ಜೈಮಿನಿ ಭಾರತ/ಹದಿನಾಲ್ಕನೆಯ ಸಂಧಿ

ವಿಕಿಸೋರ್ಸ್ ಇಂದ
Jump to navigation Jump to search

ಹದಿನಾಲ್ಕನೆಯ ಸಂಧಿ[ಸಂಪಾದಿಸಿ]

ಪದ್ಯ :-:ಸೂಚನೆ:[ಸಂಪಾದಿಸಿ]

ಚಂಡಸುರಥನ ಶಿರವನಸುರಹರನಾಜ್ಞೆಯಿಂ | ಕೊಂಡು ಗರುಡಂ ಪ್ರಯಾಗವನೈದಲೀಶ್ವರಂ | ಕಂಡು ವೃಷರಾಜನಂ ಕಳುಹಿ ತರಸಿದನದಂ ರುಂಡಮಾಲೆಯ ತೊಡವಿಗೆ||.

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಚಂಡಸುರಥನ ಶಿರವನು ಅಸುರಹರನ ಆಜ್ಞೆಯಿಂ ಕೊಂಡು ಗರುಡಂ ಪ್ರಯಾಗವನು ಐದಲು = [ಉಗ್ರನಾದ ಸುರಥನ ತಲೆಯನ್ನು ಅಸುರಹರನಾದ ಕೃಷ್ಣನ ಆಜ್ಞೆಯಂತೆ, ಅದನ್ನು ತೆಗೆದುಕೊಂಡು ಗರುಡನು ಪ್ರಯಾಗಕ್ಕೆ ಹೋಗಲು,] ; ಈಶ್ವರಂ ಕಂಡು ವೃಷರಾಜನಂ ಕಳುಹಿ ತರಸಿದನು ಅದಂ ರುಂಡಮಾಲೆಯ ತೊಡವಿಗೆ = [ಈಶ್ವರನು ಅದನ್ನು ಕಂಡು ತನ್ನ ವಾಹನವಾದ ವೃಷಭವನ್ನು ಕಳುಹಿಸಿ ಆ ರುಂಡವನ್ನು ತನ್ನ ರುಂಡಮಾಲೆಯಲ್ಲಿ ತೊಡುವುದಕ್ಕಾಗಿ ತರಸಿದನು];
 • ತಾತ್ಪರ್ಯ:ಅಸುರಹರನಾದ ಕೃಷ್ಣನ ಆಜ್ಞೆಯಂತೆ, ಉಗ್ರನಾದ ಸುರಥನ ತಲೆಯನ್ನು ತೆಗೆದುಕೊಂಡು ಗರುಡನು ಪ್ರಯಾಗಕ್ಕೆ ಹೋಗಲು. ಈಶ್ವರನು ಅದನ್ನು ಕಂಡು ತನ್ನ ವಾಹನವಾದ ವೃಷಭವನ್ನು ಕಳುಹಿಸಿ ತನ್ನ ರುಂಡಮಾಲೆಯಲ್ಲಿ ತೊಡುವುದಕ್ಕಾಗಿ ಆ ರುಂಡವನ್ನು ತರಸಿದನು.
 • (ಪದ್ಯ-ಸೂಚನೆ)

ಪದ್ಯ :-:೧:[ಸಂಪಾದಿಸಿ]

ಕೇಳ್ದೈ ನೃಪಾಲಕ ಸುಧನ್ವನಗ್ಗಳಿಕೆಯಂ | ಪೇಳ್ದಪೆಂ ನಿನಗಾಲಿಪುದು ಸುರಥನಂಕಮಂ | ತಾಳ್ದನತಿರೋಷ ಮಂ ರಥವೇರಿ ವಿನುತಕೋದಂಡಮಂ ಜೇಗೈಯ್ಯುತೆ,, ||
ಬಾಳ್ದಪನೆ ಫಲುಗುಣನು ಮೇಣಿಳಾ ಮಂಡಲವ| ನಾಳ್ದಪನೆ ಧರ್ಮಜಂ ಕಾಣಬಹದಿಂದೆನ್ನ | ತೋಳ್ದೀಂಟೆಯಂ ಕಳೆವೆನೆನುತ ಕೃಷ್ಣಾರ್ಜುನರ ಸರಿಸಕೈತರುತಿರ್ದನು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕೇಳ್ದೈ ನೃಪಾಲಕ ಸುಧನ್ವನ ಅಗ್ಗಳಿಕೆಯಂ, ಪೇಳ್ದಪೆಂ ನಿನಗೆ ಆಲಿಪುದು ಸುರಥನ ಅಂಕಮಂ =[ರಾಜನೇ ಕೇಳಿದೆಯಲ್ಲವೇ ಸುಧನ್ವನ ಶ್ರೇಷ್ಠತೆ ಮತ್ತು ಸಾಹಸವನ್ನು,. ಈಗ ಕೇಳು ನಿನಗೆ ಸುರಥನ ಯುದ್ಧವನ್ನು ಹೇಳುವೆನು.]; ತಾಳ್ದನು ಅತಿರೋಷಮಂ ರಥವೇರಿ ವಿನುತ ಕೋದಂಡಮಂ ಜೇಗೈಯ್ಯತೆ, ಬಾಳ್ದಪನೆ ಫಲುಗುಣಮ ಮೇಣ್ ಇಳಾ ಮಂಡಲವನಉ ಆಳ್ದಪನೆ ಧರ್ಮಜಂ ಕಾಣಬಹ ದು = [ಅವನು ಅತಿರೋಷವನ್ನು ಹೊಂದಿ, ರಥವೇರಿಕೊಂಡು, ತನ್ನ ಬಿಲ್ಲನ್ನು ಠೇಂಕರಿಸುತ್ತಾ, ಅರ್ಜುನನ ಇನ್ನು ಬದುಕಿರುವನೇ ಮತ್ತೆ ಧರ್ಮಜನು ಭೂಮಿಯನ್ನು ಆಳುವನೇ? ನೋಡಬಹುದು!]; ಇಂದೆನ್ನ ತೋಳ್ ತೀಟೆಯಂ ಕಳೆವೆನು ಎನುತ ಕೃಷ್ಣಾರ್ಜುನರ ಸರಿಸಕಎ ಐತರುತಿರ್ದನು = [ಈ ದಿನ ನನ್ನ ತೋಳಿನ ಯುದ್ಧ ಚಾಪಲ್ಯವನ್ನು ತೀರಿಸಿಕೊಳ್ಳುತ್ತೇನೆ’, ಎಂದು ಹೇಳುತ್ತಾ ಕೃಷ್ಣಾರ್ಜುನರ ಎದುರಿಗೆ ಬರತ್ತಿದ್ದನು.]
 • ತಾತ್ಪರ್ಯ: ರಾಜನೇ ಕೇಳಿದೆಯಲ್ಲವೇ ಸುಧನ್ವನ ಶ್ರೇಷ್ಠತೆ ಮತ್ತು ಸಾಹಸವನ್ನು,. ಈಗ ಕೇಳು ನಿನಗೆ ಸುರಥನ ಯುದ್ಧವನ್ನು ಹೇಳುವೆನು. ಅವನು ಅತಿರೋಷವನ್ನು ಹೊಂದಿ, ರಥವೇರಿಕೊಂಡು, ತನ್ನ ಬಿಲ್ಲನ್ನು ಠೇಂಕರಿಸುತ್ತಾ , ಅರ್ಜುನನ ಇನ್ನು ಬದುಕಿರುವನೇ ಮತ್ತೆ ಧರ್ಮಜನು ಭೂಮಿಯನ್ನು ಆಳುವನೇ? ನೋಡಬಹುದು! ಈ ದಿನ ನನ್ನ ತೋಳಿನ ಯುದ್ಧ ಚಾಪಲ್ಯವನ್ನು ತೀರಿಸಿಕೊಳ್ಳುತ್ತೇನೆ’, ಎಂದು ಹೇಳುತ್ತಾ ಕೃಷ್ಣಾರ್ಜುನರ ಎದುರಿಗೆ ಬರತ್ತಿದ್ದನು.
 • (ಪದ್ಯ-೧)XIII-IX

ಪದ್ಯ :-:೨:[ಸಂಪಾದಿಸಿ]

ಸುರಥನೈತಹ ರಣೋತ್ಸಾಹಮಂ ಕಂಡು ಹರಿ | ನರನೊಳಾಲೋಚಿಸಿ ನುಡಿದನಿವಂ ಧರೆಯೊಳಾ | ಚರಿಸದಿಹ ಪುಣ್ಯಕರ್ಮ ಗಳೊಂದಿಲ್ಲವಂ ಮರೆತಾದೊಡಂ ಮಾಡಿದ ||
ದುರಿತ ಲವಮಂ ಕಾಣೆನಾರ್ ಜಯೀಪರೀತನಂ | ಸರಿಸದೊಳ್ ನಿಂದೆವಾದೊಡೆ ಬಹುದು ನಮಗೀಗ | ಪರಿಭವಂ ಪ್ರದ್ಯುಮ್ನ ಮೊದಲಾದ ಘಟುಭಟರ್ ಕಾದಲಿವನೊಡನೆಂದನು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಸುರಥನು ಐತಹ ರಣೋತ್ಸಾಹಮಂ ಕಂಡು ಹರಿ ನರನೊಳು ಆಲೋಚಿಸಿ ನುಡಿದನು = [ಸುರಥನು ಬರುತ್ತಿರುವ ರಣೋತ್ಸಾಹವನ್ನು ಕಂಡು ಕೇಷ್ಣನು ಅರ್ಜುನನೊಡನೆ ಆಲೋಚಿಸಿ ಹೇಳಿದನು.] ; ಇವಂ ಧರೆಯೊಳು ಆಚರಿಸದಿಹ ಪುಣ್ಯಕರ್ಮಂಗಳು ಒಂದಿಲ್ಲ ಇವಂ ಮರೆತಾದೊಡಂ ಮಾಡಿದ ದುರಿತ ಲವಮಂ ಕಾಣೆನು =[ ಇವನು ಭೂಮಿಯಲ್ಲಿ ಆಚರಿಸದಿರುವ ಪುಣ್ಯಕರ್ಮಗಳು ಯಾವುದೂ ಇಲ್ಲ. ಇವನು ಮರೆತಾದರೂ ಮಾಡಿದ ಪಾಪಕರ್ಮವನ್ನು ಒಂದು ಕಾಳಿನಷ್ಟಾದರೂ ನಾನುಕಾಣಲಾರೆನು - ಪುಣ್ಯಪುರುಷನು.]; ಆರ್ ಜಯೀಪರು ಈತನಂ ಸರಿಸದೊಳ್ ನಿಂದೆವಾದೊಡೆ ಬಹುದು ನಮಗೀಗ ಪರಿಭವಂ ಪ್ರದ್ಯುಮ್ನ ಮೊದಲಾದ ಘಟುಭಟರ್ ಕಾದಲಿ ಇವನೊಡನೆ ಎಂದನು=[ ಈತನನ್ನು ಜಯಿಸುವವರು ಯಾರು? ಇವನ ಎದುರುನಿಂತರೆ ಈಗ ನಮಗೆ ಸೋಲು ತಪ್ಪದು. ಪ್ರದ್ಯುಮ್ನ ಮೊದಲಾದ ವೀರರು ಇವನೊಡನೆ ಯುದ್ಧಮಾಡಲಿ ಎಂದನು.]
 • ತಾತ್ಪರ್ಯ: ಸುರಥನು ಬರುತ್ತಿರುವ ರಣೋತ್ಸಾಹವನ್ನು ಕಂಡು ಕೃಷ್ಣನು ಅರ್ಜುನನೊಡನೆ ಆಲೋಚಿಸಿ ಹೇಳಿದನು ಇವನು ಭೂಮಿಯಲ್ಲಿ ಆಚರಿಸದಿರುವ ಪುಣ್ಯಕರ್ಮಗಳು ಯಾವುದೂ ಇಲ್ಲ. ಇವನು ಮರೆತಾದರೂ ಮಾಡಿದ ಪಾಪಕರ್ಮವನ್ನು ಒಂದು ಕಾಳಿನಷ್ಟಾದರೂ ನಾನು ಕಾಣಲಾರೆನು - ಪುಣ್ಯಪುರುಷನು. ಈತನನ್ನು ಜಯಿಸುವವರು ಯಾರು? ಇವನ ಎದುರುನಿಂತರೆ ಈಗ ನಮಗೆ ಸೋಲು ತಪ್ಪದು. ಪ್ರದ್ಯುಮ್ನ ಮೊದಲಾದ ವೀರರು ಇವನೊಡನೆ ಯುದ್ಧಮಾಡಲಿ ಎಂದನು.
 • (ಪದ್ಯ-೨)

ಪದ್ಯ :-:೩:[ಸಂಪಾದಿಸಿ]

ರಾಜೀವನೇತ್ರನಿಂತೆನುತುಮಂಧಕವೃಷ್ಣಿ | ಭೋಜರೆನಿಪಖಿಳ ಯಾದವಕುಲದ ಪಟುಭಟಸ | ಮಾಜಮಂ ಪ್ರಧ್ಯುಮ್ನನೊಡನೆ ಸುರಥನ ರಥಕ್ಕೆಣೆಯೊಡ್ಡಿ ನರನ ರಥದ ||
ವಾಜಿಗಳ ವಾಘೆಯಂ ತಿರುಹಿ ಹಿಂದಕೆ ಮೂರು | ಯೋಜನದೊಳಿಟ್ಟಣಿಸಿ ನಿಂದು ಗರ್ಜಿಸುವ ಸೇ | ನಾಜಲಧಿ ಮಧ್ಯದೊಳ್ ಬಂದು ನಿಂದರೆನೆಲೆಯ ಸುಯಿದಾನಮಂ ಬಲಿದನು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ರಾಜೀವನೇತ್ರನು ಇಂತು ಎನುತಂ ಅಂಧಕ ವೃಷ್ಣಿ ಭೋಜರೆನಿಪ ಅಖಿಳ ಯಾದವಕುಲದ ಪಟುಭಟ ಸ ಮಾಜಮಂ ಪ್ರಧ್ಯುಮ್ನನೊಡನೆ ಸುರಥನ ರಥಕ್ಕೆ ಎಣೆಯೊಡ್ಡಿ =[ ಕೃಷ್ಣನು ಹೀಗೆ ಹೇಳಿ ಅಂಧಕ ವೃಷ್ಣಿ ಭೋಜರೇ ಮೊದಲಾದ ಅಖಿಲ ಯಾದವರ ವೀರ ಯೋದರ ಸಮೂಹವನ್ನು ಪ್ರಧ್ಯುಮ್ನನೊಡನೆ ಸುರಥನ ರಥಕ್ಕೆ ಎದುರುನಿಲ್ಲಸಿ,] ; ನರನ ರಥದ ವಾಜಿಗಳ ವಾಘೆಯಂ ತಿರುಹಿ ಹಿಂದಕೆ ಮೂರು ಯೋಜನದೊಳು ಇಟ್ಟಣಿಸಿ ನಿಂದು ಗರ್ಜಿಸುವ ಸೇನಾಜಲಧಿ ಮಧ್ಯದೊಳ್ ಬಂದು ನಿಂದು ಅರೆನೆಲೆಯ ಸುಯಿದಾನಮಂ ಬಲಿದನು= [ಅರ್ಜುನನ ರಥದ ಕುದುರೆಗಳ ವಾಘೆಯನ್ನು ಎಳೆದು ಹಿಂದಕ್ಕೆ ತಿರುಗಿಸಿ ಮೂರು ಯೋಜನದೂರದಲ್ಲಿ ಸಂದಣಿಯಲ್ಲಿ ತಂದು ಆರ್ಭಟಿಸುವ ಸೇನಾಸಮೂಹದü ಮಧ್ಯದಲ್ಲಿ ಬಂದು ನಿಂತು, ಗಟ್ಟಿನೆಲೆಯಲ್ಲಿ ರಕ್ಷೆಯನ್ನು ಬಲಪಡಿಸಿದನು].
 • ತಾತ್ಪರ್ಯ: ಕೃಷ್ಣನು ಹೀಗೆ ಹೇಳಿ ಅಂಧಕ ವೃಷ್ಣಿ ಭೋಜರೇ ಮೊದಲಾದ ಅಖಿಲ ಯಾದವರ ವೀರ ಯೋದರ ಸಮೂಹವನ್ನು ಪ್ರಧ್ಯುಮ್ನನೊಡನೆ ಸುರಥನ ರಥಕ್ಕೆ ಎದುರುನಿಲ್ಲಸಿ, ಅರ್ಜುನನ ರಥದ ಕುದುರೆಗಳ ವಾಘೆಯನ್ನು ಎಳೆದು ಹಿಂದಕ್ಕೆ ತಿರುಗಿಸಿ ಮೂರು ಯೋಜನ ದೂರದ ಸಂದಣಿಯಲ್ಲಿ ತಂದು ಆರ್ಭಟಿಸುವ ಸೇನಾಸಮೂಹದü ಮಧ್ಯದಲ್ಲಿ ಬಂದು ನಿಂತು, ಗಟ್ಟಿನೆಲೆಯಲ್ಲಿ ರಕ್ಷೆಯನ್ನು ಬಲಪಡಿಸಿದನು].
 • (ಪದ್ಯ-೩)

ಪದ್ಯ :-:೪:[ಸಂಪಾದಿಸಿ]

ಇತ್ತಲಾಹವಕೆ ಮುಂಕೊಂಡು ಬಹ ಸುರಥನಂ | ತೆ ತ್ತಿಸಿದನಂಬಿನಿಂ ಪ್ರದ್ಯುಮ್ನನಾತನಂ | ಮೆತ್ತಿಸಿದನವಂ ಬಾಣದಿಂ ಪಾರ್ಥನೆತ್ತ ಜಾರಿದನೀಗ ಶೌರಿಸಹಿತ ||
ಮತ್ತಗಜದಗ್ಗಳಿಕೆ ಮಕ್ಷಿಕದೊಳಹುದು ಗಡ | ಮುತ್ತಿದುವು ಕರಿ ತುರಗ ರಥ ಪದಾತಿಗಳಲ್ಲಿ | ಹೊತ್ತುಗಳವೊಡೆ ಸುಧನ್ವನ ಹರಿಬವಲ್ಲೆನುತೆ ತೆಗೆದೆಚ್ಚನಾ ಭಟರನು ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಇತ್ತಲು ಆಹವಕೆ ಮುಂಕೊಂಡು ಬಹ ಸುರಥನಂ ತೆತ್ತಿಸಿದನು ಅಂಬಿನಿಂ ಪ್ರದ್ಯುಮ್ನನು, =[ ಇತ್ತ ಯುದ್ಧಕ್ಕೆ ಮುಂದೆ ನುಗ್ಗಿ ಬರುವ ಸುರಥನನ್ನು ಪ್ರದ್ಯುಮ್ನನು ಬಾಣಗಳಿಂದ ಹೊಡೆದು ಮುತ್ತಿದನು;,]; ಆತನಂ ಮೆತ್ತಿಸಿದನು ಅವಂ ಬಾಣದಿಂ,=[ಆದರೆ ಸುರಥನು ಆತನನ್ನು ಪ್ರತಿಯಾಗಿ ಬಾಣದಿಂದ ಚುಚ್ಚುವಂತೆ ಮಾಡಿದನು,]; ಪಾರ್ಥನು ಎತ್ತ ಜಾರಿದನು ಈಗ ಶೌರಿಸಹಿತ,=[ ಈಗ ಕೃಷ್ಣನಸಹಿತ ಪಾರ್ಥನು ಎತ್ತ ಹೋದನು,];ಮತ್ತಗಜದ ಅಗ್ಗಳಿಕೆ ಮಕ್ಷಿಕದೊಳು ಅಹುದು ಗಡ, ಮುತ್ತಿದುವು ಕರಿ ತುರಗ ರಥ ಪದಾತಿಗಳಲ್ಲಿ ಹೊತ್ತುಗಳವೊಡೆ ಸುಧನ್ವನ ಹರಿಬವು ಅಲ್ಲೆನುತೆ ತೆಗೆದೆಚ್ಚನು ಆ ಭಟರನು =[ ಮದದ ಆನೆಯ ದೊಡ್ಡತನಕ್ಕೆ ಈ ನೊಣಗಳಂತಿರುವ ಸೈನ್ಯ ಸಮವಾಗುವುದೆ ಗಡ !, ಆಗ ಆನೆ ಕುದುರೆ ರಥ ಪದಾತಿಗಳು ಮುತ್ತಿದುವು; ಅವುಗಳೊಡನೆ ಯುದ್ಧದಲ್ಲಿ ಹೊತ್ತುಗಳೆದರೆ ಸುಧನ್ವನ ಮರಣದ ಸೇಡು ತೀರಿಸುವ ಕಾರ್ಯವು ಆಗುವುದಿಲ್ಲ ಎನ್ನುತ್ತಾ ಆ ಭಟರನ್ನು ತೆಗೆದು ಹೊಡೆದನು.]
 • ತಾತ್ಪರ್ಯ: ಇತ್ತ ಯುದ್ಧಕ್ಕೆ ಮುಂದೆ ನುಗ್ಗಿ ಬರುವ ಸುರಥನನ್ನು ಪ್ರದ್ಯುಮ್ನನು ಬಾಣಗಳಿಂದ ಹೊಡೆದು ಮುತ್ತಿದನು; ಆದರೆ ಸುರಥನು ಆತನನ್ನು ಪ್ರತಿಯಾಗಿ ಬಾಣದಿಂದ ಚುಚ್ಚುವಂತೆ ಮಾಡಿದನು, ಈಗ ಕೃಷ್ಣನಸಹಿತ ಪಾರ್ಥನು ಎತ್ತ ಹೋದನು, .ಮದ್ದಾನೆಯ ದೊಡ್ಡತನಕ್ಕೆ ಈ ನೊಣಗಳಂತಿರುವ ಸೈನ್ಯ ಸಮವಾಗುವುದೆ ಗಡ !, ಎಂದನು, ಆಗ ಆನೆ ಕುದುರೆ ರಥ ಪದಾತಿಗಳು ಮುತ್ತಿದುವು; ಅವುಗಳೊಡನೆ ಯುದ್ಧದಲ್ಲಿ ಹೊತ್ತು ಕಳೆದರೆ ಸುಧನ್ವನ ಮರಣದ ಸೇಡು ತೀರಿಸುವ ಕಾರ್ಯವು ಆಗುವುದಿಲ್ಲ, ಎನ್ನುತ್ತಾ ಆ ಭಟರನ್ನು ತೆಗೆದು ಹೊಡೆದನು
 • (ಪದ್ಯ-೪)

ಪದ್ಯ :-:೫:[ಸಂಪಾದಿಸಿ]

ತವಕದಿಂ ಪ್ರದ್ಯುಮ್ನನಂ ಗೆಲ್ದು ಸಾತ್ಯಕಿಯ | ನವಗಡಡಿಸಿ ಕೃತವರ್ಮ ಸಾಂಬಾನುಸಾಲ್ವರಂ | ಜವಗೆಡಿಸಿ ಕಲಿಯೌವನಾಶ್ವನಂ ಸದೆದು ನೀಲಧ್ವಜನನುರೆಘಾತಿಸಿ ||
ರವಿಸುತನ ಸೂನುವಂ ಪರಿಭವಿಸಿ ನಿಖಿಳ ಯಾ | ದವ ಸುಭಟರಂ ಜಯಿಸಿ ಚತುರಂಗಸೈನ್ಯಮಂ | ಸವರಿ ಸಮರಥ ಮಹಾರಥರನೊಂದೇ ರಥದೊಳಾ ಸುರಥನೊಡೆದುಳಿದನು ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ತವಕದಿಂ ಪ್ರದ್ಯುಮ್ನನಂ ಗೆಲ್ದು ಸಾತ್ಯಕಿಯನು ಅವಗಡಡಿಸಿ ಕೃತವರ್ಮ ಸಾಂಬ ಅನುಸಾಲ್ವರಂ ಜವಗೆಡಿಸಿ ಕಲಿಯೌವನಾಶ್ವನಂ ಸದೆದು ನೀಲಧ್ವಜನನು ಉರೆ ಘಾತಿಸಿ=[ ಅವಸರದಿಂದ ಪ್ರದ್ಯುಮ್ನನನ್ನು ಗೆದ್ದು ಸಾತ್ಯಕಿಯನು ಸೋಲಿಸಿ, ಕೃತವರ್ಮ ಸಾಂಬ ಅನುಸಾಲ್ವರನ್ನು ವೇಗದಶಕ್ತಿಯನ್ನು ಕುಂದಿಸಿ, ಶೂರ ಯೌವನಾಶ್ವನನ್ನು ಹೊಡೆದು, ನೀಲಧ್ವಜನನು ಬಹಳ ಗಾಯಮಾಡಿ, ]; ರವಿಸುತನ ಸೂನುವಂ ಪರಿಭವಿಸಿ ನಿಖಿಳ ಯಾದವ ಸುಭಟರಂ ಜಯಿಸಿ ಚತುರಂಗಸೈನ್ಯಮಂ ಸವರಿ ಸಮರಥ ಮಹಾರಥರನು ಒಂದೇ ರಥದೊಳು ಸುರಥನು ಒಡೆದು ಉಳಿದನು=[ ವೃಷಕೇತುವನ್ನು ಸೋಲಿಸಿ, ಅಷ್ಟೂ ಯಾದವ ವೀರರನ್ನು ಜಯಿಸಿ ಚತುರಂಗಸೈನ್ಯವನ್ನೂ ತರಿದು, ಸಮರಥ ಮಹಾರಥರನ್ನು ಒಂದೇ ರಥದಲ್ಲಿ ಸುರಥನು ಹೊಡೆದು ಸೋಲದೆ ಉಳಿದನು];
 • ತಾತ್ಪರ್ಯ: ಸುರಥನು ಅವಸರದಿಂದ ಪ್ರದ್ಯುಮ್ನನನ್ನು ಗೆದ್ದು ಸಾತ್ಯಕಿಯನು ಸೋಲಿಸಿ, ಕೃತವರ್ಮ ಸಾಂಬ ಅನುಸಾಲ್ವರನ್ನು ವೇಗದಶಕ್ತಿಯನ್ನು ಕುಂದಿಸಿ, ಶೂರ ಯೌವನಾಶ್ವನನ್ನು ಹೊಡೆದು, ನೀಲಧ್ವಜನನು ಬಹಳ ಗಾಯಮಾಡಿ ವೃಷಕೇತುವನ್ನು ಸೋಲಿಸಿ, ಅಷ್ಟೂ ಯಾದವ ವೀರರನ್ನು ಜಯಿಸಿ ಚತುರಂಗಸೈನ್ಯವನ್ನೂ ತರಿದು, ಸಮರಥ ಮಹಾರಥರನ್ನು ಒಂದೇ ರಥದಲ್ಲಿ ಸುರಥನು ಹೊಡೆದು ಸೋಲದೆ ಉಳಿದನು.
 • (ಪದ್ಯ-೫)XIV

ಪದ್ಯ :-:೬:[ಸಂಪಾದಿಸಿ]

ಸೊಕ್ಕಾನೆ ಪೊಕ್ಕು ಕಾಸಾರಮಂ ಕಲಕುವಂ | ತಕ್ಕದೊಳೊಕ್ಕಲಿಕ್ಕಿದನಖಿಳಸೈನ್ಯಮಂ | ಮಿಕ್ಕು ನೊಂದೆಕ್ಕಲಂ ಬೀದಿವರಿದಟ್ಟುವಂತೋಡಿಸಿದನತಿಬಲನು ||
ಕಕ್ಕಸದೊಳೆಕ್ಕತುಳಕೈತಂದ ವೀರರಂ | ಮುಕ್ಕುರುಕಿ ತೆಕ್ಕೆಗೆಡಿಸಿದನಾ ರಣಾಗ್ರದೊಳ್ | ಪೆಕ್ಕಳಿಸಿದುಕ್ಕಂದದದಟಿಂದೆ ಸುರಥನರಸಿದನಚ್ಯುತಾರ್ಜುನರನು ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಸೊಕ್ಕಾನೆ ಪೊಕ್ಕು ಕಾಸಾರಮಂ ಕಲಕುವಂತೆ ಅಕ್ಕದೊಳು (ಅಕ್ಷ-ಪಗಡೆಮನೆ-ರಣರಂಗ) ಒಕ್ಕಲಿಕ್ಕಿದನು (ಹೊಡೆದು ಅಸ್ತವ್ಯಸ್ತವಾಗಿಸು) ಅಖಿಳ ಸೈನ್ಯಮಂ ಮಿಕ್ಕು ನೊಂದುಕ್ಕಲಂ (ನೊಂದ ಎಕ್ಕಲ-ಕಾಡುಹಂದಿ) ಬೀದಿವರಿದು ಅಟ್ಟುವಂತೆ ಓಡಿಸಿದನು ಅತಿಬಲನು=[ಸೊಕ್ಕಿದ ಆನೆ ಸರೋವರವನ್ನು ಹೊಕ್ಕು ಕಲಕುವಂತೆ ರಣರಂಗದಲ್ಲಿ ಹೊಡೆದು ಅಸ್ತವ್ಯಸ್ತವಾಗಿಸಿದನು ಅಖಿಲ ಸೈನ್ಯವನ್ನೂ, ಮತ್ತೂ ನೊಂದ ಕಾಡುಹಂದಿಯು ಬೀದಿಯಲ್ಲಿ ಅಟ್ಟುವಂತೆ ಅತಿಬಲಶಾಲಿ ಸುರಥನು ಸೈನ್ಯವನ್ನು ಓಡಿಸಿದನು]; ಕಕ್ಕಸದೊಳು ಎಕ್ಕು (ಹೊಡೆ) ಅತುಳಕೆ ಐತಂದ ವೀರರಂ ಮುಕ್ಕುರುಕಿ ತೆಕ್ಕೆಗೆಡಿಸಿದನು ಆ ರಣಾಗ್ರದೊಳ್ ಪೆಕ್ಕಳಿಸಿದ ಉಕ್ಕಂದದ ಅದಟಿಂದೆ ಸುರಥನು ಅರಸಿದನು ಅಚ್ಯುತ ಅರ್ಜುನರನು= [ಶೀಘ್ರವಾಗಿ ಯುದ್ಧಕ್ಕೆ ಬಂದ ವೀರರನ್ನು ಹೊಡೆದು ಬೀಳುವಂತೆಯೂ ಓಡುವಂತೆಯೂ ಮಾಡಿದನು. ಆ ರಣರಂಗದ ಮುಂಭಾಗದಲ್ಲಿ ಮುತ್ತಿದ ಉಕ್ಕಿಬರುವ ಶೌರ್ಯದಿಂದದೆ ಸುರಥನು ಅಚ್ಯುತ ಅರ್ಜುನರನ್ನು ಹುಡುಕಿದನು.].
 • ತಾತ್ಪರ್ಯ: ಸೊಕ್ಕಿದ ಆನೆ ಸರೋವರವನ್ನು ಹೊಕ್ಕು ಕಲಕುವಂತೆ ರಣರಂಗದಲ್ಲಿ ಹೊಡೆದು ಅಸ್ತವ್ಯಸ್ತವಾಗಿಸಿದನು ಅಖಿಲ ಸೈನ್ಯವನ್ನೂ, ಮತ್ತೂ ನೊಂದ ಕಾಡುಹಂದಿಯು ಬೀದಿಯಲ್ಲಿ ಅಟ್ಟುವಂತೆ ಅತಿಬಲಶಾಲಿ ಸುರಥನು ಸೈನ್ಯವನ್ನು ಓಡಿಸಿದನು; ಶೀಘ್ರವಾಗಿ ಯುದ್ಧಕ್ಕೆ ಬಂದ ವೀರರನ್ನು ಹೊಡೆದು ಬೀಳುವಂತೆಯೂ ಓಡುವಂತೆಯೂ ಮಾಡಿದನು. ಆ ರಣರಂಗದ ಮುಂಭಾಗದಲ್ಲಿ ಮುತ್ತಿದ ಉಕ್ಕಿಬರುವ ಶೌರ್ಯದಿಂದದೆ ಸುರಥನು ಅಚ್ಯುತ ಅರ್ಜುನರನ್ನು ಹುಡುಕಿದನು.
 • (ಪದ್ಯ-೬)

ಪದ್ಯ :-:೭:[ಸಂಪಾದಿಸಿ]

ಘೋರಸಂಸಾರದೊಳ್ ಮುಸುಕುವ ಮರವೆಯಂ ನಿ | ವಾರಿಸಿ ಮಹಾಯೋಗಿ ಜೀವಪರಮಾತ್ಮರ ವಿ |ಚಾರಿಸುವ ತೆರೆದಿಂದೆ ರಿಪುಮೋಹರದೊಳೊತ್ತಿ ಕವಿವ ಭಟರಂ ಗಣಿಸದೆ ||
ವೀರಸುರಥಂ ಕೃಷ್ಣಪಲ್ಗುಣರನರಸಿದನು | ದಾರ ವಿಕ್ರಮ ಪರಿಜ್ಞಾನದಿಂದೆಡಬಲನ | ನಾರಯ್ಯದೇಕಾಗ್ರಚಿತ್ತದಿಂ ವಸುಮತೀಕಾಂತ ಕೇಳದ್ಭುತವನು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಘೋರಸಂಸಾರದೊಳ್ ಮುಸುಕುವ ಮರವೆಯಂ ನಿವಾರಿಸಿ ಮಹಾಯೋಗಿ ಜೀವಪರಮಾತ್ಮರ ವಿ ಚಾರಿಸುವ ತೆರೆದಿಂದೆ=[ಅರಿಷಡ್‍ವರ್ಗಗಳಿಂದಕೂಡಿದ ಸಂಸಾರದಲ್ಲಿ ಆವರಿಸುವ ಮಾಯೆಯನ್ನು ನಿವಾರಿಸಿ ಮಹಾಯೋಗಿಯು ಜೀವ ಪರಮಾತ್ಮರ ರಹಸ್ಯವನ್ನು ಹುಡುಕುವ ರೀತಿಯಲ್ಲಿ]; ರಿಪುಮೋಹರದೊಳು ಒತ್ತಿ ಕವಿವ ಭಟರಂ ಗಣಿಸದೆ ವೀರಸುರಥಂ ಕೃಷ್ಣಪಲ್ಗುಣರನು ಅರಸಿದನು =[ ಶತ್ರುಸೈನ್ಯದಲ್ಲಿ ಮೇಲೆಬಿದ್ದು ಹೊಡೆಯುವ ಭಟರನ್ನು ಲೆಕ್ಕಿಸದೆ, ವೀರಸುರಥನು ಕೃಷ್ಣಪಲ್ಗುಣರನ್ನು ಅಲ್ಲಿ ಹುಡುಕಿದನು]; ಉದಾರ ವಿಕ್ರಮ ಪರಿಜ್ಞಾನದಿಂದ ಎಡಬಲನನು ಆರಯ್ಯದೆ ಏಕಾಗ್ರ ಚಿತ್ತದಿಂ ವಸುಮತೀಕಾಂತ ಕೇಳು ಅದ್ಭುತವನು= [ಸಾತ್ವಿಕ ಪರಿಶ್ರಮದ ಪರಿಜ್ಞಾನದಿಂದ ಆಚೆ ಈಚೆ ನೋಡದೆ ಏಕಾಗ್ರ ಚಿತ್ತದಿಂದ ಸತ್ಯವನ್ನು ಹುಡುಕುವಂತೆ ಅವರನ್ನು ಹುಡುಕುತ್ತಿದ್ದನು. ಎಲೈ ರಾಜ ಜನಮೇಜಯನೇ ಕೇಳು ಅದ್ಭುತವನ್ನು. ಎಂದನು ಮುನಿ.]
 • ತಾತ್ಪರ್ಯ: ಅರಿಷಡ್ ವರ್ಗಗಳಿಂದ ಕೂಡಿದ ಸಂಸಾರದಲ್ಲಿ ಆವರಿಸುವ ಮಾಯೆಯನ್ನು ನಿವಾರಿಸಿ ಮಹಾಯೋಗಿಯು ಜೀವ ಪರಮಾತ್ಮರ ರಹಸ್ಯವನ್ನು ಹುಡುಕುವ ರೀತಿಯಲ್ಲಿ]; ಶತ್ರುಸೈನ್ಯದಲ್ಲಿ ಮೇಲೆಬಿದ್ದು ಹೊಡೆಯುವ ಭಟರನ್ನು ಲೆಕ್ಕಿಸದೆ, ವೀರಸುರಥನು ಕೃಷ್ಣಪಲ್ಗುಣರನ್ನು ಅಲ್ಲಿ ಹುಡುಕಿದನು. ಸಾತ್ವಿಕ ಪರಿಶ್ರಮದ ಪರಿಜ್ಞಾನದಿಂದ ಆಚೆ ಈಚೆ ನೋಡದೆ ಏಕಾಗ್ರ ಚಿತ್ತದಿಂದ ಸತ್ಯವನ್ನು ಹುಡುಕುವಂತೆ ಅವರನ್ನು ಹುಡುಕುತ್ತಿದ್ದನು. ಎಲೈ ರಾಜ ಜನಮೇಜಯನೇ ಕೇಳು ಅದ್ಭುತವನ್ನು. ಎಂದನು ಮುನಿ.]
 • (ಪದ್ಯ-೭)

ಪದ್ಯ :-:೮:[ಸಂಪಾದಿಸಿ]

ಅದ್ಬುತ ಪರಾಕ್ರಮದೊಳಾ ನಿಖಳಸೇನೆಗೆ ಮ | ಹದ್ಭಯವ ಬೀರುತೈತಹ ಸುರಥನಂ ಕಾಣು | ತುದ್ಭವಿಸಿತರ್ಜುನಂಗತಿರೋಪಮೆಂದನಸುರಾಂತಕನೊಳಿವನ ಜಯಕೆ ||
ತ್ವದ್‍ಭಾವನೊಳ್ ತೋರಿದೆಣಿಕೆಯೇನೆರೆ ದೇವ | ಮದ್ಭುಜದೊಳೀ ಚಾಪಮಿರ್ದುಮಾವವನಸ್ತ್ರ | ವಿಧ್ಬುವನಕಮಮ ನೋಡುವೆನೆನುತೆ ಬಿಲ್ಡಿರುವನೊದರಿ ನರನಿದಿರಾದನು ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅದ್ಬುತ ಪರಾಕ್ರಮದೊಳು ಆ ನಿಖಳ ಸೇನೆಗೆ ಮಹದ್ಭಯವ ಬೀರುತ ಐತಹ ಸುರಥನಂ ಕಾಣುತ=[ ಅದ್ಬುತ ಪರಾಕ್ರಮದಿಂದ, ಆ ಎಲ್ಲಾ ಸೇನೆಗೆ ಮಹಾ ಭಯವನ್ನು ಉಂಟು ಮಾಡತ್ತಾ ಬರುತ್ತಿರುವ ಸುರಥನನ್ನು ಕಂಡು]; ಉದ್ಭವಿಸಿತು ಅರ್ಜುನಂಗೆ ಅತಿರೋಷಂ ಎಂದನು ಅಸುರಾಂತಕನೊಳು ಇವನ ಜಯಕೆ ತ್ವದ್ ಭಾವನೊಳ್ ತೋರಿದ ಎಣಿಕೆಯೇನು ಎಲೆ ದೇವ= [ಅರ್ಜುನನಿಗೆ ಬಹಳ ರೋಷ ಉಂಟಾಯಿತು. ಕೃಷ್ನನೊಡನೆ ಎಲೆ ದೇವ ಇವನನ್ನು ಜಯಿಸಲು ನಿನ್ನ ಮನಸ್ಸಿನಲ್ಲಿ ತೋರಿದ ಉಪಾಯವೇನು ಎಂದನು]; ಮದ್ ಭುಜದೊಳು ಚಾಪಮಿರ್ದುಂ ಆವು ಅವನ ಅಸ್ತ್ರ ವಿಧ್ಬುವನಕ ಅಮಮ ನೋಡುವೆನು ಎನುತೆ ಬಿಲ್ಡಿರುವನು ಒದರಿ ನರನು ಇದಿರಾದನು =[ ನನ್ನು ಕೈಯಲ್ಲಿ ಬಿಲ್ಲು ಇದ್ದೂ ನಾವು ಅವನ ಅಸ್ತ್ರ ವಿದ್ಯಾಪರಿಣಿತಿಯನ್ನು ಅಮಮ ನೋಡುವೆನು, ಎನ್ನುತ್ತಾ ಬಿಲ್ಲಿನ ನಾಣನ್ನು ಠೇಂಕರಿಸಿ ಅರ್ಜುನನು ಅವನಿಗೆ ಎದುರು ನಿಂತನು.]
 • ತಾತ್ಪರ್ಯ: ಅದ್ಬುತ ಪರಾಕ್ರಮದಿಂದ, ಆ ಎಲ್ಲಾ ಸೇನೆಗೆ ಮಹಾ ಭಯವನ್ನು ಉಂಟು ಮಾಡತ್ತಾ ಬರುತ್ತಿರುವ ಸುರಥನನ್ನು ಕಂಡು, ಅರ್ಜುನನಿಗೆ ಬಹಳ ರೋಷ ಉಂಟಾಯಿತು. ಕೃಷ್ನನೊಡನೆ ಎಲೆ ದೇವ ಇವನನ್ನು ಜಯಿಸಲು ನಿನ್ನ ಮನಸ್ಸಿನಲ್ಲಿ ತೋರಿದ ಉಪಾಯವೇನು ಎಂದನು. ನನ್ನು ಕೈಯಲ್ಲಿ ಬಿಲ್ಲು ಇದ್ದೂ ನಾವು ಅವನ ಅಸ್ತ್ರ ವಿದ್ಯಾಪರಿಣಿತಿಯನ್ನು ಅಮಮ ನೋಡುವೆನು, ಎನ್ನುತ್ತಾ ಬಿಲ್ಲಿನ ನಾಣನ್ನು ಠೇಂಕರಿಸಿ ಅರ್ಜುನನು ಅವನಿಗೆ ಎದುರು ನಿಂತನು.]
 • (ಪದ್ಯ-೮)

ಪದ್ಯ :-:೯:[ಸಂಪಾದಿಸಿ]

ಎಲವೊ ಸೋದರನಳಿದಳಲ್ಗಾಗಿ ನಮ್ಮೊಡನೆ | ಕಲಹಕೈದುವ ನಿನ್ನನಿಸುವುದನುಚಿತಮೆಂದು | ತೊಲಗಿದೊಡೆ ನೀನರಿದುದಿಲ್ಲಲಾ ತಲೆ ಬಲ್ಲಿತೆಂದು ಕಲ್ಲಂ ಪಾಯ್ವೆಲಾ ||
ಕಲಿಯಾಗಿ ಸಮರದೊಳ್ ಕಾದಿದೊಡೆ ನಿನಗಿಲ್ಲಿ | ಗೆಲವಹುದೆ ಮರುಳಾಗಬೇಡ ಹಯಮಂ ಬಿಟ್ಟು | ನೆಲದೆರೆಯ ಧರ್ಮಸುತನಂ ಕಂಡು ಬದುಕುವುದು ಲೇಸೆಂದು ನರನೆಚ್ಚನು ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಎಲವೊ ಸೋದರನು ಅಳಿದ ಅಳಲ್ಗಾಗಿ (ಅಳಲಿಗಾಗಿ) ನಮ್ಮೊಡನೆ ಕಲಹಕೆ ಐದುವ ನಿನ್ನ ಇಸುವುದು ಅನುಚಿತಮೆಂದು ತೊಲಗಿದೊಡೆ ನೀನು ಅರಿದುದು ಇಲ್ಲಲಾ=[ಎಲವೊ ಸೋದರನು ಮರಣಹೊಂದಿದ ಶೋಕಕ್ಕಾಗಿ ನಮ್ಮೊಡನೆ ಯುದ್ಧಕ್ಕೆ ಬರುವ ನಿನ್ನನ್ನು ಹೊಡೆಯುವುದು ಅನುಚಿತವೆಂದು ನಾವು ದೂರ ಹೋದರೆ, ನೀನು ಅದನ್ನು ತಿಳಿಯಲಿಲ್ಲವಲ್ಲಾ!]; ತಲೆ ಬಲ್ಲಿತೆಂದು ಕಲ್ಲಂ ಪಾಯ್ವೆಲಾ ಕಲಿಯಾಗಿ ಸಮರದೊಳ್ ಕಾದಿದೊಡೆ ನಿನಗೆ ಇಲ್ಲಿ ಗೆಲವು ಅಹುದೆ= [ತಲೆ ಗಟ್ಟಿಯಿದೆ ಎಂದು ತಲೆಯಿಂದ ಕಲ್ಲನ್ನು ಹಾಯುವೆಯಲ್ಲಾ! (ಕಲ್ಲಿಗೆ ಡಿಕ್ಕಿ ಹೊಡೆಯುವೆಯಾ); ಶೂರನಾಗಿ ಯುದ್ಧದಲ್ಲಿ ಹೋರಾಡಿದರೆ ನಿನಗೆ ಇಲ್ಲಿ ಗೆಲುವಾಗುವುದೆ?]; ಮರುಳಾಗಬೇಡ ಹಯಮಂ ಬಿಟ್ಟು ನೆಲದೆರೆಯ ಧರ್ಮಸುತನಂ ಕಂಡು ಬದುಕುವುದು ಲೇಸೆಂದು ನರನು ಎಚ್ಚನು= [ಮರುಳಾಗಬೇಡ ಕುದುರೆಯನ್ನು ಬಿಟ್ಟು ಭೂಮಿಯ ದೊರೆಯಾದ ಧರ್ಮಜನನ್ನು ಕಂಡು ಬದುಕುವುದು ಒಳ್ಳೆಯದು ಎಂದು ಹೇಳಿ ಅರ್ಜುನನು ಬಾಣಹೊಡೆದನು.]
 • ತಾತ್ಪರ್ಯ: ಎಲವೊ ಸೋದರನು ಮರಣಹೊಂದಿದ ಶೋಕಕ್ಕಾಗಿ ನಮ್ಮೊಡನೆ ಯುದ್ಧಕ್ಕೆ ಬರುವ ನಿನ್ನನ್ನು ಹೊಡೆಯುವುದು ಅನುಚಿತವೆಂದು ನಾವು ದೂರ ಹೋದರೆ, ನೀನು ಅದನ್ನು ತಿಳಿಯಲಿಲ್ಲವಲ್ಲಾ! ತಲೆ ಗಟ್ಟಿಯಿದೆ ಎಂದು ತಲೆಯಿಂದ ಕಲ್ಲನ್ನು ಹಾಯುವೆಯಲ್ಲಾ! (ಕಲ್ಲಿಗೆ ಡಿಕ್ಕಿ ಹೊಡೆಯುವೆಯಾ); ಶೂರನೆಂದು ಯುದ್ಧದಲ್ಲಿ ಹೋರಾಡಿದರೆ ನಿನಗೆ ಇಲ್ಲಿ ಗೆಲುವಾಗುವುದೆ? ಮರುಳಾಗಬೇಡ ಕುದುರೆಯನ್ನು ಬಿಟ್ಟು ಭೂಮಿಯ ದೊರೆಯಾದ ಧರ್ಮಜನನ್ನು ಕಂಡು ಬದುಕುವುದು ಒಳ್ಳೆಯದು, ಎಂದು ಹೇಳಿ ಅರ್ಜುನನು ಬಾಣ ಹೊಡೆದನು.]
 • (ಪದ್ಯ-೯)

ಪದ್ಯ :-:೧೦:[ಸಂಪಾದಿಸಿ]

ಗಣವೇ ಮತ್ಸಹಭವಂಗೆ ನೀಂ ಹರಿ ಹರ ಹಿ | ರಣ್ಯಗರ್ಭಾದಿಗಳ್ ಮುಳಿದೊಡಳಿದಪನೆ ಕಾ | ರುಣ್ಯದಿಂ ನಿನ್ನನುದ್ಧರಿಸಲೆಂದಚ್ಯುತಂ ಕೊಟ್ಟ ತನ್ನವತಾರದ ||
ಪುಣ್ಯದಿಂ ಮಡಿದು ಮುಕ್ತಿಗೆ ಸಂದನಿದಕೆ ನೈ | ರ್ವಿಣ್ಣ್ಯ ಮೆಮಗಿಲ್ಲ ನಾವಿನ್ನು ಹಯಮಂ ಬಿಡಲ | ರಣ್ಯವಾಸಿಗಳಲ್ಲ ನೋಡೆಮ್ಮೆ ಸಾಹಸವನೆನುತೆಚ್ಚನಾ ಸುರಥನು ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಗಣವೇ ಮತ್ಸಹಭವಂಗೆ (ಮತ್ ಸಹ ಭವ -ಸಹೋದರ) ನೀಂ ಹರಿ ಹರ ಹಿರಣ್ಯಗರ್ಭಾದಿಗಳ್ ಮುಳಿದೊಡೆ ಅಳಿದಪನೆ= [ಗಣ್ಯವೇ/ಲೆಕ್ಕವೇ ಸಹೋದರನಿಗೆ ನೀನು? ಹರಿ ಹರ ಬ್ರಹ್ಮರು ಸಿಟ್ಟಿನಿಂದ ಯುದ್ಧಕ್ಕೆ ಬಂದರೆ, ಸಾಯವಂಥವನೇ? ಇಲ್ಲ!]; ಕಾರುಣ್ಯದಿಂ ನಿನ್ನನು ಉದ್ಧರಿಸಲೆಂದು ಅಚ್ಯುತಂ ಕೊಟ್ಟ ತನ್ನ ಅವತಾರದ ಪುಣ್ಯದಿಂ ಮಡಿದು ಮುಕ್ತಿಗೆ ಸಂದನು ಇದಕೆ ನೈರ್ವಿಣ್ಣ್ಯಂ(ನಿರ್ವಿಣ್ಣತೆ - ದುಃಖ) ಎಮಗಿಲ್ಲ= [ಕರುಣೆಯಿಂದ ನಿನ್ನನು ಉದ್ಧರಿಸಲು ಅಚ್ಯುತನು ಕೊಟ್ಟ ತನ್ನ ಅವತಾರದ ಪುಣ್ಯದಿಂದ ಸಾವಿಗೀಡಾಗಿ ಮುಕ್ತಿಯನ್ನು ಪಡೆದನು; ಇದಕ್ಕೆ ದುಃಖ ನನಗಿಲ್ಲ.]; ನಾವಿನ್ನು ಹಯಮಂ ಬಿಡಲು ಅರಣ್ಯವಾಸಿಗಳಲ್ಲ ನೋಡೆಮ್ಮೆ ಸಾಹಸವನು ಎನುತ ಎಚ್ಚನು ಆ ಸುರಥನು= [ನಾವು ಇನ್ನು ಕುದುರೆಯನ್ನು ಬಿಡಲು ಅರಣ್ಯವಾಸಿಗಳಾದ ಸಂನ್ಯಾಸಿಗಳಲ್ಲ, ಕ್ಷತ್ರಿಯರು, ನೋಡು ನಮ್ಮ ಸಾಹಸವನ್ನು ಎನ್ಉತ್ತಾ ಆ ಸುರಥನು ತಿರುಗಿ ಬಾಣದಿಂದ ಹೊಡೆದನು.]
 • ತಾತ್ಪರ್ಯ: ಗಣ್ಯವೇ/ಲೆಕ್ಕವೇ ನನ್ನ ಸಹೋದರನಿಗೆ ನೀನು? ಹರಿ ಹರ ಬ್ರಹ್ಮರು ಸಿಟ್ಟಿನಿಂದ ಯುದ್ಧಕ್ಕೆ ಬಂದರೆ, ಸಾಯವಂಥವನೇ? ಇಲ್ಲ! ಕರುಣೆಯಿಂದ ನಿನ್ನನು ಉದ್ಧರಿಸಲು ಅಚ್ಯುತನು ಕೊಟ್ಟ ತನ್ನ ಅವತಾರದ ಪುಣ್ಯದಿಂದ ಅವನು ಸಾವಿಗೀಡಾಗಿ ಮುಕ್ತಿಯನ್ನು ಪಡೆದನು; ಇದಕ್ಕೆ ದುಃಖ ನನಗಿಲ್ಲ. ನಾವು ಇನ್ನು ಕುದುರೆಯನ್ನು ಬಿಡಲು ಅರಣ್ಯವಾಸಿಗಳಾದ ಸಂನ್ಯಾಸಿಗಳಲ್ಲ, ಕ್ಷತ್ರಿಯರು, ನೋಡು ನಮ್ಮ ಸಾಹಸವನ್ನು ಎನ್ನುತ್ತಾ ಆ ಸುರಥನು ತಿರುಗಿ ಬಾಣದಿಂದ ಹೊಡೆದನು.
 • (ಪದ್ಯ-೧೦)

ಪದ್ಯ :-:೧೧:[ಸಂಪಾದಿಸಿ]

ಇಸಲುಚ್ಚಳಿಸಿ ಪಾಯ್ವ ಸುರಥನಂಬಿನ ಗರಿಯ | ಬಿಸಿಯ ಗಾಳಿಯ ಬಾಧೆಯಂದುರಿದು ಭುಗಿಲೆಂದು | ಮಸಗಿದತಿಶಯದ ರೋಷಜ್ವಾಲೆಯಿಂ ಧನಂಜಯನಾದನೀ ನರನೆನೆ || :ದೆಸೆಯಾವುದಿಳೆಯಾವುದಿನಬಿಂಬಮಾವುದಾ | ಗಸಮಾವುದೆಂಬಿನಂ ಪೊಸಮಸೆಯ ವಿಶಿಖಮಂ | ಮುಸುಕಿದಂ ಸಾರಧಿ ಧ್ವಜ ಹಯಗಳಡಗೆಡೆದು ಸುರಥಂ ವಿರಥನಾಗಲು ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಇಸಲು (ಇಸು -ಹೊಡಿ)ಉಚ್ಚಳಿಸಿ ಪಾಯ್ವ ಸುರಥನ ಅಂಬಿನ ಗರಿಯ ಬಿಸಿಯ ಗಾಳಿಯ ಬಾಧೆಯಂದ ಉರಿದು ಭುಗಿಲೆಂದು ಮಸಗಿದ (ಮುತ್ತಿ ಹರಡಿದ) ಅತಿಶಯದ ರೋಷಜ್ವಾಲೆಯಿಂ= [(ಸುರಥನು)ಹೊಡೆಯಲು ಮೇಲೇ ಹಾರುವ , ಸುರಥನ ಬಾಣದ ಗರಿಯ ಬಿಸಿಯ ಗಾಳಿಯ ಬಾಧೆಯಂದ ಉರಿದು ಭುಗಿಲೆಂದು ಮುತ್ತಿ ಹರಡಿದ ಅತಿಶಯದ ರೋಷಜ್ವಾಲೆಯಿಂದ]; ಧನಂಜಯನು ಆದನು ಈ ನರನು (ಅಂಧಕಾರದ ನರಕ)ಎನೆ ದೆಸೆಯಾವುದು ಇಳೆಯಾವುದು ಇನಬಿಂಬಂ ಆವುದು ಆಗಸಮಾವುದು ಎಂಬಿನಂ= [ಅರ್ಜುನನು 'ಈ ನರಕ ಸ್ವರೂಪನು' ಆದನು ಎನ್ನುವಂತೆ, ದಿಕ್ಕುಯಾವುದು, ಭೂಮಿಯಾವುದು. ಸೂರ್ಯಬಿಂಬ ಯಾವುದು ಆಕಾಶಯಾವುದು ಎಂದು ತಿಳಿಯಲು ಆಗದಂತೆ]; ಪೊಸಮಸೆಯ ವಿಶಿಖಮಂ ಮುಸುಕಿದಂ ಸಾರಧಿ ಧ್ವಜ ಹಯಗಳು ಅಡಗೆಡೆದು (ಅಡ್ಡಬೀಳು) ಸುರಥಂ ವಿರಥನಾಗಲು= [ಹೊಸಮಸೆದ ಬಾಣಗಳನ್ನು ಎಲ್ಲೆಡೆ ತುಂಬಿದನು, ಆಗ ಸಾರಧಿ, ಧ್ವಜ, ಕುದುರೆಗಳು ಅಡ್ಡಬಿದ್ದು ಸುರಥನು ರಥವಿಲ್ಲದಂತೆ ಆದನು.]
 • ತಾತ್ಪರ್ಯ:ಸುರಥನು ಹೊಡೆಯಲು, ಮೇಲೆ ಹಾರುವ ಬಾಣದ ಗರಿಯ ಬಿಸಿಯ ಗಾಳಿಯ ಉರಿದು ಭುಗಿಲೆಂದು ಮುತ್ತಿ ಹರಡಿದ ಈ ಅತಿಶಯ ಬಾಧೆಯಿಂದ ಅರ್ಜುನನು ರೋಷಜ್ವಾಲೆಹೊಂದಿ 'ನರಕ ಸ್ವರೂಪನು' ಆದನು ಎನ್ನುವಂತೆ, ದಿಕ್ಕುಯಾವುದು, ಭೂಮಿಯಾವುದು, ಸೂರ್ಯಬಿಂಬ ಯಾವುದು, ಆಕಾಶಯಾವುದು ಎಂದು ತಿಳಿಯಲು ಆಗದಂತೆ, ಹೊಸ ಮಸೆದ ಬಾಣಗಳನ್ನು ಎಲ್ಲೆಡೆ ತುಂಬಿದನು, ಆಗ ಸಾರಧಿ, ಧ್ವಜ, ಕುದುರೆಗಳು ಅಡ್ಡಬಿದ್ದು ಸುರಥನು ರಥವಿಲ್ಲದಂತೆ ಆದನು.
 • (ಪದ್ಯ-೧೧)

ಪದ್ಯ :-:೧೨:[ಸಂಪಾದಿಸಿ]

ಕೂಡೆ ಮತ್ತೊಂದು ಪೊಸರಥವನಳವಡಿಸಿಕೊಂ | ಡೀಡಿರಿದನಂಬಿನಿಂ ಪಾರ್ಥನ ವರೂಥಮಂ | ಕೂಡೆ ಹಿಂಭಾಗಕೈನೂರ ಬಿಲ್ಲಂತರಕೆ ಪೋದುದು ಸಂಗರದೊಳು |
ಮಾಡಿದಂ ಕೃಷ್ಣನ ಶರೀರದೊಳ್ ಗಾಯಮಂ | ತೋಡಿದಂ ಕುರುರೆಗಳೊಡಲ್ಗಳಂ ನರನಂ ವಿ | ಭಾಡಿಸಿದನಾ ಸುರಥನೊಂದು ಶಪಥದೊಳಿಸುವುದಿದರೊಳೇನಹುದೆಂದನು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕೂಡೆ ಮತ್ತೊಂದು ಪೊಸ ರಥವನು ಅಳವಡಿಸಿಕೊಂಡು ಈಡಿರಿದನು ಅಂಬಿನಿಂ ಪಾರ್ಥವ ವರೂಥಮಂ=[ಕೂಡಲೆ ಮತ್ತೊಂದು ಹೊಸ ರಥವನ್ನು ಅಳವಡಿಸಿಕೊಂಡು ಬಾಣದಿಂದ ಪಾರ್ಥನ ರಥವನ್ನು ಚುಚ್ಚುವಂತೆ ಹೊಡೆದನು.] ಕೂಡೆ ಹಿಂಭಾಗಕೆ ಐನೂರ ಬಿಲ್ಲ ಅಂತರಕೆ ಪೋದುದು ಸಂಗರದೊಳು ಮಾಡಿದಂ ಕೃಷ್ಣನ ಶರೀರದೊಳ್ ಗಾಯಮಂ ತೋಡಿದಂ ಕುರುರೆಗಳ ಒಡಲ್ಗಳಂ ನರನಂ ವಿಭಾಡಿಸಿದನು=[ಕೂಡಲೆ ಅವನ ರಥವು ಐನೂರು ಬಿಲ್ಲಿನ (ಮಾರು) ದೂರಕ್ಕೆ ಹಿಂದಕ್ಕೆ ಹೊಯಿತು. ಯುದ್ಧದಲ್ಲಿ ಕೃಷ್ಣನ ಶರೀರದಲ್ಲಿಯೂ ಗಾಯವನ್ನು ಮಾಡಿದನು; ತೋಡಿದಂ ಕುರುರೆಗಳ ಹೊಟ್ಟೆಗೂ ಗಾಯವಾಗುವಂತೆ ಹೊಡೆದನು; ಅರ್ಜುನನ್ನಣ ಬಲವಾಗಿ ಹೊಡೆದನು.]; ಆ ಸುರಥನು ಒಂದು ಶಪಥದೊಳು ಇಸುವುದು ಇದರೊಳು ಏನಹುದು ಎಂದನು=[ಆ ಸುರಥನು ಒಂದು ಶಪಥಮಾಡಿ ಹೊಡೆಯಬೇಕು; ಇದರಿಂದ, ಸುಮ್ಮನೆ ಹೋರಾಡುವುದರಿಂದ ಏನಾಗುವುದು? ಪ್ರಯೋಜನವಿಲ್ಲ ಎಂದನು.]
 • ತಾತ್ಪರ್ಯ: ಸುರಥನು, ಕೂಡಲೆ ಮತ್ತೊಂದು ಹೊಸ ರಥವನ್ನು ಅಳವಡಿಸಿಕೊಂಡು ಬಾಣದಿಂದ ಪಾರ್ಥನ ರಥವನ್ನು ಚುಚ್ಚುವಂತೆ ಹೊಡೆದನು. ಕೂಡಲೆ ಪಾರ್ಥನ ರಥವು ಐನೂರು ಬಿಲ್ಲಿನ (ಮಾರು) ದೂರಕ್ಕೆ ಹಿಂದಕ್ಕೆ ಹೊಯಿತು. ಯುದ್ಧದಲ್ಲಿ ಕೃಷ್ಣನ ಶರೀರದಲ್ಲಿಯೂ ಗಾಯವನ್ನು ಮಾಡಿದನು; ತೋಡಿದಂ ಕುರುರೆಗಳ ಹೊಟ್ಟೆಗೂ ಗಾಯವಾಗುವಂತೆ ಹೊಡೆದನು; ಅರ್ಜುನನ್ನಣ ಬಲವಾಗಿ ಹೊಡೆದನು. ಆ ಸುರಥನು ಒಂದು ಶಪಥಮಾಡಿ ಹೊಡೆಯಬೇಕು; ಇದರಿಂದ, ಸುಮ್ಮನೆ ಹೋರಾಡುವುದರಿಂದ ಏನಾಗುವುದು? ಪ್ರಯೋಜನವಿಲ್ಲ ಎಂದನು.
 • (ಪದ್ಯ-೧೨)

ಪದ್ಯ :-:೧೩:[ಸಂಪಾದಿಸಿ]

ಶ:ಪಥಮೇನಿದಕಿನ್ನು ನಿನ್ನನಾಂ ಕೊಲ್ಲದೊಡೆ | ವಿಪುಲಪಾತಕರಾಶೀ ತನಗೆ ಸಂಘಟಿಸದಿ | ರ್ದಪುದೆ ಪೇಳೆನುತ ತೆಗೆದೆಚ್ಚೊಡಾ ಬಾಣಮಂ ಸುರಥಂ ನಡುವೆ ಖಂಡಿಸಿ ||
ಅಪಹಾಸದಿಂದಿಳೆಗೆ ನಿನ್ನನೀ ರಥದಿಂದೆ | ನಿಪತನಂಗೆಯ್ಸದೊಡೆ ತನಗೆ ಪರಲೋಕದೊಳ್ | ವಿಪರೀತಗತಿಯಾಗದಿರ್ದಪುದೆ ಪೇಳೆಂದು ತೆಗೆದಚ್ಚು ಬೊಬ್ಬಿರಿದನು ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಶಪಥಮೇನು ಇದಕಿನ್ನು ನಿನ್ನ ನಾಂ ಕೊಲ್ಲದೊಡೆ ವಿಪುಲ ಪಾತಕರಾಶೀ ತನಗೆ ಸಂಘಟಿಸದೆ ಇರ್ದಪುದೆ ಪೇಳೆನುತ ತೆಗೆದು ಎಚ್ಚೊಡೆ= [ಶಪಥವೇಕೆ ಇದಕ್ಕೆ ; ಇನ್ನು ನಿನ್ನನ್ನು ನಾನು ಕೊಲ್ಲದಿದ್ದರೆ, ಹೇರಳ ಪಾಪರಾಶಿ ತನಗೆ ಬಂದು ಸೇರದೆ ಇರುವುದೆ ? ಸೇರಲಿ! ಹೇಳು ಎನ್ನುತ್ತಾ ತೆಗೆದು ಹೊಡೆದನು. ಆಗÉ]; ಆ ಬಾಣಮಂ ಸುರಥಂ ನಡುವೆ ಖಂಡಿಸಿ ಅಪಹಾಸದಿಂದ ಇಳೆಗೆ ನಿನ್ನನ್ನು ಈ ರಥದಿಂದೆ ನಿಪತನಂ ಗೆಯ್ಸದೊಡೆ = [ಆ ಬಾಣವನ್ನು ಸುರಥನು ನಡುವೆಯೇ ಕತ್ತರಿಸಿ ಅಪಹಾಸ್ಯ ಮಾಡುತ್ತಾ ಭೂಮಿಗೆ ನಿನ್ನನ್ನು ಈ ರಥದಿಂದ ಕೆಳಗೆ ಕೆಡಗದಿದ್ದರೆ ]; ತನಗೆ ಪರಲೋಕದೊಳ್ ವಿಪರೀತಗತಿಯಾಗದೆ ಇರ್ದಪುದೆ ಪೇಳೆಂದು ತೆಗೆದು ಎಚ್ಚು ಬೊಬ್ಬಿರಿದನು=[ ತನಗೆ ಪರಲೋಕದಲ್ಲಿ ಕೆಟ್ಟಗತಿಯಾಗದೆ ಇರ್ದಪುದೆ? (ಕೆಟ್ಟಗತಿಯಾಗಲಿ), ಹೇಳು ಎಂದು ತೆಗೆದು ಹೊಡೆದು ಬೊಬ್ಬಿರಿದನು].
 • ತಾತ್ಪರ್ಯ:ಅರ್ಜುನನು, ಶಪಥವೇಕೆ ಇದಕ್ಕೆ ; ಇನ್ನು ನಿನ್ನನ್ನು ನಾನು ಕೊಲ್ಲದಿದ್ದರೆ, ಹೇರಳ ಪಾಪದರಾಶಿ ತನಗೆ ಬಂದು ಸೇರದೆ ಇರುವುದೆ ? ಸೇರಲಿ! ಹೇಳು ಎನ್ನುತ್ತಾ ತೆಗೆದು ಹೊಡೆದನು. ಆಗ ಆ ಬಾಣವನ್ನು ಸುರಥನು ನಡುವೆಯೇ ಕತ್ತರಿಸಿ ಅಪಹಾಸ್ಯ ಮಾಡುತ್ತಾ ಭೂಮಿಗೆ ನಿನ್ನನ್ನು ಈ ರಥದಿಂದ ಕೆಳಗೆ ಕೆಡಗದಿದ್ದರೆ ತನಗೆ ಪರಲೋಕದಲ್ಲಿ ಕೆಟ್ಟಗತಿಯಾಗದೆ ಇರ್ದಪುದೆ? (ಕೆಟ್ಟಗತಿಯಾಗಲಿ), ಹೇಳು ಎಂದು ತೆಗೆದು ಹೊಡೆದು ಬೊಬ್ಬಿರಿದನು.
 • (ಪದ್ಯ-೧೩)

ಪದ್ಯ :-:೧೪:[ಸಂಪಾದಿಸಿ]

ಸುರಥನಿಸುಗೆಯೊಳರ್ಜುನಂ ನೊಂದು ಮುಂಗಾಣ | ದಿರೆ ಮುರಾಂತಕನಿವನ ತೋಳ್ಗಳಂ ಬೇಗ ಕ | ತ್ತರಿಸು ದಿವ್ಯಾಸ್ತ್ರಮಂ ಪೂಡೆಂದು ತಾಂ ಪಾಂಚಜನ್ಯಮಂ ಪೂರೈಸಲು ||
ನರನಾ ನುಡಿಗೆ ಮುನ್ನಮೆಚ್ಚು ಕೆಡಪಿದನಾತ | ನುರುಭುಜವನೈವೆಡೆಯ ಭೂಜಗೇಂದ್ರ ನಂದದಿಂ | ಧರೆಯೊಳ್ ಪೊರಳ್ದುರುಳ್ವುದು ಪೊಯ್ದುದುರೆ ಕೊಂದುದಾಕ್ಷಣಂ ಪರಬಲವನ ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಸುರಥನ ಇಸುಗೆಯೊಳು(ಎಸುಗೆ) ಅರ್ಜುನಂ ನೊಂದು ಮುಂಗಾಣದಿರೆ ಮುರಾಂತಕನು ಇವನ ತೋಳ್ಗಳಂ ಬೇಗ ಕತ್ತರಿಸು ದಿವ್ಯಾಸ್ತ್ರಮಂ ಪೂಡೆಂದು ತಾಂ ಪಾಂಚಜನ್ಯಮಂ ಪೂರೈಸಲು=[ಸುರಥನ ಬಾಣದ ಹೊಡೆತಕ್ಕೆ ಅರ್ಜುನನು ನೊಂದು ಮುಂದೆ ಏನು ಮಾಡುವುದೆಂದು ತೋಚದಿರಲು,ಕೃಷ್ಣನು ಇವನ ತೋಳುಗಳನ್ನು ಬೇಗ ಕತ್ತರಿಸು, ದಿವ್ಯಾಸ್ತ್ರವನ್ನು ಹೂಡು ಎಂದು ತಾನು ಪಾಂಚಜನ್ಯವನ್ನು ಊದಿದನು. ಆಗ]; ನರನಾ ನುಡಿಗೆ ಮುನ್ನಮೆ ಎಚ್ಚು ಕೆಡಪಿದನು ಆತನ ಉರುಭುಜವನು ಐವೆಡೆಯ ಭೂಜಗೇಂದ್ರ ನಂದದಿಂ ಧರೆಯೊಳ್ ಪೊರಳ್ದು ಉರುಳ್ವುದು ಪೊಯ್ದುದು ಉರೆ ಕೊಂದುದಾಕ್ಷಣಂ ಪರಬಲವನ =[ಅರ್ಜುನನು ಆ ಮಾತು ಮುಗಿಯುವುದರೊಳಗೆ ಬಾಣ ಹೊಡೆದು ಅವನ ಉದ್ದಭುಜವನ್ನು ಕಡಿದು ಕೆಡವಿದನು; ಅದು ಐದುಹೆಡೆಯ ಸರ್ಪದಂತೆ ಭೂಮಿಯಲ್ಲಿ ಬಿದ್ದು ಹೊರಳಿ ಉರುಳಿ ಹೊಡೆಯುತ್ತಿತ್ತು; ಹಾಗೆ ಬಹಳ ಸೈನಿರನ್ನು ಆ ಕ್ಷಣದಲ್ಲಿ ಕೊಂದುಹಾಕಿತು.]
 • ತಾತ್ಪರ್ಯ:ಸುರಥನ ಬಾಣದ ಹೊಡೆತಕ್ಕೆ ಅರ್ಜುನನು ನೊಂದು ಮುಂದೆ ಏನು ಮಾಡುವುದೆಂದು ತೋಚದಿರಲು,ಕೃಷ್ಣನು ಇವನ ತೋಳುಗಳನ್ನು ಬೇಗ ಕತ್ತರಿಸು, ದಿವ್ಯಾಸ್ತ್ರವನ್ನು ಹೂಡು ಎಂದು ತಾನು ಪಾಂಚಜನ್ಯವನ್ನು ಊದಿದನು. ಆಗ ಅರ್ಜುನನು ಆ ಮಾತು ಮುಗಿಯುವುದರೊಳಗೆ ಬಾಣ ಹೊಡೆದು ಅವನ ಉದ್ದಭುಜವನ್ನು ಕಡಿದು ಕೆಡವಿದನು; ಅದು ಐದುಹೆಡೆಯ ಸರ್ಪದಂತೆ ಭೂಮಿಯಲ್ಲಿ ಬಿದ್ದು ಹೊರಳಿ ಉರುಳಿ ಹೊಡೆಯುತ್ತಿತ್ತು; ಹಾಗೆ ಬಹಳ ಸೈನಿರನ್ನು ಆ ಕ್ಷಣದಲ್ಲಿ ಕೊಂದುಹಾಕಿತು.
 • (ಪದ್ಯ-೧೪)

ಪದ್ಯ :-:೧೫:[ಸಂಪಾದಿಸಿ]

ಒತ್ತೋಳನುತ್ತರಿಸಲೊತ್ತೋಳ ಸತ್ವದಿಂ | ಮತ್ತಾತನುರವಣಿಸಿ ಮತ್ತ ದಂತಿಯ ತೆರದಿ | ನೊತ್ತಿ ಭರದಿಂ ಪಾರ್ಥನೊತ್ತಿಗೈತರೆ ಕಂಡು ಹರಿ ವಿಜಯನಂ ಜರೆಯಲು ||
ತತ್ತಳಂಗೊಳದೆಚ್ಚು ತತ್ತಳವಿಗೆಯ್ದುವವ | ನತ್ತಲ್ ಭುಜವನರಿಯೆ ನೆತ್ತರಾಗಸಕೆ ಚಿ | ಮ್ಮಿತ್ತು ರಣದೊಕುಳಿಯ ಮಿತ್ತುವಿನ ಜೀರ್ಕೊಳವಿಯುಗುಳ್ವ ಕೆನ್ನೀರೆಂಬೊಲು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಒತ್ತೋಳನು ಉತ್ತಿರಿಸಲು ಒತ್ತೋಳ ಸತ್ವದಿಂ ಮತ್ತೆ ಆತನು ಉರವಣಿಸಿ ಮತ್ತ ದಂತಿಯ ತೆರದಿಂ ಒತ್ತಿ ಭರದಿಂ ಪಾರ್ಥನ ಒತ್ತಿಗೆ ಐತರೆ ಕಂಡು ಹರಿ ವಿಜಯನಂ ಜರೆಯಲು=[ಒಂದು ತೋಳನ್ನು ಕತ್ತರಿಸಲು, ಉಳಿದ ಒಂದು ತೋಳಿನ ಸತ್ವದಿಂದ ಮತ್ತೆ ಆತನು ಪರಾಕ್ರಮಿಸಿ ಮದದ ಆನೆಯ ರೀತಿಯಲ್ಲಿ ಮುಂದೆ ವೇಗದಿಂದ ಪಾರ್ಥನ ಬಳಿಗೆ ಬರಲು, ಅದನ್ನು ಕಂಡು ಕೃಷ್ನನು ಅರ್ಜುನನ್ನು ತಡಮಾಡಿದುದಕ್ಕೆ ನಿಂದಿಸಲು,];ತತ್ತಳಂಗೊಳದೆ ಎಚ್ಚು ತತ್ತ್ ಅಳವಿಗೆ ಐಯ್ದುವ ಅವನ ಅತ್ತಲ್ ಭುಜವನು ಅರಿಯೆ ನೆತ್ತರು ಆಗಸಕೆ ಚಿಮ್ಮಿತ್ತು ರಣದ ಓಕುಳಿಯ ಮಿತ್ತುವಿನ ಜೀರ್ಕೊಳವಿಯು ಉಗುಳ್ವ ಕೆನ್ನೀರೆಉ ಎಂಬೊಲು=[ ಕಳವಳಗೊಳ್ಳದೆ ಬಾಣದಿಂದ ಹೊಡೆದು ತನ್ನ ಬಳಿಗೆ ಬರುತ್ತಿರುವ ಅವನ ಮತ್ತೊಂದು ಭುಜವನ್ನೂ ಕತ್ತರಿಸಲು ರಕ್ತವು ಆಕಾಶಕ್ಕೆ ಚಿಮ್ಮಿತ್ತು; ಅದು ರಣರಂಗದ ಮೃತ್ಯುವಿನ ಓಕುಳಿಯ ಆಟದ ಜೀರ್ಕೊಳವಿಯು ಹಾರಿಸುವ ಕೆನ್ನೀರು /ಕೆಂಪುನೀರು ಎಂಬಂತಿತ್ತು]
 • ತಾತ್ಪರ್ಯ:ಒಂದು ತೋಳನ್ನು ಕತ್ತರಿಸಲು, ಉಳಿದ ಒಂದು ತೋಳಿನ ಸತ್ವದಿಂದ ಮತ್ತೆ ಆತನು ಪರಾಕ್ರಮಿಸಿ ಮದದ ಆನೆಯ ರೀತಿಯಲ್ಲಿ ಮುಂದೆ ವೇಗದಿಂದ ಪಾರ್ಥನ ಬಳಿಗೆ ಬರಲು, ಅದನ್ನು ಕಂಡು ಕೃಷ್ನನು ಅರ್ಜುನನ್ನು ತಡಮಾಡಿದುದಕ್ಕೆ ನಿಂದಿಸಲು, ಕಳವಳಗೊಳ್ಳದೆ ಬಾಣದಿಂದ ಹೊಡೆದು ತನ್ನ ಬಳಿಗೆ ಬರುತ್ತಿರುವ ಅವನ ಮತ್ತೊಂದು ಭುಜವನ್ನೂ ಕತ್ತರಿಸಲು ರಕ್ತವು ಆಕಾಶಕ್ಕೆ ಚಿಮ್ಮಿತ್ತು; ಅದು ರಣರಂಗದ ಮೃತ್ಯುವಿನ ಓಕುಳಿಯ ಆಟದ ಜೀರ್ಕೊಳವಿಯಿಂದ ಹಾರಿಸುವ ಕೆನ್ನೀರು /ಕೆಂಪುನೀರು ಎಂಬಂತಿತ್ತು]
 • (ಪದ್ಯ-೧೫)

ಪದ್ಯ :-:೧೬:[ಸಂಪಾದಿಸಿ]

ತೋಳ್ಗಳೆರಡುಂ ಕತ್ತರಿಸಿ ಬೀಳೆ ಮತ್ತೆ ಕ | ಟ್ವಾಳ್ಗಳ ಶಿರೋಮಣಿ ಸುರಥನಾ ಕಿರೀಟಯಂ | ಕಾಲ್ಗಂಳಿಂದೊದೆದು ಕೆಡಹುವೆನೆಂದು ಭರದಿಂದೆ ಬೊಬ್ಬಿರಿಯುತೈತರಲ್ಕೆ ||
ಕೋಲ್ಗಳಿಂ ತೊಡೆಗಳಂ ಕತ್ತರಿಸೆ ನಾದಿದುವು | ಧೂಳ್ಗಳರುಣಾಂಬುವಿಂದೆದೆಯೊಳ್ ತೆವಳ್ದಹಿಯ | ವೊಲ್ಗಂಡುಗಲಿ ಧನಂಜಯನ ಸಮ್ಮುಖಕೆ ಮೇಲ್ವಾಯ್ದನವನೇವೇಳ್ವೆನು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ತೋಳ್ಗಳು ಎರಡುಂ ಕತ್ತರಿಸಿ ಬೀಳೆ ಮತ್ತೆ ಕಟ್ವಾಳ್ಗಳ ಶಿರೋಮಣಿ ಸುರಥನು ಆ ಕಿರೀಟಯಂ ಕಾಲ್ಗಂಳಿಂದ ಒದೆದು ಕೆಡಹುವೆನೆಂದು= [ತೋಳುಗಳು ಎರಡೂ ಕತ್ತರಿಸಿ ಬೀಳಲು ಮತ್ತೆ ವೀರಯೋಧ ಶಿರೋಮಣಿಯಾದ ಸುರಥನು ಆ ಅರ್ಜುನನ್ನು ಕಾಲುಗಳಿಂದ ಒದೆದು ಕೆಡಗುವೆನು ಎಂದು]; ಭರದಿಂದೆ ಬೊಬ್ಬಿರಿಯುತ ಐತರಲ್ಕೆ ಕೋಲ್ಗಳಿಂ ತೊಡೆಗಳಂ ಕತ್ತರಿಸೆ ನಾದಿದುವು ಧೂಳ್ಗಳು ಅರುಣಾಂಬುವಿಂದ =[ವಾಗವಾಗಿ ಬೊಬ್ಬಿರಿಯುತ್ತಾ ಬರತ್ತಿರಲು ಬಾಣಗಳಿಂದ ಅವನ ತೊಡೆಗಳನ್ನು ಕತ್ತರಿಸಲು ಧೂಳುಗಳು ರಕ್ತದಿಂದ ಒದ್ದೆಯಾದುವು]; ಎದೆಯೊಳ್ ತೆವಳ್ದು ಅಹಿಯವೊಲ್ ಗಂಡುಗಲಿ ಧನಂಜಯನ ಸಮ್ಮುಖಕೆ ಮೇಲ್ವಾಯ್ದನು ಅವನು ಏವೇಳ್ವೆನು =[ಆಗ ಎದೆಯಿಂದ ತೆವಳಿ ಹಾವಿನಂತೆ ಗಂಡುಗಲಿ ಧನಂಜಯನ ಎದುರಿಗೆ ಮೇಲೆಹಾದುಬಂದನು ಅವನು ಏನು ಹೇಳಲಿ?].
 • ತಾತ್ಪರ್ಯ:ಸುರತನ ತೋಳುಗಳು ಎರಡೂ ಕತ್ತರಿಸಿ ಬೀಳಲು ಮತ್ತೆ ವೀರಯೋಧ ಶಿರೋಮಣಿಯಾದ ಸುರಥನು ಆ ಅರ್ಜುನನ್ನು ಕಾಲುಗಳಿಂದ ಒದೆದು ಕೆಡಗುವೆನು ಎಂದು, ವೇಗವಾಗಿ ಬೊಬ್ಬಿರಿಯುತ್ತಾ ಬರತ್ತಿರಲು ಬಾಣಗಳಿಂದ ಅವನ ತೊಡೆಗಳನ್ನು ಕತ್ತರಿಸಲು ಧೂಳುಗಳು ರಕ್ತದಿಂದ ಒದ್ದೆಯಾದುವು; ಆಗ ಎದೆಯಿಂದ ತೆವಳಿ ಹಾವಿನಂತೆ ಗಂಡುಗಲಿ ಧನಂಜಯನ ಎದುರಿಗೆ ಅವನು ಮೇಲೆಹಾದು ಬಂದನು, ಏನು ಹೇಳಲಿ?].
 • (ಪದ್ಯ-೧೬)

ಪದ್ಯ :-:೧೭:[ಸಂಪಾದಿಸಿ]

ಆಗ ಮುರಹರನಾಜ್ಞೆಯಿಂದೆಚ್ಚು ಫಲಗುಣಂ | ಬೇಗ ಸುರಥನ ಶಿರವನರಿಯಲಾ ತಲೆ ಬಂದು | ತಾಗಿತತಿಭರದೊಳ್ ನರನ ವಕ್ಷವಂ ಕೆಡಹಿತಾ ವರೂಥಾಗ್ರದಿಂದ ||
ನೀಗಿದಂ ಮರವೆಯಿಂದರಿವಂ ಧನಂಜಯಂ | ಮೇಗೆ ಕೃಷ್ಣನ ಚರಣಕೈತಂದು ಬಿದ್ದು ಹರಿ | ರಾಘವ ಜನಾರ್ಧನ ಮುಕುಂದ ಯೆನುತಿರ್ದುದಾ ಶಿರಮತಿವಿಕಾಸದಿಂದೆ ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಆಗ ಮುರಹರನ ಆಜ್ಞೆಯಿಂದ ಎಚ್ಚು ಫಲಗುಣಂ ಬೇಗ ಸುರಥನ ಶಿರವನು ಅರಿಯಲು= [ಆಗ ಕೃಷ್ನನ ಆಜ್ಞೆಯಿಂದ ಎಚ್ಚು ಫಲ್ಗುಣನು ಬೇಗ ಸುರಥನ ತಲೆಯನ್ನು ಕತ್ತರಿಸಲು]; ಆ ತಲೆ ಬಂದು ತಾಗಿತು ಅತಿಭರದೊಳ್ ನರನ ವಕ್ಷವಂ ಕೆಡಹಿತಾ ವರೂಥಾಗ್ರದಿಂದ= [ಆ ತಲೆ ಅತಿವೇಗವಾಗಿ ಬಂದು ಅರ್ಜುನನ ಎದೆಗೆ ತಾಗಿತು ಮತ್ತು ಅವನನ್ನು ರಥದ ಮೇಲಿಂದ ಕೆಡಗಿತು.]; ನೀಗಿದಂ ಮರವೆಯಿಂದ ಅರಿವಂ ಧನಂಜಯಂ= [ ಧನಂಜಯನು ಮೈಮರೆತು ಎಚ್ಚರತಪ್ಪಿದನು.]; ಮೇಗೆ ಕೃಷ್ಣನ ಚರಣಕೆ ಐತಂದು ಬಿದ್ದು ಹರಿ ರಾಘವ ಜನಾರ್ಧನ ಮುಕುಂದ ಯೆನುತಿರ್ದುದು ಆ ಶಿರಂ ಅತಿವಿಕಾಸದಿಂದೆ =[ಆ ತಲೆ ನಂತರ ಕೃಷ್ಣನ ಪಾದಕ್ಕೆ ಬಂದು ಬಿದ್ದು ಹರಿ, ರಾಘವ, ಜನಾರ್ಧನ, ಮುಕುಂದ ಎಂದು ಆನಂದದಿಂದ ಎನ್ನುತ್ತಿತ್ತು.].
 • ತಾತ್ಪರ್ಯ:ಆಗ ಕೃಷ್ನನ ಆಜ್ಞೆಯಿಂದ ಎಚ್ಚು ಫಲ್ಗುಣನು ಬೇಗ ಸುರಥನ ತಲೆಯನ್ನು ಕತ್ತರಿಸಲು, ಆ ತಲೆ ಅತಿವೇಗವಾಗಿ ಬಂದು ಅರ್ಜುನನ ಎದೆಗೆ ತಾಗಿತು ಮತ್ತು ಅವನನ್ನು ರಥದ ಮೇಲಿಂದ ಕೆಡಗಿತು. ಧನಂಜಯನು ಮೈಮರೆತು ಎಚ್ಚರತಪ್ಪಿದನು. ಆ ತಲೆ ನಂತರ ಕೃಷ್ಣನ ಪಾದಕ್ಕೆ ಬಂದು ಬಿದ್ದು ಹರಿ, ರಾಘವ, ಜನಾರ್ಧನ, ಮುಕುಂದ ಎಂದು ಆನಂದದಿಂದ ಎನ್ನುತ್ತಿತ್ತು.
 • (ಪದ್ಯ-೧೭)

ಪದ್ಯ :-:೧೮:[ಸಂಪಾದಿಸಿ]

ಶ್ರೀ ಕರಾಂಬುಜಯುಗ್ಮದಿಂದೆತ್ತಿಕೊಂಡು ಕಮ | ಲಾಕಾಂತನಾ ಶಿರವನೀಕ್ಷಿಸಿ ಕರುಣದಿಂದ | ಮಾಕಾಶದೆಡೆಯೊಳಿಹ ಗರುಡನಂ ಕರೆದಿತ್ತು ಜವದಿಂ ಪ್ರಯಾಗಕೈದಿ ||
ಈ ಕಪಾಲವನಲ್ಲಿ ಹಾಯ್ಕೆಂದು ಬೆಸಸಲದ | ನಾ ಖಗೇಶ್ವರನೊಯ್ಯುತಿರೆ ಗಗನಪಥದೊಳ್ ಪಿ | ನಾಕಿ ಕಂಡಳ್ತಿಯಿಂದ ತಲೆಗೆ ಕಳುಹಿಡಂ ಭೃಂಗೀಶನಂ ಮುದದೊಳು ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಶ್ರೀ ಕರಾಂಬುಜಯುಗ್ಮದಿಂದ (ಕರ-ಕೈ ;ಅಂಬುಜ-ಕಮಲ; ಯುಗ್ಮ-ಎರಡು) ಎತ್ತಿಕೊಂಡು ಕಮಲಾಕಾಂತನು (ಲಕ್ಷ್ಮೀಪತಿ) ಆ ಶಿರವನು ಈಕ್ಷಿಸಿ =[ ಶ್ರೀಕೃಷ್ಣನು ತನ್ನ ಕೈಯಿಂದ ಆ ಶಿರವನ್ನು ಎತ್ತಿಕೊಂಡು ನೋಡಿ]; ಕರುಣದಿಂದಂ ಆಕಾಶದ ಎಡೆಯೊಳು ಇಹ ಗರುಡನಂ ಕರೆದು ಇತ್ತು ಜವದಿಂ ಪ್ರಯಾಗಕೆ ಐದಿ ಈ ಕಪಾಲವನು ಅಲ್ಲಿ ಹಾಯ್ಕೆಂದು ಬೆಸಸಲು =[ಕರುಣೆಯಿಂದ ಆಕಾಶ ಪ್ರದೇಶದಲ್ಲಿ ಇರುವ ಗರುಡನನ್ನು ಕರೆದು ಅದನ್ನು ಕೊಟ್ಟು ವೇಗವಾಗಿ ಪ್ರಯಾಗಕ್ಕೆ ಹೋಗಿ, ಈ ಕಪಾಲವನ್ನು ಅಲ್ಲಿ ಹಾಕೆಂದು ಹೇಳಲು]; ಅದನು ಆ ಖಗೇಶ್ವರನು ಒಯ್ಯುತಿರೆ ಗಗನಪಥದೊಳ್ ಪಿನಾಕಿ ಕಂಡು ಅಳ್ತಿಯಿಂದ ತಲೆಗೆ ಕಳುಹಿದಂ ಭೃಂಗೀಶನಂ ಮುದದೊಳು=[ಅದನ್ನು ಆ ಗರುಡನು ತೆಗೆದುಕೊಂಡು ಹೋಗುತ್ತಿರುವಾಗ, ಆಕಾಶದ ಮಾರ್ಗದಲ್ಲಿ ಶಿವನು ಕಂಡು ಪ್ರೀತಿಯಿಂದ ಆ ತಲೆಯನ್ನು ತರಲು ಭೃಂಗೀಶನೆಂಬ ಪ್ರಮಥನನ್ನು ಸಂತಸದಿಂದ ಕಳುಹಿದನು.].
 • ತಾತ್ಪರ್ಯ: ಶ್ರೀಕೃಷ್ಣನು ತನ್ನ ಕೈಯಿಂದ ಆ ಶಿರವನ್ನು ಎತ್ತಿಕೊಂಡು ನೋಡಿ, ಕರುಣೆಯಿಂದ ಆಕಾಶ ಪ್ರದೇಶದಲ್ಲಿ ಇರುವ ಗರುಡನನ್ನು ಕರೆದು ಅದನ್ನು ಕೊಟ್ಟು ವೇಗವಾಗಿ ಪ್ರಯಾಗಕ್ಕೆ ಹೋಗಿ, ಈ ಕಪಾಲವನ್ನು ಅಲ್ಲಿ ಹಾಕೆಂದು ಹೇಳಲು, ಅದನ್ನು ಆ ಗರುಡನು ತೆಗೆದುಕೊಂಡು ಹೋಗುತ್ತಿರುವಾಗ, ಆಕಾಶದ ಮಾರ್ಗದಲ್ಲಿ ರುದ್ರನು ಕಂಡು ಪ್ರೀತಿಯಿಂದ ಆ ತಲೆಯನ್ನು ತರಲು ಭೃಂಗೀಶನೆಂಬ ಪ್ರಮಥನನ್ನು ಸಂತಸದಿಂದ ಕಳುಹಿದನು.
 • (ಪದ್ಯ-೧೮)

ಪದ್ಯ :-:೧೯:[ಸಂಪಾದಿಸಿ]

ಎಲ್ಲಿಗೊಯ್ದಪನೀ ಸುರಥನ ತಲೆಯಂ ಗರುಡ | ನಿಲ್ಲಿಹುದು ರುಂಡಮಾಲೆಯೊಳಿವನ ಸೋದರನ | ಸಲ್ಲಲಿತ ಶಿರಮಿದುರ ಸಂಗಡಕೆ ಕೊಂಡು ಬಾರೆಂದು ಮದನಾರಿ ಬೆಸಸೆ ||
ನಿಲ್ಲದೈತಂದು ಭೃಂಗೀಶ್ವರಂ ಬೇಡೆ ಖಗ | ವಲ್ಲಭಂ ಪತಿನಿರೂಪವನೊಮ್ಮೆಯಂ ಮೀರ್ವ | ನಲ್ಲೆಂದತಿಕ್ರಮಿಸಿ ನಡೆಯಲಾ ಪಕ್ಷಘಾತದೊಳಾತನಳವಳಿದನು ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಎಲ್ಲಿಗೆ ಒಯ್ದಪನು ಈ ಸುರಥನ ತಲೆಯಂ ಗರುಡ ನಿಲ್ಲು=[ಗರುಡನು ಸುರಥನ ತಲೆಯನ್ನು ಎಲ್ಲಿಗೆ ಒಯ್ಯುತ್ತಾನೆ? ]; ಇಹುದು ರುಂಡಮಾಲೆಯೊಳು ಇವನ ಸೋದರನ ಸಲ್ಲಲಿತ ಶಿರಮ್=[ ಇವನ ಸಹೋದರನ ತಲೆ ರುಂಡಮಾಲೆಯಲ್ಲಿ ಇದೆ] ಇದುರ ಸಂಗಡಕೆ ಕೊಂಡು ಬಾರೆಂದು ಮದನಾರಿ ಬೆಸಸೆ =[ಇದರ ಸಂಗಡ ಇಡಲು ಅದನ್ನು ತೆಗೆದುಕೊಂಡು ಬಾ ಎಂದು ಹೇಳಲು,]; ನಿಲ್ಲದೆ ಐತಂದು ಭೃಂಗೀಶ್ವರಂ ಬೇಡೆ ಖಗವಲ್ಲಭಂ ಪತಿನಿರೂಪವನು=[ಬೃಂಗೀಶ್ವರನು ಗರುಡನ ಬಳಿ ಬಂದು, ರುಂಡವನ್ನು ಕೊಡು ಎಂದು ಕೇಳಲು, ಗರುಡನು ತನ್ನ ಒಡೆಯನ ಆಜ್ಞೆಯನ್ನು ]; ಒಮ್ಮೆಯುಂ ಮೀರ್ವನು ಅಲ್ಲೆಂದು ಅತಿಕ್ರಮಿಸಿ ನಡೆಯಲು ಆ ಪಕ್ಷಘಾತದೊಳ್ ಆತನು ಅಳವಳಿದನು= [ಒಮ್ಮೆಯೂ ಮೀರಲು ಸಾದ್ಯವಿಲ್ಲ ಎಂದು, ಅವನ ಮಾತನ್ನು ಮೀರಿ ಹಾರಲು, ಬೃಂಗೀಶ್ವರನು ಅವನ ರೆಕ್ಕೆ ಬೀಸುವ ಹೊಡೆತದಿಂದ ಬಳಲಿಹೋದನು.]
 • ತಾತ್ಪರ್ಯ: ಗರುಡನು ಸುರಥನ ತಲೆಯನ್ನು ಎಲ್ಲಿಗೆ ಒಯ್ಯುತ್ತಾನೆ? ಇವನ ಸಹೋದರನ ತಲೆ ರುಂಡಮಾಲೆಯಲ್ಲಿ ಇದೆ. ಇದರ ಸಂಗಡ ಇಡಲು ಅದನ್ನು ತೆಗೆದುಕೊಂಡು ಬಾ ಎಂದು ಹೇಳಲು, ಬೃಂಗೀಶ್ವರನು ಗರುಡನ ಬಳಿ ಬಂದು, ರುಂಡವನ್ನು ಕೊಡು ಎಂದು ಕೇಳಲು, ಗರುಡನು ತನ್ನ ಒಡೆಯನ ಆಜ್ಞೆಯನ್ನು ಒಮ್ಮೆಯೂ ಮೀರಲು ಸಾದ್ಯವಿಲ್ಲ ಎಂದು, ಅವನ ಮಾತನ್ನು ಮೀರಿ ಹಾರಲು, ಬೃಂಗೀಶ್ವರನು ಅವನ ರೆಕ್ಕೆ ಬೀಸುವ ಹೊಡೆತದಿಂದ ಬಳಲಿಹೋದನು.
 • (ಪದ್ಯ-೧೯)

ಪದ್ಯ :-:೨೦:[ಸಂಪಾದಿಸಿ]

ಗರುಡನ ಗರಿಯ ಗಾಳಿಯೊಳ್ ಸಿಕ್ಕಿ ಬೆಂಡಾಗಿ | ತಿರುಗಿ ಬಂದಭವಂಗೆ ಭೃಂಗಿಪಂ ಬಿನ್ನೈಸು | ತಿರೆ ಕೇಳ್ದು ಗಿರಿಜೆ ನಸುನಗುತೆ ಹರಿವಾಹನನ ಬಲ್ಮೆಯಂ ನೆರೆ ಪೊಗಳ್ದು ||
ಪಿರಿದಾತನಂ ಜರೆಯೆ ತಲೆವಾಗಿ ಲಜ್ಜಿಸಲ್ | ಪುರಹರಂ ಕೃಪೆಯೊಳವನಂ ಮತ್ತೆ ಸಂತೈಸಿ | ಕರೆದು ವೃಷರಾಜಂಗೆ ಬೆಸಸೆ ಬೆಂಬತ್ತಿದಂ ಪಕ್ಷೀಂದ್ರನಂ ನಭದೊಳು ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಗರುಡನ ಗರಿಯ ಗಾಳಿಯೊಳ್ ಸಿಕ್ಕಿ ಬೆಂಡಾಗಿ ತಿರುಗಿ ಬಂದಭವಂಗೆ ಭೃಂಗಿಪಂ ಬಿನ್ನೈಸುತಿರೆ= [ಗರುಡನ ರೆಕ್ಕೆಯ ಗಾಳಿಯಲ್ಲಿ ಸಿಕ್ಕಿ ಬಳಲಿ ಬೆಂಡಾಗಿ ಹಿಂತಿರುಗಿ ಬಂದು ಶಿವನಿಗೆ ಭೃಂಗಿಯು ಗರುಡನು ಕೊಡದೆ ಹೋದನೆಂದು ಹೇಳುತ್ತಿರಲು]; ಕೇಳ್ದು ಗಿರಿಜೆ ನಸುನಗುತೆ ಹರಿವಾಹನನ ಬಲ್ಮಿಯಂ ನೆರೆ ಪೊಗಳ್ದು ಪಿರಿದು ಆತನಂ ಜರೆಯೆ ತಲೆವಾಗಿ ಲಜ್ಜಿಸಲ್ =[ಅದನ್ನು ಕೇಳಿದ ಗಿರಿಜೆ ನಸುನಗುತ್ತಾ ಹರಿವಾಹನನಾದ ಗರುಡನ ಬಲವನ್ನು ಬಹಳ ಹೊಗಳಿ, ಬೃಂಗಿಯನ್ನು ಬಹಳ ಹೀನಾಯಿಸಲು, ಅವನು ನಾಚಿಕೆಯಿಂದ ತಲೆತಗ್ಗಿಸಿದನು;]; ಪುರಹರಂ ಕೃಪೆಯೊಳವನಂ ಮತ್ತೆ ಸಂತೈಸಿ ಕರೆದು ವೃಷರಾಜಂಗೆ ಬೆಸಸೆ ಬೆಂಬತ್ತಿದಂ ಪಕ್ಷೀಂದ್ರನಂ ನಭದೊಳು= [ಪುರಹರನಾದ ಶಿವನು ಕರುಣೆಯಿಮದ ಅವನನ್ನು ಮತ್ತೆ ಸಂತೈಸಿ,ವೃಷರಾಜನನ್ನು ಕರೆದು ಅವನಿಗೆ ಹೇಳಲು, ವೃಷಭನು ಆಕಾಶದಲ್ಲಿ ಗರುಡನನ್ನು ಆಕಾಶದಲ್ಲಿ ಬೆಂಬೆತ್ತಿ ಹೋದನು.]
 • ತಾತ್ಪರ್ಯ:ಗರುಡನ ರೆಕ್ಕೆಯ ಗಾಳಿಯಲ್ಲಿ ಸಿಕ್ಕಿ ಬಳಲಿ ಬೆಂಡಾಗಿ ಹಿಂತಿರುಗಿ ಬಂದು ಶಿವನಿಗೆ ಭೃಂಗಿಯು ಗರುಡನು ಕೊಡದೆ ಹೋದನೆಂದು ಹೇಳುತ್ತಿರಲು; ಅದನ್ನು ಕೇಳಿದ ಗಿರಿಜೆ ನಸುನಗುತ್ತಾ ಹರಿವಾಹನನಾದ ಗರುಡನ ಬಲವನ್ನು ಬಹಳ ಹೊಗಳಿ, ಬೃಂಗಿಯನ್ನು ಬಹಳ ಹೀನಾಯಿಸಲು, ಅವನು ನಾಚಿಕೆಯಿಂದ ತಲೆತಗ್ಗಿಸಿದನು;ಪುರಹರನಾದ ಶಿವನು ಕರುಣೆಯಿಮದ ಅವನನ್ನು ಮತ್ತೆ ಸಂತೈಸಿ,ವೃಷರಾಜನನ್ನು ಕರೆದು ಅವನಿಗೆ ಹೇಳಲು, ವೃಷಭನು ಆಕಾಶದಲ್ಲಿ ಗರುಡನನ್ನು ಆಕಾಶದಲ್ಲಿ ಬೆಂಬೆತ್ತಿ ಹೋದನು.]
 • (ಪದ್ಯ-೨೦)

ಪದ್ಯ :-:೨೧:[ಸಂಪಾದಿಸಿ]

ಬೇಗದಿಂದೈದಿ ನಂದೀಶ್ವರಂ ಗರುಡನಂ | ಪೋಗದಿರ್ ತಲೆಯನಾಭರಣಕ್ಕೆ ತಾರೆಂದು ನಾಗಭೂಷಣನಟ್ಟಿದಂ ತನ್ನೀಯದೊಡೆ ನಿನಗೆ ಬಹುದುಪಹತಿಯೆನೆ ||
ಆಗಲದಕೇನಸುರಮರ್ಧನನ ಬೆಸದಿಂಪ್ರ | ಯಾಗದೊಳ್ ಬಿಡುವೆನೀ ಶಿರಮಂ ಬರಿದೆ ಗಾಸಿ | ಯಾಗದಿರ್ ತಿರುಗು ನೀನೆಂದು ವಿನತಾಸುತಂ ಸೈವರಿದನಾಗಸದೊಳು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬೇಗದಿಂದ ಐದಿ ನಂದೀಶ್ವರಂ ಗರುಡನಂ ಪೋಗದಿರ್ ತಲೆಯನು ಆಭರಣಕ್ಕೆ ತಾರೆಂದು ನಾಗಭೂಷಣನು ಅಟ್ಟಿದಂ ತನ್ನಂ ಈಯದೊಡೆ ನಿನಗೆ ಬಹುದು ಉಪಹತಿ(ತೊಂದರೆ) ಎನೆ =[ಬೇಗ ಗರುಡನ ಬಳಿಗೆ ಬಂದು, ನಂದೀಶ್ವರು ಗರುಡನಿಗೆ ಮುಂದೆ ಹೋಗಬೇಡ; ಸುರಥನ ತಲೆಯನ್ನು ರುದ್ರನ ರುಂಡಮಾಲಾಲೆಯ ಆಭರಣಕ್ಕೆ ತಂದುಕೊಡು ಎಂದು ನಾಗಭೂಷಣನಾದ ಶಿವನು ನನ್ನನ್ನು ಕಳಿಸಿದ್ದಾನೆ; ಕೊಡದಿದ್ದರೆ ನಿನಗೆ ತೊಂದರೆ ಬರುವುದು ಎನ್ನಲು]; ಆಗಲಿ ಅದಕೇನು ಅಸುರಮರ್ಧನನ ಬೆಸದಿಂ ಪ್ರಯಾಗದೊಳ್ ಬಿಡುವೆನೀ ಶಿರಮಂ ಬರಿದೆ ಗಾಸಿಯಾಗದಿರ್ ತಿರುಗು ನೀನೆಂದು ವಿನತಾಸುತಂ ಸೈವರಿದನು ಆಗಸದೊಳು=[ಆಗಲಿ ಅದಕ್ಕೇನು, ಅಸುರಮರ್ಧನ ಕೃಷ್ಣನು ಹೇಳಿದಂತೆ ಪ್ರಯಾಗದಲ್ಲಿ ಹಾಕುವೆನು ಈ ಶಿರವನ್ನು; ಸುಮ್ಮನೆ ತೊಂದರೆಗೆ ಒಳಗಾಗಬೇಡ; ಹಿಂತಿರುಗು ನೀನು, ಎಂದು ವಿನತೆಯಮಗ ಗರುಡನು ಮುಂದುವರಿದನು ಆಕಾಶದಲ್ಲಿ.]
 • ತಾತ್ಪರ್ಯ: ಬೇಗ ಗರುಡನ ಬಳಿಗೆ ಬಂದು, ನಂದೀಶ್ವರು ಗರುಡನಿಗೆ ಮುಂದೆ ಹೋಗಬೇಡ; ಸುರಥನ ತಲೆಯನ್ನು ರುದ್ರನ ರುಂಡಮಾಲಾಲೆಯ ಆಭರಣಕ್ಕೆ ತಂದುಕೊಡು ಎಂದು ನಾಗಭೂಷಣನಾದ ಶಿವನು ನನ್ನನ್ನು ಕಳಿಸಿದ್ದಾನೆ; ಕೊಡದಿದ್ದರೆ ನಿನಗೆ ತೊಂದರೆ ಬರುವುದು ಎನ್ನಲು; ಆಗಲಿ ಅದಕ್ಕೇನು, ಅಸುರಮರ್ಧನ ಕೃಷ್ಣನು ಹೇಳಿದಂತೆ ಪ್ರಯಾಗದಲ್ಲಿ ಹಾಕುವೆನು ಈ ಶಿರವನ್ನು; ಸುಮ್ಮನೆ ತೊಂದರೆಗೆ ಒಳಗಾಗಬೇಡ; ಹಿಂತಿರುಗು ನೀನು, ಎಂದು ವಿನತೆಯಮಗ ಗರುಡನು ಆಕಾಶದಲ್ಲಿ ಮುಂದುವರಿದನು .]
 • (ಪದ್ಯ-೨೧)

ಪದ್ಯ :-:೨೨:[ಸಂಪಾದಿಸಿ]

ತ್ರಿಭುವನವನಲ್ಲಾಡಿಸುವ ಗರಿಯ ಗಾಳಿಗಿಳಿ ರಭಸದಿಂದೈದುವ ಸುಪರ್ಣನಂ ಹಿಂದಣ ವೃ | ಷಭನ ಮುಖದುಚ್ಛ್ವಾಸ ನಿಶ್ವಾಸ ಮಾರುತಂ ತಡೆದತ್ತಲಿತ್ತಲೆಳೆಯೆ ||
ನಭದೊಳಯ್ಯಯ್ಯಾನಾಯಾಸದಿಂ ಪೋಗಿದು | ರ್ಲಭವೆನಿಸುವಮಲಪ್ರಯಾಗದೊಳ್ ಕಲಿವೊಗರೊ | ಳಭಿಶೋಭಿಸುವ ಸುರಥ ಶಿರವನಾ ಗೋಪತಿಗೆ ಕುಡದೆ ಬಿಸುಟಂ ಗರುಡನು||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ತ್ರಿಭುವನವನು ಅಲ್ಲಾಡಿಸುವ ಗರಿಯ ಗಾಳಿಗಿಳ ರಭಸದಿಂದ ಐದುವ ಸುಪರ್ಣನಂ =[ ಮೂರು ಲೋಕವನ್ನೂ ಅಲ್ಲಾಡಿಸುವ ಗರುಡನ ರೆಕ್ಕೆಯ ಗರಿಯ ಗಾಳಿಗಳ ರಭಸದಿಂದ ಐದುವ ಸುಪರ್ಣ / ಗರುಡನನ್ನು]; ಹಿಂದಣ ವೃಷಭನ ಮುಖದ ಉಚ್ಛ್ವಾಸ ನಿಶ್ವಾಸದ ಗಾಳಿಯು ಮಾರುತಂ ತಡೆದು ಅತ್ತಲಿತ್ತಲು ಎಳೆಯೆ =[ ಹಿಂದೆ ಬರುತ್ತಿರುವ ವೃಷಭನ ಮೂಗಿನ ಉಚ್ಛ್ವಾಸನಿಶ್ವಾಸದ ಗಾಳಿಯು ಗರುಡನ ವೇಗವನ್ನು ತಡೆದು ಅತ್ತಲಿತ್ತಲು ಎಳೆಯುತ್ತಿರಲು, ]; ನಭದೊಳು ಒಯ್ಯಯ್ಯನೆ ಆಯಾಸದಿಂ ಪೋಗಿ ದುರ್ಲಭವೆನಿಸುವ ಅಮಲ ಪ್ರಯಾಗದೊಳ್ ಕಲಿವೊಗರೊಳು (ಕಲಿ- ಶೂರ,ಶೌಂ, ಪೊಗರು- ಸೊಕ್ಕು, ಶಕ್ತಿ,ಶೌರ್ಯ, ಸಾಹಸ) ಅಭಿಶೋಭಿಸುವ ಸುರಥ ಶಿರವನು ಆ ಗೋಪತಿಗೆ ಕುಡದೆ ಬಿಸುಟಂ ಗರುಡನು =[ ಆಕಾಶದಲ್ಲಿ ಮೆಲ್ಲಮೆಲ್ಲನೆ ಆಯಾಸದಿದ ಹೋಗಿ ಸುಲಭದಲ್ಲಿ ಸಿಗದ ಪವಿತ್ರವಾದ ಪ್ರಯಾಗದಲ್ಲಿ ಶೌರ್ಯಸಾಹಸದಿಂದ ಅಭಿಶೋಭಿಸುವ ಸುರಥನ ಶಿರವನ್ನು ಆ ವೃಷಭನಿಗೆ ಕೊಡದೆ ಗರುಡನು ಹಾಕಿದನು.]
 • ತಾತ್ಪರ್ಯ: ಮೂರು ಲೋಕವನ್ನೂ ಅಲ್ಲಾಡಿಸುವ ಗರುಡನ ರೆಕ್ಕೆಯ ಗರಿಯ ಗಾಳಿಗಳ ರಭಸದಿಂದ ಐದುವ ಸುಪರ್ಣ / ಗರುಡನನ್ನು ಹಿಂದೆ ಬರುತ್ತಿರುವ ವೃಷಭನ ಮೂಗಿನ ಉಚ್ಛ್ವಾಸನಿಶ್ವಾಸದ ಗಾಳಿಯು ಗರುಡನ ವೇಗವನ್ನು ತಡೆದು ಅತ್ತಲಿತ್ತಲು ಎಳೆಯುತ್ತಿರಲು, ಆಕಾಶದಲ್ಲಿ ಮೆಲ್ಲಮೆಲ್ಲನೆ ಆಯಾಸದಿದ ಹೋಗಿ, ಸುಲಭದಲ್ಲಿ ಸಿಗದ ಪವಿತ್ರವಾದ ಪ್ರಯಾಗದಲ್ಲಿ ಶೌರ್ಯಸಾಹಸದಿಂದ ಅಭಿಶೋಭಿಸುವ ಸುರಥನ ಶಿರವನ್ನು ಆ ವೃಷಭನಿಗೆ ಕೊಡದೆ ಗರುಡನು ಹಾಕಿದನು.]
 • (ಪದ್ಯ-೨೨)

ಪದ್ಯ :-:೨೩:[ಸಂಪಾದಿಸಿ]

ಆ ಗರುಡನಾ ಶಿರವನಾಪ್ರಯಾಗದ ಜಲದೊ | ಳಾ ಗಗನದಿಂದೆ ಬಿಸುಟಾ ಕೃಷ್ಣನಿದ್ದಬಳಿ | ಗಾಗಿ ತಿರುಗಿದನಾಗಳಾ ತಲೆಯನಲ್ಲಿಂದಮಾ ವೃಷಭನೆತ್ತಿಕೊಂಡು ||
ಆ ಗಿರೀಶನ ರಾಜಿಪಾ ಸಭೆಗೆ ತಂದು ಕುಡ | ಲಾ ಗೋಪತಿಯ ಮೆಚ್ಚುತಾ ರುಂಡಮಾಲೆಗದ | ನಾ ಗೌರಿ ಕೊಂಡಾಡಲಾನಂದಿಂದೆ ನಲಿದಾ ಶಂಕರಂ ತಾಳ್ದನು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಆ ಗರುಡನು ಆ ಶಿರವನು ಆ ಪ್ರಯಾಗದ ಜಲದೊಳು ಆ ಗಗನದಿಂದೆ ಬಿಸುಟು ಆ ಕೃಷ್ಣನು ಇದ್ದಬಳಿಗಾಗಿ ತಿರುಗಿದನು =[ ಆ ಗರುಡನು ಆ ತಲೆಯನ್ನು ಆ ಪ್ರಯಾಗದ ಜಲದಲ್ಲಿ, ಆ ಆಕಾಶದಿಂದ ಎಸೆದು, ಆ ಕೃಷ್ಣನು ಇದ್ದ ಕಡೆಗೆ ಹೊರಟನು]; ಆಗಳು ಆ ತಲೆಯನು ಅಲ್ಲಿಂದಂ ಆ ವೃಷಭನು ಎತ್ತಿಕೊಂಡು ಆ ಗಿರೀಶನ ರಾಜಿಪ ಆ ಸಭೆಗೆ ತಂದು ಕುಡಲು =[ ಆಗ ಆ ತಲೆಯನ್ನು ಅಲ್ಲಿಂದ ಆ ವೃಷಭನು ಎತ್ತಿಕೊಂಡು ಆ ಶಿವನ ಶೋಭಿಸುವ ಆ ಸಭೆಗೆ ತಂದು ಕೊಡಲು]; ಆ ಗೋಪತಿಯ ಮೆಚ್ಚುತ ಆ ರುಂಡಮಾಲೆಗೆ ಅದನ್ನು ಆ ಗೌರಿ ಕೊಂಡಾಡಲು ಆನಂದಿಂದೆ ನಲಿದು ಆ ಶಂಕರಂ ತಾಳ್ದನು =[ ಆ ವೃಷಭನನ್ನು ಮೆಚ್ಚುತ್ತಾ ಆ ರುಂಡಮಾಲೆಗೆ ಅದನ್ನು ಆ ಗೌರಿ ವೃಷಭನನ್ನು ಹೊಗಳುತ್ತಿರಲ, ಆನಂದಿಂದೆ ಸಂತೋಷಪಟ್ಟು ಆ ಶಂಕರನು ತನ್ನ ರುಂಡಮಾಲೆಯಲ್ಲಿ ಧರಿಸಿದನು.].
 • ತಾತ್ಪರ್ಯ: ಆ ಗರುಡನು ಆ ತಲೆಯನ್ನು ಆ ಪ್ರಯಾಗದ ಜಲದಲ್ಲಿ, ಆ ಆಕಾಶದಿಂದ ಎಸೆದು, ಆ ಕೃಷ್ಣನು ಇದ್ದ ಕಡೆಗೆ ಹೊರಟನು. ಆಗ ಆ ತಲೆಯನ್ನು ಅಲ್ಲಿಂದ ಆ ವೃಷಭನು ಎತ್ತಿಕೊಂಡು ಆ ಶಿವನ ಶೋಭಿಸುವ ಆ ಸಭೆಗೆ ತಂದು ಕೊಡಲು, ಆ ವೃಷಭನನ್ನು ಮೆಚ್ಚುತ್ತಾ ಆ ರುಂಡಮಾಲೆಗೆ ಅದನ್ನು ಆ ಗೌರಿ ವೃಷಭನನ್ನು ಹೊಗಳುತ್ತಿರಲ, ಆನಂದಿಂದೆ ಸಂತೋಷಪಟ್ಟು ಆ ಶಂಕರನು ತನ್ನ ರುಂಡಮಾಲೆಯಲ್ಲಿ ಧರಿಸಿದನು. (‘ಆ’, ಎನ್ನವ ಅಕ್ಷರ ಪುನರುಕ್ತಿಯ ಅಲಂಕಾರವಾಗಿ ಉಪಯೋಗಿಸಲ್ಪಟ್ಟಿದೆ).
 • (ಪದ್ಯ-೨೩)

ಪದ್ಯ :-:೨೪:[ಸಂಪಾದಿಸಿ]

ಇತ್ತಲರ್ಜುನಕೃಷ್ಣರಿಂದೆ ಸುರಥಂ ಮಡಿದ | ಮೃತ್ತಾಂತಮಂ ಕಂಡು ಹಂಸಧ್ವಜಂ ತನ್ನ | ಚಿತ್ತದೊಳ್ ಕಡುನೊಂದಳಲ್ದು ಮಿಗೆ ಮರಣಮಂ ನಿಶ್ಚೈಸಿ ರೋಷದಿಂದೆ ||
ತತ್ತರಣದೊಳ್ ಕಾದಿ ಮುರಹರಂ ಮೆಚ್ಚಲಾ | ನುತ್ತಮದ ಗತಿವಡೆವೆನೆಂದು ರಥವೇರಿ ಬಾ | ಗೊತ್ತಿ ನಿಜಚಾಪಮಂ ಜೇಗೈದು ಪಡೆಸಹಿತ ಪಲುಗುಣಂಗಿದಿರಾದನು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಇತ್ತಲು ಅರ್ಜುನ ಕೃಷ್ಣರಿಂದೆ ಸುರತಂ ಮಡಿದ ಮೃತ್ತಾಂತಮಂ ಕಂಡು ಹಂಸಧ್ವಜಂ ತನ್ನ ಚಿತ್ತದೊಳ್ ಕಡುನೊಂದು ಅಳಲ್ದು =[ ಇತ್ತಲಾಗಿ ಚಂಪಕಾನಗರಿಯಲ್ಲಿ ಅರ್ಜುನ ಮತ್ತು ಕೃಷ್ಣರಿಂದ ಸುರಥನು ಮಡಿದ ಸುದ್ದಿಯನ್ನು ಕೇಳಿ ಹಂಸಧ್ವಜನು ತನ್ನ ಮನಸ್ಸಿನಲ್ಲಿ ಬಹಳ ನೊಂದುಕೊಂಡು ಕಣ್ಣೀರುಹಾಕಿ ]; ಮಿಗೆ ಮರಣಮಂ ನಿಶ್ಚೈಸಿ ರೋಷದಿಂದೆ ತತ್ ರಣದೊಳ್ ಕಾದಿ ಮುರಹರಂ ಮೆಚ್ಚಲು ಆನು ಉತ್ತಮದ ಗತಿವಡೆವೆನೆಂದು =[ ಹಿಚ್ಚಿನ ಅಥವಾ ಕೊನೆಯ ತೀರ್ಮಾನವಾಗಿ ತನಗೆ ಮರಣವನ್ನು ನಿಶ್ಚೈಸಿಕೊಂಡು, ಸಿಟ್ಟಿನ ಆವೇಶದಲ್ಲಿ ಆ ರಣರಂಗದಲ್ಲಿ ಯುದ್ಧಮಾಡಿ ಕೃಷ್ಣನು ಮೆಚ್ಚುವಂತೆ ಮಾಡಿ ತಾನು ಉತ್ತಮದ ಗತಿಯನ್ನು ಪಡೆವೆನೆಂದು]; ರಥವೇರಿ ಬಾಗೊತ್ತಿ (ಬಗ್ಗಿಸಿ ಒತ್ತಿ -ಹೆದೆಯೇರಿಸಿ) ನಿಜಚಾಪಮಂ ಜೇಗೈದು ಪಡೆಸಹಿತ ಪಲುಗುಣಂಗೆ ಇದಿರಾದನು =[ ರಥವನ್ನು ಹತ್ತಿ ಬಿಲ್ಲನ್ನು ಬಗ್ಗಿಸಿ ಒತ್ತಿ -ಹೆದೆಯೇರಿಸಿ ತನ್ನ ಬಿಲ್ಲನ್ನು ಠೇಂಕಾರ ಮಾಡಿ ಸೈನ್ಯಸಹಿತ ಅರ್ಜುನನಿಗೆ ಇದಿರಾಗಿ ಯುದ್ಧಕ್ಕೆ ನಿಂತನು.];
 • ತಾತ್ಪರ್ಯ: ಇತ್ತಲಾಗಿ ಚಂಪಕಾನಗರಿಯಲ್ಲಿ ಅರ್ಜುನ ಮತ್ತು ಕೃಷ್ಣರಿಂದ ಸುರಥನು ಮಡಿದ ಸುದ್ದಿಯನ್ನು ಕೇಳಿ ಹಂಸಧ್ವಜನು ತನ್ನ ಮನಸ್ಸಿನಲ್ಲಿ ಬಹಳ ನೊಂದುಕೊಂಡು ಕಣ್ಣೀರುಹಾಕಿ, ಹೆಚ್ಚಿನ ಮಟ್ಟದ ಅಥವಾ ಕೊನೆಯ ತೀರ್ಮಾನವಾಗಿ ತನಗೆ ಮರಣವನ್ನು ನಿಶ್ಚೈಸಿಕೊಂಡು, ಸಿಟ್ಟಿನ ಆವೇಶದಲ್ಲಿ ಆ ರಣರಂಗದಲ್ಲಿ ಕೃಷ್ಣನು ಮೆಚ್ಚುವಂತೆ ಯುದ್ಧಮಾಡಿ ತಾನು ಉತ್ತಮ ಗತಿಯನ್ನು ಪಡೆವೆನೆಂದು, ರಥವನ್ನು ಹತ್ತಿ ಬಿಲ್ಲನ್ನು ಬಗ್ಗಿಸಿ ಒತ್ತಿ -ಹೆದೆಯೇರಿಸಿ ತನ್ನ ಬಿಲ್ಲನ್ನು ಠೇಂಕಾರ ಮಾಡಿ ಸೈನ್ಯಸಹಿತ ಅರ್ಜುನನಿಗೆ ಇದಿರಾಗಿ ಯುದ್ಧಕ್ಕೆ ನಿಂತನು.
 • (ಪದ್ಯ-೨೪)

ಪದ್ಯ :-:೨೫:[ಸಂಪಾದಿಸಿ]

ಮುಳಿದು ಹಂಸಧ್ವಜಂ ಕಾಳೆಗಕೆ ನಿಲಲಾಗ | ನಳಿನಭವನಳ್ಕಿದಂ ಲೋಕಸೃಷ್ಟಿಗೆ ಮತ್ತೆ | ಬಳಲಬೇಕೆಂದು ರವಿಮಂಡಲಂ ನಡುಗಿತೊಡನೈದುವ ಭಟರ ರಭಸಕೆ ||
ಪ್ರಳಯ ಮಿಂದಹುದೆಂದು ಕಂಪಿಸಿತು ಧರೆ ಸಗ್ಗ | ಪೊಳಲೊಳಗೆತೆರಪಿಲ್ಲವೆಂದು ಗಜಬಜಿಸಿ ಸುರ| ಕುಲಮೈದೆ ಕಂಗೆಟ್ಟುದಸುರಾರಿ ಚಿಂತಿಸಿದನರಸ ಕೇಳದ್ಬುತವನು ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಮುಳಿದು ಹಂಸಧ್ವಜಂ ಕಾಳೆಗಕೆ ನಿಲಲು ಆಗ ನಳಿನಭವನು ಅಳ್ಕಿದಂ ಲೋಕಸೃಷ್ಟಿಗೆ ಮತ್ತೆ ಬಳಲಬೇಕೆಂದು =[ ಸಿಟ್ಟಿನಿಂದ ಹಂಸಧ್ವಜನು ಯುದ್ಧಕ್ಕೆ ನಿಲ್ಲಲು ಆಗ ಬ್ರಹ್ಮನು ಹೆದರಿದನು ಲೋಕಸೃಷ್ಟಿಗೆ ಮತ್ತೆ ಕಷ್ಟಪಡಬೇಕೆಂದು, ಕಾರಣ ಈ ಯುದ್ಧ ಸರ್ವನಾಶಕ್ಕೆ ಕಾರಣ ವಾಗಬಹುದು ಎಂಬ ಚಿಂತೆ ]; ರವಿಮಂಡಲಂ ನಡುಗಿತು ಒಡನೆ ಐದುವ ಭಟರ ರಭಸಕೆ ಪ್ರಳಯಂ ಇಂದು ಅಹುದೆಂದು ಕಂಪಿಸಿತು ಧರೆ =[ ರವಿಮಂಡಲವೇ ನಡುಗಿತು; ಹಂಸಧ್ವಜನ ಜೊತೆಯಲ್ಲಿ ಬರುತ್ತಿರುವ ಭಟರ ರಭಸಕ್ಕೆ ಪ್ರಳಯವು ಇಂದು ಆಗಬಹುದೆಂದು ಕಂಪಿಸಿತು ಭೂಮಿ,]; ಸಗ್ಗ ಪೊಳಲೊಳಗೆ (ಸ್ವರ್ಗಲೋಕದಲ್ಲಿ) ತೆರಪಿಲ್ಲವೆಂದು ಗಜಬಜಿಸಿ ಸುರ| ಕುಲಮೈದೆ ಕಂಗೆಟ್ಟುದು ಅಸುರಾರಿ ಚಿಂತಿಸಿದನು ಅರಸ ಕೇಳು ಅದ್ಬುತವನು =[ ಸ್ವರ್ಗ ಲೋಕದಲ್ಲಿ ವೀರ ಮರಣಹೊಂದಿ ಬರುವವರಿಗೆ ಸ್ಥಳ ಇಲ್ಲವೆಂದು ಗಾಬರಿಯಿಂದ ಗಜಬಜಿಸಿ ದೇವತೆಗಳ ಸಮೂಹ ಕಂಗೆಟ್ಟಿತು! ಅಸುರಾರಿಯಾದ ಕೃಷ್ಣನು ಯೋಚಿಸಿದನು, ಅರಸ ಜನಮೇಜಯನೇ ಕೇಳು ಅದ್ಬುತವನು ಎಂದನು ಜೈಮಿನಿ.].
 • ತಾತ್ಪರ್ಯ: ಸಿಟ್ಟಿನಿಂದ ಹಂಸಧ್ವಜನು ಯುದ್ಧಕ್ಕೆ ನಿಲ್ಲಲು ಆಗ ಬ್ರಹ್ಮನು ಹೆದರಿದನು ಲೋಕಸೃಷ್ಟಿಗೆ ಮತ್ತೆ ಕಷ್ಟಪಡಬೇಕೆಂದು, ಕಾರಣ ಈ ಯುದ್ಧ ಸರ್ವನಾಶಕ್ಕೆ ಕಾರಣ ವಾಗಬಹುದು ಎಂಬ ಚಿಂತೆ. ರವಿಮಂಡಲವೇ ನಡುಗಿತು; ಹಂಸಧ್ವಜನ ಜೊತೆಯಲ್ಲಿ ಬರುತ್ತಿರುವ ಭಟರ ರಭಸಕ್ಕೆ ಇಂದು ಪ್ರಳಯವು ಆಗಬಹುದೆಂದು ಭೂಮಿ ಹೆದರಿ ಕಂಪಿಸಿತು. ಸ್ವರ್ಗ ಲೋಕದಲ್ಲಿ ವೀರ ಮರಣಹೊಂದಿ ಬರುವವರಿಗೆ ಸ್ಥಳ ಇಲ್ಲವೆಂದು ಗಾಬರಿಯಿಂದ ಗಜಬಜಿಸಿ ದೇವತೆಗಳ ಸಮೂಹ ಕಂಗೆಟ್ಟಿತು! ಅಸುರಾರಿಯಾದ ಕೃಷ್ಣನು ಯೋಚಿಸಿದನು, ಅರಸ ಜನಮೇಜಯನೇ ಕೇಳು ಅದ್ಬುತವನು ಎಂದನು ಜೈಮಿನಿ. (ಉತ್ಪ್ರೇಕ್ಷಾಲಂಕಾರ)
 • (ಪದ್ಯ-೨೫)

ಪದ್ಯ :-:೨೬:[ಸಂಪಾದಿಸಿ]

ಹಂಸಧ್ವಜಂ ಕಾದಲೆಂತಹುದೊ ಎನುತಮಾ | ಕಂಸಾಂತಕಂ ನಿದಾನಿಸಿಕೊಂಡು ಶಕ್ರಸುತ | ನಂ ಸೈರಿಸೆನುತೆ ಕುದುರೆಗಳ ವಾಘೆಯನಿಲಿಸಿ ಜಗುಳ್ದ ಪೀತಾಂಬರವನು
ಅಂಸದೊಳ್ ಸಾರ್ಚುತೆ ವರೂಥಮನಿಳಿದು ಸಿಂಹ | ಮಂ ಸೋಲಿಸುವ ಗತಿಯೊಳೈತಂದನಾಗತ | ನ್ನಂ ಸೇವಿರ್ಪಿಗೆ ಸೇವಕನೆಂಬುದಂ ತೋರುತಾತನ ಸಮೀಪಕಾಗಿ ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಹಂಸಧ್ವಜಂ ಕಾದಲು ಎಂತಹುದೊ ಎನುತಂ ಆ ಕಂಸಾಂತಕಂ ನಿದಾನಿಸಿಕೊಂಡು ಶಕ್ರಸುತನಂ ಸೈರಿಸು ಎನುತೆ =[ ಹಂಸಧ್ವಜನು ಯುದ್ಧಮಾಡಿದರೆ ಪರಿಣಾಮ ಏನಾಗುವುದೊ ಎನ್ನುತ್ತಾ ಆ ಕಂಸಾಂತಕನಾದ ಕೃಷ್ಣನು ವಿಚಾರಮಾಡಿಕೊಂಡು ಅರ್ಜುನನ್ನು ತಾಳ್ಮೆ ವಹಿಸು ಎನ್ನತ್ತಾ]; ಕುದುರೆಗಳ ವಾಘೆಯ ನಿಲಿಸಿ ಜಗುಳ್ದ ಪೀತಾಂಬರವನು ಅಂಸದೊಳ್ ಸಾರ್ಚುತೆ (ಸಾಚು- ಹೊದಿ) ವರೂಥಮನಿಳಿದು =[ ಕುದುರೆಗಳ ವಾಘೆಯನ್ನು ತಡೆದು ನಿಲ್ಲಿಸಿ ಜಾರಿದ ಪೀತಾಂಬರವನ್ನು ಭುಜದಲ್ಲಿ ಸೇರಿಸುತ್ತಾ ರಥವನ್ನು ಇಳಿದು]; ಸಿಂಹಮಂ ಸೋಲಿಸುವ ಗತಿಯೊಳು ಐತಂದನಾಗ ತನ್ನಂ ಸೇವಿರ್ಪಿಗೆ ಸೇವಕನೆಂಬುದಂ ತೋರುತ ಆತನ ಸಮೀಪಕಾಗಿ =[ ಸಿಂಹವನ್ನು ಎದುರಿಸುವಂತೆ ಗಂಭೀರವಾದ ನೆಡಿಗೆಯಲ್ಲಿ ತನ್ನನ್ನು ಸೇವಿಸುವವರಿಗೆ ಸೇವಕನೆಂಬುದನ್ನು ತೋರುತ್ತಾ ಆತನ ಸಮೀಪಕ್ಕೆ ಬಂದನು].
 • ತಾತ್ಪರ್ಯ: ಹಂಸಧ್ವಜನು ಯುದ್ಧಮಾಡಿದರೆ ಪರಿಣಾಮ ಏನಾಗುವುದೊ ಎನ್ನುತ್ತಾ ಆ ಕಂಸಾಂತಕನಾದ ಕೃಷ್ಣನು ವಿಚಾರಮಾಡಿಕೊಂಡು ಅರ್ಜುನನ್ನು ತಾಳ್ಮೆವಹಿಸು ಎಂದು ಹೇಳಿ, ಕುದುರೆಗಳ ವಾಘೆಯನ್ನು ತಡೆದು ನಿಲ್ಲಿಸಿ ಜಾರಿದ ಪೀತಾಂಬರವನ್ನು ಭುಜದಲ್ಲಿ ಸೇರಿಸುತ್ತಾ ರಥವನ್ನು ಇಳಿದು, ಸಿಂಹವನ್ನು ಎದುರಿಸಲು ಬರುವಂತೆ ಗಂಭೀರವಾದ ನೆಡಿಗೆಯಲ್ಲಿ, ತನ್ನನ್ನು ಸೇವಿಸುವವರಿಗೆ ಸೇವಕನೆಂಬುದನ್ನು ತೋರುತ್ತಾ ಆತನ ಸಮೀಪಕ್ಕೆ ಬಂದನು].
 • (ಪದ್ಯ-೨೬)

ಪದ್ಯ :-:೨೭:[ಸಂಪಾದಿಸಿ]

ಮಿಸುಪ ಮಕುಟದ ನೊಸಲ ತಿಲಕದಿಂದಲಕದಿಂ | ದೆಸಳುಗಂಗಳ ತೊಳಪ ಕದಪಿನಿಂ ಪದಪಿನಿಂ | ಪಸರಿಸುವ ನಸುನಗೆಯ ವದನದಿಂ ರದನದಿಂ ಪÉÇಳೆವ ಚಬುಕಾಗ್ರದಿಂದೆ ||
ತ್ರಿಸರ ಕೌಸ್ತುಭ ಸುಕೇಯೂರದಿಂ ಹಾರದಿಂ | ದೊಸೆದುಟ್ಟ ಪೆÇಂಬಟ್ಟೆ ಯುಡುಗೆಯಿಂ ತುಡುಗೆಯಿಂ | ದೆಸೆವ ನೀಲೋತ್ಪಲಶ್ಯಾಮಲಂ ಕೋಮಲಂ ಬರುತಿರ್ದನವನಿದಿರೊಳು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಮಿಸುಪ ಮಕುಟದ ನೊಸಲ ತಿಲಕದಿಂದ ಅಲಕದಿಂದೆ =[ಮಿನುಗುತ್ತಿರುವ ಕಿರೀಟದ, ಹಣೆಯಲ್ಲಿರುವ ತಿಲಕದಿಂದ, ಮತ್ತು ಮುಂಗುರುಳಿನಿಂದ,]; ಎಸಳುಗಂಗಳ ತೊಳಪ ಕದಪಿನಿಂ ಪದಪಿನಿಂ ಪಸರಿಸುವ ನಸುನಗೆಯ ವದನದಿಂ ರದನದಿಂ=[ವಿಶಾಲವಾದ ಕಣ್ಣುಗಳ, ಹೊಳೆಯುವ ಕೆನ್ನೆಗಳಿಂದಲೂ, ಚಂದಗಾಣುವಿಕೆಯಿಂದಲೂ, ಪಸರಿಸುವ ನಸುನಗೆಯನ್ನು ಬೀರುತ್ತಿರುವ ಮುಖದಿಂದಲೂ, ಸುಂದರ ಹಲ್ಲುಗಳಿಂದಲೂ,]; ಪೊಳೆವ ಚಬುಕಾಗ್ರದಿಂದೆ (ಚುಬಕ= ಗಲ;್ಲ ಚುಬುಕó??) ತ್ರಿಸರ ಕೌಸ್ತುಭ ಸುಕೇಯೂರದಿಂ ಹಾರದಿಂದ ಒಸೆದುಟ್ಟ ಪೆÇಂಬಟ್ಟೆಯ (ಹೊನ್ನಿನ ಬಟ್ಟೆ) ಉಡುಗೆಯಿಂ ತುಡುಗೆಯಿಂದ ಎಸೆವ ನೀಲೋತ್ಪಲಶ್ಯಾಮಲಂ ಕೋಮಲಂ ಬರುತಿರ್ದನು ಇವನ ಇದಿರೊಳು =[ಹೊಳೆಯುವ ಗಲ್ಲದ ತುದಿಯಿಂದಲೂ ತ್ರಿವಳಿಯಿಂದಲೂ, ಕೌಸ್ತುಭ ಮತ್ತು ಬಾಹು ಆಬರಣ ಸುಕೇಯೂರದಿಂದಲೂ, ಹಾರದಿಂದಲೂ, ಹೊಎದಾದ ಉಟ್ಟ ಚಿನ್ನದ ಜರತಾರಿ ಬಟ್ಟೆ ಮತ್ತು ಉಡುಗೆಯಿಂದ ಶೋಭಿಸುತ್ತಿರುವ ನೀಲೋತ್ಪಲ ಅಥವಾ ಕನ್ನಯದಿಲೆಯ ಶ್ಯಾಮಲ ಬಣ್ನದ ಕೋಮಲ ಶರೀರದ ಕೃಷ್ಣನು ಹಂಸಧ್ವಜನ ಎದುರಿನಲ್ಲಿ ಬರುತಿದ್ದನು.];
 • ತಾತ್ಪರ್ಯ: ಮಿನುಗುತ್ತಿರುವ ಕಿರೀಟದ, ಹಣೆಯಲ್ಲಿರುವ ತಿಲಕದಿಂದ, ಮತ್ತು ಮುಂಗುರುಳಿನಿಂದ ವಿಶಾಲವಾದ ಕಣ್ಣುಗಳ, ಹೊಳೆಯುವ ಕೆನ್ನೆಗಳಿಂದಲೂ, ಚಂದಗಾಣುವಿಕೆಯಿಂದಲೂ, ಪಸರಿಸುವ ನಸುನಗೆಯನ್ನು ಬೀರುತ್ತಿರುವ ಮುಖದಿಂದಲೂ, ಸುಂದರ ಹಲ್ಲುಗಳಿಂದಲೂ, ಹೊಳೆಯುವ ಗಲ್ಲದ ತುದಿಯಿಂದಲೂ ತ್ರಿವಳಿಯಿಂದಲೂ, ಕೌಸ್ತುಭ ಮತ್ತು ಬಾಹು ಆಬರಣ ಸುಕೇಯೂರದಿಂದಲೂ, ಹಾರದಿಂದಲೂ, ಹೊಸದಾದ ಉಟ್ಟ ಚಿನ್ನದ ಜರತಾರಿ ಬಟ್ಟೆ ಮತ್ತು ಉಡುಗೆಯಿಂದ ಶೋಭಿಸುತ್ತಿರುವ ನೀಲೋತ್ಪಲ ಅಥವಾ ಕನ್ನಯದಿಲೆಯ ಶ್ಯಾಮಲ ಬಣ್ನದ ಕೋಮಲ ಶರೀರದ ಕೃಷ್ಣನು ಹಂಸಧ್ವಜನ ಎದುರಿನಲ್ಲಿ ಬರುತ್ತಿದ್ದನು.
 • (ಪದ್ಯ-೨೭)

ಪದ್ಯ :-:೨೮:[ಸಂಪಾದಿಸಿ]

ರಥದಿಂದಮಿಳಿದು ತನಗಿದಿರಾಗಿ ಬಹ ದನುಜ | ಮಥನನಂ ಕಾಣುತೆ ಮರಾಳಧ್ವಜಂಮನೋ | ವ್ಯಥೆಯೆಲ್ಲಮಂ ಮರೆದು ಹರ್ಷದಿಂ ಪಿಡಿದ ಶರಧನುಗಳಂ ಕೆಲಕೆ ಸಾರ್ಚಿ ||
ಪೃಥಿವಿಗೆ ವರೂಥದಿಂ ಧುಮ್ಮಿಕ್ಕಿ ಹರಿಯ ಮುಂ | ಪಧದೊಳಡಿಗೆಡೆಯುತೆಲೆ ದೇವ ಬಿಜಯಂಗೈದ | ಕಥನವನೆನಗೆ ನಿರೂಪಿಸಬೇಹುದೆಂದಾತನೆದ್ದು ಕೈಗಳ ಮುಗಿದನು ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ರಥದಿಂದಂ ಇಳಿದು ತನಗೆ ಇದಿರಾಗಿ ಬಹ ದನುಜ ಮಥನನಂ ಕಾಣುತೆ =[ ರಥದಿಂದ ಇಳಿದು ತನಗೆ ಎದುರಾಗಿ ಬರುತ್ತಿರುವ ಕೃಷ್ನನನ್ನು ಕಾಣುತ್ತಲು]; ಮರಾಳಧ್ವಜಂ ಮನೋವ್ಯಥೆಯೆಲ್ಲಮಂ ಮರೆದು ಹರ್ಷದಿಂ ಪಿಡಿದ ಶರಧನುಗಳಂ ಕೆಲಕೆ ಸಾರ್ಚಿ =[ ಹಂಸಧ್ವಜನು ಮನಸ್ಸಿನ ವ್ಯಥೆಯೆಲ್ಲವನ್ನೂ ಮರೆತು, ಹರ್ಷದಿಂದ ತಾನು ಹಿಡಿದ ಬಿಲ್ಲು ಬಾಣಗಳನ್ನು ಬದಿಗೆ ಸಾಚಿ ಇಟ್ಟು, ]; ಪೃಥಿವಿಗೆ ವರೂಥದಿಂ ಧುಮ್ಮಿಕ್ಕಿ ಹರಿಯ ಮುಂ | ಪಧದೊಳಡಿಗೆಡೆಯುತೆಲೆ (ಅಡಿಗೆ ಕೆಡೆ: ಕಾಲಿಗೆ ಬೀಳು) =[ರಥದಿಂದ ನೆಲಕ್ಕೆ ಹಾರಿ ಇಳಿದು, ಹರಿಯ ಎದುರು ದಾರಿಯಲ್ಲಿ ಅವನ ಕಾಲಿಗೆ ನಮಸ್ಕರಿಸಿ,]; ದೇವ ಬಿಜಯಂಗೈದ ಕಥನವನು ಎನಗೆ ನಿರೂಪಿಸಬೇಹುದೆಂದು ಆತನು ಎದ್ದು ಕೈಗಳ ಮುಗಿದನು =[ ದೇವ ಇಲ್ಲಿಗೆ ದಯಮಾಡಿಸಿದ ವಿಚಾರವನ್ನು ನನಗೆ ಹೇಳಬೆಕು ಎಂದು ಆತನು ಎದ್ದು ಕೈಗಳನ್ನು ಮುಗಿದನು].
 • ತಾತ್ಪರ್ಯ: ರಥದಿಂದ ಇಳಿದು ತನಗೆ ಎದುರಾಗಿ ಬರುತ್ತಿರುವ ಕೃಷ್ನನನ್ನು ಕಾಣುತ್ತಲು, ಹಂಸಧ್ವಜನು ಮನಸ್ಸಿನ ವ್ಯಥೆಯೆಲ್ಲವನ್ನೂ ಮರೆತು, ಹರ್ಷದಿಂದ ತಾನು ಹಿಡಿದ ಬಿಲ್ಲು ಬಾಣಗಳನ್ನು ಬದಿಗೆ ಸಾಚಿ ಇಟ್ಟು, ರಥದಿಂದ ನೆಲಕ್ಕೆ ಹಾರಿ ಇಳಿದು, ಕೃಷ್ಣನ ಎದುರು ದಾರಿಯಲ್ಲಿಯೇ ಅವನ ಕಾಲಿಗೆ ನಮಸ್ಕರಿಸಿ, ದೇವ ಇಲ್ಲಿಗೆ ದಯಮಾಡಿಸಿದ ವಿಚಾರವನ್ನು ನನಗೆ ಹೇಳಬೆಕು ಎಂದು ಆತನು ಎದ್ದು ಕೈಗಳನ್ನು ಮುಗಿದನು.
 • (ಪದ್ಯ-೨೮)

ಪದ್ಯ :-:೨೯:[ಸಂಪಾದಿಸಿ]

ಆ ಮಹೀಪತಿಯ ನುಡಿಗಸುರಾರಿ ನಗುತೆ ಸಂ | ಗ್ರಾಮದೊಳ್ ಪಾರ್ಧನಂ ಗೆಲ್ವೆನೆಂಬೀಕ್ಷಾತ್ರ | ತಾಮಸಮಿದೇಕೆ ವಿಜಯಂಗಾವು ಮಾಡುವ ಸಹಾಯಮಂ ಕಂಡು ಕಂಡು |
ನೀ ಮಕ್ಕಳಂ ಬರಿದೆ ಕೊಲಿ ಕಿಡಿಸಿದೆ ಸಾಕು | ಬಾ ಮಿತ್ರಭಾವದಿಂದೆಮ್ಮನಾಲಂಗಿಸು ವೃ || ಥಾ ಮನೋವ್ಯಥೆಬೇಡ ತುರಗಮಂಬಿಡುಯಜ್ಞಕನುಕೂಲನಾಗೆಂದನು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಆ ಮಹೀಪತಿಯ ನುಡಿಗೆ ಅಸುರಾರಿ ನಗುತೆ ಸಂಗ್ರಾಮದೊಳ್ ಪಾರ್ಧನಂ ಗೆಲ್ವೆನೆಂಬ ಈ ಕ್ಷಾತ್ರ ತಾಮಸಂ ಇದೇಕೆ =[ ಆ ರಾಜನ ಮಾತಿಗೆ ಕೃಷ್ನನು ನಗುತ್ತಾ ಯುದ್ಧದಲ್ಲಿ ಪಾರ್ಧನನ್ನು ಗೆಲ್ಲುವೆನೆಂಬ ಈ ಕ್ಷಾತ್ರ ಸಿಟ್ಟು ಅಜ್ಞಾನ ಇವೆಲ್ಲಾ ಏಕೆ? ]; ವಿಜಯಂಗೆ ಆವು ಮಾಡುವ ಸಹಾಯಮಂ ಕಂಡು ಕಂಡು ನೀ ಮಕ್ಕಳಂ ಬರಿದೆ (ವೃಥಾ) ಕೊಲಿಸಿ ಕಿಡಿಸಿದೆ ಸಾಕು =[ ಅದೂ, ವಿಜಯನಿಗೆ ನಾವು ಮಾಡುವ ಸಹಾಯವನ್ನು ಕಂಡು ಕಂಡು ನೀನು ಮಕ್ಕಳನ್ನು ವೃಥಾ ಕೊಲ್ಲಿಸಿ ತಪ್ಪು ಮಾಡಿದೆ, ಇನ್ನು ಸಾಕು]; ಬಾ ಮಿತ್ರಭಾವದಿಂದ ಎಮ್ಮನು ಆಲಂಗಿಸು ವೃಥಾ ಮನೋವ್ಯಥೆ ಬೇಡ ತುರಗಮಂ ಬಿಡು ಯಜ್ಞಕೆ ಅನುಕೂಲನಾಗು ಎಂದನು =[ ಬಾ ಮಿತ್ರಭಾವದಿಂದ ನನ್ನನ್ನು ಆಲಂಗಿಸು ವೃಥಾ ಮನೋವ್ಯಥೆ ಬೇಡ; ಕುದುರೆಯನ್ನು ಬಿಡು; ಯಜ್ಞಕೆ ಅನುಕೂಲನಾಗು, ಎಂದನು].
 • ತಾತ್ಪರ್ಯ: ಆ ರಾಜನ ಮಾತಿಗೆ ಕೃಷ್ನನು ನಗುತ್ತಾ ಯುದ್ಧದಲ್ಲಿ ಪಾರ್ಧನನ್ನು ಗೆಲ್ಲುವೆನೆಂಬ ಈ ಕ್ಷಾತ್ರ ಸಿಟ್ಟು ಅಜ್ಞಾನ ಇವೆಲ್ಲಾ ಏಕೆ? ಅದೂ, ವಿಜಯನಿಗೆ ನಾವು ಮಾಡುವ ಸಹಾಯವನ್ನು ಕಂಡು ಕಂಡು ನೀನು ಮಕ್ಕಳನ್ನು ವೃಥಾ ಕೊಲ್ಲಿಸಿ ತಪ್ಪು ಮಾಡಿದೆ, ಇನ್ನು ಸಾಕು, ಬಾ ಮಿತ್ರಭಾವದಿಂದ ನನ್ನನ್ನು ಆಲಂಗಿಸು ವೃಥಾ ಮನೋವ್ಯಥೆ ಬೇಡ; ಕುದುರೆಯನ್ನು ಬಿಡು; ಯಜ್ಞಕೆ ಅನುಕೂಲನಾಗು, ಎಂದನು.
 • (ಪದ್ಯ-೨೯)

ಪದ್ಯ :-:೩೦:[ಸಂಪಾದಿಸಿ]

ಕ್ಷತ್ರಿಯಂ ಬಿರುದಿನ ಹಯಂ ಬರಲ್ಕಟ್ಟಿದೆ ಧ | ರಿತ್ರಿಯನದೆಂತಾಳ್ದಪಂ ಬಳಿಕೆ ಗೆಲ್ದೊಡಂ | ಶತ್ರುವಿಂದಳಿದೊಡಂ ಕೇಡಾವುದಾತಂಗೆ ಸಾಕದಂತಿರಲಿ ನಿಮ್ಮ ||
ಮಿತ್ರಭಾವದೊಳೊಪ್ಪಿದೊಡೆ ಮೇಲೆ ತನಗಿನ್ನು | ಪುತ್ರಶೋಕಾದಿಗಳ ದುಖಃಗಳಿರ್ದಪುವೆ | ಚಿತ್ರಮಿದು ಜಾಹ್ನವಿಯೊಳಾಳ್ದಂಗೆ ದಾಹಮೆತ್ತಣದೆನಗೆ ಬೆಸೆಸೆಂದನು ||30

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕ್ಷತ್ರಿಯಂ ಬಿರುದಿನ ಹಯಂ ಬರಲ್ಕಟ್ಟಿದೆ ಧರಿತ್ರಿಯನು ಅದೆಂತು ಆಳ್ದಪಂ =[ ಕ್ಷತ್ರಿಯನೆಂಬ ಬಿರುದಿನ ಹೆಮ್ಮೆಯಿಂದ ಕುದುರೆಯು ಬರಲು ಕಟ್ಟಿದೆ. ಕ್ಷಾತ್ರ ಗುಣವಿಲ್ಲದಿದ್ದರೆ ಭೂಮಿಯನ್ನು ಅದು ಹೇಗೆ ಆಳುವನು? ಬಳಿಕೆ ಗೆಲ್ದೊಡಂ ಶತ್ರುವಿಂದ ಅಳಿದೊಡಂ ಕೇಡಾವುದು ಆತಂಗೆ ಸಾಕು ಅದಂತಿರಲಿ =[ಕಟ್ಟಿದ ಬಳಿಕ ಗೆದ್ದರೂ, ಶತ್ರುವಿಂದ ಸಾವು ಬಂದರೂ, ಕೇಡು ಯಾವುದು ಅವನಿಗೆ, ಎರಡೂ ಒಂದೇ, ಗೆದ್ದರೆ ರಾಜ್ಯ, ಸತ್ತರೆ ವೀರಸ್ವರ್ಗ]; ಸಾಕದಂತಿರಲಿ ನಿಮ್ಮ , ಮಿತ್ರಭಾವದೊಳು ಅಪ್ಪಿದೊಡೆ ಮೇಲೆ ತನಗಿನ್ನು ಪುತ್ರಶೋಕಾದಿಗಳ ದುಖಃಗಳು ಇರ್ದಪುವೆ =[ಸಾಕು ಅದು ಹಾಗಿರಲಿ, ನಿಮ್ಮನ್ನು ಮಿತ್ರಭಾವದಿಂದ ಅಪ್ಪಿಕೊಂಡ ಮೇಲೆ ತನಗಿನ್ನು ಪುತ್ರಶೋಕಾದಿಗಳ ದುಖಃಗಳು ಇರುವುವೆ?]; ಚಿತ್ರಮಿದು ಜಾಹ್ನವಿಯೊಳು ಆಳ್ದಂಗೆ ದಾಹಂ ಎತ್ತಣದು ಎನಗೆ ಬೆಸೆಸು ಎಂದನು =[ನಿಮ್ಮ ಸ್ನೇಹ ವಿಶಿಷ್ಟವಾದುದು; ಗಂಗೆಯಲ್ಲಿ ಅಡ್ಡಾಡುವವನಿಗೆ ಬಯಾರಿಕೆ ಎಲ್ಲಿರುವುದು? ಎನಗೆ ಹೇಳು ಎಂದನು.
 • ತಾತ್ಪರ್ಯ:ಕ್ಷತ್ರಿಯನೆಂಬ ಬಿರುದಿನ ಹೆಮ್ಮೆಯಿಂದ ಕುದುರೆಯು ಬರಲು ಕಟ್ಟಿದೆ. ಕ್ಷಾತ್ರ ಗುಣವಿಲ್ಲದಿದ್ದರೆ ಭೂಮಿಯನ್ನು ಅದು ಹೇಗೆ ಆಳುವನು? ಕಟ್ಟಿದ ಬಳಿಕ ಗೆದ್ದರೂ, ಶತ್ರುವಿಂದ ಸಾವು ಬಂದರೂ, ಕೇಡು ಯಾವುದು ಅವನಿಗೆ, ಎರಡೂ ಒಂದೇ, ಗೆದ್ದರೆ ರಾಜ್ಯ, ಸತ್ತರೆ ವೀರಸ್ವರ್ಗ; ಸಾಕು ಅದು ಹಾಗಿರಲಿ, ನಿಮ್ಮನ್ನು ಮಿತ್ರಭಾವದಿಂದ ಅಪ್ಪಿಕೊಂಡ ಮೇಲೆ ತನಗಿನ್ನು ಪುತ್ರಶೋಕಾದಿಗಳ ದುಖಃಗಳು ಇರುವುವೆ? ನಿಮ್ಮ ಸ್ನೇಹ ವಿಶಿಷ್ಟವಾದುದು; ಗಂಗೆಯಲ್ಲಿ ಅಡ್ಡಾಡುವವನಿಗೆ ಬಯಾರಿಕೆ ಎಲ್ಲಿರುವುದು? ನನಗೆ ಹೇಳು ಎಂದನು
 • (ಪದ್ಯ-೩೦)

ಪದ್ಯ :-:೩೧:[ಸಂಪಾದಿಸಿ]

ಆ ದೊಡೆಲೆ ನೃಪ ಸಖ್ಯದಿಂದೆಮ್ಮನೀಗ ನೀ | ನಾದರಿಸಿ ಪಾರ್ಧನಂ ಕಂಡು ಧರ್ಮಜನ ಹಯ | ಮೇಧಕೆ ಸಹಾಯಮಾಗಿಹುದೆಂದು ಕೃಷ್ಣನವನಂ ತೆಗೆದು ತಕ್ಕೈಸಲು ||
ಕಾದಿ ಮಡಿದಾತ್ಮಜರ ಶೋಕಮಂ ಮರೆದು ಮಧು | ಸೂದನಂಗೆರಗಿದೊಡೆ ಮಗಳಪ್ಪಿ ಸಂತೈಸು | ತಾ ದಯಾಂಬುಧಿ ವಿಜಯನಂ ಕೆರದು ಮೈತ್ರಿಯಿಂದಾತನಂ ಕೂಡಿಸಿದನು ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಆದೊಡೆ ಎಲೆ ನೃಪ ಸಖ್ಯದಿಂದ ಎಮ್ಮನೀಗ ನೀನು ಆದರಿಸಿ ಪಾರ್ಧನಂ ಕಂಡು ಧರ್ಮಜನ ಹಯಮೇಧಕೆ ಸಹಾಯಮಾಗಿ ಇಹುದೆಂದು ಕೃಷ್ಣನು ಅವನಂ ತೆಗೆದು ತಕ್ಕೈಸಲು=[ಎಲೆ ನೃಪನೇ ಹಾಗಿದ್ದರೆ, ಸ್ನೇಹದಿಂದ ನಮ್ಮ ಮಾತನ್ನು ಈಗ ನೀನು ಗೌರವಿಸಿ ಪಾರ್ಧನನ್ನು ಕಂಡು ಧರ್ಮಜನ ಅಶ್ವಮೇಧಕ್ಕೆ ಸಹಾಯವಾಗಿ ಇರಬೇಕು ಎಂದು ಕೃಷ್ಣನು ಅವನನ್ನು ಹತ್ತಿರ ಕರೆದು ಉಪಚರಿಸಲು]; ಕಾದಿ ಮಡಿದ ಆತ್ಮಜರ ಶೋಕಮಂ ಮರೆದು ಮಧುಸೂದನಂಗೆ ಎರಗಿದೊಡೆ ಮಗಳಪ್ಪಿ ಸಂತೈಸುತ =[ ಯುದ್ಧಮಾಡಿ ಮಡಿದ ಮಕ್ಕಳ ಶೋಕವನ್ನು ಮರೆತು, ಮಧುಸೂದನನಿಗೆ ನಮಸ್ಕರಿಸಲು, ಪುನಃ ಅವನನ್ನು ಅಪ್ಪಿ ಸಂತೈಸುತ್ತಾ ]; ಆ ದಯಾಂಬುಧಿ ವಿಜಯನಂ ಕೆರದು ಮೈತ್ರಿಯಿಂದ ಆತನಂ ಕೂಡಿಸಿದನು=[ ಆ ದಯಾ ಸಮುದ್ರನಾದ ಕೃಷ್ಣನು ಅರ್ಜುನನ್ನು ಕೆರದು ಮೈತ್ರಿಯಮೂಲಕ ಆತನನ್ನೂ ರಾಜನನ್ನೂ ಒಟ್ಟುಗೂಡಿಸಿದನು.]
 • ತಾತ್ಪರ್ಯ:ಎಲೆ ನೃಪನೇ ಹಾಗಿದ್ದರೆ, ನಮ್ಮ ಸ್ನೇಹದಿಂದ ನಮ್ಮ ಮಾತನ್ನು ಈಗ ನೀನು ಗೌರವಿಸಿ ಪಾರ್ಧನನ್ನು ಕಂಡು ಧರ್ಮಜನ ಅಶ್ವಮೇಧಕ್ಕೆ ಸಹಾಯವಾಗಿ ಇರಬೇಕು, ಎಂದು ಕೃಷ್ಣನು ಅವನನ್ನು ಹತ್ತಿರ ಕರೆದು ಉಪಚರಿಸಲು, ಯುದ್ಧಮಾಡಿ ಮಡಿದ ಮಕ್ಕಳ ಶೋಕವನ್ನು ಮರೆತು, ಮಧುಸೂದನನಿಗೆ ನಮಸ್ಕರಿಸಲು, ಪುನಃ ಅವನನ್ನು ಅಪ್ಪಿ ಸಂತೈಸುತ್ತಾ ; ಆ ದಯಾ ಸಮುದ್ರನಾದ ಕೃಷ್ಣನು ಅರ್ಜುನನ್ನು ಕೆರದು ಮೈತ್ರಿಯಮೂಲಕ ಆತನನ್ನೂ ರಾಜನನ್ನೂ ಒಟ್ಟುಗೂಡಿಸಿದನು.]
 • (ಪದ್ಯ-೩೧)

ಪದ್ಯ :-:೩೨:[ಸಂಪಾದಿಸಿ]

ಅರಸ ಕೇಳು ಬಳಿಕುಳಿದ ಸೇನೆಯೆಂ ಸುತ ಸಹೋದರ | ಬಂಧು ವರ್ಗಮಂ ಸಚಿವ ಸಾಮಂತರಂ | ಗುರುಪುರೋಹಿತರಂ ಚಮೂಪರಂ ಚತುರಂಗದಗ್ಗಳೆಯ ಪಟುಭಟರನು ||
ಕರೆದು ಹರಿಪಾರ್ಧರಂ ಕಾಣಿಸಿ ನಗರದಿಂದೆ | ತರಸಿದಂ ವಿವಿಧಭಂಡಾರದರ್ಧಂಗಳಂ | ಪರಿಪರಿಯ ವಸ್ತುಗಳನಿಭಹಯ ವರೂಧಮಂ ಗೋಮಹಿಷಿ ಯುವತಿಯರನು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಅರಸ ಕೇಳು, ರಾಜನು ಬಳಿಕ ಉಳಿದ ಸೇನೆಯೆಂ ಸುತ ಸಹೋದರ ಬಂಧು ವರ್ಗಮಂ ಸಚಿವ ಸಾಮಂತರಂ ಗುರುಪುರೋಹಿತರಂ ಚಮೂಪರಂ ಚತುರಂಗದ ಅಗ್ಗಳೆಯ ಪಟುಭಟರನು =[ಅರಸ ಜನಮೇಜಯನೇ ಕೇಳು, ಬಳಿಕ ಉಳಿದ ಸೇನೆಯೆನ್ನು, ಮಗ ಸಹೋದರ ಬಂಧು ವರ್ಗದವರನ್ನೂ, ಸಚಿವ ಸಾಮಂತರನ್ನೂ ಗುರುಪುರೋಹಿತರನ್ನೂ, ಸೇನಾಧಿಪತಿಗಳನ್ನೂ, ಚತುರಂಗಸೈನ್ಯದ ಮುಖ್ಯ ವೀರರನ್ನೂ,]; ಕರೆದು ಹರಿಪಾರ್ಥರಂ ಕಾಣಿಸಿ ನಗರದಿಂದೆ ತರಸಿದಂ ವಿವಿಧಭಂಡಾರದರ್ಧಂಗಳಂ ಪರಿಪರಿಯ ವಸ್ತುಗಳನಿಭಹಯ ವರೂಧಮಂ ಗೋಮಹಿಷಿ ಯುವತಿಯರನು =[ಕರೆದು ಕೃಷ್ಣ ಮತ್ತು ಪಾರ್ಥರನ್ನು ತೋರಿಸಿ ನಗರದಿಂದ ನಾನಾ ಬಗೆಯ ಭಂಡಾರದ ಸಂಪತ್ತನ್ನು, ಬಗೆಬಗೆಯ ವಸ್ತುಗಳನ್ನು ಆನೆ ಕುದುರೆ ರಥಗಳನ್ನು, ಗೋವುಗಳನ್ನು,ಎಮ್ಮೆಗಳನ್ನು,ದಾಸಿಯರನ್ನು ತರಸಿದನು.]
 • ತಾತ್ಪರ್ಯ:ಅರಸ ಜನಮೇಜಯನೇ ಕೇಳು, ಬಳಿಕ ಉಳಿದ ಸೇನೆಯೆನ್ನು, ಮಗ ಸಹೋದರ ಬಂಧು ವರ್ಗದವರನ್ನೂ, ಸಚಿವ ಸಾಮಂತರನ್ನೂ ಗುರುಪುರೋಹಿತರನ್ನೂ, ಸೇನಾಧಿಪತಿಗಳನ್ನೂ, ಚತುರಂಗಸೈನ್ಯದ ಮುಖ್ಯ ವೀರರನ್ನೂ, ಕರೆದು ಕೃಷ್ಣ ಮತ್ತು ಪಾರ್ಥರನ್ನು ತೋರಿಸಿ ನಗರದಿಂದ ನಾನಾ ಬಗೆಯ ಭಂಡಾರದ ಸಂಪತ್ತನ್ನು, ಬಗೆಬಗೆಯ ವಸ್ತುಗಳನ್ನು ಆನೆ ಕುದುರೆ ರಥಗಳನ್ನು, ಗೋವುಗಳನ್ನು,ಎಮ್ಮೆಗಳನ್ನು,ದಾಸಿಯರನ್ನು ತರಸಿದನು.
 • (ಪದ್ಯ-೩೨)

ಪದ್ಯ :-:೩೩:[ಸಂಪಾದಿಸಿ]

ಕಡೆಯಮಾತೇನವಂ ಸಪ್ತಪ್ರಕೃತಿಗಳಂ | ತಡೆಯದೆಲ್ಲವನಿವರ್ಗೊಪ್ಪಿಸಿದನಾ ನಗರ | ದೆಡೆಯೊಳೈದಿರುಳಿರ್ದು ಹಂಸಧ್ವಜಂ ಸಹಿತ ರ್ಪಾಧನಂ ತುರುಗದೊಡನೆ ||
ಪಡೆಯ ಸನ್ನಾಹದಿಂ ಕಳುಹಿ ಮುಂದಕೆ ಹಯಂ | ನಡೆಯಲಿಲ್ಲಯ ವಸ್ತುಗಳ್ವೆರಸಿ ದೇವಪುರ | ದೊಡೆಯ ಲಕ್ಷ್ಮೀವರಂ ಗಜನಗರಿಗೈತಂದು ಭೂಪಾಲನಂ ಕಂಡನು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕಡೆಯಮಾತು ಏನು;=[ಕಡೆಯ ಮಾತು ಏನೆಂದರೆ] ; ಅವಂ ಸಪ್ತಪ್ರಕೃತಿಗಳಂ ತಡೆಯದೆ (ಕೂಡಲೆ) ಎಲ್ಲವನು ಇವರ್ಗೆ ಒಪ್ಪಿಸಿದನು;=[ ಕೂಡಲೆ ಅವನು ಸಪ್ತಪ್ರಕೃತಿಗಳಾದ , ರಾಜ –ತಾನು, ಮಂತ್ರಿ. ಕೋಟೆ, ದುರ್ಗ, ರಾಷ್ಟ್ರ, ಸೈನ್ಯ, ದ್ರವ್ಯ ಕೋಶ, ಎಲ್ಲವನ್ನೂ ಇವರಿಗೆ ಒಪ್ಪಿಸಿದನು]; ನಗರ ದೆಡೆಯೊಳು ಐದು ಇರುಳು ಇರ್ದು ಹಂಸಧ್ವಜಂ ಸಹಿತ ಪಾರ್ಥನಂ ತುರುಗದೊಡನೆ ಪಡೆಯ ಸನ್ನಾಹದಿಂ ಕಳುಹಿ ಮುಂದಕೆ ಹಯಂ ನಡೆಯಲು =[ ನಗರ ದಲ್ಲಿ ಐದು ರಾತ್ರಿ ಇದ್ದು, ಹಂಸಧ್ವಜನ ಸಹಿತ ಪಾರ್ಥನನ್ನು ತುರುಗದೊಡನೆ ಪಡೆಯ ಸಿದ್ಧತೆಯೊಂದಿಗೆ ಕಳುಹಿಸಿ, ಮುಂದಕ್ಕೆ ಕುದುರೆ ನಡೆಯಲು]; ಅಲ್ಲಿಯ ವಸ್ತುಗಳ್ ಬೆರಸಿ ದೇವಪುರ ದೊಡೆಯ ಲಕ್ಷ್ಮೀವರಂ ಗಜನಗರಿಗೆ ಐತಂದು ಭೂಪಾಲನಂ ಕಂಡನು =[ ಅಲ್ಲಿಯ ವಸ್ತುಗಳನ್ನು ಸೇರಿಸಿಕೊಂಡು ದೇವಪುರ ದೊಡೆಯ ಲಕ್ಷ್ಮೀವರನಾದ ಕೃಷ್ನನು ಹಸ್ತಿನಾವತಿಗೆ ಬಂದು ಭೂಪಾಲ ಧರ್ಮರಾಯನನ್ನು ಕಂಡನು.]
 • ತಾತ್ಪರ್ಯ:ಕಡೆಯ ಮಾತು ಏನೆಂದರೆ; ಕೂಡಲೆ ಅವನು ಸಪ್ತಪ್ರಕೃತಿಗಳಾದ , ರಾಜ –ತಾನು, ಮಂತ್ರಿ. ಕೋಟೆ, ದುರ್ಗ, ರಾಷ್ಟ್ರ, ಸೈನ್ಯ, ದ್ರವ್ಯ ಕೋಶ, ಎಲ್ಲವನ್ನೂ ಇವರಿಗೆ ಒಪ್ಪಿಸಿದನು. ನಗರ ದಲ್ಲಿ ಐದು ರಾತ್ರಿ ಇದ್ದು, ಹಂಸಧ್ವಜನ ಸಹಿತ ಪಾರ್ಥನನ್ನು ತುರುಗದೊಡನೆ ಪಡೆಯ ಸಿದ್ಧತೆಯೊಂದಿಗೆ ಕಳುಹಿಸಿ, ಕುದುರೆ ಮುಂದಕ್ಕೆ ನಡೆಯಲು; ಅಲ್ಲಿಯ ವಸ್ತುಗಳನ್ನು ಸೇರಿಸಿಕೊಂಡು ದೇವಪುರ ದೊಡೆಯ ಲಕ್ಷ್ಮೀವರನಾದ ಕೃಷ್ನನು ಹಸ್ತಿನಾವತಿಗೆ ಬಂದು ಭೂಪಾಲ ಧರ್ಮರಾಯನನ್ನು ಕಂಡನು.
 • (ಪದ್ಯ-೩೩)XIIX
 • [೧]
 • [೨]
 • ಸಂಧಿ ೧೪ ಕ್ಕೆ ಪದ್ಯಗಳು:೭೧೩.

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


 1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
 2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.