ವಿಷಯಕ್ಕೆ ಹೋಗು

ಜೈಮಿನಿ ಭಾರತ/ಎಂಟನೆಯ ಸಂಧಿ

ವಿಕಿಸೋರ್ಸ್ದಿಂದ

ಎಂಟನೆಯ ಸಂಧಿ

[ಸಂಪಾದಿಸಿ]

ಪದ್ಯ :-:ಸೂಚನೆ |:

[ಸಂಪಾದಿಸಿ]

ಸೂಚನೆ : ಅದ್ವರೋಪಕ್ರಮದೊಳಮಲಹಯಮೈದೆ ನೀ | ಲಧ್ವಜನ ಪಟ್ಟಣದೊಳಗ್ನಿಯಂ ಕಂಡರಿಬ | ಲಧ್ವಂಸಿ ಪಾರ್ಥನವನಂ ಜಯಿಸೆ ಭಂಗದಿಂ ತನ್ನ ಪುರಮಂ ಪೊಕ್ಕನು ||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸೂಚನೆ :ಅದ್ವರ ಉಪಕ್ರಮದೊಳು ಅಮಲಹಯಮೈದೆ ನೀಲಧ್ವಜನ ಪಟ್ಟಣದೊಳು=[ಯಜ್ಞದ ಆರಂಭದಲ್ಲಿ ನೀಲಧ್ವಜನ ಪಟ್ಟಣದೊಳಗೆ ನಿರ್ಮಲವಾದ ಕುದುರೆಯು ಬರಲು]; ಅಗ್ನಿಯಂ ಕಂಡು ಅರಿಬಲಧ್ವಂಸಿ ಪಾರ್ಥನು ಅವನಂ ಜಯಿಸೆ ಭಂಗದಿಂ ತನ್ನ ಪುರಮಂ ಪೊಕ್ಕನು=[ಶತ್ರು ಸೈನ್ಯವನ್ನು ನಾಶಮಾಡುವವನಾದ ಪಾರ್ಥನು ಅಗ್ನಿಯನ್ನು ಕಂಡು ಅವನನ್ನು ಒಲಿಸಿಕೊಂಡು, ನೀಲಧ್ವಜನನ್ನು ಜಯಿಸಲು ಅವಮಾನದಿಂದದಿಂ ತನ್ನ ಪುರವನ್ನು ಹೊಕ್ಕನು].
  • ತಾತ್ಪರ್ಯ: ಯಜ್ಞದ ಆರಂಭದಲ್ಲಿ ನೀಲಧ್ವಜನ ಪಟ್ಟಣದೊಳಗೆ ನಿರ್ಮಲವಾದ ಕುದುರೆಯು ಬರಲು, ಶತ್ರು ಸೈನ್ಯವನ್ನು ನಾಶಮಾಡುವವನಾದ ಪಾರ್ಥನು ಅಗ್ನಿಯನ್ನು ಕಂಡು ಅವನನ್ನು ಒಲಿಸಿಕೊಂಡು, ನೀಲಧ್ವಜನನ್ನು ಜಯಿಸಲು ಅವನು ಅವಮಾನದಿಂದದಿಂ ತನ್ನ ಪುರವನ್ನು ಹೊಕ್ಕನು.

(ಪದ್ಯ - ಸೂಚನೆ) VI-VIII

ಪದ್ಯ :-:೧:

[ಸಂಪಾದಿಸಿ]

ರಾಯ ಕೇಳನುಸಾಲ್ವನಂ ಕೂಡಿಕೊಂಡು ಕಮ | ಲಾಯತಾಂಬಕನಖಿಳಯಾದವರ ಗಡಣದಿಂ | ದಾ ಯುಧಿಷ್ಠಿರನೃಪನ ಸನ್ಮಾನಮಂ ತಳೆಯತಿರೆ ಜಾಹ್ನವೀತಟದೊಳು ||
ಆಯಿತಧ್ವರಶಾಲೆ ಶಾಸ್ತ್ರವಿಶ್ರುತದ ವಿವಿ | ಧಾಯತ ವಿಚಿತ್ರ ವೈಭವದಿಂದೆ ಬಳಿಕಾ ಮ | ಹಾ ಯಾಗದನುಪಮ ಪ್ರಾರಂಭಕಾಲದ ವಸಂತರ್ತು ಸಂಭಿವಿಸಿತು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಯ ಕೇಳು ಅನುಸಾಲ್ವನಂ ಕೂಡಿಕೊಂಡು ಕಮಲಾಯತಾಂಬಕನು=[ಜನಮೇಜಯರಾಯನೇ ಕೇಳು, ಅನುಸಾಲ್ವನಂ ಕೂಡಿಕೊಂಡು ಕೃಷ್ಣನು]; ಅಖಿಳಯಾದವರ ಗಡಣದಿಂದ ಆ ಯುಧಿಷ್ಠಿರನೃಪನ ಸನ್ಮಾನಮಂ ತಳೆಯತಿರೆ ಜಾಹ್ನವೀತಟದೊಳು=[ಎಲ್ಲಾ ಯಾದವರ ಗಡಣದಿಂದ ಆ ಯುಧಿಷ್ಠಿರರಾಜನಿಂದ ಉಪಚಾರವನ್ನು ಪಡೆಯುತ್ತಿರಲು, ಗಂಗಾನದಿಯ ತಟದಲ್ಲಿ]; ಆಯಿತು ಅಧ್ವರಶಾಲೆ ಶಾಸ್ತ್ರವಿಶ್ರುತದ ವಿವಿಧಾಯತ ವಿಚಿತ್ರ ವೈಭವದಿಂದೆ=[ಅಧ್ವರಶಾಲೆ ಶಾಸ್ತ್ರದಂತೆ ವಿವಿಧ ಆಯತ(ಆಕಾರ೦ ವಿಚಿತ್ರ ವೈಭವದಿಂದೆ ತಯಾರಾಯಿತು.] ಬಳಿಕಾ ಮಹಾ ಯಾಗದ ಅನುಪಮ ಪ್ರಾರಂಭಕಾಲದ ವಸಂತರ್ತು ಸಂಭಿವಿಸಿತು]=[ಬಳಿಕ ಆ ಮಹಾ ಯಾಗದ ಅನುಪಮ/ ಉತ್ತಮ ಮುಹೂರ್ತದ ಪ್ರಾರಂಭಕಾಲವಾದ ವಸಂತ ಋತು ಬಂದಿತು.
  • ತಾತ್ಪರ್ಯ: ಜನಮೇಜಯರಾಯನೇ ಕೇಳು, ಅನುಸಾಲ್ವನಂ ಕೂಡಿಕೊಂಡು ಕೃಷ್ಣನು ಎಲ್ಲಾ ಯಾದವರ ಗಡಣದಿಂದ ಆ ಯುಧಿಷ್ಠಿರರಾಜನಿಂದ ಉಪಚಾರವನ್ನು ಪಡೆಯುತ್ತಿರಲು, ಗಂಗಾನದಿಯ ತಟದಲ್ಲಿ ಅಧ್ವರಶಾಲೆ ಶಾಸ್ತ್ರದಂತೆ ವಿವಿಧ ಆಯತ(ಆಕಾರ) ವಿಚಿತ್ರ ವೈಭವದಿಂದೆ ತಯಾರಾಯಿತು. ಬಳಿಕ ಆ ಮಹಾ ಯಾಗದ ಅನುಪಮ/ ಉತ್ತಮ ಮುಹೂರ್ತದ ಪ್ರಾರಂಭ ಕಾಲವಾದ ವಸಂತ ಋತು ಬಂದಿತು.

(ಪದ್ಯ - ೧)

ಪದ್ಯ :-:೨:

[ಸಂಪಾದಿಸಿ]

ಒಂದೆಡೆಯೊಳಂ ತನಗೆ ನಿಲವಿಲ್ಲದತಿವೇಗ | ದಿಂದೆ ನಿರುತಂ ಪ್ರಬಲಮಾಗಿ ಬೀಸುವ ಗಾಳಿ | ಚಂದನದ್ರುಮಮಂ ತೊಡರ್ದಹಿಗಳಾಹಾರವಂ ಕೊಂಡುಕೊಂಡು ಮಿಕ್ಕು ||
ಮಂದತ್ವಮಂ ತಳೆದು ಮಲಯಾಚಲದ ಸೀಮೆ | ಯಿಂದೆ ಸರಸಿಜದೊಳ್ ಭ್ರಮಿಸುವ ಮರಿದುಂಬಿಗಳ | ವೃಂದಮಂ ಕೂಡಿಕೊಂಡಳೆವೆಲರ್ ಬಂದುದು ವಿರಹಿಗಳೆದೆಯಾರುವಂತೆ ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಒಂದೆಡೆಯೊಳಂ ತನಗೆ ನಿಲವಿಲ್ಲದೆ ಅತಿವೇಗದಿಂದೆ ನಿರುತಂ(ಸದಾ) ಪ್ರಬಲಮಾಗಿ ಬೀಸುವ ಗಾಳಿ=[ಒಂದುಕಡೆಯೂ ತನಗೆ ನಿಲ್ಲುವ ಅವಕಾಶವಿಲ್ಲದೆ ಅತಿವೇಗದಿಂದೆ ಸದಾ ಪ್ರಬಲಮಾಗಿ ಬೀಸುವ ಗಾಳಿ] ಚಂದನದ್ರುಮಮಂ ತೊಡರ್ದ ಅಹಿಗಳು ಆಹಾರವಂ ಕೊಂಡುಕೊಂಡು ಮಿಕ್ಕು ಮಂದತ್ವಮಂ ತಳೆದು=[ಚಂದನಮರವನ್ನು ಸುತ್ತಿರುವ ಹಾವುಗಳು ಈ ಗಾಳಿಯ ಆಹಾರವನ್ನು ಸೇವಿಸಿಕೊಂಡು ನಂತರ ಅದನ್ನು ಬಿಟ್ಟಾಗ ಅದು ಮಂದತ್ವವನ್ನು (ನಿಧಾನಗತಿಯನ್ನು) ತಳೆದು] ಮಲಯಾಚಲದ ಸೀಮೆ ಯಿಂದೆ ಸರಸಿಜದೊಳ್ ಭ್ರಮಿಸುವ ಮರಿದುಂಬಿಗಳ ವೃಂದಮಂ ಕೂಡಿಕೊಂಡ ಎಳೆವೆಲರ್ ಬಂದುದು ವಿರಹಿಗಳೆದೆಯು ಆರುವಂತೆ=[ಮಲಯಾಚಲ/ ಬೆಟ್ಟದ ಸೀಮೆಯಿಂದೆ ಸರೋವರದಲ್ಲಿ ಭ್ರಮಿಸುವ ಮರಿದುಂಬಿಗಳ ಗುಂಪನ್ನು ಕೂಡಿಕೊಂಡ ಮಂದಮಾರುತವು ಬಂದಿತು; ಅದು ವಿರಹಿಗಳ ಎದೆಯು ಪ್ರಿಯರನ್ನು ನೆನೆದು ಸಿಗದೆ ಸಂಕಟದ ಬಿಸಿಯಿಂದ ಆರುವಂತೆ ಇತ್ತು.]
  • ತಾತ್ಪರ್ಯ: (ಚೈತ್ರಮಾಸದ ಮಂದ ಮಾರುತದ ವರ್ಣನೆ:: ತಂಪಾದ ಮಂದಮಾರುತದಿಂದ ವಿರಹಿಗಳ ಎದೆ ಬಿಸಿಯಾಗಿ ಆರುವಂತಿತ್ತು- ಎನ್ನುವ ಉಪಮಾನ):: ಒಂದುಕಡೆಯೂ ತನಗೆ ನಿಲ್ಲುವ ಅವಕಾಶವಿಲ್ಲದೆ ಅತಿವೇಗದಿಂದೆ ಸದಾ ಪ್ರಬಲಮಾಗಿ ಬೀಸುವ ಗಾಳಿ, ಚಂದನಮರವನ್ನು ಸುತ್ತಿರುವ ಹಾವುಗಳು ಈ ಗಾಳಿಯ ಆಹಾರವನ್ನು ಸೇವಿಸಿಕೊಂಡು ನಂತರ ಅದನ್ನು ಬಿಟ್ಟಾಗ ಅದು ಮಂದತ್ವವನ್ನು (ನಿಧಾನಗತಿಯನ್ನು) ತಳೆದು ಮಲಯಾಚಲ/ ಬೆಟ್ಟದ ಸೀಮೆಯಿಂದೆ ಸರೋವರದಲ್ಲಿ ಭ್ರಮಿಸುವ ಮರಿದುಂಬಿಗಳ ಗುಂಪನ್ನು ಕೂಡಿಕೊಂಡ ತಂಪಾದ ಮಂದಮಾರುತವು ಬಂದಿತು; ಅದು ವಿರಹಿಗಳ ಎದೆಯು, ಪ್ರಿಯರನ್ನು ನೆನೆದು ಸಿಗದೆ ಸಂಕಟದ ಬಿಸಿಯಿಂದ ಆರುವಂತೆ ಮಾಡುವಹಾಗೆ ಇತ್ತು.

(ಪದ್ಯ - ೨)(If I am right)

ಪದ್ಯ :-:೩:

[ಸಂಪಾದಿಸಿ]

ಮಿರುಗುವ ತಳಿರ್ದೋರಣಂಗಳಂ ಕಟ್ಟಿಸುತೆ | ಮರಿಗೋಗಿಲೆಗಳ ಬಾಯ್ಗಳ ಬಲಿದ ಬಂಧನದ | ಸೆರೆಗಳಂ ಬಿಡಿಸುತ್ತೆ ತುಂಬಿಗಳ ದಳಕೆ ಕಮ್ಮಲರ್ಗಳಂ ಸೂರೆವಿಡುತೆ ||
ಕಿರುವೆಲರೊಳೆತ್ತಲುಂ ಸಾರಿಸುತೆ ವಿರಹಿಗಳ | ನೆರಗಿಸುತೆ ಜೊನ್ನದ ಜಸಂ ಪೆರ್ಚೆ ಮಧುನೃಪಂ | ಪೊರಮುಟ್ಟು ಮಾಗಿಯನ್ನುಡುಗಿಸಿ ಸಮಸ್ತ ವನರಾಷ್ಟ್ರಮಂ ಕೈಕೊಂಡನು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಿರುಗುವ ತಳಿರ್ದೋರಣಂಗಳಂ ಕಟ್ಟಿಸುತೆ ಮರಿಗೋಗಿಲೆಗಳ ಬಾಯ್ಗಳ ಬಲಿದ ಬಂಧನದ ಸೆರೆಗಳಂ ಬಿಡಿಸುತ್ತೆ=[ಹೊಳೆಯುವ ಮರಗಳತಳಿರ/ ಚಿಗುರಿನ ತೋರಣಗಳನ್ನು ಕಟ್ಟಿಸುತ್ತಾ(ಆಗ ಮರಗಳು ಚಿಗುರುತ್ತವೆ) ಮರಿಗೋಗಿಲೆಗಳ ಬಾಯಿಗೆ ಹಾಕಿದ ಬಂಧನದ ಸೆರೆಗಳನ್ನು ಬಿಡಿಸುತ್ತಾ (ಹಕ್ಕಿಗಳು ಹಾಡುವಂತೆ ಮಾಡುತ್ತಾ)]; ತುಂಬಿಗಳ ದಳಕೆ ಕಮ್ಮಲರ್ಗಳಂ ಸೂರೆವಿಡುತೆ ಕಿರು ಎಲರೊಳ್ ಎತ್ತಲುಂ ಸಾರಿಸುತೆ ವಿರಹಿಗಳ ನೆರಗಿಸುತೆ ಜೊನ್ನದ ಜಸಂ ಪೆರ್ಚೆ=[ತುಂಬಿಗಳ/ ಜೇನುಗಳ ಗುಂಪಿಗೆ ಕಂಪಿನ ಹೂವುಗಳನ್ನು ರಾಸಿರಾಸಿಯಾಗಿ ಕೊಡುತ್ತಾ, ಎಲ್ಲಾಕಡೆ ಮಂದವಾದ ತಂಗಾಳಿ ಹರಡುತ್ತಾ ವಿರಹಿಗಳನ್ನು ಒಟ್ಟುಗೂಡಿಸುತ್ತಾ ಬೆಳುದಿಂಗಳ ಪ್ರಭಾವ ಹೆಚ್ಚಿ]; ಮಧುನೃಪಂ ಪೊರಮುಟ್ಟು ಮಾಗಿಯನ್ನುಡುಗಿಸಿ ಸಮಸ್ತ ವನರಾಷ್ಟ್ರಮಂ ಕೈಕೊಂಡನು.=[ಮಧುಮಾಸವೆಂಬ ರಾಜನು ಹೊರಹೊರಟು ಚಳಿಗಾಲವನ್ನು ಇಲ್ಲದಂತೆಮಾಡಿ ಸಮಸ್ತ ವನರಾಷ್ಟ್ರವನ್ನು ಆಕ್ರಮಿಸಿದನು.]
  • ತಾತ್ಪರ್ಯ: (ಮಧುಮಾಸ ವೆಂಬ ವಸಂತ ಋತುವಿಗೆ ರಾಜನ ರೂಪಕ): ಹೊಳೆಯುವ ಮರಗಳತಳಿರ/ ಚಿಗುರಿನ ತೋರಣಗಳನ್ನು ಕಟ್ಟಿಸುತ್ತಾ(ಆಗ ಮರಗಳು ಚಿಗುರುತ್ತವೆ) ಮರಿಗೋಗಿಲೆಗಳ ಬಾಯಿಗೆ ಹಾಕಿದ ಬಂಧನದ ಸೆರೆಗಳನ್ನು ಬಿಡಿಸುತ್ತಾ (ಹಕ್ಕಿಗಳು ಹಾಡುವಂತೆ ಮಾಡುತ್ತಾ); ತುಂಬಿಗಳ/ ಜೇನುಗಳ ಗುಂಪಿಗೆ ಕಂಪಿನ ಹೂವುಗಳನ್ನು ರಾಸಿರಾಸಿಯಾಗಿ ಕೊಡುತ್ತಾ, ಎಲ್ಲಾಕಡೆ ಮಂದವಾದ ತಂಗಾಳಿ ಹರಡುತ್ತಾ ವಿರಹಿಗಳನ್ನು ಒಟ್ಟುಗೂಡಿಸುತ್ತಾ ಬೆಳುದಿಂಗಳ ಪ್ರಭಾವ ಹೆಚ್ಚಿ, ಮಧುಮಾಸವೆಂಬ ರಾಜನು ಹೊರಹೊರಟು ಚಳಿಗಾಲವನ್ನು ಇಲ್ಲದಂತೆಮಾಡಿ ಸಮಸ್ತ ವನವೆಮಬ ರಾಷ್ಟ್ರವನ್ನು ಆಕ್ರಮಿಸಿದನು.

(ಪದ್ಯ - ೩)

ಪದ್ಯ :-:೪:

[ಸಂಪಾದಿಸಿ]

ಫೊಸಮಾವಶೋಕೆಯೊಳ್ ಮರಿದುಂಬಿ ಕೋಗಿಲೆಯೊ | ಳೆಸೆವ ಸಂಪಗೆ ಪೊಚ್ಪ ಪೊಂದಾವರೆಯೊಳೊಳ್ಪವ| ಡಸಿದ ಮಲ್ಲಿಗೆಯಲರ್ ಬೆಳತ ಬೆಳ್ದಿಂಗಳೊಳ್ ಗಿಳಿವಿಂಡು ಬನಸಿರಿಯೊಳು ||
ಎಸೆದುವೊಂದೊಂದರೊಳ್ ಮದುಮಾಸಕಂಗಜನ | ದೆಸೆಯಂತೆ ಖತಿಯಂತೆ ಧನದಂತೆ ಜಸದಂತೆ | ಪಸುರ್ವೆಳಸಿನಂತೆ ಕೆಂಪಸಿತಂ ಪಳದಿ ಪಳುಕುಪಚ್ಚೆಗಳ ಬಣ್ಣದಿಂದೆ ||4|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ( ಚೈತ್ರಮಾಸವು ಬರಲು,)ಫೊಸಮಾವು ಅಶೋಕೆಯೊಳ್ ಮರಿದುಂಬಿ ಕೋಗಿಲೆಯೊಳು ಎಸೆವ ಸಂಪಗೆ ಪೊಚ್ಪ ಪೊಂದಾವರೆಯೊಳೊಳ್=[ಮಾವಿನ ಮರದಲ್ಲಿ ಹೊಸತು ಚಿಗರು:ಕೆಂಪು,ಶೋಕವಿಲ್ಲದ ಸಂತಸಕೊಡುವುದು, ಕೋಗಿಲೆಯ ಹಾಡಿನಲ್ಲಿ ಮರಿದುಂಬಿಯ ಝೇಂಕಾರ ಸೇರಿದೆ, ಎಲ್ಲೆಡೆ ಕಾಣುವ ಸಂಪಗೆ ಹೂವುಗಳು, ಹೊಸ ಹೊನ್ನಿನ ತಾವರೆಯ ಹೂವಿನಲ್ಲಿ,]; ಪವಡಸಿದ ಮಲ್ಲಿಗೆಯಲರ್ ಬೆಳತ ಬೆಳ್ದಿಂಗಳೊಳ್ ಗಿಳಿವಿಂಡು ಬನಸಿರಿಯೊಳು ಎಸೆದುವು, ಒಂದೊಂದರೊಳ್ ಮದುಮಾಸಕೆ ಅಂಗಜನ ದೆಸೆಯಂತೆ ಖತಿಯಂತೆ ಧನದಂತೆ ಜಸದಂತೆ=[ಎಲ್ಲೆಡೆ ಅರಳಿದ ಮಲ್ಲಿಗೆಯ ಹೂವಿನ ಬಿಳಿಪು, ಬಹಳತುಂಬಿದ ಬೆಳ್ದಿಂಗಳಲ್ಲಿ, ವನದಸಿರಿಸಂಪತ್ತಿನಲ್ಲಿ ಗಿಳಿಗಳ ಹಿಂಡು, ಇವುಗಳಲ್ಲಿ ಎಸೆದುವು ಒಂದೊಂದರಲ್ಲಿ ಒಂದೊಂದರಂತೆ ಮದುಮಾಸಕ್ಕೆ ಪ್ರೇಮದೇವತೆ ಅಂಗಜನಾದ ಮನ್ಮಥನು ಅಲ್ಲಿ ಇರುವಿಕೆಯಂತೆ ಅರುಣಬಣ್ಣವೂ,(ಅಥವಾ ಸಂಧ್ಯಾ ದಿಕ್ಕಿನಂತೆ) ಕೋಗಿಲೆ ಮರಿದುಂಬಿಗಳಂತೆ ತಮಸ್ಸಿನ ಸಿಟ್ಟಿನ(ಖತಿ)ನಂತೆಯೂ ಕಂಡವು;, ಕಮಲದ ಬಂಗಾರದ(ಧನ)ಬಣ್ಣದಂತೆಯೂ, ಬೆಳುದಿಂಗಳಂತೆ (ಜಸ)ಯಶಪ್ರದವಾಗಿಯೂ ಕಂಡವು];ಪಸುರ್ ಎಳಸಿನಂತೆ ಕೆಂಪು ಅಸಿತಂ ಪಳದಿ ಪಳುಕು ಪಚ್ಚೆಗಳ ಬಣ್ಣದಿಂದೆ=[ಹೇಗೆಂದರೆ ಪಂಚವರ್ಣಗಳಲ್ಲಿ - ಎಳೆಚಿಗುರಿನ ಹಸಿರು ಕೆಂಪು ಸಿತ/ ಬಿಳಿಪು, ಹಳದಿ ಪಳುಕು/ಮಿರುಗುವ ಪಚ್ಚೆ /ಹಸಿರು ಬಣ್ಣಗಳಿಂದ ಮಧುಮಾಸ ಕಂಗೊಳಿಸಿತು ].
  • ತಾತ್ಪರ್ಯ: ( ಚೈತ್ರಮಾಸವು ಬರಲು,) ಮಾವಿನ ಮರದಲ್ಲಿ ಹೊಸತು ಚಿಗರು:ಕೆಂಪು,ಶೋಕವಿಲ್ಲದ ಸಂತಸಕೊಡುವುದು, ಕೋಗಿಲೆಯ ಹಾಡಿನಲ್ಲಿ ಮರಿದುಂಬಿಯ ಝೇಂಕಾರ ಸೇರಿದೆ, ಎಲ್ಲೆಡೆ ಕಾಣುವ ಸಂಪಗೆ ಹೂವುಗಳು, ಹೊಸ ಹೊನ್ನಿನ ತಾವರೆಯ ಹೂವಿನಲ್ಲಿ; ಎಲ್ಲೆಡೆ ಅರಳಿದ ಮಲ್ಲಿಗೆಯ ಹೂವಿನ ಬಿಳಿಪು, ಬಹಳತುಂಬಿದ ಬೆಳ್ದಿಂಗಳಲ್ಲಿ, ವನದಸಿರಿಸಂಪತ್ತಿನಲ್ಲಿ ಗಿಳಿಗಳ ಹಿಂಡು, ಇವುಗಳಲ್ಲಿ ಎಸೆದುವು ಒಂದೊಂದರಲ್ಲಿ ಒಂದೊಂದರಂತೆ ಮದುಮಾಸಕ್ಕೆ ಪ್ರೇಮದೇವತೆ ಅಂಗಜನಾದ ಮನ್ಮಥನು ಅಲ್ಲಿ ಇರುವಿಕೆಯಂತೆ ಅರುಣಬಣ್ಣವೂ,(ಅಥವಾ ಸಂಧ್ಯಾ ದಿಕ್ಕಿನಂತೆ) ಕೋಗಿಲೆ ಮರಿದುಂಬಿಗಳಂತೆ ತಮಸ್ಸಿನ ಸಿಟ್ಟಿನ(ಖತಿ)ನಂತೆಯೂ ಕಂಡವು;, ಕಮಲದ ಬಂಗಾರದ(ಧನ)ಬಣ್ಣದಂತೆಯೂ, ಬೆಳುದಿಂಗಳಂತೆ (ಜಸ)ಯಶಪ್ರದವಾಗಿಯೂ ಕಂಡವು; ಹೇಗೆಂದರೆ ಪಂಚವರ್ಣಗಳಲ್ಲಿ - ಎಳೆಚಿಗುರಿನ ಹಸಿರು ಕೆಂಪು ಸಿತ/ ಬಿಳಿಪು, ಹಳದಿ ಪಳುಕು/ಮಿರುಗುವ ಪಚ್ಚೆ /ಹಸಿರು ಬಣ್ಣಗಳಿಂದ ಮಧುಮಾಸ ಕಂಗೊಳಿಸಿತು .

(ಪದ್ಯ - ೪)

ಪದ್ಯ :-:೫:

[ಸಂಪಾದಿಸಿ]

ತಳಿತೆಸೆವ ತರುಗಳ ನೆಳಲ್ಗಳಂ ಸಾರ್ದು ಶೀ | ತಳದ ನಿರ್ಮಲಸುವಾರಿಯನೀಂಟಿ ನವ್ಯಪರಿ| ಮಳದಿಂದೆ ಸೊಗಸ ತೀಡುವ ತೆಳುವೆಲರ್ಗೆ ಮೆಯ್ಯೊಡ್ಡಿ ಮಾರ್ಗಶ್ರಮವನು ||
ಕಳೆದರಧ್ವಗರೋಪದೊಳ್ ನೆರೆದು ವಿರಹಿಗಳ್ | ಮಲಯಜದ ಘನಸಾರದೊಳ್ ತಂಪುವೆತ್ತು ನಿ | ಚ್ಚಳದ ಕರುವಾಡದೊಳ್ ಭೋಗಿಸಿದರಂದು ಚೈತ್ರಾಗಮದ ಸಂಭ್ರಮದೊಳು ||೫||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಳಿತು ಎಸೆವ ತರುಗಳ ನೆಳಲ್ಗಳಂ ಸಾರ್ದು ಶೀತಳದ ನಿರ್ಮಲಸುವಾರಿಯನು ಈಂಟಿ=[ಚಿಗುರಿ ಶೋಭಸುವ ಮರಗಳ ನೆಳಲನ್ನು ಸಾರಿ, ತಣ್ಣನೆಯ ನಿರ್ಮಲವಾದ ವೀರನ್ನು ಕುಡಿದು]; ನವ್ಯಪರಿಮಳದಿಂದೆ ಸೊಗಸ ತೀಡುವ ತೆಳುವ ಅಲರ್ಗೆ ಮೆಯ್ಯೊಡ್ಡಿ ಮಾರ್ಗಶ್ರಮವನು ಕಳೆದರು ಅಧ್ವಗರು(ಪಯಣಿಗರು)=[ಹೊಸ ಪರಿಮಳದಿಂದ ಸೊಗಸನನ್ನು ಕೊಡುವ(ಹಚ್ಚುವ) ತಂಗಾಳಿಗೆ ಮೆಯ್ಯೊಡ್ಡಿ ಮಾರ್ಗದ ಆಯಾಸವನ್ನು ಪಯಣಿಗರು ಕಳೆದರು.]; ಓಪದೊಳ್(ಪ್ರೀತಿಯಿಂದ) ನೆರೆದು ವಿರಹಿಗಳು ಮಲಯಜದ ಘನಸಾರದೊಳ್ ತಂಪುವೆತ್ತು ನಿಚ್ಚಳದ ಕರುವಾಡದೊಳ್ ಭೋಗಿಸಿದರು ಅಂದು ಚೈತ್ರಾಗಮದ ಸಂಭ್ರಮದೊಳು=[ಪ್ರೀತಿಯಿಂದ ಅಗಲಿದ ವಿರಹಿಗಳು ಒಟ್ಟುಸೇರಿ ಬೆಟ್ಟದಿಂದ ಬೀಸುವ ಸುವಾಸನೆಯ ತಂಪುಗಾಳಿಯನ್ನು ಅಂದಿನ ಚೈತ್ರಮಾಸದ ಆಗಮನವಾದಾಗ ಸಂಭ್ರಮದಿಂದ ಮನೆಯ ಬಿಸಿಲು ಮಹಡಿಯಲ್ಲಿ ಪಡೆದು ಆನಂದಿಸಿದರು. ].
  • ತಾತ್ಪರ್ಯ: ಚಿಗುರಿ ಶೋಭಸುವ ಮರಗಳ ನೆಳಲನ್ನು ಸಾರಿ, ತಣ್ಣನೆಯ ನಿರ್ಮಲವಾದ ವೀರನ್ನು ಕುಡಿದು; ಹೊಸ ಪರಿಮಳದಿಂದ ಸೊಗಸನನ್ನು ಕೊಡುವ(ಹಚ್ಚುವ) ತಂಗಾಳಿಗೆ ಮೆಯ್ಯೊಡ್ಡಿ ಮಾರ್ಗದ ಆಯಾಸವನ್ನು ಪಯಣಿಗರು ಕಳೆದರು. ಪ್ರೀತಿಯಿಂದ ಅಗಲಿದ ವಿರಹಿಗಳು ಒಟ್ಟುಸೇರಿ ಬೆಟ್ಟದಿಂದ ಬೀಸುವ ಸುವಾಸನೆಯ ತಂಪುಗಾಳಿಯನ್ನು ಅಂದಿನ ಚೈತ್ರಮಾಸದ ಆಗಮನವಾದಾಗ ಸಂಭ್ರಮದಿಂದ ಮನೆಯ ಬಿಸಿಲು ಮಹಡಿಯಲ್ಲಿ ಪಡೆದು ಆನಂದಿಸಿದರು.]

(ಪದ್ಯ - ೫)

ಪದ್ಯ :-:೬:

[ಸಂಪಾದಿಸಿ]

ಆ ಚೈತ್ರ ಮಾಸಮೆಸೆದುದು ಧರ್ಮಜನ ಕೀರ್ತಿ | ಭೂಚಕ್ರಮಂ ಮುಸುಕಿದಂತೆ ಬೆಳುದಿಂಗಳಿರೆ | ಯಾಚಕರನೆತ್ತಲುಂ ಕೂಗಿ ಕರೆವಂತುಲಿಯೆ ಕೋಗಿಲೆಗಳಿಳೆಯ ಜನದ ||
ಲೋಚನಕುದಯಿಪ ಪೊಸದಂತೆ ಚೂತಾಂಕುರಂ | ಗೋಚರಿಸೆ ಪಾತಕಕ್ಷಯದಂತೆ ಮಾಗಿಯ ವಿ | ಮೋಚನಂ ಕಾಣಿಸಲ್ ಪುಣ್ಯಯವಾಸನೆಯಂತೆ ದಕ್ಷಿಣದ ವಾಯು ಸುಳಿಯೆ ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಚೈತ್ರಮಾಸಂ ಎಸೆದುದು ಧರ್ಮಜನ ಕೀರ್ತಿ ಭೂಚಕ್ರಮಂ ಮುಸುಕಿದಂತೆ=[ಆ ಚೈತ್ರಮಾಸವು ಧರ್ಮಜನ ಕೀರ್ತಿ ಭೂಮಂಡಲವನ್ನೆಲ್ಲಾ ಆವರಿಸಿದಂತೆಶೋಭಾಯಮಾನವಾಗಿತ್ತು]; ಬೆಳುದಿಂಗಳು ಇರೆ ಯಾಚಕರನೆತ್ತಲುಂ ಕೂಗಿ ಕರೆವಂತೆ ಉಲಿಯೆ ಕೋಗಿಲೆಗಳು=[ಬೆಳುದಿಂಗಳು ಇರಲು ಯಾಚಕರನ್ನು ಎಲ್ಲಾಕಡೆಯಿಂದಲೂ ಕೂಗಿ ಕರೆಯುವಂತೆ ಕೋಗಿಲೆಗಳು ಹಾಡುತ್ತದ್ದವು]; ಇಳೆಯ ಜನದ ಲೋಚನಕೆ ಉದಯಿಪ ಪೊಸದಂತೆ ಚೂತಾಂಕುರಂ ಗೋಚರಿಸೆ =[ಭೂಮಿಯ ಜನರ ಕಣ್ಣಿಗೆ ಕಾಣಿಸಿಕೊಳ್ಳುವ ಹೊಸದಾದ ಮಾವಿನ ಚಿಗುರುಗಳು ಗೋಚರಿಸಲು]; ಪಾತಕ(ಪಾಪ)ಕ್ಷಯದಂತೆ ಮಾಗಿಯ ವಿಮೋಚನಂ ಕಾಣಿಸಲ್ ಪುಣ್ಯವಾಸನೆಯಂತೆ ದಕ್ಷಿಣದ ವಾಯು ಸುಳಿಯೆ=[ಪಾಪದ ನಿವಾರಣೆಯಾಗುವಂತೆ ಮಾಗಿಯ/ ಚಳಿಗಾಲದ ಅಂತ್ಯವು ಗೋಚರಿಸಲು, ಪುಣ್ಯವಾಸನೆಯಂತೆ ದಕ್ಷಿಣದ ಮಾರತಗಲು ಬೀಸಿದವು].
  • ತಾತ್ಪರ್ಯ:ಆ ಚೈತ್ರಮಾಸವು ಧರ್ಮಜನ ಕೀರ್ತಿ ಭೂಮಂಡಲವನ್ನೆಲ್ಲಾ ಆವರಿಸಿದಂತೆ ಶೋಭಾಯಮಾನವಾಗಿತ್ತು; ಬೆಳುದಿಂಗಳು ಇರಲು ಯಾಚಕರನ್ನು ಎಲ್ಲಾ ಕಡೆಯಿಂದಲೂ ಕೂಗಿ ಕರೆಯುವಂತೆ ಕೋಗಿಲೆಗಳು ಹಾಡುತ್ತದ್ದವು; ಭೂಮಿಯ ಜನರ ಕಣ್ಣಿಗೆ ಕಾಣಿಸಿಕೊಳ್ಳುವ ಹೊಸದಾದ ಮಾವಿನ ಚಿಗುರುಗಳು ಗೋಚರಿಸಲು, ಪಾಪದ ನಿವಾರಣೆಯಾಗುವಂತೆ ಮಾಗಿಯ/ ಚಳಿಗಾಲದ ಅಂತ್ಯವಾಗಿ, ಪುಣ್ಯವಾಸನೆಯಂತೆ ದಕ್ಷಿಣದ ಮಾರತಗಲು ಬೀಸಿದವು].

(ಪದ್ಯ - ೬)

ಪದ್ಯ :-:೭:

[ಸಂಪಾದಿಸಿ]

ಧಾತ್ರೀಶ ಕೇಳ್ ಬಳಿಕ ಧರ್ಮಜಂ ತಾಮರಸ | ನೇತ್ರ ವೇದವ್ಯಾಸರಾಜ್ಞೆಯಿಂದಖಿಳರ್ಷಿ | ಗೋತ್ರದ ಮುನಿಗಳೆಲ್ಲರಂ ಕರೆಸಿ ಮೇಲವರನುಜ್ಞೆಯಿಂದಾ ಯಜ್ಞದ ||
ಸೂತ್ರಪ್ರಕಾರದಿಂದಾರಾಜಿಸುವ ಬಹಿಃ | ಕ್ಷೇತ್ರದಧ್ವರಶಾಲೆಯೊಳ್ ದೀಕ್ಷೆಯಂ ತಳೆದು | ಚೈತ್ರಸಿತಪೌರ್ಣಮಾಸಿಯ ದಿನದೆ ಬಿಟ್ಟನರ್ಚಿಸಿ ಹಯುವನುತ್ಸವದೊಳು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಧಾತ್ರೀಶ ಕೇಳ್ ಬಳಿಕ ಧರ್ಮಜಂ ತಾಮರಸನೇತ್ರ ವೇದವ್ಯಾಸರ ಆಜ್ಞೆಯಿಂದ=[ಜನಮೇಜಯನೇ ಕೇಳು, ಬಳಿಕ ಧರ್ಮಜನು ಕಮಲನೇತ್ರನಾದ ವೇದವ್ಯಾಸರ ಆಜ್ಞೆಯಿಂದ]; ಅಖಿಳ ಋಷಿ ಗೋತ್ರದ ಮುನಿಗಳೆಲ್ಲರಂ ಕರೆಸಿ ಮೇಲವರ ಅನುಜ್ಞೆಯಿಂದ=[ಎಲ್ಲಾ ಋಷಿ ಗೋತ್ರದ ಮುನಿಗಳೆಲ್ಲರನ್ನೂ ಕರೆಸಿ ನಂತರ ಅವರ ಅನುಜ್ಞೆಯಿಂದ]; ಆ ಯಜ್ಞದ ಸೂತ್ರಪ್ರಕಾರದಿಂದ ಆ ರಾಜಿಸುವ ಬಹಿಃ ಕ್ಷೇತ್ರದ ಅಧ್ವರಶಾಲೆಯೊಳ್ ದೀಕ್ಷೆಯಂ ತಳೆದು=[ಆ ಯಜ್ಞದ ಸೂತ್ರಪ್ರಕಾರದಂತೆ ಆ ಶೋಭಿಸುವ ಬಹಿಃ ಕ್ಷೇತ್ರದ(ಗಂಗಾತೀರದ) ಅಧ್ವರಶಾಲೆಯಲ್ಲಿ ದೀಕ್ಷೆಯನ್ನುಹೊಂದಿ ]; ಚೈತ್ರಸಿತಪೌರ್ಣಮಾಸಿಯ ದಿನದೆ ಬಿಟ್ಟನು ಅರ್ಚಿಸಿ ಹಯುವನು ಉತ್ಸವದೊಳು=[ಚೈತ್ರ ಶುಕ್ಲ ಪೌರ್ಣಿಮ ತಿಥಿಯಂದು ಕುದುರೆಯನ್ನು ಪೂಜಿಸಿ ಮೆರವಣಿಗೆಯ ಮೂಲಕ ಬಿಟ್ಟನು].
  • ತಾತ್ಪರ್ಯ: ಜನಮೇಜಯನೇ ಕೇಳು, ಬಳಿಕ ಧರ್ಮಜನು ಕಮಲನೇತ್ರನಾದ ವೇದವ್ಯಾಸರ ಆಜ್ಞೆಪಡೆದು ಎಲ್ಲಾ ಋಷಿ ಗೋತ್ರದ ಮುನಿಗಳೆಲ್ಲರನ್ನೂ ಕರೆಸಿ ನಂತರ ಅವರ ಅನುಜ್ಞೆಯನ್ನೂ ಪಡೆದು, ಆ ಯಜ್ಞದ ಸೂತ್ರಪ್ರಕಾರದಂತೆ ಆ ಶೋಭಿಸುವ ಬಹಿಃ ಕ್ಷೇತ್ರದ(ಗಂಗಾತೀರದ) ಅಧ್ವರಶಾಲೆಯಲ್ಲಿ ದೀಕ್ಷೆಯನ್ನುಹೊಂದಿ ಚೈತ್ರ ಶುಕ್ಲ ಪೌರ್ಣಿಮ ತಿಥಿಯಂದು ಕುದುರೆಯನ್ನು ಪೂಜಿಸಿ ಮೆರವಣಿಗೆಯ ಮೂಲಕ ಬಿಟ್ಟನು.

(ಪದ್ಯ - ೭)VII -VIII

ಪದ್ಯ :-:೮:

[ಸಂಪಾದಿಸಿ]

ಇಂದುಕುಲದಗ್ಗಳೆಯ ಪಾಂಡುವಸುಧಾಪಾಲ | ನಂದನ ಯುಧಿಷ್ಠಿರ ನರೇಂದ್ರನಧ್ವರಹಯಮಿ | ದಂ ದಿಟ್ಟರಾರಾದೊಡಂ ಕಟ್ಟಿಕೊಳಲಾರ್ಪೊಡಿಳೆಯೊಳೆಂಬೀ ಲಿಪಿಯನು ||
ಸಂದಿಸಿ ಬರೆದ ಕನಕಪಟ್ಟ ಮನದರ ಪಣೆಯೊ | ಳೊಂದಿಸಿ ತುರಂಗಮವನಮಲಸ್ತ್ರಾಭರಣ | ದಿಂ ದಿವ್ಯಗಂಧಮಾಲ್ಯಾಕ್ಷತೆಗಳಿಂದಲಂಕರಿಸಿ ಬಿಟ್ಟರ್ ಶುಭದೊಳು ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಂದುಕುಲದ ಅಗ್ಗಳೆಯ ಪಾಂಡುವಸುಧಾಪಾಲನಂದನ ಯುಧಿಷ್ಠಿರ ನರೇಂದ್ರನ ಅಧ್ವರಹಯಂ ಇದಂ ದಿಟ್ಟರು ಆರಾದೊಡಂ ಕಟ್ಟಿಕೊಳಲು ಆರ್ಪೊಡೆ ಇಳೆಯೊಳು=['ಚಂದ್ರವಂಶದ ರಾಜ ಪಾಂಡುವಿನ ಮಗ ಯುಧಿಷ್ಠಿರ ನರೇಂದ್ರನ ಯಜ್ಞಕುದುರೆಯಾದ ಇದನ್ನು ಈ ಭೂಮಿಯಲ್ಲಿ ಯಾರಾದರೂ ಶೂರರು ಕಟ್ಟಿಕೊಳ್ಳಲು ಶಕ್ತಿಇದ್ದರೆ ಕಟ್ಟಿ(ನಮ್ಮನ್ನು ಗೆದ್ದು ಯಜ್ಞನೆಡೆಸಬೇಕು, ಇಲ್ಲದಿದ್ದರೆ ಕಾಣಿಕೆ ಕೊಡಬೇಕು'),]; ಎಂಬ ಈ ಬರಹವನ್ನು ಜೋಡಿಸಿ ಬರೆದ ಚಿನ್ನದಪಟ್ಟಿಯನ್ನು ಅದರ ಹಣೆಯಲ್ಲಿ ಹೊಂದಿಸಿಕಟ್ಟಿ =[ಎಂಬ ಈ ಲಿಪಿಯನು ಸಂದಿಸಿ ಬರೆದ ಕನಕಪಟ್ಟಮನು ಅದರ ಪಣೆಯೊಳೊಂದಿಸಿ ]; ತುರಂಗಮನು ಅಮಲಸ್ತ್ರಾಭರಣದಿಂ ದಿವ್ಯಗಂಧಮಾಲ್ಯಾಕ್ಷತೆಗಳಿಂದ ಅಲಂಕರಿಸಿ ಬಿಟ್ಟರ್ ಶುಭದೊಳು=[ಆ ಕುದುರೆಯನ್ನು ಉತ್ತಮ ಸ್ತ್ರಾಭರಣದಿಂದ ದಿವ್ಯಗಂಧಮಾಲ್ಯಾಕ್ಷತೆಗಳಿಂದ ಅಲಂಕರಿಸಿ ಶುಭಸಮಯದಲ್ಲಿ ದೇಶ ಸಂಚಾರಕ್ಕೆ ಬಿಟ್ಟರು.]
  • ತಾತ್ಪರ್ಯ:'ಚಂದ್ರವಂಶದ ರಾಜ ಪಾಂಡುವಿನ ಮಗ ಯುಧಿಷ್ಠಿರ ನರೇಂದ್ರನ ಯಜ್ಞಕುದುರೆಯಾದ ಇದನ್ನು ಈ ಭೂಮಿಯಲ್ಲಿ ಯಾರಾದರೂ ಶೂರರು ಕಟ್ಟಿಕೊಳ್ಳಲು ಶಕ್ತಿಇದ್ದರೆ ಕಟ್ಟಿ(ನಮ್ಮನ್ನು ಗೆದ್ದು ಯಜ್ಞನೆಡೆಸಬೇಕು, ಇಲ್ಲದಿದ್ದರೆ ಕಾಣಿಕೆ ಕೊಡಬೇಕು'), ಎಂಬ ಈ ಬರಹವನ್ನು ಜೋಡಿಸಿ ಬರೆದ ಚಿನ್ನದಪಟ್ಟಿಯನ್ನು ಅದರ ಹಣೆಯಲ್ಲಿ ಹೊಂದಿಸಿಕಟ್ಟಿ ಆ ಕುದುರೆಯನ್ನು ಉತ್ತಮ ಸ್ತ್ರಾಭರಣದಿಂದ ದಿವ್ಯಗಂಧಮಾಲ್ಯಾಕ್ಷತೆಗಳಿಂದ ಅಲಂಕರಿಸಿ, ಶುಭಸಮಯದಲ್ಲಿ ದೇಶಸಂಚಾರಕ್ಕೆ ಬಿಟ್ಟರು.

(ಪದ್ಯ - ೮)

ಪದ್ಯ :-:೯:

[ಸಂಪಾದಿಸಿ]

ಶ್ಲಾಘ್ಯದಿಂದಾದ ಮಜ್ಜನಭೋಜನದ ಸದಾ | ರೋಗ್ಯದಿಂ ತಾಂಬೂಲ ವಸ್ತ್ರ ಭೂಷಣದ ಸೌ | ಭಾಗ್ಯದಿಂ ಕುಸುಮ ಪರಿಮಳಲೇಪನಂಗಳಿಂ ಸ್ತ್ರೀಪುರುಷರೇಕಾಂತಕೆ ||
ಯೋಗ್ಯವಹ ಸಜ್ಜೆವನೆಯೊಳಗೀರ್ವರುಂ ದಿವ್ಯ | ಭೋಗ್ಯಮೆನಿಪೊಂದು ಮಂಚದೊಳೊರಗಿ ಕಾಮವೈ | ರಾಗ್ಯಮಾರ್ಗಿರ್ಪುದಸಿಪತ್ರವ್ರತಂ ತದ್ವ್ರತದೊಳರಸನಿರುತಿರ್ದನು ||9||
 ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಶ್ಲಾಘ್ಯದಿಂದ ಆದ ಮಜ್ಜನ ಭೋಜನದ ಸದಾ ಆರೋಗ್ಯದಿಂ=[ಉತ್ತಮವಾದ ಸ್ನಾನ, ಭೋಜನದಿಂದ ಸದಾ ಆರೋಗ್ಯದಿಂದ]; ತಾಂಬೂಲ ವಸ್ತ್ರ ಭೂಷಣದ ಸೌಭಾಗ್ಯದಿಂ ಕುಸುಮ ಪರಿಮಳಲೇಪನಂಗಳಿಂ=[ತಾಂಬೂಲ ವಸ್ತ್ರ ಭೂಷಣದ ಸೌಭಾಗ್ಯದಿಂದ ಕುಸುಮ ಪರಿಮಳದ ಲೇಪನಂಗಳಿಂದ(ಹಚ್ಚಿಕೊಳ್ಳುವುದು)]; ಸ್ತ್ರೀಪುರುಷರೇಕಾಂತಕೆ ಯೋಗ್ಯವಹ ಸಜ್ಜೆವನೆಯೊಳಗೀರ್ವರುಂ ದಿವ್ಯ ಭೋಗ್ಯಮೆನಿಪೊಂದು ಮಂಚದೊಳೊರಗಿ ಕಾಮವೈರಾಗ್ಯಮಾರ್ಗಿರ್ಪುದಸಿಪತ್ರವ್ರತಂ=[ದೀಕ್ಷಿತರಾದ ಪತಿ ಪತ್ನಿಯರ ಏಕಾಂತ ವಾಸಕ್ಕೆ- ಯುಧಿಷ್ಠಿರ ದ್ರೌಪದಿಯರ ಏಕಾಂತವಾಸಕ್ಕೆ ಯೋಗ್ಯವಾಗಿರುವ ಸಜ್ಜೆಮನೆಯೊಳಗೆ ಇಬ್ಬರೂ, ದಿವ್ಯ ಭೋಗ್ಯವು ಎನಿಸುವ ಮಂಚದಲ್ಲಿ ಮಲಗಿ, ಪರಸ್ಪರ ಕಾಮವಿಲ್ಲದೆ ವೈರಾಗ್ಯದಿಂದ ಇರುವ "ಅಸಿಪತ್ರವ್ರತ"ವನ್ನು ಪಾಲಿಸುತ್ತಾ,]; ತದ್ ವ್ರತದೊಳ್ ಅರಸನು ಇರುತಿರ್ದನು=[ಧರ್ಮಜನು ಆ ವ್ರತದಲ್ಲಿ ಇರುತ್ತಿದ್ದನು].
  • ತಾತ್ಪರ್ಯ:'ಉತ್ತಮವಾದ ಸ್ನಾನ, ಭೋಜನದಿಂದ ಸದಾ ಆರೋಗ್ಯದಿಂದ, ತಾಂಬೂಲ ವಸ್ತ್ರ ಭೂಷಣದ ಸೌಭಾಗ್ಯದಿಂದ ಕುಸುಮ ಪರಿಮಳದ ಲೇಪನಂಗಳಿಂದ(ಹಚ್ಚಿಕೊಳ್ಳುವುದು), ದೀಕ್ಷಿತರಾದ ಪತಿ ಪತ್ನಿಯರ ಏಕಾಂತ ವಾಸಕ್ಕೆ- ಯುಧಿಷ್ಠಿರ ದ್ರೌಪದಿಯರ ಏಕಾಂತವಾಸಕ್ಕೆ ಯೋಗ್ಯವಾಗಿರುವ ಸಜ್ಜೆಮನೆಯೊಳಗೆ ಇಬ್ಬರೂ, ದಿವ್ಯ ಭೋಗ್ಯವು ಎನಿಸುವ ಮಂಚದಲ್ಲಿ ಮಲಗಿ, ಪರಸ್ಪರ ಕಾಮವಿಲ್ಲದೆ ವೈರಾಗ್ಯದಿಂದ ಇರುವ "ಅಸಿಪತ್ರವ್ರತ"ವನ್ನು ಪಾಲಿಸುತ್ತಾ, ಧರ್ಮಜನು ಆ ವ್ರತದಲ್ಲಿ ಇರುತ್ತಿದ್ದನು.(ಅಸಿ:ಕತ್ತಿ; ಮಲಗಿದಾಗ ಇಬ್ಬರ ಮಧ್ಯೆ ಖಡ್ಗವನ್ನಿಟ್ಟು ಒಬ್ಬರನ್ನೊಬ್ಬರು ಮುಟ್ಟದೆ ಇರುವುದು- ಅಸಿಪತ್ರವ್ರತ)

(ಪದ್ಯ - ೯)

ಪದ್ಯ :-:೧೦:

[ಸಂಪಾದಿಸಿ]

ತದ್ಯಾಗಮೊಂದು ಬರಿಸಕೆ ಮುಗಿವುದನ್ನೆಗಂ | ಸದ್ಯಾಜಮಾನದೀಕ್ಷೆಯನವನಿಪಂ ತಾಳ್ದ | ನುದ್ಯುಕ್ತರಾದರರ್ಜುನನೊಡನೆ ಹಯರಕ್ಷೆಗಸುರಹರನಾಜ್ಞೆಯಿಂದೆ ||
ಉದ್ಯತ್ಪರಾಕ್ರಮಿಗಳನುಸಾಲ್ವ ಸಾತ್ಯಕಿ | ಪ್ರದ್ಯುಮ್ನ ಕೃತವರ್ಮ ಯೌವನಾಶ್ವಾತಿಬಲ | ಖದ್ಯೋತಸುತಸೂನು ಮೊದಲಾದ ವೀರರೊದಗಿತು ಚಾತುರಂಗದೊಡನೆ ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತತ್ ಯಾಗಮೊಂದು ಬರಿಸಕೆ ಮುಗಿವುದು=[ಆ ಯಾಗವು ಒಂದು ವರ್ಷಕ್ಕೆ ಮುಗಿಯುವುದು]; ಅನ್ನೆಗಂ ಸತ್ ಯಾಜಮಾನದೀಕ್ಷೆಯನು ಅವನಿಪಂ ತಾಳ್ದನು=[ಅಲ್ಲಿಯವರೆಗೆ ಸತ್ಯವಂತನಾಗಿ ಯಾಜಮಾನದೀಕ್ಷೆಯನ್ನು ರಾಜನು ಹೊಂದಿದನು.]; ಉದ್ಯುಕ್ತರಾದರು ಅರ್ಜುನನೊಡನೆ ಹಯರಕ್ಷೆಗೆ ಅಸುರಹರನಾಜ್ಞೆಯಿಂದೆ=[ ಅರ್ಜುನನೊಡನೆ ಕುದುರೆಯ ರಕ್ಷಣೆಗೆ ಕೃಷ್ಣನ ಆಜ್ಞೆಯಂತೆ (ಉದ್ಯುಕ್ತರಾದರು / ಸಿದ್ಧರಾದರು->)]; ಉದ್ಯತ್ ಪರಾಕ್ರಮಿಗಳು ಅನುಸಾಲ್ವ ಸಾತ್ಯಕಿ ಪ್ರದ್ಯುಮ್ನ ಕೃತವರ್ಮ ಯೌವನಾಶ್ವ ಅತಿಬಲ ಖದ್ಯೋತಸುತಸೂನು ಮೊದಲಾದ ವೀರರು ಒದಗಿತು ಚಾತುರಂಗದೊಡನೆ=[ತೇಜಸ್ವಿ ಪರಾಕ್ರಮಿಗಳಾದ ಅನುಸಾಲ್ವ ಸಾತ್ಯಕಿ ಪ್ರದ್ಯುಮ್ನ ಕೃತವರ್ಮ ಯೌವನಾಶ್ವ ಅತಿಬಲ ವೃಷಕೇತು ಮೊದಲಾದ ವೀರರು ಚಾತುರಂಗದೊಡನೆ ಸೇರಿಕೊಂಡು,ಪ್ರಯಾಣಕ್ಕೆ ಸಿದ್ಧರಾದರು.].
  • ತಾತ್ಪರ್ಯ:ಆ ಯಾಗವು ಒಂದು ವರ್ಷಕ್ಕೆ ಮುಗಿಯುವುದು; ಅಲ್ಲಿಯವರೆಗೆ ಸತ್ಯವಂತನಾಗಿ ಯಾಜಮಾನದೀಕ್ಷೆಯನ್ನು ರಾಜನು ಹೊಂದಿದನು. ಅರ್ಜುನನೊಡನೆ ಕುದುರೆಯ ರಕ್ಷಣೆಗೆ ಕೃಷ್ಣನ ಆಜ್ಞೆಯಂತೆ, ತೇಜಸ್ವಿ ಪರಾಕ್ರಮಿಗಳಾದ ಅನುಸಾಲ್ವ ಸಾತ್ಯಕಿ ಪ್ರದ್ಯುಮ್ನ ಕೃತವರ್ಮ ಯೌವನಾಶ್ವ ಅತಿಬಲ ವೃಷಕೇತು ಮೊದಲಾದ ವೀರರು ಚಾತುರಂಗದೊಡನೆ ಸೇರಿಕೊಂಡು,ಪ್ರಯಾಣಕ್ಕೆ ಸಿದ್ಧರಾದರು.

(ಪದ್ಯ - ೧೦)

ಪದ್ಯ :-:೧೧:

[ಸಂಪಾದಿಸಿ]

ಇಭಮುಖಾರ್ಚನೆಯಂ ನವಗ್ರಹದ ಪೂಜೆಯಂ | ವಿಭವದಿಂ ಮಾಡಿ ಧರ್ಮಜ ಭೀಮ ಕುಂತಿಗ | ಳ್ಗಭಿನಮಿಸಿ ಕೃಷ್ಣನ ಪದಾಂಬುಜಕ್ಕೆರಗಿ ದಿಕ್ಪಾಲರಂ ಬೇಡಿಕೊಂಡು ||
ಶುಭಮಹೂರ್ತದೊಳರಸಿಯರ ಸೇಸೆವತ್ತ ಮುನಿ | ಸಭೆಗೆ ವಂದಿಸಿ ಪರಕೆಗೊಂಡು ಪಾಠಕರ ಜಯ | ರಭಸದಿಂದೆಸೆವ ಮಂಗಳವಾದಯ ಘೋಷದಿಂದರ್ಜುನಂ ಪೊರಮಟ್ಟನು ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಭಮುಖ(ಗಣಪತಿ) ಅರ್ಚನೆಯಂ ನವಗ್ರಹದ ಪೂಜೆಯಂ ವಿಭವದಿಂ ಮಾಡಿ=[ಗಣಪತಿ ಅರ್ಚನೆಯನ್ನೂ ನವಗ್ರಹದ ಪೂಜೆಯನ್ನೂ ಚೆನ್ನಾಗಿ ಮಾಡಿ ]; ಧರ್ಮಜ ಭೀಮ ಕುಂತಿಗಳ್ಗೆ ಅಭಿನಮಿಸಿ ಕೃಷ್ಣನ ಪದಾಂಬುಜಕ್ಕೆ ಎರಗಿ ದಿಕ್ಪಾಲರಂ ಬೇಡಿಕೊಂಡು=[ಧರ್ಮಜ ಭೀಮ ಕುಂತಿ ಇವರುಗಳಿಗೆ ನಮಸ್ಕಾರಮಾಡಿ, ಕೃಷ್ಣನ ಪಾದಗಳಿಗೆ ವಂದಿಸಿ, ದಿಕ್ಪಾಲರಿಗೆ ವಿಜಯಕ್ಕಾಗಿ ಬೇಡಿಕೊಂಡು]; ಶುಭಮಹೂರ್ತದೊಳ್ ಅರಸಿಯರ ಸೇಸೆವತ್ತ ಮುನಿಸಭೆಗೆ ವಂದಿಸಿ ಪರಕೆಗೊಂಡು=[ಶುಭಮಹೂರ್ತದಲ್ಲಿ ರಾಣಿಯರ ಆರತಿ ಪಡೆದು ಮುನಿಸಭೆಗೆ ವಂದಿಸಿ, ಅವರಿಂದ ಆಶೀರ್ವಾದ ಪಡೆದು, ] ಪಾಠಕರ ಜಯ ರಭಸದಿಂದ ಎಸೆವ ಮಂಗಳವಾದಯ ಘೋಷದಿಂದ ಅರ್ಜುನಂ ಪೊರಮಟ್ಟನು=[ಪಾಠಕರು ಹೊಗಳುತ್ತಿರಲು, ಜಯಕಾರಮಾಡುತ್ತಿರುವಾಗ ವಜ್ರಂಭಣೆಯಿಂದ ಮಂಗಳವಾದ್ಯ ಘೋಷದಿಂದ ಅರ್ಜುನಂ ಪೊರಮಟ್ಟನು].
  • ತಾತ್ಪರ್ಯ:ಗಣಪತಿ ಅರ್ಚನೆಯನ್ನೂ ನವಗ್ರಹದ ಪೂಜೆಯನ್ನೂ ಚೆನ್ನಾಗಿ ಮಾಡಿ, ಧರ್ಮಜ ಭೀಮ ಕುಂತಿ ಇವರುಗಳಿಗೆ ನಮಸ್ಕಾರಮಾಡಿ, ಕೃಷ್ಣನ ಪಾದಗಳಿಗೆ ವಂದಿಸಿ, ದಿಕ್ಪಾಲರಿಗೆ ವಿಜಯಕ್ಕಾಗಿ ಬೇಡಿಕೊಂಡು, ಶುಭಮಹೂರ್ತದಲ್ಲಿ ರಾಣಿಯರ ಆರತಿ ಪಡೆದು ಮುನಿಸಭೆಗೆ ವಂದಿಸಿ, ಅವರಿಂದ ಆಶೀರ್ವಾದ ಪಡೆದು,ಪಾಠಕರು ಹೊಗಳುತ್ತಿರಲು, ಜಯಕಾರಮಾಡುತ್ತಿರುವಾಗ ವಜ್ರಂಭಣೆಯಿಂದ ಮಂಗಳವಾದ್ಯ ಘೋಷದಿಂದ ಅರ್ಜುನಂ ಪೊರಮಟ್ಟನು.

(ಪದ್ಯ - ೧೧)

ಪದ್ಯ :-:೧೨:

[ಸಂಪಾದಿಸಿ]

ಮುರಹರನ ರಾಣಿಯರ್ ಧುರಧೀರ ಕರ್ಣಸುತ | ನರಸಿಯೆಂದೆನ್ನ ಪೊಗಳ್ವಂತೆ ಮಿಗೆ ಸಂಗರದೊ | ಳರಿಗಳಂ ಗೆಲ್ವುದೆಂದಾರತಿಯನೆತ್ತಿ ಮುತ್ತಿನ ಸೇಸೆಗಳನೆ ಸೂಸಿ ||
ಭರದಿಂದ ಬಂದಪ್ಪದಂಗನೆಯ ಮೊಗನೋಡಿ| ಕುರುಳುಗಳನುಗುರ್ಗಳಿಂ ತಿದ್ದಿ ಮುದ್ದಿಸಿ ತನ್ನ | ಬೆರಳುಂಗರಂಗೊಟ್ಟು ಸಂತೈಸಿ ವೃಷಕೇತು ಕಾಂತೆಯಂ ಬೀಳ್ಕೊಂಡನು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮುರಹರನ ರಾಣಿಯರು ಧುರಧೀರ ಕರ್ಣಸುತನರಸಿಯೆಂದೆನ್ನ ಪೊಗಳ್ವಂತೆ ಮಿಗೆ(ಬಹಳ)=[ಕೃಷ್ಣನ ರುಕ್ಮಿಣಿ ಮೊದಲಾದ ರಾಣಿಯರು ಧುರಧೀರ /ಯುದ್ಧದಲ್ಲಿ ಮಹಾವೀರ ಕರ್ಣಸುತ ವೃಷಕೇತುವಿನ ಹೆಂಡತಿ ಇವಳು', ಎಂದು ನನ್ನನ್ನು ಬಹಳ ಹೊಗಳುವಂತೆ]; ಸಂಗರದೊಳರಿಗಳಂ ಗೆಲ್ವುದೆಂದಾರತಿಯನೆತ್ತಿ ಮುತ್ತಿನ ಸೇಸೆಗಳನೆ ಸೂಸಿ=[ಯುದ್ಧದಲ್ಲಿ ನೀವು ಶತ್ರುಗಳನ್ನು ಗೆಲ್ಲಬೇಕು ಎಂದು ಆರತಿಯನ್ನು ಎತ್ತಿ ಮುತ್ತಿನ ಸೇಸೆಗಳನನ್ನು ಸೂಸಿ (ಆರತಿಯ ಜೊತೆ, ಮುತ್ತಿನಿಂದ ಮಾಡಿದ ಗುಚ್ಛಗಳನ್ನು ತಲೆಗೆ ಸುಳಿಯುವುದು)]; ಭರದಿಂದ ಬಂದಪ್ಪದಂಗನೆಯ ಮೊಗನೋಡಿ| ಕುರುಳುಗಳನುಗುರ್ಗಳಿಂ ತಿದ್ದಿ ಮುದ್ದಿಸಿ=[ಆಗ ಅವನು ಭರದಿಂದ ಮುಂದೆ ಬಂದು ಅಪ್ಪಿ,ಪತ್ನಿಯ ಮುಖವನ್ನು ಪ್ರೀತಿಯಿಂದನೋಡಿ, ಕುರುಳುಗಳನ್ನು ಬೆರಳುಗಳಿಂದ ತಿದ್ದಿ ಮುದ್ದಿಸಿದನು]; ತನ್ನ ಬೆರಳುಂಗರಂಗೊಟ್ಟು ಸಂತೈಸಿ ವೃಷಕೇತು ಕಾಂತೆಯಂ ಬೀಳ್ಕೊಂಡನು=[ನಂತರ ತನ್ನ ಬೆರಳಲ್ಲಿದ್ದ ಉಂಗುರವನ್ನು (ಕೊಟ್ಟು) ಅವಳ ಕೈಗೆ ತೊಡಿಸಿ ಸಮಾಧಾನಪಡಿಸಿ ಪತ್ನಿಯನ್ನು ವೃಷಕೇತು ಬೀಳ್ಕೊಂಡು ಹೊರಟನು].
  • ತಾತ್ಪರ್ಯ: ರುಕ್ಮಿಣಿ ಮೊದಲಾದ ಕೃಷ್ಣನ ರಾಣಿಯರು, 'ಧುರಧೀರ /ಯುದ್ಧದಲ್ಲಿ ಮಹಾವೀರ ಕರ್ಣಸುತ ವೃಷಕೇತುವಿನ ಹೆಂಡತಿ ಇವಳು', ಎಂದು ನನ್ನನ್ನು ಬಹಳ ಹೊಗಳುವಂತೆ, ಯುದ್ಧದಲ್ಲಿ ನೀವು ಶತ್ರುಗಳನ್ನು ಗೆಲ್ಲಬೇಕು', ಎಂದು ಆರತಿಯನ್ನು ಎತ್ತಿ ಮುತ್ತಿನ ಸೇಸೆಗಳನನ್ನು ಸೂಸಿದಳು (ಆರತಿಯ ಜೊತೆ, ಮುತ್ತಿನಿಂದ ಮಾಡಿದ ಗುಚ್ಛಗಳನ್ನು ತಲೆಗೆ ಸುಳಿಯುವುದು); ಆಗ ಅವನು ಭರದಿಂದ ಮುಂದೆ ಬಂದು ಅವಳನ್ನು ಅಪ್ಪಿ,ಪತ್ನಿಯ ಮುಖವನ್ನು ಪ್ರೀತಿಯಿಂದ ನೋಡಿ, ಕುರುಳುಗಳನ್ನು ಬೆರಳುಗಳಿಂದ ತಿದ್ದಿ ಮುದ್ದಿಸಿದನು; ನಂತರ ತನ್ನ ಬೆರಳಲ್ಲಿದ್ದ ಉಂಗುರವನ್ನು (ಕೊಟ್ಟು) ಅವಳ ಕೈಗೆ ತೊಡಿಸಿ ಸಮಾಧಾನಪಡಿಸಿ ಪತ್ನಿಯನ್ನು ವೃಷಕೇತು ಬೀಳ್ಕೊಂಡು ಹೊರಟನು.

(ಪದ್ಯ - ೧೨)

ಪದ್ಯ :-:೧೩:

[ಸಂಪಾದಿಸಿ]

ಅಂಕೆಯಿಂದರ್ಜುನಂಗಂದು ಯಾದವಸೈನ್ಯ | ಮಂ ಕೂಡಿಕೊಟ್ಟು ದಳಪತಿಯಾಗಿ ತನಯನಂ | ಮುಂಕೊಳಿಸಿ ಕರ್ಣಜ ಸುವೇಗಾನುಸಾಲ್ವರ ಸಹಾಯಮಂ ಕೈವರ್ತಿಸಿ ||
ಪಂಕರುಹಲೋಚನಂ ಪೊರಮಟ್ಟನಿಬರೆಲ್ಲ | ರಂ ಕಳುಹಿ ತಿರುಗಿದಂ ಸ್ವೇಚ್ಛೆಯಿಂದಾ ಹಯಂ | ತೆಂಕಮೊಗಮಾಗಿ ನಡೆದುದು ಕರಿತುರಗರಥಪದಾತಿಗಳ್ ಸಂದಣಿಸಲು ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಂಕೆಯಿಂದ ಅರ್ಜುನಂಗೆ ಅಂದು ಯಾದವಸೈನ್ಯಮಂ ಕೂಡಿಕೊಟ್ಟು ದಳಪತಿಯಾಗಿ ತನಯನಂ ಮುಂಕೊಳಿಸಿ=[ನಿಯಮಬದ್ಧವಾಗಿ ಅರ್ಜುನನಿಗಗೆ ಅಂದು ಯಾದವಸೈನ್ಯವನ್ನು ಕೂಡಿಕೊಟ್ಟು ದಳಪತಿಯಾಗಿ ಮಗ ಪ್ರದ್ಯುಮ್ನನ್ನು ನೇಮಿಸಿ]; ಕರ್ಣಜ ಸುವೇಗ ಅನುಸಾಲ್ವರ ಸಹಾಯಮಂವನ್ನು ಕೈವರ್ತಿಸಿ=[ಕರ್ಣಜ ಸುವೇಗ ಅನುಸಾಲ್ವರ ಸಹಾಯವನ್ನು ಅರ್ಜುನನಿಗೆ ಕೊಟ್ಟು ]; ಪಂಕರುಹಲೋಚನಂ ಪೊರಮಟ್ಟು ಅನಿಬರೆಲ್ಲರಂ ಕಳುಹಿ ತಿರುಗಿದಂ=[ಕೃಷ್ಣನು ಹೊರಹೊರಟು, ಅವರೆಲ್ಲರನ್ನೂ ಸ್ವಲ್ಪದೂರ ಕಳುಹಿಸಿ ಹಿಂತಿರುಗಿದನು]; ಸ್ವೇಚ್ಛೆಯಿಂದ ಆ ಹಯಂ ತೆಂಕಮೊಗಮಾಗಿ ನಡೆದುದು ಕರಿತುರಗರಥಪದಾತಿಗಳ್ ಸಂದಣಿಸಲು(ಒತ್ತೊತ್ತಾಗಿನಡೆದರು)=[ನೊಂತರ ಸ್ವೇಚ್ಛೆಯಿಂದ ಆ ಕುದುರೆಯು ದಕ್ಷಿಣದಿಕ್ಕಿಗೆ ಮುಖವಾಗಿ ನಡೆಯಿತು; ಅದನ್ನು ಆನೆ ಕುದುರೆ ರಥ ಪದಾತಿಗಳು ಒತ್ತೊತ್ತಾಗಿ ನೆಡೆದು ಅದನ್ನು ಹಿಂಬಾಲಿಸಿದರು.]
  • ತಾತ್ಪರ್ಯ:ನಿಯಮಬದ್ಧವಾಗಿ ಅರ್ಜುನನಿಗೆ ಅಂದು ಯಾದವಸೈನ್ಯವನ್ನು ಕೂಡಿಕೊಟ್ಟು, ದಳಪತಿಯಾಗಿ ಮಗ ಪ್ರದ್ಯುಮ್ನನ್ನು ನೇಮಿಸಿ; ಕರ್ಣಜ ಸುವೇಗ ಅನುಸಾಲ್ವರ ಸಹಾಯವನ್ನು ಅರ್ಜುನನಿಗೆ ಕೊಟ್ಟು, ಕೃಷ್ಣನು ಹೊರಹೊರಟು, ಅವರೆಲ್ಲರನ್ನೂ ಸ್ವಲ್ಪದೂರ ಕಳುಹಿಸಿ ಹಿಂತಿರುಗಿದನು; ನಂತರ ಸ್ವೇಚ್ಛೆಯಿಂದ ಆ ಕುದುರೆಯು ದಕ್ಷಿಣದಿಕ್ಕಿಗೆ ಮುಖವಾಗಿ ನಡೆಯಿತು; ಅದನ್ನು ಆನೆ ಕುದುರೆ ರಥ ಪದಾತಿಗಳು ಒತ್ತೊತ್ತಾಗಿ ನೆಡೆದು ಅದನ್ನು ಹಿಂಬಾಲಿಸಿದರು.]

(ಪದ್ಯ - ೧೩)

ಪದ್ಯ :-:೧೪:

[ಸಂಪಾದಿಸಿ]

ಊಹಿಸುವೊಡರಿದೆನೆ ತುರಂಗಮದ ಕೂಡೆ ಸ | ನ್ನಾಹದಿಂ ಮೇರೆದಪ್ಪಿದ ಮಹಾರ್ಣವದ ಪ್ರ | ವಾಹಮೆನೆ ತಳ್ತಿಡಿದ ತರುಗುಲ್ಮಲತೆಗಳಿಂ ತಡೆಗೊಂಡ ಕಾನನಮೆನೆ ||
ಮೋಹರಂ ಭೂತಳಮನೊಳಕೊಂಡು ಬರುತಿರ್ದು | ದಾಹಯಂ ಬಳಿಕ ದಕ್ಷಿಣದಿಶಾಮುಖಮಾಗಿ | ಮಾಹಿಷ್ಮತೀಪಟ್ಟನದ ಬಹಿರ್ಭಾಗದುಪವನದೆಡೆಗೆ ನಡೆತಂದುದು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಊಹಿಸುವೊಡೆ ಅರಿದು ಎನೆ ತುರಂಗಮದ ಕೂಡೆ ಸನ್ನಾಹದಿಂ ಮೇರೆದಪ್ಪಿದ ಮಹಾರ್ಣವದ ಪ್ರವಾಹಮೆನೆ=[ಊಹಿಸಲು ಅಸಾಧ್ಯ ಎನ್ನುವಂತೆ, ಕುದುರೆಯ ಜೊತೆ, ಸನ್ನಾಹದಿಂದ ಗಡಿಮಿತಿಮೀರಿದ ಪ್ರಳಯಕಾಲದ ಪ್ರವಾಹವೋ ಎನ್ನುವಂತೆ]; ತಳ್ತು ಇಡಿದ ತರು ಗುಲ್ಮ ಲತೆಗಳಿಂ ತಡೆಗೊಂಡ ಕಾನನಮೆನೆ=[ಚಿಗುರಿನಿಂದ ತುಂಬಿದ ಮರ ಬಳ್ಳಿ ಪೊದೆಗಳಿಂದ ಅಡ್ಡಬಂದ ದಟ್ಟ ಕಾಡಿನಂತೆ]; ಮೋಹರಂ ಭೂತಳಮನು ಒಳಕೊಂಡು ಬರುತಿರ್ದುದು ಆ ಹಯಂ=[ಆ ಸೈನ್ಯವು, ಬೂಮಿಯನ್ನು ಆವರಿಸಿ, ಬರುತ್ತಿತ್ತು. ಆ ಹಯಂ];ಆ ಹಯಂ ಬಳಿಕ ದಕ್ಷಿಣದಿಶಾಮುಖಮಾಗಿ ಮಾಹಿಷ್ಮತೀ ಪಟ್ಟನದ ಬಹಿರ್ಭಾಗದ ಉಪವನದೆಡೆಗೆ ನಡೆತಂದುದು=[ ಆಕುದುರೆ ಬಳಿಕ ದಕ್ಷಿಣದಿಕ್ಕಿಗೆ ಅಭಿಮುಖವಾಗಿ ಮಾಹಿಷ್ಮತೀ ಪಟ್ಟನದ ಹೊರಭಾಗದ ಉಪವನದ ಕಡೆಗೆ ನಡೆದುಬಂತು].
  • ತಾತ್ಪರ್ಯ:ಊಹಿಸಲು ಅಸಾಧ್ಯ ಎನ್ನುವಂತೆ, ಕುದುರೆಯ ಜೊತೆ, ಸನ್ನಾಹದಿಂದ ಗಡಿಮಿತಿಮೀರಿದ ಪ್ರಳಯಕಾಲದ ಪ್ರವಾಹವೋ ಎನ್ನುವಂತೆ, ಚಿಗುರಿನಿಂದ ತುಂಬಿದ ಮರ ಬಳ್ಳಿ ಪೊದೆಗಳಿಂದ ಅಡ್ಡಬಂದ ದಟ್ಟ ಕಾಡಿನಂತೆ, ಆ ಸೈನ್ಯವು, ಬೂಮಿಯನ್ನು ಆವರಿಸಿ, ಬರುತ್ತಿತ್ತು. ಆ ಕುದುರೆ ಬಳಿಕ ದಕ್ಷಿಣದಿಕ್ಕಿಗೆ ಅಭಿಮುಖವಾಗಿ ಮಾಹಿಷ್ಮತೀ ಪಟ್ಟನದ ಹೊರಭಾಗದ ಉಪವನದ ಕಡೆಗೆ ನಡೆದುಬಂತು.

(ಪದ್ಯ - ೧೪)

ಪದ್ಯ :-:೧೫:

[ಸಂಪಾದಿಸಿ]

ಆ ನಗರದರಸು ನೀಲಧ್ವಜಂ ಮೇಣವನ | ಸೂನು ಪ್ರವೀರನೆಂಬವನಾಗಲ್ಲಿಗು | ದ್ಯಾನಕೇಳಿಗೆ ಬಂದನೊಲವಿಂದೆ ಮದನಮಂಜರಿಯೆಂಬ ಕಾಂತೆಯೊಡನೆ ||
ಆ ನಳಿನಲೋಚನೆಯ ಕೆಳದಿಯರ್ ಬಿಡಯದಿಂ | ದಾನಂದನದೊಳು ಸಂಚರಿಸುತಿರ್ದರ್ ಬಳಿಕ | ಮೀನಕೇತನ ಮಹೀಪಾನರಮನೆಯ ಸೊಕ್ಕಾನೆಗಳ ತಂಡದಂತೆ ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ನಗರದ ಅರಸು ನೀಲಧ್ವಜಂ ಮೇಣವನ ಸೂನು ಪ್ರವೀರನೆಂಬವನು=[ಆ ನಗರದ ಅರಸನು ನೀಲಧ್ವಜನು, ಮತ್ತೆ ಅವನ ಮಗ ಪ್ರವೀರನೆಂಬವವನು]; ಅವನು ಆಗ ಅಲ್ಲಿಗೆ ಉದ್ಯಾನ ಕೇಳಿಗೆ ಬಂದನು ಒಲವಿಂದೆ ಮದನಮಂಜರಿಯೆಂಬ ಕಾಂತೆಯೊಡನೆ=[ಅವನು ಆಗ ಅಲ್ಲಿಗೆ ಉದ್ಯಾನವಿಹಾರ ಮಾಡುವ ಪ್ರೀತಿಯಿಂದ ಅವನ ಮದನಮಂಜರಿಯೆಂಬ ಪತ್ನಿಯ ಜೊತೆ ಬಂದನು ]; ಆ ನಳಿನಲೋಚನೆಯ ಕೆಳದಿಯರ್ ಬಿಡಯದಿಂದ ಆನಂದನದೊಳು ಸಂಚರಿಸುತಿರ್ದರ್ ಬಳಿಕ ಮೀನಕೇತನ ಮಹೀಪಾಲನ ಅರಮನೆಯ ಸೊಕ್ಕಾನೆಗಳ ತಂಡದಂತೆ=[ಆ ಕಮಲದ ಎಸಳಿನಂತೆ ಕಣ್ಣುಳ್ಳ ಮದನಮಂಜರಿಯ ಗೆಳತಿಯರು, ಗುಂಪಾಗಿ ಆನಂದನದೊಳು ಸಂಚರಿಸುತ್ತಿದ್ದರು; ಬಳಿಕ ಮೀನಕೇತನನಾದ ಮನ್ಮಥನ ರಾಜನ ಅರಮನೆಯ ಸೊಕ್ಕಾನೆಗಳ ತಂಡದಂತೆ ಆ ಹೆಂಗಸರು ವಯ್ಯಾರದಿಂದ ಅಲ್ಲಿ ತಿರುಗಾಡುತ್ತಿದ್ದರು.]
  • ತಾತ್ಪರ್ಯ:ಆ ನಗರದ ಅರಸನು ನೀಲಧ್ವಜನು, ಮತ್ತೆ ಅವನ ಮಗ ಪ್ರವೀರನೆಂಬವವನು; ಅವನು ಆಗ ಅಲ್ಲಿಗೆ ಉದ್ಯಾನವಿಹಾರ ಮಾಡುವ ಪ್ರೀತಿಯಿಂದ ಅವನ ಮದನಮಂಜರಿಯೆಂಬ ಪತ್ನಿಯ ಜೊತೆ ಬಂದನು ;ಆ ಕಮಲದ ಎಸಳಿನಂತೆ ಕಣ್ಣುಳ್ಳ ಮದನಮಂಜರಿಯ ಗೆಳತಿಯರು, ಗುಂಪಾಗಿ ಆನಂದನದೊಳು ಸಂಚರಿಸುತ್ತಿದ್ದರು; ಬಳಿಕ ಮೀನಕೇತನನಾದ ಮನ್ಮಥನ ರಾಜನ ಅರಮನೆಯ ಸೊಕ್ಕಾನೆಗಳ ತಂಡದಂತೆ ಆ ಹೆಂಗಸರು ವಯ್ಯಾರದಿಂದ ಅಲ್ಲಿ ತಿರುಗಾಡುತ್ತಿದ್ದರು.]

(ಪದ್ಯ - ೧೫)viii - viii

ಪದ್ಯ :-:೧೬:

[ಸಂಪಾದಿಸಿ]

ನೋಡಿ ತಿಲಕವನಪ್ಪಿ ಕುರುವಕವನೆಳನಗೆಯೊ | ಳೂಡಿ ಸಂಪಗೆಯಂ ಪ್ರಿಯಂಗುವಂ ಸೋಂಕಿ ಮುರಿ | ದಾಡಿ ಚೂತಮನೊದೆರಶೋಕೆಯಂ ಬಕುಳಮಂ ಮುಕ್ಕುಳಿಸಿ ಮದ್ಯದಿಂದೆ ||
ಪಾಡಿ ಪುನ್ನಾಗವಂ ಕರ್ಣಿಕಾರವನೆ ಕೊಂ | ಡಾಡಿ ಮಂದಾರಮಂ ಜಾಣ್ಮುಡಿದು ಪುಷ್ಪಿತಂ | ಮಾಡಿ ತೋರಿದರಂಬುಜಾಕ್ಷಿಯರ್ ನಾನಾವಿಲಾಸದಿಂದಾ ನನದೊಳು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • (ಆಗಿನ ಸಂಪ್ರದಾಯಗಳು)ನೋಡಿ ತಿಲಕವನು, ಅಪ್ಪಿ ಕುರುವಕ (ಮದರಂಗಿ)ವನು, ಎಳನಗೆಯೊಳೂಡಿ ಸಂಪಗೆಯಂ=[ಹಣೆಯ ತಿಲಕವನ್ನು ನೋಡಿಕೊಂಡು, ಮದರಂಗಿ ಅಥವಾ ಗೋರಂಟಿಗಿಡವನ್ನು ಅಪ್ಪಿಕೊಂಡು, ಸಂಪಗೆಯನ್ನು ಎಳನಗೆಯಿಂದ ಮುಡಿದು,];, ಪ್ರಿಯಂಗುವಂ(ಮರ) ಸೋಂಕಿ ಮುರಿದಾಡಿ ಚೂತಮನು ಒದೆರಶೋಕೆಯಂ, ಬಕುಳಮಂ ಮುಕ್ಕುಳಿಸಿ,=[ಪ್ರಿಯಂಗುವಂ(ಮರ)ವನ್ನು ಮುಟ್ಟಿ, ಮಾವಿನ ಚಿಗುರನ್ನು ಮುರಿದು ಆಟವಾಡಿ, ಅಶೋಕೆಯ ಮರವನ್ನು ಒದೆದು, ಬಕುಳೆಲೆಯನ್ನು ಬಾಯಿ ಮುಕ್ಕುಳಿಸಿ,]; ಮದ್ಯದಿಂದೆ ಪಾಡಿ ಪುನ್ನಾಗವಂ(ಸುರಹೊನ್ನೆ?), ಕರ್ಣಿಕಾರವನೆ(ಬೆಟ್ಟದಾವರೆ) ಕೊಂಡಾಡಿ,=[ಪುನ್ನಾಗವಂ(ಸುರಹೊನ್ನೆ?)ಯನ್ನು ಮದದಿಂದ ಹಾಡಿ, ಕರ್ಣಿಕಾರವನ್ನು(ಬೆಟ್ಟದಾವರೆ)ಹೊಗಳಿ, ಕೊಂಡಾಡಿ,] ಮಂದಾರಮಂ ಜಾಣ್ಮುಡಿದು ಪುಷ್ಪಿತಂ ಮಾಡಿ, ತೋರಿದರು ಅಂಬುಜಾಕ್ಷಿಯರ್ ನಾನಾವಿಲಾಸದಿಂದಾ ನನದೊಳು=[ಮಂದಾರಹೂವನ್ನ ಜಾಣತನದಿಂದ ಮುಡಿದು ತಲೆಯನ್ನು ಹೂಪೂರಣ ಮಾಡಿ, ಹೆಂಗಸುರು ನಾನಾಬಗೆಯ ವಿನೋದವಿಲಾಸದಿಂದ ಇರುವುದು ಕಂಡಿತು.]
  • ತಾತ್ಪರ್ಯ:(ಆಗಿನ ಸಂಪ್ರದಾಯಗಳು) ಹಣೆಯ ತಿಲಕವನ್ನು ನೋಡಿಕೊಂಡು, ಮದರಂಗಿ ಅಥವಾ ಗೋರಂಟಿಗಿಡವನ್ನು ಅಪ್ಪಿಕೊಂಡು, ಸಂಪಗೆಯನ್ನು ಎಳನಗೆಯಿಂದ ಮುಡಿದು, ಪ್ರಿಯಂಗುವಂ(ಮರ)ವನ್ನು ಮುಟ್ಟಿ, ಮಾವಿನ ಚಿಗುರನ್ನು ಮುರಿದು ಆಟವಾಡಿ, ಅಶೋಕೆಯ ಮರವನ್ನು ಒದೆದು, ಬಕುಳೆಲೆಯನ್ನು ಬಾಯಿ ಮುಕ್ಕುಳಿಸಿ, ಪುನ್ನಾಗವಂ(ಸುರಹೊನ್ನೆ?)ಯನ್ನು ಮದದಿಂದ ಹಾಡಿ, ಕರ್ಣಿಕಾರವನ್ನು(ಬೆಟ್ಟದಾವರೆ)ಹೊಗಳಿ, ಕೊಂಡಾಡಿ,ಮಂದಾರಹೂವನ್ನ ಜಾಣತನದಿಂದ ಮುಡಿದು ತಲೆಯನ್ನು ಹೂಪೂರಣ ಮಾಡಿ, ಹೆಂಗಸುರು ನಾನಾಬಗೆಯ ವಿನೋದವಿಲಾಸದಿಂದ ಇರುವುದು ಕಂಡಿತು.

(ಪದ್ಯ - ೧೬)

ಪದ್ಯ :-:೧೭:

[ಸಂಪಾದಿಸಿ]

ಮುಟ್ಟಲ್ ಪ್ರಿಯಂಗು ಪೂವಹ ತರಳೆಯರ ಕೈಗೆ | ನಿಟ್ಟಿಸಲ್ ತಿಲಕಮಲರಹ ನೀರೆಯರ ಕಣ್ಗೆ | ಮೆಟ್ಟಿದೊಡಶೋಕಮಂಕುರಮಪ್ಪ ಬಾಲೆಯರ ಮೆಲ್ಲಡಿಗೆ ಮಿಗೆ ಬೆಳ್ನಗೆ ||
ಪುಟ್ಟಲ್ಕೆ ಸಂಪಗೆ ಮುಗುಳ್ದೋರ್ಪ ಸುದತಿಯರ | ಬಟ್ಟಮೊಗಕೆಣೆಯಹವೆ ತಾವರೆಗಳೆಂದವಂ | ಬಿಟ್ಟು ತುಂಬಿದ ಜೌವನೆಯರ ತನುಪರಿಮಳಕೆ ಕವಿದುವಾ ಬನದಳಿಗಳು ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮುಟ್ಟಲ್ ಪ್ರಿಯಂಗು(ಅಶೋಕಮರ) ಪೂವಹ ತರಳೆಯರ ಕೈಗೆ ನಿಟ್ಟಿಸಲ್ ತಿಲಕಂ(ತಿಲಕಮರ?) ಅಲರಹ=[ಬಾಲಕಿಯರು ಮುಟ್ಟಿದರೆ ಪ್ರಿಯಂಗು(ಅಶೋಕಮರ)ಹೋಬಿಡುವುದು, ಈ ತರಳೆಯ ಕೈಯನ್ನು ನೋಡಿದರೆ ತಿಲಕಮರ ಹೂವು ಬಿಡುವುದು ]; ನೀರೆಯರ ಕಣ್ಗೆ ಮೆಟ್ಟಿದೊಡೆ ಅಶೋಕಂ ಅಂಕುರಮಪ್ಪ ಬಾಲೆಯರ ಮೆಲ್ಲಡಿಗೆ ಮಿಗೆ ಬೆಳ್ನಗೆ ಪುಟ್ಟಲ್ಕೆ ಸಂಪಗೆ ಮುಗುಳ್ದೋರ್ಪ=[ ಬಾಲಕಿಯರ ಕಣ್ನಗೆಬಿದ್ದರೆ ಅಶೋಕಮರವು ಚಿಗುರುವುದು ಮತ್ತು ಮೃದುವಾದ ಪಾದತಾಗಿದರೆ ಮತ್ತೂ ಹೆಚ್ಚು ಚಿಗುರುವುದು, ಅವರ ಬೆಳದಿಂಗಳಂತಹ ನೆಗೆ ಅವರ ಮುಖದಲ್ಲಿ ತೋರಿದರೆ ಸಂಪಗೆಮರದಲ್ಲಿ ಮೊಗ್ಗೆಗಳು ಬರುವುವು]; ಸುದತಿಯರ ಬಟ್ಟಮೊಗಕೆ ಎಣೆಯಹವೆ ತಾವರೆಗಳೆಂದು ಅವಂ ಬಿಟ್ಟು ತುಂಬಿದ ಜೌವನೆಯರ ತನುಪರಿಮಳಕೆ ಕವಿದುವು ಆ ಬನದಳಿಗಳು=[ಈ ಹೆಣ್ಣುಮಕ್ಕಳ ಬಟ್ಟಲು ಅಥವಾ ಗುಂಡಾದ ಮುಖಕ್ಕೆ ತಾವರೆಗಳು ಸರಿಸಾಟಿಯೇ - ಅಲ್ಲ ಅದಕ್ಕೂ ಮಿಗಿಲು ಎಂದು, ಆ ಕಮಲಗಳನ್ನು ಬಿಟ್ಟು, ಈ ಪ್ರಾಯದ ಯುವತಿಯರ ದೇಹದಪರಿಮಳಕ್ಕೆ ಮನಸೋತು ಆ ಉಪವನದ ತುಂಬಿಗಳು / ಜೇನುಗಳು ಇವರನ್ನು ಮುತ್ತಿದವು.]
  • ತಾತ್ಪರ್ಯ:ಬಾಲಕಿಯರು ಮುಟ್ಟಿದರೆ ಪ್ರಿಯಂಗು(ಅಶೋಕಮರ)ಹೋಬಿಡುವುದು, ಈ ತರಳೆಯ ಕೈಯನ್ನು ನೋಡಿದರೆ ತಿಲಕಮರ ಹೂವು ಬಿಡುವುದು; ಬಾಲಕಿಯರ ಕಣ್ನಗೆಬಿದ್ದರೆ ಅಶೋಕಮರವು ಚಿಗುರುವುದು ಮತ್ತು ಮೃದುವಾದ ಪಾದತಾಗಿದರೆ ಮತ್ತೂ ಹೆಚ್ಚು ಚಿಗುರುವುದು, ಅವರ ಬೆಳದಿಂಗಳಂತಹ ನೆಗೆ ಅವರ ಮುಖದಲ್ಲಿ ತೋರಿದರೆ ಸಂಪಗೆಮರದಲ್ಲಿ ಮೊಗ್ಗೆಗಳು ಬರುವುವು; ಈ ಹೆಣ್ಣುಮಕ್ಕಳ ಬಟ್ಟಲು ಅಥವಾ ಗುಂಡಾದ ಮುಖಕ್ಕೆ ತಾವರೆಗಳು ಸರಿಸಾಟಿಯೇ - ಅಲ್ಲ ಅದಕ್ಕೂ ಮಿಗಿಲು ಎಂದು, ಆ ಕಮಲಗಳನ್ನು ಬಿಟ್ಟು, ಈ ಪ್ರಾಯದ ಯುವತಿಯರ ದೇಹದಪರಿಮಳಕ್ಕೆ ಮನಸೋತು ಆ ಉಪವನದ ತುಂಬಿಗಳು / ಜೇನುಗಳು ಇವರನ್ನು ಮುತ್ತಿದವು.

(ಪದ್ಯ - ೧೭)

ಪದ್ಯ :-:೧೮:

[ಸಂಪಾದಿಸಿ]

ಸಣ್ಣನಡು ಸೈನಿಮಿರೆ ತೋಳಮೊದಲೊಳ್ಪೆಸೆಯೆ | ತಿಣ್ಣಮೊಲೆಗಳ್ ಪೊದಳೆ ಬೆನ್ನ ಸೋರ್ಮುಡಿಯಲೆಯೆ | ಕಣ್ಣ ಬೆಳಗಾಗಸವ(ಸಾ)ನಾವರಿಸೆ ಮೊಗಮೆತ್ತಿ ತುದಿಗಾಲ್ಗಳಿಂದೆ ನಿಂದು ||
ಬಣ್ಣವಳಿಯದ ಪೂಗಳಂ ಕೊಯ್ದು ಬೆಂಡಾಗಿ | ತಣ್ಣೆಲರ್ಗೊಡ್ಡಿ ಮೈಬೆಮರನಾರಿಸಿಕೊಂಡು | ಪೆಣ್ಣುವಿಂಡಾ ಬನದೊಳಲರ್ಗಳಂ ತಮ್ಮ ತನುವಿನ ಕಂಪಿನಿಂ ಪೊರೆದರು ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಣ್ಣನಡು ಸೈನಿಮಿರೆ(ಹಿಮ್ಮಡಿಎತ್ತಿ ಕೈಮೇಲೆಮಾಡಿ ಚಿಮ್ಮಿದಾಗ) ತೋಳಮೊದಲೊಳ್ (ಪ)ಎಸೆಯೆ ತಿಣ್ಣಮೊಲೆಗಳ್ ಪೊದಳೆ(ಹೊಳೆಯಲು)=[ಸಣ್ಣನಡುವಿರುವ ಬಾಲೆಯರು ಹಿಮ್ಮಡಿಎತ್ತಿ ಕೈಮೇಲೆಮಾಡಿ ಮೇಲಕ್ಕೆ ಚಿಮ್ಮಿದಾಗ ತೋಳಿನ ಬುಡದಲ್ಲಿ ದಪ್ಪಗಟ್ಟಿ ಮೊಲೆಗಳು ಹೊಳೆಯಲು,]; ಬೆನ್ನ ಸೋರ್ಮುಡಿ(ತುರುಬು) ಅಲೆಯೆ, ಕಣ್ಣ ಬೆಳಗು ಆಗಸವನು ಆವರಿಸೆ ಮೊಗಮೆತ್ತಿ ತುದಿಗಾಲ್ಗಳಿಂದೆ ನಿಂದು,=[(ಎತ್ತರದಲ್ಲಿದ್ದ ಹೂ ಕೊಯ್ಯಲು) ಬೆನ್ನಮೇಲೆ ತುರುಬಿನಗಂಟು ಅಲೆದಾಡುತ್ತಿರಲು, ಕಣ್ಣ ನೋಟ ಆಕಾಶದಕಡೆ ಇದ್ದಾಗ, ಮುಖವನ್ನು ಮೇಲೆ ಎತ್ತಿ ತುದಿ-ಕಾಲಲ್ಲಿಲ್ ನಿಂತು,]; ಬಣ್ಣವಳಿಯದ ಪೂಗಳಂ ಕೊಯ್ದು ಬೆಂಡಾಗಿ ತಣ್ಣೆಲರ್ಗೆ ಒಡ್ಡಿ ಮೈಬೆಮರನು ಆರಿಸಿಕೊಂಡು ಪೆಣ್ಣುವಿಂಡು ಆ ಬನದೊಳು ಅಲರ್ಗಳಂ ತಮ್ಮ ತನುವಿನ ಕಂಪಿನಿಂ ಪೊರೆದರು=[ಬಣ್ಣಬಾಡದ ಹೊಸ ಹೂವುಗಳನ್ನು ಕೊಯ್ದು ಆಯಾಸಗೊಂಡು, ತಂಪುಗಾಳಿಗೆ ದೇಹವನ್ನು ಒಡ್ಡಿ ಮೈಬೆವರನ್ನು ಆರಿಸಿಕೊಂಡು ಈ ಹೆಣ್ಣುಗಳಹಿಂಡು ಆ ಉಪವನದಲ್ಲಿ ಹೂವುಗಳನ್ನು ತಮ್ಮ ದೇಹದ ಪರಿಮಳದಿಂದ, ಬಾಡದಂತೆ ಕಾಪಾಡಿದರು.]
  • ತಾತ್ಪರ್ಯ:ಸಣ್ಣ ನಡುವಿರುವ ಬಾಲೆಯರು ಹಿಮ್ಮಡಿಎತ್ತಿ ಕೈಮೇಲೆಮಾಡಿ ಮೇಲಕ್ಕೆ ಚಿಮ್ಮಿದಾಗ ತೋಳಿನ ಬುಡದಲ್ಲಿ ದಪ್ಪಗಟ್ಟಿ ಮೊಲೆಗಳು ಹೊಳೆಯಲು,(ಎತ್ತರದಲ್ಲಿದ್ದ ಹೂ ಕೊಯ್ಯಲು) ಬೆನ್ನಮೇಲೆ ತುರುಬಿನ ಗಂಟು ಅಲೆದಾಡುತ್ತಿರಲು, ಕಣ್ಣ ನೋಟ ಆಕಾಶದಕಡೆ ಇದ್ದಾಗ, ಮುಖವನ್ನು ಮೇಲೆ ಎತ್ತಿ ತುದಿ-ಕಾಲಲ್ಲಿ ನಿಂತು, ಬಣ್ಣಬಾಡದ ಹೊಸ ಹೂವುಗಳನ್ನು ಕೊಯ್ದು ಆಯಾಸಗೊಂಡು, ತಂಪುಗಾಳಿಗೆ ದೇಹವನ್ನು ಒಡ್ಡಿ ಮೈಬೆವರನ್ನು ಆರಿಸಿಕೊಂಡ ಈ ಹೆಣ್ಣುಗಳಹಿಂಡು ಆ ಉಪವನದಲ್ಲಿ ಹೂವುಗಳನ್ನು ತಮ್ಮ ದೇಹದ ಪರಿಮಳದಿಂದ, ಬಾಡದಂತೆ ಕಾಪಾಡಿದರು.

(ಪದ್ಯ - ೧೮)IX-IIX

ಪದ್ಯ :-:೧೯:

[ಸಂಪಾದಿಸಿ]

ನಿಲುಕಿ ಪೂಗೊಯ್ವ ಲಲಿತಾಂಗಿಯರ ಬಟ್ಟಬ | ಲ್ಮೊಲೆಗಳಂ ಪೊರಲಾರದಸಿಯ ಸೆಳೆನಡುವಿದು ಶಿ | ಥಿಲಮೆಂದು ಹರಿನೀಲದೆಸೆವೊಂದು ಸಣ್ಣಸರಳಂ ಮನೋಜಂ ನಿರ್ಮಿಸಿ ||
ನಿಲಿಸಿ ನಿಗಿದನೊ ಮೂರುಕಟ್ಟನೆಡೆಗೆಡೆಗೆನಲ್ | ಸಲೆ ರಾಜಿಸಿತು ವಳಿತ್ರಯದ ಚೆಲ್ವಿಕೆಯಿಂದೆ | ಲಲನೆಯರ ಮಧ್ಯದೊಳೊಗೆದ ಬಾಸೆ ಕುಸುಮಾಪಚಯಸಮಯದೊಳ್ ಪೊಸತೆನೆ ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಿಲುಕಿ ಪೂಗೊಯ್ವ ಲಲಿತಾಂಗಿಯರ ಬಟ್ಟಬಲ್ಮೊಲೆಗಳಂ ಪೊರಲಾರದಸಿಯ ಸೆಳೆನಡುವಿದು ಶಿಥಿಲಮೆಂದು=[ಹಿಮ್ಮಡಿ ಎತ್ತಿ ಮೇಲೆಕ್ಕೆ ಜೀಕಿ ಹೂವು ಕೊಯಿದು, ತೆಳುದೇಹದ ಹುಡುಗಿಯರ ದಪ್ಪಮೊಲೆಗಳನ್ನು ಹೊರಲಾರದೆ ಕತ್ತಿಯ ಸಣ್ಣಸೊಂಟದಂತೆ ಇದೆ ಇದೆಂದು ಅದಕ್ಕೆ ಬಲಸಾಲದೆಂದು]; ಹರಿನೀಲದೆ ಎಸೆವ ಒಂದು ಸಣ್ಣಸರಳಂ ಮನೋಜಂ ನಿರ್ಮಿಸಿ ನಿಲಿಸಿ ನಿಗಿದನೊ ಮೂರುಕಟ್ಟನು ಎಡೆಗೆಡೆಗೆನಲ್=[ಹರಿನೀಲಮಣಿಯಂತಿರು ಒಂದು ಸಣ್ಣಸರಳನ್ನು ಮನ್ಮಥನು ನಿರ್ಮಿಸಿ ಮಧ್ಯ ನಿಲ್ಲಿಸಿ ಮಧ್ಯಮಧ್ಯದಲ್ಲಿ ಮೂರುಕಟ್ಟನು ಹಾಕಿದ್ದಾನೋ ಎಣ್ನುವಂತೆ]; ಸಲೆ ರಾಜಿಸಿತು ವಳಿತ್ರಯದ ಚೆಲ್ವಿಕೆಯಿಂದೆ(ತ್ರಿವಳಿಯ/ ಮೂರು ರೋಮದ ರೇಖುಗಳು ಅಥವಾ ಸಾಲುಗಳು) ಲಲನೆಯರ ಮಧ್ಯದೊಳೊಗೆದ ಬಾಸೆ (ರೋಮದ ಸಾಲುಗಳು)ಕುಸುಮ ಅಪಚಯ ಸಮಯದೊಳ್ ಪೊಸತೆನೆ=[ಈ ಪ್ರಾಯದಹೆಣ್ನುಮಕ್ಕಳಯರ ಹೂವುಗಳನ್ನು ಕೊಯಗಯುವ ಸಮಯದಲ್ಲಿ ಸೊಂಟಮಧ್ಯದಲ್ಲಿ ಇರುವ ಮೂರು ರೋಮದ ಸಾಲುಗಳು ಚಂದವಾಗಿ ಪೊಸಬಗೆಯಂತೆ ಚಂದವಾಗಿ ಶೋಭಿಸಿತು. ].
  • ತಾತ್ಪರ್ಯ:ಹಿಮ್ಮಡಿ ಎತ್ತಿ ಮೇಲೆಕ್ಕೆ ಜೀಕಿ ಹೂವು ಕೊಯ್ಯವ, ತೆಳುದೇಹದ ಹುಡುಗಿಯರ ದಪ್ಪಮೊಲೆಗಳನ್ನು ಹೊರಲಾರದೆ ಕತ್ತಿಯ ಸಣ್ಣಸೊಂಟದಂತೆ ಇದೆ ಇದೆಂದು ಅದಕ್ಕೆ ಬಲಸಾಲದೆಂದು, ಹರಿನೀಲಮಣಿಯಂತಿರು ಒಂದು ಸಣ್ಣಸರಳನ್ನು ಮನ್ಮಥನು ನಿರ್ಮಿಸಿ ಮಧ್ಯ ನಿಲ್ಲಿಸಿ ಮಧ್ಯಮಧ್ಯದಲ್ಲಿ ಮೂರುಕಟ್ಟನು ಹಾಕಿದ್ದಾನೋ ಎಣ್ನುವಂತೆ, ಈ ಪ್ರಾಯದಹೆಣ್ನುಮಕ್ಕಳು ಹೂವುಗಳನ್ನು ಕೊಯ್ಯುವ ಸಮಯದಲ್ಲಿ ಸೊಂಟಮಧ್ಯದಲ್ಲಿ ಇರುವ ಮೂರು ರೋಮದ ಸಾಲುಗಳು ಪೊಸಬಗೆಯಂತೆ ಚಂದವಾಗಿ ಶೋಭಿಸಿತು.

(ಪದ್ಯ - ೧೯)

ಪದ್ಯ :-:೨೦:

[ಸಂಪಾದಿಸಿ]

ತುಂಬಿಗಳನೋಡಿಸದ ಚಂಪಕಂ ಸೊಕ್ಕಾನೆ | ಯಂ ಬೆದರಿಸದ ಸಿಂಗಮಿಡಿದಂಧಕಾರಮಂ | ತುಂಬಿಸದಚಂದ್ರಮಂಡಲಮಿರಲ್ ಕಂಡಿಲ್ಲಿ ನಾವುಮಿರ್ದೊಡೆ ನಮ್ಮನು ||
ಶಂಬರಾರಿಯ ಶರಂ ಕಾಡದಿರುಳಿನ ವಿರಹ | ಕೆಂಬ ನಿಶ್ಚಯದೊಳಗಲದೆ ಬಾಲಿಕೆಯರುರವ | ನಿಂಬುಗೊಂಡೆಣಿವಕ್ಕಿಯೆನಲೆಸೆದುವಲರ್ಗೊಯ್ವ ನೀರೆಯರ ನೆಲೆಮೊಲೆಗಳು ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತುಂಬಿಗಳನು ಓಡಿಸದ ಚಂಪಕಂ ಸೊಕ್ಕಾನೆಯಂ ಬೆದರಿಸದ ಸಿಂಗಂ ಇಡಿದ ಅಂಧಕಾರಮಂ ತುಂಬಿಸದ ಚಂದ್ರಮಂಡಲಮ್ ಇರಲ್ ಕಂಡಿಲ್ಲಿ ನಾವುಂ ಇರ್ದೊಡೆ=[ಜೇನುಗಳನ್ನು ಓಡಿಸದ ಸಂಪಗೆ ಹೂವು, ಸೊಕ್ಕಿದ ಆನೆಯನ್ನು ಹೆದರಿಸದ ಸಿಂಹ, ಕತ್ತಲೆ ಆವರಿಸಿದಾಗ, ಅದನ್ನು ತುಂಬಿಸದ ಬೆಳದಿಂಗಳ ಚಂದ್ರಮಂಡಲ ಇದ್ದಾಗ, ಕಂಡೂಕೂಡ ನಾವು ಇದ್ದರೆ]; ನಮ್ಮನು
ಶಂಬರಾರಿಯ ಶರಂ ಕಾಡದೆ ಇರುಳಿನ ವಿರಹಕೆಂಬ ನಿಶ್ಚಯದೊಳು ಅಗಲದೆ ಬಾಲಿಕೆಯರ ಉರವನು ಇಂಬುಗೊಂಡ ಎಣಿವಕ್ಕಿಯೆನಲು ಎಸೆದುವು ಅಲರ್ಗೊಯ್ವ ನೀರೆಯರ ನೆಲೆಮೊಲೆಗಳು=[ನಮ್ಮನ್ನು ರಾತ್ರಿಯಾದಾಗ ಪ್ರೇಮಿಯ ಅಗಲಿಕೆ ವಿರಹದಿಂದ ಮನ್ಮಥನ ಬಾಣವುಕಾಡುವಂತೆ, ಕಾಡದೆ ಇರುವುದೇ - ಹೆಣ್ಣಿನ ಅಗಲಿಕೆಯ ಸಂಕಟವನ್ನು ಅನುಭವಿಸಬೇಕಾಗುವುದು, ಎಂದು ತಿಳಿಸುವಂತೆ, ಆ ಹೂಗಳನ್ನು ಕೊಯ್ಯುವ ನಾರಿಯರ ಚಕ್ರವಾಕಪಕ್ಷಿಗಳಂತೆ ಕೋಡಿಕೊಂಡಿರುವ ಉಬ್ಬಿರುವ ಎದೆ, (ಸಣ್ಣಸೊಂಟ)ಗಳು ಶೋಭಿಸುತ್ತಿದ್ದವು.]
  • ತಾತ್ಪರ್ಯ:ಜೇನುಗಳನ್ನು ಓಡಿಸದ ಸಂಪಗೆ ಹೂವು (ಬಾಲಕಿಯರ ಮೂಗು), ಸೊಕ್ಕಿದ ಆನೆಯನ್ನು ಹೆದರಿಸದ ಸಿಂಹ (ಬಾಲಕಿಯರ ಸೊಂಟ), ಕತ್ತಲೆ ಆವರಿಸಿದಾಗ, ಅದನ್ನು ತುಂಬಿಸದ ಬೆಳದಿಂಗಳ ಚಂದ್ರಮಂಡಲ ಇದ್ದಾಗ (ಬಾಲಕಿಯರ ಮುಖ), ಕಂಡೂಕೂಡ ನಾವು ಇದ್ದರೆ, ನಮ್ಮನ್ನು ರಾತ್ರಿಯಾದಾಗ ಪ್ರೇಮಿಯ ಅಗಲಿಕೆ ವಿರಹದಿಂದ ಮನ್ಮಥನ ಬಾಣವುಕಾಡುವಂತೆ, ಕಾಡದೆ ಇರುವುದೇ - ಹೆಣ್ಣಿನ ಅಗಲಿಕೆಯ ಸಂಕಟವನ್ನು ಅನುಭವಿಸಬೇಕಾಗುವುದು, ಎಂದು ತಿಳಿಸುವಂತೆ, ಆ ಹೂಗಳನ್ನು ಕೊಯ್ಯುವ ನಾರಿಯರ ಚಕ್ರವಾಕಪಕ್ಷಿಗಳಂತೆ ಕೋಡಿಕೊಂಡಿರುವ ಉಬ್ಬಿರುವ ಎದೆ, (ಸಣ್ಣಸೊಂಟ)ಗಳು ಶೋಭಿಸುತ್ತಿದ್ದವು.]

(ಪದ್ಯ - ೨೦)

ಪದ್ಯ :-:೨೧:

[ಸಂಪಾದಿಸಿ]

ಮೊಳೆವಲ್ಲ ಮೊಲ್ಲೆಯಂ ಚೆಂದುಟಿಯ ಬಂದುಗೆಯ | ನೆಳನಗೆಯ ಮಲ್ಲಿಗೆಯ ನೆಸಳ್ಗಣ್ಣ ನೈದಿಲಂ | ನಳಿತೋಳ ಸಿರಿಸಮಂ ಸೆಳ್ಳುಗುರು ಕೇತಕಿಯ ನುಣ್ಮೊಗದ(ಆನನದ) ತಾವರೆಯನು ||
ತೊಳಗುವ ಸುನಾಸಿಕದ ಸಂಪಗೆಯನವಯವದೊ | ಳಳವಡಿಸಿ ಕುಸುಮಗಂಧಿಯರೇತಕಿನ್ನು ಪೂ | ಗಳನರಸಿ ಕೊಯ್ಯರೆಂದವರ ನಡು ಚಿಂತಿಸಿಯೆ ಬಡವಾದುದೆನೆಲೆಸೆದುದು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೊಳೆವಲ್ಲ (ಮೊಳೆತ ಹಲ್ಲು) ಮೊಲ್ಲೆಯಂ (ಮಲ್ಲಿಗೆ ಹೂ), ಚೆಂದುಟಿಯ ಬಂದುಗೆಯನು (ಕೆಂಪುದಾಸವಾಳ)=[ಆಲ್ಲಿ ಸುಳಿದಾಡತ್ತಿದ್ದ ಬಾಲೆಯರು ಹೇಗಿದ್ದರೆಂದರೆ: ಮೊಳೆತ ಹಲ್ಲು ಅದೇ ಮಲ್ಲಿಗೆ ಹೂ, ಅವರ ಚೆಂದುಟಿಯೇ ಕೆಂಪುದಾಸವಾಳ];, ಎಳನಗೆಯ ಮಲ್ಲಿಗೆಯನು ಎಸಳ್ಗಣ್ಣ ನೈದಿಲಂ, ನಳಿತೋಳ ಸಿರಿಸಮಂ, ಸೆಳ್ಳುಗುರು ಕೇತಕಿಯ=[ಎಳನಗೆಯೇ ಮಲ್ಲಿಗೆ, ಅಗಲವಾದ ಕಣ್ಣೇ ಕಮಲ, ನಳಿತೋಳುಗಳೇ ಮೃದುವಾದ ಶೀರೀಷ ಹೂ, ಚೂಪು ಉಗುರು ಕೇತಗೆ ಹೂವು,];ನುಣ್ಮೊಗದ(ಆನನದ) ತಾವರೆಯನು
ತೊಳಗುವ ಸುನಾಸಿಕದ ಸಂಪಗೆಯನು=[ನುಣ್ಮೊಗದ/ಆನನದ/ನುಣುಪಾದ ಮುಖವೇ ತಾವರೆ ಹೂವು, ಚಂದದ ಮೂಗು ಸಂಪಗೆ],ಅವಯವದೊಳು ಅಳವಡಿಸಿ ಕುಸುಮಗಂಧಿಯರು ಏತಕಿನ್ನು ಪೂಗಳನು ಅರಸಿ ಕೊಯ್ಯರೆಂದು ಅವರ ನಡು ಚಿಂತಿಸಿಯೆ ಬಡವಾದುದು ಎನೆಲು ಎಸೆದುದು=[ ಹೀಗೆ ಅವರ ಅವಯವದಲ್ಲಿ ಅಳವಡಿಸಿರುವಾಗ ಹೂವಿನ ಪರಿಮಳವುಳ್ಳ ಈ ಬಾಲೆಯರು, ಏತಕ್ಕೆ ಇನ್ನೂ ಹೂವುಗಳನ್ನು ಹುಡುಕಿ ಕೊಯ್ಯುವರೆಂದು, ಅವರ ಸೊಂಟ ಚಿಂತೆಮಾಡಿ- ಮಾಡಿ ಬಡವಾದುದೋ ಎಂಬಂತೆ ಅವರ ನಡು ಬಡಕಲು/ಸಪುರವಾಗಿತ್ತು.]
  • ತಾತ್ಪರ್ಯ: ಆಲ್ಲಿ ಸುಳಿದಾಡತ್ತಿದ್ದ ಬಾಲೆಯರು ಹೇಗಿದ್ದರೆಂದರೆ: ಮೊಳೆತ ಹಲ್ಲು ಅದೇ ಮಲ್ಲಿಗೆ ಹೂ, ಅವರ ಚೆಂದುಟಿಯೇ ಕೆಂಪುದಾಸವಾಳ, ಎಳನಗೆಯೇ ಮಲ್ಲಿಗೆ, ಅಗಲವಾದ ಕಣ್ಣೇ ಕಮಲ, ನಳಿತೋಳುಗಳೇ ಮೃದುವಾದ ಶೀರೀಷ ಹೂ, ಚೂಪು ಉಗುರು ಕೇತಗೆ ಹೂವು, ನುಣ್ಮೊಗದ/ಆನನದ/ನುಣುಪಾದ ಮುಖವೇ ತಾವರೆ ಹೂವು, ಚಂದದ ಮೂಗು ಸಂಪಗೆ, ಹೀಗೆ ಅವರ ಅವಯವದಲ್ಲಿ ಹೂವುಗಳನ್ನು ಅಳವಡಿಸಿರುವಾಗ ಹೂವಿನ ಪರಿಮಳವುಳ್ಳ ಈ ಬಾಲೆಯರು, ಏತಕ್ಕೆ ಇನ್ನೂ ಹೂವುಗಳನ್ನು ಹುಡುಕಿ ಕೊಯ್ಯುವರೆಂದು, ಅವರ ಸೊಂಟ ಚಿಂತೆಮಾಡಿ- ಮಾಡಿ ಬಡವಾದುದೋ ಎಂಬಂತೆ ಅವರ ನಡು ಬಡಕಲು/ಸಪುರವಾಗಿತ್ತು.

(ಪದ್ಯ - ೨೧)

ಪದ್ಯ :-:೨೨:

[ಸಂಪಾದಿಸಿ]

ಕರವೀರವರ್ಗಮಂ ಬಾಗಿಸಿದರದಟರಂ | ತಿರದೆ ಪುನ್ನಾಗಮಂ ಪತ್ತಿರಂಜಿಸಿದರ್ ಚ | ದುರಮಾವುಗರಂತೆ ಜಾತಿಯಂತರವನರಿದಾಯ್ದುರವನೀಶರಂತೆ ||
ಸುರಗಿಯಂ ತುಡುಕಿದರ್ ಭಟರಂತೆ ಬಗೆಗೆಳಸಿ | ಪರಿದರ್ ಸುವಿಟರಂತೆ ಪಾದರಿಯನರಸಿ ಪಿಡಿ || ದುರವಣಿಸಿದರ್ ನಗರಶೋಧನೆಯ ತಳವಾರರಂತೆ ಬನದೊಳ್ ಪೆಣ್ಗಳು ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕರವೀರ ವರ್ಗಮಂ ಬಾಗಿಸಿದರು ಅದಟರು, ಅಂತಿರದೆ ಪುನ್ನಾಗಮಂ ಪತ್ತಿರಂಜಿಸಿದರ್=[ಕರವೀರಗಿಡವನ್ನು ಹೂಕೊಯ್ಯಲು ಬಗ್ಗಿಸಿದಾಗ- ಆ ಹೆಣ್ಣುಗಳು ಕೈಯಲ್ಲಿ ಯುದ್ಧಮಾಡುವ ವೀರರನ್ನು ಬಗ್ಗಿಸಿ ಜಯಿಸಿದಂತಾಯಿತು, ಅದ್ದರಿಂದ ಅವರು ಅದಟರು- ವೀರರು; ಅಂತಿರದೆ ಪುನ್ನಾಗಮಂ ಪತ್ತಿ ರಂಜಿಸಿದರ್ ಚದುರ ಮಾವುಗರಂತೆ=[ಅಷ್ಟಲ್ಲದೆ ಪುನ್ನಾಗವೆಂಬ ಮರ ಹತ್ತಿದರು ಆನಂದಿಸಿದರು - ಆಗ ಅವರು ಪು-ಗಂಡು~ನಾಗ ಆನೆಯನ್ನು ಹತ್ತಿದ ಚದುರ ಮಾವುತರಂತೆ ಆನಂದಿಸಿದರು]; ಸುರಗಿಯಂ ತುಡುಕಿದರ್ ಜಾತಿಯಂತರವನರಿದೆ ಆಯ್ದುರವನೀಶರಂತೆ ಸುರಗಿಯಂ ತುಡುಕಿದರ್=[ಹೂವುಗಳ ಜಾತಿಯ ಅಂತರವನ್ನು ಎಣಿಸದೆ ಎಲ್ಲಾ ಹೂವನ್ನೂ ಆಯ್ದುಕೊಂಡರು- ಹೇಗೆಂದರೆ ಮಾನವರಲ್ಲಿ ಜಾತಿ ಅಂತರವನ್ನು ನೋಡದೆ ಪಾಲಿಸುವರು ರಾಜರು ಅಥವಾ ಅವನೀಶರು ಅವರ ಹಾಗಿರುವರು ವನಿತೆಯರು, ಮತ್ತೆ ಸುರಗಿಯನ್ನು ಹಿಡಿದರು ಹೂವನ್ನು ಕೊಯ್ದುರು ಎನ್ನುವುದು-ಸುರಗಿ ಕತ್ತಿಯನ್ನು(ಸಿರಿಗನ್ನಡ ಅರ್ಥಕೋಶ) ಹಿಡಿದರು ಎಂದೂ ಆಗುವುದು];ಭಟರಂತೆ ಬಗೆಗೆಳಸಿ ಪರಿದರ್,, ಸುವಿಟರಂತೆ ಪಾದರಿಯನರಸಿ ಪಿಡಿದು ಉವಣಿಸಿದರ್ ನಗರಶೋಧನೆಯ ತಳವಾರರಂತೆ ಬನದೊಳ್ ಪೆಣ್ಗಳು=[ಭಟರಂತೆ /ಕಾವಲುಗಾರರಂತೆ ಪತ್ತೆಗಾಗಿ ತಿರುಗಾಡಿದರು, ಹೊಸಬಗೆ ಹೂವಿಗಾಗಿ ಹುಡುಕಿದರು;ಪಾದರಿಎಂಬ ಹೂವನ್ನು ಹುಡುಕಿಅದನ್ನು ಹಿಡಿದರು, ಜಾರೆಯರನ್ನು ಅರಸಿ ಹೊರಟ ಜಾಣ ವಿಟರಂತೆ ಇದ್ದರು; ನಗರದಲ್ಲಿ ಕಳ್ಳರನ್ನು ಹುಡುಕುವ ತಳವಾರರಂತೆ ಕಾಡಿನಲ್ಲಿ ಶರ್ಯ ತೋರಿ ಜಾಲಾಡಿದರು ಈ ಹೆಂಗಳೆಯರು.]
  • ತಾತ್ಪರ್ಯ: (ಹೂವು ಮರ ಗಿಡಗಳ ಹೆಸರಿಗೆ ದ್ವಂದ್ವಾರ್ಥವನ್ನು ಕೊಟ್ಟು ಚಮತ್ಕಾರ ಉಪಮೆ) ಕರವೀರಗಿಡವನ್ನು ಹೂಕೊಯ್ಯಲು ಬಗ್ಗಿಸಿದಾಗ- ಆ ಹೆಣ್ಣುಗಳು ಕೈಯಲ್ಲಿ ಯುದ್ಧಮಾಡುವ ವೀರರನ್ನು ಬಗ್ಗಿಸಿ ಜಯಿಸಿದಂತಾಯಿತು, ಅದ್ದರಿಂದ ಅವರು ಅದಟರು- ವೀರರು; ಅಷ್ಟಲ್ಲದೆ ಪುನ್ನಾಗವೆಂಬ ಮರ ಹತ್ತಿದರು ಆನಂದಿಸಿದರು - ಆಗ ಅವರು ಪು-ಗಂಡು~ನಾಗ ಆನೆಯನ್ನು ಹತ್ತಿದ ಚದುರ ಮಾವುತರಂತೆ ಆನಂದಿಸಿದರು; ಹೂವುಗಳ ಜಾತಿಯ ಅಂತರವನ್ನು ಎಣಿಸದೆ ಎಲ್ಲಾ ಹೂವನ್ನೂ ಆಯ್ದುಕೊಂಡರು- ಹೇಗೆಂದರೆ ಮಾನವರಲ್ಲಿ ಜಾತಿ ಅಂತರವನ್ನು ನೋಡದೆ ಪಾಲಿಸುವರು ರಾಜರು ಅಥವಾ ಅವನೀಶರು ಅವರ ಹಾಗಿರುವರು ವನಿತೆಯರು, ಮತ್ತೆ ಸುರಗಿಯನ್ನು ಹಿಡಿದರು ಹೂವನ್ನು ಕೊಯ್ದುರು ಎನ್ನುವುದು-ಸುರಗಿ ಕತ್ತಿಯನ್ನು(ಸಿರಿಗನ್ನಡ ಅರ್ಥಕೋಶ) ಹಿಡಿದರು ಎಂದೂ ಆಗುವುದು; ಭಟರಂತೆ /ಕಾವಲುಗಾರರಂತೆ ಪತ್ತೆಗಾಗಿ ತಿರುಗಾಡಿದರು, ಹೊಸಬಗೆ ಹೂವಿಗಾಗಿ ಹುಡುಕಿದರು;ಪಾದರಿಎಂಬ ಹೂವನ್ನು ಹುಡುಕಿಅದನ್ನು ಹಿಡಿದರು, ಜಾರೆಯರನ್ನು ಅರಸಿ ಹೊರಟ ಜಾಣ ವಿಟರಂತೆ ಇದ್ದರು; ನಗರದಲ್ಲಿ ಕಳ್ಳರನ್ನು ಹುಡುಕುವ ತಳವಾರರಂತೆ ಕಾಡಿನಲ್ಲಿ ಶರ್ಯ ತೋರಿ ಜಾಲಾಡಿದರು ಈ ಹೆಂಗಳೆಯರು.(ಇದಕ್ಕೆ ವಿರೋಧಾಭಾಸ ಅಲಂಕಾರ ಮತ್ತು ಉಪಮೆಯ ಉಪಯೊಗವೆನ್ನವರು)

(ಪದ್ಯ - ೨೨)X-||X

ಪದ್ಯ :-:೨೩:

[ಸಂಪಾದಿಸಿ]

ಜಾತಿ ಸೇವಂತಿಗೆ ಶಿರೀಷಮೊದಲಾದ ಪೂ | ಜಾತಿಗಳೊಳಿಂತಲರ್ಗೊಯ್ಯತುಪವನದೊಳ್ ನಿ | ಜಾತಿಶಯಲೀಲೆಯಿಂದಿರುತಿರ್ದಳಾ ಮದಮಂಜರಿ ಕೆಳೆದಿಯರೊಡನೆ ||
ಭೂತಳದೊಳಿದು ಶುಭಾಕಾರದಿಂದಾಶ್ಚರ್ಯ | ಭೂತಮೆನೆ ಮೈದೋರಿತಾಗೆಳಮರೇಂದ್ರ ಸಂ | ಭೂತನ ತರಂಗಮಮದಂ ಕಂಡು ಮುತ್ತಿದರ್ ಮತ್ತಗಜಗಾಮಿನಿಯರು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಜಾತಿ ಸೇವಂತಿಗೆ ಶಿರೀಷಮೊದಲಾದ ಪೂಜಾತಿಗಳೊಳ್ ಇಂತು ಅಲರ್ಗೊಯ್ಯತ ಉಪವನದೊಳ್=[ಆನೇಕ ಜಾತಿಯ ಹೂಗಳಾದ ಸೇವಂತಿಗೆ ಶಿರೀಷಮೊದಲಾದ ಹೂವಿನ ಜಾತಿಗಳ ಹೀಗೆ ಹೂವು ಕೊಯ್ಯುತ್ತಾ ಉಪವನದಲ್ಲಿ];ನಿಜ ಅತಿಶಯ ಲೀಲೆಯಿಂದ ಇರುತಿರ್ದಳು ಆ ಮದಮಂಜರಿ ಕೆಳೆದಿಯರೊಡನೆ=[ತನ್ನ ಆಟವಿನೋದದಲ್ಲಿ ಆ ಮದಮಂಜರಿ ಗೆಳತಿಯರೊಡನೆ ಇರುತ್ತಿದ್ದಳು ]; ಭೂತಳದೊಳು ಇದು ಶುಭಾಕಾರದಿಂದ ಆಶ್ಚರ್ಯಭೂತಮೆನೆ ಮೈದೋರಿತು=[ಭೂಮಂಡಲದಲ್ಲೇ ಇದು ಶುಭವಾದ ಅದ್ಭುತ ಆಕಾರದಿಂದ ಆಶ್ಚರ್ಯ ಪ್ರಾಣಿ ಎಂಬಂತೆ ಮೆನೆ ಆಗ ಅಲ್ಲಿ ಕಂಡಿತು,]; ಆಗೆಳು ಅಮರೇಂದ್ರ ಸಂಭೂತನ(ಇಂದ್ರನ ಮಗ) ತರಂಗಂ ಅದಂ ಕಂಡು ಮುತ್ತಿದರ್ ಮತ್ತಗಜಗಾಮಿನಿಯರು=[ಅರ್ಜುನನ ಕುದುರೆ, ಅದನ್ನು ಕಂಡು ಮುತ್ತಿದರ್ ಮದ್ದಾನೆಯಂತೆ ನಡೆಯುವ ಹೆಂಗಸರು ಅದನ್ನು ಮುತ್ತಿಕೊಂಡರು].
  • ತಾತ್ಪರ್ಯ:ಆನೇಕ ಜಾತಿಯ ಹೂಗಳಾದ ಸೇವಂತಿಗೆ ಶಿರೀಷಮೊದಲಾದ ಹೂವಿನ ಜಾತಿಗಳ ಹೀಗೆ ಹೂವು ಕೊಯ್ಯುತ್ತಾ ಉಪವನದಲ್ಲಿ, ತನ್ನ ಆಟ ವಿನೋದಗಳಲ್ಲಿ ಆ ನೀಲಧ್ವಜನ ಮಗನ ಹೆಂಡತಿ, ಮದಮಂಜರಿ ಗೆಳತಿಯರೊಡನೆ ಇರುತ್ತಿದ್ದಳು. ಆಗ ಅಲ್ಲಿ, ಭೂಮಂಡಲದಲ್ಲೇ ಇದು ಶುಭವಾದ ಅದ್ಭುತ ಆಕಾರದಿಂದ ಆಶ್ಚರ್ಯ ಪ್ರಾಣಿ ಎಂಬಂತೆ ಅರ್ಜುನನ ಕುದುರೆ ಕಂಡಿತು. ಅದನ್ನು ಕಂಡು ಮದ್ದಾನೆಯಂತೆ ನಡೆಯುವ ಆ ಹೆಂಗಸರು ಅದನ್ನು ಮುತ್ತಿಕೊಂಡರು.

(ಪದ್ಯ - ೨೩)

ಪದ್ಯ :-:೨೪:

[ಸಂಪಾದಿಸಿ]

ವನಿತೆಯರೊಳಾ ಮದನಮಂಜರಿ ಹಯದ ಪಣಿಯ | ಕನಕಪಟ್ಟದ ಲೇಖನವನೋದಿಕೊಂಡು ಯಮ | ತನುಜನಗ್ಗಳಿಕೆಯಂ ಕಂಡು ನಸುನಗುತೆ ನಿಜಪತಿಗಾಗಳದನುಸಿರಲು ||
ಕನಲ್ದಿನಿಯಳಂ ನೋಡುತವನೆದ್ದು ಕಾಣಬಹು | ದೆನುತ ಪಿಡಿದಶ್ವಮಂ ಕಟ್ಟಿ ಪಟ್ಟಣಕೆ ಮಾ | ನಿನಿಯರಂ ಕಳುಹಿ ಪರಿವಾರಮಂ ಕರೆಸಿ ನರನೊಳ್ ಕಾದಲನುವಾದನು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವನಿತೆಯರೊಳ ಆ ಮದನಮಂಜರಿ ಹಯದ ಪಣಿಯ ಕನಕಪಟ್ಟದ ಲೇಖನವನು ಓದಿಕೊಂಡು=[ಆ ಉಪವನದಲ್ಲಿದ್ದ ವನಿತೆಯರಲ್ಲಿ ಆ ಮದನಮಂಜರಿ ಕುದುರೆಯ ಹಣಿಯ ಕನಕಪಟ್ಟದ(ಚಿನ್ನದ ಪಟ್ಟಿ) ಲೇಖನವನ್ನು ಓದಿಕೊಂಡು]; ಯಮ ತನುಜನ ಉಗ್ಗಳಿಕೆಯಂ ಕಂಡು ನಸುನಗುತೆ ನಿಜಪತಿಗೆ ಆಗಳು ಅದನು ಉಸಿರಲು=[ಧರ್ಮರಾಯನ ಶ್ರೇಷ್ಠತೆಯ ಬಿರುದನ್ನು ಕಂಡು ನಸುನಗುತ್ತಾ ಗಂಡನಿಗೆ ಆಗಲೇ ಅದನ್ನು ಹೇಳಿದಳು. ಆಗ]; ಕನಲ್ದು ಇನಿಯಳಂ ನೋಡುತ ಅವನೆದ್ದು ಕಾಣಬಹುದು ಎನುತ ಪಿಡಿದು ಅಶ್ವಮಂ ಕಟ್ಟಿ=[ಅವನು ಸಿಟ್ಟುಗೊಂಡು,ಹೆಂಡತಿಯನ್ನು ನೋಡುತ್ತಾ ಅವನೆದ್ದು ಪರೀಕ್ಷಿಸಬೇಕೆಂದು ಕುದುರೆಯನ್ನು ಹಿಡಿದು ಕಟ್ಟಿ]; ಪಟ್ಟಣಕೆ ಮಾನಿನಿಯರಂ ಕಳುಹಿ ಪರಿವಾರಮಂ ಕರೆಸಿ ನರನೊಳ್ ಕಾದಲು ಅನುವಾದನು=[ಟ್ಟಣಕ್ಕೆ ಹೆಂಗಸರನ್ನು ಕಳುಹಿಸಿ ತನ್ನ ಮಂತ್ರಿ ಸೇನಾಧಿಪತಿ ಮೊದಲಾದ ಪರಿವಾರವನ್ನು ಕರೆಸಿ ಅರ್ಜುನನೊಡನೆ ಯುದ್ಧಮಾಡಲು ಅನುವಾದನು].
  • ತಾತ್ಪರ್ಯ:ಆ ಉಪವನದಲ್ಲಿದ್ದ ವನಿತೆಯರಲ್ಲಿ ಆ ಮದನಮಂಜರಿ ಕುದುರೆಯ ಹಣಿಯ ಕನಕಪಟ್ಟದ(ಚಿನ್ನದ ಪಟ್ಟಿ) ಲೇಖನವನ್ನು ಓದಿಕೊಂಡು, ಧರ್ಮರಾಯನ ಶ್ರೇಷ್ಠತೆಯ ಬಿರುದನ್ನು ಕಂಡು ನಸುನಗುತ್ತಾ ಗಂಡನಿಗೆ ಆಗಲೇ ಅದನ್ನು ಹೇಳಿದಳು. ಆಗ ಅವನು ಸಿಟ್ಟುಗೊಂಡು,ಹೆಂಡತಿಯನ್ನು ನೋಡುತ್ತಾ ಅವನೆದ್ದು ಪರೀಕ್ಷಿಸಬೇಕೆಂದು ಕುದುರೆಯನ್ನು ಹಿಡಿದು ಕಟ್ಟಿ, ಪಟ್ಟಣಕ್ಕೆ ಹೆಂಗಸರನ್ನು ಕಳುಹಿಸಿ ತನ್ನ ಮಂತ್ರಿ ಸೇನಾಧಿಪತಿ ಮೊದಲಾದ ಪರಿವಾರವನ್ನು ಕರೆಸಿ ಅರ್ಜುನನೊಡನೆ ಯುದ್ಧಮಾಡಲು ಅನುವಾದನು.

(ಪದ್ಯ - ೨೪)

ಪದ್ಯ :-:೨೫:

[ಸಂಪಾದಿಸಿ]

ಭೂಲೋಲ ಕೇಳಗ್ನಿ ಮನೆಯಳಿಯನಾಗಿಹಂ | ನೀಲದ್ವಜಂಗದೆಂತೆನೆ ಮುನ್ನವನ ಮಗಳ್ | ಮೂಲೋಕದೊಳ್ ಸುಭಗರಾರೆಂದರಸಿ ನೋಂತು ಪಾವಕನ ನೊಲಿಸೆಮೆಚ್ಚಿ ||
ಬಾಲಿಕೆಯನಂದುಮೊದಲಾಗಿ ವೈಶ್ವಾನರಂ | ಪಾಲಿಪಂ ಪತಿರೂಪದಿಂದಾ ಪುರದೊಳವನ | ಮೂಲ ಬಲದಿಂ ಪ್ರವೀರಂ ಪಿಡಿದು ಕಟ್ಟಿದಂ ಪಾರ್ಥನ ತುರಂಗಮವನು ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭೂಲೋಲ ಕೇಳಗ್ನಿ ಮನೆಯ ಅಳಿಯನಾಗಿಹಂ ನೀಲದ್ವಜಂಗೆ=[ಜನಮೇಜಯ ರಾಜನೇ ಕೇಳು,ನೀಲದ್ವಜನಿಗೆ ಅಗ್ನಿಯು ಆ ಮನೆಯ ಅಳಿಯನಾಗಿದ್ದಾನೆ.]; ಅದೆಂತೆನೆ ಮುನ್ನವನ ಮಗಳ್ ಮೂಲೋಕದೊಳ್ ಸುಭಗರು ಆರೆಂದು ಅರಸಿ ನೋಂತು ಪಾವಕನ ನೊಲಿಸೆ ಮೆಚ್ಚಿ ಬಾಲಿಕೆಯನು =[ಅದು ಹೇಗೆಂದರೆ,ಮುಂಚೆ ಅವನ ಮಗಳು ಮೂರು ಲೋಕಗಳಲ್ಲಿ ಶ್ರೇಷ್ಠರು ಯಾರೆಂದು ಹುಡುಕಿ, ಅಗ್ನಿಯನ್ನು ಉಪಾಸನೆಮಾಡಿದಾಗ ಅಗ್ನಿ ಸೋತು ಮೆಚ್ಚಿ ಆ ಬಾಲಕಿಯನ್ನು ಮದುವೆಯಾದನು.]; ಅಂದು ಮೊದಲಾಗಿ ವೈಶ್ವಾನರಂ ಪಾಲಿಪಂ ಪತಿರೂಪದಿಂದ ಆ ಪುರದೊಳು=[ಅಂದು ಮೊದಲಾಗಿ ಅಗ್ನಿಯು ಪತಿರೂಪದಿಂದ ಆ ನಗರದಲ್ಲಿದ್ದು ಪಾಲಿಸುವನು.] ಅವನ ಮೂಲ ಬಲದಿಂ ಪ್ರವೀರಂ ಪಿಡಿದು ಕಟ್ಟಿದಂ ಪಾರ್ಥನ ತುರಂಗಮವನು=[ಅವನ ಬೆಂಬಲದಿಂದ ಪ್ರವೀರನು ಪಾರ್ಥನ ತುರಗವನ್ನು ಪಿಡಿದು ಕಟ್ಟಿದನು]
  • ತಾತ್ಪರ್ಯ:ಜನಮೇಜಯ ರಾಜನೇ ಕೇಳು,ನೀಲದ್ವಜನಿಗೆ ಅಗ್ನಿಯು ಆ ಮನೆಯ ಅಳಿಯನಾಗಿದ್ದಾನೆ. ಅದು ಹೇಗೆಂದರೆ,ಮುಂಚೆ ಅವನ ಮಗಳು ಮೂರು ಲೋಕಗಳಲ್ಲಿ ಶ್ರೇಷ್ಠರು ಯಾರೆಂದು ಹುಡುಕಿ, ಅಗ್ನಿಯನ್ನು ಉಪಾಸನೆಮಾಡಿದಾಗ ಅಗ್ನಿ ಸೋತು ಮೆಚ್ಚಿ ಆ ಬಾಲಕಿಯನ್ನು ಮದುವೆಯಾದನು. ಅಂದು ಮೊದಲಾಗಿ ಅಗ್ನಿಯು ಪತಿರೂಪದಿಂದ ಆ ನಗರದಲ್ಲಿದ್ದು ಪಾಲಿಸುವನು.ಅವನ ಬೆಂಬಲದ ಬಲದಿಂದ ಪ್ರವೀರನು ಪಾರ್ಥನ ತುರಗವನ್ನು ಪಿಡಿದು ಕಟ್ಟಿದನು.

(ಪದ್ಯ - ೨೪)

ಪದ್ಯ :-:೨೬:

[ಸಂಪಾದಿಸಿ]

ಕಟ್ಟಿರ್ದ ಕುದುರೆಯಂ ಕಂಡು ಕಾಪಿನ ಭಟರ್ | ದಟ್ಟಿಸಿದೊಡಾ ಪ್ರವೀರಂ ಕೆರಳ್ದಾಹವಂ | ಗೊಟ್ಟೆನಾರ್ಪೊಡೆ ಬರಲಿ ತನ್ನೊಡನೆ ಕಾಳಗಕೆ ಪಡೆಸಹಿತ ಪಾರ್ಥನೆಂದು ||
ತೊಟ್ಟಂ ಶರಾಸನದೊಳಂಬನವನೀ ಮಾತು | ಮುಟ್ಟದುದು ಫಲುಗುಣಂಗೆಳನಗೆಯ ಕೋಪದಿಂ | ದಟ್ಟಿ ನೋಡಿದೊಡಾಗ ನಡೆದುದು ಚತುರ್ಬಲಂ ಸರ್ವಸನ್ನಾಹದಿಂದೆ ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಟ್ಟಿರ್ದ ಕುದುರೆಯಂ ಕಂಡು ಕಾಪಿನ ಭಟರ್ ದಟ್ಟಿಸಿದೊಡೆ ಆ ಪ್ರವೀರಂ ಕೆರಳ್ದು=[ಕಟ್ಟಿದ್ದ ಕುದುರೆಯನ್ನು ಕಂಡು ಕಾಪವಲಿನನ ಭಟರು, ಹೆದರಿಸಿದರು ಆಗ ಪ್ರವೀರನು ಸಿಟ್ಟುಗೊಂಡು, ಕೆರಳ್ದು]; ಆಹವಂಗೊಟ್ಟೆನು ಆರ್ಪೊಡೆ ಬರಲಿ ತನ್ನೊಡನೆ ಕಾಳಗಕೆ ಪಡೆಸಹಿತ ಪಾರ್ಥನೆಂದು ತೊಟ್ಟಂ ಶರಾಸನದೊಳು ಅಂಬನು=[ಯುದ್ಧವನ್ನು ಕೊಟ್ಟಿದ್ದೇನೆ; ಶಕ್ತಿ ಇದ್ದರೆ ಬರಲಿ ತನ್ನೊಡನೆ ಪಾರ್ಥನು ಸೈನ್ಯಸಹಿತ ಕಾಳಗಕ್ಕೆ ಬರಲಿ ಎಂದು, ಬಲ್ಲಿನಲ್ಲಿ ಬಾಣಹೂಡಿನಿಂತನು.];ಅವನ ಈ ಮಾತು ಮುಟ್ಟದುದು ಫಲುಗುಣಂಗೆ ಎಳನಗೆಯ ಕೋಪದಿಂ ದಟ್ಟಿ(ಘರ್ಜಿಸಿ) ನೋಡಿದೊಡೆ ಆಗ ನಡೆದುದು ಚತುರ್ಬಲಂ ಸರ್ವಸನ್ನಾಹದಿಂದೆ=[ಅವನ ಈ ಮಾತು ಫಲುಗುಣನಿಗೆ ಮುಟ್ಟಿತು,ಮುಗುಳನಗೆಯ ಕೋಪದಿಂದ ಘರ್ಜಿಸಿ ನಂತರ ನೋಡಿದಾಗ ಚತುರ್ಬಲ ಸೈನ್ಯವೂ ಸರ್ವಸನ್ನಾಹದಿಂದ ಯುದ್ಧಕ್ಕೆ ನಡೆಯಿತು].
  • ತಾತ್ಪರ್ಯ:ಕಟ್ಟಿದ್ದ ಕುದುರೆಯನ್ನು ಕಂಡು ಕಾಪವಲಿನನ ಭಟರು, ಹೆದರಿಸಿದರು ಆಗ ಪ್ರವೀರನು ಸಿಟ್ಟುಗೊಂಡು, ಯುದ್ಧವನ್ನು ಕೊಟ್ಟಿದ್ದೇನೆ; ಶಕ್ತಿ ಇದ್ದರೆ ಬರಲಿ ತನ್ನೊಡನೆ ಪಾರ್ಥನು ಸೈನ್ಯಸಹಿತ ಕಾಳಗಕ್ಕೆ ಬರಲಿ ಎಂದು, ಬಲ್ಲಿನಲ್ಲಿ ಬಾಣಹೂಡಿನಿಂತನು. ಅವನ ಈ ಮಾತು ಫಲುಗುಣನಿಗೆ ಮುಟ್ಟಿತು,ಮುಗುಳನಗೆಯ ಕೋಪದಿಂದ ಘರ್ಜಿಸಿ ನಂತರ ನೋಡಿದಾಗ ಚತುರ್ಬಲ ಸೈನ್ಯವೂ ಸರ್ವಸನ್ನಾಹದಿಂದ ಯುದ್ಧಕ್ಕೆ ನಡೆಯಿತು.

(ಪದ್ಯ - ೨೬)

ಪದ್ಯ :-:೨೭:

[ಸಂಪಾದಿಸಿ]

ಚೂಳಿಯ ಚತುರ್ಬಲದ ದಾಳಿ ನಗರಿಗೆ ನಭಕೆ | ದೂಳಿ ದೆಸೆದೆಸೆಗಳ್ಗೆ ಘೀಳಿಡುವವಾದ್ಯರವ | ದೋಳಿ ನೆರೆ ಮುಸುಕಿತೊಂದೇ ಬಾರಿ ಪುರಜನಕೆ ರವಿಗೆ ದಿಕ್ಬಾಲಕರ್ಗೆ ||
ಬಾಳುವೆ ಮಹಾತೇಜಮತಿಶಯದ ಪದವಿಗಳ್ | ಕಾಳಹುದು ಮಸುಳಿಪುದು ಚಲನಮಹುದೆಂದು ಹೇ | ರಾಳಭಯದಿಂ ಶಂಕೆಯಿಂದದ್ಭುತಂಗಳಿಂ ದೃತಿ ಗತಿ ಮತಿಗಳಳಿದುವು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಚೂಳಿಯ ಚತುರ್ಬಲದ ದಾಳಿ ನಗರಿಗೆ ನಭಕೆ ದೂಳಿ ದೆಸೆದೆಸೆಗಳ್ಗೆ ಘೀಳಿಡುವ ವಾದ್ಯರವದೋಳಿ=[ಚತುರ್ಬಲ ಸೈನ್ಯದ ಮುಂಭಾಗದ ದಾಳಿಯಿಂದ ನಗರದ ಆಕಾಶವೆಲ್ಲಾದೂಳಾಯಿತು. ಜೊತೆಗೆ ದಿಕ್ಕು ದಿಕ್ಕುಗಳನ್ನೆಲ್ಲಾ ವಾದ್ಯ ಘೋಷಗಳು ತುಂಬಿದವು.]; ನೆರೆ ಮುಸುಕಿತೊಂದೇ ಬಾರಿ ಪುರಜನಕೆ ರವಿಗೆ ದಿಕ್ಬಾಲಕರ್ಗೆ=[ಈ ಧೂಳು, ವಾದ್ಯ ಘೋಷಗಳು ಒಂದೇ ಬಾರಿಗೆ ಸೂರ್ಯನಿಗೆ,ಜನರಿಗೆ, ದಿಕ್ಪಾಲಕರಿಗೆ ಮುಸುಗಿತು.]; ಬಾಳುವೆ ಮಹಾತೇಜಂ ಅತಿಶಯದ ಪದವಿಗಳ್ ಕಾಳಹುದು ಮಸುಳಿಪುದು ಚಲನಂ ಅಹುದೆಂದು ಹೇರಾಳಭಯದಿಂ ಶಂಕೆಯಿಂದದ್ಭುತಂಗಳಿಂ ದೃತಿ ಗತಿ ಮತಿಗಳಳಿದುವು=[ಬಾಳುವೆ ಮಹಾತೇಜದ ಬಾಳುವೆ / ಇರುವು, ದೊಡ್ಡ ಪದವಿಗಳು ಕೆಡುವುದು, ಮಸುಕಾಗುವುದು, ಬದಲಾವಣೆಹೊಂಧುವುದು; ಬಹಳಭಯದಿಂದ ಶಂಕೆಯಿಂದ, ಅದ್ಭುತವಾದ್ದರಿಂದ ಬುದ್ಧಿಯುಕೆಡುವುದು, ವಿಚಾರ ಶಕ್ತಿಯೂ ಕುಂದುವುದು].
  • ತಾತ್ಪರ್ಯ: ಚತುರ್ಬಲ ಸೈನ್ಯದ ಮುಂಭಾಗದ ದಾಳಿಯಿಂದ ನಗರದ ಆಕಾಶವೆಲ್ಲಾದೂಳಾಯಿತು. ಜೊತೆಗೆ ದಿಕ್ಕು ದಿಕ್ಕುಗಳನ್ನೆಲ್ಲಾ ವಾದ್ಯ ಘೋಷಗಳು ತುಂಬಿದವು. ಈ ಧೂಳು, ವಾದ್ಯ ಘೋಷಗಳು ಒಂದೇ ಬಾರಿಗೆ ಸೂರ್ಯನಿಗೆ,ಜನರಿಗೆ, ದಿಕ್ಪಾಲಕರಿಗೆ ಮುಸುಗಿತು. ಮಹಾತೇಜದ ಬಾಳುವೆ / ಇರುವು, ದೊಡ್ಡ ಪದವಿಗಳು ಕೆಡುವುದು, ಮಸುಕಾಗುವುದು, ಬದಲಾವಣೆಹೊಂಧುವುದು; ಬಹಳಭಯದಿಂದ ಶಂಕೆಯಿಂದ, ಅದ್ಭುತವಾದ್ದರಿಂದ ಬುದ್ಧಿಯುಕೆಡುವುದು, ವಿಚಾರ ಶಕ್ತಿಯೂ ಕುಂದುವುದು. ಹೀಗೆ ಅಗ್ನಿದೇವನಿಂದ ರಕ್ಷಿತವಾದ ನಗರವೂ ಮಸುಕಾಯಿತು].

(ಪದ್ಯ - ೨೭)X|

ಪದ್ಯ :-:೨೮:

[ಸಂಪಾದಿಸಿ]

ಮೇರೆದಪ್ಪಿದ ಮಹಾರ್ಣವದಂತೆ ಭುವನಸಂ | ಹಾರಕಾಲದ ಮೇಘಚಯದಂತೆ ಭರದಿಂದೆ ಪ್ರ | ವೀರನಂ ಮುಸುಕಿತರ್ಜುನನ ಮುಂಚೂಣಿಯ ಚತುರ್ಬಲಂದೆಸೆದೆಸೆಯೊಳು |
ತೇರೈಸದಿರ್ದನವನತಿಸತ್ಯದಿಂದೆ ಸಂ || ಸಾರಪ್ರಲಾಪಮಾಲಾಕುಲಮನಧ್ಯಾತ್ಮ | ಸಾರದಿಂ ತಡೆವ ಯೋಗೀಶ್ವರನ ಚಿತ್ತದಂತೆಚ್ಚರಿನ ದಾತುಗೆಡದೆ ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೇರೆ ತಪ್ಪಿದ ಮಹಾರ್ಣವದಂತೆ ಭುವನಸಂಹಾರ ಕಾಲದ ಮೇಘಚಯದಂತೆ=[ಗಡಿಮೀರಿ ಉಕ್ಕಿಬಂದ ಮಹಾಸಮುದ್ರದಂತೆ, ಲೋಕಸಂಹಾರ ಮಾಡುವ ಲಯಕಾರಕ ಮೋಡಗಳ ಸಮೂಹದಂತೆ]; ಭರದಿಂದೆ ಪ್ರವೀರನಂ ಮುಸುಕಿತು ಅರ್ಜುನನ ಮುಂಚೂಣಿಯ ಚತುರ್ಬಲಂದೆಸೆದೆಸೆಯೊಳು=[ಕೂಡಲೆ ಪ್ರವೀರನನ್ನು ಅರ್ಜುನನ ಮುಂಮುಂದಿನ ಚತುರ್ಬಲ ಸೈನ್ಯ ಎಲ್ಲಾದಿಕ್ಕಿನಿಂದ ಮುತ್ತಿತು.]; ತೇರು ಐಸದಿರ್ದನು (ರಥಬರದಂತೆ ತಡೆದನು) ಅವನು ಅತಿಸತ್ಯದಿಂದೆ ಸಂಸಾರಪ್ರಲಾಪಂ ಆಲ(ವಿಷ:ಸಂಸಾರದ ಅರಿಷಡ್ವರ್ಗ)ಕುಲ(ಸಮೂಹ) ಮನು ಅಧ್ಯಾತ್ಮಸಾರದಿಂ(ಆತ್ಮಜ್ಞಾನದಿಂದ) ತಡೆವ ಯೋಗೀ ರ್ಶ ವರನ ಚಿತ್ತದಂತೆಚ್ಚರಿನ ದಾತುಗೆಡದೆ=[ಅವನು ಶತ್ರು ರಥವನ್ನು ಬರದಂತೆ ತಡೆದನು, ಹೇಗೆಂದರೆ- ಅತಿಸತ್ಯದಿಂದಿದ್ದು,ಯೋಗೀಶ್ವರನು ಚಿತ್ತದಲ್ಲಿ ಸದಾಎಚ್ಚರಿನಿಂದ ಇದ್ದು ಶಕ್ತಿಕುಂದದೆ ಅಧ್ಯಾತ್ಮಸಾರವಾದ ಆತ್ಮಜ್ಞಾನದಿಂದ ಸಂಸಾರವೆಂ ಮಾಯೆಯಾದ ಸಂಸಾರದ ಅರಿಷಡ್ವರ್ಗ ಸಮೂಹವನ್ನು ತಡೆಯುವಂತೆ ಅರ್ಉನನ ರಥ ಮತ್ತುಸೈನ್ಯವನ್ನು ತಡೆದನು].
  • ತಾತ್ಪರ್ಯ:ಡಿಮೀರಿ ಉಕ್ಕಿಬಂದ ಮಹಾಸಮುದ್ರದಂತೆ, ಲೋಕಸಂಹಾರ ಮಾಡುವ ಲಯಕಾರಕ ಮೋಡಗಳ ಸಮೂಹದಂತೆ, ಕೂಡಲೆ ಪ್ರವೀರನನ್ನು ಅರ್ಜುನನ ಮುಂದಿನ ಚತುರ್ಬಲ ಸೈನ್ಯವು ಎಲ್ಲಾ ದಿಕ್ಕಿನಿಂದ ಮುತ್ತಿತು. ಆಗ ಅವನು ಶತ್ರು ರಥವನ್ನು, ಅತಿಸತ್ಯದಿಂದಿದ್ದು,ಯೋಗೀಶ್ವರನು ಚಿತ್ತದಲ್ಲಿ ಸದಾಎಚ್ಚರಿದಿಂದ ಇದ್ದು, ಶಕ್ತಿಕುಂದದೆ ಅಧ್ಯಾತ್ಮಸಾರವಾದ ಆತ್ಮಜ್ಞಾನದಿಂದ ಸಂಸಾರವೆಂಬ ಮಾಯೆಯಾದ ಸಂಸಾರದ ಅರಿಷಡ್ವರ್ಗ ಸಮೂಹವನ್ನು ತಡೆಯುವಂತೆ ಅರ್ಜುನನ ರಥ ಮತ್ತು ಸೈನ್ಯವನ್ನು ಮುಂದೆ ಬರದಂತೆ ತಡೆದನು.

(ಪದ್ಯ - ೨೮)

ಪದ್ಯ :-:೨೯:

[ಸಂಪಾದಿಸಿ]

ಮೇಗೆ ಮುಸುಕಿದ ಚೂಣಿಯನಿತು ಚಾತುರ್ಬಲವ | ನಾಗಳೋರ್ವನೆ ಚಾರಿವರಿವರಿದು ಬಾಣಪ್ರ | ಯೋಗಂಗಳಿಂ ಪ್ರವೀರಂ ಕೊಲ್ವುದಂ ಕಂಡು ಬಿಲ್ಗೊಂಡು ಕೋಪದಿಂದೆ ||
ಬೇಗದಿಂ ಪ್ರದ್ಯುಮ್ನ ಸಾತ್ಯಕಿ ವೃಷದ್ವಜಸು | ವೇಗಾನುಸಾಲ್ವ ಕೃತವರ್ಮಾದಿ ಪಟುಭಟರ್ || ತಾಗಿದರ್ ಕಲ್ವಮೇಘಂಗಳಿಂ ತಡೆವಿಟ್ಟಮಳೆಯೆನಲ್ ಕಣೆಗರೆಯುತೆ ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೇಗೆ ಮುಸುಕಿದ ಚೂಣಿಯ ಅನಿತು ಚಾತುರ್ಬಲವನು ಆಗಳು ಓರ್ವನೆ ಚಾರಿವರಿವರಿದು ಬಾಣಪ್ರಯೋಗಂಗಳಿಂ ಪ್ರವೀರಂ ಕೊಲ್ವುದಂ ಕಂಡು=[ತಮ್ಮ ಮೇಲೆ ಮುತ್ತಿದ ಸೈನ್ಯದ ಮುಂದಿನ ಪಡೆಯನ್ನಣ ಅಷ್ಟೂ ಚತುರಂಗ ಸೈನ್ಯವನ್ನೂ, ಆಗ ಒಬ್ಬನೆ ಎಲ್ಲೆಡೆ ಪ್ರವೀರನು ಚಲಿಸಿ ಬಾಣಪ್ರಯೋಗಗಳಿಂದ ಚೂರು ಚೂರುಮಾಡಿ ಕೊಲ್ಲುವುದನ್ನು ಕಂಡು ]; ಬಿಲ್ಗೊಂಡು ಕೋಪದಿಂದೆ ಬೇಗದಿಂ ಪ್ರದ್ಯುಮ್ನ ಸಾತ್ಯಕಿ ವೃಷದ್ವಜಸು ವೇಗಾನುಸಾಲ್ವ ಕೃತವರ್ಮಾದಿ ಪಟುಭಟರ್ ತಾಗಿದರ್=[ಬಿಲ್ಲನ್ನು ತೆಗೆದುಕೊಂಡು ಕೋಪದಿಂದ ಕೂಡಲೆ, ಪ್ರದ್ಯುಮ್ನ, ಸಾತ್ಯಕಿ, ವೃಷದ್ವಜಸು ವೇಗ, ಅನುಸಾಲ್ವ, ಕೃತವರ್ಮ ಮದಲಾದ ವೀರಭಟರು ಅವನನ್ನು ಎದುರಿಸಿದರು.], ಕಲ್ವಮೇಘಂಗಳಿಂ ತಡೆವಿಟ್ಟಮಳೆಯೆನಲ್ ಕಣೆಗೆರಯುತೆ=[ಕಲ್ಪಾಂತರದ ಪ್ರಳಯದ ಮೋಡಗಳಂತೆ ಬಾಣಗಳಮಳೆಯನ್ನು ಸುರಿಸುತ್ತಾ,ಅವನನ್ನ್ನುತಡೆದರು.]
  • ತಾತ್ಪರ್ಯ:ತಮ್ಮ ಮೇಲೆ ಮುತ್ತಿದ ಸೈನ್ಯದ ಮುಂದಿನ ಪಡೆಯನ್ನಣ ಅಷ್ಟೂ ಚತುರಂಗ ಸೈನ್ಯವನ್ನೂ, ಆಗ ಒಬ್ಬನೆ ಎಲ್ಲೆಡೆ ಪ್ರವೀರನು ಚಲಿಸಿ ಬಾಣಪ್ರಯೋಗಗಳಿಂದ ಚೂರು ಚೂರುಮಾಡಿ ಕೊಲ್ಲುವುದನ್ನು ಕಂಡು, ಬಿಲ್ಲನ್ನು ತೆಗೆದುಕೊಂಡು ಕೋಪದಿಂದ ಕೂಡಲೆ, ಪ್ರದ್ಯುಮ್ನ, ಸಾತ್ಯಕಿ, ವೃಷದ್ವಜಸು ವೇಗ, ಅನುಸಾಲ್ವ, ಕೃತವರ್ಮ ಮದಲಾದ ವೀರಭಟರು ಅವನನ್ನು ಕಲ್ಪಾಂತರದ ಪ್ರಳಯದ ಮೋಡಗಳಂತೆ ಬಾಣಗಳಮಳೆಯನ್ನು ಸುರಿಸುತ್ತಾ,ಅವನನ್ನ್ನುತಡೆದರು ಎದುರಿಸಿದರು.]

(ಪದ್ಯ - ೨೯)

ಪದ್ಯ :-:೩೦:

[ಸಂಪಾದಿಸಿ]

ಆ ಪ್ರವೀರಂ ಬಳಿಕನಿಬರೆಲ್ಲರೊಡನೆ ನಾ | ನಾಪ್ರಕಾರದ ಸಮರದೊಳ್ ಕಾದಲಿತ್ತ ಸೇ | ನಾಪ್ರತತಿಸಹಿತ ನೀಲಧ್ವಜಂ ನಗರಮಂ ಪೊರೆಮಟ್ಟನೇವೇಳ್ವೆನು |
ಈ ಪ್ರಭಾಕರಕಿರಣಮೀ ವಾಯುಸಂಚರಣ | ಮೀ ಪ್ರವಹಿಸುವ ನದಿಗಳೀ ಗಗನಮೀ ಧರೆ ಮ | ಹಾಪ್ರಳಯಕಡಗುವಂತಡಗಿ ಭುವನತ್ರಯಂ ಬರಿದೂಳಿಮಯವಾಗಲು ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಪ್ರವೀರಂ ಬಳಿಕ ಅನಿಬರು ಎಲ್ಲರೊಡನೆ ನಾನಾಪ್ರಕಾರದ ಸಮರದೊಳ್ ಕಾದಲು=[ಆ ಪ್ರವೀರನು ಬಳಿಕ ಬಂದ ಆ ಎಲ್ಲಾ ವೀರರೊಡನೆ ನಾನಾಪ್ರಕಾರದ ಯುದ್ಧದಲ್ಲಿ,ಕಾದುತ್ತಿರಲು]; ಇತ್ತ ಸೇನಾಪ್ರತತಿ ಸಹಿತ ನೀಲಧ್ವಜಂ ನಗರಮಂ ಪೊರೆಮಟ್ಟನು ಏವೇಳ್ವೆನು=[ಈಕಡೆ ನಗರದಲ್ಲಿ, ಸೇನಾಧಿಪತಿಗಳ ಸಹಿತ, ನೀಲಧ್ವಜನು ನಗರದಿಂದ ಹೊರಹೊರಟನು, ಅದನ್ನು ಏನೆಂದು ವರ್ಣಿಸಲಿ! ]; ಈ ಪ್ರಭಾಕರಕಿರಣಂ ಈ ವಾಯುಸಂಚರಣಮ ಈ ಪ್ರವಹಿಸುವ ನದಿಗಳು ಈ ಗಗನಂ ಈ ಧರೆ ಮಹಾಪ್ರಳಯಕೆ ಅಡಗುವಂತ ಎ ಅಡಗಿ ಭುವನತ್ರಯಂ ಬರಿದೂಳಿಮಯವಾಗಲು=[ಈ ಸೂರ್ಯನು, ಈ ವಾಯುಸಂಸಂಚಾರವು, ಈ ಹರಿಯುವ ನದಿಗಳು, ಈ ಆಕಾಶ,ಈ ಭೂಮಿ, ಎಲ್ಲ ಆ ಮಹಾ ಪ್ರಳಯದಲ್ಲಿ ಅಡಗುವಂತೆ ಈ ಸಂದರಭದಲ್ಲಿ ಅಡಗಿ ಮೂರುಲೋಕವೂ ಧೂಳೀ ಮಯವಾಯಿತು.]
  • ತಾತ್ಪರ್ಯ: ಆ ಪ್ರವೀರನು ಬಳಿಕ ಬಂದ ಆ ಎಲ್ಲಾ ವೀರರೊಡನೆ ನಾನಾಪ್ರಕಾರದ ಯುದ್ಧದಲ್ಲಿ,ಕಾದುತ್ತಿರಲು; ಈ ಕಡೆ ನಗರದಲ್ಲಿ, ಸೇನಾಧಿಪತಿಗಳ ಸಹಿತ, ನೀಲಧ್ವಜನು ನಗರದಿಂದ ಹೊರಹೊರಟನು, ಅದನ್ನು ಏನೆಂದು ವರ್ಣಿಸಲಿ! ಈ ಸೂರ್ಯನು, ಈ ವಾಯುಸಂಸಂಚಾರವು, ಈ ಹರಿಯುವ ನದಿಗಳು, ಈ ಆಕಾಶ,ಈ ಭೂಮಿ, ಎಲ್ಲ ಆ ಮಹಾ ಪ್ರಳಯದಲ್ಲಿ ಅಡಗುವಂತೆ ಈ ಸಂದರಭದಲ್ಲಿ ಅಡಗಿ ಮೂರುಲೋಕವೂ ಧೂಳೀ ಮಯವಾಯಿತು.

(ಪದ್ಯ - ೩೦)

ಪದ್ಯ :-:೩೦:

[ಸಂಪಾದಿಸಿ]

ಮೊಗಸಿದರ್ ಪರಬಲವನಾಗಳ್ ಪ್ರವೀರನಂ | ತೆಗೆಸಿದರ್ ಪಿನ್ನೆಲೆಗೆ ರಿಪುಸೈನ್ಯದಳವಿಯಂ ! ತೆಗೆಸಿದರ್ ತಮತಮಗೆ ಕೈಕೊಂಡು ವಾರಣ ವರೂಥ ವರವಾಜಿಗಳನು ||
ಪುಗಿಸಿದರ್ ವೈರಿಮೋಹರದೊಳಗೆ ಸಾಹಸಂ | ಮಿಗಿಸಿದರ್ ಪೊಯ್ದಾಡಿ ತದವೀರರಸದಿಂದೆ | ಸೊಗಸಿದರ್ ಧುರಧೀರ ನೀಲಧ್ವಜನ ಮನೆಯ ಚತುರ ಚತುರಂಗದವರು ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೊಗಸಿದರ್(ಆಕ್ರಮಿಸು) ಪರಬಲವನಾಗಳ್ ಪ್ರವೀರನಂ ತೆಗೆಸಿದರ್ ಪಿನ್ನೆಲೆಗೆ=[ಶತ್ರುಸೈನ್ಯವನ್ನು ಆಕ್ರಮಿಸಿದರು- ಪ್ರವೀರನನ್ನು ಹಿಂಭಾಗಕ್ಕೆ ಕಳಿಸಿದರು.];ರಿಪುಸೈನ್ಯದಳವಿಯಂ ತೆಗೆಸಿದರ್ ತಮತಮಗೆ ಕೈಕೊಂಡು ವಾರಣ(ಆನೆ) ವರೂಥ ವರವಾಜಿಗಳನು ಪುಗಿಸಿದರ್ ವೈರಿಮೋಹರದೊಳಗೆ=[ಶತ್ರುಸೈನ್ಯದ ಶಕ್ತಿಯನ್ನು ಕುಂದಿಸಿದರು, ತಾವು ತಾವೇ ನಿರ್ಧಾರ ತೆಗೆದುಕೊಂಡು ಆನೆ, ಕುದುರೆ, ರಥಗಳನ್ನು ವೈರಿಸೈನ್ಯದಲ್ಲಿ ನುಗ್ಗಿಸಿದರು.]; ಸಾಹಸಂ ಮಿಗಿಸಿದರ್ ಪೊಯ್ದಾಡಿ ತದವೀರರಸದಿಂದೆ ಸೊಗಸಿದರ್ ಧುರಧೀರ ನೀಲಧ್ವಜನ ಮನೆಯ ಚತುರ ಚತುರಂಗದವರು=[ರಣಧೀರರಾದ ನೀಲಧ್ವಜನ ಮನೆಯ ಯುದ್ಧದಲ್ಲಿ ನಿಪುಣರಅದ ಚತುರಂಗಸೈನ್ಯದವರು ಸಾಹಸದಿಂದ ಹೋರಾಡಿ ವೈರಿಸೈನ್ಯದೊಳಗೆ ನುಗ್ಗಿಸಿದರು; ಅವರು ವೀರರಸದಿಂದ / ಶೌರ್ಯದಿಂದ ಯುದ್ಧಮಾಡಿ ಪ್ರಕಾಸಿಸಿದರು.]
  • ತಾತ್ಪರ್ಯ:ಶತ್ರುಸೈನ್ಯವನ್ನು ಆಕ್ರಮಿಸಿದರು- ಪ್ರವೀರನನ್ನು ಹಿಂಭಾಗಕ್ಕೆ ಕಳಿಸಿದರು. ಶತ್ರುಸೈನ್ಯದ ಶಕ್ತಿಯನ್ನು ಕುಂದಿಸಿದರು, ತಾವು ತಾವೇ ನಿರ್ಧಾರ ತೆಗೆದುಕೊಂಡು ಆನೆ, ಕುದುರೆ, ರಥಗಳನ್ನು ವೈರಿಸೈನ್ಯದಲ್ಲಿ ನುಗ್ಗಿಸಿದರು. ರಣಧೀರರಾದ ನೀಲಧ್ವಜನ ಮನೆಯ ಯುದ್ಧದಲ್ಲಿ ನಿಪುಣರಅದ ಚತುರಂಗಸೈನ್ಯದವರು ಸಾಹಸದಿಂದ ಹೋರಾಡಿ ವೈರಿಸೈನ್ಯದೊಳಗೆ ನುಗ್ಗಿಸಿದರು; ಅವರು ವೀರರಸದಿಂದ / ಶೌರ್ಯದಿಂದ ಯುದ್ಧಮಾಡಿ ಪ್ರಕಾಸಿಸಿದರು.

(ಪದ್ಯ - ೩೦)

ಪದ್ಯ :-:೩೨:

[ಸಂಪಾದಿಸಿ]

ಮಗ್ಗಿದರ್ ಮಸಗಿದಂಬುಧಿಯ ತೆರೆಯಂತೆ ಸಲೆ | ಮುಗ್ಗಿದರ್ ಮುಗಿಲಮೊಗ್ಗರದಂತೆ ಭೋಂಕರಿಸು | ತೊಗ್ಗಿದರ್ ಕವಿದು ಜೇನ್ನೊಣದಂತೆ ಪೊಯ್ದಾಡಿ ರಿಪುಸೈನ್ಯಕಾನನವನು ||
ನೆಗ್ಗಿದರ್ ನೆಲೆಗೆಡಿಸಿ ಬಿರುಗಾಳಿಯಂತೈದೆ | ನುಗ್ಗಿದರ್ ನುಚ್ಚುನುರಿಯಾಗೆಬರಸಿಡಿಲಂತೆ | ಹಿಗ್ಗಿದರ್ ಪಚ್ಚಿವೀರಾವೇಶದಿಂದೆ ಪಟುಭಟರಾಗಳಾಹವದೊಳು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಗ್ಗಿದರ್ ಮಸಗಿದ ಅಂಬುಧಿಯ ತೆರೆಯಂತೆ ಸಲೆ ಮುಗ್ಗಿದರ್ ಮುಗಿಲಮೊಗ್ಗರದಂತೆ ಭೋಂಕರಿಸು ತೊಗ್ಗಿದರ್ ಕವಿದು ಜೇನ್ನೊಣದಂತೆ=[ಉಬ್ಬಿಬಂದ ಸಮುದ್ರದ ತೆರೆಯಂತೆ ಬಗ್ಗಿಹೋದರು, ಮತ್ತೂ ಮುಗ್ಗರಿಸಿ ನುಗ್ಗಿದರು ಕವಿದ ಮೋಡದದಂತೆ, ಭೋಂಕಾರ ಶಬ್ದಮಾಡುತ್ತಾ ಜೇನುನೊಣದಂತೆ ಒಟ್ಟಾಗಿ ಧಾಳಿಮಾಡಿದರು,]; ಪೊಯ್ದಾಡಿ ರಿಪುಸೈನ್ಯಕಾನನವನು ನೆಗ್ಗಿದರ್ ನೆಲೆಗೆಡಿಸಿ(ಓಡಿಸಿ) ಬಿರುಗಾಳಿಯಂತೈದೆ ನುಗ್ಗಿದರ್ ನುಚ್ಚುನುರಿಯಾಗೆ ಬರಸಿಡಿಲಂತೆ=[ ಶತ್ರುಸೈನ್ಯವೆಂಬ ಕಾಡನ್ನು ಬಡಿದು ನಾಶಪಡಿಸಿದರು,ಬಿರುಗಾಳಿಯಂತೆ ಬಂದು ಓಡಿಸಿ ಹೊಡೆದರು, ಬರಸಿಡಿಲಹಾಗೆ ಶತ್ರುಸೈನ್ಯ ಪುಡಿಪುಡಿಯಾಗುವಂತೆ ನುಗ್ಗಿದರು,]; ಹಿಗ್ಗಿದರ್ ಪಚ್ಚಿವೀರಾವೇಶದಿಂದೆ ಪಟುಭಟರಾಗಳಾಹವದೊಳು=[ಹೆಚ್ಚಿನ ವೀರಾವೇಶದಿಂದೆ ವೀರಭಟರು ಆಗ ಯುದ್ಧದಲ್ಲಿ ಸಂತೋಷಪಟ್ಟರು.]
  • ತಾತ್ಪರ್ಯ:ಉಬ್ಬಿಬಂದ ಸಮುದ್ರದ ತೆರೆಯಂತೆ ಬಗ್ಗಿಹೋದರು; ಮತ್ತೂ ಮುಗ್ಗರಿಸಿ ಕವಿದ ಮೋಡದದಂತೆ ನುಗ್ಗಿದರು; ಭೋಂಕಾರ ಶಬ್ದಮಾಡುತ್ತಾ ಜೇನುನೊಣದಂತೆ ಒಟ್ಟಾಗಿ ಧಾಳಿಮಾಡಿದರು; ಶತ್ರುಸೈನ್ಯವೆಂಬ ಕಾಡನ್ನು ಬಡಿದು ನಾಶಪಡಿಸಿದರು; ಬಿರುಗಾಳಿಯಂತೆ ಬಂದು ಓಡಿಸಿ ಹೊಡೆದರು, ಬರಸಿಡಿಲಹಾಗೆ ಶತ್ರುಸೈನ್ಯ ಪುಡಿಪುಡಿಯಾಗುವಂತೆ ನುಗ್ಗಿದರು; ಬಹಳ ವೀರಾವೇಶದಿಂದೆ ವೀರಭಟರು ಆಗ ಯುದ್ಧದಲ್ಲಿ ಸಂತೋಷಪಟ್ಟರು.

(ಪದ್ಯ - ೩೨)

ಪದ್ಯ :-:೩೩:

[ಸಂಪಾದಿಸಿ]

ಪೊಯ್ದಾಡಿ ಮಡಿದ ಕಲಿಗಳ ಶರೀರಂಗಳಂ | ಪೊಯ್ದೆಳೆದು ಪರಿತಿಂಬ ಮರುಳ್ಗಳಂ ಮೇಣವರ | ನೊಯ್ದಲ್ಲಿ ದಿವ್ಯತನುಗಳೊಳಪ್ಪಿ ಚುಂಬಿಸುವ ಸುರಸತಿಯರಂ ಕಾಣುತೆ ||
ಮೆಯ್ದೆಗೆದಪರ ವೀರರೆಂದೋರ್ವರೊರ್ವರಂ | ಬಯ್ದು ಮೂದಲಿಸಿ ರಣರಂಗದೊಳ್ ಪಟುಭಟರ್ | ಕಯ್ದೋರುತಿರ್ದರೊಟೆವೆರಸಿ ಕೇಶಾಕೇಶಿಯುದ್ಧದಿಂದಳವಳಿಯದೆ ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪೊಯ್ದಾಡಿ ಮಡಿದ ಕಲಿಗಳ ಶರೀರಂಗಳಂ ಪೊಯ್ದು ಎಳೆದು ಪರಿತಿಂಬ ಮರುಳ್ಗಳಂ=[ಹೊಡೆದಾಡಿ ಸತ್ತ ವೀರರ ದೇಹಗಳನ್ನು ಬಡಿದು ಎಳೆದುಕೊಂಡು ಹೋಗಿ ಪರೊಪರಿಯಾಗಿ ತಿನ್ನುವ ಪಿಶಾಚಿಗಳನ್ನು,] ಮೇಣವರ ನೊಯ್ದಲ್ಲಿ ದಿವ್ಯತನುಗಳೊಳಪ್ಪಿ ಚುಂಬಿಸುವ ಸುರಸತಿಯರಂ ಕಾಣುತೆ=[ಮತ್ತು ಅವರನ್ನು ಎತ್ತಿಕೊಂಡು ಹೋಗಿ ವೀರ ಸ್ವರ್ಗ ಪಡೆದ ಆ ದಿವ್ಯದೇಹಗಳನ್ನು ಅಪ್ಪಿ ಚುಂಬಿಸುತ್ತಿರುವ ದೇವಕನ್ಯೆಯರನ್ನು ಕಾಣುತ್ತಾ]; ಮೆಯ್ದೆಗೆದಪರ (ಹಿಂದೆಸರಿಯುವವರ) ಅವೀರರೆಂದು ರ್ವರೊರ್ವರಂ ಬಯ್ದು ಮೂದಲಿಸಿ ರಣರಂಗದೊಳ್ ಪಟುಭಟರ್ ಕಯ್ದೋರುತಿರ್ದರು(ಹೋರಾಡುತ್ತಿದ್ದರು) ಒಡೆವೆರಸಿ(ಒಟ್ಟುಸೇರಿ) ಕೇಶಾಕೇಶಿಯುದ್ಧದಿಂದ ಅಳವು(ಶಕ್ತಿ ಪೌರುಷ) ಅಳಿಯದೆ=[ಸತ್ತವರನ್ನು ನೋಡಿ ಹಿಂದೆಸರಿಯುವವರನ್ನು ಎಂಥಾ ವೀರರೆಂದು (ಹೇಡಿಗಳೆಂದು),ಒಬ್ಬರನ್ನೊಬ್ಬರು ಬಯ್ದು ಮೂದಲಿಸಿ ರಣರಂಗದಲ್ಲಿ - ಕೂದಲು ಹಿಡಿದು- ಕೇಶಾಕೇಶಿಯುದ್ಧದಿಂದ ಪೌರುಷಕುಂದದೆ ಪಟುಭಟರು /ವೀರರು ಕೈ ಕೈಸೇರಿಸಿ ಹೋರಾಡುತ್ತಿದ್ದರು].
  • ತಾತ್ಪರ್ಯ: ಹೊಡೆದಾಡಿ ಸತ್ತ ವೀರರ ದೇಹಗಳನ್ನು ಬಡಿದು ಎಳೆದುಕೊಂಡು ಹೋಗಿ ಪರೊಪರಿಯಾಗಿ ತಿನ್ನುವ ಪಿಶಾಚಿಗಳನ್ನು, ಮತ್ತು ಅವರನ್ನು ಎತ್ತಿಕೊಂಡು ಹೋಗಿ ವೀರ ಸ್ವರ್ಗ ಪಡೆದ ಆ ದಿವ್ಯದೇಹಗಳನ್ನು ಅಪ್ಪಿ ಚುಂಬಿಸುತ್ತಿರುವ ದೇವಕನ್ಯೆಯರನ್ನು ಕಾಣುತ್ತಾ, ಸತ್ತವರನ್ನು ನೋಡಿ ಹಿಂದೆಸರಿಯುವವರನ್ನು ಎಂಥಾ ವೀರರೆಂದು (ಹೇಡಿಗಳೆಂದು),ಒಬ್ಬರನ್ನೊಬ್ಬರು ಬಯ್ದು ಮೂದಲಿಸಿ ರಣರಂಗದಲ್ಲಿ - ಕೂದಲು ಹಿಡಿದು- ಕೇಶಾಕೇಶಿಯುದ್ಧದಿಂದ ಪೌರುಷಕುಂದದೆ ಪಟುಭಟರು /ವೀರರು ಕೈ ಕೈಸೇರಿಸಿ ಹೋರಾಡುತ್ತಿದ್ದರು.

(ಪದ್ಯ - ೩೩)

ಪದ್ಯ :-:೩೪:

[ಸಂಪಾದಿಸಿ]

ಕೃತವರ್ಮನುರವಣೆಯನನುಸಾಲ್ವನುಬ್ಬಟೆಯ | ನತಿಬಲಸುವೇಗನ ಪರಾಕ್ರಮವನಾದಿತ್ಯ | ಸುತಸುತನ ಶೌರ್ಯಮಂ ಸಾತ್ಯಕಿಯ ವೀರ್ಯಮಂ ವರಯೌವನಾಶ್ವನೃಪನ ||
ಆತುಳವಿಕ್ರಮವನನಿರುದ್ಧನಾಟೋಪಮಂ | ಪ್ರತಿಭಟಭಯಂಕರ ಪ್ರದ್ಯುಮ್ನನದಟನು | ನ್ನತಿಗೆಡಿಸಿತಾಗ ನೀಲಧ್ವಜನ ಪರಿವಾರಮೆವೇಳ್ವೆನಾಹವದೊಳು ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೃತವರ್ಮನ ಉರವಣೆಯನು(ಶೌರ್ಯವನ್ನು) ಅನುಸಾಲ್ವನ ಉಬ್ಬಟೆಯನು(ಶೌರ್ಯವನ್ನು), ಅತಿಬಲಸುವೇಗನ ಪರಾಕ್ರಮವನ್ನು, ಆದಿತ್ಯಸುತಸುತನ(ವೃಷಕೇತುವಿನ) ಶೌರ್ಯಮಂ (ಶೌರ್ಯವನ್ನು), ಸಾತ್ಯಕಿಯ ವೀರ್ಯಮಂ(ಶೌರ್ಯವನ್ನು), ವರಯೌವನಾಶ್ವ ನೃಪನ ಆತುಳ ವಿಕ್ರಮವನು(ಮಹಾ ಶೌರ್ಯವನ್ನು), ಅನಿರುದ್ಧನ ಆಟೋಪಮಂ (ಶೌರ್ಯವನ್ನು) ಪ್ರತಿಭಟಭಯಂಕರ ಪ್ರದ್ಯುಮ್ನನ ಅದಟನು(ಶೌರ್ಯವನ್ನು) ಉನ್ನತಿಗೆಡಿಸಿತು ಆಗ ನೀಲಧ್ವಜನ ಪರಿವಾರಮ್ ಏವೇಳ್ವೆನು ಆಹವದೊಳು=[ ನೀಲಧ್ವಜನ ಸೈನ್ಯವು ಆಗ ಯುದ್ಧದಲ್ಲಿ ಕುಗ್ಗಿಸಿತು, ಏನೆಂದು ಹೇಳಲಿ.]
  • ತಾತ್ಪರ್ಯ:ಕೃತವರ್ಮ, ಅನುಸಾಲ್ವ, ಅತಿಬಲ ಸುವೇಗ, ವೃಷಕೇತು, ಸಾತ್ಯಕಿ, ವರ ಯೌವನಾಶ್ವ ನೃಪ , ಅನಿರುದ್ಧನ ಪ್ರತಿಭಟಭಯಂಕರ ಪ್ರದ್ಯುಮ್ನ ಇವರೆಲ್ಲರ ಮಹಾ ಶೌರ್ಯವನ್ನು ನೀಲಧ್ವಜನ ಸೈನ್ಯವು ಆಗ ಯುದ್ಧದಲ್ಲಿ ಕುಗ್ಗಿಸಿತು, ಏನೆಂದು ಹೇಳಲಿ.

(ಪದ್ಯ - ೩೪)

ಪದ್ಯ :-:೩೫:

[ಸಂಪಾದಿಸಿ]

ಅರ್ಜುನಂ ಕಂಡನಹಿತ ಪ್ರಬಲಬಲಮಸುರ | ನಿರ್ಜರರ್ಗರಿದೆನೆ ಕಠೋರಮಾಗಲ್ ತನ್ನ | ವರ್ಜಯಿಸಲರಿಯರೇನೆಂದು ಕಡುಗೋಪದಿಂ ಚಾಪಮಂ ಪಿಡಿದು ಮಿಡಿದು ||
ಗರ್ಜನೆಯೊಳೆಯ್ದೆ ಕಡೆಗಾಲದೊಳ್ ಮಳೆಗರೆವ | ಪರ್ಜನ್ಯನಂತಾರ್ದಿಸುತೆ ನಡೆಯಲಿದಿರಾಂಪ | ವರ್ಜಗದೊಳುಂಟೆ ಮುರಿದುದು ಪುರಕೆ ನೀಲಧ್ವಜನ ಸೇನೆ ಕೆಟ್ಟು ಕೆದರಿ ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರ್ಜುನಂ ಕಂಡನು ಅಹಿತ(ಶತ್ರು) ಪ್ರಬಲ ಬಲಂ ಅಸುರ ನಿರ್ಜರರ್ಗೆ ಅರಿದೆನೆ ಕಠೋರಮಾಗಲ್ ತನ್ನವರ್ ಜಯಿಸಲರಿಯರ್ ಏನೆಂದು=[ಅರ್ಜುನನು ಶತ್ರುಗಳ ಪ್ರಬಲವಾದ ಸೈನ್ಯವನ್ನು ನೋಡಿದನು; ಅದು ದಾನವರು ಅಥವಾ ದೇವತೆಗಳಿಗೆ ಜಯಿಸಲು ಅಸಾಧ್ಯ, ತನ್ನವರಿಗೆ ಇದು ಕಠಿಣವಾಗಿದ್ದು ಗೆಲ್ಲಲು ಅಸಾದ್ಯ ಎನ್ನುವಂತೆ ಇತ್ತು. ಏನೆಂದು], ಕಡುಗೋಪದಿಂ ಚಾಪಮಂ ಪಿಡಿದು ಮಿಡಿದು ಗರ್ಜನೆಯೊಳ್ ಐಯ್ದೆ ಕಡೆಗಾಲದೊಳ್ ಮಳೆಗರೆವ ಪರ್ಜನ್ಯನಂತೆ ಆರ್ದಿಸುತೆ=[ಇದೇನು ಸೈನ್ಯ ಎಂದು, ಬಹಳ ಕೋಪದಿಂದ ಬಿಲ್ಲನ್ನು ಹಿಡಿದು ಅದರ ದಾರವನ್ನು ಮಿಡಿದು ಗರ್ಜನೆಮಾಡುತ್ತಾ ಬಂದಾಗ ಪ್ರಳಯಕಾಲದಲ್ಲಿ ಮಳೆಬಂದಂತೆ ವರುಣನಂತೆ ಘರ್ಜಿಸುತ್ತಾ]; ನಡೆಯಲಿದಿರಾಂಪವರ್ ಜಗದೊಳುಂಟೆ ಮುರಿದುದು ಪುರಕೆ ನೀಲಧ್ವಜನ ಸೇನೆ ಕೆಟ್ಟು ಕೆದರಿ=[ನಡೆಯಲು ಅವನ ಎದುರು ನಲ್ಲುವವರು ಇದ್ದಾರೆಯೇ -ಇಲ್ಲ! ಆಗ ನೀಲಧ್ವಜನ ಸೇನೆ ಸೋತು ಮಾಹಿಷ್ಮತೀ ಪುರಕ್ಕೆ ದಿಕ್ಕು ಕೆಟ್ಟು ಚದರಿ ಓಡಿಹೊಯಿತು.]
  • ತಾತ್ಪರ್ಯ:ಅರ್ಜುನನು ಶತ್ರುಗಳ ಪ್ರಬಲವಾದ ಸೈನ್ಯವನ್ನು ನೋಡಿದನು; ಅದು ದಾನವರು ಅಥವಾ ದೇವತೆಗಳಿಗೆ ಜಯಿಸಲು ಅಸಾಧ್ಯ, ತನ್ನವರಿಗೆ ಇದು ಕಠಿಣವಾಗಿದ್ದು ಗೆಲ್ಲಲು ಅಸಾದ್ಯ ಎನ್ನುವಂತೆ ಇತ್ತು. ಇದೇನು ಸೈನ್ಯ ಎಂದು, ಬಹಳ ಕೋಪದಿಂದ ಬಿಲ್ಲನ್ನು ಹಿಡಿದು ಅದರ ದಾರವನ್ನು ಮಿಡಿದು ಗರ್ಜನೆಮಾಡುತ್ತಾ ಬಂದಾಗ ಪ್ರಳಯಕಾಲದಲ್ಲಿ ಮಳೆಸುರಿಸುವ ವರುಣನಂತೆ ಘರ್ಜಿಸುತ್ತಾ ನಡೆಯಲು ಅವನ ಎದುರು ನಲ್ಲುವವರು ಇದ್ದಾರೆಯೇ -ಇಲ್ಲ! ಆಗ ನೀಲಧ್ವಜನ ಸೇನೆ ಸೋತು ಮಾಹಿಷ್ಮತೀ ಪುರಕ್ಕೆ ದಿಕ್ಕು ಕೆಟ್ಟು ಚದರಿ ಓಡಿಹೊಯಿತು.

(ಪದ್ಯ - ೩೫)

ಪದ್ಯ :-:36:

[ಸಂಪಾದಿಸಿ]

ಮುರಿದು ಬಹಸೇನೆಯಂ ಕಂಡಾ ಪ್ರವೀರನುರೆ | ಜರೆದು ಕೋದಂಡಮಂ ಕೊಂಡು ಕೌಂತೇಯನಂ | ತರುಬಲಡಹಾಯ್ದು ವೃಷಕೇತು ಬರಲಾತನೊಳ್ ಸರಿಯಾಗಿ ಕಾದುತಿರಲು ||
ಪೆರಗಿಕ್ಕಿ ಕರ್ಣಿಯಂ ಮುಂದೆ ನಿಂದನುಸಾಲ್ವ | ನುರುಬಿದೊಡವಂ ನೋಯೆ ನೀಲಧ್ವಜಂ ತಾನೆ | ತುರುಗಿದಗ್ಗದ ಸಕಲಬಲ ಸಹಿತ ನೂಕಿದಂ ಫಲಗುಣನ ಪಡೆಯ ಮೇಲೆ ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮುರಿದು(ಸೋತು) ಬಹಸೇನೆಯಂ ಕಂಡಾ ಪ್ರವೀರನು ಉರೆ ಜರೆದು ಕೋದಂಡಮಂ ಕೊಂಡು=[ಸೋತು ಬರುತ್ತಿರುವ ಸೇನೆಯನ್ನು ಕಂಡು ಆ ಪ್ರವೀರನು ಅವರಿಗೆ ಬಹಳ ಬಯ್ದು, ಬಿಲ್ಲನ್ನು ತೆಗೆದುಕೊಂಡು]; ಕಾಂತೇಯನಂ ತರುಬಲಡಹಾಯ್ದು ವೃಷಕೇತು ಬರಲಾತನೊಳ್ ಸರಿಯಾಗಿ ಕಾದುತಿರಲು=[ ಅರ್ಜುನನ್ನು ಎದುರಿಸಲು ಹೋಗುವಾಗ ವೃಷಕೇತು ಅಡ್ಡ ಬರಲು ಆತನೊಡನೆ ಸರಿಯಾಗಿ ಯುದ್ಧ ಮಾಡುವಾಗ,]; ಪೆರಗಿಕ್ಕಿ(ಪಕ್ಕಕ್ಕೆಸರಿಸಿ) ಕರ್ಣಿಯಂ ಮುಂದೆ ನಿಂದನುಸಾಲ್ವ ನುರುಬಿದೊಡವಂ ನೋಯೆ=[ಅವನನ್ನು ಪಕ್ಕಕ್ಕೆಸರಿಸಿ ವೃಕೇತುವಿನ ಮುಂದೆ ನಿಂತು ಸಾಲ್ವನು ಪ್ರವೀರನ್ನು ಹೊಡೆದಾಗ ಅವನು ಪಟ್ಟಿನಿಂದ ನೊಂದನು.]; ನೀಲಧ್ವಜಂ ತಾನೆ ತುರುಗಿದ ಅಗ್ಗದ (ಗುಂಪಾಗಿರುವ ಉತ್ತಮ) ಸಕಲಬಲ ಸಹಿತ ನೂಕಿದಂ ಫಲಗುಣನ ಪಡೆಯ ಮೇಲೆ=[ಆಗ ನೀಲಧ್ವಜನು ತಾನೆ ಗುಂಪಾಗಿರುವ ಉತ್ತಮ ಎಲ್ಲಾ ಸೈನ್ಯ ಸಹಿತ ಅರ್ಜುನನ ಸೈನ್ಯದ ಮೇಲೆ ನುಗ್ಗಿದನು.]
  • ತಾತ್ಪರ್ಯ: ಸೋತು ಬರುತ್ತಿರುವ ಸೇನೆಯನ್ನು ಕಂಡು ಆ ಪ್ರವೀರನು ಅವರಿಗೆ ಬಹಳ ಬಯ್ದು, ಬಿಲ್ಲನ್ನು ತೆಗೆದುಕೊಂಡು; ಅರ್ಜುನನ್ನು ಎದುರಿಸಲು ಹೋಗುವಾಗ ವೃಷಕೇತು ಅಡ್ಡ ಬರಲು ಆತನೊಡನೆ ಸರಿಯಾಗಿ ಯುದ್ಧ ಮಾಡುವಾಗ, ಅವನನ್ನು ಪಕ್ಕಕ್ಕೆಸರಿಸಿ ವೃಕೇತುವಿನ ಮುಂದೆ ನಿಂತು ಸಾಲ್ವನು ಪ್ರವೀರನ್ನು ಹೊಡೆದಾಗ ಅವನು ಪಟ್ಟಿನಿಂದ ನೊಂದನು. ಆಗ ನೀಲಧ್ವಜನು ತಾನೆ ಗುಂಪಾಗಿರುವ ಉತ್ತಮ ಎಲ್ಲಾ ಸೈನ್ಯ ಸಹಿತ ಅರ್ಜುನನ ಸೈನ್ಯದ ಮೇಲೆ ನುಗ್ಗಿದನು.

(ಪದ್ಯ - ೩೨)X||

ಪದ್ಯ :-:೩೭:

[ಸಂಪಾದಿಸಿ]

ವಾನರವರಧ್ವಜಂ ಮುಳಿದು ನೀಲಧ್ವಜನ | ಸೇನೆಯಂ ತಡೆಗಡಿಯುತಾತನಂ ಮುಸುಕಿದನ | ನೂನಶರಜಾಲದಿಂ ಬಳಿಕವಂ ಕಂಗೆಟ್ಟು ಪಾವಕಂ ಪೊರೆಯೊಳಿರಲು ||
ನೀನಳಿಯನಾಗಿರ್ದುಮೆನಗಿನಿತಪಾಯಮೇ | ಕೀನರನ ದೆಸೆಯ ಭಯಮಂ ಬಿಡಿಸಬೇಕೆನೆ ಕೃ | ಶಾನು ಕೇಳ್ದಾಗ ಸುಡತೊಡಗಿದಂ ತಾನೆ ಪೊಕ್ಕರ್ಜುನನ ಸೈನಿಕವನು ||37|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಾನರವರಧ್ವಜಂ (ಕಪಿಶ್ರೇಷ್ಠನನ್ನು ಧ್ವಜವಾಗಿ ಉಳ್ಳವನು) ಮುಳಿದು ನೀಲಧ್ವಜನ ಸೇನೆಯಂ ತಡೆಗಡಿಯುತ ಆತನಂ ಮುಸುಕಿದನು ಅನೂನ(ಅಧಿಕ) ಶರಜಾಲದಿಂ=[ಅರ್ಜುನನು ಸಿಟ್ಟಿನಿಂದ ನೀಲಧ್ವಜನ ಸೇನೆಯನ್ನು ಹಿಮ್ಮಟ್ಟಿಸುತ್ತಾ ಆತನನ್ನು ಬಹಳ ಬಾಣಗಳಿಂದ ಮುಚ್ಚಿದನು.]; ಬಳಿಕ ಅವಂ ಕಂಗೆಟ್ಟು ಪಾವಕಂ ಪೊರೆಯೊಳಿರಲು ನೀನು ಅಳಿಯನು ಆಗಿರ್ದುಂ ಎನಗೆ ಇನಿತು ಅಪಾಯಮು ಏಕೆ=[ಬಳಿಕ ನೀಲಧ್ವಜನು ದಿಕ್ಕುಗಾಣದೆ,ಕಂಗೆಟ್ಟು ಅಳಿಯನಾದ ಅಗ್ನಿಯು ಹತ್ತಿರದಲ್ಲಿ ಇರಲು ಅವನೊಡನೆ, 'ನೀನು ಅಳಿಯನು ಆಗಿದ್ದು ನನಗೆ ಇಷ್ಟು ಅಪಾಯವೇಕೆ ಬಂತು? ];ಈ ನರನ ದೆಸೆಯ ಭಯಮಂ ಬಿಡಿಸಬೇಕು ಎನೆ ಕೃಶಾನು ಕೇಳ್ದು ಆಗ ಸುಡತೊಡಗಿದಂ ತಾನೆ ಪೊಕ್ಕು ಅರ್ಜುನನ ಸೈನಿಕವನು=[ಈ ಅರ್ಜುನನ ಕಡೆಯಿಂದ ಬಂದ ಭಯವನ್ನು ನಿವಾರಿಸು', ಎನ್ನಲು ಅಗ್ನಿಯು ಕೇಳಿ ಆಗ ತಾನೆ ಹೊಕ್ಕು ಅರ್ಜುನನ ಸೈನ್ಯವನ್ನು ಸುಡತೊಡಗಿದನು.]
  • ತಾತ್ಪರ್ಯ: ಅರ್ಜುನನು ಸಿಟ್ಟಿನಿಂದ ನೀಲಧ್ವಜನ ಸೇನೆಯನ್ನು ಹಿಮ್ಮಟ್ಟಿಸುತ್ತಾ ಆತನನ್ನು ಬಹಳ ಬಾಣಗಳಿಂದ ಮುಚ್ಚಿದನು. ಬಳಿಕ ನೀಲಧ್ವಜನು ದಿಕ್ಕುಗಾಣದೆ,ಕಂಗೆಟ್ಟು ಅಳಿಯನಾದ ಅಗ್ನಿಯು ಹತ್ತಿರದಲ್ಲಿ ಇರಲು ಅವನೊಡನೆ, 'ನೀನು ಅಳಿಯನು ಆಗಿದ್ದು ನನಗೆ ಇಷ್ಟು ಅಪಾಯವೇಕೆ ಬಂತು? ಈ ಅರ್ಜುನನ ಕಡೆಯಿಂದ ಬಂದ ಭಯವನ್ನು ನಿವಾರಿಸು', ಎನ್ನಲು ಅಗ್ನಿಯು ಕೇಳಿ ಆಗ ತಾನೆ ಹೊಕ್ಕು ಅರ್ಜುನನ ಸೈನ್ಯವನ್ನು ಸುಡತೊಡಗಿದನು.

(ಪದ್ಯ - ೩೭)

ಪದ್ಯ :-:೩೮:

[ಸಂಪಾದಿಸಿ]

ಛತ್ರ ಚಾಮರ ಹರಿಗೆ ಹಕ್ಕರಿಗೆ ಹಲ್ಲಣ ವಿ | ಚಿತ್ರದ ಪತಾಕೆ ಸೀಗುರಿ ಸಿಂಧ ಸೀಸಕ ತ | ನುತ್ರ ರಂಜಿಕೆ ಪಾಶ ವಸ್ತ್ರ ವಾಹನ ವಾದ್ಯ ಕೈದು ಬತ್ತಳಿಕೆ ಬಂಡಿ ||
ಪತ್ರ ಬಂದುರ ಬಾಣ ಕೋದಂಡ ರಥ ರಥಾಂ | ಗ ತ್ರಿವೇಣುಕ ಯುಗಾಂಕ್ಷಂಗಳುರಿಗೊಳೆ ಪಾಂಡು | ಪುತ್ರಸೇನೆಯೊಳೆಲ್ಲರುಂ ಬೆದರಿದರ್ ಕೆಟ್ಟು ಕೆದರಿದರ್ ಕಿಡಿಯನೊದರಿ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಛತ್ರ ಚಾಮರ ಹರಿಗೆ ಹಕ್ಕರಿಗೆ ಹಲ್ಲಣ ವಿಚಿತ್ರದ ಪತಾಕೆ ಸೀಗುರಿ ಸಿಂಧ ಸೀಸಕ=[ಛತ್ರ, ಚಾಮರ, ಹರಿಗೆಯೆಂಬ ಫಲಕ, ಹಕ್ಕರಿಗೆ(ಲಗಾಮು), ಹಲ್ಲಣ-ಕುದುರೆಯಬೆನ್ನುದಿಂಬು, ವಿಚಿತ್ರದ ಪತಾಕೆಅಥವಾ ಬಾವುಟ, ಸೀಗುರಿಎಂಬ ಬಿಳಿಪತಾಕೆ, ಸಿಂಧೆಂಬ ನಿಶನೆ ಬಾವುಟ, ಸೀಸಕ ಎಂಬ ಕವಚ,]; ತನುತ್ರ ರಂಜಿಕೆ ಪಾಶ ವಸ್ತ್ರ ವಾಹನ ವಾದ್ಯ ಕೈದು ಬತ್ತಳಿಕೆ ಬಂಡಿ=[ತನುತ್ರೆವೆಂಬ ಯುದ್ಧದುಡುಪು, ರಂಜಿಕೆ ಪಾಶ ವಸ್ತ್ರಗಳ ಸಲಕರಣೆಗಳು, ವಾಹನ ವಾದ್ಯ ಕೈದು-ಶಸ್ತ್ರಗಳು, ಬತ್ತಳಿಕೆ ಬಂಡಿ ]; ಪತ್ರ ಬಂದುರ ಬಾಣ ಕೋದಂಡ ರಥ ರಥಾಂಗ ತ್ರಿವೇಣುಕ ಯುಗಾಂಕ್ಷಂಗಳುರಿಗೊಳೆ=[ಪತ್ರ ಬಂದುರ ಬಾಣ(ರೆಕ್ಕೆ ಕಟ್ಟಿದ್ದು), ಕೋದಂಡ/ಬಿಲ್ಲು, ರಥ, ರಥಾಂಗಗಳಾದ ಚಕ್ರ ಮೊದಲಾದ ಸಲಕರಣೆಗಳು, ತ್ರಿವೇಣುಕವೆಂಬ ಗಾಡಿಯ ಮೂಕೀಮರ, ಯುಗಾಂಕ್ಷಂಗಳು ಉರಿಗೊಳೆ/ಸುಡಲು (ನೊಗ,ಗಾಲಿಯಅಕ್ಷ,)] ಪಾಂಡುಪುತ್ರಸೇನೆಯೊಳು ಎಲ್ಲರುಂ ಬೆದರಿದರ್ ಕೆಟ್ಟು ಕೆದರಿದರ್ ಕಿಡಿಯನೊದರಿ=[ಪಾಂಡುಪುತ್ರನ ಸೇನೆಯಲ್ಲಿ ಎಲ್ಲರೂ ಹೆದರಿದರು, ಬೆಂಕಿಯನ್ನು ಕೊಡವುತ್ತಾ ಕೆಟ್ಟು ಓಡಿದರು.].
  • ತಾತ್ಪರ್ಯ: ಛತ್ರ, ಚಾಮರ, ಹರಿಗೆಯೆಂಬ ಫಲಕ, ಹಕ್ಕರಿಗೆ(ಲಗಾಮು), ಹಲ್ಲಣ-ಕುದುರೆಯಬೆನ್ನುದಿಂಬು, ವಿಚಿತ್ರದ ಪತಾಕೆಅಥವಾ ಬಾವುಟ, ಸೀಗುರಿಎಂಬ ಬಿಳಿಪತಾಕೆ, ಸಿಂಧೆಂಬ ನಿಶನೆ ಬಾವುಟ, ಸೀಸಕ ಎಂಬ ಕವಚ, ತನುತ್ರೆವೆಂಬ ಯುದ್ಧದುಡುಪು, ರಂಜಿಕೆ ಪಾಶ ವಸ್ತ್ರಗಳ ಸಲಕರಣೆಗಳು, ವಾಹನ ವಾದ್ಯ ಕೈದು-ಶಸ್ತ್ರಗಳು, ಬತ್ತಳಿಕೆ ಬಂಡಿ ಪತ್ರ ಬಂದುರ ಬಾಣ(ರೆಕ್ಕೆ ಕಟ್ಟಿದ್ದು), ಕೋದಂಡ/ಬಿಲ್ಲು, ರಥ, ರಥಾಂಗಗಳಾದ ಚಕ್ರ ಮೊದಲಾದ ಸಲಕರಣೆಗಳು, ತ್ರಿವೇಣುಕವೆಂಬ ಗಾಡಿಯ ಮೂಕೀಮರ, ಯುಗಾಂಕ್ಷಂಗಳು (ನೊಗ,ಗಾಲಿಯಅಕ್ಷ,)ಉರಿಗೊಳೆ/ಸುಡಲು, ಪಾಂಡುಪುತ್ರನಾದ ಅರ್ಜುನನ ಸೇನೆಯಲ್ಲಿ ಎಲ್ಲರೂ ಹೆದರಿದರು, ಬೆಂಕಿಯನ್ನು ಕೊಡವುತ್ತಾ ಕೆಟ್ಟು ಓಡಿದರು.].

(ಪದ್ಯ - ೩೮)

ಪದ್ಯ :-:೩೯:

[ಸಂಪಾದಿಸಿ]

ಹೊಗೆಹೊಗೆದು ಹೊಗೆ ಸುತ್ತಿ ಹೊಗುವ ದೆಸೆ ದೆಸೆಗಳಂ | ಮೊಗೆಮೊಗೆದು ಮಗಸಿ ಪಲಮೊಗದೊಳವ್ವಳಿಸಿ ಪುಟ | ನೆಗೆನೆಗೆದು ನೆಗಳ್ದು ಸೋನೆಗಳಾಗಿ ಸುರಿವ ಕಿರುಗಿಡಿಗಳ ತುಷಾರದಿಂದೆ ||
ಧಗಧಗಧಗನೆ ಪೊತ್ತುವಾ ಜ್ವಾಲೆಗಳ ಮಾಲೆ | ಭುಗುಭುಗುಭುಗಿಲ್ಭುಗಿಲ್ಭುಗಿಲೆಂದು ಡಾವರಿಸೆ | ತೆಗೆತೆಗೆದು ತಗುಳ್ದೆಲ್ಲರಂ ದಹಿಸತೊಡಗಿದವು ದಳ್ಳುರಿ ನರನ ಬಲದೊಳು ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • (ಅರ್ಜುನನ ಸೈನ್ಯದಲ್ಲಿ ಬೆಂಕಿ,)ಹೊಗೆಹೊಗೆದು ಹೊಗೆ ಸುತ್ತಿ ಹೊಗುವ ದೆಸೆ ದೆಸೆಗಳಂ ಮೊಗೆಮೊಗೆದು ಮಗಸಿ=[ಹೊಗೆಹೊಗೆಯಾಗಿ ಹೊಗೆ ಸುತ್ತಿಸುತ್ತಿಕೊಂಡು, ದಿಕ್ಕುಗಳನ್ನು ಹೊಗುವ ಬೆಂಕಿ-ಹೊಗೆ, ಮೊಗೆಮೊಗೆದು / ಹೊಕ್ಕು,ಆವರಿಸಿ ಮಗಸಿ]; ಪಲಮೊಗದೊಳ್ (ಹಲವು ಮುಖದಿಂದ) ಅವ್ವಳಿಸಿ ಪುಟ ನೆಗೆನೆಗೆದು ನೆಗಳ್ದು ಸೋನೆಗಳಾಗಿ ಸುರಿವ ಕಿರುಗಿಡಿಗಳ ತುಷಾರದಿಂದೆ=[ಹಲವು ಮುಖದಿಂದ ಹರಡಿ, ಪುಟ / ಚಿಮ್ಮಿ ನೆಗೆನೆಗೆದು ಮೇಲೆ ಹಬ್ಬಿ, ಮಳೆಯಂತೆ ಸುರಿವ ಕಿರು ಕಿಡಿಗಳ ಹಿಮಬೀಳುವಂತೆ,] ಧಗಧಗಧಗನೆ ಪೊತ್ತುವಾ ಜ್ವಾಲೆಗಳ ಮಾಲೆ ಭುಗುಭುಗುಭುಗಿಲ್ಭುಗಿಲ್ಭುಗಿಲೆಂದು ಡಾವರಿಸೆ (ಸುಡಲು)=[ಗಧಗಧಗನೆ ಹತ್ತಿ ಉರಿವ ಆ ಜ್ವಾಲೆಗಳು ಮಾಲೆಮಾಲೆಯಾಗಿ ತೋರಿದವು. ಭುಗುಭುಗುಭುಗಿಲ್ಭುಗಿಲ್ಭುಗಿಲೆಂದು ಎಲ್ಲಕಡೆ ಹಬ್ಬಿತು]; ತೆಗೆತೆಗೆದು ತಗುಳ್ದು ಎಲ್ಲರಂ ದಹಿಸತೊಡಗಿದವು ದಳ್ಳುರಿ ನರನ ಬಲದೊಳು=[ಅರ್ಜುನನ ಸೈನ್ಯದಲ್ಲಿ ಎಲ್ಲರನ್ನೂ ಹುಡುಕಿ ತೆಗೆತೆಗೆದು ತಗೆದು ಸುಡಲು ತೊಡಗಿದವು ಬೆಂಕಿಯ ದೊಡ್ಡ ಸುಳಿಗಳು.](ಅನುಕರಣ ಶಬ್ದಗಳು - ಅನುಪ್ರಾಸ)
  • ತಾತ್ಪರ್ಯ:ಅರ್ಜುನನ ಸೈನ್ಯದಲ್ಲಿ ಬೆಂಕಿ, ಹೊಗೆಹೊಗೆಯಾಗಿ ಹೊಗೆ ಸುತ್ತಿಸುತ್ತಿಕೊಂಡು, ದಿಕ್ಕುಗಳನ್ನು ಹೊಗುವ ಬೆಂಕಿ-ಹೊಗೆ, ಮೊಗೆಮೊಗೆದು / ಹೊಕ್ಕು,ಆವರಿಸಿ ಹಲವು ಮುಖದಿಂದ ಹರಡಿ, ಪುಟ / ಚಿಮ್ಮಿ ನೆಗೆನೆಗೆದು ಮೇಲೆ ಹಬ್ಬಿ, ಮಳೆಯಂತೆ ಸುರಿವ ಕಿರು ಕಿಡಿಗಳ ಹಿಮಬೀಳುವಂತೆ, ಗಧಗಧಗನೆ ಹತ್ತಿ ಉರಿವ ಆ ಜ್ವಾಲೆಗಳು ಮಾಲೆಮಾಲೆಯಾಗಿ ತೋರಿದವು. ಭುಗುಭುಗುಭುಗಿಲ್ಭುಗಿಲ್ಭುಗಿಲೆಂದು ಎಲ್ಲಕಡೆ ಹಬ್ಬಿತು; ಅರ್ಜುನನ ಸೈನ್ಯದಲ್ಲಿ ಎಲ್ಲರನ್ನೂ ಹುಡುಕಿ ತೆಗೆತೆಗೆದು ತಗೆದು ಸುಡಲು ತೊಡಗಿದವು ಬೆಂಕಿಯ ದೊಡ್ಡ ಸುಳಿಗಳು.](ಅನುಕರಣ ಶಬ್ದಗಳು - ಅನುಪ್ರಾಸ)

(ಪದ್ಯ - ೩೯)

ಪದ್ಯ :-:೪೦:

[ಸಂಪಾದಿಸಿ]

ಕಟ್ಟುಗ್ರಕೋಪದಿಂ ಮುಳಿದಂದು ರಾಘವಂ | ತೊಟ್ಟ ಬಾಣದ ಮೊನೆಯ ದಳ್ಳುರಿಯ ಜಳಕೆ ಕಂ | ಗೆಟ್ಟು ಸಿಡಿಮಿಡಿಗೊಂಡ ಸಾಗರದ ಜೀವಾಳಿಯಂತೆ ಪಾಂಡವನ ಸೇನೆ ||
ಅಟ್ಟಿ ಸುಡುವನಲ ಧೂಮಜ್ವಾಲೆಗೊಡನೆ ಗೋ | ಳಿಟ್ಟು ಹೊದಕುಳಿಗೊಂಡು ಹೊರಳುತಿರಲುಬ್ಬೆಗಂ | ಬಟ್ಟು ಪಾರ್ಥಂ ಚಿಂತಿಸಿದನೆತ್ತಣದ್ಭುತಮಿದೆಂದು ಪಾವಕನುರುಬೆಗೆ ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಟ್ಟುಗ್ರಕೋಪದಿಂ ಮುಳಿದು ಅಂದು ರಾಘವಂ ತೊಟ್ಟ ಬಾಣದ ಮೊನೆಯ ದಳ್ಳುರಿಯ ಜಳಕೆ(ಶಾಖ) ಕಂಗೆಟ್ಟು=[ಅತಿಯಾದ ಕೋಪದಿಂದ ಅಂದು ತ್ರೇತಾಯುಗದಲ್ಲಿ, ರಘುರಾಮನು ಸಿಟ್ಟಿನಿಂದ ತೊಟ್ಟ ಬಾಣದ ತುದಿಯ ದಳ್ಳುರಿಯ ಜಳಕೆ /ಶಾಖಕ್ಕೆ ಕಂಗೆಟ್ಟು]; ಸಿಡಿಮಿಡಿಗೊಂಡ ಸಾಗರದ ಜೀವಾಳಿಯಂತೆ ಪಾಂಡವನ ಸೇನೆ ಅಟ್ಟಿ ಸುಡುವ ಅನಲ ಧೂಮಜ್ವಾಲೆಗೊಡನೆ ಗೋಳಿಟ್ಟು ಹೊದಕುಳಿಗೊಂಡು ಹೊರಳುತಿರಲು=[ಅಂದು ಕಳವಳಗೊಂಡ ಸಮುದ್ರದ ಜೀವಜಂತುಗಳಂತೆ, ಪಾಂಡವನ ಸೇನೆ ಎಲ್ಲಡೆ ಆವರಿಸಿ ಸುಡುವ ಅಗ್ನಿಯ ಧೂಮಜ್ವಾಲೆಗೆ ಆಗ ಗೋಳಿಟ್ಟು ಭಯಪಟ್ಟು ಹೊರಳಾಡುತ್ತಿರಲು,]; ಉಬ್ಬೆಗಂ ಬಟ್ಟು ಪಾರ್ಥಂ ಚಿಂತಿಸಿದನೆತ್ತಣ ಅದ್ಭುತಮಿದೆಂದು ಪಾವಕನ ಉರುಬೆಗೆ=[ಮನಸ್ಸಿನಲ್ಲಿ ಉದ್ವೇಗದಿಂದ,ಪಾರ್ಥನು ಅಗ್ನಿಯ ಅನಾಹುತ ಕಂಡು, ಇದು ಯಾವಬಗೆಯ ಅದ್ಭುತವು ಎಂದು ಚಿಂತಿತನಾದನು.].
  • ತಾತ್ಪರ್ಯ:ಅತಿಯಾದ ಕೋಪದಿಂದ ಅಂದು ತ್ರೇತಾಯುಗದಲ್ಲಿ, ರಘುರಾಮನು ಸಿಟ್ಟಿನಿಂದ ತೊಟ್ಟ ಬಾಣದ ತುದಿಯ ದಳ್ಳುರಿಯ ಜಳಕೆ /ಶಾಖಕ್ಕೆ ಕಂಗೆಟ್ಟು, ಅಂದು ಕಳವಳಗೊಂಡ ಸಮುದ್ರದ ಜೀವಜಂತುಗಳಂತೆ, ಪಾಂಡವನ ಸೇನೆ ಎಲ್ಲಡೆ ಆವರಿಸಿ ಸುಡುವ ಅಗ್ನಿಯ ಧೂಮಜ್ವಾಲೆಗೆ ಆಗಸೈನಿಕರು ಗೋಳಿಟ್ಟು ಭಯಪಟ್ಟು ಹೊರಳಾಡುತ್ತಿರಲು, ಮನಸ್ಸಿನಲ್ಲಿ ಉದ್ವೇಗದಿಂದ,ಪಾರ್ಥನು ಅಗ್ನಿಯ ಅನಾಹುತ ಕಂಡು, ಇದು ಯಾವಬಗೆಯ ಅದ್ಭುತವು ಎಂದು ಚಿಂತಿತನಾದನು.

(ಪದ್ಯ - ೪೦)

ಪದ್ಯ :-:೪೧:

[ಸಂಪಾದಿಸಿ]

ಭಗ್ನರಾದರ್ ಕೆಲರ್ ಕವಚಾದಿಗಳ್ ಬೆಂದು | ನಗ್ನರಾದರ್ ಕೆಲರ್ ಪೆಚ್ಚಿದುರಿಗಿಚ್ಚಿನೊಳ್ | ಮಗ್ನರಾದರ್ ಕೆಲರ್ ತನ್ನ ಸೇನೆಯೊಳಕಟ ಧರ್ಮಜನ ಹಯಮೇಧಕೆ ||
ವಿಘ್ನಮಾದುದೆ ಶಿವಶಿವೆನುತೆ ಚಿಂತಿಸಿದನಿದ | ಕಗ್ನಿಯಂ ಭಜಿಸಿ ನೋಡುವೆನೆಂದು ನಿಜ ಕಂ ವಿ | ಲಗ್ನ ಚಾಪವನಿಳುಹಿ ಶುಚಿಯಾಗಿ ಪಾವಕನನರ್ಜುನಂ ಪ್ರಾರ್ಥಿಸಿದನು ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • (ತನ್ನ ಸೇನೆಯಲ್ಲಿ) ಭಗ್ನರಾದರ್ ಕೆಲರ್ ಕವಚಾದಿಗಳ್ ಬೆಂದು ನಗ್ನರಾದರ್ ಕೆಲರ್ ಪೆಚ್ಚಿದ (ಹೆಚ್ಚಿದ)ಉರಿಗಿಚ್ಚಿನೊಳ್ ಮಗ್ನರಾದರ್ ಕೆಲರ್=[ದೇಹದ ಅಂಗಸುಟ್ಟು ವಿಕಲರಾದರು ಕೆಲವರು, ಕವಚಾದಿಗಳು ಬೆಂದು ಬಟ್ಟೆ ಇಲ್ಲದೆ ನಗ್ನರಾದರು ಕೆಲವರು, ಹೆಚ್ಚಿದ ಉರಿಯುವ ಬೆಂಕಿಯಲ್ಲಿ ಮುಳುಗಿದರು ಕೆಲವರು]; ತನ್ನ ಸೇನೆಯೊಳ್ ಅಕಟ ಧರ್ಮಜನ ಹಯಮೇಧಕೆ ವಿಘ್ನಮಾದುದೆ ಶಿವಶಿವಾ ಎನುತೆ ಚಿಂತಿಸಿದನು =[ತನ್ನ ಸೇನೆಯಲ್ಲಿ, ಅಕಟ ನಾವು ಸೋತು ಧರ್ಮಜನ ಅಶ್ವಮೇಧಯಜ್ಞಕ್ಕೆ ವಿಘ್ನವಾಗುವುದೇ ಎನ್ನುತ್ತಾ ಚಿಂತಿಸಿದನು. ]; ಇದಕೆ ಅಗ್ನಿಯಂ ಭಜಿಸಿ ನೋಡುವೆನೆಂದು ನಿಜ ಕರವಿಲಗ್ನ (ಕೈಯಲ್ಲಿದ್ದ) ಚಾಪವನು ಇಳುಹಿ ಶುಚಿಯಾಗಿ ಪಾವಕನನು ಅರ್ಜುನಂ ಪ್ರಾರ್ಥಿಸಿದನು=[ಇದಕ್ಕೆ ಪರಿಹಾರವಾಗಿ, ಅಗ್ನಿಯನ್ನು ಭಜಿಸಿ ನೋಡುವೆನೆಂದು ತನ್ನ ಕೈಯಲ್ಲಿದ್ದ ಬಿಲ್ಲನ್ನು ಕೆಳಗಿಟ್ಟು ರಥದಲ್ಲಿದ್ದ ನೀರಿನಿಂದ ಮುಖ ಕಣ್ನು ತೊಳೆದು ಆಚಮನ ಮಾಡಿ, ಮಂತ್ರಸ್ನಾನದಿಂದ ಶುಚಿಯಾಗಿ ಅಗ್ನಿಯನ್ನು ಅರ್ಜುನನು ಪ್ರಾರ್ಥಿಸಿದನು.]
  • ತಾತ್ಪರ್ಯ:ಅರ್ಜುನನ ಸೇನೆಯಲ್ಲಿ, ದೇಹದ ಅಂಗಸುಟ್ಟು ವಿಕಲರಾದರು ಕೆಲವರು, ಕವಚಾದಿಗಳು ಬೆಂದು ಬಟ್ಟೆ ಇಲ್ಲದೆ ನಗ್ನರಾದರು ಕೆಲವರು, ಹೆಚ್ಚಿದ ಉರಿಯುವ ಬೆಂಕಿಯಲ್ಲಿ ಮುಳುಗಿದರು ಕೆಲವರು, ಅಕಟ ನಾವು ಸೋತು ಧರ್ಮಜನ ಅಶ್ವಮೇಧಯಜ್ಞಕ್ಕೆ ವಿಘ್ನವಾಗುವುದೇ ಎನ್ನುತ್ತಾ ಚಿಂತಿಸಿದನು. ಇದಕ್ಕೆ ಪರಿಹಾರವಾಗಿ, ಅಗ್ನಿಯನ್ನು ಭಜಿಸಿ ನೋಡುವೆನೆಂದು ತನ್ನ ಕೈಯಲ್ಲಿದ್ದ ಬಿಲ್ಲನ್ನು ಕೆಳಗಿಟ್ಟು ರಥದಲ್ಲಿದ್ದ ನೀರಿನಿಂದ ಮುಖ ಕಣ್ನು ತೊಳೆದು ಆಚಮನ ಮಾಡಿ, ಮಂತ್ರಸ್ನಾನದಿಂದ ಶುಚಿಯಾಗಿ ಅಗ್ನಿಯನ್ನು ಅರ್ಜುನನು ಪ್ರಾರ್ಥಿಸಿದನು.

(ಪದ್ಯ - ೪೧)

ಪದ್ಯ :-:೪೨:

[ಸಂಪಾದಿಸಿ]

ಬಳಿಕನಲ ಸೂಕ್ತಗಳಿಂದೆ ನುತಿಗೆಯ್ದು ಭೂ | ತಳಕೊಂದಿ ಸಾಷ್ಟಾಂಗದಿಂದೆರಗಿ ನಿಂದು ನೀಂ | ಮುಳಿಯಲೇಖೀ ಮಖಂ ನಿನಗೈಸಲೇ ನಿನ್ನ ದೆಸೆಯಿಂದಖೀಳ ಸುರರ್ಗೆ ||
ತಳೆವುದು ಹವಿರ್ಭಾಗಮೀ ಚರಾಚರದ ಪೊರೆ | ಗೊಳಗೆಲ್ಲಮುಂ ನೀನೆ ನಿನ್ನಂದ ಮೂಲೋಕ | ದಳಿವುಳಿವು ಸಾಕದಂತಿರಲೆನಗೆ ಮಾರ್ಗಮಂ ಕೊಟ್ಟುಳೂಹಬೇಕೆಂದನು ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಅನಲ ಸೂಕ್ತಗಳಿಂದೆ ನುತಿಗೆಯ್ದು ಭೂತಳಕೊಂದಿ ಸಾಷ್ಟಾಂಗದಿಂದೆರಗಿ ನಿಂದು=[ಬಳಿಕ ಅಗ್ನಿಸೂಕ್ತಗಳಿಂದ ಅಗ್ನಿಯನ್ನು ಸ್ತೋತ್ರಮಾಡಿ ನೆಲಕ್ಕೆ ಇಳಿದು ಸಾಷ್ಟಾಂಗದಿಂದ ನಮಸ್ಕರಿಸಿ,ನಿಂತುಕೊಂಡು,]; ನೀಂ ಮುಳಿಯಲೇಖೆ ಈ ಮಖಂ ನಿನಗೈಸಲೇ ನಿನ್ನ ದೆಸೆಯಿಂದ ಅಖಿಳ ಸುರರ್ಗೆ ತಳೆವುದು ಹವಿರ್ಭಾಗಮೀ=[ನೀನು ಸಿಟ್ಟು ಮಅಡುವುದೇಕೆ? ಈಗ ನಾವು ಮಾಡುವ ಯಜ್ಞವು ನಿನಗಾಗಿಯೇ ಇದೆ; ನಿನ್ನ ಮೂಲಕ ಎಲ್ಲಾ ದೇವತೆಗಳಿಗೆ ಹವಿರ್ಭಾಗವು ಸಲ್ಲುವುದು.]; ಚರಾಚರದ ಪೊರೆಗೆ ಒಳಗೆ ಎಲ್ಲಮುಂ ನೀನೆ ನಿನ್ನಂದ ಮೂಲೋಕ ದಳಿವುಳಿವು ಸಾಕದಂತಿರಲೆನಗೆ ಮಾರ್ಗಮಂ ಕೊಟ್ಟುಳೂಹಬೇಕೆಂದನು=[ಚರಾಚರದ ಹೊರಗೆ ಒಳಗೆ ಎಲ್ಲಾ ನೀನೆ ನಿನ್ನಂದ ಮೂರುಲೋಕದ ಅಳಿವು ಉಳಿವು, ಸಾಕು ಅದು ಹಾಗಿರಲಿ,ನನಗೆ ದಾರಿ ಕೊಟ್ಟು \ ಮುಂದಿನ ದಾರಿ ತೋರಿಸಿ, ಕಾಪಾಡಬೇಕು ಎಂದನು.]
  • ತಾತ್ಪರ್ಯ:ಅರ್ಜುನನು ಬಳಿಕ ಅಗ್ನಿಸೂಕ್ತಗಳಿಂದ ಅಗ್ನಿಯನ್ನು ಸ್ತೋತ್ರಮಾಡಿ ನೆಲಕ್ಕೆ ಇಳಿದು ಸಾಷ್ಟಾಂಗದಿಂದ ನಮಸ್ಕರಿಸಿ,ನಿಂತುಕೊಂಡು, ನೀನು ಸಿಟ್ಟು ಮಅಡುವುದೇಕೆ? ಈಗ ನಾವು ಮಾಡುವ ಯಜ್ಞವು ನಿನಗಾಗಿಯೇ ಇದೆ; ನಿನ್ನ ಮೂಲಕ ಎಲ್ಲಾ ದೇವತೆಗಳಿಗೆ ಹವಿರ್ಭಾಗವು ಸಲ್ಲುವುದು. ಚರಾಚರದ ಹೊರಗೆ ಒಳಗೆ ಎಲ್ಲಾ ನೀನೆ ನಿನ್ನಂದ ಮೂರುಲೋಕದ ಅಳಿವು ಉಳಿವು, ಸಾಕು ಅದು ಹಾಗಿರಲಿ,ನನಗೆ ದಾರಿ ಕೊಟ್ಟು \ ಮುಂದಿನ ದಾರಿ ತೋರಿಸಿ, ಕಾಪಾಡಬೇಕು ಎಂದನು.

(ಪದ್ಯ - ೪೨)

ಪದ್ಯ :-:೪೩:

[ಸಂಪಾದಿಸಿ]

ದೇವ ನೀನಂದು ಗಾಂಡೀವಮಂ ತನಗಿತ್ತೆ | ಭಾವಿಸಲ್ ಪಾಂಚಾಲೆ ನಿನ್ನೊಳುದ್ಭವಿಸಿದಳ್ | ನಾವು ಲೋಗರೆ ನಿನಗೆ ಪೇಳೆಂದು ನುತಿಸಿ ಕುಂತೀಸುತಂ ಬೇಡಿಕೊಳಲು ||
ಪಾವಕಂ ಮೆಚ್ಚಿ ನುಡಿದಂ ಪಾರ್ಥ ಕೇಳಾದೊ | ಡಾವು ಮುಳಿಯೆವು ನಿಮಗೆ ಹರಿ ಸಮೀಪದೊಳಿರ್ದು | ಮೀ ವಾಜಿಮೇಧಮೇಕಮೃತಮಿರಲಳೆಗೆಳೆಸಿದಂತಾಯ್ತು ನಿಮಗೆಂದನು ||43|

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದೇವ ನೀನಂದು ಗಾಂಡೀವಮಂ ತನಗಿತ್ತೆ ಭಾವಿಸಲ್ ಪಾಂಚಾಲೆ ನಿನ್ನೊಳು ಉದ್ಭವಿಸಿದಳ್=[ದೇವ ಅಗ್ನಿಯೇ, ನೀನು ಹಿಂದೆನನಗೆ ಗಾಂಡೀವ ಧನಸ್ಸನ್ನು ಕೊಟ್ಟೆ, ವಿಚಾರಮಾಡಿದರೆ ಪಾಂಚಾಲೆಯು ನಿನ್ನಲ್ಲಿ ಹುಟ್ಟಿದವಳು.(ನಾವು ನಿನಗೆ ಅಳಿಯಂದಿರು) ]; ನಾವು ಲೋಗರೆ ನಿನಗೆ ಪೇಳೆಂದು ನುತಿಸಿ ಕುಂತೀಸುತಂ ಬೇಡಿಕೊಳಲು=[ನಾವು ಅನ್ಯರೇ, ನಿನಗೆ ಸಾಮಾನ್ಯ ಜನರೇ? ಹೇಳು ಎಂದು ಅರ್ಜುನನು ಸ್ತುತಿಸಲು,ಮತ್ತು ಬೇಡಿಕೊಳ್ಳಲು]; ಪಾವಕಂ ಮೆಚ್ಚಿ ನುಡಿದಂ ಪಾರ್ಥ ಕೇಳು ಆದೊಡೆ ಆವು ಮುಳಿಯೆವು ನಿಮಗೆ ಹರಿ ಸಮೀಪದೊಳಿರ್ದುಂ=[ಅಗ್ನಿಯು ಮೆಚ್ಚಿ ನುಡಿದನು, 'ಪಾರ್ಥ ಕೇಳು ಹಾಗಿದ್ದಮೇಲೆ ನಾವು ಕೋಪಮಾಡುವುದಿಲ್ಲ, ನಿಮಗೆ ಹರಿಯೇ ಸಮೀಪದಲ್ಲಿ ಇದ್ದರೂ]; ಈ ವಾಜಿಮೇಧಂ ಏಕೆ ಅಮೃತಮಿರಲ್ ಅಳೆಗೆ(ಮಜ್ಜಿಗೆಗೆ) ಎಳೆಸಿದಂತೆ ಆಯ್ತು ನಿಮಗೆ ಎಂದನು=[ಈ ಅಶ್ವಮೇಧಯಜ್ಞ ಏಕೆ? ನಿಮಗೆ ಕೈಯಲ್ಲಿ ಅಮೃತವು ಇದ್ದಾಗ ಮಜ್ಜಿಗೆಯನ್ನು ಬೇಡಿದಂತೆ ಆಯ್ತು ಎಂದನು].
  • ತಾತ್ಪರ್ಯ: ಅರ್ಜುನ ಅಗ್ನಿಯನ್ನು ಪ್ರಾರ್ಥಿಸುತ್ತಾನೆ.ದೇವ ಅಗ್ನಿಯೇ, ನೀನು ಹಿಂದೆ ನನಗೆ ಗಾಂಡೀವ ಧನುಸ್ಸನ್ನು ಕೊಟ್ಟೆ, ವಿಚಾರಮಾಡಿದರೆ ಪಾಂಚಾಲೆಯು ನಿನ್ನಲ್ಲಿ ಹುಟ್ಟಿದವಳು.(ನಾವು ನಿನಗೆ ಅಳಿಯಂದಿರು) ]; ನಾವು ಅನ್ಯರೇ, ನಿನಗೆ ಸಾಮಾನ್ಯ ಜನರೇ? ಹೇಳು ಎಂದು ಅರ್ಜುನನು ಸ್ತುತಿಸಲು,ಮತ್ತು ಬೇಡಿಕೊಳ್ಳಲು, ಅಗ್ನಿಯು ಮೆಚ್ಚಿ ನುಡಿದನು, 'ಪಾರ್ಥ ಕೇಳು ಹಾಗಿದ್ದಮೇಲೆ ನಾವು ಕೋಪಮಾಡುವುದಿಲ್ಲ, ನಿಮಗೆ ಹರಿಯೇ ಸಮೀಪದಲ್ಲಿ ಇದ್ದರೂ ಈ ಅಶ್ವಮೇಧಯಜ್ಞ ಏಕೆ? ನಿಮಗೆ ಕೈಯಲ್ಲಿ ಅಮೃತವು ಇದ್ದಾಗ ಮಜ್ಜಿಗೆಯನ್ನು ಬೇಡಿದಂತೆ ಆಯ್ತು ಎಂದನು.

(ಪದ್ಯ - ೪೩)

ಪದ್ಯ :-:೪೪:

[ಸಂಪಾದಿಸಿ]

ಅಹುದು ನೀವೆಂಬುದಂ ಮೀರಬರ್ಪುದೆ ಹರಿಯ | ಸಹವಾಸಮೇ ಸಾಕು ಜಗದೊಳ್ ಸ್ವಧರ್ಮಮಂ | ವಹಯಿಸದವರಾರು ಮುನಿವರನಾಜ್ಞೆಯಾದಪುದು ಮೇಣಂತುಮಲ್ಲದೆಮಗೆ ||
ವಿಹಗೇಂದ್ರವಾಹನಂ ಮಾಡವೇಳ್ಕೆಂದನು | ಗ್ರಹಿಸಿದಂ ಮಖಮನಿದಕೆಂತೆಂದು ನರನೆನಲ್ | ದಹಿಪುದು ಮಾಣ್ದೆನೆಂದಭಯಮಿತ್ತಗ್ನಿ ನೀಲಧ್ವಜಗಿಂತೆಂದನು ||44||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಹುದು ನೀವು ಎಂಬುದಂ ಮೀರಬರ್ಪುದೆ ಹರಿಯ ಸಹವಾಸಮೇ ಸಾಕು ಜಗದೊಳ್=[ ನೀವು ಹೇಳುವುದು ನಿಜ, ನಿಮ್ಮ ಮಾತು ಮೀರಬಹುದೇ? ಹರಿಯ ಸಹವಾಸವೇ ಸಾಕು, ಆದರೆ ಜಗದಲ್ಲಿ ಸ್ವಧರ್ಮವನ್ನು ಕ್ಷತ್ರಿಯ ಧರ್ಮವನ್ನೂ ಯಾಗವನ್ನೂ, ಮಾಡದವರು ಯಾರು? ಆದಲ್ಲದೆ ಮುನಿವರರಾದ ಬಾದರಾಯಣರು ಮಾಡಲು ಆಜ್ಞೆಮಾಡಿದರು;];ಮೇಣ್ ಆಂತುಂ ಅಲ್ಲದೆ ಎಮಗೆ ವಿಹಗೇಂದ್ರವಾಹನಂ ಮಾಡವೇಳ್ಕೆಂದು ಅನುಗ್ರಹಿಸಿದಂ ಮಖಮನು ನಿದಕೆ ಎಂತೆಂದು ನರನೆನಲ್=[ ಅದೂ ಅಲ್ಲದೆ ನಮಗೆ ಕೃಷ್ಣನು ಮಾಡಬಹುದೆಂದು ಅನುಗ್ರಹಿಸಿದನು; ಅದಕ್ಕೆ ಅಶ್ವಮೇಧಯಜ್ಞವನ್ನು ಮಾಡುತ್ತಿದ್ದೇವೆ, ಎಂದು ಅರ್ಜುನನು ಹೇಳಲು,]; ದಹಿಪುದು ಮಾಣ್ದೆನೆಂದು ಅಭಯಮಿತ್ತು ಅಗ್ನಿ ನೀಲಧ್ವಜಗೆ ಇಂತೆಂದನು=[ಅಗ್ನಿಯು ಇನ್ನು ಸುಡುವಕೆಲಸ ಮಾಡುವುದಿಲ್ಲ ಎಂದು ಅಭಯವಿತ್ತು; ಅಗ್ನಿ ನೀಲಧ್ವಜಗೆ ಇಂತೆಂದನು ].
  • ತಾತ್ಪರ್ಯ: ಅರ್ಜುನ ಅಗ್ನಿಗೆ ಹೇಳಿದನು: ನೀವು ಹೇಳುವುದು ನಿಜ, ನಿಮ್ಮ ಮಾತು ಮೀರಬಹುದೇ? ಹರಿಯ ಸಹವಾಸವೇ ಸಾಕು, ಆದರೆ ಜಗದಲ್ಲಿ ಸ್ವಧರ್ಮವನ್ನು ಕ್ಷತ್ರಿಯ ಧರ್ಮವನ್ನೂ ಯಾಗವನ್ನೂ, ಮಾಡದವರು ಯಾರು? ಆದಲ್ಲದೆ ಮುನಿವರರಾದ ಬಾದರಾಯಣರು ಮಾಡಲು ಆಜ್ಞೆಮಾಡಿದರು; ಅದೂ ಅಲ್ಲದೆ ನಮಗೆ ಕೃಷ್ಣನು ಮಾಡಬಹುದೆಂದು ಅನುಗ್ರಹಿಸಿದನು; ಅದಕ್ಕೆ ಅಶ್ವಮೇಧಯಜ್ಞವನ್ನು ಮಾಡುತ್ತಿದ್ದೇವೆ, ಎಂದು ಅರ್ಜುನನು ಹೇಳಲು, ಅಗ್ನಿಯು ಇನ್ನು ಸುಡುವಕೆಲಸ ಮಾಡುವುದಿಲ್ಲ ಎಂದು ಅಭಯವಿತ್ತು; ಅಗ್ನಿ ನೀಲಧ್ವಜಗೆ ಹೀಗೆ ಹೇಳಿದನು.

(ಪದ್ಯ - ೪೪)

ಪದ್ಯ :-:೪೫:

[ಸಂಪಾದಿಸಿ]

ಸಂಗರಂ ಬೇಡ ನರನೊಡನೆ ಸಾಕಾತನ ತು | ರಂಗಮವ ಬಿಡು ನಡೆ ನಗರಕೆಂದು ವೈಶ್ವಾನ | ರಂ ಗುಣದೊಳರಸನಂ ತಿರುಗಿಸಿದನತ್ತಲರ್ಜುನನುರಿಯ ಡಾವರವನು |
ಭಂಗಿಸಿದನೆಚ್ಚು ನಾರಾಯಣಾಸ್ತ್ರದೊಳನ್ನೆ | ಗಂ ಗಗನ ಮಣಿ ಪಶ್ಚಿಮಾಂಗನೆಯ ಬೈತಲೆಯ | ರಂಗು ಮಾಣಿಕದಂತೆ ಕಣ್ಗೆ ಕಾಣಿಸುತಿರ್ದುದಸ್ತಗಿರಿ ಮಸ್ತಕದೊಳು ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಂಗರಂ ಬೇಡ ನರನೊಡನೆ ಸಾಕಾತನ ತುರಂಗಮವ ಬಿಡು=[ಅರ್ಜುನನೊಡನೆ ಯುದ್ಧವು ಬೇಡ ವಿರೋಧಸಾಕು ಆತನ ಕುದುರೆಯನ್ನು ಬಿಡು]; ನಡೆ ನಗರಕೆಂದು ವೈಶ್ವಾನರಂ ಗುಣದೊಳು ಅರಸನಂ ತಿರುಗಿಸಿದನು=[ನಗರಕ್ಕೆ ಹಿಂತಿರುಗು ಎಂದು ಅಗ್ನಿಯು ವಿನಯದಿಂದ ಹೇಳಿ ಅರಸನನ್ನು ಹಿಂತಿರುಗಿಸಿದನು.]; ಅತ್ತಲು ಅರ್ಜುನನು ಉರಿಯ ಡಾವರವನು ಭಂಗಿಸಿದನು ಎಚ್ಚು ನಾರಾಯಣಾಸ್ತ್ರದೊಳ್=[ಅತ್ತ ಯುದ್ಧ ಭೂಮಿಯಲ್ಲಿ ಅರ್ಜುನನು ಬೆಂಕಿಯ ಉರಿಯ ತಾಪವನ್ನು ನಾರಾಯಣಾಸ್ತ್ರವನ್ನು ಪ್ರಯೋಗಿಸಿ ಶಾಂತಗೊಳಿಸಿದನು.]; ಅನ್ನೆಗಂ ಗಗನ ಮಣಿ ಪಶ್ಚಿಮಾಂಗನೆಯ ಬೈತಲೆಯ ರಂಗು ಮಾಣಿಕದಂತೆ ಕಣ್ಗೆ ಕಾಣಿಸುತಿರ್ದುದು ಅಸ್ತಗಿರಿ ಮಸ್ತಕದೊಳು=[ಅಷ್ಟು ಹೊತ್ತಿಗೆ ಗಗನಮಣಿಯಾದ ಸೂರ್ಯನು, ಪಶ್ಚಿಮಾಂಗನೆಯ ಬೈತಲೆಯ(ಪಶ್ಚಿಮದಿಕ್ಕು ಎಂಬ ಹೆಣ್ಣಿನ ಬೈತಲೆಯಯ ಕುಂಕುಮದ ಕೆಂಪುರಂಗು ಸೂರ್ಯಮುಳುಗುನವ ಬೆಟ್ಟದ ತಲೆಯಲ್ಲಿ ಮಾಣಿಕದಂತೆ ಕಣ್ಣಿಗೆ ಕಾಣಿಸುತ್ತಿತ್ತು.]
  • ತಾತ್ಪರ್ಯ:ಅಗ್ನಿಯು ನೀಲಧ್ವಜನಿಗೆ, 'ಅರ್ಜುನನೊಡನೆ ಯುದ್ಧವು ಬೇಡ ವಿರೋಧಸಾಕು ಆತನ ಕುದುರೆಯನ್ನು ಬಿಡು; ನಗರಕ್ಕೆ ಹಿಂತಿರುಗು ಎಂದು ವಿನಯದಿಂದ ಹೇಳಿ ಅರಸನನ್ನು ಹಿಂತಿರುಗಿಸಿದನು. ಅತ್ತ ಯುದ್ಧ ಭೂಮಿಯಲ್ಲಿ ಅರ್ಜುನನು ಬೆಂಕಿಯ ಉರಿಯ ತಾಪವನ್ನು ನಾರಾಯಣಾಸ್ತ್ರವನ್ನು ಪ್ರಯೋಗಿಸಿ ಶಾಂತಗೊಳಿಸಿದನು. ಅಷ್ಟು ಹೊತ್ತಿಗೆ ಗಗನಮಣಿಯಾದ ಸೂರ್ಯನು, ಪಶ್ಚಿಮಾಂಗನೆಯ ಬೈತಲೆಯ(ಪಶ್ಚಿಮದಿಕ್ಕು ಎಂಬ ಹೆಣ್ಣಿನ ಬೈತಲೆಯ) ಕುಂಕುಮದ ಕೆಂಪುರಂಗು ಸೂರ್ಯ ಮುಳುಗುನವ ಬೆಟ್ಟದ ತಲೆಯಲ್ಲಿ ಮಾಣಿಕದಂತೆ ಕಣ್ಣಿಗೆ ಕಾಣಿಸುತ್ತಿತ್ತು.

(ಪದ್ಯ - ೪೫)

ಪದ್ಯ :-:೪೬:

[ಸಂಪಾದಿಸಿ]

ರಂಜಿಸುವ ಪಶ್ಚಿಮಾಚಲ ಕಿರಾತಂ ತೊಟ್ಟ | ಗುಂಜಾಭರಣಮೊ ಮೇಣ್ ಗಗನಾಂಬುದಿಯ ತಡಿಯ | ಮಂಜು ವಿದ್ರುಮ ಲತೆಯೊ ಮೇಣಪರ ದಿಗ್ವಧುವಿನಂಗ ಕುಂಕುಮ ಲೇಪವೊ ||
ಅಂಜನೇಭದ ಸಿಂಧುರವೊ ಶೀವನ ಮಸ್ತಕದ| ಕಂಚೆಡೆಯೊ ವಿಷ್ಣು ಪದ ಪಂಕರುಹದರುಣತೆಯೊ | ಸಂಜೆವೆಣ್ಣುಟ್ಟ ರಕ್ತಾಂಬರವೊ ಪೇಳೆನಲ್ಕಾಬೈಗುಗೆಂಪೆಸೆದುದು ||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಂಜಿಸುವ ಪಶ್ಚಿಮಾಚಲ ಕಿರಾತಂ ತೊಟ್ಟ ಗುಂಜಾಭರಣಮೊ ಮೇಣ್=[ಶೋಭಿಸುವ ಪಶ್ಚಿಮಾಚಲವೆಂಬ ಕಿರಾತನು / ಬೇಡನು ತೊಟ್ಟ ಕೆಂಪುಗುಲಗುಂಜಿಯಿಂದ ಮಾಡಿದ ಆಭರಣವೋ ಅಥವಾ]; ಗಗನಾಂಬುದಿಯ ತಡಿಯ ಮಂಜು(ಅಂದವಾದ) ವಿದ್ರುಮ ಲತೆಯೊ=[ಆಕಾಶವೆಂಬ ಸಮುದ್ರದ ತಡಿಯಲ್ಲಿರುವ ಅಂದವಾದ ಹವಳದಬಳ್ಳಿಯೋ!]; ಮೇಣ್ ಅಪರದಿಗ್ ವಧುವಿನಂಗ ಕುಂಕುಮ ಲೇಪವೊ=[ಅಥವಾ ಪಶ್ಚಿಮದಿಕ್ಕೆಂಬ ವಧುವಿನ ಕುಂಕುಮ ಲೇಪವೊ]; ಅಂಜನ ಇಭದ(ಪಶ್ಚಿಮದ ದಿಗ್ಗಜ) ಸಿಂಧುರವೊ ಶೀವನ ಮಸ್ತಕದ ಕಂಚೆಡೆಯೊ=[ಪಶ್ಚಿಮದ ದಿಗ್ಗಜದ ಹಣೆಯ ಕುಂಕುಮವೋ! ಶೀವನ ತಲೆಯ ಕೆಂಪು ಜಡೆಯೋ!]; ವಿಷ್ಣು ಪದ ಪಂಕರುಹದರುಣತೆಯೊ ಸಂಜೆವೆಣ್ಣು ಉಟ್ಟ ರಕ್ತಾಂಬರವೊ ಪೇಳೆನಲ್ಕೆ ಆ ಬೈಗು ಕೆಂಪೆಸೆದುದು=[ವಿಷ್ಣುವಿನ ಕಮಲದಂತಹ ಪಾದಪದ್ಮದ ಅರಣ ಬಣ್ಣವೋ! ಸಂಧ್ಯಾದೇವಿ ಉಟ್ಟ ರಕ್ತಾಂಬರವೊ ಹೇಳು ಎನ್ನುವಂತೆ ಆ ಸಂಜೆ ಶೋಭಿಸಿತು. ]
  • ತಾತ್ಪರ್ಯ: ಆ ದಿನದ ಸಂಜೆಯ ವರ್ಣನೆ: ಶೋಭಿಸುವ ಪಶ್ಚಿಮಾಚಲವೆಂಬ ಕಿರಾತನು / ಬೇಡನು ತೊಟ್ಟ ಕೆಂಪುಗುಲಗುಂಜಿಯಿಂದ ಮಾಡಿದ ಆಭರಣವೋ!; ಅಥವಾ ಆಕಾಶವೆಂಬ ಸಮುದ್ರದ ತಡಿಯಲ್ಲಿರುವ ಅಂದವಾದ ಹವಳದಬಳ್ಳಿಯೋ! ಅಥವಾ ಪಶ್ಚಿಮದಿಕ್ಕೆಂಬ ವಧುವಿನ ಕುಂಕುಮ ಲೇಪವೊ ಪಶ್ಚಿಮದ ದಿಗ್ಗಜದ ಹಣೆಯ ಕುಂಕುಮವೋ! ಶೀವನ ತಲೆಯ ಕೆಂಪು ಜಡೆಯೋ! ವಿಷ್ಣುವಿನ ಕಮಲದಂತಹ ಪಾದಪದ್ಮದ ಅರಣ ಬಣ್ಣವೋ! ಸಂಧ್ಯಾದೇವಿ ಉಟ್ಟ ರಕ್ತಾಂಬರವೊ ಹೇಳು ಎನ್ನುವಂತೆ ಆ ಸಂಜೆ ಶೋಭಿಸಿತು. ]

(ಪದ್ಯ - ೪೬)

ಪದ್ಯ :-:೪೭:

[ಸಂಪಾದಿಸಿ]

ಬಿಚ್ಚುವೆಣೆವಕ್ಕಿಗಳಹೃದಯಮಂಬೇಯಿಸುವ | ಪೊಚ್ಚ ಪೊಸಕೆಂಡಂಗಳೆನೆ ಲೋಕಮಂ ನುಂಗ | ಲಿಚ್ಚಯಿಸಿ ಬಪ್ಪ ಕತ್ತಲೆಯೆಂಬ ಕಾಳರಕ್ಕಸಿ ಕೋಪದಿಂದುಗಳ್ದ ||
ಕಿಚ್ಚಿನ ಕೆದರ್ಗಿಡಿಗಳೆನೆ ತನ್ನ ಬಾಳುವೆಗೆ | ನಚ್ಚಿನವಳೀ ರಾತ್ರಿ ವಧುವೆಂದು ಹಿಮಕರಂ | ಮೆಚ್ಚಿ ಮುಂಗಳುಪಿದೆಳಮಾಣಿಕಗಳೆಂಬಂತೆ ಸಂಜೆದಾರೆಗಳೆಸೆದುವು ||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಿಚ್ಚುವ ಎಣೆವಕ್ಕಿಗಳ ಹೃದಯಮಂ(ಮನಸ್ಸನ್ನು) ಬೇಯಿಸುವ ಪೊಚ್ಚ ಪೊಸಕೆಂಡಂಗಳು ಎನೆ=[ಗಂಡಿಗಾಗಿ ರೆಕ್ಕೆ ಬಿಚ್ಚುವ ಚಕ್ರವಾಕ ಪಕ್ಷಿಗಳ ಮನಸ್ಸನ್ನು ಹೃದಯವನ್ನು ಮನಸ್ಸನ್ನು ನೋಯಿಸುವ ಹೊಚ್ಚಹೊಸ ಕೆಂಡಗಳು ಎನ್ನುವಂತೆ ಸಂಜೆಯ ಕೆಂಪು ಕಿರಣಗಳ ಸಾಲು ಶೋಭಿಸಿತು.]; ಲೋಕಮಂ ನುಂಗಲು ಇಚ್ಚಯಿಸಿ ಬಪ್ಪ ಕತ್ತಲೆಯೆಂಬ ಕಾಳರಕ್ಕಸಿ ಕೋಪದಿಂದ ಉಗಳ್ದ ಕಿಚ್ಚಿನ ಕೆದರ್ ಕಿಡಿಗಳೆನೆ=[ಲೋಕವನ್ನು ನುಂಗಲು ಇಚ್ಚಿಸಿ ಬರುವ ಕತ್ತಲೆಯೆಂಬ ಕಾಳರಕ್ಕಸಿಯ ಕೋಪದಿಂದ ಉಗುಳಿದ ಬೆಂಕಿಯ ಕೆದರಿದ ಕಿಡಿಗಳೋ ಎನ್ನುವಂತೆ, ಸಂಜೆಯ ಕೆಂಪು ಕಿರಣಗಳ ಸಾಲು ಶೋಭಿಸಿತು. ]; ತನ್ನ ಬಾಳುವೆಗೆ ನಚ್ಚಿನವಳು ಈ ರಾತ್ರಿ ವಧುವೆಂದು ಹಿಮಕರಂ ಮೆಚ್ಚಿ ಮುಂಗಳುಪಿದ(ಮುಂದೆ+ಕಳುಪಿದ) ಎಳಮಾಣಿಕಗಳು ಎಂಬಂತೆ=[ತನ್ನ ಜೊತೆ ಬಾಳುವೆಮಾಡಲು ನಚ್ಚಿನವಳು ಈ ರಾತ್ರಿ ವಧುವೆಂದು, ಚಂದ್ರನು ಮೆಚ್ಚಿ ಮುಂಚೆಯೇ ಕಳುಹಿಸಿದ ಎಳೆಯಮಾಣಿಕ್ಯಗಳು ಎಂಬಂತೆ]; ಸಂಜೆ ದಾರೆಗಳು ಎಸೆದುವು=[ಸಂಜೆಯ ಕೆಂಪು ಕಿರಣಗಳ ಸಾಲು ಶೋಭಿಸಿತು.].
  • ತಾತ್ಪರ್ಯ: ಗಂಡಿಗಾಗಿ ರೆಕ್ಕೆ ಬಿಚ್ಚುವ ಚಕ್ರವಾಕ ಪಕ್ಷಿಗಳ ಮನಸ್ಸನ್ನು ಹೃದಯವನ್ನು ಮನಸ್ಸನ್ನು ನೋಯಿಸುವ ಹೊಚ್ಚಹೊಸ ಕೆಂಡಗಳು ಎನ್ನುವಂತೆ ಸಂಜೆಯ ಕೆಂಪು ಕಿರಣಗಳ ಸಾಲು ಶೋಭಿಸಿತು; ಲೋಕವನ್ನು ನುಂಗಲು ಇಚ್ಚಿಸಿ ಬರುವ ಕತ್ತಲೆಯೆಂಬ ಕಾಳರಕ್ಕಸಿಯ ಕೋಪದಿಂದ ಉಗುಳಿದ ಬೆಂಕಿಯ ಕೆದರಿದ ಕಿಡಿಗಳೋ ಎನ್ನುವಂತೆ, ಸಂಜೆಯ ಕೆಂಪು ಕಿರಣಗಳ ಸಾಲು ಶೋಭಿಸಿತು; ತನ್ನ ಜೊತೆ ಬಾಳುವೆಮಾಡಲು ನಚ್ಚಿನವಳು ಈ ರಾತ್ರಿ ವಧುವೆಂದು, ಚಂದ್ರನು ಮೆಚ್ಚಿ ಮುಂಚೆಯೇ ಕಳುಹಿಸಿದ ಎಳೆಯಮಾಣಿಕ್ಯಗಳು ಎಂಬಂತೆ[ಸಂಜೆಯ ಕೆಂಪು ಕಿರಣಗಳ ಸಾಲು ಶೋಭಿಸಿತು.

(ಪದ್ಯ - ೪೭)

ಪದ್ಯ :-:೪೮:

[ಸಂಪಾದಿಸಿ]

ಓಡಿದುವು ಪಕ್ಷಿಗಳ್ ಗೂಡಿಂಗೆ ದೆಸೆಗಳಂ | ನೋಡಿದುವು ಘೂಕಂಗಳಳಿಗಳಂ ಸೆರೆಗೆಯ್ದು | ಪೂಡಿದುವು ಬಾಗಿಲಂ ಕಮಲಂಗಳರಲ್ದು ವಿಂದೀವರಂಗಳ್ ನಭದೊಳು ||
ಮೂಡಿದುವು ತಾರೆಗಳ್ ಚಕ್ರವಾಕಂಗಳಂ | ಕಾಡಿದುವು ವಿರಹತಾಪಂಗಳಿಳೆಯೆಲ್ಲಮಂ | ತೀಡಿದುವು ಕತ್ತಲೆಗಳಲ್ಲಿಗಲ್ಲಿಗೆ ಮನೆಮನೆಗೆ ಸೊಡರ್ ಕಣ್ಗೆಸೆದುವು ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಓಡಿದುವು ಪಕ್ಷಿಗಳ್ ಗೂಡಿಂಗೆ, ದೆಸೆಗಳಂ ನೋಡಿದುವು ಘೂಕಂಗಳು, ಅಳಿಗಳಂ ಸೆರೆಗೆಯ್ದು ಪೂಡಿದುವು ಬಾಗಿಲಂ ಕಮಲಂಗಳು, ಅರಲ್ದುವು ಇಂದೀವರಂಗಳ್, ನಭದೊಳು

ಮೂಡಿದುವು ತಾರೆಗಳ್, ಚಕ್ರವಾಕಂಗಳಂ ಕಾಡಿದುವು ವಿರಹತಾಪಂಗಳು, ಇಳೆಯೆಲ್ಲಮಂ ತೀಡಿದುವು ಕತ್ತಲೆಗಳು, ಅಲ್ಲಿಗಲ್ಲಿಗೆ ಮನೆಮನೆಗೆ ಸೊಡರ್ ಕಣ್ಗೆಸೆದುವು=[ಪಕ್ಷಿಗಳು ಗೂಡಿಗೆ ಓಡಿದುವು , ಘೂಕಂಗಳು/ ಗೂಗೆಗಳು ಕತ್ತಲು ಬಯಸಿ (ಪಶ್ಚಿಮ)ದೆಸೆಗಳನ್ನು ನೋಡಿದುವು , ಬಾಗಿಲನ್ನು ಹೂಡಿದಂತೆ, ಕಮಲಗಳು ಸಂಜೆಗೆ ದಳಗಳು ಮುಚ್ಚಿ ಜೇನುಗಳನ್ನು ಸೆರೆಹಿಡಿದವು, ಅರಳಿದವು ಇಂದೀವರಂಗಳು / ಕನ್ನೈದಿಲೆಗಳು, ನಭದೊಳು ಆಕಾಶದಲ್ಲಿ ಮೂಡಿದುವು ತಾರೆಗಳು, ಚಕ್ರವಾಕಪಕ್ಷಿಗಳನ್ನು ವಿರಹತಾಪ ಕಾಡಿತು, ಹೀಗೆ ಭೂಮಿಯೆಲ್ಲವನ್ನೂ ಆವರಿಸಿತು ಕತ್ತಲೆಗಳು, ಆಗ ಅಲ್ಲಿಗೆ ಅಲ್ಲಿಗೆ (ಬೀದಿ ಬೀಧಿಗಳಲ್ಲಿ) ಮನೆಮನೆಗಯಲ್ಲಿ ಹಣತೆ ದೀಪಗಳು ಕಣ್ಣಿಗೆ ಶೋಭಾಯಮಾನವಾಗಿ ಕಾಣಿಸಿತು.]

  • ತಾತ್ಪರ್ಯ: ಪಕ್ಷಿಗಳು ಗೂಡಿಗೆ ಓಡಿದುವು , ಘೂಕಂಗಳು/ ಗೂಗೆಗಳು ಕತ್ತಲು ಬಯಸಿ (ಪಶ್ಚಿಮ)ದೆಸೆಗಳನ್ನು ನೋಡಿದುವು , ಬಾಗಿಲನ್ನು ಹೂಡಿದಂತೆ, ಕಮಲಗಳು ಸಂಜೆಗೆ ದಳಗಳು ಮುಚ್ಚಿ ಜೇನುಗಳನ್ನು ಸೆರೆಹಿಡಿದವು, ಅರಳಿದವು ಇಂದೀವರಂಗಳು / ಕನ್ನೈದಿಲೆಗಳು, ನಭದೊಳು ಆಕಾಶದಲ್ಲಿ ಮೂಡಿದುವು ತಾರೆಗಳು, ಚಕ್ರವಾಕಪಕ್ಷಿಗಳನ್ನು ವಿರಹತಾಪ ಕಾಡಿತು, ಹೀಗೆ ಭೂಮಿಯೆಲ್ಲವನ್ನೂ ಆವರಿಸಿತು ಕತ್ತಲೆಗಳು, ಆಗ ಅಲ್ಲಿಗೆ ಅಲ್ಲಿಗೆ (ಬೀದಿ ಬೀಧಿಗಳಲ್ಲಿ) ಮನೆಮನೆಗಯಲ್ಲಿ ಹಣತೆ ದೀಪಗಳು ಕಣ್ಣಿಗೆ ಶೋಭಾಯಮಾನವಾಗಿ ಕಾಣಿಸಿತು.

(ಪದ್ಯ - ೪೮)

ಪದ್ಯ :-:೪೯:

[ಸಂಪಾದಿಸಿ]

ರವಿ ಪಶ್ಚಿಮಾದ್ರಿಯಂ ಮರೆಗೊಳೆ ತಮಸ್ತೋಮ | ಮವನಿಯಂ ಮುಸುಕಿತೀ ತೆರೆದೊಳಸಿತಧ್ವಜಂ | ಬವರದೊಳ್ ಮುರಿದು ಭಂಗಿತನಾಗಿ ತಿರುಗಿದಂ ತನ್ನ ಪಟ್ಟಣಕಿತ್ತಲು ||
ಪವನ ಸಖನಂ ಬೇಡಿಕೊಂಡು ನಾರಾಯಣಾ | ಸ್ತ್ರವನೆಚ್ಚು ಪೆರ್ಚಿದುರಿಯಂ ಕಿಡಿಸಿ ನಿಜ ಸೈನಿ | ಕವನೆಲ್ಲ ಬಿಡಿಸಿದಂ ದೇವಪುರ ಲಕ್ಷ್ಮೀಪತಿಯ ಮೈದುನಂ ಮುದದೊಳು ||49||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರವಿ ಪಶ್ಚಿಮಾದ್ರಿಯಂ (ಪಶ್ಚಿಮಾಬ್ಧಿಯಂ?) ಮರೆಗೊಳೆ ತಮಸ್ತೋಮಂ ಅವನಿಯಂ ಮುಸುಕಿತು ಈ ತೆರೆದೊಳ್=[ಸೂರ್ಯನು ಪಶ್ಚಿಮಾದ್ರಿಯಲ್ಲಿ / ಬೆಟ್ಟದಲ್ಲಿ (ಸಮುದ್ರದಲ್ಲಿ) ಮರೆಹೊಗಲು / ಮುಳುಗಲು ಕತ್ತಲೆಯು, ಭೂಮಿಯನ್ನು ಆವರಿಸಿತು ಈ ತೆರೆದಲ್ಲಿ ]; ಅಸಿತಧ್ವಜಂ ಬವರದೊಳ್ ಮುರಿದು ಭಂಗಿತನಾಗಿ ತಿರುಗಿದಂ ತನ್ನ ಪಟ್ಟಣಕೆ=[ನೀಲಧ್ವಜನು ಯುದ್ಧದಲ್ಲಿ ಸೊತು ಅವಮಾನಿತನಾಗಿ ತನ್ನ ಪಟ್ಟಣಕ್ಕೆ ಹಿಂತಿರುಗಿದನು]; ಇತ್ತಲು ಪವನ ಸಖನಂ ಬೇಡಿಕೊಂಡು ನಾರಾಯಣಾ ಸ್ತ್ರವನೆಚ್ಚು ಪೆರ್ಚಿದುರಿಯಂ ಕಿಡಿಸಿ ನಿಜ ಸೈನಿಕವನೆಲ್ಲ ಬಿಡಿಸಿದಂ ದೇವಪುರ ಲಕ್ಷ್ಮೀಪತಿಯ ಮೈದುನಂ ಮುದದೊಳು=[ಇತ್ತ ಅಗ್ನಿಯನ್ನು ಬೇಡಿಕೊಂಡು ಅವನನ್ನು ಒಲಿಸಿಕೊಂಡು, ನಾರಾಯಣಾಸ್ತ್ರವನ್ನು ಬಿಟ್ಟು ಹೆಚ್ಚದ ಉರಿ /ಬೆಂಕಿಯನ್ನು ಶಾಂತಗೊಳಿಸಿ,ಅದರಂದ ತನ್ನ ಸೈನಿಕರನ್ನೆಲ್ಲಾ ದೇವಪುರ ಲಕ್ಷ್ಮೀಪತಿಯ ಮೈದುನನಾದ ಅರ್ಜುನನು ಸಂತಸದಿಂದ ಬಿಡಿಸಿದನು].
  • ತಾತ್ಪರ್ಯ:ಸೂರ್ಯನು ಪಶ್ಚಿಮಾದ್ರಿಯಲ್ಲಿ ಮುಳುಗಲು ಕತ್ತಲೆಯು, ಭೂಮಿಯನ್ನು ಆವರಿಸಿತು. ಈ ತೆರೆದಲ್ಲಿ ನೀಲಧ್ವಜನು ಯುದ್ಧದಲ್ಲಿ ಸೊತು ಅವಮಾನಿತನಾಗಿ ತನ್ನ ಪಟ್ಟಣಕ್ಕೆ ಹಿಂತಿರುಗಿದನು. ಇತ್ತ ಅಗ್ನಿಯನ್ನು ಬೇಡಿಕೊಂಡು ಅವನನ್ನು ಒಲಿಸಿಕೊಂಡು, ನಾರಾಯಣಾಸ್ತ್ರವನ್ನು ಬಿಟ್ಟು ಹೆಚ್ಚದ ಉರಿ /ಬೆಂಕಿಯನ್ನು ಶಾಂತಗೊಳಿಸಿ,ಅದರಂದ ತನ್ನ ಸೈನಿಕರನ್ನೆಲ್ಲಾ ದೇವಪುರ ಲಕ್ಷ್ಮೀಪತಿಯ ಮೈದುನನಾದ ಅರ್ಜುನನು ಸಂತಸದಿಂದ ಬಿಡಿಸಿದನು.

(ಪದ್ಯ - ೪೯)

  • []
  • []
  • (ಸಂಧಿ :೮ ಕ್ಕೆ ಪದ್ಯಗಳು:೪೩೭)
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.