ವಿಷಯಕ್ಕೆ ಹೋಗು

ಜೈಮಿನಿ ಭಾರತ/ಹತ್ತೊಂಭತ್ತನೆಯ ಸಂಧಿ

ವಿಕಿಸೋರ್ಸ್ದಿಂದ

ಹತ್ತೊಂಭತ್ತನೆಯ ಸಂಧಿ

[ಸಂಪಾದಿಸಿ]

ಪದ್ಯ :-:ಸೂಚನೆ:

[ಸಂಪಾದಿಸಿ]

ಸೂಚನೆ : ರಮಣಂ ತೊರೆದನೆಂಬುದುಂ ಕೇಳ್ದು ಶೋಕದಿಂ |ಭ್ರಮಿಸುತಡವಿಯೊಳಿರಲ್ ಕಂಡು ವಾಲ್ಮೀಕಿಯಾ | ಶ್ರಮಕೊಯ್ದೊಡಲ್ಲಿ ಮಿಥಿಳೇಂದ್ರಸುತೆ ತನಯರಂ ಪಡೆದು ಪದುಳದೊಳಿರ್ದಳು ||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಮಣಂ ತೊರೆದನು ಎಂಬುದುಂ ಕೇಳ್ದು ಶೋಕದಿಂ ಭ್ರಮಿಸುತ ಅಡವಿಯೊಳು ಇರಲ್ ಕಂಡು ವಾಲ್ಮೀಕಿಯು ಆಶ್ರಮಕೆ ಒಯ್ದೊಡೆ ಅಲ್ಲಿ ಮಿಥಿಳೇಂದ್ರಸುತೆ ತನಯರಂ ಪಡೆದು ಪದುಳದೊಳು ಇರ್ದಳು=[ ಪತಿಯು ತನ್ನನ್ನು ತೊರೆದನು ಎಂಬುದನ್ನು ಕೇಳಿ ಶೋಕದಿಂದ ದಿಕ್ಕುತೋಚದೆ ಭ್ರಮೆಗೆ ಒಳಗಾಗಿ ಕಾಡಿನಲ್ಲಿ ಇರಲು, ವಾಲ್ಮೀಕಿಯು ಕಂಡು ಆಶ್ರಮಕ್ಕೆ ಅವಳನ್ನು ಕರೆದುಕೊಂಡು ಹೊಗಿ ಅಲ್ಲಿ ಮಿಥಿಲಾನಗರದ ರಾಜನ ಮಗಳು ಜಾನಕಿ ತನಯರನ್ನು/ ಗಂಡು ಮಕ್ಕಳನ್ನು ಪಡೆದು ಸುಖವಾಗಿ ಇದ್ದಳು.]
  • ತಾತ್ಪರ್ಯ: ಪತಿಯು ತನ್ನನ್ನು ತೊರೆದನು ಎಂಬುದನ್ನು ಕೇಳಿ ಶೋಕದಿಂದ ದಿಕ್ಕುತೋಚದೆ ಭ್ರಮೆಗೆ ಒಳಗಾಗಿ ಕಾಡಿನಲ್ಲಿ ಇರಲು, ವಾಲ್ಮೀಕಿಯು ಕಂಡು ಆಶ್ರಮಕ್ಕೆ ಅವಳನ್ನು ಕರೆದುಕೊಂಡು ಹೊಗಿ ಅಲ್ಲಿ ಮಿಥಿಲಾನಗರದ ರಾಜನ ಮಗಳು ಜಾನಕಿ ತನಯರನ್ನು/ ಗಂಡು ಮಕ್ಕಳನ್ನು ಪಡೆದು ಸುಖವಾಗಿ ಇದ್ದಳು.
  • (ಪದ್ಯ-ಸೂಚನೆ)X-X

ಪದ್ಯ :-:೧:

[ಸಂಪಾದಿಸಿ]

ಅರಸ ಕೇಳ್ ಸೌಮಿತ್ರಿ ವೈದೇಹಿಯಂ ಕೊಂಡು | ತೆರಳುವ ರಥಾಗ್ರದೊಳ್ ಚಲಿಸುವ ಪತಾಕೆ ರಘು | ವರನಂಗನೆಯನುಳಿದನಹಹಯೆಂದಡಿಗಡಿಗೆ ತಲೆಗೊಡುಹುವಂತಿರಲ್ಕೆ ||
ಪರಮದಾರುಣಮಾಯ್ತಿದೆಂದಯೋಧ್ಯಾಪುರದ | ನೆರವಿಯ ಜನಂ ಗುಜುಗುಜಿಸಿ ಮನದೆ ಕರಗಿ ಕಾ | ತರಿಸುತಿರೆ ಪರಿಸಿದಂ ಕಾಲ್ಬಟ್ಟೆಗೊಂಡನಿಲವೇಗದಿಂದಾ ರಥವನು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರಸ ಕೇಳ್ ಸೌಮಿತ್ರಿ ವೈದೇಹಿಯಂ ಕೊಂಡು ತೆರಳುವ ರಥಾಗ್ರದೊಳ್ ಚಲಿಸುವ ಪತಾಕೆ ರಘುವರನು ಆಂಗನೆಯನು ಉಳಿದನು ಅಹಹ! ಯೆಂದು ಅಡಿಗಡಿಗೆ ತಲೆಗೊಡುಹುವಂತೆ ಇರಲ್ಕೆ=[ಅರಸ ಜನಮೇಜಯನೇ ಕೇಳು, ಸೌಮಿತ್ರಿಯು/ಲಕ್ಷ್ಮಣನು ವಿದೇಹರಾಜ್ಯದ ಜಾನಕಿಯನ್ನು ರಥದಲ್ಲಿ ಕರೆದುಕೊಂಡು ಹೋಗುತ್ತಿರುವ ರಥದಮೇಲೆ ಪತಾಕೆಯು, ದುಃಖದಿಂದ ರಘುರಾಮನು ಪತ್ನಿಯನ್ನು ತೊರೆದನು- ಅಹಹ! ಎಂದು ಪದೇಪದೇ ತಲೆಕೊಡವುವಂತೆ, ಗಾಳಿಗೆ ಬಡಿದುಕೊಳ್ಲುತ್ತಿತ್ತು. ಹಾಗಿರಲು,]; ಪರಮದಾರುಣಂ ಆಯ್ತು ಇದು ಎಂದು ಅಯೋಧ್ಯಾಪುರದ ನೆರವಿಯ ಜನಂ ಗುಜುಗುಜಿಸಿ ಮನದೆ ಕರಗಿ ಕಾತರಿಸುತಿರೆ ಪರಿಸಿದಂ ಕಾಲ್‍ಬಟ್ಟೆಗೊಂಡ (ಕಾಲ್ -ಕಿಚ್ಚು +ಬಟ್ಟೆ-ದಾರಿ) ಅನಿಲವೇಗದಿಂದ ಆ ರಥವನು=[ಬಹಳ ಕಠೋರ ಘಟನೆ ಇದಾಯಿತಲ್ಲಾ ಎಂದು, ಅಯೋಧ್ಯಾಪುರದಲ್ಲಿ ಸೇರಿದ ಜನರು ಪರಸ್ಪರ ಮೆಲ್ಲಗೆ ಗುಜುಗುಜಿಸಿ ಮಾತಾಡಿಕೊಂಡು, ಮನದಲ್ಲಿ ನೊಂದು ಕಳವಳಪಡುತ್ತಿರಲು, ಸಾರಥಿಯು ಆ ರಥವನ್ನು ದಾರಿಗೆಕಿಚ್ಚುಹತ್ತಿದಂತೆ ವಾಯುವೇಗದಿಂದ ಓಡಿಸಿದನು.]
  • ತಾತ್ಪರ್ಯ:ಅರಸ ಜನಮೇಜಯನೇ ಕೇಳು, ಸೌಮಿತ್ರಿಯು/ಲಕ್ಷ್ಮಣನು ವಿದೇಹರಾಜ್ಯದ ಜಾನಕಿಯನ್ನು ರಥದಲ್ಲಿ ಕರೆದುಕೊಂಡು ಹೋಗುತ್ತಿರುವ ರಥದಮೇಲೆ ಪತಾಕೆಯು, ದುಃಖದಿಂದ ರಘುರಾಮನು ಪತ್ನಿಯನ್ನು ತೊರೆದನು- ಅಹಹ! ಎಂದು ದುಃಖದಿಂದ ತಲೆಕೊಡವುವಂತೆ ಪದೇಪದೇ ಗಾಳಿಗೆ ಬಡಿದುಕೊಳ್ಲುತ್ತಿತ್ತು. ಹಾಗಿರಲು, ಬಹಳ ಕಠೋರ ಘಟನೆ ಇದಾಯಿತಲ್ಲಾ ಎಂದು, ಅಯೋಧ್ಯಾಪುರದಲ್ಲಿ ಸೇರಿದ ಜನರು ಪರಸ್ಪರ ಮೆಲ್ಲಗೆ ಗುಜುಗುಜಿಸಿ ಮಾತಾಡಿಕೊಂಡು, ಮನದಲ್ಲಿ ನೊಂದು ಕಳವಳಪಡುತ್ತಿರಲು, ಸಾರಥಿಯು ಆ ರಥವನ್ನು ದಾರಿಗೆಕಿಚ್ಚುಹತ್ತಿದಂತೆ ವಾಯುವೇಗದಿಂದ ಓಡಿಸಿದನು.
  • (ಪದ್ಯ-೧)

ಪದ್ಯ :-:೨:

[ಸಂಪಾದಿಸಿ]

ಧುರದೊಳಾಂತರನಿರಿದು ಮೆರೆಯಲೇರುವ ರಥಂ | ತರಳೆಯಂ ಕಾನನಕೆ ಕಳುಹಲಡರ್ವಂತಾಯ್ತು | ಧರೆಯೊಳಾರ್ತರನೈದೆ ರಕ್ಷಿಸುವ ಬುದ್ಧಿ ಕೋಮಲೆಯ ಕೊಲೆಗೆಲಸಕಾಯ್ತು ||
ಕರುಣಮಿಲ್ಲದೆ ಹೊರೆವ ಹರಣಮಂ ಸುಡಲಿ ನಿ | ಷ್ಠುರದೊಳೆಂತೀಕೃತ್ಯಮೆಸಗುವನೊ ರಾಘವೇ | ಶ್ವರನೆಂತಿದಕ್ಕೆ ಬೆಸಸಿದನೊ ತನಗೆನುತೆ ಸೌಮಿತ್ರಿ ಮರುಗುತ ನಡೆದನು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಧುರದೊಳು ಆಂತರನು ಇರಿದು ಮೆರೆಯಲು ಏರುವ ರಥಂ ತರಳೆಯಂ ಕಾನನಕೆ ಕಳುಹಲು ಅಡರ್ವಂತಾಯ್ತು,=[ಯುದ್ಧದಲ್ಲಿ ಎದುರಿಸಿದವರನ್ನು ಹೊಡೆದು ಮೆರೆಯಲು ಹತ್ತುವ ರಥವು, ತರುಣಿ/ ಹೆಂಗುಸನ್ನು ಕಾಡಿಗೆ ಕಳುಹಿಸಲು ಹತ್ತುವಂತಾಯಿತು;]; ಧರೆಯೊಳು ಆರ್ತರನು ಐದೆ ರಕ್ಷಿಸುವ ಬುದ್ಧಿ ಕೋಮಲೆಯ ಕೊಲೆಗೆಲಸಕಾಯ್ತು=[ಈ ಭೂಮಿಯಲ್ಲಿ ದೀನರು ಬರಲು ಅವರನ್ನು ರಕ್ಷಿಸುವ ಬುದ್ಧಿ ಕೋಮಲೆಯ ಕೊಲೆಗೆಲಸಕ್ಕಾಯಿತು.]; ಕರುಣಮಿಲ್ಲದೆ ಹೊರೆವ ಹರಣಮಂ ಸುಡಲಿ ನಿಷ್ಠುರದೊಳು ಎಂತು ಈ ಕೃತ್ಯಂ ಎಸಗುವನೊ ರಾಘವೇಶ್ವರನು ಎಂತಿದಕ್ಕೆ ಬೆಸಸಿದನೊ ತನಗೆನುತೆ ಸೌಮಿತ್ರಿ ಮರುಗುತ ನಡೆದನು=[ಕರುಣವಿಲ್ಲದೆ ಹೊಟ್ಟೆಹೊರೆಯುವ ಈ ಜೀವ ಸುಡಲಿ! ನಿಷ್ಠುರವಾಗಿ ಹೇಗೆ ಈ ಕಾರ್ಯವನ್ನು ಮಾಡವೆನೊ! ರಾಘವೇಶ್ವರನು ಹೇಗೆ ಇದಕ್ಕೆ ತನಗೆ ಆಜ್ಞೆ ಮಾಡಿದನೋ! ಎನ್ನುತ್ತಾ ಸೌಮಿತ್ರಿ /ಲಕ್ಷ್ಮಣ ದುಃಖಿಸುತ್ತಾ ನಡೆದನು].
  • ತಾತ್ಪರ್ಯ:ಯುದ್ಧದಲ್ಲಿ ಎದುರಿಸಿದವರನ್ನು ಹೊಡೆದು ಮೆರೆಯಲು ಹತ್ತುವ ರಥವು, ತರುಣಿ/ ಹೆಂಗುಸನ್ನು ಕಾಡಿಗೆ ಕಳುಹಿಸಲು ಹತ್ತುವಂತಾಯಿತು; ಈ ಭೂಮಿಯಲ್ಲಿ ದೀನರು ಬರಲು ಅವರನ್ನು ರಕ್ಷಿಸುವ ಬುದ್ಧಿ ಕೋಮಲೆಯ ಕೊಲೆಗೆಲಸಕ್ಕಾಯಿತು. ಕರುಣವಿಲ್ಲದೆ ಹೊಟ್ಟೆಹೊರೆಯುವ ಈ ಜೀವ ಸುಡಲಿ! ನಿಷ್ಠುರವಾಗಿ ಹೇಗೆ ಈ ಕಾರ್ಯವನ್ನು ಮಾಡವೆನೊ! ರಾಘವೇಶ್ವರನು ಹೇಗೆ ಇದಕ್ಕೆ ತನಗೆ ಆಜ್ಞೆ ಮಾಡಿದನೋ! ಎನ್ನುತ್ತಾ ಸೌಮಿತ್ರಿ /ಲಕ್ಷ್ಮಣ ದುಃಖಿಸುತ್ತಾ ನಡೆದನು.
  • (ಪದ್ಯ-೨)

ಪದ್ಯ :-:೩:

[ಸಂಪಾದಿಸಿ]

ಬಳ್ಳೊರಲ್ದುದು ಮುಂದೆ ಮಾರ್ಗವಂ ದಾಂಟಿದುದು | ಕುಳ್ಳಿರ್ದ ಮೃಗಮೆದ್ದು ಬಲದ ಕಣ್ಣದಿರೆ ಕಂ ಡಳ್ಳೆದೆಯಲವನಿಸುತೆ ನೋಡು ಲಕ್ಷ್ಮಣ ದುರ್ನಿಮಿತ್ತಂಗಳಂ ಪಥದೊಳು ||
ಡಿಳ್ಳಮಾದಪುದೀಗಳೆನ್ನ ಮನಮಿದಕೆ ಮುಂ| ದೊಳ್ಳಿತಾಗಲಿ ರಾಮನಾಯುಷ್ಯಕೈಶ್ವರ್ಯ | ಕುಳ್ಳ ಭುಜಬಲಕಸುರರಂಗೆಲ್ದ ರಾಘವಂ ನಮ್ಮಂ ಸಲಹಲೆಂದಳು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳ್ಳು(ನರಿ) ಒರಲ್ದುದು ಮುಂದೆ ಮಾರ್ಗವಂ ದಾಂಟಿದುದು ಕುಳ್ಳಿರ್ದ ಮೃಗಮೆದ್ದು ಬಲದ ಕಣ್ಣದಿರೆ ಕಂಡು ಅಳ್ಳೆದೆಯಲಿ ಅವನಿಸುತೆ ನೋಡು ಲಕ್ಷ್ಮಣ ದುರ್ನಿಮಿತ್ತಂಗಳಂ ಪಥದೊಳು=[ನರಿ ಊಳಿಟ್ಟಿತು, ಕುಳಿತಿದ್ದ ಮೃಗ ಎದ್ದು ಎದುರಿನಲ್ಲಿ ದಾರಿಯನ್ನು ದಾಟಿತು. ಬಲದ ಕಣ್ಣ ಅದುರಿತು, ಇದನ್ನು ಕಂಡು ಭಯದಲ್ಲಿ ಅವನಿಸುತೆ / ಸೀತೆ, ನೋಡು ಲಕ್ಷ್ಮಣ ದಾರಿಯಲ್ಲಿ ದುರ್ನಿಮಿತ್ತಗಳು ಆಗುತ್ತಿವೆ.]; ಡಿಳ್ಳಂ ಆದಪುದು ಈಗಳು ಎನ್ನ ಮನಂ ಇದಕೆ ಮುಂದೆ ಒಳ್ಳಿತಾಗಲಿ! ರಾಮನ ಆಯುಷ್ಯಕೆ ಐಶ್ವರ್ಯಕೆ ಉಳ್ಳಭುಜಬಲಕೆ ಅಸುರರಂ ಗೆಲ್ದ ರಾಘವಂ ನಮ್ಮಂ ಸಲಹಲಿ ಎಂದಳು=[ ಇದಕ್ಕೆ ಈಗ ನನ್ನ ಮನಸ್ಸು ದಿಗಿಲುಗೊಂಡಿದೆ; ಮುಂದೆ ಒಳ್ಳಿತಾಗಲಿ! ರಾಮನ ಆಯುಷ್ಯಕೆ ಐಶ್ವರ್ಯಕೆ ಇರುವಭುಜಬಲಕೆ ಅಸುರರನ್ನು ಗೆದ್ದ ರಾಘವನು ನಮ್ಮನ್ನು ಸಲಹಲಿ, ಎಂದಳು];
  • ತಾತ್ಪರ್ಯ:ನರಿ ಊಳಿಟ್ಟಿತು, ಕುಳಿತಿದ್ದ ಮೃಗ ಎದ್ದು ಎದುರಿನಲ್ಲಿ ದಾರಿಯನ್ನು ದಾಟಿತು. ಬಲದ ಕಣ್ಣ ಅದುರಿತು, ಇದನ್ನು ಕಂಡು ಭಯದಲ್ಲಿ ಅವನಿಸುತೆ / ಸೀತೆ, ನೋಡು ಲಕ್ಷ್ಮಣ ದಾರಿಯಲ್ಲಿ ದುರ್ನಿಮಿತ್ತಗಳು ಆಗುತ್ತಿವೆ. ಇದಕ್ಕೆ ಈಗ ನನ್ನ ಮನಸ್ಸು ದಿಗಿಲುಗೊಂಡಿದೆ; ಮುಂದೆ ಒಳ್ಳಿತಾಗಲಿ! ರಾಮನ ಆಯುಷ್ಯಕೆ ಐಶ್ವರ್ಯಕೆ ಇರುವಭುಜಬಲಕೆ ಅಸುರರನ್ನು ಗೆದ್ದ ರಾಘವನು ನಮ್ಮನ್ನು ಸಲಹಲಿ, ಎಂದಳು.
  • (ಪದ್ಯ-೩)

ಪದ್ಯ :-:೪:

[ಸಂಪಾದಿಸಿ]

ಅನ್ನೆಗಂ ಜಾನಕಿಯ ಕಣ್ಗೆ ತೋರಿತು ಮುಂದೆ | ಸನ್ನುತ ರಘೂಧ್ವಹನ ಕೀರ್ತಿಯೆನೆ ಮೂವಟ್ಟೆ | ಯನ್ನಡೆದು ಮುಕ್ಕಣ್ಣನಂ ಸಾರ್ದು ಮೂಜಗದ ಷಾಪಮಂ ಮುರಿದು ಮುಕ್ಕಿ ||
ಮುನ್ನೀರು ಮುಂತಾಗಿ ಮೂದೇವರೊಳಗಾದ | ಮುನ್ನುಳ್ಳ ಮೂವತ್ತು ಮೂರ್ಕೋಟಿ ವಿಬುಧರಂ | ತನ್ನೊಳ್ ಮುಳುಗಿದರಣಕಿಪ ಪೆಂಪೊದವಿ ರಪಿವ ಬೆಳ್ವೊನಲ್ ದಿವಿಜ ನದಿಯ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅನ್ನಗಂ ಜಾನಕಿಯ ಕಣ್ಗೆ ತೋರಿತು ಮುಂದೆ=[ಅಷ್ಟುಹೊತ್ತಿಗೆ ಜಾನಕಿಯ ಕಣ್ಣಿಗೆ ಮುಂದೆ ಗಂಗೆಯು ತೋರಿತು. ಅದು ಹೇಗಿತ್ತೆಂದರೆ]; ಸನ್ನುತ ರಘೂಧ್ವಹನ ಕೀರ್ತಿಯೆನೆ ಮೂವಟ್ಟೆಯನ್ನಡೆದು (ಮೂ-ಮೂರು+ಬಟ್ಟೆ - ದಾರಿ+ ನೆಡೆದು - ಸಂಚರಿಸಿ) ಮುಕ್ಕಣ್ಣನಂ ಸಾರ್ದು ಮೂಜಗದ ಷಾಪಮಂ ಮುರಿದು ಮುಕ್ಕಿ=[ ಹೊಗಳಿಕೆಗೆ ಯೋಹ್ಯನಾದ,ರಾಮಚಂದ್ರನ ಕೀರ್ತಿಎನ್ನುವಂತೆ/ ಅದಕ್ಕೆ ಸಮ ಎನ್ನುವಂತೆ, ಮೂರು ಲೋಕದ ದಾರಿಯಾದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿ ಸಂಚರಿಸಿ, ಮೂರು ಕಣ್ಣುಳ್ಳ ಶಿವನ ಜಟೆಯನ್ನು ಸೇರಿ, ಮೂರುಲೋಕದ ಪಾಪವನ್ನು ಕಳೆದು,]; ಮುನ್ನೀರು ಮುಂತಾಗಿ ಮೂದೇವರೊಳಗಾದ ಮುನ್ನುಳ್ಳ (ಮೊದಲಿಂದಲೂ ಇರುವ) ಮೂವತ್ತು ಮೂರ್ಕೋಟಿ ವಿಬುಧರಂ ತನ್ನೊಳ್=[ಮುಂದೆ ಸಮುದ್ರ ಸೇರಿ, ಬ್ರಹ್ಮ ವಿಷ್ಣು, ರುದ್ರ ಈ ಮೂರು ದೇವರಲ್ಲಿ ಸೇರಿದ, ಎಂದರೆ ವಿಷ್ಣುವಿನ ಪಾದದಲ್ಲಿ ಹುಟ್ಟಿ, ಬ್ರಹ್ಮನ ಕಮಂಡಲು ಸೇರಿ, ಕೊನೆಗೆ ಶಿವನ ಜಟೆಯಲ್ಲಿ ನಿಂತು, ಮೊದಲಿಂದಲೂ ಇರುವ ಮೂವತ್ತು ಮೂರುಕೋಟಿ ದೇವತೆಗಳನ್ನು, ತನ್ನಲ್ಲಿ]; ಮುಳುಗಿದರು ಅಣಕಿಪ ಪೆಂಪೊದವಿ ಪರಿವ ಬೆಳ್ವೊನಲ್ ದಿವಿಜ ನದಿಯ=[ಮುಳುಗಿದವರು ಅಣಕಿಸುವಷ್ಟು ಶ್ರೇಷ್ಠತೆಯನ್ನು ಪಡೆದು, ಹರಿಯುವ ಬಿಳಿ/ಶುದ್ಧ ದೇವಗಂಗಾ ನದಿಯ (ಜಾನಕಿಗೆ ಕಂಡಿತು.]
  • ತಾತ್ಪರ್ಯ: ಅಷ್ಟುಹೊತ್ತಿಗೆ ಜಾನಕಿಯ ಕಣ್ಣಿಗೆ ಮುಂದೆ ಗಂಗೆಯು ತೋರಿತು. ಅದು ಹೇಗಿತ್ತೆಂದರೆ; ಹೊಗಳಿಕೆಗೆ ಯೋಗ್ಯವಾದ,ರಾಮಚಂದ್ರನ ಕೀರ್ತಿಎನ್ನುವಂತೆ/ ಅದಕ್ಕೆ ಸಮ ಎನ್ನುವಂತೆ, ಮೂರು ಲೋಕದ ದಾರಿಯಾದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿ ಸಂಚರಿಸಿ, ಮೂರು ಕಣ್ಣುಳ್ಳ ಶಿವನ ಜಟೆಯನ್ನು ಸೇರಿ, ಮೂರುಲೋಕದ ಪಾಪವನ್ನು ಕಳೆದು, ಮುಂದೆ ಸಮುದ್ರ ಸೇರಿ, ಬ್ರಹ್ಮ ವಿಷ್ಣು, ರುದ್ರ ಈ ಮೂರು ದೇವರಲ್ಲಿ ಸೇರಿದ, ಎಂದರೆ ವಿಷ್ಣುವಿನ ಪಾದದಲ್ಲಿ ಹುಟ್ಟಿ, ಬ್ರಹ್ಮನ ಕಮಂಡಲು ಸೇರಿ, ಕೊನೆಗೆ ಶಿವನ ಜಟೆಯಲ್ಲಿ ನಿಂತು, ಮೊದಲಿಂದಲೂ ಇರುವ ಮೂವತ್ತು ಮೂರುಕೋಟಿ ದೇವತೆಗಳನ್ನು ತನ್ನಲ್ಲಿ ಮುಳುಗಿದವರು ಶ್ರೇಷ್ಠತೆಯನ್ನು ಪಡೆದು ಅಣಕಿಸುವಷ್ಟು, ಹರಿಯುತ್ತಿರುವ ಶುದ್ಧ ದೇವಗಂಗಾ ನದಿಯ (ಜಾನಕಿಗೆ ಕಂಡಿತು.)
  • (ಪದ್ಯ-೪)Xι -X

ಪದ್ಯ :-:೫:

[ಸಂಪಾದಿಸಿ]

ತೆರದ ಕಲ್ಲೋಲ ಮಾಲೆಗಳ ಲೀಲೆಗಳ | ಬೆರೆಬೆರೆವ ರಾಜಹಂಸಾಳಗಳ ಕೇಳಿಗಳ | ಪರಿಪರಿಯ ನೀರ್ವನಿಗಳಾಕರದ ಶೀಕರದ ನೊರೆಯ ಬೊಬ್ಬುಳೀಯ ಸುಳಿಯ ||
ಮೊರೆಮೊರೆದ ಘರ್ಮಿಸುವ ಪರಿವುಗಳ ಮುರಿವುಗಲು | ತಿರುತಿರುಗಿ ಸುಳಿವ ಜಲಜಂತುಗಳ ಗೊಂತುಗಳ | ನೆರೆನೆರೆದು ಮುನಿಜನಂ ಸೇವಿಸುವ ಭಾವಿಸುವ ಗಂಗೆಗವನಿಜೆ ಬಂದಳು ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತೆರತೆರದ ಕಲ್ಲೋಲ ಮಾಲೆಗಳ ಲೀಲೆಗಳ ಬೆರೆಬೆರೆವ ರಾಜಹಂಸಾಳಗಳ ಕೇಳಿಗಳ=[ಬಗೆಬಗೆಯ ಅಲೆಗಳ ಲೀಲೆಗಳ ಪರಂಪರೆಗಳ; ಪರಸ್ಪರ ಬೆರೆಯುವ / ಸೇರುವ ರಾಜಹಂಸ ಸಮೂಹಗಳ ಮತ್ತು ಅವುಗಳ ಆಟಗಳ;]; ಪರಿಪರಿಯ ನೀರ್ವನಿಗಳಾಕರದ ಶೀಕರದ ನೊರೆಯ ಬೊಬ್ಬುಳೀಯ ಸುಳಿಯ=[ನಾನಾರೀತಿಯ ನೀರಿನ ಹನೀಗಳ,ತುಂತುರು ಹನಿಗಳ, ನೊರೆಯ ಬೊಬ್ಬುಳೀಯ ಸುಳಿಯ ]; ಮೊರೆ ಮೊರೆದು ಘೂರ್ಮಿಸುವ ಪರಿವುಗಳ ಮುರಿವುಗಳ ತಿರುತಿರುಗಿ ಸುಳಿವ ಜಲಜಂತುಗಳ ಗೊಂತುಗಳ ನೆರೆನೆರೆದು ಮುನಿಜನಂ ಸೇವಿಸುವ ಭಾವಿಸುವ ಗಂಗೆಗವನಿಜೆ ಬಂದಳು=[ಸದಾ ಮೊರೆಯುತ್ತಿರುವ, ಘೂರ್ಮಿಸುವ ಶಬ್ದಮಾಡಿ ಹರಿವುಗಳಿಂದ ಕೂಡಿದ ಸುಳಿಗಳು ಮತ್ತೆ ಮತ್ತೆ ಹತ್ತಿರ ಸುಳಿಯವ ಜಲಚರ ಪ್ರಾಣಿಗಳ, ತೊಟ್ಟಿಗಳ. ಬಹಳ ಮುನಿಜನು ಒಟ್ಟಾಗಿ ಸೇವಿಸುವ ಧ್ಯಾನಿಸುವ ಗಂಗೆಗೆ ಅವನಿಜೆ /ಸೀತೆ ಬಂದಳು ]
  • ತಾತ್ಪರ್ಯ:ಬಗೆಬಗೆಯ ಅಲೆಗಳ ಲೀಲೆಗಳ ಪರಂಪರೆಗಳ; ಪರಸ್ಪರ ಬೆರೆಯುವ / ಸೇರುವ ರಾಜಹಂಸ ಸಮೂಹಗಳ ಮತ್ತು ಅವುಗಳ ಆಟಗಳ; ನಾನಾರೀತಿಯ ನೀರಿನ ಹನೀಗಳ,ತುಂತುರು ಹನಿಗಳ, ನೊರೆಯ ಬೊಬ್ಬುಳೀಯ ಸುಳಿಯ, ಸದಾ ಮೊರೆಯುತ್ತಿರುವ, ಘೂರ್ಮಿಸುವ ಶಬ್ದಮಾಡಿ ಹರಿವುಗಳಿಂದ ಕೂಡಿದ ಸುಳಿಗಳು ಮತ್ತೆ ಮತ್ತೆ ಹತ್ತಿರ ಸುಳಿಯವ ಜಲಚರ ಪ್ರಾಣಿಗಳ, ತೊಟ್ಟಿಗಳ. ಬಹಳ ಮುನಿಜನು ಒಟ್ಟಾಗಿ ಸೇವಿಸುವ ಧ್ಯಾನಿಸುವ ಗಂಗೆಗೆ ಅವನಿಜೆ /ಸೀತೆ ಬಂದಳು.
  • (ಪದ್ಯ-೫)

ಪದ್ಯ :-:೬:

[ಸಂಪಾದಿಸಿ]

ತೆಂಗೆಳಗವುಂಗು ಪನಸರಿ ದ್ರಾಕ್ಷ ಜಂಬು ನಾ | ರಂಗ ಜಂಬೀರ ಖರ್ಜೂರ ಕಿತ್ತಳೆ ಮಾತು | ಳಂಗ ತಿಂತ್ರಿಣಿ ಚೂತ ನೆಲ್ಲಿ ಬಿಲ್ವ ಪಿತ್ಥಮೆಂಬ ನಾನಾ ತರುಗಳು ||
ತೊಂಗುವ ಫಲಾವಳಿಯ ಭಾರಂಗಳಾವಗಂ | ಪಿಂಗವಿವನಿಳೆಗಿಳುಪಬೇಕೆಂದು ಬಾಗಿದೊಂ | ದಂಗಮನೆ ಕಣ್ಗೆಸೆದುವಿಕ್ಕೆಲದೊಳಾ ಜಾಹ್ನವಿಯ ತಡಿಯ ಬನದೆಡೆಯೊಳು ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತೆಂಗು= ತೆಂಗಿನಮರಗಳು, ಎಳಗವುಂಗು =ಎಳೆ ಅಡಿಕೆ ಮರಗಳು,,ಪನಸರಿ =ಹಲಸು, ದ್ರಾಕ್ಷ =ದ್ರಾಕ್ಷಿ ಬಳ್ಳಿ, ಜಂಬು = ನೇರಳಳೆ ಮರ, ನಾರಂಗ= ಹೇರಳೆಮರ, ಜಂಬೀರ= ನಿಂಬೆ, ಖರ್ಜೂರ, ಕಿತ್ತಳೆ, ಮಾತುಳಂಗ= ಮಾದಲ, ತಿಂತ್ರಿಣಿ =ಹುಣಿಸೆ ಮರಗಳು, ಚೂತ= ಮಾವು, ನೆಲ್ಲಿ, ಬಿಲ್ವ, ಪಿತ್ಥಮೆಂಬ ನಾನಾ ಬಗೆಯ ಮರಗಳು, ತೊಂಗುವ= ಜೋಲಾಡುವ, ಫಲಾವಳಿಯ= ಹಣ್ಣುಗಳು, ಭಾರಂಗಳು ಆವಗಂ=ಯಾವಾಗಲೂ ತುಂಬಿರುವುವು,; ಪಿಂಗವು ಇವನು (ಪಿಂಗು,ಹಿಂಗು,=ಬಿಡು, ಬಿಡುಗಡೆ) ಇಳೆಗೆ ಇಳುಪಬೇಕೆಂದು ಬಾಗಿದ ಒಂದು ಅಂಗಮನೆ ಕಣ್ಗೆಸೆದುವು ಇಕ್ಕೆಲದೊಳು ಆ ಜಾಹ್ನವಿಯ ತಡಿಯ ಬನದೆಡೆಯೊಳು=[ಭಾರವಾದ ಬಿಡದ ಈ ಹಣ್ಣುಗಳನ್ನು ಭೂಮಿಗೆ ಇಳಿಸಬೇಕೆಂದು ಬಾಗಿದ ಒಂದು ಅಂಗವೂ(ಕೈಯಿ) ಎನ್ನುವಂತೆ ಆ ಜಾಹ್ನವಿಯ /ಗಂಗೆಯ ತಡಿಯ ಎರಡೂ ಬದಿಯ ವನದಲ್ಲಿ ಜಾನಕಿಯ ಕಣ್ಣಿಗೆ ಗೊಚರಿಸಿದವು].
  • ತಾತ್ಪರ್ಯ:ತೆಂಗಿನಮರಗಳು, ಎಳೆ ಅಡಿಕೆ ಮರಗಳು, ಹಲಸು, ದ್ರಾಕ್ಷಿ ಬಳ್ಳಿ, ನೇರಳೆ ಮರ, ಹೇರಳೆಮರ, ನಿಂಬೆ, ಖರ್ಜೂರ, ಕಿತ್ತಳೆ, ಮಾದಲ, ಹುಣಿಸೆ ಮರಗಳು, ಮಾವು, ನೆಲ್ಲಿ, ಬಿಲ್ವ, ಪಿತ್ಥವೆಂಬ ನಾನಾ ಬಗೆಯ ಮರಗಳು, ಜೋಲಾಡುವ ಹಣ್ಣುಗಳು, ಯಾವಾಗಲೂ ತುಂಬಿರುವುವು, ಭಾರವಾದ ಬಿಡದ ಈ ಹಣ್ಣುಗಳನ್ನು ಭೂಮಿಗೆ ಇಳಿಸಬೇಕೆಂದು ಬಾಗಿದ ಒಂದು ಅಂಗವೋ(ಕೈಯಿ) ಎನ್ನುವಂತೆ ಆ ಜಾಹ್ನವಿಯ /ಗಂಗೆಯ ತಡಿಯ ಎರಡೂ ಬದಿಯ ವನದಲ್ಲಿ ಜಾನಕಿಯ ಕಣ್ಣಿಗೆ ಗೊಚರಿಸಿದವು]. ( ಭಗೀರಥನನ್ನು ಹಿಂಬಾಲಿಸಿ ಬಂದ ಗಂಗೆ ಜಹ್ನು ಋಷಿಯ ಯಜ್ಞಶಾಲೆಗೆ ನುಗ್ಗಿದಾಗ,ಅದನ್ನುಕುಡಿದುಬಿಟ್ಟನು; ಬಗೀರಥನ ಪ್ರಾರ್ಥನೆಯ ನಂತರ ಅದನ್ನು ತನ್ನ ಅವನು ತನ್ನ ಕಿವಿಯಿಂದ ಗಂಗೆಯನ್ನು ಹೊರಗೆ ಬಿಟ್ಟನು, ಅದಕ್ಕಾಗಿ ಗಂಗೆಗೆ ಜಾಹ್ನವಿ ಎಂದು ಹೆಸರು ಬಂತು)
  • (ಪದ್ಯ-೬)

ಪದ್ಯ :-:೭:

[ಸಂಪಾದಿಸಿ]

ಇಳಿದು ರಥದಿಂದೆ ಮಂದಾಕಿನಿಗೆ ಪಡಮುಟ್ಟು | ಬಳಿಕ ನಾವಿಕರೊಡನೆ ನಾವದೊಳ್ ಗಂಗೆಯಂ | ಕಳೆದು ನಿರ್ಮಲ ತೀರ್ಥದೊಳ್ ಮಿಂದು ಸೌಮಿತ್ರಿ ಮತ್ತೆ ಭೂಜಾತೆ ಸಹಿತ ||
ಒಳಗೊಳಗೆ ಮರುಗಿ ಬಿಸುಸುಯ್ದು ಚಿಂತಿಸುತೆ ಮುಂ | ದಳೆದುಗ್ರ ಮೃಗಪಕ್ಷಿ ಗಣದಿಂದೆ ಘೂರ್ಮಿಸುವ | ಹಳುವನಂ ಪೊಕ್ಕನಡಿಯಿಡುವೊಡಸದಳಮೆಂಬ ಕೆರ್ಕಶದ ಮಾರ್ಗದಿಂದೆ ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಳಿದು ರಥದಿಂದೆ ಮಂದಾಕಿವನಿಗೆ ಪಡಮುಟ್ಟು ಬಳಿಕ ನಾವಿಕರೊಡನೆ ನಾವದೊಳ್ ಗಂಗೆಯಂ ಕಳೆದು ನಿರ್ಮಲ ತೀರ್ಥದೊಳ್ ಮಿಂದು=[ ರಥದಿಂದ ಇಳಿದು ಮಂದಾಕಿನಿಗೆ/ಗಂಗೆಗೆ ನಮಿಸಿ, ಬಳಿಕ ನಾವಿಕರೊಡನೆ ದೋಣಿಯಲ್ಲಿ ಗಂಗೆಯನ್ನು ದಾಟಿ, ನಿರ್ಮಲ ತೀರ್ಥದಲ್ಲಿ ಸ್ನಾನಮಾಡಿದರು.]; ಸೌಮಿತ್ರಿ ಮತ್ತೆ ಭೂಜಾತೆ ಸಹಿತ ಒಳಗೊಳಗೆ ಮರುಗಿ ಬಿಸುಸುಯ್ದು ಚಿಂತಿಸುತೆ ಮುಂದೆ ತಳೆದ ಉಗ್ರ ಮೃಗಪಕ್ಷಿ ಗಣದಿಂದೆ ಘೂರ್ಮಿಸುವ ಹಳುವನಂ ಪೊಕ್ಕನು ಅಡಿಯಿಡುವೊಡೆ ಅಸದಳಂ(ಅಸಾಧ್ಯ) ಎಂಬ ಕೆರ್ಕಶದ ಮಾರ್ಗದಿಂದೆ=[ನಂತರ ಸೌಮಿತ್ರಿಯು ಮತ್ತೆ ಜಾನಕಿಯ ಸಹಿತ ತನ್ನ ಒಳಗೊಳಗೆ ಮರುಗುತ್ತಾ ಬಿಸುಸುಯ್ದು ಚಿಂತಿಸುತ್ತಾ, ಮುಂದೆ ಬೆಳೆದ ಉಗ್ರ ಮೃಗಪಕ್ಷಿ ಸಮೂಹದಿಂದ ಘರ್ಜಿಸುವ ಹಳುವನ್ನು (ದಟ್ಟಪೊದೆಯ ಕಾನು) ಹೊಕ್ಕನು. ಅದು,ಅಲ್ಲಿ ಹೆಜ್ಜೆ ಇಟ್ಟು ನೆಡೆಯುವುದೇ ಅಸಾಧ್ಯ ಎಂಬಷ್ಟು ಕಠಿಣವಾದ ಮಾರ್ಗವಾಗಿತ್ತು.]
  • ತಾತ್ಪರ್ಯ:ಲಕ್ಷ್ಮಣ ಸೀತೆಯರು ರಥದಿಂದ ಇಳಿದು ಮಂದಾಕಿನಿಗೆ/ಗಂಗೆಗೆ ನಮಿಸಿ, ಬಳಿಕ ನಾವಿಕರೊಡನೆ ದೋಣಿಯಲ್ಲಿ ಗಂಗೆಯನ್ನು ದಾಟಿ, ನಿರ್ಮಲ ತೀರ್ಥದಲ್ಲಿ ಸ್ನಾನಮಾಡಿದರು; ನಂತರ ಸೌಮಿತ್ರಿಯು ಮತ್ತೆ ಜಾನಕಿಯ ಸಹಿತ ಮುಂದೆ ಹೊರಟನು. ಲಕ್ಷ್ಮಣನು ತನ್ನ ಒಳಗೊಳಗೆ ಮರುಗುತ್ತಾ ಬಿಸುಸುಯ್ದು ಚಿಂತಿಸುತ್ತಾ, ಮುಂದೆ ಬೆಳೆದ ಉಗ್ರ ಮೃಗಪಕ್ಷಿ ಸಮೂಹದಿಂದ ಘರ್ಜಿಸುವ ಹಳುವನ್ನು (ದಟ್ಟಪೊದೆಯ ಕಾನು) ಹೊಕ್ಕನು. ಅದು,ಅಲ್ಲಿ ಹೆಜ್ಜೆ ಇಟ್ಟು ನೆಡೆಯುವುದೇ ಅಸಾಧ್ಯ ಎಂಬಷ್ಟು ಕಠಿಣವಾದ ಮಾರ್ಗವಾಗಿತ್ತು.
  • (ಪದ್ಯ-೭)

ಪದ್ಯ :-:೮:

[ಸಂಪಾದಿಸಿ]

ಶಕುನಿ ಚೀತ್ಕಾರ ಘೋಷಣಮಯಂ ತೃಣಮಯಂ | ವಿಕಿರದುಪಲಾಳಿ ಕರ್ಕಶಮಯಂ ಶಶಮಯಂ | ಪ್ರಕಟ ಕಂಟಕ ಕೀರ್ಣ ತರುಮಯಂ ರುರುಮಯಂ ವಿವಿಧೋಗ್ರಜಂತು ಮಯವು ||
ನಕುಲ ಮೂಷಕ ಸರೀಸೃಪ ಮಯಂ ದ್ವಿಪಮಯಂ | ಸಕಲ ಭೂವಿಷಮ ಸಂಕುಲಮಯಂ ಬಿಲಮಯಂ | ವೃಕ ಸೂಕರ ವ್ಯಾಘ್ರ ಚಯಮಯಂ ಭಯಮಯಂ ತಾನೆನಿಸಿ ಕಾಡಿರ್ದುದು ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಶಕುನಿ ಚೀತ್ಕಾರ ಘೋಷಣಮಯಂ ತೃಣಮಯಂ ವಿಕಿರದ ಉಪಲ (ಕಲ್ಲು) ಆಳಿ=[ಆ ಗಂಗಾ ತಟಿಯ ಕಾಡಿನಲ್ಲಿ, ಶಕುನಿ ಎಂಬ ಹಕ್ಕಿಯ ಚೀತ್ಕಾರ ಕೂಗುಗಳು, ಹಲ್ಲು ಕಲ್ಲುಗಳಳ ಮಯವಾಗಿತ್ತು]; ಕರ್ಕಶಮಯಂ ಶಶ (ಮೊಲ)ಮಯಂ ಪ್ರಕಟ ಕಂಟಕ ಕೀರ್ಣ ತರುಮಯಂ ರುರುಮಯಂ ವಿವಿಧೋಗ್ರಜಂತು ಮಯವು=[ಕರ್ಕಶಶಬ್ದಗಳ ಮಯ, ಮೊಲಗಳ ಮಯವು; ಎದ್ದು ಕಾಣುವ ಮುಳ್ಳು ತುಂಬಿದ ಮರಗಳ ಸಮೂಹ; ರುರು ಎಂಬ ಜಿಂಕೆಯ ಮಯವು; ವಿವಿಧವಾದ ಉಗ್ರಪ್ರಾಣಿಗಳ ಮಯವು ]; ನಕುಲ(ಮುಂಗುಸಿ) ಸರೀಸೃಪ ಮಯಂ ದ್ವಿಪಮಯಂ ಸಕಲ ಭೂವಿಷಮ ಸಂಕುಲಮಯಂ ಬಿಲಮಯಂ ವೃಕ ಸೂಕರ ವ್ಯಾಘ್ರ ಚಯಮಯಂ ಭಯಮಯಂ ತಾನೆನಿಸಿ ಕಾಡಿರ್ದುದು=[ಮುಂಗುಸಿ ಇಲಿಹೆಗ್ಗಣಗಲು, ಹಾವು ಮೊದಲಾದ ಸರೀಸೃಪ ಸಮೂಹಗಳಿದ್ದವು; ಆನೆಗಳು, ಸಕಲ ಭೂಮಿಯ ಕೆಡುಕು ಜೀವಿಗಳ ಹಿಂಡುಗಳು, ಕೊರೆದ ಬಿಲಗಳ ಮಯ; ತೋಳ,ಕಾಡುಹಂದಿ, ಹುಲಿಗಳ ಗುಂಪುಗಳ ಮಯವು, ಒಟ್ಟಿನಲ್ಲಿ, ಕಾಡು ತಾನು ಭಯಪೂರಿತ ಎನಿಸಿತ್ತು.]
  • ತಾತ್ಪರ್ಯ:ಆ ಗಂಗಾ ತಟಿಯ ಕಾಡಿನಲ್ಲಿ, ಹಕ್ಕಿಯ ಚೀತ್ಕಾರ ಕೂಗುಗಳು, ಹಲ್ಲು ಕಲ್ಲುಗಳಳ ಮಯವಾಗಿತ್ತು; ಕರ್ಕಶ ಶಬ್ದಗಳ ಮಯ, ಮೊಲಗಳ ಮಯವು; ಎದ್ದು ಕಾಣುವ ಮುಳ್ಳು ತುಂಬಿದ ಮರಗಳ ಸಮೂಹ; ರುರು ಎಂಬ ಜಿಂಕೆಯ ಮಯವು; ವಿವಿಧವಾದ ಉಗ್ರಪ್ರಾಣಿಗಳ ಮಯವು; ಮುಂಗುಸಿ ಇಲಿಹೆಗ್ಗಣಗಲು, ಹಾವು ಮೊದಲಾದ ಸರೀಸೃಪ ಸಮೂಹಗಳಿದ್ದವು; ಆನೆಗಳು, ಸಕಲ ಭೂಮಿಯ ಕೆಡುಕು ಜೀವಿಗಳ ಹಿಂಡುಗಳು, ಕೊರೆದ ಬಿಲಗಳ ಮಯ; ತೋಳ,ಕಾಡುಹಂದಿ, ಹುಲಿಗಳ ಗುಂಪುಗಳ ಮಯವು, ಒಟ್ಟಿನಲ್ಲಿ, ಕಾಡು ತಾನು ಭಯಪೂರಿತ ಎನಿಸಿತ್ತು.]
  • (ಪದ್ಯ-೮)

ಪದ್ಯ :-:೯:

[ಸಂಪಾದಿಸಿ]

ಇರುಳಂತೆ ಪಗಲಂತೆ ಮಖದಂತೆ ದಿವದಂತೆ | ವರ ಪಯೋನಿಧಿಯಂತೆ ಕೈಲಾಸಗಿರಿಯಂತೆ | ನಿರುತಮಂ ಸೋಮಾರ್ಕ ಶಿಖಿ ಸಹಸ್ರಾಕ್ಷ ಹರಿನುತಶಿವಾವಾಸಮಾಗಿ ||
ಧುರದಂತೆ ಕೊಳದಂತೆ ಕಡಲಂತೆ ನಭದಂತೆ | ಶರ ಪುಂಡರೀಕ ವಿದ್ರುಮ ಋಕ್ಷಮಯದೊಳಿಡಿ | ದಿರುತಿರ್ದುದಾ ಮಹಾಟವಿ ಜಾನಕಿಯ ಕಣ್ಗೆ ಘೋರತರಮಾಗಿ ಮುಂದೆ ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇರುಳಂತೆ ಪಗಲಂತೆ ಮಖದಂತೆ ದಿವದಂತೆ (ದಿವಿಯಂತೆ) ವರ ಪಯೋನಿಧಿಯಂತೆ ಕೈಲಾಸಗಿರಿಯಂತೆ ನಿರುತಮಂ ಸೋಮ ಅರ್ಕ ಶಿಖಿ ಸಹಸ್ರಾಕ್ಷ ಹರಿನುತ ಶಿವಾ ವಾಸಮಾಗಿ=[ರಾತ್ರಿಯಂತೆ, ಹಗಲಂತೆ, ಯಜ್ಞದಂತೆ, ಸ್ವರ್ಗದಂತೆ, ಶ್ರೇಷ್ಠವಾದ ಸಮುದ್ರದಂತೆ, ಕೈಲಾಸಗಿರಿಯಂತೆ ಸದಾಕಾಲ ಚಂದ್ರ/ಸೊಮ -ಸೋಮ ಎಂಬಬಳ್ಳಿ, ಅರ್ಕ/ಸೂರ್ಯ/ಎಕ್ಕದ ಗಿಡ. ಶಿಖಿ/ಅಗ್ನಿ/ಮರ, ಸಹಸ್ರಾಕ್ಷ/ಇಂದ್ರ/ನವಿಲು, ಹರಿ/ ವಿಷ್ಣು, ಸ್ತುತಿಸಲ್ಪಡುವ ಶಿವನ ವಾಸವಾಗಿತ್ತು; ಒಂದೇ ಪದದ ಹಿಂದೆ ತಿಳಿಸಿದ ಎರಡು ಅರ್ಥದಲ್ಲಿ: :ಸೋಮ ಅರ್ಕ ಶಿಖಿ ಸಹಸ್ರಾಕ್ಷ ಹರಿನುತ ಶಿವಾ ವಾಸಮಾಗಿ, ಇವು ದ್ವಂದಾರ್ಥದಲ್ಲಿ ಅಲ್ಲಿದ್ದುವು, ಉದಾ:"ಅಲ್ಲಿ ಚಂದ್ರ ಇದ್ದ" ಹೇಗೆಂದರೆ ಸೊಮ -ಸೋಮ ಎಂಬಬಳ್ಳಿ ಇತ್ತು; ಸೋಮ ಎಂದರೆ ಚಂದ್ರ. ಃಇಗೆ ಎಲ್ಲವನ್ನೂತಿಳಿಯುವುದು ]; ಧುರದಂತೆ, ಕೊಳದಂತೆ, ಕಡಲಂತೆ ನಭದಂತೆ ಶರ ಪುಂಡರೀಕ ವಿದ್ರುಮ ಋಕ್ಷಮಯದೊಳು ಇಡಿದಿರುತಿರ್ದುದು ಆ ಮಹಾಟವಿ ಜಾನಕಿಯ ಕಣ್ಗೆ ಘೋರತರಮಾಗಿ ಮುಂದೆ=[ಧುರದಂತೆ-ಯುದ್ಧದಂತೆ/ಮಧುರದನಿಯ ಪಕ್ಷಿಯಮತೆ; ಕೊಳದಂತೆ-ಸರೋವರದಂತೆ/ಅಡಗುದಾಣ; ಕಡಲಂತೆ-ಸಮುದ್ರದಂತೆ/ತೀರಪ್ರದೇಶ/ ನಭದಂತೆ-ಆಕಾಶ/ ಕಾಡಿನ ದೌರ್ಜನ್ಯ, ಶರ/ಬಾಣ/ನೀರು, ಪುಂಡರೀಕ/ವಿXfಣುವಿನಂತೆ/ಕಮಲ ವಿತ್ತು, ವಿದ್ರುಮ/ಹವಳ/ದೊಡ್ಡ ಮರ, ಋಕ್ಷ-ನಕ್ಷತ್ರ/ಕರಡಿಮಯವಾಗಿತ್ತು. ದ್ವಂದಾರ್ಥದಲ್ಲಿ ಇವೆಲ್ಲವೂ ಅಲ್ಲಿದ್ದುವು. ಆ ಮಹಾ ಅರಣ್ಯ ಘೋರತರವಾಗಿ ಜಾನಕಿಯ ಕಣ್ಗಿಗೆ ಮುಂದೆ ಕಂಡಿತು.]
  • ತಾತ್ಪರ್ಯ: ರಾತ್ರಿಯಂತೆ, ಹಗಲಂತೆ, ಯಜ್ಞದಂತೆ, ಸ್ವರ್ಗದಂತೆ, ಶ್ರೇಷ್ಠವಾದ ಸಮುದ್ರದಂತೆ, ಕೈಲಾಸಗಿರಿಯಂತೆ ಸದಾಕಾಲ ಚಂದ್ರ/ಸೊಮ -ಸೋಮ ಎಂಬಬಳ್ಳಿ, ಅರ್ಕ/ಸೂರ್ಯ/ಎಕ್ಕದ ಗಿಡ. ಶಿಖಿ/ಅಗ್ನಿ/ಮರ, ಸಹಸ್ರಾಕ್ಷ/ಇಂದ್ರ/ನವಿಲು, ಹರಿ/ ವಿಷ್ಣು, ಸ್ತುತಿಸಲ್ಪಡುವ ಶಿವನ ವಾಸವಾಗಿತ್ತು; ಒಂದೇ ಪದದ ಮೇಲೆ ತಿಳಿಸಿದ ಎರಡು ಅರ್ಥದಲ್ಲಿ: :ಸೋಮ ಅರ್ಕ ಶಿಖಿ ಸಹಸ್ರಾಕ್ಷ ಹರಿನುತ ಶಿವ ಇವೆಲ್ಲಾ ದ್ವಂದಾರ್ಥದಲ್ಲಿ ಅಲ್ಲಿದ್ದುವು/ ಅದೇಹೆಸರುಳ್ಳ ಮತ್ತೊಂದು ವಸ್ತು ಇತ್ತು, ಉದಾ:"ಅಲ್ಲಿ ಚಂದ್ರ ಇದ್ದ" ಹೇಗೆಂದರೆ ಸೊಮ -ಸೋಮ ಎಂಬಬಳ್ಳಿ ಇತ್ತು; ಸೋಮ ಎಂದರೆ ಚಂದ್ರ. ಃಇಗೆ ಎಲ್ಲವನ್ನೂತಿಳಿಯುವುದು ಧುರದಂತೆ-ಯುದ್ಧದಂತೆ/ಮಧುರದನಿಯ ಪಕ್ಷಿಯಂತೆ; ಕೊಳದಂತೆ-ಸರೋವರದಂತೆ/ಅಡಗುದಾಣ; ಕಡಲಂತೆ-ಸಮುದ್ರದಂತೆ/ತೀರಪ್ರದೇಶ/ ನಭದಂತೆ-ಆಕಾಶ/ ಕಾಡಿನ ದೌರ್ಜನ್ಯ, ಶರ/ಬಾಣ/ನೀರು, ಪುಂಡರೀಕ/ವಿಷ್ಣುವಿನಂತೆ ಇತ್ತು/ಕಮಲ ವಿತ್ತು (ಕಮಲಕ್ಕೆ ಪುಂರೀಕ ಎಂಬ ಹೆಸರಿದೆ), ವಿದ್ರುಮ/ಹವಳ/ದೊಡ್ಡ ಮರ, ಋಕ್ಷ-ನಕ್ಷತ್ರ/ಕರಡಿಮಯವಾಗಿತ್ತು. ದ್ವಂದಾರ್ಥದಲ್ಲಿ ಇವೆಲ್ಲವೂ ಅಲ್ಲಿದ್ದುವು. ಆ ಮಹಾ ಅರಣ್ಯ ಘೋರತರವಾಗಿ ಜಾನಕಿಯ ಕಣ್ಗಿಗೆ ಮುಂದೆ ಕಂಡಿತು. ]
  • (ಪದ್ಯ-೯)

ಪದ್ಯ :-:೧೦:

[ಸಂಪಾದಿಸಿ]

ಅಟವಿಯ ಮಹಾಘೋರ ಗಹ್ವರಂ ಮುಂದೆ ದು | ರ್ಘಟಮಾಗೆ ನಡುನಡುಗಿ ಭೀತಿಯಿಂ ಸೀತೆ ಸಂ | ಕಟದಿಂದೆ ರಾಮನಾಮಂಗಳಂ ಜಪಸುತೆಲೆ ಸೌಮಿತ್ರಿ ಕಾನನಮಿದು ||
ಅಟನಕಸದಳಮಪ್ಪುದಿಲ್ಲಿ ಪುಣ್ಯಾಶ್ರಮದ | ಜಟಿಗಳಂ ವಲ್ಕಲವನುಟ್ಟ ಮುನಿವಧುಗಳಂ | ವಟುಗಳಂ ಶ್ರುತಿಘೋಷ ಹೋಮಧೂಮಂಗಳಂ ಕಾಣೆನೆಂದಳವಳಿದಳು ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಟವಿಯ ಮಹಾಘೋರ ಗಹ್ವರಂ ಮುಂದೆ ದುರ್ಘಟಮಾಗೆ ನಡುನಡುಗಿ ಭೀತಿಯಿಂ ಸೀತೆ ಸಂಕಟದಿಂದೆ ರಾಮನಾಮಂಗಳಂ ಜಪಸುತೆಲೆ=[ಅಡವಿಯ ಮಹಾಘೋರವಾದ ಗುಹೆಯು ಮುಂದೆ ಇದ್ದು, ಪ್ರವೇಶಿಸಲು ಅಸಾದ್ಯವಾಗಲು, ಸೀತೆ ಬಹಳನಡುನಡುಗಿ ಹೆದರಿಕೆಯಿಂದ ಸೀತೆಯು ಸಂಕಟಪಡುತ್ತಾ ರಾಮನಾಮಗಳನ್ನು ಜಪಸುತ್ತಾ,]; ಸೌಮಿತ್ರಿ ಕಾನನಮಿದು ಅಟನಕೆ ಅಸದಳಂ ಅಪ್ಪುದಿಲ್ಲಿ ಪುಣ್ಯಾಶ್ರಮದ ಜಟಿಗಳಂ ವಲ್ಕಲವನುಟ್ಟ ಮುನಿವಧುಗಳಂ ವಟುಗಳಂ ಶ್ರುತಿಘೋಷ ಹೋಮಧೂಮಂಗಳಂ ಕಾಣೆನೆಂದಳವಳಿದಳು=[ಸೌಮಿತ್ರಿ/ಲಕ್ಷ್ಮಣನೇ ಇದು ಅರಣ್ಯ,ಪ್ರವೇಶಕ್ಕೆ ಅಸಾಧ್ಯವಾಗಿದೆ, ಪುಣ್ಯಾಶ್ರಮದ ಜಟಿಬಿಟ್ಟ ಮುನಿಗಳನ್ನೂ ವಲ್ಕಲ/ನಾರುಬಟ್ಟೆಯನ್ನು ಉಟ್ಟ ಮುನಿವಧುಗಳು ವಟುಗಳು ಶ್ರುತಿಘೋಷ ಹೋಮಧೂಮಗಳನ್ನೂ ನಾನು ಕಾಣೆನು, ಎಂದು ಸಂಕಟಪಟ್ಟಳು].
  • ತಾತ್ಪರ್ಯ:ಅಡವಿಯ ಮಹಾಘೋರವಾದ ಗುಹೆಯು ಮುಂದೆ ಇದ್ದು, ಪ್ರವೇಶಿಸಲು ಅಸಾದ್ಯವಾಗಲು, ಸೀತೆ ಬಹಳನಡುನಡುಗಿ ಹೆದರಿಕೆಯಿಂದ ಸೀತೆಯು ಸಂಕಟಪಡುತ್ತಾ ರಾಮನಾಮಗಳನ್ನು ಜಪಸುತ್ತಾ, ಸೌಮಿತ್ರಿ/ಲಕ್ಷ್ಮಣನೇ ಇದು ಅರಣ್ಯ- ಪ್ರವೇಶಕ್ಕೆ ಅಸಾಧ್ಯವಾಗಿದೆ, ಪುಣ್ಯಾಶ್ರಮದ ಜಟಿಬಿಟ್ಟ ಮುನಿಗಳನ್ನೂ ವಲ್ಕಲ/ನಾರುಬಟ್ಟೆಯನ್ನು ಉಟ್ಟ ಮುನಿವಧುಗಳನ್ನೂ ವಟುಗಳನ್ನೂ ಶ್ರುತಿಘೋಷ ಹೋಮಧೂಮಗಳನ್ನೂ ನಾನು ಕಾಣೆನು, ಎಂದು ಸಂಕಟಪಟ್ಟಳು.
  • (ಪದ್ಯ-೧೦)XII

ಪದ್ಯ :-:೧೧:

[ಸಂಪಾದಿಸಿ]

ಎಲ್ಲಿ ಮುನಿಪೋತ್ತಮರ ಪಾವನದ ವನದೆಡೆಗ | ಳೆಲ್ಲಿ ಸಿದ್ಧಾಶ್ರಮಂಗಳ ಮಂಗಳಸ್ಥಳಗ | ಳೆಲ್ಲಿ ಸುಹವಿಗಳ ಕಂಪೂಗೆದ ಪೊಗೆದಳೆದಗ್ನಿಹೋತ್ರದ ಕುಟೀರಂಗಳು ||
ಎಲ್ಲಿ ಪರಿಚಿತವಾದ ವಾದ ವೇದ ಧ್ವನಿಗ | ಳಲ್ಲಿಗೊಯ್ಯದೆ ದಾರುದಾರುಣದ ಕಟ್ಟಡವಿ | ಗಿಲ್ಲಿಗೇಕೈತಂದೆ ತಂದೆ ಸೌಮಿತ್ರಿ ಹೇಳೆಂದು ಜಾನಕಿ ಸುಯ್ದಳು ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಲ್ಲಿ ಮುನಿಪೋತ್ತಮರ ಪಾವನದ ವನದ ಎಡೆಗಳೆಲ್ಲಿ ಸಿದ್ಧಾಶ್ರಮಂಗಳ ಮಂಗಳ ಸ್ಥಳಗಳೆಲ್ಲಿ=[ಎಲ್ಲಿಯೂ ಮುನಿಗಳ ಆಶ್ರಮ ಕಾಣುವುದಿಲ್ಲವಲ್ಲಾ! ಮುನಿಪೋತ್ತಮರ ಪಾವನವಾದ ವನದ ಪ್ರದೇಶಗಳು ಎಲ್ಲಿವೆ? ಸಿದ್ಧಾಶ್ರಮಂಗಳ ಮಂಗಳ ಸ್ಥಳಗಳು ಎಲ್ಲಿವೆ?]; ಸುಹವಿಗಳ ಕಂಪು ಒಗೆದ ಪೊಗೆ ತಳೆದ ಅಗ್ನಿಹೋತ್ರದ ಕುಟೀರಂಗಳು=[ಉತ್ತಮ ಹವಿಸ್ಸುಗಳ ಸುವಾಸನೆ ಕೊಡುವ ಹೊಗೆಯುಳ್ಳ ಅಗ್ನಿಹೋತ್ರದ ಕುಟೀರಗಳು ಕಾಣದಲ್ಲಾ!]; ಎಲ್ಲಿ ಪರಿಚಿತವಾದ ವಾದ ವೇದ ಧ್ವನಿಗಳಲ್ಲಿಗೆ ಒಯ್ಯದೆ ದಾರು(ಕಟ್ಟಿಗೆ/ಮರ) ದಾರುಣದ ಕಟ್ಟಡವಿಗೆ ಇಲ್ಲಿಗೆ ಏಕೆ ಐತಂದೆ ತಂದೆ ಸೌಮಿತ್ರಿ ಹೇಳೆಂದು ಜಾನಕಿ ಸುಯ್ದಳು=[ಎಲ್ಲಿ ಪರಿಚಿತವಾದ ವಾದ/ತರ್ಕ, ವೇದ ಧ್ವನಿಗಳು ಅಲ್ಲಿಗೆ ಕರೆದುಕೊಂಡು ಹೋಗದೆ, ಮರ-ಕಟ್ಟಿಗೆಗಳಿಂದ ಕೂಡಿದ ಭಯಂಕರವಾದ ಕಟ್ಟಡವಿಗೆ / ದಟ್ಟ ಕಾಡಿಗೆ, ಇಲ್ಲಿಗೆ ಏಕೆ ಬಂದೆ? ತಂದೆ/ಪೂಜ್ಯನೇ ಸೌಮಿತ್ರಿ ಹೇಳು ಎಂದು ಜಾನಕಿ ಸಂಕಟದಿಂದ ನಿಟ್ಟುಸಿರುಬಿಟ್ಟಳು.]
  • ತಾತ್ಪರ್ಯ:ಜಾನಕಿ ಲಕ್ಷ್ಮಣನನ್ನು ಕೇಳಿದಳು; ಎಲ್ಲಿಯೂ ಮುನಿಗಳ ಆಶ್ರಮ ಕಾಣುವುದಿಲ್ಲವಲ್ಲಾ! ಮುನಿಪೋತ್ತಮರ ಪಾವನವಾದ ವನದ ಪ್ರದೇಶಗಳು ಎಲ್ಲಿವೆ? ಸಿದ್ಧಾಶ್ರಮಂಗಳ ಮಂಗಳ ಸ್ಥಳಗಳು ಎಲ್ಲಿವೆ? ಉತ್ತಮ ಹವಿಸ್ಸುಗಳ ಸುವಾಸನೆ ಕೊಡುವ ಹೊಗೆಯುಳ್ಳ ಅಗ್ನಿಹೋತ್ರದ ಕುಟೀರಗಳು ಕಾಣದಲ್ಲಾ! ಎಲ್ಲಿ ಪರಿಚಿತವಾದ ವಾದ/ತರ್ಕ, ವೇದ ಧ್ವನಿಗಳು? ಅಲ್ಲಿಗೆ ಕರೆದುಕೊಂಡು ಹೋಗದೆ, ಮರ-ಕಟ್ಟಿಗೆಗಳಿಂದ ಕೂಡಿದ ಭಯಂಕರವಾದ ಕಟ್ಟಡವಿಗೆ / ದಟ್ಟ ಕಾಡಿಗೆ, ಇಲ್ಲಿಗೆ ಏಕೆ ಬಂದೆ? ತಂದೆ/ಪೂಜ್ಯನೇ ಸೌಮಿತ್ರಿ ಹೇಳು ಎಂದು ಜಾನಕಿ ಸಂಕಟದಿಂದ ನಿಟ್ಟುಸಿರುಬಿಟ್ಟಳು.
  • (ಪದ್ಯ-೧೧)

ಪದ್ಯ :-:೧೨:

[ಸಂಪಾದಿಸಿ]

ಪಾವನಕೆ ಪಾವನಂ ಮಂಗಳಕೆ ಮಂಗಳಮ | ದಾವನಚರಿತ್ರ ನಾಮಂಗಳಾ ರಾಘವನೆ | ಜೀವೇಶನಾಗಿರಲ್ಕಾ ತನಂಘ್ರಿಯ ನಗಲ್ದೀಗ ನಾಂ ಬಂದಬಳಿಕ ||
ಈ ವನದೊಳಿನ್ನು ಪುಣ್ಯಾಶ್ರಮಂ ಗೋಚರಿಪು | ದೇ ವನಜದರಳನುಳಿದಾರಡಿಗೆ ಬೊಬ್ಬುಳಿಯ | ಪೂವಿನೊಳ್ ಮಧುವುಂಟೆ ಸೌಮಿತ್ರಿ ಹೇಳೆಂದು ಸೀತೆ ಪೊದಕುಳಿಗೊಂಡಳು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪಾವನಕೆ ಪಾವನಂ ಮಂಗಳಕೆ ಮಂಗಳಂ ಅದು ಆವನ ಚರಿತ್ರ ನಾಮಂಗಳು ಆ ರಾಘವನೆ ಜೀವೇಶನು ಆಗಿರಲ್ಕೆ=[ಪಾವನಕ್ಕೆ ಪಾವನನು ಎಲ್ಲದಕ್ಕಿಂತ ಪವಿತ್ರನು, ಮಂಗಳಕ್ಕೆ ಮಂಗಳಸ್ವರೂಪನು,ಆಗಿರುವ ಯಾವನ ಚರಿತ್ರೆ ನಾಮಗಳೋ ಆ ರಾಘವನನ ಪತಿ ಆಗಿರಲು, ]; ಆತನ ಅಂಘ್ರಿಯನು ಅಗಲ್ದು ಈಗ ನಾಂ ಬಂದಬಳಿಕ ಈ ವನದೊಳು ಇನ್ನು ಪುಣ್ಯಾಶ್ರಮಂ ಗೋಚರಿಪುದೇ=[ಆತನ ಪಾದಗಳನ್ನು ಅಗಲಿ ಈಗ ನಾನು ಬಂದಬಳಿಕ ಈ ವನದಲ್ಲಿ ಇನ್ನು ಪುಣ್ಯಾಶ್ರಮವು ಕಾಣುವುದೇ!]; ವನಜದ ಅರಳನು ಉಳಿದ ಆರಡಿಗೆ ಬೊಬ್ಬುಳಿಯ ಪೂವಿನೊಳ್ ಮಧುವುಂಟೆ ಸೌಮಿತ್ರಿ ಹೇಳೆಂದು ಸೀತೆ ಪೊದಕುಳಿಗೊಂಡಳು=[ ಕಮಲದದ ಹೂವನ್ನು ಬಿಟ್ಟು ಜೇನಿಗೆ ಕೇದಗೆಯ ಹೂವಿನಲ್ಲಿ ಮಧುವು ಸಿಗುವುದೇ? ಸೌಮಿತ್ರಿ ಇದೇನು ಹೇಳು ಎಂದು ಸೀತೆ ಸಂತಾಪಗೊಂಡಳು].
  • ತಾತ್ಪರ್ಯ:ಪಾವನಕ್ಕೆ ಪಾವನನು ಎಲ್ಲದಕ್ಕಿಂತ ಪವಿತ್ರನು, ಮಂಗಳಕ್ಕೆ ಮಂಗಳಸ್ವರೂಪನು,ಆಗಿರುವ ಯಾವನ ಚರಿತ್ರೆ ನಾಮಗಳೋ ಆ ರಾಘವನನ ಪತಿ ಆಗಿರಲು, ಆತನ ಪಾದಗಳನ್ನು ಅಗಲಿ ಈಗ ನಾನು ಬಂದಬಳಿಕ ಈ ವನದಲ್ಲಿ ಇನ್ನು ಪುಣ್ಯಾಶ್ರಮವು ಕಾಣುವುದೇ! ಕಮಲದದ ಹೂವನ್ನು ಬಿಟ್ಟು ಜೇನಿಗೆ ಕೇದಗೆಯ ಹೂವಿನಲ್ಲಿ ಮಧುವು ಸಿಗುವುದೇ? ಸೌಮಿತ್ರಿ ಇದೇನು ಹೇಳು ದಟ್ಟಕಾಡಿಗೆ ಕರೆತಂದೆ, ಎಂದು ಸೀತೆ ಸಂತಾಪಗೊಂಡಳು.
  • (ಪದ್ಯ-೧೨)

ಪದ್ಯ :-:೧೩:

[ಸಂಪಾದಿಸಿ]

ನರನಾಥ ಕೇಳವನಿಸುತೆ ನುಡಿದಮಾತಿಗು | ತ್ತರವನಾಡದೆ ಮನದೊಳುರೆ ನೊಂದು ರಾಘವೇ | ಶ್ವರನೆಂದ ಕಷ್ಟಮಂ ಪೇಳ್ದಪೆನೊ ಮೇಣುಸಿರದಿರ್ದಪೆನೊ ನಿಷ್ಠುರದೊಳು ||
ತರಣಿಕುಲಸಾರ್ವಭೌಮನ ರಾಣಿಯಂ ಬನದೊ | ಳಿರಸಿ ಪೋದಪೆನೆಂತೊ ಪೋಗದಿರ್ದೊಡೆ ಸಹೋ | ದರನದೇನೆಂದಪನೊ ಹಾಯೆಂದು ಲಕ್ಷ್ಮಣಂ ಬೆಂದು ಬೇಗುದಿಗೊಂಡನು ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನರನಾಥ ಕೇಳು ಅವನಿಸುತೆ ನುಡಿದಮಾತಿಗೆ ಉತ್ತರವನಾಡದೆ ಮನದೊಳು ಉರೆ ನೊಂದು=[ಜನಮೇಜಯರಾಜನೇ ಕೇಳು, ಭೂಮಿಸುತೆ ಹೇಳಿದ ಮಾತಿಗೆ ಉತ್ತರವನ್ನು ಕೊಡದೆ, ಮನಸ್ಸಿನಲ್ಲಿ ಬಹಳ ನೊಂದು]; ರಾಘವೇಶ್ವರನೆಂದ ಕಷ್ಟಮಂ ಪೇಳ್ದಪೆನೊ ಮೇಣು ಉಸಿರದೆ ಇರ್ದಪೆನೊ ನಿಷ್ಠುರದೊಳು=[ರಾಘವೇಶ್ವರ ರಾಮನು ಹೇಳಿದ ನೋವಿನ ವಿಷಯವನ್ನು ನಿಷ್ಠುರದಲ್ಲಿ ಗಟ್ಟಿಮನಸ್ಸುಮಾಡಿ ಹೇಳಲೋ ಅಥವಾ ಹೇಳದೆ ಇರಲೋ ];ತರಣಿಕುಲಸಾರ್ವಭೌಮನ ರಾಣಿಯಂ ಬನದೊಳು ಇರಸಿ ಪೋದಪೆನು ಎಂತೊ ಪೋಗದಿರ್ದೊಡೆ ಸಹೋದರನು ಏನೆಂದಪನೊ=[ಸೂರ್ಯವಂಶದ ಸಾರ್ವಭೌಮನ ರಾಣಿ ಸೀತೆಯನ್ನು ಕಾಡಿನಲ್ಲಿ ಬಿಟ್ಟು ನಾನು ಹೇಗೆ ಹೋಗಲಿ! ಬಿಟ್ಟು ಹೋಗದಿದ್ದರೆ ಅಣ್ಣನು ಏನು ಹೇಳುವನೋ]; ಹಾ ! ಯೆಂದು ಲಕ್ಷ್ಮಣಂ ಬೆಂದು ಬೇಗುದಿಗೊಂಡನು=[ಹಾ ! ಎಂದು ಲಕ್ಷ್ಮಣನು ಮನಸ್ಸಿನಲ್ಲಿ ದುಃಖದಿಂದ ಬೆಂದು ಸಮಕಟಪಟ್ಟನು.]
  • ತಾತ್ಪರ್ಯ: ಜನಮೇಜಯರಾಜನೇ ಕೇಳು, ಭೂಮಿಸುತೆ ಹೇಳಿದ ಮಾತಿಗೆ ಉತ್ತರವನ್ನು ಕೊಡದೆ, ಮನಸ್ಸಿನಲ್ಲಿ ಬಹಳ ನೊಂದು, ರಾಘವೇಶ್ವರ ರಾಮನು ಹೇಳಿದ ನೋವಿನ ವಿಷಯವನ್ನು ನಿಷ್ಠುರದಲ್ಲಿ ಗಟ್ಟಿಮನಸ್ಸುಮಾಡಿ ಹೇಳಲೋ ಅಥವಾ ಹೇಳದೆ ಇರಲೋ! ಸೂರ್ಯವಂಶದ ಸಾರ್ವಭೌಮನ ರಾಣಿ ಸೀತೆಯನ್ನು ಕಾಡಿನಲ್ಲಿ ಬಿಟ್ಟು ನಾನು ಹೇಗೆ ಹೋಗಲಿ! ಬಿಟ್ಟು ಹೋಗದಿದ್ದರೆ ಅಣ್ಣನು ಏನು ಹೇಳುವನೋ; ಹಾ ! ಎಂದು ಲಕ್ಷ್ಮಣನು ಮನಸ್ಸಿನಲ್ಲಿ ದುಃಖದಿಂದ ಬೆಂದು ಸಮಕಟಪಟ್ಟನು.]
  • (ಪದ್ಯ-೧೩)

ಪದ್ಯ :-:೧೪:

[ಸಂಪಾದಿಸಿ]

ಉಕ್ಕಿದುವು ಕಂಬನಿಗಳಧರೋಷ್ಠಮದಿರಿತಲ | ಗಿಕ್ಕಿ ತಿರುಪಿದವೊಲಾಯ್ತೊಡಲೊಳೆಡೆವರಿಯದುಸಿ | ರೊಕ್ಕದುರೆ ಕಂಪಿಸಿದುದವಯವಂ ಕರಗಿತೆರ್ದೆ ಸೈರಣೆ ಸಮತೆಗೆಟ್ಟುದು ||
ಸಿಕ್ಕಿದುವು ಕಂಠದೊಳ್ ಮಾತುಗಳ್ ಸೆರೆಬಿಗಿದು | ಮಿಕಕು ಮೀರುವ ಶೋಕದಿಂದೆ ಬೆಂಡಾಗಿ ಕಡು | ಗಕ್ಕಸದ ಕೆಲಸಮನುಸಿರಲರಿಯ ದವನೊಯ್ಯ ನವನಿಸುತೆಗಿಂತೆಂದನು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಉಕ್ಕಿದುವು ಕಂಬನಿಗಳು ಅಧರ ಓಷ್ಠಂ ಅದಿರಿತು ಅಲಗಿಕ್ಕಿ ತಿರುಪಿದವೊಲಾಯ್ತು ಒಡಲೊಳು=[ಲಕ್ಷ್ಮಣನ ಕಣ್ಣುಗಳಲ್ಲಿ ಕಂಬನಿಗಳು ಉಕ್ಕಿಬಂದವು, ಕೆಳತುಟಿಯು ದುಃಖದಿಂದ ನಡುಗಿತು; ಹೊಟ್ಟೆಯಲ್ಲಿ ಕತ್ತಿಯನ್ನು ಚುಚ್ಚಿ ತಿರುಗಿಸಿದಂತೆ ಸಂಕಟ ಆಯಿತು]; ಎಡೆವರಿಯದೆ ಉಸಿರೊಕ್ಕದು ಉರೆ ಕಂಪಿಸಿದುದು ಅವಯವಂ ಕರಗಿತು ಎರ್ದೆ ಸೈರಣೆ ಸಮತೆಗೆಟ್ಟುದು=[ಹೊರಬರಲಾರದೆ ಉಸಿರು ಹಿಡಿಯಿತು; ಮತ್ತೆ ಇಡೀದೇಹವೇ ನಡುಗಿತು; ಎದೆ ಕರುಣೆಯಿಂದ ಕರಗಿತು; ಸಂಯಮ ಸಮತೋಲನ ಕಳೆದುಕೊಂಡಿತು.]; ಸಿಕ್ಕಿದುವು ಕಂಠದೊಳ್ ಮಾತುಗಳ್ ಸೆರೆಬಿಗಿದು ಮಿಕ್ಕು ಮೀರುವ ಶೋಕದಿಂದೆ ಬೆಂಡಾಗಿ ಕಡುಗಕ್ಕಸದ ಕೆಲಸಮನು ಉಸಿರಲರಿಯದೆ=[ಮಾತು ದನಿ ಕಂಠದಲ್ಲೇ ಸಕ್ಕಿ ಶಬ್ಧಹರಡುವುದು ಕಷ್ಟವಾಯಿತು; ಕಂಠದಸೆರೆ ದುಃಖದಿಂದ ಉಬ್ಬಿ ಮಾತುಗಳು ಹಿಡಿದವು; ಅತಿಯಾದ ಮೀರಿದ ಶೋಕದಿಂದೆ ಬಳಲಿ ಬಹಳ ಕಷ್ಟದ ಕೆಲಸಮನ್ನು ಹೇಳಲು ಆಗದೆ, ಹೇಗೆ ತಿಳಿಸಬೇಕೆಂದು ತಿಳಿಯದೆ,]; ಅವನು ಒಯ್ಯನೆ ಅವನಿಸುತೆಗೆ ಇಂತೆಂದನು=[ಅವನು ಮೆಲ್ಲಗೆ ಭೂಮಿಸುತೆಗೆ ಹೀಗೆ ಹೇಳಿದನು.]
  • ತಾತ್ಪರ್ಯ: ಲಕ್ಷ್ಮಣನ ಕಣ್ಣುಗಳಲ್ಲಿ ಕಂಬನಿಗಳು ಉಕ್ಕಿಬಂದವು, ಕೆಳತುಟಿಯು ದುಃಖದಿಂದ ನಡುಗಿತು; ಹೊಟ್ಟೆಯಲ್ಲಿ ಕತ್ತಿಯನ್ನು ಚುಚ್ಚಿ ತಿರುಗಿಸಿದಂತೆ ಸಂಕಟ ಆಯಿತು; ಹೊರಬರಲಾರದೆ ಉಸಿರು ಹಿಡಿಯಿತು; ಮತ್ತೆ ಇಡೀದೇಹವೇ ನಡುಗಿತು; ಎದೆ ಕರುಣೆಯಿಂದ ಕರಗಿತು; ಸಂಯಮ ಸಮತೋಲನ ಕಳೆದುಕೊಂಡಿತು.ಮಾತು ದನಿ ಕಂಠದಲ್ಲೇ ಸಕ್ಕಿ ಶಬ್ಧಹರಡುವುದು ಕಷ್ಟವಾಯಿತು; ಕಂಠದಸೆರೆ ದುಃಖದಿಂದ ಉಬ್ಬಿ ಮಾತುಗಳು ಹಿಡಿದವು; ಅತಿಯಾದ ಮೀರಿದ ಶೋಕದಿಂದೆ ಬಳಲಿ ಬಹಳ ಕಷ್ಟದ ಕೆಲಸಮನ್ನು ಹೇಳಲು ಆಗದೆ, ಹೇಗೆ ತಿಳಿಸಬೇಕೆಂದು ತಿಳಿಯದೆ, ಅವನು ಮೆಲ್ಲಗೆ ಭೂಮಿಸುತೆಗೆ ಹೀಗೆ ಹೇಳಿದನು.]
  • (ಪದ್ಯ-೧೪)

ಪದ್ಯ :-:೧೫:

[ಸಂಪಾದಿಸಿ]

ದೇವಿ ನಿನಗಿನ್ನೆಗಂ ಪೇಳ್ದುದಿಲ್ಲಪವಾದ | ಮಾವರಿಸಿ ನಿನ್ನನೊಲ್ಲದೆ ರಘುಕುಲೋದ್ವಹಂ | ಸೀವರಿಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾಯೆಂದೆನಗೆ ನೇಮಿಸಿದೊಡೆ ||
ಆ ವಿಭುವಿನಾಜ್ಞೆಯಂ ಮೀರಲರಿಯದೆ ನಿಮ್ಮ | ನೀ ವಿಪಿನಕೊಡಗೊಂಡು ಬಂದೆನಿನ್ನೊಯ್ಯೊಯ್ಯ | ನಾವಲ್ಲಿಗಾದೊಡಂ ಪೋಗೆಂದು ಲಕ್ಷ್ಮಣಂ ಬಾಷ್ಪಲೋಚನನಾದನು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದೇವಿ ನಿನಗೆ ಇನ್ನೆಗಂ ಪೇಳ್ದುದಿಲ್ಲ ಅಪವಾದಂ ಆವರಿಸಿ ನಿನ್ನನು ಒಲ್ಲದೆ ರಘುಕುಲೋದ್ವಹಂ ಸೀವರಿಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾಯೆಂದು ಎನಗೆ ನೇಮಿಸಿದೊಡೆ=[ದೇವಿಯೇ ನಿಮಗೆ ಇನ್ನೂ ಹೇಳದಿರುವ ವಿಚಾರವಿದೆ! ನಿಮ್ಮ ಮೇಲೆ ಅಪವಾದ ಆವರಿಸಿ ಬಂದಿದ್ದು, ನಿಮ್ಮನ್ನು ತನ್ನೊಡನೆ ಇರಿಸಿಕೊಳ್ಳಲು ಇಷ್ಟಪಡದೆ, ರಘುಕುಲದ ರಾಮನು ಹಿಂಜರಿದು ಕಾಡಿಗೆ ಕಳುಹಿಸಿ ಬಿಟ್ಟು ಬಾಯೆಂದು ತನಗೆ ಆಜ್ಞೆಮಾಡಿದಾಗ,]; ಆ ವಿಭುವಿನ ಆಜ್ಞೆಯಂ ಮೀರಲು ಅರಿಯದೆ ನಿಮ್ಮನು ಈ ವಿಪಿನಕೆ ಒಡಗೊಂಡು ಬಂದೆನು ಇನ್ನು ಒಯ್ಯೊಯ್ಯನೆ ಆವು ಎಲ್ಲಿಗಾದೊಡಂ ಪೋಗೆಂದು ಲಕ್ಷ್ಮಣಂ ಬಾಷ್ಪಲೋಚನನಾದನು=[ಆ ರಾಜಾಜ್ಞೆಯನ್ನು ಮೀರಲು ಸಾದ್ಯವಾಗದೆ ನಿಮ್ಮನು ಈ ಕಾಡಿಗೆ ಒಡಗೊಂಡು ಬಂದೆನು. ಇನ್ನು ಮೆಲ್ಲಮೆಲ್ಲಗೆ ತಾವು ಎಲ್ಲಿಗಾದರೂ ಹೋಗಬಹುದೆಂದು ಹೇಳಿ ಲಕ್ಷ್ಮಣನು ಕಣ್ಣಲ್ಲಿ ನೀರು ತುಂಬಿದವನಾದನು ].
  • ತಾತ್ಪರ್ಯ: ದೇವಿಯೇ ನಿಮಗೆ ಇನ್ನೂ ಹೇಳದಿರುವ ವಿಚಾರವಿದೆ! ನಿಮ್ಮ ಮೇಲೆ ಅಪವಾದ ಆವರಿಸಿ ಬಂದಿದ್ದು, ನಿಮ್ಮನ್ನು ತನ್ನೊಡನೆ ಇರಿಸಿಕೊಳ್ಳಲು ಇಷ್ಟಪಡದೆ, ರಘುಕುಲದ ರಾಮನು ಹಿಂಜರಿದು ಕಾಡಿಗೆ ಕಳುಹಿಸಿ ಬಿಟ್ಟು ಬಾಯೆಂದು ತನಗೆ ಆಜ್ಞೆಮಾಡಿದಾಗ, ಆ ರಾಜಾಜ್ಞೆಯನ್ನು ಮೀರಲು ಸಾದ್ಯವಾಗದೆ ನಿಮ್ಮನು ಈ ಕಾಡಿಗೆ ಒಡಗೊಂಡು ಬಂದೆನು. ಇನ್ನು ಮೆಲ್ಲಮೆಲ್ಲಗೆ ತಾವು ಎಲ್ಲಿಗಾದರೂ ಹೋಗಬಹುದೆಂದು ಹೇಳಿ ಲಕ್ಷ್ಮಣನು ಕಣ್ಣಲ್ಲಿ ನೀರು ತುಂಬಿದವನಾದನು .
  • (ಪದ್ಯ-೧೫)

ಪದ್ಯ :-:೧೬:

[ಸಂಪಾದಿಸಿ]

ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ | ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ | ದೆರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಳುಗನೆ ಧರೆಗೆ ನಡುನಡುಗುತೆ ||
ಮರೆದಳಂಗೋಪಾಂಗಮಂ ಬಳಿಕ ಸೌಮಿತ್ರಿ | ಮರುಗಿ (ಕ)ತಣ್ಣೀರ್ದಳೆದು ಪತ್ರದೊಳ್ ಕೊಡೆವಿಡಿದು | ಸೆರಗಿಂದೆ ಬೀಸಿ ರಾಯನ ಸೇವೆ ಸಂದುದೇ ತನಗೆಂದು ರೋದಿಸಿದನು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ ಮುರಿದು ಇಳೆಗೊರಗುವಂತೆ=[ಬಿರುಗಾಳಿ ಬೀಸಿ ಹೊಡೆಯಲು ಕೊನೆತುಂಬಿದ ಬಾಳೆಯಮರ ಅಲುಗಾಡಿ ಮುರಿದು ಭೂಮಿಗೆ ಒರಗುವಂತೆ, ]; ಲಕ್ಷ್ಮಣನ ಮಾತು ಕಿವಿದೆರೆಗೆ ಬೀಳದ ಮುನ್ನ ಹಮ್ಮೈಸಿ (ಎಚ್ಚರ ತಪ್ಪಿ) ಬಿದ್ದಳಂಗನೆ ಧರೆಗೆ ನಡುನಡುಗುತೆ=[ಲಕ್ಷ್ಮಣನ ಮಾತು ಕಿವಿಗೆ / ಒಳಕಿವಿಗೆ ಬೀಳುವುದಕ್ಕೆ ಮೊದಲೇ/ ಅವನ ಮಾತು ಮುಗಿಯುವ ಮೊದಲೇ ಸೀತೆ ನಡುನಡುಗುತ್ತಾ ಎಚ್ಚರ ತಪ್ಪಿ ಭೂಮಿಗೆ ಬಿದ್ದಳು!]; ಮರೆದಳು ಅಂಗೋಪಾಂಗಮಂ ಬಳಿಕ ಸೌಮಿತ್ರಿ ಮರುಗಿ (ಕ)ತಣ್ಣೀರ್ ತಳೆದು ಪತ್ರದೊಳ್ ಕೊಡೆವಿಡಿದು ಸೆರಗಿಂದೆ ಬೀಸಿ ರಾಯನ ಸೇವೆ ಸಂದುದೇ ತನಗೆಂದು ರೋದಿಸಿದನು=[ಅವಳು ದೇಹದ ಮೇಲಿನ ಅರಿವನ್ನೇ ಮರೆತು ಎಚ್ಚರತಪ್ಪಿದಳು. ಬಳಿಕ ಲಕ್ಷ್ಮಣ ಮರುಗಿ ಕಣ್ಣೀರು ಸರಿಸುತ್ತಾ ಅವಳಿಗೆ ನೀರು ಚಿಮುಕಿಸಿ, ಎಲೆಗಳಿಂದ ಬಿಸಿಲು ಬೇಳದಂತೆ ಕೊಡೆವಹಿಡಿದು, ತನ್ನ ಶಾಲಿನ ಸೆರಗಿನಿಂದೆ ಗಾಳಿ ಬೀಸಿ, ಸೀತೆ ಮರಣಿಸಿದಳೇ! ಹಾಗಿದ್ದರೆ ರಾಜನಾದ ರಾಮನ ಸೇವೆಯು ತನಗೆ ಇಂದಿಗೆ ಮುಗಿಯಿತೇ, ಸೀತೆ ಮರಣಿಸಿದರೆ ಅದಕ್ಕೆ ಕಾರಣನಾಗಿ ತಾನು ಬದುಕಿರುವವನಲ್ಲ ಎಂದುಕೊಂಡನು].
  • ತಾತ್ಪರ್ಯ:ಬಿರುಗಾಳಿ ಬೀಸಿ ಹೊಡೆಯಲು ಕೊನೆತುಂಬಿದ ಬಾಳೆಯ ಮರ ಅಲುಗಾಡಿ ಮುರಿದು ಭೂಮಿಗೆ ಒರಗುವಂತೆ, ಲಕ್ಷ್ಮಣನ ಮಾತು ಕಿವಿಗೆ ಬೀಳುವುದಕ್ಕೆ ಮೊದಲೇ, ಎಂದರೆ ಅವನ ಮಾತು ಮುಗಿಯುವ ಮೊದಲೇ ಸೀತೆ ನಡುನಡುಗುತ್ತಾ ಎಚ್ಚರದಪ್ಪಿ ಭೂಮಿಗೆ ಬಿದ್ದಳು! ಅವಳು ದೇಹದ ಮೇಲಿನ ಅರಿವನ್ನೇ ಮರೆತು ಎಚ್ಚರತಪ್ಪಿದಳು. ಬಳಿಕ ಲಕ್ಷ್ಮಣ ಮರುಗಿ ಕಣ್ಣೀರು ಸರಿಸುತ್ತಾ ಅವಳಿಗೆ ನೀರು ಚಿಮುಕಿಸಿ, ಬಿಸಿಲು ಬೀಳದಂತೆ ಎಲೆಗಳಿಂದ ಕೊಡೆವಹಿಡಿದು, ತನ್ನ ಶಾಲಿನ ಸೆರಗಿನಿಂದೆ ಗಾಳಿ ಬೀಸಿ, ಸೀತೆ ಮರಣಿಸಿದಳೇ! ಹಾಗಿದ್ದರೆ ರಾಜನಾದ ರಾಮನ ಸೇವೆಯು ತನಗೆ ಇಂದಿಗೆ ಮುಗಿಯಿತೇ, ಈ ದಿಕ್ಕಿಲ್ಲದ ಕಾಡಿನಲ್ಲಿ ತುಂಬು ಗರ್ಭಿಣಿ ಸೀತೆ ಮರಣಿಸಿದರೆ ಅದಕ್ಕೆ ಕಾರಣನಾಗಿ ತಾನು ಬದುಕಿರುವವನಲ್ಲ ಎಂದುಕೊಂಡನು.(ಗರ್ಭಿಣಿಯಾಗಿ ಅವನೆದುರು ಸೀತೆ ಮರಣಿಸಿದರೆ ಅದರ ಪರಿಣಾಮ ಘೋರ)
  • (ಪದ್ಯ-೧೬)

ಪದ್ಯ :-:೧೭:

[ಸಂಪಾದಿಸಿ]

ಒಯ್ಯನರಗಳಿಗೆಯೊಳ್ ಕಣ್ಥೆರದು ದೈನ್ಯದಿಂ | ಸುಯ್ಯಲರನುರೆ ಸೂಸಿ ಸೌಮಿತ್ರಿಯಂ ನೋಡಿ | ಕೊಯ್ಯಲೊಲ್ಲದ ಕೊರಳನಿಂತು ತನ್ನಂ ಬಿಡಲ್ ಮಾಡಿದಪರಾಧಮುಂಟೆ ||
ಕಯ್ಯಾರೆ ಖಡ್ಗಮಂ ಕೊಟ್ಟು ತನ್ನರಸಿಯಂ | ಹೊಯ್ಯೆಂದು ಪೇಳದಡವಿಗೆ ಕಳುಹಿ ಬಾಯೆಂದ | ನಯ್ಯಯ್ಯೊ ರಾಘವಂ ಕಾರುಣ್ಯನಿಧಿ ಯೆಂದಳಲ್ದಳಂಭೋಜನೇತ್ರೆ||17|| |

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಒಯ್ಯನೆ ಅರಗಳಿಗೆಯೊಳ್ ಕಣ್ಥೆರದು ದೈನ್ಯದಿಂ ಸುಯ್ಯಲರನು ಉರೆ ಸೂಸಿ ಸೌಮಿತ್ರಿಯಂ ನೋಡಿ=[ಮೆಲ್ಲಗೆ ಅರಗಳಿಗೆಯಲ್ಲಿ ಕಣ್ಣುತೆರೆದು ದೈನ್ಯದಿಂದ ನಿಟ್ಟುಸಿರನ್ನು ಉದ್ದಕ್ಕೆ ಬಿಟ್ಟು,ಸೌಮಿತ್ರಿಯನ್ನು ನೋಡಿ]; ಕೊಯ್ಯಲೊಲ್ಲದ ಕೊರಳನಿಂತು ತನ್ನಂ ಬಿಡಲ್ ಮಾಡಿದ ಅಪರಾಧಮುಂಟೆ=[ಕೊಯ್ಯಲೊಲ್ಲದ ಕೊರಳನ್ನು ಕೊಯ್ಯಲು ಇಷ್ಟಪಡದೆ ಹೀಗೆ ತನ್ನನ್ನು ಬಿಡಲು ತಾನು ಮಾಡಿದ ಅಪರಾಧವೇನಾದರೂ ಇದೆಯೇ? ]; ಕಯ್ಯಾರೆ ಖಡ್ಗಮಂ ಕೊಟ್ಟು ತನ್ನ ಅರಸಿಯಂ ಹೊಯ್ಯೆಂದು ಪೇಳದೆ ಅಡವಿಗೆ ಕಳುಹಿ ಬಾಯೆಂದನೆ=[ತನ್ನ ಕಯ್ಯಾರೆ ಖಡ್ಗವನ್ನು ಕೊಟ್ಟು ತನ್ನ ಪತ್ನಿಯನ್ನು 'ಕಡಿದುಬಿಡು', ಎಂದು ಹೇಳದೆ 'ಕಾಡಿಗೆ ಕಳುಹಿಸಿ ಬಾ'ಯೆಂದನೆ?]; ಅಯ್ಯಯ್ಯೊ ರಾಘವಂ ಕಾರುಣ್ಯನಿಧಿಯೆಂದು ಅಳಲ್ದಳು ಅಂಭೋಜನೇತ್ರೆ=['ಅಯ್ಯಯ್ಯೊ ರಾಘವನು ಕಾರುಣ್ಯನಿಧಿ',ಯೆಂದು ಕಮಲನೇತ್ರೆಯಾದ ಸೀತೆ ಅತ್ತಳು.];
  • ತಾತ್ಪರ್ಯ:ಮೆಲ್ಲಗೆ ಅರಗಳಿಗೆಯಲ್ಲಿ ಕಣ್ಣುತೆರೆದು ದೈನ್ಯದಿಂದ ನಿಟ್ಟುಸಿರನ್ನು ಉದ್ದಕ್ಕೆ ಬಿಟ್ಟು,ಸೌಮಿತ್ರಿಯನ್ನು ನೋಡಿ, ಕೊರಳನ್ನು ಕೊಯ್ಯಲು ಇಷ್ಟಪಡದೆ ಹೀಗೆ ತನ್ನನ್ನು ಬಿಡಲು ತಾನು ಮಾಡಿದ ಅಪರಾಧವೇನಾದರೂ ಇದೆಯೇ? ತನ್ನ ಕಯ್ಯಾರೆ ಖಡ್ಗವನ್ನು ಕೊಟ್ಟು ತನ್ನ ಪತ್ನಿಯನ್ನು 'ಕಡಿದುಬಿಡು', ಎಂದು ಹೇಳದೆ 'ಕಾಡಿಗೆ ಕಳುಹಿಸಿ ಬಾ'ಯೆಂದನೆ? 'ಅಯ್ಯಯ್ಯೊ ರಾಘವನು ಕಾರುಣ್ಯನಿಧಿ',ಯೆಂದು ಕಮಲನೇತ್ರೆಯಾದ ಸೀತೆ ಅತ್ತಳು.
  • (ಪದ್ಯ-೧೭)XIII

ಪದ್ಯ :-:೧೮:

[ಸಂಪಾದಿಸಿ]

ಬಿಟ್ಟನೆ ರಘುಶ್ರೇಷ್ಠನೆನ್ನ ನಕಟಕಟ ತಾ | ಮುಟ್ಟನೆ ನೆಗಳ್ದ ಬಾಳ್ಕೆಗೆ ಸಂಚಕಾರಮಂ | ಕೊಟ್ಟನೆ ಸುಮಿತ್ರಾತನುಜ ಕಟ್ಟರಣ್ಯದೊಳ್ ಕಳುಹಿ ಬಾಯೆಂದು ನಿನಗೆ ||
ಕೊಟ್ಟನೆ ನಿರೂಪಮಂ ತಾನೆನ್ನ ಕಣ್ಬಟ್ಟೆ | ಗೆಟ್ಟನೇ ಮನೋವಲ್ಲಭನನಗಲ್ದಡವಿಯೊಳ್ | ನೆಟ್ಟನೆ ಪಿಶಾಚದವೊಲೆಂತಿಹೆನೊ ಕೆಟ್ಟೆನಲ್ಲಾ ಯೆಂದೊರಲ್ದಳಬಲೆ ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಿಟ್ಟನೆ ರಘುಶ್ರೇಷ್ಠನು ಎನ್ನ ನಕಟಕಟ ತಾ ಮುಟ್ಟನೆ ನೆಗಳ್ದ ಬಾಳ್ಕೆಗೆ ಸಂಚಕಾರಮಂ ಕೊಟ್ಟನೆ=[ರಘುಶ್ರೇಷ್ಠನು ನನ್ನನ್ನು ಬಿಟ್ಟನೆ! ಅಕಟಕಟ ತಾನುಇನ್ನು ನನ್ನನ್ನು ಮುಟ್ಟುವುದಿಲ್ಲವೇ? ಏಳಿಗೆಯ ಬಾಳಿಗೆ ಕೊನೆಗೊಳಿಸುವ ತೀರ್ಮಾನವನ್ನು ಕೊಟ್ಟನೆ]; ಸುಮಿತ್ರಾತನುಜ ಕಟ್ಟರಣ್ಯದೊಳ್ ಕಳುಹಿ ಬಾಯೆಂದು ನಿನಗೆ ಕೊಟ್ಟನೆ ನಿರೂಪಮಂ=['ಲಕ್ಷ್ಮಣಾ ನೀನು ದಟ್ಟಕಾಡಿನಲ್ಲಿ ಇವಳನ್ನು ಬಿಟ್ಟು ಬಾ', ಎಂದು ನಿನಗೆ ಅಪ್ಪಣೆ ಕೊಟ್ಟನೆ?]; ತಾನು ಎನ್ನ ಕಣ್ ಬಟ್ಟೆಗೆಟ್ಟನೇ(ದಾರಿಕಾಣದಂತೆ) ಮನೋವಲ್ಲಭನನು ಅಗಲ್ದು ಅಡವಿಯೊಳ್ ನೆಟ್ಟನೆ ಪಿಶಾಚದವೊಲ್ ಎಂತಿಹೆನೊ ಕೆಟ್ಟೆನಲ್ಲಾ ಯೆಂದು ಒರಲ್ದಳು ಅಬಲೆ=[ರಾಮನು-ತಾನು ನನ್ನ ಕಣ್ಣಿಗೆ/ಬದುಕಿಗೆ ಮುಂದೆ ದಾರಿಕಾಣದಂತೆ ಮಾಡಿದನೇ! ಮನೋವಲ್ಲಭನಾದ ರಾಮನನ್ನು ಅಗಲಿ ಅಡವಿಯಲ್ಲಿ ಇರಲಿ ಎಂದು, ಇಲ್ಲಿ ತಂದು ಪಿಶಾಚಿಯಂತೆ ಇರಲು ನಿಲ್ಲಿಸಿದನೇ! ಹೇಗಿರುವೆನೊ! ಕೆಟ್ಟೆಕಷ್ಟಕ್ಕೆ ಸಿಕ್ಕಿದೆನು! ಎಂದು ಅಬಲೆಯಾದ ಸೀತೆ ಗೋಳಿಟ್ಟಳು.]
  • ತಾತ್ಪರ್ಯ:ರಘುಶ್ರೇಷ್ಠನು ನನ್ನನ್ನು ಬಿಟ್ಟನೆ! ಅಕಟಕಟ ತಾನುಇನ್ನು ನನ್ನನ್ನು ಮುಟ್ಟುವುದಿಲ್ಲವೇ? ಏಳಿಗೆಯ ಬಾಳಿಗೆ ಕೊನೆಗೊಳಿಸುವ ತೀರ್ಮಾನವನ್ನು ಕೊಟ್ಟನೆ; 'ಲಕ್ಷ್ಮಣಾ ನೀನು ದಟ್ಟಕಾಡಿನಲ್ಲಿ ಇವಳನ್ನು ಬಿಟ್ಟು ಬಾ', ಎಂದು ನಿನಗೆ ಅಪ್ಪಣೆ ಕೊಟ್ಟನೆ? ರಾಮನು-ತಾನು ನನ್ನ ಕಣ್ಣಿಗೆ/ಬದುಕಿಗೆ ಮುಂದೆ ದಾರಿಕಾಣದಂತೆ ಮಾಡಿದನೇ! ಮನೋವಲ್ಲಭನಾದ ರಾಮನನ್ನು ಅಗಲಿ ಅಡವಿಯಲ್ಲಿ ಇರಲಿ ಎಂದು, ಇಲ್ಲಿ ತಂದು ಪಿಶಾಚಿಯಂತೆ ಇರಲು ನಿಲ್ಲಿಸಿದನೇ! ಹೇಗಿರುವೆನೊ! ಕೆಟ್ಟೆನು ಕಷ್ಟಕ್ಕೆ ಸಿಕ್ಕಿದೆನು! ಎಂದು ಅಬಲೆಯಾದ ಸೀತೆ ಗೋಳಿಟ್ಟಳು.
  • (ಪದ್ಯ-೧೮)

ಪದ್ಯ :-:೧೯:

[ಸಂಪಾದಿಸಿ]

ಎಂದು ಕೌಶಿಕಮುನಿಪನೊಡನೆ ಮಿಥಿಲಾಪುರಕ್ಕೆ | ಬಂದು ಹರಧನುವ ಮುರಿದೆನ್ನಂ ಮದುವೆಯಾದ | ನಂದುಮೊದಲಾಗಿ ರಮಿಸಿದನೆನ್ನೊಳಾನಗಲ್ದೊಡೆ ತಾಂ ನವೆದನಲ್ಲದೆ ||
ಒಂದಿದನೆ ಸೌಖ್ಯಮಂ ರಾಮನೆನಗಾಗಿ ಕಪಿ | ವೃಂದಮಂ ನೆರಪಿ ಕಡಲಂ ಕಟ್ಟಿ ದೈತ್ಯರಂ | ಕೊಂದಗ್ನಿ ಮುಖದೊಳ್ ಪರೀಕ್ಷಿಸಿದ ನೆನ್ನೊಳಪರಾಧಮಂ ಕಾಣಿಸಿದನೇ ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಂದು (ಯಾವಾಗ) ಕೌಶಿಕಮುನಿಪನೊಡನೆ ಮಿಥಿಲಾಪುರಕ್ಕೆ ಬಂದು ಹರಧನುವ ಮುರಿದು ಎನ್ನಂ ಮದುವೆಯಾದನು ಅಂದು ಮೊದಲಾಗಿ ರಮಿಸಿದನು ಎನ್ನೊಳು=[ ವಿಶ್ವಾಮಿತ್ರ ಮುನಿಯೊಡನೆ ಮಿಥಿಲಾಪುರಕ್ಕೆ ಯಾವಾಗ ಬಂದು ಹರಧನುಸ್ಸನ್ನು ಮುರಿದು ನನ್ನನ್ನು ಮದುವೆಯಾದನೋ, ಅಂದು ಮೊದಲಾಗಿ ನನ್ನೊಡನೆ ಸುಖ ಅನುಭವಿಸಿದನು.];ಆನು ಅಗಲ್ದೊಡೆ ತಾಂ ನವೆದನು ಅಲ್ಲದೆ ಒಂದಿದನೆ ಸೌಖ್ಯಮಂ=[ ನಾನು ಅಪಹೃತಳಾಗಿ ಅವನಿಂದ ಅಗಲಿದಾಗ ತಾನು ನವೆದನು/ ಕಷ್ಟ ಅನುಭವಿಸಿದನು; ಅದಲ್ಲದೆ ಸೌಖ್ಯವನ್ನು ಹೊಂದಿದನೆ?]; ರಾಮನು ಎನಗಾಗಿ ಕಪಿವೃಂದಮಂ ನೆರಪಿ ಕಡಲಂ ಕಟ್ಟಿ ದೈತ್ಯರಂ ಕೊಂದಗ್ನಿ ಮುಖದೊಳ್ ಪರೀಕ್ಷಿಸಿದನು ಎನ್ನೊಳು ಅಪರಾಧಮಂ ಕಾಣಿಸಿದನೇ=[ರಾಮನು ನನಗಾಗಿ ಕಪಿಸಮೂಹದ ನೆರವಿನಿಂದ ಕಡಲಿಗೆ ಸೇತುವೆಕಟ್ಟಿ ರಾಕ್ಷಸರನ್ನು ಕೊಂದು ಅಗ್ನಿಮುಖದಲ್ಲಿ ನನ್ನನ್ನು ಪರೀಕ್ಷಿಸಿದನು; ಹೀಗಿದ್ದೂ ನನ್ನಲ್ಲಿ ಅಪರಾಧವನ್ನು ಹುಡುಕಿ ಕಂಡನೇ?]
  • ತಾತ್ಪರ್ಯ:.ಯಾವಾಗ ವಿಶ್ವಾಮಿತ್ರ ಮುನಿಯೊಡನೆ ಮಿಥಿಲಾಪುರಕ್ಕೆ ಬಂದು ಹರಧನುಸ್ಸನ್ನು ಮುರಿದು ನನ್ನನ್ನು ಮದುವೆಯಾದನೋ, ಅಂದು ಮೊದಲಾಗಿ ನನ್ನೊಡನೆ ಅವನು ಸುಖ ಅನುಭವಿಸಿದನು. ನಾನು ಅಪಹೃತಳಾಗಿ ಅವನಿಂದ ಅಗಲಿದಾಗ ತಾನು ನವೆದನು/ ಕಷ್ಟ ಅನುಭವಿಸಿದನು; ಅದಲ್ಲದೆ ಸೌಖ್ಯವನ್ನು ಹೊಂದಿದನೆ?(ಅವನಲ್ಲಿ ನನ್ನ ಬಗೆಗೆ ಅಷ್ಟೊಂದು ಪ್ರೀತಿ ಇತ್ತು). ರಾಮನು ನನಗಾಗಿ ಕಪಿಸಮೂಹದ ನೆರವಿನಿಂದ ಕಡಲಿಗೆ ಸೇತುವೆಕಟ್ಟಿ ರಾಕ್ಷಸರನ್ನು ಕೊಂದು ಅಗ್ನಿಮುಖದಲ್ಲಿ ನನ್ನನ್ನು ಪರೀಕ್ಷಿಸಿದನು; ಹೀಗಿದ್ದೂ ನನ್ನಲ್ಲಿ ಅಪರಾಧವನ್ನು ಹುಡುಕಿ ಕಂಡನೇ?]
  • (ಪದ್ಯ-೧೯)

ಪದ್ಯ :-:೨೦:

[ಸಂಪಾದಿಸಿ]

ಕಲ್ಮುಳ್ಳಿಡಿದಕಾಡೊಳಂದೆನ್ನನುಪಚಿರಿಸಿ | ಪಲ್ಮೊರೆದು ಗರ್ಜಿಪ ವಿರಾಧನಂ ಮರ್ದಿಸಿದೆ | ಬಲ್ಮೆಯಿಂ ನಾಂ ಕಳುಹಿದೊಡೆ ಜನಸ್ಥಾನದಿಂ ಹೋದೆ ರಾಘವನ ಬಳಿಗೆ ||
ನಲ್ಮೆಯಂ ಮರೆದಪೆನೆ ಸೌಮಿತ್ರಿ ನೀನೆಲ್ಲ | ರೊಲ್ಮೈದುನನೆ ತನಗೆ ಕಾನನದೊಳೆನ್ನನಿಲಿ | ಸಲ್ಮನಂ ಬಂದಪುದೆ ತಂದೆ ನಿನಗೆಂದು ಕಂಬನಿಮಿಡಿದಳಂಬುಜಾಕ್ಷಿ ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಲ್ ಮುಳ್ಳು ಇಡಿದ ಕಾಡೊಳು ಅಂದು ಎನ್ನನು ಉಪಚಿರಿಸಿ ಪಲ್ ಮೊರೆದು (ಹಲ್ಲುಕಡಿದು) ಗರ್ಜಿಪ ವಿರಾಧನಂ ಮರ್ದಿಸಿದೆ=[ಕಲ್ಲು ಮುಳ್ಳು ತುಂಬಿದ ಕಾಡಿನಲ್ಲಿ ಅಂದು ವನವಾಸದಲ್ಲಿ ನನ್ನನ್ನು ಉಪಚಿರಿಸಿದೆ; ಹಲ್ಲುಕಡಿಯುತ್ತಾ ಗರ್ಜಿಸುತ್ತಾ ಬಂದ ವಿರಾಧನನ್ನು ಕೊಂದೆ]; ಬಲ್ಮೆಯಿಂ ನಾಂ ಕಳುಹಿದೊಡೆ ಜನಸ್ಥಾನದಿಂ ಹೋದೆ ರಾಘವನ ಬಳಿಗೆ = [ಅಪಾಯವನ್ನು ಗ್ರಹಿಸಿ ಅಣ್ಣನ ಮಾತಿನಂತೆ ನನ್ನ ರಕ್ಷಣೆಗೆ ನಿಂತಿದ್ದೆ, ಆದರೆ ಒತ್ತಾಯದಿಂದ ನಾನು ಕಳುಹಿಸಿದಾಗ ನನಗೆ ಗೌರವಕೊಟ್ಟು ಜನಸ್ಥಾನದ ಕಾಡಿನಲ್ಲಿ ರಾಘವನ ಬಳಿಗೆ ಹೋದೆ, ಆಗ ನನ್ನನ್ನು ಏಕಾಂಗಿಯಾಗಿ ಬಿಟ್ಟು ಹೋಗಲು ಇಷ್ಟಪಡಲಿಲ್ಲ.]; ನಲ್ಮೆಯಂ(ಗೌರವ-ಪ್ರೀತಿಯನ್ನು) ಮರೆದಪೆನೆ ಸೌಮಿತ್ರಿ ನೀನು ಎಲ್ಲರೊಲ್ ಮೈದುನನೆ ತನಗೆ=[ ಸೌಮಿತ್ರಿ ನಿನ್ನ ಪ್ರೀತಿ ಗೌರವಗಳನ್ನು ನನಗೆ ಮರೆಯಲು ಸಾದ್ಯವೇ? ತನಗೆ, ನೀನು ಎಲ್ಲರಂತೆ ಕೇವಲ ಮೈದುನನೆ/ತಂದೆಯ ಸಮಾನನು. ]; ಕಾನನದೊಳ್ ಎನ್ನ ನಿಲಿಸಲ್ ಮನಂ ಬಂದಪುದೆ ತಂದೆ ನಿನಗೆ ಎಂದು ಕಂಬನಿಮಿಡಿದಳು ಅಂಬುಜಾಕ್ಷಿ=[ಕಾಡಿನಲ್ಲಿ ನನ್ನನ್ನು ಇರಿಸಲು, ತಂದೆ ಲಕ್ಷ್ಮಣ ನಿನಗೆ ಮನಸ್ಸು ಬರುವುದೆ? ಎಂದು ಅಂಬುಜಾಕ್ಷಿ ಸೀತೆ ಕಣ್ಣೀರು ಸುರಿಸಿದಳು].
  • ತಾತ್ಪರ್ಯ:ಕಲ್ಲು ಮುಳ್ಳು ತುಂಬಿದ ಕಾಡಿನಲ್ಲಿ ಅಂದು ವನವಾಸದಲ್ಲಿ ನನ್ನನ್ನು ಉಪಚಿರಿಸಿದೆ; ಹಲ್ಲುಕಡಿಯುತ್ತಾ ಗರ್ಜಿಸುತ್ತಾ ಬಂದ ವಿರಾಧನನ್ನು ಕೊಂದೆ; ಅಪಾಯವನ್ನು ಗ್ರಹಿಸಿ ಅಣ್ಣನ ಮಾತಿನಂತೆ ನನ್ನ ರಕ್ಷಣೆಗೆ ನಿಂತಿದ್ದೆ, ಆದರೆ ಒತ್ತಾಯದಿಂದ ನಾನು ಕಳುಹಿಸಿದಾಗ ನನಗೆ ಗೌರವಕೊಟ್ಟು ಜನಸ್ಥಾನದ ಕಾಡಿನಲ್ಲಿ ರಾಘವನ ಬಳಿಗೆ ಹೋದೆ, ಆಗ ನನ್ನನ್ನು ಏಕಾಂಗಿಯಾಗಿ ಬಿಟ್ಟು ಹೋಗಲು ನೀನು ಇಷ್ಟಪಡಲಿಲ್ಲ. ಸೌಮಿತ್ರಿ ನಿನ್ನ ಪ್ರೀತಿ ಗೌರವಗಳನ್ನು ನನಗೆ ಮರೆಯಲು ಸಾದ್ಯವೇ? ತನಗೆ, ನೀನು ಎಲ್ಲರಂತೆ ಕೇವಲ ಮೈದುನನೆ/ತಂದೆಯ ಸಮಾನನು. ಕಾಡಿನಲ್ಲಿ ನನ್ನನ್ನು ಇರಿಸಲು, ತಂದೆ ಲಕ್ಷ್ಮಣ ನಿನಗೆ ಮನಸ್ಸು ಬರುವುದೆ? ಎಂದು ಅಂಬುಜಾಕ್ಷಿ ಸೀತೆ ಕಣ್ಣೀರು ಸುರಿಸಿದಳು.
  • (ಪದ್ಯ-೨೦)

ಪದ್ಯ :-:೨೧:

[ಸಂಪಾದಿಸಿ]

ತೊಳೆವ ನಾಸಿಕದ ನುಣ್ಗದಪುಗಳ ಪೊಳೆವ ಕಂ | ಗಳ ತುರುಗಿದೆವೆಯ ನಿಡುಪುರ್ಬುಗಳ ಪೆರೆನೊಸಲ | ಥಳಥಳಿಪ ಮಕುಟದ ಕಿವಿಯ ಮಕರಕುಂಡಲದ ಕೋಮಲಿತ ಚುಬುಕಾಗ್ರದ ||
ಲಲಿತಾರುಣಾಧರದ ಮಿರುಗುವ ರಧನಪಂಙ್ಕ್ತ | ಗಳ ಸೂಸುವೆಳೆನಗೆಯ ಮೋಹನದ ಚೆಲ್ವಿನೊ | ಬ್ಬುಳಿಯೆನಿಪ ರಾಘವನ ಸಿರಿಮೊಗವನೆಂತು ನೋಡದೆಮಾಣ್ಬೆನಕಟೆಂದಳು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತೊಳೆವ ನಾಸಿಕದ ನುಣ್ಗದಪುಗಳ ಪೊಳೆವ ಕಂಗಳ ತುರುಗಿದೆವೆಯ ನಿಡುಪುರ್ಬುಗಳ ಪೆರೆನೊಸಲ ಥಳಥಳಿಪ ಮಕುಟದ ಕಿವಿಯ ಮಕರಕುಂಡಲದ ಕೋಮಲಿತ ಚುಬುಕಾಗ್ರದ=[ಕಾಂತಿಯುಕ್ತ ನಾಸಿಕದ (ಮೂಗಿನ), ನುಣ್ಗನೆಯ ಕೆನ್ನೆಗಳ, ಪೊಳೆಯುವ ಕಂಣುಗಳ, ದೊಡ್ಡ ಕಣ್ಣುರೆಪ್ಪೆಯ, ಉದ್ದವಾದ ಹುಬ್ಬುಗಳ, ವಿಶಾಲಹಣೆಯ, ಥಳಥಳಿಪ ಕಿರೀಟದ, ಕಿವಿಗಳಲ್ಲಿ ಮಕರಕುಂಡಲ ಧರಿಸಿದ ಕೋಮಲ ಗಲ್ಲದ ]; ಲಲಿತ ಅರುಣ ಅಧರದ ಮಿರುಗುವ ರಧನಪಂಙ್ಕ್ತಗಳ ಸೂಸುವ ಎಳೆನಗೆಯ ಮೋಹನದ ಚೆಲ್ವಿನೊಬ್ಬುಳಿಯೆನಿಪ ರಾಘವನ ಸಿರಿಮೊಗವನು ಎಂತು ನೋಡದೆಮಾಣ್ಬೆನು ಅಕಟ ಎಂದಳು=[ಸುಂದರವಾದ ಕೆಂಪುತುಟಿಯ/ ಅಧರದ ಮಿರುಗುತ್ತಿರುವ ಹಲ್ಲುಗಳ, ಎಳೆನಗೆಯನ್ನು ಬೀರುವ/ಸೂಸುವ ಮೋಹನ ರೂಪದ ಚೆಲುವಿನರಾಶಿಯಂತಿರುವ ರಾಘವನ ಚಂದಮುಖವನ್ನು ಹೇಗೆ ನೋಡದೆ ಇರಲಿ! ಅಕಟ! ಎಂದಳು ಸೀತೆ].
  • ತಾತ್ಪರ್ಯ:ಕಾಂತಿಯುಕ್ತ ನಾಸಿಕದ (ಮೂಗಿನ), ನುಣ್ಗನೆಯ ಕೆನ್ನೆಗಳ, ಪೊಳೆಯುವ ಕಂಣುಗಳ, ದೊಡ್ಡ ಕಣ್ಣುರೆಪ್ಪೆಯ, ಉದ್ದವಾದ ಹುಬ್ಬುಗಳ, ವಿಶಾಲಹಣೆಯ, ಥಳಥಳಿಪ ಕಿರೀಟದ, ಕಿವಿಗಳಲ್ಲಿ ಮಕರಕುಂಡಲ ಧರಿಸಿದ ಕೋಮಲ ಗಲ್ಲದ, ಸುಂದರವಾದ ಕೆಂಪುತುಟಿಯ/ ಅಧರದ ಮಿರುಗುತ್ತಿರುವ ಹಲ್ಲುಗಳ, ಎಳೆನಗೆಯನ್ನು ಬೀರುವ/ಸೂಸುವ ಮೋಹನ ರೂಪದ ಚೆಲುವಿನ ರಾಶಿಯಂತಿರುವ ರಾಘವನ ಚಂದಮುಖವನ್ನು ಹೇಗೆ ನೋಡದೆ ಇರಲಿ! ಅಕಟ! ಎಂದಳು ಸೀತೆ.
  • (ಪದ್ಯ-೨೧)

ಪದ್ಯ :-:೨೨:

[ಸಂಪಾದಿಸಿ]

ರಾಮನಂ ಭುವನಾಭಿರಾಮನಂ ಗುಣರತ್ನ | ಧಾಮನಂ ರಘುಕುಲೋದ್ಧಾಮನಂ ರೂಪಜಿತ | ಕಾಮನಂ ಸತ್ಕೀರ್ತಿಕಾಮನಂ ಶರಣಜನವಾರ್ಧಿಯಂ ಮಿಗೆ ಪೆರ್ಚಿಪ ||
ಸೋಮನಂ ಸೌಭಾಗ್ಯಸೋಮನಂ ಕುವಲಯ | ಶ್ಯಾಮನಂ ನಿಜತನುಶ್ಯಾಮನಂ ಘನಪುಣ್ಯ | ನಾಮನಂ ಸಂತತಂ ನಾ ಮನಂದಣಿಯೆ ರಮಿಸದೆ ಬಾಳ್ವೆನೆಂತೆಂದಳು ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಮನಂ ಭುವನ ಅಭಿರಾಮನಂ ಗುಣರತ್ನ ಧಾಮನಂ ರಘುಕುಲದ ಉದ್ಧಾಮನಂ=[ಲೊಕದಲ್ಲಿ ಸುಂದರನಾದ ರಾಮನನ್ನು, ಗುಣರತ್ನಗಳಿಗೆ ಆಧಾರನಾದ ರಘುಕುಲದ ಶ್ರೇಷ್ಠನನ್ನು,]; ರೂಪಜಿತಕಾಮನಂ ಸತ್ಕೀರ್ತಕಾಮನಂ ಶರಣಜನ ವಾರ್ಧಿಯಂ (ಸಮುದ್ರ-ಸಮೂಹ)ಸೋಮನಂ ಸೌಭಾಗ್ಯಸೋಮನಂ ಮಿಗೆ ಪೆರ್ಚಿಪ=[ಕಾಮನನ್ನು ರೂಪದಲ್ಲಿ ಮೀರಸಿದವನನ್ನು, ಸತ್ಕೀರ್ತಿಯನ್ನು ಬಯಸುವನನ್ನು, ಶರಣು ಬಂದ ಜನರ ಸಮೂಹಕ್ಕೆ ಬಃಲ ಹೆಚ್ಚಿಸುವ ಬಾಗ್ಯಕೊಡುವ ಚಂದ್ರನಂತೆ (ಚಂದ್ರನನ್ನು ಕಂಡು ಸಮುದ್ರ ಉಕ್ಕುತ್ತದೆ- ರಾಮನನ್ನು ಕಂಡು ಶರಣರು/ ಭಕ್ತರು ಸಂತಸ ಪಡುವರು)]; ಕುವಲಯ ಶ್ಯಾಮನಂ ನಿಜತನುಶ್ಯಾಮನಂ ಘನಪುಣ್ಯ ನಾಮನಂ ಸಂತತಂ ನಾ ಮನಂದಣಿಯೆ ರಮಿಸದೆ ಬಾಳ್ವೆನೆಂತೆಂದಳು=[ನೈದಿಲೆಯಂತೆ ಶ್ಯಾಮಲ ಬಣ್ಣದ ಶರೀರದ ಶ್ಯಾಮನನ್ನು, ಘನಪುಣ್ಯಪ್ರದ ಹೆಸರಿನವನನ್ನು, ಸದಾಕಾಲ ನಾನು ಮನಸ್ಸು ತೃಪ್ತಿಯಾಗುವಂತೆ ಸಂತೋಷಪಡಿಸದೆ ಹೇಗೆ ಬಾಳಲಿ ಎಂದಳು].
  • ತಾತ್ಪರ್ಯ:ಲೊಕದಲ್ಲಿ ಸುಂದರನಾದ ರಾಮನನ್ನು, ಗುಣರತ್ನಗಳಿಗೆ ಆಧಾರನಾದ ರಘುಕುಲದ ಶ್ರೇಷ್ಠನನ್ನು, ಕಾಮನನ್ನು ರೂಪದಲ್ಲಿ ಮೀರಸಿದವನನ್ನು, ಸತ್ಕೀರ್ತಿಯನ್ನು ಬಯಸುವನನ್ನು, ಶರಣು ಬಂದ ಜನರ ಸಮೂಹಕ್ಕೆ ಬಃಲ ಹೆಚ್ಚಿಸುವ ಬಾಗ್ಯಕೊಡುವ ಚಂದ್ರನಂತೆ (ಚಂದ್ರನನ್ನು ಕಂಡು ಸಮುದ್ರ ಉಕ್ಕುತ್ತದೆ- ರಾಮನನ್ನು ಕಂಡು ಶರಣರು/ ಭಕ್ತರು ಸಂತಸ ಪಡುವರು) ನೈದಿಲೆಯಂತೆ ಶ್ಯಾಮಲ ಬಣ್ಣದ ಶರೀರದ ಶ್ಯಾಮನನ್ನು, ಘನಪುಣ್ಯಪ್ರದ ಹೆಸರಿನವನನ್ನು, ಸದಾಕಾಲ ನಾನು ಮನಸ್ಸು ತೃಪ್ತಿಯಾಗುವಂತೆ ಸಂತೋಷಪಡಿಸದೆ ಹೇಗೆ ಬಾಳಲಿ ಎಂದಳು].
  • (ಪದ್ಯ-೨೨)

ಪದ್ಯ :-:೨೩:

[ಸಂಪಾದಿಸಿ]

ರಾಯಕೇಳಿಂತಿಂತು ರಾಘವೇಶ್ವರನ ರಮ | ಣೀಯ ಗುಣಮಾಲೆಯಂ ನೆನೆನೆನೆದು ಹಂಬಲಿಸು | ತಾಯತಾಂಬಕಿ ಮತ್ತೆ ಮೈಮರೆಯುತೆಚ್ಚರುತೆ ಪಾವಗಿದ ಪಸುಳೆವೊಲಿರೆ ||
ತಾಯೆ ನಿನ್ನಂಬಿಟ್ಟು ಪೋಗಲಾರೆಂ ಪೋಗ | ದೀಯವಸ್ಥೆಯೊಳಿರ್ದೊಡಣ್ಣ ನೇಗೈದಪನೊ| ಹಾಯೆಂದು ಲಕ್ಷ್ಮಣಂ ಶೋಕಗದ್ಗದನಾಗೆ ಸೀತೆ ಮಗುಳಿಂತೆಂದಳು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಯ ಕೇಳು ಇಂತಿಂತು ರಾಘವೇಶ್ವರನ ರಮಣೀಯ ಗುಣಮಾಲೆಯಂ ನೆನೆನೆನೆದು ಹಂಬಲಿಸುತ ಆಯತಾಂಬಕಿ ಮತ್ತೆ ಮೈಮರೆಯುತ ಎಚ್ಚರುತೆ ಪಾವಗಿದ ಪಸುಳೆವೊಲು ಇರೆ=[ರಾಜನೇ ಕೇಳು, ಹೀಗೆ ನಾನಾಬಗೆಯಲ್ಲಿ, ರಾಘವೇಶ್ವರನ ಉತ್ತಮ ಗುಣಗಳನ್ನು ನೆನೆನೆನೆದು ಹಂಬಲಿಸುತ್ತಾ ಸೀತೆಯು ಮತ್ತೆ ಮತ್ತೆ ಎಚ್ಚರ ತಪ್ಪುತ್ತಾ ಎಚ್ಚರಾಗುತ್ತಾ ಹಾವುಕಚ್ಚಿದ ಮಗುವಿನಂತೆ ಇರಲು]; ತಾಯೆ ನಿನ್ನಂಬಿಟ್ಟು ಪೋಗಲಾರೆಂ ಪೋಗದೆ ಈಯವಸ್ಥೆಯೊಳು ಇರ್ದೊಡೆ ಅಣ್ಣನು ಏಗೈದಪನೊ ಹಾಯೆಂದು ಲಕ್ಷ್ಮಣಂ ಶೋಕಗದ್ಗದನು ಆಗೆ ಸೀತೆ ಮಗುಳಿಂತೆಂದಳು=[ತಾಯೆ ಸೀತಾದೇವಿ, ನಿನ್ನನ್ನು ಬಿಟ್ಟು ಹೋಗಲಾರೆ, ಹೋಗದೆ ಈ ಅವಸ್ಥೆಯಲ್ಲಿ ಇದ್ದರೆ ಅಣ್ಣ ರಾಮನು ಏನುಮಾಡುವನೊ! ಹಾ! ಎಂದು ಲಕ್ಷ್ಮಣನು ಶೋಕದಿಂದ ಗದ್ಗದಿಸಿದನು. ಆಗೆ ಸೀತೆ ಅವನಿಗೆ ಉತ್ತರವಾಗಿ ಹೇಗೆ ಹೇಳಿದಳು.]
  • ತಾತ್ಪರ್ಯ:ರಾಜನೇ ಕೇಳು, ಹೀಗೆ ನಾನಾಬಗೆಯಲ್ಲಿ, ರಾಘವೇಶ್ವರನ ಉತ್ತಮ ಗುಣಗಳನ್ನು ನೆನೆನೆನೆದು ಹಂಬಲಿಸುತ್ತಾ ಸೀತೆಯು ಮತ್ತೆ ಮತ್ತೆ ಎಚ್ಚರ ತಪ್ಪುತ್ತಾ ಎಚ್ಚರಾಗುತ್ತಾ ಹಾವುಕಚ್ಚಿದ ಮಗುವಿನಂತೆ ಇರಲು; ತಾಯೆ ಸೀತಾದೇವಿ, ನಿನ್ನನ್ನು ಬಿಟ್ಟು ಹೋಗಲಾರೆ, ಹೋಗದೆ ಈ ಅವಸ್ಥೆಯಲ್ಲಿ ಇದ್ದರೆ ಅಣ್ಣ ರಾಮನು ಏನುಮಾಡುವನೊ! ಹಾ! ಎಂದು ಲಕ್ಷ್ಮಣನು ಶೋಕದಿಂದ ಗದ್ಗದಿಸಿದನು. ಆಗೆ ಸೀತೆ ಅವನಿಗೆ ಉತ್ತರವಾಗಿ ಹೀಗೆ ಹೇಳಿದಳು.
  • (ಪದ್ಯ-೨೩)

ಪದ್ಯ :-:೨೪:

[ಸಂಪಾದಿಸಿ]

ತಂದೆ ಲಕ್ಷ್ಮಣ ನಿನ್ನೊಳೆಂದೊಡಿನ್ನೇನಹುದು | ಹಿಂದಣ ಜನಸ್ಥಾನದಂದದೊಳ್ ಪೋಗು ನೀಂ | ಕೊಂದುಕೊಂಬೊಡೆ ತನ್ನ ಬೆಂದೊಡಲೊಳಿದೆ ಬಸಿರ ದಂದುಗಂ ಕಾನನದೊಳು ||
ಬಂದುದಂ ಕಾಣ್ಬೆನಾನಿಂದು ಕೌಸಲೆಯಡಿಗೆ | ವಂದಿಸಿದೆನಪರಾಧಮೊಂದುಮಿಲ್ಲದೆ ತನ್ನ | ಕಂದನೆನ್ನಂ ತೊರೆದುದಂ ದೇವಿಗೊರೆವುದೆನುತಂದಳಲ್ದಳ್ ಮೃಗಾಕ್ಷಿ ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಂದೆ (ಆತ್ಮೀಯ ಪೂಜ್ಯನೇ) ಲಕ್ಷ್ಮಣ ನಿನ್ನೊಳು ಎಂದೊಡೆ ಇನ್ನು ಏನಹುದು=[ತಂದೆ (ಆತ್ಮೀಯ ಪೂಜ್ಯನೇ) ಲಕ್ಷ್ಮಣಾ! ನಿನ್ನಲ್ಲಿ ಕಷ್ಟವನ್ನು ಹೇಳಿದರೆ ಇನ್ನು ಏನು ಪ್ರಯೋಜನ?]; ಹಿಂದಣ ಜನಸ್ಥಾನದ ಅಂದದೊಳ್ ಪೋಗು ನೀಂ ಕೊಂದುಕೊಂಬೊಡೆ ತನ್ನ ಬೆಂದ ಒಡಲೊಳಿದೆ ಬಸಿರ ದಂದುಗಂ=[ಹಿಂದೆ ವನವಾಸದಲ್ಲಿದ್ದಾಗ ಜನಸ್ಥಾನದಲ್ಲಿ ನನ್ನನ್ನು ಬಿಟ್ಟು ಹೋದ ರೀತಿಯಲ್ಲಿ ನೀನು ಹೋಗು; ಆತ್ಮಹತ್ಯೆ ಮಾಡಿಕೊಳ್ಳೋಣವೆಂದರೆ, ತನ್ನ ಸಂಕಟದಿಂದ ಬೆಂದಿರುವ ಈ ಹೊಟ್ಟೆಯಲ್ಲಿ ಬಸಿರ ತೊಡಕು ಇದೆ.]; ಕಾನನದೊಳು ಬಂದುದಂ ಕಾಣ್ಬೆ ನಾನಿಂದು ಕೌಸಲೆಯ ಅಡಿಗೆ ವಂದಿಸಿದೆನು ಅಪರಾಧಮೊಂದುಂ ಇಲ್ಲದೆ ತನ್ನ ಕಂದನು ಎನ್ನಂ ತೊರೆದುದಂ ದೇವಿಗೆ ಒರೆವುದು ಎನುತ ಅಂದು ಅಳಲ್ದಳ್ ಮೃಗಾಕ್ಷಿ=[ಇಂದು ಕಾಡಿನಲ್ಲಿ ಬಂದುದನ್ನು ನಾನು ಅನುಭವಿಸುವೆನು! ಕೌಸಲ್ಯೆಯ ಪಾದಕ್ಕೆ ವಂದಿಸಿದೆನು ಎಂದು ಹೇಳು; ಒಂದೂ ಅಪರಾಧ ಇಲ್ಲದೆ ತನ್ನ ಮಗನು ನನ್ನನ್ನು ತೊರೆದುದನ್ನು ಆ ದೇವಿಗೆ ಹೇಳುವುದು, ಎನುತ ಅಂದು ಮೃಗಾಕ್ಷಿ ಸೀತೆ ಕಣ್ಣೀರಿಟ್ಟಳು.]
  • ತಾತ್ಪರ್ಯ:(ಆತ್ಮೀಯ ಪೂಜ್ಯನೇ)ತಂದೆ ಲಕ್ಷ್ಮಣಾ! ನಿನ್ನಲ್ಲಿ ಕಷ್ಟವನ್ನು ಹೇಳಿದರೆ ಇನ್ನು ಏನು ಪ್ರಯೋಜನ? ಹಿಂದೆ ವನವಾಸದಲ್ಲಿದ್ದಾಗ ಜನಸ್ಥಾನದಲ್ಲಿ ನನ್ನನ್ನು ಬಿಟ್ಟು ಹೋದ ರೀತಿಯಲ್ಲಿ ನೀನು ಹೋಗು; ಆತ್ಮಹತ್ಯೆ ಮಾಡಿಕೊಳ್ಳೋಣವೆಂದರೆ, ಸಂಕಟದಿಂದ ಬೆಂದಿರುವ ಈ ನನ್ನ ಹೊಟ್ಟೆಯಲ್ಲಿ ಬಸಿರ ತೊಡಕು ಇದೆ. ಇಂದು ಕಾಡಿನಲ್ಲಿ ಬಂದುದನ್ನು ನಾನು ಅನುಭವಿಸುವೆನು! ಕೌಸಲ್ಯೆಯ ಪಾದಕ್ಕೆ ವಂದಿಸಿದೆನು ಎಂದು ಹೇಳು; ಒಂದೂ ಅಪರಾಧ ಇಲ್ಲದೆ ತನ್ನ ಮಗನು ನನ್ನನ್ನು ತೊರೆದುದನ್ನು ಆ ದೇವಿಗೆ ಹೇಳುವುದು, ಎನುತ ಅಂದು ಮೃಗಾಕ್ಷಿ ಸೀತೆ ಕಣ್ಣೀರಿಟ್ಟಳು.
  • (ಪದ್ಯ-೨೪)

ಪದ್ಯ :-:೨೫:

[ಸಂಪಾದಿಸಿ]

ಏಕೆ ನಿಂದಿಹೆ ಪೋಗು ಸೌಮಿತ್ರಿ ಕೋಪಿಸನೆ | ಕಾಕುತ್ಥ್ಸನಿಲ್ಲಿ ತಳುವಿದೊಡೆ ನೆರವುಂಟು ತನ | ಗೀಕಾಡೊಳುಗ್ರಜಂತುಗಳಲ್ಲಿ ರಘುನಾಥನೇಕಾಕಿಯಾಗಿರ್ಪನು ||
ಲೋಕದರಸೇಗೈದೊಡಂ ತನ್ನ ಕಿಂಕರರ್ | ಬೇಕುಬೇಡೆಂದು ಪೇಳರೆ ಭರತ ಶತ್ರುಘ್ನ | ರೀಕೆಲಸಕೊಪ್ಪಿದರೆ ಹನುಮಂತನಿರ್ದಪನೆ ಪೇಳೆಂದಳಲ್ಡಳಬಲೆ ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಏಕೆ ನಿಂದಿಹೆ ಪೋಗು ಸೌಮಿತ್ರಿ ಕೋಪಿಸನೆ ಕಾಕುತ್ಥ್ಸನು ಇಲ್ಲಿ ತಳುವಿದೊಡೆ (ತಡಮಾಡಿದರೆ);=[ಏಕೆ ನಿಂತಿರುವೆ? ಲಕ್ಷ್ಮಣ ಹೋಗು ,ಇಲ್ಲಿ ತಡಮಾಡಿದರೆ, ಅಲ್ಲಿ ಕಾಕುತ್ಥ್ಸ ರಾಮನು ಕೋಪಿಸುವುದಿಲ್ಲವೇ?]; ನೆರವುಂಟು ತನಗೆ ಈ ಕಾಡೊಳು ಅಗ್ರಜಂತುಗಳು,=[ಈ ಕಾಡಲ್ಲಿ ತನಗೆ ಉಗ್ರಜಂತುಗಳ ನೆರವುಂಟು,]; ಅಲ್ಲಿ ರಘುನಾಥನು ಏಕಾಕಿಯಾಗಿರ್ಪನು, ಲೋಕದರಸು ಏಗೈದೊಡಂ ತನ್ನ ಕಿಂಕರರ್ ಬೇಕುಬೇಡೆಂದು ಪೇಳರೆ?=[ಅಲ್ಲಿ ರಘುನಾಥನು ಏಕಾಂಗಿಯಾಗಿರುವನು, ಲೋಕದ ಅರಸು ಏನುಮಾಡಿದರೂ,ಅವನ ಸೇವಕರು ಇದು ಸರಿ ಮಾಡಬೇಕು, ಇದು ಸರಿಯಲ್ಲ ಬೇಡ, ಎಂದು ಹೇಳುವುದಿಲ್ಲವೇ?]; ಭರತ ಶತ್ರುಘ್ನರು ಈ ಕೆಲಸಕೆ ಒಪ್ಪಿದರೆ? ಹನುಮಂತನು ಇರ್ದಪನೆ? ಪೇಳು ಎಂದು ಅಳಲ್ಡಳು ಅಬಲೆ=[ಭರತ ಶತ್ರುಘ್ನರು ಈ ಕೆಲಸಕ್ಕೆ ಒಪ್ಪಿದರೆ? ಹನುಮಂತನು ಇದ್ದನೆ? ಹೇಳು ಎಂದು ಅಬಲೆ ಸೀತೆ ಅತ್ತಳು.]
  • ತಾತ್ಪರ್ಯ:'ಏಕೆ ನಿಂತಿರುವೆ? ಲಕ್ಷ್ಮಣ ಹೋಗು ,ಇಲ್ಲಿ ತಡಮಾಡಿದರೆ, ಅಲ್ಲಿ ಕಾಕುತ್ಥ್ಸ ರಾಮನು ಕೋಪಿಸುವುದಿಲ್ಲವೇ?' ಈ ಕಾಡಲ್ಲಿ ತನಗೆ ಉಗ್ರಜಂತುಗಳ ನೆರವುಂಟು. ಅಲ್ಲಿ ರಘುನಾಥನು ಏಕಾಂಗಿಯಾಗಿರುವನು, ಲೋಕದ ಅರಸು ಏನುಮಾಡಿದರೂ,ಅವನ ಸೇವಕರು ಇದು ಸರಿ ಮಾಡಬೇಕು, ಇದು ಸರಿಯಲ್ಲ ಬೇಡ, ಎಂದು ಹೇಳುವುದಿಲ್ಲವೇ? ಭರತ ಶತ್ರುಘ್ನರು ಈ ಕೆಲಸಕ್ಕೆ ಒಪ್ಪಿದರೆ? ಹನುಮಂತನು ಇದ್ದನೆ? ಹೇಳು ಎಂದು ಅಬಲೆ ಸೀತೆ ಅತ್ತಳು.
  • (ಪದ್ಯ-೨೫)

ಪದ್ಯ :-:೨೬:

[ಸಂಪಾದಿಸಿ]

ಆರಿರ್ದೊಡೇಗೈವರಿದು ತನ್ನ ಮರುಳಾಟ | ಮಾ ರಾವಣನತಮ್ಮನೈಸಲೆ ವಿಭೀಷಣಂ | ಭೀರುಗಳನರಿದಪನೆ ಸೋದರಂಗುರೆ ಮುಳಿದ ಸುಗ್ರೀವನೆಂಬವಂಗೆ ||
ಕಾರುಣ್ಯಮಿರ್ದಪುದೆ ಮತ್ತುಳಿದ ಮಂತ್ರಿಗಳ | ದಾರುಂಟು ಪೇಳುವರ್ ದೇವರಿಗೆ ನೀನೊಪ್ಪಿ | ಘೋರಾಟವಿಗೆ ಕೊಂಡುಬಂದೆ ಕಳಪುವೊಡಿನ್ನೊರಲ್ಡೊಡೇನಹುದೆಂದಳು ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆರು ಇರ್ದೊಡೆ ಏಗೈವರು ಇದು ತನ್ನ ಮರುಳಾಟಂ,=[ಯಾರು ಇದ್ದು ಏನು ಮಾಡುವರು!ಇದು ತಾನು ಕರುಣೆ ಬಯಸುವುದು ಕೇವಲ ತನ್ನ ಮರುಳಾಟವೇ ಸರಿ/ ತನ್ನ ಭ್ರಮೆ!,]; ಆ ರಾವಣನ ತಮ್ಮನು ಐಸಲೆ ವಿಭೀಷಣಂ ಭೀರುಗಳನು ಅರಿದಪನೆ ಸೋದರಂಗೆ ಉರೆ ಮುಳಿದ ಸುಗ್ರೀವನೆಂಬವಂಗೆ ಕಾರುಣ್ಯಂ ಇರ್ದಪುದೆ=[ಆ ರಾವಣನ ತಮ್ಮ ವಿಭೀಷಣನು ಎಷ್ರವನು? ಹೆಂಗಸರಭಯ ಕಷ್ಟಗಳನ್ನು ಅರಿಯಬಲ್ಲನೇ? ಸೋದರನಿಗೆ ಬಹಳಸಿಟ್ಟುಮಾಡಿದ್ದ ಸುಗ್ರೀವನೆಂಬವನಿಗೆ ಕರುಣೆ ಇರುವುದು ಸಾಧ್ಯವೇ?]; ಮತ್ತುಳಿದ ಮಂತ್ರಿಗಳು ಅದು ಆರುಂಟು ಪೇಳುವರ್ ದೇವರಿಗೆ (ರಾಮನಿಗೆ), ನೀನು ಒಪ್ಪಿ ಘೋರಾಟವಿಗೆ ಕೊಂಡುಬಂದೆ ಕಳಪುವೊಡೆ(ರಾಮನು ಕಳಿಸಲು) ಇನ್ನು ಒರಲ್ಡೊಡೆ ಏನಹುದು ಎಂದಳು=[ಮತ್ತೆ ಉಳಿದ ಮಂತ್ರಿಗಳು ಅದು ಯಾರಿದ್ದಾರೆ ರಾಮನಿಗೆ ಹೇಳುವವರು? ರಾಮನು ಕಳಿಸಲು, ನೀನು ಈ ಕ್ರೂರ ಕೆಲಸಕ್ಕೆ ಒಪ್ಪಿ ಘೋರಅಡವಿಗೆ ಗರ್ಭಿಣಿಯಾದ ನನ್ನನ್ನು ಕರೆದುಕೊಂಡು ಬಂದೆ. ಇನ್ನು ಗೋಳಾಡಿದರೆ ಏನು ಪ್ರಯೋಜನವಾಗುವುದ, ಎಂದಳು].
  • ತಾತ್ಪರ್ಯ:'ಯಾರು ಇದ್ದು ಏನು ಮಾಡುವರು! ಇದು, ತಾನು ಕರುಣೆ ಬಯಸುವುದು ಕೇವಲ ತನ್ನ ಮರುಳಾಟವೇ ಸರಿ/ ತನ್ನ ಭ್ರಮೆ!, ಆ ರಾವಣನ ತಮ್ಮ ವಿಭೀಷಣನು ಎಷ್ರವನು? ಹೆಂಗಸರ ಭಯ ಕಷ್ಟಗಳನ್ನು ಅರಿಯಬಲ್ಲನೇ? ಸೋದರನಿಗೆ ಬಹಳ ಸಿಟ್ಟುಮಾಡಿದ್ದ ಸುಗ್ರೀವನೆಂಬವನಿಗೆ ಕರುಣೆ ಇರುವುದು ಸಾಧ್ಯವೇ? ಮತ್ತೆ ಉಳಿದ ಮಂತ್ರಿಗಳು ಅದು ಯಾರಿದ್ದಾರೆ ರಾಮನಿಗೆ ಹೇಳುವವರು? ರಾಮನು ಕಳಿಸಲು, ನೀನು ಈ ಕ್ರೂರ ಕೆಲಸಕ್ಕೆ ಒಪ್ಪಿ ಘೋರಅಡವಿಗೆ ಗರ್ಭಿಣಿಯಾದ ನನ್ನನ್ನು ಕರೆದುಕೊಂಡು ಬಂದೆ. ಇನ್ನು ಗೋಳಾಡಿದರೆ ಏನು ಪ್ರಯೋಜನವಾಗುವುದು, ಎಂದಳು.
  • (ಪದ್ಯ-೨೬)

ಪದ್ಯ :-:೨೭:

[ಸಂಪಾದಿಸಿ]

ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ | ಕಡುಪಾತಕಂಗೈದು ಪೆಣ್ಣಾಗಿ ಸಂಭವಿಸಿ | ದೊಡಲಂ ಪೊರೆವುದೆನ್ನೊಳಪರಾಧಮುಂಟು ಸಾಕಿಲ್ಲಿರಲ್ಬೇಡ ನೀನು ||
ನಡೆ ಪೋಗು ನಿಲ್ಲದಿರ್ ನಿನಗೆ ಮಾರ್ಗದೊಳಾಗ | ಲಡಿಗಡಿಗೆ ಸುಖಮೆಂದು ಸೀತೆ ಕಂಬನಿಗಳಂ | ಮಿಡಿದಾರ್ತೆಯಾಗಿರಲ್ ಸೌಮಿತ್ರಿ ನುಡಿದನಾ ವಿಪಿನದಭಿಮಾನಿಗಳ್ಗೆ ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ ಕಡುಪಾತಕಂ ಗೈದು (ಪಾತಕ=ಪಾಪಕೃತ್ಯ ಗೈದು=ಮಾಡಿ) ಪೆಣ್ಣಾಗಿ ಸಂಭವಿಸಿದ ಒಡಲಂ ಪೊರೆವುದು ಎನ್ನೊಳು ಅಪರಾಧಮುಂಟು=[ಅಂತಿಮ ನಿರ್ಧಾರಕ್ಕೆ ಬಂದ ಸೀತೆ ಹೇಳಿದಳು, 'ಕರುಣಾಳುವಾದ ರಾಘವನಲ್ಲಿ ತಪ್ಪಿಲ್ಲ, ನನ್ನಲ್ಲೇ ಅಪರಾಧವಿದೆ; ಏನೆಂದರೆ ಕೆಟ್ಟ ಪಾತಕಗಳನ್ನು ಮಾಡಿ ಸದರ ಫಲವಾಗಿ ಹೆಣ್ಣಾಗಿ ಹುಟ್ಟಿ ಈ ದೇಹವನ್ನು ಪೋಶಿಸುವುದು ನನ್ನದೇ ಅಪರಾಧವಾಗಿದೆ; ನಾನು ಹೆಣ್ಣಾಗಿ ಹುಟ್ಟಿದ್ದೇ ನನ್ನ ತಪ್ಪು ಎಂದು ನಿರಾಶಾಭಾವದಲ್ಲಿ ಹೇಳುತ್ತಾಳೆ]; ಸಾಕು ಇಲ್ಲಿರಲ್ ಬೇಡ ನೀನು ನಡೆ ಪೋಗು ನಿಲ್ಲದಿರ್ ನಿನಗೆ ಮಾರ್ಗದೊಳಾಗಲಡಿಗಡಿಗೆ ಸುಖಮೆಂದು ಸೀತೆ ಕಂಬನಿಗಳಂ ಮಿಡಿದು ಆರ್ತೆಯಾಗಿರಲ್=[ಸಾಕು, ನೀನು ಇಲ್ಲಿ ಇರುವುದು ಬೇಡ, ನಡೆ ಹೋಗು ನಿಲ್ಲಬೇಡ, ನಿನಗೆ ದಾರಿಯಲ್ಲಿ,ಹೆಜ್ಜೆಹೆಜ್ಜೆಗೆ ಸುಖವಾಗಲಿ,ಎಂದು ಸೀತೆ ಕಂಬನಿತುಂಬಿ ಅಸಾಹಕಳಾಗಿರಲು,]; ಸೌಮಿತ್ರಿ ನುಡಿದನು ಆ ವಿಪಿನದ ಅಭಿಮಾನಿಗಳ್ಗೆ=[ಸೌಮಿತ್ರಿ /ಲಕ್ಷ್ಮಣ ಆ ಕಾಡಿನ ಅಭಿಮಾನಿಗಳಿಗೆ ಪ್ರಾರ್ಥಿಸಿದನು.]
  • ತಾತ್ಪರ್ಯ:'ಅಂತಿಮ ನಿರ್ಧಾರಕ್ಕೆ ಬಂದ ಸೀತೆ ಹೇಳಿದಳು, 'ಕರುಣಾಳುವಾದ ರಾಘವನಲ್ಲಿ ತಪ್ಪಿಲ್ಲ, ನನ್ನಲ್ಲೇ ಅಪರಾಧವಿದೆ; ಏನೆಂದರೆ ಕೆಟ್ಟ ಪಾತಕಗಳನ್ನು ಮಾಡಿ, ಅದರ ಫಲವಾಗಿ ಹೆಣ್ಣಾಗಿ ಹುಟ್ಟಿ ಈ ದೇಹವನ್ನು ಪೋಷಿಸುತ್ತಿದ್ದೇನಲ್ಲಾ (ಜೀವಂತ ಇದ್ದೇನಲ್ಲಾ), ನನ್ನದೇ ಅಪರಾಧವಾಗಿದೆ; ನಾನು ಹೆಣ್ಣಾಗಿ ಹುಟ್ಟಿದ್ದೇ ನನ್ನ ತಪ್ಪು ಎಂದು ನಿರಾಶಾಭಾವದಲ್ಲಿ ಹೇಳುತ್ತಾಳೆ. ಸಾಕು, ನೀನು ಇಲ್ಲಿ ಇರುವುದು ಬೇಡ, ನಡೆ ಹೋಗು ನಿಲ್ಲಬೇಡ, ನಿನಗೆ ದಾರಿಯಲ್ಲಿ,ಹೆಜ್ಜೆಹೆಜ್ಜೆಗೆ ಸುಖವಾಗಲಿ,ಎಂದು ಸೀತೆ ಕಂಬನಿತುಂಬಿ ಅಸಾಹಕಳಾಗಿರಲು, ಸೌಮಿತ್ರಿ /ಲಕ್ಷ್ಮಣ ಆ ಕಾಡಿನ ಅಭಿಮಾನಿಗಳಿಗೆ ಪ್ರಾರ್ಥಿಸಿದನು.
  • (ಪದ್ಯ-೨೭)

ಪದ್ಯ :-:೨೮:

[ಸಂಪಾದಿಸಿ]

ಎಲೆ ವನಸ್ಥಳಗಳೀರ ವೃಕ್ಷಂಗಳಿರ ಮೃಗಂ | ಗಳಿರ ಕ್ರಿಮಿಕೀಟಂಗಳಿರ ಪಕ್ಷಿಗಳಿರ ಲತೆ | ಗಳಿರ ತೃಣಗುಲ್ಮಂಗಳಿರ ಪಂಚಭೂತಂಗಳಿರ ದೆಸೆಗಳಿರ ಕಾವುದು ||
ಎಲೆ ಧರ್ಮದೇವತೆ ಜಗಜ್ಜನನಿ ಜಾಹ್ನವಿಯೆ | ಸಲಹಿಕೊಳ್ವುದು ತನ್ನ ಮಾತೆಯಂ ಜಾನಕಿಯ | ನೆಲೆತಾಯೆ ಭೂದೇವಿ ನಿನ್ನ ಮಗಳಿಹಳೆಂದು ಸೌಮಿತ್ರಿ ಕೈಮುಗಿದನು ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಲೆ ವನಸ್ಥಳಗಳೀರ ವೃಕ್ಷಂಗಳಿರ ಮೃಗಂಗಳಿರ ಕ್ರಿಮಿಕೀಟಂಗಳಿರ ಪಕ್ಷಿಗಳಿರ ಲತೆಗಳಿರ ತೃಣಗುಲ್ಮಂಗಳಿರ (ತೃಣಗುಲ್ಮ/ ಹುಲ್ಲು-ಪೊದೆ) ಪಂಚಭೂತಂಗಳಿರ ದೆಸೆಗಳಿರ ಕಾವುದು=[ಎಲೆ ವನಸ್ಥಳಗಳೇ, ವೃಕ್ಷಂಗಳೇ, ಮೃಗಗಳೇ, ಕ್ರಿಮಿಕೀಟಗಳೇ, ಪಕ್ಷಿಗಳೇ, ಬಳ್ಳಿಗಳೇ,ಹುಲ್ಲು-ಪೊದೆಗಳೇ, ಪಂಚಭೂತಗಳೇ, ದಿಕ್ಕುಗಳೇ ಈ ಸೀತೆಯನ್ನು ಕಾಯಬೇಕು!]; ಎಲೆ ಧರ್ಮದೇವತೆ ಜಗಜ್ಜನನಿ ಜಾಹ್ನವಿಯೆ ಸಲಹಿಕೊಳ್ವುದು ತನ್ನ ಮಾತೆಯಂ ಜಾನಕಿಯ ನೆಲೆತಾಯೆ ಭೂದೇವಿ ನಿನ್ನ ಮಗಳಿಹಳೆಂದು ಸೌವಿತ್ರಿ ಕೈಮುಗಿದನು=[ಎಲೆ ಧರ್ಮದೇವತೆ ಜಗಜ್ಜನನಿಯಾದ ಜಾಹ್ನವಿಯೆ/ ಗಂಗೆಯೇ, ಸಲಹಬೇಕು ತನ್ನ ಮಾತೆಯಾದ ಜಾನಕಿಯನ್ನು, ಎಲೆತಾಯೆ ಭೂದೇವಿಯೇ, ಇವಳು ನಿನ್ನ ಮಗಳಾಗಿರುವಳೆಂದು ಕಾಪಾಡಬೇಕು, ಎಂದು ಸೌಮಿತ್ರಿ ಕೈಮುಗಿದನು].
  • ತಾತ್ಪರ್ಯ:'ಲಕ್ಷ್ಮಣನು ಸೀತೆಗಾಗಿ ಪ್ರಾರ್ಥಿಸುತ್ತಾನೆ; ಎಲೆ ವನಸ್ಥಳಗಳೇ, ವೃಕ್ಷಂಗಳೇ, ಮೃಗಗಳೇ, ಕ್ರಿಮಿಕೀಟಗಳೇ, ಪಕ್ಷಿಗಳೇ, ಬಳ್ಳಿಗಳೇ,ಹುಲ್ಲು-ಪೊದೆಗಳೇ, ಪಂಚಭೂತಗಳೇ, ದಿಕ್ಕುಗಳೇ ಈ ಸೀತೆಯನ್ನು ಕಾಯಬೇಕು! ಎಲೆ ಧರ್ಮದೇವತೆ ಜಗಜ್ಜನನಿಯಾದ ಜಾಹ್ನವಿಯೆ/ ಗಂಗೆಯೇ,ತನ್ನ ಮಾತೆಯಾದ ಜಾನಕಿಯನ್ನು ಸಲಹಬೇಕು, ಎಲೆ ತಾಯೆ ಭೂದೇವಿಯೇ ಇವಳು ನಿನ್ನ ಮಗಳಾಗಿರುವಳೆಂದು ಕಾಪಾಡಬೇಕು,ಎಂದು ಸೌಮಿತ್ರಿ/ ಲಕ್ಷ್ಮಣನು ಕೈಮುಗಿದನು.
  • (ಪದ್ಯ-೨೮)

ಪದ್ಯ :-:೨೯:

[ಸಂಪಾದಿಸಿ]

ಮಾಳ್ಕೆಯಿನ್ನಾವುದಿಬ್ಬಗಿಯಾಗಿ ತನ್ನೊಡಲ | ಸೀಳ್ಕೆಡಹಬೇಡವೆ ಧರಿತ್ರಿಯೊಳ್ ನಿಷ್ಠುರದ | ಬಾಳ್ಕೆಯಂ ಸುಡಲೆನುತೆ ದೇವಿಯಂ ಬಲವಂದು ಲಕ್ಷ್ಮಣಂ ನಮಿಸಿ ಬಳಿಕ ||
ಬೀಳ್ಕೊಂಡು ನಡೆಯಲ್ಕೆ ಹಿಂದುಹಿಂದಕೆ ಮನಂ | ನೀಳ್ಕೊ(ಳ್ಕು)ಳಿಗೊಳಲ್ಕೆಂದುಮಗಲದಣ್ಣನ ಕಡೆಗೆ | ದೂಳ್ಕಾಯದೊಳ್ ಪತ್ತಿ ಪೊರಳ್ವ ಸೀತೆಯ ಕಡೆಗೆ ತೂಗುಯ್ಯಲೆವೊಲಾದನು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಾಳ್ಕೆ (ಕರ್ತವ್ಯ) ಯಿನ್ನಾವುದು ಇಬ್ಬಗಿಯಾಗಿ ತನ್ನೊಡಲ ಸೀಳಿ ಕೆಡಹಬೇಡವೆ ಧರಿತ್ರಿಯೊಳ್ ನಿಷ್ಠುರದ ಬಾಳ್ಕೆಯಂ ಸುಡಲಿ ಎನುತೆ=[ಇನ್ನು ಯಾವುದು ಕರ್ತವ್ಯ? ಅದು ಎರಡಬಗೆತಾಯಿತು; ಸರಿ ಯಾವುದೆಂದು ತಿಳಿಯದಾಗಿ, ತನ್ನ ದೇಹವು ಸೀಳಿ ಕೆಡಗಿ ಕಳಕ್ಕೆ ಭೂಮಿಯಲ್ಲಿ ಬೀಳಬಾರದೇ! ನಿಷ್ಠುರದ ಬಾಳುವೆಯನ್ನು ಸುಡಲಿ ಎನ್ನುತ್ತಾ]; ದೇವಿಯಂ ಬಲವಂದು ಲಕ್ಷ್ಮಣಂ ನಮಿಸಿ ಬಳಿಕ ಬೀಳ್ಕೊಂಡು ನಡೆಯಲ್ಕೆ ಹಿಂದುಹಿಂದಕೆ ಮನಂ ನೀಳ್‍ಕೊಳಿಗೊಳುಲ್ಕೆ (ನೀಳ್ಕೊಳು=ಅಲೆದಾಡಲು-ಸಿರಿಗನ್ನಡ ಅರ್ಥಕೊಶ))=[ಲಕ್ಷ್ಮಣನು ಸೀತಾದೇವಿಯನ್ನು ಪ್ರದಕ್ಷಿಣೆ ಮಾಡಿ ಅವಳಿಗೆ ನಮಿಸಿ ಬಳಿಕ ಬೀಳ್ಕೊಂಡು ನಡೆಯಲು, ಹಿಂದುಹಿಂದಕ್ಕೆ ಮನಸ್ಸು ಅಲೆದಾಡಲು]; ಎಂದುಂ ಅಗಲದ ಅಣ್ಣನ ಕಡೆಗೆ ದೂಳ್ ಕಾಯದೊಳ್ ಪತ್ತಿ ಪೊರಳ್ವ ಸೀತೆಯ ಕಡೆಗೆ ತೂಗುಯ್ಯಲೆವೊಲಾದನು=[ಎಂದೂ ತಾನು ಅಗಲಿರದ ಅಣ್ಣನ ಕಡೆಗೆ ಒಮ್ಮೆ, ಮತ್ತೆ ದೂಳು ದೇಹಕ್ಕೆ ಹತ್ತಿ ಹೊರಳುವ ಸೀತೆಯ ಕಡೆಗೆ ಮನಸ್ಸು ಎಳೆದು ತೂಗುಯ್ಯಾಲೆಯಂತೆ ಆದನು.]
  • ತಾತ್ಪರ್ಯ: ಇನ್ನು ಯಾವುದು ಕರ್ತವ್ಯ? ಅದು ಎರಡ ಬಗೆಯಾಯಿತು-ಸೀತೆಯ ರಕ್ಷಣೆ, ರಾಮನ ಸನ್ನಿಧಿಗೆ ತೆರಳುವುದು; ಸರಿ ಯಾವುದೆಂದು ತಿಳಿಯದಾಗಿ, ತನ್ನ ದೇಹವು ಸೀಳಿ ಕಳಕ್ಕೆ ಕೆಡಗಿ ಭೂಮಿಯಲ್ಲಿ ಬೀಳಬಾರದೇ! ನಿಷ್ಠುರದ ಬಾಳುವೆಯನ್ನು ಸುಡಲಿ ಎನ್ನುತ್ತಾ; ಲಕ್ಷ್ಮಣನು ಸೀತಾದೇವಿಯನ್ನು ಪ್ರದಕ್ಷಿಣೆ ಮಾಡಿ ಅವಳಿಗೆ ನಮಿಸಿ ಬಳಿಕ ಬೀಳ್ಕೊಂಡು ನಡೆಯಲು, ಹಿಂದುಹಿಂದಕ್ಕೆ ಮನಸ್ಸು ಅಲೆದಾಡಲು, ಎಂದೂ ತಾನು ಅಗಲಿರದ ಅಣ್ಣನ ಕಡೆಗೆ ಒಮ್ಮೆ, ಮತ್ತೆ ದೂಳು ದೇಹಕ್ಕೆ ಹತ್ತಿ ಹೊರಳುವ ಸೀತೆಯ ಕಡೆಗೆ ಒಮ್ಮೆ ಮನಸ್ಸು ಎಳೆದು ತೂಗುಯ್ಯಾಲೆಯಂತೆ ಆದನು.
  • (ಪದ್ಯ-೨೯)

ಪದ್ಯ :-೩೦:

[ಸಂಪಾದಿಸಿ]

ನಡೆಗೊಳಲ್ ಕಂಡು ಬಾಯಾರ್ವಳಂ ಚೀವಳಂ | ಕಡಲಿಡುವ ಕಂಬನಿಯೊಳಾಳ್ವಳಂ ಬೀಳ್ವಳಂ | ಪುಡಿಯೊಳ್ ಪೊರಳ್ದು ಬಸವಳಿವಳಂ ಸುಳಿವಳಂ ಭರತಾವರಜನಗಲ್ದು ||
ಅಡಿಗಡಿಗೆ ತಿರುತಿರುಗಿ ನೋಡುವಂ ಬಾಡುವಂ | ಬಿಡದೆ ಬಿಸುಸುಯ್ದು ಬೆಂಡಾದಪಂ ಪೋದಪಂ | ಪೊಡೆಮರಳ್ವಂ ನಿಲ್ವನಳಲುವಂ ಬಳಲುವಂ ಬಟ್ಟೆಯೊಳ್ ದಿಟ್ಟಿಗೆಟ್ಟು ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಡೆಗೊಳಲ್ ಕಂಡು ಬಾಯಾರ್ವಳಂ ಚೀರ್ವಳಂ ಕಡಲಿಡುವ ಕಂಬನಿಯೊಳು ಆಳ್ವಳಂ ಬೀಳ್ವಳಂ ಪುಡಿಯೊಳ್ ಪೊರಳ್ದು ಬಸವಳಿವಳಂ ಸುಳಿವಳಂ ಭರತ ಆವರಜನು ಅಗಲ್ದು=[ಲಕ್ಷ್ಮಣನು ಮುಂದೆ ನಡೆಯಲು, ಬಾಯಾರುವವಳನ್ನು, ಚೀರುವವಳನ್ನು, ಕಡಲಿನಂತೆ ಇರುವ ಕಣ್ಣೀರಿನಲ್ಲಿ ಓಲಾಡುವವಳನ್ನು, ಬೀಳುವವಳನ್ನು, ಧೂಳಿನಲ್ಲಿ ಹೊರಳಿ ಬಸವಳಿಯುವವಳನ್ನು, ನಡೆದಾಡುವ ಸೀತೆಯನ್ನು ಕಂಡು ಭರತನ ತಮ್ಮ ಲಕ್ಷ್ಮಣನು ಅಗಲಿ/ ಬಿಟ್ಟುಹೋಗುವಾಗ]; ಅಡಿಗಡಿಗೆ ತಿರುತಿರುಗಿ ನೋಡುವಂ ಬಾಡುವಂ ಬಿಡದೆ ಬಿಸುಸುಯ್ದು ಬೆಡಾದಪಂ ಪೋದಪಂ ಪೊಡೆಮರಳ್ವಂ ನಿಲ್ವನು ಅಳಲುವಂ ನಿಳಲುವಂ ಬಟ್ಟೆಯೊಳ್ (ಬಟ್ಟೆ=ದಾರಿ) ದಿಟ್ಟಿಗೆಟ್ಟು (ದಿಟ್ಟೆ=ದೈರ್ಯ)=[ಪದೇಪದೇ ತಿರುತಿರುಗಿ ನೋಡುವನು; ಬಾಡುವನು, ಒಂದೇಸಮ ಬಿಸುಸುಯ್ದು ಬೆಂಡಾಗುವನು/ ಶಕ್ತಿಗುಂದುವನು, ಮತ್ತೆ ಹೋಗುವನು, ತಿರುಗಿಮರಳುವನು, ನಿಲ್ಲುವನು, ಅಳುವನು, ದಾರಿಯಲ್ಲಿ ಧೈರ್ಯಗೆಟ್ಟು ನಿಲ್ಲುವನು.]
  • ತಾತ್ಪರ್ಯ:ಲಕ್ಷ್ಮಣನು ಮುಂದೆ ನಡೆಯಲು, ಬಾಯಾರುವವಳನ್ನು, ಚೀರುವವಳನ್ನು, ಕಡಲಿನಂತೆ ಇರುವ ಕಣ್ಣೀರಿನಲ್ಲಿ ಓಲಾಡುವವಳನ್ನು, ಬೀಳುವವಳನ್ನು, ಧೂಳಿನಲ್ಲಿ ಹೊರಳಿ ಬಸವಳಿಯುವವಳನ್ನು, ನಡೆದಾಡುವ ಸೀತೆಯನ್ನು, ಕಂಡು, ಭರತನ ತಮ್ಮ ಲಕ್ಷ್ಮಣನು ಅಗಲಿ/ ಬಿಟ್ಟುಹೋಗುವಾಗ ಪದೇಪದೇ ತಿರುತಿರುಗಿ ನೋಡುವನು; ಬಾಡುವನು, ಒಂದೇಸಮ ಬಿಸುಸುಯ್ದು ಬೆಂಡಾಗುವನು/ ಶಕ್ತಿಗುಂದುವನು, ಮತ್ತೆ ಹೋಗುವನು, ತಿರುಗಿಮರಳುವನು, ನಿಲ್ಲುವನು, ಅಳುವನು, ದಾರಿಯಲ್ಲಿ ಧೈರ್ಯಗೆಟ್ಟು ನಿಲ್ಲುವನು.
  • (ಪದ್ಯ-೩೦)

ಪದ್ಯ :-೩೧:

[ಸಂಪಾದಿಸಿ]

ತಾಯನೆಳೆಗರು ಬಿಚ್ಚುವಂತೊಯ್ಯನೊಯ್ಯನ | ತ್ಯಾಯಾಸದಿಂದಗಲ್ದಮರನದಿಯಂ ದಾಂಟಿ | ರಾಯಕೇಳ್ ದುಃಖಾರ್ತನಾಗಿ ಸೌಮಿತ್ರಿ ಸಾಗಿದನತ್ತಲಿವಳಿತ್ತಲು ||
ಬಾಯಾರಿ ಕಂಗೆಟ್ಟು ಲಕ್ಷ್ಮಣನ ತಲೆ ಮಸುಳ | ಲಾಯೆಂದೊರಲ್ದು ಭಯಶೋಕದಿಂದಸವಳಿದು | ಕಾಯಮಂ ಮರೆದವನಿಗೊರಗಿದಳ್ *ಬೇರ್ಗೊಯ್ದುಬಿಸುಟೆಳೆಯ ಬಳ್ಳಿಯಂತೆ ||31||(*ಮೂಲಮಂಕೊಯ್ದೆಳೆಯ ಬಳ್ಳಿಯಂತೆ)

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಾಯನು ಎಳೆಗರು ಬಿಚ್ಚುವಂತ ಒಯ್ಯನೊಯ್ಯನೆ ಅತ್ಯಾಯಾಸದಿಂದ ಅಗಲ್ದು ಅಮರ ನದಿಯಂ ದಾಂಟಿ ರಾಯಕೇಳ್ ದುಃಖಾರ್ತನಾಗಿ ಸೌಮಿತ್ರಿ ಸಾಗಿದನು ಅತ್ತಲು,=[ರಾಯನೇ ಕೇಳು, ತಾಯಿಹಸುವಿನಿಂದ ಎಳೆಗರುವು ಅಗಲಿದಂತೆ ಮೆಲ್ಲಮೆಲ್ಲನೆ ಅತಿ ಆಯಾಸದಿಂದ ಸೀತೆಯನ್ನು ಬಿಟ್ಟು, ಗಂಗಾ ನದಿಯನ್ನು ದಾಟಿ ದುಃಖಾರ್ತನಾಗಿ ಸೌಮಿತ್ರಿ ಅತ್ತ ಹೊರಟುಹೋದನು.,]; ಇವಳು ಇತ್ತಲು ಬಾಯಾರಿ ಕಂಗೆಟ್ಟು ಲಕ್ಷ್ಮಣನ ತಲೆ ಮರಸುಳಲು ಆ ಯೆಂದು ಒರಲ್ದು ಭಯಶೋಕದಿಂದ ಅಸವಳಿದು ಕಾಯಮಂ ಮರೆದು ಅವನಿಗೆ ಒರಗಿದಳ್ ಬೇರ್ ಕೊಯ್ದು ಬಿಸುಟ ಎಳೆಯ ಬಳ್ಳಿಯಂತೆ=[ಇವಳು ಇತ್ತ ಬಾಯಾರಿ ಕಂಗೆಟ್ಟು ಲಕ್ಷ್ಮಣನ ತಲೆ ಮರೆಯಾಗಲು, ಆ! ಎಂದು ಚೀರಿ ಭಯಶೋಕದಿಂದ ಶಕ್ತಿಗುಂದಿ ದೇಹದ ಪರಿವೆಯನ್ನು ಮರೆತಳು/ ಎಚ್ಚರತಪ್ಪಿ ನೆಲದಮೇಲೆ ಬಿದ್ದಳು; ಅದು ಬೇರು ಕತ್ತರಿಸಿ ಎಸೆದ ಎಳೆಯ ಬಳ್ಳಿಯಂತೆ ಕಾಣುತ್ತಿತ್ತು.]
  • ತಾತ್ಪರ್ಯ:ರಾಯನೇ ಕೇಳು, ತಾಯಿಹಸುವಿನಿಂದ ಎಳೆಗರುವು ಅಗಲಿದಂತೆ ಮೆಲ್ಲಮೆಲ್ಲನೆ ಅತಿ ಆಯಾಸದಿಂದ ಸೀತೆಯನ್ನು ಬಿಟ್ಟು, ಗಂಗಾ ನದಿಯನ್ನು ದಾಟಿ ದುಃಖಾರ್ತನಾಗಿ ಸೌಮಿತ್ರಿ ಅತ್ತ ಹೊರಟುಹೋದನು. ಇವಳು ಇತ್ತ ಬಾಯಾರಿ ಕಂಗೆಟ್ಟು ಲಕ್ಷ್ಮಣನ ತಲೆ ಮರೆಯಾಗಲು, ಆ! ಎಂದು ಚೀರಿ ಭಯಶೋಕದಿಂದ ಶಕ್ತಿಗುಂದಿ ದೇಹದ ಪರಿವೆಯನ್ನು ಮರೆತಳು/ ಎಚ್ಚರತಪ್ಪಿ ನೆಲದಮೇಲೆ ಬಿದ್ದಳು; ಅದು ಬೇರು ಕತ್ತರಿಸಿ ಎಸೆದ ಎಳೆಯ ಬಳ್ಳಿಯಂತೆ ಕಾಣುತ್ತಿತ್ತು.
  • (ಪದ್ಯ-೩೧)

ಪದ್ಯ :-೩೨:

[ಸಂಪಾದಿಸಿ]

ಅರಸ ಕೇಳಲ್ಲಿರ್ದ ಪಕ್ಷಿ ಮೃಗ ಜಂತುಗಳ್ | ಧರಣಿಸುತೆಯಂ ಬಳಸಿ ನಿಂದು ಮೈಯುಡಗಿ ಜೋ | ಲ್ದಿರದೆ ಕಂಬನಿಗರೆದು ನಿಜವೈರಮಂ ಮರೆದು ಪುಲ್ಮೇವುಗಳನೆ ತೊರೆದು ||
ಕೊರಗುತಿರ್ದುವು ಕೂಡೆ ವೃಕ್ಷಲತೆಗಳ್ ಬಾಡಿ | ಸೊರಗುತಿರ್ದುವು ಶೋಕಭಾರದಿಂ ಕಲ್ಗಳುಂ | ಕರಗುತಿರ್ದುವು ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರಸ ಕೇಳು ಅಲ್ಲಿರ್ದ ಪಕ್ಷಿ ಮೃಗ ಜಂತುಗಳ್ ಧರಣಿಸುತೆಯಂ ಬಳಸಿ ನಿಂದು ಮೈಯ್ ಉಡಗಿ ಜೋಲ್ದು ಇರದೆ (ಜೋಲಾಡದೆ-ಅಲುಗಾಡದೆ)ಕಂಬನಿಗರೆದು ನಿಜವೈರಮಂ ಮರೆದು ಪುಲ್ಮೇವುಗಳನೆ (ಪುಲ್ ಮೇವುಗಳನ್ನು) ತೊರೆದು(ಸೇವಿಸದೆ), ಕೊರಗುತಿರ್ದುವು=[ಜನಮೇಜಯ ಅರಸನೇ ಕೇಳು, ಅಲ್ಲಿದ್ದ ಪಕ್ಷಿ, ಮೃಗ, ಜೀವಜಂತುಗಳು ಸೀತೆಯನ್ನು ಸುತ್ತುವರಿದು ನಿಂತು, ಮೈಕುಗ್ಗಿಸಿಕೊಂಡು ಅಲುಗಾಡದೆ ಕಣ್ಣೀರುಸುರಿಸಿ, ತಮ್ಮಜಾತಿವೃವನ್ನು ಮರೆತು, ಮೇವುಗಳನ್ನು ಸೇವಿಸದೆ, ಕೊರಗುತ್ತಿದ್ದವು]; ಕೂಡೆ ವೃಕ್ಷಲತೆಗಳ್ ಬಾಡಿ ಸೊರಗುತಿರ್ದುವು ಶೋಕಭಾರದಿಂ ಕಲ್ಗಳುಂ ಕರಗುತಿರ್ದುವು ಜಗದೊಳು ಉತ್ತಮರ ಹಾನಿಯಂ ಕಂಡು ಸೈರಿಸುವರುಂಟೆ=[ಜೊತೆಗೆ ಮರಬಳ್ಳಿಗಳೂ ಶೋಕಭಾರದಿಂದ ಬಾಡಿ ಸೊರಗುತ್ತಿದ್ದವು; ಕಲ್ಲುಗಳು ಕರಗುತ್ತಿದ್ದವು. ಜಗತ್ತಿನಲ್ಲಿ ಉತ್ತಮರಿಗೆ ಆದ ಹಾನಿಯನ್ನು ಕಂಡು ಸೈರಿಸುವವರು ಯಾರಿದ್ದಾರೆ? ಯಾರೂ ಇಲ್ಲ!].
  • ತಾತ್ಪರ್ಯ:ಜನಮೇಜಯ ಅರಸನೇ ಕೇಳು, ಅಲ್ಲಿದ್ದ ಪಕ್ಷಿ, ಮೃಗ, ಜೀವಜಂತುಗಳು ಸೀತೆಯನ್ನು ಸುತ್ತುವರಿದು ನಿಂತು, ಮೈಕುಗ್ಗಿಸಿಕೊಂಡು ಅಲುಗಾಡದೆ ಕಣ್ಣೀರುಸುರಿಸಿ, ತಮ್ಮಜಾತಿವೃವನ್ನು ಮರೆತು, ಮೇವುಗಳನ್ನು ಸೇವಿಸದೆ, ಕೊರಗುತ್ತಿದ್ದವು; ಜೊತೆಗೆ ಮರಬಳ್ಳಿಗಳೂ ಶೋಕಭಾರದಿಂದ ಬಾಡಿ ಸೊರಗುತ್ತಿದ್ದವು; ಕಲ್ಲುಗಳು ಕರಗುತ್ತಿದ್ದವು. ಜಗತ್ತಿನಲ್ಲಿ ಉತ್ತಮರಿಗೆ ಆದ ಹಾನಿಯನ್ನು ಕಂಡು ಸೈರಿಸುವವರು ಯಾರಿದ್ದಾರೆ? ಯಾರೂ ಇಲ್ಲ!.
  • (ಪದ್ಯ-೩೨)

ಪದ್ಯ :-೩೩:

[ಸಂಪಾದಿಸಿ]

ಮೊರೆಯಲೊಲ್ಲವು ತುಂಬಿ ಕುಣಿಯಲೊಲ್ಲವು ನವಿಲ್ | ಬೆರೆಯಲೊಲ್ಲವು ಕೋಕಿ ನಡೆಯಲೊಲ್ಲವು ಹಂಸೆ | ಕರೆಯಲೊಲ್ಲವು ಪಿಕಂ ನುಡಿಯಲೊಲ್ಲವು ಶುಕಂ ನಲಿಯಲೊಲ್ಲವು ಚಕೋರಿ ||
ನೆರೆಯಲೊಲ್ಲವು ಹರಿಣಿಯೊರೆಯಲೊಲ್ಲವು ಕರಿಣಿ | ಪೊರೆಯಲೊಲ್ಲವು ಚಮರಿ ಮೆರೆಯಲೊಲ್ಲವು ಸಿಂಗ | ಮರರೆ ಜಾನಕಿಯ ಶೋಕಂ ತಮ್ಮದೆಂದಾಕೆಯಂಗಮಂ ನೋಡಿನೋಡಿ ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೊರೆಯಲೊಲ್ಲವು ತುಂಬಿ ಕುಣಿಯಲೊಲ್ಲವು ನವಿಲ್ ಬೆರೆಯಲೊಲ್ಲವು ಕೋಕಿ ನಡೆಯಲೊಲ್ಲವು ಹಂಸೆ ಕರೆಯಲೊಲ್ಲವು ಪಿಕಂ ನುಡಿಯಲೊಲ್ಲವು ಶುಕಂ ನಲಿಯಲೊಲ್ಲವು ಚಕೋರಿ=[ ತುಂಬಿಗಳು/ಜೇನು ಹಾರಿ ಝೇಂಕರಿಸಿ ಸದ್ದುಮಾಡಲಿಲ್ಲ; ನವಿಲುಗಳು ಕುಣಿಯಲ ನಿರಾಕರಿಸಿದವು; ಕೋಕಿಪಕ್ಷಿಗಳು ದಃಖದಿಂದ ಬೆರೆಯಲು ಇಷ್ಟಪಡಲಿಲ್ಲ; ಹಂಸಗಳು ನಡೆಯಲು ಇಷ್ಟಪಡಲಿಲ್ಲ; ಕೋಗಿಲೆ ಕರೆದು ಕೂಗಲು ಇಷ್ಟಪಡಲಿಲ್ಲ; ಗಿಳಿಗಳು ನುಡಿಯಲು ಇಷ್ಟಪಡಲಿಲ್ಲ; ಚಕೋರಪಕ್ಷಿಗಳು ನಲಿಯಲು ಇಷ್ಟಪಡಲಿಲ್ಲ;]; ನೆರೆಯಲೊಲ್ಲವು ಹರಿಣಿಯೊರೆಯಲೊಲ್ಲವು ಕರಿಣಿ ಪೊರೆಯಲೊಲ್ಲವು ಚಮರಿ ಮೆರೆಯಲೊಲ್ಲವು ಸಿಂಗ ಮರರೆ ಜಾನಕಿಯ ಶೋಕಂ ತಮ್ಮದೆಂದಾಕೆಯಂಗಮಂ ನೋಡಿನೋಡಿ=[ಹರಿಣಿ/ ಜಿಂಕೆಗಳು ಸೇರಲು ಇಷ್ಟಪಡಲಿಲ್ಲ; ಕರಿಣಿ /ಹೆಣ್ಣಾನೆಗಳು ಯೊರೆ/ಪೊರೆ/ ಸ್ವಂತಪೋಷಣೆಗೆ ಇಷ್ಟಪಡಲಿಲ್ಲ; ಚಮರಿಮೃಗಗಳೂ ಪೊರೆಯಲು ಇಷ್ಟಪಡಲಿಲ್ಲ; ಸಿಂಹಗಳು ಮೆರೆಯಲು/ ಸಿಂಹ ಸಂತಸಪಡಲು ಇಷ್ಟಪಡಲಿಲ್ಲ; ಅರರೆ! ಆಶ್ಚರ್ಯ! ಜಾನಕಿಯ ಶೋಕವು ತಮ್ಮದೆಂದು ಆಕೆಯ ಅಂಗವನ್ನು ಒಂದೇ ಸಮನೆ ನೋಡಿ.] ಪ್ರತಿಯೊಂದು ಪ್ರಾಣಿಯ ಒಂದೊಂದು ಅಂಗಗಳು ಅವಳ ಯವುದಾದರೂ ಒಂದು ಅಂಗಕ್ಕೆ ಹೋಲುತ್ತಿತ್ತು. (ಉತ್ಪ್ರೇಕ್ಷೆಯ ಅಲಂಕಾರ)
  • ತಾತ್ಪರ್ಯ:ತುಂಬಿಗಳು/ಜೇನು ಹಾರಿ ಝೇಂಕರಿಸಿ ಸದ್ದುಮಾಡಲಿಲ್ಲ; ನವಿಲುಗಳು ಕುಣಿಯಲ ನಿರಾಕರಿಸಿದವು; ಕೋಕಿಪಕ್ಷಿಗಳು ದಃಖದಿಂದ ಬೆರೆಯಲು ಇಷ್ಟಪಡಲಿಲ್ಲ; ಹಂಸಗಳು ನಡೆಯಲು ಇಷ್ಟಪಡಲಿಲ್ಲ; ಕೋಗಿಲೆ ಕರೆದು ಕೂಗಲು ಇಷ್ಟಪಡಲಿಲ್ಲ; ಗಿಳಿಗಳು ನುಡಿಯಲು ಇಷ್ಟಪಡಲಿಲ್ಲ; ಚಕೋರಪಕ್ಷಿಗಳು ನಲಿಯಲು ಇಷ್ಟಪಡಲಿಲ್ಲ; ಜಿಂಕೆಗಳು ಸೇರಲು ಇಷ್ಟಪಡಲಿಲ್ಲ; ಹೆಣ್ಣಾನೆಗಳು ಸ್ವಂತಪೋಷಣೆಗೆ ಇಷ್ಟಪಡಲಿಲ್ಲ; ಚಮರಿಮೃಗಗಳೂ ಪೊರೆಯಲು ಇಷ್ಟಪಡಲಿಲ್ಲ; ಸಿಂಹಗಳು ಮೆರೆಯಲು/ ಸಿಂಹ ಸಂತಸಪಡಲು ಇಷ್ಟಪಡಲಿಲ್ಲ; ಅರರೆ! ಆಶ್ಚರ್ಯ! ಆಕೆಯ ಅಂಗವನ್ನು ಒಂದೇ ಸಮನೆ ನೋಡಿ ಹೋಲಿಕೆಯಿಂದ ಜಾನಕಿಯ ಶೋಕವು ತಮ್ಮದೆಂದು ಭಾವಿಸಿದವು. ಪ್ರತಿಯೊಂದು ಪ್ರಾಣಿಯ ಒಂದೊಂದು ಅಂಗಗಳು ಅವಳ ಯವುದಾದರೂ ಒಂದು ಅಂಗಕ್ಕೆ ಹೋಲುತ್ತಿತ್ತು. (ಉತ್ಪ್ರೇಕ್ಷೆಯ ಅಲಂಕಾರ)
  • (ಪದ್ಯ-೩೩)

ಪದ್ಯ :-೩೪:

[ಸಂಪಾದಿಸಿ]

ಬೀಸಿದುವು ಬಾಲದೊಳ್ ಚಮರಿಗಳ್ ಚವರಮಂ | ಪಾಸಿದುವು ಕರಿಗಳೆಳೆದಳಿರ ಮೃದುತಲ್ಪಮಂ | ಸೂಸಿದುವು ಸಾರಸಂಗಳ್ ತಮ್ಮ ಗರಿಗಳಂ ತೋದು ತಂದಂಬುಗಳನು ||
ಆ ಸಿರಿಮೊಗಕ್ಕೆ ಬಿಸಿಲಾಗದಂತಾಗಸದೊ | ಳೋಸರಿಸದಂಚೆಗಳರಂಕೆಯನಗಲ್ಚಿನೆಳ | ಲಾಸೆಗೈದುವು ರಾಘವನ ರಾಣಿ ದುಃಖಸಂತಪ್ತೆಯಾಗಿರುತಿರಲ್ಕೆ ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಘವನ ರಾಣಿ ದುಃಖಸಂತಪ್ತೆಯಾಗಿ ಇರುತ್ತಿರುವಾಗ, ಬೀಸಿದುವು ಬಾಲದೊಳ್ ಚಮರಿಗಳ್ ಚವರಮಂ, ಪಾಸಿದುವು ಕರಿಗಳು (ಆನೆ)ಎಳೆ ತಳಿರ ಮೃದುತಲ್ಪಮಂ, ಸೂಸಿದುವು ಸಾರಸಂಗಳ್ ತಮ್ಮ ಗರಿಗಳಂ ತೋದು ತಂದು ಅಂಬುಗಳನು (ನೀರು),=[ ಬಾಲದಲ್ಲಿ (ಚಾಮರ)ಚಮರಿಗಳನ್ನು ಬೀಸಿದುವು; ಆನೆಗಳು ಎಳೆಚಿಗುರುಎಲ್ಲಯ ಹಾಸಿಗೆ ಹಾಸಿದವು; ಸಾರಸ ಪಕ್ಷಿಗಳು ತಮ್ಮ ಗರಿಗಳನ್ನು ತೋಯಿಸಿ ತಂದು ನೀರನ್ನು ಚಿಮಿಕಿಸಿದುವು ,]; ಆ ಸಿರಿಮೊಗಕ್ಕೆ ಬಿಸಿಲಾಗದಂತೆ ಆಗಸದೊಳು ಓಸರಿಸದ (ಸರಿಯದ) ಅಂಚೆಗಳು ರಂಕೆಯನು ಅಗಲ್ಚಿ ನೆಳಲಾಸೆ ಗೈದುವು ರಾಘವನ ರಾಣಿ ದುಃಖಸಂತಪ್ತೆಯಾಗಿ ಇರುತಿರಲ್ಕೆ=[ಸೀತೆಯ ಆ ಸುಂದರ ಹಂಸಗಳು ಮುಖಕ್ಕೆ ಬಿಸಿಲಾಗದಂತೆ ಆಕಾಶದಲ್ಲಿ ಹಾರಿಸರಿಯದೆ ಒಂದೇಕಡೆ ನಿಂತು ರಕ್ಕೆಯನ್ನು ಅಗಲಿಸಿ ನೆಳಲ ಹಾಸೆಮಾಡಿದವು].
  • ತಾತ್ಪರ್ಯ:ರಾಘವನ ರಾಣಿ ದುಃಖಸಂತಪ್ತೆಯಾಗಿ ಇರುತ್ತಿರುವಾಗ, ಬಾಲದಲ್ಲಿ (ಚಾಮರ)ಚಮರಿಗಳನ್ನು ಬೀಸಿದುವು; ಆನೆಗಳು ಎಳೆಚಿಗುರುಎಲ್ಲಯ ಹಾಸಿಗೆ ಹಾಸಿದವು; ಸಾರಸ ಪಕ್ಷಿಗಳು ತಮ್ಮ ಗರಿಗಳನ್ನು ತೋಯಿಸಿ ತಂದು ನೀರನ್ನು ಚಿಮಿಕಿಸಿದುವು, ಸೀತೆಯ ಆ ಸುಂದರ ಹಂಸಗಳು ಮುಖಕ್ಕೆ ಬಿಸಿಲಾಗದಂತೆ ಆಕಾಶದಲ್ಲಿ ಹಾರಿಸರಿಯದೆ ಒಂದೇಕಡೆ ನಿಂತು ರಕ್ಕೆಯನ್ನು ಅಗಲಿಸಿ ನೆಳಲ ಹಾಸೆಮಾಡಿದವು.
  • (ಪದ್ಯ-೩೪)

ಪದ್ಯ :-೩೫:

[ಸಂಪಾದಿಸಿ]

ಸುರನದಿಯ ತೆರೆತೆರೆಯ ನಡುನಡುವೆ ಬಿದ್ದೆದ್ದು | ಬರಲಾರದಿರ್ದೊಡಂ ಮತ್ತೆ ಗಂಗೆಯೊಳಲ | ರ್ದರವಿಂದಗಂಧದತಿ ಭಾರವಂ ಪೋರಲಾರದಿರ್ದೊಡಂ ಧರಣಿಸುತೆಯ ||
ಪರಿತಾಪಮಂ ತವಿಸದಿರಬಾರದೆಂದು ತರ | ಹರದೊಳೊಯ್ಯೊಯ್ಯನೈತಂದು ಬೀಸಿತು ಸುಖ | ಸ್ಪರುಶವಾತಂ ಜಗದೊಳುಪಕಾರಿಯಾದವಂ ತನ್ನ ನೋವಂ ನೋಳ್ಪನೆ ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸುರನದಿಯ ತೆರೆತೆರೆಯ ನಡುನಡುವೆ ಬಿದ್ದೆದ್ದು ಬರಲಾರದೆ ಇರ್ದೊಡಂ=[(ಮಂದಮಾರುತವು) ಸುರನದಿಯಾದ ಗಂಗೆಯ ತೆರೆತೆರೆಗಳ ನಡುವೆ - ನಡುವೆ ಬಿದ್ದು ಎದ್ದು ಬರಲಾರದೆ ಇದ್ದರೂ] ಮತ್ತೆ ಗಂಗೆಯೊಳು ಅಲರ್ದರವಿಂದಗಂಧದ ಅತಿ ಭಾರವಂ ಪೊರಲಾರದೆ ಇರ್ದೊಡಂ ಧರಣಿಸುತೆಯ ಪರಿತಾಪಮಂ ತವಿಸದೆ ಇರಬಾರದೆಂದು=[ಮತ್ತೆ ಗಂಗೆಯಲ್ಲಿ ಅರಳಿದ ಕಮಲದ ಪರಿಮಳದ ಅತಿ ಭಾರವವನ್ನು ಹೊರಲಾರದೆ ಇದ್ದರೂ, ಭೂಮಾತೆಯ ಮಗಳ ಸಂಕಟವನ್ನು ತಣಿಸದೆ ಇರಬಾರದೆಂದು]; ತರಹರದೊಳು ಒಯ್ಯೊಯ್ಯನೆ ಐತಂದು ಬೀಸಿತು ಸುಖಸ್ಪರುಶವಾತಂ ಜಗದೊಳು ಉಪಕಾರಿಯಾದವಂ ತನ್ನ ನೋವಂ ನೋಳ್ಪನೆ=[ಸಹನೆಯಿಂದ ಮೆಲ್ಲಮೆಲ್ಲಗೆ ಬಂದು ಸೀತೆಗೆ ಸುಖನೀಡಲು ಮೈತಡವಿ ಗಾಳಿಯು ಬೀಸಿತು. ಜಗದಲ್ಲಿ ಉಪಕಾರಿಯಾದವನು ತನ್ನ ನೋವನ್ನು ನೋಡುವನೇ?].
  • ತಾತ್ಪರ್ಯ:(ಮಂದಮಾರುತವು) ಸುರನದಿಯಾದ ಗಂಗೆಯ ತೆರೆತೆರೆಗಳ ನಡುವೆ - ನಡುವೆ ಬಿದ್ದು ಎದ್ದು ಬರಲಾರದೆ ಇದ್ದರೂ,ಮತ್ತೆ ಗಂಗೆಯಲ್ಲಿ ಅರಳಿದ ಕಮಲದ ಪರಿಮಳದ ಅತಿ ಭಾರವವನ್ನು ಹೊರಲಾರದೆ ಇದ್ದರೂ, ಭೂಮಾತೆಯ ಮಗಳ ಸಂಕಟವನ್ನು ತಣಿಸದೆ ಇರಬಾರದೆಂದು, ಸಹನೆಯಿಂದ ಮೆಲ್ಲಮೆಲ್ಲಗೆ ಬಂದು ಸೀತೆಗೆ ಸುಖನೀಡಲು ಮೈತಡವಿ ಗಾಳಿಯು ಬೀಸಿತು. ಜಗದಲ್ಲಿ ಉಪಕಾರಿಯಾದವನು ತನ್ನ ನೋವನ್ನು ನೋಡುವನೇ?
  • (ಪದ್ಯ-೩೫)

ಪದ್ಯ :-೩೬:

[ಸಂಪಾದಿಸಿ]

ವೃಥಿವಿಯಾತ್ಮಜೆ ಬಳಿಕ ಚೇತರಿಸಿ ತನಗಿನ್ನು | ಪಥಮಾವುದೆಂದು ದೆಸೆದೆಸೆಗಳಂ ನೋಡಿ ಸಲೆ | ಶಿಥಿಲಮಾದವಯವದ ಧೂಳಿಡಿದ ಬಿಡುಮುಡಿಯ ವಿಕೃತಿಯ ನೆಣೆಸದೆ ||
ಮಿಥಿಲೇಂದ್ರವಂಶದೊಳ್ ಜನಿಸಿ ರಘುಕುಲದ ದಶ | ರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳ್ | ವ್ಯಥಿಸುವಂತಾಯ್ತಕಟ ವಿಧಿಯೆಂದು ಹಲುಬಿದಳ್ ಕಲ್ಮರಂ ಕರಗುವಂತೆ ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವೃಥಿವಿಯಾತ್ಮಜೆ ಬಳಿಕ ಚೇತರಿಸಿ ತನಗಿನ್ನು ಪಥಮಾವುದೆಂದು ದೆಸೆದೆಸೆಗಳಂ ನೋಡಿ ಸಲೆ ಶಿಥಿಲಮಾದ ಅವಯವದ ಧೂಳಿಡಿದ ಬಿಡುಮುಡಿಯ ವಿಕೃತಿಯನು ಎಣೆಸದೆ =[ವೃಥಿವಿಯ ಆತ್ಮಜೆ ಸೀತೆ ಬಳಿಕ ಚೇತರಿಸಿಕೊಂಡು ತನಗಿನ್ನು ಮುಂದೆ ದಾರಿಯಾವುದು ಎಂದು ಎಲ್ಲದಿಕ್ಕುಗಳನ್ನೂ ನೋಡಿ, ಬಹಳ ಬಳಲಿದ ಅವಯವದ ಧೂಳು ಹತ್ತಿದ ಬಿಚ್ಚಿದಮುಡಿಯ ಅವ್ಯವಸ್ಥೆಯನ್ನು ಲೆಕ್ಕಿಸದೆ]; ಮಿಥಿಲೇಂದ್ರವಂಶದೊಳ್ ಜನಿಸಿ ರಘುಕುಲದ ದಶರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳ್ ವ್ಯಥಿಸುವಂತಾಯ್ತು ಅಕಟ ವಿಧಿಯೆಂದು ಹಲುಬಿದಳ್ ಕಲ್ಮರಂ ಕರಗುವಂತೆ=[ಮಿಥಿಲೆಯ ರಾಜನ ವಂಶದಲ್ಲಿ ಜನಿಸಿ, ರಘುಕುಲದ ದಶರಥ ನೃಪನ ಸೊಸೆಯಾಗಿ ತನಗೆ ಈದಟ್ಟವಾದ ಕಾಡಿನಲ್ಲಿ ದುಃಕಪಡುವಂತೆ ಆಯಿತಲ್ಲಾ!ಅಕಟ ಇದು ವಿಧಿ! ಎಂದು ಕಲ್ಲು-ಮರ ಕರಗುವಂತೆ ಗೋಳಿಟ್ಟಳು.]
  • ತಾತ್ಪರ್ಯ: ವೃಥ್ವಿಯ ಆತ್ಮಜೆ ಸೀತೆ ಬಳಿಕ ಚೇತರಿಸಿಕೊಂಡು ತನಗಿನ್ನು ಮುಂದೆ ದಾರಿಯಾವುದು ಎಂದು ಎಲ್ಲದಿಕ್ಕುಗಳನ್ನೂ ನೋಡಿ, ಬಹಳ ಬಳಲಿದ ಅವಯವದ ಧೂಳು ಹತ್ತಿದ ಬಿಚ್ಚಿದಮುಡಿಯ ಅವ್ಯವಸ್ಥೆಯನ್ನು ಲೆಕ್ಕಿಸದೆ, ಮಿಥಿಲೆಯ ರಾಜನ ವಂಶದಲ್ಲಿ ಜನಿಸಿ, ರಘುಕುಲದ ದಶರಥ ನೃಪನ ಸೊಸೆಯಾಗಿ ತನಗೆ ಈ ದಟ್ಟವಾದ ಕಾಡಿನಲ್ಲಿ ದುಃಖಪಡುವಂತೆ ಆಯಿತಲ್ಲಾ! ಅಕಟ ಇದು ವಿಧಿ! ಎಂದು ಕಲ್ಲು-ಮರ ಕರಗುವಂತೆ ಗೋಳಿಟ್ಟಳು. (ಯಾರೂ ಸಹಾಯಮಾಡಲು ಇಲ್ಲದ ಕಾಡಿನಲ್ಲಿ ಗೋಳಿಟ್ಟ ಸೀತೆಯ ದಃಖಾಲಾಪಕ್ಕೆ "ಅರಣ್ಯ ರೋದನ" ಎಂದು ಹೆರುಬಂದಿದೆ)
  • (ಪದ್ಯ-೩೬)

ಪದ್ಯ :-೩೭:

[ಸಂಪಾದಿಸಿ]

ಕೇಣಮಂ ಬಿಟ್ಟಾತ್ಮಘಾತಕದೊಳೀ ಕ್ಷಣಂ | ಪ್ರಾಣಮಂ ತೊರೆದಪೆನೆ ಬಂದಪುದು ಗರ್ಭದಿಂ | ಭ್ರೂಣಹತ್ಯಾದೋಷಮೇಗೈವೆನಾರ್ಗೊರೆವೆನೆಂದೊಯ್ಯನೆದ್ದು ಬಳಿಕ ||
ಏಣಾಕ್ಷಿ ನಡೆದಳಡವಿಯೊಳುಪಲ ಕಂಟಕ | ಶ್ರೇಣಿಗಳ್ ಸೊಂಕಿಮೆಲ್ಲಡಿಗಳಿಂ ಬಸಿವ ನವ ಶೋಣಿತಂ ನೆಲದೊಳ್ ಪೊನಲ್ವರಿಯಲರಸ ಕೇಳ್ ಪೆಣ್ವೊಡಲ್ವಿಡಿಯಬಹುದೆ ||37|

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೇಣಮಂ(ಚಿಂತನೆ,ಸಂಕೋಚ,ಹೆದರಿಕೆ) ಬಿಟ್ಟು ಆತ್ಮಘಾತಕದೊಳು ಈ ಕ್ಷಣಂ ಪ್ರಾಣಮಂ ತೊರೆದಪೆನೆ ಬಂದಪುದು ಗರ್ಭದಿಂ ಭ್ರೂಣಹತ್ಯಾದೋಷಂ=[ಚಿಂತೆ, ಹೆದರಿಕೆ ಬಿಟ್ಟು ಆತ್ಮಹತ್ಯೆಯಲ್ಲಿ ಈ ಕ್ಷಣವೇ ಪ್ರಾಣವನ್ನು ಬಿಟ್ಟುಬಿಡಲೇ? ಆಗ, ಗರ್ಭದಲ್ಲಿ ಶಿಶುಇದ್ದು ಭ್ರೂಣಹತ್ಯಾದೋಷವು ಬರುವುದು.]; ಏಗೈವೆನು ಆರ್ಗೆ ಒರೆವೆನು ಎಂದು ಒಯ್ಯನೆದ್ದು ಬಳಿಕ ಏಣಾಕ್ಷಿ ನಡೆದಳು ಅಡವಿಯೊಳು ಉಪಲ ಕಂಟಕ (ಕಲ್ಲು ಮುಳ್ಳು) ಶ್ರೇಣಿಗಳ್ ಸೊಂಕಿ ಮೆಲ್ಲಡಿಗಳಿಂ ಬಸಿವ ನವ ಶೋಣಿತಂ ನೆಲದೊಳ್ ಪೊನಲ್ ವರಿಯಲು=[ಏನುಮಾಡಲಿ! ಯಾರಿಗೆ ಹೇಳಲಿ! ಎಂದು ಮೆಲ್ಲನೆ ಎದ್ದು, ಬಳಿಕ ಸೀತೆಯು ಅಡವಿಯಲ್ಲಿ ನಡೆದಳು. ಅಲ್ಲಿ ಕಲ್ಲು ಮುಳ್ಳುಗಳು ದಾರಿಯಲ್ಲಿ ಸೊಂಕಿ ಪಾದಗಳಿಂದ ಬಸಿಯುವ ನವ ರಕ್ತವು ನೆಲದಲ್ಲಿ ಹಳ್ಳವಾಗಿ ಹರಿಯಲು]; ಅರಸ ಕೇಳ್ ಪೆಣ್ ಒಡಲ್ ಹಿಡಿಯಬಹುದೆ=[ಅರಸ ಕೇಳು, ಹೆಣ್ಣಿ ದೇಹ ಈಕಷ್ಟವನ್ನು ಸಹಿಸಬಹುದೇ? ಎಂದನು ಮುನಿ.].
  • ತಾತ್ಪರ್ಯ:ಚಿಂತೆ, ಹೆದರಿಕೆ ಬಿಟ್ಟು ಆತ್ಮಹತ್ಯೆಯಲ್ಲಿ ಈ ಕ್ಷಣವೇ ಪ್ರಾಣವನ್ನು ಬಿಟ್ಟುಬಿಡಲೇ? ಆಗ, ಗರ್ಭದಲ್ಲಿ ಶಿಶುಇದ್ದು ಭ್ರೂಣಹತ್ಯಾದೋಷವು ಬರುವುದು. ಏನುಮಾಡಲಿ! ಯಾರಿಗೆ ಹೇಳಲಿ! ಎಂದು ಮೆಲ್ಲನೆ ಎದ್ದು ಯೋಚಿಸಿ, ನಂತರ ಸೀತೆಯು ಅಡವಿಯಲ್ಲಿ ನಡೆದಳು. ಅಲ್ಲಿ ದಾರಿಯಲ್ಲಿ ಕಲ್ಲು ಮುಳ್ಳುಗಳು ಸೊಂಕಿ ಪಾದಗಳಿಂದ ಬಸಿಯುವ ಬಿಸಿರಕ್ತವು ನೆಲದಲ್ಲಿ ಹಳ್ಳವಾಗಿ ಹರಿಯಿತು. ಅರಸನೇ ಕೇಳು, ಹೆಣ್ಣಿನ ದೇಹ ಈ ಕಷ್ಟವನ್ನು ಸಹಿಸಬಹುದೇ? ಎಂದನು ಜೈಮಿನಿ.
  • (ಪದ್ಯ-೩೭)

ಪದ್ಯ :-೩೮:

[ಸಂಪಾದಿಸಿ]

ಅನ್ನೆಗಂ ಮಖಕೆ ಯೂಪವನರಸುತಾ ಬನಕೆ | ಸನ್ನುತ ತಪೋಧನಂ ವಾಲ್ಮೀಕಿ ಮುನಿವರಂ | ತನ್ನ ಶೀಷ್ಯರ್ವೆರಸಿ ನರೆತಂದು ಕಾಡೊಳೊರ್ವಳೆ ಪುಗಲ್ದೆಸೆಗಾಣದೆ ||
ಬನ್ನದಿಂ ಬಗೆಗೆಟ್ಟು ಪಾಡಳಿದು ಗ್ರೀಷ್ಮಋತುವಿಂ | ನವೆದ ಕಾಂತಾರದಧಿದೇವಿ ತಾನೆನಲ್ | ಸನ್ನಗದ್ಗದಕಂಠಿಯಾಗಿ ರೋದಿಸುತಿರ್ದ ವೈದೇಹಿಯಂ ಕಂಡನು ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅನ್ನೆಗಂ ಮಖಕೆ ಯೂಪವನು (ಯಜ್ಞಪಶುವನ್ನು ಕಟ್ಟುವ ಕಂಬ) ಅರಸುತಾ ಬನಕೆ ಸನ್ನುತ ತಪೋಧನಂ ವಾಲ್ಮೀಕಿ ಮುನಿವರಂ ತನ್ನ ಶೀಷ್ಯರ್ ವೆ/ಬೆರಸಿ ನರೆತಂದು=[ಆ ಸಮಯದಲ್ಲಿ ಯಜ್ಞಕ್ಕೆ ಯೂಪವನ್ನು ಅಂದರೆ ಯಜ್ಞಪಶುವನ್ನು ಕಟ್ಟುವ ಕಂಬವನ್ನು ಹುಡುಕುತ್ತಾ ವನಕ್ಕೆ ಶ್ರೇಷ್ಠ ತಪೋಧನನಾದ ವಾಲ್ಮೀಕಿ ಮುನಿವರನು ತನ್ನ ಶೀಷ್ಯರ ಜೊತೆಗೂಡಿ ನೆಡೆದು ಬಂದು,]; ಕಾಡೊಳು ಓರ್ವಳೆ ಪುಗಲ್ ದೆಸೆಗಾಣದೆ ಬನ್ನದಿಂ ಬಗೆಗೆಟ್ಟು ಪಾಡು ಅಳಿದು ಗ್ರೀಷ್ಮಋತುವಿಂ ನವೆದ ಕಾಂತಾರದ ಅಧಿದೇವಿ ತಾನೆನಲ್ ಸನ್ನ ಗದ್ಗದಕಂಠಿಯಾಗಿ ರೋದಿಸುತಿರ್ದ ವೈದೇಹಿಯಂ ಕಂಡನು=[ಆ ಕಾಡಲ್ಲಿ ಒಬ್ಬಳೆ ಹೊಗಲು ದಿಕ್ಕುಗಾಣದೆ ಕಷ್ಟದಿಂದ ಬುದ್ಧಿಗೆಟ್ಟು ದೇಹಸ್ಥಿತಿಕೆಟ್ಟು, ಗ್ರೀಷ್ಮಋತುವಿನಿಂದ (ಬಿಸಿಲಿನಿಂದ)ಬಾಡಿದ ವನದ ಅಧಿದೇವಿಯೋ ತಾನು ಎನ್ನುವಂತೆ, ಮೆದುವಾದ ಗದ್ಗದಿತ ದನಿಯಲ್ಲಿ ರೋದಿಸುತಿದ್ದ ವೈದೇಹಿಯನ್ನು (ಸೀತೆಯನ್ನು) ಕಂಡನು.]
  • ತಾತ್ಪರ್ಯ:ಆ ಸಮಯದಲ್ಲಿ ಯಜ್ಞಕ್ಕೆ ಯೂಪವನ್ನು ಅಂದರೆ ಯಜ್ಞಪಶುವನ್ನು ಕಟ್ಟುವ ಕಂಬದಮರವನ್ನು ಹುಡುಕುತ್ತಾ ವನಕ್ಕೆ ಶ್ರೇಷ್ಠ ತಪೋಧನನಾದ ವಾಲ್ಮೀಕಿ ಮುನಿವರನು ತನ್ನ ಶೀಷ್ಯರ ಜೊತೆಗೂಡಿ ನೆಡೆದು ಬಂದು, ಆ ಕಾಡಲ್ಲಿ ಒಬ್ಬಳೆ ಹೊಗಲು ಆಗದೆ, ದಿಕ್ಕುಗಾಣದೆ ಕಷ್ಟದಿಂದ ಬುದ್ಧಿಗೆಟ್ಟು ದೇಹಸ್ಥಿತಿಕೆಟ್ಟು, ಗ್ರೀಷ್ಮಋತುವಿನಿಂದ (ಬಿಸಿಲಿನಿಂದ)ಬಾಡಿದ ವನದ ಅಧಿದೇವಿಯೋ ತಾನು ಎನ್ನುವಂತೆ ಬಳಲಿದ, ಮೆದುವಾದ ಗದ್ಗದಿತ ದನಿಯಲ್ಲಿ ಸಣ್ಣಗೆ ರೋದಿಸುತಿದ್ದ ವೈದೇಹಿಯನ್ನು (ಸೀತೆಯನ್ನು) ಕಂಡನು.
  • (ಪದ್ಯ-೩೮)

ಪದ್ಯ :-೩೯:

[ಸಂಪಾದಿಸಿ]

ಆರಿವಳಿದೇತಕಿರ್ದಪಳೀ ವನಾಂತರದೊ | ಳಾರೈವೆನಿದನೆಂದು ನಡೆತಂದು ಕರುಣದಿಂ | ದಾ ಋಷಿ ನುಡಿಸಿದನೆಲೆ ತಾಯೆ ನೀನಾವಳೌ ಕಂಡ ಕುರುಪಾಗಿರ್ಪುದು ||
ಘೋರತರ ಗಹನಕೊರ್ವಳೆ ಬಂದೆಯೆಂತಕಟ | ಭೀರು ಹೇಳೌ ಹೆದರಬೇಡ ವಾಲ್ಮೀಕಿ ನಾಂ | ಭೂರಿಶೋಕಾರ್ತರಾಗಿರ್ದರಂ ಕಂಡು ಸುಮ್ಮನೆ ಪೋಪನಲ್ಲೆಂದನು ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆರು ಇವಳು ಇದೇತಕೆ ಇರ್ದಪಳು ಈ ವನಾಂತರದೊಳು ಆರೈವೆನು ಇದನೆಂದು ನಡೆತಂದು ಕರುಣದಿಂದ ಆ ಋಷಿ ನುಡಿಸಿದನು=[ಯಾರು ಇವಳು? ಇದೇಕೆ ಈ ಕಾಡಿನೊಳಗೆ ಇರುವಳು! ವಿಚಾರಿಸುವೆನು ಇದನ್ನು, ಎಂದು, ಸೀತೆಯ ಹತ್ತಿರ ಬಂದು ಕರುಣದಿಂದ ಆ ಋಷಿ ಮಾತಾಡಿಸಿದನು]; ಎಲೆ ತಾಯೆ ನೀನು ಆವಳೌ ಕಂಡ ಕುರುಪಾಗಿರ್ಪುದು ಘೋರತರ ಗಹನಕೆ ಓರ್ವಳೆ ಬಂದೆಯೆಂತು ಅಕಟ ಭೀರು (ಭಯಪಟ್ಟವರು) ಹೇಳೌ ಹೆದರಬೇಡ=["ಎಲೆ ತಾಯೆ, ನೀನು ಯಾರವ್ವಾ? ಎಲ್ಲೋ ನೋಡಿದ ಗುರುತು ಕಾಣುವುದು; ಘೋರತರವಾದ ದಟ್ಟಕಾಡಿಗೆ ಒಬ್ಬಳೆ ಹೇಗೆಬಂದೆ? ಅಕಟ! ಭಯಪಟ್ಟಿರುವೆ! ಹೇಳವ್ವಾ ಹೆದರಬೇಡ,]; ವಾಲ್ಮೀಕಿ ನಾಂ ಭೂರಿಶೋಕಾರ್ತರು ಆಗಿರ್ದರಂ ಕಂಡು ಸುಮ್ಮನೆ ಪೋಪನು ಅಲ್ಲ ಎಂದನು=[ನಾನು ವಾಲ್ಮೀಕಿ,ಹೀಗೆ ಬಹಳ ದುಃಖದಲ್ಲಿ ಸಂಕಟಪಡುವವರನ್ನು ಕಂಡು ಸುಮ್ಮನೆ ಹೋಗುವವನು ಅಲ್ಲ ಎಂದನು. ].
  • ತಾತ್ಪರ್ಯ:ವಾಲ್ಮೀಕಿಯು,'ಯಾರು ಇವಳು? ಇದೇಕೆ ಈ ಕಾಡಿನೊಳಗೆ ಇರುವಳು! ಇದನ್ನು ವಿಚಾರಿಸುವೆನು', ಎಂದು, ಸೀತೆಯ ಹತ್ತಿರ ಬಂದು ಕರುಣದಿಂದ ಆ ಋಷಿ ಮಾತಾಡಿಸಿದನು; "ಎಲೆ ತಾಯೆ, ನೀನು ಯಾರವ್ವಾ? ಎಲ್ಲೋ ನೋಡಿದ ಗುರುತು ಕಾಣುವುದು; ಘೋರತರವಾದ ದಟ್ಟಕಾಡಿಗೆ ಒಬ್ಬಳೆ ಹೇಗೆಬಂದೆ? ಅಕಟ! ಭಯಪಟ್ಟಿರುವೆ! ಹೇಳವ್ವಾ ಹೆದರಬೇಡ, ನಾನು ವಾಲ್ಮೀಕಿ, ಹೀಗೆ ಬಹಳ ದುಃಖದಲ್ಲಿ ಸಂಕಟಪಡುವವರನ್ನು ಕಂಡು ಸುಮ್ಮನೆ ಹೋಗುವವನು ಅಲ್ಲ ಎಂದನು.
  • (ಪದ್ಯ-೩೯)

ಪದ್ಯ :೪೦:

[ಸಂಪಾದಿಸಿ]

ಹರುಷಮೊತ್ತರಿಸಿದುದು ಶೋಕವಿಮ್ಮಡಿಸಿದುದು | ಬೆರಸಿದುದು ಲಜ್ಜೆ ಭೂಮಿಜೆಗಂದು ಗದ್ಗದ | ಸ್ವರದಿಂದೆ ಸೀತೆ ತಾಂ ಲೋಕಾಪವಾದಕಪರಾಧಿಯಲ್ಲದ ತನ್ನನು ||
ತರಣಿಕುಲಸಂಭವಂ ಬಿಟ್ಟನೆಂದೀವನದೊ | ಳಿರಿಸಿ ಪೋದಂ ಸುಮಿತ್ರಾತ್ಮಜಂ ಜೀವಮಂ | ಪೊರೆಯವೇಳ್ವುದೆ ಗರ್ಭಮೊಡಲೊಳಿಹುದೇಗೈವೆನೆಂದೆರಗಿದಳ್ ಮುನಿಪದದೊಳು ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹರುಷಂ ಒತ್ತರಿಸಿದುದು ಶೋಕವು ಇಮ್ಮಡಿಸಿದುದು ಬೆರಸಿದುದು ಲಜ್ಜೆ ಭೂಮಿಜೆಗೆ ಅಂದು,=[ವಿಚಾರಿಸಿದವರು ವಾಲ್ಮೀಕಿ ಮುನಿಗಳೆಂದು ಸೀತೆಗೆ ತಿಳಿದಾಗ,ಅತಿಕಷ್ಟದಲ್ಲಿದ್ದಾಗ ಹಿತೈಷಿಗಳನ್ನು ಕಂಡು ಹರುಷ ಹರುಷ ಒತ್ತರಿಸಿ ಉಕ್ಕಿತು, ಒಳಗಿದ್ದ ಶೋಕವು ಇಮ್ಮಡಿಯಾಗಿ ಹೊರಬಂದು ಹೃದಯ ಹಗುರಾಯಿತು; ಭೂಮಿಜೆ ಸೀತೆಗೆ ತನ್ನ ಸ್ಥಿತಿನೆನೆದು ಆಗ ನಾಚಿಕೆಯೂ ಅದರ ಜೊತೆ ಸೇರಿತು.]; ಗದ್ಗದ ಸ್ವರದಿಂದೆ ಸೀತೆ ತಾಂ ಲೋಕಾಪವಾದಕೆ ಅಪರಾಧಿಯಲ್ಲದ ತನ್ನನು ತರಣಿಕುಲಸಂಭವಂ ಬಿಟ್ಟನೆಂದು,=[ಸೀತೆಯು, ಗದ್ಗದ ಸ್ವರದಿಂದ ತಾನು ಅಪರಾಧಿಯಲ್ಲದಿದ್ದರೂ ಲೋಕಾಪವಾದಕ್ಕೆ ಗುರಿಯಾಗಿ, ತನ್ನನ್ನು ತರಣಿಕುಲಸಂಭವನಾದ ರಾಮನು ಬಿಟ್ಟನೆಂದೂ,]; ಈ ವನದೊಳಿರಿಸಿ ಪೋದಂ ಸುಮಿತ್ರಾತ್ಮಜಂ ಜೀವಮಂ ಪೊರೆಯವೇಳ್ವುದೆ ಗರ್ಭಂ ಒಡಲೊಳಿಹುದು ಏಗೈವೆನೆಂದು ಎರಗಿದಳ್ ಮುನಿಪದದೊಳು=[ ಸುಮಿತ್ರೆಯ ಮಗ ಲಕ್ಷ್ಮಣ ತನ್ನನ್ನು ಈ ಕಾಡಿನಲ್ಲಿ ಬಿಟ್ಟು ಹೋದನೆಂದೂ,ಹೊಟ್ಟೆಯಲ್ಲಿ ಗರ್ಭವಿದೆಯೆಂದು ಜೀವವನ್ನು ಹಿಡಿದುಕೊಳ್ಳಬೇತಾಗಿದೆ, ಏನುಮಾಡಲಿ ಎಂದು ಮುನಿಯ ಪಾದಲ್ಲೆ ನಮಸ್ಕರಿಸಿದಳು.].
  • ತಾತ್ಪರ್ಯ: ವಿಚಾರಿಸಿದವರು ವಾಲ್ಮೀಕಿ ಮುನಿಗಳೆಂದು ಸೀತೆಗೆ ತಿಳಿದಾಗ,ಅತಿಕಷ್ಟದಲ್ಲಿದ್ದಾಗ ಹಿತೈಷಿಗಳನ್ನು ಕಂಡು ಹರುಷ ಹರುಷ ಒತ್ತರಿಸಿ ಉಕ್ಕಿತು, ಒಳಗಿದ್ದ ಶೋಕವು ಇಮ್ಮಡಿಯಾಗಿ ಹೊರಬಂದು ಹೃದಯ ಹಗುರಾಯಿತು; ಭೂಮಿಜೆ ಸೀತೆಗೆ ತನ್ನ ಸ್ಥಿತಿನೆನೆದು ಆಗ ನಾಚಿಕೆಯೂ ಅದರ ಜೊತೆ ಸೇರಿತು. ಸೀತೆಯು, ಗದ್ಗದ ಸ್ವರದಿಂದ ತಾನು ಅಪರಾಧಿಯಲ್ಲದಿದ್ದರೂ ಲೋಕಾಪವಾದಕ್ಕೆ ಗುರಿಯಾಗಿ, ತನ್ನನ್ನು ತರಣಿಕುಲಸಂಭವನಾದ ರಾಮನು ಬಿಟ್ಟನೆಂದೂ, ಸುಮಿತ್ರೆಯ ಮಗ ಲಕ್ಷ್ಮಣನು ತನ್ನನ್ನು ಈ ಕಾಡಿನಲ್ಲಿ ಬಿಟ್ಟು ಹೋದನೆಂದೂ,ಹೊಟ್ಟೆಯಲ್ಲಿ ಗರ್ಭವಿದೆಯೆಂದು ಜೀವವನ್ನು ಹಿಡಿದುಕೊಳ್ಳಬೇತಾಗಿದೆ, ಏನುಮಾಡಲಿ ಎಂದು ಹೇಳಿ, ಮುನಿಯ ಪಾದಲ್ಲೆ ನಮಸ್ಕರಿಸಿದಳು.
  • (ಪದ್ಯ-೪೦)xv

ಪದ್ಯ :೪೧:

[ಸಂಪಾದಿಸಿ]

ದೇವಿ ಬಿಡು ಶೋಕಮಂ ಪುತ್ರಯುಗಮಂ ಪಡೆವೆ | ಭಾವಿಸದಿರನ್ನು ಸಂದೇಹಮಂ ಜನಕಂಗೆ | ನಾವನ್ಯರಲ್ಲ ನಮ್ಮಾಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ ನಿನ್ನನು ||
ಆವಾವ ಬಯಕೆಯುಂಟೆಲ್ಲಮಂ ಸಲಿಸಿ ತಾ | ನೋವಿಕೊಂಡಿರ್ಪೆನಂಜದಿರೆಂದು ಸಂತೈಸಿ | ರಾವಣಾರಿಯ ರಾಣಿಯಂ ನಿಜತಪೋವನಕೆ ವಾಲ್ಮೀಕಿ ಕರೆತಂದನು ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದೇವಿ ಬಿಡು ಶೋಕಮಂ ಪುತ್ರಯುಗಮಂ ಪಡೆವೆ ಭಾವಿಸದಿರು ಇನ್ನು ಸಂದೇಹಮಂ ಜನಕಂಗೆ ನಾವನ್ಯರಲ್ಲ=[ದೇವಿ, ಶೋಕವನ್ನು ಬಿಡು. ಅವಳಿ ಪುತ್ರರನ್ನು ಪಡೆಯುವೆ. ಇನ್ನು ಮುಂದೇನು ಎಂಬ, ಇವರೊಡನೆ ಹೋಗಬಹುದೇ ಎಂಬ ಸಂದೇಹವನ್ನು ಬಿಡು. ಜನಕನಿಗೆ ನಾವು ಬೇರೆಯವಲ್ಲ, ಆಪ್ತರು, ತಂದೆಯೆಂದು ಭಾವಿಸು.]; ನಮ್ಮಾಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ ನಿನ್ನನು ಆವಾವ ಬಯಕೆಯುಂಟು ಎಲ್ಲಮಂ ಸಲಿಸಿ ತಾನು ಓವಿಕೊಂಡಿರ್ಪೆನು ಅಂಜದಿರೆಂದು ಸಂತೈಸಿ ರಾವಣಾರಿಯ ರಾಣಿಯಂ ನಿಜತಪೋವನಕೆ ವಾಲ್ಮೀಕಿ ಕರೆತಂದನು=[ನಮ್ಮು ಆಶ್ರಮಕ್ಕೆ ಬಂದು ನೀನು ಸುಖದಲ್ಲಿ ಚಿಂತೆ ಬಿಟ್ಟು ಇದ್ದರೆ ನಿನ್ನನು ಯಾವ ಯಾವ ಬಯಕೆಯುಂಟೊ ಎಲ್ಲವನ್ನೂ ನೆರವೇರಿಸಿ ತಾನು ಕಾಪಾಡಿಕೊಂಡಿರುವೆನು; ಹೆದರಬೇಡ ಎಂದು ಸಂತೈಸಿ ರಾವಣಾರಿ ರಾಮನ ರಾಣಿಯನ್ನು ತನ್ನ ತಪೋವನಕ್ಕೆ ವಾಲ್ಮೀಕಿ ಕರೆತಂದನು];
  • ತಾತ್ಪರ್ಯ-:ವಾಲ್ಮೀಕಿಮುನಿ ಸೀತೆಗೆ ಭರವಸೆ ನೀಡಿ ಧೈರ್ಯ ಹೇಳಿದನು. 'ದೇವಿ, ಶೋಕವನ್ನು ಬಿಡು. ಅವಳಿ ಪುತ್ರರನ್ನು ಪಡೆಯುವೆ. ಇನ್ನು ಮುಂದೇನು ಎಂಬ, ಇವರೊಡನೆ ಹೋಗಬಹುದೇ ಎಂಬ ಸಂದೇಹವನ್ನು ಬಿಡು. ಜನಕನಿಗೆ ನಾವು ಬೇರೆಯವಲ್ಲ, ಆಪ್ತರು, ತಂದೆಯೆಂದು ಭಾವಿಸು', 'ನಮ್ಮ ಆಶ್ರಮಕ್ಕೆ ಬಂದು ನೀನು ಸುಖದಲ್ಲಿ ಚಿಂತೆ ಬಿಟ್ಟು ಇದ್ದರೆ ನಿನ್ನನು ಯಾವ ಯಾವ ಬಯಕೆಯುಂಟೊ ಎಲ್ಲವನ್ನೂ ನೆರವೇರಿಸಿ ತಾನು ಕಾಪಾಡಿಕೊಂಡಿರುವೆನು; ಹೆದರಬೇಡ', ಎಂದು ಸಂತೈಸಿ ರಾವಣಾರಿ ರಾಮನ ರಾಣಿಯನ್ನು ತನ್ನ ತಪೋವನಕ್ಕೆ ವಾಲ್ಮೀಕಿ ಕರೆತಂದನು.
  • (ಪದ್ಯ-೪೧)

ಪದ್ಯ :೪೨:

[ಸಂಪಾದಿಸಿ]

ಚಿತ್ರಮಯಮಾಗಿ ಕಟ್ಟಿತು ಪರ್ಣಶಾಲೆ ಶತ | ಪತ್ರಲೋಚನೆಗೆ ಬಳಿಕಲ್ಲಿ ಋಷಿಪತ್ನಿಯರ | ಮಿತ್ರತ್ವಮಂ ತಳೆದು ವಾಲ್ಮೀಕಿಮುನಿಪನಾರೈಕೆಯಿಂ ಸೀತೆ ತನ್ನ ||
ಪುತ್ರೋದಯದ ಕಾಲಮಂ ನೋಡುತಿರ್ದಳ್ ಧ | ರಿತ್ರಿಯೊಳ್ ದೃಢಪತಿವ್ರತೆಯರ್ಗೆ ನಿರ್ಮಲ ಚ | ರಿತ್ರಮೆಂತಾದೊಡಂ ವಿಪರೀತಮಾದಪುದೆ ಭೂಪಾಲ ಕೇಳೆಂದನು ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಚಿತ್ರಮಯಮಾಗಿ ಕಟ್ಟಿತು ಪರ್ಣಶಾಲೆ ಶತಪತ್ರಲೋಚನೆಗೆ (ಶತಪತ್ರ=ಕಮಲ-ಲೋಚನೆ)=[ಕಮಲದಪತ್ರದಂತೆ ವಿಶಾಲಕಣ್ಣಿನ ಸೀತೆಗೆ ಚಂದವಾಗಿ-ಚಿತ್ರಮಯಮಾಗಿ ಪರ್ಣಶಾಲೆಯು ಕಟ್ಟಲ್ಪಟ್ಟಿತು ]; ಬಳಿಕಲ್ಲಿ ಋಷಿಪತ್ನಿಯರ ಮಿತ್ರತ್ವಮಂ ತಳೆದು ವಾಲ್ಮೀಕಿಮುನಿಪನಾರೈಕೆಯಿಂ ಸೀತೆ ತನ್ನ ಪುತ್ರೋದಯದ ಕಾಲಮಂ ನೋಡುತಿರ್ದಳ್=[ಬಳಿಕ ಆಶ್ರಮದಲ್ಲಿ ಋಷಿಪತ್ನಿಯರ ಗೆಳೆತನವನ್ನು ಹೊಂದಿ ವಾಲ್ಮೀಕಿಮುನಿಯ ಆರೈಕೆಯಲ್ಲಿ ಸೀತೆ ತನ್ನ ಪುತ್ರರ ಜನನಕಾಲವನ್ನು ಎದುರುನೋಡುತ್ತಾ ಇದ್ದಳು]; ಧರಿತ್ರಿಯೊಳ್ ದೃಢಪತಿವ್ರತೆಯರ್ಗೆ ನಿರ್ಮಲ ಚರಿತ್ರಮೆಂತಾದೊಡಂ ವಿಪರೀತಮಾದಪುದೆ ಭೂಪಾಲ ಕೇಳೆಂದನು=[ಈ ಭೂಮಿಯಲ್ಲಿ ನಿರ್ಮಲ ಚರಿತ್ರೆಯಿರುವ ದೃಢಪತಿವ್ರತೆಯರಿಗೆ ಏನಾದರೂ ಅವಘಡವಾಗುವುದೇ? ಆಗದು. ಭೂಪಾಲನೇ ಕೇಳು ಎಂದನು ಮುನಿ.]
  • ತಾತ್ಪರ್ಯ-:ಕಮಲದಪತ್ರದಂತೆ ವಿಶಾಲಕಣ್ಣಿನ ಸೀತೆಗೆ ಚಂದವಾಗಿ-ಚಿತ್ರಮಯಮಾಗಿ ಪರ್ಣಶಾಲೆಯು ಕಟ್ಟಲ್ಪಟ್ಟಿತು. ಬಳಿಕ ಆಶ್ರಮದಲ್ಲಿ ಋಷಿಪತ್ನಿಯರ ಗೆಳೆತನವನ್ನು ಹೊಂದಿ ವಾಲ್ಮೀಕಿಮುನಿಯ ಆರೈಕೆಯಲ್ಲಿ ಸೀತೆ ತನ್ನ ಪುತ್ರರ ಜನನಕಾಲವನ್ನು ಎದುರುನೋಡುತ್ತಾ ಇದ್ದಳು. ಈ ಭೂಮಿಯಲ್ಲಿ ನಿರ್ಮಲ ಚರಿತ್ರೆಯಿರುವ ದೃಢಪತಿವ್ರತೆಯರಿಗೆ ಏನಾದರೂ ಅವಘಡವಾಗುವುದೇ? ಆಗದು. ಭೂಪಾಲನೇ ಕೇಳು ಎಂದನು ಮುನಿ.
  • (ಪದ್ಯ-೪೨)

ಪದ್ಯ :೪೩:

[ಸಂಪಾದಿಸಿ]

ಜಾತಿವೈರಂಗಳಿಲ್ಲದ ಪಕ್ಷಿಮೃಗದ ಸಂ | ಘಾತದಿಂ ಋತುಭೇದಮಿಲ್ಲದ ಲತಾದ್ರುಮ | ವ್ರಾತದಿಂ ಪಗಲಿರುಳು ಶಂಕೆಯಿಲ್ಲದ ಪೂಗೊಳಂಗಳ ವಿಕಾಸದಿಂದೆ ||
ಶೀತೋಷ್ಣದಾಸರಿಲ್ಲದ ಸುಸ್ಥಳಂಗಳಿಂ | ಪ್ರೀತಿವಿರಹಿತ ದುಃಖಸುಖದ ಜಂಜಡಮಿಲ್ಲ | ದಾ ತಪೋವನದೊಳಗೆ ಋಷಿವಧುಗಳೊಡನೆ ವೈದೇಹಿ ಪದುಳದೊಳಿರ್ದಳು ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಜಾತಿವೈರಂಗಳು ಇಲ್ಲದ ಪಕ್ಷಿಮೃಗದ ಸಂಘಾತದಿಂ ಋತುಭೇದಂ ಇಲ್ಲದ ಲತಾದ್ರುಮವ್ರಾತದಿಂ ಪಗಲಿರುಳು ಶಂಕೆಯಿಲ್ಲದ ಪೂಗೊಳಂಗಳ ವಿಕಾಸದಿಂದೆ=[ಪರಸ್ಪರ ಜಾತಿವೈರಗಳಿಲ್ಲದ ಪಕ್ಷಿಮೃಗದ ಸಮೂಹದಿಂದಲೂ, ಸದಾ ಚಿಗುರುವ- ಫಲಬಿಡುವ ಋತುಭೇದವು ಇಲ್ಲದ ಮರಬಳ್ಳಿಗಳ ಸಮೂಹದಿಂದಲೂ, ಹಗಲು ಮತ್ತು ಇರುಳು/ ರಾತ್ರಿ ಎಂಬ ಬೇಧಲ್ಲದ ಹೂವಿನ ಕೊಳಗಳ ವಿಕಾಸದಿಂದಲೂ,];

ಶೀತೋಷ್ಣದ ಆಸರಿಲ್ಲದ ಸುಸ್ಥಳಂಗಳಿಂ ಪ್ರೀತಿವಿರಹಿತ ದುಃಖಸುಖದ ಜಂಜಡಮಿಲ್ಲದ ಆ ತಪೋವನದೊಳಗೆ ಋಷಿವಧುಗಳೊಡನೆ ವೈದೇಹಿ ಪದುಳದೊಳಿರ್ದಳು =[ ಶೀತ ಉಷ್ಣ ಇವುಗಳ ತೊಂದರೆ ಇಲ್ಲದ ಉತ್ತಮ ಸ್ಥಳಂಗಳಿದಲೂ, ಪ್ರೀತಿಇಲ್ಲದ ಸಮಯವಿಲ್ಲ, ದುಃಖಸುಖದ ಜಂಜಡವಿಲ್ಲದೆ ಸದಾ ಪ್ರೀತಿಯಿರುವ ಆ ತಪೋವನದೊಳಗೆ ಋಷಿಪತ್ನಿಯರೊಡನೆ ವೈದೇಹಿ/ ಸೀತೆ ಪಸುಖವಾಗಿದ್ದಳು.]

  • ತಾತ್ಪರ್ಯ-:ಪರಸ್ಪರ ಜಾತಿವೈರಗಳಿಲ್ಲದ ಪಕ್ಷಿಮೃಗದ ಸಮೂಹದಿಂದಲೂ, ಸದಾ ಚಿಗುರುವ- ಫಲಬಿಡುವ ಋತುಭೇದವು ಇಲ್ಲದ ಮರಬಳ್ಳಿಗಳ ಸಮೂಹದಿಂದಲೂ, ಹಗಲು ಮತ್ತು ಇರುಳು/ ರಾತ್ರಿ ಎಂಬ ಬೇಧಲ್ಲದ ಹೂವಿನ ಕೊಳಗಳ ವಿಕಾಸದಿಂದಲೂ, ಶೀತ ಉಷ್ಣ ಇವುಗಳ ತೊಂದರೆ ಇಲ್ಲದ ಉತ್ತಮ ಸ್ಥಳಂಗಳಿದಲೂ, ಪ್ರೀತಿಇಲ್ಲದ ಸಮಯವಿಲ್ಲ, ದುಃಖಸುಖದ ಜಂಜಡವಿಲ್ಲದೆ ಸದಾ ಪ್ರೀತಿಯಿರುವ ಆ ತಪೋವನದೊಳಗೆ ಋಷಿಪತ್ನಿಯರೊಡನೆ ವೈದೇಹಿ/ ಸೀತೆ ಪಸುಖವಾಗಿದ್ದಳು.
  • (ಪದ್ಯ-೪೩)

ಪದ್ಯ :೪೪:

[ಸಂಪಾದಿಸಿ]

ಮುನಿವಟುಗಳೆಡೆಯಾಡಿ ಪರಿಚರ್ಯೆಯಂ ಮಾಳ್ಪ | ರಿನಿದಾದವಸ್ತುವಂ ಋಷಿವಧುಗಳಿತ್ತಪರ್| ತನತನಗೆ ಸತ್ಕರಿಸುವರ್ ತಾಪಸೋತ್ತಮರ್ ವಾಲ್ಮೀಕಿ ಸಾದರದೊಳು ||
ದಿನದಿನಕೆ ಬೇಕಾದ ಬಯಕೆಯಂ ಸಲಿಸುವಂ | ಬನದೊಳಿಂತಿರುತಿರ್ದಳವನಿಸುತೆ ರಾಘವೇಂ | ದ್ರನ ಚರಣಕಮಲಮಂ ಧ್ಯಾನಿಸುತೆ ಮರೆದಖಿಲ ರಾಜವಿಭವ ಶ್ರೀಯನು ||44||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸೀತೆಗೆ, ಮುನಿವಟುಗಳು ಎಡೆಯಾಡಿ ಪರಿಚರ್ಯೆಯಂ ಮಾಳ್ಪರು ಇನಿದಾದ ವಸ್ತುವಂ ಋಷಿವಧುಗಳ್ ಇತ್ತಪರ್ ತನತನಗೆ ಸತ್ಕರಿಸುವರ್ ತಾಪಸೋತ್ತಮರ್ ವಾಲ್ಮೀಕಿ ಸಾದರದೊಳು=[ಮುನಿವಟು ಬಾಲಕರು ತಿರುಗಾಡಿ ಸೇವೆಯನ್ನು ಮಾಡುವರು; ಸವಿಯಾದ ವಸ್ತುಗಳನ್ನು ಋಷಿಪತ್ನಿಯರು ಕೊಡುವರು; ಉತ್ತಮ ತಪಸ್ವಿಗಳು ವಾಲ್ಮೀಕಿ ಆಶ್ರಮದಲ್ಲಿ ಆದರದಿಂದ ತಾವು ತಾವೇ ತಿಳಿದುಕೊಂಡು ಸತ್ಕರಿಸುವರು. (ಹೇಳುವ ಅಗತ್ಯವಿಲ್ಲ); ]; ದಿನದಿನಕೆ ಬೇಕಾದ ಬಯಕೆಯಂ ಸಲಿಸುವಂ ಬನದೊಳು ಇಂತು ಇರುತಿರ್ದಳು ಅವನಿಸುತೆ ರಾಘವೇಂದ್ರನ ಚರಣಕಮಲಮಂ ಧ್ಯಾನಿಸುತೆ ಮರೆದು ಅಖಿಲ ರಾಜವಿಭವ ಶ್ರೀಯನು=[ಪ್ರತಿದಿನ ಸೀತೆಯು ಬಯಸಿದಬಯಕೆಯನ್ನು ಸಲ್ಲಿಸುವರು; ಋಷಿ ಆಶ್ರಮದ ವನದಲ್ಲಿ ಸೀತೆ, ರಾಘವೇಂದ್ರನ ಪಾದಗಳನ್ನು ಧ್ಯಾನಿಸುತ್ತಾ, ಮರೆದಖಿಲ ರಾಜವೌಭವದ ಸಂಪತ್ತನ್ನು ಮರತು ಆಶ್ರಮದ ವನದಲ್ಲಿ ಇರುತ್ತಿದ್ದಳು.]
  • ತಾತ್ಪರ್ಯ-:ಸೀತೆಗೆ, ಮುನಿವಟುಗಳು/ ಬಾಲಕರು ತಿರುಗಾಡಿ ಸೇವೆಯನ್ನು ಮಾಡುವರು; ಸವಿಯಾದ ವಸ್ತುಗಳನ್ನು ಋಷಿಪತ್ನಿಯರು ಕೊಡುವರು; ಉತ್ತಮ ತಪಸ್ವಿಗಳು ವಾಲ್ಮೀಕಿ ಆಶ್ರಮದಲ್ಲಿ ಆದರದಿಂದ ತಾವು ತಾವೇ ತಿಳಿದುಕೊಂಡು ಸತ್ಕರಿಸುವರು. (ಹೇಳುವ ಅಗತ್ಯವಿಲ್ಲ); ಪ್ರತಿದಿನ ಸೀತೆಯು ಬಯಸಿದಬಯಕೆಯನ್ನು ಸಲ್ಲಿಸುವರು; ಋಷಿ ಆಶ್ರಮದ ವನದಲ್ಲಿ ಸೀತೆ, ರಾಘವೇಂದ್ರನ ಪಾದಗಳನ್ನು ಧ್ಯಾನಿಸುತ್ತಾ, ಮರೆದಖಿಲ ರಾಜವೌಭವದ ಸಂಪತ್ತನ್ನು ಮರತು ಆಶ್ರಮದ ವನದಲ್ಲಿ ಇರುತ್ತಿದ್ದಳು.]
  • (ಪದ್ಯ-೪೪)

ಪದ್ಯ :೪೫:

[ಸಂಪಾದಿಸಿ]

ಅವನಿಜೆಯ ಗರ್ಭಕ್ಕೆ ತುಂಬಿದುದು ನವಮಾಸ | ದವಧಿ ಬಳಿಕೊಂದಿರುಳ ಶುಭಲಗ್ನದೊಳ್ ಪಡೆದ | ಳವಳಿಮಕ್ಕಳನುಪಚರಿಸೆ ವಿದಗ್ಧಾಂಗನೆಯರಾ ಸೂತಿಕಾಗೃಹದೊಳು ||
ತವಕದಿಂದೈತಂದು ಮುನಿವಟುಗಳುಸಿರಲು | ತ್ಸವದಿಂದೆ ವಾಲ್ಮೀಕಿಮುನಿ ಬಂದು ನೋಡಿ ಕುಶ | ಲವದಿಂದೆ ಸೇಚನಂಗೈದು ಕುಶಲವರೆಂದು ಪೆಸರಿಟ್ಟನರ್ಭಕರ್ಗೆ ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅವನಿಜೆಯ ಗರ್ಭಕ್ಕೆ ತುಂಬಿದುದು ನವಮಾಸದ ಅವಧಿ ಬಳಿಕ ಒಂದಿರುಳ ಶುಭಲಗ್ನದೊಳ್ ಪಡೆದಳು ಅವಳಿಮಕ್ಕಳನು ಉಪಚರಿಸೆ ವಿದಗ್ಧಾಂಗನೆಯರು ಆ ಸೂತಿಕಾಗೃಹದೊಳು=[ಸೀತೆಯ ಗರ್ಭಕ್ಕೆ ಒಂಭತ್ತು ತಿಂಗಳ ಅವಧಿ ತುಂಬಿತು. ಬಳಿಕ ಒಂದು ರಾತ್ರಿ ಶುಭಲಗ್ನದಲ್ಲಿ ಆ ಸೂತಿಕಾಗೃಹದಲ್ಲಿ ಚತುರ ಸೂಲಗಿತ್ತಿಯರು ಉಪಚರಿಸಲು ಅವಳಿಮಕ್ಕಳನ್ನು ಪಡೆದಳು.];ತವಕದಿಂದ ಐತಂದು ಮುನಿವಟುಗಳು ಉಸಿರಲು ಉತ್ಸವದಿಂದೆ ವಾಲ್ಮೀಕಿಮುನಿ ಬಂದು ನೋಡಿ ಕುಶಲವದಿಂದೆ ಸೇಚನಂಗೈದು ಕುಶಲವರೆಂದು ಪೆಸರಿಟ್ಟನು ಅರ್ಭಕರ್ಗೆ=[ಕುತೂಹಲ/ ಅವಸರದಿಂದ ಮುನಿವಟುಗಳು ಬಂದು ಮುನಿಗೆ ಹೇಳಲು ಸಂಭ್ರಮದಿಂದ ವಾಲ್ಮೀಕಿಮುನಿ ಬಂದು ನೋಡಿ ಕುಶಲವದಿಂದ/ದರ್ಭೆಯಿಂದ ನೀರು ಚಿಮುಕಿಸಿ ಮಕ್ಕಳಿಗೆ ಕುಶಲವರೆಂದು ಹೆಸರಿಟ್ಟನು.]
  • ತಾತ್ಪರ್ಯ-:ಆಶ್ರಮದಲ್ಲಿರುವಾಗ, ಸೀತೆಯ ಗರ್ಭಕ್ಕೆ ಒಂಭತ್ತು ತಿಂಗಳ ಅವಧಿ ತುಂಬಿತು. ಬಳಿಕ ಒಂದು ರಾತ್ರಿ ಶುಭಲಗ್ನದಲ್ಲಿ ಆ ಸೂತಿಕಾಗೃಹದಲ್ಲಿ ಚತುರ ಸೂಲಗಿತ್ತಿಯರು ಉಪಚರಿಸಲು ಅವಳಿಮಕ್ಕಳನ್ನು ಪಡೆದಳು. ಅವಸರದಿಂದ ಮುನಿವಟುಗಳು ಬಂದು ಮುನಿಗೆ ಹೇಳಲು ಸಂಭ್ರಮದಿಂದ ವಾಲ್ಮೀಕಿಮುನಿ ಬಂದು ನೋಡಿ ಕುಶಲವದಿಂದ/ದರ್ಭೆಯಿಂದ ನೀರು ಚಿಮುಕಿಸಿ ಮಕ್ಕಳಿಗೆ ಕುಶಲವರೆಂದು ಹೆಸರಿಟ್ಟನು.
  • (ಪದ್ಯ-೪೫)

ಪದ್ಯ :೪6:

[ಸಂಪಾದಿಸಿ]

ದೆಸೆಗಳ್ ಪ್ರಸನ್ನತೆಯೊಳೆಸೆದ ವಾಗಸದೊಳುಡು | ವಿಸರಂಗಳೊಪ್ಪಿದುವು ಪೊಸಗಂಪಿಡಿದು ಗಾಳಿ | ಪಸರಿಸಿತು ತವೆ ಸುಪ್ರದಕ್ಷಿಣದೊಳುರಿದುದಗ್ನಿ ಜ್ವಾಲೆ ಕಡಲುಕ್ಕಿತು ||
ವಸುಧೆ ನಲಿದುದು ತಿಳಿದು ಪರಿದುವು ನದಿಗಳಂದು | ಶಶಿರವಿಗಳುದಯಿಸಿದರೇಕಕಾಲದೊಳೆನಲ್ | ಶಿಶುಗಳಾಶ್ರಮದ ಮುನಿಗಳ ಕಣ್ಗೆ ಕಾಣಿಸಿದರೊಸಗೆ ಮೂಜಗಕಾದುದು ||46||**

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದೆಸೆಗಳ್ ಪ್ರಸನ್ನತೆಯೊಳು ಎಸೆದವು ಆಗಸದೊಳು ಉಡುವಿಸರಂಗಳೊಪ್ಪಿದುವು ಪೊಸಗಂಪಿಡಿದು ಗಾಳಿ ಪಸರಿಸಿತು ತವೆ ಸುಪ್ರದಕ್ಷಿಣದೊಳು ಉರಿದುದ ಅಗ್ನಿ ಜ್ವಾಲೆ ಕಡಲುಕ್ಕಿತು=[ದಿಕ್ಕುಗಳು ಪ್ರಸನ್ನತೆಯಲ್ಲಿ ಪ್ರಕಾಶಿಸಿದವು; ಆಗಸದಲ್ಲಿ ನಕ್ಷತ್ರಗಳ ರಾಶಿಗಳು ಅನುಕೂಲವಾಗಿದ್ದವು. ಹೊಸಕಂಪಿನಲ್ಲಿ ಗಾಳಿ ಬೀಸಿತು. ಸುಪ್ರದಕ್ಷಿಣೆಯಲ್ಲಿ ಚೆನ್ನಾಗಿ ಅಗ್ನಿ ಜ್ವಾಲೆ ಉರಿಯಿತು; ಕಡಲುಕ್ಕಿತು.]; ವಸುಧೆ ನಲಿದುದು ತಿಳಿದು ಪರಿದುವು ನದಿಗಳಂದು ಶಶಿರವಿಗಳುದಯಿಸಿದರು ಏಕಕಾಲದೊಳು ಎನಲ್ ಶಿಶುಗಳು ಆಶ್ರಮದ ಮುನಿಗಳ ಕಣ್ಗೆ ಕಾಣಿಸಿದರು ಒಸಗೆ ಮೂಜಗಕಾದುದು=[ಭೂಮಿ ನಲಿಯಿತು; ತಿಳಿದು ಪರಿದುವು ಅಂದು ನದಿಗಳು ತಿಳಿಯಾಗಿ ಹರಿದವು; ಶಶಿರವಿಗಳು ಏಕಕಾಲದಲ್ಲಿ ಉದಯಿಸಿದರು, ಹೀಗಿರಲು, ಶಿಶುಗಳು ಆಶ್ರಮದ ಮುನಿಗಳ ಕಣ್ಣಿಗೆ ಕಂಡರು; ಸುದ್ದಿಸಂಭ್ರಮ ಮೂರು ಜಗತ್ತಿಗೂ ಆಯಿತು.]
  • ತಾತ್ಪರ್ಯ-:ದಿಕ್ಕುಗಳು ಪ್ರಸನ್ನತೆಯಲ್ಲಿ ಪ್ರಕಾಶಿಸಿದವು; ಆಗಸದಲ್ಲಿ ನಕ್ಷತ್ರಗಳ ರಾಶಿಗಳು ಅನುಕೂಲವಾಗಿದ್ದವು. ಹೊಸಕಂಪಿನಲ್ಲಿ ಗಾಳಿ ಬೀಸಿತು. ಸುಪ್ರದಕ್ಷಿಣೆಯಲ್ಲಿ ಚೆನ್ನಾಗಿ ಅಗ್ನಿ ಜ್ವಾಲೆ ಉರಿಯಿತು; ಕಡಲುಕ್ಕಿತು. ಭೂಮಿ ನಲಿಯಿತು; ತಿಳಿದು ಪರಿದುವು ಅಂದು ನದಿಗಳು ತಿಳಿಯಾಗಿ ಹರಿದವು; ಶಶಿರವಿಗಳು ಏಕಕಾಲದಲ್ಲಿ ಉದಯಿಸಿದರು, ಹೀಗಿರಲು, ಶಿಶುಗಳು ಆಶ್ರಮದ ಮುನಿಗಳ ಕಣ್ಣಿಗೆ ಕಂಡರು; ಸುದ್ದಿಸಂಭ್ರಮ ಮೂರು ಜಗತ್ತಿಗೂ ಆಯಿತು.
  • (ಪದ್ಯ-೪೬)

ಪದ್ಯ :೪೭:

[ಸಂಪಾದಿಸಿ]

ಬಾಲದೊಡಿಗೆಗಳೆಲ್ಲಮಂ ತುಡಿಸಿ ನೋಡುವಂ | ಬಾಲಲೀಲೆಗಳನಾಡಿಸಿ ಮುದ್ದು ಮಾಡುವಂ | ಬಾಲಕರ್ಗಿನಿದಾದ ವಸ್ತುವಂ ಕೊಡುವಂ ತನ್ನ ತೊಡೆಮಡಿಲೊಳಿಟ್ಟು ||
ಲಾಲಿಸುವನಾವಗಂ ಜಪ ಸಮಾಧಿ ತಪಗಳ | ಕಾಳಮಂ ಬಗೆಯದೆ ಮುನೀರ್ಶವರಂ ಕುಶಲವರ | ಮೇಣಕ್ಕರೊಳಿರ್ದನಾಶ್ರಮದೊಳುತ್ಸವಂ ಪೆರ್ಚಿದದು ದಿನದಿನದೊಳು ||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಾಲ ತೊಡಿಗೆಗಳ ಎಲ್ಲಮಂ ತುಡಿಸಿ ನೋಡುವಂ ಬಾಲಲೀಲೆಗಳನು ಆಡಿಸಿ ಮುದ್ದು ಮಾಡುವಂ ಬಾಲಕರ್ಗೆ ಇನಿದಾದ ವಸ್ತುವಂ ಕೊಡುವಂ ತನ್ನ ತೊಡೆಮಡಿಲೊಳು ಇಟ್ಟು ಲಾಲಿಸುವನು=[ವಾಲ್ಮೀಕಿಮುನಿ,ಎಲ್ಲಾ ಬಗೆಯ ಬಾಲಕರ ತೊಡಿಗೆಗಳನ್ನು ತೊಡಿಸಿ ನೋಡುವನು; ಬಾಲಲೀಲೆಗಳನ್ನು ಆಡಿಸಿ ಮುದ್ದು ಮಾಡುವನು; ಬಾಲಕರಿಗೆ ಸವಿಯಾದ ವಸ್ತುಗಳನ್ನು ಕೊಡುವನು; ತನ್ನ ತೊಡೆಯ ಮಡಿಲಲ್ಲಿ ಇಟ್ಟುಕೊಂಡು ಲಾಲಿಸುವನು.]; ಆವಗಂ ಜಪ ಸಮಾಧಿ ತಪಗಳ ಕಾಳಮಂ ಬಗೆಯದೆ ಮುನೀಶ್ವರಂ ಕುಶಲವರ ಮೇಣ್ ಅಕ್ಕರೊಳ್ ಇರ್ದನು ಆಶ್ರಮದೊಳು ಉತ್ಸವಂ ಪೆರ್ಚಿದದು ದಿನದಿನದೊಳು=[ಆ ಸಮಯದಲ್ಲಿ ಜಪ ಸಮಾಧಿ ತಪಗಳ ಕಾಳಜಿಯನ್ನು ಯೋಚಿಸದೆ ಮುನೀಶ್ವರನು ಕುಶಲವರಲ್ಲಿ ಬಹಳ ಪ್ರೀತಿಯಿಂದ ಇದ್ದನು. ಆಶ್ರಮದಲ್ಲಿ ದಿನದಿನಕ್ಕೂ ಸಂಭ್ರಮವು ಹೆಚ್ಚಿತು].
  • ತಾತ್ಪರ್ಯ-:ವಾಲ್ಮೀಕಿಮುನಿ,ಎಲ್ಲಾ ಬಗೆಯ ಬಾಲಕರ ತೊಡಿಗೆಗಳನ್ನು ತೊಡಿಸಿ ನೋಡುವನು; ಬಾಲಲೀಲೆಗಳನ್ನು ಆಡಿಸಿ ಮುದ್ದು ಮಾಡುವನು; ಬಾಲಕರಿಗೆ ಸವಿಯಾದ ವಸ್ತುಗಳನ್ನು ಕೊಡುವನು; ತನ್ನ ತೊಡೆಯ ಮಡಿಲಲ್ಲಿ ಇಟ್ಟುಕೊಂಡು ಲಾಲಿಸುವನು. ಆ ಸಮಯದಲ್ಲಿ ಜಪ ಸಮಾಧಿ ತಪಗಳ ಕಾಳಜಿಯನ್ನು ಯೋಚಿಸದೆ ಮುನೀಶ್ವರನು ಕುಶಲವರಲ್ಲಿ ಬಹಳ ಪ್ರೀತಿಯಿಂದ ಇದ್ದನು. ಆಶ್ರಮದಲ್ಲಿ ದಿನದಿನಕ್ಕೂ ಸಂಭ್ರಮವು ಹೆಚ್ಚಿತು.
  • (ಪದ್ಯ-೪೭)

ಪದ್ಯ :೪೭:

[ಸಂಪಾದಿಸಿ]

ದಶರಥ ನೃಪಾಲ ಸುತನರಮನೆಯ ಬೆಳವಿಗೆಯ | ಶಿಶುಗಳ್ಗೆ ಕಾಂತಾರವಾಸದೊಳ್ ನವೆವ ಕ | ರ್ಕಶಮಿದೆತ್ತಣದೆಂದು ಮಿಥಿಲೇಂದ್ರ ಸಂಭೂತೆ ಚಿತ್ತದೊಳ್ ಮರುಗದಂತೆ ||
ವಿಶದಮಾನಸನಾಗಿ ವಾಲ್ಮೀಕಿಮುನಿವರಂ | ಕುಶಲವರನೋವಿದಂ ವಿವಿಧವೈಭವದಿಂದೆ | ಶಶಧರನ ಕಳೆಯ ತೆರದೊಳಾರಾಘವಾತ್ಮಜರ್ ದಿನದಿನಕೆ ವರ್ಧಿಸಿದರು ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದಶರಥ ನೃಪಾಲ ಸುತನ ಅರಮನೆಯ ಬೆಳವಿಗೆಯ ಶಿಶುಗಳ್ಗೆ ಕಾಂತಾರವಾಸದೊಳ್ ನವೆವ ಕರ್ಕಶಮಿದು ಎತ್ತಣದೆಂದು ಮಿಥಿಲೇಂದ್ರ ಸಂಭೂತೆ ಚಿತ್ತದೊಳ್ ಮರುಗದಂತೆ=[ದಶರಥ ನೃಪಾಲ ಸುತನಾದ ರಾಮನ ಅರಮನೆಯಲ್ಲಿ ಬೆಳಯಬೇಕಾದ ಶಿಶುಗಳು ವನವಾಸದಲ್ಲಿ ನವೆದು ಕಷ್ಟಪಡುವ ಸ್ಥಿತಿ ಬಂದಿತಲ್ಲಾ ಎಂದು ಮಿಥಿಲೇಂದ್ರ ಜನಕನಮಗಳು ಸೀತೆ ಮನಸ್ಸಿನಲ್ಲಿ ಕೊರಗದಂತೆ ]; ವಿಶದ ಮಾನಸನಾಗಿ ವಾಲ್ಮೀಕಿಮುನಿವರಂ ಕುಶಲವರನು ಓವಿದಂ (ಸಾಕಿದನು) ವಿವಿಧವೈಭವದಿಂದೆ ಶಶಧರನ ಕಳೆಯ ತೆರದೊಳು ಆ ರಾಘವಾತ್ಮಜರ್ ದಿನದಿನಕೆ ವರ್ಧಿಸಿದರು=[ವಿಶಾಲ ಮನಸ್ಸಿನಿಂದ ವಾಲ್ಮೀಕಿ ಮುನಿವರನು ಕುಶಲವರನ್ನು ವಿವಿಧವೈಭವದಿಂದ ಸಾಕಿದನು. ಚಂದ್ರನ ಕಳೆಯ ರೀತಿಯಲ್ಲಿ ಆ ರಾಘವನ ಮಕ್ಕಳು ದಿನದಿನಕೆ ಬೆಳೆದರು].
  • ತಾತ್ಪರ್ಯ-:ದಶರಥ ನೃಪಾಲ ಸುತನಾದ ರಾಮನ ಅರಮನೆಯಲ್ಲಿ ಬೆಳಯಬೇಕಾದ ಶಿಶುಗಳು ವನವಾಸದಲ್ಲಿ ನವೆದು ಕಷ್ಟಪಡುವ ಸ್ಥಿತಿ ಬಂದಿತಲ್ಲಾ ಎಂದು ಮಿಥಿಲೇಂದ್ರಜನಕನ ಮಗಳು ಸೀತೆ ಮನಸ್ಸಿನಲ್ಲಿ ಕೊರಗದಂತೆ, ವಿಶಾಲ ಮನಸ್ಸಿನಿಂದ ವಾಲ್ಮೀಕಿ ಮುನಿವರನು ಕುಶಲವರನ್ನು ವಿವಿಧವೈಭವದಿಂದ ಸಾಕಿದನು. ಚಂದ್ರನ ಕಳೆಯ ರೀತಿಯಲ್ಲಿ ಆ ರಾಘವನ ಮಕ್ಕಳು ದಿನದಿನಕೆ ಬೆಳೆದರು].
  • (ಪದ್ಯ-೪೭)

ಪದ್ಯ :೪೮:

[ಸಂಪಾದಿಸಿ]

ಚೆಲ್ವೆರಡುರೂಪಾಯ್ತೊ ವಿಮಲತೆ ಕವಲ್ತುದೋ | ಗೆಲ್ವದೆಸೆ ಗೆಳೆಗೊಂಡಡರ್ದಪುದೊ ಕೀರ್ತಿಯ ಮ | ದಲ್ವಸುಧೆಯೊಳ್ ದ್ವಿಧಾಕೃತಿಯಾಯ್ತೊ ಸಂತಸದ ಬೆಳಸಿನ ಬೆಳೆದ ಪಸುಗೆಯೊ ||
ಸಲ್ವಕುಲದೇಳ್ಗೆಯ ಸಸಿಯ ಕೋಡೊ ಮೋಹನದ | ಬಲ್ವೊನಲ ಸವಡಿಯೋ ಸೊಗಸಿನವಳಿಯ ಫಲವೊ | ಸೊಲ್ವೊಡಿದು ಪೊಸತೆನಲ್ ಕುಶಲವರ್ ಕುಶಲದಿಂ ಕಣ್ಗೆಸೆದರಾಶ್ರಮದೊಳು ||49||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಚೆಲ್ವು ಎರಡುರೂಪಾಯ್ತೊ ವಿಮಲತೆ ಕವಲ್ತುದೋ ಗೆಲ್ವದೆಸೆಗೆ ಎಳೆಗೊಂಡು ಅಡರ್ದಪುದೊ=[ಸೌಂದರ್ಯವು ಎರಡು ರೂಪವಾಯ್ತೊ!ನಿರ್ಮಲತೆ/ ಶುದ್ಧತೆ ಕವಲು ಒಡೆಯಿತೋ! ಜಯಿಸು ದೆಸೆಗೆ ಕುಡಿಯೊಡೆದು ಹರಡಿತೊ!]; ಕೀರ್ತಿಯ ಮದಲ್ವಸುಧೆಯೊಳ್ (ಮಡಲ್=ಪ್ರವಾಹ)) ದ್ವಿಧಾಕೃತಿಯಾಯ್ತೊ ಸಂತಸದ ಬೆಳಸಿನ ಬೆಳೆದ ಪಸುಗೆಯೊ (ಭಾಗ) ಸಲ್ವಕುಲದೇಳ್ಗೆಯ ಸಸಿಯ ಕೋಡೊ! ಮೋಹನದ ಬಲ್ವೊನಲ ಸವಡಿಯೋ=[ಕೀರ್ತಿಯ ಹರಿವಿನ ಹಾಲಿನಲ್ಲಿ ಎರಡು ಆಕೃತಿಯಾಯ್ತೊ! ಸಂತೋಷದ ಪೈರಿನಲ್ಲಿ ಬೆಳೆದ ಎರದು ವಿಭಾಗವೋ! ಹೆಸರುಳ್ಳ ಕುಲದ ಏಳ್ಗೆಯ ಚಂದ್ರನ ಕೋಡೊ! ಮೋಹನರೂಪಿನ ದೊಡ್ಡ ಹೊನಲೋ! ಸವಡಿಯೋ/ಜೋಡಿಯೊ! ]; ಸೊಗಸಿನ ಅವಳಿಯ/ಸೊಗಸಿನ ವಳಿಯ ಫಲವೊ ಸೊಲ್ವೊಡೆ (ಸೊಲ್ =ಹೇಳು) ಇದು ಪೊಸತೆನಲ್ ಕುಶಲವರ್ ಕುಶಲದಿಂ ಕಣ್ಗೆಸೆದರು ಆಶ್ರಮದೊಳು=[ಸೊಗಸಿನ ಅವಳಿಯ ಫಲವೊ (ಸೊಗಸೇ ರೂಪು ಪಡೆದು ಎರಡಾಗಿ ಬಂದಿದೆಯೋ ಅಥವಾ ಸೊಗಸಿನ ಬಳ್ಳಿಯ(ವಲಿಯ)ಲ್ಲಿ ಬಿಟ್ಟ ಫಲವೊ)! ಹೇಳುವುದಾದರೆ ಇದು ಹೊಸತೆಂಬಂತೆ ಕುಶಲವರು ಆರೋಗ್ಯದಿಂದಿದ್ದು ಕಣ್ಣಿಗೆ ಪ್ರಕಾಶಿಸುತ್ತಿದ್ದರು.]
  • ತಾತ್ಪರ್ಯ-:ಕುಶಲವರು ಹೇಗಿದ್ದರೆಂದರೆ: ಸೌಂದರ್ಯವು ಎರಡು ರೂಪವಾಯ್ತೊ!ನಿರ್ಮಲತೆ/ ಶುದ್ಧತೆ ಕವಲು ಒಡೆಯಿತೋ! ಜಯಿಸು ದೆಸೆಗೆ ಕುಡಿಯೊಡೆದು ಹರಡಿತೊ! ಕೀರ್ತಿಯ ಹರಿವಿನ ಹಾಲಿನಲ್ಲಿ ಎರಡು ಆಕೃತಿಯಾಯ್ತೊ! ಸಂತೋಷದ ಪೈರಿನಲ್ಲಿ ಬೆಳೆದ ಎರದು ವಿಭಾಗವೋ! ಹೆಸರುಳ್ಳ ಕುಲದ ಏಳ್ಗೆಯ ಚಂದ್ರನ ಕೋಡೊ! ಮೋಹನರೂಪಿನ ದೊಡ್ಡ ಹೊನಲೋ! ಸವಡಿಯೋ/ಜೋಡಿಯೊ! ಸೊಗಸಿನ ಅವಳಿಯ ಫಲವೊ (ಸೊಗಸೇ ರೂಪು ಪಡೆದು ಎರಡಾಗಿ ಬಂದಿದೆಯೋ ಅಥವಾ ಸೊಗಸಿನ ಬಳ್ಳಿಯ(ವಳಿಯ)ಲ್ಲಿ ಬಿಟ್ಟ ಫಲವೊ)! ಹೇಳುವುದಾದರೆ ಇದು ಹೊಸತೆಂಬಂತೆ ಕುಶಲವರು ಆರೋಗ್ಯದಿಂದಿದ್ದು ಕಣ್ಣಿಗೆ ಪ್ರಕಾಶಿಸುತ್ತಿದ್ದರು.
  • (ಪದ್ಯ-೪೮)

ಪದ್ಯ :೪೯:

[ಸಂಪಾದಿಸಿ]

ತೊಟ್ಟಿಲೊಳ್ ನಲಿವ ನೆವಮಿಲ್ಲದೆ ನಗುವ ಬಾಯ್ಗೆ | ಬೆಟ್ಟಕ್ಕಿ ಪೀರ್ವ ಪಸಿದೊಡೆ ಚೀರ್ವ ಮೊಲೆಯುಂಬ | ಪಟ್ಟಿರಿಸೆ ಪೊರಳ್ವಂಬೆಗಾಲಿಡುವ ಮೊಳೆವಲ್ಲ ಜೊಲ್ಲುಗೆ ತೊದಳಿಸಿ ನುಡಿವ ||
ದಟ್ಟಡಿಯಿಡುವ ನಿಲ್ವ ತೊಡರ್ವ ಬೇಡುವ ಪರಿವ | ಬಟ್ಟೆಯೊಳೊರಗುವ ಕಾಡುವ ಕುಣಿವ ಲೀಲೆಯಂ | ನೆಟ್ಟನೆ ಕುಮಾರಕರ್ ತೋರಿದರ್ ಜಾನಕಿಗೆ ವಾಲ್ಮೀಕಿಮುನಿವರಂಗೆ ||50||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕುಶಲವರು ಬೆಳೆದ ಬಗೆ ಮತ್ತು ಬಾಲಲೀಲೆ: ತೊಟ್ಟಿಲೊಳ್ ನಲಿವ ನೆವಮಿಲ್ಲದೆ ನಗುವ ಬಾಯ್ಗೆ ಬೆಟ್ಟಕ್ಕಿ ಪೀರ್ವ ಪಸಿದೊಡೆ ಚೀರ್ವ ಮೊಲೆಯುಂಬ ಪಟ್ಟಿರಿಸೆ ಪೊರಳ್ವ ಅಂಬೆಗಾಲಿಡುವ ಮೊಳೆವಲ್ಲ ಜೊಲ್ಲುಗೆ ತೊದಳಿಸಿ ನುಡಿವ=[ತೊಟ್ಟಿಲಲ್ಲಿ ನಲಿದಾಡುವ ಶಿಶುಗಳು; ನೆವಮಿಲ್ಲದೆ ನಗುವರು; ಬಾಯಿಗೆ ಬೆಟ್ಟು ಹಾಕಿಚೀಪುವರು;ಹಸಿವಾದರೆ ಚೀರುವರು; ಮೊಲೆಯನ್ನು ಉಣ್ಣಲು ಒತ್ತಿ ಇರಿಸಿದರೆ ಹೊರಳುವರು; ಅಂಬೆಗಾಲಿಡುವರು; ಮೊಳೆಯುತ್ತಿರುವ ಹಲ್ಲುಹೊಂದಿರುವರು; ಜೊಲ್ಲುಸುರಿಸುತ್ತಾ ತೊದಲಿಸಿ ಮಾತನಾಡುವರು; ]; ದಟ್ಟಡಿಯಿಡುವ ನಿಲ್ವ ತೊಡರ್ವ ಬೇಡುವ ಪರಿವ ಬಟ್ಟೆಯೊಳೊರಗುವ ಕಾಡುವ ಕುಣಿವ ಲೀಲೆಯಂ ನೆಟ್ಟನೆ ಕುಮಾರಕರ್ ತೋರಿದರ್ ಜಾನಕಿಗೆ ವಾಲ್ಮೀಕಿಮುನಿವರಂಗೆ=[(ದಟ್ಟ)ಹತ್ತಿರಹತ್ತಿರ ಹೆಜ್ಜೆ ಇಟ್ಟು ನೆಡಿಯುವರು; ನಿಲ್ಲುವರು, ನಡೆಯುವಾಗ ತೊಡರಿಕೊಳ್ಳುವರು; ಕೊಡುಎಂದು ಕೇಳುವರು; ತಪ್ಪಿಸಿಕೊಳ್ಳುವರು; ದಾರುಲ್ಲಿಯೇ ಮಲಗುವರು; ಕಾಡುವರು, ಕುಣಿಯುವರು; ಈ ಬಗೆಯ ಲೀಲೆಯನ್ನು ಚಂದವಾಗಿ ಕುಮಾರಕರ್ ತೋರಿಸಿದರು ಜಾನಕಿಗೆ ವಾಲ್ಮೀಕಿಮುನಿವರಂಗೆ].
  • ತಾತ್ಪರ್ಯ-:ಕುಶಲವರು ಬೆಳೆದ ಬಗೆ ಮತ್ತು ಬಾಲಲೀಲೆ: ತೊಟ್ಟಿಲಲ್ಲಿ ನಲಿದಾಡುವ ಶಿಶುಗಳು; ನೆವಮಿಲ್ಲದೆ ನಗುವರು; ಬಾಯಿಗೆ ಬೆಟ್ಟು ಹಾಕಿಚೀಪುವರು;ಹಸಿವಾದರೆ ಚೀರುವರು; ಮೊಲೆಯನ್ನು ಉಣ್ಣಲು ಒತ್ತಿ ಇರಿಸಿದರೆ ಹೊರಳುವರು; ಅಂಬೆಗಾಲಿಡುವರು; ಮೊಳೆಯುತ್ತಿರುವ ಹಲ್ಲುಹೊಂದಿರುವರು; ಜೊಲ್ಲುಸುರಿಸುತ್ತಾ ತೊದಲಿಸಿ ಮಾತನಾಡುವರು; (ದಟ್ಟ)ಹತ್ತಿರಹತ್ತಿರ ಹೆಜ್ಜೆ ಇಟ್ಟು ನೆಡಿಯುವರು; ನಿಲ್ಲುವರು, ನಡೆಯುವಾಗ ತೊಡರಿಕೊಳ್ಳುವರು; ಕೊಡುಎಂದು ಕೇಳುವರು; ತಪ್ಪಿಸಿಕೊಳ್ಳುವರು; ದಾರುಲ್ಲಿಯೇ ಮಲಗುವರು; ಕಾಡುವರು, ಕುಣಿಯುವರು; ಈ ಬಗೆಯ ಲೀಲೆಯನ್ನು ಚಂದವಾಗಿ ಕುಮಾರಕರು ಜಾನಕಿಗೆ ವಾಲ್ಮೀಕಿಮುನಿವರರಿಗೆ ತೋರಿಸಿದರು.
  • (ಪದ್ಯ-೪೯)

ಪದ್ಯ :೫೧:

[ಸಂಪಾದಿಸಿ]

ಬಿಡದೆ ಪಾಲ್ಪೀರ್ವುದಂ ಕಳಿಯಲೋರಗೆ ಮಕ್ಕ | ಳೊಡನೆ ಧೂಳಾಟ ಮೊದಲಾದ ಲೀಲೆಗಳ ಪರಿ | ವಿಡಿಯೆಂದೆಸೆವ ಕುಮಾರರ್ಗೆ ಮುನಿಪತಿ ಚೌಲಕರ್ಮಂಗಳಂ ಮಾಡಿಸಿ ||
ತೊಡಗಿಸಿದನಕ್ಷರಭ್ಯಾಸಮಂ ಬಳಿಕ ನಡೆ | ನುಡಿಯ ಜಾಣ್ಮೆಯ ಕಲೆಯ ರಾಜಲಕ್ಷಣದ ಚೆ | ಲ್ವಿಡಿದ ಲಲಿತಾಂಗದಿಂ ಕುಶಲವರ್ ಕುಶಲ ವರ್ಧನರಾಗಿ ರಂಜಿಸಿದರು ||51||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಿಡದೆ ಪಾಲ್ ಪೀರ್ವುದಂ ಕಳಿಯಲು ಓರಗೆ ಮಕ್ಕಳೊಡನೆ ಧೂಳಾಟ ಮೊದಲಾದ ಲೀಲೆಗಳ ಪರಿವಿಡಿಯೆಂದ ಎಸೆವ ಕುಮಾರರ್ಗೆ ಮುನಿಪತಿ ಚೌಲಕರ್ಮಂಗಳಂ ಮಾಡಿಸಿ=[ಬಿಡದೆ ಎದೆಹಾಲು ಕುಡಿಯುವ ವಯಸ್ಸು ದಾಟಿದ ನಂತರ, ಓರಗೆಯ ಮಕ್ಕಳೊಡನೆ ಧೂಳಿನಲ್ಲಿ ಆಟ ಮೊದಲಾದ ಲೀಲೆಗಳನ್ನು ಮಾಡತ್ತಾ ಈಕ್ರಮದಲ್ಲಿ ಶೋಭಿಸಿದ ಕುಮಾರರಿಗೆ ಮುನಿಪತಿಯು ಚೌಲಕರ್ಮಗಳ ಸಂಸ್ಕಾರಗಳನ್ನು ಮಾಡಿಸಿ]; ತೊಡಗಿಸಿದನು ಅಕ್ಷರಭ್ಯಾಸಮಂ ಬಳಿಕ ನಡೆ ನುಡಿಯ ಜಾಣ್ಮೆಯ ಕಲೆಯ ರಾಜಲಕ್ಷಣದ ಚೆಲ್ವಿಡಿದ ಲಲಿತಾಂಗದಿಂ ಕುಶಲವರ್ ಕುಶಲ ವರ್ಧನರಾಗಿ ರಂಜಿಸಿದರು=[ತೊಡಗಿಸಿದನು ಅಕ್ಷರಭ್ಯಾಸವನ್ನು ಆರಂಭೀಸಿದನು; ಬಳಿಕ ನಡೆ ನುಡಿಯ ತಿಳುವಳಿಕೆಯ ಕಲೆಯ ಶಿಕ್ಷಣ ಪಡೆದು ರಾಜಲಕ್ಷಣದ ಸುಂದರ ಕೋಮಲದೇಹದ ಕುಶಲವರು ಕ್ಷೇಮದಲ್ಲಿ ಬೆಳೆದುಪ್ರಕಾಶಿಸಿದರು.]
  • ತಾತ್ಪರ್ಯ-:ಕೇವಲ ಎದೆಹಾಲು ಕುಡಿಯುವ ವಯಸ್ಸು ದಾಟಿದ ನಂತರ, ಓರಗೆಯ ಮಕ್ಕಳೊಡನೆ ಧೂಳಿನಲ್ಲಿ ಆಟ ಮೊದಲಾದ ಲೀಲೆಗಳನ್ನು ಮಾಡತ್ತಾ ಈಕ್ರಮದಲ್ಲಿ ಶೋಭಿಸಿದ ಕುಮಾರರಿಗೆ ಮುನಿಪತಿಯು ಚೌಲಕರ್ಮಗಳ ಸಂಸ್ಕಾರಗಳನ್ನು ಮಾಡಿಸಿತೊಡಗಿಸಿದನು ಅಕ್ಷರಭ್ಯಾಸವನ್ನು ಆರಂಭೀಸಿದನು; ಬಳಿಕ ನಡೆ ನುಡಿಯ ತಿಳುವಳಿಕೆಯ ಕಲೆಯ ಶಿಕ್ಷಣ ಪಡೆದು ರಾಜಲಕ್ಷಣದ ಸುಂದರ ಕೋಮಲದೇಹದ ಕುಶಲವರು ಕ್ಷೇಮದಲ್ಲಿ ಬೆಳೆದುಪ್ರಕಾಶಿಸಿದರು.
  • (ಪದ್ಯ-೫೧)

ಪದ್ಯ :೫೨:

[ಸಂಪಾದಿಸಿ]

ಶ್ರೀಮಾಧವನ ಮನೋಹರದ ಸೌಂದರ್ಯಮಂ | ಕಾಮನ ಜನಕನ ಕಮನೀಯ ಲಾವಣ್ಯಮಂ | ರಾಮಚಂದ್ರನ ರಾಮಣೀಯಕದ ರೂಪಮಂ ತಾಳ್ದೊಗೆದ ಸುಕುಮಾರರ ||
ಕೋಮಲಾಂಗದ ಸೊಬಗನಭಿವರ್ಣಿಸುವರುಂಟೆ | ಭೂಮಿಯೊಳ್ ಚೆಲ್ವಿಗೆ ವಸಂತನಂ ಮದನನಂ | ಸೋಮನಂ ಪಡಿಯಿಡಲ್ ಪುನರುಕ್ತಮುಪ್ಪುದೆನೆ ಕುಶಲವರ್ ಕಣ್ಗೆಸೆದರು ||52||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಶ್ರೀಮಾಧವನ ಮನೋಹರದ ಸೌಂದರ್ಯಮಂ ಕಾಮನ ಜನಕನ ಕಮನೀಯ ಲಾವಣ್ಯಮಂ ರಾಮಚಂದ್ರನ ರಾಮಣೀಯಕದ ರೂಪಮಂ ತಾಳಿದ ಒಗೆದ=[ಶ್ರೀವಿಷ್ಣುವಿನ ಮನೋಹರವಾದ ಸೌಂದರ್ಯವನ್ನೂ, ಅವನ ಆಕರ್ಷಣೀಯವಾದ ಲಾವಣ್ಯವನ್ನೂ, ರಾಮಚಂದ್ರನ ರಮಣೀಯ ರೂಪವನ್ನೂ ತಾಳಿ ತೊರುವ]; ಸುಕುಮಾರರ ಕೋಮಲಾಂಗದ ಸೊಬಗನು ಅಭಿವರ್ಣಿಸುವರುಂಟೆ ಭೂಮಿಯೊಳ್ ಚೆಲ್ವಿಗೆ ವಸಂತನಂ ಮದನನಂ ಸೋಮನಂ ಪಡಿಯಿಡಲ್ ಪುನರುಕ್ತಮುಪ್ಪುದೆನೆ ಕುಶಲವರ್ ಕಣ್ಗೆಸೆದರು =[ಸುಕುಮಾರರಾದ ಲವಕುಶರ ಕೋಮಲ ಶರೀರದ ಸೊಬಗನ್ನು ಸರಿಯಾಗಿ ವಿವರಿಸುವವರು ಈ ಭೂಮಿಯಲ್ಲಿ ಇದ್ದಾರೆಯೇ? ಅವರ ಸೌಂದರ್ಯಅದಕ್ಕೂ ಮಿಗಿಲಾದುದು. ಅವರ ಚೆಲುವಿಗೆ ವಸಂತನನ್ನೂ ಮದನನ್ನೂ ಸೋಮನನ್ನೂ ಸರಿಎಂದರೆ ಪುನರುಕ್ತಿಯಾಗುವುದು. ಈ ರೀತಿಯಲ್ಲಿ ಕುಶಲವರು ಶೋಭಿಸಿದರು].
  • ತಾತ್ಪರ್ಯ-:ಶ್ರೀಮಹಾವಿಷ್ಣುವಿನ ಮನೋಹರವಾದ ಸೌಂದರ್ಯವನ್ನೂ, ಅವನ ಆಕರ್ಷಣೀಯವಾದ ಲಾವಣ್ಯವನ್ನೂ, ರಾಮಚಂದ್ರನ ರಮಣೀಯ ರೂಪವನ್ನೂ ತಾಳಿ ತೊರುವ, ಸುಕುಮಾರರಾದ ಲವಕುಶರ ಕೋಮಲ ಶರೀರದ ಸೊಬಗನ್ನು ಸರಿಯಾಗಿ ವಿವರಿಸುವವರು ಈ ಭೂಮಿಯಲ್ಲಿ ಇದ್ದಾರೆಯೇ? ಅವರ ಸೌಂದರ್ಯಅದಕ್ಕೂ ಮಿಗಿಲಾದುದು. ಅವರ ಚೆಲುವಿಗೆ ವಸಂತನನ್ನೂ ಮದನನ್ನೂ ಸೋಮನನ್ನೂ ಸರಿಎಂದರೆ ಪುನರುಕ್ತಿಯಾಗುವುದು. ಈ ರೀತಿಯಲ್ಲಿ ಕುಶಲವರು ಶೋಭಿಸಿದರು.
  • (ಪದ್ಯ-೫೨)

ಪದ್ಯ :೫೩:

[ಸಂಪಾದಿಸಿ]

ದ್ವಾದಶಾಬ್ದದ ಮೇಲೆ ಮುನಿಪಂ ಕುಮಾರರ್ಗೆ | ವೇದೋಕ್ತದಿಂದಮುಪನಯನಂಗಳಂ ಮಾಡಿ | ಭೂದೇವನಿಕರಕೆ ವಸಿಷ್ಠ ನೊಳ್ ವರಕಾಮಧೇನುವಂ ಬೇಡಿ ತಂದು ||
ಆದರಿಸೆ ಭೋಜನ ಸುಗಂಧಾಕ್ಷತೆಗಳಿಂದ | ಮಾದುದತಿವಿಭವದಿಂದುತ್ಸವಂ ಬಳಿಕ ತರು | ಣಾದಿತ್ಯಸನ್ನಿಭರ್ ತೊಳಗಿದರ್ ಜಾನಕಿಯ ಚಿತ್ತಕಾನಂದಮಾಗೆ ||53||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದ್ವಾದಶಾಬ್ದದ ಮೇಲೆ ಮುನಿಪಂ ಕುಮಾರರ್ಗೆ ವೇದೋಕ್ತದಿಂದಂ ಉಪನಯನಂಗಳಂ ಮಾಡಿ=[ಕುಶಲವರಿಗೆ ಹನ್ನೆರಡು ವರ್ಷವಾದ ಮೇಲೆ ಮುನಿಯು ಕುಮಾರರಿಗೆ ವೇದೋಕ್ತ ರೀತಿಯಿಂದ ಉಪನಯನಗಳನ್ನು ಮಾಡಿದನು. ]; ಭೂದೇವ ನಿಕರಕೆ ವಸಿಷ್ಠನೊಳ್ ವರಕಾಮಧೇನುವಂ ಬೇಡಿ ತಂದು ಆದರಿಸೆ ಭೋಜನ ಸುಗಂಧಾಕ್ಷತೆಗಳಿಂದಂ=[ಆಗ ವಸಿಷ್ಠನಲ್ಲಿ ಪೂಜ್ಯಕಾಮಧೇನುವನ್ನು ಬೇಡಿ ತಂದು ಬ್ರಾಹ್ಮಣರಿಗೆ ಭೋಜನ ಸುಗಂಧಾಕ್ಷತೆಗಳಿಂದ ಆದರಿಸಿದನು.]; ಆದುದು ಅತಿವಿಭವದಿಂದ ಉತ್ಸವಂ ಬಳಿಕ ತರುಣಾದಿತ್ಯಸನ್ನಿಭರ್ ತೊಳಗಿದರ್ ಜಾನಕಿಯ ಚಿತ್ತಕೆ ಆನಂದಮಾಗೆ=[ಆ ವಿಶೇಷ ಕಾರ್ಯಕ್ರಮ ಬಹಳ ವೌಭವದಿಂದ ಉತ್ಸವವು ಆಯಿತು. ಬಳಿಕ ತರುಣರಾದ ರವಿಕುಲದ ಮಕ್ಕಳು ಜಾನಕಿಯ ಮನಸ್ಸಿಗೆ ಆನಂದವಾಗುವಂತೆ ಪ್ರಕಾಸಿಸಿದರು.]
  • ತಾತ್ಪರ್ಯ-:ಕುಶಲವರಿಗೆ ಹನ್ನೆರಡು ವರ್ಷವಾದ ಮೇಲೆ ಮುನಿಯು ಕುಮಾರರಿಗೆ ವೇದೋಕ್ತ ರೀತಿಯಿಂದ ಉಪನಯನಗಳನ್ನು ಮಾಡಿದನು. ಆಗ ವಸಿಷ್ಠನಲ್ಲಿ ಪೂಜ್ಯಕಾಮಧೇನುವನ್ನು ಬೇಡಿ ತಂದು ಬ್ರಾಹ್ಮಣರಿಗೆ ಭೋಜನ ಸುಗಂಧಾಕ್ಷತೆಗಳಿಂದ ಆದರಿಸಿದನು. ಆ ವಿಶೇಷ ಕಾರ್ಯಕ್ರಮ ಬಹಳ ವೌಭವದಿಂದ ಉತ್ಸವವು ಆಯಿತು. ಬಳಿಕ ತರುಣರಾದ ರವಿಕುಲದ ಮಕ್ಕಳು ಜಾನಕಿಯ ಮನಸ್ಸಿಗೆ ಆನಂದವಾಗುವಂತೆ ಪ್ರಕಾಸಿಸಿದರು.
  • (ಪದ್ಯ-೫೩)

ಪದ್ಯ :೫೪:

[ಸಂಪಾದಿಸಿ]

ಸರ್ವಕರ್ಮದ ವಿಧಿಯನಖಿಳ ನಿಗಮದ ಕಡೆಯ | ನುರ್ವ ಶಾಸ್ತ್ರದ ಬಗೆಯನುದಿತ ಧರ್ಮದ ನೆಲೆಯ | ನುರ್ವೀಶ ನೀತಿಗಳ ನಿಶ್ಚಯವನೈದೆ ಸಾಂಗೋಪಾಂಗವಾಗಿ ಬರಿಸಿ ||
ತರ್ವಾಯೊಳಾ ಕುಮಾರರ್ಗೆ ಮುನಿನಾಥಂ ಧ | ನುರ್ವೇದಮಂ ಶಿಕ್ಷೆಗೈದು ರಾಮಾಯಣವ | ನಿರ್ವರುಂ ಪಾಡುವಂತೋದಿಸಿದನತಿಮಧರಭಾವದಿಂ ತುದಿ ಮೊದಲ್ಗೆ ||54||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸರ್ವಕರ್ಮದ ವಿಧಿಯನು ಅಖಿಳ ನಿಗಮದ ಕಡೆಯನು ಉರ್ವ ಶಾಸ್ತ್ರದ ಬಗೆಯನು ಉದಿತ ಧರ್ಮದ ನೆಲೆಯನುರ್ವೀಶ ನೀತಿಗಳ ನಿಶ್ಚಯವನೈದೆ ಸಾಮಗೋಪಾಂಗವಾಗಿ ಬರಿಸಿ=[ಕುಶಲವರಿಗೆ,ಸರ್ವಧಾರ್ಮಿಕ ಕರ್ಮದ ವಿಧಿಯನ್ನೂ, ಅಖಿಲ ವೇದದ ಕೊನೆಯವರೆಗಿನಪಾಠವನ್ನೂ, ಭೂಮಿಯ/ಕರ್ಮಕಾಂಡದ/ ವ್ಯವಸಾಯದ ಶಾಸ್ತ್ರದ ಬಗೆಯನ್ನೂ, ಏಳಿಗೆಯ ಧರ್ಮದ ನೆಲೆಯನ್ನೂ, ರಾಜ ನೀತಿಗಳ ನಿಶ್ಚಯವನ್ನೂ, ತಿಳಿಯುವಂತೆ, ಸಾಂಗೋಪಾಂಗವಾಗಿ ಕಲಿಸಿದನು. ]; ತರ್ವಾಯೊಳಾ ಕುಮಾರರ್ಗೆ ಮುನಿನಾಥಂ ಧನುರ್ವೇದಮಂ ಶಿಕ್ಷೆಗೈದು ರಾಮಾಯಣವನಿರ್ವರುಂ ಪಾಡುವಂತೋದಿಸಿದನತಿ ಮಧರಭಾವದಿಂ ತುದಿ ಮೊದಲ್ಗೆ=[ತರುವಾಯ ಆ ಕುಮಾರರಿಗೆ ಮುನಿನಾಥನು ಧನುರ್ವೇದ/ ಬಿಲ್ಲು ವಿದ್ಯೆಯ ಶಿಕ್ಷಣಕೊಟ್ಟನು. ತಾನು ರಚಿಸಿದ ರಾಮಾಯಣವನ್ನು ಅವರು ಇಬ್ಬರಿಗೂ ಮೊದಲಿಂದ ತುದಿಯವರಗೂ ಇಂಪಾದಭಾವದಲ್ಲಿ ಹಾಡುವಂತೆ ಕಲಿಸಿದನು].
  • ತಾತ್ಪರ್ಯ-: ಕುಶಲವರಿಗೆ,ಸರ್ವಧಾರ್ಮಿಕ ಕರ್ಮದ ವಿಧಿಯನ್ನೂ, ಅಖಿಲ ವೇದದ ಕೊನೆಯವರೆಗಿನ ಪಾಠವನ್ನೂ, ಭೂಮಿಯ/ಕರ್ಮಕಾಂಡದ/ ವ್ಯವಸಾಯದ ಶಾಸ್ತ್ರದ ಬಗೆಯನ್ನೂ, ಏಳಿಗೆಯ ಧರ್ಮದ ನೆಲೆಯನ್ನೂ, ರಾಜ ನೀತಿಗಳ ನಿಶ್ಚಯವನ್ನೂ, ತಿಳಿಯುವಂತೆ, ಸಾಂಗೋಪಾಂಗವಾಗಿ ಕಲಿಸಿದನು. ತರುವಾಯ ಆ ಕುಮಾರರಿಗೆ ಮುನಿನಾಥನು ಧನುರ್ವೇದ/ ಬಿಲ್ಲು ವಿದ್ಯೆಯ ಶಿಕ್ಷಣಕೊಟ್ಟನು. ತಾನು ರಚಿಸಿದ ರಾಮಾಯಣವನ್ನು ಅವರು ಇಬ್ಬರಿಗೂ ಮೊದಲಿಂದ ತುದಿಯವರಗೂ ಇಂಪಾದಭಾವದಲ್ಲಿ ಹಾಡುವಂತೆ ಕಲಿಸಿದನು.
  • (ಪದ್ಯ-೫೪)

ಪದ್ಯ :೫೫:

[ಸಂಪಾದಿಸಿ]

ಸೀತೆ ನಲಿವಂತೆ ವಾಲ್ಮೀಕಿ ಮೆಚ್ಚುವ ತೆರದೊ | ಳಾತಪೋವನದ ಮುನಿಗಣಮೈದೆ ಕೊಂಡಾಡ | ಲಾ ತರುಣರೀರ್ವರುಂ ಮಧುರವೀಣೆಗಳ ಮೇಳಾಪದಾಲಾಪಂಗಳ ||
ಗೀತದೊಳ್ ಸಂಕೀರ್ಣ ಶುದ್ಧ ಸಾಳಗದಿಂ ರ | ಸಾತಿಶಯಮನೆ ಪಾಡುವರ್ ದೇವನಗರೀ ನಿ | ಕೇತನ ಶ್ರೀಪತಿಯ ಚಾರಿತ್ರಮಪ್ಪ ರಾಮಾಯಣವನನುದಿನದೊಳು ||55||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸೀತೆ ನಲಿವಂತೆ ವಾಲ್ಮೀಕಿ ಮೆಚ್ಚುವ ತೆರದೊಳು ಆತಪೋವನದ ಮುನಿಗಣಂ ಐದೆ ಕೊಂಡಾಡಲು=[ಸೀತೆಯು ಆನಂದ ಹೊಂದುವಂತೆ ವಾಲ್ಮೀಕಿಯು ಮೆಚ್ಚುವ ರೀತಿಯಲ್ಲಿ ಆ ತಪೋವನದ ಮುನಿಗಳ ಸಮೂಹ ಬಂದು ಕೇಳಿ ಕೊಂಡಾಡಲು]; ಆ ತರುಣರೀರ್ವರುಂ ಮಧುರವೀಣೆಗಳ ಮೇಳಾಪದ ಆಲಾಪಂಗಳ ಗೀತದೊಳ್ ಸಂಕೀರ್ಣ ಶುದ್ಧ ಸಾಳಗದಿಂ (ಸಮ್ಮೇಳನ) ರಸಾತಿಶಯಮನೆ ಪಾಡುವರ್=[ಆ ತರುಣರಿಬ್ಬರೂ, ಮಧುರವೀಣೆಗಳನ್ನು ನುಡಿಸುತ್ತಾ ಮೇಳ ರಾಗಾಲಾಪಗಳ ಸಂಗೀತದಲ್ಲಿ ಸಂಕೀರ್ಣ ಶುದ್ಧ ಸಮ್ಮೇಳನದಿಂದ ಕಾವ್ಯರಸ ಅತಿಶಯವಾಗಿ ತೋರುವಂತೆ ಹಾಡುವರು.]; ದೇವನಗರೀ ನಿಕೇತನ ಶ್ರೀಪತಿಯ ಚಾರಿತ್ರಂ ಅಪ್ಪ ರಾಮಾಯಣವನು ಅನುದಿನದೊಳು.=[ದೇವನಗರಿಯಲ್ಲಿ ವಾಸವಾಗಿರುವ ಶ್ರೀಪತಿಯ ಚಾರಿತ್ರ್ಯದ ಕಥೆಯ ರಾಮಾಯಣವನ್ನು ಅನುದಿನವೂ ಹಾಡುವರು.]
  • ತಾತ್ಪರ್ಯ-:ಸೀತೆಯು ಆನಂದವಾಗುವಂತೆ, ವಾಲ್ಮೀಕಿಯು ಮೆಚ್ಚುವ ರೀತಿಯಲ್ಲಿ, ಆ ತಪೋವನದ ಮುನಿಗಳ ಸಮೂಹ ಬಂದು ಕೇಳಿ ಕೊಂಡಾಡಲು, ಆ ತರುಣ ಕುಶಲವರಿಬ್ಬರೂ, ಮಧುರವೀಣೆಗಳನ್ನು ನುಡಿಸುತ್ತಾ ಮೇಳ ರಾಗಾಲಾಪಗಳ ಸಂಗೀತದಲ್ಲಿ ಸಂಕೀರ್ಣ ಶುದ್ಧ ಸಮ್ಮೇಳನದಿಂದ ಕಾವ್ಯರಸ ಅತಿಶಯವಾಗಿ ತೋರುವಂತೆ ಹಾಡುವರು. ಅವರು ದೇವನಗರಿಯಲ್ಲಿ ವಾಸವಾಗಿರುವ ಶ್ರೀಪತಿಯ ಚಾರಿತ್ರ್ಯದ ಕಥೆಯ ರಾಮಾಯಣವನ್ನು ಅನುದಿನವೂ ಹಾಡುವರು.
  • (ಪದ್ಯ-೫೫)XVII-X
  • ಸಂಧಿ ೧೯ಕ್ಕೆ ಪದ್ಯ:೯೯೮;
  • []
  • []
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.