ಜೈಮಿನಿ ಭಾರತ/ಹದಿನೇಳನೆಯ ಸಂಧಿ

ವಿಕಿಸೋರ್ಸ್ ಇಂದ
Jump to navigation Jump to search

ಹದಿನೇಳನೆಯ ಸಂಧಿ[ಸಂಪಾದಿಸಿ]

ಪದ್ಯ :-:ಸೂಚನೆ:[ಸಂಪಾದಿಸಿ]

ಸೂಚನೆ: ವಿನಯದಿಂದೈ ತಂದು ಕಾಣಲ್ಕೆ ಬಭ್ರುವಾ | ಹನನಂ ಜರೆದು ನರಂ ನೂಕಿದೊಡೆ ಬಳಿಕವಂ | ಕನಲಿ ಪಾರ್ಥನ ಚಾತುರಂಗದೊಳ್ ಕಾದಲ್ಕೆಸೇನೆಸಹಿತಿದಿರಾದನು||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ವಿನಯದಿಂದ ಐತಂದು ಕಾಣಲ್ಕೆ ಬಭ್ರುವಾಹನನಂ ಜರೆದು ನರಂ ನೂಕಿದೊಡೆ ಬಳಿಕವಂ ಕನಲಿ ಪಾರ್ಥನ ಚಾತುರಂಗದೊಳ್ ಕಾದಲ್ಕೆ ಸೇನೆಸಹಿತ ಇದಿರಾದನು=[ವಿನಯದಿಂದ ಬಂದು ಕಾಣಲು ಬಭ್ರುವಾಹನನನ್ನು ಅವಮಾನಿಸಿ, ಅರ್ಜುನನು ನಿರಾಕರಿಸಿದಾಗ ಬಳಿಕ ಅವನು / ಬಬ್ರುವಾಹನನು ಸಿಟ್ಟುಗೊಂಡು, ಪಾರ್ಥನ ಚತುರಂಗ ಸೈನ್ಯದೊಡನೆ ಹೋರಾಡಲು ಸೇನೆಸಮೇತ ಎದುರು ನಿಂತನು].
 • ತಾತ್ಪರ್ಯ:ವಿನಯದಿಂದ ಬಂದು ಕಾಣಲು ಬಭ್ರುವಾಹನನನ್ನು ಅವಮಾನಿಸಿ, ಅರ್ಜುನನು ನಿರಾಕರಿಸಿದಾಗ ಬಳಿಕ ಅವನು / ಬಬ್ರುವಾಹನನು ಸಿಟ್ಟುಗೊಂಡು, ಪಾರ್ಥನ ಚತುರಂಗ ಸೈನ್ಯದೊಡನೆ ಹೋರಾಡಲು ಸೇನೆಸಮೇತ ಎದುರು ನಿಂತನು.
 • (ಪದ್ಯ-ಸೂಚನೆ)

ಪದ್ಯ :-:೧:[ಸಂಪಾದಿಸಿ]

ಭೂಭುಜಲಲಾಮ ಕೇಳಿಂದ್ರತನಯನ ತುರಗ | ಮಾಭೀಷಣನ ಸೀಮೆಯಂ ಕಳೆದು ಬರೆ ಮುಂದೆ || ಶೋಭಿಸಿತು ವರ್ಷಾಗಮಂ ಧರೆಯ ಬೇಸಗೆಯ ಬೇಸರಂ ತವೆ ತವಿಸುತೆ ||
ಲಾಭಿಸುವ ಚಾತಕಪ್ರೀತಿಯಂ ಕಂಡಸೂ | ಯಾಭರವನಂಚೆಗಳ್ ತಾಳಲಾರದೆ ಘನ | ಕ್ಷೋಭದಿಂದೊಡಿದುವು ಪರರ ಸಿರಿಯಂ ಸೈರಿಸರು ವಿಜಾತಿಯ ಜನರೆನೆ ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಭೂಭುಜಲಲಾಮ (ಭೂಭುಜ=ರಾಜರಿಗೆ +ತಿಲಕದಂತಿರುವವನು) ಕೇಳು ಇಂದ್ರತನಯನ ತುರಗಮ ಆ ಭೀಷಣನ ಸೀಮೆಯಂ ಕಳೆದು ಬರೆ ಮುಂದೆ ಶೋಭಿಸಿತು ವರ್ಷ(ಮಳೆ) ಆಗಮಂ ಧರೆಯ ಬೇಸಗೆಯ ಬೇಸರಂ ತವೆ ತವಿಸುತೆ =[ಜನಮೇಜಯನೇ ಕೇಳು ಅರ್ಜುನನ ಕುದುರೆಯು ಆ ಭೀಷಣನ ಸೀಮೆಯನ್ನು ದಾಟಿ ಬರಲು ಮುಂದಿನದಿನಗಳು ಶೋಭಿಸುವ ಮಳೆಗಾಲದ ಆಗಮನ. ಭೂಮಿಯಯ ಬೇಸಗೆಯ ಬೇಸರವನ್ನು ಚೆನ್ನಾಗಿ ಶಾಂತಗೊಳಿಸುತ್ತಾ, ]; ಲಾಭಿಸುವ (ಲಭಿಸುವ /ದೊರಕುವ) ಚಾತಕ ಪ್ರೀತಿಯಂ ಕಂಡು ಅಸೂಯಾಧರವನು ಅಂಚೆಗಳ್ ತಾಳಲಾರದೆ ಘನ ಕ್ಷೋಭದಿಂದ ಓಡಿದುವು ಪರರ ಸಿರಿಯಂ ಸೈರಿಸರು ವಿಜಾತಿಯ ಜನರೆನೆ=[ಚಾತಕಪಕ್ಷಿಯ ಪ್ರೀತಿಯು ಲಭಿಸುವುದನ್ನು ಕಂಡು ಅಸೂಯಾ ಭಾರವನು ಅಂಚೆಗಳು /ಹಂಸಪಕ್ಷಿಗಳು ತಾಳಲಾರದೆ ಬಹಳ ಬಾಧೆಯಿಂದ ಓಡಿದುವು, ಅದು ಹೇಗೆಂದರೆ, ಪರರ ಸಂಪತ್ತನ್ನು ವಿಜಾತಿಯ ಜನರು ಸಹಿಸಲಾರರು ಎನ್ನುವಂತಿತ್ತು.];
 • ತಾತ್ಪರ್ಯ:ಜನಮೇಜಯನೇ ಕೇಳು ಅರ್ಜುನನ ಕುದುರೆಯು ಆ ಭೀಷಣನ ಸೀಮೆಯನ್ನು ದಾಟಿ ಬರಲು ಮುಂದಿನದಿನಗಳು ಶೋಭಿಸುವ ಮಳೆಗಾಲದ ಆಗಮನ. ಭೂಮಿಯಯ ಬೇಸಗೆಯ ಬೇಸರವನ್ನು ಚೆನ್ನಾಗಿ ಶಾಂತಗೊಳಿಸಿದಾಗ, ಚಾತಕಪಕ್ಷಿಯ ಪ್ರೀತಿಯ ವಸ್ತು ಲಭಿಸುವುದನ್ನು ಕಂಡು ಅಸೂಯೆಯ ಭಾರವನು ಹಂಸಪಕ್ಷಿಗಳು ತಾಳಲಾರದೆ ಬಹಳ ಬಾಧೆಯಿಂದ ಓಡಿದುವು, ಅದು ಹೇಗೆಂದರೆ, ಪರರ ಸಂಪತ್ತನ್ನು ವಿಜಾತಿಯ ಜನರು ಸಹಿಸಲಾರರು ಎನ್ನುವಂತಿತ್ತು. (ಚಾತಕಪಕ್ಷಿ ಮಳೆಯ ನೀರಿಗಾಗಿ ಕಾದಿರುತ್ತದೆ)
 • (ಪದ್ಯ-೧)

ಪದ್ಯ :-:೨:[ಸಂಪಾದಿಸಿ]

ಎದ್ದುವು ಮುಗಿಲ್ಗಳೆಣ್ಣೆಸೆಗಳೊಳ್ ತರತರದೊ | ಳಿದ್ದುವು ಗಿರಿಗಳಂತೆ ಮಿಂಚಿದುವು ದಿಗ್ವಧುಗ | ಳುದ್ದಂಡದಿಂದೆ ಪರ್ಜನ್ಯನಂ ಸೆಣಸಿ ನೋಡುವಚಲಾಪಾಂಗದಂತೆ ||
ಸದ್ಧಾತೃವಾಗಿ ತನ್ನವೊಲಿರದ ಲೋಭಿಯಂ | ಗದ್ಧಿಸುವ ತೆರದಿಂದೆ ಮೊಳಗಿದುವು ಧರಣಿಯೊಳ್ | ಬಿದ್ದ ಮುಂಬನಿಯ ಕಂಪಿಗೆ ಸೊಗಸಲಾನೆಗಳ್‍ಕೃಷಿಕತತಿನಲಿಯಲೊಡನೆ ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಎದ್ದುವು ಮುಗಿಲ್ಗಳ್(ಮೋಡ) ಎಣ್ಣೆಸೆಗಳೊಳ್ (ಎಂಟು+ದೆಸೆ) ತರತರದೊಳು ಇದ್ದುವು ಗಿರಿಗಳಂತೆ,=[ಮಳೆಗಾಲದ ಆರಂಭದಲ್ಲಿ, ಮೋಡಗಳು ಎಂಟುದಿಕ್ಕಿನಲ್ಲಿ ಎದ್ದುವು. ಅವು ತರತರರೂಪಾಗಿ ಇದ್ದುವು ಗಿರಿಗಳಂತೆಯು ಇದ್ದವು.]; ಮಿಂಚಿದುವು ದಿಗ್ವಧುಗಳು (ದಿಕ್ +ವಧುಗಳು,ದಿಕ್ಕು ಎಂಬ ವನಿತೆಯರು) ಉದ್ದಂಡದಿಂದೆ (ಬಹಳ, ಉದ್ದಕ್ಕೂ ಬೀಳುವುದು) ಪರ್ಜನ್ಯನಂ ಸೆಣಸಿ ನೋಡುವ ಅಚಲ ಆ ಅಪಾಂಗದಂತೆ (ಕಡೆಗಣ್ಣು) (ಅಚಲವಾದ ಎಂಟುದಿಕ್ಕುಗಳು ಹೆಣ್ಣುಗಳು - ಮಿಂಚು ಆ ಹೆಣ್ಣಿನ ಕಡೆಗಣ್ಣಿನ ನೋಟ; /ವಧುಗಳ ಕಡೆಗಣ್ಣಿನ ನೋಟ ಮಿಂಚಿನಂತೆ ಇರುವುದು ಎಂಭ ಭಾವ)=[(ಮಿಂಚಿದುವು) ದಿಕ್ಕು ಎಂಬ ವಧುಗಳು ಉದ್ದಕ್ಕೂ ಒಂದೇ ಸಮನೆ ಸುರಿವ ಮಳೆಯನ್ನು ನಿರೋಧಿಸಿ ನೋಡುವ ಅಚಂಚಲವಾದ ಕಡೆಗಣ್ಣಿನ ನೋಟದಂತೆ ಮಿಂಚಿದುವು]; ಸತ್+ ದಾತೃವಾಗಿ( ಕೊಡುವವ) ತನ್ನವೊಲ್ ಇರದ ಲೋಭಿಯಂ ಗದ್ಧಿಸುವ ತೆರದಿಂದೆ ಮೊಳಗಿದುವು, ಧರಣಿಯೊಳ್ ಬಿದ್ದ ಮುಂಬನಿಯ ಕಂಪಿಗೆ ಸೊಗಸಲು ಆನೆಗಳ್‍ ಕೃಷಿಕತತಿ ನಲಿಯಲು ಒಡನೆ =[ಒಳಿತನ್ನು ಕೊಡುವವನಾಗಿ ತನ್ನಂತೆ ಇರದ ಲೋಭಿಯನ್ನು ಗದರಿಸುವ ರೀತಿಯಲ್ಲಿ (ಗುಡುಗುಗಳು) ಗುಡುಗಿದವು, ಭೂಮಿಯಲ್ಲಿ ಬಿದ್ದ ಮೊದಲ ಮಳೆಹನಿಯ ಕಂಪಿಗೆ ಆನೆಗಳು, ಕೃಷಿಕರ ಸಮೂಹ ಕೂಡಲೆ ಆಗ ಸಂತಸಗೊಂಡವು].
 • ತಾತ್ಪರ್ಯ:ಮಳೆಗಾಲದ ಆರಂಭದಲ್ಲಿ, ಮೋಡಗಳು ಎಂಟುದಿಕ್ಕಿನಲ್ಲಿ ಎದ್ದುವು. ಅವು ತರತರರೂಪಾಗಿ ಇದ್ದುವು ಗಿರಿಗಳಂತೆಯು ಇದ್ದವು. (ಮಿಂಚಿದುವು) ದಿಕ್ಕು ಎಂಬ ವಧುಗಳು ಉದ್ದಕ್ಕೂ ಒಂದೇ ಸಮನೆ ಸುರಿವ ಮಳೆಯನ್ನು ನಿರೋಧಿಸಿ ನೋಡುವ ಅಚಂಚಲವಾದ ಕಡೆಗಣ್ಣಿನ ನೋಟದಂತೆ ಮಿಂಚಿದುವು; ಒಳಿತನ್ನು ಕೊಡುವವನಾಗಿ ತನ್ನಂತೆ ಇರದ ಲೋಭಿಯನ್ನು ಗದರಿಸುವ ರೀತಿಯಲ್ಲಿ (ಗುಡುಗುಗಳು) ಗುಡುಗಿದವು, ಭೂಮಿಯಲ್ಲಿ ಬಿದ್ದ ಮೊದಲ ಮಳೆಹನಿಯ ಕಂಪಿಗೆ ಆನೆಗಳು, ಕೃಷಿಕರ ಸಮೂಹ ಕೂಡಲೆ ಆಗ ಸಂತಸಗೊಂಡವು].
 • (ಪದ್ಯ-೨)

ಪದ್ಯ :-:೩:[ಸಂಪಾದಿಸಿ]

ವರ ನೀಲಕಂಠ ನೃತ್ಯದಿನಂಧಕಾಸುರ ಸ | ಮರ ಧರಣಿಯಂ ಕುವಲಯಾನಂದಕರದ ಘನ | ಪರಿಶೋಭೆಯಿಂದೆ ಚಂದ್ರೋದಯವನಾಲೋಕ ಚಂಚಲೋದ್ಭಾಸದಿಂದ ||
ತರುಣಿಯ ಕಟಾಕ್ಷಮಂ ರಾಜಹಂಸಪ್ರಭಾ | ಹರಣದಿಂ ಪರಶುರಾಮಪ್ರತಾಪವನಧಿಕ | ತರವಾಹಿನೀ ಘೋಷದಿಂದೆ ನೃಪಯಾತ್ರೆಯಂ ಪೊಲ್ತು ಕಾರೆಸೆದಿರ್ದುದು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ವರ ನೀಲಕಂಠ (ನವಿಲು /ಶಿವ)) ನೃತ್ಯದಿಂ ಆಂಧಕಾಸುರ (ಕತ್ತಲೆ) ಸಮರ ಧರಣಿಯಂ ಕುವಲಯಾನಂದಕರದ ಘನಪರಿಶೋಭೆಯಿಂದೆ=[ಮಳೆಗಾವು,ಸುಂದರ /ಶ್ರೇಷ್ಠ ನವಿಲಿನ ನೃತ್ಯದಿಂದ ಕೂಡಿದೆ; ಕತ್ತಲೆಯ ಸಮರ ಭೂಮಿಯನ್ನು ಕನ್ನೈದಿಲೆಯ ಆನಂದಕರದ ಘನಪರಿಶೋಭೆಯಿಂದೆ ಕೂಡಿದೆ];ಚಂದ್ರೋದಯವನು ಆಲೋಕ ಚಂಚಲೋದ್ಭಾಸದಿಂದತರುಣಿಯ ಕಟಾಕ್ಷಮಂ ರಾಜಹಂಸ ಪ್ರಭಾಹರಣದಿಂ ಪರಶುರಾಮ ಪ್ರತಾಪವನು ಅಧಿಕ ತರವಾಹಿನೀ ಘೋಷದಿಂದೆ ನೃಪಯಾತ್ರೆಯಂ ಪೊಲ್ತು ಕಾರೆಸೆದಿರ್ದುದು ಕಾರೆಸೆದಿರ್ದುದು=[ಚಂದ್ರೋದಯವು ತಾನು ತೋರುವುದು, ಚಂಚಲ /ಅಸ್ಪಷ್ಟ ಶೋಭೆಯಿಂದ ಕೂಡಿದೆ;ಚಂದ್ರೋದಯವನು ಆಲೋಕ (ನೋಡು,ಕಾಣುವುದು,) ಚಂಚಲ ಉದ್ಭಾಸದಿಂದ (ಪ್ರಕಾಶದಿಂದ) ತರುಣಿಯ ಕಟಾಕ್ಷ / ನೋಟವು ರಾಜಹಂಸದ ಶೋಭೆಯನ್ನು ಅಪಹರಿಸುವುದರಿಂದ ಕೂಡಿದೆ; ಪರಶುರಾಮ ಶೌರ್ಯದ ಪ್ರತಾಪವನ್ನು ಅಧಿಕ ತರವಾಹಿನೀ ನದಿಗಳ ಹರಿವಿನ ಶಬ್ದದಿಂದ / ಘೋಷದಿಂದೆ ಹೋಲಿಕೆಪಡೆದಿದೆ; ಈ ರೀತಿ ಮಳೆಗಾವು ರಾಜನ ಸೈನ್ಯ ಯಾತ್ರೆಯನ್ನು ಹೋಲುತ್ತಿತ್ತು.]
 • ತಾತ್ಪರ್ಯ:ಮಳೆಗಾವು,ಸುಂದರ ನವಿಲಿನ ನೃತ್ಯದಿಂದ ಕೂಡಿದೆ (ಅಂಧಕನನ್ನು ವಧಿಸುವ ನೀಲಕಂಠ ಶಿವನ ನೃತ್ಯಕ್ಕೆ ಹೋಲಿಕೆ); ಕತ್ತಲೆಯ ಸಮರ ಭೂಮಿಯನ್ನು ಕನ್ನೈದಿಲೆಯ ಆನಂದಕರದ ಘನಪರಿಶೋಭೆಯಿಂದೆ ಕೂಡಿದೆ;ಚಂದ್ರೋದಯವು ಅಸ್ಪಷ್ಟ ಶೋಭೆಯಿಂದ ಕೂಡಿದೆ; ಚಂಚಲ ಉದ್ಭಾಸದಿಂದ (ಪ್ರಕಾಶದಿಂದ) ತರುಣಿಯ ನೋಟವು ರಾಜಹಂಸದ ಶೋಭೆಯನ್ನು ಅಪಹರಿಸುವುದರಿಂದ ಕೂಡಿದೆ; ಪರಶುರಾಮ ಶೌರ್ಯದ ಪ್ರತಾಪವನ್ನು ಅಧಿಕ ತರ ವಾಹಿನೀ(ಸೈನ್ಯವೆಂಬ ಅರ್ಥದಲ್ಲಿ) ಅನೇಕ ನದಿಗಳ ತುಂಬು ಹರಿವಿನ ಶಬ್ದದಿಂದ / ಘೋಷದಿಂದೆ ಹೋಲಿಕೆ ಪಡೆದಿದೆ; ಈ ರೀತಿ ಮಳೆಗಾವು ರಾಜನ ಸೈನ್ಯ ಯಾತ್ರೆಯನ್ನೂ ಹೋಲುತ್ತಿತ್ತು.] (ಕೆಲವು ಶ್ಲೇಶಾರ್ಥವು ಅಸ್ಪಷ್ಟವಾಗಿದೆ)
 • (ಪದ್ಯ-೩)

ಪದ್ಯ :-:೪:[ಸಂಪಾದಿಸಿ]

ಜಾತ ನವ ಶಾಡ್ವಲದ ಸೊಂಪಿಡಿದೆಸೆವ ನೆಲದ | ಪೂತಸೆವ ಜಾಜಿಗಳ ವರಕುಟಜ ರಾಜಿಗಳ | ಕೇತಕಿಯ ಧೂಲಗಳ ಕೆದರುತಿಹ ಗಾಳಿಗಳಲಸದಿಂದ್ರಗೋಪಚಯದ ||
ಕಾತೆಳಯ ಮಾವುಗಳ ಬನಬನದ ಠಾವುಗಳ | ನೂತನ ಸುವಾರಿಗಳ ನಡೆಗುಡದ ದಾರಿಗಳ | ಭೂತಳದ ಸಿರಿ ಮೆರೆಯೆ ಮುಗಿಲೈದೆ ಮಳೆಗರೆಯೆ ವರ್ಷರ್ತು ಚೆಲ್ವಾದುದು ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • (ಮಳೆಗಾಲದ ಬರುವಿನಿಂದ,) ಜಾತ ನವ ಶಾಡ್ವಲದ(ಹಸಿರುಹುಲ್ಲು) ಸೊಂಪಿಡಿದು ಎಸೆವ ನೆಲದ=[ ಮಳೆಗಾಲದ ಬರುವಿನಿಂದ, ಹೊಸದಾಗಿ ಹುಟ್ಟಿದ ಹಸಿರುಹುಲ್ಲಿನ ಸೊಗಸನ್ನು ಪಡೆದು ಶೋಭಿಸುವ ನೆಲದಿಂದಲೂ,];ಪೂತು ಎಸೆವ ಜಾಜಿಗಳ ವರಕುಟಜ ರಾಜಿಗಳ ಕೇತಕಿಯ ಧೂಲಗಳ ಕೆದರುತಿಹ ಗಾಳಿಗಳ ಲಸದ(ಶೋಭೀಸುವ) ಇಂದ್ರಗೋಪಚಯದ =[ಹೂವುಬಿಟ್ಟು ಶೋಭಿಸುವ ಜಾಜಿಗಳ ಮತ್ತು ಶ್ರೇಷ್ಠ ಕುಟಜ /ಕೊಡಸದ/ ಹೂವಿನ ಸಾಲುಗಳಿಂದಲೂ; ಕೇತಕಿಯ ಹೂವಿನ ಧೂಳುಗಳನ್ನು ಕದರಿ ಹಾರಿಸುತ್ತಿರುವ ಗಾಳಿಗಳಿಂದಲೂ: ಶೋಭೀಸುವ ಕಾಮನಬಿಲ್ಲಿನಂತೆ ಅನೇಕಬಣ್ಣದ];ಕಾತ/ಮೊಗ್ಗಿನ ಎಳಯಮರಗಳ, ಮಾವುಗಳ ಬನಬನದ ಠಾವುಗಳ ನೂತನ ಸುವಾರಿಗಳ (ಸು+ ವಾರಿ-ನೀರು)ನಡೆಗುಡದ (ನಡೆಯಲು+ಕುಡದ ಅವಕಾಶ ಕೊಡದ) ದಾರಿಗಳ ಭೂತಳದ ಸಿರಿ ಮೆರೆಯೆ ಮುಗಿಲು ಐದೆ ಮಳೆಗರೆಯೆ ವರ್ಷರ್ತು ಚೆಲ್ವಾದುದು =[ಕಳಿತ/ತಳಿತ ಎಳಯಮರಗಳ, ಮಾವುಗಳ ಚಿಕ್ಕ ವನಗಳ ಪ್ರದೇಶಗಳ ಹೊಸ ಕೊಳಗಳ ನಡೆಯಲು ಕಷ್ಟದ ದಾರಿಗಳ, ಭೂಮಿಯ ಸಂಪತ್ತು ಶೋಭಿಸುತ್ತಿರಲು ಮೋಡ ಬಂದು ಮಳೆಸುರಿಯಲು ವರ್ಷಋತು ಚೆಂದವಾಗಿ ಕಂಡಿತು.]
 • ತಾತ್ಪರ್ಯ:ಮಳೆಗಾಲದ ಬರುವಿನಿಂದ, ಹೊಸದಾಗಿ ಹುಟ್ಟಿದ ಹಸಿರುಹುಲ್ಲಿನ ಸೊಗಸನ್ನು ಪಡೆದು ಶೋಭಿಸುವ ನೆಲದಿಂದಲೂ, ಹೂವುಬಿಟ್ಟು ಶೋಭಿಸುವ ಜಾಜಿಗಳ ಮತ್ತು ಶ್ರೇಷ್ಠ ಕುಟಜ /ಕೊಡಸದ/ ಹೂವಿನ ಸಾಲುಗಳಿಂದಲೂ; ಕೇತಕಿಯ ಹೂವಿನ ಧೂಳುಗಳನ್ನು ಕದರಿ ಹಾರಿಸುತ್ತಿರುವ ಗಾಳಿಗಳಿಂದಲೂ: ಶೋಭೀಸುವ ಕಾಮನಬಿಲ್ಲಿನಂತೆ ಅನೇಕಬಣ್ಣದ ಚಿಗುರೊಡೆದ ಎಳಯಮರಗಳ, ಮಾವುಗಳ ಚಿಕ್ಕ ವನಗಳ ಪ್ರದೇಶಗಳ ಹೊಸ ಕೊಳಗಳ ನಡೆಯಲು ಕಷ್ಟದ ದಾರಿಗಳ, ಭೂಮಿಯ ಸಂಪತ್ತು ಶೋಭಿಸುತ್ತಿರಲು ಮೋಡ ಬಂದು ಮಳೆಸುರಿಯಲು ವರ್ಷಋತು ಚೆಂದವಾಗಿ ಕಂಡಿತು.]
 • (ಪದ್ಯ-೩)

ಪದ್ಯ :-:೫:[ಸಂಪಾದಿಸಿ]

ತುಂಗ ನವಚಿತ್ರ ಮಯ ಸುಪ್ರಭಾಸುರ ಕಾರ್ಮು | ಕಂಗಳಿಂ ಸುರಕಾರ್ಮುಕಂಗಳಂ ವಿವಿಧ ವಾ | ದ್ಯಂಗಳ ಗಂಭೀರ ಘನ ಘೋಷಂಗಳಿಂದೆ ಘನಘೋಷಂಗಳಂ ನೆಗಳ್ದ ||
ಸಂಗತ ನೃಪಾಲ ವಾಹಿನಿಗಳಿಂ ವಾಹಿನಿಗ | ಳಂಗೆಲ್ದು ವೀರಪಾಂಡವ ಸೈನ್ಯಸಾಗರಂ | ಕಂಗೊಳಿಪ ಕಾರ್ಗಾಲಿದಂತೆಸೆಯೆ ವಾಜಿ ಮಣಿಪುರಕಾಗಿ ನಡೆತಂದುದು ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ತುಂಗ ನವಚಿತ್ರ ಮಯ ಸುಪ್ರಭಾಸುರ ಕಾರ್ಮುಕಂಗಳಿಂ=[ಉನ್ನತ ನವಚಿತ್ರಗಳಿಂದ ತುಂಬಿದ ಪ್ರಕಾಶಮಾನವಾದ ಬಿಲ್ಲುಗಳಿಂದಲೂ]; ಸುರಕಾರ್ಮುಕಂಗಳಂ (ಸುರ/ಇಂದ್ರ + ಕಾರ್ಮುಕ/ಧನುಸ್ಸು) ವಿವಿಧ ವಾದ್ಯಂಗಳ ಗಂಭೀರ ಘನ ಘೋಷಂಗಳಿಂದೆ=[ಕಾಮನಬಿಲ್ಲಿನಂತೆ ಬಣ್ಣದ ವಿವಿಧ ವಾದ್ಯಂಗಳ ಗಂಭೀರ ದೊಡ್ಡ ಶಬ್ದಗಳಿಂದಲೂ,]; ಘನಘೋಷಂಗಳಂ ನೆಗಳ್ದ ಸಂಗತ ನೃಪಾಲ ವಾಹಿನಿಗಳಿಂ=[ಈ ದೊಡ್ಡ ಸದ್ದಿನ ಜೊತೆ ನಿಯಮಿತವಾಗಿ ಸೇರಿದ ರಾಜರ ಸೈನ್ಯಗಳಿಂದಲೂ ]; ವಾಹಿನಿಗಳಂ (ವಾಹಿನಿ-ಸೈನ್ಯ,ನದಿ)ಗೆಲ್ದು ವೀರಪಾಂಡವ ಸೈನ್ಯಸಾಗರಂ ಕಂಗೊಳಿಪ ಕಾರ್ಗಾಲಿದಂತೆಸೆಯೆ ವಾಜಿ ಮಣಿಪುರಕಾಗಿ ನಡೆತಂದುದು=[ಅನೇಕ ಸೈನ್ಯಗಳನ್ನು ಗೆದ್ದು,ನದಿಗಳನ್ನು ದಾಟಿ ವೀರಪಾಂಡವ ಅರ್ಜುನನ ಸಮುದ್ರದಂತಿರುವ ಸೈನ್ಯ ಶೋಭೆಯಿಂದ ಕೂಡಿದ ಆರ್ಭಟದ ಮಳೆಗಾಲದಂತೆ ತೋರುತ್ತಿರಲು ಕುದುರೆಯು ಮಣಿಪುರಕ್ಕೆ ಬಂದಿತು.]
 • ತಾತ್ಪರ್ಯ:ಉನ್ನತ ನವಚಿತ್ರಗಳಿಂದ ತುಂಬಿದ ಪ್ರಕಾಶಮಾನವಾದ ಬಿಲ್ಲುಗಳಿಂದಲೂ; ಕಾಮನಬಿಲ್ಲಿನ ಬಣ್ಣದ ವಿವಿಧ ವಾದ್ಯಂಗಳ ಗಂಭೀರ ದೊಡ್ಡ ಶಬ್ದಗಳಿಂದಲೂ, ಈ ದೊಡ್ಡ ಸದ್ದಿನ ಜೊತೆ ಉತ್ತಮ, ನಿಯಮಿತವಾಗಿ ಸೇರಿದ ರಾಜರ ಸೈನ್ಯಗಳಿಂದಲೂ; ಅನೇಕ ಸೈನ್ಯಗಳನ್ನು ಗೆದ್ದು,ನದಿಗಳನ್ನು ದಾಟಿ ವೀರಪಾಂಡವ ಅರ್ಜುನನ ಸಮುದ್ರದಂತಿರುವ ಸೈನ್ಯ ಶೋಭೆಯಿಂದ ಕೂಡಿದ ಆರ್ಭಟದ ಮಳೆಗಾಲದಂತೆ ತೋರುತ್ತಿರಲು, ಯಜ್ಞದಕುದುರೆಯು ಮಣಿಪುರಕ್ಕೆ ಬಂದಿತು.
 • (ಪದ್ಯ-೫)

ಪದ್ಯ :-:೬:[ಸಂಪಾದಿಸಿ]

ಕ್ಷೋಣೀಂದ್ರ ಕೇಳರ್ಜುನನ ಕಣ್ಗೆ ಮಣಿಪುರಂ | ಕಾಣಿಸಿತು ಕನಕರಜತದ ಕೋಂಟೆ ಕೊತ್ತಳದ | ಮಾಣಿಕದ ವಜ್ರವೈಡೂರ್ಯ ಗೋಮೇಧಿಕದ ಮುಗಿಲಟ್ಟಳೆಯ ಸಾಲ್ಗಳ ||
ಶೋಣಪ್ರವಾಳ ತೋರಣದ ಸೂಸಕದ ಕ | ಟ್ಟಾಣಿ ಮುತ್ತುಗಳ ಲೋವೆಗಳ ಗೋಪುರದ ಬಿ | ನ್ನಾಣದ ಸುಚಿತ್ರಪತ್ರದ ಕುಸುಕದೆಸಕದಿಂ ಮೆರೆವ ಬಾಗಿಲ್ಗಳಿಂದೆ ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕ್ಷೋಣೀಂದ್ರ ಕೇಳು ಅರ್ಜುನನ ಕಣ್ಗೆ ಮಣಿಪುರಂ ಕಾಣಿಸಿತು ಕನಕರಜತದ ಕೋಂಟೆ ಕೊತ್ತಳದ ಮಾಣಿಕದ ವಜ್ರವೈಡೂರ್ಯ ಗೋಮೇಧಿಕದ ಮುಗಿಲಟ್ಟಳೆಯ ಸಾಲ್ಗಳ=[ರಾಜನೇ ಕೇಳು ಅರ್ಜುನನ ಕಣ್ಣಿಗೆ ಮಣಿಪುರವು (ಕಾಣಿಸಿತು->) ಬೆಳ್ಳಿಬಂಗಾರದ ಕೋಟೆ ಕೊತ್ತಳದ/ ಬರುಜಿನ ಮಾಣಿಕ್ಯದ ವಜ್ರವೈಡೂರ್ಯ ಗೋಮೇಧಿಕದ ಮೋಡ ಮುಟ್ಟುವಷ್ಟು ಎತ್ತರದ ಕೋಟೆಯ ಗೋಪುರದ ಸಾಲುಗಳ]; ಶೋಣಪ್ರವಾಳ ತೋರಣದ ಸೂಸಕದ ಕಟ್ಟಾಣಿ ಮುತ್ತುಗಳ ಲೋವೆಗಳ ಗೋಪುರದ ಬಿನ್ನಾಣದ ಸುಚಿತ್ರಪತ್ರದ ಕುಸುಕದೆಸಕದಿಂ ಮೆರೆವ ಬಾಗಿಲ್ಗಳಿಂದೆ=[ಕೆಂಪು ಹವಳದ ತೋರಣದ ಗೊಂಡೆಗಳ ಕಟ್ಟಾಣಿ ಮುತ್ತುಗಳ ಛಾವಣಿಯ ಚೌಕಟ್ಟುಗಳ ಗೋಪುರದ ಬೆಡಗಿನ ಸುಚಿತ್ರಪತ್ರದ ಕೆತ್ತಿದತಗ್ಗುಗಳ ಕೆಲಸದಿಂದ ಶೋಭಿಸುವ ಬಾಗಿಲುಗಳಿಂದ ಕೂಡಿದ ನಗರ ಕಾಣಿಸಿತು].
 • ತಾತ್ಪರ್ಯ:ರಾಜನೇ ಕೇಳು ಅರ್ಜುನನ ಕಣ್ಣಿಗೆ ಮಣಿಪುರವು (ಕಾಣಿಸಿತು->) ಬೆಳ್ಳಿಬಂಗಾರದ ಕೋಟೆ ಕೊತ್ತಳದ/ ಬರುಜಿನ ಮಾಣಿಕ್ಯದ ವಜ್ರವೈಡೂರ್ಯ ಗೋಮೇಧಿಕದ ಮೋಡ ಮುಟ್ಟುವಷ್ಟು ಎತ್ತರದ ಕೋಟೆಯ ಗೋಪುರದ ಸಾಲುಗಳ, ಕೆಂಪು ಹವಳದ ತೋರಣದ ಗೊಂಡೆಗಳ ಕಟ್ಟಾಣಿ ಮುತ್ತುಗಳ ಛಾವಣಿಯ ಚೌಕಟ್ಟುಗಳ ಗೋಪುರದ ಬೆಡಗಿನ ಸುಚಿತ್ರಪತ್ರದ ಕೆತ್ತಿದತಗ್ಗುಗಳ ಕೆಲಸದಿಂದ ಶೋಭಿಸುವ ಬಾಗಿಲುಗಳಿಂದ ಕೂಡಿದ ನಗರ ಕಾಣಿಸಿತು.
 • (ಪದ್ಯ-೬)

ಪದ್ಯ :-:೭:[ಸಂಪಾದಿಸಿ]

ಪಗಲ ದೆಸೆಗಳುಕಿ ಪರೆದಿರ್ದ ಬೆಳ್ದಿಂಗಳೀ | ನಗರಮಂ ಪೊಕ್ಕು ವೆಂಟಣಿಸಿ ಮಾರ್ಮಲೆತಿರಲ್ | ಮಿಗೆ ಮೋಹರಿಸಿ ಬಂದು ಮುತ್ತಿಗೆಯನಿಕ್ಕಿ ಕೊಂಡಿರ್ಪೆಳವಿಸಿಲ್ಗಳೆನಲು ||
ಗಗನವನಡರ್ದ ಸೌಧಂಗಳ ಮರೀಚಿಯಿಂ | ಪೊಗರುಗುವ ಪೊಚ್ಚ ಪೊಸ ಪೊನ್ನ ಕೋಟೆಂಗಳ ಕಾಂ | ತಿಗಳೈದೆ ಮುಸುಕಿಕೊಂಡೆಸೆದಿರ್ದುವರ್ಜುನನ ಕಣ್ಗೆ ಕೌತುಕಮಾಗಲು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಪಗಲ ದೆಸೆಗೆ (ಸ್ಥಿತಿ) ಅಳುಕಿ ಪರೆದಿರ್ದ ಬೆಳ್ದಿಂಗಳು ಈ ನಗರಮಂ ಪೊಕ್ಕು ವೆಂಟಣಿಸಿ ಮಾರ್ಮಲೆತಿರಲ್=[ಹಗಲ ಪ್ರತಾಪಕ್ಕೆ ಹೆದರಿ ಹೋಗಿದ್ದ ಬೆಳ್ದಿಂಗಳು ಈ ನಗರವನ್ನು ಹೊಕ್ಕು ಅಭಿವೃದ್ಧಿಯಾಗಿ, ಎದುರುಬಿದ್ದಿದೆ ಎನ್ನುವಂತಿರಿಲು]; ಮಿಗೆ ಮೋಹರಿಸಿ ಬಂದು ಮುತ್ತಿಗೆಯನು ಇಕ್ಕಿಕೊಂಡಿರ್ಪ ಎಳವಿಸಿಲ್ಗಳು ಎನಲು=[ಬಹಳ ಸೇನೆಯಂತೆ ಒಟ್ಟಾಗಿ ಬಂದು ಮುತ್ತಿಗೆಯನ್ನು ಎಳೆಬಿಸಿಲು ಹಾಕಿಕೊಂಡಿದೆ ಎನ್ನುವಂತೆ ]; ಗಗನವನು ಅಡರ್ದ ಸೌಧಂಗಳ ಮರೀಚಿಯಿಂ ಪೊಗರು ಉಗುವ ಪೊಚ್ಚ ಪೊಸ ಪೊನ್ನ ಕೋಟೆಂಗಳ ಕಾಂತಿಗಳು=[ಆಕಾಶವನ್ನು ಮುಟ್ಟುವಂತಿರುವ ಉಪ್ಪರಿಗೆ ಮನೆಗಳ ಕಾಂತಿಯಿಂದ ಬೆಳಕು ಬೀರುವ ಹೊಚ್ಚಹೊಸ ಕೋಟೆಗಳ ಪ್ರಕಾಶವು]; ಐದೆ ಮುಸುಕಿಕೊಂಡು ಎಸೆದಿರ್ದುವು ಅರ್ಜುನನ ಕಣ್ಗೆ ಕೌತುಕಮಾಗಲು=[ಬರಲು ವ್ಯಾಪಿಸಿಕೊಂಡು ಅರ್ಜುನನ ಕಣ್ಣಿಗೆ ಆಶ್ಚರ್ಯವಾಗುವಂತೆ ಶೋಭಿಸುತ್ತಿದ್ದವು].
 • ತಾತ್ಪರ್ಯ:ಹಗಲ ಪ್ರತಾಪಕ್ಕೆ ಹೆದರಿ ಹೋಗಿದ್ದ ಬೆಳ್ದಿಂಗಳು ಈ ನಗರವನ್ನು ಹೊಕ್ಕು ಅಭಿವೃದ್ಧಿಯಾಗಿ, ಹಗಲಿಗೆ ಎದುರುಬಿದ್ದಿದೆ ಎನ್ನುವಂತಿರಿಲು; ದೊಡ್ಡ ಸೇನೆಯಂತೆ ಒಟ್ಟಾಗಿ ಬಂದು ಮುತ್ತಿಗೆಯನ್ನು ಎಳೆಬಿಸಿಲು ಹಾಕಿಕೊಂಡಿದೆ ಎನ್ನುವಂತೆ; ಆಕಾಶವನ್ನು ಮುಟ್ಟುವಂತಿರುವ ಉಪ್ಪರಿಗೆ ಮನೆಗಳ ಕಾಂತಿಯಿಂದ ಬೆಳಕು ಬೀರುವ ಹೊಚ್ಚಹೊಸ ಕೋಟೆಗಳ ಪ್ರಕಾಶವು ವ್ಯಾಪಿಸಿಕೊಂಡು ಬರುತ್ತಿರಲು, ಅರ್ಜುನನ ಕಣ್ಣಿಗೆ ಆಶ್ಚರ್ಯವಾಗುವಂತೆ ಶೋಭಿಸುತ್ತಿದ್ದವು.
 • (ಪದ್ಯ-೭)

ಪದ್ಯ :-:೮:[ಸಂಪಾದಿಸಿ]

ಮೇರುಗಿರಿಯಂ ಜರೆವ ಕಾಂಚನದ ಗೋಪುರಂ | ತೋರಮೊಲೆ ರಾಜಮಾರ್ಗಂ ಬಾಹುಲತೆ ನೃಪಾ | ಗಾರಂ ಮುಖಾಂಬುಜಂ ಚಿತ್ರಿತಪತಾಕೆಗಳ್ ಚಲಿಸುವಳಕಾವಳಿಗಳು ||
ತೋರಣಂ ಮಣಿಹಾರಮೆಸೆವ ಕೋಟಾವಲಯ | ಮಾರಾಜಿಪಂಬರಂ ಪರಿಖೆ ಮೇಖಲೆ ಗೃಹಸು | ಧಾರೋಚಿ ದರಹಾಸಮಾಗಲಾ ನಗರಿ ಚೆಲ್ವಿನ ನಾರಿಯಂತಿರ್ದುದು ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಮೇರುಗಿರಿಯಂ ಜರೆವ ಕಾಂಚನದ ಗೋಪುರಂ ತೋರಮೊಲೆ,=[ನಗರವು ನಾರಿಯನ್ನು ಹೋಲುವುದು, ಹೇಗೆಂದರೆ; ಮೇರುಗಿರಿಯನನು ಮೀರಿಸುವ ಕಾಂಚನದ ಗೋಪುರಗಳೇ ದಪ್ಪಮೊಲೆಗಳು,] ರಾಜಮಾರ್ಗಂ ಬಾಹುಲತೆ, ನೃಪಾಗಾರಂ ಮುಖಾಂಬುಜಂ, ಚಿತ್ರಿತಪತಾಕೆಗಳ್ ಚಲಿಸುವಳಕಾವಳಿಗಳು,=[ರಾಜಮಾರ್ಗವು ಬಳ್ಳಿಯಂತಿರುವ ಬಾಹುಗಳು, ಅರಮನೆ ಮುಖ ಕಮಲ,, ಚಿತ್ರಿತ ಪತಾಕೆಗಳು ಚಲಿಸುವ ಮುಂಗುರುಳುಗಳು,]; ತೋರಣಂ ಮಣಿಹಾರಂಗಳು ಎಸೆವ ಕೋಟಾವಲಯಂ ಆರಾಜಿಪ ಅಂಬರಂ, ಪರಿಖೆ ಮೇಖಲೆ, ಗೃಹಸುಧಾರೋಚಿ (ಮನೆಯ ಬಳಿದ ಬಿಳಿಬಣ್ಣ) ದರಹಾಸಂ ಆಗಲಾ ನಗರಿ ಚೆಲ್ವಿನ ನಾರಿಯಂತಿರ್ದುದು=[ತೋರಣಗಳು ಮಣಿಹಾರಗಳು, ಶೋಭಾಯಮಾನವಾದ ನಗರವನ್ನು ಸುತ್ತಿಕೊಂಡಿರುವ ಕೋಟೆಯ ಪ್ರಾಕಾರವುವು ಚಂದದ ಉಟ್ಟ ಬಟ್ಟೆ, ತೋಡಿದ ಅಗಳವೇ ಮೇಖಲೆ /ಒಡ್ಯಾಣ ಅಥವಾ ಡಾಬು,, ಮನೆಗೆ ಬಳಿದ ಬಿಳಿಸುಣ್ಣ ಮುಗುಳುನಗೆಯು, ಆಗಿರಲು ಆ ನಗರವು ಚೆಲುವಿನ ನಾರಿಯಂತೆ ಇತ್ತು!]
 • ತಾತ್ಪರ್ಯ:ನಗರವು ನಾರಿಯನ್ನು ಹೋಲುವುದು, ಹೇಗೆಂದರೆ; ಮೇರುಗಿರಿಯನನು ಮೀರಿಸುವ ಕಾಂಚನದ ಗೋಪುರಗಳೇ ದಪ್ಪಮೊಲೆಗಳು, ರಾಜಮಾರ್ಗವು ಬಳ್ಳಿಯಂತಿರುವ ಬಾಹುಗಳು, ಅರಮನೆ ಮುಖ ಕಮಲ,, ಚಿತ್ರಿತ ಪತಾಕೆಗಳು ಚಲಿಸುವ ಮುಂಗುರುಳುಗಳು, ತೋರಣಗಳು ಮಣಿಹಾರಗಳು, ಶೋಭಾಯಮಾನವಾದ ನಗರವನ್ನು ಸುತ್ತಿಕೊಂಡಿರುವ ಕೋಟೆಯ ಪ್ರಾಕಾರವುವು ಚಂದದ ಉಟ್ಟ ಬಟ್ಟೆ, ತೋಡಿದ ಅಗಳವೇ ಮೇಖಲೆ /ಒಡ್ಯಾಣ ಅಥವಾ ಡಾಬು,, ಮನೆಗೆ ಬಳಿದ ಬಿಳಿಸುಣ್ಣ ಮುಗುಳುನಗೆಯು, ಆಗಿರಲು ಆ ನಗರವು ಚೆಲುವಿನ ನಾರಿಯಂತೆ ಇತ್ತು!
 • (ಪದ್ಯ-೮)

ಪದ್ಯ :-:೯:[ಸಂಪಾದಿಸಿ]

ಕೋಟೆಗಾವಲ ಭಟರ ವಿವಿಧಾಯುಧಂಗಳ ಕ | ವಾಟರಕ್ಷೆಯ ಬಲದ ಸನ್ನಾಹಸಾಧನದ | ಕೂಟದತಿಭೀಕರದ ದುರ್ಗದಭಿಮಾನದೇವತೆ ಸಕಲಭೂವಲಯಕೆ ||
ಮೀಟೆನಿಸುವಾತನೀ ಪೊಳಲಾಣ್ಮನೋರ್ವನೆ ಸ | ಘಾಟಿಕೆಯೊಳೆಂದು ಬೆರಳೆತ್ತಿ ತೋರಿಸುವಂತೆ | ನೋಟಕರ ಕಣ್ಗೆ ಕಾಣಿಸಿದುವೆಣ್ದೆಸೆಯ ಡೆಂಕಣಿಯ ಪಳವಿಗೆಗಯ್ಗಳು ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕೋಟೆಗಾವಲ ಭಟರ ವಿವಿಧಾಯುಧಂಗಳ ಕವಾಟರಕ್ಷೆಯ ಬಲದ ಸನ್ನಾಹಸಾಧನದ=[ಕೋಟೆಯ ಕಾವಲಿನ ಭಟರ ವಿವಿಧ ಆಯುಧಗಳ ದ್ವಾರರಕ್ಷೆಯ ಸೈನ್ಯದ ಸಿದ್ಧತೆಯ ಸಾಧನಗಳ]; ಕೂಟದ ಅತಿಭೀಕರದ ದುರ್ಗದ ಅಭಿಮಾನ ದೇವತೆ ಸಕಲ ಭೂವಲಯಕೆ ಮೀಟೆನಿಸುವ ಆತನು ಈ ಪೊಳಲ ಆಣ್ಮನು ಓರ್ವನೆ ಸಘಾಟಿಕೆಯೊಳೆಂದು ಬೆರಳೆತ್ತಿ ತೋರಿಸುವಂತೆ ನೋಟಕರ ಕಣ್ಗೆ ಕಾಣಿಸಿದುವು ಎಣ್ದೆಸೆಯ ಡೆಂಕಣಿಯ ಪಳವಿಗೆಗಯ್ಗಳು=[ಸಮೂಹದ ಅತಿಭೀಕರವಾದ ದುರ್ಗದ ಅಭಿಮಾನ ದೇವತೆ ಸಕಲ ಭೂಪ್ರದೇಶಕ್ಕೆ ಉತ್ತಮನು ಎನಿಸಿಕೊಳ್ಳುವ ಆತನು ಈ ನಗರದ ದೊರೆಯು ಒಬ್ಬನೇ ಘನತೆಯಿಂದ ಇರುವನೆಂದು ಬೆರಳೆತ್ತಿ ತೋರಿಸುವಂತೆ ಎಂಟುದಿಕ್ಕಿನ ಧ್ವಜಸ್ತಂಬದ ಹಲಿಗೆಗಳು ನೋಡುವವರ ಕಣ್ಣಿಗೆ ಕಾಣಿಸಿದುವು.]
 • ತಾತ್ಪರ್ಯ: ಕೋಟೆಯ ಕಾವಲಿನ ಭಟರ ವಿವಿಧ ಆಯುಧಗಳ ದ್ವಾರರಕ್ಷೆಯ ಸೈನ್ಯದ ಸಿದ್ಧತೆಯ ಸಾಧನಗಳ ಸಮೂಹದ ಅತಿಭೀಕರವಾದ ದುರ್ಗದ ಅಭಿಮಾನ ದೇವತೆಯೂ ಮತ್ತು ಸಕಲ ಭೂಪ್ರದೇಶಕ್ಕೆ ಉತ್ತಮನು ಎನಿಸಿಕೊಳ್ಳುವ ಆತನು ಈ ನಗರದ ದೊರೆಯು ಒಬ್ಬನೇ ಘನತೆಯಿಂದ ಇರುವನೆಂದು ಬೆರಳೆತ್ತಿ ತೋರಿಸುವಂತೆ ಎಂಟುದಿಕ್ಕಿನ ಧ್ವಜಸ್ತಂಬದ ಹಲಿಗೆಗಳು ನೋಡುವವರ ಕಣ್ಣಿಗೆ ಕಾಣಿಸಿದುವು.]
 • (ಪದ್ಯ-೯)

ಪದ್ಯ :-:೧೦:[ಸಂಪಾದಿಸಿ]

ತಂಡತಂಡದೊಳಾ ಪೊಳಲ ಪುಗುವ ಪೊರೆಮಡುವ | ಶುಂಡಾಲ ವಾಜಿಗಳ ಪುರಜನದ ಪರಿಜನದ | ಮಂಡಲಾಧಿಪರನಿಪ ಹಂಸಧ್ವಜಾತಿ ಭೂಭುಜರನುದಿನಂ ತಪ್ಪದೆ ||
ಕೊಂಡುಬಂದೀವ ಕಟ್ಟಳೆಯ ಕಪ್ಪದ ಪೊನ್ನ | ಬಂಡಿಗಳ ಸಾಸಿರದ ಸಂದಣಿಯ ಕಾಣಬಹ | ಕಂಡು ಮರಳುವ ಮನ್ನೆಯರ ಮಹಾವಿಭವಂಗಳೆಸೆದುವಾ ಪುರದ ಪೊರೆಗೆ ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ತಂಡತಂಡದೊಳು ಆ ಪೊಳಲ ಪುಗುವ ಪೊರೆಮಡುವ ಶುಂಡಾಲ ವಾಜಿಗಳ ಪುರಜನದ ಪರಿಜನದ ಮಂಡಲಾಧಿಪರನಿಪ ಹಂಸಧ್ವಜಾತಿ ಭೂಭುಜರನುದಿನಂ=[ತಂಡತಂಡವಾಗಿ ಆ ನಗರಕ್ಕೆ ಪ್ರವೇಶಿಸುವ ಹೊರ ಹೊರಡುವ, ಆನೆ ಕುದುರೆ, ಪುರಜನ, ಪರಿವಾರದ ಜನ, ಮಂಡಲಾಧಿಪರಾದ ಹಂಸಧ್ವಜ ಮೊದಲಾದ ರಾಜರು ಅನುದಿನವೂ]; ತಪ್ಪದೆ ಕೊಂಡುಬಂದು ಈವ ಕಟ್ಟಳೆಯ ಕಪ್ಪದ ಪೊನ್ನ ಬಂಡಿಗಳ ಸಾಸಿರದ ಸಂದಣಿಯ ಕಾಣಬಹ ಕಂಡು ಮರಳುವ ಮನ್ನೆಯರ ಮಹಾವಿಭವಂಗಳು ಎಸೆದುವ ಆ ಪುರದ ಪೊರೆಗೆ=[ತಪ್ಪದೆ ತೆಗೆದುಕೊಂಡುಬಂದು ಕೊಡುವ ಕಟ್ಟಳೆಯ /ನಿಯಮದ ಕಪ್ಪದ ಹೊನ್ನು ಬಂಡಿಗಳು ಸಾವಿರದ ಸಮೂಹವನ್ನೂ, ದೊರೆಯನ್ನು ಕಾಣಲುಬರುವ, ಕಂಡು ಮರಳುವ ಮಾನವಂತರ ಮಹಾವೈಭವಗಳು ಆ ಪುರದ ಹೊರೆಗೆ ಶೋಭಿಸಿದವು].
 • ತಾತ್ಪರ್ಯ:ತಂಡತಂಡವಾಗಿ ಆ ನಗರಕ್ಕೆ ಪ್ರವೇಶಿಸುವ ಹೊರ ಹೊರಡುವ, ಆನೆ ಕುದುರೆ, ಪುರಜನ, ಪರಿವಾರದ ಜನ, ಮಂಡಲಾಧಿಪರಾದ ಹಂಸಧ್ವಜ ಮೊದಲಾದ ರಾಜರು ಅನುದಿನವೂ ತಪ್ಪದೆ ತೆಗೆದುಕೊಂಡುಬಂದು ಕೊಡುವ ಕಟ್ಟಳೆಯ /ನಿಯಮದ ಕಪ್ಪದ ಹೊನ್ನು ಬಂಡಿಗಳು ಸಾವಿರದ ಸಮೂಹವನ್ನೂ, ದೊರೆಯನ್ನು ಕಾಣಲುಬರುವ, ಕಂಡು ಮರಳುವ ಮಾನವಂತರ ಮಹಾವೈಭವಗಳು ಆ ಪುರದ ಹೊರೆಗೆ ಶೋಭಿಸಿದವು.
 • (ಪದ್ಯ-೧೦)

ಪದ್ಯ :-:೧೧:[ಸಂಪಾದಿಸಿ]

ನೆಟ್ಟನೆ ಹಯಂ ಪೋಗಿ ವಹಿಲದಿಂ ಪೊಕ್ಕುದಾ | ಪಟ್ಟಣವನದರೊಡನೆ ನಡೆತಂದು ಪಾಳೆಯಂ | ಬಿಟ್ಟುದು ಪುರೋದ್ಯಾನವೀಧಿಗಳೊಳರ್ಜುನಂ ನಗರಮಂ ನೋಡಿ ನಗುತ ||
ಕಟ್ಟೆಸಕದಿಂದೆ ಕಂಗೊಳಿಸುತಿದೆ ಪೊಳಲಿದಂ | ಮುಟ್ಟಿ ಪಾಲಿಪ ವೀರನಾರವಂ ಕುದುರೆಯಂ | ಕಟ್ಟುವನೆ ಪೇಳೆಂದು ಹಂಸಧ್ವಜಕ್ಷಿತಿಪನಂ ಕೇಳ್ದೊಡಿಂತೆಂದನು ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ನೆಟ್ಟನೆ ಹಯಂ ಪೋಗಿ ವಹಿಲದಿಂ ಪೊಕ್ಕುದಾ ಪಟ್ಟಣವನು=[ ಕುದುರೆಯು ನೇರವಾಗಿ ವೇಗದಿಂದ ಹೋಗಿ ಆ ಪಟ್ಟಣವನ್ನು ಹೊಕ್ಕಿತು.]; ಅದರೊಡನೆ ನಡೆತಂದು ಪಾಳೆಯಂ ಬಿಟ್ಟುದು ಪುರೋದ್ಯಾನವೀಧಿಗಳೊಳರ್ಜುನಂ ನಗರಮಂ ನೋಡಿ ನಗುತ=[ಅದರೊಡನೆ ಬಂದು ಅರ್ಜುನನ ಸೈನ್ಯ ಅಲ್ಲಿ ಪಾಳೆಯವನ್ನು ಹಾಕಿತು; ಪುರ ಉದ್ಯಾನ ಬೀದಿಗಳುಳ್ಳ ನಗರವನ್ನು ನೋಡಿ ಅರ್ಜುನನು ನಗುತ್ತಾ ]; ಕಟ್ಟೆಸಕದಿಂದೆ ಕಂಗೊಳಿಸುತಿದೆ ಪೊಳಲಿದಂ ಮುಟ್ಟಿ ಪಾಲಿಸ ವೀರನಾರವಂ ಕುದುರೆಯಂ ಕಟ್ಟುವನೆ ಪೇಳೆಂದು ಹಂಸಧ್ವಜಕ್ಷಿತಿಪನಂ ಕೇಳ್ದೊಡಿಂತೆಂದನು=[ಕಟ್ಟುನಿಟ್ಟಾದ ಕ್ರಮದಿಂದ ನಗರವು ಕಂಗೊಳಿಸುತ್ತಿದೆ; ಇದನ್ನು ಮನಮುಟ್ಟಿ ಪಾಲಿಸುವ ಆ ವೀರನಾರು? ಕುದುರೆಯನ್ನು ಕಟ್ಟುವನೆ ಹೇಳೆಂದು ಹಂಸಧ್ವಜ ರಾಜನನ್ನು ಕೇಳಿದಾಗ, ಅವನು ಈ ರೀತಿ ಹೇಳಿದನು.]
 • ತಾತ್ಪರ್ಯ:ಕುದುರೆಯು ನೇರವಾಗಿ ವೇಗದಿಂದ ಹೋಗಿ ಆ ಪಟ್ಟಣವನ್ನು ಹೊಕ್ಕಿತು. ಅದರೊಡನೆ ಬಂದು ಅರ್ಜುನನ ಸೈನ್ಯ ಅಲ್ಲಿ ಪಾಳೆಯವನ್ನು ಹಾಕಿತು; ಪುರ ಉದ್ಯಾನ ಬೀದಿಗಳುಳ್ಳ ನಗರವನ್ನು ನೋಡಿ ಅರ್ಜುನನು ನಗುತ್ತಾ, ಕಟ್ಟುನಿಟ್ಟಾದ ಕ್ರಮದಿಂದ ನಗರವು ಕಂಗೊಳಿಸುತ್ತಿದೆ; ಇದನ್ನು ಮನಮುಟ್ಟಿ ಪಾಲಿಸುವ ಆ ವೀರನಾರು? ಕುದುರೆಯನ್ನು ಕಟ್ಟುವನೆ ಹೇಳೆಂದು ಹಂಸಧ್ವಜ ರಾಜನನ್ನು ಕೇಳಿದಾಗ, ಅವನು ಈ ರೀತಿ ಹೇಳಿದನು.
 • (ಪದ್ಯ-೧೦)

ಪದ್ಯ :-:೧೧:[ಸಂಪಾದಿಸಿ]

ನೀನರಿದುದಿಲ್ಲಲಾ ಪಾರ್ಥ ಮಣಿಪುರಮೆಂಬ | ರೀನಗರಮಂ ಬಭ್ರುವಾಹನಂ ಪ್ರಖ್ಯಾತ | ಭೂನಾಥನಿಲ್ಲಿಗರಸವನಿಪರೊಳಗ್ಗಳೆಯನಿವನ ಸಿದ್ಧಾಯಕಾಗಿ ||
ಏನೆಂಬೆನೊಂದು ಸಾಸಿರ ಬಂಡಿ ಕನಕಮಂ | ನ್ಯೂನಮಿಲ್ಲದೆ ತೆತ್ತು ಬಹೆವು ನಾವೆಲ್ಲರುಂ | ಹೀನಮಾದೊಡೆ ದಂಡಿಸುವನೆಂಬ ಭೀತಿಯಿಂ ಪ್ರತಿದಿನದೊಳಂ ತಪ್ಪದೆ ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ನೀನು ಅರಿದುದು ಇಲ್ಲಲಾ ಪಾರ್ಥ ಮಣಿಪುರಮೆಂಬರು ಈ ನಗರಮಂ=[ನೀನು ತಿಳಿದಿಲ್ಲವೇ ಪಾರ್ಥ? ಈ ನಗರವನ್ನು ಮಣಿಪುರವೆನ್ನುವರು.]; ಬಭ್ರುವಾಹನಂ ಪ್ರಖ್ಯಾತ ಭೂನಾಥನು ಇಲ್ಲಿಗೆ ಅರಸ ಅವನಿಪರೊಳು ಅಗ್ಗಳೆಯನು=[ಇಲ್ಲಿಗೆ ಬಭ್ರುವಾಹನನು ಪ್ರಖ್ಯಾತ ರಾಜನು. ಈ ಅರಸ ರಾಜರಲ್ಲಿ ಪ್ರತಾಪವುಳ್ಳವನು]; ಇವನ ಸಿದ್ಧ ಆಯಕಾಗಿ ಏನೆಂಬೆನು ಒಂದು ಸಾಸಿರ ಬಂಡಿ ಕನಕಮಂ ನ್ಯೂನಂ ಇಲ್ಲದೆ ತೆತ್ತು ಬಹೆವು ನಾವೆಲ್ಲರುಂ=[ಏನು ಹೇಳಲಿ, ಇವನ ಸಿದ್ಧ ಆದಾಯಕ್ಕಾಗಿ, ಕಪ್ಪವಾಗಿ,ಒಂದು ಸಾವಿರ ಬಂಡಿ ಚಿನ್ನವನ್ನು ಕಡಿಮೆಯಾಗದಂತೆ ನಾವೆಲ್ಲರೂ ಸಲ್ಲಿಸಿ ಬರುತ್ತೇವೆ]; ಹೀನಮಾದೊಡೆ ದಂಡಿಸುವನೆಂಬ ಭೀತಿಯಿಂ ಪ್ರತಿದಿನದೊಳಂ ತಪ್ಪದೆ=[ಕಡಿಮೆಯಾದರೆ, ಶಿಕ್ಷಿಸುವನೆಂಬ ಭಯದಿಂದ ಪ್ರತಿದಿನವೂ ತಪ್ಪದೆ ಕೊಡುವೆವು].
 • ತಾತ್ಪರ್ಯ:ನೀನು ತಿಳಿದಿಲ್ಲವೇ ಪಾರ್ಥ? ಈ ನಗರವನ್ನು ಮಣಿಪುರವೆನ್ನುವರು. ಇಲ್ಲಿಗೆ ಬಭ್ರುವಾಹನನು ಪ್ರಖ್ಯಾತ ರಾಜನು. ಈ ಅರಸ ರಾಜರಲ್ಲಿ ಪ್ರತಾಪವುಳ್ಳವನು; ಏನು ಹೇಳಲಿ, ಇವನ ಸಿದ್ಧ ಆದಾಯಕ್ಕಾಗಿ, ಕಪ್ಪವಾಗಿ,ಒಂದು ಸಾವಿರ ಬಂಡಿ ಚಿನ್ನವನ್ನು ಕಡಿಮೆಯಾಗದಂತೆ ನಾವೆಲ್ಲರೂ ಸಲ್ಲಿಸಿ ಬರುತ್ತೇವೆ; ಕಡಿಮೆಯಾದರೆ, ಶಿಕ್ಷಿಸುವನೆಂಬ ಭಯದಿಂದ ಪ್ರತಿದಿನವೂ ತಪ್ಪದೆ ಕೊಡುವೆವು.
 • (ಪದ್ಯ-೧೦)xxiiiv

ಪದ್ಯ :-:೧೩:[ಸಂಪಾದಿಸಿ]

ಈತಂಗೆ ಸಚಿವಂ ಸುಬುದ್ಧಿಯೆಂಬವನೋರ್ವ | ನಾತನೇ ಪಾಲಿಸುವನಿವನ ಭೂತಳಮಂ ನಿ | ಜಾತಿಶಯ ಧರ್ಮದಿಂದೆಳ್ಳನಿತು ದೋಷಮಿಲ್ಲದೆ ಸಾವಧಾನನಾಗಿ ||
ನೀತಿಪಥಮಂ ಬಿಡದೆ ವಿವಿಧವರ್ಣಾಶ್ರಮದ | ಜಾತಿಭೇದವನರಿದು ಸಂತತಂ ಪ್ರಜೆಗಳಂ | ಪ್ರೀತಿಯಂ ಪೊರೆದು ಪರಿಜನಕೆ ಪದುಳಿಗನಾಗಿ ಭೂಪನಂ ಪೋಷಿಸುವನು ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಈತಂಗೆ ಸಚಿವಂ ಸುಬುದ್ಧಿಯೆಂಬವನು ಓರ್ವನು ಆತನೇ ಪಾಲಿಸುವನು ಇವನ ಭೂತಳಮಂ ನಿಜಾತಿಶಯ ಧರ್ಮದಿಂದ ಎಳ್ಳನಿತು ದೋಷಮಿಲ್ಲದೆ=[ಈತನಿಗೆ ಸಚಿವನು ಸುಬುದ್ಧಿಯೆಂಬವನು ಒಬ್ಬನು ಇರುವನು;, ಆತನೇ ಇವನ ರಾಜ್ಯವನ್ನು ನಿಜವಾದ ಅತಿಶಯ ಧರ್ಮದಿಂದ ಸ್ವಲ್ಪವೂ ದೋಷವಿಲ್ಲದೆ ಪಾಲಿಸುವನು]; ಸಾವಧಾನನಾಗಿ ನೀತಿಪಥಮಂ ಬಿಡದೆ ವಿವಿಧವರ್ಣಾಶ್ರಮದ ಜಾತಿಭೇದವನು ಅರಿದು ಸಂತತಂ ಪ್ರಜೆಗಳಂ ಪ್ರೀತಿಯಂ ಪೊರೆದು ಪರಿಜನಕೆ ಪದುಳಿಗನಾಗಿ ಭೂಪನಂ ಪೋಷಿಸುವನು=[ಎಚ್ಚರಿಕೆಯಿಂದ ನೀತಿಮಾರ್ಗವನ್ನು ಬಿಡದೆ ವಿವಿಧ ವರ್ಣಾಶ್ರಮದ ಜಾತಿಭೇದದ ಪದ್ದತಿಗಳನ್ನು ತಿಳಿದುಕೊಂಡು ಸತತವಾಗಿ ಪ್ರಜೆಗಳನ್ನು ಪ್ರೀತಿಯಿಂದ ಸಲಹಿ ಪರಿವಾರದ ಜನರಿಗೆ ಹಿತಚಿಂತಕನಾಗಿನಾ ಬಬ್ರುವಾಹನ ಸೇವೆಮಾಡುವನು].
 • ತಾತ್ಪರ್ಯ:ಈತನಿಗೆ ಸಚಿವನು ಸುಬುದ್ಧಿಯೆಂಬವನು ಒಬ್ಬನು ಇರುವನು;, ಆತನೇ ಇವನ ರಾಜ್ಯವನ್ನು ನಿಜವಾದ ಅತಿಶಯ ಧರ್ಮದಿಂದ ಸ್ವಲ್ಪವೂ ದೋಷವಿಲ್ಲದೆ ಪಾಲಿಸುವನು. ಎಚ್ಚರಿಕೆಯಿಂದ ನೀತಿಮಾರ್ಗವನ್ನು ಬಿಡದೆ ವಿವಿಧ ವರ್ಣಾಶ್ರಮದ ಜಾತಿಭೇದದ ಪದ್ದತಿಗಳನ್ನು ತಿಳಿದುಕೊಂಡು ಸತತವಾಗಿ ಪ್ರಜೆಗಳನ್ನು ಪ್ರೀತಿಯಿಂದ ಸಲಹಿ ಪರಿವಾರದ ಜನರಿಗೆ ಹಿತಚಿಂತಕನಾಗಿನಾ ಬಬ್ರುವಾಹನ ಸೇವೆಮಾಡುವನು].
 • (ಪದ್ಯ-೧೩)

ಪದ್ಯ :-:೧೪:[ಸಂಪಾದಿಸಿ]

ಒಂದು ಕೊಡಕೆಯ ಕಪ್ಪಿನಿಂದೆಸೆವ ತೇಜಿಗಳ್ | ಕುಂದೇಂದುಧವಳಾಂಗದಾನೆಗಳ್ ಮಣಿಮಯದ | ಪೊಂದೇರ್ಗಳಿನಿತೆಂದರಿಯರಿವನ ಕರಣಿಕರ್ ಮಿಕ್ಕ ರಥ ಕರಿ ಘಟೆಗಳ ||
ಮಂದಿ ಕುದುರೆಯ ಪವಣನರಿವರಾರ್ ಭೂಪಾಲ | ವೃಂದದೊಳ್ ಪಡಿಯುಂಟೆ ಭಭ್ರುವಾಹಂಗೆ ಕಡು | ಪೊಂದಿದತಿಶಯವೀರನೀ ತುರಗಮಂ ಕಟ್ಟದಿರ್ದಪನೆ ಪೇಳೆಂದನು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಒಂದು ಕೊಡಕೆಯ ಕಪ್ಪಿನಿಂದ ಎಸೆವ ತೇಜಿಗಳ್ ಕುಂದ (ಮಲ್ಲಿಗೆ) ಇಂದು ಧವಳಾಂಗದ ಆನೆಗಳ್ ಮಣಿಮಯದ ಪೊಂದೇರ್ಗಳು ಇನಿತು ಎಂದರಿಯರು=[ಒಂದು ಕಿವಿಯ ಕಪ್ಪು ಬಣ್ಣದಿಂದ ಶೋಭಿಸುವ ಕುದುರೆಗಳ, ಮಲ್ಲಿಗೆ ಮತ್ತು ಚಂದ್ರನಂತೆ ಬಿಳಿಯ ದೇಹದ ಆನೆಗಳು ಮಣಿಮಯದ ಚಿನ್ನದ ರಥಗಳು ಇಷ್ಟು ಇದೆ ಎಂದು ತಿಳಿಯರು]; ಅವನ ಕರಣಿಕರ್ (ಲೆಕ್ಕಬರೆಯುವವರು)ಮಿಕ್ಕ ರಥ ಕರಿ ಘಟೆಗಳ ಮಂದಿ ಕುದುರೆಯ ಪವಣನು ಅರಿವರಾರ್ ಭೂಪಾಲ ವೃಂದದೊಳ್ ಪಡಿಯುಂಟೆ ಭಭ್ರುವಾಹಂಗೆ=[ಅವನ ಕರಣಿಕರು ಹೆಚ್ಚನ ರಥ ಆನೆಗಳ, ಮಂದಿಯ ಕುದುರೆಯ ಉಳಿದ ರಥ ಆನೆಗಳ ಹಿಂಡು, ಕುದುರೆಯ ಸ್ಥತಿಯನ್ನು ಅರಿಯುವವರು ಯಾರು! ಲೆಕ್ಕವಿಲ್ಲದಷ್ಟಿವೆ! ರಾಜರ ಸಮೂಹದಲ್ಲಿ ಪ್ರತಿಯುಂಟೆ ಭಭ್ರುವಾಹನನಿಗೆ! ]; ಕಡು ಪೊಂದಿದ ಅತಿಶಯ ವೀರನೀ ತುರಗಮಂ ಕಟ್ಟದೆ ಇರ್ದಪನೆ ಪೇಳು ಎಂದನು=[ಅವನು ಬಹಳ ಶಕ್ತಿಯನ್ನು ಹೊಂದಿದ ಅತಿಶಯ ವೀರನು. ಈ ಕುದುರೆಯನ್ನು ಕಟ್ಟದೆ ಇರುವನೇ? ಹೇಳು ಎಂದನು ];
 • ತಾತ್ಪರ್ಯ:ಒಂದು ಕಿವಿಯ ಕಪ್ಪು ಬಣ್ಣದಿಂದ ಶೋಭಿಸುವ ಕುದುರೆಗಳ, ಮಲ್ಲಿಗೆ ಮತ್ತು ಚಂದ್ರನಂತೆ ಬಿಳಿಯ ದೇಹದ ಆನೆಗಳು ಮಣಿಮಯದ ಚಿನ್ನದ ರಥಗಳು ಇಷ್ಟು ಇದೆ ಎಂದು ತಿಳಿಯರು ಅವನ ಕರಣಿಕರು; ಹೆಚ್ಚನ ರಥ ಆನೆಗಳ, ಮಂದಿಯ ಕುದುರೆಯ ಉಳಿದ ರಥ ಆನೆಗಳ ಹಿಂಡು, ಕುದುರೆಯ ಸ್ಥತಿಯನ್ನು ಅರಿಯುವವರು ಯಾರು! ಲೆಕ್ಕವಿಲ್ಲದಷ್ಟಿವೆ! ರಾಜರ ಸಮೂಹದಲ್ಲಿ ಪ್ರತಿಯುಂಟೆ ಭಭ್ರುವಾಹನನಿಗೆ! ಅವನು ಬಹಳ ಶಕ್ತಿಯನ್ನು ಹೊಂದಿದ ಅತಿಶಯ ವೀರನು. ಈ ಕುದುರೆಯನ್ನು ಕಟ್ಟದೆ ಇರುವನೇ? ಹೇಳು ಎಂದನು ];
 • (ಪದ್ಯ-೧೪)

ಪದ್ಯ :-:೧೫:[ಸಂಪಾದಿಸಿ]

ಈ ಪುರದೊಳಿರ್ಪಮಾನವರೆಲ್ಲರುಂ ಸದಾ | ಶ್ರೀಪತಿಯ ಭಜನೆಯಲ್ಲದೆ ಪೆರತರಿಯರತಿದ | ಯಾಪರರ್ ವೇದಾರ್ಥಕೋವಿದರ್ ಸತ್ಯವೃತಾಚಾರಸಂಪನ್ನರು ||
ಕೋಪವರ್ಜಿತರಹಿಂಸಾಮತಿಗಳಾತ್ಮಸ್ವ | ರೂಪಜ್ಞರತಿಬಲರ್ ದಾನಿಗಳ್ ಶುಚಿಗಳ್ ಪ್ರ | ತಾಪಿಗಳ್ ವೀರರ್ಕಳತಿನಿಪುಣರನಸೂಯರಸ್ತ್ರಶಸ್ತ್ರಪ್ರೌಢರು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಈ ಪುರದೊಳು ಇರ್ಪ ಮಾನವರು ಎಲ್ಲರುಂ ಸದಾ ಶ್ರೀಪತಿಯ ಭಜನೆಯಲ್ಲದೆ ಪೆರತರಿಯರು ಅತಿದಯಾಪರರ್ ವೇದಾರ್ಥ ಕೋವಿದರ್ ಸತ್ಯವೃತಾಚಾರ ಸಂಪನ್ನರು=[ಈ ನಗರದಲ್ಲಿ ಇರುವ ಮಾನವರು ಎಲ್ಲರೂ ಸದಾ ಶ್ರೀಪತಿಯ ಭಜನೆಯಲ್ಲದೆ ಬೇರೆ ತೀಳಿಯರು. ಅತಿ ದಯಾಪರರು ವೇದಾರ್ಥ ತಿಳಿದರು ಸತ್ಯವೃತಾಚಾರ ಸಂಪನ್ನರು]; ಕೋಪವರ್ಜಿತರು ಅಹಿಂಸಾಮತಿಗಳು ಆತ್ಮಸ್ವರೂಪಜ್ಞರು ಅತಿಬಲರ್ ದಾನಿಗಳ್ ಶುಚಿಗಳ್ ಪ್ರತಾಪಿಗಳ್ ವೀರರ್ಕಳು ಅತಿನಿಪುಣರು ಅನಸೂಯರು ಅಸ್ತ್ರಶಸ್ತ್ರಪ್ರೌಢರು=[ಕೋಪಬಿಟ್ಟವರು / ಶಾಂತರು, ಅಹಿಂಸಾಮತಿಗಳು ಆತ್ಮಸ್ವರೂಪ ತಿಳಿದವರು, ಅತಿಬಲಶಾಲಿಗಳು, ದಾನಿಗಳು, ಶುಚಿವಂತರು, ಪ್ರತಾಪಿಗಳು ವೀರರು, ಅತಿನಿಪುಣರು, ಅನಸೂಯಾಪರರು ಅಸ್ತ್ರಶಸ್ತ್ರದಲ್ಲಿ ಜಾಣರು ].
 • ತಾತ್ಪರ್ಯ:ಈ ನಗರದಲ್ಲಿ ಇರುವ ಮಾನವರು ಎಲ್ಲರೂ ಸದಾ ಶ್ರೀಪತಿಯ ಭಜನೆಯಲ್ಲದೆ ಬೇರೆ ತೀಳಿಯರು. ಅತಿ ದಯಾಪರರು ವೇದಾರ್ಥ ತಿಳಿದರು ಸತ್ಯವೃತಾಚಾರ ಸಂಪನ್ನರು; ಕೋಪಬಿಟ್ಟವರು / ಶಾಂತರು, ಅಹಿಂಸಾಮತಿಗಳು ಆತ್ಮಸ್ವರೂಪ ತಿಳಿದವರು, ಅತಿಬಲಶಾಲಿಗಳು, ದಾನಿಗಳು, ಶುಚಿವಂತರು, ಪ್ರತಾಪಿಗಳು ವೀರರು, ಅತಿನಿಪುಣರು, ಅನಸೂಯಾಪರರು ಅಸ್ತ್ರಶಸ್ತ್ರದಲ್ಲಿ ಜಾಣರು.
 • (ಪದ್ಯ-೧೫)

ಪದ್ಯ :-:೧೬:[ಸಂಪಾದಿಸಿ]

ಯೋಗಿಜನದಂತೆ ಮುಕ್ತಾಹಾರದಿಂ ಪೂಜ್ಯ | ಮಾಗಿಹುದು ಪಾತಾಳನಿಳಯದಂತಾವಗಂ | ಭೋಗಿಪವಿಲಾಸಮಂ ತಳೆದಿಹುದು ಸಂತತಂ ಗಾಂಧರ್ವಶಾಸ್ತ್ರದಂತೆ ||
ರಾಗಾನುಬಂಧ ಮೋಹನ ಮಧುರತಾಲಂಬ | ಮಾಗಿಹುದು ಪಾರ್ಥ ಕೇಳೀಪುರದ ಸಕಲ ನಾ | ರೀಗಣಂ ಮೇಣಂತುಮಲ್ಲದೆ ಪತಿವ್ರತಾಶೀಲಮಂ ತಾಳ್ದೆಸೆವುದು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಯೋಗಿ ಜನದಂತೆ ಮುಕ್ತಾಹಾರದಿಂ/ಮುಕ್ತ ಆಹಾರದಿಂ ಪೂಜ್ಯಮಾಗಿಹುದು; ಪಾತಾಳನಿಳಯದಂತೆ ಆವಗಂ ಭೋಗಿಪವಿಲಾಸಮಂ ತಳೆದಿಹುದು;=ಇಲ್ಲಿಯ ನಾರಿಯರು, =[ಯೋಗಿಗಳಂತತೆ ಮುಕ್ತ/ಯೋಗ್ಯವಲ್ಲದ ಆಹಾರ ಬಿಟ್ಟು, ಮಿತವಾದ ಆಹಾರದಿಂದ ಮತ್ತು ಮುತ್ತಿನಹಾರ ಧರಿಸಿಪೂಜ್ಯವಾಗಿರುವರು, ; ಪಾತಾಳನಿಲಯದಂತೆ ಯಾವಾಗಲೂ ಅಲ್ಲಿಯ ಹಾವುಗಳ ಭೋಗಿಸುವ ವಿಲಾಸವನ್ನೂ ಹೊಂದಿರುವರು;]; ಸಂತತಂ ಗಾಂಧರ್ವಶಾಸ್ತ್ರದಂತೆ ರಾಗಾನುಬಂಧ ಮೋಹನ ಮಧುರತಾ ಆಲಂಬಂ ಆಗಿಹುದು ಪಾರ್ಥ ಕೇಳೀಪುರದ ಸಕಲ ನಾರೀಗಣಂ ಮೇಣ್ ಅಂತುಮಲ್ಲದೆ ಪತಿವ್ರತಾಶೀಲಮಂ ತಾಳ್ದು ಎಸೆವುದು =[ಸತತವಾಗಿ, ಗಾಂಧರ್ವಶಾಸ್ತ್ರದಂತೆ ರಾಗಾನುಬಂಧ ಮೋಹನ ಮಧುರ ತಾಲಗಳಿಂದ ಸಂಗೀತದಿಂದ ಮತ್ತು ರಾಗ/ಪ್ರೀತಿಯಿಯಿಂದ ತುಂಬಿರುವುದು; ಪಾರ್ಥ ಕೇಳು ಈ ಪುರದ ಸಕಲ ನಾರೀ ಸಮೂಹವೂ ಈರೀತಿಯಲ್ಲದೆ ಪತಿವ್ರತಾಶೀಲರಾಗಿ ಇದ್ದು ಶೋಭಿಸುವರು.].
 • ತಾತ್ಪರ್ಯ:ಇಲ್ಲಿಯ ನಾರಿಯರು, [ಯೋಗಿಗಳಂತತೆ ಮುಕ್ತ/ಯೋಗ್ಯವಲ್ಲದ ಆಹಾರ ಬಿಟ್ಟು, ಮಿತವಾದ ಆಹಾರದಿಂದ ಮತ್ತು ಮುತ್ತಿನಹಾರ ಧರಿಸಿಪೂಜ್ಯವಾಗಿರುವರು, ; ಪಾತಾಳನಿಲಯದಂತೆ ಯಾವಾಗಲೂ ಅಲ್ಲಿಯ ಹಾವುಗಳ ಭೋಗಿಸುವ ವಿಲಾಸವನ್ನೂ ಹೊಂದಿರುವರು; ಸತತವಾಗಿ, ಗಾಂಧರ್ವಶಾಸ್ತ್ರದಂತೆ ರಾಗಾನುಬಂಧ ಮೋಹನ ಮಧುರ ತಾಲಗಳಿಂದ ಸಂಗೀತದಿಂದ ಮತ್ತು ರಾಗ/ಪ್ರೀತಿಯಿಯಿಂದ ತುಂಬಿರುವುದು; ಪಾರ್ಥ ಕೇಳು ಈ ಪುರದ ಸಕಲ ನಾರೀ ಸಮೂಹವೂ ಈರೀತಿಯಲ್ಲದೆ ಪತಿವ್ರತಾಶೀಲರಾಗಿ ಇದ್ದು ಶೋಭಿಸುವರು.
 • (ಪದ್ಯ-೧೬)

ಪದ್ಯ :-:೧೭:[ಸಂಪಾದಿಸಿ]

ಇಲ್ಲಿ ಪುರುಷಸ್ತ್ರೀಯರೊರ್ವರುಂ ಪಾತಕಿಗ | ಳಲ್ಲದಿಹ ಕಾರಣಂ ಸಾನ್ನಿಧ್ಯದಿಂ ರಮಾ | ವಲ್ಲಭಂ ಪೊರೆವನೀ ನಗರಮಂ ತನಗಿದೆರಡನೆಯ ವೈಕುಂಠಮೆಂದು ||
ನಿಲ್ಲದೆ ತುರಂಗಮಂ ಪೋಗಿ ಪೊಕ್ಕುದು ಬಿಡಿಸ | ಬಲ್ಲರಂ ಕಾಣೆನಾಂ ಫಲುಗುಣ ಮುರಾಂತಕನ | ಮೆಲ್ಲಡಿಯ ಕರುಣಮೆಂತಿಹುದೆಂದರಿಯೆನೆಂದನಾ ಹಂಸಕೇತು ನೃಪನು ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಇಲ್ಲಿ ಪುರುಷಸ್ತ್ರೀಯರು ಓರ್ವರುಂ ಪಾತಕಿಗಳು ಅಲ್ಲದಿಹ ಕಾರಣಂ ಸಾನ್ನಿಧ್ಯದಿಂ ರಮಾವಲ್ಲಭಂ ಪೊರೆವನು ಈ ನಗರಮಂ ತನಗಿದೆರಡನೆಯ ವೈಕುಂಠಮೆಂದು=[ಇಲ್ಲಿ ಪುರುಷರು ಸ್ತ್ರೀಯರು ಇವರಲ್ಲಿ ಒಬ್ಬರೂ ಪಾತಕಿಗಳು/ ಕೆಟ್ಟಕೆಲಸ ಮಾಡುವವರು ಅಲ್ಲದಿರುವ ಕಾರಣದಿಂದ, ರಮಾವಲ್ಲಭನಾದ ಶ್ರೀಹರಿಯು ತನ್ನ ಸಾನ್ನಿಧ್ಯದಿಂದ ಈ ನಗರವನ್ನು ತನಗೆ ಎರಡನೆಯ ವೈಕುಂಠಮೆಂದು ಕಾಪಾಡುತ್ತಿರುವನು.]; ನಿಲ್ಲದೆ ತುರಂಗಮಂ(ತುರಂಗಮದು) ಪೋಗಿ ಪೊಕ್ಕುದು ಬಿಡಿಸಬಲ್ಲರಂ ಕಾಣೆನು ಆಂ (ನಾನು) ಫಲುಗುಣ ಮುರಾಂತಕನ ಮೆಲ್ಲಡಿಯ ಕರುಣಮ್ ಎಂತಿಹುದೆಂದು ಅರಿಯೆನೆಂದನು ಆ ಹಂಸಕೇತು ನೃಪನು=[ಆ ಕುದುರೆಯು ನಿಲ್ಲದೆ ಹೋಗಿ ಮಗರವನ್ನು ಹೊಕ್ಕಿರುವುದು, ಅದನ್ನು ಬಿಡಿಸಬಲ್ಲವರನ್ನು ಕಾಣೆನು ನಾನು ಫಲ್ಗುಣನೇ; ಕೃಷ್ಣನ ಮೃದುಪಾದದ ಕರುಣೆಯು ಹೇಗಿರುವುದಂದು ತಿಳಿಯದೆಂದನು ಆ ಹಂಸಕೇತು ರಾಜನು].
 • ತಾತ್ಪರ್ಯ:ಇಲ್ಲಿ ಪುರುಷರು ಸ್ತ್ರೀಯರು ಇವರಲ್ಲಿ ಒಬ್ಬರೂ ಪಾತಕಿಗಳು/ ಕೆಟ್ಟಕೆಲಸ ಮಾಡುವವರು ಅಲ್ಲದಿರುವ ಕಾರಣದಿಂದ, ರಮಾವಲ್ಲಭನಾದ ಶ್ರೀಹರಿಯು ತನ್ನ ಸಾನ್ನಿಧ್ಯದಿಂದ ಈ ನಗರವನ್ನು ತನಗೆ ಎರಡನೆಯ ವೈಕುಂಠಮೆಂದು ಕಾಪಾಡುತ್ತಿರುವನು. ಆ ಕುದುರೆಯು ನಿಲ್ಲದೆ ಹೋಗಿ ಈ ನಗರವನ್ನು ಹೊಕ್ಕಿರುವುದು, ಅದನ್ನು ಬಿಡಿಸಬಲ್ಲವರನ್ನು ನಾನು ಕಾಣೆನು ಫಲ್ಗುಣನೇ; ಕೃಷ್ಣನ ಮೃದುಪಾದದ ಕರುಣೆಯು ಹೇಗಿರುವುದಂದು ತಿಳಿಯದೆಂದನು ಆ ಹಂಸಕೇತು ರಾಜನು].
 • (ಪದ್ಯ-೧೭)

ಪದ್ಯ :-:೧೮:[ಸಂಪಾದಿಸಿ]

ಭೂಲೋಲ ಕೇಳ್ ಮರಾಳಧ್ವಜನ ಮಾತನಿಂ | ತಾಲಿಸುವ ಪಾರ್ಥನ ಕಿರೀಟಾಗ್ರದೊಳ್ ಬಂದು | ಕಾಲೂರಿ ನಿಂದಿರ್ದುದೊಂದುಪರ್ದೇನೆಂಬೆನುತ್ಪಾತದದ್ಭುತವನು ||
ನೀಲಧ್ವಜಾದಿ ನೃಪರೆಲ್ಲರುಂ ತಮತಮಗೆ | ಮೇಲಣಪಜಯ ಸೂಚನೆಯಲಾ ನರಂಗಕಟ | ಕಾಲಗತಿಯೆಂತಿಹುದೊ ಶಿವಶಿವಾಯೆನುತೆ ಮನವಳುಕಿ ಚಿಂತಿಸುತಿರ್ದರು ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಭೂಲೋಲ ಕೇಳ್ ಮರಾಳಧ್ವಜನ ಮಾತನಿಂತು ಆಲಿಸುವ ಪಾರ್ಥನ ಕಿರೀಟಾಗ್ರದೊಳ್ ಬಂದು ಕಾಲೂರಿ ನಿಂದಿರ್ದುದು ಒಂದು ಪರ್ದು=[ರಾಜನೇ ಕೇಳು, ಹಂಸಧ್ವಜನ ಮಾತನ್ನು ಹೀಗೆ ಆಲಿಸುತ್ತದ್ದ ಪಾರ್ಥನ ಕಿರೀಟದ ತುದಿಯಲ್ಲಿ ಒಂದು ಹದ್ದು ಬಂದು ಕಾಲೂರಿ ನಿಂತಿತ್ತು.]; ಏನೆಂಬೆನು ಉತ್ಪಾತದ ಅದ್ಭುತವನು ನೀಲಧ್ವಜ ಆದಿ ನೃಪರೆಲ್ಲರುಂ ತಮತಮಗೆ ಮೇಲಣ ಅಪಜಯ ಸೂಚನೆಯಲಾ ನರಂಗೆ ಅಕಟ ಕಾಲಗತಿ ಎಂತಿಹುದೊ ಶಿವಶಿವಾಯೆನುತೆ ಮನವು ಅಳುಕಿ ಚಿಂತಿಸುತ ಇರ್ದರು=[ಏನು ಹೇಳಲಿ ಉತ್ಪಾತದ ಅದ್ಭುತವನು! ನೀಲಧ್ವಜನನೇ ಆದಿಯಾಗಿ ರಾಜರೆಲ್ಲರೂ, ತಮತಮಗೆ ಮುಂದೆ ಅಪಜಯದ ಸೂಚನೆಯಲಾ ಅರ್ಜುನನಿಗೆ ಅಕಟ! ಕಾಲಗತಿ ಹೇಗಿರುವುದೋ ಶಿವಶಿವಾ ಎನ್ನುತ್ತಾ ಮನಸ್ಸು ಹೆದರಿ/ಕುಂದಿ ಚಿಂತಿಸುತ್ತಾ ಇದ್ದರು].
 • ತಾತ್ಪರ್ಯ:ರಾಜನೇ ಕೇಳು, ಹಂಸಧ್ವಜನ ಮಾತನ್ನು ಹೀಗೆ ಆಲಿಸುತ್ತದ್ದ ಪಾರ್ಥನ ಕಿರೀಟದ ತುದಿಯಲ್ಲಿ ಒಂದು ಹದ್ದು ಬಂದು ಕಾಲೂರಿ ನಿಂತಿತ್ತು.]; ಏನು ಹೇಳಲಿ ಉತ್ಪಾತದ ಅದ್ಭುತವನು! ನೀಲಧ್ವಜನನೇ ಆದಿಯಾಗಿ ರಾಜರೆಲ್ಲರೂ, ತಮತಮಗೆ ಮುಂದೆ ಅಪಜಯದ ಸೂಚನೆಯಲಾ ಅರ್ಜುನನಿಗೆ ಅಕಟ! ಕಾಲಗತಿ ಹೇಗಿರುವುದೋ ಶಿವಶಿವಾ ಎನ್ನುತ್ತಾ ಮನಸ್ಸು ಹೆದರಿ/ಕುಂದಿ ಚಿಂತಿಸುತ್ತಾ ಇದ್ದರು.
 • (ಪದ್ಯ-೧೮)xxix

ಪದ್ಯ :-:೧೯:[ಸಂಪಾದಿಸಿ]

ಇತ್ತಲೀ ತೆರದೊಳಿರುತಿರಲತ್ತಲಾ ಪುರದೊ | ಳುತ್ತಮಹಯಾಗಮವನೊಡನೆ ಬಂದಿಹ ನೃಪರ | ವೃತ್ತಾಂತಮಂ ಬಭ್ರುವಾಹನಂ ಕೇಳ್ದು ಭಟರಂ ಕಳುಹಿ ತೊಳತೊಳಗುವ ||
ಮುತ್ತುಗಳ ಮಾಲೆಯಿಂ ಕನಕದಾಭರಣದಿಂ | ಬಿತ್ತರದ ಗಂಧಮಾಲ್ಯಾಕ್ಷತೆಗಳಿಂ ಪೂಜೆ | ವೆತ್ತೆಸವ ತುರಗಮಂ ತರಿಸಿ ಕಟ್ಟಿದನೋದಿಕೊಂಡು ಪಟ್ಟದ ಲಿಪಿಯನು ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಇತ್ತಲು ಈ ತೆರದೊಳು ಇರುತಿರಲು ಅತ್ತಲು ಆ ಪುರದೊಳ ಉತ್ತಮ ಹಯ ಆಗಮವನು ಒಡನೆ ಬಂದಿಹ ನೃಪರ ವೃತ್ತಾಂತಮಂ ಬಭ್ರುವಾಹನಂ ಕೇಳ್ದು=[ಇತ್ತ ಅರ್ಜುನಾದಿಗಳು ಈ ರೀತಿಯಲ್ಲಿ ಇರುವಾಗ, ಅತ್ತ ಆ ಪುರದಲ್ಲಿ ಉತ್ತಮ ಕುದುರೆ ಜೊತೆಗೆ ಬಂದಿರುವ ರಾಜರ ಬಂದಿರುವ ವೃತ್ತಾಂತವನ್ನು ಬಭ್ರುವಾಹನನು ಕೇಳಿ]; ಭಟರಂ ಕಳುಹಿ ತೊಳತೊಳಗುವ ಮುತ್ತುಗಳ ಮಾಲೆಯಿಂ ಕನಕದಾಭರಣದಿಂ ಬಿತ್ತರದ ಗಂಧಮಾಲ್ಯಾಕ್ಷತೆಗಳಿಂ ಪೂಜೆವೆತ್ತೆಸವ ತುರಗಮಂ ತರಿಸಿ ಕಟ್ಟಿದನು ಓದಿಕೊಂಡು ಪಟ್ಟದ ಲಿಪಿಯನು=[ಭಟರನ್ನು ಕಳುಹಿಸಿ ಬಹಳ ಅಂದವಾಗಿ ಮುತ್ತುಗಳ ಮಾಲೆಯಿದ ಕನಕದ ಆಭರಣದಿಂದ ಅತಿಶದ ಗಂಧಮಾಲ್ಯಾಕ್ಷತೆಗಳಿದ ಪೂಜೆಗೊಂಡು ಶೋಭಿಸುವ ತುರಗವನ್ನು ತರಿಸಿ ಅದರ ಹಣೆಯ ಮೇಲಿನ ಪಟ್ಟದ ಲಿಪಿಯನ್ನು ಓದಿಕೊಂಡು ಕಟ್ಟಿದನು].
 • ತಾತ್ಪರ್ಯ:ಇತ್ತ ಅರ್ಜುನಾದಿಗಳು ಈ ರೀತಿಯಲ್ಲಿ ಇರುವಾಗ, ಅತ್ತ ಆ ಪುರದಲ್ಲಿ ಉತ್ತಮ ಕುದುರೆ ಜೊತೆಗೆ ಬಂದಿರುವ ರಾಜರ ಬಂದಿರುವ ವೃತ್ತಾಂತವನ್ನು ಬಭ್ರುವಾಹನನು ಕೇಳಿ; ಭಟರನ್ನು ಕಳುಹಿಸಿ ಬಹಳ ಅಂದವಾಗಿ ಮುತ್ತುಗಳ ಮಾಲೆಯಿದ ಕನಕದ ಆಭರಣದಿಂದ ಅತಿಶದ ಗಂಧಮಾಲ್ಯಾಕ್ಷತೆಗಳಿದ ಪೂಜೆಗೊಂಡು ಶೋಭಿಸುವ ತುರಗವನ್ನು ತರಿಸಿ ಅದರ ಹಣೆಯ ಮೇಲಿನ ಪಟ್ಟದ ಲಿಪಿಯನ್ನು ಓದಿಕೊಂಡು ಕಟ್ಟಿದನು].
 • (ಪದ್ಯ-೧೯)

ಪದ್ಯ :-:೨೦:[ಸಂಪಾದಿಸಿ]

ಅರಸ ಕೇಳಾದುದನಿತರೊಳಸ್ತಮಯ ಸಮಯ | ಮರವಿಂದದಲರ್ಗಳೊಳ್ ಸೆರೆಯಾದುವಾರಡಿಗ | ಳಿರದೆ ಸರಿದವು ಬಿಸಿಲ ಬೀಡುಗಳ್ ಗೂಡುಗೊಂಡುವು ಕೂಡೆ ಪಕ್ಷಿಜಾತಿ ||
ಪಿರಿದೆನಿಪ ಕತ್ತಲೆಯ ರಾಶಿಯಂ ಪೊತ್ತಿಕೊಂ || ಡುರಿವ ಬೆಂಕಿಯ ಕಡೆಯೊಳುಳಿದ ಕೆಂಗೆಂಡಮೆನೆ | ತರಣಿಮಂಡಲಮೆಸೆದುದಪರದಿಗ್ಭಾಗದೊಳ್ ಕೊರಗಿದವು ಕೋಕಂಗಳು ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅರಸ ಕೇಳು ಆದುದು ಅನಿತರೊಳು ಅಸ್ತಮಯ ಸಮಯಂ ಅರವಿಂದದ ಅಲರ್ಗಳೊಳ್ ಸೆರೆಯಾದುವು ಆರಡಿಗಳು (ಜೇನು) ಇರದೆ ಸರಿಯವು ಬಿಸಿಲ ಬೀಡುಗಳ್ ಗೂಡುಗೊಂಡುವು ಕೂಡೆ ಪಕ್ಷಿಜಾತಿ=[ಅರಸನೇ ಕೇಳು, ಅಷ್ಟರಲ್ಲಿ ಅಸ್ತಮಯ ಸಮಯ ಆಯಿತು. ಕಮಲದ ಹೂವುಗಳು ಮುಚ್ಚಿದುದರಿಂದ ಜೇನುಗಳು ಅದರಲ್ಲಿ ಸೆರೆಯಾದುವು. ತಾಪದ ಬಿಸಿಲ ತಾಣಗಳು ಇರದೆ ಸರಿದು ತಂಪಾದವು. ಸಂಜೆಯಾದ ಕೂಡಲೆ ಪಕ್ಷಿಜಾತಿಗಳು ಗೂಡು ಸೇರಿದವು]; ಪಿರಿದು ಎನಿಪ ಕತ್ತಲೆಯ ರಾಶಿಯಂ ಪೊತ್ತಿಕೊಂಡು ಉರಿವ ಬೆಂಕಿಯ ಕಡೆಯೊಳು ಉಳಿದ ಕೆಂಗೆಂಡಮೆನೆ ತರಣಿಮಂಡಲಂ ಎಸೆದುದು ಅಪರದಿಗ್ಭಾಗದೊಳ್ ಕೊರಗಿದವು ಕೋಕಂಗಳು.=[ಅತಿಯಾದುದು ಎನ್ನಿಸುವ ಕತ್ತಲೆಯ ರಾಶಿಯು ಹೊತ್ತಿಕೊಂಡು ಉರಿದ ಬೆಂಕಿಯ ನಂತರ ಉಳಿದ ಕೆಂಪುಕೆಂಡ ಎನ್ನುವಂತೆ ಸೂರ್ಯಮಂಡಲವು ಪಶ್ಚಿಮ ದಿಕ್ಕಿನಲ್ಲಿ ಕಾಣಿಸಿತು. ಆಗ ಕೋಕಗಳು ಪಕ್ಷಿಗಳು ದುಃಕಿಸಿದವು.]
 • ತಾತ್ಪರ್ಯ:ಅರಸನೇ ಕೇಳು, ಅಷ್ಟರಲ್ಲಿ ಅಸ್ತಮಯ ಸಮಯ ಆಯಿತು. ಕಮಲದ ಹೂವುಗಳು ಮುಚ್ಚಿದುದರಿಂದ ಜೇನುಗಳು ಅದರಲ್ಲಿ ಸೆರೆಯಾದುವು. ತಾಪದ ಬಿಸಿಲ ತಾಣಗಳು ಇರದೆ ಸರಿದು ತಂಪಾದವು. ಸಂಜೆಯಾದ ಕೂಡಲೆ ಪಕ್ಷಿಜಾತಿಗಳು ಗೂಡು ಸೇರಿದವು; ಅತಿಯಾಯಿತು ಎನ್ನಿಸುವ ಕತ್ತಲೆಯ ರಾಶಿಯು ಹೊತ್ತಿಕೊಂಡು ಉರಿದ ಬೆಂಕಿಯ ನಂತರ ಉಳಿದ ಕೆಂಪು ಕೆಂಡ ಎನ್ನುವಂತೆ ಸೂರ್ಯಮಂಡಲವು ಪಶ್ಚಿಮ ದಿಕ್ಕಿನಲ್ಲಿ ಕಾಣಿಸಿತು. ಆಗ ಕೋಕಗಳು ಪಕ್ಷಿಗಳು ದುಃಖಿಸಿದವು.]
 • (ಪದ್ಯ-೨೦)

ಪದ್ಯ :-:೨೧:[ಸಂಪಾದಿಸಿ]

ವಿಳಸಿತಾಂಬರ ಮಣಿ ವಿಭೂಷಣವನುಳಿದು ಮಂ | ಗಳರಾಗಮಂ ತಾಳ್ದು ತಾರಾಭರಣವನಾಂ | ತಳೊ ಸಂಜೆವೆಣ್ಣೆಂಬ ತೆರದಿಂದೆ ಕೆಂಪಿಡಿದುಡುಗಳೆಸೆದುವಾಗಸದೊಳು ||
ನಳಿನಾಳಿ ನಾಳಿನಳಿಕುಲಕಿರಲಿ ಸರಸ ಪರಿ | ಮಳಸಾರ ಮಧುವೆಂದು ಬಾಗಿಲ್ಗಳಂ ಪೂಡಿ | ಕೊಳುತಿರ್ಪುವೆಂಬಂತೆ ಮುಗಿಯುತಿರ್ದುವು ಕೂಡೆ ತೀವಿದುವು ಕತ್ತಲೆಗಳು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ವಿಳಸಿತ (ಪರಿಶುದ್ಧ) ಅಂಬರಮಣಿ(ರವಿ) ವಿಭೂಷಣವನು ಉಳಿದು (ಬಿಟ್ಟು) ಮಂಗಳರಾಗಮಂ(ಕುಜನಬಣ್ಣ-ಕೆಂಪು) ತಾಳ್ದು ತಾರಾಭರಣವನು ಆಂತಳೊ ಸಂಜೆವೆಣ್ಣು ಎಂಬ ತೆರದಿಂದೆ ಕೆಂಪು ಇಡಿದ ಉಡುಗಳು ಎಸೆದುವು ಆಗಸದೊಳು=[ಸಂಜೆಯೆಂಬ ಹೆಣ್ಣು, ಪರಿಶುದ್ಧವಾದ ಅಂಬರಮಣಿ/ ಸೂರ್ಯನ ಅಲಂಕಾರವನ್ನು ಬಿಟ್ಟು ಕೆಂಪುಬಣ್ಣವನ್ನು ತಾಳಿ ತಾರೆಗಳ ಆಭರಣವನ್ನು ಧರಿಸಿದಳೊ (<-ಸಂಜೆವೆಣ್ಣು) ಎಂಬ ರೀತಿಯಲ್ಲಿ ಕೆಂಪುಬಣ್ಣ ಪಡೆದ ತಾರೆಗಳು ಆಗಸದಲ್ಲಿ ಪ್ರಕಾಶಿಸಿದುವು]; ನಳಿನ (ಕಮಲ) ಅಳಿ(ಸಮೂಹ) ನಾಳಿನ ಅಳಿಕುಲಕೆ (ದುಂಬಿ) ಇರಲಿ ಸರಸ ಪರಿಮಳಸಾರ ಮಧುವೆಂದು ಬಾಗಿಲ್ಗಳಂ ಪೂಡಿ ಕೊಳುತಿರ್ಪುವು ಎಂಬಂತೆ ಮುಗಿಯುತಿರ್ದುವು ಕೂಡೆ ತೀವಿದುವು ಕತ್ತಲೆಗಳು=[(ಸಂಜೆಯಾದಾಗ ತಾವರೆಗಳು ಮುಚ್ಚಿಕೊಳ್ಳುವ ಕ್ರಮಕ್ಕೆ ಕಾವ್ಯಮಯವಾಗಿ ಹೋಲಿಕೆ)ಕಮಲಗಳ ಸಮೂಹ/ಸಾಲುಗಳು ನಾಳೆ ಬರುವ ಜೇನುಗಳ ಕುಲಕ್ಕೆ ರಸಭರಿತ ಪರಿಮಳಸಾರವಾದ ಮಧು/ಜೇನುತುಪ್ಪವು ಇರಲಿ ಎಂದು ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಿರುವುವು ಎಂಬಂತೆ ಅವು ಮುಚ್ಚಿಕೊಳ್ಳುತ್ತಿದ್ದವು ಕೂಡಲೆ ಕತ್ತಲೆ ಮುಸುಗಿತು.]
 • ತಾತ್ಪರ್ಯ:ಸಂಜೆಯೆಂಬ ಹೆಣ್ಣು, ಪರಿಶುದ್ಧವಾದ ಅಂಬರಮಣಿ/ ಸೂರ್ಯನ ಅಲಂಕಾರವನ್ನು ಬಿಟ್ಟು ಕೆಂಪುಬಣ್ಣವನ್ನು ತಾಳಿ ತಾರೆಗಳ ಆಭರಣವನ್ನು ಧರಿಸಿದಳೊ (<-ಸಂಜೆವೆಣ್ಣು) ಎಂಬ ರೀತಿಯಲ್ಲಿ ಕೆಂಪುಬಣ್ಣ ಪಡೆದ ತಾರೆಗಳು ಆಗಸದಲ್ಲಿ ಪ್ರಕಾಶಿಸಿದುವು; (ಸಂಜೆಯಾದಾಗ ತಾವರೆಗಳು ಮುಚ್ಚಿಕೊಳ್ಳುವ ಕ್ರಮಕ್ಕೆ ಕಾವ್ಯಮಯವಾಗಿ ಹೋಲಿಕೆ): ಕಮಲಗಳ ಸಮೂಹ/ಸಾಲುಗಳು ನಾಳೆ ಬರುವ ಜೇನುಗಳ ಕುಲಕ್ಕೆ ರಸಭರಿತ ಪರಿಮಳಸಾರವಾದ ಮಧು/ಜೇನುತುಪ್ಪವು ಇರಲಿ ಎಂದು ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಿರುವುವು ಎಂಬಂತೆ ಅವು ಮುಚ್ಚಿಕೊಳ್ಳುತ್ತಿದ್ದವು ಕೂಡಲೆ ಕತ್ತಲೆ ಮುಸುಗಿತು.]ರೂಪಕ-ಉಪಾನ ಉಪಮೇಯಗಳ ಮಿಶ್ರಣ; ಅರ್ಥ ಶ್ಲೇಷಾಲಂಕಾರವೇ?))
 • (ಪದ್ಯ-೨೧)

ಪದ್ಯ :-:೨೨:[ಸಂಪಾದಿಸಿ]

ಏನೆಂಬೆನರ್ಜುನನ ಕಟಕಮಿರ್ದುದು ಮಹಾಂ | ಭೋನಿಧಿಯ ಮಸಕದಿಂ ಪೊಳಲು ಪೊರವಳಯದು | ದ್ಯಾನವೀಧಿಗಳೊಳತ್ತಲ್ ಬಭ್ರವಾಹನಂ ನಗರದೊಳೆಣಿಕೆಗೊಳ್ಳದೆ ||
ತಾನಮಲ ಸಂಧ್ಯಾವಿಧಿಗಳನಾಚರಿಸಿ ಸು | ಮ್ಮಾನದಿಂ ಪತ್ತು ಸಾಸಿರ ಕಂಭದೆಸಕದಾ | ಸ್ಥಾನಮಂಟಪಕೆ ಬಂದೋಲಗಂಗೊಟ್ಟನತಿಸಂಭ್ರಮದೊಳಂದಿನಿರು ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಏನೆಂಬೆನು ಅರ್ಜುನನ ಕಟಕಮ್ ಇರ್ದುದು ಮಹಾಂಭೋನಿಧಿಯ ಮಸಕದಿಂ ಪೊಳಲು ಪೊರವಳಯದ ಉದ್ಯಾನವೀಧಿಗಳೊಳು=[ಏನು ಹೇಳಲಿ, ಅರ್ಜುನನ ಸೈನ್ಯ (ಇತ್ತು) ಮಹಾಸಮುದ್ರವನ್ನು ಮೀರಿಸುವಂತೆ ನಗರದ ಹೊರವಲಯದ ಉದ್ಯಾನ ಮತ್ತು ಮಾರ್ಗಗಳಲ್ಲಿ ಇತ್ತು.]; ಅತ್ತಲ್ ಬಭ್ರವಾಹನಂ ನಗರದೊಳು ಎಣಿಕೆಗೊಳ್ಳದೆ ತಾನು ಅಮಲ ಸಂಧ್ಯಾವಿಧಿಗಳನು ಆಚರಿಸಿ ಸುಮ್ಮಾನದಿಂ ಪತ್ತು ಸಾಸಿರ ಕಂಭದ ಎಸಕದ ಆಸ್ಥಾನಮಂಟಪಕೆ ಬಂದು ಓಲಗಂಗೊಟ್ಟನು ಅತಿಸಂಭ್ರಮದೊಳು ಅಂದಿನಿರುಳು=[ ಅತ್ತ ಬಭ್ರವಾಹನನು ನಗರದಲ್ಲಿ ಇದನ್ನು ಲೆಕ್ಕಸದೆ ತಾನು ಪವಿತ್ರ ಸಂಧ್ಯಾವಿಧಿಗಳನ್ನು ಆಚರಿಸಿ ಹರ್ಷದಿಂದ ಹತ್ತು ಸಾವಿರ ಕಂಭದ ಶೋಭಾಯಮಾನದ ಆಸ್ಥಾನಮಂಟಪಕ್ಕೆ ಬಂದು ಅತಿಸಂಭ್ರಮದಿಂದ ಆ ರಾತ್ರಿ ಓಲಗವನ್ನು ಕೊಟ್ಟನು (ರಾಜಸಭೆ ನೆಡೆಸಿದನು].
 • ತಾತ್ಪರ್ಯ:ಏನು ಹೇಳಲಿ, ಅರ್ಜುನನ ಸೈನ್ಯ (ಇತ್ತು) ಮಹಾಸಮುದ್ರವನ್ನು ಮೀರಿಸುವಂತೆ ನಗರದ ಹೊರವಲಯದ ಉದ್ಯಾನ ಮತ್ತು ಮಾರ್ಗಗಳಲ್ಲಿ ಇತ್ತು. ಅತ್ತ ಬಭ್ರವಾಹನನು ನಗರದಲ್ಲಿ ಇದನ್ನು ಲೆಕ್ಕಸದೆ ತಾನು ಪವಿತ್ರ ಸಂಧ್ಯಾವಿಧಿಗಳನ್ನು ಆಚರಿಸಿ ಹರ್ಷದಿಂದ ಹತ್ತು ಸಾವಿರ ಕಂಭದ ಶೋಭಾಯಮಾನದ ಆಸ್ಥಾನಮಂಟಪಕ್ಕೆ ಬಂದು ಅತಿಸಂಭ್ರಮದಿಂದ ಆ ರಾತ್ರಿ ಓಲಗವನ್ನು ಕೊಟ್ಟನು (ರಾಜಸಭೆ ನೆಡೆಸಿದನು].
 • (ಪದ್ಯ-೨೨)

ಪದ್ಯ :-:೨೩:[ಸಂಪಾದಿಸಿ]

ಪಳುಕುಗಳ ನೆಲಗಟ್ಟು ಮರಕತಂಗಳ ಜಗಲಿ | ಪೊಳೆವ ನೀಲದ ಭಿತ್ತಿ ಬಜ್ಜರದ ಕಂಭಮುರೆ | ತೊಳಪ ವೈಡೂರಿಯದ ಮದನಕೈ ಮಿರಿಪ ಗೋಮೇಧಿಕದ ಬೋದಿಗೆಗಳು ||
ಸಲೆ ಪುಷ್ಯರಾಗದ ತೊಲೆಗಳೆಸೆವಮಾಣಿಕಂ | ಗಳ ಲೋವೆ ಮುತ್ತುಗಲ ಸೂಸಕಂ ಮಿಸುಪ ಪ | ವಳದ ಪುತ್ತಳಿ ಪೊನ್ನ ಪೊದಕೆ ರಂಜಿಸಿತು ಚಾವಡಿಯ ಚೌರಸದೆಡೆಯೊಳು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಪಳುಕುಗಳ(ಚಂದ್ರಕಾಂತ ಶಿಲೆ) ನೆಲಗಟ್ಟು ಮರಕತಂಗಳ (ಹಸಿರುಬಣ್ಣ) ಜಗಲಿ ಪೊಳೆವ ನೀಲದ ಭಿತ್ತಿ (ಗೊಡೆ)ಬಜ್ಜರದ (ವಜ್ರದ) ಕಂಭಂ ಮುರೆ ತೊಳಪ ವೈಡೂರಿಯದ ಮದನಕೈ (ಕಂಬದ ಮೇಲೆ ಆಧಾರದ ಕೈ),=[ಚಂದ್ರಕಾಂತ ಶಿಲೆಯ ನೆಲಗಟ್ಟು, ಹಸಿರುಬಣ್ಣದ ಕಲ್ಲಿನ ಜಗಲಿ, ಹೊಳೆವ ನೀಲದ ಗೊಡೆ, ವಜ್ರದ ಕಂಭವು, ಮತ್ತೆ ಹೊಳೆಯುವ ವೈಡೂರ್ಯದ ಮದನಕೈ (ಕಂಬದ ಮೇಲೆ ಆಧಾರದ ಕೈ),]; ಮಿರಿಪ ಗೋಮೇಧಿಕದ ಬೋದಿಗೆಗಳು(ನಾಗಂದಿಗೆ), ಸಲೆ ಪುಷ್ಯರಾಗದ ತೊಲೆಗಳು, ಎಸೆವ ಮಾಣಿಕಂಗಳ ಲೋವೆ, ಮುತ್ತುಗಳ ಸೂಸಕಂ, ಮಿಸುಪ ಪವಳದ ಪುತ್ತಳಿ, ಪೊನ್ನ ಪೊದಕೆ ರಂಜಿಸಿತು ಚಾವಡಿಯ ಚೌರಸದೆಡೆಯೊಳು=[ ಮಿರುಗುವ ಗೋಮೇಧಿಕದ ಬೋದಿಗೆಗಳು(ನಾಗಂದಿಗೆ), ಉತ್ತಮ ಪುಷ್ಯರಾಗದ ತೊಲೆಗಳು, ಶೋಭೆಯ ಮಾಣಿಕ್ಯಗಳ ಲೋವೆ (ಬಂಧ?), ಮುತ್ತುಗಳ ಗುಚ್ಛಗಳು, ಹೊಳೆಯುವಹವಳದ ಪುತ್ತಳಿ /ಗೊಂಬೆಗಳು, ಚಿನ್ನದ ಹೊದಕೆ ಇದ್ದ ಸಭಾಮಂಟಪ ನಾಲ್ಕುಕಡೆ ಇದ್ದು ಶೋಭಿಸಿತು].
 • ತಾತ್ಪರ್ಯ:ಚಂದ್ರಕಾಂತ ಶಿಲೆಯ ನೆಲಗಟ್ಟು, ಹಸಿರುಬಣ್ಣದ ಕಲ್ಲಿನ ಜಗಲಿ, ಹೊಳೆವ ನೀಲದ ಗೊಡೆ, ವಜ್ರದ ಕಂಭವು, ಮತ್ತೆ ಹೊಳೆಯುವ ವೈಡೂರ್ಯದ ಮದನಕೈ (ಕಂಬದ ಮೇಲೆ ಆಧಾರದ ಕೈ), ಮಿರುಗುವ ಗೋಮೇಧಿಕದ ಬೋದಿಗೆಗಳು(ನಾಗಂದಿಗೆ), ಉತ್ತಮ ಪುಷ್ಯರಾಗದ ತೊಲೆಗಳು, ಶೋಭೆಯ ಮಾಣಿಕ್ಯಗಳ ಲೋವೆ (ಬಂಧ?), ಮುತ್ತುಗಳ ಗುಚ್ಛಗಳು, ಹೊಳೆಯುವಹವಳದ ಪುತ್ತಳಿ /ಗೊಂಬೆಗಳು, ಚಿನ್ನದ ಹೊದಕೆ ಇದ್ದ ಸಭಾಮಂಟಪ ನಾಲ್ಕುಕಡೆ ಇದ್ದು ಶೋಭಿಸಿತು].
 • (ಪದ್ಯ-೨೩)

ಪದ್ಯ :-:೨೪:[ಸಂಪಾದಿಸಿ]

ಸಜ್ಜುಕಂ ಮುಡಿವ ತಿಲಕಮನಿಡುವ ಮೊಗಮುರಿವ | ಕಜ್ಜಳಂಬರೆವ ಕನ್ನಡಿಯ ನಿಟ್ಟಿಪ ಪಾಡು | ವುಜ್ಜುಗದ ನರ್ತನದ ಕೋಪುಗಳ ವೀಣಾದಿವಾದ್ಯಮಂ ಬಿತ್ತಿರಿಸುವ ||
ಕಜ್ಜದ ಪಲವುಕಲೆಗಳಂ ತೋರುವಭಿನವದ | ಸಜ್ಜೀವಮಾಗಿರ್ದು ಪುತ್ತಳಿಗಳವಯವದ | ಪಜ್ಜಳಿಪ ನವರತ್ನಭೂಷಣದ ಕಾಂತಿಗಳ್ ಕಣ್ಗೆಸೆದುವಾ ಸಭೆಯೊಳು||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಸಜ್ಜುಕಂ (ಮೊಗ್ಗಿನ ಸರ) ಮುಡಿವ ತಿಲಕಮನಿಡುವ ಮೊಗಮುರಿವ ಕಜ್ಜಳಂ (ಕಾಡಿಗೆ) ಬರೆವ ಕನ್ನಡಿಯ ನಿಟ್ಟಿಪ ಪಾಡು ವುಜ್ಜುಗದ ನರ್ತನದ ಕೋಪು(ಅಭಿನಯ)ಗಳ=[ಮೊಗ್ಗಿನ ಸರ ಮುಡಿಯುವ, ತಿಲಕವನ್ನು ಹಚ್ಚಿಕೊಳ್ಳುವ, ಮುಖವರೆಸಿ ಕಾಡಿಗೆ ಬರೆದುಕೊಳ್ಳುವ, ಕನ್ನಡಿಯ ನಿಟ್ಟಿಸಿನೋಡುವ, ಹಾಡುವ ಭಂಗಿಯ, ನರ್ತನದ ಕೋಪು/ಅಭಿನಯ ಭಂಗಿಗಳ]; ವೀಣಾದಿವಾದ್ಯಮಂ ಬಿತ್ತಿರಿಸುವ ಕಜ್ಜದ ಪಲವುಕಲೆಗಳಂ ತೋರುವಭಿನವದ ಸಜ್ಜೀವಮಾಗಿರ್ದು ಪುತ್ತಳಿಗಳು (ಗೊಂಬೆಗಳು)ಅವಯವದ ಪಜ್ಜಳಿಪ ನವರತ್ನಭೂಷಣದ ಕಾಂತಿಗಳ್ ಕಣ್ಗೆಸೆದುವಾ ಸಭೆಯೊಳು=[ವೀಣಾದಿವಾದ್ಯಗಳನ್ನು ನುಡಿಸುವ,ನಾನಾಕ್ರಿಯೆಗಳದ ಹಲವುಕಲೆಗಳನ್ನು ತೋರಿಸುವ ಅಭಿನಯದ ಸಜ್ಜೀವದಂತೆ ಇರುವ ಪುತ್ತಳಿಗಳು ಅಂದದ ಅವಯವದ ಪ್ರಜ್ವಲಿಸುವ ನವರತ್ನ ಭೂಷಣದ ಕಾಂತಿಗಳಿಂದ ಆ ಸಭೆಯಲ್ಲಿ ಕಣ್ಣಿಗೆ ಶೋಭಿಸಿದವು].
 • ತಾತ್ಪರ್ಯ:ಮೊಗ್ಗಿನ ಸರ ಮುಡಿಯುವ, ತಿಲಕವನ್ನು ಹಚ್ಚಿಕೊಳ್ಳುವ, ಮುಖವರೆಸಿ ಕಾಡಿಗೆ ಬರೆದುಕೊಳ್ಳುವ, ಕನ್ನಡಿಯ ನಿಟ್ಟಿಸಿನೋಡುವ, ಹಾಡುವ ಭಂಗಿಯ, ನರ್ತನದ ಕೋಪು/ಅಭಿನಯ ಭಂಗಿಗಳ; ವೀಣಾದಿವಾದ್ಯಗಳನ್ನು ನುಡಿಸುವ,ನಾನಾಕ್ರಿಯೆಗಳದ ಹಲವುಕಲೆಗಳನ್ನು ತೋರಿಸುವ ಅಭಿನಯದ ಸಜ್ಜೀವದಂತೆ ಇರುವ ಪುತ್ತಳಿಗಳು ಅಂದದ ಅವಯವದ ಪ್ರಜ್ವಲಿಸುವ ನವರತ್ನ ಭೂಷಣದ ಕಾಂತಿಗಳಿಂದ ಆ ಸಭೆಯಲ್ಲಿ ಕಣ್ಣಿಗೆ ಶೋಭಿಸಿದವು. (ಬೇಲೂರು ದೇವಾಲಯದ ಶಿಲಾಬಾಲಿಕೆಯರ ವರ್ಣನೆಯಂತಿದೆ)
 • (ಪದ್ಯ-೨೪)

ಪದ್ಯ :-:೨೫:[ಸಂಪಾದಿಸಿ]

ಅಂಚೆಗಳ್ ಕೊಳರ್ವಕ್ಕಿಗಳ್ ಜೊನ್ನವಕ್ಕಿಗಳ್ ಪಿಂಚೆಗಳ್ ಗಿಳಿಗಳೆಣೆವಕ್ಕಿಗಳ್ ಪರಮೆಗಳ್ ಕೊಂಚೆಗಳ್ ಕೋಗಿಲೆಗಳಲ್ಲಿಗೊಪ್ಪಿದುವು ಸಜ್ಜೀವಭಾವದಿಂದೆ ||
ಪಂಚಾನನಾದಿ ಮೃಗತತಿ ಗಜಹಯಾವಳಿ ವಿ | ರಿಂಚಿಸೃಷ್ಠಿಯೊಳುಳ್ಳ ಮೂಜಗದ ನಾನಾಪ್ರ | ಪಂಚುಗಳ ಚಿತ್ರಪತ್ರಂಗಳೆಸೆದಿರ್ದುವಾ ಸಭೆಯೊಳ್ ಮನೋಹರಮೆನೆ ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅಂಚೆಗಳ್ ಕೊಳರ್ವಕ್ಕಿಗಳ್ ಜೊನ್ನವಕ್ಕಿಗಳ್ ಪಿಂಚೆಗಳ್ ಗಿಳಿಗಳೆಣೆವಕ್ಕಿಗಳ್ ಪರಮೆಗಳ್ ಕೊಂಚೆಗಳ್ ಕೋಗಿಲೆಗಳಲ್ಲಿಗೊಪ್ಪಿದುವು ಸಜ್ಜೀವಭಾವದಿಂದೆ=[ಹಂಸಗಳು, ಬಕಪಕ್ಷಿಗಳು, ಚಕೋರ ಪಕ್ಷಿಗಳು, ನವಿಲುಗಳು,ಗಿಳಿಗಳು ಎಣೆವಕ್ಕಿಗಳು/ಚಕ್ರವಾಕಗಳು, ದುಂಬಿಗಳು, ಕ್ರೌಂಚಗಳು, ಕೋಗಿಲೆಗಳು,ಈ ಶಿಲ್ಪಗಳು ಸಜ್ಜೀವಭಾವದಿಂದ ಅಲ್ಲಿ ಕಂಡು ಬಂದವು.]; ಪಂಚಾನವಾದಿ ಮೃಗತತಿ ಗಜಹಯಾವಳಿ ವಿರಿಂಚಿಸೃಷ್ಠಿಯೊಳುಳ್ಳ ಮೂಜಗದ ನಾನಾಪ್ರಪಂಚುಗಳ ಚಿತ್ರಪತ್ರಂಗಳೆಸೆದಿರ್ದುವಾ ಸಭೆಯೊಳ್ ಮನೋಹರಮೆನೆ, =[ಪಂಚಾನನ ಸಿಂಹವೇ ಮೊದಲಾದದ ಮೃಗಗಳ, ಗಜ ಕುದುರೆ ಸಮೂಹ, ಬ್ರಹ್ಮನ ಸೃಷ್ಠಿಯೊಳುಳ್ಳ ಮೂರುಜಗತ್ತಿನ ನಾನಾ ಪ್ರಪಂಚಗಳ ಚಿತ್ರದ ಪಟಗಳು ಅಲ್ಲಿ ಆ ಸಭೆಯಲ್ಲಿ ಮನೋಹರವಾಗಿ ಶೋಭಿಸುತ್ತಿದ್ದವು]
 • ತಾತ್ಪರ್ಯ:ಹಂಸಗಳು, ಬಕಪಕ್ಷಿಗಳು, ಚಕೋರ ಪಕ್ಷಿಗಳು, ನವಿಲುಗಳು,ಗಿಳಿಗಳು ಎಣೆವಕ್ಕಿಗಳು/ಚಕ್ರವಾಕಗಳು, ದುಂಬಿಗಳು, ಕ್ರೌಂಚಗಳು, ಕೋಗಿಲೆಗಳು,ಈ ಶಿಲ್ಪಗಳು ಸಜ್ಜೀವಭಾವದಿಂದ ಅಲ್ಲಿ ಕಂಡು ಬಂದವು. ಪಂಚಾನನ ಸಿಂಹವೇ ಮೊದಲಾದದ ಮೃಗಗಳ, ಗಜ ಕುದುರೆ ಸಮೂಹ, ಬ್ರಹ್ಮನ ಸೃಷ್ಠಿಯೊಳುಳ್ಳ ಮೂರುಜಗತ್ತಿನ ನಾನಾ ಪ್ರಪಂಚಗಳ ಚಿತ್ರದ ಪಟಗಳು ಅಲ್ಲಿ ಆ ಸಭೆಯಲ್ಲಿ ಮನೋಹರವಾಗಿ ಶೋಭಿಸುತ್ತಿದ್ದವು]
 • (ಪದ್ಯ-೨೫)

ಪದ್ಯ :-:೨೬:[ಸಂಪಾದಿಸಿ]

ನೀಲಮಣಿಕಾಂತಿಗಳ ಕತ್ತಲೆಯ ಮುತ್ತುಗಳ | ಡಾಳಗಳ ಕೌಮುದಿಯ ಮಾಣಿಕದ ರಶ್ಮಿಗಳ ಬಾಲಾತಪದ ವಿದ್ರುಮಚ್ಚವಿಯ ಸಂಜೆಗೆಂಪಿನ ಪಗಲಿರುಳ್ಗಳಲ್ಲಿ ||
ತೇಲದಿಹುವಲ್ಲದೆ ದಿವಾರಾತ್ರಿಯುಂಟೆಂಬ | ಕಾಲಭೇದವನರಿಯದಾ ಮಹಾಸಭೆ ಸುರಪ | ನೋಲಗದ ಮಂಟಪದ ಸೌಭಾಗ್ಯಕೆಂಟುಮಡಿಯಾಗಿರ್ದುದಚ್ಚರಿಯೆನೆ ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ನೀಲಮಣಿಕಾಂತಿಗಳ ಕತ್ತಲೆಯ ಮುತ್ತುಗಳ ಡಾಳಗಳ ಕೌಮುದಿಯ ಮಾಣಿಕದ ರಶ್ಮಿಗಳ ಬಾಲಾತಪದ ವಿದ್ರುಮಚ್ಚವಿಯ ಸಂಜೆಗೆಂಪಿನ ಪಗಲಿರುಳ್ಗಳಲ್ಲಿ=[ನೀಲಮಣಿಯ ಕಾಂತಿಯ ಕತ್ತಲೆಯ ಮುತ್ತುಗಳ ಪ್ರಭೆಗಳ ಬೆಳದಿಂಗಳ, ಮಾಣಿಕದ ರಶ್ನಿಗಳ ಬೆಳಕು ಬಾಲಾತಪದಂತೆ/ ಎಳೆಬಿಸಿಲಿನಂತೆ ಇತ್ತು; ಹವಳದ ಕಾಂತಿ ಸಂಜೆಯ ಕೆಂಪುಬಿಳಕಿನಂತಿತ್ತು; ಹಗಲು ರಾತ್ರಿಗಳು ಅಲ್ಲಿ ]; ತೇಲದೆ ಇಹುವು ಅಲ್ಲದೆ ದಿವಾರಾತ್ರಿಯುಂಟೆಂಬ ಕಾಲಭೇದವನರಿಯದಾ ಮಹಾಸಭೆ ಸುರಪ ನೋಲಗದ ಮಂಟಪದ ಸೌಭಾಗ್ಯಕೆ ಎಂಟುಮಡಿಯಾಗಿ ಇರ್ದುದು ಅಚ್ಚರಿಯೆನೆ =[ಗೊತ್ತಾಗದೆ ಇರುವುದು; ಹಗಲು ರಾತ್ರಿಯುಂಟೆಂಬ ಕಾಲಭೇದವನು ತಿಳಿಯದ ಮಹಾಸಭೆ ಇಂದ್ರನ ಓಲಗದ ಮಂಟಪದ ಸೌಭಾಗ್ಯಕ್ಕೆ ಎಂಟರಷ್ಟು ಅದ್ಭುತವಾಗಿತ್ತು, ಹೀಗೆ ಆಶ್ಚರ್ಯವಾಗಿತ್ತು.]
 • ತಾತ್ಪರ್ಯ:ನೀಲಮಣಿಯ ಕಾಂತಿಯ ಕತ್ತಲೆಯ ಮುತ್ತುಗಳ ಪ್ರಭೆಗಳ ಬೆಳದಿಂಗಳ, ಮಾಣಿಕದ ರಶ್ನಿಗಳ ಬೆಳಕು ಬಾಲಾತಪದಂತೆ/ ಎಳೆಬಿಸಿಲಿನಂತೆ ಇತ್ತು; ಹವಳದ ಕಾಂತಿ ಸಂಜೆಯ ಕೆಂಪುಬಿಳಕಿನಂತಿತ್ತು; ಹಗಲು ರಾತ್ರಿಗಳು ಅಲ್ಲಿ ಗೊತ್ತಾಗದೆ ಇರುವುದು; ಹಗಲು ರಾತ್ರಿಯುಂಟೆಂಬ ಕಾಲಭೇದವನು ತಿಳಿಯದ ಮಹಾಸಭೆ ಇಂದ್ರನ ಓಲಗದ ಮಂಟಪದ ಸೌಭಾಗ್ಯಕ್ಕೆ ಎಂಟರಷ್ಟು ಅದ್ಭುತವಾಗಿತ್ತು, ಹೀಗೆ ಆಶ್ಚರ್ಯವಾಗಿತ್ತು.
 • (ಪದ್ಯ-೨೬)

ಪದ್ಯ :-:೨೭:[ಸಂಪಾದಿಸಿ]

ಕಸ್ತುರಿ ಜವಾಜಿಗಳ ಸಾರಣಿಯ ಕುಂಕುಮ ಪ | ರಿಸ್ತರಣದಗುರು ಚಂದನ ಧೂಪ ವಾಸಿತದ | ವಿಸ್ತರದ ಕರ್ಪೂರತೈಲದಿಂದಲ್ಲಲ್ಲಿಗುರಿವ ಬೊಂಬಾಳಂಗಳ ||
ಶಸ್ತರತ್ನ ಪ್ರದೀಪ ಜ್ವಾಲೆಗಳ ಸಭೆ ಸ | ಮಸ್ತ ಸೌಭಾಗ್ಯದಿಂದೊಪ್ಪುತಿರಲಾಗ ಭೂ | ಪಸ್ತೋಮಸಹಿತ ಬಂದಾ ಬಭ್ರುವಾಹನಂ ಕುಳ್ಳಿರ್ದನೋಲಗದೊಳು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕಸ್ತುರಿ ಜವಾಜಿಗಳ(ಪುನುಗು) ಸಾರಣಿಯ ಕುಂಕುಮ ಪರಿಸ್ತರಣದ ಅಗುರು ಚಂದನ ಧೂಪ ವಾಸಿತದ ವಿಸ್ತರದ ಕರ್ಪೂರತೈಲದಿಂದ=[ಕಸ್ತೂರಿ, ಪುನುಗು ಹಚ್ಚದ ಕುಂಕುಮ ಕಸ್ತೂರಿಯ ಸುತ್ತಲೂ ಹಚ್ಚಿದ, ಅಗುರು ಚಂದನ ಧೂಪ ಇವುಗಳ ಪರಿಮಳದ, ವಿಸ್ತಾರವಾದ ಕರ್ಪೂರತೈಲದಿಂದ ]; ಅಲ್ಲಲ್ಲಿಗುರಿವ ಬೊಂಬಾಳಂಗಳ ಶಸ್ತರತ್ನ ಪ್ರದೀಪ ಜ್ವಾಲೆಗಳ ಸಭೆ ಸಮಸ್ತ ಸೌಭಾಗ್ಯದಿಂದ ಒಪ್ಪುತಿರಲು ಆಗ ಭೂಪಸ್ತೋಮಸಹಿತ ಬಂದಾ ಬಭ್ರುವಾಹನಂ ಕುಳ್ಳಿರ್ದನು ಒಲಗದೊಳು =[ಅಲ್ಲಲ್ಲಿ ಉರಿಯುತ್ತಿರುವ ದೀವಟಿಗೆಗಳ, ಪ್ರಶಸ್ತರತ್ನ ದೊಡ್ಡ ದೀಪ ಜ್ವಾಲೆಗಳ ಸಭೆಯು ಸಮಸ್ತ ಸೌಭಾಗ್ಯದಿಂದ ಇರುವಾಗ, ರಾಜರ ಸಮೂಹ ಸಹಿತ ಬಂದ ಆ ಬಭ್ರುವಾಹನನು ಒಲಗದ ಸಭೆಯಲ್ಲಿ ಕುಳಿತನು.]
 • ತಾತ್ಪರ್ಯ:ಕಸ್ತೂರಿ, ಪುನುಗು ಹಚ್ಚದ ಕುಂಕುಮ ಕಸ್ತೂರಿಯ ಸುತ್ತಲೂ ಹಚ್ಚಿದ, ಅಗುರು ಚಂದನ ಧೂಪ ಇವುಗಳ ಪರಿಮಳದ, ವಿಸ್ತಾರವಾದ ಕರ್ಪೂರತೈಲದಿಂದ ಅಲ್ಲಲ್ಲಿ ಉರಿಯುತ್ತಿರುವ ದೀವಟಿಗೆಗಳ, ಪ್ರಶಸ್ತರತ್ನ ದೊಡ್ಡ ದೀಪ ಜ್ವಾಲೆಗಳ ಸಭೆಯು ಸಮಸ್ತ ಸೌಭಾಗ್ಯದಿಂದ ಇರುವಾಗ, ರಾಜರ ಸಮೂಹ ಸಹಿತ ಬಂದ ಆ ಬಭ್ರುವಾಹನನು ಒಲಗದ ಸಭೆಯಲ್ಲಿ ಕುಳಿತನು.
 • (ಪದ್ಯ-೨೭)

ಪದ್ಯ :-:೨೮:[ಸಂಪಾದಿಸಿ]

ಓಲಗಕೆ ಬಂದ ನೃಪಕೋಟಿ ಕೋಟೀರ ಪ್ರ | ಭಾಲಹರಿ ಹರಿದು ಮುಸುಕಿತು ತತ್ಸಭಾಮಣಿ | ಜ್ವಾಲೆಗಳ ನಿಕರಮಂ ಕರಮಂ ಮುಗಿವ ಭಟರ ಸಂಘಸಂಘರ್ಷಣದೊಳು ||
ತೇಲಿ ಕಡಿಕಿದ ಕಂಠಮಾಲೆಗಳ ಗಳಿತಮು || ಕ್ತಾಳಿಗಳಗಲಕೆ ಪರಿದೆಸೆವ ಮುತ್ತಿನ ರಂಗ ವಾಲಿಗಳನಿಕ್ಕಿದರು ದರ್ಶನೋತ್ಸವಕೆಂಬ ತೆರನಾದುದಾ ಸ್ಥಳದೊಳು ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಓಲಗಕೆ ಬಂದ ನೃಪಕೋಟಿ ಕೋಟೀರ (ಕಿರೀಟ) ಪ್ರಭಾಲಹರಿ ಹರಿದು ಮುಸುಕಿತು ತತ್ ಸಭಾಮಣಿ ಜ್ವಾಲೆಗಳ ನಿಕರಮಂ ಕರಮಂ ಮುಗಿವ ಭಟರ ಸಂಘಸಂಘರ್ಷಣದೊಳು=[ಓಲಗಕ್ಕೆ ಬಂದ ಕೋಟಿ ನೃಪರ ಕಿರೀಟದ ಪ್ರಭೆ ಹರಡಿ ಆ ಸಭಾಂಗಣದ ರತ್ನ ಮಣಿಗಳ ಬೆಳಕಿನ ಪ್ರವಾಹವನ್ನು ಮಸುಕುಮಾಡಿತು ಮತ್ತೂ ಮುಗಿಬಿದ್ದ ವೀರ ಯೋಧರ ಗುಂಪು ತಾಕಲಾಟದಲ್ಲಿ ]; ತೇಲಿ ಕಡಿಕಿದ ಕಂಠಮಾಲೆಗಳ ಗಳಿತಮುಕ್ತಾಳಿಗಳೂ ಆಗಲಕೆ ಪರಿದೆಸೆವ ಮುತ್ತಿನ ರಂಗ ವಾಲಿಗಳನಿಕ್ಕಿದರು ದರ್ಶನ ಉತ್ಸವಕೆಂಬ ತೆರನಾದುದಾ ಸ್ಥಳದೊಳು =[ಅಲುಗಾಡಿ ಕಡಿದ ಕಂಠಮಾಲೆಗಳ ಜಾರಿದ ಮುತ್ತಿನ ರಾಶಿಗಳು ಆಗಲಕೆ /ಏಲ್ಲೆಡೆ ಹರಿದು ಹರಡಿ ಶೋಭಿಸುವ ಮುತ್ತಿನ ಮಣಿಗಳು ದರ್ಶನ ಉತ್ಸವಕ್ಕೆ/ ನೋಡುವ ಪ್ರದರ್ಶನಕ್ಕೆ ಮುತ್ತಿನ ರಂಗವಲ್ಲಿಗಳನ್ನು ಹಾಕಿದರು ಎಂಬಂತೆ ರೀತಿಯಲ್ಲಿ ಆ ಸ್ಥಳದಲ್ಲಿ ಆಯಿತು].
 • ತಾತ್ಪರ್ಯ: ಓಲಗಕ್ಕೆ ಬಂದ ಕೋಟಿ ನೃಪರ ಕಿರೀಟದ ಪ್ರಭೆ ಹರಡಿ ಆ ಸಭಾಂಗಣದ ರತ್ನ ಮಣಿಗಳ ಬೆಳಕಿನ ಪ್ರವಾಹವನ್ನು ಮಸುಕುಮಾಡಿತು ಮತ್ತೂ ಮುಗಿಬಿದ್ದ ವೀರ ಯೋಧರ ಗುಂಪು ತಾಕಲಾಟದಲ್ಲಿ ಅಲುಗಾಡಿ ಕಡಿದ ಕಂಠಮಾಲೆಗಳ ಜಾರಿದ ಮುತ್ತಿನ ರಾಶಿಗಳು ಆಗಲಕೆ /ಏಲ್ಲೆಡೆ ಹರಿದು ಹರಡಿ ಶೋಭಿಸುವ ಮುತ್ತಿನ ಮಣಿಗಳು ದರ್ಶನ ಉತ್ಸವಕ್ಕೆ/ ನೋಡುವ ಪ್ರದರ್ಶನಕ್ಕೆ ಮುತ್ತಿನ ರಂಗವಲ್ಲಿಗಳನ್ನು ಹಾಕಿದರು ಎಂಬಂತೆ ರೀತಿಯಲ್ಲಿ ಆ ಸ್ಥಳದಲ್ಲಿ ಆಯಿತು].
 • (ಪದ್ಯ-೨೮)xxx

ಪದ್ಯ :-:೨೯:[ಸಂಪಾದಿಸಿ]

ವಿಭ್ರಾಜಿಸುವ ರಾಜಮಂಡಲದಿರವನೆ ಕಂ | ಡಭ್ರದಲ್ಲಿಯ ರಾಜಮಂಡಲಂ ತನಗಿನ್ನು | ವಿಭ್ರಮದ ವ್ಯತ್ತಮೇಕೆಂದು ಲಜ್ಜಿಸಿ ನೀಳ್ದ ತೆರದಿಂದೆ ಕಂಗೊಳಿಸುವ ||
ಶುಭ್ರಚಾಮರಮಂ ನಿಮಿರ್ದು ಚಿಮ್ಮಿಸಿದರ್ಚ | ಲಭ್ರಮರಕುಂತಲದ ಕಮಲದಳನೇತ್ರೆಯರ್ | ಬಭ್ರುವಾಹನ ಮಹೀಪಾಲಕನ ಕೆಲಬಲದೊಳಂದಿನಿರುಳೋಲಗದೊಳು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ವಿಭ್ರಾಜಿಸುವ/ ಪ್ರಕಾಶಿಸುವ, ರಾಜಮಂಡಲದ/ಬಬ್ರುವಾಹನನ ಅಧೀನ ಮಿತ್ರರಾಜರ ಮಂಡಲದ ದುಂಡಾಗಿ ಸುತ್ತುವರಿದು, ಇರವನೆ/ತೇಜಸ್ಸಿನಿಂದ ಇರುವುದನ್ನು ಕಂಡು, ಅಭ್ರದಲ್ಲಿಯ/ ಆಕಾಶದಲ್ಲಿಯ, ರಾಜಮಂಡಲಂ/ಸೂರ್ಯ-ಚಂದ್ರನು ತನಗಿನ್ನು ವಿಭ್ರಮದ ವ್ಯತ್ತಂ/ ವೃತ್ತಾಕಾರವಾಗಿ ಸುತ್ತುವುದು ಅಥವಾ ವೃತ್ತಾಕಾರವಾಗಿ ಇರುವುದು ಏಕೆಂದು, ಲಜ್ಜಿಸಿ/ ನಾಚಿಕೆಪಡುವಂತೆ, ನೀಳ್ದ/ ಉದ್ದಕ್ಕೆ ಕೈಮಾಡಿ, ಬೀಸುವ, ತೆರದಿಂದೆ/ ರೀತಿಯಲ್ಲಿ, ಕಂಗೊಳಿಸುವ/ ಶೋಭಿಸುವ, ಶುಭ್ರಚಾಮರಮಂ/ ಬಿಳಿಚಾಮರವನ್ನು, ನಿಮಿರ್ದು/ ಮೇಲಕ್ಕೆ, ಚಿಮ್ಮಿಸಿದರ್/ ಎತ್ತಿ ಚಿಮ್ಮಿ ಅರಳಿಸಿದರು.; ಚಲ ಭ್ರಮರಕುಂತಲದ/ ಚಲಿಸುತ್ತಿರುವ ದುಂಬಿಗಳಂತಿರುವ ಕೂದಲುಗಳು ಉಳ್ಳ, ಕಮಲದಳನೇತ್ರೆಯರ್/ ಕಮಲದ ದಳದಂತೆ ವಿಶಾಲ ಕಣ್ಣಿನ ಚಲುವೆಯರು, ಬಭ್ರುವಾಹನ ಮಹೀಪಾಲಕನ/ ಬಬ್ರವಾಹನ ರಾಜನ, ಕೆಲಬಲದೊಳು/ ಅಕ್ಕ ಪಕ್ಕದಲ್ಲಿ, ಅಂದಿನ ಇರುಳು ಓಲಗದೊಳು/ ಆ ದಿನದ ರಾತ್ರಿಯ ರಾಜಸಭೆಉಲ್ಲಿ.
 • ತಾತ್ಪರ್ಯ: ಕುದುರೆಯನ್ನು ಕಟ್ಟಿದ ಆ ದಿನದ ರಾತ್ರಿಯ ಬಬ್ರುವಾಹನನ ಓಲಗ ಅಥವಾ ರಾಜಸಭೆಯಲ್ಲಿ, ಪ್ರಕಾಶಿಸುವ ಬಬ್ರುವಾಹನನ ಅಧೀನ ಮಿತ್ರರಾಜರ ಮಂಡಲದ ದುಂಡಾಗಿ ಸುತ್ತುವರಿದು ತೇಜಸ್ಸಿನಿಂದ ಇರುವುದನ್ನು ಕಂಡು ಆಕಾಶದಲ್ಲಿಯ ಚಂದ್ರನು ತನಗಿನ್ನು ವೃತ್ತಾಕಾರವಾಗಿ ಸುತ್ತುವುದು ಅಥವಾ ವೃತ್ತಾಕಾರವಾಗಿ ಇರುವುದು ಏಕೆಂದು ನಾಚಿಕೆಪಡುವಂತೆ ಇತ್ತು;,ಆ ದಿನದ ರಾತ್ರಿಯ ರಾಜಸಭೆಯಲ್ಲಿ ಚಲಿಸುತ್ತಿರುವ ದುಂಬಿಗಳಂತಿರುವ ಕೂದಲುಗಳು ಉಳ್ಳ, ಕಮಲದ ದಳದಂತೆ ವಿಶಾಲ ಕಣ್ಣಿನ ಚಲುವೆಯರು ಬಬ್ರವಾಹನ ರಾಜನ,ಅಕ್ಕ ಪಕ್ಕದಲ್ಲಿ, . ಉದ್ದಕ್ಕೆ ಕೈಮಾಡಿ ಬೀಸುವ ರೀತಿಯಲ್ಲಿ ಶೋಭಿಸುವ ಬಿಳಿಚಾಮರವನ್ನು ಮೇಲಕ್ಕೆ ಎತ್ತಿ ಚಿಮ್ಮಿ ಅರಳಿಸಿದರು. (ಉಪಮಾ ಉಪಮೇಯಗಳು ಅಸ್ಪಷ್ಟವಾಗಿರುವಂತೆ ತೋರುವುದು)
 • (ಪದ್ಯ-೨೯)

ಪದ್ಯ :-:೩೦:[ಸಂಪಾದಿಸಿ]

ಬಳಿಕಾ ಮಹಾಸ್ಥಾನದೊಳ್ ಬಭ್ರುವಾಹನಂ || ನಲವಿಮದೆ ಕುಳ್ಳಿರ್ದು ನಗುತೆ ಪರಮಂಡಲ | ಸ್ಥಳದಿಂದೆ ಬಂದ ರಾಯರ ಯಜ್ಞತುರಗಪುಂ ಕಟ್ಟಿಕೊಂಡೆವು ಮನೆಯೊಳು|
ಕೊಳುಗುಳಕೆ ಮಿಡುಕುವರ್ ನಾವು ನಾಳೆ ನ್ನು ಹಿಂ | ದುಳಿಯಬಾರದು ಕದನಕನುವಾಗಿರಲಿ ಪಾಯ | ದಳಮೆಂದು ನುಡಿದಂ ಸುಬುದ್ಧಿಮೊದಲಾಗಿಹ ಶಿರಃ ಪ್ರಧಾನಿಗಳ ಕೂಡೆ ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಳಿಕ ಆ ಮಹಾಸ್ಥಾನದೊಳ್ ಬಭ್ರುವಾಹನಂ ನಲವಿಂದೆ ಕುಳ್ಳಿರ್ದು=[ಬಳಿಕ ಆ ಮಹಾಸಭೆಯಲ್ಲಿ ಬಭ್ರುವಾಹನು ಹರ್ಷದಿಂದ ಕುಳಿತಿದ್ದು,]; ನಗುತೆ ಪರಮಂಡಲ ಸ್ಥಳದಿಂದೆ ಬಂದ ರಾಯರ ಯಜ್ಞತುರಗಪುಂ ಕಟ್ಟಿಕೊಂಡೆವು ಮನೆಯೊಳು=[ನಗುತ್ತಾ ಬೇರೆರಾಜ್ಯದ ಪ್ರದೇಶದಿಂದ ಬಂದ ರಾಜರ ಯಜ್ಞತುರಗವನ್ನು ನಮ್ಮ ಅರಮನೆಯಲ್ಲಿ ಕಟ್ಟಿಕೊಂಡಿದ್ದೇವೆ.]; ಕೊಳುಗುಳಕೆ ಮಿಡುಕುವರ್ ನಾವು ನಾಳೆ ಇನ್ನು ಹಿಂದುಳಿಯಬಾರದು ಕದನಕನುವಾಗಿರಲಿ ಪಾಯ ದಳಮೆಂದು ನುಡಿದಂ ಸುಬುದ್ಧಿಮೊದಲಾಗಿಹ ಶಿರಃ ಪ್ರಧಾನಿಗಳ ಕೂಡೆ=[ಯುದ್ಧಕ್ಕೆ ಶೌರ್ಯವುಳ್ಳವರು ಬರಬೇಕು, ನಾವು ನಾಳೆ ಇನ್ನು ಹಿಂದುಳಿಯಬಾರದು; ಕದನಕ್ಕೆ ಕಾಲ್ದಳವು ಸಿದ್ಧವಾಗಿರಲಿ ಎಂದು ಅಲ್ಲಿದ್ದ ಸುಬುದ್ಧಿ ಮೊದಲಾದ ಮುಖ್ಯ ಪ್ರಧಾನಿಗಳ ಸಂಗಡ ಹೇಳಿದನು.].
 • ತಾತ್ಪರ್ಯ:ಬಳಿಕ ಆ ಮಹಾಸಭೆಯಲ್ಲಿ ಬಭ್ರುವಾಹನು ಹರ್ಷದಿಂದ ಕುಳಿತಿದ್ದು,[ನಗುತ್ತಾ ಬೇರೆರಾಜ್ಯದ ಪ್ರದೇಶದಿಂದ ಬಂದ ರಾಜರ ಯಜ್ಞತುರಗವನ್ನು ನಮ್ಮ ಅರಮನೆಯಲ್ಲಿ ಕಟ್ಟಿಕೊಂಡಿದ್ದೇವೆ. ಯುದ್ಧಕ್ಕೆ ಶೌರ್ಯವುಳ್ಳವರು ಬರಬೇಕು, ನಾವು ನಾಳೆ ಇನ್ನು ಹಿಂದುಳಿಯಬಾರದು; ಕದನಕ್ಕೆ ಕಾಲ್ದಳವು ಸಿದ್ಧವಾಗಿರಲಿ ಎಂದು ಅಲ್ಲಿದ್ದ ಸುಬುದ್ಧಿ ಮೊದಲಾದ ಮುಖ್ಯ ಪ್ರಧಾನಿಗಳ ಸಂಗಡ ಹೇಳಿದನು.].
 • (ಪದ್ಯ-೩೦)

ಪದ್ಯ :-:೩೧:[ಸಂಪಾದಿಸಿ]

ಇಂತಿಲ್ಲಿ ನಡೆದಖಿಲಪೃತ್ತಾಂತಮಂ ಕೇಳ್ದ | ಳಂತಃಪುರದೊಳರ್ಜುನನ ಗುಣಾವಳಿಗಳಂ | ಸಂತತಂ ನೆನೆದು ಚಿಂತಿಪ ಬಭ್ರುವಾಹನನ ನಿಜಮಾತೆ ಚಿತ್ರಾಂಗದೆ ||
ಸಂತೋಷಮಂ ತಾಳ್ದು ತನಯನೋಲಗಕೆ ಭರ | ದಿಂ ತಳರ್ದಿದಿರೇಳ್ವ ಕುವರನಂ ತೆಗೆದಪ್ವಿ | ಕುಂತೀಸುತನ ವಾಜಿಯಂ ಕಟ್ಟಿದೈ ಮಗನೆ ಲೇಸುಮಾಡಿದೆಯೆಂದಳು ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಇಂತು ಇಲ್ಲಿ ನಡೆದ ಅಖಿಲ ಪೃತ್ತಾಂತಮಂ ಕೇಳ್ದಳು ಅಂತಃಪುರದೊಳು ಅರ್ಜುನನ ಗುಣ ಆವಳಿಗಳಂ ಸಂತತಂ ನೆನೆದು ಚಿಂತಿಪ ಬಭ್ರುವಾಹನನ ನಿಜಮಾತೆ ಚಿತ್ರಾಂಗದೆ =[ರಾಜಸಭೆಯಲ್ಲಿ ನಡೆದ ಎಲ್ಲಾ ಸುದ್ದಿ/ ವಿಚಾರಗಳನ್ನೂ ಅಂತಃಪುರದಲ್ಲಿ ಇದ್ದ, ಸದಾ ಅರ್ಜುನನ ಗುಣ ನಾನಾವಿಧದವುಗಳನ್ನು ಸತತವಾಗಿ ನೆನೆದು ಚಿಂತಿಸುತ್ತಿದ್ದ ಬಭ್ರುವಾಹನನ ತಾಯಿ ಚಿತ್ರಾಂಗದೆ ಕೇಳಿದಳು.]; ಸಂತೋಷಮಂ ತಾಳ್ದು ತನಯನ ಓಲಗಕೆ ಭರದಿಂ ತಳರ್ದು ಇದಿರೇಳ್ವ ಕುವರನಂ ತೆಗೆದಪ್ವಿ ಕುಂತೀಸುತನ ವಾಜಿಯಂ ಕಟ್ಟಿದೈ ಮಗನೆ ಲೇಸುಮಾಡಿದೆಯೆಂದಳು=[ಅದರಿಂದ ಸಂತೋಷಪಟ್ಟು, ಮಗನ ಓಲಗಕೆ / ಸಭೆಗೆ ವೇಗವಾಗಿ ತೆರಳಿ, ಇದಿರುಗೋಳ್ಳಲು ಎದ್ದ ಮಗನನ್ನು ಬರಸೆಳೆದು ಅಪ್ಪಿಕೊಂಡು, ಕುಂತೀಸುತನಾದ ಅರ್ಜುನನ ಕುದುರೆಯನ್ನು ಕಟ್ಟಿದೆಯಾ ಮಗನೆ! ಒಳ್ಳೆಯದು ಮಾಡಿದೆ! (ತಪ್ಪು ಎಂದು ಭಾವ)) ಎಂದಳು.]
 • ತಾತ್ಪರ್ಯ:ರಾಜಸಭೆಯಲ್ಲಿ ನಡೆದ ಎಲ್ಲಾ ಸುದ್ದಿ/ ವಿಚಾರಗಳನ್ನೂ ಅಂತಃಪುರದಲ್ಲಿ ಇದ್ದ, ಸದಾ ಅರ್ಜುನನ ಗುಣ ನಾನಾವಿಧದವುಗಳನ್ನು ಸತತವಾಗಿ ನೆನೆದು ಚಿಂತಿಸುತ್ತಿದ್ದ ಬಭ್ರುವಾಹನನ ತಾಯಿ ಚಿತ್ರಾಂಗದೆ ಕೇಳಿದಳು. ಅದರಿಂದ ಸಂತೋಷಪಟ್ಟು, ಮಗನ ಓಲಗಕೆ / ಸಭೆಗೆ ವೇಗವಾಗಿ ತೆರಳಿ, ಇದಿರುಗೋಳ್ಳಲು ಎದ್ದ ಮಗನನ್ನು ಬರಸೆಳೆದು ಅಪ್ಪಿಕೊಂಡು, ಕುಂತೀಸುತನಾದ ಅರ್ಜುನನ ಕುದುರೆಯನ್ನು ಕಟ್ಟಿದೆಯಾ ಮಗನೆ! ಒಳ್ಳೆಯದು ಮಾಡಿದೆ! (ತಪ್ಪು ಎಂದು ಭಾವ)) ಎಂದಳು.
 • (ಪದ್ಯ-೩೧)

ಪದ್ಯ :-:೩೨:[ಸಂಪಾದಿಸಿ]

ಕ್ಷುದ್ರಬುದ್ಧಿಯನೆಲ್ಲಿ ಕಲಿತೆ ನೀನೀಪರಿ ಗು | ರುದ್ರೋಹಕೆಂತು ತೊಡರ್ದುದು ನಿನ್ನ ಮನಮಕಟ | ಮದ್ರಮಣನಾಗಮಂ ನಿನಗೆ ವಿರಹಿತಮಾದುದಾತನುದರದೊಳೆ ಜನಿಸಿ ||
ಉದ್ರೇಕದಿಂದ ಕಟ್ಟಿದೆಯಲಾ ತುರಗಮಂ | ಭದ್ರಮಾದುದು ರಾಜಕಾರ್ಯಮಿದಮೃತಕೆ ಸ | ಮುದ್ರಮಂ ಮಥಿಸೆ ವಿಷಮುದಿಸಿದವೊಲಾಯ್ತು ನಿನ್ನುದ್ಭವಂ ತನಗೆಂದಳು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕ್ಷುದ್ರಬುದ್ಧಿಯನು ಎಲ್ಲಿ ಕಲಿತೆ ನೀನು ಈ ಪರಿ ಗುರುದ್ರೋಹಕೆ ಎಂತು ತೊಡರ್ದುದು ನಿನ್ನ ಮನಂ ಅಕಟ ಮದ್ ರಮಣನ ಆಗಮಂ ನಿನಗೆ ವಿರಹಿತಂ ಆದುದು ಆತನ ಉದರದೊಳೆ ಜನಿಸಿ=[ನೀನು ಕೆಟ್ಟಬುದ್ಧಿಯನ್ನು ಎಲ್ಲಿ ಕಲಿತೆ? ಈ ರೀತಿ ಗುರು/ಪಿತೃದ್ರೋಹ ಮಾಡಲು ಹೇಗೆ ತೊಡಗಿತು ನಿನ್ನ ಮನಸ್ಸು? ಅಕಟ! ನನ್ನ ರಮಣನ/ ಪತಿಯ ಆಗಮನವು, ಆತನ ಹೊಟ್ಟೆಯಲ್ಲಿ ಹುಟ್ಟಿ ನಿನಗೆ ಹಿತವಲ್ಲದ್ದು ಆಗಿದ್ದು ಹೇಗೆ?]; ಉದ್ರೇಕದಿಂದ ಕಟ್ಟಿದೆಯಲಾ ತುರಗಮಂ ಭದ್ರಮಾದುದು ರಾಜಕಾರ್ಯಂ ಇದಂ ಅಮೃತಕೆ ಸಮುದ್ರಮಂ ಮಥಿಸೆ ವಿಷಂ ಉದಿಸಿದವೊಲು ಆಯ್ತು ನಿನ್ನ ಉದ್ಭವಂ ತನಗೆ ಎಂದಳು=[ಅಹಂಕಾರದಿಂದ ಕಟ್ಟಿದೆಯಲ್ಲಾ ತುರಗವನ್ನು, ಶ್ರೇಷ್ಠ/ ಉತ್ತಮವಾಯಿತು ರಾಜಕಾರ್ಯ; ಇದು ಅಮೃತಕ್ಕಾಗಿ ಸಮುದ್ರವನ್ನು ಕಡೆದಾಗ ವಿಷವು ಉದ್ಭವಿಸಿದಂತೆ ಆಯಿತು - ತನಗೆ ನೀನು ಹುಟ್ಟಿದ್ದು ಎಂದಳು.];
 • ತಾತ್ಪರ್ಯ:ಚಿತ್ರಾಂಗದೆ ಮಗನನ್ನು ಕುರಿತು, ನೀನು ಕೆಟ್ಟಬುದ್ಧಿಯನ್ನು ಎಲ್ಲಿ ಕಲಿತೆ? ಈ ರೀತಿ ಗುರು/ಪಿತೃದ್ರೋಹ ಮಾಡಲು ಹೇಗೆ ತೊಡಗಿತು ನಿನ್ನ ಮನಸ್ಸು? ಅಕಟ! ನನ್ನ ರಮಣನ/ ಪತಿಯ ಆಗಮನವು, ಆತನ ಹೊಟ್ಟೆಯಲ್ಲಿ ಹುಟ್ಟಿ ನಿನಗೆ ಹಿತವಲ್ಲದ್ದು ಆಗಿದ್ದು ಹೇಗೆ? ಅಹಂಕಾರದಿಂದ ಕಟ್ಟಿದೆಯಲ್ಲಾ ತುರಗವನ್ನು, ಶ್ರೇಷ್ಠ/ ಉತ್ತಮವಾಯಿತು ರಾಜಕಾರ್ಯ; ಇದು ಅಮೃತಕ್ಕಾಗಿ ಸಮುದ್ರವನ್ನು ಕಡೆದಾಗ ವಿಷವು ಉದ್ಭವಿಸಿದಂತೆ ತನಗೆ ನೀನು ಹುಟ್ಟಿದ್ದು ಆಯಿತು, ಎಂದಳು.];
 • (ಪದ್ಯ-೩೨)

ಪದ್ಯ :-:೩೩:[ಸಂಪಾದಿಸಿ]

ಮಾತೆಯ ನುಡಿಗೆ ನಡುನಡುಗಿ ಬಭ್ರುವಾಹನಂ | ಭೀತಿಯಿಂದಡಿಗೆರಗಿ ಕ್ಷತ್ರಿಯರ ಪಂತದಿಂ | ದಾತನ ತುರಗಮಂ ಕಟ್ಟಿದೆಂ ನಿಮ್ಮ ಚಿತ್ತಕೆ ಬಾರದಿರ್ದ ಬಳಿಕ ||
ನೀತಿಯಾದಪುದೆ ತನಗಿನ್ನು ನಿಮ್ಮಡಿಗೆ ಸಂ | ಪ್ರೀತಿಯೆಂತಾದಪುದದಂ ಬೆಸಸಿದೊಡೆ ಮಾಳ್ವೆ | ನೇತಕಾತುರಮೆಂದು ಕೈಮುಗಿದೊಡಾಗ ಚಿತ್ರಾಂಗದೆ ನಿರೂಪಿದಳು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಮಾತೆಯ ನುಡಿಗೆ ನಡುನಡುಗಿ ಬಭ್ರುವಾಹನಂ ಭೀತಿಯಿಂದ ಅಡಿಗೆ ಎರಗಿ ಕ್ಷತ್ರಿಯರ ಪಂತದಿಂದ ಆತನ ತುರಗಮಂ ಕಟ್ಟಿದೆಂ=[ಬಬ್ರುವಾಹನನು, ತಾಯಿಯ ನುಡಿಗೆ ಹೆದರಿ ನಡುಗಿ ಭಯದಿಂದ ಪಾದಕ್ಕೆ ನಮಿಸಿ, ಕ್ಷತ್ರಿಯರ ಧರ್ಮದಿಂದ ಆತನ ಕುದುರೆಯನ್ನು ಕಟ್ಟಿದೆನು.]; ನಿಮ್ಮ ಚಿತ್ತಕೆ ಬಾರದಿರ್ದ ಬಳಿಕ ನೀತಿಯಾದಪುದೆ ತನಗಿನ್ನು ನಿಮ್ಮ ಅಡಿಗೆ ಸಂಪ್ರೀತಿಯೆಂತು ಆದಪುದು ಅದಂ ಬೆಸಸಿದೊಡೆ ಮಾಳ್ವೆನು=[ನಿಮ್ಮ ಮನಸ್ಸಿಗೆ ಅದು ಸರಿ ಬರದಿದ್ದರೆ ಕಟ್ಟಿ ಯುದ್ಧ ಮಾಡುವುದು,ನೀತಿಯಾಗುವುದೇ? ತನಗೆ ಇನ್ನು ನಿಮ್ಮ ಪಾದಕ್ಕೆ/ ಮನಸ್ಸಿಗೆ ಯಾವುದು ಸಂಪ್ರೀತಿ ಆಗುವುದೋ ಅದನ್ನು ಹೇಳಿದರೆ ಹಾಗೆ ಮಾಡುವೆನು]; ಏತಕೆ ಆತುರಮೆಂದು ಕೈಮುಗಿದೊಡೆ ಆಗ ಚಿತ್ರಾಂಗದೆ ನಿರೂಪಿದಳು=[ನೀನು ಏಕೆ ಆತುರಪಟ್ಟು ಸಿಟ್ಟಾಗುವೆ? ದುಃಖಪಡುವೆ? ಎಂದು ಅವನು ಕೈಮುಗಿದಾಗ ಚಿತ್ರಾಂಗದೆ ಹೇಳಿದಳು.].
 • ತಾತ್ಪರ್ಯ:ಬಬ್ರುವಾಹನನು, ತಾಯಿಯ ನುಡಿಗೆ ಹೆದರಿ ನಡುಗಿ ಭಯದಿಂದ ಪಾದಕ್ಕೆ ನಮಿಸಿ, ಕ್ಷತ್ರಿಯರ ಧರ್ಮದಿಂದ ಆತನ ಕುದುರೆಯನ್ನು ಕಟ್ಟಿದೆನು. ನಿಮ್ಮ ಮನಸ್ಸಿಗೆ ಅದು ಸರಿ ಬರದಿದ್ದರೆ ಕಟ್ಟಿ ಯುದ್ಧ ಮಾಡುವುದು,ನೀತಿಯಾಗುವುದೇ? ತನಗೆ ಇನ್ನು ನಿಮ್ಮ ಪಾದಕ್ಕೆ/ ಮನಸ್ಸಿಗೆ ಯಾವುದು ಸಂಪ್ರೀತಿ ಆಗುವುದೋ ಅದನ್ನು ಹೇಳಿದರೆ ಹಾಗೆ ಮಾಡುವೆನು; ನೀನು ಏಕೆ ಆತುರಪಟ್ಟು ಸಿಟ್ಟಾಗುವೆ? ದುಃಖಪಡುವೆ? ಎಂದು ಅವನು ಕೈಮುಗಿದಾಗ ಚಿತ್ರಾಂಗದೆ ಹೇಳಿದಳು.].
 • (ಪದ್ಯ-೩೩)

ಪದ್ಯ :-:೩೪:[ಸಂಪಾದಿಸಿ]

ಮಗನೆ ಕೇಳೆನ್ನನೆಂದರ್ಜುನಂ ಬಿಟ್ಟು ನಿಜ | ನಗರಿಗೈದಿದಿನಂದು ಮೊದಲಾಗಿ ತಾನವನ | ನಗಲ್ದ ಸಂತಾಪದಿಂ ತಪಿಸುತಿರ್ದೆಂ ಪುಣ್ಯವಶದಿಮದೆ ಬಂದನಿಂದು ||
ಬಗೆಯದಿರ್ದಪೆನೆಂತು ಕಾಂತನಂ ನೀನಿಂದು ಮೊಗದೋರಿ ನಿನ್ನ ಸರ್ವಸ್ವಮಂ ತಾತನಂ | ಘ್ರಿಗೆ ಸಮರ್ಪಿಸಿದೊಡಾಂ ಮಾಡಿದ ತಪೋನಿಷ್ಠೆ ಸಫಲಮಾದಪುದೆಂದಳು ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಮಗನೆ ಕೇಳು ಎನ್ನನು ಎಂದು ಅರ್ಜುನಂ ಬಿಟ್ಟು ನಿಜನಗರಿಗೆ ಐದಿದಿನೊ ಅಂದು ಮೊದಲಾಗಿ ತಾನು ಅವನನು ಅಗಲ್ದ ಸಂತಾಪದಿಂ ತಪಿಸುತಿರ್ದೆಂ=[ಮಗನೆ ಕೇಳು, ನನ್ನನು ಎಂದು ಅರ್ಜುನನು ಬಿಟ್ಟು ತನ್ನ ನಗರಕ್ಕೆ ಹೋದನೊ ಅಂದಿನಿಂದಲೂ ತಾನು ಅವನನನ್ನು ಅಗಲಿದ ಸಂಕಟದಿಂದ ಬೇಯುತ್ತಿದ್ದೆನು.];ಪುಣ್ಯವಶದಿಂದೆ ಬಂದನು ಇಂದು ಬಗೆಯದೆ (ಅರಿಯದೆ) ಇರ್ದಪೆನು ಎಂತು ಕಾಂತನಂ, ನೀನು ಇಂದು ಮೊಗದೋರಿ ನಿನ್ನ ಸರ್ವಸ್ವಮಂ ತಾತನ ಅಂಘ್ರಿಗೆ ಸಮರ್ಪಿಸಿದೊಡೆ ಆಂ ಮಾಡಿದ ತಪೋನಿಷ್ಠೆ ಸಫಲಂ ಆದಪುದು ಎಂದಳು=[ಪುಣ್ಯವಶದಿಂದ ಇಂದು / ಈಗ ಬಂದಿರುವನು; ಪತಿಯನ್ನು ಅರಿತು ಸಂತೋಷಪಡದೆ ಹೇಗೆ ಇರಲಿ! ನೀನು ಇಂದು ಅವನನ್ನು ಭೇಟಿಮಾಡಿ ನಿನ್ನ ಸರ್ವಸ್ವವವನ್ನೂ ತಂದೆಯ ಪಾದಕ್ಕೆಗೆ ಸಮರ್ಪಿಸಿದರೆ ನಾನು ಮಾಡಿದ ತಪೋನಿಷ್ಠೆಯು ಸಫಲವಾಗುವುದು ಎಂದಳು].
 • ತಾತ್ಪರ್ಯ:ಮಗನೆ ಕೇಳು, ನನ್ನನು ಎಂದು ಅರ್ಜುನನು ಬಿಟ್ಟು ತನ್ನ ನಗರಕ್ಕೆ ಹೋದನೊ ಅಂದಿನಿಂದಲೂ ತಾನು ಅವನನನ್ನು ಅಗಲಿದ ಸಂಕಟದಿಂದ ಬೇಯುತ್ತಿದ್ದೆನು. ಪುಣ್ಯವಶದಿಂದ ಇಂದು / ಈಗ ಬಂದಿರುವನು; ಪತಿಯನ್ನು ಅರಿತು ಸಂತೋಷಪಡದೆ ಹೇಗೆ ಇರಲಿ! ನೀನು ಇಂದು ಅವನನ್ನು ಭೇಟಿಮಾಡಿ ನಿನ್ನ ಸರ್ವಸ್ವವವನ್ನೂ ತಂದೆಯ ಪಾದಕ್ಕೆಗೆ ಸಮರ್ಪಿಸಿದರೆ ನಾನು ಮಾಡಿದ ತಪೋನಿಷ್ಠೆಯು ಸಫಲವಾಗುವುದು ಎಂದಳು].
 • (ಪದ್ಯ-೩೪)

ಪದ್ಯ :-:೩೫:[ಸಂಪಾದಿಸಿ]

ಕಂದ ನೀನಿಂದು ನಿನ್ನಖಿಳ ಪ್ರಕೃತಿಗಳಂ | ತಂದೆಗೊಪ್ಪಿಸಿ ಯುಧಿಷ್ಠಿರನೃಪನ ವೈರಿಗಳ | ಮುಂದೆ ತೋರಿಸು ನಿನ್ನ ಶೌರ್ಯಮಂ ತನುಧನಪ್ರಾಣಂಗಳವರದಾಗೆ ||
ನಿಂದೆಗೊಳಗಾಗದಿರ್ ದುಷ್ಟಸಂತಾನದಂ | ತೊಂದಿಸದಿರಗತಿಯಂ ತನ್ನ ಪಾತಿವ್ರತ್ಯ | ಕೆಂದು ಸೂನುಗೆ ಬುದ್ಧಿಗಲಿಸಿ ಪಾರ್ಥನ ಬರವಿಗುಬ್ಬಿದಳ್ ಚಿತ್ರಾಂಗದೆ ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕಂದ ನೀನು ಇಂದು ನಿನ್ನ ಅಖಿಳ ಪ್ರಕೃತಿಗಳಂ ತಂದಗೊಪ್ಪಿಸಿ ಯುಧಿಷ್ಠಿರನೃಪನ ವೈರಿಗಳ ಮುಂದೆ ತೋರಿಸು ನಿನ್ನ ಶೌರ್ಯಮಂ ತನುಧನಪ್ರಾಣಂಗಳವರದಾಗೆ=[ಮಗನೇ, ನೀನು ಇಂದು ನಿನ್ನ ಎಲ್ಲಾ ರಾಜ್ಯದ ಸಪ್ತ ಪ್ರಕೃತಿಗಳನ್ನು ಎಂದರೆ ಸ್ವಾಮಿ (ರಾಜ), ಅಮಾತ್ಯ, ಮಿತ್ರ, ಕೋಶ, ಸೈನ್ಯ, ರಾಷ್ಟ್ರ ಮತ್ತು ದುರ್ಗ ಎಂಬ ಏಳು ಬಗೆಯ ರಾಜ್ಯಾಂಗಗಳನ್ನು ತಂದೆಗೊಪ್ಪಿಸಿ ಯುಧಿಷ್ಠಿರನೃಪನ ವೈರಿಗಳ ಮುಂದೆ ನಿನ್ನ ಶೌರ್ಯವನ್ನು ತೋರಿಸು, ಏಕೆಂದರೆ ತನುಧನಪ್ರಾಣಗಳು ಅವರಿಗೆ ಸೇರಿದೆ.]; ನಿಂದೆಗೆ ಒಳಗಾಗದಿರ್ ದುಷ್ಟಸಂತಾನದಂತೆ ಒಂದಿಸದಿರು ಅಗತಿಯಂ ತನ್ನ ಪಾತಿವ್ರತ್ಯ ಕೆಂದು ಸೂನುಗೆ ಬುದ್ಧಿಗಲಿಸಿ ಪಾರ್ಥನ ಬರವಿಗುಬ್ಬಿದಳ್ ಚಿತ್ರಾಂಗದೆ=[ದುಷ್ಟಸಂತಾನದಂತೆ ನಿಂದೆಗೆ ಒಳಗಾಗದಿರು; ತನ್ನ ಪಾತಿವ್ರತ್ಯಕ್ಕೆ ದುರ್ಗತಿಯನ್ನು ತರಬೇಡ ಎಂದು ಮಗನಿಗೆ ಬುದ್ಧಿಹೇಳಿ, ಚಿತ್ರಾಂಗದೆ ಪಾರ್ಥನ ಬರುವಿಗೆ ಹಿಗ್ಗಿದಳು.]
 • ತಾತ್ಪರ್ಯ:ಮಗನೇ, ನೀನು ಇಂದು ನಿನ್ನ ಎಲ್ಲಾ ರಾಜ್ಯದ ಸಪ್ತ ಪ್ರಕೃತಿಗಳನ್ನು ಎಂದರೆ ಸ್ವಾಮಿ (ರಾಜ), ಅಮಾತ್ಯ, ಮಿತ್ರ, ಕೋಶ, ಸೈನ್ಯ, ರಾಷ್ಟ್ರ ಮತ್ತು ದುರ್ಗ ಎಂಬ ಏಳು ಬಗೆಯ ರಾಜ್ಯಾಂಗಗಳನ್ನು ತಂದೆಗೊಪ್ಪಿಸಿ ಯುಧಿಷ್ಠಿರನೃಪನ ವೈರಿಗಳ ಮುಂದೆ ನಿನ್ನ ಶೌರ್ಯವನ್ನು ತೋರಿಸು, ಏಕೆಂದರೆ ತನುಧನಪ್ರಾಣಗಳು ಅವರಿಗೆ ಸೇರಿದೆ. ದುಷ್ಟ ಸಂತಾನದಂತೆ ನಿಂದೆಗೆ ಒಳಗಾಗದಿರು; ತನ್ನ ಪಾತಿವ್ರತ್ಯಕ್ಕೆ ದುರ್ಗತಿಯನ್ನು ತರಬೇಡ ಎಂದು ಮಗನಿಗೆ ಬುದ್ಧಿಹೇಳಿ, ಚಿತ್ರಾಂಗದೆ ಪಾರ್ಥನ ಬರುವಿಗೆ ಹಿಗ್ಗಿದಳು.
 • (ಪದ್ಯ-೩೫) I-X;

ಪದ್ಯ :-:೩೬:[ಸಂಪಾದಿಸಿ]

ಜನನಿಯಂ ಮನೆಗೆ ಮನ್ನಿಸಿ ಕಳುಹಿ ಬಭ್ರುವಾ | ಹನನಾ ಸುಬುದ್ದಿಯಂ ನೋಡಿ ಪಿತನಂ ಕಾಣ್ಬು | ದನುಚಿತವೊ ಮೇಣುಚಿತಮಾದಪುದೊ ಪೇಳಿದರ ನಿಶ್ಚಯವನೀಗಳೆನಲು ||
ನಿನಗೆಣಿಕೆ ಬೇಡ ಮೊದಲರಿಯದಾದೆವು ಧರ್ಮ | ತನಯಂಗೆ ನಿಮ್ಮಯ್ಯನನುಜನಾತನ ರಕ್ಷೆ | ವಿನುತಹಯಮಿ(ಕಿ)ದನಿನ್ನು ಕಲಿತನದೆ ಕಟ್ಟುವುದು ನೀತಿಪಥಮಲ್ಲೆಂದನು ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಜನನಿಯಂ ಮನೆಗೆ ಮನ್ನಿಸಿ ಕಳುಹಿ ಬಭ್ರುವಾಹನನು ಆ ಸುಬುದ್ದಿಯಂ ನೋಡಿ ಪಿತನಂ ಕಾಣ್ಬುದು ಅನುಚಿತವೊ ಮೇಣ್ ಉಚಿತಮಾದಪುದೊ ಪೇಳಿದರ ನಿಶ್ಚಯವನು ಈಗಳು ಎನಲು=[ತಾಯಿಯನ್ನು ಮನೆಗೆ ಮರ್ಯಾದೆಯಿಂದ ಕಳುಹಿಸಿ, ಬಭ್ರುವಾಹನನು ಆ ಸುಬುದ್ದಿಯನ್ನು ನೋಡಿ ತಂದೆಯನ್ನು ಕಾಣುವುದು ಅನುಚಿತವೊ ಅಥವಾ ಯೊಗ್ಯವಾದುದೋ ಇದರ ಧರ್ಮನಿಶ್ಚಯವನ್ನು ಈಗ ಹೇಳು ಎನ್ನಲು,];ನಿನಗೆ ಎಣಿಕೆ ಬೇಡ ಮೊದಲು ಅರಿಯದಾದೆವು ಧರ್ಮತನಯಂಗೆ ನಿಮ್ಮಯ್ಯನನುಜನು ಅತನ ರಕ್ಷೆ ವಿನುತಹಯಂ ಇದನಿನ್ನು ಕಲಿತನದೆ ಕಟ್ಟುವುದು ನೀತಿಪಥಂ ಅಲ್ಲೆಂದನು=[ಆಗ ಸುಬುದ್ಧಿಯು, ನಿನಗೆ ಯೋಚನೆ ಬೇಡ, ಮೊದಲು ನಾವು ತಿಳಿಯದೆ ಕಟ್ಟಿದೆವು. ಧರ್ಮಜನಿಗೆ ನಿಮ್ಮ ತಂದೆಯು ಸಹೊದರನು. ಅತನ ರಕ್ಷೆಯಲ್ಲಿ ಶ್ರೇಷ್ಠವಾದ ಕುದುರೆಯು ಇರುವುದು, ಇದನ್ನು ಇನ್ನು ಪರಾಕ್ರಮದಿಂದ ಕಟ್ಟುವುದು ನೀತಿಮಾರ್ಗವಲ್ಲ,ಎಂದನು.]
 • ತಾತ್ಪರ್ಯ:ತಾಯಿಯನ್ನು ಮನೆಗೆ ಮರ್ಯಾದೆಯಿಂದ ಕಳುಹಿಸಿ, ಬಭ್ರುವಾಹನನು ಆ ಮಂತ್ರಿ ಸುಬುದ್ದಿಯನ್ನು ನೋಡಿ ತಂದೆಯನ್ನು ಕಾಣುವುದು ಅನುಚಿತವೊ ಅಥವಾ ಯೊಗ್ಯವಾದುದೋ ಇದರ ಧರ್ಮನಿಶ್ಚಯವನ್ನು ಈಗ ಹೇಳು ಎನ್ನಲು, ಆಗ ಸುಬುದ್ಧಿಯು, ನಿನಗೆ ಯೋಚನೆ ಬೇಡ, ಮೊದಲು ನಾವು ತಿಳಿಯದೆ ಕಟ್ಟಿದೆವು. ಧರ್ಮಜನಿಗೆ ನಿಮ್ಮ ತಂದೆಯು ಸಹೊದರನು. ಅತನ ರಕ್ಷೆಯಲ್ಲಿ ಶ್ರೇಷ್ಠವಾದ ಯಜ್ಞಕುದುರೆಯು ಇರುವುದು, ಇದನ್ನು ಇನ್ನು ಪರಾಕ್ರಮದಿಂದ ಕಟ್ಟುವುದು ನೀತಿಮಾರ್ಗವಲ್ಲ,ಎಂದನು.
 • (ಪದ್ಯ-೩೬)

ಪದ್ಯ :-:೩೭:[ಸಂಪಾದಿಸಿ]

ಇನ್ನು ಕಟ್ಟಿಸು ಗುಡಿಗಳಂ ಬೇಗ ಪಟ್ಟಣಕೆ | ನಿನ್ನಖಿಳ ರಾಜ್ಯಪದವಿಯನೊಪ್ಪಿಸಯ್ಯಂಗೆ | ಮನ್ನೆಯರ್ ಚತುರಂಗದ ಸೇನೆ ನಾಗರಿಕಜನಮಲಂಕರಿಸಿಕೊಳಲಿ ||
ಕನ್ನೆಯರ್ ಲಾಜ ದಧಿ ದೂರ್ವಾಕ್ಷತೆಗಳಿಂದೆ | ಕನ್ನಡಿ ಕಳಸವಿಡಿದು ಬರಲಿ ಸಂದರ್ಶನಕೆ | ಸನ್ನುತ ಸುವಸ್ತುಗಳನೆಲ್ಲಮಂ ತೆಗೆಸು ತಡವೇಕೆಂದನಾ ಸುಬುದ್ಧಿ ||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಇನ್ನು ಕಟ್ಟಿಸು ಗುಡಿಗಳಂ (ಮಂಟಪ) ಬೇಗ ಪಟ್ಟಣಕೆ ನಿನ್ನ ಅಖಿಳ ರಾಜ್ಯಪದವಿಯನು ಒಪ್ಪಿಸು ಅಯ್ಯಂಗೆ (ತಂದೆಗೆ) ಮನ್ನೆಯರ್ ಚತುರಂಗದ ಸೇನೆ ನಾಗರಿಕಜನಂ ಅಲಂಕರಿಸಿಕೊಳಲಿ=[ಇನ್ನು ಪಟ್ಟಣಕ್ಕೆ ಮಂಟಪ ತೋರಣಗಳನ್ನು ಬೇಗ ಕಟ್ಟಿಸು; ನಿನ್ನ ಅಖಿಲ ರಾಜ್ಯಪದವಿಯನ್ನು ತಂದೆಗೆ ಒಪ್ಪಿಸು; ಮಾನಿನಿಯರು /ಹೆಂಗಸರು, ಚತುರಂಗ ಸೇನೆ, ನಾಗರಿಕಜನರು, ಅಲಂಕರಿಸಿಕೊಳ್ಳಲಿ. ]; ಕನ್ನೆಯರ್ ಲಾಜ (ಭತ್ತ ಹುರಿದ ಅರಳು ಅಥಿತಿಗಳ ಮೇಲೆ ಹೂವಿನಂತೆ ಎರಚುವರು)) ದಧಿ ದೂರ್ವಾಕ್ಷತೆಗಳಿಂದೆ ಕನ್ನಡಿ ಕಳಸವಿಡಿದು ಬರಲಿ ಸಂದರ್ಶನಕೆ ಸನ್ನುತ ಸುವಸ್ತುಗಳನೆಲ್ಲಮಂ ತೆಗೆಸು ತಡವೇಕೆ ಎಂದನು ಆ ಸುಬುದ್ಧಿ=[(ಸ್ವಾಗತ ಸಿದ್ಧತೆಗಾಗಿ) ಹುಡುಗಿಯರು/ ಕುಮಾರಿಯರು ಅರಳು, ಮೊಸರು, ದೂರ್ವೆ, ಅಕ್ಷತೆಗಳಿಂದ ಕನ್ನಡಿ ಕಳಸಹಿಡಿದು ಬರಲಿ, ಪಾರ್ತನ ಸಂದರ್ಶನ ಮಾಡಲು, ಉತ್ತಮ ಸುವಸ್ತುಗಳನ್ನು ಎಲ್ಲವನ್ನೂ ತೆಗೆಸು ತಡವೇಕೆ? ಎಂದನು ಆ ಸುಬುದ್ಧಿ].
 • ತಾತ್ಪರ್ಯ:ಇನ್ನು ಪಟ್ಟಣಕ್ಕೆ ಮಂಟಪ ತೋರಣಗಳನ್ನು ಬೇಗ ಕಟ್ಟಿಸು; ನಿನ್ನ ಅಖಿಲ ರಾಜ್ಯಪದವಿಯನ್ನು ತಂದೆಗೆ ಒಪ್ಪಿಸು; ಮಾನಿನಿಯರು /ಹೆಂಗಸರು, ಚತುರಂಗ ಸೇನೆ, ನಾಗರಿಕಜನರು, ಅಲಂಕರಿಸಿಕೊಳ್ಳಲಿ. ಸ್ವಾಗತ ಸಿದ್ಧತೆಗಾಗಿ ಹುಡುಗಿಯರು/ ಕುಮಾರಿಯರು ಅರಳು, ಮೊಸರು, ದೂರ್ವೆ, ಅಕ್ಷತೆಗಳಿಂದ ಕನ್ನಡಿ ಕಳಸಹಿಡಿದು ಬರಲಿ, ಪಾರ್ತನ ಸಂದರ್ಶನ ಮಾಡಲು, ಉತ್ತಮ ಸುವಸ್ತುಗಳನ್ನು ಎಲ್ಲವನ್ನೂ ತೆಗೆಸು ತಡವೇಕೆ? ಎಂದನು ಆ ಸುಬುದ್ಧಿ.
 • (ಪದ್ಯ-೩೭)

ಪದ್ಯ :-:೩೮:[ಸಂಪಾದಿಸಿ]

ವರಸುಬುದ್ದಿಯ ಬುದ್ದಿಯಂ ಕೇಳ್ದನಾ ಪಾರ್ಥಿ | ದೊರೆದೊರೆಗಳೆಲ್ಲರಂ ಕಳುಪಿದಂ ಮನೆಗಳ್ಗೆ | ಪುರದೊಳಗೆ ಡಂಗುರಂಬೊಯ್ಸಿದಂ ಕೋಶದ ಸುವಸ್ತುಗಳನು ||
ತರಿಸಿದಂ ಕನಕಪೂರಿತ ಶಕಟನಿಕರಮಂ | ತರುಣಿ ಗೋಮಹಿಷಿ ಮದ ಕುಂಜರ ಕುಲಾಶ್ವಮಣಿ | ವಿರಚಿತ ರಥಂಗಳಂ ರಜತ ಕಾಂಚನ ಮಯದ ಪಲವು ಕೊಪ್ಪರಿಗೆಗಳನು ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ವರಸುಬುದ್ದಿಯ ಬುದ್ದಿಯಂ ಕೇಳ್ದನಾ ಪಾರ್ಥಿ ದೊರೆದೊರೆಗಳೆಲ್ಲರಂ ಕಳುಪಿದಂ ಮನೆಗಳ್ಗೆ ಪುರದೊಳಗೆ ಡಂಗುರಂಬೊಯ್ಸಿದಂ ಕೋಶದ ಸುವಸ್ತುಗಳನು=[ಶ್ರೇಷ್ಠ ಮಂತ್ರಿ ಸುಬುದ್ದಿಯ ಬುದ್ದಿಯಮಾತನ್ನು ಕೇಳಿದ ಪಾರ್ಥಿ/ ಬಬ್ರುವಾಹನ ಎಲ್ಲಾ ಮಿತ್ರ ದೊರೆಗಳನ್ನು ಅವರ ಮನೆಗಳಿಗೆ ಕಳುಹಿಸಿದನು.ನಗರದಲ್ಲಿ ಸ್ವಾಗತ ಸಿದ್ಧತೆಗೆ ಡಂಗುರ ಹೊಡೆಸಿದನು. ಕೋಶದ ಉತ್ತಮ ವಸ್ತುಗಳನ್ನೂ, ]; ತರಿಸಿದಂ ಕನಕಪೂರಿತ ಶಕಟನಿಕರಮಂ ತರುಣಿ ಗೋಮಹಿಷಿ ಮದ ಕುಂಜರ ಕುಲಾಶ್ವಮಣಿ ವಿರಚಿತ ರಥಂಗಳಂ ರಜತ ಕಾಂಚನ ಮಯದ ಪಲವು ಕೊಪ್ಪರಿಗೆಗಳನು=[ ಚಿನ್ನದಿಂದ ತುಂಬಿದ ಗಾಡಿಗಳನ್ನು, ಯುವತಿಯರು, ಗೋವುಗಳು,ಮಹಿಷಿಗಳು, ಮದದ ಆನೆಗಳು,ಉತ್ತಮ ಅಶ್ವಗಳು, ಮಣಿ ವಿರಚಿತ ರಥಂಗಳು, ಬೆಳ್ಳಿ ಬಂಗಾರದ ಹಲವು ಕೊಪ್ಪರಿಗೆಗಳನ್ನೂ ತರಿಸಿದನು.];
 • ತಾತ್ಪರ್ಯ:ಶ್ರೇಷ್ಠ ಮಂತ್ರಿ ಸುಬುದ್ದಿಯ ಬುದ್ದಿಯಮಾತನ್ನು ಕೇಳಿದ ಪಾರ್ಥಿ/ ಬಬ್ರುವಾಹನ ಎಲ್ಲಾ ಮಿತ್ರ ದೊರೆಗಳನ್ನು ಅವರ ಮನೆಗಳಿಗೆ ಕಳುಹಿಸಿದನು.ನಗರದಲ್ಲಿ ಸ್ವಾಗತ ಸಿದ್ಧತೆಗೆ ಡಂಗುರ ಹೊಡೆಸಿದನು. ಕೋಶದ ಉತ್ತಮ ವಸ್ತುಗಳನ್ನೂ, ಚಿನ್ನದಿಂದ ತುಂಬಿದ ಗಾಡಿಗಳನ್ನು, ಯುವತಿಯರು, ಗೋವುಗಳು,ಮಹಿಷಿಗಳು, ಮದದ ಆನೆಗಳು,ಉತ್ತಮ ಅಶ್ವಗಳು, ಮಣಿ ವಿರಚಿತ ರಥಂಗಳು, ಬೆಳ್ಳಿ ಬಂಗಾರದ ಹಲವು ಕೊಪ್ಪರಿಗೆಗಳನ್ನೂ ತರಿಸಿದನು.
 • (ಪದ್ಯ-೩೮)

ಪದ್ಯ :-:೩೯:[ಸಂಪಾದಿಸಿ]

ನವ್ಯಚಿತ್ತಾಂಬರಾಭರಣಂಗಳಂ ವಿವಿಧ | ದಿವ್ಯರತ್ನಂಗಳಂ ಪರಿಪರಿಯ ಪರಿಮಳ | ದ್ರವ್ಯಂಗಳಂ ಕನಕ ಖಟ್ವ ನುತಹಂಸತೂಲದಮೃದುಲ ತಲ್ಪಗಳನು ||
ಸುವ್ಯಜನ ಚಾಮರ ಸಿತಾತಪತ್ರಂಗಳಂ | ಸವ್ಯಸಾಚಿಯ ಕಾಣಿಕೆಗೆ ತರುವುದೆಂದು ಕ | ರ್ತವ್ಯದಿಂ ಜೋಡಿಸಿದನಾ ಬಭ್ರುವಾಹನಂದಿರುಳಖಿಳ ವಸ್ತುಗಳನು ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ನವ್ಯಚಿತ್ತಾಂಬರ ಆಭರಣಂಗಳಂ ವಿವಿಧ ದಿವ್ಯರತ್ನಂಗಳಂ ಪರಿಪರಿಯ ಪರಿಮಳ ದ್ರವ್ಯಂಗಳಂ ಕನಕ ಖಟ್ವ (ಮಂಚ) ನುತಹಂಸತೂಲದ ಮೃದುಲ ತಲ್ಪಗಳನು=[ಹೊಸ ಚಿತ್ರದಬಟ್ಟೆ/ಧೋತರಗಳು, ಆಭರಣಗಳು, ವಿವಿಧ ದಿವ್ಯರತ್ನಗಳು, ನಾನಾಬಗೆಯ ಪರಿಮಳ ದ್ರವ್ಯಗಳು, ಚಿನ್ನದ ಮಂಚಗಳು, ಹೊಗಳಿಕೆಗೆ ತಕ್ಕ ಹಂಸತೂಲದ ಮೃದುವಾದ ಹಾಸಿಗೆಗಳು,]; ಸುವ್ಯಜನ ಚಾಮರ ಸಿತಾತಪತ್ರಂಗಳಂ ಸವ್ಯಸಾಚಿಯ ಕಾಣಿಕೆಗೆ ತರುವುದೆಂದು ಕರ್ತವ್ಯದಿಂ ಜೋಡಿಸಿದನಾ ಬಭ್ರುವಾಹನಂ ಅಂದಿರುಳು ಅಖಿಳ ವಸ್ತುಗಳನು=[ಒಳ್ಳೆಯ ಬೀಸಣಿಕೆ ಚಾಮರ ಬಿಳಿಕೊಡೆಗಳು, ಇವುಗಳನ್ನು ಅರ್ಜುನನ ಕಾಣಿಕೆಗೆ ತರುವುದೆಂದು ಸಾರಿಸಿ, ತನ್ನ ಕರ್ತವ್ಯಶ್ರದ್ಧೆಯಿಂದ ಬಭ್ರುವಾಹನನು ಅಂದು ರಾತ್ರಿಯೇ ಅಖಿಲ ವಸ್ತುಗಳನ್ನು ಜೋಡಿಸಿದನು.];
 • ತಾತ್ಪರ್ಯ:ಹೊಸ ಚಿತ್ರದಬಟ್ಟೆ/ಧೋತರಗಳು, ಆಭರಣಗಳು, ವಿವಿಧ ದಿವ್ಯರತ್ನಗಳು, ನಾನಾಬಗೆಯ ಪರಿಮಳ ದ್ರವ್ಯಗಳು, ಚಿನ್ನದ ಮಂಚಗಳು, ಹೊಗಳಿಕೆಗೆ ತಕ್ಕ ಹಂಸತೂಲದ ಮೃದುವಾದ ಹಾಸಿಗೆಗಳು, ಒಳ್ಳೆಯ ಬೀಸಣಿಕೆ ಚಾಮರ ಬಿಳಿಕೊಡೆಗಳು, ಇವುಗಳನ್ನು ಅರ್ಜುನನ ಕಾಣಿಕೆಗೆ ತರುವುದೆಂದು ಸಾರಿಸಿ, ತನ್ನ ಕರ್ತವ್ಯಶ್ರದ್ಧೆಯಿಂದ ಬಭ್ರುವಾಹನನು ಅಂದು ರಾತ್ರಿಯೇ ಅಖಿಲ ವಸ್ತುಗಳನ್ನು ಜೋಡಿಸಿದನು.
 • (ಪದ್ಯ-೩೯)

ಪದ್ಯ :-:೪೦:[ಸಂಪಾದಿಸಿ]

ಸ್ವರಗೈದುದನಿತರೊಳ್ ಚರಣಾಯುಧಂ ಜಾರೆ | ಯರ ಮನಂ ಬೆಚ್ಚಿದುದು ಮೂಡದೆಸೆ ಬೆಳತುದು ಪ | ಸರಿದುದು ತಂಗಾಳಿ ಖಗನಿಕರಮುಲಿದೆದ್ದುವರಳಿದುವು ತಾವರೆಗಳು ||
ಮೊರೆದುದಾರಡಿ ನೆರೆದುವೆಣೆವಕ್ಕಿ ತಾರೆಗಳ್ | ಪರಿದುವಿಡಿದಿರ್ದ ಕತ್ತಲೆ ತೊಲಗಿತುತ್ಪಲಂ | ಕೊರಗಿದುದು ಜನದ ಕಣ್ಣೆವೆದೆರೆದುದೊದರಿದುವು ದೇಗುಲದ ವಾದ್ಯಂಗಳು ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಪಾರ್ಥನ ದರ್ಶನಕ್ಕೆ ಸಿದ್ಧತೆಯಾಯಿತು, ಆಗ ,ಸ್ವರಗೈದುದು ಅನಿತರೊಳ್ ಚರಣಾಯುಧಂ (ಕೋಳಿ) ಜಾರೆಯರ ಮನಂ ಬೆಚ್ಚಿದುದು ಮೂಡದೆಸೆ ಬೆಳತುದು ಪಸರಿದುದು ತಂಗಾಳಿ ಖಗನಿಕರಮು ಉಲಿದೆದ್ದುವು ಅರಳಿದುವು ತಾವರೆಗಳು=[ಅಷ್ಟರಲ್ಲಿ ಕೋಳಿ ಕೂಗಿತು, ವಿಟರೊಡನೆ ಇದ್ದ ಜಾರೆಯರು ಬೆಳಗಾದನ್ನು ಕಂಡು ಮನದಲ್ಲಿ ಹೆದರಿದರು, ಮೂಡಣ ದಿಕ್ಕಿನಲ್ಲಿ ಬೆಳಕುಕಂಡಿತು, ತಂಗಾಳಿ ಬೀಸಿತು, ಹಕ್ಕಿಗಳ ಗುಂಪು ಹಾಡಿದವು, ತಾವರೆಗಳು ಅರಳಿದುವು;]; ಮೊರೆದುದು ಆರಡಿ ನೆರೆದುವು ಎಣೆವಕ್ಕಿ ತಾರೆಗಳ್ ಪರಿದುವು ಇಡಿದಿರ್ದ ಕತ್ತಲೆ ತೊಲಗಿತು ಉತ್ಪಲಂ ಕೊರಗಿದುದು ಜನದ ಕಣ್ಣೆವೆ ತೆರೆದುದು ಒದರಿದುವು ದೇಗುಲದ ವಾದ್ಯಂಗಳು =[ಜೇನು ಮೊರೆಯಿತು, ಚಕ್ರವಾಕಗಳು ಸೇರಿದುವು, ತಾರೆಗಳು ಹೋದುವು, ಮುಸುಕಿದ್ದ ಕತ್ತಲೆ ತೊಲಗಿತು, ವೈದಿಲೆಯು ಮುಚ್ಚಿದವು, ಜನದ ಕಣ್ಣು ರೆಪ್ಪೆ ತೆರೆಯಿತು, ದೇಗುಲದ ವಾದ್ಯಗಳು ಮೊಳಗಿದವು.]
 • ತಾತ್ಪರ್ಯ:ಪಾರ್ಥನ ದರ್ಶನಕ್ಕೆ ಸಿದ್ಧತೆಯಾಯಿತು, ಅಷ್ಟರಲ್ಲಿ ಕೋಳಿ ಕೂಗಿತು, ವಿಟರೊಡನೆ ಇದ್ದ ಜಾರೆಯರು ಬೆಳಗಾದನ್ನು ಕಂಡು ಮನದಲ್ಲಿ ಹೆದರಿದರು, ಮೂಡಣ ದಿಕ್ಕಿನಲ್ಲಿ ಬೆಳಕುಕಂಡಿತು, ತಂಗಾಳಿ ಬೀಸಿತು, ಹಕ್ಕಿಗಳ ಗುಂಪು ಹಾಡಿದವು, ತಾವರೆಗಳು ಅರಳಿದುವು; ಜೇನು ಮೊರೆಯಿತು, ಚಕ್ರವಾಕಗಳು ಸೇರಿದುವು, ತಾರೆಗಳು ಹೋದುವು, ಮುಸುಕಿದ್ದ ಕತ್ತಲೆ ತೊಲಗಿತು, ವೈದಿಲೆಯು ಮುಚ್ಚಿದವು, ಜನದ ಕಣ್ಣು ರೆಪ್ಪೆ ತೆರೆಯಿತು, ದೇಗುಲದ ವಾದ್ಯಗಳು ಮೊಳಗಿದವು. ಬೆಳಗಾಯಿತು!
 • (ಪದ್ಯ-೪೦)

ಪದ್ಯ :-:೪೧:[ಸಂಪಾದಿಸಿ]

ಅರಳ್ದ ಶೋಣಾಂಬುಜಚ್ಛಾಯೆಗಳಡರ್ದುವೆನೆ | ಭರದಿಂದೆ ಕತ್ತಲೆಯ ಮೇಲೆ ಬಹ ರವಿಯ ರಥ | ತುರಗ ಖುರಪುಟದಿಂದಮೇಳ್ವ ಕೆಂದೂಳ್ಗಳೆನೆ ಪ್ರಾಚೀ ನಿತಂಬವತಿಗೆ ||
ಸರಸದಿಂ ತರಣಿಯೊಳ್‍ನೆರೆವ ಸಮಯದೊಳಾದ | ಕರರುಹಕ್ಷತದ ಕಿಸುಬಾಸುಳ್ಗಳೆನೆ ಸವಿ | ಸ್ತರದ ಸಂಧ್ಯಾರಾಗಮೈದೆ ರಂಜಿಸುತಿರ್ದುದಂದು ಮೂಡಣ ದೆಸೆಯೊಳು ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅರಳ್ದ ಶೋಣ ಅಂಬುಜ (ಕೆಂಪು ತಾವರೆ) ಚ್ಛಾಯೆಗಳು ಅಡರ್ದುವೆನೆ ಭರದಿಂದೆ ಕತ್ತಲೆಯ ಮೇಲೆ ಬಹ ರವಿಯ ರಥ ತುರಗ ಖುರಪುಟದಿಂದಂ ಏಳ್ವ ಕೆಂದೂಳ್ಗಳು ಎನೆ=[ಅರಳಿದ ಕೆಂಪು ತಾವರೆಯ ಕೆಂಪುನೆರಳುಗಳು ಮೆತ್ತಿದವು ಎನ್ನುವಂತೆ, ವೇಗವಾಗಿ ಕತ್ತಲೆಯ ಮೇಲೆ ಬರುತ್ತಿರುವ ರವಿಯ ರಥ ಕುದುರೆಗಳ ಖುರಪುಟದಿಂದ(ಗೊರಸಿನಿಂದ) ಏಳುವ ಕೆಂದೂಳೋ ಎನ್ನುವಂತೆ,]; ಪ್ರಾಚೀ (ಪೂರ್ವದ) ನಿತಂಬವತಿಗೆ ಸರಸದಿಂ ತರಣಿಯೊಳ್‍ ನೆರೆವ ಸಮಯದೊಳು ಆದ ಕರರುಹಕ್ಷತದ( ಕರ-ಕೈ+ರುಹ - ಹುಟ್ಟಿದ್ದು/ಉಗುರು-,ಕ್ಷತ-ಗಾಯ ಕಿಸುಬಾಸುಳ್ಗಳೆನೆ ಸವಿಸ್ತರದ ಸಂಧ್ಯಾರಾಗಂ ಐದೆ ರಂಜಿಸುತಿರ್ದುದಂದು ಮೂಡಣ ದೆಸೆಯೊಳು =[ಪ್ರಾಚೀ ಪೂರ್ವದಿಕ್ಕೆಂಬ ನಿತಂಬವತಿಗೆ ಸರಸದಿಂದ ತರಣಿ/ ಸೂರ್ಯನೊಡನೆ ಸೇರುವ ಸಮಯದಲ್ಲಿ ಉಗುರಿನಿಂದಾದ ಚಿಕ್ಕ ಬಾಸುಂಡೆಗಳ ಹಾಗೆ ಬಹಳ ವಿಸ್ತಾರವಾದ ಸಂಧ್ಯಾರಾಗವು ಬರಲು/ ಉದಯದ ಬೆಳಗಿನ ಕೆಂಪು ಛಾಯೆ ಪೂರ್ವದಿಕ್ಕಿನಲ್ಲಿ ರಂಜಿಸುತತಿತ್ತು.].
 • ತಾತ್ಪರ್ಯ:ಅರಳಿದ ಕೆಂಪು ತಾವರೆಯ ಕೆಂಪುನೆರಳುಗಳು ಮೆತ್ತಿದವು ಎನ್ನುವಂತೆ, ವೇಗವಾಗಿ ಕತ್ತಲೆಯ ಮೇಲೆ ಬರುತ್ತಿರುವ ರವಿಯ ರಥ ಕುದುರೆಗಳ ಖುರಪುಟದಿಂದ(ಗೊರಸಿನಿಂದ) ಏಳುವ ಕೆಂದೂಳೋ ಎನ್ನುವಂತೆ, ಪ್ರಾಚೀ ಪೂರ್ವದಿಕ್ಕೆಂಬ ನಿತಂಬವತಿಗೆ ಸರಸದಿಂದ ತರಣಿಯೊಡನೆ/ ಸೂರ್ಯನೊಡನೆ ಸೇರುವ ಸಮಯದಲ್ಲಿ ಉಗುರಿನಿಂದಾದ ಚಿಕ್ಕ ಬಾಸುಂಡೆಗಳ ಹಾಗೆ ಬಹಳ ವಿಸ್ತಾರವಾದ ಸಂಧ್ಯಾರಾಗವು ಬರಲು/ ಉದಯದ ಬೆಳಗಿನ ಕೆಂಪು ಛಾಯೆ ಪೂರ್ವದಿಕ್ಕಿನಲ್ಲಿ ರಂಜಿಸುತತಿತ್ತು.
 • (ಪದ್ಯ-೪೧)

ಪದ್ಯ :-:೪೧:[ಸಂಪಾದಿಸಿ]

ಜಿತತಮಂ ಭುವನಮಧ್ಯಪ್ರಕಾಶಂ ವಿರಾ | ಜಿತ ವರಾಹ ಶ್ರೀಧರಂ ಪಂಚಮುಖಮೂರ್ತಿ | ನುತಕಾಶ್ಯಪಂ ರಾಜತೇಜೋಹರಂ ದೂಷಣಾರಿ ಗೋಕುಲಜಾತನು ||
ಅತಿಕಾಂತಿ ಶೋಭಿತ ದಿಗಂಬರಂ ಕಲಿತಾಪ | ಹೃತಕುವಲಯಂ ಚಕ್ರಿಯವತಾರದಶಕದು | ನ್ನತಿಗಳಂ ತಳೆದೆಸೆವ ದಿನಪನುದಯಂಗೈದನಂದು ಪೂರ್ವಾಚಲದೊಳು ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಜಿತತಮಂ (ತಮ-ಕತ್ತಲೆಯನ್ನು,ತಮೋಗುಣವನ್ನು ಗೆದ್ದವನು), ಭುವನಮಧ್ಯಪ್ರಕಾಶಂ (ಲೋಕಗಳ ಮಧ್ಯೆ ಪ್ರಕಾಶಿತನು), ವಿರಾಜಿತ ವರಾಹ ಶ್ರೀಧರಂ (ವಿಷ್ಣುರೂಪನಾಗಿದ್ದು ಶೋಭಿಸುವ ವರಾಹರೂಪಿಯೂ, ಲಕ್ಷ್ಮೀ ಧರನೂ,ಪತಿಯೂಆದವನು), ಪಂಚಮುಖಮೂರ್ತಿ (ವಿಷ್ಣುವಾಗಿ ಶಿವನ ಪಂಚ ಮುಖಗಳಲ್ಲಿ ಒಬ್ಬನು), ಕಾಶ್ಯಪಂ (ಸ್ತುತಿಸಲ್ಪಡುವ ಕಶ್ಯಪಮುನಿಯ ಮಗನು),ರಾಜತೇಜೋಹರಂ (ಪರಷುರಾಮ ಅವತಾರದಲ್ಲಿ ರಾಜರನ್ನು/ತೇಜಸ್ಸನ್ನು ಕುಂದಿಸಿದವನು) ದೂಷಣಾರಿ (ದೂಷನ/ಪಾಪವನ್ನು ಪರಿಹರಿಸುವವನು, ರಾಮಾವತಾರದಲ್ಲಿ ದೂಷಣನ್ನು ಕೊಂದವನು), ಗೋಕುಲಜಾತನು (ಕೃಷ್ಣನಾಗಿ ಗೊಕುಲದಲ್ಲಿ ಹುಟ್ಟಿದವನು), ಅತಿಕಾಂತಿ ಶೋಭಿತ (ಬಹಳ ಕಾಂತಿಯಿಂದ ಶೋಬಿಸುವವನು) ದಿಗಂಬರಂ (ದಿಕ್ಕುಗಳನ್ನು ಅಂಬರ ಬಟ್ಟೆಯಾಗಿ ಉಳ್ಳವನು), ಕಲಿತಾಪ ಹೃತಕುವಲಯಂ (ಬಹಳ ತಾಪದಿಂದ ನೈದಿಲೆಗಳನ್ನು ಹೃತ-ಬಾಡಿಸಿದವನು) ಚಕ್ರಿಯ ಅವತಾರ ದಶಕದ ಉನ್ನತಿಗಳಂ ತಳೆದು(ವಿಷ್ಣುವಿನ ಹತ್ತು ಅವತಾರ ಎತ್ತಿ) ಎಸೆವ (ಪ್ರಕಾಶಿಸುವ) ದಿನಪನು ಉದಯಂಗೈದನು ಅಂದು ಪೂರ್ವಾಚಲದೊಳು (ಸೂರ್ಯನು ಅಂದು ಪೂರ್ವದ ಬೆಟ್ಟದಲ್ಲಿ ಉದಯವಾದನು).
 • ತಾತ್ಪರ್ಯ:ತಮ-ಕತ್ತಲೆಯನ್ನು, ತಮೋಗುಣವನ್ನು ಗೆದ್ದವನು, ಲೋಕಗಳ ಮಧ್ಯೆ ಪ್ರಕಾಶಿತನು, ವಿಷ್ಣುರೂಪನಾಗಿದ್ದು ಶೋಭಿಸುವ ವರಾಹರೂಪಿಯೂ, ಲಕ್ಷ್ಮೀ ಧರನೂ,ಪತಿಯೂಆದವನು, ವಿಷ್ಣುವಾಗಿ ಶಿವನ ಪಂಚ ಮುಖಗಳಲ್ಲಿ ಒಬ್ಬನು, ಸ್ತುತಿಸಲ್ಪಡುವ ಕಶ್ಯಪಮುನಿಯ ಮಗನು, ಪರಷುರಾಮ ಅವತಾರದಲ್ಲಿ ರಾಜರನ್ನು/ತೇಜಸ್ಸನ್ನು ಕುಂದಿಸಿದವನು, ದೂಷನ/ಪಾಪವನ್ನು ಪರಿಹರಿಸುವವನು, ರಾಮಾವತಾರದಲ್ಲಿ ದೂಷಣನ್ನು ಕೊಂದವನು, ಕೃಷ್ಣನಾಗಿ ಗೊಕುಲದಲ್ಲಿ ಹುಟ್ಟಿದವನು, ಬಹಳ ಕಾಂತಿಯಿಂದ ಶೋಬಿಸುವವನು, ದಿಕ್ಕುಗಳನ್ನು ಅಂಬರ ಬಟ್ಟೆಯಾಗಿ ಉಳ್ಳವನು, ಬಹಳ ತಾಪದಿಂದ ನೈದಿಲೆಗಳನ್ನು ಹೃತ-ಬಾಡಿಸಿದವನು, ವಿಷ್ಣುವಿನ ಹತ್ತು ಅವತಾರ ಎತ್ತಿ ಪ್ರಕಾಶಿಸುವ ಸೂರ್ಯನು ಅಂದು ಪೂರ್ವದ ಬೆಟ್ಟದಲ್ಲಿ ಉದಯವಾದನು. (ಶ್ಲೇಷಾರ್ಥಗಳು)
 • (ಪದ್ಯ-೪೧)

ಪದ್ಯ :-:೪೩:[ಸಂಪಾದಿಸಿ]

ಒಂದು ಮಾರ್ಗದೊಳೆ ನಡೆಯದೆ ಸದಾ ದ್ವಿಜನಿಕರ | ದಂದಮಂ ಕಿಡಿಸಿ ಗುರುಬುಧ ಮಂಗಳೋನ್ನತಿಗೆ | ಕುಂದನಿತ್ತುದರಿಂದ ಸಾರಧಿ ಹೆಳವನಾದನಾತ್ಮಜಂ ಲೋಕವರಿಯೆ ||
ಮಂದನಾದಂ ನಿನ್ನ ಪತಿಗೆಂದು ಪದ್ಮಿನಿಯ | ಮುಂದೆ ನಗುವಸಿತೋತ್ಪಲಂಗಳಿನನುದಯದೊಳ್ | ಕಂದಿದುವು ಪರನಿಂದೆಗೈದರ್ಗೆ ಪರಿಭವಂ ಕ(ಕೈ)ಯ್ಯೊಡನೆ ತೋರದಿಹುದೆ ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಒಂದು ಮಾರ್ಗದೊಳೆ ನಡೆಯದೆ ಸದಾ ದ್ವಿಜ ನಿಕರದ ಅಂದಮಂ ಕಿಡಿಸಿ=[ಉತ್ತರಾಯಣ ದಕ್ಷಿಣಾಯನದಲ್ಲಿ ಬೇರೆ ಬೇರೆ ಮಾರ್ಗದಲ್ಲಿ ಸಂಚರಿಸುವ ರವಿಯು, ಒಂದೇ ಮಾರ್ಗದಲ್ಲಿ ಎಂದರೆ ಧರ್ಮ ಮಾರ್ಗದಲ್ಲಿ ಸಂಚರಿಸದೆ ಎಂಬ ಅರ್ಥದಲ್ಲಿ ತಪ್ಪುಮಾಡಿದನು, ಸದಾ ದ್ವಿಜ/ಹಕ್ಕಿಗಳ ಸಮೂಹದ ಜೀವನ ಕ್ರಮವನ್ನು ಸುಡುಬಿಸಿಲಿನಿಂದ ಕೆಡಿಸಿ/ ದ್ವಿಜ ಎಂದರೆ ಬ್ರಾಹ್ಮಣರು ಎಂದು ಅರ್ಥವಿದ್ದು ಆ ದೋಷ ಬಂದಿದೆ ]; ಗುರು ಬುಧ ಮಂಗಳೋನ್ನತಿಗೆ ಕುಂದನಿತ್ತುದರಿಂದ ಸಾರಧಿ ಹೆಳವನಾದನು ಆತ್ಮಜಂ ಲೋಕವರಿಯೆ ಮಂದನಾದಂ=[ಗುರು ಬುಧ ಮಂಗಳ ಗ್ರಹಗಳ ಇವರ ಉನ್ನತಿಗೆ ಕುಂದನ್ನು (ಸೂರ್ಯನ ಮುಂದೆ ಅವರು ಹೊಳೆಯರು) ಕೊಟ್ಟಿದ್ದರಿಂದ ಆ ಪಾಪಕ್ಕೆ ರವಿಯ ಸಾರಧಿ (ಸಾರಥಿ ಅರಣ-ಅವನಿಗೆ ಕಾಲಿಲ್ಲ) ಹೆಳವನಾದನು ಎಂದು ಅರ್ಥ ಮಾಡಬಹುದು; ಅಲ್ಲದೆ ಅದಕ್ಕಾಗಿ ಅವನ ಮಗ ಶನಿ (ಗ್ರಹ) ಲೋಕದ ಜನ ತಿಳಿದಂತೆ ಮಂದನು (ಆಕಾಶದಲ್ಲಿ ನಿದಾನ ಗತಿ/ಸಂಚಾರ ಆವನದು.];ನಿನ್ನ ಪತಿಗೆ ಎಂದು ಪದ್ಮಿನಿಯ ಮುಂದೆ ನಗುವ ಸಿತೋತ್ಪಲಂಗಳು ಇನನ ಉದಯದೊಳ್ ಕಂದಿದುವು. "ಪರನಿಂದೆಗೈದರ್ಗೆ ಪರಿಭವಂ ಕೈಯ್ಯೊಡನೆ (ಕೈಯ ಒಡನೆ) ತೋರದಿಹುದೆ" =[ಇದು ನಿನ್ನ ಪತಿ ಸೂರ್ಯನ ವಿಗತಿ ಎಂದು, ಎಂದು ಪದ್ಮಿನಿಯ ಮುಂದೆ ನಗುವ ( ಪದ್ಮಿನಿ/ ಕಮಲ (ಸೂರ್ಯನ ಪತ್ನಿ ಎಂಬ ಭಾವದಲ್ಲಿ) ಸಿತ/ಬಿಳಿಯ ನೈದಿಲೆಗಳು ಸೂರ್ಯನ ಉದಯಕಾಲದಲ್ಲಿ ಕಂದಿ ಬಾಡಿದವು; ಏಕೆಂದರೆ ಅವು ಪರನಿಂದೆ / ಸೂರ್ಯನನ್ನು ಹೀಗೆ ನಿಂದಿಸಿದವು. ನೈದಿಲೆಗಳು ಸೂರ್ಯನನ್ನು ನಿಂದಿಸಿದ್ದಕ್ಕೆ ಅವಕ್ಕೆ ಪ್ರತಿಫಲವಾಗಿ ಪರಿಭವ/ ಸೋಲು ಅವಮಾನ ಕೂಡಲೆ ತೋರದೆ ಇರುವುದೇ? ತೋರುವುದು.
 • ತಾತ್ಪರ್ಯ: ಮಣಿಪುರದಲ್ಲಿ ಸೂರ್ಯನು ಉದಯಿಸಿದ; ಆಗ ರಾತ್ರಿ ಅರಳುವ ಬಿಳಿನೈದಿಲೆಗಳು ಕಂದಿಮುಚ್ಚಿದವು; ಅದು ಹೇಗೆ ಕಂಡಿತೆಂದರೆ, ಅವು ಅರಳುತ್ತಿರುವ ಕಮಲದ / ಪದ್ಮಿನಿಯ ಮೇಲೆ ಅಸೂಯೆಗೊಂಡು ಪದ್ಮಿನಿಯ ಪತಿ ಸೂರ್ಯನನ್ನು ಈ ರೀತಿ ನಿಂದಿಸಿದವು, ಒಂದೇ ಮಾರ್ಗದಲ್ಲಿ ಎಂದರೆ ಧರ್ಮ ಮಾರ್ಗದಲ್ಲಿ ಸಂಚರಿಸದೆ ಸೂರ್ಯನು ತಪ್ಪುಮಾಡಿದನು, ಸದಾ ದ್ವಿಜ(ಹಕ್ಕಿಗಳ) ಸಮೂಹದ, ದ್ವಿಜ-ಬ್ರಾಹ್ಮಣರು ಎಂಬ ಅರ್ಥದಲ್ಲಿ ಸುಡುಬಿಸಿಲಿನಿಂದ ಕೆಡಿಸಿ, ಆ ದೋಷ ಬಂದಿದೆ; ಗುರು ಬುಧ ಮಂಗಳ ಗ್ರಹಗಳ ಇವರ ಉನ್ನತಿಗೆ ಕುಂದನ್ನು (ಸೂರ್ಯನ ಮುಂದೆ ಅವರು ಹೊಳೆಯರು) ಉಂಟುಮಾಡಿದ್ದರಿಂದ ಆ ಪಾಪಕ್ಕೆ ರವಿಯ ಸಾರಧಿ (ಸಾರಥಿ ಅರಣ-ಅವನಿಗೆ ಕಾಲಿಲ್ಲ) ಹೆಳವನಾದನು, ರವಿಯ ಮಗ ಶನಿ (ಗ್ರಹ) ಲೋಕದ ಜನ ತಿಳಿದಂತೆ ಮಂದನು (ಆಕಾಶದಲ್ಲಿ ನಿದಾನ ಗತಿ/ಸಂಚಾರಿ ಆದನು) ಪರನಿಂದೆ ಮಾಡಿದ ನೈದಿಲೆಗಳು ಕಂದಿದವು; "ಪರನಿಂದೆಗೈದರ್ಗೆ ಪರಿಭವಂ ಕೈಯ್ಯೊಡನೆ ತೋರದಿಹುದೆ", ನೈದಿಲೆಗಳು ಪರನಿಂದೆ ಮಾಡಿದ್ದಕ್ಕೆ ಪ್ರತಿಫಲವಾಗಿ ಪರಿಭವ/ ಸೋಲು ಅವಮಾನ ಕೂಡಲೆ ತೋರದೆ ಇರುವುದೇ? ತೋರುವುದು. (ಶ್ಲೇಷಾರ್ಥ ತರಲು ಸುತ್ತುಬಳಸಿದೆ)
 • (ಪದ್ಯ-೪೩)

ಪದ್ಯ :-:೪೪:[ಸಂಪಾದಿಸಿ]

ಆದಿತ್ಯನುದಯದೊಳ್ ಫಲುಗುಣನ ಸೂನು ಸಂ | ಧ್ಯಾದಿಗಳನಾಚರಿಸಿ ವಸ್ತುಗಳನೈದೆ ಸಂ | ಪಾದಿಸಿ ಕಿರೀಟಿಯಂ ಕಾಣಲನುವಾದನರ್ಜನನಿತ್ತಪಾಳೆಯದೊಳು ||
ಸಾದಿಸಿ ಸಕಲ ನಿತ್ಯಕೃತ್ಯಮಂ ಮಾಡಿ ಮಧು | ಸೂದನನ ಚರಣಮಂ ನೆನೆದು ವೃಷಕೇತು ಮೊದ | ಲಾದ ವೀರರ್ಕಳಂ ಕರೆಸಿದಂ ಹಯಮಂ ಬಿಡಿಸಿಕೊಂಬ ತವಕದಿಂದೆ ||44||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಆದಿತ್ಯನ ಉದಯದೊಳ್ ಫಲುಗುಣನ ಸೂನು ಸಂಧ್ಯಾದಿಗಳನು ಆಚರಿಸಿ ವಸ್ತುಗಳನೈದೆ ಸಂಪಾದಿಸಿ ಕಿರೀಟಿಯಂ ಕಾಣಲನುವಾದನು=[ಸೂರ್ಯನ ಉದಯದ ಸಮಯದಲ್ಲಿ ಫಲ್ಗುಣನ ಮಗ ಬಬ್ರವಾಹನ ಸಂಧ್ಯಾದಿ ಕರ್ಮಗಳನ್ನು ಆಚರಿಸಿ ಕೊಡುವ ವಸ್ತುಗಳು ಬರಲು ಅವುಗಳನ್ನು ಸಿದ್ಧಪಡಿಸಿ, ಅರ್ಜುನನ್ನು ಕಾಣಲು ಅನುವಾದನು]; ಅರ್ಜನನು ಇತ್ತ ಪಾಳೆಯದೊಳು ಸಾದಿಸಿ ಸಕಲ ನಿತ್ಯಕೃತ್ಯಮಂ ಮಾಡಿ ಮಧುಸೂದನನ ಚರಣಮಂ ನೆನೆದು ವೃಷಕೇತು ಮೊದಲಾದ ವೀರರ್ಕಳಂ ಕರೆಸಿದಂ ಹಯಮಂ ಬಿಡಿಸಿಕೊಂಬ ತವಕದಿಂದೆ=[ಅರ್ಜನನು ಈ ಕಡೆ, ಪಾಳೆಯದಲ್ಲಿ ಸಕಲ ನಿತ್ಯಕರ್ಮಗಳನ್ನು ಮಾಡಿ ಮಧುಸೂದನನ ಪಾದಗಳನ್ನು ನೆನೆದು, ವೃಷಕೇತು ಮೊದಲಾದ ವೀರರನ್ನು ಹಯವನ್ನು ಬಿಡಿಸಿಕೊಳ್ಳುವ ತವಕದಿಂದ ಕರೆಸಿದನು.]
 • ತಾತ್ಪರ್ಯ:ಸೂರ್ಯನ ಉದಯದ ಸಮಯದಲ್ಲಿ ಫಲ್ಗುಣನ ಮಗ ಬಬ್ರವಾಹನ ಸಂಧ್ಯಾದಿ ಕರ್ಮಗಳನ್ನು ಆಚರಿಸಿ ಕೊಡುವ ವಸ್ತುಗಳು ಬರಲು ಅವುಗಳನ್ನು ಸಿದ್ಧಪಡಿಸಿ, ಅರ್ಜುನನ್ನು ಕಾಣಲು ಅನುವಾದನು; ಅರ್ಜನನು ಈ ಕಡೆ, ಪಾಳೆಯದಲ್ಲಿ ಸಕಲ ನಿತ್ಯಕರ್ಮಗಳನ್ನು ಮಾಡಿ ಮಧುಸೂದನನ ಪಾದಗಳನ್ನು ನೆನೆದು, ಹಯವನ್ನು ಬಿಡಿಸಿಕೊಳ್ಳುವ ತವಕದಿಂದ, ವೃಷಕೇತು ಮೊದಲಾದ ವೀರರನ್ನು ಕರೆಸಿದನು.
 • (ಪದ್ಯ-೪೪)

ಪದ್ಯ :-:೪೫:[ಸಂಪಾದಿಸಿ]

ಅನುಸಾಲ್ವಕನ ಸೇನೆ ಯಾದವರ ಚತುರಂಗ | ಮಿನಸುತನ ಸೂನುವಿನ ಮೋಹರಂ ಯೌವನಾ | ಶ್ವನ ಪಾಯದಳ ಮತುಲಹಂಸಕೇತುವಿನ ಪಡೆ ನೀಲಧ್ವಜನ ವಾಪಿನಿ ||
ಧನುಜಾರಿ ನಂದನನ ನೇಮದಿಂ ಸಂಗ್ರಾಮ | ಕನುವಾಗಿ ಪೊರಮಟ್ಟುದಾಗ ಸನ್ನಾಹದಿಂ | ಘನವಾದ್ಯ ರಭಸದಿಂದರ್ಜುನಂ ಬಂದು ನಿಂದಂ ಮುಂದೆ ದೊರೆಗಳೊಡನೆ ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅನುಸಾಲ್ವಕನ ಸೇನೆ ಯಾದವರ ಚತುರಂಗಂ ಇನಸುತನ ಸೂನುವಿನ ಮೋಹರಂ ಯೌವನಾಶ್ವನ ಪಾಯದಳಂ ಅತುಲ ಹಂಸಕೇತುವಿನ ಪಡೆ ನೀಲಧ್ವಜನ ವಾಪಿನಿ=[ಅನುಸಾಲ್ವನ ಸೇನೆ, ಯಾದವರ ಚತುರಂಗ ಬಲ, ವೃಷಕೇತುವಿನ ಸೈನ್ಯ, ಯೌವನಾಶ್ವನ ಕಾಲುದಳ, ಹಂಸಕೇತುವಿನ ಶ್ರೇಷ್ಠ ಪಡೆ, ನೀಲಧ್ವಜನ ದಳ]; ಧನುಜಾರಿ ನಂದನನ ನೇಮದಿಂ ಸಂಗ್ರಾಮಕೆ ಅನುವಾಗಿ ಪೊರಮಟ್ಟುದು ಆಗ ಸನ್ನಾಹದಿಂ ಘನವಾದ್ಯ ರಭಸದಿಂದ ಅರ್ಜುನಂ ಬಂದು ನಿಂದಂ ಮುಂದೆ ದೊರೆಗಳೊಡನೆ=[ಪ್ರದ್ಯುಮ್ನನ ಆಜ್ಞೆಯಂತೆ ಯುದ್ಧಕ್ಕೆ ಸಿದ್ಧವಾಗಿ ಹೊರಟಿತು. ಆಗ ಯುದ್ಧಸನ್ನಾಹದಿಂದ, ಘನವಾದ್ಯಗಳು ದೊಡ್ಡದಾಗಿ ಮೊಳಗುತ್ತಿರಲು, ದೊರೆಗಳೊಡನೆ ಅರ್ಜುನನು ಮುಂದೆ ಬಂದು ನಿಂತನು.]
 • ತಾತ್ಪರ್ಯ:ಅನುಸಾಲ್ವನ ಸೇನೆ, ಯಾದವರ ಚತುರಂಗ ಬಲ, ವೃಷಕೇತುವಿನ ಸೈನ್ಯ, ಯೌವನಾಶ್ವನ ಕಾಲುದಳ, ಹಂಸಕೇತುವಿನ ಶ್ರೇಷ್ಠ ಪಡೆ, ನೀಲಧ್ವಜನ ದಳ; ಪ್ರದ್ಯುಮ್ನನ ಆಜ್ಞೆಯಂತೆ ಯುದ್ಧಕ್ಕೆ ಸಿದ್ಧವಾಗಿ ಹೊರಟಿತು. ಆಗ ಯುದ್ಧಸನ್ನಾಹದಿಂದ, ಘನವಾದ್ಯಗಳು ದೊಡ್ಡದಾಗಿ ಮೊಳಗುತ್ತಿರಲು, ದೊರೆಗಳೊಡನೆ ಅರ್ಜುನನು ಮುಂದೆ ಬಂದು ನಿಂತನು.
 • (ಪದ್ಯ-೪೫)

ಪದ್ಯ :-:೪೬:[ಸಂಪಾದಿಸಿ]

ಆ ಸಮಯದೊಳ್ ಬಭ್ರುವಾಹನಂ ಪೊರಮಟ್ಟ | ನಾ ಸುಬುದ್ಧಿ ಪ್ರಮುಖ ಮಂತ್ರಿಗಳ ಗಡಣದಿಂ | ದಾಸಕಲ ವಸ್ತುಸಹಿತಾ ಕುದುರೆಯಂ ಕೊಂಡು ನಿಖಿಳ ಚತುರಂಗದೊಡನೆ ||
ಭಾಸುರದ ಕಳಸ ಕನ್ನಡಿವಿಡಿದು ನಡೆತಹ ವಿ| ಲಾಸಿನಿಯರೊಗ್ಗಿನಿಂ ಸಂದಣಿಯ ಪುರಜನದ || ಭೂಸುರಸ್ತೋಮದಿಂ ಗುಡಿತೋರಣಾವಳಿಯ ಸಿಂಗರದ ಪದಪಿನಿಂದೆ ||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಆ ಸಮಯದೊಳ್ ಬಭ್ರುವಾಹನಂ ಪೊರಮಟ್ಟನು ಆ ಸುಬುದ್ಧಿ ಪ್ರಮುಖ ಮಂತ್ರಿಗಳ ಗಡಣದಿಂದ ಆ ಸಕಲ ವಸ್ತುಸಹಿತ ಆ ಕುದುರೆಯಂ ಕೊಂಡು ನಿಖಿಳ ಚತುರಂಗದೊಡನೆ=[ಆ ಸಮಯದಲ್ಲಿ ಬಭ್ರುವಾಹನನು (ಹೊರಟನು->) ಆ ಸುಬುದ್ಧಿ ಮತ್ತು ಪ್ರಮುಖ ಮಂತ್ರಿಗಳ ಸಮೂಹದಿಂದ ಆ ಸಕಲ ವಸ್ತುಗಳ ಸಹಿತ ಆ ಕುದುರೆಯನ್ನು ಜೊತೆಯಲ್ಲಿ ಕೊಂಡು ಎಲ್ಲಾ ಚತುರಂಗ ಸೈನ್ಯದೊಡನೆ ಹೊರಟನು]; ಭಾಸುರದ ಕಳಸ ಕನ್ನಡಿವಿಡಿದು ನಡೆತಹ ವಿಲಾಸಿನಿಯರ ಒಗ್ಗಿನಿಂ ಸಂದಣಿಯ ಪುರಜನದ ಭೂಸುರಸ್ತೋಮದಿಂ ಗುಡಿತೋರಣಾವಳಿಯ ಸಿಂಗರದ ಪದಪಿನಿಂದೆ=[ಅಂದವಾದ ಕಳಸ ಕನ್ನಡಿ ಹಿಡಿದು ನಡೆದು ಬರುತ್ತಿರುವ ಮಹಿಳೆಯರ ಸಮೂಹದ ಸಂದಣಿಯ ಜೊತೆ ಪುರಜನರ ಮತ್ತು ಬ್ರಾಹ್ಮಣರ ಸಮೂಹದ ಜೊತೆ ಗುಡಿತೋರಣಗಳ ಸಿಂಗರದ ಸೊಗಸಿನಿಂದ ಕೂಡಿ ಹೊರಟನು.]
 • ತಾತ್ಪರ್ಯ:ಆ ಸಮಯದಲ್ಲಿ ಬಭ್ರುವಾಹನನು ಆ ಸುಬುದ್ಧಿ ಮತ್ತು ಪ್ರಮುಖ ಮಂತ್ರಿಗಳ ಸಮೂಹದಿಂದ ಆ ಸಕಲ ವಸ್ತುಗಳ ಸಹಿತ ಆ ಕುದುರೆಯನ್ನು ಜೊತೆಯಲ್ಲಿ ಕೊಂಡು ಎಲ್ಲಾ ಚತುರಂಗ ಸೈನ್ಯದೊಡನೆ ಹೊರಟನು. ಅಂದವಾದ ಕಳಸ ಕನ್ನಡಿ ಹಿಡಿದು ನಡೆದು ಬರುತ್ತಿರುವ ಮಹಿಳೆಯರ ಸಮೂಹದ ಸಂದಣಿಯ ಜೊತೆ ಪುರಜನರ ಮತ್ತು ಬ್ರಾಹ್ಮಣರ ಸಮೂಹದ ಜೊತೆ ಗುಡಿತೋರಣಗಳ ಸಿಂಗರದ ಸೊಗಸಿನಿಂದ ಕೂಡಿ ಹೊರಟನು.
 • (ಪದ್ಯ-೪೬)

ಪದ್ಯ :-:೪೭:[ಸಂಪಾದಿಸಿ]

ಎಲ್ಲಿ ಕೌಂತೇಯನಿರ್ದಪನಲ್ಲಿಗಾಗಿ ನಿಂ | ದಲ್ಲಿನಿಲ್ಲದೆ ಸಂಭ್ರಮದೊಳೆ ನಡೆತಂದು ಮೈ | ಭುಲ್ಲವಿಸೆ ಹರ್ಷದಿಂ ಪಾರ್ಥನಂಕಂಡು ನಿಜಮೌಳಿಯಂ ತೆಗೆದು ನರನ ||
ಮೆಲ್ಲಡಿಗನರ್ಘ್ಯ ರತ್ನಂಗಳಂ ಸುರಿದು ಕರ | ಪಲ್ಲವದ್ವಿತಯಮಂ ಮುಗಿದು ಭಯಭಕ್ತಿಯಿಂ | ಚೆಲ್ಲಿದನೊಡಲನಿಳೆಯೊಳಾ ಬಭ್ರುವಾಹನಂ ನೀಡಿ ಸಾಷ್ಟಾಂಗದಿಂದೆ ||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಎಲ್ಲಿ ಕೌಂತೇಯನು ಇರ್ದಪನು ಅಲ್ಲಿಗಾಗಿ ನಿಂದಲ್ಲಿ ನಿಲ್ಲದೆ ಸಂಭ್ರಮದೊಳೆ ನಡೆತಂದು=[ಎಲ್ಲಿ ಅರ್ಜುನನು ಇರುವನೋ ಅಲ್ಲಿಗೆ ನಿಂತಲ್ಲಿ ನಿಲ್ಲದೆ, ಸಂಭ್ರಮದಿಂದ ಬಂದು ]; ಮೈಭೂಲ್ಲವಿಸೆ ಹರ್ಷದಿಂ ಪಾರ್ಥನಂ ಕಂಡು ನಿಜಮೌಳಿಯಂ ತೆಗೆದು ನರನ ಮೆಲ್ಲಡಿಗೆ ಅನರ್ಘ್ಯ ರತ್ನಂಗಳಂ ಸುರಿದು=[ತಂದೆಯನ್ನು ನೋಡಿ,ಅವನ ದೇಹವು ಪುಳುಕಗೊಳ್ಳಲು ಹರ್ಷದಿದ ಪಾರ್ಥನನ್ನು ಕಂಡು ತನ್ನ ಕಿರೀಟವನ್ನು ತೆಗೆದು ಅರ್ಜುನನ ಮೃದು ಪಾದಗಳಿಗೆ ಅನರ್ಘ್ಯ ರತ್ನಗಳನ್ನು ಸುರಿದು]; ಕರಪಲ್ಲವ ದ್ವಿತಯಮ (ಪಲ್ಲವ/ತಳಿರು ಸಮು +ಕರ ಕೈ, ದ್ವಿತ-ಎರಡು) ಮುಗಿದು ಭಯಭಕ್ತಿಯಿಂ ಚೆಲ್ಲಿದನು ಒಡಲನು ಇಳೆಯೊಳ ಆ ಬಭ್ರುವಾಹನಂ ನೀಡಿ ಸಾಷ್ಟಾಂಗದಿಂದೆ =[ತನ್ನ ಎರಡೂ ಕೈಗಳನ್ನು ಮುಗಿದು ಭಯಭಕ್ತಿಯಿಂದ ತನ್ನದೇಹವನ್ನು ಭೂಮಿಯಮೇಲೆ ಚಾಚಿ ಆ ಬಭ್ರುವಾಹನನು ಸಾಷ್ಟಾಂಗದಿಂದ ನಮಸಗಕರಿಸಿದನು.]
 • ತಾತ್ಪರ್ಯ:ಎಲ್ಲಿ ಅರ್ಜುನನು ಇರುವನೋ ಅಲ್ಲಿಗೆ ನಿಂತಲ್ಲಿ ನಿಲ್ಲದೆ, ಸಂಭ್ರಮದಿಂದ ಬಂದು ತಂದೆಯನ್ನು ನೋಡಿ,ಅವನ ದೇಹವು ಪುಳುಕಗೊಳ್ಳಲು ಹರ್ಷದಿದ ಪಾರ್ಥನನ್ನು ಕಂಡು ತನ್ನ ಕಿರೀಟವನ್ನು ತೆಗೆದು ಅರ್ಜುನನ ಮೃದು ಪಾದಗಳಿಗೆ ಅನರ್ಘ್ಯ ರತ್ನಗಳನ್ನು ಸುರಿದು, ತನ್ನ ಎರಡೂ ಕೈಗಳನ್ನು ಮುಗಿದು ಭಯಭಕ್ತಿಯಿಂದ ತನ್ನ ದೇಹವನ್ನು ಭೂಮಿಯಮೇಲೆ ಚಾಚಿ ಆ ಬಭ್ರುವಾಹನನು ಸಾಷ್ಟಾಂಗದಿಂದ ನಮಸಗಕರಿಸಿದನು.
 • (ಪದ್ಯ-೪೭)

ಪದ್ಯ :-:೪೮:[ಸಂಪಾದಿಸಿ]

ಅರಸ ಕೇಳಾ ಬಭ್ರುವಾಹನನೊಡನೆ ಬಂದ | ಪರಿವಾರಮಾ ಪುರಜನಂಗಳಾ ಕಾಮಿನಿಯ | ರರಳ ಮಳೆ ಮುಕ್ತಾಫಲಂಗಳಾ ಸುರಿದರರ್ಜುನನ ಮಸ್ತಕದಮೇಲೆ ||
ವರಸುಬುದ್ಧಿ ಪ್ರಮುಖ ಮಂತ್ರಿಗಳ್ ಬಂದರೊ | ತ್ತರಿಸಿ ಕಾಣಿಕೆಗೊಂಡು ಬಳಿಕ ವಿಸ್ಮಿತನಾಗಿ | ನರನೆಲೆ ನೃಪಾಲ ನೀನಾರೆನಲ್ಕವನೆದ್ದು ಕೈಮುಗಿಯುತಿಂತೆಂದನು ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅರಸ ಕೇಳು ಆ ಬಭ್ರುವಾಹನನೊಡನೆ ಬಂದ ಪರಿವಾರಂ ಆ ಪುರಜನಂಗಳು ಆ ಕಾಮಿನಿಯರ ಅರಳ ಮಳೆ ಮುಕ್ತಾಫಲಂಗಳು ಆ ಸುರಿದರು ಅರ್ಜುನನ ಮಸ್ತಕದ ಮೇಲೆ=[ಅರಸ ಕೇಳು, ಆ ಬಭ್ರುವಾಹನನೊಡನೆ ಬಂದ ಪರಿವಾರವು, ಆ ಪುರಜನರು, ಆ ವನಿತೆಯರು ಅರ್ಜುನನ ತಲೆಯ ಮೇಲೆ ಅರಳನ್ನೂ, ಹೂಗಳನ್ನೂ, ಮುತ್ತುಗಳನ್ನೂ ಮಳೆಯಂತೆ ಸುರಿದರು. ]; ವರಸುಬುದ್ಧಿ ಪ್ರಮುಖ ಮಂತ್ರಿಗಳ್ ಬಂದರು ಒತ್ತರಿಸಿ ಕಾಣಿಕೆಗೊಂಡು ಬಳಿಕ ವಿಸ್ಮಿತನಾಗಿ ನರನೆಲೆ ನೃಪಾಲ ನೀನಾರೆನಲ್ಕೆ ಅವನೆದ್ದು ಕೈಮುಗಿಯುತ ಇಂತೆಂದನು=[ ಉತ್ತಮ ಮಂತ್ರಿಯಾದ ಸುಬುದ್ಧಿ ಮತ್ತು ಪ್ರಮುಖ ಮಂತ್ರಿಗಳು ಒತ್ತೊತ್ತಾಗಿ ಬಂದರು. ಅವರಿಂದ ಕಾಣಿಕೆಗಳನ್ನು ಪಡೆದ ಬಳಿಕ, ವೀರನಾಗಿ ಕುದುರೆ ಕಟ್ಟುವ ಬದಲು ಶರಣಾಗತನಾದುದನ್ನು ಕಂಡು ಆಶ್ಚರ್ಯಪಟ್ಟು ಅರ್ಜುನನು, ಎಲೆ ನೃಪಾಲನೇ ನೀನು ಯಾರು (ನಿನ್ನ ಪೂರ್ವಾಪರವೇನು?) ಎಂದು ಕೇಳಲು, ಅವನು ಎದ್ದು ಕೈಮುಗಿದುಕೊಂಡು ಹೀಗೆ ಹೇಳಿದನು.]
 • ತಾತ್ಪರ್ಯ:ಅರಸ ಕೇಳು, ಆ ಬಭ್ರುವಾಹನನೊಡನೆ ಬಂದ ಪರಿವಾರವು, ಆ ಪುರಜನರು, ಆ ವನಿತೆಯರು ಅರ್ಜುನನ ತಲೆಯ ಮೇಲೆ ಅರಳನ್ನೂ, ಹೂಗಳನ್ನೂ, ಮುತ್ತುಗಳನ್ನೂ ಮಳೆಯಂತೆ ಸುರಿದರು. ಉತ್ತಮ ಮಂತ್ರಿಯಾದ ಸುಬುದ್ಧಿ ಮತ್ತು ಪ್ರಮುಖ ಮಂತ್ರಿಗಳು ಒತ್ತೊತ್ತಾಗಿ ಬಂದರು. ಅವರಿಂದ ಕಾಣಿಕೆಗಳನ್ನು ಪಡೆದ ಬಳಿಕ, ವೀರನಾಗಿ ಕುದುರೆ ಕಟ್ಟುವ ಬದಲು ಶರಣಾಗತನಾದುದನ್ನು ಕಂಡು ಆಶ್ಚರ್ಯಪಟ್ಟು ಅರ್ಜುನನು, ಎಲೆ ನೃಪಾಲನೇ ನೀನು ಯಾರು (ನಿನ್ನ ಪೂರ್ವಾಪರವೇನು?) ಎಂದು ಕೇಳಲು, ಅವನು ಎದ್ದು ಕೈಮುಗಿದುಕೊಂಡು ಹೀಗೆ ಹೇಳಿದನು.
 • (ಪದ್ಯ-೪೮)

ಪದ್ಯ :-:೪೯:[ಸಂಪಾದಿಸಿ]

ತಾತ ಚಿತ್ತೈಸು ನಿನ್ನಾತ್ಮಜಂ ತಾನೆನ್ನ | ಮಾತೆ ಚಿತ್ರಾಂಗದೆ ಸಲಹಿದವಳುಲೂಪಿ ಸಂ | ಪ್ರೀತಿಯಿಂದಿವರಾದರರಸಿಯರ್ ನೀನಂದು ತೀರ್ಥಯಾತ್ರೆಗೆ ಬಂದಿರೆ ||
ಜಾತನಾದೆಂ ಬಭ್ರುವಾಹನಂ ತಾನೀಗ | ಳೀತುರಗಮಂ ಪಿಡಿದು ಕಟ್ಟಿ ತಪ್ಪಿದೆ ಗುಣಾ | ತೀತಿಮಂ ಕ್ಷಮಿಸೆಂದು ಮಗುಳೆರಗಿದಂ ಪಾರ್ಥ ನಡಿಗವಂ ಭೀತಿಯಿಂದೆ ||49||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ತಾತ ಚಿತ್ತೈಸು ನಿನ್ನ ಆತ್ಮಜಂ ತಾನು ಎನ್ನ ಮಾತೆ ಚಿತ್ರಾಂಗದೆ, ಸಲಹಿದವಳು ಉಲೂಪಿ ಸಂಪ್ರೀತಿಯಿಂದ ಅವರು ಆದರು ಅರಸಿಯರ್ ನೀನು ಅಂದು ತೀರ್ಥಯಾತ್ರೆಗೆ ಬಂದಿರೆ=[ತಾತ / ತಂದೆಯೇ ಕೇಳು, ನಿನ್ನ ಪುತ್ರನು ತಾನು; ನನ್ನ ತಾಯಿ ಚಿತ್ರಾಂಗದೆ; ಸಂಪ್ರೀತಿಯಿಂದ ಸಲಹಿದವಳು ಉಲೂಪಿ; ನೀನು ಹಿಂದೆ ತೀರ್ಥಯಾತ್ರೆಗೆ ಬಂದಿದ್ದಾಗ ಅವರು ಅದರು ನಿನಗೆ ಅರಸಿಯರು / ಪತ್ನಿಯರು ಆದರು]; ಜಾತನಾದೆಂ ಬಭ್ರುವಾಹನಂ ತಾನು ಈಗಳು ಈ ತುರಗಮಂ ಪಿಡಿದು ಕಟ್ಟಿ ತಪ್ಪಿದೆ ಗುಣಾತೀತಿಮಂ ಕ್ಷಮಿಸೆಂದು ಮಗುಳೆರಗಿದಂ ಪಾರ್ಥ ನಡಿಗೆ ಅವಂ ಭೀತಿಯಿಂದೆ =[ ಆದ್ದರಿಂದ ತಾನು ಬಭ್ರುವಾಹನನು ಜಾತನಾದೆನು /ಮಗನಾದೆನು; ಈಗ ಈ ತುರಗವನ್ನು ಹಿಡಿದು ಕಟ್ಟಿ ತಪ್ಪಮಾಡಿದೆ; ನಡತೆಮೀರಿದ್ದನ್ನು ಕ್ಷಮಿಸು ಎಂದು, ಪುನಃ ಪಾರ್ಥನ ಪಾದಗಳಿಗೆ ಅವನು ಹೆದರುತ್ತಾ ನಮಸ್ಕರಿಸಿದನು.]
 • ತಾತ್ಪರ್ಯ:ತಾತ / ತಂದೆಯೇ ಕೇಳು, ನಿನ್ನ ಪುತ್ರನು ತಾನು; ನನ್ನ ತಾಯಿ ಚಿತ್ರಾಂಗದೆ; ಸಂಪ್ರೀತಿಯಿಂದ ಸಲಹಿದವಳು ಉಲೂಪಿ; ನೀನು ಹಿಂದೆ ತೀರ್ಥಯಾತ್ರೆಗೆ ಬಂದಿದ್ದಾಗ ಅವರು ಅದರು ನಿನಗೆ ಅರಸಿಯರು / ಪತ್ನಿಯರು ಆದರು; ಆದ್ದರಿಂದ ತಾನು ಬಭ್ರುವಾಹನನು ಜಾತನಾದೆನು /ಮಗನಾದೆನು; ಈಗ ಈ ತುರಗವನ್ನು ಹಿಡಿದು ಕಟ್ಟಿ ತಪ್ಪಮಾಡಿದೆ; ನಡತೆಮೀರಿದ್ದನ್ನು ಕ್ಷಮಿಸು ಎಂದು, ಪುನಃ ಪಾರ್ಥನ ಪಾದಗಳಿಗೆ ಅವನು ಹೆದರುತ್ತಾ ನಮಸ್ಕರಿಸಿದನು.
 • (ಪದ್ಯ-೪೯)

ಪದ್ಯ :-:೫೦:[ಸಂಪಾದಿಸಿ]

ಮಗುಳೆ ಮಗುಳಡಿಗೆರಗಿ ಭಯ ಭರಿತಭಕ್ತಿಯಿಂ | ಮಿಗೆ ಬೇಡಿಕೊಳುತೆ ಕಾಲ್ವಿಡಿದಿರ್ಪ ತನಯನಂ | ಮೊಗನೋಡಿ ಮಾತಾಡಿಸದೆ ಬೆರಗುವಡೆದಂತೆ ಕೆತ್ತುಗೊಂಡಿಹ ವಿಜಯನ ||
ಬಗೆಯನೀಕ್ಷಿಸಿ ಹಂಸಕೇತು ನೀಲದ್ವಜಾ | ದಿಗಳೆಲ್ಲರುಂ ಸವಿಸ್ಮಯರಾಗಿ ಚಿಂತಿಸಿ ಕ | ರಗಿದರತಿ ಕರುಣರಸಭಾವದಿಂದೇನೆಂಬೆನಪಕೃತದ ಸೂಚಕವನು ||50||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಮಗುಳೆ ಮಗುಳೆ ಅಡಿಗೆ ಎರಗಿ ಭಯ ಭರಿತಭಕ್ತಿಯಿಂ ಮಿಗೆ ಬೇಡಿಕೊಳುತೆ ಕಾಲ್ ವಿಡಿದಿರ್ಪ ತನಯನಂ=[ಮತ್ತೆ ಮತ್ತೆ ಪಾದಗಳಿಗೆ ನಮಸ್ಕರಿಸುವ, ಭಯ ಮತ್ತು ಭಕ್ತಿಯಿಂದ ಬಹಳ ಬೇಡಿಕೊಳುತ್ತಾ, ಕಾಲನ್ನು ಹಿಡಿದಿರುವ ಮಗನನ್ನು ]; ಮೊಗನೋಡಿ ಮಾತಾಡಿಸದೆ ಬೆರಗುವಡೆದಂತೆ ಕೆತ್ತುಗೊಂಡಿಹ ವಿಜಯನ ಬಗೆಯನು ಈಕ್ಷಿಸಿ ಹಂಸಕೇತು ನೀಲದ್ವಜಾದಿಗಳು ಎಲ್ಲರುಂ ಸವಿಸ್ಮಯರಾಗಿ=[ಮುಖನೋಡಿ ಮಾತಾಡಿಸದೆ ಬೆರಗಾದವನಂತೆ ಗಂಟಿಕ್ಕಿದಮುಖದ ಪಾರ್ಥನ ಕ್ರಮವನ್ನು ನೋಡಿ ಹಂಸಕೇತು ನೀಲದ್ವಜಾದಿ ಎಲ್ಲರುಂ ಆಶ್ಚರ್ಯಪಟ್ಟವರಾಗಿ.]; ಚಿಂತಿಸಿ ಕರಗಿದರತಿ ಕರುಣರಸಭಾವದಿಂದ ಏನೆಂಬೆನು ಅಪಕೃತದ ಸೂಚಕವನು=[ಬಹಳ ಚಿಂತಿಸಿ ಕರುಣರಸಭಾವದಿಂದ ಮರುಕಗೊಮಡರು, ಅಪಸಕುನದ ಸೂಚನೆಯನ್ನ!ಏನು ಹೇಳಲಿ.].
 • ತಾತ್ಪರ್ಯ: ಮತ್ತೆ ಮತ್ತೆ ಪಾದಗಳಿಗೆ ನಮಸ್ಕರಿಸುವ, ಭಯ ಮತ್ತು ಭಕ್ತಿಯಿಂದ ಬಹಳ ಬೇಡಿಕೊಳುತ್ತಾ, ಕಾಲನ್ನು ಹಿಡಿದಿರುವ ಮಗನನ್ನು ಮುಖನೋಡಿ ಮಾತಾಡಿಸದೆ ಬೆರಗಾದವನಂತೆ ಗಂಟಿಕ್ಕಿದಮುಖದ ಪಾರ್ಥನ ಕ್ರಮವನ್ನು ನೋಡಿ ಹಂಸಕೇತು ನೀಲದ್ವಜಾದಿ ಎಲ್ಲರುಂ ಆಶ್ಚರ್ಯಪಟ್ಟವರಾಗಿ. ಬಹಳ ಚಿಂತಿಸಿ ಕರುಣರಸಭಾವದಿಂದ ಮರುಕಗೊಮಡರು, ಅಪಶಕುನದ ಸೂಚನೆಯನ್ನು! ಏನು ಹೇಳಲಿ.
 • (ಪದ್ಯ-೫೦)

ಪದ್ಯ :-:೫೧:[ಸಂಪಾದಿಸಿ]

ಪ್ರದ್ಯುಮ್ನ ಹಂಸಧ್ವಜಾದಿಗಳ್ ಬಳಿಕಿದೇ | ನುದ್ಯೋಗಮೆಲೆ ಪಾರ್ಥ ನಿನ್ನ ತನುಭವನೀತ | ನುದ್ಯತ್ಪರಾಕ್ರಮಿ ಮಹಾವೈಭವಶ್ಲಾಘ್ಯನಭಿಮಾನಿ ಮಾನ್ಯನಿಳೆಗೆ ||
ಖದ್ಯೋತಸನ್ನಿಭಂ ನಿನ್ನ ಹೋಲುವೆಯ ನಿರ | ವದ್ಯರೂಪಂ ಪದಾವನತನಾಗಿರ್ದಪಂ | ಹೃದ್ಯನಿವನಂ ಪರಿಗ್ರಹಿಸಿ ಮನ್ನಿಸದೇಕೆ ಸುಮ್ಮನಿರ್ದಪೆಯೆಂದರು ||51||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಪ್ರದ್ಯುಮ್ನ ಹಂಸಧ್ವಜಾದಿಗಳ್ ಬಳಿಕ ಇದೇನು ಉದ್ಯೋಗಂ ಎಲೆ ಪಾರ್ಥ ನಿನ್ನ ತನುಭವನು ಈತನು ಉದ್ಯತ್ಪರಾಕ್ರಮಿ (ಉದ್ಯತ್/ಮೇಲೆದ್ದ, ಹೆಚ್ಚಿನ + ಪರಾಕ್ರಮಿ) ಮಹಾವೈಭವಶ್ಲಾಘ್ಯನು ಅಭಿಮಾನಿ ಮಾನ್ಯನು ಇಳೆಗೆ=[ಪ್ರದ್ಯುಮ್ನ ಹಂಸಧ್ವಜ ಮೊದಲಾದವರು ನಂತರ, ಇದೇನು ವರ್ತನೆ ಎಲೆ ಪಾರ್ಥ, ನಿನ್ನ ಮಗನಾದ ಈತನು ಮೇಲುಮಟ್ಟದ ಪರಾಕ್ರಮಿ ಮಹಾವೈಭವಶ್ಲಾಘ್ಯನು ಹೊಗಳಿಕೆಗೆ ಅರ್ಹನು, ಅಭಿಮಾನಿ ಮಾನ್ಯವಂತನು ಭೂಮಿಯಲ್ಲಿ]; ಖದ್ಯೋತಸನ್ನಿಭಂ (ಖದ್ಯೋತ ಸೂರ್ಯ + ಸನ್ನಿಭಂ/ ಸಮ)) ನಿನ್ನ ಹೋಲುವೆಯ ನಿರವದ್ಯರೂಪಂ ಪದಾವನತನು ಆಗಿರ್ದಪಂ ಹೃದ್ಯನು ಇವನಂ ಪರಿಗ್ರಹಿಸಿ ಮನ್ನಿಸದೆ ಏಕೆ ಸುಮ್ಮನಿರ್ದಪೆ ಎಂದರು=[ಸೂರ್ಯನಿಗೆ ಸಮನಾದ ಕಾಂತಿಯುಳ್ಳವನು,ನಿನ್ನ ಹೋಲುವಿಕೆಯುಳ್ಳವನು, ಕಳಂಕವಿಲ್ಲದ ರೂಪಹೊಂದಿದವನು, ನಿನ್ನ ಪಾದಕ್ಕೆ ನಮಿಸಿದವನಾಗಿ ವಿಧೇಯನು, ಪ್ರಿಯವಾದವನು, ಇವನನ್ನು ಪರಿಗ್ರಹಿಸಿ ಮನ್ನಿಸದೆ ಏಕೆ ಸುಮ್ಮನಿರುವೆ? ಎಂದರು].
 • ತಾತ್ಪರ್ಯ:ಪ್ರದ್ಯುಮ್ನ ಹಂಸಧ್ವಜ ಮೊದಲಾದವರು ನಂತರ, ಇದೇನು ವರ್ತನೆ ಎಲೆ ಪಾರ್ಥ, ನಿನ್ನ ಮಗನಾದ ಈತನು ಮೇಲುಮಟ್ಟದ ಪರಾಕ್ರಮಿ ಮಹಾವೈಭವಶ್ಲಾಘ್ಯನು ಹೊಗಳಿಕೆಗೆ ಅರ್ಹನು, ಅಭಿಮಾನಿ ಮಾನ್ಯವಂತನು ಭೂಮಿಯಲ್ಲಿ ಸೂರ್ಯನಿಗೆ ಸಮನಾದ ಕಾಂತಿಯುಳ್ಳವನು,ನಿನ್ನ ಹೋಲುವಿಕೆಯುಳ್ಳವನು, ಕಳಂಕವಿಲ್ಲದ ರೂಪಹೊಂದಿದವನು, ನಿನ್ನ ಪಾದಕ್ಕೆ ನಮಿಸಿದವನಾಗಿ ವಿಧೇಯನು, ಪ್ರಿಯವಾದವನು, ಇವನನ್ನು ಪರಿಗ್ರಹಿಸಿ ಮನ್ನಿಸದೆ ಏಕೆ ಸುಮ್ಮನಿರುವೆ? ಎಂದರು.
 • (ಪದ್ಯ-೫೧)

ಪದ್ಯ :-:೫೧:[ಸಂಪಾದಿಸಿ]

ಭೂಪ ಕೇಳಿವರಿಂತೆನಲ್ಕೆ ಬಳಿಕರ್ಜುನಂ | ಕೋಪದಿಂದವನ ನಿಟ್ಟಿಸುತೆಂದನಾಗ ತಲೆ || ಪೋಪುದಕೆ ತನ್ನ ಕಾಲ್ಪೊಣೆಯೆಂಬ ಧರೆಯ ನಾಣ್ಣುಡಿ ತಪ್ಪದಾದುದೆನಲು ||
ಆ ಪುತ್ರನಹ ಬಭ್ರುವಾಹನನನೊದೆದೆಲವೊ | ನೀ ಪಂದೆ ಲೋಕದೊಳ್ ತನಗೆ ಸಂಭವಿಸಿದವ | ನೀಪರಿಯೊಳಂಜುವನೆ ಮೊದಲಶ್ವಮಂ ಕಟ್ಟಿ ಮತ್ತೆಬಿಡುವನೆ ಕಾದದೆ ||52||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಭೂಪ ಕೇಳು ಇವರು ಇಂತು ಎನಲ್ಕೆ ಬಳಿಕ ಅರ್ಜುನಂ ಕೋಪದಿಂದ ಅವನ ನಿಟ್ಟಿಸುತ ಎಂದನಾಗ ತಲೆ ಪೋಪುದಕೆ ತನ್ನ ಕಾಲ್ ಪೊಣೆಯೆಂಬ ಧರೆಯ ನಾಣ್ಣುಡಿ ತಪ್ಪದಾದುದು ಎನಲು=[ಭೂಪ ಕೇಳು, ಇವರು ಈ ರೀತಿ ಹೇಳಲು, ಬಳಿಕ ಅರ್ಜುನನು ಕೋಪದಿಂದ ಅವನನ್ನು ದಿಟ್ಟಿಸಿ ನೋಡಿ, ಆಗ ಎಂದನು, 'ತಲೆ ಹೋಗುವುದಕ್ಕೆ ತನ್ನ ಕಾಲು ಹೊಣೆ', (ಓಡಿ ತಪ್ಪಿಸಿಕೊಳ್ಳಲು ಆಗಲಿಲ್ಲ ಎಂಬ ಭಾವ; ಹೆದರಿ ಓಡುವವನ ಗುಣ)ಯೆಂಬ ಲೋಕದ ಗಾದೆಗೆ ತಪ್ಪದೆ ಅದರಂತೆ ಆಯಿತು, ಎನ್ನಲು, ]; ಆ ಪುತ್ರನಹ ಬಭ್ರುವಾಹನನನು ಒದೆದು ಎಲವೊ ನೀ ಪಂದೆ ಲೋಕದೊಳ್ ತನಗೆ ಸಂಭವಿಸಿದವನು ಈ ಪರಿಯೊಳು ಅಂಜುವನೆ ಮೊದಲು ಅಶ್ವಮಂ ಕಟ್ಟಿ ಮತ್ತೆ ಬಿಡುವನೆ ಕಾದದೆ=[ಆ ಪುತ್ರನಾಗಿರುವ ಬಭ್ರುವಾಹನನ್ನು ಒದೆದು, 'ಎಲವೊ! ನೀ ಹೇಡಿ, ಲೋಕದಲ್ಲಿ ತನಗೆ ಹುಟ್ಟಿದವನು ಈ ರೀತಿ ಹೆದರುವನೆ! ಮೊದಲು ಅಶ್ವವನ್ನು ಕಟ್ಟಿ ಯುದ್ಧಮಾಡದೆ ಮತ್ತೆ ಬಿಡುವನೆ! ಎಂದನು ಪಾರ್ಥ].
 • ತಾತ್ಪರ್ಯ:ರಾಜನೇ ಕೇಳು, ಇವರು ಈ ರೀತಿ ಹೇಳಲು, ಬಳಿಕ ಅರ್ಜುನನು ಕೋಪದಿಂದ ಅವನನ್ನು ದಿಟ್ಟಿಸಿ ನೋಡಿ, ಆಗ ಎಂದನು, 'ತಲೆ ಹೋಗುವುದಕ್ಕೆ ತನ್ನ ಕಾಲು ಹೊಣೆ', (ಓಡಿ ತಪ್ಪಿಸಿಕೊಳ್ಳಲು ಆಗಲಿಲ್ಲ ಎಂಬ ಭಾವ; ಹೆದರಿ ಓಡುವವನ ಗುಣ)ಯೆಂಬ ಲೋಕದ ಗಾದೆಗೆ ತಪ್ಪದೆ ಅದರಂತೆ ಆಯಿತು, ಎನ್ನಲು, ಆ ಪುತ್ರನಾಗಿರುವ ಬಭ್ರುವಾಹನನ್ನು ಒದೆದು, 'ಎಲವೊ! ನೀ ಹೇಡಿ, ಲೋಕದಲ್ಲಿ ತನಗೆ ಹುಟ್ಟಿದವನು ಈ ರೀತಿ ಹೆದರುವನೆ! ಮೊದಲು ಅಶ್ವವನ್ನು ಕಟ್ಟಿ ಯುದ್ಧಮಾಡದೆ ಮತ್ತೆ ಬಿಡುವನೆ! ಎಂದನು ಪಾರ್ಥ].
 • (ಪದ್ಯ-೫೧)

ಪದ್ಯ :-:೫೩:[ಸಂಪಾದಿಸಿ]

ಚಿತ್ರಾಂಗದೆಗೆ ವೈಶ್ಯನಿಂದೆ ಸಂಭವಿಸಿರ್ದ | ಪುತ್ರನಲ್ಲದೆ ತನಗೆ ಜನಿಸಿದೊಡೆ ಬಿಡುವೆಯಾ | ಕ್ಷತ್ರಿಯರ ಮತಮಂ ಸುಭದ್ರೆಗೆನ್ನಿಂ ಜನಿಸಿದಭಿಮನ್ಯು ತಾನೋರ್ವನೆ ||
ಶತ್ರುಗಳ ವಿಗಡಚಕ್ರವ್ಯೂಹದಲ್ಲಿಗೆ ಧ | ರಿತ್ರೀಶನಂ ಮೀರಿ ನಡೆದು ಸಂಗ್ರಾಮದೊಳ | ಮಿತ್ರಭಟರಂ ಗೆಲ್ದಳಿದನಾತನಲ್ಲದತ್ಮಜರುಂಟೆ ತನಗೆಂದನು ||53||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಚಿತ್ರಾಂಗದೆಗೆ ವೈಶ್ಯನಿಂದೆ ಸಂಭವಿಸಿರ್ದ ಪುತ್ರನಲ್ಲದೆ ತನಗೆ ಜನಿಸಿದೊಡೆ ಬಿಡುವೆಯಾ ಕ್ಷತ್ರಿಯರ ಮತಮಂ=[ಚಿತ್ರಾಂಗದೆಗೆ ವೈಶ್ಯನಿಂದ ಹುಟ್ಟಿದ ಪುತ್ರನು ಇವನು, ಅಲ್ಲದೆ ತನಗೆ ಹುಟ್ಟಿದವನಾಗಿದ್ದರೆ, ಕ್ಷತ್ರಿಯರ ಧರ್ಮವನ್ನು ಬಿಟ್ಟು ಬಿಡುವೆಯಾ ಕುದುರೆಯನ್ನು]; ಸುಭದ್ರೆಗೆ ಎನ್ನಿಂ ಜನಿಸಿದ ಅಭಿಮನ್ಯು ತಾನು ಓರ್ವನೆ ಶತ್ರುಗಳ ವಿಗಡಚಕ್ರವ್ಯೂಹದಲ್ಲಿಗೆ ಧರಿತ್ರೀಶನಂ ಮೀರಿ ನಡೆದು ಸಂಗ್ರಾಮದೊಳ್ ಅಮಿತ್ರಭಟರಂ ಗೆಲ್ದು ಅಳಿದನಾತನು ಅಲ್ಲದೆ ಆತ್ಮಜರುಂಟೆ ತನಗೆ ಎಂದನು =[ಸುಭದ್ರೆಗೆ ನನ್ನಿಂದ ಜನಿಸಿದ ಅಭಿಮನ್ಯು ತಾನು ಒಬ್ಬನೇ ಮಗ, ಶತ್ರುಗಳ ಕಠಿಣ ಚಕ್ರವ್ಯೂಹದಲ್ಲಿಗೆ ಹೊಕ್ಕು ಧರ್ಮಜನ ಮಾತು ಮೀರಿ ನಡೆದು, ಯುದ್ಧದಲ್ಲಿ ಶತ್ರುಗಳ ಶೂರರನ್ನು ಗೆದ್ದು ಮಡಿದನು; ಆತನು ಅಲ್ಲದೆ ಮಗನುಂಟೆ ತನಗೆ ಎಂದನು.]
 • ತಾತ್ಪರ್ಯ:ಚಿತ್ರಾಂಗದೆಗೆ ವೈಶ್ಯನಿಂದ ಹುಟ್ಟಿದ ಪುತ್ರನು ಇವನು, ಅಲ್ಲದೆ ತನಗೆ ಹುಟ್ಟಿದವನಾಗಿದ್ದರೆ, ಕ್ಷತ್ರಿಯರ ಧರ್ಮವನ್ನು ಬಿಟ್ಟು ಕುದುರೆಯನ್ನು ಬಿಡುವೆಯಾ? ಸುಭದ್ರೆಗೆ ನನ್ನಿಂದ ಜನಿಸಿದ ಅಭಿಮನ್ಯು ತಾನು ಒಬ್ಬನೇ ಮಗ, ಶತ್ರುಗಳ ಕಠಿಣ ಚಕ್ರವ್ಯೂಹದಲ್ಲಿಗೆ ಹೊಕ್ಕು ಧರ್ಮಜನ ಮಾತು ಮೀರಿ ನಡೆದು, ಯುದ್ಧದಲ್ಲಿ ಶತ್ರುಗಳ ಶೂರರನ್ನು ಗೆದ್ದು ಮಡಿದನು; ಆತನು ಅಲ್ಲದೆ ಮಗನುಂಟೆ ತನಗೆ ಎಂದನು.
 • (ಪದ್ಯ-೫೩)

ಪದ್ಯ :-:೫೪:[ಸಂಪಾದಿಸಿ]

ಜಂಬುಕಂ ಜನಿಸುವುದೆ ಸಿಂಗದುದರದೊಳಕಟ | ಹೆಂಬೇಡಿ ನೀನೆಲವೊ ಕುಲಗೇಡಿ ತನ್ನ ಬಸಿ | ರಿಂ ಬಂದವನೆ ಖೂಳ ಕುದುರೆಯಂ ಕಾದದೇತಕೆ ತಂದೆ ಪಂದೆ ನಿನಗೆ ||
ಡೊಂಬಿನ ಚತುರ್ಬಲಮಿದೇಕೆ ಭೂಪಾಲರಾ | ಡಂಭರದ ಛತ್ರಚಮರಂಗಳೇತಕೆ ಬಯಲ | ಡಂಬಕದ ಕೈದುಗಳಿವೇಕೆ ಸುಡು ಬಿಡು ಜೀವದಾಸೆಯಂ ಪೋಗೆಂದನು ||54||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಜಂಬುಕಂ (ನರಿ) ಜನಿಸುವುದೆ ಸಿಂಗದ ಉರದೊಳು ಅಕಟ ಹೆಂಬೇಡಿ ನೀನು ಎಲವೊ ಕುಲಗೇಡಿ ತನ್ನ ಬಸಿರಿಂ ಬಂದವನೆ=[ಸಿಂಹದ ಹೊಟ್ಟೆಯಲ್ಲಿ ನರಿಯು ಹುಟ್ಟುವುದೆ, ಅಕಟ! ನೀನು ಹೆಣ್ಣಿನಂತೆ ಹೆದರಿಕೆಯವನು, ಎಲವೊ ಕುಲಗೇಡಿ ತನ್ನ ಹೊಟ್ಟೆಯಲ್ಲಿ ಹುಟ್ಟಿದವನೆ? ಅಲ್ಲ!]; ಖೂಳ ಕುದುರೆಯಂ ಕಾದದೆ ಏತಕೆ ತಂದೆ ಪಂದೆ ನಿನಗೆ ಡೊಂಬಿನ ಚತುರ್ಬಲಂ ಇದೇಕೆ ಭೂಪಾಲರ ಆಡಂಭರದ ಛತ್ರಚಮರಂಗಳೇತಕೆ ಬಯಲಡಂಬಕದ ಕೈದುಗಳಿವು ಏಕೆ ಸುಡು ಬಿಡು ಜೀವದ ಆಸೆಯಂ ಪೋಗೆಂದನು=[ಖೂಳ! ಕುದುರೆಯನ್ನು ಯುದ್ಧಮಾಡದೆ ಏತಕ್ಕೆ ತಂದೆ? ಹೇಡಿ ನಿನಗೆ ಡಂಬದ (ತೋರಿಕೆಯ) ಚತುರ್ಬಲ ಸೈನ್ಯವು ಇದೇಕೆ? ಭೂಮಿಪಾಲಕರ ಆಡಂಭರದ ಛತ್ರ ಚಾಮರಗಳು ಏತಕ್ಕೆ? ಬಯಲಾಡಂಬರದ (ತೋರಿಕೆಯ) ಶಸ್ತ್ರಗಳು ಇವು ಏಕೆ? ನಿನ್ನ ಜೀವದ ಆಸೆಯ ನಾಟಕವನ್ನು ಬಿಡು! ನಿನ್ನ ಜೀವನವನ್ನು ಸುಡು! (ಅಲ್ಪನು ಎಂದು) ಹೊಗು ಎಂದನು ].
 • ತಾತ್ಪರ್ಯ: ಸಿಂಹದ ಹೊಟ್ಟೆಯಲ್ಲಿ ನರಿಯು ಹುಟ್ಟುವುದೆ, ಅಕಟ! ನೀನು ಹೆಣ್ಣಿನಂತೆ ಹೆದರಿಕೆಯವನು, ಎಲವೊ ಕುಲಗೇಡಿ ತನ್ನ ಹೊಟ್ಟೆಯಲ್ಲಿ ಹುಟ್ಟಿದವನೆ? ಅಲ್ಲ! [ಖೂಳ! ಕುದುರೆಯನ್ನು ಯುದ್ಧಮಾಡದೆ ಏತಕ್ಕೆ ತಂದೆ? ಹೇಡಿ ನಿನಗೆ ಡಂಬದ (ತೋರಿಕೆಯ) ಚತುರ್ಬಲ ಸೈನ್ಯವು ಇದೇಕೆ? ಭೂಮಿಪಾಲಕರ ಆಡಂಭರದ ಛತ್ರ ಚಾಮರಗಳು ಏತಕ್ಕೆ? ಬಯಲಾಡಂಬರದ (ತೋರಿಕೆಯ) ಶಸ್ತ್ರಗಳು ಇವು ಏಕೆ? ನಿನ್ನ ಜೀವದ ಆಸೆಯ ನಾಟಕವನ್ನು ಬಿಡು! ನಿನ್ನ ಹೇಡಿ ಜೀವನವನ್ನು ಸುಡು! (ಅಲ್ಪನು ಎಂದು) ಹೊಗು ಎಂದನು.
 • (ಪದ್ಯ-೫೪)

ಪದ್ಯ :-:೫೫:[ಸಂಪಾದಿಸಿ]

ಅಹಹ | ನರ್ತಕಿಯಲಾ ಗಂಧರ್ವನಾಯಕನ | ದುಹಿತೃವಲ್ಲಾ ನಿನ್ನ ಮಾತೆ ಚಿತ್ರಾಂಗದೆಯೆ | ವಿಹಿತಮಲ್ಲಿದು ನಿನಗೆ ಭೂಮಿಪರ ವೇಷಮಂ ತಳೆದ ನಾಟಕದ ರಚನೆ ||
ಬಹಳ ಪೌರುಷಮಾದುದಿಂದು ಹಯಮಂ ತಡೆದ | ರೆಹಣಿ ರಾಯರಮುಂದೆ ಹೋಗೆಂದು ದುಷ್ಕೃತಿಯ | ಕುಹಕದಿಂದ ಬೈದು ಭಂಗಿಸಿ ಜರೆದನಾತ್ಮಜನನರ್ಜುನಂ ಕೋಪದಿಂದೆ ||55||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅಹಹ! ನರ್ತಕಿಯಲಾ ಗಂಧರ್ವನಾಯಕನ ದುಹಿತೃವಲ್ಲಾ (ಮಗಳು) ನಿನ್ನ ಮಾತೆ ಚಿತ್ರಾಂಗದೆಯೆ ವಿಹಿತಂ ಅಲ್ಲಿದು ನಿನಗೆ ಭೂಮಿಪರ ವೇಷಮಂ ತಳೆದ ನಾಟಕದ ರಚನೆ=[ಅಹಹ! ನರ್ತಕಿಯಲ್ಲವೇ, ಗಂಧರ್ವನಾಯಕನ ಮಗಳು ನಿನ್ನ ಮಾತೆ ಚಿತ್ರಾಂಗದೆಯೆ? ಒಳ್ಳೆಯದಲ್ಲ ನಿನಗೆ ಭೂಮಿಪಾಲಕರ ವೇಷವನ್ನು ಧರಿಸಿ, ಗಂಧರ್ವರಂತೆ ನಾಟಕದ ರಚನೆ (ಕಪಟ ನಾಟಕ)]; ಬಹಳ ಪೌರುಷಮಾದುದು ಇಂದು ಹಯಮಂ ತಡೆದ ರೆಹಣಿ (ರಹಸ್ಯ ನಾಟಕ) ರಾಯರ ಮುಂದೆ ಹೋಗೆಂದು ದುಷ್ಕೃತಿ (ಕೆಡುಕುತನ)ಯ ಕುಹಕದಿಂದ ಬೈದು ಭಂಗಿಸಿ ಜರೆದನು (ನಿಂದಿಸಿದನು) ಆತ್ಮಜನನು ಅರ್ಜುನಂ ಕೋಪದಿಂದೆ=[ಬಹಳ ಪೌರುಷ! ಇಂದು ಕುದುರೆಯನ್ನು ತಡೆದದ್ದು ರಹಸ್ಯ ನಾಟಕ! ಅರ್ಜುನನು ಹೀಗೆ ರಾಜರ ಎದುರಿನಲ್ಲಿ ಹೋಗೆಂದು ಕೆಡುಕನನ್ನು ನಿಂದಿಸುವಂತೆ ಕುಹಕದಿಂದ ಬೈದು ಅವಮಾನಿಸಿ ಮಗನನ್ನು ಕೋಪದಿಂದ ನಿಂದಿಸಿದನು].
 • ತಾತ್ಪರ್ಯ: ಅಹಹ! ನಿನ್ನ ಮಾತೆ ಚಿತ್ರಾಂಗದೆಯೆ, ಗಂಧರ್ವನಾಯಕನ ಮಗಳು ನರ್ತಕಿಯಲ್ಲವೇ? ಭೂಮಿಪಾಲಕರ ವೇಷವನ್ನು ಧರಿಸಿ, ಗಂಧರ್ವರಂತೆ ನಾಟಕದ ರಚನೆ (ಕಪಟ ನಾಟಕ) ಒಳ್ಳೆಯದಲ್ಲ ನಿನಗೆ; ನಿನ್ನದು ಬಹಳ ಪೌರುಷ! ಇಂದು ಕುದುರೆಯನ್ನು ತಡೆದದ್ದು ರಹಸ್ಯ ನಾಟಕ! ಅರ್ಜುನನು ಹೀಗೆ ರಾಜರ ಎದುರಿನಲ್ಲಿ ಹೋಗೆಂದು ಕೆಡುಕನನ್ನು ನಿಂದಿಸುವಂತೆ ಕುಹಕದಿಂದ ಬೈದು ಅವಮಾನಿಸಿ ಮಗನನ್ನು ಕೋಪದಿಂದ ನಿಂದಿಸಿದನು.
 • (ಪದ್ಯ-೫೫)

ಪದ್ಯ :-:೫೬:[ಸಂಪಾದಿಸಿ]

ಬಿರುನುಡಿಗಳಿಂ ತನ್ನ ಮೊಗನೋಡದರ್ಜುನಂ | ಜರೆದೊಡಾತನ ಬಗೆಯನಾ ಸುಬುದ್ಧಿಗೆ ತೋರು | ತುರೆ ಕನಲ್ದಿರದೆದ್ದು ಪಳಿದೆಲಾ ಮಾತೆಯಂ ನನಗೆ ಸೀವರಿಸಿದೆಯಲಾ ||
ಅರಿಯಬಹುದಿನ್ನು ಕೇಳ್ ನಿನ್ನ ತಲೆಗೆಡಹದೊಡೆ | ಕುರಹಿಟ್ಟು ನೀನಾಡಿದಿನಿತೆಲ್ಲಮುಂ ದಿಟಂ | ಮರೆಯದಿರ್ ಸಾಕೆಂದು ತಿರುಗಿದಂ ಬಭ್ರುವಾಹನನಂದು ಕುದುರೆಸಹಿತ ||56||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಿರುನುಡಿಗಳಿಂ ತನ್ನ ಮೊಗನೋಡದ ಅರ್ಜುನಂ ಜರೆದೊಡೆ ಆತನ ಬಗೆಯನು ಆ ಸುಬುದ್ಧಿಗೆ ತೋರುತ ಉರೆ ಕನಲ್ದು ಇರದೆ ಎದ್ದು ಪಳಿದೆಲಾ ಮಾತೆಯಂ=[ಕಠಿಣ ಮಾತುಗಳಿಂದ ತನ್ನ ಮುಖವನ್ನು ನೋಡದೆ ಅರ್ಜುನನು ನಿಂದಿಸಿದರೆ, ಆತನ ರೀತಿಯನ್ನು ಆ ಸುಬುದ್ಧಿಗೆ ತೋರಿಸುತ್ತಾ, ಬಹಳ ಸಿಟ್ಟುಗೊಂಡು, ಬಗ್ಗಿದ್ದವನು ಮೊದಲಂತೆ ವಿನಯದಿಂದ ಇರದೆ ಎದ್ದು,ಹಳಿದೆಯಲ್ಲವೇ ನನ್ನ ತಾಯಿಯನ್ನು?]; ನನಗೆ ಸೀವರಿಸಿದೆಯಲಾ ಅರಿಯಬಹುದು ಇನ್ನು ಕೇಳ್ ನಿನ್ನ ತಲೆಗೆಡಹದೊಡೆ ಕುರಹಿಟ್ಟು ನೀನಾಡಿದ ಅನಿತೆಲ್ಲಮುಂ ದಿಟಂ=[ನನಗೆ ಸೀವರಿಸಿದೆಯಲಾ ಅರಿಯಬಹುದು ಇನ್ನು ಕೇಳ್ ನಿನ್ನ ತಲೆಗೆಡಹದೊಡೆ ಕುರಹಿಟ್ಟು ನೀನಾಡಿದ ಅನಿತೆಲ್ಲಮುಂ ದಿಟಂ]; ಮರೆಯದಿರ್ ಸಾಕೆಂದು ತಿರುಗಿದಂ ಬಭ್ರುವಾಹನು ಅಂದು ಕುದುರೆ ಸಹಿತ =[ಮರೆಯಬೇಡ! ಸಾಕು ನಿನಗೆ ಕೊಟ್ಟ ಗೌರವ, ಎಂದು ಬಭ್ರುವಾಹನು ಅಂದು ಕುದುರೆ ಸಹಿತ ಹಿಂದಕ್ಕೆ ತಿರುಗಿದನು.]
 • ತಾತ್ಪರ್ಯ: ಕಠಿಣ ಮಾತುಗಳಿಂದ ತನ್ನ ಮುಖವನ್ನು ನೋಡದೆ ಅರ್ಜುನನು ನಿಂದಿಸಿದರೆ, ಆತನ ರೀತಿಯನ್ನು ಆ ಸುಬುದ್ಧಿಗೆ ತೋರಿಸುತ್ತಾ, ಬಹಳ ಸಿಟ್ಟುಗೊಂಡು, ಬಗ್ಗಿದ್ದವನು ಮೊದಲಂತೆ ವಿನಯಬಿಟ್ಟು ಎದ್ದು, ಹಳಿದೆಯಲ್ಲವೇ ನನ್ನ ತಾಯಿಯನ್ನು? ನನಗೆ ನಿಂದಿಸಿ ಅವಮಾನಿಸಿದೆಯಲ್ಲವೇ ಇದರ ಪ್ರತಿಫಲ ಮುಂದೆ ತಿಳಿಯಬಹುದು, ಇನ್ನು ಕೇಳು ನಿನ್ನ ತಲೆಯನ್ನು ಕೆಡಗದಿದ್ದರೆ, ಕೆಟ್ಟಕುರುಹಿನಿಂದ ನೀನಾಡಿದ ಆ ಎಲ್ಲಾ ಮಾತೂ ದಿಟವಾದುದು, ಎಂದು ತಿಳಿ, (ಅದರೆ ನಿನ್ನಮಾತನ್ನು ಸುಳ್ಳು ಮಾಡುವೆನು ಎಂದು ಬಾವ)]; ಮರೆಯಬೇಡ! ಸಾಕು ನಿನಗೆ ಕೊಟ್ಟ ಗೌರವ, ಎಂದು ಬಭ್ರುವಾಹನು ಅಂದು ಕುದುರೆ ಸಹಿತ ಹಿಂದಕ್ಕೆ ತಿರುಗಿದನು.
 • (ಪದ್ಯ-೫೬)

ಪದ್ಯ :-:೫೭:[ಸಂಪಾದಿಸಿ]

ತೆಗಸಿದಂ ತಂದಖಳವಸ್ತುವಂ ಕುದುರೆಯಂ | ಬಿಗಿಸಿದಂ ಲಾಯದೊಳ್ ಪುರಜನಸ್ತ್ರೀಯರಂ | ಪುಗಿಸಿದಂ ಪಟ್ಟಣಕೆ ಕರೆಸಿದಂ ಸಚಿವರಂ ಸೇನಾದಿನಾಯಕರನು |
ಜಗಿಸಿದಂ ಚತುರಂಗಮಂ ನೆರಹಿ ಧಾತ್ರಿಯಂ | ಮಿಗಿಸಿದಂ ವಾದ್ಯರವದಿಂದೆ ಘೋಷಮಂ | ಮುಗಿಸಿದಂ ತಾವರೆಯನಾ ಬಭ್ರುವಾಹನಂ ಧೂಳ್ಗಳಿನನಂ ಮುಸುಕಲು ||57||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • (ಆ ಬಭ್ರುವಾಹನನು)ತೆಗಸಿದಂ ತಂದ ಅಖಳ ವಸ್ತುವಂ ಕುದುರೆಯಂ ಬಿಗಿಸಿದಂ ಲಾಯದೊಳ್ ಪುರಜನಸ್ತ್ರೀಯರಂ ಪುಗಿಸಿದಂ ಪಟ್ಟಣಕೆ ಕರೆಸಿದಂ ಸಚಿವರಂ ಸೇನಾದಿನಾಯಕರನು=[ಅರ್ಜುನನಿಗೆ ಸಲ್ಲಿಸಲು ತಂದಿದ್ದ ಎಲ್ಲಾ ವಸ್ತುಗಲನ್ನು ತೆಗಸಿದನು; ಕುದುರೆಯನ್ನು ಲಾಯದಲ್ಲಿ ಬಿಗಿಸಿದನು; ಬಂದಿದ್ದ ಪುರಜನರನ್ನೂ, ಸ್ತ್ರೀಯರನ್ನು ಪಟ್ಟಣಕ್ಕೆ ಪುನಃ ಹೊಗಿಸಿದನು; ಸಚಿವರನ್ನೂ ಸೇನಾದಿನಾಯಕರನ್ನೂ ಕರೆಸಿದನು;]; ಜಗಿಸಿದಂ (ಜಾಗು/ ಏಳು/ಸಿದ್ಧಗೊಳಿಸು/ಜಾಗ್ರತ ಗೊಳಿಸು) ಚತುರಂಗಮಂ ನೆರಹಿ (ನರೆದರು-ಒಟ್ಟುಸೇರು) ಧಾತ್ರಿಯಂ ಮಿಗಿಸಿದಂ ವಾದ್ಯರವದಿಂದೆ ಘೋಷಮಂ ಮುಗಿಸಿದಂ ('ಮುಗಿಸಿದಂ' ಪದ -ಘೋಷ, ತಾವರೆ -ಎರಡೂ ಪದಗಳಿಗೆ ಅನ್ವಯ) ತಾವರೆಯನು ಆ ಬಭ್ರುವಾಹನಂ ಧೂಳ್ಗಳ್ ಇನನಂ ಮುಸುಕಲು=[ಚತುರಂಗ ಸೈನ್ನ್ಯವನ್ನು ಸಿದ್ಧಗೊಳಿಸಿ ಒಟ್ಟುಸೇರಿಸಿ,ಭೂಮಿ ಪ್ರದೇಶವನ್ನು ಮೀರಿಸಿದನು: ವಾದ್ಯಘೋಷದಿಂದ ಸಮುದ್ರಘೋಷವನ್ನು ಮುಚ್ಚಿಸಿದನು; (<-ಆ ಬಭ್ರುವಾಹನನು) ಧೂಳುಗಳು ಸೂರ್ಯನನ್ನು ಮುಸುಕಲು ಸಂಜೆಯಾಗಿದೆ ಎಂಬ ಭ್ರಮೆಯಲ್ಲಿ ತಾವರೆಗಳು ಮುಚ್ಚಿದವು.]
 • ತಾತ್ಪರ್ಯ:ಆ ಬಭ್ರುವಾಹನನು, ಅರ್ಜುನನಿಗೆ ಸಲ್ಲಿಸಲು ತಂದಿದ್ದ ಎಲ್ಲಾ ವಸ್ತುಗಲನ್ನು ತೆಗಸಿದನು; ಕುದುರೆಯನ್ನು ಲಾಯದಲ್ಲಿ ಬಿಗಿಸಿದನು; ಬಂದಿದ್ದ ಪುರಜನರನ್ನೂ, ಸ್ತ್ರೀಯರನ್ನು ಪಟ್ಟಣಕ್ಕೆ ಪುನಃ ಹೊಗಿಸಿದನು; ಸಚಿವರನ್ನೂ ಸೇನಾದಿನಾಯಕರನ್ನೂ ಕರೆಸಿದನು; ಚತುರಂಗ ಸೈನ್ನ್ಯವನ್ನು ಸಿದ್ಧಗೊಳಿಸಿ ಒಟ್ಟುಸೇರಿಸಿ,ಭೂಮಿ ಪ್ರದೇಶವನ್ನು ಮೀರಿಸಿದನು: ವಾದ್ಯಘೋಷದಿಂದ ಸಮುದ್ರಘೋಷವನ್ನು ಮುಚ್ಚಿಸಿದನು; ಈ ದಟ್ಟಣೆಯ ಧೂಳುಗಳು ಸೂರ್ಯನನ್ನು ಮುಸುಕಲು ಸಂಜೆಯಾಗಿದೆ ಎಂಬ ಭ್ರಮೆಯಲ್ಲಿ ತಾವರೆಗಳು ಮುಚ್ಚಿದವು.
 • (ಪದ್ಯ-೫೭)

ಪದ್ಯ :-:೫೮:[ಸಂಪಾದಿಸಿ]

ಕೇಳೆಲೆ ನೃಪಾಲಕುಲತಿಲಕ ಮುಂದದ್ಭುತ ಕ | ಥಾಳಾಪಮಂ ಬಳಿಕ ಪೂಡಿದುದು ಕರ್ಕಶದ | ಕಾಳಗಂ ಸವ್ಯಸಾಚಿಗೆ ಬಭ್ರುವಾಹನನ ಕೂಡೆ ಮಹದಾಹವದೊಳು ||
ಹೇಳಲೇನಂದು ಸುರಪಂಗೆ ಪಾರ್ಥನೊಳಾದ | ಕೋಲಾಹಳದ ಕದನದಂತೆ ಮುನ್ನದ್ವರದ| ಬೇಳಂಬದಿಂದೆ ರಾಮಂಗೆ ಕುಶಲವರೊಡನೆ ಬಂದ ಸಂಗ್ರಾಮದಂತೆ ||58||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕೇಳೆಲೆ ನೃಪಾಲಕುಲತಿಲಕ ಮುಂದೆ ಅದ್ಭುತ ಕಥಾಳಾಪಮಂ (ಆಲಾಪ - ಮಾತು ಹೇಳಿಕೆ) ಬಳಿಕ ಪೂಡಿದುದು ಕರ್ಕಶದ ಕಾಳಗಂ ಸವ್ಯಸಾಚಿಗೆ ಬಭ್ರುವಾಹನನ ಕೂಡೆ ಮಹತ್ ಆಹವದೊಳು=[ಎಲೆ ನೃಪಾಲಕುಲತಿಲಕನಾದ ಜನಮೇಜಯನೇ, ಮುಂದಿನ ಅದ್ಭುತ ಕಥೆಯ ವಿವರವನ್ನು ಕೇಳು. ಬಳಿಕ ಕಠೋರವಾದ ಯುದ್ಧವು ಸವ್ಯಸಾಚಿಗೆ ಮತ್ತು ಬಭ್ರುವಾಹನಿಗೆ ದೊಡ್ಡ ಯುದ್ಧ ಆಯಿತು.]; ಹೇಳಲೇನು ಅಂದು ಸುರಪಂಗೆ/ಇಂದ್ರ ಮತ್ತು ಅವನ ಮಗ ಪಾರ್ಥನೊಳಾದ ಕೋಲಾಹಳದ ಕದನದಂತೆ ಮುನ್ನ ಅದ್ವರದ ಬೇಳಂಬದಿಂದೆ (ಗೊಂದಲ) ರಾಮಂಗೆ ಕುಶಲವರೊಡನೆ ಬಂದ ಸಂಗ್ರಾಮದಂತೆ=[ ಏನು ಹೇಳಲಿ ಅಂದು ಖಾಂಡವದಹನ ಸಮಯದಲ್ಲಿ ಇಂದ್ರನಿಗೆ ಅವನ ಮಗ ಪಾರ್ಥನ ಜೊತೆ ಆದ ಆರ್ಭಟದ ಯುದ್ಧದಂತೆ ಮತ್ತು ಮುನ್ನ /ಹಿಂದೆ ತ್ರೇತಾಯುಗದಲ್ಲಿ ಅಶ್ವಮೇಧದ ನೆವದಿಂದ ರಾಮನಿಗೂ ಕುಶಲವರೊಡನೆ ನೆಡೆದ ಯುದ್ಧದಂತೆ ಆಯಿತು.]
 • ತಾತ್ಪರ್ಯ:ಎಲೆ ನೃಪಾಲಕುಲತಿಲಕನಾದ ಜನಮೇಝಯನೇ, ಮುಂದಿನ ಅದ್ಭುತ ಕಥೆಯ ವಿವರವನ್ನು ಕೇಳು. ಬಳಿಕ ಕಸವ್ಯಸಾಚಿಗೆ ಮತ್ತು ಬಭ್ರುವಾಹನಿಗೆ ದೊಡ್ಡ ಯುದ್ಧ ಆಯಿತು. ಏನು ಹೇಳಲಿ ಅಂದು ಖಾಂಡವದಹನ ಸಮಯದಲ್ಲಿ ಇಂದ್ರನಿಗೆ ಪಾರ್ಥನ ಜೊತೆ ಆದ ಆರ್ಭಟದ ಯುದ್ಧದಂತೆ ಮತ್ತು ಮುನ್ನ /ಹಿಂದೆ ತ್ರೇತಾಯುಗದಲ್ಲಿ ಅಶ್ವಮೇಧದ ನೆವದಿಂದ ರಾಮನಿಗೂ ಅವನ ಮಕ್ಕಳು ಕುಶಲವರೊಡನೆ ನೆಡೆದ ಯುದ್ಧದಂತೆ ಆಯಿತು.
 • (ಪದ್ಯ-೫೮)

ಪದ್ಯ :-:೫೯:[ಸಂಪಾದಿಸಿ]

ಆಲಿಸಿದನಲ್ಲಿ ಪರಿಯಂತ ಜನಮೇಜಯಂ | ಮೇಲಣ ಕಥೆಯನೊಲ್ದು ಬೆಸೆಗೊಂಡನೆಲೆ ಮುನಿಪ | ಹೋಲಿಸಿ ನುಡಿದೆ ಸುರಪಫಲುಗುಣರ ಸಮರಮಂ ಕೇಳ್ದೆನದನಾಂ ನಿನ್ನೊಳು ||
ಹೇಳಬೇಹುದು ರಾಘವಂಗೆ ಸುತನೊಡನಾದ | ಕಾಳಗದ ಸಂಗತಿಯನೆನಗೆಂದೆನಲ್ಕೆ ಭೂ | ಪಾಲಂಗೆ ವಿರಚಿಸಿದನೀ ತೆರದೊಳಾ ತಪೋನಿಧಿ ಬಳಿಕ ಸಂತಸದೊಳು ||59||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಆಲಿಸಿದನು ಅಲ್ಲಿ ಪರಿಯಂತ ಜನಮೇಜಯಂ, ಮೇಲಣ ಕಥೆಯನು=[ಜನಮೇಜಯನು ಅಲ್ಲಿ ವರೆಗಿನ ಮೇಲಿನ ಕಥೆಯನ್ನು ಕೇಳಿದನು.]; ಒಲ್ದು ಬೆಸೆಗೊಂಡನು ಎಲೆ ಮುನಿಪ ಹೋಲಿಸಿ ನುಡಿದೆ ಸುರಪ ಫಲುಗುಣರ ಸಮರಮಂ ಕೇಳ್ದೆನು ಅದ ನಾಂ ನಿನ್ನೊಳು ಹೇಳಬೇಹುದು ರಾಘವಂಗೆ ಸುತನೊಡನಾದ ಕಾಳಗದ ಸಂಗತಿಯನು ಎನಗೆಂದು ಎನಲ್ಕೆ=[ರಾಜನು ಪ್ರೀತಿಯಿಂದ ಕೇಳಿದನು, ಎಲೈ ಮುನಿಯೇ ಹೋಲಿಸಿ ಹೇಳಿದೆಯಲ್ಲಾ, ಅದರಲ್ಲಿ ಸುರಪತಿ/ ಇಂದ್ರನಿಗೂ ಮತ್ತು ಫಲ್ಗುಣರ / ಇಂದ್ರನ ಮಗ ಇವರ ನಡುವೆ ಖಾಂಡವ ದಹನ ಸಮಯದಲ್ಲಿ ಆದ ಯುದ್ಧವನ್ನು ನಿನ್ನಿಂದ ಕೇಳಿದ್ದೇನೆ. ಈಗ ನನಗೆ, ರಾಘವನಿಗೆ ಮಕ್ಕಳೊಡನೆ ಆದ ಯುದ್ಧದ ಸಂಗತಿಯನ್ನು ನನಗೆ ಹೇಳಬೇಕು ಎಂದು ಎನ್ನಲು,]; ಭೂಪಾಲಂಗೆ ವಿರಚಿಸಿದನೀ ತೆರದೊಳಾ ತಪೋನಿಧಿ ಬಳಿಕ ಸಂತಸದೊಳು=[ಬಳಿಕ ರಾಜನಿಗೆಗ ತಪೋನಿಧಿಯು ವಿವರವಾಗಿ ಈ ತೆರದಲ್ಲಿ ಸಂತೋಷದಿಂದ (ವಿರಚಿಸಿದನು) ಹೇಳಿದನು.].
 • ತಾತ್ಪರ್ಯ:ಜನಮೇಜಯನು ಅಲ್ಲಿ ವರೆಗಿನ ಮೇಲಿನ ಕಥೆಯನ್ನು ಕೇಳಿದನು. ರಾಜನು ಪ್ರಿತಿಯಿಂದ ಕೇಳಿದನು, ಎಲೈ ಮುನಿಯೇ ಹೋಲಿಸಿ ಹೇಳಿದೆಯಲ್ಲಾ, ಅದರಲ್ಲಿ ಸುರಪತಿ / ಇಂದ್ರ ಮತ್ತು ಅವನ ಮಗ ಫಲ್ಗುಣರ ನಡುವೆ ಆದ ಯುದ್ಧವನ್ನು ನಿನ್ನಿಂದ ಕೇಳಿದ್ದೇನೆ. ಈಗ ನನಗೆ, ರಾಘವನಿಗೆ ಮಕ್ಕಳೊಡನೆ ಆದ ಯುದ್ಧದ ಸಂಗತಿಯನ್ನು ಹೇಳಬೇಕು ಎನ್ನಲು, ಬಳಿಕ ರಾಜನಿಗೆ ತಪೋನಿಧಿಯು ವಿವರವಾಗಿ ಈ ತೆರದಲ್ಲಿ ಸಂತೋಷದಿಂದ (ವಿರಚಿಸಿದನು)ಆ ಕಥೆಯನ್ನು ಹೇಳಿದನು.
 • (ಪದ್ಯ-೫೯)

ಪದ್ಯ :-:೬೦:[ಸಂಪಾದಿಸಿ]

ಪ್ರೇಮದಿಂದೈದೆ ವಿಸ್ತರಿಸಿದಂ ನೃಪಕುಲೋ | ದ್ದಾಮ ಜನಮೇಜಯಂ ಬೆಸಗೊಳಲ್ ಜೈಮಿನಿ ಮ | ಹಾಮುನೀಂದ್ರಂ ಕೂರ್ತು ಕೇಳ್ವರ್ಗೆ ರೋಮಾಂಚನಂ ಪೊಣ್ಮತಿ ಹರುಷ ಮುಣ್ಮ||
ರಾಮಾವತಾರದೊಳ್ ದೇವಪುರನಿಲಯಲ | ಕ್ಷ್ಮೀಮನೋವಲ್ಲಭಂ ತನ್ನ ಸುತರೊಡನೆ ಸಂ | ಗ್ರಾಮದೊಳ್ ಕಾದಿದ ಕಥಾಮೃತವನದರ ಕಾರಣಸಹಿತ ತುದಿಮೊದಲ್ಗೆ ||60||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • (ಪ್ರೇಮದಿಂದ ಐದೆ ವಿಸ್ತರಿಸಿದಂ /ಐದೆ -ಬರಲು(ಕ್ರಿ.ಗ್ರಾಮ್ಯ) ಪ್ರಶ್ನೆ ಬರಲು/ ಪ್ರೇಮದಿಂದ ಕೇಳಲು ವಿಸ್ತರಿಸಿದನು->) ನೃಪಕುಲೋದ್ದಾಮ ಜನಮೇಜಯಂ ಬೆಸಗೊಳಲ್ ಜೈಮಿನಿ ಮಹಾಮುನೀಂದ್ರಂ ಕೂರ್ತು ಕೇಳ್ವರ್ಗೆ ರೋಮಾಂಚನಂ ಪೊಣ್ಮತಿ ಹರುಷ ಮುಣ್ಮ=[ನೃಪಕುಲೋದ್ದಾಮನಾದ ಜನಮೇಜಯನು ಕೇಳಲು, ಜೈಮಿನಿ ಮಹಾಮುನೀಂದ್ರನು ಕೂತು ಕೇಳುವವರಿಗೆ ರೋಮಾಂಚನವು ಹೊಮ್ಮುವಂತೆ, ಹರುಷ ಉಂಟಾಗುವಂತೆ]; ರಾಮಾವರಾರದೊಳ್ ದೇವಪುರನಿಲಯಲ ಕ್ಷ್ಮೀಮನೋವಲ್ಲಭಂ ತನ್ನ ಸುತರೊಡನೆ ಸಂಗ್ರಾಮದೊಳ್ ಕಾದಿದ ಕಥಾಮೃತವನದರ ಕಾರಣಸಹಿತ ತುದಿಮೊದಲ್ಗೆ=[ರಾಮಾವತಾರದಲ್ಲಿ ದೇವಪುರನಿಲಯ ಲಕ್ಷ್ಮೀಮನೋವಲ್ಲಭನಾದ ವಿಷ್ಣುವು ತನ್ನ ಮಕ್ಕಳೊಡನೆ ಸಂಗ್ರಾಮದಲ್ಲಿ ಯುದ್ಧಮಾಡಿದ ಕಥಾಮೃತವನ್ನು ಅದರ ಕಾರಣಸಹಿತ ತುದಿಮೊದಲುಪೂರ್ಣ ಪ್ರೇಮದಿಂದ ಕೇಳಲು ವಿಸ್ತರಿಸಿ ಹೇಳಿದನು.];
 • ತಾತ್ಪರ್ಯ:ನೃಪಕುಲೋದ್ದಾಮನಾದ ಜನಮೇಜಯನು ಕೇಳಲು, ಜೈಮಿನಿ ಮಹಾಮುನೀಂದ್ರನು ಕೂತು ಕೇಳುವವರಿಗೆ ರೋಮಾಂಚನವು ಹೊಮ್ಮುವಂತೆ, ಹರುಷ ಉಂಟಾಗುವಂತೆ ರಾಮಾವತಾರದಲ್ಲಿ ದೇವಪುರನಿಲಯ ಲಕ್ಷ್ಮೀಮನೋವಲ್ಲಭನಾದ ವಿಷ್ಣುವು ತನ್ನ ಮಕ್ಕಳೊಡನೆ ಸಂಗ್ರಾಮದಲ್ಲಿ ಯುದ್ಧಮಾಡಿದ ಕಥಾಮೃತವನ್ನು ಅದರ ಕಾರಣಸಹಿತ ತುದಿಮೊದಲುಪೂರ್ಣ ಪ್ರೇಮದಿಂದ ಕೇಳಲು ವಿಸ್ತರಿಸಿ ಹೇಳಿದನು.
 • (ಪದ್ಯ-೬೦)iii-x
 • [೧]
 • [೨]
 • ಸಂಧಿ ೧೭ಕ್ಕೆ ಪದ್ಯ ೮೬೯.

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


 1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
 2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.