳಲ್ಲಿ ಶೋಭಿಸಿದುವು; ಉತ್ತಮ ಮಂಗಳ ದ್ರವ್ಯಗಳು ಸಿದ್ಧವಾದುವು; ಪನ್ನೀರ ಸಿಂಚನಗಳು ];; ಮುಸುಕಿದವು ಧೂಪ ವಾಸನೆಗಳು ಇಡಿದುದು ವಿವಿಧ ಕುಸುಮ ಗಂಧೋತ್ಕರಂ ಘನ ಸಾರ ಕುಂಕುಮದ ಕೆಸರುಗಳ ಪರಿಮಳಂ ತೀಡಿದುದು ಕಪ್ಪುರದ ಸೊಡರ್ಗಂಪು ರಂಜಿಸಿದುದು==[ತುಂಬಿದವು; ಧೂಪದ ಪರಿಮಳಗಳು ವ್ಯಾಪಿಸಿತು; ವಿವಿಧ ಹೂವುಗಳ ಸುವಾಸನೆಗಳು, ಘನವಾದ ಸಾರ ಕುಂಕುಮ ಕೇಸರಿಯ ರಸರಾಡಿಗಳ ಪರಿಮಳವು ತುಂಬಿತು; ಕರ್ಪುರದ ದೀಪದ ಕಂಪು ಹರಡಿ ರಂಜನೀಯವಾಯಿತು].
 • ತಾತ್ಪರ್ಯ:ಕೃಷ್ಣನ ಆಜ್ಞೆಯಿಂದ ಆಗ ಪಟ್ಟಣದೊಳಗೆ ಹೊಸತು ಕಂಡಿತು; ಗುಡಿ ತೋರಣದ ರಚನೆಗಳು ಬೀದಿಗಳಲ್ಲಿ ಶೋಭಿಸಿದುವು; ಉತ್ತಮ ಮಂಗಳ ದ್ರವ್ಯಗಳು ಸಿದ್ಧವಾದುವು; ಪನ್ನೀರ ಸಿಂಚನಗಳು ತುಂಬಿದವು; ಧೂಪದ ಪರಿಮಳಗಳು ವ್ಯಾಪಿಸಿತು; ವಿವಿಧ ಹೂವುಗಳ ಸುವಾಸನೆಗಳು, ಘನವಾದ ಸಾರ ಕುಂಕುಮ ಕೇಸರಿಯ ರಸರಾಡಿಗಳ ಪರಿಮಳವು ತುಂಬಿತು; ಕರ್ಪುರದ ದೀಪದ ಕಂಪು ಹರಡಿ ರಂಜನೀಯವಾಯಿತು.
 • (ಪದ್ಯ-೧೮)

ಪದ್ಯ:-:೧೯:[ಸಂಪಾದಿಸಿ]

ಪೊರಮಟ್ಟುದಖಿಳ ಪುರಜನಮೈದೆ ಸಿಂಗರದ |
ಮೆರಹುಗಳ ಮೌಳಿಯಿಂ ಮೇಳವದ ರಚನೆಗಳ |
ತರತರದ ವಿದ್ಯಾ ವಿನೋದದಿಂ ನಟ ನರ್ತಕೀ ಜನದ ಗೀತದಿಂದೆ ||
ತುರುಗಿದ ಮೃದಂಗಾದಿ ವಾದಯಧ್ವನಿಗಳಿಂದೆ |
ಮಿರುಗುವ ವಿಲಾಸಿನಿಯರೋಳಿಯಿಂ ಮಾರ್ಗದೊಳ್|
ತೆರಪಿಲ್ಲೆನಲ್ಕೆ ವೈಭವದಿಂದೆ ಪಾರ್ಥನನಿದಿರ್ಗೊಂಬ ಸಂಭ್ರಮದೊಳು ||19||

ಪದವಿಭಾಗ-ಅರ್ಥ:
ಪೊರಮಟ್ಟುದು ಅಖಿಳ ಪುರಜನಂ ಐದೆ ಸಿಂಗರದ ಮೆರಹುಗಳ ಮೌಳಿಯಿಂ ಮೇಳವದ ರಚನೆಗಳ ತರತರದ ವಿದ್ಯಾ ವಿನೋದದಿಂ ನಟ ನರ್ತಕೀ ಜನದ ಗೀತದಿಂದೆ==[ಅರ್ಜುನನು ದಿದ್ವಿಜಯದ ಸಮೂಹದೊಡನೆ ಬರಲು, ತಲೆಯನ್ನು ಸಿಂಗರಿಸಿದ ಹೊಳಪಿನ ಮೇಳದ ರಚನೆಗಳಜೊತೆ ತರತರದ ವಿದ್ಯಾ ವಿನೋದದಿಂದ, ನಟ ನರ್ತಕಿಜನರ ಗೀತದಿಂದ ];; ತುರುಗಿದ ಮೃದಂಗಾದಿ ವಾದಯ ಧ್ವನಿಗಳಿಂದೆ ಮಿರುಗುವ ವಿಲಾಸಿನಿಯರ ಓಳಿಯಿಂ ಮಾರ್ಗದೊಳ್ ತೆರಪಿಲ್ಲ ಎನಲ್ಕೆ ವೈಭವದಿಂದೆ ಪಾರ್ಥನನು ಇದಿರ್ಗೊಂಬ ಸಂಭ್ರಮದೊಳು==[ತುಂಬಿದ ಮೃದಂಗ ಮೊದಲಾದ ವಾದ್ಯ ಧ್ವನಿಗಳಿಂದ ಮಿರುಗುವ ವಿಲಾಸಿನಿಯರ ಗುಂಪುಗಳಿಮದ ದಾರಿಯಲ್ಲಿ ತೆರಪಿಲ್ಲ ಎನ್ನುವಂತೆ ವೈಭವದಿಂದ ಪಾರ್ಥನನು ಎದಿರುಗೊಂಬ ಸಂಭ್ರಮದಲ್ಲಿ ಎಲ್ಲಾ ಪುರಜನರೂ, ಹೊರಟರು].
 • ತಾತ್ಪರ್ಯ: ಅರ್ಜುನನು ದಿದ್ವಿಜಯದ ಸಮೂಹದೊಡನೆ ಬರಲು, ತಲೆಯನ್ನು ಸಿಂಗರಿಸಿದ ಹೊಳಪಿನ ಮೇಳದ ರಚನೆಗಳಜೊತೆ ತರತರದ ವಿದ್ಯಾ ವಿನೋದದಿಂದ, ನಟ ನರ್ತಕಿಜನರ ಗೀತದಿಂದ ತುಂಬಿದ ಮೃದಂಗ ಮೊದಲಾದ ವಾದ್ಯ ಧ್ವನಿಗಳಿಂದ ಮಿರುಗುವ ವಿಲಾಸಿನಿಯರ ಗುಂಪುಗಳಿಮದ ದಾರಿಯಲ್ಲಿ ತೆರಪಿಲ್ಲ ಎನ್ನುವಂತೆ ವೈಭವದಿಂದ ಪಾರ್ಥನನು ಎದಿರುಗೊಂಬ ಸಂಭ್ರಮದಲ್ಲಿ ಎಲ್ಲಾ ಪುರಜನರೂ, ಹೊರಟರು.
 • (ಪದ್ಯ-೧೯)

ಪದ್ಯ:-:೨೦:[ಸಂಪಾದಿಸಿ]

ದಂತಿಗಳ ಮೇಲೆ ದೇವಕಿ ಯಶೋದಾದೇವಿ |
ಕುಂತಿಯರ್ ಪೊರಮಟ್ಟರದರ ಬಳಿವಿಡಿದು ಸೀ |
ಮಂತಿನೀ ಗಣಸಹಿತ ರುಕ್ಷಿಣಿಯ ದಂಡಿಗೆ ತೆರಳ್ದುದತಿ ವಿಭವದಿಂದೆ ||
ತಿಂತಿಣಿಸಿ ಗಗನದೊಳ್ ತುಂಬಿಗಳ್ ಕಾರಮುಗಿ |
ಲಂತೆ ನವ ಪಾರಿಜಾತದ ಕುಸುಮ ಪರಿಮಳಕೆ |
ಸಂತತಂ ಮುಸುಕಲಂದಣದೊಳೈದಿದಳಾಳಿಯರ್‍ವೆರಸಿ ಸತ್ಯಭಾಮೆ ||20||

ಪದವಿಭಾಗ-ಅರ್ಥ:
ದಂತಿಗಳ ಮೇಲೆ ದೇವಕಿ ಯಶೋದಾದೇವಿ ಕುಂತಿಯರ್ ಪೊರಮಟ್ಟರು ಅದರ ಬಳಿವಿಡಿದು ಸೀಮಂತಿನೀ ಗಣಸಹಿತ ರುಕ್ಷಿಣಿಯ ದಂಡಿಗೆ ತೆರಳ್ದುದು ಅತಿ ವಿಭವದಿಂದೆ=[ಆನೆಗಳ ಮೇಲೆ ದೇವಕಿ ಯಶೋದಾದೇವಿ ಕುಂತಿಯರು ಹೊರಟರು; ಅವರ ಬಳಿಯೇ ಹಿಂದಿನಿಂದ ವನಿತೆಯರು ಸಮೂಹಸಹಿತ ರುಕ್ಷಿಣಿಯ ಪಲ್ಲಕ್ಕಿ/ದಂಡಿಗೆಯು ಅತಿ ವೈಭವದಿಂದ ಹೊರಟಿತು;];; ತಿಂತಿಣಿಸಿ ಗಗನದೊಳ್ ತುಂಬಿಗಳ್ ಕಾರಮುಗಿಲಂತೆ ನವ ಪಾರಿಜಾತದ ಕುಸುಮ ಪರಿಮಳಕೆ ಸಂತತಂ ಮುಸುಕಲು ಅಂದಣದೊಳೈದಿದಳು ಆಳಿಯರ್‍ ವೆರಸಿ ಸತ್ಯಭಾಮೆ==[ಆಕಾಶದಲ್ಲಿ ತುಂಬಿಗಳು ಕಪ್ಪುಮುಗಿಲಿನಂತೆ ಹೊಸ ಪಾರಿಜಾತದ ಕುಸುಮ ಪರಿಮಳಕ್ಕೆ ಗುಂಪಾಗಿ ಒಂದೇ ಸಮನ ಮುತ್ತಲು, ಸತ್ಯಭಾಮೆ ಸಖಿಯರೊಡನೆ ದಿದಳು ಅಂದಣದಲ್ಲಿ ಬಂದಳು].
 • ತಾತ್ಪರ್ಯ:ಆನೆಗಳ ಮೇಲೆ ದೇವಕಿ ಯಶೋದಾದೇವಿ ಕುಂತಿಯರು ಹೊರಟರು; ಅವರ ಬಳಿಯೇ ಹಿಂದಿನಿಂದ ವನಿತೆಯರು ಸಮೂಹಸಹಿತ ರುಕ್ಷಿಣಿಯ ಪಲ್ಲಕ್ಕಿ/ದಂಡಿಗೆಯು ಅತಿ ವೈಭವದಿಂದ ಹೊರಟಿತು;ಆಕಾಶದಲ್ಲಿ ತುಂಬಿಗಳು ಕಪ್ಪುಮುಗಿಲಿನಂತೆ ಹೊಸ ಪಾರಿಜಾತದ ಕುಸುಮ ಪರಿಮಳಕ್ಕೆ ಗುಂಪಾಗಿ ಒಂದೇ ಸಮನ ಮುತ್ತಲು, ಸತ್ಯಭಾಮೆ ಸಖಿಯರೊಡನೆ ದಿದಳು ಅಂದಣದಲ್ಲಿ ಬಂದಳು].
 • (ಪದ್ಯ-೨೦)

ಪದ್ಯ:-:೨೧:[ಸಂಪಾದಿಸಿ]

ಜಾಂಬುವತಿ ಮೊದಲಾದ ಪಂಕರುಹ ಪತ್ರಾಯ |
ತಾಂಬಕನ ರಾಣಿಯರ್ ಪರಿಪರಿಯೊಳೆಸೆವ ದಿ |
ವ್ಯಾಂಬರ ಸುಗಂಧ ಮಾಲ್ಯಾಭರಣ ಮುಕ್ತಾವಳಿಗಳ ಸಿಂಗರವನಾಂತು ||
ತಾಂಬೂಲ ರಾಗರಸದೊಳ್ ಪಿಡಿದ ಲಲಿತ ವ |
ದನಾಂಬುಜದ ಕಾಂತಿಗಳ ಕಳೆವೆತ್ತು ತಮತಮಗೆ |
ಜಾಂಬೂನದಾಲಂಕೃತಾಂದೋಳಿಕಾರೋಹಣಂಗೈದು ಪೊರಮಟ್ಟರು ||21||

ಪದವಿಭಾಗ-ಅರ್ಥ:
ಜಾಂಬುವತಿ ಮೊದಲಾದ ಪಂಕರುಹ ಪತ್ರಾಯತಾಂಬಕನ ರಾಣಿಯರ್ ಪರಿಪರಿಯೊಳು ಏಸೆವ ದಿವ್ಯಾಂಬರ ಸುಗಂಧ ಮಾಲ್ಯಾಭರಣ ಮುಕ್ತಾವಳಿಗಳ ಸಿಂಗರವನು ಅಂತು==[ಜಾಂಬುವತಿ ಮೊದಲಾದ ಕೃಷ್ಣನ ರಾಣಿಯರು ಪರಿಪರಿಯಲ್ಲಿ ಶೋಬಿಸುವ ದಿವ್ಯಾಂಬರ, ಸುಗಂಧ, ಮಾಲ್ಯಾಭರಣ, ಮುಕ್ತಾವಳಿಗಳ ಶ್ರಂಗಾರವನ್ನು ಮಾಡಿಕೊಂಡು,];; ತಾಂಬೂಲ ರಾಗರಸದೊಳ್ ಪಿಡಿದ ಲಲಿತ ವದನಾಂಬುಜದ ಕಾಂತಿಗಳ ಕಳೆವೆತ್ತು ತಮತಮಗೆ ಜಾಂಬೂನದ ಆಲಂಕೃತ ಆಂದೋಳಿಕ ಆರೋಹಣಂಗೈದು ಪೊರಮಟ್ಟರು==[ತಾಂಬೂಲ ಸೇವಿಸಿ ಅದರರಾಗರಸದಲ್ಲಿ ತುಂಬಿದ ಲಲಿತ ಮುಖಕಮಲದ ಕಾಂತಿಗಳಿಂದ ಶೋಭೆ ಪಡೆದು ತಮತಮಗೆ ಸಿದ್ಧವಾದ ಚಿನ್ನದ ಆಲಂಕೃತ ಪಲ್ಲಕ್ಕಿಯನ್ನು ಹತ್ತಿ ಹೊರಟರು.]
 • ತಾತ್ಪರ್ಯ:ಜಾಂಬುವತಿ ಮೊದಲಾದ ಕೃಷ್ಣನ ರಾಣಿಯರು ಪರಿಪರಿಯಲ್ಲಿ ಶೋಬಿಸುವ ದಿವ್ಯಾಂಬರ, ಸುಗಂಧ, ಮಾಲ್ಯಾಭರಣ, ಮುಕ್ತಾವಳಿಗಳ ಶ್ರಂಗಾರವನ್ನು ಮಾಡಿಕೊಂಡು, ತಾಂಬೂಲ ಸೇವಿಸಿ ಅದರ ರಾಗರಸದಲ್ಲಿ ತುಂಬಿದ ಲಲಿತ ಮುಖಕಮಲದ ಕಾಂತಿಗಳಿಂದ ಶೋಭೆ ಪಡೆದು ತಮತಮಗೆ ಸಿದ್ಧವಾದ ಚಿನ್ನದ ಆಲಂಕೃತ ಪಲ್ಲಕ್ಕಿಯನ್ನು ಹತ್ತಿ ಹೊರಟರು.];;
 • (ಪದ್ಯ-೨೧)

ಪದ್ಯ:-:೨೨:[ಸಂಪಾದಿಸಿ]

ಇಟ್ಟಣಿಸಿತಮರೇಂದ್ರತನಯನನಿದಿರ್ಗೊಂಬ |
ಬಟ್ಟೆಯೊಳ್ ನಾರೀಸಮೂಹಮೊರಸೊರಸಿನೊಳ್ |
ತೊಟ್ಟಮೈದೊಡಿಗೆಗಳ ಮಸೆದ ಪೊಂಬುಡಿಯಂತೆ ಕುಂಕುಮ ರಜಂಗಳುಗಲು ||
ಕಟ್ಟಿರ್ದ ಹಾರಾದಿಗಳ್ ಪರಿದುದಿರ್ವವೊಲ್ |
ದಿಟ್ಟಿಗೊನೆಗಳ ಕಾಂತಿ ಸೂಸುತಿರೆತನುರುಚಿಯೊ|
ಳುಟ್ಟ ವಸನ ದ್ಯುತಿ ವಿರಾಜಿಸುತ್ತಿರೆ ಹಾವಭಾವದ ವಿಲಾಸದಿಂದೆ ||22||

ಪದವಿಭಾಗ-ಅರ್ಥ:
ಇಟ್ಟಣಿಸಿತು ಅಮರೇಂದ್ರತನಯನನು (ಅರ್ಜುನನು) ಇದಿರ್ಗೊಂಬ ಬಟ್ಟೆಯೊಳ್ ನಾರೀಸಮೂಹಂ ಒರಸೊರಸಿನೊಳ್ (ಕ್ರಮಕ್ರಮವಾಗಿ) ತೊಟ್ಟ ಮೈದೊಡಿಗೆಗಳ ಮಸೆದ ಪೊಂಬುಡಿಯಂತೆ ಕುಂಕುಮ ರಜಂಗಳು ಉಗಲು==[ ಅರ್ಜುನನ್ನು ಎದರುಗೊಳ್ಳವ/ಸ್ವಾಗತಿಸುವ ದಾರಿಯಲ್ಲಿ ವನುತೆಯರ ಸಮೂಹ ಕ್ರಮಕ್ರಮವಾಗಿ ತೊಟ್ಟ ಮೈಯ್ಯ ತೊಡಿಗೆಗಳ ಮಸೆದ/ತಿಕ್ಕಿದ ಚಿನ್ನದ ಪುಡಿಯಂತೆ ಕುಂಕುಮ ಹುಡಿಗಳು ಸೂಸಲು];; ಕಟ್ಟಿರ್ದ ಹಾರಾದಿಗಳ್ ಪರಿದು ಉದಿರ್ವವೊಲ್ ದಿಟ್ಟಿಗೊನೆಗಳ ಕಾಂತಿ ಸೂಸುತಿರೆ ತನು ರುಚಿಯೊಳು ಉಟ್ಟ ವಸನ ದ್ಯುತಿ ವಿರಾಜಿಸುತ್ತಿರೆ ಹಾವಭಾವದ ವಿಲಾಸದಿಂದೆ==[ಕಟ್ಟಿದ್ದ ಹಾರಾದಿಗಳು ಹರಿದು ಉದುರುವಂತೆ ದೃಷ್ಟಿಗಳ ಕಡೆನೋಟದ ಕಾಂತಿ ಚೆಲ್ಲುತ್ತಿರಲು ದೇಹಕಾಂತಿಯಿಂದ ಉಟ್ಟ ಬಟ್ಟೆಯ ಹೊಳಪು ವಿರಾಜಿಸುತ್ತಿರಲು, ಅವರ ಹಾವಭಾವದ ವಿಲಾಸದಿಂದ ಆ ದಾರಿ ಇಟ್ಟಣಿಸಿತು/ ಇಕ್ಕಟ್ಟಾಗಿ ತೋರಿತು.]
 • ತಾತ್ಪರ್ಯ:ಅರ್ಜುನನ್ನು ಎದರುಗೊಳ್ಳವ/ಸ್ವಾಗತಿಸುವ ದಾರಿಯಲ್ಲಿ ವನುತೆಯರ ಸಮೂಹ ಕ್ರಮಕ್ರಮವಾಗಿ ತೊಟ್ಟ ಮೈಯ್ಯ ತೊಡಿಗೆಗಳ ಮಸೆದ/ತಿಕ್ಕಿದ ಚಿನ್ನದ ಪುಡಿಯಂತೆ ಕುಂಕುಮ ಹುಡಿಗಳು ಸೂಸಲು ಕಟ್ಟಿದ್ದ ಹಾರಾದಿಗಳು ಹರಿದು ಉದುರುವಂತೆ ದೃಷ್ಟಿಗಳ ಕಡೆನೋಟದ ಕಾಂತಿ ಚೆಲ್ಲುತ್ತಿರಲು ದೇಹಕಾಂತಿಯಿಂದ ಉಟ್ಟ ಬಟ್ಟೆಯ ಹೊಳಪು ವಿರಾಜಿಸುತ್ತಿರಲು, ಅವರ ಹಾವಭಾವದ ವಿಲಾಸದಿಂದ ಆ ದಾರಿ ತುಂಬಿಹೋಯಿತು.(ಇಟ್ಟಣಿಸಿತು/ ಇಕ್ಕಟ್ಟಾಗಿ ತೋರಿತು).]
 • (ಪದ್ಯ-೨೨)

ಪದ್ಯ:-:೨೩:[ಸಂಪಾದಿಸಿ]

ಬಂದುದು ಮಹಾಜನಂಬಹಳ ವೈಭವದಿಂದೆ |
ನಿಂದುದು ಚತುರ್ಬಲಂ ಕೆಲಕೆಲದೊಳೊಡ್ಡಾಗಿ |
ಸಂದಿಸಿದರಿವರವರ್ ಬಳಿಕಶ್ವಯುಗ ಸಹಿತ ನಡೆದು ಬಹ ಫಲುಗುಣಂಗೆ ||
ಚಂದನದ ಮುತ್ತಿನಕ್ಷತೆಯ ಕುಂಕುಮ ಮಿಶ್ರ |
ದಿಂದೆ ದಧಿ ಲಾಜ ದೂರ್ವಾಂಕುರಗಳಿಂದೆಸೆವ |
ಪೊಂದಳಿಗೆವಿಡಿದಾರತಿಯನೆತ್ತಿ ಮುತ್ತುಗಳ ಸೇಸೆದಳಿದರ್ ಸತಿಯರು ||23||

ಪದವಿಭಾಗ-ಅರ್ಥ:
ಬಂದುದು ಮಹಾಜನಂ ಬಹಳ ವೈಭವದಿಂದೆ ನಿಂದುದು ಚತುರ್ಬಲಂ ಕೆಲಕೆಲದೊಳು ಒಡ್ಡಾಗಿ ಸಂದಿಸಿದರು ಅವರವರ್ ಬಳಿಕ ಅಶ್ವಯುಗ ಸಹಿತ ನಡೆದು ಬಹ ಫಲುಗುಣಂಗೆ==[ದೊಡ್ಡ ಸಂಖ್ಯೆಯಲ್ಲ ಜನ ಬಹಳ ವೈಭವದಿಂದ ಬಂದರು. ನಿಂದುದು ಚತುರ್ಬಲಗಳು ಆಕಡೆ ಈಕಡೆ ದೂರದಲ್ಲಿ ಒತ್ತಾಗಿ ನಿಂತರು; ಅಲ್ಲಿದ್ದ ಅವರವರು ಬಳಿಕ ಎರಡು ಅಶ್ವಗಳ ಸಹಿತ ನಡೆದು ಬರುತ್ತಿರುವ ಫಲ್ಗುಣನಿಗೆ ಸಂದಿಸಿದರು];; ಚಂದನದ ಮುತ್ತಿನ ಅಕ್ಷತೆಯ ಕುಂಕುಮ ಮಿಶ್ರದಿಂದೆ ದಧಿ ಲಾಜ ದೂರ್ವಾಂಕುರಗಳಿಂದ ಎಸೆವ ಪೊಂದಳಿಗೆ ವಿಡಿದು ಆರತಿಯನು ಎತ್ತಿ ಮುತ್ತುಗಳ ಸೇಸೆ ತಳಿದರ್ ಸತಿಯರು==[ಫಲ್ಗುಣನಿಗೆ ಚಂದನದ, ಮುತ್ತಿನ ಅಕ್ಷತೆಯ, ಕುಂಕುಮ ಮಿಶ್ರದಿಂದೆ ದಧಿ, ಲಾಜ/ಅರಳು, ದೂರ್ವೆಯಕುಡಿ,ಇವುಗಳಿಂದ ಶೋಭಿಸುವ ಚಿನ್ನದ ತಾಟು ಹಿಡಿದು ಆರತಿಯನು ಎತ್ತಿ, ಮುತ್ತುಗಳ ಉಂಡೆಗಳನ್ನು ಮುಖದಸುತ್ತು ಸುಳಿದು ನಾರಿಯರು ಸೇಸೆ ತಳಿದರು.].
 • ತಾತ್ಪರ್ಯ:ದೊಡ್ಡ ಸಂಖ್ಯೆಯಲ್ಲ ಜನ ಬಹಳ ವೈಭವದಿಂದ ಬಂದರು. ನಿಂದುದು ಚತುರ್ಬಲಗಳು ಆಕಡೆ ಈಕಡೆ ದೂರದಲ್ಲಿ ಒತ್ತಾಗಿ ನಿಂತರು; ಅಲ್ಲಿದ್ದ ಅವರವರು ಬಳಿಕ ಎರಡು ಅಶ್ವಗಳ ಸಹಿತ ನಡೆದು ಬರುತ್ತಿರುವ ಫಲ್ಗುಣನಿಗೆ ಸಂದಿಸಿದರು. ಫಲ್ಗುಣನಿಗೆ ಚಂದನದ, ಮುತ್ತಿನ ಅಕ್ಷತೆಯ, ಕುಂಕುಮ ಮಿಶ್ರದಿಂದೆ ದಧಿ, ಲಾಜ/ಅರಳು, ದೂರ್ವೆಯಕುಡಿ,ಇವುಗಳಿಂದ ಶೋಭಿಸುವ ಚಿನ್ನದ ತಾಟು ಹಿಡಿದು ಆರತಿಯನು ಎತ್ತಿ, ಮುತ್ತುಗಳ ಉಂಡೆಗಳನ್ನು ಮುಖದಸುತ್ತು ಸುಳಿದು ನಾರಿಯರು ಸೇಸೆ ತಳಿದರು.
 • (ಪದ್ಯ-೨೩)

ಪದ್ಯ:-:೨೪:[ಸಂಪಾದಿಸಿ]

ವಿಜಯ ಹರಿಸುತ ಯೌವನಾಶ್ವ ಸಾತ್ಯಕಿ ವೃಷ |
ಧ್ವಜ ಸಾಂಬ ಕೃತವರ್ಮ ಹೈಡಿಂಬಿ ಸಾಲ್ವಾವ |
ರಜ ಸುವೇಗಾನಿರುದ್ಧಾದಿಗಳ್ ಧೃತರಾಷ್ಟ್ರಭೂಪನಂ ಕಂಡು ಬಳಿಕ ||
ಅಜವಾಹನ ಧ್ವಜ ಮಯೂರಧ್ವಜಾರುಣ |
ಧ್ವಜ ಚಂದ್ರಹಾಸ ನೀಲಧ್ವಜ ಧನಂಜಯಾ |
ತ್ಮಜ ವೀರವರ್ಮ ಪ್ರಮುಖರಾದ ರಾಯರಂ ಕಾಣಿಸಿದರುಚಿತದಿಂದೆ ||24||

ಪದವಿಭಾಗ-ಅರ್ಥ:
ವಿಜಯ ಹರಿಸುತ ಯೌವನಾಶ್ವ ಸಾತ್ಯಕಿ ವೃಷ ಧ್ವಜ ಸಾಂಬ ಕೃತವರ್ಮ ಹೈಡಿಂಬಿ ಸಾಲ್ವಾವರಜ ಸುವೇಗ ಅನಿರುದ್ಧಾದಿಗಳ್ ಧೃತರಾಷ್ಟ್ರಭೂಪನಂ ಕಂಡು ಬಳಿಕ==[ಅರ್ಜುನ, ಪ್ರದ್ಯುಮ್ನ, ಯೌವನಾಶ್ವ, ಸಾತ್ಯಕಿ, ವೃಷಧ್ವಜ, ಸಾಂಬ, ಕೃತವರ್ಮ, ಹಿಡಿಂಬಿಯಮಗ ಮೇಘನಾದ, ಅನುಸಾಲ್ವ, ಸುವೇಗ, ಅನಿರುದ್ಧಾದಿಗಳು ಧೃತರಾಷ್ಟ್ರಭೂಪನನ್ನು ಕಂಡು ಬಳಿಕ ];; ಅಜವಾಹನ ಧ್ವಜ ಮಯೂರಧ್ವಜಾರುಣ ಧ್ವಜ ಚಂದ್ರಹಾಸ ನೀಲಧ್ವಜ ಧನಂಜಯಾ ತ್ಮಜ ವೀರವರ್ಮ ಪ್ರಮುಖರಾದ ರಾಯರಂ ಕಾಣಿಸಿದರುಚಿತದಿಂದೆ==[ಹಂಸಧ್ವಜ ಮಯೂರಧ್ವಜ, ತಾಮ್ರಧ್ವಜ, ಚಂದ್ರಹಾಸ, ನೀಲಧ್ವಜ, ಧನಂಜಯನಮಗ ಬಭ್ರುವಾಹನನು, ವೀರವರ್ಮ, ಪ್ರಮುಖರಾದ ರಾಯರನ್ನು ಗೌರವಿಸಿದರು].
 • ತಾತ್ಪರ್ಯ:ಅರ್ಜುನ, ಪ್ರದ್ಯುಮ್ನ, ಯೌವನಾಶ್ವ, ಸಾತ್ಯಕಿ, ವೃಷಧ್ವಜ, ಸಾಂಬ, ಕೃತವರ್ಮ, ಹಿಡಿಂಬಿಯಮಗ ಮೇಘನಾದ, ಅನುಸಾಲ್ವ, ಸುವೇಗ, ಅನಿರುದ್ಧಾದಿಗಳು ಧೃತರಾಷ್ಟ್ರಭೂಪನನ್ನು ಕಂಡು ಬಳಿಕ ಹಂಸಧ್ವಜ ಮಯೂರಧ್ವಜ, ತಾಮ್ರಧ್ವಜ, ಚಂದ್ರಹಾಸ, ನೀಲಧ್ವಜ, ಧನಂಜಯನಮಗ ಬಭ್ರುವಾಹನ, ವೀರವರ್ಮ, ಈ ಪ್ರಮುಖರಾದ ರಾಯರನ್ನು ಗೌರವಿಸಿದರು.
 • (ಪದ್ಯ-೨೪)

ಪದ್ಯ:-:೨೫:[ಸಂಪಾದಿಸಿ]

ವಂದನೀಯರ್ಗೆ ವಂದಿಸಿ ವಂದಿಸುವ ಜನದ |
ವಂದನೆಗಳಂ ಕೊಂಡು ಸಮಬಂಧುಗಳನಪ್ಪಿ |
ಸಂದರ್ಶನೋತ್ಸವದೊಳನ್ಯೋನ್ಯ ಸಂಭಾಷಣೆಗಳಿಂದೆ ಮುದಿತರಾಗಿ ||
ವಂದಿಸಿದರೆಲ್ಲರುಂ ಬಕದಾಲ್ಭ್ಯಮುನಿ ಬಳಿ |
ಕಂದಣಂಗಳನಿಳಿದು ಮುರಹರನ ನೇಮದಿಂ |
ಬಂದರರ್ಧವರಶಾಲೆಗರಸನಂ ಕಾಣಲ್ಕೆ ಗೋಧೂಳಿ ಲಗ್ನಮಾಗೆ ||25||

ಪದವಿಭಾಗ-ಅರ್ಥ:
ವಂದನೀಯರ್ಗೆ ವಂದಿಸಿ ವಂದಿಸುವ ಜನದ ವಂದನೆಗಳಂ ಕೊಂಡು ಸಮಬಂಧುಗಳನು ಅಪ್ಪಿ ಸಂದರ್ಶನೋತ್ಸವದೊಳು ಅನ್ಯೋನ್ಯ ಸಂಭಾಷಣೆಗಳಿಂದೆ ಮುದಿತರಾಗಿ==[ವಂದನೀಯರಾದವರಿಗೆ ನಮಸ್ಕರಿಸಿ, ವಂದಿಸುವ ಜನರ ವಂದನೆಗಳನ್ನು ಸ್ವೀಕರಿಸಿ, ಸಮಬಂಧುಗಳನು ಅಪ್ಪಿಕೊಂಡು ಉಪಚರಿಸಿ, ಸಂದರ್ಶನದ ಸಂತೋಷದಲ್ಲಿ ಅನ್ಯೋನ್ಯವಾಗಿ/ ಪರಸ್ಪರ ಸಂಭಾಷಣೆಗಳನ್ನು ಮಾಡುತ್ತಾ, ಸಂತಸಪಟ್ಟು,];; ವಂದಿಸಿದರು ಎಲ್ಲರುಂ ಬಕದಾಲ್ಭ್ಯಮುನಿ ಬಳಿಕ ಅಂದಣಂಗಳನು ಇಳಿದು ಮುರಹರನ ನೇಮದಿಂ ಬಂದರು ಅಧ್ವರಶಾಲೆಗೆ ಅರಸನಂ ಕಾಣಲ್ಕೆ ಗೋಧೂಳಿ ಲಗ್ನಮಾಗೆ==[ ಎಲ್ಲರೂ ಬಕದಾಲ್ಭ್ಯಮುನಿಗೆ ವಂದಿಸಿದರು; ಬಳಿಕ ಪಲ್ಲಕ್ಕಿಗಳನ್ನು ಇಳಿದು ಕೃಷ್ಣನ ಹೇಳಿಕೆಯಂತೆ ಅರಸನನ್ನು ಕಾಣಲು ಅಧ್ವರಶಾಲೆಗೆ ಬಂದರು. ಅದು ಗೋಧೂಳಿ ಲಗ್ನದ ಸಮಯವಾಗಿತ್ತು].
 • ತಾತ್ಪರ್ಯ:ವಂದನೀಯರಾದವರಿಗೆ ನಮಸ್ಕರಿಸಿ, ವಂದಿಸುವ ಜನರ ವಂದನೆಗಳನ್ನು ಸ್ವೀಕರಿಸಿ, ಸಮಬಂಧುಗಳನು ಅಪ್ಪಿಕೊಂಡು ಉಪಚರಿಸಿ, ಸಂದರ್ಶನದ ಸಂತೋಷದಲ್ಲಿ ಅನ್ಯೋನ್ಯವಾಗಿ/ ಪರಸ್ಪರ ಸಂಭಾಷಣೆಗಳನ್ನು ಮಾಡುತ್ತಾ, ಸಂತಸಪಟ್ಟು, ಎಲ್ಲರೂ ಬಕದಾಲ್ಭ್ಯಮುನಿಗೆ ವಂದಿಸಿದರು; ಬಳಿಕ ಪಲ್ಲಕ್ಕಿಗಳನ್ನು ಇಳಿದು ಕೃಷ್ಣನ ಹೇಳಿಕೆಯಂತೆ ಅರಸನನ್ನು ಕಾಣಲು ಅಧ್ವರಶಾಲೆಗೆ ಬಂದರು. ಅದು ಗೋಧೂಳಿ ಲಗ್ನದ ಸಮಯವಾಗಿತ್ತು.
 • (ಪದ್ಯ-೨೫)

ಪದ್ಯ:-:೨೬:[ಸಂಪಾದಿಸಿ]

ತರತರದ ಛತ್ರ ಚಾಮರಂಗಳ ವಿಡಾಯಿಗಳ |
ಪರಿಪರಿಯ ಸಿಂದ ಸೀಗುರಿ ಪತಾಕಾವಳಿಯ |
ಮೊರೆಮೊರೆವ ವಿವಿಧ ವಾದ್ಯಧ್ವನಿಯ ವಂದಿ ಮಾಗಧರ ಜಯಜಯ ನಿನದದ ||
ಸರಸತರ ಸಂಗೀತ ನರ್ತನದ ಮೇಳವದ |
ನೆರೆನೆರೆದ ಚತುರಂಗದೊಡ್ಡುಗಳ ಸಂದಣಿಯ |
ದೊರೆದೊರೆಗಳೈತಂದರುತ್ಸವದೊಳರಸನಂ ಕಾಣಲಚ್ಯುತನ ಕೂಡೆ ||26||

ಪದವಿಭಾಗ-ಅರ್ಥ:
ತರತರದ ಛತ್ರ ಚಾಮರಂಗಳ ವಿಡಾಯಿಗಳ ಪರಿಪರಿಯ ಸಿಂದ ಸೀಗುರಿ ಪತಾಕಾವಳಿಯ ಮೊರೆಮೊರೆವ ವಿವಿಧ ವಾದ್ಯಧ್ವನಿಯ ವಂದಿ ಮಾಗಧರ ಜಯಜಯ ನಿನದದ==[ನಾನಾ ಬಗೆಯ ಛತ್ರ ಚಾಮರಗಳ, ಸಮೂಹಗಳ, ಪರಿಪರಿಯ ಸಿಂದ/ಛತ್ರಿ, ಸೀಗುರಿ, ಅನೇಕ ಪತಾಕೆಗಳ, ಮೊರೆಯುವ ವಿವಿಧ ವಾದ್ಯಧ್ವನಿಯ, ವಂದಿ ಮಾಗಧರ ಜಯಜಯ ಘೋಷಗಳ,];;ಸರಸತರ ಸಂಗೀತ ನರ್ತನದ ಮೇಳವದ ನೆರೆನೆರೆದ ಚತುರಂಗದ ಒಡ್ಡುಗಳ ಸಂದಣಿಯ ದೊರೆದೊರೆಗಳು ಐತಂದರು ಉತ್ಸವದೊಳು ಅರಸನಂ ಕಾಣಲು ಅಚ್ಯುತನ ಕೂಡೆ==[ಇಂಪಾದ ಸಂಗೀತ ನರ್ತನದ ಮೇಳಗಳ, ಬಹಳವಾಗಿ ಸೇರಿದ /ನೆರೆದ ಚತುರಂಗದ ಸೈನ್ಯದ ವಿಭಾಗಗಳ, ಎಲ್ಲಾ ಸೇರಿಕೊಂಡು ಸಂದಣಿಯಲ್ಲಿ ಅನೇಕ ದೊರೆಗಳು ಉತ್ಸವದಲ್ಲಿ ಅರಸನನ್ನು ಕಾಣಲು ಅಚ್ಯುತನ ಜೊತೆಯಲ್ಲಿ ಬಂದರು].
 • ತಾತ್ಪರ್ಯ:ನಾನಾ ಬಗೆಯ ಛತ್ರ ಚಾಮರಗಳ, ಸಮೂಹಗಳ, ಪರಿಪರಿಯ ಸಿಂದ/ಛತ್ರಿ, ಸೀಗುರಿ, ಅನೇಕ ಪತಾಕೆಗಳ, ಮೊರೆಯುವ ವಿವಿಧ ವಾದ್ಯಧ್ವನಿಯ, ವಂದಿ ಮಾಗಧರ ಜಯಜಯ ಘೋಷಗಳ, ಇಂಪಾದ ಸಂಗೀತ ನರ್ತನದ ಮೇಳಗಳ, ಬಹಳವಾಗಿ ಸೇರಿದ /ನೆರೆದ ಚತುರಂಗದ ಸೈನ್ಯದ ವಿಭಾಗಗಳ, ಎಲ್ಲಾ ಸೇರಿಕೊಂಡು ಸಂದಣಿಯಲ್ಲಿ ಅನೇಕ ದೊರೆಗಳು ಉತ್ಸವದಲ್ಲಿ ಅರಸನನ್ನು ಕಾಣಲು ಅಚ್ಯುತನ ಜೊತೆಯಲ್ಲಿ ಬಂದರು.
 • (ಪದ್ಯ-೨೬)

ಪದ್ಯ:-:೨೭:[ಸಂಪಾದಿಸಿ]

ಮುಂದೆ ಕುದುರೆಗಳದರ ಬಳಿಯೊಳ್ ಸಮಸ್ತ ಯದು |
ವೃಂದದೊಡಗೂಡಿ ತಾನೆಡಬಲದೊಳಮರೇಂದ್ರ |
ನಂದನ ವೃಷಭಧ್ವಜರ್ ಪಿಂತೆ ಹಂಸಧ್ವಜ ಮಯೂರಧ್ವಜಾದಿ ನೃಪರು ||
ಸಂದಣಿಸಿ ಗೋಧೂಳಿ ಲಗ್ನದೊಳ್ ಭೂಪನಂ |
ಸಂಧಿಸುವ ಮಾಳ್ಕೆಯಿಂ ಕಪ್ಪುರದ ತೈಲಂಗ |
ಳಿಂದುರಿವ ಬೊಂಬಾಳ ಶತಕೋಟಿಗಳ್ ಪಿಡಿಯಲಸುರಹರನೈತಂದನು ||27||

ಪದವಿಭಾಗ-ಅರ್ಥ:
ಮುಂದೆ ಕುದುರೆಗಳು ಅದರ ಬಳಿಯೊಳ್ ಸಮಸ್ತ ಯದು ವೃಂದದ ಒಡಗೂಡಿ ತಾನು ಎಡಬಲದೊಉ ಅಮರೇಂದ್ರನಂದನ ವೃಷಭಧ್ವಜರ್ ಪಿಂತೆ ಹಂಸಧ್ವಜ ಮಯೂರಧ್ವಜಾದಿ ನೃಪರು==[ಮುಂದೆ ಕುದುರೆಗಳು ಅದರ ಬಳಿಯಲ್ಲಿ ಸಮಸ್ತ ಯಾದವರು ಒಡಗೂಡಿಕೊಂಡು, ತಾನು/ಕೃಷ್ಣನು, ಎಡಬಲದಲ್ಲಿ ಅರ್ಜುನ ವೃಷಭಧ್ವಜರು, ಹಿಂದೆ ಹಂಸಧ್ವಜ ಮಯೂರಧ್ವಜಾದಿ ನೃಪರು,];; ಸಂದಣಿಸಿ ಗೋಧೂಳಿ ಲಗ್ನದೊಳ್ ಭೂಪನಂ ಸಂಧಿಸುವ ಮಾಳ್ಕೆಯಿಂ ಕಪ್ಪುರದ ತೈಲಂಗಳಿಂದ ಉರಿವ ಬೊಂಬಾಳ ಶತಕೋಟಿಗಳ್ ಪಿಡಿಯಲು ಅಸುರಹರನು ಐತಂದನು==[ಒಟ್ಟಿಗೆ ಗೋಧೂಳಿ ಲಗ್ನದಲ್ಲಿ ಧರ್ಮರಾಯನನ್ನು ಸಂಧಿಸುವ ಕಾರ್ಯದ ಸಮಯದಲ್ಲಿ ಕರ್ಪುರದ ತೈಲಂಗಳಿಂದ ಉರಿಯುವ ಶತಕೋಟಿ ದೀವಟಿಗೆಗಳ್ನು ಹಿಡಿದಿರಲು ಕೃಷ್ಣನು ಬಂದನು].
 • ತಾತ್ಪರ್ಯ:ಮುಂದೆ ಕುದುರೆಗಳು ಅದರ ಬಳಿಯಲ್ಲಿ ಸಮಸ್ತ ಯಾದವರು ಒಡಗೂಡಿಕೊಂಡು, ತಾನು/ಕೃಷ್ಣನು, ಎಡಬಲದಲ್ಲಿ ಅರ್ಜುನ ವೃಷಭಧ್ವಜರು, ಹಿಂದೆ ಹಂಸಧ್ವಜ ಮಯೂರಧ್ವಜಾದಿ ನೃಪರು,ಒಟ್ಟಿಗೆ ಗೋಧೂಳಿ ಲಗ್ನದಲ್ಲಿ ಧರ್ಮರಾಯನನ್ನು ಸಂಧಿಸುವ ಕಾರ್ಯದ ಸಮಯದಲ್ಲಿ ಕರ್ಪುರದ ತೈಲಂಗಳಿಂದ ಉರಿಯುವ ಶತಕೋಟಿ ದೀವಟಿಗೆಗಳ್ನು ಹಿಡಿದಿರಲು ಕೃಷ್ಣನು ಬಂದನು.
 • (ಪದ್ಯ-೨೭)

ಪದ್ಯ:-:೨೮:[ಸಂಪಾದಿಸಿ]

ಕರ್ಣದೊಳ್ ಕೇಳಬಹುದಲ್ಲದಕ್ಷಿಯೊಳನಿಮಿ |
ಷರ್ನೋಡಲಳವಹುದೆ ತುರಗಮೇಧಂಗಳನ |
ಹರ್ನಿಶಾ ವಲ್ಲಭರ ಕುಲದ ಭೂಪಾಲಕರ್ ಮಾಡಿದರ್‍ ಪಲಬರವರ ||
ನಿರ್ಣಯವೆ ಹರಿಯೊಡನೆ ಸಿರಿಸಹಿತ ಧರೆಗೆ ಪಯ |
ದರ್ಣವಂ ಬಂದಪುದೋ ಶಿವಶಿವಾ ಪೊಸತಿದಂ |
ವರ್ಣಿಸುವ ಕವಿ ಯಾವನೆನೆ ವಾಜಿಗಳ ಕೂಡೆ ನಡೆತಂದರವನೀಶರು ||28||

ಪದವಿಭಾಗ-ಅರ್ಥ:
ಕರ್ಣದೊಳ್ ಕೇಳಬಹುದು ಅಲ್ಲದೆ ಅಕ್ಷಿಯೊಳ್ ಅನಿಮಿಷರ್ ನೋಡಲು ಅಳವು ಅಹುದೆ, ತುರಗಮೇಧಂಗಳನು ಅಹರ್ನಿಶಾ ವಲ್ಲಭರ (ಹಗಲು ರಾತ್ರಿಯ ವಲ್ಲಭರು:ಸೂರ್ಯ ಚಂದ್ರರ) ಕುಲದ ಭೂಪಾಲಕರ್ ಮಾಡಿದರ್‍ ಪಲಬರು ಅವರ==[ಕಿವಿಯಿಂದ ಕೇಳಬಹುದು ಅದಲ್ಲದೆ, ಕಣ್ಣಗಳಿಂದ ದೇವತೆಗಳು ನೋಡಲು ಸಾದ್ಯಯವಾಗುವುದೇ? ಇಲ್ಲ! ಅಶ್ವಮೇಧ ಯಾಗಗಳನ್ನು ಸೂರ್ಯ ಚಂದ್ರ ಕುಲದ ರಾಜರು ಹಲವರು ಮಾಡಿದರು];; ಪಲಬರು ಅವರ ನಿರ್ಣಯವೆ? ಹರಿಯೊಡನೆ ಸಿರಿಸಹಿತ ಧರೆಗೆ ಪಯದರ್ಣವಂ (ಕ್ಷೀರಸಮುದ್ರ) ಬಂದಪುದೋ ಶಿವಶಿವಾ ಪೊಸತಿದಂ ವಣಿಸುವ ಕವಿ ಯಾವನೆನೆ ವಾಜಿಗಳ ಕೂಡೆ ನಡೆತಂದರವನೀಶರು==[ಆದರೆ ಅವರ ಯಜ್ಞಗಳು ಈ ಮಟ್ಟದ್ದೆಂಬ ನಿರ್ಣಯ ಮಾಡಬಹುದೇ? ಸಾದ್ಯವಿಲ್ಲ; ಏಕೆಂದರೆ ಶ್ರೀಹರಿಯೊಡನೆ ಸಂಪತ್ತಿನ ಸಹಿತ ಭೂಮಿಗೆ ಕ್ಷೀರಸಮುದ್ರವೇ ಬರುತ್ತಿರುವುದೊ ಎಂಬಂತಿತ್ತು, ಶಿವಶಿವಾ! ಹೊಸತು ಇದು, ವರ್ಣಿಸುವ ಕವಿ ಯಾವನು ಇದ್ದಾನೆ? ಇಲ್ಲ! ಎನ್ನುವಂತಿರಲು ಕುದುರೆಗಳ ಸಹಿತ ರಾಜರುಗಳು ನಡೆದು ಬಂದರು].
 • ತಾತ್ಪರ್ಯ:ಕಿವಿಯಿಂದ ಕೇಳಬಹುದು ಅದಲ್ಲದೆ, ಕಣ್ಣಗಳಿಂದ ದೇವತೆಗಳು ನೋಡಲು ಸಾದ್ಯಯವಾಗುವುದೇ? ಇಲ್ಲ! ಅಶ್ವಮೇಧ ಯಾಗಗಳನ್ನು ಸೂರ್ಯ ಚಂದ್ರ ಕುಲದ ರಾಜರು ಹಲವರು ಮಾಡಿದರು ಆದರೆ ಅವರ ಯಜ್ಞಗಳು ಈ ಮಟ್ಟದ್ದೆಂಬ ನಿರ್ಣಯ ಮಾಡಬಹುದೇ? ಸಾದ್ಯವಿಲ್ಲ; ಏಕೆಂದರೆ ಶ್ರೀಹರಿಯೊಡನೆ ಸಂಪತ್ತಿನ ಸಹಿತ ಭೂಮಿಗೆ ಕ್ಷೀರಸಮುದ್ರವೇ ಬರುತ್ತಿರುವುದೊ ಎಂಬಂತಿತ್ತು, ಶಿವಶಿವಾ! ಹೊಸತು ಇದು, ವರ್ಣಿಸುವ ಕವಿ ಯಾವನು ಇದ್ದಾನೆ? ಇಲ್ಲ! ಎನ್ನುವಂತಿರಲು ಕುದುರೆಗಳ ಸಹಿತ ರಾಜರುಗಳು ನಡೆದು ಬಂದರು.
 • (ಪದ್ಯ-೨೮)

ಪದ್ಯ:-:೨೯:[ಸಂಪಾದಿಸಿ]

ಯಾಜಮಾನ್ಯದೊಳೆಸೆವ ಭೂಪಾಲನಂ ಕಂಡು |
ವಾಜಿಗಳನೊಪ್ಪಿಸಿ ಪದಾಂಬುಜಕೆ ಪೊಡಮಟ್ಟೊ |
ಡಾ ಜಿಷ್ಣುವಂ ತೆಗೆದು ತಕ್ಕೈಸಿ ಕರ್ಣಜ ಪ್ರದ್ಯುಮ್ನಕಾದಿಗಳನು ||
ತೇಜದಿಂದವನೀಶ್ವರಂ ಮನ್ನಿಸಿದ ಬಳಿಕ |
ರಾಜೀನ ಲೋಚನಂ ಕಾಣಿಸಿದನರಸಂಗೆ |
ರಾಜಮೌಳಿಗಳಾದ ಹಂಸಧ್ವಜಪ್ರಮುಖ ದೇಶಾಧಿವಲ್ಲಭರನು ||29||

ಪದವಿಭಾಗ-ಅರ್ಥ:
ಯಾಜಮಾನ್ಯದೊಳು ಎಸೆವ ಭೂಪಾಲನಂ ಕಂಡು ವಾಜಿಗಳನು ಒಪ್ಪಿಸಿ ಪದಾಂಬುಜಕೆ ಪೊಡಮಟ್ಟೊಡೆ ಆ ಜಿಷ್ಣುವಂ ತೆಗೆದು ತಕ್ಕೈಸಿ ಕರ್ಣಜ ಪ್ರದ್ಯುಮ್ನಕ ಆದಿಗಳನು==[ಯಜ್ಞದ ಕರ್ತ್ರುವಾಗಿ ಯಾಜಮಾನ್ಯದಲ್ಲಿ ಶೋಭಿಸುತ್ತಿದ್ದ ಧರ್ಮರಾಯ ಭೂಪಾಲನನ್ನು ಕಂಡು ಅವನಿಗೆ ಯಜ್ಞದ ಕುದುರೆಗಳನ್ನು ಒಪ್ಪಿಸಿ, ಅವನ ಪಾದಗಳಿಗೆ ನಮಸ್ಕರಿಸಿದಾಗ ಆ ಅರ್ಜುನನ್ನು ಹಿಡಿದುಕೊಂಡು ಆದರಿಸಿ, ಕರ್ಣಜ/ವೃಷಕೇತು, ಪ್ರದ್ಯುಮ್ನರೇ ಮೊದಲಾದವರನ್ನು];; ತೇಜದಿಂದ ಅವನೀಶ್ವರಂ ಮನ್ನಿಸಿದ ಬಳಿಕ ರಾಜೀನ ಲೋಚನಂ ಕಾಣಿಸಿದನು ಅರಸಂಗೆ ರಾಜಮೌಳಿಗಳಾದ ಹಂಸಧ್ವಜ ಪ್ರಮುಖ ದೇಶಾಧಿವಲ್ಲಭರನು==[ತೇಜಸ್ವಿಯಾದ ಧರ್ಮರಾಯನು ಆದರಿಸಿದ ಬಳಿಕ, ಅರಸನಿಗೆ ಕೃಷ್ಣನು ರಾಜಶ್ರೇಷ್ಠರಾದ ಹಂಸಧ್ವಜ ಮೊದಲಾದ ಪ್ರಮುಖ ಭೂವಲ್ಲಭರನ್ನು/ ರಾಜರನ್ನು ಪರಿಚಯಿಸಿದನು].
 • ತಾತ್ಪರ್ಯ:ಅರ್ಜುನನು, ಯಜ್ಞದ ಕರ್ತ್ರುವಾಗಿ ಯಾಜಮಾನ್ಯದಲ್ಲಿ ಶೋಭಿಸುತ್ತಿದ್ದ ಧರ್ಮರಾಯ ಭೂಪಾಲನನ್ನು ಕಂಡು ಅವನಿಗೆ ಯಜ್ಞದ ಕುದುರೆಗಳನ್ನು ಒಪ್ಪಿಸಿ, ಅವನ ಪಾದಗಳಿಗೆ ನಮಸ್ಕರಿಸಿದಾಗ ಆ ಅರ್ಜುನನ್ನು ಹಿಡಿದುಕೊಂಡು ಆದರಿಸಿ, ಕರ್ಣಜ/ವೃಷಕೇತು, ಪ್ರದ್ಯುಮ್ನರೇ ಮೊದಲಾದವರನ್ನು ತೇಜಸ್ವಿಯಾದ ಧರ್ಮರಾಯನು ಆದರಿಸಿದ ಬಳಿಕ, ಅರಸನಿಗೆ ಕೃಷ್ಣನು ರಾಜಶ್ರೇಷ್ಠರಾದ ಹಂಸಧ್ವಜ ಮೊದಲಾದ ಪ್ರಮುಖ ಭೂವಲ್ಲಭರನ್ನು/ ರಾಜರನ್ನು ಪರಿಚಯಿಸಿದನು.
 • (ಪದ್ಯ-೨೯)

ಪದ್ಯ:-:೩೦:[ಸಂಪಾದಿಸಿ]

ಈತಂ ಕಣಾ ರಾಜಹಂಸ ಹಂಸಧ್ವಜಂ|
ಖ್ಯಾತನೀತಂ ವೀರ ವೀರವರ್ಮಾವನಿಪ |
ನೀತಂ ನೃಪಾಲ ರತ್ನಾಭರಣ ಮಧ್ಯನಾಯಕ ನೀಲ ನೀಲಕೇತು ||
ಈತಂ ವಿರೋಧಿ ಬಲ ವನ ಶಿಖಿ ಶಿಖಿಧ್ವಜಂ |
ಭೂತಳ ಸ್ಥಿತ ಚಂದ್ರಚಂದ್ರಹಾಸಕ್ಷ್ಮೇಂದ್ರ |
ನೀತನೀತಂ ದಿವಿಜ ಪತಿಯ ಸುತ ಸುತ ಬಭ್ರುವಾಹನಂ ನೋಡೆಂದನು ||30||

ಪದವಿಭಾಗ-ಅರ್ಥ:
ಈತಂ ಕಣಾ ರಾಜಹಂಸ ಹಂಸಧ್ವಜಂ ಖ್ಯಾತನೀತಂ ವೀರ ವೀರವರ್ಮ ಅವನಿಪನ್ ಈತಂ ನೃಪಾಲ ರತ್ನಾಭರಣ ಮಧ್ಯನಾಯಕ ನೀಲ ನೀಲಕೇತು==[ಕೃಷ್ಣನು ಧರ್ಮಜನನ್ನು ಕುರಿತು,'ಈತನು ಕಣಾ ರಾಜಹಂಸ ಹಂಸಧ್ವಜನು, ಪ್ರಖ್ಯಾತನು ಈತನು ವೀರ ವೀರವರ್ಮನು ದೊರೆಯು, ಈತನು ರತ್ನಾಭರಣ ಮಧ್ಯದಲ್ಲಿರುವ ನಾಯಕ ನೀಲರತ್ನದಂತಿರು ನೃಪಾಲ ನೀಲಕೇತು];; ಈತಂ ವಿರೋಧಿ ಬಲ ವನ ಶಿಖಿ ಶಿಖಿಧ್ವಜಂ ಭೂತಳ ಸ್ಥಿತ ಚಂದ್ರ ಚಂದ್ರಹಾಸಕ್ಷ್ಮೇಂದ್ರನು ಈತ ನೀತಂ ದಿವಿಜಪತಿಯ ಸುತ ಸುತ ಬಭ್ರುವಾಹನಂ ನೋಡೆಂದನು==[ಈತನು ಶತ್ರುಸೈನ್ಯಕ್ಕೆ ಕಾಡು ಕಿಚ್ಚಿನಂತಿರವವನು ಮಯೂರಧ್ವಜ; ಭೂಮಿಯಲ್ಲಿರುವ ಚಂದ್ರನಂತಿರು, ಚಂದ್ರಹಾಸರಾಜನು, ಈತನು ಈತನು ಅರ್ಜುನನ ಮಗ ಬಭ್ರುವಾಹನನು, ನೋಡು ಎಂದನು].
 • ತಾತ್ಪರ್ಯ:ಕೃಷ್ಣನು ಧರ್ಮಜನನ್ನು ಕುರಿತು,'ಈತನು ಕಣಾ ರಾಜಹಂಸ ಹಂಸಧ್ವಜನು, ಪ್ರಖ್ಯಾತನು ಈತನು ವೀರ ವೀರವರ್ಮನು ದೊರೆಯು, ಈತನು ರತ್ನಾಭರಣ ಮಧ್ಯದಲ್ಲಿರುವ ನಾಯಕ ನೀಲರತ್ನದಂತಿರು ನೃಪಾಲ ನೀಲಕೇತು, ಈತನು ಶತ್ರುಸೈನ್ಯಕ್ಕೆ ಕಾಡು ಕಿಚ್ಚಿನಂತಿರವವನು ಮಯೂರಧ್ವಜ; ಭೂಮಿಯಲ್ಲಿರುವ ಚಂದ್ರನಂತಿರು, ಚಂದ್ರಹಾಸರಾಜನು, ಈತನು ಈತನು ಅರ್ಜುನನ ಮಗ ಬಭ್ರುವಾಹನನು, ನೋಡು ಎಂದನು.
 • (ಪದ್ಯ-೩೦)XXXI

ಪದ್ಯ:-:೩೧:[ಸಂಪಾದಿಸಿ]

ಏರಿಸಿ ನುಡಿವುದಿಲ್ಲ ತನಗೆ ಸಮವೆನಿಸುವರ್ |
ಮೀರಿದ ಪರಾಕ್ರಮಿಗಳಿವರನುಪಚರಿಸೆಂದು|
ಬೇರೆಬೇರಾ ನೃಪರನವರವರ ಸುತಸಹೋದರ ಮುಖ್ಯ ಮಂತ್ರಿಗಳನು ||
ಮಾರೊಡ್ಡಿದಮರಾದ್ರಿಯಂತೆ ರಾಶಿಗಳಾಗೆ |
ಹೇರಿ ತಂದೊಡವೆಯಂ ವಿವಿಧ ರತ್ನಂಗಳಂ |
ತೋರಿಸಿ ಸುವಸ್ತುಗಳನೊಪ್ಪಿಸಿದನರಸಂಗೆ ದಾನವಧ್ವಂಸಿ ನಗುತೆ ||31||

ಪದವಿಭಾಗ-ಅರ್ಥ:
ಏರಿಸಿ ನುಡಿವುದಿಲ್ಲ ತನಗೆ ಸಮವೆನಿಸುವರ್ ಮೀರಿದ ಪರಾಕ್ರಮಿಗಳು ಇವರನು ಉಪಚರಿಸೆಂದು ಬೇರೆಬೇರೆ ಆ ನೃಪರನು ಅವರವರ ಸುತಸಹೋದರ ಮುಖ್ಯ ಮಂತ್ರಿಗಳನು==[ಧರ್ಮಜನನ್ನು ಕುರಿತು ಕೃಷ್ಣನು ಹೇಳಿದನು: ಉತ್ಪ್ರೇಕ್ಷೆ ಮಾಡಿ ಹೇಳುವುದಿಲ್ಲ; ಇವರು ನನಗೆ ಸಮಾನವೆನ್ನಿಸುವರು ಮತ್ತು ಹೆಚ್ಚಿನ ಪರಾಕ್ರಮಿಗಳು ಇವರನ್ನು ಉಪಚರಿಸು ಎಂದು ಬೇರೆಬೇರೆಯಾಗಿ ಆ ರಾಜನ್ನು ಅವರವರ ಸುತಸಹೋದರ ಮುಖ್ಯ ಮಂತ್ರಿಗಳನ್ನೂ ಅರಸ ಧರ್ಮರಾಯನಿಗೆ ಪರಿಚಯಿಸಿದನು.];; ಮಾರೊಡ್ಡಿದ (ಮಾರು +ಒಡ್ಡಿದ:ಮಾರುಗಟ್ಟಲೆ ರಾಶಿಬಿದ್ದ) ಅಮರಾದ್ರಿಯಂತೆ ರಾಶಿಗಳಾಗೆ ಹೇರಿ ತಂದ ಒಡವೆಯಂ ವಿವಿಧ ರತ್ನಂಗಳಂ ತೋರಿಸಿ ಸುವಸ್ತುಗಳನು ಒಪ್ಪಿಸಿದನು ಅರಸಂಗೆ ದಾನವಧ್ವಂಸಿ ನಗುತೆ==[ ಮತ್ತೆ ರಾಶಿಯಾಗಿ ಮೇರಪರ್ತದಂತೆ ಒಟ್ಟುಗೂಡಿದ ರಾಶಿಗಳಾಗೆ ಹೇರಿಕೊಂಡು ತಂದ ಒಡವೆಗಳನ್ನೂ, ವಿವಿಧ ರತ್ನಗಳನ್ನೂ ತೋರಿಸಿ, ಆ ಉತ್ತಮ ವಸ್ತುಗಳನ್ನು, ಕೃಷ್ಣನು ನಗುತ್ತಾ ಅರಸನಿಗೆ ಒಪ್ಪಿಸಿ ಕೊಟ್ಟನು].
 • ತಾತ್ಪರ್ಯ:ಧರ್ಮಜನನ್ನು ಕುರಿತು ಕೃಷ್ಣನು ಹೇಳಿದನು: ಉತ್ಪ್ರೇಕ್ಷೆ ಮಾಡಿ ಹೇಳುವುದಿಲ್ಲ; ಇವರು ನನಗೆ ಸಮಾನವೆನ್ನಿಸುವರು ಮತ್ತು ಹೆಚ್ಚಿನ ಪರಾಕ್ರಮಿಗಳು ಇವರನ್ನು ಉಪಚರಿಸು ಎಂದು ಬೇರೆಬೇರೆಯಾಗಿ ಆ ರಾಜನ್ನು ಅವರವರ ಸುತಸಹೋದರ ಮುಖ್ಯ ಮಂತ್ರಿಗಳನ್ನೂ ಅರಸ ಧರ್ಮರಾಯನಿಗೆ ಪರಿಚಯಿಸಿದನು.];; ಮಾರೊಡ್ಡಿದ (ಮಾರು +ಒಡ್ಡಿದ:ಮಾರುಗಟ್ಟಲೆ ರಾಶಿಬಿದ್ದ) ಅಮರಾದ್ರಿಯಂತೆ ರಾಶಿಗಳಾಗೆ ಹೇರಿ ತಂದ ಒಡವೆಯಂ ವಿವಿಧ ರತ್ನಂಗಳಂ ತೋರಿಸಿ ಸುವಸ್ತುಗಳನು ಒಪ್ಪಿಸಿದನು ಅರಸಂಗೆ ದಾನವಧ್ವಂಸಿ ನಗುತೆ==[ ಮತ್ತೆ ರಾಶಿಯಾಗಿ ಮೇರಪರ್ತದಂತೆ ಒಟ್ಟುಗೂಡಿದ ರಾಶಿಗಳಾಗೆ ಹೇರಿಕೊಂಡು ತಂದ ಒಡವೆಗಳನ್ನೂ, ವಿವಿಧ ರತ್ನಗಳನ್ನೂ ತೋರಿಸಿ, ಆ ಉತ್ತಮ ವಸ್ತುಗಳನ್ನು, ಕೃಷ್ಣನು ನಗುತ್ತಾ ಅರಸನಿಗೆ ಒಪ್ಪಿಸಿ ಕೊಟ್ಟನು].
 • (ಪದ್ಯ-೩೧)

ಪದ್ಯ:-:೩೨:[ಸಂಪಾದಿಸಿ]

ಬಳಿಕಾ ಸಮಸ್ತ ಭೂಪಾಲರಸುರಾರಿಯಂ |
ಬಳಸಿ ನಿಂದೆಲೆ ದೇವ ನಿನ್ನ ದರ್ಶನಮಾಯ್ತು |
ನಳಿನಭವ ವಿಂಶತಿಯೊಳಿರ್ದ ಬಕದಾಲ್ಭ್ಯಮುನಿಯಂ ಕಂಡೆವಚ್ಚರಿಯೊಳು ||
ಇಳೆಯ ದೇಶದ ವೈಭವಂಗಳಂ ಹರಿಯೊಡನೆ|
ತೊಳಲಿ ನೋಡಿದೆವಧ್ವರಕೆ ಬಂದೆವೀ ಪುಣ್ಯ |
ನಿಳಯನಹ ಧರ್ಮಜನನೀಕ್ಷಿಸಿದೆವಿನಿತರಿಂ ಕೃತಕೃತ್ಯರಾವೆಂದರು ||32||

ಪದವಿಭಾಗ-ಅರ್ಥ:
ಬಳಿಕಾ ಸಮಸ್ತ ಭೂಪಾಲರು ಅಸುರಾರಿಯಂ ಬಳಸಿ ನಿಂದೆಲೆ ದೇವ ನಿನ್ನ ದರ್ಶನಮಾಯ್ತು ನಳಿನಭವ ವಿಂಶತಿಯೊಳಿರ್ದ ಬಕದಾಲ್ಭ್ಯಮುನಿಯಂ ಕಂಡೆವು ಅಚ್ಚರಿಯೊಳು==[ಬಳಿಕ ಆ ಸಮಸ್ತ ರಾಜರು ಕೃಷ್ಣನನ್ನು ಸುತ್ತುವರಿದು ನಿಂತು, 'ಎಲೆ ದೇವ, ನಮಗೆ ನಿನ್ನ ದರ್ಶನವಾಯಿತು; ಇಪ್ಪತ್ತು ಬ್ರಹ್ಮನ ಕಾಲದಲ್ಲಿ ಬದುಕಿದ್ದ ಬಕದಾಲ್ಭ್ಯಮುನಿಯನ್ನು ಅಚ್ಚರಿಯಿಂದ ಕಂಡೆವು;];; ಇಳೆಯ ದೇಶದ ವೈಭವಂಗಳಂ ಹರಿಯೊಡನೆ ತೊಳಲಿ ನೋಡಿದೆವು ಅಧ್ವರಕೆ ಬಂದೆವೀ ಪುಣ್ಯ ನಿಳಯನು ಅಹ ಧರ್ಮಜನನು ಈಕ್ಷಿಸಿದೆವು ಇನಿತರಿಂ ಕೃತಕೃತ್ಯರು ಆವು ಎಂದರು==[ಭೂಮಿಯ ನಾನಾ ದೇಶದ ವೈಭವಗಳನ್ನು ಕೃಷ್ಣನೊಡನೆ ಸಂಚರಿಸಿ ನೋಡಿದೆವು; ಅಶ್ವಮೇಧ ಅಧ್ವರಕ್ಕೆ ಬಂದೆವು, ಹಾಗಾಗಿ ಪುಣ್ಯ ನಿಧಿಯಾದ ಧರ್ಮಜನನ್ನು ಕಂಡೆವು; ಇವೆಲ್ಲದರಿಂದ ನಾವು ಕೃತಕೃತ್ಯರಾದೆವು,'ಎಂದರು].
 • ತಾತ್ಪರ್ಯ: ಬಳಿಕ ಆ ಸಮಸ್ತ ರಾಜರು ಕೃಷ್ಣನನ್ನು ಸುತ್ತುವರಿದು ನಿಂತು,'ಎಲೆ ದೇವ, ನಮಗೆ ನಿನ್ನ ದರ್ಶನವಾಯಿತು; ಇಪ್ಪತ್ತು ಬ್ರಹ್ಮನ ಕಾಲದಲ್ಲಿ ಬದುಕಿದ್ದ ಬಕದಾಲ್ಭ್ಯಮುನಿಯನ್ನು ಅಚ್ಚರಿಯಿಂದ ಕಂಡೆವು; ಭೂಮಿಯ ನಾನಾ ದೇಶದ ವೈಭವಗಳನ್ನು ಕೃಷ್ಣನೊಡನೆ ಸಂಚರಿಸಿ ನೋಡಿದೆವು; ಅಶ್ವಮೇಧ ಅಧ್ವರಕ್ಕೆ ಬಂದೆವು, ಹಾಗಾಗಿ ಪುಣ್ಯ ನಿಧಿಯಾದ ಧರ್ಮಜನನ್ನು ಕಂಡೆವು; ಇವೆಲ್ಲದರಿಂದ ನಾವು ಕೃತಕೃತ್ಯರಾದೆವು,'ಎಂದರು.
 • (ಪದ್ಯ-೩೨)

ಪದ್ಯ:-:೩೩:[ಸಂಪಾದಿಸಿ]

ಎನಲವರ ನುಡಿಗಳ್ಗೆ ನಸುನಗುತೆ ಮುರಹರಂ |
ವಿನಯದಿಂದರಸಂಗೆ ನೇಮಿಸಿದೊಡಾ ಸಕಲ |
ಜನಪತಿಗಳಂ ಧರಾವಲ್ಲಭಂ ಸತ್ಕರಿಸಿ ವಿವಿಧೋಪಚಾರದಿಂದೆ ||
ಮನವೊಲಿದು ಬಕದಾಲ್ಭ್ಯನಂ ಪೂಜೆಗೈದಖಿಳ |
ಮುನಿಗಳಂ ಕೂಡಿಕೊಂಡಧ್ವರೋಪಕ್ರಮಕೆ |
ವಿನುತ ಸಂಕಲ್ಪಮಂ ಮಾಡಿ ರಚಿಸಿದನಿ(ರಿ)ಷ್ಟಿಕಾಚಯನಮಂ ಕ್ರಮದೊಳು ||33||

ಪದವಿಭಾಗ-ಅರ್ಥ:
ಎನಲು ಅವರ ನುಡಿಗಳ್ಗೆ ನಸುನಗುತೆ ಮುರಹರಂ ವಿನಯದಿಂದ ಅರಸಂಗೆ ನೇಮಿಸಿದೊಡೆ ಆ ಸಕಲ ಜನಪತಿಗಳಂ ಧರಾವಲ್ಲಭಂ ಸತ್ಕರಿಸಿ ವಿವಿಧ ಉಪಚಾರದಿಂದೆ==[ರಾಜರು ತಾವು ಕೃತಕೃತ್ಯರು, ಎನ್ನಲು ಅವರ ಮಾತಿಗೆ ಕೃಷ್ಣನು ನಸುನಗುತ್ತ ವಿನಯದಿಂದ ಅರಸನಿಗೆ ಹೇಳಿದಾಗ, ಆ ಸಕಲ ರಾಜರನ್ನೂ ಧರ್ಮಜನು ವಿವಿಧ ಉಪಚಾರದಿಂದ ಸತ್ಕರಿಸಿದನು.];; ಮನವೊಲಿದು ಬಕದಾಲ್ಭ್ಯನಂ ಪೂಜೆಗೈದ ಅಖಿಳ ಮುನಿಗಳಂ ಕೂಡಿಕೊಂಡು ಅಧ್ವರ ಉಪಕ್ರಮಕೆ ವಿನುತ ಸಂಕಲ್ಪಮಂ ಮಾಡಿ ರಚಿಸಿದನು ಇಷ್ಟಿಕಾಚಯನಮಂ ಕ್ರಮದೊಳು=[ಮನಃಪೂರ್ವಕವಾಗಿ ಪ್ರೀತಿಯಿಂದ ಬಕದಾಲ್ಭ್ಯನನ್ನು ಪೂಜೆಮಾಡಿದ ಬಳಿಕ, ಎಲ್ಲಾ ಮುನಿಗಳನ್ನು ಕೂಡಿಕೊಂಡು ಯಜ್ಞವನ್ನು ಆರಂಭಿಸಲು ವಿಶಿಷ್ಟ ಸಂಕಲ್ಪವನ್ನು ಮಾಡಿ ಇಷ್ಟಿಕಾಚಯ/ಯಜ್ಞವೇದಿಕೆಯನ್ನು ಕ್ರಮದಲ್ಲಿ ರಚಿಸಿದನು].
 • ತಾತ್ಪರ್ಯ:ರಾಜರು ತಾವು ಕೃತಕೃತ್ಯರು, ಎನ್ನಲು ಅವರ ಮಾತಿಗೆ ಕೃಷ್ಣನು ನಸುನಗುತ್ತ ವಿನಯದಿಂದ ಅರಸನಿಗೆ ಹೇಳಿದಾಗ, ಆ ಸಕಲ ರಾಜರನ್ನೂ ಧರ್ಮಜನು ವಿವಿಧ ಉಪಚಾರದಿಂದ ಸತ್ಕರಿಸಿದನು. ಮನಃಪೂರ್ವಕವಾಗಿ ಪ್ರೀತಿಯಿಂದ ಬಕದಾಲ್ಭ್ಯನನ್ನು ಪೂಜೆಮಾಡಿದ ಬಳಿಕ, ಎಲ್ಲಾ ಮುನಿಗಳನ್ನು ಕೂಡಿಕೊಂಡು ಯಜ್ಞವನ್ನು ಆರಂಭಿಸಲು ವಿಶಿಷ್ಟ ಸಂಕಲ್ಪವನ್ನು ಮಾಡಿ ಇಷ್ಟಿಕಾಚಯ/ಯಜ್ಞವೇದಿಕೆಯನ್ನು ಕ್ರಮದಲ್ಲಿ ರಚಿಸಿದನು.
 • (ಪದ್ಯ-೩೩)

ಪದ್ಯ:-:೩೪:[ಸಂಪಾದಿಸಿ]

ಕ್ಷೇತ್ರಮಂ ನೆಲೆಗೈದು ವೃಷಭಂಗಳಂಪೂಡಿ |
ವೇತ್ರಮಂ ಪಿಡಿಯೆ ನೃಪನೋಷಧಿಗಳಂ ಕಮಲ |
ನೇತ್ರೆ ತಾಳ್ದೆರೆ ಕುಂತಿ ದೇವಕಿ ಯಶೋದೆಯರ್ ಕೃಷ್ಣಾದಿ ಪೃಥ್ವೀಶರು ||
ಧಾತ್ರೀಸುರರ್ ನಾರಿಯರ್ ವೆರಸಿ ಕನಕಮಯ |
ಪಾತ್ರೆಯೊಳ್ ಕರ್ಪೂರ ಚಂದನ ಜಲವನೊಡನೆ |
ಸೂತ್ರವಿಧಿಗಳ ಮಂತ್ರಪಾಠದಿಂ ತಳಿಯೆ ಶೋಧಿಸಿದರುಕ್ತಸ್ಥಳವನು ||34||

ಪದವಿಭಾಗ-ಅರ್ಥ:
ಕ್ಷೇತ್ರಮಂ ನೆಲೆಗೈದು ವೃಷಭಂಗಳಂ ಪೂಡಿ ವೇತ್ರಮಂ ಪಿಡಿಯೆ ನೃಪನು ಓಷಧಿಗಳಂ ಕಮಲನೇತ್ರೆ ತಾಳ್ದೆರೆ ಕುಂತಿ ದೇವಕಿ ಯಶೋದೆಯರ್ ಕೃಷ್ಣಾದಿ ಪೃಥ್ವೀಶರು==[ಭೂಮಿಯನ್ನು ಗೊತ್ತುಮಾಡಿ ಎತ್ತುಗಳನ್ನು ಹೂಡಿ ಧರ್ಮರಾಜನು ಕುತ್ತಿಗೆಯ ಹಗ್ಗವನ್ನು ಹಿಡಿಯಲು,ದ್ರೌಪದಿಯು ಶುದ್ಧಿಯ ಓಷಧಿಗಳನ್ನು/ವನಸ್ಪತಿಗಳನ್ನು ಹಿಡಿದಿರಲು, ಕುಂತಿ, ದೇವಕಿ, ಯಶೋದೆಯರು ಕೃಷ್ಣ ಮತ್ತು ರಾಜರು ];; ಧಾತ್ರೀಸುರರ್ ನಾರಿಯರ್ ವೆರಸಿ ಕನಕಮಯ ಪಾತ್ರೆಯೊಳ್ ಕರ್ಪೂರ ಚಂದನ ಜಲವನು ಒಡನೆ ಸೂತ್ರವಿಧಿಗಳ ಮಂತ್ರಪಾಠದಿಂ ತಳಿಯೆ ಶೋಧಿಸಿದರು ಉಕ್ತಸ್ಥಳವನು==[ವಿಪ್ರರು, ವನಿತೆಯರು, ಎಲ್ಲಾಸೇರಿ, ಚಿನ್ನದ ಪಾತ್ರೆಯಲ್ಲಿ ಕರ್ಪೂರ, ಚಂದನ, ಮಿಶ್ರಿತ ಜಲವನ್ನು ಕೂಡಲೆ ಸೂತ್ರವಿಧಿಗಳ ಮಂತ್ರಪಾಠದಿಂದ ಚಿಮುಕಿಸಿ ಯಜ್ಞಸ್ಥಳವನ್ನು ಶುದ್ಧಗೊಳಿಸಿದರು].
 • ತಾತ್ಪರ್ಯ:ಭೂಮಿಯನ್ನು ಗೊತ್ತುಮಾಡಿ ಎತ್ತುಗಳನ್ನು ಹೂಡಿ ಧರ್ಮರಾಜನು ಕುತ್ತಿಗೆಯ ಹಗ್ಗವನ್ನು ಹಿಡಿಯಲು,ದ್ರೌಪದಿಯು ಶುದ್ಧಿಯ ಓಷಧಿಗಳನ್ನು/ವನಸ್ಪತಿಗಳನ್ನು ಹಿಡಿದಿರಲು, ಕುಂತಿ, ದೇವಕಿ, ಯಶೋದೆಯರು ಕೃಷ್ಣ ಮತ್ತು ರಾಜರು ವಿಪ್ರರು, ವನಿತೆಯರು, ಎಲ್ಲಾಸೇರಿ, ಚಿನ್ನದ ಪಾತ್ರೆಯಲ್ಲಿ ಕರ್ಪೂರ, ಚಂದನ, ಮಿಶ್ರಿತ ಜಲವನ್ನು ಕೂಡಲೆ ಸೂತ್ರವಿಧಿಗಳ ಮಂತ್ರಪಾಠದಿಂದ ಚಿಮುಕಿಸಿ ಯಜ್ಞಸ್ಥಳವನ್ನು ಶುದ್ಧಗೊಳಿಸಿದರು.
 • (ಪದ್ಯ-೩)

ಪದ್ಯ:-:೩೫:[ಸಂಪಾದಿಸಿ]

ಶ್ರುತಿಮಂತ್ರವಿಧಿಗಳಿಂ ವ್ಯಾಸ ಬಕದಾಲ್ಭ್ಯರನು |
ಮತದಿಂದೆ ಬುಧರಿಟ್ಟಿಗೆಗೆಳ ನಳವಡಿಸಿದರ್ |
ಕ್ಷಿತಿಯೊಳ್ ಸುಪರ್ಣಾಕೃತಿಯ ವೇದಿಯಂ ಚತುರ್ ವ್ಯೂಹದೊಳ್ ನಿಲಿಸಿ ನಾಲ್ಕು ||
ಶತವನುದರಾಸನಂಗಳ್ಗೆ ತೆಂಕಣ ಗರಿಯ |
ಚಿತೆಗೆ ನೂರರಮೇಲೆ ನಾಲ್ವತ್ತು ನಾಲ್ಕನಾ |
ಪ್ರತಿಯೊಳುತ್ತರ ಪಕ್ಷಕನಿತುಮಂ ಪುಚ್ಛಕೆಪ್ಪತ್ತೊಂದನೊಂದಿಸಿದರು ||35||

ಪದವಿಭಾಗ-ಅರ್ಥ:
ಶ್ರುತಿಮಂತ್ರವಿಧಿಗಳಿಂ ವ್ಯಾಸ ಬಕದಾಲ್ಭ್ಯರ ಅನುಮತದಿಂದೆ ಬುಧರು ಇಟ್ಟಿಗೆಗೆಳನು ಅಳವಡಿಸಿದರ್ ಕ್ಷಿತಿಯೊಳ್ ಸುಪರ್ಣಾಕೃತಿಯ ವೇದಿಯಂ ಚತುರ್ ವ್ಯೂಹದೊಳ್ ನಿಲಿಸಿ ನಾಲ್ಕು ಶತವನು ಉದರ ಆಸನಂಗಳ್ಗೆ (ಅನನ: ಮುಖ)==[ಶ್ರುತಿಮಂತ್ರವಿಧಿಗಳಿಂದ ವ್ಯಾಸ ಮತ್ತು ಬಕದಾಲ್ಭ್ಯರ ಒಪ್ಪಿಗೆಯಿಂದ ವಿಪ್ರರು, ಇಟ್ಟಿಗೆಗೆಳನು ಯಜ್ಞಕುಂಡಕ್ಕೆ ಅಳವಡಿಸಿದರು. ಆ ಯಜ್ಞಭೂಮಿಯಲ್ಲಿ ಗರುದನ ಆಕೃತಿಯ ವೇದಿಯನ್ನು ನಾಲ್ಕುದಿಕ್ಕುಳ್ಳ ಚೌಕದೊಳಗೆ ನಿಲ್ಲಿಸಿ ನಾಲ್ಕು ನೂರು ಇಟ್ಟಿಗೆಗಳನ್ನು ಹೊಟ್ಟೆ ಆಸನಗಳಿಗೆ,];; ತೆಂಕಣ ಗರಿಯ ಚಿತೆಗೆ ನೂರರಮೇಲೆ ನಾಲ್ವತ್ತು ನಾಲ್ಕನು ಆ ಪ್ರತಿಯೊಳು ಉತ್ತರ ಪಕ್ಷಕೆ ಅನಿತುಮಂ ಪುಚ್ಛಕೆ ಎಪ್ಪತ್ತೊಂದನು ಒಂದಿಸಿದರು==[ದಕ್ಷಿಣಭಾಗದ ಗರಿಯ ಚಿತೆಗೆ ನೂರು ಮತ್ತ ನಾಲ್ವತ್ತು ನಾಲ್ಕನ್ನು, ಆ ರೀತಿಯಲ್ಲಿ ಉತ್ತರ ದಿಕ್ಕಿನ ಪಕ್ಷಕ್ಕೆ, ಉಳಿದ ಎಪ್ಪತ್ತೊಂದು ಅಷ್ಟನ್ನು ಪುಚ್ಛಕ್ಕೆ ಜೋಡಿಸಿದರು].
 • ತಾತ್ಪರ್ಯ:ಶ್ರುತಿಮಂತ್ರವಿಧಿಗಳಿಂದ ವ್ಯಾಸ ಮತ್ತು ಬಕದಾಲ್ಭ್ಯರ ಒಪ್ಪಿಗೆಯಿಂದ ವಿಪ್ರರು, ಇಟ್ಟಿಗೆಗೆಳನು ಯಜ್ಞಕುಂಡಕ್ಕೆ ಅಳವಡಿಸಿದರು. ಆ ಯಜ್ಞಭೂಮಿಯಲ್ಲಿ ಗರುದನ ಆಕೃತಿಯ ವೇದಿಯನ್ನು ನಾಲ್ಕುದಿಕ್ಕುಳ್ಳ ಚೌಕದೊಳಗೆ ನಿಲ್ಲಿಸಿ ನಾಲ್ಕು ನೂರು ಇಟ್ಟಿಗೆಗಳನ್ನು ಹೊಟ್ಟೆ ಆಸನಗಳಿಗೆ, ದಕ್ಷಿಣಭಾಗದ ಗರಿಯ ಚಿತೆಗೆ ನೂರು ಮತ್ತ ನಾಲ್ವತ್ತು ನಾಲ್ಕನ್ನು, ಆ ರೀತಿಯಲ್ಲಿ ಉತ್ತರ ದಿಕ್ಕಿನ ಪಕ್ಷಕ್ಕೆ, ಉಳಿದ ಎಪ್ಪತ್ತೊಂದು ಅಷ್ಟನ್ನು ಪುಚ್ಛಕ್ಕೆ ಜೋಡಿಸಿದರು.
 • (ಪದ್ಯ-೩೫)

ಪದ್ಯ:-:೩೬:[ಸಂಪಾದಿಸಿ]

ಮೊದಲೊಂದನಿಟ್ಟಿಗೆಯ ನಿಮ್ಮಡಿಸಲೆರಡನೆಯ |
ದದ ನಿಮ್ಮಡಿಸಲುರೆ ವಿರಾಜಿಸಿತು ಮೂರನೆಯ |
ದದ ನಿಮ್ಮಡಿಸಲಾಯ್ತು ನಾಲ್ಕನೆಯದದ ನಿಮ್ಮಡಿಸಲೆಸೆದುದೈದನೆಯದು ||
ಪುದಿದಿಂತು ಮೆರೆದುದು ಸುಪರ್ಣ ಪಂಚಕದ ಯಾ |
ಗದ ವೇದಿಗಳ್ಮಹಾಮಂಟಪವನೈದೆ ರಚಿ|
ಸಿದರೆಂಟು ಬಾಗಿಲ್ಗಳಿಂ ಕೂಡಿ ತೋರಣ ಪತಾಕೆಗಳ ವಿಸ್ತರದೊಳು ||36||

ಪದವಿಭಾಗ-ಅರ್ಥ:
ಮೊದಲು ಒಂದನು ಇಟ್ಟಿಗೆಯನು ಇಮ್ಮಡಿಸಲು ಎರಡನೆಯದು ಅದನಿಮ್ಮಡಿಸಲು ಉರೆ ವಿರಾಜಿಸಿತು ಮೂರನೆಯದು ಅದುನು ಇಮ್ಮಡಿಸಲು ಆಯ್ತು ನಾಲ್ಕನೆಯದು ಅದನು ಇಮ್ಮಡಿಸಲು ಎಸೆದುದು ಐದನೆಯದು==[ಮೊದಲು ಒಂದನು ಇಟ್ಟಿಗೆಯನ್ನು ಇಟ್ಟು ಇಮ್ಮಡಿಸಲು ಎರಡನೆಯದು (ಎರಡನೆಯ ಸಾಲು), ಅದನ್ನು ಇಮ್ಮಡಿಸಲು ಮತ್ತೆ ಸೋಭಿಸಿತು ಮೂರನೆಯದು, ಅದನ್ನು ಇಮ್ಮಡಿಸಲು ಆಯ್ತು ನಾಲ್ಕನೆಯ ಸಾಲು,ಅದನು ಮತ್ತೆ ಇಮ್ಮಡಿಸಲು ಸೋಭಿಸಿತು ಐದನೆಯದು];; ಪುದಿದಿಂತು (ಪುದಿದ: ಹೂಡಿದ,ಜೋಡಿಸಿದ) ಮೆರೆದುದು ಸುಪರ್ಣ ಪಂಚಕದ ಯಾಗದ ವೇದಿಗಳ್ ಮಹಾಮಂಟಪವನು ಐದೆ ರಚಿಸಿದರು ಎಂಟು ಬಾಗಿಲ್ಗಳಿಂ ಕೂಡಿ ತೋರಣ ಪತಾಕೆಗಳ ವಿಸ್ತರದೊಳು=[ಹೀಗೆ ಜೋಡಿಸಿದ ಇಟ್ಟಿಗಯು ಸುಪರ್ಣ ಪಂಚಕದ ಯಾಗದ ವೇದಿಗಳಾಗಿ ಶೋಭಿಸಿತು. ಮಹಾಮಂಟಪವನ್ನು ಎಂಟು ಬಾಗಿಲುಗಳಿಂದ ಕೂಡಿ ತೋರಣ ಪತಾಕೆಗಳ ಜೋಡಿಸಿ ವಿಸ್ತಾರವಾಗಿ ಇರುವಂತೆ ರಚಿಸಿದರು].
 • ತಾತ್ಪರ್ಯ:ಮೊದಲು ಒಂದನು ಇಟ್ಟಿಗೆಯನ್ನು ಇಟ್ಟು ಇಮ್ಮಡಿಸಲು ಎರಡನೆಯದು (ಎರಡನೆಯ ಸಾಲು), ಅದನ್ನು ಇಮ್ಮಡಿಸಲು ಮತ್ತೆ ಸೋಭಿಸಿತು ಮೂರನೆಯದು, ಅದನ್ನು ಇಮ್ಮಡಿಸಲು ಆಯ್ತು ನಾಲ್ಕನೆಯ ಸಾಲು,ಅದನು ಮತ್ತೆ ಇಮ್ಮಡಿಸಲು ಸೋಭಿಸಿತು ಐದನೆಯದು ಹೀಗೆ ಜೋಡಿಸಿದ ಇಟ್ಟಿಗಯು ಸುಪರ್ಣ ಪಂಚಕದ ಯಾಗದ ವೇದಿಗಳಾಗಿ ಶೋಭಿಸಿತು. ಮಹಾಮಂಟಪವನ್ನು ಎಂಟು ಬಾಗಿಲುಗಳಿಂದ ಕೂಡಿ ತೋರಣ ಪತಾಕೆಗಳ ಜೋಡಿಸಿ ವಿಸ್ತಾರವಾಗಿ ಇರುವಂತೆ ರಚಿಸಿದರು.
 • (ಪದ್ಯ-೩೬)

ಪದ್ಯ:-:೩೭:[ಸಂಪಾದಿಸಿ]

ಇಷ್ಟಕಾಚಯನದಿಂ ರಾಜಿಸಿತು ಬಳಸಿ ಪರಿ |
ಶಿಷ್ಟದಿಂದೊಪ್ಪಿದುವು ಪಲವು ವೇದಿಗಳೆಸೆದು |
ವಷ್ಟಕುಂಡದ ರಚನೆ ಪಾಲಾಶಮೇಳು ಖಾದಿರಮಾರುಬಿಲ್ವಮೈದು ||
ದೃಷ್ಟಮಾದುನ್ನತ ಶ್ಲೇಷ್ಮಾತಕಂ ಮೂರ |
ಧಿಷ್ಠಿತದ ಯೂಪಮಿಂತೇಕವಿಂಶಶಿಗಳು |
ತ್ಕೃಷ್ಟತ್ರಿವೃತ್ಸೂತ್ರ ಭೂಷಿತ ಚಷಾಲದಿಂ ಮೆರೆದುವಾ ಮಂಟಪದೊಳು ||37||

ಪದವಿಭಾಗ-ಅರ್ಥ:
ಇಷ್ಟಕಾಚಯನದಿಂ (ಇಟ್ಟಿಗೆ) ರಾಜಿಸಿತು ಬಳಸಿ ಪರಿಶಿಷ್ಟದಿಂದ ಒಪ್ಪಿದುವು ಪಲವು ವೇದಿಗಳು ಎಸೆದುವು ಅಷ್ಟಕುಂಡದ ರಚನೆ ಪಾಲಾಶಂ ಏಳು ಖಾದಿರಂ ಆರು,ಬಿಲ್ವಂ ಐದು(೫)==[ಇಟ್ಟಿಗೆಯಿಂದ ಕಟ್ಟಿದ ಕುಂಡ ಶೋಭಿಸಿತು; (ಬಳಸಿ ಪರಿಶಿಷ್ಟದಿಂದ (ಉಳಿದ) ಒಪ್ಪಿದುವು->) ಹಲವು ವೇದಿಕೆಗಳು ಬಳಸಿ ಉಳಿದ ಇಟ್ಟಿಗೆಗಳಿಂದ ಕಟ್ಟಿ ಶೋಭಿಸಿವು; ಅಷ್ಟಕುಂಡದ ರಚನೆ ಪಾಲಾಶ/ಮತ್ತುಗುದ ಕಂಬ ಏಳು, ಖಾದಿರಮರದ್ದು ಆರು, ಬಿಲ್ವದ್ದು ಐದು,];; ದೃಷ್ಟಮಾದ ಉನ್ನತ ಶ್ಲೇಷ್ಮಾತಕಂ ಮೂರು ಅಧಿಷ್ಠಿತದ (ಸ್ಥಾಪಿತ) ಯೂಪಂ ಇಂತು ಏಕವಿಂಶಶಿಗಳು ಉತ್ಕೃಷ್ಟ ತ್ರಿವೃತ್ಸೂತ್ರ(ತ್ರಿವತ್ ಸೂತ್ರ: ಯಜ್ಞಕುಂಡದ ಸುತ್ತ ಮೂರು ಸುತ್ತುದಾರ) ಭೂಷಿತ ಚಷಾಲದಿಂ (ಕಂಬದ ಬಳೆ- ಪಶುವನ್ನು ಕಟ್ಟಲು) ಮೆರೆದುವಾ ಮಂಟಪದೊಳು==[ನೋಡತಕ್ಕ ಉನ್ನತ ಶ್ಲೇಷ್ಮಾತಕ/ಬೇಲ ಮರದ್ದು ಮೂರು, ಸ್ಥಾಪಿಸಲಾದ ಯೂಪಸ್ಥಂಬಗಳು ಒಟ್ಟು ಇಪ್ಪತ್ತೊಂದು ಕಂಬಗಳು; ಉತ್ಕೃಷ್ಟವಾದ ಯಜ್ಞಕುಂಡದ ಸುತ್ತ ಮೂರು ಸುತ್ತುದಾರದಿಂದ ಭೂಷಿತವಾದ ಮತ್ತು ಕಂಬದ ಬಳೆಗಳಿಂದ ಆ ಮಂಟಪದಲ್ಲಿ ಶೋಭಿಸಿದವು ].
 • ತಾತ್ಪರ್ಯ:ಇಟ್ಟಿಗೆಯಿಂದ ಕಟ್ಟಿದ ಕುಂಡ ಶೋಭಿಸಿತು; ಹಲವು ವೇದಿಕೆಗಳು ಬಳಸಿ ಉಳಿದ ಇಟ್ಟಿಗೆಗಳಿಂದ ಕಟ್ಟಿ ಶೋಭಿಸಿವು; ಅಷ್ಟಕುಂಡದ ರಚನೆ ಪಾಲಾಶ/ಮತ್ತುಗುದ ಕಂಬ ಏಳು, ಖಾದಿರಮರದ್ದು ಆರು, ಬಿಲ್ವದ್ದು ಐದು, ನೋಡತಕ್ಕ ಉನ್ನತ ಶ್ಲೇಷ್ಮಾತಕ/ಬೇಲ ಮರದ್ದು ಮೂರು, ಸ್ಥಾಪಿಸಲಾದ ಯೂಪಸ್ಥಂಬಗಳು ಒಟ್ಟು ಇಪ್ಪತ್ತೊಂದು ಕಂಬಗಳು; ಉತ್ಕೃಷ್ಟವಾದ ಯಜ್ಞಕುಂಡದ ಸುತ್ತ ಮೂರು ಸುತ್ತುದಾರದಿಂದ ಭೂಷಿತವಾದ ಮತ್ತು ಕಂಬದ ಬಳೆಗಳಿಂದ ಆ ಮಂಟಪದಲ್ಲಿ ಶೋಭಿಸಿದವು.
 • (ಪದ್ಯ-೩೭)

ಪದ್ಯ:-:೩೭:[ಸಂಪಾದಿಸಿ]

ವಿಹಿತ ಸಂಸ್ಥಾಪಿತ ಮಖಾವಳಿಗಳಿಂದೆ ಶತ |
ಜುಹುಗಳಿಂ ವೈಕಂಕತದ ಷಷ್ಟಿ ಸ್ರುಕ್ಸ್ರುವನಿ|
ವಹದಿಂದೆ ಗೋಚರ್ಮ ಲೋಹಿತ ದುಲೂಖಲದ ಸೋಮವಲ್ಲಿಯ ಮುಸಲದ ||
ವಿಹರಿಸುವ ದರ್ಭಾಸ್ತರಣದ ಚಮಸಾದಿಗಳ |
ಬಹು ಸಾಧನಂಗಳಿಂ ಭೂರಿ ಸಂಭಾರ ಸಂ |
ಗ್ರಹದಿಂದೆ ಬೇಕಾದ ವಸ್ತುಸಂಜಾತದಿಂ ಮಖಶಾಲೆ ಕಣ್ಗೆಸೆದುದು ||38||

ಪದವಿಭಾಗ-ಅರ್ಥ:
ವಿಹಿತ ಸಂಸ್ಥಾಪಿತ ಮಖಾವಳಿಗಳಿಂದೆ (ಮಖ ಆವಳಿ:ಸಮೂಹ) ಶತಜುಹುಗಳಿಂ (ತುಪ್ಪಕ್ಕೆ,ಉದ್ದ ಮರದ ಸೌಟು?-ಸೃಕ್ಕು, ಪಾತ್ರೆ) ವೈಕಂಕತದ (ಕಂಕತ:ಬಾಚಣಿಗೆ) ಷಷ್ಟಿ, ಸ್ರುಕ್ಸ್ರುವನಿವಹ ದಿಂದೆ (ತುಪ್ಪದ ಪಾತ್ರೆ, ನವಹ: ಸಮೂಹ), ಗೋಚರ್ಮ ಲೋಹಿತ ದುಲೂಖಲದ ಸೋಮವಲ್ಲಿಯ ಮುಸಲದ (ವನಕೆ)==[ಯಜ್ಞ ಕುಂಡಗಳ ಪ್ರದೇಶವು: ಸರಿಯಾಗಿ ಸಂಸ್ಥಾಪಿತವಾದ ಅನೇಕ ಯಜ್ಞಕುಂಡಗಳಿಂದ, ತುಪ್ಪವನ್ನು ಯಜ್ಞಕ್ಕೆ ಹಾಕು ಉದ್ದ ಮರದ ಸೌಟುಗಳಿಂದ, ದೊಡ್ಡ ಬಾಚಣಿಕೆಗಳಿಂದ, ಅರವತ್ತು ತುಪ್ಪದ ಪಾತ್ರೆಗಳಿಂದ, ಗೋಚರ್ಮಗಳು, ಕೆಂಪುಬಣ್ಣದ ಒರಳುಗಳಿಂದ, ಸೋಮಲತೆಯಿಂದ ರಸ ತೆಗೆಯಲು ಒನಕೆಯಿಂದ,];; ವಿಹರಿಸುವ ದರ್ಭಾಸ್ತರಣದ ಚಮಸಾದಿಗಳ ಬಹು ಸಾಧನಂಗಳಿಂ ಭೂರಿ ಸಂಭಾರ ಸಂಗ್ರಹದಿಂದೆ ಬೇಕಾದ ವಸ್ತುಸಂಜಾತದಿಂ ಮಖಶಾಲೆ ಕಣ್ಗೆಸೆದುದು==[ಹಾಸಿರುವ ದರ್ಭೆಯ ಚಾಪೆಗಳಿಂದ, ಸೋಮರಸ ತುಂಬುವ ಚಮಸ ಮೊದಲಾದ ಬಹು ಸಾಧನಗಳಿದ ಹೇರಳವಾಗಿರವ ಸಂಭಾರ ಸಂಗ್ರಹದಿಂದ, ಮತ್ತು ಇನ್ನೂ ಬೇಕಾದ ವಸ್ತುಗಳ ಸಂಗ್ರಹದಿಂದ ಯಜ್ಞಶಾಲೆ ಕಣ್ಗಿಗೆ ಶೋಭಿಸಿತು.]
 • ತಾತ್ಪರ್ಯ:ಯಜ್ಞ ಕುಂಡಗಳ ಪ್ರದೇಶವು: ಸರಿಯಾಗಿ ಸಂಸ್ಥಾಪಿತವಾದ ಅನೇಕ ಯಜ್ಞಕುಂಡಗಳಿಂದ, ತುಪ್ಪವನ್ನು ಯಜ್ಞಕ್ಕೆ ಹಾಕು ಉದ್ದ ಮರದ ಸೌಟುಗಳಿಂದ, ದೊಡ್ಡ ಬಾಚಣಿಕೆಗಳಿಂದ, ಅರವತ್ತು ತುಪ್ಪದ ಪಾತ್ರೆಗಳಿಂದ, ಗೋಚರ್ಮಗಳು, ಕೆಂಪುಬಣ್ಣದ ಒರಳುಗಳಿಂದ, ಸೋಮಲತೆಯಿಂದ ರಸ ತೆಗೆಯಲು ಒನಕೆಯಿಂದ, ಹಾಸಿರುವ ದರ್ಭೆಯ ಚಾಪೆಗಳಿಂದ, ಸೋಮರಸ ತುಂಬುವ ಚಮಸ ಮೊದಲಾದ ಬಹು ಸಾಧನಗಳಿದ ಹೇರಳವಾಗಿರವ ಸಂಭಾರ ಸಂಗ್ರಹದಿಂದ, ಮತ್ತು ಇನ್ನೂ ಬೇಕಾದ ವಸ್ತುಗಳ ಸಂಗ್ರಹದಿಂದ ಯಜ್ಞಶಾಲೆ ಕಣ್ಗಿಗೆ ಶೋಭಿಸಿತು.
 • (ಪದ್ಯ-೩೭)

ಪದ್ಯ:-:೩೯:[ಸಂಪಾದಿಸಿ]

ವರಿಸಿ ಬಕದಾಲ್ಬ್ಯನಂ ಬ್ರಹ್ಮತ್ವಕಿರಿಸಿದರ್ |
ವರ ಮುನಿಪನಾ ವ್ಯಾಸನಾಚಾರ್ಯನಾದ ನ |
ಧ್ವರಿಯು ಮೊದಲಾದ ಋತ್ವಿಜರಾಗೆ ವಾಮದೇವ ವಶಿಷ್ಟಗೌತಮಾತ್ರಿ ||
ವರ ಪರಾಶರ ಭರದ್ವಾಜ ಕೌಂಡಿನ್ಯ ಭಾ |
ಗುರಿಜಾಮದಗ್ನ್ಯಗಾಲವ ಜಾತಕರ್ಣ ಸೌ |
ಭರಿ ಸುಮಂತ ಕಹೋಳದೈಭ್ಯ ರೋಮಶ ಮುಖ್ಯಮುನಿಗಳಾ ಕ್ರತುವರದೊಳು ||39||

ಪದವಿಭಾಗ-ಅರ್ಥ:
ವರಿಸಿ ಬಕದಾಳ್ಭ್ಯನಂ ಬ್ರಹ್ಮತ್ವಕೆ ಇರಿಸಿದರ್ ವರ ಮುನಿಪನು ಆ ವ್ಯಾಸನು ಆಚಾರ್ಯನಾದನು ಅಧ್ವರಿಯು ಮೊದಲಾದ ಋತ್ವಿಜರು ಆಗೆ ವಾಮದೇವ ವಶಿಷ್ಟ ಗೌತಮ ಅತ್ರಿ==[ವರಿಸಿ ಬಕದಾಲ್ಬ್ಯಮನಿಯನ್ನು ವರುಣ (ಮರ್ಯಾದೆಯ ಸಂಕೇತ ಧರ್ಬೆಮತ್ತು ಉಡುಗೊರೆ)ವ್ನು ಕೊಟ್ಟು ಬ್ರಹ್ಮತ್ವಕೆ ಕೂರಿಸಿದರು; ಶ್ರೇಷ್ಠ ಮುನಿಪನಾದ ಆ ವ್ಯಾಸನು ಆಚಾರ್ಯನಾದನು; ಅಧ್ವರ್ಯ ಮತ್ತು ಋತ್ವಿಜರಾಗಿ ವಾಮದೇವ, ವಶಿಷ್ಟ, ಗೌತಮ, ಅತ್ರಿ, ];; ವರ ಪರಾಶರ ಭರದ್ವಾಜ ಕೌಂಡಿನ್ಯ ಭಾಗುರಿ ಜಾಮದಗ್ನ್ಯ ಗಾಲವ ಜಾತಕರ್ಣ ಸೌಭರಿ ಸುಮಂತ ಕಹೋಳದೈಭ್ಯ ರೋಮಶ ಮುಖ್ಯಮುನಿಗಳಾ ಕ್ರತುವರದೊಳು==[ಪೂಜ್ಯ ಪರಾಶರ, ಭರದ್ವಾಜ, ಕೌಂಡಿನ್ಯ, ಭಾಗುರಿ, ಜಾಮದಗ್ನಿ, ಗಾಲವ, ಜಾತಕರ್ಣ, ಸೌಭರಿ, ಸುಮಂತ, ಕಹೋಳ, ದೈಭ್ಯ, ರೋಮಶ,ಈ ಮುಖ್ಯಮುನಿಗಳು ಆ ಶ್ರೇಷ್ಠಯಜ್ಞದಲ್ಲಿ ನೇಮಕವಾದರು].
 • ತಾತ್ಪರ್ಯ:ಬಕದಾಲ್ಬ್ಯಮನಿಯನ್ನು ವರುಣ (ಮರ್ಯಾದೆಯ ಸಂಕೇತ ಧರ್ಬೆಮತ್ತು ಉಡುಗೊರೆ)ಯನ್ನು ಕೊಟ್ಟು ಬ್ರಹ್ಮತ್ವಕೆ ಕೂರಿಸಿದರು; ಶ್ರೇಷ್ಠ ಮುನಿಪನಾದ ಆ ವ್ಯಾಸನು ಆಚಾರ್ಯನಾದನು; ಅಧ್ವರ್ಯ ಮತ್ತು ಋತ್ವಿಜರಾಗಿ ವಾಮದೇವ, ವಶಿಷ್ಟ, ಗೌತಮ, ಅತ್ರಿ, ಪೂಜ್ಯ ಪರಾಶರ, ಭರದ್ವಾಜ, ಕೌಂಡಿನ್ಯ, ಭಾಗುರಿ, ಜಾಮದಗ್ನಿ, ಗಾಲವ, ಜಾತಕರ್ಣ, ಸೌಭರಿ, ಸುಮಂತ, ಕಹೋಳ, ದೈಭ್ಯ, ರೋಮಶ,ಈ ಮುಖ್ಯಮುನಿಗಳು ಆ ಶ್ರೇಷ್ಠಯಜ್ಞದಲ್ಲಿ ನೇಮಕವಾದರು.
 • (ಪದ್ಯ-೩೯)

ಪದ್ಯ:-:೪೦:[ಸಂಪಾದಿಸಿ]

ರಕ್ಷೋಘ್ನಮಂತ್ರದಿಂದೆಂಟು ಬಾಗಿಲ್ಗಳಂ |
ರಕ್ಷಿಸುವರಾಗಿ ವಿಶ್ವಾಮಿತ್ರ ಭೃಗು ವಾಯು |
ಭಕ್ಷಕ ಪುಲಸ್ತ್ಯರ್ ಮಧುಚ್ಛಂದ ಧೌಮ್ಯೋಪಮನ್ಯುಕ ಕಪಿಲ ನೇತ್ರರು ||
ಅಕ್ಷಯ ತಪೋಧನ ವರ ಮುನಿಗಳೆಲ್ಲರುಂ |
ಲಕ್ಷಿತದ ಪೂಜೆಗಳನನುಕರಿಸಲನಿಭರ ಸ |
ಮಕ್ಷದೊಳ್ ಧರ್ಮಜಂ ಮೃಗಶೃಂಗ ಧರನಾಗಿ ಯಾಜಮಾನ್ಯದೊಳೆಸೆದನು ||40||

ಪದವಿಭಾಗ-ಅರ್ಥ:
ರಕ್ಷೋಘ್ನಮಂತ್ರದಿಂದ ಎಂಟು ಬಾಗಿಲ್ಗಳಂ ರಕ್ಷಿಸುವರಾಗಿ ವಿಶ್ವಾಮಿತ್ರ ಭೃಗು ವಾಯುಭಕ್ಷಕ ಪುಲಸ್ತ್ಯರ್ ಮಧುಚ್ಛಂದ ಧೌಮ್ಯೋಪಮನ್ಯುಕ ಕಪಿಲ ನೇತ್ರರು==[ರಕ್ಷೋಘ್ನಮಂತ್ರದಿಂದ ಎಂಟು ಬಾಗಿಲುಗಳನ್ನೂ ರಕ್ಷಿಸುವರಾಗಿ ವಿಶ್ವಾಮಿತ್ರ, ಭೃಗು, ವಾಯುಭಕ್ಷಕ, ಪುಲಸ್ತ್ಯರ್, ಮಧುಚ್ಛಂದ, ಧೌಮ್ಯ, ಉಪಮನ್ಯುಕ, ಕಪಿಲನೇತ್ರರು ನೇಮಕವಾದರು;];; ಅಕ್ಷಯ ತಪೋಧನ ವರ ಮುನಿಗಳು ಎಲ್ಲರುಂ ಲಕ್ಷಿತದ ಪೂಜೆಗಳನು ಅನುಕರಿಸಲು ಅನಿಭರ ಸಮಕ್ಷದೊಳ್ ಧರ್ಮಜಂ ಮೃಗಶೃಂಗ ಧರನಾಗಿ ಯಾಜಮಾನ್ಯದೊಳು ಎಸೆದನು==[ಅಕ್ಷಯ ತಪೋಧನರಾದ ಶ್ರೇಷ್ಠ ಮುನಿಗಳು ಎಲ್ಲರೂ ಉದ್ದೇಶಿತದ ಪೂಜೆಗಳನ್ನು ಮಾಡಲು, ಅವರೆಲ್ಲ ಸಮಕ್ಷದಲ್ಲಿ ಧರ್ಮಜನು ಮೃಗಶೃಂಗ/ಜಿಂಕೆಯ ಕೋಡು ಹಿಡಿದು/ ಧರನಾಗಿ ಯಜ್ಞದ ಯಾಜಮಾನ ಸ್ಥಾನದಲ್ಲಿ ಶೋಭಿಸಿದನು].
 • ತಾತ್ಪರ್ಯ:ರಕ್ಷೋಘ್ನಮಂತ್ರದಿಂದ ಎಂಟು ಬಾಗಿಲುಗಳನ್ನೂ ರಕ್ಷಿಸುವರಾಗಿ ವಿಶ್ವಾಮಿತ್ರ, ಭೃಗು, ವಾಯುಭಕ್ಷಕ, ಪುಲಸ್ತ್ಯರ್, ಮಧುಚ್ಛಂದ, ಧೌಮ್ಯ, ಉಪಮನ್ಯುಕ, ಕಪಿಲನೇತ್ರರು ನೇಮಕವಾದರು; ಅಕ್ಷಯ ತಪೋಧನರಾದ ಶ್ರೇಷ್ಠ ಮುನಿಗಳು ಎಲ್ಲರೂ ಉದ್ದೇಶಿತದ ಪೂಜೆಗಳನ್ನು ಮಾಡಲು, ಅವರೆಲ್ಲ ಸಮಕ್ಷದಲ್ಲಿ ಧರ್ಮಜನು ಮೃಗಶೃಂಗ/ಜಿಂಕೆಯ ಕೋಡು ಹಿಡಿದು/ ಧರನಾಗಿ ಯಜ್ಞದ ಯಾಜಮಾನ ಸ್ಥಾನದಲ್ಲಿ ಶೋಭಿಸಿದನು.
 • (ಪದ್ಯ-೪೦)

ಪದ್ಯ:-:೪೧:[ಸಂಪಾದಿಸಿ]

ವ್ಯಾಸಮುನಿ ಬಳಿಕಲ್ಲಿ ನುಡಿದನವನೀಶಂಗೆ |
ಭಾಸುರಸಭಾವಲಯದೊಳ್ ಮೆರೆವ ದಿವ್ಯ ಸಿಂ |
ಹಾಸನಾರೂಢವಾಗಿಹ ಮುಕುಂದಾದಿ ಭೂಪಾಲರ್ಗೆ ವಿನಯದಿಂದೆ ||
ಈ ಸಮಯದೊಳ್ ಚತುಷಷ್ಟಿ ದಂಪತಿಗಳ್ ವಿ|
ಲಾಸದಿಂದಮಲ ಕಲಶಂಗಳಂ ತುಂಬಿ ಗಂ |
ಗಾ ಸರಿತ್ತೋಯಮಂ ಕೊಂಡು ಬರವೇಳ್ಪುದರಸನ ಮಖನಿಮಿತ್ತಕಾಗಿ ||41||

ಪದವಿಭಾಗ-ಅರ್ಥ:
ವ್ಯಾಸಮುನಿ ಬಳಿಕಲ್ಲಿ ನುಡಿದನು ಅವನೀಶಂಗೆ ಭಾಸುರ ಸಭಾವಲಯದೊಳ್ ಮೆರೆವ ದಿವ್ಯ ಸಿಂಹಾಸನಾರೂಢವಾಗಿ ಇಹ ಮುಕುಂದಾದಿ ಭೂಪಾಲರ್ಗೆ ವಿನಯದಿಂದೆ==[ಬಳಿಕ ವ್ಯಾಸಮುನಿಯು ಅಲ್ಲಿ, ಅವನೀಶ ಧರ್ಮಜನಿಗೆ ಪ್ರಕಾಶಿಸುತ್ತಿರುವ ಸಭಾವಲಯದಲ್ಲಿ ಶೋಭಿಸುವ ದಿವ್ಯ ಸಿಂಹಾಸನದ ಮೇಲೆ ಕುಳಿತಿರುವ ಕೃಷ್ಣನೇ ಮೊದಲಾದ ಭೂಪಾಲರಿಗೆ ವಿನಯದಿಂದ ನುಡಿದನು];; ಈ ಸಮಯದೊಳ್ ಚತುಷಷ್ಟಿ ದಂಪತಿಗಳ್ ವಿಲಾಸದಿಂದ ಅಮಲ ಕಲಶಂಗಳಂ ತುಂಬಿ ಗಂಗಾ ಸರಿತ್ತೋಯಮಂ ಕೊಂಡು ಬರವೇಳ್ಪುದು ಅರಸನ ಮಖನಿಮಿತ್ತಕಾಗಿ==[ಈ ಸಮಯದಲ್ಲಿ ಅರವತ್ನಾಲ್ಕು ದಂಪತಿಗಳು ವೈಭವದಿಂದ ನಿರ್ಮಲವಾದ ಕಲಶಗಳಲ್ಲಿಗಂಗಾನದಿಯ ನೀರನ್ನು ತುಂಬಿ ಅರಸನ ಯಜ್ಞಕ್ಕಾಗಿ ತೆಗೆದುಕೊಂಡು ಬರಲು ಹೇಳುವುದು.]
 • ತಾತ್ಪರ್ಯ:ಬಳಿಕ ವ್ಯಾಸಮುನಿಯು ಅಲ್ಲಿ, ಅವನೀಶ ಧರ್ಮಜನಿಗೆ ಪ್ರಕಾಶಿಸುತ್ತಿರುವ ಸಭಾವಲಯದಲ್ಲಿ ಶೋಭಿಸುವ ದಿವ್ಯ ಸಿಂಹಾಸನದ ಮೇಲೆ ಕುಳಿತಿರುವ ಕೃಷ್ಣನೇ ಮೊದಲಾದ ಭೂಪಾಲರಿಗೆ ವಿನಯದಿಂದ ನುಡಿದನು. ಈ ಸಮಯದಲ್ಲಿ ಅರವತ್ನಾಲ್ಕು ದಂಪತಿಗಳು ವೈಭವದಿಂದ ನಿರ್ಮಲವಾದ ಕಲಶಗಳಲ್ಲಿ ಗಂಗಾನದಿಯ ನೀರನ್ನು ತುಂಬಿ ಅರಸನ ಯಜ್ಞಕ್ಕಾಗಿ ತೆಗೆದುಕೊಂಡು ಬರಲು ಹೇಳುವುದು.
 • (ಪದ್ಯ-೪೧)

ಪದ್ಯ:-:೪೨:[ಸಂಪಾದಿಸಿ]

ಜನಪ ಕೇಳ್ ವ್ಯಾಸಮುನಿ ವಾಕ್ಯಮಂ ಕೇಳ್ದು ಬಳಿ |
ಕನಸೂಯೆ ಸಹಿತತ್ರಿ ಮೇಣರುಂಧತಿ ಸಹಿತ |
ಮುನಿ ವಸಿಷ್ಠಂ ಶೌರಿ ತಾನೆ ರುಕ್ಮಿಣಿಸಹಿತ ಪಾರ್ಥಂ ಸುಭದ್ರೆ ಸಹಿತ ||
ದನುಜಾರಿಸೂನು ಮಾಯಾವತಿ ಸಹಿತ ಮುದದೊ |
ಳನಿರುದ್ಧನುಷೆ ಸಹಿತ ಮಾರುತಿ ಹಿಡಿಂಬಿ ಸಹಿ |
ತಿನಸುತನ ಕುವರಂ ಪ್ರಭದ್ರೆ ಸಹಿತಮಲ ಕಲಶಂಗಳಂ ಪೊತ್ತೆಸೆದರು ||42||

ಪದವಿಭಾಗ-ಅರ್ಥ:
ಜನಪ ಕೇಳ್ ವ್ಯಾಸಮುನಿ ವಾಕ್ಯಮಂ ಕೇಳ್ದು ಬಳಿಕ ಅನಸೂಯೆ ಸಹಿತ ಅತ್ರಿ ಮೇಣ್ ಅರುಂಧತಿ ಸಹಿತ ಮುನಿ ವಸಿಷ್ಠಂ ಶೌರಿ ತಾನೆ ರುಕ್ಮಿಣಿ ಸಹಿತ ಪಾರ್ಥಂ ಸುಭದ್ರೆ ಸಹಿತ==[ಜನಮೇಜಯನೇ ಕೇಳು, ವ್ಯಾಸಮುನಿಯ ಮಾತನ್ನು ಕೇಳಿ, ಬಳಿಕ ಅನಸೂಯೆ ಸಹಿತ ಅತ್ರಿ, ಮತ್ತೆ ಅರುಂಧತಿ ಸಹಿತ ಮುನಿ ವಸಿಷ್ಠನು, ಕೃಷ್ಣ ತಾನೆ ರುಕ್ಮಿಣಿ ಸಹಿತ, ಪಾರ್ಥನು ಸುಭದ್ರೆ ಸಹಿತ, ];; ದನುಜಾರಿಸೂನು ಮಾಯಾವತಿ ಸಹಿತ ಮುದದೊಳು ಅನಿರುದ್ಧನು ಉಷೆ ಸಹಿತ ಮಾರುತಿ ಹಿಡಿಂಬಿ ಸಹಿತ ಇನಸುತನಕುವರಂ ಪ್ರಭದ್ರೆ ಸಹಿತ ಅಮಲ ಕಲಶಂಗಳಂ ಪೊತ್ತು ಎಸೆದರು==[ಪ್ರದ್ಯಮ್ನ ಮಾಯಾವತಿ ಸಹಿತ, ಸಂತಸದಿಂದ ಅನಿರುದ್ಧನು ಉಷೆ ಸಹಿತ, ಭೀಮನು ಹಿಡಿಂಬಿ ಸಹಿತ, ವೃಷಕೇತು ಪ್ರಭದ್ರೆ ಸಹಿತ, ಪರಿಶುದ್ಧ ಕಲಶಗಳನ್ನು ಹೊತ್ತು ಪ್ರಕಾಶಿಸಿದರು.]
 • ತಾತ್ಪರ್ಯ:ಜನಮೇಜಯನೇ ಕೇಳು, ವ್ಯಾಸಮುನಿಯ ಮಾತನ್ನು ಕೇಳಿ, ಬಳಿಕ ಅನಸೂಯೆ ಸಹಿತ ಅತ್ರಿ, ಮತ್ತೆ ಅರುಂಧತಿ ಸಹಿತ ಮುನಿ ವಸಿಷ್ಠನು, ಕೃಷ್ಣ ತಾನೆ ರುಕ್ಮಿಣಿ ಸಹಿತ, ಪಾರ್ಥನು ಸುಭದ್ರೆ ಸಹಿತ, ಪ್ರದ್ಯಮ್ನ ಮಾಯಾವತಿ ಸಹಿತ, ಸಂತಸದಿಂದ ಅನಿರುದ್ಧನು ಉಷೆ ಸಹಿತ, ಭೀಮನು ಹಿಡಿಂಬಿ ಸಹಿತ, ವೃಷಕೇತು ಪ್ರಭದ್ರೆ ಸಹಿತ, ಪರಿಶುದ್ಧ ಕಲಶಗಳನ್ನು ಹೊತ್ತು ಪ್ರಕಾಶಿಸಿದರು.
 • (ಪದ್ಯ-೪೨)

ಪದ್ಯ:-:೪೩:[ಸಂಪಾದಿಸಿ]

ಲಲನೆ ಲೀಲಾವತಿಸಹಿತ ಮಯೂರಧ್ವಜಂ |
ವಿಲಸಿತ ಸುನಂದೆ ಬಳಿವಿಡಿಯೆ ನೀಲಧ್ವಜಂ |
ಲಲಿತ ಪ್ರಭಾವತಿವೆರಸಿ ಯೌವನಾಶ್ವ ನನುಸಾಲ್ವಂಧಮಿಲ್ಲೆಗೂಡಿ ||
ಉಳಿದ ಹಂಸಧ್ವಜ ಕಿರೀಟಿಸುತ ಶಶಿಹಾಸ |
ಕಲಿ ವೀರವರ್ನ ತಾಮ್ರಧ್ವಜಾದ್ಯವನಿಪರ್ |
ಸಲೆ ತಮ್ಮ ತಮ್ಮ ಕಾಂತೆಯರೊಡನೆ ಸಲಿಲ ಕಲಶಂಗಳಂ ತಾಳ್ದೆಸೆದರು ||43||

ಪದವಿಭಾಗ-ಅರ್ಥ:
ಲಲನೆ ಲೀಲಾವತಿ ಸಹಿತ ಮಯೂರಧ್ವಜಂ ವಿಲಸಿತ ಸುನಂದೆ ಬಳಿವಿಡಿಯೆ ನೀಲಧ್ವಜಂ ಲಲಿತ ಪ್ರಭಾವತಿವೆರಸಿ ಯೌವನಾಶ್ವ ನನುಸಾಲ್ವಂಧಮಿಲ್ಲೆಗೂಡಿ==[ಪತ್ನಿ ಲೀಲಾವತಿ ಸಹಿತ ಮಯೂರಧ್ವಜನು, ಶೋಭೆಯ ಸುನಂದೆ ಹಿಂಬಾಲಿಸಲು ನೀಲಧ್ವಜನು, ಲಲಿತ ಪ್ರಭಾವತಿ ಜೊತೆಯಲ್ಲಿ ಯೌವನಾಶ್ವನು, ಅನುಸಾಲ್ವನು ಪತ್ನಿ ಧಮಿಲ್ಲೆಯನ್ನು ಒಡಗೂಡಿಕೊಂಡು,];; ಉಳಿದ ಹಂಸಧ್ವಜ ಕಿರೀಟಿಸುತ ಶಶಿಹಾಸ ಕಲಿ ವೀರವರ್ನ ತಾಮ್ರಧ್ವಜಾದ್ಯವನಿಪರ್ ಸಲೆ ತಮ್ಮ ತಮ್ಮ ಕಾಂತೆಯರೊಡನೆ ಸಲಿಲ ಕಲಶಂಗಳಂ ತಾಳ್ದೆಸೆದರು==[ಉಳಿದ ಹಂಸಧ್ವಜನು, ಬಭ್ರುವಾಹನ, ಚಂದ್ರಹಾಸ, ಕಲಿ ವೀರವರ್ಮ, ತಾಮ್ರಧ್ವಜ, ಮೊದಲಾದ ಎಲ್ಲರೂ, ವಿಶೇಷವಾಗಿ ತಮ್ಮ ತಮ್ಮ ಪತ್ನಿಯರೊಡನೆ ಗಂಗಾಜಲದ ಕಲಶಗಳನ್ನು ಹೊತ್ತುತರುವಾಗ ಮಿಂಚಿದರು.]
 • ತಾತ್ಪರ್ಯ: ಪತ್ನಿ ಲೀಲಾವತಿ ಸಹಿತ ಮಯೂರಧ್ವಜನು, ಶೋಭೆಯ ಸುನಂದೆ ಹಿಂಬಾಲಿಸಲು ನೀಲಧ್ವಜನು, ಲಲಿತ ಪ್ರಭಾವತಿ ಜೊತೆಯಲ್ಲಿ ಯೌವನಾಶ್ವನು, ಅನುಸಾಲ್ವನು ಪತ್ನಿ ಧಮಿಲ್ಲೆಯನ್ನು ಒಡಗೂಡಿಕೊಂಡು, ಉಳಿದ ಹಂಸಧ್ವಜನು, ಬಭ್ರುವಾಹನ, ಚಂದ್ರಹಾಸ, ಕಲಿ ವೀರವರ್ಮ, ತಾಮ್ರಧ್ವಜ, ಮೊದಲಾದ ಎಲ್ಲರೂ, ವಿಶೇಷವಾಗಿ ತಮ್ಮ ತಮ್ಮ ಪತ್ನಿಯರೊಡನೆ ಗಂಗಾಜಲದ ಕಲಶಗಳನ್ನು ಹೊತ್ತುತರುವಾಗ ಮಿಂಚಿದರು.
 • (ಪದ್ಯ-೪೩)II

ಪದ್ಯ:-:೪೪:[ಸಂಪಾದಿಸಿ]

ದೊರೆದೊರೆಗಳೆಲ್ಲರುಂ ತಮ್ಮ ತಮ್ಮರಸಿಯರ್ |
ಬೆರಸಿ ಗಂಗಾ ತಟಕೆ ಮುಸುಕಿದ ಸುಪಲ್ಲವೋ |
ತ್ಕರದ ಪೊಂಗಲಸಂಗಳಂ ಕೊಂಡು ನಡೆಯಲವರವರ ಮೈಗಾವಳ್ಗಳ ||
ಪರಿವಾರದಿಂದೆ ಪಾರ್ವರ ಮಂತ್ರಘೋಷದಿಂ |
ನೆರೆದಿಹ ಮಹಾಜನದ ಸಂದಣಿಗಳಿಂ ಪಾಠ |
ಕರ ನೃತ್ಯ ವಾದ್ಯಗೀತಂಗಳ ವಿಲಾಸದಿಂದುತ್ಸವಂ ಚೆಲ್ವಾದುದು ||44||

ಪದವಿಭಾಗ-ಅರ್ಥ:
ದೊರೆದೊರೆಗಳೆಲ್ಲರುಂ ತಮ್ಮ ತಮ್ಮ ಅರಸಿಯರ್ ಬೆರಸಿ ಗಂಗಾ ತಟಕೆ ಮುಸುಕಿದ ಸುಪಲ್ಲವೋತ್ಕರದ ಪೊಂಗಲಸಂಗಳಂ ಕೊಂಡು ನಡೆಯಲು ಅವರವರ ಮೈಗಾವಳ್ಗಳ==[ರಾಜುಗಳು ಎಲ್ಲರೂ ತಮ್ಮ ತಮ್ಮ ಪತ್ನಿರ ಜೊತೆಗೆ ಗಂಗಾನದಿಯ ತಟಕ್ಕೆ ಮುತ್ತಿದ ಚೆನ್ನಾಗಿ ಚಿಗುರಿದ ಗಿಡಗಳಂತೆ ಚಿನ್ನದ ಕಲಶಗಳನ್ನು ಹೊತ್ತುಕೊಂಡು ನಡೆಯಲು, ಅವರವರ ಮೈಗಾವಲಿಗೆ ];; ಪರಿವಾರದಿಂದೆ ಪಾರ್ವರ ಮಂತ್ರಘೋಷದಿಂ ನೆರೆದಿಹ ಮಹಾಜನದ ಸಂದಣಿಗಳಿಂ ಪಾಠಕರ ನೃತ್ಯ ವಾದ್ಯಗೀತಂಗಳ ವಿಲಾಸದಿಂದ ಉತ್ಸವಂ ಚೆಲ್ವಾದುದು==[ಜೊತೆಗೆ ಬಂದ ಪರಿವಾರಗಳಿಂದ, ವಿಪ್ರರರ ಮಂತ್ರಘೋಷದಿಂದ, ನೆರೆದಿಹ ಮಹಾಜನದ ಸಂದಣಿಗಳಿಂದ, ಪಾಠಕರ ನೃತ್ಯ ವಾದ್ಯಗೀತಗಳ ವಿಲಾಸದಿಂದ, ಉತ್ಸವಂ ಚಂದವಾಯಿತು].
 • ತಾತ್ಪರ್ಯ: ರಾಜುಗಳು ಎಲ್ಲರೂ ತಮ್ಮ ತಮ್ಮ ಪತ್ನಿರ ಜೊತೆಗೆ ಗಂಗಾನದಿಯ ತಟಕ್ಕೆ ಮುತ್ತಿದ ಚೆನ್ನಾಗಿ ಚಿಗುರಿದ ಗಿಡಗಳಂತೆ ಚಿನ್ನದ ಕಲಶಗಳನ್ನು ಹೊತ್ತುಕೊಂಡು ನಡೆಯಲು, ಅವರವರ ಮೈಗಾವಲಿಗೆ ಜೊತೆಗೆ ಬಂದ ಪರಿವಾರಗಳಿಂದ, ವಿಪ್ರರರ ಮಂತ್ರಘೋಷದಿಂದ, ನೆರೆದಿಹ ಮಹಾಜನದ ಸಂದಣಿಗಳಿಂದ, ಪಾಠಕರ ನೃತ್ಯ ವಾದ್ಯಗೀತಗಳ ವಿಲಾಸದಿಂದ, ಉತ್ಸವಂ ಚಂದವಾಯಿತು.
 • (ಪದ್ಯ-೪೪)

ಪದ್ಯ:-:೪೫:[ಸಂಪಾದಿಸಿ]

ಆನೆಗಳ ಮೇಲೆ ಕುವರಿಯರಿರ್ದು ಮುತ್ತುಗಳ |
ಸೋನೆಗಳನಡಿಗಡಿಗೆ ಸೂಸುತಿರೆ ಮನ್ಮಥನ |
ಸೇನೆಗಳ ತೆರೆದಿಂದೆ ನೃಪ ಸತಿಯರೂಳಿಗದ ತರಳೆಯರ್ ಕಂಗೊಳಿಸಲು ||
ನಾನಾ ವಿಧದೊಳೆಸೆವ ಶೃಂಗಾರವಿಭವದಿಂ |
ಭೂ ನುತಾಶ್ಚರ್ಯಮಾಗಿರೆ ಜಲಾಗಮಕೆ ಹರಿ |
ತಾನೆ ಬರೆ ಮೊಳಗಿದುವು ದೇವದುಂದುಭಿ ಕರೆದುದರಲ ಮಳೆ ಗಗನದಿಂದೆ ||45||

ಪದವಿಭಾಗ-ಅರ್ಥ:
ಆನೆಗಳ ಮೇಲೆ ಕುವರಿಯರಿರ್ದು ಮುತ್ತುಗಳ ಸೋನೆಗಳನು ಅಡಿಗಡಿಗೆ ಸೂಸುತಿರೆ ಮನ್ಮಥನ ಸೇನೆಗಳ ತೆರೆದಿಂದೆ ನೃಪ ಸತಿಯರ ಊಳಿಗದ ತರಳೆಯರ್ ಕಂಗೊಳಿಸಲು==[ಆನೆಗಳ ಮೇಲೆ ಕುವರಿಯರು ಕುಳಿತು ಮುತ್ತುಗಳ ಮಳೆಗಳನ್ನು ಅಡಿಗಡಿಗೆ ಸುರಿಸುತ್ತಿರಲು, ಮನ್ಮಥನ ಸೇನೆಗಳ ರೀತಿಯಿಂದ ರಾಜರ, ಅವರ ಸತಿಯರ ಮತ್ತು ಕೆಲಸದ ತರಳೆಯರು ಶೋಭಿಸಲು ];; ನಾನಾ ವಿಧದೊಳು ಎಸೆವ ಶೃಂಗಾರವಿಭವದಿಂ ಭೂನುತಾಶ್ಚರ್ಯಮಾಗಿರೆ ಜಲಾಗಮಕೆ ಹರಿ ತಾನೆ ಬರೆ ಮೊಳಗಿದುವು ದೇವದುಂದುಭಿ ಕರೆದುದು ಅರಲ ಮಳೆ ಗಗನದಿಂದೆ==[ನಾನಾ ವಿಧದಲ್ಲಿ ಮಿಂಚುತ್ತಿರುವ ಶೃಂಗಾರ ವೌಭವದಿಂದ ಭೂಮಿಯಲ್ಲಿ ಕೊಗಳಿಕೆಗೆ ತಕ್ಕದಾಗಿ ಆಶ್ಚರ್ಯವಾಗಿರಲು, ಜಲಾಗಮಕ್ಕೆ (ನೀರುಸಂಗ್ರಹಕ್ಕೆ?) ಕೃಷ್ಣನು ತಾನೆ ಬರಲು ಆಕಾಶದಿಂದ ದೇವದುಂದುಭಿ ಮೊಳಗಿದುವು, ಅರಳಿನ ಮಳೆ ಸುರಿಯಿತು.].
 • ತಾತ್ಪರ್ಯ:
 • (ಪದ್ಯ-೪೫)

ಪದ್ಯ:-:೪೬:[ಸಂಪಾದಿಸಿ]

ದೇವ ದೇವರ ದೇವನೆಂಬುದಂ ಮಾನುಷ್ಯ |
ಭಾವದಿಂ ಲಕ್ಷ್ಮೀವಿಲಾಸನೆಂದೆಂಬುದಂ |
ಗೋವಳಯರೊಡನಾಟದಿಂದೆ ನೀಗಾಡಿದಂತೀಗ ಪದ ನಖದೊಳೊಗೆದು ||
ಪಾವನವೆನಿಸುವ ಗಂಗಾಜಲವನೆತ್ತುವ ಮ |
ಹಾ ವಿಭುವಿನೆಸೆವ ಲೀಲೆಗೆ ಕೈಮುಗಿದು ಕುಂತಿ |
ದೇವಕಿಯರಚ್ಯುತನ ವಸನಮಂ ಪಿಡಿದು ರುಕ್ಮಿಣಿಯ ಸೆರಗಂ ಬಿಗಿದರು ||46||

ಪದವಿಭಾಗ-ಅರ್ಥ:
ದೇವ ದೇವರ ದೇವನೆಂಬುದಂ ಮಾನುಷ್ಯಭಾವದಿಂ ಲಕ್ಷ್ಮೀವಿಲಾಸನೆಂದು ಎಂಬುದಂ ಗೋವಳಯರ ಒಡನಾಟದಿಂದೆ ನೀಗಾಡಿದಂತೆ ಈಗ ಪದ ನಖದೊಳೊಗೆದು==[ದೇವ/ಕೃಷ್ಣನು ದೇವರ ದೇವ ಎಂಬುದನ್ನು ಮನುಷ್ಯನ ಭಾವನೆಯಿಂದ ಲಕ್ಷ್ಮೀವಿಲಾಸನೆಂದು ಭಾವಿಸವುದು, ಎಂಬುದನ್ನು, ಗೋವಳರ ಒಡನಾಟದಿಂದೆ ಇಲ್ಲವಾಗಿ ಮಾಡಿದಂತೆ, ಈಗ, ತನ್ನ ಪಾದದ ಹೆಬ್ಬೆರಳಿನ ಉಗುರಿನಿಂದ ಹುಟ್ಟಿದ];; ಪಾವನವೆನಿಸುವ ಗಂಗಾಜಲವನು ಎತ್ತುವ ಮಹಾ ವಿಭು ವಿನಂತೆ (ವಿಭು:ವಿಷ್ಣು) ಎಸೆವ ಲೀಲೆಗೆ ಕೈಮುಗಿದು ಕುಂತಿ ದೇವಕಿಯರು ಅಚ್ಯುತನ ವಸನಮಂ ಪಿಡಿದು ರುಕ್ಮಿಣಿಯ ಸೆರಗಂ ಬಿಗಿದರು==[ಪಾವನವೆಂದು ಹೆಸರಾದ ಗಂಗಾಜಲವನ್ನು ಎತ್ತುವ ಮಹಾವಿಭುವು ಎನ್ನುವಂತೆ ಶೋಭಿಸುವ ಲೀಲೆಗೆ ಕೈಮುಗಿದು, ಕುಂತಿ ದೇವಕಿಯರು ಅಚ್ಯುತನ ಮೇಲುಹೊದೆದ ಬಟ್ಟೆಯನ್ನು ಹಿಡಿದು ರುಕ್ಮಿಣಿಯ ಸೆರಗಿಗೆ ಸೇರಿಸಿ ಬಿಗಿದರು. ಇದು ವಿವಾಹದ ಸಪ್ತಪದಿಯ ಸಮಯದಲ್ಲಿ ನೂತನ ಪತಿ ಪತ್ನಿಯರ ಸೆರಗನ್ನು ಗಂಟು ಹಾಕುವರು; ಅದರ ನೆನಪಿನ ಹಾಸ್ಯಕ್ರಿಯೆ)].
 • ತಾತ್ಪರ್ಯ: ದೇವ/ಕೃಷ್ಣನು ದೇವರ ದೇವ ಎಂಬುದನ್ನು ಮನುಷ್ಯನ ಭಾವನೆಯಿಂದ ಲಕ್ಷ್ಮೀವಿಲಾಸನೆಂದು ಭಾವಿಸವುದು, ಎಂಬುದನ್ನು, ಗೋವಳರ ಒಡನಾಟದಿಂದೆ ಇಲ್ಲವಾಗಿ ಮಾಡಿದಂತೆ, ಈಗ, ತನ್ನ ಪಾದದ ಹೆಬ್ಬೆರಳಿನ ಉಗುರಿನಿಂದ ಹುಟ್ಟಿದ ಪಾವನವೆಂದು ಹೆಸರಾದ ಗಂಗಾಜಲವನ್ನು ಎತ್ತುವ ಮಹಾವಿಭುವು ಎನ್ನುವಂತೆ ಶೋಭಿಸುವ ಮಾನವ ರೂಪಿನ ಲೀಲೆಗೆ ಕೈಮುಗಿದು, ಕುಂತಿ ದೇವಕಿಯರು ಅಚ್ಯುತನ ಮೇಲುಹೊದೆದ ಬಟ್ಟೆಯನ್ನು ಹಿಡಿದು ರುಕ್ಮಿಣಿಯ ಸೆರಗಿಗೆ ಸೇರಿಸಿ ಗಂಟು ಹಾಕಿದರು. (ಇದು ವಿವಾಹದ ಸಪ್ತಪದಿಯ ಸಮಯದಲ್ಲಿ ನೂತನ ಪತಿ ಪತ್ನಿಯರ ಸೆರಗನ್ನು ಗಂಟು ಹಾಕುವರು; ಅದರ ನೆನಪಿನ ಹಾಸ್ಯಕ್ರಿಯೆ).
 • ಟಿಪ್ಪಣಿ: ವಿಷ್ಣುವು ವಾಮನನಾಗಿದ್ದಾಗ ಮೂರು ಪಾದ ಭಿಕ್ಷೆಯನ್ನು ಬಲಿಯಿಂದ ಪಡೆದು, ತ್ರಿವಿಕ್ರಮ ರೂಪ ತಾಳಿ ತನ್ನ ಒಂದು ಪಾದದಿಂದ ಭೂಮಿಯನ್ನು ಅಳೆದು, ನಂತರ ಒಂದು ಕಾಲನ್ನು ಮೇಲೆ ಎತ್ತಿ ಆ ಒಂದು ಪಾದದಿಂದ ಸ್ವರ್ಗಲೋಕವನ್ನು ಅಳೆದನು. ಆಗ ವಿಷ್ಣುವಿನ ಪಾದದ ಹೆಬ್ಬೆರಳ ತುದಿ (ಉಗುರು?) ಬ್ರಹ್ಮಾಂಡದ ಮಾಡಿಗೆ ತಗಲಿ ತೂತುಬಿದ್ದು ಆದರಿಂದ ನೀರಿನ ಪ್ರವಾಹ ಹರಿಯಿತು. ಅದೇ ಗಂಗಾಜಲ ಪ್ರವಾಹ, ಅದನ್ನು ಬ್ರಹ್ಮನು ತನ್ನ ಕಮಂಡಲಿನಲ್ಲಿ ಹಿಡಿದಿಟ್ಟನು, ನಂತರ ಅಲ್ಲಿಂದ ಭೂಮಿಗೆ ಧುಮುಕಿದಾಗ, ಅದರಿಂದ ಭೂಮಿಯನ್ನು ಕಾಪಾಡಲು ಶಿವನು ತನ್ನ ತಲೆಯಿಂದ ತಡೆದು ಜಟೆಯಿಂದ ಬಂಧಿಸಿದನು, ನಂತರ ಭಗೀರಥನ ಪ್ರಾರ್ಥನೆಯಂತೆ ಭೂಮಿಗೆ ಬಿಟ್ಟನು. ಇಲ್ಲಿ- ಕೃಷ್ಣನು ಮಾನವ ರೂಪಿನಲ್ಲಿ ತನ್ನ ಕಾಲಿನ ಹೆಬ್ಬೆರಳಿನಿಂದ ಜನಿಸಿದ ಗಂಗೆಯನ್ನು ಮಾನವನಂತೆ ನಾಟಕವಾಡಿ ಯಜ್ಞದ ಪಾತ್ರೆಗೆ ತುಂಬಿದನು.(ಹರಿವಂಶ, ಭಾಗವತ, ಪದ್ಮಪುರಾಣ, ಮ.ಭಾ.ವನಪರ್ವ:::'ಚಂ')
 • (ಪದ್ಯ-೪೬)

ಪದ್ಯ:-:೪೭:[ಸಂಪಾದಿಸಿ]

ನೋಡಿದಂ ನಾರದ ಮುನೀಂದ್ರನೀ ಕೌತುಕವ |
ನಾಡಿದಂ ಸತ್ಯಭಾಮೆಯ ಮನೆಗೆ ಬಂದು ನೀಂ |
ಮಾಡುವುಜ್ಜಗಮಿದೇನೆಲೆ ದೇವಿ ಮಂದಿರದೊಳಧ್ವರಾರಂಭಕೀಗ ||
ಆಡಂಬರದೊಳಂಬು ಕಲಶಂಗಳಂ ಪಿಡಿಯೆ |
ಕೂಡಿದ ಚತುಷ್ಷಷ್ಟಿದಂಪತಿಗಳೊಗ್ಗಿನೊಳ್ |
ಗಾಡಿ ಮಿಗೆ ರುಕ್ಮಿಣಿ ವಿರಾಜಿಸುವಳೇವೇಳ್ವೆನವಳ ಭಾಗ್ಯವನೆಂದನು ||47||
|

ಪದವಿಭಾಗ-ಅರ್ಥ:
ನೋಡಿದಂ ನಾರದ ಮುನೀಂದ್ರನು ಈ ಕೌತುಕವನು ಆಡಿದಂ ಸತ್ಯಭಾಮೆಯ ಮನೆಗೆ ಬಂದು ನೀಂ ಮಾಡುವ ಉಜ್ಜಗಮ್ ಇದೇನು ಎಲೆ ದೇವಿ ಮಂದಿರದೊಳು ಅಧ್ವರ ಆರಂಭಕೀಗ==[ನಾರದ ಮುನೀಂದ್ರನು ಈ ಕೌತುಕವನು ನೋಡಿದನು; ಅವನು ಸತ್ಯಭಾಮೆಯ ಮನೆಗೆ ಬಂದು,'ನೀನು ಮಾಡುವ ಉದ್ಯೋಗ ಇದೇನು ಎಲೆ ದೇವಿ, ಮನೆಯಲ್ಲಿ! ಅಧ್ವರ ಆರಂಭಕ್ಕೆ ಈಗ];; ಆಡಂಬರದೊಳು ಅಂಬು (ನೀರು) ಕಲಶಂಗಳಂ ಪಿಡಿಯೆ ಕೂಡಿದ ಚತುಷ್ಷಷ್ಟಿದಂಪತಿಗಳು ಒಗ್ಗಿನೊಳ್ ಗಾಡಿ ಮಿಗೆ( ಬಹಳ ವೈಭವ) ರುಕ್ಮಿಣಿ ವಿರಾಜಿಸುವಳು ಏವೇಳ್ವೆನು ಅವಳ ಭಾಗ್ಯವನೆಉ ಎಂದನು==[ಆಡಂಬರದಿಂದ ನೀರಿನ ಕಲಶಗಳನ್ನು ಹಿಡಿಯಲು ಕೂಡಿದ (೬೪)ಚತುಷ್ಷಷ್ಟಿದಂಪತಿಗಳು ಗುಂಪಾಗಿ ಬಹಳ ವೈಭವದಿಂದ ರುಕ್ಮಿಣಿ ವಿರಾಜಿಸುತ್ತಿರುವಳು ಏನು ಹೇಳಲಿ ಅವಳ ಭಾಗ್ಯವನ್ನು', ಎಂದನು].
 • ತಾತ್ಪರ್ಯ:ನಾರದ ಮುನೀಂದ್ರನು ಈ ಕೌತುಕವನು ನೋಡಿದನು; ಅವನು ಸತ್ಯಭಾಮೆಯ ಮನೆಗೆ ಬಂದು,'ನೀನು ಮಾಡುವ ಉದ್ಯೋಗ ಇದೇನು ಎಲೆ ದೇವಿ, ಮನೆಯಲ್ಲಿ! ಅಧ್ವರ ಆರಂಭಕ್ಕೆ ಈಗ ಆಡಂಬರದಿಂದ ನೀರಿನ ಕಲಶಗಳನ್ನು ಹಿಡಿಯಲು ಕೂಡಿದ (೬೪)ಚತುಷ್ಷಷ್ಟಿದಂಪತಿಗಳು ಗುಂಪಾಗಿ ಬಹಳ ವೈಭವದಿಂದ ರುಕ್ಮಿಣಿ ವಿರಾಜಿಸುತ್ತಿರುವಳು ಏನು ಹೇಳಲಿ ಅವಳ ಭಾಗ್ಯವನ್ನು', ಎಂದನು.
 • (ಪದ್ಯ-೪೭)

ಪದ್ಯ:-:೪೮:[ಸಂಪಾದಿಸಿ]

ಛತ್ರಚಾಮರ ಧೂಪ ಗಂಧ ಕುಸುಮಾವಳಿಯ |
ಚಿತ್ರ ವೈಭವದಿಂದೆ ದಂಪತಿಗಳಾಗಿ ಬಹು |
ಪುತ್ರಪೌತ್ರರ್ವೆರಸಿ ಕೈವಾರಿಸುವ ಸಕಲ ಜನದ ಸನ್ಮಾನದಿಂದೆ ||
ಅತ್ರಿ ಮೊದಲಾದ ಋಷಿಗಳ ಮುಂದೆ ನೆರೆದಿಹ ಧ |
ರಿತ್ರಿಯೆ ಸಮಸ್ತ ರಾಜೋತ್ತಮರ ನಡುವೆ ಶತ |
ಪತ್ರನೇತ್ರನ ಬಳಿಯೆ ರಂಜಿಸುವ ರುಕ್ಮಿಣಿಯ ಭಾಗ್ಯಮದನೇಂವೊಗಳ್ವೆನು ||48||

ಪದವಿಭಾಗ-ಅರ್ಥ:
ಛತ್ರಚಾಮರ ಧೂಪ ಗಂಧ ಕುಸುಮಾವಳಿಯ ಚಿತ್ರ ವೈಭವದಿಂದೆ ದಂಪತಿಗಳಾಗಿ ಬಹು ಪುತ್ರಪೌತ್ರರ್ವೆರಸಿ ಕೈವಾರಿಸುವ ಸಕಲ ಜನದ ಸನ್ಮಾನದಿಂದೆ==[ನಾರದನು ಸತ್ಯಭಾಮೆಗೆ ಮತ್ತೂ ಹೇಳಿದನು: ಛತ್ರಚಾಮರ, ಧೂಪ, ಗಂಧ, ಹೂವುಗಳ ರಾಶಿ, ಬಹಳ ವೈಭವದಿಂದ ದಂಪತಿಗಳಾಗಿ ಬಹು ಮಗ ಮೊಮ್ಮಕ್ಕಳು ಸೇರಿಕೊಂಡು, ಲಭಿಸಿರುವ ಸಕಲ ಜನದ ಸನ್ಮಾನದಿಂದ];; ಅತ್ರಿ ಮೊದಲಾದ ಋಷಿಗಳ ಮುಂದೆ ನೆರೆದಿಹ ಧರಿತ್ರಿಯೆ ಸಮಸ್ತ ರಾಜೋತ್ರಮರ ನಡುವೆ ಶತಪತ್ರನೇತ್ರನ ಬಳಿಯೆ ರಂಜಿಸುವ ರುಕ್ಮಿಣಿಯ ಭಾಗ್ಯಮದನೇಂವೊಗಳ್ವೆನು==[ಅತ್ರಿ ಮೊದಲಾದ ಋಷಿಗಳ ಮುಂದೆ ನೆರೆದಿರುವ, ಭೂಮಂಡಲದ ಸಮಸ್ತ ರಾಜೋತ್ತಮರ ನಡುವೆ, ಕಮಲಾಕ್ಷ ಕೃಷ್ಣನ ಬಳಿಯಲ್ಲಿ ಶೋಭಿಸುವ ರುಕ್ಮಿಣಿಯ ಭಾಗ್ಯವನ್ನು ಅದು ಏನೆಂದು ಹೊಗಳಲಿ! (ಎಂದನು)].
 • ತಾತ್ಪರ್ಯ:ನಾರದನು ಸತ್ಯಭಾಮೆಗೆ ಮತ್ತೂ ಹೇಳಿದನು: ಛತ್ರಚಾಮರ, ಧೂಪ, ಗಂಧ, ಹೂವುಗಳ ರಾಶಿ, ಬಹಳ ವೈಭವದಿಂದ ದಂಪತಿಗಳಾಗಿ ಬಹು ಮಗ ಮೊಮ್ಮಕ್ಕಳು ಸೇರಿಕೊಂಡು, ಲಭಿಸಿರುವ ಸಕಲ ಜನದ ಸನ್ಮಾನದಿಂದ, ಅತ್ರಿ ಮೊದಲಾದ ಋಷಿಗಳ ಮುಂದೆ ನೆರೆದಿರುವ, ಭೂಮಂಡಲದ ಸಮಸ್ತ ರಾಜೋತ್ತಮರ ನಡುವೆ, ಕಮಲಾಕ್ಷ ಕೃಷ್ಣನ ಬಳಿಯಲ್ಲಿ ಶೋಭಿಸುವ ರುಕ್ಮಿಣಿಯ ಭಾಗ್ಯವನ್ನು ಅದು ಏನೆಂದು ಹೊಗಳಲಿ! (ಎಂದನು).
 • (ಪದ್ಯ-೪೮)

ಪದ್ಯ:-:೪೯:[ಸಂಪಾದಿಸಿ]

ಉರ್ವ ಮೋಹದ ರಾಣಿ ಕೃಷ್ಣಂಗೆ ನಾನೆಂದು |
ಗರ್ವಿಸುವೆ ಬರಿದೆ ರುಕ್ಮಿಣಿಯಂತೆ ಶೌರಿ ಸಹಿ |
ತುರ್ವಿಪನಯಜ್ಞದೊಳ್ ದಮಪತಿಗಳಾಗಿರ್ದವರ್ಗೆ ದುರ್ಲಭಮಿದೆನಲು ||
ಗೀರ್ವಾಣ ನದಿಯಸಲಿಲಾಗಮಕೆ ಪೆÇರಮಟ್ಟು |
ಸರ್ವ ಸಂಭ್ರಮದಿಂದೆ ವರ್ತಿಸದೆ ಮನೆಯೊಳಿಹ |
ನಿರ್ವಾಹಮೇನೆಂದು ನಾರದ ಕೇಳ್ದೊಡಾದೇವಿ ನಗುತಿಂತೆಂದಳು ||49||

ಪದವಿಭಾಗ-ಅರ್ಥ:
ಉರ್ವ ಮೋಹದ ರಾಣಿ ಕೃಷ್ಣಂಗೆ ನಾನೆಂದು ಗರ್ವಿಸುವೆ ಬರಿದೆ ರುಕ್ಮಿಣಿಯಂತೆ ಶೌರಿ ಸಹಿತ ಉರ್ವಿಪನ ಯಜ್ಞದೊಳ್ ದಂಪತಿಗಳು ಆಗಿರ್ದವರ್ಗೆ ದುರ್ಲಭಮಿದು ಎನಲು==[ನಾರದ ಹೇಳಿದ,'ಬಹಳ ಮೋಹದ ರಾಣಿ ಕೃಷ್ಣನಿಗೆ ನಾನು ಎಂದು ಬರಿದೆ ಗರ್ವಪಡುವೆ, ರುಕ್ಮಿಣಿಯಂತೆ ಕೃಷ್ಣನ ಸಹಿತ ರಾಜನ ಯಜ್ಞದಲ್ಲಿ ದಂಪತಿಗಳು ಆಗಿದ್ದವರಿಗೆ ಈ ಅವಕಾಶ ದುರ್ಲಭವು, ಎನ್ನಲು ];; ಗೀರ್ವಾಣ ನದಿಯ ಸಲಿಲಾಗಮಕೆ ಪೊರಮಟ್ಟು ಸರ್ವ ಸಂಭ್ರಮದಿಂದೆ ವರ್ತಿಸದೆ ಮನೆಯೊಳು ಇಹ ನಿರ್ವಾಹಂ ಏನೆಂದು ನಾರದ ಕೇಳ್ದೊಡೆ ಆ ದೇವಿ ನಗುತ ಇಂತೆಂದಳು==[ಗಂಗಾನದಿಯ ತೀರ್ಥಜಲದ ಸ್ವಾಗತಕ್ಕೆ ಹೊರಟುಬಂದು ಸರ್ವ ಸಂಭ್ರಮದಿಂದ ನೆಡೆದುಕೊಳ್ಳದೆ, ಮನೆಯಲ್ಲಿ ಇರುವ ಅನಿವಾರ್ಯ ಕೆಲಸ ಏನೆಂದು, ನಾರದ ಕೇಳಿದಾಗ ಆ ದೇವಿ ನಗುತ್ತ ಹೀಗೆ ಹೇಳಿದಳು].
 • ತಾತ್ಪರ್ಯ: ನಾರದ ಹೇಳಿದ,'ಬಹಳ ಮೋಹದ ರಾಣಿ ಕೃಷ್ಣನಿಗೆ ನಾನು ಎಂದು ಬರಿದೆ ಗರ್ವಪಡುವೆ, ರುಕ್ಮಿಣಿಯಂತೆ ಕೃಷ್ಣನ ಸಹಿತ ರಾಜನ ಯಜ್ಞದಲ್ಲಿ ದಂಪತಿಗಳು ಆಗಿದ್ದವರಿಗೆ ಈ ಅವಕಾಶ ದುರ್ಲಭವು, ಎನ್ನಲು ಗಂಗಾನದಿಯ ತೀರ್ಥಜಲದ ಸ್ವಾಗತಕ್ಕೆ ಹೊರಟುಬಂದು ಸರ್ವ ಸಂಭ್ರಮದಿಂದ ನೆಡೆದುಕೊಳ್ಳದೆ, ಮನೆಯಲ್ಲಿ ಇರುವ ಅನಿವಾರ್ಯ ಕೆಲಸ ಏನೆಂದು, ನಾರದ ಕೇಳಿದಾಗ ಆ ದೇವಿ ನಗುತ್ತ ಹೀಗೆ ಹೇಳಿದಳು.
 • (ಪದ್ಯ-೪೯)

ಪದ್ಯ:-:೫೦:[ಸಂಪಾದಿಸಿ]

ಮುನಿಪ ನೀನರಿಯದವನಂತೀಗ ಬಂದೆನ್ನ |
ಮನವ ನಾರೈದು ಕೇಳ್ದಪೆ ದನುಜರಿಪು ತನ್ನ |
ಮನೆಯೊಳಿರ್ದಪನೆಂದು ಸತ್ಯಭಾಮಾದೇವಿ ಕೃಷ್ಣನಂ ತೋರಿಸಲ್ಕೆ ||
ಜನಪತಿಯ ಮುಂದೆ ರುಕ್ಮಿಣಿ ಸಹಿತ ತೊಳಗುತಿಹ |
ವನಜಾಕ್ಷನಂ ಕಂಡೆನಲ್ಲಿ ಮೇಣಿಲ್ಲಿ ಮೋ |
ಹನ ರೂಪನಾಗಿ ಕಂಗೊಳಿಸುತಿರ್ದಪನೆಂದು ನಾರದಂ ಬೆರಗಾದನು||50||

ಪದವಿಭಾಗ-ಅರ್ಥ:
ಮುನಿಪ ನೀನು ಅರಿಯದವನಂತೆ ಈಗ ಬಂದೆಉ ಎನ್ನ ಮನವನು ಆರೈದು ಕೇಳ್ದಪೆ ದನುಜರಿಪು ತನ್ನ ಮನೆಯೊಳು ಇರ್ದಪನೆಂದು ಸತ್ಯಭಾಮಾದೇವಿ ಕೃಷ್ಣನಂ ತೋರಿಸಲ್ಕೆ==[ನಾರದ ಮುನಿಪನೇ, 'ನೀನು ಅರಿಯದವನಂತೆ ಈಗ ಬಂದು ನನ್ನ ಮನಸ್ಸನ್ನು ಉಪಚರಿಸಿ ಕೇಳುತ್ತಿರುವೆ. ಕೃಷ್ನನು ತನ್ನ ಮನೆಯೊ ಇರುವನೆಂದು ಸತ್ಯಭಾಮಾದೇವಿ ಒಳಗಿರುವ ಕೃಷ್ಣನನ್ನು ತೋರಿಸಲು];; ಜನಪತಿಯ ಮುಂದೆ ರುಕ್ಮಿಣಿ ಸಹಿತ ತೊಳಗುತಿಹ ವನಜಾಕ್ಷನಂ ಕಂಡೆನು ಅಲ್ಲಿ ಮೇಣಿ ಇಲ್ಲಿ ಮೋಹನ ರೂಪನಾಗಿ ಕಂಗೊಳಿಸುತಿರ್ದಪನು ಎಂದು ನಾರದಂ ಬೆರಗಾದನು==['ಧರ್ಮಜನ ಮುಂದೆ ರುಕ್ಮಿಣಿ ಸಹಿತ ಶೋಭಿಸುತ್ತಿರುವ ವನಜಾಕ್ಷ ಕೃಷ್ಣನನ್ನು ಕಂಡೆನು; ಅಲ್ಲಿ ಮತ್ತೆ ಇಲ್ಲಿ ಮೋಹನ ರೂಪವುಳ್ಳನಾಗಿ ಕಂಗೊಳಿಸುತ್ತಿರುವನು, ಎಂದು ನಾರದನು ಬೆರಗಾದನು].
 • ತಾತ್ಪರ್ಯ:ನಾರದ ಮುನಿಪನೇ, 'ನೀನು ಅರಿಯದವನಂತೆ ಈಗ ಬಂದು ನನ್ನ ಮನಸ್ಸನ್ನು ಉಪಚರಿಸಿ ಕೇಳುತ್ತಿರುವೆ. ಕೃಷ್ನನು ತನ್ನ ಮನೆಯೊ ಇರುವನೆಂದು ಸತ್ಯಭಾಮಾದೇವಿ ಒಳಗಿರುವ ಕೃಷ್ಣನನ್ನು ತೋರಿಸಲು, 'ಧರ್ಮಜನ ಮುಂದೆ ರುಕ್ಮಿಣಿ ಸಹಿತ ಶೋಭಿಸುತ್ತಿರುವ ವನಜಾಕ್ಷ ಕೃಷ್ಣನನ್ನು ಕಂಡೆನು; ಅಲ್ಲಿ ಮತ್ತೆ ಇಲ್ಲಿ ಮೋಹನ ರೂಪವುಳ್ಳನಾಗಿ ಕಂಗೊಳಿಸುತ್ತಿರುವನು, ಎಂದು ನಾರದನು ಬೆರಗಾದನು].
 • (ಪದ್ಯ-೫೦)

ಪದ್ಯ:-:೫೧:[ಸಂಪಾದಿಸಿ]

ನಾಂ ಬಂದ ಬಗೆಯನರಿದಿಲ್ಲಿ ನೀನಿಹೆ ಸಾಕ |
ದೇಂ ಬಯಲ್ಗೀ ಮನಜ ಲೀಲೆ ನಿನಗೆಂದು ಪೀ |
ತಾಂಬರಂಗಭಿನಮಿಸಿ ಬೀಳ್ಕೊಂಡು ನಾರದಂ ಪೋರಮುಟ್ಟು ವಹಿಲದಿಂದೆ ||
ಜಾಂಬುವತಿಯಾಲಯಕೆ ನಡೆತಂದು ತಾಯೆ ಕಮ |
ಲಾಂಬಕಂ ನೃಪನ ಮಖಕರಸಿಯರ್ವೆರಸಿ ಗಂ |
ಗಾಂಬುವಂತಹನಲ್ಲಿ ಸಂಭ್ರಮದೊಳೇಕೆ ಪೋಗದೆ ಮನೆಯೊಳಿಹೆಯೆಂದನು ||51||

ಪದವಿಭಾಗ-ಅರ್ಥ:
ನಾಂ ಬಂದ ಬಗೆಯನು ಅರಿದಿಲ್ಲಿ ನೀನು ಇಹೆ ಸಾಕು ಅದೇಂ ಬಯಲ್ಗೆ ಈ ಮನಜ ಲೀಲೆ ನಿನಗೆ ಎಂದು ಪೀತಾಂಬರಂಗೆ ಅಭಿನಮಿಸಿ ಬೀಳ್ಕೊಂಡು ನಾರದಂ ಪೋರಮುಟ್ಟು ವಹಿಲದಿಂದೆ==[ನಾನು (ನಾರದನು) ಬಂದ ವಿಚಾರವನ್ನು ತಿಳಿದು, ಕೃಷ್ಣಾ ನೀನು ಇಲ್ಲಿ ಇರುವೆ! ಸಾಕು ಅದೇನು ನಾಟಕಕ್ಕೆ, ಈ ಮನಜ ಲೀಲೆ ನಿನಗೆ, ಎಂದು ಪೀತಾಂಬರ ಕೃಷ್ಣನಿಗೆ ಅಭಿನಮಿಸಿ ಬೀಳ್ಕೊಂಡು ನಾರದನು ಹೊರಟು ವೇಗವಾಗಿ, ];; ಜಾಂಬುವತಿಯ ಆಲಯಕೆ ನಡೆತಂದು ತಾಯೆ ಕಮಲಾಂಬಕಂ ನೃಪನ ಮಖಕೆ ಅರಸಿಯರ್ವೆರಸಿ ಗಂಗಾ ಅಂಬುವಂತಹನು ಅಲ್ಲಿ ಸಂಭ್ರಮದೊಳು ಏಕೆ ಪೋಗದೆ ಮನೆಯೊಳು ಇಹೆಯೆಂದನು==[ಜಾಂಬುವತಿಯ ಮನೆಗೆ ಬಂದು,'ತಾಯೆ ಕೃಷ್ಣನು ರಾಜನ ಯಜ್ಞಕ್ಕೆ ಪತ್ನಿಯರ ಜೊತೆ ಗಂಗಾಜಲವನ್ನು ತರುವನು, ಅಲ್ಲಿ ಸಂಭ್ರಮದಿಂದ ಏಕೆ ಹೋಗದೆ ಮನೆಯಲ್ಲಿ ಇರುವೆ? ಎಂದನು.].
 • ತಾತ್ಪರ್ಯ:ನಾನು (ನಾರದನು) ಬಂದ ವಿಚಾರವನ್ನು ತಿಳಿದು, ಕೃಷ್ಣಾ ನೀನು ಇಲ್ಲಿ ಇರುವೆ! ಸಾಕು ಅದೇನು ನಾಟಕಕ್ಕೆ, ಈ ಮನಜ ಲೀಲೆ ನಿನಗೆ, ಎಂದು ಪೀತಾಂಬರ ಕೃಷ್ಣನಿಗೆ ಅಭಿನಮಿಸಿ ಬೀಳ್ಕೊಂಡು ನಾರದನು ಹೊರಟು ವೇಗವಾಗಿ, ಜಾಂಬುವತಿಯ ಮನೆಗೆ ಬಂದು,'ತಾಯೆ ಕೃಷ್ಣನು ರಾಜನ ಯಜ್ಞಕ್ಕೆ ಪತ್ನಿಯರ ಜೊತೆ ಗಂಗಾಜಲವನ್ನು ತರುವನು, ಅಲ್ಲಿ ಸಂಭ್ರಮದಿಂದ ಏಕೆ ಹೋಗದೆ ಮನೆಯಲ್ಲಿ ಇರುವೆ? ಎಂದನು.
 • (ಪದ್ಯ-೫೧)

ಪದ್ಯ:-:೫೨:[ಸಂಪಾದಿಸಿ]

ಎಂದೊಡೆ ಮುನೀಂದ್ರ ನಾವೆಲ್ಲರುಂ ನಿಮಿಷಮರ |
ವಿಂದದಳನೇತ್ರನನಗಲ್ದು ಜೀವಿಸಲರಿಯೆ |
ವಿಂದೆಮ್ಮ ಮನೆಯೊಳಿರ್ದಪನಾತನೊಳ್ಳಿದನೊಳೆನಗೆ ಮತ್ಸರಮಿದೇಕೆ ||
ತಂದೆ ನಿನ್ನಾಟಮಂ ಬಲ್ಲೆನೆನೆ ಜಾಂಬುವತಿ |
ಯಂ ದೇವಋಷಿ ಪರಸಿ ಬೀಳ್ಕೊಂಡು ರಾಣಿಯರ |
ಮಂದಿರದೊಳೆಲ್ಲಿಯುಂ ಕೃಷ್ಣನಿಹನೆಂದರಿದು ಮಖಶಾಲೆಗೈತಂದನು ||52||

ಪದವಿಭಾಗ-ಅರ್ಥ:
ಎಂದೊಡೆ ಮುನೀಂದ್ರ ನಾವೆಲ್ಲರುಂ ನಿಮಿಷಂ ಅರವಿಂದದಳನೇತ್ರನನು ಅಗಲ್ದು ಜೀವಿಸಲು ಅರಿಯೆವು ಇಂದೆಮ್ಮ ಮನೆಯೊಳಿರ್ದಪನು ಆತನೊಳ್ಳಿದನೊಳು ಎನಗೆ ಮತ್ಸರಂ ಇದೇಕೆ==[ನಾರದನು ಎಂದಾಗ, ಜಾಂಬವತಿ, 'ಮುನೀಂದ್ರ ನಾವೆಲ್ಲರುಊ ನಿಮಿಷವೂ ಅರವಿಂದದಳನೇತ್ರನಾದ ಕೃಷ್ಣನನ್ನು ಅಗಲಿ ಜೀವಿಸಿರಲು ತಿಳಿಯೆವು; ಇಂದು ಅವನು ನಮ್ಮ ಮನೆಯಲ್ಲಿ ಇದ್ದಿಉವನು; ಆತನು ಒಳ್ಳೆಯವನು ಅವನೊಡನೆ ನನಗೆ ಮತ್ಸರವು ಏಕೆ ಇರುವುದು?];; ತಂದೆ ನಿನ್ನಾಟಮಂ ಬಲ್ಲೆನು ಎನೆ ಜಾಂಬುವತಿಯಂ ದೇವಋಷಿ ಪರಸಿ ಬೀಳ್ಕೊಂಡು ರಾಣಿಯರ ಮಂದಿರದೊಳು ಎಲ್ಲಿಯುಂ ಕೃಷ್ಣನಿಹನೆಂದು ಅರಿದು ಮಖಶಾಲೆಗೆ ಐತಂದನು==[ತಂದೆ ಮುನಿಯೇ, ನಿನ್ನ ತುಂಟಾಟವನ್ನು ತಿಳಿದಿರುವೆನು, ಎನ್ನಲು, ಜಾಂಬುವತಿಯನ್ನು ದೇವಋಷಿ ಹರಸಿ ಬೀಳ್ಕೊಂಡು, ಎಲ್ಲಾ ರಾಣಿಯರ ಮನೆಗಳಲ್ಲೂ ಕೃಷ್ಣನು ಇರುವನೆಂದು ತಿಳಿದು ಯಜ್ಞಶಾಲೆಗೆ ಬಂದನು].
 • ತಾತ್ಪರ್ಯ:ನಾರದನು ಇಲ್ಲೇಕೆ ಇರುವೆ ಎಂದಾಗ, ಜಾಂಬವತಿ, 'ಮುನೀಂದ್ರ ನಾವೆಲ್ಲರುಊ ನಿಮಿಷವೂ ಅರವಿಂದದಳನೇತ್ರನಾದ ಕೃಷ್ಣನನ್ನು ಅಗಲಿ ಜೀವಿಸಿರಲು ತಿಳಿಯೆವು; ಇಂದು ಅವನು ನಮ್ಮ ಮನೆಯಲ್ಲಿ ಇದ್ದಿಉವನು; ಆತನು ಒಳ್ಳೆಯವನು ಅವನೊಡನೆ ನನಗೆ ಮತ್ಸರವು ಏಕೆ ಇರುವುದು? ತಂದೆ ಮುನಿಯೇ, ನಿನ್ನ ತುಂಟಾಟವನ್ನು ತಿಳಿದಿರುವೆನು, ಎನ್ನಲು, ಜಾಂಬುವತಿಯನ್ನು ದೇವಋಷಿ ಹರಸಿ ಬೀಳ್ಕೊಂಡು, ಎಲ್ಲಾ ರಾಣಿಯರ ಮನೆಗಳಲ್ಲೂ ಕೃಷ್ಣನು ಇರುವನೆಂದು ತಿಳಿದು ಯಜ್ಞಶಾಲೆಗೆ ಬಂದನು.
 • (ಪದ್ಯ-೫೨)

ಪದ್ಯ:-:೫೨:[ಸಂಪಾದಿಸಿ]

ಅಲ್ಲಿಂದ ನಾರದಂ ಮತ್ತೆ ಬಂದಿಲ್ಲಿ ಭೂ |
ವಲ್ಲಭನ ಮುಂದೆ ರುಕ್ಷಿಣಿ ಸಹಿತ ಕಟ್ಟಿರ್ದ |
ಪಲ್ಲವದ ಪೊಂಗಳಸಮಂ ತಾಳ್ದು ಋತ್ವಿಜರ ಮುನಿಗಣದ ನೃಪ ನಿಕರದ ||
ಎಲ್ಲಾಜನಂಗಳ ಪೊಗಳ್ಕೆಯಂ ಕೈಕೊಂಬ |
ಸಲ್ಲಾಪದಿಂದೆಸೆಯುತಿರೆ ಕಂಡು ಬೆರಗಾಗಿ |
ನಿಲ್ಲದೆ ನಿಗಮ ಸೂಕ್ತದಿಂ ನುತಿಸಿದಂ ದೇವಪುರದ ಲಕ್ಷ್ಮೀಪತಿಯನು ||53||

ಪದವಿಭಾಗ-ಅರ್ಥ:
ಅಲ್ಲಿಂದ ನಾರದಂ ಮತ್ತೆ ಬಂದಿಲ್ಲಿ ಭೂವಲ್ಲಭನ ಮುಂದೆ ರುಕ್ಷಿಣಿ ಸಹಿತ ಕಟ್ಟಿರ್ದ ಪಲ್ಲವದ ಪೊಂಗಳಸಮಂ ತಾಳ್ದು ಋತ್ವಿಜರ ಮುನಿಗಣದ ನೃಪ ನಿಕರದ==[ಅಲ್ಲಿಂದ ನಾರದನು ಮತ್ತೆ ಬಂದು ಇಲ್ಲಿ ಯಜ್ಞಶಾಲೆಯಲ್ಲಿ ಧರ್ಮಜನ ಮುಂದೆ ರುಕ್ಷಿಣಿ ಸಹಿತ ಕಟ್ಟಿದ್ದ ಚಿಗುರು ಎಲೆಯ ಚಿನ್ನದ ಕಳಸವನ್ನು ಹಿಡಿದುಕೊಂಡು ಋತ್ವಿಜರ, ಮುನಿಗಣದ, ರಾಜ ಸಮೂಹದ];; ಎಲ್ಲಾಜನಂಗಳ ಪೊಗಳ್ಕೆಯಂ ಕೈಕೊಂಬ ಸಲ್ಲಾಪದಿಂದ (ಸಲ್ಲಾಪ:ಸಂತಸದ ಮಾತು) ಎಸೆಯುತಿರೆ ಕಂಡು ಬೆರಗಾಗಿ ನಿಲ್ಲದೆ ನಿಗಮ ಸೂಕ್ತದಿಂ ನುತಿಸಿದಂ ದೇವಪುರದ ಲಕ್ಷ್ಮೀಪತಿಯನು==[ಎಲ್ಲಾ ಜನರ ಹೊಗಳಿಕೆಯನ್ನು ಸ್ವೀಕರಿಸಿ ಸಲ್ಲಾಪ ಮಾಡುತ್ತಿರುವ ಕೃಷ್ಣನು ಪ್ರಕಾಶಿಸುತ್ತಿರಲು ಕಂಡು ಬೆರಗಾಗಿ ಸುಮ್ಮನಿರದೆ, ವೇದ ಸೂಕ್ತದಿದ ದೇವಪುರದ ಲಕ್ಷ್ಮೀಪತಿಯನ್ನು ಸ್ತೋತ್ರ ಮಾಡಿದನು].
 • ತಾತ್ಪರ್ಯ:ಅಲ್ಲಿಂದ ನಾರದನು ಮತ್ತೆ ಬಂದು ಇಲ್ಲಿ ಯಜ್ಞಶಾಲೆಯಲ್ಲಿ ಧರ್ಮಜನ ಮುಂದೆ ರುಕ್ಷಿಣಿ ಸಹಿತ ಕಟ್ಟಿದ್ದ ಚಿಗುರು ಎಲೆಯ ಚಿನ್ನದ ಕಳಸವನ್ನು ಹಿಡಿದುಕೊಂಡು ಋತ್ವಿಜರ, ಮುನಿಗಣದ, ರಾಜ ಸಮೂಹದ ಎಲ್ಲಾ ಜನರ ಹೊಗಳಿಕೆಯನ್ನು ಸ್ವೀಕರಿಸಿ ಸಲ್ಲಾಪ ಮಾಡುತ್ತಿರುವ ಕೃಷ್ಣನು ಪ್ರಕಾಶಿಸುತ್ತಿರಲು, ಕಂಡು ಬೆರಗಾಗಿ ಸುಮ್ಮನಿರದೆ, ವೇದ ಸೂಕ್ತದಿದ ದೇವಪುರದ ಲಕ್ಷ್ಮೀಪತಿಯನ್ನು ಸ್ತೋತ್ರ ಮಾಡಿದನು.
 • (ಪದ್ಯ-೫೩)II-I

ಒಟ್ಟು ಪದ್ಯಗಳು: ೧೮೬೦

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


 1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
 2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.