ಸೂಚನೆ:ಹರಿಗಳಂ ತಡೆಯಲ್ಕೆ ಸಾರಸ್ವತಾಖ್ಯ ಪುರ ವರದೊಳು ಅಂತಕನ ವೃತ್ತಾಂತಮಂ ಕೇಳ್ದು ಸಂಗರದೊಳು ಅಚ್ಯುತನ ಮತದಿಂ ವೀರವರ್ಮನಂ ಜಯಿಸಿದಂ ಕಲಿಪಾರ್ಥನು=[ಯಜ್ಞದ ಕುದುರೆಗಳನ್ನು ಸಾರಸ್ವತವೆಂಬ ಹೆಸರಿನ ಶ್ರೇಷ್ಠನಗರದಲ್ಲಿ ತಡೆಯಲು, ಯಮನ ವೃತ್ತಾಂತವನ್ನು ಕೇಳಿ ಯುದ್ಧದಲ್ಲಿ ಕೃಷ್ಣನ ಅಭಿಪ್ರಾಯದಂತೆ ವೀರವರ್ಮನನ್ನು ಶೂರನಾದ ಪಾರ್ಥನು ಜಯಿಸಿದನು.]
ತಾತ್ಪರ್ಯ: ಸಾರಸ್ವತವೆಂಬ ಹೆಸರಿನ ಶ್ರೇಷ್ಠನಗರದಲ್ಲಿ ಯಜ್ಞದ ಕುದುರೆಗಳನ್ನು ತಡೆಯಲು, ಯಮನ ವೃತ್ತಾಂತವನ್ನು ಕೇಳಿ ಯುದ್ಧದಲ್ಲಿ ಕೃಷ್ಣನ ಅಭಿಪ್ರಾಯದಂತೆ ವೀರವರ್ಮನನ್ನು ಶೂರನಾದ ಪಾರ್ಥನು ಜಯಿಸಿದನು.
ಸೋಮ ಕುಲತಿಲಕ ಜನಮೇಜಯ ನರೇಂದ್ರ ಕೇಳು ಆ ಮಯೂರಧ್ವಜಂ ತನ್ನ ನಗರದೊಳು ಅತಿ ಪ್ರೇಮದಿಂ ಮೂರುದಿನಂ ಅರ್ಜನ ಮುರಾರಿಗಳನನು ಇರಿಸಿಕೊಂಡಿರ್ದು=[ಚಂದ್ರ ಕುಲತಿಲಕನಾದ ಜನಮೇಜಯ ನರೇಂದ್ರನೇ ಕೇಳು, ಆ ಮಯೂರಧ್ವಜನು ತನ್ನ ನಗರದಲ್ಲಿ ಬಹಳ ಪ್ರೇಮದಿಂದ ಮೂರು ದಿನಗಳ ಕಾಲ ಅರ್ಜನ ಮತ್ತು ಕೃಷ್ಣರನ್ನು ಇರಿಸಿಕೊಂಡಿದ್ದು];; ಬಳಿಕ ಭೀಮಾನುಜನ ಕೂಡೆ ಪೊರಮಟ್ಟನು ಅನುಸಾಲ್ವ, ಕಾಮ, ಕರ್ಣಜ, ಬಭ್ರುವಾಹನ, ಸುವೇಗ, ನಿಸ್ಸೀಮ ನೀಲಧ್ವಜ, ಮರಾಳಧ್ವಜಾದಿಗಳ್ ಪಡೆವೆರಸಿ ನಡೆದರೊಡನೆ=[ನಂತರ ಭೀಮಾನುಜನಾದ ಅರ್ಜುನನ ಸಂಗಡ ಹೊರಟನು, ಅವರು ಅನುಸಾಲ್ವ, ಪ್ರದ್ಯುಮ್ನ, ಕರ್ಣಜ ವೃಷಕೇತು, ಬಭ್ರುವಾಹನ, ಸುವೇಗ, ಶೂರ ನೀಲಧ್ವಜ, ಮಯೂರಧ್ವಜಾದಿಗಳನ್ನು ಕೂಡಿಕೊಂಡು ಸೈನ್ಯ ಸಮೇತ ನಡೆದರು.]
ತಾತ್ಪರ್ಯ:ಚಂದ್ರ ಕುಲತಿಲಕನಾದ ಜನಮೇಜಯ ನರೇಂದ್ರನೇ ಕೇಳು, ಆ ಮಯೂರಧ್ವಜನು ತನ್ನ ನಗರದಲ್ಲಿ ಬಹಳ ಪ್ರೇಮದಿಂದ ಮೂರು ದಿನಗಳ ಕಾಲ ಅರ್ಜನ ಮತ್ತು ಕೃಷ್ಣರನ್ನು ಇರಿಸಿಕೊಂಡಿದ್ದು, ನಂತರ ಭೀಮಾನುಜನಾದ ಅರ್ಜುನನ ಸಂಗಡ ಹೊರಟನು, ಅವರು ಅನುಸಾಲ್ವ, ಪ್ರದ್ಯುಮ್ನ, ಕರ್ಣಜ ವೃಷಕೇತು, ಬಭ್ರುವಾಹನ, ಸುವೇಗ, ಶೂರ ನೀಲಧ್ವಜ, ಮಯೂರಧ್ವಜಾದಿಗಳನ್ನು ಕೂಡಿಕೊಂಡು ಸೈನ್ಯ ಸಮೇತ ನಡೆದರು.
ತುಂಬಿತು ಮಹೀಮಂಡಲವನು ಅತುಲಸೇನೆ ನಡೆಗೊಂಬುದು ಇನ್ನೆಲ್ಲಿಗೆ ಮಹಾದೇವ ಕೌತುಕಮು ಇದೆಂಬ ತೆರನಾಗಿ ಮುಂದಕೆ ತಳೆವ ಕುದುರೆಗಳ ಕೂಡೆ ಸವರಾಷ್ಟ್ರಕಾಗಿ=[ ಭೂಮಂಡಲವನ್ನು ಅತುಲಸೇನೆ ತುಂಬಿತು; ಯಜ್ಞದಕುದುರೆಗಳು ಇನ್ನು ಎಲ್ಲಿಗೆ ಹೋಗುವುದು ಮಹಾದೇವ, ಆಶ್ಚರ್ಯವು ಇದು ಎಂಬ ರೀತಿಯಲ್ಲಿ, ಮುಂದಕ್ಕೆ ಹೊಗುತ್ತಿರುವ ಕುದುರೆಗಳ ಕೂಡೆ ಹೊಸರಾಜ್ಯಕ್ಕಾಗಿ,];;ಬೆಂಬಿಡದೆ ಬಂದುದು ಅರ್ಜುನನ ಬಲಮಲ್ಲಿ ಸುಖದಿಂ ಬಾಳ್ವ ಭೂವರಂ ವೀರವರ್ಮ ಜನಾಡಂಬರದೊಳು ಇರ್ದಪಂ ಸಾರಸ್ವತಾಖ್ಯ ನಗರದೊಳು ಅತಿ ವಿಲಾಸದಿಂದೆ=[ಅದರ ಬೆಂಬಿಡದೆ ಹಿಂಬಾಲಿಸಿಕೊಂಡು ಬಂದಿತು ಅರ್ಜುನನ ಸೈನ್ಯ. ಅಲ್ಲಿ ಸುಖದಿಂದ ಬಾಳುತ್ತಿರುವ ರಾಜನು ವೀರವರ್ಮನು. ಅವನು ಸಾರಸ್ವತ ಹಸರಿನ ನಗರದಲ್ಲಿ ಜನ/ ಪರಿವಾರದೊಂದಿಗೆ ವೈಭವದಿಂದ ಮತ್ತು ಬಹಳ ಸಂತೋಷದಿಂದ ಇರುವನು.]
ತಾತ್ಪರ್ಯ: ಭೂಮಂಡಲವನ್ನು ಮಹಾಸೇನೆ ತುಂಬಿತು; ಯಜ್ಞದಕುದುರೆಗಳು ಇನ್ನು ಎಲ್ಲಿಗೆ ಹೋಗುವುದು ಮಹಾದೇವ, ಆಶ್ಚರ್ಯವು ಇದು ಎಂಬ ರೀತಿಯಲ್ಲಿ, ಮುಂದಕ್ಕೆ ಹೊಗುತ್ತಿರುವ ಕುದುರೆಗಳ ಕೂಡೆ ಹೊಸರಾಜ್ಯಕ್ಕಾಗಿ, ಅದರ ಬೆಂಬಿಡದೆ ಹಿಂಬಾಲಿಸಿಕೊಂಡು ಬಂದಿತು ಅರ್ಜುನನ ಸೈನ್ಯ. ಅಲ್ಲಿ ಸುಖದಿಂದ ಬಾಳುತ್ತಿರುವ ರಾಜನು ವೀರವರ್ಮನು. ಅವನು ಸಾರಸ್ವತ ಹಸರಿನ ನಗರದಲ್ಲಿ ಜನ/ ಪರಿವಾರದೊಂದಿಗೆ ವೈಭವದಿಂದ ಮತ್ತು ಬಹಳ ಸಂತೋಷದಿಂದ ಇರುವನು.]
ನೆರೆ ನಾಲ್ಕು ಚರಣದಿಂ ಧರ್ಮಂ ಅಡಿಯಿಡುತಿಹುದು ಮರೆದು ಕನಸಿನೊಳಾದೊಡಂ ಪಾತಕದ ಕೃತ್ಯಕೆರಗುವವರಿಲ್ಲ ಪುರುಷ ಸ್ತ್ರೀಕದಂಬದೊಳ್ ವ್ಯಾಧಿಗಳ ಪೀಡೆಗಳನು=[ಸಾರಸ್ವತ ಪುರದಲ್ಲಿ, ಪೂರ್ತಿ ನಾಲ್ಕು ಪಾದಗಳಿಂದಲೂ ಧರ್ಮವು ಹೆಜ್ಜೆ ಇಡುತ್ತಿದೆ. ಮರೆತಾಗಲೀ, ಕನಸಿನಲ್ಲಾಗಲಿ, ಪಾಪ ಕೃತ್ಯಕ್ಕೆ ತೊಡಗುವರಿಲ್ಲ; ಪುರುಷ ಸ್ತ್ರೀಸಮೂಹದಲ್ಲಿ ರೋಗರುಜಿನಗಳ ತೊಂದರೆಯನ್ನು ];; ಅರಿಯರು ಆರುಂ ದುಃಖ ಶೋಕಸಂತಾಪದಿಂ ಮರುಗುವವರಂ ಕಾಣೆನ ಆ ನೃಪನ ರಾಷ್ಟ್ರದೊಳ್, ಸೆರೆಯಾಗಿ ವೈವಸ್ವತಂ ಮನೆಯ ಅಳಿಯತನದೊಳು ಇರುತಿಹಂ ಭೂವರಂಗೆ=[ಯಾರೂ ಅರಿಯರು (ಕಾಣರು); ಯಾರೂ ದುಃಖ, ಶೋಕ, ಸಂತಾಪದಿಂದ ಮರುಗುವವರನ್ನು ಆ ರಾಜನ ರಾಷ್ಟ್ರದಲ್ಲಿ ಕಾಣೆನು, ಆ ರಾಜನಿಗೆ ಯಮನು ಮನೆಯ ಅಳಿಯತನದಲ್ಲಿ ಸೆರೆಯಾಗಿ ಇರುವನು, ಎಂದನು ಜೈಮಿನಿ.]
(ಕದಂಬ: ಹೆಸರುಪದ:(ಸಂ) ೧ ಕಡಹದ ಮರ, ನೀಪ ವೃಕ್ಷ ೨ ಗುಂಪು;;ನೆರೆ: ಅವ್ಯಯ(ದೇ) ಪೂರ್ತಿಯಾಗಿ, ಪೂರ್ಣವಾಗಿ ಬರಹ ನಿ.)
ತಾತ್ಪರ್ಯ::ಸಾರಸ್ವತ ಪುರದಲ್ಲಿ, ಪೂರ್ತಿ ನಾಲ್ಕು ಪಾದಗಳಿಂದಲೂ ಧರ್ಮವು ಹೆಜ್ಜೆ ಇಡುತ್ತಿದೆ. ಮರೆತಾಗಲೀ, ಕನಸಿನಲ್ಲಾಗಲಿ, ಪಾಪ ಕೃತ್ಯಕ್ಕೆ ತೊಡಗುವರಿಲ್ಲ; ಪುರುಷ ಸ್ತ್ರೀಸಮೂಹದಲ್ಲಿ ರೋಗರುಜಿನಗಳ ತೊಂದರೆಯನ್ನು ಯಾರೂ ಅರಿಯರು (ಕಾಣರು); ಯಾರೂ ದುಃಖ, ಶೋಕ, ಸಂತಾಪದಿಂದ ಮರುಗುವವರನ್ನು ಆ ರಾಜನ ರಾಷ್ಟ್ರದಲ್ಲಿ ಕಾಣೆನು, ಆ ರಾಜನಿಗೆ ಯಮನು ಮನೆಯ ಅಳಿಯತನದಲ್ಲಿ ಸೆರೆಯಾಗಿ ಇರುವನು, ಎಂದನು ಜೈಮಿನಿ.]
ಆ ವೀರವರ್ಮನ (ನಿಜರಾಷ್ಟ್ರಕೆ) ಈ ಪಾಂಡವನ ಕುದುರೆಗಳ್ ಕಾವ ಪಡೆಸಹಿತ ನಿಜರಾಷ್ಟ್ರಕ ಐತಂದುವು ಎಂಬ ಈ ವಾರ್ತೆಯಂ ಕೇಳ್ದು ನಗುತೆ ಖತಿಗೊಂಡು ಕೃಷ್ಣಾರ್ಜುನರ ಸಾಹಸವನು=[ಆ ವೀರವರ್ಮನ (ತನ್ನ) ರಾಷ್ಟ್ರಕ್ಕೆ ಈ ಪಾಂಡವನ ಕುದುರೆಗಳು ಕಾವಲಿನ ಸೇನೆಸಹಿತ ಬಂದವು, ಎಂಬ ಈ ಸಮಾಚಾರವನ್ನು ಕೇಳಿ, ನಗುತ್ತಾ ಸಿಟ್ಟುಗೊಂಡು ಕೃಷ್ಣಾರ್ಜುನರ ಸಾಹಸವನ್ನು];; ನಾವು ಅರಿದುಕೊಂಬೆವು ಅಶ್ವಂಗಳಂ ಕಟ್ಟುವುದು ನೀವೆಂದು ಕಳುಪಲು ಆ ನೃಪನ ಪರಿವಾರಂ ಮಹಾ ವಿಭವದಿಂದೆ ಕರಿ ತುರಗ ರಥ ಪಾಯದಳಮ್ ಒತ್ತರಿಸೆ ಪೊರಮಟ್ಟುದು=[ನಾವು ತಿಳಿದುಕೊಳ್ಳುತ್ತೇವೆ, ಎರಡೂ ಅಶ್ವಗಳನನ್ನು ನೀವು ಕಟ್ಟುವುದು, ಎಂದು ಕಳುಹಿಸಲು, ಆ ರಾಜನ ಪರಿವಾರವು ಮಹಾವೈಭವದಿಂದೆ ಆನೆ, ಕುದುರೆ,ತುರಗ, ರಥ ಕಾಲಾಳುದಳವು ಮುಂದೆ ನುಗ್ಗಲು ಹೊರಟಿತು.]
ತಾತ್ಪರ್ಯ::ಆ ವೀರವರ್ಮನ (ತನ್ನ) ರಾಷ್ಟ್ರಕ್ಕೆ ಈ ಪಾಂಡವನ ಕುದುರೆಗಳು ಕಾವಲಿನ ಸೇನೆಸಹಿತ ಬಂದವು, ಎಂಬ ಈ ಸಮಾಚಾರವನ್ನು ಕೇಳಿ, ನಗುತ್ತಾ ಸಿಟ್ಟುಗೊಂಡು ಕೃಷ್ಣಾರ್ಜುನರ ಸಾಹಸವನ್ನು ನಾವು ತಿಳಿದುಕೊಳ್ಳುತ್ತೇವೆ, ಎರಡೂ ಅಶ್ವಗಳನನ್ನು ನೀವು ಕಟ್ಟುವುದು, ಎಂದು ಕಳುಹಿಸಲು, ಆ ರಾಜನ ಪರಿವಾರವು ಮಹಾವೈಭವದಿಂದೆ ಆನೆ, ಕುದುರೆ,ತುರಗ, ರಥ ಕಾಲಾಳುದಳವು ಮುಂದೆ ನುಗ್ಗಲು ಹೊರಟಿತು.]
ಸುಲಭನೆಂದನುಪಮ ಸುಫಾಲನೆಂದುನ್ನತ ಕು |
ವಲನೆಂದು ನೀಲನೆಂದಗ್ಗದ ಸರಳನೆಂದು |
ಬಲವಂತರಿವರೈವರಾ ನೃಪನ ಸೂನುಗಳ್ ಪೊರಮಟ್ಟು ಸೇನೆ ಸಹಿತ ||
ಕೆಲವರಿದಡರ್ದು ಕೈದುಡುಕಿ ತುಸ ಮಾತ್ರಮೆನೆ |
ಫಲುಗುಣನ ತುರಗಂಗಳಂ ತಂದು ನಿಮಿಷದೊಳ್ |
ನಿಲಿಸಿದರ್ ಪಿತನ ಸನ್ನಿಧಿಯೊಳದನರ್ಜುನನ ಪಡೆ ಕಂಡು ಕವಿದುದೊಡನೆ ||5|||
ಪದವಿಭಾಗ-ಅರ್ಥ:
ಸುಲಭನೆಂದು ಅನುಪಮ ಸುಫಾಲನೆಂದು ಉನ್ನತಕುವಲನೆಂದು ನೀಲನೆಂದು ಅಗ್ಗದ ಸರಳನೆಂದು ಬಲವಂತರಿವರು ಐವರಾ ನೃಪನ ಸೂನುಗಳ್ (ಮಕ್ಕಳು) ಪೊರಮಟ್ಟು ಸೇನೆ ಸಹಿತ=[ಆ ರವಿವರ್ಮನ ಮಕ್ಕಳು ಐದು ಜನ;, ಅವರು ಸುಲಭ, ಅನುಪಮ ವೀರನಾದ ಸುಫಾಲ, ಉನ್ನತಕುವಲ ನೀಲ, ಅಗ್ಗದ/ ಶ್ರೇಷ್ಠ ಸರಳ, ಬಲವಂತ ಎಂಬ ಐವರು ಸೇನೆ ಸಹಿತ ಹೊರಟು]; ಕೆಲವ (ಸ್ಥಳ, ಬದಿ,ಪಾರ್ಶ್ವ) ಅರಿದು ಅಡರ್ದು ಕೈದುಡುಕಿ ತುಸ ಮಾತ್ರಮ್ ಎನೆ ಫಲುಗುಣನ ತುರಗಂಗಳಂ ತಂದು ನಿಮಿಷದೊಳ್ ನಿಲಿಸಿದರ್ ಪಿತನ ಸನ್ನಿಧಿಯೊಳು ಅದನು ಅರ್ಜುನನ ಪಡೆ ಕಂಡು ಕವಿದುದೊಡನೆ=[ಕುದುರೆ ಇರುವ ಸಥಳವನ್ನು ತಿಳಿದು,ಆಕ್ರಮಿಸಿ, ಕೈಹಾಕಿ ಕ್ಷಣ ಮಾತ್ರ ಎನ್ನವಷ್ಟು ಕಾಲದಲ್ಲಿ, ಫಲ್ಗುಣನ ತುರಗಗಳನ್ನು ನಿಮಿಷಮಾತ್ರದಲ್ಲಿ ತಂದು ತಂದೆಯ ಸನ್ನಿಧಿಯಲ್ಲಿ ಅದನ್ನು ನಿಲ್ಲಿಸಿದರು; ಆಗ ಅರ್ಜುನನ ಸೈನ್ಯ ಅದನ್ನು ಕಂಡು ಕೂಡಲೆ ರವಿವರ್ಮನ ಸೈನ್ಯವನ್ನು ಮುತ್ತಿತು.]
ತಾತ್ಪರ್ಯ::ಆ ರಾಜ ರವಿವರ್ಮನ ಮಕ್ಕಳು ಐದು ಜನ;, ಅವರು ಸುಲಭ, ಅನುಪಮ ವೀರನಾದ ಸುಫಾಲ, ಉನ್ನತಕುವಲ ನೀಲ, ಅಗ್ಗದ/ ಶ್ರೇಷ್ಠ ಸರಳ, ಬಲವಂತ ಎಂಬ ಐವರು ಸೇನೆ ಸಹಿತ ಹೊರಟು, ಕುದುರೆ ಇರುವ ಸಥಳವನ್ನು ತಿಳಿದು,ಆಕ್ರಮಿಸಿ, ಕೈಹಾಕಿ ಕ್ಷಣ ಮಾತ್ರ ಎನ್ನವಷ್ಟು ಕಾಲದಲ್ಲಿ, ಫಲ್ಗುಣನ ತುರಗಗಳನ್ನು ನಿಮಿಷಮಾತ್ರದಲ್ಲಿ ತಂದು ತಂದೆಯ ಸನ್ನಿಧಿಯಲ್ಲಿ ಅದನ್ನು ನಿಲ್ಲಿಸಿದರು; ಆಗ ಅರ್ಜುನನ ಸೈನ್ಯ ಅದನ್ನು ಕಂಡು ಕೂಡಲೆ ರವಿವರ್ಮನ ಸೈನ್ಯವನ್ನು ಮುತ್ತಿತು.]
ಮೋಹರದ ಮುಂದೆ ನಡೆತರುತಿರ್ದ ಕಲಿ ಬಭ್ರುವಾಹನಂ ಕೇಳ್ದು ಕಡುಗೋಪದಿಂದ ಒದಗಿ ಬಂದು ಆಹವಕೆ ಶಂಖನಾದಂ ಗೆಯ್ಯೆ ಬೆದರಿತು ಜಗತ್ತ್ರಯಂ ಪರಬಲದೊಳು=[ಸೈನ್ಯದ ಮುಂದೆ ಬರುತ್ತಿದ್ದ ಕಲಿ ಬಭ್ರುವಾಹನನು ಕುದುರೆಗಳನ್ನು ಒಯಿದ ಸುದ್ದಿ ಕೇಳಿ ಬಹಳಗೋಪದಿಂದ ಮುಂದೆ ಬಂದು ಯುದ್ಧಕ್ಕೆ ಶಂಖನಾದವನ್ನು ಮಾಡಲು, ಜಗತ್ತ್ರಯವೂ ಹೆದರಿತು, ಶತ್ರುಸೈನ್ಯದಲ್ಲಿ ];; ಸಾಹಸಿಗಳು ಉಡಗಿದರ್ ಬಳಿಕೆರಡು ಚೂಣಿಗಳ ಕಾಹುರದ ಕಲಿಗಳು ಒಡವೆರಿಸಿ (ಒಡಹುಟ್ಟು;;ಒಡ:ಜೊತೆ, ವೆರೆಸಿ:ಸೇರಿ) ಹೂಯ್ದಾಡಿದರ್ ಬಾಹು ನಖ ಮುಷ್ಟಿ ಕೇಶಾಕೇಶಿ ಮಲ್ಲಯುದ್ಧದ ಹತಾಹತಿಗಳಿಂದೆ=[ಸಾಹಸಿಗಳು ಸಹ ಆ ನಾದಕ್ಕೆ ಕುಗ್ಗಿದರು; ಬಳಿಕ ಎರಡು ಸೇನೆಗಳಲ್ಲಿದ್ದ ಆವೇಶ ಹೊಂದಿದ ಶೂರರು ಒಬ್ಬರಿಗೊಬ್ಬರು ಜೊತೆ ಸೇರಿ ತೋಳು, ಬಾಹು, ಮುಷ್ಟಿ, ಪರಸ್ಪರ ಕೂದಲುಹಿಡಿದು, ಮಲ್ಲಯುದ್ಧದ ಪಟ್ಟುಗಳಿಂದ, ಕೊಲ್ಲುವಹೊಡೆತಗಳಿಂದ ಹೊಡೆದಾಡಿದರು].
(ಕಾಹುರ :ಆವೇಶ, ಸೊಕ್ಕು, ಕೋಪ; ಬರಹನಿ.)
ತಾತ್ಪರ್ಯ::ಸೈನ್ಯದ ಮುಂದೆ ಬರುತ್ತಿದ್ದ ಕಲಿ ಬಭ್ರುವಾಹನನು ಕುದುರೆಗಳನ್ನು ಒಯಿದ ಸುದ್ದಿ ಕೇಳಿ ಬಹಳಗೋಪದಿಂದ ಮುಂದೆ ಬಂದು ಯುದ್ಧಕ್ಕೆ ಶಂಖನಾದವನ್ನು ಮಾಡಲು, ಜಗತ್ತ್ರಯವೂ ಹೆದರಿತು, ಶತ್ರುಸೈನ್ಯದಲ್ಲಿ ಸಾಹಸಿಗಳು ಸಹ ಆ ನಾದಕ್ಕೆ ಕುಗ್ಗಿದರು; ಬಳಿಕ ಎರಡು ಸೇನೆಗಳಲ್ಲದ್ದ ಆವೇಶ ಹೊಂದಿದ ಶೂರರು ಒಬ್ಬರಿಗೊಬ್ಬರು ಜೊತೆ ಸೇರಿ ತೋಳು, ಬಾಹು, ಮುಷ್ಟಿ, ಪರಸ್ಪರ ಕೂದಲುಹಿಡಿದು, ಮಲ್ಲಯುದ್ಧದ ಪಟ್ಟುಗಳಿಂದ, ಕೊಲ್ಲುವಹೊಡೆತಗಳಿಂದ ಹೊಡೆದಾಡಿದರು].
ಬಳಿಕೆರಡು ಕಡೆಯ ಭಟರುಬ್ಬರದೊಳಬ್ಬರದೊ |
ಳೆಳಸಿ ಹೊಯ್ದಾಡುತಿರಲಾಚೆಯಿಂದೀಚೆಯಿಂ |
ತಳತಂತ್ರಮೊಡನೊಡನೆ ಮುಗ್ಗಿದುದು ಮಗ್ಗಿದುದು ಬಹಳ ಕೋಲಾಹಲದೊಳು ||
ಖಳಿ ಕಟಿಲು ಖಟಿಲೆಂಬ ರವದಿಂದೆ ಜವದಿಂದೆ |
ಕಳಿವರಿದು ಘೋರಪ್ರಹಾರದಿಂ ವೀರದಿಂ |
ಬಳಸಿ ಬಿದ್ದುದು ಮಂದಿ ಹೆಣಮಯದ ರಣಮಯದ ರೌಕುಳದ ರಚನೆ ಮೆರೆಯೆ ||7||
ಪದವಿಭಾಗ-ಅರ್ಥ:
ಬಳಿಕೆರಡು ಕಡೆಯ ಭಟರು ಉಬ್ಬರದೊಳು ಅಬ್ಬರದೊಳು ಎಳಸಿ ಹೊಯ್ದಾಡುತಿರಲು ಆಚೆಯಿಂದ ಈಚೆಯಿಂ ತಳತಂತ್ರಮ್ (ಸೈನ್ಯ) ಒಡನೊಡನೆ ಮುಗ್ಗಿದುದು ಮಗ್ಗಿದುದು (ಎಡವು) ಬಹಳ ಕೋಲಾಹಲದೊಳು=[ಬಳಿಕ ಎರಡು ಕಡೆಯ ಭಟರು ಉತ್ಸಾಹದಿಂದ ಆರ್ಭಟಮಾಡುತ್ತಾ, ಸೋಲಿಸಲು ಎಳಸಿ/ ಉದ್ದೇಶಪಟ್ಟು, ಹೊಡೆದಾಡುತ್ತಿರಲು, ಆಚೆಯಿಂದ ಈಚೆಯಿಂ ಸೈನ್ಯವು ಬಹಳ ಕೋಲಾಹಲದಲ್ಲಿ ಸಮಯ ಕಳೆದಂತೆ (ಒಡನೆ) ಬಳಲಿತು, ಸಾಹಸ ತಗ್ಗಿತು,];; ಖಳಿ ಕಟಿಲು ಖಟಿಲೆಂಬ ರವದಿಂದೆ ಜವದಿಂದೆ ಕಳಿವರಿದು ಘೋರಪ್ರಹಾರದಿಂ ವೀರದಿಂ ಬಳಸಿ ಬಿದ್ದುದು ಮಂದಿ ಹೆಣಮಯದ ರಣಮಯದ ರೌಕುಳದ ರಚನೆ ಮೆರೆಯೆ=[ಖಳಿ ಕಟಿಲು ಖಟಿಲೆಂಬ ಸದ್ದಿನಲ್ಲಿ ವೇಗವಾಗಿ ಆಯದ ಸ್ಥಅನ ತಿಳಿದು ಘೋರವಾಗಿ ಹೊಡೆದು,ಶೌರ್ಯದಿಂದ ಬಳಸಿ, ಪೆಟ್ಟಾಗಿ ಭಟರು ಬಿದ್ದರು, ರಣರಂಗ ಹೆಣಮಯವಾಯಿತು. ಅವ್ಯವಸ್ಥೆ ಕಾಣಿಸಿತು].
( <ಮರಾ. ರವಖಳ) ೧ ಅವ್ಯವಸ್ಥೆ, ಚೆಲ್ಲಾಪಿಲ್ಲಿ ೨ ಅತಿಶಯ, ಆಧಿಕ್ಯ)(ಕಳಿವು:ಆಯಸ್ಥಾನ,ಸಾವು, ನಾಶ)
ತಾತ್ಪರ್ಯ:ಬಳಿಕ ಎರಡು ಕಡೆಯ ಭಟರು ಉತ್ಸಾಹದಿಂದ ಆರ್ಭಟಮಾಡುತ್ತಾ, ಸೋಲಿಸಲು ಎಳಸಿ/ ಉದ್ದೇಶಪಟ್ಟು, ಹೊಡೆದಾಡುತ್ತಿರಲು, ಆಚೆಯಿಂದ ಈಚೆಯಿಂ ಸೈನ್ಯವು ಬಹಳ ಕೋಲಾಹಲದಲ್ಲಿ ಸಮಯ ಕಳೆದಂತೆ (ಒಡನೆ) ಬಳಲಿತು, ಸಾಹಸ ತಗ್ಗಿತು, ಖಳಿ ಕಟಿಲು ಖಟಿಲೆಂಬ ಸದ್ದಿನಲ್ಲಿ ವೇಗವಾಗಿ ಆಯದ ಸ್ಥಅನ ತಿಳಿದು ಘೋರವಾಗಿ ಹೊಡೆದು,ಶೌರ್ಯದಿಂದ ಬಳಸಿ, ಪೆಟ್ಟಾಗಿ ಭಟರು ಬಿದ್ದರು, ರಣರಂಗ ಹೆಣಮಯವಾಯಿತು. ಅವ್ಯವಸ್ಥೆ ಕಾಣಿಸಿತು.
ಮತ್ತೆ ಪುರದಿಂದಯುತ ನಿಯುತ ಸಂಖ್ಯೆಯ ರಥವ |
ಮೊತ್ತದಿಂ ಕುದುರೆ ಮಂದಿಗಳ ಸಂದಣಿಗಳಿಂ |
ಮತ್ತಗಜ ಘಟೆಗಳಂದಾನೃಪನ ಸುತರೈವರುಂ ಪಚಾರಿಸುತ ಬಂದು||
ಒತ್ತಾಯಮಂ ಮಾಡೆ ಬಭ್ರುವಾಹಂ ಕನ |
ಲ್ದುತ್ತುಂಗ ಚಾಪದಿಂ ಕಣೆಗೆರಯುತಿರಲನಿಬ |
ರೆತ್ತಲಡಗಿದರೊ ಪೇಳೆನೆ ಮಡಿದುದರಿಚಾತುರಂಗಮದನೇವೇಳ್ವೆನು ||8||
ಪದವಿಭಾಗ-ಅರ್ಥ:
ಮತ್ತೆ ಪುರದಿಂದ ಅಯುತ ನಿಯುತ ಸಂಖ್ಯೆಯ ರಥವ ಮೊತ್ತದಿಂ ಕುದುರೆ ಮಂದಿಗಳ ಸಂದಣಿಗಳಿಂ ಮತ್ತಗಜ ಘಟೆಗಳಂದು ಆ ನೃಪನ ಸುತರು ಐವರುಂ ಪಚಾರಿಸುತ ಬಂದು=[ಮತ್ತೆ ನಗರದಿಂದ ಸಾವಿರಾರು ಲೆಕ್ಕವಿಲ್ಲದಷ್ಟು ಸಂಖ್ಯೆಯ ರಥಗಳು, ಕುದುರೆಗಳು ಭಟರುಗಳು, ಇವುಗಳ ಸಮೂಹಗಳಿಂದ, ಮದಗಜಘಟೆಗಳು ಆ ನೃಪನ ಮಕ್ಕಳು ಐದುಜನರು ಆರ್ಭಟಿಸುತ್ತಾ ಬಂದು];;ಒತ್ತಾಯಮಂ ಮಾಡೆ ಬಭ್ರುವಾಹಂ ಕನಲ್ದು ಉತ್ತುಂಗ ಚಾಪದಿಂ ಕಣೆಗೆರಯುತಿರಲು ಅನಿಬರು ಎತ್ತಲಡಗಿದರೊ ಪೇಳೆನೆ ಮಡಿದುದು ಅರಿಚಾತುರಂಗಂ ಅದನು ಏವೇಳ್ವೆನು=[ಯುದ್ಧದ ಒತ್ತಡವನ್ನು ಉಂಟುಮಾಡಲು ಬಭ್ರುವಾಹನನು ಸಿಟ್ಟಾಗಿ ದೊಡ್ಡ ಬಿಲ್ಲಿನಿಂದ ಬಾಣದ ಮಳೆಸುರಿಸುತ್ತಿರಲು, ಎಲ್ಲರೂ ಎಲ್ಲಿ ಅಡಗಿದರೋ ಎನ್ನುವಂತೆ ಶತ್ರು ಸೈನ್ಯವು ನಾಶವಾಯಿತು. ಅದನ್ನು ಏನು ಹೇಳಲಿ. ಎಂದನು ಜೈಮಿನಿ.]
ತಾತ್ಪರ್ಯ:ಮತ್ತೆ ನಗರದಿಂದ ಸಾವಿರಾರು ಲೆಕ್ಕವಿಲ್ಲದಷ್ಟು ಸಂಖ್ಯೆಯ ರಥಗಳು, ಕುದುರೆಗಳು ಭಟರುಗಳು, ಇವುಗಳ ಸಮೂಹಗಳಿಂದ, ಮದಗಜಘಟೆಗಳು ಆ ನೃಪನ ಮಕ್ಕಳು ಐದುಜನರು ಆರ್ಭಟಿಸುತ್ತಾ ಬಂದು ಯುದ್ಧದ ಒತ್ತಡವನ್ನು ಉಂಟುಮಾಡಲು ಬಭ್ರುವಾಹನನು ಸಿಟ್ಟಾಗಿ ದೊಡ್ಡ ಬಿಲ್ಲಿನಿಂದ ಬಾಣದ ಮಳೆಸುರಿಸುತ್ತಿರಲು, ಎಲ್ಲರೂ ಎಲ್ಲಿ ಅಡಗಿದರೋ ಎನ್ನುವಂತೆ ಶತ್ರು ಸೈನ್ಯವು ನಾಶವಾಯಿತು. ಅದನ್ನು ಏನು ಹೇಳಲಿ. ಎಂದನು ಜೈಮಿನಿ.]
ಕಲಿ ಬಭ್ರುವಾಹನ ಕೋಲ್ಗಳಿಂ ನಿಜಸೇನೆ |
ಖಿಲಮಾಗುತಿರೆ ಕೇಳ್ದು ವೀರವರ್ಮಂ ತಾನೆ |
ಬಲ ಸಹಿತ ಪೊರಮಟ್ಟು ತನಗಳಿಯನಾಗಿರ್ದ ಕಾಲಂಗೆ ತೋರಿಸಲ್ಕೆ ||
ಕೊಲತೊಡಗಿದಂ ಬಳಿಕ ಧರ್ಮರಾಜಂ ಮಳಿದು |
ಫಲುಗುಣನ ತಳತಂತ್ರಮಂ ತನ್ನ ಮಾವಂಗೆ |
ಗೆಲವಾಗಬೇಕೆಂದು ಜೀವಿಗಳ ವಧೆಗೆ ಜವನಳಕುವನೆ ಜಗದೊಳೆನಲು ||9||
ಪದವಿಭಾಗ-ಅರ್ಥ:
ಕಲಿ ಬಭ್ರುವಾಹನ ಕೋಲ್ಗಳಿಂ ನಿಜಸೇನೆ ಖಿಲಮಾಗುತಿರೆ ಕೇಳ್ದು ವೀರವರ್ಮಂ ತಾನೆ ಬಲ ಸಹಿತ ಪೊರಮಟ್ಟು ತನಗಳಿಯನು ಆಗಿರ್ದ ಕಾಲಂಗೆ ತೋರಿಸಲ್ಕೆ=[ಶೂರ ಬಭ್ರುವಾಹನನು ಬಾಣಗಳೀಂದ ತನ್ನಸೇನೆಯು ನಾಶಗುತ್ತಿರಲು ಕೇಳಿ ವೀರವರ್ಮನು ತಾನೆ ಸೈನ್ಯ ಸಹಿತ ಹೊರಹೊರಟು, ತನಗೆ ಅಳಿಯನು ಆಗಿದ್ದ ಯಮನಿಗೆ ತೋರಿಸಲು,];; ಕೊಲತೊಡಗಿದಂ ಬಳಿಕ ಧರ್ಮರಾಜಂ ಮಳಿದು ಫಲುಗುಣನ ತಳತಂತ್ರಮಂ ತನ್ನ ಮಾವಂಗೆ ಗೆಲವಾಗಬೇಕೆಂದು ಜೀವಿಗಳ ವಧೆಗೆ ಜವನಳಕುವನೆ ಜಗದೊಳು ಎನಲು=[ಯಮನು ಸಿಟ್ಟಿನಿಂದ ಫಲ್ಗುಣನ ಸೈನ್ಯವನ್ನು ಕೊಲ್ಲತೊಡಗಿದನು. ಬಳಿಕ ಧರ್ಮರಾಜನಾದ ಯಮನು ತನ್ನ ಮಾವ ವೀರವರ್ಮನಿಗೆ ಗೆಲವಾಗಬೇಕೆಂದು ಕೊಲ್ಲತೊಡಗಿದನು. ಜಗತ್ತಿನಲ್ಲಿ ಜೀವಿಗಳ ವಧೆಗೆ ಯಮನು ಅಂಜುವನೆ. ಎಂದು ಜನರು ಎನ್ನಲು].
ಎಂದಿರ್ದೊಡಂ ಪ್ರಾಣಿಗಳನು ಎಲ್ಲರುಂ ಕೊಲ್ವ ದಂದುಗಂ ತನಗೆ ಬಿಡದೆಂದು ಮುಳಿದು ಅಂತಕಂ ಬಂದು ಪೊಕ್ಕನೊ ಕಿರೀಟಿಯ ದಳವನು ಎನೆ ಹತಾಹತಿಗಳಂ ಮಾಡುತಿರಲು=[ ಎಂದಾದರೂ ಪ್ರಾಣಿಗಳನ್ನು ಎಲ್ಲವನ್ನೂ ಕೊಲ್ಲುವ ಕರ್ತವ್ಯ ತನಗೆ ಬಿಡದು ಎಂದು, ಸಿಟ್ಟಿನಿಂದ ಯಮನು ಬಂದು ಹೊಕ್ಕಿರುವನೋ ಅರ್ಜುನನ ಸೈನ್ಯವನ್ನು ಎನ್ನುವಂತೆ, ಹತ್ಯೆಯ ಮೇಲೆ ಹತ್ಯೆ ಮಾಡುತ್ತಿರಲು];; ನಿಂದು ಕಾದುವರು ಇಲ್ಲದಂ ಕಂಡು ಪಾರ್ಥ ಮುಕುಂದನಂ ಬೆಸಗೊಂಡನು ಎಲೆ ದೇವ ಸೈನ್ಯಮಂ |ಮುಂದುಗೆಡಿಸುವ ಪರಾಕ್ರಮದ ಕಟ್ಟಾಸುರದ ವೀರನು ಇವನು ಆವನೆಂದು=[ ಅವನ ಎದುರು ನಿಂತು ಯುದ್ಧಮಾಡುವವರು ಇಲ್ಲದೆ ಇರುವವರನ್ನು ಕಂಡು ಪಾರ್ಥನು ಕೃಷ್ಣನನ್ನು ಕೇಳಿದನು,’ ಎಲೆ ದೇವ ಸೈನ್ಯವನ್ನು ಮುಂದುವರಿಯದಂತೆ ಸೋಲಿಸುತ್ತಿರುವ ಪರಾಕ್ರಮದ ಕಡು ಕ್ರೂರಿಯಾದ ವೀರನು ಇವನು ಯಾರು,’ ಎಂದು]
ತಾತ್ಪರ್ಯ:ಎಂದಾದರೂ ಪ್ರಾಣಿಗಳನ್ನು ಎಲ್ಲವನ್ನೂ ಕೊಲ್ಲುವ ಕರ್ತವ್ಯ ತನಗೆ ಬಿಡದು ಎಂದು, ಸಿಟ್ಟಿನಿಂದ ಯಮನು ಬಂದು ಹೊಕ್ಕಿರುವನೋ, ಅರ್ಜುನನ ಸೈನ್ಯವನ್ನು ಎನ್ನುವಂತೆ, ಹತ್ಯೆಯ ಮೇಲೆ ಹತ್ಯೆ ಮಾಡುತ್ತಿರಲು, ಅವನ ಎದುರು ನಿಂತು ಯುದ್ಧಮಾಡುವವರು ಇಲ್ಲದೆ ಇರುವವರನ್ನು ಕಂಡು ಪಾರ್ಥನು ಕೃಷ್ಣನನ್ನು ಕೇಳಿದನು,’ಎಲೆ ದೇವ ಸೈನ್ಯವನ್ನು ಮುಂದುವರಿಯದಂತೆ ಸೋಲಿಸುತ್ತಿರುವ ಪರಾಕ್ರಮದ ಕಡು ಕ್ರೂರಿಯಾದ ವೀರನು ಇವನು ಯಾರು,’ಎಂದು.
ತಾತಾ ಕೇಳೈ ಪಾರ್ಥ ನಿನಗೆ ಹಿರಿಯಯ್ಯನು ಅಹನು ಈತಂ ಕಣಾ, ಧರ್ಮರಾಜನು, ಈ ನೃಪನ ಜಾ |ಮಾತನು ಆಗಿರ್ದಪಂ =[ಪ್ರಿಯಮಿತ್ರಾ ಪಾರ್ಥ ಕೇಳು, ನಿನಗೆ ಈತನು ದೊಡ್ಡಪ್ಪನಾಗಿರುವನು ಕಣಯ್ಯಾ. ಇವನು ಧರ್ಮರಾಜನು. ಈ ರಾಜನ ಜಾಮಾತ/ ಮಾವನಾಗಿರುವನು];; ಮಾವಂಗೆ ಹಿತಮಾಗಿ ನಮ್ಮ ಚಾತುರ್ಬಲವನು , ಘಾತಿಸುವನೆಂದು ಹರಿ ನುಡಿದೊಡೆ ಧನಂಜಯನಿದೇತಕೆ ಮಹೀಪತಿಗೆ ತಾನಳಿಯನು ಆದನು ಈ ಭೂತಳದೊಳು ಅದನು ಅರಿಪಬೇಕು ಎಂದು ಬೇಡಿಕೊಳಲು ಅಸುರಹರನು ಇಂತೆಂದನು=[ ಮಾವನ ಕರ್ತವ್ಯವಾಗಿ; ಮಾವನಾದ ಕಾರಣ ಅಳಿಯನ ಹಿತಕ್ಕಾಗಿ ಸಹಾಯಮಾಡಲು ನಮ್ಮ ಚತುರ್ಬಲ ಸೈನ್ಯವನ್ನು ಕೊಲ್ಲುತ್ತಿರುವನು ಎಂದು ಹರಿ ಹೇಳಿದಾಗ ಧನಂಜಯನು ಎದು ಏತಕ್ಕಾಗಿ ಈ ರಾಜನಿಗೆ ಈ ಭೂಮಿಯಮೇಲೆ ಅಳಿಯನಾದನು? ಅದನ್ನು ತಿಳಿಸಬೇಕೆಂದು ಅರ್ಜುನನು, ಬೇಡಿಕೊಳ್ಳಲು ಕೃಷ್ಣನು ಹೀಗೆ ಹೇಳಿದನು.].
ತಾತ್ಪರ್ಯ:ಪ್ರಿಯಮಿತ್ರಾ ಪಾರ್ಥ ಕೇಳು, ನಿನಗೆ ಈತನು ದೊಡ್ಡಪ್ಪನಾಗಿರುವನು ಕಣಯ್ಯಾ. ಇವನು ಧರ್ಮರಾಜನು. ಈ ರಾಜನ ಜಾಮಾತ/ ಮಾವನಾಗಿರುವನು. ಮಾವನ ಕರ್ತವ್ಯವಾಗಿ; ಮಾವನಾದ ಕಾರಣ ಅಳಿಯನ ಹಿತಕ್ಕಾಗಿ ಸಹಾಯಮಾಡಲು ನಮ್ಮ ಚತುರ್ಬಲ ಸೈನ್ಯವನ್ನು ಕೊಲ್ಲುತ್ತಿರುವನು, ಎಂದು ಹರಿ ಹೇಳಿದಾಗ ಧನಂಜಯನು, ಏತಕ್ಕಾಗಿ ಈ ರಾಜನಿಗೆ ಈ ಭೂಮಿಯಮೇಲೆ ಅಳಿಯನಾದನು? ಅದನ್ನು ತಿಳಿಸಬೇಕೆಂದು ಅರ್ಜುನನು, ಬೇಡಿಕೊಳ್ಳಲು ಕೃಷ್ಣನು ಹೀಗೆ ಹೇಳಿದನು.
ಆಲಿಸಾದೊಡೆ ಪಾರ್ಥ ವೀರವರ್ಮಕ ಮಹೀ |
ಪಾಲಕನ ತನುಜೆ ಮಾಲಿನಿಯೆಂಬ ನಾಮದಿಂ |
ದಾಲಯದೊಳಿರುತಿರ್ದೊಡಾದುದಾ ಕನ್ನಿಕೆಗೆ ಯೌವ್ವನಪ್ರಾಪ್ತಿ ಬಳಿಕ ||
ಬಾಲಕಿಗೆ ಪತಿಯಾಗಬೇಕೆಂದು ನರನಾಥ |
ನಾಲೋಚಿಸಿದೊಡಾಕೆ ಪಿತನೊಡನೆ ಮಾನವರ |
ಮೇಲೆನಗೆ ಮನವೆರಗದೆನಲಲವಂ ಮತ್ತೆ ವರನಾರೆಂದೊಡಿಂತೆಂದಳು ||12||
ಪದವಿಭಾಗ-ಅರ್ಥ:
ಆಲಿಸು ಆದೊಡೆ ಪಾರ್ಥ ವೀರವರ್ಮಕ ಮಹೀಪಾಲಕನ ತನುಜೆ ಮಾಲಿನಿಯೆಂಬ ನಾಮದಿಂದಾಲಯದೊಳು ಇರುತಿರ್ದೊಡೆ ಆದುದು ಆ ಕನ್ನಿಕೆಗೆ ಯೌವ್ವನಪ್ರಾಪ್ತಿ=[ ಹಾಗಿದ್ದರೆ ಕೇಳು ಪಾರ್ಥ, ವೀರವರ್ಮಕ ರಾಜನ ಮಗಳು ಮಾಲಿನಿಯೆಂಬ ಹೆಸರಿವಳು ಅರಮನೆಯಲ್ಲಿ ಇರುತ್ತಿರುವಾಗ, ಆಕನ್ಯೆಗೆ ಯೌವನ ಪ್ರಾಪ್ತಿ ಆಯಿತು..];; ಬಳಿಕ ಬಾಲಕಿಗೆ ಪತಿಯಾಗಬೇಕೆಂದು ನರನಾಥನು ಆಲೋಚಿಸಿದೊಡೆ ಆಕೆ ಪಿತನೊಡನೆ ಮಾನವರ ಮೇಲೆ ಎನಗೆ ಮನವೆರಗದು ಎನಲು ಅವಂ ಮತ್ತೆ ವರನು ಆರೆಂದೊಡೆ ಇಂತೆಂದಳು=[ ನಂತರ ಬಾಲಕಿಗೆ ಪತಿಯನ್ನು ಹೊದಿಸಬೇಕೆಂದು ರಾಜನು ಆಲೋಚಿಸಿದಾಗ, ಆಕೆ ತಂದೆಯೊಡನೆ ಮಾನವರ ಮೇಲೆ ತನಗೆ ಮನಸ್ಸು ಇಲ್ಲ, ಎನ್ನಲು, ಅವನು ಮತ್ತೆ ವರನು ಯಾರಾಗಬೇಕೆಂದು ಕೇಳಲು, ಅವಳು ಹೀಗೆ ಹೇಳಿದಳು.].
ತಾತ್ಪರ್ಯ:ಹಾಗಿದ್ದರೆ ಕೇಳು ಪಾರ್ಥ, ವೀರವರ್ಮಕ ರಾಜನ ಮಗಳು ಮಾಲಿನಿಯೆಂಬ ಹೆಸರಿವಳು ಅರಮನೆಯಲ್ಲಿ ಇರುತ್ತಿರುವಾಗ, ಆಕನ್ಯೆಗೆ ಯೌವನ ಪ್ರಾಪ್ತಿ ಆಯಿತು. ನಂತರ ಬಾಲಕಿಗೆ ಪತಿಯನ್ನು ಹೊದಿಸಬೇಕೆಂದು ರಾಜನು ಆಲೋಚಿಸಿದಾಗ, ಆಕೆ ತಂದೆಯೊಡನೆ ಮಾನವರ ಮೇಲೆ ತನಗೆ ಮನಸ್ಸು ಇಲ್ಲ, ಎನ್ನಲು, ಅವನು ಮತ್ತೆ ವರನು ಯಾರಾಗಬೇಕೆಂದು ಕೇಳಲು, ಅವಳು ಹೀಗೆ ಹೇಳಿದಳು.
ಬೊಪ್ಪ ಕೇಳ್ ಮನುಜರ್ಗೆ ಮರಣಂ ಎಂದಿರ್ದೊಡಂ ತಪ್ಪದು ಅದರಿಂದೆ ಮಾನವರ ಪಾಣಿಗ್ರಹಣಕೆ ಒಪ್ಪೆನು ಆಂ ಪತಿಯೊಳು ಉರಿವುಗವೇಳ್ಪುದು ಅಲ್ಲದೊಡೆ ವಿಧವೆಯಾಗಿರವೇಳ್ಪುದು,=[ತದೆಯೇ ಕೇಳು, ಮನುಷ್ಯರಿಗೆ ಮರಣವು ಎಂದಾದರೂ ಒಂದು ದಿನ ತಪ್ಪದು. ಅದರಿಂದ ಮಾನವರ ಪಾಣಿಗ್ರಹಣಕೆ ಒಪ್ಪುವುದಿಲ್ಲ.. ನಾನು ಪತಿ ಸತ್ತರೆ, ಪತಿಯ ಜೊತೆ ಬೆಂಕಿಯನ್ನು ಹೊಗಬೇಕಾಗುವುದು, ಅಲ್ಲದಿದ್ದರೆ ವಿಧವೆಯಾಗಿರಬೇಕಾಗುವುದು;];; ಅಪ್ಪುವೊಡೆ ನಿಜಕಾಂತನು ಇಲ್ಲದೊಡೆ ಮನ್ಮಥನು ನಿಪ್ಪಸರದಿಂದ (ನಿಡು ಸರಳಿನಿಂದ) ಇಸುವ ಕುಸುಮಾಸ್ತ್ರಕೆ ಅನ್ಯರಂ=[ ಅಪ್ಪÅವೊಡೆ ನನಗೆ ಗಂಡನು ಇಲ್ಲದಿದ್ದರೆ ಮನ್ಮಥನು/ಕಾಮನು ಅವನ ನಿಡು ಸರಳಿನಿಂದ/ ಬಾಣದಿಂದ ಹೊಡೆಯುವ ಕುಸುಮಾಸ್ತ್ರಕ್ಕೆ ಅನ್ಯರನ್ನು ಅಪ್ಪಿದರೆ /ಸೇರಿದರೆ].;;
ಬಪ್ಪ ನರಕವನು ಅರಿಯದೆ ಒಡಗೂಡುವೇಳ್ಪುದು ಇದಕೆ ಅಂಜುವೆಂ ತಾನು ಎಂದಳು= [ಮುಂದೆ ಬರುವ ನರಕವನ್ನು ಅರಿಯದೆ ಅವನ ಜೊತೆ ಸೇರಿಸುಖಿಸಬೇಕಾಗುವುದು, ಇದಕ್ಕೆ ತಾನು ಅಂಜುವೆನು, ಎಂದಳು ].
ತಾತ್ಪರ್ಯ:ತಂದೆಯೇ ಕೇಳು, ಮನುಷ್ಯರಿಗೆ ಮರಣವು ಎಂದಾದರೂ ಒಂದು ದಿನ ತಪ್ಪದು. ಅದರಿಂದ ಮಾನವರ ಪಾಣಿಗ್ರಹಣಕೆ ಒಪ್ಪುವುದಿಲ್ಲ. ನಾನು ಪತಿ ಸತ್ತರೆ, ಪತಿಯ ಜೊತೆ ಬೆಂಕಿಯನ್ನು ಹೊಗಬೇಕಾಗುವುದು, ಅಲ್ಲದಿದ್ದರೆ ವಿಧವೆಯಾಗಿರಬೇಕಾಗುವುದು; ನನಗೆ ಗಂಡನು ಇಲ್ಲದಿದ್ದರೆ ಮನ್ಮಥನು/ಕಾಮನು ಅವನ ನಿಡು ಸರಳಿನಿಂದ/ ಬಾಣದಿಂದ ಹೊಡೆಯುವ ಕುಸುಮಾಸ್ತ್ರಕ್ಕೆ ಅನ್ಯರನ್ನು (ಅಪ್ಪುವೊಡೆ)ಅಪ್ಪಿದರೆ /ಸೇರಿದರೆ ಮುಂದೆ ಬರುವ ನರಕವನ್ನು ಅರಿಯದೆ ಅವನ ಜೊತೆ ಸೇರಿ ಸುಖಿಸಬೇಕಾಗುವುದು, ಇದಕ್ಕೆ ತಾನು ಅಂಜುವೆನು, ಎಂದಳು.
ನಿಜನಾಥನು ಇರ್ದಲ್ಲಿ ಮರಣಂ ಆದೊಡೆ ಪುಣ್ಯಂ ಅಜನು ಆದರಿಪನು ಅವನ ಕೂಡೆ ತನ್ನ ಅಂಗಮಂ ತ್ಯಜಿಸಿದೊಡೆ,=[ ತನ್ನ ಗಂಡನು ಇದ್ದಾಗ ತನಗೆ ಮರಣವಾದರೆ ಪುಣ್ಯವು. ಮೊದಲು ಗಂಡ ಸತ್ತರೆ, ಅವನಕೂಡೆ / ಜೊತೆ ತಾನು ಅಗ್ನಿಯಲ್ಲಿ ದೇಹವನ್ನು ತ್ಯಜಿಸಿದರೆ ಅಜನು/ ಬ್ರಹ್ಮನು ಆದರಿಸುವನು];; ವಿಧವೆಯಾದೊಡೆ ಸತಿಗೆ ಪಾತಕಂ ಬಂದಲ್ಲದೆ ಇರದು; ಬಳಿಕ ಪ್ರಜೆಗಳಂ ಪಡೆದು ಸದ್ಗತಿಗೆ ಐದವೇಳ್ವದು;=[ ವಿಧವೆಯಾದರೆ ಸತಿಯಾದವಳಿಗೆ ಪಾಪವು ಬರದೆ ಇರುವುದಿಲ್ಲ.; ಬಳಿಕ/ ಇದಲ್ಲದೆ ಇನ್ನಂದು ದಾರಿ, ಮಕ್ಕಳನ್ನು ಪಡೆದು ಸದ್ಗತಿಯನ್ನು ಪಡೆಯುವುದು;];; ಇದು ರುಜುವಲ್ಲ ಮಾನುಷ್ಯಮಾರ್ಗಂ; ಇದಕೆ ಆರದೆ (ಆರ್/ ಆರು:ಸಮರ್ಥನಾಗು, ಶಕ್ಯನಾಗು) ಆಂ ಭಜಿಸುವೆಂ ಧರ್ಮರಾಜನ ನನ್ನನು ಆತಂಗೆ ಮದುವೆಯ ಅಹೆನು ಎಂದಳು=[ ಇದು ಯೋಗ್ಯವಲ್ಲ, ಇವು ಮಾನುಷ್ಯಮಾರ್ಗಗಳು ; ಈ ಮಾರ್ಗಗಳನ್ನು ನಾನು ಆರದೆ/ಆರಿಸದೆ, ಒಪ್ಪದೆ, ನಾನು ಯಮ ಧರ್ಮರಾಜನನ್ನು ಭಜಿಸುವೆನು. ನನ್ನನು ಆತನಿಗೆ ಕೊಡು; ನಾನು ಆತನನ್ನು ಮದುವೆಯಾಗುವೆನು ಎಂದಳು].
ತಾತ್ಪರ್ಯ:ತನ್ನ ಗಂಡನು ಇದ್ದಾಗ ತನಗೆ ಮರಣವಾದರೆ ಪುಣ್ಯವು. ಮೊದಲು ಗಂಡ ಸತ್ತರೆ, ಅವನಕೂಡೆ / ಜೊತೆ ತಾನು ಅಗ್ನಿಯಲ್ಲಿ ದೇಹವನ್ನು ತ್ಯಜಿಸಿದರೆ ಅಜನು/ ಬ್ರಹ್ಮನು ಆದರಿಸುವನು. ವಿಧವೆಯಾದರೆ ಸತಿಯಾದವಳಿಗೆ ಪಾಪವು ಬರದೆ ಇರುವುದಿಲ್ಲ.; ಬಳಿಕ/ ಇದಲ್ಲದೆ ಇನ್ನಂದು ದಾರಿ, ಮಕ್ಕಳನ್ನು ಪಡೆದು ಸದ್ಗತಿಯನ್ನು ಪಡೆಯುವುದು ಇದು ಯೋಗ್ಯವಲ್ಲ, ಇವು ಮಾನುಷ್ಯ ಮಾರ್ಗಗಳು; ಈ ಮಾರ್ಗಗಳನ್ನು ನಾನು ಒಪ್ಪದೆ, ನಾನು ಯಮ ಧರ್ಮರಾಜನನ್ನು ಭಜಿಸುವೆನು. ನನ್ನನು ಆತನಿಗೆ ಕೊಡು; ನಾನು ಆತನನ್ನು ಮದುವೆಯಾಗುವೆನು ಎಂದಳು.
ಮೃತರಾದೊಡವನ ಪೊರೆಗೈದುವರ್ ಸುಕೃತ ದು |
ಷ್ಕøತವನಾತನೆ ಬಲ್ಲನದರಿಂದೆ ತನಗೆ ರವಿ |
ಸುತನೆ ವರನಾದಪಂ ವ್ರತ ದಾನ ತಪದೊದೊಳಾತನಂ ಮೆಚ್ಚಿಸುವೆನು ||
ಅತಿಶಯಮಿದೆನ್ನದಿರ್ ನಿನ್ನ ಪುಣ್ಯದ ಫಲಂ |
ಪ್ರತಿಕೂಲಮಾಗದೆನಗಿನ್ನು ವೈವಸ್ವತಂ |
ಪತಿಯಾಗದಿರನವನ ಕಾಯಮಂ ತಳೆದು ಜಸಪಡೆದಪೆಂ ತಾನೆಂದಳು ||15||
ಪದವಿಭಾಗ-ಅರ್ಥ:
ಮೃತರಾದೊಡೆ ಅವನ ಪೊರೆಗೆ ಐದುವರ್ ಸುಕೃತ ದುಷ್ಕೃತವನು ಆತನೆ ಬಲ್ಲನದರಿಂದೆ ತನಗೆ ರವಿಸುತನೆ ವರನಾದಪಂ ವ್ರತ ದಾನ ತಪದೊದೊಳಾತನಂ ಮೆಚ್ಚಿಸುವೆನು=[ಜನರು ಮೃತರಾದಾಗ ಯಮನ ಬಳಿಗೆ ಹೋಗುವರು; ಆದ್ದರಿಂದ ಸುಕೃತ ದುಷ್ಕೃತವನು/ ಪಾಪ ಪುಣ್ಯಗಳನ್ನು, ಆತನೆ ತಿಳಿದಿರುವನು; ಅದ್ದರಿಂದ ತನಗೆ ರವಿಯಸುತ ಯಮನೆ ವರನಾಗುವನು, ವ್ರತ ದಾನ ತಪಸ್ಸಿನಿಂದ ಅವನನ್ನು ಮೆಚ್ಚಿಸುವೆನು.];; ಅತಿಶಯಂ ಇದೆನ್ನದಿರ್ ನಿನ್ನ ಪುಣ್ಯದ ಫಲಂ ಪ್ರತಿಕೂಲಮಾಗದು ಎನಗಿನ್ನು ವೈವಸ್ವತಂ (ಸೂರ್ಯ:ವಿವಸ್ವಂತನ ಮಗ ವೈವಸ್ವತ-ಯಮ) ಪತಿಯಾಗದಿರನು ಅವನ ಕಾಯಮಂ ತಳೆದು ಜಸ (ಯಶ) ಪಡೆದಪೆಂ ತಾನೆಂದಳು=[ಅತಿಶಯ/ಕೈಗೆಟುಕದ ಅತಿಯಾಸೆ ಇದು ಎನ್ನಬೇಡ. ನಿನ್ನ ಪುಣ್ಯದ ಫಲಕ್ಕೆ, ಪುತ್ರಿಯನ್ನು ಸಕಾಲದಲ್ಲಿ ವಿವಾಹ ಮಾಡಬೇಕಾದ ನಿನ್ನ ಧರ್ಮಕ್ಕೆ ಪ್ರತಿಕೂಲವಾಗುವುದಿಲ್ಲ. ನನಗೆ ಇನ್ನು ವೈವಸ್ವತನು/ ಯಮನು ಪತಿಯಾಗದೆ ಇರಲಾರನು. ಅವನ ಕಾಯಮಂ/ದೇಹವನ್ನು ಮನಸ್ಸಿನಲ್ಲಿ ತಳೆದು/ಧ್ಯಾನಿಸಿ ಯಶಸ್ಸನ್ನು ತಾನು ಪಡೆಯುವೆನು,' ಎಂದಳು].
ತಾತ್ಪರ್ಯ:ಜನರು ಮೃತರಾದಾಗ ಯಮನ ಬಳಿಗೆ ಹೋಗುವರು; ಆದ್ದರಿಂದ ಸುಕೃತ ದುಷ್ಕೃತವನು/ ಪಾಪ ಪುಣ್ಯಗಳನ್ನು, ಆತನೆ ತಿಳಿದಿರುವನು; ಅದ್ದರಿಂದ ತನಗೆ ರವಿಯಸುತ ಯಮನೇ ವರನಾಗುವನು, ವ್ರತ ದಾನ ತಪಸ್ಸಿನಿಂದ ಅವನನ್ನು ಮೆಚ್ಚಿಸುವೆನು. ಅತಿಶಯ/ಕೈಗೆಟುಕದ ಅತಿಯಾಸೆ ಇದು ಎನ್ನಬೇಡ. ನಿನ್ನ ಪುಣ್ಯದ ಫಲಕ್ಕೆ, ಪುತ್ರಿಯನ್ನು ಸಕಾಲದಲ್ಲಿ ವಿವಾಹ ಮಾಡಬೇಕಾದ ನಿನ್ನ ಧರ್ಮಕ್ಕೆ ಪ್ರತಿಕೂಲವಾಗುವುದಿಲ್ಲ. ನನಗೆ ಇನ್ನು ವೈವಸ್ವತನು/ ಯಮನು ಪತಿಯಾಗದೆ ಇರಲಾರನು. ಅವನ ಕಾಯಮಂ/ದೇಹವನ್ನು ಮನಸ್ಸಿನಲ್ಲಿ ತಳೆದು/ಧ್ಯಾನಿಸಿ ಯಶಸ್ಸನ್ನು ತಾನು ಪಡೆಯುವೆನು,' ಎಂದಳು.
ಇಂತೆಂದು ಮಾಲಿನಿ ಮಹೀಪತಿಗೆ ವಿನಯದಿಂದ ಅಂತಸ್ಥಮಾಗಿಹ ಮನೋರಥವನು ಒರೆದು ಇನ್ನು ಸಂತತಂ ಬಿಡದೆ ನಾನಾವಿಧದ ಪುಣ್ಯ ಕರ್ಮಂಗಳಂ ನೀನೆ ರಚಿಸಿ=[ಮಾಲಿನಿಯು ಈ ರೀತಿ ರಾಜನಿಗೆ ವಿನಯದಿಂದ ತನ್ನ ಅಂತರಂದಲ್ಲಿದ್ದ ಮನೋರಥವನ್ನು ಹೇಳಿ, ಇನ್ನು ಸತತವಾಗಿ ಬಿಡದೆ ನಾನಾವಿಧದ ಪುಣ್ಯ ಕರ್ಮಗಳನ್ನು ನೀನೆ ರಚಿಸಿ/ಯೋಜಿಸಿ ];; ಎಂತಾದೊಡೆ ಆಂ ಧರ್ಮರಾಜಂಗೆ ಮದುವೆಯಪ್ಪಂತೆ ಮಾಡೆಂದು ಕಾಲ್ಗೆ ಎರಗಿದೊಡೆ ತನುಜೆಯಂ ಸಂತೈಸಿ ತೊಡಗಿದಂ ಯಮಸೂಕ್ತದಿಂದ ವೈವಸ್ವತ ಪ್ರಾರ್ಥನೆಯನು=[ಹೇಗಾದರೂ ಮಾಡಿ ನಾನು ಧರ್ಮರಾಜನಿಗೆ ಮದುವೆಯಾಗುವಂತೆ ಮಾಡು ಎಂದು ತಂದೆಯ ಕಾಲಿಗೆಬಿದ್ದಾಗ ಅವನು ಮಗಳನ್ನು ಸಂತೈಸಿ, ಯಮಸೂಕ್ತದಿಂ ವೈವಸ್ವತ ಪ್ರಾರ್ಥನೆಯನ್ನು ಮಾಡಲು ತೊಡಗಿದನು].
ತಾತ್ಪರ್ಯ:ಮಾಲಿನಿಯು ಈ ರೀತಿ ರಾಜನಿಗೆ ವಿನಯದಿಂದ ತನ್ನ ಅಂತರಂದಲ್ಲಿದ್ದ ಮನೋರಥವನ್ನು ಹೇಳಿ, ಇನ್ನು ಸತತವಾಗಿ ಬಿಡದೆ ನಾನಾವಿಧದ ಪುಣ್ಯ ಕರ್ಮಗಳನ್ನು ನೀನೆ ರಚಿಸಿ/ಯೋಜಿಸಿ ಹೇಗಾದರೂ ಮಾಡಿ ನಾನು ಧರ್ಮರಾಜನಿಗೆ ಮದುವೆಯಾಗುವಂತೆ ಮಾಡು ಎಂದು ತಂದೆಯ ಕಾಲಿಗೆಬಿದ್ದಾಗ ಅವನು ಮಗಳನ್ನು ಸಂತೈಸಿ, ಯಮಸೂಕ್ತದಿಂದ ವೈವಸ್ವತ ಪ್ರಾರ್ಥನೆಯನ್ನು ಮಾಡಲು ತೊಡಗಿದನು.
ಅಂದು ಮೊದಲಾಗಿ ಮಾಲಿನಿ ದಿವಾರಾತ್ರಿಯೊ |
ಳ್ಕುಂದದೆ ಕೃತಾಂತನಂ ನಾನಾ ವಿಧಾನಂಗ |
ಳಿಂದೆ ಪೂಜಿಸುತಿರ್ದಳನ್ನೆಗಂ ದಿನದಿನಕೆ ಯೌವನಂ ಪ್ರಬಲಮಾಗೆ ||
ಇಂದುವದನೆಯ ನೆನಹಿಗೊಳಗಾಗಿ ತರಣಿಜಂ |
ಬಂದು ಮೈದೋರದಿರೆ ಧರ್ಮದ ಸಹಾಯಕ್ಕೆ |
ಮುಂದುವರಿದಮರಮುನಿ ನಾರದಂ ತಿಳಿದನೀ ವೃತ್ತಾಂತಮಂ ಮನದೊಳು ||17||
ಪದವಿಭಾಗ-ಅರ್ಥ:
ಅಂದು ಮೊದಲಾಗಿ ಮಾಲಿನಿ ದಿವಾರಾತ್ರಿಯೊಳ್ ಕುಂದದೆ ಕೃತಾಂತನಂ ನಾನಾ ವಿಧಾನಂಗಳಿಂದೆ ಪೂಜಿಸುತಿರ್ದಳು ಅನ್ನೆಗಂ ದಿನದಿನಕೆ ಯೌವನಂ ಪ್ರಬಲಮಾಗೆ=[ಅಂದನಿಂದ ಸತತವಾಗಿ ಮಾಲಿನಿಯು ಹಗಲು ರಾತ್ರಿ ಆಲಸ್ಯ ಮಾಡದೆ ಯಮನನ್ನು ನಾನಾ ವಿಧಾನಗಳಿಂದ ಪೂಜಿಸುತತಿದ್ದಳು. ಅಷ್ಟರಲ್ಲಿ ದಿನದಿನಕ್ಕೆ ಮಾಲಿನಿಯ ಯೌವನವು ಪ್ರಬಲವಾಗಿ ಪೂರ್ಣಗೊಂಡಿತು.];; ಇಂದುವದನೆಯ ನೆನಹಿಗೆ ಒಳಗಾಗಿ ತರಣಿಜಂ ಬಂದು ಮೈದೋರದೆ ಇರೆ ಧರ್ಮದ ಸಹಾಯಕ್ಕೆ ಮುಂದುವರಿದ ಅಮರಮುನಿ ನಾರದಂ ತಿಳಿದನು ಈ ವೃತ್ತಾಂತಮಂ ಮನದೊಳು=[ಚಂದ್ರಮುಖಿ ಮಾಲಿನಿಯ ದ್ಯಾನಕ್ಕೆ ಮನಸೊತು ತರಣಿಜನಾದ ಯಮನು ಬಂದು ಪ್ರತ್ಯಕ್ಷನಾದೆಇರಲು, ಧರ್ಮದ ಸಹಾಯಕ್ಕೆ ಮುಂದೆನಿಲ್ಲವ ದೇವಮುನಿ ನಾರದನು ಈ ವಿಷಯವನ್ನು ಮನಸ್ಸಿನಿಂದ ತಿಳಿದನು.]
ತಾತ್ಪರ್ಯ:ಅಂದನಿಂದ ಸತತವಾಗಿ ಮಾಲಿನಿಯು ಹಗಲು ರಾತ್ರಿ ಆಲಸ್ಯ ಮಾಡದೆ ಯಮನನ್ನು ನಾನಾ ವಿಧಾನಗಳಿಂದ ಪೂಜಿಸುತತಿದ್ದಳು. ಅಷ್ಟರಲ್ಲಿ ದಿನದಿನಕ್ಕೆ ಮಾಲಿನಿಯ ಯೌವನವು ಪ್ರಬಲವಾಗಿ ಪೂರ್ಣಗೊಂಡಿತು. ಚಂದ್ರಮುಖಿ ಮಾಲಿನಿಯ ದ್ಯಾನಕ್ಕೆ ಮನಸೊತು ತರಣಿಜನಾದ ಯಮನು ಬಂದು ಪ್ರತ್ಯಕ್ಷನಾದೆಇರಲು, ಧರ್ಮದ ಸಹಾಯಕ್ಕೆ ಮುಂದೆನಿಲ್ಲವ ದೇವಮುನಿ ನಾರದನು ಈ ವಿಷಯವನ್ನು ಮನಸ್ಸಿನಿಂದ ತಿಳಿದನು.
ನಿಜವಾಗಿ ಮನದೊಳು ಅನ್ಯವನು ಉಳಿದು (ಬಿಟ್ಟು) ತನ್ನನೇ ಭಜಿಪ ಶರಣಾಗತರನು ಆದರಿಸದೆ ಇರ್ದಪರೆ ಸುಜನರು ಎಲೆ ತರಣಿಸುತ,=[ನಿಜವಾಗಿ ಮನಸ್ಸಿನಲ್ಲಿ ಬೇರೆ ಯೋಚನೆ ಬಿಟ್ಟು ತನ್ನನೇ ಭಜಿಸುತ್ತಿರುವ ಶರಣಾಗತರನ್ನು ಉತ್ತಮರು ಆದರಿಸದೆ ಇರುವರೇ ತರಣಿಯಸುತನಾದ ಧರ್ಮನೇ?];; ನಾಲ್ಕು ಚರಣವನುಊರಿ ನಡೆವ ಧರ್ಮದೊಳು ಅಡರ್ದು ಪ್ರಜೆಗಳಿಂದ ಎಸೆವ ಸಾರಸ್ವತ ಪುರಕ್ಕೆ ಆ ಮನುಜ ಮೇಷಮಂ ತಾಳ್ದು ನೀಂ ಪೋಗಿ ವರಿಸು ಭೂಭುಜನ ಕುವರಿಯನು=[ಧರ್ಮ ದೇವತೆಯು,ನಾಲ್ಕು ಪಾದಗಳನ್ನೂ ಊರಿ ನಡೆಯುವ ಧರ್ಮದಿಂದ ಕೂಡಿದ ಪ್ರಜೆಗಳಿಂದ ಶೋಭಿಸುವ ಸಾರಸ್ವತ ಪುರಕ್ಕೆ ಆ ಮನುಷ್ಯ ಮೇಷವನ್ನು ಧರಿಸಿ ನೀನು ಹೋಗಿ ಆರಾಜನ ಮಗಳು, ಆ ಭಕ್ತೆ ಮಾಲಿನಿಯನ್ನು ವರಿಸು, ಎಂದನು ನಾರದ. ];; ಎಂದೊಡೆ ಒಪ್ಪಿ ವೈವಸ್ವತಂ ಕಳುಹಿದಂ ಸುರಮುನಿಯನು=[ನಾರದನು ಹಾಗೆ ಹೇಳಿದಾಗ ಅದಕ್ಕೆ ವೈವಸ್ವತನು ಒಪ್ಪಿ ಸುರಮುನಿಯನ್ನು ಕಳುಹಿಸಿದನು.]
ತಾತ್ಪರ್ಯ:ನಿಜವಾಗಿ ಮನಸ್ಸಿನಲ್ಲಿ ಬೇರೆ ಯೋಚನೆ ಬಿಟ್ಟು ತನ್ನನೇ ಭಜಿಸುತ್ತಿರುವ ಶರಣಾಗತರನ್ನು ಉತ್ತಮರು ಆದರಿಸದೆ ಇರುವರೇ ತರಣಿಯಸುತನಾದ ಧರ್ಮನೇ? ಧರ್ಮ ದೇವತೆಯು,ನಾಲ್ಕು ಪಾದಗಳನ್ನೂ ಊರಿ ನಡೆಯುವ ಧರ್ಮದಿಂದ ಕೂಡಿದ ಪ್ರಜೆಗಳಿಂದ ಶೋಭಿಸುವ ಸಾರಸ್ವತ ಪುರಕ್ಕೆ ಮನುಷ್ಯ ಮೇಷವನ್ನು ಧರಿಸಿ ನೀನು ಹೋಗಿ ಆ ರಾಜನ ಮಗಳು, ಭಕ್ತೆ ಮಾಲಿನಿಯನ್ನು ವರಿಸು, ಎಂದನು ನಾರದ. ನಾರದನು ಹಾಗೆ ಹೇಳಿದಾಗ ಅದಕ್ಕೆ ವೈವಸ್ವತನು ಒಪ್ಪಿ ಸುರಮುನಿಯನ್ನು ಕಳುಹಿಸಿ ಕೊಟ್ಟನು.
ಧರ್ಮರಾಜನ ಪೊರಗೆ ಪೋಗಿರ್ದೆನು ಎಲೆ ವೀರವರ್ಮ ಕೇಳು ಇನ್ನೆಗಂ ನೀನು ಆರ್ಜಿಸಿದ ಪುಣ್ಯ ಕರ್ಮಫಲದಿಂದೆ ವೈಶಾಖ ಮಾಸದ ಶುಕ್ಲಪಕ್ಷದೊಳ್ ಧರೆಗೆ ಬಂದು=[ನಾರದನು ರಾಜನನ್ನು ಕುರಿತು,'ಧರ್ಮರಾಜನ ಬಳಿಗೆ ಹೋಗಿದ್ದೆನು, ಎಲೆ ವೀರವರ್ಮ ಕೇಳು ಇದುವರೆಗೆ ನೀನು ಗಳಿಸಿದ ಪುಣ್ಯ ಕರ್ಮಫಲದಿಂದ, ವೈಶಾಖ ಮಾಸದ ಶುಕ್ಲಪಕ್ಷದಲ್ಲಿ ಯಮಧರ್ಮನು ಭೂಮಿಗೆ ಬಂದು];; ನಿರ್ಮಲಚರಿತ್ರೆ ತವ ತನುಜೆ ಮಾಲಿನಿಯಂ ಜನರ್ ಮೆಚ್ಚೆ ಮದುವೆಯಾದಪನ್ ಎಂದನು ಅಂತಕಂ ಪೆರ್ಮೆಯಿಂದ (ಪೆರ್ಮೆ:ಹಿರಿಮೆ) ಆದರಿಸುವಂತೆ ಸಂಪಾದಿಸುವುದು ಎಂದು ಮುನಿಪತಿ ನುಡಿದನು=[ನಿರ್ಮಲಚರಿತ್ರೆಯಾದ ನಿನ್ನ ಮಗಳು ಮಾಲಿನಿಯನ್ನು ಜನರು ಮೆಚ್ಚುವಂತೆ ಮದುವೆಯಾಗುವನು', ಎಂದನು ಯಮನನ್ನು ಹೆಮ್ಮಯಿಂದ/ಹಿರಿದಾದ ರೀತಿಯಲ್ಲಿ ಆದರಿಸುವಂತೆಯೂ, ಅವನ ದಯೆಯನ್ನು ಸಂಪಾದಿಸು', ಎಂದು ಮುನಿಪತಿ ನುಡಿದನು].
ತಾತ್ಪರ್ಯ:ನಾರದನು ರಾಜನನ್ನು ಕುರಿತು,'ಧರ್ಮರಾಜನ ಬಳಿಗೆ ಹೋಗಿದ್ದೆನು, ಎಲೆ ವೀರವರ್ಮ ಕೇಳು ಇದುವರೆಗೆ ನೀನು ಗಳಿಸಿದ ಪುಣ್ಯ ಕರ್ಮಫಲದಿಂದ, ವೈಶಾಖ ಮಾಸದ ಶುಕ್ಲಪಕ್ಷದಲ್ಲಿ ಯಮಧರ್ಮನು ಭೂಮಿಗೆ ಬಂದು ನಿರ್ಮಲಚರಿತ್ರೆಯಾದ ನಿನ್ನ ಮಗಳು ಮಾಲಿನಿಯನ್ನು ಜನರು ಮೆಚ್ಚುವಂತೆ ಮದುವೆಯಾಗುವನು', ಎಂದನು ಯಮನನ್ನು ಹೆಮ್ಮಯಿಂದ/ಹಿರಿದಾದ ರೀತಿಯಲ್ಲಿ ಆದರಿಸುವಂತೆಯೂ, ಅವನ ದಯೆಯನ್ನು ಸಂಪಾದಿಸು', ಎಂದು ಮುನಿಪತಿ ನುಡಿದನು].
ಸುರಮುನಿಯ ವಾಕ್ಯಮಂ ಕೇಳಿದಂ ತಾಳಿದಂ |
ಪರಿತೋಷಮಂ ಭೂಪನೊಲವಿಂದೆ ನಲವಿಂದೆ |
ಪುರವರವನೈದೆ ಸಿಂಗರಿಸಿದಂ ತರಿಸಿದಂ ಬೇಕಾದ ವಸ್ತುಗಳನು ||
ಸರಸ ಗುಣ ಸೌಂದರ್ಯ ಶಾಲಿನಿಗೆ ಮಾಲಿನಿಗೆ |
ತರಣಿಜನಕೊಡೆ ವೈವಾಹಮುಂ ಮೋಹಮುಂ |
ದೊರಕೊಂಬುದೆಂದು ವಿಸ್ತರಿಸಿದಂ ಬರಿಸಿದಂ ಬಾಂಧವರನುತ್ಸವದೊಳು ||22||
ಪದವಿಭಾಗ-ಅರ್ಥ:
ಸುರಮುನಿಯ ವಾಕ್ಯಮಂ ಕೇಳಿದಂ ತಾಳಿದಂ ಪರಿತೋಷಮಂ ಭೂಪನು ಒಲವಿಂದೆ ನಲವಿಂದೆ ಪುರವರವನು ಐದೆ ಸಿಂಗರಿಸಿದಂ ತರಿಸಿದಂ ಬೇಕಾದ ವಸ್ತುಗಳನು=[ನಾರದರ ಮಾತುಗಳನ್ನು ಕೇಳಿದ ವೀರವರ್ಮಕನು ಬಹಳ ಸಂತೋಷವನ್ನು ತಾಳಿದನು; ಭೂಪನು ಪ್ರೀತಿಯಿಂದ,ಸಂತಸದಿಂದ, ಬಮದು ನಗರವನ್ನು ಸಿಂಗರಿಸಿದನು, ವಿವಾಹಕ್ಕೆ ಬೇಕಾದ ವಸ್ತುಗಳನ್ನು ತರಿಸಿದನು.];; ಸರಸ ಗುಣ ಸೌಂದರ್ಯ ಶಾಲಿನಿಗೆ (ಶಾಲಿನಿ:ಗಡಸುಗಾತಿ) ಮಾಲಿನಿಗೆ ತರಣಿಜನಕೊಡೆ ವೈವಾಹಮುಂ ಮೋಹಮುಂ ದೊರಕೊಂಬುದೆಂದು ವಿಸ್ತರಿಸಿದಂ ಬರಿಸಿದಂ ಬಾಂಧವರನು ಉತ್ಸವದೊಳು=[ಸರಸ ಗುಣದ ಸುಂದರಿ ಧೈರ್ಯಶಾಲಿನಿಯಾದ ಮಾಲಿನಿಗೆ ಧರ್ಮನ ಕೊಡೆ ವಿವಾಹವೂ ಪ್ರೀತಿಯೂ ದೊರಕುವುದೆಂದು ಪ್ರಚಾರ ಮಾಡಿದನು, ಬಾಂಧವರನ್ನು ಉತ್ಸವದಿಂದ ಕರೆಸಿದನು.].
ತಾತ್ಪರ್ಯ:ನಾರದರ ಮಾತುಗಳನ್ನು ಕೇಳಿದ ವೀರವರ್ಮಕನು ಬಹಳ ಸಂತೋಷವನ್ನು ತಾಳಿದನು; ಭೂಪನು ಪ್ರೀತಿಯಿಂದ,ಸಂತಸದಿಂದ, ಬಂದು ನಗರವನ್ನು ಸಿಂಗರಿಸಿದನು, ವಿವಾಹಕ್ಕೆ ಬೇಕಾದ ವಸ್ತುಗಳನ್ನು ತರಿಸಿದನು. ಸರಸ ಗುಣದ ಸುಂದರಿ ಧೈರ್ಯಶಾಲಿನಿಯಾದ ಮಾಲಿನಿಗೆ ಧರ್ಮನ ಕೊಡೆ ವಿವಾಹವೂ ಪ್ರೀತಿಯೂ ದೊರಕುವುದೆಂದು ಪ್ರಚಾರ ಮಾಡಿದನು, ಬಾಂಧವರನ್ನು ಉತ್ಸವದಿಂದ ಕರೆಸಿದನು.
ದುರಿತ ಕೋಟಿಗಳೊಡನೆ ಪಂಚಪಾತಕ ಮುಖ್ಯ ದೊರೆಗಳು ಇಟ್ಟಣಿಸಲು ಅಗಣಿತ ರೋಗ ಸಂಕುಲಂ ಬೆರಸಿ ಮಿಗೆ ರಾಜಕ್ಷಯಾದಿ ನಿಖಿಳ ವ್ಯಾದಿನಾಯಕರ್ ಬಳಿಸಂದರು=[ಪಾಪಗಳ ಕೋಟಿಗಳೊಡನೆ ಪಂಚಪಾತಕಸ ಮುಖ್ಯ ದೊರೆಗಳು ಬಹಳ ಒತೊತ್ತಾಗಿ ಸೇರಲು, ಅಗಣಿತ ರೋಗ ಸಮೂಹ ಒಟ್ಟಾಗಿ, ಮತ್ತೆ ರಾಜಕ್ಷಯ ಮೊದಲಾದ ಎಲ್ಲಾ ರೋಗಗಳ ನಾಯಕರ್ಉ ಬಳಿಗೆ ಬಂದರು.];;ಉರುತರದ ರುಜೆಗಳ ಅರಸಿಯರ ಸಂಖ್ಯಾತದಿಂ ನೆರೆದುದು ವಿಷೂಚಿ ಸಂಗ್ರಹಣಿ ಮೊದಲಾದ ಭೀಕರ ವದನೆಯರ ಕೂಡಿ ಬಳಿಕ ಅಂತಕಂಗೆ ಬಿನ್ನೈಸಿದಂ ಕ್ಷಯ ಸಚಿವನು=[ಅನೇಕ ಅನಾರೋಗ್ಯಗಳ ರಾಣಿಯರು ಲೆಕ್ಕವಿಲ್ಲದಷ್ಟು ಒಟ್ಟಾಗಿ ಬಂದರು, ವಿಷೂಚಿ ಸಂಗ್ರಹಣಿ ಮೊದಲಾದ ಭೀಕರ ಮುಖದವರನ್ನು ಕೂಡಿಕೊಂಡ ಬಳಿಕ ಕ್ಷಯ ಸಚಿವನು ಯಮನಿಗೆ ಅರಕೆ ಮಾಡಿಕೊಂಡನು.]
ತಾತ್ಪರ್ಯ:ಪಾಪಗಳ ಕೋಟಿಗಳೊಡನೆ ಪಂಚಪಾತಕಸ ಮುಖ್ಯ ದೊರೆಗಳು ಬಹಳ ಒತೊತ್ತಾಗಿ ಸೇರಲು, ಅಗಣಿತ ರೋಗ ಸಮೂಹ ಒಟ್ಟಾಗಿ, ಮತ್ತೆ ರಾಜಕ್ಷಯ ಮೊದಲಾದ ಎಲ್ಲಾ ರೋಗಗಳ ನಾಯಕರ್ಉ ಬಳಿಗೆ ಬಂದರು. ಅನೇಕ ಅನಾರೋಗ್ಯಗಳ ರಾಣಿಯರು ಲೆಕ್ಕವಿಲ್ಲದಷ್ಟು ಒಟ್ಟಾಗಿ ಬಂದರು, ವಿಷೂಚಿ ಸಂಗ್ರಹಣಿ ಮೊದಲಾದ ಭೀಕರ ಮುಖದವರನ್ನು ಕೂಡಿಕೊಂಡ ಬಳಿಕ ಕ್ಷಯ ಸಚಿವನು ಯಮನಿಗೆ ಅರಕೆ ಮಾಡಿಕೊಂಡನು.
ದೇವ ನಿಮ್ಮೊಡನೆ ಮದುವೆಗೆ ಬಂದೊಡೆ ಎಮಗೆ ವೇದಾವಳಿಯ ಘೋಷ ಶ್ರವಣಮಹುದು ಹೋಮ ಧೂಮ ಅವಲೋಕಮಹುದು ಪುಣ್ಯಕರ್ಮಿಗಳ ಸೋಂಕಿನಗಾಳಿ ಮೇಲೆಬಹುದು=[ಧರ್ಮದೇವನೇ, ನಿಮ್ಮೊಡನೆ ಮದುವೆಗೆ ಬಂದರೆ ನಮಗೆ ವೇದ ಮಂತ್ರಗಳ ಘೋಷ ಶ್ರವಣವಾಗುವುದು ಹೋಮ ಧೂಮದ ಅವಲೋಕ ಸೆವನೆ ಆಗುವುದು ಪುಣ್ಯವಂತರ ಸೋಂಕಿನಗಾಳಿಯ ಪ್ರಭಾವ ನಮ್ಮ ಮೇಲೆ ಆಗುವುದು; ಇದರಿಂದ ಅವುಗಳ ಗಣಗಳು ಬದಲಾಗಿ ಪಾಪಿಗಳಿಗೆ ಯಾತನೆ ಕೊಡಲು ಆಗುವುದಿಲ್ಲ.];; ಆ ವೀರವರ್ಮಕಂ ಧಾರ್ಮಿಕಂ ಗೋ ವಿಪ್ರಸೇವಕಂ ಪ್ರಜೆಗಳುಂ ದ್ವಿಜಹಿತವರು ಅತಿ ಶುಚಿಗಳು ಆವೆಂತು ಬಹೆವು ಅಲ್ಲಿಗೆ ಎಂದೊಡೆ ಕೃತಾಂತಕಂ ಕ್ಷಯಂಗೆ ಮಗುಳ್ ಇಂತೆಂದನು=[ಆ ವೀರವರ್ಮಕನು ಧಾರ್ಮಿಕನು, ಗೋ ವಿಪ್ರಸೇವಕನು, ಪ್ರಜೆಗಳೂ ದ್ವಿಜರಿಗೆ ಹಿತವರು, ಅತಿ ಶುಚಿಗಳು ನಾವು ಅಲ್ಲಿಗೆ ಹೇಗೆ ಬರುವುದು ಎಂದಾಗಡ ಯಮನು ಕ್ಷಯನಿಗೆ ತಿರುಗಿ ಹೀಗೆ ಹೇಳಿದನು.]
ತಾತ್ಪರ್ಯ:ಧರ್ಮದೇವನೇ,, 'ನಿಮ್ಮೊಡನೆ ಮದುವೆಗೆ ಬಂದರೆ ನಮಗೆ ವೇದ ಮಂತ್ರಗಳ ಘೋಷ ಶ್ರವಣವಾಗುವುದು ಹೋಮ ಧೂಮದ ಅವಲೋಕ ಸೆವನೆ ಆಗುವುದು ಪುಣ್ಯವಂತರ ಸೋಂಕಿನಗಾಳಿಯ ಪ್ರಭಾವ ನಮ್ಮ ಮೇಲೆ ಆಗುವುದು; ಇದರಿಂದ ಅವುಗಳ ಗಣಗಳು ಬದಲಾಗಿ ಪಾಪಿಗಳಿಗೆ ಯಾತನೆ ಕೊಡಲು ಆಗುವುದಿಲ್ಲ.ಆ ವೀರವರ್ಮಕನು ಧಾರ್ಮಿಕನು, ಗೋ ವಿಪ್ರಸೇವಕನು, ಪ್ರಜೆಗಳೂ ದ್ವಿಜರಿಗೆ ಹಿತವರು, ಅತಿ ಶುಚಿಗಳು ನಾವು ಅಲ್ಲಿಗೆ ಹೇಗೆ ಬರುವುದು?' ಎಂದಾಗ ಯಮನು ಕ್ಷಯನಿಗೆ ತಿರುಗಿ ಹೀಗೆ ಹೇಳಿದನು.
ಕ್ಷಯ ಕೇಳ್ ಸಮಸ್ತ ಪಾತಕ ರೋಗನಾಯಕರ್ ಭಯಮಯ ಆಕಾರಂಗಳಂ ಬಿಟ್ಟು ದಿವಾಕೃತಿಯನು ಆಂತು(ಪಡೆದು) ತನ್ನ ಪಟ್ಟಣದೊಳು ಎಂತು ಅನವರತ ಮಿರುತಿರ್ಪರು ಅಂತೆ ಅನಿಬರು=[ಕ್ಷಯನೇ ಕೇಳು, ಸಮಸ್ತ ಪಾತಕ ರೋಗನಾಯಕರೂ ಭಯಂಕರ ಆಕಾರಗಳನ್ನು ಬಿಟ್ಟು, ದಿವಾಕೃತಿಯನು ಪಡೆದು ತನ್ನ ಪಟ್ಟಣದೊಳು ಹೇಗೆ ಅನವರತ ಇರುವರೊ ಹಾಗೆ ಎಲ್ಲರು];;
ಪ್ರಿಯದಿಂದೆ ಬರಲಿ ಎಮ್ಮೊಡನೆ ಮದುವೆಗೆ ಆ ಪುರಾಶ್ರಯದೊಳು ಇಹರು ಎಲ್ಲರುಂ ಪುಣ್ಯಕರ್ಮಿಗಳು ಅವರ ನಯನಾವಲೋಕನಕೆ ಸೊಗಸಾಗಬೇಕು ಎಂದು ವೈವಸ್ವತಂ ನುಡಿದನು=[ಪ್ರಿಯವಾದ ರೂಪದಿಂದ ನಮ್ಮೊಡನೆ ಮದುವೆಗೆ ಬರಲಿ; ಆ ನಗರದಲ್ಲಿ ಇರುವರು ಎಲ್ಲರೂ ಪುಣ್ಯಕರ್ಮಿಗಳು. ಅವರ ಕಣ್ಣಿನ ನೋಟಕ್ಕೆ ಸೊಗಸಾಗಿ ಇರಬೇಕು ಎಂದು ಯಮನು ಹೇಳಿದನು].
ತಾತ್ಪರ್ಯ:'ಕ್ಷಯನೇ ಕೇಳು, ಸಮಸ್ತ ಪಾತಕ ರೋಗನಾಯಕರೂ ಭಯಂಕರ ಆಕಾರಗಳನ್ನು ಬಿಟ್ಟು, ದಿವಾಕೃತಿಯನು ಪಡೆದು ತನ್ನ ಪಟ್ಟಣದೊಳು ಹೇಗೆ ಅನವರತ ಇರುವರೊ ಹಾಗೆ ಎಲ್ಲರು ಪ್ರಿಯವಾದ ರೂಪದಿಂದ ನಮ್ಮೊಡನೆ ಮದುವೆಗೆ ಬರಲಿ; ಆ ನಗರದಲ್ಲಿ ಇರುವರು ಎಲ್ಲರೂ ಪುಣ್ಯಕರ್ಮಿಗಳು. ಅವರ ಕಣ್ಣಿನ ನೋಟಕ್ಕೆ ಸೊಗಸಾಗಿ ಇರಬೇಕು ಎಂದು ಯಮನು ಹೇಳಿದನು.
ವಿಜಯ ಕೇಳು ಇತೆಂದು ಬಳಿಕ ದಿವ್ಯಾಕೃತಿಯ ನಿಜಭೃತ್ಯರೊಡನೆ ಶಮನಂ ವೀರವರ್ಮ ಭೂಭುಜನ ಪಟ್ಟಣಕೆ ಬರಲಾ ನೃಪನು ಇದಿರ್ಗೊಂಡು ನಾರದಂ ಮೊದಲಾಗಿ ಇಹ=[ಕೃಷ್ಣನು ಹೇಳಿದ,ಅರ್ಜುನನೇ ಕೇಳು, ಹೀಗೆ ಯಮನು ಸೇವಕರಿಗೆ ಹೇಳಿದ ಬಳಿಕ, ದಿವ್ಯಾಕೃತಿಯನ್ನು ಹೊಂದಿ, ನಿತನ್ನ ಸೇವಕರೊಡನೆ ಯಮನು, ವೀರವರ್ಮಕ ರಾಜನ ಪಟ್ಟಣಕ್ಕೆ ಬರಲು ಆ ರಾಜನು ಇದಿರ್ಗೊಂಡು (ಸ್ವಾಗತ ಮಾಡಿ), ನಾರದಂ ಮೊದಲಾಗಿ ಇರುವ ];; ದ್ವಿಜರ ಮುಂದೆ ಅಗ್ನಿ ಸಾಕ್ಷಿಕದೊಳು ಆತಂಗೆ ಪಂಕಜವದನೆ ಮಾಲಿನಿಯನು ಇತ್ತು ವಿಧಿ ವಿಹಿತದಿಂ ತ್ರಿಜಗಕಿದು ಪೊಸತೆನೆ ವಿವಾಹಭವನದೊಳು ಅಂದು ಮದುವೆಯಂ ಮಾಡಿಸಿದನು=[ಬ್ರಾಹ್ಮಣರ ಮುಂದೆ ಅಗ್ನಿ ಸಾಕ್ಷಿಯಾಗಿ ಯಮನಿಗೆ ಪಂಕಜವದನೆಯಾದ ಮಾಲಿನಿಯನ್ನು ಕೊಟ್ಟು ವಿಧಿಪೂರ್ವಕ ಮೂರು ಜಗತ್ತಿಗೂ ಇದು ಹೊಸತಾಗಿರಲು ವಿವಾಹ ಭವನದಲ್ಲಿ ಅಂದು ಮದುವೆಯನ್ನು ಮಾಡಿಸಿದನು].
ತಾತ್ಪರ್ಯ:ಕೃಷ್ಣನು ಹೇಳಿದ,ಅರ್ಜುನನೇ ಕೇಳು, ಹೀಗೆ ಯಮನು ಸೇವಕರಿಗೆ ಹೇಳಿದ ಬಳಿಕ, ತಾನು ದಿವ್ಯಾಕೃತಿಯನ್ನು ಹೊಂದಿ, ನಿತನ್ನ ಸೇವಕರೊಡನೆ ಯಮನು, ವೀರವರ್ಮಕ ರಾಜನ ಪಟ್ಟಣಕ್ಕೆ ಬರಲು ಆ ರಾಜನು ಇದಿರ್ಗೊಂಡು (ಸ್ವಾಗತ ಮಾಡಿ), ನಾರದಂ ಮೊದಲಾಗಿ ಇರುವ ಬ್ರಾಹ್ಮಣರ ಮುಂದೆ ಅಗ್ನಿ ಸಾಕ್ಷಿಯಾಗಿ ಯಮನಿಗೆ ಪಂಕಜವದನೆಯಾದ ಮಾಲಿನಿಯನ್ನು ಕೊಟ್ಟು ವಿಧಿಪೂರ್ವಕ ಮೂರು ಜಗತ್ತಿಗೂ ಇದು ಹೊಸತಾಗಿರಲು ವಿವಾಹ ಭವನದಲ್ಲಿ ಅಂದು ಮದುವೆಯನ್ನು ಮಾಡಿಸಿದನು.
ಅಚ್ಚರಿಯೊಳು ಆದ ವೈವಾಹದ ಉತ್ಸವಕೆ ಸಲೆ ಮೆಚ್ಚಿ ವೈವಸ್ವತಂ ನುಡಿದನು ಎಲೆ ರಾಯ ನಿನ್ನಿಚ್ಚೆ ಯಾವುದು ಬೇಡು ಕುಡುವೆ=[ಅಶ್ಚರ್ಯ ರೀತಿಯಲ್ಲಿ ಆದ ವಿವಾಹದ ಉತ್ಸವಕ್ಕೆ ಬಹಳ ಮೆಚ್ಚಿ ಯಮಧರ್ಮನು ಹೇಳಿದನು, 'ಎಲೆ ರಾಯ ನಿನ್ನ ಅಪೇಕ್ಷೆ ಯಾವುದು,ಬೇಡು ಕೊಡುವೆನು;];; ನಿನ್ನ ಅಲ್ಪಕಾಲಕೆ ಬಹುದು ಮೃತ್ಯು ನಿನಗೆ ಎಚ್ಚರಿದ ಅರಿದಿರ್ಪುದು ಎನೆ=[ನಿನ್ನ ಆಯುಷ್ಯದಲ್ಲಿ ಇನ್ನು ಅಲ್ಪಕಾಲಕ್ಕೆ ನಿನಗೆ ಮೃತ್ಯು ಬರುವುದು, ಎಚ್ಚರದಿಂದ ಅದನ್ನು ತಿಳಿದು ಇರಬೇಕು,ಎನ್ನಲು,];; ವೀರವರ್ಮಕಂ ನಿಚ್ಚಟದೊಳು ಈ ಮಗಳನು ಇತ್ತು ಮಗುಳು ಈಸಿಕೊಂಬ ಅಚ್ಚಿಗದ ವರಂ ಅದೇಕೆ ಎನೆ ಕನ್ಯಾಶುಲ್ಕಂ ಅತಿ ದೋಷಕರಂ ಎಂದನು=[ವೀರವರ್ಮಕನು ನಿಶ್ಚಲ ಭಕ್ತಿಯಿಂದ ಈ ಮಗಳನು ನಿನಗೆ ಕೊಟ್ಟು, ಪುನಃ ಹಿಂತಿರುಗಿ ಪ್ರತಿಫಲ ತೆಗೆದುಕೊಳ್ಳುವುದು ಆಶ್ಚರ್ಯಕರ/ ಅದ್ಭುತ ವರವು, ಅದೇಕೆ ಬೇಡವೆಂದರೆ ಎನ್ನುತ್ತಾ ಕನ್ಯಾಶುಲ್ಕವು ಅತಿ ದೋಷಕರವು ಎಂದನು. ಕನ್ಯೆಯನ್ನು ಕೊಟ್ಟು ಅದಕ್ಕೆ ಪ್ರತಿಫಲ ಪಡೆದರೆ ಅದು ಕನ್ಯೆಯ ವಿಕ್ರಯ/ಮಾರಾಟದಂತೆ, ಆದ್ದರಿಂದ ಬೇಡ.]
ತಾತ್ಪರ್ಯ:ಅಶ್ಚರ್ಯ ರೀತಿಯಲ್ಲಿ ಆದ ವಿವಾಹದ ಉತ್ಸವಕ್ಕೆ ಬಹಳ ಮೆಚ್ಚಿ ಯಮಧರ್ಮನು ಹೇಳಿದನು, 'ಎಲೆ ರಾಯ ನಿನ್ನ ಅಪೇಕ್ಷೆ ಯಾವುದು,ಬೇಡು ಕೊಡುವೆನು; ನಿನ್ನ ಆಯುಷ್ಯದಲ್ಲಿ ಇನ್ನು ಅಲ್ಪಕಾಲಕ್ಕೆ ನಿನಗೆ ಮೃತ್ಯು ಬರುವುದು, ಎಚ್ಚರದಿಂದ ಅದನ್ನು ತಿಳಿದು ಇರಬೇಕು,ಎನ್ನಲು, ವೀರವರ್ಮಕನು ನಿಶ್ಚಲ ಭಕ್ತಿಯಿಂದ ಈ ಮಗಳನು ನಿನಗೆ ಕೊಟ್ಟು, ಪುನಃ ಹಿಂತಿರುಗಿ ಪ್ರತಿಫಲ ತೆಗೆದುಕೊಳ್ಳುವುದು ಆಶ್ಚರ್ಯಕರ/ ಅದ್ಭುತ ವರವು ಅದೇಕೆ ಬೇಡವೆಂದರೆ, ಎನ್ನುತ್ತಾ ಕನ್ಯಾಶುಲ್ಕವು ಅತಿ ದೋಷಕರವು ಎಂದನು. ಕನ್ಯೆಯನ್ನು ಕೊಟ್ಟು ಅದಕ್ಕೆ ಪ್ರತಿಫಲ ಪಡೆದರೆ ಅದು ಕನ್ಯೆಯ ವಿಕ್ರಯ/ಮಾರಾಟದಂತೆ, ಆದ್ದರಿಂದ ಬೇಡ' ಎಂದನು.]
ಎಂದೊಡೆ ಅಂತಕನು ಎಂದನು ಎಲೆ ಮಹೀಪಾಲ ನಿನಗೆ ಇಂದು ಪುರುಷಾರ್ಥಂ ಅಲ್ಲ ಈ ವರಂ ಕರೆದು ಲೇಸಿಂದೆ ಕೊಟ್ಟಾತನಂ ಮಿಗೆ ಪರಸದೆ ಇರ್ದಪನೆ ತೆಗೆದುಕೊಂಡು ಅವನು ಇಳೆಯೊಳು ಹಿಂದುಗಳೆಯದಿರು ಎನ್ನ ಮಾತನು=[ರಾಜನು ಪ್ರತಿಫಲ ಬೇಡ, ಎಂದಾಗ ಯಮನು ಹೇಳಿದನು,'ಎಲೆ ರಾಜನೇ, ನಿನಗೆ ಇಂದು ನಾನು ಕೊಡುವ ವರವು ಪ್ರತಿಫಲವಾಗಿ ಅಲ್ಲ; ಈ ವರವು, ನನ್ನನ್ನು ಕರೆದು ಒಳ್ಳೇರೀತಿಯಿಂದ ಕನ್ಯೆಯನ್ನು ಕೊಟ್ಟಾತನನ್ನು ಮತ್ತೆ ಹರಸದೆ ಇರುವೆನೆ? ದಾನವನ್ನು ತೆಗೆದುಕೊಂಡವನು ಕೊಡುವ ಇದನ್ನು ಆಶೀರ್ವಾದವೆಂದು ತೆಗೆದುಕೊ; ನನ್ನ ಮಾತನ್ನು ಈ ಭೂಮಿಯಲ್ಲಿ ದೇವತೆಯನ್ನು ನಿರಾಕರಿಸ ಬೇಡ.(ಅವಮಾನಿಸಬೇಡ)];; ಎನೆ ಭೂವರಂ ಮುಂದೆ ತನಗೆ ಅಲ್ಪಕಾಲಕೆ ಮೃತ್ಯು ಬಹುದನು ಅರಿದು ಒಂದುಪಾಯಾಂತರವನು ಎಣಿಸಿ ನಸುನಗುತ ಶಮನಂಗೆ ಬಳಿಕ ಇಂತೆಂದನು=[ಎನ್ನಲು ರಾಜನು ಮುಂದೆ ತನಗೆ ಸ್ವಲ್ಪಕಾಲದಲ್ಲಿ ಮೃತ್ಯು ಬರುವುದನ್ನು ತಿಳಿದು, ಒಂದು ಉಪಾಯದ ಯುಕ್ತಿಯನ್ನು ಯೋಚಿಸಿ, ನಸುನಗುತ್ತಾ ಯಮನಿಗೆ ಬಳಿಕ ಹೀಗೆ ಹೇಳಿದನು].
ತಾತ್ಪರ್ಯ:ರಾಜನು ಪ್ರತಿಫಲ ಬೇಡ, ಎಂದಾಗ ಯಮನು ಹೇಳಿದನು,'ಎಲೆ ರಾಜನೇ, ನಿನಗೆ ಇಂದು ನಾನು ಕೊಡುವ ವರವು ಪ್ರತಿಫಲವಾಗಿ ಅಲ್ಲ; ಈ ವರವು, ನನ್ನನ್ನು ಕರೆದು ಒಳ್ಳೇರೀತಿಯಿಂದ ಕನ್ಯೆಯನ್ನು ಕೊಟ್ಟಾತನನ್ನು ಮತ್ತೆ ಹರಸದೆ ಇರುವೆನೆ? ದಾನವನ್ನು ತೆಗೆದುಕೊಂಡವನು ಕೊಡುವ ಇದನ್ನು ಆಶೀರ್ವಾದವೆಂದು ತೆಗೆದುಕೊ; ನನ್ನ ಮಾತನ್ನು ಈ ಭೂಮಿಯಲ್ಲಿ ದೇವತೆಯನ್ನು ನಿರಾಕರಿಸ ಬೇಡ.(ಅವಮಾನಿಸಬೇಡ) ಎನ್ನಲು ರಾಜನು ಮುಂದೆ ತನಗೆ ಸ್ವಲ್ಪಕಾಲದಲ್ಲಿ ಮೃತ್ಯು ಬರುವುದನ್ನು ತಿಳಿದು, ಒಂದು ಉಪಾಯದ ಯುಕ್ತಿಯನ್ನು ಯೋಚಿಸಿ, ನಸುನಗುತ್ತಾ ಯಮನಿಗೆ ಬಳಿಕ ಹೀಗೆ ಹೇಳಿದನು].
ಆದೊಡಿಲ್ಲಿಗೆ ಬರಲಿ ನಿನ್ನೀ ಕೃಪೆಯಿಂದೆ ಮಧು |
ಸೂದನಂ ತನಗನ್ನೆಗಂ ಮರಣವಾಗದಿರ |
ಲಾ ದೈತ್ಯಮಥನನಂ ಕಾಣ್ಬಪರಿಯಂತರಂ ನೀನುಮೆಮ್ಮೀಪುರದೊಳು ||
ಕಾದುಕೊಂಡಿಹುದೆನ್ನನೀವುದೀ ವರವನೆನೆ |
ಸಾದರದೊಳಿತ್ತಂದು ಮೊದಲಾಗಿ ನಾನಾ ವಿ |
ನೋದದಿಂ ಮಾಲಿನಿಯೊಡನೆ ರಮಿಸುತಿರ್ಪನೀ ಪಟ್ಟಣದೊಳಿನ ತನುಜನು ||31|
ಪದವಿಭಾಗ-ಅರ್ಥ:
ಆದೊಡೆ ಇಲ್ಲಿಗೆ ಬರಲಿ ನಿನ್ನೀ ಕೃಪೆಯಿಂದೆ ಮಧುಸೂದನಂ ತನಗೆ ಅನ್ನೆಗಂ ಮರಣವಾಗದಿರಲಿ ಆ ದೈತ್ಯಮಥನನಂ ಕಾಣ್ಬಪರಿಯಂತರಂ ನೀನುಂ ಎಮ್ಮೀಪುರದೊಳು. ಕಾದುಕೊಂಡಿಹುದು ಎನ್ನನು =[ಹಾಗಿದ್ದರೆ, ನಿನ್ನ ಈ ಕೃಪೆಯಿಂದೆ/ ವರದಿಂದ ಮಧುಸೂದನನು ಇಲ್ಲಿಗೆ ಬರಲಿ; ತನಗೆ ಅಲ್ಲಿಯವರೆಗೆ ಮರಣವಾಗದಿರಲಿ; ಆ ದೈತ್ಯಮಥನನ ಕೃಷ್ಣನನ್ನು ಕಾಣುವ ಪರಿಯಂತರವೂ ನೀನು ನಮ್ಮ ಈ ಪುರದಲ್ಲಿ ನನ್ನನ್ನು ಕಾದುಕೊಂಡು ಇರುವುದು, ];; ಈವುದು ಈ ವರವನು ಎನೆ ಸಾದರದೊಳು ಇತ್ತು ಅಂದು ಮೊದಲಾಗಿ ನಾನಾ ವಿನೋದದಿಂ ಮಾಲಿನಿಯೊಡನೆ ರಮಿಸುತಿರ್ಪನು ಈ ಪಟ್ಟಣದೊಳು ಇನ ತನುಜನು=[ಈ ವರವನ್ನು ಕೊಡುವುದು, ಎನ್ನಲು, ಆದರದಿಂದ ಆ ವರವನ್ನು ಕೊಟ್ಟು, ಈ ಪಟ್ಟಣದಲ್ಲಿ ಸೂರ್ಯನಪುತ್ರ ಯಮನು ಅಂದು ಮೊದಲಾಗಿ ನಾನಾ ವಿನೋದದಿಂದ ಮಾಲಿನಿಯೊಡನೆ ರಮಿಸುತ್ತಿರುವನು].
ತಾತ್ಪರ್ಯ:ಹಾಗಿದ್ದರೆ, ನಿನ್ನ ಈ ಕೃಪೆಯಿಂದೆ/ ವರದಿಂದ ಮಧುಸೂದನನು ಇಲ್ಲಿಗೆ ಬರಲಿ; ತನಗೆ ಅಲ್ಲಿಯವರೆಗೆ ಮರಣವಾಗದಿರಲಿ; ಆ ದೈತ್ಯಮಥನನ ಕೃಷ್ಣನನ್ನು ಕಾಣುವ ಪರಿಯಂತರವೂ ನೀನು ನಮ್ಮ ಈ ಪುರದಲ್ಲಿ ನನ್ನನ್ನು ಕಾದುಕೊಂಡು ಇರುವುದು, ಈ ವರವನ್ನು ಕೊಡುವುದು, ಎನ್ನಲು, ಆದರದಿಂದ ಆ ವರವನ್ನು ಕೊಟ್ಟು, ಈ ಪಟ್ಟಣದಲ್ಲಿ ಸೂರ್ಯನಪುತ್ರ ಯಮನು ಅಂದು ಮೊದಲಾಗಿ ನಾನಾ ವಿನೋದದಿಂದ ಮಾಲಿನಿಯೊಡನೆ ರಮಿಸುತ್ತಿರುವನು].
ಇನ್ನು ಅರಿದೆಲೈ ಪಾರ್ಥ ರವಿತನಯನು ಈ ಪುರದೊಳು ಇನ್ನೆಗಂ ಬಂದಿರ್ದ ವೃತ್ತಾಂತಮಂ ನೋಡು ತನ್ನ ಮಾವನ ಸಹಾಯಕೆ ನಮ್ಮ ಸೇನೆಯಂ ಸಂಹರಿಸುತಿಹನು=[ಯಮನು ಮಾವನಾದ ವಿಷಯವನ್ನು,ಮತ್ತು ರವಿತನಯ ಯಮನು ಈ ನಗರದಲ್ಲಿ ಇಲ್ಲಿಯತನಕ ಬಂದು ಇದ್ದ ವೃತ್ತಾಂತವನ್ನು ಅರಿತುಕೊಂಡೆಯಲ್ಲವೇ ಪಾರ್ಥ,. ನೋಡು ತನ್ನ ಮಾವನ ಸಹಾಯಕ್ಕೆ ನಮ್ಮ ಸೇನೆಯನ್ನು ಸಂಹರಿಸುತ್ತಿರುವನು.];; ಇತ್ತಲು ಸನ್ನದ್ಧನಾಗಿ ತನ್ನಂ ಕಾಣ್ಬ ಲವಲವಿಕೆಯಿಂ ನಡೆತಹಂ ವೀರವರ್ಮನು, ಈಕ್ಷಿಸು ಧುರಕೆ ನಿನ್ನ ಕೋದಂಡಮಂ ನುಡಿಸು ಎನುತ ಹರಿ ಧನಂಜಯನ ರಥಕೆ ಐತಂದನು=[ಇತ್ತ ಕಡೆ, ಯುದ್ಧಕ್ಕೆ ಸನ್ನದ್ಧನಾಗಿ ತನ್ನನ್ನು (ಕೃಷ್ಣನನ್ನು) ಕಾಣುವ ತವಕದಿಂದ ನಡೆತರುತ್ತಿರುವ ವೀರವರ್ಮನನ್ನು ನೋಡು!, ಯುದ್ಧಕ್ಕೆ ಸಿದ್ಧನಾಗಿ ನಿನ್ನ ಕೋದಂಡವನ್ನು ಠೇಂಕಾರ ಮಾಡು, ಎನ್ನತ್ತಾ ಕೃಷ್ಣನು ಧನಂಜಯನ ರಥಕ್ಕೆ ಸಾರಥಿಯಾಗಿ ಬಂದನು].
ತಾತ್ಪರ್ಯ:ಯಮನು ಮಾವನಾದ ವಿಷಯವನ್ನು,ಮತ್ತು ರವಿತನಯ ಯಮನು ಈ ನಗರದಲ್ಲಿ ಇಲ್ಲಿಯತನಕ ಬಂದು ಇದ್ದ ವೃತ್ತಾಂತವನ್ನು ಅರಿತುಕೊಂಡೆಯಲ್ಲವೇ ಪಾರ್ಥ,. ನೋಡು ತನ್ನ ಮಾವನ ಸಹಾಯಕ್ಕೆ ನಮ್ಮ ಸೇನೆಯನ್ನು ಸಂಹರಿಸುತ್ತಿರುವನು. ಇತ್ತ ಕಡೆ, ಯುದ್ಧಕ್ಕೆ ಸನ್ನದ್ಧನಾಗಿ ತನ್ನನ್ನು (ಕೃಷ್ಣನನ್ನು) ಕಾಣುವ ತವಕದಿಂದ ನಡೆತರುತ್ತಿರುವ ವೀರವರ್ಮನನ್ನು ನೋಡು!, ಯುದ್ಧಕ್ಕೆ ಸಿದ್ಧನಾಗಿ ನಿನ್ನ ಕೋದಂಡವನ್ನು ಠೇಂಕಾರ ಮಾಡು, ಎನ್ನತ್ತಾ ಕೃಷ್ಣನು ಧನಂಜಯನ ರಥಕ್ಕೆ ಸಾರಥಿಯಾಗಿ ಬಂದನು.
ವೀರವರ್ಮನ ಕಾಳೆಗಕ್ಕೆ ಹರಿ ಫಲುಗುಣನ ತೇರನು ಏರಲು ಕಂಡು ತಮತಮಗೆ ಕವಿದರ್ (ಮುತ್ತಿದರು) ಮಯೂರಧ್ವಜಾದಿ ಭೂಪಾಲಕರ್ ತೊಲಗಹೇಳು ಅಂತಂಕಂ ತಾನು ಆದೊಡೆ=[ವೀರವರ್ಮಕನ ಎದುರು ಕಾಳೆಗ ಮಾಡಲು ಕೃಷ್ಣನು ಫಲ್ಗುಣನ ರಥವನ್ನು ಹತ್ತಿದನು. ಅದನ್ನು ಕಂಡು ತಾವು ತಾವೇ ಸಿದ್ಧರಾಗಿ ಮಯೂರಧ್ವಜ ಮೊದಲಾದ ರಾಜರು ಶತ್ರುಗಳನ್ನು ಮುತ್ತಿದರು. ಯಮಧರ್ಮನಿಗೆ ಹೊರಟುಹೋಗಲು ಹೇಳು; ತಾನು ಯಮಧರ್ಮ ಆದರೆ,];; ನಾರಕಿಗಳಂ ಬಾಧಿಸುವುದಲ್ಲದೆ ಅಸುರ ಸಂಹಾರಕನ ಸೇವೆಯಂ ಮಾಡುತಿಹ ನಮ್ಮ ಪರಿವಾರಮಂ ಕೊಲ್ವೊಡೆ ಅಧಿಕಾರಮ್ ಎತ್ತಣದೆನುತೆ ಮುಂಕೊಂಡು ಕವಿದು ಎಚ್ಚರು=[ಪಾಪಿಗಳನ್ನು ಮಾತ್ರಾ ಬಾಧಿಸಬೇಕು; ಅದಲ್ಲದೆ ಅಸುರ ಸಂಹಾರಕನಾದ ಕೃಷ್ಣನ ಸೇವೆಯನ್ನು ಮಾಡುತ್ತಿರುವ ನಮ್ಮ ಸೈನ್ಯವನ್ನು ಕೊಲ್ಲುವ ಅಧಿಕಾರವು ಅವನಿಗೆ ಎಲ್ಲಿಯದು? ಎನ್ನತ್ತಾ ಮುಂದೆನುಗ್ಗಿ ಮುತ್ತಿ ಹೊಡೆದರು].
ತಾತ್ಪರ್ಯ:ವೀರವರ್ಮಕನ ಎದುರು ಕಾಳೆಗ ಮಾಡಲು ಕೃಷ್ಣನು ಫಲ್ಗುಣನ ರಥವನ್ನು ಹತ್ತಿದನು. ಅದನ್ನು ಕಂಡು ತಾವು ತಾವೇ ಸಿದ್ಧರಾಗಿ ಮಯೂರಧ್ವಜ ಮೊದಲಾದ ರಾಜರು ಶತ್ರುಗಳನ್ನು ಮುತ್ತಿದರು. ಯಮಧರ್ಮನಿಗೆ ಹೊರಟುಹೋಗಲು ಹೇಳು; ತಾನು ಯಮಧರ್ಮ ಆದರೆ, ಪಾಪಿಗಳನ್ನು ಮಾತ್ರಾ ಬಾಧಿಸಬೇಕು; ಅದಲ್ಲದೆ ಅಸುರ ಸಂಹಾರಕನಾದ ಕೃಷ್ಣನ ಸೇವೆಯನ್ನು ಮಾಡುತ್ತಿರುವ ನಮ್ಮ ಸೈನ್ಯವನ್ನು ಕೊಲ್ಲುವ ಅಧಿಕಾರವು ಅವನಿಗೆ ಎಲ್ಲಿಯದು? ಎನ್ನತ್ತಾ ಮುಂದೆನುಗ್ಗಿ ಮುತ್ತಿ ಹೊಡೆದರು].
ಅನಿರುದ್ಧ ಸಾತ್ಯಕಿ ಪ್ರದ್ಯುಮ್ನ ಕೃತವರ್ಮರು ಅನಜಸುತ ಗದ ಸಾಂಬ ಹೈಡಿಂಬಿ ಬಭ್ರುವಾಹನ ಯೌವನಾಶ್ವ ಪ್ರವೀರ ಹಂಸಧ್ವಜ ಸುವೇಗ ಕಲಿ ನೀಲಕೇತು ಅನುಸಾಲ್ವ ತಾಮ್ರಕೇತನ ಮಯೂರಧ್ವಜರ್ ತನತನಗೆ ಕಣೆಗರೆಯಲು=[ಅನಿರುದ್ಧ, ಸಾತ್ಯಕಿ, ಪ್ರದ್ಯುಮ್ನ, ಕೃತವರ್ಮರು, ಇನಜಸುತ-ವೃಷಕೇತು, ಗದ, ಸಾಂಬ, ಹೈಡಿಂಬಿ, ಬಭ್ರುವಾಹನ, ಯೌವನಾಶ್ವ, ಪ್ರವೀರ, ಹಂಸಧ್ವಜ, ಸುವೇಗ, ಕಲಿನೀಲಕೇತು, ಅನುಸಾಲ್ವ, ತಾಮ್ರಧ್ವಜ, ಮಯೂರಧ್ವಜರು ವೀರವರ್ಮಕನನ್ನು ಮುತ್ತಿ, ತಮಗೆ ತೋರಿದಂತೆ ಬಾಣಗಳನ್ನು ಬಿಡಲು,];; ಆ ವೀರವರ್ಮನು ಎಚ್ಚು ಅನಿಬರಂ ಮುರಿದು ಕೃಷ್ಣಾರ್ಜುನರ ಸರಿಸದೊಳ್ ನಿಂದು ನಗುತಿಂತೆಂದನು=[ಆ ವೀರವರ್ಮಕನು ತಿರುಗಿ ಎಲ್ಲರನ್ನೂ ಹೊಡೆದು, ವ್ಯೂಹ ಮುರಿದು, ಅವರಿಂದ ದಾಟಿ ಕೃಷ್ಣಾರ್ಜುನರ ಎದುರು ನಿಂತು ನಗುತ್ತಾ ಹೀಗೆ ಹೇಳಿದನು].
ತಾತ್ಪರ್ಯ:ಅನಿರುದ್ಧ, ಸಾತ್ಯಕಿ, ಪ್ರದ್ಯುಮ್ನ, ಕೃತವರ್ಮರು, ಇನಜಸುತ-ವೃಷಕೇತು, ಗದ, ಸಾಂಬ, ಹೈಡಿಂಬಿ, ಬಭ್ರುವಾಹನ, ಯೌವನಾಶ್ವ, ಪ್ರವೀರ, ಹಂಸಧ್ವಜ, ಸುವೇಗ, ಕಲಿನೀಲಕೇತು, ಅನುಸಾಲ್ವ, ತಾಮ್ರಧ್ವಜ, ಮಯೂರಧ್ವಜರು ತಮಗೆ ತೋರಿದಂತೆ ಬಾಣಗಳನ್ನು ಬಿಡಲು, ಆ ವೀರವರ್ಮಕನು ತಿರುಗಿ ಎಲ್ಲರನ್ನೂ ಹೊಡೆದು, ವ್ಯೂಹ ಮುರಿದು, ಅವರಿಂದ ದಾಟಿ ಕೃಷ್ಣಾರ್ಜುನರ ಎದುರು ನಿಂತು ನಗುತ್ತಾ ಹೀಗೆ ಹೇಳಿದನು.
ಈ ವೀರರು ಓರ್ವರುಂ ತನಗೆ ಪಾಡಲ್ಲ ರಾಜೀವಲೋಚನ ನಿನ್ನೊಳು ಈ ನರನೊಳು ಈ ಧ್ವಜದ ಪಾವನಿಯೊಳು ಉರೆ ಕಾದಿ ಮತ್ ಭುಜದ ಕಂಡೂತಿಯಂ ಕಳೆಯವೇಳ್ಪುದು=[ಈ ವೀರರು ಒಬ್ಬರೂ ತನಗೆ ಸಮರಲ್ಲ; ರಾಜೀವಲೋಚನ ಕೃಷ್ಣನೇ ನಿನ್ನೊಡನೆ, ಈ ಅರ್ಜುನನೊಡನೆ, ಈ ಧ್ವಜದ ಮಾರತಿಯೊಡನೆ ಬಹಳ ಹೊಡೆದಾಡಿ ನನ್ನ ಭುಜದ ತೀಟೆಯನ್ನು ಕಳೆಯಬೇಕಾಗಿದೆ.];; ಮೂವರುಂ ತೊಲಗದಿರಿ ಸಾಕು ಎನುತ ಕೃಷ್ಣ ಗಾಂಡೀವಿ ಪವನಜರನು ಆರೇಳೆಂಟು ಸರಳನು ಎಚ್ಚು ಆ ವಸುಮತೀಶನು ಉಳಿದವರನು ಐದೈದು ಬಾಣಂಗಳಿಂ ಘಾತಿಸಿದನು=[ಈಗ ನೀವು ಮೂವರೂ ತಪ್ಪಿಸಿ ಹೋಗಬೇಡಿ, ಸಾಕು ಎನುತ್ತಾ ಕೃಷ್ಣ ಅರ್ಜುನ ಮಾರುತಿಯರನ್ನು ಆರು, ಏಳು, ಎಂಟು, ಸರಳುಗಳಿಂದ ಹೊಡೆದು, ಆ ರಾಜನು ಉಳಿದವರನ್ನು ಐದು ಮತ್ತು ಐದು ಬಾಣಗಳಿಂದ ಹೊಡೆದದನು].
ತಾತ್ಪರ್ಯ:ಈ ವೀರರು ಒಬ್ಬರೂ ತನಗೆ ಸಮರಲ್ಲ; ರಾಜೀವಲೋಚನ ಕೃಷ್ಣನೇ ನಿನ್ನೊಡನೆ, ಈ ಅರ್ಜುನನೊಡನೆ, ಈ ಧ್ವಜದ ಮಾರತಿಯೊಡನೆ ಬಹಳ ಹೊಡೆದಾಡಿ ನನ್ನ ಭುಜದ ತೀಟೆಯನ್ನು ಕಳೆಯಬೇಕಾಗಿದೆ. ಈಗ ನೀವು ಮೂವರೂ ತಪ್ಪಿಸಿ ಹೋಗಬೇಡಿ, ಸಾಕು ಎನುತ್ತಾ ಕೃಷ್ಣ ಅರ್ಜುನ ಮಾರುತಿಯರನ್ನು ಆರು, ಏಳು, ಎಂಟು, ಸರಳುಗಳಿಂದ ಹೊಡೆದು, ಆ ರಾಜನು ಉಳಿದವರನ್ನು ಐದು ಮತ್ತು ಐದು ಬಾಣಗಳಿಂದ ಹೊಡೆದದನು.
ಈತನು ಈಗ, ಎಲೆ ದೇವ ವೀರವರ್ಮಕನೆಂಬ ಭೂತಳಾಧಿಪನು ಆದೊಡೆ ಒಳ್ಳಿತು ಇವನು ಅತಿ ಬಲಂ ಮಾತುಲನಲಾ ಧರ್ಮರಾಜಂಗೆ ಕಟ್ಟಿಕೊಳಬಹುದು ಇವಂ ಕುದುರೆಗಳನು=[ಈತನು ಈಗಲೇ ಎಲೆ ದೇವ, ಈತನು ಈಗ ವೀರವರ್ಮಕನೆಂಬ ರಾಜನಾದರೆ ಒಳಿತೇ ಆಯಿತು; ಇವನು ಅತಿಬಲಶಾಲಿಯಲ್ಲವೇ, ಯಮಧರ್ಮರಾಜನಿಗೆ ಮಾವನಲ್ಲವೇ! ಇವನು ಯಮನ ಮಗ ಧರ್ಮಜನ ಕುದುರೆಗಳನ್ನು ಕಟ್ಟಿಕೊಳಬಹುದೇ? ತನ್ನ ಅಳಿಯನ ಮಗನ ಕುದುರೆಗಳನ್ನು ಕಟ್ಟಬಹುದೇ? ಆದರೆ ಕಟ್ಟಿದ್ದಾನೆ.];; ಘಾತಿಸಿದೊಡೆ ಎಮಗೆ ತಪ್ಪಿಲ್ಲಲಾ ಬೆಸಗೊಂಬ ಮಾತಾವುದು ಅಶ್ವಂಗಳಂ ಬಿಡದೆ ಭುಜದ ಕಂಡೂತಿಯಂ ಕಳೆದಪಂ ಗಡ ನೋಳ್ಪೆನು ಎನುತ ನರನು ಎಚ್ಚನು ಆ ನರಪತಿಯನು=[ಇವನನ್ನು ಹೊಡೆದರೆ ನಮಗೆ ದೋಷವಿಲ್ಲ ಅಲ್ಲವೇ? ಅವನು ಹೇಳುವ ಮಾತು ಯಾವ ಬಗೆಯದು! ಅಶ್ವಗಳನ್ನು ಬಿಡದೆ ಭುಜದ ಚಪಲವನ್ನು ಕಳೆದುಕೊಳ್ಳುವನಂತೆ ಗಡ! ನೋಡುವೆನು ಎನ್ನುತ್ತಾ ಅರ್ಜುನನು ಆ ರಾಜನನ್ನು ಹೊಡೆದನು].
ತಾತ್ಪರ್ಯ:ಈತನು ಈಗಲೇ ಎಲೆ ದೇವ, ಈತನು ಈಗ ವೀರವರ್ಮಕನೆಂಬ ರಾಜನಾದರೆ ಒಳಿತೇ ಆಯಿತು; ಇವನು ಅತಿಬಲಶಾಲಿಯಲ್ಲವೇ, ಯಮಧರ್ಮರಾಜನಿಗೆ ಮಾವನಲ್ಲವೇ! ಇವನು ಯಮನ ಮಗ ಧರ್ಮಜನ ಕುದುರೆಗಳನ್ನು ಕಟ್ಟಿಕೊಳಬಹುದೇ? ತನ್ನ ಅಳಿಯನ ಮಗನ ಕುದುರೆಗಳನ್ನು ಕಟ್ಟಬಹುದೇ? (ಯಮನ ಮಗ ಧರ್ಮಜ) ಕಟ್ಟಕೂಡದು, ಆದರೆ ಕಟ್ಟಿದ್ದಾನೆ. ಇವನನ್ನು ಹೊಡೆದರೆ ನಮಗೆ ದೋಷವಿಲ್ಲ ಅಲ್ಲವೇ? ಅವನು ಹೇಳುವ ಮಾತು ಯಾವ ಬಗೆಯದು! ಅಶ್ವಗಳನ್ನು ಬಿಡದೆ ಭುಜದ ಚಪಲವನ್ನು ಕಳೆದುಕೊಳ್ಳುವನಂತೆ ಗಡ! ನೋಡುವೆನು ಎನ್ನುತ್ತಾ ಅರ್ಜುನನು ಆ ರಾಜನನ್ನು ಹೊಡೆದನು.
ಕಟಕಿಯೇಕೆ ಎಮ್ಮೊಡನೆ ಪಾಂಡುಸುತ ನೀನೆ ಪಟುಭಟನಪ್ಪೆ ಮೂಜಗಕೆ ಕೃಹ್ಣನ ಸಹಾಯದಿಂ ಫಟೆಸಿದ ಅಗ್ಗಳಿಕೆಗೆ ಏತಕೆ ಬೆರೆವೆ (ಬೆರು:ಗರ್ವ?)ಸೈರಿಸೆನುತಾ ನೃಪಂ ಕೋಪದಿಂದೆ=[ಕಟಕಿಯೇಕೆ/ಅಪಹಾಸ್ಯವೇಕೆ ನಮ್ಮೊಡನೆ; ಪಾಂಡುಸುತನೇ ನೀನೊಬ್ಬನೇ ಮೂರೂ ಜಗತ್ತಿಗೆ ಪಟುಭಟನಾಗಿರುವೆಯೋ! ಕೃಹ್ಣನ ಸಹಾಯದಿಂದ ಸಿಕ್ಕಿದ ಕೀರ್ತಿಗೆ ಏಕೆ ಗರ್ವಪಡುವೆ? ಈ ಪೆಟ್ಟನ್ನು ಸಹಿಸಿಕೋ ಎನ್ನತ್ತಾ ರಾಜನು ಕೋಪದಿಂದ];; ಚಟುಲ ಚಾಪದೊಳು ಉರುಳ್ಚಿದನು ಅಂಬನು ಅಖಿಳ ದಿಕ್ತಟದೊಳ್ ಗಗನ ಮಂಡಲದೊಳ್ ಅಹಿತಬಲದೊಳು ಉತ್ಕಟ ಬಾಣಮಯಮಾಗೆ ಹರಿ ನರ ಕಪೀಂದ್ರ ರಥವಾಜಿಗಳ್ ಭ್ರಮಿಸುವಂತೆ=[ಚಮತ್ಕಾರದಲ್ಲಿ ಬಿಲ್ಲಿನಿಂದ ಬಾಣಗಳನ್ನು ಉರುಳಿಸಿದನು/ತೂರಿದನು. ಅವು ಅಖಿಲ ದಿಕ್ಕು ದಿಕ್ಕಿನ ಅಂಚಿಗೆ, ಆಕಾಶಮಂಡಲದಲ್ಲಿ ಶತ್ರು ಸೇನೆಯಲ್ಲಿ ಕೃಷ್ಣ,ಅರ್ಜುನ, ಮಾರುತಿಗಳು ರಥಕುದುರೆಗಳು ಭ್ರಮಿಸುವಂತೆ ಎಲ್ಲೆಲ್ಲೂ ಬಾಣಮಯವಾಯಿತು].
ತಾತ್ಪರ್ಯ:ಕಟಕಿಯೇಕೆ/ಅಪಹಾಸ್ಯವೇಕೆ ನಮ್ಮೊಡನೆ; ಪಾಂಡುಸುತನೇ ನೀನೊಬ್ಬನೇ ಮೂರೂ ಜಗತ್ತಿಗೆ ಪಟುಭಟನಾಗಿರುವೆಯೋ! ಕೃಹ್ಣನ ಸಹಾಯದಿಂದ ಸಿಕ್ಕಿದ ಕೀರ್ತಿಗೆ ಏಕೆ ಗರ್ವಪಡುವೆ? ಈ ಪೆಟ್ಟನ್ನು ಸಹಿಸಿಕೋ ಎನ್ನತ್ತಾ ರಾಜನು ಕೋಪದಿಂದ ಚಮತ್ಕಾರದಲ್ಲಿ ಬಿಲ್ಲಿನಿಂದ ಬಾಣಗಳನ್ನು ಉರುಳಿಸಿದನು/ತೂರಿದನು. ಅವು ಅಖಿಲ ದಿಕ್ಕು ದಿಕ್ಕಿನ ಅಂಚಿಗೆ, ಆಕಾಶಮಂಡಲದಲ್ಲಿ ಶತ್ರು ಸೇನೆಯಲ್ಲಿ ಕೃಷ್ಣ,ಅರ್ಜುನ, ಮಾರುತಿಗಳು ರಥಕುದುರೆಗಳು ಭ್ರಮಿಸುವಂತೆ ಎಲ್ಲೆಲ್ಲೂ ಬಾಣಮಯವಾಯಿತು].
ನೆರೆ ಮಂತ್ರಿ ಮಂತ್ರದಿಂದ ಅಹಿತರ ಉತ್ಸಾಹಮಂ ಬರಿಗೈವ ತೆರದಿಂದೆ ನರನು ಅವನ ಕಣೆಗಳಂ ತರಿದೊಟ್ಟುತ ಇದರೊಳು ಏನಾದಪುದು ಸಾಕಿನ್ನು ಬಿಡು ನಮ್ಮ ಕುದುರೆಗಳನು=[ಪಕ್ಕದ/ವಿಶೇಷ ಸಲಹೆಗಾರರ ಸಲಹೆಗಳಿಂದ ಶತ್ರುಗಳ ಪರಾಕ್ರಮವನ್ನು ಬರಿದುಮಾಡುವ ರೀತಿಯಲ್ಲಿ ಅರ್ಜುನನು ಅವನ ಬಾಣಗಳನ್ನು ಕತ್ತರಿಸಿ ರಾಶಿಹಾಕಿ, 'ಇದರಿಂದ ಏನು ಪ್ರಯೋಜನ? ಸಾಕು ಇನ್ನು ಬಿಡು ನಮ್ಮ ಕುದುರೆಗಳನ್ನು,' ಎಂದನು ಅರ್ಜುನ.];; ಬಿರುಸರಳ ಬಿಡೆಯಕೆ ಎಡೆಗುಡದಿರು ಒಡಲಂ ಕಡೆಯೊಳು ಉರುಬೆಗೆ ಎರಗದೆ ಹರಿಯದು ಅರಿದುಕೊಳ್ಳು ಎನುತ ಕೋಲ್ಗರೆದೊಡೆ ಆ ನೃಪತಿ ರ್ಪಾಘನ ಬಾಣಮಂ ಕಡಿದು ನಸುನಗೆಯೊಳಿಂತೆಂದನು=[ದೇಹವನ್ನು ಬಿರುಸಾದ ಬಾಣಗಳ ಹೊಡೆತಕ್ಕೆ ಒಡ್ಡಬೇಡ; ಕಡೆಗೆ ಶೌರ್ಯಕ್ಕೆ ಜೀವ ಬಲಿಯಾಗದೆ ಮುಗಿಯದು. ತಿಳಿದುಕೊ, ಎನುತ್ತಾ ಬಾಣಗಳನ್ನು ಬಿಟ್ಟಾಗ ಆ ರಾಜನು ಪಾರ್ಥನ ಬಾಣಗಳನ್ನು ಕಡಿದು ನಸುನಗುತ್ತಾ ಹೀಗೆ ಎಂದನು].
ತಾತ್ಪರ್ಯ: ವಿಶೇಷ ಸಲಹೆಗಾರರ ಸಲಹೆಗಳಿಂದ ಶತ್ರುಗಳ ಪರಾಕ್ರಮವನ್ನು ಬರಿದುಮಾಡುವ ರೀತಿಯಲ್ಲಿ ಅರ್ಜುನನು ಅವನ ಬಾಣಗಳನ್ನು ಕತ್ತರಿಸಿ ರಾಶಿಹಾಕಿ, 'ಇದರಿಂದ ಏನು ಪ್ರಯೋಜನ? ಸಾಕು ಇನ್ನು ಬಿಡು ನಮ್ಮ ಕುದುರೆಗಳನ್ನು,' ಎಂದನು ಅರ್ಜುನ. ದೇಹವನ್ನು ಬಿರುಸಾದ ಬಾಣಗಳ ಹೊಡೆತಕ್ಕೆ ಒಡ್ಡಬೇಡ; ಕಡೆಗೆ ಶೌರ್ಯಕ್ಕೆ ಜೀವ ಬಲಿಯಾಗದೆ ಮುಗಿಯದು. ತಿಳಿದುಕೊ, ಎನುತ್ತಾ ಬಾಣಗಳನ್ನು ಬಿಟ್ಟಾಗ ಆ ರಾಜನು ಪಾರ್ಥನ ಬಾಣಗಳನ್ನು ಕಡಿದು ನಸುನಗುತ್ತಾ ಹೀಗೆ ಎಂದನು.
ಎಲೆ ಪಾರ್ಥ ವಿನಯದಿಂ ನೀಂ ಬೇಡಿಕೊಂಡೊಡೆ ಮೊದಲೆ ಬಿಡುವೆನು ಅಶ್ವಂಗಳಂ ಬರಿದೆ ಕಾಳೆಗಕೆ ಬಲಸಹಿತ ಬಂದೆಮ್ಮೊಡನೆ ಕೆಣಕಿ ರಣದೊಳಗೆ ಕುದುರೆಯಂ ಬಿಡಲೇಕೆ=[ಎಲೆ ಪಾರ್ಥ ವಿನಯದಿಂದ ನೀನು ಮೊದಲೆ ಬೇಡಿಕೊಂಡಿದ್ದರೆ ಅಶ್ವಗಳನ್ನು ಬಿಡುತ್ತಿದ್ದೆನು; ಅದಿಲ್ಲದೆ ಸುಮ್ಮನೆ ಕಾಳೆಗಕ್ಕೆ ಸೈನ್ಯಸಹಿತ ಬಂದು,ನಮ್ಮನ್ನು ಕೆಣಕಿ ಯುದ್ಧಭೂಮಿಯಲ್ಲಿ ಕುದುರೆಯನ್ನು ಬಿಡು ಎಂದರೆ, ಏಕೆ ಬಿಡಬೇಕು?];;ಕಲಿತನದ ಪಂತಂ ಉಂಟಾದೊಡೆ ಇದು ಸಮರಮೈ ಸಲೆ(ಬಹಳಷ್ಟು) ಕಾಣಬಹುದು ಎನುತ ಕಣೆಗಳ ಅರುವತ್ತರಿಂ ಫಲುಗುಣ ಮುರಧ್ವಂಸಿ ವಾನರ ಹಯಂಗಳಂ ಕೆಡೆಯೆಚ್ಚು ಬೊಬ್ಬಿರಿದನು=[ಶೌರ್ಯದ ಪಂಥವು ಉಂಟಾದರೆ, ಆಗ ಮುಂದಿನದನ್ನು ಬಹಳಷ್ಟು ಕಾಣಬಹುದು, ಇದು ಯುದ್ಧವಯ್ಯಾ! ಎನುತ್ತಾ ಬಾಣಗಳು ಅರುವತ್ತರಿಂದ ಫಲ್ಗುಣ ಕೃಷ್ಣ ಮಾರುತಿ, ಕುದುರೆಗಳನ್ನು ಕೆಡೆಯುವಂತೆ/ಬೀಳುವಂತೆ ಹೊಡೆದು ಬೊಬ್ಬಿರಿದನು].
ತಾತ್ಪರ್ಯ:ಎಲೆ ಪಾರ್ಥ ವಿನಯದಿಂದ ನೀನು ಮೊದಲೆ ಬೇಡಿಕೊಂಡಿದ್ದರೆ ಅಶ್ವಗಳನ್ನು ಬಿಡುತ್ತಿದ್ದೆನು; ಅದಿಲ್ಲದೆ ಸುಮ್ಮನೆ ಕಾಳೆಗಕ್ಕೆ ಸೈನ್ಯಸಹಿತ ಬಂದು,ನಮ್ಮನ್ನು ಕೆಣಕಿ ಯುದ್ಧಭೂಮಿಯಲ್ಲಿ ಕುದುರೆಯನ್ನು ಬಿಡು ಎಂದರೆ, ಏಕೆ ಬಿಡಬೇಕು? ಶೌರ್ಯದ ಪಂಥವು ಉಂಟಾದರೆ, ಆಗ ಮುಂದಿನದನ್ನು ಬಹಳಷ್ಟು ಕಾಣಬಹುದು, ಇದು ಯುದ್ಧವಯ್ಯಾ! ಎನುತ್ತಾ ಬಾಣಗಳು ಅರುವತ್ತರಿಂದ ಫಲ್ಗುಣ ಕೃಷ್ಣ ಮಾರುತಿ, ಕುದುರೆಗಳನ್ನು ಕೆಡೆಯುವಂತೆ/ಬೀಳುವಂತೆ ಹೊಡೆದು ಬೊಬ್ಬಿರಿದನು.
ಆರಸ ಕೇಳವನ ಬಾಣದ ಘಾತಿಗರ್ಜುನಂ |
ಕೊರಗಿದಂ ಮೇಲೆ ಪಲ್ಗಿರಿದನಾ ಕಪಿ ಚಕ್ರ |
ಧರನೈದೆ ಕೈಮರೆದು ವಾಘೆಯಂ ಸಡಲಿಸೆ ರಥಾಶ್ವಂಗಳಸ್ತ್ರಹತಿಗೆ |
ತರಹರಿಸಲರಿಯದೋಡಿದುವೊಂದು ಕಡೆಗೆ ಬಳಿ |
ಕುರವಣಿಸಿ ಪಾಂಡವನ ಪತಾಕಿನಿಯ ಸುಭಟ ಪ್ರ |
ಕರವನರೆಯಟ್ಟಿದಂ ತಿರುತಿರುಗಿ ಚಾರಿವರಿದೇವೇಳ್ವೆನದ್ಭುತವನು ||40||
ಪದವಿಭಾಗ-ಅರ್ಥ:
ಆರಸ ಕೇಳವನ ಬಾಣದ ಘಾತಿಗರ್ಜುನಂ ಕೊರಗಿದಂ ಮೇಲೆ ಪಲ್ಗಿರಿದನು ಆ ಕಪಿ ಚಕ್ರಧರನು ಐದೆ ಕೈಮರೆದು ವಾಘೆಯಂ ಸಡಲಿಸೆ ರಥಾಶ್ವಂಗಳು ಅಸ್ತ್ರಹತಿಗೆ=[ಆರಸ ಕೇಳೂ, ಅವನ/ವೀರವರ್ಮಕನ ಬಾಣದ ಹೊಡೆತಕ್ಕೆ, ಅರ್ಜುನನು ನೊಂದನು, ಮೇಲೆ ಮಾರುತಿ ನೋವಿನಿಂದ ಹಲ್ಲುಕಿರಿದನು, ಚಕ್ರಧರ ಕೃಷ್ಣನು ಹೀಗೆ ಮೈಮರೆಯಲು ಕೈಸಡಿಲವಾಗಿ ಕುದುರೆಯ ವಾಘೆಯ ಹಗ್ಗ ಸಡಲಿಸಲು, ರಥದ ಕುದುರೆಗಳು ಬಾಣದ ಪಟ್ಟಿಗೆ];; ತರಹರಿಸಲು ಅರಿಯದೆ ಓಡಿದುವು ಒಂದು ಕಡೆಗೆ, ಬಳಿಕ ಉರವಣಿಸಿ ಪಾಂಡವನ ಪತಾಕಿನಿಯ ಸುಭಟ ಪ್ರಕರವನು ಅರೆಯಟ್ಟಿದಂ (ಅರೆ:ಅರ್ಧ, ಅರೆದು,ಪುಡಿಮಾಡಿ) ತಿರುತಿರುಗಿ ಚಾರಿವರಿದು (ಚಾರು ಅರಿದು:ಚೆನ್ನಾಗಿ ತಿಳಿದು) ಏವೇಳ್ವೆನು ಅದ್ಭುತವನು=[ಸುಧಾರಿಸಿಕೊಳ್ಳಲು ಆಗದೆ ದೂರ ಓಡಿದುವು, ಬಳಿಕ ಮೇಲೆಬಿದ್ದು ಪಾಂಡವನ ಸೈನ್ಯದ ವೀರರ ಸಮೂಹವನ್ನು ಅರೆಯಟ್ಟಿದಂ ಯುದ್ಧಭೂಮಿಯಲ್ಲಿ ತಿರುತಿರುಗಿ ಸೈನ್ಯದ ಮರ್ಮ ತಿಳಿದು ಛಿದ್ರಮಾಡಿ ಓಡಿಸಿದನು, ಈ ಅದ್ಭುತವನ್ನು ಏನು ಹೇಳಲಿ].
ತಾತ್ಪರ್ಯ: ಆರಸ ಕೇಳು, ಅವನ/ವೀರವರ್ಮಕನ ಬಾಣದ ಹೊಡೆತಕ್ಕೆ, ಅರ್ಜುನನು ನೊಂದನು, ಮೇಲೆ ಮಾರುತಿ ನೋವಿನಿಂದ ಹಲ್ಲುಕಿರಿದನು, ಚಕ್ರಧರ ಕೃಷ್ಣನು ಹೀಗೇ ಮೈಮರೆಯಲು ಕೈಸಡಿಲವಾಗಿ ಕುದುರೆಯ ವಾಘೆಯ ಹಗ್ಗ ಸಡಲಿಸಲು, ರಥದ ಕುದುರೆಗಳು ಬಾಣದ ಪಟ್ಟಿಗೆ ಸುಧಾರಿಸಿಕೊಳ್ಳಲು ಆಗದೆ ದೂರ ಓಡಿದುವು, ಬಳಿಕ ಮೇಲೆಬಿದ್ದು ಪಾಂಡವನ ಸೈನ್ಯದ ವೀರರ ಸಮೂಹವನ್ನು ಅರೆಯಟ್ಟಿದಂ ಯುದ್ಧಭೂಮಿಯಲ್ಲಿ ತಿರುತಿರುಗಿ ಸೈನ್ಯದ ಮರ್ಮ ತಿಳಿದು ಛಿದ್ರಮಾಡಿ ಓಡಿಸಿದನು, ಈ ಅದ್ಭುತವನ್ನು ಏನು ಹೇಳಲಿ.
ಅಭ್ರದೊಳ್ ಮಿಂಚು ಸುಳಿವಂತೆ ಪರಬಲದೊಳ್ ಪರಿಭ್ರಮಿಸಿತು ಅವನ ರಥಮ್ ಎರಗುತಿಹ ಸಿಡಿಲಂತೆ ವಿಭ್ರಾಜಿಸಿತು ಘೋಷಮೊಡನೆ ಬಿರುವಳೆಯಂಶೆ ಕರೆದುವಂಬಿನ ಸರಿಗಳು=[ಆಕಾಶದಲ್ಲಿ ಮಿಂಚು ಸುಳಿವಂತೆ ಶತ್ರು ಸೈನ್ಯದಲ್ಲಿ ಸಂಚರಿಸಿತು ವೀರವರ್ಮನ ರಥವು; ಹೊಡೆಯುವ ಸಿಡಿಲಿನಂತೆ ಪ್ರಕಾಶಿಸಸಿತು; ಆರ್ಭಟಿಸುತ್ತಾ ಬಿರುವಳೆಯಂತೆ ಬಾಣಗಳ (ಸರಿಗಳ:ಹನಿಗಳ) ಮಳೆಸುರಿಯಿತು; ];;ಬಭ್ರುವಾಹನ ಮಯೂರಧ್ವಜಾದಿಗಳು ಆಹವ ಭ್ರಷ್ಟರಾದರು ಇದಕರ್ಜುನಂ ರೋಷಬದ್ಧ ಭ್ರಕುಟಿ ಮುಖಭಯಂಕರನಾಗಲು ಅಸುರಾರಿ ಕಂಡು ಬಳಿಕ ಇಂತೆಂದನು=[ಬಭ್ರುವಾಹನ ಮಯೂರಧ್ವಜಾದಿಗಳು ಯುದ್ಧದಲ್ಲಿ ಹಿಂದೆಸರಿದರು; ಇದಕ್ಕೆ ಅರ್ಜುನನು ರೋಷದಿಂದ ಹುಬ್ಬುಗಂಟಿಕ್ಕಿ ಅವನ ಮುಖ ಭಯಂಕರವಾಗಲು, ಕೃಷ್ನನು ಅದನ್ನು ಕಂಡು ಬಳಿಕ ಹೀಗೆ ಹೇಳಿದನು].
ತಾತ್ಪರ್ಯ:ಆಕಾಶದಲ್ಲಿ ಮಿಂಚು ಸುಳಿವಂತೆ ಶತ್ರು ಸೈನ್ಯದಲ್ಲಿ ಸಂಚರಿಸಿತು ವೀರವರ್ಮನ ರಥವು; ಹೊಡೆಯುವ ಸಿಡಿಲಿನಂತೆ ಪ್ರಕಾಶಿಸಸಿತು; ಆರ್ಭಟಿಸುತ್ತಾ ಬಿರುವಳೆಯಂತೆ ಬಾಣಗಳ ಮಳೆಸುರಿಯಿತು; ಬಭ್ರುವಾಹನ ಮಯೂರಧ್ವಜಾದಿಗಳು ಯುದ್ಧದಲ್ಲಿ ಹಿಂದೆಸರಿದರು; ಇದಕ್ಕೆ ಅರ್ಜುನನು ರೋಷದಿಂದ ಹುಬ್ಬುಗಂಟಿಕ್ಕಿ ಅವನ ಮುಖ ಭಯಂಕರವಾಗಲು, ಕೃಷ್ನನು ಅದನ್ನು ಕಂಡು ಬಳಿಕ ಹೀಗೆ ಹೇಳಿದನು].
ಖಾತಿ ಬೇಡಲೆ ಪಾರ್ಥ ನಿನಗೆ ಎನಗೆ ಮಣಿಯಂ ಮಹಾತಿಬಲನು ಎಲ್ಲರಂತಲ್ಲ ಅದಟು ಉಪಾಯಂಗಳು ಈತನೊಳ್ ಕೊಳ್ಳದು ಜಯದ್ರಥನ ತಲೆಯನರಿದ ಅಂಬು ಇವನೆಡೆಗೆ ಪೋಗದು=[ಸಿಟ್ಟು ಮಾಡಬೇಡ ಎಲೆ ಪಾರ್ಥ, ನಿನಗೆ ಅಥವಾ ನನಗೆ ಸೋಲನು, ಮಹಾ ಅತಿಬಲನು; ಇವನು ಎಲ್ಲರಂತಲ್ಲ ಪರಾಕ್ರಮ, ತಂತ್ರಗಳು ಇವನಲ್ಲಿ ನೆಡೆಯದು; ಜಯದ್ರಥನ ತಲೆಯನ್ನು ಕಡಿದ ಪಾಶುಪತ ಬಾಣ ಇವನ ಹತ್ತಿರ ಹೋಗದು,];; ಸೂತಜನ (ಕರ್ಣನ) ರಥದ ಗಾಳಿಗೆ ಸಿಲ್ಕನು ಇಕ್ಕಿದ ಮಹೀತಳದೊಳು ಎಡರಿಲ್ಲಿ ಇವಂಗೆ ನಾಂ ಮುಳಿದೊಡೆ ಸುನೀತನ ಶಿರದ್ಛೇದನಂ ಗೈದ ಚಕ್ರಂ ಇವನಂ ಮುಟ್ಟದು ಏವೇಳ್ವೆನು=[ಕರ್ಣನ ರಥದ ಗಾಲಿಹುಗಿದಾಗ ಬಿಟ್ಟ ಬಾಣಕ್ಕೆ ಇವನು ಸಿಕ್ಕನು; ಭೂಮಿಯಲ್ಲಿ ಇವನಿಗೆ ಎದುರು ನಿಲ್ಲುವವರು ಇಲ್ಲ. ನಾನು ಸಿಟ್ಟಾಗಿ ಸುನೀತನ (ಶಿಶುಪಾಲ?) ಶಿರದ್ಛೇದನ ಮಾಡಿದ ಚಕ್ರವು ಇವನನ್ನು ಮುಟ್ಟದು, ಏನು ಹೇಳಲಿ].
ತಾತ್ಪರ್ಯ:ಸಿಟ್ಟು ಮಾಡಬೇಡ ಎಲೆ ಪಾರ್ಥ, ನಿನಗೆ ಅಥವಾ ನನಗೆ ಸೋಲನು, ಮಹಾ ಅತಿಬಲನು; ಇವನು ಎಲ್ಲರಂತಲ್ಲ ಪರಾಕ್ರಮ, ತಂತ್ರಗಳು ಇವನಲ್ಲಿ ನೆಡೆಯದು; ಜಯದ್ರಥನ ತಲೆಯನ್ನು ಕಡಿದ ಪಾಶುಪತ ಬಾಣ ಇವನ ಹತ್ತಿರ ಹೋಗದು, ಕರ್ಣನ ರಥದ ಗಾಲಿಹುಗಿದಾಗ ಬಿಟ್ಟ ಬಾಣಕ್ಕೆ ಇವನು ಸಿಕ್ಕನು; ಭೂಮಿಯಲ್ಲಿ ಇವನಿಗೆ ಎದುರು ನಿಲ್ಲುವವರು ಇಲ್ಲ. ನಾನು ಸಿಟ್ಟಾಗಿ ಸುನೀತನ (ಶಿಶುಪಾಲ?) ಶಿರದ್ಛೇದನ ಮಾಡಿದ ಚಕ್ರವು ಇವನನ್ನು ಮುಟ್ಟದು, ಏನು ಹೇಳಲಿ.
ಇಂತೆಂದು ಹರಿ ಪಾರ್ಥನಂ ನಿಲಿಸಿ ನೋಡಿ ಹನುಮಂತನಂ ಕರೆದು ನೀನೀತನ ವರೂಥಮಂ ತೊಂತಿ (ಸುತ್ತಿ?)ವಾಲಾಗ್ರದಿಂ ಗಗನದೊಳ್ ತಿರುಪಿ ಇಡು ಮಹಾರ್ಣವಕೆ (ಸಮುದ್ರ) ಪೋಗಲೆನಲು=[ಹೀಗೆ ಹೇಳಿ ಕೃಷ್ಣನು ಪಾರ್ಥನನ್ನು ಸುಮ್ಮನಿರಿಸಿ, ಹನುಮಂತನನ್ನು ನೋಡಿ ಕರೆದು ನೀನು ಈತನ (ವೀರವರ್ಮಕನ) ರಥವನ್ನು ಬಾಲದ ತುದಿಯಿಂದ ಸುತ್ತಿ ಆಕಾಶದಲ್ಲಿ ತಿರುಪಗಿಸಿ, ಸಮುದ್ರಕ್ಕೆ ಎಸದುಬಿಡು, ಹೋಗು ಎನ್ನಲು];; ಎಂತು ಇವನ ರಥಮನೀಡಾಡುವೆಂ ದಶವದನ ನಂತೆಯುಂ ಜಂಬುಮಾಲಿಯುವೊಲುಂ ರಾಮ ಸೀಮಂತಿನಿಗೆ ಕಾವಲಿರ್ದ ಅಸುರೆಯರ ತೆರದೊಳಂ ಖಳನು ಈತನು ಅಲ್ಲ ಎಂದನು=[ಮಾರುತಿಯು,ಇವನ ರಥಮನ್ನು ಹೇಗೆ ಎಸೆಯಲಿ? ರಾವಣನಂತೆಯಾಗಲಿ, ಜಂಬುಮಾಲಿಯಂತೆಯಾಗಲಿ, ರಾಮನ ಪತ್ನಿ ಸೀತೆಗೆ ಕಾವಲಿದ್ದ ರಾಕ್ಷಸಿಯರಂತೆ ಈತನು ಕೆಟ್ಟವನಲ್ಲ,ಎಂದನು].
ತಾತ್ಪರ್ಯ:ಹೀಗೆ ಹೇಳಿ ಕೃಷ್ಣನು ಪಾರ್ಥನನ್ನು ಸುಮ್ಮನಿರಿಸಿ, ಹನುಮಂತನನ್ನು ನೋಡಿ ಕರೆದು ನೀನು ಈತನ (ವೀರವರ್ಮಕನ) ರಥವನ್ನು ಬಾಲದ ತುದಿಯಿಂದ ಸುತ್ತಿ ಆಕಾಶದಲ್ಲಿ ತಿರುಪಗಿಸಿ, ಸಮುದ್ರಕ್ಕೆ ಎಸದುಬಿಡು, ಹೋಗು ಎನ್ನಲು, ಮಾರುತಿಯು,ಇವನ ರಥಮನ್ನು ಹೇಗೆ ಎಸೆಯಲಿ? ರಾವಣನಂತೆಯಾಗಲಿ, ಜಂಬುಮಾಲಿಯಂತೆಯಾಗಲಿ, ರಾಮನ ಪತ್ನಿ ಸೀತೆಗೆ ಕಾವಲಿದ್ದ ರಾಕ್ಷಸಿಯರಂತೆ ಈತನು ಕೆಟ್ಟವನಲ್ಲ,ಎಂದನು.
ವಾಯುಸುತ ಶಂಕೆ ಬೇಡೆನ್ನಾಜ್ಞೆ ಧರ್ಮದ ಸ |
ಹಾಯಮಿದು ನಿನಗೆಮಗೆ ಬೇಕಾದ ಕಜ್ಜಮೆಂ |
ದಾ ಯದುಕುಲಾಧಿಪಂ ನೇಮಿಸಿದೊಡಾ ಕಪಿವರಂ ತನ್ನ ವಾಲಧಿಯನು ||
ಆಯತಂಗೈದು ಸಾರಥಿಕುದುರೆಗಳ್ ಸಹಿತ |
ಜೇಯನಾಗಿಹ ನೃಪನ ರಥಮಂ ತೊಡರ್ದಾಂಜ |
ನೇಯಂ ನಭಸ್ಥಳಕೆ ಚಿಗಿದಂ ಪಯೋನಿಧಿಗೆ ಬಿಸುಡುವುದ್ಯೋಗದಿಂದೆ ||44||
ಪದವಿಭಾಗ-ಅರ್ಥ:
ವಾಯುಸುತ ಶಂಕೆ ಬೇಡ ತನ್ನಾಜ್ಞೆ, ಧರ್ಮದ ಸಹಾಯಂ ಇದು ನಿನಗೆ ಎಮಗೆ ಬೇಕಾದ ಕಜ್ಜಮೆಂದ ಆ ಯದುಕುಲಾಧಿಪಂ ನೇಮಿಸಿದೊಡೆ=[ಅದಕ್ಕೆ ಕೃಷ್ಣನು, ವಾಯುಸುತನೇ ಶಂಕೆ ಬೇಡ ಇದು ತನ್ನಾಜ್ಞೆ, ಮತ್ತು ಇದು ಧರ್ಮದ ಸಹಾಯವು,ನಿನಗೆ ನಮಗೆ ಬೇಕಾದ ಕರ್ತವ್ಯವೆಂದು ಆ ಕೃಷ್ಣನು ಆಜ್ಞಾಪಸಿಸಿದಾಗ];; ಆ ಕಪಿವರಂ ತನ್ನ ವಾಲ ಅಧಿಯನು ಆಯತಂ ಗೈದು ಸಾರಥಿ ಕುದುರೆಗಳ್ ಸಹಿತ ಅಜೇಯನು ಆಗಿಹ ನೃಪನ ರಥಮಂ ತೊಡರ್ದಾಂಜನೇಯಂ ನಭಸ್ಥಳಕೆ ಚಿಗಿದಂ ಪಯೋನಿಧಿಗೆ ಬಿಸುಡುವುದ್ಯೋಗದಿಂದೆ=[ಆ ಮಾರುತಿಯು, ತನ್ನ ಬಾಲದ ತುದಿಯನ್ನು ಅತಿಯಾಗಿ ಬೆಳಸಿ ಸಾರಥಿ ಕುದುರೆಗಳ ಸಹಿತ ಅಜೇಯನಾಗಿರುವ ರಾಜನ ರಥವನ್ನು ಸುತ್ತಿಕೊಂಡು ಆಂಜನೇಯನು ಆಕಾಶಕ್ಕೆ ಚಿಗಿದನು, ಅವುಗಳನ್ನು ಸಮುದ್ರಕ್ಕೆ ಬಿಸುಡುವುವ ಉದ್ದೇಶಹೋದಿದ್ದನು.].
ತಾತ್ಪರ್ಯ:ಅದಕ್ಕೆ ಕೃಷ್ಣನು, ವಾಯುಸುತನೇ ಶಂಕೆ ಬೇಡ ಇದು ತನ್ನಾಜ್ಞೆ, ಮತ್ತು ಇದು ಧರ್ಮದ ಸಹಾಯವು,ನಿನಗೆ ನಮಗೆ ಬೇಕಾದ ಕರ್ತವ್ಯವೆಂದು ಆ ಕೃಷ್ಣನು ಆಜ್ಞಾಪಸಿಸಿದಾಗ, ಆ ಮಾರುತಿಯು, ತನ್ನ ಬಾಲದ ತುದಿಯನ್ನು ಅತಿಯಾಗಿ ಬೆಳಸಿ ಸಾರಥಿ ಕುದುರೆಗಳ ಸಹಿತ ಅಜೇಯನಾಗಿರುವ ರಾಜನ ರಥವನ್ನು ಸುತ್ತಿಕೊಂಡು ಆಂಜನೇಯನು ಆಕಾಶಕ್ಕೆ ಚಿಗಿದನು, ಅವುಗಳನ್ನು ಸಮುದ್ರಕ್ಕೆ ಬಿಸುಡುವುವ ಉದ್ದೇಶಹೋದಿದ್ದನು.
ಅನ್ನೆಗಂ ತನ್ನ ರಥಮಂ ಬಿಟ್ಟು ವೀರವರ್ಮ ನರನ ಮಣಿಯ ವರೂಥಮಂ ತೆಗೆದು ಕೂಂಡು ಉನ್ನತ ಪರಾಕ್ರಮದೊಳು ಆಗಸದೆ ಎಡೆಗೆ ಚಿಗಿದು=[ಅಷ್ಟರಲ್ಲಿ, ತನ್ನ ರಥವನ್ನು ಬಿಟ್ಟು ವೀರವರ್ಮಕನು ಅರ್ಜುನನ ಮಣಿಮಯ ರಥವನ್ನು ತೆಗೆದುಕೂಂಡು ಉನ್ನತ ಪರಾಕ್ರಮದಿಂದ ಆಗಸದಲ್ಲಿ ಮೇಲಕ್ಕೆ ಚಿಗಿದು];; ಬಂದೆಲೈ ವಾನರೇಂದ್ರ ನಿನ್ನೊಳು ಇರ್ದಪುದು ಬರಿದೇರು ಎನ್ನ ಕೈಯೊಳು ಇದೆ ಪನ್ನಗಾರ್ರಿವಜ ಕೀರಿಟಗಳ್ ವೆರಸಿರ್ದ ಸನ್ನುತಸ್ಯಂದನಂ ನೋಡೆಂದು ಗಗನದೊಳ್ ಕಪಿಯಂ ಪಚಾರಿಸಿದನು=[ಮಾರತಿಗೆ, 'ಬಂದೆಯಲ್ಲಾ ಯುದ್ಧಕ್ಕೆ ವಾನರೇಂದ್ರ, ನಿನ್ನ ಹತ್ತಿರ ಇರುವುದು ಬರಿಯ ರಥ, ನನ್ನ ಕೈಯಲ್ಲಿ ಇದೆ, ಕೃಷ್ಣ ಕೀರಿಟಗಳು ಒಟ್ಟಿಗಿರುವ ಉತ್ತಮ ರಥವು, ನೋಡು ಎಂದು ಆಕಾಶದಲ್ಲಿ ಮಾರುತಿಯನ್ನು ಅಪಹಾಸ್ಯಮಾಡಿದನು].
ತಾತ್ಪರ್ಯ:ಅಷ್ಟರಲ್ಲಿ, ತನ್ನ ರಥವನ್ನು ಬಿಟ್ಟು ವೀರವರ್ಮಕನು ಅರ್ಜುನನ ಮಣಿಮಯ ರಥವನ್ನು ತೆಗೆದುಕೂಂಡು ಉನ್ನತ ಪರಾಕ್ರಮದಿಂದ ಆಗಸದಲ್ಲಿ ಮೇಲಕ್ಕೆ ಚಿಗಿದು, ಮಾರತಿಗೆ, 'ಬಂದೆಯಲ್ಲಾ ಯುದ್ಧಕ್ಕೆ ವಾನರೇಂದ್ರ, ನಿನ್ನ ಹತ್ತಿರ ಇರುವುದು ಬರಿಯ ರಥ, ನನ್ನ ಕೈಯಲ್ಲಿ ಇದೆ, ಕೃಷ್ಣ ಕೀರಿಟಗಳು ಒಟ್ಟಿಗಿರುವ ಉತ್ತಮ ರಥವು, ನೋಡು ಎಂದು ಆಕಾಶದಲ್ಲಿ ಮಾರುತಿಯನ್ನು ಅಪಹಾಸ್ಯಮಾಡಿದನು.
ಎಲ್ಲಿಗೆ ಎನ್ನ ವರೂಥಮಂ ಬೀರ್ವೇ ಕೀಶ ನೀನು ಅಲ್ಲಿಗೆ ಈಡಾಡುವೆಂ ಸವ್ಯಸಾಚಿಯಾ ರಥವನು ಅಲ್ಲದೊಡೆ ಪಾಲ್ಗಡಲ ಶೇಷ ತಲ್ಪದೊಳೆ ಮೊರೆವ ಇಂದಿರಾದೇವಿ ತನ್ನ
ವಲ್ಲಭನು ಅಗಲ್ದು=[ಎಲ್ಲಿಗೆ ನನ್ನ ರಥವನ್ನು ಎಸೆಯುವೆ ನೀನು ಎಲೆ ಕೋಡುಗ? ಅಲ್ಲಿಗೆ ಎಸೆಯುವೆನು ಸವ್ಯಸಾಚಿಯ ರಥವನ್ನು, ಅಲ್ಲದಿದ್ದರೆ ಇಂದಿರಾದೇವಿ ತನ್ನ ವಲ್ಲಭನನ್ನು ಅಗಲಿ ಗೋಳಿಡುವ ಕ್ಷೀರಸಮುದ್ರದ ಶೇಷನ ಹಾಸಿಗೆಗೆ ಎಸೆಯುವೆನು.];; ಪಾರ್ಥನ ಭಕ್ತಿಗೊಲಿದಿರಲ್ ತಲ್ಲಣಿಸಿ ವಿರಹದಿಂ ತಪಿಸುತಿಹಳು ಆ ರಮೆಗೆ ನಲ್ಲನೊಡಗೂಡುವಂತೆ ಅಮೃತಾಬ್ಧಿಗೆ ಇಡುವೆನೆಂದು ಉಬ್ಬಿದಂ ಭೂಪಾಲನು=[ಏಕೆಂದರೆ ಈ ಕೃಷ್ಣನು ಪಾರ್ಥನ ಭಕ್ತಿಗೆ ಒಲಿದು ಇಲ್ಲಿ ಬಂದಿರುವುದರಿಂದ, ತಲ್ಲಣಿಸಿ ವಿರಹದಿಂದ ತಪಿಸುತ್ತಿರುವಳು. ಆ ರಮೆಗೆ ಪ್ರೀತಿಯ ನಲ್ಲ/ ಪ್ರಿಯತಮನು ಸೇರುವಂತೆ ಅಮೃತದಸಮುದ್ರಕ್ಕೆ ಹಾಕುವೆನೆಂದು ರಾಜನು ಪೌರುಷತೋರಿದನು.]
ತಾತ್ಪರ್ಯ:ಎಲ್ಲಿಗೆ ನನ್ನ ರಥವನ್ನು ಎಸೆಯುವೆ ನೀನು ಎಲೆ ಕೋಡುಗ? ಅಲ್ಲಿಗೇ ಎಸೆಯುವೆನು ಸವ್ಯಸಾಚಿಯ ರಥವನ್ನು, ಅಲ್ಲದಿದ್ದರೆ ಇಂದಿರಾದೇವಿ ತನ್ನ ವಲ್ಲಭನನ್ನು ಅಗಲಿ ಗೋಳಿಡುವ ಕ್ಷೀರಸಮುದ್ರದ ಶೇಷನ ಹಾಸಿಗೆಗೆ ಎಸೆಯುವೆನು. ಏಕೆಂದರೆ ಈ ಕೃಷ್ಣನು ಪಾರ್ಥನ ಭಕ್ತಿಗೆ ಒಲಿದು ಇಲ್ಲಿ ಬಂದಿರುವುದರಿಂದ, ತಲ್ಲಣಿಸಿ ವಿರಹದಿಂದ ತಪಿಸುತ್ತಿರುವಳು. ಆ ರಮೆಗೆ ಪ್ರೀತಿಯ ನಲ್ಲ/ ಪ್ರಿಯತಮನು ಸೇರುವಂತೆ ಅಮೃತದ ಸಮುದ್ರಕ್ಕೆ ರಥವನ್ನು ಹಾಕುವೆನೆಂದು ರಾಜನು ಪೌರುಷತೋರಿದನು.
ಸಾಗರಕೆ ಲಂಘಿಸಿದ ಸಾಹಸಕೆ ಬೆರೆವೆ ನೀನು, ಗಸದೊಳು ಆದಿತ್ಯನು ಇರೆ ಚಂದ್ರನು ಒಪ್ಪೂವನೆ ಪೋಗೆಲೆ ಮರುಳೆ ತನ್ನ ಮುಂದಣ ಪರಾಕ್ರಮಿಗಳುಂಟೆ ಮೂಜಗದೊಳು ಎನುತೆ=[ನೀನು ಸಮುದ್ರವನ್ನು ಹಾರಿದ ಸಾಹಸಕ್ಕೆ ಅಹಂಕರಿಸುವೆ. ಆಕಾಶದಲ್ಲಿ ಸೂರ್ಯನು (ತಾನು) ಇರಲು ಚಂದ್ರನು (ಮಾರುತಿ) ಪ್ರಕಾಶಿಸುವನೇ? ಹೋಗೆಲೆ ಮರುಳೆ ತನಗೂ ಮೇಲಿನ ಪರಾಕ್ರಮಿಗಳುಂಟೆ ಮೂರು ಜಗತ್ತಿನಲ್ಲಿ/ ಇಲ್ಲವೇ ಇಲ್ಲ! ಎನ್ನುತ್ತಾ];; ತಾಗಿದಂ ನೃಪತಿ ಹನುಮಂತನಂ ಬಳಿಕ ನಾವು ಈಗಳವರಂತೆ ಅಲ್ಲ ತಾನೆ ತನ್ನಂ ಪೊಗಳುವ ಈ ಗರುವಿಕೆಯನು ಅರಿಯೆವು ಅತಿವೃದ್ಧರೆಂದು ಎರಗಿದಂ ಕಪಿ ಮಹೀಶ್ವರನನು=[ರಾಜನು ಹನುಮಂತನನ್ನು ಎದುರಿಸಿದನು. ಬಳಿಕ ಮಾರುತಿಯು, ನಾವು ಈಗಿನ ದ್ವಾಪರದಂತವರು ಅಲ್ಲ, ತಾವೇ ತಮ್ಮನ್ನು ಹೊಗಳಿಕೊಳ್ಳವ, ಗರ್ವವನ್ನು ತಿಳಿಯೆವು; ನಾವು ಅತಿವೃದ್ಧರು ಎಂದು ಹೇಳಿ ಮಾರುತಿಯು ಅವನನ್ನು ವಂದಿಸಿದನು.]
ತಾತ್ಪರ್ಯ:ನೀನು ಸಮುದ್ರವನ್ನು ಹಾರಿದ ಸಾಹಸಕ್ಕೆ ಅಹಂಕರಿಸುವೆ. ಆಕಾಶದಲ್ಲಿ ಸೂರ್ಯನು (ತಾನು) ಇರಲು ಚಂದ್ರನು (ಮಾರುತಿಯು) ಪ್ರಕಾಶಿಸುವನೇ? ಹೋಗು ಎಲೆ ಮರುಳೆ, ಮೂರು ಜಗತ್ತಿನಲ್ಲಿ ತನಗೂ ಮೇಲಿನ ಪರಾಕ್ರಮಿಗಳುಂಟೆ? ಇಲ್ಲವೇ ಇಲ್ಲ! ಎನ್ನುತ್ತಾ, ರಾಜನು ಹನುಮಂತನನ್ನು ಎದುರಿಸಿದನು. ಬಳಿಕ ಮಾರುತಿಯು, ನಾವು ಈಗಿನ ದ್ವಾಪರಯುಗದಂತವರು ಅಲ್ಲ, ತಾವೇ ತಮ್ಮನ್ನು ಹೊಗಳಿಕೊಳ್ಳವ, ಗರ್ವವನ್ನು ತಿಳಿಯೆವು; ನಾವು ಅತಿವೃದ್ಧರು ಎಂದು ಹೇಳಿ ಮಾರುತಿಯು ಅವನನ್ನು ವಂದಿಸಿದನು.
ಆ ವೀರವರ್ಮಂ ಕನಲ್ದು ಆಗ ಪಾರ್ಥ ರಾಜೀವಾಕ್ಷ ಕಪಿಗಳಂ ಕರೆದು ಲೋಕತ್ರಯಕೆ ಮೂವರುಂ ನೀವು ಅತಿ ಪರಾಕ್ರಮಿಗಳು ಆನೊರ್ವನು=[ಆ ವೀರವರ್ಮಕನು ಸಿಟ್ಟಿನಿಂದ ಆಗ ಪಾರ್ಥ ಕೃಷ್ಣ, ಮಾರುತಿಗಳನ್ನು ಕರೆದು, ಲೋಕತ್ರಯದಲ್ಲಿ ನೀವು ಮೂವರೂ ಅತಿ ಪರಾಕ್ರಮಿಗಳು, ನಾನು ಒಬ್ಬನೇ,];; ಆಹವದೊಳು ಎನ್ನ ಕೂಡೆ ಸಾವದಾನದೊಳು ಒದಗಿದೊಡೆ ಕಾಣಬಹುದು ಎನುತ ಪಾವನಿಯನು (ಪವಮಾನ:ವಾಯು, ಪವಮಾನಿ:ಮಾರುತಿ/ಪಾವನಿ) ಅಡಸಿ ಪೊಯ್ದೊಡೆ ಮುಷ್ಟಿಘಾತದಿಂದ ಆ ವಾಯುಜಂ ತೊಲಗಲು ಅಸುರಹರನು ಆ ನೃಪನ ವಕ್ಷಸ್ಥಳವನು ಒದೆದನು=[ಯುದ್ಧದಲ್ಲಿ ನನ್ನ ಜೊತೆ ಸಾವದಾನದಿಂದ/ ಒಬ್ಬೊರಾಗಿ ಯುದ್ಧಕ್ಕೆ ಬಂದರೆ, ನನ್ನ ಶೌರ್ಯವನ್ನು ಕಾಣಬಹುದು, ಎನ್ನುತ್ತಾ, ಮಾರುತಿಯನ್ನು ಅಡ್ಡಗಟ್ಟಿ ಹೋಡೆದನು; ಅವನ ಮುಷ್ಟಿಘಾತದಿಂದ ಆ ವಾಯುಪುತ್ರನು ಅಲ್ಲಿಂದ ಸರಿದು ಹೋಗಲು ಕೃಷ್ನನು ಆ ರಾಜನ ಎದೆಗೆ ಒದೆದನು].
ತಾತ್ಪರ್ಯ:ಆ ವೀರವರ್ಮಕನು ಸಿಟ್ಟಿನಿಂದ ಆಗ ಪಾರ್ಥ ಕೃಷ್ಣ, ಮಾರುತಿಗಳನ್ನು ಕರೆದು, ಲೋಕತ್ರಯದಲ್ಲಿ ನೀವು ಮೂವರೂ ಅತಿ ಪರಾಕ್ರಮಿಗಳು, ನಾನು ಒಬ್ಬನೇ, ಯುದ್ಧದಲ್ಲಿ ನನ್ನ ಜೊತೆ ಸಾವದಾನದಿಂದ/ ಒಬ್ಬೊರಾಗಿ ಯುದ್ಧಕ್ಕೆ ಬಂದರೆ, ನನ್ನ ಶೌರ್ಯವನ್ನು ಕಾಣಬಹುದು, ಎನ್ನುತ್ತಾ, ಮಾರುತಿಯನ್ನು ಅಡ್ಡಗಟ್ಟಿ ಹೋಡೆದನು; ಅವನ ಮುಷ್ಟಿಘಾತದಿಂದ ಆ ವಾಯುಪುತ್ರನು ಅಲ್ಲಿಂದ ಸರಿದು ಹೋಗಲು ಕೃಷ್ನನು ಆ ರಾಜನ ಎದೆಗೆ ಒದ್ದನು.
ಹರಿಯ ಪದಘಾತಿಗೆ ಆ ನೃಪತಿ ಮೂರ್ಛಿತನಾಗಿ ಧರೆಗುರುಳ್ದು ಒಡನೆ ಚೇತರಿಸುತೆ ಎಲೆ ವೀರರ್ಕಳಿರ ನೀವು ಮೂವರಾನೊರ್ವನು ಎಂದು ಆಹವದೊಳು ಉರವಣಿಸ ಬೇಡಿ ಬರಿದೆ=[ಕೃಷ್ಣನ ಕಾಲಿನ ವದೆತಕ್ಕೆ ಆ ರಾಜನು ಮೂರ್ಛಿತನಾಗಿ ನೆಲಕ್ಕೆ ಉರುಳಿಬಿದ್ದನು. ಕೂಡಲೆ ಚೇತರಿಸಿಕೊಂಡು, ಎಲೆ ವೀರರೇ, ನೀವು ಮೂವರು ನಾನು ಒಬ್ಬನೇ ಎಂದು ಯುದ್ಧದಲ್ಲಿ ಸುಮ್ಮನೆ ಮೆರೆಯಬೇಡಿ;];; ಮುರಹರನ ದರ್ಶನಂ ದೊರೆಕೊಳ್ವಿನಂ ತನಗೆ ಮರಣಮಿಲ್ಲ ಅಂತಕನ ವರದಿಂದೆ ಬಳಿಕ ಈಗ ಪುರುಷೋತ್ತಮನ ಪದಸ್ಪರ್ಶಮಾಯ್ತು ಎನಗಿನ್ನು ಮೃತ್ಯವು ಎತ್ತಣದು ಎಂದನು=[ಕೃಷ್ಣನ ದರ್ಶನವು ದೊರೆಯುವವರೆಗೂ ತನಗೆ ಯಮನ ವರದಿಂದ ಮರಣವಿಲ್ಲ; ಬಳಿಕ ಈಗ ಪುರುಷೋತ್ತಮನಾದ ಕೃಷ್ಣನ ಪಾದಸ್ಪರ್ಶವಾಯಿತು, ನನಗೆ ಇನ್ನು ಮೃತ್ಯು ಯಾವಲೆಕ್ಕ! ಮೃತ್ಯು ಭಯವಿಲ್ಲವು, ಎಂದನು].
ತಾತ್ಪರ್ಯ:ಕೃಷ್ಣನ ಕಾಲಿನ ವದೆತಕ್ಕೆ ಆ ರಾಜನು ಮೂರ್ಛಿತನಾಗಿ ನೆಲಕ್ಕೆ ಉರುಳಿಬಿದ್ದನು. ಕೂಡಲೆ ಚೇತರಿಸಿಕೊಂಡು, ಎಲೆ ವೀರರೇ, ನೀವು ಮೂವರು ನಾನು ಒಬ್ಬನೇ ಎಂದು ಯುದ್ಧದಲ್ಲಿ ಸುಮ್ಮನೆ ಮೆರೆಯಬೇಡಿ; ಕೃಷ್ಣನ ದರ್ಶನವು ದೊರೆಯುವವರೆಗೂ ತನಗೆ ಯಮನ ವರದಿಂದ ಮರಣವಿಲ್ಲ; ಬಳಿಕ ಈಗ ಪುರುಷೋತ್ತಮನಾದ ಕೃಷ್ಣನ ಪಾದಸ್ಪರ್ಶವಾಯಿತು, ನನಗೆ ಇನ್ನು ಮೃತ್ಯು ಯಾವಲೆಕ್ಕ! ಮೃತ್ಯು ಭಯವಿಲ್ಲವು, ಎಂದನು.
ಎಂದೊಡಸುರಾಂತಕಂ ನೋಡಿದಂ ಕಾರುಣ್ಯ |
ದಿಂದೆ ನಿಜ ರಥದೊಳಿದಿರಾಗಿ ಸಮರಕೆ ಮತ್ತೆ |
ನಿಂದಿಹ ನರೇಂದ್ರನಂ ನುಡಿದಂ ಕಿರೀಟಗೆಲೆ ಪಾರ್ಥ ನಿನಗೆನಗಿವನೊಳು||
ಕುಂದದೆ ಸಹಸ್ರ ವರ್ಷಂ ಪೊಣರ್ದೊಡೆ ತೀರ |
ದೆಂದಿಗುಂ ಲಘು ಹಸ್ತನತಿಬಲಂ ಶಸ್ತ್ರಾಸ್ತ್ರ |
ದಿಂದದಿಕ ನಖಿಳ ವೀರರ್ಕಳಂ ಗೆಲ್ದನಿವನಾಂ ತೋಷಿಸುವೆನೆಂದನು ||50||
ಪದವಿಭಾಗ-ಅರ್ಥ:
ಎಂದೊಡೆ ಅಸುರಾಂತಕಂ ನೋಡಿದಂ ಕಾರುಣ್ಯದಿಂದೆ ನಿಜ ರಥದೊಳು ಇದಿರಾಗಿ ಸಮರಕೆ ಮತ್ತೆ ನಿಂದಿಹ ನರೇಂದ್ರನಂ ನುಡಿದಂ ಕಿರೀಟಗೆಲೆ ಪಾರ್ಥ ನಿನಗೆ ಎನಗೆ ಇವನೊಳು=[ವೀರವರ್ಮಕನು ತನಗೆ ಸಾವು ಯಾವಲೆಕ್ಕ ಎಂದಾಗ, ಕೃಷ್ಣನು ತನ್ನ ರಥಕ್ಕೆ ಎದುರಾಗಿ ಯುದ್ಧಕ್ಕೆ ಮತ್ತೆ ನಿಂತಿರುವ ರಾಜನನ್ನು ಕರುಣದಿಂದ ನೋಡಿದನು.ಅರ್ಜುನನಿಗೆ ಹೇಳಿದನು, ಎಲೆ ಪಾರ್ಥ ನಿನಗೆ ನನಗೆ ಇವನೊಡನೆ];;ಕುಂದದೆ ಸಹಸ್ರ ವರ್ಷಂ ಪೊಣರ್ದೊಡೆ ತೀರದು ಎಂದಿಗುಂ ಲಘು ಹಸ್ತನು ಅತಿಬಲಂ ಶಸ್ತ್ರಾಸ್ತ್ರದಿಂದ ಅದಿಕನು ಅಖಿಳ ವೀರರ್ಕಳಂ ಗೆಲ್ದನು ಇವನ ಆಂ ತೋಷಿಸುವೆನು ಎಂದನು=[ಬಿಡದೆ ಸಹಸ್ರ ವರ್ಷಕಾಲ ಹೋರಾಡಿದರೂ ಯುದ್ಧ ಮುಗಿಯದು, ಎಂದಿಗೂ ಯುದ್ಧದಲ್ಲಿ ಲಾಘವದಹಸ್ತನು, ಅತಿಬಲನು, ಶಸ್ತ್ರಾಸ್ತ್ರದಿಂದ ಅದಿಕನಾಗಿರುವನು, ಅಖಿಲ ವೀರರನ್ನೂ ಗೆದ್ದನು; ಇವನನ್ನು ನಾನು ಸಂತೋಷಪಡಿಸುವೆನು ಎಂದನು].
ತಾತ್ಪರ್ಯ:ವೀರವರ್ಮಕನು ತನಗೆ ಸಾವು ಯಾವಲೆಕ್ಕ ಎಂದಾಗ, ಕೃಷ್ಣನು ತನ್ನ ರಥಕ್ಕೆ ಎದುರಾಗಿ ಯುದ್ಧಕ್ಕೆ ಮತ್ತೆ ನಿಂತಿರುವ ರಾಜನನ್ನು ಕರುಣದಿಂದ ನೋಡಿದನು.ಅರ್ಜುನನಿಗೆ ಹೇಳಿದನು, ಎಲೆ ಪಾರ್ಥ ನಿನಗೆ ನನಗೆ ಇವನೊಡನೆ ಬಿಡದೆ ಸಹಸ್ರ ವರ್ಷಕಾಲ ಹೋರಾಡಿದರೂ ಯುದ್ಧ ಮುಗಿಯದು, ಎಂದಿಗೂ ಯುದ್ಧದಲ್ಲಿ ಲಾಘವದಹಸ್ತನು, ಅತಿಬಲನು, ಶಸ್ತ್ರಾಸ್ತ್ರದಿಂದ ಅದಿಕನಾಗಿರುವನು, ಅಖಿಲ ವೀರರನ್ನೂ ಗೆದ್ದನು; ಇವನನ್ನು ನಾನು ಸಂತೋಷಪಡಿಸುವೆನು ಎಂದನು.
ದೇವ ನೀನು ಆವನಂ ತೋಷಿಸುವೆ ಜಗದೊಳು ಅವನೇ ವಿಜಯಿ ಮೇಣ ಅವನೆ ಬಲವಂತನು ಎಂದೊಡೆ ಇನ್ನು ಈ ವಸುಮತೀಶ್ವರಂ ಧುರದೊಳು ಎನ್ನಾಳ್ತನಕೆ ಸೋಳ್ದಪನೆ=[ದೇವ ಕೃಷ್ಣಾ, ನೀನು ಯಾವನನ್ನು ಸಂತೋಷಿಸುವೆಯೊ, ಜಗತ್ತನಲ್ಲಿ ಅವನೇ ವಿಜಯಿ; ಮತ್ತು ಅವನೆ ಬಲವಂತನು, ಎಂದಾಗ, 'ಇನ್ನು ಈ ವಸುಮತೀಶ್ವರನು ಯುದ್ಧದಲ್ಲಿ ನನ್ನ ಪೌರುಷಕ್ಕೆ ಸೋಲುವನೆ? ಇಲ್ಲ.];; ಸಾಕು ಇದೆಂದು ಶ್ರೀವಲ್ಲಭನೊಳು ಅರ್ಜುನಂ ಪೇಳ್ದೊಡೆ ಆ ಮಾತನು ಆ ವೀರವರ್ಮಕಂ ಕೇಳ್ದು ಮಿಗೆ ಮೆಚ್ಚಿ ಗಾಂಡೀವಿಗೆ ಅಭಿವಂದಿಸಿ ಬೆರಳ್ಗೊನೆಯನು ಒಲೆದೊಲೆದು ಕೊಂಡಾಡುತ ಇಂತೆಂದನು=[ಸಾಕು ಈ ಯುದ್ಧ ಎಂದು, ಶ್ರೀಕೃಷ್ಣನೊಡನೆ ಅರ್ಜುನನು ಹೇಳಿದಾಗ ಆ ಮಾತನ್ನು ಆ ವೀರವರ್ಮಕನು ಕೇಳಿ, ಬಹಳ ಮೆಚ್ಚಿ ಗಾಂಡೀವಿಗೆ/ ಅರ್ಜುನನಿಗೆ ಅಭಿವಂದಿಸಿದನು ಮತ್ತೆ ಅವನು ಬೆರಳು ತುದಿಯನ್ನು ಒಲೆದು ಒಲೆದು/ ಅಲ್ಲಾಡಿಸಿ, ಕೊಂಡಾಡುತ್ತಾ ಹೀಗೆ ಹೇಳಿದನು].
ತಾತ್ಪರ್ಯ:ದೇವ ಕೃಷ್ಣಾ, ನೀನು ಯಾವನನ್ನು ಸಂತೋಷಿಸುವೆಯೊ, ಜಗತ್ತನಲ್ಲಿ ಅವನೇ ವಿಜಯಿ; ಮತ್ತು ಅವನೆ ಬಲವಂತನು, ಎಂದಾಗ, 'ಇನ್ನು ಈ ವಸುಮತೀಶ್ವರನು ಯುದ್ಧದಲ್ಲಿ ನನ್ನ ಪೌರುಷಕ್ಕೆ ಸೋಲುವನೆ? ಇಲ್ಲ. ಸಾಕು ಈ ಯುದ್ಧ ಎಂದು, ಶ್ರೀಕೃಷ್ಣನೊಡನೆ ಅರ್ಜುನನು ಹೇಳಿದಾಗ ಆ ಮಾತನ್ನು ಆ ವೀರವರ್ಮಕನು ಕೇಳಿ, ಬಹಳ ಮೆಚ್ಚಿ ಗಾಂಡೀವಿಗೆ/ ಅರ್ಜುನನಿಗೆ ಅಭಿವಂದಿಸಿದನು ಮತ್ತೆ ಅವನು ಬೆರಳು ತುದಿಯನ್ನು ಒಲೆದು ಒಲೆದು/ ಅಲ್ಲಾಡಿಸಿ, ಕೊಂಡಾಡುತ್ತಾ ಹೀಗೆ ಹೇಳಿದನು.
ಎಲೆ ಧನಂಜಯ ಚರಾಚರಮೆಲ್ಲಮಂ ಬಾಹು |
ಬಲದಿಂದೆ ಗೆಲ್ವೆನೆಂಬಗ್ಗಳಿಕೆಯಂ ಬಿಟ್ಟು |
ಜಲಜಾಯತಾಕ್ಷನಾಡಿದ ಮಾತಿಗನುಸಾರಿಯಾಗಿ ನೀನೆಂದ ನುಡಿಗೆ ||
ಸಲೆ ಸೊಗಸಿತೆನ್ನ ಮನವಿನ್ನು ಕಾದುವೆನೆಂಬ |
ಚಲಮಿಲ್ಲ ತನಗೆನುತ ಕರದ ಚಾಪವನಿಳುಹಿ |
ನಲವಿಂದೆ ಬಂದು ಕೃಷ್ಣನ ಪಾದಕೆರಗಿದಂ ವೀರವರ್ಮಂ ಪ್ರಿಯದೊಳು ||52||
ಪದವಿಭಾಗ-ಅರ್ಥ:
ಎಲೆ ಧನಂಜಯ ಚರಾಚರಮೆಲ್ಲಮಂ ಬಾಹುಬಲದಿಂದೆ ಗೆಲ್ವೆನೆಂಬ ಅಗ್ಗಳಿಕೆಯಂ ಬಿಟ್ಟು ಜಲಜಾಯತಾಕ್ಷನು ಆಡಿದ ಮಾತಿಗೆ ಅನುಸಾರಿಯಾಗಿ ನೀನೆಂದ ನುಡಿಗೆ=[ಎಲೆ ಧನಂಜಯ ಚರಾಚರವೆಲ್ಲವನ್ನೂ, ಬಾಹುಬಲದಿಂದ ಗೆಲ್ಲುವೆನೆಂಬ ಅಹಂಕಾರವನ್ನು ಬಿಟ್ಟು ಶ್ರೀಕೃಷ್ನನು ಆಡಿದ ಮಾತಿಗೆ ಒಪ್ಪಿ ನೀನು ಹೇಳಿದ ಮಾತು ];; ಸಲೆ ಸೊಗಸಿತೆಉ ಎನ್ನ ಮನವು ಇನ್ನು ಕಾದುವೆನೆಂಬ ಚಲಮಿಲ್ಲ ತನಗೆ ಎನುತ ಕರದ ಚಾಪವನು ಇಳುಹಿ ನಲವಿಂದೆ ಬಂದು ಕೃಷ್ಣನ ಪಾದಕೆ ಎರಗಿದಂ ವೀರವರ್ಮಂ ಪ್ರಿಯದೊಳು=[ನನ್ನ ಮನಸ್ಸಿಗೆ ಬಹಳ ಸೊಗಸಿತು. ಇನ್ನು ತನಗೆ ಯುದ್ಧಮಾಡವೆನೆಂಬ ಹಟವಿಲ್ಲ, ಎನ್ನುತ್ತಾ, ಕೈಯಲ್ಲದ್ದ ಬಿಲ್ಲನ್ನು ಕೆಳಗೆ ಇಳಿಸಿದನು. ವೀರವರ್ಮಕನು ಸಂತೋಷದಿಂದ ಬಂದು ಕೃಷ್ಣನ ಪಾದಕ್ಕೆ ಪ್ರೀತಿಯಿಂದ ನಮಸ್ಕರಿಸಿದನು].
ತಾತ್ಪರ್ಯ:ಎಲೆ ಧನಂಜಯ ಚರಾಚರವೆಲ್ಲವನ್ನೂ, ಬಾಹುಬಲದಿಂದ ಗೆಲ್ಲುವೆನೆಂಬ ಅಹಂಕಾರವನ್ನು ಬಿಟ್ಟು ಶ್ರೀಕೃಷ್ನನು ಆಡಿದ ಮಾತಿಗೆ ಒಪ್ಪಿ ನೀನು ಹೇಳಿದ ಮಾತು ನನ್ನ ಮನಸ್ಸಿಗೆ ಬಹಳ ಸೊಗಸಿತು. ಇನ್ನು ತನಗೆ ಯುದ್ಧಮಾಡವೆನೆಂಬ ಹಟವಿಲ್ಲ, ಎನ್ನುತ್ತಾ, ಕೈಯಲ್ಲದ್ದ ಬಿಲ್ಲನ್ನು ಕೆಳಗೆ ಇಳಿಸಿದನು. ವೀರವರ್ಮಕನು ಸಂತೋಷದಿಂದ ಬಂದು ಕೃಷ್ಣನ ಪಾದಕ್ಕೆ ಪ್ರೀತಿಯಿಂದ ನಮಸ್ಕರಿಸಿದನು.
ತಾಮರಸ (ಕಮಲ) ಲೋಚನಂ ತೆಗೆದು ಬಿಗಿದಪ್ಪಿದಂ ಪ್ರೇಮದಿಂದ ಆ ನೃಪನನು ಅರ್ಜುನಂ ಮನ್ನಿಸಿದನು ಆ ಮಯೂರಧ್ವಜಾದಿಗಳು ಎಲ್ಲರುಂ ಕೂಡೆ ಭಾವಿಸಿದರು ಉಚಿತದಿಂದೆ=[ಕಮಲ ಲೋಚನನಾದ ಕೃಷ್ನನು ಪ್ರೇಮದಿಂದ ಆ ನೃಪನನ್ನು ಬರಸೆಳೆದು ಬಿಗಿಯಾಗಿ ಅಪ್ಪಿದನು; ಅರ್ಜುನನು ಅನನ್ನು ಗೌರವಿಸಿದನು, ಆ ಮಯೂರಧ್ವಜಾದಿ ರಾಜರೆಲ್ಲರೂ,ಒಟ್ಟಾಗಿ ಉಚಿತವಾಗಿ ಗೌರವತೋರಿದರು.];; ಜಾಮಾತನು ಅಗಿರ್ದ ವೈವಸ್ವತಂ ಬಂದು ಭೂಮೀಶನಂ ಮುಕುಂದನ ಕೈಯೊಳಿತ್ತು ಸುತ್ರಾಮಸುತ (ಅರ್ಜುನ) ಮುಖ್ಯರು ಅಭಿವಂದಿಸಲ್ ಪರಸಿ ನಿಜನಗರಕ್ಕೆ ಬೀಳ್ಕೊಂಡನು.=[ಅಳಿಯನಾಗಿದ್ದ ಯಮನು ಬಂದು ವೀರವರ್ಮಕ ರಾಜನನ್ನು ಮುಕುಂದನ ಕೈಯಲ್ಲಿ ಇಟ್ಟು, ಅರ್ಜುನಾದಿ ಮುಖ್ಯರು ಯಮನನ್ನು ಅಭಿವಂದಿಸಲು ಅವರನ್ನು ಹರಸಿ ಯಮನು ತನ್ನ ನಗರಕ್ಕೆ ಹೋದನು.]
ತಾತ್ಪರ್ಯ:ಕಮಲ ಲೋಚನನಾದ ಕೃಷ್ನನು ಪ್ರೇಮದಿಂದ ಆ ನೃಪನನ್ನು ಬರಸೆಳೆದು ಬಿಗಿಯಾಗಿ ಅಪ್ಪಿದನು; ಅರ್ಜುನನು ಅನನ್ನು ಗೌರವಿಸಿದನು, ಆ ಮಯೂರಧ್ವಜಾದಿ ರಾಜರೆಲ್ಲರೂ,ಒಟ್ಟಾಗಿ ಉಚಿತವಾಗಿ ಗೌರವತೋರಿದರು. ರಅಜನಿಗೆ ಅಳಿಯನಾಗಿದ್ದ ಯಮನು ಬಂದು ವೀರವರ್ಮಕ ರಾಜನನ್ನು ಮುಕುಂದನ ಕೈಯಲ್ಲಿ ಇಟ್ಟು, ಅರ್ಜುನಾದಿ ಮುಖ್ಯರು ಯಮನನ್ನು ಅಭಿವಂದಿಸಲು ಅವರನ್ನು ಹರಸಿ ಯಮನು ತನ್ನ ನಗರಕ್ಕೆ ಹೋದನು.
ಬಳಿಕವಂ ತನ್ನ ತನು ದೇಶ ಕೋಶಂಗಳಂ |
ಬಳುವಳಿಗಳಂ ಮಾಡಿ ತುರಗಂಗಳಂ ತರಿಸಿ |
ನಳಿನೋದರನ ಕೈಯೊಳಿತ್ತು ಮಿಗೆ ಭಕ್ತಿಯಿಂದುಪಚರಿಸಿ ಮುರಹರನನು ||
ಉಳಿದ ನೃಪರೆಲ್ಲರಂ ಸತ್ಯರಿಸಿ ವಿನಯದಿಂ |
ಪೂಳಲೊಳಾರ್ದಿನಮಿರಿಸಿಕೊಂಡಿರ್ದು ಪಾರ್ಥನಂ |
ದಳ ಸಹಿತ ಪೊರಮಟ್ಟನುತ್ಸವದೊಳಶ್ವರಕ್ಷೆಗೆ ಧನಂಜಯನ ಕೂಡೆ ||54||
(ಪೂಳಲೊಳರುದಿನಮಿರಿಸಿಕೊಂಡಿರ್ದು)
ಪದವಿಭಾಗ-ಅರ್ಥ:
ಬಳಿಕ ಅವಂ ತನ್ನ ತನು ದೇಶ ಕೋಶಂಗಳಂ ಬಳುವಳಿಗಳಂ ಮಾಡಿ ತುರಗಂಗಳಂ ತರಿಸಿ ನಳಿನೋದರನ (ಹೊಕ್ಕಳಲ್ಲಿ ಕಮಲವರುವವಬು) ಕೈಯೊಳು ಇತ್ತು ಮಿಗೆ ಭಕ್ತಿಯಿಂದ ಉಪಚರಿಸಿ ಮುರಹರನನು=[ಬಳಿಕ ಆ ರಾಜ ವೀರವರ್ಮಕನು ತನ್ನ ತನು ದೇಶ ಕೋಶಂಗಳನ್ನೂ ಬಳುವಳಿಗಳನ್ನೂ ಕೊಟ್ಟುಸತ್ಕಾರ ಮಾಡಿ, ತುರಗಗಳನ್ನು ತರಿಸಿ ಕೃಷ್ಣನ ಕೈಯಲ್ಲಿ ಕೊಟ್ಟು,ಕೃಷ್ಣನನ್ನು ಬಹಳ ಭಕ್ತಿಯಿಂದ ಉಪಚರಿಸಿ];; ಉಳಿದ ನೃಪರ ಎಲ್ಲರಂ ಸತ್ಯರಿಸಿ ವಿನಯದಿಂ ಪೂಳಲೊಳು ಆರುದಿನಮ್ ಇರಿಸಿಕೊಂಡಿರ್ದು ಪಾರ್ಥನಂ ದಳ ಸಹಿತ ಪೊರಮಟ್ಟನು ಉತ್ಸವದೊಳ್ವು ಅರಕ್ಷೆಗೆ ಧನಂಜಯನ ಕೂಡೆ=[ಉಳಿದ ರಾಜರು ಎಲ್ಲರನ್ನೂ ಸತ್ಯರಿಸಿ, ವಿನಯದಿಂದ ತನ್ನ ಪುರದಲ್ಲಿ ಆರುದಿನ ಇರಿಸಿಕೊಂಡಿದ್ದು, ಪಾರ್ಥನ ಸೈನ್ಯ ಸಹಿತ ಧನಂಜಯನ ಜೊತೆ ಸಂಭ್ರಮದಿಂದ ಅಶ್ವ ರಕ್ಷೆಗೆ ಹೊರಟನು.]
ತಾತ್ಪರ್ಯ:ಬಳಿಕ ಆ ರಾಜ ವೀರವರ್ಮಕನು ತನ್ನ ತನು ದೇಶ ಕೋಶಂಗಳನ್ನೂ ಬಳುವಳಿಗಳನ್ನೂ ಕೊಟ್ಟುಸತ್ಕಾರ ಮಾಡಿ, ತುರಗಗಳನ್ನು ತರಿಸಿ ಕೃಷ್ಣನ ಕೈಯಲ್ಲಿ ಕೊಟ್ಟು,ಕೃಷ್ಣನನ್ನು ಬಹಳ ಭಕ್ತಿಯಿಂದ ಉಪಚರಿಸಿ ಉಳಿದ ರಾಜರು ಎಲ್ಲರನ್ನೂ ಸತ್ಯರಿಸಿ, ವಿನಯದಿಂದ ತನ್ನ ಪುರದಲ್ಲಿ ಆರುದಿನ ಇರಿಸಿಕೊಂಡಿದ್ದು, ಪಾರ್ಥನ ಸೈನ್ಯ ಸಹಿತ ಧನಂಜಯನ ಜೊತೆ ಸಂಭ್ರಮದಿಂದ ಅಶ್ವ ರಕ್ಷೆಗೆ ಹೊರಟನು.
ಭದ್ರ ಲಕ್ಷಣದಿಂದೆ ಶುಭ್ರಮಾಗಿಹ ಕರಿಗ |
ಳದ್ರಿ ಸಮಮಾದುವೆಪ್ಪತ್ತೊಂದು ಸಾವಿರವ |
ನುದ್ರೇಕದತಿವೇಗದೇಕ ಕರ್ಣ ಶ್ಯಾಮದಗಣಿತ ಸುವಾಜಿಗಳನು ||
ವಿದ್ರುಮಾಧರೆಯರ ಸಹಸ್ರಮಂ ನವ ವಿಧದ |
ಸದ್ರತ್ನ ರಾಜಿಗಳನೆಂಟೆಡೆಯೊಳೊಗೆದ ವಿಲ |
ಸದ್ರುಚಿರ ಮುಕ್ತಾಪಲಂಗಳಂ ಕೊಟ್ಟು ನರನೊಡನವಂ ಪೊರಮಟ್ಟನು ||55||
ಪದವಿಭಾಗ-ಅರ್ಥ:
ಭದ್ರ ಲಕ್ಷಣದಿಂದೆ ಶುಭ್ರಮಾಗಿಹ ಕರಿಗಳದ್ರಿ ಸಮಮಾದುವೆಪ್ಪತ್ತೊಂದು ಸಾವಿರವನುದ್ರೇಕದತಿವೇಗದೇಕ ಕರ್ಣ ಶ್ಯಾಮದಗಣಿತ ಸುವಾಜಿಗಳನು=[ಉತ್ತಮ ಲಕ್ಷಣದಿಂದ ಶುಭ್ರವಾಗಿರುವ, ಕರಿಗಳ ಬೆಟ್ಟಸಮಾಬದ ಎಪ್ಪತ್ತೊಂದು ಸಾವಿರ ಆನೆದಳನ್ನು, ಚುರುಕಾದ ಅತಿ ವೇಗದ ಒಂದೇ ಕಿವಿಯ ಕಪ್ಪುಬಣ್ನದ ಅಗಣಿತ ಉತ್ತಮಕುದುರೆಗಳನ್ನೂ,];; ವಿದ್ರುಮಾಧರೆಯರ (ವಿದ್ರುಮ:ಹವಳ;ಅಧರ:ತುಟಿ) ಸಹಸ್ರಮಂ ನವ ವಿಧದ ಸದ್ರತ್ನ ರಾಜಿಗಳನೆಂಟೆಡೆಯೊಳೊಗೆದ ವಿಲಸತ್ ರುಚಿರ (ಪ್ರಕಾಶಿಸುವ ಉತ್ತಮ) ಮುಕ್ತಾಪಲಂಗಳಂ ಕೊಟ್ಟು ನರನೊಡನವಂ ಪೊರಮಟ್ಟನು=[ಕೆಂಪು ತುಟಿಗಳ ದಾಸಿಯರನ್ನೂ, ಸಹಸ್ರ ನವ ವಿಧದ ಉತ್ತಮ ರತ್ನ ರಾಜಿಗಳನ್ನೂ, ಎಂಟು ಎಡೆಯಲ್ಲಿ ಲಭಿಸಿದ ಪ್ರಕಾಶಿಸುವ ಉತ್ತಮ ಮುತ್ತುಗಳನ್ನೂ, ಕೊಟ್ಟು ಅರ್ಜುನನೊಡನೆ ವೀರವರ್ಮಕನು ಹೊರಟನು].
ತಾತ್ಪರ್ಯ:ಉತ್ತಮ ಲಕ್ಷಣದಿಂದ ಶುಭ್ರವಾಗಿರುವ, ಕರಿಗಳ ಬೆಟ್ಟಸಮಾಬದ ಎಪ್ಪತ್ತೊಂದು ಸಾವಿರ ಆನೆದಳನ್ನು, ಚುರುಕಾದ ಅತಿ ವೇಗದ ಒಂದೇ ಕಿವಿಯ ಕಪ್ಪುಬಣ್ನದ ಅಗಣಿತ ಉತ್ತಮಕುದುರೆಗಳನ್ನೂ, ಕೆಂಪು ತುಟಿಗಳ ದಾಸಿಯರನ್ನೂ, ಸಹಸ್ರ ನವ ವಿಧದ ಉತ್ತಮ ರತ್ನ ರಾಜಿಗಳನ್ನೂ, ಎಂಟು ಎಡೆಯಲ್ಲಿ ಲಭಿಸಿದ ಪ್ರಕಾಶಿಸುವ ಉತ್ತಮ ಮುತ್ತುಗಳನ್ನೂ, ಕೊಟ್ಟು ಅರ್ಜುನನೊಡನೆ ವೀರವರ್ಮಕನು ಹೊರಟನು.
ಸಾರಸ್ವತಾಖ್ಯ ಪುರದಿಂದೆ ಬಳಿಕರ್ಜುನಂ |
ವೀರವರ್ಮ ಕ್ಷಿತಿಪನಂ ಕೂಡಿಕೊಂಡಾ ಮ |
ಯೂರಧ್ವಜಾದಿಗಳ್ವೆರಸಿ ಪಡೆ ಸಹಿತ ಕುದುರೆಗಳೊಡನೆ ನಡೆಯೆ ಮುಂದೆ ||
ಘೋರನಕ್ರಾಕುಲದ ಪೆರ್ಮಡುಗಳಿಂದೆ ಗಂ |
ಭೀರಮಾಗಿಹ ಮಹಾನದಮಿರ್ದುದೊಂದದಂ |
ಭೂರಿಪೋತಪ್ರಕರದಿಂ ಕಳೆದನಮರನಗರೀ ಶ್ರೀಶನಾಜ್ಞೆಯಿಂದೆ ||56||
ಪದವಿಭಾಗ-ಅರ್ಥ:
ಸಾರಸ್ವತಾಖ್ಯ ಪುರದಿಂದೆ ಬಳಿಕ ಅರ್ಜುನಂ ವೀರವರ್ಮ ಕ್ಷಿತಿಪನಂ ಕೂಡಿಕೊಂಡು ಆ ಮಯೂರಧ್ವಜಾದಿಗಳ್ವೆರಸಿ ಪಡೆ ಸಹಿತ ಕುದುರೆಗಳೊಡನೆ ನಡೆಯೆ ಮುಂದೆ=[ನಂತರ ಸಾರಸ್ವತ ಹೆಸರಿನ ಪುರದಿಂದ ಅರ್ಜುನನು ವೀರವರ್ಮ ರಾಜನನ್ನು ಕೂಡಿಕೊಂಡು ಆ ಮಯೂರಧ್ವಜಾದಿಗಳ ಜೊತೆಯಲ್ಲಿ ಸೈನ್ಯ ಸಹಿತ ಕುದುರೆಗಳೊಡನೆ ಮುಂದೆ ನಡೆಯಲು,];; ಘೋರ ನಕ್ರ ಆಕುಲದ ಪೆರ್ಮಡುಗಳಿಂದೆ ಗಂಭೀರಮಾಗಿಹ ಮಹಾನದಂ ಇರ್ದುದು ಒಂದು, ಅದಂ ಭೂರಿ ಪೋತ (ತೆಪ್ಪ ದೋಣಿ) ಪ್ರಕರದಿಂ ಕಳೆದನು ಅಮರನಗರೀ ಶ್ರೀಶನ ಆಜ್ಞೆಯಿಂದೆ=[ಘೋರವಾದ ಮೊಸಳೆ ವಾಸವಿರುವ ದೊಡ್ಡ ಮಡುಗಳಿಂದ ಗಂಭೀರವಾಗಿರುವ ಒಂದು ಮಹಾನದಿಯು ಇತ್ತು, ಅದನ್ನು ದೊಡ್ಡ ತೆಪ್ಪ ದೋಣಿ ಸಹಾಯದಿಂದ ಅಮರನಗರದ ಶ್ರೀಶನ ಆಜ್ಞೆಯಿಂದ ದಾಟಿದರು].
ತಾತ್ಪರ್ಯ:ನಂತರ ಸಾರಸ್ವತ ಹೆಸರಿನ ಪುರದಿಂದ ಅರ್ಜುನನು ವೀರವರ್ಮ ರಾಜನನ್ನು ಕೂಡಿಕೊಂಡು ಆ ಮಯೂರಧ್ವಜಾದಿಗಳ ಜೊತೆಯಲ್ಲಿ ಸೈನ್ಯ ಸಹಿತ ಕುದುರೆಗಳೊಡನೆ ಮುಂದೆ ನಡೆಯಲು, ಘೋರವಾದ ಮೊಸಳೆ ವಾಸವಿರುವ ದೊಡ್ಡ ಮಡುಗಳಿಂದ ಕೂಡಿದ ಗಂಭೀರವಾಗಿರುವ ಒಂದು ಮಹಾನದಿಯು ಇತ್ತು, ಅದನ್ನು ದೊಡ್ಡ ತೆಪ್ಪ ದೋಣಿ ಸಹಾಯದಿಂದ ಅಮರನಗರದ ಶ್ರೀಶನ ಆಜ್ಞೆಯಿಂದ ದಾಟಿದರು].
↑ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
↑ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.