ವಿಷಯಕ್ಕೆ ಹೋಗು

ಜೈಮಿನಿ ಭಾರತ ಹದಿಮೂರನೆಯ ಸಂಧಿ

ವಿಕಿಸೋರ್ಸ್ದಿಂದ

ಹದಿಮೂರನೆಯ ಸಂಧಿ

[ಸಂಪಾದಿಸಿ]

ಪದ್ಯ :-:ಸೂಚನೆ:

[ಸಂಪಾದಿಸಿ]

ಹಂಸಧ್ವಜನ ಸುತನ ಸಮರಮರಿದಾಗಿ ಬರೆ ಕಂಸಾರಿ ಬಂದು ಸಾರಥಿಯಾಗಿ ನರನ ಶರ | ದಿಂ ಸುಧನ್ವನ ಶಿರವನರಿಸಿದಂ ಮೇಲೆ ಸುರಗಣ ಮೈದೆ ಕೊಂಡಾಡಲು ||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸೂಚನೆ: ಹಂಸಧ್ವಜನ ಸುತನ ಸಮರಂ ಅರಿದು (೧ ಅಸಾಧ್ಯವಾದುದು ೨ ಅಪೂರ್ವವಾದುದು) ಆಗಿ ಬರೆ ಕಂಸಾರಿ ಬಂದು ಸಾರಥಿಯಾಗಿ ನರನ ಶರದಿಂ ಸುಧೆನ್ವನ ಶಿರವನರಿಸಿದಂ ಮೇಲೆ ಸುರಗಣ ಮೈದೆ ಕೊಂಡಾಡಲು=[ಹಂಸಧ್ವಜನ ಸುತನಾದ ಸುಧನ್ವನ ಯುದ್ಧವು ಅಸಾಧ್ಯವೂ, ಅಪೂರ್ವವೂ ಆಗಿಬರಲು ಕೃಷ್ಣನು ಬಂದು ಸಾರಥಿಯಾಗಿ ಅರ್ಜುನನ ಬಾಣದಿಂದ ಸುಧೆನ್ವನ ತಲೆಯನ್ನು ಅರಿಸಿದನು ಆಗ ಮೇಲೆ ದೇಚತೆಗಳು ಬಂದುಕೊಂಡಾಡಿದರು.]
  • ತಾತ್ಪರ್ಯ: ಹಂಸಧ್ವಜನ ಸುತನಾದ ಸುಧನ್ವನ ಯುದ್ಧವು ಅಸಾಧ್ಯವೂ, ಅಪೂರ್ವವೂ ಆಗಿಬರಲು ಕೃಷ್ಣನು ಬಂದು ಸಾರಥಿಯಾಗಿ ಅರ್ಜುನನ ಬಾಣದಿಂದ ಸುಧೆನ್ವನ ತಲೆಯನ್ನು ಅರಿಸಿದನು ಆಗ ಮೇಲೆ ದೇಚತೆಗಳು ಬಂದುಕೊಂಡಾಡಿದರು.
  • (ಪದ್ಯ-ಸೂಚನೆ)IV-IX

ಪದ್ಯ :-:೧:

[ಸಂಪಾದಿಸಿ]

ಕೇಳಲೆ ನೃಪಾಲಕುಲಮೌಳಿ ಬಳಿಕರ್ಜುನಂ | ಕಾಳಗಕೆ ನಡೆವ ಭಟರಂ ನಿಲಿಸಿ ಮುಂದುವರಿ | ವಾಳಪಡೆಯಂ ತೆಗೆಸಿ ಭರದಿಂದೆ ನೂಕಿದಂ ಕಲಿಸುಧನ್ವನ ಸರಿಸಕೆ ||
ಗಾಳಿಯ ಜವಂ ಪೊಡೆವ ಸಿಡಿಲ ಗರ್ಜನೆ ರವಿಯ ಮೇಳಮುಂ ದಾವಾಗ್ನಿಯಾಟೋಪಮಂತಕನ | ಕೋಳಾಹಳಂ ಕೂಡಿಕೊಂಡೊಂದು ರೂಪಾದವೋಲ್ ಕಾಣಿಸುವ ರಥವನು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೇಳಲೆ ನೃಪಾಲಕುಲಮೌಳಿ ಬಳಿಕ ಅರ್ಜುನಂ ಕಾಳಗಕೆ ನಡೆವ ಭಟರಂ ನಿಲಿಸಿ ಮುಂದುವರಿವ ಆಳಪಡೆಯಂ ತೆಗೆಸಿ ಭರದಿಂದೆ=[ಎಲೆ ನೃಪಾಲಕುಲ ಶ್ರೇಷ್ಟನಾದ ಜನಮೇಜಯನೇ ಕೇಳು, ಬಳಿಕ ಅರ್ಜುನನು ಕಾಳಗಕ್ಕೆ ಹೋಗುತ್ತಿರುವ ಸೈನಿಕರನ್ನು ನಿಲ್ಲಿಸಿ, ಮುಂದುವರಿವ ಪದಾತಿಸೈನ್ಯವನ್ನೂ ತಡೆದು, ವೇಗವಾಗಿ]; ನೂಕಿದಂ ಕಲಿಸುಧನ್ವನ ಸರಿಸಕೆ ಗಾಳಿಯ ಜವಂ(ವೇಗ) ಪೊಡೆವ ಸಿಡಿಲ ಗರ್ಜನೆ ರವಿಯ ಮೇಳಮುಂ ದಾವಾಗ್ನಿಯ ಆಟೋಪಂ ಅಂತಕನ ಕೋಳಾಹಳಂ ಕೂಡಿಕೊಂಡು ಒಂದು ರೂಪಾದವೋಲ್ ಕಾಣಿಸುವ ರಥವನು=[(ನಡೆಸಿದನು.) ವೀರ ಸುಧನ್ವನ ಸಮೀಪಕ್ಕೆ ಗಾಳಿಯ ವೇಗ, ಹೊಡೆಯುವ ಸಿಡಿಲ ಗರ್ಜನೆ, ರವಿಯ ಬಿಸಿಲು, ಕಾಡು ಕಿಚ್ಚನ ಆರ್ಭಟ, ಯಮನ ಕೋಲಾಹಲ,ಇವೆಲ್ಲಾ ಕೂಡಿಕೊಂಡು ಒಂದು ರೂಪವಾದಂತೆ ಕಾಣಿಸುವ ರಥವನ್ನು ನಡೆಸಿದನು.]
  • ತಾತ್ಪರ್ಯ:ಎಲೆ ನೃಪಾಲಕುಲ ಶ್ರೇಷ್ಟನಾದ ಜನಮೇಜಯನೇ ಕೇಳು, ಬಳಿಕ ಅರ್ಜುನನು ಕಾಳಗಕ್ಕೆ ಹೋಗುತ್ತಿರುವ ಸೈನಿಕರನ್ನು ನಿಲ್ಲಿಸಿ, ಮುಂದುವರಿವ ಪದಾತಿಸೈನ್ಯವನ್ನೂ ತಡೆದು, ವೇಗವಾಗಿ, (ರಥವನ್ನು ನಡೆಸಿದನು) ವೀರ ಸುಧನ್ವನ ಸಮೀಪಕ್ಕೆ ಗಾಳಿಯ ವೇಗ, ಹೊಡೆಯುವ ಸಿಡಿಲ ಗರ್ಜನೆ, ರವಿಯ ಬಿಸಿಲು, ಕಾಡು ಕಿಚ್ಚನ ಆರ್ಭಟ, ಯಮನ ಕೋಲಾಹಲ,ಇವೆಲ್ಲಾ ಕೂಡಿಕೊಂಡು ಒಂದು ರೂಪವಾದಂತೆ ಕಾಣಿಸುವ ರಥವನ್ನು ನಡೆಸಿದನು.
  • (ಪದ್ಯ-೧)

ಪದ್ಯ :-:೨:

[ಸಂಪಾದಿಸಿ]

ಕುದರೆಗಳ ಖುರಪುಟಧ್ವನಿ ನಿಜವರೂಥ ಚ | ಕ್ರದ ರವಂ ದೇವದತ್ತದ ಘೋಷಮೆಸೆವ ಸಿಂ | ಧದ ತುದಿಯ ಕಪಿಯಬ್ಬರಣೆ ಧನುಜ್ರ್ಯಾನಾದಮೊಂದಾಗಿ ಭೀಕರದೊಳು ||
ಪದಿನಾಲ್ಕು ಲೋಕಮಂ ಬೆದರಿಸಲ್ಕಿದು ನರನ | ಕದನದಾರವಮೆಂದು ತಿಳಿದಂಬುಜಾಸನಂ | ಮೊದಲಾದ ನಿರ್ಜರರ್ ತಂತಮ್ಮ ವಾಹನವಿಮಾನದಿಂದೈತಂದರು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕುದರೆಗಳ ಖುರಪುಟಧ್ವನಿ ನಿಜವರೂಥ ಚಕ್ರದ ರವಂ ದೇವದತ್ತದ ಘೋಷಮೆಸೆವ ಸಿಂಧದ ತುದಿಯ ಕಪಿಯಬ್ಬರಣೆ ಧನುಜ್ರ್ಯಾನಾದಮೊಂದಾಗಿ ಭೀಕರದೊಳು=[ಕುದರೆಗಳ ಖುರಪುಟಧ್ವನಿ ತನ್ನರಥ ಚಕ್ರದ ಸದ್ದು, ದೇವದತ್ತದ ಘೋಷವು, ಶೋಭಿಸುತ್ತಿರುವ ಧ್ವಜದ ತುದಿಯಲ್ಲಿ ಕಪಿಯ ಆರ್ಭಟ, ಧನುವಿನ ಠಂಕಾರದ ಭೀಕರತೆಯು,]; ಪದಿನಾಲ್ಕು ಲೋಕಮಂ ಬೆದರಿಸಲ್ಕಿದು ನರನ ಕವನದಾರವಮೆಂದು ತಿಳಿದಂಬುಜಾಸನಂ ಮೊದಲಾದ ನಿರ್ಜರರ್ ತಂತಮ್ಮ ವಾಹನವಿಮಾನದಿಂದೈತಂದರು=[ಹದಿನಾಲ್ಕು ಲೋಕವನ್ನೂ ಹೆದರಿಸಲು, ಇದು ಅರ್ಜುನನ ಕದನದ ಶಬ್ದವೆಂದು ತಿಳಿದು ಆಂಬುಜಾಸನಾದ ಬ್ರಹ್ಮನು ಮೊದಲಾದ ದೇವತೆಗಳು ತಂತಮ್ಮ ವಾಹನ ವಿಮಾನಗಳಲ್ಲಿ ಬಂದರು.].
  • ತಾತ್ಪರ್ಯ:ಕುದರೆಗಳ ಖುರಪುಟಧ್ವನಿ ತನ್ನರಥ ಚಕ್ರದ ಸದ್ದು, ದೇವದತ್ತದ ಘೋಷವು, ಶೋಭಿಸುತ್ತಿರುವ ಧ್ವಜದ ತುದಿಯಲ್ಲಿ ಕಪಿಯ ಆರ್ಭಟ, ಧನುವಿನ ಠಂಕಾರದ ಭೀಕರತೆಯು,ಹದಿನಾಲ್ಕು ಲೋಕವನ್ನೂ ಹೆದರಿಸಲು, ಇದು ಅರ್ಜುನನ ಕದನದ ಶಬ್ದವೆಂದು ತಿಳಿದು ಆಂಬುಜಾಸನಾದ ಬ್ರಹ್ಮನು ಮೊದಲಾದ ದೇವತೆಗಳು ತಂತಮ್ಮ ವಾಹನ ವಿಮಾನಗಳಲ್ಲಿ ಬಂದರು.].
  • (ಪದ್ಯ-೧)

ಪದ್ಯ :-:೩:

[ಸಂಪಾದಿಸಿ]

ವಾನರಸಮುನ್ನತ ಧ್ವಜರೂಥದೊಳೈದು | ವಾ ನರ ಸಮರ ಭರವನರಿದು ಕಾಳಗಕೆ ತಾ | ವಾನರಸಮರ್ಥರೆಂದರ್ಜುನಂ ಬಹನೆಂದು ನಿಜಸಾರಥಿಗೆ ಸೂಚಿಸಿ ||
ದಾನವನರನಾನಿಮಿಷರೊಳ್ ನೀನೆ ಭಟನಹ ನಿ | ದಾನವನನೇಕಮುಖದಿಂ ಕೇಳ್ದು ಸಂಗ್ರಾಮ | ದಾನವನರಿಸಿ ಬಂದೆನೆಂದಚ್ಚನಾ ಸುಧನ್ವಂ ಪಾರ್ಥನಂ ಧುರದೊಳು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಾನರಸಮುನ್ನತ ಧ್ವಜರೂಥದೊಳು ಐದುವ ಆ ನರ ಸಮರ ಭರವನು ಅರಿದು ಕಾಳಗಕೆ ತಾವು ಆ ನರ ಸಮರ್ಥರೆಂದು ಅರ್ಜುನಂ ಬಹನೆಂದು ನಿಜಸಾರಥಿಗೆ ಸೂಚಿಸಿ=[ವಾನರನಾದ ಮಾರುತಿಯಿಂದ ಕೂಡಿದ ಎತ್ತರದ ಧ್ವಜದ ರಥದಲ್ಲಿ ಬರುತ್ತಿರುವ ಆ ಅರ್ಜುನನ ಯುದ್ಧದ ವೇಗವನ್ನು ತಿಳಿದು ಕಾಳಗಕ್ಕೆ ತಾವು(ಸುಧನ್ವನು) ಆ ನರ/ಅರ್ಜುನನಿಗಿಂತಲೂ ಸಮರ್ಥರೆಂದೂ, ಈಗ ಅರ್ಜುನನು ಬರುತ್ತಿರುವನೆಂದು ತನ್ನ ಸಾರಥಿಗೆ ಎಚ್ಚರಿಸಿ,ಸೂಚಿಸಿ,];ದಾನವ ನರನು ಆ ಅನಿಮಿಷರೊಳ್ ನೀನೆ ಭಟನಹ ನಿದಾನವನು ಅನೇಕ ಮುಖದಿಂ ಕೆಂಳ್ದು ಸಂಗ್ರಾಮ ದಾನವನು ಅರಿಸಿ ಬಂದೆನು ಎಂದು ಎಚ್ಚನು ಆ ಸುಧನ್ವಂ ಪಾರ್ಥನಂ ಧುರದೊಳು=[ದಾನವರಲ್ಲಿ, ನರರಲ್ಲಿ, ಆ ಅನಿಮಿಷ/ ದೇವತೆಗಳಲ್ಲಿ ನೀನೇ ಶೂರನೆಂದು ವಿಷಯವನ್ನು ಅನೇಕರ ಬಾಯಿಂದ ಕೇಳಿ ಯುದ್ಧದ ದಾನವನ್ನು ಬಯಸಿ ಬಂದಿರುವೆನು ಎಂದು ಆ ಸುಧನ್ವನು ಪಾರ್ಥನನ್ನು ಯುದ್ಧದಲ್ಲಿ ಹೊಡೆದನು].
  • ತಾತ್ಪರ್ಯ:ವಾನರನಾದ ಮಾರುತಿಯಿಂದ ಕೂಡಿದ ಎತ್ತರದ ಧ್ವಜದ ರಥದಲ್ಲಿ ಬರುತ್ತಿರುವ ಆ ಅರ್ಜುನನ ಯುದ್ಧದ ವೇಗವನ್ನು ತಿಳಿದು ಕಾಳಗಕ್ಕೆ ತಾವು(ಸುಧನ್ವನು) ಆ ನರ/ಅರ್ಜುನನಿಗಿಂತಲೂ ಸಮರ್ಥರೆಂದೂ, ಈಗ ಅರ್ಜುನನು ಬರುತ್ತಿರುವನೆಂದು ತನ್ನ ಸಾರಥಿಗೆ ಎಚ್ಚರಿಸಿ,ಸೂಚಿಸಿ, ದಾನವರಲ್ಲಿ, ನರರಲ್ಲಿ, ಆ ಅನಿಮಿಷ/ ದೇವತೆಗಳಲ್ಲಿ ನೀನೇ ಶೂರನೆಂಬ ವಿಷಯವನ್ನು ಅನೇಕರ ಬಾಯಿಂದ ಕೇಳಿ ಯುದ್ಧದ ದಾನವನ್ನು ಬಯಸಿ ಬಂದಿರುವೆನು, ಎಂದು ಆ ಸುಧನ್ವನು ಪಾರ್ಥನನ್ನು ಯುದ್ಧದಲ್ಲಿ ಹೊಡೆದನು].
  • (ಪದ್ಯ-೩)IV-IX

ಪದ್ಯ :-:೪:

[ಸಂಪಾದಿಸಿ]

ಕ್ರುದ್ಧನಾದಂ ಧನಂಜಯನಿದೇಕೆಮ್ಮೊಡನೆ | ಯುದ್ದವನಪೇಕ್ಷಿಸುವೆ ಶಿವಶಿವಾ ನೀನಪ್ರ | ಬುದ್ಧನಲ್ಲವೆ ದೇವದೈತ್ಯ ಮಾನವರೊಳ್ ಮದೀಯವೈರದೊಳೆ ಬಾಳ್ಧ ||
ಉದ್ಧತಪರಾಕ್ರಮಿಗಳುಂಟೆ ಸಂಗರಕೆ ಸ | ನ್ನದ್ಥರಾದಿನಸುತದ್ರೋಣ ಭೀಷ್ಮಾದಿ ಪ್ರ | ಸಿದ್ಧ ಭಟರೇನಾದರರಿಯಲಾ ಮರುಳೆ ಹೋಗೆನುತೆಚ್ಚನಾ ಪಾರ್ಥನು ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕ್ರುದ್ಧನಾದಂ ಧನಂಜಯನು ಇದೇಕೆ ಎಮ್ಮೊಡನೆ ಯುದ್ದವನು ಅಪೇಕ್ಷಿಸುವೆ ಶಿವಶಿವಾ=[ಕೋಪಗೊಂಡನು ಧನಂಜಯನು, ಇದೇಕೆ ನಮ್ಮೊಡನೆ ಯುದ್ದವನ್ನು ಬಯಸುವೆ? ಶಿವಶಿವಾ!] ನೀನು ಅಪ್ರಬುದ್ಧನಲ್ಲವೆ ದೇವ ದೈತ್ಯ ಮಾನವರೊಳ್ ಮದೀಯ(ನನ್ನ) ವೈರದೊಳೆ ಬಾಳ್ಧ ಉದ್ಧತ ಪರಾಕ್ರಮಿಗಳುಂಟೆ=[ನೀನು ಅವಿವೇಕಿಯಲ್ಲವೆ? ದೇವ ದೈತ್ಯ ಮಾನವರಲ್ಲಿ ನನ್ನ ವೈರಸಾಧಿಸಿ ಬದುಕಿದ ಉನ್ನತ ಪರಾಕ್ರಮಿಗಳು ಇದ್ದಾರಯೇ?]; ಸಂಗರಕೆ ಸನ್ನದ್ಥರಾದ ಇನಸುತ ದ್ರೋಣ ಭೀಷ್ಮಾದಿ ಪ್ರಸಿದ್ಧ ಭಟರೇನಾದರು ಅರಿಯಲಾ ಮರುಳೆ ಹೋಗೆನುತ ಎಚ್ಚನಾ ಪಾರ್ಥನು=[ಯುದ್ಧಕ್ಕೆ ಬಂದ ಕರ್ಣ, ದ್ರೋಣ, ಭೀಷ್ಮಾದಿಗಳಂಥ ಪ್ರಸಿದ್ಧ ಭಟರು ಏನಾದರು ತಿಳಿದಿಲ್ಲವೇ ಮರುಳೆ? ಹೋಗು ಎನ್ನುತ್ತಾ ಎಚ್ಚನಾ ಪಾರ್ಥನು ಬಾಣವನ್ನು ಹೊಡೆದನು.]
  • ತಾತ್ಪರ್ಯ:ಧನಂಜಯನು ಕೋಪಗೊಂಡನು, ಇದೇಕೆ ನಮ್ಮೊಡನೆ ಯುದ್ದವನ್ನು ಬಯಸುವೆ? ಶಿವಶಿವಾ! ನೀನು ಅವಿವೇಕಿಯಲ್ಲವೆ? ದೇವ ದೈತ್ಯ ಮಾನವರಲ್ಲಿ ನನ್ನ ವೈರಸಾಧಿಸಿ ಬದುಕಿದ ಉನ್ನತ ಪರಾಕ್ರಮಿಗಳು ಇದ್ದಾರಯೇ? ಯುದ್ಧಕ್ಕೆ ಬಂದ ಕರ್ಣ, ದ್ರೋಣ, ಭೀಷ್ಮಾದಿಗಳಂಥ ಪ್ರಸಿದ್ಧ ಭಟರು ಏನಾದರು ತಿಳಿದಿಲ್ಲವೇ ಮರುಳೆ? ಹೋಗು ಎನ್ನುತ್ತಾ ಎಚ್ಚನಾ ಪಾರ್ಥನು ಬಾಣವನ್ನು ಹೊಡೆದನು.]
  • (ಪದ್ಯ-೪)

ಪದ್ಯ :-:೫:

[ಸಂಪಾದಿಸಿ]

ಸಾರಥಿಯ ಬಲ್ಪಿಂದೆ ಕೌರವಬಲದ ನಿಖಿಳ | ವೀರರಂ ಗೆಲ್ದೆಯಲ್ಲದೆ ನಿನ್ನ ನೀ ಧರೆಯೊ | ಳಾರರಿಯರಕಟ ನೀಂ ಕೃಷ್ಣನಂ ಕರೆಸಿಕೊಂಡಳವಿಗುಡು ಬಳಿಕೆನ್ನೊಳು ||
ಸಾರನ್ನೆಗಂ ಬರಿದೆಬಳಲಬೇಡೆಮ್ಮಲ್ಲಿ | ಹಾರೈಸದಿರ್ ಜಯವನೆನುತೆಚ್ಚೊಡರ್ಜುನನ | ತೇರಿರದೆ ತಿರ್ರನೆ ತಿರುಗಿಯಂತೆ ತಿರುಗಿತದನೇನೆಂಬೆನದ್ಭುತವನು ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಾರಥಿಯ ಬಲ್ಪಿಂದೆ ಕೌರವಬಲದ ನಿಖಿಳ ವೀರರಂ ಗೆಲ್ದೆಯಲ್ಲದೆ ನಿನ್ನ ನೀ ಧರೆಯೊಳು ಆರು ಅರಿಯರು ಅಕಟ,=[ಸಾರಥಿಯ ಬಲದಿಂದ ಕೌರವಸೈನ್ಯದದ ಅಖಿಲ ವೀರರನ್ನೂ ಗೆದ್ದೆಯಲ್ಲದೆ ನಿನ್ನನು/ನಿನ್ನಶಕ್ತಿಯನ್ನು ಈ ಭೂಮಿಯಲ್ಲಿ ತಿಳಿಯದವರು ಯಾರಿದ್ದಾರೆ! ಅಕಟ!]; ನೀಂ ಕೃಷ್ಣನಂ ಕರೆಸಿಕೊಂಡು ಅಳವಿಗುಡು ಬಳಿಕ ಎನ್ನೊಳು ಸಾರು ಅನ್ನೆಗಂ ಬರಿದೆ ಬಳಲಬೇಡ ಎಮ್ಮಲ್ಲಿ ಹಾರೈಸದಿರ್ ಜಯವನೆನುತ=[ನೀನು ಕೃಷ್ಣನನ್ನು ಕರೆಸಿಕೊಂಡು ಬಳಿಕ ನನ್ನಲ್ಲಿ ಯುದ್ಧಮಾಡಿ ಶಕ್ತಿತೋರಿಸು, ಹೋಗು, ಅಲ್ಲಿಯವರೆಗೆ ಬರಿದೆ ಬಳಲಬೇಡ ನಮ್ಮಲ್ಲಿ ಜಯವನ್ನು ಹಾರೈಸಬೇಡ, ಎನ್ನುತ್ತಾ]; ಎಚ್ಚೊಡೆ ಅರ್ಜುನನ ತೇರು ಇರದೆ ತಿರ್ರನೆ ತಿರುಗಿಯಂತೆ ತಿರುಗಿತು ಅದನು ಏನೆಂಬೆನು ಅದ್ಭುತವನು=[ಬಾಣದಿಂದ ಹೊಡೆದಾಗ ಅರ್ಜುನನ ರಥ ಇರದೆ ತಿರ್ರನೆ ಬಗುರಿಯಂತೆ ತಿರುಗಿತು, ಆ ಅದ್ಭುತವನು ಏನೆನ್ನಲಿ].
  • ತಾತ್ಪರ್ಯ:ಸಾರಥಿಯ ಬಲದಿಂದ ಕೌರವಸೈನ್ಯದದ ಅಖಿಲ ವೀರರನ್ನೂ ಗೆದ್ದೆಯಲ್ಲದೆ ನಿನ್ನನು/ನಿನ್ನಶಕ್ತಿಯನ್ನು ಈ ಭೂಮಿಯಲ್ಲಿ ತಿಳಿಯದವರು ಯಾರಿದ್ದಾರೆ! ಅಕಟ! ನೀನು ಕೃಷ್ಣನನ್ನು ಕರೆಸಿಕೊಂಡು ಬಳಿಕ ನನ್ನಲ್ಲಿ ಯುದ್ಧಮಾಡಿ ಶಕ್ತಿತೋರಿಸು, ಹೋಗು, ಅಲ್ಲಿಯವರೆಗೆ ಬರಿದೆ ಬಳಲಬೇಡ ನಮ್ಮಲ್ಲಿ ಜಯವನ್ನು ಹಾರೈಸಬೇಡ, ಎನ್ನುತ್ತಾ, ಬಾಣದಿಂದ ಹೊಡೆದಾಗ ಅರ್ಜುನನ ರಥ ಇರದೆ ತಿರ್ರನೆ ಬಗುರಿಯಂತೆ ತಿರುಗಿತು, ಆ ಅದ್ಭುತವನು ಏನೆನ್ನಲಿ].
  • (ಪದ್ಯ-೫)

ಪದ್ಯ :-:೬:

[ಸಂಪಾದಿಸಿ]

ಪೂತುರೆ ಸುಧನ್ವ ಸತ್ವಾತಿಶಯದಿಂದೆ ವಿ | ಖ್ಯಾತನಹೆ ಮದ್ರಥವನೀ ತೆರದೊಳಿಸುವರಂ | ಪಾತಾಳ ಸುರನಿಲಯಭೂತಳದ ಪಟುಭಟವ್ರಾತದೊಳ್ ಕಾಣೆನಿನ್ನು ||
ನೀ ತರಳನಕಟ ಬರಿದೇತಕಳಿದಪೆ ನಿನ್ನ | ತಾತನಂ ಬರಹೇಳು ಘಾತಿಸುವರಲ್ಲ ನಾ | ವಾ ತುರಂಗಮವ ಬಿಡು ಧಾತುಗೆಡಬೇಡೆನುತ್ತಾತನಂ ನರನೆಚ್ಚನು ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪೂತುರೆ ಸುಧನ್ವ! ಸತ್ವಾತಿಶಯದಿಂದೆ ವಿಖ್ಯಾತನು ಅಹೆ ಮದ್ರಥವನು ಈ ತೆರದೊಳಿಉ ಇಸುವರಂ ಪಾತಾಳ ಸುರನಿಲಯಭೂತಳದ ಪಟುಭಟವ್ರಾತದೊಳ್ ಕಾಣೆನು=[ಭಲಾ ಸುಧನ್ವ! ಅತಿಶಯಸತ್ವಶಾಲಿಯೂ ವಿಖ್ಯಾತನು ಆಗಿರುವೆ! ನನ್ನ ರಥವನು ಈ ರೀತಿಯಲ್ಲಿ ಹೊಡೆದವರನ್ನು ಪಾತಾಳ ಸ್ವರ್ಗ ಭೂಮಿಯಲ್ಲಿರವ ಪವೀರರಲ್ಲಿ ಕಂಡಿಲ್ಲ.]; ಇನ್ನು ನೀ ತರಳನು ಅಕಟ ಬರಿದೇತಕೆ ಅಳಿದಪೆ ನಿನ್ನ ತಾತನಂ ಬರಹೇಳು ಘಾತಿಸುವರಲ್ಲ ನಾವು ಆ ತುರಂಗಮವ ಬಿಡು ಧಾತುಗೆಡಬೇಡ ಎನುತ್ತಾತನಂ ನರನೆಚ್ಚನು=[ಇನ್ನೂ ನೀನು ಚಿಕ್ಕ ಪ್ರಾಯದವನು ಅಕಟ! ಏತಕ್ಕಾಗಿ ಬರಿದೆ ಸಾಯುವೆ! ನಿನ್ನ ತಂದೆಯನ್ನು ಬರಲುಹೇಳು; ನಾವು ಹಿಂಸಿಸುವರಲ್ಲ; ಆ ತುರಗವನ್ನು ಬಿಡು; ಹೆದರಬೇಡ ಎನುತ್ತಾ ಅತನನ್ನು ಅರ್ಜುನನು,ಬಾಣದಿಂದ ಹೊಡೆದನು.]
  • ತಾತ್ಪರ್ಯ:ಭಲಾ ಸುಧನ್ವ! ಅತಿಶಯಸತ್ವಶಾಲಿಯೂ ವಿಖ್ಯಾತನು ಆಗಿರುವೆ! ನನ್ನ ರಥವನು ಈ ರೀತಿಯಲ್ಲಿ ಹೊಡೆದವರನ್ನು ಪಾತಾಳ ಸ್ವರ್ಗ ಭೂಮಿಯಲ್ಲಿರವ ಪವೀರರಲ್ಲಿ ಕಂಡಿಲ್ಲ.ಇನ್ನೂ ನೀನು ಚಿಕ್ಕ ಪ್ರಾಯದವನು ಅಕಟ! ಏತಕ್ಕಾಗಿ ಬರಿದೆ ಸಾಯುವೆ! ನಿನ್ನ ತಂದೆಯನ್ನು ಬರಲುಹೇಳು; ನಾವು ಹಿಂಸಿಸುವರಲ್ಲ; ಆ ತುರಗವನ್ನು ಬಿಡು; ಹೆದರಬೇಡ ಎನುತ್ತಾ ಅತನನ್ನು ಅರ್ಜುನನು,ಬಾಣದಿಂದ ಹೊಡೆದನು.]
  • (ಪದ್ಯ-೬)

ಪದ್ಯ :-:೭:

[ಸಂಪಾದಿಸಿ]

ಇನ್ನು ಹಯಮಂ ಬಿಡುವನಲ್ಲ ನಿನಗೆಮ್ಮ ತಾ | ತಂ ನಳಿನನಾಭನ ಸಹಾಯಮಿಲ್ಲದೆ ಬರಿದೆ | ತನ್ನನಳುಕಿಸಲರಿಯೆ ಕಕ್ಕುಲಿತೆ ಬೇಡ ನಡೆ ಹಸ್ತಿನಾಪುರಕೆ ಮರಳಿ ||
ಸನ್ನುತತುರಂಗಮೇಧಾಧ್ವರಕೆ ದೀಕ್ಷೆಗೊಂ | ಬಂ ನರೇಂದ್ರಾಗ್ರಣಿ ಮರಾಳಧ್ವಜಂ ಬಳಿಕ | ನಿನ್ನ ವಿಕ್ರಮದಿಂದೆ ಜಯಿಸು ಭೂಮಂಡಲವನೆನುತವಂ ತೆಗೆದೆಚ್ಚನು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇನ್ನು ಹಯಮಂ ಬಿಡುವನಲ್ಲ ನಿನಗೆ ಎಮ್ಮ ತಾತಂ ನಳಿನನಾಭನ ಸಹಾಯಂ ಇಲ್ಲದೆ ಬರಿದೆ ತನ್ನನು ಅಳುಕಿಸಲು ಅರಿಯೆ ಕಕ್ಕುಲಿತೆ ಬೇಡ ನಡೆ ಹಸ್ತಿನಾಪುರಕೆ ಮರಳಿ=[ನಿನಗೆ ನಮ್ಮ ತಂದೆಯು ಇನ್ನು ಹಯವನ್ನು ಬಿಡುವವನಲ್ಲ; ಕೃಷ್ಣನ ಸಹಾಯ ಇಲ್ಲದೆ ಬರಿದೆ ತನ್ನನು ಸೋಲಿಸಲು ಅಸಾಧ್ಯ. ಕುದರೆಯ ಆಸೆ ಬೇಡ; ಹಸ್ತಿನಾಪುರಕ್ಕೆ ಮರಳಿ ಹೋಗು.]; ಸನ್ನುತ ತುರಂಗಮೇಧಾಧ್ವರಕೆ ದೀಕ್ಷೆಗೊಂಬಂ ನರೇಂದ್ರಾಗ್ರಣಿ ಮರಾಳಧ್ವಜಂ ಬಳಿಕ ನಿನ್ನ ವಿಕ್ರಮದಿಂದೆ ಜಯಿಸು ಭೂಮಂಡಲವನು ಎನುತ ಅವಂ ತೆಗೆದೆಚ್ಚನು=[ಶ್ರೇಷ್ಠ ಅಶ್ವಮೇಧ ಯಜ್ಞಕ್ಕೆ ರಾಜಶ್ರೇಷ್ಠ ಹಂಸಧ್ವಜನು ದೀಕ್ಷೆಪಡೆದು ಪೂರೈಸುವನು; ಬಳಿಕ ನಿನ್ನ ಶೌರ್ಯದಿಂದ ಭೂಮಂಡಲವನ್ನು ಜಯಿಸು, ಎನುತ್ತಾ ಅವನು ತೆಗೆದು ಬಾಣಬಿಟ್ಟನು.]
  • ತಾತ್ಪರ್ಯ:ನಿನಗೆ ನಮ್ಮ ತಂದೆಯು ಇನ್ನು ಹಯವನ್ನು ಬಿಡುವವನಲ್ಲ; ಕೃಷ್ಣನ ಸಹಾಯ ಇಲ್ಲದೆ ಬರಿದೆ ತನ್ನನು ಸೋಲಿಸಲು ಅಸಾಧ್ಯ. ಕುದರೆಯ ಆಸೆ ಬೇಡ; ಹಸ್ತಿನಾಪುರಕ್ಕೆ ಮರಳಿ ಹೋಗು. ಶ್ರೇಷ್ಠ ಅಶ್ವಮೇಧ ಯಜ್ಞಕ್ಕೆ ರಾಜಶ್ರೇಷ್ಠ ಹಂಸಧ್ವಜನು ದೀಕ್ಷೆಪಡೆದು ಪೂರೈಸುವನು; ಬಳಿಕ ನಿನ್ನ ಶೌರ್ಯದಿಂದ ಭೂಮಂಡಲವನ್ನು ಜಯಿಸು, ಎನುತ್ತಾ ಅವನು ತೆಗೆದು ಬಾಣಬಿಟ್ಟನು.
  • (ಪದ್ಯ-೭)

ಪದ್ಯ :-:೮:

[ಸಂಪಾದಿಸಿ]

ಈ ಚಾಪಮೀ ಬಾಣಮೀ ದಿವ್ಯರಥಮೀ ವ | ನೇಚರಧ್ವಜಮೀ ಮಹಾಶ್ವಂಗಳೀ ಸವ್ಯ | ಸಾಚಿತ್ವಮೀ ದೇವದತ್ತಶಂಖಂ ತನಗಿದೇಕೆ ನಿನ್ನಂ ಜಯಿಸದೆ ||
ಈ ಚತುರ್ದಶಜಗವನಣುವೆಂದರಿವೆನಕಟ | ಗೋಚರವೆ ನೀನೆನಗೆ ಫಡಯೆನುತೆ ತೆಗಿದು ನಾ | ರಾಚವೇಳ್ನರನೆಚ್ಚಂ ಸುಧನ್ವನ ಮೇಲೆ ಪಾರ್ಥನೆಣ್ದೆಸೆ ಕಂಪಿಸೆ ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಈ ಚಾಪಮ್ ಈ ಬಾಣಮ್ ಈ ದಿವ್ಯರಥಮ್ ಈ ವನೇಚರಧ್ವಜಮ್ ಈ ಮಹಾಶ್ವಂಗಳು ಈ ಸವ್ಯಸಾಚಿತ್ವಮ್ ಈ ದೇವದತ್ತಶಂಖಂ ತನಗೆ ಎದೇಕೆ ನಿನ್ನಂ ಜಯಿಸದೆ=[ಈ ಗಾಂಡೀವ, ಈ ಅಕ್ಷಯ ಬಾಣ, ಈ ದಿವ್ಯರಥ, ಈ ಕಪಿಧ್ವಜವು, ಈ ಮಹಾ ಅಶ್ವಗಳು, ಈ ಸವ್ಯಸಾಚಿತನ, ಈ ದೇವದತ್ತ ಶಂಖವು, ತನಗೆ ಇವು ಏಕೆ ನಿನ್ನನ್ನು ಜಯಿಸದೆ ಇದ್ದರೆ!]; ಈ ಚತುರ್ದಶ ಜಗವನು ಅಣುವೆಂದ ಅರಿವೆನು ಅಕಟ ಗೋಚರವೆ ನೀನೆನಗೆ ಫಡಯೆನುತೆ ತೆಗಿದು ನಾರಾಚವೇಳ್ ನರನೆಚ್ಚಂ ಸುಧನ್ವನಮೇಲೆ ಪಾರ್ಥನು ಎಣ್ದೆಸೆ-(ಎಂಟು+ದೆಸೆ) ಕಂಪಿಸೆ=[ಈ ಚತುರ್ದಶ (೧೪) ಜಗವನ್ನೂ ಅಣು ಸಮಾನವೆಂದು ಭಾವಿಸುವೆನು; ಅಕಟ! ನೀನು ನನಗೆ ಲಕ್ಷವೇ! ಫಡ, ಎಂದು ತೆಗೆದು ಏಳುಬಾಣಗಳನ್ನು ಅರ್ಜುನನು ಸುಧನ್ವನ ಮೇಲೆ ಹೊಡೆದನು. ಆಗ ಎಂಟು ದಿಕ್ಕುಗಳೂ ಕಂಪಿಸಿದವು.]
  • ತಾತ್ಪರ್ಯ:ಈ ಗಾಂಡೀವ, ಈ ಅಕ್ಷಯ ಬಾಣ, ಈ ದಿವ್ಯರಥ, ಈ ಕಪಿಧ್ವಜವು, ಈ ಮಹಾ ಅಶ್ವಗಳು, ಈ ಸವ್ಯಸಾಚಿತನ, ಈ ದೇವದತ್ತ ಶಂಖವು, ತನಗೆ ಇವು ಏಕೆ ನಿನ್ನನ್ನು ಜಯಿಸದೆ ಇದ್ದರೆ! ಈ ಚತುರ್ದಶ (೧೪) ಜಗತ್ತನ್ನೂ ಅಣು ಸಮಾನವೆಂದು ಭಾವಿಸುವೆನು; ಅಕಟ! ನೀನು ನನಗೆ ಲಕ್ಷವೇ! ಫಡ, ಎಂದು ತೆಗೆದು ಏಳುಬಾಣಗಳನ್ನು ಅರ್ಜುನನು ಸುಧನ್ವನ ಮೇಲೆ ಹೊಡೆದನು. ಆಗ ಎಂಟು ದಿಕ್ಕುಗಳೂ ಕಂಪಿಸಿದವು.]
  • (ಪದ್ಯ-೮)

ಪದ್ಯ :-:೯:

[ಸಂಪಾದಿಸಿ]

ದಿವ್ಯಹಯ ರಥ ಚಾಪ ಶರ ಕೇತು ಕಂಬುಗಳ್ | ಸವ್ಯಸಾಚಿತ್ವಮಿವು ನಿನಗೊದಗಿದವು ರಣದೊ | ಳವ್ಯಯಂ ಸಾರಥ್ಯಮಂ ಮಾಡಲ್ಲಿನ್ನು ಜಯವಹುದೆ ಹುಲುಸೂತನಿಂದೆ ||
ಸವ್ಯವಾಹನಸಖಂ ತೊಲಗಿಸುವ ಬಹಳಮೇ | ಘ ವ್ಯೂಹಸಂಘಾತದೊಡ್ಡವಣೆ ಮುರಿವುದೇ ಕೃ | ತವ್ಯಜನವಾತದಿಂದಲೆ ಮರುಳೆ ಹೋಗೆನುತವಂ ಕಿರೀಟಿಯನೆಚ್ಚನು ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದಿವ್ಯಹಯ ರಥ ಚಾಪ ಶರ ಕೇತು ಕಂಬು(ಶಂಖ)ಗಳ್ ಸವ್ಯಸಾಚಿತ್ವಂ ಇವು ನಿನಗೆ ಒದಗಿದವು ರಣದೊಳು ಅವ್ಯಯಂ ಸಾರಥ್ಯಮಂ ಮಾಡಲ್ಲಿನ್ನು ಜಯವಹುದೆ ಹುಲುಸೂತನಿಂದೆ=[ದಿವ್ಯವಾದ ಹಯ, ರಥ, ಬಿಲ್ಲು ಬಾಣ-ಬತ್ತಳಿಕೆ, ಧ್ವಜ, ಶಂಖಗಳು, ಸವ್ಯಸಾಚಿತ್ವ ಯುದ್ಧದಲ್ಲಿ ಅವ್ಯಯನಾದ ಕೃಷ್ಣನು ಸಾರಥ್ಯವನ್ನು ಮಾಡಲು ಇವು ನಿನಗೆ ಒದಗಿದವು. ಅವನಿಲ್ಲದೆ ಅಲ್ಪನಾದ ಸೂತನಿಂದ ಇನ್ನು ಜಯದೊರಕುವುದೇ?]; ಸವ್ಯವಾಹನಸಖಂ(ಅಗ್ನಿಯ ಸಖ-ಬಿರುಗಾಳಿ) ತೊಲಗಿಸುವ ಬಹಳಮೇಘ ವ್ಯೂಹಸಂಘಾತದ ಒಡ್ಡವಣೆ ಮುರಿವುದೇ ಕೃತವ್ಯಜನವಾತ(ಬೀಸಣಿಕೆಯ ಗಾಳಿ)ದಿಂದ=[ಬಿರುಗಾಳಿಯಿಂದ ತೊಲಗಿಸುವ ಬಹಳ ಮೇಘದ ದಟ್ಟಣೆಯನ್ನು ಬೀಸಣಿಕೆಯ ಗಾಳಿ ಚದುರಿಸುವುದೇ?]; ಎಲೆ ಮರುಳೆ ಹೋಗು ಎನುತ ಅವಂ ಕಿರೀಟಯನು ಎಚ್ಚನು=[ಎಲೆ ಮರುಳೆ ಹೋಗು ಎನ್ನತ್ತಾ ಅವನು ಕಿರೀಟಿಯನ್ನು ಬಾಣದಿಂದ ಹೊಡೆದನು.].
  • ತಾತ್ಪರ್ಯ:ದಿವ್ಯವಾದ ಹಯ, ರಥ, ಬಿಲ್ಲು ಬಾಣ-ಬತ್ತಳಿಕೆ, ಧ್ವಜ, ಶಂಖಗಳು, ಸವ್ಯಸಾಚಿತ್ವ ಯುದ್ಧದಲ್ಲಿ ಅವ್ಯಯನಾದ ಕೃಷ್ಣನು ಸಾರಥ್ಯವನ್ನು ಮಾಡಲು ಇವು ನಿನಗೆ ಒದಗಿದವು. ಅವನಿಲ್ಲದೆ ಅಲ್ಪನಾದ ಸೂತನಿಂದ ಇನ್ನು ಜಯದೊರಕುವುದೇ? ಬಿರುಗಾಳಿಯಿಂದ ತೊಲಗಿಸುವ ಬಹಳ ಮೇಘದ ದಟ್ಟಣೆಯನ್ನು ಬೀಸಣಿಕೆಯ ಗಾಳಿ ಚದುರಿಸುವುದೇ? ಎಲೆ ಮರುಳೆ ಹೋಗು ಎನ್ನತ್ತಾ ಅವನು ಕಿರೀಟಿಯನ್ನು ಬಾಣದಿಂದ ಹೊಡೆದನು.
  • (ಪದ್ಯ-೯)

ಪದ್ಯ :-:೧೦:

[ಸಂಪಾದಿಸಿ]

ಪಾಂಡವಂ ಬಳಿಕ ಬೇಸಗೆಯ ನಡುವಗಲ ಮಾ | ರ್ತಾಂಡನಂತಿಹ ಕಲಿಸುಧನ್ವನಂ ಕಂಡು ಮಿಗೆ | ಖಾಂಡವದಹನಲಬ್ಧವಾಗಿ ಮೂಡಿಗೆಯೊಳಿರ್ದಾಗ್ನೇಯಮಾರ್ಗಣವನು ||
ಗಾಂಡೀವಕಳವಡಿಸಿ ತೆಗೆವಿನಂ ಕರ್ಬೊಗೆಯ | ಜಾಂಡಮಂ ತೀವಿದುದು ಕಾದುವು ಕುಲಾದ್ರಿಗಳ್ | ಭಾಂಡಜಲದಂದದಿಂ ಕುದಿದುಕ್ಕಿದುದು ಕಡಲ್ ಪೇಳಲೇನದ್ಭುತವನು ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪಾಂಡವಂ ಬಳಿಕ ಬೇಸಗೆಯ ನಡುವಗಲ(ನಡುಹಗಲು) ಮಾರ್ತಾಂಡನಂತೆ ಇಹ ಕಲಿಸುಧನ್ವನಂ ಕಂಡು ಮಿಗೆ ಖಾಂಡವದಹನ ಲಬ್ಧವಾಗಿ ಮೂಡಿಗೆಯೊಳು ಇರ್ದ ಆಗ್ನೇಯ ಮಾರ್ಗಣವನು=[ಅರ್ಜುನನು ಬಳಿಕ ಬೇಸಿಗೆಯ ನಡುಹಗಲು ಸೂರ್ಯನಂತೆ ಇರುವ ಕಲಿಸುಧನ್ವನನ್ನು ಕಂಡು, ವಿಶೇಷವಾಗಿ ಖಾಂಡವದಹನದಲ್ಲಿ ಅಗ್ನಿಯಿಂದ ದೊರಕಿದ ಬತ್ತಳಿಕೆಯಲ್ಲಿದ್ದ ಆಗ್ನೇಯ ಅಸ್ತ್ರವನ್ನು]; ಗಾಂಡೀವಕೆ ಅಳವಡಿಸಿ ತೆಗೆವಿನಂ ಕರ್ಬೊಗೆಯು ಅಜಾಂಡಮಂ ತೀವಿದುದು ಕಾದುವು ಕಲಾದ್ರಿಗಳ್ ಭಾಂಡಜಲದಂದದಿಂ ಕುದಿದು ಉಕ್ಕಿದುದು ಕಡಲ್ ಪೇಳಲೇನದ್ಭುತವನು=[ಗಾಂಡೀವಕ್ಕೆ ಅಳವಡಿಸಿ ಪ್ರಯೋಗಿಸಲು,ಕಪ್ಪು ಹೊಗೆಯು ಬ್ರಹ್ಮಾಂಡವನ್ನು ಮುತ್ತಿತು ಕಾದುಬಿಸಿಯಾಯಿತು ಕುಲಪರ್ವತಗಳು, ಗುಡಾಣದ ನೀರಿನಂತೆ ಸಮುದ್ರ ಕುದಿದು ಉಕ್ಕಿತು.ಅದ್ಭುತವನ್ನು ಏನು ಹೇಳಲಿ!].
  • ತಾತ್ಪರ್ಯ:ಅರ್ಜುನನು ಬಳಿಕ ಬೇಸಿಗೆಯ ನಡುಹಗಲು ಸೂರ್ಯನಂತೆ ಇರುವ ಕಲಿಸುಧನ್ವನನ್ನು ಕಂಡು, ವಿಶೇಷವಾಗಿ ಖಾಂಡವದಹನದಲ್ಲಿ ಅಗ್ನಿಯಿಂದ ದೊರಕಿದ ಬತ್ತಳಿಕೆಯಲ್ಲಿದ್ದ ಆಗ್ನೇಯ ಅಸ್ತ್ರವನ್ನು ಗಾಂಡೀವಕ್ಕೆ ಅಳವಡಿಸಿ ಪ್ರಯೋಗಿಸಲು,ಕಪ್ಪು ಹೊಗೆಯು ಬ್ರಹ್ಮಾಂಡವನ್ನು ಮುತ್ತಿತು ಕಾದುಬಿಸಿಯಾಯಿತು ಕುಲಪರ್ವತಗಳು, ಗುಡಾಣದ ನೀರಿನಂತೆ ಸಮುದ್ರ ಕುದಿದು ಉಕ್ಕಿತು.ಅದ್ಭುತವನ್ನು ಏನು ಹೇಳಲಿ!
  • (ಪದ್ಯ-೧೦)

ಪದ್ಯ :-:೧೧:

[ಸಂಪಾದಿಸಿ]

ಆವಗಂ ಪೀರ್ವೊಡಾಸರ್ಗೊಂಡು ತೀರದ ಮ | ಹಾವಾರ್ಧಿಜಲವನೊಂದೇಸಾರಿ ಸುರಿಗೊಂಬ | ಡಾವರದೊಳೆದ್ದ ವಡಬಾಗ್ನಿಯೋ ವಿಲಯರುದ್ರನ ಪಣೆಯ ಕಣ್ಗಿಚ್ಚಿದೋ ||
ಭಾವಿಸುವೊಡರಿದೆಂಬೊಲಾದುದು ಧನಂಜಯನ | ಪಾವಕಾಸ್ತ್ರಂ ಬಳಿಕ ತೆಗೆದು ಬೊಬ್ಬಿರಿದು ಗಾಂ | ಡೀವದಿಂ ಪಾರಿಸಿದೊಡಾ ಸುಧನ್ವನ ಸರಿಸಕಡರಿತುರಿ ಕಡುಭರದೊಳು ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆವಗಂ ಪೀರ್ವೊಡೆ ಆಸರ್ಗೊಂಡು ತೀರದ ಮಹಾವಾರ್ಧಿ ಜಲವನೊಂದೇ ಸಾರಿ ಸುರಿಗೊಂಬ ಡಾವರದೊಳು ಎದ್ದ ವಡಬಾಗ್ನಿಯೋ=[ಮಹಾಸಮುದ್ದ ಜಲವನ್ನು ಒಂದೇ ಸಾರಿ ಕುಡಿಯುವ ಬಯಕೆಯಿಂದ ಎದ್ದ ಯಾವಾಗಲೂ ಬಾಯಾರಿಕೆ ತೀರದ ಬಡಬಾಗ್ನಿಯೋ]; ವಿಲಯರುದ್ರನ ಪಣೆಯ ಕಣ್ಗಿಚ್ಚು ಇದೋ ಭಾವಿಸುವೊಡೆ ಅರಿದೆಂಬೊಲು ಆದುದು ಧನಂಜಯನ ಪಾವಕಾಸ್ತ್ರಂ=[ಪ್ರಳಯರುದ್ರನ ಹಣೆಯ ಕಣ್ಗಿನ ಬೆಂಕಿಯೋ, ಇದು ಯೋಚಿಸಿದರೂ ಅರಿಯಲಾಗದ್ದು ಎಂಬಂತೆ ಆಯಿತು ಧನಂಜಯನ ಆಗ್ನೇಯಾಸ್ತ್ರಂ]; ಬಳಿಕ ತೆಗೆದು ಬೊಬ್ಬಿರಿದು ಗಾಂಡೀವದಿಂ ಪಾರಿಸಿದೊಡೆ ಆ ಸುಧನ್ವನ ಸರಿಸಕೆ ಅಡರಿತು ಉರಿ ಕಡುಭರದೊಳು=[ಬಳಿಕ ಆ ಅಸ್ತ್ರವನ್ನು ತೆಗೆದು ಬೊಬ್ಬಿರಿದು ಗಾಂಡೀವದಿಂದ ಬಿಟ್ಟಾಗ ಆ ಸುಧನ್ವನ ಹತ್ತಿರ ಉರಿ ವೇಗವಾಗಿ ನುಗ್ಗಿತು].
  • ತಾತ್ಪರ್ಯ: ಮಹಾಸಮುದ್ದ ಜಲವನ್ನು ಒಂದೇ ಸಾರಿ ಕುಡಿಯುವ ಬಯಕೆಯಿಂದ ಎದ್ದ ಯಾವಾಗಲೂ ಬಾಯಾರಿಕೆ ತೀರದ ಬಡಬಾಗ್ನಿಯೋ! ಪ್ರಳಯರುದ್ರನ ಹಣೆಯ ಕಣ್ಗಿನ ಬೆಂಕಿಯೋ, ಇದು ಯೋಚಿಸಿದರೂ ಅರಿಯಲಾಗದ್ದು ಎಂಬಂತೆ ಆಯಿತು ಧನಂಜಯನ ಆಗ್ನೇಯಾಸ್ತ್ರವು, ಬಳಿಕ ಆ ಅಸ್ತ್ರವನ್ನು ತೆಗೆದು ಬೊಬ್ಬಿರಿದು ಗಾಂಡೀವದಿಂದ ಬಿಟ್ಟಾಗ ಆ ಸುಧನ್ವನ ಹತ್ತಿರ ಉರಿ ವೇಗವಾಗಿ ನುಗ್ಗಿತು.
  • (ಪದ್ಯ-೧೧)

ಪದ್ಯ :-:೧೨:

[ಸಂಪಾದಿಸಿ]

ತೆಕ್ಕೆವರಿದೇಳ್ವ ಕರ್ಬ್ಬೊಗೆಯ ಹೊರಳಿಗಳ ದಶ | ದಿಕ್ಕುಗಳನವ್ವಳಿಪ ಕೇಸುರಿಯ ಚೂಣಿಗಳ | ಮಿಕ್ಕು ಸೂಸುವ ತೂರುಗಿಡಿಗಳ ಕಣಾಳಿಗಳ ಕಾರಿಡುವ ಪೊತ್ತುಗೆಗಳ ||
ಕೊಕ್ಕರಿಸುತುಗುವ ತನಿಗೆಂಡದಿಂಡೆಗಳ ಸಲೆ ಮುಕ್ಕುಳಿಸಿ ಮೊಗೆವ ಪೆರ್ಗಿಚ್ಚುಗಳ ವೆಂಕೆ ಮೇ | ಲಿಕ್ಕಿದುದು ಹಂಸಧ್ವಜನ ಸೇನೆ ಬೆಂದು ಬೇಗುದಿಗೊಂಡುದಾ ಕ್ಷಣದೊಳು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತೆಕ್ಕೆ(ಧ್ಜಜ)ವರಿದು ಏಳ್ವ ಕರ್ಬ್ಬೊಗೆಯ ಹೊರಳಿಗಳ ದಶದಿಕ್ಕುಗಳನು ಅವ್ವಳಿಪ ಕೇಸುರಿಯ ಚೂಣಿಗಳ=[ಧ್ಜಜವನ್ನು ಮೀರಿ ಏಳುವ ಕಪ್ಪು ಹೊಗೆಯ ಸುರಳಿಗಳ ದಶದಿಕ್ಕುಗಳನ್ನೂ ಆವರಿಸಿದ ಉದ್ದಸುಳಿಯ ಮುಂದೆ ನುಗ್ಗುತ್ತಿರುವ]; ಮಿಕ್ಕು ಸೂಸುವ ತೂರುಗಿಡಿಗಳ ಕಣ ಆಳಿಗಳ ಕಾರಿಡುವ ಪೊತ್ತುಗೆಗಳ(ಹೊತ್ತಿದ ಕೊಳ್ಳಿ) ಕೊಕ್ಕರಿಸುತ ಉಗುವ ತನಿಗೆಂಡದಿಂಡೆಗಳ[ಎಲ್ಲಡೆ ಸೂಸುವ ತೂರುವ ಬೆಂಕಿಯಕಿಡಿಗಳ, ಸಣ್ಣಕಿಡಿಗಳ, ಕಾರಿಡುವ ಕೊಳ್ಳಿಗಳ ಕಿಡಿಹಾರಿಸುತ್ತಾ ಉಗುಳುವ ತನಿಕೆಂಡ ದಿಂಡೆಗಳ(ದಿಂಡುಗಳ)]; ಸಲೆ ಮುಕ್ಕುಳಿಸು ಮೊಗೆವ ಪೆರ್ಗಿಚ್ಚುಗಳ (ಹಿರಿದು+ಕಿಚ್ಚು) ವೆಂಕೆ ಮೇಲಿಕ್ಕಿದುದು ಹಂಸಧ್ವಜನ ಸೇನೆ ಬೆಂದು ಬೇಗುದಿಗೊಂಡುದಾ ಕ್ಷಣದೊಳು=[ಬಹಳ ಉಗುಳಿದಂತೆ ನುಗ್ಗುವ ಸುಳಿಯ ತುಂಬುವ ದೊಡ್ಡ ಬೆಂಕಿಗಳ ಓಲಾಟ ಹಂಸಧ್ವಜನ ಸೇನೆ ಮೇಲೆ ಹೊಡೆಯಿತು; ಅದು ಕ್ಷಣದಲ್ಲಿ ಬೆಂದು ಸಂಕಟಪಟ್ಟಿತು. ].
  • ತಾತ್ಪರ್ಯ:ಧ್ಜಜವನ್ನು ಮೀರಿ ಏಳುವ ಕಪ್ಪು ಹೊಗೆಯ ಸುರಳಿಗಳ ದಶದಿಕ್ಕುಗಳನ್ನೂ ಆವರಿಸಿದ ಉದ್ದಸುಳಿಯ ಮುಂದೆ ನುಗ್ಗುತ್ತಿರುವ, ಎಲ್ಲಡೆ ಸೂಸುವ ತೂರುವ ಬೆಂಕಿಯಕಿಡಿಗಳ, ಸಣ್ಣಕಿಡಿಗಳ, ಕಾರಿಡುವ ಕೊಳ್ಳಿಗಳ ಕಿಡಿಹಾರಿಸುತ್ತಾ ಉಗುಳುವ ತನಿಕೆಂಡ ದಿಂಡೆಗಳ(ದಿಂಡುಗಳ)ಬಹಳ ಉಗುಳಿದಂತೆ ನುಗ್ಗುವ ಸುಳಿಯ ತುಂಬುವ ದೊಡ್ಡ ಬೆಂಕಿಗಳ ಓಲಾಟ ಹಂಸಧ್ವಜನ ಸೇನೆ ಮೇಲೆ ಹೊಡೆಯಿತು; ಅದು ಕ್ಷಣದಲ್ಲಿ ಬೆಂದು ಸಂಕಟಪಟ್ಟಿತು.
  • (ಪದ್ಯ-೧೨)

ಪದ್ಯ :-:೧೩:

[ಸಂಪಾದಿಸಿ]

ಕಾದವು ಭಟರ ಕೈದುಗಳ್ ಪಿಡಿಯಲರಿದೆನ | ಲ್ಕಾದವು ಶರಾಗ್ನಿ ಗಾಹುತಿ ಗಜಹಯಾದಿಗಳ್ | ಕಾದವು ಧನಂಜಯನ ಮುಂದೆಮ್ಮ ಬಲಗಳೆಂದಾ ಸುಧನ್ವಂ ಕೆರಳ್ದು ||
ಕೋದಂಡಕತಿವೇಗದೊಳ್ ವಾರುಣಾಸ್ತ್ರವಂ | ಕೋದಂಡಲೆವ ಶಿಖಿಜ್ವಾಲೆಯಂ ನಿಲಿಸಲಿದ | ಕೋದಂಡಮೆನ್ನೊಳೆನುತಾರ್ದು ತೆಗೆದಚ್ಚನುರಿ ನಂದಿ ಜಲಮಯವಾಗಲು ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾದವು(ಬಿಸಿ) ಭಟರ ಕೈದುಗಳ್ ಪಿಡಿಯಲು ಅರಿದೆನಲ್ಕೆ ಅದವು ಶರಾಗ್ನಿಗಾಹುತಿ ಗಜಹಯಾದಿಗಳ್ ಕಾದವು ಧನಂಜಯನ ಮುಂದೆಮ್ಮ ಬಲಗಳೆಂದು ಆ ಸುಧನ್ವಂ ಕೆರಳ್ದು=[ಸೈನಿಕರ ಆಯುಧಗಳು ಬಿಸಿಯಾದವು, ಅವು ಹಿಡಿಯಲು ಆಗದು ಎನ್ನುವಂತೆ ಆಯಿತು; ಶರದ ಬೆಂಕಿಗೆ ಆನೆ ಕುದುರೆಗಳು ಅಗ್ನಿಗೆ ಆಹುತಿ ಅದವು; ಧನಂಜಯನ ಮುಂದೆ ನಮ್ಮ ಸೈನ್ಯಗಳು ಬಿಸಿಯಾದವು ಎಂದು ಆ ಸುಧನ್ವನು ಕೋಪಗೊಂಡು]; ಕೋದಂಡಕೆ ಅತಿವೇಗದೊಳ್ ವಾರುಣಾಸ್ತ್ರವಂ ಕೋದು ಅಂಡಲೆವ ಶಿಖಿಜ್ವಾಲೆಯಂ ನಿಲಿಸಲು=[ಬಿಲ್ಲಿಗೆ ಅತಿವೇಗದಲ್ಲಿ ವಾರುಣಾಸ್ತ್ರವನ್ನು ಹೂಡಿ ಹಬ್ಬುತ್ತಿರುವ ಬೆಂಕಿ ಜ್ವಾಲೆಯನ್ನು ನಿಲ್ಲಿಸಲು]; ಇದ ಕೋ(ತೆಗೆದುಕೋ) ದಂಡ(ಶಿಕ್ಷೆ -ಪರಿಹಾರ)ಮು ಎನ್ನೊಳು ಎನುತ ಆರ್ದು ತೆಗೆದು ಎಚ್ಚನು ಉರಿ ನಂದಿ ಜಲಮಯವಾಗಲು=[ಇದನ್ನು ತೆಗೆದುಕೋ ಪ್ರತಿಅಸ್ತ್ರ ನನ್ನದು ಎನ್ನುತ್ತಾ ಆರ್ಭಟಿಸಿ ತೆಗೆದುಹೊಡೆದನು. ಆಗ ಉರಿ ನಂದಿ ಜಲಮಯವಾಯಿತು.]
  • ತಾತ್ಪರ್ಯ:ಸೈನಿಕರ ಆಯುಧಗಳು ಬಿಸಿಯಾದವು, ಅವು ಹಿಡಿಯಲು ಆಗದು ಎನ್ನುವಂತೆ ಆಯಿತು; ಶರದ ಬೆಂಕಿಗೆ ಆನೆ ಕುದುರೆಗಳು ಅಗ್ನಿಗೆ ಆಹುತಿ ಅದವು; ಧನಂಜಯನ ಮುಂದೆ ನಮ್ಮ ಸೈನ್ಯಗಳು ಬೆಂದವು ಎಂದು, ಆ ಸುಧನ್ವನು ಕೋಪಗೊಂಡು, ಬಿಲ್ಲಿಗೆ ಅತಿವೇಗದಲ್ಲಿ ವಾರುಣಾಸ್ತ್ರವನ್ನು ಹೂಡಿ ಹಬ್ಬುತ್ತಿರುವ ಬೆಂಕಿ ಜ್ವಾಲೆಯನ್ನು ನಿಲ್ಲಿಸಲು, ಇದನ್ನು ತೆಗೆದುಕೋ ಪ್ರತಿಅಸ್ತ್ರ ನನ್ನದು ಎನ್ನುತ್ತಾ ಆರ್ಭಟಿಸಿ ತೆಗೆದುಹೊಡೆದನು. ಆಗ ಉರಿ/ಬೆಂಕಿ ನಂದಿ ಜಲಮಯವಾಯಿತು.
  • (ಪದ್ಯ-೧೩)

ಪದ್ಯ :-:೧೪:

[ಸಂಪಾದಿಸಿ]

ನಾದವು ಸಮಸ್ತಬಲಮಖಿಳವಾದಯಗಳ ನಿ ನಾದವುಡುಗಿತು ನನೆದು ಗಜ ವಾಜಿ ನಿಕರಮೇ | ನಾದವುದಕದೊಳೆಂಬುದಂ ಕಾಣೆನಾ ಸುಧನ್ವನ ವಾರುಣಾಸ್ತ್ರದಿಂದೆ ||
ತೋದಳವಳಿದರೆಲ್ಲ ರಂಬುಧಾರೆಗಳದೆಂ ತೋ ದಳವನೊರಸಿದವರ್ಜುನಂ ಬೆರಗುವೆ | ತ್ತೋದಲಳವಡದ ವಟುವಂತಿರ್ದನಾಹವದೊಳರಸ ಕೇಳ್ ಕೌತುಕವನು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಾದವು ಸಮಸ್ತಬಲಂ ಆಖಿಳವಾದ್ಯಂಗಳ ನಿನಾದವು ಅಡುಗಿತು ನನೆದು ಗಜ ವಾಜಿ ನಿಕರಮ್ ಏನಾದವು ಊದಕದೊಳು ಎಂಬುದಂ ಕಾಣೆನು ಸುಧನ್ವನ ವಾರುಣಾಸ್ತ್ರದಿಂದೆ=[ಸಮಸ್ತ ಸೈನ್ಯವೂ ಒದ್ದೆಯಾಯಿತು; ನನೆದು ಎಲ್ಲಾ ವಾದ್ಯಗಳ ಶಬ್ದವು ಅಡುಗಿತು; ಗಜ ಕುದುರೆ ಸಮೂಹ ಸುಧನ್ವನ ವಾರುಣಾಸ್ತ್ರದಿಂದ ಏನಾದವು ನೀರಿನಲ್ಲಿ ಎಂಬುದನ್ನು ಕಾಣೆನು]; ತೋದು ಅಳವಳಿದರು ಎಲ್ಲರೂ ಅಂಬುಧಾರೆಗಳು ಅದೆಂತೋ ದಳವನೊರಸಿದವು ಅರ್ಜುನಂ ಬೆರಗುವೆತ್ತು ಓದಲಳವಡದ ವಟುವಂತೆ ಇರ್ದನ ಆಹವದೊಳು ಅರಸ ಕೇಳ್ ಕೌತುಕವನು=[ತೋದು ಬಳಲಿದರು ಎಲ್ಲರೂ ನೀರಿನಧಾರೆಗಳು ಅದು ಎಂತೋ ಸೈನ್ಯವನ್ನು ನಾಶಪಡಿಸಿದ ಅರ್ಜುನನು ಆ ಸೈನ್ಯದಲ್ಲಿ ಬೆರಗು ಪಟ್ಟು ಓದಲು ಆಗದ ವಟುವಿನಂತೆ ಇದ್ದನು, ಅರಸನೇ ಕೇಳು ಆಶ್ಚರ್ಯವನ್ನು].
  • ತಾತ್ಪರ್ಯ:ಸಮಸ್ತ ಸೈನ್ಯವೂ ಒದ್ದೆಯಾಯಿತು; ನನೆದು ಎಲ್ಲಾ ವಾದ್ಯಗಳ ಶಬ್ದವು ಅಡುಗಿತು; ಗಜ ಕುದುರೆ ಸಮೂಹ ಸುಧನ್ವನ ವಾರುಣಾಸ್ತ್ರದಿಂದ ಏನಾದವು ನೀರಿನಲ್ಲಿ ಎಂಬುದನ್ನು ಕಾಣೆನು; ತೋದು ಬಳಲಿದರು ಎಲ್ಲರೂ ನೀರಿನಧಾರೆಗಳು ಅದು ಎಂತೋ ಸೈನ್ಯವನ್ನು ನಾಶಪಡಿಸಿದ ಅರ್ಜುನನು ಆ ಸೈನ್ಯದಲ್ಲಿ ಬೆರಗು ಪಟ್ಟು ಓದಲು ಆಗದ ವಟುವಿನಂತೆ ಇದ್ದನು, ಅರಸನೇ ಕೇಳು ಆಶ್ಚರ್ಯವನ್ನು.
  • (ಪದ್ಯ-೧೪)V

ಪದ್ಯ :-:೧೫:

[ಸಂಪಾದಿಸಿ]

ಬಳಿಕೆ ವಾಯವ್ಯಾಸ್ತ್ರದಿಂದ ಶೋಷಿಸಿದನಾ | ಜಲವನರ್ಜುನ ನದ್ರಿಬಾಣಮಂ ಪೂಡಿದಂ | ಕಲಿಸುಧನ್ವಂ ತೊಟ್ಟನೈಂದ್ರಶರಮಂ ಫಲುಗುಣಂ ತಿಮಿರಸಾಯಕವನು ||
ಸೆಳದಂ ವರಾಳರ್ಶವಜನ ಸುತಂ ತೆಗೆದನು ಜ್ಜ್ವಲರವಿಕಳಂಬಮಂ ಭೀಭತ್ಸು ತುಡುಕಿದಂ | ಮುಳಿದವಂ ಗರಳವಿಶಿಖವನುಗಿದನಾನರಂ ಗಾರುಡಶಿಲೀಮಖವನು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕೆ ವಾಯವ್ಯಾಸ್ತ್ರದಿಂದ ಶೋಷಿಸಿದನು ಆ ಜಲವನು ಅರ್ಜುನ ನದ್ರಿಬಾಣಮಂ ಪೂಡಿದಂ ಕಲಿಸುಧನ್ವಂ ತೊಟ್ಟನು ಐಂದ್ರಶರಮಂ ಫಲುಗುಣಂ=[ಬಳಿಕೆ ಅರ್ಜುನ ವಾಯವ್ಯಾಸ್ತ್ರದಿಂದ ಆ ಜಲವನ‍್ನು ಒಣಗಿಸಿದನು. ವೀರಸುಧನ್ವನು ಪರ್ವತಾಸ್ತ್ರ ಹೂಡಿದನು, ಫಲುಗುಣನು ಐಂದ್ರಶರದಿಂದ ಅದನ್ನು ಓಡಿಸಿದನು.]; ತಿಮಿರಸಾಯಕವನು ಸೆಳದಂ ವರಾಳಧ್ವಜನ ಸುತಂ ತೆಗೆದನು ಜ್ಜ್ವಲರವಿಕಳಂಬಮಂ ಭೀಭತ್ಸು ತುಡುಕಿದಂ=[ಸುಧನ್ವ ತಿಮಿರ (ಕತ್ತಲೆ) ಅಸ್ತ್ರವನ್ನು ಹೊಡೆದ; ಅದನ್ನು ಸೂರ್ಯಾಸ್ತ್ರದಿಂದ ತೆಗೆದನು ಅರ್ಜುನ;]; ಮುಳಿದವಂ ಗರಳವಿಶಿಖವನುಗಿದನು ಆ ನರಂ ಗಾರುಡಶಿಲೀ ಮಖವನು=[ಸುಧನ್ವ ಗರಳ(ವಿಷ)ಶರವನ್ನು ಹೂಡಿದ, ಆ ನರನು ಗರುಡಶರದಿಂದ ಅದನ್ನು ತೆಗೆದ].
  • ತಾತ್ಪರ್ಯ:ಬಳಿಕೆ ಅರ್ಜುನ ವಾಯವ್ಯಾಸ್ತ್ರದಿಂದ ಆ ಜಲವನ‍್ನು ಒಣಗಿಸಿದನು. ವೀರಸುಧನ್ವನು ಪರ್ವತಾಸ್ತ್ರ ಹೂಡಿದನು, ಫಲುಗುಣನು ಐಂದ್ರಶರದಿಂದ ಅದನ್ನು ಓಡಿಸಿದನು.ಸುಧನ್ವ ತಿಮಿರ (ಕತ್ತಲೆ) ಅಸ್ತ್ರವನ್ನು ಹೊಡೆದ; ಅದನ್ನು ಸೂರ್ಯಾಸ್ತ್ರದಿಂದ ತೆಗೆದನು ಅರ್ಜುನ; ಸುಧನ್ವ ಗರಳ(ವಿಷ)ಶರವನ್ನು ಹೂಡಿದ, ಆ ನರನು ಗರುಡಶರದಿಂದ ಅದನ್ನು ತೆಗೆದ.
  • (ಪದ್ಯ-೧೫)

ಪದ್ಯ :-:೧೬:

[ಸಂಪಾದಿಸಿ]

ಈ ತೆರದೊಳಖಿಳ ದಿವ್ಯಾಸ್ತ್ರಂಗಳಿಸುಗೆಗಳ ಚಾತುರ್ಯದಿಂದೊರ್ವರೊರ್ವರಂ ಗೆಲ್ವ ಸ | ತ್ವಾತಿ ಯದಿಂದೆ ಕಾದಿದರಾ ಸುಧನ್ವಾರ್ಜುನರ್ ಬಳಿಕ ರೋಷದಿಂದೆ ||
ಭೀತಿಗೊಳೆ ಮೂಜಗಂ ತೆಗೆದು ಬ್ರಹ್ಮಾಸ್ತ್ರಮಂ ಶ್ವೇತವಾಹನನಾರ್ದಿಸಲ್ಕೆ ಹಂಸಧ್ವಜನ | ಜಾತಂ ಪ್ರತೀಕಾರಕಾ ಪಿತಾಮಹಶರವನೆಚ್ಚೊಡನೆ ಬೊಬ್ಬಿರಿದನು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಈ ತೆರದೊಳು ಅಖಿಳ ದಿವ್ಯಾಸ್ತ್ರಂಗಳ ಇಸುಗೆಗಳ ಚಾತುರ್ಯದಿಂದ ಓರ್ವರೊರ್ವರಂ ಗೆಲ್ವ ಸತ್ವಾತಿಯದಿಂದೆ ಕಾದಿದರು ಆ ಸುಧನ್ವಾರ್ಜುನರ್=[ಆ ಸುಧನ್ವಾರ್ಜುನರು ಈ ತೆರದಲ್ಲಿ ಎಲ್ಲಾ ದಿವ್ಯಾಸ್ತ್ರಂಗಳ ಬಾಣಗಳ ಚಾತುರ್ಯದಿಂದ ಒಬ್ಬರನ್ನೊಬ್ಬರು ಗೆಲ್ಲುವ ಸತ್ವದ ಅತಿಯತೋರಿ ಯುದ್ಧಮಾಡಿದರು.]; ಬಳಿಕ ರೋಷದಿಂದೆ ಭೀತಿಗೊಳೆ ಮೂಜಗಂ ತೆಗೆದು ಬ್ರಹ್ಮಾಸ್ತ್ರಮಂ ಶ್ವೇತವಾಹನನು ಆರ್ದಿಸಲ್ಕೆ=[ಬಳಿಕ ಸಿಟ್ಟಿನಿಂದ ಮೂರುಜಗತ್ತೂ ಭೀತಿಪಡಲು, ಅರ್ಜುನನು ಬ್ರಹ್ಮಾಸ್ತ್ರವನ್ನು ತೆಗೆದು ಆರ್ಭಟಿಸಿಸಿ ಬಿಡಲು,]; ಹಂಸಧ್ವಜನ ಜಾತಂ ಪ್ರತೀಕಾರಕೆ ಆ ಪಿತಾಮಹಶರವನು ಎಚ್ಚೊಡನೆ ಬೊಬ್ಬಿರಿದನು=[ ಸುಧನ್ವನೂ ಪ್ರತೀಕಾರಕ್ಕೆ ಆ ಬ್ರಹ್ಮಾಸ್ತ್ರ ಶರವನ್ನೇ ಬಿಟ್ಟು ಬೊಬ್ಬಿರಿದನು].
  • ತಾತ್ಪರ್ಯ:ಆ ಸುಧನ್ವಾರ್ಜುನರು ಈ ತೆರದಲ್ಲಿ ಎಲ್ಲಾ ದಿವ್ಯಾಸ್ತ್ರಂಗಳ ಬಾಣಗಳ ಚಾತುರ್ಯದಿಂದ ಒಬ್ಬರನ್ನೊಬ್ಬರು ಗೆಲ್ಲುವ ಸತ್ವದ ಅತಿಯತೋರಿ ಯುದ್ಧಮಾಡಿದರು. ಬಳಿಕ ಸಿಟ್ಟಿನಿಂದ ಮೂರುಜಗತ್ತೂ ಭೀತಿಪಡಲು, ಅರ್ಜುನನು ಬ್ರಹ್ಮಾಸ್ತ್ರವನ್ನು ತೆಗೆದು ಆರ್ಭಟಿಸಿಸಿ ಬಿಡಲು, ಸುಧನ್ವನೂ ಪ್ರತೀಕಾರಕ್ಕೆ ಆ ಬ್ರಹ್ಮಾಸ್ತ್ರ ಶರವನ್ನೇ ಬಿಟ್ಟು ಬೊಬ್ಬಿರಿದನು.
  • (ಪದ್ಯ-೧೬)

ಪದ್ಯ :-:೧೭:

[ಸಂಪಾದಿಸಿ]

ಆ ವರ ಬ್ರಹ್ಮಾಸ್ತ್ರಂ ಗಳೆರಡುಂ ಪೊಣರ್ದಡಗ ಲಾ ವಿಜಯನೆಣಿಕೆಗೊಂಡೀತನಂ ಗೆಲ್ವ ನಗೆ | ಯಾವುದೆಂದುಗಿದು ಹೂಡಿದನಕ್ಷಯಾಸ್ತ್ರಮಂ ತನ್ನ ರಥಕವನ ತೇರ್ಗೆ ||
ತೀವಿದುವು ಬಾಣಂಗಳಾಕಾಶಮಂ ಕಾಣೆ ನೀವಸುಧೆಯೆತ್ತಣದು ಶಶಿರವಿ ಕುಲಾದ್ರಿ ತಾ | ರಾವಳಿಗಳೇನಾದು ವೆಣ್ದೆಸೆಯ ನರಿವರಾರೆಂಬಿನಂ ಕೈಗೈದನು ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ವರ ಬ್ರಹ್ಮಾಸ್ತ್ರಂಗಳೆರಡುಂ ಪೊಣರ್ದು ಅಡಗಲಾ ವಿಜಯನೆಣಿಕೆಗೊಂಡು ಈತನಂ ಗೆಲ್ವ ಬಗೆ ಯಾವುದೆಂದು ಉಗಿದು ಹೂಡಿದನು ಅಕ್ಷಯಾಸ್ತ್ರಮಂ=[ಆ ವರ ಬ್ರಹ್ಮಾಸ್ತ್ರಂಗಳೆರಡೂ ಹೋರಾಡಿ ಶಾಂತವಾಗಲು, ಅರ್ಜುನನು ಯೋಚಿಸಿ, ಈತನನ್ನು ಗೆಲ್ಲುವ ಬಗೆ ಯಾವುದೆಂದು ಕೊನೆಗೆ ಅಕ್ಷಯಾಸ್ತ್ರವನ್ನು ಎಳೆದು ಹೂಡಿದನು]; ತನ್ನ ರಥಕೆ ಅವನ ತೇರ್ಗೆ ತೀವಿದುವು ಬಾಣಂಗಳು ಆಕಾಶಮಂ ಕಾಣೆನೂ ಈ ವಸುಧೆ ಯೆತ್ತಣದು ಶಶಿರವಿ ಕುಲಾದ್ರಿ ತಾರಾವಳಿಗಳು ಏನಾದುವೆಣ್ದೆಸೆಯ ನರಿವರೂ ಅರು ಎಂಬಿನಂ ಕೈಗೈದನು=[ತನ್ನ ರಥಕ್ಕೆ, ಅವನ ರಥಕ್ಕೆಬಾಣಗಳು ಮುತ್ತಿದುವು, ಆಕಾಶವೂ ಕಾಣುವುದಿಲ್ಲ ವಭೂಮಿಯೂ ಎಲ್ಲಿದೆ,ಚಂದ್ರ ಸೂರ್ಯರು ಕುಲಪರ್ವತಗಳು ತಾರೆಪುಂಜಗಳು ಏನಾದುವು, ಎಂಟು ದಿಕ್ಕನ್ನು ನೋಡಿದರೂ ಯಾರು ಯಾವುದೆಂದು ತಿಳಿಯದಂತೆಕೈಚಳಕ ತೋರಿಸಿದನು.].
  • ತಾತ್ಪರ್ಯ:ಆ ವರ ಬ್ರಹ್ಮಾಸ್ತ್ರಂಗಳೆರಡೂ ಹೋರಾಡಿ ಶಾಂತವಾಗಲು, ಅರ್ಜುನನು ಯೋಚಿಸಿ, ಈತನನ್ನು ಗೆಲ್ಲುವ ಬಗೆ ಯಾವುದೆಂದು ಕೊನೆಗೆ ಅಕ್ಷಯಾಸ್ತ್ರವನ್ನು ಎಳೆದು ಹೂಡಿದನು. ತನ್ನ ರಥಕ್ಕೆ, ಅವನ ರಥಕ್ಕೆ ಬಾಣಗಳು ಮುತ್ತಿದುವು, ಆಕಾಶವೂ ಕಾಣುವುದಿಲ್ಲ ವಭೂಮಿಯೂ ಎಲ್ಲಿದೆ,ಚಂದ್ರ ಸೂರ್ಯರು ಕುಲಪರ್ವತಗಳು ತಾರೆಪುಂಜಗಳು ಏನಾದುವು, ಎಂಟು ದಿಕ್ಕನ್ನು ನೋಡಿದರೂ ಯಾರು ಯಾವುದೆಂದು ತಿಳಿಯದಂತೆ ಕೈಚಳಕ ತೋರಿಸಿದನು.].
  • (ಪದ್ಯ-೧೭)

ಪದ್ಯ :-:೧೮:

[ಸಂಪಾದಿಸಿ]

ಇಚ್ಚಾರಿಗೊಂಡು ನರನೆಚ್ಚ ಕೆಂಗರಿಗೋಲ ಬಚ್ಚಳೆಯ ಪೊಸಮಸೆಯ ನಿಚ್ಚಳದ ನಿಡುಸರಳ್ | ಪೆಚ್ಚಿದವು ನಿಮಿಷದೊಳ್ ಮುಚ್ಚಿದವು ಗಗನಮಂ ಕೊಚ್ಚಿದವು ಪರಬಲವನೆ ||
ಬಿಚ್ಚಿದವು ಕವಚಮಂ ಕಚ್ಚಿದವು ಖಂಡಮಂ | ಚುಚ್ಚಿದವು ಕೂಡ ಥಟ್ಟುಚ್ಚಿದವು ಸೀಳಾಗಿ | ಪಚ್ಚಿದವು ಮೈಯೊಳಗೆ ಹೆಚ್ಚಿದವು ಹೊಗರಗಲು ಮಚ್ಚಿದವು ನೆಣವಸೆಯನು ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಚ್ಚಾರಿಗೊಂಡು ನರನೆಚ್ಚ ಕೆಂಗರಿಗೋಲ ಬಚ್ಚಳೆಯ ಪೊಸಮಸೆಯ ನಿಚ್ಚಳದ ನಿಡುಸರಳ್ ಪೆಚ್ಚಿದವು ನಿಮಿಷದೊಳ್ ಮುಚ್ಚಿದವು ಗಗನಮಂ ಕೊಚ್ಚಿದವು ಪರಬಲವನೆ=[ಎಲ್ಲಕಡೆ ಅರ್ಜುನನು ಹೊಡೆದ ಕೆಂಪುಗರಿಯ ಬಾಣಗಳು, ಚಪ್ಪಟೆಯಹೊಸಮಸೆದ ಹೊಳೆಯುವ ಉದ್ದಬಾಣಗಳು ಹೆಚ್ಚುತ್ತಾಹೋದವು, ನಿಮಿಷದಲ್ಲಿ ಆಕಾಶವನ್ನು ಮುಚ್ಚಿದವು ಶತ್ರುಗಳನ್ನು ಕೊಚ್ಚಿಹಾಕಿದವು.]; ಬಿಚ್ಚಿದವು ಕವಚಮಂ ಕಚ್ಚಿದವು ಖಂಡಮಂ ಚುಚ್ಚಿದವು ಕೂಡ ಥಟ್ಟುಚ್ಚಿದವು ಸೀಳಾಗಿ ಪಚ್ಚಿದವು ಮೈಯೊಳಗೆ ಹೆಚ್ಚಿದವು ಹೊಗರ್ ಅಗಲು(ಹಗಲು?) ಮಚ್ಚಿದವು ನೆಣವಸೆಯನು=[ಕವಚಗಳನ್ನು ಬಿಚ್ಚಿದವು, ಮಾಂಸಖಂಡಗಳನ್ನು ಕಚ್ಚಿ ಚುಚ್ಚಿದವು,ಮತ್ತೂ ಸೀಳುಮಾಡಿ ಹೊಡೆದವು, ಮೈಯೊಳಗೆ ಸೇರಿಕೊಂಡವು,ಮತ್ತೆಮತೆ ಹೆಚ್ಚಾದವು ಮಾಂಸಕಾಣುವಂತೆ ಮಾಡಿದವು,ಹಗಲನ್ನೇ ಮುಚ್ಚಿಬಿಟ್ಟವು.]
  • ತಾತ್ಪರ್ಯ:ಎಲ್ಲ ಕಡೆ ಅರ್ಜುನನು ಹೊಡೆದ ಕೆಂಪುಗರಿಯ ಬಾಣಗಳು, ಚಪ್ಪಟೆಯಹೊಸಮಸೆದ ಹೊಳೆಯುವ ಉದ್ದಬಾಣಗಳು ಹೆಚ್ಚುತ್ತಾಹೋದವು, ನಿಮಿಷದಲ್ಲಿ ಆಕಾಶವನ್ನು ಮುಚ್ಚಿದವು ಶತ್ರುಗಳನ್ನು ಕೊಚ್ಚಿಹಾಕಿದವು.ಕವಚಗಳನ್ನು ಬಿಚ್ಚಿದವು, ಮಾಂಸಖಂಡಗಳನ್ನು ಕಚ್ಚಿ ಚುಚ್ಚಿದವು,ಮತ್ತೂ ಸೀಳುಮಾಡಿ ಹೊಡೆದವು, ಮೈಯೊಳಗೆ ಸೇರಿಕೊಂಡವು,ಮತ್ತೆಮತೆ ಹೆಚ್ಚಾದವು ಮಾಂಸಕಾಣುವಂತೆ ಮಾಡಿದವು,ಹಗಲನ್ನೇ ಮುಚ್ಚಿಬಿಟ್ಟವು.
  • (ಪದ್ಯ-೧೮)

ಪದ್ಯ :-:೧೯:

[ಸಂಪಾದಿಸಿ]

ಗೌರಿಯರಸನ ಕೂಡೆ ಕಾದಿದ ಪರಾಕ್ರಮದ | ಸೌರಂಭಮಿಂತುಟೆ ನಿವಾತಕವಚರನಿರಿದ | ಗೌರವಮಿದೀಗಲೇ ಭೀಷ್ಮ ಕರ್ಣ ದ್ರೋಣ ಮಾದ್ರಪತಿ ಮೊದಲಾಗಿಹ ||
ಕೌರವಬಲದೊಳಖಿಳ ವೀರಭಟರಂ ಗೆಲ್ದ | ಪೌರುಷಮಿನಿತೆ ಸಾಕು ಬರಿದೆ ಬಳಲಿಸಬೇಡ | ಶೌರಿಯಂ ಕರೆಸೆನುತೆ ಕಣೆಗಳಂ ಕಡಿದೆಚ್ಚನಾ ಸುಧನ್ವಂ ನರನನು ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಗೌರಿಯ ಅರಸನ ಕೂಡೆ ಕಾದಿದ ಪರಾಕ್ರಮದ ಸೌರಂಭಮಿಂತುಟೆ ನಿವಾತಕವಚರನು ಇರಿದ ಗೌರವಮ್ ಇದೀಗಲೇ ಭೀಷ್ಮ ಕರ್ಣ ದ್ರೋಣ ಮಾದ್ರಪತಿ ಮೊದಲಾಗಿಹ=[ಗೌರಿಯ ಪತಿ ಶಿವನ ಕೂಡೆ ಯುದ್ಧಮಾಡಿದ ಪರಾಕ್ರಮದ ಸಂಭ್ರಮವು ಇಷ್ಟೇನೇ? ನಿವಾತಕವಚರನ್ನು ಕೊಂದ ಗೌರವವು ಇದು ಈಗಲೇ ತೋರಿಸಿದಷ್ಟೆ ಸರಿಯೇ? ಭೀಷ್ಮ ಕರ್ಣ ದ್ರೋಣ ಮಾದ್ರಪತಿ ಮೊದಲಾಗಿರುವ]; ಕೌರವಬಲದೊಳು ಅಖೀಳ ವೀರಭಟರಂ ಗೆಲ್ದ ಪೌರುಷಮ್ ಇನಿತೆ ಸಾಕು ಬರಿದೆ ಬಳಲಿಸಬೇಡ ಶೌರಿಯಂ ಕರೆಸೆನುತೆ ಕಣೆಗಳಂ ಕಡಿದು ಎಚ್ಚನಾ ಸುಧನ್ವಂ ನರನನು=[ಕೌರವಸೈನ್ಯದಲ್ಲಿ ಅಖಿಲ ವೀರರನ್ನು ಗೆದ್ದ ಪೌರುಷವು ಇಷ್ಟೇನೇ? ಸಾಕು ಬರಿದೆ ಆಯಾಸಪಡಬೇಡ ಕೃಷ್ಣನನ್ನು ಕರೆಸು ಎನ್ನುತ್ತಾ ಬಾಣಗಳನ್ನು ಸುಧನ್ವನು ಕಡಿದು ನರನನ್ನು ಪುನಃ ಹೊಡೆದನು.]
  • ತಾತ್ಪರ್ಯ:ಗೌರಿಯ ಪತಿ ಶಿವನ ಕೂಡೆ ಯುದ್ಧಮಾಡಿದ ಪರಾಕ್ರಮದ ಸಂಭ್ರಮವು ಇಷ್ಟೇನೇ? ನಿವಾತಕವಚರನ್ನು ಕೊಂದ ಗೌರವವು ಇದು ಈಗಲೇ ತೋರಿಸಿದಷ್ಟೆ ಸರಿಯೇ? ಭೀಷ್ಮ ಕರ್ಣ ದ್ರೋಣ ಮಾದ್ರಪತಿ ಮೊದಲಾಗಿರುವ ಕೌರವಸೈನ್ಯದಲ್ಲಿ ಅಖಿಲ ವೀರರನ್ನು ಗೆದ್ದ ಪೌರುಷವು ಇಷ್ಟೇನೇ? ಸಾಕು ಬರಿದೆ ಆಯಾಸಪಡಬೇಡ ಕೃಷ್ಣನನ್ನು ಕರೆಸು ಎನ್ನುತ್ತಾ ಸುಧನ್ವನು ಬಾಣಗಳನ್ನು ಕಡಿದು ನರನನ್ನು ಪುನಃ ಹೊಡೆದನು.]
  • (ಪದ್ಯ-೧೯)

ಪದ್ಯ :-:೨೦:

[ಸಂಪಾದಿಸಿ]

ಕೇಳವನಿಪಾಲಕ ಸುಧನ್ವನಿಸುವಿಸುಗೆಯಂ ಪೇಳಲರಿಯೆಂ ತಿರುಗುತಿರ್ದುದು ವರೂಥಂ ಕು | ಲಾಲಚಕದ ವೊಲಸವಳಿದಂ ಕಪೀಶ್ವರಂ ಭ್ರಮಣೆಯಿಂ ಥ್ವಜದಮೇಲೆ ||
ಕಾಲಾಟವಡಗಿದುವು ಕುದುರೆಗಳ್ ಸೂತನಂ ಕಾಲನೊಯ್ದುಂ ಧನಂಜಯನೊಡಲೊಳಂಬುಗಳ್ | ಕೀಲಿಸಿದುವಿಕ್ಕೆಲದ ಸೇನೆಯಂ ಸವರಿದುವು ಹೊಗರುಗುವ ಹೊಸಗಣೆಗಳು ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೇಳು ಅವನಿಪಾಲಕ, ಸುಧನ್ವನು ಇಸುವ ಅಸುಗೆಯಂ(ಸತ್ವ) ಪೇಳಲು ಅರಿಯೆಂ ತಿರುಗುತಿರ್ದುದು ವರೂಥಂ ಕುಲಾಲ ಚಕ್ರದವೊಲ್ ಅಸವಳಿದಂ ಕಪೀಶ್ವರಂ ಭ್ರಮಣೆಯಿಂ ಥ್ವಜದಮೇಲೆ=[ಅವನಿಪಾಲಕನೇ ಕೇಳು, ಸುಧನ್ವನು ಬಾಣಬಿಡುವ ಸತ್ವವನ್ನು ಹೇಳಲು ತಿಳಿಯದು; ರಥವು ಕುಂಬಾರನಚಕ್ರದಂತೆ ತಿರುಗುತ್ತಿತ್ತು; ಥ್ವಜದಮೇಲೆ ಇದ್ದ ಕಪೀಶ್ವರನು ಈ ಪರಿಭ್ರಮಣೆಯಿಂದ ಬಸವಳಿದನು]; ಕಾಲಾಟವು ಅಡಗಿದುವು ಕುದುರೆಗಳ್ ಸೂತನಂ ಕಾಲನು ಒಯ್ದುಂ ಧನಂಜಯನೊಡಲೊಳು ಅಂಬುಗಳ್ ಕೀಲಿಸಿದುವು=[ಕುದುರೆಗಳ ಕಾಲುಗಳನಡಿಗೆ ನಿಂತಿತು; ಸೂತನನ್ನ ಯಮನು ಕರೆದೊಯ್ದನು. ಧನಂಜಯನ ಮೈಯಲ್ಲಿ ಬಾಣಗಳು ನಾಟಿದುವು]; ಇಕ್ಕೆಲದ ಸೇನೆಯಂ ಸವರಿದುವು ಹೊಗರು ಉಗುವ ಹೊಸಗಣೆಗಳು=[ ಕಾಂತಿಯನ್ನು ಬೀರುವ ಹೊಸಬಾಣಗಳು ಎರಡೂಕಡೆಯ ಸೇನೆಯನ್ನು ಕೊಂದುವು].
  • ತಾತ್ಪರ್ಯ:ಅವನಿಪಾಲಕನೇ ಕೇಳು, ಸುಧನ್ವನು ಬಾಣಬಿಡುವ ಸತ್ವವನ್ನು ಹೇಳಲು ತಿಳಿಯದು; ರಥವು ಕುಂಬಾರನಚಕ್ರದಂತೆ ತಿರುಗುತ್ತಿತ್ತು; ಥ್ವಜದಮೇಲೆ ಇದ್ದ ಕಪೀಶ್ವರನು ಈ ಪರಿಭ್ರಮಣೆಯಿಂದ ಬಸವಳಿದನು; ಕುದುರೆಗಳ ಕಾಲುಗಳ ನಡಿಗೆ ನಿಂತಿತು; ಸೂತನನ್ನ ಯಮನು ಕರೆದೊಯ್ದನು. ಧನಂಜಯನ ಮೈಯಲ್ಲಿ ಬಾಣಗಳು ನಾಟಿದುವು; ಕಾಂತಿಯನ್ನು ಬೀರುವ ಹೊಸಬಾಣಗಳು ಎರಡೂಕಡೆಯ ಸೇನೆಯನ್ನು ಕೊಂದುವು.
  • (ಪದ್ಯ-೨೦)

ಪದ್ಯ :-:೨೧:

[ಸಂಪಾದಿಸಿ]

ವ್ಯಥಿಸಿದಂ ಗಾಯದಿಂ ಸೂತನಳಿಯಲ್ಕೆ ಸಾ ರಥಿತನವನುಂ ತಾನೆ ಮಾಡುತಿದಿರಾದನತಿ | ರಥತ ನೂಳಗ್ಗಳೆಯನರ್ಜುನನಾ ಸುಧನ್ವಂಗೆ ಬಳಿಕೀತನಂ ಧುರದೊಳು ||
ಮಥಿಸದಿರ್ದೊಡೆ ತನ್ನನೇಕೆ ಪಡೆದಳೊ ಬರಿದೆ ಪೃಥೆ ನೆಲಕೆ ಪೊರೆಯಾಗಿ ಶಿವಶಿವಾ ಬಂದುದೇ | ಪೃಥಿವಿಪನ ಮಖಕೆಡರಕಟಯೆನುತೆ ಮನದೊಳಗೆ ಕೃಷ್ಣನಂ ಧ್ಯಾನಿಸಿದನು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವ್ಯಥಿಸಿದಂ ಗಾಯದಿಂ ಸೂತನು ಅಳಿಯಲ್ಕೆ ಸಾರಥಿತನವನುಂ ತಾನೆ ಮಾಡುತ ಇದಿರಾದನು ಅತಿರಥರೊಳು ಅಗ್ಗಳೆಯನು ಅರ್ಜುನನು ಆ ಸುಧನ್ವಂಗೆ=[ಅರ್ಜುನನು ಗಾಯದಿಂದ ನೊಂದನು; ಸೂತನು ಸಾಯಲು, ಸಾರಥಿತನವನ್ನು ತಾನೆ ಮಾಡುತ್ತಾ ಅತಿರಥರಲಲ್ಲಿ ಶ್ರೇಷ್ಠನಾದ ಅರ್ಜುನನು ಆ ಸುಧನ್ವನಿಗೆ ಎದುರಾದನು]; ಬಳಿಕ ಈತನಂ ಧುರದೊಳು ಮಥಿಸದೆ ಇರ್ದೊಡೆ ತನ್ನನು ಏಕೆ ಪಡೆದಳೊ ಬರಿದೆ ಪೃಥೆ ನೆಲಕೆ ಪೊರೆಯಾಗಿ ಶಿವಶಿವಾ ಬಂದುದೇ ಪೃಥಿವಿಪನ ಮಖಕೆ ಎಡರು ಅಕಟಯೆನುತೆ ಮನದೊಳಗೆ ಕೃಷ್ಣನಂ ಧ್ಯಾನಿಸಿದನು=[ಬಳಿಕ ಈತನನ್ನು ಯುದ್ಧದಲ್ಲಿ ಸೋಲಿಸದೆ ಇದ್ದರೆ, ಕುಂತಿಯು ತನ್ನನು ಏಕೆ ಪಡೆದಳೊ ಬರಿದೆ, ಭೂಮಿಗೆ ಭಾರವಾಗಿ ಶಿವಶಿವಾ! ಧರ್ಮರಾಜನ ಯಜ್ಞಕ್ಕೆ ತೊಂದರೆ ಬಂದಿತೇ ಅಕಟ! ಎನ್ನುತ್ತ ಮನಸ್ಸಿನಲ್ಲಿ ಕೃಷ್ಣನನ್ನು ಧ್ಯಾನಿಸಿದನು].
  • ತಾತ್ಪರ್ಯ:ಅರ್ಜುನನು ಗಾಯದಿಂದ ನೊಂದನು; ಸೂತನು ಸಾಯಲು, ಸಾರಥಿತನವನ್ನು ತಾನೆ ಮಾಡುತ್ತಾ ಅತಿರಥರಲಲ್ಲಿ ಶ್ರೇಷ್ಠನಾದ ಅರ್ಜುನನು ಆ ಸುಧನ್ವನಿಗೆ ಎದುರಾದನು; ಬಳಿಕ ಈತನನ್ನು ಯುದ್ಧದಲ್ಲಿ ಸೋಲಿಸದೆ ಇದ್ದರೆ, ಕುಂತಿಯು ತನ್ನನು ಏಕೆ ಪಡೆದಳೊ ಬರಿದೆ, ಭೂಮಿಗೆ ಭಾರವಾಗಿ ಶಿವಶಿವಾ! ಧರ್ಮರಾಜನ ಯಜ್ಞಕ್ಕೆ ತೊಂದರೆ ಬಂದಿತೇ ಅಕಟ! ಎನ್ನುತ್ತ ಮನಸ್ಸಿನಲ್ಲಿ ಕೃಷ್ಣನನ್ನು ಧ್ಯಾನಿಸಿದನು].
  • (ಪದ್ಯ-೨೧)

ಪದ್ಯ :-:೨೨:

[ಸಂಪಾದಿಸಿ]

ಅರಸ ಕೇಳರ್ಜುನಂ ಧ್ಯಾನಿಸಲ್ಕಾಗಳಿಭ ಪುರದೊಳರಿದಂ ಮುರಧ್ವಂಸಿ ಹಂಸಧ್ವಜನ | ಧುರಮಂ ಸುಧನ್ವನ ಪರಾಕ್ರಮವನೆಚ್ಚರಿಸಿ ಧರ್ಮತನಯಾದಿಗಳ್ಗೆ ||
ತೆರಳದು ಕೀರಿಟಗಾಹವಮೆಂದು ವಹಿಲದಿಂ ಗರುಡವಾಹನನಾಗಿ ಬಂದನಾ ಕ್ಷಣಕಲ್ಲಿ | ಗರವಿಂದನಾಭನಾನತರ ನೆನಹಿಗೆ ನಿತ್ಯ ನೆಂಬುದಂ ತೋರುವಂತೆ ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರಸ ಕೇಳು ಅರ್ಜುನಂ ಧ್ಯಾನಿಸಲ್ಕೆ ಆಗಳು ಇಭಪುರದೊಳು ಅರಿದಂ ಮುರಧ್ವಂಸಿ ಹಂಸಧ್ವಜನ ಧುರಮಂ=[ಅರಸ ಜನಮೇಜಯನೇ ಕೇಳು, ಅರ್ಜುನನು ಧ್ಯಾನಿಸಲು ಆಗ ಹಸ್ತಿನಾಪುರದಲ್ಲಿ, ಅರಿದಂ ಕೃಷ್ಣನು ಹಂಸಧ್ವಜನ ಯುದ್ಧವನ್ನು ತಿಳಿದನು]; ಸುಧನ್ವನ ಪರಾಕ್ರಮವನು ಎಚ್ಚರಿಸಿ ಧರ್ಮತನಯಾದಿಗಳ್ಗೆ=[ಸುಧನ್ವನ ಪರಾಕ್ರಮವನ್ನು ಧರ್ಮತನಯಾದಿಗಳಿಗೆ ಹೇಳಿ]; ತೆರಳದು ಕೀರಿಟಗೆ ಆಹವಮೆಂದು ವಹಿಲದಿಂ ಗರುಡವಾಹನನಾಗಿ ಬಂದನಾ ಕ್ಷಣಕಲ್ಲಿಗೆ ಅರವಿಂದನಾಭನು ಆನತರ ನೆನಹಿಗೆ ನಿತ್ಯ ನೆಂಬುದಂ ತೋರುವಂತೆ=[ಅರ್ಜುನನಿಗೆ ಅಸಾದ್ಯವಾಯಿತು ಯುದ್ಧವೆಂದು, ಅವಸರದಿಂದ ವೇಗವಾಗಿ ಗರುಡವಾಹನನಾಗಿ ಆಕ್ಷಣದಲ್ಲಿ ಅಲ್ಲಿಗೆ ಕೃಷ್ಣನು ಶರಣಾಗತರ ನೆನಪಿಗೆ ನೆರವುಕೊಡುವುದನ್ನು ತೋರಿಸುವಂತೆ ಬಂದನು ].
  • ತಾತ್ಪರ್ಯ:ಅರಸ ಜನಮೇಜಯನೇ ಕೇಳು, ಅರ್ಜುನನು ಧ್ಯಾನಿಸಲು ಆಗ ಹಸ್ತಿನಾಪುರದಲ್ಲಿ, ಅರಿದಂ ಕೃಷ್ಣನು ಹಂಸಧ್ವಜನ ಯುದ್ಧವನ್ನು ತಿಳಿದನು; ಸುಧನ್ವನ ಪರಾಕ್ರಮವನ್ನು ಧರ್ಮತನಯಾದಿಗಳಿಗೆ ಹೇಳಿ; ಅರ್ಜುನನಿಗೆ ಅಸಾದ್ಯವಾಯಿತು ಯುದ್ಧವೆಂದು, ಅವಸರದಿಂದ ವೇಗವಾಗಿ ಗರುಡವಾಹನನಾಗಿ ಆಕ್ಷಣದಲ್ಲಿ ಅಲ್ಲಿಗೆ ಕೃಷ್ಣನು ಶರಣಾಗತರ ನೆನಪಿಗೆ ನೆರವುಕೊಡುವುದನ್ನು ತೋರಿಸುವಂತೆ ಬಂದನು.
  • (ಪದ್ಯ-೨೨)VI

ಪದ್ಯ :-:೨೨:

[ಸಂಪಾದಿಸಿ]

ಕಶ್ಯಪ ವಸಿಷ್ಠಾದಿ ಪರಮಋಷಿಮುಖ್ಯರಾಲಸ್ಯಮಿಲ್ಲದೆ ಮಾಡುವ ಧ್ಯಾನಕೊಮ್ಮೆಯುಂ | ದೃಶ್ಯಮಿಲ್ಲದ ಚಿನ್ಮಯಾನಂದರೂಪನೀಕುಂತೀಕುಮಾರಕರ್ಗೆ ||
ವಶ್ಯನಾಗಿಹನೆಂತೊ ಶಿವಶಿವಾ ನೀಲಮೇ ಘಶ್ಯಾಮಲನ ಲೀಲೆ ಪೊಸತೆಂದು ಸಉರರುಲಿಯೆ | ಸ್ವಶ್ಯಾಲಕನ ರಥಾಗ್ರಕೆ ಸುಪರ್ಣಸ್ಕಂಧದಿಂದೆ ಮುರಹರನಿಳಿದನು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಶ್ಯಪ ವಸಿಷ್ಠಾದಿ ಪರಮಋಷಿಮುಖ್ಯರು ಆಲಸ್ಯಂ ಇಲ್ಲದೆ ಮಾಡುವ ಧ್ಯಾನಕೆ ಒಮ್ಮೆಯುಂ ದೃಶ್ಯಮಿಲ್ಲದ ಚಿನ್ಮಯಾನಂದರೂಪನು ಈ ಕುಂತೀಕುಮಾರಕರ್ಗೆ ವಶ್ಯನಾಗಿಹನೆಂತೊ ಶಿವಶಿವಾ=[ಕಶ್ಯಪ ವಸಿಷ್ಠ ರೇ ಮೊದಲಾದ ಪರಮಋಷಿ ಮುಖ್ಯರು ಆಲಸ್ಯವಿಲ್ಲದೆ ಮಾಡುವ ಧ್ಯಾನಕ್ಕೆ ಒಮ್ಮೆಯೂ ಕೋಡ ಕಾಣಿಸಿಕಳದ ಚಿನ್ಮಯಾನಂದರೂಪನಾದ ಕೃಷ್ನನು ಈ ಕುಂತೀಕುಮಾರರಿಗೆ ಹೇಗೆ ವಶನಾದನೋ ಶಿವಶಿವಾ!]; ನೀಲಮೇಘಶ್ಯಾಮಲನ ಲೀಲೆ ಪೊಸತೆಂದು ಸುರರುಲಿಯೆ ಸ್ವಶ್ಯಾಲಕನ (ತನಗೆ ಮೈದುನ) ರಥಾಗ್ರಕೆ ಸುಪರ್ಣಸ್ಕಂಧದಿಂದೆ (ಗರುಡನ ಹೆಗಲು) ಮುರಹರನಿಳಿದನು=[ನೀಲಮೇಘದಂತೆ ಶ್ಯಾಮಲನಾದ ಕೃಷ್ನನ ಲೀಲೆ ಹೊಸತೆಂದು ದೇವತೆಗಳು ಹೇಳುತ್ತಿರಲು ಮೈದುನನ ರಥದ ಮುಂದೆ ಗರುಡನ ಹೆಗಲಿನಿಂದ ಕೃಷ್ಣನು ಇಳಿದನು].
  • ತಾತ್ಪರ್ಯ:ಕಶ್ಯಪ ವಸಿಷ್ಠ ರೇ ಮೊದಲಾದ ಪರಮಋಷಿ ಮುಖ್ಯರು ಆಲಸ್ಯವಿಲ್ಲದೆ ಮಾಡುವ ಧ್ಯಾನಕ್ಕೆ ಒಮ್ಮೆಯೂ ಕೋಡ ಕಾಣಿಸಿಕಳದ ಚಿನ್ಮಯಾನಂದರೂಪನಾದ ಕೃಷ್ನನು ಈ ಕುಂತೀಕುಮಾರರಿಗೆ ಹೇಗೆ ವಶನಾದನೋ ಶಿವಶಿವಾ! ನೀಲಮೇಘದಂತೆ ಶ್ಯಾಮಲನಾದ ಕೃಷ್ನನ ಲೀಲೆ ಹೊಸತೆಂದು ದೇವತೆಗಳು ಹೇಳುತ್ತಿರಲು ಮೈದುನನ ರಥದ ಮುಂದೆ ಗರುಡನ ಹೆಗಲಿನಿಂದ ಕೃಷ್ಣನು ಇಳಿದನು.
  • (ಪದ್ಯ-೨೨)

ಪದ್ಯ :-:೨೪:

[ಸಂಪಾದಿಸಿ]

ಮೊಳಗಿದವು ನಿಸ್ಸಾಳಕೋಟಿಗಳ್ ಫಲುಗುಣನ ದಳಗೊಳಗೆ ತನತನಗೆರಗುತಿರ್ದುದುತ್ಸವದ | ಲಳಿ ಮಸಗಿ ಕಳಕಳದ ಬೊಬ್ಬೆಯಿಂ ಮಿಕ್ಕುದು ರಭಸಮಭ್ಧಘೋಷಣವನು ||
ಬಳಿಕೆ ನಸುನಗುತೆ ಚರಣಕೆ ಮಣಿದ ಪಾರ್ಥನಂ ಸೆಳೆದು ಬಿಗಿಯಪ್ಪಿ ಮೈದಡವಿ ಬೋಳೈಸಿ ರಥ | ದೊಳಗೆ ಕುಳ್ಳಿರ್ದು ನಲವಿಂದೆಮುರರಿಪು ಕುದುರೆಗಳ ಮಾಘೆಯಿಂ ಕೊಂಡನು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೊಳಗಿದವು ನಿಸ್ಸಾಳಕೋಟಿಗಳ್ ಫಲುಗುಣನ ದಳಗೊಳಗೆ ತನತನಗೆ ಎರಗುತಿರ್ದುದು=[ಫಲ್ಗುಣನ ಸೈನ್ಯದಲ್ಲಿ ನಾನಾ ವಾದ್ಯಗಳು ಮೊಳಗಿದವು; ಕೃಷ್ಣನಿಗೆ ಎಲ್ಲರೂ ತಾವುತಾವಾಗಿಯೇ ನಮಸ್ಕರಿಸುತ್ತಿದ್ದರು.]; ಉತ್ಸವದ ಲಳಿ(ಅಲ್ಲೋಲ ಕಲ್ಲೋಲ ,ಆಶ್ಚರ್ಯ)) ಮಸಗಿ ಕಳಕಳದ ಬೊಬ್ಬೆಯಿಂ ಮಿಕ್ಕುದು ರಭಸಂ ಅಭ್ಧ ಘೋಷಣವನು=[ಅಲ್ಲಿ ಸಂತೋಷದ ಅಲ್ಲೋಲ ಕಲ್ಲೋಲ, ಆಶ್ಚರ್ಯ ಹಬ್ಬಿತು. ಕಳಕಳದ ಹಿಗ್ಗಿನ ಕೂಗಾಟದಿಂದ ಸಮುದ್ರದ ಅಲೆಯ ಶಬ್ದವನ್ನೂ ಮೀರಿಸಿತು.]; ಬಳಿಕೆ ನಸುನಗುತೆ ಚರಣಕೆ ಮಣಿದ ಪಾರ್ಥನಂ ಸೆಳೆದು ಬಿಗಿಯಪ್ಪಿ ಮೈದಡವಿ ಬೋಳೈಸಿ ರಥದೊಳಗೆ ಕುಳ್ಳಿರ್ದು ನಲವಿಂದೆಮುರರಿಪು ಕುದುರೆಗಳ ಮಾಘೆಯಿಂ ಕೊಂಡನು=[ಬಳಿಕೆ ನಸುನಗುತ್ತಾ ಕೃಷ್ಣನು ಕಾಲಿಗೆ ನಮಿಸಿದ ಪಾರ್ಥನನ್ನು ಹತ್ತಿರಕ್ಕೆ ಎಳೆಉಕೊಂಡು ಬಿಗಿಯಾಗಿ ಅಪ್ಪಿ ಮೈದಡವಿ ಉಪಚರಿಸಿ,ರಥದಲ್ಲಿ ಕುಳಿತು ಸಂತಸದಿಂದ ಕುದುರೆಗಳ ಮಾಘೆಯನ್ನು ಕೈಯಲ್ಲಿತೆಗೆದುಕೊಂಡನು].
  • ತಾತ್ಪರ್ಯ:ಫಲ್ಗುಣನ ಸೈನ್ಯದಲ್ಲಿ ನಾನಾ ವಾದ್ಯಗಳು ಮೊಳಗಿದವು; ಕೃಷ್ಣನಿಗೆ ಎಲ್ಲರೂ ತಾವುತಾವಾಗಿಯೇ ನಮಸ್ಕರಿಸುತ್ತಿದ್ದರು. ಅಲ್ಲಿ ಸಂತೋಷದ ಅಲ್ಲೋಲ ಕಲ್ಲೋಲ, ಆಶ್ಚರ್ಯ ಹಬ್ಬಿತು. ಕಳಕಳದ ಹಿಗ್ಗಿನ ಕೂಗಾಟದಿಂದ ಸಮುದ್ರದ ಅಲೆಯ ಶಬ್ದವನ್ನೂ ಮೀರಿಸಿತು. ಬಳಿಕೆ ನಸುನಗುತ್ತಾ ಕೃಷ್ಣನು ಕಾಲಿಗೆ ನಮಿಸಿದ ಪಾರ್ಥನನ್ನು ಹತ್ತಿರಕ್ಕೆ ಎಳೆಉಕೊಂಡು ಬಿಗಿಯಾಗಿ ಅಪ್ಪಿ ಮೈದಡವಿ ಉಪಚರಿಸಿ,ರಥದಲ್ಲಿ ಕುಳಿತು ಸಂತಸದಿಂದ ಕುದುರೆಗಳ ಮಾಘೆಯನ್ನು ಕೈಯಲ್ಲಿತೆಗೆದುಕೊಂಡನು.
  • (ಪದ್ಯ-೨೪)

ಪದ್ಯ :-:೨೫:

[ಸಂಪಾದಿಸಿ]

ಇನಿತೆಲ್ಲಮಂ ನೋಡುತಿರ್ದಂ ಸುಧನ್ವನನುದಿನಮಂತರಂಗದೊಳ್ ಧ್ಯಾನಿಸುವ ನಿರ್ಮಲಾ | ತ್ಮನದಿವ್ಯಮೂರ್ತಿಯಂ ಪಾರ್ಥನ ರಥಾಗ್ರದೊಳ್ ಕಂಡು ಪುಳಕೋದ್ಗಮದೊಳು ||
ತನುವನೀಡಾಡಿ ಸಾಷ್ಟಾಂಗಪ್ರಣಾಮದಿಂ ಮನದೊಳಗೆ ಹಿಗ್ಗಿ ತನ್ನಾಳ್ತನಕ್ಕೆ ಸಾಕಿನ್ನು | ನೆನೆದೆಣಿಕೆ ಕೈಸಾರ್ದುದೆಂದು ಕಣ್ದಣಿಯದಚ್ಯುತನಂ ನಿರೀಕ್ಷಿಸಿದನು ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇನಿತೆಲ್ಲಮಂ ನೋಡುತಿರ್ದಂ ಸುಧನ್ವನು ಅನುದಿನಂ ಅಂತರಂಗದೊಳ್ ಧ್ಯಾನಿಸುವ ನಿರ್ಮಲಾತ್ಮನ ದಿವ್ಯಮೂರ್ತಿಯಂ ಪಾರ್ಥನ ರಥಾಗ್ರದೊಳ್ ಕಂಡು ಪುಳಕದ(ರೋಮಾಂಚನ) ಉದ್ಗಮ (ಎದ್ದಿರುವುದು)ದೊಳು =[ಇವೆಲ್ಲವನ್ನೂ ನೋಡುತ್ತಿದ್ದ ಸುಧನ್ವನು ಪ್ರತಿದಿನವೂ ತಾನು ಅಂತರಂಗದಲ್ಲಿ ಧ್ಯಾನಿಸುವ ನಿರ್ಮಲಾತ್ಮನ ದಿವ್ಯಮೂರ್ತಿಯನ್ನು ಪಾರ್ಥನ ರಥದಮುಂದೆ ಕಂಡು ರೋಮಾಂಚನಗೊಂಡು,]; ತನುವನು ಈಡಾಡಿ ಸಾಷ್ಟಾಂಗಪ್ರಣಾಮದಿಂ ಮನದೊಳಗೆ ಹಿಗ್ಗಿ ತನ್ನ ಆಳ್ತನಕ್ಕೆ ಸಾಕಿನ್ನು ನೆನೆದ(ಬಯಸಿದ) ಎಣಿಕೆ ಕೈಸಾರ್ದುದು ಎಂದು ಕಣ್ ತಣಿಯದೆ ಅಚ್ಯುತನಂ ನಿರೀಕ್ಷಿಸಿದನು=[ದೇಹವನ್ನು ಮರೆತು ಮನಸ್ಸಿನಲ್ಲೇ ಸಾಷ್ಟಾಂಗಪ್ರಣಾಮದಿಂದ ನಮಿಸಿ, ಮನಸ್ಸಿನಲ್ಲಿ ಹಿಗ್ಗಿ ತನ್ನ ಶೌರ್ಯಕ್ಕೆ ಬಯಸಿದ ಆಸೆ ಸಿಕ್ಕಿತು, ಸಾಕು ಇನ್ನು ಎಂದು ಕಣ್ಣಾರೆ ನೋಡಿದರೂ ತೃಪ್ತಿಯಾಗದೆ ಅಚ್ಯುತನನ್ನು ನೊಡಿದನು].
  • ತಾತ್ಪರ್ಯ: ಇವೆಲ್ಲವನ್ನೂ ನೋಡುತ್ತಿದ್ದ ಸುಧನ್ವನು ಪ್ರತಿದಿನವೂ ತಾನು ಅಂತರಂಗದಲ್ಲಿ ಧ್ಯಾನಿಸುವ ನಿರ್ಮಲಾತ್ಮನ ದಿವ್ಯಮೂರ್ತಿಯನ್ನು ಪಾರ್ಥನ ರಥದಮುಂದೆ ಕಂಡು ರೋಮಾಂಚನಗೊಂಡು, ದೇಹವನ್ನು ಮರೆತು ಮನಸ್ಸಿನಲ್ಲೇ ಸಾಷ್ಟಾಂಗಪ್ರಣಾಮದಿಂದ ನಮಿಸಿ, ಮನಸ್ಸಿನಲ್ಲಿ ಹಿಗ್ಗಿ ತನ್ನ ಶೌರ್ಯಕ್ಕೆ ಬಯಸಿದ ಆಸೆ ಸಿಕ್ಕಿತು, ಸಾಕು ಇನ್ನು ಎಂದು ಕಣ್ಣಾರೆ ನೋಡಿದರೂ ತೃಪ್ತಿಯಾಗದೆ ಅಚ್ಯುತನನ್ನು ನೊಡಿದನು].
  • (ಪದ್ಯ-೨೫)

ಪದ್ಯ :-:೨೬:

[ಸಂಪಾದಿಸಿ]

ಅತಸೀಕುಸುಮಗಾತ್ರನಂ ಕಮಲನೇತ್ರನಂ ಸ್ಮಿತ ರುಚಿರಶುಭ ರದನನಂ ಚಾರು ವದನನಂ | ಕೃತಮೃಗಮದೋಲ್ಲಸತ್ಸುಲಲಾಟನಂ ಮಣಿಕೀರಿಟನಂ ಕಂಬುಗಳದ ||
ಅತುಲ ತುಲಸೀಮಾಲನಂ ರಮಾಲೋಲನಂ ಧೃತಕೌಸ್ತುಭೋದ್ಭಾಸನಂ ಪೀತವಾಸನಂ | ನುತಸಮಸ್ತಾಭರಣನಂ ಪುಣ್ಯಚರಣನಂ ಕಲಿಸುಧನ್ವಂ ಕಂಡನು ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅತಸೀ(ನೀಲಿ ಅಗಸೇಹೂವು) ಕುಸುಮಗಾತ್ರನಂ ಕಮಲನೇತ್ರನಂ ಸ್ಮಿತ ರುಚಿರ (ಚಂದದ)ಶುಭರದನನಂ ಚಾರು ವದನನಂ ಕೃತಮೃಗಮದ ಉಲ್ಲಸತ್ಸು ಲಲಾಟನಂ (ಕಸ್ತೂರಿಮೃಗದ ಕಸ್ತೂರಿಯ ಲಲಾಟ/ಹಣೆ) =[ನೀಲಿ ಅಗಸೇಹೂವಿನಬಣ್ಣದ ದೇಹದವನನ್ನು, ಕಮಲನೇತ್ರನನ್ನು ಮುಗುಳುನಗೆಯ ಚಂದದ ಹಲ್ಲುಳ್ಳವನನ್ನು, ಸುಂದರ ಮುಖದವನನ್ನು, ಕಸ್ತೂರಿತಿಲಕದವನನ್ನು,]; ಮಣಿಕೀರಿಟನಂ ಕಂಬುಗಳದ(ಶಂಖದ - ಗಳ-ಕುತ್ತಿಗೆ) ಅತುಲ ತುಲಸೀಮಾಲನಂ ರಮಾಲೋಲನಂ ಧೃತ(ಧರಿಸಿದವ)ಕೌಸ್ತುಭ ಉದ್ಭಾಸನಂ(ಹೊಳೆಯುವ) ಪೀತವಾಸನಂ=[ಮಣಿಕೀರಿಟದವನನ್ನು, ಶಂಖದಂತ ಕುತ್ತಿಗೆಯುಳ್ಳವನನ್ನು, ಅತುಲ ತುಲಸೀಮಾಲೆ ಧರಿಸಿದವನನ್ನು, ರಮಾ/ಲಕ್ಮೀಲೋಲನನ್ನು, ಹೊಳೆಯುವ ಕೌಸ್ತುಭ ಧರಿಸಿದವನನ್ನು ಪೀತವಾಸನನ್ನು ]; ನುತಸಮಸ್ತಾಭರಣನಂ ಪುಣ್ಯಚರಣನಂ ಕಲಿಸುಧನ್ವಂ ಕಂಡನು=[ಸ್ತುತಿಸುವ ಸಮಸ್ತ ಆಭರಣಧರಿದವನನ್ನು, ಪುಣ್ಯಚರಣನನ್ನು ಶೂರಸುಧನ್ವನು ಕಂಡನು].
  • ತಾತ್ಪರ್ಯ:ನೀಲಿ ಅಗಸೇಹೂವಿನಬಣ್ನದ ದೇಹದವನನ್ನು, ಕಮಲನೇತ್ರನನ್ನು ಮುಗುಳುನಗೆಯ ಚಂದದ ಹಲ್ಲುಳ್ಳವನನ್ನು, ಸುಂದರ ಮುಖದವನನ್ನು, ಕಸ್ತೂರಿತಿಲಕದವನನ್ನು, ಮಣಿಕೀರಿಟದವನನ್ನು, ಶಂಖದಂತ ಕುತ್ತಿಗೆಯುಳ್ಳವನನ್ನು, ಅತುಲ ತುಲಸೀಮಾಲೆ ಧರಿಸಿದವನನ್ನು, ರಮಾ/ಲಕ್ಮೀಲೋಲನನ್ನು, ಹೊಳೆಯುವ ಕೌಸ್ತುಭ ಧರಿಸಿದವನನ್ನು ಪೀತವಾಸನನ್ನು, ಸ್ತುತಿಸಲ್ಪಡುವ ಸಮಸ್ತ ಆಭರಣ ಧರಿದವನನ್ನು, ಪುಣ್ಯಚರಣನನ್ನು ಶೂರಸುಧನ್ವನು ಕಂಡನು.
  • (ಪದ್ಯ-೨೬)

ಪದ್ಯ :-:೨೭:

[ಸಂಪಾದಿಸಿ]

ಜಯ ಚತುರ್ಮುಖಜನಕ ಜಯ ಚಾರುಚಾರಿತ್ರ ಜಯ ಚಿದಾನಂದ ಜಯ ಚೀರಾಂಬರಜ್ಞೇಯ | ಜಯ ಜಯ ಚ್ಯುತಿದೂರ ಜಯ ಚೂಡಬರ್ಹಶೊಭಿತ ಚೇತನಸ್ವರೂಪ ||
ಜಯ ಚೈದ್ಯಮಥನ ಜಯ ಚೋದಿತಾಕಿಳಲೋಕ | ಜಯ ಚೌರ್ಯಕೃತಲೀಲ ಜಯ ಚಂಡಶತಕಿರಣ | ಜಯ ಚಕ್ರಧರಯೆಂದು ಕೃಷ್ಣನಂ ಕಲಿಸುಧನ್ವಂ ಪೊಗಳ್ದಂ ಮನದೊಳು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಜಯ ಚತುರ್ಮುಖಜನಕ ಜಯ ಚಾರುಚಾರಿತ್ರ ಜಯ ಚಿದಾನಂದ ಜಯ ಚೀರಾಂಬರಜ್ಞೇಯ ಜಯ ಜಯ ಚ್ಯುತಿದೂರ ಜಯ ಚೂಡಬರ್ಹಶೊಭಿತ ಚೇತನಸ್ವರೂಪ=[ಜಯ ಬ್ರಹ್ಮನ ತಂದೆ, ಜಯ ಉತ್ತಮ ಗುಣದವ, ಜಯ ಚಿದಾನಂದ/ ಆನಂದವೇ ರೂಪ, ಜಯ ನಾರು ಬಟ್ಟೆಯವನಾಗಿ ಜ್ಞೇಯ, ಜಯ ಜಯ ನಾಶವಿಲ್ಲದವ, ಜಯ ನವಿಲುಗರಿ ಶೊಭಿತ, ಚೇತನಸ್ವರೂಪ, ]; ಜಯ ಚೈದ್ಯಮಥನು ಜಯ ಚೋದಿತಾಕಿಳಲೋಕ ಜಯ ಚೌರ್ಯಕೃತಲೀಲ ಜಯ ಚಂಡಶತಕಿರಣ ಜಯ ಚಕ್ರಧರಯೆಂದು ಕೃಷ್ಣನಂ ಕಲಿಸುಧನ್ವಂ ಪೊಗಳ್ದಂ ಮನದೊಳು=[ಜಯ ಶಿಶುಪಾಲಮಥನ, ಜಯ ಸೃಷ್ಟಿತ ಅಖಿಲ ಲೋಕ ಜಯ ಬೆಣ್ಣೆಕದ್ದ ಲೀಲ ಜಯ ನೂರು ರವಿ ಕಿರಣ, ಜಯ ಚಕ್ರಧರ, ಎಂದು ಕೃಷ್ಣನನ್ನು ಕಲಿಸುಧನ್ವನು ಮನಸ್ಸಿನಲ್ಲಿ ಹೊಗಳಿದನು.].
  • ತಾತ್ಪರ್ಯ:ಜಯ ಬ್ರಹ್ಮನ ತಂದೆ, ಜಯ ಉತ್ತಮ ಗುಣದವ, ಜಯ ಚಿದಾನಂದ/ ಆನಂದವೇ ರೂಪ, ಜಯ ನಾರು ಬಟ್ಟೆಯವನಾಗಿ ಜ್ಞೇಯ, ಜಯ ಜಯ ನಾಶವಿಲ್ಲದವ, ಜಯ ನವಿಲುಗರಿ ಶೊಭಿತ, ಚೇತನಸ್ವರೂಪ, ಜಯ ಶಿಶುಪಾಲಮಥನ, ಜಯ ಸೃಷ್ಟಿತ ಅಖಿಲ ಲೋಕ ಜಯ ಬೆಣ್ಣೆಕದ್ದ ಲೀಲ ಜಯ ನೂರು ರವಿ ಕಿರಣ, ಜಯ ಚಕ್ರಧರ, ಎಂದು ಕೃಷ್ಣನನ್ನು ಕಲಿಸುಧನ್ವನು ಮನಸ್ಸಿನಲ್ಲಿ ಹೊಗಳಿದನು.
  • (ಪದ್ಯ-೨೭)

ಪದ್ಯ :-:೨೮:

[ಸಂಪಾದಿಸಿ]

ಜೀಯ ಜಗದಂತರಾತ್ಮಕ ಸರ್ವಚೈತನ್ಯ | ಜೀಯ ಶುದ್ಧಾದ್ವಯ ನಿರಂಜನ ನಿರಾವರಣ | ಜೀಯ ನಿನ್ನೊಳಗೀ ಸಮಸ್ತಮಧ್ಯಸ್ತಮಾಗಿದೆ ನೀನೆ ಸತ್ಯರೂಪ ||
ಜೀಯ ನಾರಾಯಣ ಮುಕುಂದ ಮಾಧವ ಕೃಷ್ಣ | ಜೀಯ ಚಕ್ರಿಯೆ ಪೀತವಾಸ ಲಕ್ಷ್ಮೀಲೋಲ | ಜೀಯ ಸರ್ವಸ್ವತಂತ್ರನೆ ಬಿಡಿಸು ಸಂಸಾರಪಾಶದಿಂದೆನ್ನನೆಂದು ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸುಧನ್ವ ಮನಸ್ಸಿನಲ್ಲಿಯೇ ಪ್ರಾರ್ಥಿಸಿದ: ಜೀಯ ಜಗದಂತರಾತ್ಮಕ ಸರ್ವಚೈತನ್ಯ ಜೀಯ ಶುದ್ಧಾದ್ವಯ ನಿರಂಜನ ನಿರಾವರಣ ಜೀಯ ನಿನ್ನೊಳಗೀ ಸಮಸ್ತಮಧ್ಯಸ್ತಮಾಗಿದೆ ನೀನೆ ಸತ್ಯರೂಪ=[ಜೀಯ/ ಒಡೆಯನೇ, ಜಗದಂತರಾತ್ಮಕ/ಜಗತ್ತಿನ ಆತ್ಮನು; ಸರ್ವಚೈತನ್ಯ ಜೀಯ ಶುದ್ಧಾದ್ವಯ/ಎರಡಿಲ್ಲದವನು, ನಿರಂಜನ/ನಿರ್ಲಿಪ್ತ, ನಿರಾವರಣ/ಆವರಣವಾದ ಮಾಯೆಇಲ್ಲದವನು, ಜೀಯ ನಿನ್ನೊಳಗೀ ಸಮಸ್ತಮಧ್ಯಸ್ತಮಾಗಿದೆ/ ಸಮಸ್ತವೂ ನಿನ್ನಲ್ಲಿ ಅಡಗಿದೆ, ನೀನೆ ಸತ್ಯರೂಪ/ಸದಾ ಇರುವವನು,]; ಜೀಯ ನಾರಾಯಣ ಮುಕುಂದ ಮಾಧವ ಕೃಷ್ಣ ಜೀಯ ಚಕ್ರಿಯೆ ಪೀತವಾಸ ಲಕ್ಷ್ಮೀಲೋಲ ಜೀಯ ಸರ್ವಸ್ವತಂತ್ರನೆ ಬಿಡಿಸು ಸಂಸಾರಪಾಶದಿಂದ ಎನ್ನನೆಂದು=[ಜೀಯ ನಾರಾಯಣ. ಮುಕುಂದ/ಮೋಕ್ಷದಾಯಕ, ಮಾಧವ, ಕೃಷ್ಣ, ಜೀಯ ಚಕ್ರಿಯೆ, ಪೀತವಾಸ/ಪೀತಾಂಬರನು, ಲಕ್ಷ್ಮೀಲೋಲ, ಜೀಯ ಸರ್ವಸ್ವತಂತ್ರನೆ ಬಿಡಿಸು ಸಂಸಾರಪಾಶದಿಂದ ಎನ್ನನು ಎಂದು ಪ್ರಾರ್ಥಿದನು.].
  • ತಾತ್ಪರ್ಯ:ಜೀಯ/ ಒಡೆಯನೇ, ಜಗದಂತರಾತ್ಮಕ/ಜಗತ್ತಿನ ಆತ್ಮನು; ಸರ್ವಚೈತನ್ಯ ಜೀಯ ಶುದ್ಧಾದ್ವಯ/ಎರಡಿಲ್ಲದವನು, ನಿರಂಜನ/ನಿರ್ಲಿಪ್ತ, ನಿರಾವರಣ/ಆವರಣವಾದ ಮಾಯೆಇಲ್ಲದವನು, ಜೀಯ ನಿನ್ನೊಳಗೀ ಸಮಸ್ತಮಧ್ಯಸ್ತಮಾಗಿದೆ/ ಸಮಸ್ತವೂ ನಿನ್ನಲ್ಲಿ ಅಡಗಿದೆ, ನೀನೆ ಸತ್ಯರೂಪ/ಸದಾ ಇರುವವನು, ಜೀಯ ನಾರಾಯಣ. ಮುಕುಂದ/ಮೋಕ್ಷದಾಯಕ, ಮಾಧವ, ಕೃಷ್ಣ, ಜೀಯ ಚಕ್ರಿಯೆ, ಪೀತವಾಸ/ಪೀತಾಂಬರನು, ಲಕ್ಷ್ಮೀಲೋಲ, ಜೀಯ ಸರ್ವಸ್ವತಂತ್ರನೆ ಬಿಡಿಸು ಸಂಸಾರಪಾಶದಿಂದ ಎನ್ನನು ಎಂದು ಪ್ರಾರ್ಥಿದನು.
  • (ಪದ್ಯ-೨೮)

ಪದ್ಯ :-:೨೯:

[ಸಂಪಾದಿಸಿ]

ಭಯಭರಿತಭಕ್ತಿಯಿಂ ಭಾವಿಸಿದನಾ ಜಗ | ನ್ಮಯನಂ ಬಳಿಕ ದೇವ ಕೇಳ್ ನಿನ್ನ ಸರ್ವಜ್ಞ | ತೆಯನೆನಗೆ ತೋರಿಸಿದೆ ಲೇಸಾಯ್ತು ನಿನ್ನ ಕೃಪೆಯಿಲ್ಲದೊಡೆ ಪಾಂಡವರ್ಗೆ ||
ಜಯಮೆತ್ತಣದು ಲೋಕದೊಳ್ ಸಾಕೆದಂತಿರಲಿ ಬಯಲ ಭಂಜನೆ ಬೇಡ ಮಾಡಲೊಂದು ಪ್ರತಿ | ಜ್ಞೆಯನರ್ಜುನರ ನಿನ್ನ ಮುಂದೆನ್ನಮೇಲೆನುತ್ತಾ ಸುಧನ್ವಂ ನುಡಿದನು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭಯಭರಿತಭಕ್ತಿಯಿಂ ಭಾವಿಸಿದನಾ ಜಗನ್ಮಯನಂ, ಬಳಿಕ ದೇವ ಕೇಳ್ ನಿನ್ನ ಸರ್ವಜ್ಞ ತೆಯನು ಎನಗೆ ತೋರಿಸಿದೆ ಲೇಸಾಯ್ತು=[ಸುಧನ್ವನು ಭಯಭರಿತಭಕ್ತಿಯಿಂದ ಧ್ಯಾನಿಸಿದನು ಆ ಜಗನ್ಮಯನನ್ನು, ಬಳಿಕ ದೇವನೇ ಕೇಳು, ಅರ್ಜುನನು ನೆನೆದ ಕೂಡಲೆ ಬಂದು, ನಿನ್ನ ಸರ್ವಜ್ಞತೆಯನು ನನಗೆ ತೋರಿಸಿದೆ ಆನಮದವಾಯಿತು.]; ನಿನ್ನ ಕೃಪೆಯಿಲ್ಲದೊಡೆ ಪಾಂಡವರ್ಗೆ ಜಯಮೆತ್ತಣದು ಲೋಕದೊಳ್ ಸಾಕು ಅದಂತಿರಲಿ ಬಯಲ ಭಂಜನೆ ಬೇಡ ಮಾಡಲಿ ಒಂದು ಪ್ರತಿಜ್ಞೆಯನು ಅರ್ಜುನಂ ನಿನ್ನ ಮುಂದೆ ಎನ್ನ ಮೇಲೆ ಏನುತ್ತಾ ಸುಧನ್ವಂ ನುಡಿದನು=[ನಿನ್ನ ಕೃಪೆಯಿಲ್ಲದಿದ್ದರೆ ಪಾಂಡವರಿಗೆ ಲೋಕದಲ್ಲಿ ಜಯವು ಎಲ್ಲಿಯದು, ಸಾಧ್ಯವೇ ಇಲ್ಲ! ಸಾಕು ಅದಂತಿರಲಿ ಸುಮ್ಮನೆ ಯುದ್ಧ ಬೇಡ; ನಿನ್ನ ಮುಂದೆ ನನ್ನ ಮೇಲೆ ಒಂದು ಪ್ರತಿಜ್ಞೆಯನ್ನು ಅರ್ಜುನನು ಮಾಡಲಿ, ಏನುತ್ತಾ ಸುಧನ್ವನು ನುಡಿದನು].
  • ತಾತ್ಪರ್ಯ: ಸುಧನ್ವನು ಭಯಭರಿತಭಕ್ತಿಯಿಂದ ಧ್ಯಾನಿಸಿದನು ಆ ಜಗನ್ಮಯನನ್ನು, ಬಳಿಕ ದೇವನೇ ಕೇಳು, ಅರ್ಜುನನು ನೆನೆದ ಕೂಡಲೆ ಬಂದು, ನಿನ್ನ ಸರ್ವಜ್ಞತೆಯನು ನನಗೆ ತೋರಿಸಿದೆ ಆನಮದವಾಯಿತು.ನಿನ್ನ ಕೃಪೆಯಿಲ್ಲದಿದ್ದರೆ ಪಾಂಡವರಿಗೆ ಲೋಕದಲ್ಲಿ ಜಯವು ಎಲ್ಲಿಯದು, ಸಾಧ್ಯವೇ ಇಲ್ಲ! ಸಾಕು ಅದಂತಿರಲಿ ಸುಮ್ಮನೆ ಯುದ್ಧ ಬೇಡ; ನಿನ್ನ ಮುಂದೆ ನನ್ನ ಮೇಲೆ ಒಂದು ಪ್ರತಿಜ್ಞೆಯನ್ನು ಅರ್ಜುನನು ಮಾಡಲಿ, ಎಂದು ಸುಧನ್ವನು ನುಡಿದನು.
  • (ಪದ್ಯ-೨೯)

ಪದ್ಯ :-:೩೦:

[ಸಂಪಾದಿಸಿ]

ಅರ್ಜುನಂ ಕೇಳ್ದನೆಲೆ ಮರುಳೆ ನೋಡಾದೊಡಿ | ನ್ನಾರ್ಜಿಸಿದ ಸುಕೃತಮೆಳ್ಳನಿತಿಲ್ಲದಿಹ ಪುಣ್ಯ ವರ್ಜಿತನ ಒಓಕಮಾಗಲಿ ತನಗೆ ನಿನ್ನ ತಲೆಯಂ ಮೂರುಬಾಣದಿಂದೆ ||
ನಿರ್ಜರರ್ ಮೆಚ್ಚಲರಿಯದೊಡೆಂದು ನುಡಿಯಲ್ಕೆ | ದುರ್ಝಯನಿವಂ ನಿನಗೆ ಸಾಧ್ಯನಲ್ಲೆಂದು ಹರಿ | ಗರ್ಜಿಸಿದನಾ ಪಾರ್ಥನಂ ಬಳಿಕ ಹಂಸಧ್ವಜನ ತನಯನಿಂತೆಂದನು ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರ್ಜುನಂ ಕೇಳ್ದನು ಎಲೆ ಮರುಳೆ ನೋಡು ಆದೊಡಿನ್ನು ಆರ್ಜಿಸಿದ ಸುಕೃತಂ ಎಳ್ಳನಿತಿಲ್ಲದಿಹ ಪುಣ್ಯ ವರ್ಜಿತನ ಲೋಕಮಾಗಲಿ ತನಗೆ=[ಅರ್ಜುನನು ಕೇಳಿದನು, ಎಲೆ ಮರುಳೆ ನೋಡು ಆದೊಡೆ ಇನ್ನು ಗಳಿಸಿದ ಸುಕೃತ- ಪುಣ್ಯವು, ಎಳ್ಳನಿತು ಇಲ್ಲದೆ ಇರುವ ಪುಣ್ಯ ವರ್ಜಿತನ ಲೋಕವು ತನಗೆ ಸಿಗಲಿ]; ನಿನ್ನ ತಲೆಯಂ ಮೂರುಬಾಣದಿಂದೆ ನಿರ್ಜರರ್ ಮೆಚ್ಚಲರಿಯದೊಡೆ ಎಂದು ನುಡಿಯಲ್ಕೆ=[ನಿನ್ನ ತಲೆಯನ್ನು ಮೂರುಬಾಣದಿಂದ ದೇವತೆಗಳು ಮೆಚ್ಚುವಂತೆ ಕತ್ತರಿಸದಿದ್ದರೆ ಎಂದು ನುಡಿಯಲು]; ದುರ್ಜಯನು ಇವಂ ನಿನಗೆ ಸಾಧ್ಯನಲ್ಲೆಂದು ಹರಿ ಗರ್ಜಿಸಿದನು ಆ ಪಾರ್ಥನಂ ಬಳಿಕ ಹಂಸಧ್ವಜನ ತನಯನು ಇಂತೆಂದನು=[ದುರ್ಜಯನು ಇವನು; 'ನಿನಗೆ ಜಯಿಸಲು ಸಾಧ್ಯನಲ್ಲ' ಎಂದು ಹರಿ ಆ ಪಾರ್ಥನಿಗೆ ಗರ್ಜಿಸಿದನು. ಬಳಿಕ ಹಂಸಧ್ವಜನ ಮಗನು ಹೀಗೆ ಹೇಳಿದನು.]
  • ತಾತ್ಪರ್ಯ:ಅರ್ಜುನನು ಕೇಳಿದನು, ಎಲೆ ಮರುಳೆ ನೋಡು ಹಾಗಿದ್ದರೆ, ಇದುವರೆಗೆ ಗಳಿಸಿದ ಸುಕೃತ- ಪುಣ್ಯವು, ಎಳ್ಳನಿತು ಇಲ್ಲದೆ ಇರುವ ಪುಣ್ಯ ವರ್ಜಿತನ ಲೋಕವು ತನಗೆ ಸಿಗಲಿ, ನಿನ್ನ ತಲೆಯನ್ನು ಮೂರುಬಾಣಗಳಿಂದ ದೇವತೆಗಳು ಮೆಚ್ಚುವಂತೆ ಕತ್ತರಿಸದಿದ್ದರೆ ಎಂದು ನುಡಿಯಲು; ದುರ್ಜಯನು ಇವನು; 'ನಿನಗೆ ಜಯಿಸಲು ಸಾಧ್ಯನಲ್ಲ' ಎಂದು ಹರಿ ಆ ಪಾರ್ಥನಿಗೆ ಗರ್ಜಿಸಿದನು. ಬಳಿಕ ಹಂಸಧ್ವಜನ ಮಗನು ಹೀಗೆ ಹೇಳಿದನು.]
  • (ಪದ್ಯ-೩೦)

ಪದ್ಯ :-:೩೧:

[ಸಂಪಾದಿಸಿ]

ಗರ್ವದಿಂ ನುಡಿದೆಲಾ ಪಾರ್ಥ ಕೃಷ್ಣನ ಮುಂದೆ | ಗೀರ್ವಾಣರೆಲ್ಲರುಂ ನೋಡುತ್ತಿರಲೀಗ ನೀಂ | ಸರ್ವಶಕ್ತಿಯೊಳಿಸುವ ಮೂರುಬಾಣಂಗಳಂ ನಡುವೆ ಖಂಡಿಸದಿರ್ದೊಡೆ ||
ಉರ್ವಿಯೊಳ್ ಪಾತಕಿಗಳಾಗಿರ್ದವರ ಗತಿಗ | ಡರ್ವೆನೆಂದಾ ಸುಧನ್ವಂ ಬಳಿಕ ಮೇದಿನಿಯ | ದಿರ್ವಿನಂ ತೆಗೆದಚ್ಚನರ್ಜುನನ ತೇರೊಂದು ನಲ್ವಮಾತ್ರಂ ತೊಲಗಲು||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಗರ್ವದಿಂ ನುಡಿದೆಲಾ ಪಾರ್ಥ ಕೃಷ್ಣನ ಮುಂದೆ ಗೀರ್ವಾಣರು ಎಲ್ಲರುಂ ನೋಡುತ್ತಿರಲೀಗ ನೀಂ ಸರ್ವಶಕ್ತಿಯೊಳು ಇಸುವ ಮೂರುಬಾಣಂಗಳಂ ನಡುವೆ ಖಂಡಿಸದಿರ್ದೊಡೆ=[ಕೃಷ್ಣನ ಮುಂದೆ ದೇವತೆಗಳು ಎಲ್ಲರೂ ನೋಡುತ್ತಿರಲು ಈಗ ನೀನು ಸರ್ವಶಕ್ತಿಯಿಂದ ಬಿಡುವ ಮೂರುಬಾಣಗಳನ್ನೂ ನಡುವೆ ಕತ್ತರಿಸದಿದ್ದರೆ]; ಉರ್ವಿಯೊಳ್ ಪಾತಕಿಗಳು ಆಗಿರ್ದವರ ಗತಿಗೆ ಅಡರ್ವೆನು ಎಂದು ಆ ಸುಧನ್ವಂ ಬಳಿಕ ಮೇದಿನಿಯು ಅದುರ್ವಿನಂ ತೆಗೆದು ಎಚ್ಚನು ಅರ್ಜುನನ ತೇರು ಒಂದು ನಲ್ವಮಾತ್ರಂ ತೊಲಗಲು=[ಭೂಮಿಯಲ್ಲಿ ಪಾತಕಿಗಳಾಗಿರುವವರ ಗತಿಗೆ ಹೋಗುವೆನು, ಎಂದು ಆ ಸುಧನ್ವನು ಬಳಿಕ ಭೂಮಿಯು ಅದುರವಂತೆ ತೆಗೆದು ಹೊಡೆದನು, ಅದಕ್ಕೆ ಅರ್ಜುನನ ರಥ ನಾಲ್ಕುನೂರು ಮೊಳ ಹಿಂದಕ್ಕೆ ಹೋಯಿತು.]
  • ತಾತ್ಪರ್ಯ:ಗರ್ವದಿಂ ನುಡಿದೆಯಲ್ಲವೇ ಪಾರ್ಥ!, ಕೃಷ್ಣನ ಮುಂದೆ ದೇವತೆಗಳು ಎಲ್ಲರೂ ನೋಡುತ್ತಿರಲು ಈಗ ನೀನು ಸರ್ವಶಕ್ತಿಯಿಂದ ಬಿಡುವ ಮೂರುಬಾಣಗಳನ್ನೂ ನಡುವೆ ಕತ್ತರಿಸದಿದ್ದರೆ, ಭೂಮಿಯಲ್ಲಿ ಪಾತಕಿಗಳಾಗಿರುವವರ ಗತಿಗೆ ಹೋಗುವೆನು, ಎಂದು ಆ ಸುಧನ್ವನು ಬಳಿಕ ಭೂಮಿಯು ಅದುರವಂತೆ ತೆಗೆದು ಹೊಡೆದನು, ಅದಕ್ಕೆ ಅರ್ಜುನನ ರಥ ನಾಲ್ಕುನೂರು ಮೊಳ ಹಿಂದಕ್ಕೆ ಹೋಯಿತು.
  • (ಪದ್ಯ-೩೧)

ಪದ್ಯ :-:೩೨:

[ಸಂಪಾದಿಸಿ]

ತೇರ್ಮಗುಳ್ದಳವಿಯಿಂ ತೊಲಗಿ ಬೆಂಡಾಗಿ ನಾ | ನೂರ್ಮೊಳಂ ಪೋಗಲ್ಕೆ ತಲೆದೂಗಿ ಮುರಹರಂ | ಕಾರ್ಮೊಳಗುವಂತಿರೆ ಸುಧನ್ವನಂ ಕೊಂಡಾಡಿ ನೋಡಿ ಪಾರ್ಥನ ಮೊಗವನು||
ಘೂರ್ಮಿಸಿದನಂದಿನ ಜಯದ್ರಥನ ಕಥೆ ಬಂದು ದಾರ್ಮುಳಿದೊಡಂ ಮಣಿವನಲ್ಲ ಮೇಣಿವನೊಡನೆ | ಮಾರ್ಮಲೆವರಿಲ್ಲ ನೀನೆನ್ನೊಳಾಲೋಚಿಸದೆ ನುಡಿದೆ ಭಾಷೆಯನೆಂದನು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತೇರ್ ಮಗುಳ್ದು ಅಳವಿಯಿಂ ತೊಲಗಿ ಬೆಂಡಾಗಿ ನಾನೂರ್ ಮೊಳಂ ಪೋಗಲ್ಕೆ ತಲೆದೂಗಿ ಮುರಹರಂ ಕಾರ್ (ಮೇಘ) ಮೊಳಗುವಂತಿರೆ ಸುಧನ್ವನಂ ಕೊಂಡಾಡಿ=[ರಥ ತಿರುಗಿ, ವೇಗವಾಗಿ ತೊಲಗಿ ದುರ್ಬಲವಾಗಿ, ನಾನೂರ್ ಮೊಳದಷ್ಟು ಹೋಗಲು, ಮುರಹರನು ಮೆಚ್ಚಿ ತಲೆದೂಗಿ ಮೋಡದ ಘರ್ಜನೆಯಂತೆ ಸುಧನ್ವನನ್ನು ಕೊಂಡಾಡಿದನು.]; ನೋಡಿ ಪಾರ್ಥನ ಮೊಗವನು ಘೂರ್ಮಿಸಿದನು ಅಂದಿನ ಜಯದ್ರಥನ ಕಥೆ ಬಂದುದು=[ ಪಾರ್ಥನ ಮುಖವನ್ನು ನೋಡಿ ಗದರಿಸಿದನು, ಅಂದಿನ ಜಯದ್ರಥನ ಕಥೆಯಂತೆ ಇಂದಿನ ಸ್ಥಿತಿ ಬಂದಿತು ಎಂದನು.]; ಆರ್ +ಮುಳಿದೊಡಂ ಮಣಿವನಲ್ಲ ಮೇಣ್ ಇವನೊಡನೆ ಮಾರ್ಮಲೆವರು ಇಲ್ಲ; ನೀನು ಎನ್ನೊಳು ಆಲೋಚಿಸದೆ ನುಡಿದೆ ಭಾಷೆಯನು ಎಂದನು =[ಯಾರೇ ಸಿಟ್ಟುಗೊಂಡು ಹೋರಾಡಿದರೂ ಸೋಲುವವನಲ್ಲ; ಮತ್ತೆ ಇವನೊಡನೆ ಹೋರಾಡುವವರಿಲ್ಲ; ನೀನು ನನ್ನಲ್ಲಿ ಆಲೋಚಿಸದೆ ಭಾಷೆಯನ್ನು ಮಾಡಿದೆ ಎಂದನು].
  • ತಾತ್ಪರ್ಯ:ರಥ ತಿರುಗಿ, ವೇಗವಾಗಿ ತೊಲಗಿ ದುರ್ಬಲವಾಗಿ, ನಾನೂರ್ ಮೊಳದಷ್ಟು ಹೋಗಲು, ಮುರಹರನು ಮೆಚ್ಚಿ ತಲೆದೂಗಿ ಮೋಡದ ಘರ್ಜನೆಯಂತೆ ಗಟ್ಟಿಯಾಗಿ ಸುಧನ್ವನನ್ನು ಕೊಂಡಾಡಿದನು. ಪಾರ್ಥನ ಮುಖವನ್ನು ನೋಡಿ ಗದರಿಸಿದನು, ಅಂದಿನ ಜಯದ್ರಥನ ಕಥೆಯಂತೆ ಇಂದಿನ ಸ್ಥಿತಿ ಬಂದಿತು ಎಂದನು. ಯಾರೇ ಸಿಟ್ಟುಗೊಂಡು ಹೋರಾಡಿದರೂ ಸೋಲುವವನಲ್ಲ; ಮತ್ತೆ ಇವನೊಡನೆ ಹೋರಾಡುವವರಿಲ್ಲ; ನೀನು ನನ್ನಲ್ಲಿ ಆಲೋಚಿಸದೆ ಭಾಷೆಯನ್ನು ಮಾಡಿದೆ ಎಂದನು.
  • (ಪದ್ಯ-೩೧)

ಪದ್ಯ :-:೩೩:

[ಸಂಪಾದಿಸಿ]

ಇವನೇಕಪತ್ನೀವ್ರತಸ್ಥನಾಗಿಹುದರಿಂ| ತವೆ ತಾತ ನಾಜ್ಞೆಯಂ ಪಾಲಿಸುತೆ ಬಹುದರಿಂ | ಕವಲಿಲ್ಲದೆಮ್ಮನರ್ಚಿಪ ಭಕ್ತನಹುದರಿಂದಜ ಭವ ಸುರೇಶ್ವರರ್ಗೆ ||
ಬವರದೊಳ್ ಮಣಿವನಲ್ಲಿನ್ನಿವನ ಶೌರ್ಯಮಂ ಜವಗೆಡಿಸಿ ನಮ್ಮನುರೆ ಬಳಲಿಸುವ ಧೈರ್ಯಮಂ | ಭುವನತ್ರಯವನಂಜಿಸುವ ವಿಪುಲವೀರ್ಯಮಂ ನೋಡೆಂದು ಹರಿ ನುಡಿದನು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇವನು ಏಕಪತ್ನೀವ್ರತಸ್ಥನು ಆಗಿಹುದರಿಂ ತವೆ(ಅತಿಶಯವಾಗಿ) ತಾತನಾಜ್ಞೆಯಂ ಪಾಲಿಸುತೆ ಬಹದರಿಂ=[ಇವನು ಏಕಪತ್ನೀವ್ರತಸ್ಥನು ಆಗಿರುವುದರಿಂದ, ಅತಿಶಯವಾಗಿ ತಂದೆಯ ಆಜ್ಞೆಯನ್ನು ಪಾಲಿಸುತ್ತಾ ಇರುವುರಿಂದ]; ಕವಲಿಲ್ಲದೆ(ಬೇರೆ ಯೋಚನೆ ಇಲ್ಲದೆ ಏಕಾಗ್ರವಾಗಿ) ಎಮ್ಮನು ಅರ್ಚಿಪ ಭಕ್ತನು ಅಹುದರಿಂದ ಅಜ ಭವ ಸುರೇಶ್ವರರ್ಗೆ ಬವರದೊಳ್ ಮಣಿವನಲ್ಲ=[ಬೇರೆ ಯೋಚನೆ ಇಲ್ಲದೆ ಏಕಾಗ್ರವಾಗಿ ನನ್ನನು ಅರ್ಚಿಸುವ ಭಕ್ತನು ಆಗಿರುವುರಿಂದ ಬ್ರಹ್ಮ, ಶಿವ, ಇಂದ್ರರಿಗೆ ಯುದ್ಧದಲ್ಲಿ ಮಣಿಯುವವನಲ್ಲ]; ಇನ್ನಿವನ ಶೌರ್ಯಮಂ ಜವಗೆಡಿಸಿ ನಮ್ಮನು ಉರೆ ಬಳಲಿಸುವ ಧೈರ್ಯಮಂ ಭುವನತ್ರಯವನು ಅಂಜಿಸುವ ವಿಪುಲವೀರ್ಯಮಂ ನೋಡೆಂದು ಹರಿ ನುಡಿದನು=[ಇನ್ನು ಇವನ ಶೌರ್ಯವನ್ನು ತಗ್ಗಿಸಲು ನಮ್ಮನು ಬಹಳ ಬಳಲಿಸುವ ಧೈರ್ಯವನ್ನೂ ಭುವನತ್ರಯವನ್ನೂ ಅಂಜಿಸುವ ಹೆಚ್ಚಿನ ಶೌರ್ಯವನ್ನು ನೋಡು ಎಂದು ಹರಿ ನುಡಿದನು]
  • ತಾತ್ಪರ್ಯ:ಇವನು ಏಕಪತ್ನೀವ್ರತಸ್ಥನು ಆಗಿರುವುದರಿಂದ, ಅತಿಶಯವಾಗಿ ತಂದೆಯ ಆಜ್ಞೆಯನ್ನು ಪಾಲಿಸುತ್ತಾ ಇರುವುರಿಂದ, ಬೇರೆ ಯೋಚನೆ ಇಲ್ಲದೆ ಏಕಾಗ್ರವಾಗಿ ನನ್ನನು ಅರ್ಚಿಸುವ ಭಕ್ತನು ಆಗಿರುವುರಿಂದ ಬ್ರಹ್ಮ, ಶಿವ, ಇಂದ್ರರಿಗೆ ಯುದ್ಧದಲ್ಲಿ ಮಣಿಯುವವನಲ್ಲ; ಇನ್ನು ಇವನ ಶೌರ್ಯವನ್ನು ಎದುರಿಸಿ ತಗ್ಗಿಸಲು ನಮ್ಮನು ಬಹಳ ಬಳಲಿಸುವ ಧೈರ್ಯವನ್ನೂ ಭುವನತ್ರಯವನ್ನೂ ಅಂಜಿಸುವ ಹೆಚ್ಚಿನ ಶೌರ್ಯವನ್ನು ನೋಡು ಎಂದು ಹರಿ ನುಡಿದನು.
  • (ಪದ್ಯ-೩೩)

ಪದ್ಯ :-:೩೪:

[ಸಂಪಾದಿಸಿ]

ಅನಿತರೊಳ್ ಕಲಿಸುಧನ್ವಂ ಕೇಳ್ದು ನುಡಿದನೆಲೆ ವನಜಾಕ್ಷ ಬೆಟ್ಟಮಂ ಕೊಡೆವಿಡಿದು ಪಟ್ಟಿಯಂ | ನನೆಯಲೀ ಯದವೊಲೀ ಪಾರ್ಥನಂ ರಕ್ಷಸುವೆ ನೀಂ ಕೃಪೆಯೊಳಾವು ಬರಿದೆ ||
ತೊನೆದೊಡೇನಹುದಿನ್ನು ರಣದೊಳೀದೇಹಮಂ ನಿನಗೊಪ್ಪಿಸದೆ ಬಿಡೆಂ ಸಾಕದಂತಿರಲೊಮ್ಮೆ | ಮುನಿದು ನೋಡಳುಕಿದೊಡೆ ನಿನ್ನ ಕಿಂಕರನಲ್ಲೆನುತ ರಥವನೊಡೆಯೆಚ್ಚನು ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅನಿತರೊಳ್ ಕಲಿಮಧನ್ವಂ ಕೇಳ್ದು ನುಡಿದನು ಎಲೆ ವನಜಾಕ್ಷ ಬೆಟ್ಟಮಂ ಕೊಡೆವಿಡಿದು ಪಟ್ಟಿಯಂ (ಬಟ್ಟೆಯಚೂರು) ನನೆಯಲು ಈಯದವೊಲ್=[ಅಷ್ಟರಲ್ಲಿ ವೀರಮಧನ್ವನು ಅದನ್ನು ಕೇಳಿ, ನುಡಿದನು ಎಲೆ ವನಜಾಕ್ಷನಾದ ಕೃಷ್ಣನೇ, ಬೆಟ್ಟವನ್ನು ಎತ್ತಿ ಕೊಡೆಯಂತೆ ಹಿಡಿದು ಬಟ್ಟೆಯಚೂರು ಪಟ್ಟಿಯೂ ನೆನೆಯಲು ಅವಕಾಶಕೊಡದೆ ಈ ಪಾರ್ಥನನನ್ನು ರಕ್ಷಸುತ್ತಿರುವೆ; ನೀಂ ಕೃಪೆಯೊಳು ಆವು ಬರಿದೆ
ತೊನೆದೊಡೆ ಏನಹುದು ಇನ್ನು=[ನಿನ್ನ ಕೃಪೆಯಲ್ಲಿ, ನಿನ್ನನ್ನು ನಂಬಿ ನಾವು ಬರಿದೆ ಹೋರಾಡಿದರೆ ಏನಾಗುದು ಇನ್ನು]; ರಣದೊಳು ಈ ದೇಹಮಂ ನಿನಗೆ ಒಪ್ಪಿಸದೆ ಬಿಡೆಂ=[ರಣರಂಗದಲ್ಲಿ ಯುದ್ಧಮಾಡಿ ಈ ನನ್ನ ದೇಹವನ್ನು ನಿನಗೆ ಒಪ್ಪಿಸದೆ ಬಿಡುವುದಲ್ಲ.];ಸಾಕದಂತಿರಲಿ ಒಮ್ಮೆ ಮುನಿದು ನೋಡು ಅಳುಕಿದೊಡೆ ನಿನ್ನ ಕಿಂಕರನಲ್ಲ ಎನುತ ರಥವನು ಒಡೆ(ನೆ?) ಎಚ್ಚನು =[ ಸಾಕು ಅದಂತಿರಲಿ ಒಮ್ಮೆ ನೀನು ನನ್ನ ಮೇಲೆ ಕೋಪಗೊಂಡು ನೋಡು, ನಾನು ಹೆದರಿದರೆ ನಿನ್ನ ಭಕ್ತನಲ್ಲವೆಂದು ತಿಳಿ, ಎನ್ನತ್ತಾ ರಥವನ್ನು ಒಡನೆಯೇ ಬಾಣದಿಂದ ಹೊಡೆದನು];
  • ತಾತ್ಪರ್ಯ:ಅಷ್ಟರಲ್ಲಿ ವೀರ ಸುಧನ್ವನು ಅದನ್ನು ಕೇಳಿ, ನುಡಿದನು ಎಲೆ ವನಜಾಕ್ಷನಾದ ಕೃಷ್ಣನೇ, ಬೆಟ್ಟವನ್ನು ಎತ್ತಿ ಕೊಡೆಯಂತೆ ಹಿಡಿದು ಬಟ್ಟೆಯಚೂರು ಪಟ್ಟಿಯೂ ನೆನೆಯಲು ಅವಕಾಶಕೊಡದೆ ಈ ಪಾರ್ಥನನನ್ನು ರಕ್ಷಸುತ್ತಿರುವೆ; ನಿನ್ನ ಕೃಪೆಯಲ್ಲಿ ನಿನ್ನನ್ನು ನಂಬಿ ನಾವು ಬರಿದೆ ಹೋರಾಡಿದರೆ ಏನಾಗುದು ಇನ್ನು ರಣರಂಗದಲ್ಲಿ ಯುದ್ಧಮಾಡಿ ಈ ನನ್ನ ದೇಹವನ್ನು ನಿನಗೆ ಒಪ್ಪಿಸದೆ ಬಿಡುವುದಲ್ಲ. ಸಾಕು ಅದು ಹಾಗಿರಲಿ, ಒಮ್ಮೆ ನೀನು ನನ್ನ ಮೇಲೆ ಕೋಪಗೊಂಡು ನೋಡು, ನಾನು ಹೆದರಿದರೆ ನಿನ್ನ ಭಕ್ತನಲ್ಲವೆಂದು ತಿಳಿ, ಎನ್ನತ್ತಾ ರಥವನ್ನು ಒಡನೆಯೇ ಬಾಣದಿಂದ ಹೊಡೆದನು];
  • (ಪದ್ಯ-೩೪)

ಪದ್ಯ :-:೩೫:

[ಸಂಪಾದಿಸಿ]

ಸುರ್ರನೆ ಸುಳಿದು ಸುತ್ತಿ ಬೆಂಡಾಗೆ ಕುದುರೆಗಳ್ ಕಿರ್ರನೆ ಪಪೀಶ್ವರಂ ಪಲ್ಗಿರಿದು ಚೀರಲ್ಕೆ | ಕರ್ರನೆ ಕವಿಯೆ ಕಣ್ಗೆ ಕೆತ್ತಲೆ ಶಿರೋಭ್ರಮಣೆಯಿಂ ಕೃಷ್ಣ ಫಲುಗುಣರ್ಗೆ ||
ಘರ್ರನೆ ಪೊರಳ್ದು ಗಾಲಿಗಳೇಳೆ ಧರಣಿಯಂ ತಿರ್ರನೆ ತಿರುಗುವ ಸುಟ್ಟುರೆಗಾಳಿಯಂದದಿಂ | ಸರ್ರನೆ ಸರಿದುದು ಹಿಂದಕೆ ರಥಂ ಮತ್ತವನಸುರಾರಿ ಬಣ್ಣಿಸಿದನು ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸುರ್ರನೆ ಸುಳಿದು ಸುತ್ತಿ ಬೆಂಡಾಗೆ ಕುದುರೆಗಳ್ ಆಯಾಸ ಕಿರ್ರನೆ ಪಪೀಶ್ವ ರಂ ಪಲ್ಗಿರಿದು ಚೀರಲ್ಕೆ ಕರ್ರನೆ ಕವಿಯೆ ಕಣ್ಗೆ ಕೆತ್ತಲೆ ಶಿರೋಭ್ರಮಣೆಯಿಂ ಕೃಷ್ಣ ಫಲುಗುಣರ್ಗೆ=[ಸುರ್ರನೆ ಸುಳಿದು ಸುತ್ತಿ ಕುದುರೆಗಳು ಆಯಾಸಗೊಂಡವು; ಧ್ವಜದ ಪಪೀಶ್ವರನು ಕಿರ್ರನೆ ಹಲ್ಗು ಕಿರಿದು ಚೀರಲು, ಕಣ್ಣಿಗೆ ಕಪ್ಪು ಕೆತ್ತಲೆ ಕವಿಯಲು, ಕೃಷ್ಣ ಫಲುಗುಣರಿಗೆ ತಲೆತಿರುಗಿದಂತಾಗಿ]; ಘರ್ರನೆ ಪೊರಳ್ದು ಗಾಲಿಗಳೇಳೆ ಧರಣಿಯಂ ತಿರ್ರನೆ ತಿರುಗುವ ಸುಟ್ಟುರೆಗಾಳಿಯಂದದಿಂ ಸರ್ರನೆ ಸರಿದುದು ಹಿಂದಕೆ ರಥಂ ಮತ್ತವನಸುರಾರಿ ಬಣ್ಣಿಸಿದನು=[ಗಾಲಿಗಳು ಘರ್ರನೆ ಹೊರಳಿ, ಸುಟ್ಟುರೆಗಾಳಿಯಂತೆ ಭೂಮಿಯು ತಿರ್ರನೆ ತಿರುಗುವಂತೆ, ರಥವು ಸರ್ರನೆ ಹಿಂದಕ್ಕೆ ಸರಿಯಿತು. ಮತ್ತೆ ಕೃಷ್ಣನು ಅವನನ್ನು ಬಣ್ಣಿಸಿದನು].
  • ತಾತ್ಪರ್ಯ: ಸುಧನ್ವನ ಬಾಣಕ್ಕೆ ಕುದುರೆಗಳು ಸುರ್ರನೆ ಸುಳಿದು ಸುತ್ತಿ ಆಯಾಸಗೊಂಡವು; ಧ್ವಜದ ಪಪೀಶ್ವರನು ಕಿರ್ರನೆ ಹಲ್ಗು ಕಿರಿದು ಚೀರಲು, ಕಣ್ಣಿಗೆ ಕಪ್ಪು ಕೆತ್ತಲೆ ಕವಿಯಲು, ಕೃಷ್ಣ ಫಲುಗುಣರಿಗೆ ತಲೆತಿರುಗಿದಂತಾಗಿ, ಗಾಲಿಗಳು ಘರ್ರನೆ ಹೊರಳಿ, ಸುಟ್ಟುರೆಗಾಳಿಯಂತೆ ಭೂಮಿಯು ತಿರ್ರನೆ ತಿರುಗುವಂತೆ, ರಥವು ಸರ್ರನೆ ಹಿಂದಕ್ಕೆ ಸರಿಯಿತು. ಮತ್ತೆ ಕೃಷ್ಣನು ಅವನನ್ನು ಹೊಗಳಿದನು.
  • (ಪದ್ಯ-೩೫)

ಪದ್ಯ :-:೩೬:

[ಸಂಪಾದಿಸಿ]

ಪೊಡವಿಪತಿ ಕೇಳ್ ಬಳಿಕ ಕಣ್ ಕೆಂಡದಂತಾಗೆ ಕುಡಿಹುಬ್ಬು ಧೂಮಲತೆಯೆಂಬೊಲಿರೆ ಹುಂಕಾರ | ದೊಡವೆ ನಿಶ್ವಾಸಮಂ ಬಿಗುವ ನಾಸಾಪುಟಂ ಜ್ವಾಲೆಯಂದೊಳೊಪ್ಪಿರೆ ||
ಕಿಡಿಯಿಡುವ ಕೋಪಮಂ ತಾಳ್ದಂ ಧನಂಜಯಂ ಕಡೆಗಾಲದಂದಿನ ಧನಂಜಯಂ ತಾನೆನಲ | ಪಡೆ ನಡುಗೆ ದೊಬ್ಬಿರಿದು ಪೂಡಿದಂ ಬಾಣಮಂ ಸಳೆದು ನಿಕಾರ್ಮುಕವನು ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪೊಡವಿಪತಿ ಕೇಳ್ ಬಳಿಕ ಕಣ್ ಕೆಂಡದಂತೆ ಆಗೆ ಕುಡಿಹುಬ್ಬು ಧೂಮಲತೆಯೆಂಬೊಲು ಇರೆ ಹುಂಕಾರದೊಡವೆ ನಿಶ್ವಾಸಮಂ ಬಿಗುವ ನಾಸಾಪುಟಂ ಜ್ವಾಲೆಯಂದದೊಳು ಒಪ್ಪಿರೆ=[ರಾಜನೇ ಕೇಳು, ಬಳಿಕ ಕಣ್ಣು ಕೆಂಡದಂತೆ ಕೆಂಪಾಗಲು, ಕುಡಿಹುಬ್ಬು ಧೂಮಲತೆಯಂತೆ / ಹೊಗೆಯಸುಳಿಯಂತೆ ಅಂಕುಡೊಂಕಾಗಿಯಿರಲು, ಹುಂಕಾರದೊಡವೆ ನಿಶ್ವಾಸದ ಮೂಗಿನ ಹೊಳ್ಳೆಗಳು ಬಿಗುವಾಗಿ ಜ್ವಾಲೆಯಂತೆ ಕಾಣಲು,]; ಕಿಡಿಯಿಡುವ ಕೋಪಮಂ ತಾಳ್ದಂ ಧನಂಜಯಂ, ಕಡೆಗಾಲದ ಅಂದಿನ ಧನಂಜಯಂ (ಅಗ್ನಿ) ತಾನೆನಲ್ ಪಡೆ ನಡುಗೆ ದೊಬ್ಬಿರಿದು ಪೂಡಿದಂ ಬಾಣಮಂ ಸಳೆದು ನಿಜಕಾರ್ಮುಕವನು=[ಬೆಂಕಿಯ ಕಿಡಿಯಂತರಿವ ಕೋಪವನ್ನು ತಾಳಿ, ಧನಂಜಯನು, ಪ್ರಳಯಕಾಲದ ಅಂದಿನ ಅಗ್ನಿಯೇ ತಾನು ಎನ್ನುವಂತೆ ಸೈನ್ಯವು ನಡುಗಲು,ಬೊಬ್ಬಿರಿದು ತನ್ನ ಬಿಲ್ಲಿನಲ್ಲಿ ಬಾಣವನ್ನು ಸಳೆದು ಪೂಡಿದನು.]
  • ತಾತ್ಪರ್ಯ: ರಾಜನೇ ಕೇಳು, ಬಳಿಕ ಕಣ್ಣು ಕೆಂಡದಂತೆ ಕೆಂಪಾಗಲು, ಕುಡಿಹುಬ್ಬು ಧೂಮಲತೆಯಂತೆ / ಹೊಗೆಯಸುಳಿಯಂತೆ ಅಂಕುಡೊಂಕಾಗಿಯಿರಲು, ಹುಂಕಾರದೊಡವೆ ನಿಶ್ವಾಸದ ಮೂಗಿನ ಹೊಳ್ಳೆಗಳು ಬಿಗುವಾಗಿ ಜ್ವಾಲೆಯಂತೆ ಕಾಣಲು, ಬೆಂಕಿಯ ಕಿಡಿಯಂತಿರುವ ಕೋಪವನ್ನು ತಾಳಿ, ಧನಂಜಯನು, ಪ್ರಳಯಕಾಲದ ಅಂದಿನ ಅಗ್ನಿಯೇ ತಾನು ಎನ್ನುವಂತೆ ಸೈನ್ಯವು ನಡುಗಲು,ಬೊಬ್ಬಿರಿದು ತನ್ನ ಬಿಲ್ಲಿನಲ್ಲಿ ಬಾಣವನ್ನು ಸಳೆದು ಹೂಡಿದನು.]
  • (ಪದ್ಯ-೩6)

ಪದ್ಯ :-:೩೭:

[ಸಂಪಾದಿಸಿ]

ಖತಿಯಿಂವೆ ಫಲುಗುಣಂ ಪೂಡಿದ ಮಹಾಸ್ತ್ರಮಂ ಶತಪತ್ರಲೋಚನಂ ಕಂಡದಕೆ ಮುನ್ನತಾ | ನತುಲಗೋವರ್ಧನವನಾಂತು ಗೋಕುಲವನೋವಿದ ಸುಕೃತಫಲವನಿತು ||
ಅತಿಶಯದ ಶಕ್ತಿಯಂ ನೆಲಗೊಳಿಸಿ ಬೇಗದಿಂ ಪ್ರತಿಭಟನ ಶಿರವನಿಳುಹಿನ್ನೆಂದು ಬೆಸೆಸಲು | ನ್ನತಪರಾಕ್ರಮಿ ಧನಂಜಯನಾರ್ದು ಕಿವಿವರಿಗೆ ತೆಗೆದಚ್ಚನಾ ಶರವನು ||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಖತಿಯಿಂವೆ ಫಲುಗುಣಂ ಪೂಡಿದ ಮಹಾಸ್ತ್ರಮಂ ಶತಪತ್ರಲೋಚನಂ/ಕಮಲದಮತೆ ವಿಶಾಲ ಕಣ್ಣುಳ್ಳವನು, ಕಂಡು=[ಸಿಟ್ಟಿನಿಂದ ಫಲುಗುಣನು ಹೂಡಿದ ಮಹಾಸ್ತ್ರವನ್ನು ಕೃಷ್ಣನು, ಕಂಡು]; ಅದಕೆ ಮುನ್ನ ತಾನು ಅತುಲ ಗೋವರ್ಧನವನು ಆಂತು ಗೋಕುಲವನು ಓವಿದ ಸುಕೃತಫಲವ ಅನಿತು ಅತಿಶಯದ ಶಕ್ತಿಯಂ ನೆಲಗೊಳಿಸಿ=[ಅದಕ್ಕೆ ಈಹಿಂದೆ ತಾನು ದೊಡ್ಡ ಗೋವರ್ಧನವನ್ನು ಎತ್ತಿ ಗೋಕುಲವನ್ನು ಕಾಪಾಡಿದ ಸುಕೃತಫಲವನ್ನು ಅಷ್ಟನ್ನೂ ಅತಿಶಯದ ಶಕ್ತಿಯನ್ನೂ ಅದರಲ್ಲಿ ತುಂಬಿ]; ಬೇಗದಿಂ ಪ್ರತಿಭಟನ ಶಿರವನು ಇಳುಹು ಇನ್ನೆಂದು ಬೆಸೆಸಲು ಉನ್ನತ ಪರಾಕ್ರಮಿ ಧನಂಜಯನು ಆರ್ದು ಕಿವಿವರಿಗೆ ತೆಗೆದು ಎಚ್ಚನು ಆ ಶರವನು=[ಬೇಗ ಶತ್ರುವಿನ ಶಿರವನ್ನು ಇಳಿಸು/ ಕತ್ತರಿಸು ಇನ್ನು ಎಂದು ಹೇಳಲು ಉನ್ನತ ಪರಾಕ್ರಮಿಯಾದ ಧನಂಜಯನು ಆರ್ಭಟಿಸಿ ಹೆದೆಯನ್ನು ಕಿವಿಯವರಿಗೆ ಎಳೆದು ಆ ಬಾಣವನ್ನು ಹೊಡೆದನು.].
  • ತಾತ್ಪರ್ಯ: ಸಿಟ್ಟಿನಿಂದ ಫಲುಗುಣನು ಹೂಡಿದ ಮಹಾಸ್ತ್ರವನ್ನು ಕೃಷ್ಣನು, ಕಂಡು, ಅದಕ್ಕೆ ಈಹಿಂದೆ ತಾನು ದೊಡ್ಡ ಗೋವರ್ಧನವನ್ನು ಎತ್ತಿ ಗೋಕುಲವನ್ನು ಕಾಪಾಡಿದ ಸುಕೃತಫಲವನ್ನು ಅಷ್ಟನ್ನೂ ಅತಿಶಯದ ಶಕ್ತಿಯನ್ನೂ ಅದರಲ್ಲಿ ತುಂಬಿ, ಬೇಗ ಶತ್ರುವಿನ ಶಿರವನ್ನು ಇಳಿಸು/ ಕತ್ತರಿಸು ಇನ್ನು ಎಂದು ಹೇಳಲು ಉನ್ನತ ಪರಾಕ್ರಮಿಯಾದ ಧನಂಜಯನು ಆರ್ಭಟಿಸಿ ಹೆದೆಯನ್ನು ಕಿವಿಯವರಿಗೆ ಎಳೆದು ಆ ಬಾಣವನ್ನು ಹೊಡೆದನು.
  • (ಪದ್ಯ-೩೭)VIII

ಪದ್ಯ :-:೩೮:

[ಸಂಪಾದಿಸಿ]

ಅಹಹ ಮುರಹರ ಪಾರ್ಧನಿಸುವ ಬಾಣಕೆ ನಿನ್ನ ಬಹಳ ಸುಕೃತವನಿತ್ತೆ ಲೇಸಾದುದಿದನರಿಯೆ | ಬಹುದೆ ನೋವಿಲ್ಲಲಾ ನಿನಗೆನುತ ತೀವ್ರದಿಂ ಕೊರಳ ಸಿರಸಕೆ ನಭದೊಳು ||
ಬಹ ಸರಳನೆಚ್ಚು ನಿಮಿಷಾರ್ಧದೊಳ್ ಕಡಿದು ಗಹ ಗಹಿಸುವ ಸುಧನ್ವನಂ ಕಂಡವನ ಸೈನ್ಯದೊಳ್ | ಕಹಳೆಗಳ್ ಸೂಳೈಸಿದವು ಮೆಚ್ಚಿದರ್ ಇದವಿಜರಚ್ಯುತಂ ಬೆರೆಗಾದನು ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಹಹ ಮುರಹರ ಪಾರ್ಧನಉ ಇಸುವ ಬಾಣಕೆ ನಿನ್ನ ಬಹಳ ಸುಕೃತವನಉ ಇತ್ತೆ ಲೇಸಾದುದಉ ಇದನಉ ಅರಿಯೆ| ಬಹುದೆ =[ಅಹಹ ಕೃಷ್ಣನೇ ಪಾರ್ಧನು ಬಿಡುವ ಬಾಣಕ್ಕೆ ನಿನ್ನ ಬಹಳ ಸುಕೃತವನು ಕೊಟ್ಟೆ ಒಳ್ಳೆಯದು ಇದನ್ನು ಕತ್ತರಸಬಹುದೇ? ]; ನೋವಿಲ್ಲಲಾ ನಿನಗೆನುತ ತೀವ್ರದಿಂ ಕೊರಳ ಸಿರಸಕೆ ನಭದೊಳು =[ಕತ್ತರಿಸಿದರೆ ನಿನಗೆ ಬೇಸರವಿಲ್ಲವೇ /ಬೇಸರ ಪಡಬೇಡ! ಎನುತ ತೀವ್ರದಿಂ ಕೊರಳ ಸಿರಸಕೆ/ ಕುತ್ತಿಗೆಯ ಬಳಿಗೆ, ಆಕಾಶದಲ್ಲಿ ] ; ಬಹ ಸರಳನು ಎಚ್ಚು ನಿಮಿಷಾರ್ಧದೊಳ್ ಕಡಿದು ಗಹ ಗಹಿಸುವ ಸುಧನ್ವನಂ ಕಂಡು ಅವನ ಸೈನ್ಯದೊಳ್ ಕಹಳೆಗಳ್ ಸೂಳೈಸಿದವು ಮೆಚ್ಚಿದರ್ ದಿವಿಜರು ಅಚ್ಯುತಂ ಬೆರೆಗಾದನು=[ ಬರುತ್ತಿರುವ ಬಾಣವನ್ನು ಹೊಡೆದು ನಿಮಿಷಾರ್ಧದದಲ್ಲಿ ಕಡಿದು, ಗಹ ಗಹಿಸಿ ನಗುವ ಸುಧನ್ವನನ್ನು ಕಂಡು ಅವನ ಸೈನ್ಯದಲ್ಲಿ ಕಹಳೆಗಳು ಮೊಳಗಿದವು ದಿವಿಜರು ಮೆಚ್ಚಿದರು, ಅಚ್ಯುತನು ಬೆರೆಗಾದನು].
  • ತಾತ್ಪರ್ಯ: ಅಹಹ ಕೃಷ್ಣನೇ ಪಾರ್ಧನು ಬಿಡುವ ಬಾಣಕ್ಕೆ ನಿನ್ನ ಬಹಳ ಸುಕೃತವನು ಕೊಟ್ಟೆ ಒಳ್ಳೆಯದು ಇದನ್ನು ಕತ್ತರಸಬಹುದೇ? ಕತ್ತರಿಸಿದರೆ ನಿನಗೆ ಬೇಸರವಿಲ್ಲವೇ /ಬೇಸರ ಪಡಬೇಡ! ಎನ್ನುತ್ತಾ ವೇಗವಾಗಿ ಕುತ್ತಿಗೆಯ ಬಳಿಗೆ, ಆಕಾಶದಲ್ಲಿ ಬರುತ್ತಿರುವ ಬಾಣವನ್ನು ಹೊಡೆದು ನಿಮಿಷಾರ್ಧದದಲ್ಲಿ ಕಡಿದು, ಗಹ ಗಹಿಸಿ ನಗುವ ಸುಧನ್ವನನ್ನು ಕಂಡು ಅವನ ಸೈನ್ಯದಲ್ಲಿ ಕಹಳೆಗಳು ಮೊಳಗಿದವು. ದಿವಿಜರು ಮೆಚ್ಚಿದರು, ಅಚ್ಯುತನು ಬೆರೆಗಾದನು.
  • (ಪದ್ಯ-೩೮)

ಪದ್ಯ :-:೩೯:

[ಸಂಪಾದಿಸಿ]

ಮೂರುಬಾಣದೊಳಿವನ ತಲೆಯನರಿದಪೆನೆಂದು ತೋರಿಯಠಾಡಿದೆನಾಂ ಪ್ರತಿಜ್ಞೆಯನದರೊಳೊಂದು | ಮೀರಿಪೋದುದು ಕೋಲೆರಡರಿಂವೆ ರಿಪುಶಿರವನಿಳುಹಬೇಕೆನುತೆ ನರನು ||
ಏರಿಸಿದ ನಂಬಂ ಶರಾಸನಕೆ ಬಳಿಕದಕೆ ಹೇರಿದಂ ಹರಿ ತನ್ನ ಕೃಷ್ಣಾವತಾರದೊಳ್ | ಮೀರಿ ಧರೆಯಂ ಪೊರೆದ ಪುಣ್ಯಮಂ ಮೇಲೆ ಫಲಗುಣನೆಚ್ಚನಾ ಕಣೆಯನು ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೂರುಬಾಣದೊಳು ಇವನ ತಲೆಯನು ಅರಿದಪೆನು ಎಂದು ತೋರಿಯಾಡಿದೆನು / ಆಂ/ ಪ್ರತಿಜ್ಞೆಯನು =[ ಮೂರುಬಾಣಗಳಲ್ಲಿ ಇವನ ತಲೆಯನ್ನು ಕತ್ತರಿಸುವೆನು ಎಂದು ನಾನು ಪ್ರತಿಜ್ಞೆಯನ್ನು ದೊಡ್ಡ ದಾಗಿ ಮಾಡಿದೆನು]; ಅದರೊಳು ಒಂದು ಮೀರಿಪೋದುದು ಕೋಲು ಎರಡರಿಂದೆ ರಿಪುಶಿರವನು ಇಳುಹಬೇಕೆನುತೆ ನರನು ಏರಿಸಿದ ನಂಬಂ ಶರಾಸನಕೆ(ಬಿಲ್ಲು)=[ ಅದರಲ್ಲಿ ಒಂದು ನಷ್ಟವಾಯಿತು ಕೋಲು ಎರಡು ಬಾಣ ದಿಂದ ರಿಪುವಿನ ತಲೆಯನ್ನು ತೆಗೆಯಬೇಕು ಎನ್ನುತ್ತಾ ನರನು ಬಾಣವನ್ನು ಬಿಲ್ಲಿಗೆ ಏರಿಸಿದನು ]; ಬಳಿಕ ಅದಕೆ ಹೇರಿದಂ ಹರಿ ತನ್ನ ಕೃಷ್ಣಾವತಾರದೊಳ್ ಮೀರಿ ಧರೆಯಂ ಪೊರೆದ ಪುಣ್ಯಮಂ ಮೇಲೆ ಫಲಗುಣನು ಎಚ್ಚನು ಆ ಕಣೆಯನು=[ ಬಳಿಕ ಅದಕ್ಕೆ ಹರಿಯು ತನ್ನ ಕೃಷ್ಣಾವತಾರದಲ್ಲಿ ಹೆಚ್ಕಾಗಿ ಭೂಮಿಯನ್ನು ಕಾಪಾಡಿದ ಪುಣ್ಯವನ್ನು ತುಂಬಿದಮೇಲೆ ಫಲಗುಣನು ಆ ಬಾಣವನ್ನು ಬಿಟ್ಟನು].
  • ತಾತ್ಪರ್ಯ: ಮೂರುಬಾಣಗಳಲ್ಲಿ ಇವನ ತಲೆಯನ್ನು ಕತ್ತರಿಸುವೆನು ಎಂದು ನಾನು ಪ್ರತಿಜ್ಞೆಯನ್ನು ದೊಡ್ಡ ದಾಗಿ ಮಾಡಿದೆನು. ಅದರಲ್ಲಿ ಒಂದು ನಷ್ಟವಾಯಿತು ಎರಡು ಬಾಣದಿಂದ ರಿಪುವಿನ ತಲೆಯನ್ನು ತೆಗೆಯಬೇಕು ಎನ್ನುತ್ತಾ ನರನು ಬಾಣವನ್ನು ಬಿಲ್ಲಿಗೆ ಏರಿಸಿದನು. ಬಳಿಕ ಅದಕ್ಕೆ ಹರಿಯು ತನ್ನ ಕೃಷ್ಣಾವತಾರದಲ್ಲಿ ಹೆಚ್ಕಾಗಿ ಭೂಮಿಯನ್ನು ಕಾಪಾಡಿದ ಪುಣ್ಯವನ್ನು ತುಂಬಿದಮೇಲೆ ಫಲಗುಣನು ಆ ಬಾಣವನ್ನು ಬಿಟ್ಟನು.
  • (ಪದ್ಯ-೩೯)

ಪದ್ಯ :-:೪೦:

[ಸಂಪಾದಿಸಿ]

ಆಗಳತಿ ರೋಷದಿಂದಾಲಿಗಳ್ ಕೆಂಪಡರ ಲೀಗಳರ್ಜುನನ ಬಾಣಕೆ ನಿನ್ನ ಪುಣ್ಯಮಂ | ನೀಗಿದೆಯಲಾ ದೇವ ನೋಡು ಬಹ ದಿವ್ಯಾಸ್ತ್ರಮಂ ಕತ್ತರಿಸದಿರ್ದೊಡೆ ||
ಭೋಗದೊಳರುಂಧತಿಯ ಕೊಡಿದ ವಷಿಷ್ಠನಂ ಪೋಗಿ ಕೊಂದವನ ದುರ್ಗತಿಗೆ ತಾನಿಳಿವೆನೆನು | ತಾಗಸದೊಳರ್ಕನಂತೈತಪ್ಪ ಸರಳಂ ಸ ಧನ್ವನಿಕ್ಕಿಡಿಗೈದನು ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆಗಳು ಅತಿ ರೋಷದಿಂದ ಆಲಿಗಳ್ ಕೆಂಪಡರಲು ಈಗಳು ಅರ್ಜುನನ ಬಾಣಕೆ ನಿನ್ನ ಪುಣ್ಯಮಂ ನೀಗಿದೆಯಲಾ ದೇವ ನೋಡು=[ ಆಗ ಅತಿ ರೋಷದಿಂದ ಕಣ್ಣಿನ ಆಲಿಗಳು ಕೆಂಪಡರಲು, ಈಗ ಅರ್ಜುನನ ಬಾಣಕ್ಕೆ ನಿನ್ನ ಪುಣ್ಯವನ್ನು ಕೊಟ್ಟೆಯಲಾ ದೇವ ನೋಡು]; ಬಹ ದಿವ್ಯಾಸ್ತ್ರಮಂ ಕತ್ತರಿಸದೆ ಇರ್ದೊಡೆ ಭೋಗದೊಳು ಅರುಂಧತಿಯ ಕೊಡಿದ ವಷಿಷ್ಠನಂ ಪೋಗಿ ಕೊಂದವನ ದುರ್ಗತಿಗೆ ತಾನು ಇಳಿವೆನು=[ ಬರುವ ದಿವ್ಯಾಸ್ತ್ರವನ್ನು ಕತ್ತರಿಸದೆ ಇದ್ದರೆ ಭೋಗದಲ್ಲಿ ಅರುಂಧತಿಯನ್ನು ಕೊಡಿರುವ ವಷಿಷ್ಠನನ್ನು ಹೋಗಿ ಕೊಂದವನ ದುರ್ಗತಿಗೆ ತಾನು ಇಳಿವೆನು]; ಎನುತ ಆಗಸದೊಳು ಅರ್ಕನಂತೆ ಐತಪ್ಪ ಸರಳಂ ಸುಧನ್ವ ನು ಇಕ್ಕಿಡಿಗೈದನು=[ ಎನ್ನುತ್ತಾ ಆಗಸದಲ್ಲಿ ಸೂರ್ಯನಂತೆ ಬರುತ್ತಿರುವ ಬಾಣವನ್ನು ಸುಧನ್ವ ನು ಎರಡು ತುಂಡು ಮಾಡಿದನು];
  • ತಾತ್ಪರ್ಯ: ಆಗ ಅತಿ ರೋಷದಿಂದ ಕಣ್ಣಿನ ಆಲಿಗಳು ಕೆಂಪಡರಲು, ಸುಧನ್ವನು ಹೇಳಿದನು, ಈಗ ಅರ್ಜುನನ ಬಾಣಕ್ಕೆ ನಿನ್ನ ಪುಣ್ಯವನ್ನು ಕೊಟ್ಟೆಯಲಾ ದೇವ ನೋಡು, ಬರುವ ದಿವ್ಯಾಸ್ತ್ರವನ್ನು ಕತ್ತರಿಸದೆ ಇದ್ದರೆ ಭೋಗದಲ್ಲಿ ಅರುಂಧತಿಯನ್ನು ಕೊಡಿರುವ ವಷಿಷ್ಠನನ್ನು ಹೋಗಿ ಕೊಂದವನ ದುರ್ಗತಿಗೆ ತಾನು ಇಳಿವೆನು ಎನ್ನುತ್ತಾ ಆಗಸದಲ್ಲಿ ಸೂರ್ಯನಂತೆ ಬರುತ್ತಿರುವ ಬಾಣವನ್ನು ಸುಧನ್ವನು ಎರಡು ತುಂಡು ಮಾಡಿದನು.
  • (ಪದ್ಯ-೪೦)

ಪದ್ಯ :-:೪೧:

[ಸಂಪಾದಿಸಿ]

ಕೊಡೆ ಮೊಳಗಿದುವು ನಿಸ್ಸಾಳಂಗಳೈದೆ ಕೊಂಡಾಡಿದರ್ ಸುರರಭ್ರದೊಳಿ ಬಳಿಕ ಕೃಷ್ಣ ನಂ | ನೋಡಿ ನುಡಿದಂ ಪಾರ್ಥನೆರಡಂಬು ಮುರಿದುದಿನ್ನೊಂದರೊಳಿವನ ಶಿರವನು ||
ರೂಢಿಯಿಂದರಿಯದೊಡೆ ಹರಿಹರ ವಿಭೇದಮಂ | ಮಾಡಿ ನಿಂದಿಸಿದವನ ಗತಿಯಾಗಲೆನಗೆನುತ | ಪೂಡಿದಂ ಮತ್ತೆ ಕೋದಂಡದೊಳ್ ಬಾಣಮಂ ನೃಪತಿ ಕೇಳದ್ಭುತವನು ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೊಡೆ ಮೊಳಗಿದುವು ನಿಸ್ಸಾಳಂಗಳು ಐದೆ ಕೊಂಡಾಡಿದರ್ ಸುರರು ಅಭ್ರದೊಳ್ ಬಳಿಕ ಕೃಷ್ಣ ನಂನೋಡಿ ನುಡಿದಂ ಪಾರ್ಥನು=[ತಕ್ಷಣ ವಾದ್ಯಗಳು ಮೊಳಗಿದುವು; ಆಕಾಶದಲ್ಲಿ ದೇವತೆಗಳು ಬಂದು ಕೊಂಡಾಡಿದರು; ಬಳಿಕ ಕೃಷ್ಣನನ್ನು ನೋಡಿ ಪಾರ್ಥನು ನುಡಿದನು]; ಎರಡಂಬು ಮುರಿದುದು ಇನ್ನೊಂದರೊಳು ಇವನ ಶಿರವನು ರೂಢಿಯಿಂದ ಅರಿಯದೊಡೆ ಹರಿಹರ ವಿಭೇದಮಂ ಮಾಡಿ ನಿಂದಿಸಿದವನ ಗತಿಯಾಗಲಿ ಎನಗೆ ಎನುತ=[ಎರಡು ಬಾಣಗಳು ತುಂಡಾದವು,ಇನ್ನೊಂದರಲ್ಲಿ ಇವನ ಶಿರವನ್ನು ಹೇಳಿದ ಮಾತಿನಂತೆ ಕತ್ತರಸದಿದ್ದರೆ ಹರಿಹರಲ್ಲಿ ಭೇದವನ್ನು ಮಾಡಿ ನಿಂದಿಸಿದವನ ಗತಿಯಾಗಲಿ ನನಗೆ ಎನ್ನುತ್ತಾ] ಪೂಡಿದಂ ಮತ್ತೆ ಕೋದಂಡದೊಳ್ ಬಾಣಮಂ ನೃಪತಿ ಕೇಳು ಅದ್ಭತವನು=[ಪೂಡಿದಂ ಮತ್ತೆ ಬಿಲ್ಲಿನಲ್ಲಿ ಬಾಣವನ್ನು ಹೂಡಿದನು, ರಾಜನೇ, ಕೇಳು ಅದ್ಭುತವನು ].
  • ತಾತ್ಪರ್ಯ:ತಕ್ಷಣ ವಾದ್ಯಗಳು ಮೊಳಗಿದುವು; ಆಕಾಶದಲ್ಲಿ ದೇವತೆಗಳು ಬಂದು ಕೊಂಡಾಡಿದರು; ಬಳಿಕ ಕೃಷ್ಣನನ್ನು ನೋಡಿ ಪಾರ್ಥನು ನುಡಿದನು. ಎರಡು ಬಾಣಗಳು ತುಂಡಾದವು,ಇನ್ನೊಂದರಲ್ಲಿ ಇವನ ಶಿರವನ್ನು ಹೇಳಿದ ಮಾತಿನಂತೆ, ಆಡಿದಮಾತಿಗೆ ತಪ್ಪಬಾರದೆಂಬ ರೂಢಿಯಂತೆ, ಕತ್ತರಸದಿದ್ದರೆ ಹರಿಹರಲ್ಲಿ ಭೇದವನ್ನು ಮಾಡಿ ನಿಂದಿಸಿದವನ ಗತಿಯಾಗಲಿ ನನಗೆ ಎನ್ನುತ್ತಾ ಮತ್ತೆ ಬಿಲ್ಲಿನಲ್ಲಿ ಬಾಣವನ್ನು ಹೂಡಿದನು, ರಾಜನೇ, ಕೇಳು ಅದ್ಭುತವನು.
  • (ಪದ್ಯ-೪೧)

ಪದ್ಯ :-:೪೨:

[ಸಂಪಾದಿಸಿ]

ಆ ಹೂಡಿದರ್ಜುನನ ಮಾರ್ಗಣದ ಮೊದಲೊಳಾ ವಾಹನಂಗೈದು ಕಮಲಜನಂ ನಿಲಿಸಿ ವೃಷಭ | ವಾಹನನ ಕೋಲ್ದುದಿಗೆ ತಂದಿರಿಸಿ ಸಾಯಕದ ನಡುವೆ ತಾನೇ ವ್ಯಾಪಿಸಿ ||
ಕಾಹುಗಳನುರೆ ಬಲಿದು ರಾಮಾವವಾರದೊಳ್ ದೇಹಮಳ್ಳನಿತುದಿನ ಮಾರ್ಜಿಸಿದ ಪುಣ್ಯಮಂ | ರೂಹುಗಾಣಿಸಿ ಕೊಟ್ಟು ಶಕ್ತಿಯಂ ನೆಲೆಗೊಳಿಸಿ ಮುರಹರಂ ತೋಳ್ವೆಯ್ದನು ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಹೂಡಿದ ಅರ್ಜುನನ ಮಾರ್ಗಣದ ಮೊದಲೊಳು ಆವಾಹನಂ ಗೈದು ಕಮಲಜನಂ ನಿಲಿಸಿ=[ಬಿಲ್ಲಿನಲ್ಲಿ ಹೂಡಿದ ಅರ್ಜುನನ ಆ ಬಾಣದ ಮೊದಲಭಾಗದಲ್ಲಿ ಬ್ರಹ್ಮನನ್ನು ಆವಾಹನಮಾಡಿ ನಿಲ್ಲಿಸಿ, ಕಮಲಜನಂ ನಿಲಿಸಿ]; ವೃಷಭವಾಹನನ ಕೋಲ್ದುದಿಗೆ ತಂದಿರಿಸಿ ಸಾಯಕದ ನಡುವೆ ತಾನೇ ವ್ಯಾಪಿಸಿ ಕಾಹುಗಳನು ಉರೆ ಬಲಿದು=[ಶಿವನನ್ನು ಬಾಣದತುದಿಗೆ ಆವಾಹನೆ ಮಾಡಿ ಇರಿಸಿ, ಬಾಣದ ನಡುವೆ ಕೃಷ್ಣನು ತಾನೇ ವ್ಯಾಪಿಸಿ, ರಕ್ಷಾಬಂಧಗಳನ್ನು ಅದರಲ್ಲಿ ಬಂಧಿಸಿ,]; ರಾಮಾವವಾರದೊಳ್ ದೇಹಮಳ್ಳನಿತುದಿನ ಮಾರ್ಜಿಸಿದ ಪುಣ್ಯಮಂ ರೂಹುಗಾಣಿಸಿ ಕೊಟ್ಟು ಶಕ್ತಿಯಂ ನೆಲೆಗೊಳಿಸಿ ಮುರಹರಂ ತೋಳ್ವೆಯ್ದನು=[ರಾಮಾವವಾರದಲ್ಲಿ ತಾನು ದೇಹಧಾರಿಯಾಗಿ ಆಗ ಗಳಿಸಿದ ಪುಣ್ಯವನ್ನು ಅದರಲ್ಲಿ ತುಂಬಿಕೊಟ್ಟು, ಇನ್ನೂ ಶಕ್ತಿಯನ್ನು ಅದರಲ್ಲಿ ನೆಲೆಗೊಳಿಸಿ, ಕೃಷ್ಣನು, ಬಾಣಬಿಡಲು ಸೂಚಿಸಿ, ತೋಳುತಟ್ಟಿದನು];
  • ತಾತ್ಪರ್ಯ: ಬಿಲ್ಲಿನಲ್ಲಿ ಹೂಡಿದ ಅರ್ಜುನನ ಆ ಬಾಣದ ಮೊದಲಭಾಗದಲ್ಲಿ ಕೃಷ್ಣನು, ಬ್ರಹ್ಮನನ್ನು ಆವಾಹನಮಾಡಿ ನಿಲ್ಲಿಸಿದನು; ಶಿವನನ್ನು ಬಾಣದತುದಿಗೆ ಆವಾಹನೆ ಮಾಡಿ ಇರಿಸಿದನು; ಬಾಣದ ನಡುವೆ ಕೃಷ್ಣನು ತಾನೇ ವ್ಯಾಪಿಸಿ, ರಕ್ಷಾಬಂಧಗಳನ್ನು ಅದರಲ್ಲಿ ಬಂಧಿಸಿದನು; ರಾಮಾವವಾರದಲ್ಲಿ ತಾನು ದೇಹಧಾರಿಯಾಗಿ ಆಗ ಗಳಿಸಿದ ಪುಣ್ಯವನ್ನು ಅದರಲ್ಲಿ ತುಂಬಿಕೊಟ್ಟು, ಇನ್ನೂ ಶಕ್ತಿಯನ್ನು ಅದರಲ್ಲಿ ನೆಲೆಗೊಳಿಸಿ, ಕೃಷ್ಣನು, ಬಾಣಬಿಡಲು ಸೂಚಿಸಿ, ತೋಳುತಟ್ಟಿದನು.
  • (ಪದ್ಯ-೪೨)

ಪದ್ಯ :-:೪೩:

[ಸಂಪಾದಿಸಿ]

ಕೋಟಿಸಿಡಿಲೊಮ್ಮೆ ಗರ್ಜಿಸುವೊಲೂದಿದನಾ ನಿ ಶಾಟದಲ್ಲಣನತುಳಪಾಂಚಜನವನಾ ಕಿ | ರೀಟಿ ಪಿಡಿದಂ ದೇವದತ್ತಮಂ ಸಪ್ತಾಬ್ಧಿರಭಸಮೊಬ್ಬುಳಿಸುವಂತೆ ||
ಮೀಟಾಡಿಸಿತು ಭೂಮಿಯಂ ಮೇರುಶೈಲಮಂ ದೂಟಾಡಿಸಿತು ರಾಶಿ ತಾರಾ ಗ್ರಹಂಗಳಂ | ತಾಟಾಡಿಸಿತು ಹುನುಮನುಬ್ಬರಣೆ ಲಗ್ಗೆವರೆ ಮೊಳಗಿದವು ನಿಜಬಲದೊಳು ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೋಟಿಸಿಡಿಲು ಒಮ್ಮೆ ಗರ್ಜಿಸುವೊಲು ಊದಿದನು ಆ ನಿಶಾಟದಲ್ಲಣನು (ನಿಶಾಟ-ರಾಕ್ಷಸರನ್ನು + ತಲ್ಲಣಗೊಳಿಸಿದವನು) ಅತುಳ ಪಾಂಚಜನವನು ಆ ಕಿರೀಟಿ ಪಿಡಿದಂ ದೇವದತ್ತಮಂ=[ಕೋಟಿಸಿಡಿಲು ಒಮ್ಮೆಯೇ ಗರ್ಜಿಸುವಂತೆ ಆ ಕೃಷ್ಣನು ಅಸಾಧಾರಣವಾದ ಪಾಂಚಜನ್ಯವನ್ನು ಊದಿದನು; ಆ ಅರ್ಜುನನು ಪಿಡಿದಂ ದೇವದತ್ತ ಶಂಖವನ್ನು ಹಿಡಿದು ಊದಿದನು]; ಸಪ್ತಾಬ್ಧಿ ರಭಸಮ್ ಉಬ್ಬುಳಿಸುವಂತೆ ಮೀಟಾಡಿಸಿತು ಭೂಮಿಯಂ ಮೇರುಶೈಲಮಂ ದೂಟಾಡಿಸಿತು ರಾಶಿ ತಾರಾ ಗ್ರಹಂಗಳಂ ತಾಟಾಡಿಸಿತು ಹುನುಮನುಬ್ಬರಣೆ ಲಗ್ಗೆವರೆ ಮೊಳಗಿದವು ನಿಜಬಲದೊಳು=[ಆ ಶಬ್ಧದಿಂದ ಏಳು ಸಮುದ್ರಗಳನ್ನು ಉಬ್ಬುಳಿಸಿದವು, ಆ ಧ್ವನಿಯು ಭೂಮಿಯನ್ನು ಮೀಟಿ ಅಲುಗಾಡಿಸಿತು, ಮೇರುಪರ್ವತವು ಕದಲಿಸಿತು, ರಾಶಿ ತಾರೆಗಳು ಗ್ರಹಗಳ ಓಲಾಡಿಸಿತು, ಹುನುಮನು ಆರ್ಭಟಿಸಿದನು, ಅರ್ಜುನನ ಸೈನ್ಯದಲ್ಲಿ ಧಾಳಿಯ ಕೋಲಾಹಲ ಮೊಳಗಿದವು];
  • ತಾತ್ಪರ್ಯ: ಕೋಟಿಸಿಡಿಲು ಒಮ್ಮೆಯೇ ಗರ್ಜಿಸುವಂತೆ ಆ ಕೃಷ್ಣನು ಅಸಾಧಾರಣವಾದ ಪಾಂಚಜನ್ಯವನ್ನು ಊದಿದನು; ಆ ಅರ್ಜುನನು ಪಿಡಿದಂ ದೇವದತ್ತ ಶಂಖವನ್ನು ಹಿಡಿದು ಊದಿದನು. ಆ ಶಬ್ಧದಿಂದ ಏಳು ಸಮುದ್ರಗಳನ್ನು ಉಬ್ಬುಳಿಸಿದವು, ಆ ಧ್ವನಿಯು ಭೂಮಿಯನ್ನು ಮೀಟಿ ಅಲುಗಾಡಿಸಿತು, ಮೇರುಪರ್ವತವು ಕದಲಿಸಿತು, ರಾಶಿ ತಾರೆಗಳು ಗ್ರಹಗಳ ಓಲಾಡಿಸಿತು, ಹುನುಮನು ಆರ್ಭಟಿಸಿದನು, ಅರ್ಜುನನ ಸೈನ್ಯದಲ್ಲಿ ಧಾಳಿಯ ಕೋಲಾಹಲ ಮೊಳಗಿದವು.
  • (ಪದ್ಯ-೪೩)

ಪದ್ಯ :-:೪೪:

[ಸಂಪಾದಿಸಿ]

ಕಂಡ ನೀತೆರನಂ ಸುಧನ್ವನಿಂತೆಂದನೆಲೆ ಪುಂಡರೀಕಾಕ್ಷ ನಿನ್ನಯ ಪುಣ್ಯಮಂ ಸೂರೆ | ಗೊಂಡವಂ ತಾನೋ ಧನಂಜಯನೊ ಪುಸಿಯದುಸಿರೆನಗೆ ಸಾಕಿನ್ನು ಬರಿದೆ ||
ಕೊಂಡಾಡಬೇಡ ಬಿಡಿಸಂಬನದನೆಡೆಯೊಳಾಂ ಖಂಡಿಸದೊಡೆನ್ನಣುಗನೆಂಬಳೇ ಮಾತೆ ಸತಿ | ಗಂಡನೆಂದೆಣಿಸುವಳೆ ಸುತನೆ ತಾತಂಗೆ ತಾಂ ಕೇಳ್ ಪ್ರತಿಜ್ಞೆಯನೆಂದನು ||44||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಂಡನು ಈ ತೆರನಂ ಸುಧನ್ವನು ಇಂತೆಂದನು ಎಲೆ ಪುಂಡರೀಕಾಕ್ಷ ನಿನ್ನಯ ಪುಣ್ಯಮಂ ಸೂರೆಗೊಂಡವಂ ತಾನೋ ಧನಂಜಯನೊ ಪುಸಿಯದೆ ಉಸಿರು ಎನಗೆ=[ಕೃಷ್ಣನ ಈ ಬಗೆಯ ಶಕ್ತಿತುಂಬಿದದನ್ನು ಸುಧನ್ವ ನೋಡಿದನು; ಆಗ ಸುಧನ್ವನು ಇಂತೆಂದನು ಎಲೆ ಪುಂಡರೀಕಾಕ್ಷ! ನಿನ್ನ ಪುಣ್ಯವನ್ನು ಸೂರೆಗೊಂಡವನು ತಾನೋ ಅಥವಾ ಧನಂಜಯನೊ? ಹುಸಿಯಾಡದೆ ಸತ್ಯವನ್ನು ಹೇಳುನನಗೆ]; ಸಾಕಿನ್ನು ಬರಿದೆ ಕೊಂಡಾಡಬೇಡ ಬಿಡಿಸು ಅಂಬನು ಅದನನು ಎಡೆಯೊಳು ಆಂ ಖಂಡಿಸದೊಡೆ ಎನ್ನ ಅಣುಗನೆಂಬಳೇ ಮಾತೆ, ಸತಿಗಂಡನೆಂದು ಎಣಿಸುವಳೆ ಸುತನೆ ತಾತಂಗೆ ತಾಂ ಕೇಳ್ ಪ್ರತಿಜ್ಞೆಯನು ಎಂದನು=[ಸಾಕು ಇನ್ನು ನನ್ನನ್ನು ಬರಿದೆ ಕೊಂಡಾಡಬೇಡ, ಬಿಡಿಸು ಬಾಣವನ್ನು ಅದನ್ನು ಮಧ್ಯದಲ್ಲಿ ನಾನು ಕತ್ತರಿಸದಿದ್ದರೆ, ನನ್ನನ್ನು ಮಗ ಎನ್ನವಳೇ ತಾಯಿ?, ಪತ್ನಿ ಗಂಡನೆಂದು ಲೆಕ್ಕಿಸುವಳೆ? ಅಪ್ಪನಿಗೆ ತಾನು ಮಗನೆ? ಕೇಳು ಪ್ರತಿಜ್ಞೆಯನ್ನು ಎಂದನು].
  • ತಾತ್ಪರ್ಯ:ಕೃಷ್ಣನ ಈ ಬಗೆಯ ಶಕ್ತಿತುಂಬಿದದನ್ನು ಸುಧನ್ವ ನೋಡಿದನು; ಆಗ ಸುಧನ್ವನು ಇಂತೆಂದನು ಎಲೆ ಪುಂಡರೀಕಾಕ್ಷ! ನಿನ್ನ ಪುಣ್ಯವನ್ನು ಸೂರೆಗೊಂಡವನು ತಾನೋ ಅಥವಾ ಧನಂಜಯನೊ? ಹುಸಿಯಾಡದೆ ಸತ್ಯವನ್ನು ಹೇಳು ನನಗೆ; ಸಾಕು ಇನ್ನು ನನ್ನನ್ನು ಬರಿದೆ ಹೊಗಳಬೇಡ, ಬಿಡಿಸು ಬಾಣವನ್ನು ಅದನ್ನು ಮಧ್ಯದಲ್ಲಿ ನಾನು ಕತ್ತರಿಸದಿದ್ದರೆ, ನನ್ನನ್ನು ಮಗ ಎನ್ನವಳೇ ತಾಯಿ?, ಪತ್ನಿ ಗಂಡನೆಂದು ಲೆಕ್ಕಿಸುವಳೆ? ಅಪ್ಪನಿಗೆ ತಾನು ಮಗನೆ? ಕೇಳು ಪ್ರತಿಜ್ಞೆಯನ್ನು ಎಂದನು].
  • (ಪದ್ಯ-೪೪)

ಪದ್ಯ :-:೪೫:

[ಸಂಪಾದಿಸಿ]

ಭೂಸುರರ್ ಬಂದು ಕಾಶಿಯೂಳೆಸೆವ ಮಣಿಕರ್ಣಿ| ಕಾಸಲಿಲದೊಳ್ ಮಿಂದು ಶಾಸ್ತ್ರವಿದಿಯಿಂದಮುಪ | ವಾಸಮಂ ಮಾಡಿ ಶಿವರಾತ್ರಿಯೋಳ್ ವಿರಚಿಸಿದ ವಿಶ್ವೇಶಪೂಜೆಗಳನು ||
ಹೇಸದೆಡಗಾಲಿಂದೆ ನೂಕಿದನ ದೋಷಮೆನ ಗೀಸಾಯಕ ವನೆಡೆಯೊಳರಿಯದಿರಲಾಗಲೆಂ | ದಾ ಸುಧನ್ವಂ ತನ್ನ ಭುಜಬಲದೊಳಾರ್ದು ನಿಜಧನುವನೊದರಿಸುತಿರ್ದನು ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭೂಸುರರ್ ಬಂದು ಕಾಶಿಯೂಳು ಎಸೆವ ಮಣಿಕರ್ಣಿಕಾ ಸಲಿಲದೊಳ್ ಮಿಂದು ಶಾಸ್ತ್ರವಿದಿಯಿಂದಂ ಉಪವಾಸಮಂ ಮಾಡಿ=[ಬ್ರಾಹ್ಮಣರು ಬಂದು ಕಾಶಿಯಲ್ಲಿ ಶೋಭಿಸುವ ಮಣಿಕರ್ಣಿಕಾ ನದಿಯಲ್ಲಿ ಸ್ನಾನಮಾಡಿ, ಶಾಸ್ತ್ರವಿದಿಯಿಂದ ಉಪವಾಸವನ್ನು ಮಾಡಿ]; ಶಿವರಾತ್ರಿಯೋಳ್ ವಿರಚಿಸಿದ ವಿಶ್ವೇಶಪೂಜೆಗಳನು ಹೇಸದೆ ಎಡಗಾಲಿಂದೆ ನೂಕಿದನ ದೋಷಮ್ ಎನಗೆ ಈ ಸಾಯಕವನು ಎಡೆಯೊಳು ಅರಿಯದಿರಲು ಆಗಲೆಂದ=[ಶಿವರಾತ್ರಿಯಲ್ಲಿ ಮಾಡಿದ ವಿಶ್ವೇಶರನ ಪೂಜೆಗಳನ್ನು ಪಾಪಕ್ಕೆ ಅಂಜದೆ/ಹೇಸದೆ ಎಡಗಾಲಿನಿಂದ ಒದೆದವನ ದೋಷವು ನನಗೆ, ಈಗ ಅರ್ಜುನನು ಬಿಡುವ ಬಾಣವನ್ನು ಮಧ್ಯದಲ್ಲಿ ಕತ್ತರಿಸದಿದ್ದರೆ ಆಗಲಿ ಎಂದ;]; ಆ ಸುಧನ್ವಂ ತನ್ನ ಭುಜಬಲದೊಳು ಆರ್ದು ನಿಜಧನುವನು ಒದರಿಸುತಿತ ಇರ್ದನು=[ನಂತರ ಆ ಸುಧನ್ವನು ಆರ್ಭಟಿಸಿ, ತನ್ನ ಭುಜಬಲದಿಂದ ತನ್ನ ಧನುಸ್ಸನ್ನು ಠೇಂಕಾರಮಾಡುತ್ತಾ ಇದ್ದನು].
  • ತಾತ್ಪರ್ಯ: ಬ್ರಾಹ್ಮಣರು ಬಂದು ಕಾಶಿಯಲ್ಲಿ ಶೋಭಿಸುವ ಮಣಿಕರ್ಣಿಕಾ ನದಿಯಲ್ಲಿ ಸ್ನಾನಮಾಡಿ, ಶಾಸ್ತ್ರವಿದಿಯಿಂದ ಉಪವಾಸವನ್ನು ಮಾಡಿ ಶಿವರಾತ್ರಿಯಲ್ಲಿ ಮಾಡಿದ ವಿಶ್ವೇಶರನ ಪೂಜೆಗಳನ್ನು ಪಾಪಕ್ಕೆ ಅಂಜದೆ/ಹೇಸದೆ ಎಡಗಾಲಿನಿಂದ ಒದೆದವನ ದೋಷವು ನನಗೆ, ಈಗ ಅರ್ಜುನನು ಬಿಡುವ ಬಾಣವನ್ನು ಮಧ್ಯದಲ್ಲಿ ಕತ್ತರಿಸದಿದ್ದರೆ ಆಗಲಿ ಎಂದ; ನಂತರ ಆ ಸುಧನ್ವನು ಆರ್ಭಟಿಸಿ, ತನ್ನ ಭುಜಬಲದಿಂದ ತನ್ನ ಧನುಸ್ಸನ್ನು ಠೇಂಕಾರಮಾಡುತ್ತಾ ಇದ್ದನು].
  • (ಪದ್ಯ-೪೫)

ಪದ್ಯ :-:೪೬:

[ಸಂಪಾದಿಸಿ]

ಅನಿತರೊಳ್ ತ್ರೈಮೂರ್ತಿಗಳ ದಿವ್ಯಶಕ್ತಿಯಿಂ |ವಿನುತ ರಾಮಾವತಾರದ ಪುಣ್ಯಶಕ್ತಿಯಿಂ | ದನುಪಮ ಧನುರ್ವೇದದುರುಮಂತ್ರಶಕ್ತಿಯಿಂ ತೀವಿದ ಮಹಾಶರವನು ||
ತನಗೆ ಭುಜಬಲದೊಳುಂಟಾದ ನಿಜಶಕ್ತಿಯಿಂ| ಕನಲಿ ಕಿವಿವರೆಗೆ ತೆಗೆದಾರ್ದು ಫಲುಗುಣನೆಚ್ಚ | ನೆನಿತು ಸತ್ವಾಥಿಕನೊ ಕಲಿಸುಧನ್ವಂ ಧರೆಯೊಳೇನೆಂಬೆನದ್ಭುತವನು ||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅನಿತರೊಳ್ ತ್ರೈಮೂರ್ತಿಗಳ ದಿವ್ಯಶಕ್ತಿಯಿಂ ವಿನುತ ರಾಮಾವತಾರದ ಪುಣ್ಯಶಕ್ತಿಯಿಂದ ಅನುಪಮ ಧನುರ್ವೇದದ ಉರು ಮಂತ್ರಶಕ್ತಿಯಿಂ ತೀವಿದ ಮಹಾಶರವನು=[ಅಷ್ಟರಲ್ಲಿ ತ್ರಿಮೂರ್ತಿಗಳ ದಿವ್ಯಶಕ್ತಿಯಿಂದ ಶ್ರೇಷ್ಠ ರಾಮಾವತಾರದ ಪುಣ್ಯಶಕ್ತಿಯಿಂದ ಅನುಪಮ ಧನುರ್ವೇದದ ಹೆಚ್ಚಿನ ಮಂತ್ರಶಕ್ತಿಯಿಂದ ತುಂಬಿದ್ದ ಮಹಾಶರವನ್ನು]; ತನಗೆ ಭೂಜಬಲದೊಳು ಉಂಟಾದ ನಿಜಶಕ್ತಿಯಿಂ ಕನಲಿ ಕಿವಿವರೆಗೆ ತೆಗೆದು ಆರ್ದು ಫಲುಗುಣನು ಎಚ್ಚನು=[ಅರ್ಜುನನು ತನಗೆ ಭುಜಬಲದಲ್ಲಿ ಉಂಟಾದ ತನ್ನ ವಿಶೇಷಶಕ್ತಿಯಿಂದ ಸಿಟ್ಟಿನಿಂದ ಕಿವಿವರೆಗೆ ಬಾಣವನ್ನು ಎಳೆದು ಆರ್ಭಟಿಸಿ ಹೊಡೆದನು.]; ಎನಿತು ಸತ್ವಾಥಿಕನೊ ಕಲಿಸುಧನ್ವಂ ಧರೆಯೊಳು ಏನೆಂಬೆನು ಅದ್ಭುತವನು=[ಈ ಭೂಮಿಯಲ್ಲಿ ಎಷ್ಟು ಅಧಿಕ ಸತ್ವವುಳ್ಳವನೋ ವೀರ ಸುಧನ್ವನು ಏನನ್ನು ಹೇಳಲಿ ಅದ್ಭುತವನು, ಎಂದನು ಜೈಮಿನಿ.]
  • ತಾತ್ಪರ್ಯ: ಅಷ್ಟರಲ್ಲಿ ತ್ರಿಮೂರ್ತಿಗಳ ದಿವ್ಯಶಕ್ತಿಯಿಂದ ಶ್ರೇಷ್ಠ ರಾಮಾವತಾರದ ಪುಣ್ಯಶಕ್ತಿಯಿಂದ ಅನುಪಮ ಧನುರ್ವೇದದ ಹೆಚ್ಚಿನ ಮಂತ್ರಶಕ್ತಿಯಿಂದ ತುಂಬಿದ್ದ ಮಹಾಶರವನ್ನು, ಅರ್ಜುನನು ತನಗೆ ಭುಜಬಲದಲ್ಲಿ ಉಂಟಾದ ತನ್ನ ವಿಶೇಷ ಶಕ್ತಿಯಿಂದ ಸಿಟ್ಟಿನಿಂದ ಕಿವಿಯವರೆಗೆ ಬಾಣವನ್ನು ಎಳೆದು ಆರ್ಭಟಿಸಿ ಹೊಡೆದನು. ಈ ಭೂಮಿಯಲ್ಲಿ ಎಷ್ಟು ಅಧಿಕ ಸತ್ವವುಳ್ಳವನೋ ವೀರ ಸುಧನ್ವನು, ಏನನ್ನು ಹೇಳಲಿ ಅದ್ಭುತವನು, ಎಂದನು ಜೈಮಿನಿ.]
  • (ಪದ್ಯ-೪೬)

ಪದ್ಯ :-:೪೭:

[ಸಂಪಾದಿಸಿ]

ಹೆದರಿತುಭಯದ ಸೇನೆ ಕೆದರಿತು ಸುರಸ್ತೋಮ | ಮೊದರಿತಿನಮಂಡಲಂ ಬೆದರಿತು ಜಗತ್ತ್ರಯಂ | ಬಿದರಿತು ಕುಲಾದ್ರಿಚಯ ಮುದುರಿತುಡುಸಂದೋಹಮದಿರಿತಿಳೆ ತತ್ಕ್ಷಣದೊಳು ||
ಕದಡಿತು ಮಹಾರ್ಣವಂ ಕದಲಿದಂ ಕಚ್ಛಪಂ ಪುದುಗಿತಣ್ಧೆಸೆಯಾನೆ ಹುದುಗಿದಂ ಭೋಗಿಪಂ | ಗದಗದಿಸಿತಾ ಸಾಯಕದ ಬಿಸಿಗೆ ಬ್ರಂಹ್ಮಾಂಡಮದನೇನ ಬಣ್ಣಿಸುವೆನು||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹೆದರಿದವು ಎರಡೂ ಸೇನೆಗಳು, ದೇವತೆಗಳು ಗಲಿಬಿಲಿಗೊಂಡರು; ಒದರಿತು ಸೂರ್ಯಮಂಡಲವು; ಬೆದರಿತು ಜಗತ್ತ್ರಯಂ ಬಿದರಿತು ಕುಲಾದ್ರಿಚಯಂ=[ಹೆದರಿತು ಉಭಯದ ಸೇನೆ ಕೆದರಿತು ಸುರಸ್ತೋಮಂ ಸೂರ್ಯಮಂಡಲದಲ್ಲಿ ದೊಡ್ಡ ಶಬ್ಧವಾಯಿತು; ಜಗತ್ತ್ರಯಬು ಹೆದರಿತು; ಕುಲಪರ್ವತಗಳು ನಡುಗಿದವು]; ಉದುರಿತು ಉಡುಸಂದೋಹಂ ಅದಿರಿತಿಉ ಇಳೆ ತತ್ ಕ್ಷಣದೊಳು ಕದಡಿತು ಮಹಾರ್ಣವಂ ಕದಲಿದಂ ಕಚ್ಛಪಂ ಪುದುಗಿತು ಎಣ್ಧೆಸೆಯಾನೆ ಹುದುಗಿದಂ ಭೋಗಿಪಂ(ಆದಿ ಶೇಷ) ಗದಗದಿಸಿತು ಆ ಸಾಯಕದ ಬಿಸಿಗೆ ಬ್ರಂಹ್ಮಾಂಡಮು ಅದನೇನ ಬಣ್ಣಿಸುವೆನು ಬಿದುರು =[ಉದುರಿತು ನಕ್ಷತ್ರಸಮೂಹ; ಭೂಮಿಯು ನಡುಗಿತು; ಆ ಕ್ಷಣದಲ್ಲಿ ಕದಡಿತು ಮಹಾಸಮುದ್ರವು; ಕದಲಿದಬಿಟ್ಟನು ಕೂರ್ಮನು; ಎಂಟು ದಿಕ್ಕಿನ ಆನೆಗಳು ಮುದುರಿಕೊಂಡವು; ಭೂಮಿಯನ್ನು ಹೊತ್ತ ಆದಿ ಶೇಷನು ಕುಗ್ಗಿದ; ಗದಗದಿಸಿತು ಆ ಬಾಣದ ಬಿಸಿಗೆ ಬ್ರಂಹ್ಮಾಂಡ ಗದಗದಿಸಿತು; ಅದನು ಏನು ವಿವರಿಸಲಿ!]
  • ತಾತ್ಪರ್ಯ: ಹೆದರಿತು ಉಭಯದ ಸೇನೆ ಕೆದರಿತು ಸುರಸ್ತೋಮಂ ಸೂರ್ಯಮಂಡಲದಲ್ಲಿ ದೊಡ್ಡ ಶಬ್ಧವಾಯಿತು; ಜಗತ್ತ್ರಯಬು ಹೆದರಿತು; ಕುಲಪರ್ವತಗಳು ನಡುಗಿದವು; ಉದುರಿತು ನಕ್ಷತ್ರಸಮೂಹ; ಭೂಮಿಯು ನಡುಗಿತು; ಆ ಕ್ಷಣದಲ್ಲಿ ಕದಡಿತು ಮಹಾಸಮುದ್ರವು; ಕದಲಿದಬಿಟ್ಟನು ಕೂರ್ಮನು; ಎಂಟು ದಿಕ್ಕಿನ ಆನೆಗಳು ಮುದುರಿಕೊಂಡವು; ಭೂಮಿಯನ್ನು ಹೊತ್ತ ಆದಿ ಶೇಷನು ಕುಗ್ಗಿದ; ಗದಗದಿಸಿತು ಆ ಬಾಣದ ಬಿಸಿಗೆ ಬ್ರಂಹ್ಮಾಂಡ ಗದಗದಿಸಿತು; ಅದನ್ನು ಏನು ವಿವರಿಸಲಿ! ಎಂದನು ಮುನಿ.
  • (ಪದ್ಯ-೪೭)X

ಪದ್ಯ :-:೪೮:

[ಸಂಪಾದಿಸಿ]

ಬೆಚ್ಚಿದನೆ ಬೆದರಿದನೆ ಚಿತ್ತದೊಳ್ ಕಲಿತನದ ಕೆಚ್ಚು ಕೊರಗಿತೆ ಬಹ ಮಹಾಶರವನಾಗಳಾ | ರ್ದೆಚ್ಚಂ ಸುಧನ್ವನಿಕ್ಕಡಿಯಾದುದಂದು ಬಿದ್ದುದು ಹಿಂದಣರ್ಧಮಿಳೆಗೆ ||
ಉಚ್ಚಳಿಸಿ ಬಂದು ಕೊಲ್ದುದಿಯವನ ಕಂಠಮಂ ಕೊಚ್ಚಿ ಹಾಯ್ದತ್ತಳಲ್ದುದು (ತ್ತೆರಳ್ದುದು) ಮೇದಿನಿಯೊಳಾಗ | ಳಚ್ಚಯುತ ಮುರಾರಿ ಕೇಶವ ರಾಮ ಯೆನುತಿರ್ದುದಾ ತಲೆ ಚಿಗಿದು ನಭದೊಳು ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬೆಚ್ಚಿದನೆ ಬೆದರಿದನೆ ಚಿತ್ತದೊಳ್ ಕಲಿತನದ ಕೆಚ್ಚು ಕೊರಗಿತೆ ಬಹ ಮಹಾಶರವನು ಆಗಳು ಆರ್ದು ಎಚ್ಚಂ ಸುಧನ್ವನು =[ ಹೆದರಿದನೆ ಬೆದರಿದನೆ –ಇಲ್ಲ! ಮನಸ್ಸಿನಲ್ಲಿ ಶರ್ಯದ ಕೆಚ್ಚು ಕಡಮೆಯಾಯಿತೆ? ಇಲ್ಲ! ಬರುತ್ತಿರುವ ಮಹಾಶರವನ್ನು ಆರ್ಭಟಿಸಿ ಆಗ ಹೊಡೆದನು ಸುಧನ್ವ]; ಇಕ್ಕಡಿಯಾದುದು ಅಂದು ಬಿದ್ದುದು ಹಿಂದಣ ಅರ್ಧಂ ಇಳೆಗೆ ಉಚ್ಚಳಿಸಿ ಬಂದು ಕೋಲ್ ತುದಿಯು ಅವನ ಕಂಠಮಂ ಕೊಚ್ಚಿ ಹಾಯ್‍ದು ಅತ್ತ ಅಳಲ್ದುದು ಮೇದಿನಿಯೊಳಾಗ = [ಆ ಮಹಾಶರ ಆಗ ಎರಡು ತುಂಡಾಯಿತು ಹಿಂದಣ ಅರ್ಧವು ಭೂಮಿಗೆ ಬಿದ್ದಿತು ; ಬಾಣದ ತುದಿಯು ಮುಂದೆ ನುಗ್ಗಿ ಬಂದು ಅವನ ಕಂಠವನ್ನು ಕತ್ತರಿಸಿ ಅತ್ತ ಹಾದು ಹೋಗಿ ಭೂಮಿಯಲ್ಲಿ ಅಡಗಿತು]; ಅಚ್ಚು ತ ಮುರಾರಿ ಕೇಶವ ರಾಮ ಯೆನುತಿರ್ದುದು ಆ ತಲೆ ಚಿಗಿದು ನಭದೊಳು = [ಆ ತಲೆ ಆಕಾಶಕ್ಕೆ ಚಿಗಿದು ಅಚ್ಯುತ ಮುರಾರಿ ಕೇಶವ ರಾಮ ಎನ್ನುತ್ತಿತ್ತು.]
  • ತಾತ್ಪರ್ಯ: ಹೆದರಿದನೆ ಬೆದರಿದನೆ –ಇಲ್ಲ! ಮನಸ್ಸಿನಲ್ಲಿ ಶರ್ಯದ ಕೆಚ್ಚು ಕಡಮೆಯಾಯಿತೆ? ಇಲ್ಲ! ಬರುತ್ತಿರುವ ಮಹಾಶರವನ್ನು ಆರ್ಭಟಿಸಿ ಆಗ ಹೊಡೆದನು ಸುಧನ್ವ ; ಆ ಮಹಾಶರ ಆಗ ಎರಡು ತುಂಡಾಯಿತು ಹಿಂದಣ ಅರ್ಧವು ಭೂಮಿಗೆ ಬಿದ್ದಿತು ; ಮುಂದಿನ ಭಾಗದ ಅರ್ಧ ಬಾಣದ ತುದಿಯು ಮುಂದೆ ನುಗ್ಗಿ ಬಂದು ಅವನ ಕಂಠವನ್ನು ಕತ್ತರಿಸಿ ಅತ್ತ ಹಾದು ಹೋಗಿ ಭೂಮಿಯಲ್ಲಿ ಅಡಗಿತು; ಆ ತಲೆ ಆಕಾಶಕ್ಕೆ ಚಿಗಿದು ಅಚ್ಯುತ ಮುರಾರಿ ಕೇಶವ ರಾಮ ಎನ್ನುತ್ತಿತ್ತು.
  • (ಪದ್ಯ-೪೮)

ಪದ್ಯ :-:೪೯:

[ಸಂಪಾದಿಸಿ]

ಕಂದು ಕುಂದಿಲ್ಲದ ಸುವೃತ್ತದಿಂದೆಸೆವ ತನ| ಗೊಂದುಬಾರಿಯುಮಿನ್ನು ಪರಪೀಡೆ ಲೇಸಲ್ಲ | ಪೆಂದು ನಿಜವೈರಮಂ ಬಿಟ್ಟು ಕಮಲಂಗಳಂ ಸಂತೈಸೆ ಗಗನದಿಂದೆ ||
ಬಂದಪನೊ ಸಂಪೂರ್ಣ ಕಲೆಗಳಿಂದಾರಾಜಿ| ಪಿಂದುವೆನೆ ಕೃಷ್ಣನ ಪದಾಂಭೋಜ ಯುಗಳಕೈ | ತಂದು ಬಿದ್ದದು ಸುಧನ್ವನ ಶಿರಂ ಹರಿಯ ನಾಮಾವಳೀಯನುಚ್ಚರಿಸುತೆ ||49||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಂದು ಕುಂದಿಲ್ಲದ ಸುವೃತ್ತ ದಿಂದೆಸೆವ ತನಗೆ ಒಂದುಬಾರಿಯುಂ ಇನ್ನು ಪರಪೀಡೆ ಲೇಸಲ್ಲ ಪೆಂದು ನಿಜವೈರಮಂ ಬಿಟ್ಟು =[ ಆ ಸುಧನ್ವನ ತಲೆಯು ಸ್ವಲ್ಪವೂ ಬಾಡದ ಕುಗ್ಗದಿರುವ ದುಂಡಾಗಿರು ಲಕ್ಷಣದಿಂದ ಪ್ರಕಾಶಿಸುವ, ತನಗೆ ಒಂದುಬಾರಿಯೂ ಇನ್ನು ಪರಪೀಡೆ ಯೋಗ್ಯವದುದಲ್ಲವೆಂದು ತನ್ನ ವೈರವನ್ನು ಬಿಟು] ್ಟ ; ಕಮಲಂಗಳಂ ಸಂತೈಸೆ ಗಗನದಿಂದೆ ಬಂದಪನೊ ಸಂಪೂರ್ಣ ಕಲೆಗಳಿಂದಾರಾಜಿಪಿಂದುವೆನೆ= [ಕಮಲಂಗಳನ್ನು ಸಂತೈಸಲು ಆಕಾಶದಿಂದ ಬಂದ ಸಂಪೂರ್ಣ ಕಲೆಗಳಿಂದಾರಾಜಿಸುವ ಚಂದ್ರನೋ ಎನ್ನವಂತೆ ] ; ಕೃಷ್ಣನ ಪದಾಂಭೋಜ ಯುಗಳಕೆ ಐತಂದು ಬಿದ್ದದು ಸುಧನ್ವನ ಶಿರಂ ಹರಿಯ ನಾಮಾವಳೀಯನು ಉಚ್ಚರಿಸುತೆ = [ಕೃಷ್ಣನ ಪಾದಕಮಲಗಳಿಗೆ ಸುಧನ್ವನ ಶಿರವು ಅದು ಹರಿಯ ನಾಮಾವಳೀಯನ್ನು ಉಚ್ಚರಿಸುತ್ತಾ ಬಂದು ಬಿದ್ದಿತು,]
  • ತಾತ್ಪರ್ಯ: ಆ ಸುಧನ್ವನ ತಲೆಯು ಸ್ವಲ್ಪವೂ ಬಾಡದ ಕುಗ್ಗದಿರುವ ದುಂಡಾಗಿರು ಲಕ್ಷಣದಿಂದ ಪ್ರಕಾಶಿಸುವ, ತನಗೆ ಒಂದುಬಾರಿಯೂ ಇನ್ನು ಪರಪೀಡೆ ಯೋಗ್ಯವಾದುದಲ್ಲವೆಂದು ತನ್ನ ವೈರವನ್ನು ಬಿಟ್ಟು, ಕಮಲಗಳನ್ನು ಸಂತೈಸಲು ಆಕಾಶದಿಂದ ಬಂದ ಸಂಪೂರ್ಣ ಕಲೆಗಳಿಂದಾರಾಜಿಸುವ ಚಂದ್ರನೋ ಎನ್ನವಂತೆ, ಕೃಷ್ಣನ ಪಾದಕಮಲಗಳಿಗೆ ಸುಧನ್ವನ ಶಿರವು ಅದು ಹರಿಯ ನಾಮಾವಳೀಯನ್ನು ಉಚ್ಚರಿಸುತ್ತಾ ಬಂದು ಬಿದ್ದಿತು,]
  • (ಪದ್ಯ-೪೯)

ಪದ್ಯ :-:೫೦:

[ಸಂಪಾದಿಸಿ]

ತಪ್ಪಿದನಲಾ ಚಕ್ರಿ ಹಾಯೆಂದು ಸುರರುಲಿಯ| ಲುಪ್ಪರಿಸಿ ತಲೆ ಚಿಗಿಯಲವನಟ್ಟೆ ತೋಳ್ಗಳಂ | ಚಪ್ಪರಿಸಿಕೊಂಡೆದ್ದು ಬಂದು ರಣರಂಗದೊಳ್ ತಿರುತಿರುಗಿ ಚಾರಿವರಿದು ||
ಅಪ್ಪಳಿಸಿ ಹೊಯ್ದೆಳೆದು ಸದೆದಿಟ್ಟೊರಸಿ ಮೆಟ್ಟಿ| ಸೊಪ್ಪಿಸಿ ಪೊರಳ್ದೆದು ತೆವರಿ ಪರಿದರೆಯಟ್ಟಿ |ಚಿಪ್ಪು ಚೀರಾಗಿಸಿತು ಸಕಲ ಪರಿವಾರಮಂ ಮುರಹರಂ ಬೆರಗಾಗಲು ||50||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಪ್ಪಿದನಲಾ ಚಕ್ರಿ ಹಾ ಎಂದು ಸುರರು ಉಲಿಯಲು=[ಭಕ್ತರನ್ನು ಕಾಪಾಡುವೆನೆಂ ಭರವಸೆಗೆ ತಪ್ಪಿದನಲ್ಲಾ ಕೃಷ್ಣನು! ಹಾ! ಎಂದು ದೇವತೆಗಳು ಹೇಳಲು,]; ಉಪ್ಪರಿಸಿ (ಉಪ್ಪರ=ಮೇಲೆ) ತಲೆ ಚಿಗಿಯಲು ಅವನ ಅಟ್ಟೆ ತೋಳ್ಗಳಂ ಚಪ್ಪರಿಸಿಕೊಂಡೆದ್ದು ಬಂದು ರಣರಂಗದೊಳ್ ತಿರುತಿರುಗಿ ಚಾರಿವರಿದು ಅಪ್ಪಳಿಸಿ ಹೋಯ್ದುಎಳೆದು ಸದೆದು= [ಇತ್ತ, ಸುಧನ್ವನ ತಲೆ ಮೇಲಕ್ಕೆ ಚಿಗಿಯಲು ಅವನ ದೇಹವು ತೋಳುಗಳನ್ನು ತಟ್ಟಿಕೊಂಡು ಎದ್ದು ಬಂದು ರಣರಂಗದಲ್ಲಿ ತಿರುಗಾಡುತ್ತಾ ಓಲಾಡುತ್ತಾ ಅಪ್ಪಳಿಸಿ ಹೊಡೆದು, ಎಳೆದು ಸಾಯುವಂತೆ ಹೊಡೆದು]; ಇಟ್ಟೊರಸಿ ಮೆಟ್ಟಿ ಸೊಪ್ಪಿಸಿ ಪೊರಳ್ದೆದು ತೆವರಿ ಪರಿದು ಅರೆಯಟ್ಟಿ ಚಿಪ್ಪು ಚೀರಾಗಿಸಿತು ಸಕಲ ಪರಿವಾರಮಂ ಮುರಹರಂ ಬೆರಗಾಗಲು=[ಶತ್ರುಗಳನ್ನು ಇಟ್ಟು ತಿಕ್ಕಿ, ಮೆಟ್ಟಿ, ನಿಸ್ಸಾರಮಾಡಿ, ಹೊರಳಿ, ಚರ್ಮಸುಲಿದು, ಹರಿದು ಬೆನ್ನಟ್ಟಿ, ಚೂರು ಚೂರು ಮಾಡಿತು; ಸಕಲ ಸೈನ್ಯವೂ ಕೃಷ್ಣನೂ ಇದನ್ನು ನೋಡಿ ಬೆರಗಾದರು.]
  • ತಾತ್ಪರ್ಯ:ಭಕ್ತರನ್ನು ಕಾಪಾಡುವೆನೆಂ ಭರವಸೆಗೆ ತಪ್ಪಿದನಲ್ಲಾ ಕೃಷ್ಣನು! ಹಾ! ಎಂದು ದೇವತೆಗಳು ಹೇಳಲು, ಇತ್ತ, ಸುಧನ್ವನ ತಲೆ ಮೇಲಕ್ಕೆ ಚಿಗಿಯಲು ಅವನ ದೇಹವು ತೋಳುಗಳನ್ನು ತಟ್ಟಿಕೊಂಡು ಎದ್ದು ಬಂದು ರಣರಂಗದಲ್ಲಿ ತಿರುಗಾಡುತ್ತಾ ಓಲಾಡುತ್ತಾ ಅಪ್ಪಳಿಸಿ ಹೊಡೆದು, ಎಳೆದು ಸಾಯುವಂತೆ ಹೊಡೆದು, ಶತ್ರುಗಳನ್ನು ಇಟ್ಟು ತಿಕ್ಕಿ, ಮೆಟ್ಟಿ, ನಿಸ್ಸಾರಮಾಡಿ, ಹೊರಳಿ, ಚರ್ಮಸುಲಿದು, ಹರಿದು ಬೆನ್ನಟ್ಟಿ, ಚೂರು ಚೂರು ಮಾಡಿತು; ಸಕಲ ಸೈನ್ಯವೂ ಕೃಷ್ಣನೂ ಇದನ್ನು ನೋಡಿ ಬೆರಗಾದರು.
  • (ಪದ್ಯ-೫೦)

ಪದ್ಯ :-:೫೧:

[ಸಂಪಾದಿಸಿ]

ಹೊಳೆವ ಕುಂಡಲದ ಕದಪಿನ ಮುರಿದೆಸೆವ ಮೀಸೆ| ಗಳ ನಗೆಮೊಗದ ರದನಪಂಕ್ತಿಗಳ ಬಿಟ್ಟ ಕಂ | ಗಳ ಬಿಗಿದ ಹುಬ್ಬುಗಳ ಪೆರೆನೊಸಲ ತಿಲಕದ ನವಿರ ಹಿಣಿಲ ಕಾಂತಿಯಿಂದೆ ||
ಕಳಿಕಳಿಪ ತನಿವೀರರಸದುರುಳಿಯಂತೆ ತೊಳ ತೊಳಗುವ ಸುಧನ್ಟನ ಶಿರವನೆರಡು ಕೈಗಳಿಂ | ನಳಿನದಳಲೋಚನಂ ಪಿಡಿದೆತ್ತಿಕೊಂಡು ನೋಡಿದನವನದೇಂ ಸುಕೃತಿಯೊ ||51||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹೊಳೆವ ಕುಂಡಲದ ಕದಪಿನ ಮುರಿದೆಸೆವ ಮೀಸೆಗಳ ನಗೆಮೊಗದ ರದನಪಂಕ್ತಿಗಳ ಬಿಟ್ಟ ಕಂಗಳ ಬಿಗಿದ ಹುಬ್ಬುಗಳ ಪೆರೆನೊಸಲ ತಿಲಕದ ನವಿರ ಹಿಣಿಲ ಕಾಂತಿಯಿಂದೆ=[ಹೊಳೆಯುತ್ತರುವ ಕುಂಡಲದಿಂದ ಕೂಡಿದ, ಕೆನ್ನೆಗಳ ಮೇಲೆ ಶೋಭಿಸುವ ತಿರಪಿದ ಎಳೆ ಮೀಸೆಗಳನ್ನುಳ್ಳು ಮುಖ, ನಗುಮುಖವುಳ್ಳ ಬಿಳಿಯಹಲ್ಲಿನಪಂಕ್ತಿಗಳಿರುವ, ಬಿಟ್ಟ ಕಣ್ಣುಗಳು, ಬಿಗಿದ ಹುಬ್ಬುಗಳು, ಅಗಲವಾದ ಹಣೆ, ಅದರಲ್ಲಿ ತಿಲಕವಿರುವ, ಹಣೆಯಲ್ಲಿ ಎರಡುಕಡೆ ಸಣ್ಣ ಉಬ್ಬುಗಳ ಶೋಭೆಯಿಂದ]; ಕಳಿಕಳಿಪ ತನಿವೀರರಸದ ಉರುಳಿಯಂತೆ ತೊಳ ತೊಳಗುವ ಸುಧನ್ಟನ ಶಿರವನು ಎರಡು ಕೈಗಳಿಂ ನಳಿನದಳಲೋಚನಂ ಪಿಡಿದೆತ್ತಿಕೊಂಡು ನೋಡಿದನು ಅವನು ಅದೇಂ ಸುಕೃತಿಯೊ=[ಥಳಥಳಿಸುವ ಪೂರ್ಣ ವೀರರಸದ ಚೆಂಡಿನಂತೆ ಪ್ರಕಾಶಿಸುವ ಸುಧನ್ಟನ ಶಿರವನ್ನು /ತಲೆಯನ್ನು ಎರಡೂ ಕೈಗಳಿಂದ ಕೃಷ್ನನು ಹಿಡಿದು ಎತ್ತಿಕೊಂಡು ನೋಡಿದನು. ಸುಧನ್ವನು ಅದೆಷ್ಟು ಪುಣ್ಯಶಾಲಿಯೋ!].
  • ತಾತ್ಪರ್ಯ:ಹೊಳೆಯುತ್ತರುವ ಕುಂಡಲದಿಂದ ಕೂಡಿದ, ಕೆನ್ನೆಗಳ ಮೇಲೆ ಶೋಭಿಸುವ ತಿರಪಿದ ಎಳೆ ಮೀಸೆಗಳನ್ನುಳ್ಳು ಮುಖ, ನಗುಮುಖವುಳ್ಳ ಬಿಳಿಯಹಲ್ಲಿನಪಂಕ್ತಿಗಳಿರುವ, ಬಿಟ್ಟ ಕಣ್ಣುಗಳು, ಬಿಗಿದ ಹುಬ್ಬುಗಳು, ಅಗಲವಾದ ಹಣೆ, ಅದರಲ್ಲಿ ತಿಲಕವಿರುವ, ಹಣೆಯಲ್ಲಿ ಎರಡುಕಡೆ ಸಣ್ಣ ಉಬ್ಬುಗಳ ಶೋಭೆಯಿಂದ ಥಳಥಳಿಸುವ ಪೂರ್ಣ ವೀರರಸದ ಚೆಂಡಿನಂತೆ ಪ್ರಕಾಶಿಸುವ ಸುಧನ್ಟನ ಶಿರವನ್ನು /ತಲೆಯನ್ನು ಎರಡೂ ಕೈಗಳಿಂದ ಕೃಷ್ನನು ಹಿಡಿದು ಎತ್ತಿಕೊಂಡು ನೋಡಿದನು. ಸುಧನ್ವನು ಅದೆಷ್ಟು ಪುಣ್ಯಶಾಲಿಯೋ!
  • (ಪದ್ಯ-೫೧)

ಪದ್ಯ :-:೫೨:

[ಸಂಪಾದಿಸಿ]

ಕೈದಳದೊಳೆಸೆವ ತಲೆಯಂ ನಾಸಿಕಾಗ್ರದೆಡೆ| ಗೊಯ್ದು ಮುರಮಥನನಾಘ್ರಾಣಿಸಿದನಾತನೇ | ಗೈದನೆಂಬುದನಚ್ಯುತನೆ ಬಲ್ಲನಾಗಲಾ ಮೊಗದಿಂದೆ ತನ್ನ ಮೊಗೆಕೆ ||
ಐದಿತವನಾತ್ಮವತಿತೇಜದಿಂ ಬಳಿಕಮರ |ರೈದೆ ಬಣ್ಣಿಸಿದರಾ ಶಿರವನಸುರಾಂತಕಂ | ಮೈದುನಂಗುರೆ ತೋರಿ ಹಂಸಧ್ವಜನ ಮುಂದಕಿಡಲಟ್ಟೆ ಬಿದ್ದದಿಳೆಗೆ ||52||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೈದಳದೊಳು (ಕೈ ತಳದೊಳು) ಎಸೆವ ತಲೆಯಂ ನಾಸಿಕಾಗ್ರದ ಎಡೆಗೆ ಒಯ್ದು ಮುರಮಥನನು ಆಘ್ರಾಣಿಸಿದನು=[ಕೃಷ್ನನು ತನ್ನ ಕೈ ತಳದಲ್ಲಿ ಶೋಭಿಸುವ ತಲೆಯನ್ನು ಮೂಗಿನ ಹತ್ತಿರ ತಂದು ಮೂಸಿದನು]; ಆತನು ಏಗೈದನೆಂಬುದನು ಅಚ್ಯುತನೆ ಬಲ್ಲನು ಆಗಲು ಆ ಮೊಗದಿಂದೆ ತನ್ನ ಮೊಗೆಕೆ ಐದಿತವನಾತ್ಮವು ಅತಿತೇಜದಿಂ=[ ಆತನು ಏನು ಮಾಡಿದನು ಎಂಬುದು ಆ ಅಚ್ಯುತನೆ ಬಲ್ಲನು. ಆಗ ಆ ಮುಖದಿಂದ ತನ್ನ ಮುಖಕ್ಕೆ ಅವನ ಆತ್ಮವು ತೇಜಸ್ಸಿನ ರೂಪದಿಂದ ಹೊಯಿತು.]; ಬಳಿಕ ಅಮರರು ಐದೆ ಬಣ್ಣಿಸಿದರು ಆ ಶಿರವನು ಅಸುರಾಂತಕಂ ಮೈದುನಂಗೆ ಉರೆ ತೋರಿ ಹಂಸಧ್ವಜನ ಮುಂದಕೆ ಇಡಲು ಅಟ್ಟೆ ಬಿದ್ದದು ಇಳೆಗೆ=[ಬಳಿಕ ದೇವತೆಗಳು ಆಕಾಶದಲ್ಲಿ ಬಂದು ಹೊಗಳಿದರು. ಆ ಶಿರವನ್ನು ಕೃಷ್ಣನು ಅರ್ಜುನನಿಗೆ ತೋರಿಸಿ, ಹಂಸಧ್ವಜನ ಮುಂದಕ್ಕೆ ಇಟ್ಟನು. ಆಗ ಸುಧನ್ವನ ದೇಹ ಭೂಮಿಗೆ ಬಿದ್ದಿತು.]
  • ತಾತ್ಪರ್ಯ: ಕೃಷ್ನನು ತನ್ನ ಕೈ ತಳದಲ್ಲಿ ಶೋಭಿಸುವ ತಲೆಯನ್ನು ಮೂಗಿನ ಹತ್ತಿರ ತಂದು ಮೂಸಿದನು; ಆತನು ಏನು ಮಾಡಿದನು ಎಂಬುದು ಆ ಅಚ್ಯುತನೆ ಬಲ್ಲನು. ಆಗ ಆ ಮುಖದಿಂದ ತನ್ನ ಮುಖಕ್ಕೆ ಅವನ ಆತ್ಮವು ತೇಜಸ್ಸಿನ ರೂಪದಿಂದ ಹೊಯಿತು. ಬಳಿಕ ದೇವತೆಗಳು ಆಕಾಶದಲ್ಲಿ ಬಂದು ಹೊಗಳಿದರು. ಆ ಶಿರವನ್ನು ಕೃಷ್ಣನು ಅರ್ಜುನನಿಗೆ ತೋರಿಸಿ, ಹಂಸಧ್ವಜನ ಮುಂದಕ್ಕೆ ಇಟ್ಟನು. ಆಗ ಸುಧನ್ವನ ದೇಹ ಭೂಮಿಗೆ ಬಿದ್ದಿತು.]
  • (ಪದ್ಯ-೫೨)

ಪದ್ಯ :-:೫೩:

[ಸಂಪಾದಿಸಿ]

ಭೂಪಾಲ ಕೇಳ್ ನೋಡುತಿರ್ದಂ ಸುಧನ್ವನಾ| ಟೋಪಮಂ ತಲೆ ಪಾರ್ಥನಸ್ತ್ರದಿಂ ಪರಿಯೆ ಸಂ | ತಾಪದಿಂ ಮರುಗುತಿಳೆಯೊಳ್ ಪೊರಳ್ವಿನಮಾಶಿರಂ ತನ್ನ ಬಳಿಗೆ ಬರಲು||
ಹಾ ಪುತ್ರಯೆನುತೆತ್ತಿಕೊಂಡು ಮುಂಡಾಡಿ ಪಣೆ ಗಾಪಣೆಯನೊಂದಿಸಿ ಪೊಸೆದು ಚೀರ್ದು ಬಹಳ ಪ್ರ | ಲಾಪದಿಂದಳಲ್ದಂ ಮರಾಳಧ್ವಜಂ ಪೊರೆಯ ಕಲ್ಮರಂ ಕರುಗುವಂತೆ ||53||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭೂಪಾಲ ಕೇಳ್ ನೋಡುತಿರ್ದಂ ಸುಧನ್ವನ ಆಟೋಪಮಂ=[ ರಾಜನೇ ಕೇಳು, ಹಂಸಧ್ವಜನು ಸುಧನ್ವನ ಪರಾಕ್ರಮವನ್ನು ನೋಡುತ್ತಿದ್ದನು.]; ತಲೆ ಪಾರ್ಥನ ಅಸ್ತ್ರದಿಂ ಪರಿಯೆ ಸಂತಾಪದಿಂ ಮರುಗುತ ಇಳೆಯೊಳ್ ಪೊರಳ್ವಿನಂ = [ಮಗನ ತಲೆ ಪಾರ್ಥನ ಅಸ್ತ್ರದಿಂದ ಕತ್ತರಿಸಲು, ದುಃಖದಿಂದ ನಲದಮೇಲೆ ಹೊರಳುತ್ತಿರಲು,]; ಆ ಶಿರಂ ತನ್ನ ಬಳಿಗೆ ಬರಲು ಹಾ ಪುತ್ರ ಎನುತ ಎತ್ತಿಕೊಂಡು ಮುಂಡಾಡಿ ಪಣೆಗೆ ಆಪಣೆಯನೊಂದಿಸಿ ಪೊಸೆದು ಚೀರ್ದು ಬಹಳ ಪ್ರಲಾಪದಿಂದ ಅಳಲ್ದಂ ಮರಾಳಧ್ವಜಂ ಪೊರೆಯ ಕಲ್ಮರಂ ಕರುಗುವಂತೆ = [ಆ ತಲೆಯು ತನ್ನ ಬಳಿಗೆ ಬರಲು ಹಾ ಪುತ್ರ ಎನ್ನುತ್ತಾ ಅದನ್ನು ಎತ್ತಿಕೊಂಡು ಮುದ್ದಾಡಿ, ತನ್ನು ಹಣೆಗೆ É ಆ ಹಣೆಯನ್ನು ಹೊಂದಿಸಿ, ತಿಕ್ಕಿ ಚೀರಿ, ಬಹಳ ಹೊಗಳುತ್ತಾ ಅಕ್ಕಪಕ್ಕದ ಕಲ್ಲು ಮರ ಕರುಗುವಂತೆ ಅತ್ತನು].
  • ತಾತ್ಪರ್ಯ: ತಾತ್ಪರ್ಯ : ರಾಜನೇ ಕೇಳು, ಹಂಸಧ್ವಜನು ಸುಧನ್ವನ ಪರಾಕ್ರಮವನ್ನು ನೋಡುತ್ತಿದ್ದನು. ಮಗನ ತಲೆ ಪಾರ್ಥನ ಅಸ್ತ್ರದಿಂದ ಕತ್ತರಿಸಲು, ದುಃಖದಿಂದ ನಲದಮೇಲೆ ಹೊರಳುತ್ತಿರಲು, ಆ ತಲೆಯು ತನ್ನ ಬಳಿಗೆ ಬರಲು, ಹಾ ಪುತ್ರ ಎನ್ನುತ್ತಾ ಅದನ್ನು ಎತ್ತಿಕೊಂಡು ಮುದ್ದಾಡಿ, ತನ್ನು ಹಣೆಗೆ É ಆ ಹಣೆಯನ್ನು ಹೊಂದಿಸಿ, ತಿಕ್ಕಿ ಚೀರಿ, ಬಹಳ ಹೊಗಳುತ್ತಾ ಅಕ್ಕಪಕ್ಕದ ಕಲ್ಲು ಮರ ಕರುಗುವಂತೆ ಅತ್ತನು.
  • (ಪದ್ಯ-೫೩)

ಪದ್ಯ :-:೫೪:

[ಸಂಪಾದಿಸಿ]

ಬೀಳ್ಟೆನೋ ಶೈಲಾಗ್ರದಿಂದೆ ಕರ್ಮಡುವಿನೊಳ| ಗಾಳ್ವೆ ನೋ ನಿನ್ನ ನಿಟ್ಟೆಪ ತನ್ನ ಕಂಗಳಂ | ಕೀಳ್ಟನೊ ಪರಸಿ ಪಡೆದೊಡಲನುರೆ ಸೀಳ್ಟೆನೋ ನಿನ್ನ ನುಡಿಗಳನೆಂದಿಗೆ ||
ಕೇಳ್ಟನೋ ಜನ್ಮ ಜನ್ಮಾಂತರದೊಳಾದೊಡಂ| ಪೇಳ್ಟೆನೋ ನಿನಗೆ ಬೆಸನಂ ಮಗನೆ ಶೋಕಮಂ | ತಾಳ್ಟೆನೋ ತಾನೆನ್ನೊಳುಸಿರಲಾಗದೆ ಮೌನಮೇಕಕಟ ನಿನಗೆಂದನು ||54||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬೀಳ್ಟೆನೋ ಶೈಲಾಗ್ರದಿಂದೆ, ಕರ್ಮಡುವಿನೊಳಗೆ ಆಳ್ವೆ ನೋ, ನಿನ್ನ ನಿಟ್ಟೆಪ ತನ್ನ ಕಂಗಳಂ ಕೀಳ್ಟನೊ, ಪರಸಿ ಪಡೆದೊಡಲನು ಉರೆ ಸೀಳ್ಟೆನೋ= [ಬೆಟ್ಟದ ಮೇಲಿನಿಂದ ಬೀಳಲೋ! ಆಳವಾದ ಕಪ್ಪು ಮಡುವಿನಲ್ಲಿ ಮುಳುಗಲೊ!, ನಿನ್ನನ್ನು ನೋಡುತ್ತಿರುವ ನನ್ನ ಕಣ್ಣನ್ನು ಕೀಳಲೊ! ಹರಕೆಮಾಡಿ ಪಡೆದ ಆ ತಾಯಿಯ ಹೊಟ್ಟೆಯನ್ನು ಸೀಳಲೋ! ] ; ನಿನ್ನ ನುಡಿಗಳನು ಎಂದಿಗೆ ಕೇಳ್ಟನೋ, ಜನ್ಮ ಜನ್ಮಾಂತರದೊಳು ಆದೊಡಂ|ಪೇಳ್ಟೆನೋ, ನಿನಗೆ ಬೆಸನಂ ಮಗನೆ ಶೋಕಮಂ ತಾಳ್ಟೆನೋ ತಾನೆನ್ನೊಳುಸಿರಲಾಗದೆ ಮೌನಮೇಕಕಟ ನಿನಗೆಂದನು = [ನಿನ್ನ ಮಾತುಗಳನ್ನು ಯಾವಾಗ ಕೇಳುವೆನೊ! ಜನ್ಮ ಜನ್ಮಾಂತರದಲ್ಲಿಯಾದರೂ ನಿನಗೆ ಆಜ್ಞೆಯನ್ನು ಮಾಡುವೆನೊ! ಮಗನೆ ಶೋಕವನ್ನು ಹೇಗೆ ತಾಳಿಕೊಳ್ಳಲಿ; ಸುಧನ್ವನು ತಾನು ಉತ್ತರ ಕೊಡದೆ, 'ನಿನಗೆ ಮೌನವೇಕೆ ಅಕಟ!' ಎಂದನು].
  • ತಾತ್ಪರ್ಯ: ಹಂಸಧ್ವಜನು ತಾನು, ಬೆಟ್ಟದ ಮೇಲಿನಿಂದ ಬೀಳಲೋ!, ಆಳವಾದ ಕಪ್ಪು ಮಡುವಿನಲ್ಲಿ ಮುಳುಗಲೊ!, ನಿನ್ನನ್ನು ನೋಡುತ್ತಿರುವ ನನ್ನ ಕಣ್ಣನ್ನು ಕೀಳಲೊ!, ಹರಕೆಮಾಡಿ ಪಡೆದ ಆ ತಾಯಿಯ ಹೊಟ್ಟೆಯನ್ನು ಸೀಳಲೋ! ನಿನ್ನ ಮಾತುಗಳನ್ನು ಯಾವಾಗ ಕೇಳುವೆನೊ! , ಜನ್ಮ ಜನ್ಮಾಂತರದಲ್ಲಿಯಾದರೂ ನಿನಗೆ ಆಜ್ಞೆಯನ್ನು ಮಾಡುವೆನೊ! , ಮಗನೆ ಶೋಕವನ್ನು ಹೇಗೆ ತಾಳಿಕೊಳ್ಳಲಿ; ಸುಧನ್ವನು ತಾನು ಉತ್ತರ ಕೊಡದೆ, ‘ನಿನಗೆ ಮೌನವೇಕೆ ಅಕಟ!’ ಎಂದನು.
  • (ಪದ್ಯ-೫೪)

ಪದ್ಯ :-:೫೫:

[ಸಂಪಾದಿಸಿ]

ಕೊಳುಗುಳಕೆ ನಡೆತಂದೆ ಬಿಲ್ಟಿಡಿಯುತೈತಂದೆ| ಪಲುಗುಣನೊಡನೆ ಹೋರಿ ಜಯಿಸಬೇಡವೇ ಹೋರಿ| ಕಲಿತನದೊಳುಕ್ಕಿ ಕಂದದಾತ ನೀನೇಕೆ ಅಂದವಳಿದೆ ರಣದೊಳಗೆ ಕಂದ ||
ನಿಲಯಕೆಂ ತಾಂ ಪುಗುವೆನುಳಿದು ನಿನ್ನಂ ಮಗುವೆ | ಸಲಹು ಬಾ ದಮ್ಮಯ್ಯ ಮಾತಾಡು ದಮ್ಮಯ್ಯ | ಬಳಲಿಸದಿರೈ ತಮ್ಮನೊಮ್ಮೆ ನೊಡೈ ತಮ್ಮ ಯೆಂದಳಲೊಳವನಾಳ್ದನು ||55||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೊಳುಗುಳಕೆ ನಡೆತಂದೆ ಬಿಲ್ಟಿಡಿಯುತ ಐತಂದೆ ಪಲುಗುಣನೊಡನೆ ಹೋರಿ ಜಯಿಸಬೇಡವೇ ಹೋರಿ ಕಲಿತನದೊಳು ಉಕ್ಕಿ ಕಂದದಾತ ನೀನೇಕೆ ಅಂದವಳಿದೆ ರಣದೊಳಗೆ ಕಂದ = [ಯುದ್ಧಕ್ಕೆ ಬಂದೆ, ಬಿಲ್ಲನ್ನು ಹಿಡಿದು ಬಂದೆ, ಪಲ್ಗುಣನೊಡನೆ ಹೊರಿ/ ಹೋರಾಡಿ ಜಯಿಸಬೇಡವೇ ಹೋರಿ/ವೃಷಭಸಮಾನನೇ! ಶೌರ್ಯದಲ್ಲಿ ಉನ್ನತಿಯವನು - ಕುಗ್ಗದವನು; ನೀನೇಕೆ ಸಪ್ಪೆಯಾದೆ ರಣರಂಗದಲ್ಲಿ ಕಂದ! ] ; ನಿಲಯಕೆಂ ತಾಂ ಪುಗುವೆನುಳಿದು ನಿನ್ನಂ ಮಗುವೆ ಸಲಹು ಬಾ ದಮ್ಮಯ್ಯ ಮಾತಾಡು ದಮ್ಮಯ್ಯ ಬಳಲಿಸದಿರೈ ತಮ್ಮನು ಒಮ್ಮೆ ನೊಡೈ ತಮ್ಮ ಯೆಂದು ಅಳಲೊಳು ಅವನಾಳ್ದನು = [ನಿನ್ನನ್ನು ಬಿಟ್ಟು ನಾನು ಮನೆಗೆ ಹೇಗೆ ಹೋಗಲಿ ಮಗನೆ? ನನ್ನನ್ನು ಕಾಪಾಡ ಬಾ ದಮ್ಮಯ್ಯ, ಮಾತಾಡು ದಮ್ಮಯ್ಯ, ಬಳಲಿಸಬೇಡ, ಸುರಥ ತಮ್ಮನನ್ನು ಒಂದುಬಾರಿ ನೋಡು ತಮ್ಮ, ಎಂದು ದುಃಖದಲ್ಲಿ ಅವನು ಅತ್ತನು.]
  • ತಾತ್ಪರ್ಯ: (ಸುಧನ್ವನೇ ನೀನು) ಯುದ್ಧಕ್ಕೆ ಬಂದೆ, ಬಿಲ್ಲನ್ನು ಹಿಡಿದು ಬಂದೆ, ಪಲ್ಗುಣನೊಡನೆ ಹೊರಿ/ ಹೋರಾಡಿ ಜಯಿಸಬೇಡವೇ ಹೋರಿ/ವೃಷಭಸಮಾನನೇ! ಶೌರ್ಯದಲ್ಲಿ ಉನ್ನತಿಯವನು - ಕುಗ್ಗದವನು; ನೀನೇಕೆ ಸಪ್ಪೆಯಾದೆ ರಣರಂಗದಲ್ಲಿ ಕಂದ! ನಿನ್ನನ್ನು ಬಿಟ್ಟು ನಾನು ಮನೆಗೆ ಹೇಗೆ ಹೋಗಲಿ ಮಗನೆ? ನನ್ನನ್ನು ಕಾಪಾಡ ಬಾ ದಮ್ಮಯ್ಯ, ಮಾತಾಡು ದಮ್ಮಯ್ಯ, ಬಳಲಿಸಬೇಡ, ಸುರಥ ತಮ್ಮನನ್ನು ಒಂದುಬಾರಿ ನೋಡು ತಮ್ಮ, ಎಂದು ದುಃಖದಲ್ಲಿ ಅವನು ಅತ್ತನು.
  • (ಪದ್ಯ-೫೫)

ಪದ್ಯ :-:೫೬:

[ಸಂಪಾದಿಸಿ]

ಮೋಹಮುಳ್ಳೊಡೆ ತಪ್ತ ತೈಲಪೂರಿತ ಘನಕ| ಟಾಹದೊಳ್ ಕೆಡಪಿಸುವನೇ ತಂದೆ ತನಯನಂ | ಬಾಹಿರಂಗದ ಶೋಕವೆಂದು ಜರೆಯದೆ ಲೋಕಮೀಗ ಹಲುಬಲ್ ತನ್ನನು ||
ದ್ರೋಹಮಂ ಮಾಡಿದೆಂ ನಿನಗೆನ್ನ ಮೇಲೆ ಮುಳಿ| ದಾಹ ವದೊಳಳಿದೈ ಸುಧನ್ವ ಕಾಯ್ದಣ್ಣೆ ಯೊಳ್ | ದೇಹಮಂ ಕಾದ ಕೃಷ್ಣಂ ಕಾದಲಹಿತನೇಕಾದನ್ಯೆ ನಿನಗೆಂದನು ||56||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೋಹಮುಳ್ಳೊಡೆ ತಪ್ತ ತೈಲಪೂರಿತ ಘನಕಟಾಹದೊಳ್ ಕೆಡಪಿಸುವನೇ ತಂದೆ ತನಯನಂ=[‘ಮಗನ ಮೇಲೆ ಮೋಹ ಇದ್ದಿದ್ದರೆ ಕುದಿಯುವ ಎಣ್ಣೆ ತುಂಬಿದ ದೊಡ್ದ ಕೊಪ್ಪರಿಗೆಯಲ್ಲಿ ಹಾಕಿಸುವನೇ ತಂದೆ ಮಗನನ್ನು]; ಬಾಹಿರಂಗದ ಶೋಕವೆಂದು ಜರೆಯದೆ ಲೋಕಮ್ ಈಗ ಹಲುಬಲ್ ತನ್ನನು= [ಈಗ ದುಃಖಿಸಲು ತನ್ನನ್ನು ಆಡಂಬರದ- ಕಪಟದ ಶೋಕವೆಂದು ಲೋಕದ ಜನರು -ತೆಗಳರೇ,]; ದ್ರೋಹಮಂ ಮಾಡಿದೆಂ ನಿನಗ ಎನ್ನ ಮೇಲೆ ಮುಳಿದು ಆಹವದೊಳು ಅಳಿದೈ ಸುಧನ್ವ=[ದ್ರೋಹವನ್ನು ಮಾಡಿದೆನು ನಿನಗೆ, ನನ್ನ ಮೇಲೆ ಸಿಟ್ಟಿನಿಂದ ಯುದ್ಧದಲ್ಲಿ ಸತ್ತೆಯಾ, ಸುಧನ್ವ?] ; ಕಾಯ್ದಣ್ಣೆ ಯೊಳ್ ದೇಹಮಂ ಕಾದ ಕೃಷ್ಣಂ ಕಾದಲ್ ಅಹಿತನೇಕಾದನ್ಯೆ ನಿನಗೆ ಎಂದನು=[ ಕಾದಿರುವ ಎಣ್ಣೆಯಲ್ಲಿ ನಿನ್ನ ದೇಹವನ್ನು ಕಾಪಾಡಿದ ಕೃಷ್ಣನು ಯುದ್ಧಮಾಡಿದಾಗ ನಿನಗೆ ಶತ್ರುವಾದನು ಏಕೆ?’ ಎಂದನು].
  • ತಾತ್ಪರ್ಯ: ‘ಮಗನ ಮೇಲೆ ಮೋಹ ಇದ್ದಿದ್ದರೆ ಕುದಿಯುವ ಎಣ್ಣೆ ತುಂಬಿದ ದೊಡ್ದ ಕೊಪ್ಪರಿಗೆಯಲ್ಲಿ ಹಾಕಿಸುವನೇ ತಂದೆ ಮಗನನ್ನು? ಈಗ ದುಃಖಿಸಲು ತನ್ನನ್ನು ಆಡಂಬರದ- ಕಪಟದ ಶೋಕವೆಂದು ಲೋಕದ ಜನರು -ತೆಗಳರೇ; ದ್ರೋಹವನ್ನು ಮಾಡಿದೆನು ನಿನಗೆ, ನನ್ನ ಮೇಲೆ ಸಿಟ್ಟಿನಿಂದ ಯುದ್ಧದಲ್ಲಿ ಸತ್ತೆಯಾ, ಸುಧನ್ವ? ಕಾದಿರುವ ಎಣ್ಣೆಯಲ್ಲಿ ನಿನ್ನ ದೇಹವನ್ನು ಕಾಪಾಡಿದ ಕೃಷ್ಣನು ಯುದ್ಧಮಾಡಿದಾಗ ನಿನಗೆ ಶತ್ರುವಾದನು ಏಕೆ?’, ಎಂದನು.
  • (ಪದ್ಯ-೫೬)

ಪದ್ಯ :-:೫೭:

[ಸಂಪಾದಿಸಿ]

ಅಣ್ಣದೇವಂ ಕದನಮಂ ಜಯಿಸಿ ಬಹನೆಂದು ಬಣ್ಣದ ಸೊಡರ್ಗಳಂ ಕೈಗೈಸುವನುಜೆಯಂ | ಹುಣ್ಣಿಮೆಯ ಶಶಿಯಂದದಾಸ್ಯದೆಳನಗೆಯೊಳೈತಹ ನಿನ್ನ ವಲ್ಲಭೆಯನು ||
ಹಣ್ಣಿದುತ್ಸಾಹಮಂ ಕೇಳ್ದು ತನ್ನೊಡಲೊಳಗೆ ತಣ್ಣಸಂ ತಳ್ತು ಬಹ ನಿನ್ನ ನಿಜಮಾತೆಯಂ | ಕಣ್ಣಾರೆ ಕಾಣ್ಬೆನೆಂತಕಟ ವಿಪರೀತಮಾದೊಡೆ ತನಯ ಹೇಳೆಂದನು ||57||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಣ್ಣದೇವಂ ಕದನಮಂ ಜಯಿಸಿ ಬಹನೆಂದು ಬಣ್ಣದ ಸೊಡರ್ಗಳಂ ಕೈಗೈಸುವ ಅನುಜೆಯಂ=[ಅಣ್ಣದೇವ ಯುದ್ಧವನ್ನು ಜಯಿಸಿ ಬರುವನೆಂದು ಬಣ್ಣದ ಆರತಿಗಳನ್ನು ಕೈಯಲ್ಲಿ ಹಿಡಿದು ತರವ ತಂಗಿಯನ್ನು,(ಹೇಗೆ ನೋಡಲಿ)]; ಹುಣ್ಣಿಮೆಯ ಶಶಿಯಂದದ ಆಸ್ಯದ ಎಳನಗೆಯೊಳು ಐತಹ ನಿನ್ನ ವಲ್ಲಭೆಯನು=[ಹುಣ್ಣಿಮೆಯ ಚಂದ್ರನಂತಿರವ ಮುಖದಲ್ಲಿ ಮುಗಳುನಗೆಯೊಂದಿಗೆ ದಬರುವ ನಿನ್ನ ಪತ್ನಿಯನ್ನು,]; ಹಣ್ಣಿದ ಉತ್ಸಾಹಮಂ ಕೇಳ್ದು ತನ್ನ ಒಡಲೊಳಗೆ ತಣ್ಣಸಂ ತಳ್ತು ಬಹ ನಿನ್ನ ನಿಜಮಾತೆಯಂ ಕಣ್ಣಾರೆ ಕಾಣ್ಬೆನೆಂತು ಅಕಟ ವಿಪರೀತಮ್ ಆದೊಡೆ ತನಯ ಹೇಳೆಂದನು = [ನಿನ್ನ ಯುದ್ಧದ ಅತಿ ಉತ್ಸಾಹದ ಸುದ್ದಿ ಕೇಳಿ, ತನ್ನ ಹೊಟ್ಟೆಯಲ್ಲಿ ತಂಪಾದ ಆನಂದ ಪಡೆದು ಬರುವ ನಿನ್ನ ತಾಯಿಯನ್ನು ಕಣ್ಣಾರೆ ಹೇಗೆ ನೋಡಲಿ, ಅಕಟ! ಅವಳ ಭಾವನೆಗೆ ವಿರುದ್ಧವಾದ ಘಟನೆಯಾಗಿರುವಾಗ, ಮಗನೇ ಹೇಳು ಎಂದನು.].
  • ತಾತ್ಪರ್ಯ:ಅಣ್ಣದೇವನು ಯುದ್ಧವನ್ನು ಜಯಿಸಿ ಬರುವನೆಂದು ಬಣ್ಣದ ಆರತಿಗಳನ್ನು ಕೈಯಲ್ಲಿ ಹಿಡಿದು ತರವ ತಂಗಿಯನ್ನು ಹೇಗೆ ನೋಡಲಿ; ಹುಣ್ಣಿಮೆಯ ಚಂದ್ರನಂತಿರವ ಮುಖದಲ್ಲಿ ಮುಗಳುನಗೆಯೊಂದಿಗೆ ಬರುವ ನಿನ್ನ ಪತ್ನಿಯನ್ನು ಹೇಗೆ ನೋಡಲಿ; ನಿನ್ನ ಯುದ್ಧದ ಅತಿ ಉತ್ಸಾಹದ ಸುದ್ದಿ ಕೇಳಿ, ತನ್ನ ಹೊಟ್ಟೆಯಲ್ಲಿ ತಂಪಾದ ಆನಂದ ಪಡೆದು ಬರುವ ನಿನ್ನ ತಾಯಿಯನ್ನು ಅವಳ ಭಾವನೆಗೆ ವಿರುದ್ಧವಾದ ಘಟನೆಯಾಗಿರುವಾಗ, ಕಣ್ಣಾರೆ ಹೇಗೆ ನೋಡಲಿ, ಅಕಟ! ಮಗನೇ ಹೇಳು ಎಂದನು.
  • (ಪದ್ಯ-೫೭)

ಪದ್ಯ :-:೫೮:

[ಸಂಪಾದಿಸಿ]

ತಾತನಲ್ಲವೆ ನಿನಗೆ ತಾನೆನ್ನೊಳಿಂತಕಟ ಮಾತಾಡದಿಹರೆ ನಿನ್ನಂ ಪಡೆದಳಂ ವೀರ | ಮಾತೆಯೆಂಬರ್ ಕಟ್ಟುನರನ ಹಯವಂ ಕಾದು ನಡೆ ಕೃಷ್ಣಫಲುಗಣರೊಳು ||
ಏತಕೆ ಬರಿದೆ ಸುಮ್ಮನಿಹೆ ಕಂಠಮಾಲೆಯೊಳ್ ಜಾತಿನಾಯಕರತ್ನಮಂ ತೆಗೆದು ಬಿಸುಟಂತೆ | ಧಾತುಗೆಟ್ಟಿದೆ ತಮ್ಮ ಬಲಮೆಂದು ಹಲುಬಿದಂ ಧರೆಯೊಳ್ ಪೊರಳ್ದುಮರುಗಿ ||58||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಾತನಲ್ಲವೆ ನಿನಗೆ ತಾನು ಎನ್ನೊಳು ಇಂತು ಅಕಟ ಮಾತಾಡದೆ ಇಹರೆ ನಿನ್ನಂ ಪಡೆದಳಂ ವೀರ ಮಾತೆಯೆಂಬರ್= [ನಿನಗೆ ತಾನು ತಂದೆಯಲ್ಲವೇ? ನನ್ನಲ್ಲಿ ಹೀಗೆ ಅಕಟ ಮಾತಾಡದೆ ಇರಬಹುದೆ? ನಿನ್ನನ್ನು ಹಡೆದವಳು ವೀರ ಮಾತೆ ಎಂದು ಕರೆಯಲ್ಪಡುವಳು.]; ಕಟ್ಟು ನರನ ಹಯವಂ ಕಾದು ನಡೆ ಕೃಷ್ಣಫಲುಗಣರೊಳು ಏತಕೆ ಬರಿದೆ ಸುಮ್ಮನಿಹೆ=[ಕಟ್ಟು ಅರ್ಜುನನ ಕುದುರೆಯನ್ನು; ನಡೆ ಕೃಷ್ಣ ಫಲ್ಗುಣರೊಡನೆ ಯುದ್ಧಮಾಡು, ಏತಕ್ಕಾಗಿ ಬರಿದೆ ಸುಮ್ಮನಿರುವೆ.]; ಕಂಠಮಾಲೆಯೊಳ್ ಜಾತಿನಾಯಕ ರತ್ನಮಂ ತೆಗೆದು ಬಿಸುಟಂತೆ ಧಾತುಗೆಟ್ಟಿದೆ ತಮ್ಮ ಬಲಮೆಂದು ಹಲುಬಿದಂ ಧರೆಯೊಳ್ ಪೊರಳ್ದು ಮರುಗಿ =[ಕಂಠಮಾಲೆಯಲ್ಲಿ ಉತ್ತಮ ರತ್ನವನ್ನು ತೆಗೆದು ಎಸೆದಹಾಗೆ ಆಗಿದೆ, ನಮ್ಮ ಸೈನ್ಯವು ರತ್ನದಂತಿರುವ ನಾಯಕನಿಲ್ಲದೆ ಶಕ್ತಿಕುಂದಿದೆ.ಭೂಮಿಯಲ್ಲಿ ಹೊರಳಿ ಗೋಳಿಟ್ಟನು.]
  • ತಾತ್ಪರ್ಯ: ನಿನಗೆ ತಾನು ತಂದೆಯಲ್ಲವೇ? ನನ್ನಲ್ಲಿ ಹೀಗೆ ಅಕಟ ಮಾತಾಡದೆ ಇರಬಹುದೆ? ನಿನ್ನನ್ನು ಹಡೆದವಳು ವೀರ ಮಾತೆ ಎಂದು ಕರೆಯಲ್ಪಡುವಳು. ಕಟ್ಟು ಅರ್ಜುನನ ಕುದುರೆಯನ್ನು; ನಡೆ ಕೃಷ್ಣ ಫಲ್ಗುಣರೊಡನೆ ಯುದ್ಧಮಾಡು, ಏತಕ್ಕಾಗಿ ಬರಿದೆ ಸುಮ್ಮನಿರುವೆ. ಕಂಠಮಾಲೆಯಲ್ಲಿ ಉತ್ತಮ ರತ್ನವನ್ನು ತೆಗೆದು ಎಸೆದಹಾಗೆ ಆಗಿದೆ, ನಮ್ಮ ಸೈನ್ಯವು ರತ್ನದಂತಿರುವ ನಾಯಕನಿಲ್ಲದೆ ಶಕ್ತಿಕುಂದಿದೆ.ಭೂಮಿಯಲ್ಲಿ ಹೊರಳಿ ಗೋಳಿಟ್ಟನು.
  • (ಪದ್ಯ-೫೮)

ಪದ್ಯ :-:೫೯:

[ಸಂಪಾದಿಸಿ]

ಲಂಬಿಸಿದನತಿಶೋಕ ಭಾರದಿಂ ಮೊಗಮಿಟ್ಟು| ಚುಂಬಿಸಿದನಡಿಗಡಿಗೆ ನಾನಾಪ್ರಕಾರದಿಂ| ಪಂಬಲಿಸಿ ಸುತನ ಗುಣಶೀಲಂಗಳಂ ನೆನೆದು ಹಳವಳಿಸಿದಂ ಪೆರ್ಚಿದ ||
ಕಂಬನಿಯ ಕಡಲೊಳಗೆ ಡಾವರಿಪ ವಡಬಶಿಖಿ ಯೆಂಬಿನಂ ಕಾಣಿಸುವಳಲ್ಗಿಚ್ಚಿಗವನೊಡಲ | ನಿಂಬುಗೊಟ್ಟಂ ಮರುಗುತಿರ್ದುದು ಸಮಸ್ತ ಪರಿವಾರಮಾತನ ಸುತ್ತಲು ||59|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಲಂಬಿಸಿದನು (ಒಲೆದಾಡು) ಅತಿಶೋಕ ಭಾರದಿಂ ಮೊಗಮಿಟ್ಟು ಚುಂಬಿಸಿದನು ಅಡಿಗಡಿಗೆ ನಾನಾಪ್ರಕಾರದಿಂ ಪಂಬಲಿಸಿ ಸುತನ ಗುಣಶೀಲಂಗಳಂ ನೆನೆದು ಹಳವಳಿಸಿದಂ= [ ಅತಿಯಾದ ಶೋಕಭಾರದಿಂದ ಒಲೆದಾಡಿದನು; ಮಗನ ಮುಖವನ್ನು ತನ್ನ ಮುಖವನ್ನಿಟ್ಟು ಚುಂಬಿಸಿದನು; ಪದೇಪದೇ ನಾನಾ ರೀತಿಯಲ್ಲಿ ಹಂಬಲಿಸಿ, ಮಗನ ಗುಣನೆಡತೆಗಳನ್ನು ನೆನೆದು ಉಮ್ಮಳಿಸಿ ದುಃಖಿಸಿದನು] ಪೆರ್ಚಿದ ಕಂಬನಿಯ ಕಡಲೊಳಗೆ ಡಾವರಿಪ ವಡಬಶಿಖಿ (ಪ್ರಳಯ ಕಾಲದ ಕುದುರೆ ಮುಖದ ಬೆಂಕಿ) ಯೆಂಬಿನಂ ಕಾಣಿಸುವ ಅಳಲ್ ಕಿಚ್ಚಿಗೆ ದುಃಖದ ಅಗ್ನಿಗೆ) ಅವನ ಒಡಲನು ಇಂಬುಗೊಟ್ಟಂ= [ಹೆಚ್ಚಾದಕಣ್ಣೀರಕಡಲಲ್ಲಿ ದಗೆಯಿಂದ ಸುಡುವ ಸಮುದ್ರದಲ್ಲಿ ಏಳುವ ದೊಡ್ಡ ಬೆಂಕಿಯೊ ಎನ್ನುವಂತೆ ಕಾಣಿಸುವ ದುಃಖದ ಅಗ್ನಿಗೆ ಅವನ ದೇಹವನ್ನು ಅರ್ಪಿಸಿದನು.]; ಮರುಗುತಿರ್ದುದು ಸಮಸ್ತ ಪರಿವಾರಮಾತನ ಸುತ್ತಲು=[ ಆಗ ಅವನ ಸುತ್ತಲು ಇದ್ದ ಸಮಸ್ತ ಪರಿವಾರವೂ ಮರುಗುತ್ತಿತ್ತು.]
  • ತಾತ್ಪರ್ಯ: ಅತಿಯಾದ ಶೋಕಭಾರದಿಂದ ನಿಲ್ಲಾರದೆ ಒಲೆದಾಡಿದನು; ಮಗನ ಮುಖವನ್ನು ತನ್ನ ಮುಖವನ್ನಿಟ್ಟು ಚುಂಬಿಸಿದನು; ಪದೇಪದೇ ನಾನಾ ರೀತಿಯಲ್ಲಿ ಹಂಬಲಿಸಿ, ಮಗನ ಗುಣನೆಡತೆಗಳನ್ನು ನೆನೆದು ಉಮ್ಮಳಿಸಿ ದುಃಖಿಸಿದನು. ಹೆಚ್ಚಾದ ಕಣ್ಣೀರ ಕಡಲಲ್ಲಿ, ದಗೆಯಿಂದ ಸುಡುವ ಸಮುದ್ರದಲ್ಲಿ ಏಳುವ ದೊಡ್ಡ ಬೆಂಕಿಯೊ ಎನ್ನುವಹಾಗೆ ಕಾಣಿಸುವ ದುಃಖದ ಅಗ್ನಿಗೆ ಅವನ ದೇಹವನ್ನು ಅರ್ಪಿಸಿದನು. ಆಗ ಅವನ ಸುತ್ತಲು ಇದ್ದ ಸಮಸ್ತ ಪರಿವಾರವೂ ಮರುಗುತ್ತಿತ್ತು.
  • (ಪದ್ಯ-೫೯)

ಪದ್ಯ :-:೬೦:

[ಸಂಪಾದಿಸಿ]

ಕಾಳಗಕೆ ಮುಂಕೊಂಡು ನಡೆವರಾರಿನ್ನು ತಮ ಗೂಳಿಗವನಿತ್ತು ಬೆಸಸುವರುಂಟೆ ನೀನೆ ಕ | ಟ್ಟಾಳೆಂಬರೀಗಳಿಂತಳಿದಪರೆ ದಾತಾರ ವೀರ ಸುಕುಮಾರಧೀರ ||
ಕಾಳಾದುದಕಟ ಚಂಪಕನಗರದರಸುಗಳ ಬಾಳುವೆ ಮಹಾದೇವ ಹಾಯೆಂದೊರಲ್ದು ಪಡೆ | ಗೋಳಿಟ್ಟುದಾನೆ ಕುದುರೆಗಳೊರೆವ ಕಂಬನಿ ಬಳಲ್ಗಿವಿಗಳಿಂ ಜೋಲ್ದುವು ||60||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾಳಗಕೆ ಮುಂಕೊಂಡು ನಡೆವರು ಆರಿನ್ನು ತಮಗೆ ಊಳಿಗವನು ಇತ್ತು ಬೆಸಸುವರುಂಟೆ=[ಯುದ್ಧಕ್ಕೆ ಮಂದೆನುಗ್ಗಿ ನಡೆಯುವವರು ಇನ್ನ ಯಾರು? ತಮಗೆ ಕಾರ್ಯವನ್ನು ಸೂಚಿಸಿ ಆಜ್ಞೆಮಾಡುವವರು ಇದ್ದಾರೆಯೇ?]; ನೀನೆ ಕಟ್ಟಾಳೆಂಬರು ಈಗಳು ಇಂತು ಅಳಿದಪರೆ ದಾತಾರ (ಕೊಡುವವ) ವೀರ ಸುಕುಮಾರ ಧೀರ=[ನೀನೇ ಮಹಾವೀರನೆಂದು ಹೇಳುವರು;ರು ಈಗ ಹೀಗೆ ಸಾಯುವರೆ ಎಲೈ ದಾತಾರ ವೀರ ಸುಕುಮಾರ ಧೀರ?]; ಕಾಳಾದುದು ಅಕಟ ಚಂಪಕನಗರದ ಅರಸುಗಳ ಬಾಳುವೆ ಮಹಾದೇವ ಹಾಯೆಂದು ಒರಲ್ದು ಪಡೆ ಗೋಳಿಟ್ಟುದು ಅನೆ ಕುದುರೆಗಳು ಒರೆವ ಕಂಬನಿ ಬಳಲ್ ಕಿವಿಗಳಿಂ ಜೋಲ್ದುವು=[ಅಕಟ! ಕೆಡುಕಾಯಿತಲ್ಲಾ ಚಂಪಕನಗರದ ರಾಜರ ಬಾಳು, ಮಹಾದೇವ ಹಾ! ಎಂದು ಸೈನ್ಯ ಗೋಲಿಟ್ಟಿತು; ಅನೆ ಕುದುರೆಗಳು ಕಂಬನಿ ಸುರಿಸಿ ಬಳಲಿ ದುಃಖದಿಂದ ಕಿವಿಗಳು ಜೋಲು ಬಿದ್ದವು].
  • ತಾತ್ಪರ್ಯ:
  • (ಪದ್ಯ-೬೦)

ಪದ್ಯ :-:೬೦:

[ಸಂಪಾದಿಸಿ]

ಬಳಿಕ ಆ ಸುಧನ್ವನ ಸಹೋದರಂ ಸುರಥಂ ಬಹಳ ಶೋಕಭಾರಮಂ ತಳೆದಿರ್ದ ಅವಂ ಕೂಡೆ ತಿಳಿದು ಕಡುಗೋಪದಿಂ ಬಿಲ್ಕೊಂಡು ನುಡಿದನೆಲೆ ತಾತ ಕೇಳೀತನನಿಂದು ||
ನಳಿನನಾಭನ ಮುಂದೆ ಭಾಷೆಯಂ ಪೂರೈಸಿ ಕೊಳುಗುಳದೊಳಳಿದನಿದಕಿನ್ನು ದುಃಖಿಸಲೇತ |ಕಳಲದಿರು ಧುರದೊಳೆನ್ನಾಟೋಪಮಂ ನೋಡೆನಲ್ಕರಸನಿಂತೆಂದನು ||61||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಆ ಸುಧನ್ವನ ಸಹೋದರಂ ಸುರಥಂ ಬಹಳ ಶೋಕಭಾರಮಂ ತಳೆದಿರ್ದ ಅವಂ ಕೂಡೆ ತಿಳಿದು= [ಬಳಿಕ ಆ ಸುಧನ್ವನ ಸಹೋದರ ಸುರಥನು ಬಹಳ ದುಃಖವನ್ನು ಹೊಂದಿದ ರಾಜನನ್ನು ನೋಡಿ, ತಿಳಿದು ಅವನ ಸಂಗಡ]; ಕಡುಗೋಪದಿಂ ಬಿಲ್ಕೊಂಡು ನುಡಿದನೆಲೆ ತಾತ ಕೇಳು ಈತನಿಂದು ನಳಿನನಾಭನ ಮುಂದೆ ಭಾಷೆಯಂ ಪೂರೈಸಿ ಕೊಳುಗುಳದೊಳು ಅಳಿದನು=[ ಬಹಳ ಕೋಪದಿಂದ ಬಿಲ್ಲನ್ನು ತೆಗೆದುಕೊಂಡು ನುಡಿದನು ಎಲೆ ತಂದೆಯೇ ಕೇಳು ಸುಧನ್ವನು ಇಂದು ನಳಿನನಾಭನ ಮುಂದೆ ಭಾಷೆಯ ನ್ನು ಪೂರೈಸಿ ಯುದ್ಧದಲ್ಲಿ ಸತ್ತನು]; ಇದಕೆ ಇನ್ನು ದುಃಖಿಸಲು ಏತಕೆ? ಅಳಲದಿರು ಧುರದೊಳು ಎನ್ನಾಟೋಪಮಂ ನೋಡು ಎನಲ್ಕೆ ಅರಸನು ಇಂತೆಂದನು=[ ಇದಕ್ಕೆ ಇನ್ನು ದುಃಖಿಸುವುದು ಏಕೆ? ಅಳಬೇಡ; ಯುದ್ಧದಲ್ಲಿ ನನ್ನ ಶೌರ್ಯವನ್ನು ನೋಡು ಎನ್ನಲು ಅರಸನು ಹೀಗೆ ಹೇಳಿದನು.]
  • ತಾತ್ಪರ್ಯ: ಬಳಿಕ ಆ ಸುಧನ್ವನ ಸಹೋದರ ಸುರಥನು ಬಹಳ ದುಃಖವನ್ನು ಹೊಂದಿದ ರಾಜನನ್ನು ನೋಡಿ, ತಿಳಿದು ಅವನ ಸಂಗಡ, ಬಹಳ ಕೋಪದಿಂದ ಬಿಲ್ಲನ್ನು ತೆಗೆದುಕೊಂಡು ನುಡಿದನು ಎಲೆ ತಂದೆಯೇ ಕೇಳು, ಸುಧನ್ವನು ಇಂದು ನಳಿನನಾಭನ ಮುಂದೆ ಭಾಷೆಯನ್ನು ಪೂರೈಸಿ ಯುದ್ಧದಲ್ಲಿ ಸತ್ತನು. ಇದಕ್ಕೆ ಇನ್ನು ದುಃಖಿಸುವುದು ಏಕೆ? ಅಳಬೇಡ; ಯುದ್ಧದಲ್ಲಿ ನನ್ನ ಶೌರ್ಯವನ್ನು ನೋಡು ಎನ್ನಲು ಅರಸನು ಹೀಗೆ ಹೇಳಿದನು.]
  • (ಪದ್ಯ-೬೦)

ಪದ್ಯ :-:೬೨:

[ಸಂಪಾದಿಸಿ]

ಉಂಟು ಕೃಷ್ಣನ ಮುಂದೆ ಭಾಷೆಯಂ ಪೂರೈಸಿ ಟಿಂಟಣಿಸದೊಡಲಂ ತೊರೆದು ಮುಕ್ತಿ ರಾಜ್ಯಮಂ | ವೆಂಟಳಿಕೊಂಡಂ ಸುಧನ್ವನಿಂತಿದಕಾಗಿ ಧೈತಿಗೆಟ್ಟಳಲ್ದುದಿಲ್ಲ |
ಕಂಠಮಂ ಕತ್ತರಿಸಿಸಲಾ ಶಿರಂ ತನ್ನೆಡೆಗೆ ಬಂಟುಗಡದೈದಿದೊಡೆ ತೆಗೆದೆತ್ತಿಕೊಂಡು ವೈಕುಂಠನೀಕ್ಷಿಸಿ ಮತ್ತೆ ಬಿಸುಟನೆಂಬುದಕೆ ಮರುಗುವೆನೆಂದೊಂಡಿತೆಂದನು ||62||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಉಂಟು (ನಿಜ) ಕೃಷ್ಣನ ಮುಂದೆ ಭಾಷೆಯಂ ಪೂರೈಸಿ ಟಿಂಟಣಿಸದೆ ಒಡಲಂ ತೊರೆದು ಮುಕ್ತಿ ರಾಜ್ಯಮಂ | ವೆಂಟಳಿಕೊಂಡಂ ಸುಧನ್ವನಿಂತಿದಕಾಗಿ ಧೈತಿಗೆಟ್ಟಳಲ್ದುದಿಲ್ಲ = [ನಿಜ) ಕೃಷ್ಣನ ಮುಂದೆ ಭಾಷೆಯನ್ನು ಪೂರೈಸಿ ಹಿಂಜರಿಯದೆ ದೇಹವನ್ನು ತೊರೆದು ಮುಕ್ತಿ ರಾಜ್ಯವನ್ನು ಗಳಿಸಿಕೊಂಡನು ಸುಧನ್ವನು ; ಹೀಗಿರಲು ಅದಕ್ಕಾಗಿ ದೈರ್ಯಗೆಟ್ಟು ಅಳಲಿಲ್ಲ..] ; ಕಂಠಮಂ ಕತ್ತರಿಸಿಸಲಉ ಆ ಶಿರಂ ತನ್ನೆಡೆಗೆ ಬಂಟುಗಡದೈದಿದೊಡೆ ತೆಗೆದೆತ್ತಿಕೊಂಡು ವೈಕುಂಠನೀಕ್ಷಿಸಿ ಮತ್ತೆ ಬಿಸುಟನು ಎಂಬುದಕೆ ಮರುಗುವೆನು ಎಂದೊಡೆ ಇಂತೆಂದನು =[ ಕುತ್ತಿಗೆಯನ್ನು ಕತ್ತರಿಸಿಸಲು ಆ ಶಿರವು ದಾರಿತಪ್ಪದೆ ತನ್ನೆಡೆಗೆ ಬಂದಾಗ ಕೃಷ್ಣನು ಅದನ್ನು ತೆಗೆದು ಎತ್ತಿಕೊಂಡು ನೋಡಿ ಮತ್ತೆ ಎಸೆದನು, ಅದಕ್ಕೆ ನಾನು ದುಃಖಿತನಾಗಿದ್ದೇನೆ ಎಂದನು. ಅದಕ್ಕೆ ಸುರಥನು ಹೀಗೆ ಹೇಳಿದನು.]
  • ತಾತ್ಪರ್ಯ: ನೀನು ಹೇಳಿದುದು ನಿಜ; ಕೃಷ್ಣನ ಮುಂದೆ ಭಾಷೆಯನ್ನು ಪೂರೈಸಿ ಹಿಂಜರಿಯದೆ ದೇಹವನ್ನು ತೊರೆದು ಸುಧನ್ವನು ಮುಕ್ತಿ ರಾಜ್ಯವನ್ನು ಗಳಿಸಿಕೊಂಡನು  ; ಹೀಗಿರಲು ಅದಕ್ಕಾಗಿ ದೈರ್ಯಗೆಟ್ಟು ಅಳಲಿಲ್ಲ. ಕುತ್ತಿಗೆಯನ್ನು ಕತ್ತರಿಸಿಸಲು ಆ ಶಿರವು ದಾರಿತಪ್ಪದೆ ತನ್ನೆಡೆಗೆ ಬಂದಾಗ ಕೃಷ್ಣನು ಅದನ್ನು ತೆಗೆದು ಎತ್ತಿಕೊಂಡು ನೋಡಿ ಮತ್ತೆ ಎಸೆದನು, ಅದಕ್ಕೆ ನಾನು ದುಃಖಿತನಾಗಿದ್ದೇನೆ ಎಂದನು. ಅದಕ್ಕೆ ಸುರಥನು ಹೀಗೆ ಹೇಳಿದನು.]
  • (ಪದ್ಯ-೬೨)

ಪದ್ಯ :-:೬೩:

[ಸಂಪಾದಿಸಿ]

ತಾತ ಚಿತ್ತೈಸಿದರೊಳೇನಹುದು ತಿರುಗಿ ಬಿಸು| ಡೀ ತಲೆಯ ನಸುರಾಂತಕನ ಚರಣದೆಡೆಗೆ ಸಹ | ಜಾತನಂ ಕೊಂದಾತನಂ ಕೊಲ್ವೆನೆಂದು ಸುರಥಂ ರಥಕಡರ್ದಬಳಿಕ ||
ಖಾತಿಯಿಂದ ಆ ಶಿರವನು ಆ ಮರಾಳಧ್ವಜಂ ಪೀತಾಂಬರನ ಪೊರೆಗೆ ಹಾಯ್ಕಲಾಮುರಹರಂ | ಪ್ರೀತಿಯಿಂ ತೆಗೆದು ನಭಕಿಡಲದಂ ರುಂಡಮಾಲೆಯೊಳಾಂತನಲ್ಲಿ ಶಿವನು ||63||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಾತ ಚಿತ್ತೈಸು ಇದರೊಳು ಏನಹುದು ತಿರುಗಿ ಬಿಸುಡು ಈ ತಲೆಯ ನಸುರಾಂತಕನ ಚರಣದ ಎಡೆಗೆ =[ ತಂದೆಯೇ ಕೇಳು, ಈ ರುಂಡದಿಂದ ಏನು ಪ್ರಯೋಜನ? ಈ ತಲೆಯನ್ನು ಕೃಷ್ಣನ ಪಾದದಕಡೆಗೆ ತಿರುಗಿ ಎಸೆದುಬಿಡು]; ಸಹಜಾತನಂ ಕೊಂದಾತನಂ ಕೊಲ್ವೆನೆಂದು ಸುರಥಂ ರಥಕೆ ಅಡರ್ದ ಬಳಿಕ= [ನಾನು ನನ್ನ ಸೋದರನನ್ನು ಕೊಂದವನನ್ನು ಕೊಲ್ಲುವೆನು ಎಂದು, ಸುರಥನು ರಥವನ್ನು ಹತ್ತಿದ ಬಳಿಕ, ] ಖಾತಿಯಿಂದ ಆ ಶಿರವನು ಆ ಮರಾಳಧ್ವಜಂ ಪೀತಾಂಬರನ ಪೊರೆಗೆ ಹಾಯ್ಕಲು = [ಸಿಟ್ಟಿನಿಂದ ಆ ತಲೆಯನ್ನು ಆ ಹಂಸಧ್ವಜನು ಕೃಷ್ಣನಕಡೆಗೆ ಹಾಕಲು] ; ಆ ಮುರಹರಂ ಪ್ರೀತಿಯಿಂ ತೆಗೆದು ನಭಕೆ ಇ ಡಲು ಅದಂ ರುಂಡಮಾಲೆಯೊಳು ಆಂತನು ಅಲ್ಲಿ ಶಿವನು = [ಆ ಮುರಹರನು ಅದನ್ನು ಪ್ರೀತಿಯಿದ ತೆಗೆದುಕೊಂಡು ಆಕಾಶಕ್ಕೆ ಹಾಕಲು ಅದನ್ನು ಶಿವನು ತನ್ನ ರುಂಡಮಾಲೆಯಲ್ಲಿ ಸೇರಿಸಿಕೊಂಡನು.]
  • ತಾತ್ಪರ್ಯ:ತಂದೆಯೇ ಕೇಳು, ಈ ರುಂಡದಿಂದ ಏನು ಪ್ರಯೋಜನ? ಈ ತಲೆಯನ್ನು ಕೃಷ್ಣನ ಪಾದದಕಡೆಗೆ ತಿರುಗಿ ಎಸೆದುಬಿಡು. ನಾನು ನನ್ನ ಸೋದರನನ್ನು ಕೊಂದವನನ್ನು ಕೊಲ್ಲುವೆನು ಎಂದು, ಸುರಥನು ರಥವನ್ನು ಹತ್ತಿದ ಬಳಿಕ, ಆ ಹಂಸಧ್ವಜನು ಸಿಟ್ಟಿನಿಂದ ಆ ತಲೆಯನ್ನು ಕೃಷ್ಣನ ಕಡೆಗೆ ಹಾಕಲು, ಆ ಮುರಹರನು ಅದನ್ನು ಪ್ರೀತಿಯಿದ ತೆಗೆದುಕೊಂಡು ಆಕಾಶಕ್ಕೆ ಹಾಕಲು, ಅದನ್ನು ಶಿವನು ತನ್ನ ರುಂಡಮಾಲೆಯಲ್ಲಿ ಸೇರಿಸಿಕೊಂಡನು.
  • (ಪದ್ಯ-೬೩)

ಪದ್ಯ :-:೬೪:

[ಸಂಪಾದಿಸಿ]

ಅಡಗಿತಾ ಶಿರಮಲ್ಲಿ ಹಂಸಧ್ವಜಂ ತನ್ನ | ಪಡೆಸಹಿತ ನಿಂದನಾಹವಕೆ ಸನ್ನಾಹದಿಂ | ದೊಡಹುnÖದಂ ಮಡಿದಳಲ್ಗೆ ಸುರಥಂ ರಥಕಡರ್ದು ನಿಜಕಾರ್ಮುಕವನು ||
ಮಿಡಿದು ಕೃಷ್ಣಾರ್ಜುನರ ಸರಸಕೈತರಲವನ | ಕಡುಶೌರ್ಯಮಂ ಕಂಡಾ ಶಂಕೆಯಿಂ ದೇವಪುರ | ದೊಡೆಯ ಲಕ್ಷ್ಮೀವರಂ ಮಾಡಿದಂತನ್ನವೈದುನನೊಳಾಲೋಚನೆಯನು ||64||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಡಗಿತು ಆ ಶಿರಂ ಅಲ್ಲಿ ಹಂಸಧ್ವಜಂ ತನ್ನ ಪಡೆಸಹಿತ ನಿಂದನು ಆಹವಕೆ ಸನ್ನಾಹದಿಂದ = [ಸುಧನ್ವನ ಶಿರವು ಶಿವನ ರುಂಡ ಮಾಲೆಯಲ್ಲಿ ಸೇರಿ ಅಡಗಿತು. ಹಂಸಧ್ವಜನು ತನ್ನ ಸೈನ್ಯ ಸಹಿತ ಯುದ್ಧ ಮಾಡಲು ಸಿದ್ಧನಾಗಿ ನಿಂತನುÀ] ; ಒಡಹುಟ್ಟಿದಂ ಮಡಿದ ಅಳಲ್ಗೆ ಸುರಥಂ ರಥಕೆ ಅಡರ್ದು ನಿಜಕಾರ್ಮುಕವನು ಮಿಡಿದು ಕೃಷ್ಣಾರ್ಜುನರ ಸರಸಕೆ ಐತರಲು = [ಒಡಹುಟ್ಟಿದ ಸುಧನ್ವನ ಸಾವಿನಿಂದ ದುಃಖಪಟ್ಟು, ಸೇಡು ತೀರಿಸಲು, ಸುರಥನು ರಥವನ್ನು ಹತ್ತಿ, ತನ್ನ ಬಿಲ್ಲನ್ನು ಠೇಂಕಾರ ಮಾಡಿ ಕೃಷ್ಣಾರ್ಜುನರ ಹತ್ತಿರಕ್ಕೆ ಬಂದನು.]; ಅವನ ಕಡುಶೌರ್ಯಮಂ ಕಂಡು ಆ ಶಂಕೆಯಿಂ ದೇವಪುರ ದೊಡೆಯ ಲಕ್ಷ್ಮೀವರಂ ಮಾಡಿದಂ ತನ್ನ ವೈದುನನೊಳು ಆಲೋಚನೆಯನು = [ಅವನ ಮಹಾಶೌರ್ಯವನ್ನು ನೋಡಿ, ಭಯದಿಂದ ದೇವಪುರ ದೊಡೆಯ ಲಕ್ಷ್ಮೀವರನಾದ ಕೃಷ್ಣನು ತನ್ನ ವೈದುನ ಅರ್ಜುನನ ಜೊತೆ ಸಮಾಲೋಚನೆ ಮಾಡಿದನು.]
  • ತಾತ್ಪರ್ಯ: ಸುಧನ್ವನ ಶಿರವು ಶಿವನ ರುಂಡ ಮಾಲೆಯಲ್ಲಿ ಸೇರಿ ಅಡಗಿತು. ಹಂಸಧ್ವಜನು ತನ್ನ ಸೈನ್ಯ ಸಹಿತ ಯುದ್ಧ ಮಾಡಲು ಸಿದ್ಧನಾಗಿ ನಿಂತನುÀ ಒಡಹುಟ್ಟಿದ ಸುಧನ್ವನ ಸಾವಿನಿಂದ ದುಃಖಪಟ್ಟು, ಸೇಡು ತೀರಿಸಲು, ಸುರಥನು ರಥವನ್ನು ಹತ್ತಿ, ತನ್ನ ಬಿಲ್ಲನ್ನು ಠೇಂಕಾರ ಮಾಡಿ ಕೃಷ್ಣಾರ್ಜುನರ ಹತ್ತಿರಕ್ಕೆ ಬಂದನು. ಅವನ ಮಹಾಶೌರ್ಯವನ್ನು ನೋಡಿ, ಭಯದಿಂದ ದೇವಪುರ ದೊಡೆಯ ಲಕ್ಷ್ಮೀವರನಾದ ಕೃಷ್ಣನು ತನ್ನ ವೈದುನ ಅರ್ಜುನನ ಜೊತೆ ಸಮಾಲೋಚನೆ ಮಾಡಿದನು.
  • (ಪದ್ಯ-೬೪)
  • []
  • []
  • ಸಂಧಿ ೧೩ಕ್ಕೆ ಪದ್ಯಗಳು: ೮೦೬.
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಒಲ್ಲೇಖ

[ಸಂಪಾದಿಸಿ]
  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.