ವಿಷಯಕ್ಕೆ ಹೋಗು

ಜೈಮಿನಿ ಭಾರತ/ಇಪ್ಪತ್ಮೂರನೆಯ ಸಂಧಿ

ವಿಕಿಸೋರ್ಸ್ದಿಂದ

ಇಪ್ಪತ್ತುಮೂರನೆಯ ಸಂಧಿ

[ಸಂಪಾದಿಸಿ]

ಪದ್ಯ:-:ಸೂಚನೆ:

[ಸಂಪಾದಿಸಿ]

ಆಹವ ಸಮರ್ಥ ಕರ್ಣಜನಂ ಕೆಡಹಿ ಬಭ್ರು |
ವಾಹನಂ ಸುರನದಿಯ ಶಾಪದಿಂದರಿಯಲ್ಕೆ |
ರಾಹು ತುಡುಕಿರ್ದಮೃತಕರಬಿಂಬದಂತಿರ್ದುದರ್ಜುನನ ತಲೆ ರಣದೊಳು ||

ಪದವಿಭಾಗ-ಅರ್ಥ:
ಸೂಚನೆ: ಆಹವ ಸಮರ್ಥ ಕರ್ಣಜನಂ ಕೆಡಹಿ ಬಭ್ರುವಾಹನಂ ಸುರನದಿಯ ಶಾಪದಿಂದ ಅರಿಯಲ್ಕೆ ರಾಹು ತುಡುಕಿರ್ದ ಅಮೃತಕರಬಿಂಬದಂತೆ ಇರ್ದುದು ಅರ್ಜುನನ ತಲೆ ರಣದೊಳು=[ಯುದ್ಧದಲ್ಲಿ ಸಮರ್ಥನಾದ/ ಗಟ್ಟಿಗನಾದ ಕರ್ಣನಮಗ ವೃಷಕೇತುವನ್ನು ಬೀಳಿಸಿ, ಬಭ್ರುವಾಹನನು ಗಂಗೆಯ ಶಾಪದ ಬಲದಿಂದ ಅರ್ಜುನನ ತಲೆಯನ್ನು ಕತ್ತರಿಸಲು, ಅರ್ಜುನನ ತಲೆ ರಣರಂಗದಲ್ಲಿ ರಾಹುಗ್ರಹವು ಹಿಡಿದಿರುವ ಅಮೃತಕರ- ಚಂದ್ರನ ಬಿಂಬದಂತೆ ಕಾಣುತ್ತಿತ್ತು.]
  • ತಾತ್ಪರ್ಯ:ಯುದ್ಧದಲ್ಲಿ ಸಮರ್ಥನಾದ/ ಗಟ್ಟಿಗನಾದ ಕರ್ಣನ ಮಗ ವೃಷಕೇತುವನ್ನು ಬೀಳಿಸಿ (ತಲೆಕತ್ತರಿಸಿ), ಬಭ್ರುವಾಹನನು ಗಂಗೆಯ ಶಾಪದ ಬಲದಿಂದ ಅರ್ಜುನನ ತಲೆಯನ್ನು ಕತ್ತರಿಸಲು,ಅರ್ಜುನನ ತಲೆ ರಣರಂಗದಲ್ಲಿ ರಾಹುಗ್ರಹವು ಹಿಡಿದಿರುವ ಅಮೃತಕರ- ಚಂದ್ರನ ಬಿಂಬದಂತೆ ಕಾಣುತ್ತಿತ್ತು.
  • (ಪದ್ಯ-ಸೂಚನೆ)VI-XI

ಪದ್ಯ:-:೧:

[ಸಂಪಾದಿಸಿ]

ಜನಪ ಕೇಳರ್ಜುನನ ಸೈನ್ಯದೊಳ್ ಬಭ್ರುವಾ |
ಹನನಖಿಳವೀರರಂ ಕೆಡಹಿ ಹಂಸಧ್ವಜನೊ |
ಡನೆ ರಣದೊಳೆಚ್ಚಾಡಿ ಸ್ಯಂದನ ಸಹಸ್ರಮಂ ತಡೆಗಡಿದವನ ಪಡೆಯೊಳು ||
ತನಿಗಲಿಗಳಾರುಸಾವಿರಮಂ ಪೊರಳ್ಚಿ ವಾ |
ಹಿನಿಯನೈದಕ್ಷೋಹಿಣಿಯನೊಕ್ಕಲಿಕ್ಕಿ ಮೇ |
ದಿನಿಗವಂ ಮೈಮರೆದು ಬೀಳ್ವಂತೆ ಸೆಕ್ಕಿದಂ ಕಾಯದೊಳ್ ಸಾಯಕವನು ||1||

ಪದವಿಭಾಗ-ಅರ್ಥ:
ಜನಮೇಜಯ ಜನಪನೇ ಕೇಳು, ಅರ್ಜುನನ ಸೈನ್ಯದೊಳ್ ಬಭ್ರುವಾಹನನ ಅಖಿಳವೀರರಂ ಕೆಡಹಿ ಹಂಸಧ್ವಜನೊಡನೆ ರಣದೊಳು ಎಚ್ಚಾಡಿ ಸ್ಯಂದನ ಸಹಸ್ರಮಂ ತಡೆಗಡಿದವನ ಪಡೆಯೊಳು=[ಜನಮೇಜಯ ಜನಪನೇ ಕೇಳು, ಅರ್ಜುನನ ಸೈನ್ಯದಲ್ಲಿ ಬಭ್ರುವಾಹನನು ಎಲ್ಲಾವೀರರನ್ನು ಸೋಲಿಸಿಕೆಡವಿ, ಹಂಸಧ್ವಜನೊಡನೆ ರಣರಂಗದಲ್ಲಿ ಹೊಡೆದಾಡಿ, ಸಾವಿರ ರಥವನ್ನು ತಡೆದು ಕಡಿದು/ನಾಶಮಾಡಿ,ಅವನ ಸೈನ್ಯದಲ್ಲಿ]; ತನಿ (ಹೊಸ,ಯುವಕ) ಗಲಿಗಳು ಆರುಸಾವಿರಮಂ ಪೊರಳ್ಚಿ ವಾಹಿನಿಯನು ಐದಕ್ಷೋಹಿಣಿಯನು ಒಕ್ಕಲಿಕ್ಕಿ ಮೇದಿನಿಗೆ ಅವಂ ಮೈಮರೆದು ಬೀಳ್ವಂತೆ ಸೆಕ್ಕಿದಂ(ಸಿಕ್ಕಿಸಿದನು) ಕಾಯದೊಳ್ ಸಾಯಕವನು =[ಶೂರರಾದ ಆರುಸಾವಿರ ಯುವಕಭಟರನ್ನು ಹಿಂತಿರುಗುವಂತೆ ಮಾಡಿ, ಐದು ಕ್ಷೋಹಿಣಿಯಸೈನ್ಯವನ್ನು ಹೊಡೆದು ಓಡಿಸಿ, ಅವನು ಭೂಮಿಗೆ ಎಚ್ಚರತಪ್ಪಿ ಬೀಳುವಂತೆ ಅವನ ದೇಹದಲ್ಲಿ ಬಾಣವನ್ನು ತೂರಿಸಿದನು.]
  • ತಾತ್ಪರ್ಯ:ಜನಮೇಜಯ ಜನಪನೇ ಕೇಳು, ಅರ್ಜುನನ ಸೈನ್ಯದಲ್ಲಿ ಬಭ್ರುವಾಹನನು ಎಲ್ಲಾವೀರರನ್ನು ಸೋಲಿಸಿಕೆಡವಿ, ಹಂಸಧ್ವಜನೊಡನೆ ರಣರಂಗದಲ್ಲಿ ಹೊಡೆದಾಡಿ, ಸಾವಿರ ರಥವನ್ನು ತಡೆದು ಕಡಿದು/ನಾಶಮಾಡಿ,ಅವನ ಸೈನ್ಯದಲ್ಲಿ ಶೂರರಾದ ಆರುಸಾವಿರ ಯುವಕಭಟರನ್ನು ಹಿಂತಿರುಗುವಂತೆ ಮಾಡಿ, ಐದು ಕ್ಷೋಹಿಣಿಯಸೈನ್ಯವನ್ನು ಹೊಡೆದು ಓಡಿಸಿ, ಅವನು ಭೂಮಿಗೆ ಎಚ್ಚರತಪ್ಪಿ ಬೀಳುವಂತೆ ಅವನ ದೇಹದಲ್ಲಿ ಬಾಣವನ್ನು ತೂರಿಸಿದನು.]
  • (ಪದ್ಯ-೧)

ಪದ್ಯ:-:೨:

[ಸಂಪಾದಿಸಿ]

ಅಸದಳದೊಳವನ ಸುತರಿರ್ವರುಂ ಮಡಿದ ಬಳಿ |
ಕಸುರಾರಿ ತನ್ನೊಳಾಡಿದ ಬಲ್ಮೆಯಂ ನೆನೆದು |
ದೆಸೆಗೆಟ್ಟು ಬಿದ್ದನಕಟೆಂದು ಹಂಸಧ್ವಜಂಗರ್ಜುನಂ ಮರುಗುತಿರಲು ||
ಮುಸಕಿದಂ ಪಡೆಸಹಿತ ಬಂದು ಪಾರ್ಥಿಯ ರಥವ |
ನಸಮ ಭುಜಬಲ ಸುವೇಗಂ ಬಳಿಕ ಸಂಗರಂ |
ಪೊಸತಾದುದಿರ್ವರ್ಗೆ ಕೊಂದನರ್ಜುನಿ ಮತ್ತೆ ವೀರರಿರ್ಛಾಸಿರವನು ||2||

ಪದವಿಭಾಗ-ಅರ್ಥ:
ಅಸದಳದೊಳ ಅವನ ಸುತರು ಇರ್ವರುಂ ಮಡಿದ ಬಳಿಕ ಅಸುರಾರಿ ತನ್ನೊಳು ಆಡಿದ ಬಲ್ಮೆಯಂ ನೆನೆದು ದೆಸೆಗೆಟ್ಟು ಬಿದ್ದನು ಅಕಟೆಂದು ಹಂಸಧ್ವಜಂಗೆ ಅರ್ಜುನಂ ಮರುಗುತಿರಲು=[ಅತಿಶಯ ಸಾಮರ್ಥ್ಯ ತೋರಿಸಿ ಅವನ ಮಕ್ಕಳು ಇಬ್ಬರೂ ಮಡಿದ ಬಳಿಕ ಅಸುರಾರಿ ಕೃಷ್ಣನು ತನ್ನೊಡನೆ ಹೇಳಿದ ಶ್ರೇಷ್ಠತೆಯನ್ನು ನೆನೆದು, ದೆಸೆಗೆಟ್ಟು ಬಿದ್ದನು ಅಕಟಾ ಎಂದು ಹಂಸಧ್ವಜಂನಿಗಾಗಿ ಅರ್ಜುನನು ಮರುಗುತ್ತಿರಲು]; ಮುಸಕಿದಂ ಪಡೆಸಹಿತ ಬಂದು ಪಾರ್ಥಿಯ ರಥವನು ಅಸಮ ಭುಜಬಲ ಸುವೇಗಂ ಬಳಿಕ ಸಂಗರಂ ಪೊಸತು ಆದುದು ಇರ್ವರ್ಗೆ ಕೊಂದನು ಅರ್ಜುನಿ ಮತ್ತೆ ವೀರರ್ ಇರ್ ಛಾಸಿರವನು=[ ಅಸಮ ಭುಜಬಲ ಸುವೇಗನು ಸೈನ್ಯಸಹಿತ ಬಂದು ಪಾರ್ಥಿಯ ರಥವನು ಆಕ್ರಮಿಸಿದನು; ಬಳಿಕ ಯುದ್ಧವು ಹೊಸಬಗೆ ಆಯಿತು ಇಬ್ಬರಿಗೂ; ಅರ್ಜುನಿ/ಬಬ್ರುವಾಹನನು ಮತ್ತೆ ವೀರರಾದ ಎರಡು ಸಾವಿರಭಟರನ್ನು ಕೊಂದನು.];
  • ತಾತ್ಪರ್ಯ:ಅತಿಶಯ ಸಾಮರ್ಥ್ಯ ತೋರಿಸಿ ಅವನ ಮಕ್ಕಳು ಸುಧನ್ವ ಸುರಥ ಇಬ್ಬರೂ ಮಡಿದ ಬಳಿಕ ಅಸುರಾರಿ ಕೃಷ್ಣನು ತನ್ನೊಡನೆ ಹೇಳಿದ ಅವರ ಶ್ರೇಷ್ಠತೆಯನ್ನು ನೆನೆದು, ದೆಸೆಗೆಟ್ಟು ಬಿದ್ದನು ಅಕಟಾ ಎಂದು ಹಂಸಧ್ವಜಂನಿಗಾಗಿ ಅರ್ಜುನನು ಮರುಗುತ್ತಿರಲು; ಅಸಮ ಭುಜಬಲ ಸುವೇಗನು ಸೈನ್ಯಸಹಿತ ಬಂದು ಪಾರ್ಥಿಯ ರಥವನು ಆಕ್ರಮಿಸಿದನು; ಬಳಿಕ ಯುದ್ಧವು ಹೊಸಬಗೆ ಆಯಿತು ಇಬ್ಬರಿಗೂ; ಅರ್ಜುನಿ/ಬಬ್ರುವಾಹನನು ಮತ್ತೆ ವೀರರಾದ ಎರಡು ಸಾವಿರಭಟರನ್ನು ಕೊಂದನು.
  • (ಪದ್ಯ-೨)

ಪದ್ಯ:-:೩:

[ಸಂಪಾದಿಸಿ]

ಸಾಹಸದೊಳಿರ್ವರುಂ ಸರಿಯೆನೆ ಸುವೇಗಂ ಮ |
ಹಾಹವದೊಳೆಚ್ಚಾಡಿ ವಿರಧನಾಗಿಯೆ ಬಭ್ರು |
ವಾಹನನ ಬಾಣದಿಂದುರೆ ನೊಂದು ಬಿದ್ದನವನಿಗೆ ಬಳಿಕ ಪಾರ್ಥಿ ನರನ ||
ಮೋಹರವನೈದಿದಂ ಪ್ರಳಯಭೈರವನ ಕೋ |
ಲಾಹಲಮಿದೆಂಬಂತೆ ಕೊಂದನೆಲ್ಲಾ ಬಲವ |
ದೇಹದೊಳೆಸೆವ ಜೀವ ಪರಮರವೊಲುಳಿದಿರ್ದರಾವೃಷಧ್ವಜ ಪಾರ್ಥರು ||3||

ಪದವಿಭಾಗ-ಅರ್ಥ:
ಸಾಹಸದೊಳು ಇರ್ವರುಂ ಸರಿಯೆನೆ ಸುವೇಗಂ ಮಹಾ ಆಹವದೊಳು ಎಚ್ಚಾಡಿ ವಿರಧನಾಗಿಯೆ ಬಭ್ರುವಾಹನನ ಬಾಣದಿಂದ ಉರೆ ನೊಂದು ಬಿದ್ದನು ಅವನಿಗೆ ಬಳಿಕ ಪಾರ್ಥಿ ನರನ=[ಸಾಹಸದಲ್ಲಿ ಇಬ್ಬರು ಸರಿಯೆನ್ನುವಂತೆ ಸುವೇಗನು ಮಹಾ ಯುದ್ಧದಲ್ಲಿ ಬಬ್ರುವಾಹನನೊಡನೆ ಹೊಡೆದಾಡಿ ರಥವನ್ನು ಕಳೆದುಕೊಂಡು, ಬಭ್ರುವಾಹನನ ಬಾಣದಿಂದ ಬಹಳ ನೊಂದು ಅವನಿಗೆ/ಭೂಮಿಗೆ ಬಿದ್ದನು; ಬಳಿಕ ಪಾರ್ಥಿ/ಬಬ್ರುವಾಹನನು ಅರ್ಜುನನ]; ಮೋಹರವನು ಐದಿದಂ ಪ್ರಳಯಭೈರವನ ಕೋಲಾಹಲಂ ಇದು ಎಂಬಂತೆ ಕೊಂದನು ಎಲ್ಲಾ ಬಲವ ದೇಹದೊಳು ಎಸೆವ ಜೀವ ಪರಮರ ವೊಲು ಉಳಿದಿರ್ದರು ಆ ವೃಷಧ್ವಜ ಪಾರ್ಥರು=[ಸೈನ್ಯವನ್ನು ಪ್ರವೇಶಿಸಿದನು; ಇದು ಪ್ರಳಯಭೈರವನ ಕೋಲಾಹಲ ಎಂಬಂತೆ ಎಲ್ಲಾ ಸೈನ್ಯವನ್ನು ಕೊಂದನು; ದೇಹದಲ್ಲಿ ಪ್ರಕಾಶಿಸುವ ಜೀವ ಪರಮಾತ್ಮರ ಹಾಗೆ ಆ ವೃಷಧ್ವಜ ಪಾರ್ಥರು ಉಳಿದಿದ್ದರು].
  • ತಾತ್ಪರ್ಯ:ಸಾಹಸದಲ್ಲಿ ಇಬ್ಬರು ಸರಿಯೆನ್ನುವಂತೆ ಸುವೇಗನು ಮಹಾ ಯುದ್ಧದಲ್ಲಿ ಹೊಡೆದಾಡಿ ರಥವನ್ನು ಕಳೆದುಕೊಂಡು, ಬಭ್ರುವಾಹನನ ಬಾಣದಿಂದ ಬಹಳ ನೊಂದು ಅವನಿಗೆ/ಭೂಮಿಗೆ ಬಿದ್ದನು; ಬಳಿಕ ಪಾರ್ಥಿ/ಬಬ್ರುವಾಹನನು ಅರ್ಜುನನ ಸೈನ್ಯವನ್ನು ಪ್ರವೇಶಿಸಿದನು; ಇದು ಪ್ರಳಯಭೈರವನ ಕೋಲಾಹಲ ಎಂಬಂತೆ ಎಲ್ಲಾ ಸೈನ್ಯವನ್ನು ಕೊಂದನು; ದೇಹದಲ್ಲಿ ಪ್ರಕಾಶಿಸುವ ಜೀವ ಪರಮಾತ್ಮರ ಹಾಗೆ ಆ ವೃಷಧ್ವಜ ಪಾರ್ಥರು ಉಳಿದಿದ್ದರು.
  • (ಪದ್ಯ-೩)

ಪದ್ಯ:-:೪:

[ಸಂಪಾದಿಸಿ]

ರಣದೊಳಂತವರಿರ್ದರಿತ್ತ ಮುನ್ನೊಂದು ಕಾ |
ರಣಕೆ ಗುರು ಶಾಪಮಂ ಕುಡಲದಂ ಬಿಡಿಸಿ ಫಲು |
ಗುಣನಮಲ ತೀರ್ಥಯಾತ್ರಾ ಪ್ರಸಂಗದೊಳಂದು ತಾಂ ಪರಿಗ್ರಹಿಸಿ ನೆರೆದ ||
ಫಣೀರಾಜನಂದನೆಯುಲೂಪಿ ಪಾತಾಳದಿಂದೆ |
ಮಣಿಪುರಕೆ ಬಂದು ಮೂರ್ಛಿತರಾಗಿ ಸಮರ ಧಾ |
ರಿಣಿಯೊಳಿಹ ದೊರೆಗಳಂ ತರಿಸಿ ಮಂತ್ರೌಷಧಿಗಳಿಂದೆ ಪಾಲಿಸುತಿರ್ದಳು ||4||

ಪದವಿಭಾಗ-ಅರ್ಥ:
ರಣದಲ್ಲಿ ಆರೀತಿಯಲ್ಲಿ ತವರಿರ್ದರಿತ್ತ=[ರಣದೊಳು ಅಂತು ಅವರು ಇರ್ದರು,]; ಇತ್ತ ಮುನ್ನೊಂದು ಕಾರಣಕೆ ಗುರು ಶಾಪಮಂ ಕುಡಲದಂ ಬಿಡಿಸಿ ಫಲುಗುಣನು ಅಮಲ ತೀರ್ಥಯಾತ್ರಾ ಪ್ರಸಂಗದೊಳು ಅಂದು ತಾಂ ಪರಿಗ್ರಹಿಸಿ ನೆರೆದ=[= ಇತ್ತ ಮಣಿಪುರದಲ್ಲಿ, ಅರ್ಜುನನು ಮುಂಚೆ ಒಂದು ಕಾರಣಕ್ಕೆ ಗುರು ನಿಯಮ/ಶಾಪವನ್ನು ಪರಿಹರೊಸಿಕೊಳ್ಳಲು,**(ಫಲುಗುಣನು) ಪವಿತ್ರ ತೀರ್ಥಯಾತ್ರೆ ಮಾಡುತ್ತಿದ್ದ ಪ್ರಸಂಗದಲ್ಲಿ, ಅಂದು ತಾನು ಗಾಂಧರ್ವ ವಿವಾಹದಲ್ಲಿ ಪರಿಗ್ರಹಿಸಿ ಸೇರಿದ ಪತ್ನಿ];; ಫಣೀರಾಜನಂದನೆ ಉಲೂಪಿ ಪಾತಾಳದಿಂದೆ ಮಣಿಪುರಕೆ ಬಂದು ಮೂರ್ಛಿತರಾಗಿ ಸಮರ ಧಾರಿಣಿಯೊಳು ಇಹ ದೊರೆಗಳಂ ತರಿಸಿ ಮಂತ್ರೌಷಧಿಗಳಿಂದೆ ಪಾಲಿಸುತಿರ್ದಳು =[ಫಣೀರಾಜನ ಮಗಳು ಉಲೂಪಿ ಪಾತಾಳದಿಂದ ಮಣಿಪುರಕ್ಕೆ ಬಂದು ಮೂರ್ಛಿತರಾಗಿ ರಣರಂಗದಲ್ಲಿ ಬಿದ್ದ ಭೂಮಿಯ ದೊರೆಗಳನ್ನು ತರಿಸಿ ಮಂತ್ರೌಷಧಿಗಳಿಂದ ಉಪಚರಿಸುತ್ತಿದ್ದಳು]. **(ದೋಷ: ಅರ್ಜುನನು ದರ್ಮರಾಯ ದ್ರೌಪದಿಯರು ಒಟ್ಟಿಗೆ ಅಂತಃಪುರದೊಳಗೆ ಇದ್ದಾಗ, ಬ್ರಾಹ್ಮಣನ ಗೋರಕ್ಷಣೆಗಾಗಿ ಪ್ರವೇಶಿಸಿ ಅಲ್ಲಿದ್ದ ತನ್ನ ಬಿಲ್ಲನ್ನು ತಂದನು; ಗುರು ವ್ಯಾಸರ/ನಾರದರ ನಿಯಮದಂತೆ ದ್ರೌಪದಿ ಮತ್ತೊಬ್ಬನೊಡನೆ ಮಲಗಿದಾಗ ಸೋದರನು ನೋಡಿದರೆ ಪ್ರಾಯಶ್ಚತ್ತವಾಗಿ ಒಂದು ವರ್ಷದ ತೀರ್ತಯಾತ್ರೆಯ ಶಿಕ್ಷೆ ಅನುಭವಿಸಬೇಕು. ಆ ನಿಯಮದಂತೆ ಅರ್ಜುನನು ಯಾತ್ರೆ ಕೈಗೊಂಡಿದ್ದನು, ಆಗ ಚಿತ್ರಾಂಗದೆ ಉಲೂಪಿಯರನ್ನು ವರಿಸಿ ಸೇರಿದ್ದನು.)
  • ತಾತ್ಪರ್ಯ:ರಣರಂಗದಲ್ಲಿ ಆ ರೀತಿಯಲ್ಲಿ ಅವರು ಇದ್ದರು; ಇತ್ತ ಮಣಿಪುರದಲ್ಲಿ, ಅರ್ಜುನನು ಮುಂಚೆ ಒಂದು ಕಾರಣಕ್ಕೆ ಗುರು ಶಾಪವನ್ನು ಕೊಡಲು, ಅದನ್ನು ಪರಿಹರೊಸಿಕೊಳ್ಳಲು,(ಫಲುಗುಣನು) ಪವಿತ್ರ ತೀರ್ಥಯಾತ್ರೆ ಮಾಡುತ್ತಿದ್ದ ಪ್ರಸಂಗದಲ್ಲಿ, ಅಂದು ತಾನು ಗಾಂಧರ್ವ ವಿವಾಹದಲ್ಲಿ ಪರಿಗ್ರಹಿಸಿ ಸೇರಿದ ಪತ್ನಿ, ಫಣೀರಾಜನ ಮಗಳು ಉಲೂಪಿ ಪಾತಾಳದಿಂದ ಮಣಿಪುರಕ್ಕೆ ಬಂದು. ಮೂರ್ಛಿತರಾಗಿ ರಣರಂಗದಲ್ಲಿ ಬಿದ್ದ ಭೂಮಿಯ ದೊರೆಗಳನ್ನು ತರಿಸಿ ಮಂತ್ರೌಷಧಿಗಳಿಂದ ಉಪಚರಿಸುತ್ತಿದ್ದಳು.
  • (ಪದ್ಯ-೪)vi

ಪದ್ಯ:-:೫:

[ಸಂಪಾದಿಸಿ]

ನೃಪ ಕೇಳುಲೂಪಿ ಚಿತ್ರಾಂಗದೆಗೆ ಪೇಳ್ದಸುರ |
ರಿಪುಸುತಂ ತನ್ನತನಯಂಬೆರಸಿ ಪಾರ್ಥಜನ |
ವಿಪುಲಾಸ್ತ್ರದಿಂದೆ ಮೂರ್ಛಿತನಾಗಿ ರಣದೊಳಿರಲಿರ್ವರಂ ತರಿಸಿಕೊಂಡು ||
ಅಪಗತ ಶ್ರಮರಪ್ಪತೆರದಿಂದೆ ಮಂದಿರದೊ |
ಳುಪಚರಿಸಿ ಮಣಿ ಮಂತ್ರ ಮೂಲಿಕಾತತಿಗಳಂ |
ತಪಿಸದಂತಾರೈಯುತಿರ್ದಳುರ್ಜುನನಿತ್ತ ವೃಷಕೇತುಗಿಂತೆಂದನು ||5||

ಪದವಿಭಾಗ-ಅರ್ಥ:
ನೃಪ ಕೇಳು, ಉಲೂಪಿ ಚಿತ್ರಾಂಗದೆಗೆ ಪೇಳ್ದು ಅಸುರರಿಪುಸುತಂ ತನ್ನತನಯಂ ಬೆರಸಿ ಪಾರ್ಥಜನ ವಿಪುಲಾಸ್ತ್ರದಿಂದೆ ಮೂರ್ಛಿತನಾಗಿ ರಣದೊಳಿರಲು ಇರ್ವರಂ ತರಿಸಿಕೊಂಡು=[ಜನಮೇಜಯ ನೃಪ ಕೇಳು, ಉಲೂಪಿ ಚಿತ್ರಾಂಗದೆಗೆ ಹೇಳಿ ಕೃಷ್ಣನ ಮಕ್ಕಳು ತನ್ನ ಮಗ ಸೇರಿ ಬಬ್ರುವಾಹನನ ಬಹಳಅಸ್ತ್ರಗಳಿಂದ ಪ್ರದ್ಯುಮ್ನ ಅನಿರುದ್ಧರು ಮೂರ್ಛಿತನಾಗಿ ರಣರಂಗದಲ್ಲಿ ಬಿದ್ದಿರಲು, ಇಬ್ಬರನ್ನೂ ಅಲ್ಲಿಂದ ತರಿಸಿಕೊಂಡು]; ಅಪಗತಶ್ರಮರು ಅಪ್ಪ (ಅಪಗತ+ಶ್ರಮ-ನೋವುಕಡಿಮೆಯಾಗುವ) ತೆರದಿಂದೆ ಮಂದಿರದೊಳು ಉಪಚರಿಸಿ ಮಣಿ ಮಂತ್ರ ಮೂಲಿಕಾತತಿಗಳಂ ತಪಿಸದಂತೆ ಆರೈಯುತಿರ್ದಳು ಅರ್ಜುನನು ಇತ್ತ ವೃಷಕೇತುಗೆ ಇಂತೆಂದನು=[ನೋವುಕಡಿಮೆಯಾಗುವ ರೀತಿಯಲ್ಲಿ ಮಣಿ ಮಂತ್ರ ಮೂಲಿಕೆಗಳ ಅನೇಕಬಗೆಯಿಂದ ತಾಪವುಂಟಾಗದಂತೆ ಉಪಚರಿಸುತ್ತಿದ್ದಳು. ಅರ್ಜುನನು ಇತ್ತ ರಣರಂಗದಲ್ಲಿ ವೃಷಕೇತುವಿಗೆ ಹೀಗೆ ಹೇಳಿದನು.]. (ಉಲೂಪಿ ಚಿತ್ರಾಂಗದೆಗೆ ಗಂಗೆಯ ಶಾಪ ವಿಚಾರ ತಿಳಿಸಿದಳೆಂದು ಕೆಲವರು ಅರ್ಥಮಾಡುತ್ತಾರೆ; ಅದರೆ ಅದು ಸ್ಪಷ್ಟವಿಲ್ಲ))
  • ತಾತ್ಪರ್ಯ:ಜನಮೇಜಯ ನೃಪ ಕೇಳು, ಉಲೂಪಿ ಚಿತ್ರಾಂಗದೆಗೆ ಹೇಳಿ ಕೃಷ್ಣನ ಮಕ್ಕಳು ತನ್ನ ಮಗ ಸೇರಿ ಬಬ್ರುವಾಹನನ ಬಹಳಅಸ್ತ್ರಗಳಿಂದ ಪ್ರದ್ಯುಮ್ನ ಅನಿರುದ್ಧರು ಮೂರ್ಛಿತನಾಗಿ ರಣರಂಗದಲ್ಲಿ ಬಿದ್ದಿರಲು, ಇಬ್ಬರನ್ನೂ ಅಲ್ಲಿಂದ ತರಿಸಿಕೊಂಡು, ನೋವುಕಡಿಮೆಯಾಗುವ ರೀತಿಯಲ್ಲಿ ಮಣಿ ಮಂತ್ರ ಮೂಲಿಕೆಗಳ,ಇತರೆ ಅನೇಕ ಬಗೆಯಿಂದ ತಾಪವುಂಟಾಗದಂತೆ ಉಪಚರಿಸುತ್ತಿದ್ದಳು. ಅರ್ಜುನನು ಇತ್ತ ರಣರಂಗದಲ್ಲಿ ವೃಷಕೇತುವಿಗೆ ಹೀಗೆ ಹೇಳಿದನು.].
  • (ಪದ್ಯ-೫)

ಪದ್ಯ:-:೬:

[ಸಂಪಾದಿಸಿ]

ಮಗನೆ ಮಡಿದುದು ಸೈನ್ಯಮನುಸಾಲ್ವಮುಖರಾದ |
ವಿಗಡರೇರ್ವಡೆದು ಸೈಗೆಡದರಿಳೆಯೊಳ್ ತಮ್ಮ |
ನಗರಿಗನಿರುದ್ಧಪ್ರದ್ಯುಮ್ನರಂ ಕೊಂಡೊಯ್ದರಹಿತರಿವನಂ ಜಯಿಸುವ ||
ಬಗೆಗಾಣಿನಾದೊಡಂ ನಿಲ್ವೆನಾನಿಲ್ಲಿ ಕಾ |
ಳಗಕೆ ನೀನಿರದೆ ಹಸ್ತಿನಪುರಿಗೆ ಪೋಗಿ ಪೇ |
ಳಗಧರ ಯುಧಿಷ್ಠಿರರ್ಗೀಸ್ಥಿತಿಯನೆಂಬಿನಂ ತೋರ್ದುವುತ್ಪಾತಂಗಳು ||6||

ಪದವಿಭಾಗ-ಅರ್ಥ:
ಮಗನೆ ಮಡಿದುದು ಸೈನ್ಯಮ್ ಅನುಸಾಲ್ವ ಮುಖರಾದ ವಿಗಡರು ಏರ್ವಡೆದು (ಏರಿ ಹೊಡೆದು-ಏರಿಹೋಗಿ?) ಸೈಗೆಡದರು ಇಳೆಯೊಳ್ ತಮ್ಮನಗರಿಗೆ ಅನಿರುದ್ಧ ಪ್ರದ್ಯುಮ್ನರಂ ಕೊಂಡೊಯ್ದರು ಅಹಿತರು=[ಮಗನೆ ವೃಷಕೇತು, ಮಡಿದುದು ಸೈನ್ಯವು ನಾಶವಾಯಿತು; ಅನುಸಾಲ್ವನೇ ಮೊದಲಾದ ಪ್ರಮುಖರಾದ ವೀರರು ಶತ್ರುವನ್ನು ಎದುರಿಸಿ ಸೋತು ಭೂಮಿಯಲ್ಲಿ ಬಿದ್ದರು; ಶತ್ರುಗಳು ತಮ್ಮ ನಗರಿಕ್ಕೆ ಅನಿರುದ್ಧ ಪ್ರದ್ಯುಮ್ನರನ್ನು ಎತ್ತಿಕೊಂಡು ಹೋದರು;]; ಇವನಂ ಜಯಿಸುವ ಬಗೆಗಾಣಿನು ಆದೊಡಂ ನಿಲ್ವೆ ನಾನಿಲ್ಲಿ ಕಾಳಗಕೆ, ನೀನು ಇರದೆ ಹಸ್ತಿನಪುರಿಗೆ ಪೋಗಿ ಪೇಳು ಅಗಧರ ಯುಧಿಷ್ಠಿರರ್ಗೆ ಈ ಸ್ಥಿತಿಯನು ಎಂಬಿನಂ ತೋರ್ದುವು ಉತ್ಪಾತಂಗಳು=[ಇವನನ್ನು - ಬಬ್ರುವಾಹನನ್ನು ಜಯಿಸುವ ದಾರಿಯನ್ನು ಕಾಣಿನು ಆದರೂ ನಿಲ್ವೆ ನಾನು ಇಲ್ಲಿ ಕಾಳಗಕ್ಕೆ ನಿಲ್ಲುವೆನು; ನೀನು ಇಲ್ಲಿಇರದೆ ಹಸ್ತಿನಾಪುರಕ್ಕೆ ಹೋಗಿ ಪೇಳು ಕೃಷ್ಣ ಯುಧಿಷ್ಠಿರರಿಗೆ ಇಲ್ಲಿಯ ಪರಿಸ್ಥಿತಿಯನ್ನು ಹೇಳು; ಎನ್ನುವಾಗ ಉತ್ಪಾತಗಳು/ ಅಪಶಕುನಗಳು ತೋರಿದವು].
  • ತಾತ್ಪರ್ಯ:ಮಗನೆ ವೃಷಕೇತು, ಮಡಿದುದು ಸೈನ್ಯವು ನಾಶವಾಯಿತು; ಅನುಸಾಲ್ವನೇ ಮೊದಲಾದ ಪ್ರಮುಖರಾದ ವೀರರು ಶತ್ರುವನ್ನು ಎದುರಿಸಿ ಸೋತು ಭೂಮಿಯಲ್ಲಿ ಬಿದ್ದರು; ಶತ್ರುಗಳು ತಮ್ಮ ನಗರಿಕ್ಕೆ ಅನಿರುದ್ಧ ಪ್ರದ್ಯುಮ್ನರನ್ನು ಎತ್ತಿಕೊಂಡು ಹೋದರು;]; ಇವನನ್ನು - ಬಬ್ರುವಾಹನನ್ನು ಜಯಿಸುವ ದಾರಿಯನ್ನು ಕಾಣಿನು ಆದರೂ ನಾನು ಇಲ್ಲಿ ಕಾಳಗಕ್ಕೆ ನಿಲ್ಲುವೆನು; ನೀನು ಇಲ್ಲಿಇರದೆ ಹಸ್ತಿನಾಪುರಕ್ಕೆ ಹೋಗಿಕೃಷ್ಣ ಯುಧಿಷ್ಠಿರರಿಗೆ ಇಲ್ಲಿಯ ಪರಿಸ್ಥಿತಿಯನ್ನು ಹೇಳು; ಎನ್ನುವಾಗ ಉತ್ಪಾತಗಳು/ ಅಪಶಕುನಗಳು ತೋರಿದವು].
  • (ಪದ್ಯ-೬)

ಪದ್ಯ:-:೭:

[ಸಂಪಾದಿಸಿ]

ಪರ್ದು ಕುಳ್ಳಿರ್ದುದರ್ಜುನನ ಮಕುಟಾಗ್ರದೊಳ |
ಡರ್ದು ಗೂಡಿಕ್ಕಿದುವು ರಥದೊಳ್ ಕಪೋತಂಗ |
ಳಿರ್ದುದು ತನುಛ್ಛಾಯೆ ತಲೆಯಿಲ್ಲದಿನಿತುಮಂ ಕಂಡು ಬೆರಗಾಗಿ ನರನು ||
ಪೊರ್ದದಿರದಪಜಯಂ ತನಗಿನ್ನು ಧರ್ಮಜಂ |
ನಿರ್ದೈವನಹನಲಾ ಶಿವ ಮಹಾದೇವ ಮುರ |
ಮರ್ದನ ತುರಗಮೇಧವನೆಂತು ಮಾಡಿದಪನೊ ಕರ್ಣಸುತ ಹೇಳೆಂದನು ||7||

ಪದವಿಭಾಗ-ಅರ್ಥ:
ಪರ್ದು ಕುಳ್ಳಿರ್ದುದು ಅರ್ಜುನನ ಮಕುಟಾಗ್ರದೊಳು ಅಡರ್ದು ಗೂಡಿಕ್ಕಿದುವು ರಥದೊಳ್ ಕಪೋತಂಗಳುಇರ್ದುದು ತನುಛ್ಛಾಯೆ ತಲೆಯಿಲ್ಲದೆ ಇನಿತುಮಂ ಕಂಡು ಬೆರಗಾಗಿ ನರನು=[ಹದ್ದು ಹಾರಿಬಂದು ಅರ್ಜುನನ ಮಕುಟದ ಮೇಲೆ ಕುಳಿತಿತು; ರಥಕ್ಕೆ ಮುತ್ತಿ ಪಾರಿವಾಗಳು ಗೂಡುಕಟ್ಟಿದವು; ಅರ್ಜುನನ ನೆರಳಿನಲ್ಲಿ ಅವನ ತಲೆಯಿಲ್ಲದೆ ತೋರಿತು; ಇವೆಲ್ಲವನ್ನೂ ಕಂಡು ಅರ್ಜುನನು ಬೆರಗಾದನು;]; ಪೊರ್ದದಿರದು (ಹೊದ್ದಿರದು- ಹೊಂದದೆಇರದು) ಅಪಜಯಂ ತನಗಿನ್ನು ಧರ್ಮಜಂ ನಿರ್ದೈವನು ಅಹನಲಾ ಶಿವ ಮಹಾದೇವ ಮುರಮರ್ದನ ತುರಗಮೇಧವನೆಂತು ಮಾಡಿದಪನೊ ಕರ್ಣಸುತ ಹೇಳೆಂದನು=[ಈ ಅಪಶಕುನಗಳನ್ನು ನೋಡಿ, ತನಗೆ ಅಪಜಯವು ಆಗದೆ ಇರದು, ಧರ್ಮಜನು ನಿರ್ದೈವನು/ದೈವಕೃಪೆ ಇಲ್ಲದವನಾಗುವನಲ್ಲಾ! ಶಿವ ಮಹಾದೇವ! ಕೃಷ್ಣನು ಅಶ್ವಮೇಧ ಯಾಗವನ್ನು ಹೇಗೆ ಧರ್ಮಜನಿಂದ ಮಾಡಿಸುವನೊ! ಕರ್ಣಸುತನೇ ಹೇಳಪ್ಪಾ ಎಂದನು ].
  • ತಾತ್ಪರ್ಯ:ಹದ್ದು ಹಾರಿಬಂದು ಅರ್ಜುನನ ಮಕುಟದ ಮೇಲೆ ಕುಳಿತಿತು; ರಥಕ್ಕೆ ಮುತ್ತಿ ಪಾರಿವಾಗಳು ಗೂಡುಕಟ್ಟಿದವು; ಅರ್ಜುನನ ನೆರಳಿನಲ್ಲಿ ಅವನ ತಲೆಯಿಲ್ಲದೆ ತೋರಿತು; ಇವೆಲ್ಲವನ್ನೂ ಕಂಡು ಅರ್ಜುನನು ಬೆರಗಾದನು; ಈ ಅಪಶಕುನಗಳನ್ನು ನೋಡಿ, ತನಗೆ ಅಪಜಯವು ಆಗದೆ ಇರದು, ಧರ್ಮಜನು ನಿರ್ದೈವನು/ದೈವಕೃಪೆ ಇಲ್ಲದವನಾಗುವನಲ್ಲಾ! ಶಿವ ಮಹಾದೇವ! ಕೃಷ್ಣನು ಅಶ್ವಮೇಧ ಯಾಗವನ್ನು ಹೇಗೆ ಧರ್ಮಜನಿಂದ ಮಾಡಿಸುವನೊ! ಕರ್ಣಸುತನೇ ಹೇಳಪ್ಪಾ ಎಂದನು.
  • (ಪದ್ಯ-೭)

ಪದ್ಯ:-:೮:

[ಸಂಪಾದಿಸಿ]

ವಾಜಿ ಸಹಿತಾಂ ಪೋಗಿ ಸಕಲ ಪರಿಕರದಿಂದೆ |
ತೇಜದಿಂದೊಪ್ಪುವಗ್ನಿಗಳಿಂದೆ ಭೂಸುರ ಸ |
ಮಾಜದಿಂದಖಿಲ ಋತ್ವಿಕ್ಕುಗಳ ಬಹುವಿಧದ ಮಂತ್ರಘೋಷಂಗಳಿಂದೆ ||
ರಾಜಿಸುವ ನುತ ಯಜ್ಞಶಾಲೆಯೊಳ್ ಭೂವರಂ |
ಯಾಜಮಾನ್ಯದೊಳೆಸೆವ ಸಿರಿಯಂ ವೃಕೋದರ ಸ |
ರೋಜಾಂಬಕಾದಿ ಬಾಂಧವರೊಳಾವೃತನಾಗಿರಲ್ ಕಾಣಿನಕಟೆಂದನು ||8||

ಪದವಿಭಾಗ-ಅರ್ಥ:
ವಾಜಿ ಸಹಿತಾಂ ಪೋಗಿ ಸಕಲ ಪರಿಕರದಿಂದೆ ತೇಜದಿಂದ ಒಪ್ಪುವ ಅಗ್ನಿಗಳಿಂದೆ ಭೂಸುರ ಸಮಾಜದಿಂದ ಅಖಿಲ ಋತ್ವಿಕ್ಕುಗಳ ಬಹುವಿಧದ ಮಂತ್ರಘೋಷಂಗಳಿಂದೆ=[ಯಜ್ಞಕುದುರೆ ಸಹಿತ ಹಸ್ತನಾವತಿಗೆ ಹಿಂತಿರುಗಿ ಹೋಗಿ, ಸಕಲ ಪರಿಕರದಿಂದ ಪ್ರಕಾಶದಿಂದ ಬೆಳಗುವ ಅಗ್ನಿಗಳಿಂದ ಬ್ರಾಹ್ಮಣಸಮಾಜದಿಂದ ಅಖಿಲ ಋತ್ವಿಕ್ಕುಗಳ ಬಹುವಿಧದ ಮಂತ್ರಘೋಷಂಗಳಿಂದ]; ರಾಜಿಸುವ ನುತ ಯಜ್ಞಶಾಲೆಯೊಳ್ ಭೂವರಂ ಯಾಜಮಾನ್ಯದೊಳು ಎಸೆವ ಸಿರಿಯಂ ವೃಕೋದರ ಸರೋಜಾಂಬಕ ಆದಿ ಬಾಂಧವರೊಳು ಆವೃತನಾಗಿರಲ್ ಕಾಣಿನು ಅಕಟೆಂದನು=[ಶೋಬಿಸುವ ಪೂಜ್ಯವಾದ ಯಜ್ಞಶಾಲೆಯಲ್ಲಿ ಧರ್ಮರಾಜನ ಯಾಜಮಾನ್ಯದಲ್ಲಿ ಪ್ರಕಾಶಿಸುವ ಸಂಪತ್ತನ್ನೂ, ಭೀಮನನ್ನೂ, ಕೃಷ್ಣನೇ ಮೊದಲಾದ ಬಾಂಧವರಿಂದ ಆವೃತನಾಗಿರುವ ಅವನನ್ನು ಇನ್ನು ಕಾಣಲಾರೆನು ಅಕಟ! ಎಂದನು].
  • ತಾತ್ಪರ್ಯ:ಯಜ್ಞಕುದುರೆ ಸಹಿತ ಹಸ್ತನಾವತಿಗೆ ಹಿಂತಿರುಗಿ ಹೋಗಿ, ಸಕಲ ಪರಿಕರದಿಂದ ಪ್ರಕಾಶದಿಂದ ಬೆಳಗುವ ಅಗ್ನಿಗಳಿಂದ ಬ್ರಾಹ್ಮಣಸಮಾಜದಿಂದ ಅಖಿಲ ಋತ್ವಿಕ್ಕುಗಳ ಬಹುವಿಧದ ಮಂತ್ರಘೋಷಂಗಳಿಂದ ಶೋಬಿಸುವ ಪೂಜ್ಯವಾದ ಯಜ್ಞಶಾಲೆಯಲ್ಲಿ ಧರ್ಮರಾಜನ ಯಾಜಮಾನ್ಯದಲ್ಲಿ ಪ್ರಕಾಶಿಸುವ ಸಂಪತ್ತನ್ನೂ, ಭೀಮನನ್ನೂ, ಕೃಷ್ಣನೇ ಮೊದಲಾದ ಬಾಂಧವರಿಂದ ಆವೃತನಾಗಿರುವ ಅವನನ್ನು ಇನ್ನು ಕಾಣಲಾರೆನು ಅಕಟ! ಎಂದನು.
  • (ಪದ್ಯ-೮)

ಪದ್ಯ:-:೯:

[ಸಂಪಾದಿಸಿ]

ಪೇಳಲೇನಹುದಿನ್ನು ಬಭ್ರುವಾಹನನೊಡನೆ |
ಕಾಳೆಗಂಗುಡುವೆನಾಂ ಕುಲಕೆ ನೀಂ ಮಗನೊರ್ವ |
ಬಾಳುವೆ ಗೆಡಿಸಬೇಡ ಗಜಪುರಕೆ ಪೋಗಿ ಮುರಹರ ಧರ್ಮನಂದನರ್ಗೆ ||
ಕಾಳಾದ ರಾಜಕಾರ್ಯಸ್ಥಿತಿಯ ನೆಚ್ಚರಿಸು |
ಕೇಳೆನ್ನ ಮಾತನೆಂದರ್ಜುನಂ ನುಡಿಯಲ್ಕೆ |
ತಾಳದೆ ವೃಷಧ್ವಜಂ ಕೋಪದಿಂ ಪಾರ್ಥಂಗೆ ಕೈಮುಗಿಯುತಿಂತೆಂದನು ||9||

ಪದವಿಭಾಗ-ಅರ್ಥ:
ಪೇಳಲೇನು ಅಹುದಿನ್ನು ಬಭ್ರುವಾಹನನೊಡನೆ ಕಾಳೆಗಂ ಕುಡುವೆನು ಆಂ (ನಾನು) ಕುಲಕೆ ನೀಂ ಮಗನೊರ್ವ ಬಾಳುವೆಗೆಡಿಸಬೇಡ=[ಇನ್ನು ಹೇಳಲು ಏನು ಇರುವುದು! (ಏನೂ ಇಲ್ಲ) ನಾನು ಬಭ್ರುವಾಹನನೊಡನೆ ಯುದ್ಧವನ್ನು ಮಾಡುಡುವೆನು; ನೀನು ನಮ್ಮ ಕುಲಕ್ಕೆ ಒಬ್ಬ ಮಗನಿರುವೆ. ಕುಲದ ಬಾಳುವೆಯನ್ನು/ಪರಂಪರೆಯನ್ನು ಕೆಡಿಸಬೇಡ; ನೀನೂ ಯುದ್ಧಮಾಡಿ ಸಾಯಬೇಡ]; ಗಜಪುರಕೆ ಪೋಗಿ ಮುರಹರ ಧರ್ಮನಂದನರ್ಗೆ ಕಾಳಾದ ರಾಜಕಾರ್ಯ ಸ್ಥಿತಿಯನು ಎಚ್ಚರಿಸು ಕೇಳೆನ್ನ ಮಾತನು ಎಂದು ಅರ್ಜುನಂ ನುಡಿಯಲ್ಕೆ=[ಹಸ್ತಿನಾವತಿಪುರಕ್ಕೆ ಹೋಗಿ ಕೃಷ್ಣ ಧರ್ಮಜರಿಗೆ ರಾಜಕಾರ್ಯವು ಕೆಟ್ಟುಹೋದ ಸ್ಥಿತಿಯನ್ನು ಎಚ್ಚರಿಕೆಯಿಂದ ತಿಳಿಸು. ನನ್ನ ಮಾತನ್ನು ಕೇಳು, ಎಂದು ಅರ್ಜುನನು ಹೇಳಲು]; ತಾಳದೆ ವೃಷಧ್ವಜಂ ಕೋಪದಿಂ ಪಾರ್ಥಂಗೆ ಕೈಮುಗಿಯುತ ಇಂತೆಂದನು=[ಅದನ್ನು ಸಹಿಸಲಾರದೆ ವೃಷಧ್ವಜನು ಕೋಪದಿಂದ ಪಾರ್ಥನಿಗೆ ಕೈಮುಗಿಯುತ್ತಾ ಹೀಗೆ ಹೇಳಿದನು].
  • ತಾತ್ಪರ್ಯ:ಅರ್ಜುನನು, 'ಇನ್ನು ಹೇಳಲು ಏನು ಇರುವುದು! (ಏನೂ ಇಲ್ಲ) ನಾನು ಬಭ್ರುವಾಹನನೊಡನೆ ಯುದ್ಧವನ್ನು ಮಾಡುಡುವೆನು; ನೀನು ನಮ್ಮ ಕುಲಕ್ಕೆ ಒಬ್ಬ ಮಗನಿರುವೆ. ಕುಲದ ಬಾಳುವೆಯನ್ನು/ಪರಂಪರೆಯನ್ನು ಕೆಡಿಸಬೇಡ; ನೀನೂ ಯುದ್ಧಮಾಡಿ ಸಾಯಬೇಡ; ನೀನು ಹಸ್ತಿನಾವತಿಪುರಕ್ಕೆ ಹೋಗಿ ಕೃಷ್ಣ ಧರ್ಮಜರಿಗೆ ರಾಜಕಾರ್ಯವು ಕೆಟ್ಟುಹೋದ ಸ್ಥಿತಿಯನ್ನು ಎಚ್ಚರಿಕೆಯಿಂದ ತಿಳಿಸು. ನನ್ನ ಮಾತನ್ನು ಕೇಳು, ಎಂದು ಅರ್ಜುನನು ಹೇಳಲು; ಅದನ್ನು ಸಹಿಸಲಾರದೆ ವೃಷಧ್ವಜನು ಕೋಪದಿಂದ ಪಾರ್ಥನಿಗೆ ಕೈಮುಗಿಯುತ್ತಾ ಹೀಗೆ ಹೇಳಿದನು.
  • (ಪದ್ಯ-೯)

ಪದ್ಯ:-:೧೦:

[ಸಂಪಾದಿಸಿ]

ಒಳ್ಳಿತಿದು ತಾತ ನಿನ್ನಂ ಬಿಟ್ಟು ನಾಂಪೋಗ |
ಲುಳ್ಳವನೆ ಗಜನಗರಿಗಕಟ ರಣದೊಳ್ ಜೀವ |
ಗಳ್ಳನಾದೊಡೆ ಮತ್ಪಿತಾಮಹಂ ಬೀಳದಿರ್ಪನೆ ಗಗನಮಾರ್ಗದಿಂದೆ ||
ಹೊಳ್ಳೆದೆಯ ಹೊರಬಿಗರೊಳೆಂಬುದೀ ನುಡಿಗಳಂ |
ತಳ್ಳಂಕದಿಂದೆ ನೀನಾಹವದೊಳಿಂತೆಣಿಕೆ |
ಗೊಳ್ಳಲೇಕಿವನ ಬಿಂಕವನೀಗ ಮುರಿವೆನೆನ್ನಂ ಕಳುಹಿ ನೋಡೆಂದನು ||10||

ಪದವಿಭಾಗ-ಅರ್ಥ:
ಒಳ್ಳಿತಿದು ತಾತ ನಿನ್ನಂ ಬಿಟ್ಟು ನಾಂ ಪೋಗಲುಳ್ಳವನೆ ಗಜನಗರಿಗೆ ಅಕಟ ರಣದೊಳ್ ಜೀವಗಳ್ಳನಾದೊಡೆ ಮತ್ಪಿತಾಮಹಂ ಬೀಳದಿರ್ಪನೆ ಗಗನಮಾರ್ಗದಿಂದೆ=[ಇದು ಒಳ್ಳೆಯ ಮಾತು! (ಅಲ್ಲ ಎಂಬ ಅರ್ಥ)) ತಂದೆಯೇ(ಚಿಕ್ಕಪ್ಪಾ) ನಿನ್ನನ್ನು ಬಿಟ್ಟು ನಾನು ಹಸ್ತನಾವತಿಗೆ ಹೋಗಲು ಬಯಸುವೆನೇ? ಅಕಟ! ಯುದ್ಧದಲ್ಲಿ ಜೀವಗಳ್ಳನಾದರೆ ನನ್ನ ತಂದೆ- ಅಜ್ಜಂದಿರು ಸ್ವರ್ಗದಿಂದ ಬೀಳದಿರುವನೇ!]; ಹೊಳ್ಳೆದೆಯ ಹೊರಬಿಗರೊಳು ಎಂಬುದು ಈ ನುಡಿಗಳಂ ತಳ್ಳಂಕದಿಂದೆ ನೀನು ಆಹವದೊಳಿಂತು ಎಣಿಕೆಗೊಳ್ಳಲು ಏಕೆ ಇವನ ಬಿಂಕವನು ಈಗ ಮುರಿವೆನು ಎನ್ನಂ ಕಳುಹಿ ನೋಡೆಂದನು=[ ಹೆದರಿಕೆಹೃದಯದ ಹೊರಗಿನವರಲ್ಲಿ ಈ ಮಾತುಗಳನ್ನು ಎಂಬುದು/ ಹೇಳಬೇಕು; ಚಿಂತೆ ಮತ್ತು ಹದರಿಕೆಯಿಂದ ನೀನು ಯುದ್ಧದಲ್ಲಿ ಯೋಚಿಸುವುದು ಏಕೆ? ಇವನ ಸೊಕ್ಕನ್ನು ಈಗ ಅಡಗಿಸುವೆನು, ನನ್ನನ್ನು ಯುದ್ಧಕ್ಕೆ ಕಳುಹಿಸಿ ನೋಡು ಎಂದನು.]
  • ತಾತ್ಪರ್ಯ:ಇದು ಒಳ್ಳೆಯ ಮಾತು! (ಅಲ್ಲ ಎಂಬ ಅರ್ಥ)) ತಂದೆಯೇ(ಚಿಕ್ಕಪ್ಪಾ) ನಿನ್ನನ್ನು ಬಿಟ್ಟು ನಾನು ಹಸ್ತನಾವತಿಗೆ ಹೋಗಲು ಬಯಸುವೆನೇ? ಅಕಟ! ಯುದ್ಧದಲ್ಲಿ ಜೀವಗಳ್ಳನಾದರೆ ನನ್ನ ತಂದೆ- ಅಜ್ಜಂದಿರು ಸ್ವರ್ಗದಿಂದ ಬೀಳದಿರುವನೇ! ಹೆದರಿಕೆ ಹೃದಯದ ಹೊರಗಿನವರಲ್ಲಿ ಈ ಮಾತುಗಳನ್ನು ಎಂಬುದು/ ಹೇಳಬೇಕು; ಚಿಂತೆ ಮತ್ತು ಹದರಿಕೆಯಿಂದ ನೀನು ಯುದ್ಧದಲ್ಲಿ ಯೋಚಿಸುವುದು ಏಕೆ? ಇವನ ಸೊಕ್ಕನ್ನು ಈಗ ಅಡಗಿಸುವೆನು, ನನ್ನನ್ನು ಯುದ್ಧಕ್ಕೆ ಕಳುಹಿಸಿ ನೋಡು ಎಂದನು.
  • (ಪದ್ಯ-೧೦)

ಪದ್ಯ:-:೧೧:

[ಸಂಪಾದಿಸಿ]

ತಂದೆಗೋಸುಗ ಮಾಳ್ದನವಸರಕೆ ಗೋನಿಮಿ |
ತ್ತಂ ದೇವ ವಿಪ್ರಾರ್ಥಕಸುದೊರೆದೊಡಾತಂಗೆ |
ಸಂದೇಹಮಿಲ್ಲದಾದಪುದು ಗಡ ಕೈವಲ್ಯ ಮೀಗಳಾನೆಂತು ರಣಕೆ ||
ಹಿಂದುಗಳೆದಪೆನೇಕಪತ್ನಿಯಾಗಿಹ ಸತಿಯ |
ಮುಂದಕೈದುವೆನೆಂತು ಭಾನುಸಂಭವನ ಸುತ |
ನೆಂದೆನಿಸಿಕೊಂಬೆನೆಂತನೃತಮಂ ನುಡಿವನಲ್ಲಾಹವಕೆ ಕಳುಹೆಂದನು ||11||

ಪದವಿಭಾಗ-ಅರ್ಥ:
ತಂದೆಗೋಸುಗಮ್ ಆಳ್ದನು ಅವಸರಕೆ ಗೋನಿಮಿತ್ತಂ ದೇವ ವಿಪ್ರಾರ್ಥಕೆ ಅಸುದೊರೆದೊಡೆ ಆತಂಗೆ ಸಂದೇಹಮಿಲ್ಲದೆ ಅದಪುದು ಗಡ ಕೈವಲ್ಯಂ=[ತಂದೆಯ ಅವಸರಕ್ಕೋಸ್ಕರ ಸಮಯಕ್ಕೆ ಆದವನು,ಗೋವಿನ ನಿಮಿತ್ತವಾಗಿ, ದೇವ ವಿಪ್ರಾರ್ಥಕ್ಕಾಗಿ ಜೀವತೊರೆದರೆ ಅವನಿಗೆ ಸಂದೇಹವಿಲ್ಲದೆ ಕೈವಲ್ಯಂ/ ಮೋಕ್ಷ ಆಗುವುದು ಗಡ!]; ಈಗಳಾನು ಎಂತು ರಣಕೆ ಹಿಂದುಗಳೆದಪೆನು ಏಕಪತ್ನಿಯಾಗಿಹ ಸತಿಯ ಮುಂದಕೆ ಐದುವೆನೆಂತು=[ಈಗ ನಾನು ಹೇಗೆ ಯುದ್ಧಕ್ಕೆ ಹಿಮ್ಮೆಟ್ಟಲಿ? ಏಕಪತ್ನಿಯಾಗಿರುವ ನನ್ನ ಸತಿಯ ಮುಂದೆ ಹೇಗೆ ಹೋಗಲಿ?]; ಭಾನುಸಂಭವನ ಸುತ ನೆಂದೆನಿಸಿಕೊಂಬೆನು ಅತ ಅನೃತಮಂ ನುಡಿವನಲ್ಲ ಆಹವಕೆ ಕಳುಹೆಂದನು=[ಸೂರ್ಯಪುತ್ರನ ಮಗೆ ಎಂದು ಹೇಗೆ ಎನಿಸಿಕೊಳ್ಲಲಿ? ಸುಳ್ಳು ಹೇಳುವವನಲ್ಲ (ಅವನ ಸೊಕ್ಕನು ಮುರಿವೆನು) ಯುದ್ಧಕ್ಕೆ ಕಳುಹಿಸು ಎಂದನು.];
  • ತಾತ್ಪರ್ಯ:ತಂದೆಯ ಅವಸರಕ್ಕೋಸ್ಕರ ಸಮಯಕ್ಕೆ ಆದವನು,ಗೋವಿನ ನಿಮಿತ್ತವಾಗಿ, ದೇವ ವಿಪ್ರಾರ್ಥಕ್ಕಾಗಿ ಜೀವತೊರೆದರೆ ಅವನಿಗೆ ಸಂದೇಹವಿಲ್ಲದೆ ಕೈವಲ್ಯಂ/ ಮೋಕ್ಷ ಆಗುವುದು ಗಡ! ಈಗ ನಾನು ಹೇಗೆ ಯುದ್ಧಕ್ಕೆ ಹಿಮ್ಮೆಟ್ಟಲಿ? ಏಕಪತ್ನಿಯಾಗಿರುವ ನನ್ನ ಸತಿಯ ಮುಂದೆ ಹೇಗೆ ಹೋಗಲಿ? ಸೂರ್ಯಪುತ್ರನ ಮಗೆ ಎಂದು ಹೇಗೆ ಎನಿಸಿಕೊಳ್ಲಲಿ? ಸುಳ್ಳು ಹೇಳುವವನಲ್ಲ (ಅವನ ಸೊಕ್ಕನು ಮುರಿವೆನು) ಯುದ್ಧಕ್ಕೆ ಕಳುಹಿಸು ಎಂದನು.
  • (ಪದ್ಯ-೧೧)

ಪದ್ಯ:-:೧೨:

[ಸಂಪಾದಿಸಿ]

ಮಂದಿ ಸಹಿತೀ ಬಭ್ರುವಾಹನಂ ಬರಲಿ ನಾ |
ನಿಂದು ರಣದೊಳ್ ನಿನ್ನ ಕಂಗಳ್ಗೆ ಹಬ್ಬಮಂ |
ತಂದಲ್ಲದಿರೆನೆಂದು ವೃಷಕೇತು ಬಲ್ಪಿಂ ಧನಂಜಯಂಗೆರಗಿ ಬಳಿಕ ||
ಪೊಂದೇರ್ಗಡರ್ದು ನಿಜ ಚಾಪಮಂ ತುಡುಕಿ ನರ |
ನಂದನನ ಸಮ್ಮುಖಕೆ ನಡತಂದು ನುಡಿದನೆಲೆ |
ಮಂದಮತಿ ಪಾರ್ಥಸುತನಹಡೆ ನಿಲ್ ಕರ್ಣಜಂ ತಾನೆನುತ ತೆಗೆದಚ್ಚನು ||12||

ಪದವಿಭಾಗ-ಅರ್ಥ:
ಮಂದಿ ಸಹಿತ ಈ ಬಭ್ರುವಾಹನಂ ಬರಲಿ ನಾನಿಂದು ರಣದೊಳ್ ನಿನ್ನ ಕಂಗಳ್ಗೆ ಹಬ್ಬಮಂ ತಂದಲ್ಲದೆ ಇರೆನೆಂದು ವೃಷಕೇತು ಬಲ್ಪಿಂ ಧನಂಜಯಂಗೆ ಎರಗಿ=[ವೃಷಕೇತು ಹೇಳಿದನು, ಸೈನ್ಯ ಸಹಿತ ಈ ಬಭ್ರುವಾಹನನು ಬರಲಿ ನಾನು ಇಂದು ಯುದ್ಧದಲ್ಲಿ ನಿನ್ನ ಕಣ್ಣುಗಳಿಗೆ ಹಬ್ಬವನ್ನು ತರದೆ ಇರಲಾರೆನೆಂದು ವೃಷಕೇತು ಹೆಮ್ಮೆಯಿಂದ ಧನಂಜಯನಿಗೆ ನಮಿಸಿದನು, ]; ಬಳಿಕ ಪೊಂದೇರ್ಗೆ ಅಡರ್ದು ನಿಜ ಚಾಪಮಂ ತುಡುಕಿ ನರ ನಂದನನ ಸಮ್ಮುಖಕೆ ನಡತಂದು ನುಡಿದನೆಲೆ ಮಂದಮತಿ ಪಾರ್ಥಸುತನು ಅಹಡೆ ನಿಲ್ ಕರ್ಣಜಂ ತಾನು ಎನುತ ತೆಗೆದು ಎಚ್ಚನು=[ಬಳಿಕ ಹೊನ್ನುರಥವನ್ನು ಹತ್ತಿ ತನ್ನ ಬಿಲ್ಲನ್ನು ಹಿಡಿದು,ಅರ್ಜುನನ ಮಗನ ಎದುರಿಗೆ ಬಂದು ಹೇಳಿದನು, ಎಲೆ ಬುದ್ಧಗೇಡಿ ಪಾರ್ಥಸುತನೇ ಆಗಿದ್ದರೆ ನಿಲ್ಲು, ತಾನು ಕರ್ಣನ ಮಗ ಎನ್ನುತ್ತಾ ಬಾಣವನ್ನು ತೆಗೆದು ಹೊಡೆದನು].
  • ತಾತ್ಪರ್ಯ:ವೃಷಕೇತು ಹೇಳಿದನು, ಸೈನ್ಯ ಸಹಿತ ಈ ಬಭ್ರುವಾಹನನು ಬರಲಿ ನಾನು ಇಂದು ಯುದ್ಧದಲ್ಲಿ ನಿನ್ನ ಕಣ್ಣುಗಳಿಗೆ ಹಬ್ಬವನ್ನು ತರದೆ ಇರಲಾರೆನೆಂದು ವೃಷಕೇತು ಹೆಮ್ಮೆಯಿಂದ ಧನಂಜಯನಿಗೆ ನಮಿಸಿದನು, ಬಳಿಕ ಹೊನ್ನುರಥವನ್ನು ಹತ್ತಿ ತನ್ನ ಬಿಲ್ಲನ್ನು ಹಿಡಿದು,ಅರ್ಜುನನ ಮಗನ ಎದುರಿಗೆ ಬಂದು ಹೇಳಿದನು, ಎಲೆ ಬುದ್ಧಗೇಡಿ ಪಾರ್ಥಸುತನೇ ಆಗಿದ್ದರೆ ನಿಲ್ಲು, ತಾನು ಕರ್ಣನ ಮಗ ಎನ್ನುತ್ತಾ ಬಾಣವನ್ನು ತೆಗೆದು ಹೊಡೆದನು.
  • (ಪದ್ಯ-೧೨)

ಪದ್ಯ:-:೧೩:

[ಸಂಪಾದಿಸಿ]

ಲೇಸನಾಡಿದೆ ಕರ್ಣಸುತನಾದೊಡೊಳ್ಳಿತೈ |.
ವಾಸಿಯುಳ್ಳವನಪ್ಪೆ ಫಲುಗುಣಂ ಕೊಂದನ |
ಲ್ಲಾ ಸಮರದೊಳ್ ನಿನ್ನ ತಾತನಂ ತನಗೆ ನೀನಿದಿರಪ್ಪುದುಚಿತಮೆನುತ ||
ಸೂಸಿದಂ ಕಣಿಗಳಂ ಬಭ್ರುವಾನನದಂ |
ನೇಸರಣುಗನ ಸುತಂ ಬರಿಗೆಯ್ದು ಪಾರ್ಥಿಯಂ |
ಗಾಸಿಮಾಡಿದನಂಬುಗಳ ಮಳೆಯೊಳವನೀತನಂ ಮುಸುಕಿದಂ ಶರದೊಳು ||13|

ಪದವಿಭಾಗ-ಅರ್ಥ:
ಲೇಸನಾಡಿದೆ ಕರ್ಣಸುತನು ಆದೊಡೆ ಒಳ್ಳಿತೈ ವಾಸಿಯುಳ್ಳವನು (ಕಾರ್ಯಸಾಧಕ-ಜಿ.ವೆಂ.ಸು.ನಿಘಂಟು) ಅಪ್ಪೆ ಫಲುಗುಣಂ ಕೊಂದನಲ್ಲಾ ಸಮರದೊಳ್ ನಿನ್ನ ತಾತನಂ ತನಗೆ ನೀನು ಇದಿರಪ್ಪುದು ಉಚಿತಮ್ ಎನುತ=[ಒಳ್ಳೆಯಮಾತನ್ನಾಡಿದೆ, ಕರ್ಣಸುತನು ಆದರೆ ಒಳ್ಳೆಯದಾಯಿತು; ಕಾರ್ಯಸಾಧಕನು ಆಗಿರುವೆ ಫಲುಗುಣನು ನಿನ್ನ ತಂದೆಯನ್ನು ಯುದ್ಧದಲ್ಲಿ ಕೊಂದನಲ್ಲಾ; ತನಗೆ ನೀನು ಎದುರುನಿಲ್ಲುವುದು ಉಚಿತವು/ಯೋಗ್ಯವು, ಎನ್ನುತ್ತಾ ]; ಸೂಸಿದಂ ಕಣೆಗಳಂ ಬಭ್ರುವಾನನು ಅದಂ ನೇಸರ ಅಣುಗನ ಸುತಂ (ಸೂರ್ಯನ ಮಗನ ಮಗ) ಬರಿಗೆಯ್ದು ಪಾರ್ಥಿಯಂ ಗಾಸಿಮಾಡಿದನು ಅಂಬುಗಳ ಮಳೆಯೊಳು ಅವನು ಈತನಂ ಮುಸುಕಿದಂ ಶರದೊಳು=[ ಬಭ್ರುವಾನನು ಬಾಣಗಳನ್ನು ಸುರಿಸಿದನು; ಅದನ್ನು ವೃಷಕೇತು ವಿಫಲಗೊಳಿಸಿ ಬಬ್ರುವಾಹನನ್ನು ಬಾಣಗಳ ಮಳೆಯಿಂದ ಗಾಸಿಮಾಡಿದನು; ಅವನು/ವೃಷಕೇತು ಈತನನ್ನು ಶರದಳಿಂದ ಮುಚ್ಚದನು.]
  • ತಾತ್ಪರ್ಯ:ಒಳ್ಳೆಯಮಾತನ್ನಾಡಿದೆ, ಕರ್ಣಸುತನು ಆದರೆ ಒಳ್ಳೆಯದಾಯಿತು; ಕಾರ್ಯಸಾಧಕನು ಆಗಿರುವೆ ಫಲುಗುಣನು ನಿನ್ನ ತಂದೆಯನ್ನು ಯುದ್ಧದಲ್ಲಿ ಕೊಂದನಲ್ಲಾ; ತನಗೆ ನೀನು ಎದುರುನಿಲ್ಲುವುದು ಉಚಿತವು/ಯೋಗ್ಯವು, ಎನ್ನುತ್ತಾ ಬಭ್ರುವಾನನು ಬಾಣಗಳನ್ನು ಸುರಿಸಿದನು; ಅದನ್ನು ವೃಷಕೇತು ವಿಫಲಗೊಳಿಸಿ ಬಬ್ರುವಾಹನನ್ನು ಬಾಣಗಳ ಮಳೆಯಿಂದ ಗಾಸಿಮಾಡಿದನು; ಅವನು/ವೃಷಕೇತು ಈತನನ್ನು ಶರಗಳಿಂದ ಮುಚ್ಚಿದನು.
  • (ಪದ್ಯ-೧೩)

ಪದ್ಯ:-:೧೪:

[ಸಂಪಾದಿಸಿ]

ಎ(ಇ)ಸುವರೆಚ್ಚಂಬುಗಳನೆಡೆಯೊಳಿಕ್ಕಡಿಗೈವ |
ರಿಸುವರೋರೊರ್ವರಂ ಗಾಯಗಾಣಿಸಿ ಕೆರ |
ಳ್ದಿಸುವರಶ್ವಧ್ವಜ ವರೂಥ ಸಾರಥಿಗಳಂ ತರಿದಿಳೆಗುರುಳ್ಚಿ ಕೂಡೆ ||
ಇಸುವರೊಮ್ಮೊಮ್ಮೆ ಮೈಮರೆದು ಚೇತರಿಸಿಕೊಂ |
ಡಿಸುವರಾಗ್ನೇಯಾದಿ ದಿವ್ಯಾಸ್ತ್ರನಿಕರದಿಂ |
ದಿಸುವರಿಂತವರವರ ಸರಿಬರಿಗೆ ಬಾಣಂಗಳಂ ಕರ್ಣಪಾರ್ಥಸುತರು ||14||

ಪದವಿಭಾಗ-ಅರ್ಥ:
ಎಸುವರು ಎಚ್ಚಂಬುಗಳನು ಎಡೆಯೊಳು ಇಕ್ಕಡಿಗೈವರು ಇಸುವರು ಓರೊರ್ವರಂ ಗಾಯಗಾಣಿಸಿ ಕೆರಳ್ದು ಇಸುವರು ಅಶ್ವಧ್ವಜ ವರೂಥ ಸಾರಥಿಗಳಂ ತರಿದು ಇಳೆಗೆ ಉರುಳ್ಚಿ ಕೂಡೆ=[ಬಾಣಬಿಡುವರು, ಬಿಟ್ಟಬಾಣಗಳನ್ನು ಮಧ್ಯದಲ್ಲಿ ಕತ್ತರಿಸುವರು, ಮತ್ತೆ ಒಬ್ಬರೊಬ್ಬರನ್ನು ಗಾಯಗಾಣಿಸಿ ಹೊಡೆಯುವರು; ಕೋಪಗೊಂಡು ಹೊಡೆಯುವರು, ಅಶ್ವ,ಧ್ವಜ,ರಥ, ಸಾರಥಿಗಳನ್ನು ಕತ್ತರಿಸಿ ಭೂಮಿಗೆ ಉರುಳಿಸುವರು, ಜೊತೆಗೆ,]; ಇಸುವರು ಒಮ್ಮೊಮ್ಮೆ ಮೈಮರೆದು ಚೇತರಿಸಿಕೊಂಡು ಇಸುವರು ಆಗ್ನೇಯ ಆದಿ ದಿವ್ಯಾಸ್ತ್ರನಿಕರದಿಂದ ಇಸುವರಿಂತು ಅವರವರ ಸರಿಬರಿಗೆ ಬಾಣಂಗಳಂ ಕರ್ಣಪಾರ್ಥಸುತರು=[ಬಾಣಬಿಡುವರು ಒಮ್ಮೊಮ್ಮೆ ಎಚ್ಚರತಪ್ಪಿ ಚೇತರಿಸಿಕೊಂಡು ಬಾಣಬಿಡುವರು; ಆಗ್ನೇಯ ಮೊದಲಾದ ದಿವ್ಯಾಸ್ತ್ರಗಳಿಂದ ಹೊಡೆಯುವರು, ಇಂತು ಅವರವರ ಸರಿಸಮವಾಗಿ ಬಾಣಗಳನ್ನು ಕರ್ಣಪಾರ್ಥಸುತರು ಹೋರಅಡಿದರು.]
  • ತಾತ್ಪರ್ಯ: ಇಬ್ಬರೂ,ಬಾಣಬಿಡುವರು, ಬಿಟ್ಟಬಾಣಗಳನ್ನು ಮಧ್ಯದಲ್ಲಿ ಕತ್ತರಿಸುವರು, ಮತ್ತೆ ಒಬ್ಬರೊಬ್ಬರನ್ನು ಗಾಯಗಾಣಿಸಿ ಹೊಡೆಯುವರು; ಕೋಪಗೊಂಡು ಹೊಡೆಯುವರು, ಅಶ್ವ,ಧ್ವಜ,ರಥ, ಸಾರಥಿಗಳನ್ನು ಕತ್ತರಿಸಿ ಭೂಮಿಗೆ ಉರುಳಿಸುವರು, ಜೊತೆಗೆ, ಬಾಣಬಿಡುವರು ಒಮ್ಮೊಮ್ಮೆ ಎಚ್ಚರತಪ್ಪಿ ಚೇತರಿಸಿಕೊಂಡು ಬಾಣಬಿಡುವರು; ಆಗ್ನೇಯ ಮೊದಲಾದ ದಿವ್ಯಾಸ್ತ್ರಗಳಿಂದ ಹೊಡೆಯುವರು, ಇಂತು ಅವರವರ ಸರಿಸಮವಾಗಿ ಬಾಣಗಳನ್ನು ಕರ್ಣಪಾರ್ಥಸುತರು ಹೋರಾಡಿದರು.
  • (ಪದ್ಯ-೧೪)

ಪದ್ಯ:-:೧೫:

[ಸಂಪಾದಿಸಿ]

ಅಂದಾದ ಕರ್ಣಾರ್ಜುನರ ಕಾಳಗವನವರ |
ನಂದನರ್ ನಿರ್ಣೆಸುತಿರ್ದರೆನೆ ಶಸ್ತ್ರಾಸ್ತ್ರ |
ದಿಂದೆ ಶರಸಂಧಾನ ಸತ್ಯ ಸಾಹಸ ಲಕ್ಷ್ಯ ಲಳಿ ಲಾಘವಂಗಳಿಂದೆ ||
ಮುಂದುವರಿವಗ್ಗಳಿಕೆ ಮುಳಿಸು ಮೂದಲೆ ಮೋಡಿ |
ಬಂದಿ ಭಾರಣಿ ಬಿಂಕ ಬೆಸೆ ಚಮತ್ಕಾರಂಗ |
ಳಿಂದ ಸಮಮಾಗೆ ಕೈದೋರಿದಂ ವೃಷಕೇತು ಬಭ್ರುವಾಹನನ ಮೇಲೆ ||15||

ಪದವಿಭಾಗ-ಅರ್ಥ:
ಅಂದು ಆದ ಕರ್ಣಾರ್ಜುನರ ಕಾಳಗವನು ಅವರ ನಂದನರ್ ನಿರ್ಣೆಸುತಿರ್ದರು ಎನೆ, ಶಸ್ತ್ರಾಸ್ತ್ರದಿಂದೆ ಶರಸಂಧಾನ ಸತ್ಯ ಸಾಹಸ ಲಕ್ಷ್ಯ ಲಳಿ ಲಾಘವಂಗಳಿಂದೆ=[ಅಂದು ಕುರುಕ್ಷೇತ್ರದಲ್ಲಿ ಆದ ಕರ್ಣಾರ್ಜುನರ ಕಾಳಗವನ್ನು ಅವರ ಮಕ್ಕಳು ನಿರ್ಣೆಸುತ್ತಿದ್ದಾರೆ ಎನ್ನುವಂತೆ, ಶಸ್ತ್ರಾಸ್ತ್ರದಿಂದ ಶರಸಂಧಾನ, ಸತ್ಯ, ಸಾಹಸ, ಲಕ್ಷ್ಯ (ಗುರಿ), ಲಳಿ(ಸುತ್ತುವುದು/ಕ್ರೌರ್ಯ) ಲಾಘವಗಳಿಂದ ]; ಮುಂದುವರಿವ ಅಗ್ಗಳಿಕೆ ಮುಳಿಸು ಮೂದಲೆ ಮೋಡಿ ಬಂದಿ ಭಾರಣಿ ಬಿಂಕ ಬೆಸೆ ಚಮತ್ಕಾರಂಗಳಿಂದ ಸಮಮಾಗೆ ಕೈದೋರಿದಂ ವೃಷಕೇತು ಬಭ್ರುವಾಹನನ ಮೇಲೆ=[ಮುಂದುವರಿವ ಪ್ರಾವೀಣ್ಯತೆ, ಸಿಟ್ಟು, ಮೂದಲಿಕೆ, ಮೋಡಿ/ಚಮತ್ಕಾರ, ಬಂದಿ/ಬಂಧನ, ಭಾರಣಿ/ಶೌರ್ಯ, ಬಿಂಕ/ಹೆಚ್ಚುಗಾರಿಕೆ/ ಧೈರ್ಯ, ಮಾತು, ಚಮತ್ಕಾರಗಳಿಂದ ಸಮಸಮವಾಗಲು, ವೃಷಕೇತು ತನ್ನ ಕೈ ಚಮತ್ಕಾರವನ್ನು ಬಭ್ರುವಾಹನನ ಮೇಲೆ ತೋರಿಸಿದನು.]
  • ತಾತ್ಪರ್ಯ:ಅಂದು ಕುರುಕ್ಷೇತ್ರದಲ್ಲಿ ಆದ ಕರ್ಣಾರ್ಜುನರ ಕಾಳಗವನ್ನು ಅವರ ಮಕ್ಕಳು ನಿರ್ಣೆಸುತ್ತಿದ್ದಾರೆ ಎನ್ನುವಂತೆ, ಶಸ್ತ್ರಾಸ್ತ್ರದಿಂದ ಶರಸಂಧಾನ, ಸತ್ಯ, ಸಾಹಸ, ಲಕ್ಷ್ಯ (ಗುರಿ), ಲಳಿ(ಸುತ್ತುವುದು/ಕ್ರೌರ್ಯ) ಲಾಘವಗಳಿಂದ, ಮುಂದುವರಿವ ಪ್ರಾವೀಣ್ಯತೆ, ಸಿಟ್ಟು, ಮೂದಲಿಕೆ, ಮೋಡಿ/ಚಮತ್ಕಾರ, ಬಂದಿ/ಬಂಧನ, ಭಾರಣಿ/ಶೌರ್ಯ, ಬಿಂಕ/ಹೆಚ್ಚುಗಾರಿಕೆ/ ಧೈರ್ಯ, ಮಾತು, ಚಮತ್ಕಾರಗಳಿಂದ ಸಮಸಮವಾಗಲು, ವೃಷಕೇತು ತನ್ನ ಕೈ ಚಮತ್ಕಾರವನ್ನು ಬಭ್ರುವಾಹನನ ಮೇಲೆ ತೋರಿಸಿದನು.
  • (ಪದ್ಯ-೧೫)

ಪದ್ಯ:-:೧೬:

[ಸಂಪಾದಿಸಿ]

ಬಳಿಕಖಿಳ ದಿವ್ಯಾಸ್ತ್ರದಿಂದೆ ವೃಷಕೇತು ವೆ |
ಗ್ಗಳಿಸೆ ವಾಡಬ ವೈಷ್ಣವಂಗಳಿಂ ಪರಿಹರಿಸಿ |
ಕೋಳುತರ್ಜುನಾತ್ಮಜಂ ಕೆರಳ್ದಿವನನೆಚ್ಚೊಡುಚ್ಚಳಿಸಿ ತಚ್ಛೋಣಿತವನು ||
ತೊಳೆಯಲಿಳಿದುವು ಭೋಗವತಿಯ ಜಲಕಂಬುಗಳ್ |
ಮುಳಿದು ಕರ್ಣಜನೆಸಲ್ಕಾತನಂ ಸುತ್ತಿಸಿತು |
ಸುಳಿಗಾಳಿಯಂದದಿಂ ಕಣೆಗಳರೆಗಳಿಗೆ ಪರ್ಯಂತರಂ ಸಂಗರದೊಳು ||16||

ಪದವಿಭಾಗ-ಅರ್ಥ:
ಬಳಿಕಖಿಳ ದಿವ್ಯಾಸ್ತ್ರದಿಂದೆ ವೃಷಕೇತು ವೆಗ್ಗಳಿಸೆ ವಾಡಬ ವೈಷ್ಣವಂಗಳಿಂ ಪರಿಹರಿಸಿ ಕೊಳುತ ಅರ್ಜುನಾತ್ಮಜಂ ಕೆರಳ್ದು ಇವನನು ಎಚ್ಚೊಡೆ ಉಚ್ಚಳಿಸಿ (ಸೀಳಿ:ಸಾಹಿತ್ಯಪರಿಷತ್ ನಿಘಂಟು)=[ಬಳಿಕ ಎಲ್ಲಾ ದಿವ್ಯಾಸ್ತ್ರದಿಂದ ವೃಷಕೇತು ಪ್ರಬಲವಾಗಲು, ವೈಷ್ಣವಾಸ್ತ್ರದಿಂದ ಪರಿಹರಿಸಿ ಕೊಳ್ಳುತ್ತ ಬಬ್ರಯಾಹನನು ಕೆರಳಿ ವೃಷಕೇತುವನ್ನು ಹೊಡೆದಾಗ ಸೀಳಿ ]; ತಚ್ಛೋಣಿತವನು ತೊಳೆಯಲು ಇಳಿದುವು ಭೋಗವತಿಯ ಜಲಕಂಬುಗಳ್ ಮುಳಿದು ಕರ್ಣಜನು ಎಸಲ್ಕೆ ಆತನಂ ಸುತ್ತಿಸಿತು ಸುಳಿಗಾಳಿಯಂದದಿಂ ಕಣೆಗಳರೆಗಳಿಗೆ ಪರ್ಯಂತರಂ ಸಂಗರದೊಳು=[ರಕ್ತವನ್ನು ತೊಳೆಯಲು ದೇಹದಲ್ಲಿ ಬಾಣಗಳು ಭೋಗವತಿಯ ಜಲಕ್ಕೆ (ಪಾತಾಳ ನದಿಯ ಜಲಕ್ಕೆ) ಇಳಿದುವು; ಈ ಯುದ್ಧದಲ್ಲಿ ಸಿಟ್ಟುಗೊಂಡು ವೃಷಕೇತುವು ತಿರುಗಿ ಹೊಡೆಯಲು,ಸುಂಟರಗಾಳಿಯಂತೆ ಬಾಣಗಳು ಅರೆಘಳಿಗೆ ಕಾಲ ಬಬ್ರುವಾಹನನ್ನು ಸುತ್ತಿಸಿತು].
  • ತಾತ್ಪರ್ಯ:ಬಳಿಕ ಎಲ್ಲಾ ದಿವ್ಯಾಸ್ತ್ರದಿಂದ ವೃಷಕೇತು ಪ್ರಬಲವಾಗಲು, ವೈಷ್ಣವಾಸ್ತ್ರದಿಂದ ಪರಿಹರಿಸಿ ಕೊಳ್ಳುತ್ತ ಬಬ್ರಯಾಹನನು ಕೆರಳಿ ವೃಷಕೇತುವನ್ನು ಹೊಡೆದಾಗ ಸೀಳಿ ರಕ್ತವನ್ನು ತೊಳೆಯಲು ದೇಹದಲ್ಲಿ ಬಾಣಗಳು ಭೋಗವತಿಯ ಜಲಕ್ಕೆ (ಪಾತಾಳ ನದಿಯ ಜಲಕ್ಕೆ) ಇಳಿದುವು; ಸಿಟ್ಟುಗೊಂಡ ವೃಷಕೇತುವು ತಿರುಗಿ ಹೊಡೆಯಲು,ಸುಂಟರಗಾಳಿಯಂತೆ ಬಾಣಗಳು ಅರೆಘಳಿಗೆ ಕಾಲ ಬಬ್ರುವಾಹನನ್ನು ಈ ಯುದ್ಧದಲ್ಲಿ ಸುತ್ತಿಸಿತು].
  • (ಪದ್ಯ-೧೬)

ಪದ್ಯ:-:೧೭:

[ಸಂಪಾದಿಸಿ]

ಮತ್ತೆ ಹೊಡಕರಿಸಿ ಪಾರ್ಥನ ಸೂನು ರೋಷಾಗ್ನಿ |
ಪೊತ್ತಿ ಕಿಡಿಗೆದರಿ ದಿವ್ಯಾಸ್ತ್ರಮಂ ಪೂಡಿ ತೆಗೆ |
ಯುತ್ತೆಲವೊ ಕರ್ಣಸುತ ನೀನೆ ಬಿಲ್ಲಾಳಪ್ಪೆನಾಂ ಪೊಣರ್ದತಿಬಲರೊಳು ||
ಚಿತ್ತಚಂಚಲಮಿಲ್ಲದೀಕ್ಷಿಸೆನುತೆಚ್ಚೊಡೆದೆ |
ಗೊತ್ತಿ ಶಿರಮಂ ಕೂಡಿ ಪಿಡಿದಾಗಸಕೆ ಬಾಣ |
ವೆತ್ತಿಕೊಂಡೊಯ್ದು ವೃಷಕೇತುವಂ ತಿರುಗಿಸಿತು ದೆಸೆದೆಸೆಗಳಂ ನಭದೊಳು ||17||

ಪದವಿಭಾಗ-ಅರ್ಥ:
ಮತ್ತೆ ಹೊಡಕರಿಸಿ ಪಾರ್ಥನ ಸೂನು ರೋಷಾಗ್ನಿ ಪೊತ್ತಿ ಕಿಡಿಗೆದರಿ ದಿವ್ಯಾಸ್ತ್ರಮಂ ಪೂಡಿ ತೆಗೆ ಯುತ್ತೆಲವೊ ಕರ್ಣಸುತ ನೀನೆ ಬಿಲ್ಲಾಳಪ್ಪೆನಾಂ ಪೊಣರ್ದತಿಬಲರೊಳು=[ಮತ್ತೆ ಹೂಂಕರಿಸಿ ಬಬ್ರವಾಹನನ ರೋಷದಿಂದ ಬೆಂಕಿಯಾಗಿ ಹೊತ್ತಿ ಕಿಡಿಗೆದರಿ ದಿವ್ಯಾಸ್ತ್ರವನ್ನು ಹೂಡಿ ತೆಗೆಯುತ್ತ ಎಲವೊ ಕರ್ಣಸುತನೇ ನೀನೆ ದೊಡ್ಡಬಿಲ್ಲಾಳಾಗಿರುವೆ, ನಾನು ಹೋರಾಡಿದ ಅತಿಬಲರಲ್ಲಿ,]; ಚಿತ್ತಚಂಚಲಮಿಲ್ಲದೆ ಈಕ್ಷಿಸು ಎನುತ ಎಚ್ಚೊಡೆ ಎದೆಗೊತ್ತಿ ಇರಮಂ ಕೂಡಿ ಪಿಡಿದು ಆಗಸಕೆ ಬಾಣವೆತ್ತಿಕೊಂಡೊಯ್ದು ವೃಷಕೇತುವಂ ತಿರುಗಿಸಿತು ದೆಸೆದೆಸೆಗಳಂ ನಭದೊಳು=[ಮನಸ್ಸಿಟ್ಟು ನೋಡು ಎನುತ್ತಾ ಬಾಣ ಹೊಡೆದಾಗ ಅದು ಎದೆಗೊತ್ತಿಹಿಡಿದು ತಲೆಯನ್ನೂಕೂಡಿ ಹಿಡಿದುಕೊಂಡು ಆಕಾಶಕ್ಕೆ ಆ ಬಾಣವು ಎತ್ತಿಕೊಂಡ ಹೋಗಿ ವೃಷಕೇತುವನ್ನು ಆಕಾಶದಲ್ಲಿ ದಿಕ್ಕುದಿಕ್ಕಿಗೆ ತಿರುಗಿಸಿತು].
  • ತಾತ್ಪರ್ಯ:ಮತ್ತೆ ಹೂಂಕರಿಸಿ ಬಬ್ರವಾಹನನ ರೋಷದಿಂದ ಬೆಂಕಿಯಾಗಿ ಹೊತ್ತಿ ಕಿಡಿಗೆದರಿ ದಿವ್ಯಾಸ್ತ್ರವನ್ನು ಹೂಡಿ ತೆಗೆಯುತ್ತ ಎಲವೊ ಕರ್ಣಸುತನೇ ನಾನು ಹೋರಾಡಿದ ಅತಿಬಲರಲ್ಲಿ ನೀನೆ ದೊಡ್ಡಬಿಲ್ಲಾಳಾಗಿರುವೆ; ಮನಸ್ಸಿಟ್ಟು ನೋಡು ಎನ್ನುತ್ತಾ ಬಾಣ ಹೊಡೆದಾಗ ಅದು ಎದೆಗೊತ್ತಿಹಿಡಿದು ತಲೆಯನ್ನೂಕೂಡಿ ಹಿಡಿದುಕೊಂಡು ಆಕಾಶಕ್ಕೆ ಆ ಬಾಣವು ಎತ್ತಿಕೊಂಡು ಹೋಗಿ ವೃಷಕೇತುವನ್ನು ಆಕಾಶದಲ್ಲಿ ದಿಕ್ಕುದಿಕ್ಕಿಗೆ ತಿರುಗಿಸಿತು].
  • (ಪದ್ಯ-೧೭)vii

ಪದ್ಯ:-:೧೮:

[ಸಂಪಾದಿಸಿ]

ಭಾನುಸುತ ಸೂನುವಂ ನಭಕೆತ್ತಿ ಕೊಂಡೊಯ್ದು |
ನಾನಾದೆಸೆಗೆ ತಿರುಗಿಸಿತು ಮುಹೂರ್ತತ್ರಿತಯ |
ಮೀನೆಲಕೆ ಕೆಡಹದೆ ಮಹಾಶರಂ ಕೆಳಗೆ ಬಿಲ್ವಿಡಿದು ಸನ್ನದ್ಧರಾಗಿ ||
ಈ ನರನುಮಾ ಬಭ್ರುವಾಹನನನು ಮೊಡನೈದೆ |
ಬಾನೆಡೆಯೊಳಾತಂ ಪಿತಾಮಹಂಗಭಿನಮಿಸಿ |
ಕಾನನ ತರಿತ್ಸಾಗರಂಗಳೊಳ್ ಬೀಳದಿಳಿದಂ ಮಣಿಪುರದ ಮಹಿಯೊಳು ||18||

ಪದವಿಭಾಗ-ಅರ್ಥ:
ಭಾನುಸುತ ಸೂನುವಂ ನಭಕೆತ್ತಿ ಕೊಂಡೊಯ್ದು ನಾನಾದೆಸೆಗೆ ತಿರುಗಿಸಿತು ಮುಹೂರ್ತತ್ರಿತಯಂ ಈ ನೆಲಕೆ ಕೆಡಹದೆ ಮಹಾಶರಂ =[ಬಭ್ರುವಾಹನನ್ನು ಆಕಾಸಕ್ಕೆ ಎತ್ತಿ ತೆಗೆದುಕೊಂಡುಹೋಗಿ ಮಹಾಶರವು ನಾನಾದಿಕ್ಕಿಗೆ ತಿರುಗಿಸಿತು ಈ ನೆಲಕ್ಕೆ ಕೆಡವದೆ ಒಂಭತ್ತು ಗಳಿಗೆಯ ಕಾಲ, ]; ಕೆಳಗೆ ಬಿಲ್ವಿಡಿದು ಸನ್ನದ್ಧರಾಗಿ ಈ ನರನು, ಆ ಬಭ್ರುವಾಹನನನು ಮೊಡನೈದೆ ಬಾನೆಡೆಯೊಳಾತಂ ಪಿತಾಮಹಂಗಭಿನಮಿಸಿ ಕಾನನ ತರಿತ್ಸಾಗರಂಗಳೊಳ್ ಬೀಳದಿಳಿದಂ ಮಣಿಪುರದ ಮಹಿಯೊಳು=[ಈ ವೃಷಕೇತು ಕೆಳಗೆ ಬಿಲ್ಲು ಹಿಡಿದು ಸನ್ನದ್ಧರಾಗಿರಲು ಆ ಬಭ್ರುವಾಹನನು ಕೂಡಲೆ ಬರುವುದಕ್ಕಾಗಿ, ಆಕಾಶದಲ್ಲಿ ಆತನು ತನ್ನ ಪಿತಾಮಹ ಸೂರ್ಯನಿಗೆ ಅಭಿನಮಿಸಿ ಕಾಡಿನಲ್ಲಾಗಲಿ,ಸಮುದ್ರದಲ್ಲಾಗಲೀ ಬೀಳದೆ ಮಣಿಪುರದ ಭೂಮಿಯಲ್ಲ ಇಳಿದನು.].
  • ತಾತ್ಪರ್ಯ:ಬಭ್ರುವಾಹನನ್ನು ಆಕಾಸಕ್ಕೆ ಎತ್ತಿ ತೆಗೆದುಕೊಂಡುಹೋಗಿ ಮಹಾಶರವು ನಾನಾದಿಕ್ಕಿಗೆ ತಿರುಗಿಸಿತು ಈ ನೆಲಕ್ಕೆ ಕೆಡವದೆ ಒಂಭತ್ತು ಗಳಿಗೆಯ ಕಾಲ, ಈ ವೃಷಕೇತು ಕೆಳಗೆ ಬಿಲ್ಲು ಹಿಡಿದು ಸನ್ನದ್ಧರಾಗಿರಲು, ಆ ಬಭ್ರುವಾಹನನು ಕೂಡಲೆ ಬರುವುದಕ್ಕಾಗಿ, ಆಕಾಶದಲ್ಲಿ ಆತನು ತನ್ನ ಪಿತಾಮಹ ಸೂರ್ಯನಿಗೆ ಅಭಿನಮಿಸಿ ಕಾಡಿನಲ್ಲಾಗಲಿ,ಸಮುದ್ರದಲ್ಲಾಗಲೀ ಬೀಳದೆ ಮಣಿಪುರದ ಭೂಮಿಯಲ್ಲಿ ಇಳಿದನು.].
  • (ಪದ್ಯ-೧೮)

ಪದ್ಯ:-:೧೯:

[ಸಂಪಾದಿಸಿ]

ಮೊಗಮೆತ್ತಿ ಫಲುಗುಣಂ ನೋಡುತಿರೆ ಕರ್ಣಜಂ |
ಗಗನದಿಂ ಬಿದ್ದಿಳೆಗೆ ಪೊಡೆಚಂಡಿನಂತೆ ಪುಟ |
ನೆಗೆದೆದ್ದು ರೋಷದಿಂ ಘುಡುಘುಡುಸಿ ಪ್ರಾರ್ಥಸುತನಂ ಪಚಾರಿಸಿ ಕನಲ್ದು |
ತೆಗೆದಿಸಲ್ ಬಾಣಂಗಳಶ್ವ ಸಾರಥಿ ಪತಾ |
ಕೆಗಳಿಂದಮರ್ದ ರಥಸಹಿತ ಚಿತ್ರಾಂಗದೆಯ |
ಮಗನಂ ನಭಸ್ಥಳಕೆ ಕೊಂಡಡರ್ದುವು ನಾಕ ಪರಿಯಂತಮಾಕ್ಷಣದೊಳು ||19||

ಪದವಿಭಾಗ-ಅರ್ಥ:
ಮೊಗಮೆತ್ತಿ ಫಲುಗುಣಂ ನೋಡುತಿರೆ ಕರ್ಣಜಂ ಗಗನದಿಂ ಬಿದ್ದು ಇಳೆಗೆ ಪೊಡೆಚಂಡಿನಂತೆ ಪುಟ ನೆಗೆದೆದ್ದು ರೋಷದಿಂ ಘುಡುಘುಡುಸಿ ಪ್ರಾರ್ಥಸುತನಂ ಪಚಾರಿಸಿ ಕನಲ್ದು=[ಫಲುಗುಣನು ಮುಖವನ್ನು ಎತ್ತಿ ನೋಡುತತಿರಲು ಕರ್ಣಜ ವೃಷಕೇತು ಆಕಾಶದಿಂದ ಭೂಮಿಗೆ ಬಿದ್ದು ಹೊಡಯುವ ಚಂಡಿನಂತೆ ಪುಟ ನೆಗೆದು ಎದ್ದು ರೋಷದಿಂದ ಘುಡುಘುಡುಸುತ್ತಾ ಪ್ರಾರ್ಥಸುತ ಬಬ್ರುವಾಹನನ್ನು ನಿಂದಿಸಿ/ಹೀಯಾಳಿಸಿ ಸಿಟ್ಟಿನಿಂದ ]; ತೆಗೆದು ಇಸಲ್ ಬಾಣಂಗಳಶ್ವ ಸಾರಥಿ ಪತಾಕೆಗಳಿಂದಮರ್ದ ರಥಸಹಿತ ಚಿತ್ರಾಂಗದೆಯ ಮಗನಂ ನಭಸ್ಥಳಕೆ ಕೋಂಡಡರ್ದುವು ನಾಕ ಪರಿಯಂತಮಾಕ್ಷಣದೊಳು =[ಬಾಣಗಳನ್ನು ತೆಗೆದು ಹೊಡೆದಾಗ, ಅಶ್ವ ಸಾರಥಿ ಪತಾಕೆಗಳಿಂದ ಅಮರ್ದ ರಥಸಹಿತ ಚಿತ್ರಾಂಗದೆಯ ಮಗನನ್ನು ಆಕಾಶಕ್ಕೆ ಸ್ವರ್ಗಪರಿಯಂತ ಆ ಕ್ಷಣದಲ್ಲಿ ತೆಗೆದುಕೊಂಡುಹೋಯಿತು.]
  • ತಾತ್ಪರ್ಯ:ಫಲುಗುಣನು ಮುಖವನ್ನು ಎತ್ತಿ ನೋಡುತತಿರಲು ಕರ್ಣಜ ವೃಷಕೇತು ಆಕಾಶದಿಂದ ಭೂಮಿಗೆ ಬಿದ್ದು ಹೊಡಯುವ ಚಂಡಿನಂತೆ ಪುಟ ನೆಗೆದು ಎದ್ದು ರೋಷದಿಂದ ಘುಡುಘುಡುಸುತ್ತಾ ಪ್ರಾರ್ಥಸುತ ಬಬ್ರುವಾಹನನ್ನು ನಿಂದಿಸಿ/ಹೀಯಾಳಿಸಿ ಸಿಟ್ಟಿನಿಂದ ಬಾಣಗಳನ್ನು ತೆಗೆದು ಹೊಡೆದಾಗ, ಅಶ್ವ ಸಾರಥಿ ಪತಾಕೆಗಳಿಂದ ಅಮರ್ದ ರಥಸಹಿತ ಚಿತ್ರಾಂಗದೆಯ ಮಗನನ್ನು ಆಕಾಶಕ್ಕೆ ಸ್ವರ್ಗಪರಿಯಂತ ಆ ಕ್ಷಣದಲ್ಲಿ ತೆಗೆದುಕೊಂಡುಹೋಯಿತು.
  • (ಪದ್ಯ-೧೯)

ಪದ್ಯ:-:೨೦:

[ಸಂಪಾದಿಸಿ]

ನಭದೊಳತ್ಯುಗ್ರದಿಂತಪಿಸುವ ದಿವಾಕರ |
ಪ್ರಭೆಯಿಂದುರಿಯ ರಥಂ ಬಿದ್ದನುರ್ವಿಗೆ ಪಾರ್ಧಿ |
ರಭಸದಿಂ ಪೂರ್ವದೊಳಡರ್ದ ಸಂಪಾತಿ ಗರಿ ಸೀದಿಳೆಗೆ ಬೀಳುವಂತೆ ||
ತ್ರಿಭುವನಕೆ ಪೊಸತಾಗೆ ಕರ್ಣಜಂ ಮತ್ತೆ ರಿಪು |
ಸುಭಟನಂ ಮೂರುಬಾಣದೊಳೆಚ್ಚು ದಿವಸ ವ |
ಲ್ಲಭನ ಮಂಡಲದಲ್ಲಿಗೈದಿಸಿ ಪಚಾರಿಸಿ ಜರೆದು ಕೂಡೆ ಬೊಬ್ಬಿರಿದನು||20||

ಪದವಿಭಾಗ-ಅರ್ಥ:
ನಭದೊಳು ಅತ್ಯುಗ್ರದಿಂ ತಪಿಸುವ ದಿವಾಕರ ಪ್ರಭೆಯಿಂದ ಉರಿಯ ರಥಂ ಬಿದ್ದನು ಉರ್ವಿಗೆ ಪಾರ್ಧಿ ರಭಸದಿಂ ಪೂರ್ವದೊಳು ಅಡರ್ದ ಸಂಪಾತಿ ಗರಿ ಸೀದಿಳೆಗೆ ಬೀಳುವಂತೆ=[ಆಕಾಶದಲ್ಲಿ ಅತ್ಯುಗ್ರದಿಂದ ಸುಡುವ ಸೂರ್ಯನ ಪ್ರಭೆಯಿಂದ ರಥವು ಉರಿಯಲು ಭೂಮಿಗೆ ಪಾರ್ಧಿ/ಬಭ್ರುವಾಹನ ರಭಸದಿಂದ ಬಿದ್ದನು; ಹೇಗೆಂದರೆ ಹಿಂದೆ ಸಂಪಾತಿಯು ಸೂರ್ಮಂಡಲಕ್ಕೆ ಹೋಗಿ ಗರಿ ಸುಟ್ಟು/ಸೀದು ಭೂಮಿಗೆ ಬಿದ್ದಂತೆ ಇತ್ತು.]; ತ್ರಿಭುವನಕೆ ಪೊಸತಾಗೆ ಕರ್ಣಜಂ ಮತ್ತೆ ರಿಪುಸುಭಟನಂ (ಶತ್ರು) ಮೂರುಬಾಣದೊಳು ಎಚ್ಚು ದಿವಸ ವಲ್ಲಭನ ಮಂಡಲದಲ್ಲಿಗೆ ಐದಿಸಿ ಪಚಾರಿಸಿ ಜರೆದು ಕೂಡೆ ಬೊಬ್ಬಿರಿದನು=[ಮೂರು ಲೊಕಕ್ಕೂ ಹೊಸಪರಿಯಾಗಲು ಕರ್ಣಜನು/ವೃಷಕೇತು ಮತ್ತೆ ಶತ್ರು-ವೀರನನ್ನು ಮೂರುಬಾಣದಿಂದ ಹೊಡೆದು ಸೂರ್ಯಮಂಡಲಕ್ಕೆ ಕಳಿಸಿ ಹೀಯಾಳಿಸಿ,ಬೈದು ಜೊತೆಗೆ ಆರ್ಭಟಿಸಿದನು];
  • ತಾತ್ಪರ್ಯ:ಅಂತರಿಕ್ಷಕ್ಕೆ ಹೋಗಿದ್ದ ಬಭ್ರುವಾಹನ, ಆಕಾಶದಲ್ಲಿ ಅತ್ಯುಗ್ರದಿಂದ ಸುಡುವ ಸೂರ್ಯನ ಪ್ರಭೆಯಿಂದ ರಥವು ಉರಿಯಲು ಭೂಮಿಗೆ ಪಾರ್ಧಿ/ಬಭ್ರುವಾಹನ ರಭಸದಿಂದ ಬಿದ್ದನು; ಹೇಗೆಂದರೆ ಹಿಂದೆ ಸಂಪಾತಿಯು ಸೂರ್ಮಂಡಲಕ್ಕೆ ಹೋಗಿ ಗರಿ ಸುಟ್ಟು/ಸೀದು ಭೂಮಿಗೆ ಬಿದ್ದಂತೆ ಇತ್ತು. ಮೂರು ಲೊಕಕ್ಕೂ ಹೊಸಪರಿಯಾಗಲು ಕರ್ಣಜನು/ವೃಷಕೇತು ಮತ್ತೆ ಶತ್ರು-ವೀರನನ್ನು ಮೂರುಬಾಣದಿಂದ ಹೊಡೆದು ಸೂರ್ಯಮಂಡಲಕ್ಕೆ ಕಳಿಸಿ ಹೀಯಾಳಿಸಿ,ಬೈದು ಜೊತೆಗೆ ಆರ್ಭಟಿಸಿದನು];
  • (ಪದ್ಯ-೨೦)

ಪದ್ಯ:-:೨೧:

[ಸಂಪಾದಿಸಿ]

ಬೊಬ್ಬಿರಿವ ಕರ್ಣಜನ ದನಿಗೇಳ್ದು ರೋಷದಿಂ |
ದಬ್ಬರಿಸಿ ಗಗನದೊಳ್ ತನ್ನ ರಥಮಂ ಬಿಟ್ಟು |
ಹೆಬ್ಬೆಟ್ಟದಂತಿವನ ಮಸ್ತಕದ ಮೇಲೆ ಬೀಳಲ್ಕಿವಂ ಕನಲ್ದು ಕೂಡೆ ||
ಉಬ್ಬಿ ಪುಟನೆಗೆದೆದ್ದು ಸಾಯಕದೊಳೆಚ್ಚವನ |
ನೆಬ್ಬಿಸಿದನಾಗಸಕೆ ಮತ್ತೆ ಭೀಭತ್ಸು ಕಂ |
ಡೊಬ್ಬೆರಳನಲ್ಲಾಡಿ ಪೊಗಳಲ್ಕೆ ವೃಷಕೇತು ಫಲುಗುಣಂಗಿಂತೆಂದನು ||21||

ಪದವಿಭಾಗ-ಅರ್ಥ:
ಬೊಬ್ಬಿರಿವ ಕರ್ಣಜನ ದನಿಗೇಳ್ದು ರೋಷದಿಂದ ಅಬ್ಬರಿಸಿ ಗಗನದೊಳ್ ತನ್ನ ರೆಥಮಂ ಬಿಟ್ಟು ಹೆಬ್ಬೆಟ್ಟದಂತೆ ಇವನ ಮಸ್ತಕದ ಮೇಲೆ ಬೀಳಲ್ಕೆ=[ಬಭ್ರುವಾಹನನು, ಆರ್ಬಟಿಸುತ್ತಿರುವ ವೃಷಕೇತುವಿನ ದನಿಯನ್ನು ಕೇಳಿ, ರೋಷದಿಂದ ಅಬ್ಬರಿಸಿ ಗಗನದಲ್ಲಿ ತನ್ನ ರಥವನ್ನು ಬಿಟ್ಟು ದೊಡ್ಡ ಬೆಟ್ಟದಂತೆ ಇವನ ತಲೆಯ ಬೀಳಲು,]; ಇವಂ ಕನಲ್ದು ಕೂಡೆ ಉಬ್ಬಿ ಪುಟನೆಗೆದೆದ್ದು ಸಾಯಕದೊಳು ಎಚ್ಚವನ ನೆಬ್ಬಿಸಿದನು ಆಗಸಕೆ=[ವೃಷಕೇತುವು ಸಿಟ್ಟಗೊಂಡು, ಕೂಡಲೆ ಮೈಉಬ್ಬಿಸಿ, ಪುಟನೆಗೆದೆದ್ದು ಬಾಣದಿಂದ ಅವನನ್ನು ಹೊಡೆದು ಆಕಾಶಕ್ಕೆ ಹಾರಿಸಿದನು.]; ಮತ್ತೆ ಭೀಭತ್ಸು ಕಂಡು ಒಬ್ಬೆರಳನಲ್ಲಾಡಿ ಪೊಗಳಲ್ಕೆ ವೃಷಕೇತು ಫಲುಗುಣಂಗೆ ಇಂತೆಂದನು=[ಆಗ ಅದನ್ನು ಅರ್ಜುನನು ಕಂಡು ಒಂದು ತೋರು ಬೆರಳನ್ನು ಅಲ್ಲಾಡಿಸಿ ಹೊಗಳಲು ವೃಷಕೇತು ಫಲುಗುಣನಿಗೆ ಹೀಗೆ ಹೇಳಿದನು,];
  • ತಾತ್ಪರ್ಯ:ಬಭ್ರುವಾಹನನು, ಆರ್ಬಟಿಸುತ್ತಿರುವ ವೃಷಕೇತುವಿನ ದನಿಯನ್ನು ಕೇಳಿ, ರೋಷದಿಂದ ಅಬ್ಬರಿಸಿ ಗಗನದಲ್ಲಿ ತನ್ನ ರಥವನ್ನು ಬಿಟ್ಟು ದೊಡ್ಡ ಬೆಟ್ಟದಂತೆ ಇವನ ತಲೆಯ ಬೀಳಲು, ವೃಷಕೇತುವು ಸಿಟ್ಟಗೊಂಡು, ಕೂಡಲೆ ಮೈಉಬ್ಬಿಸಿ, ಪುಟನೆಗೆದೆದ್ದು ಬಾಣದಿಂದ ಅವನನ್ನು ಹೊಡೆದು ಆಕಾಶಕ್ಕೆ ಹಾರಿಸಿದನು.ಆಗ ಅದನ್ನು ಅರ್ಜುನನು ಕಂಡು ಒಂದು ತೋರು ಬೆರಳನ್ನು ಅಲ್ಲಾಡಿಸಿ ಹೊಗಳಲು ವೃಷಕೇತು ಫಲುಗುಣನಿಗೆ ಹೀಗೆ ಹೇಳಿದನು,
  • (ಪದ್ಯ-೨೧)

ಪದ್ಯ:-:೨೨:

[ಸಂಪಾದಿಸಿ]

ತಾತ ನೋಡಂದು ರಣದೊಳ್ ತೇರ ಗಾಲಿ ವಸು |
ಧಾತಳದೊಳಳ್ದೊಡಾಯತಮಾಗಿ ನಿಲ್ವಿನಂ |
ಘಾತಿಸದಿರೆಂದು ನಿನ್ನೊಡನೆ ನಮ್ಮಯ್ಯನಾಡಿದವೊಲಾಡದೆ ಸುಮ್ಮನೆ ||
ಈತನೆನ್ನಸ್ತ್ರದಿಂ ಗಾಸಿಯಾದವನೆಂದು |
ಮಾತಾಡುವನಿತರೊಳ್ ಮತ್ತಿವನ ಮೇಲೆ ಬಂ |
ದಾತ ಬೀಳಲ್ ನೊಂದರಿರ್ವರುಂ ಚೇತರಿಸಿಕೊಂಡು ಧುರಕನುವಾದರು ||22||

ಪದವಿಭಾಗ-ಅರ್ಥ:
ತಾತ ನೋಡಂದು ರಣದೊಳ್ ತೇರ ಗಾಲಿ ವಸುಧಾತಳದೊಳು ಅಳ್ದೊಡೆ ಆಯತಮಾಗಿ ನಿಲ್ವಿನಂ ಘಾತಿಸದಿರೆಂದು ನಿನ್ನೊಡನೆ ನಮ್ಮಯ್ಯನಾಡಿದವೊಲು ಆಡದೆ=[ತಂದೆಯೇ, ನೋಡು ಅಂದು ರಣರಂಗದಲ್ಲಿ ರಥದ ಗಾಲಿ ಭೂಮಿಯಲ್ಲಿ ಇಳಿದಾಗ, ಸಿದ್ದವಾಗಿಗಿ ನಿಲ್ಲುವತನಕ ಹೊಡೆಯದಿರು ಎಂದು ನಿನ್ನೊಡನೆ ನಮ್ಮ ತಂದೆ ಕರ್ಣನು ಹೇಳಿದಂತೆ ಹೇಳದೆ]; ಸುಮ್ಮನೆ ಈತನು ಎನ್ನ ಅಸ್ತ್ರದಿಂ ಗಾಸಿಯಾದವನೆಂದು ಮಾತಾಡುವ ಅನಿತರೊಳ್ ಮತ್ತಿವನ ಮೇಲೆ ಬಂದಾತ ಬೀಳಲ್ ನೊಂದರು ಇರ್ವರುಂ ಚೇತರಿಸಿಕೊಂಡು ಧುರಕೆ ಅನುವಾದರು=[ಸುಮ್ಮನೆ ಈ ಬಭ್ರವಾಹನನು ನನ್ನು ಅಸ್ತ್ರದಿಂದ ಕೊಲ್ಲಲ್ಪಡುವನು ಎಂದು ಹೇಳುವ ಅಷ್ಟರಲ್ಲಿ ಮತ್ತೆ ಇವನ ಮೇಲೆ ಬಭ್ರುವಾಹನನು ಬಂದು ಬೀಳಲು, ಇಬ್ಬರೂ ಪಟ್ಟಿನಿಂದ ನೊಂದರು; ಅವರಿಬ್ಬರೂ ಚೇತರಿಸಿಕೊಂಡು ಮತ್ತೆ ಯುದ್ಧಕ್ಕೆ ಅನುವಾದರು].
  • ತಾತ್ಪರ್ಯ:ತಂದೆಯೇ, ನೋಡು ಅಂದು ರಣರಂಗದಲ್ಲಿ ರಥದ ಗಾಲಿ ಭೂಮಿಯಲ್ಲಿ ಇಳಿದಾಗ, ಸಿದ್ದವಾಗಿಗಿ ನಿಲ್ಲುವತನಕ ಹೊಡೆಯದಿರು ಎಂದು ನಿನ್ನೊಡನೆ ನಮ್ಮ ತಂದೆ ಕರ್ಣನು ಹೇಳಿದಂತೆ ಹೇಳದೆ, ಸುಮ್ಮನೆ ಈ ಬಭ್ರವಾಹನನು ನನ್ನು ಅಸ್ತ್ರದಿಂದ ಕೊಲ್ಲಲ್ಪಡುವನು ಎಂದು ಹೇಳುವ ಅಷ್ಟರಲ್ಲಿ ಮತ್ತೆ ಇವನ ಮೇಲೆ ಬಭ್ರುವಾಹನನು ಬಂದು ಬೀಳಲು, ಇಬ್ಬರೂ ಪಟ್ಟಿನಿಂದ ನೊಂದರು; ಅವರಿಬ್ಬರೂ ಚೇತರಿಸಿಕೊಂಡು ಮತ್ತೆ ಯುದ್ಧಕ್ಕೆ ಅನುವಾದರು.
  • (ಪದ್ಯ-೨೨)

ಪದ್ಯ:-:೨೩:

[ಸಂಪಾದಿಸಿ]

ಮಣಿ ವರೂಥಾರೂಢರಾಗಿ ಬಳಿಕಿರ್ವರುಂ |
ರಣರಂಗದೊಳ್ ಕಡುಗಿ ಕಾದಿದರ್ ಕಾಯದೊಳ್ |
ಕಣಿಗಳಿಡಿಯಲ್ ಖಂಡಮಂ ಕಚ್ಚಿ ಪಾರಲರುಣಾಂಬುಗಳ‍್ ಕೋಡಿವರಿಯೆ |
ಪೋಣರ್ವರಂಬರಕಡರ್ದೊಮ್ಮೆ ಮೇದಿನಿಗಿಳಿದು |
ಪೆಣಗುವರ್ ಮತ್ತೊಮ್ಮೆ ನಭದೊಳಿರ್ದೊರ್ವರ್ ಧ |
ರಣಿಯೊಳಿರ್ದೊರ್ವರ್ ನೆಲದೊಳೊರ್ವರಾಗಸದೊಳೊರ್ವರಿರ್ದಾ ಕಲಿಗಳು ||23||

ಪದವಿಭಾಗ-ಅರ್ಥ:
ಮಣಿ ವರೂಥ ಆರೂಢರಾಗಿ ಬಳಿಕ ಇರ್ವರುಂ ರಣರಂಗದೊಳ್ ಕಡುಗಿ ಕಾದಿದರ್ ಕಾಯದೊಳ್ ಕಣಿಗಳಿಡಿಯಲ್ ಖಂಡಮಂ ಕಚ್ಚಿಪಾರಲು (ಹೊಕ್ಕು ಹಾರಲು) ಅರುಣಾಂಬುಗಳ‍್ ಕೋಡಿವರಿಯೆ=[ಮಣಿರಥ ಕುಳಿತು, ಬಳಿಕ ಇಬ್ಬರೂ ದೇಹದಲ್ಲಿ ಬಾಣಗಳು ಹೊಕ್ಕಿರಲು ಮಾಂಸಖಂಡವನ್ನು ಹೊಕ್ಕು ರಕ್ತದ ಹನಿಗಳಿ ಹಾರಿ ಕೋಡಿಹರಿಯುತ್ತಿರಲು ರಣರಂಗದಲ್ಲಿ ಕಠಿಣವಾಗಿ ಹೋರಾಡಿದರು;]; ಪೋಣರ್ವರು ಅಂಬರಕೆ ಅಡರ್ದು ಒಂಮ್ಮೆ ಮೇದಿನಿಗೆ ಇಳಿದು ಪೆಣಗುವರ್ ಮತ್ತೊಮ್ಮೆ ನಭದೊಳು ಇರ್ದು ಒರ್ವರ್ ಧರಣಿಯೊಳು ಇರ್ದು ಒರ್ವರ್ ನೆಲದೊಳು ಒರ್ವರ್ ಆಗಸದೊಳು ಒರ್ವರು ಇರ್ದಾ ಕಲಿಗಳು=[ಪೋಣರ್ವರು ಆಕಾಶಕ್ಕೆ ಹಾರಿ ಹೋರಾಡುವರು, ಒಮ್ಮೆ ಭೂಮಿಗೆ ಇಳಿದು ಹೆಣಗುವರು, ಮತ್ತೊಮ್ಮೆ ಗಗನದಲ್ಲಿ ಒಬ್ಬರು ಇದ್ದು ಧರಣಿಯಲ್ಲಿ ಒಬ್ಬರು ಇದ್ದು, ನೆಲದಲ್ಲಿ ಮತ್ತೊಬ್ಬ ಆಗಸದಲ್ಲಿ ಇನ್ನುಬ್ಬರು ಹೀಗೆ ಇದ್ದು ಆ ಶೂರರು ಹೋರಾಡುವರು,].
  • ತಾತ್ಪರ್ಯ:ವೃಷಕೇತು ಮತ್ತು ಬಭ್ರುವಾಹನರು, ಬಳಿಕ ಮಣಿರಥಲ್ಲಿ ಕುಳಿತು, ಇಬ್ಬರೂ ದೇಹದಲ್ಲಿ ಬಾಣಗಳು ಹೊಕ್ಕಿರಲು ಮಾಂಸಖಂಡವನ್ನು ಹೊಕ್ಕು ರಕ್ತದ ಹನಿಗಳಿ ಹಾರಿ ಕೋಡಿಹರಿಯುತ್ತಿರಲು ರಣರಂಗದಲ್ಲಿ ಕಠಿಣವಾಗಿ ಹೋರಾಡಿದರು; ಆಕಾಶಕ್ಕೆ ಹಾರಿ ಹೋರಾಡುವರು, ಒಮ್ಮೆ ಭೂಮಿಗೆ ಇಳಿದು ಹೆಣಗುವರು, ಮತ್ತೊಮ್ಮೆ ಗಗನದಲ್ಲಿ ಒಬ್ಬರು ಇದ್ದು ಧರಣಿಯಲ್ಲಿ ಒಬ್ಬರು ಇದ್ದು, ನೆಲದಲ್ಲಿ ಮತ್ತೊಬ್ಬ ಆಗಸದಲ್ಲಿ ಇನ್ನುಬ್ಬರು ಹೀಗೆ ಇದ್ದು ಆ ಶೂರರು ಹೋರಾಡುವರು,].
  • (ಪದ್ಯ-೨೩)

ಪದ್ಯ:-:೨೪:

[ಸಂಪಾದಿಸಿ]

ಭೂಪ ಕೇಳಿಂತೈದುದುನಮೈದೆ ಕಾದಿದರ್ |
ಚಾಪವಿದ್ಯಾಪ್ರವೀಣರ್ ಬಳಿಕ ಪಾರ್ಥಜಂ |
ಭಾಪುರೇ ವೃಷಕೇತು ನೀನೆ ಪಟುಭಟನಪ್ಪೆ ಲೋಕದೊಳ್ ಸಾಕೆದೆಯೊಳು ||
ಶ್ರೀಪತಿಧ್ಯಾನಮಂ ಮಾಡೆನುತೆ ತೆಗೆದಿಸಲ್ |
ಕೋಪದಿಂದಾಕಣೆಯ ನಿವನರಿವನಿತರೋಳ್ ಪ್ರ |
ತಾಪದಿಂ ಕವಲಂಭನೆಚ್ಚು ಕತ್ತಿರಿಸಿದಂ ಕರ್ಣಜನ ಕಂಧರವನು ||24||

ಪದವಿಭಾಗ-ಅರ್ಥ:
ಭೂಪ ಕೇಳು, ಇಂತು ಐದು ದಿನಮೈದೆ ಕಾದಿದರ್ ಚಾಪವಿದ್ಯಾ ಪ್ರವೀಣರ್ ಬಳಿಕ ಪಾರ್ಥಜಂ ಭಾಪುರೇ ವೃಷಕೇತು ನೀನೆ ಪಟುಭಟನಪ್ಪೆ ಲೋಕದೊಳ್=[ಜನಮೇಜಯ ಭೂಪ ಕೇಳು, ಇಂತು ಬಿಲ್ಲುವಿದ್ಯಾ ಪ್ರವೀಣರು ಐದು ದಿನ ಹೋರಾಡಿದರು, ಬಳಿಕ ಪಾರ್ಥಜ ಬಭ್ರುವಾಹನ ಭಾಪುರೇ/ಮೆಚ್ಚಿದೆ, ವೃಷಕೇತು ನೀನು ಲೋಕದಲ್ಲಿ ಉತ್ತಮ ವೀರಭಟ]; ಸಾಕು ಎದೆಯೊಳು ಶ್ರೀಪತಿಧ್ಯಾನಮಂ ಮಾಡೆನುತೆ ತೆಗೆದು ಇಸಲ್ ಕೋಪದಿಂದ ಆಕಣೆಯನು ಇವನು ಅರಿವ ಅನಿತರೋಳ್ ಪ್ರತಾಪದಿಂ ಕವಲಂಭನು ಎಚ್ಚು ಕತ್ತಿರಿಸಿದಂ ಕರ್ಣಜನ ಕಂಧರವನು=[ಸಾಕು ಮನಸ್ಸಿನಲ್ಲಿ ವಿಷ್ಣುವಿನ ಧ್ಯಾನವನ್ನು ಮಾಡು ಎನ್ನುತ್ತಾ ಕೋಪದಿಂದ ತೆಗೆದು ಹೋಡೆಯಲು, ಆ ಬಾಣವನ್ನು ಇವನು-ವೃಷಕೇತು ಅದನ್ನು ಕತ್ತರಿಸುವಷ್ಟರಲ್ಲಿ ವೇಗದಿಂದ ಆ ಅರ್ಧಚಂದ್ರ ಬಾಣದಿಂದ ಕರ್ಣಜ ವೃಷಕೇತುವಿನ ಕುತ್ತಿಗೆಯನ್ನು ಹೊಡೆದು ಕತ್ತರಿಸಿದನು.].
  • ತಾತ್ಪರ್ಯ:ಜನಮೇಜಯ ಭೂಪ ಕೇಳು, ಇಂತು ಬಿಲ್ಲುವಿದ್ಯಾ ಪ್ರವೀಣರು ಐದು ದಿನ ಹೋರಾಡಿದರು, ಬಳಿಕ ಪಾರ್ಥಜ/ ಬಭ್ರುವಾಹನ ಭಾಪುರೇ/ಮೆಚ್ಚಿದೆ, ವೃಷಕೇತು ನೀನು ಲೋಕದಲ್ಲಿ ಉತ್ತಮ ವೀರಭಟ; ಸಾಕು ಇನ್ನು ಮನಸ್ಸಿನಲ್ಲಿ ವಿಷ್ಣುವಿನ ಧ್ಯಾನವನ್ನು ಮಾಡು! ಎನ್ನುತ್ತಾ ಕೋಪದಿಂದ ತೆಗೆದು ಹೋಡೆಯಲು, ಆ ಬಾಣವನ್ನು ಇವನು-ವೃಷಕೇತು ಕತ್ತರಿಸುವಷ್ಟರಲ್ಲಿ ವೇಗದಿಂದ ಆ ಅರ್ಧಚಂದ್ರ ಬಾಣದಿಂದ ಕರ್ಣಜನಾದ ವೃಷಕೇತುವಿನ ಕುತ್ತಿಗೆಯನ್ನು ಹೊಡೆದು ಕತ್ತರಿಸಿದನು.].
  • (ಪದ್ಯ-೨೪)

ಪದ್ಯ:-:೨೫:

[ಸಂಪಾದಿಸಿ]

ಕಡಿದು ಕವಲಂಬುಗಿಯೆ ಕರ್ಣಜನ ತಲೆ ನಭಕೆ |
ಸಿಡಿದು ಕಂತುಕದಂತೆ ಬಂದು ಬಿದ್ದುದು ಪಾರ್ಥ |
ನಡಿಗೆ ನಾರಾಯಣ ಮುಕುಂದ ಮಾಧವಯೆನುತೆ ಮುಂಡವತಿವೇಗದಿಂದೆ ||
ನಡೆದು ರಣದೊಳ್ ಮಣಿಪುರೇಂದ್ರನಂ ಪೊಯ್ದಿಳೆಗೆ |
ಕೆಡಹಿ ಪಡೆಯೆಲ್ಲಮಂ ಸದೆದುರುಳ್ದುದು ನರಂ |
ಪಿಡಿದೆರಡು ಕೈಗಳಿಂದಾ ಶಿರವನೆತ್ತಿಕೊಂಡೀಕ್ಷಿಸುತಳಲ್ದನಂದು ||25||

ಪದವಿಭಾಗ-ಅರ್ಥ:
ಕಡಿದು ಕವಲಂಬು ಉಗಿಯೆ ಕರ್ಣಜನ ತಲೆ ನಭಕೆ ಸಿಡಿದು ಕಂತುಕದಂತೆ (ಚೆಂಡು) ಬಂದು ಬಿದ್ದುದು ಪಾರ್ಥನ ಅಡಿಗೆ ನಾರಾಯಣ ಮುಕುಂದ ಮಾಧವಯೆನುತೆ ಮುಂಡವು ಅತಿವೇಗದಿಂದೆ=[ಅರ್ಧಚಂದ್ರ ಬಾಣವು ವೃಷಕೆತುವಿನ ತಲೆಯನ್ನು ಕಡಿದುಹಾಕಲು ಕರ್ಣಜನ ತಲೆ ಆಕಾಸಕ್ಕೆ ಸಿಡಿದು ಚೆಂಡಿನಂತೆ ಪಾರ್ಥನ ಪಾದಕ್ಕೆ ಬಂದು ಬಿದ್ದಿತು; ಅದು ನಾರಾಯಣ ಮುಕುಂದ ಮಾಧವಯೆನ್ನುತ್ತತ್ತು; ಅವನ ಮುಂಡವು ಅತಿವೇಗದಿಂದ ]; ನಡೆದು ರಣದೊಳ್ ಮಣಿಪುರೇಂದ್ರನಂ ಪೊಯ್ದು ಇಳೆಗೆ ಕೆಡಹಿ ಪಡೆಯೆಲ್ಲಮಂ ಸದೆದು ಉರುಳ್ದುದು ನರಂ ಪಿಡಿದೆರಡು ಕೈಗಳಿಂದಾ ಶಿರವನು ಎತ್ತಿಕೊಂಡು ಈಕ್ಷಿಸುತ ಅಳಲ್ದನು ಅಂದು=[ನಡೆದು ರಣರಂಗದಲ್ಲಿ ಮಣಿಪುರದ ರಾಜ ಬಭ್ರುವಾಹನನ್ನು ಹೊಡೆದು ಭುಮಿಗೆ ಕೆಡಗಿ, ಸೈನ್ಯವೆಲ್ಲವನ್ನೂ ಬಡಿದು ಉರುಳಿ ಬಿತ್ತು; ಅರ್ಜುನನು ವೃಷಕೇತವಿನ ಶಿರವನ್ನು ಎರಡು ಕೈಗಳಿಂದ ಹಿಡಿದು ಎತ್ತಿಕೊಂಡು ನೋಡುತ್ತಾ ಅಂದು ಕಣ್ಣೀರುಹಾಕಿಅತ್ತನು!].
  • ತಾತ್ಪರ್ಯ:ಅರ್ಧಚಂದ್ರ ಬಾಣವು ವೃಷಕೆತುವಿನ ತಲೆಯನ್ನು ಕಡಿದುಹಾಕಲು ಕರ್ಣಜನ ತಲೆ ಆಕಾಸಕ್ಕೆ ಸಿಡಿದು ಚೆಂಡಿನಂತೆ ಪಾರ್ಥನ ಪಾದಕ್ಕೆ ಬಂದು ಬಿದ್ದಿತು; ಅದು ನಾರಾಯಣ ಮುಕುಂದ ಮಾಧವಯೆನ್ನುತ್ತತ್ತು; ಅವನ ಮುಂಡವು ಅತಿವೇಗದಿಂದ ನಡೆದು ರಣರಂಗದಲ್ಲಿ ಮಣಿಪುರದ ರಾಜ ಬಭ್ರುವಾಹನನ್ನು ಹೊಡೆದು ಭೂಮಿಗೆ ಕೆಡಗಿ, ಸೈನ್ಯವೆಲ್ಲವನ್ನೂ ಬಡಿದು ಉರುಳಿ ಬಿತ್ತು; ಅರ್ಜುನನು ವೃಷಕೇತವಿನ ಶಿರವನ್ನು ಎರಡು ಕೈಗಳಿಂದ ಹಿಡಿದು ಎತ್ತಿಕೊಂಡು ನೋಡುತ್ತಾ ಅಂದು ಕಣ್ಣೀರುಹಾಕಿ ಅತ್ತನು!
  • (ಪದ್ಯ-೨೫)

ಪದ್ಯ:-:೨೬:

[ಸಂಪಾದಿಸಿ]

ಬಿಟ್ಟಕಂಗಳ್ ಬಿಗಿದ ಪುರ್ಬುಗಳ್ ಪೆರೆ ನೊಸಲ |
ಬೊಟ್ಟು ಸೂಸಿದ ಕುರುಳ್ ಥಳಥಳಿಪ ಕುಂಡಲಂ |
ಪುಟ್ಟದುಪ್ಪುಳ್ಮೀಸೆ ಪೊಳೆವಲ್ ನಗುವ ಮೊಗಂ ಕಳಕಳಿಪೆ ಕಳೆಯದಿಂದೆ ||
ಕಟ್ಟುಗ್ರಮಾಗಿರ್ದ ತನುವೀರರಸದೊಂದು |
ಗಟ್ಟಿಯೆನೆ ತೋರ್ಪ ಕರ್ಣಜನ ತಲೆಯಂ ನರಂ |
ನಿಟ್ಟಿಸುತೆ ಪಣಿಯಂ ಪಣೆಯೊಳಿಟ್ಟು ಪೊಸೆದು ಚುಂಬಿಸಿ ಕಂಬನಿಯೊಳಾಳ್ದನು ||26||

ಪದವಿಭಾಗ-ಅರ್ಥ:
ಬಿಟ್ಟಕಂಗಳ್ ಬಿಗಿದ ಪುರ್ಬುಗಳ್ ಪೆರೆನೊಸಲ ಬೊಟ್ಟು ಸೂಸಿದ ಕುರುಳ್ ಥಳಥಳಿಪ ಕುಂಡಲಂ ಪುಟ್ಟದುಪ್ಪುಳ (ಪುಟ್ಟ ತುಪ್ಪಳ-ಒತ್ತಾಗಿ ಕೂದಲಿರುವ) ಮೀಸೆ ಪೊಳೆವಲ್ ನಗುವ ಮೊಗಂ ಕಳಕಳಿಪೆ ಕಳೆಯದಿಂದೆ=[ಬಿಟ್ಟಕಣ್ಣುಗಳು, ಬಿಗಿದ ಹುಬ್ಬುಗಳು, ಅಗಲಹಣೆಯಬೊಟ್ಟು, ಕೆದರಿದ ಕುರುಳು, ಥಳಥಳಿಸುವ ಕುಂಡಲ, ಪುಟ್ಟದುಪ್ಪುಳ ಮೀಸೆ, ಹೊಳೆವ ಹಲ್ಲು- ನಗುವ ಮುಖ, ಕಳಕಳಿಪೆ/ಶೋಭಿಸುವ ಕಳೆಯದಿಂದ ತೋರುತ್ತಿತ್ತು; ]; ಕಟ್ಟು ಉಗ್ರಮಾಗಿರ್ದ ತನುವೀರರಸದೊಂದು ಗಟ್ಟಿಯೆನೆ ತೋರ್ಪ ಕರ್ಣಜನ ತಲೆಯಂ ನರಂ ನಿಟ್ಟಿಸುತೆ ಪಣಿಯಂ ಪಣೆಯೊಳು ಇಟ್ಟು ಪೊಸೆದು ಚುಂಬಿಸಿ ಕಂಬನಿಯೊಳು ಆಳ್ದನು(ಮುಳುಗಿದನು)=[ಕಟ್ಟು ಉಗ್ರವಾಗಿದ್ದ ತನುವೀರರಸವು ಒಂದು ಗಟ್ಟಿರೂಪ ಪಡೆದಂತೆ ತೋರುವ ಕರ್ಣಜನ/ವೃಷಕೇತುವಿನ ತಲೆಯನ್ನು ಅರ್ಜುನನು ನಿಟ್ಟಿಸಿನೋಡುತ್ತಾ ಹಣಿಯನ್ನು ತನ್ನ ಹಣೆಯಲ್ಲಿ ಇಟ್ಟು, ಅದಕ್ಕೆ ಹೊಸೆದು ಚುಂಬಿಸಿ ಕಂಬನಿಯಲ್ಲಿ ಮುಳುಗಿದನು].
  • ತಾತ್ಪರ್ಯ:ವೃಷಕೆತುವಿನ ತಲೆಯನ್ನು ಅರ್ಜುನನು ಕೈಯಲ್ಲಿ ಹಿಡಿದು ನೋಡಿದಾಗ, ಬಿಟ್ಟಕಣ್ಣುಗಳು, ಬಿಗಿದ ಹುಬ್ಬುಗಳು, ಅಗಲಹಣೆಯಬೊಟ್ಟು, ಕೆದರಿದ ಕುರುಳು, ಥಳಥಳಿಸುವ ಕುಂಡಲ, ಪುಟ್ಟದುಪ್ಪುಳ ಮೀಸೆ, ಹೊಳೆವ ಹಲ್ಲು- ನಗುವ ಮುಖ, ಕಳಕಳಿಪೆ/ಶೋಭಿಸುವ ಕಳೆಯದಿಂದ ತೋರುತ್ತಿತ್ತು; ಕಟ್ಟು ಉಗ್ರವಾಗಿದ್ದ ತನುವೀರರಸವು ಒಂದು ಗಟ್ಟಿರೂಪ ಪಡೆದಂತೆ ತೋರುವ ಕರ್ಣಜನ/ವೃಷಕೇತುವಿನ ತಲೆಯನ್ನು ಅರ್ಜುನನು ನಿಟ್ಟಿಸಿನೋಡುತ್ತಾ ಹಣಿಯನ್ನು ತನ್ನ ಹಣೆಯಲ್ಲಿ ಇಟ್ಟು, ಅದಕ್ಕೆ ಹೊಸೆದು ಚುಂಬಿಸಿ ಕಂಬನಿಯಲ್ಲಿ ಮುಳುಗಿದನು.
  • (ಪದ್ಯ-೨೬)

ಪದ್ಯ:-:೨೭:

[ಸಂಪಾದಿಸಿ]

ಮಗನೆ ನೀನೆಂತು ಮಡಿದೈ ಕೃಷ್ಣರಾಯಂಗೆ |
ಸೊಗಸಾದುದೇ ನಿನ್ನಳಿವು ಧರ್ಮತನಯಂಗೆ |
ಮೊಗದೋರ್ಪ ಸುತರುಂಟೆ ನೀನಲ್ಲದೇನೆಂದಳಲ್ವಳೈ ಕುಂತಿ ನಿನಗೆ ||
ಪಗೆಯೆಂದು ಕೊಂದೆವಗ್ರಜನನೆಮಗಾತನಿಂ |
ಮಿಗಿಲೆಂದು ಕಂಡಿಹೆವಲೈ ನಿನ್ನನೈವರ್ಗೆ |
ಸುಗತಿಗುಡುವಾತ್ಮಭವರಿರ್ದಪರೆ ಪೇಳೆಂದು ಹಳವಳಿಸಿದಂ ಪಾರ್ಥನು ||27||

ಪದವಿಭಾಗ-ಅರ್ಥ:
ಮಗನೆ ನೀನೆಂತು ಮಡಿದೈ ಕೃಷ್ಣರಾಯಂಗೆ ಸೊಗಸಾದುದೇ ನಿನ್ನಳಿವು ಧರ್ಮತನಯಂಗೆ ಮೊಗದೋರ್ಪ ಸುತರುಂಟೆ ನೀನಲ್ಲದೆ ಏನೆಂದು ಅಳಲ್ವಳೈ ಕುಂತಿ ನಿನಗೆ=[ಅರ್ಜುನನು ಮಡಿದ ವೃಷಕೇತುವಿಗೆ ಹೇಳುವನು, ಮಗನೆ ನೀನು ಹೇಗೆ ಮಡಿದೆ? ಕೃಷ್ಣನಿಗೆ ಇದು ಇಷ್ಟವೇ? ನಿನ್ನ ಸಾವಿನ ನಂತರ ಧರ್ಮತನಯನಿಗೆ ಮುಖತೋರುವ ನೀನಲ್ಲದೆ ಬೇರೆ ಮಕ್ಕಳುಂಟೆ? (ಕುರುಕ್ಷೇತ್ರ ಯುದ್ಧದ ಕೊನೆಯ ದಿನ ಉಪಪಾಂಡವರೆಲ್ಲರೂ ಕೊಲೆಯಾದರು; ಕರ್ಣನಮಗ ಒಬ್ಬನೇ ಉಳಿದವ.) ಕುಂತಿ ನಿನಗಾಗಿ ಏನೆಂದು ಅಳುವಳೋ! ]; ಪಗೆಯೆಂದು ಕೊಂದೆವು ಅಗ್ರಜನನು ಎಮಗೆ ಆತನಿಂ ಮಿಗಿಲೆಂದು ಕಂಡಿಹೆವು ಎಲೈ ನಿನ್ನನು ಐವರ್ಗೆ ಸುಗತಿಗುಡುವ ಆತ್ಮಭವರು ಇರ್ದಪರೆ ಪೇಳೆಂದು ಹಳವಳಿಸಿದಂ ಪಾರ್ಥನು=[ಶತ್ರುವೆಂದು ಅಣ್ಣ ಕರ್ಣನನ್ನು ಕೊಂದೆವು; ನೀನು ನಮಗೆ ಆತನಿಗಿಂತ ಹೆಚ್ಚಿನವನು ಎಂದು ನೋಡಿಕಕೊಂಡೆವು, ಎಲೈ ನಿನ್ನನು ಬಿಟ್ಟು ನಾವು ಐದುಜನ ಸೋದರರಿಗೆ (ಉತ್ತರಕ್ರಿಯೆ ಮಾಡಿ) ಸುಗತಿಯನ್ನು ಕೊಡುವ ಮಕ್ಕಳು ನಮಗೆ ಇರುವರೇ? ಇಲ್ಲ. ಹೇಳು ಎಂದು ಪಾರ್ಥನು ಹಳವಳಿಸಿದನು/ಗೋಳಿಟ್ಟನು.].
  • ತಾತ್ಪರ್ಯ:ಅರ್ಜುನನು ಮಡಿದ ವೃಷಕೇತುವಿಗೆ ಹೇಳುವನು, ಮಗನೆ ನೀನು ಹೇಗೆ ಮಡಿದೆ? ಕೃಷ್ಣನಿಗೆ ಇದು ಇಷ್ಟವೇ? ನಿನ್ನ ಸಾವಿನ ನಂತರ ಧರ್ಮತನಯನಿಗೆ ಮುಖತೋರುವ ನೀನಲ್ಲದೆ ಬೇರೆ ಮಕ್ಕಳುಂಟೆ? ಕುಂತಿ ನಿನಗಾಗಿ ಏನೆಂದು ಅಳುವಳೋ! ಶತ್ರುವೆಂದು ಅಣ್ಣ ಕರ್ಣನನ್ನು ಕೊಂದೆವು; ನೀನು ನಮಗೆ ಆತನಿಗಿಂತ ಹೆಚ್ಚಿನವನು ಎಂದು ನೋಡಿಕಕೊಂಡೆವು, ಎಲೈ ನಿನ್ನನು ಬಿಟ್ಟು ನಾವು ಐದುಜನ ಸೋದರರಿಗೆ (ಉತ್ತರಕ್ರಿಯೆ ಮಾಡಿ) ಸುಗತಿಯನ್ನು ಕೊಡುವ ಮಕ್ಕಳು ನಮಗೆ ಇರುವರೇ? ಇಲ್ಲ. ಹೇಳು ಎಂದು ಪಾರ್ಥನು ಹಳವಳಿಸಿದನು/ಗೋಳಿಟ್ಟನು.
  • (ಪದ್ಯ-೨೭)

ಪದ್ಯ:-:೨೮:

[ಸಂಪಾದಿಸಿ]

ಸಾಲದೆ ಮಹಾಹವದೊಳಭಿಮನ್ಯು ಮಡಿದಳಲ್ |
ಬಾಲಕಂ ನೀನಿರ್ದೊಡೇನಕಟ ಕಣ್ಣ ಮುಂ |
ದಾಲಿಸೈ ತನ್ನ ಮಾತಂ ನುಡಿಸಲಾಗದೇ ನೋಡೆನ್ನ ನಾದರದೊಳು ||
ಪಾಲಿಸೈ ತುರಗಮಂ ಮಂದಿಯಂ ನಡೆಸಿನ್ನು |
ಮೇಲಣುದ್ಯೋಗಮಾವುದು ಕಂಡ ನಿನ್ನ ಗುಣ |
ಶೀಲಮಂ ಭೂಪನೊಳ್ ಬಣ್ಣಿಪ ವೃಕೋದರಂಗೇನೆಂಬೆನುಸಿರೆಂದನು ||28||

ಪದವಿಭಾಗ-ಅರ್ಥ:
ಸಾಲದೆ ಮಹಾಹವದೊಳು ಅಭಿಮನ್ಯು ಮಡಿದ ಅಳಲ್ ಬಾಲಕಂ ನೀನು ಇರ್ದೊಡೇನು ಅಕಟ ಕಣ್ಣ ಮುಂದೆ=[ಅರ್ಜುನನು ದುಃಖಿಸುತ್ತಾ, ಮಹಾಯುದ್ಧಲ್ಲಿ ಅಭಿಮನ್ಯು ಮಡಿದ ದುಃಖ ಮರೆಯಲು ಬಾಲಕನಾದ ನೀನು ಕಣ್ಣ ಮುಂದೆ ಇದ್ದರೇನು ಸಾಲದೆ ಅಕಟ! ]; ಆಲಿಸೈ ತನ್ನ ಮಾತಂ ನುಡಿಸಲಾಗದೇ ನೋಡೆನ್ನನು ಆದರದೊಳು=[ ತನ್ನ ಮಾತನ್ನು ಆಲಿಸು/ಕೇಳು; ನನ್ನನ್ನು ಆದರದದಿಂದ ನೋಡಿ ನುಡಿಸು/ಮಾತಾಡಿಸಬಾರದೇ]; ಪಾಲಿಸೈ ತುರಗಮಂ ಮಂದಿಯಂ ನಡೆಸು ಇನ್ನು ಮೇಲಣ ಉದ್ಯೋಗಮಾವುದು=[ಏಳು ಕುದುರೆಯನ್ನು ಪಾಲಿಸು;ಇನ್ನು ಸೈನ್ಯವನ್ನು ನಡೆಸು; ಇನ್ನು ಮುಂದಿನ ನಮ್ಮ ಕರ್ತವ್ಯ ಯಾವದು ಹೇಳು.]; ಕಂಡ ನಿನ್ನ ಗುಣ ಶೀಲಮಂ ಭೂಪನೊಳ್ ಬಣ್ಣಿಪ ವೃಕೋದರಂಗೆ ಏನೆಂಬೆನು ಉಸಿರೆಂದನು=[ನಿನ್ನ ಗುಣ ಶೀಲಗಳನ್ನು ನೋಡಿ ಧರ್ಮರಾಜನಿಗೆ ಬಣ್ಣಿಸುವ ವೃಕೋದರನಿಗೆ ಏನು ಹೇಳಲಿ? ಹೇಳಪ್ಪಾ ಎಂದನು ಅರ್ಜುನ.].
  • ತಾತ್ಪರ್ಯ:ಅರ್ಜುನನು ದುಃಖಿಸುತ್ತಾ, ಮಹಾಯುದ್ಧಲ್ಲಿ ಅಭಿಮನ್ಯು ಮಡಿದ ದುಃಖ ಮರೆಯಲು ಬಾಲಕನಾದ ನೀನು ಕಣ್ಣ ಮುಂದೆ ಇದ್ದರೇನು ಸಾಲದೆ ಅಕಟ! ತನ್ನ ಮಾತನ್ನು ಆಲಿಸು/ಕೇಳು; ನನ್ನನ್ನು ಆದರದದಿಂದ ನೋಡಿ ನುಡಿಸು/ಮಾತಾಡಿಸಬಾರದೇ?; ಏಳು ಕುದುರೆಯನ್ನು ಪಾಲಿಸು; ಇನ್ನು ಸೈನ್ಯವನ್ನು ನಡೆಸು; ಇನ್ನು ಮುಂದಿನ ನಮ್ಮ ಕರ್ತವ್ಯ ಯಾವದು ಹೇಳು. ನಿನ್ನ ಗುಣ ಶೀಲಗಳನ್ನು ನೋಡಿ ಧರ್ಮರಾಜನಿಗೆ ಬಣ್ಣಿಸುವ ವೃಕೋದರನಿಗೆ ಏನು ಹೇಳಲಿ? ಹೇಳಪ್ಪಾ ಎಂದನು ಅರ್ಜುನ.].
  • (ಪದ್ಯ-೨೮)viii

ಪದ್ಯ:-:೨೯:

[ಸಂಪಾದಿಸಿ]

ಮೂಗಿಲ್ಲದಾನನಂ ಲಿಂಗಮಿಲ್ಲದ ಪೀಠ |
ಮಾಗಿರದೆ ಪಾಂಡವರ ಸಿರಿಯಿನ್ನು ನೀನಿಲ್ಲ |
ದಾಗ ನಿನ್ನ ದಟಿಂದೆ ಯೌವ್ವನಾಶ್ವಾನುಸಾಲ್ವರ ಸಖ್ಯಮಾದುದೆಮಗೆ ||
ಯಾಗಮಹುದರಸಂಗೆ ನಿನ್ನಿಂದ ನೀಂ ಪದ್ದು |
ಕಾಗೆಗೊಡಲಂ ಕೊಟ್ಟು ರಣದೊಳೆನ್ನಂ ಬಿಟ್ಟು |
ಪೋಗಲಪ್ಪುದೆ ತಂದೆ ವೃಷಕೇತು ಪೇಳೆಂದು ಮರುಗಿದಂ ಸವ್ಯಸಾಚಿ ||29||

ಪದವಿಭಾಗ-ಅರ್ಥ:
ಮೂಗಿಲ್ಲದ ಆನನಂ ಲಿಂಗಮಿಲ್ಲದ ಪೀಠಮಾಗಿ ಇರದೆ ಪಾಂಡವರ ಸಿರಿಯಿನ್ನು ನೀನಿಲ್ಲದಾಗ ನಿನ್ನ ಅದಟಿಂದೆ ಯೌವ್ವನಾಶ್ವ ಅನುಸಾಲ್ವರ ಸಖ್ಯಮಾದುದು ಎಮಗೆ=[ಪಾಂಡವರ ಸಿರಿ ಇನ್ನು ನೀನಿಲ್ಲದೆ ಇರುವಾಗ, ಮೂಗು ಇಲ್ಲದ ಮುಖವು, ಲಿಂಗವಿಲ್ಲದ ಪೀಠವಂತೆ ಇರದೆ?/ ಇರುವುದು. ನಮಗೆ ನಿನ್ನ ಶೌರ್ಯದಿಂದ ಯೌವ್ವನಾಶ್ವ ಅನುಸಾಲ್ವರ ಸ್ನೇಹವಾಯಿತು.]; ಯಾಗಮು ಅಹುದು ಅರಸಂಗೆ ನಿನ್ನಿಂದ ನೀಂ ಪದ್ದು ಕಾಗೆಗೆ ಒಡಲಂ ಕೊಟ್ಟು ರಣದೊಳು ಎನ್ನಂ ಬಿಟ್ಟು ಪೋಗಲು ಅಪ್ಪುದೆ ತಂದೆ ವೃಷಕೇತು ಪೇಳು ಎಂದು ಮರುಗಿದಂ ಸವ್ಯಸಾಚಿ=[ ನಿನ್ನಿಂದ ಅರಸ ಧರ್ಮಜನಿಗೆ ಯಾಗವು ಆಗುವುದು. ನೀನು ಹದ್ದು ಕಾಗೆಗೆ ದೇಹವನ್ನು ಕೊಟ್ಟು ರಣರಂಗದಲ್ಲಿ ನನ್ನನ್ನು ಬಿಟ್ಟು ಹೋಗಬಹುದೆ? ತಂದೆ ವೃಷಕೇತು ಹೇಳು, ಎಂದು ಮರುಗಿದನು ಅರ್ಜುನ];
  • ತಾತ್ಪರ್ಯ:ಪಾಂಡವರ ಸಂಪತ್ತು, ನೀನಿಲ್ಲದೆ ಇರುವಾಗ,ಇನ್ನು ಮೂಗು ಇಲ್ಲದ ಮುಖವು, ಲಿಂಗವಿಲ್ಲದ ಪೀಠವಂತೆ ಇರದೆ?/ ಇರುವುದು. ನಮಗೆ ನಿನ್ನ ಶೌರ್ಯದಿಂದ ಯೌವ್ವನಾಶ್ವ ಅನುಸಾಲ್ವರ ಸ್ನೇಹವಾಯಿತು. ನಿನ್ನಿಂದ ಅರಸ ಧರ್ಮಜನಿಗೆ ಯಾಗವು ಆಗುವುದು. ನೀನು ಹದ್ದು ಕಾಗೆಗೆ ದೇಹವನ್ನು ಕೊಟ್ಟು ರಣರಂಗದಲ್ಲಿ ನನ್ನನ್ನು ಬಿಟ್ಟು ಹೋಗಬಹುದೆ? ತಂದೆ ವೃಷಕೇತು ಹೇಳು, ಎಂದು ಮರುಗಿದನು ಅರ್ಜುನ];
  • (ಪದ್ಯ-೨೯)

ಪದ್ಯ:-:೩೦:

[ಸಂಪಾದಿಸಿ]

ಈ ಪರಿಯೊಳಾ ವೃಷಧ್ವಜನ ತಲೆಪಿಡಿದವನ ||
ರೂಪಗುಣ ಶೀಲಮಂ ನೆನೆನೆನೆದು ಶೋಕ ಪ್ರ |
ಳಾಪದಿಂ ನರನಳಲುತಿರಲತ್ತ ಕರ್ಣಸುತನಟ್ಟೆ ಬಂದಪ್ಪಳಿಸಲು ||
ಧೂಪಿಸಿ ಧರೆಗೆ ಬಿದ್ದೊಡನೆ ಮೂರ್ಛೆ ತಿಳಿದೆದ್ದು |
ಚಾಪದ ಕೊನೆಗೆ ಮೊಗವನಿಟ್ಟೋರೆಯಾಗಿ ನಿಂ |
ದಾ ಪಾರ್ಥನಂ ನೋಡಿ ನಸುನಗುತೆ ಚಿತ್ರಾಂಗದೆಯ ತನುಜನಿಂತೆಂದನು ||30||

ಪದವಿಭಾಗ-ಅರ್ಥ:
ಈ ಪರಿಯೊಳಾ ವೃಷಧ್ವಜನ ತಲೆಪಿಡಿದವನ ರೂಪಗುಣ ಶೀಲಮಂ ನೆನೆನೆನೆದು ಶೋಕ ಪ್ರ ಳಾಪದಿಂ ನರನು ಅಳಲುತಿರಲು ಇತ್ತ ಕರ್ಣಸುತನಟ್ಟೆ ಬಂದು ಅಪ್ಪಳಿಸಲು=[ಈ ಪರಿಯಲ್ಲಿ ವೃಷಧ್ವಜನ ತಲೆಯನ್ನು ಹಿಡಿದುಕೊಂಡು ಅವನ ರೂಪಗುಣ ಶೀಲಗಳನ್ನು ನೆನೆನೆನೆದು ಶೋಕದಿಂದ ಅರ್ಜುನನು ಅಳುತ್ತಿರಲು, ಇತ್ತ ಕರ್ಣಜನ ತಲೆಇಲ್ಲದ ಮುಂಡವು ನುಗ್ಗಿಬಂದು ಅಪ್ಪಳಿಸಿದಾಗ]; ಧೂಪಿಸಿ ಧರೆಗೆ ಬಿದ್ದೊಡನೆ ಮೂರ್ಛೆ ತಿಳಿದೆದ್ದು ಚಾಪದ ಕೊನೆಗೆ ಮೊಗವನು ಇಟ್ಟು ಓರೆಯಾಗಿ ನಿಂದು ಆ ಪಾರ್ಥನಂ ನೋಡಿ ನಸುನಗುತೆ ಚಿತ್ರಾಂಗದೆಯ ತನುಜನು ಇಂತೆಂದನು=[ಬಭ್ರುವಾಹನನು ಎಚ್ಚರತಪ್ಪಿ ಭೂಮಿಗೆ ಬಿದ್ದನು, ಒಡನೆ ಎಚ್ಚರಗೊಂಡು ಬಿಲ್ಲಿನ ಕೊನೆಗೆ ಮುಖವನ್ನು ಇಟ್ಟು ಓರೆಯಾಗಿ ನಿಂತುಕೊಂಡು, ಆ ಪಾರ್ಥನನ್ನು ನೋಡಿ ನಸುನಗುತ್ತಾ ಚಿತ್ರಾಂಗದೆಯ ಮಗನು ಹೀಗೆ ಹೇಳಿದನು].
  • ತಾತ್ಪರ್ಯ:ಈ ಪರಿಯಲ್ಲಿ ವೃಷಧ್ವಜನ ತಲೆಯನ್ನು ಹಿಡಿದುಕೊಂಡು ಅವನ ರೂಪಗುಣ ಶೀಲಗಳನ್ನು ನೆನೆನೆನೆದು ಶೋಕದಿಂದ ಅರ್ಜುನನು ಅಳುತ್ತಿರಲು, ಇತ್ತ ಕರ್ಣಜನ ತಲೆಇಲ್ಲದ ಮುಂಡವು ನುಗ್ಗಿಬಂದು ಅಪ್ಪಳಿಸಿದಾಗ, ಬಭ್ರುವಾಹನನು ಎಚ್ಚರತಪ್ಪಿ ಭೂಮಿಗೆ ಬಿದ್ದನು, ಒಡನೆ ಎಚ್ಚರಗೊಂಡು ಬಿಲ್ಲಿನ ಕೊನೆಗೆ ಮುಖವನ್ನು ಇಟ್ಟು ಓರೆಯಾಗಿ ನಿಂತುಕೊಂಡು, ಆ ಪಾರ್ಥನನ್ನು ನೋಡಿ ನಸುನಗುತ್ತಾ ಚಿತ್ರಾಂಗದೆಯ ಮಗನು ಹೀಗೆ ಹೇಳಿದನು.
  • (ಪದ್ಯ-೩೦)

ಪದ್ಯ:-:೩೧:

[ಸಂಪಾದಿಸಿ]

ಎಲೆ ಪಾರ್ಥ ವೈಶ್ಯಯಸಂಭವರಾವಹೆವು ನಿಮ್ಮ |
ಬಲ ಸಮಾಜದೊಳಂಬುಗಳ ಪಸರಮಂ ಹರಹಿ |
ಗೆಲವಿನಗ್ಗದಲಾಭಮಂ ಪಡೆದೆವದಟರ ಶಿರಂಗಳಂ ಕೊಂಡೆವರಿಸಿ ||
ಕಲಿಗಳೈತಂದು ಜೀವಕೆ ಸಂಚಕಾರಮಂ |
ಸಲೆ ಬೇಡಿದೊಡೆ ಕೊಟ್ಟೆ ವಿಚ್ಛೆಯುಳ್ಳೊಡೆ ನಿನ್ನ |
ತಲೆಯ ಬೆಲೆಗಿದೆ ಸಾಹಸ ದ್ರವ್ಯಮೆನ್ನೊಳೆಂದಾರ್ಜುನಿ ಪಚಾರಿಸಿದನು ||31||

ಪದವಿಭಾಗ-ಅರ್ಥ:
ಅರ್ಜುನನ್ನು ಕುರಿತು,'ಎಲೆ ಪಾರ್ಥ ವೈಶ್ಯಸಂಭವರು ಆವು ಅಹೆವು ನಿಮ್ಮ ಬಲ ಸಮಾಜದೊಳು ಅಂಬುಗಳ ಪಸರಮಂ ಹರಹಿ ಗೆಲವಿನ ಅಗ್ಗದ ಲಾಭಮಂ ಪಡೆದೆವು ಅದಟರ ಶಿರಂಗಳಂ ಕೊಂಡೆವು ಅರಿಸಿ (ಹುಡುಕಿ)=[ಅರ್ಜುನನ್ನು ಕುರಿತು,'ಎಲೆ ಪಾರ್ಥ, ನಾವು ವೈಶ್ಯಕುದಲ್ಲಿ ಹುಟ್ಟಿದವರು ಆಗಿರುವೆವು; ನಿಮ್ಮ ಸೈನ್ಯ ಸಮೂಹದಲ್ಲಿ ಬಾಣಗಳ ವಿಸ್ತಾರವನ್ನು ಹರಡಿ ಗೆಲವಿನ ಅಗ್ಗದಲ್ಲಿ ಲಾಭವನ್ನು ಪಡೆದೆವು; ವೀರರ ತಲೆಗಳನ್ನು ಹುಡುಕಿ ಕೊಂಡುಕೊಂಡೆವು/ತೆಗೆದುಕೊಂಡೆವು.]; ಕಲಿಗಳು ಐತಂದು ಜೀವಕೆ ಸಂಚಕಾರಮಂ ಸಲೆ ಬೇಡಿದೊಡೆ ಕೊಟ್ಟೆವು ಇಚ್ಛೆಯು ಉಳ್ಳೊಡೆ ನಿನ್ನ ತಲೆಯ ಬೆಲೆಗೆ ಇದೆ ಸಾಹಸ ದ್ರವ್ಯಮು ಎನ್ನೊಳು ಎಂದು ಆರ್ಜುನಿ ಪಚಾರಿಸಿದನು=[ವೀರರು ಬಂದು ಜೀವಕ್ಕೆ ಸಂಚಕಾರವನ್ನು(ಮುಂಗಡವನ್ನು) ಬಹಳ ಬೇಡಿದಾಗ ಕೊಟ್ಟೆವು; ಅಪೇಕ್ಷೆ ಇದ್ದರೆ ನಿನ್ನ ತಲೆಯ ಬೆಲೆಗೆ ನನ್ನಲ್ಲಿ ಸಾಹಸವೆಂಬ ದ್ರವ್ಯವು ಇದೆ', ಎಂದು ಬಭ್ರುವಾಹನನು ಅಪಹಾಸ್ಯ ಮಾಡಿದನುದನು ].
  • ತಾತ್ಪರ್ಯ:ಅರ್ಜುನನ್ನು ಕುರಿತು,'ಎಲೆ ಪಾರ್ಥ, ನಾವು ವೈಶ್ಯಕುದಲ್ಲಿ ಹುಟ್ಟಿದವರು ಆಗಿರುವೆವು; ನಿಮ್ಮ ಸೈನ್ಯ ಸಮೂಹದಲ್ಲಿ ಬಾಣಗಳ ವಿಸ್ತಾರವನ್ನು ಹರಡಿ ಗೆಲವಿನ ಅಗ್ಗದಲ್ಲಿ ಲಾಭವನ್ನು ಪಡೆದೆವು; ವೀರರ ತಲೆಗಳನ್ನು ಹುಡುಕಿ ಕೊಂಡುಕೊಂಡೆವು/ತೆಗೆದುಕೊಂಡೆವು. ವೀರರು ಬಂದು ಜೀವಕ್ಕೆ ಸಂಚಕಾರವನ್ನು(ಮುಂಗಡವನ್ನು) ಬಹಳ ಬೇಡಿದಾಗ ಕೊಟ್ಟೆವು; ಅಪೇಕ್ಷೆ ಇದ್ದರೆ ನಿನ್ನ ತಲೆಯ ಬೆಲೆಗೆ ನನ್ನಲ್ಲಿ ಸಾಹಸವೆಂಬ ದ್ರವ್ಯವು/ಹಣ ಇದೆ', ಎಂದು ಬಭ್ರುವಾಹನನು ಅಪಹಾಸ್ಯ ಮಾಡಿದನು.
  • (ಪದ್ಯ-೩೧)

ಪದ್ಯ:-:೩೨:

[ಸಂಪಾದಿಸಿ]

ಇವರೊಳೇನಹುದಿನ್ನು ವೀರನೀ ಕರ್ಣಸುತ |
ನಿವನ ತಲೆಯಂ ಸಮರ್ಪಿಸು ಮಹಾದೇವಂಗೆ |
ತವೆ ರುಂಡಮಾಲೆಯೊಳ್ ಪೂಜ್ಯಮಾಗಿಹುದೀಶ್ವರ ಪ್ರೀತಿಯಹುದು ನಿನಗೆ ||
ಶಿವನಂದು ಪಾಶುಪತ ಬಾಣಮಂ ಕೊಟ್ಟುದಿ |
ಲ್ಲವೆ ನಿಜಸ್ವಾಮಿಯಂ ಮರೆದಪರೆ ಸಾಕಿದರ |
ಬವಣೆಯೇತಕೆ ನಮಗೆ ಕಾದುವೆಯೊತುರಗಮಂ ಬಿಟ್ಟಪೆಯೊ ಪೇಳೆಂದನು ||32||

ಪದವಿಭಾಗ-ಅರ್ಥ:
ಇವರೊಳು ಏನಹುದು ಇನ್ನು ವೀರನು ಈ ಕರ್ಣಸುತನು ಇವನ ತಲೆಯಂ ಸಮರ್ಪಿಸು ಮಹಾದೇವಂಗೆ ತವೆ ರುಂಡಮಾಲೆಯೊಳ್ ಪೂಜ್ಯಮಾಗಿಹುದು ಈಶ್ವರ ಪ್ರೀತಿಯಹುದು ನಿನಗೆ=[ಮರಣ ಹೊಂದಿದ ಇವರಲ್ಲಿ ಏನಾಗುವುದು ಇನ್ನು- ಇನ್ನು ಏನೂ ಪ್ರಯೋಜನವಿಲ್ಲ., ಈ ಕರ್ಣಸುತನು ವೀರನು; ಇವನ ತಲೆಯನ್ನು ಮಹಾದೇವನಿಗೆ ಸಮರ್ಪಿಸು; ಅವನ ರುಂಡಮಾಲೆಯಲ್ಲಿ ಪೂಜ್ಯವಾಗಿ ಇರುವುದು; ನಿನಗೆ ಈಶ್ವರನ ಪ್ರೀತಿ ಸಿಗುವುದು];; ಶಿವನಂದು ಪಾಶುಪತ ಬಾಣಮಂ ಕೊಟ್ಟುದಿಲ್ಲವೆ ನಿಜಸ್ವಾಮಿಯಂ ಮರೆದಪರೆ ಸಾಕಿದರ ಬವಣೆಯೇತಕೆ ನಮಗೆ ಕಾದುವೆಯೊ ತುರಗಮಂ ಬಿಟ್ಟಪೆಯೊ ಪೇಳೆಂದನು=[ಶಿವನು ಹಿಂದೆ ಪಾಶುಪತ ಅಸ್ತ್ರವನ್ನು ನಿನಗೆ ಕೊಟ್ಟಿರುವುದಿಲ್ಲವೆ? ತನ್ನ ಸ್ವಾಮಿಯನ್ನು ಮರೆಯುವರೆ? ಸಾಕು ಇದರ ಚಿಂತೆಯೇಕೆ ನಮಗೆ; ಯುದ್ಧಮಾಡುವೆಯೊ ಕುದುರೆಯನ್ನು ಬಿಟ್ಟು ಹೋಗುವೆಯೊ? ಹೇಳು ಎಂದನು, ಬಭ್ರುವಾಹನ.]
  • ತಾತ್ಪರ್ಯ:ಮರಣ ಹೊಂದಿದ ಇವರಲ್ಲಿ ಏನಾಗುವುದು ಇನ್ನು- ಇನ್ನು ಏನೂ ಪ್ರಯೋಜನವಿಲ್ಲ., ಈ ಕರ್ಣಸುತನು ವೀರನು; ಇವನ ತಲೆಯನ್ನು ಮಹಾದೇವನಿಗೆ ಸಮರ್ಪಿಸು; ಅವನ ರುಂಡಮಾಲೆಯಲ್ಲಿ ಪೂಜ್ಯವಾಗಿ ಇರುವುದು; ನಿನಗೆ ಈಶ್ವರನ ಪ್ರೀತಿ ಸಿಗುವುದು; ಶಿವನು ಹಿಂದೆ ಪಾಶುಪತ ಅಸ್ತ್ರವನ್ನು ನಿನಗೆ ಕೊಟ್ಟಿರುವುದಿಲ್ಲವೆ? ತನ್ನ ಸ್ವಾಮಿಯನ್ನು ಮರೆಯುವರೆ? ಸಾಕು ಇದರ ಚಿಂತೆಯೇಕೆ ನಮಗೆ; ಯುದ್ಧಮಾಡುವೆಯೊ ಕುದುರೆಯನ್ನು ಬಿಟ್ಟು ಹೋಗುವೆಯೊ? ಹೇಳು ಎಂದನು, ಬಭ್ರುವಾಹನ.
  • (ಪದ್ಯ-೩೨)

ಪದ್ಯ:-:೩೩:

[ಸಂಪಾದಿಸಿ]

ನೋಡಿದಂ ತಿರುಗಿ ಕಣ್ಣಾಲಿಗಳ್ ಕೆಂಪಡರೆ |
ಮಾಡಿದಂ ಕೋಪಮಂ ಧೈರ್ಯದಿಂದಳಲನೀ |
ಡಾಡಿಮಂ ಕರ್ಣಜನ ಶಿರವನಲ್ಲಿರಿಸಿದಂ ಕೊಂಡನುರು ಕಾರ್ಮುಕವನು ||
ತೀಡಿದಂ ಜೇಗೈದು ತಿರುವಿನೊಳ್ ಬಾಣಮಂ |
ಪೂಡಿದಂ ತೆಗೆದೆಚ್ಚು ರುಧಿರ ಪ್ರವಾಹವಂ |
ತೋಡಿದಂ ಬಭ್ರುವಾಹನನ ಸರ್ವಾಂಗದೊಳ್ ಕಲಿಪಾರ್ಥನಾ ಕ್ಷಣದೊಳು ||33||

ಪದವಿಭಾಗ-ಅರ್ಥ:
ನೋಡಿದಂ ತಿರುಗಿ ಕಣ್ಣಾಲಿಗಳ್ ಕೆಂಪಡರೆ ಮಾಡಿದಂ ಕೋಪಮಂ ಧೈರ್ಯದಿಂದಳಲನೀಡಾಡಿಮಂ ಕರ್ಣಜನ ಶಿರವನಲ್ಲಿರಿಸಿದಂ ಕೊಂಡನುರು ಕಾರ್ಮುಕವನು=[ಪಾರ್ಥನು, ಬಭ್ರುವಾಹನನ್ನು ತಿರುಗಿ ನೋಡಿದನು, ಕಣ್ಣುಗುಡ್ಡೆಗಳು ಕೆಂಪಡರಲು, ಕೋಪತಾಳಿದನು, ಧೈರ್ಯದಿಂದ ದುಃಖವನ್ನು ತೊಲಗಿಸಿದನು; ಕರ್ಣಜನ ತಲೆಯನ್ನು ಪಕ್ಕದಲ್ಲಿ ಇರಿಸಿದನು; ಬಿಲ್ಲನ್ನು ಕೈಗೆ ತೆಗೆದುಕೊಂಡನು.]; ತೀಡಿದಂ ಜೇಗೈದು ತಿರುವಿನೊಳ್ ಬಾಣಮಂ ಪೂಡಿದಂ ತೆಗೆದೆಚ್ಚು ರುಧಿರ ಪ್ರವಾಹವಂ ತೋಡಿದಂ (ಗಾಯಮಾಡಿದನು) ಬಭ್ರುವಾಹನನ ಸರ್ವಾಂಗದೊಳ್ ಕಲಿಪಾರ್ಥನಾ ಕ್ಷಣದೊಳು=[ಬಿಲ್ಲನ್ನು ಸವರಿ,ಝೇಂಕಾರ ಮಾಡಿ, ಹೆದೆಯಲ್ಲಿ ಬಾಣವನ್ನು ಹೂಡಿದನು, ತೆಗೆದು ಬಾಣಪ್ರಯೋಗಮಾಡಿ ರಕ್ತಪ್ರವಾಹವನ್ನು ಹರಿಸಿದನು. ಆ ಸಮಯದಲ್ಲಿ ಕಲಿಪಾರ್ಥನು ಬಭ್ರುವಾಹನನ ದೇಹದ ತುಂಬಾ ಗಾಯ ಮಾಡಿದನು].
  • ತಾತ್ಪರ್ಯ:ಪಾರ್ಥನು, ಬಭ್ರುವಾಹನನ್ನು ತಿರುಗಿ ನೋಡಿದನು, ಕಣ್ಣುಗುಡ್ಡೆಗಳು ಕೆಂಪಡರಲು, ಕೋಪತಾಳಿದನು, ಧೈರ್ಯದಿಂದ ದುಃಖವನ್ನು ತೊಲಗಿಸಿದನು; ಕರ್ಣಜನ ತಲೆಯನ್ನು ಪಕ್ಕದಲ್ಲಿ ಇರಿಸಿದನು; ಬಿಲ್ಲನ್ನು ಕೈಗೆ ತೆಗೆದುಕೊಂಡನು. ಬಿಲ್ಲನ್ನು ಸವರಿ,ಝೇಂಕಾರ ಮಾಡಿ, ಹೆದೆಯಲ್ಲಿ ಬಾಣವನ್ನು ಹೂಡಿದನು, ತೆಗೆದು ಬಾಣಪ್ರಯೋಗಮಾಡಿ ರಕ್ತಪ್ರವಾಹವನ್ನು ಹರಿಸಿದನು. ಆ ಸಮಯದಲ್ಲಿ ಕಲಿಪಾರ್ಥನು ಬಭ್ರುವಾಹನನ ದೇಹದ ತುಂಬಾ ಗಾಯ ಮಾಡಿದನು.
  • (ಪದ್ಯ-೩೩)

ಪದ್ಯ:-:೩೪:

[ಸಂಪಾದಿಸಿ]

ಮೈಸಿರಿಯಳಲ್ಗಳಿವು ಲೇಸಾಯ್ತು ಪಗೆಯ ಮಗ |
ನೈಸಲೇ ಕರ್ಣಜಂ ಸಾಕಿವೇ(ದೇ)ತಕೆ ಬರಿದೆ |
ವೈಸಿಕದ ಬಾಣಪ್ರಯೋಗಂಗಳಿಂದ್ರ ಕೀಲದೊಳುಮಾಕಾಂತನಿಂದೆ ||
ಕೈಸಾರ್ದ ಸಾಯಕವನುಗಿಯೆನುತಪಾರ್ಥನಂ |
ವೈಸರಿಸದೆಚ್ಚನೀ ಬಭ್ರುವಾಹನನ ಕಣೆ |
ಗೈಸದು ನಭೋವಲಯಮೆನೆ ಕವಿದುವಂಬುಗಳ್ ದೇವತತಿ ಬೆರಗಾಗಲು ||34||

ಪದವಿಭಾಗ-ಅರ್ಥ:
ಮೈಸಿರಿಯ (ಎದುರಿಗೆ ತೋರುವ ಕೇವಲ ದೇಹಕ್ಕೆ ಸಂಬಮಧಪಟ್ಟ, ಮನಃ ಪೂರ್ವಕ ಅಲ್ಲದ೦) ಅಳಲ್ಗಳು ಇವು ಲೇಸಾಯ್ತು ಪಗೆಯ ಮಗನೈಸಲೇ ಕರ್ಣಜಂ ಸಾಕಿದೇತಕೆ ಬರಿದೆ ವೈಸಿಕದ ಬಾಣಪ್ರಯೋಗಂಗಳು ಇಂದ್ರಕೀಲದೊಳು ಉಮಾಕಾಂತನಿಂದೆ=[ಮೈಸಿರಿಯ/ಕೇವಲ ದೇಹ ಸಂಪತ್ತಿನ/ ತೋರಿಕೆಯ ದುಃಖ ನಿನ್ನದು, ಆಗಿದ್ದು ಒಳ್ಳೆಯದು, ನಿನ್ನ ಶತ್ರುವಿನ ಮಗನಲ್ಲವೇ ವೃಷಕೇತು, ಸಾಕು ಇದೇಕೆ ಬರಿದೆ ಅಪ್ರಯೊಜಕ ಬಾಣಪ್ರಯೋಗಗಳು ಇಂದ್ರಕೀಲದಲ್ಲಿ ಉಮಾಕಾಂತ- ಶಿವನಿಂದ ]; ಕೈಸಾರ್ದ ಸಾಯಕವನು ಉಗಿಯೆನುತ ಪಾರ್ಥನಂ ವೈಸರಿಸದೆ ಎಚ್ಚನೀ ಬಭ್ರುವಾಹನನ ಕಣೆಗೈಸು ಅದು ನಭೋವಲಯಂ ಎನೆ ಕವಿದುವು ಅಂಬುಗಳ್ ದೇವತತಿ ಬೆರಗಾಗಲು=[ಪಡೆದ ಅಸ್ತ್ರವನ್ನು ತೆಗೆ ಎನ್ನುತ್ತಾ ಪಾರ್ಥನನ್ನು ಲೆಕ್ಕಿಸದೆ ಹೊಡೆದನು ಈ ಬಭ್ರುವಾಹನನು; ಅವನ ಬಾಣಚಳಕ/ ಬಾಣಪ್ರಯೋಗ ಆಕಾಶವನ್ನು ವ್ಯಾಪಿಸಿತು ಎನ್ನುವಂತೆ ಬಾಣಗಳು ಎಲ್ಲಡೆ ಕವಿದುವು.]
  • ತಾತ್ಪರ್ಯ:ನಿನ್ನದು ಕೇವಲ ದೇಹ ಸಂಪತ್ತಿನ/ ತೋರಿಕೆಯ ದುಃಖ ನಿನ್ನದು, ಆಗಿದ್ದು ಒಳ್ಳೆಯದು, ನಿನ್ನ ಶತ್ರುವಿನ ಮಗನಲ್ಲವೇ ವೃಷಕೇತು, ಸಾಕು ಇದೇಕೆ ಬರಿದೆ ಅಪ್ರಯೊಜಕ ಬಾಣಪ್ರಯೋಗಗಳು ಇಂದ್ರಕೀಲದಲ್ಲಿ ಉಮಾಕಾಂತ- ಶಿವನಿಂದ ಪಡೆದ ಅಸ್ತ್ರವನ್ನು ತೆಗೆ ಎನ್ನುತ್ತಾ ಪಾರ್ಥನನ್ನು ಲೆಕ್ಕಿಸದೆ ಹೊಡೆದನು ಈ ಬಭ್ರುವಾಹನನು; ಅವನ ಬಾಣಚಳಕ/ ಬಾಣಪ್ರಯೋಗ ಆಕಾಶವನ್ನು ವ್ಯಾಪಿಸಿತು ಎನ್ನುವಂತೆ ಬಾಣಗಳು ಎಲ್ಲಡೆ ಕವಿದುವು.
  • (ಪದ್ಯ-೩೪)

ಪದ್ಯ:-:೩೫:

[ಸಂಪಾದಿಸಿ]

ಮತ್ತವು ಮಸುಳ್ವಂತೆ ನರನಾರ್ದು ತೆಗೆದಿಸಲ್ |
ಪೆತ್ತುವು ಸರಳ್ಗಳೊಂದೊಂದಯುತ ನಿಯುತಮಂ |
ಪೊತ್ತುವು ಸರಳ್ಗಳೊಂದೊಂದಯುತ ನಿಯುತಮಂ |
ಪೊತ್ತುವು ನಭಸ್ಥಳಕೆ ಕೊಂಡು ರಿಪುಸೇನೆಯಂ ತಾರೆಗಳನುದಿರಿಸಿದುವು||
ಕಿತ್ತುವು ಕುಲಾದ್ರಿಗಳನಾಗಸದ ಬಟ್ಟೆಯಂ |
ಕೆತ್ತುವು ದಿಗಂತಮಂ ತುಂಬಿದುವು ಬಾಣಂಗ |
ಳಿತ್ತುವು ಜಗತ್ತ್ರಯಕೆ ಕಂಪಮಂ ಪಿಂತೆಂದುಮಿಲ್ಲಿದು ವಿಚಿತ್ರಮೆನಲು ||35||

ಪದವಿಭಾಗ-ಅರ್ಥ:
ಮತ್ತವು ಮಸುಳ್ವಂತೆ ನರನು ಆರ್ದು ತೆಗೆದು ಇಸಲ್ ಪೊತ್ತುವು ಸರಳ್ಗಳು ಒಂದೊಂದು ಅಯುತ (ಹತ್ತು ಸಾವಿರ , ಲೆಕ್ಕವಿಲ್ಲದಷ್ಟು) ನಿಯುತಮಂ ಪೊತ್ತುವು ನಭಸ್ಥಳಕೆ ಕೊಂಡು ರಿಪುಸೇನೆಯಂ ತಾರೆಗಳನುದಿರಿಸಿದುವು=[ ಅರ್ಜುನನು ಆರ್ಭಟಿಸಿ ತೆಗೆದು ಹೊಡೆಯಲು, ಮತ್ತೆ ಅವು ಕತ್ತಲಾಗುವಂತೆ ಪೊತ್ತುವು ಬಾಣಗಳು ಒಂದೊಂದು ಹತ್ತು ಸಾವಿರ/, ಲೆಕ್ಕವಿಲ್ಲದಷ್ಟು ಸೇರಿಕೊಂಡು ಶತ್ರುಸೇನೆಯನ್ನು ಆಕಾಶಕ್ಕೆ ಹೊತ್ತಕೊಂಡುಹೋದವು; ನಕ್ಷತ್ರಗಳನ್ನು ಉದಿರಿಸಿದುವು]; ಕಿತ್ತುವು ಕುಲಾದ್ರಿಗಳನು ಆಗಸದ ಬಟ್ಟೆಯಂ ಕೆತ್ತುವು ದಿಗಂತಮಂ ತುಂಬಿದುವು ಬಾಣಂಗಳಿತ್ತುವು ಜಗತ್ತ್ರಯಕೆ ಕಂಪಮಂ ಪಿಂತೆ ಎಂದುಂ ಇಲ್ಲಿದು ವಿಚಿತ್ರಂ ಎನಲು=[ಮಹಾ ಬೆಟ್ಟಗಳಾದ ಕುಲಾದ್ರಿಗಳನ್ನು ಕಿತ್ತುವು, ಆಗಸದಲ್ಲಿ ದಾರಿಯನ್ನು ರಚಿಸಿದವು; ದಿಗಂತವನ್ನು ತುಂಬಿದುವು; ಈ ಬಾಣಗಳು ಮೂರುಲೋಕ್ಕೂ ನಡುಕವನ್ನು ಉಂಟುಮಾಡಿದವು; ಹಿಂದೆ ಯಾವಾಗಲೂ ಈ ವಿಚಿತ್ರವು ಆಗಿಲ್ಲ ಎನ್ನುವಂತಿತ್ತು.]
  • ತಾತ್ಪರ್ಯ: ಅರ್ಜುನನು ಆರ್ಭಟಿಸಿ ತೆಗೆದು ಹೊಡೆಯಲು, ಮತ್ತೆ ಅವು ಕತ್ತಲಾಗುವಂತೆ ಹೆಚ್ಚಾದವು, ಬಾಣಗಳು ಒಂದೊಂದು ಹತ್ತು ಸಾವಿರ/, ಲೆಕ್ಕವಿಲ್ಲದಷ್ಟು ಸೇರಿಕೊಂಡು ಶತ್ರುಸೇನೆಯನ್ನು ಆಕಾಶಕ್ಕೆ ಹೊತ್ತಕೊಂಡುಹೋದವು; ನಕ್ಷತ್ರಗಳನ್ನು ಉದಿರಿಸಿದುವು; ಮಹಾ ಬೆಟ್ಟಗಳಾದ ಕುಲಾದ್ರಿಗಳನ್ನು ಕಿತ್ತುವು, ಆಗಸದಲ್ಲಿ ದಾರಿಯನ್ನು ರಚಿಸಿದವು; ದಿಗಂತವನ್ನು ತುಂಬಿದುವು; ಈ ಬಾಣಗಳುಮೂರುಲೋಕ್ಕೂ ನಡುಕವನ್ನು ಉಂಟುಮಾಡಿದವು; ಹಿಂದೆ ಯಾವಾಗಲೂ ಈ ವಿಚಿತ್ರವು ಆಗಿಲ್ಲ ಎನ್ನುವಂತಿತ್ತು.]
  • (ಪದ್ಯ-೩೫)

ಪದ್ಯ:-:೩೬:

[ಸಂಪಾದಿಸಿ]

ಕೊರೆದುವಂಗೋಪಾಂಗಮಂ ಪಾರ್ಥನಂಬುಗಳ್ |
ತೆರದ ಜಾಳಾಂದ್ರದಂತಾಯ್ತುಗಿದ ಬಟ್ಟೆಗಳ್ |
ಕರೆದ ಪರ್ಮಳೆಯಿಂದೆ ನನೆದ ಜಾದಿನ ಗಿರಿಯೊಳಿರದಿಳಿವ ಕೆಂಬೊನಲ್ಗಳ ||
ತೆರದೊಳೆಸೆದುವು ರಕ್ತಧಾರೆಗಳ್ ಗಾಯದೊಳ್ |
ಮರೆದನೊಡಲಂ ನಿಮಿಷಕೊಡನೆ ತರಹರಿಸಿದಂ |
ಜರೆದನರ್ಜುನನಂ ರಣಾಗ್ರದೊಳ್ ಮೂದಲಿಸಿ ಬಭ್ರುವಾಹನಂ ಕನಲ್ದು ||36||

ಪದವಿಭಾಗ-ಅರ್ಥ:
ಕೊರೆದುವು ಅಂಗೋಪಾಂಗಮಂ ಪಾರ್ಥನ ಅಂಬುಗಳ್ ತೆರದ ಜಾಳಾಂದ್ರದಂತೆ ಆಯ್ತು ಉಗಿದ ಬಟ್ಟೆಗಳ್=[ಪಾರ್ಥನ ಬಾಣಗಳು ಬಭ್ರವಾಹನನ ಅಂಗೋಪಾಂಗವನ್ನು/ ಅಂಗಾಂಗಗಳನ್ನು ಕೊರೆದುವು, ಆಗ ತೆರೆದುತೋರುವ ಜಾಳಾಂದ್ರದಂತೆ/ ಜರಡಿಯಂತೆ ಆಯ್ತು; ];ಉಗಿದ ಬಟ್ಟೆಗಳ್ ಕರೆದ ಪರ್ಮಳೆಯಿಂದೆ ನನೆದ ಜಾದಿನ ಗಿರಿಯೊಳು ಇರದೆ ಇಳಿವ ಕೆಂಬು ಹೊನಲ್ಗಳ ತೆರದೊಳು ಎಸೆದುವು ರಕ್ತಧಾರೆಗಳ್ ಗಾಯದೊಳ್=[ಕರೆದ ದೊಡ್ಡ ಮಳೆಯಿಂದ ನನೆದ ಜಾಡುಗಳ ಗಿರಿಯಲ್ಲಿ ಕಾಲುವೆಯಾದ ದಾರಿಗಳಂತೆ ನಿಲ್ಲದೆ ಇಳಿಯುವ ಕೆಂಪು ನೀರಿನ ಹೊಳೆಯಂತೆ ಗಾಯದಲ್ಲಿ ರಕ್ತಧಾರೆಗಳು ಕಂಡವು]; ಮರೆದನು ಒಡಲಂ ನಿಮಿಷಕೊಡನೆ ತರಹರಿಸಿದಂ ಜರೆದನು ಅರ್ಜುನನಂ ರಣಾಗ್ರದೊಳ್ ಮೂದಲಿಸಿ ಬಭ್ರುವಾಹನಂ ಕನಲ್ದು=[ಈ ಹೊಡೆತಕ್ಕೆ ಬಭ್ರುವಾಹನನು ಎಚ್ಚರತಪ್ಪಿದನು; ನಿಮಿಷದಲ್ಲಿ ಚೇತರಿಸಿಕೊಂಡು ಅವನು ಸಿಟ್ಟಿನಿಂದ ಅರ್ಜುನನ್ನು ರಣರಂಗದ ಎದುರುಬಂದು, ಬಭ್ರುವಾಹನನು ಕೋಪಗೊಂಡು ಮೂದಲಿಸಿ ನಿಂದಿಸಿದನು].
  • ತಾತ್ಪರ್ಯ:ಪಾರ್ಥನ ಬಾಣಗಳು ಬಭ್ರವಾಹನನ ಅಂಗೋಪಾಂಗವನ್ನು/ ಅಂಗಾಂಗಗಳನ್ನು ಕೊರೆದುವು, ಆಗ ತೆರೆದುತೋರುವ ಜಾಳಾಂದ್ರದಂತೆ/ ಜರಡಿಯಂತೆ ಆಯ್ತು; ಸುರಿದ ದೊಡ್ಡ ಮಳೆಯಿಂದ ನನೆದ ಜಾಡುಗಳುಳ್ಳ ಗಿರಿಯಲ್ಲಿ ಕಾಲುವೆಯಾದ ದಾರಿಗಳಂತೆ ನಿಲ್ಲದೆ ಇಳಿಯುವ ಕೆಂಪು ನೀರಿನ ಹೊಳೆಯಂತೆ ಗಾಯದಲ್ಲಿ ರಕ್ತಧಾರೆಗಳು ಕಂಡವು; ಈ ಹೊಡೆತಕ್ಕೆ ಬಭ್ರುವಾಹನನು ಎಚ್ಚರತಪ್ಪಿದನು; ಬಭ್ರುವಾಹನನು ನಿಮಿಷದಲ್ಲಿ ಚೇತರಿಸಿಕೊಂಡು, ಸಿಟ್ಟಿನಲ್ಲಿ ಅರ್ಜುನನ್ನು ರಣರಂಗದ ಎದುರು ಬಂದು, ಕೋಪಗೊಂಡು ಮೂದಲಿಸಿ ನಿಂದಿಸಿದನು].
  • (ಪದ್ಯ-೩೬)

ಪದ್ಯ:-:೩೭:

[ಸಂಪಾದಿಸಿ]

ಕರ್ಣ ಭೀಷ್ಮ ದ್ರೋಣರಂ ಗೆಲ್ದು ಕೊಟ್ಟಂ ಸು |
ಪರ್ಣಧ್ವಜಂ ನಿನಗೆ ಕರುಣದಿಂ ಕಾದಿದ ನ |
ಪರ್ಣಾಧವಂ ನಿನ್ನೊಳಗ್ಗಳಿಕೆ ಪಿರಿದೆಂದು ಮೇದಿನಿಯೊಳರಿಯದವರು ||
ವರ್ಣಿಸುವರೆಂದು ಬೆರೆತಿಹೆ ತನ್ನ ಸಮರಮಂ |
ನಿರ್ಣೈಸಿದೊಡೆ ವೀರನಹುದೆಂದು ಬಾಣಮಯ |
ದರ್ಣವಮಿದೆತ್ತಣಿಂ ಮೇರೆದಪ್ಪದುದೆನಲ್ ಬಭ್ರುವಾಹನನೆಚ್ಚಲು(ನು) ||37||

ಪದವಿಭಾಗ-ಅರ್ಥ:
ಕರ್ಣ ಭೀಷ್ಮ ದ್ರೋಣರಂ ಗೆಲ್ದು ಕೊಟ್ಟಂ ಸುಪರ್ಣಧ್ವಜಂ ನಿನಗೆ ಕರುಣದಿಂ ಕಾದಿದ ನಪರ್ಣಾಧವಂ ನಿನ್ನೊಳಗ್ಗಳಿಕೆ ಪಿರಿದೆಂದು ಮೇದಿನಿಯೊಳರಿಯದವರು=[ಕರ್ಣ ಭೀಷ್ಮ ದ್ರೋಣರನ್ನು ಗೆದ್ದು ಕೊಟ್ಟನು ಕೃಷ್ಣನು; ನಿನ್ನನ್ನು ಕರುಣದಿಂದ ಕಾಪಾಡಿದನು ಆ ಕೃಷ್ಣನು; ನಿನ್ನ ಶ್ರೇಷ್ಠತೆ ದೊಡ್ಡದೆಂದು ಭೂಮಿಯಮೇಲಿನ ಅರಿಯದ ಜನರು ]; ವರ್ಣಿಸುವರೆಂದು ಬೆರೆತಿಹೆ ತನ್ನ ಸಮರಮಂ ನಿರ್ಣೈಸಿದೊಡೆ ವೀರನಹುದೆಂದು ಬಾಣಮಯದ ಅರ್ಣವಂ ಇದು ಎತ್ತಣಿಂ ಮೇರೆದಪ್ಪದುದು ಎನಲ್ ಬಭ್ರುವಾಹನನು ಎಚ್ಚಲು=[ವರ್ಣಿಸುವರೆಂದು ಹಿರಿತನ ಹೊಂದಿರುವೆ; ತನ್ನೊಡನೆ ಯುದ್ಧದಲ್ಲಿ ಹೆಚ್ಚುಗಾರಿಕೆ ನಿರ್ಣೈಸಿದರೆ ನಿಜವಾದ ವೀರನು ಅಹುದು, ಎಂದು ಬಾಣಮಯದ ಸಮುದ್ರವು ಇದು ಎಲ್ಲಿಂದ ಮಿತಿಯನ್ನು ದಾಟಿತು ಎನ್ನುವಂತೆ ಬಭ್ರುವಾಹನನು ಬಾಣ ಹೊಡೆದನು.]
  • ತಾತ್ಪರ್ಯ:ಕರ್ಣ ಭೀಷ್ಮ ದ್ರೋಣರನ್ನು ಗೆದ್ದು ಕೊಟ್ಟನು ಕೃಷ್ಣನು; ನಿನ್ನನ್ನು ಕರುಣದಿಂದ ಕಾಪಾಡಿದನು ಆ ಕೃಷ್ಣನು; ನಿನ್ನ ಶ್ರೇಷ್ಠತೆ ದೊಡ್ಡದೆಂದು ಭೂಮಿಯಮೇಲಿನ ಅರಿಯದ ಜನರು ವರ್ಣಿಸುವರೆಂದು ಹಿರಿತನ ಹೊಂದಿರುವೆ; ತನ್ನೊಡನೆ ಯುದ್ಧದಲ್ಲಿ ಹೆಚ್ಚುಗಾರಿಕೆ ನಿರ್ಣೈಸಿದರೆ ನಿಜವಾದ ವೀರನು ಅಹುದು, ಎಂದು ಬಾಣಮಯದ ಸಮುದ್ರವು ಇದು ಎಲ್ಲಿಂದ ಮಿತಿಯನ್ನು ದಾಟಿತು ಎನ್ನುವಂತೆ ಬಭ್ರುವಾಹನನು ಬಾಣ ಹೊಡೆದನು.
  • (ಪದ್ಯ-೩೭)

ಪದ್ಯ:-:೩೮:

[ಸಂಪಾದಿಸಿ]

ಕೆತ್ತಿದುವು ದಿಕ್ತಟದ ಭಿತ್ತಿಗಳನದ್ರಿಗಳ |
ನೆತ್ತಿದುವು ಧರೆಯನುಚ್ಚಿಳಿಸಿ ಕೂರ್ಮನ ಬೆನ್ನ |
ನೊತ್ತಿದುವು ಕಲಕಿದುವು ಸಾಗರವನಾದಿತ್ಯಮಂಡಲವ ನಂಡಲೆದುವು ||
ಮುತ್ತಿದುವು ಬಾಂದಳವನೆಲ್ಲವಂ ಕೆಲಕೆಲವು
ಪತ್ತಿದವು ಪರಿದುವಿಳಿದುವು ಸಕಲಲೋಕಕ್ಕೆ |
ಬಿತ್ತಿದುವು ಭೀತಿಯಂ ಬಭ್ರುವಾಹನನ ಶರಜಾಲಮದನೇವೇಳ್ವೆನು ||38||

ಪದವಿಭಾಗ-ಅರ್ಥ:
ಕೆತ್ತಿದುವು ದಿಕ್ತಟದ ಭಿತ್ತಿಗಳನು, ಅದ್ರಿಗಳ ನೆತ್ತಿದುವು ಧರೆಯನುಚ್ಚಿಳಿಸಿ ಕೂರ್ಮನ ಬೆನ್ನನು ಒತ್ತಿದುವು, ಕಲಕಿದುವು ಸಾಗರವನು ಆದಿತ್ಯಮಂಡಲವನು ಅಂಡಲೆದುವು=[ಬಭ್ರುವಾಹನನ ಬಾಣಗಳು, ದಿಕ್ಕುಗಳ ತುದಿಯ ಗಡಿಗಳನ್ನು ಹೊಡೆದು ಘಾಸಿಮಾಡಿದವು; ಬೆಟ್ಟಗಳನ್ನು ಎತ್ತಿದುವು; ಭೂಮಿಯನ್ನು ದಾಟಿ ಸಮುದ್ರದ ತಳದಲ್ಲಿರುವ ಕೂರ್ಮನ ಬೆನ್ನನು ಒತ್ತಿದುವು, ಸಮುದ್ರವನ್ನು ಕಲಕಿದುವು/ಕದಡಿದವು; ಸೂರ್ಯಮಂಡಲವನು ಮುಟ್ಟಿ ಅಲ್ಲಿ ಸುತ್ತಾಡಿದವು]; ಮುತ್ತಿದುವು ಬಾಂದಳವನು ಎಲ್ಲವಂ ಕೆಲಕೆಲವು ಪತ್ತಿದವು ಪರಿದುವು ಇಳಿದುವು ಸಕಲಲೋಕಕ್ಕೆ ಬಿತ್ತಿದುವು ಭೀತಿಯಂ ಬಭ್ರುವಾಹನನ ಶರಜಾಲಂ ಅದನು ಏವೇಳ್ವೆನು=[ಬಭ್ರುವಾಹನನ ಬಾಣಗಳ ಜಾಲ, ಎಲ್ಲಾ ದಿಗಂತವನ್ನು/ಬಾಂದಳವನು ಮುತ್ತಿದುವು; ಆ ಬಾಣಗಳಲ್ಲಿ ಕೆಲಕೆಲವು ಹತ್ತಿದವು, ಹರಿ/ಹೋದವು; ಸಕಲಲೋಕಕ್ಕೆ ಇಳಿದವು; ಅಲ್ಲಿ ಭೀತಿಯನ್ನು ಉಂಟುಮಾಡಿದವು, ಅದನ್ನು ಏನು ಹೇಳಲಿ!];
  • ತಾತ್ಪರ್ಯ:ಬಭ್ರುವಾಹನನ ಬಾಣಗಳು, ದಿಕ್ಕುಗಳ ತುದಿಯ ಗಡಿಗಳನ್ನು ಹೊಡೆದು ಘಾಸಿಮಾಡಿದವು; ಬೆಟ್ಟಗಳನ್ನು ಎತ್ತಿದುವು; ಭೂಮಿಯನ್ನು ದಾಟಿ ಸಮುದ್ರದ ತಳದಲ್ಲಿರುವ ಕೂರ್ಮನ ಬೆನ್ನನು ಒತ್ತಿದುವು, ಸಮುದ್ರವನ್ನು ಕಲಕಿದುವು/ಕದಡಿದವು; ಸೂರ್ಯಮಂಡಲವನು ಮುಟ್ಟಿ ಅಲ್ಲಿ ಸುತ್ತಾಡಿದವು; ಬಭ್ರುವಾಹನನ ಬಾಣಗಳ ಜಾಲ,ಎಲ್ಲಾ ದಿಗಂತವನ್ನು/ಬಾಂದಳವನು ಮುತ್ತಿದುವು; ಆ ಬಾಣಗಳಲ್ಲಿ ಕೆಲಕೆಲವು ಹತ್ತಿದವು, ಹರಿ/ಹೋದವು; ಸಕಲಲೋಕಕ್ಕೆ ಇಳಿದವು; ಅಲ್ಲಿ ಭೀತಿಯನ್ನು ಉಂಟುಮಾಡಿದವು, ಅದನ್ನು ಏನು ಹೇಳಲಿ!
  • (ಪದ್ಯ-೩೮)IX

ಪದ್ಯ:-:೩೯:

[ಸಂಪಾದಿಸಿ]

ಹಾರಿಸಿತು ರಥಮಂ ತುರಂಗಮಂ ರುಧಿರಮಂ |
ಕಾರಿಸಿತು ಸಾರಥಿಯ ಜೀವಮಂ ಸುರಲೋಕ |
ಕೇರಿಸಿತು ಛತ್ರಚಾಮರ ಪತಾಕಾಳಿಯಂ ಕೆಂಗರಿಯ ಗಾಳಿಯಿಂದೆ ||
ತೂರಿಸಿತು ಟೆಕ್ಕೆಯದ ಮೇಲೆ ಹನುಮಂತನಂ |
ಚೀರಿಸಿತು ಪಾರ್ಥನ ಶರೀರದೊಳ್ ಬಟ್ಟೆಯಂ |
ತೋರಿಸಿತು ಬಭ್ರುವಾಹನನ ಶರ ಸಂಕುಲಂ ಫಲುಗುಣಂ ಕಂಪಿಸಲ್ಕೆ||39||

ಪದವಿಭಾಗ-ಅರ್ಥ:
ಹಾರಿಸಿತು ರಥಮಂ ತುರಂಗಮಂ ರುಧಿರಮಂ ಕಾರಿಸಿತು ಸಾರಥಿಯ ಜೀವಮಂ ಸುರಲೋಕ ಕೇರಿಸಿತು ಛತ್ರಚಾಮರ ಪತಾಕಾಳಿಯಂ ಕೆಂಗರಿಯ ಗಾಳಿಯಿಂದೆ=[ರಥವನ್ನು ಹಾರಿಸಿತು; ತುರಗವನ್ನು ರಕ್ತ ಕಾರುವಂತೆ ಮಾಡಿಸತು; ಸಾರಥಿಯ ಜೀವವನ್ನು ಸ್ವರ್ಗಕ್ಕೆ ಏ/ಸೇರಿಸಿತು; ಛತ್ರಚಾಮರ ಪತಾಕೆಗಳನ್ನು ಬಾಣಗಳ ಕೆಂಪುಗರಿಯ ಗಾಳಿಯಿಂದ ];; ತೂರಿಸಿತು ಟೆಕ್ಕೆಯದ ಮೇಲೆ ಹನುಮಂತನಂ ಚೀರಿಸಿತು ಪಾರ್ಥನ ಶರೀರದೊಳ್ ಬಟ್ಟೆಯಂ ತೋರಿಸಿತು ಬಭ್ರುವಾಹನನ ಶರ ಸಂಕುಲಂ ಫಲುಗುಣಂ ಕಂಪಿಸಲ್ಕೆ=[ತೂರಿಸಿತು; ಧ್ವಜದ ಮೇಲೆ ಇದ್ದ ಹನುಮಂತನನ್ನು ಚೀರುವಂತೆಮಾಡಿತು; ಪಾರ್ಥನ ಶರೀರದಲ್ಲಿ ದಾರಿಯನ್ನು ತೋರಿಸಿತು; ಹೀಗೆಬಭ್ರುವಾಹನನ ಬಾಣಗಳಸಂಕುಲಂ ಫಲುಗುಣನು ಕಂಪಿಸುವಂತೆಮಾಡಿತು.]
  • ತಾತ್ಪರ್ಯ:ರಥವನ್ನು ಹಾರಿಸಿತು; ತುರಗವನ್ನು ರಕ್ತ ಕಾರುವಂತೆ ಮಾಡಿಸತು; ಸಾರಥಿಯ ಜೀವವನ್ನು ಸ್ವರ್ಗಕ್ಕೆ ಏ/ಸೇರಿಸಿತು; ಛತ್ರಚಾಮರ ಪತಾಕೆಗಳನ್ನು ಬಾಣಗಳ ಕೆಂಪುಗರಿಯ ಗಾಳಿಯಿಂದ ತೂರಿಸಿತು; ಧ್ವಜದ ಮೇಲೆ ಇದ್ದ ಹನುಮಂತನನ್ನು ಚೀರುವಂತೆಮಾಡಿತು; ಪಾರ್ಥನ ಶರೀರದಲ್ಲಿ ದಾರಿಯನ್ನು ತೋರಿಸಿತು; ಹೀಗೆಬಭ್ರುವಾಹನನ ಬಾಣಗಳಸಂಕುಲಂ ಫಲುಗುಣನು ಕಂಪಿಸುವಂತೆಮಾಡಿತು.]
  • (ಪದ್ಯ-೩೯)

ಪದ್ಯ:-:೪೦:

[ಸಂಪಾದಿಸಿ]

ಮತ್ತೆ ಸಂಗರದೊಳನ್ನೋನ್ಯಮವರಿರ್ವರ್ಗೆ |
ಚಿತ್ತದೊಳ್ ಮುಸುಗಿತು ಘನ ಕ್ಷಾತ್ರತಾಮಸಂ |
ಪೊತ್ತಿತತಿರೋಷಾಗ್ನಿ ಬಳಿಕೊರ್ವ ರೊರ್ವರಂ ಜೈಸುವಭಿಲಾಷೆಯಿಂದೆ ||
ತೆತ್ತಿಸಿದ ಕಣೆಗಳಿಂ ಮೈಗಳೈಮೊಗದೊಲಿರೆ |
ನೆತ್ತರೊರತೆಗಳಿಂದೆ ತನುಗಳುರೆ ಪೂತಮು |
ಳ್ ಮುತ್ತಗದೊಳಿರೆ ತಂದೆಮಕ್ಕಳೆಚ್ಚಾಡಿದರ್ ನಿಚ್ಚಟದೊಳಚ್ಚರಿಯೆನೆ ||40||

ಪದವಿಭಾಗ-ಅರ್ಥ:
ಮತ್ತೆ ಸಂಗರದೊಳು ಅನ್ನೋನ್ಯಮು ಅವರಿರ್ವರ್ಗೆ ಚಿತ್ತದೊಳ್ ಮುಸುಗಿತು ಘನ ಕ್ಷಾತ್ರತಾಮಸಂ ಪೊತ್ತಿತು ಅತಿರೋಷಾಗ್ನಿ ಬಳಿಕೊರ್ವ ರೊರ್ವರಂ ಜೈಸುವ ಅಭಿಲಾಷೆಯಿಂದೆ=[ಪುನಃ ಯುದ್ಧದಲ್ಲಿ ಪರಸ್ಪರ ಅರ್ಜುನ ಬಭ್ರವಾಹನ ಈ ಇಬ್ಬರಿಗೆ ಮನಸ್ಸಿನಲ್ಲಿ ಆವರಿಸಿದ ಘನ ಕ್ಷಾತ್ರ ಆಗ್ರಹದಿಂದ, ಅತಿ ರೋಷಾಗ್ನಿಯು ಹೊತ್ತಿತು. ಬಳಿಕ ಒಬ್ಬರನ್ನು ಜಯಿಸುವ ಅಭಿಲಾಷೆಯಿಂದ ];; ತೆತ್ತಿಸಿದ ಕಣೆಗಳಿಂ ಮೈಗಳು ಐಮೊಗದೊಲು ಇರೆ ನೆತ್ತರು ಒರತೆಗಳಿಂದೆ ತನುಗಳು ಉರೆ ಪೂತಮುಳ್ ಮುತ್ತಗದೊಳು ಇರೆ ತಂದೆಮಕ್ಕಳು ಎಚ್ಚಾಡಿದರ್ ನಿಚ್ಚಟದೊಳು ಅಚ್ಚರಿಯೆನೆ=[ಜೋಡಿಸಿದ ಬಾಣಗಳಿಂದ, ಇಬ್ಬರ ದೇಹಗಳು ಐದು ಮುಖದಂತಾಗಿ ಹತ್ತಾರು ಗಾಯದ ಕಣ್ಣುಗಳಿಮದ ರಕ್ತವು ಒರತೆಗಳಿಂದ (ಒಸರುವ ರಂದ್ರದಿಮದ) ಅವರ ದೇಹಗಳು ಬಹಳ ಕೆಂಪುಹೂವುತಂಬಿದ ಮುಳ್ ಮುತ್ತಗದ ಮರದಂತೆ ಇರಲು, ಗೆಲುವಿನ ನಿಶ್ಚಯದಿಂದ ತಂದೆಮಕ್ಕಳು ಹೋರಾಡಿದರು.]
  • ತಾತ್ಪರ್ಯ:ಪುನಃ ಯುದ್ಧದಲ್ಲಿ ಪರಸ್ಪರ ಅರ್ಜುನ ಬಭ್ರವಾಹನ ಈ ಇಬ್ಬರಿಗೆ ಮನಸ್ಸಿನಲ್ಲಿ ಆವರಿಸಿದ ಘನ ಕ್ಷಾತ್ರ ಆಗ್ರಹದಿಂದ, ಅತಿ ರೋಷಾಗ್ನಿಯು ಹೊತ್ತಿತು. ಬಳಿಕ ಒಬ್ಬರನ್ನು ಜಯಿಸುವ ಅಭಿಲಾಷೆಯಿಂದ ಜೋಡಿಸಿದ ಬಾಣಗಳಿಂದ, ಇಬ್ಬರ ದೇಹಗಳು ಐದು ಮುಖದಂತಾಗಿ ಹತ್ತಾರು ಗಾಯದ ಕಣ್ಣುಗಳಿಮದ ರಕ್ತವು ಒರತೆಗಳಿಂದ (ಒಸರುವ ರಂದ್ರದಿಮದ) ಅವರ ದೇಹಗಳು ಬಹಳ ಕೆಂಪುಹೂವುತಂಬಿದ ಮುಳ್ ಮುತ್ತಗದ ಮರದಂತೆ ಇರಲು, ಗೆಲುವಿನ ನಿಶ್ಚಯದಿಂದ ತಂದೆಮಕ್ಕಳು ಹೋರಾಡಿದರು.
  • (ಪದ್ಯ-೪೦)

ಪದ್ಯ:-:೪೧:

[ಸಂಪಾದಿಸಿ]

ಜನಪ ಕೇಳ್ ಜಾಹ್ನವಿಯ ಶಾಪದಿಂ ಬಳಿಕ ಪಾ |
ರ್ಥನ ಸತ್ವಮೆಳದಾಗಿ ಬರೆ ಕಂಡು ಬಭ್ರುವಾ |
ಹನನೆಂದನೆಲೆ ಧನಂಜಯ ತನ್ನ ಜನನಿ ಚಿತ್ರಾಂಗದೆ ಪತಿವ್ರತೆ ಕಣಾ ||
ಅನಿಮಿತ್ತಮಾಕೆಯಂ ಪಳಿದ ಕಾರಣದಿಂದೆ |
ನಿನಗೆ ಕೈಗುಂದುತಿದೆ ಸಾಕಿನ್ನು ಕೃಷ್ಣನಂ |
ನೆನೆ ಮರುಳೆ ಮುರಹರನ ಸಾರಥ್ಯಮಿಲ್ಲದಾರಂ ಗೆಲ್ದೆ ಹೇಳೆಂದನು ||41|||

ಪದವಿಭಾಗ-ಅರ್ಥ:
ಜನಪ ಕೇಳ್ ಜಾಹ್ನವಿಯ ಶಾಪದಿಂ ಬಳೀಕ ಪಾರ್ಥನ ಸತ್ವಮ್ ಎಳದಾಗಿ ಬರೆ ಕಂಡು ಬಭ್ರುವಾಹನನು ಎಂದನು ಎಲೆ ಧನಂಜಯ ತನ್ನ ಜನನಿ ಚಿತ್ರಾಂಗದೆ ಪತಿವ್ರತೆ ಕಣಾ=[ಜನಪ ಜನಮೇಜಯನೇ ಕೇಳು, ಗಂಗೆಯ ಶಾಪದಿಂದ ಕೆಲವು ಸಮಯದ ಬಳಿಕ ಪಾರ್ಥನ ಸತ್ವವು ಕಡಿಮೆಯಾಗಿ ಬರಲು, ಅದನ್ನು ಕಂಡು ಬಭ್ರುವಾಹನನು ಹೇಳಿದನು, 'ಎಲೆ ಧನಂಜಯ ತನ್ನ ತಾಯಿ ಚಿತ್ರಾಂಗದೆಯು ಪತಿವ್ರತೆ ಕಣಾ!];; ಅನಿಮಿತ್ತಮ್ ಆಕೆಯಂ ಪಳಿದ ಕಾರಣದಿಂದೆ ನಿನಗೆ ಕೈಗುಂದುತಿದೆ ಸಾಕಿನ್ನು ಕೃಷ್ಣನಂ ನೆನೆ ಮರುಳೆ ಮುರಹರನ ಸಾರಥ್ಯಮಿಲ್ಲದೆ ಆರಂ ಗೆಲ್ದೆ ಹೇಳೆಂದನು=[ವಿನಾಕಾರಣ ಆಕೆಯನ್ನು ನಿಂದಿಸಿದ ಕಾರಣದಿಂದ ನಿನಗೆ ಕೈಸೋಲುತ್ತಿದೆ; ಇನ್ನು ನಿನ್ನ ಅಹಂಕಾರ ಸಾಕು; ಕೃಷ್ಣನನ್ನು ನೆನೆ ಮರುಳೆ! ಮುರಹರನ ಸಾರಥ್ಯವು ಇಲ್ಲದೆ ನೀನು ಯಾವ ಶೂರರನ್ನು ಗೆದ್ದಿರುವೆ ಹೇಳು', ಎಂದನು].
  • ತಾತ್ಪರ್ಯ:ಜನಪ ಜನಮೇಜಯನೇ ಕೇಳು, ಗಂಗೆಯ ಶಾಪದಿಂದ ಕೆಲವು ಸಮಯದ ಬಳಿಕ ಪಾರ್ಥನ ಸತ್ವವು ಕಡಿಮೆಯಾಗಿ ಬರಲು, ಅದನ್ನು ಕಂಡು ಬಭ್ರುವಾಹನನು ಹೇಳಿದನು, 'ಎಲೆ ಧನಂಜಯ ತನ್ನ ತಾಯಿ ಚಿತ್ರಾಂಗದೆಯು ಪತಿವ್ರತೆ ಕಣಾ! ವಿನಾಕಾರಣ ಆಕೆಯನ್ನು ನಿಂದಿಸಿದ ಕಾರಣದಿಂದ ನಿನಗೆ ಕೈಸೋಲುತ್ತಿದೆ; ಇನ್ನು ನಿನ್ನ ಅಹಂಕಾರ ಸಾಕು; ಕೃಷ್ಣನನ್ನು ನೆನೆ ಮರುಳೆ! ಮುರಹರನ ಸಾರಥ್ಯವು ಇಲ್ಲದೆ ನೀನು ಯಾವ ಶೂರರನ್ನು ಗೆದ್ದಿರುವೆ ಹೇಳು', ಎಂದನು.
  • (ಪದ್ಯ-೪೧)

ಪದ್ಯ:-:೪೨:

[ಸಂಪಾದಿಸಿ]

ಕ್ಷೋಣಿಗೋಸುಗ ಕೊಂದೆ ನೀನಂದು ಕರ್ಣನಂ |
ಮೇಣವನ ತನಯನ ನೆಳಲ್ಗೆ ಸೇರದೆ ಮನದ |
ಕೇಣದಿಂದೆನ್ನ ಕೈಯಿಂದೆ ಕೊಲಿಸಿದೆ ಸಾಕು ಹಗೆ ಹರಿದುದಿನ್ನು ನಿನಗೆ ||
ಪ್ರಾಣಮಂ ಕಾದುಬಿಡುವೆ ವೋಗು ಬಿಲ್ಗೊಳಲ್ |
ತ್ರಾಣಮುಳ್ಳೊಡೆ ನಿಂದು ಚಿತ್ತದೊಳ್ ನೆನೆ ಚಕ್ರ |
ಪಾಣಿಯಂ ಬಲಮಪ್ಪುದೆಂದು ಜರೆದಂ ಬಭ್ರುವಾಹನಂ ಫಲುಗುಣನನು ||42||

ಪದವಿಭಾಗ-ಅರ್ಥ:
ಕ್ಷೋಣಿಗೋಸುಗ ಕೊಂದೆ ನೀನಂದು ಕರ್ಣನಂ ಮೇಣವನ ತನಯನ ನೆಳಲ್ಗೆ ಸೇರದೆ ಮನದ ಕೇಣದಿಂದ ಎನ್ನ ಕೈಯಿಂದೆ ಕೊಲಿಸಿದೆ ಸಾಕು ಹಗೆ ಹರಿದುದಿನ್ನು ನಿನಗೆ=[ಭೂಮಿಗಾಗಿ/ ರಾಜ್ಯಕ್ಕಾಗಿ ನೀನು ಅಂದು ಕರ್ಣನನ್ನು ಕೊಂದೆ; ಮತ್ತೆ ಅವನ ಮಗನ ನೆರಳು/ ಇರುವು ಇಷ್ಟವಾಗದೆ ಮನಸ್ಸಿನಲ್ಲಿದ್ದ ಮತ್ಸರದಿಂದ ನನ್ನ ಕೈಯಿಂದ ಕೊಲ್ಲಿಸಿದೆ, ಸಾಕು ನಿನ್ನ ದ್ವೇಷ/ಸೇಡು ಬಗೆಹರಿಯಿತು ಇನ್ನು ನಿನಗೆ ];; ಇನ್ನು ನಿನಗೆ ಪ್ರಾಣಮಂ ಕಾದುಬಿಡುವೆ ವೋಗು ಬಿಲ್ ಕೊಳಲ್ (ಹಿಡಿಯಲು) ತ್ರಾಣಮ್ ಉಳ್ಳೊಡೆ ನಿಂದು ಚಿತ್ತದೊಳ್ ನೆನೆ ಚಕ್ರಪಾಣಿಯಂ ಬಲಮಪ್ಪುದು ಎಂದು ಜರೆದಂ ಬಭ್ರುವಾಹನಂ ಫಲುಗುಣನನು=[ನಿನಗೆ, ನಿನ್ನ ಪ್ರಾಣವನ್ನು ಕಾಪಾಡಿ ಬಿಡುವೆ ಹೋಗು; ಬಿಲ್ಗನ್ನು ಹಿಡಿಯಲು ಶಕ್ತಿ ಇದ್ದರೆ ಯುದ್ಧಕ್ಕೆ ನಿಂತು ಮನಸ್ಸಿನಲ್ಲಿ ಕೃಷ್ಣನನ್ನು ನೆನೆಸು ಶಕ್ತಿಬರುವುದು ಎಂದು ಫಲುಗುಣನನ್ನು ಬಭ್ರುವಾಹನನು ನಿಂದಿಸಿದನು.]
  • ತಾತ್ಪರ್ಯ:ಭೂಮಿಗಾಗಿ/ ರಾಜ್ಯಕ್ಕಾಗಿ ನೀನು ಅಂದು ಕರ್ಣನನ್ನು ಕೊಂದೆ; ಮತ್ತೆ ಅವನ ಮಗನ ನೆರಳು/ ಇರುವು ಇಷ್ಟವಾಗದೆ ಮನಸ್ಸಿನಲ್ಲಿದ್ದ ಮತ್ಸರದಿಂದ ನನ್ನ ಕೈಯಿಂದ ಕೊಲ್ಲಿಸಿದೆ, ಸಾಕು ನಿನ್ನ ದ್ವೇಷ/ಸೇಡು ಬಗೆಹರಿಯಿತು ನಿನಗೆ; ಇನ್ನು ನಿನ್ನ ಪ್ರಾಣವನ್ನು ಕಾಪಾಡಿ ಬಿಡುವೆ ಹೋಗು; ಬಿಲ್ಗನ್ನು ಹಿಡಿಯಲು ಶಕ್ತಿ ಇದ್ದರೆ ಯುದ್ಧಕ್ಕೆ ನಿಂತು ಮನಸ್ಸಿನಲ್ಲಿ ಕೃಷ್ಣನನ್ನು ನೆನೆಸು ಶಕ್ತಿಬರುವುದು, ಎಂದು ಫಲುಗುಣನನ್ನು ಬಭ್ರುವಾಹನನು ನಿಂದಿಸಿದನು.
  • (ಪದ್ಯ-೪೨)

ಪದ್ಯ:-:೪೩:

[ಸಂಪಾದಿಸಿ]

ಹೊಣೆ ಹೊಕ್ಕಂದು$ ತಾಂ ಪಗೆವನಂ ಗೆಲ್ದೊಡಂ |
ಮಾಣದೆ ರಣಾಗ್ರದೊಳ್ ಮಡಿದೊಡಂ ಕ್ಷತ್ರಿಯ |
ರ್ಗೂಣಿಯಮೆ ಕರ್ಣನಂ ಕೊಂದೊಡೇನವನ ಸುತನಳಿದೊಡೇನಾಹವದೊಳು ||
ಕ್ಷೀಣಬಲನೇ ತಾನಕಟ ನೀಂ ಸಮರ್ಥನೇ |
ಕಾಣಬಹುದೆನುತೆ ಭೀಮಾನುಜಂ ಕೋಪದಿಂ |
ಬಾಣಂಗಳಂ ಮಗನಮೇಲೆ ಕರೆಯಲ್ಕವಂ ಪರೆಗಡಿಯುತಿಂತೆಂದನು ||43||

  • $(ಹೂಣೆ ಹೊಕ್ಕಿದ್ದ?)
ಪದವಿಭಾಗ-ಅರ್ಥ:
ಹೂ(ಹೊ)ಣೆ ಹೊಕ್ಕಂದು (ಹೊಣೆ ಹೊತ್ತು ಅಂದು) ತಾಂ ಪಗೆವನಂ ಗೆಲ್ದೊಡಂ ಮಾಣದೆ ರಣಾಗ್ರದೊಳ್ ಮಡಿದೊಡಂ ಕ್ಷತ್ರಿಯಗೆ ಊರ್ಣಿಯಮೆ (ಊಣೆ-ದೋಷ,ನ್ಯೂನತೆ) ಕರ್ಣನಂ ಕೊಂದೊಡೇನು ಅವನ ಸುತನಳಿದೊಡೇನು ಆಹವದೊಳು=[ಅಂದು ಕುರುಕ್ಷೇತ್ರದಲ್ಲಿ ಕರ್ತವ್ಯವನ್ನು ಅನುಸರಿಸಿ ತಾನು ಶತ್ರುವನ್ನು ರಣರಂಗದಲ್ಲಿ ಗೆದ್ದರೆ (ಆಗದೇ)ತಪ್ಪೆ? ಕ್ಷತ್ರಿಯನು ಮಡಿದರೆ ದೋಷವೇ? ಯುದ್ಧದಲ್ಲಿ ಕರ್ಣನನ್ನು ಕೊಂದರೇನು? ಅವನ ಮಗ ಮಡಿದರೆ ಏನು (ದೋಷವಿಲ್ಲ)?];; ಕ್ಷೀಣಬಲನೇ ತಾನು ಅಕಟ ನೀಂ ಸಮರ್ಥನೇ ಕಾಣಬಹುದು ಎನುತೆ ಭೀಮಾನುಜಂ ಕೋಪದಿಂ ಬಾಣಂಗಳಂ ಮಗನಮೇಲೆ ಕರೆಯಲ್ಕೆ ಅವಂ ಪರೆಗಡಿಯುತ (ಪರೆ+ಕಡಿ:ಪರೆ-ಪರಂಪರೆ, ಸಾಲು) ಇಂತು ಎಂದನು=[ತಾನು ದುರ್ಲನೇ ಅಕಟ! ನೀನು ಸಮರ್ಥನೇ! ಇದನ್ನು ಕಾಣಬಹುದು ಎನ್ನುತ್ತಾ, ಭೀಮನಸೋದರ ಅರ್ಜುನನು ಕೋಪದಿಂದ ಬಾಣಗಳನ್ನು ಮಗನಮೇಲೆ ಸುರಿಸಲು, ಅವನು ಬಾಣಗಳ ಸಾಲನ್ನು ಕಡಿದು ತುಂಡುಮಾಡುತ್ತಾ ಹೀಗೆ ಹೇಳಿದನು ].
  • ತಾತ್ಪರ್ಯ:ಅಂದು ಕುರುಕ್ಷೇತ್ರದಲ್ಲಿ ಕರ್ತವ್ಯವನ್ನು ಅನುಸರಿಸಿ ತಾನು ಶತ್ರುವನ್ನು ರಣರಂಗದಲ್ಲಿ ಗೆದ್ದರೆ (ಆಗದೇ)ತಪ್ಪೆ? ಕ್ಷತ್ರಿಯನು ಮಡಿದರೆ ದೋಷವೇ? ಯುದ್ಧದಲ್ಲಿ ಕರ್ಣನನ್ನು ಕೊಂದರೇನು? ಅವನ ಮಗ ಮಡಿದರೆ ಏನು (ದೋಷವಿಲ್ಲ)? ತಾನು ದುರ್ಲನೇ ಅಕಟ! ನೀನು ಸಮರ್ಥನೇ! ಇದನ್ನು ಕಾಣಬಹುದು ಎನ್ನುತ್ತಾ, ಭೀಮನಸೋದರ ಅರ್ಜುನನು ಕೋಪದಿಂದ ಬಾಣಗಳನ್ನು ಮಗನಮೇಲೆ ಸುರಿಸಲು, ಅವನು ಆ ಬಾಣಗಳ ಸಾಲನ್ನು ಕಡಿದು ತುಂಡುಮಾಡುತ್ತಾ ಹೀಗೆ ಹೇಳಿದನು.
  • (ಪದ್ಯ-೪೩)

ಪದ್ಯ:-:೪೪:

[ಸಂಪಾದಿಸಿ]

ಪ್ರೀತಿಯಿಂ ದ್ರೋಣನಿತ್ತಂಬುಗಳ್ ಮನ್ಮಥಾ |
ರಾತಿ ಮುಖ್ಯಾಮರರ್ ಕೊಟ್ಟ ಬಾಣಂಗಳ |
ಜ್ಞಾತಮಾದುವು ನಿನಗೆ ಮರುಳೆ ನಿನ್ನೊಡನಾಡಿ ಕೃಷ್ಣನಂ ಮರೆದೆಯಾಗಿ||
ಏತಕಾಹವಮಿನ್ನು ಸಾಕೆನಲ್ ಫಲುಗುಣಂ |
ಖಾತಿಯಿಂ ಮಗುಳಿಸಲ್ಕಾ ಬಭ್ರುವಾಹನಂ |
ಘಾತಿಸಿದನಡಿಗಡಿಗೆ ಪಾರ್ಥನಂ ಜಾಹ್ನವಿಯ ಶಾಪದಿಂ ಕೈಗಿಡಲ್ಕೆ ||44||

ಪದವಿಭಾಗ-ಅರ್ಥ:
ಪ್ರೀತಿಯಿಂ ದ್ರೋಣನು ಇತ್ತ ಅಂಬುಗಳ್ ಮನ್ಮಥಾರಾತಿ(ಶಿವ) ಮುಖ್ಯ ಅಮರರ್ ಕೊಟ್ಟ ಬಾಣಂಗಳು ಅಜ್ಞಾತಮಾದುವು ನಿನಗೆ ಮರುಳೆ ನಿನ್ನೊಡನಾಡಿ ಕೃಷ್ಣನಂ ಮರೆದೆಯಾಗಿ=[ನಿನಗೆ ಮರುಳೆ ನಿನ್ನ ಒಡನಾಡಿ ಕೃಷ್ಣನನ್ನು ಮರೆತೆಯಾದ್ದರಿಂದ, ಪ್ರೀತಿಯಿಂದ ದ್ರೋಣನು ಉಪದೇಶಿಸಿದ ಅಸ್ತ್ರಗಳು, ಶಿವನು, ಮುಖ್ಯ ದೇವತೆಗಳು ಕೊಟ್ಟ ಅಸ್ತ್ರಗಳು ಮರವೆಯಾದುವು;];;ಏತಕೆ ಆಹವಮ್ ಇನ್ನು ಸಾಕೆನಲ್ ಫಲುಗುಣಂ ಖಾತಿಯಿಂ ಮಗುಳು ಇಸಲ್ಕೆ ಆ ಬಭ್ರುವಾಹನಂ ಘಾತಿಸಿದನು ಅಡಿಗಡಿಗೆ ಪಾರ್ಥನಂ ಜಾಹ್ನವಿಯ ಶಾಪದಿಂ ಕೈಗಿಡಲ್ಕೆ (ಕೈ+ಕಿಡಲ್ಕೆ -ಕೆಡಲು)=[ಏತಕ್ಕೆ ಆಹಂಕಾರ? ಇನ್ನು ಸಾಕು ಎನ್ನಲು, ಫಲುಗುಣನು ಸಿಟ್ಟಿನಿಂದ ತಿರುಗೆ ಹೊಡೆಯಲು, ಆ ಬಭ್ರುವಾಹನನು, ಗಂಗೆಯ ಶಾಪದಿಂದ ಅರ್ಜುನನ ಕೈಸೋಲಲು, ಮತ್ತೆಮತ್ತೆ ಪಾರ್ಥನನ್ನು ಗಾಯಮಾಡಿದನು];
  • ತಾತ್ಪರ್ಯ:ಬಭ್ರವಾಹನ ಹೇಳಿದ, ನಿನಗೆ ಮರುಳೆ ನಿನ್ನ ಒಡನಾಡಿ ಕೃಷ್ಣನನ್ನು ಮರೆತೆಯಾದ್ದರಿಂದ, ಪ್ರೀತಿಯಿಂದ ದ್ರೋಣನು ಉಪದೇಶಿಸಿದ ಅಸ್ತ್ರಗಳು, ಶಿವನು ಮತ್ತು ಮುಖ್ಯ ದೇವತೆಗಳು ಕೊಟ್ಟ ಅಸ್ತ್ರಗಳು ಮರವೆಯಾದುವು; ಏತಕ್ಕೆ ಆಹಂಕಾರ? ಇನ್ನು ಸಾಕು ಎನ್ನಲು, ಫಲುಗುಣನು ಸಿಟ್ಟಿನಿಂದ ತಿರುಗೆ ಹೊಡೆಯಲು, ಆ ಬಭ್ರುವಾಹನನು, ಗಂಗೆಯ ಶಾಪದಿಂದ ಅರ್ಜುನನ ಕೈಸೋಲುತ್ತಿರಲು, ಮತ್ತೆಮತ್ತೆ ಪಾರ್ಥನನ್ನು ಗಾಯಮಾಡಿದನು];
  • (ಪದ್ಯ-೪೪)

ಪದ್ಯ:-:೪೫:

[ಸಂಪಾದಿಸಿ]

ಸುರನದಿಯ ಶಾಪದಿಂ ಮೋಹಿಸಿ ನರಂ ಮುಳಿದು |
ಧುರದೊಳಾವಾವಂಬನಿಸುವನದನೆಲ್ಲಮಂ |
ಪಡೆಗಡಿದು ಕೋಪದಿಂದೆ ಪೂಡಿದಂ ಬಭ್ರುವಾಹಂ ತನ್ನ ಕಾರ್ಮುಕದೊಳು ||
ನಿರುಪಮ ಜ್ವಾಲಾಮುಖದ ಕಾಮರೂಪದುರು |
ತರ ವಡಬಶಿಖಿಯಂದದರ್ಧಚಂದ್ರಾಕೃತಿಯ |
ಶರವನುತ್ಕೀರ್ಣಸ್ಫುಲಿಂಗ ಪ್ರಕರವನುಗ್ರ ಪ್ರಭಾಭೀಕರವನು ||45||

ಪದವಿಭಾಗ-ಅರ್ಥ:
ಸುರನದಿಯ ಶಾಪದಿಂ ಮೋಹಿಸಿ ನರಂ ಮುಳಿದು ಧುರದೊಳು ಆವಾವಂಬನು ಇಸುವನು ಅದನು ಎಲ್ಲಮಂ ಪಡೆಗಡಿದು=[ಗಂಗೆಯ ಶಾಪದ ಪ್ರಭಾವದಿಂದ, ಅರ್ಜುನನು ಸಿಟ್ಟಿನಿಂದ ಯುದ್ಧದಲ್ಲಿ ಯಾವಾಯಾವ ಬಾಣವನ್ನು ಹೊಡೆಯುವನೋ ಅವೆಲ್ಲವನ್ನೂ ತುಂಡುಮಾಡಿ,];; ಕೋಪದಿಂದೆ ಪೂಡಿದಂ ಬಭ್ರುವಾಹಂ ತನ್ನ ಕಾರ್ಮುಕದೊಳು ನಿರುಪಮ ಜ್ವಾಲಾಮುಖದ (ಬೆಂಕಿಯುಗುಳುವ) ಕಾಮರೂಪದ (ಬೇಕಾದ ರೂಪ ಹೊಂದಬಲ್ಲ) ಉರುತರ ವಡಬಶಿಖಿಯಂದದ(ಬಡಬಾನಲದಂತಿರುವ) ಅರ್ಧಚಂದ್ರಾಕೃತಿಯ ಶರವನು ಉತ್ಕೀರ್ಣಸ್ಫುಲಿಂಗ (ಉತ್ಕೀರ್ಣ-ಚೆಲ್ಲುವ ಬೀರುವ,ಸ್ಪುಲಿಂಗ-ಅಗ್ನಿಕಣ) ಪ್ರಕರವನು ಉಗ್ರಪ್ರಭಾ ಭೀಕರವನು=[ಕೋಪದಿಂದೆ ಬಭ್ರುವಾಹನನು ತನ್ನ ಬಿಲ್ಲಿನಲ್ಲಿ ಅಸಾಧಾರಣವಾದ ಜ್ವಾಲಾಮುಖದ ಕಾಮರೂಪದ ದೊಡ್ಡ ಬಡಬಾನಲದಂತಿರುವ ಅರ್ಧಚಂದ್ರಾಕೃತಿಯ ಬೆಂಕಿಕಿಡಿಗಳನ್ನು ಉಗುಳುತ್ತಿರುವ ಮತ್ತು ಭೀಕರವಾದ ಉಗ್ರಕಾಂತಿಯನ್ನು ಬೀರುವ ಬಾಣವನ್ನು ಹೂಡಿದನು.]
  • ತಾತ್ಪರ್ಯ:ಗಂಗೆಯ ಶಾಪದ ಪ್ರಭಾವದಿಂದ, ಅರ್ಜುನನು ಸಿಟ್ಟಿನಿಂದ ಯುದ್ಧದಲ್ಲಿ ಯಾವಾಯಾವ ಬಾಣವನ್ನು ಹೊಡೆಯುವನೋ ಅವೆಲ್ಲವನ್ನೂ ತುಂಡುಮಾಡಿ, ಕೋಪದಿಂದೆ ಬಭ್ರುವಾಹನನು ತನ್ನ ಬಿಲ್ಲಿನಲ್ಲಿ ಅಸಾಧಾರಣವಾದ ಜ್ವಾಲಾಮುಖದ ಕಾಮರೂಪದ ದೊಡ್ಡ ಬಡಬಾನಲದಂತಿರುವ ಅರ್ಧಚಂದ್ರಾಕೃತಿಯ ಬೆಂಕಿಕಿಡಿಗಳನ್ನು ಉಗುಳುತ್ತಿರುವ ಮತ್ತು ಭೀಕರವಾದ ಉಗ್ರಕಾಂತಿಯನ್ನು ಬೀರುವ ಬಾಣವನ್ನು ಹೂಡಿದನು.
  • (ಪದ್ಯ-೪೫)

ಪದ್ಯ:-:೪೬:

[ಸಂಪಾದಿಸಿ]

ಅರ್ಕಾದಿ ಸರ್ವಗ್ರಹಗಳಿಂದ್ರಾದಿ ದೇ |
ವರ್ಕಗಳಾಂಗಿರಸಾದಿ ಮುನಿಗಳೆಲ್ಲರ್ ಮರುಗಿ |
ದರ್ಕರೆದು ವರುಣಾಂಬುವಂ ಮೇಘಮುದಿರಿತುಲ್ಕಾಪಾತಮಿಳೆ ನಡುಗಿತು |
ಶರ್ಕರಾವರ್ತಂ ಪ್ರವರ್ತಿಸಿತು ಪ್ರಾರ್ಥಜಂ |
ಕರ್ಕಶದ ಬಾಣಮಂ ತೆಗೆದಿಸಲ್ ಕಿಡಿಗಳ ಪೊ |
ದರ್ಕವಿಯೆ ದೆಸೆದೆಸೆಗೆ ಭುಗುಭುಗಿಸುವ ಜ್ವಾಲೆ ಮೇಲ್ವಾಯ್ದು ಬರುತಿರ್ದುದು ||46||

ಪದವಿಭಾಗ-ಅರ್ಥ:
ಅರ್ಕಾದಿ ಸರ್ವ ಗ್ರಹಗಳು ಇಂದ್ರಾದಿ ದೇವರ್ಕಗಳು ಆಂಗಿರಸಾದಿ ಮುನಿಗಳೆಲ್ಲರ್ ಮರುಗಿದರ್ ಕರೆದು ವರುಣಾಂಬುವಂ (ರಕ್ತದಹನಿ) ಮೇಘಂ ಉದಿರಿತು ಉಲ್ಕಾಪಾತಮ್ ಇಳೆ ನಡುಗಿತು=[ರವಿ ಮೊದಲಾದ ಗ್ರಹಗಳು, ಇಂದ್ರಾದಿ ದೇವತೆಗಳು, ಆಂಗಿರಸಾದಿ ಮುನಿಗಳು, ಎಲ್ಲರೂ ಮರುಗಿದರು; ಮೇಘವು ರಕ್ತದ ಮಳೆ ಕರೆಯಿತು; ಉಲ್ಕೆಗಳು ಉದಿರಿದವು; ಭೂಮಿ ನಡುಗಿತು];; ಶರ್ಕರಾವರ್ತಂ ಪ್ರವರ್ತಿಸಿತು ಪ್ರಾರ್ಥಜಂ ಕರ್ಕಶದ ಬಾಣಮಂ ತೆಗೆದು ಇಸಲ್ ಕಿಡಿಗಳ ಪೊದರ್ ಕವಿಯೆ ದೆಸೆದೆಸೆಗೆ ಭುಗುಭೂಗಿಸುವ ಜ್ವಾಲೆ ಮೇಲ್ವಾಯ್ದು ಬರುತಿರ್ದುದು=[ಮರಳಿನ ಸುಂಟರಗಾಳಿ ಬೀಸಿತು; ಪ್ರಾರ್ಥಜನು ಕ್ರೂರವಾದ ಬಾಣವನ್ನು ತೆಗೆದು ಹೊಡೆಯಲು ಕಿಡಿಗಳ ಮಳೆ ಸುರಿದುಕವಿಯಿತು; ದಿಕ್ಕುದಿಕ್ಕಿಗೆಗ ಭುಗುಭುಗಿಸುವ ಜ್ವಾಲೆ ನಗ್ಗಿ ಬರುತ್ತಿತ್ತು].
  • ತಾತ್ಪರ್ಯ:ರವಿ ಮೊದಲಾದ ಗ್ರಹಗಳು, ಇಂದ್ರಾದಿ ದೇವತೆಗಳು, ಆಂಗಿರಸಾದಿ ಮುನಿಗಳು, ಎಲ್ಲರೂ ಮರುಗಿದರು; ಮೇಘವು ರಕ್ತದ ಮಳೆ ಕರೆಯಿತು; ಉಲ್ಕೆಗಳು ಉದಿರಿದವು; ಭೂಮಿ ನಡುಗಿತು; ಮರಳಿನ ಸುಂಟರಗಾಳಿ ಬೀಸಿತು; ಪ್ರಾರ್ಥಜನು ಕ್ರೂರವಾದ ಬಾಣವನ್ನು ತೆಗೆದು ಹೊಡೆಯಲು ಕಿಡಿಗಳ ಮಳೆ ಸುರಿದುಕವಿಯಿತು; ದಿಕ್ಕುದಿಕ್ಕಿಗೆಗ ಭುಗುಭುಗಿಸುವ ಜ್ವಾಲೆ ನಗ್ಗಿ ಬರುತ್ತಿತ್ತು.
  • (ಪದ್ಯ-೪೬)

ಪದ್ಯ:-:೪೭:

[ಸಂಪಾದಿಸಿ]

ಅತ್ಯುಗ್ರ ಸಾಯಕಂ ಬರೆ ಪಾರ್ಥನಿದಿರಾಗಿ |
ಪ್ರತ್ಯಸ್ತ್ರದಿಂದಿಸಲದಂ ಕೊಳ್ಳದೈತರಲ್ |
ಸತ್ಯಭಾಮಾ ಕಾಂತನಂ ಚಿಂತಿಪನಿತರೊಳ್ ತೀವ್ರದಿಂ ಕೊರಳನರಿಯೆ ||
ಅತ್ಯಧಿಕ ಕುಂಡಲದ ತಲೆ ಚಿಗಿದು ನಭದೊಳಾ |
ದಿತ್ಯ ಮಂಡಲಮಿಳೆಗುರುಳ್ವಂತೆ ಮುನಿಗಣ |
ಸ್ತುತ್ಯ ಕೇಶವ ಕೃಷ್ಣಯೆನುತ ಬಿದ್ದುದು ಕರ್ಣಸುತನ ಶಿರದೆಡೆಗೆ ಪೋಗಿ ||47||

ಪದವಿಭಾಗ-ಅರ್ಥ:
ಅತ್ಯುಗ್ರ ಸಾಯಕಂ ಬರೆ ಪಾರ್ಥನ ಇದಿರಾಗಿ ಪ್ರತ್ಯಸ್ತ್ರದಿಂದ ಇಸಲು ಅದಂ ಕೊಳ್ಳದೈತರಲ್ ಸತ್ಯಭಾಮಾ ಕಾಂತನಂ ಚಿಂತಿಪ ಅನಿತರೊಳ್ ತೀವ್ರದಿಂ ಕೊರಳನು ಅರಿಯೆ=[ಅತಿ ಉಗ್ರ ಬಾನವು ಬರೆಲು ಪಾರ್ಥನಿಗೆ ಎದುರಾಗಿ ಪ್ರತ್ಯಸ್ತ್ರದಿಂದ ಅದನ್ನು ಹೊಡೆಯುವುದಕ್ಕಾಗಿ ಅದನ್ನು ಕೈಗೆತೆಗೆದುಕೊಳ್ಳುವ ಅಷ್ಟರಲ್ಲಿ, ಕೃಷ್ಣನನ್ನು ನೆನೆಯುವುದರೊಳಗೆ ವೇಗದಿಂದ ಬಂದು ಕೊರಳನ್ನು ಕತ್ತರಿತು;];; ಅತ್ಯಧಿಕ ಕುಂಡಲದ ತಲೆ ಚಿಗಿದು ನಭದೊಳು ಆದಿತ್ಯ ಮಂಡಲಂ ಇಳೆಗೆ ಉರುಳ್ವಂತೆ ಮುನಿಗಣ ಸ್ತುತ್ಯ ಕೇಶವ ಕೃಷ್ಣಯೆನುತ ಬಿದ್ದುದು ಕರ್ಣಸುತನ ಶಿರದೆಡೆಗೆ ಪೋಗಿ=[ಆಗ ಆ ಅತ್ಯಧಿಕ ಕುಂಡಲದ ತಲೆ ಚಿಗಿದು ಆಕಾಶದಲ್ಲಿರುವ ಆದಿತ್ಯಮಂಡಲವು ಭೂಮಿಗೆ ಉರುಳುವಂತೆ, ಮುನಿಗಳ ಸಮೂಹ ಸ್ತುತಿಸುವ ದೇವನ ಹೆಸರಾದ, ಕೇಶವ ಕೃಷ್ಣ ಎನ್ನುತ್ತಾ ಕರ್ಣಸುತ ವೃಷಕೇತುವಿನ ತಲೆಯ ಹತ್ತಿರ ಹೋಗಿ ಬಿದ್ದಿತು. ].
  • ತಾತ್ಪರ್ಯ:ಬಭ್ರುವಾಹನನು ಹೊಡೆದ ಆ ಅತಿ ಉಗ್ರ ಬಾಣವು ಪಾರ್ಥನಿಗೆ ಎದುರಾಗಿ ಬರೆಲು, ಅದನ್ನು ಪ್ರತ್ಯಸ್ತ್ರದಿಂದ ಹೊಡೆಯುವುದಕ್ಕಾಗಿ ಆ ಅಸ್ತ್ರದನ್ನು ಕೈಗೆತೆಗೆದುಕೊಳ್ಳುವ ಅಷ್ಟರಲ್ಲಿ, ಕೃಷ್ಣನನ್ನು ನೆನೆಯುವುದರೊಳಗೆ ವೇಗದಿಂದ ಬಂದು ಅರ್ಜುನನ ಕೊರಳನ್ನು ಕತ್ತರಿತು; ಆಗ ಆ ಅತ್ಯಧಿಕ ಕುಂಡಲದ ತಲೆ ಚಿಗಿದು ಆಕಾಶದಲ್ಲಿರುವ ಆದಿತ್ಯಮಂಡಲವು ಭೂಮಿಗೆ ಉರುಳುವಂತೆ, ಮುನಿಗಳ ಸಮೂಹ ಸ್ತುತಿಸುವ ದೇವನ ಹೆಸರಾದ, ಕೇಶವ ಕೃಷ್ಣ ಎನ್ನುತ್ತಾ ಕರ್ಣಸುತ ವೃಷಕೇತುವಿನ ತಲೆಯ ಹತ್ತಿರ ಹೋಗಿ ಬಿದ್ದಿತು.
  • (ಪದ್ಯ-೪೭)X

ಪದ್ಯ:-:೪೮:

[ಸಂಪಾದಿಸಿ]

ಕಲಿವೃಷಧ್ವಜನ ಶಿರದೊಡನೆ ಕೂಡಿತು ನರನ |
ತಲೆ ಕರ್ಣಜನ ಕಬಂದವನಪ್ಪಿ ಕೊಂಡುದಾ |
ಫಲುಗುಣನ ಮುಂಡಮಿದನೆಲ್ಲರುಂ ಕಂಡು ಮರುಗಿದರಾಗ ಕರುಣದಿಂದೆ ||
ನಲವಿಂದೆ ಬೊಬ್ಬಿರಿದುದಾ ಬಭ್ರುವಾಹನನ |
ಬಲಮೈದೆ ಮೊಳಗಿದುವು ವಾದ್ಯಂಗಳಾಹವದ |
ಗೆಲವಿಂದೆ ಪುರಕೆ ತಿರುಗಿದನವಂ ವಂದಿ ಸಂದೋಹದ ಪೊಗಳ್ಕೆಯಿಂದೆ ||48||

ಪದವಿಭಾಗ-ಅರ್ಥ:
ಕಲಿವೃಷಧ್ವಜನ ಶಿರದೊಡನೆ ಕೂಡಿತು ನರನ ತಲೆ ಕರ್ಣಜನ ಕಬಂದವನು ಅಪ್ಪಿ ಕೊಂಡುದಾ ಫಲುಗುಣನ ಮುಂಡಂ ಇದನು ಎಲ್ಲರುಂ ಕಂಡು ಮರುಗಿದರಾಗ ಕರುಣದಿಂದೆ=[ಅರ್ಜುನನ ತಲೆ ವೀರವೃಷಧ್ವಜನ ಶಿರದಜೊತೆ ಕೂಡಿತು; ಕರ್ಣಜನ ಮುಂಡವನ್ನು ಫಲ್ಗುಣನ ಮುಂಡವು ಅಪ್ಪಿ ಕೊಂಡಿತು; ಆಗ ಇದನ್ನು ಎಲ್ಲರೂ ಕಂಡು ಕರುಣದಿಂದ ಮರುಗಿದರು;];; ನಲವಿಂದೆ ಬೊಬ್ಬಿರಿದುದಾ ಬಭ್ರುವಾಹನನ ಬಲಂ ಐದೆ ಮೊಳಗಿದುವು ವಾದ್ಯಂಗಳು ಆಹವದ ಗೆಲವಿಂದೆ ಪುರಕೆ ತಿರುಗಿದನು ಅವಂ ವಂದಿ ಸಂದೋಹದ ಪೊಗಳ್ಕೆಯಿಂದೆ=[ಆ ಬಭ್ರುವಾಹನನ ಸೈನ್ಯವು ಬರಲು, ಸಂತೋಷದಿಂದ ಬೊಬ್ಬಿರಿಯಿತು; ವಾದ್ಯಗಳು ಯುದ್ಧದ ಗೆಲವಿನಿಂದ ಮೊಳಗಿದುವು; ಅವನು ವಂದಿಮಾಗಧರ ಸಮೂಹ ಹೊಗಳುತ್ತಿರಲು, ನಗರಕ್ಕೆ ಹಿಂತಿರುಗಿದನು .]
  • ತಾತ್ಪರ್ಯ:ಅರ್ಜುನನ ತಲೆ ವೀರ ವೃಷಧ್ವಜನ ಶಿರದ ಜೊತೆ ಕೂಡಿತು; ಕರ್ಣಜನ ಮುಂಡವನ್ನು ಫಲ್ಗುಣನ ಮುಂಡವು ಅಪ್ಪಿ ಕೊಂಡಿತು; ಆಗ ಇದನ್ನು ಎಲ್ಲರೂ ಕಂಡು ಕರುಣದಿಂದ ಮರುಗಿದರು; ಆ ಬಭ್ರುವಾಹನನ ಸೈನ್ಯವು ಒಟ್ಟಾಗಿ ಬರಲು, ಸಂತೋಷದಿಂದ ಬೊಬ್ಬಿರಿಯಿತು; ವಾದ್ಯಗಳು ಯುದ್ಧದ ಗೆಲವಿನಿಂದ ಮೊಳಗಿದುವು; ಅವನು ವಂದಿಮಾಗಧರ ಸಮೂಹ ಹೊಗಳುತ್ತಿರಲು, ನಗರಕ್ಕೆ ಹಿಂತಿರುಗಿದನು .]
  • (ಪದ್ಯ-೪೮)

ಪದ್ಯ:-:೪೯:

[ಸಂಪಾದಿಸಿ]

ತ್ರಿಜಗಂ ಮರುಗುವಂತೆ ಕಾರ್ತಿಕೈಕಾದಶೀ |
ಕುಜವಾರದುತ್ತರಾನಕ್ಷತ್ರದಂದು ವಾ |
ರಿಜಮಿತ್ರನಸ್ತಮಯ ಸಮಯದೊಳ್ ಕೃಷ್ಣಯೆನುತರ್ಜುನನ ತಲೆಬೀಳಲು ||
ವಿಜಯೋತ್ಸವದೊಳೈದಿದಂ ಬಭ್ರುವಾಹನಂ |
ನಿಜಪುರಕೆ ಗುಡಿ ತೋರಣದೊಳೆಸೆಯೆ ಬಣ್ಣಿಸಲ್ |
ಪ್ರಜೆಗಳಂಗನೆಯರಾರತಿ ಪುಷ್ಪ ದಧಿ ಲಾಜ ದೂರ್ವೆಯೊಳಿದಿರ್ಗೊಳಲ್ಕೆ ||49|

ಪದವಿಭಾಗ-ಅರ್ಥ:
ತ್ರಿಜಗಂ ಮರುಗುವಂತೆ ಕಾರ್ತಿಕ ಏಕಾದಶೀ ಕುಜವಾರದ ಉತ್ತರಾ ನಕ್ಷತ್ರದಂದು ವಾರಿಜಮಿತ್ರನ ಅಸ್ತಮಯ ಸಮಯದೊಳ್ ಕೃಷ್ಣ ಎನುತ ಅರ್ಜುನನ ತಲೆ ಬೀಳಲು=[ತ್ರಿಜಗವೂ ಮರುಗುವಂತೆ ಕಾರ್ತಿಕ ಏಕಾದಶೀ ಕುಜವಾರದ ಉತ್ತರಾ ನಕ್ಷತ್ರದಂದು ಸೂರ್ಯನ ಅಸ್ತಮಯ ಸಮಯದಲ್ಲಿ ಕೃಷ್ಣ - ಎನ್ನುತ್ತಾ ಅರ್ಜುನನ ತಲೆ ಬೀಳಲು, ];; ವಿಜಯೋತ್ಸವದೊಳು ಐದಿದಂ ಬಭ್ರುವಾಹನಂ ನಿಜಪುರಕೆ ಗುಡಿ ತೋರಣದೊಳು ಎಸೆಯೆ ಬಣ್ಣಿಸಲ್ ಪ್ರಜೆಗಳು ಅಂಗನೆಯರು ಆರತಿ ಪುಷ್ಪ ದಧಿ ಲಾಜ ದೂರ್ವೆಯೊಳು ಇದಿರ್ಗೊಳಲ್ಕೆ=[ವಿಜಯೋತ್ಸವದಿಂದ ಬಭ್ರುವಾಹನನು, ಗುಡಿ ತೋರಣದ ಅಲಂಕಾರ ಶೋಭಿಸಲು, ಪ್ರಜೆಗಳು ಹೊಗಳುತ್ತಿರಲು, ಹೆಂಗಸರು ಆರತಿ ಪುಷ್ಪ ಮೊಸರು, ಅರಳು ದೂರ್ವೆಯ ಸಹಿತ ಇದಿರುಗೊಳ್ಳಲು ತನ್ನ ಪುರಕ್ಕೆ ಹೋದನು.]
  • ತಾತ್ಪರ್ಯ:ಮೂರುಜಗವೂ ಮರುಗುವಂತೆ ಕಾರ್ತಿಕ ಏಕಾದಶೀ ಕುಜವಾರದ ಉತ್ತರಾ ನಕ್ಷತ್ರದಂದು ಸೂರ್ಯನ ಅಸ್ತಮಯ ಸಮಯದಲ್ಲಿ ಕೃಷ್ಣ - ಎನ್ನುತ್ತಾ ಅರ್ಜುನನ ತಲೆ ಬೀಳಲು, ಬಭ್ರುವಾಹನನು, ಗುಡಿ ತೋರಣದ ಅಲಂಕಾರ ಶೋಭಿಸಲು, ಪ್ರಜೆಗಳು ಹೊಗಳುತ್ತಿರಲು, ಹೆಂಗಸರು ಆರತಿ ಪುಷ್ಪ ಮೊಸರು, ಅರಳು ದೂರ್ವೆಯ ಸಹಿತ ಇದಿರುಗೊಳ್ಳಲು ವಿಜಯೋತ್ಸವದಿಂದ ತನ್ನ ಪುರಕ್ಕೆ ಹೋದನು.]
  • (ಪದ್ಯ-೪೯)

ಪದ್ಯ:-:೫೦:

[ಸಂಪಾದಿಸಿ]

ಮಿಗೆ ಜಯೋತ್ಸವದಿಂದೆ ಪೌರಜನದೊಸಗಿಯಿಂ |
ಬಗೆಬಗೆಯ ಸಿಂಗರದ ಪೆಣ್ಗಳ ಸೊಡರ್ಗಳಿಂ |
ನಗರ ಪ್ರವೇಶಮಂ ಮಾಡಿದಂ ಬಭ್ರುವಾಹನನಿತ್ತಲರಮನೆಯೊಳು ||
ಸೊಗಸಿಂದುಲೂಪಿ ಸಹಿತಿರುತಿರ್ದ ಚಿತ್ರಾಂಗ |
ದೆಗೆಬಂದು ಸುದತಿಯರ್ ದೇವಿ ನೀನೇಂ ನೋಂತು |
ಮಗನಂ ಪಡೆದೆಯೊ ನರನಂ ಕೊಂದು ಬರ್ಪನಾರತಿಗಳಂ ತರಿಸೆಂದರು ||50||

ಪದವಿಭಾಗ-ಅರ್ಥ:
ಮಿಗೆ ಜಯೋತ್ಸವದಿಂದೆ ಪೌರಜನದ ಒಸಗಿಯಿಂ ಬಗೆಬಗೆಯ ಸಿಂಗರದ ಪೆಣ್ಗಳ ಸೊಡರ್ಗಳಿಂ ನಗರ ಪ್ರವೇಶಮಂ ಮಾಡಿದಂ ಬಭ್ರುವಾಹನನು=[ಬಹಳ ಜಯೋತ್ಸವದಿಂದ ಪುರಜನರ ಹಾರೈಕೆಯಂತೆ ಬಗೆಬಗೆಯಲ್ಲಿ ಸಿಂಗರಿಸಿಕೊಂಡ ಹೆಂಗಸರು ದೀಪಗಳಿಂದ ಎದುರುಕೊಳ್ಳುತ್ತಿರಲು ಬಭ್ರುವಾಹನನು ನಗರ ಪ್ರವೇಶಮಾಡಿದನು];; ಇತ್ತಲು ಅರಮನೆಯೊಳು ಸೊಗಸಿಂದ ಉಲೂಪಿ ಸಹಿತಿರುತಿರ್ದ ಚಿತ್ರಾಂಗದೆಗೆ ಬಂದು ಸುದತಿಯರ್ ದೇವಿ ನೀನೇಂ ನೋಂತು ಮಗನಂ ಪಡೆದೆಯೊ ನರನಂ ಕೊಂದು ಬರ್ಪನ ಆರತಿಗಳಂ ತರಿಸೆಂದರು=[ಇತ್ತ ಅರಮನೆಯಲ್ಲಿ ಆನಂದದಿಂದ ಉಲೂಪಿಯ ಜೊತೆಯಲ್ಲಿದ್ದ ಚಿತ್ರಾಂಗದೆಗೆ ಸಖಿಯರು ಬಂದು, ದೇವಿ ನೀನು ವ್ರತ ಮಾಡಿ ಮಗನನ್ನು ಪಡೆದೆಯೊ! ಅವನು ಅರ್ಜುನನ್ನು ಕೊಂದು ಬರುತ್ತಿರುವನು, ಸ್ವಾಗತಿಸಲು ಆರತಿಗಳನ್ನು ತರಿಸು ಎಂದರು].
  • ತಾತ್ಪರ್ಯ:ಬಹಳ ಜಯೋತ್ಸವದಿಂದ ಪುರಜನರ ಹಾರೈಕೆಯಂತೆ ಬಗೆಬಗೆಯಲ್ಲಿ ಸಿಂಗರಿಸಿಕೊಂಡ ಹೆಂಗಸರು ದೀಪಗಳಿಂದ ಎದುರುಕೊಳ್ಳುತ್ತಿರಲು ಬಭ್ರುವಾಹನನು ನಗರ ಪ್ರವೇಶಮಾಡಿದನು.ಇತ್ತ ಅರಮನೆಯಲ್ಲಿ ಆನಂದದಿಂದ ಉಲೂಪಿಯ ಜೊತೆಯಲ್ಲಿದ್ದ ಚಿತ್ರಾಂಗದೆಗೆ ಸಖಿಯರು ಬಂದು, ದೇವಿ ನೀನು ವ್ರತ ಮಾಡಿ ಮಗನನ್ನು ಪಡೆದೆಯೊ! ಅವನು ಅರ್ಜುನನ್ನು ಕೊಂದು ಬರುತ್ತಿರುವನು, ಸ್ವಾಗತಿಸಲು ಆರತಿಗಳನ್ನು ತರಿಸು ಎಂದರು].
  • (ಪದ್ಯ-೫೦)

ಪದ್ಯ:-:೫೧:

[ಸಂಪಾದಿಸಿ]

ಮಾನಿನಿಯರಿಂತಾಗ ಚಿತ್ರಾಂಗದೆಗೆ ನಿನ್ನ |
ಸೂನು ಕಲಿ ಪಾರ್ಥನಂ ಸಮರದೊಳ್ ಕೊಂದು ಸುಂ |
ಮಾನದಿಂದೈತಪ್ಪನೆಂದು ಪೊಗಳಲ್ ಕೇಳಿ ಹಮ್ಮೈಸಿ ಬಿದ್ದಿಳೆಯೊಳು ||
ಹಾ ನಾಥ ಕೆಟ್ಟೆನಕಟೆಂದು ಕಂಬನಿಯೊಳ |
ಳ್ದಾನಾರಿ ದುಃಖಾರ್ತೆಯಾಗಲಂತಃಪುರದ |
ಮೀನಾಕ್ಷಿಯರ್ ಕೂಡೆ ರೋದಿಸಲ್ ಪೆರ್ಚಿತು ವಿಷಾದರವಮರಮನೆಯೊಳು ||51||

ಪದವಿಭಾಗ-ಅರ್ಥ:
ಮಾನಿನಿಯರು ಇಂತು ಆಗ ಚಿತ್ರಾಂಗದೆಗೆ ನಿನ್ನ ಸೂನು ಕಲಿ ಪಾರ್ಥನಂ ಸಮರದೊಳ್ ಕೊಂದು ಸುಂಮಾನದಿಂದ ಐತಪ್ಪನು ಎಂದು ಪೊಗಳಲ್ ಕೇಳಿ ಹಮ್ಮೈಸಿ ಬಿದ್ದಿಳೆಯೊಳು=[ಆಗ ಅರಮನೆಯ ಹೆಂಗಸರು ಹೀಗೆ ಚಿತ್ರಾಂಗದೆಗೆ ನಿನ್ನ ಮಗ ಕಲಿ ಪಾರ್ಥನನ್ನು ಯುದ್ಧದಲ್ಲಿ ಕೊಂದು ವೈಭವದಿಂದ ಬರತ್ತಿರುವನು, ಎಂದು ಹೊಗಳಲು, ಅದನ್ನು ಕೇಳಿ ಎಚ್ಚರತಪ್ಪಿ ನೆಲಕ್ಕೆ ಬಿದ್ದಳು.];; ಹಾ ನಾಥ ಕೆಟ್ಟೆನು ಅಕಟ ಎಂದು ಕಂಬನಿಯೊಳು ಅಳ್ದು ಆ ನಾರಿ ದುಃಖಾರ್ತೆಯಾಗಲು ಅಂತಃಪುರದ ಮೀನಾಕ್ಷಿಯರ್ ಕೂಡೆ ರೋದಿಸಲ್ ಪೆರ್ಚಿತು ವಿಷಾದರವಂ ಅರಮನೆಯೊಳು=[ಹಾ ನಾಥ ಕೆಟ್ಟೆನು ಅಕಟ! ಎಂದು ಕಂಬನಿಸುರಿಸುತ್ತಾ ಅತ್ತು, ಆ ನಾರಿ ದುಃಖಿತಳಾಗಲು, ಅಂತಃಪುರದ ಹಂಗಸರು ಅವಳಜೊತೆ ರೋದಿಸಲು ಅರಮನೆಯಲ್ಲಿ ದುಃಖದ ಸದ್ದು ತುಂಬಿತು.].
  • ತಾತ್ಪರ್ಯ:ಆಗ ಅರಮನೆಯ ಹೆಂಗಸರು ಹೀಗೆ ಚಿತ್ರಾಂಗದೆಗೆ ನಿನ್ನ ಮಗ ಕಲಿ ಪಾರ್ಥನನ್ನು ಯುದ್ಧದಲ್ಲಿ ಕೊಂದು ವೈಭವದಿಂದ ಬರತ್ತಿರುವನು, ಎಂದು ಹೊಗಳಲು, ಅದನ್ನು ಕೇಳಿ ಎಚ್ಚರತಪ್ಪಿ ನೆಲಕ್ಕೆ ಬಿದ್ದಳು. ಹಾ ನಾಥ ಕೆಟ್ಟೆನು ಅಕಟ! ಎಂದು ಕಂಬನಿಸುರಿಸುತ್ತಾ ಅತ್ತು, ಆ ನಾರಿ ದುಃಖಿತಳಾಗಲು, ಅಂತಃಪುರದ ಹಂಗಸರು ಅವಳಜೊತೆ ರೋದಿಸಲು ಅರಮನೆಯಲ್ಲಿ ದುಃಖದ ಸದ್ದು ತುಂಬಿತು.].
  • (ಪದ್ಯ-೫೧)

ಪದ್ಯ:-:೫೨:

[ಸಂಪಾದಿಸಿ]

ರಾಜಾಲಯ ದ್ವಾರದೊಳ್ ತೇರನಿಳಿದು ನೀ |
ರಾಜನಾದಿಗಳಿಂದಿದಿರ್ಗೊಂಬ ಸಂಭ್ರಮದ |
ರಾಜವದನೆಯರೊಳಗೆ ಚಿತ್ರಾಂಗದೆಯ ಶೋಕದಿಂದಮಾರ್ತೆಯರಾಗಿರೆ ||
ಈ ಜಯೋತ್ಸವದೊಳಿಂತೀ ವಿಷಾದ ಧ್ವನಿ ವ |
ಧೂ ಜನಕಿದೇಕೆನುತ ಪೊಕ್ಕನಂತಃಪುರವ |
ನಾಜನನಿಯಂಗದಿರವಂ ಕಂಡು ಬೆರಗಾಗಿ ಪಾರ್ಥಸುತನಿಂತೆಂದನು ||52||

ಪದವಿಭಾಗ-ಅರ್ಥ:
ರಾಜಾಲಯ ದ್ವಾರದೊಳ್ ತೇರನಿಳಿದು ನೀರಾಜನಾದಿಗಳಿಂದ ಇದಿರ್ಗೊಂಬ ಸಂಭ್ರಮದ ರಾಜವದನೆಯರೊಳಗೆ ಚಿತ್ರಾಂಗದೆಯ ಶೋಕದಿಂದಂ ಆರ್ತೆಯರಾಗಿರೆ=[ಅರಮನೆಯ ದ್ವಾರದಲ್ಲಿ ರಥವನ್ನು ಇಳಿದು ನೀರಾಜನಾದಿಗಳಿಂದ ಇದಿರುಗೊಂಬ ಸಂಭ್ರಮದ ರಾಜಸ್ತ್ರಿಯರಲ್ಲಿ ಚಿತ್ರಾಂಗದೆಯ ಶೋಕದಿಂದ ದಃಖತಪ್ತೆಯಾಗಿರಲು,];; ಈ ಜಯೋತ್ಸವದೊಳು ಇಂತು ಈ ವಿಷಾದ ಧ್ವನಿ ವಧೂ ಜನಕೆ ಇದೇಕೆ ಎನುತ ಪೊಕ್ಕನು ಅಂತಃಪುರವನು ಆ ಜನನಿಯಂಗದ ಇರವಂ ಕಂಡು ಬೆರಗಾಗಿ ಪಾರ್ಥಸುತನು ಇಂತೆಂದನು=[ಈ ಜಯದ ಉತ್ಸವದಲ್ಲಿ ಹೀಗೆ ಈ ವಿಷಾದ ಧ್ವನಿ ಹೆಂಗಸರಿಗೆ ಇದೇಕೆ ಎನ್ನುತ್ತಾ ಅಂತಃಪುರವನ್ನು ಪೊಕ್ಕನು. ಅಲ್ಲಿ ಆ ತಾಯಿಯ ದೇಹ ಸ್ಥಿತಿಯನ್ನು ಕಂಡು ಬೆರಗಾಗಿ ಪಾರ್ಥಸುತ ಬಭ್ರುವಾಹನನು ಹೀಗೆ ಹೇಳಿದನು.]
  • ತಾತ್ಪರ್ಯ:ಅರಮನೆಯ ದ್ವಾರದಲ್ಲಿ ರಥವನ್ನು ಇಳಿದು ನೀರಾಜನಾದಿಗಳಿಂದ ಇದಿರುಗೊಂಬ ಸಂಭ್ರಮದ ರಾಜಸ್ತ್ರಿಯರಲ್ಲಿ ಚಿತ್ರಾಂಗದೆಯ ಶೋಕದಿಂದ ದಃಖತಪ್ತೆಯಾಗಿರಲು, ಈ ಜಯದ ಉತ್ಸವದಲ್ಲಿ ಹೀಗೆ ಈ ವಿಷಾದ ಧ್ವನಿ ಹೆಂಗಸರಿಗೆ ಇದೇಕೆ ಎನ್ನುತ್ತಾ ಅಂತಃಪುರವನ್ನು ಪೊಕ್ಕನು. ಅಲ್ಲಿ ಆ ತಾಯಿಯ ದೇಹ ಸ್ಥಿತಿಯನ್ನು ಕಂಡು ಬೆರಗಾಗಿ ಪಾರ್ಥಸುತ ಬಭ್ರುವಾಹನನು ಹೀಗೆ ಹೇಳಿದನು.
  • (ಪದ್ಯ-೫೨)

ಪದ್ಯ:-:೫೩:

[ಸಂಪಾದಿಸಿ]

ಅಪಜಯಂ ತನಗಾದುದಿಲ್ಲ ಸಂಗ್ರಾಮದೊಳ್ |
ವಿಪರೀತಮೇತಕಿಂತಾನಂದ ಕಾಲದೊಳ್ |
ಕುಪಿತ ಮುಖನಾಗಿ ತನ್ನಂ ಜರೆದೊಡರ್ಜುನನ ಶಿರವನರಿದೆಂ ಧುರದೊಳು ||
ರಿಪುಭಯಂಕರ ಕರ್ಣ ತನಯಂಗೆ ಸಂಗರದೊ |
ಳುಪಹತಿಯನಿತ್ತೆಂ ಪ್ರಯಾಸದಿಂದದಕೆ ನೀಂ |
ತಪಿಸಲೇಕೆಂದು ಕಣ್ಣೀರ್ದೊಡೆದು ಮಾತೆಯಂ ಸಂತೈಸಲಿಂತೆಂದಳು ||53||

ಪದವಿಭಾಗ-ಅರ್ಥ:
ಅಪಜಯಂ ತನಗೆ ಆದುದಿಲ್ಲ ಸಂಗ್ರಾಮದೊಳ್ ವಿಪರೀತಂ (ವಿರುದ್ಧ ನೆಡೆ) ಏತಕೆ ಇಂತು ಆನಂದ ಕಾಲದೊಳ್ ಕುಪಿತ ಮುಖನಾಗಿ ತನ್ನಂ ಜರೆದೊಡೆ ಅರ್ಜುನನ ಶಿರವನು ಅರಿದೆಂ ಧುರದೊಳು=[ಬಭ್ರುವಾಹನನು ತಾಯಿಗೆ ಹೇಳಿದನು, ತನಗೆ ಯುದ್ಧದಲ್ಲಿ ಅಪಜಯವು ಆಗಿಲ್ಲ; ಸಂತೋಷದ ಬದಲಾಗಿ ವಿರುದ್ಧವಾದ ದುಃಖ ಏಕೆ? ಆನಂದ ಕಾಲದಲ್ಲಿ ಸಿಟ್ಟಿನ ಮುಖದಿಂದ ತನ್ನನ್ನು ನಿಂದಿಸಿದ ಅರ್ಜುನನ ತಲೆಯನ್ನು ಯುದ್ಧದಲ್ಲಿ ಕಡಿದೆನು.];; ರಿಪುಭಯಂಕರ ಕರ್ಣ ತನಯಂಗೆ ಸಂಗರದೊಳು ಉಪಹತಿಯನಿತ್ತೆಂ ಪ್ರಯಾಸದಿಂದ ಅದಕೆ ನೀಂ ತಪಿಸಲೇಕೆಎ ಎಂದು ಕಣ್ಣೀರ್ ತೊಡೆದು ಮಾತೆಯಂ ಸಂತೈಸಲು ಇಂತೆಂದಳು=[ರಿಪುಭಯಂಕರನಾದ ಕರ್ಣನ ಮಗನಿಗೆ ಯುದ್ಧದಲ್ಲಿ ಬಹಳ ಕಷ್ಟದಿಂದ ಸೋಲುಣ್ಣಿಸಿದೆನು, ಅದಕ್ಕೆ ನೀನು ಸಂಕಟಪಡುವುದೇಕೆ? ಎಂದು ಕಣ್ಣೀರನ್ನು ಒರೆಸಿ ತಾಯಿಯನ್ನು ಸಮಾಧಾನ ಪಡಿಸಲು ಅವಳು ಹೀಗೆ ಹೇಳಿದಳು].
  • ತಾತ್ಪರ್ಯ:ಬಭ್ರುವಾಹನನು ತಾಯಿಗೆ ಹೇಳಿದನು, ತನಗೆ ಯುದ್ಧದಲ್ಲಿ ಅಪಜಯವು ಆಗಿಲ್ಲ; ಸಂತೋಷದ ಬದಲಾಗಿ ವಿರುದ್ಧವಾದ ದುಃಖ ಏಕೆ? ಆನಂದ ಕಾಲದಲ್ಲಿ ಸಿಟ್ಟಿನ ಮುಖದಿಂದ ತನ್ನನ್ನು ನಿಂದಿಸಿದ ಅರ್ಜುನನ ತಲೆಯನ್ನು ಯುದ್ಧದಲ್ಲಿ ಕಡಿದೆನು. ರಿಪುಭಯಂಕರನಾದ ಕರ್ಣನ ಮಗನಿಗೆ ಯುದ್ಧದಲ್ಲಿ ಬಹಳ ಕಷ್ಟದಿಂದ ಸೋಲುಣ್ಣಿಸಿದೆನು, ಅದಕ್ಕೆ ನೀನು ಸಂಕಟಪಡುವುದೇಕೆ? ಎಂದು ಕಣ್ಣೀರನ್ನು ಒರೆಸಿ ತಾಯಿಯನ್ನು ಸಮಾಧಾನ ಪಡಿಸಲು ಅವಳು ಹೀಗೆ ಹೇಳಿದಳು.
  • (ಪದ್ಯ-೫೩)

ಪದ್ಯ:-:೫೪:

[ಸಂಪಾದಿಸಿ]

ಲೇಸು ಮಾಡಿದೆ ಮಗನೆ ಪಗೆಯಾದನೇ ನರಂ |
ವಾಸಿ ಬಂದುದೆ ನಿನಗೆ ಮತ್ಕಾಂತನಳಿದನೇ |
ವಾಸವನ ಸೂನು ಮೃತನಾದನೇ ಧರ್ಮಾನುಜಂ ಪ್ರಾಣಮಂ ತೊರೆದನೇ ||
ವಾಸುದೇವನ ಸಖಂ ಮಡಿದನೇ ನಿನ್ನಂದ |
ದಾಸುರ ಪರಾಕ್ರಮದೊಳಾತ್ಮಪಿತೃಘಾತಮಂ |
ಹೇಸದೆಸಗಿದರುಂಟೆ ಸುಡಲಿ ಸುತರೇಕೆಂದಳಲ್ದಳಾ ಚಿತ್ರಾಂಗದೆ ||54||

ಪದವಿಭಾಗ-ಅರ್ಥ:
ಲೇಸು ಮಾಡಿದೆ ಮಗನೆ ಪಗೆಯಾದನೇ ನರಂ ವಾಸಿ ಬಂದುದೆ ನಿನಗೆ ಮತ್ (ನನ್ನ) ಕಾಂತನು ಅಳಿದನೇ ವಾಸವನ ಸೂನು ಮೃತನಾದನೇ ಧರ್ಮಾನುಜಂ ಪ್ರಾಣಮಂ ತೊರೆದನೇ=[ಒಳ್ಳೆಯಕೆಲಸ ಮಾಡಿದೆ ಮಗನೆ! ((ತಪ್ಪು ಎಂದು ಭಾವ); ಶತ್ರುವಾದನೇ ಅರ್ಜುನ? ಒಳಿತು/ಪುಣ್ಯ ಬಂದಿತೇ ನಿನಗೆ? ನನ್ನ ಪತಿ ಮಡಿದನೇ? ಇಂದ್ರನಮಗನು ಮೃತನಾದನೇ? ಧರ್ಮಜನ ತಮ್ಮ ಪ್ರಾಣವನ್ನು ತೊರೆದನೇ?];;ವಾಸುದೇವನ ಸಖಂ ಮಡಿದನೇ ನಿನ್ನಂದದ ಅಸುರ ಪರಾಕ್ರಮದೊಳು ಆತ್ಮಪಿತೃಘಾತಮಂ ಹೇಸದೆ ಎಸಗಿದರು ಉಂಟೆ ಸುಡಲಿ ಸುತರೇಕೆ ಎಂದು ಅಳಲ್ದಳಾ ಚಿತ್ರಾಂಗದೆ=[ವಾಸುದೇವನ ಸ್ನೇಹಿತ ಮಡಿದನೇ? ನಿನ್ನ ರೀತಿಯ ರಾಕ್ಷಸಪರಾಕ್ರಮದಲ್ಲಿ ಆತ್ಮಪಿತೃಘಾತವನ್ನು -ಸ್ವಂತ ತಂದೆಯನ್ನು ಹೇಸದೆ ಕೊಮದವರು ಉಂಟೆ? ಸುಡಲಿ ಮಕ್ಕಳೇಕೆ ಬೇಕು? ಎಂದು ಅತ್ತಳು ಆ ಚಿತ್ರಾಂಗದೆ].
  • ತಾತ್ಪರ್ಯ:ಚಿತ್ರಾಂಗದೆ ಮಗನಿಗೆ ದುಃಖದಿಂದ ಹೇಳಿದಳು, 'ಒಳ್ಳೆಯಕೆಲಸ ಮಾಡಿದೆ ಮಗನೆ! ((ತಪ್ಪು ಎಂದು ಭಾವ); ಶತ್ರುವಾದನೇ ಅರ್ಜುನ? ಒಳಿತು/ಪುಣ್ಯ ಬಂದಿತೇ ನಿನಗೆ? ನನ್ನ ಪತಿ ಮಡಿದನೇ? ಇಂದ್ರನಮಗನು ಮೃತನಾದನೇ? ಧರ್ಮಜನ ತಮ್ಮ ಪ್ರಾಣವನ್ನು ತೊರೆದನೇ? ವಾಸುದೇವನ ಸ್ನೇಹಿತ ಮಡಿದನೇ? ನಿನ್ನ ರೀತಿಯ ರಾಕ್ಷಸಪರಾಕ್ರಮದಲ್ಲಿ ಆತ್ಮಪಿತೃಘಾತವನ್ನು -ಸ್ವಂತ ತಂದೆಯನ್ನು ಹೇಸದೆ ಕೊಮದವರು ಉಂಟೆ? ಸುಡಲಿ ಮಕ್ಕಳೇಕೆ ಬೇಕು?' ಎಂದು ಅತ್ತಳು ಆ ಚಿತ್ರಾಂಗದೆ.
  • (ಪದ್ಯ-೫೪)

ಪದ್ಯ:-:೫೫:

[ಸಂಪಾದಿಸಿ]

ಈ ಕರ್ಣಸೂತ್ರಮೀಕರ್ಣ ತಾಟಂಕಮೀ |
ಶ್ರೀಕರಂ ನಿಜ ಜನನಿಗೇಕೆಂದು ಬಿಡಸಿದೈ |
ಸಾಕಿನ್ನು ಮಗಮೊಮ್ಮೊಗರಳಿದುದಂ ಕೇಳ್ದೆಂತು ಸೈರಿಪಳೊ ಕುಂತಿದೇವಿ ||
ಭೂಕಾಂತನೇ ಗೈದಪನೊ ಧರ್ಮರಾಜ ನವಿ |
ವೇಕದಿಂ ಬಾಳ್ಕೆಗಿಡಿಸಿದೆಯೆಂದು ತನಯನಂ |
ಶೋಕದಿಂ ಮಿಗೆ ಬೈದಳಲ್ವ ಚಿತ್ರಾಂಗದೆಗುಲೂಪಿ ಬಳಿಕಿಂತೆಂದಳು ||55||

ಪದವಿಭಾಗ-ಅರ್ಥ:
ಈ ಕರ್ಣಸೂತ್ರಂ ಈಕರ್ಣತಾಟಂಕಂ ಈ ಶ್ರೀಕರಂ ನಿಜ ಜನನಿಗೆ ಏಕೆಂದು ಬಿಡಸಿದೈ, ಸಾಕಿನ್ನು ಮಗಮೊಮ್ಮೊಗರು ಅಳಿದುದಂ ಕೇಳ್ದೆಂತು ಸೈರಿಪಳೊ ಕುಂತಿದೇವಿ=[ಈ ಕರ್ಣಸೂತ್ರ/ಕಂಠದಮಂಗಲ ಸೂತ್ರ, ಕಿವಿಯ ಓಲೆ, ಈ ಶ್ರೀಕರವಾದ ಬಳೆ ಮೊದಲಾದವು ತನ್ನ ತಾಯಿಗೆ ಏಕೆಂದು ತೆಗೆಸಿದಯಾ?, ಸಾಕಿನ್ನು, ಮಗ ಮೊಮ್ಮೊಗ ಇವರು ಸತ್ತುದುದನ್ನು ಕೇಳಿ ಹೇಗೆ ಕುಂತಿದೇವಿ ಸೈರಿಸುವಳೊ! ];; ಭೂಕಾಂತನು ಏ ಗೈದಪನೊ ಧರ್ಮರಾಜನ# ಅವಿವೇಕದಿಂ #ಬಾಳ್ಕೆಗಿಡಿಸಿದೆಯೆಂದು (ಬಾಳ+ಕೆಡಿಸಿದೆ ಎಂದು) ತನಯನಂ ಶೋಕದಿಂ ಮಿಗೆ ಬೈದು ಅಳಲ್ವ ಚಿತ್ರಾಂಗದೆಗೆ ಉಲೂಪಿ ಬಳಿಕ ಇಂತೆಂದಳು=[ಧರ್ಮರಾಜನು ಏನು ಮಾಡುವನೊ! ಅವಿವೇಕದಿಂದ ಯಜ್ಞಕ್ಕೆ ಭಂಗಮಾಡಿ ಧರ್ಮರಾಜನ ಬಾಳನ್ನು ನನ್ನ ಬಾಳನ್ನೂ ಕೆಡಿಸಿದೆಯೆಂದು ಮಗನನ್ನು ಶೋಕದಿಂದ ಬಹಳ ಬೈದು ಅಳುತ್ತಿರುವ ಚಿತ್ರಾಂಗದೆಗೆ ಉಲೂಪಿ ಬಳಿಕ ಹೀಗೆ ಹೇಳಿದಳು. ]
  • ತಾತ್ಪರ್ಯ:ಈ ಕರ್ಣಸೂತ್ರ/ಕಂಠದ ಮಂಗಲಸೂತ್ರ, ಕಿವಿಯ ಓಲೆ, ಈ ಶ್ರೀಕರವಾದ ಬಳೆ ಮೊದಲಾದವು ತನ್ನ ತಾಯಿಗೆ ಏಕೆಂದು ತೆಗೆಸಿದಯಾ?, ಸಾಕಿನ್ನು, ಮಗ ಮೊಮ್ಮೊಗ ಇವರು ಸತ್ತುದುದನ್ನು ಕೇಳಿ ಕುಂತಿದೇವಿ ಹೇಗೆಸೈರಿಸುವಳೊ! ಧರ್ಮರಾಜನು ಏನು ಮಾಡುವನೊ! ಅವಿವೇಕದಿಂದ ಯಜ್ಞಕ್ಕೆ ಭಂಗಮಾಡಿ ಧರ್ಮರಾಜನ ಬಾಳನ್ನು ನನ್ನ ಬಾಳನ್ನೂ ಕೆಡಿಸಿದೆಯೆಂದು ಮಗನನ್ನು ಶೋಕದಿಂದ ಬಹಳ ಬೈದು ಅಳುತ್ತಿರುವ ಚಿತ್ರಾಂಗದೆಗೆ ಉಲೂಪಿ ಬಳಿಕ ಹೀಗೆ ಹೇಳಿದಳು.]
  • (ಪದ್ಯ-೫೫)

ಪದ್ಯ:-:೫೬:

[ಸಂಪಾದಿಸಿ]

ದೇವಿ ನಿಲ್ಲಿನ್ನು ಮರ್ಜುನನ ಮೃತಿ ಸಂಶಯಂ |
ಭಾವಿಸುವೊಡೆನಗೊಂದು ಕುರುಪುಂಟು ತನ್ನ ಕೇ |
ಳೀವನದೊಳಂದು ಪಾರ್ಥಂ ತನಗೆ ತೋರಿದಂ ದಾಡಿದು ದ್ರುಮಮೈದನು ||
ಆವ ದಿನಕೊಣಗುವುವು ತರುಗಳಾ ದಿನಕೆನ್ನ |
ಜೀವಕಳಿವಹುದೆಂದು ತಾನದಂ ನೋಡಿ ಬಹೆ |
ನೀ ವಿಷಾದಂ ಬೇಡ ಸೈರಿಸೆನೆ ಕಳುಹಿದ ಳುಲೂಪಿಯಂ ಚಿತ್ರಾಂಗದೆ ||56||

ಪದವಿಭಾಗ-ಅರ್ಥ:
ದೇವಿ ನಿಲ್ಲ ಇನ್ನುಂ ಅರ್ಜುನನ ಮೃತಿ ಸಂಶಯಂ ಭಾವಿಸುವೊಡೆ ಎನಗೊಂದು ಕುರುಪುಂಟು; ತನ್ನ ಕೇಳೀವನದೊಳು ಅಂದು ಪಾರ್ಥಂ ತನಗೆ ತೋರಿದಂ ದಾಡಿದು ದ್ರುಮಂ ಐದನು=[ದೇವಿ ನಿಲ್ಲಿಸು ಇನ್ನೂ ಅರ್ಜುನನ ಮೃತಿಯು ಯೋಚಿಸಿದರೆ ಸಂಶಯವಿದೆ; ನನಗೊಂದು ಕುರುಪು/ಕುರುಹು ಇದೆ; ತನ್ನ ವಿಹಾರದ ತೋಟದಲ್ಲಿ ಅಂದು ಪಾರ್ಥನು ತನಗೆ ತೋರಿದ ದಾಡಿದುದ ಐದುಮರವಿದೆ.];; ಆವ ದಿನಕೆ ಒಣಗುವುವು ತರುಗಳು ಆ ದಿನಕೆ ಎನ್ನ ಜೀವಕೆ ಅಳಿವಹುದೆಂದು ತಾನು ಅದಂ ನೋಡಿ ಬಹೆನು ಈ ವಿಷಾದಂ ಬೇಡ ಸೈರಿಸು ಎನೆ ಕಳುಹಿದಳು ಲೂಪಿಯಂ ಚಿತ್ರಾಂಗದೆ=[ಯಾವ ದಿನಕ್ಕೆ ಆ ಮರಗಳು ಒಣಗುವುವೋ ಆ ದಿನಕ್ಕೆ ತನ್ನ ಜೀವ ಅಳಿಯುವುದೆಂದೂ ಹೇಳಿರುವನು, ತಾನು ಅದನ್ನು ನೋಡಿ ಬರುವೆನು; ಈ ದುಃಖ ಬೇಡ ಸೈರಿಸಿಕೊ, ಎನ್ನಲು ಲೂಪಿಯನ್ನು ಚಿತ್ರಾಂಗದೆ ಅದನ್ನು ನೋಡಲು ಕಳುಹಿದಳು].
  • ತಾತ್ಪರ್ಯ:ದೇವಿ ನಿಲ್ಲಿಸು ಇನ್ನೂ ಅರ್ಜುನನ ಮೃತಿಯು ಯೋಚಿಸಿದರೆ ಸಂಶಯವಿದೆ; ನನಗೊಂದು ಕುರುಪು/ಕುರುಹು ಇದೆ; ತನ್ನ ವಿಹಾರದ ತೋಟದಲ್ಲಿ ಅಂದು ಪಾರ್ಥನು ತನಗೆ ತೋರಿದ ದಾಡಿದುದ ಐದುಮರವಿದೆ. ಯಾವ ದಿನಕ್ಕೆ ಆ ಮರಗಳು ಒಣಗುವುವೋ ಆ ದಿನಕ್ಕೆ ತನ್ನ ಜೀವ ಅಳಿಯುವುದೆಂದೂ ಹೇಳಿರುವನು, ತಾನು ಅದನ್ನು ನೋಡಿ ಬರುವೆನು; ಈ ದುಃಖ ಬೇಡ ಸೈರಿಸಿಕೊ, ಎನ್ನಲು ಲೂಪಿಯನ್ನು ಚಿತ್ರಾಂಗದೆ ಅದನ್ನು ನೋಡಲು ಕಳುಹಿದಳು.
  • (ಪದ್ಯ-೫೬)

ಪದ್ಯ:-:೫೭:

[ಸಂಪಾದಿಸಿ]

ಕ್ರೀಡಾವನಕೆ ಪೋಗಿ ನಿಮಿಷದೊಳಹೀಂದ್ರಸುತೆ |
ನೋಡಿ ಬಂದಲ್ಲಿಯ ದವಾಗ್ನಿಯಿಂದಾ ಪಂಚ |
ದಾಡಿಮ ದ್ರುಮಮೊಣಗಿತರ್ಜುನನ ಮೃತಿ ದಿಟಂ ನಡೆ ಪೋಪೆವಲ್ಲಿಗೆಂದು ||
ಪೀಡಿಸುವ ಶೋಕದಿಂ ಚಿತ್ರಾಂಗದೆಗೆ ನುಡಿಯೆ|
ಕೂಡೆ ಪೊರಮಟ್ಟೆಲ್ಲರುಂ ರಣಕೆ ನಡೆತಂದು |
ಜೋಡಾಗಿ ಬಿದ್ದಿರ್ದ ಕರ್ಣಸುತ ಪಾರ್ಥರಂ ಕಂಡಲ್ಲಿ ಕೆಡೆದಳಲ್ದರು ||57||

ಪದವಿಭಾಗ-ಅರ್ಥ:
ಕ್ರೀಡಾವನಕೆ ಪೋಗಿ ನಿಮಿಷದೊಳು ಅಹೀಂದ್ರಸುತೆ ನೋಡಿ ಬಂದಲ್ಲಿಯ ದವಾಗ್ನಿಯಿಂದ ಆ ಪಂಚ ದಾಡಿಮ ದ್ರುಮಮ್ ಒಣಗಿತು ಅರ್ಜುನನ ಮೃತಿ ದಿಟಂ ನಡೆ ಪೋಪೆವು ಅಲ್ಲಿಗೆಂದು=[ಉಲೂಪಿಯು ಕ್ರೀಡಾವನಕ್ಕೆ ಹೋಗಿ ನಿಮಿಷದಲ್ಲಿ/ ಬೇಗ ನೋಡಿದಾಗ ಬಂದು ಅಲ್ಲಿಯ ಬೆಂಕಿಯಿಂದ ಆ ಐದು ದಾಳಿಂಬೆ ಗಿಡಗಳು ಒಣಗಿತ್ತು; ಅರ್ಜುನನ ಸಾವು ನಿಜ ನಡೆ ಅಲ್ಲಿಗೆ ಹೋಗೋಣ ಎಂದು,];; ಪೀಡಿಸುವ ಶೋಕದಿಂ ಚಿತ್ರಾಂಗದೆಗೆ ನುಡಿಯೆ ಕೂಡೆ ಪೊರಮಟ್ಟು ಎಲ್ಲರುಂ ರಣಕೆ ನಡೆತಂದು ಜೋಡಾಗಿ ಬಿದ್ದಿರ್ದ ಕರ್ಣಸುತ ಪಾರ್ಥರಂ ಕಂಡಲ್ಲಿ ಕೆಡೆದು ಅಳಲ್ದರು=[ಸಂಕಟ ಮತ್ತು ಶೋಕದಿಂದ ಚಿತ್ರಾಂಗದೆಗೆ ಹೇಳಲು ತಕ್ಷಣ ಹೊರಟು ಎಲ್ಲರೂ ರಣರಂಗಕ್ಕೆಕ ಬಂದು ಒಟ್ಟಿಗೆ ಜೋಡಾಗಿ ಬಿದ್ದಿದ್ದ ಕರ್ಣಸುತ ಮತ್ತು ಪಾರ್ಥರನ್ನು ಅಲ್ಲಿ ಕಂಡು ನೆಲಕ್ಕೆಬಿದ್ದು ಅತ್ತರು.];
  • ತಾತ್ಪರ್ಯ: ಉಲೂಪಿಯು ಕ್ರೀಡಾವನಕ್ಕೆ ಹೋಗಿ ನಿಮಿಷದಲ್ಲಿ/ ಬೇಗ ನೋಡಿದಾಗ ಬಂದು ಅಲ್ಲಿಯ ಬೆಂಕಿಯಿಂದ ಆ ಐದು ದಾಳಿಂಬೆ ಗಿಡಗಳು ಒಣಗಿತ್ತು; ಅರ್ಜುನನ ಸಾವು ನಿಜ ನಡೆ ಅಲ್ಲಿಗೆ ಹೋಗೋಣ ಎಂದು, ಸಂಕಟ ಮತ್ತು ಶೋಕದಿಂದ ಚಿತ್ರಾಂಗದೆಗೆ ಹೇಳಲು ತಕ್ಷಣ ಹೊರಟು ಎಲ್ಲರೂ ರಣರಂಗಕ್ಕೆಕ ಬಂದು ಒಟ್ಟಿಗೆ ಜೋಡಾಗಿ ಬಿದ್ದಿದ್ದ ಕರ್ಣಸುತ ಮತ್ತು ಪಾರ್ಥರನ್ನು ಅಲ್ಲಿ ಕಂಡು ನೆಲಕ್ಕೆಬಿದ್ದು ಅತ್ತರು.
  • (ಪದ್ಯ-೫೭)

ಪದ್ಯ:-:೫೮:

[ಸಂಪಾದಿಸಿ]

ಶೀತೋಷ್ಣರುಚಿಗಳಂ ಗಗನ ಗತಿಯಂ ಬಿಟ್ಟು |
ಭೂತಳದ ಮೇಲೆ ರವಿ ಶಶಿಗಳೆಸೆವಂತೆ ಪುರು |
ಹೂತಸುತ ಕರ್ಣಜರ ತಲೆಗಳೊಪ್ಪಿರೆ ಕಂಡುಲೂಪಿ ಚಿತ್ರಾಂಗದೆಯರು ||
ಕಾತರಸಿ ಕರಗಿ ಕಂಬನಿಯೊಳಾಳ್ದಾಗ ಶೋ |
ಕಾತಿಶಯದಿಂದೆ ಪಾರ್ಥನ ಪಾದದೊಳ್ ಪೊರ |
ಳ್ದಾತನ ಗುಣಂಗಳಂ ಸಾಲ್ಗೊಳಿಸಿ ಬಣ್ಣಿಸಿ ಪೊರಳ್ದು ಗೋಳಿಡುತಿರ್ದರು ||58||

ಪದವಿಭಾಗ-ಅರ್ಥ:
ಶೀತ ಉಷ್ಣ ರುಚಿಗಳಂ ಗಗನ ಗತಿಯಂ ಬಿಟ್ಟು ಭೂತಳದ ಮೇಲೆ ರವಿ ಶಶಿಗಳು ಎಸೆವಂತೆ ಪುರುಹೂತಸುತ ಕರ್ಣಜರ ತಲೆಗಳು ಒಪ್ಪಿರೆ ಕಂಡು ಉಲೂಪಿ ಚಿತ್ರಾಂಗದೆಯರು=[ಶೀತ ಉಷ್ಣ ಗುಣಗಳನ್ನೂ, ಗಗನ ಸಂಚಅರವನ್ನೂ ಬಿಟ್ಟು ನೆಲದ ಮೇಲೆ ಸೂರ್ಯ ಚಂದ್ರರು ಪ್ರಕಾಶಿಸುವಂತೆ ಅರ್ಜುನ ವೃಷಕೇತುಗಳ ತಲೆಗಳು ತೋರುತ್ತಿರಲು, ಅದನ್ನು ಕಂಡು ಉಲೂಪಿ ಚಿತ್ರಾಂಗದೆಯರು];; ಕಾತರಸಿ ಕರಗಿ ಕಂಬನಿಯೊಳು ಆಳ್ದಾಗ ಶೋಕಾತಿಶಯದಿಂದೆ ಪಾರ್ಥನ ಪಾದದೊಳ್ ಪೊರಳ್ದು ಆತನ ಗುಣಂಗಳಂ ಸಾಲ್ಗೊಳಿಸಿ ಬಣ್ಣಿಸಿ ಪೊರಳ್ದು ಗೋಳಿಡುತಿರ್ದರು=[ದುಃಖದಿಂದ ಕರಗಿ ಕಂಬನಿಯಲ್ಲಿ ಮುಳುಗಿ ಆಗ ಶೋಕಾತಿಶಯದಿಂದ ಪಾರ್ಥನ ಪಾದದಲ್ಲಿ ಹೊರಳಿ ಆತನ ಗುಣಂಗಳನ್ನು ಸಾಲುಸಾಲಾಗಿ ಬಣ್ಣಿಸಿ ಹೊರಳುತ್ತಾ ಗೋಳಿಡುತಿದ್ದರು.];
  • ತಾತ್ಪರ್ಯ:ಶೀತ ಉಷ್ಣ ಗುಣಗಳನ್ನೂ, ಗಗನ ಸಂಚಾರವನ್ನೂ ಬಿಟ್ಟು ನೆಲದ ಮೇಲೆ ಸೂರ್ಯ ಚಂದ್ರರು ಬಿದ್ದು ಪ್ರಕಾಶಿಸುವಂತೆ ಅರ್ಜುನ ವೃಷಕೇತುಗಳ ತಲೆಗಳು ತೋರುತ್ತಿರಲು, ಅದನ್ನು ಕಂಡು ಉಲೂಪಿ ಚಿತ್ರಾಂಗದೆಯರು ದುಃಖದಿಂದ ಕರಗಿ ಕಂಬನಿಯಲ್ಲಿ ಮುಳುಗಿ ಆಗ ಶೋಕಾತಿಶಯದಿಂದ ಪಾರ್ಥನ ಪಾದದಲ್ಲಿ ಹೊರಳಿ ಆತನ ಗುಣಂಗಳನ್ನು ಸಾಲುಸಾಲಾಗಿ ಬಣ್ಣಿಸಿ ಹೊರಳುತ್ತಾ ಗೋಳಿಡುತಿದ್ದರು.
  • (ಪದ್ಯ-೫೮)

ಪದ್ಯ:-:೫೯:

[ಸಂಪಾದಿಸಿ]

ನಿನ್ನಂಗ ಸಂಗಮನಗಲ್ದಾಯ್ತು ಪಲಕಾಲ |
ಮಿನ್ನೊಮ್ಮೆ ನೆರೆಯಲಾಗದೆ ನಾಥ ಮೂಜಗದೊ |
ಳುನ್ನಿಸಲ್ ನಿನಗೆ ಪಡಿಯಹರುಂಟೆ ರೂಪ ಗುಣ ವಿಕ್ರಮ ಪ್ರೌಢಿಗಳೊಳು ||
ಭಿನ್ನಿಸದೆ ಕೆಚ್ಚೆದೆಯ ಸತಿಯರಾವಸುವಿಡಿದೆ |
ವಿನ್ನೆಗಂ ಕೇಳ್ದೆಂತು ಸೈರಿಪರೊ ಕಾಂತನೊಳ್ |
ನನ್ನಿಯುಳ್ಳರಸಿಯರ್ ದ್ರೌಪದಿ ಸುಭದ್ರೆಯರದೆಂತುಳಿವರಕಟೆಂದರು ||59||

ಪದವಿಭಾಗ-ಅರ್ಥ:
ನಿನ್ನ ಅಂಗ ಸಂಗಮನು ಅಗಲ್ದು ಆಯ್ತು ಪಲಕಾಲಂ=[ಉಲೂಪಿ ಚಿತ್ರಾಂಗದೆಯರು ದುಃಖದಿಂದ, ನಾಥ, ನಿನ್ನ ದೇಹ ಸಂಪರ್ಕಮಾಡಿ ನಂತರ ನಿನ್ನನ್ನು ಅಗಲಿ ಹಲವು ಕಾಲ ಆಯ್ತು.];; ಇನ್ನೊಮ್ಮೆ ನೆರೆಯಲಾಗದೆ ನಾಥ ಮೂಜಗದೊಳು ಉನ್ನಿಸಲ್ ನಿನಗೆ ಪಡಿಯಹರು ಉಂಟೆ ರೂಪ ಗುಣ ವಿಕ್ರಮ ಪ್ರೌಢಿಗಳೊಳು=[ಇನ್ನೊಮ್ಮೆ ನಿನ್ನೊಡನೆ ಸೇರಲಾಗದೆ, (ನಾಥ) ಮೂರುಜಗತ್ತಿನಲ್ಲಿ ಯೋಚಿಸಿದರೆ ನಿನಗೆ ಸಮನಾಗಿರುವರು ರೂಪ ಗುಣ ವಿಕ್ರಮ ಪ್ರೌಢಿಗಳಲ್ಲಿ ಬೇರೆಯವರು ಉಂಟೆ?];; ಭಿನ್ನಿಸದೆ ಕೆಚ್ಚೆದೆಯ ಸತಿಯರು ಆವಸುವಿಡಿದೆವು ಇನ್ನೆಗಂ=[ಬೇರೆಯವರನ್ನು ಬಯಸದೆ ಎದೆಯೊಡೆಯದೆ ಗಟ್ಟಿಮನಸ್ಸಿನ ಕೆಚ್ಚೆದೆಯ ಸತಿಯರು ಇನ್ನೆಗಂ/ಇದುವರೆಗೆ ನಾವು ಪ್ರಾಣವನ್ನು ಹಿಡಿದುಕೊಂಡಿರುವೆವು.];; ಇನ್ನೆಗಂ ಕೇಳ್ದು ಎಂತು ಸೈರಿಪರೊ ಕಾಂತನೊಳ್ ನನ್ನಿಯುಳ್ಳ ಅರಸಿಯರ್ ದ್ರೌಪದಿ ಸುಭದ್ರೆಯರು ಅದೆಂತು ಉಳಿವರು ಅಕಟ ಎಂದರು=[ಈ ಮರಣವಾರ್ತೆಯನ್ನು, ಕೇಳಿ ಕಾಂತನಲ್ಲಿ ನಿಷ್ಟೆ-ಪ್ರೀತಿಯುಳ್ಳ ಅರಸಿಯರಾದ ದ್ರೌಪದಿ ಸುಭದ್ರೆಯರು ಅದು ಹೇಗೆ ಸಹಿಸಿಕೊಂಡು ಉಳಿಯುವರೊ ಅಕಟ! ಎಂದರು].
  • ತಾತ್ಪರ್ಯ:ಉಲೂಪಿ ಚಿತ್ರಾಂಗದೆಯರು ದುಃಖದಿಂದ ಮಡಿದ ಪಾರ್ಥನನ್ನು ಕುರಿತು, ನಾಥ!, ನಿನ್ನ ದೇಹ ಸಂಪರ್ಕಮಾಡಿ ನಂತರ ನಿನ್ನನ್ನು ಅಗಲಿ ಹಲವು ಕಾಲ ಆಯ್ತು. ಇನ್ನೊಮ್ಮೆ ನಿನ್ನೊಡನೆ ಸೇರಲಾಗದೆ ಹೋದೆವು, (ನಾಥ) ಮೂರುಜಗತ್ತಿನಲ್ಲಿ ಯೋಚಿಸಿದರೆ ನಿನಗೆ ಸಮನಾಗಿರುವರು ರೂಪ ಗುಣ ವಿಕ್ರಮ ಪ್ರೌಢಿಗಳಲ್ಲಿ ಬೇರೆಯವರು ಉಂಟೆ? ಬೇರೆಯವರನ್ನು ಬಯಸದೆ ಎದೆಯೊಡೆಯದೆ ಗಟ್ಟಿಮನಸ್ಸಿನ ಕೆಚ್ಚೆದೆಯ ಸತಿಯರು ಇನ್ನೆಗಂ/ಇದುವರೆಗೆ ನಾವು ಪ್ರಾಣವನ್ನು ಹಿಡಿದುಕೊಂಡಿರುವೆವು. ಈ ಮರಣವಾರ್ತೆಯನ್ನು, ಕೇಳಿ ಕಾಂತನಲ್ಲಿ ನಿಷ್ಟೆ-ಪ್ರೀತಿಯುಳ್ಳ ಅರಸಿಯರಾದ ದ್ರೌಪದಿ ಸುಭದ್ರೆಯರು ಅದು ಹೇಗೆ ಸಹಿಸಿಕೊಂಡು ಉಳಿಯುವರೊ ಅಕಟ! ಎಂದರು.
  • (ಪದ್ಯ-೫೯)

ಪದ್ಯ:-:೬೦:

[ಸಂಪಾದಿಸಿ]

ಅಡಿಯೊಳ್ ಪೊರಳ್ದು ಕಾಯವನಪ್ಪಿ ಕೈಗಳಂ |
ಪಿಡುದುರಸ್ಥಳಕೆ ತೆಗೆದೊಂದಿಸಿ ಕೊರಲ್ಗೆ ಕಡಿ |
ವಡೆದ ತಲೆಯಂ ಕೂಡಿ ನೋಡಿ ಮುಂಡಾಡಿ ಪಣೆಗಿಟ್ಟು ಮೊಗಮಂ ಚುಂಬಿಸಿ ||
ಒಡನೊಡನೆ ಪಾರ್ಥನ ಚರಿತ್ರಮಂ ಸಾಲ್ಗೊಳಿಸಿ |
ನುಡಿನುಡಿಗಳಲ್ದು ಕೆಲದೊಳ್ ಕಡೆದ ಕರ್ಣಜಂ |
ಗೊಡಲುರಿಯೊಳಕಟ ಸುತ ಹಾಯೆಂದು ಮರುಗಿದರುಲೂಪಿ ಚಿತ್ರಾಂಗದೆಯರು ||60||

ಪದವಿಭಾಗ-ಅರ್ಥ:
ಅಡಿಯೊಳ್ ಪೊರಳ್ದು ಕಾಯವನು ಅಪ್ಪಿ ಕೈಗಳಂ ಪಿಡುದು ಉರಸ್ಥಳಕೆ ತೆಗೆದು ಒಂದಿಸಿ (ಹೊಂದಿಸಿ), ಕೊರಲ್ಗೆ ಕಡಿವಡೆದ ತಲೆಯಂ ಕೂಡಿ, ನೋಡಿ ಮುಂಡಾಡಿ ಪಣೆಗಿಟ್ಟು ಮೊಗಮಂ ಚುಂಬಿಸಿ, =[ಪಾದದಲ್ಲಿ ಹೊರಳಿ, ದೇಹವನ್ನು ಅಪ್ಪಿ, ಕೈಗಳನ್ನು ಹಿಡಿದು ಎದೆಗೆ ಒತ್ತಿಕೊಂಡು, ಅವನ್ನು ತೆಗೆದು ಹೊಂದಿಸಿ, ಕೊರಳಿಗೆ ಕಡಿದ ತಲೆಯನ್ನು ಕೂಡಿಸಿ, ನೋಡಿ ಮುಂಡಾಡಿ, ತನ್ನ ಹಣೆಯನ್ನು ಅವನ ಹಣೆಗಿಟ್ಟು, ಮುಖವನ್ನು ಚುಂಬಿಸಿ,];; ಒಡನೊಡನೆ ಪಾರ್ಥನ ಚರಿತ್ರಮಂ ಸಾಲ್ಗೊಳಿಸಿ ನುಡಿನುಡಿಗೆ ಅಳಲ್ದು ಕೆಲದೊಳ್ ಕಡೆದ ಕರ್ಣಜಂಗೆ ಒಡಲುರಿಯೊಳು ಅಕಟ ಸುತ ಹಾಯೆಂದು ಮರುಗಿದರು ಉಲೂಪಿ ಚಿತ್ರಾಂಗದೆಯರು=[ಮತ್ತೆ ಮತ್ತೆ ಪಾರ್ಥನ ಚರಿತ್ರ/ಗುಣವನ್ನು ಸಾಲುಸಾಲಾಗಿ ಹೇಳಿ, ಪ್ರತಿನುಡಿಗೆ ಅಳುತ್ತಾ, ಪಕ್ಕದಲ್ಲಿ ಬಿದ್ದಿದ್ದ ಕರ್ಣಜ-ವೃಷಕೇತುವಿಗಾಗಿ ಹೊಟ್ಟೆಯಲ್ಲಿ ಸಂಕಟಪಡುತ್ತಾ ಅಕಟ ಮಗನೇ ಹಾ! ಯೆಂದು ದುಃಖಿಸಿದರು ಉಲೂಪಿ ಚಿತ್ರಾಂಗದೆಯರು].
  • ತಾತ್ಪರ್ಯ:ಅರ್ಜುನನ ಪಾದದಲ್ಲಿ ಹೊರಳಿ, ದೇಹವನ್ನು ಅಪ್ಪಿ, ಕೈಗಳನ್ನು ಹಿಡಿದು ಎದೆಗೆ ಒತ್ತಿಕೊಂಡು, ಅವನ್ನು ತೆಗೆದು ಹೊಂದಿಸಿ, ಕೊರಳಿಗೆ ಕಡಿದ ತಲೆಯನ್ನು ಕೂಡಿಸಿ, ನೋಡಿ ಮುಂಡಾಡಿ, ತನ್ನ ಹಣೆಯನ್ನು ಅವನ ಹಣೆಗಿಟ್ಟು, ಮುಖವನ್ನು ಚುಂಬಿಸಿ, ಮತ್ತೆ ಮತ್ತೆ ಪಾರ್ಥನ ಚರಿತ್ರ/ಗುಣವನ್ನು ಸಾಲುಸಾಲಾಗಿ ಹೇಳಿ, ಪ್ರತಿನುಡಿಗೆ ಅಳುತ್ತಾ, ಪಕ್ಕದಲ್ಲಿ ಬಿದ್ದಿದ್ದ ಕರ್ಣಜ-ವೃಷಕೇತುವಿಗಾಗಿ ಹೊಟ್ಟೆಯಲ್ಲಿ ಸಂಕಟಪಡುತ್ತಾ ಅಕಟ ಮಗನೇ ಹಾ! ಯೆಂದು ದುಃಖಿಸಿದರು ಉಲೂಪಿ ಚಿತ್ರಾಂಗದೆಯರು].
  • (ಪದ್ಯ-೬೦)

ಪದ್ಯ:-:೬೧:

[ಸಂಪಾದಿಸಿ]

ಬಳಿಕ ಚಿತ್ರಾಂಗದೆ ಕುಮಾರನಂ ನೋಡಿ ಕೊಲೆ |
ಗೆಳಸಿದೈ ಜನಕಂಗೆ ಜನನಿಯರ್ ನಾವಿರ್ವ |
ರುಳಿಯಲೇಖಿನ್ನಕಟ ವೈಧವ್ಯಮಂ ತಾಳಬಲ್ಲೆವೆ ಮಹೀತಳದೊಳು ||
ಸೆಳೆದು ಪೊಡೆ ಖಡ್ಗದಿಂದೆಮ್ಮೀಶಿರಂಗಳಂ |
ಬಳಿಕೈದೆ ಭಾರ್ಗವಂ ಕೊಂದುದಿಲ್ಲವೆ ತಾಯ |
ನಳುಕದಿರ್ ಪಿತನ ಮಾತೃದ್ವಯದ ವಧೆ ನಿನಗೆ ಸಫಲಮಾದಪುದೆಂದಳು ||61||

ಪದವಿಭಾಗ-ಅರ್ಥ:
ಬಳಿಕ ಚಿತ್ರಾಂಗದೆ ಕುಮಾರನಂ ನೋಡಿ ಕೊಲೆಗೆ ಎಳಸಿದೈ ಜನಕಂಗೆ ಜನನಿಯರ್ ನಾವಿರ್ವರು ಉಳಿಯಲೇಕಿನ್ನು ಅಕಟ ವೈಧವ್ಯಮಂ ತಾಳಬಲ್ಲೆವೆ ಮಹೀತಳದೊಳು=[ಬಳಿಕ ಚಿತ್ರಾಂಗದೆ ಕುಮಾರನನ್ನು ನೋಡಿ ತಂದಯ ಕೊಲೆಗೆ ಬಯಿದೆಯಲ್ಲವೇ! ತಾಯಂದಿರು ನಾವು ಇಬ್ಬರು ಉಳಿಯುವುದೇಕೆ? ಅಕಟ ವೈಧವ್ಯವನ್ನು ತಾಳಬಲ್ಲೆವೆ ಈಭೂಮಿಯಲ್ಲಿ ಬದುಕಿ?];; ಸೆಳೆದು ಪೊಡೆ ಖಡ್ಗದಿಂದ ಎಮ್ಮ ಈ ಶಿರಂಗಳಂ ಬಳಿಕ ಐದೆ ಭಾರ್ಗವಂ ಕೊಂದುದಿಲ್ಲವೆ ತಾಯನು ಅಳುಕದಿರ್ ಪಿತನ ಮಾತೃದ್ವಯದ ವಧೆ ನಿನಗೆ ಸಫಲಂ ಆದಪುದೆಂದಳು=[ ನಮ್ಮ ಈ ತಲೆಗಳನ್ನು ಸೆಳೆದು ಖಡ್ಗದಿಂದ ಹೊಡೆ!, ತಂದೆ ಹೇಳಿದ ಬಳಿಕ ಭಾರ್ಗವನು /ಪರಷುರಾಮನು ಮುತ್ತೈದೆ ತಾಯನ್ನು ಕೊಂದಿಲ್ಲವೆ! ಅಳುಕಬೇಡ, ತಂದೆಯ ಮತ್ತು ಇಬ್ಬರು ತಾಯಂದಿರ ವಧೆಯಿಂದ ನಿನಗೆ ಸಫಲ/ಪುಣ್ಯಫಲ ಆಗುವುದು ಎಂದಳು.]
  • ತಾತ್ಪರ್ಯ:ಬಳಿಕ ಚಿತ್ರಾಂಗದೆ ತನ್ನ ಕುಮಾರನನ್ನು ನೋಡಿ ತಂದಯ ಕೊಲೆಗೆ ಬಯಿದೆಯಲ್ಲವೇ! ತಾಯಂದಿರು ನಾವು ಇಬ್ಬರು ಉಳಿಯುವುದೇಕೆ? ಅಕಟ! ವೈಧವ್ಯವನ್ನು ತಾಳಬಲ್ಲೆವೆ ಈಭೂಮಿಯಲ್ಲಿ ಬದುಕಿ? ನಮ್ಮ ಈ ತಲೆಗಳನ್ನು ಸೆಳೆದು ಖಡ್ಗದಿಂದ ಹೊಡೆ!, ತಂದೆ ಹೇಳಿದ ಬಳಿಕ ಭಾರ್ಗವನು /ಪರಷುರಾಮನು ಸಾಧ್ವಿ ತಾಯನ್ನು ಕೊಂದಿಲ್ಲವೆ! ಅಳುಕಬೇಡ, ತಂದೆಯ ಮತ್ತು ಇಬ್ಬರು ತಾಯಂದಿರ ವಧೆಯಿಂದ ನಿನಗೆ ಸಫಲ/ಪುಣ್ಯಫಲ ಆಗುವುದು ಎಂದಳು.]
  • (ಪದ್ಯ-೬೧)

ಪದ್ಯ:-:೬೨:

[ಸಂಪಾದಿಸಿ]

ತಾಯ ಮಾತಂ ಕೇಳ್ದು ಶೋಕಕಲುಷಿತನಾಗಿ |
ಪ್ರೀಯದಿಂ ಪೋಗಿ ಕಂಡೊಡೆ ತನುಜನಲ್ಲೆಂದು |
ನೋಯೆ ನುಡಿದಾಹಮಂ ಬೇಕೆಂದೊಡೀತನಂ ಕೊಂದೆ ನಾಂ ಪಂತಮೆಂದು ||
ದಾಯತಪ್ಪಿದ ಬಳಿಕ ಪೇಳ್ದೊಡೇನಹುದಿನ್ನು |
ಹೇಯಮಾದುದು ತನ್ನ ಬಾಳ್ಕೆ ಪಿತೃವಧೆಯೊಳೀ |
ಕಾಯಮಂ ಬಿಡುವೆನೀಗಲೆ ನೋಳ್ಪುದೆಂದವಂ ಕಿಚ್ಚುವುಗಲನುವಾದನು ||62||

ಪದವಿಭಾಗ-ಅರ್ಥ:
ತಾಯ ಮಾತಂ ಕೇಳ್ದು ಶೋಕಕಲುಷಿತನಾಗಿ ಪ್ರೀಯದಿಂ ಪೋಗಿ ಕಂಡೊಡೆ ತನುಜನಲ್ಲೆಂದು ನೋಯೆ ನುಡಿದು ಆಹಮಂ ಬೇಕು ಎಂದೊಡೆ ಈತನಂ ಕೊಂದೆ ನಾಂ ಪಂತಮೆಂದು=[ತಾಯಿಯ ಮಾತನ್ನು ಕೇಳಿ ದುಃಖಭರಿತನಾಗಿ, ತಾಯಿಯೇ,ನಾನು ಪ್ರೀತಿಯಿಂದ ವಿನಯವಾಗಿ ಹೋಗಿ ಪಾರ್ಥನನ್ನು ಕಂಡಾಗ ಅವನು ನನ್ನನ್ನು ಮಗನಲ್ಲ ಎಂದು ಬಹಳ ನೋಯುವಂತೆ ನುಡಿದನು. ಯುದ್ಧಮಾಡಬೇಕು ಎಂದಾಗ ಈತನನ್ನು ಶಪಥಮಾಡಿದಂತೆ ನಾನು ಕೊಂದೆ.];; ದಾಯತಪ್ಪಿದ ಬಳಿಕ ಪೇಳ್ದೊಡೇನಹುದಿನ್ನು ಹೇಯಮಾದುದು ತನ್ನ ಬಾಳ್ಕೆ ಪಿತೃವಧೆಯೊಳೀ ಕಾಯಮಂ ಬಿಡುವೆನೀಗಲೆ ನೋಳ್ಪುದೆಂದವಂ ಕಿಚ್ಚುವುಗಲನುವಾದನು=[ನೀತಿ ತಪ್ಪಿದಮೇಲೆ ಇನ್ನು ಹೇಳಿ ಏನು ಪ್ರಯೋಜನ. ತನ್ನ ಬಾಳುವೆ ಪಿತೃವಧೆಯಿಂದ ಅಯೋಗ್ಯವಾಯಿತು. ಈಗ ಕೂಡಲೆ ಈ ದೇಹವನ್ನು ಬಿಡುವೆನು; ನೀನು ನೋಡು ಎಂದು ಅವನು ಅಗ್ನಿಪ್ರವೇಶಕ್ಕೆ ಸಿದ್ಧನಾದನು].
  • ತಾತ್ಪರ್ಯ:ತಾಯಿಯ ಮಾತನ್ನು ಕೇಳಿ ದುಃಖಭರಿತನಾಗಿ, ತಾಯಿಯೇ,ನಾನು ಪ್ರೀತಿಯಿಂದ ವಿನಯವಾಗಿ ಹೋಗಿ ಪಾರ್ಥನನ್ನು ಕಂಡಾಗ ಅವನು ನನ್ನನ್ನು ಮಗನಲ್ಲ ಎಂದು ಬಹಳ ನೋಯುವಂತೆ ನುಡಿದನು. ಯುದ್ಧಮಾಡಬೇಕು ಎಂದಾಗ ಈತನನ್ನು ಶಪಥಮಾಡಿದಂತೆ ನಾನು ಕೊಂದೆ. ನೀತಿ ತಪ್ಪಿದಮೇಲೆ ಇನ್ನು ಹೇಳಿ ಏನು ಪ್ರಯೋಜನ. ತನ್ನ ಬಾಳುವೆ ಪಿತೃವಧೆಯಿಂದ ಅಯೋಗ್ಯವಾಯಿತು. ಈಗ ಕೂಡಲೆ ಈ ದೇಹವನ್ನು ಬಿಡುವೆನು; ನೀನು ನೋಡು ಎಂದು ಅವನು ಅಗ್ನಿಪ್ರವೇಶಕ್ಕೆ ಸಿದ್ಧನಾದನು.
  • (ಪದ್ಯ-೬೨)

ಪದ್ಯ:-:೬೩:

[ಸಂಪಾದಿಸಿ]

ತಂದೆಯಂಕೊಂದುಳಿದನೆಂದು ಲೋಕದ ಜನಂ|
ನಿಂದಿಸದೆಬಿಡದಿದಕೆ ನಿಷ್ಕೃತಿಗಳಂಕಾಣೆ |
ನೊಂದು ಮಂತ್ರಧ್ಯಾನ ಜಪ ತೀರ್ಥ ಯಾಗ ಯೋಗಂಗಳಿಂಕಳೆದುಕೊಳಲು||
ಸಂಧಿಗ್ಧಮಾಗಿರ್ದ ಪಾತಕಂ ಪೋಪುದು ಮು|
ಕುಂದ ಸ್ಮರಣೆಯಿಂದಮರ್ಜುನಂ ವೈಷ್ಣವಂ |
ಬಂದುದಪಕೀರ್ತಿ ನಾಂ ನಾಚದೆಂತಿರ್ಪೆಂ ಪುಗುವೆನಗ್ನಿಯೊಳೆಂದನು||63||

ಪದವಿಭಾಗ-ಅರ್ಥ:
ತಂದೆಯಂ ಕೊಂದು ಉಳಿದನೆಂದು ಲೋಕದ ಜನಂನಿಂದಿಸದೆ ಬಿಡದು ಇದಕೆ ನಿಷ್ಕೃತಿಗಳಂ ಕಾಣೆ ನೊಂದು ಮಂತ್ರಧ್ಯಾನ ಜಪ ತೀರ್ಥ ಯಾಗ ಯೋಗಂಗಳಿಂ ಕಳೆದುಕೊಳಲು=[ತಂದೆಯನ್ನು ಕೊಂದು ಬದುಕಿದನು ಎಂದು ಲೋಕದ ಜನರು ನಿಂದಿಸದೆ ಬಿಡರು; ಪಶ್ಚಾತ್ತಾಪ ಪಟ್ಟು ಮಂತ್ರಧ್ಯಾನ, ಜಪ, ತೀರ್ಥ, ಯಾಗ, ಯೋಗಗಳಿಂದ ಕಳೆದುಕೊಳ್ಳಲು, ಇದಕ್ಕೆ ಪರಿಹಾರ-ಪ್ರಾಯಶ್ಚಿತವನ್ನು ಕಾಣೆನು.];;ಸಂಧಿಗ್ಧಮಾಗಿರ್ದ ಪಾತಕಂ ಪೋಪುದು ಮುಕುಂದ ಸ್ಮರಣೆಯಿಂದಮರ್ಜುನಂ ವೈಷ್ಣವಂ ಬಂದುದಪಕೀರ್ತಿ ನಾಂ ನಾಚದೆಂತಿರ್ಪೆಂ ಪುಗುವೆನಗ್ನಿಯೊಳೆಂದನು=[ಸಂಧಿಗ್ಧವಾಗಿರುವ ಪಾಪವು ಮುಕುಂದ ಸ್ಮರಣೆಯಿಂದ ಹೋಗುವುದು; ಆದರೆ ಅರ್ಜುನನು ವೈಷ್ಣವನು -ವಿಷ್ಣುಭಕ್ತನನ್ನು ಕೊಂದ ಅಪಕೀರ್ತಿ ಬಂದಿತು; ನಾನು ನಾಚಿಕೆ ಬಿಟ್ಟು ಹೇಗೆ ಇರಲಿ? ಅದಕ್ಕಾಗಿ ಅಗ್ನಿಪ್ರವೇಶ ಮಾಡುವೆನು ಎಂದನು.]
  • ತಾತ್ಪರ್ಯ:ತಂದೆಯನ್ನು ಕೊಂದು ಬದುಕಿದನು ಎಂದು ಲೋಕದ ಜನರು ನಿಂದಿಸದೆ ಬಿಡರು; ಪಶ್ಚಾತ್ತಾಪ ಪಟ್ಟು ಮಂತ್ರಧ್ಯಾನ, ಜಪ, ತೀರ್ಥ, ಯಾಗ, ಯೋಗಗಳಿಂದ ಕಳೆದುಕೊಳ್ಳಲು, ಇದಕ್ಕೆ ಪರಿಹಾರ-ಪ್ರಾಯಶ್ಚಿತವನ್ನು ಕಾಣೆನು. ಸಂಧಿಗ್ಧವಾಗಿರುವ ಪಾಪವು ಮುಕುಂದ ಸ್ಮರಣೆಯಿಂದ ಹೋಗುವುದು; ಆದರೆ ಅರ್ಜುನನು ವೈಷ್ಣವನು -ವಿಷ್ಣುಭಕ್ತನನ್ನು ಕೊಂದ ಅಪಕೀರ್ತಿ ಬಂದಿತು; ನಾನು ನಾಚಿಕೆ ಬಿಟ್ಟು ಹೇಗೆ ಇರಲಿ? ಅದಕ್ಕಾಗಿ ಅಗ್ನಿಪ್ರವೇಶ ಮಾಡುವೆನು ಎಂದನು.
  • (ಪದ್ಯ-೬೩)

ಪದ್ಯ:-:೬೪:

[ಸಂಪಾದಿಸಿ]

ಅನಲಪ್ರವೇಶಮಂ ನಿಶ್ಚಯಿಸಿ ಬಭ್ರುವಾ |
ಹನನಗುರು ಚಂದನದ ಕಾಷ್ಠಂಗಳಂ ತರಿಸು |
ವನಿತರೊಳ್ ಕಂಡು ಚಿತ್ರಾಂಗದೆ ಕನಲ್ದು ಸುತನಂ ಬೈದು ಫಲುಗುಣಂಗೆ ||
ವನಜನಾಭಮ ಮಿತ್ರನಿನ್ನೆಗಂ ಮನದೊಳಂ |
ದನುಪಮ ಕೃಪಾಳು ತಾನಿಲ್ಲಿ ಗೈದದೆ ಮಾಣ್ದ |
ಪನೆ ಸೈರಿಸನ್ನೆಗಂ ನರನ ಜೀವಕ್ಕೆ ಪೊಣೆ ದೇವಪುರ ಲಕ್ಷ್ಮೀಶನು ||64|

ಪದವಿಭಾಗ-ಅರ್ಥ:
ಅನಲಪ್ರವೇಶಮಂ ನಿಶ್ಚಯಿಸಿ ಬಭ್ರುವಾಹನನು ಅಗುರು ಚಂದನದ ಕಾಷ್ಠಂಗಳಂ ತರಿಸುವ ಅನಿತರೊಳ್ ಕಂಡು ಚಿತ್ರಾಂಗದೆ ಕನಲ್ದು ಸುತನಂ ಬೈದು=[ಅಗ್ನಿಪ್ರವೇಶನ್ನು ನಿಶ್ಚಯಿಸಿ ಬಭ್ರುವಾಹನನು ಅಗುರು ಚಂದನದ ಕಟ್ಟಿಗೆಗಳನ್ನು ತರಿಸುವ ಅಷ್ಟರಲ್ಲಿ ಚಿತ್ರಾಂಗದೆ ಕಂಡು,ಸಿಟ್ಟುಮಾಡಿ ಮಗನನ್ನು ಬೈದು,];; ಫಲುಗುಣಂಗೆ ವನಜನಾಭಮ ಮಿತ್ರನು ಇನ್ನೆಗಂ ಮನದೊಳು ಅಂದು ಅನುಪಮ ಕೃಪಾಳು ತಾನು ಇಲ್ಲಿಗೆ ಐದದೆ ಮಾಣ್ದಪನೆ, ಸೈರಿಸು ಅನ್ನೆಗಂ, ನರನ ಜೀವಕ್ಕೆ ಪೊಣೆ ದೇವಪುರ ಲಕ್ಷ್ಮೀಶನು=[ಫಲುಗುಣನಿಗೆ ವನಜನಾಭ ಕೃಷ್ಣನು ಮಿತ್ರನು; ಅನುಪಮ ಕೃಪಾಳು ಇದನ್ನು ಅವನು ಮನಸ್ಸಿನಲ್ಲಿ ತಿಳಿದು ತಾನು ಇಲ್ಲಿಗೆ ಬರದೆ ಇರುವನೆ! ಬಂದೇ ಬರುವನು, ಸೈರಿಸು ಅಲ್ಲಿಯ ತನಕ, ನರನ ಜೀವಕ್ಕೆ ದೇವಪುರ ಲಕ್ಷ್ಮೀಶನು ಪೊಣೆಗಾರನು, ಎಂದಳು ಚಿತ್ರಾಂಗದೆ.]
  • ತಾತ್ಪರ್ಯ:ಅಗ್ನಿಪ್ರವೇಶನ್ನು ನಿಶ್ಚಯಿಸಿ ಬಭ್ರುವಾಹನನು ಅಗುರು ಚಂದನದ ಕಟ್ಟಿಗೆಗಳನ್ನು ತರಿಸುವ ಅಷ್ಟರಲ್ಲಿ ಚಿತ್ರಾಂಗದೆ ಕಂಡು,ಸಿಟ್ಟುಮಾಡಿ ಮಗನನ್ನು ಬೈದು, ಫಲುಗುಣನಿಗೆ ವನಜನಾಭ ಕೃಷ್ಣನು ಮಿತ್ರನು; ಅನುಪಮ ಕೃಪಾಳು ಇದನ್ನು ಅವನು ಮನಸ್ಸಿನಲ್ಲಿ ತಿಳಿದು ತಾನು ಇಲ್ಲಿಗೆ ಬರದೆ ಇರುವನೆ! ಬಂದೇ ಬರುವನು, ಸೈರಿಸು ಅಲ್ಲಿಯ ತನಕ, ನರನ ಜೀವಕ್ಕೆ ದೇವಪುರ ಲಕ್ಷ್ಮೀಶನು ಪೊಣೆಗಾರನು, ಎಂದಳು ಚಿತ್ರಾಂಗದೆ.]
  • (ಪದ್ಯ-೬೪)XI-XI
  • ಸಂಧಿ ೨೩ಕ್ಕೆ ಪದ್ಯಗಳು:೧೨೨೮.
  • []
  • []
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.