ವಿಷಯಕ್ಕೆ ಹೋಗು

ಜೈಮಿನಿ ಭಾರತ/ಇಪ್ಪತ್ತೊಂದನೆಯ ಸಂಧಿ

ವಿಕಿಸೋರ್ಸ್ದಿಂದ

ಇಪ್ಪತ್ತೊಂದನೆಯ ಸಂಧಿ

[ಸಂಪಾದಿಸಿ]

ಪದ್ಯ :ಸೂಚನೆ:

[ಸಂಪಾದಿಸಿ]

ಸೂಚನೆ-: ತನಯರೊಳ್ ಕಾದಿ ಮೂರ್ಛಿತನಾದ ರಾಮನಂ | ಮುನಿಮೌಳಿ ವಾಲ್ಮೀಕಿ ಬಂದು ಸಂತೈಸಲ್ಕೆ | ವಿನುತಾಶ್ವಮೇಧಮಂ ಪೂರೈಸಿ ಸೀತೆಸಹಿತವನಿಯಂ ಪಾಲಿಸಿದನು ||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತನಯರೊಳ್ ಕಾದಿ ಮೂರ್ಛಿತನಾದ ರಾಮನಂ ಮುನಿಮೌಳಿ ವಾಲ್ಮೀಕಿ ಬಂದು ಸಂತೈಸಲ್ಕೆ ವಿನುತ ಅಶ್ವಮೇಧಮಂ ಪೂರೈಸಿ ಸೀತೆಸಹಿತ ಅವನಿಯಂ ಪಾಲಿಸಿದನು=[ಮಕ್ಕಳೋಡನೆ ಯುದ್ಧಮಾಡಿ ಮೂರ್ಛೆಹೊಂದಿದ ರಾಮನನ್ನು ಮುನಿಶ್ರೇಷ್ಠನಾದ ವಾಲ್ಮೀಕಿ ಬಂದು ಎಚ್ಚರಗೊಳಿಸಿ ಸಂತೈಸಲು ಶುಭಕರ ಅಶ್ವಮೇಧ ಯಾಗವನ್ನು ಪೂರೈಸಿ ಸೀತೆಸಹಿತ ಭೂಮಿಯನ್ನು ಪಾಲಿಸಿದನು].
  • ತಾತ್ಪರ್ಯ:ಮಕ್ಕಳೋಡನೆ ಯುದ್ಧಮಾಡಿ ಮೂರ್ಛೆಹೊಂದಿದ ರಾಮನನ್ನು ಮುನಿಶ್ರೇಷ್ಠನಾದ ವಾಲ್ಮೀಕಿ ಬಂದು ಎಚ್ಚರಗೊಳಿಸಿ ಸಂತೈಸಲು ಶುಭಕರ ಅಶ್ವಮೇಧ ಯಾಗವನ್ನು ಪೂರೈಸಿ ಸೀತೆಸಹಿತ ಭೂಮಿಯನ್ನು ಪಾಲಿಸಿದನು
  • (ಪದ್ಯ-ಸೂಚನೆ.)

ಪದ್ಯ :೧:

[ಸಂಪಾದಿಸಿ]

ಅರಸ ಕೇಳ್ ಜಾಹ್ನವಿಯ ತೀರದೊಳ್ ದೀಕ್ಷೆಗೊಂ | ಡಿರುತಿರ್ದ ರಾಘವಂ ಚಿತ್ತದನುತಾಪದಿಂ | ಭರತನಂಕರೆದು ಶತ್ರುಘ್ನನೇಗೈದನೆಂಬುದನುಸಿರ್ವರಾರುಮೆನಗೆ ||
ತರಳರಂ ಪಿಡಿದಪನೊ ಕೊಂದಪನೊ ಲಕ್ಷ್ಮಣಂ | ಧುರದೊಳ್ ಬಳಲ್ದಪನೊ ಗೆಲ್ದಪನೊ ಸೋಲ್ದಪನೊ | ತುರಗಮಂ ಬಿಡಿಸಿ ತಂದಪನೊ ನಾನರಿಯೆನೆಂದಸುರಾರಿ ಚಿಂತಿಸಿದನು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರಸ ಕೇಳ್ ಜಾಹ್ನವಿಯ ತೀರದೊಳ್ ದೀಕ್ಷೆಗೊಂಡು ಇರುತಿರ್ದ ರಾಘವಂ ಚಿತ್ತದ ಅನುತಾಪದಿಂ=[ಜನಮೇಜಯ ಅರಸನೇ ಕೇಳು, ಗಂಗೆಯ ತೀರದಲ್ಲಿ ಯಜ್ಞದೀಕ್ಷೆಯನ್ನು ಕೈಗೊಂಡು ಇರುತಿದ್ದ ರಾಘವನು ಮನಸ್ಸಿನಲ್ಲಿ ಚಿಂತೆಯನ್ನು ಹೊಂದಿ ]; ಭರತನಂ ಕರೆದು ಶತ್ರುಘ್ನನು ಏಗೈದನು ಎಂಬುದನು ಉಸಿರ್ವರು ಆರುಂ ಎನಗೆ ತರಳರಂ ಪಿಡಿದಪನೊ ಕೊಂದಪನೊ ಲಕ್ಷ್ಮಣಂ ಧುರದೊಳ್ ಬಳಲ್ದಪನೊ ಗೆಲ್ದಪನೊ ಸೋಲ್ದಪನೊ=[ಭರತನನ್ನು ಕರೆದು, ಶತ್ರುಘ್ನನು ಏನುಮಾಡಿದನು ಎಂಬುದನ್ನು ತನಗೆ ಹೇಳುವವರು ಯಾರು? ಬಾಲಕರನ್ನು ಹಿಡಿಯುವನೊ, ಕೊಲ್ಲುವನೋ, ಲಕ್ಷ್ಮಣನು ಯುದ್ಧದಲ್ಲಿ ಬಳಲಿವನೊ, ಗೆಲ್ಲುವನೊ ಸೋಲುವನೊ?]; ತುರಗಮಂ ಬಿಡಿಸಿ ತಂದಪನೊ ನಾನರಿಯೆನು ಎಂದು ಅಸುರಾರಿ ಚಿಂತಿಸಿದನು=[ಕುದುರೆಯನ್ನು ಬಿಡಿಸಿ ತರುವನೊ ನಾನು ತಿಳಿಯಲಾರೆನಲ್ಲಾ, ಎಂದು ಅಸುರಾರಿಯಾದ ರಾಮನು ಚಿಂತಿಸಿದನು].
  • ತಾತ್ಪರ್ಯ:ಜನಮೇಜಯ ಅರಸನೇ ಕೇಳು, ಗಂಗೆಯ ತೀರದಲ್ಲಿ ಯಜ್ಞದೀಕ್ಷೆಯನ್ನು ಕೈಗೊಂಡು ಇರುತಿದ್ದ ರಾಘವನು ಮನಸ್ಸಿನಲ್ಲಿ ಚಿಂತೆಯನ್ನು ಹೊಂದಿ ಭರತನನ್ನು ಕರೆದು, ಶತ್ರುಘ್ನನು ಏನುಮಾಡಿದನು ಎಂಬುದನ್ನು ತನಗೆ ಹೇಳುವವರು ಯಾರು? ಬಾಲಕರನ್ನು ಹಿಡಿಯುವನೊ, ಕೊಲ್ಲುವನೋ, ಲಕ್ಷ್ಮಣನು ಯುದ್ಧದಲ್ಲಿ ಬಳಲಿವನೊ, ಗೆಲ್ಲುವನೊ ಸೋಲುವನೊ? ಕುದುರೆಯನ್ನು ಬಿಡಿಸಿ ತರುವನೊ ನಾನು ತಿಳಿಯಲಾರೆನಲ್ಲಾ, ಎಂದು ಅಸುರಾರಿಯಾದ ರಾಮನು ಚಿಂತಿಸಿದನು.
  • (ಪದ್ಯ-೧.)

ಪದ್ಯ :೨:

[ಸಂಪಾದಿಸಿ]

ಕನಸಿನೊಳ್ ಸೋಲ್ದುದಿಲ್ಲಾರ್ಗೆಯುಂ ಲಕ್ಷ್ಮಣಂ | ವನಚಾರಿ ಬಾಲಕರ ಪಾಡಾವುದೀಗ ಮುಳಿ | ದನುವರದೊಳಿರ್ವರಂ ಘಾತಿಸದೆ ಸಮ್ಮೋಹನಾಸ್ತ್ರದೊಳ್ ಮರವೆಗೊಳಿಸಿ ||
ತನಗೆ ತಂದೊಪ್ಪಿಸುವ ತೆರದೊಳತಿಬಲ ಚರರ | ನನುಜನೆಡೆಗಟ್ಟೆಂದು ರಾಘವಂ ಭರತನೊಡ | ನೆನಲವಂ ದೂತರಂ ಕಳುಹಲವರರಿದು ಬಂದವನಿಪತಿಗಿಂತೆಂದರು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕನಸಿನೊಳ್ ಸೋಲ್ದುದಿಲ್ಲ ಆರ್ಗೆಯುಂ ಲಕ್ಷ್ಮಣಂ=[ ಸೋಲ್ದುದಿಲ್ಲ ಆರ್ಗೆಯುಂ ಲಕ್ಷ್ಮಣನು ಯಾರಿಗೂ ಕನಸಿನಲ್ಲಿಯೂ ಸೋತಿಲ್ಲ.]; ವನಚಾರಿ ಬಾಲಕರ ಪಾಡು ಆವುದು ಈಗ ಮುಳಿದು ಅನುವರದೊಳು ಈರ್ವರಂ ಘಾತಿಸದೆ ಸಮ್ಮೋಹನಾಸ್ತ್ರದೊಳ್ ಮರವೆಗೊಳಿಸಿ=[ವನದಲ್ಲಿರುವ ಸಂಚಾರಿ ಬಾಲಕರ ಶಕ್ತಿ ಯಾವುದು? ಈಗ ಸಿಟ್ಟಿನಿಂದ ಯುದ್ಧದಲ್ಲಿ ಆಇಬ್ಬರು ಬಾಕರನ್ನು ಕೊಲ್ಲದೆ, ಸಮ್ಮೋಹನಾಸ್ತ್ರದಲ್ಲಿ ಎಚ್ಚರತಪ್ಪಿಸಿ]; ತನಗೆ ತಂದು ಒಪ್ಪಿಸುವ ತೆರದೊಳು ಅತಿಬಲ ಚರರನು ಅನುಜನ ಎಡೆಗೆ ಅಟ್ಟೆಂದು ರಾಘವಂ ಭರತನೊಡನೆ ಎನಲು=[ತನಗೆ ತಂದು ಒಪ್ಪಿಸುವ ರೀತಿಯಲ್ಲಿ ಅತಿಬಲವುಳ್ಳ ಚರರನ್ನು ಲಕ್ಷ್ಮಣನ ಬಳಿಗೆ ಕಳುಹಿಸು ಎಂದು ರಾಘವನು ಭರತನೊಡನೆ ಹೇಳಲು,]; ಅವಂ ದೂತರಂ ಕಳುಹಲು ಅವರು ಅರಿದು ಬಂದು ಅವನಿಪತಿಗೆ ಇಂತೆಂದರು=[ಅವನು ಅದೇರೀತಿ ದೂತರನ್ನು ಕಳುಹಿಸಲು ಅವರು ವಿಷಯತಿಳಿದು ಬಂದು ಅವನಿಪತಿ ರಾಮನಿಗೆ ಹೀಗೆ ಹೇಳಿದರು].
  • ತಾತ್ಪರ್ಯ:ಲಕ್ಷ್ಮಣನು ಯಾರಿಗೂ ಕನಸಿನಲ್ಲಿಯೂ ಸೋತವನಲ್ಲ. ವನದಲ್ಲಿರುವ ಸಂಚಾರಿ ಬಾಲಕರ ಶಕ್ತಿ ಯಾವುದು? ಈಗ ಸಿಟ್ಟಿನಿಂದ ಯುದ್ಧದಲ್ಲಿ ಆ ಇಬ್ಬರು ಬಾಕರನ್ನು ಕೊಲ್ಲದೆ, ಸಮ್ಮೋಹನಾಸ್ತ್ರದಲ್ಲಿ ಎಚ್ಚರತಪ್ಪಿಸಿ, ತನಗೆ ತಂದು ಒಪ್ಪಿಸುವ ರೀತಿಯಲ್ಲಿ ಅತಿಬಲವುಳ್ಳ ಚರರನ್ನು ಲಕ್ಷ್ಮಣನ ಬಳಿಗೆ ಕಳುಹಿಸು ಎಂದು ರಾಘವನು ಭರತನೊಡನೆ ಹೇಳಲು, ಅವನು ಅದೇರೀತಿ ದೂತರನ್ನು ಕಳುಹಿಸಲು ಅವರು ವಿಷಯತಿಳಿದುಕೊಂಡು ಬಂದು ಅವನಿಪತಿ ರಾಮನಿಗೆ ಹೀಗೆ ಹೇಳಿದರು.
  • (ಪದ್ಯ-೨.)

ಪದ್ಯ :೩:

[ಸಂಪಾದಿಸಿ]

ದೇವ ಬಿಡು ದೀಕ್ಷೆಯಂ ಕಾದು ನಡೆ ಕುಶನೊಳ್ ಮ | ಹಾವಿರನಾತನಾ ಲವನಿಂದೆ ಬಲ್ಲಿದಂ | ಜೀವಸಂದೇಹಮಾಗಿರ್ಪುದೈ ಶತ್ರುಘ್ನ ಲಕ್ಷ್ಮಣರ್ಗಳಸೇನೆ ||
ಭಾವಿಸೆ ತವಾಕೃತಿಯ ಬಾಲಕರ ದೆಸೆಯಿಂದೆ | ಗೋವರ್ಧನಂಗೆ ಮೊಲೆಗೊಟ್ಟ ಪೂತನಿವೊಲಾ | ಯ್ತೇವೇಳ್ವೆವೆಂದು ದೂತರ್ ನುಡಿಯೆ ರಾಘವಂ ಕೇಳಿ ಮೂರ್ಛಿತನಾದನು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದೇವ ಬಿಡು ದೀಕ್ಷೆಯಂ ಕಾದು ನಡೆ ಕುಶನೊಳ್ ಮಹಾವಿರನು ಆತನು ಆ ಲವನಿಂದೆ ಬಲ್ಲಿದಂ=[ದೇವ ಶ್ರೀರಾಮನೇ ದೀಕ್ಷೆಯನ್ನು ಬಿಡು! ಕುಶನೊಡನೆ ಯುದ್ಧಕ್ಕೆ ಹೊರಡು; ಅವನು ಮಹಾವಿರನು; ಆತನು ಅವನ ತಮ್ಮ ಆ ಲವನಿಗಿಂತ ಬಲಶಾಲಿ!]; ಜೀವಸಂದೇಹಂ ಆಗಿರ್ಪುದೈ ಶತ್ರುಘ್ನ ಲಕ್ಷ್ಮಣರ್ಗಳ ಸೇನೆ ಭಾವಿಸೆ ತವಾಕೃತಿಯ ಬಾಲಕರ ದೆಸೆಯಿಂದೆ=[ ಭಾವಿಸಿನೋಡಿದರೆ ನಿಮ್ಮದೇ ರೂಪವುಳ್ಳ ಆ ಬಾಲಕರ ದೆಸೆಯಿಂದ, ಶತ್ರುಘ್ನ ಮತ್ತು ಲಕ್ಷ್ಮಣರುಗಳ ಮತ್ತು ಸೇನೆಯ ಭಟರ ಜೀವವೇ ಸಂದೇಹಕ್ಕೆ ಒಳಗಾಗಿದೆ!]; ಗೋವರ್ಧನಂಗೆ ಮೊಲೆಗೊಟ್ಟ ಪೂತನಿವೊಲಾಯ್ತು ಏವೇಳ್ವೆವು=[ಗೋವರ್ಧನ ಕೃಷ್ಣನಿಗೆ ಮೊಲೆಗೊಟ್ಟ ಪೂತನಿಯಂತೆ ನಮ್ಮಸೇನೆಆಗಿದೆ! ನಾವು ಏನು ಹೇಳುವುದು]; ಎಂದು ದೂತರ್ ನುಡಿಯೆ ರಾಘವಂ ಕೇಳಿ ಮೂರ್ಛಿತನಾದನು=[ಎಂದು ದೂತರು ಹೇಳಲು, ರಾಘವನು ಕೇಳಿ ಮೂರ್ಛೆಹೊಂದಿದನು.]
  • ತಾತ್ಪರ್ಯ:ದೇವ ಶ್ರೀರಾಮನೇ ದೀಕ್ಷೆಯನ್ನು ಬಿಡು! ಕುಶನೊಡನೆ ಯುದ್ಧಕ್ಕೆ ಹೊರಡು; ಅವನು ಮಹಾವಿರನು; ಆತನು ಅವನ ತಮ್ಮ ಆ ಲವನಿಗಿಂತ ಬಲಶಾಲಿ! ಭಾವಿಸಿನೋಡಿದರೆ ನಿಮ್ಮದೇ ರೂಪವುಳ್ಳ ಆ ಬಾಲಕರ ದೆಸೆಯಿಂದ, ಶತ್ರುಘ್ನ ಮತ್ತು ಲಕ್ಷ್ಮಣರುಗಳ ಮತ್ತು ಸೇನೆಯ ಭಟರ ಜೀವವೇ ಸಂದೇಹಕ್ಕೆ ಒಳಗಾಗಿದೆ! ಗೋವರ್ಧನ ಕೃಷ್ಣನಿಗೆ ಮೊಲೆಗೊಟ್ಟ ಪೂತನಿಯಂತೆ ನಮ್ಮಸೇನೆ ಆಗಿದೆ! ನಾವು ಏನು ಹೇಳುವುದು*; ಎಂದು ದೂತರು ಹೇಳಲು, ರಾಘವನು ಕೇಳಿ ಮೂರ್ಛೆಹೊಂದಿದನು.
  • (ಇಲ್ಲಿ ರಾಮಾವತಾರದ ಕಥೆಯಲ್ಲಿ ದೂತರು ಇನ್ನೂ ಘಟಿಸದ ಕೃಷ್ಣಾವತಾರದ ಘಟನೆಯನ್ನು ಹೋಲಿಕೆಯಲ್ಲಿ ಹೇಳಿರುವುದು 'ಕಾವ್ಯಾಲಂಕಾರ ದೋಷ ಮತ್ತು ಅಭಾಸ' ಎಂದು ತಜ್ಞರ ಮತ.)
  • (ಪದ್ಯ-೩.)

ಪದ್ಯ :೪:

[ಸಂಪಾದಿಸಿ]

ಬಳಿಕ ಶೈತ್ಯೋಪಚಾರಂಗಳಿಂ ಭರತನಿನ | ಕುಲಸಾರ್ವಭೌಮನಂ ಸಂತೈಸುತಿರೆ ಮೂರ್ಛೆ | ತಿಳಿದೆದ್ದು ಲಕ್ಷ್ಮಣನದಾವಡೆಯೊಳೆನ್ನ ಸೊಲ್ಸಲಿಸುವನದಾವೆಡೆಯೊಳು ||
ಹಳುವಿನೊಳ್ ತನಗಾಗಿ ನವೆದನುಜನಾವೆಡೆಯೊ | ಳಳಿದನೇ ಸೌಮಿತ್ರಿ ಹಾ ತಮ್ಮ ಹಾ ಯೆನುತೆ | ಹಳವಳಿಸಿ ಬಿಸುಸುಯ್ದಳಲ್ದು ಮರುಗಿದನಂದು ರಾಘವಂ ಶೋಕದಿಂದೆ ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಶೈತ್ಯೋಪಚಾರಂಗಳಿಂ ಭರತನು ಇನಕುಲ ಸಾರ್ವಭೌಮನಂ ಸಂತೈಸುತಿರೆ ಮೂರ್ಛೆ ತಿಳಿದೆದ್ದು=[ಬಳಿಕ ಭರತನು ಶೈತ್ಯೋಪಚಾರ ಮಾಡಿ ರವಿಕುಲದ ಸಾರ್ವಭೌಮ ರಾಮನನ್ನು ಸಂತೈಸುತ್ತಿರಲು, ರಾಮನು ಮೂರ್ಛೆ ತಿಳಿದೆದ್ದು]; ಲಕ್ಷ್ಮಣನು ಅದಾವಡೆಯೊಳು ಎನ್ನ ಸೊಲ್ (ಆಜ್ಞೆ) ಸಲಿಸುವನು ಅದಾವೆಡೆಯೊಳು ಹಳುವಿನೊಳ್ ತನಗಾಗಿ ನವೆದನುಜನು ಆವೆಡೆಯೊಳು ಅಳಿದನೇ=[ಲಕ್ಷ್ಮಣನು ಇನ್ನು ನನ್ನ ಆಜ್ಞೆಯನ್ನು ಯಾವಾಗ ಪಾಲಿಸುವನು!ಯಾವ ಯಾವ ಕಡೆ ಕಾಡಿನಲ್ಲಿ ನನ್ನೊಡನೆ ತಿರುಗಿದನು! ಅದು ಯಾವಕಡೆ ಕಾಡಿನಲ್ಲಿ ತನಗಾಗಿ ಕಷ್ಟ ಅನುಭವಿಸಿದನು! ಮರಣಹೊಂದಿದನೇ!]; ಸೌಮಿತ್ರಿ ಹಾ ತಮ್ಮ ಹಾ ಯೆನುತೆ ಹಳವಳಿಸಿ ಬಿಸುಸುಯ್ದು ಅಳಲ್ದು ಮರುಗಿದನು ಅಂದು ರಾಘವಂ ಶೋಕದಿಂದೆ=[ಅಂದು ರಾಘವನು ಶೋಕದಿಂದೆ ಸೌಮಿತ್ರಿ, ಲಕ್ಷ್ಮಣಾ ಹಾ ತಮ್ಮ ಹಾ ಯೆನ್ನುತ್ತಾ, ಹಳವಳಿಸಿ ಬಿಸಿ ನಿಟ್ಟುಸಿರು ಬಿಡುತ್ತಾ ಕಣ್ಣೀರಿಟ್ಟು ಮರುಗಿದನು].
  • ತಾತ್ಪರ್ಯ:ಬಳಿಕ ಭರತನು ಶೈತ್ಯೋಪಚಾರ ಮಾಡಿ ರವಿಕುಲದ ಸಾರ್ವಭೌಮ ರಾಮನನ್ನು ಸಂತೈಸುತ್ತಿರಲು, ರಾಮನು ಮೂರ್ಛೆ ತಿಳಿದೆದ್ದು; ಲಕ್ಷ್ಮಣನು ಇನ್ನು ನನ್ನ ಆಜ್ಞೆಯನ್ನು ಯಾವಾಗ ಪಾಲಿಸುವನು! ಯಾವ ಯಾವ ಕಡೆ ಕಾಡಿನಲ್ಲಿ ನನ್ನೊಡನೆ ತಿರುಗಿದನು! ಅದು ಯಾವಕಡೆ ಕಾಡಿನಲ್ಲಿ ತನಗಾಗಿ ಕಷ್ಟ ಅನುಭವಿಸಿದನು! ಮರಣಹೊಂದಿದನೇ! ಎಂದು, ರಾಘವನು ಶೋಕದಿಂದೆ ಸೌಮಿತ್ರಿ, ಲಕ್ಷ್ಮಣಾ ಹಾ ತಮ್ಮ ಹಾ ಯೆನ್ನುತ್ತಾ, ಅಂದು ಹಳವಳಿಸಿ ಬಿಸಿ ನಿಟ್ಟುಸಿರು ಬಿಡುತ್ತಾ ಕಣ್ಣೀರಿಟ್ಟು ಮರುಗಿದನು.
  • (ಪದ್ಯ-೪.)

ಪದ್ಯ :೫:

[ಸಂಪಾದಿಸಿ]

ಜಾನಕಿಯನಂದು ಪೊರಮಡಿಸಿದನ್ಯಾಯದಿಂ | ಭಾನುಕುಲ ಸಂಭವಂಗಾದುವಿಂತೀತೆರದ | ಹಾನಿಗಳ್ ಸೌಮಿತ್ರಿ ಶತ್ರುಘ್ನರಂ ಜಯಿಸುವಗ್ಗಳೆಯರಾರ್ ಜಗದೊಳು ||
ಕಾನನದ ಮುನಿಸುತರ್ಗದಟೆತ್ತಣದು ರಾಮ | ಸೂನುಗಳ್ ತಪ್ಪದಾಕೃತಿಗಳಂ ನೋಡಲನು | ಮಾನಮೇಕೆಂದು ಮೊರೆಯಿಟ್ಟುದೆಲ್ಲಾ ಜನಂ ರಾಘವಂ ಕೇಳುವಂತೆ ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಜಾನಕಿಯನು ಅಂದು ಪೊರಮಡಿಸಿದ ಅನ್ಯಾಯದಿಂ ಭಾನುಕುಲ ಸಂಭವಂಗೆ ಆದುವಿಂತು ಈ ತೆರದ ಹಾನಿಗಳ್=[ಜಾನಕಿಯನ್ನು ಅಂದು ಹೊರಹಾಕಿದ ಅನ್ಯಾಯದಿಂದ ರವಿಕುಲದಲ್ಲಿ ಹುಟ್ಟಿದ ರಾಮನಿಗೆ ಈ ರೀತಿ ಹಾನಿ ಆಯಿತು;]; ಸೌಮಿತ್ರಿ ಶತ್ರುಘ್ನರಂ ಜಯಿಸುವ ಅಗ್ಗಳೆಯರಾರ್ ಜಗದೊಳು ಕಾನನದ ಮುನಿಸುತರ್ಗೆ ಅದಟು ಎತ್ತಣದು=[ಲಕ್ಷ್ಮಣ ಶತ್ರುಘ್ನರನ್ನು ಜಯಿಸುವ ಶೂರರು ಜಗದಲ್ಲಿ ಯಾರೂ ಇಲ್ಲ; ಕಾಡಿನ ಮುನಿಯಮಕ್ಕಳಿಗೆ ಈ ಶೌರ್ಯ ಎಲ್ಲಿಯದು!]; ರಾಮ ಸೂನುಗಳ್ ತಪ್ಪದ ಆಕೃತಿಗಳಂ ನೋಡಲು ಅನುಮಾನಂ ಏಕೆಂದು ಮೊರೆಯಿಟ್ಟುದು ಎಲ್ಲಾ ಜನಂ ರಾಘವಂ ಕೇಳುವಂತೆ=[ ರಾಮನ ಮಕ್ಕಳು ಇವರು, ನೋಡಲು ತಪ್ಪದೆ ಅವನದೇ ಆಕೃತಿಗಳು; ಅನುಮಾನ ಏಕೆ? ಎಂದು ಎಲ್ಲಾ ಜನರು ರಾಘವನಿಗೆ ಕೇಳುವಂತೆ ಮೊರೆಯಿಟ್ಟರು].
  • ತಾತ್ಪರ್ಯ:ಜಾನಕಿಯನ್ನು ಅಂದು ಹೊರಹಾಕಿದ ಅನ್ಯಾಯದಿಂದ ರವಿಕುಲದಲ್ಲಿ ಹುಟ್ಟಿದ ರಾಮನಿಗೆ ಈ ರೀತಿ ಹಾನಿ ಆಯಿತು; ಲಕ್ಷ್ಮಣ ಶತ್ರುಘ್ನರನ್ನು ಜಯಿಸುವ ಶೂರರು ಜಗದಲ್ಲಿ ಯಾರೂ ಇಲ್ಲ; ಕಾಡಿನ ಮುನಿಯಮಕ್ಕಳಿಗೆ ಈ ಶೌರ್ಯ ಎಲ್ಲಿಯದು! ರಾಮನ ಮಕ್ಕಳು ಇವರು, ನೋಡಲು ತಪ್ಪದೆ ಅವನದೇ ಆಕೃತಿಗಳು; ಅನುಮಾನ ಏಕೆ? ಎಂದು ಎಲ್ಲಾ ಜನರು ರಾಘವನಿಗೆ ಕೇಳುವಂತೆ ಮೊರೆಯಿಟ್ಟರು.
  • (ಪದ್ಯ-೫.)

ಪದ್ಯ :೬:

[ಸಂಪಾದಿಸಿ]

ಸೀತಾವದನಚಿಹ್ನೆಮೆನ್ನಂಗದಾಕಾರ | ಮಾ ತಾಪಸಾರ್ಭಕರೊಳಿರ್ದಪುದು ಗಡ ಪಡೆದ | ಮಾತೆಯೆಲ್ಲಿರ್ದಪಳೊ ಕದುರೆಯಂ ಕಟ್ಟುವದಟೆತ್ತಣದಿವರ್ಗೆಂಬುದ ||
ದೂತರಂ ಕರೆ ಕೇಳ್ವೆವಿನ್ನೊಮ್ಮೆ ಶಿಶುಗಳಂ | ಘಾತಿಸದೆ ದಯೆಗೈದು ತಾನೇರ್ವಡೆದನೊ ಮೇ | ಣಾತರಳರತಿಬಲರೊ ಸೌಮಿತ್ರಿ ಬಿದ್ದನೇಕೆಂದು ರಘುಪತಿ ಸುಯ್ದನು ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸೀತಾವದನಚಿಹ್ನಂ ಎನ್ನಂಗದಾಕಾರಮ್ ಆ ತಾಪಸಾರ್ಭಕರೊಳು ಇರ್ದಪುದು ಗಡ=[ಸೀತೆಯ ಮುಖದ ಕುರುಹು, ತನ್ನ ದೇಹದ ಆಕಾರವು, ಆ ತಾಪಸರ ಮಕ್ಕಳಲ್ಲಿ ಇರುವುದು,ಅಚ್ಚರಿ! ಗಡ!]; ಪಡೆದಮಾತೆ ಎಲ್ಲಿರ್ದಪಳೊ ಕದುರೆಯಂ ಕಟ್ಟುವ ಅದಟು ಎತ್ತಣದು ಇವರ್ಗೆ ಎಂಬುದ ದೂತರಂ ಕರೆ ಕೇಳ್ವೆವು ಇನ್ನೊಮ್ಮೆ=[ಆ ಮಕ್ಕಳನ್ನು ಪಡೆದ ತಾಯಿ ಎಲ್ಲಿರುವಳೋ! ಕದುರೆಯನ್ನು ಕಟ್ಟುವ ಶೌರ್ಯ ಎಲ್ಲಿಯದು ಇವರಿಗೆ ಎಂಬುದನ್ನು ದೂತರನ್ನು ಕರೆದು ಇನ್ನೊಮ್ಮೆ ಕೇಳುವೆವು!]; ಶಿಶುಗಳಂ ಘಾತಿಸದೆ ದಯೆಗೈದು ತಾನೇ ಏರ್ವಡೆದನೊ (ಏರ್+ಪಡೆ-ಮೇಲೆಹೋಗು? ಸ್ವರ್ಗ+ಪಡೆದನೋ) ) ಮೇಣ್ ತರಳರ್ ಅತಿಬಲರೊ ಸೌಮಿತ್ರಿ ಬಿದ್ದನೇಕೆಂದು ರಘುಪತಿ ಸುಯ್ದನು=[ಹೀಗಿರುವ ಬಾಲಕರನ್ನು ಹೊಡೆಯಲಾರದೆ ದಯೆತೋರಿ ತಾನೇ ಬಿದ್ದನೊ ಅಥವಾ ಬಾಲಕರು ಅತಿಬಲವುಳ್ಳವರೊ! ಸೌಮಿತ್ರಿ / ಲಕ್ಷ್ಮಣನು ಯುದ್ಧದಲ್ಲಿ ಬಿದ್ದನೇಕೆ? ಎಂದು ರಘುಪತಿ ನಿಟ್ಟುಸಿರುಬಿಟ್ಟನು.].
  • ತಾತ್ಪರ್ಯ:ಸೀತೆಯ ಮುಖದ ಕುರುಹು, ತನ್ನ ದೇಹದ ಆಕಾರವು, ಆ ತಾಪಸರ ಮಕ್ಕಳಲ್ಲಿ ಇರುವುದು,ಅಚ್ಚರಿ! ಗಡ!; ಆ ಮಕ್ಕಳನ್ನು ಪಡೆದ ತಾಯಿ ಎಲ್ಲಿರುವಳೋ! ಕದುರೆಯನ್ನು ಕಟ್ಟುವ ಶೌರ್ಯ ಎಲ್ಲಿಯದು ಇವರಿಗೆ ಎಂಬುದನ್ನು ದೂತರನ್ನು ಕರೆದು ಇನ್ನೊಮ್ಮೆ ಕೇಳುವೆವು! ಹೀಗಿರುವ ಬಾಲಕರನ್ನು ಹೊಡೆಯಲಾರದೆ ಲಕ್ಷ್ಮಣನು ದಯೆತೋರಿ ತಾನೇ ಬಿದ್ದನೊ ಅಥವಾ ಬಾಲಕರು ಅತಿಬಲವುಳ್ಳವರೊ! ಸೌಮಿತ್ರಿ / ಲಕ್ಷ್ಮಣನು ಯುದ್ಧದಲ್ಲಿ ಬಿದ್ದನೇಕೆ? ಎಂದು ರಘುಪತಿ ನಿಟ್ಟುಸಿರುಬಿಟ್ಟನು.
  • (ಪದ್ಯ-೬.)

ಪದ್ಯ :೭:

[ಸಂಪಾದಿಸಿ]

ಇಂತಿಂತಳಲ್ದಾಗ ಬಿಸುಸುಯ್ದೊಡನೆ ರಾಘ | ವಂ ತನ್ನ ಸಹಜರ ಗುಣಂಗಳಂ ನೆನೆನೆನೆದು | ಚಿಂತಿಸುತಿರೆ ಮತ್ತೆ ಕುಶನ ಶರಘಾತಿಯಿಂದುರೆ ನೊಂದು ಭೀತಿಗೊಂಡು ||
ಸಂತಪ್ತರಾಗಿ ಪರಿತಂದು ಲಕ್ಷಣನೊಡಲೊ | ಳಂತರಿಸಲರಿಯದಸು ಮಡಿದುದುಸಕಲಸೈನ್ಯ | ಮೆಂತಿಹನೊ ಶತ್ರುಘ್ನನೇಕೆ ದೀಕ್ಷೆಯಿದೆಂದು ಚರರೈದೆ ಮೊರೆಯಿಟ್ಟರು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಂತು ಇಂತು ಅಳಲ್ದು ಆಗ ಬಿಸುಸುಯ್ದು ಒಡನೆ ರಾಘವಂ ತನ್ನ ಸಹಜರ ಗುಣಂಗಳಂ ನೆನೆನೆನೆದು ಚಿಂತಿಸುತಿರೆ=[ರಾಮನು ಹೀಗೆ, ಈ ರೀತಿ ದುಃಖಪಟ್ಟು, ಆಗ ಬಿಸುಸುಯ್ದು ಕೂಡಲೆ ರಾಘವನು ತನ್ನ ಸಹೋದರರ ಗುಣಗಳನ್ನು ನೆನೆನೆನೆದು ಚಿಂತಿಸುತ್ತಿರಲು,]; ಮತ್ತೆ ಕುಶನ ಶರಘಾತಿಯಿಂದ ಉರೆ ನೊಂದು ಭೀತಿಗೊಂಡು ಸಂತಪ್ತರಾಗಿ ಪರಿತಂದು ಲಕ್ಷಣನ ಒಡಲೊಳು ಅಂತರಿಸಲು ಅರಿಯದ ಅಸು=[ದೂತರು ಮತ್ತೆ ಕುಶನ ಬಾಣದ ಪಟ್ಟಿನಿಂದ ಬಹಳ ನೊಂದು ಭೀತಿಗೊಂಡು ಸಂತಪ್ತರಾಗಿ ಓಡಿಬಂದು ಲಕ್ಷಣನ ದೇಹದಲ್ಲಿ ಉಸಿರಾಟವು ನಡೆಯುವಂತೆ ಕಾಣದು]; ಮಡಿದುದು ಸಕಲಸೈನ್ಯಂ ಎಂತಿಹನೊ ಶತ್ರುಘ್ನನು ಏಕೆ ದೀಕ್ಷೆಯಿದು ಎಂದು ಚರರು ಐದೆ ಮೊರೆಯಿಟ್ಟರು=[ಸಕಲ ಸೈನ್ಯವೂ ನಾಶವಾಯಿತು; ಶತ್ರುಘ್ನನು ಹೇಗಿರುವನೋ ತಿಳಿಯದು! ಏಕೆ ದೀಕ್ಷೆಯಿದು ಎಂದು ಚರರು ಬಂದು ಮೊರೆಯಿಟ್ಟರು].
  • ತಾತ್ಪರ್ಯ:ರಾಮನು ಹೀಗೆ, ಈ ರೀತಿ ದುಃಖಪಟ್ಟು, ಆಗ ಬಿಸುಸುಯ್ದು ಕೂಡಲೆ ರಾಘವನು ತನ್ನ ಸಹೋದರರ ಗುಣಗಳನ್ನು ನೆನೆನೆನೆದು ಚಿಂತಿಸುತ್ತಿರಲು, ದೂತರು ಮತ್ತೆ ಕುಶನ ಬಾಣದ ಪಟ್ಟಿನಿಂದ ಬಹಳ ನೊಂದು ಭೀತಿಗೊಂಡು ಸಂತಪ್ತರಾಗಿ ಓಡಿಬಂದು ಲಕ್ಷಣನ ದೇಹದಲ್ಲಿ ಉಸಿರಾಟವು ನಡೆಯುವಂತೆ ಕಾಣದು; ಸಕಲ ಸೈನ್ಯವೂ ನಾಶವಾಯಿತು; ಶತ್ರುಘ್ನನು ಹೇಗಿರುವನೋ ತಿಳಿಯದು! ಏಕೆ ದೀಕ್ಷೆಯಿದು? ಎಂದು ಚರರು ಬಂದು ಮೊರೆಯಿಟ್ಟರು.
  • (ಪದ್ಯ-೭.)

ಪದ್ಯ :೮:

[ಸಂಪಾದಿಸಿ]

ಮೊರೆವೇಳ್ದ ದೂತರಂ ಗರ್ಜಿಸುತೆ ರಾಘವಂ | ಗೆರಗಿ ಕೈಮುಗಿದು ಭಯವಿಹ್ವಲರ್ ಚಾರರಿವ | ರರಿದಪೆರೆ ಸೌಮಿತ್ರಿ ಶತ್ರುಘ್ನರಾಹವಶ್ರಮದಿಂದೆ ತನು ಮನವನು ||
ಮರೆದರಲ್ಲದೆ ಮರಣವೆತ್ತಣದು ಸಾಕಿನ್ನು | ಬರಿದೆ ಚಿಂತಿಸಬೇಡ ನಾಂ ಪೋಗಿ ಬಾಲಕರ | ಮುರುಕಮಂ ಬಿಡಿಸಿ ತಹೆನಶ್ವಮಂ ಕಳುಹೆನ್ನನೆಂದು ಭರತಂ ನುಡಿದನು ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೊರೆವೇಳ್ದ ದೂತರಂ ಗರ್ಜಿಸುತೆ ರಾಘವಂ ಗೆರಗಿ ಕೈಮುಗಿದು ಭಯವಿಹ್ವಲರ್ ಚಾರರಿವರು ಅರಿದಪೆರೆ=[ಭರತನು ಮೊರೆಯಿಡುತ್ತಿರುವ ದೂತರನ್ನು ಗದರಿಸಿ, ರಾಘವನಿಗೆ ನಮಿಸಿ ಕೈಮುಗಿದು, ಬಹಳ ಚಾರರು ಇವರು ಭಯಪಟ್ಟಿರುವರು ಇವರಿಗೆ ತಿಳಿಯುವುದೇ?]; ಸೌಮಿತ್ರಿ ಶತ್ರುಘ್ನರಾಹವಶ್ರಮದಿಂದೆ ತನು ಮನವನು ಮರೆದರಲ್ಲದೆ ಮರಣವೆತ್ತಣದು=[ಲಕ್ಷ್ಮಣ ಶತ್ರುಘ್ನರು ಯುದ್ಧದ ಶ್ರಮದಿಂದೆ ಎಚ್ಚರತಪ್ಪಿರಬಹದು, ಮರಣಹೊಂದಿರಲು ಸಾಧ್ಯವೇ? ]; ಸಾಕಿನ್ನು ಬರಿದೆ ಚಿಂತಿಸಬೇಡ ನಾಂ ಪೋಗಿ ಬಾಲಕರ ಮುರುಕಮಂ (ಬಿಂಕ, ಬಿನ್ನಾಣ ೨ ಸೊಕ್ಕು, ಗರ್ವ ಜಿವೆಂ.ಸುಬ್ಬಯ್ಯ,ಕನ್ನಡ ಕನ್ನಡ ನಿಘಂಟು)) ಬಿಡಿಸಿ ತಹೆನಶ್ವಮಂ ಕಳುಹೆನ್ನನೆಂದು ಭರತಂ ನುಡಿದನು=[ರಾಮಾ ಸಾಕು ಇನ್ನು ಬರಿದೆ ಚಿಂತಿಸಬೇಡ; ನಾನು ಹೋಗಿ ಬಾಲಕರ ಸೊಕ್ಕನ್ನು ಬಿಡಿಸಿ ಕುದುರೆಯನ್ನು ತರುವೆನು. ನನ್ನನ್ನು ಕಳುಹಿಸು ಎಂದು ಭರತನು ಹೇಳಿದನು].
  • ತಾತ್ಪರ್ಯ:ಭರತನು ಮೊರೆಯಿಡುತ್ತಿರುವ ದೂತರನ್ನು ಗದರಿಸಿ, ರಾಘವನಿಗೆ ನಮಿಸಿ ಕೈಮುಗಿದು, ಚಾರರು ಇವರು ಬಹಳ ಭಯಪಟ್ಟಿರುವರು ಇವರಿಗೆ ತಿಳಿಯುವುದೇ? ಲಕ್ಷ್ಮಣ ಶತ್ರುಘ್ನರು ಯುದ್ಧದ ಶ್ರಮದಿಂದೆ ಎಚ್ಚರತಪ್ಪಿರಬಹದು, ಮರಣಹೊಂದಿರಲು ಸಾಧ್ಯವೇ? ರಾಮಾ ಸಾಕು ಇನ್ನು ಬರಿದೆ ಚಿಂತಿಸಬೇಡ; ನಾನು ಹೋಗಿ ಬಾಲಕರ ಸೊಕ್ಕನ್ನು ಬಿಡಿಸಿ ಕುದುರೆಯನ್ನು ತರುವೆನು. ನನ್ನನ್ನು ಕಳುಹಿಸು ಎಂದು ಭರತನು ಹೇಳಿದನು.
  • (ಪದ್ಯ-೮.)

ಪದ್ಯ :೯:

[ಸಂಪಾದಿಸಿ]

ಬಳಿಕ ಜಾಂಬವ ಸುಷೇಣಾಂಗದ ಹನೂಮಂತ | ನಳ ನೀಲ ಕುಮುದ ಶತಬಲಿ ಗವಯರೆಂಬ ಕಪಿ | ಗಳ ಪಡೆಯನೆಲ್ಲಮಂ ಬಲದೊಳುಳಿದಖಿಳ ಚತುರಂಗಮಂ ಕೂಡಿಕೊಟ್ಟು ||
ಕಳುಹಲಿನಕುಲ ಸಾರ್ವಭೌಮನಂ ಬೀಳ್ಕೊಂಡು | ತಳೆದು ಸುರನದಿಯ ತೀರದೊಳಾಂಜನೇಯನಂ | ಕೊಳಗುಳದ ವೃತ್ತಾಂತಮಂ ಕಂಡು ಬಂದೊರೆವುದೆಂದು ಭರತಂ ಪೇಳ್ದನು ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಜಾಂಬವ, ಸುಷೇಣ, ಅಂಗದ, ಹನೂಮಂತ, ನಳ, ನೀಲ ಕುಮುದ ಶತಬಲಿ ಗವಯರೆಂಬ ಕಪಿಗಳ ಪಡೆಯನೆಲ್ಲಮಂ ಬಲದೊಳುಳಿದಖಿಳ ಚತುರಂಗಮಂ ಕೂಡಿಕೊಟ್ಟು ಕಳುಹಲು=[ಬಳಿಕ ಜಾಂಬವ, ಸುಷೇಣ, ಅಂಗದ, ಹನೂಮಂತ, ನಳ, ನೀಲ, ಕುಮುದ, ಶತಬಲಿ, ಗವಯರೆಂಬ ಕಪಿಗಳ ಪಡೆಯನ್ನು ಎಲ್ಲವನ್ನೂ, ಸೈನ್ಯದಲ್ಲಿ ಉಳಿದ ಅಖಿಲ ಚತುರಂಗವನ್ನು ಕೂಡಿಕೊಂಡು ಯುದ್ಧಕ್ಕೆ ಕಳುಹಲು]; ಇನಕುಲ ಸಾರ್ವಭೌಮನಂ ಬೀಳ್ಕೊಂಡು ತಳೆದು ಸುರನದಿಯ ತೀರದೊಳು ಆಜನೇಯನಂ ಕೊಳಗುಳದ ವೃತ್ತಾಂತಮಂ ಕಂಡು ಬಂದು ಒರೆವುದೆಂದು ಭರತಂ ಪೇಳ್ದನು=[ರವಿಕುಲ ಸಾರ್ವಭೌಮ ರಾಮನನ್ನು ಬೀಳ್ಕೊಂಡು, ಹೊರಟವರು ಗಂಗಾನದಿಯ ತೀರದಲ್ಲಿ ಬೀಡುಬಿಟ್ಟು, ಯುದ್ಧದ ವೃತ್ತಾಂತವನ್ನು ನೋಡಿಕೊಂಡು ಬಂದುತಿಳಿಸಬೇಕೆಂದು ಭರತನು ಆಂಜನೇಯನನ್ನು ಕರೆದು ಹೇಳಿದನು.].
  • ತಾತ್ಪರ್ಯ:ಬಳಿಕ ಜಾಂಬವ, ಸುಷೇಣ, ಅಂಗದ, ಹನೂಮಂತ, ನಳ, ನೀಲ, ಕುಮುದ, ಶತಬಲಿ, ಗವಯರೆಂಬ ಕಪಿಗಳ ಪಡೆಯನ್ನು ಎಲ್ಲವನ್ನೂ, ಸೈನ್ಯದಲ್ಲಿ ಉಳಿದ ಅಖಿಲ ಚತುರಂಗವನ್ನು ಕೂಡಿಕೊಂಡು ಯುದ್ಧಕ್ಕೆ ಕಳುಹಲು; ರವಿಕುಲ ಸಾರ್ವಭೌಮ ರಾಮನನ್ನು ಬೀಳ್ಕೊಂಡು, ಹೊರಟವರು ಗಂಗಾನದಿಯ ತೀರದಲ್ಲಿ ಬೀಡುಬಿಟ್ಟು, ಯುದ್ಧದ ವೃತ್ತಾಂತವನ್ನು ನೋಡಿಕೊಂಡು ಬಂದು ತಿಳಿಸಬೇಕೆಂದು ಭರತನು ಆಂಜನೇಯನನ್ನು ಕರೆದು ಹೇಳಿದನು.
  • (ಪದ್ಯ-೯.)XXIX-X

ಪದ್ಯ :೧೦:

[ಸಂಪಾದಿಸಿ]

ಧೀಂಕಿಟ್ಟನಲ್ಲಿಂದೆ ಕಲಿಹನುಮ ನಾರಣದೊ | ಳಂಕಿತದ ಕುಶನ ಬಾಣಂಗಳಿಂ ಮಡಿದ ಬಲ | ಸಂಕುಲವನಿಕ್ಷ್ವಾಕುನಂದನಂ ನಿನ್ನ ಸುತೆ ಸೀತೆಯಂ ಬಿಟ್ಟನೆಂದು ||
ಕೊಂಕದಿರು ಸೈರಿಸುವುದೆಂದೈದೆ ಭೂದೇವಿ | ಯಂ ಕೋಪಮಂ ಮಾಣಿಸಲ್ ಬೇಡಿಕೊಳ್ವ ತರ | ದಿಂ ಕೆಡೆದು ಮೈ ಮರೆದು ಮಲಗಿರ್ದ ಸೌಮಿತ್ರಿ ಶತ್ರುಘ್ನರಂ ಕಂಡನು ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಧೀಂಕಿಟ್ಟನು ಅಲ್ಲಿಂದೆ ಕಲಿಹನುಮನು ಆರಣದೊಳು ಅಂಕಿತದ ಕುಶನ ಬಾಣಂಗಳಿಂ ಮಡಿದ ಬಲಸಂಕುಲವನು=[ ಕಲಿಹನುಮನು ಧೀಂಕಿಟ್ಟು ಅಲ್ಲಿಂದೆ ಹಾರಿ, ಯುದ್ಧಭೂಮಿಗೆ ಬಂದು, ಆ ರಣರಂಗದಲ್ಲಿ ಹೆಸರು/ಗುರುತುಳ್ಳ ಕುಶನ ಬಾಣಗಳಿಂದ ಪ್ರಾಣಬಿಟ್ಟ ಸೈನ್ಯಸಮೂಹವನ್ನು ನೋಡಿದನು.]; ಇಕ್ಷ್ವಾಕುನಂದನಂ ನಿನ್ನ ಸುತೆ ಸೀತೆಯಂ ಬಿಟ್ಟನೆಂದು ಕೊಂಕದಿರು ಸೈರಿಸುವುದೆಂದು ಐದೆ ಭೂದೇವಿಯಂ ಕೋಪಮಂ ಮಾಣಿಸಲ್ ಬೇಡಿಕೊಳ್ವ ತರದಿಂ=[ಇಕ್ಷ್ವಾಕುನಂದನನಾದ ರಾಮನು ನಿನ್ನ (ಭೂಮಿಯ) ಸುತೆ ಸೀತೆಯನ್ನು ಬಿಟ್ಟನೆಂದು ಬೇಸರಪಡದೆ ಸೈರಿಸಬೇಕೆಂದು ಆ (ಸೈನಿಕರು)- ಲಕ್ಷ್ಮಣ ಶತ್ರುಘ್ನರು ಇಲ್ಲಗೆಬಂದು ಭೂದೇವಿಯ ಕೋಪವನ್ನು ಶಾಂತಗೊಳಿಸಲು ಬೇಡಿಕೊಳ್ಳುವ ತರದಿಂದ]; ಕೆಡೆದು ಮೈ ಮರೆದು ಮಲಗಿರ್ದ ಸೌಮಿತ್ರಿ ಶತ್ರುಘ್ನರಂ ಕಂಡನು=[ನೆಲಕ್ಕೆ ಬಿದ್ದು ಮಲಗಿ ಎಚ್ಚರವಿಲ್ಲದೆ ಮಲಗಿದ್ದ ಸೌಮಿತ್ರಿ ಶತ್ರುಘ್ನರನ್ನು ಕಂಡನು];
  • ತಾತ್ಪರ್ಯ:ಕಲಿಹನುಮನು ಧೀಂಕಿಟ್ಟು ಅಲ್ಲಿಂದೆ ಹಾರಿ, ಯುದ್ಧಭೂಮಿಗೆ ಬಂದು, ಆ ರಣರಂಗದಲ್ಲಿ ಹೆಸರು/ಗುರುತುಳ್ಳ ಕುಶನ ಬಾಣಗಳಿಂದ ಪ್ರಾಣಬಿಟ್ಟ ಸೈನ್ಯಸಮೂಹವನ್ನು ನೋಡಿದನು. ಇಕ್ಷ್ವಾಕುನಂದನನಾದ ರಾಮನು ನಿನ್ನ (ಭೂಮಿಯ) ಸುತೆ ಸೀತೆಯನ್ನು ಬಿಟ್ಟನೆಂದು ಬೇಸರಪಡದೆ ಸೈರಿಸಬೇಕೆಂದು ಆ ಲಕ್ಷ್ಮಣ ಶತ್ರುಘ್ನರು ಇಲ್ಲಗೆಬಂದು ಭೂದೇವಿಯ ಕೋಪವನ್ನು ಶಾಂತಗೊಳಿಸಲು ಬೇಡಿಕೊಳ್ಳುವ ತರದಿಂದ, ನೆಲಕ್ಕೆ ಬಿದ್ದು ಮಲಗಿ ಎಚ್ಚರವಿಲ್ಲದೆ ಮಲಗಿದ್ದ ಸೌಮಿತ್ರಿ ಶತ್ರುಘ್ನರನ್ನು ಕಂಡನು.
  • (ಪದ್ಯ-೧೦.)

ಪದ್ಯ :೧೧:

[ಸಂಪಾದಿಸಿ]

ಕಂಡು ಕಪಿವೀರನವರೀರ್ವರಂ ತೆಗೆದೆತ್ತಿ | ಕೊಂಡು ಭರತನ ಪೊರೆಗೆ ತರಲವಂಬಳಿಕ ಮಣಿ | ಮಂಡಿತ ವರೂಥದೊಳವರ್ಗಳಂ ಪಟ್ಟಿರಿಸಿ ಹಯಮಂ ಕದಳಿಗೆ ಕಟ್ಟಿ ||
ಚಂಡ ಶರ ಚಾಪ ಪಾಣಿಗಳಾಗಿ ತೊಳಗುವು | ದ್ದಂಡ ಕುಶ ಲವರಿರ್ವರಿರ್ಪುದಂ ಕೇಳ್ದು ಕೋ | ದಂಡಮಂ ಜೇಗೈದು ಪಡೆವೆರಸಿ ನೂಕಿದಂ ಮುಳಿದು ಬಾಲಕರ ಮೇಲೆ ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಂಡು ಕಪಿವೀರನು ಅವರೀರ್ವರಂ ತೆಗೆದೆತ್ತಿಕೊಂಡು ಭರತನ ಪೊರೆಗೆ ತರಲು ಅವಂ ಬಳಿಕ ಮಣಿಮಂಡಿತ ವರೂಥದೊಳವರ್ಗಳಂ ಪಟ್ಟಿರಿಸಿ=[ ಕಪಿವೀರನಾದ ಹನುಮಂತನು ಭರತ ಶತ್ರುಘ್ನರನ್ನು ಕಂಡು ಅವರಿಬ್ಬರನ್ನೂ ತೆಗೆದುಎತ್ತಿಕೊಂಡು ಭರತನ ಬಳಿಗೆ ತರಲು, ಅವನು ಬಳಿಕ ಅವರಿಬ್ಬರನ್ನೂ ಮಣಿಮಂಡಿತವಾದ ರಥದಲ್ಲಿ ಉಪಚರಿಸಿ ಇಟ್ಟನು.]; ಹಯಮಂ ಕದಳಿಗೆ ಕಟ್ಟಿ ಚಂಡ ಶರ ಚಾಪ ಪಾಣಿಗಳಾಗಿ ತೊಳಗುವುದ್ದಂಡ ಕುಶ ಲವರಿರ್ವರು ಇರ್ಪುದಂ ಕೇಳ್ದು ಕೋದಂಡಮಂ ಜೇಗೈದು ಪಡೆವೆರಸಿ ನೂಕಿದಂ ಮುಳಿದು ಬಾಲಕರ ಮೇಲೆ=[ ನಂತರ ಭರತನು ಕುದುರೆಯನ್ನು ಕದಳಿಗಮರಕ್ಕೆ ಕಟ್ಟಿ ಶೂರರಾದ, ಬಿಲ್ಲುಬಾಣ ಹಿಡಿದು ಶೋಭಿಸುವ ಬಲಿಷ್ಟ ಕುಶ ಲವರಿಬ್ಬರು ಇರುವದನ್ನು ಕೇಳಿ ಬಿಲ್ಲನ್ನು ಜೇಂಕರಿಸಿ ಸಿಟ್ಟಿನಿಂದ ಬಾಲಕರ ಮೇಲೆ ಸೈನ್ಯಸಮೇತ ನೆದೆದನು.]
  • ತಾತ್ಪರ್ಯ: ಕಪಿವೀರನಾದ ಹನುಮಂತನು ಭರತ ಶತ್ರುಘ್ನರನ್ನು ಕಂಡು ಅವರಿಬ್ಬರನ್ನೂ ತೆಗೆದುಎತ್ತಿಕೊಂಡು ಭರತನ ಬಳಿಗೆ ತರಲು, ಅವನು ಬಳಿಕ ಅವರಿಬ್ಬರನ್ನೂ ಮಣಿಮಂಡಿತವಾದ ರಥದಲ್ಲಿ ಉಪಚರಿಸಿ ಇಟ್ಟನು. ನಂತರ ಭರತನು ಕುದುರೆಯನ್ನು ಕದಳಿಗಮರಕ್ಕೆ ಕಟ್ಟಿ ಶೂರರಾದ, ಬಿಲ್ಲುಬಾಣ ಹಿಡಿದು ಶೋಭಿಸುವ ಬಲಿಷ್ಟ ಕುಶ ಲವರಿಬ್ಬರು ಇರುವದನ್ನು ಕೇಳಿ ಬಿಲ್ಲನ್ನು ಜೇಂಕರಿಸಿ ಸಿಟ್ಟಿನಿಂದ ಬಾಲಕರ ಮೇಲೆ ಸೈನ್ಯಸಮೇತ ನೆಡೆದನು.]
  • (ಪದ್ಯ-೧೧.)

ಪದ್ಯ :೧೨:

[ಸಂಪಾದಿಸಿ]

ಅಣ್ಣತಮ್ಮಂದಿರೀರ್ವರು ಮರಿಚತುರ್ಬಲಂ | ಪಣ್ಣಿ ಬರೆ ಕಂಡು ಬಿಲ್ಗೊಂಡೆದ್ದು ಕೋಪದಿಂ | ದಣ್ಣೆಕಲ್ಲಾಡಿದರ್ ಪಟುಭಟರ ತಲೆಗಳಂ ಬಾಣಪ್ರಯೋಗದಿಂದೆ ||
ಬಣ್ಣಿಸಲ್ಪವಣೆ ಯೋಜನದಗಲಮೆಲ್ಲಿಯುಂ | ಕಣ್ಣೆವೆಯಲುಗುವನಿತರೊಳ್ ಸರಲ್ಮಯಮಾಗೆ | ಚಿಣ್ಣರಂಗದ ಮೇಲೆ ಮೆಚ್ಚಿ ಪೂಮಳೆಗಳಂ ಕರೆದಮರರ್ ಪೊಗಳ್ದು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಣ್ಣತಮ್ಮಂದಿರು ಈರ್ವರುಂ ಅರಿಚತುರ್ಬಲಂ ಪಣ್ಣಿ ಬರೆ(ಹಣ್ಣಿಬರೆ-ಸನ್ನದ್ಧವಾಗಿ ಬರಲು) ಕಂಡು ಬಿಲ್ಗೊಂಡು ಎದ್ದು ಕೋಪದಿಂದ ಅಣ್ಣೆಕಲ್ಲಾಡಿದರ್ (ಕವಣೆ-ಕಲ್ಲಾಡಿದರು) ಪಟುಭಟರ ತಲೆಗಳಂ ಬಾಣಪ್ರಯೋಗದಿಂದೆ=[ಅಣ್ಣತಮ್ಮಂದಿರು ಇಬ್ಬರೂ ಶತ್ರುಚತುರ್ಬಲವನ್ನು ಸನ್ನದ್ಧವಾಗಿ ಬರಲು ಕಂಡು ಬಿಲ್ಗು ಹಿಡಿದು ಎದ್ದು ಕೋಪದಿಂದ ಪಟುಭಟರ ತಲೆಗಳನ್ನು ಬಾಣಪ್ರಯೋಗದಿಂದ ಕವಣೆ-ಕಲ್ಲಾಡಿದರು-(ಚೆಂಡಾಡಿದರು)]; ಬಣ್ಣಿಸಲ್ ಪವಣೆ (ಹವಣೆ-ಶಕ್ಯವೇ)=[ಬಣ್ಣಿಸಲು ಶಕ್ಯವೇ?]; ಯೋಜನದಗಲಂ ಎಲ್ಲಿಯುಂ ಕಣ್ಣೆವೆಯು ಅಲುಗುವ ಅನಿತರೊಳ್ ಸರಲ್ಮಯಮಾಗೆ ಚಿಣ್ಣರ ಅಂಗದ ಮೇಲೆ ಮೆಚ್ಚಿ ಪೂಮಳೆಗಳಂ ಕರೆದು ಅಮರರ್ ಪೊಗಳ್ದು =[ಯೋಜನದಗಲದಲ್ಲಿ ಎಲ್ಲಕಡೆಯೂ ಕಣ್ಣು ರೆಪ್ಪೆಯು ಅಲುಗುವ ಅಷ್ಟರಲ್ಲಿ ಬಾಣಗಳಮಯವಾಯಿತು. ಬಾಲಕರ ಮೈಮೇಲೆ ಅವರನ್ನು ಮೆಚ್ಚಿ ಹೂವಿನ ಮಳೆಗಳನ್ನು ಕರೆದು ದೇವತೆಗಳು ಹೊಗಳಿದರು.]
  • ತಾತ್ಪರ್ಯ:ಅಣ್ಣತಮ್ಮಂದಿರು ಇಬ್ಬರೂ ಶತ್ರುಚತುರ್ಬಲವನ್ನು ಸನ್ನದ್ಧವಾಗಿ ಬರಲು ಕಂಡು ಬಿಲ್ಗು ಹಿಡಿದು ಎದ್ದು ಕೋಪದಿಂದ ಪಟುಭಟರ ತಲೆಗಳನ್ನು ಬಾಣಪ್ರಯೋಗದಿಂದ ಕವಣೆ-ಕಲ್ಲಾಡಿದರು-(ಚೆಂಡಾಡಿದರು); ಬಣ್ಣಿಸಲು ಶಕ್ಯವೇ? ಯೋಜನದಗಲದಲ್ಲಿ ಎಲ್ಲಕಡೆಯೂ ಕಣ್ಣು ರೆಪ್ಪೆಯು ಅಲುಗುವ ಅಷ್ಟರಲ್ಲಿ ಬಾಣಗಳಮಯವಾಯಿತು. ಬಾಲಕರ ಮೈಮೇಲೆ ಅವರನ್ನು ಮೆಚ್ಚಿ ಹೂವಿನ ಮಳೆಗಳನ್ನು ಕರೆದು ದೇವತೆಗಳು ಹೊಗಳಿದರು.]
  • (ಪದ್ಯ-೧೨.)

ಪದ್ಯ :೧೩:

[ಸಂಪಾದಿಸಿ]

ಚಾಪ ಟಂಕಾರಂ ಜಗತ್ತ್ರಯದೊಳೆಲ್ಲಿಯುಂ | ವ್ಯಾಪಿಸಲ್ ಕಿವುಡಾದುವಷ್ಟದಿಗ್ಧಂತಿಗ | ಳ್ ಭೂಪಯೋಧಿಗಳೊಡೆವೆರಸಿದುವು ಕುಲಾದ್ರಿಗಳ್ ಜರಿದುವಹಿ ಕಂಪಿಸಿದನು ||
ತಾಪದಿಂ ಪೊಡೆಮರಳ್ದಂ ಕೂರ್ಮನಾ ರವಿಯ | ರೂಪಡಗಿತೆಸುವ ಬಾಣಾಂಧಕಾರದೊಳಂದು | ದೀಪಮಿಲ್ಲದ ಮನೆವೊಲಾದುದು ರಣಾಂಗಣಂ ಕಾದುವರದೆಂತೋ ಭಟರು ||13|| |

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಚಾಪ ಟಂಕಾರಂ ಜಗತ್ತ್ರಯದೊಳು ಎಲ್ಲಿಯುಂ ವ್ಯಾಪಿಸಲ್ ಕಿವುಡು ಆದುವು ಅಷ್ಟದಿಗ್ಧಂತಿಗಳ್ ಭೂಪಯೋಧಿಗಳು ಒಡೆವೆರಸಿದುವು ಕುಲಾದ್ರಿಗಳ್ ಜರಿದುವು ಅಹಿ ಕಂಪಿಸಿದನು=[ಬಿಲ್ಲಿನ ಟಂಕಾರವು ಜಗತ್ತ್ರಯದ ಎಲ್ಲಕಡೆಯೂ ವ್ಯಾಪಿಸಲು ಅಷ್ಟದಿಗ್ಧಂತಿಗಳು ಕಿವುಡು ಆದುವು; ಭೂಮಿಯಲ್ಲಿರು ಸಮುದ್ರಗಳು ಒಟ್ಟುಸೇರಿದವು; ಕುಲಾದ್ರಿಗಳು ಜರಿದುವು; ಆದಿಶೇಷನು ನಡುಗಿದನು]; ತಾಪದಿಂ ಪೊಡೆಮರಳ್ದಂ ಕೂರ್ಮನು ಆ ರವಿಯ ರೂಪ ಅಡಗಿತು ಎಸುವ ಬಾಣಾಂಧಕಾರದೊಳ್ ಅಂದು ದೀಪಮ್ ಇಲ್ಲದ ಮನೆವೊಲ್ ಆದುದು ರಣಾಂಗಣಂ ಕಾದುವರು ಅದೆಂತೋ ಭಟರು=[ಕೂರ್ಮನು ಬಿಸಿಯಾಗಿ ಹೊರಳಿದನು; ಆ ರವಿಯ ರೂಪವು ಕತ್ತಲೆಯಿಂದ ಅಡಗಿತು; ಬಿಡುತ್ತಿರುವ ಬಾಣಗಳು ಕವಿದು ಅಂಧಕಾರದಲ್ಲಿ ಅಂದು ದೀಪವು/ಬೆಳಕು ಇಲ್ಲದ ಮನೆ ಆಯಿತು;ಭಟರು ರಣಾಂಗಣದಲ್ಲಿ ಅದು ಹೇಗೆ ಹೋರಾಡುವವರೋ!].
  • ತಾತ್ಪರ್ಯ:ಆ ಬಾಲಕರ ಯುದ್ಧ ಸಮಯದಲ್ಲಿ ಬಿಲ್ಲಿನ ಟಂಕಾರವು ಜಗತ್ತ್ರಯದ ಎಲ್ಲಕಡೆಯೂ ವ್ಯಾಪಿಸಲು ಅಷ್ಟದಿಗ್ಧಂತಿಗಳು ಕಿವುಡು ಆದುವು; ಭೂಮಿಯಲ್ಲಿರು ಸಮುದ್ರಗಳು ಒಟ್ಟುಸೇರಿದವು; ಕುಲಾದ್ರಿಗಳು ಜರಿದುವು; ಆದಿಶೇಷನು ನಡುಗಿದನು. ಕೂರ್ಮನು ಬಿಸಿಯಾಗಿ ಹೊರಳಿದನು; ಆ ರವಿಯ ರೂಪವು ಕತ್ತಲೆಯಿಂದ ಅಡಗಿತು; ಬಿಡುತ್ತಿರುವ ಬಾಣಗಳು ಕವಿದು ಅಂಧಕಾರದಲ್ಲಿ ಅಂದು ದೀಪವು/ಬೆಳಕು ಇಲ್ಲದ ಮನೆ ಆಯಿತು;ಭಟರು ರಣಾಂಗಣದಲ್ಲಿ ಅದು ಹೇಗೆ ಹೋರಾಡುವವರೋ!
  • (ಪದ್ಯ-೧೩.)

ಪದ್ಯ :೧೪:

[ಸಂಪಾದಿಸಿ]

ಕೋಲ್ಗರೆಯಲಾನೆಗಳ ಸುಂಡಿಲ್ಗಳುಂ ಹಯದ | ಕಾಲ್ಗಳುಂ ರಾವುತರ ಜೋದರ ಶಿರಂಗಳುಂ | ಮೇಲ್ಗೈದು ರಥಿಕರ ಧನುರ್ದಂಡಮಂ ಕೈದುವಿಡಿದ ಪಾಣಿಗಳುಮಿಳೆಗೆ ||
ಸಾಲ್ಗೊಂಡುರುಳ್ದುವೊದಗಿದ ಕಪಿಗಳಂಗದೊಳ್ | ಕೀಲ್ಗಳಂ ಬಲಿದಂತೆ ನಾಂಟಿದುವು ಪರಬಲಂ | ಸೋಲ್ಗುಮಲ್ಲದೆ ಕುಶ ಲವರ ಮುಂದೆ ಗೆಲ್ವ ಭಟರಂ ಕಾಣೆನಾಹವದೊಳು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೋಲ್ಗರೆಯಲು ಆನೆಗಳ ಸುಂಡಿಲ್ಗಳುಂ ಹಯದ ಕಾಲ್ಗಳುಂ ರಾವುತರ ಜೋದರ ಶಿರಂಗಳುಂ ಮೇಲ್ಗೈದು (ಮೇಲಕೆ ಐದು-ಹೋಗು) ರಥಿಕರ ಧನುರ್ದಂಡಮಂ ಕೈದುವಿಡಿದ ಪಾಣಿಗಳುಂ ಇಳೆಗೆ ಸಾಲ್ಗೊಂಡು ಉರುಳ್ದುವು=[ಲವಕುಶರಿಂದ ಬಾಣಗಳ ಮಳೆಸುರಿಯಲು ಆನೆಗಳ ಸೊಂಡಿಲುಗಳು, ಕುದುರೆಯ ಕಾಲುಗಳು, ರಾವುತರ ಮಾವುತರ ತಲೆಗಳು, ಮೇಲಕ್ಕೆ ಹಾರಿದುವು; ರಥಿಕರ ಬಿಲ್ಲು ಆಯಧ ಹಿಡಿದ ಕೈಗಳು ಭೂಮಿಗೆ ಸಾಲು ಸಾಲಾಗಿ ಉರುಳಿದವು]; ಒದಗಿದ ಕಪಿಗಳ ಅಂಗದೊಳ್ ಕೀಲ್ಗಳಂ ಬಲಿದಂತೆ ನಾಂಟಿದುವು ಪರಬಲಂ ಸೋಲ್ಗುಂ ಅಲ್ಲದೆ ಕುಶ ಲವರ ಮುಂದೆ ಗೆಲ್ವ ಭಟರಂ ಕಾಣೆನು ಆಹವದೊಳು (ಯುದ್ಧ)=[ಒಟ್ಟಾಗಿ ಬಂದ ಕಪಿಗಳ ದೇಹದಲ್ಲಿ ಕೀಲುಗಳನ್ನು ಬಡಿದಂತೆ ಬಾಣಗಳು ನಾಟಿದುವು; ಶತ್ರಯ ಸೈನ್ಯವು ಸೋಲುವುದಲ್ಲದೆ, ಕುಶ ಲವರ ಮುಂದೆ ಯುದ್ಧದಲ್ಲಿ ಗೆಲ್ಲುವ ಶೂರರನ್ನು ಕಾಣೆನು.]
  • ತಾತ್ಪರ್ಯ:ಲವಕುಶರಿಂದ ಬಾಣಗಳ ಮಳೆಸುರಿಯಲು ಆನೆಗಳ ಸೊಂಡಿಲುಗಳು, ಕುದುರೆಯ ಕಾಲುಗಳು, ರಾವುತರ ಮಾವುತರ ತಲೆಗಳು, ಮೇಲಕ್ಕೆ ಹಾರಿದುವು; ರಥಿಕರ ಬಿಲ್ಲು ಆಯಧ ಹಿಡಿದ ಕೈಗಳು ಭೂಮಿಗೆ ಸಾಲು ಸಾಲಾಗಿ ಉರುಳಿದವು; ಒಟ್ಟಾಗಿ ಬಂದ ಕಪಿಗಳ ದೇಹದಲ್ಲಿ ಕೀಲುಗಳನ್ನು ಬಡಿದಂತೆ ಬಾಣಗಳು ನಾಟಿದುವು; ಶತ್ರಯ ಸೈನ್ಯವು ಸೋಲುವುದಲ್ಲದೆ, ಕುಶ ಲವರ ಮುಂದೆ ಯುದ್ಧದಲ್ಲಿ ಗೆಲ್ಲುವ ಶೂರರನ್ನು ಕಾಣೆನು.(ಎಂದನು ಮುನಿ)
  • (ಪದ್ಯ-೧೪.)

ಪದ್ಯ :೧೫:

[ಸಂಪಾದಿಸಿ]

ಸೇನೆಯಂ ನಿಮಿಷದೊಳ್ ತಡೆಗಡಿಯೆ ಕಂಡು ಪವ | ಮಾನಜಂ ನಡೆತಂದು ಬಾಲಕರ ವಿಗ್ರಹಂ | ಭಾನುಕುಲತಿಲಕನಾಕೃತಿವೊಲಿದೆ ನೋಡೆಂದು ಭರತಂಗೆ ತೋರಿಸಲ್ಕೆ||
ಸಾನುರಾಗದೊಳತುಲ ಚಾಪಮಂ ಪಿಡಿದು ರಾ | ಮಾನುಜಂ ಕುಶನ ಸನ್ಮುಖಕೈದಿ ನುಡಿಸಿದಂ | ಸೂನುಗಳ ಮೊಗಂ ನಿರೀಕ್ಷಿಸಿ ಘನಸ್ನೇಹದಿಂದೆ ಪುಳಕಂ ಪೊಣ್ಮಲು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸೇನೆಯಂ ನಿಮಿಷದೊಳ್ ತಡೆಗಡಿಯೆ ಕಂಡು ಪವಮಾನಜಂ ನಡೆತಂದು ಬಾಲಕರ ವಿಗ್ರಹಂ ಭಾನುಕುಲತಿಲಕನ ಆಕೃತಿವೊಲಿದೆ ನೋಡೆಂದು ಭರತಂಗೆ ತೋರಿಸಲ್ಕೆ=[ಸೇನೆಯನ್ನು ನಿಮಿಷದಲ್ಲಿ ತಡೆದು ಹೊಡೆಯಲು/ಕಡಿಯೆ, ಅದನ್ನು ಕಂಡು ಹನುಮಂತನು ಮುಂದೆಬಂದು ಬಾಲಕರ ರೂಪವು ರಾಮನ ಆಕಾರದಂತೆ ಇದೆ, ನೋಡು ಎಂದು ಭರತನಿಗೆ ತೋರಿಸಲು,];ಸಾನುರಾಗದೊಳು ಅತುಲ ಚಾಪಮಂ ಪಿಡಿದು ರಾಮಾನುಜಂ ಕುಶನ ಸನ್ಮುಖಕೆ ಐದಿ ನುಡಿಸಿದಂ ಸೂನುಗಳ ಮೊಗಂ ನಿರೀಕ್ಷಿಸಿ ಘನಸ್ನೇಹದಿಂದೆ ಪುಳಕಂ ಪೊಣ್ಮಲು=[(ಅವನು) ಪ್ರೀತಿಯಿಂದ ಕೂಡಿ,ಅವನ ಉತ್ತಮ ಧನುಸ್ಸನ್ನು ಹಿಡಿದು ರಾಮನಸೋದರ ಭರತನು ಕುಶನ ಎದುರಿಗೆ ಹೋಗಿ, ಮಕ್ಕಳ ಮುಖ ನೋಡಿ ದೇಹದಲ್ಲಿ ಪುಳಕವುಂಟಾಗಲು ಬಹಳ ಸ್ನೇಹದಿಂದ ಅವರನ್ನು ಮಾತಾಇಸಿದನು.]
  • ತಾತ್ಪರ್ಯ:ಸೇನೆಯನ್ನು ನಿಮಿಷದಲ್ಲಿ ತಡೆದು ಹೊಡೆಯಲು/ಕಡಿಯೆ, ಅದನ್ನು ಕಂಡು ಹನುಮಂತನು ಮುಂದೆಬಂದು ಬಾಲಕರ ರೂಪವು ರಾಮನ ಆಕಾರದಂತೆ ಇದೆ, ನೋಡು ಎಂದು ಭರತನಿಗೆ ತೋರಿಸಲು,(ಅವನು) ಪ್ರೀತಿಯಿಂದ ಕೂಡಿ,ಅವನ ಉತ್ತಮ ಧನುಸ್ಸನ್ನು ಹಿಡಿದು ರಾಮನ ಸೋದರ ಭರತನು ಕುಶನ ಎದುರಿಗೆ ಹೋಗಿ, ಮಕ್ಕಳ ಮುಖ ನೋಡಿ ದೇಹದಲ್ಲಿ ಪುಳಕವುಂಟಾಗಲು ಬಹಳ ಸ್ನೇಹದಿಂದ ಕುಶನನ್ನು ಮಾತಾಡಿಸಿದನು.
  • (ಪದ್ಯ-೧೫.)

ಪದ್ಯ :೧೬:

[ಸಂಪಾದಿಸಿ]

ವತ್ಸ ನೀನಾರವಂ ನಿನಗೀತನೇನಹಂ | ಮತ್ಸಹೋದರರನುರೆ ಘಾತಿಸಿದಿರೆಮ್ಮೆಯ ಮ | ಹತ್ಸೈನ್ಯಮಂ ಕೊಂದಿರಿನ್ನಾದೊಡಂ ಕುದುರೆಯಂ ಬಿಟ್ಟು ಪೋಗಿ ಬರಿದೆ ||
ಮತ್ಸರಿಸಬೇಡ ನಿಮ್ಮಂ ಪಡೆದ ತಾಯ ಬಳಿ | ಗುತ್ಸವದೊಳೈದಿ ಸುಖಮಿಹುದೆಂದು ಭರತನೆನ | ಲುತ್ಸಕದೊಳಾ ಕುಶಂ ನಸುನಗುತೆ ನುಡಿದನಿಂತಾ ರಾಘವಾನುಜಂಗೆ ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವತ್ಸ ನೀನು ಆರವಂ ನಿನಗೆ ಈತನು ಏನಹಂ ಮತ್ ಸಹೋದರರನು ಉರೆ ಘಾತಿಸಿದಿರಿ ಎಮ್ಮೆಯ ಮಹತ್ ಸೈನ್ಯಮಂ ಕೊಂದಿರಿ=[ಬಾಲಕನೇ, ನೀನು ಯಾರವನು? ನಿನಗೆ ಈತನು ಏನಾಗಬೇಕು? ನನ್ನ ಸಹೋದರರನ್ನು ಬಹಳ ನೋಯಿಸಿದಿರಿ; ನಮ್ಮ ದೊಡ್ಡ ಸೈನ್ಯವನ್ನು ಕೊಂದಿರಿ;]; ಇನ್ನಾದೊಡಂ ಕುದುರೆಯಂ ಬಿಟ್ಟು ಪೋಗಿ ಬರಿದೆ ಮತ್ಸರಿಸಬೇಡ ನಿಮ್ಮಂ ಪಡೆದ ತಾಯ ಬಳಿಗೆ ಉತ್ಸವದೊಳು ಐದಿ ಸುಖಂ ಇಹುದೆಂದು ಭರತನು ಎನಲು=[ಇನ್ನಾದರೂ ಕುದುರೆಯನ್ನು ಬಿಟ್ಟು ಹೋಗಿ. ಬರಿದೆ ವಿರೋದಬೇಡ; ನಿಮ್ಮನ್ನು ಪಡೆದ ತಾಯ ಬಳಿಗೆ ಸಂತೋಷದಿಂದ ಹೋಗಿ ಸುಖದಲ್ಲಿ ಇರಿ, ಎಂದು ಭರತನು ಹೇಳಲು]; ಉತ್ಸಕದೊಳು ಆ ಕುಶಂ ನಸುನಗುತೆ ನುಡಿದನಿಂತು ಆ ರಾಘವಾನುಜಂಗೆ=[ಉತ್ಸಾಹದಿಂದ ಆ ಕುಶನು ನಸುನಗುತ್ತಾ ಆ ರಾಘವನ ತಮ್ಮ ಭರತನಿಗೆ ಹೀಗೆ ಹೇಳಿದನು.].
  • ತಾತ್ಪರ್ಯ:ಬಾಲಕನೇ, ನೀನು ಯಾರವನು? ನಿನಗೆ ಈತನು ಏನಾಗಬೇಕು? ನನ್ನ ಸಹೋದರರನ್ನು ಬಹಳ ನೋಯಿಸಿದಿರಿ; ನಮ್ಮ ದೊಡ್ಡ ಸೈನ್ಯವನ್ನು ಕೊಂದಿರಿ; ಇನ್ನಾದರೂ ಕುದುರೆಯನ್ನು ಬಿಟ್ಟು ಹೋಗಿ. ಬರಿದೆ ವಿರೋದಬೇಡ; ನಿಮ್ಮನ್ನು ಪಡೆದ ತಾಯ ಬಳಿಗೆ ಸಂತೋಷದಿಂದ ಹೋಗಿ ಸುಖದಲ್ಲಿ ಇರಿ, ಎಂದು ಭರತನು ಹೇಳಲು, ಉತ್ಸಾಹದಿಂದ ಆ ಕುಶನು ನಸುನಗುತ್ತಾ ಆ ರಾಘವನ ತಮ್ಮ ಭರತನಿಗೆ ಹೀಗೆ ಹೇಳಿದನು.
  • (ಪದ್ಯ-೧೬.)

ಪದ್ಯ :೧೭:

[ಸಂಪಾದಿಸಿ]

ಕಟ್ಟಿದ ತುರಂಗಮಂ ಬಿಡುವನಲ್ಲೀತನೊಡ | ಹುಟ್ಟಿದಂ ತನಗೆ ವಾಲ್ಮೀಕಿಮುನಿವರನವರ್ | ನೆಟ್ಟನೆ ರಣಾಗ್ರದೊಳ್ ನಿನ್ನನುಂ ನಿನ್ನನುಜರಂತೆ ಘಾತಿಸಿದ ಬಳಿಕ ||
ಮುಟ್ಟಿದುತ್ಸವದಿಂದ ತಾಯ ಬಳಿಗೈದಿ ಪÉÇಡ | ಮಟ್ಟಲ್ಲಿ ಸುಖದೊಳಿರ್ದಪೆವೆಂದು ಕಣೆಗಳಂ | ತೊಟ್ಟು ತಾನೀಗ ಕುಶನರಿ ಇುಕೊಳ್ಳೆನುತೆಚ್ಚನಾ ಭರತನಂ ದಧುರದೊಳು ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಟ್ಟಿದ ತುರಂಗಮಂ ಬಿಡುವನಲ್ಲ ಈತನ ಒಡಹುಟ್ಟಿದಂ ತನಗೆ ವಾಳ್ಮೀಕಿಮುನಿವರನವರ್=[ಕಟ್ಟಿದ ಕುದುರಯನ್ನು ಬಿಡುವನಲ್ಲ; ಈತನು ತನಗೆ ಒಡಹುಟ್ಟಿದವನು; ನಾವು ವಾಲ್ಮೀಕಿಮುನಿವರನ ಕಡೆಯವರು]; ನೆಟ್ಟನೆ ರಣಾಗ್ರದೊಳ್ ನಿನ್ನನುಂ ನಿನ್ನನುಜರಂತೆ ಘಾತಿಸಿದ ಬಳಿಕ ಮುಟ್ಟಿದ ಉತ್ಸವದಿಂದ ತಾಯ ಬಳಿಗೈದಿ ಪೊಡಮಟ್ಟಲ್ಲಿ ಸುಖದೊಳಿರ್ದಪೆವೆಂದು=[ನೇರವಾಗಿ ರಣರಂಗದಲ್ಲಿ ನಿನ್ನನ್ನು ನಿನ್ನನುಜರಂತೆ ಹೊಡೆದು ಸೋಲಿಸಿದ ಬಳಿಕ ಗೆದ್ದ ಸಮತೋಷದಿಂದ ತಾಯ ಬಳಿಗೆ ಹೋಗಿ ನಮಸ್ಕಾರಮಾಡಿ ಸುಖವಾಗಿ ಇರುವೆವು, ಎಂದು ಹೇಳಿ]; ಕಣೆಗಳಂ ತೊಟ್ಟು ತಾನು ಈಗ ಕುಶನು ಅರಿ ಇದುಕೊಳ್ಳೆನುತ ಎಚ್ಚನಾ ಭರತನಂ ದಧುರದೊಳು=[ಬಾಣಗಳನ್ನು ತೊಟ್ಟು ನಾನು ಕುಶನೆಂಬುವನು ಈಗ ತಿಳಿದುಕೊ; ಇದು ನನ್ನ ಬಾಣ ತೆಗೆದುಕೊ ಎನುತ್ತಾ ಭರತನನ್ನು ಯುದ್ಧದಲ್ಲಿ ಹೊಡೆದನು].
  • ತಾತ್ಪರ್ಯ:ಕಟ್ಟಿದ ಕುದುರಯನ್ನು ಬಿಡುವನಲ್ಲ; ಈತನು ತನಗೆ ಒಡಹುಟ್ಟಿದವನು; ನಾವು ವಾಲ್ಮೀಕಿಮುನಿವರನ ಕಡೆಯವರು; ನೇರವಾಗಿ ರಣರಂಗದಲ್ಲಿ ನಿನ್ನನ್ನು ನಿನ್ನನುಜರಂತೆ ಹೊಡೆದು ಸೋಲಿಸಿದ ಬಳಿಕ ಗೆದ್ದ ಸಂತೋಷದಿಂದ ತಾಯ ಬಳಿಗೆ ಹೋಗಿ ನಮಸ್ಕಾರಮಾಡಿ ಸುಖವಾಗಿ ಇರುವೆವು, ಎಂದು ಹೇಳಿ; ಬಾಣಗಳನ್ನು ತೊಟ್ಟು ನಾನು ಕುಶನೆಂಬುವನು ಈಗ ತಿಳಿದುಕೊ; ಇದು ನನ್ನ ಬಾಣ ತೆಗೆದುಕೊ ಎನ್ನುತ್ತಾ ಭರತನನ್ನು ಯುದ್ಧದಲ್ಲಿ ಹೊಡೆದನು.
  • (ಪದ್ಯ-೧೭.)

ಪದ್ಯ :೧೮:

[ಸಂಪಾದಿಸಿ]

ಭರತನಂ ಗಣಿಸದಿಸುತಿರೆ ಕಂಡು ಮತ್ತೆ ಕರಿ | ತುರಗ ರಥ ಪಾಯದಳ ಮೊತ್ತಿದುದು ಕೂಡೆ ವಾ | ನರ ಸಿಂಗಳೀಕ ಮುಸು ಕರಡಿಯ ಬಲಂ ಮುತ್ತಿದುದು ಬಳಿಕ ನಸುನಗುತೆ ಕುಶನು ||
ಕರೆದು ಕುದುರೆಯ ಬಳಿಗೆ ತಮ್ಮನಂ ಕಳುಹಿ ಬಿ | ಲ್ದಿರುವಿಂದುಗುಳ್ಚಿದಂ* ಕಣೆಗಳಂ ವೈರಿ ಮೋ | ಹರದ ತಲೆವಣೆಗಳಂ ಪಗೆಗಳೆರ್ದೆವಣಿಗಳಂ ರವಿಗೆಣೆಗಳಂ ಕ್ಷಣದೊಳು ||18||

  • (ಉರುಳ್ಚಿದಂ ?-ಉರುಳಿಸಿದನು)
ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭರತನಂ ಗಣಿಸದೆ ಇಸುತಿರೆ ಕಂಡು ಮತ್ತೆ ಕರಿ ತುರಗ ರಥ ಪಾಯದಳ ಮೊತ್ತಿದುದು ಕೂಡೆ ವಾನರ ಸಿಂಗಳೀಕ ಮುಸು ಕರಡಿಯ ಬಲಂ ಮುತ್ತಿದುದು=[ಭರತನ ಮಾತನ್ನು ಲೆಕ್ಕಿಸದೆ ಬಾಣಬಿಡುತ್ತಿರಲು ಕಂಡು ಮತ್ತೆ ಆನೆ, ಕುದುರೆ, ರಥ, ಪದಾತಿದಳಗಳು ಮುಂದೆ ಒತ್ತಿಬಂದವು. ಜೊತೆಗೆ ವಾನರ, ಸಿಂಗಳೀಕ, ಮುಸು (ಕಪ್ಪುಮುಖದ ಕಪಿ), ಕರಡಿಯ ಸೈನ್ಯವು ಮುತ್ತಿದವು.]; ಬಳಿಕ ನಸುನಗುತೆ ಕುಶನು ಕರೆದು ಕುದುರೆಯ ಬಳಿಗೆ ತಮ್ಮನಂ ಕಳುಹಿ ಬಿಲ್ದಿರುವಿಂದ ಉಗುಳ್ಚಿದಂ (ಉಗುಳಿಚು-ಬಿಡು, ಹೊರಹಾಕು.) ಕಣೆಗಳಂ ವೈರಿ ಮೋಹರದ ತಲೆವಣೆಗಳಂ ಪಗೆಗಳ ಎರ್ದೆವಣಿಗಳಂ ರವಿಗೆಣೆಗಳಂ (ಅಸ್ತ್ರ) ಕ್ಷಣದೊಳು=[ಬಳಿಕ ನಸುನಗುತ್ತಾ ಕುಶನು ಲವನನ್ನು ಕರೆದು ಕುದುರೆಯ ಬಳಿಗೆ ತಮ್ಮನನ್ನು ಕಾವಲಿಗೆ ಕಳುಹಿಸಿ, ಬಿಲ್ಲಿನಹೆದೆಯಿಂದ ಬಾಣಗಳನ್ನು ವೈರಿ ಸೈನ್ಯದ ಮೇಲೆ ಉಗುಳ್ಚಿದನು/ಬಿಟ್ಟನು; ಕ್ಷಣದಲ್ಲಿ ತಲೆ-ಹಣೆಗಳನ್ನೂ, ವೈರಿಗಳ ಎದೆಮಣಿಗಳಾದ ಹೃದಯವನ್ನೂ ಶತ್ರುಗಳಅಸ್ತ್ರಗಳನ್ನೂ ಹೊಡೆದನು];
  • ತಾತ್ಪರ್ಯ:ಭರತನ ಮಾತನ್ನು ಲೆಕ್ಕಿಸದೆ ಬಾಣಬಿಡುತ್ತಿರಲು ಕಂಡು ಮತ್ತೆ ಆನೆ, ಕುದುರೆ, ರಥ, ಪದಾತಿದಳಗಳು ಮುಂದೆ ಒತ್ತಿಬಂದವು. ಜೊತೆಗೆ ವಾನರ, ಸಿಂಗಳೀಕ, ಮುಸು (ಕಪ್ಪುಮುಖದ ಕಪಿ), ಕರಡಿಯ ಸೈನ್ಯವು ಮುತ್ತಿದವು. ಬಳಿಕ ನಸುನಗುತ್ತಾ ಕುಶನು ಲವನನ್ನು ಕರೆದು ಕುದುರೆಯ ಬಳಿಗೆ ತಮ್ಮನನ್ನು ಕಾವಲಿಗೆ ಕಳುಹಿಸಿ, ಬಿಲ್ಲಿನಹೆದೆಯಿಂದ ಬಾಣಗಳನ್ನು ವೈರಿ ಸೈನ್ಯದ ಮೇಲೆ ಉಗುಳ್ಚಿದನು/ಬಿಟ್ಟನು; ಕ್ಷಣದಲ್ಲಿ ತಲೆ-ಹಣೆಗಳನ್ನೂ, ವೈರಿಗಳ ಎದೆಮಣಿಗಳಾದ ಹೃದಯವನ್ನೂ ಶತ್ರುಗಳಅಸ್ತ್ರಗಳನ್ನೂ ಹೊಡೆದನು;
  • (ಪದ್ಯ-೧೮.)

ಪದ್ಯ :೧೯:

[ಸಂಪಾದಿಸಿ]

ಹತ್ತು ಭರತನ ಮೇಲೆ ನಳನ ಮೇಲೆಂಟು ಮೂ | ವತ್ತು ಹನುಮನಮೇಲೆ ಜಾಂಬವನಮೇಲೆ ನಾ | ಲ್ವತ್ತಂಗದನಮೇಲೆ ತೊಂಬತ್ತು ನೀಲ ಕುಮುದರ ಮೇಲೆ ನೂರುನೂರು ||
ಉತ್ತುಂಗ ಗವಯ ಶತಬಲಿ ಸುಷೇಣರಮೇಲೆ | ಹತ್ತು ಹತ್ತಂಬೊಡಲ್ವುಗಲೆಚ್ಚನನಿಬರಂ | ಮತ್ತೆ ಘಾತಿಸಿ ಕೂಡೆ ರಾಮಾನುಜನ ಮೇಲೆ ಕೂರ್ಗಣೆಗಳಂಕರೆದನು ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹತ್ತು ಭರತನ ಮೇಲೆ ನಳನ ಮೇಲೆಂಟು ಮೂವತ್ತು ಹನುಮನಮೇಲೆ ಜಾಂಬವನಮೇಲೆ ನಾಲ್ವತ್ತು ಅಂಗದನಮೇಲೆ ತೊಂಬತ್ತು ನೀಲ ಕುಮುದರ ಮೇಲೆ ನೂರುನೂರು=[ಕುಶನು ಈ ಕ್ರಮದಲ್ಲಿ ಬಾಣಗಳಿಂದ ಹೊಡೆದನು, ಹತ್ತು ಭರತನ ಮೇಲೆ, ನಳನ ಮೇಲೆ ಎಂಟು, ಮೂವತ್ತು ಹನುಮನಮೇಲೆ, ಜಾಂಬವನಮೇಲೆ ನಾಲ್ವತ್ತು, ಅಂಗದನಮೇಲೆ ತೊಂಬತ್ತು, ನೀಲ ಕುಮುದರ ಮೇಲೆ ನೂರುನೂರು,]; ಉತ್ತುಂಗ ಗವಯ ಶತಬಲಿ ಸುಷೇಣರಮೇಲೆ ಹತ್ತು ಹತ್ತಂಬು ಒಡಲ್ ಒಗಲು (ದೇಹ ಹೊಗಲು) ಎಚ್ಚನು ಅನಿಬರಂ (ಎಲ್ಲರ) ಮತ್ತೆ ಘಾತಿಸಿ ಕೂಡೆ ರಾಮಾನುಜನ ಮೇಲೆ ಕೂರ್ಗಣೆಗಳಂ ಕರೆದನು=[ಉತ್ತುಂಗ, ಗವಯ, ಶತಬಲಿ, ಸುಷೇಣರ ಮೇಲೆ ಹತ್ತು ಹತ್ತು ಅಂಬುಗಳು, ಅವು ಎಲ್ಲರಲ್ಲಿ ದೇಹದಲ್ಲಿ ಹೊಗುವಂತೆ ಹೊಡೆದನು; ಪುನಃ ಹೊಡೆದು, ಜೊತೆಗೆ ರಾಮಾನುಜ ಭರತನ ಮೇಲೆ ಚೂಪಾದ ಬಾಣಗಳನ್ನು ಸುರಿಸಿದನು].
  • ತಾತ್ಪರ್ಯ:ಕುಶನು ಈ ಕ್ರಮದಲ್ಲಿ ಬಾಣಗಳಿಂದ ಹೊಡೆದನು, ಹತ್ತು ಭರತನ ಮೇಲೆ, ನಳನ ಮೇಲೆ ಎಂಟು, ಮೂವತ್ತು ಹನುಮನಮೇಲೆ, ಜಾಂಬವನಮೇಲೆ ನಾಲ್ವತ್ತು, ಅಂಗದನಮೇಲೆ ತೊಂಬತ್ತು, ನೀಲ ಕುಮುದರ ಮೇಲೆ ನೂರುನೂರು; ಉತ್ತುಂಗ, ಗವಯ, ಶತಬಲಿ, ಸುಷೇಣರ ಮೇಲೆ ಹತ್ತು ಹತ್ತು ಅಂಬುಗಳು, ಅವು ಎಲ್ಲರಲ್ಲಿ ದೇಹದಲ್ಲಿ ಹೊಗುವಂತೆ ಹೊಡೆದನು; ಪುನಃ ಹೊಡೆದು, ಜೊತೆಗೆ ರಾಮಾನುಜ ಭರತನ ಮೇಲೆ ಚೂಪಾದ ಬಾಣಗಳನ್ನು ಸುರಿಸಿದನು.
  • (ಪದ್ಯ-೧೯.)

ಪದ್ಯ :೨೦:

[ಸಂಪಾದಿಸಿ]

ಎಲ್ಲಿ ಕುಶನಂಬು ಸೋಂಕಿದುವಲ್ಲಿ ಮೂರ್ಛೆ ಮೃತಿ | ಯಲ್ಲದುಳಿವಿಲ್ಲ ಪಡೆಯೆಲ್ಲಮಂ ತಲ್ಲಣಿಸಿ | ಚೆಲ್ಲಿದುದು ದೆಸೆದೆಸೆಗೆ ಬಲ್ಲಿದ ಕಪೀಶ್ವರರ್ ಕೈಗೆಟ್ಟು ಮೈಮರೆದರು ||
ನಿಲ್ಲದೋಡಿತು ದೊದ್ದೆಘಲ್ಲಣಿಯನಾಂತು ನಿಂ | ದಲ್ಲಿ ಸಾರಥಿ ಕುದುರೆಗಳ್ ಮಡಿದು ತೇರ್ಮುರಿದು | ಬಿಲ್ಲುಡಿದು ಭರತನಂಗೋಪಾಂಗದಲ್ಲಿ ನಾಂಟಿದುವು ಪೊಸ ಮಸೆಗಣೆಗಳು ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಲ್ಲಿ ಕುಶನ ಅಂಬು ಸೋಂಕಿದುವು ಅಲ್ಲಿ ಮೂರ್ಛೆ ಮೃತಿಯಲ್ಲದೆ ಉಳಿವಿಲ್ಲ=[ಎಲ್ಲಿ ಕುಶನ ಬಾಣಗಳು ತಾಗಿದವೋ ಅಲ್ಲಿ ಮೂರ್ಛೆ ಮೃತಿಯಲ್ಲದೆ ಬದುಕಿ ಉಳಿದವರಿಲ್ಲ]; ಪಡೆಯೆಲ್ಲಮಂ ತಲ್ಲಣಿಸಿ ಚೆಲ್ಲಿದುದು ದೆಸೆದೆಸೆಗೆ ಬಲ್ಲಿದ ಕಪೀಶ್ವರರ್ ಕೈಗೆಟ್ಟು ಮೈಮರೆದರು=[ಸೈನ್ಯವೆಲ್ಲವನ್ನೂ ಅವನ ಬಾಣಗಳು ತಲ್ಲಣಿಸಿ ಓಡಿಸಿತು ದಿಕ್ಕುದಿಕ್ಕಿಗೆ; ಬಲಿಷ್ಠ ಕಪೀಶ್ವರರು ಕೈಲಾಗದೆ ಮೈಮರೆತರು]; ನಿಲ್ಲದೆ ಓಡಿತು ದೊದ್ದೆ (ಸೈನ್ಯ-ಗುಂಪು) ಘಲ್ಲಣಿಯನು (ಹೊಡೆದಾಟ) ಆಂತು ನಿಂದಲ್ಲಿ ಸಾರಥೀ ಕುದುರೆಗಳ್ ಮಡಿದು ತೇರ್ ಮುರಿದು ಬಿಲ್ಲು ಉಡಿದು ಭರತನ ಅಂಗೋಪಾಂಗದಲ್ಲಿ ನಾಂಟಿದುವು ಪೊಸ ಮಸೆಗಣೆಗಳು=[ಸೈನ್ಯ ನಿಲ್ಲದೆ ಓಡಿತು, ಪೆಟ್ಟನ್ನು ಪಡೆದು ನಿಂತಲ್ಲಿ ಸಾರಥಿ ಕುದುರೆಗಳು ಸತ್ತು, ರಥ ಮುರಿದು, ಬಿಲ್ಲು ತುಂಡಾಗಿ, ಭರತನ ದೇಹದ ತುಂಬ ಹೊಸ ಮಸೆದ ಬಾಣಗಳು ನಾಂಟಿದುವು].
  • ತಾತ್ಪರ್ಯ:ಎಲ್ಲಿ ಕುಶನ ಬಾಣಗಳು ತಾಗಿದವೋ ಅಲ್ಲಿ ಮೂರ್ಛೆ ಮೃತಿಯಲ್ಲದೆ ಬದುಕಿ ಉಳಿದವರಿಲ್ಲ; ಸೈನ್ಯವೆಲ್ಲವನ್ನೂ ಅವನ ಬಾಣಗಳು ತಲ್ಲಣಿಸಿ ಓಡಿಸಿತು ದಿಕ್ಕುದಿಕ್ಕಿಗೆ; ಬಲಿಷ್ಠ ಕಪೀಶ್ವರರು ಕೈಲಾಗದೆ ಮೈಮರೆತರು; ಸೈನ್ಯ ನಿಲ್ಲದೆ ಓಡಿತು, ಪೆಟ್ಟನ್ನು ಪಡೆದು ನಿಂತಲ್ಲಿ ಸಾರಥಿ ಕುದುರೆಗಳು ಸತ್ತು, ರಥ ಮುರಿದು, ಬಿಲ್ಲು ತುಂಡಾಗಿ, ಭರತನ ದೇಹದ ತುಂಬ ಹೊಸ ಮಸೆದ ಬಾಣಗಳು ನಾಟಿದುವು.
  • (ಪದ್ಯ-೨೦.)

ಪದ್ಯ :೨೧:

[ಸಂಪಾದಿಸಿ]

ಜಗದೊಳ್ ಕುಶಾಸ್ತ್ರ ನಿಕರಕ್ಕೆ(ಪ್ರಕರಕೆ)* ಮೈಗೊಟ್ಟವಂ | ಮಿಗೆ ಪತಿತನಾಗದಿರ್ದಪನೆ ಪೇಳೆಂಬಿನಂ | ವಿಗತ ಚೇತನನಾಗಿ ಭರತಂ ಮಹೀತಳಕ್ಕೆ ಬಿದ್ದು ಮೂರ್ಛೆಯೊಳಿರಲ್ಕೆ ||
ವಿಗಡ ಹನುಮಂ ಕಂಡು ಕಿತ್ತು ಪೆರ್ಬೆಟ್ಟಮಂ | ನೆಗಪಿ ತಂದರ್ಭಕನ ಮೇಲಿಡಲ್ಕಣುವೆಂದು | ಬಗೆಯದೆ ವಿಭಾಡಿಸಿದನಾತನಂ ಕಣೆಯೆಚ್ಚು ನಗುತೆ ಜಾನಕಿಯ ಸೂನು ||21||

  • (ಪ್ರಕರಕೆ-ಸಮುಹಕ್ಕೆ)
ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಜಗದೊಳ್ ಕುಶಾಸ್ತ್ರ ನಿಕರಕ್ಕೆ ಮೈ ಕೊಟ್ಟವಂ ಮಿಗೆ ಪತಿತನಾಗದೆ ಇರ್ದಪನೆ ಪೇಳ್ ಅಂಬಿನಂ ವಿಗತ ಚೇತನನಾಗಿ ಭರತಂ ಮಹೀತಳಕ್ಕೆ ಬಿದ್ದು ಮೂರ್ಛೆಯೊಳು ಇರಲ್ಕೆ=[ಜಗತ್ತಿನಲ್ಲಿ ಕುಶನ ಅಸ್ತ್ರ ಸರಣಿಗೆ ದೇಹ ಕೊಟ್ಟವನು ಮತ್ತೆ ಪೆಟ್ಟಾಗದೆ ಇರುವನೆ ಹೇಳು; ಬಾಣದಿಂದ ಭರತನು ಚೇತನ ಕಡಿಮೆಯಾಗಿ ಭೂಮಿಗೆ ಬಿದ್ದು ಮೂರ್ಛೆಹೋಗಿರಲು,]; ವಿಗಡ ಹನುಮಂ ಕಂಡು ಕಿತ್ತು ಪೆರ್ ಬೆಟ್ಟಮಂ ನೆಗಪಿ ತಂದು ಅರ್ಭಕನ ಮೇಲಿಡಲ್ಕೆ ಅಣುವೆಂದು ಬಗೆಯದೆ ವಿಭಾಡಿಸಿದನು ಆತನಂ ಕಣೆಯ ಎಚ್ಚು ನಗುತೆ ಜಾನಕಿಯ ಸೂನು=[ಶೂರ ಹನುಮನು ಕಂಡು ಒಂದು ದೊಡ್ಡ ಬೆಟ್ಟವನ್ನು ಕಿತ್ತು ಮೇಲೆತ್ತಿ ತಂದು ಬಾಲಕನ ಮೇಲೆ ಇಡಲು ಬಂದಾಗ, ಅದನ್ನು ಅಣುವೆಂದು ಭಾವಿಸಿ ಅಲಕ್ಷ್ಯಮಾಡಿ ನಗುತ್ತ ಜಾನಕಿಯ ಮಗನು ಬಾಣಬಿಟ್ಟು ನಾಶಮಾಡಿದನು.]
  • ತಾತ್ಪರ್ಯ:ಜಗತ್ತಿನಲ್ಲಿ ಕುಶನ ಅಸ್ತ್ರ ಸರಣಿಗೆ ದೇಹ ಕೊಟ್ಟವನು ಮತ್ತೆ ಪೆಟ್ಟಾಗದೆ ಇರುವನೆ ಹೇಳು; ಬಾಣದಿಂದ ಭರತನು ಚೇತನ ಕಡಿಮೆಯಾಗಿ ಭೂಮಿಗೆ ಬಿದ್ದು ಮೂರ್ಛೆಹೋಗಿರಲು, ಶೂರ ಹನುಮನು ಕಂಡು ಒಂದು ದೊಡ್ಡ ಬೆಟ್ಟವನ್ನು ಕಿತ್ತು ಮೇಲೆತ್ತಿ ತಂದು ಬಾಲಕನ ಮೇಲೆ ಇಡಲು ಬಂದಾಗ, ಅದನ್ನು ಅಣುವೆಂದು ಭಾವಿಸಿ ಅಲಕ್ಷ್ಯಮಾಡಿ ನಗುತ್ತ ಜಾನಕಿಯ ಮಗನು ಬಾಣಬಿಟ್ಟು ನಾಶಮಾಡಿದನು.
  • (ಪದ್ಯ-೨೧.)

ಪದ್ಯ :೨೨:

[ಸಂಪಾದಿಸಿ]

ಕಡೆಯ ಮಾತೇನಖಿಳ ಸೇನೆಯಂ ಭರತನಂ | ಕೆಡಹಿ ಕುಶನಲ್ಲಿಂದೆ ತುರಗಮಿರ್ದೆಡೆಗೆ ಬಂ | ದೊಡಹುಟ್ಟಿದಂ ವೆರಸಿ ನಿಲ್ವಿನಂ ದೂತರೀತೆರನಂ ರಘೂದ್ವಹಂಗೆ ||
ಕಡುವೇಗದಿಂದೆ ಪೋಗಿ ಬಿನ್ನೈಸೆ ಕೇಳ್ದಳ | ಲ್ವಿಡಿದು ಪರಿತಾಪದಿಂದುರೆನೊಂದು ವಿಸ್ಮಯಂ | ಬಡುತೆದ್ದು ಸುಗ್ರೀವ ವರವಿಭೀಷಣರೆಡಬಲದೊಳೈದೆ ಪೊರಮಟ್ಟನು ||22||

  • (ಪ್ರಕರಕೆ-ಸಮುಹಕ್ಕೆ)
ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಡೆಯ ಮಾತೇನು ಅಖಿಳ ಸೇನೆಯಂ ಭರತನಂ ಕೆಡಹಿ ಕುಶನು ಅಲ್ಲಿಂದೆ ತುರಗಮಿರ್ದೆಡೆಗೆ ಬಂದು ಒಡಹುಟ್ಟಿದಂ ವೆರಸಿ ನಿಲ್ವಿನಂ=[ಕಡೆಯ ಮಾತು- ತಾತ್ಪರ್ಯ, ಅಖಿಲ ಸೇನೆಯನ್ನೂ ಭರತನನ್ನೂ ಸೋಲಿಸಿ ಕೆಡಗಿ, ಕುಶನು ಅಲ್ಲಿಂದೆ ಕುದುರೆ ಇದ್ದಕಡೆಗೆ ಬಂದು ಒಡಹುಟ್ಟಿದ ಲವನ ಜೊತೆ ನಿಂತನು.]; ದೂತರು ಈ ತೆರನಂ ರಘೂದ್ವಹಂಗೆ ಕಡುವೇಗದಿಂದೆ ಪೋಗಿ ಬಿನ್ನೈಸೆ ಕೇಳ್ದು ಅಳಲ್ ವಿಡಿದು ಪರಿತಾಪದಿಂದ ಉರೆನೊಂದು ವಿಸ್ಮಯಂಬಡುತ=[ರಾಮನ ದೂತರು ಈ ತೆರನಾಗಿ ಆದ ಘಟನೆಯನ್ನು ರಾಮನಿಗೆ ಬಹಳ ವೇಗವಾಗಿ ಪೋಗಿ ಬಿನ್ನಹಮಾಡಿದರು; ಅದನ್ನು ಕೇಳಿ ದುಃಖಪಟ್ಟು ಪರಿತಾಪದಿಂದ ಬಹಳನೊಂದು ಆಶ್ಚರ್ಯಪಡುತ್ತಾ]; ಎದ್ದು ಸುಗ್ರೀವ ವರವಿಭೀಷಣರೆಉ ಎಡಬಲದೊಳು ಐದೆ ಪೊರಮಟ್ಟನು=[ಎದ್ದು ಸುಗ್ರೀವ ಶ್ರೇಷ್ಠವಿಭೀಷಣರು ಎಡಬಲದಲ್ಲಿ ಬರಲು ಯಜ್ಞಶಾಲೆಯಿಂದ ಹೊರಹೊಟನು.]
  • ತಾತ್ಪರ್ಯ:ಕಡೆಯ ಮಾತು- ಸಾರಾಂಶ, ಅಖಿಲ ಸೇನೆಯನ್ನೂ ಭರತನನ್ನೂ ಸೋಲಿಸಿ ಕೆಡಗಿ, ಕುಶನು ಅಲ್ಲಿಂದೆ ಕುದುರೆ ಇದ್ದಕಡೆಗೆ ಬಂದು ಒಡಹುಟ್ಟಿದ ಲವನ ಜೊತೆ ನಿಂತನು. ರಾಮನ ದೂತರು ಈ ತೆರನಾಗಿ ಆದ ಘಟನೆಯನ್ನು ರಾಮನಿಗೆ ಬಹಳ ವೇಗವಾಗಿ ಪೋಗಿ ಬಿನ್ನಹಮಾಡಿದರು; ಅದನ್ನು ಕೇಳಿ ದುಃಖಪಟ್ಟು ಪರಿತಾಪದಿಂದ ಬಹಳನೊಂದು ಆಶ್ಚರ್ಯಪಡುತ್ತಾ ಎದ್ದು ಸುಗ್ರೀವ, ಶ್ರೇಷ್ಠವಿಭೀಷಣರು ಎಡಬಲದಲ್ಲಿ ಬರಲು ಯಜ್ಞಶಾಲೆಯಿಂದ ಹೊರಹೊಟನು.
  • (ಪದ್ಯ-೨೨.)XXX

ಪದ್ಯ :೨೩:

[ಸಂಪಾದಿಸಿ]

ಬಂದಂ ರಥಾರೂಢನಾಗಿ ರಣರಂಗದೊಳ್ | ನಿಂದು ಮೈಮರೆದೊರಗಿದನುಜರಂ ಮಡಿದ ಬಲ | ವೃಂದಮಂ ಕುದುರೆಯಂ ಕಟ್ಟಿಕೊಂಡಿದಿರಾಗಿ ಬಿಲ್ವಿಡಿದು ಕಾಳೆಗಕ್ಕೆ ||
ನಿಂದಿರ್ದ ಯಮಳರಂ ಕಂಡು ಬೆರಗಾಗಿ ರಘು | ನಂದನಂ ವಿನಯದಿಂ ತಾನೆ ಬೆಸಗೊಂಡನಿಂ | ತೆಂದು ಘನ ಗಂಭೀರವಾಕ್ಯದಿಂದತಿಮನೋಹರಮಾದ ಸುಸ್ವರದೊಳು ||23||

  • (ಪ್ರಕರಕೆ-ಸಮೂಹಕ್ಕೆ)
ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಂದಂ ರಥಾರೂಢನಾಗಿ ರಣರಂಗದೊಳ್ ನಿಂದು ಮೈಮರೆದು ಒರಗಿದ ಅನುಜರಂ ಮಡಿದ ಬಲವೃಂದಮಂ ಕುದುರೆಯಂ ಕಟ್ಟಿಕೊಂಡು ಇದಿರಾಗಿ ಬಿಲ್ ಹಿಡಿದು ಕಾಳೆಗಕ್ಕೆ ನಿಂದಿರ್ದ ಯಮಳರಂ ಕಂಡು ಬೆರಗಾಗಿ=[ರಾಮನು, ರಥಾರೂಢನಾಗಿ ಬಂದನು; ರಣರಂಗದಲ್ಲಿ ನಿಂತು ಎಚ್ಚರತಪ್ಪಿ ಮಲಗಿದ ತಮ್ಮಂದಿರನ್ನೂ, ಮರಣಿಸಿದ ಸೈನ್ಯಸಮೂಹವನ್ನೂ, ಕುದುರೆಯನ್ನು ಕಟ್ಟಿಕೊಂಡು ಅದರ ಎದುರಿಗೆ ಬಿಲ್ಲು ಹಿಡಿದು ಕಾಳೆಗಕ್ಕೆ ಸಿದ್ಧರಾಗಿ ನಿಂತಿದ್ದ ಅವಳಿಸೋದರರನ್ನೂ ಕಂಡು ಬೆರಗಾದನು.]; ರಘುನಂದನಂ ವಿನಯದಿಂ ತಾನೆ ಬೆಸಗೊಂಡನು ಇಂತೆಂದು ಘನ ಗಂಭೀರ ವಾಕ್ಯದಿಂದ ಅತಿಮನೋಹರಮಾದ ಸುಸ್ವರದೊಳು=[ರಘುನಂದನನು ವಿನಯದಿದ ಬಾಲಕರನ್ನು ಕುರಿತು ಘನ ಗಂಭೀರವಾಕ್ಯದಿಂದ ಅತಿಮನೋಹರಮಾದ ಇಂಪಾದದನಿಯಲ್ಲಿ ತಾನೆ ಹೀಗೆಂದು ವಿಚಾರಿಸಿದನು.]
  • ತಾತ್ಪರ್ಯ:ರಾಮನು, ರಥಾರೂಢನಾಗಿ ಬಂದನು; ರಣರಂಗದಲ್ಲಿ ನಿಂತು ಎಚ್ಚರತಪ್ಪಿ ಮಲಗಿದ ತಮ್ಮಂದಿರನ್ನೂ, ಮರಣಿಸಿದ ಸೈನ್ಯಸಮೂಹವನ್ನೂ, ಕುದುರೆಯನ್ನು ಕಟ್ಟಿಕೊಂಡು ಅದರ ಎದುರಿಗೆ ಬಿಲ್ಲು ಹಿಡಿದು ಕಾಳೆಗಕ್ಕೆ ಸಿದ್ಧರಾಗಿ ನಿಂತಿದ್ದ ಅವಳಿಸೋದರರನ್ನೂ ಕಂಡು ಬೆರಗಾದನು. ರಘುನಂದನನು ವಿನಯದಿದ ಬಾಲಕರನ್ನು ಕುರಿತು ಘನ ಗಂಭೀರವಾಕ್ಯದಿಂದ ಅತಿಮನೋಹರವಾದ ಇಂಪಾದದನಿಯಲ್ಲಿ ತಾನೆ ಹೀಗೆಂದು ವಿಚಾರಿಸಿದನು.
  • (ಪದ್ಯ-೨೩.)

ಪದ್ಯ :೨೪:

[ಸಂಪಾದಿಸಿ]

ಎಲೆ ಪಸುಳೆಗಳಿರ ನಿಮಗೀ ಧನುರ್ವೇದಮಂ | ಕಲಿಸಿದವನಾವನಾವುದು ನಿವಾಸಸ್ಥಳಂ | ಸಲಹಿದವನಾವನಾವಂ ತಂದೆ ತಾಯಾವಳಶ್ವಮಂ ಕಟ್ಟುವಿನಿತು ||
ಛಲಮಿದೇತಕೆ ನಮ್ಮ ಸೇನೆಯಂ ಜಯಿಸುವೀ | ಬಲಮೇತರಿಂದಾದುದೆಂದು ನಯದಿಂದೆ ರಘು | ಕುಲ ಲಲಾಮಂ ಕೇಳ್ದೊಡಾಕುಶಂ ನಸುನಗುತೆ ಮಾರುತ್ತರಂಗೊಟ್ಟನು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಲೆ ಪಸುಳೆಗಳಿರ ನಿಮಗೆ ಈ ಧನುರ್ವೇದಮಂ ಕಲಿಸಿದವನು ಆವನು ಆವುದು ನಿವಾಸಸ್ಥಳಂ ಸಲಹಿದವನಾವನು ಆವಂ ತಂದೆ ತಾಯ್ ಆವಳು ಅಶ್ವಮಂ ಕಟ್ಟುವ ಇನಿತು ಛಲಮ್ ಇದೇತಕೆ=[ಎಲೆ ಹಸುಳೆಗಳಿರ/ಮಕ್ಕಳೆ ನಿಮಗೆ ಈ ಧನುರ್ವೇದವನ್ನು ಕಲಿಸಿದವನು ಯಾರು? ನಿಮ್ಮ ವಾಸಸ್ಥಳವು ಯಾವುದು? ಸಲಹಿದವನು ಯಾವನು? ಯಾರು ತಂದೆ? ತಾಯಿ ಯಾರು? ಕುದುರೆಯನ್ನು ಕಟ್ಟುವ ಇಷ್ಟೊಂದು ಛಲವು ಇದೇಕೆ?]; ನಮ್ಮ ಸೇನೆಯಂ ಜಯಸುವ ಈಬಲಂ ಏತರಿಂದ ಆದುದೆಂದು ನಯದಿಂದೆ ರಘುಕುಲ ಲಲಾಮಂ ಕೇಳ್ದೊಡೆ ಆಕುಶಂ ನಸುನಗುತೆ ಮಾರು ಉತ್ತರಂ ಗೊಟ್ಟನು=[ನಮ್ಮ ಸೇನೆಯನ್ನು ಜಯಿಸುವ ಈ ಶಕ್ತಿ ನಿಮಗೆ ಯಾವುದರಿಂದ ಆಯಿತು? ಎಂದು ನಯದಿಂದ ರಘುಕುಲಲಲಾಮ ರಾಮನು ಕೇಳಿದಾಗ ಆ ಕುಶನು ನಸುನಗುತ್ತಾ ತಿರುಗಿ ಉತ್ತರವನ್ನು ಕೊಟ್ಟನು].
  • ತಾತ್ಪರ್ಯ:ಎಲೆ ಮಕ್ಕಳೆ ನಿಮಗೆ ಈ ಧನುರ್ವೇದವನ್ನು ಕಲಿಸಿದವನು ಯಾರು? ನಿಮ್ಮ ವಾಸಸ್ಥಳವು ಯಾವುದು? ಸಲಹಿದವನು ಯಾವನು? ಯಾರು ತಂದೆ? ತಾಯಿ ಯಾರು? ಕುದುರೆಯನ್ನು ಕಟ್ಟುವ ಇಷ್ಟೊಂದು ಛಲವು ಇದೇಕೆ? ನಮ್ಮ ಸೇನೆಯನ್ನು ಜಯಿಸುವ ಈ ಶಕ್ತಿ ನಿಮಗೆ ಯಾವುದರಿಂದ ಆಯಿತು? ಎಂದು ನಯದಿಂದ ರಘುಕುಲಲಲಾಮ ರಾಮನು ಕೇಳಿದಾಗ ಆ ಕುಶನು ನಸುನಗುತ್ತಾ ತಿರುಗಿ ಉತ್ತರವನ್ನು ಕೊಟ್ಟನು.
  • (ಪದ್ಯ-೨೪.)

ಪದ್ಯ :೨೫:

[ಸಂಪಾದಿಸಿ]

ರಾಜೇಂದ್ರ ನೀನೆಮ್ಮೊಳಾಹವಕೆ ಬಿಲ್ಗೊಂಡು | ವಾಜಿಯಂ ಬಿಡಿಸಿಕೊಳ್ಳಲ್ಲದೊಡೆ ಮರುಳಪ್ರ | ಯೋಜಕದ ಮಾತಿದೇತಕೆ ನಿರುಪಮ ಕ್ಷಾತ್ರಪೌರುಷವನುಳಿದು ಬರಿದೆ |
ಸೋಜಿಗದೊಳೆಮ್ಮ ಜನನಸ್ಥಿತಿಗಳಂ ಕೇಳ್ದೊ | ಡೀಜಗಂ ಮೆಚ್ಚದೆಚ್ಚಾಡಿ ನೋಡೆನುತೆ ಕುಶ | ನಾಜಲಜ ಮಿತ್ರಕುಲ ತಿಲಕನಂ ಬಗೆಯದೆ ನುಡಿದೊಡಾತನಿಂತೆಂದನು ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಜೇಂದ್ರ ನೀನು ಎಮ್ಮೊಳು ಆಹವಕೆ ಬಿಲ್ಗೊಂಡು ವಾಜಿಯಂ ಬಿಡಿಸಿಕೊಳ್ಳು ಅಲ್ಲದೊಡೆ ಮರುಳ ಅಪ್ರಯೋಜಕದ ಮಾತು ಇದು ಏತಕೆ=[ರಾಜೇಂದ್ರ ನೀನು ನಮ್ಮಲ್ಲಿ ಯುದ್ಧಕ್ಕೆ ಬಿಲ್ಗನ್ನು ಹಿಡಿದು ಕುದುರೆಯನ್ನು, ಬಿಡಿಸಿಕೊಳ್ಳುವುದು; ಅಲ್ಲದೆ ಮರುಳು ಅಪ್ರಯೋಜಕವಾದ ಮಾತು ಏಕೆ?]; ನಿರುಪಮ ಕ್ಷಾತ್ರಪೌರುಷವನು ಉಳಿದು ಬರಿದೆ ಸೋಜಿಗದೊಳು ಎಮ್ಮ ಜನನಸ್ಥಿತಿಗಳಂ ಕೇಳ್ದೊಡೆ ಈಜಗಂ ಮೆಚ್ಚದು=[ಸಾಟಿಯಿಲ್ಲದ ಕ್ಷಾತ್ರಪೌರುಷವನ್ನು ಬಿಟ್ಟು ಬರಿದೆ ಸೋಜಿಗದಿಂದ/ಬೆರಗಿನಿಂದ ನಮ್ಮ ಜನನವಿಚಾರ ಕೇಳಿದರೆ ಈಜಗತ್ತು ಮೆಚ್ಚುವುದಿಲ್ಲ.]; ಎಚ್ಚಾಡಿ ನೋಡು ಎನುತೆ ಕುಶನು ಆಜಲಜಮಿತ್ರಕುಲ ತಿಲಕನಂ ಬಗೆಯದೆ ನುಡಿದೊಡೆ ಆತನು ಇಂತೆಂದನು=[ಯುದ್ಧಮಾಡಿ ನೋಡು ಎನುತ್ತಾ ಕುಶನು ಆ ರವಿಕುಲಶ್ರೇಷ್ಠನನ್ನು ಲೆಕ್ಕಿಸದೆ ಹೇಳಿದಾಗ ಆತನು ಹೀಗೆ ಹೇಳಿದನು].
  • ತಾತ್ಪರ್ಯ:ರಾಜೇಂದ್ರ ನೀನು ನಮ್ಮಲ್ಲಿ ಯುದ್ಧಕ್ಕೆ ಬಿಲ್ಗನ್ನು ಹಿಡಿದು ಕುದುರೆಯನ್ನು, ಬಿಡಿಸಿಕೊಳ್ಳುವುದು; ಅಲ್ಲದೆ ಮರುಳು ಅಪ್ರಯೋಜಕವಾದ ಮಾತು ಏಕೆ? ಸಾಟಿಯಿಲ್ಲದ ಕ್ಷಾತ್ರಪೌರುಷವನ್ನು ಬಿಟ್ಟು ಬರಿದೆ ಬೆರಗಿನಿಂದ ನಮ್ಮ ಜನನವಿಚಾರ ಕೇಳಿದರೆ ಈಜಗತ್ತು ಮೆಚ್ಚುವುದಿಲ್ಲ. ಯುದ್ಧಮಾಡಿ ನೋಡು ಎನುತ್ತಾ ಕುಶನು ಆ ರವಿಕುಲಶ್ರೇಷ್ಠನನ್ನು ಲೆಕ್ಕಿಸದೆ ಹೇಳಿದಾಗ ಆತನು ಹೀಗೆ ಹೇಳಿದನು].
  • (ಪದ್ಯ-೨೫.)

ಪದ್ಯ :೨೬:

[ಸಂಪಾದಿಸಿ]

ಶಿಶುಗಳಾಗಿಹ ನಿಮ್ಮೊಳೆನಗೆ ಕಾಳಗವೆ ಪರ | ವಶರಾಗಿ ಬಿದ್ದನುಜರಂ ಕಂಡು ಖತಿಯೊಳಾಂ | ವಿಶಿಖಮಂ ತೊಡುವೆನೆಂದೊಡೆ ಮನವೊಡಂಬಡದು ನಿಮ್ಮ ಜನನಸ್ಥಿಗಳ ||
ವಿಶದ ವಿಸ್ತರವ ನೊರೆದೊಡೆ ನೋಡಿಕೊಳ್ವೆನೆನೆ | ಕುಶನೆಂದನಿಂತು ಲೋಕಾನಂದಕರಮಾದ | ನಿಶಿತವಾಕ್ಯಂಗಳಂ ಜನಮೇಜಯ ಕ್ಷಿತಿಪ ಕೇಳಾ ರಘೂದ್ವಹಂಗೆ ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಶಿಶುಗಳು ಆಗಿಹ ನಿಮ್ಮೊಳು ಎನಗೆ ಕಾಳಗವೆ ಪರವಶರಾಗಿ ಬಿದ್ದ ಅನುಜರಂ ಕಂಡು ಖತಿಯೊಳಾಂ ವಿಶಿಖಮಂ ತೊಡುವೆನು ಎಂದೊಡೆ ಮನವು ಒಡಂಬಡದು=[ಮಕ್ಕಳಾಗಿರು ನಿಮ್ಮಲ್ಲಿ ನನಗೆ ಯುದ್ಧವೆ! ಎಚ್ಚರವಿಲ್ಲದೆ ಬಿದ್ದಿರುವ ಸೋದರರನ್ನು ಕಂಡು ಸಿಟ್ಟಿನಿಂದ ಬಾಣವನ್ನು ತೊಡಬೇಕು ಎಂದುಕೊಂಡರೆ, ಮನಸ್ಸು ಒಪ್ಪುತ್ತಿಲ್ಲ.]; ನಿಮ್ಮ ಜನನಸ್ಥಿಗಳ ವಿಶದ ವಿಸ್ತರವನು ಒರೆದೊಡೆ ನೋಡಿಕೊಳ್ವೆನು ಎನೆ ಕುಶನೆಂದನು ಇಂತು ಲೋಕಾನಂದಕರಮಾದ ನಿಶಿತವಾಕ್ಯಂಗಳಂ ಜನಮೇಜಯ ಕ್ಷಿತಿಪ ಕೇಳಾ ರಘೂದ್ವಹಂಗೆ=[ನಿಮ್ಮ ಜನನವಿಚಾರವನ್ನು ವಿಶದವಾಗಿ, ವಿಸ್ತಾರವಾಗಿ ಹೇಳಿದರೆ ಮುಂದಿನ ಕಾರ್ಯವನ್ನು ನೋಡಿಕೊಳ್ಳುವೆನು, ಎಂದು ರಾಮನು ಎನ್ನಲು, ಕುಶನು ಈ ರೀತಿ ಲೋಕಕ್ಕೆ ಆನಂದಕರವಾದ ತೀಕ್ಷಣವಾಕ್ಯಗಳನ್ನು ರಘುನಂದನನಿಗೆ ಹೀಗೆ ಎಂದನು, ಜನಮೇಜಯ ರಾಜನೇ ಕೇಳು.];
  • ತಾತ್ಪರ್ಯ:ಮಕ್ಕಳಾಗಿರು ನಿಮ್ಮಲ್ಲಿ ನನಗೆ ಯುದ್ಧವೆ! ಎಚ್ಚರವಿಲ್ಲದೆ ಬಿದ್ದಿರುವ ಸೋದರರನ್ನು ಕಂಡು ಸಿಟ್ಟಿನಿಂದ ಬಾಣವನ್ನು ತೊಡಬೇಕು ಎಂದುಕೊಂಡರೆ, ಮನಸ್ಸು ಒಪ್ಪುತ್ತಿಲ್ಲ. ನಿಮ್ಮ ಜನನವಿಚಾರವನ್ನು ವಿಶದವಾಗಿ, ವಿಸ್ತಾರವಾಗಿ ಹೇಳಿದರೆ ಮುಂದಿನ ಕಾರ್ಯವನ್ನು ನೋಡಿಕೊಳ್ಳುವೆನು, ಎಂದು ರಾಮನು ಎನ್ನಲು, ಕುಶನು ಈ ರೀತಿ ಲೋಕಕ್ಕೆ ಆನಂದಕರವಾದ ತೀಕ್ಷಣವಾಕ್ಯಗಳನ್ನು ರಘುನಂದನನಿಗೆ ಹೀಗೆ ಎಂದನು, ಜನಮೇಜಯ ರಾಜನೇ ಕೇಳು.
  • (ಪದ್ಯ-೨೬.)

ಪದ್ಯ :೨೭:

[ಸಂಪಾದಿಸಿ]

ಈ ತಪೋವನದೊಳೆಮ್ಮಿರ್ವರನವಳಿಯಾಗಿ | ಸೀತೆಯೊರ್ವಳೆ ಪಡೆದಳನುದಿನದೊಳಾರೈದು | ಜಾತೋಪನಯನಾದಿ ಕರ್ಮಂಗಳಂ ಮಾಡಿ ನಿಗಮಾಗಮ ಸ್ಮೃತಿಗಳ ||
ವ್ರಾತಮಂ ಬರಿಸಿ ಕಾರ್ಮುಕವೇದಮಂ ಕಲಿಸಿ | ನೀತಿಗಳನರುಹಿ ರಾಮಾಯಣವನೋದಿಸಿ ಮ | ಹಾತಿಬಲರೆನಿಸಿದಂ ವಾಲ್ಮೀಕಿ ಮುನಿಪನೆಂದೊರೆದು ಮಗುಳಿಂತೆಂದನು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಈ ತಪೋವನದೊಳು ಎಮ್ಮಿರ್ವರನು ಅವಳಿಯಾಗಿ ಸೀತೆಯು ಒರ್ವಳೆ ಪಡೆದಳು=[ಈ ತಪೋವನದಲ್ಲಿ ನಮ್ಮಿಬ್ಬರನ್ನು ಅವಳಿಯಾಗಿ ಒಬ್ಬಳೆ ಇರುವ ಸೀತೆಯು ಪಡೆದಳು]; ಅನುದಿನದೊಳು ಆರೈದು ಜಾತ ಉಪನಯನಾದಿ ಕರ್ಮಂಗಳಂ ಮಾಡಿ ನಿಗಮ ಆಗಮ ಸ್ಮೃತಿಗಳ ವ್ರಾತಮಂ ಬರಿಸಿ=[ಅನುದಿನದವೂ ಆರೈಕೆಮಾಡಿ ಜಾತಕರ್ಮ, ಉಪನಯನಾದಿ ಸಂಸ್ಕಾರಕರ್ಮಗಳನ್ನು ಮಾಡಿ ನಿಗಮ ಆಗಮ ಸ್ಮೃತಿಗಳ ಸಮಸ್ತವಿದ್ಯೆಗಳನ್ನು ಕಲಿಸಿ]; ಕಾರ್ಮುಕವೇದಮಂ ಕಲಿಸಿ ನೀತಿಗಳನು ಅರುಹಿ ರಾಮಾಯಣವನು ಓದಿಸಿ ಮಹಾತಿಬಲರು ಎನಿಸಿದಂ ವಾಲ್ಮೀಕಿ ಮುನಿಪನು ಎಂದು ಒರೆದು ಮಗುಳು ಇಂತೆಂದನು=[ಧನುರ್ವೇದವನ್ನು ಕಲಿಸಿ ನೀತಿಶಾಸ್ತ್ರಗಳನ್ನು ತಿಳಿಸಿ ರಾಮಾಯಣವನ್ನು ಪಾಠಮಾಡಿಸಿ ನಮ್ಮನ್ನು ಮಹಾತಿಬಲರು ಎನ್ನುವಂತೆ ಮಾಡಿದವನು ವಾಲ್ಮೀಕಿ ಮುನಿಪನು ಎಂದು ಹೇಳಿ ಪುನಃ ಹೀಗೆಂದನು].
  • ತಾತ್ಪರ್ಯ:ಈ ತಪೋವನದಲ್ಲಿ ನಮ್ಮಿಬ್ಬರನ್ನು ಅವಳಿಯಾಗಿ ಒಬ್ಬಳೆ ಇರುವ ಸೀತೆಯು ಪಡೆದಳು; ಅನುದಿನದವೂ ಆರೈಕೆಮಾಡಿ ಜಾತಕರ್ಮ, ಉಪನಯನಾದಿ ಸಂಸ್ಕಾರಕರ್ಮಗಳನ್ನು ಮಾಡಿ ನಿಗಮ ಆಗಮ ಸ್ಮೃತಿಗಳ ಸಮಸ್ತವಿದ್ಯೆಗಳನ್ನು ಕಲಿಸಿ ಧನುರ್ವೇದವನ್ನು ಕಲಿಸಿ ನೀತಿಶಾಸ್ತ್ರಗಳನ್ನು ತಿಳಿಸಿ ರಾಮಾಯಣವನ್ನು ಪಾಠಮಾಡಿಸಿ ನಮ್ಮನ್ನು ಮಹಾತಿಬಲರು ಎನ್ನುವಂತೆ ಮಾಡಿದವನು ವಾಲ್ಮೀಕಿ ಮುನಿಪನು ಎಂದು ಹೇಳಿ ಪುನಃ ಹೀಗೆಂದನು.
  • (ಪದ್ಯ-೨೭.)

ಪದ್ಯ :೨೮:

[ಸಂಪಾದಿಸಿ]

ರಾಮಚಾರಿತ್ರ ಪಠನಾಭ್ಯಾಸ ಯೋಗದಿಂ | ಕ್ಷೇಮಂ ಸುಪುಷ್ಟಿ ನಿಶ್ಚಲಮತಿ ನಿರಾಲಸ್ಯ | ಮೀಮಹಾಸೈನ್ಯವಂ ಗೆಲ್ವದಟು ತಮಗಾದುದೆಂದು ಕುಶನುಸಿರೆ ಕೇಳ್ದು ||
ಪ್ರೇಮದಿಂ ತನ್ನ ಸುತರೆಂದರಿದು ಸೀತೆಯಂ | ಬೀಮಾತು ಕಿವಿದಾಗಿದೊಡೆ ಬಿದ್ದು ಮೂರ್ಛೆವೆ | ತ್ತಾ ಮಹೀಶಂ ಕೂಡೆ ಚೇತನಂ ಬಡೆದು ಸುಗ್ರೀವನೊಡನಿಂತೆಂದನು ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಮಚಾರಿತ್ರ ಪಠನಾಭ್ಯಾಸ ಯೋಗದಿಂ ಕ್ಷೇಮಂ ಸುಪುಷ್ಟಿ ನಿಶ್ಚಲಮತಿ ನಿರಾಲಸ್ಯಂ ಈ ಮಹಾಸೈನ್ಯವಂ ಗೆಲ್ವ ಅದಟು ತಮಗೆ ಆದುದೆಂದು ಕುಶನುಸಿರೆ=[ರಾಮಚರಿತ್ರೆಯ ಪಠನದ ಅಭ್ಯಾಸ ಯೋಗದಿಂದ ಕ್ಷೇಮವೂ, ಸುಪುಷ್ಟಿ ನಿಶ್ಚಲಮತಿ ನಿರಾಲಸ್ಯವೂ, ಈ ಮಹಾಸೈನ್ಯವನ್ನು ಗೆಲ್ಲುವ ಶೌರ್ಯವೂ, ತಮಗೆ ಆಯಿತು ಎಂದು ಕುಶನು ಹೇಳಲು.]; ಕೇಳ್ದು ಪ್ರೇಮದಿಂ ತನ್ನ ಸುತರೆಂದು ಅರಿದು ಸೀತೆಯಂಬ ಈ ಮಾತು ಕಿವಿದಾಗಿದೊಡೆ ಬಿದ್ದು ಮೂರ್ಛೆವೆತ್ತು ಆ ಮಹೀಶಂ ಕೂಡೆ ಚೇತನಂ ಬಡೆದು ಸುಗ್ರೀವನೊಡನೆ ಇಂತೆಂದನು=[ಕೇಳಿ, ಪ್ರೇಮದಿಂದ ತನ್ನ ಮಕ್ಕಳೆಮದು ಅರಿತು, ಸೀತೆಯೆಂಬ ಈ ಮಾತು ಕಿವಿಗೆ ತಾಗಿದಾಕ್ಷಣ ಬಿದ್ದು ಮೂರ್ಛೆಹೋಗಿ, ಆ ರಾಜರಾಮನು ಕೂಡಲೆ ಚೇತರಿಸಿಕೊಂಡು ಸುಗ್ರೀವನೊಡನೆ ಹೀಗೆಂದನು].
  • ತಾತ್ಪರ್ಯ:ರಾಮಚರಿತ್ರೆಯ ಪಠನದ ಅಭ್ಯಾಸ ಯೋಗದಿಂದ ಕ್ಷೇಮವೂ, ಸುಪುಷ್ಟಿ ನಿಶ್ಚಲಮತಿ ನಿರಾಲಸ್ಯವೂ, ಈ ಮಹಾಸೈನ್ಯವನ್ನು ಗೆಲ್ಲುವ ಶೌರ್ಯವೂ, ತಮಗೆ ಆಯಿತು ಎಂದು ಕುಶನು ಹೇಳಲು.ಕೇಳಿ, ಪ್ರೇಮದಿಂದ ತನ್ನ ಮಕ್ಕಳೆಮದು ಅರಿತು, ಸೀತೆಯೆಂಬ ಈ ಮಾತು ಕಿವಿಗೆ ತಾಗಿದಾಕ್ಷಣ ಬಿದ್ದು ಮೂರ್ಛೆಹೋಗಿ, ಆ ರಾಜರಾಮನು ಕೂಡಲೆ ಚೇತರಿಸಿಕೊಂಡು ಸುಗ್ರೀವನೊಡನೆ ಹೀಗೆಂದನು.
  • (ಪದ್ಯ-೨೮.)

ಪದ್ಯ :೨೯:

[ಸಂಪಾದಿಸಿ]

ಕಪಿರಾಜ ಕೇಳೈ ಕುಮಾರಕರ ನುಡಿಗಳಂ | ನಿಪುಣರಿವರಾವ ಪುರುಷಂಗೆ ಸಂಭವಿಸಿದರ್ | ವಿಪಿನಚಾರಿಗಳ ನಿನ್ನೊಮ್ಮೆ ನೀಂ ಬೆಸಗೊಳೆನೆ ನಸುನಗುತೆ ಸುಗ್ರೀವನು ||
ತಪನಕುಲ ಜಾತರ್ ಪುರಾಣ ಪುರುಷೋತ್ತಮನ | ವಿಪುಲ ಸಂತತಿಗಳಿವರೀಕ್ಷಿಪೊಡೆ ದೇವ ನಿ | ನ್ನುಪ ರೂಪಮಾಗಿರ್ಪುದಲ್ಲದೊಡವರ್ಗಿನಿತು ಸತ್ವಮೆತ್ತಣದೆಂದನು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಪಿರಾಜ ಕೇಳೈ ಕುಮಾರಕರ ನುಡಿಗಳಂ ನಿಪುಣರು ಇವರು ಆವ ಪುರುಷಂಗೆ ಸಂಭವಿಸಿದರ್ ವಿಪಿನಚಾರಿಗಳನು ಇನ್ನೊಮ್ಮೆ ನೀಂ ಬೆಸಗೊಳು ಎನೆ=[ರಾಮನು, ಕಪಿರಾಜನಾದ ಸುಗ್ರೀವನೇ ಕೇಳು ಈ ಕುಮಾರರ ಮಾತುಗಳನ್ನು; ಇವರು ನಿಪುಣರು; ಯಾವ ತಂದೆಗೆ ಜನಿಸಿದರು ಈ ವನಚರರು ಎಂದು ನೀನು ಇನ್ನೊಮ್ಮೆ ಕೇಳು ಎನ್ನಲು]; ನಸುನಗುತೆ ಸುಗ್ರೀವನು ತಪನಕುಲ ಜಾತರ್ ಪುರಾಣ ಪುರುಷೋತ್ತಮನ ವಿಪುಲ ಸಂತತಿಗಳಿವರು=[ನಸುನಗುತ್ತಾ ಸುಗ್ರೀವನು ಸೂರ್ಯಕುಲದಲ್ಲಿ ಹುಟ್ಟಿದ ಪುರಾಣ ಪುರುಷೋತ್ತಮನ (ರಾಮನ) ಉತ್ತಮ ಸಂತತಿಗಳು ಇವರು]; ಈಕ್ಷಿಪೊಡೆ ದೇವ ನಿನ್ನುಪ ರೂಪಮಾಗಿರ್ಪುದು ಅಲ್ಲದೊಡೆ ಇವರ್ಗೆ ಇನಿತು ಸತ್ವಮ್ ಎತ್ತಣದೆಂದನು=[ನೋಡಿದಾಗ ದೇವ ನಿನ್ನ ಉಪರೂಪವಾಗಿರುವರು; ಇಲ್ಲದಿದ್ದರೆ ಇವರಿಗೆ ಇಷ್ಟೊಂದು ಸತ್ವವು ಎಲ್ಲಿಯದು, ಎಂದನು].
  • ತಾತ್ಪರ್ಯ:ರಾಮನು, ಕಪಿರಾಜನಾದ ಸುಗ್ರೀವನೇ ಕೇಳು ಈ ಕುಮಾರರ ಮಾತುಗಳನ್ನು; ಇವರು ನಿಪುಣರು; ಯಾವ ತಂದೆಗೆ ಜನಿಸಿದರು ಈ ವನಚರರು ಎಂದು ನೀನು ಇನ್ನೊಮ್ಮೆ ಕೇಳು ಎನ್ನಲು; ನಸುನಗುತ್ತಾ ಸುಗ್ರೀವನು ಸೂರ್ಯಕುಲದಲ್ಲಿ ಹುಟ್ಟಿದ ಪುರಾಣ ಪುರುಷೋತ್ತಮನ (ರಾಮನ) ಉತ್ತಮ ಸಂತತಿಗಳು ಇವರು; ಇವರನ್ನು ನೋಡಿದಾಗ ದೇವ ನಿನ್ನ ಪ್ರತಿರೂಪವಾಗಿರುವರು; ಇಲ್ಲದಿದ್ದರೆ ಇವರಿಗೆ ಇಷ್ಟೊಂದು ಸತ್ವವು ಎಲ್ಲಿಯದು, ಎಂದನು.
  • (ಪದ್ಯ-೨೯.)

ಪದ್ಯ :೩೦:

[ಸಂಪಾದಿಸಿ]

ಸುಗ್ರೀವ ರಾಘವರ್ ಮಾತಾಡುವನಿತರೊಳ್ | ನಿಗ್ರಹಿಸಿಕೊಂಡಿರ್ದ ಕುದುರೆಯಂ ಬಿಡುವೊಡ | ಭ್ಯಗ್ರಮುಳ್ಳವನಾಗಿ ನೀಲನೈತರೆ ಕುಶಂ ಕೋಪದಿಂದಾ ಕಪಿಗಳ ||
ಅಗ್ರಣಿಯನೆಚ್ಚು ಕೆಡಪಿದೊಡವನ ರುಧೀರದಿಂ | ದುಗ್ರರೂಪದೊಳೆದ್ದುವಾ ನೀಲಕೋಟಿಗಳ್ | ವಿಗ್ರಹಕ್ಕೆ ಕಡುಮುಳಿದು ಮರಗೊಂಬೆಬೆಟ್ಟ ಕಲ್ಲುಂಡುಗೊಂಡೆಲ್ಲೆಡೆಯೊಳು*||30||

  • (ಕಲ್ಗುಂಡುಗೊಂಡು ಕಳನೆಲ್ಲಡೆಯೊಳು)
ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸುಗ್ರೀವ ರಾಘವರ್ ಮಾತಾಡುವ ಅನಿತರೊಳ್ ನಿಗ್ರಹಿಸಿಕೊಂಡಿರ್ದ ಕುದುರೆಯಂ ಬಿಡುವೊಡೆ ಅಭಿ ಅಗ್ರಂ ಉಳ್ಳವನಾಗಿ ನೀಲನು ಐತರೆ=[ಸುಗ್ರೀವ ಮತ್ತು ರಾಘವರು ಮಾತಾಡುವ ಅಷ್ಟರಲ್ಲಿ ಹಿಡಿದಿಟ್ಟುಕೊಂಡಿದ್ದ ಕುದುರೆಯನ್ನು ಬಿಡುವುದಕ್ಕೆ ಆಗ ಸೈನ್ಯದ ಮುಂದೆ ನಿಂತ ನೀಲನು ಬರಲು]; ಕುಶಂ ಕೋಪದಿಂದ ಆ ಕಪಿಗಳ ಅಗ್ರಣಿಯನು ಎಚ್ಚು ಕೆಡಪಿದೊಡೆ=[ಕುಶನು ಕೋಪದಿಂದ ಆ ಕಪಿಗಳ ಮುಖ್ಯಸ್ಥನನ್ನು ಹೊಡೆದು ಕೆಡವಿದಾಗ]; ಅವನ ರುಧೀರದಿಂದ ಉಗ್ರರೂಪದೊಳು ಎದ್ದುವು ಆ ನೀಲಕೋಟಿಗಳ್ ವಿಗ್ರಹಕ್ಕೆ ಕಡುಮುಳಿದು ಮರ,ಕೊಂಬೆ,ಬೆಟ್ಟ ಕಲ್ಲುಂಡು ಕೊಂಡ ಎಲ್ಲೆಡೆಯೊಳು=[ಅವನ ರಕ್ತದಿಂದ ಉಗ್ರರೂಪದ ಆ ನೀಲನರೂಪದ ಕೋಟಿಕಪಿಗಳು (ರಕ್ತಬೀಜಾಸುರನಂತೆ)ಎಲ್ಲಾಕಡೆ ಯುದ್ಧಕ್ಕೆ ಬಹಳಸಿಟ್ಟಿನಿಂದ ಮರ,ಕೊಂಬೆ,ಬೆಟ್ಟ ಕಲ್ಲುಂಡು ಕೈಯಲ್ಲಿ ಹಿಡಿದುಕೊಂಡು ಎದ್ದುವು. (ಅದು ಅವನಿಗಿದ್ದ ವರ)]
  • ತಾತ್ಪರ್ಯ:ಸುಗ್ರೀವ ಮತ್ತು ರಾಘವರು ಮಾತಾಡುವ ಅಷ್ಟರಲ್ಲಿ ಹಿಡಿದಿಟ್ಟುಕೊಂಡಿದ್ದ ಕುದುರೆಯನ್ನು ಬಿಡುವುದಕ್ಕೆ ಆಗ ಸೈನ್ಯದ ಮುಂದೆ ನಿಂತ ನೀಲನು ಬರಲು; ಕುಶನು ಕೋಪದಿಂದ ಆ ಕಪಿಗಳ ಮುಖ್ಯಸ್ಥ ನೀಲನನ್ನು ಹೊಡೆದು ಕೆಡವಿದಾಗ; ಅವನ "ನೆಲಕ್ಕೆ ಬಿದ್ದ ರಕ್ತ"ದಿಂದ ಉಗ್ರರೂಪದ ಆ ನೀಲನರೂಪದ ಕೋಟಿಕಪಿಗಳು (ರಕ್ತಬೀಜಾಸುರನಂತೆ)ಹುಟ್ಟಿ ಎಲ್ಲಾಕಡೆ ಯುದ್ಧಕ್ಕೆ ಬಹಳಸಿಟ್ಟಿನಿಂದ ಮರ,ಕೊಂಬೆ,ಬೆಟ್ಟ ಕಲ್ಲುಂಡು ಕೈಯಲ್ಲಿ ಹಿಡಿದುಕೊಂಡು ಎದ್ದುವು. (ಅದು ಅವನಿಗಿದ್ದ ವರ)]
  • (ಪದ್ಯ-೩೦.)

ಪದ್ಯ :೩೧:

[ಸಂಪಾದಿಸಿ]

ನೀಲ ವಾನರಸೈನ್ಯದೊತ್ತಾಯಮಂ ಕಂಡು | ಮೇಲೆಸೆವ ರವಿಯನಾರಾಧಿಸಿ ಕುಶಂ ಮಹಾ | ಸ್ಥೂಲಕಾಯದ ಕಪಿಗಳಂ ಗೆಲಲ್ಕೊಂದುವರೆ ಯೋಜನದಳತೆಯಗಲದ ||
ಕೋಲಗಾಯದ ನೆತ್ತರೊಸರಲೀಯದವೋಲು | ಬಾಲಕಂ ತುಡುವೊಡಳವಡುವ ತೆರನಾದ ರಿಪು | ಜಾಲಕಸದಳಮಾದ ಪೂಡಲಕ್ಷಯವಾದ ಬಾಣಂಗಳಂ ಪಡೆದನು ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನೀಲ ವಾನರಸೈನ್ಯದ ಒತ್ತಾಯಮಂ (ಒತ್ತು-ನುಗ್ಗುವಿಕೆ) ಕಂಡು ಮೇಲೆ ಎಸೆವ ರವಿಯನು ಆರಾಧಿಸಿ ಕುಶಂ=[ನೀಲನ ಪ್ರತಿರೂಪದ ವಾನರಸೈನ್ಯದ ನುಗ್ಗವಿಕೆಯನ್ನು ಕಂಡು ಮೇಲೆ ಪ್ರಕಾಶಿಸುವ ರವಿಯನ್ನು ಪ್ರಾರ್ಥಿಸಿ, ಕುಶನು]; ಮಹಾಸ್ಥೂಲಕಾಯದ ಕಪಿಗಳಂ ಗೆಲಲ್ಕೆ ಒಂದುವರೆ ಯೋಜನದ ಅಳತೆಯ ಅಗಲದ ಕೋಲಗಾಯದ (ಬಾಣದ ಗಾಯದ ರಕ್ತ ನೆಲಕ್ಕೆ ಬೀಳದಂತೆ) ನೆತ್ತರೊಸರಲೀಯದವೋಲು=[ಮಹಾ ದೊಡ್ಡ ಶರೀರದ ಕಪಿಗಳನ್ನು ಗೆಲ್ಲಲು ಒಂದುವರೆ ಯೋಜನದ ಅಳತೆಯ ಅಗಲದ ಅಕ್ಷಯಬಾಣಗಲ ಹಾಸನ್ನು ಬಾಣದ ಗಾಯದ ರಕ್ತ ನೆಲಕ್ಕೆ ಬೀಳದಂತೆ ತಡೆಯಲು ಪಡೆದನು.]; ಬಾಲಕಂ ತುಡುವೊಡೆ ಅಳವಡುವ ತೆರನಾದ ರಿಪುಜಾಲಕೆ ಅಸದಳಮಾದ ಪೂಡಲು ಅಕ್ಷಯವಾದ ಬಾಣಂಗಳಂ ಪಡೆದನು=[ಬಾಲಕ ಕುಶನು ಪ್ರಯೋಗಿಸಲು ಅಳವಡುವ/ಸಾಧ್ಯವಾಗುವ ತರದ ಮತ್ತು ಶತ್ರು ಸಮೂಹಕ್ಕೆ ಎದುರಿಸಲು ಅಸಾದ್ಯವಾದ ಹೂಡಲು ಅಕ್ಷಯವಾದ ಬಾಣಂಗಳನ್ನು ಪಡೆದನು.]
  • ತಾತ್ಪರ್ಯ:ನೀಲನ ಪ್ರತಿರೂಪದ ವಾನರಸೈನ್ಯದ ನುಗ್ಗವಿಕೆಯನ್ನು ಕಂಡು ಮೇಲೆ ಪ್ರಕಾಶಿಸುವ ರವಿಯನ್ನು ಪ್ರಾರ್ಥಿಸಿ, ಕುಶನು, ಮಹಾ ದೊಡ್ಡ ಶರೀರದ ಕಪಿಗಳನ್ನು ಗೆಲ್ಲಲು ಒಂದುವರೆ ಯೋಜನದ ಅಳತೆಯ ಅಗಲದ ಅಕ್ಷಯಬಾಣಗಳ ಹಾಸನ್ನು, ಬಾಣದ ಗಾಯದ ರಕ್ತ ನೆಲಕ್ಕೆ ಬೀಳದಂತೆ ತಡೆಯಲೂ, ತನಗೆ ಪ್ರಯೋಗಿಸಲು ಅಳವಡುವ/ಸಾಧ್ಯವಾಗುವ ತರದ ಮತ್ತು ಶತ್ರು ಸಮೂಹಕ್ಕೆ ಎದುರಿಸಲು ಅಸಾದ್ಯವಾದ ಹೂಡಲು ಅಕ್ಷಯವಾದ ಬಾಣಂಗಳನ್ನು ಪಡೆದನು.
  • (ಪದ್ಯ-೩೧.)

ಪದ್ಯ :೩೨:

[ಸಂಪಾದಿಸಿ]

ಆ ಮಹಾಬಾಣಂಗಳಂ ಪೂಡಿ ತೆಗೆದೆಚ್ಚು | ಭೀಮ ವಿಕ್ರಮ ಕುಶಂ ಕೆಡಹಿದನಸಿತ ಕಪಿ | ಸ್ತೋಮಮಂ ಬಳಿಕುರುಳ್ಚಿದನಾದಿ ನೀಲನಂ ಸುಗ್ರೀವ ಮುಖ್ಯರಾದ ||
ಕಾಮರೂಪದ ಸಕಲ ವಾನರ ಚಮೂಪರಂ | ಭೂಮಿಯೊಳ್ ಮೂರ್ಛೆಗೆಯ್ದೊರಗಿಸಿ ವಿಭೀಷಣನ | ಸಾಮಥ್ರ್ಯಮಂ ನಿಲಿಸಿ ಮತ್ತವನ ಬಲಮಂ ಪೊರಳ್ಚಿದಂ ಸಂಗರದೊಳು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಮಹಾಬಾಣಂಗಳಂ ಪೂಡಿ ತೆಗೆದು ಎಚ್ಚು ಭೀಮ ವಿಕ್ರಮ ಕುಶಂ ಕೆಡಹಿದನು ಅಸಿತ (ಕಪ್ಪುಬಣ್ಣದ/ ಅಹಿತ-ಶತ್ರು) ಕಪಿ ಸ್ತೋಮಮಂ=[ಮಹಾ ವಿಕ್ರಮ/ಶೂರನಾದ ಕುಶನು, ಆ ಮಹಾಬಾಣಗಳನ್ನು ತೆಗೆದು ಪೂಡಿ ಹೊಡೆದು,ಕಪ್ಪುಬಣ್ಣದ ನೀಲಕಪಿ ಸಮೂಹವನ್ನು ಕೆಡಗಿದನು]; ಬಳಿಕ ಉರುಳ್ಚಿದನು ಆದಿ ನೀಲನಂ ಸುಗ್ರೀವ ಮುಖ್ಯರಾದ ಕಾಮರೂಪದ ಸಕಲ ವಾನರ ಚಮೂಪರಂ ಭೂಮಿಯೊಳ್ ಮೂರ್ಛೆಗೆಯ್ದೊರಗಿಸಿ=[ಬಳಿಕ ಮೂಲ ನೀಲನನ್ನು ಉರುಳಿಸಿದನು; ಸುಗ್ರೀವ ಮುಖ್ಯರಾದ ಕಾಮರೂಪದ ಸಕಲ ವಾನರ ವೀರರನ್ನು, ಮೂರ್ಛೆಗೊಳಿಸಿ ಭೂಮಿಯಲ್ಲಿ ಮಲಗಿಸಿದನು.]; ವಿಭೀಷಣನ ಸಾಮಥ್ರ್ಯಮಂ ನಿಲಿಸಿ ಮತ್ತವನ ಬಲಮಂ ಪೊರಳ್ಚಿದಂ ಸಂಗರದೊಳು=[ವಿಭೀಷಣನ ಸಾಮಥ್ರ್ಯಮಂ ನಿಲ್ಲಿಸಿ ಮತ್ತವನ ಸೈನ್ಯವನ್ನು ಯುದ್ಧದಲ್ಲಿ ಹಿಂತಿರುಗುವಂತೆ ಮಾಡಿದನು.]
  • ತಾತ್ಪರ್ಯ:ಮಹಾ ವಿಕ್ರಮ/ಶೂರನಾದ ಕುಶನು, ಆ ಮಹಾಬಾಣಗಳನ್ನು ತೆಗೆದು ಪೂಡಿ ಹೊಡೆದು,ಕಪ್ಪುಬಣ್ಣದ ನೀಲಕಪಿ ಸಮೂಹವನ್ನು ಕೆಡಗಿದನು; ಬಳಿಕ ಮೂಲ ನೀಲನನ್ನು ಉರುಳಿಸಿದನು; ಸುಗ್ರೀವ ಮುಖ್ಯರಾದ ಕಾಮರೂಪದ ಸಕಲ ವಾನರ ವೀರರನ್ನು, ಮೂರ್ಛೆಗೊಳಿಸಿ ಭೂಮಿಯಲ್ಲಿ ಮಲಗಿಸಿದನು. ವಿಭೀಷಣನ ಸಾಮಥ್ರ್ಯಮಂ ನಿಲ್ಲಿಸಿ ಮತ್ತವನ ಸೈನ್ಯವನ್ನು ಯುದ್ಧದಲ್ಲಿ ಹಿಂತಿರುಗುವಂತೆ ಮಾಡಿದನು.
  • (ಪದ್ಯ-೩೨.)

ಪದ್ಯ :೩೩:

[ಸಂಪಾದಿಸಿ]

ನರ ವಾಜಿ ದಂತಿ ಮುಸು ಕರಡಿ ಸಿಂಗಳಿಕ ವಾ | ನರ ದಾನವರೊಳಿಡಿದ ಸೇನೆಯೊಳ್ ನೋಡಲೊ | ರ್ವರುಮಿಲ್ಲದೆಲ್ಲರುಂ ಬಿದ್ದು ತಾನೇಕಾಕಿಯಪ್ಪುದುಂ ಖಾತಿಗೊಂಡು ||
ಸರಳನರ್ಭಕರ ಮೇಲೆಚ್ಚಂ ರಘೂದ್ವಹಂ | ಧರೆಯೊಳೀ ಕ್ಷತ್ರಿಯರ ಮನವಾಸಿಗಳದೆಂತೊ | ತರಹರಿಸಬಾರದಿಹ ರಾಮಬಾಣಂಗಳೈದಿದುವು ಕಾಲಾಗ್ನಿಯಂತೆ ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನರ ವಾಜಿ ದಂತಿ ಮುಸು ಕರಡಿ ಸಿಂಗಳಿಕ ವಾನರ ದಾನವರೊಳು ಇಡಿದ ಸೇನೆಯೊಳ್ ನೋಡಲು ಓರ್ವರುಂ ಇಲ್ಲದೆ=[ನರ, ಕುದುರೆ, ಆನೆ, ಮುಸು, ಕರಡಿ, ಸಿಂಗಳಿಕ, ವಾನರ, ದಾನವರು ತುಂಬಿದ ಸೇನೆಯಲ್ಲಿ ನೋಡಲು ಓಬ್ಬರೂ ಇಲ್ಲದೆ]; ಎಲ್ಲರುಂ ಬಿದ್ದು ತಾನು ಏಕಾಕಿಯಪ್ಪುದುಂ ಖಾತಿಗೊಂಡು ಸರಳನು ಅರ್ಭಕರ ಮೇಲೆ ಎಚ್ಚಂ ರಘೂದ್ವಹಂ ಧರೆಯೊಳು ಈ ಕ್ಷತ್ರಿಯರ ಮನವಾಸಿಗಳು ಅದೆಂತೊ ತರಹರಿಸಬಾರದಿಹ ರಾಮಬಾಣಂಗಳು ಐದಿದುವು ಕಾಲಾಗ್ನಿಯಂತೆ=[ಎಲ್ಲರೂ ಯುದ್ಧದಲ್ಲಿ ಬಿದ್ದು ತಾನು ಏಕಾಕಿಯಾಗಿರುವುದನ್ನು ತಿಳಿದು, ಸಿಟ್ಟಿನಿಂದ ಬಾಣವನ್ನು ಬಾಲಕರ ಮೇಲೆ ಹೊಡೆದನು ರಘುರಾಮನು; ಭೂಮಿಯಲ್ಲಿ ಈ ಕ್ಷತ್ರಿಯರ ಮನೋಭಾವನೆಗಳು ಅದೆಂತಿರುವುದೊ! ತಡೆಯಲಾಗದ ರಾಮಬಾಣಂಗಳು ಕಾಲಾಗ್ನಿಯಂತೆ ಕುಶನಮೇಲೆ ಬಂದವು.]
  • ತಾತ್ಪರ್ಯ:ನರ, ಕುದುರೆ, ಆನೆ, ಮುಸು, ಕರಡಿ, ಸಿಂಗಳಿಕ, ವಾನರ, ದಾನವರು ತುಂಬಿದ ಸೇನೆಯಲ್ಲಿ ನೋಡಲು ಓಬ್ಬರೂ ಇಲ್ಲದೆ ಎಲ್ಲರೂ ಯುದ್ಧದಲ್ಲಿ ಬಿದ್ದು ತಾನು ಏಕಾಕಿಯಾಗಿರುವುದನ್ನು ತಿಳಿದು, ರಘುರಾಮನು ಸಿಟ್ಟಿನಿಂದ ಬಾಣವನ್ನು ಬಾಲಕರ ಮೇಲೆ ಹೊಡೆದನು ; ಭೂಮಿಯಲ್ಲಿ ಈ ಕ್ಷತ್ರಿಯರ ಮನೋಭಾವನೆಗಳು ಅದೆಂತಿರುವುದೊ! ತಡೆಯಲಾಗದ ರಾಮಬಾಣಂಗಳು ಕಾಲಾಗ್ನಿಯಂತೆ ಕುಶನಮೇಲೆ ಬಂದವು.
  • (ಪದ್ಯ-೩೩.)

ಪದ್ಯ :೩೪:

[ಸಂಪಾದಿಸಿ]

ಬಚ್ಚೆವೋಗದ ರಾಮಬಾಣಂಗಳಂ ನಡುವೆ | ನುಚ್ಚುನೂರಾಗೆ ಕತ್ತರಿಸಿ ರಘುನಾಥನಂ | ಮುಚ್ಚಿದರ್ ಕಣೆಗಳಿಂ ಮತ್ತೆ ಕಾಕುತ್ಥ್ಸಂ ಕೆರಳ್ದು ಕುಶ ಲವರ ಮೇಲೆ ||
ಎಚ್ಚೊಡಾ ಕೋಲ್ಗಳಂ ಬಾಲಕರ್ ಮಧ್ಯದೊಳ್ | ಕೊಚ್ಚಿ ರಾವಣ ರಿಪುವಿನಂಗಮಂ ನೋಯಿಸಿದ | ರಚ್ಚರಿಯ ಕಾಳೆಗಂ ತಂದೆಮಕ್ಕಳ್ಗೆ ನಡೆದುದು ಸುರರ್ ಬೆರಗಾಗಲು ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಚ್ಚೆವೋಗದ (ವ್ಯರ್ಥವಾಗಿ/ಬಂಜೆಯಾಗಿ ಹೋಗದ?)ರಾಮಬಾಣಂಗಳಂ ನಡುವೆ ನುಚ್ಚುನೂರಾಗೆ ಕತ್ತರಿಸಿ ರಘುನಾಥನಂ ಮುಚ್ಚಿದರ್ ಕಣೆಗಳಿಂ=[ವ್ಯರ್ಥವಾಗಿ ಹೋಗದ ರಾಮಬಾಣಗಳನ್ನು ನಡುವೆಯೇ ಕುಶ ಲವರು, ನುಚ್ಚುನೂರಾಗುವಂತೆ ಕತ್ತರಿಸಿ ರಘುನಾಥನನ್ನು ಬಾಣಗಳಿಂದ ಮುಚ್ಚಿದರು]; ಮತ್ತೆ ಕಾಕುತ್ಥ್ಸಂ ಕೆರಳ್ದು ಕುಶ ಲವರ ಮೇಲೆ ಎಚ್ಚೊಡಾ ಕೋಲ್ಗಳಂ ಬಾಲಕರ್ ಮಧ್ಯದೊಳ್ ಕೊಚ್ಚಿ ರಾವಣ ರಿಪುವಿನಂಗಮಂ ನೋಯಿಸಿದರು.=[ಮತ್ತೆ ಕಾಕುತ್ಥ್ಸ ರಾಮನು ಕೋಪಗೊಂಡು ಕುಶ ಲವರ ಮೇಲೆ ಹೊಡೆದಾಗ, ಆ ಬಾಣಗಳನ್ನು ಬಾಲಕರು ಮಧ್ಯದಲ್ಲಿ ಕೊಚ್ಚಿ ರಾವಣರಿಪು-ರಾಮನ ದೇಹವನ್ನು ನೋಯಿಸಿದು]; ಅಚ್ಚರಿಯ ಕಾಳೆಗಂ ತಂದೆಮಕ್ಕಳ್ಗೆ ನಡೆದುದು ಸುರರ್ ಬೆರಗಾಗಲು=[ತಂದೆಮಕ್ಕಳಿಗೆ ಅಚ್ಚರಿಯ ಯುದ್ಧವು ನಡೆಯಿತು; ದೇವತೆಗಳು ಬೆರಗಾದರು.]
  • ತಾತ್ಪರ್ಯ:ವ್ಯರ್ಥವಾಗಿ ಹೋಗದ ರಾಮಬಾಣಗಳನ್ನು ನಡುವೆಯೇ ಕುಶ ಲವರು, ನುಚ್ಚುನೂರಾಗುವಂತೆ ಕತ್ತರಿಸಿ ರಘುನಾಥನನ್ನು ಬಾಣಗಳಿಂದ ಮುಚ್ಚಿದರು; ಮತ್ತೆ ಕಾಕುತ್ಥ್ಸ ರಾಮನು ಕೋಪಗೊಂಡು ಕುಶ ಲವರ ಮೇಲೆ ಹೊಡೆದಾಗ, ಆ ಬಾಣಗಳನ್ನು ಬಾಲಕರು ಮಧ್ಯದಲ್ಲಿ ಕೊಚ್ಚಿ ರಾವಣರಿಪು-ರಾಮನ ದೇಹವನ್ನು ನೋಯಿಸಿದು; ತಂದೆಮಕ್ಕಳಿಗೆ ಅಚ್ಚರಿಯ ಯುದ್ಧವು ನಡೆಯಿತು; ದೇವತೆಗಳು ಬೆರಗಾದರು.
  • (ಪದ್ಯ-೩೪.)XXXΙ

ಪದ್ಯ :೩೫:

[ಸಂಪಾದಿಸಿ]

ಕಕ್ಕಸದೊಳಂದು ರಾವಣ ಕುಂಭಕರ್ಣಾದಿ | ರಕ್ಕಸರ ತಲೆಗಳನರಿದು ತಿರುಗಿಬಹ ಕಣೆಗ | ಳಿಕ್ಕಡಿಗಳಾಗಿ ಬಿದ್ದುವು ಧರೆಗೆ ಕೂಡೆ ಬಾಲಕರಿಸುಗೆ ತನ್ನಿಸುಗೆಗೆ ||
ಮಿಕ್ಕುಬರೆ ಬೆರಗಾಗಿ ರಾಘವಂ ಸುಮ್ಮನಿರೆ | ಪೊಕ್ಕುವಂಬುಗಳೊಡಲೊಳಾತ್ಮಜರ ಮೇಲೆ ತನ | ಗಕ್ಕರುಂಟಿಲ್ಲೆಂಬುದಂ ನೋಳ್ವೆವೆಂಬವೊಲ್ ಭೂಪ ಕೇಳ್ ಕೌತುಕವನು ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಕ್ಕಸದೊಳು (ಕರ್ಕಶ-ಕಠಿಣತೆಯಿಂದ) ಅಂದು ರಾವಣ ಕುಂಭಕರ್ಣಾದಿ ರಕ್ಕಸರ ತಲೆಗಳನು ಅರಿದು ತಿರುಗಿಬಹ ಕಣೆಗಳು ಇಕ್ಕಡಿಗಳಾಗಿ ಬಿದ್ದುವು ಧರೆಗೆ=[ಕಠಿಣತೆಯಿಂದ ಅಂದು ರಾವಣ ಕುಂಭಕರ್ಣಾದಿ ರಾಕ್ಷಸರ ತಲೆಗಳನ್ನು ಅರಿಯುವಾಗ ಅವರಿಂದ ತಿರುಗಿಬರುತ್ತಿರುವ ಬಾಣಗಳು ರಾಮನ ಬಾಣಕ್ಕೆ ಎರಡು ತುಂಡುಗಳಾಗಿ ಬಿದ್ದುವು ಭೂಮಿಗೆ]; ಕೂಡೆ (ಅದರ ಜೊತೆ) ಬಾಲಕರ ಇಸುಗೆ ತನ್ನ ಇಸುಗೆಗೆ ಮಿಕ್ಕುಬರೆ ಬೆರಗಾಗಿ ರಾಘವಂ ಸುಮ್ಮನಿರೆ=[ ಆದರೆ ಅದರ ಜೊತೆ ಹೋಲಿಸಿದಾಗ ಬಾಲಕರ ಬಾಣದಹೊಡೆತಗಳು ತನ್ನ ಬಾಣದಹೊಡೆತಕ್ಕೆ ಮಿಕ್ಕುವೇಗವಾಗಿ ಬರಲು ಬೆರಗಾಗಿ ರಾಘವನು ಸುಮ್ಮನಿದ್ದನು.]; ಪೊಕ್ಕುವು ಅಂಬುಗಳು ಒಡಲೊಳು ಆತ್ಮಜರ ಮೇಲೆ ತನಗೆ ಅಕ್ಕರ ಉಂಟು ಇಲ್ಲ ಎಂಬುದಂ ನೋಳ್ವೆವೆಂಬವೊಲ್ ಭೂಪ ಕೇಳ್ ಕೌತುಕವನು=[ಆಗ ಬಾಲಕರು ಬಿಟ್ಟ ಬಾಣಗಳು ಅವನ ಒಡಲಲ್ಲಿ/ದೇಹದಲ್ಲಿ ಹೊಕ್ಕವು; ಅವು ತನ್ನ ಮಕ್ಕಳಮೇಲೆ ಅವನಿಗೆ ಪ್ರೀತಿ ಉಂಟು ಅಥವಾ ಇಲ್ಲ ಎಂಬುದನ್ನು ಒಳಹೊಕ್ಕು ನೋಡುವೆನು ಎಂಬಂತೆ ಇತ್ತು, ಜನಮೇಜಯನೇ ಕೇಳು ಈ ಆಶ್ಚರ್ಯವನ್ನು ಎಂದನು ಮುನಿ.]
  • ತಾತ್ಪರ್ಯ:ಕಠಿಣತೆಯಿಂದ ಅಂದು ರಾವಣ ಕುಂಭಕರ್ಣಾದಿ ರಾಕ್ಷಸರ ತಲೆಗಳನ್ನು ಅರಿಯುವಾಗ ಅವರಿಂದ ತಿರುಗಿಬರುತ್ತಿರುವ ಬಾಣಗಳು ರಾಮನ ಬಾಣಕ್ಕೆ ಎರಡು ತುಂಡುಗಳಾಗಿ ಭೂಮಿಗೆ ಬಿದ್ದುವು; ಆದರೆ ಅದರ ಜೊತೆ ಹೋಲಿಸಿದಾಗ ಬಾಲಕರ ಬಾಣದ ಹೊಡೆತಗಳು ತನ್ನ ಬಾಣದ ಹೊಡೆತಕ್ಕೆ ಮಿಕ್ಕುವೇಗವಾಗಿ ಬರಲು ಬೆರಗಾಗಿ ರಾಘವನು ಸುಮ್ಮನಿದ್ದನು. ಆಗ ಬಾಲಕರು ಬಿಟ್ಟ ಬಾಣಗಳು ಅವನ ಒಡಲಲ್ಲಿ/ದೇಹದಲ್ಲಿ ಹೊಕ್ಕವು; ಅವು ತನ್ನ ಮಕ್ಕಳಮೇಲೆ ಅವನಿಗೆ ಪ್ರೀತಿ ಉಂಟು ಅಥವಾ ಇಲ್ಲ ಎಂಬುದನ್ನು ಒಳಹೊಕ್ಕು ನೋಡುವೆನು ಎಂಬಂತೆ ಇತ್ತು, ಜನಮೇಜಯನೇ ಕೇಳು ಈ ಆಶ್ಚರ್ಯವನ್ನು ಎಂದನು ಮುನಿ.]
  • (ಪದ್ಯ-೩೫.

ಪದ್ಯ :೩೬:

[ಸಂಪಾದಿಸಿ]

ಪಲ್ಲವಿತ ನವ ಚೂತತರು ಬೇಸಗೆಯ ಝಳಕೆ | ನಿಲ್ಲದಸವಳಿದು ಜೋಲ್ವಂತೆ ಕೋಮಲಕಾಯ | ದೆಲ್ಲೆಡೆಯೊಳಂ ನಾಂಟಿದಂಬುಗಳ ರುಧಿರ ಪ್ರವಾಹದಿಂದುರೆ ಬಳಲ್ದು ||
ಮೆಲ್ಲನೆ ವರೂಥದೊಳ್ ಸಾರಥಿವೆರಸಿ ಧರಾ | ವಲ್ಲಭಂ ಮೈಮರೆದು ಪವಡಿಸಿದನನಿಮಿಷರ್ | ಚೆಲ್ಲಿದರ್ ಪೂಮಳೆಗಳಂ ಮೊಳಗಿದುವು ದೇವ ದುಂದುಭಿಗಳಂಬರದೊಳು ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪಲ್ಲವಿತ ನವ ಚೂತತರು ಬೇಸಗೆಯ ಝಳಕೆ ನಿಲ್ಲದೆ ಅಸವಳಿದು ಜೋಲ್ವಂತೆ=[ಚಿಗುರಿದ ಹೊಸ ಮಾವಿನಮರ ಬೇಸಗೆಯ ಝಳವನ್ನು ಸಹಿಸಲಾದೆ ಬಾಡಿ ಜೋಲುವಂತೆ]; ಕೋಮಲಕಾಯದ ಎಲ್ಲೆಡೆಯೊಳಂ ನಾಂಟಿದ ಅಂಬುಗಳ ರುಧಿರ ಪ್ರವಾಹದಿಂದ ಉರೆ ಬಳಲ್ದು ಮೆಲ್ಲನೆ ವರೂಥದೊಳ್ ಸಾರಥಿವೆರಸಿ ಧರಾವಲ್ಲಭಂ ಮೈಮರೆದು ಪವಡಿಸಿದನು=[ಕೋಮಲದೇಹದ ಧರೆಯವಲ್ಲಭನಾದ ರಾಮನು ದೇಹದ ಎಲ್ಲಕಡೆ ನಾಟಿದ ಬಾಣಗಳ ಗಾಯದ ರಕ್ತ ಪ್ರವಾಹದಿಂದ ಬಹಳ ಬಳಲಿ ಮೆಲ್ಲನೆ ರಥದಲ್ಲಿ ಸಾರಥಿಯೂಸೇರಿ ಎಚ್ಚರತಪ್ಪಿಮಲಗಿದನು.]; ಅನಿಮಿಷರ್ ಚೆಲ್ಲಿದರ್ ಪೂಮಳೆಗಳಂ ಮೊಳಗಿದುವು ದೇವ ದುಂದುಭಿಗಳು ಅಂಬರದೊಳು=[ದೇವತೆಗಳು ಹೂವಿನಮಳೆಗಳನ್ನು ಚೆಲ್ಲಿದರು; ಆಕಾಶದಲ್ಲಿ ದೇವ ದುಂದುಭಿಗಳು/ವಾದ್ತಗಳು ಮೊಳಗಿದುವು.]
  • ತಾತ್ಪರ್ಯ:ಚಿಗುರಿದ ಹೊಸ ಮಾವಿನಮರ ಬೇಸಗೆಯ ಝಳವನ್ನು ಸಹಿಸಲಾದೆ ಬಾಡಿ ಜೋಲುವಂತೆ, ಕೋಮಲದೇಹದ ಧರೆಯವಲ್ಲಭನಾದ ರಾಮನು ದೇಹದ ಎಲ್ಲಕಡೆ ನಾಟಿದ ಬಾಣಗಳ ಗಾಯದ ರಕ್ತ ಪ್ರವಾಹದಿಂದ ಬಹಳ ಬಳಲಿ ಮೆಲ್ಲನೆ ರಥದಲ್ಲಿ ಸಾರಥಿಯೂಸೇರಿ ಎಚ್ಚರತಪ್ಪಿಮಲಗಿದನು. ದೇವತೆಗಳು ಹೂವಿನಮಳೆಗಳನ್ನು ಚೆಲ್ಲಿದರು; ಆಕಾಶದಲ್ಲಿ ದೇವ ದುಂದುಭಿಗಳು/ವಾದ್ಯಗಳು ಮೊಳಗಿದುವು.]
  • (ಪದ್ಯ-೩೬.

ಪದ್ಯ :೩೭:

[ಸಂಪಾದಿಸಿ]

ಆ ಕುಮಾರರ್ ಬಳಿಕ ಶರಹತಿಗೆ ಮೈಮರೆದ | ಕಾಕುತ್ಥ್ಸನಲ್ಲಿಗೈತಂದು ರಾಜೇಂದ್ರನ ಶು | ಭಾಕಾರಮಂ ನೋಡಿ ಸಿರಿಮೊಗದ ಮಣಿ ಕುಡಲಂಗಳಂ ಕಂಬುಗಳದ ||
ಏಕಾವಳಿಯ ಹಾರಮಂ ತೆಗೆದುಕೊಂಡೂರ್ಮಿ | ಳಾಕಾಂತ ಭರತ ಶತ್ರುಘ್ನರ ವಿಭೂಷಣಾ | ನೀಕಮಂ ಕಳೆದೊಂದು ವಸನದೊಳ್ ಕಟ್ಟಿ ಕುಶನೊಡನೆ ಲವನಿಂತೆಂದನು ||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಕುಮಾರರ್ ಬಳಿಕ ಶರಹತಿಗೆ ಮೈಮರೆದ ಕಾಕುತ್ಥ್ಸನಲ್ಲಿಗೆ ಐತಂದು=[ಆ ಕುಮಾರರು ಬಳಿಕ ಬಾಣದ ಪಟ್ಟಿಗೆ ಎಚ್ಚರತಪ್ಪಿದ ಕಾಕುತ್ಥ್ಸ ರಾಮನ ಹತ್ತಿರ ಬಂದು]; ರಾಜೇಂದ್ರನ ಶುಭಾಕಾರಮಂ ನೋಡಿ ಸಿರಿಮೊಗದ ಮಣಿ ಕುಡಲಂಗಳಂ ಕಂಬುಗಳದ ಏಕಾವಳಿಯ ಹಾರಮಂ ತೆಗೆದುಕೊಂಡು=[ರಾಜೇಂದ್ರನ ಶುಭವಾದ ಮೈಸೊಬಗನ್ನು ನೋಡಿ ಅವನ ಮುಖದ ಮಣಿ ಕುಡಲಗಳನ್ನೂ, ಶಂಖದಂತಿರುವ ಕುತ್ತಿಗೆಯ ಏಕಾವಳಿಯ ಹಾರವನ್ನೂ ತೆಗೆದುಕೊಂಡು]; ಊರ್ಮಿಳಾಕಾಂತ ಭರತ ಶತ್ರುಘ್ನರ ವಿಭೂಷಣಾ ನೀಕಮಂ ಕಳೆದು ಒಂದು ವಸನದೊಳ್ ಕಟ್ಟಿ ಕುಶನೊಡನೆ ಲವನು ಇಂತೆಂದನು=[ಊರ್ಮಿಳಾಕಾಂತ- ಲಕ್ಷ್ಮಣ, ಭರತ, ಶತ್ರುಘ್ನರ ವಿಭೂಷಣವಾದ ವಡವೆಗಳನ್ನು ಕಳಚಿ ಒಂದು ವಸ್ತ್ರದಲ್ಲಿ ಕಟ್ಟಿ ಕುಶನೊಡನೆ ಲವನು ಹೀಗೆ ಹೇಳಿದನು.].
  • ತಾತ್ಪರ್ಯ:ಆ ಕುಮಾರರು ಬಳಿಕ ಬಾಣದ ಪಟ್ಟಿಗೆ ಎಚ್ಚರತಪ್ಪಿದ ಕಾಕುತ್ಥ್ಸ ರಾಮನ ಹತ್ತಿರ ಬಂದು; ರಾಜೇಂದ್ರನ ಶುಭವಾದ ಮೈಸೊಬಗನ್ನು ನೋಡಿ ಅವನ ಮುಖದ ಮಣಿ ಕುಂಡಲಗಳನ್ನೂ, ಶಂಖದಂತಿರುವ ಅವನ ಕುತ್ತಿಗೆಯ ಏಕಾವಳಿಯ ಹಾರವನ್ನೂ ತೆಗೆದುಕೊಂಡು, ಊರ್ಮಿಳಾಕಾಂತ-ಲಕ್ಷ್ಮಣ, ಭರತ, ಶತ್ರುಘ್ನರ ಭೂಷಣವಾದ ವಡವೆಗಳನ್ನು ಕಳಚಿ ಒಂದು ವಸ್ತ್ರದಲ್ಲಿ ಕಟ್ಟಿ ಕುಶನೊಡನೆ ಲವನು ಹೀಗೆ ಹೇಳಿದನು.
  • (ಪದ್ಯ-೩೭.

ಪದ್ಯ :೩೮:

[ಸಂಪಾದಿಸಿ]

ಅಗ್ರಭವ ಕೇಳಿವರೊಳೊಂದು ರಥಮಂ ಪತ್ತಿ | ವಿಗ್ರಹದೊಳೆಚ್ಚರಾಗಿರ್ದ ವೀರರ್ಕಳ ಕ | ಚ ಗ್ರಹಣಮಂ ಮಾಡಿಕೊಂಡು ಬಹೆನೆನುತೆ ಲಕ್ಷ್ಮಣನ ಪೊಂದೇರ್ಗಡರ್ದು ||
ವ್ಯಗ್ರದಿಂ ಲವನೈತರಲ್ ಕುಶನ ಶರಹತಿಯ | ನಿಗ್ರಹಕ್ಕೊಳಗಾಗಿ ಮೂರ್ಛೆಯಿಲ್ಲದೆ ಕಪಿಗ| ಳಗ್ರಣಿಗಳುಳಿದಿರ್ದರಿರ್ವರದರೊಳ್ಜಾಂಬವನೊಳೆಂದನಾ ಹನುಮನು ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಗ್ರಭವ ಕೇಳಿವರೊಳು ಒಂದು ರಥಮಂ ಪತ್ತಿ ವಿಗ್ರಹದೊಳ್ ಎಚ್ಚರು ಆಗಿರ್ದ ವೀರರ್ಕಳ ಕಚ(ಕೂದಲು) ಗ್ರಹಣಮಂ (ಹಿಡಿ) ಮಾಡಿಕೊಂಡು ಬಹೆನು ಎನುತೆ=[ಲವನು, ಅಣ್ಣನೇ ಕೇಳು ಇದರಲ್ಲಿ ಒಂದು ರಥವನ್ನು ಹತ್ತಿ ಯುದ್ಧದಲ್ಲಿ ಎಚ್ಚರಾಗಿರುವ ವೀರರುಗಳ ಕೂದಲು ಹಿಡಿದುಕೊಂಡು ಬರುವೆನು ಎನ್ನುತ್ತಾ]; ಲಕ್ಷ್ಮಣನ ಪೊಂದೇರ್ಗೆ ಅಡರ್ದು ವ್ಯಗ್ರದಿಂ ಲವನು ಐತರಲ್=[ಲಕ್ಷ್ಮಣನ ಹೊನ್ನಿನರಥವನ್ನು ಹತ್ತಿ ಧೈರ್ಯದಿಂದ ಲವನು ಬರಲು]; ಕುಶನ ಶರಹತಿಯ ನಿಗ್ರಹಕ್ಕೆ ಒಳಗಾಗಿ ಮೂರ್ಛೆಯಿಲ್ಲದೆ ಕಪಿಗಳಗ್ರಣಿಗಳು ಉಳಿದಿರ್ದರ್ ಇರ್ವರು ಅದರೊಳ್ ಜಾಂಬವನೊಳು ಎಂದನು ಆ ಹನುಮನು=[ಕುಶನ ಬಾಣದಹೊಡೆತಕ್ಕೆ ನಿಗ್ರಹಕ್ಕೆ ಒಳಗಾಗಿ ಮೂರ್ಛೆಹೊಂದದೆ ಕಪಿಗಳ ಮುಖ್ಯರಾದವರು ಉಳಿದಿದ್ದ ಇಬ್ಬರು, ಅವರಲ್ಲಿ ಜಾಂಬವನನ್ನು ಕುರಿತು ಆ ಹನುಮನು ಹೀಗೆಂದನು.]
  • ತಾತ್ಪರ್ಯ:ಲವನು, ಅಣ್ಣನೇ ಕೇಳು ಇದರಲ್ಲಿ ಒಂದು ರಥವನ್ನು ಹತ್ತಿ ಯುದ್ಧದಲ್ಲಿ ಎಚ್ಚರಾಗಿರುವ ವೀರರುಗಳ ಕೂದಲು ಹಿಡಿದುಕೊಂಡು ಬರುವೆನು ಎನ್ನುತ್ತಾ, ಲಕ್ಷ್ಮಣನ ಹೊನ್ನಿನರಥವನ್ನು ಹತ್ತಿ ಧೈರ್ಯದಿಂದ ಲವನು ಬರಲು, ಕುಶನ ಬಾಣದ ಹೊಡೆತದ ನಿಗ್ರಹಕ್ಕೆ ಒಳಗಾಗಿ ಮೂರ್ಛೆಹೊಂದದೆ ಕಪಿಗಳ ಮುಖ್ಯರಾದ ಇಬ್ಬರು ಉಳಿದಿದ್ದರು, ಅವರಲ್ಲಿ ಜಾಂಬವನನ್ನು ಕುರಿತು ಆ ಹನುಮನು ಹೀಗೆಂದನು.]
  • (ಪದ್ಯ-೩೮.)

ಪದ್ಯ :೩೯:

[ಸಂಪಾದಿಸಿ]

ಕಂಡಿರೇ ಜಾಂಬವರೆ ರಾಮಾದಿ ವೀರರಂ | ದಿಂಡುಗೆಡಹಿದಬಳಿಕ ರಣದೊಳುಸಿರಿರ್ದರಂ | ಮಂಡೆವಿಡಿದೆಳೆದುಯ್ವೆನೆಂದು ಸೀತಾಸುತಂ ಬಂದಪಂ ನಾವಿವನೊಳು ||
ದಂಡಿಗಾರೆವು ನಮ್ಮನೀ ಬಾಲಕಂಪಿಡಿದು | ಕೊಂಡು ಪೋಗಲಿ ಜಾನಕಿಯ ಪೊರೆಗೆ ದೇವಿ ಕೃಪೆ | ಯಿಂ ಡಿಂಗರಿಗರೆಂದು ಪಾಲಿಸಲಿ ಮೇಣುಳಿಯಲೆಂದನಾ ಹನುಮಂತನು ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಂಡಿರೇ ಜಾಂಬವರೆ ರಾಮಾದಿ ವೀರರಂ ದಿಂಡುಗೆಡಹಿದ ಬಳಿಕ ರಣದೊಳು ಉಸಿರಿರ್ದರಂ ಮಂಡೆವಿಡಿದೆಳೆದು ಒಯ್ವೆನೆಂದು ಸೀತಾಸುತಂ ಬಂದಪಂ=[ನೋಡಿದಿರಾ ಹಿರಿಯಜಾಂಬವಂತವರೇ, (ಜಾಂಬವನು ಹಿಂದಿನ ಯುಗದವನು) ರಾಮಾದಿ ವೀರರನ್ನು ಶಕ್ತಿಗುಂದಿಸಿದ ಬಳಿಕ ಯುದ್ಧದಲ್ಲಿ ಜೀವ/ಉಸಿರುಇರುವವರನ್ನು ಕೂದಲುಹಿಡಿದು ಎಳೆದು ಒಯ್ಯುವೆನೆಂದು ಸೀತೆಯಮಗ ಬರುತ್ತಿರುವನು.]; ನಾವಿವನೊಳು ದಂಡಿಗ ಆರೆವು (ಯುದ್ದ-ಮಾಡಲಾರೆವು)ನಮ್ಮನೀ ಬಾಲಕಂ ಪಿಡಿದುಕೊಂಡು ಪೋಗಲಿ ಜಾನಕಿಯ ಪೊರೆಗೆ ದೇವಿ ಕೃಪೆಯಿಂ ಡಿಂಗರಿಗರೆಂದು ಪಾಲಿಸಲಿ ಮೇಣು ಉಳಿಯಲಿ ಎಂದನಾ ಹನುಮಂತನು=[ನಾವು ಇವನೊಡನೆ ಹೋರಾಟ ಮಾಡಲಾರೆವು; ನಮ್ಮನು ಈ ಬಾಲಕನು ಜಾನಕಿಯ ಹತ್ತಿರ ಹಿಡಿದುಕೊಂಡು ಹೋಗಲಿ; ದೇವಿ ಸೀತೆಯ ಕೃಪೆಯಿಂದ ಭಕ್ತರೆಂದು ಪಾಲಿಸಲಿ, ಇಲ್ಲವೇ ಬಿಡಲಿ, ಎಂದನು ಆ ಹನುಮಂತನು].
  • ತಾತ್ಪರ್ಯ:ನೋಡಿದಿರಾ ಹಿರಿಯಜಾಂಬವಂತವರೇ, (ಜಾಂಬವನು ಹಿಂದಿನ ಯುಗದವನು) ರಾಮಾದಿ ವೀರರನ್ನು ಶಕ್ತಿಗುಂದಿಸಿದ ಬಳಿಕ ಯುದ್ಧದಲ್ಲಿ ಜೀವ/ಉಸಿರುಇರುವವರನ್ನು ಕೂದಲುಹಿಡಿದು ಎಳೆದು ಒಯ್ಯುವೆನೆಂದು ಸೀತೆಯಮಗ ಬರುತ್ತಿರುವನು. ನಾವು ಇವನೊಡನೆ ಹೋರಾಟ ಮಾಡಲಾರೆವು; ನಮ್ಮನು ಈ ಬಾಲಕನು ಜಾನಕಿಯ ಹತ್ತಿರ ಹಿಡಿದುಕೊಂಡು ಹೋಗಲಿ; ದೇವಿ ಸೀತೆಯ ಕೃಪೆಯಿಂದ ಭಕ್ತರೆಂದು ಪಾಲಿಸಲಿ, ಇಲ್ಲವೇ ಬಿಡಲಿ, ಎಂದನು ಆ ಹನುಮಂತನು.
  • (ಪದ್ಯ-೩೯.)

ಪದ್ಯ :೪೧:

[ಸಂಪಾದಿಸಿ]

ಕೆಡದಿರ್ದರೆಲ್ಲರಂ ನೋಡಿ ರಣರಂಗದೊಳ್ | ಮಿಡುಕಿ ಮಾತಾಡುವಿವರಂ ಕಂಡು ಲೀಲೆಯಿಂ | ಪಿಡಿದು ಲವನೆಳೆತಂದುಕೌತುಕದ ಕಪಿಗಳೆಂದಣ್ಣಂಗೆ ತೋರಿಸಲ್ಕೆ ||
ಕಡು ಮೆಚ್ಚಿ ತಮ್ಮನಂ ಕುಶನಪ್ಪಿದಂ ಬಳಿಕ | ಪಡೆದ ತಾಯಂ ಕಾಣಲಾ ಪ್ಲವಗ ಪತಿಗಳಂ | ಬಿಡದನಿಬರಾ ಭರಣಮನಿತುಮಂ ಕೊಂಡಿರ್ವರುಂ ಬಂದರಾಶ್ರಮಕ್ಕೆ ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೆಡದಿರ್ದ ಎರೆಲ್ಲರಂ ನೋಡಿ ರಣರಂಗದೊಳ್ ಮಿಡುಕಿ ಮಾತಾಡುವ ಇವರಂ ಕಂಡು ಲೀಲೆಯಿಂ ಪಿಡಿದು ಲವನು ಎಳೆತಂದು ಕೌತುಕದ ಕಪಿಗಳೆಂದು ಅಣ್ಣಂಗೆ ತೋರಿಸಲ್ಕೆ=[ಲವನು ರಣರಂಗದಲ್ಲಿ ಬಿದ್ದಿದ್ದ ಎರೆಲ್ಲರನ್ನೂ ನೋಡಿ ರಣರಂಗದಲ್ಲಿ ದುಃಖದಿದಂದ ಮಾತಾಡುತ್ತಿರುವ ಇವರನ್ನು ಕಂಡು ವಿನೋದದಿಂದ ಹಿಡಿದು (ಲವನು) ಎಳೆದುತಂದು ಕುತೂಹಲದ ಕಪಿಗಳೆಂದು ಅಣ್ಣನಿಗೆ ತೋರಿಸಲು, ]; ಕಡು ಮೆಚ್ಚಿ ತಮ್ಮನಂ ಕುಶನು ಅಪ್ಪಿದಂ ಬಳಿಕ ಪಡೆದ ತಾಯಂ ಕಾಣಲಾ ಪ್ಲವಗ ಪತಿಗಳಂ ಬಿಡದೆ ಅನಿಬರು ಆಭರಣಮ್ ಅನಿತುಮಂ ಕೊಂಡು ಇರ್ವರುಂ ಬಂದರು ಆಶ್ರಮಕ್ಕೆ=[ತಮ್ಮ ಲವನನ್ನು ಬಹಳ ಮೆಚ್ಚಿ ಕುಶನು ಅಪ್ಪಿಕೊಂಡನು. ಬಳಿಕ ತಮ್ಮನ್ನುಪಡೆದ ತಾಯಿಯನ್ನು ಕಾಣಲು ಆ ಕಪಿವರರನ್ನು ಬಿಡದೆ ಎಲ್ಲರು ಆಭರಣವೆಲ್ಲವನ್ನೂ ತೆಗೆದುಕೊಂಡು ಇಬ್ಬರೂ,ಆಶ್ರಮಕ್ಕೆ ಬಂದರು].
  • ತಾತ್ಪರ್ಯ:ಲವನು ರಣರಂಗದಲ್ಲಿ ಬಿದ್ದಿದ್ದ ಎರೆಲ್ಲರನ್ನೂ ನೋಡಿ ರಣರಂಗದಲ್ಲಿ ದುಃಖದಿದಂದ ಮಾತಾಡುತ್ತಿರುವ ಇವರನ್ನು ಕಂಡು ವಿನೋದದಿಂದ ಹಿಡಿದು (ಲವನು) ಎಳೆದುತಂದು ಕುತೂಹಲದ ಕಪಿಗಳೆಂದು ಅಣ್ಣನಿಗೆ ತೋರಿಸಲು, ತಮ್ಮ ಲವನನ್ನು ಬಹಳ ಮೆಚ್ಚಿ ಕುಶನು ಅಪ್ಪಿಕೊಂಡನು. ಬಳಿಕ ತಮ್ಮನ್ನುಪಡೆದ ತಾಯಿಯನ್ನು ಕಾಣಲು ಆ ಕಪಿವರರನ್ನು ಬಿಡದೆ ಎಲ್ಲರು ಆಭರಣವೆಲ್ಲವನ್ನೂ ತೆಗೆದುಕೊಂಡು ಇಬ್ಬರೂ,ಆಶ್ರಮಕ್ಕೆ ಬಂದರು.
  • (ಪದ್ಯ-೪೦.)

ಪದ್ಯ :೪೧:

[ಸಂಪಾದಿಸಿ]

ಏನಾದರೋ ತನಯರೆಂದು ಚಿಂತಿಸುತಿರ್ಪ | ಜಾನಕಿಗೆ ರಾಮಾದಿಗಳ ಭೂಷಣಂಗಳ | ಕಾನನದ ಬೇಂಟೆಯೊಳ್ ಸಿಕ್ಕಿ ಸೀಕರಿಗೊಂಬ ಮೃಗಪೋತಕಂಗಳಂತೆ ||
ಮೌನದಿಂ ಮೈಯುಡುಗಿ ನೊಂದೆಳೆತಟಕೆ ಬಿದ್ದ | ವಾನರಶ್ರೇಷ್ಠರಂ ತಂದಿತ್ತು ಚರಣದೊಳ್ | ಸೂನುಗಳ್ ಪೊಡಮಡಲ್ಕಾಸೀತೆ ನಡುನಡುಗಿ ನಂದನರ್ಗಿಂತೆಂದಳು ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಏನಾದರೋ ತನಯರೆಂದು ಚಿಂತಿಸುತಿರ್ಪ ಜಾನಕಿಗೆ ರಾಮಾದಿಗಳ ಭೂಷಣಂಗಳ ಕಾನನದ ಬೇಂಟೆಯೊಳ್ ಸಿಕ್ಕಿ ಸೀಕರಿಗೊಂಬ ಮೃಗಪೋತಕಂಗಳಂತೆ=[ಮಕ್ಕಳು ಏನಾದರೋ ಎಂದು ಚಿಂತಿಸುತ್ತಿದ್ದ ಜಾನಕಿಗೆ ರಾಮಾದಿಗಳ ಆಭರಣಗಳನ್ನೂ, ಕಾಡಿನ ಬೇಟೆಯಲ್ಲಿ ಸಿಕ್ಕಿ ಬಳಲಿದ ಜಿಂಕೆಯಮರಿಗಳಂತೆ]; ಮೌನದಿಂ ಮೈಯುಡುಗಿ ನೊಂದು ಎಳೆತಟಕೆ ಬಿದ್ದ ವಾನರಶ್ರೇಷ್ಠರಂ ತಂದಿತ್ತು ಚರಣದೊಳ್ ಸೂನುಗಳ್ ಪೊಡಮಡಲ್ಕೆ ಆ ಸೀತೆ ನಡುನಡುಗಿ ನಂದನರ್ಗೆ ಇಂತೆಂದಳು=[ಮೌನದಿಂದ ಮೈಯನ್ನು ಉಡುಗಿಸಿಕೊಂಡು, ನೊಂದು ಎಳೆತಾಟಕೆ ಸಿಕ್ಕಿಬಿದ್ದ ವಾನರಶ್ರೇಷ್ಠರನ್ನು ತಂದು ಅವಳಿಗೆ ಕೊಟ್ಟು, ಮಕ್ಕಳು ಕಾಲಿಗೆ ನಮಿಸಲು, ಆ ಸೀತೆ ನಡುನಡುಗಿ ಮಕ್ಕಳಿಗೆ ಹೀಗೆ ಹೇಳಿದಳು.]
  • ತಾತ್ಪರ್ಯ:ಮಕ್ಕಳು ಏನಾದರೋ ಎಂದು ಚಿಂತಿಸುತ್ತಿದ್ದ ಜಾನಕಿಗೆ ರಾಮಾದಿಗಳ ಆಭರಣಗಳನ್ನೂ, ಕಾಡಿನ ಬೇಟೆಯಲ್ಲಿ ಸಿಕ್ಕಿ ಬಳಲಿದ ಜಿಂಕೆಯಮರಿಗಳಂತೆ, ಮೌನದಿಂದ ಮೈಯನ್ನು ಉಡುಗಿಸಿಕೊಂಡು, ನೊಂದು ಎಳೆತಾಟಕೆ ಸಿಕ್ಕಿಬಿದ್ದ ವಾನರಶ್ರೇಷ್ಠರನ್ನು ತಂದು ಅವಳಿಗೆ ಕೊಟ್ಟು, ಮಕ್ಕಳು ಕಾಲಿಗೆ ನಮಿಸಲು, ಆ ಸೀತೆ ನಡುನಡುಗಿ ಮಕ್ಕಳಿಗೆ ಹೀಗೆ ಹೇಳಿದಳು.
  • (ಪದ್ಯ-೪೧.)

ಪದ್ಯ :೪೧:

[ಸಂಪಾದಿಸಿ]

ಆರುಮರಿಯದವೊಲೀ ಕಾನನದೊಳಿರ್ದೆನಾಂ | ಧಾರಿಣೀಶರ ಭೂಷಣಂಗಳೇತಕೆ ನಮಗೆ | ವೀರ ಕಪಿವರರಿವರ್ ಜಗದೊಳಭಿಮಾನಿಗಳ್ ಭಂಗಮೇಕಿಂತಿವರ್ಗೆ ||
ಘೋರಕರ್ಮಂಗಳಂ ಮಾಡಿದಿರಿ ಮಕ್ಕಳಿರ | ದಾರಿತಪ್ಪಿದಿರಿನ್ನು ವಾಲ್ಮೀಕಿಮುನಿವರಂ | ಬಾರದಿರನೀಗಳೆ ರಣದೊಳಿವರನಿರಿಸಿ ಬಹುದೆಂದಳವನಿಜೆ ಲವಂಗೆ ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆರುಂ ಅರಿಯದವೊಲು ಈ ಕಾನನದೊಳು ಇರ್ದೆನು ಆಂ ಧಾರಿಣೀಶರ ಭೂಷಣಂಗಳು ಏತಕೆ ನಮಗೆ=[ನಾನು ಯಾರೂ ತಿಳಿಯದಂತೆ ಈ ಕಾಡಿನಲ್ಲಿ ಇದ್ದೆನು. ರಾಜರ ಭೂಷಣ/ಆಭರಣಗಳು ನಮಗೆ ಏಕೆ ಬೇಕು?]; ವೀರ ಕಪಿವರರು ಇವರ್ ಜಗದೊಳು ಅಭಿಮಾನಿಗಳ್ ಭಂಗಮೇಕೆ ಇಂತಿವರ್ಗೆ=[ಇವರು ಜಗತ್ತಿನಲ್ಲಿ ಮಹಾವೀರ ಕಪಿಶ್ರೇಷ್ಠರು ಅಭಿಮಾನಿಗಳು/ ಮಾನವಂತರು; ಇವರಿಗೆ ಅವಮಾನವೇಕೆ ಮಾಡಿದಿರಿ.]; ಘೋರಕರ್ಮಂಗಳಂ ಮಾಡಿದಿರಿ ಮಕ್ಕಳಿರ ದಾರಿತಪ್ಪಿದಿರಿ ಇನ್ನು ವಾಲ್ಮೀಕಿಮುನಿವರಂ ಬಾರದಿರನು=[ದೊಡ್ಡ ಅಪರಾಧದ ಕೆಲಸ ಮಾಡಿದಿರಿ ಮಕ್ಕಳಿರಾ! ದಾರಿತಪ್ಪಿದಿರಲ್ಲಾ! ಇನ್ನು ವಾಲ್ಮೀಕಿಮುನಿವರನು ಬಂದು ಸಿಟ್ಟುಮಾಡದೆ ಇರನು]; ಈಗಳೆ ರಣದೊಳು ಇವರನು ಇರಿಸಿ ಬಹುದು ಎಂದಳು ಅವನಿಜೆ ಲವಂಗೆ=[ಈಗಲೆ ಇವರನ್ನು ರಣರಂಗದಲ್ಲಿ ಇರಿಸಿ ಬರಬೇಕು, ಎಂದು ಸೀತೆ ಲವನಿಗೆ ಹೇಳದಳು].
  • ತಾತ್ಪರ್ಯ:ಸೀತೆ ದುಃಖದಿಂದ ಹೇಳಿದಳು, ನಾನು ಯಾರೂ ತಿಳಿಯದಂತೆ ಈ ಕಾಡಿನಲ್ಲಿ ಇದ್ದೆನು. ರಾಜರ ಭೂಷಣ/ಆಭರಣಗಳು ನಮಗೆ ಏಕೆ ಬೇಕು? ಇವರು ಜಗತ್ತಿನಲ್ಲಿ ಮಹಾವೀರ ಕಪಿಶ್ರೇಷ್ಠರು ಅಭಿಮಾನಿಗಳು/ ಮಾನವಂತರು; ಇವರಿಗೆ ಅವಮಾನವೇಕೆ ಮಾಡಿದಿರಿ. ದೊಡ್ಡ ಅಪರಾಧದ ಕೆಲಸ ಮಾಡಿದಿರಿ ಮಕ್ಕಳಿರಾ! ದಾರಿತಪ್ಪಿದಿರಿ! ಇನ್ನು ವಾಲ್ಮೀಕಿಮುನಿವರನು ಬಂದು ಸಿಟ್ಟುಮಾಡದೆ ಇರನು; ಈಗಲೆ ಇವರನ್ನು ರಣರಂಗದಲ್ಲಿ ಇರಿಸಿ ಬರಬೇಕು,ಎಂದು ಸೀತೆ ಲವನಿಗೆ ಹೇಳದಳು].
  • (ಪದ್ಯ-೪೧.)

ಪದ್ಯ :೪೩:

[ಸಂಪಾದಿಸಿ]

ವೈದೇಹಿ ನುಡಿದುದುಂ ಕೈಕೊಂಡು ಲವನವರ | ನುಯ್ದು ರಣರಂಗದೊಳ್ ಮಗುಳಿರಿಸಿ ಬಂದ ನಿರ | ದೈದೆ ನಾರದನಿಂದ ಕೇಳ್ದು ವಾಲ್ಮೀಕಿ ಮುನಿ ಪಾತಾಳಲೋಕದಿಂದೆ ||
ಮೈದೋರಲಾಶ್ರಮದ್ವಾರದೊಳ್ ಕಂಡು ಮೇ | ಲ್ವಾಯ್ದುಕ್ಕುವಾನಂದರಸದಿಂದೆ ವಂದನಂ | ಗೈದಳವನಿಜೆ ಮಣಿದರೆಲ್ಲರುಂ ಜಾನಕಿಯ ಸುತರೆರಗಿದರ್ ಪದದೊಳು ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವೈದೇಹಿ ನುಡಿದುದುಂ ಕೈಕೊಂಡು ಲವನು ಅವರನು ಉಯ್ದು ರಣರಂಗದೊಳ್ ಮಗುಳ್ ಇರಿಸಿ ಬಂದಂ ಇರದೆ=[ವೈದೇಹಿಯಾದ ಸೀತೆ ಹೇಳಿದುದನ್ನು ನೆರವೇರಿಸಲು, ಲವನು ಅವರನ್ನು ಕರೆತಂದು ರಣರಂಗದಲ್ಲಿ ಪುನಃ ಇರಿಸಿ ಇರದೆಕೂಡಲೆ ಬಂದನು.]; ಐದೆ ನಾರದನಿಂದ ಕೇಳ್ದು ವಾಲ್ಮೀಕಿ ಮುನಿ ಪಾತಾಳಲೋಕದಿಂದೆ ಮೈದೋರಲು=[ಐದೆ ನಾರದನಿಂದ ಇಲ್ಲಿಯ ವಿಷಯ ಕೇಳಿ ವಾಲ್ಮೀಕಿ ಮುನಿ ಪಾತಾಳಲೋಕದಿಂದೆ ಐದೆ/ಬರಲು; ಅವರು ಆಶ್ರಮದ್ವಾರದಲ್ಲಿ ಕಾಣಿಸಿಕೊಳ್ಳಲು]; ಕಂಡು ಮೇಲ್ವಾಯ್ದು ಉಕ್ಕುವ ಆನಂದ ರಸದಿಂದೆ ವಂದನಂ ಗೈದಳು ಅವನಿಜೆ ಮಣಿದರು ಎಲ್ಲರುಂ ಜಾನಕಿಯ ಸುತರು ಎರಗಿದರ್ ಪದದೊಳು=[ಅವರನ್ನು ಕಂಡು ಅವಸರದಿಂದ ಉಕ್ಕುವ ಆನಂದ ರಸದಲ್ಲಿ ಅವನಿಜೆ ಸೀತೆ ನಮಸ್ಕಾರ ಮಾಡಿದಳು. ನಂತರ ಎಲ್ಲರೂ ವಂದಿಸಿದರು; ಜಾನಕಿಯ ಮಕ್ಕಳು ಅವರ ಪಾದಗಳಿಗೆ ಎರಗಿದರು.];
  • ತಾತ್ಪರ್ಯ:ವೈದೇಹಿಯಾದ ಸೀತೆ ಹೇಳಿದುದನ್ನು ನೆರವೇರಿಸಲು, ಲವನು ಅವರನ್ನು ಕರೆತಂದು ರಣರಂಗದಲ್ಲಿ ಪುನಃ ಇರಿಸಿ ಇರದೆಕೂಡಲೆ ಬಂದನು. ನಾರದನಿಂದ ಇಲ್ಲಿಯ ವಿಷಯ ಕೇಳಿ ವಾಲ್ಮೀಕಿ ಮುನಿ ಪಾತಾಳಲೋಕದಿಂದೆ ಐದೆ/ಬರಲು; ಅವರು ಆಶ್ರಮದ್ವಾರದಲ್ಲಿ ಕಾಣಿಸಿಕೊಳ್ಳಲು, ಅವರನ್ನು ಕಂಡು ಅವಸರದಿಂದ ಉಕ್ಕುವ ಆನಂದ ರಸದಲ್ಲಿ ಅವನಿಜೆ ಸೀತೆ ನಮಸ್ಕಾರ ಮಾಡಿದಳು. ನಂತರ ಎಲ್ಲರೂ ವಂದಿಸಿದರು; ಜಾನಕಿಯ ಮಕ್ಕಳು ಅವರ ಪಾದಗಳಿಗೆ ಎರಗಿದರು.
  • (ಪದ್ಯ-೪೩.)

ಪದ್ಯ :೪೪:

[ಸಂಪಾದಿಸಿ]

ಶರ ವೇದಮೂರ್ತಿಗಳ ತೆರದಿಂದ ರಾಜಿಸುವ | ತರಳರಂ ಮಣಿದೆತ್ತಿ ಮಕ್ಕಳಿರ ನಿಮಗೆ ರಘು | ವರನ ಸೇನೆಯೊಳಾಯ್ತುಗಡ ಕಲಹಮೇಕೆ ತೊಡಗಿತು ತೋಟಿ ನಿಮ್ಮಕೂಡೆ ||
ಧುರಕೆ ಬಂದೆಚ್ಚಾಡಿ ಬಿದ್ದರಾರ್ ಮೆಯ್ಯೊ | ಳರಿಗಳಂಬಿನ ಗಾಯಮಿಲ್ಲದೆತ್ತಣ ಬಲೋ | ತ್ಕರದೇಳ್ಗೆ ಪೇಳ್ವುದೆನೆ ವಾಲ್ಮೀಕಿಮುನಿಪುಂಗವಂಗೆ ಕುಶನಿಂತೆದನು ||44||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಶರ ವೇದಮೂರ್ತಿಗಳ ತೆರದಿಂದ ರಾಜಿಸುವ ತರಳರಂ ಮಣಿದೆತ್ತಿ ಮಕ್ಕಳಿರ ನಿಮಗೆ ರಘು ವರನ ಸೇನೆಯೊಳಾಯ್ತು ಗಡ=[ಧನುರ್ವೇದದ ಪ್ರತ್ಯಕ್ಷ ಮೂರ್ತಿಗಳ ರೀತಿಯಲ್ಲಿ ಪ್ರಕಾಶಿಸುವ ಕಾಲಿಗೆ ಬಿದ್ದ ಬಾಲಕರನ್ನು ಬಗ್ಗಿ ಎತ್ತಿ, ಮಕ್ಕಳಿರಾ, ನಿಮಗೆ ರಘುರಾಮನ ಸೇನೆಯೊಡನೆ ಯುದ್ಧವಾಯಿತು? ಗಡ!]; ಕಲಹಂ ಏಕೆ ತೊಡಗಿತು ತೋಟಿ ನಿಮ್ಮಕೂಡೆ ಧುರಕೆ ಬಂದು ಎಚ್ಚಾಡಿ ಬಿದ್ದರು ಆರ್=[ಅವನೊಡನೆ ಕಲಹವು ಏಕೆ ತೊಡಗಿತು? ನಿಮ್ಮ ಕೂಡೆ ಯುದ್ಧ! ಯುದ್ಧಕ್ಕೆ ಬಂದು ಹೋರಾಡಿ ಯಾರು ಬಿದ್ದರು?]; ಮೆಯ್ಯೊಳ ಅರಿಗಳ ಅಂಬಿನ ಗಾಯಮಿಲ್ಲದೆ ಎತ್ತಣ ಬಲೋತ್ಕರದ ಏಳ್ಗೆ ಪೇಳ್ವುದು ಎನೆ ವಾಲ್ಮೀಕಿಮುನಿಪುಂಗವಂಗೆ ಕುಶನು ಇಂತೆದನು=[ನಿಮ್ಮ ಮೆಯ್ಯಲ್ಲಿ ಶತ್ರುಗಳ ಬಾಣದ ಗಾಯವಿಲ್ಲದೆ ಯಾವಬಗೆಯ ಉನ್ನತಶಕ್ತಿಯ ಏಳಿಗೆ! ಹೇಳಿರಿ ಎನಲು ವಾಲ್ಮೀಕಿಮುನಿ ಪುಂಗವನಿಗೆ ಕುಶನು ಹೀಗೆ ಹೇಳಿದನು.]
  • ತಾತ್ಪರ್ಯ:ಧನುರ್ವೇದದ ಪ್ರತ್ಯಕ್ಷ ಮೂರ್ತಿಗಳ ರೀತಿಯಲ್ಲಿ ಪ್ರಕಾಶಿಸುವ ಕಾಲಿಗೆ ಬಿದ್ದ ಬಾಲಕರನ್ನು ಬಗ್ಗಿ ಎತ್ತಿ, ಮಕ್ಕಳಿರಾ, ನಿಮಗೆ ರಘುರಾಮನ ಸೇನೆಯೊಡನೆ ಯುದ್ಧವಾಯಿತು? ಗಡ! ಅವನೊಡನೆ ಕಲಹವು ಏಕೆ ತೊಡಗಿತು? ನಿಮ್ಮ ಕೂಡೆ ಯುದ್ಧ! ಯುದ್ಧಕ್ಕೆ ಬಂದು ಹೋರಾಡಿ ಯಾರು ಬಿದ್ದರು? ನಿಮ್ಮ ಮೆಯ್ಯಲ್ಲಿ ಶತ್ರುಗಳ ಬಾಣದ ಗಾಯವಿಲ್ಲದೆ ಯಾವಬಗೆಯ ಉನ್ನತಶಕ್ತಿಯ ಏಳಿಗೆ ಹೇಗಾಯಿತು! ಹೇಳಿರಿ ಎನಲು ವಾಲ್ಮೀಕಿಮುನಿ ಪುಂಗವನಿಗೆ ಕುಶನು ಹೀಗೆ ಹೇಳಿದನು.]
  • (ಪದ್ಯ-೪೪.)

ಪದ್ಯ :೪೫:

[ಸಂಪಾದಿಸಿ]

ತಂದೆ ನೀವಿರಲೆಮಗೆ ಸುಕ್ಷೇಮಕರಮಪ್ಪು | ದೆಂದೆಂದುಮಿದು ನಿಜಂ ನಿಮ್ಮಡಿಗಳುಪದೇಶ | ದಿಂದರಿಗಳಂ ಗೆಲ್ದೆವೀನಿಮ್ಮ ಪುಣ್ಯಾಶ್ರಮದೊಳಾಯ್ತು ಭೂತ ಹಿಂಸೆ ||
ಬಂದುದೊಂದಶ್ವಮದನೀ ಲವಂ ಕಟ್ಟಿದಂ | ಮಂದಿ ಕವಿದುದು ಮೇಲೆ ಶತ್ರುಘ್ನನುರುಬಿದಂ | ಸಂಧಿಸಿದೆ ನಾಂ ಬಳಿಕ ಸೌಮಿತ್ರಿ ಭರತ ರಾಮಾದಿಗಳ್ ನಡೆತಂದರು ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಂದೆ ನೀವಿರಲು ಎಮಗೆ ಸುಕ್ಷೇಮಕರಂ ಅಪ್ಪುದು ಎಂದೆಂದುಂ ಇದು ನಿಜಂ ನಿಮ್ಮಡಿಗಳ ಉಪದೇಶದಿಂದ ಅರಿಗಳಂ ಗೆಲ್ದೆವು=[ತಂದೆಯಂತಿರುವ ನೀವು ಇರಲು ನಮಗೆ ಸುಕ್ಷೇಮಕರವೇ ಎಂದೆಂದಿಗೂ ಆಗುವುದು. ಇದು ನಿಜವು! ನಿಮ್ಮಪಾದಗಳ ಉಪದೇಶದಿಂದ ಶತ್ರುಗಳನ್ನು ಗೆದ್ದೆವು]; ಈ ನಿಮ್ಮ ಪುಣ್ಯಾಶ್ರಮದೊಳು ಆಯ್ತು ಭೂತ ಹಿಂಸೆ=[ಈ ನಿಮ್ಮ ಪುಣ್ಯಾಶ್ರಮದಲ್ಲಿ ಭೂತ/ಜೀವ ಹಿಂಸೆ ಆಯಿತು ಕ್ಷಮಿಸಬೇಕು.]; ಬಂದುದು ಒಂದು ಅಶ್ವಂ ಅದನು ಈ ಲವಂ ಕಟ್ಟಿದಂ ಮಂದಿ ಕವಿದುದು=[ಒಂದು ಕುದುರೆಯು ತಪೋವನದೊಳಗೆ ಬಂದಿತು; ಅದನ್ನು ಈ ಲವನು ಕಟ್ಟಿದನು. ಸೈನ್ಯ ಕವಿದು ಯುದ್ಧಕ್ಕೆ ಬಂದಿತು.]; ಮೇಲೆ ಶತ್ರುಘ್ನನು ಉರುಬಿದಂ ಸಂಧಿಸಿದೆ ನಾಂ ಬಳಿಕ ಸೌಮಿತ್ರಿ ಭರತ ರಾಮಾದಿಗಳ್ ನಡೆತಂದರು=[ಅದು ಸೋತಾಗ, ಶತ್ರುಘ್ನನು ಆಕ್ರಮಿಸಿದನು; ನಾನು ಅವನನ್ನು ಎದುರಿಸಿದೆ; ಬಳಿಕ ಲಕ್ಷ್ಮಣ ಭರತ ರಾಮಾದಿಗಳು ಯುದ್ಧಕ್ಕೆ ಬಂದರು, ಎಂದನು ಕುಶ.].
  • ತಾತ್ಪರ್ಯ:ತಂದೆಯಂತಿರುವ ನೀವು ಇರಲು ನಮಗೆ ಎಂದೆಂದಿಗೂ ಸುಕ್ಷೇಮಕರವೇ ಆಗುವುದು. ಇದು ನಿಜವು! ನಿಮ್ಮಪಾದಗಳ ಉಪದೇಶದಿಂದ ಶತ್ರುಗಳನ್ನು ಗೆದ್ದೆವು; ಈ ನಿಮ್ಮ ಪುಣ್ಯಾಶ್ರಮದಲ್ಲಿ ಭೂತ/ಜೀವ ಹಿಂಸೆ ಆಯಿತು ಕ್ಷಮಿಸಬೇಕು. ಒಂದು ಕುದುರೆಯು ತಪೋವನದೊಳಗೆ ಬಂದಿತು; ಅದನ್ನು ಈ ಲವನು ಕಟ್ಟಿದನು. ಸೈನ್ಯ ಕವಿದು ಯುದ್ಧಕ್ಕೆ ಬಂದಿತು. ಅದು ಸೋತಾಗ, ಶತ್ರುಘ್ನನು ಆಕ್ರಮಿಸಿದನು; ನಾನು ಅವನನ್ನು ಎದುರಿಸಿದೆ; ಬಳಿಕ ಲಕ್ಷ್ಮಣ ಭರತ ರಾಮಾದಿಗಳು ಯುದ್ಧಕ್ಕೆ ಬಂದರು, ಎಂದನು ಕುಶ.
  • (ಪದ್ಯ-೪೫.)

ಪದ್ಯ :೪೬:

[ಸಂಪಾದಿಸಿ]

ಕಡೆಯ ಮಾತೇನಿನ್ನು ದೊರೆದೊರೆಗಳೆಲ್ಲರಂ | ಪಡೆಯೊಳ್ ನಿಶಾಟ ಕಪಿ ನರ ಚಾತುರಂಗಮಂ | ಕೆಡಹಿದೆವೆನಲ್ ಕುಶನ ನುಡಿಗೆ ಸೈವೆರೆಗಾಗಿ ವಾಲ್ಮೀಕಿಮುನಿ ಮನದೊಳು ||
ಕಡುನೊಂದನಕಟಕಟ ತಪ್ಪಾದುದೆನುತೆ ನಡು | ನಡುಗುತಿಹ ಸೀತೆಯಂ ಸಂತೈಸಿ ವಹಿಲದಿಂ | ನಡೆತಂದನೊಡನಿರ್ದ ತಾಪಸ ವಿತತಿ ಸಹಿತ ಸಂಗ್ರಾಮ ಭೂಮಿಗಾಗಿ ||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಡೆಯ ಮಾತೇನು ಇನ್ನು ದೊರೆದೊರೆಗಳು ಎಲ್ಲರಂ ಪಡೆಯೊಳ್ ನಿಶಾಟ ಕಪಿ ನರ ಚಾತುರಂಗಮಂ ಕೆಡಹಿದೆವು ಎನಲ್=[ಕಡೆಯ ಮಾತೇನು ಇನ್ನು ದೊರೆದೊರೆಗಳು ಎಲ್ಲರಂ ಪಡೆಯೊಳ್ ನಿಶಾಟ ಕಪಿ ನರ ಚಾತುರಂಗಮಂ ಕೆಡಹಿದೆವು ಎನಲು]; ಕುಶನ ನುಡಿಗೆ ಸೈವೆರೆಗಾಗಿ ವಾಲ್ಮೀಕಿಮುನಿ ಮನದೊಳು ಕಡುನೊಂದನು ಅಕಟಕಟ ತಪ್ಪಾದುದು ಎನುತೆ ನಡುನಡುಗುತಿಹ ಸೀತೆಯಂ ಸಂತೈಸಿ=[ಕುಶನ ನುಡಿಗೆ ಬೆರೆಗಾಗಿ ವಾಲ್ಮೀಕಿಮುನಿ ಮನಸ್ಸಿನಲ್ಲಿ ಬಹಳನೊಂದನು. ಅಕಟಕಟ ತಪ್ಪಾದುದು ಎನುತೆ ನಡುನಡುಗುತತಿರುವ ಸೀತೆಯನ್ನು ಸಂತೈಸಿದನು.]; ವಹಿಲದಿಂ ನಡೆತಂದನು ಒಡನಿರ್ದ ತಾಪಸ ವಿತತಿ ಸಹಿತ ಸಂಗ್ರಾಮ ಭೂಮಿಗಾಗಿ=[ಅವಸರದಲ್ಲಿ ಜೊತೆಯಲ್ಲಿದ್ದ ತಾಪಸರ ಸಮೂಹ ಸಹಿತ ಯುದ್ಧ ಭೂಮಿಗೆ ನಡೆದು ಬಂದನು. ].
  • ತಾತ್ಪರ್ಯ:ಕಡೆಯ ಮಾತೇನು ಇನ್ನು ದೊರೆದೊರೆಗಳು ಎಲ್ಲರಂ ಪಡೆಯೊಳ್ ನಿಶಾಟ ಕಪಿ ನರ ಚಾತುರಂಗಮಂ ಕೆಡಹಿದೆವು ಎನಲು; ಕುಶನ ನುಡಿಗೆ ಬೆರೆಗಾಗಿ ವಾಲ್ಮೀಕಿಮುನಿ ಮನಸ್ಸಿನಲ್ಲಿ ಬಹಳನೊಂದನು. ಅಕಟಕಟ ತಪ್ಪಾದುದು ಎನುತೆ ನಡುನಡುಗುತತಿರುವ ಸೀತೆಯನ್ನು ಸಂತೈಸಿದನು.ಅವಸರದಲ್ಲಿ ಜೊತೆಯಲ್ಲಿದ್ದ ತಾಪಸರ ಸಮೂಹ ಸಹಿತ ಯುದ್ಧ ಭೂಮಿಗೆ ನಡೆದು ಬಂದನು.
  • (ಪದ್ಯ-೪೬.)

ಪದ್ಯ :೪೭:

[ಸಂಪಾದಿಸಿ]

ಶರಧಿಯಂ ಕಟ್ಟುವಂದಾರಾಘವೇಶ್ವರಂ | ಧರೆಯೊಳಿಟ್ಟಣಿಸಿರ್ದ ಬೆಟ್ಟಂಗಳೆಲ್ಲಮಂ | ತರಿಸಿದಂ ಭೂಮಿಗಾಧಾರಮಿಲ್ಲದೆ ಪೋಪುದೆಂದವನ ತನುಜಾತರು ||
ಗಿರಿಗಳಂ ಪ್ರತಿಯಾಗಿ ತಂದಿಳೆಯಮೇಲಿನ್ನು | ಪರಪಿದರೊ ಪೇಳೆನಲ್ ಪೊಡೆಗೆಡೆದು ಬಿದ್ದಿರ್ದ | ಕರಿಘಟೆಗಳಟ್ಟೆಗಳ್ ಕಾಣಿಸಿದುವಾ ರಣದೊಳಾ ತಪೋನಿಧಿಯ ಕಣ್ಗೆ ||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಶರಧಿಯಂ ಕಟ್ಟುವಂದು ಆ ರಾಘವೇಶ್ವರಂ ಧರೆಯೊಳು ಇಟ್ಟಣಿಸಿರ್ದ ಬೆಟ್ಟಂಗಳ ಎಲ್ಲಮಂ ತರಿಸಿದಂ=[ಸಮುದ್ರಕ್ಕೆ ಸೇತುವೆಯನ್ನು ಕಟ್ಟುವಾಗ ಆ ರಾಘವೇಶ್ವರನು ಭೂಮಿಯಮೇಲೆ ಒಟ್ಟೊಟ್ಟಾಗಿ ಇದ್ದ ಬೆಟ್ಟಗಳೆಲ್ಲವನ್ನೂ (ತರಿಸಿದನೋ),]; ಭೂಮಿಗೆ ಆಧಾರಂ ಇಲ್ಲದೆ ಪೋಪುದೆಂದು ಅವನ ತನುಜಾತರು ಗಿರಿಗಳಂ ಪ್ರತಿಯಾಗಿ ತಂದು ಇಳೆಯಮೇಲೆ ಇನ್ನು ಪರಪಿದರೊ ಪೇಳೆನಲ್ ಪೊಡೆಗೆಡೆದು(ಹೊಡೆದು-ಕೆಡೆದು) ಬಿದ್ದಿರ್ದ ಕರಿಘಟೆಗಳ ಅಟ್ಟೆಗಳ್ ಕಾಣಿಸಿದುವು ಆ ರಣದೊಳಾ ತಪೋಧಿಯ ಕಣ್ಗೆ=[ಭೂಮಿಗೆ ಆಧಾರವು ಇಲ್ಲದೆ ಹೋಗುವುದೆಂದು ತರಿಸಿದನೋ! ಅವನ ಸಹೋದರರು ಗಿರಿಗಳಿಗೆ ಬದಲಾಗಿ ತಂದು ಬೆಟ್ಟಗಳನ್ನು ಭೂಮಿಯಮೇಲೆ ಹೀಗೆ ಹರಡಿದರೊ, ಹೇಳು ಎನ್ನುವಂತೆ, ಆ ರಣರಂಗದಲ್ಲಿ ಆ ತಪೋನಿಧಿಯ ಕಣ್ಗಿಗೆ ಸತ್ತು ಬಿದ್ದಿದ್ದ ಆನೆಗಳ ದೇಹಗಳು ಕಾಣಿಸಿದುವು];
  • ತಾತ್ಪರ್ಯ:ಸಮುದ್ರಕ್ಕೆ ಸೇತುವೆಯನ್ನು ಕಟ್ಟುವಾಗ ಆ ರಾಘವೇಶ್ವರನು ಭೂಮಿಯಮೇಲೆ ಒಟ್ಟೊಟ್ಟಾಗಿ ಇದ್ದ ಬೆಟ್ಟಗಳೆಲ್ಲವನ್ನೂ (ತರಿಸಿದನೋ), ಭೂಮಿಗೆ ಆಧಾರವು ಇಲ್ಲದೆ ಹೋಗುವುದೆಂದು ತರಿಸಿದನೋ! ಅವನ ಸಹೋದರರು ಗಿರಿಗಳಿಗೆ ಬದಲಾಗಿ ತಂದು ಬೆಟ್ಟಗಳನ್ನು ಭೂಮಿಯಮೇಲೆ ಹೀಗೆ ಹರಡಿದರೊ, ಹೇಳು ಎನ್ನುವಂತೆ, ಆ ರಣರಂಗದಲ್ಲಿ ಆ ತಪೋನಿಧಿಯ ಕಣ್ಗಿಗೆ ಸತ್ತು ಬಿದ್ದಿದ್ದ ಆನೆಗಳ ದೇಹಗಳು ಕಾಣಿಸಿದುವು.
  • (ಪದ್ಯ-೪೭.)

ಪದ್ಯ :೪೮:

[ಸಂಪಾದಿಸಿ]

ತಟ್ಟುಗೆಡದಿಹ ವಾಜಿ ವಾರಣ ವರೂಥದಿಂ | ದಿಟ್ಟಣಿಸಿ ಬಿದ್ದ ರಾಕ್ಷಸ ಮನುಜ ಕಪಿಗಳಿಂ | ದಟ್ಟಿನಗಲಕೆ ಚೆಲ್ಲಿದ ಛತ್ರ ಚಾಮರ ಪತಾಕೆಗಳ ಮೆದೆಗಳಿಂದೆ ||
ಒಟ್ಟೊಟ್ಟಿಲಾಗಿ ಸೂಸಿದ ಪಲವು ಕೈದುಗಳ | ಬೆಟ್ಟಂಗಳಿಂ ಮಿದುಳ್‍ನೆಣ ವಸೆ ಕರುಳ್ಗಳಿಂ | ಕಟ್ಟುಗ್ರಮಾದ ರಣರಂಗದೊಳ್ ವಾಲ್ಮೀಕಿಮುನಿ ರಾಮನಂ ಕಂಡನು ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಟ್ಟುಗೆಡದಿಹ (ಶಕ್ತಿ+ಕೆಡೆದಿಹ)ವಾಜಿ ವಾರಣ ವರೂಥದಿಂದ ಇಟ್ಟಣಿಸಿ ಬಿದ್ದ ರಾಕ್ಷಸ ಮನುಜ ಕಪಿಗಳಿಂ ದಟ್ಟಿನ (ರಣಭೂಮಿಯ) ಅಗಲಕೆ ಚೆಲ್ಲಿದ ಛತ್ರ ಚಾಮರ ಪತಾಕೆಗಳ ಮೆದೆಗಳಿಂದೆ=[ಶಕ್ತಿ/ಜೀವ ಕಳೆದುಕೊಂಡ ಕುದುರೆ, ಆನೆ, ರಥಗಳಿಂದ ಒಟ್ಟಾಗಿ ಬಿದ್ದ ರಾಕ್ಷಸರು, ಮನುಜರು, ಕಪಿಗಳು, ಇವರಿಂದ ಯುದ್ಧಭೂನಿಯ ಉದ್ದಗಲಕ್ಕೆ ಚೆಲ್ಲಿಬಿದ್ದ ಛತ್ರ, ಚಾಮರ, ಪತಾಕೆಗಳ, ರಾಶಿಗಳಿಂದ]; ಒಟ್ಟೊಟ್ಟಿಲಾಗಿ ಸೂಸಿದ ಪಲವು ಕೈದುಗಳ ಬೆಟ್ಟಂಗಳಿಂ ಮಿದುಳ್‍ನೆಣ ವಸೆ (ಪಸೆ-ರಸ) ಕರುಳ್ಗಳಿಂ ಕಟ್ಟುಗ್ರಮಾದ ರಣರಂಗದೊಳ್ ವಾಲ್ಮೀಕಿಮುನಿ ರಾಮನಂ ಕಂಡನು=[ಒಟ್ಟೊಟ್ಟಿಗೆ ಹರಡಿಬಿದ್ದ ಹಲವು ಆಯುಧಗಳ ಬೆಟ್ಟಗಳಷ್ಟು ರಾಶಿಯ ಮಿದುಳಿನನೆಣ ಪಸೆ ಕರುಳುಗಳಿಂದ ಅತಿ ಉಗ್ರವಾದ ರಣರಂಗದಲ್ಲಿ ವಾಲ್ಮೀಕಿಮುನಿ ರಾಮನನ್ನು ಕಂಡನು].
  • ತಾತ್ಪರ್ಯ:ಆ ರಣರಂಗದಲ್ಲಿ ಶಕ್ತಿ/ಜೀವ ಕಳೆದುಕೊಂಡ ಕುದುರೆ, ಆನೆ, ರಥಗಳಿಂದಲೂ ಒಟ್ಟಾಗಿ ಬಿದ್ದ ರಾಕ್ಷಸರು, ಮನುಜರು, ಕಪಿಗಳು, ಇವರಿಂದಲೂ, ಯುದ್ಧಭೂನಿಯ ಉದ್ದಗಲಕ್ಕೆ ಚೆಲ್ಲಿಬಿದ್ದ ಛತ್ರ, ಚಾಮರ, ಪತಾಕೆಗಳ, ರಾಶಿಗಳಿಂದಲೂ; ಒಟ್ಟೊಟ್ಟಿಗೆ ಹರಡಿಬಿದ್ದ ಹಲವು ಆಯುಧಗಳ ಬೆಟ್ಟಗಳಷ್ಟು ರಾಶಿಯ ಮಿದುಳಿನನೆಣ ಪಸೆ ಕರುಳುಗಳಿಂದ ಅತಿ ಉಗ್ರವಾದ ರಣರಂಗದಲ್ಲಿ ವಾಲ್ಮೀಕಿಮುನಿ ರಾಮನನ್ನು ಕಂಡನು. (ಭಯಾನಕರಸ ವರ್ಣನೆಗಾಗಿ ಈ ಸಂಧರ್ಬ ಉಪಯೋಗಿಸಿದೆ)
  • (ಪದ್ಯ-೪೮.)

ಪದ್ಯ :೪೯:

[ಸಂಪಾದಿಸಿ]

ಅಂದು ಪುರಹೂತವೈರಿಯ ಸರ್ಪಶರದಿಂದೆ | ಪೊಂದಿದ ಸಮಸ್ತ ಬಲ ಸಹಿತ ಬಿದ್ದೆಚ್ಚರಳಿ | ದಂದದಿಂ ನಸು ಮಸುಳ್ದಾನನದ ನಿಶೆಯ ತಾವರೆವೊಲಾಗಿಹ ಕಣ್ಗಳ ||
ಕಂದಿದವಯವದ ಕಾಂತಿಗಳ ಕರ ಪಂಕರುಹ | ದಿಂದೆ ಕೆಲಕೋಸರಿಸೆ ಬಿದ್ದ ಬಿಲ್ಲಂಬುಗಳ | ನೊಂದ ಗಾಯದ ನೆತ್ತರೊರತೆಗಳ ರಾಮನಂ ಕಂಡು ಮುನಿ ಬೆರಗಾದನು ||49||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಂದು ಪುರಹೂತವೈರಿಯ ಸರ್ಪಶರದಿಂದೆ ಪೊಂದಿದ ಸಮಸ್ತ ಬಲ ಸಹಿತ ಬಿದ್ದು ಎಚ್ಚರಳಿದಂದದಿಂ=[ಅಂದು ಇಂದ್ರನವೈರಿಯಾದ ಇಂದ್ರಜಿತುವಿನ ಸರ್ಪಾಸ್ತ್ರದ ಪೆಟ್ಟನ್ನು ಹೊಂದಿದ ರಾಮನ ಸಮಸ್ತ ಸೈನ್ಯಸಹಿತ ಬಿದ್ದು ಎಚ್ಚರತಪ್ಪಿದ ರೀತಿಯಲ್ಲಿ,]; ನಸು ಮಸುಳ್ದ ಆನನದ ನಿಶೆಯ ತಾವರೆವೊಲಾಗಿಹ ಕಣ್ಗಳ ಕಂದಿದ ಅವಯವದ ಕಾಂತಿಗಳ ಕರ ಪಂಕರುಹ ದಿಂದೆ=[ಸ್ವಲ್ಪಮಾತ್ರಾ ಮಸುಕಾದ ಮುಖದ ರಾತ್ರಿಯ ತಾವರೆಯಂತಿರುವ ಕಣ್ಣುಗಳ, ಅವಯವದ ಕಾಂತಿಗಳು ಕಂದಿರುವ, ಕರಕಮಲದಿಂದ]; ಕೆಲಕೆ ಓಸರಿಸೆ ಬಿದ್ದ ಬಿಲ್ಲು ಅಂಬುಗಳ ನೊಂದ ಗಾಯದ ನೆತ್ತರ ಒರತೆಗಳ ರಾಮನಂ ಕಂಡು ಮುನಿ ಬೆರಗಾದನು=[ಪಕ್ಕಕ್ಕೆ ಓರೆಯಾಗಿ ಬಿದ್ದ ಬಿಲ್ಲು ಬಾಣಗಳ, ನೊಂದ ಗಾಯದ ರಕ್ತವು ಒಸರುತ್ತಿರುವ ರಾಮನನ್ನು ಕಂಡು ಮುನಿ ಚಕಿತನಾದನು].
  • ತಾತ್ಪರ್ಯ:ಅಂದು ಲಂಕಾಯುದ್ಧದಲ್ಲಿ, ಇಂದ್ರನವೈರಿಯಾದ ಇಂದ್ರಜಿತುವಿನ ಸರ್ಪಾಸ್ತ್ರದ ಪೆಟ್ಟನ್ನು ಹೊಂದಿದ ರಾಮನ ಸಮಸ್ತ ಸೈನ್ಯಸಹಿತ ಬಿದ್ದು ಎಚ್ಚರತಪ್ಪಿದ ರೀತಿಯಲ್ಲಿ,ಸ್ವಲ್ಪಮಾತ್ರಾ ಮಸುಕಾದ ಮುಖದ ರಾತ್ರಿಯ ತಾವರೆಯಂತಿರುವ ಕಣ್ಣುಗಳ, ಅವಯವದ ಕಾಂತಿಗಳು ಕಂದಿರುವ, ಕರಕಮಲದಿಂದ ಪಕ್ಕಕ್ಕೆ ಓರೆಯಾಗಿ ಬಿದ್ದ ಬಿಲ್ಲು ಬಾಣಗಳ, ನೊಂದ ಗಾಯದಿಂದ ರಕ್ತವು ಒಸರುತ್ತಿರುವ ರಾಮನನ್ನು ಕಂಡು ಮುನಿ ಚಕಿತನಾದನು.
  • (ಪದ್ಯ-೪೯.)

ಪದ್ಯ :೫೦:

[ಸಂಪಾದಿಸಿ]

ಈಕ್ಷಿಸಿ ಕಮಂಡಲೋದಕದಿಂದೆ ಮುನಿವರಂ | ಪ್ರೋಕ್ಷಿಸಿದೊಡುರಗ ತಲ್ಪದೊಳುಪ್ಪಡಿಸುವ | ಬ್ಜಾ ಕ್ಷನೀತಂ ತಪ್ಪದೆಂಬಂತೆ ಕಣ್ದೆರದು ವಾಲ್ಮೀಕಿಗಭಿನಮಿಸಲು ||
ಸಾಕ್ಷಾಜ್ಜಗನ್ನಾಥ ಸರ್ವಕಾರಣ ಸಕಲ | ರಾಕ್ಷಸಾಂತಕ ಭಕ್ತವತ್ಸಲ ಕೃಪಾಳು ನಿರ | ಪೇಕ್ಷ ರಾಘವ ರಾಮ ಚಿತ್ತಾವಧಾನಮೆಂದಾ ಮುನಿ ಪೊಗಳುತಿರ್ದನು ||50||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಈಕ್ಷಿಸಿ ಕಮಂಡಲ ಉದಕದಿಂದೆ ಮುನಿವರಂ ಪ್ರೋಕ್ಷಿಸಿದೊಡೆ ಉರಗತಲ್ಪದೊಳ್ ಉಪ್ಪಡಿಸುವ (ಏಳುವ) ಅಬ್ಜಾಕ್ಷನೀತಂ ತಪ್ಪದೆ ಎಂಬಂತೆ ಕಣ್ದೆರದು ವಾಲ್ಮೀಕಿಗೆ ಅಭಿನಮಿಸಲು=[ವಾಲ್ಮೀಕಿ ಮುನಿಯು, ಮೈಮರೆತ ರಾಮನನ್ನು ನೋಡಿ, ಕಮಂಡಲದ ನೀರಿನಿಂದ ಪ್ರೋಕ್ಷಿಸಿದಾಗ ಆದಿಶೇಷನಹಾಸಿಗೆಯಲ್ಲಿ ಮಲಗಿದ್ದು ಏಳುವ ಕಮಲಾಕ್ಷ- ತಪ್ಪದೆ ಇವನು ವಿಷ್ಣುವು ಎಂಬಂತೆ ಕಣ್ಣತೆರೆದು ವಾಲ್ಮೀಕಿಗೆ ಅಭಿನಮಿಸಿದನು]; ಸಾಕ್ಷಾಜ್ಜಗನ್ನಾಥ ಸರ್ವಕಾರಣ ಸಕಲ ರಾಕ್ಷಸಾಂತಕ ಭಕ್ತವತ್ಸಲ ಕೃಪಾಳು ನಿರಪೇಕ್ಷ ರಾಘವ ರಾಮ ಚಿತ್ತಾವಧಾನಮೆಂದು ಆ ಮುನಿ ಪೊಗಳುತಿರ್ದನು=[ಆಗ ಮುನಿ ಸಾಕ್ಷಾತ್ ಜಗನ್ನಾಥ, ಸರ್ವಕಾರಣ, ಸಕಲ ರಾಕ್ಷಸಾಂತಕ, ಭಕ್ತವತ್ಸಲ, ಕೃಪಾಳು, ನಿರಪೇಕ್ಷ, ರಾಘವ ರಾಮ, ನನ್ನ ವಿಜ್ಞಾಪನೆ (ಕೇಳು) ಎಂದು ಆ ಮುನಿ ಹೊಗಳುತ್ತಿದ್ದನು.].
  • ತಾತ್ಪರ್ಯ:ವಾಲ್ಮೀಕಿ ಮುನಿಯು, ಮೈಮರೆತ ರಾಮನನ್ನು ನೋಡಿ, ಕಮಂಡಲದ ನೀರಿನಿಂದ ಪ್ರೋಕ್ಷಿಸಿದಾಗ ಆದಿಶೇಷನಹಾಸಿಗೆಯಲ್ಲಿ ಮಲಗಿದ್ದು ಏಳುವ ಕಮಲಾಕ್ಷ- ತಪ್ಪದೆ ಇವನು ವಿಷ್ಣುವು ಎಂಬಂತೆ ಕಣ್ಣತೆರೆದು ವಾಲ್ಮೀಕಿಗೆ ಅಭಿನಮಿಸಿದನು; ಆಗ ಮುನಿ ಸಾಕ್ಷಾತ್ ಜಗನ್ನಾಥ, ಸರ್ವಕಾರಣ, ಸಕಲ ರಾಕ್ಷಸಾಂತಕ, ಭಕ್ತವತ್ಸಲ, ಕೃಪಾಳು, ನಿರಪೇಕ್ಷ, ರಾಘವ ರಾಮ, ನನ್ನ ವಿಜ್ಞಾಪನೆ (ಕೇಳು) ಎಂದು ಆ ಮುನಿ ಹೊಗಳುತ್ತಿದ್ದನು.
  • (ಪದ್ಯ-೫೦.)I-XI

ಪದ್ಯ :೫೧:

[ಸಂಪಾದಿಸಿ]

ಬಳಿಕ ರಾಘವನ ಸಿರಿಮುಡಿಗೆ ನಭದಿಂದೆ ಪೂ | ಮಳೆ ಕರೆದುದುತ್ಸವದೊಳಮರ ದುಂದುಭಿಗಳುರೆ | ಮೊಳಗಿದವು ಋಷಿಮಂತ್ರಪೂತ ಜಲದಿಂದ ಭರತಾದಿಗಳ್ ಜೀವಿಸಿದರು ||
ತಳೆದರನಿಮಿಷರಮೃತಮಂ ಬಿದ್ದ ಪಡೆಯ ಮೇ | ಲುಳಿಯದೆ ಸಮಸ್ತಸೈನಿಕಮೆದ್ದುದಾಗ ಪೆರೆ | ಗಳೆದ ಫಣಿ ಕುಲದಂತೆ ನಲಿದು ಚತುರ್ಬಲಂ ಪೇಳಲೇನಚ್ಚರಿಯನು ||51|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ರಾಘವನ ಸಿರಿಮುಡಿಗೆ ನಭದಿಂದೆ ಪೂಮಳೆ ಕರೆದುದು ಉತ್ಸವದೊಳು=[ಬಳಿಕ ರಾಘವನ ತಲೆಯಮೇಲೆ ಆಕಾಶದಿಂದ ಹೂವಿನಮಳೆ ಮಳೆಯನ್ನು ಆನಂದಿಂದ ಕರೆದರು. ]; ಅಮರ ದುಂದುಭಿಗಳು ಉರೆ ಮೊಳಗಿದವು ಋಷಿಮಂತ್ರಪೂತ ಜಲದಿಂದ ಭರತಾದಿಗಳ್ ಜೀವಿಸಿದರು=[ದೇವತೆಗಳ ವಾದ್ಯ ದುಂದುಭಿಗಳು ಬಹಳವಾಗಿ ಮೊಳಗಿದವು. ಋಷಿಮಂತ್ರಪೂತ/ ವಾಲ್ಮೀಕಿಮುನಿಗಳ ಮಂತ್ರಿಸಿದ ಜಲದ ಪ್ರೋಕ್ಷಿಣದಿಂದ ಭರತಾದಿ ಲಕ್ಷ್ಮಣ ಶತ್ರುಘ್ನರು ಜೀವಿಸಿದರು/ ಎಚ್ಚರಗೊಂಡರು.]; ತಳೆದರು ಅನಿಮಿಷರ್ ಅಮೃತಮಂ ಬಿದ್ದ ಪಡೆಯಮೇಲೆ ಉಳಿಯದೆ ಸಮಸ್ತ ಸೈನಿಕಂ ಎದ್ದುದಾಗ ಪೆರೆಗಳೆದ ಫಣಿ ಕುಲದಂತೆ ನಲಿದು ಚತುರ್ಬಲಂ ಪೇಳಲೇನು ಅಚ್ಚರಿಯನು=[ಅನಿಮಿಷರಾದ ದೇವತೆಗಳು ಅಮೃತವನ್ನು ಬಿದ್ದ ಸೈನ್ಯದಮೇಲೆ ತಳೆದರು. ಆಗ ಒಬ್ಬರೂ ಉಳಿಯದೆ ಸಮಸ್ತ ಸೈನಿಕರೂ (ಪ್ರಾಣಿಗಳ ಸಹಿತ) ಜೀವಿಸಿ ಎದ್ದರು. ಅದು ಪೆರೆಗಳೆದ ಸರ್ಪಕುಲದಂತೆ ಕಾಣಿಸಿತು, ಚತುರ್ಬಲ ಸೈನ್ಯವೂ ಜೀವಿಸಿ ನಲಿದರು. ಈ ಅಚ್ಚರಯನ್ನು ಏನು ಹೇಳಲಿ! ಎಂದನು ಜೈಮಿನಿ ಋಷಿ.
  • ತಾತ್ಪರ್ಯ:ಬಳಿಕ ರಾಘವನ ತಲೆಯಮೇಲೆ ಆಕಾಶದಿಂದ ಹೂವಿನಮಳೆ ಮಳೆಯನ್ನು ಆನಂದಿಂದ ಕರೆದರು. ದೇವತೆಗಳ ವಾದ್ಯ ದುಂದುಭಿಗಳು ಬಹಳವಾಗಿ ಮೊಳಗಿದವು. ಋಷಿಮಂತ್ರಪೂತ/ ವಾಲ್ಮೀಕಿಮುನಿಗಳ ಮಂತ್ರಿಸಿದ ಜಲದ ಪ್ರೋಕ್ಷಿಣದಿಂದ ಭರತಾದಿ ಲಕ್ಷ್ಮಣ ಶತ್ರುಘ್ನರು ಜೀವಿಸಿದರು/ ಎಚ್ಚರಗೊಂಡರು. ಅನಿಮಿಷರಾದ ದೇವತೆಗಳು ಅಮೃತವನ್ನು, ಬಿದ್ದ ಸೈನ್ಯದಮೇಲೆ ತಳೆದರು. ಆಗ ಒಬ್ಬರೂ ಉಳಿಯದೆ ಸಮಸ್ತ ಸೈನಿಕರೂ (ಪ್ರಾಣಿಗಳ ಸಹಿತ) ಜೀವಿಸಿ ಎದ್ದರು. ಅದು ಪೆರೆಗಳೆದ ಸರ್ಪಕುಲದಂತೆ ಕಾಣಿಸಿತು, ಚತುರ್ಬಲ ಸೈನ್ಯವೂ ಜೀವಿಸಿ ನಲಿದರು. ಈ ಅಚ್ಚರಯನ್ನು ಏನು ಹೇಳಲಿ! ಎಂದನು ಜೈಮಿನಿ ಋಷಿ.
  • (ಪದ್ಯ-೫೧.)

ಪದ್ಯ :೫೨:

[ಸಂಪಾದಿಸಿ]

ಬರಿಸಿದಂ ನೆನೆದು ಸುರಧೇನುವಂ ವಾಲ್ಮೀಕಿ | ಪರಮ ಸಂಪ್ರೀತಿಯಿಂ ಬೇಡಿದ ಪದಾರ್ಥಮಂ | ತರಿಸಿದಂ ದುಗ್ಧಾಭಿಷೇಕಮಂ ಮಾಡಿಸಿದನಾ ರಾಘವೇಶ್ವರಂಗೆ ||
ಭರತಾದಿಗಳ್ವೆರಸಿ ಕುಳ್ಳಿರ್ದ ಬಳಿಕ ಪತಿ | ಕರಿಸಿ ಕಾಕುತ್ಸ್ಥನಂ ಕೊಂಡಾಡಿ ನೇಮದಿಂ | ಕರಿಸಿ ಕುಶಲವರಂ ಪದಾಬ್ಜದೊಳ್ ಕೆಡಹಿ ಮುನಿವರನೊಯ್ಯನಿಂತೆಂದನು ||52||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬರಿಸಿದಂ ನೆನೆದು ಸುರಧೇನುವಂ ವಾಲ್ಮೀಕಿ ಪರಮ ಸಂಪ್ರೀತಿಯಿಂ ಬೇಡಿದ ಪದಾರ್ಥಮಂ ತರಿಸಿದಂ ದುಗ್ಧಾಭಿಷೇಕಮಂ ಮಾಡಿಸಿದನು ಆ ರಾಘವೇಶ್ವರಂಗೆ=[ಮುನಿಯು, ಮನಸ್ಸಿನಲ್ಲಿ ನೆನೆದು ಕಾಮಧೇನುವನ್ನು ದೇವಲೋಕದಿಂದ ಬರುವಂತೆಮಾಡಿದನು. ವಾಲ್ಮೀಕಿ ಪರಮ ಪ್ರೀತಿಯಿಂದ ಎಲ್ಲರಿಗೂ ಅವರು ಅಪೇಕ್ಷಿಸಿದ ಪದಾರ್ಥಗಳನ್ನು ತರಿಸಿ ಕೊಟ್ಟನು. ಆ ರಾಘವೇಶ್ವರ ರಾಮನಿಗೆ ಕ್ಷೀರದ ಅಭಿಷೇಕವನ್ನು ಮಾಡಿಸಿದನು.]; ಭರತಾದಿಗಳ್ ವೆರಸಿ ಕುಳ್ಳಿರ್ದ ಬಳಿಕ ಪತಿಕರಿಸಿ(ಉದ್ದೇಶಿಸಿ-ಕುರಿತು) ಕಾಕುತ್ಸ್ಥನಂ ಕೊಂಡಾಡಿ ನೇಮದಿಂ ಕರಿಸಿ ಕುಶಲವರಂ ಪದಾಬ್ಜದೊಳ್ ಕೆಡಹಿ ಮುನಿವರನೊಯ್ಯನೆ ಇಂತೆಂದನು=[ಭರತ ಮೊದಲಾದವರು ಕುಳಿತ ಬಳಿಕ ಕಾಕುತ್ಸ್ಥ ರಾಮನನ್ನು ಉದ್ದೇಶಿಸಿ ಅವನನ್ನು ಕೊಂಡಾಡಿ ಕುಶಲವರನ್ನು ನೇಮದಿಂದ/ ರಾಮನ ಅನುಮತಿ ಪಡೆದು ಕರಿಸಿ ಅವನ ಪಾದಗಳಿಗೆ ಅವರಿಂದ ನಮಸ್ಕಾರ ಮಾಡಿಸಿ ಮುನಿವರನು ಮೆಲ್ಲಗೆ ಹೀಗೆ ಹೇಳಿದನು.]
  • ತಾತ್ಪರ್ಯ:ವಾಲ್ಮೀಕಿಯು ಮನಸ್ಸಿನಲ್ಲಿ ನೆನೆದು ಕಾಮಧೇನುವನ್ನು ದೇವಲೋಕದಿಂದ ಬರುವಂತೆಮಾಡಿದನು. ವಾಲ್ಮೀಕಿ ಪರಮ ಪ್ರೀತಿಯಿಂದ ಎಲ್ಲರಿಗೂ ಅವರು ಅಪೇಕ್ಷಿಸಿದ ಪದಾರ್ಥಗಳನ್ನು ತರಿಸಿ ಕೊಟ್ಟನು. ಆ ರಾಘವೇಶ್ವರ ರಾಮನಿಗೆ ಕ್ಷೀರದ ಅಭಿಷೇಕವನ್ನು ಮಾಡಿಸಿದನು. ಭರತ ಮೊದಲಾದವರು ಕುಳಿತ ಬಳಿಕ ಕಾಕುತ್ಸ್ಥ ರಾಮನನ್ನು ಉದ್ದೇಶಿಸಿ ಅವನನ್ನು ಕೊಂಡಾಡಿ ಕುಶಲವರನ್ನು ನೇಮದಿಂದ/ ರಾಮನ ಅನುಮತಿ ಪಡೆದು ಕರಿಸಿ ಅವನ ಪಾದಗಳಿಗೆ ಅವರಿಂದ ನಮಸ್ಕಾರ ಮಾಡಿಸಿ ಮುನಿವರನು ಮೆಲ್ಲಗೆ ಹೀಗೆ ಹೇಳಿದನು.
  • (ಪದ್ಯ-೫೨.)

ಪದ್ಯ :೫೩:

[ಸಂಪಾದಿಸಿ]

ರಾಜೇಂದ್ರ ಕೋಪಮಂ ಮಾಡದಿರ್ ನಿನ್ನಂ ಕೃ | ಪಾಜಲಧಿಯೆಂದು ಮರೆವೊಕ್ಕರಂ ಕಾವನೆಂ | ದೀಜಗಂ ಬಣ್ಣಿಪುದು ನಿನ್ನ ತನುಸಂಭವರ್ ಜಾನಕಿಯ ಮಕ್ಕಳಿವರು ||
ಓಜೆತಪ್ಪಿದರಾಶ್ರಮದೊಳಿದ್ದುದಿಲ್ಲ ಮಖ | ಯಾಜನಕೆ ವರುಣಂ ಕರೆಸಲಾಗಿ ಪೋದೆನೀ | ವ್ಯಾಜಮಂ ತಾನರಿಯೆನಪರಾಧಮೆನಿತುಳ್ಳೊಡಂ ಸೈರಿಸುವುದೆಂದನು ||53||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಜೇಂದ್ರ ಕೋಪಮಂ ಮಾಡದಿರ್ ನಿನ್ನಂ ಕೃಪಾಜಲಧಿಯೆಂದು ಮರೆವೊಕ್ಕರಂ ಕಾವನೆಂದು ಈ ಜಗಂ ಬಣ್ಣಿಪುದು=[ರಾಜೇಂದ್ರ ರಾಮನೇ ಕೋಪವನ್ನು ಮಾಡಬೇಡ. ನಿನ್ನನ್ನು ಕೃಪಾಸಮುದ್ರನೆಂದೂ ಮರೆಹೊಕ್ಕವರನ್ನು ಕಾಯುವವನೆಂದು ಈ ಜಗತ್ತು ಬಣ್ಣಿಸುವುದು.]; ನಿನ್ನ ತನುಸಂಭವರ್ ಜಾನಕಿಯ ಮಕ್ಕಳಿವರು ಓಜೆತಪ್ಪಿದರು=[ಇವರು ಕುಶ ಲವರು ನಿನ್ನ ಮಕ್ಕಳು/ತನುಸಂಭವರು, ಇವರು ಜಾನಕಿಯ ಮಕ್ಕಳು; ತಿಳುವಳಿಕಯಲ್ಲಿ ತಪ್ಪಿದರು.]; ಆಶ್ರಮದೊಳಿದ್ದುದಿಲ್ಲ ಮಖಯಾಜನಕೆ ವರುಣಂ ಕರೆಸಲಾಗಿ ಪೋದೆನು ಈ=[ತಾನು ಆಶ್ರಮದಲ್ಲಿ ಇದ್ದಿರಲಿಲ್ಲ ಯಜ್ಞ-ಯಾಜನಕ್ಕಾಗಿ ವರುಣನು ಕರೆಸಿದ್ದರಿಂದ ಪಾತಾಳ ಲೋಕಕ್ಕೆ ಹೋಗಿದ್ದೆ.]; ಈ ವ್ಯಾಜಮಂ ತಾನರಿಯೆನು ಅಪರಾಧಮೆನಿತು ಉಳ್ಳೊಡಂ ಸೈರಿಸುವುದು ಎಂದನು=[ಈ ಯುದ್ಧದ ವಿಷಯವನ್ನು ತಾನು ತಿಳಿದಿಲ್ಲ; ಅಪರಾಧ ಎಷ್ಟೇ ಇದ್ದರೂ ನೀನು ಸೈರಿಸಬೇಕು, ಎಂದನು].
  • ತಾತ್ಪರ್ಯ:ಮುನಿಯು ರಾಮನನ್ನು ಕುರಿತು, ರಾಜೇಂದ್ರ ರಾಮನೇ ಕೋಪವನ್ನು ಮಾಡಬೇಡ. ನಿನ್ನನ್ನು ಕೃಪಾಸಮುದ್ರನೆಂದೂ ಮರೆಹೊಕ್ಕವರನ್ನು ಕಾಯುವವನೆಂದು ಈ ಜಗತ್ತು ಬಣ್ಣಿಸುವುದು. ಇವರು ಕುಶ ಲವರು ನಿನ್ನ ಮಕ್ಕಳು/ತನುಸಂಭವರು, ಇವರು ಜಾನಕಿಯ ಮಕ್ಕಳು; ತಿಳುವಳಿಕಯಲ್ಲಿ ತಪ್ಪಿದರು. ತಾನು ಆಶ್ರಮದಲ್ಲಿ ಇದ್ದಿರಲಿಲ್ಲ ಯಜ್ಞ-ಯಾಜನಕ್ಕಾಗಿ ವರುಣನು ಕರೆಸಿದ್ದರಿಂದ ಪಾತಾಳ ಲೋಕಕ್ಕೆ ಹೋಗಿದ್ದೆ. ಈ ಯುದ್ಧದ ವಿಷಯವನ್ನು ತಾನು ತಿಳಿದಿಲ್ಲ; ಅಪರಾಧ ಎಷ್ಟೇ ಇದ್ದರೂ ನೀನು ಸೈರಿಸಬೇಕು, ಎಂದನು.
  • (ಪದ್ಯ-೫೩.)

ಪದ್ಯ :೫೪:

[ಸಂಪಾದಿಸಿ]

ಜಾತಂ ವಿನೀತನಾಗಲಿ ಧೂರ್ತನಾಗಿರಲಿ | ತಾತಂಗೆ ವಿರಹಿತವೆ ನೋಡದಿರ್ ಬಾಲಕರ | ತೀತಮಂ ಕ್ಷಮಿಸೆಂದು ವಾಲ್ಮೀಕಿ ನುಡಿಯೆ ರಾಘವ ನೂರ್ಮಿಳಾಪತಿಯನು ||
ಸೀತೆ ಸುತರಂ ಪಡೆದಳೆಂತೆನೆ ತವಾಜ್ಞೆಯಿಂ | ಶ್ವೇತನದಿಯಂ ದಾಂಟಿ ಪೂರ್ಣಗರ್ಭಿಣಿಯಾದ | ಭೂ ತನುಜೆಯಂ ಕಾನನದೊಳಿರಿಸಿ ಬಂದೆನಲ್ಲದೆ ಮುಂದರಿಯೆನೆಂದನು ||54||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಜಾತಂ ವಿನೀತನಾಗಲಿ ಧೂರ್ತನಾಗಿರಲಿ ತಾತಂಗೆ ವಿರಹಿತವೆ ನೋಡದಿರ್ ಬಾಲಕರ ಅತೀತಮಂ ಕ್ಷಮಿಸೆಂದು ವಾಲ್ಮೀಕಿ ನುಡಿಯೆ=[ಮಗನು ವಿನಯಶೀಲನಾಗಲಿ, ಅವಿಧೇಯನಾಗಿರಲಿ ತಂದೆಗೆ ತಿರಸ್ಕರಿಸಲು ಯೋಗ್ಯನೇ? ಬಾಲಕರ ಅತಿಕ್ರಮ ಕಾರ್ಯವನ್ನು ನೋಡಬೇಡ/ ಲೆಕ್ಕಿಸಬೇಡ; ಅವರನ್ನು ಕ್ಷಮಿಸು, ಎಂದು ವಾಲ್ಮೀಕಿ ನುಡಿಯಲು]; ರಾಘವನು ಊರ್ಮಿಳಾಪತಿಯನು ಸೀತೆ ಸುತರಂ ಪಡೆದಳೆಂತೆನೆ ತವಾಜ್ಞೆಯಿಂ ಶ್ವೇತನದಿಯಂ ದಾಂಟಿ ಪೂರ್ಣಗರ್ಭಿಣಿಯಾದ ಭೂ ತನುಜೆಯಂ ಕಾನನದೊಳು ಇರಿಸಿ ಬಂದೆನು ಅಲ್ಲದೆ ಮುಂದರಿಯೆನೆಉ ಎಂದನು=[ರಾಘವನು ಊರ್ಮಿಳಾಪತಿ ಲಕ್ಷ್ಮಣನನ್ನು ಕುರಿತು, ಸೀತೆ ಮಕ್ಕಳನ್ನು ಹೇಗೆ ಪಡೆದಳು, ಎನ್ನಲು, ನಿನ್ನ ಆಜ್ಞೆಯಂತೆ ಗಂಗಾನದಿಯನ್ನು ದಾಟಿ ಪೂರ್ಣಗರ್ಭಿಣಿಯಾದ ಭೂತನುಜೆ ಸೀತೆಯನ್ನು ಕಾಡಿನಲ್ಲಿ ಇರಿಸಿ ಬಂದೆನು, ಅಲ್ಲದೆ ಮುಂದೆ ಏನಾಯಿತೆಂದು ಅರಿಯೆನು, ಎಂದನು ].
  • ತಾತ್ಪರ್ಯ:(ಮುನಿಯು,) ಮಗನು ವಿನಯಶೀಲನಾಗಲಿ, ಅವಿಧೇಯನಾಗಿರಲಿ ತಂದೆಗೆ ತಿರಸ್ಕರಿಸಲು ಯೋಗ್ಯನೇ? ಬಾಲಕರ ಅತಿಕ್ರಮ ಕಾರ್ಯವನ್ನು ನೋಡಬೇಡ/ ಲೆಕ್ಕಿಸಬೇಡ; ಅವರನ್ನು ಕ್ಷಮಿಸು, ಎಂದು ವಾಲ್ಮೀಕಿ ನುಡಿಯಲು]; ರಾಘವನು ಊರ್ಮಿಳಾಪತಿ ಲಕ್ಷ್ಮಣನನ್ನು ಕುರಿತು, ಸೀತೆ ಮಕ್ಕಳನ್ನು ಹೇಗೆ ಪಡೆದಳು, ಎನ್ನಲು, ನಿನ್ನ ಆಜ್ಞೆಯಂತೆ ಗಂಗಾನದಿಯನ್ನು ದಾಟಿ ಪೂರ್ಣಗರ್ಭಿಣಿಯಾದ ಭೂತನುಜೆ ಸೀತೆಯನ್ನು ಕಾಡಿನಲ್ಲಿ ಇರಿಸಿ ಬಂದೆನು, ಅಲ್ಲದೆ ಮುಂದೆ ಏನಾಯಿತೆಂದು ಅರಿಯೆನು, ಎಂದನು.
  • (ಪದ್ಯ-೫೪.)

ಪದ್ಯ :೫೫:

[ಸಂಪಾದಿಸಿ]

ಇಂತೆಂದು ಲಕ್ಷ್ಮಣಂ ನುಡಿಯೆ ವಾಲ್ಮೀಕಿ ಸಮ | ನಂತರದೊಳೇಕಾಕಿಯಾಗಿ ಜಾನಕಿ ವಿರಹ | ಸಂತಾಪದಿಂದಡವಿಯೊಳ್ ತೊಳಲುತಿರ್ದುದಂ ಕಂಡು ತನ್ನಾಶ್ರಮಕ್ಕೆ ||
ಸಂತೈಸಿ ಕೂಡೆ ಕೊಂಡೊಯ್ದುದಂ ಬಳಿಕಲ್ಲಿ | ಸಂತತಿಗಳಾದುದಂ ತಾನವರ್ಗಿಲ್ಲಿ ಪ | ರ್ಯಂತರಂ ಮಾಡಿಸಿದ ಕೃತ್ಯಂಗಳೆಲ್ಲಮಂ ಪೇಳ್ದಂ ರಘೂದ್ವಹಂಗೆ ||55||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಂತೆಂದು ಲಕ್ಷ್ಮಣಂ ನುಡಿಯೆ ವಾಲ್ಮೀಕಿ ಸಮನಂತರದೊಳು (ಆ ಬಳಿಕ) ಏಕಾಕಿಯಾಗಿ ಜಾನಕಿ ವಿರಹ ಸಂತಾಪದಿಂದ=[ಹೀಗೆಂದು ಲಕ್ಷ್ಮಣನು ಹೇಳಲು, ವಾಲ್ಮೀಕಿಮುನಿಯು,ಆ ಬಳಿಕ ತಾನು ಕಾಡಿಗೆ ಹೋದಾಗ, ಏಕಾಂಗಿಯಾಗಿ ಜಾನಕಿಯು ದಿಕ್ಕಿಲ್ಲದೆ ವಿರಹ ಮತ್ತು ಶೋಕದಿಂದ]; ಅಡವಿಯೊಳ್ ತೊಳಲುತಿರ್ದುದಂ ಕಂಡು ತನ್ನ ಆಶ್ರಮಕ್ಕೆ ಸಂತೈಸಿ ಕೂಡೆ ಕೊಂಡೊಯ್ದುದಂ=[ಅಡವಿಯಲ್ಲಿ ತೊಳಲಾಡುತ್ತಿದ್ದುದನ್ನು ಕಂಡು ತನ್ನ ಆಶ್ರಮಕ್ಕೆ ಅವಳನ್ನು ಸಮಾಧಾನಪಡಿಸಿ ಜೊತೆಯಲ್ಲಿ ಕೆರದುಕೊಂಡುಹೋದುದನ್ನೂ]; ಬಳಿಕ ಅಲ್ಲಿ ಸಂತತಿಗಳು ಆದುದಂ ತಾನು ಅವರ್ಗೆ ಇಲ್ಲಿ ಪರ್ಯಂತರಂ ಮಾಡಿಸಿದ ಕೃತ್ಯಂಗಳ ಎಲ್ಲಮಂ ಪೇಳ್ದಂ ರಘೂದ್ವಹಂಗೆ=[ ಬಳಿಕ ಅಲ್ಲಿ ಅವಳಿಗೆ ಅವಳಿಮಕ್ಕಳು ಆದುದನ್ನೂ, ನಂತರ ತಾನು ಅವರಿಗೆ ಇಲ್ಲಿಯ ಪರಿಯಂತರ ಮಾಡಿಸಿದ ಜಾತಕರ್ಮ ಮೊದಲಾದ ಕಾರ್ಯಗಳೆಲ್ಲವನ್ನೂ ರಾಮನಿಗೆ ಹೇಳಿದನು.]
  • ತಾತ್ಪರ್ಯ:ಹೀಗೆಂದು ಲಕ್ಷ್ಮಣನು ಹೇಳಲು, ವಾಲ್ಮೀಕಿಮುನಿಯು,ಆ ಬಳಿಕ ತಾನು ಕಾಡಿಗೆ ಹೋದಾಗ, ಏಕಾಂಗಿಯಾಗಿ ಜಾನಕಿಯು ದಿಕ್ಕಿಲ್ಲದೆ ವಿರಹ ಮತ್ತು ಶೋಕದಿಂದ ಅಡವಿಯಲ್ಲಿ ತೊಳಲಾಡುತ್ತಿದ್ದುದನ್ನು ಕಂಡು ತನ್ನ ಆಶ್ರಮಕ್ಕೆ ಅವಳನ್ನು ಸಮಾಧಾನಪಡಿಸಿ ಜೊತೆಯಲ್ಲಿ ಕೆರದುಕೊಂಡುಹೋದುದನ್ನೂ ಬಳಿಕ ಅಲ್ಲಿ ಅವಳಿಗೆ ಅವಳಿಮಕ್ಕಳು ಆದುದನ್ನೂ, ನಂತರ ತಾನು ಅವರಿಗೆ ಇಲ್ಲಿಯ ಪರಿಯಂತರ ಮಾಡಿಸಿದ ಜಾತಕರ್ಮ ಮೊದಲಾದ ಕಾರ್ಯಗಳೆಲ್ಲವನ್ನೂ ರಾಮನಿಗೆ ಹೇಳಿದನು.
  • (ಪದ್ಯ-೫೫.)

ಪದ್ಯ :೫೬:

[ಸಂಪಾದಿಸಿ]

ಬಳಿಕ ವಾಲ್ಮೀಕಿ ನಿಜಶಿಷ್ಯರಂ ಸದನಕ್ಕೆ | ಕಳುಹಿ ತರಿಸಿದನಮಲ ವಲ್ಲಕಿಗಳಂ ತನ್ನ | ಬಳಿಯೊಳಭ್ಯಾಸಮಂ ಮಾಡಿಸಿದ ರಾಮಚಾರಿತ್ರಮಂ ತುದಿಮೊದಲ್ಗೆ ||
ಲಲಿತ ಸಾಳಂಗ ಸಾವೇರಿ ಗುಜ್ಜರಿ ಗೌಳ | ಪಳಮಂಜರಿಗಳೆಂಬ ವಿವಿಧ ರಾಗಂಗಳಂ | ಬಳಸಿ ಪಾಡಿಸಿದ ನೆರಡನೆಯ ತುಂಬುರು ನಾರದರ ತೆರದಿ ಕುಶ ಲವರನು ||56||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ವಾಲ್ಮೀಕಿ ನಿಜಶಿಷ್ಯರಂ ಸದನಕ್ಕೆ ಕಳುಹಿ ತರಿಸಿದನು ಅಮಲ ವಲ್ಲಕಿಗಳಂ (ವೀಣೆ)=[ಬಳಿಕ ವಾಲ್ಮೀಕಿ ತನ್ನ ಶಿಷ್ಯರನ್ನು ಆಶ್ರಮದ ಸದನಕ್ಕೆ ಕಳುಹಿಸಿ ಉತ್ತಮ ವೀಣೆಗಳನ್ನು ತರಿಸಿದನು.]; ತನ್ನ ಬಳಿಯೊಳ್ ಅಭ್ಯಾಸಮಂ ಮಾಡಿಸಿದ ರಾಮಚಾರಿತ್ರಮಂ ತುದಿಮೊದಲ್ಗೆ ಲಲಿತ ಸಾಳಂಗ ಸಾವೇರಿ ಗುಜ್ಜರಿ ಗೌಳ ಪಳಮಂಜರಿಗಳೆಂಬ ವಿವಿಧ ರಾಗಂಗಳಂ ಬಳಸಿ ಪಾಡಿಸಿದನೆಉ ಎರಡನೆಯ ತುಂಬುರು ನಾರದರ ತೆರದಿ ಕುಶ ಲವರನು=[ವಾಲ್ಮೀಕಿಯು ತನ್ನ ಬಳಿಯಲ್ಲಿ ಅಭ್ಯಾಸವನ್ನು ಮಾಡಿಸಿದ ರಾಮಚಾರಿತ್ರ /ರಾಮಾಯಣವನ್ನು ಮೊದಲಿಂದ ತುದಿಯವರೆಗೆ ಲಲಿತ, ಸಾಳಂಗ, ಸಾವೇರಿ, ಗುಜ್ಜರಿ, ಗೌಳ, ಪಳಮಂಜರಿಗಳೆಂಬ ವಿವಿಧ ರಾಗಗಳನ್ನು ಬಳಸಿ ಎರಡನೆಯ ತುಂಬುರು ನಾರದರ ರೀತಿಯಲ್ಲಿ ಕುಶ ಲವರಿಂದ ಹಾಡಿಸಿದನು.]
  • ತಾತ್ಪರ್ಯ:ಬಳಿಕ ವಾಲ್ಮೀಕಿ ತನ್ನ ಶಿಷ್ಯರನ್ನು ಆಶ್ರಮದ ಸದನಕ್ಕೆ ಕಳುಹಿಸಿ ಉತ್ತಮ ವೀಣೆಗಳನ್ನು ತರಿಸಿದನು. ವಾಲ್ಮೀಕಿಯು ತನ್ನ ಬಳಿಯಲ್ಲಿ ಅಭ್ಯಾಸವನ್ನು ಮಾಡಿಸಿದ ರಾಮಚಾರಿತ್ರ /ರಾಮಾಯಣವನ್ನು ಮೊದಲಿಂದ ತುದಿಯವರೆಗೆ ಲಲಿತ, ಸಾಳಂಗ, ಸಾವೇರಿ, ಗುಜ್ಜರಿ, ಗೌಳ, ಪಳಮಂಜರಿಗಳೆಂಬ ವಿವಿಧ ರಾಗಗಳನ್ನು ಬಳಸಿ ಎರಡನೆಯ ತುಂಬುರು ನಾರದರ ರೀತಿಯಲ್ಲಿ ಕುಶ ಲವರಿಂದ ಹಾಡಿಸಿದನು.
  • (ಪದ್ಯ-೫೬.)

ಪದ್ಯ :೫೭:

[ಸಂಪಾದಿಸಿ]

ವೀಣೆಯಂ ಕೈಗಿತ್ತು ಬಾಲಕರ ವದನದೊಳ್ | ವಾಣಿ ತಾಂ ನೆಲಸಿದಳೊ ಗಾನದೇವತೆಯ ಮೈ | ಗಾಣಿಕೆಯೊ ಮೋಹನದ ತನಿರಸವೊ ಸೊಗಯಿಸುವ ಕರ್ಣಾಮೃತವೋ ಪೇಳೆನೆ ||
ಜಾಣುಣ್ಮೆ ಜೋಕೆಯಿಂ ಜತಿ ರೀತಿ ತಾಳ ಪ್ರ | ಮಾಣ ಕಂಪಿತ ಮೂರ್ಛೆ ರಸ ಪಾಡು ಬೆಡಗು ಬಿ | ನ್ನಾಣಲಯ ಮಾಹತ ಪ್ರತ್ಯಾಹತ ವ್ಯಾಪ್ತಿಯರಿದು ಕೇಳಿಸಿದರವರು ||57||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವೀಣೆಯಂ ಕೈಗಿತ್ತು ಬಾಲಕರ ವದನದೊಳ್ ವಾಣಿ ತಾಂ ನೆಲಸಿದಳೊ ಗಾನದೇವತೆಯ ಮೈಗಾಣಿಕೆಯೊ ಮೋಹನದ ತನಿರಸವೊ ಸೊಗಯಿಸುವ ಕರ್ಣಾಮೃತವೋ ಪೇಳೆನೆ=[ವೀಣೆಯನ್ನು ಬಾಲಕರ ಕೈಗೆ ಕೊಟ್ಟು, ಅವರ ಮುಖದಲ್ಲಿ ಸರಸ್ವತಿಯು ತಾನೇ ನೆಲಸಿರುವಳೋ! ಗಾನದೇವತೆಯ ಪ್ರತ್ಯಕ್ಷರೂಪವೊ ಮೋಹನದ ತನಿರಸವೊ, ಸೊಗಯಿಸುವ/ಆನಂದಕೊಡುವ ಕರ್ಣಾಮೃತವೋ, ಹೇಳು ಎನ್ನುವಂತೆ]; ಜಾಣುಣ್ಮೆ ಜೋಕೆಯಿಂ ಜತಿ ರೀತಿ ತಾಳ ಪ್ರಮಾಣ ಕಂಪಿತ ಮೂರ್ಛೆ ರಸ ಪಾಡು ಬೆಡಗು ಬಿನ್ನಾಣಲಯ ಮಾಹತ ಪ್ರತ್ಯಾಹತ ವ್ಯಾಪ್ತಿಯರಿದು ಕೇಳಿಸಿದರು ಅವರು=[ಚಮತ್ಕಾರದ ರಾಗಗತಿ ಉಂಟಾಗುವಂತೆ ಜೋಕೆಯಿಂದ ಜತಿ, ರೀತಿ, ತಾಳ, ಪ್ರಮಾಣ, ಕಂಪಿತ,(ಪಲಕು) ಮೂರ್ಛೆ, ರಸ, ಹಾಡು, ಬೆಡಗು, ಬಿನ್ನಾಣ, ಲಯ, ಆಹತ, ಪ್ರತ್ಯಾಹತ, ವ್ಯಾಪ್ತಿಗಳನ್ನು ಅರಿತು ಲವಕುಶರು ಹಾಡಿ ರಾಮ ನತ್ತು ಸಭಿಕರಿಗೆ ಕೇಳಿಸಿದರು.]
  • ತಾತ್ಪರ್ಯ:ವೀಣೆಯನ್ನು ಬಾಲಕರ ಕೈಗೆ ಕೊಟ್ಟು, ಅವರ ಮುಖದಲ್ಲಿ ಸರಸ್ವತಿಯು ತಾನೇ ನೆಲಸಿರುವಳೋ! ಗಾನದೇವತೆಯ ಪ್ರತ್ಯಕ್ಷರೂಪವೊ ಮೋಹನದ ತನಿರಸವೊ, ಸೊಗಯಿಸುವ/ಆನಂದಕೊಡುವ ಕರ್ಣಾಮೃತವೋ, ಹೇಳು ಎನ್ನುವಂತೆ, ಚಮತ್ಕಾರದ ರಾಗಗತಿ ಉಂಟಾಗುವಂತೆ ಜೋಕೆಯಿಂದ ಜತಿ, ರೀತಿ, ತಾಳ, ಪ್ರಮಾಣ, ಕಂಪಿತ,(ಪಲಕು) ಮೂರ್ಛೆ, ರಸ, ಹಾಡು, ಬೆಡಗು, ಬಿನ್ನಾಣ, ಲಯ, ಆಹತ, ಪ್ರತ್ಯಾಹತ, ವ್ಯಾಪ್ತಿಗಳನ್ನು ಅರಿತು ಲವಕುಶರು ಹಾಡಿ ರಾಮ ನತ್ತು ಸಭಿಕರಿಗೆ ಕೇಳಿಸಿದರು.
  • (ಪದ್ಯ-೫೭.)

ಪದ್ಯ :೫೮:

[ಸಂಪಾದಿಸಿ]

ಸ್ಥಾಯಿ ಸಂಚಾರಿಗಳ ಸರಿಗಮ ಪಧನಿಯ ಸರ | ದಾಯತದ ಶುದ್ಧ ಸಂಕೀರ್ಣ ಸಾಳಗದ ಪೂ | ರಾಯತ ಸುತಾನಂಗಳಂ ತಾರ ಮಧ್ಯ ಮಂದ್ರಗಳಿಂದೆ ಸೊಗಸುಗೊಳಿಸಿ ||
ಗೇಯ ರಸಮೊಸರೆ ಪಾಡಿದರವರ್ ವಿನುತ ರಾ | ಮಾಯಣದ ಸುಶ್ಲೋಕಮಾಲೆಯಂ ಕೇಳ್ದು ರಘು | ರಾಯನುರೆ ಮೆಚ್ಚಿಕೊಂಡಾಡಿ ನಸುನಗೆಯಿಂದೆ ಸೌಮಿತ್ರಿಗಿಂತೆಂದನು ||58||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸ್ಥಾಯಿ ಸಂಚಾರಿಗಳ ಸರಿಗಮ ಪಧನಿಯ ಸರದ ಅಯತದ ಶುದ್ಧ ಸಂಕೀರ್ಣ ಸಾಳಗದ ಪೂ ರಾಯತ ಸುತಾನಂಗಳಂ ತಾರ ಮಧ್ಯ ಮಂದ್ರಗಳಿಂದೆ ಸೊಗಸುಗೊಳಿಸಿ=[ಸ್ಥಾಯಿ ಸಂಚಾರಿಗಳ ಸರಿಗಮ ಪಧನಿಯ ಸ್ವರದ ಆಯತದ/ಸ್ಥಾನಗಳ ಶುದ್ಧ ಸಂಕೀರ್ಣ ಸಾಳಗದ, ಪೂರಾಯತ ಸುತಾನಗಳನ್ನೂ, ತಾರ ಮಧ್ಯ ಮಂದ್ರಗಳಿಂದ ಇಂಪುಗೊಳಿಸಿ, ]; ಗೇಯ ರಸಮೊಸರೆ ಪಾಡಿದರವರ್ ವಿನುತ ರಾ ಮಾಯಣದ ಸುಶ್ಲೋಕಮಾಲೆಯಂ ಕೇಳ್ದು ರಘು ರಾಯನುರೆ ಮೆಚ್ಚಿಕೊಂಡಾಡಿ ನಸುನಗೆಯಿಂದೆ ಸೌಮಿತ್ರಿಗೆ ಇಂತೆಂದನು=[ಗೇಯ/ರಾಗದ ರಸವು ಒಸರುವಂತೆ ಪಾಡಿದರು ಅವರು- ಆ ಕುಶಲವರು, ಶ್ರೇಷ್ಠ ರಾಮಾಯಣದ ಉತ್ತಮ ಶ್ಲೋಕಮಾಲೆಯನ್ನು ಕೇಳಿ ರಘುರಾಮನು ಬಹಳ ಮೆಚ್ಚಿಕೊಂಡಾಡಿ ನಸುನಗೆಯಿಂದೆ ಸೌಮಿತ್ರಿಗೆ/ ಲಕ್ಷ್ಮಣನಿಗೆ ಹೀಗೆ ಹೇಳಿದನು.]
  • ತಾತ್ಪರ್ಯ:ಸಂಗಿತದ ಸ್ಥಾಯಿ, ಸಂಚಾರಿಗಳ ಸರಿಗಮ ಪಧನಿಯ ಸ್ವರದ, ಆಯತದ/ಸ್ಥಾನಗಳ ಶುದ್ಧ ಸಂಕೀರ್ಣ ಸಾಳಗದ, ಪೂರಾಯತ ಸುತಾನಗಳನ್ನೂ, ತಾರ ಮಧ್ಯ ಮಂದ್ರಗಳಿಂದ ಇಂಪುಗೊಳಿಸಿ, ಗೇಯ/ರಾಗದ ರಸವು ಒಸರುವಂತೆ ಪಾಡಿದರು ಅವರು- ಆ ಕುಶಲವರು, ಶ್ರೇಷ್ಠ ರಾಮಾಯಣದ ಉತ್ತಮ ಶ್ಲೋಕಮಾಲೆಯನ್ನು ಕೇಳಿ ರಘುರಾಮನು ಬಹಳ ಮೆಚ್ಚಿಕೊಂಡಾಡಿ ನಸುನಗೆಯಿಂದೆ ಸೌಮಿತ್ರಿಗೆ/ ಲಕ್ಷ್ಮಣನಿಗೆ ಹೀಗೆ ಹೇಳಿದನು.
  • (ಪದ್ಯ-೫೮.)

ಪದ್ಯ :೫೯:

[ಸಂಪಾದಿಸಿ]

ಭಾವಿಸೆಲೆ ಸೌಮಿತ್ರಿ ಬಾಲಕರ್ ಸುಲಲಿತ ವ | ಜೋ ವಿಲಾಸಂಗಳಿಂ ಸ್ವರದಿಂದೆ ರೂಪಿಂದೆ | ಲಾವಣ್ಯದಿಂದೆ ಗತಿಯಿಂದೆ ಚೇಷ್ಟೆಗಳಿಂದೆ ಸೀತೆಯಂ ನೆನೆಯಿಸುವರು ||
ದೇವಿಯನಗಲ್ದ ವಿರಹಾಗ್ನಿ ಸುತ ದರ್ಶನದ | ಜೀವನದೊಳುರೆ ನಂದಿತಾದುದಿನಕುಲದೇಳ್ಗೆ | ಭೂವಲಯದೊಳ್ ತನ್ನ ಬಾಣಮಂ ಬಂಜೆಗೈದಪರೆ ಪೊರಬಿಗರೆಂದನು ||59||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭಾವಿಸೆ ಎಲೆ ಸೌಮಿತ್ರಿ ಬಾಲಕರ್ ಸುಲಲಿತ ವಜೋ ವಿಲಾಸಗಳಿಂ,ವಿಲಾಸಗಳಿಂದ ಸ್ವರದಿಂದೆ ರೂಪಿಂದೆ ಲಾವಣ್ಯದಿಂದೆ ಗತಿಯಿಂದೆ ಚೇಷ್ಟೆಗಳಿಂದೆ ಸೀತೆಯಂ ನೆನೆಯಿಸುವರು =[ಎಲೆ ಸೌಮಿತ್ರಿ/ಲಕ್ಷ್ಮಣ, ಯೋಚಿಸಿದರೆ, ಬಾಲಕರು ಕೋಮಲವಾದ ವರ್ಚಸ್ಸಿನಿಂದ, ಸ್ವರದಿಂದ, ರೂಪಿನಿಂದ, ಲಾವಣ್ಯದಿಂದ, ನಡೆಯುವಗತಿಯಿಂದ, ಅಂಗಚೇಷ್ಟೆಗಳಿಂದ, ಸೀತೆಯನ್ನು ನೆನಪಿಸುವರು]; ದೇವಿಯನು ಅಗಲ್ದ ವಿರಹಾಗ್ನಿ ಸುತ ದರ್ಶನದ ಜೀವನದೊಳು ಉರೆ ನಂದಿತು ಆದುದು ಇನಕುಲದ ಏಳ್ಗೆ=[ಸೀತಾದೇವಿಯನ್ನು ಅಗಲಿದ ವಿರಹದ ನೋವು ಮಕ್ಕಳ ದರ್ಶನದ ಮತ್ತು ಜೀವನದಿಂದ ಬಹಳ ಕಡಿಮೆಯಾಯಿತು (ವಿರಹದ ಬೆಂಕಿ ನಂದಿತು). ಸೂರ್ಯವಂಶದ ಏಳಿಗೆ ಮುಂದುವರಿಯಿತು.]; ಭೂವಲಯದೊಳ್ ತನ್ನ ಬಾಣಮಂ ಬಂಜೆಗೈದಪರೆ ಪೊರಬಿಗರು ಎಂದನು=[ಭೂಮಂಡಲದಲ್ಲಿ ತನ್ನ ಬಾಣವನ್ನು ಹೊರಗಿನವರು ವ್ಯರ್ಥಗೊಳಿಸಲು ಸಾಧ್ಯವೇ? ಎಂದನು.]
  • ತಾತ್ಪರ್ಯ:ಎಲೆ ಸೌಮಿತ್ರಿ/ಲಕ್ಷ್ಮಣ, ಯೋಚಿಸಿದರೆ, ಬಾಲಕರು ಕೋಮಲವಾದ ವರ್ಚಸ್ಸಿನಿಂದ, ಸ್ವರದಿಂದ, ರೂಪಿನಿಂದ, ಲಾವಣ್ಯದಿಂದ, ನಡೆಯುವಗತಿಯಿಂದ, ಅಂಗಚೇಷ್ಟೆಗಳಿಂದ, ಸೀತೆಯನ್ನು ನೆನಪಿಸುವರು; ಸೀತಾದೇವಿಯನ್ನು ಅಗಲಿದ ವಿರಹದ ನೋವು ಮಕ್ಕಳ ದರ್ಶನದ ಮತ್ತು ಜೀವನದಿಂದ ಬಹಳ ಕಡಿಮೆಯಾಯಿತು (ವಿರಹದ ಬೆಂಕಿ ನಂದಿತು). ಸೂರ್ಯವಂಶದ ಏಳಿಗೆ ಮುಂದುವರಿಯಿತು. ಈ ಭೂಮಂಡಲದಲ್ಲಿ ತನ್ನ ಬಾಣವನ್ನು ಹೊರಗಿನವರು ವ್ಯರ್ಥಗೊಳಿಸಲು ಸಾಧ್ಯವೇ? ಎಂದನು.
  • (ಪದ್ಯ-೫೯.)

ಪದ್ಯ :೬೦:

[ಸಂಪಾದಿಸಿ]

ರಾಯನಾಡಿದ ನುಡಿಗೆ ನಸುನಗುತೆ ಲಕ್ಷ್ಮಣಂ | ಜೀಯ ನಿನ್ನಂಬುಗಳ್ ಮೋಘಮಾದಪುವೆ ಪರ | ಸಾಯಕದೊಳೀತಗಳ್ ನಿನ್ನಸುತರದರಿಂದೆ ನೆಲೆಗೊಂಡುದಾತ್ಮ ಶಕ್ತಿ ||
ಈ ಯಮಳರಂ ಪರಿಗ್ರಹಿಸೆಂದೊಡಾ ಕೌಸ | ಲೇಯನತಿ ಧನ್ಯರಾವೆಂದು ವಾಲ್ಮೀಕಿಯಂ | ಪ್ರೀಯೋಕ್ತಿಯಿಂದೆ ಕೊಂಡಾಡಿ ಸುಕುಮಾರರಂ ಕರೆದಾಗಳಿಂತೆಂದನು||60||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಯನು ಆಡಿದ ನುಡಿಗೆ ನಸುನಗುತೆ ಲಕ್ಷ್ಮಣಂ ಜೀಯ ನಿನ್ನ ಅಂಬುಗಳ್ ಮೋಘಮಾದಪುವೆ ಪರ ಸಾಯಕದೊಳ‍ ಈತಗಳ್ ನಿನ್ನಸುತರು ಅದರಿಂದೆ ನೆಲೆಗೊಂಡುದು ಆತ್ಮ ಶಕ್ತಿ=[ರಾಜನಾದ ರಾಮನು ಆಡಿದ ಮಾತಿಗೆ ನಸುನಗುತ್ತಾ ಲಕ್ಷ್ಮಣನು ಒಡೆಯನೇ ನಿನ್ನ ಬಾಣಗಳು ಪರರ ಬಾಣದಿಂದ ವ್ಯರ್ಥವಾಗುವುದೇ? ಇಲ್ಲವೇ ಇಲ್ಲ! ಇವರು ನಿನ್ನ ಮಕ್ಕಳು ಅದರಿಂದ ಅವರಲ್ಲಿ ನಿನ್ನ ಆತ್ಮ ಶಕ್ತಿ ನೆಲೆಗೊಂಡಿರುವುದು]; ಈ ಯಮಳರಂ ಪರಿಗ್ರಹಿಸು ಎಂದೊಡಾ ಕೌಸಲೇಯನು ಅತಿ ಧನ್ಯರು ಆವೆಂದು ವಾಲ್ಮೀಕಿಯಂ ಪ್ರೀಯೋಕ್ತಿಯಿಂದೆ ಕೊಂಡಾಡಿ ಸುಕುಮಾರರಂ ಕರೆದು ಆಗಳು ಇಂತೆಂದನು=[ಈ ಅವಳಿಮಕ್ಕಳನ್ನು ಪರಿಗ್ರಹಿಸು/ ಸ್ವೀಕರಿಸು, ಎಂದಾಗ ಕೌಸಲೇಯ ರಾಮನು, ನಾವು ನಿಮ್ಮ ಉಪಕಾರದಿಂದ ಅತಿ ಧನ್ಯರು ಎಂದು ವಾಲ್ಮೀಕಿಯನ್ನು ಪ್ರೀತಿ ಆದರದ ಮಾತುಗಳಿಂದ ಕೊಂಡಾಡಿ ಸುಕುಮಾರರನ್ನು ಕರೆದು, ಆಗ ಹೀಗೆ ಹೇಳಿದನು].
  • ತಾತ್ಪರ್ಯ:ರಾಜನಾದ ರಾಮನು ಆಡಿದ ಮಾತಿಗೆ ನಸುನಗುತ್ತಾ ಲಕ್ಷ್ಮಣನು ಒಡೆಯನೇ ನಿನ್ನ ಬಾಣಗಳು ಪರರ ಬಾಣದಿಂದ ವ್ಯರ್ಥವಾಗುವುದೇ? ಇಲ್ಲವೇ ಇಲ್ಲ! ಇವರು ನಿನ್ನ ಮಕ್ಕಳು ಅದರಿಂದ ಅವರಲ್ಲಿ ನಿನ್ನ ಆತ್ಮ ಶಕ್ತಿ ನೆಲೆಗೊಂಡಿರುವುದು (ಹಾಗಾಗಿ ನಿನ್ನ ಬಾಣವನ್ನು ಎದುರಿಸಿದರು). ಈ ಅವಳಿಮಕ್ಕಳನ್ನು ಪರಿಗ್ರಹಿಸು/ ಸ್ವೀಕರಿಸು, ಎಂದಾಗ ಕೌಸಲೇಯ ರಾಮನು, ನಾವು ನಿಮ್ಮ ಉಪಕಾರದಿಂದ ಅತಿ ಧನ್ಯರು ಎಂದು ವಾಲ್ಮೀಕಿಯನ್ನು ಪ್ರೀತಿ ಆದರದ ಮಾತುಗಳಿಂದ ಕೊಂಡಾಡಿ ಸುಕುಮಾರರನ್ನು ಕರೆದು, ಆಗ ಹೀಗೆ ಹೇಳಿದನು.
  • (ಪದ್ಯ-೬೦.)

ಪದ್ಯ :೬೧:

[ಸಂಪಾದಿಸಿ]

ಆರ ತನುಜಾತರೆಲೆ ಮಕ್ಕಳಿರ ನಿಮಗಿನಿತು | ವೀರತ್ವಮೆತ್ತಣದು ಪೇಳ್ವುದೆಂದಾತ್ಮಜರ | ನಾರಾಘವಂ ಕೇಳ್ದೊಡವರಾವು ಜಾನಕಿಯ ಗರ್ಭಸಂಭವರೆಮ್ಮನು ||
ಆರೈದು ವಾಲ್ಮೀಕಿಮುನಿ ಸಲಹಿ ಸಕಲವಿ | ದ್ಯಾರಾಜಿಯಂ ಕಲಿಸಿದಂ ದೇವ ನಿನ್ನ ಪದ | ವಾರಿಜಕೆ ದ್ರೋಹಮಂ ಮಾಡಿದೆವು ಸೈರಿಸುವುದೆಂದೆರಗಿದರ್ ಪದದೊಳು ||61||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆರ ತನುಜಾತರು ಎಲೆ ಮಕ್ಕಳಿರ ನಿಮಗೆ ಇನಿತು ವೀರತ್ವಂ ಎತ್ತಣದು ಪೇಳ್ವುದೆಂದು ಆತ್ಮಜರನು ಆರಾಘವಂ ಕೇಳ್ದೊಡೆ=[ರಾಮನು, ನೀವು ಯಾರ ತನುಜಾತರು(ಹೊಟ್ಟೆಯಲ್ಲಿ ಹುಟ್ಟಿದವರು?), ಎಲೆ ಮಕ್ಕಳೇ, ನಿಮಗೆ ಇಷ್ಟೊಂದು ವೀರತ್ವವು ಹೇಗೆ ಬಂತು ಹೇಳಿ ಎಂದು, ತನ್ನ ಮಕ್ಕಳನ್ನು ಆ ರಾಘವನು ಕೇಳಿದಾಗ]; ಆವರು ಆವು ಜಾನಕಿಯ ಗರ್ಭಸಂಭವರು ಎಮ್ಮನು ಆರೈದು ವಾಲ್ಮೀಕಿಮುನಿ ಸಲಹಿ ಸಕಲವಿದ್ಯಾರಾಜಿಯಂ ಕಲಿಸಿದಂ=[ಆವರು ತಾವು ಜಾನಕಿಯ ಗರ್ಭದಿಂದ ಹುಟ್ಟಿದವರು; ನಮ್ಮನು ಆರೈಕೆಮಾಡಿ ವಾಲ್ಮೀಕಿಮುನಿಯು ಸಲಹಿ ಸಕಲವಿದ್ಯಾಪರಿಣತಿಯನ್ನು ಕಲಿಸಿದನು]; ದೇವ ನಿನ್ನ ಪದವಾರಿಜಕೆ ದ್ರೋಹಮಂ ಮಾಡಿದೆವು ಸೈರಿಸುವುದೆಂದು ಎರಗಿದರ್ ಪದದೊಳು=[ದೇವ ನಿನ್ನ ಪಾದಪದ್ಮಗಳಿಗೆ ಅಪರಾಧ ಮಾಡಿದೆವು ಕ್ಷಮಿಸಬೇಕು ಎಂದು ಅವನ ಪಾದಕ್ಕೆ ಕುಶಲವರು ನಮಿಸಿದರು.]
  • ತಾತ್ಪರ್ಯ:ರಾಮನು, ನೀವು ಯಾರ ತನುಜಾತರು(ಹೊಟ್ಟೆಯಲ್ಲಿ ಹುಟ್ಟಿದವರು?), ಎಲೆ ಮಕ್ಕಳೇ, ನಿಮಗೆ ಇಷ್ಟೊಂದು ವೀರತ್ವವು ಹೇಗೆ ಬಂತು ಹೇಳಿ ಎಂದು, ತನ್ನ ಮಕ್ಕಳನ್ನು ಆ ರಾಘವನು ಕೇಳಿದಾಗ; ಆವರು, ತಾವು ಜಾನಕಿಯ ಗರ್ಭದಿಂದ ಹುಟ್ಟಿದವರು; ನಮ್ಮನು ಆರೈಕೆಮಾಡಿ ವಾಲ್ಮೀಕಿಮುನಿಯು ಸಲಹಿ ಸಕಲವಿದ್ಯಾಪರಿಣತಿಯನ್ನು ಕಲಿಸಿದನು; ದೇವ ನಿನ್ನ ಪಾದಪದ್ಮಗಳಿಗೆ ಅಪರಾಧ ಮಾಡಿದೆವು ಕ್ಷಮಿಸಬೇಕು ಎಂದು ತಂದೆಯ ಪಾದಕ್ಕೆ ಕುಶಲವರು ನಮಿಸಿದರು.
  • (ಪದ್ಯ-೬೧.)

ಪದ್ಯ :೬೨:

[ಸಂಪಾದಿಸಿ]

ತನಯರಂ ತೆಗೆದೊಡನೆ ಮುಂಡಾಡಿ ಬಿಗಿಯಪ್ಪಿ | ಘನತರಸ್ನೇಹದಿಂ ಶಿರವನಾಘ್ರಾಣಿಸಿ ವ | ದನವ ನೊಡನೊಡನೆ ಚುಂಬಿಸಿ ಮತ್ತೆ ಮತ್ತೆ ವಾಲ್ಮೀಕಿಯಂ ಮಿಗೆ ಪೊಗಳುತೆ ||
ಅನುಜರಿಂದೊಡಗೂಡಿ ರಘುವರಂ ಸಂತೋಷ | ವನಧಿಯೊಳ್ ಮುಳುಗಿದಂ ಸುಕುಮಾರರಂ ಕೊಂಡು | ಕೊನರಿತು ಸಮಸ್ತ ಪರಿವಾರಮುತ್ಸವದಿಂದೆ ಮೊಳಗಿದುವು ವಾದ್ಯಂಗಳಂ ||62||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತನಯರಂ ತೆಗೆದು ಒಡನೆ ಮುಂಡಾಡಿ ಬಿಗಿಯಪ್ಪಿ ಘನತರ ಸ್ನೇಹದಿಂ ಶಿರವನಾಘ್ರಾಣಿಸಿ ವದನವ ನೊಡನೆ ಒಡನೆ ಚುಂಬಿಸಿ ಮತ್ತೆ ಮತ್ತೆ ವಾಲ್ಮೀಕಿಯಂ ಮಿಗೆ ಪೊಗಳುತೆ=[ತನ್ನ ತನಯರನ್ನು ಹತ್ತಿರ ಕರೆದು ಕೂಡಲೆ ಮುಂಡಾಡಿ (ತಲೆಯನ್ನು ಪ್ರೀತಿಯಿಂದ ಸವರಿ), ಬಿಗಿದು ಅಪ್ಪಿಕೊಂಡು, ಬಹಳ ಸ್ನೇಹದಿಂದ ತಲೆಯನ್ನು ಆಘ್ರಾಣಿಸಿ, ಮುಖವನ್ನು ಪದೇ ಪದೇ ಚುಂಬಿಸಿ, ಮತ್ತೆ ಮತ್ತೆ ವಾಲ್ಮೀಕಿಯನ್ನು ಅವರ ಉಪಕಾರಕ್ಕೆ ಬಹಳ ಪೊಗಳುತ್ತಿದ್ದನು. ]; ಅನುಜರಿಂದ ಒಡಗೂಡಿ ರಘುವರಂ ಸಂತೋಷ ವನಧಿಯೊಳ್ ಮುಳುಗಿದಂ ಸುಕುಮಾರರಂ ಕೊಂಡು ಕೊನರಿತು (ಚಿಗುರಿತು-ಹೆಮ್ಮೆಪಡು:ಜಿ.ವೆಂ.ನಿಘಂಟು) ಸಮಸ್ತ ಪರಿವಾರಂ ಉತ್ಸವದಿಂದೆ ಮೊಳಗಿದುವು ವಾದ್ಯಂಗಳಂ=[ಸಹೋದರರ ಜೊತೆಯಲ್ಲಿ ರಘುರಾಮನು ಸಂತೋಷ ಸಾಗರದಲ್ಲಿ ಮುಳುಗಿದನು; ಸುಕುಮಾರರನ್ನು ಪಡೆದುಕೊಂಡು ಸಮಸ್ತ ಪರಿವಾರವೂ ಹೆಮ್ಮೆಪಟ್ಟಿತು; ಆಗ ಸಂತೋಷದಿಂದ ಮೊಳಗಿದುವು ವಾದ್ಯಂಗಳಂ.]
  • ತಾತ್ಪರ್ಯ:ತನ್ನ ತನಯರನ್ನು ಹತ್ತಿರ ಕರೆದು ಕೂಡಲೆ ಮುಂಡಾಡಿ (ತಲೆಯನ್ನು ಪ್ರೀತಿಯಿಂದ ಸವರಿ), ಬಿಗಿದು ಅಪ್ಪಿಕೊಂಡು, ಬಹಳ ಸ್ನೇಹದಿಂದ ತಲೆಯನ್ನು ಆಘ್ರಾಣಿಸಿ, ಮುಖವನ್ನು ಪದೇ ಪದೇ ಚುಂಬಿಸಿ, ಮತ್ತೆ ಮತ್ತೆ ವಾಲ್ಮೀಕಿಯನ್ನು ಅವರ ಉಪಕಾರಕ್ಕೆ ಬಹಳ ಪೊಗಳುತ್ತಿದ್ದನು. ಸಹೋದರರ ಜೊತೆಯಲ್ಲಿ ರಘುರಾಮನು ಸಂತೋಷ ಸಾಗರದಲ್ಲಿ ಮುಳುಗಿದನು; ಸುಕುಮಾರರನ್ನು ಪಡೆದುಕೊಂಡು ಸಮಸ್ತ ಪರಿವಾರವೂ ಹೆಮ್ಮೆಪಟ್ಟಿತು; ಆಗ ಸಂತೋಷದಿಂದ ಮೊಳಗಿದುವು ವಾದ್ಯಂಗಳಂ.]
  • (ಪದ್ಯ-೬೨.)

ಪದ್ಯ :೬೩:

[ಸಂಪಾದಿಸಿ]

ಬಳಿಕ ವಾಲ್ಮೀಕಿಯಂ ಸತ್ಕಸಿರಿ ಸೀತೆ ಭೂ | ತಳವರಿಯೆ ಪರಿಶುದ್ಧೆ ಲೋಕಾಪವಾದಕ್ಕೆ | ಕಳೆದೆನೆಂತಾದೊಡಂ ಪುತ್ರರಂ ಪಡೆದಳಿನ್ನರವರಿಸದೆನ್ನ ಬಳಿಗೆ ||
ಕಳುಹೆಂದು ಬೀಳ್ಕೊಂಡು ಸುತ ಸಹೋದರರೊಡನೆ | ದಳಸಹಿತ ಹಯವರಂ ವೆರಸಿನಿಜಪುರಕೆ ಬಂ | ದುಳಿದಿರ್ದ ಯಜ್ಞಮಂ ನಡೆಸಿದಂ ಮೂಜಗಂ ಪೊಗಳಲ್ಕೆ ರಘುನಾಥನು ||63||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ವಾಲ್ಮೀಕಿಯಂ ಸತ್ಕಸಿರಿ ಸೀತೆ ಭೂತಳವರಿಯೆ ಪರಿಶುದ್ಧೆ ಲೋಕಾಪವಾದಕ್ಕೆ ಕಳೆದೆನು ಎಂತಾದೊಡಂ ಪುತ್ರರಂ ಪಡೆದಳು=[ರಾಮನು ನಂತರ ವಾಲ್ಮೀಕಿಯನ್ನು ಸತ್ಕಸಿರಿ ಸೀತೆಯು ಭೂತಳವು ತಿಳಿಯುವಂತೆ ಪರಿಶುದ್ಧಳು; ಲೋಕಾಪವಾದಕ್ಕೆ ಅವಳನ್ನು ಕಾಡಿಗೆ ಕಳಿಸಿದೆನು; ಹಾಗಿದ್ದರೂ ಪುತ್ರರನ್ನು ಪಡೆದಳು]; ಇನ್ನು ಅರವರಿಸದೆ ಎನ್ನ ಬಳಿಗೆ ಕಳುಹೆಂದು ಬೀಳ್ಕೊಂಡು ಸುತ ಸಹೋದರರೊಡನೆ ದಳಸಹಿತ ಹಯವರಂ ವೆರಸಿನಿಜಪುರಕೆ ಬಂದು=[ಇನ್ನು ಹಿಂದಿನ ತ್ಯಾಗದವಿಷಯ ನೆನಸದೆ ನನ್ನ ಬಳಿಗೆ ಕಳುಹಿಸೆಂದು ಹೇಳಿ, ಮುನಿಯನ್ನು ಬೀಳ್ಕೊಂಡು ಮಕ್ಕಳು ಸಹೋದರರೊಡನೆ ಸೈನ್ಯಸಹಿತ ಕುದುರೆಯನ್ನೂ ತೆಗೆದುಕೊಂಡು ಅಯೋಧ್ಯೆ ಪುರಕ್ಕೆ ಬಂದು]; ಉಳಿದಿರ್ದ ಯಜ್ಞಮಂ ನಡೆಸಿದಂ ಮೂಜಗಂ ಪೊಗಳಲ್ಕೆ ರಘುನಾಥನು=[ ಮೂರುಲೋಕವೂ ಹೊಗಳಲು ರಘುನಾಥನು ಉಳಿದಿದ್ದ ಯಜ್ಞವನ್ನು ನಡೆಸಿದನು.]
  • ತಾತ್ಪರ್ಯ:ರಾಮನು ನಂತರ ವಾಲ್ಮೀಕಿಯನ್ನು ಸತ್ಕಸಿರಿ ಸೀತೆಯು ಭೂತಳವು ತಿಳಿಯುವಂತೆ ಪರಿಶುದ್ಧಳು; ಲೋಕಾಪವಾದಕ್ಕಾಗಿ ಅವಳನ್ನು ಕಾಡಿಗೆ ಕಳಿಸಿದೆನು; ಹಾಗಿದ್ದರೂ ಪುತ್ರರನ್ನು ಪಡೆದಳು; ಸೀತೆಯು ಇನ್ನು ಹಿಂದಿನ ತ್ಯಾಗದವಿಷಯ ನೆನಸದೆ ನನ್ನ ಬಳಿಗೆ ಕಳುಹಿಸೆಂದು ಹೇಳಿ, ಮುನಿಯನ್ನು ಬೀಳ್ಕೊಂಡು ಮಕ್ಕಳು ಸಹೋದರರೊಡನೆ ಸೈನ್ಯಸಹಿತ ಕುದುರೆಯನ್ನೂ ತೆಗೆದುಕೊಂಡು ಅಯೋಧ್ಯೆ ಪುರಕ್ಕೆ ಬಂದು, ಮೂರುಲೋಕವೂ ಹೊಗಳಲು ರಘುನಾಥನು ಉಳಿದಿದ್ದ ಯಜ್ಞವನ್ನು ನೆರವೇರಿಸಿದನು.
  • (ಪದ್ಯ-೬೩.)

ಪದ್ಯ :೬೪:

[ಸಂಪಾದಿಸಿ]

ಇತ್ತ ನಿಜತನುಜರಂ ಕಳುಹಿ ವಾಲ್ಮೀಕಿಮುನಿ | ಪೋತ್ತಮಂ ಬರಲಾಶ್ರಮ ದ್ವಾರದೊಳ್ ಕಂಡು | ಚಿತ್ತದೊಳ್ ಮರುಗುತೇನಾದರೆಲೆ ತಾತ ಕುಶ ಲವರೊಡಲ್ವಿಡಿವೆನೆಂತೊ ||
ಪೆತ್ತಂದು ಮೊದಲಾಗಿ ಪತಿವಿರಹಮಂ ಮರೆದು | ಪೊತ್ತಿರ್ದೆನೀದೇಹಮಂ ತನ್ನ ಸುತರನಾ | ರ್ಗಿತ್ತು ನೀನೈತಂದೆ ಹೇಳೆಂದು ಜಾನಕಿ ಬಿದ್ದಳಂಘ್ರಿಗಳ್ಗೆ ||64||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇತ್ತ ನಿಜತನುಜರಂ ಕಳುಹಿ ವಾಲ್ಮೀಕಿ ಮುನಿಪೋತ್ತಮಂ ಬರಲು=[ಇತ್ತ ರಾಮನ ಮಕ್ಕಳನ್ನು ಕಳುಹಿಸಿ ವಾಲ್ಮೀಕಿ ಮುನಿಪೋತ್ತಮನು ಬರಲು]; ಆಶ್ರಮ ದ್ವಾರದೊಳ್ ಕಂಡು ಚಿತ್ತದೊಳ್ ಮರುಗುತ ಏನಾದರು ಎಲೆ ತಾತ ಕುಶ ಲವರು ಒಡಲ್ ವಿಡಿವೆನೆಂತೊ=[ಆಶ್ರಮದ ದ್ವಾರದಲ್ಲಿ ಮುನಿಯೊಬ್ಬನನ್ನೇ ಕಂಡು ಮನಸ್ಸಿನಲ್ಲಿ ದುಃಖಿಸುತ್ತಾ, ಎಲೆ ತಾತ ಮನಿವರನೇ, ಏನಾದರು ಕುಶ ಲವರು ದೇಹವನ್ನು ಹೇಗೆ ಹಿಡಿಯಲಿ - ಜೀವವನ್ನು ಹೇಗೆ ಇಟ್ಟುಕೊಳ್ಳಲಿ!]; ಪೆತ್ತಂದು ಮೊದಲಾಗಿ ಪತಿವಿರಹಮಂ ಮರೆದು ಪೊತ್ತಿರ್ದೆನು ಈ ದೇಹಮಂ ತನ್ನ ಸುತರನು ಆರ್ಗಿತ್ತು ನೀನು ಐತಂದೆ ಹೇಳೆಂದು ಜಾನಕಿ ಬಿದ್ದಳು ಅಂಘ್ರಿಗಳ್ಗೆ=[ಮಕ್ಕಳನ್ನು ಹೆತ್ತನಂತರ ಮೊದಲಾಗಿ ಪತಿಯ ಅಗಲಿಕೆಯನ್ನು ಮರೆತು, ಈ ದೇಹವನ್ನು ಹೊತ್ತಿದ್ದೆನು; ನೀನು ತನ್ನ ಮಕ್ಕಳನ್ನು ಯಾರಿಗೆ ಕೊಟ್ಟುಬಂದೆ, ಹೇಳೆಂದು ಜಾನಕಿ ಮುನಿಯ ಪಾದಗಳಿಗೆ ಬಿದ್ದಳು.]
  • ತಾತ್ಪರ್ಯ:ಇತ್ತ ರಾಮನ ಮಕ್ಕಳನ್ನು ತಂದೆಯೊಡನೆ ಕಳುಹಿಸಿ ವಾಲ್ಮೀಕಿ ಮುನಿಪೋತ್ತಮನು ಬರಲು; ಆಶ್ರಮದ ದ್ವಾರದಲ್ಲಿ ಮುನಿಯೊಬ್ಬನನ್ನೇ ಕಂಡು ಮನಸ್ಸಿನಲ್ಲಿ ದುಃಖಿಸುತ್ತಾ, ಎಲೆ ತಾತ ಮನಿವರನೇ, ಏನಾದರು ಕುಶ ಲವರು ದೇಹವನ್ನು ಹೇಗೆ ಹಿಡಿಯಲಿ - ಜೀವವನ್ನು ಹೇಗೆ ಇಟ್ಟುಕೊಳ್ಳಲಿ! ಮಕ್ಕಳನ್ನು ಹೆತ್ತನಂತರ ಮೊದಲಾಗಿ ಪತಿಯ ಅಗಲಿಕೆಯನ್ನು ಮರೆತು, ಈ ದೇಹವನ್ನು ಹೊತ್ತಿದ್ದೆನು; ನೀನು ತನ್ನ ಮಕ್ಕಳನ್ನು ಯಾರಿಗೆ ಕೊಟ್ಟುಬಂದೆ, ಹೇಳೆಂದು ಜಾನಕಿ ಮುನಿಯ ಪಾದಗಳಿಗೆ ಬಿದ್ದಳು.
  • (ಪದ್ಯ-೬೪.)

ಪದ್ಯ :೬೫:

[ಸಂಪಾದಿಸಿ]

ಮಣಿದೆತ್ತಿ ಸೀತೆಯಂ ಸಂತೈಸಿ ಮಗಳೆ ನಿ | ನ್ನಣುಗರಂ ತಮ್ಮ ತಾತಂ ಕೂಡಿ ಕೊಂಡೊಯ್ದ | ನೆಣಿಕೆ ಬೇಡಿದಕಿನ್ನು ನಿನ್ನುಮಂ ಕಾಂತನಲ್ಲಿಗೆ ಕಳುಹಿ ಬರ್ಪೆನೆಂದು ||
ಗುಣದಿಂದೊಡಂಬಡಿಸಿ ವಾಲ್ಮೀಕಿ ಮುನಿವರಂ | ಮಣಿರಥವನೇರಿಸಿ ಸಮಸ್ತ ವೈಭವದಿಂ ಧ | ರಣಿಜೆಯಂ ತಂದಯೋಧ್ಯಾಪುರದೊಳಿರಿಸಿ ರಘುನಾಥನಂ ಕಾಣಿಸಿದನು ||65||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಣಿದೆತ್ತಿ ಸೀತೆಯಂ ಸಂತೈಸಿ ಮಗಳೆ ನಿನ್ನ ಅಣುಗರಂ ತಮ್ಮ ತಾತಂ ಕೂಡಿ ಕೊಂಡೊಯ್ದನು=[ಕಾಲಿಗೆ ಬಿದ್ದ ಸೀತೆಯನ್ನು ಬಗ್ಗಿ ಎತ್ತಿ, ಅವಳನ್ನು ಸಮಾಧಾನಪಡಿಸಿ, ಮಗಳೆ ನಿನ್ನ ಮಕ್ಕಳನ್ನು ಅವರ ತಂದೆಯು ಜೊತೆಗೆ ಕರೆದುಕೊಂಡುಹೋದನು.]; ಎಣಿಕೆ ಬೇಡಿದಕಿನ್ನು ನಿನ್ನುಮಂ ಕಾಂತನಲ್ಲಿಗೆ ಕಳುಹಿ ಬರ್ಪೆನೆಂದು ಗುಣದಿಂದ ಒಡಂಬಡಿಸಿ=[ಮಕ್ಕಳ ಬಗೆಗೆ ಇನ್ನು ಚಿಂತಿಸಬೇಡ,ನಿನ್ನುನ್ನೂ ಕೂಡ ನಿನ್ನ ಪತಿಯ ಬಳಿಗೆ ಕಳುಹಿಸಿ ಬರುವೆನೆಂದು ಅನುನಯದಿಂದ ಮುನಿ ಒಡಂಬಡಿಸಿದನು.]; ವಾಲ್ಮೀಕಿ ಮುನಿವರಂ ಮಣಿರಥವನು ಏರಿಸಿ ಸಮಸ್ತ ವೈಭವದಿಂ ಧರಣಿಜೆಯಂ ತಂದು ಅಯೋಧ್ಯಾಪುರದೊಳು ಇರಿಸಿ ರಘುನಾಥನಂ ಕಾಣಿಸಿದನು=[ನಂತರ ವಾಲ್ಮೀಕಿ ಮುನಿವರನು ಮಣಿರಥವನ್ನು ತರಿಸಿ ಅದರಲ್ಲಿ ಸೀತೆಯನ್ನು ಹತ್ತಿಸಿ, ಸಮಸ್ತ ವೈಭವದಿಂದ ಧರಣಿಜೆಯನ್ನು ಅಯೋಧ್ಯಾಪುರಕ್ಕೆ ಕರೆತಂದು ರಘುನಾಥನನ್ನು ಅವಳಿಗೆ ಕಾಣಿಸಿ ಸತಿ ಪತಿಗಳನ್ನು ಒಂದುಗೂಡಿಸಿದನು.]
  • ತಾತ್ಪರ್ಯ:ಕಾಲಿಗೆ ಬಿದ್ದ ಸೀತೆಯನ್ನು ಬಗ್ಗಿ ಎತ್ತಿ, ಅವಳನ್ನು ಸಮಾಧಾನಪಡಿಸಿ, ಮಗಳೆ ನಿನ್ನ ಮಕ್ಕಳನ್ನು ಅವರ ತಂದೆಯು ಜೊತೆಗೆ ಕರೆದುಕೊಂಡುಹೋದನು. ಮಕ್ಕಳ ಬಗೆಗೆ ಇನ್ನು ಚಿಂತಿಸಬೇಡ, ನಿನ್ನುನ್ನೂ ಕೂಡ ನಿನ್ನ ಪತಿಯ ಬಳಿಗೆ ಕಳುಹಿಸಿ ಬರುವೆನು, ಎಂದು ಅನುನಯದಿಂದ ಮುನಿ ಅವಳನ್ನು ಒಡಂಬಡಿಸಿದನು. ನಂತರ ವಾಲ್ಮೀಕಿ ಮುನಿವರನು ಮಣಿರಥವನ್ನು ತರಿಸಿ ಅದರಲ್ಲಿ ಸೀತೆಯನ್ನು ಹತ್ತಿಸಿ, ಸಮಸ್ತ ವೈಭವದಿಂದ ಧರಣಿಜೆಯನ್ನು ಅಯೋಧ್ಯಾಪುರಕ್ಕೆ ಕರೆತಂದು ರಘುನಾಥನನ್ನು ಅವಳಿಗೆ ಕಾಣಿಸಿ ಸತಿ ಪತಿಗಳನ್ನು ಒಂದುಗೂಡಿಸಿದನು.
  • (ಪದ್ಯ-೬೫.)

ಪದ್ಯ :೬೬:

[ಸಂಪಾದಿಸಿ]

ಮೇಲೆ ಜಾನಕಿ ಸಹಿತ ರಾಘವಂ ಸಾಮ್ರಾಜ್ಯ | ಲೋಲನಾಗಿರ್ದನೆಲೆ ಜನಮೇಜಯಾವನೀ | ಪಾಲ ಕೇಳ್ದೈ ಕುಶಲವರೊಡನಾ ರಾಮಂಗೆ ಬಂದ ಕದನದ ಕಥೆಯನು ||
ಮೂಲೋಕಕಿದು ಪುಣ್ಯವತಿರಮ್ಯಮಾಗಿರ್ಪು | ದಾಲಿಪರ್ಗಾಯುರಾರೋಗ್ಯಮೈಶ್ವರ್ಯಂ ವಿ | ಶಾಲ ಮತಿ ಸತ್ಕೀರ್ತಿ ವಿಮಲಸಂತತಿ ಸುಗತಿ ದೊರೆಕೊಂಬುದಿಹಪರದೊಳು ||66||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೇಲೆ ಜಾನಕಿ ಸಹಿತ ರಾಘವಂ ಸಾಮ್ರಾಜ್ಯ ಲೋಲನಾಗಿರ್ದನು ಎಲೆ ಜನಮೇಜಯ ಅವನೀಪಾಲ ಕೇಳ್ದೈ ಕುಶಲವರೊಡನೆ ಆ ರಾಮಂಗೆ ಬಂದ ಕದನದ ಕಥೆಯನು=[ಆನಂತರ ಜಾನಕಿ ಸಹಿತ ರಾಘವನು ಸಾಮ್ರಾಜ್ಯಪಾಲಿಸುತ್ತಾ ಸುಖಲೋಲನಾಗಿದ್ದನು.ಎಲೆ ಜನಮೇಜಯ ರಾಜನೇ ಕುಶಲವರೊಡನೆ ಆ ರಾಮನಿಗೆ ನಡೆದ ಕಾಳಗದ ಕಥೆಯನ್ನು ಕೇಳಿದೆಯಲ್ಲವೆ.]; ಮೂಲೋಕಕಿದು ಪುಣ್ಯವು ಅತಿರಮ್ಯಮಾಗಿರ್ಪುದು ಆಲಿಪರ್ಗೆ ಆಯುರಾರೋಗ್ಯಂ ಐಶ್ವರ್ಯಂ ವಿಶಾಲ ಮತಿ ಸತ್ಕೀರ್ತಿ ವಿಮಲಸಂತತಿ ಸುಗತಿ ದೊರೆಕೊಂಬುದು ಇಹಪರದೊಳು=[ಮೂರುಲೋಕಕ್ಕೂ ಇದು ಪುಣ್ಯವು, ಅತಿರಮ್ಯವಾಗಿರುದು, ಆಲಿಸಿದವರಿಗೆ ಆಯುರಾರೋಗ್ಯವನ್ನೂ, ಐಶ್ವರ್ಯವನ್ನೂ, ವಿಶಾಲ ಮತಿ ಸತ್ಕೀರ್ತಿಯನ್ನೂ, ವಿಮಲಸಂತತಿ ಸುಗತಿಗಳನ್ನೂ ಇಹಪರದಲ್ಲಿ ದೊರಕಿಸಿಕೊಡುವುದು,ಎಂದನು ಜೈಮಿನಿ]
  • ತಾತ್ಪರ್ಯ:ಆನಂತರ ಜಾನಕಿ ಸಹಿತ ರಾಘವನು ಸಾಮ್ರಾಜ್ಯಪಾಲಿಸುತ್ತಾ ಸುಖಲೋಲನಾಗಿದ್ದನು. ಎಲೆ ಜನಮೇಜಯ ರಾಜನೇ ಕುಶಲವರೊಡನೆ ಆ ರಾಮನಿಗೆ ನಡೆದ ಕಾಳಗದ ಕಥೆಯನ್ನು ಕೇಳಿದೆಯಲ್ಲವೆ. ಮೂರುಲೋಕಕ್ಕೂ ಇದು ಪುಣ್ಯವು, ಅತಿರಮ್ಯವಾಗಿರುದು, ಆಲಿಸಿದವರಿಗೆ ಆಯುರಾರೋಗ್ಯವನ್ನೂ, ಐಶ್ವರ್ಯವನ್ನೂ, ವಿಶಾಲ ಮತಿ ಸತ್ಕೀರ್ತಿಯನ್ನೂ, ವಿಮಲಸಂತತಿ ಸುಗತಿಗಳನ್ನೂ ಇಹಪರದಲ್ಲಿ ದೊರಕಿಸಿಕೊಡುವುದು,ಎಂದನು ಜೈಮಿನಿ.
  • (ಪದ್ಯ-೬೬.)

ಪದ್ಯ :೬೭:

[ಸಂಪಾದಿಸಿ]

ಅರಸ ನೀಂ ಬೆಸಗೊಳಲ್ ಪೇಳ್ದೆನಾಂ ಕುಶ ರಾಘ | ವರ ಯುದ್ಧಮಂ ಸುರಪ ಫಲುಗುಣನ ಕಾಳಗವ | ನೊರೆಯಲೇಕಿನ್ನು ಕೇಳ್ದರಿವಲೈ ಬಭ್ರುವಾಹನ ಪಾರ್ಥರಾಹವವನು ||
ವಿರಚಿಸುವೆನೊಲಿದಾಲಿಸೆಂದು ಜೈಮಿನಿ ಮುನೀ | ಶ್ವರನಿಂದು ಕುಲತಿಲಕ ಜನಮೇಜಯಂಗೆ ವಿ | ಸ್ತರಿಸಿದಂ ದೇವಪುರ ನಿಲಯ ಲಕ್ಷ್ಮೀಶನಂ ಚಿತ್ತದೊಳ್ ಧ್ಯಾನಿಸುತ್ತೆ ||67||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರಸ ನೀಂ ಬೆಸಗೊಳಲ್ ಪೇಳ್ದೆನಾಂ ಕುಶ ರಾಘವರ ಯುದ್ಧಮಂ ಸುರಪ ಫಲುಗುಣನ ಕಾಳಗವನು ಒರೆಯಲು ಏಕಿನ್ನು ಕೇಳ್ದರಿವಲೈ=[ಅರಸನೇ ನೀನು ಕೇಳಿದ್ದರಿಂದ ಕುಶ ರಾಘವರ ಯುದ್ಧವನ್ನು ನಾನು ಹೇಳಿದೆನು. ಇನ್ನು ಇಂದ್ರನಿಗೂ ಅವನ ಮಗ ಫಲುಗುಣನಿಗೂ ನಡೆದ ಕಾಳಗವನ್ನು ಹೇಳುವದೇಕೆ? ಅದನ್ನು ಮೊದಲೇ ಖಾಂಡವ ದಹನದ ಸಂದರ್ಭದಲ್ಲಿ ಕೇಳಿರುವೆ.]; ಬಭ್ರುವಾಹನ ಪಾರ್ಥರ ಆಹವವನು ವಿರಚಿಸುವೆನು ಒಲಿದು ಆಲಿಸು ಎಂದು ಜೈಮಿನಿ ಮುನೀಶ್ವರನು ಇಂದು ಕುಲತಿಲಕ ಜನಮೇಜಯಂಗೆ ವಿಸ್ತರಿಸಿದಂ ದೇವಪುರ ನಿಲಯ ಲಕ್ಷ್ಮೀಶನಂ ಚಿತ್ತದೊಳ್ ಧ್ಯಾನಿಸುತ್ತೆ=[ಬಭ್ರುವಾಹನ ಪಾರ್ಥರ ಯುದ್ಧವನ್ನು ವಿವರಿಸುವೆನು; ಪ್ರೀತಿಯಿಂದ ಆಲಿಸು ಎಂದು ಜೈಮಿನಿ ಮುನೀಶ್ವರನು ಚಂದ್ರವಂಶದ ಕುಲತಿಲಕ ಜನಮೇಜಯನಿಗೆ,- ದೇವಪುರ ನಿಲಯ ಲಕ್ಷ್ಮೀಶನನ್ನು ಚಿತ್ತದಲ್ಲಿ ಧ್ಯಾನಿಸುತ್ತ ವಿಸ್ತರಿಸಿ ಹೇಳಿದನು.]
  • ತಾತ್ಪರ್ಯ:ಅರಸನೇ ನೀನು ಕೇಳಿದ್ದರಿಂದ ಕುಶ ರಾಘವರ ಯುದ್ಧವನ್ನು ನಾನು ಹೇಳಿದೆನು. ಇನ್ನು ಇಂದ್ರನಿಗೂ ಅವನ ಮಗ ಫಲುಗುಣನಿಗೂ ನಡೆದ ಕಾಳಗವನ್ನು ಹೇಳುವದೇಕೆ? ಅದನ್ನು ಮೊದಲೇ ಖಾಂಡವ ದಹನದ ಸಂದರ್ಭದಲ್ಲಿ ಕೇಳಿರುವೆ. ಬಭ್ರುವಾಹನ ಪಾರ್ಥರ ಯುದ್ಧವನ್ನು ವಿವರಿಸುವೆನು; ಪ್ರೀತಿಯಿಂದ ಆಲಿಸು ಎಂದು ಜೈಮಿನಿ ಮುನೀಶ್ವರನು ಚಂದ್ರವಂಶದ ಕುಲತಿಲಕ ಜನಮೇಜಯನಿಗೆ,- ದೇವಪುರ ನಿಲಯ ಲಕ್ಷ್ಮೀಶನನ್ನು ಚಿತ್ತದಲ್ಲಿ ಧ್ಯಾನಿಸುತ್ತ ವಿಸ್ತರಿಸಿ ಹೇಳಿದನು.
  • (ಪದ್ಯ-೬೭.)II-XI
  • ಸಂಧಿ ೨೧ಕ್ಕೆ ಪದ್ಯಗಳು:೧೧೧೭.
  • []
  • []
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.