ವಿಷಯಕ್ಕೆ ಹೋಗು

ಜೈಮಿನಿ ಭಾರತ/ಹದಿನೆಂಟನೆಯ ಸಂಧಿ

ವಿಕಿಸೋರ್ಸ್ದಿಂದ

ಹದಿನೆಂಟನೆಯ ಸಂಧಿ

[ಸಂಪಾದಿಸಿ]

ಪದ್ಯ :-:ಸೂಚನೆ:

[ಸಂಪಾದಿಸಿ]

ಸೂಚನೆ: ಸಾಮ್ರಾಜ್ಯಮಂ ತಾಳ್ದೆಸವ ರಾಘವೇಂದ್ರನಿಂ | ದಾಮ್ರಪ್ರವಾಳದಂತಿರೆ ವಿರಾಜಿಸುತಿರ್ಪ | ತಾಮ್ರಾಧರೆಯರ ಸೀಮಂತಮಣಿ ಸೀತಾರಮಣಿ ಗರ್ಭಮಂ ತಾಳ್ದಳು||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಾಮ್ರಾಜ್ಯಮಂ ತಾಳ್ದು ಎಸವ ರಾಘವೇಂದ್ರನಿಂ ತಾಮ್ರಪ್ರವಾಳದಂತೆ ಇರೆ ವಿರಾಜಿಸುತಿರ್ಪ ತಾಮ್ರ ಅಧರೆಯರ ಸೀಮಂತಮಣಿ ಸೀತಾರಮಣಿ ಗರ್ಭಮಂ ತಾಳ್ದಳು=[ಸಾಮ್ರಾಜ್ಯವನ್ನು ಹೊಂದಿ ಶೋಭಿಸುವ ರಾಘವೇಂದ್ರ - ಶ್ರೀರಾಮನಿಂದ ಕೆಂಪುಪ್ರವಾಳದಂತೆ/ ಹವಳದಂತೆ ಇದ್ದು ಶೋಭಿಸುತ್ತಿರುವ, ಕೆಂಪುತುಟಿಯುಳ್ಳ ಬೈತಲೆಬೊಟ್ಟು ಚೂಡಾಮಣಿಯಂತಿರುವ ರಮಣೀಯಳಾದ ಸೀತೆ ಗರ್ಭವನ್ನು ಧರಿಸಿದಳು.].
  • ತಾತ್ಪರ್ಯ:ಸಾಮ್ರಾಜ್ಯವನ್ನು ಹೊಂದಿ ಶೋಭಿಸುವ ರಾಘವೇಂದ್ರ - ಶ್ರೀರಾಮನಿಂದ ಕೆಂಪುಪ್ರವಾಳದಂತೆ/ ಹವಳದಂತೆ ಇದ್ದು ಶೋಭಿಸುತ್ತಿರುವ, ಕೆಂಪುತುಟಿಯುಳ್ಳ ಬೈತಲೆಬೊಟ್ಟು-ಚೂಡಾಮಣಿಯಂತಿರುವ ರಮಣೀಯಳಾದ ಸೀತೆ ಗರ್ಭವನ್ನು ಧರಿಸಿದಳು.
  • (ಪದ್ಯ-೬೦)iii-x

ಪದ್ಯ :-:೧:

[ಸಂಪಾದಿಸಿ]

ಭೂಪಾಲ ಕೇಳಾದೊಡಿನ್ನು ಪೂರ್ವದೊಳವನಿ | ಜಾಪತಿಯ ಕುಶಲವರ ಸಂಗರದ ಕೌತುಕವ | ನಾಪನಿತನೊರೆವೆನಿಕ್ಷ್ವಾಕು ಮೊದಲಾದ ರವಿಕುಲದ ನೃಪರೇಳ್ಗೆಗಳನು ||
ವ್ಯಾಪಿಸಿದ ಸಂಪದಕೆ ನೆಲೆವನೆಯೆನಿಪ್ಪಯೋ | ಧ್ಯಾಪುರದೊಳವತರಿಸಿದಂ ಮಹಾವಿಷ್ಣುಸುತ | ರೂಪದಿಂ ರಾಮಾಭಿಧಾನದೊಳ್ ಪುತ್ರಕಾಮೇಷ್ಠಿಯಿಂ ದಶರಥಂಗೆ ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭೂಪಾಲ ಕೇಳು ಆದೊಡೆ ಇನ್ನು ಪೂರ್ವದೊಳ್ ಅವನಿಜಾಪತಿಯ ಕುಶಲವರ ಸಂಗರದ ಕೌತುಕವನು ಆಪನಿತನು (ಆದ ಅಷ್ಟನ್ನೂ) ಒರೆವೆನು=[ರಾಜನೇ ಕೇಳು ಹಾಗಿದ್ದರೆ (ನಿನಗೆ ಲವಕುಶರ ಕಥೆಕೇಳುವ ಆಸೆ ಇದ್ದರೆ), ಹಿಂದೆ ಪೂರ್ವದಲ್ಲಿ / ತ್ರೇತಾಯುಗದಲ್ಲಿ ಭೂಮಿಯ ಮಗಳ ಪತಿಯ ಮತ್ತು ಕುಶಲವರ ಕಾಳಗದ ಅಚ್ಚರಿಯ ಕಥೆಯ ನೆಡೆದದ ಅಷ್ಟನ್ನೂ)ಹೇಳುವೆನು]; ಇಕ್ಷ್ವಾಕು ಮೊದಲಾದ ರವಿಕುಲದ ನೃಪರ ಏಳ್ಗೆಗಳನು ವ್ಯಾಪಿಸಿದ ಸಂಪದಕೆ ನೆಲೆವನೆ ಯೆನಿಪ್ಪ ಆಯೋಧ್ಯಾಪುರದೊಳ್ ಅವತರಿಸಿದಂ ಮಹಾವಿಷ್ಣು ಸುತರೂಪದಿಂ ರಾಮ ಅಭಿಧಾನದೊಳ್ ಪುತ್ರಕಾಮೇಷ್ಠಿಯಿಂ ದಶರಥಂಗೆ =[ಇಕ್ಷ್ವಾಕು ಮೊದಲಾದ ಸೂರ್ಯವಂಶದ ರಾಜರ ಏಳಿಗೆಗಳಿಂದ ತುಂಬಿದ ಸಂಪತ್ತಿಗೆ ಆಶ್ರಯವೆಸಿರುವ ಆಯೋಧ್ಯಾನಗರದಲ್ಲಿ, ಪುತ್ರಕಾಮೇಷ್ಠಿಯ ಫಲವಾಗಿ ದಶರಥನಿಗೆ ಮಹಾವಿಷ್ಣುವು ರಾಮ ಎಂಬ ಹೆಸರಿನ ಮಗನರೂಪದಲ್ಲಿ ಅವತರಿಸಿದನು.]
  • ತಾತ್ಪರ್ಯ:ರಾಜನೇ ಹಾಗಿದ್ದರೆ (ನಿನಗೆ ಲವಕುಶರ ಕಥೆಕೇಳುವ ಆಸೆ ಇದ್ದರೆ) ಕೇಳು, ಹಿಂದೆ ಪೂರ್ವದಲ್ಲಿ / ತ್ರೇತಾಯುಗದಲ್ಲಿ ಭೂಮಿಯ ಮಗಳ ಪತಿಯ ಮತ್ತು ಕುಶಲವರ ಕಾಳಗದ ಅಚ್ಚರಿಯ ಕಥೆಯ ನೆಡೆದದ ಅಷ್ಟನ್ನೂ) ಹೇಳುವೆನು. ಇಕ್ಷ್ವಾಕು ಮೊದಲಾದ ಸೂರ್ಯವಂಶದ ರಾಜರ ಏಳಿಗೆಯ ಇತಿಹಾಸಗಳಿಂದ ತುಂಬಿದ ಸಂಪತ್ತಿಗೆ ಆಶ್ರಯವೆಸಿರುವ ಆಯೋಧ್ಯಾನಗರದಲ್ಲಿ, ಪುತ್ರಕಾಮೇಷ್ಠಿಯ ಫಲವಾಗಿ ದಶರಥನಿಗೆ, ಮಹಾವಿಷ್ಣುವು ರಾಮ ಎಂಬ ಹೆಸರಿನ ಮಗನ ರೂಪದಲ್ಲಿ ಅವತರಿಸಿದನು.
  • (ಪದ್ಯ-೧)

ಪದ್ಯ :-:೨:

[ಸಂಪಾದಿಸಿ]

ತೊಳೆದು ಜನನಿಯ ಜಠರಮಂ ಜನಿಸಿ ಭವನದೊಳ್ | ಬಳೆದು ಲಕ್ಷ್ಮಣ ಭರತ ಶತ್ರುಘ್ನರೊಡಗೂಡಿ | ತಳೆದು ಕೌಶಿಕನ ಮಖಮಂ ಕಾದುತಾಟಕಿಯನೊರಸಿ ಮುನಿಸತಿಯಘವನು ||
ಕಳೆದು ಮಿಥಿಲೆಗೆ ಪೋಗಿ ಭಾರ್ಗವನ ಗರ್ವಮಂ | ಸೆಳೆದು ಹರಚಾಪಮಂ ಮುರಿದೊಲಿಸಿ ಸೀತೆಯಂ | ತಳೆದುತ್ಸವದೊಳಯೋಧ್ಯಾಪುರಿಗೆ ದಶರಥನೊಡನೆ ರಾಘವಂ ಬಂದನು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತೊಳೆದು ಜನನಿಯ ಜಠರಮಂ ಜನಿಸಿ =[ರಾಮನು ಕೌಸಲ್ಯೆಯಲ್ಲಿ ಜನಿಸಿ ಜನನಿಯಾದ ಅವಳ ಹೊಟ್ಟೆಯನ್ನು ಪವಿತ್ರಗೊಳಿಸಿದನು; ];ಭವನದೊಳ್ ಬಳೆದು ಲಕ್ಷ್ಮಣ ಭರತ ಶತ್ರುಘ್ನರೊಡಗೂಡಿ ತಳೆದು (ಬೆಳೆದನು), ಕೌಶಿಕನ ಮಖಮಂ ಕಾದು ತಾಟಕಿಯನು ಒರಸಿ ಮುನಿಸತಿಯ ಅಘವನು ಕಳೆದು =[ಲಕ್ಷ್ಮಣ ಭರತ ಶತ್ರುಘ್ನ ರೊಡಗೂಡಿ ಅರಮನೆಯಲ್ಲಿ ಬೆಳೆದನು. ವಿಶ್ವಾಮಿತ್ರ ಮುನಿಯ ಯಜ್ಞವನ್ನು ರಕ್ಷಿಸಿದನು; ಅದಕ್ಕೆ ಮೊದಲು ಮುನಿಯ ಆಶ್ರಮಕ್ಕೆ ಹೋಗುವಾಗ ತಾಟಕಿಯನು ಸಂಹರಿಸಿದನು. ಕಲ್ಲಾದ ಗೌತಮಮುನಿಯ ಪತ್ನಿಯ ಪಾಪವನ್ನು ಪಾದ ಸ್ಪರ್ಶದಿಂದ ಕಳೆದನು.]; ಮಿಥಿಲೆಗೆ ಪೋಗಿ ಭಾರ್ಗವನ ಗರ್ವಮಂ ಸೆಳೆದು ಹರಚಾಪಮಂ ಮುರಿದು ಒಲಿಸಿ ಸೀತೆಯಂ ತಳೆದು (ವರಿಸಿ) ಉತ್ಸವದೊಳು ಅಯೋಧ್ಯಾಪುರಿಗೆ ದಶರಥನೊಡನೆ ರಾಘವಂ ಬಂದನು =[ ಅಲ್ಲಿಂದ ಮಿಥಿಲೆಗೆ ಹೋಗಿ ಶಿವ ಧನಸ್ಸನ್ನು ಮುರಿದು ಪ್ರೀತಿಯಿಂದ ಸೀತೆಯನ್ನು ವರಿಸಿ ಭಾರ್ಗವ/ ಪರಷುರಾಮನ ಗರ್ವವನ್ನು ವಿಷ್ಣುಧನಸ್ಸನ್ನು ಸೆಳೆದಯುವ ಮೂಲಕ ಭಂಗಿಸಿ, ವಿಝ್ರಂಬಣೆಯಿಂದ ಸಂಭ್ರಮದಿಂದ, ಅಯೋಧ್ಯಾನಗರಕ್ಕೆ ದಶರಥನೊಡನೆ ರಾಘವನು ಬಂದನು];
  • ತಾತ್ಪರ್ಯ:ರಾಮನು ಕೌಸಲ್ಯೆಯಲ್ಲಿ ಜನಿಸಿ ಜನನಿಯಾದ ಅವಳ ಹೊಟ್ಟೆಯನ್ನು ಪವಿತ್ರಗೊಳಿಸಿದನು; ಲಕ್ಷ್ಮಣ ಭರತ ಶತ್ರುಘ್ನ ರೊಡಗೂಡಿ ಅರಮನೆಯಲ್ಲಿ ಬೆಳೆದನು. ವಿಶ್ವಾಮಿತ್ರ ಮುನಿಯ ಯಜ್ಞವನ್ನು ರಕ್ಷಿಸಿದನು; ಅದಕ್ಕೆ ಮೊದಲು ಮುನಿಯ ಆಶ್ರಮಕ್ಕೆ ಹೋಗುವಾಗ ತಾಟಕಿಯನು ಸಂಹರಿಸಿದನು. ಕಲ್ಲಾದ ಗೌತಮಮುನಿಯ ಪತ್ನಿಯ ಪಾಪವನ್ನು ಪಾದ ಸ್ಪರ್ಶದಿಂದ ಕಳೆದನು. ಅಲ್ಲಿಂದ ಮಿಥಿಲೆಗೆ ಹೋಗಿ ಶಿವ ಧನಸ್ಸನ್ನು ಮುರಿದು ಪ್ರೀತಿಯಿಂದ ಸೀತೆಯನ್ನು ವರಿಸಿ ಭಾರ್ಗವ/ ಪರಷುರಾಮನ ಗರ್ವವನ್ನು ವಿಷ್ಣುಧನಸ್ಸನ್ನು ಸೆಳೆದಯುವ ಮೂಲಕ ಭಂಗಿಸಿ, ವಿಝ್ರಂಬಣೆಯಿಂದ ಸಂಭ್ರಮದಿಂದ, ಅಯೋಧ್ಯಾನಗರಕ್ಕೆ ದಶರಥನೊಡನೆ ರಾಘವನು ಬಂದನು.
  • (ಪದ್ಯ-೨)

ಪದ್ಯ :-:೩:

[ಸಂಪಾದಿಸಿ]

ವರ್ಧಿಪ ಕುಮಾರಂಗೆ ಭೂಮೀಶ್ವರಂ ಬಳಿಕ | ಮೂರ್ಧಾಭೀಷೇಚನಂ ಮಾಡಲನುಗೈಯೆ ನೃಪ | ನರ್ಧಾಂಗಿ ತಡೆಯೆ ಪೊರಮಟ್ಟು ಬನಕೈದೆ ನರಪತಿ ಪುತ್ರಶೋಕದಿಂದೆ ||
ಸ್ವರ್ಧಾಮಕಡರೆ ಕೇಳುತೆ ಭರತನಂ ಕಳುಹಿ | ದುರ್ಧರದರಣ್ಯಪ್ರವೇಶಮಂ ಮಾಡಿದಂ | ಸ್ಪರ್ಧಿಸುವ ದನುಜರಂ ಮುರಿದು ಮುನಿಗಳನೋವಿ ಸತಿಸಹಿತ ಕಾಕುತ್ಸ್ಥನು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವರ್ಧಿಪ ಕುಮಾರಂಗೆ ಭೂಮೀಶ್ವರಂ ಬಳಿಕ ಮೂರ್ಧಾಭೀಷೇಚನಂ ಮಾಡಲು ಅನುಗೈಯೆ=[ಸದ್ಗುಣಗಳಿಂದಲೂ,ವಯಸ್ಸಿನಿಂದಲೂ ಪ್ರಬುದ್ಧನಾದ ಬಳಿಕ ಮಗ ರಾಮನಿಗೆ, ಭೂಮೀಶ್ವರನಾದ ದಶರಥನು ಪಟ್ಟಾಭಿಷೇಕವನ್ನು ಮಾಡಲು ಸಿದ್ಧತೆ ಮಾಡಿದನು.]; ನೃಪ ನರ್ಧಾಂಗಿ ತಡೆಯೆ ಪೊರಮಟ್ಟು ಬನಕೈದೆ ನರಪತಿ ಪುತ್ರಶೋಕದಿಂದೆ ಸ್ವರ್ಧಾಮಕೆ ಅಡರೆ=[ಆಗ ದಶರಥನ ಮೂರನೇ ಪತ್ನಿ ಕೈಕೇಯಿಯು ಅದನ್ನು ತಡೆಯಲು, ರಾಮನು ಅವಳ ನಿಬಂಧನೆಯಂತೆ ಹೊರಟು ವನವಾಸಕ್ಕೆ ಹೋದನು. ರಾಜನು ಪುತ್ರಶೋಕದಿಂದ ಸ್ವರ್ಗಸ್ಥನಾದನು.]; ಕೇಳುತೆ ಭರತನಂ ಕಳುಹಿ ದುರ್ಧರದ ಅರಣ್ಯ ಪ್ರವೇಶಮಂ ಮಾಡಿದಂ ಸ್ಪರ್ಧಿಸುವ ದನುಜರಂ ಮುರಿದು ಮುನಿಗಳನು ಓವಿ ಸತಿಸಹಿತ ಕಾಕುತ್ಸ್ಥನು=[ಇದನ್ನು ನಂತರ ಅಯೋಧ್ಯಗೆ ಬಂದ ತಮ್ಮ ಭರತನು ಅವನನ್ನು ಕಾಣಲು ಹೋದಾಗ ರಾಮನು, ಭರತನ್ನು ರಾಜ್ಯವಾಳಲು ನೇಮಿಸಿ ಕಳುಹಿದನು. ಅಲ್ಲಿ ಮುನಿಗಳನ್ನು ಗೌರವಿಸಿ, ಸತಿ ಸಹಿತ ಕಾಕುತ್ಸ್ಥನಾದ ರಾಮನು ದಟ್ಟ ಅರಣ್ಯ ಪ್ರವೇಶನ್ನು ಮಾಡಿ, ಅಲ್ಲಿ ವಿರೋಧಿಸಿದ ದನುಜರನ್ನು ಕೊಂದನು.]
  • ತಾತ್ಪರ್ಯ:ಸದ್ಗುಣಗಳಿಂದಲೂ,ವಯಸ್ಸಿನಿಂದಲೂ ಪ್ರಬುದ್ಧನಾದ ಬಳಿಕ ಮಗ ರಾಮನಿಗೆ, ಭೂಮೀಶ್ವರನಾದ ದಶರಥನು ಪಟ್ಟಾಭಿಷೇಕವನ್ನು ಮಾಡಲು ಸಿದ್ಧತೆ ಮಾಡಿದನು. ಆಗ ದಶರಥನ ಮೂರನೇ ಪತ್ನಿ ಕೈಕೇಯಿಯು ಅದನ್ನು ತಡೆಯಲು, ರಾಮನು ಅವಳ ನಿಬಂಧನೆಯಂತೆ ಹೊರಟು ವನವಾಸಕ್ಕೆ ಹೋದನು. ರಾಜನು ಪುತ್ರಶೋಕದಿಂದ ಸ್ವರ್ಗಸ್ಥನಾದನು. ಇದನ್ನು ನಂತರ ಅಯೋಧ್ಯಗೆ ಬಂದ ತಮ್ಮ ಭರತನು ಅವನನ್ನು ಕಾಣಲು ಹೋದಾಗ ರಾಮನು, ಭರತನ್ನು ರಾಜ್ಯವಾಳಲು ನೇಮಿಸಿ ಕಳುಹಿದನು. ಕಾಡಿನಲ್ಲಿ ಮುನಿಗಳನ್ನು ಗೌರವಿಸಿ, ಸತಿ ಸಹಿತ ಕಾಕುತ್ಸ್ಥನಾದ ರಾಮನು ದಟ್ಟ ಅರಣ್ಯ ಪ್ರವೇಶನ್ನು ಮಾಡಿ, ಅಲ್ಲಿ ವಿರೋಧಿಸಿದ ದನುಜರನ್ನು ಕೊಂದನು.]
  • (ಪದ್ಯ-೩)

ಪದ್ಯ :-:೪:

[ಸಂಪಾದಿಸಿ]

ದಂಡಕಾರಣ್ಯದೊಳಿರಲ್ಕೆ ಶೂರ್ಪಣಖೆ ಬಂ | ದಂಡಲೆಯಲಾಕೆಯಂ ಭಂಗಿಸಿ ಖರಾದ್ಯರಂ | ಖಂಡಿಸಿ ಕನಕಮೃಗ ವ್ಯಾಜ್ಯದಿಂದೈದೆ ಲಕ್ಷ್ಮಣನಗಲೆ ಕಪಟದಿಂದೆ ||
ಕೊಂಡೊಯ್ಯೆ ರಾವಣಂ ಸೀತೆಯಂ ಕಾನದುರೆ | ಬೆಂಡಾಗಿ ವಿರಹದಿಂ ಬಿದ್ದಿಹ ಜಟಾಯುವಂ | ಕಂಡು ಪೊಲಬಂ ಕೇಳ್ದು ಸೌಮಿತ್ರಿಸಹಿತ ನಡೆದಂ ಮುಂದೆ ರಘುನಾಥನು ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದಂಡಕಾರಣ್ಯದೊಳು ಇರಲ್ಕೆ ಶೂರ್ಪಣಖೆ ಬಂದು ಅಂಡಲೆಯಲು ಆಕೆಯಂ ಭಂಗಿಸಿ=[ರಾಮ ಸೀತೆ, ಲಕ್ಷ್ಮಣರು ದಂಡಕಾರಣ್ಯದಲ್ಲಿ ಇದ್ದಾಗ ಶೂರ್ಪಣಖೆ ಬಂದು ತನ್ನನ್ನು ವಿವಾಹವಾಗಲು ಕೇಳಿ ಅಂಡಲೆದಳು; ಆಗ ಆಕೆಯನ್ನು ಅವಮಾನಿಸಿ ಕಳುಹಿದನು.]; ಖರಾದ್ಯರಂ ಖಂಡಿಸಿ ಕನಕಮೃಗ ವ್ಯಾಜ್ಯದಿಂದ ಐದೆ ಲಕ್ಷ್ಮಣನು ಅಗಲೆ ಕಪಟದಿಂದೆ ಕೊಂಡೊಯ್ಯೆ ರಾವಣಂ ಸೀತೆಯಂ=[ಅದರ ಸೇಡಿಗೆ ಬಂದ ಖರ ದೂಷಣ ಮೊದಲಾದವರನ್ನು ಕೊಂದನು. ನಂತರ ಕನಕಮೃಗ/ಬಂಗಾರದ ಜಿಂಕೆ ಅಲ್ಲಿ ಬರಲು, ಅದನ್ನು ಬೇಟಯಾಡಲು ಹೋದ ರಾಮನ ಸಹಾಯಕ್ಕೆ ಹೋಗುವ ಕಾರಣದಿಂದ ಲಕ್ಷ್ಮಣನು ಸೀತೆಯನ್ನು ಅಗಲಲು, ಕಪಟದಿಂದ ರಾವಣನು ಸೀತೆಯನ್ನು ಅಪಹರಿಸಿದನು.]; ಸೀತೆಯಂ ಕಾಣದೆ ಉರೆ ಬೆಂಡಾಗಿ ವಿರಹದಿಂ ಬಿದ್ದಿಹ ಜಟಾಯುವಂ ಕಂಡು ಪೊಲಬಂ ಕೇಳ್ದು ಸೌಮಿತ್ರಿ ಸಹಿತ ನಡೆದಂ ಮುಂದೆ ರಘುನಾಥನು=[ಬೇಟಯಿಂದ ಲಕ್ಷ್ಮಣನಸಹಿತ ಹಿಂತಿರುಗಿದ ರಾಮನು ಸೀತೆಯನ್ನು ಕಾಣದೆ ಬಹಳನೊಂದು ಬೆಂಡಾಗಿ ವಿರಹದಿಂದ,ಅವಳನ್ನು ಹುಡುಕುತ್ತಾ ಮುಂದೆಹೋಗಲು ಬಿದ್ದಿರುವ ಜಟಾಯು ಪಕ್ಷಿಯನ್ನು ಕಂಡು ರಾವಣನ ವಿಚಾರವನ್ನು ಕೇಳಿ, ಸೌಮಿತ್ರಿ/ ಲಕ್ಷ್ಮಣನ ಸಹಿತರಘುನಾಥನು ಮುಂದೆ ನಡೆದನು.].
  • ತಾತ್ಪರ್ಯ:ರಾಮ ಸೀತೆ, ಲಕ್ಷ್ಮಣರು ದಂಡಕಾರಣ್ಯದಲ್ಲಿ ಇದ್ದಾಗ ಶೂರ್ಪಣಖೆ ಬಂದು ತನ್ನನ್ನು ವಿವಾಹವಾಗಲು ಕೇಳಿ ಅಂಡಲೆದಳು; ಆಗ ಆಕೆಯನ್ನು ಅವಮಾನಿಸಿ ಕಳುಹಿದನು. ಅದರ ಸೇಡಿಗೆ ಬಂದ ಖರ ದೂಷಣ ಮೊದಲಾದವರನ್ನು ಕೊಂದನು. ನಂತರ ಕನಕಮೃಗ/ಬಂಗಾರದ ಜಿಂಕೆ ಅಲ್ಲಿ ಬರಲು, ಅದನ್ನು ಬೇಟಯಾಡಲು ಹೋದ ರಾಮನ ಸಹಾಯಕ್ಕೆ ಹೋಗುವ ಕಾರಣದಿಂದ ಲಕ್ಷ್ಮಣನು ಸೀತೆಯನ್ನು ಅಗಲಲು, ಕಪಟದಿಂದ ರಾವಣನು ಸೀತೆಯನ್ನು ಅಪಹರಿಸಿದನು. ಬೇಟಯಿಂದ ಲಕ್ಷ್ಮಣನ ಸಹಿತ ಹಿಂತಿರುಗಿದ ರಾಮನು ಸೀತೆಯನ್ನು ಕಾಣದೆ ಬಹಳನೊಂದು ಬೆಂಡಾಗಿ ವಿರಹದಿಂದ,ಅವಳನ್ನು ಹುಡುಕುತ್ತಾ ಮುಂದೆಹೋಗಲು ಬಿದ್ದಿರುವ ಜಟಾಯು ಪಕ್ಷಿಯನ್ನು ಕಂಡು ರಾವಣನ ವಿಚಾರವನ್ನು ಕೇಳಿ, ಸೌಮಿತ್ರಿ/ ಲಕ್ಷ್ಮಣನ ಸಹಿತ ರಘುನಾಥನು ಮುಂದೆ ನಡೆದನು.
  • (ಪದ್ಯ-೪)

ಪದ್ಯ :-:೫:

[ಸಂಪಾದಿಸಿ]

ಪಥದೊಳ್ ಕಬಂಧನಂ ಕೊಂದು ಶಬರಿಯ ಮನೋ | ರಥಮಂ ಸಲಿಸಿ ಕರುಣದಿಂದಾಂಜನೇಯನಂ | ಪ್ರಥಮದೊಳ್ ಕಂಡು ಸುಗ್ರೀವಂಗೆ ಕೈಗೊಟ್ಟು ವಾಲಿಯಂ ಬಾಣದಿಂದೆ ||
ಮಥಿಸಿ ರಾವಣನ ಮೇಲಣ ರಾಜಕಾರಿಯದ | ಕಥನಕಾಳೋಚಿಸಿ ಕರಡಿಕಪಿಗಳಂ ನೆರಪಿ | ಪೃಥಿವಿಜೆಯನರಸಲ್ಕೆ ವೀರ ಹನುಮಂತನಂ ಕಳುಹಿದಂ ಕಾಕುತ್ಸ್ಥನು ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪಥದೊಳ್ ಕಬಂಧನಂ ಕೊಂದು ಶಬರಿಯ ಮನೋ ರಥಮಂ ಸಲಿಸಿ=[ಮುಂದೆ ಹೋಗುವ ದಾರಿಯಲ್ಲಿ ಕಬಂಧನೆಂಬ ರಾಕ್ಷಸನನ್ನು ಕೊಂದು, ನಂತರ ರಾಮನ ಸತ್ಕಾರ ಮಾಡಲು ಕಾಯುತ್ತಿದ್ದ ಶಬರಿಯ ಆಸೆಯನ್ನು ಸಲ್ಲಿಸಿದನು.]; ಕರುಣದಿಂದಾಂಜನೇಯನಂ ಪ್ರಥಮದೊಳ್ ಕಂಡು ಸುಗ್ರೀವಂಗೆ ಕೈಗೊಟ್ಟು ವಾಲಿಯಂ ಬಾಣದಿಂದೆ ಮಥಿಸಿ=[ಮುಂದೆ ಹೋಗುವಾಗ ಕರುಣದಿಂದ ಆಂಜನೇಯನನ್ನು ಮೊದಲು ಕಂಡು ನಂತರ ಸುಗ್ರೀವನಿಗೆ ಮಿತ್ರನಾಗಿ ಭಾಷೆಕೊಟ್ಟು,ಸುಗ್ರೀವನೊಡನೆ ಯುದ್ಧಮಾಡಿ ಘಾಸಿಮಾಡಿದ ವಾಲಿಯನ್ನು ಬಾಣದಿಂದ ಕೊಂದನು.]; ರಾವಣನ ಮೇಲಣ ರಾಜಕಾರಿಯದ ಕಥನಕಾಳೋಚಿಸಿ ಕರಡಿಕಪಿಗಳಂ ನೆರಪಿ ಪೃಥಿವಿಜೆಯನರಸಲ್ಕೆ ವೀರ ಹನುಮಂತನಂ ಕಳುಹಿದಂ ಕಾಕುತ್ಸ್ಥನು=[ರಾವಣನ ವಿಚಾರವನ್ನೂ, ಸೀತೆಯಯಿರುವಿಕೆಯನ್ನು ತಿಳಿಯುವ ರಾಜಕಾರ್ಯದ ನಡೆಯನ್ನು ಆಲೋಚಿಸಿ ಕರಡಿ ಕಪಿಗಳ ನೆರವು ಪಡೆದು ಪೃಥಿವಿಜೆಯಾದ ಸೀತೆಯನ್ನು ಹುಡುಕಲು ವೀರ ಹನುಮಂತನನ್ನು ಕಾಕುತ್ಸ್ಥನಾದ ರಾಮನು ಕಳುಹಿಸಿದನು.]
  • ತಾತ್ಪರ್ಯ:ಮುಂದೆ ಹೋಗುವ ದಾರಿಯಲ್ಲಿ ಕಬಂಧನೆಂಬ ರಾಕ್ಷಸನನ್ನು ಕೊಂದು, ನಂತರ ರಾಮನ ಸತ್ಕಾರ ಮಾಡಲು ಕಾಯುತ್ತಿದ್ದ ಶಬರಿಯ ಆಸೆಯನ್ನು ಸಲ್ಲಿಸಿದನು. ಮುಂದೆ ಹೋಗುವಾಗ ಕರುಣದಿಂದ ಆಂಜನೇಯನನ್ನು ಮೊದಲು ಕಂಡು ನಂತರ ಸುಗ್ರೀವನಿಗೆ ಮಿತ್ರನಾಗಿ ಭಾಷೆಕೊಟ್ಟು,ಸುಗ್ರೀವನೊಡನೆ ಯುದ್ಧಮಾಡಿ ಘಾಸಿಮಾಡಿದ ವಾಲಿಯನ್ನು ಬಾಣದಿಂದ ಕೊಂದನು. ರಾವಣನ ವಿಚಾರವನ್ನೂ, ಸೀತೆಯಯಿರುವಿಕೆಯನ್ನೂ ತಿಳಿಯುವ ರಾಜಕಾರ್ಯದ ನಡೆಯನ್ನು ಆಲೋಚಿಸಿ ಕರಡಿ ಕಪಿಗಳ ನೆರವು ಪಡೆದು ಪೃಥ್ವಿಜೆಯಾದ ಸೀತೆಯನ್ನು ಹುಡುಕಲು ವೀರ ಹನುಮಂತನನ್ನು ಕಾಕುತ್ಸ್ಥನಾದ ರಾಮನು ಕಳುಹಿಸಿದನು.
  • (ಪದ್ಯ-೫)

ಪದ್ಯ :-:೬:

[ಸಂಪಾದಿಸಿ]

ಧೀಂಕಿಟ್ಟು ಶರಧಿಯಂ ದಾಂಟಿ ಮೇದಿನಿಯ ಸುತೆ | ಗಂಕಿತದ ಮುದ್ರಿಕೆಯನಿತ್ತು ಬೀಳ್ಕೊಂಡು ನಿ | ಶ್ಯಂಕೆಯೊಳಶೋಕವನಮಂ ಕಿತ್ತು ದನುಜರಂ ಸದೆದಕ್ಷನಂ ಮರ್ದಿಸಿ ||
ಅಂಕದೊಳ್ ಬಳಿಕಿಂದ್ರಜಿತುವಿನ ಬ್ರಹ್ಮಾಸ್ತ್ರ | ದಂಕೆಯೊಳ್ ನಿಂದು ವಾಲಧಿಗಿಕ್ಕಿದುರಿಯಿಂದೆ | ಲಂಕೆಯಂ ಸುಟ್ಟು ಬಂದೊಸಗೆ ವೇಳ್ದನಿಲಜನನಸುರಾರಿ ಮನ್ನಿಸಿದನು ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಧೀಂಕಿಟ್ಟು ಶರಧಿಯಂ ದಾಂಟಿ ಮೇದಿನಿಯ ಸುತೆಗೆ ಅಂಕಿತದ ಮುದ್ರಿಕೆಯನು ಇತ್ತು ಬೀಳ್ಕೊಂಡು=[ಹನುಮಂತನು, ಧೀಂಕಿಟ್ಟು/ಧೀಂ ಎಂದು ಆಕಾಶಕ್ಕೆ ಚಿಮ್ಮಿ/ ಹಾರಿ ಸಮುದ್ರವನ್ನು ದಾಟಿ ಮೇದಿನಿಯ ಮಗಳು ಸೀತೆಗೆ ಗುರುತಿನ ಮುದ್ರಿಕೆ ಚೂಡಾಮಣಿಯನ್ನು ಕೊಟ್ಟು, ಅವಳಿಂದ ಬೀಳ್ಕೊಂಡು,]; ನಿಶ್ಯಂಕೆಯೊಳು ಅಶೋಕವನಮಂ ಕಿತ್ತು ದನುಜರಂ ಸದೆದ ಅಕ್ಷನಂ ಮರ್ದಿಸಿ=[ನಿರ್ಭಯದಿಂದ ಅಶೋಕವನವನ್ನು ಕಿತ್ತು ನಾಶಮಾಡಿ, ಅಡ್ಡಬಂದ ರಾಕ್ಷಸರನ್ನು ಸದೆಬಡಿದು, ಅಕ್ಷಯಕುಮಾರನನ್ನು ಕೊಂದು,]; ಅಂಕದೊಳ್ ಬಳಿಕ ಇಂದ್ರಜಿತುವಿನ ಬ್ರಹ್ಮಾಸ್ತ್ರದ ಅಂಕೆಯೊಳ್ ನಿಂದು ವಾಲಧಿಗೆ ಇಕ್ಕಿದ ಉರಿಯಿಂದೆ ಲಂಕೆಯಂ ಸುಟ್ಟು ಬಂದು=[ಬಳಿಕ ಕಾಳಗದಲ್ಲಿ ಇಂದ್ರಜಿತುವಿನ ಬ್ರಹ್ಮಾಸ್ತ್ರಕ್ಕೆ ಶರಣಾಗಿ ನಿಂತು, ತನ್ನ ಬಾಲದತುದಿಗೆ ಹಚ್ಚಿದ ಬೆಂಕಿಯಿಂದ ಲಂಕೆಯನ್ನು ಸುಟ್ಟು ಹಿಂತಿರುಗಿ ಬಂದು]; ಒಸಗೆ ವೇಳ್ದ ಅನಿಲಜನನು ಅಸುರಾರಿ ಮನ್ನಿಸಿದನು =[ಸೀತೆಯಸಮಾಚಾರ ತಿಳಿಸಿದ ವಾಯುಪುತ್ರನನ್ನು ಅಸುರಾರಿ ರಾಮನು ಗೌರವಿಸಿ ಸತ್ಕರಿಸಿದನು].
  • ತಾತ್ಪರ್ಯ:ಹನುಮಂತನು, ಧೀಂಕಿಟ್ಟು/ಧೀಂ ಎಂದು ಆಕಾಶಕ್ಕೆ ಚಿಮ್ಮಿ/ ಹಾರಿ ಸಮುದ್ರವನ್ನು ದಾಟಿ ಮೇದಿನಿಯ ಮಗಳು ಸೀತೆಗೆ ಗುರುತಿನ ಮುದ್ರಿಕೆ ಚೂಡಾಮಣಿಯನ್ನು ಕೊಟ್ಟು, ಅವಳಿಂದ ಬೀಳ್ಕೊಂಡು, ನಿರ್ಭಯದಿಂದ ಅಶೋಕವನವನ್ನು ಕಿತ್ತು ನಾಶಮಾಡಿ, ಅಡ್ಡಬಂದ ರಾಕ್ಷಸರನ್ನು ಸದೆಬಡಿದು, ಅಕ್ಷಯಕುಮಾರನನ್ನು ಕೊಂದು, ಬಳಿಕ ಕಾಳಗದಲ್ಲಿ ಇಂದ್ರಜಿತುವಿನ ಬ್ರಹ್ಮಾಸ್ತ್ರಕ್ಕೆ ಶರಣಾಗಿ ನಿಂತು, ಅವರು ತನ್ನ ಬಾಲದತುದಿಗೆ ಹಚ್ಚಿದ ಬೆಂಕಿಯಿಂದ ಲಂಕೆಯನ್ನು ಸುಟ್ಟು ಹಿಂತಿರುಗಿ ಬಂದು ಸೀತೆಯ ಸಮಾಚಾರ ತಿಳಿಸಿದ ವಾಯುಪುತ್ರನನ್ನು ಅಸುರಾರಿ ರಾಮನು ಗೌರವಿಸಿ ಸತ್ಕರಿಸಿದನು.
  • (ಪದ್ಯ-೬)

ಪದ್ಯ :-:೭:

[ಸಂಪಾದಿಸಿ]

ಗಣನೆಯಿಲ್ಲದ ಕಪಿಗಳಂ ಕೂಡಿಕೊಂಡು ತೆಂ | ಕಣಕಡಲ ತೀರದೊಳ್ ಬಿಟ್ಟು ಬಂದೊಡೆ ವಿಭೀ | ಪಣನಂ ಪರಿಗ್ರಹಿಸಿ ಲಂಕಾಧಿಪತ್ಯಮಂ ಕೊಟ್ಟು ಜಲಧಿಯನೆ ಕಟ್ಟಿ ||
ರಣದೊಳಸುರರ ಕುಲದ ಹೆಸರುಳಿಯದಂತೆ ರಾ | ವಣ ಕುಂಭಕರ್ಣ ಮೊದಲಾದ ರಕ್ಕಸರನುರೆ | ಹಣಿದವಾಡಿದನುರವಣಿಸಿ ಧೂಳಿಗೋಟೆಯಂ ಕೊಂಡನಾ ರಘವೀರನು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಗಣನೆಯಿಲ್ಲದ ಕಪಿಗಳಂ ಕೂಡಿಕೊಂಡು ತೆಂಕಣಕಡಲ ತೀರದೊಳ್ ಬಿಟ್ಟು ಬಂದೊಡೆ ವಿಭೀಪಣನಂ ಪರಿಗ್ರಹಿಸಿ ಲಂಕಾಧಿಪತ್ಯಮಂ ಕೊಟ್ಟು=[ಲೆಕ್ಕವಿದಷ್ಟು ವಾನರರನ್ನು ಕೂಡಿಕೊಂಡು ದಕ್ಷಿನಕಡಲ ತೀರದಲ್ಲಿಪಾಳಯಹಾಕಿದನು. ಅಣ್ನ ರಾವಣನ್ನು ಬಿಟ್ಟು ಬಂದ ವಿಭೀಪಣನನ್ನು ಪರಿಗ್ರಹಿಸಿ ಅವನಿಗೆ ಲಂಕಾಧಿಪತ್ಯವನ್ನು ಕೊಟ್ಟುನು.]; ಜಲಧಿಯನೆ ಕಟ್ಟಿ ರಣದೊಳು ಅಸುರರ ಕುಲದ ಹೆಸರುಳಿಯದಂತೆ ರಾವಣ ಕುಂಭಕರ್ಣ ಮೊದಲಾದ ರಕ್ಕಸರನು ಉರೆ ಹಣಿದವಾಡಿದನು=[ಸಮುದ್ರಕ್ಕೆ ಸೇತುವೆಕಟ್ಟಿ ಯುದ್ಧದಲ್ಲಿ ರಾಕ್ಷಸ ಕುಲದ ಹೆಸರು ಉಳಿಯದಂತೆ ರಾವಣ, ಕುಂಭಕರ್ಣ, ಮೊದಲಾದ ರಾಕ್ಷಸರನ್ನು ವಿಶೇಷವಾಗಿ ಯುದ್ಧದಲ್ಲಿ ಸೋಲಿಸಿ ಸಂಹರಿಸಿದನು.]; ಉರವಣಿಸಿ ಧೂಳಿಗೋಟೆಯಂ ಕೊಂಡನು ಆ ರಘವೀರನು=[ಮತ್ತೂ ಪರಾಕ್ರಮ ತೋರಿ ಆ ರಘವೀರ ರಾಮಚಂದ್ರನು ಕೋಟೆಯನ್ನು ಧೂಳೀಪಟ ಮಾಡಿದನು.]
  • ತಾತ್ಪರ್ಯ: ರಾಮನು, ಲೆಕ್ಕವಿದಷ್ಟು ವಾನರರನ್ನು ಕೂಡಿಕೊಂಡು ದಕ್ಷಿಣಕಡಲ ತೀರದಲ್ಲಿ ಪಾಳಯ ಹಾಕಿದನು. ಅಣ್ನ ರಾವಣನ್ನು ಬಿಟ್ಟು ಬಂದ ವಿಭೀಪಣನನ್ನು ಪರಿಗ್ರಹಿಸಿ ಅವನಿಗೆ ಲಂಕಾಧಿಪತ್ಯವನ್ನು ಕೊಟ್ಟುನು. ಸಮುದ್ರಕ್ಕೆ ಸೇತುವೆಕಟ್ಟಿ ಯುದ್ಧದಲ್ಲಿ ರಾಕ್ಷಸಕುಲದ ಹೆಸರು ಉಳಿಯದಂತೆ ವಿಶೇಷವಾಗಿ ರಾವಣ, ಕುಂಭಕರ್ಣ, ಮೊದಲಾದ ರಾಕ್ಷಸರನ್ನು ಯುದ್ಧದಲ್ಲಿ ಸೋಲಿಸಿ ಸಂಹರಿಸಿದನು ಮತ್ತೂ ಪರಾಕ್ರಮ ತೋರಿ ಆ ರಘವೀರ ರಾಮಚಂದ್ರನು ಲಂಕೆಯ ಕೋಟೆಯನ್ನು ಧೂಳೀಪಟ ಮಾಡಿದನು.
  • (ಪದ್ಯ-೭)

ಪದ್ಯ :-:೮:

[ಸಂಪಾದಿಸಿ]

ರಾವಣನ ಪದಮಂ ವಿಭೀಷಣಂಗೊಲಿದಿತ್ತು | ದೇವರ್ಕಳಂ ಪೊರೆದು ಸೆರೆಯಿರ್ದ ಸೀತೆಯಂ | ಪಾವಕನ ಮುಖದಿಂ ಪರಿಗ್ರಹಿಸಿ ಮೂಜಗಂ ಮೆಚ್ಚೆ ವಿಜಯೋತ್ಸವದೊಳು ||
ಭೂವರಂ ಸೌಮಿತ್ರಿ ದಶಮುಖಾವರಜ ಸು | ಗ್ರೀವಾದಿಗಳ ಗಡಣದಿಂದಯೋಧ್ಯಾಪುರಿಗೆ | ದೂವಾಳಿಸಿದನಮಲ ಮಣಿಪುಷ್ಟಕದ ಮೇಲೆ ಭರತನಂ ಪಾಲಿಸಲ್ಕೆ ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಮನು,ರಾವಣನ ಪದಮಂ ವಿಭೀಷಣಂಗೆ ಒಲಿದಿತ್ತು ದೇವರ್ಕಳಂ ಪೊರೆದು ಸೆರೆಯಿರ್ದ ಸೀತೆಯಂ ಪಾವಕನ ಮುಖದಿಂ ಪರಿಗ್ರಹಿಸಿ=[ರಾವಣನ ರಾಜ್ಯಾಧಿಕಾರವನ್ನು ವಿಭೀಷಣನಿಗೆ ಪ್ರೀತಿಯಿಂದ ಕೊಟ್ಟನು. ದೇವತೆಗಳನ್ನು ಕಾಪಾಡಿ, ಸೆರೆಯಲ್ಲಿದ್ದ ಸೀತೆಯನ್ನು ಅಗ್ನಿಮುಖದಿಂ ಸ್ವೀಕರಿಸಿದನು.]; ಮೂಜಗಂ ಮೆಚ್ಚೆ ವಿಜಯೋತ್ಸವದೊಳು ಭೂವರಂ ಸೌಮಿತ್ರಿ ದಶಮುಖ+ ಆವರಜ (ತಮ್ಮ) ಸುಗ್ರೀವಾದಿಗಳ ಗಡಣದಿಂದ ಅಯೋಧ್ಯಾಪುರಿಗೆ ದೂವಾಳಿಸಿದನು ಅಮಲ ಮಣಿಪುಷ್ಟಕದ ಮೇಲೆ ಭರತನಂ ಪಾಲಿಸಲ್ಕೆ=[,ಮೂರುಲೋಕವೂ ಮೆಚ್ಚುವಂತೆ ವಿಜಯೋತ್ಸವಲ್ಲಿ ಭೂವರನಾದ ರಾಮನು, ಸೌಮಿತ್ರಿ/ ಲಕ್ಷ್ಮಣ, ವಿಭೀಷಣ ಸುಗ್ರೀವಾದಿಗಳ ಗಡಣದಿಂದ ಅಯೋಧ್ಯಾ ನಗರಕ್ಕೆ ಮಣಿಪುಷ್ಟಕದ ಮೇಲೆ ಶ್ರೇಷ್ಠನಾದ ಭರತನನ್ನು ಅಗ್ನಿ ಪ್ರವೇಶ ಮಾಡದಂತೆ ಪಾಲಿಸಲು, ವೇಗವಾಗಿ ಬಂದನು.]
  • ತಾತ್ಪರ್ಯ:ರಾಮನು, ರಾವಣನ ರಾಜ್ಯಾಧಿಕಾರವನ್ನು ವಿಭೀಷಣನಿಗೆ ಪ್ರೀತಿಯಿಂದ ಕೊಟ್ಟನು. ದೇವತೆಗಳನ್ನು ಕಾಪಾಡಿ, ಸೆರೆಯಲ್ಲಿದ್ದ ಸೀತೆಯನ್ನು ಅಗ್ನಿಮುಖದಿಂ ಸ್ವೀಕರಿಸಿದನು. ಮೂರುಲೋಕವೂ ಮೆಚ್ಚುವಂತೆ ವಿಜಯೋತ್ಸವಲ್ಲಿ ಭೂವರನಾದ ರಾಮನು, ಸೌಮಿತ್ರಿ/ ಲಕ್ಷ್ಮಣ, ವಿಭೀಷಣ ಸುಗ್ರೀವಾದಿಗಳ ಗಡಣದಿಂದ ಅಯೋಧ್ಯಾ ನಗರಕ್ಕೆ ಮಣಿಪುಷ್ಟಕದ ಮೇಲೆ ಶ್ರೇಷ್ಠನಾದ ಭರತನನ್ನು ಅಗ್ನಿ ಪ್ರವೇಶ ಮಾಡದಂತೆ ಪಾಲಿಸಲು, ವೇಗವಾಗಿ ಬಂದನು.]
  • (ಪದ್ಯ-೮)iv

ಪದ್ಯ :-:೯:

[ಸಂಪಾದಿಸಿ]

ವರಪುಷ್ಪಕವನಿಳಿದು ಭರತಶತ್ರುಘ್ನರಂ | ಕರುಣದಿಂ ತೆಗೆದಪ್ಪಿ ಕೌಶಿಕವಸಿಷ್ಠಾದಿ | ಗುರುಗಳಂ ಸತ್ಕರಿಸಿ ಕೈಕೆಮೊದಲಾಗಿರ್ದ ಮಾತೃಜನಕೈದೆ ನಮಿಸಿ ||
ಅರಮನೆಯ ಸತಿಯರಂ ಸಚಿವರಂ ಪ್ರಜೆಗಳಂ | ಪರಿಜನಪ್ರಕೃತಿಗಳನಿರದೆ ಕಾಣಿಸಿಕೊಂಡು | ಬರವನೇ ಹಾರೈಸಿ ಕೃಶೆಯಾದ ಕೌಸಲೆಗೆ ರಾಮನಭಿವಂದಿಸಿದನು ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವರಪುಷ್ಪಕವನು ಇಳಿದು ಭರತಶತ್ರುಘ್ನರಂ ಕರುಣದಿಂ ತೆಗೆದು ಅಪ್ಪಿ ಕೌಶಿಕವಸಿಷ್ಠಾದಿ ಗುರುಗಳಂ ಸತ್ಕರಿಸಿ ಕೈಕೆಮೊದಲಾಗಿರ್ದ ಮಾತೃಜನಕೆ ಐದೆ ನಮಿಸಿ=[ಶ್ರೇಷ್ಠವಾದ ಪುಷ್ಪಕವಿಮಾನವನ್ನು ಇಳಿದು ಭರತ ಶತ್ರುಘ್ನರನ್ನು ಕರುಣದಿಂದ ಬರಸೆಳೆದು ಅಪ್ಪಿಕೊಂಡನು. ಕೌಶಿಕ ವಸಿಷ್ಠ ಮೊದಲಾದದ ಗುರುಗಳನ್ನು ಸತ್ಕರಿಸಿದನು. ಕೈಕೆ ಮೊದಲಾಗಿರುವ ಮಾತೃಸಮಾನ ಪರಿವಾರ ಬರಲು ಅವರಿಗೆ ನಮಿಸಿದನು.];ಅರಮನೆಯ ಸತಿಯರಂ ಸಚಿವರಂ ಪ್ರಜೆಗಳಂ ಪರಿಜನಪ್ರಕೃತಿಗಳನು ಇರದೆ ಕಾಣಿಸಿಕೊಂಡು ಬರವನೇ ಹಾರೈಸಿ ಕೃಶೆಯಾದ ಕೌಸಲೆಗೆ ರಾಮನು ಅಭಿವಂದಿಸಿದನು=[ಅರಮನೆಯ ಅಂತಃಪುರ ಸ್ತ್ರೀಯರನ್ನೂ, ಸಚಿವರನ್ನೂ, ಪ್ರಜೆಗಳನ್ನೂ, ಪರಿವಾರದ ಜನಸೇವಕರುಗಳನ್ನೂ, ಬಿಡದೆ ದರ್ಶನಕೊಟ್ಟು ಉಪಚರಿಸಿ, ತನ್ನ ಬರುವಿಕೆಯನ್ನೇ ಹಾರೈಸಿ ಕೃಶೆಯಾದ ತಾಯಿ ಕೌಸಲ್ಯೆಗೆ ರಾಮನು ಅಭಿವಂದಿಸಿದನು.]
  • ತಾತ್ಪರ್ಯ:ಸೀತಾ ಲಕ್ಷ್ಮಣರ ಸಮೇತ ರಾಮನು ಶ್ರೇಷ್ಠವಾದ ಪುಷ್ಪಕವಿಮಾನವನ್ನು ಇಳಿದು ಭರತ ಶತ್ರುಘ್ನರನ್ನು ಕರುಣದಿಂದ ಬರಸೆಳೆದು ಅಪ್ಪಿಕೊಂಡನು. ಕೌಶಿಕ ವಸಿಷ್ಠ ಮೊದಲಾದದ ಗುರುಗಳನ್ನು ಸತ್ಕರಿಸಿದನು. ಕೈಕೆ ಮೊದಲಾಗಿರುವ ಮಾತೃಸಮಾನ ಪರಿವಾರ ಬರಲು ಅವರಿಗೆ ನಮಿಸಿದನು. ಅರಮನೆಯ ಅಂತಃಪುರ ಸ್ತ್ರೀಯರನ್ನೂ, ಸಚಿವರನ್ನೂ, ಪ್ರಜೆಗಳನ್ನೂ, ಪರಿವಾರದ ಜನಸೇವಕರುಗಳನ್ನೂ, ಬಿಡದೆ ದರ್ಶನಕೊಟ್ಟು ಉಪಚರಿಸಿ, ತನ್ನ ಬರುವಿಕೆಯನ್ನೇ ಹಾರೈಸಿ ಕೃಶೆಯಾದ ತಾಯಿ ಕೌಸಲ್ಯೆಗೆ ರಾಮನು ಅಭಿವಂದಿಸಿದನು.]
  • (ಪದ್ಯ-೯)

ಪದ್ಯ :-:೧೦:

[ಸಂಪಾದಿಸಿ]

ಕಯ್ದಳದೊಳೊಯ್ಯನೊಯ್ಯನೆ ಘನಸ್ನೇಹದಿಂ | ಮೆಯ್ದಡವಿ ತನಯನಂ ತಕ್ಕೈಸಿ ಮುಂಡಾಡಿ | ಕಯ್ದುಗಳ ಗಾಯಮಂ ಕಂಡು ಕರಗುತೆ ಮಗನೆ ನಿನ್ನ ಕೋಮಲತನುವನು ||
ಪೊಯ್ದವರದಾರಕಟ ಬೆಂದುದೆನ್ನೊಡಲೆಂದು | ಸುಯ್ದು ಮುಗ್ಧಾಭಾವದಿಂ ತನ್ನ ಸವತಿಯಂ | ಬಯ್ದು ಮರುಗುವ ಮಾತೆಯಂ ನೋಡಿ ನಗುತೆ ಸಂತೈಸಿದಂ ರಾವಣಾರಿ ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಾಯಿ ಕೌಸಲ್ಯೆಯು, ಮಗ ಬಳಿ ಬಂದಾಗ, ಕೈಯ ತಳದೊಳು ಒಯ್ಯನೊಯ್ಯನೆ ಘನಸ್ನೇಹದಿಂ ಮೆಯ್ದಡವಿ ತನಯನಂ ತಕ್ಕೈಸಿ ಮುಂಡಾಡಿ ಕಯ್ದುಗಳ ಗಾಯಮಂ ಕಂಡು ಕರಗುತೆ ಮಗನೆ ನಿನ್ನ ಕೋಮಲತನುವನು=[ತಾಯಿ ಕೌಸಲ್ಯೆಯು, ಮಗ ಬಳಿ ಬಂದಾಗ,ಕೈಯ ತಳದಲ್ಲಿ / ಅಂಗೈಯಲ್ಲಿ ಮೆಲ್ಲಮೆಲ್ಲಗೆ ಘನಪ್ರೀತಿಯಿಂದ ಮೆಯ್ಯನ್ನು ತಡವಿ, ಮಗನನ್ನು ಉಪಚರಿಸಿ,ತಲೆಯನ್ನು ನೇವರಿಸಿ ಮೂಸಿ ಅಪ್ಪಿ,ಆಯುಧಗಳಿಂದಾದ ಗಾಯಗಳನ್ನು ಕಂಡು ಮನದಲ್ಲಿ ಕರಗಿ, 'ಮಗನೆ ನಿನ್ನ ಕೋಮಲ ಶರೀರವನ್ನು]; ಪೊಯ್ದವರು ಅದು ಆರು ಅಕಟ ಬೆಂದುದು ಎನ್ನೊಡಲು ಎಂದು ಸುಯ್ದು ಮುಗ್ಧಾಭಾವದಿಂ ತನ್ನ ಸವತಿಯಂ ಬಯ್ದು ಮರುಗುವ ಮಾತೆಯಂ ನೋಡಿ ನಗುತೆ ಸಂತೈಸಿದಂ ರಾವಣಾರಿ=[ಹೊಡೆದು ಗಾಯಪಡಿಸಿದವರು ಅದು ಯಾರು? ಅಕಟ! ನನ್ನ ಹೊಟ್ಟೆ ಬೇಯುತ್ತಿದೆ', ಎಂದು ಬಿಸುಸುಯ್ದು ನಿಟ್ಟಸಿರು ಬಿಟ್ಟು ಮುಗ್ಧ ಭಾವನೆಯಿಂದ ತನ್ನ ಸವತಿ ಕೈಕೆಯನ್ನು ದೂರಿ ದುಃಖಿಸುತ್ತಿರುವ ತಾಯಿಯನ್ನು ನೋಡಿ ರಾವಣಾರಿಯಾದ ರಾಮನು ನಗುತ್ತಾ ಸಂತೈಸಿದನು.]
  • ತಾತ್ಪರ್ಯ:ತಾಯಿ ಕೌಸಲ್ಯೆಯು, ಮಗ ಬಳಿ ಬಂದಾಗ, ಕೈಯ ತಳದಲ್ಲಿ / ಅಂಗೈಯಲ್ಲಿ ಮೆಲ್ಲಮೆಲ್ಲಗೆ ಘನಪ್ರೀತಿಯಿಂದ ಮೆಯ್ಯನ್ನು ತಡವಿ, ಮಗನನ್ನು ಉಪಚರಿಸಿ,ತಲೆಯನ್ನು ನೇವರಿಸಿ ಮೂಸಿ ಅಪ್ಪಿ,ಆಯುಧಗಳಿಂದಾದ ಗಾಯಗಳನ್ನು ಕಂಡು ಮನದಲ್ಲಿ ಕರಗಿ, 'ಮಗನೆ ನಿನ್ನ ಕೋಮಲ ಶರೀರವನ್ನು ಹೊಡೆದು ಗಾಯಪಡಿಸಿದವರು ಅದು ಯಾರು? ಅಕಟ! ನನ್ನ ಹೊಟ್ಟೆ ಬೇಯುತ್ತಿದೆ', ಎಂದು ಬಿಸುಸುಯ್ದು ನಿಟ್ಟಸಿರು ಬಿಟ್ಟು ಮುಗ್ಧ ಭಾವನೆಯಿಂದ ತನ್ನ ಸವತಿ ಕೈಕೆಯನ್ನು ದೂರಿ ದುಃಖಿಸುತ್ತಿರುವ ತಾಯಿಯನ್ನು ನೋಡಿ ರಾವಣಾರಿಯಾದ ರಾಮನು ನಗುತ್ತಾ ಸಂತೈಸಿದನು.]
  • (ಪದ್ಯ-೧೦)

ಪದ್ಯ :-:೧೧:

[ಸಂಪಾದಿಸಿ]

ಮೇಲೆ ತಾಳ್ದಂ ಶುಭಮುಹೂರ್ತದೊಳ್ ವಾರಿನಿಧಿ | ಮೇರೆಯಾದವನಿಯಂ ಪಟ್ಟಾಭಿಷೇಚನದ | ಕಾಲದೊಳ್ ಕಂಡರು ಸಮಸ್ತಮುನಿ ಗೀರ್ವಾಣ ವಾನರ ದನುಜ ಮನುಜರು ||
ಮೂಲೋಕಮೈದೆ ಕೊಂಡಾಡೆ ಬಳಿಕುರ್ವಿಯಂ | ಪಾಲಿಸುತಿರ್ದನೊಂಬತ್ತು ಸಾಸಿರವರ್ಷ | ಮೋಲೈಸಿದುದು ರಾಘವೇಂದ್ರನಂ ನಿಖಿಳ ಭೂಪತಿಚಯಂ ಪ್ರೀತಿಯಿಂದೆ ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೇಲೆ ತಾಳ್ದಂ (ತಾಳಿದನು / ಹೊಂದಿದನು) ಶುಭಮುಹೂರ್ತದೊಳ್ ವಾರಿನಿಧಿ ಮೇರೆಯಾದ ಅವನಿಯಂ ಪಟ್ಟಾಭಿಷೇಚನದ ಕಾಲದೊಳ್ ಕಂಡರು=[ಆಮೇಲೆ ಶುಭಮುಹೂರ್ತದಲ್ಲಿ ಸಮುದ್ರವು ಮೇರೆಯಾಗಿರುವ ಭೂಮಿಯನ್ನು ತಾಳಿದನು/ಹೊಂದಿದನು. ಪಟ್ಟಾಭಿಷೇಕದ ಕಾಲದಲ್ಲಿ ಕಂಡರು ];ಸಮಸ್ತಮುನಿ ಗೀರ್ವಾಣ ವಾನರ ದನುಜ ಮನುಜರು ಮೂಲೋಕಂ ಐದೆ (ಬರಲು/ ಬಂದು) ಕೊಂಡಾಡೆ ಬಳಿಕ ಉರ್ವಿಯಂ ಪಾಲಿಸುತ ಇರ್ದನು ಒಂಬತ್ತು ಸಾಸಿರವರ್ಷಂ=[ಆಗ ಸಮಸ್ತಮುನಿಗಳು, ದೇವತೆಗಳು, ವಾನರು, ಲಂಕೆಯಿಂದ ವಿಭೀಷಣನೊಡನೆ ಬಂದ ದನುಜರು, ಮನುಷ್ಯರು, ಹೀಗೆ ಮೂರುಲೋಕದವರೂ ಬಂದು ಕೊಂಡಾಡಿದರು., ಬಳಿಕ ಒಂಬತ್ತು ಸಾವಿರವರ್ಷಗಳ ಕಾಲಭೂಮಿಯನ್ನು ಪಾಲಿಸುತ್ತಾ ಇದ್ದನು.]; ಓಲೈಸಿದುದು ರಾಘವೇಂದ್ರನಂ ನಿಖಿಳ ಭೂಪತಿಚಯಂ ಪ್ರೀತಿಯಿಂದೆ=[ಆ ಕಾಲದಲ್ಲಿ ರಾಘವೇಂದ್ರನನ್ನು ಸಮಸ್ತ ರಾಜಸಮೂಹವೂ ಪ್ರೀತಿಯಿಂದ ಓಲೈಸಿತು / ಸೇವೆಮಾಡಿತು].
  • ತಾತ್ಪರ್ಯ: ಆಮೇಲೆ ಶುಭಮುಹೂರ್ತದಲ್ಲಿ ಸಮುದ್ರವು ಮೇರೆಯಾಗಿರುವ ಭೂಮಿಯನ್ನು ಹೊಂದಿದನು. ಪಟ್ಟಾಭಿಷೇಕದ ಕಾಲದಲ್ಲಿ ಕಂಡರು. ಆಗ ಸಮಸ್ತಮುನಿಗಳು, ದೇವತೆಗಳು, ವಾನರು, ಲಂಕೆಯಿಂದ ವಿಭೀಷಣನೊಡನೆ ಬಂದ ದನುಜರು, ಮನುಷ್ಯರು, ಹೀಗೆ ಮೂರು ಲೋಕದವರೂ ಬಂದು ಕೊಂಡಾಡಿದರು. ಬಳಿಕ ಒಂಬತ್ತು ಸಾವಿರವರ್ಷಗಳ ಕಾಲಭೂಮಿಯನ್ನು ಪಾಲಿಸುತ್ತಾ ಇದ್ದನು. ಆ ಕಾಲದಲ್ಲಿ ರಾಘವೇಂದ್ರನನ್ನು ಸಮಸ್ತ ರಾಜಸಮೂಹ ಪ್ರೀತಿಯಿಂದ ಸೇವೆಮಾಡಿದರು. (ಕಾವ್ಯದಲ್ಲಿ ಉತ್ಪ್ರೇಕ್ಷೆಗಾಗಿ ಕಾಲ ಮತ್ತು ಶಕ್ತಿಗೆ ಸಾವಿರ ಸಂಖ್ಯೆಯನ್ನು ಸೇರಿಸಿ ಹೇಳುವ ರೂಢಿ ಇದೆ.
  • (ಪದ್ಯ-೧೧)

ಪದ್ಯ :-:೧೨:

[ಸಂಪಾದಿಸಿ]

ಯೂಪಮಯವಾಯ್ತು ಧರೆಯೆಲ್ಲಮುಂ ವರಜಾತ | ರೂಪಮಯವಾಯ್ತು ಮನೆಯೆಲ್ಲಮುಂ ಶುಕಪಿಕಾ | ಲಾಪಮಯವಾಯ್ತು ವನಮೆಲ್ಲಮುಂ ವರ್ಧಿಪ ಪ್ರಜೆಗಳಿಂ ಸಂಚರಿಸುವ ||
ಗೋಪಮಯವಾಯ್ತು ಗಿರಿಯೆಲ್ಲಮುಂ ರತ್ನಪ್ರ | ದೀಪಮಯವಾಯ್ತು ತಮಮೆಲ್ಲಮುಂ ರಘುಜಪ್ರ | ತಾಪಮಯವಾಯ್ತು ಮೂಜಗಮೆಲ್ಲಮಂ ದಾಶರಥಿ ರಾಜ್ಯಮಂ ಪಾಲಿಸೆ ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಯೂಪಮಯವಾಯ್ತು ಧರೆಯೆಲ್ಲಮುಂ ವರಜಾತ (ವರ/ಅನುಗ್ರಹ + ಜಾತ/ಪಡೆದ- ಚಿನ್ನದ ಸಮೃದ್ಧಿಪಡೆದ) ರೂಪಮಯವಾಯ್ತು ಮನೆಯೆಲ್ಲಮುಂ=[ದಶರಥನ ಮಗ ದಾಶರಥಿ ರಾಜ್ಯವನ್ನು ಪಾಲಿಸುವಾಗ, ಬೂಮಿಯ ಎಲ್ಲಾಕಡೆ ಯಜ್ಞದ ಯೂಪಸ್ಥಂಬಗಳು ಕಂಡವು, ಯಲ್ಲಾಕಡೆ ಯಜ್ಞಗಳು ನೆಡೆದವು; ರಾಮನ ಅನುಗ್ರಹದಿಂದ ಎಲ್ಲಾ ಮನೆಯೂ ಚಿನ್ನಬೆಳ್ಳಿಗಳ ರೂಪಮಯವು ಆಯಿತು ]; ಶುಕಪಿಕಾಲಾಪಮಯವಾಯ್ತು ವನಮೆಲ್ಲಮುಂ ವರ್ಧಿಪ ಪ್ರಜೆಗಳಿಂ ಸಂಚರಿಸುವ=[ಆಭಿವೃದ್ಧಿಹೊಂದಿದ ಪ್ರಜೆಗಳಿಂದ ಸಂಚರಿಸುವ ಗುಡ್ಡ ಬೆಟ್ಟಗಳು, ವನಗಳು ಎಲ್ಲವೂ ಶುಕಪಿಕಗಳ ಗಿಳಿಕೋಗಿಲೆಗಳ ಹಾಡಿನಿಂದ ತುಂಬಿತು;]; ಗೋಪಮಯವಾಯ್ತು (ಗೋಪ/ಗೋವಳ/ಗೋಪಾಲಕ)ಗಿರಿಯೆಲ್ಲಮುಂ ರತ್ನಪ್ರದೀಪಮಯವಾಯ್ತು ತಮಮೆಲ್ಲಮುಂ ರಘುಜಪ್ರ ತಾಪಮಯವಾಯ್ತು ಮೂಜಗಮೆಲ್ಲಮಂ ದಾಶರಥಿ ರಾಜ್ಯಮಂ ಪಾಲಿಸೆ=[ಗೋಪಮಯವಾಯ್ತು ಎಲ್ಲಾ ಬೆಟ್ಟಬಯಲೂ ಗೋವುಗಳನ್ನು ಕಾಯುವ ಗೋವಳರಿಂದ ತುಂಬಿತು- ಗೋವುಗಳು ವೃದ್ಧಿಸಿದವು; ಸಮ / ಕತ್ತಲೆ ಇದ್ದಲ್ಲಿ ರತ್ನಗಳಿಂದ ಪ್ರದೀಪಮಯ / ಪ್ರಕಾಶ ಹೊಂದಿತು; ರಘುವಂಶದ ರಾಮನ ಪ್ರತಾಪದಿಂದ ಮೂರು ಜಗತ್ತೂ ತುಂಬಿತು. ದಾಶರಥಿಯಾದ ರಾಮನು ರಾಜ್ಯವನ್ನು ಪಾಲಿಸಲು ಈ ರೀತಿ ಅಭಿವೃದ್ಧಿಯಾಯಿತು. ]
  • ತಾತ್ಪರ್ಯ:ದಶರಥನ ಮಗ ದಾಶರಥಿ ರಾಜ್ಯವನ್ನು ಪಾಲಿಸುವಾಗ, ಭೂಮಿಯ ಎಲ್ಲಾಕಡೆ ಯಜ್ಞದ ಯೂಪಸ್ಥಂಬಗಳು ಕಂಡವು, ಯಲ್ಲಾಕಡೆ ಯಜ್ಞಗಳು ನೆಡೆದವು; ರಾಮನ ಅನುಗ್ರಹದಿಂದ ಎಲ್ಲಾ ಮನೆಯೂ ಚಿನ್ನಬೆಳ್ಳಿಗಳ ರೂಪಮಯವು ಆಯಿತು. ಆಭಿವೃದ್ಧಿಹೊಂದಿದ ಪ್ರಜೆಗಳಿಂದ ಸಂಚರಿಸುವ ಗುಡ್ಡ ಬೆಟ್ಟಗಳು, ವನಗಳು ಎಲ್ಲವೂ ಶುಕಪಿಕಗಳ ಗಿಳಿಕೋಗಿಲೆಗಳ ಹಾಡಿನಿಂದ ತುಂಬಿತು; ಎಲ್ಲಾ ಬೆಟ್ಟಬಯಲೂ ಗೋವುಗಳನ್ನು ಕಾಯುವ ಗೋವಳರಿಂದ ತುಂಬಿತು- ಗೋವುಗಳು ವೃದ್ಧಿಸಿದವು; ಸಮ / ಕತ್ತಲೆ ಇದ್ದಲ್ಲಿ ರತ್ನಗಳಿಂದ ಪ್ರದೀಪಮಯ / ಪ್ರಕಾಶ ಹೊಂದಿತು; ರಘುವಂಶದ ರಾಮನ ಪ್ರತಾಪದಿಂದ ಮೂರು ಜಗತ್ತೂ ತುಂಬಿತು. ದಾಶರಥಿಯಾದ ರಾಮನು ರಾಜ್ಯವನ್ನು ಪಾಲಿಸಲು ಈ ರೀತಿ ಅಭಿವೃದ್ಧಿಯಾಯಿತು.
  • (ಪದ್ಯ-೧೨)

ಪದ್ಯ :-:೧೩:

[ಸಂಪಾದಿಸಿ]

ಪಣ್ಗಾಯಿ ಪೂ ತಳಿರ್ ಬೀತ ತರುಲತೆಯಿಲ್ಲ | ತಣ್ಗೊಳಂ ಕರೆಕಾಲ್ಬೆಳೆಗಿಲ್ಲದಿಳೆಯಿಲ್ಲ | ಪೆಣ್ಗಂಡುಗಳೊಳೊರ್ವರುಂ ನಿಜಾಚಾರ ವಿರಹಿತರಾಗಿ ನಡೆವರಿಲ್ಲ ||
ಬಿಣ್ಗೆಚ್ಚಲಿಕ್ಕಿ ಕೊಡವಾಲ್ಗರೆಯದಾವಿಲ್ಲ | ನುಣ್ಗಾಡಿವೆತ್ತಿರದ ಪಶುಪಕ್ಷಿ ಮೃಗವಿಲ್ಲ | ಕಣ್ಗೊಳಿಪ ರಾಮರಾಜ್ಯದೊಳಕಾಲ ಮರಣಮಿಲ್ಲಖಿಳಜೀವಿಗಳ್ಗೆ ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪಣ್ಗು ಕಾಯಿ ಪೂ ತಳಿರ್ ಬೀತ ತರುಲತೆಯಿಲ್ಲ=[ಹಣ್ಣು ಕಾಯಿ ಹೂವು, ಚಿಗುರು ಬೀತ (ಬಿಡದಿರುವ) ಮರಬಳ್ಳಿಗಳಿಲ್ಲ;];, ತಣ್ ಕೊಳಂ ಕರೆ ಕಾಲ್ಬೆಳೆಗಳು ಇಲ್ಲದ ಇಳೆಯಿಲ್ಲ, ಪೆಣ್ಗು ಗಂಡುಗಳು ಒರ್ವರುಂ ನಿಜ ಆಚಾರ ವಿರಹಿತರಾಗಿ ನಡೆವರಿಲ್ಲ=[ತಣ್ಣನೆಯ ಕೊಳ ಕರೆ ಕಾಲುವೆಗಳು ಇಲ್ಲದ ಭೂಮಿಯಿಲ್ಲ; ಹೆಣ್ಣ ಗಂಡುಗಳಲ್ಲ ತಮ್ಮ (ನಿಜ) ಆಚಾರ ಬಿಟ್ಟವರಾಗಿ ನಡೆಯುವವರಿಲ್ಲ; ]; ಬಿಣ್ಗೆಚ್ಚಲಿಕ್ಕಿ (ಬಿಣ್=ದೊಡ್ಡ) ಕೊಡವಾಲ್ಗರೆಯದಾವಿಲ್ಲ ನುಣ್ಗಾಡಿವೆತ್ತಿರದ (ಗಾಡಿ=ಲಕ್ಷಣ) ಪಶುಪಕ್ಷಿ ಮೃಗವಿಲ್ಲ ಕಣ್ಗೊಳಿಪ ರಾಮರಾಜ್ಯದೊಳಕಾಲ ಮರಣಮಿಲ್ಲಖಿಳಜೀವಿಗಳ್ಗೆ=[ದೊಡ್ಡ ಗಾತ್ರದ ಕೆಚ್ಚಲನ್ನು ಹೊಂದದ, ಕೊಡಹಾಲು ಕೊಡದ ಆವು / ಆಕಲು ಇಲ್ಲ; ನುಣುಪಾದ/ ಸುಂದರ ಲಕ್ಷಣ ಹೊಂದಿರದ ಪಶುಪಕ್ಷಿ ಮೃಗವಿಲ್ಲ; ಕಂಗೊಳಿಸುವ ರಾಮರಾಜ್ಯಲ್ಲಿ ಸಮಸ್ತ ಜೀವಿಗಳಿಗೆ ಅಕಾಲ ಮರಣವಿಲ್ಲ].
  • ತಾತ್ಪರ್ಯ:ಹಣ್ಣು ಕಾಯಿ ಹೂವು, ಚಿಗುರು ಬೀತ (ಬಿಡದಿರುವ) ಮರಬಳ್ಳಿಗಳಿಲ್ಲ; ತಣ್ಣನೆಯ ಕೊಳ ಕರೆ ಕಾಲುವೆಗಳು ಇಲ್ಲದ ಭೂಮಿಯಿಲ್ಲ; ಹೆಣ್ಣ ಗಂಡುಗಳಲ್ಲ ತಮ್ಮ (ನಿಜ) ಆಚಾರ ಬಿಟ್ಟವರಾಗಿ ನಡೆಯುವವರಿಲ್ಲ; ದೊಡ್ಡ ಗಾತ್ರದ ಕೆಚ್ಚಲನ್ನು ಹೊಂದದ, ಕೊಡಹಾಲು ಕೊಡದ ಆಕಳು ಇಲ್ಲ; ನುಣುಪಾದ/ ಸುಂದರ ಲಕ್ಷಣ ಹೊಂದಿರದ ಪಶುಪಕ್ಷಿ ಮೃಗವಿಲ್ಲ; ಕಂಗೊಳಿಸುವ ರಾಮರಾಜ್ಯಲ್ಲಿ ಸಮಸ್ತ ಜೀವಿಗಳಿಗೆ ಅಕಾಲ ಮರಣವಿಲ್ಲ.
  • (ಪದ್ಯ-೧೩)

ಪದ್ಯ :-:೧೪:

[ಸಂಪಾದಿಸಿ]

ಕಾಳಿಂದಿ ಸುರನದಿಗೆ ಕೃಷ್ಣನಮೃತಾಬ್ಧಿಗಳ | ಕಾಳಿ ವಾಣಿಗೆ ಕಳಂಕಿಂದುಮಂಡಲಕೆ ವರ | ಕಾಳಿ ಕಾಪಾಲಿಗೆ ಮದಂ ದೇವಗಜಕೆ ನಂಜಹಿಪತಿಗೆ ತೊಡವಾಗಿರೆ ||
ಕಾಳಿಮದ ಕೂಟಮೆನಗಿಲ್ಲೆಂಬ ಮುಳಿಸತಿವಿ | ಕಾಳಿಸಲಮಲಕೀರ್ತಿಕಾಂತೆ ಪೊರಮಟ್ಟು ಲೋ | ಕಾಳಿಯಂ ತಿರುಗುವಳೆನಲ್ಕೆ ರಾಮನ ಯಶೋವಿಸ್ತರವನೇ ಪೊಗಳ್ವೆನು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಶ್ರೇಷ್ಠರಿಗೆ ಎಲ್ಲರಿಗೂ ಕಾಳ/ಕಪ್ಪ ಎನ್ನುವ ಕಳಂಕವಿದೆ; ಕಾಳಿಂದಿ ಸುರನದಿಗೆ, ಕೃಷ್ಣನು ಅಮೃತಾಬ್ಧಿ (ಕ್ಷೀರಸಮುದ್ರ)ಗೆ ಅಳಕಾಳಿ ವಾಣಿಗೆ, ಕಳಂಕ ಇಂದುಮಂಡಲಕೆ ವರಕಾಳಿ ಕಾಪಾಲಿಗೆ, ಮದಂ ದೇವಗಜಕೆ, ನಂಜು ಅಹಿಪತಿಗೆ ತೊಡವಾಗಿರೆ=[ಶ್ರೇಷ್ಠರಿಗೆ ಎಲ್ಲರಿಗೂ ಕಾಳ/ಕಪ್ಪ ಎನ್ನುವ ಕಳಂಕವಿದೆ; ಉದಾಹರಣೆಗೆ, ಕಾಳಿಂದಿ ಸುರನದಿ/ ಗಂಗೆಗೆ ಯಮುನಾ ಕಪ್ಪುನದಿ ಕಾಳಿಂದಿ ಸೇರುವುದು; ಬಿಳಿಯ ಕ್ಷೀರ ಸಮುದ್ರದಲ್ಲಿ ಕಪ್ಪು ಕೃಷ್ಣನು/ವಿಷ್ಣು ಇದ್ದಾನೆ; ಸರಸ್ವತಿಗೆ ಕಪ್ಪು ಅಳಕಾಳಿ/ ಮುಂಗುರುಳು ಇದೆ; ಚಂದ್ರನಿಗೆ ಒಳಗೆ ಕಪ್ಪುಕಲೆ ಇದೆ; ಕಾಪಾಲಿ/ ಶಿವನಿಗೆ ಪತ್ನಿ ವರಕಾಳಿದೇವಿ; ಐರಾವತಕ್ಕೆ ಮದೋದಕವೇ ಕಳಂಕ; ನಂಜು ಅಹಿಪತಿ/ ವಾಸುಕಿಗೆ ಬಾಯಿಯಲ್ಲಿ ಕಪ್ಪುವಿಷ, ಹೀಗೆ ಎಲ್ಲ ಪ್ರಸಿದ್ಧರಿಗೆ ತೊಡರು ಅಂಟಿದೆ.]; ಕಾಳಿಮದ ಕೂಟಮ್ ಎನಗಿಲ್ಲ ಎಂಬ ಮುಳಿಸು ಅತಿವಿಕಾಳಿಸಲು (ವಿಸ್ತರಿಸು) ಅಮಲ ಕೀರ್ತಿಕಾಂತೆ ಪೊರಮಟ್ಟು ಲೋಕಾಳಿಯಂ ತಿರುಗುವಳು ಎನಲ್ಕೆ ರಾಮನ ಯಶೋವಿಸ್ತರವನು ಏ ಪೊಗಳ್ವೆನು=[ಈ ಬಗೆಯ ಕಾಳಿಮದ ಕೂಟವು / ಕಪ್ಪು ಕಲೆ ತನಗಿಲ್ಲ ಎಂಬ ಕೋಪ/ ಅಹಂಕಾರ, ಹೆಚ್ಚಲು ಪರಿಶುದ್ಧ ಕೀರ್ತಿಕಾಂತೆ ಹೊರಹೊರಟು, ಲೋಕದ ಸಮೂಹದಲ್ಲಿ ಸಂಚರಿಸುತ್ತಿದ್ದಳು, ಎನ್ನುವಂತೆ ರಾಮನ ಕೀರ್ತಿಕಾಂತೆ/ಯಶಸ್ಸಿ ವಿಸ್ತಾರವನ್ನು ಏನೆಂದು ಹೊಗಳುವೆನು/ ಹೊಗಳಿಕೆಗೆ ಮೀರಿದ್ದು.].
  • ತಾತ್ಪರ್ಯ:ಶ್ರೇಷ್ಠರಿಗೆ ಎಲ್ಲರಿಗೂ ಕಾಳ/ಕಪ್ಪು ಎನ್ನುವ ಕಳಂಕವಿದೆ; ಉದಾಹರಣೆಗೆ, ಕಾಳಿಂದಿ ಸುರನದಿಗೆ/ ಗಂಗೆಗೆ ಯಮುನಾ ಕಪ್ಪುನದಿ ಕಾಳಿಂದಿ ಸೇರುವುದು; ಬಿಳಿಯ ಕ್ಷೀರ ಸಮುದ್ರದಲ್ಲಿ ಕಪ್ಪುಬಣ್ಣದ ಕೃಷ್ಣನು/ವಿಷ್ಣು ಇದ್ದಾನೆ; ಸರಸ್ವತಿಗೆ ಕಪ್ಪು ಅಳಕಾಳಿ/ ಕಪ್ಪು ಮುಂಗುರುಳು ಇದೆ; ಚಂದ್ರನಿಗೆ ಒಳಗೆ ಕಪ್ಪುಕಲೆ ಇದೆ; ಕಾಪಾಲಿ/ ಶಿವನಿಗೆ ಪತ್ನಿ ವರಕಾಳಿದೇವಿ ಕಪ್ಪು; ಐರಾವತಕ್ಕೆ ಮದೋದಕವೇ ಕಳಂಕ; ಅಹಿಪತಿ/ ವಾಸುಕಿಗೆ ಬಾಯಿಯಲ್ಲಿ ಕಪ್ಪುವಿಷ, ಹೀಗೆ ಎಲ್ಲ ಪ್ರಸಿದ್ಧರಿಗೆ ತೊಡರು ಅಂಟಿದೆ. (ರಾಮನ ಕೀರ್ತಿಕಾಂತೆ) ಈ ಬಗೆಯ ಕಾಳಿಮದ ಕೂಟವು / ಕಪ್ಪು ಕಲೆ ತನಗಿಲ್ಲ ಎಂಬ ಕೋಪ/ ಅಹಂಕಾರ, ಹೆಚ್ಚಲು ಈ ಪರಿಶುದ್ಧ ಕೀರ್ತಿಕಾಂತೆಯು ಹೊರಹೊರಟು, ಲೋಕದ ಸಮೂಹದಲ್ಲಿ ಸಂಚರಿಸುತ್ತಿದ್ದಳು, ಎನ್ನುವಂತೆ ರಾಮನ ಕೀರ್ತಿಕಾಂತೆ/ಯಶಸ್ಸಿನ ವಿಸ್ತಾರವಿತ್ತು. ಅವನ್ನು ಏನೆಂದು ಹೊಗಳುವೆನು/ ಹೊಗಳಿಕೆಗೆ ಮೀರಿದ್ದು. ("ಎಲ್ಲಡೆ ರಾಮನ ಕೀರ್ತಿ ಹಬ್ಬಿತ್ತು", ಎನ್ನಲು ಈ ಅಲಂಕಾರದ ಉಕ್ತಿ ಬಂದಿದೆ).
  • (ಪದ್ಯ-೧೪)

ಪದ್ಯ :-:೧೫:

[ಸಂಪಾದಿಸಿ]

ಸರ್ವಸಂಪತ್ಸಮೃದ್ಧಿಗಳಿಂ ಸ್ವಧರ್ಮದಿಂ | ನಿರ್ವಿಘ್ನಮಾಗಿ ಸಕಲಪ್ರಕೃತಿ ಜಾತಿ ಚಾ | ತುರ್ವಣ್ರ್ಯಮಂ ಬಿಡದೆ ಪೊರೆವಲ್ಲಿ ನೀತಿಶಾಸ್ತ್ರಂಗಳ್ಗೆ ಪಳಿವೊರಿಸದೆ ||
ಉರ್ವಿಯಂ ನವಸಹಸ್ರಾಬ್ಧಮುರೆ ಪಾಲಿಸಿದ | ನುರ್ವಸಂತಾನಮಂ ಕಾಣದಿಕ್ಷ್ವಾಕು ಕುಲ | ನಿರ್ವಾಹಮಂ ನೆನೆದು ರಘುವರಂ ನುಡಿದನೇಕಾಂತದಿಂ ಜಾನಕಿಯೊಳು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸರ್ವಸಂಪತ್ಸಮೃದ್ಧಿಗಳಿಂ ಸ್ವಧರ್ಮದಿಂ ನಿರ್ವಿಘ್ನಮಾಗಿ ಸಕಲಪ್ರಕೃತಿ ಜಾತಿ ಚಾತುರ್ವಣ್ರ್ಯಮಂ ಬಿಡದೆ ಪೊರೆವಲ್ಲಿ ನೀತಿಶಾಸ್ತ್ರಂಗಳ್ಗೆ ಪಳಿವೊರಿಸದೆ=[ಸರ್ವಸಂಪತ್ತು ಸಂಮೃದ್ಧಿಗಳಿಂದಲೂ ಕ್ಷಾತ್ರ ಧರ್ಮದಿಂದಲೂ ನಿರ್ವಿಘ್ನವಾಗಿ ಸಕಲ ಪ್ರಕೃತಿಜೀವಿಗಳಿಗೂ, ಜಾತಿಗಳಿಗೂ, ಚಾತುರ್ವಣ್ಯ ಧರ್ಮವನ್ನು ಬಿಡದೆ ನೀತಿಶಾಸ್ತ್ರಗಳಿಗೆ ಕುಂದು ಬಾರದಂತೆ ರಾಜ್ಯವನ್ನು ಆಳಿದನು]; ಉರ್ವಿಯಂ ನವಸಹಸ್ರಾಬ್ಧಮುರೆ ಪಾಲಿಸಿದನು ಉರ್ವ (ಏಳಿಗೆ ವಂಶದ ಏಳಿಗೆ) ಸಂತಾನಮಂ ಕಾಣದ ಇಕ್ಷ್ವಾಕು ಕುಲನಿರ್ವಾಹಮಂ ನೆನೆದು ರಘುವರಂ ನುಡಿದನು ಏಕಾಂತದಿಂ ಜಾನಕಿಯೊಳು=[ಹೀಗೆ ಭೂಮಂಡಲವನ್ನು ಒಂಭತ್ತು ಸಾವಿರ ವರ್ಷಕಾಲ ಚಿನ್ನಾಗಿ ಪಾಲಿಸಿದನು. ವಂಶದ ಅಭಿವೃದ್ಧಗೆ ಸಂತಾನವನ್ನು ಆಗದಿರಲು, ಇಕ್ಷ್ವಾಕು ಕುಲವನ್ನು ಉದ್ಧರಸುವ ವಿಚಾರ ನೆನೆದುಕೊಂಡು ರಘುರಾಮನು ಏಕಾಂತದಲ್ಲಿ ಜಾನಕಿಯಬಳಿ ನುಡಿದನು.
  • ತಾತ್ಪರ್ಯ:ಸರ್ವಸಂಪತ್ತು ಸಂಮೃದ್ಧಿಗಳಿಂದಲೂ ಕ್ಷಾತ್ರ ಧರ್ಮದಿಂದಲೂ ನಿರ್ವಿಘ್ನವಾಗಿ ಸಕಲ ಪ್ರಕೃತಿಜೀವಿಗಳಿಗೂ, ಜಾತಿಗಳಿಗೂ, ಚಾತುರ್ವಣ್ಯ ಧರ್ಮವನ್ನು ಬಿಡದೆ ನೀತಿಶಾಸ್ತ್ರಗಳಿಗೆ ಕುಂದು ಬಾರದಂತೆ ರಾಜ್ಯವನ್ನು ಆಳಿದನು. ಹೀಗೆ ಭೂಮಂಡಲವನ್ನು ಒಂಭತ್ತು ಸಾವಿರ ವರ್ಷಕಾಲ ಚಿನ್ನಾಗಿ ಪಾಲಿಸಿದನು. ವಂಶದ ಅಭಿವೃದ್ಧಗೆ ಸಂತಾನವು ಆಗದಿರಲು, ಇಕ್ಷ್ವಾಕು ಕುಲವನ್ನು ಉದ್ಧರಸುವ ವಿಚಾರ ನೆನೆದುಕೊಂಡು ರಘುರಾಮನು ಏಕಾಂತದಲ್ಲಿ ಜಾನಕಿಯಬಳಿ ನುಡಿದನು.
  • (ಪದ್ಯ-೧೫)v

ಪದ್ಯ :-:೧6:

[ಸಂಪಾದಿಸಿ]

ಕಾಂತೆ ಕೇಳಿಕ್ಷ್ವಾಕುವಂಶಮೆನ್ನಲ್ಲಿ ಬಂ | ದಾಂತುದಿಲ್ಲಿಂದೆ ಸಂತತಿ ನಡೆಯದಿರ್ದೊಡೆ ಕು | ಲಾಂತಕಂ ತಾನಾದಪೆಂ ಸಾಕದಂತಿರಲಿ ಮನುಜರ್ಗೆ ಸಂಸಾರದ ||
ಭ್ರಾಂತಿಯಂ ಬಿಡಿಸುವೊಡಪತ್ಯದೇಳ್ಗೆಗಳೆ ವಿ | ಶ್ರಾಂತಿಯಲ್ಲದೆ ಪೆರತದೇನುಂಟು ಮುಂದೆ ಪು | ತ್ರಾಂತರವನೈದದಿರ್ದಪೆನೆಂತೊ ಪೇಳೆಂದು ದಾಶರಥಿ ಬಿಸುಸುಯ್ದನು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾಂತೆ ಕೇಳು ಇಕ್ಷ್ವಾಕುವಂಶಮು ಎನ್ನಲ್ಲಿ ಬಂದು ಆಂತುದು ಅಲ್ಲಿಂದೆ ಸಂತತಿ ನಡೆಯದಿರ್ದೊಡೆ ಕುಲಾಂತಕಂ ತಾನ ಆದಪೆಂ=[ಕಾಂತೆ /ಪ್ರಿಯಳೇ ಕೇಳು ಇಕ್ಷ್ವಾಕುವಂಶವು ನನ್ನಲ್ಲಿ ಬಂದು ನಿಂತಿದೆ. ಅಲ್ಲಿಂದೆ ಮುಂದಿನ ಸಂತತಿ ನಡೆಯದಿದ್ದರೆ, ಕುಲವನ್ನು ಅಂತ್ಯಗೊಳಿಸಿದವನು ತಾನು ಆಗುವೆನು.]; ಸಾಕು ಅದಂತಿರಲಿ ಮನುಜರ್ಗೆ ಸಂಸಾರದ ಭ್ರಾಂತಿಯಂ ಬಿಡಿಸುವೊಡೆ ಅಪತ್ಯದ ಏಳ್ಗೆಗಳೆ ವಿಶ್ರಾಂತಿಯಲ್ಲದೆ ಪೆರತು ಅದುನುಂಟು=[ಸಾಕು ಅದು ಹಾಗಿರಲಿ, ಮನುಷ್ರಿಗೆ ಸಂಸಾರದ ಭ್ರಾಂತಿಯನ್ನು ಬಿಡಿಸಲು ಮಕ್ಕಳ ಏಳಿಗೆಯೇ ಸಮಾಧಾನ ಶಾಂತಿಯನ್ನುಕೊಡುವುದು, ಅದಲ್ಲದೆ ಬೇರೆ ಏನಿದೆ?]; ಪುತ್ರಾಂತರವನು ಐದದಿರ್ದಪೆನೆ ಎಂತೊ ಪೇಳೆಂದು ದಾಶರಥಿ ಬಿಸುಸುಯ್ದನು=[ಮುಂದೆ ಪುತ್ರರಿಲ್ಲದ ದುಃಖಕ್ಕೆ ಈಡಾಗವೆನೇ ಎಂತೊ ಹೇಳು ಎಂದು ರಾಮನು ನಿಟ್ಟುಸಿರುಬಿಟ್ಟನು.]
  • ತಾತ್ಪರ್ಯ: ರಾಮನು ಸೀತೆಯೊಡನೆ, ಕಾಂತೆ /ಪ್ರಿಯಳೇ ಕೇಳು ಇಕ್ಷ್ವಾಕುವಂಶವು ನನ್ನಲ್ಲಿ ಬಂದು ನಿಂತಿದೆ. ಅಲ್ಲಿಂದೆ ಮುಂದಿನ ಸಂತತಿ ನಡೆಯದಿದ್ದರೆ, ಕುಲವನ್ನು ಅಂತ್ಯಗೊಳಿಸಿದವನು ತಾನು ಆಗುವೆನು. ಸಾಕು ಅದು ಹಾಗಿರಲಿ, ಮನುಷ್ಯರಿಗೆ ಸಂಸಾರದ ಭ್ರಾಂತಿಯನ್ನು ಬಿಡಿಸಲು ಮಕ್ಕಳ ಏಳಿಗೆಯೇ ಸಮಾಧಾನ ಮತ್ತು ಶಾಂತಿಯನ್ನು ಕೊಡುವುದು, ಅದಲ್ಲದೆ ಬೇರೆ ಏನಿದೆ? ಮುಂದೆ ತಾನು ಪುತ್ರರಿಲ್ಲದ ದುಃಖಕ್ಕೆ ಈಡಾಗವೆನೇ ಎಂತೊ ಹೇಳು ಎಂದು ಹೇಳಿ, ರಾಮನು ನಿಟ್ಟುಸಿರುಬಿಟ್ಟನು.
  • (ಪದ್ಯ-೧6)

ಪದ್ಯ :-:೧೭:

[ಸಂಪಾದಿಸಿ]

ಸಂತಾನಮಂದಾರದೊಳ್ ಪಡೆದತುಳವಿಭವ | ಮಂ ತಳೆದು ನಂದನೋತ್ಸವದಮೃತಪಾನದ | ತ್ಯಂತಸೌಖ್ಯವನೈದಿ ದೇವೇಂದ್ರನಂತೆ ಸುಮ್ಮಾನಮಾಗಿರದೆ ಬರಿದೆ ||
ಸಂತತಂ ಜಾತರೂಪವನೆ ಕಾಣದೆ ತಾಪ | ದಿಂ ತೊಳಲಿ ಬಳಲುವ ದರಿದ್ರನಂದದೊಳೈದೆ | ಚಿಂತಿಸುವ ಸಂಸಾರಮೇಕೆ ಮಾನವಜನ್ಮಕೆಂದು ರಘುಪತಿ ನುಡಿದನು||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಂತಾನಮಂ ದಾರದೊಳ್(ಪತ್ನಿಯೋಳ್) ಪಡೆದು ಅತುಳ ವಿಭವಮಂ ತಳೆದು ನಂದನೋತ್ಸವದ ಅಮೃತಪಾನದ ಅತ್ಯಂತ ಸೌಖ್ಯವನು ಐದಿ ದೇವೇಂದ್ರನಂತೆ ಸುಮ್ಮಾನಮಾಗಿರದೆ=[ಸಂತಾನವನ್ನು ಪತ್ನಿಯಲ್ಲಿ ಪಡೆದು ಎಣೆಯಿಲ್ಲದ ಘನತೆಯನ್ನು ಹೊಂದಿ ಮಕ್ಕಳನ್ನು ಪಡೆದ ಆನಂದದ ಉತ್ಸವದದಲ್ಲಿ ಅಮೃತಪಾನದಂತೆ ಅತ್ಯಂತ ಸೌಖ್ಯವನು ಹೋದಿ ದೇವೇಂದ್ರನಂತೆ ಸಂತೋಷವಾಗಿರದೆ ]; ಬರಿದೆ ಸಂತತಂ ಜಾತರೂಪವನೆ ( ಚಿನ್ನವನ್ನು) ಕಾಣದೆ ತಾಪದಿಂ ತೊಳಲಿ ಬಳಲುವ ದರಿದ್ರನಂದದೊಳೈದೆ ಚಿಂತಿಸುವ ಸಂಸಾರಮೇಕೆ ಮಾನವಜನ್ಮಕೆಂದು ರಘುಪತಿ ನುಡಿದನು=[ಸುಮ್ಮನೆ ಸದಾಕಾಲ ಚಿನ್ನವನ್ನು ಕಾಣದೆ ಸಂತಾಪದಿಂದ ಕಷ್ಟಪಡುತ್ತಾ ಬಳಲುವ ದರಿದ್ರನಂತೆ ಇದ್ದು ಚಿಂತಿಸುವ ಸಂಸಾರವು ಮಾನವಜನ್ಮಕ್ಕೆ ಏಕೆ ಬೇಕು? ಎಂದು ರಾಮನು ಹೇಳಿದನು].
  • ತಾತ್ಪರ್ಯ: ಸಂತಾನವನ್ನು ಪತ್ನಿಯಲ್ಲಿ ಪಡೆದು ಎಣೆಯಿಲ್ಲದ ಘನತೆಯನ್ನು ಹೊಂದಿ ಮಕ್ಕಳನ್ನು ಪಡೆದ ಆನಂದದ ಉತ್ಸವದದಲ್ಲಿ ಅಮೃತಪಾನದಂತೆ ಅತ್ಯಂತ ಸೌಖ್ಯವನು ಹೋದಿ ದೇವೇಂದ್ರನಂತೆ ಸಂತೋಷವಾಗಿರದೆ, ಸುಮ್ಮನೆ ಸದಾಕಾಲ ಚಿನ್ನವನ್ನು ಕಾಣದೆ ಸಂತಾಪದಿಂದ ಕಷ್ಟಪಡುತ್ತಾ ಬಳಲುವ ದರಿದ್ರನಂತೆ ಇದ್ದು ಚಿಂತಿಸುವ ಸಂಸಾರವು ಮಾನವಜನ್ಮಕ್ಕೆ ಏಕೆ ಬೇಕು? ಎಂದು ರಾಮನು ಹೇಳಿದನು].
  • (ಪದ್ಯ-೧೭)

ಪದ್ಯ :-:೧೮:

[ಸಂಪಾದಿಸಿ]

ನೀರಿರ್ದ ಕಾಸಾರಕರವಿಂದಮಿಲ್ಲದೊಡೆ | ತಾರಕೆಗಳಿರ್ದ ಗಗನಕೆ ಚಂದ್ರನಿಲ್ಲದೊಡೆ | ಚಾರುಯೌವನಮಿರ್ದ ಪೆಣ್ಗೆನಿಯನಿಲ್ಲದೊಡೆ ಸನ್ನುತಪ್ರಜೆಗಳಿರ್ದ ||
ಧಾರಿಣಿಗೆ ಧರ್ಮದರಸಿಲ್ಲದೊಡೆ ಸಿರಿಯಿರ್ದು | ದಾರವಂಶಕೆ ಕುವರನಿಲ್ಲದೊಡೆ ಮೆರೆದಪುದೆ | ನಾರಿ ಪೇಳೆನೆ ಲಜ್ಜೆಯಿಂದೆ ತಲೆವಾಗಿ ನಿಜಪತಿಗೆ ಜಾನಕಿ ನುಡಿದಳು||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನೀರಿರ್ದ ಕಾಸಾರಕೆ ಅರವಿಂದಂ ಇಲ್ಲದೊಡೆ ತಾರಕೆಗಳು ಇರ್ದ ಗಗನಕೆ ಚಂದ್ರನಿಲ್ಲದೊಡೆ ಚಾರುಯೌವನಮ್ ಇರ್ದ ಪೆಣ್ಗೆ ಇನಿಯನಿಲ್ಲದೊಡೆ=[ನೀರು ಇರುವ ಸರೋವರಕ್ಕೆ ಕಮಲದ ಹೂವು ಇಲ್ಲದಿದ್ದರೆ,ತಾರೆಗಳು ಇರುವ ಆಕಾಶದಲ್ಲಿ ಚಂದ್ರನು ಇಲ್ಲದಿದ್ದರೆ, ಸುಂದರ ಯೌವನವು ಇರುವ ಹೆಣ್ಣಿಗೆ ಗಂಡನಿಲ್ಲದಿದ್ದರೆ]; ಸನ್ನುತ ಪ್ರಜೆಗಳಿರ್ದ ಧಾರಿಣಿಗೆ ಧರ್ಮದ ಅರಸಿಲ್ಲದೊಡೆ ಸಿರಿಯಿರ್ದು ಉದಾರವಂಶಕೆ ಕುವರನು ಇಲ್ಲದೊಡೆ ಮೆರೆದಪುದೆ ನಾರಿ ಪೇಳೆನೆ=[ಉತ್ತಮ ಪ್ರಜೆಗಳಿದ್ದ ರಾಜ್ಯಕ್ಕೆ ಧರ್ಮದ ಅರಸಿಲ್ಲದಿದ್ದರೆ, ಸಂಪತ್ತಿದ್ದು ಉತ್ತಮ ವಂಶಕ್ಕೆ ಮಗನು ಇಲ್ಲದಿದ್ದರೆ ಶೋಭಿಸುವದೇ ಸೀತೆ ಪೇಳು ಎನ್ನಲು]; ಲಜ್ಜೆಯಿಂದೆ ತಲೆವಾಗಿ ನಿಜಪತಿಗೆ ಜಾನಕಿ ನುಡಿದಳು= [ಲಜ್ಜೆಯಿಂದ ತಲೆ ಬಗ್ಗಿಸಿ ತನ್ನಪತಿಗೆ ಜಾನಕಿ ಹೇಳಿದಳು.]
  • ತಾತ್ಪರ್ಯ: ನೀರು ಇರುವ ಸರೋವರಕ್ಕೆ ಕಮಲದ ಹೂವು ಇಲ್ಲದಿದ್ದರೆ,ತಾರೆಗಳು ಇರುವ ಆಕಾಶದಲ್ಲಿ ಚಂದ್ರನು ಇಲ್ಲದಿದ್ದರೆ, ಸುಂದರ ಯೌವನವು ಇರುವ ಹೆಣ್ಣಿಗೆ ಗಂಡನಿಲ್ಲದಿದ್ದರೆ; ಉತ್ತಮ ಪ್ರಜೆಗಳಿದ್ದ ರಾಜ್ಯಕ್ಕೆ ಧರ್ಮದ ಅರಸಿಲ್ಲದಿದ್ದರೆ, ಸಂಪತ್ತಿದ್ದು ಉತ್ತಮ ವಂಶಕ್ಕೆ ಮಗನು ಇಲ್ಲದಿದ್ದರೆ ಶೋಭಿಸುವದೇ ಸೀತೆ ಪೇಳು ಎನ್ನಲು; ಲಜ್ಜೆಯಿಂದ ತಲೆ ಬಗ್ಗಿಸಿ ತನ್ನ ಪತಿಗೆ ಜಾನಕಿ ಹೇಳಿದಳು.
  • (ಪದ್ಯ-೧೮)

ಪದ್ಯ :-:೧೯:

[ಸಂಪಾದಿಸಿ]

ಕಾಂತ ನೀಂ ಪೇಳ್ದೊಡೇಂ ಪುತ್ರವತಿಯಹುದು ಜ | ನ್ಮಾಂತರದ ಪುಣ್ಯಮೈಸಲೆ ಪೆಣ್ಗೆ ಮುನ್ನತಾಂ | ನೋಂತುದಲ್ಲದೆ ಬಂದಪುದೆ ಬರಿದೆ ಬಯಸಿದೊಡೆ ಸುಕುಮಾರನಂ ಪೊಡೆಯೊಳು ||
ಅಂತೊಳಗೆ ಪುದಗಿರ್ದ ಪರಿಮಳದೊಳೊಪ್ಪುವ ಲ | ತಾಂತಕುಟ್ಮಲದಂತೆ ವರ ಗರ್ಭಲಾಂಛನದ | ಕಾಂತಿಯಂ ತಳೆವುದಂಗನೆಯರೆಲ್ಲರ್ಗೆ ದೊರೆವುದೆ ಮೇದಿನಿಯೊಳೆಂದಳು ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾಂತ ನೀಂ ಪೇಳ್ದೊಡೇಂ ಪುತ್ರವತಿಯಹುದು ಜನ್ಮಾಂತರದ ಪುಣ್ಯಮೈಸಲೆ ಪೆಣ್ಗೆ=[ಕಾಂತ ಶ್ರೀರಾಮಾ, ನೀನು ಹೀಗೆ ಹೇಳಿದರೆ ಏನು ಹೇಳಲಿ? ಪುತ್ರವತಿಯಾಗುವುದು ಹೆಣ್ಣಿಗೆ ಜನ್ಮಾಂತರದ ಪುಣ್ಯವೇ ಸರಿ.]; ಮುನ್ನ ತಾಂನೋಂತುದು ಅಲ್ಲದೆ ಬಂದಪುದೆ ಬರಿದೆ ಬಯಸಿದೊಡೆ ಸುಕುಮಾರನಂ ಪೊಡೆಯೊಳು=[ಹಿಂದಿನ ಜನ್ಮದಲ್ಲಿ ತಾನು ದೇವರ ವ್ರತಾಚರಣೆ ಮಾಡಿದ ಪುಣ್ಯವಲ್ಲದೆ ಹಾಗೆಯೇ ಬಯಸಿದ ಮಾತ್ರಕ್ಕೆ ಸುಕುಮಾರನನ್ನು ಪಡೆಯಲು ಆಗುವುದೇ?]; ಅಂತು ಒಳಗೆ ಪುದಗಿರ್ದ ಪರಿಮಳದೊಳು ಒಪ್ಪುವ ಲತಾಂತಕುಟ್ಮಲದಂತೆ ವರ ಗರ್ಭಲಾಂಛನದ ಕಾಂತಿಯಂ ತಳೆವುದಂಗನೆಯರು ಎಲ್ಲರ್ಗೆ ದೊರೆವುದೆ ಮೇದಿನಿಯೊಳೆಂದಳು=[ಹೀಗೆ ಒಳಗೆ ಹುದುಗಿರುವ ಪರಿಮಳದಲ್ಲಿ ಒಪ್ಪುವ ಬಳ್ಳಿಯ ವಳಗಿರುವ ಮೊಗ್ಗಿನಂತೆ ಶ್ರೇಷ್ಠ ಗರ್ಭಧರಿಸಿದ ಕಾಂತಿಯನ್ನು ಪಡೆಯುವ ಭಾಗ್ಯವು ಹೆಂಗಸರೆಲ್ಲರಿಗೂ ಈ ಭೂಮಿಯಲ್ಲಿ ದೊರೆಯುವುದೇ?].
  • ತಾತ್ಪರ್ಯ:ಕಾಂತ ಶ್ರೀರಾಮಾ, ನೀನು ಹೀಗೆ ಹೇಳಿದರೆ ಏನು ಹೇಳಲಿ? ಪುತ್ರವತಿಯಾಗುವುದು ಹೆಣ್ಣಿಗೆ ಜನ್ಮಾಂತರದ ಪುಣ್ಯವೇ ಸರಿ. ಹಿಂದಿನ ಜನ್ಮದಲ್ಲಿ ತಾನು ದೇವರ ವ್ರತಾಚರಣೆ ಮಾಡಿದ ಪುಣ್ಯವಲ್ಲದೆ ಹಾಗೆಯೇ ಬಯಸಿದ ಮಾತ್ರಕ್ಕೆ ಸುಕುಮಾರನನ್ನು ಪಡೆಯಲು ಆಗುವುದೇ? ಹೀಗೆ ಒಳಗೆ ಹುದುಗಿರುವ ಪರಿಮಳದಲ್ಲಿ ಒಪ್ಪುವ ಬಳ್ಳಿಯ ಒಳಗಿರುವ ಮೊಗ್ಗಿನಂತೆ ಶ್ರೇಷ್ಠ ಗರ್ಭಧರಿಸಿದ ಕಾಂತಿಯನ್ನು ಪಡೆಯುವ ಭಾಗ್ಯವು ಹೆಂಗಸರೆಲ್ಲರಿಗೂ ಈ ಭೂಮಿಯಲ್ಲಿ ದೊರೆಯುವುದೇ?
  • (ಪದ್ಯ-೧೯)

ಪದ್ಯ :-:೨೦:

[ಸಂಪಾದಿಸಿ]

ಕಂದನಾಡುವ ಬಾಲಲೀಲೆಯಂ ನೋಡಿ ತೊದ | ಲೊಂದಿದಿನಿವಾತನುರೆ ಕೇಳ್ದು ಮುದ್ದಿನ ಮುದ್ದೆ | ಯಂದದಂಗವನೆತ್ತಿಕೊಂಡು ನಳಿತೋಳ್ಗಳಿಂದಪ್ಪಿ ಕೆಂಗುರುಳ್ಗಳೊಲೆವ ||
ಮುಂದಲೆಯ ಕಂಪನಾಘ್ರಾಣಿಸಿ ತೊರೆದ ಜೊಲ್ಲ | ಚೆಂದುಟಿಯ ಬಾಯ್ದೆರೆಯನೈದೆ ಚುಂಬಿಸಿ ಸೊಗಸು | ಗುಂದದಾಯೆಂದು ಪಂಚೇಂದ್ರಿಯಪ್ರೀತಿಯಂ ಪಡೆವರಿನ್ನಾವ ಕೃತರೊ ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಂದನಾಡುವ ಬಾಲಲೀಲೆಯಂ ನೋಡಿ ತೊದಲೊಂದಿದ ಇನಿವಾತನು ಉರೆ ಕೇಳ್ದು ಮುದ್ದಿನ ಮುದ್ದೆಯಂದದ ಅಂಗವನೆತ್ತಿಕೊಂಡು ನಳಿತೋಳ್ಗಳಿಂದ ಅಪ್ಪಿ=[ಮಗುವು ಆಡುವ ಬಾಲಲೀಲೆಯನ್ನು ನೋಡಿ ತೊದಲು ಹೊಂದಿದ ಮುದ್ದುಮಾತನ್ನು,ಬಹಳವಾಗಿ ಕೇಳಿ ಮುದ್ದಿನ ಮುದ್ದೆಯಂತಿರುವ ಮಗುವನ್ನು ಎತ್ತಿಕೊಂಡು ತಮ್ಮ ಉದ್ದತೋಲಿನಿಂದ ಅಪ್ಪಿ]; ಕೆಂಗುರುಳ್ಗಳು ಒಲೆವ ಮುಂದಲೆಯ ಕಂಪನಾಘ್ರಾಣಿಸಿ ತೊರೆದ ಜೊಲ್ಲ ಚೆಂದುಟಿಯ ಬಾಯ್ದೆರೆಯನು ಐದೆ ಚುಂಬಿಸಿ ಸೊಗಸು ಗುಂದದ ಆ ಯೆಂದು ಪಂಚೇಂದ್ರಿಯಪ್ರೀತಿಯಂ ಪಡೆವರು ಇನ್ನಾವ ಕೃತರೊ=[ಮುಂದಲೆಯಲ್ಲಿ ಒಲೆದಾಡುವ ಕೆಂಪು ಕುರುಳುಗಳನ್ನು ಕಂಪನ್ನು ಮೂಸಿ, ಸೊರುವ ಜೊಲ್ಲಿನ ಚೆಂದುಟಿಯ ಅರೆತೆರೆದ ಬಾಯನ್ನು ಸೆಳೆದು ಚುಂಬಿಸಿ ಎಂದೂ ಸೊಗಸು ಕಡಿಮೆಯಾಗದ "ಆ' ಯೆಂದು ಪಂಚೇಂದ್ರಿಯವೂ ಆನಂದಪಡುವ ಪ್ರೀತಿಯನ್ನು ಪಡೆವರು ಇನ್ನೆಷ್ಟು ಪುಣ್ಯವಂತರೋ!].
  • ತಾತ್ಪರ್ಯ:ಮಗುವು ಆಡುವ ಬಾಲಲೀಲೆಯನ್ನು ನೋಡಿ ತೊದಲು ಹೊಂದಿದ ಮುದ್ದುಮಾತನ್ನು,ಬಹಳವಾಗಿ ಕೇಳಿ ಮುದ್ದಿನ ಮುದ್ದೆಯಂತಿರುವ ಮಗುವನ್ನು ಎತ್ತಿಕೊಂಡು ತಮ್ಮ ಉದ್ದತೋಲಿನಿಂದ ಅಪ್ಪಿ, ಮುಂದಲೆಯಲ್ಲಿ ಒಲೆದಾಡುವ ಕೆಂಪು ಕುರುಳುಗಳನ್ನು ಕಂಪನ್ನು ಮೂಸಿ, ಸೊರುವ ಜೊಲ್ಲಿನ ಚೆಂದುಟಿಯ ಅರೆತೆರೆದ ಬಾಯನ್ನು ಸೆಳೆದು ಚುಂಬಿಸಿ ಎಂದೂ ಸೊಗಸು ಕಡಿಮೆಯಾಗದ "ಆ' ಯೆಂದು ಪಂಚೇಂದ್ರಿಯವೂ ಆನಂದಪಡುವ ಪ್ರೀತಿಯನ್ನು ಪಡೆವರು ಇನ್ನೆಷ್ಟು ಪುಣ್ಯವಂತರೋ!
  • (ಪದ್ಯ-೨೦)

ಪದ್ಯ :-:೨೧:

[ಸಂಪಾದಿಸಿ]

ತೇಲ್ದೋಸರಿಸಿ ಮೇಲುದಂ ಸೆಳೆವ ಕಮಲಮಂ | ಪೋಲ್ದ ಕಣ್ಗೊನೆಯಿಂದೆ ತಾಯ ಮೊಗಮಂ ನೋಳ್ಪ | ಕಾಲ್ದುದಿಗಳಂ ಬಿದಿರಿ ತಡವರಿಸಿ ಕೈಯ್ಯಿಡುವ ಬಾಲಂಗೆ ಮೋಹದಿಂದೆ ||
ಜೋಲ್ದೊಲೆವ ಹಾರಮಂ ತೆಗೆದು ಮುಯ್ಪಿಗೆ ಸಾರ್ಚಿ ಪಾಲ್ದೊರೆವ ಮೊಲೆಯೂಡಿ ಕೂಡೆ ತೊಟ್ಟಿಲೊಳಿಟ್ಟು | ಸಾಲ್ದ ಸೈಪಿಂದೆ ಜೋಗುಳವಾಡಿ ತೂಗುವಳದೇಂ ಸುಕೃತಿಯೋ ಧರೆಯೊಳು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತೇಲ್ದು ಓಸರಿಸಿ ಮೇಲುದಂ ಸೆಳೆವ ಕಮಲಮಂ ಪೋಲ್ದ ಕಣ್ಗೊನೆಯಿಂದೆ ತಾಯ ಮೊಗಮಂ ನೋಳ್ಪ ಕಾಲ್ದುದಿಗಳಂ ಬಿದಿರಿ ತಡವರಿಸಿ ಕೈಯ್ಯಿಡುವ ಬಾಲಂಗೆ ಮೋಹದಿಂದೆ=[ತಾಯಿಯ ಮಡಿಲಲ್ಲಿ ತೇಲುತ್ತಾ ಹೊರಳಿ ಸೆರಗನ್ನು ಎಳೆಯುವ, ಕಮಲವನ್ನು ಹೋಲುವ ಕಣ್ಣಿನ ಕೊನೆಯಿಂದ ತಾಯಿಯ ಮುಖವನ್ನು ನೋಡುವ, ಕಾಲಿನ ತುದಿಪಾದವನ್ನು ಕೊಡವಿ, ತಡವರಿಸಿ ಕೈಯನ್ನು ಎದೆಯಮೇಲೆ ಇಡುವ ಮಗುವಿಗೆ ಪ್ರೀತಿಯಿಂದ]; ಜೋಲ್ದು ಒಲೆವ ಹಾರಮಂ ತೆಗೆದು ಮುಯ್ಪುಗೆ ಸಾರ್ಚಿ ಪಾಲ್ದೊರೆವ ಮೊಲೆಯೂಡಿ ಕೂಡೆ ತೊಟ್ಟಿಲೊಳಿಟ್ಟು ಸಾಲ್ದ ಸೈಪಿಂದೆ ಜೋಗುಳವಾಡಿ ತೂಗುವಳದೇಂ ಸುಕೃತಿಯೋ ಧರೆಯೊಳು=[ಜೋಲುತ್ತಾ ಒಲೆದಾಡುವ ಸರವನ್ನು ತೆಗದುಪಕ್ಕಕ್ಕೆ ಸರಿಸಿ, ಎದೆಗೆ ಸಾಚಿಕೊಂಡು ಹಾಲು ಉಕ್ಕುವ ಮೊಲೆಯುಣ್ಣಿಸಿ,ಆ ಕೂಡಲೆ ತೊಟ್ಟಿಲಲ್ಲಿ ಮಗುವನ್ನಿಟ್ಟು, ಅಷ್ಟಾದರೂ ತೃಪ್ತಿಯಾಗದೆ, ಸಂತೋಷದಿಂದ ಜೋಗುಳಹಾಡಿ ತೂಗುವ ತಾಯಿಯದು ಅದೇನು ಸುಕೃತಿಯೋ ಈ ಭೂಮಿಯಲ್ಲಿ ಎಂದಳು ಸೀತೆ.].
  • ತಾತ್ಪರ್ಯ:ತಾಯಿಯ ಮಡಿಲಲ್ಲಿ ತೇಲುತ್ತಾ ಹೊರಳಿ ಸೆರಗನ್ನು ಎಳೆಯುವ ಕಮಲವನ್ನು ಹೋಲುವ ಕಣ್ಣಿನ ಕೊನೆಯಿಂದ ತಾಯಿಯ ಮುಖವನ್ನು ನೋಡುವ, ಕಾಲಿನ ತುದಿಪಾದವನ್ನು ಕೊಡವಿ, ತಡವರಿಸಿ ಕೈಯನ್ನು ಎದೆಯಮೇಲೆ ಇಡುವ ಮಗುವಿಗೆ ಪ್ರೀತಿಯಿಂದ, ಜೋಲುತ್ತಾ ಒಲೆದಾಡುವ ಸರವನ್ನು ತೆಗದುಪಕ್ಕಕ್ಕೆ ಸರಿಸಿ, ಮಗುವನ್ನು ಎದೆಗೆ ಸಾಚಿಕೊಂಡು ಹಾಲು ಉಕ್ಕುವ ಮೊಲೆಯುಣ್ಣಿಸಿ,ಆ ಕೂಡಲೆ ತೊಟ್ಟಿಲಲ್ಲಿ ಮಗುವನ್ನಿಟ್ಟು, ಅಷ್ಟಾದರೂ ತೃಪ್ತಿಯಾಗದೆ, ಸಂತೋಷದಿಂದ ಜೋಗುಳಹಾಡಿ ತೂಗುವ ತಾಯಿಯದು ಅದೇನು ಸುಕೃತಿಯೋ ಈ ಭೂಮಿಯಲ್ಲಿ, ಎಂದಳು ಸೀತೆ.
  • (ಪದ್ಯ-೨೧)

ಪದ್ಯ :-:೨೨:

[ಸಂಪಾದಿಸಿ]

ಇಂತು ಸುತರಿಲ್ಲದಾಸರೊಳವರ್ಗಳಿರ್ವರುಂ | ಚಿಂತಿಸುವ ಸಮಯಕೆ ವಸಿಷ್ಠ ಮುನಿಪತಿ ಬಂದು | ಸಂತಾನದಭ್ಯುದಯಮಾದಪುದು ಮುಂದೆ ನಿಮಗೆಂದು ಸಂಪ್ರೀತಿಯಿಂದೆ ||
ಸಂತೈಸೆ ಬಳಿಕ ರಘುಕುಲ ಸಾರ್ವಭೌಮನ | ತ್ಯಂತಹರ್ಷಿತನಾಗಿರಲ್ಕೆ ತಲೆದೋರಿತು ವ | ಸಂತಕಾಲಂ ವಿರಾಜಿತ ರಸಾಲಂ ವಿರಹಿ ಹೃದಯಶೂಲಂ ತಾನೆನೆ ||22|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಂತು ಸುತರಿಲ್ಲದ ಆಸರೊಳು ಅವರ್ಗಳು ಇರ್ವರುಂ ಚಿಂತಿಸುವ ಸಮಯಕೆ ವಸಿಷ್ಠ ಮುನಿಪತಿ ಬಂದು ಸಂತಾನದ ಅಭ್ಯುದಯಮ್ ಆದಪುದು ಮುಂದೆ ನಿಮಗೆ ಎಂದು ಸಂಪ್ರೀತಿಯಿಂದೆ ಸಂತೈಸೆ=[ಹೀಗೆ ಮಕ್ಕಳಿಲ್ಲದ (ಬಯಕೆಯ)ಚಿಂತೆಯಲ್ಲಿ ಅವರು ಇಬ್ಬರೂ ಚಿಂತಿಸುವ ಸಮಯಕ್ಕೆ ವಸಿಷ್ಠ ಮುನಿಪತಿ ಬಂದನು. ಅವನು, 'ನಿಮಗೆ ಮುಂದೆ ಸಂತಾನದ ಅಭ್ಯುದಯವು ಆಗುವುದು', ಎಂದು ಬಹಳ ಪ್ರೀತಿಯಿಂದ ಸಂತೈಸಿದನು.]; ಬಳಿಕ ರಘುಕುಲ ಸಾರ್ವಭೌಮನು ಅತ್ಯಂತಹರ್ಷಿತನಾಗಿ ಇರಲ್ಕೆ ತಲೆದೋರಿತು ವಸಂತಕಾಲಂ ವಿರಾಜಿತ ರಸಾಲಂ ವಿರಹಿ ಹೃದಯಶೂಲಂ ತಾನೆನೆ =[ಬಳಿಕ ರಘುಕುಲ ಸಾರ್ವಭೌಮನು ಅತ್ಯಂತ ಹರ್ಷಿತನಾಗಿ ಇರಲು, ಶೋಭಿಸುವ ಮಧುರವಾವ ವಿರಹಿಗಳಿಗೆ ತಾನು ಹೃದಯಶೂಲವು ಎನ್ನುಂವಂತಿರುವ ವಸಂತಕಾಲವುನೆ ತಲೆದೋರಿತು].
  • ತಾತ್ಪರ್ಯ:ಹೀಗೆ ಮಕ್ಕಳಿಲ್ಲದ (ಬಯಕೆಯ)ಚಿಂತೆಯಲ್ಲಿ ಅವರು ಇಬ್ಬರೂ ಚಿಂತಿಸುವ ಸಮಯಕ್ಕೆ ವಸಿಷ್ಠ ಮುನಿಪತಿ ಬಂದನು. ಅವನು, 'ನಿಮಗೆ ಮುಂದೆ ಸಂತಾನದ ಅಭ್ಯುದಯವು ಆಗುವುದು', ಎಂದು ಬಹಳ ಪ್ರೀತಿಯಿಂದ ಸಂತೈಸಿದನು. ಬಳಿಕ ರಘುಕುಲ ಸಾರ್ವಭೌಮನು ಅತ್ಯಂತ ಹರ್ಷಿತನಾಗಿ ಇರಲು, ಶೋಭಿಸುವ ಮಧುರವಾವ ವಿರಹಿಗಳಿಗೆ ತಾನು ಹೃದಯಶೂಲವು ಎನ್ನುಂವಂತಿರುವ ವಸಂತಕಾಲವುನೆ ತಲೆದೋರಿತು].
  • (ಪದ್ಯ-೨೨)

ಪದ್ಯ :-:೨೩:

[ಸಂಪಾದಿಸಿ]

ಅರಸಂಚೆ ಸರಸಿಯಂ ಕಲಪಿಕಂ ತಳಿತ ಮಾ | ಮರನಂ ಚಕೋರತತಿ ಚಂದ್ರಿಕೆಯನಳಿಕುಲಂ | ಬಿರಿಮುಗಳನರಗಿಳಿ ಬನಂಗಳಂ ವಿರಹಿಗಳ್ ಕೂರ್ಪರಂ ಸಾರ್ದೆಸೆಯಲು ||
ಧರೆಯೊಳೆಳೆಗಾಳಿಯಂ ಸೀತಳದ ವಾರಿಯಂ | ತರುಗಳ ನೆಳಲ್ಗಳಂ ಸೇರತೊಡಗಿತು ಜನಂ | ಪರಿವೃತ ವಸಂತಕಾಲದೊಳಿಂತಿರಲ್ ಬಳಿಕ ಸೀತೆ ಋತುಮತಿಯಾದಳು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರಸಂಚೆ ಸರಸಿಯಂ ಕಲಪಿಕಂ ತಳಿತ ಮಾಮರನಂ ಚಕೋರತತಿ ಚಂದ್ರಿಕೆಯನು ಅಳಿಕುಲಂ ಬಿರಿಮುಗಳನು ಅರಗಿಳಿ ಬನಂಗಳಂ ಸಾರ್ದು ಎಸೆಯಲು=[ರಾಜಹಂಸ ಸರೋವರವನ್ನೂ, ಹಾಡುವ ಕೋಗಿಲೆ ಚಿಗುರಿದ ಮಾವಿನಮರವನ್ನೂ, ಚಕೋರಪಕ್ಷಿಗಳ ಗುಂಪು ಬೆಳುದಿಂಗಳನ್ನೂ, ಜೇನುಹುಳುಗಳು ಅರಳುತ್ತಿರುವ ಹೂವುಗಳನ್ನೂ, ಅರಗಿಳಿಗಳು ವನಗಳನ್ನೂ,ಸಾರಲು/ ಅಲ್ಲಿ ಹೋಗಿ ಶೋಭಿಸಲು]; ವಿರಹಿಗಳ್ ಕೂರ್ಪರಂ ಸಾರ್ದು ಎಸೆಯಲು ಧರೆಯೊಳೆಳೆಗಾಳಿಯಂ ಸೀತಳದ ವಾರಿಯಂ ತರುಗಳನೆಳಲ್ಗಳಂ ಸೇರತೊಡಗಿತು ಜನಂ=[ವಿರಹಿಗಳು ಪ್ರೇಮಿಗಳ ಬಳಿ ಸಾರಿದರು, ಹೀಗೆ ವಸಂತಕಾಲ ಶೋಭಿಸಲು, ಜನರು ಧರೆಯಲ್ಲಿ ತಂಪುಗಾಳಿಯನ್ನೂ ತಣ್ನನೆಯ ನೀರಿನತಾಣವನ್ನೂ ಮರಗಳ ನೆಳಲುಗಳನ್ನೂ ಸೇರತೊಡಗಿದರು. ]; ಪರಿವೃತ ವಸಂತಕಾಲದೊಳಿಂತಿರಲ್ ಬಳಿಕ ಸೀತೆ ಋತುಮತಿಯಾದಳು=[ಎಲ್ಲಡೆ ಆವರಿಸಿದ ವಸಂತಕಾಲದ ಸಮಯದಲ್ಲಿ ಹೀಗಿರಲು, ಆ ಬಳಿಕ ಸೀತೆ ಋತುಮತಿಯಾದಳು].
  • ತಾತ್ಪರ್ಯ:ರಾಜಹಂಸ ಸರೋವರವನ್ನೂ, ಹಾಡುವ ಕೋಗಿಲೆ ಚಿಗುರಿದ ಮಾವಿನಮರವನ್ನೂ, ಚಕೋರಪಕ್ಷಿಗಳ ಗುಂಪು ಬೆಳುದಿಂಗಳನ್ನೂ, ಜೇನುಹುಳುಗಳು ಅರಳುತ್ತಿರುವ ಹೂವುಗಳನ್ನೂ, ಅರಗಿಳಿಗಳು ವನಗಳನ್ನೂ,ಸಾರಲು/ ಅಲ್ಲಿ ಹೋಗಿ ಶೋಭಿಸಲು; ವಿರಹಿಗಳು ತಮ್ಮ ಪ್ರೇಮಿಗಳ ಬಳಿ ಸಾರಿದರು, ಹೀಗೆ ವಸಂತಕಾಲ ಶೋಭಿಸಲು, ಜನರು ಧರೆಯಲ್ಲಿ ತಂಪುಗಾಳಿಯನ್ನೂ ತಣ್ನನೆಯ ನೀರಿನ ತಾಣವನ್ನೂ ಮರಗಳ ನೆಳಲುಗಳನ್ನೂ ಸೇರತೊಡಗಿದರು. ಎಲ್ಲಡೆ ಆವರಿಸಿದ ವಸಂತಕಾಲದ ಸಮಯದಲ್ಲಿ ಹೀಗಿರಲು, ಆ ಬಳಿಕ ಸೀತೆ ಋತುಮತಿಯಾದಳು. (ಕವಿಗಳ ಕಲ್ಪನೆಯಲ್ಲಿ ಚಕೋರಪಕ್ಷಿಗಳು ಬೆಳುದಿಂಗಳನ್ನು ಕುಡಿಯುತ್ತವೆ)
  • (ಪದ್ಯ-೨೩)

ಪದ್ಯ :-:೨೪:

[ಸಂಪಾದಿಸಿ]

ಮಲ್ಲಿಕಾಸ್ಮಿತರುಚಿರೆ ಕುಂದಕಟ್ಮಲರದನೆ | ಪಲ್ಲವಾಧರೆ ಭೃಂಗಕುಂತಳೆ ಕುಸುಮಗಂಧಿ | ಸಲ್ಲಲಿತಕೋಕಿಲಾಲಾಪೆ ಚಂಪವರ್ಣೆ ಮೃದುಮಧುರ ಕೀರವಾಣಿ ||
ಪುಲ್ಲಲೋಚನೆ ಚಾರುಚಂದ್ರಾಬಿಂಬಾನನೆ | ಸಲ್ಲಲಿತಗಾತ್ರಿ ಜಾನಕಿ ವಿರಾಜಿಸಿದಳ್ ಸ | ಮುಲ್ಲಾಸದಿಂ ಪುಷ್ಟವತಿಯಾಗಿ ವಿಕಸಿತ ವಸಂತಲಕ್ಷ್ಮಿಯ ತೆರದೊಳು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಲ್ಲಿಕಾಸ್ಮಿತ ರುಚಿರೆ ಕುಂದಕಟ್ಮಲರದನೆ ಪಲ್ಲವಾಧರೆ ಭೃಂಗಕುಂತಳೆ ಕುಸುಮಗಂಧಿ=[ಮಲ್ಲಿಗೆಯಂತೆ ಮುಗುಳುನಗೆಯ ಸುಂದರಿ; ದುಂಡುಮಲ್ಲಿಗೆ ಮೊಗ್ಗಿನಂತಿರುವ ಹಲ್ಲುಗಳುಳ್ಳವಳು; ಕೆಂಪು ಚಿಗುರೆಲೆಯಂತೆ ತುಟಿಯುಳ್ಳವಳು; ಜೇನುಹುಳುಗಳನ್ನು ಹೋಲುವ ಗುಂಗರುಕೂದಲು ಉಳ್ಳವಳು; ಸುವಾಸನೆಯುಳ್ಳವಳು;]; ಸಲ್ಲಲಿತಕೋಕಿಲಾಲಾಪೆ ಚಂಪವರ್ಣೆ ಮೃದುಮಧುರ ಕೀರವಾಣಿ=[ಕೋಗಿಲೆಯಂತೆ ಇಂಪಾದ ಮೃದುದನಿ ಉಳ್ಳವಳು; ಸಂಪಗೆಯ ಬಣ್ಣದವಳು; ಮೃದುಮಧುರವಾದ ಗಿಣಿಯಂತೆ ಮಾತು ಆಡುವವಳು;]; ಪುಲ್ಲಲೋಚನೆ ಚಾರುಚಂದ್ರಾಬಿಂಬಾನನೆ (ಚಾರು-ಸುಂದರ + ಚಂದ್ರಬಿಂಬ+ ಆನನೆ-ಮಖದವಳು) ಲಸಲ್ಲಲಿತಗಾತ್ರಿ ಜಾನಕಿ ವಿರಾಜಿಸಿದಳ್ ಸಮುಲ್ಲಾಸದಿಂ ಪುಷ್ಟವತಿಯಾಗಿ ವಿಕಸಿತ ವಸಂತಲಕ್ಷ್ಮಿಯ ತೆರದೊಳು=[ಕಮಲಪುಷ್ಪದಂತೆ ಕಣ್ಣುಳ್ಳವಳು; ಚಂದ್ರಬಿಂಬದಂತೆ ಮುಖವುಳ್ಳವಳು; ಉತ್ತಮ ಸುಂದರ ಕೋಮಲ ಮೈಕಟ್ಟಿನವಳು; ಜಾನಕಿ ಪುಷ್ಟವತಿಯಾಗಿ ಸುಂದರ ವಸಂತಲಕ್ಷ್ಮಿಯಂತೆ ಸಂತೋಷದಿಂದ ಶೋಭಿಸಿದಳು].
  • ತಾತ್ಪರ್ಯ: ಮಲ್ಲಿಗೆಯಂತೆ ಮುಗುಳುನಗೆಯ ಸುಂದರಿ; ದುಂಡುಮಲ್ಲಿಗೆ ಮೊಗ್ಗಿನಂತಿರುವ ಹಲ್ಲುಗಳುಳ್ಳವಳು; ಕೆಂಪು ಚಿಗುರೆಲೆಯಂತೆ ತುಟಿಯುಳ್ಳವಳು; ಜೇನುಹುಳುಗಳನ್ನು ಹೋಲುವ ಗುಂಗರುಕೂದಲು ಉಳ್ಳವಳು; ಸುವಾಸನೆಯುಳ್ಳವಳು; ಕೋಗಿಲೆಯಂತೆ ಇಂಪಾದ ಮೃದುದನಿ ಉಳ್ಳವಳು; ಸಂಪಗೆಯ ಬಣ್ಣದವಳು; ಮೃದುಮಧುರವಾದ ಗಿಣಿಯಂತೆ ಮಾತು ಆಡುವವಳು; ಕಮಲಪುಷ್ಪದಂತೆ ಕಣ್ಣುಳ್ಳವಳು; ಚಂದ್ರಬಿಂಬದಂತೆ ಮುಖವುಳ್ಳವಳು; ಉತ್ತಮ ಸುಂದರ ಕೋಮಲ ಮೈಕಟ್ಟಿನವಳು; ಜಾನಕಿ ಪುಷ್ಟವತಿಯಾಗಿ ಸುಂದರ ವಸಂತಲಕ್ಷ್ಮಿಯಂತೆ ಸಂತೋಷದಿಂದ ಶೋಭಿಸಿದಳು.
  • (ಪದ್ಯ-೨೪)vi

ಪದ್ಯ :-:೨೫:

[ಸಂಪಾದಿಸಿ]

ಮೊಡವಿ ಮೂಡಿದ ಮೊಗಂ ಸೊಗಡುಗಂಪೊಗೆದ ಮೈ | ತೊಡವುಗಳ ತೊಡಕಿಲ್ಲದವಯವಂ ಪೂಗಳಂ | ಮುಡಿಯದ ಬಳಲ್ದುರುಬು ನಿಚ್ಚಳದ ಕಣ್ಮಲರ್ ತೊಳಪ ಪಣ ಮಿರುಪ ಕದಪು ||
ಕಡುಬಿಣ್ಪಿಡಿದ ಕುಚಂ ಮಾಧವೀಲತೆಯ ಸೆಳೆ | ವೆಡಿದಕೈ ನಿರಿಯಳಿದ ನಸುಮಾಸಿದಂಬರಂ | ಕುಡಿವರಿವ ಲಜ್ಜೆ ಸಿಂಗರಕೆ ಮಿಗಿಲಾಯ್ತವನಿಸುತೆಗೆ ಋತುಮತಿಯಾಗಲು ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೊಡವಿ ಮೂಡಿದ ಮೊಗಂ ಸೊಗಡುಗಂಪೊಗೆದ ಮೈ ತೊಡವುಗಳ ತೊಡಕಿಲ್ಲದ ಅವಯವಂ ಪೂಗಳಂ ಮುಡಿಯದ ಬಳಲ್ದುರುಬು ನಿಚ್ಚಳದ ಕಣ್ಮಲರ್ ತೊಳಪ ಪಣ ಮಿರುಪ ಕದಪು=[ಸೀತಾದೇವಿಗೆ ಋತುಮತಿ ಆದಾಗ, ಮೊಡವೆಗಳು ಮೂಡಿದ ಮುಖವೂ, ಸೊಗಡು ಪರಿಮಳ ಪಡೆದದ ದೇಹ, ಆಭರಣಗಳನ್ನು ತೊಡುವ ತೊಂದರೆಪಡದ ಅವಯವಗಳು, ಹೂವುಗಳನ್ನು ಮುಡಿಯದ ಜೋಲುವತುರುಬು, ಚಂಚಲತೆಯನ್ನು ಕಳೆದುಕೊಂಡನಿಚ್ಚಲವಾದ ಪುಷ್ಪದಂತತಿರುವ ಕಣ್ನು, ಹೋಳೆಯುವ ಬೊಟ್ಟಿಲ್ಲದ ಹಣೆ,ಮಿರುಗುವ ಕೆನ್ನೆ]; ಕಡುಬಿಣ್ಪಿಡಿದ ಕುಚಂ ಮಾಧವೀಲತೆಯ (ಗುಲಗುಂಜಿ ಬಳ್ಳಿ) ಸೆಳೆ ವೆಡಿದಕೈ ನಿರಿಯಳಿದ ನಸುಮಾಸಿದಂಬರಂ ಕುಡಿವರಿವ ಲಜ್ಜೆ ಸಿಂಗರಕೆ ಮಿಗಿಲಾಯ್ತವನಿಸುತೆಗೆ ಋತುಮತಿಯಾಗಲು=[ಬಹಳಬಿಳುಪುಹೊಂದಿದ ಸ್ತನಗಳು, ಮಾಧವೀಬಳ್ಳಿಯಂತೆ ಅಚಲವಾದ ಕೈಗಳು (ಹೆಚ್ಚಿನಚಲನೆಯಿಲ್ಲದ), ನಿರಿಗಗಳಜೋಡಣೆ ಕೆಟ್ಟಿರುವ ಹಳೆಯ ಮಾಸಿದಸೀರೆ, ಅಲ್ಪ ತೊರುವ ನಾಚಿಕೆ, ಇವು ಶೃಂಗರಿಸಿಕೊಂಡಿರುವುದಕ್ಕೂ ಹೆಚ್ಚಿನ ಅಂದವನ್ನು ಋತುಮತಿಯಾದಾಗ, ಅವನಿಸುತೆಯಾದ ಸೀತೆಗೆ ನೀಡಿತು.].
  • ತಾತ್ಪರ್ಯ:ಸೀತಾದೇವಿಗೆ ಋತುಮತಿ ಆದಾಗ, ಮೊಡವೆಗಳು ಮೂಡಿದ ಮುಖವೂ, ಸೊಗಡು ಪರಿಮಳ ಪಡೆದದ ದೇಹ, ಆಭರಣಗಳನ್ನು ತೊಡುವ ತೊಂದರೆಪಡದ ಅವಯವಗಳು, ಹೂವುಗಳನ್ನು ಮುಡಿಯದ ಜೋಲುವತುರುಬು, ಚಂಚಲತೆಯನ್ನು ಕಳೆದುಕೊಂಡನಿಚ್ಚಲವಾದ ಪುಷ್ಪದಂತತಿರುವ ಕಣ್ನು, ಹೋಳೆಯುವ ಬೊಟ್ಟಿಲ್ಲದ ಹಣೆ,ಮಿರುಗುವ ಕೆನ್ನೆ; ಬಹಳ ಬಿಳುಚಿದ ಸ್ತನಗಳು, ಮಾಧವೀಬಳ್ಳಿಯಂತೆ ಅಚಲವಾದ ಕೈಗಳು (ಹೆಚ್ಚಿನಚಲನೆಯಿಲ್ಲದ), ನಿರಿಗಗಳಜೋಡಣೆ ಕೆಟ್ಟಿರುವ ಹಳೆಯ ಮಾಸಿದಸೀರೆ, ಅಲ್ಪತೊರುವ ನಾಚಿಕೆ, ಇವು ಶೃಂಗರಿಸಿಕೊಂಡಿರುವುದಕ್ಕೂ ಹೆಚ್ಚಿನ ಅಂದವನ್ನು ಅವನಿಸುತೆಯಾದ ಸೀತೆಗೆ ನೀಡಿತು.
  • (ಪದ್ಯ-೨೫)

ಪದ್ಯ :-:೨೬:

[ಸಂಪಾದಿಸಿ]

ಸಮುಚಿತ ಸ್ತ್ರೀಧರ್ಮದಿಂದೆ ನಾಲ್ಕನೆಯದಿನ | ದಮಲ ಮಜ್ಜನದಲುಕಾರದೊಳೆಸೆದಳಂದು | ನಿಮಿಷದೊಳ್ ತ್ರಿಜಗಮಂ ಗೆಲ್ಪೆನೆಂದಂಗಜಂ ಮಸೆದಡಾಯುಧವೊ ಮೇಣು ||
ಕ್ರಮದಿಂದೆ ಮನ್ಮಥಂ ಕಲುಶಮಂ ಶೋಧಿಸಿದ | ರಮಣೀಯ ಸೌಂದರ್ಯಸಾರಮೋ ಸಮರನ ನಿರು | ಪಮ ಯಶಶ್ಯ್ರೀಯ ಸಾಕಾರಮೋ ಪೇಳೆನಲ್ ಸೀತೆರಾಘವನ ಕಣ್ಗೆ ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಮುಚಿತ ಸ್ತ್ರೀಧರ್ಮದಿಂದೆ ನಾಲ್ಕನೆಯ ದಿನದ ಅಮಲ ಮಜ್ಜನದ ಅಲುಕಾರದೊಳು ಎಸೆದಳು=[ಸೀತೆಯು, ಉಚಿತವಾದ ರೂಢಿಯಲ್ಲಿರುವ ಸ್ತ್ರೀಧರ್ಮದಿಂದ ನಾಲ್ಕನೆಯ ದಿನದ ಶುದ್ದೀಕರಣ ಸ್ನಾನಮಾಡಿ ಅಲುಕಾರಮಾಡಿಕೊಂಡು ಶೋಭಿಸಿದಳು ]; ಅಂದು ನಿಮಿಷದೊಳ್ ತ್ರಿಜಗಮಂ ಗೆಲ್ಪೆನೆಂದು ಅಂಗಜಂ ಮಸೆದ ಅಡ (ನಿತಂಬ) ಅಯುಧವೊ=[ಅಂದು ಆ ಕ್ಷಣದಲ್ಲಿ ಮೂರು ಜಗತ್ತನ್ನೂ ಗೆಲ್ಲುವೆನೆಂದು ಮನ್ಮಥನು, ಮಸೆದಿರುವ ಸ್ತ್ರೀದೇಹದ ಅಯುಧವೊ]; ಮೇಣು ಕ್ರಮದಿಂದೆ ಮನ್ಮಥಂ ಕಲುಶಮಂ ಶೋಧಿಸಿದ ರಮಣೀಯ ಸೌಂದರ್ಯಸಾರಮೋ=[ಅಥವಾ ಕ್ರಮವಾಗಿ ಮನ್ಮಥನು ಕಲ್ಮಶ/ ಕಶ್ಮಲವನ್ನು ತೆಗೆದು ಶೋಧಿಸಿದ ರಮಣೀಯವಾದ ಸೌಂದರ್ಯಸಾರವೋ]; ಸಮರನ ನಿರುಪಮ ಯಶಶ್ಯ್ರೀಯ (ಯಶಃ ಶ್ರೀಯ) ಸಾಕಾರಮೋ ಪೇಳೆನಲ್ ಸೀತೆರಾಘವನ ಕಣ್ಗೆ=[ಶ್ರೇಷ್ಠಪುರುಷನ ಅಸಾಧಾರಣ ಯಶದ ಸಂಪತ್ತಿನ ಸಾಕಾರವೋ ಹೇಳು ಎನ್ನುವಂತೆ ಸೀತೆಯು ರಾಘವನ ಕಣ್ಗೆ ತೋರಿದಳು.]
  • ತಾತ್ಪರ್ಯ: ಸೀತೆಯು, ಉಚಿತವಾದ ರೂಢಿಯಲ್ಲಿರುವ ಸ್ತ್ರೀಧರ್ಮದಿಂದ ನಾಲ್ಕನೆಯ ದಿನದ ಶುದ್ದೀಕರಣ ಸ್ನಾನಮಾಡಿ ಅಲುಕಾರಮಾಡಿಕೊಂಡು ಶೋಭಿಸಿದಳು. ಅಂದು ಆ ಕ್ಷಣದಲ್ಲಿ ಮೂರು ಜಗತ್ತನ್ನೂ ಗೆಲ್ಲುವೆನೆಂದು ಮನ್ಮಥನು, ಮಸೆದಿರುವ ಸ್ತ್ರೀದೇಹದ ಅಯುಧವೊ, ಅಥವಾ ಕ್ರಮವಾಗಿ ಮನ್ಮಥನು ಕಶ್ಮಲವನ್ನು ತೆಗೆದು ಶೋಧಿಸಿದ ರಮಣೀಯವಾದ ಸೌಂದರ್ಯಸಾರವೋ, ಶ್ರೇಷ್ಠ ಪುರುಷನ ಅಸಾಧಾರಣ ಯಶದಸಂಪತ್ತಿನ ಸಾಕಾರವೋ ಹೇಳು ಎನ್ನುವಂತೆ ಸೀತೆಯು ರಾಘವನ ಕಣ್ಗೆ ತೋರಿದಳು.
  • (ಪದ್ಯ-೨೬)

ಪದ್ಯ :-:೨೭:

[ಸಂಪಾದಿಸಿ]

ಸ್ಫುರದುತ್ಕಟಾಕ್ಷ ಚಂಚಲದಿಂದೆ ಚಾರು ಪೀ | ವರಪಯೋಧರದಿಂದೆ ಪರಿವೃತ ಸುಮೇಖಲಾ | ತರಳ ಸತ್ಕಲ ಕಿಂಕಿಣೀ ಘನಸ್ವರದಿಂದೆಸೆವ ಕಂಕಣಂಗಳಿಂದೆ ||
ಸರಸತರ ಲಾವಣ್ಯಪೂರ ಪ್ರವಾಹದಿಂ | ಭರಿತ ಕಬರೀಬರ್ಹಿ ಲೀಲೆಯಿಂ ಮಳೆಗಾಲ | ದಿರವನೆಚ್ಚರಿಪರಸಿಯಂ ಕಂಡು ರಾಮನ ಮನಶ್ಚಾತಕಂ ನಲಿದುದು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸ್ಫುರತ್ ಉತ್ಕಟಾಕ್ಷ ಚಂಚಲದಿಂದೆ=[ಪ್ರಕಾಶವುಳ್ಳ ವಿಶಾಲ ಕಡೆಗಣ್ಣೋಟದ ಚಂಚಲತೆಯಿಂದ]; ಚಾರು ಪೀವರ ಪಯೋಧರದಿಂದೆ ಪರಿವೃತ ಸುಮೇಖಲಾ (ಸೊಂಟ) ತರಳ (ಅಲುಗುವ) ಸತ್ ಕಲ (ನಾದ) ಕಿಂಕಿಣೀ ಘನಸ್ವರದಿಂದ ಎಸೆವ ಕಂಕಣಂಗಳಿಂದೆ=[ಸುಂದರ ಬಲಿತ ದಪ್ಪ ಸ್ತನಗಳಿಂದ, ಸೊಂಟವನ್ನು ಸುತ್ತುವರಿದ ಒಡ್ಯಾಣ ಅಥವಾಡಾಬಿನಿಂದ ಅಲುಗುತ್ತಿದ್ದು ಇಂಪಾದನಾದ ಮಾಡುವ ಮತ್ತು ಕಿಂಕಿಣೀ ನಾದದ ಸ್ವರದಿಂದ ಶೋಭಿಸುವ ತೋಡ ಮತ್ತು ಬಳೆಗಳಿಂದ,]; ಸರಸತರ (ಸ+ರಸತರ; ಸರಸ+ತರ -ಉಲ್ಲಾಸ) ಲಾವಣ್ಯಪೂರ ಪ್ರವಾಹದಿಂ ಭರಿತ=[ಉಲ್ಲಾಸದಿಂದ ಕೂಡಿದ ಲಾವಣ್ಯತುಂಬಿದ ಸೌಂದರ್ಯದ ರಸ ಪ್ರವಾಹದಿಂದ ಭರಿತವಾದ / ತುಂಬಿದ]; ಕಬರೀಬರ್ಹಿ ಲೀಲೆಯಿಂ ಮಳೆಗಾಲದ ಇರವನು ಎಚ್ಚರಿಪ ಅರಸಿಯಂ ಕಂಡು ರಾಮನ ಮನಶ್ಚಾತಕಂ ನಲಿದುದು=[ನವಿಲಿನಂತಿರುವ ಸೀತೆಯ ತುರುಬು, ಲೀಲೆಯಿಂದ ಮಳೆಗಾಲ ಬಂದಿದೆ ಎಂದು ಎಚ್ಚರಿಸುವ ರಾಣಿಯನ್ನು ಕಂಡು ರಾಮನ ಮನಸ್ಸೆಂಬ ಚಾತಕ ಪಕ್ಷಿಯು ನಲಿಯಿತು].
  • ತಾತ್ಪರ್ಯ:ಪ್ರಕಾಶವುಳ್ಳ ವಿಶಾಲ ಕಡೆಗಣ್ಣೋಟದ ಚಂಚಲತೆಯಿಂದ; ಸುಂದರ ಬಲಿತ ದಪ್ಪ ಸ್ತನಗಳಿಂದ, ಸೊಂಟವನ್ನು ಸುತ್ತುವರಿದ ಒಡ್ಯಾಣ ಅಥವಾ ಡಾಬಿನಲ್ಲಿ ಅಲುಗುತ್ತಿದ್ದು ಇಂಪಾದ ನಾದ ಮಾಡುವ ಮತ್ತು ಕಿಂಕಿಣೀ ನಾದದ ಸ್ವರದಿಂದ ಶೋಭಿಸುವ ತೋಡ ಮತ್ತು ಬಳೆಗಳಿಂದ, ಉಲ್ಲಾಸದಿಂದ ಕೂಡಿದ ಲಾವಣ್ಯತುಂಬಿದ ಸೌಂದರ್ಯದ ರಸ ಪ್ರವಾಹದಿಂದ ಭರಿತವಾದ / ತುಂಬಿದ ಮತ್ತು -ತುರುಬಿನ ಲೀಲೆಯಿಂದ ಮಳೆಗಾಲ ಬಂದಿದೆ ಎಂದು ಎಚ್ಚರಿಸುವಂತಿರುವ ನವಿಲಿನಂತಿರುವ ತುರುಬಿನ ಸೀತೆ, ರಾಣಿಯನ್ನು ಕಂಡು ರಾಮನ ಮನಸ್ಸೆಂಬ ಚಾತಕ ಪಕ್ಷಿಯು ನಲಿಯಿತು.
  • (ಪದ್ಯ-೨೭)

ಪದ್ಯ :-:೨೮:

[ಸಂಪಾದಿಸಿ]

ಮಂದಗಮನೆಯ ಮಂದಹಾಸದ ವಿಲಾಸಮಂ | ಕುಂದರದನೆಯ ಕುಂದದವಯವದ ಸೌಂದರ್ಯ | ದಂದಮಂ ವಕ್ರಕುಂತಳೆಯ ವಕ್ರಾವಲೋಕನದ ಭಾವದ ಬಗೆಯನು ||
ಚಂದನ ಸುಗಂಧಿನಿಯ ಚಂದ್ರಾಸ್ಯದೆಸಕಮಂ | ಬಂದುಗೆದುಟಿಯಳ ಬಂಧುರದ ಸಿಂಗರವನೇ | ನೆಂದು ಬಣ್ಣಿಸಬಹುದು ರಾಮಣೀಯಕಮಾದ ರಾಮನ ಮಡದಿಯಿರವನು ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಂದಗಮನೆಯ ಮಂದಹಾಸದ ವಿಲಾಸಮಂ ಕುಂದರದನೆಯ ಕುಂದದ ಅವಯವದ ಸೌಂದರ್ಯದ ಅಂದಮಂ=[ಗಂಭೀರವಾದ ಮೆಲ್ಲಗೆ ನಡೆಯುವ ಸೀತೆಯ ಮಂದಹಾಸದ ಸೌಂದರ್ಯವನ್ನೂ, ದುಂಡುಮಲ್ಲಿಗೆಯಂತಿರುವ ಹಲ್ಲುಗಳನ್ನು ಹೊಂದಿದ, ಅವಯವದ ಸೌಂದರ್ಯವು ಸ್ವಲ್ಪವೂ ಕುಂದಿರದ ಬಗೆಯನ್ನೂ,]; ವಕ್ರಕುಂತಳೆಯ ವಕ್ರಾವಲೋಕನದ ಭಾವದ ಬಗೆಯನು ಚಂದನ ಸುಗಂಧಿನಿಯ ಚಂದ್ರಾಸ್ಯದೆಸಕಮಂ=[ಗುಂಗರು (ವಕ್ರವಾಗಿರುವ ಕೂದಲು) ಮುಂಗುರುಳಿನ ಕಡೆಗಣ್ಣಿನಲ್ಲಿ ನೋಟದಲ್ಲಿರುವ ಭಾವದ ರೀತಿಯನ್ನು,ಚಂದನದಂತೆ ಸುಗಂಧಿನಿಯಾಗಿರುವ ಸೀತೆಯ ಚಂದ್ರನಂತೆ ದುಂಡಾದ ಮುಖದ ಶೋಭೆಯನ್ನು]; ಬಂದುಗೆದುಟಿಯಳ (ಬಂದುಗೆ - ದಾಸವಾಳ) ಬಂಧುರದ ಸಿಂಗರವನೇನೆಂದು ಬಣ್ಣಿಸಬಹುದು ರಾಮಣೀಯಕಮಾದ ರಾಮನ ಮಡದಿಯಿರವನು=[ದಾಸವಾಳದಂತೆ ಕೆಂಪಾದ ತುಟಿಯುಳ್ಳ ಮನಮೋಹಕವಾದ ತುಟಿಗಳುಳ್ಳ ಸೀತೆಯ ಶೃಂಗಾರದಬಗೆಯನ್ನು ಏನೆಂದು ಬಣ್ಣಿಸಬಹುದು!ಹೀಗೆ ರಮಣೀಯವಾದ ರಾಮನ ಮಡದಿ ಸೀತೆಯ ಇರುವನ್ನ್ನು ವರ್ಣಿಸಲು ಸಾಧ್ಯವಾಗದು].
  • ತಾತ್ಪರ್ಯ:ಗಂಭೀರವಾದ ಮೆಲ್ಲಗೆ ನಡೆಯುವ ಸೀತೆಯ ಮಂದಹಾಸದ ಸೌಂದರ್ಯವನ್ನೂ, ದುಂಡುಮಲ್ಲಿಗೆಯಂತಿರುವ ಹಲ್ಲುಗಳನ್ನು ಹೊಂದಿದ, ಅವಯವದ ಸೌಂದರ್ಯವು ಸ್ವಲ್ಪವೂ ಕುಂದಿರದ ಬಗೆಯನ್ನೂ, (ವಕ್ರವಾದ)ಗುಂಗರು ಮುಂಗುರುಳಿನ , (ವಕ್ರವಾದ) ಕಡೆಗಣ್ಣಿನಲ್ಲಿ ನೋಟದಲ್ಲಿರುವ ಭಾವದ ರೀತಿಯನ್ನು,ಚಂದನದಂತೆ ಸುಗಂಧಿನಿಯಾಗಿರುವ ಸೀತೆಯ ಚಂದ್ರನಂತೆ ದುಂಡಾದ ಮುಖದ ಶೋಭೆಯನ್ನು]; ಬಂದುಗೆದುಟಿಯಳ (ಬಂದುಗೆ - ದಾಸವಾಳ) ಬಂಧುರದ ಸಿಂಗರವನೇನೆಂದು ಬಣ್ಣಿಸಬಹುದು ರಾಮಣೀಯಕಮಾದ ರಾಮನ ಮಡದಿಯಿರವನು=[ದಾಸವಾಳದಂತೆ ಕೆಂಪಾದ ತುಟಿಯುಳ್ಳ ಮನಮೋಹಕವಾದ ತುಟಿಗಳುಳ್ಳ ಸೀತೆಯ ಶೃಂಗಾರದಬಗೆಯನ್ನು ಏನೆಂದು ಬಣ್ಣಿಸಬಹುದು! ಹೀಗೆ ರಮಣೀಯವಾದ ರಾಮನ ಮಡದಿ ಸೀತೆಯ ಇರುವನ್ನ್ನು ವರ್ಣಿಸಲು ಸಾಧ್ಯವಾಗದು.
  • (ಪದ್ಯ-೨೮)

ಪದ್ಯ :-:೨೯:

[ಸಂಪಾದಿಸಿ]

ನೊಸಲೊಳಾ ರಾಜಿಸುವ ತಿಲಕದಿಂದಲಕದಿಂ | ಮಿಸುಪ ಮೈ ನಸುದೋರ್ಪ ವಸನದಿಂ ದಶನದಿಂ | ಪಸರಿಪೆಳನಗೆಯ ತೆಳ್ಗದಪಿನಿಂ ಪದಪಿನಿಂದಮರ್ದ ಪೊಂದುಡುಗೆಯಿಂದ ||
ಅಸಿವೆರಲ್ಗ ಳೊಳೊಪ್ಪುವುಗುರ್ಗಳಿಂ ತಿಗುರ್ಗಳಿಂ | ಪೊಸತೆನಿಪ ಕುಂಕುಮದ ಕಂಪಿನಿಂದಿಂಪಿನಿಂ | ತ್ರಿಸರದೊಳ್ ಮೆರೆವ ಗುರುಕುಚದಿಂದೆ ಕಾಂತೆ ಕಣ್ಗೆಸೆದಿರ್ದಳು ||29|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನೊಸಲೊಳು ಆರಾಜಿಸುವ ತಿಲಕದಿಂ ಅಲಕದಿಂ ಮಿಸುಪ ಮೈ ನಸುದೋರ್ಪ ವಸನದಿಂ ದಶನದಿಂ =[ಹಣೆಯಲ್ಲಿ ಶೋಭಿಸುವ ಕಸ್ತೂರಿ ತಿಲಕದಿಂದಲೂ, ಮುಂಗುರುಳಿನಿಂದಲೂ, ಮಿಂಚುವ ಮೈಯನ್ನು ಸ್ವಲ್ಪವೇ ತೋರುವಂತಿರುವ ಉಡುಪಿನಿಂದಲೂ, ಸುಂದರ ದಂತಪಂಕ್ತಿಯಿಂದಲೂ]; ಪಸರಿಪ ಎಳನಗೆಯ ತೆಳ್ ಕದಪಿನಿಂ ಪದಪಿನಿಂದ ಅಮರ್ದ ಪೊಂದುಡುಗೆಯಿಂದ=[ಸುತ್ತಲೂ ಬೀರುತ್ತಿರುವ ಮಂದಹಾಸದಿಂದಲೂ, ತೆಳುವಾದ ಕೆನ್ನೆಗಳಿಂದಲೂ, ಮಿಂಚನ್ನುಆವರಿಸಿಕೊಂಡ ಬಂಗಾರದ ಉಡುಗೆ/ ಸೀರೆಯಿಂದಲೂ,]; ಅಸಿವೆರಲ್ಗಳೊಳು (ತೆಳು ಬೆರಳುಗಳೊಳು) ಒಪ್ಪುವ ಉಗುರ್ಗಳಿಂ (ಉಗುರು) ತಿಗುರ್ಗಳಿಂ (ತಿಗುರು- ಸುವಾಸನೆ ಬಣ್ಣ ಹಚ್ಚಿದ) ಪೊಸತೆನಿಪ ಕುಂಕುಮದ ಕಂಪಿನಿಂದಿಂಪಿನಿಂ=[ತೆಳುವಾದ ಬೆರಳುಗಳಲ್ಲಿ ಸುಂದರವಾಗಿ ಕಾಣುವ ಉಗುರುಗಳಿಂದಲೂ, ಅದಕ್ಕೆ ಲೇಪಿಸಿದ ಸುವಾಸನೆಯ ಬಣ್ಣದಿಂದಲೂ, ಹೊಸತು ಎನ್ನಿಸುವ ರೀತಿಯಲ್ಲಿ, ಕಸ್ತೂರಿ ಮಿಶ್ರಿತ ಕುಂಕುಮದ ಸುವಾಸನೆಯಿಂದ,ಸೊಗಸಿನಿಂದ]; ತ್ರಿಸರದೊಳ್ ಮೆರೆವ ಗುರುಕುಚದಿಂದೆ ಕಾಂತೆ ಕಣ್ಗೆಸೆದಿರ್ದಳು=[ಮೂರು ಎಳೆಮುತ್ತಿನ ಸರದಲ್ಲಿ/ಸರದ ಹಿಂದೆ ಶೋಭಿಸುವ ದೊಡ್ಡಸ್ತನಗಳಿಂದ ಕಾಂತೆ/ ಸೀತೆ ಕಣ್ಣಿಗೆ ನೋಡಲು ಶೋಭಿಸಿದಳು].
  • ತಾತ್ಪರ್ಯ:ಹಣೆಯಲ್ಲಿ ಶೋಭಿಸುವ ಕಸ್ತೂರಿ ತಿಲಕದಿಂದಲೂ, ಮುಂಗುರುಳಿನಿಂದಲೂ, ಮಿಂಚುವ ಮೈಯನ್ನು ಸ್ವಲ್ಪವೇ ತೋರುವಂತಿರುವ ಉಡುಪಿನಿಂದಲೂ, ಸುಂದರ ದಂತಪಂಕ್ತಿಯಿಂದಲೂ; ಸುತ್ತಲೂ ಬೀರುತ್ತಿರುವ ಮಂದಹಾಸದಿಂದಲೂ, ತೆಳುವಾದ ಕೆನ್ನೆಗಳಿಂದಲೂ, ಮಿಂಚನ್ನು ಆವರಿಸಿಕೊಂಡ ಬಂಗಾರದ ಉಡುಗೆ/ ಸೀರೆಯಿಂದಲೂ, ತೆಳುವಾದ ಬೆರಳುಗಳಲ್ಲಿ ಸುಂದರವಾಗಿ ಕಾಣುವ ಉಗುರುಗಳಿಂದಲೂ, ಅದಕ್ಕೆ ಲೇಪಿಸಿದ ಸುವಾಸನೆಯ ಬಣ್ಣದಿಂದಲೂ, ಹೊಸತು ಎನ್ನಿಸುವ ರೀತಿಯಲ್ಲಿ, ಕಸ್ತೂರಿ ಮಿಶ್ರಿತ ಕುಂಕುಮದ ಸುವಾಸನೆಯಿಂದ,ಸೊಗಸಿನಿಂದ, ಮೂರು ಎಳೆಯ ಮುತ್ತಿನ ಸರದ ಹಿಂದೆ ಶೋಭಿಸುವ ದೊಡ್ಡಸ್ತನಗಳಿಂದ ಸೀತೆ ಕಣ್ಣಿಗೆ ನೋಡಲು ಶೋಭಿಸಿದಳು.
  • (ಪದ್ಯ-೨೯)

ಪದ್ಯ :-:೩೦:

[ಸಂಪಾದಿಸಿ]

ಪಜ್ಜಳಿಪ ರತ್ನ ಪ್ರದೀಪಂಗಳಿಂದೆ ಪೊಸ | ಬಜ್ಜರದ ಮಣಿಮಂಚದಿಂದಂಚೆದುಪ್ಪುಳಿನ | ಸಜ್ಜುಕದಲರ್ಗಳಿಂದೆಸೆವ ಮೇಳ್ವಾಸಿನಿಂ ರಾಜೋಪಭೋಗ್ಯಮಾದ ||
ಸಜ್ಜೆವನೆಯೊಳ್ ವಿರಾಜಿಪ ಕಾಂತನೆಡೆಗೆ ನಸು | ಲಜ್ಜೆ ಮಂದಸ್ಮಿತಂ ಕಿರುಬೆಮರ್ ಕಾತರಂ | ಪಜ್ಜೆದೋರಲ್ ಮೊಗದೊಳೈತಂದು ಸಾರ್ದಳೊಯ್ಯನೆ ಮತ್ತಗಜಗಾಮಿನಿ ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪಜ್ಜಳಿಪ (ಪ್ರಜ್ವಲಿಸುವ) ರತ್ನ ಪ್ರದೀಪಂಗಳಿಂದೆ ಪೊಸ ಬಜ್ಜರದ (ವಜ್ರದ) ಮಣಿಮಂಚದಿಂದ=[ಪ್ರಜ್ವಲಿಸುವ ರತ್ನದ ವಿಶೇಷ ದೀಪಗಳಿಂದ, ಹೊಸ ವಜ್ರದ ಮಣಿಮಂಚದಿಂದ]; ಆಂಚೆದುಪ್ಪುಳಿನ (ಹಂಸತೂಲಿಕೆ/ತುಪ್ಪಳ) ಸಜ್ಜುಕದ (ಮೊಗ್ಗಿನ ಸರ, ಅಲರ್ - ಹೂವು) ಅಲರ್ಗಳಿಂದ ಎಸೆವ ಮೇಳ್ವಾಸಿನಿಂ=[ಹಂಸತೂಲಿಕೆ/ತುಪ್ಪಳದ ಹಾಸಿಗೆಯ, ಮೊಗ್ಗಿನ ಸರ ಹೂವುಗಳಿಂದ ಶೋಭಿಸುವ ಮೇಲುಹಾಸಿಗೆಯ]; ರಾಜೋಪಭೋಗ್ಯಮಾದ ಸಜ್ಜೆವನೆಯೊಳ್ (ಮಲಗುವ ಮನೆ) ವಿರಾಜಿಪ ಕಾಂತನೆಡೆಗೆ ನಸು ಲಜ್ಜೆ ಮಂದಸ್ಮಿತಂ ಕಿರುಬೆಮರ್ ಕಾತರಂ ಪಜ್ಜೆದೋರಲ್ (ಚಿನ್ಹೆತೋರು ) ಮೊಗದೊಳೈತಂದು ಸಾರ್ದಳು ಒಯ್ಯನೆ (ಮೆಲ್ಲಗೆ ಬಂದಳು) ಮತ್ತಗಜಗಾಮಿನಿ (ಮದ್ದಾನೆಯಂತೆ ಮೆಲ್ಲಗೆ ನಡೆಯುವವಳು)=[ರಾಜರಿಗೆ ಉಪಭೋಗ್ಯವಾದ ಮಲಗುವ ಮನೆಗೆ ವಿರಾಜಿಸುವ ಕಾಂತನ ಬಳಿಗೆ ಅರೆ ನಾಚಿಕೆಯಿಂದ ಎಳೆನಗುಮುಖದ, ಸಣ್ನಗೆ ಬೆವರುತ್ತಿರುವ, ಕಾತರದ ಗುರುತು ಮುಖದಲ್ಲಿ ಕಾಣುತ್ತಿರಲು, ಮತ್ತಗಜಗಾಮಿನಿ ಸೀತೆಯು ಮೆಲ್ಲಗೆ ಬಂದಳು.]
  • ತಾತ್ಪರ್ಯ:ಪ್ರಜ್ವಲಿಸುವ ರತ್ನದ ವಿಶೇಷ ದೀಪಗಳಿಂದ, ಹೊಸ ವಜ್ರದ ಮಣಿಮಂಚದಿಂದ, ಹಂಸತೂಲಿಕೆ/ತುಪ್ಪಳದ ಹಾಸಿಗೆಯ, ಮೊಗ್ಗಿನ ಸರ ಹೂವುಗಳಿಂದ ಶೋಭಿಸುವ ಮೇಲುಹಾಸಿಗೆಯ, ರಾಜರಿಗೆ ಉಪಭೋಗ್ಯವಾದ ಮಲಗುವ ಮನೆಗೆ ವಿರಾಜಿಸುವ ಕಾಂತನ ಬಳಿಗೆ ಅರೆ ನಾಚಿಕೆಯಿಂದ ಎಳೆನಗುಮುಖದ, ಸಣ್ನಗೆ ಬೆವರುತ್ತಿರುವ, ಕಾತರದ ಗುರುತು ಮುಖದಲ್ಲಿ ಕಾಣುತ್ತಿರಲು, ಮತ್ತಗಜಗಾಮಿನಿ ಸೀತೆಯು ಮೆಲ್ಲಗೆ ಬಂದಳು.
  • (ಪದ್ಯ-೩೦)

ಪದ್ಯ :-:೩೧:

[ಸಂಪಾದಿಸಿ]

ಸಾಗರದ ನಡುವೆ ಫಣಿತಲ್ಪದೊಳ್ ಸಿರಿಯೊಡನೆ | ಭೋಗಿಸುವ ತೆರದಿಂ ಮಿಥಿಳೇಂದ್ರಸುತೆಯ ಸಂ | ಭೋಗದಿಂ ರಘುಕುಲ ಲಲಾಮನೆಸೆದಂ ಮನುಜಲೀಲೆಗಿದು ಸಾರ್ಥಮೆನಲು ||
ರಾಗರಸದಿಂದೆ ಪುಳಕಂ ಪೊಣ್ಮೆ ನಲಿದು ಮದ | ನಾಗಮಪ್ರೌಢಿಯಿಂ ಸಕಲ ರತಿಕಲೆಗಳಿಂ | ಪಾಗಲ್ ಪರಸ್ಪರವಿಚಾರಮಂ ಮರೆದೈಕ್ಯಭಾವದಿಂ ಸೊಗಸುಗೊಳಿಸಿ ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಾಗರದ ನಡುವೆ ಫಣಿತಲ್ಪದೊಳ್ ಸಿರಿಯೊಡನೆ ಭೋಗಿಸುವ ತೆರದಿಂ=[ಕ್ಷೀರಸಾಗರದ ನಡುವೆ ಆದಿಶೇಷನ ಹಾಸಿಗೆ ಫಣಿತಲ್ಪದಲ್ಲಿ ಸಿರಿ/ ಶ್ರೀಲಕ್ಷ್ಮಿಯೊಡನೆ ಭೋಗಿಸುವ ರೀತಿಯಲ್ಲಿ]; ಮಿಥಿಳೇಂದ್ರಸುತೆಯ ಸಂಭೋಗದಿಂ ರಘುಕುಲ ಲಲಾಮನೆಸೆದಂ ಮನುಜಲೀಲೆಗೆ ಇದು ಸಾರ್ಥಮೆನಲು=[ಮಿಥಿಲಾನಗದ ಅರಸು ಜನಕನ ಮಗಳು ಜಾನಕಿಯೊಡನೆ ಸಂಭೋಗದಿಂದ ರಘುಕುಲ ಲಲಾಮನಾದ ರಾಮನು ಶೋಭಿಸಿದನು. ಮನುಜಲೀಲೆಯಲ್ಲಿ ಇದು ಧರ್ಮಾರ್ಥಕಾಮಮೋಕ್ದದ ಪುರುಷಾರ್ಥಕ್ಕೆ ಸಾರ್ಥಕ ಎನ್ನುವಂತೆ ಇತ್ತು]; ರಾಗರಸದಿಂದೆ ಪುಳಕಂ ಪೊಣ್ಮೆ ನಲಿದು ಮದನಾಗಮಪ್ರೌಢಿಯಿಂ (ಕಾಮಶಾಸ್ತ್ರದ ಅರಿವು) ಸಕಲ ರತಿಕಲೆಗಳಿಂ ಪಾಗಲ್ ಪರಸ್ಪರವಿಚಾರಮಂ ಮರೆದೈಕ್ಯಭಾವದಿಂ ಸೊಗಸುಗೊಳಿಸಿ=[ಪ್ರೇಮರಸದಿಂದೆ ಮೈರೋಮಾಂಚನ ಹೊಂದಲು, ನಲಿದು ಕಾಮಶಾಸ್ತ್ರದ ಸಕಲ ರತಿಕಲೆಗಳು ಇಂಪಾಗಲು/ ಸೊಗಸಾಗಲು ಪರಸ್ಪರ ಸ್ವಂತ ವಿಚಾರವನ್ನು ಮರೆತು, ಐಕ್ಯಭಾವದಿದ ಸೊಗಸುಗೊಳಿಸಿ ಕ್ರೀಡಿಸಿದರು].
  • ತಾತ್ಪರ್ಯ:ಕ್ಷೀರಸಾಗರದ ನಡುವೆ ಆದಿಶೇಷನ ಹಾಸಿಗೆ ಫಣಿತಲ್ಪದಲ್ಲಿ ಸಿರಿ/ ಶ್ರೀಲಕ್ಷ್ಮಿಯೊಡನೆ ಭೋಗಿಸುವ ರೀತಿಯಲ್ಲಿ, ಮಿಥಿಲಾನಗದ ಅರಸು ಜನಕನ ಮಗಳು ಜಾನಕಿಯೊಡನೆ ಸಂಭೋಗದಿಂದ ರಘುಕುಲ ಲಲಾಮನಾದ ರಾಮನು ಶೋಭಿಸಿದನು. ಮನುಜಲೀಲೆಯಲ್ಲಿ ಇದು ಧರ್ಮಾರ್ಥಕಾಮಮೋಕ್ದದ ಪುರುಷಾರ್ಥಕ್ಕೆ ಸಾರ್ಥಕ ಎನ್ನುವಂತೆ ಇತ್ತು. ಪ್ರೇಮರಸದಿಂದೆ ಮೈರೋಮಾಂಚನ ಹೊಂದಲು, ನಲಿದು ಕಾಮಶಾಸ್ತ್ರದ ಸಕಲ ರತಿಕಲೆಗಳು ಇಂಪಾಗಲು/ ಸೊಗಸಾಗಲು ಪರಸ್ಪರ ಸ್ವಂತ ವಿಚಾರವನ್ನು ಮರೆತು, ಐಕ್ಯಭಾವದಿದ ಸೊಗಸುಗೊಳಿಸಿ ಕ್ರೀಡಿಸಿದರು].
  • (ಪದ್ಯ-೩೧)

ಪದ್ಯ :-:೩೨:

[ಸಂಪಾದಿಸಿ]

ಬೆಂಗೊಡದೆ ಮೋಸವೋಗದೆ ತವಕಮುಡುಗಿ ಪೆರ | ಪಿಂಗದೆ ವಿಘಾತಿಗಳುಕದೆ ಕೈಮರೆಯದೆ ಚದು | ರಿಂಗದೆ ನೆಗಳ್ದ ಪುಳಕಂ ಬಿಡದೆ ತಳ್ತಳ್ಕರಡಗದಲಸಿಕೆದೋರದೆ ||
ಅಂಗಜಶ್ರಮವ ನಿಟ್ಟಿಸದೆ ಸಲೆ ರಂಜಿಸುವ | ಸಂಗರ ಸದಾಳಾಪದಿಂದೆಸದರೊಂದಿನಿಸು | ಭಂಗಮಿಲ್ಲದೆ ವೀರಭಟರೊದಗುವಂತೆ ಸಮರತಿಯೊಳಾ ದಂಪತಿಗಳು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬೆಂಗೊಡದೆ ಮೋಸವೋಗದೆ ತವಕಂ ಉಡುಗಿ ಪೆರ ಪಿಂಗದೆ ವಿಘಾತಿಗೆ ಅಳುಕದೆ ಕೈಮರೆಯದೆ ಚದುರಿಂಗದೆ ನೆಗಳ್ದ ಪುಳಕಂ ಬಿಡದೆ ತಳ್ತಳ್ಕರ್ (ತಳ್ತ + ಅಳ್ಕರು- ಹೊಂದಿದ ಪ್ರೇಮ)) ಅಡಗದೆ ಅಲಸಿಕೆದೋರದೆ=[ಪರಸ್ಪರ ಬೆನ್ನು ಕೊಡದೆ- (ಮುಖಾಮುಕಿಯಾಗಿದ್ದರು), ಮೋಸಹೋಗದೆ (ತಪ್ಪಸಿಕೊಳ್ಳದೆ) , ಆಸಕ್ತಿ ಉಡುಗಿ ಆಸೆ ಹಿಂಗದೆ, ಪೆಟ್ಟಿಗೆ ಅಳುಕದೆ, ಕೈಯ ಉಪಯೋಗ ಮರೆಯದೆ, ಚದುರಿ /ಬೇರೆಯಾಗಿ ಇರದೆ, ಹೆಚ್ನಿನ ಪುಳಕವು ಕಡಿಮೆಯಾದೆ (ಬಿಡದೆ) ಪರಸ್ಪರ ಪ್ರೇಮ ಅಡಗದೆ, ಆಲಸ್ಯ ತೋರದೆ]; ಅಂಗಜಶ್ರಮವನು ಇಟ್ಟಿಸದೆ ಸಲೆ ರಂಜಿಸುವ ಸಂಗರಸದ ಆ ಆಳಾಪದಿಂದ ಎಸದರು ಒಂದಿನಿಸು ಭಂಗಂ ಇಲ್ಲದೆ ವೀರಭಟರು ಒದಗುವಂತೆ ಸಮರತಿಯೊಳು ಆ ದಂಪತಿಗಳು=[ಕ್ರೀಡೆಯ ಶ್ರಮವನ್ನು ಲೆಕ್ಕಿಸದೆ ತುಂಬಾ ರಂಜನೆ ಕೊಡುವ ಒಟ್ಟಿಗೆ ರಸಪೂರಿತದ ಮಾತುಗಳಿಂದ ಸ್ವಲ್ಪವೂ ಭಂಗವಿಲ್ಲದೆ ವೀರಭಟರು ಹೋರಾಡುವಂತೆ ಸಮರತಿಯಲ್ಲಿ ಆ ದಂಪತಿಗಳು ಶೋಬಿಸಿದರು.]
  • ತಾತ್ಪರ್ಯ:ಪರಸ್ಪರ ಬೆನ್ನು ಕೊಡದೆ- (ಮುಖಾಮುಕಿಯಾಗಿದ್ದರು), ಮೋಸಹೋಗದೆ (ತಪ್ಪಸಿಕೊಳ್ಳದೆ) , ಆಸಕ್ತಿ ಉಡುಗಿ ಆಸೆ ಹಿಂಗದೆ, ಪೆಟ್ಟಿಗೆ ಅಳುಕದೆ, ಕೈಯ ಉಪಯೋಗ ಮರೆಯದೆ, ಚದುರಿ /ಬೇರೆಯಾಗಿ ಇರದೆ, ಹೆಚ್ನಿನ ಪುಳಕವು ಕಡಿಮೆಯಾದೆ (ಬಿಡದೆ) ಪರಸ್ಪರ ಪ್ರೇಮ ಅಡಗದೆ, ಆಲಸ್ಯ ತೋರದೆ, ಕ್ರೀಡೆಯ ಶ್ರಮವನ್ನು ಲೆಕ್ಕಿಸದೆ ತುಂಬಾ ರಂಜನೆ ಕೊಡುವ ಒಟ್ಟಿಗೆ ರಸಪೂರಿತದ ಮಾತುಗಳಿಂದ ಸ್ವಲ್ಪವೂ ಭಂಗವಿಲ್ಲದೆ ವೀರಭಟರು ಹೋರಾಡುವಂತೆ ಸಮರತಿಯಲ್ಲಿ ಆ ದಂಪತಿಗಳು ಶೋಬಿಸಿದರು.
  • (ಪದ್ಯ-೩೨)

ಪದ್ಯ :-:೩೩:

[ಸಂಪಾದಿಸಿ]

ಇಂತೆಸೆವ ಸಮರತಿಯ ಸೊಬಗಿನಿಂದಮವರೀರ್ವ | ರುಂ ತೊಳಗುತಿರೆ ಬಳಿಕ ವರವಿಷ್ಣು ನಕ್ಷತ್ರ | ದಂತದೊಳ್ ವೈದೇಹಿಗಾಯ್ತು ಗರ್ಭಾದಾನ ಮದರ ಫಲಮಂ ನೋಡಲು ||
ಎಂತಾದೊಡಂ ತನ್ನ ಕಾಂತನನಗಲ್ದು ಸೀ | ಮಂತಿನಿ ಪರಸ್ಥಳದೊಳಣುಗರಂ ಪಡೆದಪಳ | ದಂ ತಿಳಿಯದುತ್ಸವದೊಳಿರ್ದಳಾಕಾಂತೆ ಬಸಿರಾದ ಲಾಂಛನವನಾಂತು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಂತು ಎಸೆವ ಸಮರತಿಯ ಸೊಬಗಿನಿಂದಂ ಅವರು ಈರ್ವರುಂ ತೊಳಗುತಿರೆ (ತೊಳಗು = ಹೊಳೆಯುತ್ತಿರಲು) ಬಳಿಕ ವರವಿಷ್ಣು ನಕ್ಷತ್ರದಂತದೊಳ್ ವೈದೇಹಿಗಾಯ್ತು ಗರ್ಭಾದಾನಂ=[ಹೀಗೆ ನೆಡೆದ ಸಮರತಿಯ ಸೊಬಗಿನಿಂದ ಅವರು ಇಬ್ಬರೂ ತೊಳಗುತ್ತಿರಲು /ಕಾಣುತ್ತಿರಲು, ಬಳಿಕ ವರವಿಷ್ಣು ನಕ್ಷತ್ರದ (ಶ್ರವಣಕ್ಕೆ-ವಿಷ್ಣುದೇವತೆ)ಅಂತಿಮ ಸಮಯದಲ್ಲಿ ವೈದೇಹಿಗೆ ಗರ್ಭಾದಾನವಾಯಿತು.]; ಅದರ ಫಲಮಂ ನೋಡಲು ಎಂತಾದೊಡಂ ತನ್ನ ಕಾಂತನನು ಅಗಲ್ದು ಸೀಮಂತಿನಿ ಪರಸ್ಥಳದೊಳು ಅಣುಗರಂ ಪಡೆದಪಳು=[ಅದರ ಫಲವನ್ನು ನೋಡಲು, ಅದರಲ್ಲಿ ಹೇಗಾದರೂ ತನ್ನ ಕಾಂತನನ್ನು ಅಗಲಿ ಸೀಮಂತಿನಿಯಾದ ಸೀತೆ ಪರಸ್ಥಳದಲ್ಲಿ ಮಕ್ಕಳನ್ನು ಪಡೆಯುವಳು ಎಂದು ಇತ್ತು.]; ಅದಂ ತಿಳಿಯದೆ ಉತ್ಸವದೊಳು ಇರ್ದಳು ಆ ಕಾಂತೆ ಬಸಿರಾದ ಲಾಂಛನವನು ಆಂತು=[ಅದನ್ನು ಸೀತೆ ತಿಳಿಯದೆ ಆ ಕಾಂತೆ ಬಸಿರಾದ ಲಕ್ಷಣಗಳನ್ನು ಪಡೆದು ಸಂತೋಷದಲ್ಲಿ ಇದ್ದಳು.]
  • ತಾತ್ಪರ್ಯ:ಹೀಗೆ ನೆಡೆದ ಸಮರತಿಯ ಸೊಬಗಿನಿಂದ ಅವರು ಇಬ್ಬರೂ ತೊಳಗುತ್ತಿರಲು /ಕಾಣುತ್ತಿರಲು, ಬಳಿಕ ವರವಿಷ್ಣು ನಕ್ಷತ್ರದ (ಶ್ರವಣಕ್ಕೆ-ವಿಷ್ಣುದೇವತೆ)ಅಂತಿಮ ಸಮಯದಲ್ಲಿ ವೈದೇಹಿಗೆ ಗರ್ಭಾದಾನವಾಯಿತು. ಅದರ ಫಲವನ್ನು ನೋಡಲು, ಅದರಲ್ಲಿ ಹೇಗಾದರೂ/ ಯಾವುದಾದರೂ ನೆವದಿಂದ ತನ್ನ ಕಾಂತನನ್ನು ಅಗಲಿ ಸೀಮಂತಿನಿಯಾದ ಸೀತೆಯು ಪರಸ್ಥಳದಲ್ಲಿ ಮಕ್ಕಳನ್ನು ಪಡೆಯುವಳು ಎಂದು ಇತ್ತು. ಸೀತೆ ಅದನ್ನು ತಿಳಿಯದೆ ಬಸಿರಾದ ಲಕ್ಷಣಗಳನ್ನು ಪಡೆದು ಸಂತೋಷದಲ್ಲಿ ಇದ್ದಳು.
  • (ಪದ್ಯ-೩೩)

ಪದ್ಯ :-:೩೪:

[ಸಂಪಾದಿಸಿ]

ಸಣ್ಣನಡು ಬಳೆಯೆ ತಿವಳಿಗಳಡಗೆ ತೆಳ್ಯಾಸೆ | ನುಣ್ಣಗೆ ಪೊಗರ್ವಡೆಯೆ ಚೂಚಕದ ಕಪ್ಪುಣ್ಮೆ | ತಿಣ್ನಮೊಲೆ ಬಿಣ್ಪಡರೆ ಕಾಲ್ಮಂದಗತಿಗಲಸೆ ನಗೆಮೊಗಂ ಬೆಳ್ಪುದೋರೆ ||
ಕಣ್ಣೆವೆಯ ಪುರ್ಬಿನ ನವಿರ್ಮಿಂಚುದಳೆಯೆ ತನು | ತಣ್ಣಸದೊಳೆಸೆಯೆ ಪೊಸಗಾಡಿವೆತ್ತಿರ್ದಳೇ | ವಣ್ಣಿಸುವೆನುಲ್ಲಸತ್ಕಾಂಚನ ಲತಾಂಗಿ ಸುತ ಲಾಂಛನದ ಗರ್ಭದಿಂದೆ ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಣ್ಣನಡು ಬಳೆಯೆ ತಿವಳಿಗಳಡಗೆ ತೆಳ್ಯಾಸೆ ನುಣ್ಣಗೆ ಪೊಗರ್ವಡೆಯೆ=[ಸಣ್ಣಸೊಂಟ ಬೆಳೆದು ಹೊಟ್ಟೆಯ ಮೇಲುಭಾಗದ ತಿವಳಿಗಳು ಅಡಗಿದವು; ಆ ಭಾಗದಲ್ಲಿ ತೆಳು ಹಾಸುಚರ್ಮವು ನುಣ್ಣಗೆ ಹೊಳಪುಹೊಂದಿತು.]; ಚೂಚಕದ ಕಪ್ಪುಣ್ಮೆ ತಿಣ್ನಮೊಲೆ ಬಿಣ್ಪಡರೆ ಕಾಲ್ಮಂದಗತಿಗಲಸೆ ನಗೆಮೊಗಂ ಬೆಳ್ಪುದೋರೆ=[ಮೊಲೆತೊಟ್ಟಿನ ಕಪ್ಪು ಹಿಗ್ಗಿತು; ಗಡಸುಮೊಲೆ ಬಿಳುಪಾಯಿತು; ಕಾಲುನೆಡಿಗೆ ಮಂದಗತಿಗೆ ಬಂತು; ನಗೆಮುಖವು ಬಿಳುಪು ತೋರಿತು;]; ಕಣ್ಣೆವೆಯ ಪುರ್ಬಿನ ನವಿರ್ ಮಿಂಚು ತಳೆಯೆ ತನು ತಣ್ಣಸದೊಳು ಎಸೆಯೆ ಪೊಸಗಾಡಿವೆತ್ತಿರ್ದಳು ಏ ವಣ್ಣಿಸುವೆನು ಉಲ್ಲಸತ್ (ಪ್ರಕಾಶಿಸುವ) ಕಾಂಚನ (ಚಿನ್ನದ) ಲತಾಂಗಿ (ಬಳ್ಳಿಯಂತಿರುವ ದೇಹದ) ಸುತ ಲಾಂಛನದ ಗರ್ಭದಿಂದೆ=[ಕಣ್ಣುರೆಪ್ಪೆಯ ಹುಬ್ಬಿನ ನವಿರು ಮಿಂಚು ತಳೆಯಿತು; ದೇಹ ತಂಪಾಗಿ ಶೋಭಿಸಿ, ಚಿನ್ನದ ಬಳ್ಳಿಯಂತಿರುವ ಸೀತೆಯು ಮಗುಪಡೆದ ಗರ್ಭದ ಗುರುತುಗಳ ಹೊಸ ಲಕ್ಷಣದಲ್ಲಿ ಶೋಭಿಸುತ್ತಿದ್ದಳು.];
  • ತಾತ್ಪರ್ಯ: ಸಣ್ಣಸೊಂಟ ಬೆಳೆದು ಹೊಟ್ಟೆಯ ಮೇಲುಭಾಗದ ತಿವಳಿಗಳು ಅಡಗಿದವು; ಆ ಭಾಗದಲ್ಲಿ ತೆಳು ಹಾಸುಚರ್ಮವು ನುಣ್ಣಗೆ ಹೊಳಪುಹೊಂದಿತು. ಮೊಲೆತೊಟ್ಟಿನ ಕಪ್ಪು ಹಿಗ್ಗಿತು; ಗಡಸುಮೊಲೆ ಬಿಳುಪಾಯಿತು; ಕಾಲುನೆಡಿಗೆ ಮಂದಗತಿಗೆ ಬಂತು; ನಗೆಮುಖವು ಬಿಳುಪು ತೋರಿತು; ಕಣ್ಣುರೆಪ್ಪೆಯ ಹುಬ್ಬಿನ ನವಿರು ಮಿಂಚು ತಳೆಯಿತು; ದೇಹ ತಂಪಾಗಿ ಶೋಭಿಸಿ, ಚಿನ್ನದ ಬಳ್ಳಿಯಂತಿರುವ ಸೀತೆಯು ಮಗುಪಡೆದ ಗರ್ಭದ ಗುರುತುಗಳಿಂದ ಹೊಸ ಲಕ್ಷಣದಲ್ಲಿ ಶೋಭಿಸುತ್ತಿದ್ದಳು.
  • (ಪದ್ಯ-೩೪)vii

ಪದ್ಯ :-:೩೫:

[ಸಂಪಾದಿಸಿ]

ಬೆಳ್ದಾವರೆಯೊಳೆರಗಿದಳಿಕುಲಂ ಗಗನಾಗ್ರ | ದೊಳ್ದಿನದಿನಕೆ ಬೆಳೆವ ಚಂದ್ರಕಲೆ ಕನಕಾದ್ರಿ | ಯೊಳ್ದಿಟ್ಟಿಗೊಳಿಸುವಸಿತಾಂಬುಜಂ ರಾರಾಜಿಸುವ ತೆರದೊಳಾ ಕಾಂತೆಯ ||
ಒಳ್ದಳೆದು ಚೆಲ್ವಿನಾನನದೊಳುರೆ ಮಿರುಗುವ ಕು | ರುಳ್ದೊಂಗಲಸಿನಡುವಿನೊಳ್ ಪೊಳೆವ ಗರ್ಭಂ ನೆ | ಗಳ್ದ ಕುಚದೊಳ್ ಮಿಸುಪ ಚೂಚಕದ ಕಪ್ಪು ಚೆಲ್ವಿಂದೆ ಕಣ್ಗೆಸದಿರ್ದುದು ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬೆಳಿ ತಾವರೆಯೊಳ್ ಎರಗಿದ ಅಳಿಕುಲಂ=[ಬಿಳಿತಾವರೆಯಲ್ಲಿ ಎರಗಿದ ಜೇನುಹುಳುಗಳ ಗುಂಪು]; ಗಗನಾಗ್ರದೊಳ್ ದಿನದಿನಕೆ ಬೆಳೆವ ಚಂದ್ರಕಲೆ (ಚಂದ್ರನು ೧೬ ಕಲೆಗಳಿಂದ ಬೆಳೆಯುವನು)=[ಆಕಾಶದ ಎತ್ತರಲ್ಲಿ ದಿನದಿನವೂ ಬೆಳೆಯುವ ಚಂದ್ರಕಲೆ]; ಕನಕಾದ್ರಿಯೊಳ್ ದಿಟ್ಟಿಗೊಳಿಸುವ ಅಸಿತಾಂಬುಜಂ=[ಕನಕಾದ್ರಿಯಲ್ಲಿ ದಿಟ್ಟಿಗೊಳಿಸುವ/ ಪ್ರಕಾಶಿಸುವ ಕನ್ನೈದಿಲೆ ಹೂವು,]; ರಾರಾಜಿಸುವ ತೆರದೊಳು ಆ ಕಾಂತೆಯ ಒಳ್ ತಳೆದ (ಪ್ರಕಾಶಹೊಂದಿದ) ಚೆಲ್ವಿನ ಆನನದೊಳು=[ಇವೆಲ್ಲಾ ಶೋಭಿಸುವ ರೀತಿಯಲ್ಲಿ, ಆ ಸೀತೆಯ ಕಾಂತಿಯನ್ನು ಹೊಂದಿದ ಚೆಲುವಿನ ಮುಖದಲ್ಲಿ]; ಉರೆ ಮಿರುಗುವ ಕುರುಳ್ದೊಂಗಲ ಅಸಿ (ಕತ್ತಿ, ಕಪ್ಪು) ನಡುವಿನೊಳ್ ಪೊಳೆವ ಗರ್ಭಂ ನೆಗಳ್ದ ಕುಚದೊಳ್ ಮಿಸುಪ ಚೂಚಕದ (ಮೊಲೆ ತೊಟ್ಟು) ಕಪ್ಪು ಚೆಲ್ವಿಂದೆ ಕಣ್ಗೆಸದಿರ್ದುದು=[ಬಹಳ ಪ್ರಕಾಶಿಸುವ ಕುರುಳಗುಚ್ಛಗಳು, ಅಸಿ ಸೊಂಟದಲ್ಲಿ ಪೊಳೆಯುವ ಗರ್ಭವು,ಬೆಳೆದ ಮೊಲೆಯಲ್ಲಿ ಪ್ರಕಾಶಿಸುವ 'ಚೂಚಕದ ಕಪ್ಪು', ಮೇಲಿನ ಹೋಲಿಕೆಗಳಂತೆ ಚೆಲುವಾಗಿ ಕಣ್ಣಿಗೆ ಎದ್ದುಕಾಣುತ್ತಿತ್ತು ].
  • ತಾತ್ಪರ್ಯ: ಬಿಳಿತಾವರೆಯಲ್ಲಿ ಎರಗಿದ ಜೇನುಹುಳುಗಳ ಗುಂಪು (ಮುಂಗುರುಳು); ಆಕಾಶದ ಎತ್ತರಲ್ಲಿ ದಿನದಿನವೂ ಬೆಳೆಯುವ ಚಂದ್ರಕಲೆ (ಮುಖ?); ಕನಕಾದ್ರಿಯಲ್ಲಿ ದಿಟ್ಟಿಗೊಳಿಸುವ/ ಪ್ರಕಾಶಿಸುವ ಕನ್ನೈದಿಲೆ ಹೂವು,(ಕಪ್ಪು ಮೊಲೆತೊಟ್ಟು); ಇವೆಲ್ಲಾ ಶೋಭಿಸುವ ರೀತಿಯಲ್ಲಿ, ಆ ಸೀತೆಯ ಕಾಂತಿಯಿಂದ ಕೂಡಿದ ಚೆಲುವಿನ ಮುಖದಲ್ಲಿ; ಬಹಳ ಪ್ರಕಾಶಿಸುವ ಕುರುಳಗುಚ್ಛಗಳು, ಅಸಿ ಸೊಂಟದಲ್ಲಿ ಹೊಳೆಯುವ ಗರ್ಭವು,ಬೆಳೆದ ಮೊಲೆಯಲ್ಲಿ ಪ್ರಕಾಶಿಸುವ 'ಚೂಚಕದ ಕಪ್ಪು', ಮೇಲಿನ ಹೋಲಿಕೆಗಳಂತೆ ಚೆಲುವಾಗಿ ಕಣ್ಣಿಗೆ ಎದ್ದುಕಾಣುತ್ತಿತ್ತು .
  • (ಪದ್ಯ-೩೫)

ಪದ್ಯ :-:೩೬:

[ಸಂಪಾದಿಸಿ]

ಚಂದ್ರಮುಖಿಯಾದ ವೈದೇಹಿಯ ಜಠರಮೆಂಬ | ಚಂದ್ರಕಾಂತದ ಮಣಿಯ ಮಧ್ಯದೊಳ್ ತವೆ ರಾಮ | ಚಂದ್ರನೆಂಬಖಿಳ ಲೋಕಾನಂದಕರಮಾದ ಸಂಪೂರ್ಣ ಕಲೆಗಳುಳ್ಳ ||
ಚಂದ್ರನ ವಿರಾಜಿಪ ಪ್ರತಿಬಿಂಬಮಾಗಿರ್ದ | ಚಂದ್ರನೆನೆ ಶಿಶು ಗರ್ಭದೊಳ್ ತೊಳಗೆ ಕೂಡಿರ್ದ | ಚಂದ್ರಿಕೆವೊಲಂಗರುಚಿ ಬೆಳ್ಪಡರಲೊಳ್ಪಿನಿಂದೊಪ್ಪಿರ್ದಳುತ್ಪಲಾಕ್ಷಿ ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಚಂದ್ರಮುಖಿಯಾದ ವೈದೇಹಿಯ ಜಠರಮೆಂಬ ಚಂದ್ರಕಾಂತದ ಮಣಿಯ ಮಧ್ಯದೊಳ್ ತವೆ ರಾಮಚಂದ್ರನೆಂಬ ಅಖಿಳ ಲೋಕಾನಂದಕರಮಾದ ಸಂಪೂರ್ಣ ಕಲೆಗಳುಳ್ಳ=[ಚಂದ್ರನಂತೆ ಮುಖವುಳ್ಳ ಜಾನಕಿಯ ಹೊಟ್ಟೆಯೆಂಬ ಚಂದ್ರಕಾಂತಮಣಿಯ ಮಧ್ಯದಲ್ಲಿ ಅತಿಶಯವಾದ ರಾಮಚಂದ್ರನೆಂಬ ಅಖಿಲ ಲೋಕಾನಂದಕರವಾದ ಸಂಪೂರ್ಣ ಕಲೆಗಳುಳ್ಳ]; ಚಂದ್ರನ ವಿರಾಜಿಪ ಪ್ರತಿಬಿಂಬಂ ಆಗಿರ್ದ ಚಂದ್ರನೆನೆ ಶಿಶು ಗರ್ಭದೊಳ್ ತೊಳಗೆ ಕೂಡಿರ್ದ ಚಂದ್ರಿಕೆವೊಲ್ ಅಂಗರುಚಿ ಬೆಳ್ಪಡರಲ್ ಒಳ್ಪಿನಿಂದ ಒಪ್ಪಿರ್ದಳು ಉತ್ಪಲಾಕ್ಷಿ=[ಚಂದ್ರನಂತೆ ಶೋಭಿಸುವ ಪ್ರತಿಬಿಂಬವಾಗಿರುವ ಚಂದ್ರನೋ ಎನ್ನುವಂತೆ ಶಿಶುವು ಗರ್ಭದಲ್ಲಿ ಹೊಳೆಯಲು, ಅದು ಒಳಸೇರಿರುವ ಬೆಳದಿಂಗಳಂತೆ ಸೀತೆಯ ದೇಹಲಕ್ಷಣ ಬಿಳಿಪಾಗಲು ಉತ್ಪಲ ಅಥವಾ ನೈದಿಲೆಯ ಎಸಳಿನಮತೆ ಕಣ್ಣುಳ್ಳ ಸೀತೆಯು ಚಂದವಾಗಿ ಕಾಣುತ್ತಿದ್ದಳು.]
  • ತಾತ್ಪರ್ಯ:ಚಂದ್ರನಂತೆ ಮುಖವುಳ್ಳ ಜಾನಕಿಯ ಹೊಟ್ಟೆಯೆಂಬ ಚಂದ್ರಕಾಂತಮಣಿಯ ಮಧ್ಯದಲ್ಲಿ ಅತಿಶಯವಾದ ರಾಮಚಂದ್ರನೆಂಬ ಅಖಿಲ ಲೋಕಾನಂದಕರವಾದ ಸಂಪೂರ್ಣ ಕಲೆಗಳುಳ್ಳ, ಚಂದ್ರನಂತೆ ಶೋಭಿಸುವ ಪ್ರತಿಬಿಂಬವಾಗಿರುವ ಚಂದ್ರನೋ ಎನ್ನುವಂತೆ ಶಿಶುವು ಗರ್ಭದಲ್ಲಿ ಹೊಳೆಯಲು, ಅದು ಒಳಸೇರಿರುವ ಬೆಳದಿಂಗಳಂತೆ ಸೀತೆಯ ದೇಹಲಕ್ಷಣ ಬಿಳಿಪಾಗಲು ಉತ್ಪಲ ಅಥವಾ ನೈದಿಲೆಯ ಎಸಳಿನಂತೆ ಕಣ್ಣುಳ್ಳ ಸೀತೆಯು ಚಂದವಾಗಿ ಕಾಣುತ್ತಿದ್ದಳು. (ಉತ್ಪ್ರೇಕ್ಷೆ -ರೂಪಕ ಅಲಂಕಾರಗಳು)
  • (ಪದ್ಯ-೩೬)

ಪದ್ಯ :-:೩೭:

[ಸಂಪಾದಿಸಿ]

ಕಾಂಚನಲತಾ ಕೋಮಲಾಂಗಿ ಗರ್ಭಿಣಿಯಾದ | ಲಾಂಛನವನಿನಕುಲಾಧೀಶ್ವರಂ ಕಂಡು ರೋ | ಮಾಂಚನದ ಹರ್ಷದಿಂ ನಾಲ್ಕನೆಯ ತಿಂಗಳೊಳ್ ವಿಭವದಿಂ ಭೂಸುರರ್ಗೆ ||
ವಾಂಛಿತವನಿತ್ತು ಪುಂಸವನ ಸೀಮಂತಮಂ | ತಾಂ ಚಾರು ಲೋಚನೆಗೆ ವಿಸ್ತರಿಸಿದಂ ಚಿತ್ತ | ಚಾಂಚಲ್ಯಮಿಲ್ಲದೆ ವಸಿಷ್ಠ ವಿಶ್ವಾಮಿತ್ರರುಕ್ತದಿಂ ಮಾಡಿಸಲ್ಕೆ ||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾಂಚನಲತಾ ಕೋಮಲಾಂಗಿ ಗರ್ಭಿಣಿಯಾದ ಲಾಂಛನವನು ಇನಕುಲ ಅಧೀಶ್ವರಂ ಕಂಡು ರೋಮಾಂಚನದ ಹರ್ಷದಿಂ=[ಬಂಗಾರದ ಬಳ್ಳಿಯಂತಿರುವ ಕೋಮಲ ಶರಿರದ ಸೀತೆಯು ಗರ್ಭಿಣಿಯಾದ ಚಿನ್ಹೆಯನ್ನು ಸೂರ್ಯವಂಶದ ಒಡೆಯ ರಾಮನು ಕಂಡು ರೋಮಾಂಚನಹೊಂದಿ ಹರ್ಷದಿಂದ]; ನಾಲ್ಕನೆಯ ತಿಂಗಳೊಳ್ ವಿಭವದಿಂ ಭೂಸುರರ್ಗೆ ವಾಂಛಿತವನಿತ್ತು ಪುಂಸವನ ಸೀಮಂತಮಂ ತಾಂ ಚಾರು ಲೋಚನೆಗೆ ವಿಸ್ತರಿಸಿದಂ ಚಿತ್ತ ಚಾಂಚಲ್ಯಂ ಇಲ್ಲದೆ ವಸಿಷ್ಠ ವಿಶ್ವಾಮಿತ್ರರ ಉಕ್ತದಿಂ ಮಾಡಿಸಲ್ಕೆ=[ನಾಲ್ಕನೆಯ ತಿಂಗಳಲ್ಲಿ ವೈಭವದಿಂದ ಬ್ರಾಹ್ಮಣರಿಗೆ ಅಪೇಕ್ಷಪಟ್ಟ ದಾನಗಳನ್ನು ಕೊಟ್ಟು ಪುಂಸವನ ಮತ್ತು ಸೀಮಂತ ಶಾಸ್ತ್ರಕಾರ್ಯಗಳನ್ನು ವಸಿಷ್ಠ ವಿಶ್ವಾಮಿತ್ರರ ಹೇಳಿಕೆಯಂತೆ, ತಾನು ಸುಂದರಕಣ್ಣುಳ್ಳ ಸೀತೆಗೆ ಮನಃಪೂರ್ವಕ ಮಾಡಿಸಿದನು.]
  • ತಾತ್ಪರ್ಯ:ಬಂಗಾರದ ಬಳ್ಳಿಯಂತಿರುವ ಕೋಮಲ ಶರೀರದ ಸೀತೆಯು ಗರ್ಭಿಣಿಯಾದ ಚಿನ್ಹೆಯನ್ನು ಸೂರ್ಯವಂಶದ ಒಡೆಯ ರಾಮನು ಕಂಡು ರೋಮಾಂಚನಹೊಂದಿ ಹರ್ಷದಿಂದ, ನಾಲ್ಕನೆಯ ತಿಂಗಳಲ್ಲಿ ವೈಭವದಿಂದ ಬ್ರಾಹ್ಮಣರಿಗೆ ಅಪೇಕ್ಷೆಪಟ್ಟ ದಾನಗಳನ್ನು ಕೊಟ್ಟು ಪುಂಸವನ ಮತ್ತು ಸೀಮಂತ ಸಂಸ್ಕಾರದ ಶಾಸ್ತ್ರಕಾರ್ಯಗಳನ್ನು ವಸಿಷ್ಠ ವಿಶ್ವಾಮಿತ್ರರ ಹೇಳಿಕೆಯಂತೆ, ತಾನು, ಸುಂದರಕಣ್ಣುಳ್ಳ ಸೀತೆಗೆ ಮನಃಪೂರ್ವಕವಾಗಿ ಮಾಡಿಸಿದನು.
  • (ಪದ್ಯ-೩೭)

ಪದ್ಯ :-:೩೯:

[ಸಂಪಾದಿಸಿ]

ಉತ್ಸವಕೆ ಬಂದನಿಬರೆಲ್ಲರಂ ಶರಣಜನ | ವತ್ಸಲಂ ಸತ್ಕರಿಸಿ ಬೀಳ್ಕೊಟ್ಟು ರಾಜಸಂ | ಪತ್ಸುಖದೊಳಿರ್ವನಿತರೊಳ್ ಬಳಿಕ ಸೀತೆ ನಿಜಕಾಂತನೇಕಾಂತಕೈದಿ ||
ಕುತ್ಸಿತಂ ಪೊದ್ದದಾಶ್ರಮದ ಋಷಿಪತ್ನಿಯರ | ಸತ್ಸಂಗದೊಳ್ ತನ್ನ ಬೇಸರಂ ತವಿಸುವೆ ನಿ | ದುತ್ಸಕಂ ತನಗದರಿನಿನ್ನೊಮ್ಮೆ ಬನಕೆ ತನ್ನಂ ಕಳುಹಬೇಕೆಂದಳು ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಉತ್ಸವಕೆ ಬಂದ ಅನಿಬರು ಎಲ್ಲರಂ ಶರಣಜನವತ್ಸಲಂ ಸತ್ಕರಿಸಿ ಬೀಳ್ಕೊಟ್ಟು ರಾಜಸಂಪತ್ಸುಖದೊಳು ಇರ್ವ ಅನಿತರೊಳ್=[ಸೀಮಂತದ ಉತ್ಸವ ಕಾರ್ಯಕ್ಕೆ ಬಂದ ಅಷ್ಟೂ ಜನರನ್ನು ಶರಣಜನರಲ್ಲಿ ಪ್ರೀತಿಯುಳ್ಳ ರಾಮನು ಉಪಚರಿಸಿ ಬೀಳ್ಕೊಟ್ಟು ರಾಜಸಂಪತ್‍ ಸುಖದ ವಿಶ್ರಾಂತಿಯಲ್ಲಿ ಇದ್ದ ಸಮಯದಲ್ಲಿ,]; ಬಳಿಕ ಸೀತೆ ನಿಜಕಾಂತನ ಏಕಾಂತಕೆ ಐದಿ ಕುತ್ಸಿತಂ ಪೊದ್ದದ (ಹೊಂದದ) ಆಶ್ರಮದ ಋಷಿಪತ್ನಿಯರ ಸತ್ಸಂಗದೊಳ್ ತನ್ನ ಬೇಸರಂ ತವಿಸುವೆನು ಇದು ಉತ್ಸಕಂ ತನಗೆ=[ಆ ಸತ್ಕಾರಗಳ ಬಳಿಕ ಸೀತೆಯು ತನ್ನ ಪತಿಯ ಏಕಾಂತಕ್ಕೆ ಹೋದಳು. ಅಲ್ಲಿ ಕೆಟ್ಟವಿಚಾರ ಹೊಂದಿಲ್ಲದ ಆಶ್ರಮದ ಋಷಿಪತ್ನಿಯರ ಸತ್ಸಂಗದಲ್ಲಿ ತನ್ನ ಬೇಸರವನ್ನು ಕಳೆಯುವೆನು; ಇದು ತನಗೆ ಆಗಿರುವ "ಬಯಕೆ" ]; ಅದರಿಂ ಇನ್ನೊಮ್ಮೆ ಬನಕೆ ತನ್ನಂ ಕಳುಹಬೇಕು ಎಂದಳು=[ಅದರಿಂದ ಇನ್ನೊಮ್ಮೆ ವನಕ್ಕೆ ತನ್ನನ್ನು ಕಳುಹಿಸಬೇಕು, ಎಂದಳು ].
  • ತಾತ್ಪರ್ಯ:ಸೀಮಂತದ ಉತ್ಸವದ ಕಾರ್ಯಕ್ಕೆ ಬಂದ ಅಷ್ಟೂ ಜನರನ್ನು ಶರಣಜನರಲ್ಲಿ ಪ್ರೀತಿಯುಳ್ಳ ರಾಮನು ಉಪಚರಿಸಿ ಬೀಳ್ಕೊಟ್ಟು ರಾಜಸಂಪತ್‍ ಸುಖದ ವಿಶ್ರಾಂತಿಯಲ್ಲಿ ಇದ್ದ ಸಮಯದಲ್ಲಿ, ಸೀತೆಯು ಆ ಸತ್ಕಾರಗಳ ಬಳಿಕ ತನ್ನ ಪತಿಯ ಏಕಾಂತಕ್ಕೆ ಹೋದಳು. ಅಲ್ಲಿ ಕೆಟ್ಟವಿಚಾರ ಹೊಂದಿಲ್ಲದ ಆಶ್ರಮದ ಋಷಿಪತ್ನಿಯರ ಸತ್ಸಂಗದಲ್ಲಿ ತನ್ನ ಬೇಸರವನ್ನು ಕಳೆಯುವೆನು; ಇದು ತನಗೆ ಆಗಿರುವ "ಬಯಕೆ"; ಅದರಿಂದ ಇನ್ನೊಮ್ಮೆ ವನಕ್ಕೆ ತನ್ನನ್ನು ಕಳುಹಿಸಬೇಕು, ಎಂದಳು.
  • (ಪದ್ಯ-೩೯)

ಪದ್ಯ :-:೪೦:

[ಸಂಪಾದಿಸಿ]

ಆ ಕ್ಷಿತಿಜೆ ಬಯಕೆಯಂ ಬಿನ್ನೈಸೆ ಕೇಳ್ದು ನಗು | ತಾಕ್ಷೇಪದಿಂದೆ ಕಳುಹುವನಾಗಿ ಸಂತೈಸಿ | ರಾಕ್ಷಸಾಂತಕ ನಿರಲ್ಕೊಂದಿರುಳ್ ಕನಸುಗಂಡೇಳುತೆ ವಸಿಷ್ಠನೊಡನೆ ||
ಈ ಕ್ಷೋಣೆಸುತೆ ಗಂಗೆಯಂ ಕಳೆದು ಕಾಡೊಳ್ ಮ | ಹಾ ಕ್ಷೀಣೆಯಾಗಿ ದೇಸಿಗರಂತೆ ದೆಸೆದೆಸೆಯ | ನೀಕ್ಷಿಸುತೆ ಮರುಗುತಳುತಿರ್ದುದಂ ಕಂಡೆನಿದು ಲೇಸಹುದೆ ಪೇಳೆಂದನು ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಕ್ಷಿತಿಜೆ ಬಯಕೆಯಂ ಬಿನ್ನೈಸೆ ಕೇಳ್ದು ನಗುತ ಆಕ್ಷೇಪದಿಂದೆ (ಆಶ್ಚರ್ಯ, ವಿಸ್ಮಯ, ಗೊಣುಗುತ್ತಾ) ಕಳುಹುವನಾಗಿ ಸಂತೈಸಿ ರಾಕ್ಷಸಾಂತಕ ನಿರಲ್=[ಆ ಭೂಮಿಜೆಯಾದ ಸೀತೆ ಬಯಕೆಯನ್ನು ರಾಮನಲ್ಲಿ ವಿಂತಿಸಲು, ಕೇಳಿ ನಗುತ್ತಾ ಆಶ್ಚರ್ಯದಿಂದ, ಕಳಿಸುವೆನೆಂದು ಸಂತೈಸಿ ರಾಕ್ಷಸಾಂತಕ ರಾಮನು ಇರಲು,]; ಒಂದಿರುಳ್ ಕನಸುಗಂಡು ಏಳುತೆ ವಸಿಷ್ಠನೊಡನೆ ಈ ಕ್ಷೋಣೆಸುತೆ ಗಂಗೆಯಂ ಕಳೆದು ಕಾಡೊಳ್ ಮಹಾ ಕ್ಷೀಣೆಯಾಗಿ ದೇಸಿಗರಂತೆ ದೆಸೆದೆಸೆಯ ನೀಕ್ಷಿಸುತೆ ಮರುಗುತ ಅಳುತಿರ್ದುದಂ ಕಂಡೆನು ಇದು ಲೇಸಹುದೆ ಪೇಳು ಎಂದನು=[ಒಂದು ರಾತ್ರಿ ಕೆಟ್ಟ ಕನಸು ಕಂಡು ಎದ್ದು, ನಂತರ ವಸಿಷ್ಠರೊಡನೆ ಈ ಭೂಮಿಸುತೆ ಗಂಗಾನದಿಯನ್ನು ದಾಟಿ, ಕಾಡಲ್ಲಿ ಬಹಳ ಕಂಗೆಟ್ಟು ದಿಕ್ಕಿಲ್ಲದವರಂತೆ ದಿಕ್ಕು ದಿಕ್ಕನ್ನು ನೋಡುತ್ತಾ ದುಃಖದಿಂದ ಅಳುತ್ತಿದುದನ್ನು ಕನಸಿನಲ್ಲಿ ಕಂಡೆನು. ಇದು ಒಳ್ಳೆಯದಾಗುವುದೇ? (ಕೆಡುಕಾಗುವಂತೆ ತೋರುವುದು) ಹೇಳು ಎಂದನು].
  • ತಾತ್ಪರ್ಯ: ಆ ಭೂಮಿಜೆಯಾದ ಸೀತೆ ಬಯಕೆಯನ್ನು ರಾಮನಲ್ಲಿ ವಿಂತಿಸಲು, ಕೇಳಿ ನಗುತ್ತಾ ಆಶ್ಚರ್ಯದಿಂದ, ಕಳಿಸುವೆನೆಂದು ಸಂತೈಸಿ ರಾಕ್ಷಸಾಂತಕ ರಾಮನು ಇರಲು, ಅವನು ಒಂದು ರಾತ್ರಿ ಕೆಟ್ಟ ಕನಸು ಕಂಡು ಎದ್ದು, ನಂತರ ವಸಿಷ್ಠರೊಡನೆ ಈ ಭೂಮಿಸುತೆ ಜಾನಕಿ, ಗಂಗಾನದಿಯನ್ನು ದಾಟಿ, ಕಾಡಲ್ಲಿ ಬಹಳ ಕಂಗೆಟ್ಟು ದಿಕ್ಕಿಲ್ಲದವರಂತೆ ದಿಕ್ಕುದಿಕ್ಕನ್ನು ನೋಡುತ್ತಾ ದುಃಖದಿಂದ ಅಳುತ್ತಿದುದನ್ನು ಕನಸಿನಲ್ಲಿ ಕಂಡೆನು. ಇದು ಒಳ್ಳೆಯದಾಗುವುದೇ? (ಕೆಡುಕಾಗುವಂತೆ ತೋರುವುದು) ಹೇಳು ಎಂದನು.
  • (ಪದ್ಯ-೪೦)

ಪದ್ಯ :-:೪೧:

[ಸಂಪಾದಿಸಿ]

ಎನೆ ಕನಸಿದೊಳ್ಳಿತಲ್ಲೆಂದದಕೆ ಶಾಂತಿಯಂ | ಮುನಿವರ ವಸಿಷ್ಠಂ ನೆಗಳ್ಚಿದಂ ಬಳಿಕ ಮನ | ದನುತಾಪದಿಂ ಪ್ರಜೆಯ ನಾರೈವುದಂ ಮರೆದೆರಡು ಮೂರುದಿವಸಮಿರ್ದು ||
ಜನಮಲಸಿದಪುದೆಂದು ರಾತ್ರಿಯೊಳ್ ಪೊರಮಟ್ಟು | ದಿನಪ ಕುಲತಿಲಕನೇಕಾಂತದೊಳ್ ನಗರ ಶೋ | ಧನೆಯ ಚಾರರೊಳೊರ್ವನಂ ಕರೆಸಿ ಕೇಳ್ದನಿಂತೆಂದು ವಿನಯೋಕ್ತಿಯಿಂದೆ ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎನೆ ಕನಸು ಇದು ಒಳ್ಳಿತಲ್ಲ ಎಂದು ಅದಕೆ ಶಾಂತಿಯಂ ಮುನಿವರ ವಸಿಷ್ಠಂ ನೆಗಳ್ಚಿದಂ=[ರಾಮನು ಮುನಿಗೆ ಕನಸಿನ ವಿಷಯ ಹೇಳಲು, ಈ ಕನಸು ಒಳ್ಳೆಯದಲ್ಲ ಎಂದು, ಅದಕ್ಕೆ ಶಾಂತಿಯನ್ನು ಮುನಿಶ್ರೇಷ್ಠ ವಸಿಷ್ಠನು ಮಾಡಿದನು.]; ಬಳಿಕ ಮನದ ಅನುತಾಪದಿಂ ಪ್ರಜೆಯ ನಾರೈವುದಂ ಮರೆದ ಎರಡು ಮೂರುದಿವಸಂ ಇರ್ದು=[ಬಳಿಕ ಮನಸ್ಸಿನ ಸಂತಾಪದಿಂದ ಪ್ರಜೆಗಳ ಕ್ಷೇಮವಿಚಾರ ಮರೆತು ಎರಡು ಮೂರುದಿವಸ ಇದ್ದನು.]; ಜನಂ ಅಲಸಿದಪುದೆಂದು ರಾತ್ರಿಯೊಳ್ ಪೊರಮಟ್ಟು ದಿನಪ ಕುಲತಿಲಕನು=[ಜನರು ಬಳಲಿ/ತೊಂದರಯಲ್ಲಿ ಇರಬಹುದೆಂದು ರಾಮನು ರಾತ್ರಿಯಲ್ಲಿ ಅರಮನೆಯಿಂದ ಹೊರಟನು.]; ಏಕಾಂತದೊಳ್ ನಗರ ಶೋಧನೆಯ ಚಾರರೊಳು ಓರ್ವನಂ ಕರೆಸಿ ಕೇಳ್ದನು ಇತೆಂದು ವಿನಯೋಯಿಂದೆ=[ಅವನು ಏಕಾಂತದಲ್ಲಿ ನಗರ ಶೋಧನೆಯ ಚಾರರಲ್ಲಿ ಒಬ್ಬನನ್ನು ಕರೆಸಿ ವಿನಯದಿಂದ ಹೀಗೆ ಕೇಳಿದನು.]
  • ತಾತ್ಪರ್ಯ:ರಾಮನು ಮುನಿಗೆ ಕನಸಿನ ವಿಷಯ ಹೇಳಲು, ಈ ಕನಸು ಒಳ್ಳೆಯದಲ್ಲ ಎಂದು, ಅದಕ್ಕೆ ಶಾಂತಿಯನ್ನು ಮುನಿಶ್ರೇಷ್ಠ ವಸಿಷ್ಠನು ಮಾಡಿದನು. ಬಳಿಕ ಮನಸ್ಸಿನ ಸಂತಾಪದಿಂದ ಪ್ರಜೆಗಳ ಕ್ಷೇಮವಿಚಾರ ಮರೆತು ಎರಡು ಮೂರುದಿವಸ ಇದ್ದನು. ಜನರು ಬಳಲಿ/ತೊಂದರಯಲ್ಲಿ ಇರಬಹುದೆಂದು ಪರೀಕ್ಷಿಸಲು ರಾಮನು ರಾತ್ರಿಯಲ್ಲಿ ಅರಮನೆಯಿಂದ ಹೊರಟನು. ಅವನು ಏಕಾಂತದಲ್ಲಿ ನಗರ ಶೋಧನೆಯ ಚಾರರಲ್ಲಿ ಒಬ್ಬನನ್ನು ಕರೆಸಿ ವಿನಯದಿಂದ ಹೀಗೆ ಕೇಳಿದನು.
  • (ಪದ್ಯ-೪೧)

ಪದ್ಯ :-:೪೨:

[ಸಂಪಾದಿಸಿ]

ನಿಂದಿಸರಲೇ ಪ್ರಜೆಗಳಿನ್ನೆಗಂ ತನ್ನ ಗುಣ | ಕೊಂದಿಸರಲೇ ಪಳಿವನಮಲತರ ಕೀರ್ತಿಯಂ | ಕಂದಿಸರಲೇ ದೂಸರಿಂದೆ ಭುಜವಿಜಯ ಪ್ರತಾಪ ತೇಜವನಿಳೆಯೊಳು ||
ನಂದಿಸರಲೇ ಜರೆದು ನಿಜವಂಶದೇಳ್ಗೆಯಂ | ಕುಂದಿಸರಲೇ ಖೋಡಿಗಳೆದು ವಹಮಾನದೊಳ್ | ಸಂಧಿಸರಲೇ ಕೊಂಕುಕೊರತೆಗಳನೆಂದವನನಸುರಾರಿ ಬೆಸಗೊಂಡನು ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಿಂದಿಸರಲೇ ಪ್ರಜೆಗಳು ಅನ್ನೆಗಂ ತನ್ನ ಗುಣಕೆ=[ಪ್ರಜೆಗಳು ಈ ವರೆಗೆ ತನ್ನ ಗುಣಕವನ್ನು ನಿಂದಿಸುವುದಿಲ್ಲವೇ? ]; ಒಂದಿಸರಲೇ (ಹೊಂದಿಸು) ಪಳಿವನ ಅಮಲತರ ಕೀರ್ತಿಯಂ=[ಶ್ರೇಷ್ಠವಾದ ಕೀರ್ತಿಯನ್ನು ಹಳಿಯುವಂಥವನಿಗೆ ಹೋಲಿಸುವರೇ?]; ಕಂದಿಸರಲೇ ದೂಸರಿಂದೆ (ದೂಷಣೆ) ಭುಜವಿಜಯ ಪ್ರತಾಪ ತೇಜವನು=[ದೂಷಣೆಯಿಂದ ನನ್ನ ಭುಜವಿಜಯ ಪ್ರತಾಪ ಕೀರ್ತಿಯನ್ನು ಕಂದಿಸುವರೇ?]; ಇಳೆಯೊಳು ನಂದಿಸರಲೇ ಜರೆದು ನಿಜವಂಶದ ಏಳ್ಗೆಯಂ=[ಈ ರಾಜ್ಯದಲ್ಲಿ ನಮ್ಮ ವಂಶದ ಏಳ್ಗೆಯನ್ನು ಜರೆದು ಕೆಡಿಸುವರೇ?]; ಕುಂದಿಸರಲೇ ಖೋಡಿಗಳೆದು ವಹಮಾನದೊಳ್=[ಅವಮಾನವಾಗಿ ಬೈದು ಕೀರ್ತಿಯನ್ನು ಕುಂದಿಸುವರೇ? ]; ಸಂಧಿಸರಲೇ ಕೊಂಕುಕೊರತೆಗಳನು ಎಂದವನನು ಅಸುರಾರಿ ಬೆಸಗೊಂಡನು=[ದೋಷ ಕೊರತೆಗಳನ್ನು ನಮಗೆ ಸಂಧಿಸಿ/ಜೋಡಿಸಿ ಹೇಳುವರೇ? ಎಂದು ಅವನನ್ನು ಅಸುರಾರಿ ರಾಮನು ಕೇಳಿದನು.]
  • ತಾತ್ಪರ್ಯ:ಪ್ರಜೆಗಳು ಈ ವರೆಗೆ ತನ್ನ ಗುಣಕವನ್ನು ನಿಂದಿಸುವುದಿಲ್ಲವೇ? ನಮ್ಮ ಶ್ರೇಷ್ಠವಾದ ಕೀರ್ತಿಯನ್ನು ಹಳಿಯುವಂಥವನಿಗೆ ಹೋಲಿಸುವರೇ? ದೂಷಣೆಯಿಂದ ನನ್ನ ಭುಜವಿಜಯ ಪ್ರತಾಪ ಕೀರ್ತಿಯನ್ನು ಕಡಿಮೆಮಾಡಿ ಮಾತಾಡುವರೇ? ಕಂದಿಸುವರೇ? ಈ ರಾಜ್ಯದಲ್ಲಿ ನಮ್ಮ ವಂಶದ ಏಳ್ಗೆಯನ್ನು ಜರೆದು ಕೆಡಿಸುವರೇ? ಅವಮಾನವಾಗಿ ಬೈದು ಕೀರ್ತಿಯನ್ನು ಕುಂದಿಸುವರೇ? ದೋಷ ಕೊರತೆಗಳನ್ನು ನಮಗೆ ಸಂಧಿಸಿ/ಜೋಡಿಸಿ ಹೇಳುವರೇ? ಎಂದು ಅವನನ್ನು ಅಸುರಾರಿ ರಾಮನು ಕೇಳಿದನು.
  • (ಪದ್ಯ-೪೨)

ಪದ್ಯ :-:೪೩:

[ಸಂಪಾದಿಸಿ]

ದೇವ ನಿನ್ನಂ ಪೆಸರಿಸಿದನೀಶನಾದಪಂ | ಸೇವಿಸಿದವಂ ಚತುರ್ಮುಖನಾಗಲುಳ್ಳವಂ | ಕಾವುದೆಂದೈದೆ ಮರೆಹೊಕ್ಕವಂ ಜಗದೊಳಾಚಂದ್ರಾರ್ಕಮಾಗಿ ಬಾಳ್ವಂ ||
ಶ್ರೀವಿಭವದಿಂ ಶಕ್ರಪದವಿಯಂ ಜರೆದಸಂ | ಭೂವಲಯದೊಳ್ ನಿಂದಿಸುವರುಂಟೆ ತರಣಿಯಂ | ಕಾವಳಂ ಮುಸುಕಿರ್ದೊಡೇನಪ್ಪುದೆಂದವಂ ಬಿನ್ನೈಸಿ ಕೈಮುಗಿದನು ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದೇವ ನಿನ್ನಂ ಪೆಸರಿಸಿದನು ಈಶನಾದಪಂ ಸೇವಿಸಿದವಂ ಚತುರ್ಮುಖನಾಗಲು ಉಳ್ಳವಂ=[ದೇವ ನಿನ್ನ ಹೆಸರು ಹೇಳಿದವನು ಈಶನಾಗುವನು, ಸೇವೆಮಾಡಿದವನು ಚತುರ್ಮುಖನಾಗಲು ಅರ್ಹನು;]; ಕಾವುದೆಂದು ಐದೆ ಮರೆಹೊಕ್ಕವಂ ಜಗದೊಳು ಆಚಂದ್ರಾರ್ಕಮಾಗಿ ಬಾಳ್ವಂ=[ತನ್ನನ್ನು ಕಾಪಾಡು ಎಂದು ಬಂದರೆ ಮರೆಹೊಕ್ಕವನು ಜಗತ್ತಿನಲ್ಲಿ ಆಚಂದ್ರಾರ್ಕಮಾಗಿ ಬಾಳುವನು.]; ಶ್ರೀವಿಭವದಿಂ ಶಕ್ರಪದವಿಯಂ ಜರೆದ ಸಂಭೂವಲಯದೊಳ್ ನಿಂದಿಸುವರುಂಟೆ ತರಣಿಯಂ ಕಾವಳಂ ಮುಸುಕಿರ್ದೊಡೆ ಏನಪ್ಪುದೆಂದು ಅವಂ ಬಿನ್ನೈಸಿ ಕೈಮುಗಿದನು=[ಶ್ರೀವೈಭವದಿಂದ ಇಂದ್ರಪದವಿಯನ್ನು ದೂರಿ ಈ ಭೂವಲಯದಲ್ಲಿ ನಿಂದಿಸುವರುಂಟೆ? ಸೂರ್ಯನನ್ನು ಕತ್ತಲೆಯು ಮುಚ್ಚಿದರೆ ಏನಾಗುವುದು? ಎಂದು ಅವನು ವಿಜ್ಞಾಪಿಸಿ ಕೈಮುಗಿದನು].
  • ತಾತ್ಪರ್ಯ:ದೇವ ನಿನ್ನ ಹೆಸರು ಹೇಳಿದವನು ಈಶನಾಗುವನು, ಸೇವೆಮಾಡಿದವನು ಚತುರ್ಮುಖನಾಗಲು ಅರ್ಹನು; ತನ್ನನ್ನು ಕಾಪಾಡು ಎಂದು ಬಂದರೆ ಮರೆಹೊಕ್ಕವನು ಜಗತ್ತಿನಲ್ಲಿ ಆಚಂದ್ರಾರ್ಕಮಾಗಿ ಬಾಳುವನು. ಶ್ರೀವೈಭವದಿಂದ ಇಂದ್ರಪದವಿಯನ್ನು ದೂರಿ ಈ ಭೂವಲಯದಲ್ಲಿ ನಿಂದಿಸುವರುಂಟೆ? ಸೂರ್ಯನನ್ನು ಕತ್ತಲೆಯು ಮುಚ್ಚಿದರೆ ಏನಾಗುವುದು? ಎಂದು ಅವನು ವಿಜ್ಞಾಪಿಸಿ ಕೈಮುಗಿದನು.
  • (ಪದ್ಯ-೪೩)

ಪದ್ಯ :-:೪೪:

[ಸಂಪಾದಿಸಿ]

ಏನಾದೊಡಂ ಕಟಕಿಯಾಗಿರ್ಪುದೀಮಾತು | ಭಾನುವಂ ಕಾವಳಂ ಮುಸುಕಲೇನೆನಲೆನ್ನ | ಧೀನವಾದರಸುತನಕಾವುದೂಣೆಯವೆಂಬರೆಂದು ರಘುಪತಿ ಕೇಳಲು||
ನೀನೆ ಪಾವನರೂಪನೆಂಬುದು ಮುನಿಯವಧು | ತಾನೆ ತೋರಿಸಳೆ ಲೋಕದ ಜನಕೆ ಜಗದೊಳ | ಜ್ಞಾನಿಗಳ್ ನುಡಿದ ನಿಂದೆಯನುಸಿರಲಮ್ಮೆನೆಂದವನೆರಗಿದಂ ಪದದೊಳು ||44|

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಏನಾದೊಡಂ ಕಟಕಿಯಾಗಿರ್ಪುದು ಈ ಮಾತು ಭಾನುವಂ ಕಾವಳಂ ಮುಸುಕಲು ಏನೆನಲ್ ಎನ್ನ ಧೀನವಾದ ಅರಸುತನಕೆ ಆವುದೂ ಊಣೆಯವೆಂಬರು ಏಂದು ರಘುಪತಿ ಕೇಳಲು=[ಏನಾದರೇನು ನಿಂದೆಯಾಗಿರುವುದು ಈ ಮಾತು, 'ಸೂರ್ಯನನ್ನು ಕತ್ತಲೆ ಮುಸುಕಿದರೆ ಏನು' ಎನ್ನುವ ಮಾತು, ನನ್ನ ಅಧೀನವಾದ ಅರಸುತನಕ್ಕೆ ಯಾವುದು ಕೊರತೆ ಎಂದು ಹೇಳುವರು, ಎಂದು ರಘುಪತಿಯು ಕೇಳಲು,];ನೀನೆ ಪಾವನರೂಪನೆಂಬುದು ಮುನಿಯವಧು ತಾನೆ ತೋರಿಸಳೆ ಲೋಕದ ಜನಕೆ =[ನೀನೆ ಪಾವನರೂಪನು ಎಂಬುದನ್ನು ಗೌತಮಮುನಿಯ ವಧುವಾದ ಅಹಲ್ಯೆಯ ಶಾಪವಿಮೋಚನೆ ಪಡೆದು ತಾನೆ ತೋರಿಸಲಿಲ್ಲವೇ ಲೋಕದ ಜನರಿಗೆ?]; ಜಗದೊಳು ಅಜ್ಞಾನಿಗಳ್ ನುಡಿದ ನಿಂದೆಯನು ಉಸಿರಲು ಅಮ್ಮೆನು ಎಂದು ಆವನು ಎರಗಿದಂ ಪದದೊಳು=[ಜಗತ್ತಿನಲ್ಲಿ ಅಜ್ಞಾನಿಗಳು ಆಡಿದ ನಿಂದೆಯನ್ನು ಹೇಳಲು ಹಿಂಜರಿಯುವೆನು, ಎಂದು ಆವನ ರಾಮನ ಪಾದಕ್ಕೆ ಎರಗಿದನು].
  • ತಾತ್ಪರ್ಯ:ಏನಾದರೇನು ನಿಂದೆಯಾಗಿರುವುದು ಈ ಮಾತು, 'ಸೂರ್ಯನನ್ನು ಕತ್ತಲೆ ಮುಸುಕಿದರೆ ಏನು' ಎನ್ನುವ ಮಾತು, ನನ್ನ ಅಧೀನವಾದ ಅರಸುತನಕ್ಕೆ ಯಾವುದು ಕೊರತೆ ಎಂದು ಹೇಳುವರು ಎಂದು ರಘುಪತಿಯು ಕೇಳಲು, ನೀನೆ ಪಾವನರೂಪನು ಎಂಬುದನ್ನು ಗೌತಮಮುನಿಯ ವಧುವಾದ ಅಹಲ್ಯೆಯ ಶಾಪವಿಮೋಚನೆ ಪಡೆದು ತಾನೆ ತೋರಿಸಲಿಲ್ಲವೇ ಲೋಕದ ಜನರಿಗೆ? ಜಗತ್ತಿನಲ್ಲಿ ಅಜ್ಞಾನಿಗಳು ಆಡಿದ ನಿಂದೆಯನ್ನು ಹೇಳಲು ಹಿಂಜರಿಯುವೆನು, ಎಂದು ಆವನ ರಾಮನ ಪಾದಕ್ಕೆ ಎರಗಿದನು.
  • (ಪದ್ಯ-೪೪)

ಪದ್ಯ :-:೪೫:

[ಸಂಪಾದಿಸಿ]

ಏಳಂಜಬೇಡಿನ್ನು ಮಾಜದಿರ್ ತನ್ನಾಣೆ | ಹೇಳೆಂದು ರಘುಕುಲಲಲಾಮನೊತ್ತಾಯದಿಂ | ಕೇಳಲವನೆಂದನವಧರಿಸೊರ್ವ ಮಡಿವಾಳಿ (ಮಡಿವಳಂ) ಮಲಿನಮಂ ತೊಳೆವನಾಗಿ ||
ಕಾಳುಗೆಡದಂ ಜೀಯ ಸದ್ಗುಣಚರಿತ್ರನಾ | ಮಾಳಿಯಂ ಜಗಮಂ ಪುನೀತಮಂ ಮಾಳ್ಪ ನಿ | ನ್ನೇಳಿಗೆಯನವನೆತ್ತ ಬಲ್ಲನೆನೆಲೇನೆಂದನೆನಲಾತನಿಂತೆಂದನು ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಏಳು ಅಂಜಬೇಡ ಇನ್ನು ಮಾಜದಿರ್ ತನ್ನಾಣೆ ಹೇಳೆಂದು ರಘುಕುಲಲಲಾಮನು ಒತ್ತಾಯದಿಂ ಕೇಳಲು=[ಏಳು ಅಂಜಬೇಡ ಇನ್ನು ಮರೆಮಾಚಬೇಡ, ತನ್ನಾಣೆ ಹೇಳು, ಎಂದು ರಘುಕುಲಲಲಾಮನು ಒತ್ತಾಯದಿಂದ ಕೇಳಲು]; ಅವನೆಂದನು ಅವಧರಿಸು ಓರ್ವ ಮಡಿವಾಳಿ ಮಲಿನಮಂ ತೊಳೆವನಾಗಿ ಕಾಳುಗೆಡದಂ ಜೀಯ ಸದ್ಗುಣಚರಿತ್ರನಾಮ ಆಳಿಯಂ=[ಅವನೆಂದನು ಕೇಳು ಓರ್ವ ಮಡಿವಾಳನು ಮಲಿನಬಟ್ಟೆಯನ್ನು ತೊಳೆಯುವವನಾಗಿ ಕೆಡುಕುನುಡಿದನು ಜೀಯ! ಸದ್ಗುಣಚರಿತ್ರದ ನಾಮಗಳಿಂದ (ಹೆಸರುಗಳ)]; ಜಗಮಂ ಪುನೀತಮಂ ಮಾಳ್ಪ ನಿನ್ನ ಏಳಿಗೆಯನು ಅವನೆತ್ತ ಬಲ್ಲನು ಎನೆಲ್ ಏನೆಂದನು ಎನಲು ಆತನು ಇಂತೆಂದನು=[ಜಗವನ್ನು ಪವಿತ್ರಗೊಳಿಸುವ ನಿನ್ನ ಕೀರ್ತಿಯನ್ನು ಅವನು ಏನು ಬಲ್ಲನು, ಅವನು ನಿನ್ನ ಶ್ರೇಷ್ಟತೆಯನ್ನು ಅರಿಯನು ಎಂದನು. ಅವನು ಏನೆಂದನು ಎನ್ನಲು, ಆತನು ಹೀಗೆ ಹೇಳಿದನು].
  • ತಾತ್ಪರ್ಯ:ಏಳು ಅಂಜಬೇಡ ಇನ್ನು ಮರೆಮಾಚಬೇಡ, ತನ್ನಾಣೆ ಹೇಳು, ಎಂದು ರಘುಕುಲಲಲಾಮ ರಾಮನು ಒತ್ತಾಯದಿಂದ ಕೇಳಲು; ಅವನೆಂದನು ಕೇಳು ಓರ್ವ ಮಡಿವಾಳನು ಮಲಿನಬಟ್ಟೆಯನ್ನು ತೊಳೆಯುವವನಾಗಿ ಕೆಡುಕುನುಡಿದನು ಜೀಯ! ಸದ್ಗುಣಚರಿತ್ರದ ನಾಮಗಳಿಂದ (ಹೆಸರು ಹೇಳುವುದರಿಂದ)]; ಜಗತ್ತನ್ನು ಪವಿತ್ರಗೊಳಿಸುವ ನಿನ್ನ ಕೀರ್ತಿಯನ್ನು ಅವನು ಏನು ಬಲ್ಲನು, ಅವನು ನಿನ್ನ ಶ್ರೇಷ್ಟತೆಯನ್ನು ಅರಿಯನು ಎಂದನು. ಅವನು ಏನೆಂದನು ಎನ್ನಲು, ಆತನು ಹೀಗೆ ಹೇಳಿದನು].
  • (ಪದ್ಯ-೪೫)

ಪದ್ಯ :-:೪೬:

[ಸಂಪಾದಿಸಿ]

ಪೆಂಡತಿ ತವರ್ಮನೆಗೆ ಮುಳಿದು ಪೇಳದೆ ಪೋದ | ಚಂಡಿತನಕವಳ ತಾಯ್ತಂದೆಗಳ್ ಕಳುಹಬಂ | ದಂಡಲೆದೊಡಿನ್ನೊಲ್ಲೆನಗಲಿರ್ದ ಮಡದಿಯಂ ಮತ್ತೆ ರಘುನಾಥನಂತೆ ||
ಕೊಂಡಾಳುವವನಲ್ಲ ತಾನೆಂದು ರಜಕ ನು | ದ್ದಂಡದೊಳ್ ನುಡಿಯೆ ಕಿವಿಮುಚ್ಚಿಕೊಳುತೆಯ್ದಿದೆನ | ಖಂಡಿತದ ಮಂತ್ರಪೂತದ ಹವಿಯನರಿದೆಂಜಲಿಪುದೆ ವಾಯಸಮೆಂದನು ||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪೆಂಡತಿ ತವರ್ಮನೆಗೆ ಮುಳಿದು ಪೇಳದೆ ಪೋದ ಚಂಡಿತನಕೆ ಅವಳ ತಾಯ್ತಂದೆಗಳ್ ಕಳುಹಬಂದು ಅಂಡಲೆದೊಡೆ=[ಹೆಂಡತಿಯು ತವರು ಮನೆಗೆ ಸಿಟ್ಟಿನಿಂದ ಹೇಳದೆ ಹೋದ ಚಂಡಿತನಕ್ಕೆ, ಅವಳ ತಾಯಿ ತಂದೆಗಳು ಗಂಡನ ಮನೆಗೆ ಕಳುಹಲು ಬಂದು ಬೇಡಿಕೊಂಡರೆ,] ಇನ್ನೊಲ್ಲೆನು ಅಗಲಿರ್ದ ಮಡದಿಯಂ ಮತ್ತೆ ರಘುನಾಥನಂತೆ ಕೊಂಡ ಆಳುವವನಲ್ಲ ತಾನೆಂದು ರಜಕ ನುದ್ದಂಡದೊಳ್ ನುಡಿಯೆ ಕಿವಿಮುಚ್ಚಿಕೊಳುತೆ ಐಯ್ದಿದೆನು=['ಇವಳನ್ನು ಇನ್ನು ಸೇರಿಸಿಕೊಳ್ಳಲಾರೆನು, ಅಗಲಿದ ಮಡದಿಯನ್ನು ಮತ್ತೆ ರಘುನಾಥನಂತೆ ಸೇರಿಸಿಕೊಂಡು ಆಳುವವನಲ್ಲ ತಾನು', ಎಂದು ರಜಕನು ಅಹಂಕಾರದಿಂದ ನುಡಿಯಲು, ನಾನು ಅದನ್ನು ಕೇಳಿ ಕಿವಿಯನ್ನು ಮುಚ್ಚಿಕೊಳ್ಳುತ್ತಾ ಅಲ್ಲಿಂದ ಹೋದೆನು]; ಅಖಂಡಿತದ ಮಂತ್ರಪೂತದ ಹವಿಯನು ಅರಿದು ಎಂಜಲಿಪುದೆ ವಾಯಸಂ ಎಂದನು=[ದೋಷವಿಲ್ಲದ ಮಂತ್ರಪೂತವಾದ ಹವಿಸ್ಸನ್ನು ತಿಳಿದು ವಾಯಸವು/ ಕಾಗೆಯು ಎಂಜಲು ಮಾಡುವುದೇ, (ಮಾಡಲಾರದು) ಎಂದನು].
  • ತಾತ್ಪರ್ಯ:ಹೆಂಡತಿಯು ತವರು ಮನೆಗೆ ಸಿಟ್ಟಿನಿಂದ ಹೇಳದೆ ಹೋದ ಚಂಡಿತನಕ್ಕೆ, ಅವಳ ತಾಯಿ ತಂದೆಗಳು ಗಂಡನ ಮನೆಗೆ ಕಳುಹಲು ಬಂದು ಬೇಡಿಕೊಂಡರೆ, 'ಇವಳನ್ನು ಇನ್ನು ಸೇರಿಸಿಕೊಳ್ಳಲಾರೆನು, ಅಗಲಿದ ಮಡದಿಯನ್ನು ಮತ್ತೆ ರಘುನಾಥನಂತೆ ಸೇರಿಸಿಕೊಂಡು ಆಳುವವನಲ್ಲ ತಾನು', ಎಂದು ರಜಕನು ಅಹಂಕಾರದಿಂದ ನುಡಿಯಲು, ನಾನು ಅದನ್ನು ಕೇಳಿ ಕಿವಿಯನ್ನು ಮುಚ್ಚಿಕೊಳ್ಳುತ್ತಾ ಅಲ್ಲಿಂದ ಹೋದೆನು; ದೋಷವಿಲ್ಲದ ಮಂತ್ರಪೂತವಾದ ಹವಿಸ್ಸನ್ನು ತಿಳಿದೂ ತಿಳಿದೂ ವಾಯಸವು/ ಕಾಗೆಯು ಎಂಜಲು ಮಾಡುವುದೇ, (ಮಾಡಲಾರದು) ಎಂದನು. (ವಾಲ್ಮೀಕಿ ರಾಮಾಯಣದಲ್ಲಿ ರಜಕನೆಂದು ಹೇಳಿಲ್ಲ, ಕೇವಲ ಕೆಲವು ಜನ ಎಂದು ಮಾತ್ರವಿದೆ; ಇದು ಕವಿಸಮಯದ ಭಾಗವಾಗಿ ಸೇರಿಸಿದೆ)
  • (ಪದ್ಯ-೪೬)

ಪದ್ಯ :-:೪೭:

[ಸಂಪಾದಿಸಿ]

ಎಂದು ಬಿನ್ನೈಸೆ ಕೇಳ್ದಾತನಂ ಕಳುಹಿ ರಘು | ನಂದನಂ ಬಂಧನಕ್ಕೊಳಗಾದ ಮತ್ತಗಜ | ದಂದದಿಂ ನಿಜಶಿರವನೊಲೆದು ಮೂಗಿನಮೇಲೆ ಬೆರಳಿಟ್ಟು ಮೌನದಿಂದೆ ||
ನಿಂದು ಸೈವೆರಗಾಗಿ ನೆನೆ ನೆನೆದು ಚಿತ್ತದೊಳ್ | ನೊಂದು ಬಿಸುಸುಯ್ದು ಕಡುವಳಿದು ಕಾತರಿಸಿ ಕಳೆ | ಗುಂದಿ ದುಮ್ಮಾನದಿಂ ಪೊಕ್ಕನಂತಃಪುರಕೆ ಪುತ್ತವುಗುವಹಿಪನಂತೆ ||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಂದು ಬಿನ್ನೈಸೆ ಕೇಳ್ದು ಆತನಂ ಕಳುಹಿ ರಘುನಂದನಂ ಬಂಧನಕ್ಕೊಳಗಾದ ಮತ್ತಗಜದಂದದಿಂ ನಿಜಶಿರವನೊಲೆದು ಮೂಗಿನಮೇಲೆ ಬೆರಳಿಟ್ಟು ಮೌನದಿಂದೆ=[ಎಂದು ಚಾರನು ಹೇಳಲು, ಕೇಳಿ ಆತನನ್ನು ಕಳುಹಿಸಿ, ರಘುನಂದನನು ಬಂಧನಕ್ಕೊಳಗಾದ ಮತ್ತಗಜದಂತೆ ತನ್ನ ತಲೆಯನ್ನು ತೂಗಿ, ಮೂಗಿನಮೇಲೆ ಬೆರಳಿಟ್ಟು ಮೌನದಿಂದ ]; ನಿಂದು ಸೈವೆರಗಾಗಿ ನೆನೆ ನೆನೆದು ಚಿತ್ತದೊಳ್ ನೊಂದು ಬಿಸುಸುಯ್ದು ಕಡುವಳಿದು ಕಾತರಿಸಿ ಕಳೆಗುಂದಿ ದುಮ್ಮಾನದಿಂ ಪೊಕ್ಕನಂತಃಪುರಕೆ ಪುತ್ತವುಗುವಹಿಪನಂತೆ=[ನಿಂತು, ಆಶ್ಚರ್ಯಪಟ್ಟು, ಮನಸ್ಸಿನಲ್ಲಿ ಸೀತೆಯನ್ನು, ಹಿಂದಿನದನ್ನು ನೆನೆ ನೆನೆದು ನೊಂದು ನಿಟ್ಟುಸಿರುಬಿಟ್ಟು, ವಿಧಿಯನ್ನು ಬಹಳನಿಂದಿಸಿ, ಕಾತರಿಸಿ ಕಳೆಗುಂದಿ ದುಃಖದಿಂದ ಸರ್ಪರಾಜನು ಹುತ್ತವನ್ನು ಹೊಗುವಂತೆ ಅಂತಃಪುರವನ್ನು ಹೊಕ್ಕನು].
  • ತಾತ್ಪರ್ಯ:ಈ ರೀತಿ ಚಾರನು ಹೇಳಲು, ಕೇಳಿ ಆತನನ್ನು ಕಳುಹಿಸಿ, ರಘುನಂದನನು ಬಂಧನಕ್ಕೊಳಗಾದ ಮತ್ತಗಜದಂತೆ ತನ್ನ ತಲೆಯನ್ನು ತೂಗಿ, ಮೂಗಿನಮೇಲೆ ಬೆರಳಿಟ್ಟು ಮೌನದಿಂದ, ನಿಂತು, ಆಶ್ಚರ್ಯಪಟ್ಟು, ಮನಸ್ಸಿನಲ್ಲಿ ಸೀತೆಯನ್ನು, ಹಿಂದಿನದನ್ನು ನೆನೆ ನೆನೆದು ನೊಂದು ನಿಟ್ಟುಸಿರುಬಿಟ್ಟು, ವಿಧಿಯನ್ನು ಬಹಳನಿಂದಿಸಿ, ಕಾತರಿಸಿ ಕಳೆಗುಂದಿ ದುಃಖದಿಂದ ಸರ್ಪರಾಜನು ಹುತ್ತವನ್ನು ಹೊಗುವಂತೆ ಅಂತಃಪುರವನ್ನು ಹೊಕ್ಕನು.
  • (ಪದ್ಯ-೪೭)

ಪದ್ಯ :-:೪೮:

[ಸಂಪಾದಿಸಿ]

ಓಲಗಂಗುಡದೆ ಬಾಗಿಲ್ಗೆ ಬಂದಖಿಳ ಭೂ | ಪಾಲರಂ ಕರೆಸಿ ಕಾಣಿಸಿಕೊಳದೊಳಗೆ ಚಿಂ | ತಾಲತಾಂಗಿಯ ಕೇಳಿಗೆಡೆಗೊಟ್ಟು ರಾಜೇಂದ್ರನಿರೆ ಕೇಳ್ದು ಭೀತಿಯಿಂದೆ ||
ಆ ಲಕ್ಷಣಾದಿಗಳ್ ಪೊಕ್ಕರಂತಃಪುರವ | ನಾಲಿಂಗಿಸಿದ ಜಾಡ್ಯದಿಂದೆ ಜಡಿದವಯವದ | ನೀಲಾಂಗನಂ ಕಂಡು ಕಾಲ್ಗೆರಗಿ ನುಡಿಸಲಮ್ಮದೆ ಸುಮ್ಮನಿರುತಿರ್ದರು ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಓಲಗಂಗುಡದೆ ಬಾಗಿಲ್ಗೆ ಬಂದ ಅಖಿಳ ಭೂಪಾಲರಂ ಕರೆಸಿ ಕಾಣಿಸಿಕೊಳದೆ=[ಓಲಗವನು / ರಾಜಸಭೆಯನ್ನು ನಡೆಸದೆ, ಬಾಗಿಲಿಗೆ ಬಂದ ಎಲ್ಲಾ ರಾಜರನ್ನು ಕರೆಸಿದರೂ ಅವರಿಗೆ ಕಾಣಿಸಿಕೊಳ್ಳದೆ]; ಒಳಗೆ ಚಿಂತಾಲತಾಂಗಿಯ ಕೇಳಿಗೆ ಎಡೆಗೊಟ್ಟು ರಾಜೇಂದ್ರನು ಇರೆ ಕೇಳ್ದು ಭೀತಿಯಿಂದೆ ಆ ಲಕ್ಷಣಾದಿಗಳ್ ಪೊಕ್ಕರು ಅಂತಃಪುರವನು=[ಅಂತಃಪುರದ ಒಳಗೆ ಚಿಂತೆ ಎಂಬ ಲತಾಂಗಿಯ ಅಪ್ಪುಗೆಗೆ ಆಸ್ಪದಕೊಟ್ಟು / ಎಂದರೆ ಗಾಢವಾದ ಚಿಂತೆಯಲ್ಲಿ ರಾಜೇಂದ್ರನು ಇರಲು, ಇದನ್ನು ಕೇಳಿ, ಹದರಿಕೆಯಿಂದ ಆ ಲಕ್ಷ್ಮಣ ಭರತ ಶತ್ರುಘ್ನರು ಅಂತಃಪುರವನ್ನು ಹೊಕ್ಕರು.]; ಆಲಿಂಗಿಸಿದ ಜಾಡ್ಯದಿಂದೆ ಜಡಿದ ಅವಯವದ ನೀಲಾಂಗನಂ ಕಂಡು ಕಾಲ್ಗೆ ಎರಗಿ ನುಡಿಸಲು ಅಮ್ಮದೆ ಸುಮ್ಮನೆ ಇರುತಿರ್ದರು=[ದುಮ್ಮಾನದ ಜಡತ್ವವು ದೇಹವನ್ನು ಆವರಿಸಿ ದಃಖತಪ್ತನಾದ ನೀಲಮೇಘಶ್ಯಾಮ ರಾಮನನ್ನು ಕಂಡು ಕಾಲಿಗೆ ನಮಿಸಿದರು; ಆದರೆ ಮಾತನಾಡಿಸಲು ಅಶಕ್ತರಾಗಿ ಸುಮ್ಮನೆ ಇದ್ದರು].
  • ತಾತ್ಪರ್ಯ:ರಾಮನು ಓಲಗವನ್ನು / ರಾಜಸಭೆಯನ್ನು ನಡೆಸದೆ, ಬಾಗಿಲಿಗೆ ಬಂದ ಎಲ್ಲಾ ರಾಜರನ್ನು ಕರೆಸಿದರೂ ಅವರಿಗೆ ಕಾಣಿಸಿಕೊಳ್ಳದೆ, ಅಂತಃಪುರದ ಒಳಗೆ ಚಿಂತೆ ಎಂಬ ಲತಾಂಗಿಯ ಅಪ್ಪುಗೆಗೆ ಆಸ್ಪದಕೊಟ್ಟು / ಎಂದರೆ ಗಾಢವಾದ ಚಿಂತೆಯಲ್ಲಿ ಮುಳುಗಿ ರಾಜೇಂದ್ರನು ಇರಲು, ಇದನ್ನು ಕೇಳಿ, ಹದರಿಕೆಯಿಂದ ಆ ಲಕ್ಷ್ಮಣ ಭರತ ಶತ್ರುಘ್ನರು ಅಂತಃಪುರವನ್ನು ಹೊಕ್ಕರು. ದುಮ್ಮಾನದ ಜಡತ್ವವು ದೇಹವನ್ನು ಆವರಿಸಿ ದಃಖತಪ್ತನಾದ ನೀಲಮೇಘಶ್ಯಾಮ ರಾಮನನ್ನು ಕಂಡು ಕಾಲಿಗೆ ನಮಿಸಿದರು; ಆದರೆ ಮಾತನಾಡಿಸಲು ಅಶಕ್ತರಾಗಿ ಸುಮ್ಮನೆ ಇದ್ದರು.
  • (ಪದ್ಯ-೪೮)

ಪದ್ಯ :-:೪೯:

[ಸಂಪಾದಿಸಿ]

ಎದ್ದು ಕುಳ್ಳಿರ್ದು ಕರುಣಾಳುಗಳ ಬಲ್ಲಹಂ | ಮುದ್ದುಗೈದನುಜರಂ ಕರೆದಿಳೆಯೊಳಿಂದೆನಗೆ | ಪೊದ್ದಿದಪವಾದಮಂ ನೀವರಿದುದಿಲ್ಲಕಟ ಸಾಕಿನ್ನು ನೆರವಿಗಳೊಳು ||
ಕದ್ದ ಕಳ್ಳನವೊಲಾಡಿಸಿಕೊಳ್ಳಲಾರೆನೊಡ | ಲಿದ್ದಲ್ಲಿ ನಿಂದೆಗೊಳಗಾಗಿ ಬದುಕುವನಲ್ಲ | ತಿದ್ದಿ ತೀರದ ವಿಲಗಕಂಜುವೆಂ ಸೀತೆಯ ಬಿಟ್ಟಲ್ಲದಿರೆನೆಂದನು ||49||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎದ್ದು ಕುಳ್ಳಿರ್ದು ಕರುಣಾಳುಗಳ ಬಲ್ಲಹಂ ಮುದ್ದುಗೈದು ಅನುಜರಂ ಕರೆದು ಇಳೆಯೊಳು ಇಂದು ಎನಗೆ ಪೊದ್ದಿದ ಅಪವಾದಮಂ ನೀವು ಅರಿದುದು ಇಲ್ಲ ಅಕಟ=[ಎದ್ದು ಕುಳಿತು ಕರುಣಾಳುಗಳಲ್ಲಿ ತಿಳುವಳಿಕೆಯುಳ್ಳವನು ತಮ್ಮಂದಿರನ್ನು ಕರೆದು ಪ್ರೀತಿಯಿಂದ ಸತ್ಕರಿಸಿ, ರಾಜ್ಯದಲ್ಲಿ ಈಗ ನನಗೆ ಬಂದಿರುವ ಅಪವಾದವನ್ನು ನೀವು ಅರಿತಿಲ್ಲ, ಅಕಟ!]; ಸಾಕಿನ್ನು ನೆರವಿಗಳೊಳು (ಜನಸಮೂಹ) ಕದ್ದ ಕಳ್ಳನವೊಲು ಅಡಿಸಿಕೊಳ್ಳಲಾರೆನು ಒಡಲಿದ್ದಲ್ಲಿ ನಿಂದೆಗೊಳಗಾಗಿ ಬದುಕುವನಲ್ಲ=[ಸಾಕು ಇನ್ನು ಜಮಸಮೂಹದಲ್ಲಿ ಕದ್ದ ಕಳ್ಳನಂತೆ ಬದುಕಿದ್ದಂತೆ ಅಡಿಸಿಕೊಳ್ಳಲಾರೆನು; ನಿಂದೆಗೊಳಗಾಗಿ ಬದುಕುವನಲ್ಲ]; ತಿದ್ದಿ ತೀರದ ವಿಲಗಕೆ ಅಂಜುವೆಂ ಸೀತೆಯ ಬಿಟ್ಟಲ್ಲದೆ ಇರೆನು ಎಂದನು=[ತಿದ್ದಿಕೊಳ್ಳಲು ಆಗದ ದೋಷಕ್ಕೆ ಅಂಜುವೆನು; ಸೀತೆಯನ್ನು ಬಿಟ್ಟಲ್ಲದೆ ಇರೆನು ಎಂದನು/ ಸೀತೆಯನ್ನು ಬಿಡದೆ ಇದ್ದರೆ ಬದುಕಿರಲಾರೆನು].
  • ತಾತ್ಪರ್ಯ:ಎದ್ದು ಕುಳಿತು ಕರುಣಾಳುಗಳಲ್ಲಿ ತಿಳುವಳಿಕೆಯುಳ್ಳವನು ತಮ್ಮಂದಿರನ್ನು ಕರೆದು ಪ್ರೀತಿಯಿಂದ ಸತ್ಕರಿಸಿ, ರಾಜ್ಯದಲ್ಲಿ ಈಗ ನನಗೆ ಬಂದಿರುವ ಅಪವಾದವನ್ನು ನೀವು ಅರಿತಿಲ್ಲ, ಅಕಟ! ಸಾಕು ಇನ್ನು ಜಮಸಮೂಹದಲ್ಲಿ ಕದ್ದ ಕಳ್ಳನಂತೆ ಬದುಕಿದ್ದಂತೆ ಅಡಿಸಿಕೊಳ್ಳಲಾರೆನು; ನಿಂದೆಗೊಳಗಾಗಿ ಬದುಕುವನಲ್ಲ; ತಿದ್ದಿಕೊಳ್ಳಲು ಆಗದ ದೋಷಕ್ಕೆ ಅಂಜುವೆನು; ಸೀತೆಯನ್ನು ಬಿಟ್ಟಲ್ಲದೆ ಇರೆನು ಎಂದನು/ ಸೀತೆಯನ್ನು ಬಿಡದೆ ಇದ್ದರೆ ಬದುಕಿರಲಾರೆನು.
  • (ಪದ್ಯ-೪೯)viii

ಪದ್ಯ :-:೫೦:

[ಸಂಪಾದಿಸಿ]

ಇವಳಯೋನಿಜೆ ರೂಪ ಗುಣ ಶೀಲ ಸಂಪನ್ನೆ | ಭುವನಪಾವನೆ ಪುಣ್ಯಚರಿತೆ ಮಂಗಳ ಮಹೋ | ತ್ಸವೆ ಪತಿವ್ರತೆಯೆಂಬುದು ಬಲ್ಲೆನಾದೊಡಂ ನಿಂದೆಗೊಳಗಾದಬಳಿಕ ||
ಅವನಿಸುತೆಯಂ ತನಗೆ ಬಿಡುವುದೇ ನಿಶ್ಚಯಂ | ರವಿಕುಲದ ರಾಯರಪಕೀರ್ತಿಯಂ ತಾಳ್ದಪರೆ | ಕುವರನಾಗಿರ್ದ ತನ್ನಂ ತಾತನುಳಿದುದಿಲ್ಲವೆ ಸತ್ಯಭಾಷೆಗಾಗಿ ||50||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇವಳು ಅಯೋನಿಜೆ ರೂಪ ಗುಣ ಶೀಲ ಸಂಪನ್ನೆ ಭುವನಪಾವನೆ ಪುಣ್ಯಚರಿತೆ ಮಂಗಳ ಮಹೋತ್ಸವೆ ಪತಿವ್ರತೆಯೆಂಬುದು ಬಲ್ಲೆನು ಆದೊಡಂ ನಿಂದೆಗೊಳಗಾದ ಬಳಿಕ=[ರಾಮನು ಹೇಳಿದ, ಇವಳು ಸೀತೆ ಅಯೋನಿಜೆ ಭೂಮಿಯಲ್ಲಿ ಜನಿಸಿದವಳು, ರೂಪ ಗುಣ ಶೀಲ ಸಂಪನ್ನೆಯಾಗಿರುವಳು, ಜಗತ್ತನ್ನು ಪಾವನಗೊಳಿಸುವವಳು, ಪುಣ್ಯಚರಿತೆ, ಮಂಗಳಕಾರ್ಯದಲ್ಲಿ ನಿರತಳು, ಪತಿವ್ರತೆಯೆಂಬುದನ್ನು ಬಲ್ಲೆನು. ಆದರೆ ನಿಂದೆಗೊಳಗಾದ ಬಳಿಕ ]; ಅವನಿಸುತೆಯಂ ತನಗೆ ಬಿಡುವುದೇ ನಿಶ್ಚಯಂ ರವಿಕುಲದ ರಾಯರು ಅಪಕೀರ್ತಿಯಂ ತಾಳ್ದಪರೆ ಕುವರನಾಗಿರ್ದ ತನ್ನಂ ತಾತನು ಉಳಿದುದಿಲ್ಲವೆ ಸತ್ಯಭಾಷೆಗಾಗಿ=[ಈ ಭೂಜಾತೆ ಸೀತೆಯನ್ನು ತನಗೆ ಬಿಡುವುದೇ ನಿಶ್ಚಯವು! ರವಿಕುಲದ ರಾಜರು ಅಪಕೀರ್ತಿಯನ್ನು ಸಹಿಸುವರೇ? ಮಗನಾದ ನನ್ನನ್ನು ತನ್ನ ತಂದೆಯು ಕಿರಿಯ ಪತ್ನಿ ಕೈಕೇಯಿಗೆ ಕೊಟ್ಟ ಸತ್ಯಭಾಷೆಗಾಗಿ ಬಿಡಲಿಲ್ಲವೇ?].
  • ತಾತ್ಪರ್ಯ: ರಾಮನು ಹೇಳಿದ, ಇವಳು ಸೀತೆ ಅಯೋನಿಜೆ ಭೂಮಿಯಲ್ಲಿ ಜನಿಸಿದವಳು, ರೂಪ ಗುಣ ಶೀಲ ಸಂಪನ್ನೆಯಾಗಿರುವಳು, ಜಗತ್ತನ್ನು ಪಾವನಗೊಳಿಸುವವಳು, ಪುಣ್ಯಚರಿತೆ, ಮಂಗಳಕಾರ್ಯದಲ್ಲಿ ನಿರತಳು, ಪತಿವ್ರತೆಯೆಂಬುದನ್ನು ಬಲ್ಲೆನು. ಆದರೆ ನಿಂದೆಗೊಳಗಾದ ಬಳಿಕ ಈ ಭೂಜಾತೆ ಸೀತೆಯನ್ನು ತಾನು ಬಿಡುವುದೇ ನಿಶ್ಚಯವು! ರವಿಕುಲದ ರಾಜರು ಅಪಕೀರ್ತಿಯನ್ನು ಸಹಿಸುವರೇ? ಮಗನಾದ ನನ್ನನ್ನು ತನ್ನ ತಂದೆಯು ಕಿರಿಯ ಪತ್ನಿ ಕೈಕೇಯಿಗೆ ಕೊಟ್ಟ ಸತ್ಯಭಾಷೆಗಾಗಿ ಬಿಡಲಿಲ್ಲವೇ?.
  • (ಪದ್ಯ-೫೦)

ಪದ್ಯ :-:೫೧:

[ಸಂಪಾದಿಸಿ]

ಕಲಿಯುಗದ ವಿಪ್ರರಾಚಾರವಂ ಬಿಡುವಂತೆ | ಹಲವುಮಾತೇನಿನ್ನು ಸೀತೆಯಂ ಬಿಟ್ಟೆನೆನೆ | ಬಲುಗರಮಿದೆತ್ತಣದೊ ಕಾರುಣ್ಯನಿಧಿಗೆನುತೆ ನಡನಡುಗಿ ಭೀತಿಯಿಂದೆ ||
ನೆಲೆಗೊಂಡ ವೇದಮಂ ಧರೆಯ ಪಾಷಂಡಿಗಳ್ | ಸೆಲೆ ನಿಂದಿಸಿದೊಡದಂ ಮಾಣ್ದಪರೆ ದ್ವಿಜರಕಟ | ಕುಲವರ್ಧಿನಿಯನೆಂತು ಬಿಡುವೆ ನೀಂ ಪೇಳೆಂದರನುಜಾತರಗ್ರಜಂಗೆ ||51||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಲಿಯುಗದ ವಿಪ್ರರು ಆಚಾರವಂ ಬಿಡುವಂತೆ=[ಕಲಿಯುಗದ ವಿಪ್ರರು ಆಚಾರವನ್ನು ಬಿಡುವಂತೆ ನಾನು ನೀತಿಯನ್ನು ಬಿಡಲೇ? (ಅಧ್ಯಾಹಾರ, ವೇದ ಮತ್ತು ಆಚಾರವನ್ನು ಬಿಡುವುದು ಧರ್ಮವನ್ನು ಬಿಟ್ಟಂತೆ, ಆದರೆ ಅಪವಾದಕ್ಕೆ ಅಂಜಿ ಪತ್ನಿಯನ್ನು ಬಿಡುವುದು ಲೋಕನೀತಿ, ಆದರೆ ಅದು ವಿವಾಹಧರ್ಮಕ್ಕೆ ಅನುಗುಣವಲ್ಲ) ]; ಹಲವು ಮಾತೇನು ಇನ್ನು ಸೀತೆಯಂ ಬಿಟ್ಟೆನು ಎನೆ ಬಲುಗರಮ್ (ಗರ-ವಿಷ) ಇದು ಎತ್ತಣದೊ ಕಾರುಣ್ಯನಿಧಿಗೆ ಎನುತೆ ನಡನಡುಗಿ ಭೀತಿಯಿಂದೆ=['ಬಹಳ ಮಾತೇಕೆ, ಇನ್ನು ಸೀತೆಯನ್ನು ಬಿಟ್ಟೆನು', ಎನ್ನಲು, 'ದೊಡ್ಡವಿಷ' ಇದು, ಕಾಠಿಣ್ಯ ಎಲ್ಲಿಂದ ಬಂದಿತೋ ಕಾರುಣ್ಯನಿಧಿಯಾದ ರಾಮನಿಗೆ ಎನ್ನುತ್ತಾ ನಡನಡುಗಿ ಭಯದಿಂದ,]; ನೆಲೆಗೊಂಡ ವೇದಮಂ ಧರೆಯ ಪಾಷಂಡಿಗಳ್ ಸೆಲೆ ನಿಂದಿಸಿದೊಡೆ ಅದಂ ಮಾಣ್ದಪರೆ ದ್ವಿಜರು ಅಕಟ ಕುಲವರ್ಧಿನಿಯನು ಎಂತು ಬಿಡುವೆ ನೀಂ ಪೇಳೆಂದರು ಅನುಜಾತರು ಅಗ್ರಜಂಗೆ=[ಎಲ್ಲರಿಂದ ಪೂಜಿತವಾಗಿದ್ದು ನೆಲೆಗೊಂಡ ವೇದವನ್ನು ಭೂಮಿಯ ನಾಸ್ತಿಕರು/ ಪಾಷಂಡಿಗಳು ಬಹಳ ನಿಂದಿಸಿದರೆ, ಅದಕ್ಕೆ ಬೆಲೆಕೊಡುವರೇ ದ್ವಿಜರು? ಅಕಟ! ಸೂರ್ಯವಂಶದ ಅಭಿವೃದ್ಧಿಯನ್ನು ಮಾಡುವ ಸಿತೆಯನ್ನು ನೀನು ಹೇಗೆ ಬಿಡುವೆ? ತಮ್ಮಂದಿರು ಅಣ್ಣನೊಡನೆ ಹೇಳು ಎಂದರು].
  • ತಾತ್ಪರ್ಯ:ಕಲಿಯುಗದ ವಿಪ್ರರು ಆಚಾರವನ್ನು ಬಿಡುವಂತೆ ನಾನು ನೀತಿಯನ್ನು ಬಿಡಲೇ? 'ಬಹಳ ಮಾತೇಕೆ, ಇನ್ನು ಸೀತೆಯನ್ನು ಬಿಟ್ಟೆನು', ಎನ್ನಲು, 'ದೊಡ್ಡವಿಷ' ಇದು, ಕಾಠಿಣ್ಯ ಎಲ್ಲಿಂದ ಬಂದಿತೋ ಕಾರುಣ್ಯನಿಧಿಯಾದ ರಾಮನಿಗೆ ಎನ್ನುತ್ತಾ ನಡನಡುಗಿ ಭಯದಿಂದ, ಎಲ್ಲರಿಂದ ಪೂಜಿತವಾಗಿದ್ದು ನೆಲೆಗೊಂಡ ವೇದವನ್ನು ಭೂಮಿಯ ನಾಸ್ತಿಕರು/ ಪಾಷಂಡಿಗಳು ಬಹಳ ನಿಂದಿಸಿದರೆ, ಅದಕ್ಕೆ ಬೆಲೆಕೊಡುವರೇ ದ್ವಿಜರು? ಅಕಟ! ಸೂರ್ಯವಂಶದ ಅಭಿವೃದ್ಧಿಯನ್ನು ಮಾಡುವ ಸೀತೆಯನ್ನು ನೀನು ಹೇಗೆ ಬಿಡುವೆ? ಹೇಳು ಎಂದು ತಮ್ಮಂದಿರು ಅಣ್ಣನೊಡನೆ ಕೇಳಿದರು.
  • (ಪದ್ಯ-೫೧)

ಪದ್ಯ :-:೫೨:

[ಸಂಪಾದಿಸಿ]

ಭಯಶೋಕದಿಂದೆ ಗದ್ಗದಿತ ಕಂಠದೊಳಶ್ರು | ನಯನದೊಳ್ ತುಳಕೆ ಭರತಂಕರೆವ ಕಪಿಲೆಯಂ | ನಯವಿದರ್ ಪೊಡೆದಡವಿಗಟ್ಟುವರೆ ಪಾವಕನೊಳರಸಿಯಂ ಪುಗಿಸಿದಂದು ||
ಪ್ರಿಯೆ ನಿನಗೆ ಪರಿಶುದ್ಧೆ ಕುಲಕೆ ಮಂಗಳೆ ಸುತೋ | ದಯಕೆ ನಿರ್ಮಲೆ ತನಗೆ ಗತಿಗುಡುವ ಸೊಸೆಯೆಂದು | ಬಯಸಿದೊಡೆ ಬಂದಯ್ಯನಾಡನೆ ಸುರಾಸುರರಮುಂದೆ ಕಪಿಕಟಕಮರಿಯೆ ||52||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭಯಶೋಕದಿಂದೆ ಗದ್ಗದಿತ ಕಂಠದೊಳಶ್ರುನಯನದೊಳ್ ತುಳಕೆ ಭರತಂ=[ಭಯ ಮತ್ತು ಶೋಕದಿಂದ, ಗದ್ಗದಿತ ಕಂಠದಲ್ಲಿ ಕಣ್ಣಿನಲ್ಲಿ ನೀರು ಬರುತ್ತಿರಲು, ಭರತನು ರಾಮನನ್ನು ಕೇಳುವನು,]; ಕರೆವ ಕಪಿಲೆಯಂ ನಯವಿದರ್ ಪೊಡೆದು ಅಡವಿಗೆ ಅಟ್ಟುವರೆ =[ಹಾಲು ಕರೆಯುವ ಕಪಿಲೆ ಹಸುವನ್ನು ನೀತಿಮಾರ್ಗವನ್ನು ಅರಿತಿರುವವರು, ಹೊಡೆದು ಕಾಡಿಗೆ ಅಟ್ಟುವರೆ?] ಪಾವಕನೊಳು ಅರಸಿಯಂ ಪುಗಿಸಿದಂದು ಪ್ರಿಯೆ ನಿನಗೆ ಪರಿಶುದ್ಧೆ ಕುಲಕೆ ಮಂಗಳೆ ಸುತೋದಯಕೆ ನಿರ್ಮಲೆ ತನಗೆ ಗತಿಗುಡುವ ಸೊಸೆಯೆಂದು ಬಯಸಿದೊಡೆ ಬಂದು ಅಯ್ಯನಾಡನೆ ಸುರ ಅಸುರರ ಮುಂದೆ ಕಪಿಕಟಕಮ್ ಅರಿಯೆ=[ಅಂದು ನಿನ್ನ ಅರಸಿ ಸೀತೆಯನ್ನು ಅಗ್ನಿಯಲ್ಲಿ ಪ್ರವೇಶ ಮಾಡಿಸಿದಾಗ, ನಿನಗೆ ಪ್ರಿಯೆಳು, ಪರಿಶುದ್ಧಳು, ಕುಲಕೆ ಮಂಗಳೆಯಾಗಿರುವಳು, ಮಗನನ್ನು ಹೆತ್ತುಕೊಡಲು ನಿರ್ಮಲೆಯು, ತನಗೆ ಪರಲೋಕದಲ್ಲಿ ಗತಿಕೊಡುವ ಸೊಸೆ ಇವಳು ಎಂದು, ಬಯಸಿದಾಗ ತಂದೆ ದಶರಥನು ಸ್ವರ್ಗದಿಂದ ಬಂದು, ದೇವತೆಗಳು, ವಿಭೀಷಣಾದಿ ಅಸುರರ ಮುಂದೆ ವಾನರ ಸೈನ್ಯದ ಎದುರು,ಎಲ್ಲರೂ ಕೇಳುವಂತೆ (ಅಯ್ಯನಾಡನೆ) ತಂದೆಯು ಹೇಳಲಿಲ್ಲವೇ?
  • ತಾತ್ಪರ್ಯ:ಭಯ ಮತ್ತು ಶೋಕದಿಂದ, ಗದ್ಗದಿತ ಕಂಠದಲ್ಲಿ ಕಣ್ಣಿನಲ್ಲಿ ನೀರು ಬರುತ್ತಿರಲು, ಭರತನು ರಾಮನನ್ನು ಕೇಳುವನು, ಹಾಲು ಕರೆಯುವ ಕಪಿಲೆ ಹಸುವನ್ನು ನೀತಿಮಾರ್ಗವನ್ನು ಅರಿತಿರುವವರು, ಹೊಡೆದು ಕಾಡಿಗೆ ಅಟ್ಟುವರೆ? ಅಂದು ಲಂಕಾನಗರಿಯಲ್ಲಿ, ನಿನ್ನ ಅರಸಿ ಸೀತೆಯನ್ನು ಅಗ್ನಿಯಲ್ಲಿ ಪ್ರವೇಶ ಮಾಡಿಸಿದಾಗ, ನೀನು ಬಯಸಿದಾಗ ತಂದೆ ದಶರಥನು ಸ್ವರ್ಗದಿಂದ ಬಂದು, ನಿನಗೆ ಪ್ರಿಯೆಳು, ಪರಿಶುದ್ಧಳು, ಕುಲಕೆ ಮಂಗಳೆಯಾಗಿರುವಳು, ಮಗನನ್ನು ಹೆತ್ತುಕೊಡಲು ನಿರ್ಮಲೆಯು, ತನಗೆ ಪರಲೋಕದಲ್ಲಿ ಗತಿಕೊಡುವ ಸೊಸೆ ಇವಳು ಎಂದು, ದೇವತೆಗಳು, ವಿಭೀಷಣಾದಿ ಅಸುರರ ಮುಂದೆ ವಾನರ ಸೈನ್ಯದ ಎದುರು,ಎಲ್ಲರೂ ಕೇಳುವಂತೆ (ಅಯ್ಯನಾಡನೆ) ತಂದೆಯು ಹೇಳಲಿಲ್ಲವೇ? (ಎಂದು ಭರತನು ರಾಮನನ್ನು ಕೇಳುವನು,)
  • (ಪದ್ಯ-೫೨)

ಪದ್ಯ :-:೫೩:

[ಸಂಪಾದಿಸಿ]

ಅದನೆಲ್ಲಮಂ ಮರೆದು ಹುಲುಮನುಜ ರಜಕನಾ | ಡಿದ ದೂಸರಂ ನೆನೆದು ಕುಲಪತ್ನಿಯಂ ಬಿಡುವ | ಹದನಾವುದಕಟ ಗುರುಲಘುವಿನಂತರವನೆಣಿಸದೆ ಬರಿದೆ ಮೂಢರಂತೆ ||
ಎದೆಗೆಟ್ಟು ದೇವಿಯಂ ದೋಷಿಯೆಂಬರೆ ಜೀಯ | ಪದುಳವಿಹುದೆಂದು ವಿನಯ ದೊಳಗ್ರಜಾತನಂ | ಕದುಬಿ ನುಡಿದಂ ಭರತನಾತನಂ ನೋಡುತೊಯ್ಯನೆ ಭೂಪನಿಂತೆಂದನು ||53|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅದನು ಎಲ್ಲಮಂ ಮರೆದು ಹುಲುಮನುಜ ರಜಕನು ಆಡಿದ ದೂಸರಂ ನೆನೆದು ಕುಲಪತ್ನಿಯಂ ಬಿಡುವ ಹದನು ಆವುದು ಅಕಟ!=[ಅದೆಲ್ಲವನ್ನೂ ಮರೆತು ಹುಲುಮನುಜ ರಜಕನು ಮಾಡಿದ ದೂಷಣೆಯನ್ನು ನೆನೆದು ಕುಲಪತ್ನಿಯನ್ನು ಬಿಡುವ ರೀತಿ ಇದುಯಾವುದು? ಅಕಟ!]; ಗುರುಲಘುವಿನ ಅಂತರವನು ಎಣಿಸದೆ ಬರಿದೆ ಮೂಢರಂತೆ ಎದೆಗೆಟ್ಟು ದೇವಿಯಂ ದೋಷಿ ಎಂಬರೆ ಜೀಯ ಪದುಳವಿಹುದೆಂದು(ನೆಮ್ಮದಿ ಸಿಗುವುದೆಂದು)=[ದೊಡ್ಡ ಅಪರಾದ ಮತ್ತು ಸಣ್ಣ ದೋಷ ಇವುಗಳ ವ್ಯತ್ಯಾಸವನ್ನು ಲೆಕ್ಕಿಸದೆ ಬರಿದೆ ಮೂಢರಂತೆ ಧೈರ್ಯಗುಂದಿ ನಿನಗೆ ನೆಮ್ಮದಿ ಸಿಗುವುದೆಂದು ಸೀತಾದೇವಿಯನ್ನು ದೋಷಿ ಎನ್ನುವರೆ!]; ವಿನಯದೊಳು ಅಗ್ರಜಾತನಂ ಕದುಬಿ ನುಡಿದಂ ಭರತನು ಆತನಂ ನೋಡುತ ಒಯ್ಯನೆ ಭೂಪನು ಇಂತೆಂದನು=[ಹೀಗೆ ವಿನಯದಿಂದ ಅಗ್ರಜ ರಾಮನನ್ನು ಪ್ರತಿಭಟಿಸಿ ಭರತನು ನುಡಿದನು. ಆತನನ್ನು ನೋಡುತ್ತಾ ಮೆಲ್ಲಗೆ ರಾಜನು ಹೀಗೆ ಹೇಳಿದನು.]
  • ತಾತ್ಪರ್ಯ:ಅದೆಲ್ಲವನ್ನೂ ಮರೆತು ಹುಲುಮನುಜ ರಜಕನು ಮಾಡಿದ ದೂಷಣೆಯನ್ನು ನೆನೆದು ಕುಲಪತ್ನಿಯನ್ನು ಬಿಡುವ ರೀತಿ ಇದುಯಾವುದು? ಅಕಟ! ದೊಡ್ಡ ಅಪರಾದ ಮತ್ತು ಸಣ್ಣ ದೋಷ ಇವುಗಳ ವ್ಯತ್ಯಾಸವನ್ನು ಲೆಕ್ಕಿಸದೆ ಬರಿದೆ ಮೂಢರಂತೆ ಧೈರ್ಯಗುಂದಿ ನಿನಗೆ ನೆಮ್ಮದಿ ಸಿಗುವುದೆಂದು ಸೀತಾದೇವಿಯನ್ನು ದೋಷಿ ಎನ್ನುವರೆ! ಹೀಗೆ ವಿನಯದಿಂದ ಅಗ್ರಜ ರಾಮನನ್ನು ಪ್ರತಿಭಟಿಸಿ ಭರತನು ನುಡಿದನು. ಆತನನ್ನು ನೋಡುತ್ತಾ ಮೆಲ್ಲಗೆ ರಾಜನು ಹೀಗೆ ಹೇಳಿದನು.
  • (ಪದ್ಯ-೫3)

ಪದ್ಯ :-:೫೪:

[ಸಂಪಾದಿಸಿ]

ತಮ್ಮ ನೀನಾಡಿದಂತವನಿಸುತೆ ನಿರಜೆಯಹು | ದುಮ್ಮಳಿಸಬೇಡ ಸೈರಿಸಲಾರೆ ನೀದೂಸ | ರಂ ಮಹಿಯೊಳುಳಿದರೆಪೃಥು ಪುರೂರವ ಹರಿಶ್ಚಂದ್ರಾದಿ ನರಪತಿಗಳು ||
ಸುಮ್ಮನಪಕೀರ್ತಿಗೊಳಗಾಗಲೇತಕೆ ಮಮತೆ | ಯಂ ಮಹಾಯೋಗಿ ಬಿಡುವಂತಿವಳನುಳಿವೆನೆನೆ | ಹಮ್ಮೈಸಿ ಲಕ್ಷ್ಮಣಂ ಕಂಪಿಸುತೆ ಕಿವಿಮುಚ್ಚುತಗ್ರಜಂಗಿಂತೆಂದನು ||54||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಮ್ಮ ನೀನು ಆಡಿದಂತೆ ಅವನಿಸುತೆ ನಿರಜೆಯಹುದು (ನಿರ್ದೋಷಿ) ಉಮ್ಮಳಿಸಬೇಡ ಸೈರಿಸಲಾರೆ ನೀ=[ತಮ್ಮ ನೀನು ಹೇಳಿದಂತೆ ಭೂಮಿಸುತೆಯು ನಿರ್ದೋಷಿ ಹೌದು; ದುಃಖದಿಂದ ನೀನು ಉಮ್ಮಳಿಸಬೇಡ ನಾನು ಸೈರಿಸಲಾರೆ]; ದೂಸರಂ ಮಹಿಯೊಳು ಉಳಿದರೆ ಪೃಥು ಪುರೂರವ ಹರಿಶ್ಚಂದ್ರಾದಿ ನರಪತಿಗಳು ಸುಮ್ಮನೆ ಅಪಕೀರ್ತಿಗೊಳಗಾಗಲು ಏತಕೆ=[ಮಾತಿನ ದೋಷಾರೋಪವು ರಾಜ್ಯದಲ್ಲಿ ರಾಜನಾಗಿ ನನ್ನು ಮೇಲೆ ಉಳಿದರೆ, ನಮ್ಮ ವಂಶದ ಕೀರ್ತಿ ಹೋಗಿ, ಪೃಥು ಪುರೂರವ ಹರಿಶ್ಚಂದ್ರಾದಿ ರಾಜರುಗಳು ಸುಮ್ಮನೆ ಅಪಕೀರ್ತಿಗೆ ಒಳಗಾಗುವರು; ಅದು ಏತಕ್ಕೆ ನನ್ನಿಂದ ಆಗಬೇಕು?]; ಮಮತೆಯಂ ಮಹಾಯೋಗಿ ಬಿಡುವಂತೆ ಇವಳನು ಉಳಿವೆನು ಎನೆ ಹಮ್ಮೈಸಿ ಲಕ್ಷ್ಮಣಂ ಕಂಪಿಸುತೆ ಕಿವಿಮುಚ್ಚುತ ಅಗ್ರಜಂಗೆ ಇಂತೆಂದನು=[ಮಮತೆಯನ್ನು /ಪತ್ನಿಯ ಮೇಲಿನ ಮೋಹವನ್ನು ಮಹಾಯೋಗಿ ಬಿಡುವಂತೆ ಇವಳನ್ನು ಬಿಡುವೆನು ಎನ್ನಲು, ಅತಿಯಾದ ವ್ಯಥೆಯಿಂದ ಲಕ್ಷ್ಮಣನು ನಡುಗುತ್ತಾ ಕಿವಿಮುಚ್ಚಿಕೊಂಡು, ಅಣ್ನನಿಗೆ ಹೀಗೆ ಹೇಳಿದನು].
  • ತಾತ್ಪರ್ಯ:ತಮ್ಮ ನೀನು ಹೇಳಿದಂತೆ ಭೂಮಿಸುತೆಯು ನಿರ್ದೋಷಿ ಹೌದು; ದುಃಖದಿಂದ ನೀನು ಉಮ್ಮಳಿಸಬೇಡ ನಾನು ಸೈರಿಸಲಾರೆ; ಮಾತಿನ ದೋಷಾರೋಪವು ರಾಜ್ಯದಲ್ಲಿ ರಾಜನಾಗಿ ನನ್ನು ಮೇಲೆ ಉಳಿದರೆ, ನಮ್ಮ ವಂಶದ ಕೀರ್ತಿ ಹೋಗಿ, ಪೃಥು ಪುರೂರವ ಹರಿಶ್ಚಂದ್ರಾದಿ ರಾಜರುಗಳು ಸುಮ್ಮನೆ ಅಪಕೀರ್ತಿಗೆ ಒಳಗಾಗುವರು; ಅದು ಏತಕ್ಕೆ ನನ್ನಿಂದ ಆಗಬೇಕು? ಮಮತೆಯನ್ನು /ಪತ್ನಿಯ ಮೇಲಿನ ಮೋಹವನ್ನು ಮಹಾಯೋಗಿ ಬಿಡುವಂತೆ ಇವಳನ್ನು ಬಿಡುವೆನು ಎನ್ನಲು, ಅತಿಯಾದ ವ್ಯಥೆಯಿಂದ ಲಕ್ಷ್ಮಣನು ನಡುಗುತ್ತಾ ಕಿವಿಮುಚ್ಚಿಕೊಂಡು, ಅಣ್ನನಿಗೆ ಹೀಗೆ ಹೇಳಿದನು].
  • (ಪದ್ಯ-೫೪)

ಪದ್ಯ :-:೫೫:

[ಸಂಪಾದಿಸಿ]

ಕಾಯಸುಖಕೋಸುಗಂ ಕೃತಧರ್ಮಮಂ ಬಿಡುವವೊ | ಲಾಯತಾಕ್ಷಿಯ ಭಾವಶುದ್ಧಿಯಂ ತಿಳಿದಿರ್ದು | ವಾಯದಪವಾದಕಿಂತರಸಿಯಂ ತೊರೆಯಬೇಕೆಂಬರೇ ಕರುಣಮಿಲ್ಲದೆ (ನಿಷ್ಕರುಣದಿಂದೆ) ||
ಜೀಯ ! ತುಂಬಿದಬಸುರ್ ಬೆಸಲಾದ ದೇವಿಯಂ | ಪ್ರೀಯದಿಂದಾರೈದು ಸಲಹಬೇಕೆಂದು ರಘು | ರಾಯಂಗೆ ಲಕ್ಷ್ಮಣಂ ಬಿನ್ನೈಸೆ ಮೇಲ್ವಾಯ್ದು ಶತ್ರುಘ್ನನಿಂತೆಂದನು ||55||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಲಕ್ಷ್ಮಣನು ವಿನಯದಿಂದ ಹೇಳುತ್ತಾನೆ:ಕಾಯ ಸುಖಕೋಸುಗಂ ಕೃತಧರ್ಮಮಂ ಬಿಡುವವೊಲ್ ಆಯತಾಕ್ಷಿಯ ಭಾವಶುದ್ಧಿಯಂ ತಿಳಿದಿರ್ದು ವಾಯದ (ಗಾಳಿಸುದ್ದಿಯ) ಅಪವಾದಕೆ ಇಂತು ಅರಸಿಯಂ ತೊರೆಯಬೇಕೆಂಬರೇ ಕರುಣಮಿಲ್ಲದೆ=[ಲಕ್ಷ್ಮಣನು ವಿನಯದಿಂದ ಹೇಳುತ್ತಾನೆ: ದೇಹ ಸುಖಕ್ಕಾಗಿ ಕರ್ತವ್ಯವಾಗಿರುವ ಧರ್ಮವನ್ನು ಬಿಡುವಂತೆ ಸೀತಾದೇವಿಯ ಭಾವಶುದ್ಧಿಯನ್ನು ತಿಳಿದು ತಿಳಿದೂ ಗಾಳಿಸುದ್ದಿಯ ಅಪವಾದಕ್ಕೆ ಹೀಗೆ ರಾಣಿಯನ್ನು ಕರುಣೆಯಿಲ್ಲದೆ ಬಡಬೇಕು ಎಂದು ಯಾರಾದರೂ ಹೇಳುವರೇ? ಖಂಡಿತಾ ಇಲ್ಲ!]; ಜೀಯ ! ತುಂಬಿದಬಸುರ್ ಬೆಸಲಾದ ದೇವಿಯಂ ಪ್ರೀಯದಿಂದಾರೈದು ಸಲಹಬೇಕೆಂದು ರಘುರಾಯಂಗೆ ಲಕ್ಷ್ಮಣಂ ಬಿನ್ನೈಸೆ ಮೇಲ್ವಾಯ್ದು ಶತ್ರುಘ್ನನು ಇಂತೆಂದನು=[ಜೀಯ ! ತುಂಬಿದ ಬಸುರಿ ಹೆರಿಗೆಗೆ ಹತ್ತಿರವಾದ ದೇವಿಯನ್ನು ಪ್ರೀತಿಯಿಂದ ಆರೈದು ಸಲಹಬೇಕು ಎಂದು ರಘುರಾಯನಿಗೆ ಲಕ್ಷ್ಮಣನು ಬಿನ್ನಹ ಮಾಡಿದನು, ಆಗ ಮೇಲೆಬಿದ್ದು ಶತ್ರುಘ್ನನು ಹೀಗೆ ಹೇಳಿದನು].
  • ತಾತ್ಪರ್ಯ:ಲಕ್ಷ್ಮಣನು ವಿನಯದಿಂದ ಹೇಳುತ್ತಾನೆ: ದೇಹ ಸುಖಕ್ಕಾಗಿ ಕರ್ತವ್ಯವಾಗಿರುವ ಧರ್ಮವನ್ನು ಬಿಡುವಂತೆ ಸೀತಾದೇವಿಯ ಭಾವಶುದ್ಧಿಯನ್ನು ತಿಳಿದು ತಿಳಿದೂ ಗಾಳಿಸುದ್ದಿಯ ಅಪವಾದಕ್ಕೆ ಹೀಗೆ ರಾಣಿಯನ್ನು ಕರುಣೆಯಿಲ್ಲದೆ ಬಿಡಬೇಕು ಎಂದು ಯಾರಾದರೂ ಹೇಳುವರೇ? ಖಂಡಿತಾ ಇಲ್ಲ! ಜೀಯ ! ತುಂಬಿದ ಬಸುರಿ ಹೆರಿಗೆಗೆ ಹತ್ತಿರವಾದ ದೇವಿಯನ್ನು ಪ್ರೀತಿಯಿಂದ ಆರೈದು ಸಲಹಬೇಕು ಎಂದು ರಘುರಾಯನಿಗೆ ಲಕ್ಷ್ಮಣನು ಬಿನ್ನಹ ಮಾಡಿದನು, ಆಗ ಮೇಲೆಬಿದ್ದು ಶತ್ರುಘ್ನನು ಹೀಗೆ ಹೇಳಿದನು.
  • (ಪದ್ಯ-೫೫)

ಪದ್ಯ :-:೫೬:

[ಸಂಪಾದಿಸಿ]

ಬಿಡುವೆರಂತಿಕ್ಷ್ವಾಕು ವಂಶದವರರಸಿಯಂ | ನುಡಿವರೆಂತಿಳೆಯೊಳಾರಾದೊಡಂ ದೂಸರಂ | ಪಡೆವರೆಂತಮಲ ಸತ್ಮೀರ್ತಿಯಂ ಬುದ್ಧಿ ವೇಳ್ವುದಕೊಡೆಯರಿಲ್ಲವಾಗಿ ||
ಕಡಿವರೆಂತೇಳ್ಗೆಯಂ ಪೆಣ್ಣಳಲ್ವೆಂಕಿಯಿಂ | ಸುಡುವರೆಂತನ್ವಯದ ಬಾಳ್ಕೆಯನಿದಕ್ಕೆ ಕಿವಿ | ಗುಡುವರೆಂತೀಗಳೆನ್ನೊಡಹುಟ್ಟಿದವರೆನುತ ಶತ್ರುಘ್ನನುರಿದೆದ್ದನು ||56||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಿಡುವೆರಂತು ಇಕ್ಷ್ವಾಕು ವಂಶದವರು ಅರಸಿಯಂ ನುಡಿವರೆಂತು ಇಳೆಯೊಳು ಆರಾದೊಡಂ ದೂಸರಂ= (ಇವೆಲ್ಲಾ ಅಸಾಧ್ಯದ ಮಾತು:[ಇಕ್ಷ್ವಾಕು ವಂಶದವರು ತಮ್ಮ ಪತ್ನಿಯರನ್ನು ಬಿಡುವುದೆಂದರೇನು? ಈ ಕುಲದವರಿಗೆ ಭೂಮಿಯಲ್ಲಿ ಯಾರಾದರೂ ದೋಷವನ್ನು ನುಡಿಯುವುದೆಂದರೇನು?]; ಪಡೆವರೆಂತು ಆಮಲ ಸತ್ಮೀರ್ತಿಯಂ ಬುದ್ಧಿ ವೇಳ್ವುದಕೆ ಒಡೆಯರಿಲ್ಲವಾಗಿ ಕಡಿವರೆಂತು ಏಳ್ಗೆಯಂ=[ರವಿಕುಲದವರು ಶ್ರೇಷ್ಠವಾದ ಸತ್ಮೀರ್ತಿಯನ್ನು ಹೇಗೆ ಪಡೆಯುವರು ಎಂಬುದನ್ನು ಅರಿತು ಬುದ್ಧಿಯನ್ನು ಹೇಳಲು ಯಜಮಾನರಿಲ್ಲದೆ ಹೊಯಿತೇ?, ಈ ಕುಲದ ಕೀರ್ತಿಯನ್ನು ಕಡಿಯುವುದೆಂದರೇನು? ('ನಿಮಗೆ, ಯಾರೂ ಹೇಳುವವರು ಕೇಳುವವರು ಇಲ್ಲವೇ! ಇದು ಹುಡುಗಾಟವಾಗಿದೆ', ಎಂಬ ನಾಡು ನುಡಿಯಂತೆ ಗುಡುಗಿದನು) ]; ಪೆಣ್ಣಳಲ್ ವೆಂಕಿಯಿಂ ಸುಡುವರೆಂತು ಅನ್ವಯದ ಬಾಳ್ಕೆಯನು ಇದಕ್ಕೆ ಕಿವಿಗುಡುವರೆಂತು ಈಗಳು ಎನ್ನೊಡಹುಟ್ಟಿದವರು ಎನುತ ಶತ್ರುಘ್ನನು ಉರಿದೆದ್ದನು=[ಹೆಣ್ಣಿನ ಅಳು-ಕಣ್ಣೀರಿನ ಬೆಂಕಿಯಿಂದ ನಮ್ಮಕುಲದ ಅನ್ವಯದ/ ವಂಶಪರಂಪರೆಯ ಬಾಳುವೆಯನ್ನೇ ಸುಡುವರೇ ಹೇಗೆ? ಈಗ ನನ್ನೊಡಹುಟ್ಟಿದವರು (ರಾಮನಿಗೆ ಅನ್ವಯಿಸಿ) ಇದಕ್ಕೆ ಹೇಗೆ ಕಿವಿಗೊಡುವರು? ಎನ್ನುತ್ತಾ ಶತ್ರುಘ್ನನು ಉರಿದೆದ್ದನು].
  • ತಾತ್ಪರ್ಯ:ಶತ್ರಘ್ನ ಆರ್ಬಟಿಸಿದ! ಇವೆಲ್ಲಾ ಅಸಾಧ್ಯದ ಮಾತು: ಇಕ್ಷ್ವಾಕು ವಂಶದವರು ತಮ್ಮ ಪತ್ನಿಯರನ್ನು ಬಿಡುವುದೆಂದರೇನು? ಈ ಕುಲದವರಿಗೆ ಭೂಮಿಯಲ್ಲಿ ಯಾರಾದರೂ ದೋಷವನ್ನು ನುಡಿಯುವುದೆಂದರೇನು? ರವಿಕುಲದವರು ಶ್ರೇಷ್ಠವಾದ ಸತ್ಕೀರ್ತಿಯನ್ನು ಹೇಗೆ ಪಡೆಯುವರು ಎಂಬುದನ್ನು ಅರಿತು ಬುದ್ಧಿಯನ್ನು ಹೇಳಲು ಯಜಮಾನರಿಲ್ಲದೆ ಹೋಯಿತೇ?, ಈ ಕುಲದ ಕೀರ್ತಿಯನ್ನು ಕಡಿಯುವುದೆಂದರೇನು? ('ಯಾರೂ ಹೇಳುವವರು ಕೇಳುವವರು ಇಲ್ಲವೇ! ಇದು ಹುಡುಗಾಟವಾಗಿದೆ', ಎಂಬ ನಾಡು ನುಡಿಯಂತೆ ಗುಡುಗಿದನು) ಹೆಣ್ಣಿನ ಅಳು-ಕಣ್ಣೀರಿನ ಬೆಂಕಿಯಿಂದ ನಮ್ಮಕುಲದ ಅನ್ವಯದ/ ವಂಶಪರಂಪರೆಯ ಬಾಳುವೆಯನ್ನೇ ಸುಡುವರೇ ಹೇಗೆ-ಈಗ ನನ್ನೊಡಹುಟ್ಟಿದವರು? (ರಾಮನಿಗೆ ಅನ್ವಯಿಸಿ) ಇದಕ್ಕೆ ಹೇಗೆ ಕಿವಿಗೊಡುವರು? ಎನ್ನುತ್ತಾ ಶತ್ರುಘ್ನನು ಉರಿದೆದ್ದನು]. (ಅವರೆಲ್ಲಾ ಒಂದೇ ವಯಸ್ಸಿನವರು;ರಾಮನಿಗೆ ಭರತ ನಾಲ್ಕು ದಿನಕ್ಕೆ ಚಿಕ್ಕವನು, ಲಕ್ಷ್ಮಣ ಶತ್ರುಘ್ನರು ಒಂದು ತಿಂಗಳಿಗೆ ಕಿರಿಯರು)
  • (ಪದ್ಯ-೫೬)

ಪದ್ಯ :-:೫೭:

[ಸಂಪಾದಿಸಿ]

ಅರಸ ಕೇಳನುಜರಾಡಿದ ನುಡಿಗೆ ತಲೆವಾಗಿ | ತರಣಿಕುಲ ತಿಲಕನೊಯ್ಯನೆ ದೈನ್ಯಭಾವದಿಂ | ತರಹರಿಸಬಾರದಪವಾದ ಹೃಛ್ಛೂಲಮಂ ತನಗೆ ಜಾನಕಿಯನುಳಿದು ||
ಪೆರೆಯುರ್ಚಿದುರಗನಂತಿರ್ದಪೆಂ ಸಾಕು ನಿಮ | ಗೊರೆದೊಡೇನಹುದೆಂದು ಬೇಸರಿಂಮನೆಗಳ್ಗೆ | ಭರತ ಶತ್ರುಘ್ನರಂ ಕಳುಹುತೇಕಾಂತದೊಳ್ ಸೌಮಿತ್ರಿಗಿಂತೆಂದನು ||57||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರಸ ಕೇಳು ಅನುಜರು ಆಡಿದ ನುಡಿಗೆ ತಲೆವಾಗಿ ತರಣಿಕುಲ ತಿಲಕನು ಒಯ್ಯನೆ ದೈನ್ಯಭಾವದಿಂ=[ಅರಸನೇ ಕೇಳು, ತಮ್ಮಂದಿರು ಆಡಿದ ಮಾತಿಗೆ ತಲೆತಗ್ಗಿಸಿ, ರವಿಕುಲಶ್ರೇಷ್ಠನು ಮೆಲ್ಲಗೆ ದೈನ್ಯಭಾವದಿಂದ]; ತರಹರಿಸಬಾರದ ಅಪವಾದ ಹೃಛ್ಛೂಲಮಂ ತನಗೆ ಜಾನಕಿಯನು ಉಳಿದು ಪೆರೆಯುರ್ಚಿದ ಉರಗನಂತೆ ಇರ್ದಪೆಂ=[ ಪರಿಹರಿಸಲಾಗದ ಅಪವಾದದ ಹೃದಯಶೂಲವನ್ನು ತೆಗೆಯಲು, ತನಗೆ ಜಾನಕಿಯನ್ನು ಬಿಟ್ಟರೆ, ಪೊರೆಬಿಟ್ಟ ಹಾವಿನಂತೆ ಇರುವೆನು.]; ಸಾಕು ನಿಮಗೆ ಒರೆದೊಡೆ ಏನಹುದು ಎಂದು ಬೇಸರಿಂ ಮನೆಗಳ್ಗೆ ಭರತ ಶತ್ರುಘ್ನರಂ ಕಳುಹುತ ಏಕಾಂತದೊಳ್ ಸೌಮಿತ್ರಿಗೆ ಇಂತೆಂದನು=[ಸಾಕು ನಿಮಗೆ ಹೇಳಿದರೆ ಏನು ಪ್ರಯೋಜನ? ಎಂದು ವ್ಯಥೆಯಿಂದ ಭರತ ಶತ್ರುಘ್ನರನ್ನು ಮನೆಗಳಿಗೆ ಕಳುಹಿಸಿದ ನಂತರ, ಏಕಾಂತದಲ್ಲಿ ಲಕ್ಷ್ಮಣನಿಗೆ ಹೀಗೆ ಹೇಳಿದನು].
  • ತಾತ್ಪರ್ಯ:ಜನಮೇಜಯ ಅರಸನೇ ಕೇಳು, ತಮ್ಮಂದಿರು ಆಡಿದ ಮಾತಿಗೆ ತಲೆತಗ್ಗಿಸಿ, ರವಿಕುಲಶ್ರೇಷ್ಠ ರಾಮನು ಮೆಲ್ಲಗೆ ದೈನ್ಯಭಾವದಿಂದ, ಪರಿಹರಿಸಲಾಗದ ಅಪವಾದದ ಹೃದಯಶೂಲವನ್ನು ತೆಗೆಯಲು ತನಗೆ ಒಂದೇ ದಾರಿ, ಜಾನಕಿಯನ್ನು ಬಿಟ್ಟರೆ, ಪೊರೆಬಿಟ್ಟ ಹಾವಿನಂತೆ ಇರುವೆನು. ಸಾಕು ನಿಮಗೆ ಹೇಳಿ ಏನು ಪ್ರಯೋಜನ? ಎಂದು ವ್ಯಥೆಯಿಂದ ಭರತ ಶತ್ರುಘ್ನರನ್ನು ಮನೆಗಳಿಗೆ ಕಳುಹಿಸಿದ ನಂತರ, ಏಕಾಂತದಲ್ಲಿ ಲಕ್ಷ್ಮಣನಿಗೆ ಹೀಗೆ ಹೇಳಿದನು.
  • (ಪದ್ಯ-೫೭)

ಪದ್ಯ :-:೫೮:

[ಸಂಪಾದಿಸಿ]

ತಮ್ಮ ಬಾ ನೀನಿಂದುವರೆಗೆ ನಾನೆಂದಮಾ | ತಮ್ಮೀರಿದವನಲ್ಲ ಕೆಲಬಲವನಾರಯ್ಯು | ತಮ್ಮರುಗದಿರು ತನ್ನ ಕೊರಳಿಗಿದೆ ಖಡ್ಗಮಲ್ಲದೊಡೀಗ ಜಾನಕಿಯನು ||
ಉಮ್ಮಳಿಸದೊಯ್ದು ಗಂಗೆಯ ತಡಿಯರಣ್ಯದೊಳ್ | ಸುಮ್ಮನೆ ಕಳುಹಿ ಬರ್ಪುದವಳೆನ್ನೊಳಾಡಿರ್ಪ | ಳೊಮ್ಮೆ ಕಾನನಕೈದಬೇಕೆಂದು ಬಯಕೆಯಿಂದದೆ ನೆವಂ ನಿನಗೆಂದನು ||58||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • (ರಾಮನು,)ತಮ್ಮ ಬಾ ನೀನು ಇಂದುವರೆಗೆ ನಾನು ಎಂದ ಮಾತಂ ಮೀರಿದವನಲ್ಲ=[ರಾಮನು (ಹೇಳಿದನು),ತಮ್ಮಾ ಲಕ್ಷ್ಮಣ ಬಾ, ನೀನು ಇದುವರೆಗೆ ನಾನು ಹೇಳಿದ ಮಾತನ್ನು ಮೀರಿದವನಲ್ಲ]; ಕೆಲಬಲವನ ಆರಯ್ಯುತಂ ಮರುಗದಿರು ತನ್ನ ಕೊರಳಿಗಿದೆ ಖಡ್ಗಮ್ ಅಲ್ಲದೊಡೆ (ಕೊರಳು ಉಳಿಯಲು) =[ಹಿಂದೆ ಮುಂದೆ (ಒಳಿತು-ಕೆಡುಕು) ಯೋಚಿಸುತ್ತಾ ದಃಖಿಸಬೇಡ; ತನ್ನ ಕೊರಳುಹೋಗಲು ಕತ್ತಿ ಬಂದಿದೆ, ಕೊರಳು ಉಳಿಯಬೇಕಾದರೆ ಒಂದೇ ದಾರಿ;]; ಈಗ ಜಾನಕಿಯನು ಉಮ್ಮಳಿಸದೆ ಒಯ್ದು ಗಂಗೆಯ ತಡಿಯ ಅರಣ್ಯದೊಳ್ ಸುಮ್ಮನೆ ಕಳುಹಿ ಬರ್ಪುದು=[ಈಗ ಜಾನಕಿಯನ್ನು ದುಃಖಿಸದೆ ಕರೆದುಕೊಂಡು ಹೋಗಿ ಗಂಗೆಯ ದಡದ ಅರಣ್ಯದಲ್ಲಿ ಸುಮ್ಮನೆ ಕಳುಹಿಸಿ ಬರಬೇಕು.];ಅವಳು ಎನ್ನೊಳು ಆಡಿರ್ಪಳು ಒಮ್ಮೆ, ಕಾನನಕೆ ಐದಬೇಕೆಂದು ಬಯಕೆಯಿಂದ ಅದೆ ನೆವಂ ನಿನಗೆ ಎಂದನು=[ಅವಳು ಒಮ್ಮೆ ನನ್ನೊಡನೆ ಋಷಿಪತ್ನಿಯರ ಜೊತೆ ಇರುವ ಬಯಕೆಯಿಂದ ಕಾನನಕ್ಕೆ ಹೋಗಬೇಕೆಂದು ಹೇಳಿರುವಳು; ನಿನಗೆ ಅದೆ ನೆವವು, ಎಂದನು.]
  • ತಾತ್ಪರ್ಯ:ರಾಮನು, ತಮ್ಮಾ ಲಕ್ಷ್ಮಣ ಬಾ, ನೀನು ಇದುವರೆಗೆ ನಾನು ಹೇಳಿದ ಮಾತನ್ನು ಮೀರಿದವನಲ್ಲ; ಹಿಂದೆ ಮುಂದೆ (ಒಳಿತು-ಕೆಡುಕು) ಯೋಚಿಸುತ್ತಾ ದಃಖಿಸಬೇಡ; ತನ್ನ ಕೊರಳುಹೋಗಲು ಕತ್ತಿ ಬಂದಿದೆ, ಈಗ ಕೊರಳು ಉಳಿಯಬೇಕಾದರೆ ಒಂದೇ ದಾರಿ; ದುಃಖಿಸದೆ ಈಗ ಜಾನಕಿಯನ್ನು ಕರೆದುಕೊಂಡು ಹೋಗಿ ಗಂಗೆಯ ದಡದ ಅರಣ್ಯದಲ್ಲಿ ಸುಮ್ಮನೆ ಕಳುಹಿಸಿ ಬರಬೇಕು. ಅವಳು ಒಮ್ಮೆ ನನ್ನೊಡನೆ ಋಷಿಪತ್ನಿಯರ ಜೊತೆ ಇರುವ ಬಯಕೆಯಿಂದ ಕಾನನಕ್ಕೆ ಹೋಗಬೇಕೆಂದು ಹೇಳಿರುವಳು; ನಿನಗೆ ಅದೆ ನೆವವು, ಎಂದನು.
  • ಸೀತಾ ಪರಿತ್ಯಾಗ -ಚರ್ಚೆ
  • (ಪದ್ಯ-೫೮)ix

ಪದ್ಯ :-:೫೯:

[ಸಂಪಾದಿಸಿ]

ಎನೆ ರಾಘವೇಂದ್ರ ನಿನ್ನಾಜ್ಞೆಯಂ ಮೀರಲ್ಕೆ | ತನಗೆ ರೌರವಮಪ್ಪುದೆಂದುದಂ ಮಾಡಲ್ಕೆ | ಜನನಿಯಂ ಕೊಂದುಗ್ರಗತಿಯಪ್ಪುದೇಗೈವೆನೆಂದು ಕಡುಶೋಕದಿಂದೆ ||
ತನು ಝೆಂಪಿಸಲ್ಕೆ ಸೆರೆಬಿಗಿದು ಕಂಬನಿಯಿಂದೆ | ನನೆದಳಲ್ದೊರೆಯೊಳಾಳ್ವ(ಲಾಳ್ದ)ನುಜಂ ಘೂರ್ಮಿಸುತೆ | ನಿನಗೆ ದೋಷಮೆ ತಾನಿರಲ್ಕೆ ನಡೆ ಕಳುಹೆಂದರಸನೇಂ ದಯೆದೊರೆದನೋ ||59||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎನೆ ರಾಘವೇಂದ್ರ ನಿನ್ನಾಜ್ಞೆಯಂ ಮೀರಲ್ಕೆ ತನಗೆ ರೌರವಂ ಅಪ್ಪುದು=[ರಾಮನು ಎನೆ/ ಹೇಳಲು,ರಾಘವೇಂದ್ರ ನಿನ್ನ ಆಜ್ಞೆಯನ್ನು ಮೀರಿದರೆ ತನಗೆ ರೌರವಂ ನರಕ ಆಗುವುದು,] ಎಂದುದಂ ಮಾಡಲ್ಕೆ ಜನನಿಯಂ ಕೊಂದ ಉಗ್ರಗತಿಯಪ್ಪುದು ಏಗೈವೆನು ಎಂದು ಕಡುಶೋಕದಿಂದೆ ತನು ಝೆಂಪಿಸಲ್ಕೆ ಸೆರೆಬಿಗಿದು ಕಂಬನಿಯಿಂದೆ ನನೆದ ಅಳಲ್ದು ಒರೆಯೊಳು (ಒರೆಯಲು)=[ನೀನು ಹೇಳಿದುದನ್ನು ಮಾಡಿದರೆ ತಾಯಿಯನ್ನು ಕೊಂದ ಉಗ್ರಗತಿ ಬರುವುದು, ಏನು ಮಾಡಲಿ? ಎಂದು ಬಹಳ ದುಃಖತಪ್ತನಾಗಿ ದೇಹ ಮೈನಡುಗಿ ಝೋಂಪಿಸಲು(ಓಲಾಡಿತು) ಗಂಟಲುಬಿಗಿದು ಕಂಬನಿಯಿಂದ ನನೆದು ಅಳುತ್ತಾ ಹೀಗೆ ಹೇಳಲು]; ಆಳ್ವ(ಳ್ದ)ಅನುಜಂ ಘೂರ್ಮಿಸುತೆ ನಿನಗೆ ದೋಷಮೆ ತಾನಿರಲ್ಕೆ ನಡೆ ಕಳುಹೆಂದು ಅರಸನು ಏಂ ದಯೆ ತೊರೆದನೋ=[ದೇಶವನ್ನು ಆಳುವ ಅವನ ಅಣ್ಣನು ಗದರಿಸಿ, ನಿನಗೆ ದೋಷವೆಲ್ಲಿಯದು ತಾನು ಹೊಣೆಗಾರನಾಗಿರಲು, ನಡೆ ಸೀತೆಯನ್ನು ಕಳುಹಿಸು, ಎಂದು ಆಜ್ಞಾಪಿಸಿದನು. ಅರಸನಾದ ರಾಮನು ಏನು ದಯೆಯನ್ನು ಬಿಟ್ಟನೇ!]
  • ತಾತ್ಪರ್ಯ:ರಾಮನು ಎನೆ/ ಹೇಳಲು,ರಾಘವೇಂದ್ರ ನಿನ್ನ ಆಜ್ಞೆಯನ್ನು ಮೀರಿದರೆ ತನಗೆ ರೌರವಂ ನರಕ ಆಗುವುದು, ನೀನು ಹೇಳಿದುದನ್ನು ಮಾಡಿದರೆ ತಾಯಿಯನ್ನು ಕೊಂದ ಉಗ್ರಗತಿ ಬರುವುದು, ಏನು ಮಾಡಲಿ? ಎಂದು ಬಹಳ ದುಃಖತಪ್ತನಾಗಿ ದೇಹ ಮೈನಡುಗಿ ಝೋಂಪಿಸಲು(ಓಲಾಡಿತು), ಗಂಟಲುಬಿಗಿದು ಕಂಬನಿಯಿಂದ ನನೆದು ಅಳುತ್ತಾ ಹೀಗೆ ಹೇಳಲು ದೇಶವನ್ನು ಆಳುವ ದೊರೆ ಅವನ ಅಣ್ಣನು ಗದರಿಸಿ, ನಿನಗೆ ದೋಷವೆಲ್ಲಿಯದು ತಾನು ಹೊಣೆಗಾರನಾಗಿರಲು, ನಡೆ ಸೀತೆಯನ್ನು ಕಳುಹಿಸು, ಎಂದು ಆಜ್ಞಾಪಿಸಿದನು. ಅರಸನಾದ ರಾಮನು ಏನು ದಯೆಯನ್ನು ಬಿಟ್ಟನೇ!
  • (ಪದ್ಯ-೫೯)

ಪದ್ಯ :-:೬೦:

[ಸಂಪಾದಿಸಿ]

ಅಣ್ಣದೇವನೊಳಿಡಿದ ವಾತ್ಸಲ್ಯಮೆಂಬ ಬ | ಲ್ಗಣ್ಣಿಯೊಳ್ ಕಟ್ಟುವಡೆದಲ್ಲೆನಲರಿಯದೆ ನಿ | ರ್ವಿಣ್ಣಭಾವದೊಳಂದು ಲಕ್ಷ್ಮಣನಂ ತುರಗ ಸಾರಥಿಕೇತನಂಗಳಿಂದೆ ||
ಹಣ್ಣಿದ ವರೋಥಮಂ ತರಿಸಿ ಪೊರಗಿರಿಸಿ ನೆಲ | ವೆಣ್ಣಿಮಗಳಿರುತಿರ್ದ ರಾಜಮಂದಿರಕೈದಿ | ಕಣ್ಣೊಳೀಕ್ಷಿಸದೆ ತಲೆವಾಗಿ ದೂರದೊಳೆ ನಿಂದಾ ಸೀತೆಗಿಂತೆಂದನು ||60||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಣ್ಣದೇವನೊಳು ಇಡಿದ (ತುಂಬಿದ) ವಾತ್ಸಲ್ಯಮೆಂಬ ಬಲ್ ಕಣ್ಣಿರ್ಯೊಳ್ (ದನಕಟ್ಟುವ ಕುಣಿಕೆಹಗ್ಗ) ಕಟ್ಟುವಡೆದು ಅಲ್ಲೆನಲು ಅರಿಯದೆ ನಿರ್ವಿಣ್ಣಭಾವದೊಳು=[ಅಣ್ಣದೇವ ರಾಮನಲ್ಲಿ ತನ್ನಮನದಲ್ಲಿ ತುಂಬಿದ ಸೋದರವಾತ್ಸಲ್ಯವೆಂಬ ಬಲವಾದ ಕಣ್ಣಿಯಲ್ಲಿ ಕಟ್ಟಲ್ಪಟ್ಟು, 'ಆಲ್ಲ' ಎಂದು ನಿರಾಕರಿಸಲು ಆಗದೆ, ಭಾವಶೂನ್ಯನಾಗಿ]; ಅಂದು ಲಕ್ಷ್ಮಣಂ ತುರಗ ಸಾರಥಿ ಕೇತನಂಗಳಿಂದೆ ಹಣ್ಣಿದ ವರೋಥಮಂ ತರಿಸಿ ಪೊರಗಿರಿಸಿ ನೆಲವೆಣ್ಣಿಮಗಳು (ನೆಲವೆಣ್ಣಿ ನ / ಭೂಮಿತಾಯಿಯ +ಮಗಳು=ಸೀತೆ) ಇರುತಿರ್ದ ರಾಜಮಂದಿರಕೆ ಐದಿ=[ ಅಂದು ಲಕ್ಷ್ಮಣನು, ತುರಗ ಸಾರಥಿ ಧ್ವಜಗಳಿಂದ ಸಿದ್ಧವಾದ ರಥವನ್ನು ತರಿಸಿ ಅರಮನೆಯ ಹೊರಗಿರಿಸಿ ಸೀತೆಯು ಇರುತ್ತಿರಯವ ರಾಜಮಂದಿರಕ್ಕೆ ಹೋಗಿ,]; ಕಣ್ಣೊಳು ಈಕ್ಷಿಸದೆ ತಲೆವಾಗಿ ದೂರದೊಳೆ ನಿಂದು ಆ ಸೀತೆಗೆ ಇಂತೆಂದನು=[ತಲೆ ಎತ್ತಿ ಕಣ್ಣಿನಿಂದ ನೋಡದೆ ತಲೆಬಗ್ಗಿಸಿಕೊಂಡು, ದೂರದಲ್ಲೇ ನಿಂತು ಆ ಸೀತೆಗೆ ಹೀಗೆ ಹೇಳಿದನು].
  • ತಾತ್ಪರ್ಯ:ಅಣ್ಣದೇವ ರಾಮನಲ್ಲಿ ತನ್ನಮನದಲ್ಲಿ ತುಂಬಿದ ಸೋದರವಾತ್ಸಲ್ಯವೆಂಬ ಬಲವಾದ ಕಣ್ಣಿಹಗ್ಗದಲ್ಲಿ ಕಟ್ಟಲ್ಪಟ್ಟು, 'ಆಲ್ಲ' ಎಂದು ನಿರಾಕರಿಸಲು ಆಗದೆ, ಭಾವಶೂನ್ಯನಾಗಿ; ಅಂದು ಲಕ್ಷ್ಮಣನು, ತುರಗ ಸಾರಥಿ ಧ್ವಜಗಳಿಂದ ಸಿದ್ಧವಾದ ರಥವನ್ನು ತರಿಸಿ ಅರಮನೆಯ ಹೊರಗಿರಿಸಿ ಸೀತೆಯು ಇರುತ್ತಿರಯವ ರಾಜಮಂದಿರಕ್ಕೆ ಹೋಗಿ, ತಲೆ ಎತ್ತಿ ಕಣ್ಣಿನಿಂದ ನೋಡದೆ ತಲೆಬಗ್ಗಿಸಿಕೊಂಡು, ದೂರದಲ್ಲೇ ನಿಂತು ಆ ಸೀತೆಗೆ ಹೀಗೆ ಹೇಳಿದನು.
  • (ಪದ್ಯ-೬೦)

ಪದ್ಯ :-:೬೧:

[ಸಂಪಾದಿಸಿ]

ತಾಯಿ ನೀನೆತಕೆಳಿಸಿದೆ ನಿನ್ನನೀಗ ರಘು | ರಾಯಂ ತಪೋವನಕೆ ಕಳುಹಿ ಬರಹೇಳಿದಂ | ಪ್ರೀಯಮುಳ್ಳೊಡೆ ರಥಂ ಪಣ್ಣಿ ಬಂದಿದೆಕೊ ಬಿಜಯಂಗೈವುದೆಂದು ಮರುಗಿ ||
ಛಾಯೆಗಾಣಿಸಿ ಸುಮಿತ್ರಾತ್ಮಜಂ ನುಡಿದಭಿ | ಪ್ರಾಯಮಂ ತಿಳಿಯದತಿ ಸಂಭ್ರಮಾನ್ವಿತೆಯಾದ | ಳಾಯತಾಂಬಕಿ ತನ್ನಭೀಷ್ಟಮಂ ಸಲಿಸುವಂ ಕಾಂತನೆಂಬುತ್ಸವದೊಳು ||61||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಾಯಿ ನೀನು ಏತಕೆ ಎಳಿಸಿದೆ ನಿನ್ನನು ಈಗ ರಘುರಾಯಂ ತಪೋವನಕೆ ಕಳುಹಿ ಬರಹೇಳಿದಂ=[ತಾಯಿ ನೀನು ಏತಕ್ಕಾಗಿ ಅಪೇಕ್ಷೆಪಟ್ಟೆ! (ನೀನು ಏತಕ್ಕಾದರೂ ಬಯಸಿದೆಯೋ!). ನಿನ್ನನು ಈಗ ರಘುರಾಮನು ತಪೋವನಕ್ಕೆ ಕಳುಹಿಸಿ ಬರಲು ಹೇಳಿದ್ದಾನೆ.]; ಪ್ರೀಯಮ್ ಉಳ್ಳೊಡೆ ರಥಂ ಪಣ್ಣಿ ಬಂದಿದೆಕೊ ಬಿಜಯಂಗೈವುದು ಎಂದು ಮರುಗಿ ಛಾಯೆಗಾಣಿಸಿ ಸುಮಿತ್ರ ಆತ್ಮಜಂ ನುಡಿದ ಅಭಿಪ್ರಾಯಮಂ ತಿಳಿಯದೆ=[ನಿನಗೆ ಇಷ್ಟವಿದ್ದರೆ ರಥವು ಸಿದ್ಧವಾಗಿ ಬಂದಿದೆ ನೋಡು, ದಯಮಾಡಿಸಬಹದು, ಎಂದು ಅಂತರಂಗದಲ್ಲಿ ಮರುಗಿ ಆಪಾಯದ ಛಾಯೆಗಾಣಿಸಿ ಲಕ್ಷ್ಮಣನು ನುಡಿದನು. ಆದರೆ ಅವನ ಅಭಿಪ್ರಾಯವನ್ನು ತಿಳಿಯದೆ]; ಅತಿ ಸಂಭ್ರಮಾನ್ವಿತೆಯಾದಳು ಆಯತಾಂಬಕಿ ತನ್ನ ಅಭೀಷ್ಟಮಂ ಸಲಿಸುವಂ ಕಾಂತನೆಂಬ ಉತ್ಸವದೊಳು=[ ವಿಶಾಲ ಅಕ್ಷಿಯ ಸೀತೆ; ತನ್ನ ಅಪೇಕ್ಷೆಯನ್ನು ಕಾಂತನು ಸಲಿಸುತ್ತಿರುವನು ಎಂಬ ಆನಂದದಲ್ಲಿ ಬಹಳ ಸಂಭ್ರಮ ಹೊಂದಿದಳು].
  • ತಾತ್ಪರ್ಯ:ತಾಯಿ ನೀನು ಏತಕ್ಕಾಗಿ ಅಪೇಕ್ಷೆಪಟ್ಟೆ! (ನೀನು ಏತಕ್ಕಾದರೂ ಬಯಸಿದೆಯೋ!). ನಿನ್ನನು ಈಗ ರಘುರಾಮನು ತಪೋವನಕ್ಕೆ ಕಳುಹಿಸಿ ಬರಲು ಹೇಳಿದ್ದಾನೆ. ನಿನಗೆ ಇಷ್ಟವಿದ್ದರೆ ರಥವು ಸಿದ್ಧವಾಗಿ ಬಂದಿದೆ ನೋಡು, ದಯಮಾಡಿಸಬಹದು, ಎಂದು ಅಂತರಂಗದಲ್ಲಿ ಮರುಗಿ ಆಪಾಯದ ಛಾಯೆಗಾಣಿಸಿ ಲಕ್ಷ್ಮಣನು ನುಡಿದನು. ಆದರೆ ಅವನ ಅಭಿಪ್ರಾಯವನ್ನು ತಿಳಿಯದೆ, ವಿಶಾಲಕಣ್ಣಿನ ಸೀತೆ, ತನ್ನ ಅಪೇಕ್ಷೆಯನ್ನು ಕಾಂತನು ಸಲ್ಲಿಸುತ್ತಿರುವನು ಎಂಬ ಆನಂದದಲ್ಲಿ ಬಹಳ ಸಂಭ್ರಮ ಹೊಂದಿದಳು.
  • (ಪದ್ಯ-೬೧)

ಪದ್ಯ :-:೬೨:

[ಸಂಪಾದಿಸಿ]

ಅಂಬುಜಾನನೆ ಬಳಿಕ ಪಯಣಮಂ ನಿಶ್ಚೈಸಿ | ನಂಬಿದರಭೀಷ್ಟಮಂ ಸಲಿಸುವ ಕೃಪಾಳು ತಾ | ನೆಂಬುದಂ ಕಾಣಿಸಿದನಿಂದೆನ್ನ ಕಾಂತನೆನಗೆಂದು ಕೌಸಲೆಗೆ ಪೇಳ್ದು ||
ಮುಂಬರಿದೊಡಂಬಡಿಸಿ ಬಲವಂದು ಕಾಲ್ಗೆರಗಿ | ತುಂಬಿದ ಪರಕೆವೆತ್ತು ಕೈಕಯೀ ದೇವಿಗೆ ಶಿ | ರಂಬಾಗಿ ವರಸುಮಿತ್ರೆಗೆ ನಮಿಸಿ ಸಖಿಯರಂ ಸಂತೈಸಿ ಬೀಳ್ಕೊಂಡಳು ||62||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಂಬುಜಾನನೆ ಬಳಿಕ ಪಯಣಮಂ ನಿಶ್ಚೈಸಿ ನಂಬಿದರ ಅಭೀಷ್ಟಮಂ ಸಲಿಸುವ ಕೃಪಾಳು ತಾನೆಂಬುದಂ ಕಾಣಿಸಿದನು ಇಂದೆನ್ನ ಕಾಂತನು ಎನಗೆಂದು=[ಕಮಲಮುಖಿಯಾದ ಸೀತೆ ಬಳಿಕ ಪ್ರಯಾಣವನ್ನು ಮಾಡಲು ನಿಶ್ಚೈಸಿ ನಂಬಿದವರ ಅಭೀಷ್ಟವನ್ನು ಸಲ್ಲಿಸುವ ಕೃಪಾಳು ತಾನು ಎಂಬುದನ್ನು ತನ್ನ ಪತಿಯು ತೋರಿಸಿದನು ಕಾಣಿಸಿದನು ತನಗೆ ಎಂದು ಭಾವಿಸಿ,]; ಕೌಸಲೆಗೆ ಪೇಳ್ದು ಮುಂಬರಿದು ಒಡಂಬಡಿಸಿ ಬಲವಂದು ಕಾಲ್ಗೆರಗಿ ತುಂಬಿದ ಪರಕೆವೆತ್ತು ಕೈಕಯೀದೇವಿಗೆ ಶಿರಂಬಾಗಿ ವರಸುಮಿತ್ರೆಗೆ ನಮಿಸಿ ಸಖಿಯರಂ ಸಂತೈಸಿ ಬೀಳ್ಕೊಂಡಳು=[ಕೌಸಲ್ಯೆಗೆ ಹೇಳಿ ಅವಳನ್ನು ಬೇಡವೆಂದರೂ ಮುಂದುವರಿದು/ಒತ್ತಾಯದಿಂದ ಒಡಂಬಡಿಸಿ, ಪ್ರದಕ್ಷಿಣೆಮಾಡಿ ಕಾಲಿಗೆ ಎರಗಿ ಮನತುಂಬಿದ ಹರಕೆಪಡೆದು, ಕೈಕಯೀದೇವಿಗೆ ತಲೆಬಗ್ಗಿ ನಮಸ್ಕರಿಸಿ,ಪೂಜ್ಯ ಸುಮಿತ್ರೆಗೂ ನಮಿಸಿ, ಸಖಿಯರನ್ನು ದುಃಖಪಡಬೇಡಿರೆಂದು ಸಂತೈಸಿ ಎಲ್ಲರನ್ನೂ ಬೀಳ್ಕೊಂಡಳು].
  • ತಾತ್ಪರ್ಯ:ಕಮಲಮುಖಿಯಾದ ಸೀತೆ ಬಳಿಕ ಪ್ರಯಾಣವನ್ನು ಮಾಡಲು ನಿಶ್ಚೈಸಿ ನಂಬಿದವರ ಅಭೀಷ್ಟವನ್ನು ಸಲ್ಲಿಸುವ ಕೃಪಾಳು ತಾನು ಎಂಬುದನ್ನು ತನ್ನ ಪತಿಯು ತೋರಿಸಿದನು ಕಾಣಿಸಿದನು ತನಗೆ ಎಂದು ಭಾವಿಸಿ, ಕೌಸಲ್ಯೆಗೆ ಹೇಳಿ ಬೇಡವೆಂದರೂ ಮುಂದುವರಿದು/ಒತ್ತಾಯದಿಂದ ಅವಳನ್ನು ಒಡಂಬಡಿಸಿ, ಪ್ರದಕ್ಷಿಣೆಮಾಡಿ ಅವಳ ಕಾಲಿಗೆ ಎರಗಿ, ಮನತುಂಬಿದ ಹರಕೆಯನ್ನು ಪಡೆದು, ಕೈಕಯೀದೇವಿಗೆ ತಲೆಬಗ್ಗಿ ನಮಸ್ಕರಿಸಿ, ಪೂಜ್ಯ ಸುಮಿತ್ರೆಗೂ ನಮಿಸಿ, ಸಖಿಯರನ್ನು ದುಃಖಪಡಬೇಡಿರೆಂದು ಸಂತೈಸಿ ಎಲ್ಲರನ್ನೂ ಬೀಳ್ಕೊಂಡಳು.
  • (ಪದ್ಯ-೬೨)

ಪದ್ಯ :-:೬೩:

[ಸಂಪಾದಿಸಿ]

ಮಿಗೆ ತಪೋವನದ ಋಷಿಗಳ್ಗೆ ಮುನಿಪತ್ನಿಯ | ರ್ಗಗುರು ಚಂದನ ಕುಂಕುಮಾನುಲೇಪನಗಳಂ | ಬಗೆಬಗೆಯ ದಿವ್ಯಾಂಬರಗಳಂ ವಿವಿಧ ಮಣಿಭೂಷಣಸುವಸ್ತುಗಳನು ||
ತೆಗೆದು ಕಟ್ಟಿಸಿ ರಥದೊಳಿಂಬಿಟ್ಟು ರಾಮನಂ | ಘ್ರಿಗಳ ಚೆಂಬೊನ್ನ ಪಾವುಗೆಗಳಂ ತರಿಸಿಕೊಂ | ಡುಗುಮಿಗೆಯ ಹರುಷದೊಳಡರ್ದಳಂಗನೆ ಮಣಿವರೂಥಮಂ ನಿಜಮಿದೆಂದು ||63||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಿಗೆ ತಪೋವನದ ಋಷಿಗಳ್ಗೆ ಮುನಿಪತ್ನಿಯರ್ಗೆ ಅಗುರು ಚಂದನ ಕುಂಕುಮ ಅನುಲೇಪನಗಳಂ ಬಗೆಬಗೆಯ ದಿವ್ಯಾಂಬರಗಳಂ ವಿವಿಧ ಮಣಿಭೂಷಣ ಸುವಸ್ತುಗಳನು=[ಆ ನಂತರ ತಪೋವನದ ಋಷಿಗಳಿಗೆ, ಮುನಿಪತ್ನಿಯರಿಗೆ, ಅಗುರು, ಚಂದನ, ಕುಂಕುಮ,ಮೊದಲಾದ ಪರಿಮಳದ್ರವ್ಯಗಳನ್ನೂ, ಬಗೆಬಗೆಯ ದಿವ್ಯಾಂಬರಗಳನ್ನೂ, ವಿವಿಧ ಮಣಿಭೂಷಣ ಉತ್ತಮ ವಸ್ತುಗಳನ್ನೂ ]; ತೆಗೆದು ಕಟ್ಟಿಸಿ ರಥದೊಳು ಇಂಬಿಟ್ಟು ರಾಮನಂಘ್ರಿಗಳ ಚೆಂಬೊನ್ನ ಪಾವುಗೆಗಳಂ ತರಿಸಿಕೊಂಡು ಉಗುಮಿಗೆಯ ಹರುಷದೊಳು ಅಡರ್ದಳು (ಹತ್ತಿದಳು) ಅಂಗನೆ ಮಣಿವರೂಥಮಂ ನಿಜಂ ಇದೆಂದು=[ತೆಗೆದು ಕಟ್ಟಿಸಿ ರಥದಲ್ಲಿ ಜೋಡಿಸಿ, ರಾಮನಪಾದಗಳ ಚಿನ್ನದ ಪಾದುಕೆಗಳನ್ನು ತರಿಸಿಕೊಂಡು ನಿಜಕ್ಕೂ ಆಶ್ರಮಕ್ಕೆ ಹೋಗುತ್ತಿರುವುದಾಗಿ ನಂಬಿ ಉಕ್ಕುತ್ತಿರುವ ಹರುಷದಲ್ಲಿ ಸೀತಾದೇವಿ ಮಣಿಮಯ ರಥವನ್ನು ಹತ್ತಿದಳು.]
  • ತಾತ್ಪರ್ಯ:ಆ ನಂತರ ತಪೋವನದ ಋಷಿಗಳಿಗೆ, ಮುನಿಪತ್ನಿಯರಿಗೆ, ಅಗರು, ಚಂದನ, ಕುಂಕುಮ,ಮೊದಲಾದ ಪರಿಮಳದ್ರವ್ಯಗಳನ್ನೂ, ಬಗೆಬಗೆಯ ದಿವ್ಯಾಂಬರಗಳನ್ನೂ, ವಿವಿಧ ಮಣಿಭೂಷಣ ಉತ್ತಮ ವಸ್ತುಗಳನ್ನೂ ತೆಗೆದು ಕಟ್ಟಿಸಿ ರಥದಲ್ಲಿ ಜೋಡಿಸಿ, ರಾಮನಪಾದಗಳ ಚಿನ್ನದ ಪಾದುಕೆಗಳನ್ನು ತರಿಸಿಕೊಂಡು ನಿಜಕ್ಕೂ ಆಶ್ರಮಕ್ಕೆ ಹೋಗುತ್ತಿರುವುದಾಗಿ ನಂಬಿ ಉಕ್ಕುತ್ತಿರುವ ಹರುಷದಲ್ಲಿ ಸೀತಾದೇವಿ ಮಣಿಮಯ ರಥವನ್ನು ಹತ್ತಿದಳು.
  • (ಪದ್ಯ-೬೩)

ಪದ್ಯ :-:೬೩:

[ಸಂಪಾದಿಸಿ]

ಅಗ್ರಜಂ ತರಿಸಂದು (ತರಿಸೆಂದು) ತನ್ನೊಳಾಡಿದ ಕಜ್ಜ | ದುಗ್ರಮಂ ಬನಕೆ ಪೋದಪೆನೆಂಬ ದೇವಿಯ ಸ | ಮಗ್ರಸಂತೋಷಮಂ ಕಂಡು ಸೌಮಿತ್ರಿ ಮನದೊಳ್ ಮರುಗಿ ಕಂಬನಿಯನು ||
ನಿಗ್ರಹಿಸಿಕೊಂಡು ಸಾರಥಿಗೆ ಸೂಚನೆಗೈದು | ವ್ಯಗ್ರದಿಂದೈದಿಸಿದನಾರಥವನಾಗ ದೇ | ವಗ್ರಾಮನಿಲಯ ಲಕ್ಷ್ಮೀಶನುಂಗುಟದೊಳೊಗೆದಮಲಜಾಹ್ನವಿಯ ತಡಿಗೆ ||64||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಗ್ರಜಂ ತರಿಸು (ತರಿಸು = ಕಡಿಸು/ ತಲೆಯನ್ನು ತರಿ / ಕಡಿ,) ಎಂದು/ಅಂದು ತನ್ನೊಳಾಡಿದ ಕಜ್ಜದು ಉಗ್ರಮಂ ಬನಕೆ ಪೋದಪೆನು ಎಂಬ ದೇವಿಯ ಸಮಗ್ರ ಸಂತೋಷಮಂ ಕಂಡು=[ಅಣ್ಣ ರಾಮನು, "ತರಿ" (ತಲೆಯನ್ನು ಕಡಿ) ಎಂದು ಹೇಳಿದಂತೆ ಆಗಿದೆ, ಅಂದು ತನ್ನೊಡನೆ ಹೇಳಿದ ಕಾರ್ಯದ ಉಗ್ರತೆಯನ್ನು ನೆನೆದು, ತಪೋವನಕ್ಕೆ ಹೋಗುವೆನು ಎಂಬ ಸೀತಾದೇವಿಯ ಅತಿಯಾದ ಸಂತೋಷಮಂ ಕಂಡು]; ಸೌಮಿತ್ರಿ ಮನದೊಳ್ ಮರುಗಿ ಕಂಬನಿಯನು ನಿಗ್ರಹಿಸಿಕೊಂಡು ಸಾರಥಿಗೆ ಸೂಚನೆ ಗೈದು ವ್ಯಗ್ರದಿಂದ=[ಸುಮಿತ್ರೆಯ ಮಗ ಲಕ್ಷ್ಮಣ ಕಂಡು, ಮನಸ್ಸಿನಲ್ಲಿ ಮರುಗಿ ಉಕ್ಕುತ್ತಿರುವ ಕಣ್ಣೀರನ್ನು ನಿಗ್ರಹಿಸಿಕೊಂಡು, ಸಾರಥಿಗೆ ಗಂಗಾತಟದ ಕಾಡಿನ ದಾರಿಗೆ ಹೋಗಲು ಸೂಚನೆ ಕೊಟ್ಟು ಉದ್ವೇಗದಿಂದ]; ಐದಿಸಿದನು (ಐದು-ಕ್ರಿಯಾಪದ =ಬರು, ಹೋಗು) ಆರಥವನು ಆಗ ದೇವಗ್ರಾಮನಿಲಯ ಲಕ್ಷ್ಮೀಶನ ಅಂಗುಟದೊಳು ಒಗೆದ ಅಮಲಜಾಹ್ನವಿಯ ತಡಿಗೆ=[(ಐದಿಸಿದನು->) ಆಗ ಆ ರಥವನ್ನು ದೇವಗ್ರಾಮನಿಲಯ ಲಕ್ಷ್ಮೀಶನ ಕಾಲು ಹೆಬ್ಬರಳಲ್ಲಿ ಹುಟ್ಟಿದ ಪವಿತ್ರವಾದ ಗಂಗೆಯ ತೀರಕ್ಕೆ ತಲುಪಿಸಿದನು.]
  • ತಾತ್ಪರ್ಯ:ಅಣ್ಣ ರಾಮನು, "ತರಿ" (ತಲೆಯನ್ನು ಕಡಿ) ಎಂದು ಹೇಳಿದಂತೆ ಆಗಿದೆ ಅಂದು ತನ್ನೊಡನೆ ಹೇಳಿದ ಕಾರ್ಯದ ಉಗ್ರತೆಯನ್ನು ನೆನೆದು, ತಪೋವನಕ್ಕೆ ಹೋಗುವೆನು ಎಂಬ ಸೀತಾದೇವಿಯ ಅತಿಯಾದ ಸಂತೋಷವನ್ನು ಸುಮಿತ್ರೆಯ ಮಗ ಲಕ್ಷ್ಮಣನು ಕಂಡು, ಮನಸ್ಸಿನಲ್ಲಿ ಮರುಗಿ ಉಕ್ಕುತ್ತಿರುವ ಕಣ್ಣೀರನ್ನು ನಿಗ್ರಹಿಸಿಕೊಂಡು, ಸಾರಥಿಗೆ ಗಂಗಾತಟದ ಕಾಡಿನ ದಾರಿಗೆ ಹೋಗಲು ಸೂಚನೆ ಕೊಟ್ಟು ಉದ್ವೇಗದಿಂದ, ಆಗ ಆ ರಥವನ್ನು ದೇವಗ್ರಾಮನಿಲಯ ಲಕ್ಷ್ಮೀಶನ ಕಾಲು ಹೆಬ್ಬರಳಲ್ಲಿ ಹುಟ್ಟಿದ ಪವಿತ್ರವಾದ ಗಂಗೆಯ ತೀರಕ್ಕೆ ತಲುಪಿಸಿದನು.
  • (ಪದ್ಯ-೬೩)X-X
  • []
  • []
  • ಸಂಧಿ ೧೮ಕ್ಕೆ ಪದ್ಯಗಳು:೯೩೩.
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.