ಜೈಮಿನಿ ಭಾರತ/ಹದಿನಾರನೆಯ ಸಂಧಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಹದಿನಾರನೆಯ ಸಂಧಿ[ಸಂಪಾದಿಸಿ]

ಪದ್ಯ :-:ಸೂಚನೆ:[ಸಂಪಾದಿಸಿ]

ಸೂಚನೆ: ಸ್ತ್ರೀರಾಜ್ಯದೊಳ್ ಪ್ರಮೀಳೆಯನೊಡಂಬಡಿಸಿ ವಿ | ಸ್ತಾರಮಾಗಿರ್ದ ಬಹುದೇಶಂಗಳಂ ತೊಳಲಿ | ಘೋರಭೀಷಣದೈತ್ಯನಂ ಮುರಿದು ಫಲುಗುಣಂ ಮಣಿಪುರಕೆ ನಡೆ ತಂದನು ||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸ್ತ್ರೀರಾಜ್ಯದೊಳ್ ಪ್ರಮೀಳೆಯನು ಒಡಂಬಡಿಸಿ=[ಸ್ತ್ರೀರಾಜ್ಯದಲ್ಲಿ ಪ್ರಮೀಳೆಯನ್ನು ಯಜ್ಞಕ್ಕೆ ಸಹಕರಿಸಲು ಒಪ್ಪಿಸಿ]; ವಿಸ್ತಾರಮಾಗಿರ್ದ ಬಹುದೇಶಂಗಳಂ ತೊಳಲಿ ಘೋರಭೀಷಣ ದೈತ್ಯನಂ ಮುರಿದು ಫಲುಗುಣಂ ಮಣಿಪುರಕೆ ನಡೆ ತಂದನು.=[ವಿಸ್ತಾರವಾಗಿರುವ ಬಹಳ ದೇಶಗಳನ್ನು ಸುತ್ತಾಡಿ, ಘೋರಭೀಷಣ ಎಂಬ ರಾಕ್ಷಸನನ್ನು ಕೊಂದು, ಫಲ್ಗುಣನು ಮಣಿಪುರಕ್ಕೆ ಬಂದನು.]
  • ತಾತ್ಪರ್ಯ:ಸ್ತ್ರೀರಾಜ್ಯದಲ್ಲಿ ಪ್ರಮೀಳೆಯನ್ನು ಯಜ್ಞಕ್ಕೆ ಸಹಕರಿಸಲು ಒಪ್ಪಿಸಿ, ವಿಸ್ತಾರವಾಗಿರುವ ಬಹಳ ದೇಶಗಳನ್ನು ಸುತ್ತಾಡಿ, ಘೋರಭೀಷಣ ಎಂಬ ರಾಕ್ಷಸನನ್ನು ಕೊಂದು, ಫಲ್ಗುಣನು ಮಣಿಪುರ ರಾಜ್ಯಕ್ಕೆ ಬಂದನು.
  • (ಪದ್ಯ-ಸೂಚನೆ)XXIII-IX

ಪದ್ಯ :-:೧:[ಸಂಪಾದಿಸಿ]

ಕೇಳವನಿಪಾಲಕುಲತಿಲಕ ತುರಗದ ಕೂಡೆ | ಪಾಳಯಂ ತೆರಳಿ ಬಂದಲ್ಲಿ ಬಿಟ್ಟರ್ಜುನಂ | ಪೇಳಿದಂತಿರುತಿರ್ದುದನ್ನೆಗಂ ಕುದುರೆ ತನ್ನಿಚ್ಛೆಯಿಂದೈದೆ ಕಂಡು ||
ಭಾಳಪಟ್ಟದ ಲೇಖನವನೋದಿಕೊಂಡು ನೀ | ಲಾಳಕಿಯರಾಗ ನಡೆತಂದು ಕೈಮುಗಿದು ಪ್ರ | ಮೀಳೆಯೆಂಬರಸಾಗಿಹ ಸ್ತ್ರೀ ಶಿರೋಮಣಿಗೆ ಸಂಭ್ರಮದೊಳಿಂತೆಂದರು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೇಳು ಅವನಿಪಾಲಕುಲತಿಲಕ /ಭೂಮಿಯನ್ನು ಪಾಲಿಸುವವರಲ್ಲಿ ತಿಲಕದಂತಿರುವ ಜನಮೇಜಯನೇ ಕೇಳು; ತುರಗದ ಕೂಡೆ ಪಾಳಯಂ ತೆರಳಿ ಬಂದಲ್ಲಿ ಬಿಟ್ಟರ್ಜುನಂ ಪೇಳಿದಂತೆ ಇರುತಿರ್ದುದು=[ಕುದುರೆಯ ಜೊತೆ, ಸೈನ್ಯವು ಹೋಗಿ ಕೊನೆಗೆ ಸ್ತ್ರೀ ರಾಜ್ಯಕ್ಕೆ ಬಂದು ಅಲ್ಲಿ ಬೀಡುಬಿಟ್ಟು ಅರ್ಜುನನು ಪೇಳಿದಂತೆ ಇರುತ್ತಿತ್ತು.]; ಅನ್ನೆಗಂ ಕುದುರೆ ತನ್ನಿಚ್ಛೆಯಿಂದ ಐದೆ ಕಂಡು ಭಾಳಪಟ್ಟದ ಲೇಖನವನು ಓದಿಕೊಂಡು ನೀಲಾಳಕಿಯರು (ನೀಲ - ಕಪ್ಪು + ಆಳಕ -ಮುಂಗುರುಳು ಉಳ್ಳವರು) ಆಗ ನಡೆತಂದು ಕೈಮುಗಿದು ಪ್ರಮೀಳೆಯೆಂಬ ಅರಸಾಗಿ ಇಹ ಸ್ತ್ರೀ ಶಿರೋಮಣಿಗೆ ಸಂಭ್ರಮದೊಳು ಇಂತೆಂದರು =[ಆ ನಗರದ ಸನಿಹದವರೆಗೆ ಕುದುರೆ ತನ್ನಿಚ್ಛೆಯಿಂದ ಬರಲು, ಅದನ್ನು ಕಂಡು ಅದರ ಹಣೆಯಮೇಲಿನ ಹಲಗೆಯ ಬರಹವನ್ನು ಓದಿಕೊಂಡು ಕಪ್ಪುಮುಂಗುರುಳ ವನಿತೆಯರು, ಆಗ ಅಲ್ಲಿಂದ ಹೊರಟುಬಂದು, ಪ್ರಮೀಳೆಯೆಂಬ ಸ್ತ್ರೀ ಶಿರೋಮಣಿ ಅರಸಿಗೆ ಕೈಮುಗಿದು ಸಂಭ್ರಮ ದಿಂದ / ಸಡಗರದಿಂದ ಹಿಗೆ ಹೇಳಿದರು.
  • ತಾತ್ಪರ್ಯ:ಕೇಳು ಅವನಿಪಾಲಕುಲತಿಲಕ /ಭೂಮಿಯನ್ನು ಪಾಲಿಸುವವರಲ್ಲಿ ತಿಲಕದಂತಿರುವ ಜನಮೇಜಯನೇ ಕೇಳು; ಕುದುರೆಯ ಜೊತೆ, ಸೈನ್ಯವು ಹೋಗಿ ಕೊನೆಗೆ ಸ್ತ್ರೀ ರಾಜ್ಯಕ್ಕೆ ಬಂದು ಅಲ್ಲಿ ಬೀಡುಬಿಟ್ಟು ಅರ್ಜುನನು ಪೇಳಿದಂತೆ ಇರುತ್ತಿತ್ತು. ಆ ನಗರದ ಸನಿಹದವರೆಗೆ ಕುದುರೆ ತನ್ನಿಚ್ಛೆಯಿಂದ ಬರಲು, ಕೆಲವು ತರುಣಿಯರು ಅದನ್ನು ಕಂಡು ಅದರ ಹಣೆಯಮೇಲಿನ ಹಲಗೆಯ ಬರಹವನ್ನು ಓದಿಕೊಂಡು ಕಪ್ಪುಮುಂಗುರುಳ ವನಿತೆಯರು, ಆಗ ಅಲ್ಲಿಂದ ಹೊರಟುಬಂದು, ಪ್ರಮೀಳೆಯೆಂಬ ಸ್ತ್ರೀ ಶಿರೋಮಣಿ ಅರಸಿಗೆ ಕೈಮುಗಿದು ಸಂಭ್ರಮ ದಿಂದ / ಸಡಗರದಿಂದ ಹಿಗೆ ಹೇಳಿದರು.
  • (ಪದ್ಯ-೧)

ಪದ್ಯ :-:೨:[ಸಂಪಾದಿಸಿ]

ಶಶಿಕುಲೋದ್ಭವ ಯುಧಿಷ್ಠಿರನೃಪನ ಕುದರೆ ಗಡ | ವಸುಧೆಯೊಳಿದಂ ಬಲ್ಲಿದರ್ ಕಟ್ಟಬೇಕು ಗಡ | ದೆಸೆಯೊಳಿದಕರ್ಜುನನ ಕಾಪಿನಾರೈಕೆ ಗಡ ಪಿಡಿದೊಡೆ ಬಿಡಿಸುವರ್ಗಡ ||
ಪೊಸತಲಾ ನಮಗೆಂದು ನಾರಿಯರ್ ಬಿನ್ನೈಸೆ | ನಸುನಗುತೆ ಲಾಯದೊಳ್ ಕಟ್ಟಿಸಿದಳಾ ಹಯವ | ನೆಸೆವ ಭದ್ರಾಸನವನಿಳಿದು ಸಂಗ್ರಾಮಕ್ಕೆ ಪೊರೆಮಟ್ಟಳಾ ಪ್ರಮೀಳೆ ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವನಿತೆಯರು ಅರಸಿಗೆ ಹೀಗೆ ಬಿನ್ನೈಸಿದರು: ಶಶಿಕುಲೋದ್ಭವ ಯುಧಿಷ್ಠಿರನ ಪನ್ನಕುದರೆ ಗಡ, ವಸುಧೆಯೊಳಿದಂ ಬಲ್ಲಿದರ್ ಕಟ್ಟಬೇಕು ಗಡ (ಗಡ =ಅಂತೆ, ಓಹೋ, ಹೀಗಿದೆ ), ದೆಸೆಯೊಳಿದಕೆ ಅರ್ಜುನನ ಕಾಪಿನ ಆರೈಕೆ ಗಡ, ಪಿಡಿದೊಡೆ ಬಿಡಿಸುವರ್ಗಡ, ಪೊಸತಲಾ ನಮಗೆಂದು ನಾರಿಯರ್ ಬಿನ್ನೈಸೆ,=[ವನಿತೆಯರು ಅರಸಿಗೆ ಹೀಗೆ ಬಿನ್ನೈಸಿದರು: ಚಂದ್ರವಂಶದಲ್ಲಿ ಹುಟ್ಟಿದ ಯುಧಿಷ್ಠಿರ ನೃಪನ ಕುದರೆಯಂತೆ ಗಡ!, ಭೂಮಿಯಲ್ಲಿ ಇದನ್ನು ಶಕ್ತಿಶಾಲಿಗಳು ಕಟ್ಟಬೇಕಂತೆ, ಗಡ, ಇದಕ್ಕೆ ದಿಕ್ಕಾಗಿ ಅರ್ಜುನನ ಕಾವಲಿನ ರಕ್ಷಣೆ ಗಡ! ಏನಾದರು ಕುದುರೆಯನ್ನು ಹಿಡಿದರೆ ಅವರು ಬಿಡಿಸುವರಂತೆ, ಗಡ!, ನಮಗೆ ಇದು ಹೊಸತಲ್ಲವೇ! ಎಂದು ನಾರಿಯರು ಬಿನ್ನವಿಸಲು,]; ನಸುನಗುತೆ ಲಾಯದೊಳ್ ಕಟ್ಟಿಸಿದಳು ಆ ಹಯವನು, ಎಸೆವ ಭದ್ರಾಸನವನು ಇಳಿದು ಸಂಗ್ರಾಮಕ್ಕೆ ಪೊರೆಮಟ್ಟಳು ಆ ಪ್ರಮೀಳೆ =[ನಸುನಗುತ್ತಾ ಕುದುರೆಲಾಯದಲ್ಲಿ ಆ ಯಜ್ಞದ ಕುದುರೆಯನ್ನು ಕಟ್ಟಿಸಿದಳು. ನಂತರ ಆ ಪ್ರಮೀಳೆ ಶೋಭಿಸುವ ಭದ್ರಾಸನದಿಂದ ಇಳಿದು ಯುದ್ಧಕ್ಕೆ ಹೊರಹೊರಟಳು.
  • ತಾತ್ಪರ್ಯ: ವನಿತೆಯರು ಅರಸಿಗೆ ಹೀಗೆ ಬಿನ್ನೈಸಿದರು: ಚಂದ್ರವಂಶದಲ್ಲಿ ಹುಟ್ಟಿದ ಯುಧಿಷ್ಠಿರ ನೃಪನ ಕುದರೆಯಂತೆ ಗಡ!, ಭೂಮಿಯಲ್ಲಿ ಇದನ್ನು ಶಕ್ತಿಶಾಲಿಗಳು ಕಟ್ಟಬೇಕಂತೆ, ಗಡ, ಇದಕ್ಕೆ ದಿಕ್ಕಾಗಿ ಅರ್ಜುನನ ಕಾವಲಿನ ರಕ್ಷಣೆ ಗಡ! ಏನಾದರು ಕುದುರೆಯನ್ನು ಹಿಡಿದರೆ ಅವರು ಬಿಡಿಸುವರಂತೆ, ಗಡ!, ನಮಗೆ ಇದು ಹೊಸತಲ್ಲವೇ! ಎಂದು ನಾರಿಯರು ಬಿನ್ನವಿಸಲು, ನಸುನಗುತ್ತಾ ಕುದುರೆಲಾಯದಲ್ಲಿ ಆ ಯಜ್ಞದ ಕುದುರೆಯನ್ನು ಕಟ್ಟಿಸಿದಳು. ನಂತರ ಆ ಪ್ರಮೀಳೆ ಶೋಭಿಸುವ ಭದ್ರಾಸನದಿಂದ ಇಳಿದು ಯುದ್ಧಕ್ಕೆ ಹೊರಹೊರಟಳು.
  • (ಪದ್ಯ-೨)

ಪದ್ಯ :-:೩:[ಸಂಪಾದಿಸಿ]

ಕಣ್ಣ ಹೊಳಪಿನ ಚಪಲೆಯರ ಕುದುರೆ ಲಕ್ಷದಿಂ | ತಿಣ್ಣಮೊಲೆಯಲಸಗಮನೆಯರಾನೆ ಲಕ್ಷದಿಂ | ಹುಣ್ಣಿಮೆಯ ಶಶಿಯಂತೆಸೆವ ಬಟ್ಟಮೊಗದ ನೀರೆಯರ ರಥ ಲಕ್ಷದಿಂದೆ ||
ಸಣ್ಣನಡುವಿನ ಸೊಕ್ಕು ಜೌವನದ ಪೊಸ ಮಿಸುನಿ | ವಣ್ಣದಂಗದ ಬಾಲೆಯರ ಮೂರು ಲಕ್ಷದಿಂ | ಪೆಣ್ಣ ದಳಮೈದೆ ಜೋಡಿಸಿತು ಪಾರ್ಥನ ಸಮರಕಾ ಪ್ರಮೀಳೆಯ ಸುತ್ತಲು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಣ್ಣ ಹೊಳಪಿನ ಚಪಲೆಯರ ಕುದುರೆ ಲಕ್ಷದಿಂ ತಿಣ್ಣಮೊಲೆಯ ಅಲಸಗಮನೆಯರ ಆನೆ ಲಕ್ಷದಿಂ, ಹುಣ್ಣಿಮೆಯ ಶಶಿಯಂತೆ ಎಸೆವ ಬಟ್ಟಮೊಗದ ನೀರೆಯರ ರಥ ಲಕ್ಷದಿಂದೆ =[ಹೊಳೆಯುವ ಕಣ್ಣ ಚಂಚಲೆಯರ ಕುದುರೆ ಸೈನ್ಯ ಲಕ್ಷದಷ್ಟು; ದಪ್ಪ ಬಿರುಸು ಮೊಲೆಯ ಮಂದ ನಡಿಗೆಯ ಯುವತಿಯರ ಆನೆ ಸೈನ್ಯ ಲಕ್ಷದಷ್ಟು; ಹುಣ್ಣಿಮೆಯ ಚಂದ್ರನಂತೆ ಶೋಭಿಸುವ ದುಂಡುಮುಖದ ಹೆಂಗೆಳೆಯರ ರಥ ಲಕ್ಷದಷ್ಟು ]; ಸಣ್ಣನಡುವಿನ ಸೊಕ್ಕು ಜೌವನದ ಪೊಸ ಮಿಸುನಿ (ಚಿನ್ನ) ವಣ್ಣದಂಗದ ಬಾಲೆಯರ ಮೂರು ಲಕ್ಷದಿಂ ಪೆಣ್ಣ ದಳಮೈದೆ ಜೋಡಿಸಿತು ಪಾರ್ಥನ ಸಮರಕಾ ಪ್ರಮೀಳೆಯ ಸುತ್ತಲು =[ಸಣ್ಣಸೊಂಟದ ಸೊಕ್ಕಿನಯೌವನದ ಹೊಸ ಚಿನ್ನದ ಬಣ್ಣದ ದೇಹವುಳ್ಳ ಪ್ರಾಯದ ಹುಡುಗಿಯರ ಸೈನ್ಯಮೂರು ಲಕ್ಷದಷ್ಟು ಇರುವ ಹೆಂಗಸರ ಸೈನ್ಯ ಬಂದು ಪಾರ್ಥನೊಡನೆ ಯುದ್ಧಕ್ಕೆ ಪ್ರಮೀಳೆಯ ಸುತ್ತಲೂ ಸಿದ್ಧವಾಗಿ ನಿಂತಿತು].
  • ತಾತ್ಪರ್ಯ:ಹೊಳೆಯುವ ಕಣ್ಣುಳ್ಳ ಚಂಚಲೆಯರ ಕುದುರೆ ಸೈನ್ಯ ಲಕ್ಷದಷ್ಟು; ದಪ್ಪ ಬಿರುಸು ಮೊಲೆಯ ಮಂದ ನಡಿಗೆಯ ಯುವತಿಯರ ಆನೆ ಸೈನ್ಯ ಲಕ್ಷದಷ್ಟು; ಹುಣ್ಣಿಮೆಯ ಚಂದ್ರನಂತೆ ಶೋಭಿಸುವ ದುಂಡುಮುಖದ ಹೆಂಗೆಳೆಯರ ರಥ ಲಕ್ಷದಷ್ಟು; ಸಣ್ಣಸೊಂಟದ ಸೊಕ್ಕಿನಯೌವನದ ಹೊಸ ಚಿನ್ನದ ಬಣ್ಣದ ದೇಹವುಳ್ಳ ಪ್ರಾಯದ ಹುಡುಗಿಯರ ಸೈನ್ಯಮೂರು ಲಕ್ಷದಷ್ಟು ಇರುವ ಹೆಂಗಸರ ಸೈನ್ಯ ಬಂದು ಪಾರ್ಥನೊಡನೆ ಯುದ್ಧಕ್ಕೆ ಪ್ರಮೀಳೆಯ ಸುತ್ತಲೂ ಸಿದ್ಧವಾಗಿ ನಿಂತಿತು.
  • (ಪದ್ಯ-೩)

ಪದ್ಯ :-:೪:[ಸಂಪಾದಿಸಿ]

ತೆಗೆದುಟ್ಟ ಚಲ್ಲಣದ ಬಿಗಿದ ಮೊಲೆಗಟ್ಟುಗಳ | ಪೊಗರುಗುವ ವೇಣಿಗಳ ಮೃಗಮದದ ಬೊಟ್ಟುಗಳ | ತಿಗುರಿದನುಲೇಪನದ ಮಗಮಗಿಪ ಕಂಪುಗಳ ಝಗಝಗಿಸುವಾಭರಣದ
ನಗೆಮೊಗದ ಮಿಂಚುಗಳ ದೃಗುಯುಗದ ಕಾಂತಿಗಳ | ಮಿಗೆತೊಳಗುವಂಘ್ರಿಗಳ ಸೊಗಯಿಸುವ ಬಾಹುಗಳ | ಬಗೆಬಗೆಯ ಕೈದುಗಳ ವಿಗಡೆಯರ್ ನೆರೆದು ಕಾಳಗಕೆ ಮುಂಕೊಳುತಿರ್ದರು ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತೆಗೆದು ಉಟ್ಟ ಚಲ್ಲಣದ (ಚೂಡಿದಾರ?) ಬಿಗಿದ ಮೊಲೆಗಟ್ಟುಗಳ ಪೊಗರು ಉಗುವ ವೇಣಿಗಳ ಮೃಗಮದದ ಬೊಟ್ಟುಗಳ ತಿಗುರಿದ ಅನುಲೇಪನದ ಮಗಮಗಿಪ ಕಂಪುಗಳ ಝಗಝಗಿಸುವ ಆಭರಣದ =[ಚೆನ್ನಾಗಿ ಉಟ್ಟ ಚಲ್ಲಣದ ಉಡುಪು ಧರಿಸಿದವರು; ಬಿಗಿಯಾಗಿ ಮೊಲೆಗಟ್ಟುಗಳನ್ನು ಕಟ್ಟಿ, ಬಿಂಕ ಸೊಕ್ಕನ್ನು ತೋರುವ ಉದ್ದಜಡೆಯ, ಕಸ್ತೂರಿಯಸುವಾಸನೆಯ ಹಣೆಯತಿಲಕಿಟ್ಟವರು, ಮೈಗೆ ಸುವಾಸನೆಯ ದ್ರವ್ಯಹಚ್ಚಿ ಕಂಪುಬೀರುವ, ಝಗಝಗಿಸುವ ಆಭರಣ ಧರಿಸಿದವರ ಸೈನ್ಯ;]; ನಗೆಮೊಗದ ಮಿಂಚುಗಳ ದೃಗುಯುಗದ ಕಾಂತಿಗಳ ಮಿಗೆತೊಳಗುವ ಅಂಘ್ರಿಗಳ ಸೊಗಯಿಸುವ ಬಾಹುಗಳ ಬಗೆಬಗೆಯ ಕೈದುಗಳ ವಿಗಡೆಯರ್ ನೆರೆದು ಕಾಳಗಕೆ ಮುಂಕೊಳುತಿರ್ದರು=[ ಮುಗುಳುನಗೆಯ ಮುಖದ ಮಿಂಚುವ ಕಣ್ಣುಗಳ ಕಾಂತಿಯುಳ್ಳವರು; ಅಲ್ಲದೆ ಬಹಳ ಚಂದದ ಪಾದಗಳುಳ್ಳವರು; ಸೊಗಸಾದ ಉದ್ದ ನುಣಪಾದ ತೋಳುಗಳಲ್ಲಿ ಬಗೆಬಗೆಯ ಆಯುಧಗಳನ್ನು ಬಲಿಷ್ಠೆಯರು ಸೇರಿ ಯುದ್ಧಕ್ಕೆಕ ಮುಂದುವರಿದು ಬರುತ್ತಿದ್ದರು].
  • ತಾತ್ಪರ್ಯ:ಚೆನ್ನಾಗಿ ಉಟ್ಟ ಚಲ್ಲಣದ ಉಡುಪು ಧರಿಸಿದವರು; ಬಿಗಿಯಾಗಿ ಮೊಲೆಗಟ್ಟುಗಳನ್ನು ಕಟ್ಟಿ, ಬಿಂಕ ಸೊಕ್ಕನ್ನು ತೋರುವ ಉದ್ದಜಡೆಯ, ಕಸ್ತೂರಿಯಸುವಾಸನೆಯ ಹಣೆಯತಿಲಕಿಟ್ಟವರು, ಮೈಗೆ ಸುವಾಸನೆಯ ದ್ರವ್ಯಹಚ್ಚಿ ಕಂಪುಬೀರುವ, ಝಗಝಗಿಸುವ ಆಭರಣ ಧರಿಸಿದವರ ಸೈನ್ಯ; ಮುಗುಳುನಗೆಯ ಮುಖದ ಮಿಂಚುವ ಕಣ್ಣುಗಳ ಕಾಂತಿಯುಳ್ಳವರು; ಅಲ್ಲದೆ ಬಹಳ ಚಂದದ ಪಾದಗಳುಳ್ಳವರು; ಸೊಗಸಾದ ಉದ್ದ ನುಣಪಾದ ತೋಳುಗಳಲ್ಲಿ ಬಗೆಬಗೆಯ ಆಯುಧಗಳನ್ನು ಬಲಿಷ್ಠ / ವಿಗಡೆಯರು ಸೇರಿ ಯುದ್ಧಕ್ಕೆ ಮುಂದುವರಿದು ಬರುತ್ತಿದ್ದರು.
  • (ಪದ್ಯ-೪)

ಪದ್ಯ :-:೫:[ಸಂಪಾದಿಸಿ]

ಮಂದಗತಿಯಿಂದೆ ನಳಿತೋಳಿಂದೆ ಕುಂಭಕುಚ | ದಿಂದೆ ಜೌವನದ ಮದದಿಂದೆ ಭದ್ರಾಕಾರ | ದಿಂದೆಸೆವ ಕನಕಮಣಿಬಂಧ ನಿಗಳಂಗಳಿಂ ಭೃಂಗಾಳಕಂಗಳಿಂದೆ ||
ಸಿಂದೂರದಿಂದಮಾರಾಜಿಸುವ ಸೀಮಂತ | ದಿಂದೆ ಮಂಜುಳಕಿಂಕಿಣಿಗಳ ಕಾಂಚೀದಾಮ | ದಿಂದೆಸೆವ ಪೆಣ್ಗಳಾನೆಗಳ ಮೇಲೈತಂದರವರಾಯತಂಗಳಿಂದೆ ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಂದಗತಿಯಿಂದೆ (ಗತಿ-ನೆಡೆ) ನಳಿತೋಳಿಂದೆ ಕುಂಭಕುಚದಿಂದೆ (ಕುಂಭ-ಮಡಕೆ) ಜೌವನದ ಮದದಿಂದೆ ಭದ್ರಾಕಾರದಿಂದೆಸೆವ ಕನಕಮಣಿಬಂಧ ನಿಗಳಂಗಳಿಂ ಭೃಂಗಾಳ (ಚಿನ್ನದ ಆಬರಣ)ಕಂಗಳಿಂದೆ=[ಸೈನಿಕರಾದರೊ,ಮೆಲ್ಲಗೆ ನಡೆಯುವರು, ತೆಳುವಾದ ತೋಳಿನವರು, ದಪ್ಪಕುಚದವರು, ಯೌವನದ ಸೊಕ್ಕುಳ್ಳವರು, ಗಟ್ಟಿಮುಟ್ಟಾದ ದೇಹದವರು, ಚಿನ್ನದ ಮಣಿಕಟ್ಟುಗಳನ್ನೂ ಪಟ್ಟಿಗಳನ್ನೂ ಚಿನ್ನದ ಆಭರಣಗಳನ್ನೂ ಧರಿಸಿದ್ದರು. ]; ಸಿಂದೂರದಿಂದಂ (ಕೆಂಪು ಕುಂಕುಮ) ಆರಾಜಿಸುವ ಸೀಮಂತದಿಂದೆ ಮಂಜುಳಕಿಂಕಿಣಿಗಳ ಕಾಂಚೀದಾಮದಿಂದ ಎಸೆವ ಪೆಣ್ಗಳು ಆನೆಗಳ ಮೇಲೆ ಐತಂದರು ಅವರು ಆಯತಂಗಳಿಂದೆ= [ಕೆಂಪು ಕುಂಕುಮಧರಿಸಿ ಶೋಭಿಸುವ, ಬೈತಲೆಬಟ್ಟು/ ಚೂಡಾಮಣಿ ಧರಿಸಿ,ಮಧುರವಾದ ಕಿಂಕಿಣಿ ಸದ್ದು ಮಾಡುತ್ತಿದ್ದರು; ಕಾಂಚೀದಾಮವೆಂಬ ಸೊಂಟದ ಡಾಬು / ಪಟ್ಟಿಧರಿಸಿ ಶೋಭಿಸುತ್ತಿರುವ ಯುವತಿಯಯರು ಆನೆಗಳ ಮೇಲೆ ತಮ್ಮ ಸೇನಾನೆಲೆ /ಆಯತದಿಂದ ಬಂದರು].
  • ತಾತ್ಪರ್ಯ: ಸೈನಿಕರಾದರೊ,ಮೆಲ್ಲಗೆ ನಡೆಯುವರು, ತೆಳುವಾದ ತೋಳಿನವರು, ದಪ್ಪಕುಚದವರು, ಯೌವನದ ಸೊಕ್ಕುಳ್ಳವರು, ಗಟ್ಟಿಮುಟ್ಟಾದ ದೇಹದವರು, ಚಿನ್ನದ ಮಣಿಕಟ್ಟುಗಳನ್ನೂ ಪಟ್ಟಿಗಳನ್ನೂ ಚಿನ್ನದ ಆಭರಣಗಳನ್ನೂ ಧರಿಸಿದ್ದರು. ಕೆಂಪು ಕುಂಕುಮಧರಿಸಿ ಶೋಭಿಸುವ, ಬೈತಲೆಬಟ್ಟು/ ಚೂಡಾಮಣಿ ಧರಿಸಿ,ಮಧುರವಾದ ಕಿಂಕಿಣಿ ಸದ್ದು ಮಾಡುತ್ತಿದ್ದರು; ಕಾಂಚೀದಾಮವೆಂಬ ಸೊಂಟದ ಡಾಬು / ಪಟ್ಟಿಧರಿಸಿ ಶೋಭಿಸುತ್ತಿರುವ ಯುವತಿಯಯರು ಆನೆಗಳ ಮೇಲೆ ತಮ್ಮ ಸೇನಾಬಿಡಾರದಿಂದ /ಆಯತದಿಂದ ಬಂದರು.
  • (ಪದ್ಯ-೫)

ಪದ್ಯ :-:೬:[ಸಂಪಾದಿಸಿ]

ಸ್ಫುರದುತ್ಕಟಾಕ್ಷದಿಂ ಲಲಿತೋರುಯುಗದಿಂದೆ | ಗುರುಪಯೋಧರವಿಜಿತ ಚಕ್ರಶೋಭಿತದಿಂದೆ | ಪರಿಲುಳಿತ ಚಾಪಲತೆಯಿಂ ಪ್ರಣಯ ಕಲಹದೊಳಗದಲ್ದಿನಿಯರಂ ಜಯಿಸುವ ||
ವರಮನೋರಥದೊಳೈದುವ ಕಾಮಿನಿಯರೀಗ | ನರನ ಸಂಗರಕೆ ಪೊಂದೇರ್ಗಳನಡರ್ದು ಬರು | ತಿರೆ ಚಿತ್ರಮೆಂದು ಸಲೆ ನೋಡುತಿರ್ದರು ಸಕಲಪರಿವಾರದೊಳ್ ವೀರರು ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸ್ಫುರದ್ ಉತ್ ಕಟಾಕ್ಷದಿಂ (ಹೊಳೆಯುವ ಉತ್ತಮ ನೋಟ) ಲಲಿತ ಊರುಯುಗದಿಂದೆ ಗುರುಪಯೋಧರ ವಿಜಿತ ಚಕ್ರಶೋಭಿತದಿಂದೆ=[ಹೊಳೆಯುವ ಕಡೆಗಣ್ಣ ಚಂದ ನೋಟದಿಂದ, ಕೋಮಲವಾದ ಎರಡು ತೊಡೆಗಳಿಂದ, ದೊಡ್ಡಮೊಲೆಗಳಿಂದ, ಗೆದ್ದ ಚಕ್ರವಾಕ ಪಕ್ಷಿಯ ಶೋಭೆಯಿಂದ]; ಪರಿಲುಳಿತ (ಪರಿ ಉಲಿತ-ಕಲರವ)) ಚಾಪಲತೆಯಿಂ ಪ್ರಣಯ ಕಲಹದೊಳ್ ಅಗಲ್ದಿನಿಯರಂ ಜಯಿಸುವ ವರಮನೋರಥದೊಳು ಐದುವ ಕಾಮಿನಿಯರು= [ಹಕ್ಕಿಯ ಕಲರವದ ಮತ್ತು ಚಂಚಲ ಸ್ವಭಾವದಿಂದ, ಪ್ರಣಯ ಕಲಹದಲ್ಲಿ ದೂರ ಸರಿದ ಪ್ರೀತಿಯವನನ್ನು ಜಯಿಸುವ ಸ್ವಭಾವದಲ್ಲಿ ಬರುವ ಈ ಹೆಂಗಸರು / ಕಾಮಿನಿಯರು]; ಈಗ ನರನ ಸಂಗರಕೆ ಪೊಂದೇರ್ಗಳನು ಅಡರ್ದು ಬರುತಿರೆ ಚಿತ್ರಮೆಂದು ಸಲೆ ನೋಡುತಿರ್ದರು ಸಕಲಪರಿವಾರದೊಳ್ ವೀರರು= [ಈಗ ಅರ್ಜುನನ ಎದುರು ಯುದ್ಧಕ್ಕೆ ಹೊನ್ನಿನರಥಗಳನ್ನು ಹತ್ತಿ ಬರುತ್ತಿರಲು, ಸಕಲ ಸೈನದಲ್ಲಿದ್ದ ವೀರರು ಇದು ವಿಚಿತ್ರವು ಎಂದು ವಿಶೇಷವಾಗಿ ನೋಡುತಿದ್ದರು.]
  • ತಾತ್ಪರ್ಯ: ಹೊಳೆಯುವ ಕಡೆಗಣ್ಣ ಚಂದ ನೋಟದಿಂದ, ಕೋಮಲವಾದ ಎರಡು ತೊಡೆಗಳಿಂದ, ದೊಡ್ಡಮೊಲೆಗಳಿಂದ, ಗೆದ್ದ ಚಕ್ರವಾಕ ಪಕ್ಷಿಯ ಶೋಭೆಯಿಂದ, ಹಕ್ಕಿಯ ಕಲರವದಂತೆ ಮಾತನಾಡುವ ಮತ್ತು ಚಂಚಲ ಸ್ವಭಾವದಿಂದ ಕೂಡಿದ, ಪ್ರಣಯ ಕಲಹದಲ್ಲಿ ದೂರ ಸರಿದ ಪ್ರಿಯನನ್ನು ಜಯಿಸುವ ಸ್ವಭಾವದಲ್ಲಿ ಬರುವ ಈ ಹೆಂಗಸರು / ಕಾಮಿನಿಯರು]; ಈಗ ನರನ ಸಂಗರಕೆ ಪೊಂದೇರ್ಗಳನು ಅಡರ್ದು ಬರುತಿರೆ ಚಿತ್ರಮೆಂದು ಸಲೆ ನೋಡುತಿರ್ದರು ಸಕಲಪರಿವಾರದೊಳ್ ವೀರರು= [ಈಗ ಅರ್ಜುನನ ಎದುರು ಯುದ್ಧಕ್ಕೆ ಹೊನ್ನಿನ ರಥಗಳನ್ನು ಹತ್ತಿ ಬರುತ್ತಿರಲು, ಸಕಲ ಸೈನದಲ್ಲಿದ್ದ ವೀರರು ಇದು ವಿಚಿತ್ರವು ಎಂದು ವಿಶೇಷವಾಗಿ ನೋಡುತಿದ್ದರು.
  • (ಪದ್ಯ-೬)

ಪದ್ಯ :-:೭:[ಸಂಪಾದಿಸಿ]

ಚಂಚಲಾಕ್ಷಿಯರ ತಳತಳಿಪ ಕಡೆಗಣ್ಣ ಕುಡಿ | ಮಿಂಚವರಡರ್ದ ತೇಜಿಗಳ ದೂವಾಳಿಯಂ | ಮುಮಚಿದುವು ನಳಿತೋಳ್ಗಳಿಂ ಜಡಿದು ಝಳಪಿಸುವ ಕೈದುಗಳ ದೀಧಿತಿಗಳು ||
ಹೊಂಚಿದುವು ವಜ್ರಮಣಿಭೂಷಣದ ಕಾಂತಿಯಂ | ಪಂಚಬಾಣ ಪ್ರಯೋಗದೊಳನೇಕಾಸ್ತ್ರ ಪ್ರ | ಪಂಚವಡಗಿತ್ತೆಸೆವ ಸಿಂಗಾಡಿಗಳನವರ ಪುರ್ಬಿನ ಗಾಡಿಗಳ್ ಮಿಕ್ಕುವು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಚಂಚಲ ಅಕ್ಷಿಯರ ತಳತಳಿಪ ಕಡೆಗಣ್ಣ ಕುಡಿ ಮಿಂಚು ಅವರು ಅಡರ್ದ ತೇಜಿಗಳ ದೂವಾಳಿಯಂ ಮುಂಚಿದುವು=[ಚಂಚಲ ಕಣ್ನಿನ ಯುವತಿಯರ ಹೊಳೆಯುವ ಕಡೆಗಣ್ಣ ಕುಡಿನೋಟದ ಮಿಂಚು, ಅವರು ಹತ್ತಿರುವ ಕುದುರೆಗಳ ವೇಗವನ್ನೂ ಮೀರಿದ್ದವು.]; ನಳಿತೋಳ್ಗಳಿಂ ಜಡಿದು ಝಳಪಿಸುವ ಕೈದುಗಳ ದೀಧಿತಿಗಳು ಹೊಂಚಿದುವು =[ ತೆಳುವಾದ ತೋಳುಗಳಿಂದ ಹೊಡೆದು ಝಳಪಿಸುವ ಆಯುಧಗಳ ಕಾಂತಿಗಳು ಹೊಳೆದು ಗೆಲುವಿಗೆ ಹೊಂಚುಹಾಕಿದುವು]; ವಜ್ರಮಣಿಭೂಷಣದ ಕಾಂತಿಯಂ ಪಂಚಬಾಣ ಪ್ರಯೋಗದೊಳು ಅನೇಕಾಸ್ತ್ರ ಪ್ರಪಂಚವಡಗಿತ್ತು/ಎಸೆವ ಸಿಂಗಾಡಿಗಳನು (ಬಿಲ್ಲುಗಳು) ಅವರ ಪುರ್ಬಿನ ಗಾಡಿಗಳ್ ಮಿಕ್ಕುವು =[ವಜ್ರಮಣಿಗಳ ಆಭರಣದ ಕಾಂತಿಯು ಪಂಚಬಾಣ ಪ್ರಯೋಗದಲ್ಲಿ ಅನೇಕ ಇತರ ಅಸ್ತ್ರ ಪ್ರಪಂಚವು ಮಸುಕಾಗಿ ಅಡಗಿತ್ತು; ಅವರ ಹೊಳೆಯುವ ಬಿಲ್ಲುಗಳನ್ನು ಅವರ ಹುಬ್ಬಿನ ಸೌಂದರ್ಯವು ಮೀರಿಸಿದವು.]
  • ತಾತ್ಪರ್ಯ: ಚಂಚಲ ಕಣ್ನಿನ ಯುವತಿಯರ ಹೊಳೆಯುವ ಕಡೆಗಣ್ಣ ಕುಡಿನೋಟದ ಮಿಂಚು, ಅವರು ಹತ್ತಿರುವ ಕುದುರೆಗಳ ವೇಗವನ್ನೂ ಮೀರಿದ್ದವು. ತೆಳುವಾದ ತೋಳುಗಳಿಂದ ಹೊಡೆದು ಝಳಪಿಸುವ ಆಯುಧಗಳ ಕಾಂತಿಗಳು ಹೊಳೆದು ಗೆಲುವಿಗೆ ಹೊಂಚುಹಾಕಿದುವು; ವಜ್ರಮಣಿಗಳ ಆಭರಣದ ಕಾಂತಿಯು ಪಂಚಬಾಣ ಪ್ರಯೋಗದಲ್ಲಿ ಅನೇಕ ಇತರ ಅಸ್ತ್ರ ಪ್ರಪಂಚವು ಮಸುಕಾಗಿ ಅಡಗಿತ್ತು; ಅವರ ಹೊಳೆಯುವ ಬಿಲ್ಲುಗಳನ್ನು ಅವರ ಹುಬ್ಬಿನ ಸೌಂದರ್ಯವು ಮೀರಿಸಿದವು.
  • (ಪದ್ಯ-೭)

ಪದ್ಯ :-:೮:[ಸಂಪಾದಿಸಿ]

ಲೀಲೆ ಮಿಗೆ ಪೆಣ್ದಳಂ ಬಂದು ವಿಜಯನ ಪಡೆಯ | ಮೇಲೆ ಬಿದ್ದುದು ಕರಿ ತುರಗ ರಥ ಪದಾತಿಗಳ | ಸಾಲೆಸೆಯೆ ಸಂದಣಿಸಿ ನಾನಾಪ್ರಕಾರದಿಂ ಕೈದುಗಳ ಮಳೆಗೆರಯುತೆ ||
ಬಾಲಾರ್ಕಬಿಂಬಮುಂ ಶಶಿಮಂಡಲಮುಮೇಕ | ಕಾಲದೊಳ್ ಮೂಡಿ ಬರ್ಪಂತೆ ಪೊಂದೇರೊಳ್ ಪ್ರ | ಮೀಳೆ ಮುಖಕಾಂತಿ ಕಳಕಳಿಸೆ ನಡೆತರುತಿರ್ದಳರಸುಮೋಹರದ ನಡುವೆ ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಲೀಲೆ ಮಿಗೆ ಪೆಣ್ದಳಂ ಬಂದು ವಿಜಯನ ಪಡೆಯ ಮೇಲೆ ಬಿದ್ದುದು, ಕರಿ ತುರಗ ರಥ ಪದಾತಿಗಳ ಸಾಲು ಎಸೆಯೆ ಸಂದಣಿಸಿ ನಾನಾಪ್ರಕಾರದಿಂ ಕೈದುಗಳ ಮಳೆಗೆರಯುತೆ=[ವಿಲಾಸವು ಹೆಚ್ಚಾದಾಗ ಆಕ್ರಮಿಸುವಂತೆ, ಹೆಣ್ಣಿನಸೇನೆ ಬಂದು ಅರ್ಜುನನ ಸೇನೆಯ ಮೇಲೆ ಬಿದ್ದು ಆಕ್ರಮಿಸಿತು. ಆನೆ, ಕುದುರೆ, ರಥ ಪದಾತಿಗಳ ಸಾಲು ಎದ್ದುಕಾಣುತ್ತಿತ್ತು; ಎಲ್ಲಾ ಒಟ್ಟಾಗಿ ನಾನಾಪ್ರಕಾರದಿದ ಆಯುಧಗಳ ಮಳೆಗೆರಯುತ್ತಾ]; ಬಾಲ ಅರ್ಕ ಬಿಂಬಮುಂ ಶಶಿಮಂಡಲಮುಂ ಏಮೇಕ ಕಾಲದೊಳ್ ಮೂಡಿ ಬರ್ಪಂತೆ ಪೊಂದೇರೊಳ್ (ಪೊನ್ನು + ತೇರೊಳ್ ತೇರಲ್ಲಿ) ಪ್ರಮೀಳೆ ಮುಖಕಾಂತಿ ಕಳಕಳಿಸೆ ನಡೆತರುತಿರ್ದಳು ಅರಸು ಮೋಹರದ ನಡುವೆ=[ಪ್ರಮೀಳೆಯ ಚಿನ್ನದ ಹೊಳೆಯುವ ತೇರು/ ರಥ,ಮತ್ತು ಅದರಲ್ಲಿ ಅವಳ ದುಂಡಾದ ಮುಖವು, ಎಳೆಯ ಸೂರ್ಯನ ಬಿಂಬವೂ ಚಂದ್ರಮಂಡಲವೂ ಏಕ ಕಾಲದಲ್ಲಿ ಮೂಡಿ ಬರುವಂತೆ ಚಿನ್ನದ ರಥದಲ್ಲಿ ಪ್ರಮೀಳೆಯ ಮುಖಕಾಂತಿಯು ಕಳಕಳಿಸಿ ಹೊಳೆಯುತ್ತಿರಲು ಸೇನೆಯ ಮಧ್ಯದಲ್ಲಿದ್ದು ಮುಂದೆ ಬರುತ್ತಿದ್ದಳು.]
  • ತಾತ್ಪರ್ಯ: ವಿಲಾಸವು ಹೆಚ್ಚಾದಾಗ ಹೆಣ್ಣು ಪುರುಷನನ್ನು ಆಕ್ರಮಿಸುವಂತೆ, ಹೆಣ್ಣುಗಳ ಸೇನೆ ಬಂದು ಅರ್ಜುನನ ಸೇನೆಯ ಮೇಲೆ ಬಿದ್ದು ಆಕ್ರಮಿಸಿತು. ಆನೆ, ಕುದುರೆ, ರಥ ಪದಾತಿಗಳ ಸಾಲು ಎದ್ದುಕಾಣುತ್ತಿತ್ತು; ಎಲ್ಲಾ ಒಟ್ಟಾಗಿ ನಾನಾಪ್ರಕಾರದಿದ ಆಯುಧಗಳ ಮಳೆಗೆರಯುತ್ತಾ, ಪ್ರಮೀಳೆಯ ಚಿನ್ನದ ಹೊಳೆಯುವ ತೇರು/ ರಥ,ಮತ್ತು ಅದರಲ್ಲಿ ಅವಳ ದುಂಡಾದ ಮುಖವು, ಎಳೆಯ ಸೂರ್ಯನ ಬಿಂಬವೂ ಚಂದ್ರಮಂಡಲವೂ ಏಕ ಕಾಲದಲ್ಲಿ ಮೂಡಿ ಬರುವಂತೆ ಚಿನ್ನದ ರಥದಲ್ಲಿ ಪ್ರಮೀಳೆಯ ಮುಖಕಾಂತಿಯು ಕಳಕಳಿಸಿ ಹೊಳೆಯುತ್ತಿರಲು ಸೇನೆಯ ಮಧ್ಯದಲ್ಲಿದ್ದು ಮುಂದೆ ಬರುತ್ತಿದ್ದಳು.]
  • (ಪದ್ಯ-೮)

ಪದ್ಯ :-:೯:[ಸಂಪಾದಿಸಿ]

ಬಳಿಕಾ ಪ್ರಮೀಳೆ ಪಾರ್ಥನ ಮೋಹರಕೆ ತನ್ನ | ದಳಸಹಿತ ನಡೆತಂದು ಕಂಡಳುನ್ನತ ಕಪಿಯ | ಪಳವಿಗೆಯ ಮಣಿರಥದೊಳೊಪ್ಪುವ ಕಿರೀಟಿಯಂ ನಗುತೆ ಮಾತಾಡಿಸಿದಳು ||
ಫಲುಗುಣಂ ನೀನೆ ನಿನ್ನಶ್ವಮಂ ತಡೆದೆ ನಾಂ | ಛಲವೋ ವಿನಯವೊ ಬಿಡಿಸಿಕೊಳ್ವ ಬಗೆಯಾವುದಿ | ನ್ನಳವಿಯೊಳ್ ಕಾಣಬಹುದೆನುತ ಬಿಲ್ತೆಗೆದು ನರನಿಂತೆಂದನು ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಆ ಪ್ರಮೀಳೆ ಪಾರ್ಥನ ಮೋಹರಕೆ ತನ್ನ ದಳಸಹಿತ ನಡೆತಂದು ಕಂಡಳು ಉನ್ನತ ಕಪಿಯ ಪಳವಿಗೆಯ ಮಣಿರಥದೊಳು ಒಪ್ಪುವ ಕಿರೀಟಿಯಂ ನಗುತೆ ಮಾತಾಡಿಸಿದಳು=[ಬಳಿಕ ಆ ಪ್ರಮೀಳೆ ಪಾರ್ಥನ ಸೈನ್ಯಕ್ಕೆ ತನ್ನ ದಳದ ಸಮೇತ ಬಂದು, ಕಂಡಳು ಎತ್ತರದಲ್ಲಿ ಕಪಿಯ ಧ್ವಜವನ್ನೂ, ಮಣಿರಥದಲ್ಲಿ ಯೋಗ್ಯರೀತಿ ಕುಳಿತ ಕಿರೀಟಿಯನ್ನು ನಗುತ್ತಾ ಮಾತನಾಡಿಸಿದಳು]; =[ಫಲುಗುಣಂ ನೀನೆ ನಿನ್ನಶ್ವಮಂ ತಡೆದೆ ನಾಂ ಛಲವೋ ವಿನಯವೊ ಬಿಡಿಸಿಕೊಳ್ವ ಬಗೆಯಾವುದು ಇನ್ನು ಅಳವಿಯೊಳ್ (ಪರಾಕ್ರಮದಲ್ಲಿ) ಕಾಣಬಹುದು ಎನುತ ಬಿಲ್ತ್ ತಗೆದು ನರನು ಇಂತೆಂದನು= [(ಕಪಿಧ್ವಜ) ಫಲ್ಗುಣನು ನೀನೆ ಅಲ್ಲವೇ! ನಿನ್ನ ಕುದುರೆಯನ್ನು ನಾನು ತಡೆದಿರುವೆನು. ಈಗ ಛಲದಿಂದ ಯುದ್ಧಮಾಡುವೆಯೋ ಅಥವಾ ವಿನಯದಿಂದ ಬಿಡಿಸಿಕೊಳ್ಳುವಿಯೋ? ಬಗೆ ಯಾವುದು ಎಂದು, ಬಿಲ್ಲು ತೆಗೆದುಕೊಂಡು,ಇನ್ನು ನನ್ನ ಪರಾಕ್ರಮದಲ್ಲಿ ಕಾಣಬಹುದು ಎನ್ನಲು, ಅರ್ಜುನನು ಹೀಗೆ ಹೇಳಿದನು.]
  • ತಾತ್ಪರ್ಯ: ಬಳಿಕ ಆ ಪ್ರಮೀಳೆ ಪಾರ್ಥನ ಸೈನ್ಯಕ್ಕೆ ತನ್ನ ದಳದ ಸಮೇತ ಬಂದು, ಕಂಡಳು ಎತ್ತರದಲ್ಲಿ ಕಪಿಯ ಧ್ವಜವನ್ನೂ, ಮಣಿರಥದಲ್ಲಿ ಯೋಗ್ಯರೀತಿ ಕುಳಿತ ಕಿರೀಟಿಯನ್ನು ನಗುತ್ತಾ ಮಾತನಾಡಿಸಿದಳು]; (ಕಪಿಧ್ವಜ) ಫಲ್ಗುಣನು ನೀನೆ ಅಲ್ಲವೇ! ನಿನ್ನ ಕುದುರೆಯನ್ನು ನಾನು ತಡೆದಿರುವೆನು. ಈಗ ಛಲದಿಂದ ಯುದ್ಧಮಾಡುವೆಯೋ ಅಥವಾ ವಿನಯದಿಂದ (ನನ್ನ ನಿಯಮಕ್ಕೆ ಒಪ್ಪಿ) ಬಿಡಿಸಿಕೊಳ್ಳುವಿಯೋ? ಬಗೆ ಯಾವುದು ಎಂದು, ಬಿಲ್ಲು ತೆಗೆದುಕೊಂಡು,ಇನ್ನು ನನ್ನ ಪರಾಕ್ರಮದಲ್ಲಿ ಕಾಣಬಹುದು ಎನ್ನಲು, ಅರ್ಜುನನು ಹೀಗೆ ಹೇಳಿದನು.]
  • (ಪದ್ಯ-೯)

ಪದ್ಯ :-:೧೦:[ಸಂಪಾದಿಸಿ]

ನಾರಿಯೊಳ್ ಕಾಳಗವೆ ತನಗಕಟ ಕಡುಗಿ ಮದ | ನಾರಿಯೊಳ್ ಕಾದಿದುಗ್ಗಡದ ನಿಜಕಾರ್ಮುಕದ | ನಾರಿಯೊಳ್ ಕಣೆಯಂ ತುಡುವೆನೆಂತೊ ಶಿವಶಿವಾ ಪರ್ಯಂಕಮಂ ಸಾರ್ದೊಡೆ ||
ನೀರಜಶರಾಹವದೊಳೊದಗುವೊಡೆ ಕಡುಚದುರೆ | ನೀ ರಣದೊಳಾಳ್ತನವನೆನ್ನೊಡನೆ ತೋರಿದೊಡೆ | ನೀರಸವೆನಿಸದೆ ಪೇಳೆಂದು ಕುಂತೀಸುತಂ ನುಡಿದೊಡವಳಿಂತೆಂದಳು ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಾರಿಯೊಳ್ ಕಾಳಗವೆ ತನಗೆ ಅಕಟ ಕಡುಗಿ (ಪರಾಕ್ರಮದಿಂದ) ಮದನಾರಿಯೊಳ್ ಕಾದಿದ ಉಗ್ಗಡದ ನಿಜಕಾರ್ಮುಕದ ನಾರಿಯೊಳ್ ಕಣೆಯಂ ತುಡುವೆನೆಂತೊ ಶಿವಶಿವಾ= [ತನಗೆ ಹೆಣ್ಣಿನ ಜೊತೆ ಯುದ್ಧವೇ! ಅಕಟ! ಪರಾಕ್ರಮದಿಂದ ಶಿವನೊಡನೆ ಯುದ್ಧಮಾಡಿದ ಉತ್ತಮವಾದ ನನ್ನ ಬಿಲ್ಲಿನ ಬಾಣವನ್ನು ನಾರಿಯಲ್ಲಿ /ಹೆಣ್ಣಿನ ಮೇಲೆ ಎಂತು /ಹೇಗೆ ತೊಡಲಿ ! ಶಿವಶಿವಾ!]; ಪರ್ಯಂಕಮಂ ಸಾರ್ದೊಡೆ ನೀರಜ ಶರ ಆಹವದೊಳು (ಮನ್ಮಥನ ಬಾಣದ ಕಾಳಗದಲ್ಲಿ) ಒದಗುವೊಡೆ ಕಡುಚದುರೆ ನೀ ರಣದೊಳು ಆಳ್ತನವನು ಎನ್ನೊಡನೆ ತೋರಿದೊಡೆ ನೀರಸವೆನಿಸದೆ ಪೇಳೆಂದು ಕುಂತೀಸುತಂ ನುಡಿದೊಡೆ ಅವಳಿಂತು ಎಂದಳು= [ಅವಳ ಬಯಕೆಯಂತೆ ಮಂಚವೇರಿದರೆ ರತಿಕೂಟದಲ್ಲಿ ಸೇರಿದರೆ ಅತಿಜಾಣೆ (ಅಲ್ಲಿಯೂಕೊಲ್ಲುವೆ) ನೀನು ರಣರಂಗದಲ್ಲಿ ಶೌರ್ಯವನ್ನು ನನ್ನೊಡನೆ ತೋರಿಸಿದರೆ ನೀರಸ ಎನ್ನಿಸದೆ ಹೇಳು ಎಂದು ಅರ್ಜುನ ಹೇಳಿದಾಗ ಅವಳ ಹೀಗೆ ಎಂದಳು].
  • ತಾತ್ಪರ್ಯ: ತನಗೆ ಹೆಣ್ಣಿನ ಜೊತೆ ಯುದ್ಧವೇ! ಅಕಟ! ಪರಾಕ್ರಮದಿಂದ ಶಿವನೊಡನೆ ಯುದ್ಧಮಾಡಿದ ಉತ್ತಮವಾದ ನನ್ನ ಬಿಲ್ಲಿನ ಬಾಣವನ್ನು ನಾರಿಯಲ್ಲಿ /ಹೆಣ್ಣಿನ ಮೇಲೆ ಎಂತು /ಹೇಗೆ ತೊಡಲಿ ! ಶಿವಶಿವಾ!(ಅವಳ ಬಯಕೆಯಂತೆ ಮಂಚವೇರಿ ರತಿಕೂಟದಲ್ಲಿ ಸೇರಿದರೆ ಅತಿಜಾಣೆ - ಅಲ್ಲಿಯೂ ಕೊಲ್ಲುವೆ) ನೀನು ಹಾಸಿಗೆಯ ಮನ್ಮಥಯುದ್ಧದಲ್ಲಿ ಅತಿ ಜಾಣೆ! ರಣರಂಗದಲ್ಲಿ ಶೌರ್ಯವನ್ನು ನನ್ನೊಡನೆ ತೋರಿಸಿದರೆ ನೀರಸ ಎನ್ನಿಸದೆ ಹೇಳು ಎಂದು ಅರ್ಜುನ ಹೇಳಿದಾಗ ಅವಳ ಹೀಗೆ ಎಂದಳು.
  • (ಪದ್ಯ-೧೦)

ಪದ್ಯ :-:೧೧:[ಸಂಪಾದಿಸಿ]

ಪರಿಯಂಕಮಂ ಸಾರ್ದೊಡಂಗಜಾಹವದೊಳಗ | ಪರಿಮಿತಸುಖಾವಹದ ಸುರತ ತಂತ್ರದ ಕಲೆಯ | ಪರಿವಿಡಿಗಳಂ ತೋರಿಸುವೆನೀಗಳೆನ್ನಂ ವರಿಸುವುದಲ್ಲದೊಡೆ ನಿನ್ನ ||
ತುರಗಮಂ ಬಿಡುವುದಿಲ್ಲದಟಿಂದೆ ಕಾದುವಾ | ತುರಮುಳ್ಳೊಡಿದಿರಾಗಿ ನೋಡು ಸಾಕೆನ್ನೊಳೆನು | ತುರವಣಿಸುತವಳೆಚ್ಚೊಡರ್ಜುನಂ ಸೈರಿಸುತ್ತೆಳನಗೆಯೊಳಿಂತೆಂದನು ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪರಿಯಂಕಮಂ ಸಾರ್ದೊಡೆ ಅಂಗಜ ಆಹವದೊಳಗೆ ಅಪರಿಮಿತ ಸುಖ+ಆವಹದ ಸುರತ ತಂತ್ರದ ಕಲೆಯ ಪರಿವಿಡಿಗಳಂ ತೋರಿಸುವೆನು=[ನನ್ನೊಡನೆ, ಮಂಚಕ್ಕೆ ಬಂದರೆ ಮನ್ಮಥನಯುದ್ಧದಲ್ಲಿ / ರತಿಕ್ರಿಡೆಯಲ್ಲಿ ಅಪರಿಮಿತ /ಅತಿಯಾದ ರತಿಕ್ರೀಡೆಯ ತಂತ್ರದ ಕಲೆಯ ಅನೇಕವಿಧಗಳನ್ನು ತೋರಿಸುವೆನು]; ಈಗಳೆನ್ನಂ ವರಿಸುವುದು ಅಲ್ಲದೊಡೆ ನಿನ್ನ ತುರಗಮಂ ಬಿಡುವುದಿಲ್ಲ= [ಈಗ ನನ್ನನ್ನು ವರಿಸುವುದು ಇಲ್ಲದಿದ್ದರೆ ನಿನ್ನ ತುರಗವನ್ನು ಬಿಡುವುದಿಲ್ಲ]; ಅದಟಿಂದೆ ಕಾದುವ ಆತುರಮ್ ಉಳ್ಳೊಡೆ ಇದಿರಾಗಿ ನೋಡು ಸಾಕು ಎನ್ನೊಳೆನುತ ಉರವಣಿಸುತ ಅವಳು ಎಚ್ಚೊಡೆ ಅರ್ಜುನಂ ಸೈರಿಸುತ್ತ ಎಳನಗೆಯೊಳು ಇಂತೆಂದನು= [ಶೌರ್ಯದಿಂದ ಹೋರಾಡುವ ಬಯಕೆ ಇದ್ದರೆ ನನಗೆ ಎದುರು ನಿಂತು ನೋಡು ಸಾಕು ಎನ್ನುತ್ತಾ ಪರಾಕ್ರಮತೋರಿ ಅವಳು ಬಾಣಹೊಡೆದಳು; ಅರ್ಜುನನು ಸಹಿಸಿಕೊಂಡು, ಎಳನಗೆಯಿಂದ ಹೀಗೆ ಹೇಳಿದನು.]
  • ತಾತ್ಪರ್ಯ: ನನ್ನೊಡನೆ, ಮಂಚಕ್ಕೆ ಬಂದರೆ ಮನ್ಮಥನಯುದ್ಧದಲ್ಲಿ / ರತಿಕ್ರಿಡೆಯಲ್ಲಿ ಅಪರಿಮಿತ /ಅತಿಯಾದ ರತಿಕ್ರೀಡೆಯ ತಂತ್ರದ ಕಲೆಯ ಅನೇಕವಿಧಗಳನ್ನು ತೋರಿಸುವೆನು; ಈಗ ನನ್ನನ್ನು ವರಿಸುವುದು; ಇಲ್ಲದಿದ್ದರೆ ನಿನ್ನ ತುರಗವನ್ನು ಬಿಡುವುದಿಲ್ಲ; ಶೌರ್ಯದಿಂದ ಹೋರಾಡುವ ಬಯಕೆ ಇದ್ದರೆ ನನಗೆ ಎದುರು ನಿಂತು ನೋಡು ಸಾಕು ಎನ್ನುತ್ತಾ ಪರಾಕ್ರಮತೋರಿ ಅವಳು ಬಾಣ ಹೊಡೆದಳು; ಅರ್ಜುನನು ಸಹಿಸಿಕೊಂಡು, ಎಳನಗೆಯಿಂದ ಹೀಗೆ ಹೇಳಿದನು.
  • (ಪದ್ಯ-೧೧)

ಪದ್ಯ :-:೧೨:[ಸಂಪಾದಿಸಿ]

ವಿಷಯೋಪಭೋಗಮಂ ಬಯಸಿ ನಿನಗಾನೊಲಿಯೆ | ವಿಷಯೋಗಮಾಗದಿರ್ದಪುದೆ ಪೇಳ್ ಪುರುಷರೀ | ವಿಷಯೋದ್ಭವ ಸ್ತ್ರೀಯರಂ ಬೆರಸಿ ಬಾಳ್ದಪರೆ ಸಾಕದಂತಿರಲಿ ನಿನಗೆ ||
ವೃಷಭಾಯಿತದೊಳಾಂತ ಭಟರೊಳ್ ಪಳಂಚುವ ಪ | ರುಷಭಾಷಿತವನಬಲೆ ನಿನ್ನೊಳಾಡುವುದು ಪೌ | ರುಷಭಾವಮಲ್ಲ ಬಿಡು ವಾಜಿಯಂ ಪೆಣ್ಗೊಲೆಗಳುಕುವೆನೆಂದಂ ಪಾರ್ಥನು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಿಷಯ ಉಪಭೋಗಮಂ ( ಬಯಸಿ ನಿನಗೆ ಆನು ಒಲಿಯೆ ವಿಷಯೋಗಮಾಗದಿರ್ದಪುದೆ ಪೇಳ್ ಪುರುಷರು ಈ ವಿಷಯೋದ್ಭವ ಸ್ತ್ರೀಯರಂ ಬೆರಸಿ ಬಾಳ್ದಪರೆ =[ಹೆಣ್ನಿನ ಸುಖವನ್ನು ಬಯಸಿ ನಿನಗೆ ನಾನು ಪ್ರೀತಿಸಿ ಒಲಿದರೆ, ನನಗೆ ವಿಷದ ಸೋಂಕು ಆಗದಿರುವುದೇ ಹೇಳು? ಪುರುಷರು ವಿಷದೊಂದಿಗೆ ಹುಟ್ಟಿದ ಈ ಸ್ತ್ರೀಯರ ಜೊತೆ ಬೆರತು ಬದುಕುವರೇ?]; ಸಾಕು ಅದು ಅಂತಿರಲಿ, ನಿನಗೆ

ವೃಷಭಾಯಿತದೊಳು ಆಂತ ಭಟರೊಳ್ ಪಳಂಚುವ ಪರುಷಭಾಷಿತವನು ಅಬಲೆ ನಿನ್ನೊಳಾಡುವುದು ಪೌರುಷಭಾವಮಲ್ಲ=[ಸಾಕು ಅದು ಹಾಗಿರಲಿ, ನಿನಗೆ ಹೋರಿಕಾಳಗದಲ್ಲಿ ಬಳಸುವ ಭಾಷೆಯನ್ನು ಹೊಂದಿರುವ ಭಟರು ಉಪಯೋಗಿಸುವ ವೀರ ನುಡಿಗಟ್ಟನ್ನು ಅಬಲೆಯಾದ ನಿನ್ನಜೊತೆ ಆಡುವುದು ಪೌರುಷ ಗಣವಲ್ಲ]; ಬಿಡು ವಾಜಿಯಂ ಪೆಣ್ಗೊಲೆಗೆ ಅಳುಕುವೆನೆಂದಂ ಪಾರ್ಥನು =[ಕುದುರೆಯನ್ನು ಬಿಡು; ಹೆಣ್ಣಿನ ಕೊಲೆಗೆ ಅಳುಕುವೆನು / ಹಿಂದೆಗೆಯುವೆನು ಎಂದನು ಪಾರ್ಥ].

  • ತಾತ್ಪರ್ಯ: ಹೆಣ್ಣಿನ ಸುಖವನ್ನು ಬಯಸಿ ನಿನಗೆ ನಾನು ಒಲಿದರೆ, ನನಗೆ ವಿಷದ ಸೋಂಕು ಆಗದಿರುವುದೇ ಹೇಳು? ಪುರುಷರು ವಿಷದೊಂದಿಗೆ ಹುಟ್ಟಿದ ಈ ಸ್ತ್ರೀಯರ ಜೊತೆ ಬೆರತು ಬದುಕುವರೇ? ಸಾಕು ಅದು ಹಾಗಿರಲಿ ನಿನಗೆ ಹೋರಿಕಾಳಗದಲ್ಲಿ ಬಳಸುವ ಭಾಷೆಯನ್ನು ಹೊಂದಿರುವ ಭಟರು ಉಪಯೋಗಿಸುವ ವೀರ ನುಡಿಗಟ್ಟನ್ನು ಅಬಲೆಯಾದ ನಿನ್ನಜೊತೆ ಆಡುವುದು ಪೌರುಷ ಗಣವಲ್ಲ]; ಬಿಡು ವಾಜಿಯಂ ಪೆಣ್ಗೊಲೆಗೆ ಅಳುಕುವೆನೆಂದಂ ಪಾರ್ಥನು =[ಕುದುರೆಯನ್ನು ಬಿಡು; ಹೆಣ್ಣಿನ ಕೊಲೆಗೆ ಅಳುಕುವೆನು / ಹಿಂದೆಗೆಯುವೆನು ಎಂದನು ಪಾರ್ಥ].
  • (ಪದ್ಯ-೧೨)

ಪದ್ಯ :-:೧೩:[ಸಂಪಾದಿಸಿ]

ಕಾದಲಂಬಿಂದೆ ಕೊಂದಪೆನೀಗಳಲ್ಲದೊಡೆ | ಕಾದಲಂ ನೀನಾಗೆ ಸುರತಮೋಹಕೆ ಪ | ಕ್ಕಾದಲಂಪಿನ ಸೌಖ್ಯಮಂ ತಳೆದ ಬಳಿಕಹುದು ಮೃತಿ ತಪ್ಪದೆಂತುಮಳಿವು ||
ಸಾದರದೊಳೆನ್ನೊಡನೆ ರಮಿಸುವುದು ನಿನಗೆ ಸೊಗ | ಸಾದರದನನುಕರಿಸು ಮೇಣ್ ಕಲಹಕೃತವೆ ಲೇ | ಸಾದರದಟಂ ತೋರಿಸೆಂದಾ ಪ್ರಮೀಳೆ ಪಾರ್ಥನ ಮೇಲೆ ಕಣೆಗರೆದಳು ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾದಲು (ಯುದ್ಧಮಾಡಿದರೆ) ಅಂಬಿಂದೆ ಕೊಂದಪೆನು ಈಗಳು ಅಲ್ಲದೊಡೆ ಕಾದಲಂ (ಪ್ರಿಯತಮ) ನೀನಾಗೆ ಸುರತಮೋಹಕೆ ಪಕ್ಕಾದ ಅಲಂಪಿನ ಸೌಖ್ಯಮಂ ತಳೆದ ಬಳಿಕ ಅಹುದು ಮೃತಿ ತಪ್ಪದೆಂತುಂ ಅಳಿವು= [ಅಂಬಿನಿಂದ ಯುದ್ಧಮಾಡಿದರೆ (ನಿನ್ನನ್ನು) ಈಗಲೇ ಕೊಂದು ಹಾಕುವೆನು; ಅಲ್ಲದಿದ್ದರೆ ನೀನು ನನಗೆ ಪ್ರಿಯತಮನು ಆದರೆ ಪ್ರೀತಿಯಸಂಭೋಗದಲ್ಲಿ ಪಕ್ವವಾದ ಹೆಚ್ಚಿನ ಆನಂದದ ಸುಖವನ್ನು ಹೊಂದಿದ ಬಳಿಕ ಸಾವು ಬರುವುದು. ಏನಾದರೂ ಮೃತ್ಯು ತಪ್ಪದು, ಅಳಿವು ವಿಶ್ಚಿತವು.]; ಸಾದರದೊಳು (ಸ + ಆದರದೊಳು- ಗೌರವ ಮತ್ತು ಪ್ರೀತಿಯಿಂದ) ಎನ್ನೊಡನೆ ರಮಿಸುವುದು ನಿನಗೆ ಸೊಗಸಾದರೆ ಅದನು ಅನುಕರಿಸು (ಅಂಗೀಕರಿಸು) ಮೇಣ್ ಕಲಹಕೃತವೆ ಲೇಸಾದರೆ ಅದಟಂ ತೋರಿಸು ಎಂದಾ ಪ್ರಮೀಳೆ ಪಾರ್ಥವ ಮೇಲೆ ಕಣೆಗರೆದಳು =[ಸಾದರದೊಳು ನನ್ನೊಡನೆ ಗೌರವ ಮತ್ತು ಪ್ರೀತಿಯಿಂದ ರಮಿಸು- ರತಿಕ್ರೀಡೆ ಮಾಡು, ನಿನಗೆ ಇದೇ ಸೊಗಸಾದರೆ ಅದನ್ನು ಅನುಸರಿಸು; ಇಲ್ಲವೇ, ಯುದ್ಧವೇ ಒಳ್ಳೆಯದು ಎನಿಸಿದರೆ, ನಿನ್ನ ಪೌರುಷವನ್ನು ತೋರಿಸು, ಎಂದು ಆ ಪ್ರಮೀಳೆ ಪಾರ್ಥನ ಮೇಲೆ ಬಾಣಗಳ ಮಳೆಗರೆದಳು].
  • ತಾತ್ಪರ್ಯ: ಅಂಬಿನಿಂದ ಯುದ್ಧಮಾಡಿದರೆ (ನಿನ್ನನ್ನು) ಈಗಲೇ ಕೊಂದು ಹಾಕುವೆನು; ಅಲ್ಲದಿದ್ದರೆ ನನಗೆ ಪ್ರಿಯತಮನು ನೀನು ಆದರೆ ಪ್ರೀತಿಯಸಂಭೋಗದಲ್ಲಿ ಪಕ್ವವಾದ ಹೆಚ್ಚಿನ ಆನಂದದ ಸುಖವನ್ನು ಹೊಂದಿದ ಬಳಿಕ ಸಾವು ಬರುವುದು. ಏನಾದರೂ ಮೃತ್ಯು ತಪ್ಪದು, ಅಳಿವು ವಿಶ್ಚಿತವು. ನನ್ನೊಡನೆ ಗೌರವ ಮತ್ತು ಪ್ರೀತಿಯಿಂದ ರಮಿಸು- ರತಿಕ್ರೀಡೆ ಮಾಡು, ನಿನಗೆ ಇದೇ ಸೊಗಸಾದರೆ ಅದನ್ನು ಒಪ್ಪಿಕೋ, ಅನುಸರಿಸು; ಇಲ್ಲವೇ, ಯುದ್ಧವೇ ಒಳ್ಳೆಯದು ಎನಿಸಿದರೆ, ನಿನ್ನ ಪೌರುಷವನ್ನು ತೋರಿಸು, ಎಂದು ಆ ಪ್ರಮೀಳೆ ಪಾರ್ಥನ ಮೇಲೆ ಬಾಣಗಳ ಮಳೆಗರೆದಳು].
  • (ಪದ್ಯ-೧೩)

ಪದ್ಯ :-:೧೪:[ಸಂಪಾದಿಸಿ]

ಹಿಂದೆ ಶೂರ್ಪಣಖಿ ಲಕ್ಷ್ಮಣನನಂಡಲೆದು ಪಡೆ | ದಂದಮಂ ನೆನೆದಿವಳನೀಕ್ಷಣವೆ ಭಂಗಿಸುವೆ | ನೆಂದು ಸಮ್ಮೋಹನಾಸ್ತ್ರವನುಗಿದು ಗಾಂಡೀವದೊಳ್ ಪೂಡಿ ಪಾರ್ಥನಿಸಲು ||
ಮಂದಸ್ಮಿತದೊಳದಂ ಕಡಿದು ಬಿಲ್ದಿರುವನೆ | ಚ್ಚಿಂದುಮುಖಿ ಶಕ್ರಸುತನಂ ನೋಯಿಸಲ್ಕೆ ಮ | ತ್ತೊಂದುಹೆದೆಯಂ ಚಾಪಕೇರಿಸಿ ನರಂ ಪೂಡಿದಂ ದಿವ್ಯಮಾರ್ಗಣವನು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹಿಂದೆ ಶೂರ್ಪಣಖಿ ಲಕ್ಷ್ಮಣನನು ಅಂಡಲೆದು ಪಡೆದ ಅಂದಮಂ ನೆನೆದು ಇವಳನು ಈಕ್ಷಣವೆ ಭಂಗಿಸುವೆನೆಂದು ಸಮ್ಮೋಹನಾಸ್ತ್ರವನು ಉಗಿದು ಗಾಂಡೀವದೊಳ್ ಪೂಡಿ ಪಾರ್ಥನು ಇಸಲು=[ಹಿಂದೆ ಶೂರ್ಪಣಖಿ ಲಕ್ಷ್ಮಣನನ್ನು ಹಿಂಸೆಪಡಿಸಿ ಕಾಟಕೊಟ್ಟು ಶಿಕ್ಷೆ ಪಡೆದ ರೀತಿಯನ್ನು ನೆನೆದು ಇವಳನ್ನು ಈ ಕ್ಷಣದಲ್ಲಿ ಸೋಲಿಸುವೆನೆಂದು ಸಮ್ಮೋಹನಾಸ್ತ್ರವನ್ನು ಬತ್ತಳಿಕೆಯಿಂದ ತೆಗೆದು ಗಾಂಡೀವದಲ್ಲಿ ಹೂಡಿ ಪಾರ್ಥನು ಹೊಡೆಯಲು]; ಮಂದಸ್ಮಿತದೊಳು ಅದಂ ಕಡಿದು ಬಿಲ್ದಿರುವನು ಎಚ್ಚಿ ಇಂದುಮುಖಿ ಶಕ್ರಸುತನಂ ನೋಯಿಸಲ್ಕೆ ಮತ್ತೊಂದು ಹೆದೆಯಂ ಚಾಪಕೇರಿಸಿ ನರಂ ಪೂಡಿದಂ ದಿವ್ಯಮಾರ್ಗಣವನು=[ಮುಗುಳು ನಗುತ್ತಾ ಅದನ್ನು ಕಡಿದು ಪಾರ್ಥನ ಬಿಲ್ಲಿನ ಹಗ್ಗವನ್ನು ಹೊಡೆದು ಪ್ರಮೀಳೆ ಪಾರ್ಥನನ್ನು ನೋಯಿಸಿದಳು; ಆಗ ಮತ್ತೊಂದು ಹೆದೆಯನ್ನು ಬಿಲ್ಲಿಗೆ ಏರಿಸಿ ಅರ್ಜುನನು ಪೂಡಿದಂ ದಿವ್ಯ ಅಸ್ಸ್ರವನ್ನು ಹೂಡಿದನು.]
  • ತಾತ್ಪರ್ಯ: ಹಿಂದೆ ಶೂರ್ಪಣಖಿ ಲಕ್ಷ್ಮಣನನ್ನು ಹಿಂಸೆಪಡಿಸಿ ಕಾಟಕೊಟ್ಟು ಶಿಕ್ಷೆ ಪಡೆದ ರೀತಿಯನ್ನು ನೆನೆದು, ಇವಳನ್ನು ಈ ಕ್ಷಣದಲ್ಲಿ ಸೋಲಿಸುವೆನೆಂದು ಸಮ್ಮೋಹನಾಸ್ತ್ರವನ್ನು ಬತ್ತಳಿಕೆಯಿಂದ ತೆಗೆದು ಗಾಂಡೀವದಲ್ಲಿ ಹೂಡಿ ಪಾರ್ಥನು ಹೊಡೆಯಲು; ಮುಗುಳು ನಗುತ್ತಾ ಅದನ್ನು ಕಡಿದು ಪಾರ್ಥನ ಬಿಲ್ಲಿನ ಹಗ್ಗವನ್ನು ಹೊಡೆದು ಕಡಿದು, ಪ್ರಮೀಳೆ ಪಾರ್ಥನನ್ನು ನೋಯಿಸಿದಳು; ಆಗ ಮತ್ತೊಂದು ಹೆದೆಯನ್ನು ಬಿಲ್ಲಿಗೆ ಏರಿಸಿ ಅರ್ಜುನನು ದಿವ್ಯಾಸ್ತ್ರವನ್ನು ಹೂಡಿದನು.]
  • (ಪದ್ಯ-೧೪)

ಪದ್ಯ :-:೧೫:[ಸಂಪಾದಿಸಿ]

ಆ ಸಮಯದೊಳ್ ನುಡಿದುದಶರೀರವಾಕ್ಯಮಾ | ಕಾಶದೊಳ್ ಬೇಡಬೇಡೆಲೆ ಪಾರ್ಥ ಹೆಂಗೊಲೆಗೆ | ಹೇಸದೆ ಮಹಾಸ್ತ್ರಮಂ ತುಡುವೆ ನೀಂ ಮುಳಿದಯುತವರ್ಷಮಿನ್ನಿವಳಕೂಡೆ ||
ಬೇಸರದೆ ಕಾದಿದೊಡೆ ತೀರಲರಿಯದು ಮನದ | ವಾಸಿಯಂ ಬಿಟ್ಟು ವರಿಸೀಕೆಯಂ ಸತಿಯಾಗೆ | ಲೇಸಹುದು ಮುಂದೆ ನಿನಗೆಂದು ನಿಡುಸರದಿಂದೆ ಸಕಲಜನಮುಂ ಕೇಳ್ವೊಲು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಸಮಯದೊಳ್ ನುಡಿದುದ ಅಶರೀರವಾಕ್ಯಮ್ ಆಕಾಶದೊಳ್ ಬೇಡಬೇಡೆಲೆ ಪಾರ್ಥ ಹೆಂಗೊಲೆಗೆ ಹೇಸದೆ ಮಹಾಸ್ತ್ರಮಂ ತುಡುವೆ=[ಆ ಸಮಯದಲ್ಲಿ ಆಕಾಶದಲ್ಲಿ ಅಶರೀರವಾಣಿ ಏನೆಂದರೆ, 'ಬೇಡಬೇಡ ಎಲೆ ಪಾರ್ಥ ಹೆಂಗಸಿನ ಕೊಲೆಗೆ ಹೇಸದೆ ಮಹಾಸ್ತ್ರವನ್ನು ತೊಡುವೆಯಾಡು]; ನೀಂ ಮುಳಿದು ಅಯುತವರ್ಷಂ ಇನ್ನಿವಳ ಕೂಡೆ ಬೇಸರದೆ ಕಾದಿದೊಡೆ ತೀರಲು ಅರಿಯದು=[ನೀನು ಕೋಪದಿಂದ ಹತ್ತುಸಾವಿರ ವರ್ಷಕಾಲ ಇವಳಕೂಡೆ ಬೇಸರಪಡದೆ ಯುದ್ಧಮಾಡಿದರೂ, ಯುದ್ಧ ಮುಗಿಯದು,]; ಮನದವಾಸಿಯಂ ಬಿಟ್ಟು ವರಿಸೀಕೆಯಂ ಸತಿಯಾಗೆ ಲೇಸಹುದು ಮುಂದೆ ನಿನಗೆಂದು ನಿಡುಸರದಿಂದೆ ಸಕಲಜನಮುಂ ಕೇಳ್ವೊಲು=[ಮನದ ಅಭಿಮಾನ ಬಿಟ್ಟು ಈಕೆಯನ್ನು ವರಿಸು; ಸತಿಯಾದರೆ ಮುಂದೆ ನಿನಗೆ ಒಳ್ಳೆಯದು ಆಗುವುದು', ಎಂದು ದೀರ್ಘಸ್ವರದಿಂದ ಸಕಲಜನರೂ ಕೇಳುವಂತೆ ನುಡಿಯಿತು.].
  • ತಾತ್ಪರ್ಯ: ಆ ಸಮಯದಲ್ಲಿ ಆಕಾಶದಲ್ಲಿ ಅಶರೀರವಾಣಿಯು, 'ಬೇಡಬೇಡ ಎಲೆ ಪಾರ್ಥ ಹೆಂಗಸಿನ ಕೊಲೆಗೆ ಹೇಸದೆ ಮಹಾಸ್ತ್ರವನ್ನು ತೊಡುವೆಯಾಡು; ನೀನು ಕೋಪದಿಂದ ಹತ್ತುಸಾವಿರ ವರ್ಷಕಾಲ ಇವಳಕೂಡೆ ಬೇಸರಪಡದೆ ಯುದ್ಧಮಾಡಿದರೂ, ಯುದ್ಧ ಮುಗಿಯದು, ಮನದ ಅಭಿಮಾನ ಬಿಟ್ಟು ಈಕೆಯನ್ನು ವರಿಸು; ಸತಿಯಾದರೆ ಮುಂದೆ ನಿನಗೆ ಒಳ್ಳೆಯದಾಗುವುದು', ಎಂದು ದೀರ್ಘಸ್ವರದಿಂದ ಸಕಲಜನರೂ ಕೇಳುವಂತೆ ನುಡಿಯಿತು.
  • (ಪದ್ಯ-೧೫)xxiv

ಪದ್ಯ :-:೧೬:[ಸಂಪಾದಿಸಿ]

ಆಲಿಸಿದನಶರೀರವಾಣಿಯಂ ಪೂಡಿರ್ದ | ಕೋಲನೊಯ್ಯನೆ ಶರಾಸನದಿಂದಮಿಳಿಪಿದಂ | ಮೇಲಣ ವಿಚಾರಮಂ ಚಿತ್ತದೊಳ್ ತಿಳಿದನಾಳೋಚಿಸಿದನಾಪ್ತರೊಡನೆ ||
ಆ ಲಲನೆಯಂ ತನ್ನೆಡೆಗೆ ಬರಿಸಿಕೊಂಡು ತ | ತ್ಕಾಲೋಚಿತದೊಳೊಡಂಬಡಿಸಿ ಕೈವಿಡಿದನನು | ಕೂಲೆಯಾಗಿರೆ ಬಳಿಕ ನಸುನಗುತೆ ವಿನಯದಿಂ ಕಲಿಪಾರ್ಥನಿಂತೆಂದನು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆಲಿಸಿದನು ಅಶರೀರವಾಣಿಯಂ ಪೂಡಿರ್ದ ಕೋಲನು ಒಯ್ಯನೆ ಶರಾಸನದಿಂದಂ ಇಳಿಪಿದಂ=[ ಅಶರೀರವಾಣಿಯನ್ನು ಕೇಳಿದನು. ಹೂಡಿದ ಅಸ್ತ್ರವನ್ನು ಮೆಲ್ಲನೆ ಬಿಲ್ಲಿನಿಂದ ಇಳಿಸಿದನು.]; ಮೇಲಣ ವಿಚಾರಮಂ ಚಿತ್ತದೊಳ್ ತಿಳಿದನು ಆಳೋಚಿಸಿದನು ಆಪ್ತರೊಡನೆ=[ಮುಂದಿನ ಮಾಡಬೇಕಾದ ವಿಚಾರವನ್ನು ಮನಸ್ಸಿನಲ್ಲಿ ತಿಳಿದುಕೊಂಡನು. ಆಪ್ತರೊಡನೆ ಚರ್ಚಿಸಿದನು.]; ಆ ಲಲನೆಯಂ ತನ್ನೆಡೆಗೆ ಬರಿಸಿಕೊಂಡು ತತ್ಕಾಲೋಚಿತದೊಳು ಒಡಂಬಡಿಸಿ ಕೈವಿಡಿದನನುಕೂಲೆಯಾಗಿರೆ ಬಳಿಕ ನಸುನಗುತೆ ವಿನಯದಿಂ ಕಲಿಪಾರ್ಥನು ಇಂತೆಂದನು =[ಆ ಯುವತಿಯನ್ನು ತನ್ನಬಳಿಗೆ ಕರೆಸಿಕೊಂಡು ಯೋಗ್ಯರೀತಿಯಲ್ಲಿ ಆ ಕಾಲಕ್ಕೆ ತಕ್ಕಂತೆ ಒಪ್ಪಿಸಿ, ಅನುಕೂಲೆಯಾಗಿರಲು ಕೈಯನ್ನು ಹಿಡಿದುಕೊಂಡನು. ಬಳಿಕ ನಸುನಗುತ್ತಾ ವಿನಯದಿಂದ ಕಲಿಪಾರ್ಥನು ಹೀಗೆಂದನು.]
  • ತಾತ್ಪರ್ಯ: ಪಾರ್ಥನು ಅಶರೀರವಾಣಿಯನ್ನು ಕೇಳಿದನು. ಹೂಡಿದ ಅಸ್ತ್ರವನ್ನು ಮೆಲ್ಲನೆ ಬಿಲ್ಲಿನಿಂದ ಇಳಿಸಿದನು. ಮುಂದೆ ಮಾಡಬೇಕಾದ ವಿಚಾರವನ್ನು ಮನಸ್ಸಿನಲ್ಲಿ ತಿಳಿದುಕೊಂಡನು. ಆಪ್ತರೊಡನೆ ಚರ್ಚಿಸಿದನು. ಆ ಯುವತಿಯನ್ನು ತನ್ನಬಳಿಗೆ ಕರೆಸಿಕೊಂಡು ಯೋಗ್ಯರೀತಿಯಲ್ಲಿ ಆ ಕಾಲಕ್ಕೆ ತಕ್ಕಂತೆ ಒಪ್ಪಿಸಿ, ಅನುಕೂಲೆಯಾಗಿರಲು ಕೈಯನ್ನು ಹಿಡಿದುಕೊಂಡನು. ಬಳಿಕ ನಸುನಗುತ್ತಾ ವಿನಯದಿಂದ ಕಲಿಪಾರ್ಥನು ಹೀಗೆಂದನು.
  • (ಪದ್ಯ-೧೬)

ಪದ್ಯ :-:೧೭:[ಸಂಪಾದಿಸಿ]

ಕಣ್ಣಳವಿದಲ್ಲಬಲೆ ಕೇಳ್ ದೀಕ್ಷೆಗೊಂಡಿರ್ಪ | ನಣ್ಣದೇವಂ ತಾನುಮನ್ನೆಗಂ ವ್ರತಿಯಾಗಿ | ಪೆಣ್ಣೊಳ್ ಬೆರೆಯೆನೆಂದು ಪೊರಮಟ್ಟೆನಶ್ವರಕ್ಷೆಗೆ ಮುಂದೆ ಗಜಪುರದೊಳು ||
ಪಣ್ಣುವಧ್ವರಕೆ ನೀಂ ಬಂದು ಕನ್ನೈದಿಲೆಯ | ಬಣ್ಣದ ಮುರಾರಿಯಂ ಕಂಡು ವಿಷವಧುತನದ | ತಿಣ್ಣಮಂ ಕಳೆದೆನ್ನೊಳೊಡಗೂಡು ಸೌಖ್ಯಮಹುದಲ್ಲಿಗೈತಹುದೆಂದನು ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಣ್ಣ ಅಳವಿ ಇದಲ್ಲ ಅಬಲೆ ಕೇಳ್ ದೀಕ್ಷೆಗೊಂಡಿರ್ಪನು ಅಣ್ಣದೇವಂ ತಾನುಂ ಅನ್ನೆಗಂ ವ್ರತಿಯಾಗಿ ಪೆಣ್ಣೊಳ್ ಬೆರೆಯೆನೆಂದು ಪೊರಮಟ್ಟೆನು ಅಶ್ವರಕ್ಷೆಗೆ=[ಪ್ರಮೀಳೆ, ಇದು ಕೇವಲ ಕಣ್ಣಿನ ಮೇಲುನೋಟಕ್ಕೆ ಸೀಮಿತವಾದ ಮಾತಲ್ಲ (ಕಣ್ಣುಕಟ್ಟಿನ ಮಾತಲ್ಲ); 'ಅಬಲೆ ಕೇಳು ನನ್ನ ಅಣ್ಣದೇವ ಧರ್ಮಜನು ಅಸಿಪತ್ರವ್ರತದ ದೀಕ್ಷೆಯಲ್ಲಿರುವನು, ತಾನೂ ಸಹ; ಅದು ಮುಗಿಯುವವರೆಗೆ ವ್ರತಧಾರಿಯಾಗಿ ಹೆಣ್ಣಿನೊಡನೆ ಬೆರೆಯುವುದಿಲ್ಲವೆಂದು ಯಜ್ಞದಕುದುರೆಯ ರಕ್ಷೆಗಾಗಿ ಹೊರಟಿದ್ದೇನೆ.]; ಮುಂದೆ ಗಜಪುರದೊಳು ಪಣ್ಣುವ ಅಧ್ವರಕೆ ನೀಂ ಬಂದು ಕನ್ನೈದಿಲೆಯ ಬಣ್ಣದ ಮುರಾರಿಯಂ ಕಂಡು ವಿಷವಧುತನದ ತಿಣ್ಣಮಂ ಕಳೆದು=[ಮುಂದೆ ಹಸ್ತಿನಾವತಿ ಪುರದಲ್ಲಿ ಹೊಮ್ಮಿಕೊಳ್ಳುವ ಅಧ್ವರ / ಯಜ್ಞಕ್ಕೆ ನೀನು ಬಂದು ಕನ್ನೈದಿಲೆಯ ಬಣ್ಣದ ಕೃಷ್ಣನನ್ನು ಕಂಡು ವಿಷಕನ್ಯೆಯ ಗುಣದ ಕೆಡುಕನ್ನು ಪರಿಹರಿಸಿಕೊಂಡು]; ಎನ್ನೊಳು ಒಡಗೂಡು ಸೌಖ್ಯಮಹುದು ಅಲ್ಲಿಗೆ ಐತಹುದು ಎಂದನು=[ನನ್ನನ್ನು ಒಡಗೂಡಬಹುದು; ಅಲ್ಲಿಗೆ ಬರುವುದರಿಂದ ಸೌಖ್ಯವುಂಟಾಗುವುದು', ಎಂದನು.].
  • ತಾತ್ಪರ್ಯ: ಪ್ರಮೀಳೆ, ಇದು ಕೇವಲ ಕಣ್ಣಿನ ಮೇಲುನೋಟಕ್ಕೆ ಸೀಮಿತವಾದ ಮಾತಲ್ಲ (ಕಣ್ಣುಕಟ್ಟಿನ ಮಾತಲ್ಲ); 'ಅಬಲೆ ಕೇಳು ನನ್ನ ಅಣ್ಣದೇವ ಧರ್ಮಜನು ಅಸಿಪತ್ರವ್ರತದ ದೀಕ್ಷೆಯಲ್ಲಿರುವನು, ತಾನೂ ಸಹ; ಅದು ಮುಗಿಯುವವರೆಗೆ ವ್ರತಧಾರಿಯಾಗಿ ಹೆಣ್ಣಿನೊಡನೆ ಬೆರೆಯುವುದಿಲ್ಲವೆಂದು ನಿಯಮಿತನಾಗಿ ಯಜ್ಞದಕುದುರೆಯ ರಕ್ಷೆಗಾಗಿ ಹೊರಟಿದ್ದೇನೆ. ಮುಂದೆ ಹಸ್ತಿನಾವತಿ ನಗರದಲ್ಲಿ ಹೊಮ್ಮಿಕೊಳ್ಳುವ ಅಧ್ವರ / ಯಜ್ಞಕ್ಕೆ ನೀನು ಬಂದು ಕನ್ನೈದಿಲೆಯ ಬಣ್ಣದ ಕೃಷ್ಣನನ್ನು ಕಂಡು ವಿಷಕನ್ಯೆಯ ಗುಣದ ಕೆಡುಕನ್ನು ಪರಿಹರಿಸಿಕೊಂಡು, ನನ್ನನ್ನು ಒಡಗೂಡಬಹುದು; ಅಲ್ಲಿಗೆ ಬರುವುದರಿಂದ ಸೌಖ್ಯವುಂಟಾಗುವುದು', ಎಂದನು.].
  • (ಪದ್ಯ-೧೭)

ಪದ್ಯ :-:೧೮:[ಸಂಪಾದಿಸಿ]

ಎನಲಾ ಪ್ರಮೀಳೆ ಪಾರ್ಥನ ಮಾತಿಗೊಪ್ಪಿ ಕರ | ವನಜಮಂ ನೀಡಿ ನಂಬುಗೆಗೊಂಡು ಕುದುರೆಯಂ | ಮನೆಯಿಂ ತರಿಸಿಕೊಟ್ಟುತನ್ನಾಲಯದೊಳಿರ್ದ ವಿವಿಧರತ್ನಾವಳಿಗಳನು ||
ಜನಪದದೊಳಿರ್ದ ವಸ್ತುಗಳೆಲ್ಲಮಂ ಕೊಂಡು | ವನಿತೆಯರ ಮೋಹರಂಬೆರಸಿ ಪೊರಮಟ್ಟು ಯಮ | ತನಯನಂ ಕಾಣ್ಬ ಕಡುತವಕದಿಂ ಬಂದಳಿಭನಗರಿಗತಿಸಂಭ್ರಮದೊಳು||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎನಲಾ ಪ್ರಮೀಳೆ ಪಾರ್ಥನ ಮಾತಿಗೊಪ್ಪಿ ಕರವನಜಮಂ ನೀಡಿ ನಂಬುಗೆಗೊಂಡು ಕುದುರೆಯಂ ಮನೆಯಿಂ ತರಿಸಿಕೊಟ್ಟು =[ಪಾರ್ಥನು ಹೀಗೆ ಹೇಳಲು, ಆ ಪ್ರಮೀಳೆ ಪಾರ್ಥನ ಮಾತಿಗೆ ಒಪ್ಪಿಕೊಂಡು ಕಮಲದಂತಿರುವ ಕೈನೀಡಿ (ಭಾಷೆಪಡೆದು) ನಂಬುಗೆಹೊಂದಿ, ಕುದುರೆಯನ್ನು ಮನೆಯಿಂದ ತರಿಸಿಕೊಟ್ಟು]; ತನ್ನಾಲಯದೊಳು ಇರ್ದ ವಿವಿಧರತ್ನಾವಳಿಗಳನು ಜನಪದದೊಳಿರ್ದ ವಸ್ತುಗಳೆಲ್ಲಮಂ ಕೊಂಡು ವನಿತೆಯರ ಮೋಹರಂ ಬೆರಸಿ ಪೊರಮಟ್ಟು =[ತನ್ನ ಅರಮನೆಯಲ್ಲಿದ್ದ ವಿವಿಧರತ್ನಗಳನ್ನು ರಾಜ್ಯದಲ್ಲಿದ್ದ ವಿಶೇಷ ವಸ್ತುಗಳೆಲ್ಲವನ್ನೂ ತೆಗೆದುಕೊಂಡು ರಾಜ್ಯದ ವನಿತೆಯರ ಸಮೂಹದೊಡನೆ ಹೊರಟು]; ಯಮ ತನಯನಂ ಕಾಣ್ಬ ಕಡುತವಕದಿಂ ಬಂದಳು ಇಭನಗರಿಗೆ ಅತಿಸಂಭ್ರಮದೊಳು=[ಧರ್ಮರಾಯನನ್ನು ಕಾಣುವ ಬಯಕೆಯಿಂದ ಹಸ್ತಿನಾವತಿಗೆ ಬಹಳ ಸಂಭ್ರಮದಿಂದ ಬಂದಳು].
  • ತಾತ್ಪರ್ಯ: ಪಾರ್ಥನು ಹೀಗೆ ಹೇಳಲು, ಆ ಪ್ರಮೀಳೆ ಪಾರ್ಥನ ಮಾತಿಗೆ ಒಪ್ಪಿಕೊಂಡು ಕಮಲದಂತಿರುವ ಕೈನೀಡಿ (ಭಾಷೆಪಡೆದು) ನಂಬುಗೆಹೊಂದಿ, ಕುದುರೆಯನ್ನು ಮನೆಯಿಂದ ತರಿಸಿಕೊಟ್ಟು, ತನ್ನ ಅರಮನೆಯಲ್ಲಿದ್ದ ವಿವಿಧರತ್ನಗಳನ್ನು ರಾಜ್ಯದಲ್ಲಿದ್ದ ವಿಶೇಷ ವಸ್ತುಗಳೆಲ್ಲವನ್ನೂ ತೆಗೆದುಕೊಂಡು ರಾಜ್ಯದ ವನಿತೆಯರ ಸಮೂಹದೊಡನೆ ಹೊರಟು, ಧರ್ಮರಾಯನನ್ನು ಕಾಣುವ ಬಯಕೆಯಿಂದ ಹಸ್ತಿನಾವತಿಗೆ ಬಹಳ ಸಂಭ್ರಮದಿಂದ ಬಂದಳು.
  • (ಪದ್ಯ-೧೮)

ಪದ್ಯ :-:೧೯:[ಸಂಪಾದಿಸಿ]

ಗಜನಗರಿಗಾಕೆಯಂ ಕಳುಹಿ ಕುದುರೆಯ ಕೂಡ | ವಿಜಯನೈತರೆ ಮುಂದೆ ದೇಶಂಗಳಜಮನುಜ | ಗಜ ಗೋಶ್ವ ಮಹಿಷಾದಿ ನಿಕರಂಗಳಿಂದೆ ಪೂರಿತಮಾಗಿ ಕಂಗೊಳಿಸಲು ||
ಕುಜಕುಜಂಗಳ ಪೊದರೊಳತಿ ಸೂಕ್ಷ್ಮಜೀವರಂ | ಬುಜಮಿತ್ರನುದಯಕುದ್ಭವಿಸಿ ಮಧ್ಯಾಹ್ನದೊಳ್ | ನಿಜದ ಜೌವನದಿಂದೆ ಬಾಳ್ದಸ್ತಮಯಕಳಿಯುತಿರೆ ಕಂಡು ಬೆರಗಾದನು ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಗಜನಗರಿಗೆ ಆಕೆಯಂ ಕಳುಹಿ ಕುದುರೆಯ ಕೂಡ ವಿಜಯನು ಐತರೆ= [ಹಸ್ತಿನಾವತಿಗೆ ಪ್ರಮೀಳೆಯನ್ನು ಕಳುಹಿಸಿ, ಕುದುರೆಯ ಜೊತೆ ಅತ್ಜುನನು ಬರುತ್ತಿರಲು,]; ಮುಂದೆ ದೇಶಂಗಳು ಅಜ ಮನುಜ ಗಜ ಗೋಶ್ವ ಮಹಿಷಾದಿ ನಿಕರಂಗಳಿಂದೆ ಪೂರಿತಮಾಗಿ ಕಂಗೊಳಿಸಲು =[ಮುಂದಿನ ದೇಶಗಳು ಆಡು, ಮನುಜ, ಗಜ, ಗೋ, ಅಶ್ವ, ಮಹಿಷ /ಕೋಣ, ಮೊದಲಾದ ಪ್ರಾಣಿಸಮೂಹ ಪೂರಿತವಾಗಿ ಕಂಗೊಳಿಸುತ್ತಿತ್ತು.]; ಕುಜಕುಜಂಗಳ ಪೊದರೊಳತಿ ಸೂಕ್ಷ್ಮಜೀವರು ಅಂಬುಜಮಿತ್ರನ ಉದಯಕೆ ಉದ್ಭವಿಸಿ ಮಧ್ಯಾಹ್ನದೊಳ್ ನಿಜದ ಜೌವನದಿಂದೆ ಬಾಳ್ದಸ್ತಮಯಕಳಿಯುತಿರೆ ಕಂಡು ಬೆರಗಾದನು=[ಗಿಡ ಮರಗಳ ಪೊದರುಗಳಲ್ಲಿ, ಅತಿ ಸೂಕ್ಷ್ಮಜೀವಿಗಳು ಸೂರ್ಯನ ಉದಯದಲ್ಲಿ ಹುಟ್ಟಿ ಮಧ್ಯಾಹ್ನದ ಸಮಯಕ್ಕೆ ತಮ್ಮ ಯೌವನದಿಂದ ಬಾಳಿ ಅಸ್ತಮಯ ಸಮಯಕ್ಕೆ ಸಾಯುವುದನ್ನು ಕಂಡು ಅರ್ಜುನನು ಬೆರಗಾದನು].
  • ತಾತ್ಪರ್ಯ: ಹಸ್ತಿನಾವತಿಗೆ ಪ್ರಮೀಳೆಯನ್ನು ಕಳುಹಿಸಿ, ಕುದುರೆಯ ಜೊತೆ ಅತ್ಜುನನು ಬರುತ್ತಿರಲು, ಮುಂದಿನ ದೇಶಗಳು ಆಡು, ಮನುಜ, ಗಜ, ಗೋ, ಅಶ್ವ, ಮಹಿಷ /ಕೋಣ, ಮೊದಲಾದ ಪ್ರಾಣಿಸಮೂಹ ಪೂರಿತವಾಗಿ ಕಂಗೊಳಿಸುತ್ತಿತ್ತು. ಅಲ್ಲಿ ಗಿಡ ಮರಗಳ ಪೊದರುಗಳಲ್ಲಿ, ಅತಿ ಸೂಕ್ಷ್ಮಜೀವಿಗಳು ಸೂರ್ಯನ ಉದಯದಲ್ಲಿ ಹುಟ್ಟಿ ಮಧ್ಯಾಹ್ನದ ಸಮಯಕ್ಕೆ ತಮ್ಮ ಯೌವನದಿಂದ ಬಾಳಿ ಅಸ್ತಮಯ ಸಮಯಕ್ಕೆ ಸಾಯುವುದನ್ನು ಕಂಡು ಅರ್ಜುನನು ಬೆರಗಾದನು.
  • (ಪದ್ಯ-೧೯)

ಪದ್ಯ :-:೨೦:[ಸಂಪಾದಿಸಿ]

ಮತ್ತೆ ಮುಂದೈದುವ ತುರಂಗಮದ ಕೂಡೆ ನಡೆ | ಯುತ್ತೆ ಬರಿದೊಗಲುಡಿಗೆಯವರ ವಕ್ರಾಂಗಿಗಳ | ನೊತ್ತೊಳವರನೊಂದು ಕಾಲವರನೊಂದು ಕಣ್ಣವರ ಮೂರಡಿಗಳವರ ||
ಉತ್ತುಂಗ ನಾಸಿಕದವರ ಮೂರು ಕಣ್ಣವರ | ನೆತ್ತಿಗೋಡೆರಡುಳ್ಳವರನೊಂದು ಕೋಡುವರ | ಕತ್ತೆಮೊಗದವರ ಕುದುರೆಮೊಗದವರ ದೇಶಂಗಳಂ ಕಂಡನಾ ಕಲಿಪಾರ್ಥನು ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮತ್ತೆ ಮುಂದೆ ಐದುವ ತುರಂಗಮದ ಕೂಡೆ ನಡೆಯುತ್ತೆ ಬರಿದೊಗಲು ಉಡಿಗೆಯವರ ವಕ್ರಾಂಗಿಗಳನ ಒತ್ತೊಳವರನು ಒಂದು ಕಾಲವರನು ಒಂದು ಕಣ್ಣವರ ಮೂರಡಿಗಳವರ=[ಮತ್ತೆ ಮುಂದೆ ಹೋಗುವ ತುರಗದ ಜೊತೆ ನಡೆಯುತ್ತಾ, ಬರಿಚರ್ಮದ ಉಡಿಗೆಯವರನ್ನೂ, ವಕ್ರಾಂಗಗಳದೇಹದವರನ್ನೂ, ಒಂದೇ ತೋಳಿನವರನ್ನೂ, ಒಂದು ಕಾಲು ಉಳ್ಳವರನ್ನೂ, ಒಂದು ಕಣ್ಣಿನವರನ್ನೂ, ಮೂರು ಅಡಿಗಳ ಎತ್ತರದವರನ್ನೂ,]; ಉತ್ತುಂಗ ನಾಸಿಕದವರ ಮೂರು ಕಣ್ಣವರ ನೆತ್ತಿಗೋಡು ಎರಡುಳ್ಳವರನು ಒಂದು ಕೋಡುವರ ಕತ್ತೆಮೊಗದವರ ಕುದುರೆಮೊಗದವರ ದೇಶಂಗಳಂ ಕಂಡನು ಆ ಕಲಿಪಾರ್ಥನು =[ಎತ್ತರದ ಮೂಗಿನವರನ್ನೂ, ಮೂರು ಕಣ್ಣಿನವರನ್ನೂ, ನೆತ್ತಿಯಲ್ಲಿ ಕೋಡು ಎರಡು ಉಳ್ಳವರನ್ನೂ, ಒಂದು ಕೋಡು ಇರುವವರನ್ನೂ, ಕತ್ತೆಮುಖದವರನ್ನೂ, ಕುದುರೆಮುಖದವರನ್ನೂ ಹೊಂದಿರುವ ದೇಶಗಳನ್ನು ಆ ಕಲಿಪಾರ್ಥನು ಕಂಡನು].
  • ತಾತ್ಪರ್ಯ: ಮತ್ತೆ ಮುಂದೆ ಹೋಗುವ ತುರಗದ ಜೊತೆ ನಡೆಯುತ್ತಾ, ಅಲ್ಲಿ ಬರಿಚರ್ಮದ ಉಡಿಗೆಯವರನ್ನೂ, ವಕ್ರಾಂಗಗಳದೇಹದವರನ್ನೂ, ಒಂದೇ ತೋಳಿನವರನ್ನೂ, ಒಂದು ಕಾಲು ಉಳ್ಳವರನ್ನೂ, ಒಂದು ಕಣ್ಣಿನವರನ್ನೂ, ಮೂರು ಅಡಿಗಳ ಎತ್ತರದವರನ್ನೂ, ಎತ್ತರದ ಮೂಗಿನವರನ್ನೂ, ಮೂರು ಕಣ್ಣಿನವರನ್ನೂ, ನೆತ್ತಿಯಲ್ಲಿ ಕೋಡು ಎರಡು ಉಳ್ಳವರನ್ನೂ, ಒಂದು ಕೋಡು ಇರುವವರನ್ನೂ, ಕತ್ತೆಮುಖದವರನ್ನೂ, ಕುದುರೆಮುಖದವರನ್ನೂ ಹೊಂದಿರುವ ದೇಶಗಳನ್ನು ಆ ಕಲಿಪಾರ್ಥನು ಕಂಡನು.
  • (ಪದ್ಯ-೨೦)

ಪದ್ಯ :-:೨೧:[ಸಂಪಾದಿಸಿ]

ಅಲ್ಲಿಗಲ್ಲಿಗೆ ತುರಂಗದ ಕೂಡೆ ಕೌಂತೇಯ | ನಿಲ್ಲದಿಲ್ಲದ ಚಿತ್ರಮಂ ನೋಡುತೈತರಲ್ | ಮೆಲ್ಲಮೆಲ್ಲನೆ ಹಯಂ ಪೋಯ್ತು ಬೀಷಣನೆಂಬಸುರನ ಪುರಕದರೊಳವನ ||
ಸೊಲ್ಲುಸೊಲ್ಲಿಗೆ ಮಿಗೆ ಹಸಾದವೆನುತವನಿಯೊಳ್ | ಸಲ್ಲಸಲ್ಲದ ಕೃತ್ಯಮೆಲ್ಲಮಂ ನೆರೆ ಮಾಡ | ಬಲ್ಲ ಬಲ್ಲಿದ ರಕ್ಕಸರ್ ಮೂರು ಕೋಟಿ ತಳ್ತಿಹರತಿಭಯಂಕರದೊಳು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಲ್ಲಿಗೆ ಅಲ್ಲಿಗೆ ತುರಂಗದ ಕೂಡೆ ಕೌಂತೇಯ ನಿಲ್ಲದೆ ಇಲ್ಲದ ಚಿತ್ರಮಂ ನೋಡುತ ಐತರಲ್ =[ಕುದುರೆ ಎಲ್ಲಗೆ ಹೋದರೆ ಅಲ್ಲಿಗೆ ತುರಗದ ಜೊತೆ ಅರ್ಜುನನು, ನಿಲ್ಲದೆ ಹೋಗುತ್ತಾ, ಎಲ್ಲೂ ಇಲ್ಲದ ವಿಚಿತ್ರವನ್ನು ನೋಡುತ್ತಾ ಬರುತ್ತಿರಲು,]; ಮೆಲ್ಲಮೆಲ್ಲನೆ ಹಯಂ ಪೋಯ್ತು ಬೀಷಣನೆಂಬ ಅಸುರನ ಪುರಕೆ=[ಮೆಲ್ಲಮೆಲ್ಲನೆ ಸಾವಕಾಶವಾಗಿ, ಕುದುರೆಯು ಬೀಷಣನೆಂಬ ರಾಕ್ಷಸನ ಪುರಕ್ಕೆ ಹೋಯಿತು.]; ಅದರೊಳು ಅವನ ಸೊಲ್ಲುಸೊಲ್ಲಿಗೆ ಮಿಗೆ ಹಸಾದವೆನುತ ಅವನಿಯೊಳ್ ಸಲ್ಲಸಲ್ಲದ ಕೃತ್ಯಮೆಲ್ಲಮಂ ನೆರೆ ಮಾಡಬಲ್ಲ ಬಲ್ಲಿದ ರಕ್ಕಸರ್ ಮೂರು ಕೋಟಿ ತಳ್ತಿಹರು ಅತಿಭಯಂಕರದೊಳು =[ಅದರಲ್ಲಿ ಅವನ ಎಲ್ಲಾ ಮಾತಿಗೆ ಆಜ್ಞೆಗೆ, ಬಹಳ ವಿಧೇಯತೆಯಿಂದ 'ಹಸಾದ' ಆಗಲಿ ಎನ್ನುತ್ತಾ ಭೂಮಿಯಲ್ಲಿ,ಮಾಡಬಾರದ / ಸಲ್ಲದ ಕೃತ್ಯವೆಲ್ಲವನ್ನೂ, ತುಂಬಾ ವಿಧೇಯತೆಯಿಂದ ಮಾಡಬಲ್ಲ ಬಲಿಷ್ಠ ರಾಕ್ಷಸರು ಅತಿಭಯಂಕರರು ಮೂರು ಕೋಟಿ ತುಂಬಿರುವರು.]
  • ತಾತ್ಪರ್ಯ: ಕುದುರೆ ಎಲ್ಲಗೆ ಹೋದರೆ ಅಲ್ಲಿಗೆ ತುರಗದ ಜೊತೆ ಅರ್ಜುನನು, ನಿಲ್ಲದೆ ಹೋಗುತ್ತಾ, ಎಲ್ಲೂ ಇಲ್ಲದ ವಿಚಿತ್ರವನ್ನು ನೋಡುತ್ತಾ ಬರುತ್ತಿರಲು, ಮೆಲ್ಲಮೆಲ್ಲನೆ ಸಾವಕಾಶವಾಗಿ, ಕುದುರೆಯು ಬೀಷಣನೆಂಬ ರಾಕ್ಷಸನ ಪುರಕ್ಕೆ ಹೋಯಿತು. ಅದರಲ್ಲಿ ಅವನ ಎಲ್ಲಾ ಮಾತಿಗೆ ಆಜ್ಞೆಗೆ, ಬಹಳ ಒಪ್ಪಿಗೆಯಿಂದ 'ಹಸಾದ' ಆಗಲಿ ಎನ್ನುತ್ತಾ ಭೂಮಿಯಲ್ಲಿ,ಮಾಡಬಾರದ / ಸಲ್ಲದ ಕೃತ್ಯವೆಲ್ಲವನ್ನೂ, ತುಂಬಾ ವಿಧೇಯತೆಯಿಂದ ಮಾಡಬಲ್ಲ ಬಲಿಷ್ಠ ರಾಕ್ಷಸರು ಅತಿಭಯಂಕರರು ಮೂರು ಕೋಟಿ ತುಂಬಿದ್ದರು.]
  • (ಪದ್ಯ-೨೧)

ಪದ್ಯ :-:೨೨:[ಸಂಪಾದಿಸಿ]

ರಕ್ಕಸರನಿಬರೆಲ್ಲರುಂ ದೀರ್ಘದೇಹಿಗಳ್ | ವೆಕ್ಕಸದ ಕೋಪಿಗಳ್ ಮೇಲೆ ಪುರುಷಾದಕರ್ | ಕಕ್ಕಸದ ಮುಸುಡವರ್ ಬಹಳಮಾಯಾವಿಗಳ್ ನಿರ್ದಯರ್ ಕೊಲೆಗಡಿಕರು ||
ಹೊಕ್ಕ ಸಮರಕ್ಕೆ ಹಿಮ್ಮೆಟ್ಟರುನ್ಮತ್ತರೆನೆ | ಮಿಕ್ಕಸದಳವನದೇವೇಳ್ವೆನರ್ಜುನನ ಹಯ | ಮೆಕ್ಕರಸದೊಳ್ ಬಂದುದಲ್ಲಿಗವನೀಶ ಕೇಳಿನ್ನಾ ಮಹಾದ್ಭುತವನು ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಕ್ಕಸರು ಅನಿಬರು ಎಲ್ಲರುಂ ದೀರ್ಘದೇಹಿಗಳ್ ವೆಕ್ಕಸದ ಕೋಪಿಗಳ್ ಮೇಲೆ ಪುರುಷಾದಕರ್ ಕಕ್ಕಸದ ಮುಸುಡವರ್ ಬಹಳಮಾಯಾವಿಗಳ್ ನಿರ್ದಯರ್ ಕೊಲೆಗಡಿಕರು=[ರಾಕ್ಷಸರು ಅವರು ಎಲ್ಲರೂ ಎತ್ತರದ ದೇಹವುಳ್ಳವರು, ಕ್ರೂರರಾದ ಕೋಪಿಗಳು, ಮತ್ತು ಅಧಮರು, ಕಠಿಣ ಮುಖದವರು, ಬಹಳ ಮಾಯಾವಿಗಳು, ನಿರ್ದಯರು, ಕೊಲೆಗಡಕರು, ]; ಹೊಕ್ಕ ಸಮರಕ್ಕೆ ಹಿಮ್ಮೆಟ್ಟರು ಉನ್ಮತ್ತರು ಎನೆ ಮಿಕ್ಕ ಅಸದಳವನು ಅದು ಏವೇಳ್ವೆನು ಅರ್ಜುನನ ಹಯಂ ಎಕ್ಕರಸದೊಳ್ ಬಂದುದು ಅಲ್ಲಿಗೆ ಅವನೀಶ ಕೇಳಿನ್ನು ಆ ಮಹಾದ್ಭುತವನು=[ಯುದ್ಧಕ್ಕೆ ಹೊಕ್ಕರೆ ಹಿಮ್ಮೆಟ್ಟುವುದಿಲ್ಲ, ಉದ್ರೇಕಿಗಳು, ಹಿಗಿರಲು ಹೆಚ್ಚಿನ ಅತಿಶಯವನ್ನು ಅದು ಏನೆಂದು ಹೇಳಲಿ. ಅರ್ಜುನನ ಕುದುರೆ ಒಂದೇ ಉಸುರಿಗೆ ಅಲ್ಲಿಗೆ ಬಂದಿತು,ರಾಜನೇ ಇನ್ನು ಆ ಮಹಾದ್ಭುತವನ್ನು ಕೇಳು.]
  • ತಾತ್ಪರ್ಯ: ಅಲ್ಲಿ ರಾಕ್ಷಸರು ಅವರು ಎಲ್ಲರೂ ಎತ್ತರದ ದೇಹವುಳ್ಳವರು, ಕ್ರೂರರಾದ ಕೋಪಿಗಳು, ಮತ್ತು ಅಧಮರು, ಕಠಿಣ ಮುಖದವರು, ಬಹಳ ಮಾಯಾವಿಗಳು, ನಿರ್ದಯರು, ಕೊಲೆಗಡಕರು, ಯುದ್ಧಕ್ಕೆ ಹೊಕ್ಕರೆ ಹಿಮ್ಮೆಟ್ಟುವುದಿಲ್ಲ, ಉದ್ರೇಕಿಗಳು, ಹಿಗಿರಲು ಹೆಚ್ಚಿನ ಅತಿಶಯವನ್ನು ಅದು ಏನೆಂದು ಹೇಳಲಿ. ಅರ್ಜುನನ ಕುದುರೆ ಒಂದೇ ಉಸುರಿಗೆ ಅಲ್ಲಿಗೆ ಬಂದಿತು,ರಾಜನೇ ಇನ್ನು ಆ ಮಹಾದ್ಭುತವನ್ನು ಕೇಳು.
  • (ಪದ್ಯ-೨೨)

ಪದ್ಯ :-:೨೩:[ಸಂಪಾದಿಸಿ]

ಆಹಾರಕಡವಿಯಂ ತೊಳಲಿ ಬರುತಿರ್ದ ಮೇ | ದೋಹೋತನೆಂಬವಂ ದಾನವೇಂದ್ರಂಗೆ ಪೌ | ರೋಹಿತ್ಯಮಂ ಮಾಡುವಂ ಬ್ರಹ್ಮರಾಕ್ಷಸಂ ಕಂಡು ಪಾರ್ಥನ ಹಯವನು ||
ಊಹಿಸಿದನಿದು ಯಜ್ಞತುರಗಮೀ ದಳಮಿದರ | ಕಾಹಿನದು ಮೇಣಿದಕೆ ಕರ್ತೃನರನೆಂದರಿದು | ಬಾಹುವಂ ಚಪ್ಪರಿಸಿಕೊಂಡುತ್ಸವದೊಳಸುರನೋಲಗಕೆ ಪರಿತಂದನು ||23|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆಹಾರಕೆ ಅಡವಿಯಂ ತೊಳಲಿ ಬರುತಿರ್ದ ಮೇದೋಹೋತನೆಂಬವಂ ದಾನವೇಂದ್ರಂಗೆ ಪೌರೋಹಿತ್ಯಮಂ ಮಾಡುವಂ ಬ್ರಹ್ಮರಾಕ್ಷಸಂ =[ಆಹಾರಕ್ಕಾಗಿ ಅಡವಿಯಲ್ಲಿ ಸಂಚರಿಸಿ,ಬರುತ್ತಿದ್ದ ಮೇದೋಹೋತನೆಂಬವನು ದಾನವರ ರಾಜನಿಗೆ ಪೌರೋಹಿತ್ಯವನ್ನು ಮಾಡುವ ಬ್ರಹ್ಮರಾಕ್ಷಸನು.]; ಕಂಡು ಪಾರ್ಥನ ಹಯವನು ಊಹಿಸಿದನು ಇದು ಯಜ್ಞತುರಗಂ ಈ ದಳಂ ಇದರ ಕಾಹಿನದು ಮೇಣ್ ಇದಕೆ ಕರ್ತೃ ನರನೆಂದು ಅರಿದು ಬಾಹುವಂ ಚಪ್ಪರಿಸಿಕೊಂಡು ಉತ್ಸವದೊಳು ಅಸುರನ ಓಲಗಕೆ ಪರಿತಂದನು =[ಅವನು ಪಾರ್ಥನ ಕುದುರೆಯನ್ನು ಕಂಡು ಊಹಿಸಿದನು. ಇದು ಯಜ್ಞತುರಗವು; ಈ ಸೈನ್ಯ ಇದರ ಕಾವಲಿನದು; ಮತ್ತೆ ಇದಕ್ಕೆ ನಾಯಕ ನರ / ಅರ್ಜುನನೆಂದು ತಿಳಿದುಕೊಂಡು ಬಾಹುವನ್ನು ತಟ್ಟಿಕೊಂಡು ಸಂಬ್ರಮದಿಂದ ರಾಕ್ಷಸರಾಜನ ರಾಜಸಭೆಗೆ ಬಂದನು.]
  • ತಾತ್ಪರ್ಯ: ಆಹಾರಕ್ಕಾಗಿ ಅಡವಿಯಲ್ಲಿ ಸಂಚರಿಸಿ,ಬರುತ್ತಿದ್ದ ಮೇದೋಹೋತನೆಂಬವನು ದಾನವರ ರಾಜನಿಗೆ ಪೌರೋಹಿತ್ಯವನ್ನು ಮಾಡುವ ಬ್ರಹ್ಮರಾಕ್ಷಸನು. ಅವನು ಪಾರ್ಥನ ಕುದುರೆಯನ್ನು ಕಂಡು ಹೀಗೆ ಊಹಿಸಿದನು. ಇದು ಯಜ್ಞತುರಗವು; ಈ ಸೈನ್ಯ ಇದರ ಕಾವಲಿನದು; ಮತ್ತೆ ಇದಕ್ಕೆ ನಾಯಕ ನರ / ಅರ್ಜುನನೆಂದು ತಿಳಿದುಕೊಂಡು ಬಾಹುವನ್ನು ತಟ್ಟಿಕೊಂಡು ಸಂಭ್ರಮದಿಂದ ರಾಕ್ಷಸರಾಜನ ರಾಜಸಭೆಗೆ ಬಂದನು.
  • (ಪದ್ಯ-೨೩)

ಪದ್ಯ :-:೨೪:[ಸಂಪಾದಿಸಿ]

ನರವಿನುಪವೀತದಿಂ ಕಣ್ಣಾಲಿಗಳೊಳ್ ಕೋದ | ಕೊರಳ ತಾವಡದಿಂದೆ ನರರ ತಲೆಗಳ ಜಪದ | ಸರದಿಂದೆ ಪಂದೊವಲ ಧೋತ್ರದಿಂದೊಟ್ಟೆಯೆಲುಗಳ ಕುಂಡಲಂಗಳಿಂದೆ ||
ಕರಿಶಿರದ ಡೊಗೆಯ ಸಲಿಲದ ಕಮಂಡುಲದಿಂದೆ | ಯುರುಗಜದ ಬೆನ್ನಸ್ಥಿಯಷ್ಟಿಯಿಂ ಸಲೆ ಭಯಂ | ಕರರೂಪನಾದ ಮೇದೋಹೋತನೈತಂದೊಡಿದಿರೆದ್ದನಸುರೇಂದ್ರನು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನರವಿನ ಉಪವೀತದಿಂ ಕಣ್ಣಾಲಿಗಳೊಳ್ ಕೋದ ಕೊರಳ ತಾವಡದಿಂದೆ, ನರರ ತಲೆಗಳ ಜಪದ ಸರದಿಂದೆ, ಪಂದೊವಲ (ಪಂದಿ + ತೊವಲು-ಹಂದಿಚರ್ಮ) ಧೋತ್ರದಿಂದ, ಒಟ್ಟೆಯೆಲುಗಳ (ಒಟ್ಟೆ + ಎಲುವು - ಒಂಟೆ ಎಲುಬು) ಕುಂಡಲಂಗಳಿಂದೆ, =[ಮಾನವನ ನರಗಳ ಜನಿವಾರ/ ಉಪವೀತದಿಂದ, ಕಣ್ಣುಗುಡ್ಡೆಗಳನ್ನು ಸುರುಗಿದ ಕೊರಳ ಹಾರದಿಂದ (ರುದ್ರಾಕ್ಷಿಬದಲಿಗೆ), ಮಾನವರ ತಲೆಗಳಸರದ ಜಪದ ಸರದಿಂದ, ಪಂದೊವಲ (ಪಂದಿ + ತೊವಲು-ಹಂದಿಚರ್ಮ) ಹಂದಿಚರ್ಮದ ಪಂಚೆ/ ಧೋತ್ರದಿಂದ, ಒಂಟೆ ಎಲುಬುಗಳ ಕುಂಡಲಂಗಳಿಂದ}; ಕರಿಶಿರದ ಡೊಗೆಯ(ತಲೆಬುರುಡೆ) ಸಲಿಲದ ಕಮಂಡುಲದಿಂದೆ, ಉರುಗಜದ ಬೆನ್ನಸ್ಥಿ ಯಷ್ಟಿಯಿಂ (ಬೆನ್ನು +ಅಸ್ಥಿ +ಯಷ್ಟಿ /ದಂಡ) ಸಲೆ ಭಯಂಕರ ರೂಪನಾದ ಮೇದೋಹೋತನು ಐತಂದೊಡೆ ಇದಿರೆದ್ದನು ಅಸುರೇಂದ್ರನು =[ಆನೆಯ ತಲೆಬುರುಡೆಯಲ್ಲಿ ಜಲವಿರುವ ಕಮಂಡುಲದಿಂದ, ದೊಡ್ಡಗಜದ ಬೆನ್ನೆಲುಬಿನ ದಂಡ ಹಿಡಿದಿರುವ, ಬಹಳ ಭಯಂಕರ ರೂಪದ ಮೇದೋಹೋತನು ರಾಜಸಭೆಗೆ ಬಂದಕೂಡಲೆ ಅಸುರೇಂದ್ರನು/ ರಾಕ್ಷಸರಾಜನು ಎದ್ದು ಗೌರವಿಸಿದನು.].
  • ತಾತ್ಪರ್ಯ: ಮಾನವನ ನರಗಳ ಜನಿವಾರ/ ಉಪವೀತದಿಂದ, ಕಣ್ಣುಗುಡ್ಡೆಗಳನ್ನು ಸುರುಗಿದ ಕೊರಳ ಹಾರದಿಂದ (ರುದ್ರಾಕ್ಷಿಬದಲಿಗೆ), ಮಾನವರ ತಲೆಗಳಸರದ ಜಪದ ಸರದಿಂದ, ಪಂದೊವಲ (ಪಂದಿ + ತೊವಲು-ಹಂದಿಚರ್ಮ) ಹಂದಿಚರ್ಮದ ಪಂಚೆ/ ಧೋತ್ರದಿಂದ, ಒಂಟೆ ಎಲುಬುಗಳ ಕುಂಡಲಂಗಳಿಂದ; ಆನೆಯ ತಲೆಬುರುಡೆಯಲ್ಲಿ ಜಲವಿರುವ ಕಮಂಡುಲದಿಂದ, ದೊಡ್ಡಗಜದ ಬೆನ್ನೆಲುಬಿನ ದಂಡ ಹಿಡಿದಿರುವ, ಬಹಳ ಭಯಂಕರ ರೂಪದ ಮೇದೋಹೋತನು ರಾಜಸಭೆಗೆ ಬಂದಕೂಡಲೆ ಅಸುರೇಂದ್ರನು/ ರಾಕ್ಷಸರಾಜನು ಎದ್ದು ಗೌರವಿಸಿದನು.
  • (ಪದ್ಯ-೨೪)

ಪದ್ಯ :-:೨೫:[ಸಂಪಾದಿಸಿ]

ಏನು ಬಿಜಯಂಗೈದಿರೆನಲಟ್ಟಹಾಸದಿಂ | ದಾನವಂಗೆಂದನೇತಕೆ ಸುಮ್ಮನಿರ್ದಪೆ ನಿ | ಧಾನವನೆಡೆಹಿ ಕಂಡವೋಲಾಯ್ತು ನಿಮ್ಮಯ್ಯ ಬಕನಂ ಕೊಂದ ಭೀಮನೆಂಬ ||
ಮಾನವನ ತಮ್ಮನರ್ಜುನನೀಗ ಬಂದನಿದೆ | ಕೋ ನಿನ್ನ ಪೊಲಸೀಮೆಗಾತನಂ ಪಿಡಿತಂದು | ನೀನುರುವ ನರಮೇಧಮಂ ಮಾಡೆನಲ್ಕವಂಗಸುರೇಂದ್ರನಿಂತೆಂದನು ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಏನು ಬಿಜಯಂಗೈದಿರಿ ಎನಲ್ ಅಟ್ಟಹಾಸದಿಂ ದಾನವಂಗೆ ಎಂದನು ಏತಕೆ ಸುಮ್ಮನಿರ್ದಪೆ ನಿಧಾನವನು ಎಡೆಹಿ ಕಂಡವೋಲಾಯ್ತು =[ಏನು ಕಾರಣದಿಂದ ಬಂದಿರಿ? ಎನ್ನಲು, ಅಟ್ಟಹಾಸದಿಂದ ನಗುತ್ತಾ ದಾನವರಾಜನಿಗೆ ಹೇಳಿದನು,'ಏಕೆ ಸುಮ್ಮನಿರುವೆ, ನಿಧಿಯನ್ನು ಎಡವಿ ಕಂಡಂತೆ ಆಗಿದೆ.]; ನಿಮ್ಮ ಅಯ್ಯ ಬಕನಂ ಕೊಂದ ಭೀಮನೆಂಬ ಮಾನವನ ತಮ್ಮನು ಅರ್ಜುನನು ಈಗ ಬಂದನು ಇದೆಕೋ ನಿನ್ನ ಪೊಲಸೀಮೆಗೆ=[ನಿಮ್ಮ ತಂದೆ ಬಕಾಸುರನನ್ನು ಕೊಂದ ಭೀಮನೆಂಬ ಮಾನವನ ತಮ್ಮನಾದ ಅರ್ಜುನನು ಈಗತಾನೆ ನಿನ್ನ ಸ್ವಂತಹೊಲದ ಸೀಮೆಗೆ ಬಂದಿರುನು]; ಆತನಂ ಪಿಡಿತಂದು ನೀನು ಉರುವ ನರಮೇಧಮಂ ಮಾಡೆನಲ್ಕೆ ಅವಂಗೆ ಅಸುರೇಂದ್ರನು ಇಂತೆಂದನು =[ಆತನನ್ನು ಹಿಡಿದು ತಂದು ನೀನು ದೊಡ್ಡ ನರಮೇಧವನ್ನು ಮಾಡು', ಎನಲು, ಅವನಿಗೆ ಅಸುರೇಂದ್ರನು ಹೀಗೆ ಹೇಳಿದನು ].
  • ತಾತ್ಪರ್ಯ:ಏನು ಕಾರಣದಿಂದ ಬಂದಿರಿ? ಎನ್ನಲು, ಅಟ್ಟಹಾಸದಿಂದ ನಗುತ್ತಾ ದಾನವರಾಜನಿಗೆ ಹೇಳಿದನು,'ಏಕೆ ಸುಮ್ಮನಿರುವೆ, ನಿಧಿಯನ್ನು ಎಡವಿ ಕಂಡಂತೆ ಆಗಿದೆ. ನಿಮ್ಮ ತಂದೆ ಬಕಾಸುರನನ್ನು ಕೊಂದ ಭೀಮನೆಂಬ ಮಾನವನ ತಮ್ಮನಾದ ಅರ್ಜುನನು ಈಗತಾನೆ ನಿನ್ನ ಸ್ವಂತಹೊಲದಸೀಮೆಗೆ ಬಂದಿರುನು; ಆತನನ್ನು ಹಿಡಿದು ತಂದು ನೀನು ದೊಡ್ಡ ನರಮೇಧವನ್ನು ಮಾಡು', ಎನಲು, ಅವನಿಗೆ ಅಸುರೇಂದ್ರನು ಹೀಗೆ ಹೇಳಿದನು ].
  • (ಪದ್ಯ-೨೫)

ಪದ್ಯ :-:೨೬:[ಸಂಪಾದಿಸಿ]

ಮತ್ತಾತನಂ ಕೊಂದವನ ತಮ್ಮನಂ ಪಿಡಿದು | ಮತ್ತಾತನಂ ಸದೆವೆನವನ ಹರಿಬಕೆ ಬಂದ | ಮತ್ತಾತನಂ ಸೀಳ್ವೆನಂತಿರಲಿ ನೀನೆನ್ನೊಳೆಂದ ಯಜ್ಞದ ಪಶುವಿಗೆ ||
ಸತ್ತಾತನಾದಪನೆ ಪೇಳ್ ಸಾಕು ನಿನ್ನಿಂದ| ಸತ್ತಾತನಾದಪನವಂ ನಿನ್ನ ನುಡಿಗೆ ಬೇ | ಸತ್ತಾತನಾದಪನೆ ನಾನಕಟ ನೋಡೆನುತೆ ಭೀಷಣಂ ಗರ್ಜಿಸಿದನು ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮತ್(ನನ್ನ) ತಾತನಂ ಕೊಂದವನ ತಮ್ಮನಂ ಪಿಡಿದು ಮತ್ತೆ ಆತನಂ ಸದೆವೆನು ಅವನ ಹರಿಬಕೆ ಬಂದ ಮತ್ತೆ ಆತನಂ ಸೀಳ್ವೆನು =[ನನ್ನ ತಾತ /ತಂದೆಯನ್ನು ಕೊಂದವನ ತಮ್ಮನನ್ನು ಹಿಡಿದು ಮತ್ತೆ ಆತನನ್ನು ಹೊಡೆದು ಸಾಯಿಸುವೆನು, ಅವನ ಸಹಾಯಕ್ಕೆ ಬಂದ ಮತ್ತೆ ಆತನ ಸಹಾಯಕರನ್ನು ಸೀಳಿ ಕೊಲ್ಲವೆನು.]; ಅಂತಿರಲಿ ನೀನು ಎನ್ನೊಳು ಎಂದ ಯಜ್ಞದ ಪಶುವಿಗೆ ಸತ್ತಾತನು ಆದಪನೆ ಪೇಳ್, ಸಾಕು ನಿನ್ನಿಂದ ಸತ್ತಾತನು ಆದಪನು ಅವಂ =[ಅದು ಹಾಗಿರಲಿ,ನೀನು ನನ್ನಲ್ಲಿ ಹೇಳಿದ ಯಜ್ಞದ ಪಶುವಿಗೆ ಸತ್ತು ಹೋದವನು ಆಗಬಹುದೇ? ಹೇಳು. ಸಾಕು ಅದಿಲ್ಲದಿದ್ದರೆ ಅವನು ನಿನ್ನಿಂದ ಯಜ್ಞದಲ್ಲಿ ಸತ್ತವನು ಆಗುವನು.]; ನಿನ್ನ ನುಡಿಗೆ ಬೇಸತ್ತಾತನು ಆದಪನೆ ನಾನು ಅಕಟ ನೋಡು ಎನುತ ಭೀಷಣಂ ಗರ್ಜಿಸಿದನು =[ನಿನ್ನ ಮಾತಿಗೆ ವಿರೋಧಮಾಡಿದವನು ನಾನು ಆಗುವೆನೇ? ಅಕಟ! ಖಂಡಿತಾ ಇಲ್ಲ ನೋಡು, ಎನ್ನುತ್ತಾ ರಾಜ ಭೀಷಣನು ಗರ್ಜಿಸಿದನು.]
  • ತಾತ್ಪರ್ಯ: ನನ್ನ ತಾತ /ತಂದೆಯನ್ನು ಕೊಂದವನ ತಮ್ಮನನ್ನು ಹಿಡಿದು ಮತ್ತೆ ಆತನನ್ನು ಹೊಡೆದು ಸಾಯಿಸುವೆನು, ಅವನ ಸಹಾಯಕ್ಕೆ ಬಂದ ಮತ್ತೆ ಆತನ ಸಹಾಯಕರನ್ನು ಸೀಳಿ ಕೊಲ್ಲವೆನು. ಅದು ಹಾಗಿರಲಿ,ನೀನು ನನ್ನಲ್ಲಿ ಹೇಳಿದ ಯಜ್ಞದ ಪಶುವಿಗೆ ಸತ್ತು ಹೋದವನು ಆಗಬಹುದೇ? ಹೇಳು. ಸಾಕು ಅದಿಲ್ಲದಿದ್ದರೆ ಅವನು ನಿನ್ನಿಂದ ಯಜ್ಞದಲ್ಲಿ ಸತ್ತವನು ಆಗುವನು (ಹಿಡಿದು ನಿನಗೆ ಕೊಡುವೆನು). ನಿನ್ನ ಮಾತಿಗೆ ವಿರೋಧಮಾಡಿದವನು ನಾನು ಆಗುವೆನೇ? ಅಕಟ! ಖಂಡಿತಾ ಇಲ್ಲ ನೋಡು, ಎನ್ನುತ್ತಾ ರಾಜ ಭೀಷಣನು ಗರ್ಜಿಸಿದನು.
  • (ಪದ್ಯ-೨೬)

ಪದ್ಯ :-:೨೭:[ಸಂಪಾದಿಸಿ]

ರಾಕ್ಷಸೋತ್ತಮರೊಳಾರ್ ಪಿಂತೆ ನರಮೇಧಮಖ | ದೀಕ್ಷೆಯಂ ಕೈಕೊಂಡರಿದಕೆ ಋತ್ವಿಜರಾರ | ಪೇಕ್ಷಿತವದೇನಾರ್ಗೆ ಸಂತುಷ್ಟಿ ಪೇಳೆಂದು ಭೀಷಣಂ ಬೆಸಗೊಳಲ್ಕೆ ||
ರೂಕ್ಷವದನವನವಂ ತೆರೆದಟ್ಟಹಾಸದಿಂ | ದಾಕ್ಷೇಪಿಸುತೆ ನುಡಿದನೆಲೆ ಮರುಳೆ ರಾವಣಂ | ಸಾಕ್ಷಿಯಲ್ಲವೆ ತತ್ಕ್ರತುವನೆಸಗಿ ಮೂಜಗವನೈದೆ ಗೆಲ್ದುದಕೆಂದನು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಕ್ಷಸೋತ್ತಮರೊಳು ಆರ್ ಪಿಂತೆ ನರಮೇಧಮಖ ದೀಕ್ಷೆಯಂ ಕೈಕೊಂಡರು ಇದಕೆ ಋತ್ವಿಜರು ಆರ್ ಅಪೇಕ್ಷಿತವದೇನು ಆರ್ಗೆ ಸಂತುಷ್ಟಿ ಪೇಳೆಂದು ಭೀಷಣಂ ಬೆಸಗೊಳಲ್ಕೆ =[ರಾಕ್ಷಸೋತ್ತಮರಲ್ಲಿ ಯಾರು ಹಿಂದೆ ನರಮೇಧ ಯಜ್ಞದ ದೀಕ್ಷೆಯನ್ನು ಕೈಕೊಂಡರು? ಇದಕ್ಕೆ ಋತ್ವಿಜರು ಯಾರ? ಅಗತ್ಯಗಳು ಅದೇನು? ಯಾರಿಗೆ ಸಂತುಷ್ಟಿ? ಹೇಳು ಎಂದು ಭೀಷಣನು ಕೇಳಲು,]; ರೂಕ್ಷ ವದನವನು ಅವಂ ತೆರೆದು ಅಟ್ಟಹಾಸದಿಂದ ಆಕ್ಷೇಪಿಸುತೆ ನುಡಿದನೆಲೆ ಮರುಳೆ ರಾವಣಂ ಸಾಕ್ಷಿಯಲ್ಲವೆ ತತ್ಕ್ರತುವನು ಎಸಗಿ ಮೂಜಗವನು ಐದೆ ಗೆಲ್ದುದಕೆ ಎಂದನು =[ ಗಡಸುತನದ ಅಸಹ್ಯಕರವಾದ ಬಾಯಿತೆರೆದು ಅವನು ಅಟ್ಟಹಾಸದಿಂದ ಆಕ್ಷೇಪಿಸುತ್ತಾ, ಹೇಳಿದನು ಎಲೆ ಮರುಳೆ ಇಷ್ಟೂ ತಿಳಿಯದೇ, ರಾವಣನು ಸಾಕ್ಷಿಯಲ್ಲವೆ ಅದೇ ನರಮೇಧ ಮಾಡಿ ಮೂರು ಜಗತ್ತನ್ನೂ ಸೊಗಸಿನಿಂದ ಗೆದ್ದಿರುವುದಕ್ಕೆ, ಎಂದನು].
  • ತಾತ್ಪರ್ಯ:ರಾಕ್ಷಸೋತ್ತಮರಲ್ಲಿ ಯಾರು ಹಿಂದೆ ನರಮೇಧ ಯಜ್ಞದ ದೀಕ್ಷೆಯನ್ನು ಕೈಕೊಂಡರು? ಇದಕ್ಕೆ ಋತ್ವಿಜರು ಯಾರ? ಅಗತ್ಯಗಳು ಅದೇನು? ಯಾರಿಗೆ ಸಂತುಷ್ಟಿ? ಹೇಳು ಎಂದು ಭೀಷಣನು ಕೇಳಲು, ಗಡಸುತನದ ಅಸಹ್ಯಕರವಾದ ಬಾಯಿತೆರೆದು ಅವನು ಅಟ್ಟಹಾಸದಿಂದ ಆಕ್ಷೇಪಿಸುತ್ತಾ, ಮೇದೋಹೋತನು ಹೇಳಿದನು, 'ಎಲೆ ಮರುಳೆ ಇಷ್ಟೂ ತಿಳಿಯದೇ, ರಾವಣನು ಸಾಕ್ಷಿಯಲ್ಲವೆ ಅದೇ ನರಮೇಧ ಮಾಡಿ ಮೂರು ಜಗತ್ತನ್ನೂ ಸೊಗಸಿನಿಂದ ಗೆದ್ದಿರುವುದಕ್ಕೆ', ಎಂದನು].
  • (ಪದ್ಯ-೨೭)

ಪದ್ಯ :-:೨೮:[ಸಂಪಾದಿಸಿ]

ಸುರೆ ನೆತ್ತರಿಂದೆ ಚಾತುರ್ಮಾಸ್ಯಮಂ ಕಳೆದ | ಹಿರಿಯರಿದೆ ಮಾಸೋಪವಾಸಿಗಳ ತಲೆಮಿದುಳ | ನುರತರಶ್ರಾವಣಕೊದಗಿಪರಿದೆ ಯತಿಮಾಂಸಮಂ ಭಾದ್ರಪದಕೆ ಬಿಡದೆ ||
ದೊರಯಿಸುವರಿದೆ ವರಾಶ್ವಿಜಕೆ ಜಡೆಮುಡಿಯವರ | ಕರುಳನಾರ್ಜಿಸುವರಿದೆ ಕಾರ್ತಿಕಕ್ಕೆಳವೆಣ್ಗ | ಳುರದ ಗುಂಡಿಗೆಯನರಸುವ ಮಹಾವ್ರತಿಗಳಿದೆ ಬೊಮ್ಮರಕ್ಕಸರೆಂದನು ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಗ್ರಾಮ್ಯ ಒರಟು ಭಾಷೆಯಲ್ಲಿ, ಮೇದೋಹೋತ ಪುರೋಹಿತ ಬ್ರಹ್ಮರಾಕ್ಷಸನು ನರಮೇಧಕ್ಕೆ ಅಗತ್ಯ ಋತ್ವಿಜರ ಪರಿಚಯ ಹೇಳುವನು:ಚಾತುರ್ಮಾಸವಾದ ಶ್ರಾವಣ, ಭಾದ್ರಪದ, ಆಸ್ವಯುಜ, ಕಾರ್ತೀಕಗಳು ಒಂದೊಂದು ಮಾಸದಲ್ಲಿ ಒಂದೊಂದುಬಗೆಯ ಆಹಾರ ಸೇವಿಸಿ ಚಾತುರ್ಮಾಸ ಆಚರಿಸುವುದು: ಸುರೆ/ ಮದ್ಯ, ನೆತ್ತರಿಂದ ಚಾತುರ್ಮಾಸ್ಯಮಂ ಕಳೆದ ಹಿರಿಯರು ಇದೆ; ತಲೆಮಿದುಳ ನುರತರಶ್ರಾವಣಕ ಒದಗಿಪರು ಇದೆ;=[ಸುರೆ /ಮದ್ಯ, ನೆತ್ತರನ್ನು ಸೇವಿಸಿ ಚಾತುರ್ಮಾಸ್ಯಮಾಡಿ ಕಳೆದ ಹಿರಿಯರು ಇದ್ದಾರೆ; ಒಂದೇಹೊತ್ತು ಊಟಮಾಡಿದ ಮಾಸೋಪವಾಸ ವೃತಮಾಡಿದ ದೈವಭಕ್ತರ ತಲೆಮಿದುಳನ್ನು ತಿಂದು ಶ್ರೇಷ್ಠವಾದ ಶ್ರಾವಣಕ ಮಾಡಲು ಅವನ್ನು ಒದಗಿಸಿಕೊಳ್ಳುವವರು ಇದ್ದಾರೆ!]; ಯತಿಮಾಂಸಮಂ ಭಾದ್ರಪದಕೆ ಬಿಡದೆ ದೊರಯಿಸುವರು ಇದೆ; ವರಾಶ್ವಿಜಕೆ ಜಡೆಮುಡಿಯವರ ಕರುಳನು ಆರ್ಜಿಸುವರು ಇದೆ;=[ಯತಿಗಳ ಮಾಂಸವನ್ನು ಭಾದ್ರಪದದಲ್ಲಿ ಬಿಡದೆ ದೊರಕಿಸಿಕೊಂಡು ತಿಂದು ಆಚರಿಸುವವರು ಇದ್ದಾರೆ!; ಶ್ರೇಷ್ಠ ಆಶ್ವೀಜಕ್ಕೆ ಜಡೆಮುಡಿಬಿಟ್ಟ ಮುದುಕ ತಪಸ್ವಿಗಳ ಕರುಳನ್ನು ಸಂಪಾದಿಸಿ ಅದರ ಮೇಲೆ /ತಿಂದು ಆಚರಿಸುವವರು ಇದ್ದಾರೆ!]; ಕಾರ್ತಿಕಕ್ಕೆ ಎಳವೆಣ್ಗಳ ಉರದ ಗುಂಡಿಗೆಯನು ಅರಸುವ ಮಹಾವ್ರತಿಗಳು ಇದೆ ಬೊಮ್ಮರಕ್ಕಸರು ಎಂದನು =[ಕಾರ್ತಿಕಕ್ಕೆ ಎಳೆ ಹೆಣ್ಣುಮಕ್ಕಳ ಎದೆಯಗುಂಡಿಗೆಯನ್ನು ಹುಡಕಿಸಿ ಆ ಹೃದಯಗಳನ್ನೇ ತಿಂದು ಆಚರಿಸುವ ಮಹಾವ್ರತಿಗಳು ಬೊಮ್ಮರಕ್ಕಸರು /ಬ್ರಹ್ಮರಾಕ್ಷಸರು ಇದ್ದಾರೆ! ಎಂದನು].
  • ತಾತ್ಪರ್ಯ: ಗ್ರಾಮ್ಯ ಒರಟು ಭಾಷೆಯಲ್ಲಿ, ಮೇದೋಹೋತ ಪುರೋಹಿತ ಬ್ರಹ್ಮರಾಕ್ಷಸನು ನರಮೇಧಕ್ಕೆ ಅಗತ್ಯ ಋತ್ವಿಜರ ಪರಿಚಯ ಹೇಳುವನು: ಚಾತುರ್ಮಾಸವಾದ ಶ್ರಾವಣ, ಭಾದ್ರಪದ, ಆಸ್ವಯುಜ, ಕಾರ್ತೀಕ ನಾಲ್ಕು ಮಾಸಗಳು; ಒಂದೊಂದು ಮಾಸದಲ್ಲಿ ಒಂದೊಂದು ಬಗೆಯ ಆಹಾರ ಸೇವಿಸಿ ಚಾತುರ್ಮಾಸ ಆಚರಿಸುವುದು: (ಇಡೀ ನಾಲ್ಕು ತಿಂಗಳು) ಸುರೆ /ಮದ್ಯ, ನೆತ್ತರನ್ನು ಸೇವಿಸಿ ಚಾತುರ್ಮಾಸ್ಯಮಾಡಿ ಕಳೆದ ಹಿರಿಯರು ಇದ್ದಾರೆ; ಒಂದೇ ಹೊತ್ತು ಊಟಮಾಡಿದ ಮಾಸೋಪವಾಸ ವೃತಮಾಡಿದ ದೈವಭಕ್ತರ ತಲೆಮಿದುಳನ್ನು ತಿಂದು ಶ್ರೇಷ್ಠವಾದ ಶ್ರಾವಣಕ ಮಾಡಲು ಅವನ್ನು ಒದಗಿಸಿಕೊಳ್ಳುವವರು ಇದ್ದಾರೆ!; ಯತಿಗಳ ಮಾಂಸವನ್ನು ಭಾದ್ರಪದದಲ್ಲಿ ಬಿಡದೆ ದೊರಕಿಸಿಕೊಂಡು ತಿಂದು ಆಚರಿಸುವವರು ಇದ್ದಾರೆ!; ಶ್ರೇಷ್ಠ ಆಶ್ವೀಜಕ್ಕೆ ಜಡೆಮುಡಿಬಿಟ್ಟ ಮುದುಕ ತಪಸ್ವಿಗಳ ಕರುಳನ್ನು ಸಂಪಾದಿಸಿ ಅದರ ಮೇಲೆ /ತಿಂದು ಆಚರಿಸುವವರು ಇದ್ದಾರೆ! ಕಾರ್ತಿಕಕ್ಕೆ ಎಳೆ ಹೆಣ್ಣುಮಕ್ಕಳ ಎದೆಯಗುಂಡಿಗೆಯನ್ನು ಹುಡಕಿಸಿ ಆ ಹೃದಯಗಳನ್ನೇ ತಿಂದು ಆಚರಿಸುವ ಮಹಾವ್ರತಿಗಳು ಬೊಮ್ಮರಕ್ಕಸರು /ಬ್ರಹ್ಮರಾಕ್ಷಸರು ಋತ್ವಿಜರಾಗಲು ಇದ್ದಾರೆ! ಎಂದನು. (ಬೀಭತ್ಸದಲ್ಲಿ ಹಾಸ್ಯ)
  • (ಪದ್ಯ-೨೮)

ಪದ್ಯ :-:೨೯:[ಸಂಪಾದಿಸಿ]

ಇನ್ನುಮಿವರಲ್ಲದೆ ಮಹಾಬ್ರಹ್ಮರಾಕ್ಷಸರ್ | ಮುನ್ನಿನ ಯುಗಂಗಳವರಿರ್ದಪರ್ ಪಿರಿಯರ್ ಸ | ಮುನ್ನತ ವಟದ್ರುಮ ನಿವಾಸಿಗಳನೇಕ ಪುರುಷಾದಕರ್ ದುರ್ದರ್ಶರು ||
ನಿನ್ನ ನರಮೇಧಕಾರ್ತ್ವಿಜ್ಯಮಂ ಮಾಳ್ವರಿದ | ಕೆನ್ನನಾಚಾರ್ಯನಾಗಿಯೆ ವರಿಸು ತದ್ಯಾಗ | ಮಂ ನೆಗಳ್ಚ(ಲ್)ಸುರರ್ಗೆ ತುಷ್ಟಿಯಪ್ಪುದು ಜಯಂ ನಿನಗೆ ಸಮುನಿಪುದೆಂದನು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇನ್ನುಮ್ ಇವರಲ್ಲದೆ ಮಹಾಬ್ರಹ್ಮರಾಕ್ಷಸರ್ ಮುನ್ನಿನ ಯುಗಂಗಳವರು ಇರ್ದಪರ್ ಪಿರಿಯರ್ ಸಮುನ್ನತ ವಟದ್ರುಮ ನಿವಾಸಿಗಳು= [ಇನ್ನುಮ್ ಇವರಲ್ಲದೆ ಇನ್ನೂ ಮಹಾಬ್ರಹ್ಮರಾಕ್ಷಸರು ಹಿಂದಿನ ಯುಗಗಳವರು ಇರುವರು; ಅವರು ಹಿರಿಯರು, ಶ್ರೇಷ್ಠವಾದ ವಟವೃಕ್ಷ / ಅರಳಿಮರ ನಿವಾಸಿಗಳು]; ಅನೇಕ ಪುರುಷಾದಕರ್ (ಪುರುಷ + ಅದಕರು /ವಧಿಸಿದವರು) ದುರ್ ದರ್ಶರು ನಿನ್ನ ನರಮೇಧಕೆ ಆರ್ತ್ವಿಜ್ಯಮಂ ಮಾಳ್ವರು ಅದಕೆ ಎನ್ನನು ಆಚಾರ್ಯನಾಗಿಯೆ ವರಿಸು =[ಅವರು ಅನೇಕ ಪುರುಷರನ್ನು ವಧಿಸಿದವರು, ನೋಡಲು ಅಸಾಧ್ರು /ಕಾಣರು; ನಿನ್ನ ನರಮೇಧ ಯಜ್ಞಕ್ಕೆ ಆರ್ತ್ವಿಜ್ಯವನ್ನು / ಋತ್ವಿಜತನವನ್ನು ಮಾಡುವರು; ಅದಕ್ಕೆ (ಆ ಯಜ್ಞಕ್ಕೆ) ನನ್ನನ್ನೇ ಆಚಾರ್ಯ / ಅಧ್ವರ್ಯನಾಗಿ ನೇಮಿಸು.]; ತದ್ ಯಾಗಮಂ ನೆಗಳ್ಚ ಅಸುರರ್ಗೆ ತುಷ್ಟಿಯಪ್ಪುದು ಜಯಂ ನಿನಗೆ ಸಮುನಿಪುದು ಎಂದನು=[ಆ ಯಾಗವನ್ನು ಮಾಡಿದರೆ ದೇವತೆಗಳಿಗೆ /(ಅಸುರರಿಗೆ) ತೃಪ್ತಿಯಾಗುವುದು, ಜಯವು ನಿನಗೆ ಉಂಟಾಗುಪುದು', ಎಂದನು ].
  • ತಾತ್ಪರ್ಯ: ಇವರಲ್ಲದೆ ಇನ್ನೂ ಮಹಾಬ್ರಹ್ಮರಾಕ್ಷಸರು ಹಿಂದಿನ ಯುಗಗಳವರು ಇರುವರು; ಅವರು ಹಿರಿಯರು, ಶ್ರೇಷ್ಠವಾದ ವಟವೃಕ್ಷ / ಅರಳಿಮರ ನಿವಾಸಿಗಳು; ಅವರು ಅನೇಕ ಪುರುಷರನ್ನು ವಧಿಸಿದವರು, ನೋಡಲು ಅಸಾಧ್ಯರು /ಕಾಣರು; ನಿನ್ನ ನರಮೇಧ ಯಜ್ಞಕ್ಕೆ ಆರ್ತ್ವಿಜ್ಯವನ್ನು / ಋತ್ವಿಜತನವನ್ನು ಮಾಡುವರು; ಅದಕ್ಕೆ (ಆ ಯಜ್ಞಕ್ಕೆ) ನನ್ನನ್ನೇ ಆಚಾರ್ಯ / ಅಧ್ವರ್ಯನನ್ನಾಗಿ ನೇಮಿಸು.ಆ ಯಾಗವನ್ನು ಮಾಡಿದರೆ ದೇವತೆಗಳಿಗೆ /(ಅಸುರರಿಗೆ) ತೃಪ್ತಿಯಾಗುವುದು, ಜಯವು ನಿನಗೆ ಉಂಟಾಗುಪುದು', ಎಂದನು.
  • (ಪದ್ಯ-೨೬)

ಪದ್ಯ :-:೩೦:[ಸಂಪಾದಿಸಿ]

ದಾನವರ ದಂಪತಿಸಹಸ್ರಮಂ ಪ್ರತಿದಿನಂ | ಮಾನವರ ಮಾಂಸಭೋಜನದಿಂದೆ ತಣೀಸಬೇ | ಕಾನವರನುಪಚರಿಪೆನಧ್ವರವನೆಸಗು ನೀಂ ಮಂಟಪವನ್ನಿಲ್ಲಿ ರಚಿಸು ||
ಸೇನೆಸಹಿತಾ ಪಾರ್ಥನಂ ಪಿಡಿದು ತಂದೊಡೆ ಸ | ಮಾನಮಿಲ್ಲಸುರರೊಳ್ ನಿನಗೆ ನಡೆದಪುದು ಮುಖ | ಮೇನೆಂಬೆನಿದರುತ್ಸವವನೆನೆ ಪುರೋಹಿತಂಗಾ ದೈತ್ಯನಿಂತೆಂದೆನು |||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದಾನವರ ದಂಪತಿಸಹಸ್ರಮಂ ಪ್ರತಿದಿನಂ ಮಾನವರ ಮಾಂಸಭೋಜನದಿಂದೆ ತಣೀಸಬೇಕು=[ದಾನವರ ಸಹಸ್ರದಂಪತಿಗಳನ್ನು ಪ್ರತಿದಿನವೂ ಮಾನವರ ಮಾಂಸಭೋಜನದಿಂದ ತೃಪ್ತಿಪಡಿಸಬೇಕು]; ಆನವರನು ಉಪಚರಿಪೆನು ಅಧ್ವರವನು ಎಸಗು ನೀಂ ಮಂಟಪವನು ಇಲ್ಲಿ ರಚಿಸು=[ನಾನು ಅವರನ್ನು ಉಪಚರಿಸುವೆನು; ಅಧ್ವರವನು ಮಾಡು; ನೀನು ಯಜ್ಞಮಂಟಪವನ್ನು ಇಲ್ಲಿ ರಚಿಸು]; ಸೇನೆಸಹಿತ ಆ ಪಾರ್ಥನಂ ಪಿಡಿದು ತಂದೊಡೆ ಸಮಾನಮಿಲ್ಲ ಅಸುರರೊಳ್ ನಿನಗೆ ನಡೆದಪುದು ಮುಖಂ ಏನೆಂಬೆನು ಇದರ ಉತ್ಸವವನು ಎನೆ ಪುರೋಹಿತಂಗೆ ಆ ದೈತ್ಯನು ಇಂತೆಂದೆನು=[ಸೇನೆಸಹಿತ ಆ ಪಾರ್ಥನನ್ನು ಹಿಡಿದು ತಂದರೆ ಅಸುರರಲ್ಲಿ ನಿನಗೆ ಸಮಾನರಿಲ್ಲವೆಂಬ ಕೀರ್ತಿಬರುವುದು. ಯಜ್ಞವು ಸಾಂಗವಾಗಿ ನಡೆಯುವುದು; ಇದರ ಉತ್ಸವವನ್ನು /ಸಂಭ್ರಮವನ್ನು ಏನು ಹೇಳಲಿ! ಎನ್ನಲು, ಪುರೋಹಿತನಿಗೆ ಆ ದೈತ್ಯರಾಜನು ಹೀಗೆಂದೆನು ].
  • ತಾತ್ಪರ್ಯ:ದಾನವರ ಸಹಸ್ರದಂಪತಿಗಳನ್ನು ಪ್ರತಿದಿನವೂ ಮಾನವರ ಮಾಂಸಭೋಜನದಿಂದ ತೃಪ್ತಿಪಡಿಸಬೇಕು; ನಾನು ಅವರನ್ನು ಉಪಚರಿಸುವೆನು; ಅಧ್ವರವನ್ನು ಮಾಡು; ನೀನು ಯಜ್ಞಮಂಟಪವನ್ನು ಇಲ್ಲಿ ರಚಿಸು; ಸೇನೆಸಹಿತ ಆ ಪಾರ್ಥನನ್ನು ಹಿಡಿದು ತಂದರೆ ಅಸುರರಲ್ಲಿ ನಿನಗೆ ಸಮಾನರಿಲ್ಲವೆಂಬ ಕೀರ್ತಿಬರುವುದು. ಯಜ್ಞವು ಸಾಂಗವಾಗಿ ನಡೆಯುವುದು; ಇದರ ಉತ್ಸವವನ್ನು /ಸಂಭ್ರಮವನ್ನು ಏನು ಹೇಳಲಿ! ಎನ್ನಲು, ಪುರೋಹಿತನಿಗೆ ಆ ದೈತ್ಯರಾಜನು ಹೀಗೆಂದೆನು.
  • (ಪದ್ಯ-೩೦)

ಪದ್ಯ :-:೩೧:[ಸಂಪಾದಿಸಿ]

ಪೊಕ್ಕು ಪಡೆಯೊಳ್ ವಿಜಯನಂ ಪಿಡಿದು ನರಮೇಧ | ಕಿಕ್ಕುವೆಂ ಬೇಗ ಕಟ್ಟಿಸು ಮಂಟಪವನೆಂದು | ಹೆಕ್ಕಳದೊಳಾತನಂ ಬೀಳ್ಕೊಂಡು ಭೀಷಣಂ ಮುಳಿದೆದ್ದು ನಡೆಯುತಿರಲು ||
ಮುಕ್ಕೋಟಿರಕ್ಕಸರ್ ಪೊರಮಟ್ಟರವನ ಕೂ | ಡಕ್ಕರಿಂ ಜಗವನೊಂದೇಬಾರಿ ಕೊಳ್ವ ತವ | ಕಕ್ಕೆ ಬಹುರೂಪಮಂ ತಾಳ್ದನೋ ಕಾಳಭೈರವನೆಂಬ ತೆರನಾಗಲು ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪೊಕ್ಕು ಪಡೆಯೊಳ್ ವಿಜಯನಂ ಪಿಡಿದು ನರಮೇಧ ಕಿಕ್ಕುವೆಂ ಬೇಗ ಕಟ್ಟಿಸು ಮಂಟಪವನೆಂದು ಹೆಕ್ಕಳದೊಳಾತನಂ ಬೀಳ್ಕೊಂಡು ಭೀಷಣಂ ಮುಳಿದೆದ್ದು ನಡೆಯುತಿರಲು=[ಸೇನೆಯಲ್ಲಿ ಹೊಕ್ಕು ಅರ್ಜುನನ್ನು ಪಹಿಡಿದು ನರಮೇಧಕ್ಕೆ ಅವನನ್ನು ಹಾಕುವೆನು; ಮಂಟಪವನ್ನು ಬೇಗ ಕಟ್ಟಿಸು ಎಂದು ಹೇಳಿ, ಹೆಮ್ಮೆಯಿಂದ / ಅಹಂಕಾರದಿಂದ ಆತನನ್ನು ಬೀಳ್ಕೊಂಡು ಭೀಷಣನು ಕೋಪದಿಂದ ಎದ್ದುಹೊರಟನು.]; ಮುಕ್ಕೋಟಿ ರಕ್ಕಸರ್ ಪೊರಮಟ್ಟರು ಅವನ ಕೂಡೆ ಅಕ್ಕರಿಂ ಜಗವನು ಒಂದೇಬಾರಿ ಕೊಳ್ವ ತವಕಕ್ಕೆ ಬಹುರೂಪಮಂ ತಾಳ್ದನೋ ಕಾಳಭೈರವನೆಂಬ ತೆರನಾಗಲು=[ ಆಗ ಮೂರು ಕೋಟಿ ರಕ್ಕಸರು ಅವನೊಡನೆ ಹೊರಟರು; ಸಂತಸದಿಂದ ಜಗತ್ತನ್ನು ಒಂದೇಬಾರಿ ಗೆಲ್ಲುವ ಅವಸರದಲ್ಲಿ ಕಾಳಭೈರವನು ಬಹುರೂಪವನ್ನು ತಾಳಿದನೋ ಎಂಬ ರೀತಿ ಕಾಣುತ್ತಿತ್ತು.].
  • ತಾತ್ಪರ್ಯ:ಭೀಷಣನು ಆರ್ಭಟಿಸಿದ, ಸೇನೆಯಲ್ಲಿ ಹೊಕ್ಕು ಅರ್ಜುನನ್ನು ಹಿಡಿದು ನರಮೇಧಕ್ಕೆ ಅವನನ್ನು ಹಾಕುವೆನು; ಮಂಟಪವನ್ನು ಬೇಗ ಕಟ್ಟಿಸು ಎಂದು ಹೇಳಿ, ಹೆಮ್ಮೆಯಿಂದ / ಅಹಂಕಾರದಿಂದ ಆತನನ್ನು ಬೀಳ್ಕೊಂಡು ಭೀಷಣನು ಕೋಪದಿಂದ ಎದ್ದುಹೊರಟನು.ಆಗ ಮೂರು ಕೋಟಿ ರಕ್ಕಸರು ಅವನೊಡನೆ ಹೊರಟರು; ಸಂತಸದಿಂದ ಜಗತ್ತನ್ನು ಒಂದೇಬಾರಿ ಗೆಲ್ಲುವ ಅವಸರದಲ್ಲಿ ಕಾಳಭೈರವನು ಬಹುರೂಪವನ್ನು ತಾಳಿದನೋ ಎಂಬ ರೀತಿ ಕಾಣುತ್ತಿತ್ತು.
  • (ಪದ್ಯ-೩೧)

ಪದ್ಯ :-:೩೨:[ಸಂಪಾದಿಸಿ]

ಭೀಷಣನೊಡನೆ ಮೂರುಕೋಟಿ ದೈತೇಯರತಿ | ರೋಷದಿಂದೈದುತಿರ್ದರು ಕಾಳಗಕೆ ಘೋರ | ವೇಷದ ಮಹಾರಾಕ್ಷಸಿಯರಂದೊಡಲ್ಗಳಂ ರುಧಿರಮಾಸಂಗಳಿಂದೆ ||
ಪೋಷಿಸುವ ತವಕದಿಂ ಪೊರಮಟ್ಟು ಬಂದು ಸಂ | ತೋಷದಿಂ ಬೆಟ್ಟದುದಿಗಳನಡರಿ ಕಂಡರು | ಧ್ಘೋಷದಿಂದಬ್ಧಿಯಂ ಜರೆವಂತೆ ನಡೆದು ಬಹ ಪಾರ್ಥನ ಪತಾಕಿನಿಯನು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭೀಷಣನೊಡನೆ ಮೂರುಕೋಟಿ ದೈತೇಯರು ಅತಿ ರೋಷದಿಂದ ಐದುತಿರ್ದರು ಕಾಳಗಕೆ=[ಭೀಷಣನೊಡನೆ ಮೂರುಕೋಟಿ ರಾಕ್ಷಸರು ಬಹಳ ರೋಷದಿಂದ ಯುದ್ಧಕ್ಕಾಗಿ ಬರುತ್ತಿದ್ದರು]; ಘೋರವೇಷದ ಮಹಾರಾಕ್ಷಸಿಯರು ಅಂದು ಒಡಲ್ಗಳಂ ರುಧಿರಮಾಸಂಗಳಿಂದೆ ಪೋಷಿಸುವ ತವಕದಿಂ ಪೊರಮಟ್ಟು ಬಂದು ಸಂತೋಷದಿಂ=[ಘೋರರೂಪಿನ ಮಹಾರಾಕ್ಷಸಿಯರು ಅಂದು ದೇಹವನ್ನು/ ಹೊಟ್ಟೆಯನ್ನು ರುಧಿರಮಾಸಂಗಳಿಂದೆ ಪೋಷಿಸುವ ಆಸೆಯಿಂದ ಹೊರಟು ಬಂದು ಸಂತೋಷದಿಂದ]; ಬೆಟ್ಟದುದಿಗಳನಡರಿ ಕಂಡರು ಉಧ್ಘೋಷದಿಂದ ಅಬ್ಧಿಯಂ ಜರೆವಂತೆ ನಡೆದು ಬಹ ಪಾರ್ಥನ ಪತಾಕಿನಿಯನು (ಸೇನೆ)=[ಬೆಟ್ಟದುದಿಗಳನ್ನು ಹತ್ತಿ, ಬಹಳ ಸದ್ದು ಮಾಡುತ್ತಾ ಸಮುದ್ರವನ್ನು ನಿಂದಿಸುವಂತೆ / ಸಮುದ್ರಕ್ಕಿಂತತಾವು ಮಿಗಿಲು ಎಂಬಂತೆ, ನಡೆದು ಬರುತ್ತಿರುವ ಪಾರ್ಥನ ಸೇನೆಯನ್ನು ಕಂಡರು]
  • ತಾತ್ಪರ್ಯ:ಭೀಷಣನೊಡನೆ ಮೂರುಕೋಟಿ ರಾಕ್ಷಸರು ಬಹಳ ರೋಷದಿಂದ ಯುದ್ಧಕ್ಕಾಗಿ ಬರುತ್ತಿದ್ದರು; ಘೋರರೂಪಿನ ಮಹಾರಾಕ್ಷಸಿಯರು ಅಂದು ತಮ್ಮ ದೇಹವನ್ನು/ ಹೊಟ್ಟೆಯನ್ನು ರುಧಿರಮಾಸಂಗಳಿಂದೆ ಪೋಷಿಸುವ ಆಸೆಯಿಂದ ಹೊರಟು ಬಂದು ಸಂತೋಷದಿಂದ, ಬೆಟ್ಟದುದಿಗಳನ್ನು ಹತ್ತಿ, ಬಹಳ ಸದ್ದು ಮಾಡುತ್ತಾ ಸಮುದ್ರವನ್ನು ನಿಂದಿಸುವಂತೆ / ಸಮುದ್ರಕ್ಕಿಂತ ತಾವು ಮಿಗಿಲು ಎಂಬಂತೆ, ನಡೆದು ಬರುತ್ತಿರುವ ಪಾರ್ಥನ ಸೇನೆಯನ್ನು ಕಂಡರು.
  • (ಪದ್ಯ-೩೨)

ಪದ್ಯ :-:೩೩:[ಸಂಪಾದಿಸಿ]

ಆ ರಾಕ್ಷಸಿಯರೊಳೊರ್ವಳ್ ಧನಂಜಯನ ಪೊಂ | ದೇರ ಪಳವಿಗೆದುದಿಯ ಹನುಮಂತನಂ ಕಂಡು | ದೂರಕೋಡಿದಳಂದು ಲಂಕಿಣಿಯನೊದೆದ ಕೋಡಗಮೆಂದು ಮತ್ತೋರ್ವಳು ||
ಊರು ಸುಡುವುದೆಂದು ತನ್ನ ಸದನದ ಸರಕ | ನಾರೈವುದಕ್ಕೆ ಪೋದಳಾ ದನುಜೆ ಮತ್ತೋರ್ವ | ಳೋರಂತೆಣಿಸಿಕೊಂಡಳೀ ಕಪಿ ನೆಳಲ್ಗೆ ಸೈರಿಸದೆಂದು ಸೈವರಿದಳು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ರಾಕ್ಷಸಿಯರೊಳು ಓರ್ವಳ್ ಧನಂಜಯನ ಪೊಂದೇರ ಪಳವಿಗೆ ತುದಿಯ ಹನುಮಂತನಂ ಕಂಡು ದೂರಕೆ ಓಡಿದಳು=[ಆ ರಾಕ್ಷಸಿಯರಲ್ಲಿ ಒಬ್ಬಳು ಧನಂಜಯನ ಚಿನ್ನದ ರಥದ ಧ್ವಜಸ್ಥಂಬದ ತುದಿಯಲ್ಲಿದ್ದ ಹನುಮಂತನಂ ಕಂಡು ದೂರಕ್ಕೆ ಓಡಿದಳು]; ಅಂದು ಲಂಕಿಣಿಯನು ಒದೆದ ಕೋಡಗಂ ಎಂದು ಮತ್ತೋರ್ವಳು ಊರು ಸುಡುವುದೆಂದು ತನ್ನ ಸದನದ ಸರಕನು ಆರೈವುದಕ್ಕೆ ಪೋದಳು=[ಅಂದು ಲಂಕಿಣಿಯನ್ನು ಒದೆದ ಕಪಿ ಎಂದು ಮತ್ತೋರ್ವಳು; ಊರನ್ನು ಸುಡುವುದೆಂದು ತನ್ನ ಮನೆಯ ವಸ್ತುಗಳನ್ನು ಕಾಪಾಡಲು ಹೊದಳು]; ಆ ದನುಜೆ ಮತ್ತೋರ್ವಳು ಓರಂತೆಣಿಸಿಕೊಂಡಳು ಈ ಕಪಿ ನೆಳಲ್ಗೆ ಸೈರಿಸದೆಂದು ಸೈವರಿದಳು=[ಆ ದನುಜೆ; ಮತ್ತೊಬ್ಬಳು ಸಾಮಾನ್ಯ ಕಪಿ ಎಂದುಕೊಂಡಳು; ಈ ಕಪಿ ತಂಪು ನೆರಳನ್ನು ಸಹಿಸದು ಎಂದು ಕೂಗಿದಳು.].
  • ತಾತ್ಪರ್ಯ:ಆ ರಾಕ್ಷಸಿಯರಲ್ಲಿ ಒಬ್ಬಳು ಧನಂಜಯನ ಚಿನ್ನದ ರಥದ ಧ್ವಜಸ್ಥಂಬದ ತುದಿಯಲ್ಲಿದ್ದ ಹನುಮಂತನಂ ಕಂಡು ದೂರಕ್ಕೆ ಓಡಿದಳು; ಅಂದು ಲಂಕಿಣಿಯನ್ನು ಒದೆದ ಕಪಿ ಎಂದಳು ಮತ್ತೋರ್ವಳು; ಊರನ್ನು ಸುಡುವುದೆಂದು ತನ್ನ ಮನೆಯ ವಸ್ತುಗಳನ್ನು ಕಾಪಾಡಲು ಹೊದಳು ಆ ರಾಕ್ಷಸಿ; ಮತ್ತೊಬ್ಬಳು ಸಾಮಾನ್ಯ ಕಪಿ ಎಂದುಕೊಂಡಳು; ಈ ಕಪಿ ತಂಪು ನೆರಳನ್ನು ಸಹಿಸದು ಎಂದು ಕೂಗಿದಳು (ಬಿಸಿಲಲ್ಲಿ ಸದಾ ಕುಳಿತಿರುವುದನ್ನು ಕಂಡು).
  • (ಪದ್ಯ-೩೩)

ಪದ್ಯ :-:೩4:[ಸಂಪಾದಿಸಿ]

ಆಗಸಕೆ ಚಿಗಿದು ರವಿಯಂ ತುಡಿಕಿ ಧೀಂಕಿಟ್ಟು | ಸಾಗರಕೆ ಸೀತೆಯಂ ಕಂಡು ಬನಮಂ ಕಿಳ್ತು | ತಾಗಿದ ನಿಶಾಟರಂ ಸದೆದು ಲಂಕೆಯನುರುಪಿ ದಶವದನನಂ ಭಂಗಿಸಿ ||
ಪೋಗಿ ಪಾತಾಳದಸುರರನೊಕ್ಕಲಿಕ್ಕಿ ಪಿರಿ | ದಾಗಿ ಬೆಟ್ಟಂಗಳಂ ಪೊತ್ತು ಮೀರಿದ ಕಪಿಯ | ನೀಗ ನಿಟ್ಟಿಸಿ ಬೆದರಿದಿರ್ದಪೆನದೆಂತುಟೆಂದೊರ್ವರಕ್ಕಸಿ ನುಡಿದಳು ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆಗಸಕೆ ಚಿಗಿದು ರವಿಯಂ ತುಡಿಕಿ ಧೀಂಕಿಟ್ಟು ಸಾಗರಕೆ ಸೀತೆಯಂ ಕಂಡು ಬನಮಂ ಕಿಳ್ತು ತಾಗಿದ ನಿಶಾಟರಂ ಸದೆದು ಲಂಕೆಯನು ಉರುಪಿ ದಶವದನನಂ ಭಂಗಿಸಿ =[ಆಕಾಶಕ್ಕೆ ಹಾರಿ ಸೂರ್ಯನನ್ನು ಹಿಡಿಯಲು ಹೋಗಿತ್ತು, ಚಂಗನೆ ಚಿಗಿದು / ಧೀಂಕಿಟ್ಟು ಸಮುದ್ರಕ್ಕೆ ಹಾರಿ, ದಾಟಿ, ಸೀತೆಯನ್ನು ಕಂಡು, ಅಲ್ಲಿ ವನವನ್ನು ಕಿತ್ತು, ವಿರೋಧಿಸಿದ ರಾಕ್ಷಸರನ್ನು ಬಡಿದು, ಲಂಕೆಯನ್ನು ಸುಟ್ಟು ರಾವಣನನ್ನು ಅವಮಾನಿಸಿ,]; ಪೋಗಿ ಪಾತಾಳದ ಅಸುರರನು ಒಕ್ಕಲಿಕ್ಕಿ ಪಿರಿದಾಗಿ ಬೆಟ್ಟಂಗಳಂ ಪೊತ್ತು ಮೀರಿದ ಕಪಿಯನೀಗ ನಿಟ್ಟಿಸಿ ಬೆದರಿದಿರ್ದಪೆನು ಅದೆಂತುಟೆಂದು ಓರ್ವರಕ್ಕಸಿ ನುಡಿದಳು=[ ಪಾತಾಳಕ್ಕೆ ಪೋಗಿ ಅಲ್ಲಿ ಐರಾವಣ ಮೈರಾವಣ ರಾಕ್ಷಸರನ್ನು ಸೋಲಿಸಿ. ಬಹಳವಾಗಿ ಬೆಟ್ಟಗಳನ್ನು ಹೊತ್ತು ಮಿತಿಮೀರಿದ ಪರಾಕ್ರಮದ ಕಪಿಯನ್ನು ನೋಡಿ ಅದು ಹೇಗೆ ಬೆದರಿದಿರುವೆನು, ಹೇಳು ಎಂದು ಒಬ್ಬ ರಾಕ್ಷಸಿ ಹೇಳಿದಳು].
  • ತಾತ್ಪರ್ಯ: ಆಕಾಶಕ್ಕೆ ಹಾರಿ ಸೂರ್ಯನನ್ನು ಹಿಡಿಯಲು ಹೋಗಿತ್ತು, ಚಂಗನೆ ಚಿಗಿದು / ಧೀಂಕಿಟ್ಟು ಸಮುದ್ರಕ್ಕೆ ಹಾರಿ, ದಾಟಿ, ಸೀತೆಯನ್ನು ಕಂಡು, ಅಲ್ಲಿ ವನವನ್ನು ಕಿತ್ತು, ವಿರೋಧಿಸಿದ ರಾಕ್ಷಸರನ್ನು ಬಡಿದು, ಲಂಕೆಯನ್ನು ಸುಟ್ಟು ರಾವಣನನ್ನು ಅವಮಾನಿಸಿ, ಪಾತಾಳಕ್ಕೆ ಪೋಗಿ ಅಲ್ಲಿ ಐರಾವಣ ಮೈರಾವಣ ರಾಕ್ಷಸರನ್ನು ಸೋಲಿಸಿ. ಬಹಳವಾಗಿ ಬೆಟ್ಟಗಳನ್ನು ಹೊತ್ತು ಮಿತಿಮೀರಿದ ಪರಾಕ್ರಮದ ಕಪಿಯನ್ನು ನೋಡಿ ಅದು ಹೇಗೆ ಬೆದರಿದಿರುವೆನು, ಹೇಳು ಎಂದು ಒಬ್ಬ ರಾಕ್ಷಸಿ ಹೇಳಿದಳು.
  • (ಪದ್ಯ-೩4)

ಪದ್ಯ :-:೩೫:[ಸಂಪಾದಿಸಿ]

ಬೆದರಿದಿರಿ ಬರಿದೆ ನೀವೀ ಕೋತಿಯಂ ತನ್ನ | ತುದಿಮೊಲೆಗಳಿಂದಪ್ಪಳಿಸಿ ನರನ ಸೈನ್ಯಮಂ | ಸದೆದು ಕೆಡಪುವೆನೆಂದು ಯೋಜನಸ್ತನಿಯೆಂಬ ರಕ್ಕಸಿ ನುಡಿಯೆ ಲಾಲಿಸಿ ||
ಗದಗದಿಸಬೇಡ ಪೇರೊಡಲೊಳಡಸುವೆನಿನಿತು | ಸದರಮಂ ನೋಡುತಿರಿ ಸಾಕೆಂದು ರೋಷದಿಂ | ದೊದರಿದಳ್‍ಮತ್ತೊರ್ವಳಸುರಿ ಲಂಬೋದರಿ ನಿಶಾಚರಿ ಮಹಾಭಯಂಕರಕರಿ ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬೆದರಿದಿರಿ ಬರಿದೆ ನೀವೀ ಕೋತಿಯಂ ತನ್ನ ತುದಿಮೊಲೆಗಳಿಂದ ಅಪ್ಪಳಿಸಿ ನರನ ಸೈನ್ಯಮಂ ಸದೆದು ಕೆಡಪುವೆನೆಂದು ಯೋಜನಸ್ತನಿಯೆಂಬ ರಕ್ಕಸಿ ನುಡಿಯೆ ಲಾಲಿಸಿ=[ಹೆದರರಬೇಡಿ ನೀವು ಸುಮ್ಮನೆ; 'ಈ ಕೋತಿಯನ್ನು ತನ್ನ ತುದಿಮೊಲೆಗಳಿಂದ ಅಪ್ಪಳಿಸಿ ಅರ್ಜುನನ ಸೈನ್ಯವನ್ನು ಬಡಿದು ಕೆಡಗುವೆನು',ಎಂದು ಯೋಜನಸ್ತನಿಯೆಂಬ ರಾಕ್ಷಸಿ ಹೇಳಲು, ಅದನ್ನು ಕೇಳಿ,]; ಗದಗದಿಸಬೇಡ ಪೇರೊಡಲೊಳು ಅಡಸುವೆನು ಇನಿತು ಸದರಮಂ ನೋಡುತಿರಿ ಸಾಕೆಂದು ರೋಷದಿಂ ದೊದರಿದಳ್‍ ಮತ್ತೊರ್ವಳು ಅಸುರಿ ಲಂಬೋದರಿ ನಿಶಾಚರಿ ಮಹಾಭಯಂಕರಕರಿ=[ಹರಟೆ ಪೊಳ್ಳುಮಾತು ಬೇಡ; ತನ್ನ ದೊಡ್ಡ ಹೊಟ್ಟೆಯಲ್ಲಿ ಇಷ್ಟೂ ಸೈನ್ಯವನ್ನು ಅಡಗಿಸುವೆನು ನೋಡುತ್ತಿರಿ ನಿಮ್ಮ ಮಾತು ಸಾಕು ಎಂದು ರೋಷದಿಂದ ಮತ್ತೊಬ್ಬ ರಾಕ್ಷಸಿ ಕೋಗಿದಳು; ಅವಳು ಲಂಬೋದರಿ ನಿಶಾಚರಿ ಮಹಾಭಯಂಕರ ರೂಪಿನವಳು.];
  • ತಾತ್ಪರ್ಯ: ಹೆದರರಬೇಡಿ ನೀವು ಸುಮ್ಮನೆ; 'ಈ ಕೋತಿಯನ್ನು ತನ್ನ ತುದಿಮೊಲೆಗಳಿಂದ ಅಪ್ಪಳಿಸಿ ಅರ್ಜುನನ ಸೈನ್ಯವನ್ನು ಬಡಿದು ಕೆಡಗುವೆನು',ಎಂದು ಯೋಜನಸ್ತನಿಯೆಂಬ ರಾಕ್ಷಸಿ ಹೇಳಲು, ಅದನ್ನು ಕೇಳಿ, ಹರಟೆ ಪೊಳ್ಳುಮಾತು ಬೇಡ; ತನ್ನ ದೊಡ್ಡ ಹೊಟ್ಟೆಯಲ್ಲಿ ಇಷ್ಟೂ ಸೈನ್ಯವನ್ನು ಅಡಗಿಸುವೆನು ನೋಡುತ್ತಿರಿ ನಿಮ್ಮ ಮಾತು ಸಾಕು ಎಂದು ರೋಷದಿಂದ ಮತ್ತೊಬ್ಬ ರಾಕ್ಷಸಿ ಕೋಗಿದಳು; ಅವಳು ಲಂಬೋದರಿ ನಿಶಾಚರಿ ಮಹಾಭಯಂಕರ ರೂಪಿನವಳು.
  • (ಪದ್ಯ-೩೫)

ಪದ್ಯ :-:೩೬:[ಸಂಪಾದಿಸಿ]

ಬಳಿಕುಳಿದ ರಕ್ಕಸಿಯರೆಲ್ಲರುಂ ಫಲುಗುಣನ | ದಳಮಂ ಪೊಡೆದು ನುಂಗಲೆಂದು ಬಾಯ್ದೆರೆದು ಕಿಡಿ | ಗಳನುಗುಳುತಾರ್ಭಟಿಸುತೈದಿದರ್ ಕೂಡೆ ಲಂಭೋದರಿ ನರನ ಪಡೆಯನು ||
ಸೆಳೆದಣಲ್ಗಡಸಿಕೊಳುತಿರ್ದಳೊಡನೊಡನೆ ಬಾಂ | ದಳಕಡರ್ದೇಳ್ವ ನಿಡುಮೊಲೆಗಳಿಂದೆ ಬಲವನ | ಪ್ಪಳಿಸಿದಳ್ ತಿರುಗಿ ತಿರುಗಿ ಬೀಸುತ್ತೆ ಯೋಜನಸ್ತನಿ ಕನಲ್ದಾ ಕ್ಷಣದೊಳು ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕುಳಿದ ರಕ್ಕಸಿಯರು ಎಲ್ಲರುಂ ಫಲುಗುಣನ ದಳಮಂ ಪೊಡೆದು ನುಂಗಲೆಂದು ಬಾಯ್ದೆರೆದು ಕಿಡಿಗಳನು ಉಗುಳುತ ಆರ್ಭಟಿಸುತ ಐದಿದರ್=[ಬಳಿಕು ಉಳಿದ ರಾಕ್ಷಸಿಯರು ಎಲ್ಲರೂ ಫಲ್ಗುಣನ ಸೈನ್ಯವನ್ನು ಹೊಡೆದು ನುಂಗಲೆಂದು ಬಾಯಿ ತೆರೆದು ಕಿಡಿಗಳನು ಉಗುಳುತ್ತಾ ಆರ್ಭಟಿಸುತ್ತಾ ಬಂದರು.]; ಕೂಡೆ ಲಂಭೋದರಿ ನರನ ಪಡೆಯನು ಸೆಳೆದು ಅಣಲ್ಗೆ (ಬಾಯಿಯ ಕೆಳಭಾಗ-ಸಿರಿಗನ್ನಡ ಅರ್ಥಕೋಶ/ಕಾರಂತ) ಅಡಸಿಕೊಳುತಿರ್ದಳು ಒಡನೊಡನೆ ಬಾಂದಳಕೆ ಅಡರ್ದು ಏಳ್ವ ನಿಡುಮೊಲೆಗಳಿಂದೆ ಬಲವನಪ್ಪಳಿಸಿದಳ್ ತಿರುಗಿ ತಿರುಗಿ ಬೀಸುತ್ತೆ ಯೋಜನಸ್ತನಿ ಕನಲ್ದಾ ಕ್ಷಣದೊಳು=[ಕೂಡಲೆ ಲಂಭೋದರಿ ನರನ ಪಡೆಯ ಸೈನಿಕರನ್ನು ಎಳೆದುಕೊಂಡು ಬಾಯಿಯೊಳಗೆ ಅಡಸಿಕೊಳುತ್ತಿದ್ದಳು, ಕೂಡಲೆ ಯೋಜನಸ್ತನಿ ಮತ್ತೆ ಮತ್ತೆ ಆಕಾಶಕ್ಕೆ ಚಿಮ್ಮಿ ಏಳುವ ಉದ್ದ ಮೊಲೆಗಳಿಂದ ಸೈನ್ನವನ್ನು ಅಪ್ಪಳಿಸಿದಳು, ಮತ್ತೆ ತಿರುಗಿ ತಿರುಗಿ ಅದನ್ನು ಕೋಪದಿಂದ ಬೀಸುತ್ತಿದ್ದಳು.].
  • ತಾತ್ಪರ್ಯ: ಬಳಿಕು ಉಳಿದ ರಾಕ್ಷಸಿಯರು ಎಲ್ಲರೂ ಫಲ್ಗುಣನ ಸೈನ್ಯವನ್ನು ಹೊಡೆದು ನುಂಗಲೆಂದು ಬಾಯಿ ತೆರೆದು ಕಿಡಿಗಳನು ಉಗುಳುತ್ತಾ ಆರ್ಭಟಿಸುತ್ತಾ ಬಂದರು. ಕೂಡಲೆ ಲಂಭೋದರಿ ಅರ್ಜುನನ ಸೈನ್ಯವನ್ನು ಸೆಳೆದು ಬಾಯಿಗೆ ಅಡಸಿಕೊಳುತ್ತಿದ್ದಳು; ಕೂಡಲೆ ಯೋಜನಸ್ತನಿ ಮತ್ತೆ ಮತ್ತೆ ಆಕಾಶಕ್ಕೆ ಚಿಮ್ಮಿ ಏಳುವ ಉದ್ದ ಮೊಲೆಗಳಿಂದ ಸೈನ್ನವನ್ನು ಅಪ್ಪಳಿಸಿದಳು, ಮತ್ತೆ ತಿರುಗಿ ತಿರುಗಿ ಅದನ್ನು ಕೋಪದಿಂದ ಬೀಸುತ್ತಿದ್ದಳು.
  • (ಪದ್ಯ-೩೬)ಅಣಲ್ಗಡಿಸು

ಪದ್ಯ :-:೩೭:[ಸಂಪಾದಿಸಿ]

ಅಸುರಕೋಟಿತ್ರಯದೊಡನೆ ಬಂದು ಭೀಷಣಂ | ಮುಸುಕಿದಂ ಕೈದುಗಳ ಮಳೆಗಳಂ ಕರೆಯುತ್ತೆ | ಮುಸಗಿದುರಿ ಪೊಗೆ ಸಿಡಿಲ್ಮಿಂಚು ಕತ್ತಲೆ ಗಾಳಿ ಮುಗಿಲೊಡ್ಡು ದೂಳ್ಗಳಿಂದೆ ||
ದೆಸೆಗೆಡಿಸುತಹಿ ಸಿಂಹ ಶರಭ ಗಜ ಭೇರುಂಡ | ಪಸಿದ ಪುಲಿ ಪಂದಿ ವೃಕ ವೃಷಭಂಗಳಾಗಿ ಗ | ರ್ಜಿಸುತುಗ್ರಭೂತಂಗಳಾಗಿ ಬಾಯ್ದೆರೆದಬ್ಬರಿಸುತೆ ಪಾರ್ಥನ ಪಡೆಯನು ||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಸುರಕೋಟಿತ್ರಯದೊಡನೆ ಬಂದು ಭೀಷಣಂ ಮುಸುಕಿದಂ ಕೈದುಗಳ ಮಳೆಗಳಂ ಕರೆಯುತ್ತೆ=[ಅಸುರರ ಮೂರು ಕೋಟಿ ಸೈನ್ಯದೊಡನೆ ಆಯಧಗಳ ಮಳೆಸುರಿಸುತ್ತಾ ಭೀಷಣನು (ಬಂದು ಮುತ್ತಿದನು).]; ಮುಸಗಿದುರಿ ಪೊಗೆ ಸಿಡಿಲ್ಮಿಂಚು ಕತ್ತಲೆ ಗಾಳಿ ಮುಗಿಲೊಡ್ಡು ದೂಳ್ಗಳಿಂದೆ =[ಆಗ ಹೊಗೆ, ಸಿಡಿಲು, ಮಿಂಚು, ಕತ್ತಲೆ, ಗಾಳಿ, ಮೋಡ, ದೂಳು ಮುಸುಗಿತು.]; ದೆಸೆಗೆಡಿಸುತಹಿ ಸಿಂಹ ಶರಭ ಗಜ ಭೇರುಂಡ ಪಸಿದ ಪುಲಿ ಪಂದಿ ವೃಕ ವೃಷಭಂಗಳಾಗಿ ಗರ್ಜಿಸುತುಗ್ರಭೂತಂಗಳಾಗಿ (ರೂಪ ತಾಳಿಕೊಂಡು) ಬಾಯ್ದೆರೆದಬ್ಬರಿಸುತೆ ಪಾರ್ಥನ ಪಡೆಯನು =[ದಿಕ್ಕು ಕೆಡಿಸಿದವು ಹಾವು, ಸಿಂಹ, ಶರಭ, ಗಜ, ಭೇರುಂಡ. ಹಸಿದ ಹುಲಿ, ಹಂದಿ, ವೃಕ /ತೋಳ ವೃಷಭಗಳ ರೂಪ ತಾಳಿಕೊಂಡು ಗರ್ಜಿಸುತ್ತಾ, ಉಗ್ರಭೂತಗಳಾಗಿ ಬಾಯಿತೆರೆದುಕೊಂಡು ಅಬ್ಬರಿಸುತ್ತಾ ಪಾರ್ಥನ ಪಡೆಯನ್ನು ಬಂದು ಮುತ್ತಿದನು.]
  • ತಾತ್ಪರ್ಯ: ಅಸುರರ ಮೂರು ಕೋಟಿ ಸೈನ್ಯದೊಡನೆ ಆಯಧಗಳ ಮಳೆಸುರಿಸುತ್ತಾ ಭೀಷಣನು (ಬಂದು ಮುತ್ತಿದನು). ಆಗ ಹೊಗೆ, ಸಿಡಿಲು, ಮಿಂಚು, ಕತ್ತಲೆ, ಗಾಳಿ, ಮೋಡ, ದೂಳು ಮುಸುಗಿತು. ಪಾರ್ಥನ ಸೈನ್ಯಕ್ಕೆ ದಿಕ್ಕು ಕೆಡಿಸಿದವು; ಹಾವು, ಸಿಂಹ, ಶರಭ, ಗಜ, ಭೇರುಂಡ. ಹಸಿದ ಹುಲಿ, ಹಂದಿ, ವೃಕ /ತೋಳ ವೃಷಭಗಳ "ರೂಪ ತಾಳಿಕೊಂಡು" ಗರ್ಜಿಸುತ್ತಾ, ಉಗ್ರಭೂತಗಳಾಗಿ ಬಾಯಿತೆರೆದುಕೊಂಡು ಅಬ್ಬರಿಸುತ್ತಾ ಪಾರ್ಥನ ಪಡೆಯನ್ನು ಬಂದು ಮುತ್ತಿದನು.
  • (ಪದ್ಯ-೩೭)

ಪದ್ಯ :-:೩೮:[ಸಂಪಾದಿಸಿ]

ಮಸಗಿದಂ ಬಳಿಕ ರಣಭೀಷಣಂ ಭೀಷಣಂ | ವಸುಮತಿಗೆ ಕಾಲಾಂತಕೋಪಮಂ ಕೋಪಮಂ | ಪಸರಿಸಿದನರಿದಂ ನಿದಾನವಂ ದಾನವಂ ಫಲುಗುಣನ ಮುಂದೆ ನಿಂದು ||
ಒಸೆದೆನ್ನ ನೈದೆ ಪೆತ್ತಾತನಂ ತಾತನಂ | ಕುಸುರಿದರಿದನಿಲಜನ ತಮ್ಮನೇ ತಮ್ಮನೇ | ಳಿಸುತೆ ಬಹೆ ನಿನ್ನ ಹದನಾವುದೈ ನಾವು ದೈತ್ಯರು ಕ್ಕೊಲ್ಲದಿರೆವೆಂದನು ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಸಗಿದಂ (ತಿಕ್ಕು, ತೀಡು) ಬಳಿಕ ರಣಭೀಷಣಂ ಭೀಷಣಂ ವಸುಮತಿಗೆ ಕಾಲಾಂತಕೋಪಮಂ ಕೋಪಮಂ ಪಸರಿಸಿದನು (ತೋರಿಸು)=[ಬಳಿಕ ರಣಭೀಷಣನಾದ /ಭಯಂಕರನಾದ ಭೀಷಣ ರಾಕ್ಷಸನು ಭೂಮಿಗೆ ಪ್ರಳಯಕೋಪದ ಕೋಪವನ್ನು ತೋರಿಸುತ್ತಾ ಎದುರುಬಿದ್ದನು]; ಅರಿದಂ ನಿದಾನವಂ (ಕಾರಣ) ದಾನವಂ ಫಲುಗುಣನ ಮುಂದೆ ನಿಂದು ಒಸೆದು (ಇಷ್ಟಪಟ್ಟು) ಎನ್ನನು ಐದೆ (ಬಂದಿರುವ ನೀನು) ಪೆತ್ತ ಆತನಂ (ಹೆತ್ತವನನ್ನು) ತಾತನಂ (ತಂದೆ) ಕುಸುರಿದ ಅರಿದ ಅನಿಲಜನ (ಭೀಮನ) ತಮ್ಮನೇ=[ಅಲ್ಲಿಗೆ ಬಂದ ಕಾರಣವನ್ನು ಅರಿತನು; ರಾಕ್ಷಸನು ಫಲ್ಗುಣನ ಮುಂದೆ ನಿಂತು, ಉದ್ದೇಶಪಟ್ಟು ನನ್ನ ಬಳಿ ಬಂದಿರುವ ನೀನು,ಪ್ರೀತಿಯ ನನ್ನ ಹೆತ್ತವನನ್ನು,ತಂದೆಯನ್ನು, ಹಿಂಸಿಸಿ ಕೊಂದ ಭೀಮನ ತಮ್ಮನೇ?]; ತಮ್ಮನೇಳಿಸುತೆ ಬಹೆ ನಿನ್ನ ಹದನ ಆವುದೈ ನಾವು ದೈತ್ಯರು ಕ್ಕೊಲ್ಲದಿರೆವೆಂದನು =[ತಮ್ಮನ್ನು / ರಾಕ್ಷಸರನ್ನು ಎಬ್ಬಿಸುತ್ತಾ /ಪ್ರಚೋದಿಸುತ್ತಾ ಬರುತ್ತಿರುವೆ, ನಿನ್ನ ರೀತಿ /ಬಂದ ಕಾರಣ ಯಾವುದು? ನಾವು ದೈತ್ಯರು ಕ್ಕೊಲ್ಲದೆ ಬಿಡುವುದಿಲ್ಲ ಎಂದನು.]
  • ತಾತ್ಪರ್ಯ: ಬಳಿಕ ರಣಭೀಷಣನಾದ /ಭಯಂಕರನಾದ ಭೀಷಣ ರಾಕ್ಷಸನು ಭೂಮಿಗೆ ಪ್ರಳಯಕೋಪದ ಕೋಪವನ್ನು ತೋರಿಸುತ್ತಾ ಎದುರುಬಿದ್ದನು; ಅಲ್ಲಿಗೆ ಬಂದ ಕಾರಣವನ್ನು ಅರಿತನು; ರಾಕ್ಷಸನು ಫಲ್ಗುಣನ ಮುಂದೆ ನಿಂತು, ನನ್ನ ಬಳಿ ಬಂದಿರುವ ನೀನು,ಪ್ರೀತಿಯ ನನ್ನ ಹೆತ್ತವನನ್ನು,ತಂದೆಯನ್ನು, ಹಿಂಸಿಸಿ ಕೊಂದ ಭೀಮನ ತಮ್ಮನೇ? ತಮ್ಮನ್ನು / ರಾಕ್ಷಸರನ್ನು ಎಬ್ಬಿಸುತ್ತಾ /ಪ್ರಚೋದಿಸುತ್ತಾ ಬರುತ್ತಿರುವೆ, ನಿನ್ನ ರೀತಿ /ಬಂದ ಕಾರಣ ಯಾವುದು? ನಾವು ದೈತ್ಯರು ಕ್ಕೊಲ್ಲದೆ ಬಿಡುವುದಿಲ್ಲ ಎಂದನು.
  • (ಪದ್ಯ-೩೮)ಅಣಲ್ಗಡಿಸು

ಪದ್ಯ :-:೩೯:[ಸಂಪಾದಿಸಿ]

ಈಗಳದರಿಂದೆ ನಿನ್ನಂ ಪಿಡಿದು ನರಮೇಧ | ಯಾಗಕ್ಕೆ ಪಶುಮಾಳ್ಪೆನೆಂದು ಫಲುಗುಣನ ರಥ | ಕಾಗಿ ಭೀಷಣನೆರಗಲರ್ಜುನಂ ನಗುತೆ ರಕ್ಷೋಘ್ನ ಬಾಣವನೆ ಪೂಡಿ ||
ಬೇಗದಿಂದಿಸಲಸುರನಳವಳಿದನವನ ಪಡೆ | ಸಾಗಿದುದು ಬಿರುಗಾಳಿ ಬೀಸಿದೊಡೆ ಬಿಣ್ಪಿಡಿದ | ಮೇಘಸಂಕುಲಮಿರದೆ ಪರಿವಂತೆ ಶರಘಾತಿಗೊಗ್ಗೊಡೆದು ಕಂಡಕಡೆಗೆ ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಈಗಳು ಅದರಿಂದೆ ನಿನ್ನಂ ಪಿಡಿದು ನರಮೇಧಯಾಗಕ್ಕೆ ಪಶುಮಾಳ್ಪೆನು ಎಂದು ಫಲುಗುಣನ ರಥಕಾಗಿ ಭೀಷಣನು ಎರಗಲು=[ಈಗ ಅದಕ್ಕಾಗಿ, ನಿನ್ನನ್ನು ಹಿಡಿದು ನರಮೇಧಯಾಗಕ್ಕೆ ಪಶುಮಾಡುವೆನು, ಎಂದು ಫಲ್ಗುಣನ ರಥಕ್ಕೆ ಭೀಷಣನು ಧಾಳಿಮಾಡಲು,]; ಅರ್ಜುನಂ ನಗುತೆ ರಕ್ಷೋಘ್ನ ಬಾಣವನೆ ಪೂಡಿ ಬೇಗದಿಂದ ಇಸಲು ಅಸುರನು ಅಳವಳಿದನು=[ಅರ್ಜುನನು ನಗುತ್ತಾ ರಕ್ಷೋಘ್ನ ಬಾಣವನ್ನು ಹೂಡಿ ಬೇಗನೆ ಹೊಡೆಯಲು, ಅಸುರನು ಶಕ್ತಿಗುಂದಿದನು.]; ಅವನ ಪಡೆ (ಸಾಗಿದುದು - ಓಡಿಹೋಯಿತು) ಬಿರುಗಾಳಿ ಬೀಸಿದೊಡೆ ಬಿಣ್ಪಿಡಿದ ಮೇಘಸಂಕುಲಂ ಇರದೆ ಪರಿವಂತೆ ಶರಘಾತಿಗೆ ಒಗ್ಗೊಡೆದು ಕಂಡಕಡೆಗೆ=[ ಅವನ ಸೈನ್ಯ ಬಿರುಗಾಳಿ ಬೀಸಿದಾಗ ಭಾರವಾದ ಮೇಘಸಮೂಹ ಒಟ್ಟಾಗಿ ಇರಲಾರದೆ ಚದುರಿ ಹೋಗುವಂತೆ ಅರ್ಜುನನ ಬಾಣದ ಹೊಡೆತಕ್ಕೆ ಕಂಡಕಂಡ ಕಡೆಗೆ ಚದುರಿ ಓಡಿಹೋಯಿತು].
  • ತಾತ್ಪರ್ಯ:ಈಗ ಅದಕ್ಕಾಗಿ, ನಿನ್ನನ್ನು ಹಿಡಿದು ನರಮೇಧಯಾಗಕ್ಕೆ ಪಶುಮಾಡುವೆನು, ಎಂದು ಫಲ್ಗುಣನ ರಥಕ್ಕೆ ಭೀಷಣನು ಧಾಳಿಮಾಡಲು, ಅರ್ಜುನನು ನಗುತ್ತಾ ರಕ್ಷೋಘ್ನ ಬಾಣವನ್ನು ಹೂಡಿ ಬೇಗನೆ ಹೊಡೆಯಲು, ಅಸುರನು ಶಕ್ತಿಗುಂದಿದನು. ಅವನ ಸೈನ್ಯ ಬಿರುಗಾಳಿ ಬೀಸಿದಾಗ ಭಾರವಾದ ಮೇಘಸಮೂಹ ಒಟ್ಟಾಗಿ ಇರಲಾರದೆ ಚದುರಿ ಹೋಗುವಂತೆ ಅರ್ಜುನನ ಬಾಣದ ಹೊಡೆತಕ್ಕೆ ಕಂಡಕಂಡ ಕಡೆಗೆ ಚದುರಿ ಓಡಿಹೋಯಿತು.
  • (ಪದ್ಯ-೩೯)ಅಣಲ್ಗಡಿಸು

ಪದ್ಯ :-:೩೯:[ಸಂಪಾದಿಸಿ]

ಮಡಿದವರ್ ಕೆಲರಂಗಭಂಗದಿಂ ಕೈಕಾಲ್ಗ | ಳುಡಿದವರ್ ಕೆಲರೆಚ್ಚ ಕೂರ್ಗಣಿಗಳವಯವದೊ | ಳಿಡಿದವರ್ ಕೆಲರೇರ್ಗಳಿಂದೆ ವೇದನೆಗಳಂ ಸೈರಿಸದೆ ಗಳದಸುವನು ||
ಪಿಡಿದವರ್ ಕೆಲರಲ್ಲಿ ಗಿಡುಮರವನೆಡೆಗೊಂಡು | ಪಿಡಿದವರ್ ಕೆಲರೋಡಿ ಬದುಕಿದೆವು ತಾವೆಂದು | ನುಡಿದವರ್ ಕೆಲರಾದರರ್ಜುನನಿಸುಗೆಯಿಂದಮಾಕ್ಷಣಂ ರಾಕ್ಷಸರೊಳು||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಡಿದವರ್ ಕೆಲರು ಅಂಗಭಂಗದಿಂ ಕೈಕಾಲ್ಗಳು ಉಡಿದವರ್ ಕೆಲರ್ ಎಚ್ಚ ಕೂರ್ಗಣೆಗಳು ಅವಯವದೊಳು ಇಡಿದವರ್ ಕೆಲರು ಏರ್ಗಳಿಂದೆ ವೇದನೆಗಳಂ ಸೈರಿಸದೆ ಕಳದ ಅಸುವನು=[ಕೆಲವರು ಮಡಿದರು, ದೇಹದ ಅಂಗಗಳ ನಷ್ಟವಾಯಿತು, ಕೈಕಾಲುಗಳು ಮರಿದವರು ಕೆಲವರು; ಹೊಡೆದ ಚೂಪುಬಾಣಗಳು ಅವಯವದಲ್ಲಿ ಸೇರಿತು ಕೆಲವರಿಗೆ; ಏಟುಗಳಿಂದ ವೇದನೆಯನ್ನು ಸಹಿಸಲಾರದೆ ಪ್ರಾಣಚನ್ನು ಕಳೆದುಕೊಂಡರು.]; ಪಿಡಿದವರ್ ಕೆಲರಲ್ಲಿ ಗಿಡುಮರವನು ಎಡೆಗೊಂಡು ಪಿಡಿದವರ್ ಕೆಲರು ಓಡಿ ಬದುಕಿದೆವು ತಾವೆಂದು ನುಡಿದವರ್ ಕೆಲರ್ (ಸಾವು) ಆದರು ಅರ್ಜುನನನ ಇಸುಗೆಯಿಂದಂ ಆಕ್ಷಣಂ ರಾಕ್ಷಸಠೊಳು =[ಕೆಲವರು ಅಲ್ಲಿ ಗಿಡುಮರಗಳನ್ನು ಹಿಡಿದು ಕೊಂಡರು, ಕೆಲವರು ಓಡಿ ಬದುಕಿದೆವು ತಾವೆಂದು ಹೇಳಿದರು; ರಾಕ್ಷಸಠೊಳು ಅರ್ಜುನನ ಬಾಣದಿಂದ ಆ ಕ್ಷಣದಲ್ಲಿ ಸಾವುಕಂಡರು.]
  • ತಾತ್ಪರ್ಯ: ಕೆಲವರು ಮಡಿದರು, ದೇಹದ ಅಂಗಗಳ ನಷ್ಟವಾಯಿತು, ಕೈಕಾಲುಗಳು ಮರಿದವರು ಕೆಲವರು; ಹೊಡೆದ ಚೂಪುಬಾಣಗಳು ಅವಯವದಲ್ಲಿ ಸೇರಿತು ಕೆಲವರಿಗೆ ಏಟುಗಳಿಂದ ವೇದನೆಯನ್ನು ಸಹಿಸಲಾರದೆ ಪ್ರಾಣವನ್ನು ಕಳೆದುಕೊಂಡರು. ಕೆಲವರು ಅಲ್ಲಿ ಗಿಡುಮರಗಳನ್ನು ಹಿಡಿದು ಕೊಂಡರು, ಕೆಲವರು ಓಡಿ ಬದುಕಿದೆವು ತಾವೆಂದು ಹೇಳಿದರು; ರಾಕ್ಷಸಠೊಳು ಅರ್ಜುನನ ಬಾಣದಿಂದ ಆ ಕ್ಷಣದಲ್ಲಿ ಸಾವು ಕಂಡರು.
  • (ಪದ್ಯ-೩೯)

ಪದ್ಯ :-:೪೧:[ಸಂಪಾದಿಸಿ]

ಓಡಿಸಿ ಬಲೌಘಮಂ ಬೀಸಿ ಬಿರುಮೊಲೆಗಳಿಂ | ತಾಡಿಸುವ ಯೋಜನಸ್ತನಿಯನುರೆ ಬಾಯ್ದೆರೆದು | ನಾಡಪಡೆಯಂ ತುತ್ತುಗೊಂಬ ಲಂಬೋದರಿಯನುಳಿದಸುರಿಯರ ಕೃತ್ಯವ ||
ನೋಡಿ ವಿಸ್ಮಿತನಾಗಿ ಪೂರ್ವವಂ ನೆನೆದು ಕೊಂ | ಡಾಡಿ ನಸುನಗುತೆ ದೆಸೆದೆಸೆಗೆ ವಾಲಾಗ್ರಮಂ | ನೀಡಿ ತಎಗೆತೆಗಿದಿಳೆಯೊಳಪ್ಪಳಿಸಿ ಕೊಂದನವರೆಲ್ಲರಂ ಕಲಿಹನುಮನು ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಓಡಿಸಿ ಬಲ ಓಘಮಂ ಬೀಸಿ ಬಿರುಮೊಲೆಗಳಿಂ ತಾಡಿಸುವ ಯೋಜನಸ್ತನಿಯನು ಅರೆ ಬಾಯ್ ತೆರೆದು ನಾಡೆ ಪಡೆಯಂ ತುತ್ತುಗೊಂಬ ಲಂಬೋದರಿಯನು ಉಳಿದ ಅಸುರಿಯರ ಕೃತ್ಯವ=[ ಸೈನ್ಯಸಮೂಹವನ್ನು ಓಡಿಸಿ, ಬೀಸಿ ಬಿರುಮೊಲೆಗಳಿಂದ ಹೊಡೆಯುವ ಯೋಜನಸ್ತನಿಯನ್ನೂ, ಅರೆ /ಅರ್ಧ ಬಾಯಿ ತೆರೆದು ಸಾಮಾನ್ಯಜನರ/ನಾಡ ಸೈನ್ಯವನ್ನು ತೆಗೆದುತಿನ್ನುವ ಲಂಬೋದರಿಯನ್ನ ಉಳಿದ ರಾಕ್ಷಸಿಯರ ಕೃತ್ಯವನ್ನೂ ]; ನೋಡಿ ವಿಸ್ಮಿತನಾಗಿ ಪೂರ್ವವಂ ನೆನೆದು ಕೊಂಡಾಡಿ ನಸುನಗುತೆ ದೆಸೆದೆಸೆಗೆ ವಾಲಾಗ್ರಮಂ ನೀಡಿ ತೆಗೆತೆಗಿದು ಇಳೆಯೊಳಪ್ಪಳಿಸಿ ಕೊಂದನು ಅವರೆಲ್ಲರಂ ಕಲಿಹನುಮನು=[ನೋಡಿ ಆಶ್ಚರ್ಯಪಟ್ಟು, ಪೂರ್ವದ ರಾಮಾಯಣವನ್ನು ನೆನೆದು ಇವರ ಶೌರ್ಯವನ್ನು ಹೊಗಳಿ, ನಸುನಗುತ್ತಾ ಎಲ್ಲಾ ದೆಸೆ /ದಿಕ್ಕಿಗೆ ಬಾಲದ ತುದಿಯನ್ನು ನೀಡಿ ಅವರನ್ನು ತೆಗೆತೆಗಿದು ಭೂಮಿಗೆ ಅಳಪ್ಪಳಿಸಿ ಕಲಿಹನುಮನು ಅವರೆಲ್ಲರನ್ನೂ ಕೊಂದನು.]
  • ತಾತ್ಪರ್ಯ: ಸೈನ್ಯಸಮೂಹವನ್ನು ಓಡಿಸಿ, ಬೀಸಿ ಬಿರುಮೊಲೆಗಳಿಂದ ಹೊಡೆಯುವ ಯೋಜನಸ್ತನಿಯನ್ನೂ, ಅರೆ /ಅರ್ಧ ಬಾಯಿ ತೆರೆದು ಸಾಮಾನ್ಯಜನರ/ನಾಡ ಸೈನ್ಯವನ್ನು ತೆಗೆದು ತಿನ್ನುವ ಲಂಬೋದರಿಯನ್ನೂ ಉಳಿದ ರಾಕ್ಷಸಿಯರ ಕೃತ್ಯವನ್ನೂ, ನೋಡಿ ಆಶ್ಚರ್ಯಪಟ್ಟು, ಪೂರ್ವದ ರಾಮಾಯಣವನ್ನು ನೆನೆದು ಇವರ ಶೌರ್ಯವನ್ನು ಹೊಗಳಿ, ನಸುನಗುತ್ತಾ ಎಲ್ಲಾ ದೆಸೆ /ದಿಕ್ಕಿಗೆ ಬಾಲದ ತುದಿಯನ್ನು ನೀಡಿ ಅವರನ್ನು ತೆಗೆತೆಗಿದು ಭೂಮಿಗೆ ಅಳಪ್ಪಳಿಸಿ ಕಲಿಹನುಮನು ಅವರೆಲ್ಲರನ್ನೂ ಕೊಂದನು.
  • (ಪದ್ಯ-೪೧)xxvi

ಪದ್ಯ :-:೪೨:[ಸಂಪಾದಿಸಿ]

ನರನ ಶರಜಾಲದಿಂ ಕಡಿವಡೆದು ವೀರವಾ | ನರನ ಲಾಂಗೂಲದಿಂ ಬಡಿವಡೆದು ರಕ್ಕಸರ | ನೆರವಿ ಹೇರಾಳದಿಂ ಪುಡಿವಡೆದು ಬಯಲಾಗೆ ಭೀಷಣಂ ಭೀತಿಗೊಂಡು ||
ವಿರಚಿಸಿದನೊಂದುಪಾಯಾಂತರವನಲ್ಲಿ ಮೈ | ಗರೆದನಾಗಳೆ ಮಾಯದಿಂದೆ ಮುನಿಯಾದನದು || ಸುರನದಿಯ ತೀರಮಾದುದು ಕಣ್ಗೆ ಕಾಣಿಸಿತು ಪುಣ್ಯಾಶ್ರಮಂ ಪೊಸತೆನೆ ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನರನ ಶರಜಾಲದಿಂ ಕಡಿವಡೆದು ವೀರವಾನರನ ಲಾಂಗೂಲದಿಂ ಬಡಿವಡೆದು ರಕ್ಕಸರ ನೆರವಿ ಹೇರಾಳದಿಂ ಪುಡಿವಡೆದು ಬಯಲಾಗೆ ಭೀಷಣಂ ಭೀತಿಗೊಂಡು=[ಅರ್ಜುನನ ಬಾಣಗಳ ಜಾಲದಿಂದ ಸತ್ತು, ಪಟ್ಟುತಿಂದು, ಮತ್ತೆ ವೀರಮಾರುತಿಯ ಬಾಲದಿಂದ ಬಡಿದ ಹೊಡೆದ ರಾಕ್ಷಸರ ಸೈನ್ಯ ಹೇರಳವಾಗಿ ಚೂರುಚೂರಾಗಿ ನಾಶವಾಗಲು, ಭೀಷಣಣು ಹೆದರಿಹೋದನು.]; ವಿರಚಿಸಿದನೊಂದು ಉಪಾಯಾಂತರವನು ಅಲ್ಲಿ ಮೈಗರೆದನಾಗಳೆ ಮಾಯದಿಂದೆ ಮುನಿಯಾದನು ಅದು ಸುರನದಿಯ ತೀರಮಾದುದು ಕಣ್ಗೆ ಕಾಣಿಸಿತು ಪುಣ್ಯಾಶ್ರಮಂ ಪೊಸತೆನೆ=[ಆಗ ಅವನು ಒಂದು ಬದಲು ಉಪಾಯದ ತಂತ್ರವನ್ನು ಹೂಡಿದನು. ಇದ್ದಕ್ಕಿದ್ದಂತೆ ಅಲ್ಲಿ ರೂಪಬದಲಾಯಿಸಿ ಮಾಯೆಯಿಂದ ಮುನಿಯಾದನು; ಅದು ಗಂಗಾನದಿಯ ತೀರದಂತೆ ಆಗಿ ಕಣ್ಣಿಗೆ ಪುಣ್ಯಾಶ್ರಮಂ ಹೊಸತು ವಿಚಿತ್ರವೆಂಬಂತೆ ಕಾಣಿಸಿತು].
  • ತಾತ್ಪರ್ಯ:ಅರ್ಜುನನ ಬಾಣಗಳ ಜಾಲದಿಂದ ಸತ್ತು, ಪಟ್ಟುತಿಂದು, ಮತ್ತೂ ವೀರಮಾರುತಿಯ ಬಾಲದಿಂದ ಬಡಿದ ಹೊಡೆದ ರಾಕ್ಷಸರ ಸೈನ್ಯ ಹೇರಳವಾಗಿ ಚೂರುಚೂರಾಗಿ ನಾಶವಾಗಲು, ಭೀಷಣನು ಹೆದರಿಹೋದನು. ಆಗ ಅವನು ಒಂದು ಬದಲು ಉಪಾಯದ ತಂತ್ರವನ್ನು ಹೂಡಿದನು. ಇದ್ದಕ್ಕಿದ್ದಂತೆ ಅಲ್ಲಿ ಅವನು ರೂಪಬದಲಾಯಿಸಿ ಮಾಯೆಯಿಂದ ಮುನಿಯಾದನು; ಅದು ಗಂಗಾನದಿಯ ತೀರದಂತೆ ಆಗಿ ಕಣ್ಣಿಗೆ ಪುಣ್ಯಾಶ್ರಮವು ಹೊಸತು ಮತ್ತು ವಿಚಿತ್ರವೆಂಬಂತೆ ಕಾಣಿಸಿತು.
  • (ಪದ್ಯ-೪೨)

ಪದ್ಯ :-:೪೩:[ಸಂಪಾದಿಸಿ]

ಎಲ್ಲಿ ನೋಡಿದೊಡೆ ಗಂಗಾಪ್ರವಾಹದ ಸಲಿಲ | ವೆಲ್ಲಿ ನೋಡಿದೊಡೆ ಪುಣ್ಯಾಶ್ರಮಕುಟೀರಂಗ | ಳೆಲ್ಲಿ ನೋಡಿದೊಡೆ ನಿಬಿಡದ್ರುಮಚ್ಛಾಯೆಗಳ್ ಕುಸುಮಫಲಮೂಲಂಗಳು ||
ಎಲ್ಲಿ ನೋಡಿದೊಡೆ ಶುಕ ಪಿಕ ಮಯೂರ ಧ್ವನಿಗ | ಳೆಲ್ಲಿ ನೋಡಿದೊಡೆ ಸಾತ್ವಿಕಮಾದ ಮೃಗನಿಕರ | ಮೆಲ್ಲಿ ನೋಡಿದೊಡೆ ಸಂಚರಿಪ ತಾಪಸವಟುಗಳಸೆದರರ್ಜುನನ ಕಣ್ಗೆ ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಲ್ಲಿ ನೋಡಿದೊಡೆ ಗಂಗಾಪ್ರವಾಹದ ಸಲಿಲವು ಎಲ್ಲಿ ನೋಡಿದೊಡೆ ಪುಣ್ಯಾಶ್ರಮ ಕುಟೀರಂಗಳು ಎಲ್ಲಿ ನೋಡಿದೊಡೆ ನಿಬಿಡದ್ರುಮಚ್ಛಾಯೆಗಳ್ ಕುಸುಮಫಲಮೂಲಂಗಳು=[ಎಲ್ಲಿ ನೋಡಿದರೂ ಗಂಗಾಪ್ರವಾಹದ ನೀರಿನ ಪ್ರವಾಹ; ಎಲ್ಲಿ ನೋಡಿದರೂ ಪುಣ್ಯಾಶ್ರಮ ಕುಟೀರಗಳು; ಎಲ್ಲಿ ನೋಡಿದರೂ ದಟ್ಟ ಮರಗಳ ನೆರಳು ಮತ್ತು ಹೂವು ಹಣ್ಣಿನಗಿಡಗಳು;]; ಎಲ್ಲಿ ನೋಡಿದೊಡೆ ಶುಕ ಪಿಕ ಮಯೂರ ಧ್ವನಿಗಳು ಎಲ್ಲಿ ನೋಡಿದೊಡೆ ಸಾತ್ವಿಕಮಾದ ಮೃಗನಿಕರಮ್ ಎಲ್ಲಿ ನೋಡಿದೊಡೆ ಸಂಚರಿಪ ತಾಪಸವಟುಗಳ ಎಸೆದರು ಅರ್ಜುನನ ಕಣ್ಗೆ=[ಎಲ್ಲಿ ನೋಡಿದರೂ ಶುಕ ಪಿಕ ನವಲುಗಳ ಧ್ವನಿಗಳು; ಎಲ್ಲಿ ನೋಡಿದರೂ ಸಾತ್ವಿಕವಾದ /ಶಾಂತ ಸ್ವರೂಪದ ಪ್ರಾಣಿಗಳ ಸಮೂಹ; ಎಲ್ಲಿ ನೋಡಿದರೂ ಸಂಚರಿಸುತ್ತಿರುವ ತಪಸ್ವಿ ವಟುಗಳು ಅರ್ಜುನನ ಕಣ್ಣಿಗೆ ಕಾಣಿಸುತ್ತಿದ್ದರು].
  • ತಾತ್ಪರ್ಯ:ಎಲ್ಲಿ ನೋಡಿದರೂ ಗಂಗಾಪ್ರವಾಹದ ನೀರಿನ ಪ್ರವಾಹ; ಎಲ್ಲಿ ನೋಡಿದರೂ ಪುಣ್ಯಾಶ್ರಮ ಕುಟೀರಗಳು; ಎಲ್ಲಿ ನೋಡಿದರೂ ದಟ್ಟ ಮರಗಳ ನೆರಳು ಮತ್ತು ಹೂವು ಹಣ್ಣಿನಗಿಡಗಳು;ಎಲ್ಲಿ ನೋಡಿದರೂ ಶುಕ ಪಿಕ ನವಲುಗಳ ಧ್ವನಿಗಳು; ಎಲ್ಲಿ ನೋಡಿದರೂ ಸಾತ್ವಿಕವಾದ /ಶಾಂತ ಸ್ವರೂಪದ ಪ್ರಾಣಿಗಳ ಸಮೂಹ; ಎಲ್ಲಿ ನೋಡಿದರೂ ಸಂಚರಿಸುತ್ತಿರುವ ತಪಸ್ವಿ ವಟುಗಳು ಅರ್ಜುನನ ಕಣ್ಣಿಗೆ ಕಾಣಿಸುತ್ತಿದ್ದರು.
  • (ಪದ್ಯ-೪೩)

ಪದ್ಯ :-:೪೩:[ಸಂಪಾದಿಸಿ]

ಆ ದಿವ್ಯ ಋಷಿಗಳಾಶ್ರಮದಿಂದಮೊರ್ವ ಮುನಿ | ಸಾದರದೊಳೈತಂದು ಫಲುಗುಣನ ಮುಂದೆ ನಿಂ | ದೀದನುಜರಂ ಕೊಂದಡೇನಹುದು ಪರಹಿಂಸೆ ಲೇಸಲ್ಲ ಬಲ್ಲವರ್ಗೆ ||
ಮಾಧವ ಮಹೇಶ್ವರಾರಾಧನತಪೋಜಪ ಸ | ಮಾಧಿಗಳನುತ್ತಮ ಸ್ವಾಧ್ಯಾಯಗತಿಗಳಂ | ಸಾಧಿಸುವೊಡಿದು ಪುಣ್ಯನದಿ ಗಂಗೆ ಶುದ್ಧಪ್ರದೇಶಮಿದು ನಿನಗೆಂದನು ||44||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ದಿವ್ಯ ಋಷಿಗಳ ಆಶ್ರಮದಿಂದಂ ಓರ್ವ ಮುನಿ ಸಾದರದೊಳು ಐತಂದು ಫಲುಗುಣನ ಮುಂದೆ ನಿಂದು ಈ ದನುಜರಂ ಕೊಂದಡೆ ಏನಹುದು ಪರಹಿಂಸೆ ಲೇಸಲ್ಲ ಬಲ್ಲವರ್ಗೆ=[ಆ ದಿವ್ಯ ಋಷಿಗಳ ಆಶ್ರಮದಿಂದ ಒಬ್ಬ ಮುನಿ ಆದರಪೂರ್ವಕ ಬಂದು, ಫಲ್ಗುಣನ ಮುಂದೆ ನಿಂತು, ಈ ರಾಕ್ಷಸರನ್ನು ಕೊಂದರೆ ಏನು ಪ್ರಯೋಜನವಾಗುವುದು? ಪ್ರಯೋಜನವಿಲ್ಲ. ಪರಹಿಂಸೆ ತಳಿದವರಿಗೆ ಒಳ್ಳೆಯದಲ್ಲ.]; ಮಾಧವ ಮಹೇಶ್ವರ ಆರಾಧನ ತಪೋಜಪ ಸಮಾಧಿಗಳನು ಉತ್ತಮ ಸ್ವಾಧ್ಯಾಯ ಗತಿಗಳಂ ಸಾಧಿಸುವೊಡೆ ಇದು ಪುಣ್ಯನದಿ ಗಂಗೆ ಶುದ್ಧಪ್ರದೇಶಮು ಇದು ನಿನಗೆ ಎಂದನು=[ಮಾಧವ ಮಹೇಶ್ವರರ ಆರಾಧನೆ, ತಪ, ಜಪ, ಸಮಾಧಿಗಳು, ಉತ್ತಮ ಸ್ವಾಧ್ಯಾಯ,ಇವು ನಿನಗೆ ಉತ್ತಮ ಗತಿಗಳನ್ನು ಸಾಧಿಸುವುದಾದರೆ ಸಹಾಯಕ; ಇದು ಪುಣ್ಯನದಿ ಗಂಗೆ, ಶುದ್ಧ ಪ್ರದೇಶವ,ಇದು ಎಂದನು ].
  • ತಾತ್ಪರ್ಯ:ಆ ದಿವ್ಯ ಋಷಿಗಳ ಆಶ್ರಮದಿಂದ ಒಬ್ಬ ಮುನಿ ಆದರಪೂರ್ವಕ ಬಂದು, ಫಲ್ಗುಣನ ಮುಂದೆ ನಿಂತು, ಈ ರಾಕ್ಷಸರನ್ನು ಕೊಂದರೆ ಏನು ಪ್ರಯೋಜನವಾಗುವುದು? ಪ್ರಯೋಜನವಿಲ್ಲ. ಪರಹಿಂಸೆ ತಳಿದವರಿಗೆ ಒಳ್ಳೆಯದಲ್ಲ.ಮಾಧವ ಮಹೇಶ್ವರರ ಆರಾಧನೆ, ತಪ, ಜಪ, ಸಮಾಧಿಗಳು, ಉತ್ತಮ ಸ್ವಾಧ್ಯಾಯ,ಇವು ನಿನಗೆ ಉತ್ತಮ ಗತಿಗಳನ್ನು ಸಾಧಿಸುವುದಾದರೆ ಸಹಾಯಕ; ಇದು ಪುಣ್ಯನದಿ ಗಂಗೆ, ಶುದ್ಧ ಪ್ರದೇಶವ,ಇದು ಎಂದನು.
  • (ಪದ್ಯ-೪೩)

ಪದ್ಯ :-:೪೫:[ಸಂಪಾದಿಸಿ]

ಬೆರಗಾದನರ್ಜುನಂ ದಾನವನ ಕೃತಕಮೆಂ | ದರಿದು ಮುನಿಯಾಗಿರ್ದವನ ತುಡುಕಲಾ ಮಾಯೆ | ಬರೆತು ಮುನ್ನಿನ ರಾಕ್ಷಸಾಕೃತಿಗೆ ನಿಲಲಾಗಿ ಪಿಡಿದಾಕ್ರಮಿಸಿ ಮನೆಯೊಳು ||
ತುರುಗಿರ್ದ ಸಕಲಭೂಷಣ ವಿವಿಧಮಣಿಗಳಂ | ತರತರದ ಪಸ್ತುಗಳನುತ್ತಮಗಜಂಗಳಂ | ಮಿರುಪ ಹಯ ರತ್ನಂಗಳಂ ಕೊಂಡು ದೈತ್ಯರಂ ದೆಸೆಗೆಡಿಸಿದಂ ಪಾರ್ಧನು ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬೆರಗಾದನು ಅರ್ಜುನಂ ದಾನವನ ಕೃತಕಮು ಎಂದು ಅರಿದು ಮುನಿಯಾಗಿ ಇರ್ದವನ ತುಡುಕಲು=[ ಅರ್ಜುನನು ಈಬದಲಾವಣೆಯನ್ನು ಕಂಡು, ಬೆರಗಾದನು. ಇದು ಪಾಕ್ಷಸನ ಮಾವಿದ್ಯೆ ಎಂದು ತಿಳದು, ಮುನಿಯಾಗಿ ಇರುವವನ ಮೇಲೆ ಆಕ್ರಮಣ ಮಾಡಲು ]; ಆ ಮಾಯೆ ಬರೆತು ಮುನ್ನಿನ ರಾಕ್ಷಸಾಕೃತಿಗೆ ನಿಲಲಾಗಿ ಪಿಡಿದು ಆಕ್ರಮಿಸಿ ಮನೆಯೊಳು ತುರುಗಿರ್ದ ಸಕಲಭೂಷಣ ವಿವಿಧಮಣಿಗಳಂ ತರತರದ ಪಸ್ತುಗಳನು ಉತ್ತಮಗಜಂಗಳಂ ಮಿರುಪ ಹಯ ರತ್ನಂಗಳಂ ಕೊಂಡು=[ಆ ಮಾಯೆ ತೆರವಾಗಿ, ಮೊದಲಿನ ರಾಕ್ಷಸಾಕೃತಿಗೆ ಅವನು ಬಂದನು. ಆಗ ಅವನನ್ನು ಹಿಡಿದು, ಬಲಾತ್ಕರಿಸಿ, ಅವನ ಅರಮನೆಯಲ್ಲಿ ತುಂಬಿದ್ದ ಸಕಲಭೂಷಣಗಳು, ವಿವಿಧಮಣಿಗಳು, ತರತರದ ಪಸ್ತುಗಳನ್ನು, ಉತ್ತಮಗಜಗಳನ್ನು, ಶೋಭೀಸುವ ಕುದುರೆ, ರತ್ನಗಳನ್ನು ತೆಗೆದುಕೊಂಡು]; ದೈತ್ಯರಂ ದೆಸೆಗೆಡಿಸಿದಂ ಪಾರ್ಧನು =[ರಾಕ್ಷಸರನ್ನು ದಿಕ್ಕಗೆಡುವಂತೆ, ಅವರನ್ನು ನಿಸ್ಸಹಾಯಕರನ್ನಾಗಿ ಮಾಡಿದನು].
  • ತಾತ್ಪರ್ಯ: ಅರ್ಜುನನು ಈ ಬದಲಾವಣೆಯನ್ನು ಕಂಡು, ಬೆರಗಾದನು. ಇದು ರಾಕ್ಷಸನ ಮಾವಿದ್ಯೆ ಎಂದು ತಿಳದು, ಮುನಿಯಾಗಿ ಇರುವವನ ಮೇಲೆ ಆಕ್ರಮಣ ಮಾಡಲು, ಆ ಮಾಯಾವಿದ್ಯೆ ತೆರವಾಗಿ, ಅವನು ಮೊದಲಿನ ರಾಕ್ಷಸಾಕೃತಿಗೆ ಬಂದನು. ಆಗ ಅವನನ್ನು ಹಿಡಿದು, ಬಲಾತ್ಕರಿಸಿ, ಅವನ ಅರಮನೆಯಲ್ಲಿ ತುಂಬಿದ್ದ ಸಕಲಭೂಷಣಗಳು, ವಿವಿಧಮಣಿಗಳು, ತರತರದ ಪಸ್ತುಗಳನ್ನು, ಉತ್ತಮ ಗಜಗಳನ್ನು, ಶೋಭೀಸುವ ಕುದುರೆ, ರತ್ನಗಳನ್ನು ತೆಗೆದುಕೊಂಡು]; ದೈತ್ಯರಂ ದೆಸೆಗೆಡಿಸಿದಂ ಪಾರ್ಧನು =[ರಾಕ್ಷಸರನ್ನು ದಿಕ್ಕಗೆಡುವಂತೆ, ಅವರನ್ನು ನಿಸ್ಸಹಾಯಕರನ್ನಾಗಿ ಮಾಡಿದನು].
  • (ಪದ್ಯ-೪೫)

ಪದ್ಯ :-:೪೬:[ಸಂಪಾದಿಸಿ]

ಕೋಳೊಡವೆ ಮುಂತಾಗಿ ತಿರುಗಿದಂ ಫಲಗುಣಂ | ಮೇಲೆ ನಡೆದುದು ಕುದುರೆ ತೆಂಕದೆಸೆಗೊಡನೆ ಕೆಂ | ದೂಳಿಡುತೆ ಬಹ ಬಹಳಬಲಸಹಿತ ಮಣಿನಗರವೆಂಬ ಪಟ್ಟಣದ ಬಳಿಗೆ ||
ಪೇಳಲೇನರ್ಜುನಸುತಂ ಬಭ್ರುವಾಹನಂ | ಪಾಲಿಸುವನಾ ಪೊಳಲನೀ ನರಂ ಬಂದುದಂ | ಕೇಳಲೇಗೈದಪನೊ ದೇವಪುರನಿಲಯ ಲಕ್ಷ್ಮೀಪತಿಯ ಮೈದುನಂಗೆ ||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೋಳೊಡವೆ (ಕೊಳ್ಳೆಯ + ಒಡವೆ) ಮುಂತಾಗಿ ತಿರುಗಿದಂ ಫಲಗುಣಂ ಮೇಲೆ ನಡೆದುದು ಕುದುರೆ ತೆಂಕದೆಸೆಗೆ ಒಡನೆ ಕೆಂದೂಳಿಡುತೆ ಬಹ ಬಹಳ ಬಲಸಹಿತ ಮಣಿನಗರವೆಂಬ ಪಟ್ಟಣದ ಬಳಿಗೆ =[ಹಾಗೆ ತೆಗೆದುಕೊಂಡ ಒಡವೆ ಮುಂತಾದವನ್ನು ತೆಗೆದುಕೊಂಡು ಹಿಂತಿರುಗಿ ಫಲಗುಣನು ಬಂದನು. ನಂತರ ಕುದುರೆಯು ತೆಂಕದೆಸೆಗೆ/ ದಕ್ಷಿಣದಿಕ್ಕಿಗೆ ನೆಡೆಯಿತು. ಹಾಗೆ ಹೋಗುವಾಗ ಕೆಂಪು ದೂಳು ಎಬ್ಬಿಸುತ್ತಾ ಬರುವಾಗ, ಬಹಳ ದೊಡ್ಡ ಸೈನ್ಯ ಸಹಿತ ಮಣಿನಗರವೆಂಬ ಪಟ್ಟಣದ ಬಳಿಗೆ ಬಂದಿತು.]; ಪೇಳಲೇನು ಅರ್ಜುನ ಸುತಂ ಬಭ್ರುವಾಹನಂ ಪಾಲಿಸುವನು ಆ ಪೊಳಲನು ಈ ನರಂ ಬಂದುದಂ ಕೇಳಲು ಏಗೈದಪನೊ ದೇವಪುರನಿಲಯ ಲಕ್ಷ್ಮೀಪತಿಯ ಮೈದುನಂಗೆ =[ಹೇಳಲೇನು ಅಲ್ಲಿ ಅರ್ಜುನನ ಮಗ ಬಭ್ರುವಾಹನನು ರಾಜನಾಗಿದ್ದು ಆ ರಾಜ್ಯವನ್ನು ಪಾಲಿಸುವನು. ಈ ಸರ್ಜುನನು ಬಂದುದನ್ನು ಕೇಳಿದಮೇಲೆ ದೇವಪುರನಿಲಯ ಲಕ್ಷ್ಮೀಪತಿಯ ಮೈದುನನಿಗೆ ಏನು ಮಾಡುವನೋ!].
  • ತಾತ್ಪರ್ಯ:ಹಾಗೆ ತೆಗೆದುಕೊಂಡ ಒಡವೆ ಮುಂತಾದವನ್ನು ತೆಗೆದುಕೊಂಡು ಹಿಂತಿರುಗಿ ಫಲಗುಣನು ಬಂದನು. ನಂತರ ಕುದುರೆಯು ತೆಂಕದೆಸೆಗೆ/ ದಕ್ಷಿಣದಿಕ್ಕಿಗೆ ನೆಡೆಯಿತು. ಹಾಗೆ ಹೋಗುವಾಗ ಕೆಂಪು ದೂಳು ಎಬ್ಬಿಸುತ್ತಾ ಬರುವಾಗ, ಬಹಳ ದೊಡ್ಡ ಸೈನ್ಯ ಸಹಿತ ಮಣಿನಗರವೆಂಬ ಪಟ್ಟಣದ ಬಳಿಗೆ ಬಂದಿತು. ಹೇಳಲೇನು ಅಲ್ಲಿ ಅರ್ಜುನನ ಮಗ ಬಭ್ರುವಾಹನನು ರಾಜನಾಗಿದ್ದು ಆ ರಾಜ್ಯವನ್ನು ಪಾಲಿಸುವನು. ಈಗ ಅರ್ಜುನನು ಬಂದುದನ್ನು ಕೇಳಿದಮೇಲೆ ದೇವಪುರನಿಲಯ ಲಕ್ಷ್ಮೀಪತಿಯ ಮೈದುನನಿಗೆ ಅವನು ಏನು ಮಾಡುವನೋ!
  • (ಪದ್ಯ-೪೬)xxvii
  • [೧]
  • [೨]
  • ಸಂಧಿ ೧೬ಕ್ಕೆ ಪದ್ಯಗಳು:೮೦೯.

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.