ಜೈಮಿನಿ ಭಾರತ/ಹದಿನೈದನೆಯ ಸಂಧಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಹದಿನೈದನೆಯ ಸಂಧಿ[ಸಂಪಾದಿಸಿ]

ಪದ್ಯ :-:ಸೂಚನೆ :[ಸಂಪಾದಿಸಿ]

'ತಣ್ಗದಿರನನ್ವಯದ ಪಾರ್ಥನ ತುರಂಗಮದು | ಪೆಣ್ಗುದುರೆಯಾಗಿ ಪೆರ್ಬುಲಿಯಾಗಿ ಪಳಿಯಂತೆ | ಕಣ್ಗೊಳಿಸುವಮಲಾಶ್ವಮಾಗಿಯಾಶ್ಚರ್ಯದಿಂ ಸ್ತ್ರೀರಾಜ್ಯಮಂ ಪೊಕ್ಕುದು ||'

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸೂಚನೆ :: ತಣ್ಗದಿರನ ಅನ್ವಯದ ಪಾರ್ಥನ ತುರಂಗಂ=[ಚಂದ್ರನ ವಂಶದ ಪಾರ್ಥನ ಕುದುರೆಯು]; ಅದು ಪೆಣ್ಗುದುರೆಯಾಗಿ ಪೆರ್ಬುಲಿಯಾಗಿ ಪಳಿಯಂತೆ ಕಣ್ಗೊಳಿಸುವ ಅಮಲಾಶ್ವಂ ಆಗಿಯು ಆಶ್ಚರ್ಯದಿಂ ಸ್ತ್ರೀರಾಜ್ಯಮಂ ಪೊಕ್ಕುದು =[ಅದು ಹೆಣ್ಣು ಕುದುರೆಯಾಗಿ ಮತ್ತೆ ದೊಡ್ಡ ಹುಲಿಯಾಗಿ ಬದಲಾಯಿಸಿ,ಆಶ್ಚರ್ಯತರವಾಗಿ ನಂತರ ಮೊದಲಿನಂತೆ ಸುಂದರವಾದ ಶ್ರೇಷ್ಠವಾದ ಅಶ್ವವಾಗಿಬದಲಾಯಿಸಿ, ನಂತರ ಸ್ತ್ರೀರಾಜ್ಯವನ್ನು (ಮಳಯಾಳ?) ಪ್ರವೇಶಿಸಿತು.].
  • ತಾತ್ಪರ್ಯ:ಚಂದ್ರನ ವಂಶದವನಾದ ಪಾರ್ಥನ ಕುದುರೆಯು ಮುಂದೆ ಹೋಗುತ್ತಾ, ಅದು ಹೆಣ್ಣು ಕುದುರೆಯಾಗಿ ಮತ್ತೆ ದೊಡ್ಡ ಹುಲಿಯಾಗಿ ಬದಲಾಯಿಸಿ,ಆಶ್ಚರ್ಯತರವಾಗಿ ನಂತರ ಮೊದಲಿನಂತೆ ಸುಂದರವಾದ ಶ್ರೇಷ್ಠವಾದ ಅಶ್ವವಾಗಿ ಬದಲಾಯಿಸಿ, ನಂತರ ಸ್ತ್ರೀರಾಜ್ಯವನ್ನು (ಮಳಯಾಳ?) ಪ್ರವೇಶಿಸಿತು.
  • (ಪದ್ಯ-ಸೂಚನೆ)

ಪದ್ಯ :-:೧ :[ಸಂಪಾದಿಸಿ]

ವಿಸ್ತರಿಪೆನಿನ್ನು ಮೇಲ್ಗತೆಯನಾಲಿಸು ನೃಪರ | ಮಸ್ತಕದ ಮೌಳಿ ಜನಮೇಜಯ ಧರಾನಾಥ | ಹಸ್ತಿನಾಪುರಕೆ ಬಂದಸುರಾರಿ ಹಂಸಧ್ವಜನ ದೇಶದಿಂದೆ ತಂದ ||
ವಸ್ತುಗಳನವನಿಪತಿಗೊಪ್ಪಿಸಿದನಲ್ಲಿಯ ಸ | ಮಸ್ತವೃತ್ತಾಂತಮಂ ವಿವರಿಸಿದನಿತ್ತ ಸುಭ | ಟಸ್ತೋಮಸಹಿತರ್ಜುನಂ ಬಡಗಮುಂತಾಗಿ ತಿರುಗಿದಂ ತುರಗದೊಡನೆ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಿಸ್ತರಿಪೆನು ಇನ್ನು ಮೇಲ್ಗತೆಯನು ಆಲಿಸು ನೃಪರ ಮಸ್ತಕದ ಮೌಳಿ ಜನಮೇಜಯ ಧರಾನಾಥ=[ವಿಸ್ತರಿಸುವೆನು ಇನ್ನು ಮೇಲಿನ/ಮುಂದಿನ ಕತೆಯನ್ನು, ಆಲಿಸು ರಾಜರ ತಲೆಯಮೇಲಿನ ಕಿರೀಟದಂತೆ ಇರುವ ಜನಮೇಜಯ ಭೂನಾಥನೇ,]; ಹಸ್ತಿನಾಪುರಕೆ ಬಂದ ಅಸುರಾರಿ ಹಂಸಧ್ವಜನ ದೇಶದಿಂದೆ ತಂದ ವಸ್ತುಗಳನು ಅವನಿಪತಿಗೊಪ್ಪಿಸಿದನು ಅಲ್ಲಿಯ ಸಮಸ್ತ ವೃತ್ತಾಂತಮಂ ವಿವರಿಸಿದನು =[ಹಸ್ತಿನಾಪುರಕ್ಕೆ ಬಂದ ಕೃಷ್ಣನು ಹಂಸಧ್ವಜನ ದೇಶದಿಂದೆ ತಂದ ವಸ್ತುಗಳನ್ನು ಧರ್ಮರಾಜನಿಗೆ ತಲುಪಿಸಿದನು. ಅಲ್ಲಿಯ ಸಮಸ್ತ ವೃತ್ತಾಂತವನ್ನೂ ವಿವರಿಸಿದನು]; ಇತ್ತ ಸುಭಟಸ್ತೋಮ ಸಹಿತರ್ಜುನಂ ಬಡಗಮುಂತಾಗಿ ತಿರುಗಿದಂ ತುರಗದೊಡನೆ =[ಇತ್ತ ವೀರರಾದ ಸೇನಾಭಟರ ಸಹಿತ ಅರ್ಜುನನು ಉತ್ತರದಿಕ್ಕಿನ ದೇಶವೇ ಮುಂತಾದ ರಾಜ್ಯಗಳಿಗೆ ಕುದುರೆಯೊಡನೆ ಸಂರಿಸಿದನು.]
  • ತಾತ್ಪರ್ಯ: ಜೈಮಿನಿಯು ಹೇಳಿದನು, ಇನ್ನು ಮೇಲಿನ/ಮುಂದಿನ ಕತೆಯನ್ನು ವಿಸ್ತರಿಸುವೆನು, ಆಲಿಸು ಜನಮೇಜಯ ಭೂನಾಥನೇ, ಹಸ್ತಿನಾಪುರಕ್ಕೆ ಬಂದ ಕೃಷ್ಣನು ಹಂಸಧ್ವಜನ ದೇಶದಿಂದೆ ತಂದ ವಸ್ತುಗಳನ್ನು ಧರ್ಮರಾಜನಿಗೆ ತಲುಪಿಸಿದನು. ಅಲ್ಲಿಯ ಸಮಸ್ತ ವೃತ್ತಾಂತವನ್ನೂ ವಿವರಿಸಿದನು; ಇತ್ತ ವೀರರಾದ ಸೇನಾಭಟರ ಸಹಿತ ಅರ್ಜುನನು ಉತ್ತರದಿಕ್ಕಿನ ದೇಶವೇ ಮುಂತಾದ ರಾಜ್ಯಗಳಿಗೆ ಕುದುರೆಯೊಡನೆ ಸಂರಿಸಿದನು.
  • (ಪದ್ಯ-೧)

ಪದ್ಯ :-:೨ :[ಸಂಪಾದಿಸಿ]

ಅಲ್ಲಿಂದ ಮುಂದೆ ನಡೆದುದು ಗ್ರೀಷ್ಮಕಾಲದೊಳ್ | ಸಲ್ಲಲಿತವಾಜಿ ಪಾರಿಪ್ಲವಕ್ಕೆ ಭೂತಲದೊ | ಳೆಲ್ಲಿಯುಂ ಕೆರೆತೊರೆಗಳೊರತೆ ಬರೆತುವು ನೀರ್ನೆಳಲ್ಗಳನರಸಿ ಪಾಂಥರು ||
ಘಲ್ಲಿಸುವ ಬೇಸಗೆಯ ಬಿಸಿಲಿಂದೆ ಮೂಜಗಂ | ತಲ್ಲಣಿಸಿತಿಳೆಯ ಕಾಹಿಳಿದು ಪಾತಾಳದಹಿ | ವಲ್ಲಭನ ಪಡೆವಿಣೆಯ ರುಚಿಗಳಾತಪದಂತೆ ಕಾಣಿಸದೆ ಮಾಣವೆನಲು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಲ್ಲಿಂದ ಮುಂದೆ ನಡೆದುದು ಗ್ರೀಷ್ಮಕಾಲದೊಳ್ ಸಲ್ಲಲಿತವಾಜಿ ಪಾರಿಪ್ಲವಕ್ಕೆ =[ಅಲ್ಲಿಂದ ಮುಂದೆ ಜೇಷ್ಠ ಆಷಾಢ ಮಾಸದ ಗ್ರೀಷ್ಮಕಾಲದಲ್ಲಿ ಕೋಮಲವಾದ ಕುದುರೆ ಪಾರಿಪ್ಲವ ದೇಶಕ್ಕೆ ನಡೆಯಿತು.]; ಭೂತಲದೊಳು ಎಲ್ಲಿಯುಂ ಕೆರೆತೊರೆಗಳ ಒರತೆ ಬರೆತುವು ನೀರ್ ನೆಳಲ್‍ಗಳನು ಅರಸಿ (ಹುಡುಕಿ) ಪಾಂಥರು (ದಾರಿಹೋಕರು) ಘಲ್ಲಿಸುವ (ತಾಪ?) ಬೇಸಗೆಯ ಬಿಸಿಲಿಂದೆ ಮೂಜಗಂ ತಲ್ಲಣಿಸಿತು ಇಳೆಯ =[ಭೂಮಿಯಮೇಲೆ ಎಲ್ಲಕಡೆಯೂ ಕೆರೆ ತೊರೆಗಳ ಒರತೆ / ಜಲ ಬತ್ತಿದವು, ನೀರ್-ನೆಳಲುಗಳನ್ನು ದಾರಿಹೋಕರು ಹಡುಕುತ್ತಿದ್ದರು. ಬಿಸಿತಾಪ ಉಂಟುಮಾಡುವ ಬೇಸಗೆಯ ಬಿಸಿಲಿನಿಂದ ಮೂರು ಲೋಕವೂ ಸಂಕಟಪಟ್ಟಿತು. ಭೂಮಿಯ,]; ಕಾಹಿಳಿದು ಪಾತಾಳದ ಅಹಿ ವಲ್ಲಭನ ಪಡೆವಿಣೆಯ ರುಚಿಗಳು ಆತಪದಂತೆ ಕಾಣಿಸದೆ ಮಾಣವೆನಲು =[ಭೂಮಿಯ ಕಾವು ಇಳಿದು ಇಳಿದು ಪಾತಾಳದ ಸರ್ಪದ ರಾಜ ವಾಸುಕಿಯ ಹೆಡೆಯ ರತ್ನದಮಣಿಗಳ ಕಾಂತಿಯಪ್ರಭೆಗಳು ಸೂರ್ಯನಂತೆ ಕಾಣಿಸದೆ ಇರದು ಎನ್ನುವಂತೆ ಇತ್ತು.]
  • ತಾತ್ಪರ್ಯ: ಅಲ್ಲಿಂದ ಮುಂದೆ ಜೇಷ್ಠ ಆಷಾಢ ಮಾಸದ ಗ್ರೀಷ್ಮಕಾಲದಲ್ಲಿ ಕೋಮಲವಾದ ಕುದುರೆ ಪಾರಿಪ್ಲವ ದೇಶಕ್ಕೆ ನಡೆಯಿತು. ಭೂಮಿಯ ಮೇಲೆ ಎಲ್ಲಕಡೆಯೂ ಕೆರೆ ತೊರೆಗಳ ಒರತೆ / ಜಲ ಬತ್ತಿದವು, ನೀರು-ನೆಳಲುಗಳನ್ನು ದಾರಿಹೋಕರು ಹಡುಕುತ್ತಿದ್ದರು. ಬಿಸಿತಾಪ ಉಂಟುಮಾಡುವ ಬೇಸಗೆಯ ಬಿಸಿಲಿನಿಂದ ಮೂರು ಲೋಕವೂ ಸಂಕಟಪಟ್ಟಿತು. ಭೂಮಿಯ ಕಾವು ಕೆಳಗೆ ಇಳಿದು ಇಳಿದು ಪಾತಾಳದ ಸರ್ಪದ ರಾಜ ವಾಸುಕಿಯ ಹೆಡೆಯ ರತ್ನದಮಣಿಗಳು ಕಾದು ಕಾಂತಿಯಪ್ರಭೆಗಳು ಸೂರ್ಯನಂತೆ ಕಾಣಿಸದೆ ಇರದು ಎನ್ನುವಂತೆ ಇತ್ತು.]
  • (ಪದ್ಯ-೨)XIIX-IX

ಪದ್ಯ :-:೩ :[ಸಂಪಾದಿಸಿ]

ಒಂದುಕಡೆಯೊಳ್ ಸೋವಲೊಂದುಕಡೆಯೊಳ್ ತಮಕೆ| ನಿಂದು ಮರೆಯಾಗಿ ರ್ಪು ದಿನ್ನಿದಂ ಕರಗಿಸುವೆ | ನೆಂದು ಕನಕಾಚಲವನುರಿಪುವನೊ ತರಣಿ ಕಿರಣದೊಳೆನೆ ಬಿಸಲ್ಗರೆಯಲು ||
ಬೆಂದು ಬೆಂಡಾಗಿ ಕುಲಶೈಲಗಳಾಸರಿಂ | ಕಂದರದ ಮೊಗದಿಂದೆ ಬಿಡುವ ನಿಸುಸುಯ್ಯೆಲರ್ | ಬಂದಪುದೆನಲ್ಕೆ ಝಳದಿಂ ಬಿಡದೆ ಬೀಸುತಿರ್ದುದು ಗಾಳೀ ಬೇಸಗೆಯೊಳು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಒಂದುಕಡೆಯೊಳ್ ಸೋವಲು (ಶೋಧಿಸಿ ಓಡಿಸು) ಒಂದು ಕಡೆಯೊಳ್ ತಮಕೆ ನಿಂದು ಮರೆಯಾಗಿರ್ಪುದು= [ಒಂದು ಕಡೆಯಿಂದ ಓಡಿಸಿದರೆ ಮತ್ತೊಂದುು ಕಡೆಯಲ್ಲಿ ಕತ್ತಲೆಗೆ ಅಡ್ಡವಾಗಿ ಮರೆಮಾಡಿ ನಿಂತು ಇರುವುವು (ಬೆಟ್ಟಗಳು)]; ಇನ್ನು ಇದಂ ಕರಗಿಸುವೆ ನೆಂದು ಕನಕಾಚಲವನು ಉರಿಪುವನೊ ತರಣಿ ಕಿರಣದೊಳು ಎನೆ = [ಇನ್ನು ಈ ಅಡಗಿದ ಕತ್ತಲೆಯನ್ನು ಕರಗಿಸುವೆನು ಎಂದು, ಅಡ್ಡ ಬಂದ ಕನಕಾಚಲವೆಂಬ ಬೆಟ್ಟವನ್ನು ಸೂರ್ಯನು ತನ್ನ ಕಿರಣದಿಂದ ಉರಿಸುವನೊ ಎನ್ನುವಂತೆ ]; ಬಿಸಲ್ ಕರೆಯಲು (ಸುರಿಸು -ಬೀರು) ಬೆಂದು ಬೆಂಡಾಗಿ ಕುಲಶೈಲಗಳು ಆಸರಿಂ ಕಂದರದ ಮೊಗದಿಂದೆ ಬಿಡುವ ನಿಸುಸುಯ್ ಅಲರ್ (ನಿಟ್ಟಸಿರು ಗಾಳಿ)= [ಬಿಸಿಲು ಸುರಿಯುತ್ತಿರಲು ಹಿಮಾಚಲ, ನಿಷಧ, ವಿಂಧ್ಯ, ಮಾಲ್ಯವಂತ, ಪಾರಿಯಯ್ರಕ, ಗಂಧಮದನ, ಹೇಮಕೂಟ ಈ ಏಳು ಕುಲಶೈಲಗಳು ಬೆಂದು ಬೆಂಡಾಗಿ ಬಾಯಾರಿ ತಮ್ಮಲ್ಲಿರುವ ಗುಹೆಗಳ ಮುಖದಿಂದ ಬಿಡುವ ನಿಟ್ಟುಸಿರ ಗಾಳಿ]; ಬಂದಪುದೆನಲ್ಕೆ ಝಳದಿಂ ಬಿಡದೆ ಬೀಸುತಿರ್ದುದು ಗಾಳಿ ಬೇಸಗೆಯೊಳು =[ ಬರುತ್ತಿರುವುದೋ ಎನ್ನುವಂತೆ ಬಿಸಿಲ ಝಳದಿಂದ ಒಂದೇಸಮನೆ ಗಾಳಿ ಬೇಸಗೆಯಲ್ಲಿ ಬೀಸುತ್ತಿತ್ತು.]
  • ತಾತ್ಪರ್ಯ:ಒಂದು ಕಡೆಯಿಂದ ಓಡಿಸಿದರೆ ಮತ್ತೊಂದುು ಕಡೆಯಲ್ಲಿ ಕತ್ತಲೆಗೆ ಅಡ್ಡವಾಗಿ ಮರೆಮಾಡಿ ನಿಂತಿರುವುವು ಬೆಟ್ಟಗಳು, ಇನ್ನು ಈ ಅಡಗಿದ ಕತ್ತಲೆಯನ್ನು ಕರಗಿಸುವೆನು ಎಂದು, ಅಡ್ಡ ಬಂದ ಕನಕಾಚಲವೆಂಬ ಬೆಟ್ಟವನ್ನು ಸೂರ್ಯನು ತನ್ನ ಕಿರಣದಿಂದ ಉರಿಸುವನೊ ಎನ್ನುವಂತೆ ಬಿಸಿಲು ಸುರಿಯುತ್ತಿರಲು, ಹಿಮಾಚಲ, ನಿಷಧ, ವಿಂಧ್ಯ, ಮಾಲ್ಯವಂತ, ಪಾರಿಯಾತ್ರಕ, ಗಂಧಮಾದನ, ಹೇಮಕೂಟ ಈ ಏಳು ಕುಲಶೈಲಗಳು ಬೆಂದು ಬೆಂಡಾಗಿ ಬಾಯಾರಿ ತಮ್ಮಲ್ಲಿರುವ ಗುಹೆಗಳ ಮುಖದಿಂದ ಬಿಡುವ ನಿಟ್ಟುಸಿರ ಗಾಳಿ ಬರುತ್ತಿರುವುದೋ ಎನ್ನುವಂತೆ ಬಿಸಿಲ ಝಳದಿಂದ ಒಂದೇ ಸಮನೆ ಗಾಳಿ ಬೇಸಗೆಯಲ್ಲಿ ಬೀಸುತ್ತಿತ್ತು.
  • (ಪದ್ಯ-೩)

ಪದ್ಯ :-:೪ :[ಸಂಪಾದಿಸಿ]

ಅವನಿಯೊಳ್ ಸಕಲ ಭೂಭೃತ್ಕುಲದ ಸೀಮೆಗಳ | ನವಗಡಿಸಿ ಪೊಕ್ಕು ನಿಖಿಳ ಪ್ರಾಣಿಗಳ್ಗೆತಾ | ಪವನೊದವಿಸುವ ದುರ್ಧರ ಗ್ರೀಷ್ಮರಾಜನ ನೆಗಳ್ದ ಚತುರಂಗಮೆನಲು ||
ರವಿಯ ಕಡುಗಾಯ್ಪುಗಳ್ ತೇರೈಸಲೊತ್ತರಿಸಿ | ಕವಿದುವು ಬಿಲ್ಗುದುರೆಗಳ್ ಕಾಯ್ದುರಿಯ ಕರಿಗ | ಳವಧಿಯಿಲ್ಲದೆ ಮುಸುಕಿದುವುಬಹಳ ತರುಗಳಿತ ದಳದಳಾಳಿಗಳಿಡಿದುವು||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅವನಿಯೊಳ್ ಸಕಲ ಭೂಭೃತ್ಕುಲದ (ಭೂ ಭೃ –ಪಾಲಿಸು, ಭೂಮಿಯನ್ನು ಪಾಲಿಸುವವರು) ಸೀಮೆಗಳನು ಅವಗಡಿಸಿ ಪೊಕ್ಕು =[ ಭೂಮಿಯಲ್ಲಿ ಸಕಲ ರಾಜರ ದೇಶಗಳನ್ನು ಆಕ್ರಮಿಸಿ ಹೊಕ್ಕು]; ನಿಖಿಳ ಪ್ರಾಣಿಗಳ್ಗೆ ತಾಪವನು (ಬಿಸಿ -ದುಃಖ ಸಂತಾಪ) ಒದವಿಸುವ =[ ಎಲ್ಲಾ ಪ್ರಾಣಿಗಳಿಗೆ ಸಂತಾಪವನ್ನು ಕೊಡುವ]; ದುರ್ಧರ (ಧರಿಸಲಾಗದ) ಗ್ರೀಷ್ಮರಾಜನ ನೆಗಳ್ದ ಚತುರಂಗಂ ಎನಲು =[ಸಹಿಸಲು ಅಸಾಧ್ಯವಾದ ಗ್ರೀಷ್ಮರಾಜನ ಉತ್ತಮ ಚತುರಂಗ ಸೈನ್ಯ ಎನ್ನುವಂತೆ,];ರವಿಯ ಕಡುಗಾಯ್ಪುಗಳ್ ( ತೀವ್ರವಾದ ಕಾಯಿಸುವ ಶಕ್ತಿ) ಶತೇರೈಸಲು ಒತ್ತರಿಸಿ ಕವಿದುವು ಬಿಲ್ಗುದುರೆಗಳ್ ಕಾಯ್ದುರಿಯ ಕರಿಗಳು =[ ಸೂರ್ಯನ ಅತಿಶಾಖದ ಬಿಸಿಲಿವ ಕಾವುಗಳು (ಆಯುಧಗಳು), ಸೇರಿಕೊಂಡು ಒತ್ತೊತ್ತಾಗಿ ಬಂದು ಮೇಲೆಬಿದ್ದವು! ಬಿಸಿಲು ಕುದುರೆಗಳುದುರೆಗಳು, ಕಾದ ಶತ್ರುಗಳು ಆನೆಗಳು /ಬಿಸಿಯಾದ ಅರವೆಯ ಸುಟ್ಟ ಕರಿಗಳು]; ಅವಧಿಯಿಲ್ಲದೆ ಮುಸುಕಿದುವು ಬಹಳ ತರುಗಳಿತ (ಮರದಲ್ಲಿ ಹಣ್ಣಾದ ದಳ-ಎಲೆ) ದಳದಳ ಆಳಿಗಳು (ಸೈನ್ಯದ ಅರ್ಥದಲ್ಲಿ ಸಾವುಗಳು, -ಹಣ್ಣೆಲೆಗಳ ಸಾಲುಗಳು) ಇಡಿ (ಉದುರು)ದುವು =[ ಮಿತಿಯಿಲ್ಲದೆ ಅತಿಯಾಗಿ ಮುತ್ತಿಕೊಂಡವು; ಬಹಳ ಮರದಲ್ಲಿ ಹಣ್ಣಾದ ದಳದಳ ಎಂದರೆ ಅನೇಕ ಎಲೆಗಳ ಸಾಲುಗಳು ಉದಿದವು]. ಗ್ರೀಷ್ಮ ರಾಜನ ಧಾಳಿಯಲ್ಲಿ ಸೈನ್ಯದಲ್ಲಿ ಕಾವು ಎಂಬ ಆಯುಧಗಳು ಅಥವಾ ರಥಗಳು, ಬಿಸಿಲು ಕುದುರೆಗಳು, ತಾಪವೆಂಬ ಆನೆಗಳು, ಉದುರುವ ದಳಗಳು ಸಾಯುವ ಸೈನಿಕರು. (ದ್ವಂದ್ವಾರ್ಥದ ಉತ್ಪ್ರೇಕ್ಷೆ)
  • ತಾತ್ಪರ್ಯ:ಭೂಮಿಯಲ್ಲಿ ಸಕಲ ರಾಜರ ದೇಶಗಳನ್ನು ಆಕ್ರಮಿಸಿ ಹೊಕ್ಕು]; ನಿಖಿಳ ಪ್ರಾಣಿಗಳ್ಗೆ ತಾಪವನು (ಬಿಸಿ -ದುಃಖ ಸಂತಾಪ) ಒದವಿಸುವ ಸಹಿಸಲು ಅಸಾಧ್ಯವಾದ ಗ್ರೀಷ್ಮರಾಜನ ಉತ್ತಮ ಚತುರಂಗ ಸೈನ್ಯ ಎನ್ನುವಂತೆ ಸೂರ್ಯನ ಅತಿಶಾಖದ ಬಿಸಿಲಿವ ಕಾವುಗಳು (ಆಯುಧಗಳು), ಸೇರಿಕೊಂಡು ಒತ್ತೊತ್ತಾಗಿ ಬಂದು ಮೇಲೆಬಿದ್ದವು! ಬಿಸಿಲು ಕುದುರೆಗಳುದುರೆಗಳು, ಕಾದ ಶತ್ರುಗಳು ಆನೆಗಳು /ಬಿಸಿಯಾದ ಅರವೆಯ ಸುಟ್ಟ ಕರಿಗಳು; ಮಿತಿಯಿಲ್ಲದೆ ಅತಿಯಾಗಿ ಮುತ್ತಿಕೊಂಡವು; ಬಹಳ ಮರದಲ್ಲಿ ಹಣ್ಣಾದ ದಳದಳ ಎಂದರೆ ಅನೇಕ ಎಲೆಗಳ ಸಾಲುಗಳು ಉದಿದವು. ಗ್ರೀಷ್ಮ ರಾಜನ ಧಾಳಿಯಲ್ಲಿ ಸೈನ್ಯದಲ್ಲಿ ಕಾವು ಎಂಬ ಆಯುಧಗಳು ಅಥವಾ ರಥಗಳು, ಬಿಸಿಲು ಕುದುರೆಗಳು, ತಾಪವೆಂಬ ಆನೆಗಳು, ಉದುರುವ ದಳಗಳು ಸಾಯುವ ಸೈನಿಕರು.(ದ್ವಂದ್ವಾರ್ಥದ ಉತ್ಪ್ರೇಕ್ಷೆ)
  • (ಪದ್ಯ-೪)

ಪದ್ಯ :-:೫ :[ಸಂಪಾದಿಸಿ]

ಅರವಟ್ಟಿಗೆಯೊಳಿರ್ದು ನೀರೆರೆವ ತರಳೆಯರ | ಬರಿವೇಟಕೆಳಸಿ ತಪಿಸುವ ಪಥಿಕರಂ ಬಯ | ಲ್ದೊರೆಗಾಸೆಯಿಂ ಪರಿದು ಬಳಲುವ ಮೃಗಗಳಂ ಕರುವಾಡದೊಳ್ ದಳದೊಳು ||
ಉರುವ ಕಾಂತೆಯರ ಕೂಟದ ಸೊಕ್ಕುದೆಕ್ಕೆಯೊಳ್ | ಮಿರುಗುವಧರಾಮೈತವನೀಂಟಿ ಸೊಗಸುವ ಸುಖಿಗ | ಳುರೆ ಜರೆವ ತನಿವೇಸಗೆಯ ದಿನದೊಳಧ್ವರಾಶ್ವದ ಕೂಡೆಪಡೆ ನಡೆದುದು ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರವಟ್ಟಿಗೆಯೊಳ್ ಇರ್ದು ನೀರು ಎರೆವ ತರಳೆಯರ ಬರಿವೇಟಕೆ ಎಳಸಿ ತಪಿಸುವ ಪಥಿಕರಂ =[ ಅರವಟ್ಟಿಗೆಯೆಂಬ ನೀರಿನಛತ್ರದಲ್ಲಿ ಇದ್ದು, ದಾರಿಗರಿಗೆ ನೀರನ್ನು ಕೊಡುವ ಯುವತಿಯರ ನಟನೆಯ ಬರಿಯ ಬೆಡಗಿಗೆ ಆಸೆಪಟ್ಟು ಸಂಕಟಪಡುವ ದಾರಿಗರನ್ನೂ, ]; ಬಯಲ್ದೊರೆಗೆ (ಮರೀಚಿಕೆಗೆ) ಆಸೆಯಿಂ ಪರಿದು ಬಳಲುವ ಮೃಗಗಳಂ =[ಬಿಸಿಲಲ್ಲಿ ನೀರಿನಂತೆ ಕಾಣುವ ಮರೀಚಿಕೆಗೆ ಆಸೆಪಟ್ಟು ಹೋಗಿ ನೀರು ಸಿಗದೆ ಬಳಲುವ ಮೃಗಗಳನ್ನೂ ಕಾಣುವ ದಿನಗಳಲ್ಲಿ ಮತ್ತು] ; ಕರುವಾಡದೊಳ್ ದಳದೊಳು ಉರುವ ಕಾಂತೆಯರ ಕೂಟದ ಸೊಕ್ಕುದೆಕ್ಕೆಯೊಳ್ (ಸೊಕ್ಕು + ತೆಕ್ಕೆಯೊಳ್) ಮಿರುಗುವ ಅಧರಾಮೃತವನು ಈಂಟಿ ಸೊಗಸುವ ಸುಖಿಗಳು ಉರೆ ಜರೆವ ತನಿವೇಸಗೆಯ ದಿನದೊಳು =[ ಬಿಸಿಲು ಮಹಡಿಯಲ್ಲಿ, ಒಳಜಗುಲಿಯಲ್ಲಿ ಮಿಂಚುತ್ತಿರುವ ಹೆಂಗಸರ ಜೊತೆ ಸೇರಿದ ಕೂಟದ ಉನ್ಮಾದದ ಅಪ್ಪುಗೆಯಲ್ಲಿ ಹೊಳೆಯುವ ತುಟಿಯ ಸವಿಯ ಅಮೃತವನ್ನು ಕುಡಿದು ಆನಂದಿಸುವ ಸುಖಿಗಳು, ಬಹಳ ನಿಂದಿಸುವ ಉರಿಬೇಸಗೆಯ ದಿನಗಳಲ್ಲಿ]; ಅಧ್ವರಾಶ್ವದ ಕೂಡೆಪಡೆ ನಡೆದುದು ಯಜ್ಞಾಶ್ವದ ಜೊತೆ ಅರ್ಜುನನ ಸೈನ್ಯ ಒಟ್ಟು ಕೂಡಿ ಮುಂದೆ ನಡೆಯಿತು.].
  • ತಾತ್ಪರ್ಯ:ಅರವಟ್ಟಿಗೆಯೆಂಬ ನೀರಿನ ಛತ್ರದಲ್ಲಿ ಇದ್ದು, ದಾರಿಗರಿಗೆ ನೀರನ್ನು ಕೊಡುವ ಯುವತಿಯರ ನಟನೆಯ ಬೆಡಗಿಗೆ ಆಸೆಪಟ್ಟು ಸಂಕಟಪಡುವ ದಾರಿಗರನ್ನೂ, ಬಿಸಿಲಲ್ಲಿ ನೀರಿನಂತೆ ಕಾಣುವ ಮರೀಚಿಕೆಗೆ ಆಸೆಪಟ್ಟು ಹೋಗಿ ನೀರು ಸಿಗದೆ ಬಳಲುವ ಮೃಗಗಳನ್ನೂ ಕಾಣುವ ದಿನಗಳಲ್ಲಿ ಮತ್ತು  ; ಬಿಸಿಲು ಮಹಡಿಯಲ್ಲಿ, ಒಳಜಗುಲಿಯಲ್ಲಿ ಮಿಂಚುತ್ತಿರುವ ಹೆಂಗಸರ ಜೊತೆ ಸೇರಿ ಕೂಟದ ಉನ್ಮಾದದ ಅಪ್ಪುಗೆಯಲ್ಲಿ ಹೊಳೆಯುವ ತುಟಿಯ ಸವಿಯ ಅಮೃತವನ್ನು ಕುಡಿದು ಆನಂದಿಸುವ ಸುಖಿಗಳು, ಬಹಳ ನಿಂದಿಸುವ ಉರಿಬೇಸಗೆಯ ದಿನಗಳಲ್ಲಿ]; ಅಧ್ವರಾಶ್ವದ ಕೂಡೆಪಡೆ ನಡೆದುದು ಯಜ್ಞಾಶ್ವದ ಜೊತೆ ಅರ್ಜುನನ ಸೈನ್ಯ ಒಟ್ಟು ಕೂಡಿ ಮುಂದೆ ನಡೆಯಿತು.
  • (ಪದ್ಯ-೫)

ಪದ್ಯ :-:೬:[ಸಂಪಾದಿಸಿ]

ಅನುಸಾಲ್ವ ಪ್ರದ್ಯುಮ್ನ ವೃಷಕೇತು ಯೌವನಾ | ಶ್ವನ ತನಯ ನೀಲಧ್ವಜರ್ ನರಂಗಿವರೈವ | ರನುವಿರ್ತಿಗಳ್ ಬಳಿಕ ಹಂಸಧ್ವಜನ ಸಖ್ಯಮಾದುದದಕಿಮ್ಮಡಿಯೆನೆ ||
ತನತನಗೆ ಮುಂಕೊಂಡು ನಡೆದುದಾ ತುರಗದೊಡ | ನನಿಬರ ಚತುರ್ಬಲಂ ಬಹಳ ಗಿರಿ ಪುರ ದೇಶ | ವನ ಪಳ್ಳ ಕೊಳ್ಳಂಗಳಂ ತುಳಿದು ಕಣದ ಘಟ್ಟಣೆಯಂತೆ ಸಮಮಾಗಲು ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅನುಸಾಲ್ವ ಪ್ರದ್ಯುಮ್ನ ವೃಷಕೇತು ಯೌವನಾಶ್ವನ ತನಯ ನೀಲಧ್ವಜರ್ ನರಂಗೆ ಇವರೈವರು ಅನುವಿರ್ತಿಗಳ್ =[ ಅನುಸಾಲ್ವ, ಪ್ರದ್ಯುಮ್ನ, ವೃಷಕೇತು, ಯೌವನಾಶ್ವನ ತನಯ ಅನುಸಾಲ್ವ, ನೀಲಧ್ವಜ ಇವರೈವರು ಅರ್ಜುನನಿಗೆ ಸಹಾಯಕರಾಗಿ ಅನುಸರಿಸಿ ಬರುವವರು]; ಬಳಿಕ ಹಂಸಧ್ವಜನ ಸಖ್ಯಮಾದುದು ಅದಕೆ ಇಮ್ಮಡಿ ಯೆನೆ =[ ಬಳಿಕ ಹಂಸಧ್ವಜನ ಸ್ನೇಹವಾಯಿತು; ಅವರ ಬಲ ಅದಕ್ಕೆ ಇಮ್ಮಡಿ ಬಲ ಎನ್ನುವಂತಾಯಿತು. ]; ತನತನಗೆ ಮುಂಕೊಂಡು ನಡೆದುದು ಆ ತುರಗದೊಡನೆ ಅನಿಬರ ಚತುರ್ಬಲಂ ಬಹಳ ಗಿರಿ ಪುರ ದೇಶ ವನ ಪಳ್ಳ ಕೊಳ್ಳಂಗಳಂ ತುಳಿದು ಕಣದ ಘಟ್ಟಣೆಯಂತೆ ಸಮಮಾಗಲು =[ ಈ ಸೈನ್ಯಗಳು ತಾವು ತಾವೇ ವ್ಯವಸ್ಥೆಮಾಡಿಕೊಂಡು, ಆ ತುರಗದೊಡನೆ ನಡೆದವು. ಅವರೆಲ್ಲರ ಚತುರಂಗ ಸೈನ್ಯ ಅನೇಕ ಬೆಟ್ಟ, ನಗರ, ದೇಶ, ವನ, ಹಳ್ಳ ಕೊಳ್ಳಗಳನ್ನು ತುಳಿದು ನಡೆದವು, ಅವುಗಳು ನೆಡೆದ ಹೆಜ್ಜೆಯ ಘಟ್ಟಣೆಗೆ ನೆಲ ಕಣದದಂತೆ ಸಮಮಟ್ಟವಾಯಿತು.].
  • ತಾತ್ಪರ್ಯ:ಅನುಸಾಲ್ವ, ಪ್ರದ್ಯುಮ್ನ, ವೃಷಕೇತು, ಯೌವನಾಶ್ವನ ತನಯ ಅನುಸಾಲ್ವ, ನೀಲಧ್ವಜ ಇವರೈವರು ಅರ್ಜುನನಿಗೆ ಸಹಾಯಕರಾಗಿ ಅನುಸರಿಸಿ ಬರುವವರು. ಬಳಿಕ ಹಂಸಧ್ವಜನ ಸ್ನೇಹವಾಯಿತು; ಅವರ ಬಲ ಮೊದಲಿನದಕ್ಕೆ ಇಮ್ಮಡಿ ಬಲ ಎನ್ನುವಂತಾಯಿತು. ಈ ಸೈನ್ಯಗಳು ತಾವು ತಾವೇ ವ್ಯವಸ್ಥ್ತೆಮಾಡಿಕೊಂಡು, ಆ ತುರಗದೊಡನೆ ನಡೆದವು. ಅವರೆಲ್ಲರ ಚತುರಂಗ ಸೈನ್ಯ ಅನೇಕ ಬೆಟ್ಟ, ನಗರ, ದೇಶ, ವನ, ಹಳ್ಳ ಕೊಳ್ಳಗಳನ್ನು ತುಳಿದು ನಡೆದವು, ಅವುಗಳು ನೆಡೆದ ಹೆಜ್ಜೆಯ ಘಟ್ಟಣೆಗೆ ನೆಲ ಕಣದದಂತೆ ಸಮಮಟ್ಟವಾಯಿತು.]
  • (ಪದ್ಯ-೬)

ಪದ್ಯ :-:೭:[ಸಂಪಾದಿಸಿ]

ಹಯಮುತ್ತರಾಭಿಮುಖಮಾಗಿ ಪಾರಿಪ್ಲವ ಧ | ರೆಯೊಳೈದಿ ಪೆಣ್ಗುದುರೆಯಾಗಿ ಪುಲಿಯಾಗಿ ವಿ | ಸ್ಮಯದಿಂದೆ ಪಾರ್ಥನಂ ಬೆದರಿಸಿ ಮುರಾರಿಯ ಮಹಿಮೆಯಿಂದೆ ಮುನ್ನಿನಂತೆ ||
ನಿಯಮಿತಮಖಾಶ್ವಮಾದತ್ತೆನಲ್ಕಾಗ ಸಂ | ಶಯದಿಂದೆ ಜನಮೇಜಯಂ ಮುನಿಪ ತಿಳಿಪು ನಿ | ಶ್ಚಯವನೀ ತುರಗಮಿಂತಾದ ಕಥನವನೆಂದು ಬೆಸಗೊಂಡೊಡಿಂತೆಂದನು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹಯಂ ಊತ್ತರಾಭಿಮುಖಮಾಗಿ ಪಾರಿಪ್ಲವ ಧರೆಯೊಳು ಐದಿ ಪೆಣ್ಗುದುರೆಯಾಗಿ ಪುಲಿಯಾಗಿ ವಿಸ್ಮಯದಿಂದೆ ಪಾರ್ಥನಂ ಬೆದರಿಸಿ ಮುರಾರಿಯ ಮಹಿಮೆಯಿಂದೆ ಮುನ್ನಿನಂತೆ ನಿಯಮಿತ ಮಖಾಶ್ವಮಂ ಆದತ್ತೆನಲ್ =[ಕುದುರಯು, ಊತ್ತರಕ್ಕೆ ಅಭಿಮುಖವಾಗಿ ಪಾರಿಪ್ಲವ ಪ್ರದೇಶದಕ್ಕೆ ಬಂದು ಅಲ್ಲಿ ಅದು ಹೆಣ್ಗು ಕುದುರೆಯಾಗಿ ಮತ್ತೆ ಹುಲಿಯಾಗಿ ಆಶ್ಚರ್ಯ ರೀತಿಯಲ್ಲಿ ಪಾರ್ಥನನ್ನು ಹೆದರಿಸಿ,ಕೃಷ್ನನ ಕೃಪೆಯಿಂದ ಮೊದಲಿನಂತೆ ಸುಂದರ ಯಜ್ಞಾಶ್ವವಾಯಿತು, ಎಂದು ಮುನಿ ಹೇಳಲು,]; ಆಗ ಸಂಶಯದಿಂದೆ ಜನಮೇಜಯಂ ಮುನಿಪ ತಿಳಿಪು ನಿಶ್ಚಯವನು ಈ ತುರಗಂ ಇಂತಾದ ಕಥನವನು ಎಂದು ಬೆಸಗೊಂಡೊಡೆ ಇಂತೆಂದನು=[ಆಗ ಅದು ಅರ್ಥವಾಗದೆ ಸಂಶಯದಿಂದ ಜನಮೇಜಯನು ಮುನಿಯನ್ನು ಈ ತುರಗವು ಹೀಗಾದ ಕಥೆಯ ವಿಷಯವನ್ನು ತಿಳಿಸು ಎಂದು ಕೇಳಿಕೊಂಡಾಗ ಅವನು ಹೀಗೆ ಹೇಳಿದನು.]
  • ತಾತ್ಪರ್ಯ: ಕುದುರಯು, ಊತ್ತರಕ್ಕೆ ಅಭಿಮುಖವಾಗಿ ಪಾರಿಪ್ಲವ ಪ್ರದೇಶದಕ್ಕೆ ಬಂದು ಅಲ್ಲಿ ಅದು ಹೆಣ್ಗು ಕುದುರೆಯಾಗಿ ಮತ್ತೆ ಹುಲಿಯಾಗಿ ಆಶ್ಚರ್ಯ ರೀತಿಯಲ್ಲಿ ಪಾರ್ಥನನ್ನು ಹೆದರಿಸಿ,ಕೃಷ್ನನ ಕೃಪೆಯಿಂದ ಮೊದಲಿನಂತೆ ಸುಂದರ ಯಜ್ಞಾಶ್ವವಾಯಿತು, ಎಂದು ಮುನಿ ಹೇಳಲು, ಆಗ ಅದು ಅರ್ಥವಾಗದೆ ಸಂಶಯದಿಂದ ಜನಮೇಜಯನು ಮುನಿಯನ್ನು ಈ ತುರಗವು ಹೀಗಾದ ಕಥೆಯ ವಿಷಯವನ್ನು ತಿಳಿಸು ಎಂದು ಕೇಳಿಕೊಂಡಾಗ ಅವನು ಹೀಗೆ ಹೇಳಿದನು.
  • (ಪದ್ಯ-೭)

ಪದ್ಯ :-:೮:[ಸಂಪಾದಿಸಿ]

ಧರಣಿಪತಿ ಕೇಳಾದೊಡಿನ್ನು ಪೂರ್ವದೊಳಿಂದು | ಧರನಂ ಮನೋಭಾವದಿಂದರ್ಚಿಸುವೆನೆಂದು | ಗಿರಿತನುಜೆ ತಪಕೆ ಪುಣ್ಯಾರಣ್ಯಮಾವುದೆಂದರಸಿಕೊಂಡೈತರಲ್ಕೆ ||
ಪರಿಶೋಭಿಸಿತು ಮುಂದೆ ಹಂಸ ಕಾರಂಡ ಮಧು | ಕರೆ ಕೋಕ ಮಧುರ ಮೃದುತರ ಕಲಮದೋತ್ಕರ | ಸ್ವರ ಕಮಲ ಕುವಲಯ ವಿರಾಜಿತ ಶ್ರೀಕರಂ ಪದ್ಮಾಕರಂ ಚೆಲ್ವೆನೆ ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಧರಣಿಪತಿ ಕೇಳು ಆದೊಡೆ ಇನ್ನು ಪೂರ್ವದೊಳು ಇಂದುಧರನಂ ಮನೋಭಾವದಿಂದ ಅರ್ಚಿಸುವೆನೆಂದು =[ಧರಣಿಪತಿಯಾದ ಜನಮೇಜಯನೇ ಕೇಳು,ಇನ್ನು ಆ ಕಥೆಯೆಂದರೆ, ಹಿಂದೆ ಶಿವನನ್ನು ಏಕಾಗ್ರಭಾವದಿಂದ ಅರ್ಚಿಸುವೆನೆಂದು]; ಗಿರಿತನುಜೆ ತಪಕೆ ಪುಣ್ಯಾರಣ್ಯಮು ಆವುದೆಂದು ಅರಸಿಕೊಂಡು ಐತರಲ್ಕೆ =[ಪರ್ವತ ಹಿಮವಂತನ ಮಗಳು ತಪಸ್ಸಿಗೆ ಪುಣ್ಯಭೂಮಿಯಾದ ಅರಣ್ಯವು ಯಾವುದೆಂದು ಹುಡುಕಿಕೊಂಡು ಬರಲು,]; ಪರಿಶೋಭಿಸಿತು ಮುಂದೆ ಹಂಸ ಕಾರಂಡ ಮಧುಕರ ಕೋಕ ಮಧುರ ಮೃದುತರ ಕಲ ಮದೋತ್ಕರ (ಆನಂದಕೊಡುವ) ಸ್ವರ ಕಮಲ ಕುವಲಯ (ಕನ್ನಯದಿಲೆ) ವಿರಾಜಿತ ಶ್ರೀಕರಂ ಪದ್ಮಾಕರಂ ಚೆಲ್ವೆನೆ =[ಅವಳ ಎದುರಿಗೆ ಹಂಸ, ಕಾರಂಡವೆಂಬ ನೀರುಹಕ್ಕಿ, ಜೇನುಹುಳುಗಳು, ಚಕ್ರವಾಕ,ಇವುಗಳ ಮಧುರವಾದ ಮೃದುವಾದ ಕಲರವದಿಂದ ಆನಂದಕೊಡುವ ಸ್ವರಗಳು ಕಲರವ, ಮತ್ತು ಕಮಲ ಕನ್ನಯದಿಲೆ ತುಂಬಿದ ಮಂಗಳಕರವಾದ ಪದ್ಮಾಕರ ಅಥವಾ ಸುಂದರ ಸರೋವರ ಬಹಳ ಶೋಭಾಯಮಾನವಾಗಿ ಎದುರಿಗೆ ಕಂಡಿತು,]
  • ತಾತ್ಪರ್ಯ: ಧರಣಿಪತಿಯಾದ ಜನಮೇಜಯನೇ ಕೇಳು,ಇನ್ನು ಆ ಕಥೆಯೆಂದರೆ, ಹಿಂದೆ ಶಿವನನ್ನು ಏಕಾಗ್ರಭಾವದಿಂದ ಅರ್ಚಿಸುವೆನೆಂದು, ಪರ್ವತ ಹಿಮವಂತನ ಮಗಳು ತಪಸ್ಸಿಗೆ ಪುಣ್ಯಭೂಮಿಯಾದ ಅರಣ್ಯವು ಯಾವುದೆಂದು ಹುಡುಕಿಕೊಂಡು ಬರಲು, ಅವಳ ಎದುರಿಗೆ ಹಂಸ, ಕಾರಂಡವೆಂಬ ನೀರುಹಕ್ಕಿ, ಜೇನುಹುಳುಗಳು, ಚಕ್ರವಾಕ,ಇವುಗಳ ಮಧುರವಾದ ಮೃದುವಾದ ಕಲರವದಿಂದ ಆನಂದಕೊಡುವ ಸ್ವರಗಳು ಕಲರವ, ಮತ್ತು ಕಮಲ ಕನ್ನಯದಿಲೆ ತುಂಬಿದ ಮಂಗಳಕರವಾದ ಪದ್ಮಾಕರ ಅಥವಾ ಸುಂದರ ಸರೋವರ ಬಹಳ ಶೋಭಾಯಮಾನವಾಗಿ ಕಂಡಿತು,]
  • (ಪದ್ಯ-೮)

ಪದ್ಯ :-:೯:[ಸಂಪಾದಿಸಿ]

ಲಸದಮಲರತ್ನ ಸೋಪಾನದಿಂ ಮೀನದಿಂ | ಬಿಸವಿನಾಸ್ವಾದಿಸುವ ಚಕ್ರದಿಂ ನಕ್ರದಿಂ | ದೆಸೆದೆಸೆಗೆ ಬಿರ್ವ ತನಿಗಂಪಿನಿಂ ತಂಪಿನಿಂ ತೊಳಪ ಹಿಮಕರಕಾಂತದ ||
ಪೊಸಸಣ್ಣಿಗೆವೊಲಿಡಿದ ಪುಳಿನದಿಂ | ದೊಸೆದು ಬಿನದಿಪ ಹಂಸಕೇಳಿಯಿಂದೊಳಿಯಿಂ | ದಸೆವ ನೀರ್ವಕ್ಕಿಗಳ ಸಂಗದಿಂ ಭೃಂಗದಿಂದಾಕೊಳಂ ಕಣ್ಗೆಸೆದುದು ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಲಸತ್ (ಹೊಳೆಯುವ) ಅಮಲರತ್ನ ಸೋಪಾನದಿಂ ಮೀನದಿಂ ಬಿಸವಿನು (ತಾವರೆ ದಂಟು) ಆಸ್ವಾದಿಸುವ ಚಕ್ರದಿಂ =[ಹೊಳೆಯುವ ಪರಿಶುದ್ಧ ರತ್ನಸೋಪಾನದಿಂದಲೂ ಮೀನುಗಳಿಂದಲೂ, ತಾವರೆ ದಂಟು ತಿನ್ನುವ ಚಕ್ರವಾಕದಿಂದಲೂ,]; ನಕ್ರದಿಂ ದೆಸೆದೆಸೆಗೆ ಬಿರ್ವ ತನಿಗಂಪಿನಿಂ ತಂಪಿನಿಂ ತೊಳಪ ಹಿಮಕರ ಕಾಂತದ (ಚಂದ್ರಕಾಂತಶಿಲೆ) ಪೊಸ ಸಣ್ಣಿಗೆವೊಲ್ ಇಡಿದ ಪುಳಿನದಿಂದ (ಮರಳು) ಒಸೆದು= [ಮೊಸಳೆಗಳಿಂದಲೂ, ಎಲ್ಲಾದಿಕ್ಕಿಗೆ ಬೀರುವ ಹೊಸ ಸುವಾಸನೆಯಿಂದಲೂ, ತಂಪಿನಿಂದಲೂ, ಹೊಳೆಯುವ ಚಂದ್ರಕಾಂತಶಿಲೆಯಿಂದಲೂ, ಹೊಸ ಸಣ್ಣಮರಳನಿಂದ ತುಂಬಿ ಶೋಭಿಸುವ]; ಬಿನದಿಪ ಹಂಸಕೇಳಿಯಿಂದ ಓಳಿಯಿಂದಸೆವ ನೀರ್ವಕ್ಕಿಗಳ ಸಂಗದಿಂ ಭೃಂಗದಿಂದಾಕೊಳಂ ಕಣ್ಗೆಸೆದುದು=[ಧ್ವನಿಮಾಡುವ ಹಂಸಕೇಳಿಯಿಂದ, ಗುಂಪಾಗಿ ಶೋಬಿಸುವ ನೀರು ಹಕ್ಕಿಗಳಿಂದಲೂ, ಜೇನಿನ ಸಂಗದಿಂದ ಇರುವ ಆ ಕೊಳವು ಗಿರಿಜೆಯ ಕಣ್ಣಿಗೆ ಕಾಣಿಸಿತು.]
  • ತಾತ್ಪರ್ಯ: ಹೊಳೆಯುವ ಪರಿಶುದ್ಧ ರತ್ನಸೋಪಾನದಿಂದಲೂ ಮೀನುಗಳಿಂದಲೂ, ತಾವರೆ ದಂಟು ತಿನ್ನುವ ಚಕ್ರವಾಕದಿಂದಲೂ, ಮೊಸಳೆಗಳಿಂದಲೂ, ಎಲ್ಲಾದಿಕ್ಕಿಗೆ ಬೀರುವ ಹೊಸ ಸುವಾಸನೆಯಿಂದಲೂ, ತಂಪಿನಿಂದಲೂ, ಹೊಳೆಯುವ ಚಂದ್ರಕಾಂತಶಿಲೆಯಿಂದಲೂ, ಹೊಸ ಸಣ್ಣಮರಳನಿಂದ ತುಂಬಿ ಶೋಭಿಸುವ, ಧ್ವನಿಮಾಡುವ ಹಂಸಕೇಳಿಯಿಂದ, ಗುಂಪಾಗಿ ಶೋಬಿಸುವ ನೀರು ಹಕ್ಕಿಗಳಿಂದಲೂ, ಜೇನಿನ ಸಂಗದಿಂದ ಇರುವ ಆ ಕೊಳವು ಗಿರಿಜೆಯ ಕಣ್ಣಿಗೆ ಕಾಣಿಸಿತು.
  • (ಪದ್ಯ-೯)

ಪದ್ಯ :-:೧೦:[ಸಂಪಾದಿಸಿ]

ತಳದೊಳೊಪ್ಪುವ ಪಸುರೆಸಳ ರೋಚಿಯಿಂ ನಡುವೆ | ತೊಳಪ ಕೆಂದಳದ ದೀಧಿತಿಯಿಂದೆ ಮೇಲೆ ಕಂ | ಗೊಳಿಪ ಹೊಂಗೇಸರದ ಕಾಂತಿಯಿಂದೆರಗುವ ಸಿತಾಳಿಯ ಮರೀಚಿಯಿಂದೆ ||
ಹೊಳೆಹೊಳೆವ ಕೋಕನದ ಪಂಜ್ಕ್ತಿಗಳ ಬಣ್ಣಮು | ಜ್ವಲದಿಂದ್ರಚಾಪದಾಕಾರಮಂ ಸಂತತಂ | ಪಳಿವಂತೆ ಕೊಳದೊಳಾರಾಜಿಸಿತು ತುಹಿನ ಗಿರಿ ರಾಜ ನಂದನೆಯ ಕಣ್ಗೆ ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಳದೊಳು ಒಪ್ಪುವ ಪಸುರೆಸಳ (ಹಸುರೆಸಳು) ರೋಚಿಯಿಂ ನಡುವೆ ತೊಳಪ ಕೆಂದಳದ ದೀಧಿತಿ (ಪ್ರಭೆ)ಯಿಂದೆ =[ಅಡಿಯಲ್ಲಿ ಇರುವ ಹಸಿರು ಎಲೆಯ ಕಾಂತಿಯಿಂದ, ನಡುವೆ ಹೊಳೆಯುವ ಕೆಂಪುದಳದ ಕಮಲದ ಶೋಬೆಯಿಂದ]; ಮೇಲೆ ಕಂಗೊಳಿಪ ಹೊಂಗೇಸರದ (ಹೊನ್ನು +ಕೇಸರದ) ಕಾಂತಿಯಿಂದೆರಗುವ ಸಿತಾಳಿಯ (ಬಿಳಿಯ ಪಕ್ಷಿಗಳ) ಮರೀಚಿಯಿಂದೆ (ಮರೀಚಿಕೆ?) =[ಮೇಲೆ ಕಂಗೊಳಿಸುತ್ತಿರುವ ಹಳದಿಕೇಸರದ ಕಾಂತಿಯಿಂದ ತೊರುವ ಬಿಳಿಯ ಪಕ್ಷಿಗಳ ಸಾಲು ಬಿಸಿಲಕುದುರೆಯಂತೆ ಹೊಳೆಯುವ ಪ್ರಕಾಶದಿಂದ]; ಹೊಳೆಹೊಳೆವ ಕೋಕನದ ಪಂಜ್ಕ್ತಿಗಳ ಬಣ್ಣಂ ಉಜ್ವಲದ ಇಂದ್ರಚಾಪದ ಆಕಾರಮಂ ಸಂತತಂ ಪಳಿವಂತೆ ಕೊಳದೊಳು ಆರಾಜಿಸಿತು ತುಹಿನ ಗಿರಿ (ಹಿಮಗಿರಿ ರಾಜನ ಮಗಳಿಗೆ -ಗಿರಿಜೆ) ರಾಜ ನಂದನೆಯ ಕಣ್ಗೆ=[ಅತಿಯಾಗಿ ಹೊಳೆಯುವ ಚಕ್ರವಾಕ ಪಕ್ಷಿಗಳ ಪಂಙ್ತಿಗಳ ಬಣ್ಣವು ಉಜ್ವಲವಾದ ಕಾಮನಬಿಲ್ಲಿನ ಆಕಾರವನ್ನು ಯಾವಾಗಲೂ ತಳೆಯುವಂತಿರವ ಕೊಳವು ಗಿರಿಜೆಯ ಕಣ್ಣಿಗೆ ಚಂದಕಾಣಿಸಿತು.]
  • ತಾತ್ಪರ್ಯ: ಕೊಳದ ಅಡಿಯಲ್ಲಿ ಇರುವ ಹಸಿರು ಎಲೆಯ ಕಾಂತಿಯಿಂದ, ನಡುವೆ ಹೊಳೆಯುವ ಕೆಂಪುದಳದ ಕಮಲದ ಶೋಬೆಯಿಂದ, ಮೇಲೆ ಕಂಗೊಳಿಸುತ್ತಿರುವ ಹಳದಿ ಕೇಸರದ ಕಾಂತಿಯಿಂದ ತೊರುವ ಬಿಳಿಯ ಪಕ್ಷಿಗಳ ಸಾಲು, ಬಿಸಿಲಕುದುರೆಯಂತೆ ಹೊಳೆಯುವ ಪ್ರಕಾಶದಿಂದ, ಅತಿಯಾಗಿ ಹೊಳೆಯುವ ಚಕ್ರವಾಕ ಪಕ್ಷಿಗಳ ಪಂಙ್ತಿಗಳ ಬಣ್ಣವು ಉಜ್ವಲವಾದ ಕಾಮನಬಿಲ್ಲಿನ ಆಕಾರವನ್ನು ಸದಾ ತಳೆಯುವಂತಿದ್ದ ಕೊಳವು ಗಿರಿಜೆಯ ಕಣ್ಣಿಗೆ ಚಂದಕಾಣಿಸಿತು.
  • (ಪದ್ಯ-೧೦)

ಪದ್ಯ :-:೧೧:[ಸಂಪಾದಿಸಿ]

ನಿರುತಂ ಕುಮುದಶೋಭಿ ನೈರುತ್ಯದಂತೆ ವಾ | ನರಸೈನ್ಯದಂತೆ ಕಮಲೋದರೋದ್ಭಾಸಿ ಭಾ | ಸುರ ಶುಕ್ಲಪಕ್ಷದಂತಹಿತಲ್ಪದಂತೆ ಕವಿಸೇವಿತಂ ಗಗನದಂತೆ ||
ಧರಣಿಪಾಲಯದಂತೆ ಸುಮನೋಹರಂ ನಿಶಾ | ಚರವಂಶದಂತೆ ಮಾಲಾಕಾರಜನದಂತೆ | ಹರಿಜನ್ಮಭೂಮಿ ಗೋಕುಲದಂತೆ ವನದಂತೆ ತತ್ಸರಂ ಕಂಗೊಳಿಸಿತು ||11|

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಿರುತಂ ಕುಮುದಶೋಭಿ ನೈರುತ್ಯದಂತೆ ವಾನರಸೈನ್ಯದಂತೆ=[ಆ ಸರೋವರವು ಸದಾ ಕುಮುದ/ ಕಮಲದಿಂದ ಶೋಭಿಸುತ್ತಿತ್ತು,ಅದೇ ಕುಮುದ ಎಂಬ ದಿಗ್ಗಜ ಆನೆಯಿಂದ ಶೋಭಿ ಎಂದುಕೊಂಡರೆ ನೈರುತ್ಯದಂತೆ; ಹಾಗೂ ನಿರುತಿ ರಾಕ್ಷಸದಂತೆ ಇರುವುದು, ಕುಮುದ ಎಂಬ ಹೆಸರಿನ ಕಪಿಗೆ ಅನ್ವಯಿಸಿ ವಾನರಸೈನ್ಯದಂತೆ ಇರುವುದು]; ಕಮಲ ಉದರೋದ್ಭಾಸಿ ಭಾಸುರ ಶುಕ್ಲಪಕ್ಷದಂತೆ ಅಹಿತಲ್ಪದಂತೆ =[ಸರೂವರದ ಉದರಲ್ಲಿ ಕಮಲ ಇರುವುದರಿಂದ,-> ಉದರೋದ್ಭಾಸಿ ಭಾಸುರನಾದ ವಿಷ್ಣುವಿಗೆಸಮ; ಸೌಂದರ್ಯದಲ್ಲಿ ಶುಕ್ಲಪಕ್ಷದಂತೆ, ಸರೋವರವು ಕಮಲನಾಬಿ ವಿಷ್ಣುವಾಗಿ ಭಾವಿಸಿದರೆ ಅಹಿತಲ್ಪದಂತೆ ಎಂದರೆ ಅವನ ಹಾಗೆ ಆದಿಶೇಷ]; ಕವಿಸೇವಿತಂ ಗಗನದಂತೆ ಧರಣಿಪಾಲಯದಂತೆ ಸುಮನೋಹರಂ =[ಹಾಡುವ ಪಕ್ಷಿಗಳಿರುವುದರಿಂದ ಕವಿಸೇವಿತನಂತೆ, ಪ್ರಕಾಶಮಾನವಾದ್ದರಿಂದ ಗಗನದಂತೆ; ಸದಾ ಪಕ್ಷಿಗಳ ಸಂಗೀತದಿಂದ ರಾಜನ ಅರಮನೆಯಂತೆ ಮನೋವಾಗಿದೆ;];ನಿಶಾಚರವಂಶದಂತೆ ಮಾಲಾಕಾರಜನದಂತೆ ಹರಿಜನ್ಮಭೂಮಿ ಗೋಕುಲದಂತೆ ವನದಂತೆ ತತ್ಸರಂ ಕಂಗೊಳಿಸಿತು =[ರಾತ್ರಿಯೂ ಹಕ್ಕಿಗಳ, ಮೀನುಗಳ ಸಂಚಾರವಿದ್ದು ನಿಶಾಚರವಂಶದಂತೆ (ರಾಕ್ಷಸರು?) ಆಗಿದೆ; ಹೂವಿನಿಂದ ಕೂಡಿದ್ದು ಮಾಲೆಮಾಡುವ ಮಾಲಾಕಾರ(ಕಟ್ಟುವ) ಜನರಂತೆ; ನೀರಿನ ಹರಿವನ್ನು ಉಂಟುಮಾಡುವುದರಿಂದ ಹರಿಜನ್ಮಭೂಮಿಯಾಗಿದೆ; ಗೋಎಂದರೆ ಕಪ್ಪೆ ಎಂಬ ಅರ್ಥದಲ್ಲಿ ಗೋಕುಲದಂತೆ; ವನ ಎಂದರೆ ನೀರುಎಂಬ ಅರ್ಥದಲ್ಲಿ ವನದಂತೆ; ಆ ಸರೋವರವು ಗಿರಿಜೆಯ ಕಣ್ಣಿಗೆ ಕಂಗೊಳಿಸಿತು].
  • ತಾತ್ಪರ್ಯ:ಆ ಸರೋವರವು ಸದಾ ಕುಮುದ/ ಕಮಲದಿಂದ ಶೋಭಿಸುತ್ತಿತ್ತು,ಅದೇ ಕುಮುದ ಎಂಬ ದಿಗ್ಗಜ ಆನೆಯಿಂದ ಶೋಭಿ ಎಂದುಕೊಂಡರೆ ನೈರುತ್ಯದಂತೆ; ಹಾಗೂ ನಿರುತಿ ರಾಕ್ಷಸದಂತೆ ಇರುವುದು, ಕುಮುದ ಎಂಬ ಹೆಸರಿನ ಕಪಿಗೆ ಅನ್ವಯಿಸಿ ವಾನರಸೈನ್ಯದಂತೆ ಇರುವುದು; ಸರೂವರದ ಉದರಲ್ಲಿ ಕಮಲ ಇರುವುದರಿಂದ,-> ಉದರೋದ್ಭಾಸಿ ಭಾಸುರನಾದ ವಿಷ್ಣುವಿಗೆಸಮ; ಸೌಂದರ್ಯದಲ್ಲಿ ಶುಕ್ಲಪಕ್ಷದಂತೆ, ಸರೋವರವು ಕಮಲನಾಬಿ ವಿಷ್ಣುವಾಗಿ ಭಾವಿಸಿದರೆ ಅಹಿತಲ್ಪದಂತೆ ಎಂದರೆ ಅವನ ಹಾಗೆ ಆದಿಶೇಷ; ಹಾಡುವ ಪಕ್ಷಿಗಳಿರುವುದರಿಂದ ಕವಿಸೇವಿತನಂತೆ, ಪ್ರಕಾಶಮಾನವಾದ್ದರಿಂದ ಗಗನದಂತೆ; ಸದಾ ಪಕ್ಷಿಗಳ ಸಂಗೀತದಿಂದ ರಾಜನ ಅರಮನೆಯಂತೆ ಮನೋಹರವಾಗಿದೆ; ರಾತ್ರಿಯೂ ಹಕ್ಕಿಗಳ, ಮೀನುಗಳ ಸಂಚಾರವಿದ್ದು ನಿಶಾಚರವಂಶದಂತೆ (ರಾಕ್ಷಸರು?) ಆಗಿದೆ; ಹೂವಿನಿಂದ ಕೂಡಿದ್ದು ಮಾಲೆಮಾಡುವ ಮಾಲಾಕಾರ(ಮಾಲೆಕಟ್ಟುವ) ಜನರಂತೆ; ನೀರಿನ ಹರಿವನ್ನು ಉಂಟುಮಾಡುವುದರಿಂದ ಹರಿಜನ್ಮಭೂಮಿಯಾಗಿದೆ; ಗೋ ಎಂದರೆ ಕಪ್ಪೆ ಎಂಬ ಅರ್ಥದಲ್ಲಿ ಗೋಕುಲದಂತೆ; ವನ ಎಂದರೆ ನೀರು ಎಂಬ ಅರ್ಥದಲ್ಲಿ ವನದಂತೆ; ಆ ಸರೋವರವು ಗಿರಿಜೆಯ ಕಣ್ಣಿಗೆ ಕಂಗೊಳಿಸಿತು.
  • (ಪದ್ಯ-೧೧)

ಪದ್ಯ :-:೧೨:[ಸಂಪಾದಿಸಿ]

ವನಮಾಲಿಯಂದದಿಂ ಪದ್ಮಿ ಪದ್ಮಿಯವೋಲ್ ಭು | ವನಕುಕ್ಷಿ ಭವನಕುಕ್ಷಿಯ ತೆರದೆ ಹಂಸಲೋ | ಚನಶೋಭಿ ಹಂಸಲೋಚನಶೋಭಿಯಂತೆ ವರಚಕ್ರಿ ವರಚಕ್ರಿಯವೊಲು ||
ಅನಿಮಿಷಾಶ್ರಯಮೂರ್ತಿಯನಿಮಿಷಾಶ್ರಯಮೂರ್ತಿ | ಯೆನೆ ಕುವಯಾಧಾರಿ ಕುವಲಯಾಧಾರಿವೋಲ್ | ವನಮಾಲಿಯೆನಿಸಿ ರಂಜಿಸುವ ಕಾಸಾರಮಂ ಸರ್ವಮಂಗಳೆ ಕಂಡಳು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವನಮಾಲಿ (ವಿಷ್ಣು)ಯಂದದಿಂ; ಪದ್ಮಿ(ವಿಷ್ಣು) ಪದ್ಮಿಯವೋಲ್; ಭುವನಕುಕ್ಷಿ ಭವನಕುಕ್ಷಿಯ (ವಿಷ್ಣು)ತೆರದೆ; ಹಂಸಲೋಚನಶೋಭಿ ಹಂಸಲೋಚನಶೋಭಿ(ವಿಷ್ಣು)ಯಂತೆ ವರಚಕ್ರಿ (ಚಕ್ರವಾಕ ಪಕ್ಷಿಯಿರುವುದರಿಂದ) ವರಚಕ್ರಿಯವೊಲು (ವಿಷ್ಣು); ಅನಿಮಿಷಾಶ್ರಯಮೂರ್ತಿಯನಿಮಿಷಾಶ್ರಯಮೂರ್ತಿ ಯೆನೆ(ವಿಷ್ಣು); ಕುವಯಾಧಾರಿ ಕುವಲಯಾಧಾರಿವೋಲ್ (ವಿಷ್ಣು)] ವನಮಾಲಿಯೆನಿಸಿ(ವಿಷ್ಣುವಿನಂತೆ) ರಂಜಿಸುವ ಕಾಸಾರಮಂ (ಸರೋವರವನ್ನು) ಸರ್ವಮಂಗಳೆ ಕಂಡಳು.
  • ತಾತ್ಪರ್ಯ:ವನಮಾಲಿ, ಪದ್ಮಿ, ಭುವನಕುಕ್ಷಿ, ಹಂಸಲೋಚನಶೋಭಿ, ವರಚಕ್ರಿ (ಚಕ್ರವಾಕ ಪಕ್ಷಿಯಿರುವುದರಿಂದ); ಅನಿಮಿಷಾಶ್ರಯಮೂರ್ತಿಯನಿಸಿ (ಮೀನು) ಕುವಯಾಧಾರಿ ವನಮಾಲಿ; ಈ ಎಲ್ಲಾ ಪರ್ಯಾಯ ಪದಗಳ ವಿಷ್ಣುವಿನ ಹೆಸರಿನ ಹೋಲಿಕೆ ಇರುವ ಗುಣಗಳುಳ್ಳ ರಂಜಿಸುವ ಸರೋವರವನ್ನು ಸರ್ವಮಂಗಳೆ ಕಂಡಳು.
  • (ಪದ್ಯ-೧೨)IXX-IX

ಪದ್ಯ :-:೧೩:[ಸಂಪಾದಿಸಿ]

ಅಳಿಯ ವರ್ಗವನಾದರಿಸುತೆ ಮಿತ್ರ ಸ್ನೇಹ | ದೊಳೆ ಸಂದು ಸುತರಂಗಲೀಲೆಯಂ ಲಾಲಿಸುತೆ| ಕುಲಸದಭ್ಯುದಯಮಂ ನೆಲೆಗೆಯ್ದು ಕಾಂತಾನುಕೂಲರಮಣೀಯಮಾಗಿ ||
ಲಲಿತ ಲಕ್ಷ್ಮೀನಿವಾಸ ಸ್ಥಾನಮೆನಿಸಿ ಮಂ | ಗಳ ವಿಭವಕೆಡೆಗೊಟ್ಟು ಸಕಲಸೌಭಾಗ್ಯಮಂ | ತಳೆದ ಸಾಂಸಾರಿಕನ ತೆರದಿಂದೆ ವಿಮಲಪದ್ಮಾಕರಂ ಕಣ್ಗೆಸೆದುದು ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಳಿಯ ವರ್ಗವನು ಆದರಿಸುತೆ ಮಿತ್ರ ಸ್ನೇಹದೊಳೆ ಸಂದು ಸುತರ ಅಂಗಲೀಲೆಯಂ ಲಾಲಿಸುತೆ=[ಅಳಿಯಂದಿರನ್ನು ಆದರದಿಂದ ಕಂಡು, ಮಿತ್ರರ ಸ್ನೇಹದಲ್ಲಿದ್ದು ಸಂದು, ಮಕ್ಕಳ ಅಂಗಲೀಲೆಯನ್ನು ಪೋಷನೆಮಾಡುತ್ತಾ]; ಕುಲಸದಭ್ಯುದಯಮಂ ನೆಲೆಗೆಯ್ದು ಕಾಂತಾನುಕೂಲ ರಮಣೀಯಮಾಗಿ ಲಲಿತ ಲಕ್ಷ್ಮೀನಿವಾಸ ಸ್ಥಾನಮೆನಿಸಿ ಮಂಗಳ ವಿಭವಕೆಡೆಗೊಟ್ಟು=[ಕುಲದ ಉತ್ತಮ ಅದಭ್ಯುದಯನ್ನು ಮಾಡಿ ಕಾಂತೆಯ ಸಹಕಾರದ ಅನುಕೂಲದ ಆನಂದಹೊಂದಿ, ಕೋಮಲ ಲಕ್ಷ್ಮೀನಿವಾಸವಾಗಿದ್ದು, ಮಂಗಳ ಅಥವಾ ಶುಭಕರ ಅಭಿವೃದ್ಧಿಗೆ ಅವಕಾಶಕೊಟ್ಟು ,]; ಸಕಲಸೌಭಾಗ್ಯಮಂ ತಳೆದ ಸಾಂಸಾರಿಕನ ತೆರದಿಂದೆ ವಿಮಲಪದ್ಮಾಕರಂ ಕಣ್ಗೆಸೆದುದು=[ ಹೀಗೆ ಸಕಲಸೌಭಾಗ್ಯವನ್ನೂ ಹೊಂದಿರುವ ಸಾಂಸಾರಿಕನಂತೆ ಪರಿಶುದ್ಧ ಪದ್ಮಗಳಿಂದಕೂಡಿದ ಸರೊವರ ಕಣ್ಣಿಗೆ ಕಂಡಿತು];
  • (ಈ ಅರೋವರ ಸಂಸಾರಿಕನಂತೆ ಇದ್ದ ಬಗೆ ಹೇಗೆಂದರೆ;ಅಳಿಯವರ್ಗವಾಗಿ ಜೇನುಹುಳುಗಳನ್ನು ಹೊಂದಿತ್ತು, ಮಿತ್ರ ಎಂದರೆ ಸೂರ್ಯನ ಸಂಪರ್ಕವಿತ್ತು, ಸುತರಂಗಲೀಲೆ ಎಂದರೆ ಸು-ಒಳ್ಳೆಯ ತರಂಗ ಲೀಲೆ ಇತ್ತು, ಕು-ಭೂಮಿಯ ಲಸದ್ -ಕಾಂತಿಯ ಅಭ್ಯುದಯ-ಹೆಚ್ಚುವಿಕೆ ಇತ್ತು, ಕಾಂತಾ-ಅಡವಿಯು ಅನುಕೂಲವಾಗಿ ಸುಂದರವಾಗಿತ್ತು, ಕಮಲ ಪುಷ್ಪದಿಂದಕೂಡಿ ಲಲಿತ ಲಕ್ಷ್ಮೀನಿವಾಸ ಸ್ಥಾನವಾಗಿತ್ತು, ಮಂಗಳ ವಿಭವಕ್ಕೆ-ಸೊಗಸಿಗೆ ನೆಲೆಯಾಗಿತ್ತು, ಹೀಗೆ ಸಕಲಸೌಭಾಗ್ಯವನ್ನು ಹೊಂದಿದ ಸಾಂಸಾರಿಕನಂತೆ ಸರೊವರ ಕಂಡಿತು.)
  • ತಾತ್ಪರ್ಯ: ಅಳಿಯಂದಿರನ್ನು ಆದರದಿಂದ ಕಂಡು, ಮಿತ್ರರ ಸ್ನೇಹದಲ್ಲಿದ್ದು ಸಂದು, ಮಕ್ಕಳ ಅಂಗಲೀಲೆಯನ್ನು ಪೋಷನೆಮಾಡುತ್ತಾ; ಕುಲದ ಉತ್ತಮ ಅದಭ್ಯುದಯನ್ನು ಮಾಡಿ ಕಾಂತೆಯ ಸಹಕಾರದ ಅನುಕೂಲದ ಆನಂದಹೊಂದಿ, ಕೋಮಲ ಲಕ್ಷ್ಮೀನಿವಾಸವಾಗಿದ್ದು, ಮಂಗಳ ಅಥವಾ ಶುಭಕರ ಅಭಿವೃದ್ಧಿಗೆ ಅವಕಾಶಕೊಟ್ಟು ,ಹೀಗೆ ಸಕಲಸೌಭಾಗ್ಯವನ್ನೂ ಹೊಂದಿರುವ ಸಾಂಸಾರಿಕನಂತೆ ಪರಿಶುದ್ಧ ಪದ್ಮಗಳಿಂದಕೂಡಿದ ಸರೊವರ ಕಣ್ಣಿಗೆ ಕಂಡಿತು;(ಈ ಸರೋವರ ಸಂಸಾರಿಕನಂತೆ ಇದ್ದ ಬಗೆ ಹೇಗೆಂದರೆ; ಅಳಿಯವರ್ಗವಾಗಿ ಜೇನುಹುಳುಗಳನ್ನು ಹೊಂದಿತ್ತು, ಮಿತ್ರ ಎಂದರೆ ಸೂರ್ಯನ ಸಂಪರ್ಕವಿತ್ತು, ಸುತರಂಗಲೀಲೆ ಎಂದರೆ ಸು-ಒಳ್ಳೆಯ ತರಂಗ ಲೀಲೆ ಇತ್ತು, ಕು-ಭೂಮಿಯ ಲಸದ್ -ಕಾಂತಿಯ ಅಭ್ಯುದಯ-ಹೆಚ್ಚುವಿಕೆ ಇತ್ತು, ಕಾಂತಾ-ಅಡವಿಯು ಅನುಕೂಲವಾಗಿ ಸುಂದರವಾಗಿತ್ತು, ಕಮಲ ಪುಷ್ಪದಿಂದಕೂಡಿ ಲಲಿತ ಲಕ್ಷ್ಮೀನಿವಾಸ ಸ್ಥಾನವಾಗಿತ್ತು, ಮಂಗಳ ವಿಭವಕ್ಕೆ-ಸೊಗಸಿಗೆ ನೆಲೆಯಾಗಿತ್ತು, ಹೀಗೆ ಸಕಲಸೌಭಾಗ್ಯವನ್ನು ಹೊಂದಿದ ಸಾಂಸಾರಿಕನಂತೆ ಸರೊವರ ಕಂಡಿತು. [ದ್ವಂದ್ವಾರ್ಥದ - ಶ್ಲೇಷಾಲಂಕಾರ])
  • (ಪದ್ಯ-೧೩)

ಪದ್ಯ :-:೧೪:[ಸಂಪಾದಿಸಿ]

ಕಳಹಂಸಮಾಕೀರ್ಣಮಾಗಿರ್ದು ಕಾಳೆಗದ | ಕಳನಲ್ಲ ವಿಷಭರಿತಮಾಗೆರ್ದು ಸರ್ಪಸಂ | ಕುಳಮಲ್ಲ ಕುಮುದಯುತಮಾಗಿರ್ದು ಖಳರಂತರಂಗದಾಲಾಪಮಲ್ಲ ||
ಅಳಿದುಳಿದು ಭಂಗಮಯಮಾಗಿರ್ದು ಮುರಿದ ನೃಪ | ದಳಮಲ್ಲ ಬಹುವಿಚಾರಸ್ಥಾನಮಾಗಿರ್ದು | ತಿಳಿಯಲ್ಕುಪದ್ರವಸ್ಥಳಮಲ್ಲಮೆನಿಸಿರ್ದುದಾ ವಿಮಲಸರಸಿ ಕಣ್ಗೆ ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಳಹಂಸಮಾಕೀರ್ಣಮಾಗಿರ್ದು ಕಾಳೆಗದ ಕಳನಲ್ಲ; ವಿಷಭರಿತಮಾಗೆರ್ದು ಸರ್ಪಸಂಕುಳಮಲ್ಲ; ಕುಮುದಯುತಮಾಗಿರ್ದು ಖಳರಂತರಂಗದಾಲಾಪಮಲ್ಲ; ಅಳಿದುಳಿದು ಭಂಗಮಯಮಾಗಿರ್ದು ಮುರಿದ ನೃಪದಳಮಲ್ಲ; ಬಹುವಿಚಾರಸ್ಥಾನಮಾಗಿರ್ದು ತಿಳಿಯಲ್ಕೆ ಉಪದ್ರವಸ್ಥಳಮಲ್ಲಮು; ಎನಿಸಿರ್ದುದಾ ವಿಮಲಸರಸಿ ಕಣ್ಗೆ.
  • ಈ ಸರೋವರದಲ್ಲಿ, ಕಲಹಂ + ಸಮಾಕೀರ್ಣವಾಗಿದ್ದರೂ (ಕಲಹವು ನಡೆಯುತ್ತಿದ್ದರೂ) ಯುಧ್ಧಭೂಮಿಯಲ್ಲ, ಏಕೆಂದರೆ ಕಳಹಂಸಮಾಕೀರ್ಣಮಾಗಿರ್ದು ಕಳಹಂಸಗಳು + ಆಕೀರ್ಣವಾಗಿದೆ. ವಿಷಭರಿತಮಾಗಿರ್ದು ಸರ್ಪಸಂಕುಳಮಲ್ಲ- ವಿಷ +ಭರಿತವಾಗಿದು ಸರ್ಪಗಳ ಸಮೂಹವಲ್ಲ, ಏಕೆಂದರೆ ವಿಷಂ=ನೀರು ಭರಿತಂ ತುಂಬಿದೆ ; ಹಾಗೆಯೇ ಕು=ಕೆಟ್ಟದ್ದರಲ್ಲಿ + ಮುದಯುತಂ =ಸಂತೋಷಪಡುವಂತಿದ್ದರೂ, ಖಳನ ಅಂತರಂಗ=ಮನಸ್ಸಲ್ಲ, ಏಕೆಂದರೆ ಕುಮುದಯುತಂ + ಆಗಿರ್ದು, ತಾವರೆಯಿಂದ ತುಂಬಿದ- ಸರೋವರವಾಗಿದೆ; ಅಳಿದುಳಿದು ಭಂಗಮಯಮಾಗಿರ್ದು ಮುರಿದ ನೃಪದಳಮಲ್ಲ; ಅಳಿದು - ಸತ್ತು ಉಳಿದು ಭಂಗಪಟ್ಟ ರಾಜರಸೈನ್ಯವಲ್ಲ, ಕಾರಣ ಅಲ್ಲಿ ಗಿಡಲತೆಗಳು, ಕಮಲದ ಹೂ ಬಾಡಿ ಮತ್ತೆ ಹುಟ್ಟಿ ಸದಾ ಕೊಗೊಲಿಸುವುದು; ಬಹುವಿಚಾರಸ್ಥಾನಂ ಆಗಿರ್ದು ತಿಳಿಯಲ್ಕೆ ಉಪದ್ರವ ಸ್ಥಳಮಲ್ಲಂ; ಒಣ ವಿತಂಡ ಚರ್ಚೆಯ ಇದ್ದೂ ತೊಂದರೆ ಕೊಡುವ ತಾಣವಲ್ಲ ಕಾರಣ ಬಹಳವಾಗಿ ವಿ-ವಿಶೇಷವಾಗಿ ಚಾರ ಎಂದರೆ ಪಕ್ಷಿಗಳು ಸಂಚರಿಸುವ ತಾಣ ಅಷ್ಟೆ; ಹೀಗಿರುವ ಆ ಪರಿಶುದ್ಧ ಸರೊವರ ಗಿರಿಜೆಯ ಕಣ್ಣಿಗೆ ಗೋಚರವಾಯಿತು.
  • ತಾತ್ಪರ್ಯ: ಈ ಸರೋವರದಲ್ಲಿ, (ಕಲಹಂ) ಕಲಹವು ನಡೆಯುತ್ತಿದ್ದರೂ ಯುಧ್ಧಭೂಮಿಯಲ್ಲ, ಏಕೆಂದರೆ ಕಳಹಂಸಗಳು ಆಕೀರ್ಣವಾಗಿದೆ. ವಿಷ ಭರಿತವಾಗಿದ್ದು ಸರ್ಪಗಳ ಸಮೂಹವಲ್ಲ, ಏಕೆಂದರೆ (ವಿಷ=ನೀರು)ನೀರು ತುಂಬಿದೆ ; ಹಾಗೆಯೇ ಕೆಟ್ಟದ್ದರಲ್ಲಿ (ಕು+ಮುದ)ಸಂತೋಷಪಡುವಂತಿದ್ದರೂ, ಖಳನ ಮನಸ್ಸಲ್ಲ, ಏಕೆಂದರೆ (ಕುಮುದ) ತಾವರೆಯಿಂದ ತುಂಬಿದ- ಸರೋವರವಾಗಿದೆ; ಅಳಿದು - ಸತ್ತು ಉಳಿದು ಭಂಗಪಟ್ಟ ರಾಜರಸೈನ್ಯವಲ್ಲ, ಕಾರಣ ಅಲ್ಲಿ ಗಿಡಲತೆಗಳು, ಕಮಲದ ಹೂ (ಅಳಿ-ಜೇನು + ತುಳಿದು)ಕಂಗೊಳಿಸುವುದು, ಅಥವಾ ಬಾಡಿ ಮತ್ತೆ ಹುಟ್ಟಿ ಸದಾ ಕಂಗೊಳಿಸುವುದು; ಒಣ ವಿತಂಡ ಚರ್ಚೆಯ ಇದ್ದೂ ತೊಂದರೆಕೊಡುವ ತಾಣವಲ್ಲ ಕಾರಣ ಬಹಳವಾಗಿ ವಿ-ವಿಶೇಷವಾಗಿ (ಚರ) ಚಾರ ಎಂದರೆ ಪಕ್ಷಿಗಳು ಸಂಚರಿಸುವ ತಾಣ ಅಷ್ಟೆ; ಹೀಗಿರುವ ಆ ಪರಿಶುದ್ಧ ಸರೊವರ ಗಿರಿಜೆಯ ಕಣ್ಣಿಗೆ ಗೋಚರವಾಯಿತು.(ಶಬ್ದಶ್ಲೇಷೆ, ಅರ್ಥಶ್ಲೇಷೆ, ವಿರೋಧಾಭಾಸ ಅಲಂಕಾರವೆನ್ನಬಹುದು)
  • (ಪದ್ಯ-೧೪)

ಪದ್ಯ :-:೧೫:[ಸಂಪಾದಿಸಿ]

ಆ ಸರಸ್ತಟದಲ್ಲಿ ಕಲ್ಪಿಸಿದಳಾಶ್ರಮ ನಿ | ವಾಸಮಂ ಭಕ್ತಿಯಿಂ ಭಜಿಸಿದಳಗೇಂದ್ರಜೆ ಸು | ಧಾಸೂತಿಮೌಳಿಯಂ ಮೆಚ್ಚಿದಂ ಶಂಭು ವರಮಂ ಕೊಟ್ಟನಿಲ್ಲಿ ನಿನ್ನ ||
ಮೀಸಲ ತಪಕ್ಕೆಡರ್ ಬಾರದಿರಲೆಂದು ಬಳಿ | ಕೋಸರಿಸದಲ್ಲಿ ಚಿರಕಾಲಮಿರುತಿರ್ದಳು | ಲ್ಲಾಸದಿಂ ಧೂರ್ಜಟಿಯ ರಾಣಿ ಯೋಗಿನಿಯೊ ತಾನೆಂಬ ತೆರದಿಂ ಬನದೊಳು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಸರಸ್ ತಟದಲ್ಲಿ ಕಲ್ಪಿಸಿದಳು ಆಶ್ರಮ ನಿವಾಸಮಂ ಭಕ್ತಿಯಿಂ ಭಜಿಸಿದಳು ಅಗೇಂದ್ರಜೆ ಸುಧಾಸೂತಿಮೌಳಿಯಂ =[ಆ ಸರಸ್ಸಿನ ದಡದಲ್ಲಿ ಆಶ್ರಮ ಗುಡಿಸಲನ್ನು ಕಟ್ಟಿದಳು. ಭಕ್ತಿಯಿಂದ ಪರ್ವತನ ಮಗಳು ಶಿವನನ್ನು ಭಜಿಸಿದಳು]; ಮೆಚ್ಚಿದಂ ಶಂಭು ವರಮಂ ಕೊಟ್ಟನು ಇಲ್ಲಿ ನಿನ್ನ ಮೀಸಲ ತಪಕ್ಕೆಡರ್ ಬಾರದಿರಲಿ ಎಂದು= [ಶಿವನು ಮೆಚ್ಚಿದನು; 'ಈ ಪ್ರದೇಶದಲ್ಲಿ ಶಿವನಿಗಾಗಿಯೇ ಮಾಡುವ ನಿನ್ನ ತಪಸ್ಸಿಗೆ ತೊಂದರೆ ಬಾರದಿರಲಿ', ಎಂದು ವರವನ್ನು ಕೊಟ್ಟನು.]; ಬಳಿಕ ಓಸರಿಸದಲ್ಲಿ ಚಿರಕಾಲಂ ಇರುತಿರ್ದಳು ಉಲ್ಲಾಸದಿಂ ಧೂರ್ಜಟಿಯ ರಾಣಿ ಯೋಗಿನಿಯೊ ತಾನು ಎಂಬ ತೆರದಿಂ ಬನದೊಳು=[ಬಳಿಕ ಬೇಸರಮಾಡದೆ ಅಲ್ಲಿ ಚಿರಕಾಲ ಆನಂದದಿಂದ ಶಿವನ ರಾಣಿ ಯೋಗಿನಿಯೊ ತಾನು ಎಂಬ ರೀತಿಯಲ್ಲಿ ವನದಲ್ಲಿ ಇರುತ್ತಿದ್ದಳು].
  • ತಾತ್ಪರ್ಯ:ಆ ಸರಸ್ಸಿನ ದಡದಲ್ಲಿ ಆಶ್ರಮ ಗುಡಿಸಲನ್ನು ಕಟ್ಟಿದಳು. ಭಕ್ತಿಯಿಂದ ಪರ್ವತನ ಮಗಳು ಶಿವನನ್ನು ಭಜಿಸಿದಳು; ಅವಳನ್ನು ಶಿವನು ಮೆಚ್ಚಿದನು; 'ಈ ಪ್ರದೇಶದಲ್ಲಿ ಶಿವನಿಗಾಗಿಯೇ ಮಾಡುವ ನಿನ್ನ ತಪಸ್ಸಿಗೆ ತೊಂದರೆ ಬಾರದಿರಲಿ', ಎಂದು ವರವನ್ನು ಕೊಟ್ಟನು. ಬಳಿಕ ಬೇಸರಮಾಡದೆ ಅಲ್ಲಿ ಚಿರಕಾಲ ಆನಂದದಿಂದ ಶಿವನ ರಾಣಿ ಯೋಗಿನಿಯೊ ತಾನು ಎಂಬ ರೀತಿಯಲ್ಲಿ ವನದಲ್ಲಿ ಇರುತ್ತಿದ್ದಳು.
  • (ಪದ್ಯ-೧೫)

ಪದ್ಯ :-:೧೬:[ಸಂಪಾದಿಸಿ]

ಇಂದುಮೌಳಿಯ ಪದಧ್ಯಾನಮಂ ಮಾಡುವಾ | ನಂದಮಿನ್ನೇತರತಿಶಯಮೋ ಶಿವನರೆಮೈಯೊ | ಳೊಂದಿರ್ದಸೌಖ್ಯಮಂ ಮರೆದು ಪಾರ್ವತಿ ತಪಸ್ವಿನಿಯಾಗಿ ತಿಳಿಗೊಳದೊಳು ||
ಮಿಂದನುದಿನಂ ಜಪ ತಪೋನಿಯಮ ಯೋಗಂಗ | ಳಿಂದೆ ಭಜಿಸಿದಳಂತರಾತ್ಮನಂ ಸಕಲಸುರ | ವೃಂದವಂದಿತ ಪಾದಪದ್ಮನಂ ಸುಜ್ಞಾನಸದ್ಮನಂ ಕಾನನದೊಳು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಂದುಮೌಳಿಯ ಪದಧ್ಯಾನಮಂ ಮಾಡುವ ಆನಂದಂ ಇನ್ನು ಏತರ ಅತಿಶಯಮೋ ಶಿವನ ಅರೆಮೈಯೊಳು ಒಂದಿರ್ದ ಸೌಖ್ಯಮಂ ಮರೆದು= [ಇಂದುಧರನಾದ ಶಿವನ ಪಾದದ ಧ್ಯಾನವನ್ನು ಮಾಡುವ ಆನಂದವು ಇನ್ನು ಯಾವಬಗೆಯ ಅತಿಶಯವಾಗಿರುವುದೋ! ಏಕೆಂದರೆ ಅವಳು ಶಿವನ ಅರೆಮೈಯ್ಯಲ್ಲಿ ಎದರೆ ಅವನ ದೇಹದ ಅರ್ಧದಲ್ಲಿ ಶಿವನೊಡನೆ ಒಂದಾಗಿ ಇದ್ದ ಸುಖವನ್ನು ಮರೆತು ಇಲ್ಲಿ ಬೇರೆಯಾಗಿಧ್ಯಾನಿಸುತ್ತಿದ್ದಳು.] ಪಾರ್ವತಿ ತಪಸ್ವಿನಿಯಾಗಿ ತಿಳಿಗೊಳದೊಳು ಮಿಂದು ಅನುದಿನಂ ಜಪ ತಪೋನಿಯಮ ಯೋಗಂಗಳಿಂದೆ ಭಜಿಸಿದಳು ಅಂತರಾತ್ಮನಂ ಸಕಲ ಸುರವೃಂದವಂದಿತ ಪಾದಪದ್ಮನಂ ಸುಜ್ಞಾನಸದ್ಮನಂ ಕಾನನದೊಳು =[ಪಾರ್ವತಿಯು ತಪಸ್ವಿನಿಯಾಗಿ ತಿಳಿಯಾದಕೊಳದಲ್ಲಿ ಸ್ನಾನಮಾಡಿ ಪ್ರತಿದಿನವೂ ಜಪ, ತಪ, ನಿಯಮ, ಯೋಗಗಳಿಂದ ಅಂತರಾತ್ಮನನ್ನು ಸಕಲ ದೇವತೆಗಳಿಂದ ವಂದಿತನಾದ ಪಾದಪದ್ಮನನ್ನು ಸುಜ್ಞಾನದ ಆಶ್ರಯನನ್ನು ಆ ಕಾಡಿನಲ್ಲಿ ಭಜಿಸಿದಳು].
  • ತಾತ್ಪರ್ಯ:ಇಂದುಧರನಾದ ಶಿವನ ಪಾದದ ಧ್ಯಾನವನ್ನು ಮಾಡುವ ಆನಂದವು ಇನ್ನು ಯಾವಬಗೆಯ ಅತಿಶಯವಾಗಿರುವುದೋ! ಏಕೆಂದರೆ ಅವಳು ಶಿವನ ಅರೆಮೈಯ್ಯಲ್ಲಿ ಎಂದರೆ ಅವನ (ಅರ್ಧನಾರೀಶ್ವರ) ದೇಹದ ಅರ್ಧದಲ್ಲಿ ಶಿವನೊಡನೆ ಒಂದಾಗಿ ಇದ್ದ ಸುಖವನ್ನು ಮರೆತು ಇಲ್ಲಿ ಬೇರೆಯಾಗಿ ಧ್ಯಾನಿಸುತ್ತಿದ್ದಳು . ಪಾರ್ವತಿಯು ತಪಸ್ವಿನಿಯಾಗಿ ತಿಳಿಯಾದ ಕೊಳದಲ್ಲಿ ಸ್ನಾನಮಾಡಿ ಪ್ರತಿದಿನವೂ ಜಪ, ತಪ, ನಿಯಮ, ಯೋಗಗಳಿಂದ ಅಂತರಾತ್ಮನನ್ನು ಸಕಲ ದೇವತೆಗಳಿಂದ ವಂದಿತನಾದ ಪಾದಪದ್ಮನನ್ನು ಸುಜ್ಞಾನದ ಆಶ್ರಯನನ್ನು ಆ ಕಾಡಿನಲ್ಲಿ ಭಜಿಸಿದಳು.
  • (ಪದ್ಯ-೧೬)

ಪದ್ಯ :-:೧೭:[ಸಂಪಾದಿಸಿ]

ಬೀಸದು ಬಿರುಸುಗಾಳಿ ಬಿಸಿಯ ಬಿಸಿಲವನಿಯಂ | ಕಾಸದು ದವಾಗ್ನಿ ಪುಲ್ಗಳೊಳೊಂದನಾದೊಡಂ | ಬೇಸದು ಮುಗಿಲ್ಗಳತಿಭರದಿಂ ಸಿಡಿಲ್ಮಿಂಚುಗಳ ಕೂಡೆ ಪೆರ್ಮಳೆಯನು ||
ಸೂಸದು ತಳೆದ ಪೂತಳಿರ್ಗಳಿಂಪಿನ ಸೊಂಪು | ಮಾಸದು ತರುಗಳಲ್ಲಿ ಪಣ್ಗಾಯ್ಗಳಂ ಬೀಯ | ಲೀಸದು ಸಮಸ್ತ ಋತುಸಮಯಂಗಳಚಲೇಂದ್ರ ತನುಜೆ ತಪಮಿರೆ ಬನದೊಳು ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬೀಸದು ಬಿರುಸುಗಾಳಿ ಬಿಸಿಯ ಬಿಸಿಲು ಅವನಿಯಂ ಕಾಸದು ದವಾಗ್ನಿ ಪುಲ್ಗಳೊಳು ಒಂದನು ಆದೊಡಂ ಬೇಸದು (ಸುಡುವುದಿಲ್ಲ), ಮುಗಿಲ್ಗಳು ಅತಿಭರದಿಂ ಸಿಡಿಲ್ಮಿಂಚುಗಳ ಕೂಡೆ ಪೆರ್ಮಳೆಯನು ಸೂಸದು =[ಪರ್ವತರಾಜನ ಮಗಳು ತಪಸ್ಸು ಮಾಡುತ್ತಿರುವಲ್ಲಿ, ಬಿರುಗಾಳಿ ಬೀಸುವುದಿಲ್ಲ, ಬಿಸಿಲಿನ ಬಿಸಿಯು ಭೂಮಿಯನ್ನು ಕಾಯಿಸುವುದಿಲ್ಲ, ಕಾಡುಗಿಚ್ಚು ಹುಲ್ಲುಗಳೊಂದನ್ನಾದರೂ ಸುಡುವುದಿಲ್ಲ. ಮುಗಿಲು ಅತಿವೇಗವಾಗಿ ಸಿಡಿಲು ಮಿಂಚುಗಳ ಜೊತೆ ದೊಡ್ಡ ಮಳೆಯನ್ನು ಸುರಿಸದು]; ತಳೆದ ಪೂತಳಿರ್ಗಳ ಇಂಪಿನ ಸೊಂಪು ಮಾಸದು ತರುಗಳಲ್ಲಿ ಪಣ್ಗಾಯ್ಗಳಂ ಬೀಯಲೀಸದು ಸಮಸ್ತ ಋತುಸಮಯಂಗಳು ಅಚಲೇಂದ್ರ ತನುಜೆ (ಅಚಲದ-ಬೆಟ್ಟದ ಇಂದ್ರ-ರಾಜನ ತನುಜೆ- ಮಗಳು) ತಪಮಿರೆ ಬನದೊಳು =[ಅಲ್ಲಿ ಭೂಮಿಯ ಮೇಲೆ ಜನ್ಮ ತಳೆದ ಹೂವು, ಚಿಗುರುಗಳ ಹಿತಕೊಡುವ ಸೊಂಪು ಕಡಿಮೆಯಾಗದು. ಮರಗಳಲ್ಲಿ ಹಣ್ಣು ಕಾಯಿಗಳು ಎಲ್ಲಾ ಋತು ಸಮಯಗಳಲ್ಲೂ ಇರುವುವು, ಬೀತುಹೋಗುವುದಿಲ್ಲ. (ಅಚಲೇಂದ್ರ ತನುಜೆ ತಪಮಿರೆ ಬನದೊಳು = ಪರ್ವತರಾಜನ ಮಗಳು ತಪಸ್ಸು ಮಾಡುತ್ತಿರುವಲ್ಲಿ)].
  • ತಾತ್ಪರ್ಯ: ಪರ್ವತರಾಜನ ಮಗಳು ತಪಸ್ಸು ಮಾಡುತ್ತಿರುವಲ್ಲಿ, ಬಿರುಗಾಳಿ ಬೀಸುವುದಿಲ್ಲ, ಬಿಸಿಲಿನ ಬಿಸಿಯು ಭೂಮಿಯನ್ನು ಕಾಯಿಸುವುದಿಲ್ಲ, ಕಾಡುಗಿಚ್ಚು ಹುಲ್ಲುಗಳೊಂದನ್ನಾದರೂ ಸುಡುವುದಿಲ್ಲ. ಮುಗಿಲು ಅತಿವೇಗವಾಗಿ ಸಿಡಿಲು ಮಿಂಚುಗಳ ಜೊತೆ ದೊಡ್ಡ ಮಳೆಯನ್ನು ಸುರಿಸದು; ಅಲ್ಲಿ ಜನ್ಮ ತಳೆದ ಹೂವು, ಚಿಗುರುಗಳ ಹಿತಕೊಡುವ ಸೊಂಪು ಕಡಿಮೆಯಾಗದು. ಮರಗಳಲ್ಲಿ ಹಣ್ಣು ಕಾಯಿಗಳು ಎಲ್ಲಾ ಋತು ಸಮಯಗಳಲ್ಲೂ ಇರುವುವು, ಬೀತುಹೋಗುವುದಿಲ್ಲ.
  • (ಪದ್ಯ-೧೭)

ಪದ್ಯ :-:೧೮:[ಸಂಪಾದಿಸಿ]

ಅಂಚೆಗಳುಡುಗವು ಮಳೆಗಾಲದೊಳ್ ಕೋಗಿಲೆಗ | ಳಿಂಚರವನುಳಿದಿರವು ಮಾಗಿಯೊಳ್ ಬೇಸಗೆಯೊ | ಳಂ ಚಿಗುರಿದೆಳವುಲ್ ಮೃಗಂಗಳ್ಗೆ ಬೀಯದಗಲದು ಚಕ್ರಮಿಥುನಮಿರುಳು ||
ಹೊಂಚದು ಪಗಲ್ ಗೂಗೆ ಸಂಪಗೆಯಲರ್ಗಳಂ | ಚಂಚರೀಕಂಗಳಡರದೆ ಮಾಣವೆಸೆವಕಮ | ಲಂ ಚಂದ್ರನು ದಯಕುತ್ಪಲಮಿನಕಿರಣಕೆ ಬಾಡದು ಬನದೊಳುಮೆ ಯಿರಲ್ಕೆ ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಂಚೆಗಳು ಉಡುಗವು, ಮಳೆಗಾಲದೊಳ್, ಕೋಗಿಲೆಗಳು ಇಂಚರವನು ಉಳಿದಿರವು ಮಾಗಿಯೊಳ್, ಬೇಸಗೆಯೊಳಂ ಚಿಗುರಿದೆಳವುಲ್ ಮೃಗಂಗಳ್ಗೆ ಬೀಯದು,=[ಹಂಸಗಳು ಉಡುಗವು, ಮಳೆಗಾಲ ಬಂದರೂ ತಮ್ಮ ಮೂಲ ಸ್ಥಳಕ್ಕೆ ಬಿಟ್ಟು ಹೋಗುವುದಿಲ್ಲ; ಚಳಿಗಾಲದಲ್ಲೂ ಕೋಗಿಲೆಗಳು ಹಾಡುವುದನ್ನು ಬಿಡುವುದಿಲ್ಲ; ಬೇಸಗೆಯಲ್ಲೂ ಚಿಗುರಿದ ಎಳೆಹುಲ್ಲು ಮೃಗಳಿಗೆ ಬೀಯದು/ ಇಲ್ಲದಂತಾಗದು.]; ಅಗಲದು ಚಕ್ರಮಿಥುನಂ ಇರುಳು, ಹೊಂಚದು ಪಗಲ್ ಗೂಗೆ, ಸಂಪಗೆಯ ಅಲರ್ಗಳಂ ಚಂಚರೀಕಂಗಳು ಎಡರದೆ ಮಾಣವು ಎಸೆವಕಮಲಂ ಚಂದ್ರನ ಉದಯಕೆ ಉತ್ಪಲಂ ಇನಕಿರಣಕೆ ಬಾಡದು ಬನದೊಳು ಉಮೆ ಯಿರಲ್ಕೆ =[ ಚಕ್ರವಾಕ ಮಿಥುನಪಕ್ಷಿಗಳು ಇರುಳು ಅಗಲುವಿದಿಲ್ಲ; ಹೊಂಚದೆ ಇರದು ಗೂಗೆ ಹಗಲೂ ಸಹ, ಜೇನುಗಳು ಸಂಪಗೆಯ ಹೂವುಗಳನ್ನೂ ಸೇರದೆ ಇರವು / ಆದರೂ ಸಾಯವು; ಶೋಭಿಸುವ ಕಮಲವು ಚಂದ್ರನ ಉದಯಕ್ಕೂ ಉತ್ಪಲವು ಸೂರ್ಯ ಕಿರಣಕ್ಕೂ ಬಾಡುವುದಿಲ್ಲ. ಇದೆಲ್ಲಾ ಈ ವನದಲ್ಲಿ ಉಮೆ ಇರುವುದರಿಂದ ಪ್ರಕೃತಿ ವಿರುದ್ಧವಾದ ಜೀವಿಸ್ನೇಹ ಕ್ರಿಯೆ ಆಗುವುದು.]
  • ತಾತ್ಪರ್ಯ: ಹಂಸಗಳು ಉಡುಗವು, ಮಳೆಗಾಲ ಬಂದರೂ ತಮ್ಮ ಮೂಲ ಸ್ಥಳಕ್ಕೆ ಬಿಟ್ಟು ಹೋಗುವುದಿಲ್ಲ; ಚಳಿಗಾಲದಲ್ಲೂ ಕೋಗಿಲೆಗಳು ಹಾಡುವುದನ್ನು ಬಿಡುವುದಿಲ್ಲ; ಬೇಸಗೆಯಲ್ಲೂ ಚಿಗುರಿದ ಎಳೆಹುಲ್ಲು ಮೃಗಳಿಗೆ ಬೀಯದು/ ಇಲ್ಲದಂತಾಗದು. ಚಕ್ರವಾಕ ಮಿಥುನಪಕ್ಷಿಗಳು ಇರುಳು ಅಗಲುವಿದಿಲ್ಲ; ಹೊಂಚದೆ ಇರದು ಗೂಗೆ ಹಗಲೂ ಸಹ, ಜೇನುಗಳು ಸಂಪಗೆಯ ಹೂವುಗಳನ್ನೂ ಸೇರದೆ ಇರವು / ಆದರೂ ಸಾಯವು; ಶೋಭಿಸುವ ಕಮಲವು ಚಂದ್ರನ ಉದಯಕ್ಕೂ ಉತ್ಪಲವು ಸೂರ್ಯ ಕಿರಣಕ್ಕೂ ಬಾಡುವುದಿಲ್ಲ. ಇದೆಲ್ಲಾ ಈ ವನದಲ್ಲಿ ಉಮೆ ಇರುವುದರಿಂದ ಪ್ರಕೃತಿ ವಿರುದ್ಧವಾದ ಜೀವಿಸ್ನೇಹ ಕ್ರಿಯೆ ಆಗುವುದು.
  • (ಪದ್ಯ-೧೮)XVIII

ಪದ್ಯ :-:೧೯:[ಸಂಪಾದಿಸಿ]

ಕಾಡಾನೆಗಳ್ ಕೇಸರಿಗಳ ಮರಿಗಳ್ಗೆ ಮೊಲೆ | ಯೂಡುವುವು ಪುಲ್ಲೆಗಳ್ ಪೆರ್ಬುಲಿಗಳೊಳ್ ಸರಸ | ವಾಡುವುವು ಪಾವು ಮುಂಗುಲಿಗಳೊಡಗೂಡುವುವು ಮೂಷಕಂ ಮೇಲೆ ಬಿದ್ದು ||
ಕಾಡುವುವು ಮಾರ್ಜಾಲಮಂ ಮೊಲಂ ತೋಳನಂ | ಬೇಡುವುವು ಮೇವುಗಳನೊಂದುಬಳಿಯೊಳ್ ಗೂಡು | ಮಾಡುವುವು ಪದ್ದು ಕಾಗಗಳೆಂತೊ ಸಾತ್ವಿಕಮಪರ್ಣೆಯ ತಪೋವನದೊಳು ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾಡಾನೆಗಳ್ ಕೇಸರಿಗಳ ಮರಿಗಳ್ಗೆ ಮೊಲೆಯೂಡುವುವು ಪುಲ್ಲೆಗಳ್ ಪೆರ್ಬುಲಿಗಳೊಳ್ ಸರಸವಾಡುವುವು ಪಾವು ಮುಂಗುಲಿಗಳು ಒಡಗೂಡುವುವು =[ಪಾರ್ವತಿ ತಪಸ್ಸು ಮಾಡುವ ವನದಲ್ಲಿ ಸತ್ವಗುಣ ಪಸರಿಸಿ ಶತ್ರುಭಾವ ಇಲ್ಲವಾಯಿತು ಎಂಬುದಕ್ಕೆ ಉದಾಹರಣೇ: ಕಾಡಾನೆಗಳು ಸಿಂಹಗಳ ಮರಿಗಳಿಗೆ ಮೊಲೆಕೊಡುವುವು; ಜಿಂಕೆಗಳು ಹೆಬ್‍ಹುಲಿಗಳಜೊತೆ ಸರಸವಾಡುವುವು; ಹಾವು ಮುಂಗುಲಿಗಳು ಒಟ್ಟುಗೂಡುವುವು; ]; ಮೂಷಕಂ ಮೇಲೆ ಬಿದ್ದು ಕಾಡುವುವು ಮಾರ್ಜಾಲಮಂ ಮೊಲಂ ತೋಳನಂ ಬೇಡುವುವು ಮೇವುಗಳನು ಒಂದುಬಳಿಯೊಳ್ ಗೂಡು ಮಾಡುವುವು ಪದ್ದು ಕಾಗಗಳೆಂತೊ ಸಾತ್ವಿಕಂ ಅಪರ್ಣೆಯ ತಪೋವನದೊಳು =[ಇಲಿಗಳು ಬೆಕ್ಕಿನ ಮೇಲೆ ಬಿದ್ದು ಕಾಡುವುವು; ಮೊಲಗಳು ತೋಳಗಳನ್ನು ಆಹಾರಕ್ಕಾಗಿ ಬೇಡುವುವು; ಹದ್ದು ಕಾಗಗಳು ಒಂದೇ ಕಡೆ ಗೂಡು ಮಾಡುವುವು, ಅದು ಎಷ್ಟು ಸಾತ್ವಿಕ ಭಾವವೋ ಅಪರ್ಣೆಯ ತಪೋವನದಲ್ಲಿ ಎಂದು ಮುನಿ ನುಡಿದನು.]
  • ತಾತ್ಪರ್ಯ: ಪಾರ್ವತಿ ತಪಸ್ಸು ಮಾಡುವ ವನದಲ್ಲಿ ಸತ್ವಗುಣ ಪಸರಿಸಿ ಶತ್ರುಭಾವ ಇಲ್ಲವಾಯಿತು ಎಂಬುದಕ್ಕೆ ಉದಾಹರಣೇ: ಕಾಡಾನೆಗಳು ಸಿಂಹಗಳ ಮರಿಗಳಿಗೆ ಮೊಲೆಕೊಡುವುವು; ಜಿಂಕೆಗಳು ಹೆಬ್‍ಹುಲಿಗಳಜೊತೆ ಸರಸವಾಡುವುವು; ಹಾವು ಮುಂಗುಲಿಗಳು ಒಟ್ಟುಗೂಡುವುವು; ಇಲಿಗಳು ಬೆಕ್ಕಿನ ಮೇಲೆ ಬಿದ್ದು ಕಾಡುವುವು; ಮೊಲಗಳು ತೋಳಗಳನ್ನು ಆಹಾರಕ್ಕಾಗಿ ಬೇಡುವುವು; ಹದ್ದು ಕಾಗಗಳು ಒಂದೇ ಕಡೆ ಗೂಡು ಮಾಡುವುವು, ಅದು ಎಷ್ಟು ಸಾತ್ವಿಕ ಭಾವವೋ ಅಪರ್ಣೆಯ ತಪೋವನದಲ್ಲಿ ಎಂದು ಮುನಿ ನುಡಿದನು.
  • (ಪದ್ಯ-೧೯)

ಪದ್ಯ :-:೨೦:[ಸಂಪಾದಿಸಿ]

ಪರಿಚರ್ಯೆಯಂ ಮಾಡುವುವು ಕೋಡಗಂಗಳಿ | ರ್ದರಗಿಳಿಗಳಾಡುವುವು ಕೂಡೆ ಸರಸೋಕ್ತಿಯಂ | ಬರಿಕೈಗಳಂ ನೀಡಿ ಪಣ್ಗಾಯಲರ್ಗಳಂ ದಂತಿಗಳ್ ಕುಡುತಿರ್ಪುವು ||
ಪಿರಿದು ಬಯಸಿದ ವಸ್ತುಗಳನಿತ್ತಪುವು ಕಲ್ಪ |ತರುಗಳೆಡೆಯಾಟದಾಸರ್ಗಳಂ ಕಳೆದಪುವು| ಪರಿಮಳದಲರ್ಗಳಗಜೆಯ ತಪೋವನದೊಳಾವಾಸಮಾಗಿರ್ಪವರ್ಗೆ ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪರಿಚರ್ಯೆಯಂ ಮಾಡುವುವು ಕೋಡಗಂಗಳು ಇರ್ದರಗಿಳಿಗಳಾಡುವುವು ಕೂಡೆ ಸರಸೋಕ್ತಿಯಂ ಬರಿಕೈಗಳಂ ನೀಡಿ ಪಣ್ಗಾಯಲರ್ಗಳಂ ದಂತಿಗಳ್ ಕುಡುತಿರ್ಪುವು =[ಪಾರ್ವತಿಯ ತಪೋವನದಲ್ಲಿ ವಾಸವಾಗಿರುವವರಿಗೆ, ಸೇವೆ ಮಾಡುತ್ತವೆ ಕಪಿಗಳು;ಇದ್ದ ಅರಗಿಳಿಗಳು ಅವರೊಡನೆ ಸರಸೋಕ್ತಿಯ ಮಾತಾಡುತ್ತವೆ; ಬೆರಳಿಲ್ಲದ ಸೊಂಡಿಲ ಬರಿಕೈಗಳಿಂದ ನೀಡಿ ಹಣ್ಗು ಕಾಯಿ ಹೂವುಗಳನ್ನು ದಂತಿ/ ಆನೆಗಳು ಕೊಡುತ್ತಿರುವುವು]; ಪಿರಿದು ಬಯಸಿದ ವಸ್ತುಗಳನು ಇತ್ತಪುವು ಕಲ್ಪ ತರುಗಳು ಎಡೆಯಾಟದ ಆಸರ್ಗಳಂ ಕಳೆದಪುವು ಪರಿಮಳದ ಅಲರ್ಗಳ (ಅಗಜೆಯ ತಪೋವನದೊಳು ಆವಾಸಮಾಗಿ ಇರ್ಪವರ್ಗೆ =[ಹೆಚ್ಚಾಗಿ ಬಯಸಿದ ವಸ್ತುಗಳನ್ನೂ (ಪಾರ್ವತಿಯ ಬಳಿ ದೇವಲೋಕದಿಂದ ಬಂದುನೆಲಸಿದ) ಕಲ್ಪ ವೃಕ್ಷಗಳು ಕೊಡುಪುವು; ತಿರುಗಾಟದ ಅಯಾಸಗಳನ್ನೂ, ಬಾಯಾರಿಕೆಯನ್ನೂ ಹೋಗಲಾಡಿಸುತ್ತಿದ್ದವು ಪರಿಮಳದ ತಂಗಾಳಿಗಳು. (ಅಗಜೆಯ ತಪೋವನದೊಳು ಆವಾಸಮಾಗಿ ಇರ್ಪವರ್ಗೆ=<-ಪಾರ್ವತಿಯ ತಪೋವನದಲ್ಲಿ ವಾಸವಾಗಿರುವವರಿಗೆ <- ].
  • ತಾತ್ಪರ್ಯ:ಪಾರ್ವತಿಯ ತಪೋವನದಲ್ಲಿ ವಾಸವಾಗಿರುವವರಿಗೆ, ಸೇವೆ ಮಾಡುತ್ತವೆ ಕಪಿಗಳು;ಇದ್ದ ಅರಗಿಳಿಗಳು ಅವರೊಡನೆ ಸರಸೋಕ್ತಿಯ ಮಾತಾಡುತ್ತವೆ; ಬೆರಳಿಲ್ಲದ ಸೊಂಡಿಲ ಬರಿಕೈಗಳನ್ನು ನೀಡಿ ದಂತಿ/ ಆನೆಗಳು ಹಣ್ಗು ಕಾಯಿ ಹೂವುಗಳನ್ನು ಕೊಡುತ್ತಿರುವುವು; ಪಾರ್ವತಿಯ ಬಳಿ ದೇವಲೋಕದಿಂದ ಬಂದು ನೆಲಸಿದ ಕಲ್ಪ ವೃಕ್ಷಗಳು ಹೆಚ್ಚಾಗಿ ಬಯಸಿದ ವಸ್ತುಗಳನ್ನೂ ಕೊಡುಪುವು; ತಿರುಗಾಟದ ಅಯಾಸಗಳನ್ನೂ, ಬಾಯಾರಿಕೆಯನ್ನೂ ಹೋಗಲಾಡಿಸುತ್ತಿದ್ದವು ಪರಿಮಳದ ತಂಗಾಳಿಗಳು.
  • (ಪದ್ಯ-೨೦)

ಪದ್ಯ :-:೨೧:[ಸಂಪಾದಿಸಿ]

ಅಷ್ಟ ಯೋಗಿನಿಯರಣಿಮಾದಿಗಳ್ ವಿನುತ ಚೌ | ಷಷ್ಟಿಕಲೆಗಳ್ ಸಪ್ತಮಾತೃಗಳ್ ಜಗದೊಳು | ತ್ಕೃಷ್ಟನದಿಗಳ್ ದಿವಾರಾತ್ರಿಗಳ್ ತಿಥಿತಾರಕಾಪ್ಸರೋವಿಸರಂಗಳು ||
ತುಷ್ಟಿನಯೆ ಪುಷ್ಟಿ ಧೃತಿ ಮತಿ ಶಾಂತಿ (ದಾಂತಿ) ಕೃತಿ | ನಿಷ್ಠೆ ನುತಿಗಳ್ ಸಕಲವರಮಂತ್ರಶಕ್ತಿಗಳ್ | ಸೃಷ್ಟಿಯ ಸಮಸ್ತಾಭಿಮಾನದೇವತೆಯರಿರ್ದರು ದೇವಿಯಂ ಸೇವೆಸಿ ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಷ್ಟ ಯೋಗಿನಿಯರು ಅಣಿಮಾದಿಗಳ್ ವಿನುತ ಚೌಷಷ್ಟಿಕಲೆಗಳ್ ಸಪ್ತಮಾತೃಗಳ್ ಜಗದೊಳು ಉತ್ಕೃಷ್ಟ ನದಿಗಳ್ ದಿವಾರಾತ್ರಿಗಳ್ ತಿಥಿ ತಾರಕ ಅಪ್ಸರಾ ಓವಿ ಸರಂಗಳು =[ಅಷ್ಟ ಯೋಗಿನಿಯರು, ಅಣಿಮಾದಿ ಅಷ್ಟ ಸಿದ್ಧಿಗಳು, ವಿನುತ ಚೌಷಷ್ಟಿ (೬೪)ಕಲೆಗಳು/ವಿದ್ಯೆಗಳು, ಸಪ್ತಮಾತೃಕಾ ದೇವತೆಗಳು, ಜಗದ ಉತ್ಕೃಷ್ಟ ನದಿಗಳು, ದಿವಾರಾತ್ರಿಗಳು, ತಿಥಿ ತಾರಕ (ನಕ್ಷತ್ರ) ಅಪ್ಸರೆಯರು ಅವರು ಇರುವ ಸರೋವರಗಳು]; ತುಷ್ಟಿನಯೆ ಪುಷ್ಟಿ ಧೃತಿ ಮತಿ ಶಾಂತಿ (ದಾಂತಿ) ಕೃತಿ ನಿಷ್ಠೆ ನುತಿಗಳ್ ಸಕಲ ವರಮಂತ್ರ ಶಕ್ತಿಗಳ್ ಸೃಷ್ಟಿಯ ಸಮಸ್ತ ಅಭಿಮಾನದೇವತೆಯರು ಇರ್ದರು ದೇವಿಯಂ ಸೇವೆಸಿ =[ತುಷ್ಟಿ ನಯೆ ಪುಷ್ಟಿ ಧೃತಿ ಮತಿ ಶಾಂತಿ (ದಾಂತಿ) ಕೃತಿ ನಿಷ್ಠೆ ನುತಿಗಳ್ ಈ ಸಕಲ ಸದ್ಗುಣಗಳು, ಶ್ರೇಷ್ಠಮಂತ್ರ ಶಕ್ತಿಗಳು, ಸೃಷ್ಟಿಯ ಸಮಸ್ತ ಅಭಿಮಾನ ದೇವತೆಯರು, ಆ ಪಾರ್ವತೀ ದೇವಿಯನ್ನು ಸೇವೆಮಾಡಿಕೊಂಡು ಇದ್ದರು ].
  • ತಾತ್ಪರ್ಯ:ಅಷ್ಟ ಯೋಗಿನಿಯರು, ಅಣಿಮಾದಿ ಅಷ್ಟ ಸಿದ್ಧಿಗಳು, ವಿನುತ ಚೌಷಷ್ಟಿ (೬೪)ಕಲೆಗಳು/ವಿದ್ಯೆಗಳು, ಸಪ್ತಮಾತೃಕಾ ದೇವತೆಗಳು, ಜಗದ ಉತ್ಕೃಷ್ಟ ನದಿಗಳು, ದಿವಾರಾತ್ರಿಗಳು, ತಿಥಿ ತಾರಕ (ನಕ್ಷತ್ರ) ಅಪ್ಸರೆಯರು ಅವರು ಇರುವ ಸರೋವರಗಳು, ತುಷ್ಟಿ ನಯೆ ಪುಷ್ಟಿ ಧೃತಿ ಮತಿ ಶಾಂತಿ (ದಾಂತಿ) ಕೃತಿ ನಿಷ್ಠೆ ನುತಿಗಳ್ ಈ ಸಕಲ ಸದ್ಗುಣಗಳು, ಶ್ರೇಷ್ಠಮಂತ್ರ ಶಕ್ತಿಗಳು, ಸೃಷ್ಟಿಯ ಸಮಸ್ತ ಅಭಿಮಾನ ದೇವತೆಯರು, ಆ ಪಾರ್ವತೀ ದೇವಿಯನ್ನು ಸೇವೆಮಾಡಿಕೊಂಡು ಇದ್ದರು.
  • (ಪದ್ಯ-೨೧)

ಪದ್ಯ :-:೨೨:[ಸಂಪಾದಿಸಿ]

ಆ ವನದೆಒಳೆಸಗಿದಳ್ ಪಾವನಚರಿತ್ರನ ಕೃ | ಪಾವನಧಿಯಂ ವಿಶ್ವಭಾವನನ (ಸಂಭಾವನನ) ಭಕ್ತಸಂ | ಜೀವನನ ತ್ರಿಜಗಮಂ ಕಾವನ ಸುವಾಂಛಿತವನೀವನ ಹಿಮಾಂಶುಧರನ ||
ದೇವ ನರ ನಾಗ ದೈತ್ಯಾವನತ ಪಾದರಾ | ಜೀವನ ಭವಾಂಭೋಧಿನಾವನ ದುರಿತ ವಿಪಿನ | ದಾವನ ಕಲಿತ ವಿಷಗ್ರೀವನ ಶಿವನ ಮಹಾದೇವನ ಭಜನೆಯನಗಜೆ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ವನದೊಳ್ ಎಸಗಿದಳ್/ಮಾಡಿದಳು ಪಾವನಚರಿತ್ರನ ಕೃಪಾವನಧಿಯಂ ವಿಶ್ವಭಾವನನ (ಸಂಭಾವನನ) ಭಕ್ತಸಂಜೀವನನ ತ್ರಿಜಗಮಂ ಕಾವನ ಸುವಾಂಛಿತವನು ಈವನ( ಯೋಗ್ಯವಾದುದನ್ನು ಕೇಳಿದಾಗ ಕೊಡುವವ) ಹಿಮಾಂಶುಧರನ =[ಆ ವನದಲ್ಲಿ ಪಾವನಚರಿತ್ರನನ್ನು, ಕೃಪಾವನಧಿಯನ್ನು, ವಿಶ್ವಭಾವನನ್ನು, (ಸಂಭಾವನನ್ನು), ಭಕ್ತಸಂಜೀವನನ್ನು, ತ್ರಿಜಗವನ್ನು ಕಾಯುವವನನ್ನು, ಸುವಾಂಛಿತವನೀವನನ್ನು, ಹಿಮಾಂಶು (ಚಂದ್ರ)ಧರನನ್ನು ]; ದೇವ ನರ ನಾಗ ದೈತ್ಯ ಅವನತ ಪಾದರಾಜೀವನ ಭವಾಂಭೋಧಿನಾವನ (ಭವ/ ಸಂಸಾರ+ ಅಂಬುಧಿ/ ಸಾಗರ -ನಾವ/ ದಾಟಿಸುವ ನಾವೆ)) ದುರಿತ ವಿಪಿನದಾವನ ಕಲಿತ ವಿಷಗ್ರೀವನ ಶಿವನ ಮಹಾದೇವನ ಭಜನೆಯನು ಅಗಜೆ =[ದೇವ ನರ ನಾಗ ದೈತ್ಯರು ನಮಸ್ಕರಿಸುವ ಪಾದಪದ್ಮನೂ ಭವಾಂಭೋಧಿನಾವನನ್ನು, ಪಾಪದ ಅರಣ್ಯದ ಬೆಂಕಿಯಾದವನನ್ನು, ವಿಷವನ್ನು ಕಂಠದಲ್ಲಿ ಸೇರಿಸಿಕೊಂಡ ವಿಷಗ್ರೀವನನ್ನು, ಶಿವನ ಮಹಾದೇವನನ್ನು ಭಜನೆಯನ್ನು/ ಧ್ಯಾನವನ್ನು ಅಗಜೆ/ ಪಾರ್ವತಿ ಮಾಡಿದಳು.].
  • ತಾತ್ಪರ್ಯ:ಆ ವನದಲ್ಲಿ ಪಾವನಚರಿತ್ರನನ್ನು, ಕೃಪಾವನಧಿಯನ್ನು, ವಿಶ್ವಭಾವನನ್ನು, (ಸಂಭಾವನನ್ನು), ಭಕ್ತಸಂಜೀವನನ್ನು, ತ್ರಿಜಗವನ್ನು ಕಾಯುವವನನ್ನು, ಸುವಾಂಛಿತವನೀವನನ್ನು, ಹಿಮಾಂಶು (ಚಂದ್ರ)ಧರನನ್ನು, ದೇವ ನರ ನಾಗ ದೈತ್ಯರು ನಮಸ್ಕರಿಸುವ ಪಾದಪದ್ಮನೂ ಭವಾಂಭೋಧಿನಾವನನ್ನು, ಪಾಪದ ಅರಣ್ಯದ ಬೆಂಕಿಯಾದವನನ್ನು, ವಿಷವನ್ನು ಕಂಠದಲ್ಲಿ ಸೇರಿಸಿಕೊಂಡ ವಿಷಗ್ರೀವನನ್ನು, ಶಿವನ ಮಹಾದೇವನನ್ನು ಭಜನೆಯನ್ನು/ ಧ್ಯಾನವನ್ನು, ಅಗಜೆ/ ಪಾರ್ವತಿ ಮಾಡಿದಳು.
  • (ಪದ್ಯ-೨೨)

ಪದ್ಯ :-:೨೩:[ಸಂಪಾದಿಸಿ]

ನಿಜನಿರ್ಮಲಿತರೂಪನಂ ಪೂರ್ವಪೂರ್ವನಂ | ಗಜ ದಾನವ ಧ್ವಂಸಿಯಂ ಕಾಲಕಾಲನಂ | ರಜನೀಶ ಕೋಟೀರನಂ ಭಕ್ತಭಕ್ತನಂ ಬಹಳ ತೇಜೋಮಯನನು ||
ಅಜಿನಾಂಬರನನಖಿಳದಿಕ್ಷಾಲ ಪಾಲನಂ | ಭುಜಗ ಧರನಂ ಸಖೀಕೃತ ರಾಜ ರಾಜನಂ | ಸುಜನರಕ್ಷಾ ಶೀಲನಂ ದೇವದೇವನಂ ಭಜಿಸಿದಳಗಜೆ ಬನದೊಳು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಿಜನಿರ್ಮಲಿತರೂಪನಂ ಪೂರ್ವಪೂರ್ವನಂ ಗಜ ದಾನವ ಧ್ವಂಸಿಯಂ ಕಾಲಕಾಲನಂ ರಜನೀಶ ಕೋಟೀರನಂ(ರಜ-ಚಂದ್ರ ಧರ-ಈಶ ಕೋಟೀರ ಕಿರೀಟವಾಗಿಧರಿಸದವ) ಭಕ್ತಭಕ್ತನಂ ಬಹಳ ತೇಜೋಮಯನನು =[ನಿರ್ಮಲ ಸತ್ಯ ರೂಪನನ್ನು, ಪೂರ್ವಕ್ಕೂ ಪೂರ್ವನು / ಹಿಂದಿನವನು/ ಅನಾದಿಪುರುಷನನ್ನು, ಗಜ ದಾನವ ಧ್ವಂಸಮಾಡಿದವನನ್ನು, ಕಾಲನಾದ ಮೃತ್ಯುವನ್ನೂ ಮೀರಿದಕಾಲಪುರುಷನನ್ನು, ಚಂದ್ರಧರನಾದ ರಜನೀಶ ಕೋಟೀರನನ್ನು, ಭಕ್ತರಭಕ್ತನನ್ನು, ಬಹಳ ತೇಜೋಮಯನನ್ನು]; ಅಜಿನ ಅಂಬರನನು ಅಖಿಳ ದಿಕ್ಷಾಲ ಪಾಲನಂ ಭುಜಗ ಧರನಂ ಸಖೀಕೃತ ರಾಜ ರಾಜನಂ ಸುಜನರಕ್ಷಾ ಶೀಲನಂ ದೇವದೇವನಂ ಭಜಿಸಿದಳಗಜೆ ಬನದೊಳು =[ಚರ್ಮದ ಅಂಬರ ಬಟ್ಟೆ /ತೊಟ್ಟವನನ್ನು, ಅಖಿಲ ದಿಕ್ಕುಗಳ ಪಾಲನೆಮಅಡುವವನನ್ನು, ಹಾವನ್ನು ಧರಿಸಿ ಸ್ನೇಹಮಅಡಿಕೊಂಡವನನ್ನು, ರಾಜರಿಗೆ ರಾಜನನನ್ನು, ಸುಜನರಕ್ಷಾ ಶೀಲನನ್ನು ದೇವದೇವನನ್ನು, ಭಜಿಸಿದಳು ಅಗಜೆ/ ಪಾರ್ವತಿ ವನದಲ್ಲಿ].
  • ತಾತ್ಪರ್ಯ: ನಿರ್ಮಲ ಸತ್ಯ ರೂಪನನ್ನು, ಪೂರ್ವಕ್ಕೂ ಪೂರ್ವನು / ಹಿಂದಿನವನು/ ಅನಾದಿಪುರುಷನನ್ನು, ಗಜ ದಾನವ ಧ್ವಂಸಮಾಡಿದವನನ್ನು, ಕಾಲನಾದ ಮೃತ್ಯುವನ್ನೂ ಮೀರಿದಕಾಲಪುರುಷನನ್ನು, ಚಂದ್ರಧರನಾದ ರಜನೀಶ ಕೋಟೀರನನ್ನು, ಭಕ್ತರಭಕ್ತನನ್ನು, ಬಹಳ ತೇಜೋಮಯನನ್ನು, ಚರ್ಮದ ಅಂಬರ ಬಟ್ಟೆ /ತೊಟ್ಟವನನ್ನು, ಅಖಿಲ ದಿಕ್ಕುಗಳ ಪಾಲನೆ ಮಾಡುವವನನ್ನು, ಹಾವನ್ನು ಧರಿಸಿ ಸ್ನೇಹಮಾಡಿಕೊಂಡವನನ್ನು, ರಾಜರಿಗೆ ರಾಜನನನ್ನು, ಸುಜನರಕ್ಷಾ ಶೀಲನನ್ನು ದೇವದೇವನನ್ನು, ಅಗಜೆ/ಪಾರ್ವತಿ ವನದಲ್ಲಿ ಭಜಿಸಿದಳು.
  • (ಪದ್ಯ-೨೩)

ಪದ್ಯ :-:೨೪:[ಸಂಪಾದಿಸಿ]

ಅಗುರು ಚಂದನ ಸುಗಂಧಾಕ್ಷತೆಯ ಪರಿಮಳದ | ಬಗೆಬಗೆಯ ಬಿರಿಮುಗಳ ಮಂಜರಿಯ ಗುಗ್ಳುಳದ | ಪೊಗೆಯ ಧೂಪದ ಬಹಳವರ್ತಿಗಳ ಕರ್ಪೂರ ನೀರಾಜನದ ಕಂಪಿನ ||
ಒಗುಮಿಗೆಯ ವಿವಿಧೋಪಹಾರದ ಸುವಾಸಿತದ | ಮೊಗವಾಸದಮಲ ತಾಂಬೂಲದ ಪರಿಕ್ರಮದ | ಸೊಗಸಿನ ಕೃತೋಪಚಾರಂಗಳಿಂದರ್ಚಿಸಿದಳಭವನಂ ಕಾತ್ಯಾಯಿನಿ ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾತ್ಯಾಯಿನಿ ಶಿವನನ್ನು ಪೂಜಿಸುವಳು, ಹೇಗೆಂದರೆ:ಅಗುರು ಚಂದನ ಸುಗಂಧಾಕ್ಷತೆಯ ಪರಿಮಳದ ಬಗೆಬಗೆಯ ಬಿರಿಮುಗಳ ಮಂಜರಿಯ ಗುಗ್ಳುಳದ ಪೊಗೆಯ ಧೂಪದ ಬಹಳವರ್ತಿಗಳ ಕರ್ಪೂರ ನೀರಾಜನದ ಕಂಪಿನ =[ಅಗುರು ಚಂದನ ಸುಗಂಧಾಕ್ಷತೆಯ ಪರಿಮಳದ ನಾನಾ ಬಗೆಯ ಅರೆಅರಳಿದ ಹೂವುಗಳ, ಮಂಜರಿಯ /ಹೂದಂಡೆಗಳಿಂದ, ಗುಗ್ಗುಳ /ಹಾಲು ಮಡ್ಡಿ, ಸಾಂಬ್ರಾಣಿ ಹೊಗೆಯ, ಧೂಪದ ಬಹಳ ಬತ್ತಿಗಳ ಕರ್ಪೂರ ನೀರಾಜನದ ಕಂಪಿನ/ಸುವಾಸನೆಯ ಇವುಗಳನ್ನು ಅರ್ಪಿಸಿ, ಮತ್ತೂ]; ಒಗುಮಿಗೆಯ ವಿವಿಧೋಪಹಾರದ ಸುವಾಸಿತದ ಮೊಗವಾಸದಮಲ ತಾಂಬೂಲದ ಪರಿಕ್ರಮದ ಸೊಗಸಿನ ಕೃತೋಪಚಾರಂಗಳಿಂದರ್ಚಿಸಿದಳಭವನಂ ಕಾತ್ಯಾಯಿನಿ =[ಒಂದಕ್ಕಿಂತ ಮತ್ತೊಂದು ಹೆಚ್ಚಿನದಾದ ವಿವಿಧ ಉಪಹಾರದ ಸುವಾಸಿತದ ಮೊಗವಾಸ/ಬಾಯಿ ಸುವಾಸನೆಯಾಗುವ ಅಮಲ ತಾಂಬೂಲದ ಪರಿಕ್ರಮ/ ಸುತ್ತುವರಿದ ಸೊಗಸಿನ ಕೃತೋಪಚಾರಂಗಳಿಂದ ಕೃತ ಉಪಚಾರಗಳಿಂದ ಅಭವ/ ಸಾವಿಲ್ಲದವನಾದ ಶಿವನನ್ನು ಕಾತ್ಯಾಯಿನಿ ಅರ್ಚಿಸಿದಳು.{ಅರ್ಚನೆಗೆ ಪಂಚ (೫) ಉಪಚಾರ; ಷೋಡಶ (೧೬) ಉಪಚಾರ; ದ್ವಾತ್ರಿಂಶತಿ (೩೨)ಉಪಚಾರ; ಚೌಷಷಷ್ಟಿ (೬೪) ಉಪಚಾರ ಎಂಬ ಬಗೆಗಳುಂಟು. ಇದರಲ್ಲಿ ಒಂದು ಬಗೆಯ ಉಪಚಾರ ಕ್ರಮದಿಂದ ಪೂಜಿಸಿದಳು ಎಂದು ಭಾವಿಸಬಹುದು}
  • ತಾತ್ಪರ್ಯ: ಕಾತ್ಯಾಯಿನಿ ಶಿವನನ್ನು ಪೂಜಿಸುವಳು, ಹೇಗೆಂದರೆ: ಅಗುರು ಚಂದನ ಸುಗಂಧಾಕ್ಷತೆಯ ಪರಿಮಳದ ನಾನಾ ಬಗೆಯ ಅರೆಅರಳಿದ ಹೂವುಗಳ, ಮಂಜರಿಯ /ಹೂದಂಡೆಗಳಿಂದ, ಗುಗ್ಗುಳ /ಹಾಲು ಮಡ್ಡಿ, ಸಾಂಬ್ರಾಣಿ ಹೊಗೆಯ, ಧೂಪದ ಬಹಳ ಬತ್ತಿಗಳ ಕರ್ಪೂರ ನೀರಾಜನದ ಕಂಪಿನ/ಸುವಾಸನೆಯ ಇವುಗಳನ್ನು ಅರ್ಪಿಸಿ, ಮತ್ತೂ, ಒಂದಕ್ಕಿಂತ ಮತ್ತೊಂದು ಹೆಚ್ಚಿನದಾದ ವಿವಿಧ ಉಪಹಾರದ ಸುವಾಸಿತದ ಮೊಗವಾಸ/ಬಾಯಿ ಸುವಾಸನೆಯಾಗುವ ಅಮಲ ತಾಂಬೂಲದ ಪರಿಕ್ರಮ/ ಸುತ್ತುವರಿದ ಸೊಗಸಿನ ಕೃತೋಪಚಾರಂಗಳಿಂದ ಕೃತ ಉಪಚಾರಗಳಿಂದ ಅಭವ/ ಸಾವಿಲ್ಲದವನಾದ ಶಿವನನ್ನು ಕಾತ್ಯಾಯಿನಿ ಅರ್ಚಿಸಿದಳು.
  • (ಪದ್ಯ-೨೪)

ಪದ್ಯ :-:೨೫:[ಸಂಪಾದಿಸಿ]

ಮೋಕ್ಷದಾಯಕಿ ಸಕಲಮಂತ್ರನಾಯಕಿ ಮಾಯೆ | ಸಾಕ್ಷಾಜ್ಜಗನ್ಮಾತೆ ನಿಜಶಕ್ತಿ ತಾನೆಂಬ | ದಾಕ್ಷಾಯಣಿಗೆ ತಪಮಿದೇಕೆಂದು ಪಂಕಜಭವಾದಿ ನಿರ್ಜರಮುಖ್ಯರು |
ಆಕ್ಷೇಪಿಸಲ್ಕೆ ವಿಪಿನದೊಳಿಂತು ಬಿಡದೆ ಭಾ | ಳಾಕ್ಷನಂ ಧ್ಯಾನಿಸುತೆ ಗಿರೆಜೆಯಿರುತಿರಲೋರ್ವ | ರಾಕ್ಷಸಂ ಕಾಂತಾರಮಂ ತಿರುಗುತೈತಂದು ಕಂಡನಾ ಪಾರ್ವತಿಯನು||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೋಕ್ಷದಾಯಕಿ ಸಕಲಮಂತ್ರನಾಯಕಿ ಮಾಯೆ ಸಾಕ್ಷಾಜ್ಜಗನ್ಮಾತೆ ನಿಜಶಕ್ತಿ ತಾನೆಂಬ ದಾಕ್ಷಾಯಣಿಗೆ ತಪಂ ಇದು ಏಕೆಂದು ಪಂಕಜಭವ (ಕಮಲದಲ್ಲಿ ಹುಟ್ಟಿದವ) ಆದಿ ನಿರ್ಜರಮುಖ್ಯರು ಆಕ್ಷೇಪಿಸಲ್ಕೆ=[ಮೋಕ್ಷ ಕೊಡುವವಳು, ಸಕಲಮಂತ್ರಗಳಿಗೆ ಅಧಿದೇವತೆ, ಮಾಯೆ = ಪ್ರಕೃತಿಯ ಮೂಲತತ್ವಸ್ವರೂಪಳು, ಸಾಕ್ಷಾತ್ ಜಗನ್ಮಾತೆ, ವಿಶ್ವವನ್ನು ಆವರಿಸಿದ ನಿಜಶಕ್ತಿ ತಾನೇ ಎಂಬ ದಾಕ್ಷಾಯಣಿಗೆ ಈ ತಪಸ್ಸು ಏಕೆ ಎಂದು ಬ್ರಹ್ಮನೇ ಮೊದಲಾದ ದೇವತೆಗಳ ಮುಖ್ಯರು ಆಕ್ಷೇಪಿಸುತ್ತಿದ್ದರು, ಆಗ,]; ಆಕ್ಷೇಪಿಸಲ್ಕೆ ವಿಪಿನದೊಳು ಇಂತು ಬಿಡದೆ ಭಾಳಾಕ್ಷನಂ ಧ್ಯಾನಿಸುತೆ ಗಿರೆಜೆಯಿರುತಿರಲು ಓರ್ವ ರಾಕ್ಷಸಂ ಕಾಂತಾರಮಂ ತಿರುಗುತ ಐತಂದು ಕಂಡನು ಆ ಪಾರ್ವತಿಯನು =[ಕಾಡಿನಲ್ಲಿ ಹೀಗೆ ಬಿಡದೆ ಹಣೆಗಣ್ಣ / ಶಿವನನ್ನು ಧ್ಯಾನಿಸುತ್ತಾ ಗಿರೆಜೆ ಇರುತ್ತಿರಲು ಒಬ್ಬ ರಾಕ್ಷಸನು ವನದಲ್ಲಿ ಸಂಚರಿಸುವಾಗ ಪಾರ್ವತಿಯನು ಬಂದು ಕಂಡನು.].
  • ತಾತ್ಪರ್ಯ:ಮೋಕ್ಷ ಕೊಡುವವಳು, ಸಕಲಮಂತ್ರಗಳಿಗೆ ಅಧಿದೇವತೆ, ಮಾಯೆ/ ಪ್ರಕೃತಿಯ ಮೂಲತತ್ವ ಸ್ವರೂಪಳು, ಸಾಕ್ಷಾತ್ ಜಗನ್ಮಾತೆ, ವಿಶ್ವವನ್ನು ಆವರಿಸಿದ ನಿಜಶಕ್ತಿ ತಾನೇ ಎಂಬ ದಾಕ್ಷಾಯಣಿಗೆ ಈ ತಪಸ್ಸು ಏಕೆ ಎಂದು ಬ್ರಹ್ಮನೇ ಮೊದಲಾದ ದೇವತೆಗಳ ಮುಖ್ಯರು ಆಕ್ಷೇಪಿಸುತ್ತಿದ್ದರು, ಆಗ, ಕಾಡಿನಲ್ಲಿ ಹೀಗೆ ಹಣೆಗಣ್ಣ / ಶಿವನನ್ನು ಬಿಡದೆ ಧ್ಯಾನಿಸುತ್ತಾ ಗಿರೆಜೆ ಇರುತ್ತಿರಲು ಒಬ್ಬ ರಾಕ್ಷಸನು ವನದಲ್ಲಿ ಸಂಚರಿಸುವಾಗ ಪಾರ್ವತಿಯನು ಬಂದು ಕಂಡನು.
  • (ಪದ್ಯ-೨೫)

ಪದ್ಯ :-:೨೬:[ಸಂಪಾದಿಸಿ]

ಹೈಮವತಿಯಂ ಕಾಣುತಭಿವಂದಿಸದೆ ಖಳಂ | ಕೈಮಾಡುವಂಗಜನ ಪೂಗೋಲ ಗಾಯದಿಂ | ಮೈಮರೆದು ಕಾತರಿಸಿ ಮುಂದುಗೆಟ್ಟೆದೆಯಾರಿ ಬೇಟದ ಕಟಕಿಗಳಿಂದೆ ||
ಐಮೊಗನ ರಾಣಿಯಂ ನುಡಿಸಿದೊಡೆ ಭೂಪ ಕೇ|ಳೈ ಮುಳಿದು ನೋಡಿದಳ್ ಭುವನಮಾತೆಯ ಖತಿಯ | ವೈಮನಸ್ಯದೊಳುಳಿವರಾರಸುರನುರಿದು ಪೋದಂ ಕೂಡೆ ಬೂದಿಯಾಗಿ ||26|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹೈಮವತಿಯಂ ಕಾಣುತ ಅಭಿವಂದಿಸದೆ ಖಳಂ ಕೈಮಾಡುವ ಅಂಗಜನ ಪೂಗೋಲ ಗಾಯದಿಂ ಮೈಮರೆದು ಕಾತರಿಸಿ =[ಹಿಮವಂತನ ಮಗಳಾದ ಹೈಮವತಿಯನ್ನು ನೋಡಿ, ಅವಳಿಗೆ ನಮಸ್ಕರಿಸದೆ, ದುಷ್ಟನು, ಸದಾ ಹೊಡೆಯುವ ಮನ್ಮಥನ ಹೂಬಾಣದಿಂದ ಹೃದಯದಲ್ಲಿ ಕಾಮೋದ್ರೇಕದ ಗಾಯಪಟ್ಟು ವಿವೇಕವನ್ನು ಮರೆತು ಅತಿಯಾಗಿ ಆಸೆಪಟ್ಟು]; ಮುಂದುಗೆಟ್ಟು (ಅವಿವೇಕ) ಎದೆಯಾರಿ (ಬಯಾರಿಕೆಯಂತೆ - ಮನಸ್ಸಿನಲ್ಲಿ ಬಯಸಿ) ಬೇಟದ ಕಟಕಿಗಳಿಂದೆ ಐಮೊಗನ ರಾಣಿಯಂ ನುಡಿಸಿದೊಡೆ ಭೂಪ ಕೇಳೈ=[ಮುಂದೆ ಏನಾಗುವುದೆಂದು ಯೋಚಿಸದೆ / ಅವಿವೇಕದಿಂದ ಕಾಮುಕತನದ ಕುಚೋದ್ಯದ ಮಾತುಗಳಿಂದ ಪಂಚಾನನ /ಶಿವನ ಪತ್ನಿಯನ್ನು ಮಾತಾಡಿಸಿದನು; ಆಗ ರಾಜನೇ ಕೇಳು,]; ಮುಳಿದು ನೋಡಿದಳ್ ಭುವನಮಾತೆಯ ಖತಿಯ ವೈಮನಸ್ಯದೊಳು ಉಳಿವರು ಆರು (ಯಾರು?) ಅಸುರನು ಉರಿದು ಪೋದಂ ಕೂಡೆ ಬೂದಿಯಾಗಿ =[ಸಿಟ್ಟಿನಿಂದ ಅವಳು ರಾಕ್ಷಸನನ್ನು ದಿಟ್ಟಿಸಿದಳು; ಜಗತ್ತಿನ ಮಾತೆಯ ಸಿಟ್ಟಿನ ವಿರೋಧದಲ್ಲಿ ಬದಿಕಿ ಉಳಿಯುವವರು ಯಾರಿದ್ದಾರೆ? ಅಸುರನು ಕೂಡಲೆ ಉರಿದು ಬೂದಿಯಾಗಿ ಹೋದನು!] (ಐಮೊಗ = ಐದು ಮುಖದವನು :ಪಂಚ ಮುಖ :- ೧.ಸದ್ಯೋಜಾತ, ೨.ಅಘೋರ, ೩.ತತ್ಪುರುಷ, ೪.ವಾಮದೇವ, ೫.ಈಶಾನ.)
  • ತಾತ್ಪರ್ಯ:ಹಿಮವಂತನ ಮಗಳಾದ ಹೈಮವತಿಯನ್ನು ನೋಡಿ, ಅವಳಿಗೆ ನಮಸ್ಕರಿಸದೆ, ದುಷ್ಟನು, ಸದಾ ಹೊಡೆಯುವ ಮನ್ಮಥನ ಹೂಬಾಣದಿಂದ ಹೃದಯದಲ್ಲಿ ಕಾಮೋದ್ರೇಕದ ಗಾಯಪಟ್ಟು ವಿವೇಕವನ್ನು ಮರೆತು ಅತಿಯಾಗಿ ಆಸೆಪಟ್ಟು, ಮುಂದೆ ಏನಾಗುವುದೆಂದು ಯೋಚಿಸದೆ / ಅವಿವೇಕದಿಂದ ಕಾಮುಕತನದ ಕುಚೋದ್ಯದ ಮಾತುಗಳಿಂದ ಪಂಚಾನನ /ಶಿವನ ಪತ್ನಿಯನ್ನು ಮಾತಾಡಿಸಿದನು; ಆಗ ರಾಜನೇ ಕೇಳು, ಸಿಟ್ಟಿನಿಂದ ಅವಳು ರಾಕ್ಷಸನನ್ನು ದಿಟ್ಟಿಸಿದಳು; ಜಗತ್ತಿನ ಮಾತೆಯ ಸಿಟ್ಟಿನ ವಿರೋಧದಲ್ಲಿ ಬದಿಕಿ ಉಳಿಯುವವರು ಯಾರಿದ್ದಾರೆ? ಅಸುರನು ಕೂಡಲೆ ಉರಿದು ಬೂದಿಯಾಗಿ ಹೋದನು!
  • (ಪದ್ಯ-೨೬)

ಪದ್ಯ :-:೨೭:[ಸಂಪಾದಿಸಿ]

ಬೆಂದುಪೋದಂ ದಾನವಂ ಬಳಿಕ ದೇವಿ ಖತಿ | ಯಿಂದ ನುಡಿದಳ್ ಶಾಪರೂಪದಿಂದೀ ವನ | ಕ್ಕಿಂದು ಮೊದಲಾಗಿ ಪುರುಷಪ್ರಾಣಿಗಳ್ ಪೊಕ್ಕೊಡಾಗಲೇ ಸ್ತ್ರೀತ್ವಮವಕೆ ||
ಬಂದು ಸಮನಿಸಲಿ ತನ್ನಾಜ್ಞೆ ತಪ್ಪದೆ ನಡೆಯ | ಲೆಂದು ಸಕಲ ಸ್ಥಾವರಾಧಿದೇವತೆಯರೊಡ | ನ ದುಂಸಾರಿದಳಲ್ಲಿ ಚಿರಕಾಲಮಿರ್ದು ಪೂರೈಸಿದಳ್ ಕಲ್ಪಿತವನು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬೆಂದುಪೋದಂ ದಾನವಂ ಬಳಿಕ ದೇವಿ ಖತಿಯಿಂದ ನುಡಿದಳ್ ಶಾಪರೂಪದಿಂದೀ ವನಕ್ಕಿಂದು ಮೊದಲಾಗಿ ಪುರುಷಪ್ರಾಣಿಗಳ್ ಪೊಕ್ಕೊಡೆ =[ಸುಟ್ಟುಹೋದನು ದಾನವನು; ಬಳಿಕ ದೇವಿಯು ಸಿಟ್ಟಿನಿಂದ ಶಾಪರೂಪವಾಗಿ ನುಡಿದಳು, 'ಈ ವನಕ್ಕೆ ಇಂದು ಮೊದಲಾಗಿ ಪುರುಷ ಪ್ರಾಣಿಗಳು ಒಳಹೊಕ್ಕರೆ]; ಆಗಲೇ ಸ್ತ್ರೀತ್ವಮವಕೆ ಬಂದು ಸಮನಿಸಲಿ ತನ್ನಾಜ್ಞೆ ತಪ್ಪದೆ ನಡೆಯಲೆಂದು ಸಕಲ ಸ್ಥಾವರಾಧಿದೇವತೆಯರೊಡನೆ ಅಂದುಂ ಸಾರಿದಳಲ್ಲಿ ಚಿರಕಾಲಮಿರ್ದು ಪೂರೈಸಿದಳ್ ಕಲ್ಪಿತವನು =[ಕೂಡಲೇ ಸ್ತ್ರೀತ್ವವು ಅವಕ್ಕೆ ಬಂದು ಸಮನಿಸಲಿ (ಉಂಟಾಗಲಿ)'. ತನ್ನ ಆಜ್ಞೆಯು ತಪ್ಪದೆ ನಡೆಯಲೆಂದು ಸಕಲ ಸ್ಥಾವರ ಅಧಿದೇವತೆಯರೊಡನೆ ಅಂದು ಸಾರಿದಳು. ಅಲ್ಲಿ ಬಹಳಕಾಲ ಇದ್ದು ತನ್ನ ಸಂಕಲ್ಪವನ್ನು ಪೂರೈಸಿದಳು.]
  • ತಾತ್ಪರ್ಯ:ಕಾಮಿಸಿದ ದಾನವನು ಸುಟ್ಟುಹೋದನು; ಬಳಿಕ ದೇವಿಯು ಸಿಟ್ಟಿನಿಂದ ಶಾಪರೂಪವಾಗಿ ನುಡಿದಳು, 'ಈ ವನಕ್ಕೆ ಇಂದು ಮೊದಲಾಗಿ ಪುರುಷ ಪ್ರಾಣಿಗಳು ಒಳಹೊಕ್ಕರೆ, ಕೂಡಲೇ ಸ್ತ್ರೀತ್ವವು ಅವಕ್ಕೆ ಬಂದು ಸಮನಿಸಲಿ (ಉಂಟಾಗಲಿ)'. ತನ್ನ ಆಜ್ಞೆಯು ತಪ್ಪದೆ ನಡೆಯಲೆಂದು ಸಕಲ ಸ್ಥಾವರ ಅಧಿದೇವತೆಯರೊಡನೆ ಅಂದು ಸಾರಿದಳು. ಅಲ್ಲಿ ಬಹಳಕಾಲ ಇದ್ದು ತನ್ನ ಸಂಕಲ್ಪವನ್ನು ಪೂರೈಸಿದಳು.]
  • (ಪದ್ಯ-೨೭)

ಪದ್ಯ :-:೨೮:[ಸಂಪಾದಿಸಿ]

ತನ್ನನರ್ಚಿಸಿದರ್ಗಭೀಷ್ಟಮಂ ಕುಡುವ ಸಂ | ಪನ್ನೆ ವರಗೌರಿ ತಪದಿಂದೊಲಿಸಲೀಶಂ ಪ್ರ | ಸನ್ನನಾದಂ ಕೆಲವುಕಾಲದಿಂ ಮೇಲೆ ಬಿಜಯಂಗೈದಳುತ್ಸವದೊಳು ||
ಉನ್ನತದ ಕೈಲಾಸಗಿರಿ ಶೀಖರಕಂದುಮೊದ | ಲಿನ್ನುಮಾ ವನಕೆ ಪೊಕ್ಕೊಡೆ ಗಂಡು ಪೆಣ್ಣಹುದು | ಪನ್ನಗ ಮೃಗಾದಿ ಪಶು ಪಕ್ಷಿಗಳ್ ಮುಂತಾದ ಜಂತುಜಾಲಂಗಳೆಲ್ಲ ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತನ್ನನು ಅರ್ಚಿಸಿದರ್ಗೆ ಅಭೀಷ್ಟಮಂ ಕುಡುವ ಸಂಪನ್ನೆ ವರಗೌರಿ ತಪದಿಂದ ಒಲಿಸಲು ಈಶಂ ಪ್ರಸನ್ನನಾದಂ= [ತನ್ನನ್ನು ಪೂಜಿಸಿದವರಿಗೆ ಅಪೇಕ್ಷಿಸಿದುದನ್ನು ಕೊಡುವ ಸಂಪನ್ನೆಯಾದ ವರಗೌರಿಯು ತಪಸ್ಸಿನಿಂದ ಒಲಿಸಲು ಈಶ್ವರನು ಪ್ರಸನ್ನನಾದನು]; ಕೆಲವು ಕಾಲದಿಂ ಮೇಲೆ ಬಿಜಯಂಗೈದಳು ಉತ್ಸವದೊಳು ಉನ್ನತದ ಕೈಲಾಸಗಿರಿ ಶೀಖರಕೆ =[ಕೆಲವು ಕಾಲದ ಮೇಲೆ ಎತ್ತರದಲ್ಲಿರುವ ಕೈಲಾಸಗಿರಿ ಶೀಖರಕ್ಕೆ ವಿಜ್ರಂಭಣೆಯಿಂದ ಪ್ರಯಾಣಮಾಡಿದಳು.]; ಅಂದು ಮೊದಲು ಇನ್ನುಮಾ ವನಕೆ ಪೊಕ್ಕೊಡೆ ಗಂಡು ಪೆಣ್ಣಹುದು ಪನ್ನಗ ಮೃಗಾದಿ ಪಶು ಪಕ್ಷಿಗಳ್ ಮುಂತಾದ ಜಂತುಜಾಲಂಗಳೆಲ್ಲ =[ಆ ನಂತರ ಇನ್ನುಮೇಲೆ ಆ ವನದೊಳಕ್ಕೆ ಹೊಕ್ಕರೆ ಗಂಡು ಹೆಣ್ಣಾಗುವುದು, ಅದು ಹಾವೇ ಮೊದಲಾದ ಮೃಗಾದಿ ಪಶು ಪಕ್ಷಿಗಳು ಮುಂತಾದ ಜಂತುಜಾಲಗಳೆಲ್ಲವುಗಳಿಗೂ ಅನ್ವಯಿಸುವುದು].
  • ತಾತ್ಪರ್ಯ:ತನ್ನನ್ನು ಪೂಜಿಸಿದವರಿಗೆ ಅಪೇಕ್ಷಿಸಿದುದನ್ನು ಕೊಡುವ ಸಂಪನ್ನೆಯಾದ ವರಗೌರಿಯು ತಪಸ್ಸಿನಿಂದ ಒಲಿಸಲು ಈಶ್ವರನು ಪ್ರಸನ್ನನಾದನು; ಕೆಲವು ಕಾಲದ ಮೇಲೆ ಎತ್ತರದಲ್ಲಿರುವ ಕೈಲಾಸಗಿರಿ ಶೀಖರಕ್ಕೆ ವಿಜ್ರಂಭಣೆಯಿಂದ ಪ್ರಯಾಣಮಾಡಿದಳು. ಆ ನಂತರ ಇನ್ನುಮೇಲೆ ಆ ವನದೊಳಕ್ಕೆ ಹೊಕ್ಕರೆ ಗಂಡು ಹೆಣ್ಣಾಗುವುದು, ಅದು ಹಾವೇ ಮೊದಲಾದ ಮೃಗಾದಿ ಪಶು ಪಕ್ಷಿಗಳು ಮುಂತಾದ ಜಂತುಜಾಲಗಳೆಲ್ಲವುಗಳಿಗೂ ಅನ್ವಯಿಸುವುದು.
  • (ಪದ್ಯ-೨೮)

ಪದ್ಯ :-:೨೯:[ಸಂಪಾದಿಸಿ]

ರಾಜೇಂದ್ರ ಕೇಳಾಗಳಾ ವನಕೆ ಪೊಕ್ಕಲ್ಲಿ | ರಾಜಿಸುವ ತಇಳಿಗೊಳದ ನೀರ್ಗುಡಿದು ಫಲುಗುಣ | ವಾಜಿ ಪೊರಮಟ್ಟು ಬಂದಾಗಳದು ಪೆಣ್ಗುದುರೆಯಾಗಿರ್ದುದೇವೇಳ್ವೆನು ||
ಸೋಜಿಗಮಿದೆಂದು ಸೈವೆರಗಾಗುತಿರ್ದುದೆ | ಲ್ಲಾಜನಂ ಪಾಂಡವಂ ಕಂಡು ಶಿವಶಿವ ಪೊಸತ | ಲಾ ಜಗದೊಳೀಕಥನಮೆಂದು ವಿಸ್ಮಿತನಾಗಿ ಕೃಷ್ಣನಂ ಧ್ಯಾನಿಸಿದನು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಜೇಂದ್ರ ಕೇಳು ಆಗಳು ಆ ವನಕೆ ಪೊಕ್ಕಲ್ಲಿ ರಾಜಿಸುವ ತಿಳಿಗೊಳದ ನೀರ್ಗುಡಿದು ಫಲುಗುಣ ವಾಜಿ ಪೊರಮಟ್ಟು ಬಂದಾಗಳು ಅದು ಪೆಣ್ಗುದುರೆಯಾಗಿರ್ದುದು ಏವೇಳ್ವೆನು=[ರಾಜೇಂದ್ರ ಜನಮೇಜಯನೇ ಕೇಳು, ಆಗ ಆ ವನದೊಳಗೆ ಹೊಕ್ಕು ಅಲ್ಲಿ ಶೋಭಿಸುವ ತಿಳಿ ಕೊಳದ ನೀರನ್ನು ಕುಡಿದು ಫಲ್ಗುಣನ ಕುದುರೆ ಹೊರಬಂದಾಗ ವಾಜಿ ಅದು ಹೆಣ್ಣು ಕುದುರೆಯಾಗಿ ಮಾರ್ಪಟ್ಟಿತು, ವಿಚಿತ್ರವನ್ನು ಏನು ಹೇಳಲಿ!]; ಸೋಜಿಗಂ ಇದೆಂದು ಸೈವೆರಗಾಗುತಿರ್ದುದು ಎಲ್ಲಾಜನಂ ಪಾಂಡವಂ ಕಂಡು ಶಿವಶಿವ ಪೊಸತಲಾ ಜಗದೊಳು ಈಕಥನಂ ಎಂದು ವಿಸ್ಮಿತನಾಗಿ ಕೃಷ್ಣನಂ ಧ್ಯಾನಿಸಿದನು=[ವಿಚಿತ್ರವು, ಇದೆಂದು ಎಲ್ಲಾ ಜನರೂ ದಿಗ್‍ಭ್ರಮೆಯಾಗಿರಲು, ಪಾಂಡವ ಅರ್ಜುನ ಇದನ್ನು ಕಂಡು ಶಿವಶಿವ ಹೊಸತಲಾ ಜಗತ್ತಿನಲ್ಲ ಈ ಬಗೆಯ ನೆಡವಳಿಕೆ, ಎಂದು ವಿಸ್ಮಿತನಾಗಿ ಕೃಷ್ಣನನ್ನು ಧ್ಯಾನಿಸಿದನು].
  • ತಾತ್ಪರ್ಯ: ರಾಜೇಂದ್ರ ಜನಮೇಜಯನೇ ಕೇಳು, ಆಗ ಆ ವನದೊಳಗೆ ಹೊಕ್ಕು ಅಲ್ಲಿ ಶೋಭಿಸುವ ತಿಳಿ ಕೊಳದ ನೀರನ್ನು ಕುಡಿದು ಫಲ್ಗುಣನ ಕುದುರೆ ಹೊರಬಂದಾಗ ವಾಜಿ ಅದು ಹೆಣ್ಣು ಕುದುರೆಯಾಗಿ ಮಾರ್ಪಟ್ಟಿತು, ವಿಚಿತ್ರವನ್ನು ಏನು ಹೇಳಲಿ! ಇದು ವಿಚಿತ್ರವು ಎಂದು ಎಲ್ಲಾ ಜನರೂ ದಿಗ್‍ಭ್ರಮೆಯಾಗಿರಲು, ಪಾಂಡವ ಅರ್ಜುನನು ಇದನ್ನು ಕಂಡು ಶಿವಶಿವ ಹೊಸತಲಾ ಜಗತ್ತಿನಲ್ಲಿ ಈ ಬಗೆಯ ನೆಡವಳಿಕೆ, ಎಂದು ವಿಸ್ಮಿತನಾಗಿ, ಕಷ್ಟವನ್ನು ಪರಿಹರಿಸಬೇಕೆಂದು, ಕೃಷ್ಣನನ್ನು ಧ್ಯಾನಿಸಿದನು.
  • (ಪದ್ಯ-೨೯)XXI

ಪದ್ಯ :-:೩೦:[ಸಂಪಾದಿಸಿ]

ಎಣಿಕೆಗೊಳುತಿರ್ದನಾ ಪಾರ್ಥನಂದಿತ್ತ ಹಿಂ | ದಣ ಕೃತಯುಗದ ಮೊದಲ ಕಾಲದೊಳ್ ಸಕಲ ಧಾ | ರಿಣಿಯ ತೀರ್ಥಂಗಳಂ ಬಳಸಿ ಬರುತಕೃತವ್ರಣಾಖ್ಯ ಭೂಸುರನೋರ್ವನು ||
ಪ್ರಣುತ ಸಲಿಲ ಸ್ನಾನಕೊಂದು ಸರಕಿಳಿದು ವಾ | ರುಣಮಂತ್ರಮಂ ವಾರಿಯೊಳ್ ಜಪಿಸುತಿರ್ದನಾ | ಕ್ಷಣದೊಳವನಂಘ್ರಿಯಂ ಬಂದು ಪಿಡಿದುದು ನೆಗಳ್ ಬಿಗಿದು ದಂತಂಗಳಿಂದೆ ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಣಿಕೆಗೊಳುತಿರ್ದನು ಆ ಪಾರ್ಥನು ಅಂದು ಇತ್ತ ಹಿಂದಣ ಕೃತಯುಗದ ಮೊದಲ ಕಾಲದೊಳ್ ಸಕಲ ಧಾರಿಣಿಯ ತೀರ್ಥಂಗಳಂ ಬಳಸಿ ಬರುತ ಕೃತವ್ರಣ ಆಖ್ಯ ಭೂಸುರನೋರ್ವನು=[ಆ ಪಾರ್ಥನು ಅಂದು ಕುದುರೆ ಹೆಣ್ಣಾದುದನ್ನು ಚಿಂತಿಸುತ್ತಿದ್ದನು; ಇತ್ತ ಹಿಂದೆ ಕೃತಯುಗದ ಮೊದಲ ಕಾಲದಲ್ಲಿ ಕೃತವ್ರಣ ಎಂಬ ಬ್ರಾಹ್ಮಣನು ಭೂಸುರನೋರ್ವನು ಭೂಮಿಯ ಸಕಲ ತೀರ್ಥಗಳನ್ನೂ ನೋಡಿ ಮಿಂದು ಬರುತ್ತಾ ]; ಪ್ರಣುತ ಸಲಿಲ ಸ್ನಾನಕೆ ಒಂದು ಸರಕಿಳಿದು ವಾರುಣ ಮಂತ್ರಮಂ ವಾರಿಯೊಳ್ ಜಪಿಸುತಿರ್ದನು ಆ ಕ್ಷಣದೊಳು ಅವನ ಅಂಘ್ರಿಯಂ ಬಂದು ಪಿಡಿದುದು ನೆಗಳ್(ಮೊಸಳೆ) ಬಿಗಿದು ದಂತಂಗಳಿಂದೆ ತರಜಹ= [ಉತ್ತಮವಾದ ಸಲಿಲ ಸ್ನಾನಕ್ಕೆ ಆಕಾಡಿನ ಒಂದು ಸರಸ್ಸಿಗೆ ಇಳಿದು ವಾರುಣ ಮಂತ್ರವನ್ನು ನೀರಿನಲ್ಲಿ ಜಪಿಸುತ್ತಿದ್ದನು. ಆ ಕ್ಷಣದಲ್ಲಿ ಅವನ ಕಾಲನ್ನು ಬಂದು ಮೊಸಳೆ ಗಟ್ಟಿಯಾಗಿ ಹಲ್ಲುಗಳಿಂದ ಪಿಹಿಡಿಯಿತು];
  • ತಾತ್ಪರ್ಯ: ಆ ಪಾರ್ಥನು ಅಂದು ಕುದುರೆ ಹೆಣ್ಣಾದುದನ್ನು ಚಿಂತಿಸುತ್ತಿದ್ದನು; ಇತ್ತ ಹಿಂದೆ ಕೃತಯುಗದ ಮೊದಲ ಕಾಲದಲ್ಲಿ ಕೃತವ್ರಣ ಎಂಬ ಬ್ರಾಹ್ಮಣನು ಭೂಸುರನೋರ್ವನು ಭೂಮಿಯ ಸಕಲ ತೀರ್ಥಗಳನ್ನೂ ನೋಡಿ ಮಿಂದು ಬರುತ್ತಾ, ಶುದ್ಧವಾದ ನೀರಿನ ಸ್ನಾನಕ್ಕೆ ಆ ಕಾಡಿನ ಒಂದು ಸರಸ್ಸಿಗೆ ಇಳಿದು ವಾರುಣ ಮಂತ್ರವನ್ನು ನೀರಿನಲ್ಲಿ ಜಪಿಸುತ್ತಿದ್ದನು. ಆ ಕ್ಷಣದಲ್ಲಿ ಅವನ ಕಾಲನ್ನು ಬಂದು ಮೊಸಳೆ ಗಟ್ಟಿಯಾಗಿ ಹಲ್ಲುಗಳಿಂದ ಪಿಹಿಡಿಯಿತು];
  • (ಪದ್ಯ-೩೦)

ಪದ್ಯ :-:೩೧:[ಸಂಪಾದಿಸಿ]

ತನ್ನ ಕಾಲ್ವಿಡಿದು ನಡುನೀರ್ಗೆಳೆವಜಂತುವಿದು | ಪನ್ನಗನೋ ಮೇಣಸುರಮಾಯೆಯೋ ಜಲದೊಳು | ತ್ಪನ್ನಮತ್ಸ್ಯವೊ ಮಹಾಗ್ರಾಹಮೋ ಶಿವಶಿವಾ ದುಷ್ಟಭಾವಿತಮಾಯ್ತಲಾ ||
ಇನ್ನಿದಕುಪಾಯಮೇನೆಂದು ಚಿಂತಿಸಿ ವಿಪ್ರ | ನುನ್ನತ ತಪೋಬಲದೊಳಂಘ್ರಿಯಂ ಬಿದಿರಲ್ಕೆ | ಭಿನ್ನಿಸದೆ ಬಿಗಿದಿರ್ದ ಬಲ್ಮೆಗಳ ದಂತಂಗಳುಡಿದುವದನೇನೆಂಬೆನು ||31||
||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತನ್ನ ಕಾಲ್ವಿಡಿದು ನಡುನೀರ್ಗೆ ಎಳೆವ ಜಂತುವು ಇದು ಪನ್ನಗನೋ ಮೇಣ್ ಅಸುರಮಾಯೆಯೋ ಜಲದೊಳು ಉತ್ಪನ್ನ ಮತ್ಸ್ಯವೊ ಮಹಾಗ್ರಾಹಮೋ ಶಿವಶಿವಾ ದುಷ್ಟಭಾವಿತಮಂ ಆಯ್ತಲಾ =[ತನ್ನ ಕಾಲನ್ನು ಹಿಡಿದು ನಡುನೀರಿಗೆ ಎಳೆವ ಈ ಪ್ರಾಣಿ ಹಾವೋ, ಅಥವಾ ರಾಕ್ಷಸ ಮಾಯೆಯೋ ನೀರಿನಲ್ಲಿ ಹುಟ್ಟಿದ ಮೀನೋ,ದೊಡ್ಡ ಮೊಸಳೆಯೋ ಶಿವಶಿವಾ (ಮಂತ್ರಜಪಕಾಲದಲ್ಲಿ) ಕೆಟ್ಟವಿಚಾರ ಆಯಿತಲ್ಲಾ ]; ಇನ್ನಿದಕೆ ಉಪಾಯಂ ಏನೆಂದು ಚಿಂತಿಸಿ ವಿಪ್ರನು ಉನ್ನತ ತಪೋಬಲದೊಳು ಅಂಘ್ರಿಯಂ ಬಿದಿರಲ್ಕೆ ಭಿನ್ನಿಸದೆ ಬಿಗಿದಿರ್ದ ಬಲ್ಮೆಗಳ ದಂತಂಗಳು ಉಡಿದುವು ಅದನೇನೆಂಬೆನು =[ಇನ್ನು ಬಿದಿಸಿಕೊಳ್ಳಲು ಇದಕ್ಕೆ ಉಪಾಯ ಏನು ಎಂದು ಯೋಚಿಸಿ ಆ ವಿಪ್ರನು ಹೆಚ್ಚಿನ ತನ್ನ ತಪೋಬಲದಿಂದ ಕಾಲನ್ನು ಝಾಡಿಸಸಲು, ಕಾಲನ್ನು ಹಿಡಿದ ಗಟ್ಟಿ ಹಲ್ಲುಗಳು ಉದುರಿದವು ಅದನ್ನು ಏನು ಹೇಳಲಿ ಎಂದನು ಮುನಿ ].
  • ತಾತ್ಪರ್ಯ: ತನ್ನ ಕಾಲನ್ನು ಹಿಡಿದು ನಡುನೀರಿಗೆ ಎಳೆವ ಈ ಪ್ರಾಣಿ ಹಾವೋ, ಅಥವಾ ರಾಕ್ಷಸ ಮಾಯೆಯೋ ನೀರಿನಲ್ಲಿ ಹುಟ್ಟಿದ ಮೀನೋ,ದೊಡ್ಡ ಮೊಸಳೆಯೋ ಶಿವಶಿವಾ (ಮಂತ್ರಜಪಕಾಲದಲ್ಲಿ) ಕೆಟ್ಟವಿಚಾರ ಆಯಿತಲ್ಲಾ; ಇನ್ನು ಬಿದಿಸಿಕೊಳ್ಳಲು ಇದಕ್ಕೆ ಉಪಾಯ ಏನು ಎಂದು ಯೋಚಿಸಿ ಆ ವಿಪ್ರನು ಹೆಚ್ಚಿನ ತನ್ನ ತಪೋಬಲದಿಂದ ಕಾಲನ್ನು ಝಾಡಿಸಸಲು, ಕಾಲನ್ನು ಹಿಡಿದ ಗಟ್ಟಿ ಹಲ್ಲುಗಳು ಉದುರಿದವು ಅದನ್ನು ಏನು ಹೇಳಲಿ ಎಂದನು ಮುನಿ.
  • (ಪದ್ಯ-೩೧)

ಪದ್ಯ :-:೩೨:[ಸಂಪಾದಿಸಿ]

ಮಡುವಿನೊಳು ಮಡವಿಡಿದ ನೆಗಳಂ ಬಲಾತ್ಕರಿಸಿ | ಬಿಡಿಸಿಕೊಂಡೊಡಮುರಿದು ತಡಿಗಡರಿ ಕೋಪದಿಂ | ನುಡಿದನುದಕಸ್ಥಮಾಗಿರ್ದ ದೇವತೆಗಳ್ಗೆ ದುಷ್ಟಭಾವದ ಜಲಮಿದು ||
ಕಡುಭಯಂಕರದಿಂದೆನಗೆ ತೋರಿತದರಿಂದ | ಪೊಡವಿಗತಿಭೀತಿಯಂ ಮಾಡುವಂತಿಲ್ಲಿ ನೀ | ರ್ಗುಡಿದ ಜೀವಿಗಳಿನ್ನು ಪುಲಿಯಾಗಲಿಂದುಮೊದಲೆಂದು ಮುನಿ ಶಾಪಿಸಿದನು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಡುವಿನೊಳು ಮಡವಿಡಿದ (ಮಡ / ಹಿಮ್ಮಡಿ + ವಿಡಿದ/ ಪಿಡಿದ/ ಹಿಡಿದ) ನೆಗಳಂ ಬಲಾತ್ಕರಿಸಿ ಬಿಡಿಸಿಕೊಂಡು ಒಡಮುರಿದು ತಡಿಗಡರಿ ಕೋಪದಿಂ ನುಡಿದನು=[ಕೃತವ್ರಣನು, ಆ ನೀರಿನ ಮಡುವಿನಲ್ಲಿ ತನ್ನ ಕಾಲಿ ಹಿಮ್ಮಡಿ ಹಿಡಿದ ಮೊಸಳೆಯಿಂದ ಬಲ ಉಪಯೋಗಿಸಿ ಬಿಡಿಸಿಕೊಂಡು, ಒಡನೆ ಹಿಂತಿರುಗಿ ಕೋಳದ ತಡಿಗೆ / ದಡಕ್ಕೆ ಹತ್ತಿ ಕೋಪದಿಂದ ಹೇಳಿದನು]; ಉದಕಸ್ಥಮ್ ಆಗಿರ್ದ ದೇವತೆಗಳ್ಗೆ ದುಷ್ಟಭಾವದ ಜಲಮಿದು ಕಡುಭಯಂಕರದಿಂದ ಎನಗೆ ತೋರಿತು=[' ಈ ಮಡುವಿನ ನೀರಿನಲ್ಲಿ ಇರುವ ದೇವತೆಗಳನ್ನು ಕುರಿತು,'ಈ ಜಲವು ದುಷ್ಟಭಾವದಿಂದ ಕೂಡಿದೆ, ನನಗೆ ಬಹಳ ಭಯಂಕರವಾಗಿ ತೋರಿತು.]; ಅದರಿಂದ ಪೊಡವಿಗೆ ಅತಿ ಭೀತಿಯಂ ಮಾಡುವಂತೆ ಇಲ್ಲಿ ನೀರ್ಗುಡಿದ ಜೀವಿಗಳನ್ನು ಪುಲಿಯಾಗಲಿ ಇಂದುಮೊದಲೆಂದು ಮುನಿ ಶಾಪಿಸಿದನು=[ಅದರಿಂದ ಭೂಮಿಯ ಜನರಿಗೆ ಅತಿ ಭಯವನ್ನು ಉಂಟು ಮಾಡುವಂತೆ ಇಲ್ಲಿ ನೀರುಕುಡಿದ ಜೀವಿಗಳು ಹುಲಿಯಾಗಲಿ ಇನ್ನುಮೇಲೆ'. ಎಂದು ವಿಪ್ರನು ಶಪಿಸಿದನು].
  • ತಾತ್ಪರ್ಯ: ಕೃತವ್ರಣನು, ಆ ನೀರಿನ ಮಡುವಿನಲ್ಲಿ ತನ್ನ ಕಾಲಿ ಹಿಮ್ಮಡಿ ಹಿಡಿದ ಮೊಸಳೆಯಿಂದ ಬಲ ಉಪಯೋಗಿಸಿ ಬಿಡಿಸಿಕೊಂಡು, ಒಡನೆ ಹಿಂತಿರುಗಿ ಕೋಳದ ತಡಿಗೆ / ದಡಕ್ಕೆ ಹತ್ತಿ ಕೋಪದಿಂದ ಹೇಳಿದನು, ಆ ಮಡುವಿನ ನೀರಿನಲ್ಲಿ ಇರುವ ದೇವತೆಗಳನ್ನು ಕುರಿತು,'ಈ ಜಲವು ದುಷ್ಟಭಾವದಿಂದ ಕೂಡಿದೆ, ನನಗೆ ಬಹಳ ಭಯಂಕರವಾಗಿ ತೋರಿತು.ಅದರಿಂದ ಭೂಮಿಯ ಜನರಿಗೆ ಅತಿ ಭಯವನ್ನು ಉಂಟು ಮಾಡುವಂತೆ ಇಲ್ಲಿ ನೀರುಕುಡಿದ ಜೀವಿಗಳು ಹುಲಿಯಾಗಲಿ ಇನ್ನುಮೇಲೆ'. ಎಂದು ವಿಪ್ರನು ಶಪಿಸಿದನು].
  • (ಪದ್ಯ-೩೨)

ಪದ್ಯ :-:೩೩:[ಸಂಪಾದಿಸಿ]

ಎಂದಾದುದಾ ಕೃತವ್ರಣನ ಶಾಪಮಾ ಸರಿಸಿ | ಗಂದುಮೊದಲಾಗಿ ಭೀಕರಮೆನಿಸುತಿರ್ಪುದಿಳೆ | ಗೊಂದು ಜೀವಿಗಳುಮುದುಕಮನೋಲ್ಲವದರೊಳುಗ್ರ ವ್ಯಾಘ್ರಮಪ್ಪ ಭಯಕೆ ||
ಅಂದು ಪೆಣ್ಗುದುರೆಯಾಗಿರ್ದ ವಿಜಯನ ವಾಜಿ | ಬಂದು ಕೊಳನಂ ಪೊಕ್ಕು ನೀರ್ಗುಡಿದು ಪುಲಿಯಾಗಿ | ಮುಂದುಗೆಡಿಸಿತು ಮತ್ತೆ ಫಲುಗುಣಂ ಕಂಡು ವಿಸ್ಮಿತನಾಗಿ ಚಿಂತಿಸಿದನು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಂದು ಆದುದು ಕೃತವ್ರಣನ ಶಾಪಮು ಆ ಸರಿಸಿಗೆ ಅಂದು ಮೊದಲಾಗಿ ಭೀಕರಂ ಎನಿಸುತಿರ್ಪುದು =[ಕೃತವ್ರಣನ ಶಾಪವು ಯಾವತ್ತು ಆ ಸರಸ್ಸಿಗೆ ಆಯಿತೋ, ಅಂದು ಮೊದಲಾಗಿ ಅದು ಭೀಕರ ಎನನ್ನಿಸಿಕೊಂಡಿದೆ]; ಇಳೆಗೆ ಒಂದು ಜೀವಿಗಳುಂ ಉದುಕಮನು ಒಲ್ಲವು ಅದರೊಳು ಉಗ್ರ ವ್ಯಾಘ್ರಮಪ್ಪ ಭಯಕೆ =[ಆ ನಂತರ ಈ ಭೂಮಿಯ ಒಂದೇ ಒಂದು ಜೀವಿಯೂ ಅದರಲ್ಲಿರುವ ನೀರನ್ನು ಹುಲಿಯಾಗುವ ಭಯದಿಂದ ಕುಡಿಯುವುದಿಲ್ಲ;]; ಅಂದು ಪೆಣ್ಗುದುರೆಯಾಗಿರ್ದ ವಿಜಯನ ವಾಜಿ ಬಂದು ಕೊಳನಂ ಪೊಕ್ಕು ನೀರ್ ಕುಡಿದು ಪುಲಿಯಾಗಿ ಮುಂದುಗೆಡಿಸಿತು ಮತ್ತೆ ಫಲುಗುಣಂ ಕಂಡು ವಿಸ್ಮಿತನಾಗಿ ಚಿಂತಿಸಿದನು =[ಪಾರ್ಥನು ಬಂದ ಆ ದಿನ /ಅಂದು ಹೆಣ್ಣು ಕದುರೆಯಾಗಿದ್ದ ಅವನ ಹಯ ಬಂದು ಕೊಳವನ್ನು ಹೊಕ್ಕು ನೀರು ಕುಡಿದು ಹುಲಿಯಾಗಿ ಮುಂದೆ ತೋರದಂತೆ ಮಾಡಿತು, ಮತ್ತೆ ಫಲ್ಗುಣನು ಇದನ್ನು ಕಂಡು ಅಚ್ಚರಿಪಟ್ಟು ಚಿಂತಿಸಿದನು].
  • ತಾತ್ಪರ್ಯ: ಕೃತವ್ರಣನ ಶಾಪವು ಯಾವತ್ತು ಆ ಸರಸ್ಸಿಗೆ ಆಯಿತೋ, ಅಂದು ಮೊದಲಾಗಿ ಅದು ಭೀಕರ ಎನನ್ನಿಸಿಕೊಂಡಿದೆ; ಈ ಭೂಮಿಯ ಒಂದೇ ಒಂದು ಜೀವಿಯೂ ಅದರಲ್ಲಿರುವ ನೀರನ್ನು ಹುಲಿಯಾಗುವ ಭಯದಿಂದ ಕುಡಿಯುವುದಿಲ್ಲ; ಪಾರ್ಥನು ಬಂದ ಆ ದಿನ /ಅಂದು ಹೆಣ್ಣು ಕದುರೆಯಾಗಿದ್ದ ಅವನ ಹಯ ಬಂದು ಕೊಳವನ್ನು ಹೊಕ್ಕು ನೀರು ಕುಡಿದು ಹುಲಿಯಾಗಿ ಮುಂದೆ ತೋರದಂತೆ ಮಾಡಿತು, ಮತ್ತೆ ಫಲ್ಗುಣನು ಇದನ್ನು ಕಂಡು ಅಚ್ಚರಿಪಟ್ಟು ಚಿಂತಿಸಿದನು].
  • (ಪದ್ಯ-೩೩)

ಪದ್ಯ :-:೩೪:[ಸಂಪಾದಿಸಿ]

ನೃಪನ ಹಯಮೇಧವಿನ್ನೆಂತಹುದೊ ಮೂಜಗದೊ | ಳಪಹಾಸಕೆಡೆಯಾದುದಾರ ಶಾಪದ ಫಲವೊ | ವಿಪರೀತಮಿದು ಶಿವಶಿವಾಯೆನುತ ನಡುನಡುಗಿ ಪಾರ್ಥನತಿಭೀತಿಯಿಂದೆ ||
ಕಪಟದೊಳ್ ಪಿಂತೆ ದುರ್ಯೋಧನಾದಿಗಳೆಸಗಿ | ದುಪಹತಿಗಳಂ ತೆಗೆಸಿ ತಲೆಗಾಯ್ದೆಲೈ ಕೃಷ್ಣ | ಕೃಪೆಮಾಡಬೇಹುದೆನಗೆಂದು ಮುರವೈರಿಯಂ ನೆನೆದು ಚಿಂತಿಸುತಿರ್ದನು ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನೃಪನ ಹಯಮೇಧವು ಇನ್ನು ಎಂತಹುದೊ ಮೂಜಗದೊಳು ಅಪಹಾಸಕೆ ಎಡೆಯಾದುದು=[ಧರ್ಮರಾಯ ನೃಪನ ಅಶ್ವಮೇಧವು ಇನ್ನು ಹೇಗೆ ಆಗುವುದೊ! ಮೂರೂ ಜಗತ್ತಿನಲ್ಲಿ ಅಪಹಾಸ್ಯಕ್ಕೆ ಅವಕಾಶವಾಯಿತು.]; ಆರ ಶಾಪದ ಫಲವೊ ವಿಪರೀತಮಿದು ಶಿವಶಿವಾ ಎನುತ ನಡುನಡುಗಿ ಪಾರ್ಥನು ಅತಿ ಭೀತಿಯಿಂದೆ=[ಯಾರ ಶಾಪದ ಫಲವೊ ಇದು ಸಹಜಕ್ಕೆ ವಿರುದ್ಧವಾದುದು. ಮುಂದಿನ ಪರಿಣಾಮ ನೆನೆದು ಅತಿ ಭಯದಿಂದ ಪಾರ್ಥನು ನಡುನಡುಗಿ ಶಿವಶಿವಾ ಎನ್ನುತ್ತಾ ಇದ್ದನು.]; ಕಪಟದೊಳ್ ಪಿಂತೆ ದುರ್ಯೋಧನಾದಿಗಳ್ ಎಸಗಿದ ಉಪಹತಿಗಳಂ ತೆಗೆಸಿ ತಲೆಗಾಯ್ದೆಲೈ ಕೃಷ್ಣ ಕೃಪೆಮಾಡಬೇಹುದು ಎನಗೆಂದು ಮುರವೈರಿಯಂ ನೆನೆದು ಚಿಂತಿಸುತಿರ್ದನು= ['ಮೋಸದಿಂದ ಹಿಂದೆ ದುರ್ಯೋಧನಾದಿಗಳು ಕೊಟ್ಟ ತೊಂದರೆಗಳನ್ನು ಪರಿಹರಿಸಿ, ನಮ್ಮ ತಲೆಗಾಯ್ದೆ / ಕಾಪಾಡಿದೆ ಎಲೈ ಕೃಷ್ಣ ಕೃಪೆಮಾಡಬೇಕು, ನನಗೆ', ಎಂದು ಮುರವೈರಿಯಾದ ಕೃಷ್ಣನನ್ನು ನೆನೆದು ಚಿಂತಿಸುತ್ತಿದ್ದನು.].
  • ತಾತ್ಪರ್ಯ: ಧರ್ಮರಾಯ ನೃಪನ ಅಶ್ವಮೇಧ ಯಾಗವು ಇನ್ನು ಹೇಗೆ ಆಗುವುದೊ! ಮೂರೂ ಜಗತ್ತಿನಲ್ಲಿ ಅಪಹಾಸ್ಯಕ್ಕೆ ಅವಕಾಶವಾಯಿತು. ಯಾರ ಶಾಪದ ಫಲವೊ ಇದು ಸಹಜಕ್ಕೆ ವಿರುದ್ಧವಾದುದು ಆಗಿದೆ. ಮುಂದಿನ ಪರಿಣಾಮ ನೆನೆದು ಅತಿ ಭಯದಿಂದ ಪಾರ್ಥನು ನಡುನಡುಗಿ ಶಿವಶಿವಾ ಎನ್ನುತ್ತಾ ಇದ್ದನು. 'ಮೋಸದಿಂದ ಹಿಂದೆ ದುರ್ಯೋಧನಾದಿಗಳು ಕೊಟ್ಟ ತೊಂದರೆಗಳನ್ನು ಪರಿಹರಿಸಿ, ನಮ್ಮ ತಲೆಗಾಯ್ದೆ / ಕಾಪಾಡಿದೆ ಎಲೈ ಕೃಷ್ಣ ಕೃಪೆಮಾಡಬೇಕು, ನನಗೆ', ಎಂದು ಮುರವೈರಿಯಾದ ಕೃಷ್ಣನನ್ನು ನೆನೆದು ಚಿಂತಿಸುತ್ತಿದ್ದನು.
  • (ಪದ್ಯ-೩೪)

ಪದ್ಯ :-:೩೫:[ಸಂಪಾದಿಸಿ]

ಭಯನಿವಾರಣ ಸಕಲಸೃಷ್ಟಿಕಾರಣ ಜಗ | ನ್ಮಯ ಜನಾರ್ದನ ದುಷ್ಟದೈತ್ಯಮರ್ದನ ನತಾ | ಶ್ರಯ ಧರಾಧರ ಕಮಲಸಂಭವೋದರ ಘನಶ್ಯಾಮ ಯದುಕುಲಲಲಾಮ ||
ಲಯವಿವರ್ಜಿತ ಪುಣ್ಯನಾಮ ನಿರ್ಜಿತದುರಿತ | ಚಯ ವಿರಾಜಿತ ಸರ್ವಲೋಕ ಪೂಜಿತಪದ | ದ್ವಯ ಕೃಪಾಕರ ಕೃಷ್ಣ ಬಿಡಿಸು ಭೀಕರವನೆಂದರ್ಜುನಂ ಘೊಷಿಸಿದನು ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭಯನಿವಾರಣ ಸಕಲಸೃಷ್ಟಿಕಾರಣ ಜಗನ್ಮಯ ಜನಾರ್ದನ ದುಷ್ಟದೈತ್ಯಮರ್ದನ ನತಾಶ್ರಯ ಧರಾಧರ ಕಮಲಸಂಭವೋದರ ಘನಶ್ಯಾಮ ಯದುಕುಲಲಲಾಮ=[ಭಯವನ್ನ ನಿವಾರಿಸುವವನು, ಸಕಲಸೃಷ್ಟಿಗೆ ಕಾರಣನು, ಜಗನ್ಮಯ ಜನಾರ್ದನ ದುಷ್ಟದೈತ್ಯರನ್ನು ನಾಶ ಮಾಡಿದವನೇ, ನತ /ನಮಸ್ಕರಿಸಿದ ಭಕ್ತರಿಗೆ ಆಶ್ರಯನೇ, ಭೂಮಿಯನ್ನು ಧರಸಿದವನೇ, ಕಮಲಸಂಭವನಾದ ಬ್ರಹ್ಮನನ್ನು ಹೊಕ್ಕಳಲ್ಲಿ ದರಸಿದವನೇ, ಘನಶ್ಯಾಮ ಯದುಕುಲ ಶ್ರೇಷ್ಠನೇ, ]; ಲಯವಿವರ್ಜಿತ ಪುಣ್ಯನಾಮ ನಿರ್ಜಿತದುರಿತಚಯ ವಿರಾಜಿತ ಸರ್ವಲೋಕ ಪೂಜಿತಪದದ್ವಯ ಕೃಪಾಕರ ಕೃಷ್ಣ ಬಿಡಿಸು ಭೀಕರವನೆಂದು ಅರ್ಜುನಂ ಘೊಷಿಸಿದನು=[ ಲಯವಿಲ್ಲದವನೇ, ಪುಣ್ಯನಾಮನೇ ಪಾಪಚಯಗಳನ್ನು ಕಳೆಯುವವನೇ ಅಥವಾ ಪಾಪಗಳಿಲ್ಲದವನೇ, ವಿರಾಜಿತನೇ, ಸರ್ವಲೋಕ ಪೂಜಿತವಾಗುವ ಪಾದಗಳುಳ್ಲವನೇ, ಕೃಪಾಕರ, ಕೃಷ್ಣ. ಬಿಡಿಸು ಭೀಕರ ಕಷ್ಟದಿಂದ ನಮ್ಮನ್ನು ಎಂದು ಅರ್ಜುನಂ ಮೊರೆಯಿಟ್ಟನು.].
  • ತಾತ್ಪರ್ಯ:ಭಯವನ್ನ ನಿವಾರಿಸುವವನು, ಸಕಲಸೃಷ್ಟಿಗೆ ಕಾರಣನು, ಜಗನ್ಮಯ ಜನಾರ್ದನ ದುಷ್ಟದೈತ್ಯರನ್ನು ನಾಶ ಮಾಡಿದವನೇ, ನತ /ನಮಸ್ಕರಿಸಿದ ಭಕ್ತರಿಗೆ ಆಶ್ರಯನೇ, ಭೂಮಿಯನ್ನು ಧರಸಿದವನೇ, ಕಮಲಸಂಭವನಾದ ಬ್ರಹ್ಮನನ್ನು ಹೊಕ್ಕಳಲ್ಲಿ ದರಸಿದವನೇ, ಘನಶ್ಯಾಮ ಯದುಕುಲ ಶ್ರೇಷ್ಠನೇ, ಲಯವಿಲ್ಲದವನೇ, ಪುಣ್ಯನಾಮನೇ ಪಾಪಚಯಗಳನ್ನು ಕಳೆಯುವವನೇ ಅಥವಾ ಪಾಪಗಳಿಲ್ಲದವನೇ, ವಿರಾಜಿತನೇ, ಸರ್ವಲೋಕ ಪೂಜಿತವಾಗುವ ಪಾದಗಳುಳ್ಲವನೇ, ಕೃಪಾಕರ, ಕೃಷ್ಣ. ಬಿಡಿಸು ಭೀಕರ ಕಷ್ಟದಿಂದ ನಮ್ಮನ್ನು ಎಂದು ಅರ್ಜುನನು ಮೊರೆಯಿಟ್ಟನು.
  • (ಪದ್ಯ-೩೫)

ಪದ್ಯ :-:೩೬:[ಸಂಪಾದಿಸಿ]

ಪುಷ್ಕರ ಗದಾ ಶಂಖ ಚಕ್ರ ಶೋಭಿತ ಕರಚ | ತುಷ್ಕದಿಂ ಶ್ರೀವತ್ಸ ಕೌಸ್ತುಭಾಭರಣದಿಂ | ನಿಷ್ಕಳಂಕೇಂದುಮಂಡಲ ಸದೃಶ ವದನದಿಂದ ನವಪೀತವಾಸದಿಂದೆ ||
ಪುಷ್ಕಲಶ್ಯಾಮ ಕೋಮಲ ರಾಮಣೀಯಕ ವ | ಪುಷ್ಕಾಂತಿಯಿಂದೆಸೆವ ನಿನ್ನ ರೂಪೆರ್ದೆಯೊಳಿರೆ | ದುಷ್ಕಂಟಕದ ಭೀತಿಯೆಮಗದೇಕೆಲೆ ದೇವ ಸಲಹೆಂದನಾ ಪಾರ್ಥನು ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪುಷ್ಕರ ಗದಾ ಶಂಖ ಚಕ್ರ ಶೋಭಿತ ಕರಚತುಷ್ಕದಿಂ ಶ್ರೀವತ್ಸ ಕೌಸ್ತುಭಾಭರಣದಿಂ ನಿಷ್ಕಳಂಕೇಂದುಮಂಡಲ ಸದೃಶ ವದನದಿಂದ ನವಪೀತವಾಸದಿಂದೆ =[ಪದ್ಮ ಗದಾ ಶಂಖ ಚಕ್ರ ನಾಲ್ಕು ಕರಗಳಲ್ಲಿ ಶೋಭಿತನೇ, ಶ್ರೀವತ್ಸ(ಶುಭಮಚ್ಚೆ) ಕೌಸ್ತುಭದ ಆಭರಣದಿಂದಲೂ ನಿಷ್ಕಳಂಕದ ಚಂದ್ರಮಂಡಲ ಸದೃಶ ಮುಖದಿಂದಲೂ, ನವಪೀತಾಮಬರ ದರಸಿದವನಾಗಿಯೂ,]; ಪುಷ್ಕಲಶ್ಯಾಮ ಕೋಮಲ ರಾಮಣೀಯಕ ವಪುಷ್ಕಾಂತಿಯಿಂದ ಎಸೆವ ನಿನ್ನ ರೂಪೆರ್ದೆಯೊಳಿರೆ ದುಷ್ಕಂಟಕದ ಭೀತಿಯೆಮಗದೇಕೆಲೆ ದೇವ ಸಲಹೆಂದನಾ ಪಾರ್ಥನು=[ಪುಷ್ಕಲ (ನೈದಿಲೆಯಂತೆ) ಶ್ಯಾಮ ಕೋಮಲ ರಾಮಣೀಯಕವಾದ ವಪುಷ್ಕಾಂತಿ (ಶರೀರದ ಕಾಂತಿ)ಯಿಂದ ಶೋಭಿಸುವ ನಿನ್ನ ರೂಪವು ಎದೆಯಲ್ಲಿದ್ದರೆ ದುಷ್ಕಂಟಕದ ಭೀತಿಯು ನಮಗೆ ಏಕೆಲೆ /ಇರದು, ದೇವ ಸಲಹು ಎಂದನು ಆ ಪಾರ್ಥನು.]
  • ತಾತ್ಪರ್ಯ:ಪದ್ಮ ಗದಾ ಶಂಖ ಚಕ್ರ ನಾಲ್ಕು ಕರಗಳಲ್ಲಿ ಶೋಭಿತನೇ, ಶ್ರೀವತ್ಸ(ಶುಭಮಚ್ಚೆ) ಕೌಸ್ತುಭದ ಆಭರಣದಿಂದಲೂ ನಿಷ್ಕಳಂಕದ ಚಂದ್ರಮಂಡಲ ಸದೃಶ ಮುಖದಿಂದಲೂ, ನವಪೀತಾಮಬರ ದರಸಿದವನಾಗಿಯೂ,ಪುಷ್ಕಲ (ನೈದಿಲೆಯಂತೆ) ಶ್ಯಾಮ ಕೋಮಲ ರಾಮಣೀಯಕವಾದ ವಪುಷ್ಕಾಂತಿ (ಶರೀರದ ಕಾಂತಿ)ಯಿಂದ ಶೋಭಿಸುವ ನಿನ್ನ ರೂಪವು ಎದೆಯಲ್ಲಿದ್ದರೆ ದುಷ್ಕಂಟಕದ ಭೀತಿಯು ನಮಗೆ ಏಕೆಲೆ /ಇರದು, ದೇವ ಸಲಹು ಎಂದು ಆ ಪಾರ್ಥನು ಪ್ರಾರ್ಥಿಸಿದನು.
  • (ಪದ್ಯ-೩೬)

ಪದ್ಯ :-:೩೭:[ಸಂಪಾದಿಸಿ]

ನಿನ್ನೊಂದು ಪೆಸರ ಪೋಲ್ವೆಯೊಳಂದಜಾಮಿಳಂ | ತನ್ನ ಪಾತಕಕೋಟಿಯಂ ಪರಿಹರಿಸಿಕೊಂಡ | ನಿನ್ನು ನೀನೆಂದು ನಂಬಿರ್ದ ನಿಜಶರಣರ್ಗೆ ಭಯಮುಂಟೆಮೂಜಗದೊಳು ||
ಎನ್ನ ಭೀತಿಯನೀಗ ಬಿಡಿಸುವೊಡೆ ಕೃಪೆಯೊಳ್ ಪ್ರ | ಸನ್ನನಾಗಚ್ಯುತ ಮುಕುಂದ ಕೇಶವ ಕೃಷ್ಣ | ಪನ್ನಗಾರಿಧ್ವಜನೆ ಯೆನುತೆ ನರಹರಿಯ ನಾಮಂಗಳಂ ವಾಚಿಸಿದನು||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಿನ್ನ ಒಂದು ಪೆಸರ ಪೋಲ್ವೆಯೊಳು ಅಂದು ಅಜಾಮಿಳಂ ತನ್ನ ಪಾತಕಕೋಟಿಯಂ ಪರಿಹರಿಸಿಕೊಂಡನು ಇನ್ನು ನೀನೆಂದು ನಂಬಿರ್ದ ನಿಜಶರಣರ್ಗೆ ಭಯಮುಂಟೆ ಮೂಜಗದೊಳು=[ನಿನ್ನ ಒಂದು ಹೆಸರು 'ನಾರಾಯಣ'ಎಂದು ಹೆಸರ ಹೋಲುವ ತನ್ನ ಮಗನನ್ನು ಕರೆದ ಕಾರಣ ಅಜಾಮಿಳನು ಅಂದು ತನ್ನ ಪಾತಕಕೋಟಿಯನ್ನು ಪರಿಹರಿಸಿಕೊಂಡನು, ಇನ್ನು ನೀನೆಂದು ನಂಬಿದ ನಿನ್ನ ಶರಣರಿಗೆ ಭಯವಿರುವುದೇ ಮೂರು ಜಗದಲ್ಲಿ!]; ಎನ್ನ ಭೀತಿಯನು ಈಗ ಬಿಡಿಸುವೊಡೆ ಕೃಪೆಯೊಳ್ ಪ್ರಸನ್ನನಾಗು ಅಚ್ಯುತ ಮುಕುಂದ ಕೇಶವ ಕೃಷ್ಣ ಪನ್ನಗಾರಿಧ್ವಜನೆಯೆನುತೆ ನರಹರಿಯ ನಾಮಂಗಳಂ ವಾಚಿಸಿದನು =[ನನ್ನ ಭಯವನ್ನು ಈಗ ಬಿಡಿಸಲು ಕೃಪೆಯಿಂದ ಪ್ರಸನ್ನನಾಗು ಅಚ್ಯುತ! ಮುಕುಂದ! ಕೇಶವ! ಕೃಷ್ಣ! ಪನ್ನಗಾರಿಧ್ವಜನೆ! ಎನ್ನುತ್ತಾ ನರಹರಿಯ/ವಿಷ್ನುವಿನ ನಾಮಗಳನ್ನು ಭಜಿಸಿದನು].
  • ತಾತ್ಪರ್ಯ:ನಿನ್ನ ಒಂದು ಹೆಸರು 'ನಾರಾಯಣ'ಎಂದು ಹೆಸರ ಹೋಲುವ ತನ್ನ ಮಗನನ್ನು ಕರೆದ ಕಾರಣ ಅಜಾಮಿಳನು ಅಂದು ತನ್ನ ಪಾತಕಕೋಟಿಯನ್ನು ಪರಿಹರಿಸಿಕೊಂಡನು, ಇನ್ನು ನೀನೆಂದು ನಂಬಿದ ನಿನ್ನ ಶರಣರಿಗೆ ಭಯವಿರುವುದೇ ಮೂರು ಜಗದಲ್ಲಿ! ನನ್ನ ಭಯವನ್ನು ಈಗ ಬಿಡಿಸಲು ಕೃಪೆಯಿಂದ ಪ್ರಸನ್ನನಾಗು ಅಚ್ಯುತ! ಮುಕುಂದ! ಕೇಶವ! ಕೃಷ್ಣ! ಪನ್ನಗಾರಿಧ್ವಜನೆ! ಎನ್ನುತ್ತಾ ನರಹರಿಯ/ವಿಷ್ನುವಿನ ನಾಮಗಳನ್ನು ಭಜಿಸಿದನು].
  • (ಪದ್ಯ-೩೭)

ಪದ್ಯ :-:೩೮:[ಸಂಪಾದಿಸಿ]

ಅದ್ಭುತವ್ಯಾಘ್ರಮಾದಶ್ವಮಂ ಕಾಣುತೆ ಮ | ಹದ್ಭಯದೊಳಸುರಾರಿಯಂ ಪಾರ್ಥನಿಂತೆಂದು | ಸದ್ಭಾವದಿಂ ಪ್ರಾರ್ಥಿಪನ್ನಗಂ ದೈವವಶದಿಂ ತನ್ನ ತಾನೆ ಬಳಿಕ ||
ಉದ್ಭವಿಸಿತಾ ಹಯಕೆ ಮುನ್ನಿನಾಕಾರಮಾ | ಪದ್ಭೀತಿ ಪಾಂಡವರ್ಗೆತ್ತಣದು ಮುರರಿಪು ಸು | ಹೃದ್ಭಂಗಮಂ ಸೈರಿಸುವನಲ್ಲೆನುತ್ತೆ ಕಟಕದ ಮಂದಿ ಕೊಂಡಾಡಲು ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅದ್ಭುತ ವ್ಯಾಘ್ರಮಾದ ಅಶ್ವಮಂ ಕಾಣುತೆ ಮಹದ್ಭಯದೊಳು ಅಸುರಾರಿಯಂ ಪಾರ್ಥನು ಇಂತೆಂದು ಸದ್ಭಾವದಿಂ ಪ್ರಾರ್ಥಿಪ ಅನ್ನಗಂ =[ಅದ್ಭುತ ಹುಲಿಯಾದ ಅಶ್ವವನ್ನು ಕಂಡು ಮಹಾಭಯದಲ್ಲಿ ಕೃಷ್ಣನನ್ನು ಪಾರ್ಥನು ಈ ರೀತಿ ಸದ್ಭಾವದಿಂದ ಪ್ರಾರ್ಥಿಸಿದ ನಂತರ,]; ದೈವವಶದಿಂ ತನ್ನ ತಾನೆ ಬಳಿಕ ಉದ್ಭವಿಸಿತು ಆ ಹಯಕೆ ಮುನ್ನಿನ ಆಕಾರಮು =[ದೈವವಶದಿಂದ ತನ್ನಿಂದ ತಾನೆ ಬಳಿಕ ಆ ಕುದುರೆಗೆ ಮೊದಲಿನ ಆಕಾರವು ಉಂಟಾಯಿತು.]; ಆಪದ್ಭೀತಿ ಪಾಂಡವರ್ಗೆ ಎತ್ತಣದು ಮುರರಿಪು ಸುಹೃತ್ ಭಂಗಮಂ ಸೈರಿಸುವನಲ್ಲ ಎನುತ್ತೆ ಕಟಕದ ಮಂದಿ ಕೊಂಡಾಡಲು =[ಆಪತ್ತಿನ ಭಯ ಪಾಂಡವರಿಗೆ ಎಲ್ಲಿಯದು! ಬರಲಾರದು. ಕೃಷ್ನನು ಮಿತ್ರರ ಅಪಮಾನವನ್ನು ಸೈರಿಸುವನಲ್ಲ ಎನುತ್ತಾ ಸೈನ್ಯದ ಜನರು ಕೊಂಡಾಡುತ್ತಿದ್ದರು.].
  • ತಾತ್ಪರ್ಯ:ಅದ್ಭುತಾಕಾರದ ಹುಲಿಯಾದ ಅಶ್ವವನ್ನು ಕಂಡು ಮಹಾಭಯದಲ್ಲಿ ಕೃಷ್ಣನನ್ನು ಪಾರ್ಥನು ಈ ರೀತಿ ಸದ್ಭಾವದಿಂದ ಪ್ರಾರ್ಥಿಸಿದ ನಂತರ, ದೈವವಶದಿಂದ ತನ್ನಿಂದ ತಾನೆ ಆ ಕುದುರೆಗೆ ಮೊದಲಿನ ಆಕಾರವು ಉಂಟಾಯಿತು. ಆಪತ್ತಿನ ಭಯ ಪಾಂಡವರಿಗೆ ಎಲ್ಲಿಯದು! ಬರಲಾರದು. ಕೃಷ್ನನು ಮಿತ್ರರ ಅಪಮಾನವನ್ನು ಸೈರಿಸುವನಲ್ಲ ಎನುತ್ತಾ ಸೈನ್ಯದ ಜನರು ಕೊಂಡಾಡುತ್ತಿದ್ದರು.
  • (ಪದ್ಯ-೩೮)

ಪದ್ಯ :-:೩೯:[ಸಂಪಾದಿಸಿ]

ಆಟವಿಕನೊಂದೊಂದು ಬಹುರೂಪಮಂ ತಾಳ್ದು | ನಾಟಕವನಾಡಿ ಮುನ್ನಿನ ತನ್ನ ರೂಪದಿಂ | ನೋಟಕರ ಕಣ್ಗೆ ಕಾಣಿಸುವಂತೆ ಪೆಣ್ಗುದುರೆಯಾಗಿ ಪುಲಿಯಾಗಿ ಮತ್ತೆ ||
ಘೋಟಕೋತ್ತಮಮಾದುದೆಂದಿನಂದದೊಳಾ ನಿ | ಶಾಟದಲ್ಲಣನಂ ಪೊಗಳ್ದುದೆಲ್ಲಾ ಜನಂ | ಕೋಟಿಸಂಖ್ಯೆಯೊಳೊದರಿದುವು ನಿಖಿಲವಾದ್ಯಂಗಳುತ್ಸವದೆ ಪಾಳೆಯದೊಳು ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆಟವಿಕನು ಒಂದೊಂದು ಬಹುರೂಪಮಂ ತಾಳ್ದು ನಾಟಕವನಾಡಿ ಮುನ್ನಿನ ತನ್ನ ರೂಪದಿಂ ನೋಟಕರ ಕಣ್ಗೆ ಕಾಣಿಸುವಂತೆ =[ಯಕ್ಷಿಣಿ ಆಟಗಾರನು ಒಂದೊಂದು ಬಹುರೂಪವನ್ನು ತಾಳಿ, ನಾಟಕವಾಡಿ, ಮೊದಲಿನ ತನ್ನ ರೂಪದಿಂದ ನೋಟಕರ ಕಣ್ಣಿಗೆ ಕಾಣಿಸುವಂತೆ,]; ಪೆಣ್ಗುದುರೆಯಾಗಿ ಪುಲಿಯಾಗಿ ಮತ್ತೆ ಘೋಟಕೋತ್ತಮಂ ಆದುದು ಎಂದಿನ ಅಂದದೊಳು ಆ ನಿಶಾಟ ದಲ್ಲಣನಂ (ರಾಕ್ಷಸರ ಸೊಕ್ಕು ಅಡಗಿಸಿದವ) ಪೊಗಳ್ದುದು ಎಲ್ಲಾ ಜನಂ ಕೋಟಿಸಂಖ್ಯೆಯೊಳು ಒದರಿದುವು ನಿಖಿಲವಾದ್ಯಂಗಳು ಉತ್ಸವದೆ ಪಾಳೆಯದೊಳು =[ಹೆಣ್ಣು ಕುದುರೆಯಾಗಿ ಹುಲಿಯಾಗಿ ಮತ್ತೆ ಉತ್ತಮ ಅಶ್ವವಾಗಿ ಎಂದಿನ ರೀತಿಯಲ್ಲಿ,ಬದಲಾವಣೆ ಆಯಿತು, ಅದಕ್ಕಾಗಿ ಕೃಷ್ಣನನ್ನು ಎಲ್ಲಾ ಜನರೂಹೊಗಳಿದರು. ಪಾಳೆಯದಲ್ಲಿ ಕೋಟಿಸಂಖ್ಯೆಯಲ್ಲಿ ಎಲ್ಲಾ ವಾದ್ಯಂಗಳೂ ಉತ್ಸವದ ಸಂತೋಷದಲ್ಲಿ ಒದರಿದುವು / ಊದಿದವು].
  • ತಾತ್ಪರ್ಯ: ಯಕ್ಷಿಣಿ ಆಟಗಾರನು ಒಂದೊಂದು ಬಹುರೂಪವನ್ನು ತಾಳಿ, ನಾಟಕವಾಡಿ, ಮೊದಲಿನ ತನ್ನ ರೂಪದಿಂದ ನೋಟಕರ ಕಣ್ಣಿಗೆ ಕಾಣಿಸುವಂತೆ, ಹೆಣ್ಣು ಕುದುರೆಯಾಗಿ ಹುಲಿಯಾಗಿ ಮತ್ತೆ ಉತ್ತಮ ಅಶ್ವವಾಗಿ ಎಂದಿನ ರೀತಿಯಲ್ಲಿ,ಬದಲಾವಣೆ ಆಯಿತು. ಅದಕ್ಕಾಗಿ ಕೃಷ್ಣನನ್ನು ಎಲ್ಲಾ ಜನರೂ ಹೊಗಳಿದರು. ಪಾಳೆಯದಲ್ಲಿ ಕೋಟಿಸಂಖ್ಯೆಯಲ್ಲಿ ಎಲ್ಲಾ ವಾದ್ಯಂಗಳೂ ಉತ್ಸವದ ಸಂತೋಷದಲ್ಲಿ ಊದಿದವು].
  • (ಪದ್ಯ-೩೯)

ಪದ್ಯ :-:೪೦:[ಸಂಪಾದಿಸಿ]

ಸೇವ್ಯಮಾಗಿರ್ದುದೆಂದಿನವೋಲ್ ತುರಂಗಂ ಮ | ಹಾ ವ್ಯಾಘ್ರರೂಪಡಗಿತಸುರಾರಿ ಭಕ್ತ ರ | ಕ್ಷಾ ವ್ಯಸನಿಯೆಂಬುದಂ ಕಾಣಿಸಿದನಡಿಗಡಿಗೆ ಕಟಕದ ಸಮಸ್ತ ಜನರು ||
ಈ ವ್ಯಾಳರಾಜ ಶಾಯಿಗೆ ಬಂದಬಂದನಾ | ನಾ ವ್ಯಥೆಯನಪಹರಿಸಿ ಪಾಂಡುಸುತರಂ ಪೊರೆವು | ದೇ ವ್ಯವಹರಣೆಯೆಂದು ಕೃಷ್ಣನಂ ಕೊಂಡಾಡಲುಬ್ಬೇರಿದಂ ಪಾರ್ಥನು ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸೇವ್ಯಮಾಗಿರ್ದುದು ಎಂದಿನವೋಲ್ ತುರಂಗಂ ಮಹಾ ವ್ಯಾಘ್ರರೂಪ ಅಡಗಿತು ಅಸುರಾರಿ ಭಕ್ತ ರಕ್ಷಾ ವ್ಯಸನಿಯೆಂಬುದನು ಕಾಣಿಸಿದನು ಅಡಿಗಡಿಗೆ =[ಎಂದಿನಂತೆ ಕುದುರೆಯು ಸೇವೆಗೆ ಯೋಗ್ಯವಾಯಿತು; ಮಹಾ ಹುಲಿಯ ರೂಪ ಅಡಗಿತು. ಕೃಷ್ಣನು ತಾನು ಭಕ್ತರ ರಕ್ಷಣೆ ಮಾಡುವ ಸ್ವಭಾವದವನೆಂದು ಪದೇಪದೇ ತೋರಿಸಿದನು.]; ಕಟಕದ ಸಮಸ್ತ ಜನರು ಈ ವ್ಯಾಳರಾಜ(ಶೇಷ) ಶಾಯಿಗೆ ಬಂದಬಂದನಾನಾ ವ್ಯಥೆಯನು ಅಪಹರಿಸಿ ಪಾಂಡುಸುತರಂ ಪೊರೆವುದೇ ವ್ಯವಹರಣೆಯೆಂದು ಕೃಷ್ಣನಂ ಕೊಂಡಾಡಲು ಉಬ್ಬೇರಿದಂ ಪಾರ್ಥನು =[ಸೈನ್ಯದ ಸಮಸ್ತ ಜನರೂ ಈ ಶೇಷಶಾಹಿ ಕೃಷ್ಣನಿಗೆ, ಪದೇ ಪದೇ ಬಂದ ನಾನಾ ಕಷ್ಟಗಲನ್ನು ಪರಿಹರಿಸಿ ಪಾಂಡವರನ್ನು ಕಾಪಾಡುವುದೇ ಕೆಲಸವೆಂದು ಕೃಷ್ಣನನ್ನು ಕೊಂಡಾಡಲು ಪಾರ್ಥನು ಹಿಗ್ಗಿದನು.]
  • ತಾತ್ಪರ್ಯ: ಎಂದಿನಂತೆ ಕುದುರೆಯು ಸೇವೆಗೆ ಯೋಗ್ಯವಾಯಿತು; ಮಹಾ ಹುಲಿಯ ರೂಪ ಅಡಗಿತು. ಕೃಷ್ಣನು ತಾನು ಭಕ್ತರ ರಕ್ಷಣೆ ಮಾಡುವ ಸ್ವಭಾವದವನೆಂದು ಪದೇಪದೇ ತೋರಿಸಿದನು. ಸೈನ್ಯದ ಸಮಸ್ತ ಜನರೂ ಈ ಶೇಷಶಾಹಿ ಕೃಷ್ಣನಿಗೆ, ಪದೇ ಪದೇ ಬಂದ ನಾನಾ ಕಷ್ಟಗಲನ್ನು ಪರಿಹರಿಸಿ ಪಾಂಡವರನ್ನು ಕಾಪಾಡುವುದೇ ಕೆಲಸವೆಂದು ಕೃಷ್ಣನನ್ನು ಕೊಂಡಾಡಲು ಪಾರ್ಥನು ಹಿಗ್ಗಿದನು.]
  • (ಪದ್ಯ-೪೦)

ಪದ್ಯ :-:೪೧:[ಸಂಪಾದಿಸಿ]

ಬಳಿಕ ಪಾರಿಪ್ಲವ ಧರಿತ್ರಿಯಿಂದಾ ಹಯಂ | ತಳರ್ದುದತಿವೇಗದಿಂ ಬಹಳ ದೇಶಂಗಳಂ | ಕೆಳೆಕಳೆದು ಬರಿಯ ವನಿತಾಮಯದ ರಾಜ್ಯದೊಳಸೀಮೆಗುತ್ಸಾಹದಿಂದ ||
ಫಲುಗುಣನ ಸೇನೆ ನಡೆದುದು ಕೂಡೆ ಭಾರದಿಂ | ದಿಳೆ ಮುಂದಕೊರ್ಗುಡಿಸಿ ಮುಗ್ಗಲೊಂದೆಸೆಯೊಳೊ | ಬ್ಬುಳಿಸಿದುವು ಮಂದಿ ಕುದುರೆಗಳೆಂಬ ತೆರೆದಿಂದೆ ಸಂದಣಿಸಿತೇವೇಳ್ವೆನು ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಪಾರಿಪ್ಲವ ಧರಿತ್ರಿಯಿಂದ ಆ ಹಯಂ ತಳರ್ದುದು ಅತಿವೇಗದಿಂ ಬಹಳ ದೇಶಂಗಳಂ ಕೆಳೆಕಳೆದು ಬರಿಯ ವನಿತಾಮಯದ ರಾಜ್ಯದ ಒಳಸೀಮೆಗೆ ಉತ್ಸಾಹದಿಂದ =[ಬಳಿಕ ಪಾರಿಪ್ಲವ ಭೂಪ್ರದೇಶದಿಂದ ಆ ಕುದುರೆಯು, ತಳರ್ದುದು ಅತಿವೇಗವಾಗಿ ತೆರಳಿತು. ಬಹಳ ದೇಶಗಳನ್ನು ದಾಟಿ ದಾಟಿ ಬರಿಯ ವನಿತೆಯರು ಇರುವ ರಾಜ್ಯದ ಒಳಪ್ರದೇಶಕ್ಕೆ ಉತ್ಸಾಹದಿಂದ ಪ್ರವೇಶಿಸಿತು.]; ಫಲುಗುಣನ ಸೇನೆ ನಡೆದುದು ಕೂಡೆ ಭಾರದಿಂದ ಇಳೆ ಮುಂದಕೆ ಓರ್ಗುಡಿಸಿ (ಓರ್ + ಗುಡಿಸಿ -ಓರೆಯಾಗಿ) ಮುಗ್ಗಲು ಒಂದೆಸೆಯೊಳು ಉಬ್ಬುಳಿಸಿದುವು ಮಂದಿ ಕುದುರೆಗಳೆಂಬ ತೆರೆದಿಂದೆ ಸಂದಣಿಸಿತು ಏವೇಳ್ವೆನು =[ಅರ್ಜುನನ ಸೇನೆಯೂ ಅದರ ಜೊತೆ ನಡೆಯಿತು; ಸೈನ್ಯದ ಭಾರದಿಂದ ಭೂಮಿ ಮುಂದಕ್ಕೆ ಓರೆಯಾಗಿ ತಗ್ಗಿಹೋಗಲು (ಮುಗ್ಗರಿಸು) ಸೈನ್ಯವು ಒಂದು ಕಡೆ ಸೇರಿ ಸಂದಣಿಸಿದುವು ಜನ, ಕುದುರೆಗಳು, ಹೀಗೆ ವಿಂಗಡಿಸಿದ ತರೆದಲ್ಲಿ ಒಟ್ಟಾಗಿ ಸೇರಿತು; ಏನು ಹೇಳಲಿ.]
  • ತಾತ್ಪರ್ಯ: ಬಳಿಕ ಪಾರಿಪ್ಲವ ಭೂಪ್ರದೇಶದಿಂದ ಆ ಕುದುರೆಯು, ತಳರ್ದುದು ಅತಿವೇಗವಾಗಿ ತೆರಳಿತು. ಬಹಳ ದೇಶಗಳನ್ನು ದಾಟಿ ದಾಟಿ ಬರಿಯ ವನಿತೆಯರು ಇರುವ ರಾಜ್ಯದ ಒಳಪ್ರದೇಶಕ್ಕೆ ಉತ್ಸಾಹದಿಂದ ಪ್ರವೇಶಿಸಿತು. ಅರ್ಜುನನ ಸೇನೆಯೂ ಅದರ ಜೊತೆ ನಡೆಯಿತು; ಸೈನ್ಯದ ಭಾರದಿಂದ ಭೂಮಿ ಮುಂದಕ್ಕೆ ಓರೆಯಾಗಿ ತಗ್ಗಿಹೋಗಲು (ಮುಗ್ಗರಿಸು) ಸೈನ್ಯವು ಒಂದು ಕಡೆ ಸೇರಿ ಸಂದಣಿಸಿದುವು ಜನ, ಕುದುರೆಗಳು, ಹೀಗೆ ವಿಂಗಡಿಸಿದ ತರೆದಲ್ಲಿ ಒಟ್ಟಾಗಿ ಸೇರಿತು; ಏನು ಹೇಳಲಿ.
  • (ಪದ್ಯ-೪೧)

ಪದ್ಯ :-:೪೨:[ಸಂಪಾದಿಸಿ]

ರಾಯ ಕೇಳಾರಾಜ್ಯದೊಳ್ ಬರಿಯ ನಾರಿಯರ್ | ಪ್ರಾಯತೆಯರಾಗಿ ಮಧುಪಾನಮತ್ತೆಯರಾಗಿ | ಕಾಯಜ ಕಲಾಕೋವಿದೆಯರಾಗಿ ರೂಫ ಲಾವಣ್ಯ ವಿಲಸಿತೆಯರಾಗಿ ||
ಗೇಯ ನರ್ತನ ವೇಣು ವೀಣಾ ವಿನೋದ ರಮ | ಣೀಯಭೋಗಾನ್ವಿತೆಯರಾಗಿ ಮತ್ತದರೊಳಾ | ಸ್ತ್ರೀಯೋರ್ವಳರಸಾಗಿರಲ್ಕವಳ ಕೆಳಗಾಗಿ ಬದುಕುವರ್ ಭಾಗ್ಯದಿಂದೆ ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಯ ಕೇಳಾರಾಜ್ಯದೊಳ್ ಬರಿಯ ನಾರಿಯರ್ ಪ್ರಾಯತೆಯರಾಗಿ ಮಧುಪಾನಮತ್ತೆಯರಾಗಿ ಕಾಯಜ ಕಲಾಕೋವಿದೆಯರಾಗಿ=[ರಾಜನೇ ಕೇಳು ,ಆ ರಾಜ್ಯದಲ್ಲಿ ಬರಿಯ ಹೆಂಗಸರು. ಯರುಣಿಯರು, ಮದ್ಯ ಪಾನ ಮಾಡಿ ಮತ್ತೇರಿರುವರು, ಮದನನ ಕಲೆಯಲ್ಲಿ ಜಾಣರು,]; ರೂಫ ಲಾವಣ್ಯ ವಿಲಸಿತೆಯರಾಗಿ ಗೇಯ ನರ್ತನ ವೇಣು ವೀಣಾ ವಿನೋದ ರಮಣೀಯಭೋಗಾನ್ವಿತೆಯರಾಗಿ =[ರೂಫ ಲಾವಣ್ಯಗಳಲ್ಲಿ ಶೋಭಿಸುವರು; ಹಾಡು ನರ್ತನ ವೇಣು (ಕೊಳಲು) ವೀಣಾ ವಿನೋದದಲ್ಲಿ ಮನೋಹರವಾದ ಭೋಗ ಹೊಂದಿದವರಾಗಿರುವರು.]; ಮತ್ತದರೊಳಾ ಸ್ತ್ರೀಯೋರ್ವಳು ಅರಸಾಗಿ ಇರಲ್ಕೆ ಅವಳ ಕೆಳಗಾಗಿ ಬದುಕುವರ್ ಭಾಗ್ಯದಿಂದೆ=[ಮತ್ತೆ ಅದರಲ್ಲಿ ಒಬ್ಬ ಸ್ತ್ರೀಯು ಅರಸಳಾಗಿ (ರಾಜನಿಲ್ಲದ ರಾಣಿ) ಇರುವಳು. ಅವಳ ಆಡಳಿತದ ಕೆಳಗೆ ಸಕಲಭಾಗ್ಯದಿಂದ ಉಳಿದವರು ಬದುಕುವರು].
  • ತಾತ್ಪರ್ಯ:ರಾಜನೇ ಕೇಳು ,ಆ ರಾಜ್ಯದಲ್ಲಿ ಬರಿಯ ಹೆಂಗಸರು. ಯರುಣಿಯರು, ಮದ್ಯ ಪಾನ ಮಾಡಿ ಮತ್ತೇರಿರುವರು, ಮದನನ ಕಲೆಯಲ್ಲಿ ಜಾಣರು, ರೂಫ ಲಾವಣ್ಯಗಳಲ್ಲಿ ಶೋಭಿಸುವರು; ಹಾಡು ನರ್ತನ ವೇಣು (ಕೊಳಲು) ವೀಣಾ ವಿನೋದದಲ್ಲಿ ಮನೋಹರವಾದ ಭೋಗ ಹೊಂದಿದವರಾಗಿರುವರು. ಮತ್ತೆ ಅದರಲ್ಲಿ ಒಬ್ಬ ಸ್ತ್ರೀಯು ಅರಸಳಾಗಿ (ರಾಜನಿಲ್ಲದ ರಾಣಿ) ಇರುವಳು. ಅವಳ ಆಡಳಿತದ ಕೆಳಗೆ ಸಕಲಭಾಗ್ಯದಿಂದ ಉಳಿದವರು ಬದುಕುವರು.
  • (ಪದ್ಯ-೪೨)

ಪದ್ಯ :-:೪೩:[ಸಂಪಾದಿಸಿ]

ಅಲ್ಲಿಗೈದಿದ ಪುರುಷರೋರ್ವರುಂ ಜೀವಿಸುವು | ದಿಲ್ಲ ಬಂದಾತನಂ ಕಂಡು ಲಲಿತಾಂಗಿಯರ್ || ಚೆಲ್ಲೆಗಂಗಳ ನೋಟಮಂ ಬೀರಿ ಸವಿವೇಟಮಂ ತೋರಿ ಮಿಗೆ ಸೊಗಸುವ ||
ಸೆಳ್ಳುಗುರ್ಗಳನೂರಿ ಮೆಲ್ಲಮೆಲ್ಲನೆ ಕೀರಿ | ಲಲ್ಲೆಗೈಯುತೆ ಮೀರಿ ಬಲ್ಮೊಲೆಗಳಂ ಪೇರಿ | ಪುಲ್ಲಶರಕೇಳಿಯೊಳ್ ಮದವೇರಿಸುವರವರ್ಮರುಳಹವೊಲರಿವು ಜಾರಿ ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಲ್ಲಿಗೆ ಐದಿದ ಪುರುಷರು ಓರ್ವರುಂ ಜೀವಿಸುವುದಿಲ್ಲ =[ಅಲ್ಲಿಗೆ ಬಂದ ಪುರುಷರು ಓಬ್ಬರೂ ಜೀವಿಸುವುದಿಲ್ಲ / ಜೀವಿಸಿ ಹಿಂತಿರುಗುವುದಿಲ್ಲ]; ಬಂದಾತನಂ ಕಂಡು ಲಲಿತಾಂಗಿಯರ್ ಚೆಲ್ಲೆಗಂಗಳ ನೋಟಮಂ ಬೀರಿ ಸವಿವೇಟಮಂ ತೋರಿ ಮಿಗೆ ಸೊಗಸುವ ಸೆಳ್ಳುಗುರ್ಗಳನೂರಿ ಮೆಲ್ಲಮೆಲ್ಲನೆ ಕೀರಿ,=[ಅಲ್ಲಿಗೆ ಬಂದಾತನನ್ನು ಕಂಡು ಲಲಿತಾಂಗಿಯರು ಚಂಚಲ ಕಣ್ಣುನೋಟ ಬೀರಿ, ಸವಿಬೆಡಗನ್ನು ತೋರಿಸಿ, ಮತ್ತೂ ಸೊಗಸಾದ ತೆಳು ಉಗುರುಗಳನ್ನು ಊರಿ ಮೆಲ್ಲಮೆಲ್ಲನೆ ಗೀರಿ,]; ಲಲ್ಲೆಗೈಯುತೆ ಮೀರಿ ಬಲ್ಮೊಲೆಗಳಂ ಪೇರಿ ಪುಲ್ಲಶರ (ಹೂವಿನ ಬಾಣ)ಕೇಳಿಯೊಳ್ (ಆಟದಲ್ಲಿ) ಮದವೇರಿಸುವರವರ್ಮರುಳಹವೊಲರಿವು ಜಾರಿ =[ಚಕ್ಕಂದದ ಮಾತನಾಡತ್ತಾ, ಮುಂದುವರಿದು ತಮ್ಮ ಬಲ್ಮೊಲೆಗಳನ್ನು ಪುರುಷರ ಎದೆಯ ಮೇಲೆ ಹೇರಿ. ಕಾಮದಾಟದಲ್ಲಿ ಮತ್ತೇರಿಸುವರು, ಅವರು ಮರುಳಾಗಿ ಬುದ್ಧಿ ಅರಿವು /ವಿವೇಕ ಹೋಗುವಂತೆ ಮಾಡುವರು.]
  • ತಾತ್ಪರ್ಯ:ಅಲ್ಲಿಗೆ ಬಂದ ಪುರುಷರು ಓಬ್ಬರೂ ಜೀವಿಸುವುದಿಲ್ಲ / ಜೀವಿಸಿ ಹಿಂತಿರುಗುವುದಿಲ್ಲ; ಅಲ್ಲಿಗೆ ಬಂದಾತನನ್ನು ಕಂಡು ಲಲಿತಾಂಗಿಯರು ಚಂಚಲ ಕಣ್ಣುನೋಟ ಬೀರಿ, ಸವಿಬೆಡಗನ್ನು ತೋರಿಸಿ, ಮತ್ತೂ ಸೊಗಸಾದ ತೆಳು ಉಗುರುಗಳನ್ನು ಊರಿ ಮೆಲ್ಲಮೆಲ್ಲನೆ ಗೀರಿ,ಚಕ್ಕಂದದ ಮಾತನಾಡತ್ತಾ, ಮುಂದುವರಿದು ತಮ್ಮ ಬಲ್ಮೊಲೆಗಳನ್ನು ಪುರುಷರ ಎದೆಯ ಮೇಲೆ ಹೇರಿ, ಕಾಮದಾಟದಲ್ಲಿ ಮತ್ತೇರಿಸುವರು, ಅವರು ಮರುಳಾಗಿ ಬುದ್ಧಿ /ಅರಿವು /ವಿವೇಕ ಹೋಗುವಂತೆ ಮಾಡುವರು.
  • (ಪದ್ಯ-೪೩)

ಪದ್ಯ :-:೪೪:[ಸಂಪಾದಿಸಿ]

ಸಮರತಿಯೊಳೊಮ್ಮೆ ಬೆರಸಿದ ಬಳಿಕ ವಿಷಯದಾ | ಭ್ರಮೆಯಿಂದೆ ಮಗ್ನರಾಗಿಹರಾ ಪುರುಷರಲ್ಲಿ | ರಮಿಸುವರವರ ಕೂಡೆ ನಾನಾಪ್ರಕಾರದಿಂದಾ ಪಂಕರುಹಮುಖಿಯರು ||
ಕ್ರಮದೊಳೀ ತೆರದೆ ಸುಖಿಸುವರೊಂದು ತಿಂಗಳು | ತ್ತಮಸುಗಂಧಾನುಲೇಪನದಿಂದೆ ಮೊಗವಾಸ | ದಮಲತಾಂಬೂಲದಿಂ ಮಧುರ ಮಧುಪಾನದಿಂದೆಸೆವ ಸಂಯೋಗದಿಂದೆ ||44||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಮರತಿಯೊಳು ಒಮ್ಮೆ ಬೆರಸಿದ ಬಳಿಕ ವಿಷಯದ ಆ ಭ್ರಮೆಯಿಂದೆ ಮಗ್ನರಾಗಿಹರು =[ಪುರುಷರೊಡನೆ ಸಮರತಿಯಲ್ಲಿ ಒಂದುಸಾರಿ ಬೆರತ ಬಳಿಕ ವಿಷಯ/ ಕಾಮದ ಆ ಭ್ರಮೆಯಿಂದ ಮಗ್ನರಾಗುವರು.]; ಆ ಪುರುಷರಲ್ಲಿ ರಮಿಸುವರು ಅವರ ಕೂಡೆ ನಾನಾಪ್ರಕಾರದಿಂದ, ಆ ಪಂಕರುಹಮುಖಿಯರು =[ಆ ಪಂಕರುಹ/ ಕಮಲ ಮುಖಿಯರು ಅವರ ಕೂಡೆ ನಾನಾಪ್ರಕಾರದಿಂದ ಆ ಪುರುಷರಲ್ಲಿ ರಮಿಸುವರು/ ಸುಖಪಡುವರು]; ಕ್ರಮದೊಳು ಈ ತೆರದೆ ಸುಖಿಸುವರು ಒಂದು ತಿಂಗಳು ಉತ್ತಮ ಸುಗಂಧ ಅನುಲೇಪನದಿಂದೆ ಮೊಗವಾಸದ ಅಮಲ ತಾಂಬೂಲದಿಂ ಮಧುರ ಮಧುಪಾನದಿಂದ ಎಸೆವ ಸಂಯೋಗದಿಂದೆ =[ಈ ಕ್ರಮದಲ್ಲಿ ಈ ತೆರದಿಂದ ಒಂದು ತಿಂಗಳು ಉತ್ತಮ ಸುಗಂಧ ಅನುಲೇಪನದಿಂದ ಮುಖ/ಬಾಯಿ ಸುವಾಸನೆಯ ಅಮಲ ತಾಂಬೂಲ ಕೊಟ್ಟು ಮಧುರವಾದ ಮಧುಪಾನಮಾಡಿಸಿ ಚಂದವಾಗಿ ಸಂಯೋಗದಿಂದ ಸುಖಿಸುವರು,]
  • ತಾತ್ಪರ್ಯ:ಅಲ್ಲಿಯ ಸುಂದರಿಯರು, ಪುರುಷರೊಡನೆ ಸಮರತಿಯಲ್ಲಿ ಒಂದುಸಾರಿ ಬೆರತ ಬಳಿಕ ವಿಷಯ/ ಕಾಮದ ಆ ಭ್ರಮೆಯಿಂದ ಪುರುಷರು ಮಗ್ನರಾಗುವರು. ಆ ಪಂಕರುಹ/ ಕಮಲ ಮುಖಿಯರು ಅವರ ಕೂಡೆ ನಾನಾಪ್ರಕಾರದಿಂದ ಆ ಪುರುಷರಲ್ಲಿ ರಮಿಸುವರು/ ಸುಖಪಡುವರು; ಈ ಕ್ರಮದಲ್ಲಿ ಈ ತೆರದಿಂದ ಒಂದು ತಿಂಗಳು ಉತ್ತಮ ಸುಗಂಧ ಅನುಲೇಪನದಿಂದ ಮುಖ/ಬಾಯಿ ಸುವಾಸನೆಯ ಅಮಲ ತಾಂಬೂಲ ಕೊಟ್ಟು ಮಧುರವಾದ ಮಧುಪಾನಮಾಡಿಸಿ ಚಂದವಾಗಿ ಸಂಯೋಗದಿಂದ ಸುಖಿಸುವರು,
  • (ಪದ್ಯ-೪೪)XXIII

ಪದ್ಯ :-:೪೫:[ಸಂಪಾದಿಸಿ]

ವಿಧವಿಧದೊಳೆಸೆವ ಕುಸುಮೋತ್ಕರದ ಪರಿಮಳದ | ಮಧುರಾಸವಕೆ ತಮ್ಮ ಮುಖವಾಸದೊಳ್ಗಂಪಿ | ನಧರದಿನಿದಂ ಬೆರಸುವಂತೆ ಮೊಗಮಿಟ್ಟು ಪೊಂಬಟ್ಟಲೊಳ್ ಸವಿದು ಮಿಕ್ಕ ||
ಮಧುವಂ ಮದಿರನೇತ್ರದಿಂ ನೋಡಿ ನಸುನಗೆಯ | ಸುಧೆಯನೊಯ್ಯನೆ ಸೂಸಿ ಸರಸದಿಂದಾದರಿಸಿ | ವಿಧುಬಿಂಬವದನೆಯರ್ ಕೊಟ್ಟರೀಂಟುವ ಸೊಗಸಿಗೆಳಸದವರಾರಿಳೆಯೊಳು ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಿಧವಿಧದೊಳು ಎಸೆವ ಕುಸುಮ ಉತ್ಕರದ (ಹೆಚ್ಚಿನ) ಪರಿಮಳದ ಮಧುರ ಆಸವಕೆ (ಮದ್ಯ) ತಮ್ಮ ಮುಖವಾಸದ ಒಳ್ಗಂಪಿನ (ಸುವಾಸನೆ) ಅಧರದ ಇನಿದಂ ಬೆರಸುವಂತೆ=[ನಾನಾವಿಧದಲ್ಲಿ ಶೋಭಿಸುವ ಹೂವಿನ ಬಹಳ ಪರಿಮಳದ ಮಧುರವಾದ ಮದ್ಯಕ್ಕೆ ತಮ್ಮ ಬಾಯಿ ತಾಂಬೂಲದ ಸುವಾಸನೆಯನ್ನೂ ತುಟಿಯ ಸಿಹಿಯನ್ನೂ ಬೆರಸುವ ರೀತಿಯಲ್ಲಿ]; ಮೊಗಮಿಟ್ಟು ಪೊಂಬಟ್ಟಲೊಳ್ ಸವಿದು ಮಿಕ್ಕ ಮಧುವಂ ಮದಿರನೇತ್ರದಿಂ ನೋಡಿ ನಸುನಗೆಯ ಸುಧೆಯನು ಒಯ್ಯನೆ ಸೂಸಿ ಸರಸದಿಂದ ಆದರಿಸಿ ವಿಧುಬಿಂಬ ವದನೆಯರ್ ಕೊಟ್ಟರೆ ಈಂಟುವ ಸೊಗಸಿಗೆ ಎಳಸದವರು ಆರ್ ಇಳೆಯೊಳು =[ಮದ್ಯದ ಚಿನ್ನದಬಟ್ಟಲಿಗೆ ಬಾಯಿಕೊಟ್ಟು, ಸ್ವಲ್ಪ ಸವಿದು ಉಳಿದ ಮಧುವನ್ನು ಮದ್ಯಕುಡಿದ ಅಮಲೇರಿದ ಅರ್ಧತೆರೆದ ಕಣ್ಣೋಟದಿಂದ ನೋಡಿ ನಸುನಗೆಯನ್ನು ಬೀರುತ್ತಾ ಸುಧೆಯನು /ಮದ್ಯವನ್ನು ಮೆಲ್ಲಗೆ ಹೀರಿ ಸರಸದಿಂದ ಆದರಿಸಿ ಚಂದ್ರಬಿಂಬದ ವದನೆಯರು /ಮುಖದ ತರುಣಿಯರು ಕೊಟ್ಟರೆ, ಆ ಮಧುವನ್ನು ಕುಡಿಯುವ ಸುಖಕ್ಕೆ ಅಪೇಕ್ಷೆ ಪಡದವವರು ಈ ಭೂಮಿಯಲ್ಲಿ ಯಾರು ಇರುವರು? ಯಾರೂ ಇಲ್ಲ, ಎಲ್ಲರೂ ಬಯಸುವರು!].
  • ತಾತ್ಪರ್ಯ:ನಾನಾವಿಧದಲ್ಲಿ ಶೋಭಿಸುವ ಹೂವಿನ ಬಹಳ ಪರಿಮಳದ ಮಧುರವಾದ ಮದ್ಯಕ್ಕೆ ತಮ್ಮ ಬಾಯಿ ತಾಂಬೂಲದ ಸುವಾಸನೆಯನ್ನೂ ತುಟಿಯ ಸಿಹಿಯನ್ನೂ ಬೆರಸುವ ರೀತಿಯಲ್ಲಿ, ಮದ್ಯತುಂಬಿದ ಚಿನ್ನದಬಟ್ಟಲಿಗೆ ಬಾಯಿಕೊಟ್ಟು, ಸ್ವಲ್ಪ ಸವಿದು ಉಳಿದ ಮಧುವನ್ನು ಮದ್ಯಕುಡಿದ ಅಮಲೇರಿದ ಅರ್ಧತೆರೆದ ಕಣ್ಣೋಟದಿಂದ ನೋಡಿ ನಸುನಗೆಯನ್ನು ಬೀರುತ್ತಾ ಸುಧೆಯನು /ಮದ್ಯವನ್ನು ಮೆಲ್ಲಗೆ ಹೀರಿ ಸರಸದಿಂದ ಆದರಿಸಿ ಚಂದ್ರಬಿಂಬದ ವದನೆಯರು /ಪೂರ್ಣಚಂದ್ರನಂತಿರುವ ಮುಖದ ತರುಣಿಯರು ಕೊಟ್ಟರೆ, ಆ ಮಧುವನ್ನು ಕುಡಿಯುವ ಸುಖಕ್ಕೆ ಅಪೇಕ್ಷೆ ಪಡದವವರು ಈ ಭೂಮಿಯಲ್ಲಿ ಯಾರು ಇರುವರು? ಯಾರೂ ಇಲ್ಲ, ಎಲ್ಲರೂ ಬಯಸುವರು!].
  • (ಪದ್ಯ-೪೫)ಉತ್ಕರ

ಪದ್ಯ :-:೪೬:[ಸಂಪಾದಿಸಿ]

ಪೊಂಬಟ್ಟಲೋಳ್ ತೀವಿದಾಸವದ ರುಚಿಗಿರ್ವ | ರುಂ ಬಿಡದೆ ಮೊಗಮಿಟ್ಟಿರಲ್ಕದರೊಳೆಸೆವ ಪಡಿ | ಬಿಂಬದಾನನದ ಭಾವಂಗಳಂ ಕಾಣುತನ್ಯೋನ್ಯಸಂಪ್ರೀತಿಯಿಂದೆ ||
ತುಂಬಿರ್ದ ಚಷಕಮಧು ತೀರಲ್ಕೆ ಬಯಲಪ್ಪು | ದೆಂಬ ಶಂಖೆಯೊಳೊಯ್ಯನೊಯ್ಯನಾಸ್ವಾದಿಸಿ ವಿ | ಳಂಬಮಂ ಮಾಡುವರದೆಂತೊ ಪುರುಷಸ್ತ್ರೀಯರೊಂದಾಗಿ ಸವಿವ ಸೊಗಸು ||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪೊಂಬಟ್ಟಲೋಳ್ ತೀವಿದ ಆಸವದ ರುಚಿಗಿರ್ವರುಂ ಬಿಡದೆ ಮೊಗಮಿಟ್ಟಿರಲ್ಕೆ ಅದರೊಳು ಎಸೆವ ಪಡಿಬಿಂಬದ ಆನನದ ಭಾವಂಗಳಂ ಕಾಣುತ ಅನ್ಯೋನ್ಯ ಸಂಪ್ರೀತಿಯಿಂದೆ =[ಚಿನ್ನದಬಟ್ಟಲಲ್ಲಿ ತುಂಬಿದ ಮದ್ಯದ ರುಚಿಗೆ ಇಬ್ಬರೂ ಸೇರಿ ಮುಖವನ್ನು ಇಟ್ಟು ಅದರಲ್ಲಿ ಕಾಣುವ ಪ್ರತಿಬಿಂಬದ ಮುಖದ ಭಾವಗಳನ್ನು ನೋಡುತ್ತಾ ಅನ್ಯೋನ್ಯವಾದ ವಿಶೇಷ ಪ್ರೀತಿಯಿಂದ]; ತುಂಬಿರ್ದ ಚಷಕಮಧು ತೀರಲ್ಕೆ ಬಯಲಪ್ಪುದೆಂಬ ಶಂಖೆಯೊಳು ಒಯ್ಯನೊಯ್ಯನೆ ಆಸ್ವಾದಿಸಿ ವಿಳಂಬಮಂ ಮಾಡುವರು ಅದೆಂತೊ ಪುರುಷಸ್ತ್ರೀಯರು ಒಂದಾಗಿ ಸವಿವ ಸೊಗಸು= [ತುಂಬಿದ ಪಾನಪಾತ್ರೆಯ ಮಧು ತೀರಿದರೆ ಪ್ರತಿಬಿಂಬ ಕಾಣದೆ ಇರವುದೆಂಬ ಶಂಕೆಯಲ್ಲಿ ಒಯ್ಯನೊಯ್ಯನೆ/ ಮೆಲ್ಲಮೆಲ್ಲಗೆ ಮಧುವನ್ನು ಆಸ್ವಾದಿಸಿ ಹೆಚ್ಚುಕಾಲ ತಡ ಮಾಡುವರು. ಪುರುಷಸ್ತ್ರೀಯರು ಒಂದಾಗಿ ಸವಿಯುವ ಸೊಗಸು ಅದು ಎಷ್ಟಿರಬಹುದು! ಅದಕ್ಕೆ ಮಿತಿಇಲ್ಲ! ].
  • ತಾತ್ಪರ್ಯ:ಚಿನ್ನದ ಬಟ್ಟಲಲ್ಲಿ ತುಂಬಿದ ಮದ್ಯದ ರುಚಿಗೆ ಇಬ್ಬರೂ ಸೇರಿ ಮುಖವನ್ನು ಇಟ್ಟು ಅದರಲ್ಲಿ ಕಾಣುವ ಪ್ರತಿಬಿಂಬದ ಮುಖದ ಭಾವಗಳನ್ನು ನೋಡುತ್ತಾ ಅನ್ಯೋನ್ಯವಾದ ವಿಶೇಷ ಪ್ರೀತಿಯಿಂದ, ತುಂಬಿದ ಪಾನಪಾತ್ರೆಯ ಮಧು ತೀರಿದರೆ ಪ್ರತಿಬಿಂಬ ಕಾಣದೆ ಇರವುದೆಂಬ ಶಂಕೆಯಲ್ಲಿ ಒಯ್ಯನೊಯ್ಯನೆ/ ಮೆಲ್ಲಮೆಲ್ಲಗೆ ಮಧುವನ್ನು ಆಸ್ವಾದಿಸಿ ಹೆಚ್ಚುಕಾಲ ತಡ ಮಾಡುವರು. ಪುರುಷಸ್ತ್ರೀಯರು ಒಂದಾಗಿ ಸವಿಯುವ ಸೊಗಸು ಅದು ಎಷ್ಟಿರಬಹುದು! ಅದಕ್ಕೆ ಮಿತಿಇಲ್ಲ! ].
  • (ಪದ್ಯ-೪೬)

ಪದ್ಯ :-:೪೭:[ಸಂಪಾದಿಸಿ]

ಕವಿಸುವರ್ ಮೋಹನವನೆಸೆವ ರತಿಕೇಳಿಯೋಳ್ | ಸವಿಸುವರ್ ಚೆಂದುಟಿಯ ತನಿರಸವನಾಸರಂ | ತವಿಸುವರ್ ಬಲ್ಮೊಲೆಯೊಳೊತ್ತಿ ಬಿಗಿಯಪ್ಪಿ ದನಿಗೈವ ಪಾರಿವದಂತಿರೆ ||
ರಮಿಸುವರ್ ಕಂಠದೊಳ್ ಬಂಧಗಳ ಬಗೆಯನನು | ಭವಿಸುವರ್ ಕೂಟದೊಳ್ ಮನಮುಳುಗಿ ಸೌಖ್ಯದಿಂ | ದ್ರವಿಸುವರ್ ಕಾಮಕಲೆಯರಿದಂಗನೆಯರಲ್ಲಿ ದೊರೆಕೊಂಡ ಪುರುಷರೊಡನೆ ||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕವಿಸುವರ್ ಮೋಹನವನು ಎಸೆವ ರತಿಕೇಳಿಯೋಳ್ ಸವಿಸುವರ್ ಚೆಂದುಟಿಯ ತನಿರಸವನು ಆಸರಂ ತವಿಸುವರ್,=[ಶೋಭೆಯ ರತಿಕೇಳಿಯಲ್ಲಿ ಸಂಮೋಹನದಿಂದ ಮನಸ್ಸನ್ನು ಕವಿಸುವರು; ಮತ್ತುಕೊಟ್ಟು ಕೊಟ್ಟು ಚೆಂದುಟಿಯ ತನಿರಸವನ್ನು ಸವಿಯೆರೆದು ಬಾಯಾರಿಕೆಯನ್ನು ತಣಿಸುವರು,]; ಬಲ್ಮೊಲೆಯೊಳು ಒತ್ತಿ ಬಿಗಿಯಪ್ಪಿ ದನಿಗೈವ ಪಾರಿವದಂತೆ ಇರೆ ರಮಿಸುವರ್ ಕಂಠದೊಳ್ ಬಂಧಗಳ ಬಗೆಯನು ಅನುಭವಿಸುವರ್ ಕೂಟದೊಳ್ ಮನಮುಳುಗಿ ಸೌಖ್ಯದಿಂ ದ್ರವಿಸುವರ್ ಕಾಮಕಲೆಯ ಅರಿದ ಅಂಗನೆಯರು ಅಲ್ಲಿ ದೊರೆಕೊಂಡ ಪುರುಷರೊಡನೆ=[ಬಿಗಿಯಾಗಿ ಅಪ್ಪಿಕೊಂಡು ಅವರ ಬಲಿತ ಮೊಲೆಯಿಂದ ಒತ್ತಿ ತಮ್ಮ ಗಂಟಲಲ್ಲಿ ನರಳುವ ಪಾರಿವಾಳದ ಗುಟುರು ದನಿಮಾಡಿ ರಮಿಸುವರು; ಕೂಟದಲ್ಲಿ ಬಗೆಬಗೆಯ ಬಂಧಗಳಲ್ಲಿ (ಆಸನಗಳ- ಪ್ರಾಣಿಗಳ ಕೂಟಕ್ರಮಗಳಲ್ಲಿ) ಸುಖವನ್ನು ಅನುಭವಿಸುವರು; ಮನಸ್ಸು ಅದರಲ್ಲಿಮುಳುಗಿ, ಮೈಮರೆತು ಸೌಖ್ಯದತುದಿಮಟ್ಟಿ ದ್ರವಿಸುವರು;ಹೀಗೆ ಅಲ್ಲಿ ತಮಗೆ ದೊರೆತ / ಕೈಗೆ ಸಿಕ್ಕಿದ ಪುರುಷರೊಡನೆ ಕಾಮಕಲೆಯನ್ನು ತಿಳಿದ ತರುಣಿಯರು ಸುಖಿಸುವರು.]
  • ತಾತ್ಪರ್ಯ:ಚಂದಕಾಣುವ ರತಿಕೇಳಿಯಲ್ಲಿ ಸಂಮೋಹನದಿಂದ ಮನಸ್ಸನ್ನು ಕವಿಸುವರು/ ಮೈಮರೆಸುವರು; ಮತ್ತುಕೊಟ್ಟು ಕೊಟ್ಟು ಚೆಂದುಟಿಯ ತನಿರಸವನ್ನು ಸವಿಯೆರೆದು ಬಾಯಾರಿಕೆಯನ್ನು ತಣಿಸುವರು, ಬಿಗಿಯಾಗಿ ಅಪ್ಪಿಕೊಂಡು ಅವರ ಬಲಿತ ಮೊಲೆಯಿಂದ ಒತ್ತಿ ತಮ್ಮ ಗಂಟಲಲ್ಲಿ ನರಳುವ ಪಾರಿವಾಳದ ಗುಟುರು ದನಿಮಾಡಿ ರಮಿಸುವರು; ಕೂಟದಲ್ಲಿ ಬಗೆಬಗೆಯ ಬಂಧಗಳಲ್ಲಿ (ಆಸನಗಳ- ಪ್ರಾಣಿಗಳ ಕೂಟಕ್ರಮಗಳಲ್ಲಿ) ಸುಖವನ್ನು ಅನುಭವಿಸುವರು; ಮನಸ್ಸು ಅದರಲ್ಲಿಮುಳುಗಿ, ಮೈಮರೆತು ಸೌಖ್ಯದತುದಿಮಟ್ಟಿ ದ್ರವಿಸುವರು;ಹೀಗೆ ಅಲ್ಲಿ ತಮಗೆ ದೊರೆತ / ಕೈಗೆ ಸಿಕ್ಕಿದ ಪುರುಷರೊಡನೆ ಕಾಮಕಲೆಯನ್ನು ತಿಳಿದ ತರುಣಿಯರು ಸುಖಿಸುವರು.
  • (ಪದ್ಯ-೪೭)

ಪದ್ಯ :-:೪೮:[ಸಂಪಾದಿಸಿ]

ಮರಣಮಹುದೆಂದರಿದು ನಡುವೆ ಮುರಿದೊಲ್ಲದನ | ಚರಣಕೆರಗುವರೊಡಂಬಡಿಸುವರ್ ದೈನ್ಯದಿಂ | ಕರುಣ ಭಾವಂಗಳಂ ತೋರುವರ್ ಮೀರಿದೊಡೆ ಚೀರುವರ್ ಘಾತಿಸುವರು ||
ಅರುಣಾಧರದ ಚುಂಬನವನಿತ್ತು ಕರಜಪ್ರ | ಹರಣದಿಂ ಕಲೆಗಳಂ ತುಡುಕಿ ಸೊಗಸಂ ಬಲಿದು | ಹರಣಮಳಿವಲ್ಲಿಪರಿಯಂತರಂ ಬಿಡರವನಲ್ಲಿಯ ವಿಷಾಂಗನೆಯರು ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮರಣಂ ಅಹುದೆಂದು ಅರಿದು ನಡುವೆ ಮುರಿದು ಒಲ್ಲದನ ಚರಣಕೆ ಎರಗುವರು ಒಡಂಬಡಿಸುವರ್ ದೈನ್ಯದಿಂ ಕರುಣ ಭಾವಂಗಳಂ ತೋರುವರ್ ಮೀರಿದೊಡೆ ಚೀರುವರ್ ಘಾತಿಸುವರು =[ಇವರೊಡನೆ ಕೇಳಿಯಿಂದ, ಮರಣವಾಗುವುದು ಎಂದು ತಿಳಿದುಕೊಂಡು, ಪುರುಷನು ಕಾಮಕೇಳಿಯ ನಡುವೆ ಬಿಟ್ಟು ಅದನ್ನು ಒಲ್ಲೆ / ಬೇಡ ಎಂದವನ ಕಾಲಿಗೆ ಬೀಳುವರು, ಒಪ್ಪಿಸುವರು ದೈನ್ಯದಿಂದ ಕಣ್ಣೀರು ಸುರಿಸುವ ಮೊದಲಾದ ಕರುಣ ಭಾವವನ್ನು ತೋರುವರು; ಒಪ್ಪದಿದ್ದರೆ ಚೀರುವರು, ಕೊನೆಗೆ ಹೊಡೆದು ಗಾಯಮಾಡುವರು]; ಅರುಣ ಅಧರದ ಚುಂಬನವನು ಇತ್ತು ಕರಜ (ಬೆರಳು-ಉಗುರು)ಪ್ರಹರಣದಿಂ ಕಲೆಗಳಂ ತುಡುಕಿ ಸೊಗಸಂ ಬಲಿದು ಹರಣಂ (ಜೀವ)ಅಳಿವಲ್ಲಿ (ಅಳಿವು-ಸಾವು) ಪರಿಯಂತರಂ ಬಿಡರು ಅವನ ಅಲ್ಲಿಯ ವಿಷಾಂಗನೆಯರು= [ಅವರು, ತಮ್ಮ ಕೆಂಪುತುಟಿಯಿಂದ ಚುಂಬನವನ್ನು ಕೊಟ್ಟು,ಬೆರಳು-ಉಗುರು ಹೊಡೆತದಿಂದ ಕಾಮಕಲೆಗಳಲ್ಲಿ ತೊಡಗಿ ಸೊಗಸನ್ನು /ಸುಖವನ್ನು ಉಂಟುಮಾಡಿ ಅವನ ಜೀವ ಹೋಗುವವರೆಗೂ ಅಲ್ಲಿಯ ವಿಷ ಅಂಗನೆಯರು / ವಿಷಕನ್ಯೆಯರು ಅವನನ್ನು ಬಿಡುವುದಿಲ್ಲ].
  • ತಾತ್ಪರ್ಯ:ಇವರೊಡನೆ ಕೇಳಿಯಿಂದ, ಮರಣವಾಗುವುದು ಎಂದು ತಿಳಿದುಕೊಂಡು, ಪುರುಷನು ಕಾಮಕೇಳಿಯ ನಡುವೆ ಬಿಟ್ಟು ಅದನ್ನು ಒಲ್ಲೆ / ಬೇಡ ಎಂದವನ ಕಾಲಿಗೆ ಬೀಳುವರು, ಒಪ್ಪಿಸುವರು ದೈನ್ಯದಿಂದ ಕಣ್ಣೀರು ಸುರಿಸುವ ಮೊದಲಾದ ಕರುಣ ಭಾವವನ್ನು ತೋರುವರು; ಒಪ್ಪದಿದ್ದರೆ ಚೀರುವರು, ಕೊನೆಗೆ ಹೊಡೆದು ಗಾಯಮಾಡುವರು; ಅವರು, ತಮ್ಮ ಕೆಂಪುತುಟಿಯಿಂದ ಚುಂಬನವನ್ನು ಕೊಟ್ಟು,ಬೆರಳು-ಉಗುರು ಹೊಡೆತದಿಂದ ಕಾಮಕಲೆಗಳಲ್ಲಿ ತೊಡಗಿ ಸೊಗಸನ್ನು /ಸುಖವನ್ನು ಉಂಟುಮಾಡಿ ಅವನ ಜೀವ ಹೋಗುವವರೆಗೂ ಅಲ್ಲಿಯ ವಿಷ ಅಂಗನೆಯರು / ವಿಷಕನ್ಯೆಯರು ಅವನನ್ನು ಬಿಡುವುದಿಲ್ಲ.
  • (ಪದ್ಯ-೪೮)

ಪದ್ಯ :-:೪೯:[ಸಂಪಾದಿಸಿ]

ಅಚ್ಚಸಂಪಗೆಯಲರ್ಗೆರಗಿದಾರಡಿಯಂತೆ | ಮೆಚ್ಚಿ ಮಡಿವಂ ಮಾಸಮಾತ್ರ ಮಾಗಲ್ಕವಂ | ಕಿಚ್ಚಿನೊಳ್ ಪುಗುವಳವಳಲ್ಲದೊಡೆ ಗರ್ಭಮಂ ಧರಿಸಿ ಪೆಣ್ಣಂ ಪಡೆವಳು ||
ಪೆಚ್ಚಿರ್ಪರಂತಲ್ಲಿ ನಾರಿಯರ್ ಬಳಿಕ ಬಂ | ದಚ್ಚರಿಯನರ್ಜುನಂ ಕೇಳ್ದಾಗ ತನ್ನ ಪಡೆ | ಗೆಚ್ಚರಿಕೆಯಾಗಿರ್ಪುದೆಂದೊರೆದು ಕೂಡೆ ಪಾಳೆಯದೊಳಗೆ ಸಾರಿಸಿದನು ||49||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಚ್ಚಸಂಪಗೆಯ ಅಲರ್ಗೆ ಎರಗಿದ ಆರಡಿಯಂತೆ ಮೆಚ್ಚಿ ಮಡಿವಂ ಮಾಸಮಾತ್ರಂ ಆಗಲ್ಕೆ ಅವಂ ಕಿಚ್ಚಿನೊಳ್ ಪುಗುವಳು ಅವಳಲ್ಲದೊಡೆ ಗರ್ಭಮಂ ಧರಿಸಿ ಪೆಣ್ಣಂ ಪಡೆವಳು =[ಅಚ್ಚಸಂಪಗೆಯ ಹೂವಿಗೆ ಎರಗಿದ ಜೇನುಹುಳದಂತೆ, ಆ ವಿಷಕನ್ಯೆಯರ ಅಂದಕ್ಕೆ ಮೆಚ್ಚಿ ಒಂದು ತಿಂಗಳಲ್ಲಿ ಸಾಯುವನು. ಅವನು ಹಾಗೆ ಸತ್ತರೆ, ಅವನ ಜೊತೆಇದ್ದ ಸುಂದರಿ ಬೆಂಕಿಯಲ್ಲಿ ಹಾರಿ ಸಾಯುವಳು; ಇಲ್ಲವೇ ಗರ್ಭವನ್ನು ಧರಿಸಿ ಹೆಣ್ಣು ಮಗುವನ್ನು ಪಡೆಯುವಳು.]; ಪೆಚ್ಚಿರ್ಪರು ಅಂತಲ್ಲಿ ನಾರಿಯರ್ ಬಳಿಕ ಬಂದಚ್ಚರಿಯನು ಅರ್ಜುನಂ ಕೇಳ್ದಾಗ ತನ್ನ ಪಡೆಗೆ ಎಚ್ಚರಿಕೆಯಾಗಿರ್ಪುದು ಎಂದು ಒರೆದು ಕೂಡೆ ಪಾಳೆಯದೊಳಗೆ ಸಾರಿಸಿದನು =[ಹೀಗೆ ಅಲ್ಲಿ ನಾರಿಯರು ಹೆಚ್ಚಿರುವರು. ಬಳಿಕ ಅರ್ಜುನನು ಅಲ್ಲಿ ಬಂದು ಈ ಅಚ್ಚರಿಯ ವಿಷಯ ಕೇಳಿ, ಆ ಕೂಡಲೆ ತನ್ನ ಸೈನ್ಯದ ಪಾಳೆಯದಲ್ಲಿ ವಿಷಯ ತಿಳಿಸಿ ಎಚ್ಚರಿಕೆಯಾಗಿ ಇರಬೇಕೆಂದು ಡಂಗುರ ಸಾರಿಸಿದನು].
  • ತಾತ್ಪರ್ಯ: ಅಚ್ಚಸಂಪಗೆಯ ಹೂವಿಗೆ ಎರಗಿದ ಜೇನುಹುಳದಂತೆ, ಆ ವಿಷಕನ್ಯೆಯರ ಅಂದಕ್ಕೆ ಮೆಚ್ಚಿ ಅವರ ಸಂಗದಿಂದ ಒಂದು ತಿಂಗಳಲ್ಲಿ ಸಾಯುವನು. ಅವನು ಹಾಗೆ ಸತ್ತರೆ, ಅವನ ಜೊತೆಇದ್ದ ಸುಂದರಿ ಬೆಂಕಿಯಲ್ಲಿ ಹಾರಿ ಸಾಯುವಳು; ಇಲ್ಲವೇ ಗರ್ಭವನ್ನು ಧರಿಸಿ ಹೆಣ್ಣು ಮಗುವನ್ನು ಪಡೆಯುವಳು. ಹೀಗೆ ಅಲ್ಲಿ ನಾರಿಯರು ಹೆಚ್ಚಿರುವರು. ಬಳಿಕ ಅರ್ಜುನನು ಅಲ್ಲಿ ಬಂದು ಈ ಅಚ್ಚರಿಯ ವಿಷಯ ಕೇಳಿ, ಆ ಕೂಡಲೆ ತನ್ನ ಸೈನ್ಯದ ಪಾಳೆಯದಲ್ಲಿ ವಿಷಯ ತಿಳಿಸಿ ಎಚ್ಚರಿಕೆಯಾಗಿ ಇರಬೇಕೆಂದು ಡಂಗುರ ಸಾರಿಸಿದನು].
  • (ಪದ್ಯ-೪೯)

ಪದ್ಯ :-:೫೦:[ಸಂಪಾದಿಸಿ]

ವಿಷಕನ್ನಿಕೆಯರಿವರ್ ಕಂಡಮಾತ್ರದೊಳಾಕ | ರುಷಣಮಂ ಮಾಡುವರ್ ಬೆರಸಿದೊಡೆ ಪುರುಷನಾ | ಯುಷವನಪಹರಿಪರಿದು ನಿಶ್ಚಯಂ ನೀವಿಲ್ಲಿ ಮರೆದಾದೊಡಂ ಮನದೊಳು ||
ವಿಷಯಕೆಳಸದೆ ಬುದ್ಧಿವಂತರಾಗಿಹುದೆಂದು | ವೃಷಕೇತು ಮೊದಲಾದ ವೀರರ್ಗೆ ಪೇಳುತನಿ | ಮಿಷನಗರದೊಡೆಯ ಲಕ್ಷ್ಮೀಪತಿಯ ಮೈದುನಂ ಕಟಕದೊಳ್ ಸಾರಿಸಿದನು ||50||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಿಷಕನ್ನಿಕೆಯರು ಇವರ್ ಕಂಡಮಾತ್ರದೊಳು ಆಕರುಷಣಮಂ ಮಾಡುವರ್ ಬೆರಸಿದೊಡೆ ಪುರುಷನ ಆಯುಷವನು ಅಪಹರಿಪರು ಇದು ನಿಶ್ಚಯಂ=[ 'ಇವರು ವಿಷಕನ್ನಿಕೆಯರು ಕಂಡಮಾತ್ರದಲ್ಲಿ ಮನಸ್ಸನ್ನು ಸೆಳೆಯುವರು. ಅವರೊಡನೆ ಸೇರಿದರೆ ಪುರುಷನ ಆಯುಷ್ಯವನ್ನು ಅಪಹರಿಸುವರು; ಇದು ನಿಶ್ಚಯವಾಗಿ ಆಗುವುದು.]; ನೀವಿಲ್ಲಿ ಮರೆದಾದೊಡಂ ಮನದೊಳು ವಿಷಯಕೆ ಎಳಸದೆ ಬುದ್ಧಿವಂತರಾಗಿ ಇಹುದೆಂದು ವೃಷಕೇತು ಮೊದಲಾದ ವೀರರ್ಗೆ ಪೇಳುತ ಅನಿಮಿಷ ನಗರದೊಡೆಯ ಲಕ್ಷ್ಮೀಪತಿಯ ಮೈದುನಂ ಕಟಕದೊಳ್ ಸಾರಿಸಿದನು =[ನೀವು ಇಲ್ಲಿ ಮರೆತಾದರೂ ಮನಸ್ಸಿನಲ್ಲಿ ಕಾಮಸುಖಕ್ಕೆ ಅಪೇಕ್ಷೆಪಡದೆ /ಪ್ರಯತ್ನಿಸದೆ, ವಿವೇಕಿಗಳೂ,ಬುದ್ಧಿವಂತರಾಗಿಯೂ ಇರಬೇಕೆಂದು, ವೃಷಕೇತು ಮೊದಲಾದ ವೀರರಿಗೆ ಹೇಳುತ್ತಾ, ದೇವತೆಗಳ ನಗರದ /ಸ್ವರ್ಗದೊಡೆಯ ಲಕ್ಷ್ಮೀಪತಿಯ ಮೈದುನನಾದ ಅರ್ಜುನನು ಸೈನ್ಯದಲ್ಲಿ ಡಂಗುರ ಸಾರಿಸಿದನು].
  • ತಾತ್ಪರ್ಯ: 'ಇವರು ವಿಷಕನ್ನಿಕೆಯರು ಕಂಡಮಾತ್ರದಲ್ಲಿ ಮನಸ್ಸನ್ನು ಸೆಳೆಯುವರು. ಅವರೊಡನೆ ಸೇರಿದರೆ ಪುರುಷನ ಆಯುಷ್ಯವನ್ನು ಅಪಹರಿಸುವರು; ಇದು ನಿಶ್ಚಯವಾಗಿ ಆಗುವುದು. ನೀವು ಇಲ್ಲಿ ಮರೆತಾದರೂ ಮನಸ್ಸಿನಲ್ಲಿ ಕಾಮಸುಖಕ್ಕೆ ಅಪೇಕ್ಷೆಪಡದೆ /ಪ್ರಯತ್ನಿಸದೆ, ವಿವೇಕಿಗಳೂ,ಬುದ್ಧಿವಂತರಾಗಿಯೂ ಇರಬೇಕು', ಎಂದು, ವೃಷಕೇತು ಮೊದಲಾದ ವೀರರಿಗೆ ಹೇಳುತ್ತಾ, ದೇವತೆಗಳ ನಗರದ /ಸ್ವರ್ಗದೊಡೆಯ ಲಕ್ಷ್ಮೀಪತಿಯ ಮೈದುನನಾದ ಅರ್ಜುನನು ಸೈನ್ಯದಲ್ಲಿ ಡಂಗುರ ಸಾರಿಸಿದನು. (ಗ್ರೀಕ್ ಪುರಾಣದಲ್ಲಿ ಯೂಲಿಸಿಸ್ ಟ್ರಾಯ್ನಿಂದ ಹಿಂದಿರುಗುವಾಗ ಇದೇ ಬಗೆಯ ವಿಷಕನ್ಯೆಯರ ದ್ವೀಪಕ್ಕೆ ಹೋಗುವನು. ಸಾಮ್ಯ ವಿಚಿತ್ರವಾಗಿದೆ.)
  • (ಪದ್ಯ-೫೦)XXIII
  • [೧]
  • [೨]
  • ಸಂಧಿ ೧೫ ಕ್ಕೆ - ಪದ್ಯ ೭೬೩.

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.