ಜೈಮಿನಿ ಭಾರತ/ಮುವತ್ತೊಂದನೆಯ ಸಂಧಿ

ವಿಕಿಸೋರ್ಸ್ ಇಂದ
Jump to navigation Jump to search

ಮೂವತ್ತೊಂದನೆಯ ಸಂಧಿ[ಸಂಪಾದಿಸಿ]

ಪದ್ಯ:-:ಸೂಚನೆ:[ಸಂಪಾದಿಸಿ]

ಸೂಚನೆ : ಕೃತ ವಿವಾಹದೊಳಗುಪಹತಿಯ ಕೃತಕಂಗಳಿಂ |
ಸುತನೊಡನೆ ಮೃತನಾದ ಮಂತ್ರಿಯಂ ಧರಣಿ ಗಧಿ |
ಪತಿಯಾಗಿ ನೆಗಪಿದಂ ಚಂದ್ರಹಾಸಂ ಚಂಡೀಕಾದೇವಿಯಂ ಮೆಚ್ಚಿಸಿ ||

ಪದವಿಭಾಗ-ಅರ್ಥ:
ಕಥಾಸಾರ:
ಕೃತ ವಿವಾಹದೊಳಗೆ ಉಪಹತಿಯ ಕೃತಕಂಗಳಿಂ ಸುತನೊಡನೆ ಮೃತನಾದ ಮಂತ್ರಿಯಂ ಧರಣಿಗೆ ಅಧಿಪತಿಯಾಗಿ ನೆಗಪಿದಂ ಚಂದ್ರಹಾಸಂ ಚಂಡೀಕಾದೇವಿಯಂ ಮೆಚ್ಚಿಸಿ=[ನೆಡೆದುಹೋಗಿರುವ ವಿವಾಹಕ್ಕೆ ಕೇಡುಮಾಡುವ ಕಪಟ -ಕುತಂತ್ರಗಳನ್ನು ಮಾಡಿದ ಕಾರಣ ಮಗನೊಡನೆ ಮೃತನಾದ ಮಂತ್ರಿಯನ್ನು ರಾಜ್ಯಕ್ಕೆ ಅಧಿಪತಿಯಾಗಿ ಚಂದ್ರಹಾಸನು ಚಂಡೀಕಾದೇವಿಯನ್ನು ಮೆಚ್ಚಿಸಿ ಬದುಕಿಸಿದನು].
 • ತಾತ್ಪರ್ಯ:ನೆಡೆದುಹೋಗಿರುವ ವಿವಾಹಕ್ಕೆ ಕೇಡುಮಾಡುವ ಕಪಟ -ಕುತಂತ್ರಗಳನ್ನು ಮಾಡಿದ ಕಾರಣದಿಂದ ಮಗನೊಡನೆ ಮೃತನಾದ ಮಂತ್ರಿಯನ್ನು, ರಾಜ್ಯಕ್ಕೆ ಅಧಿಪತಿಯಾಗಿ ಚಂದ್ರಹಾಸನು ಚಂಡೀಕಾದೇವಿಯನ್ನು ಮೆಚ್ಚಿಸಿ ಬದುಕಿಸಿದನು.
 • (ಪದ್ಯ-ಸೂಚನೆ)XIX- XII

ಪದ್ಯ:-:[ಸಂಪಾದಿಸಿ]

ವಾಸವಾತ್ಮಜ ಕೇಳಲಂಕಾರದಿಂ ಚಂದ್ರ |
ಹಾಸನಂ ಮದವಳಿಗನಂ ಮಾಡುತಿರ್ದರ್ ಸು |
ವಾಸಿನಿಯರುತ್ಸವದೊಳಿಂತೆಂದು ಮದನನಂತಃಪುರದೊಳೆಚ್ಚರಿಸಲು ||
ಪ್ರಾಸಾದದಗ್ರದೊಳ್ ತಪಿಸುತಿಹ ವಿಷಯೆಗೆ ವಿ |
ಲಾಸಿನಿಯರೈತಂದು ನುಡಿದರಂಬುಜ ವನಕೆ |
ನೇಸರುದಯಿಸುವ ಕಾಲದ ಮುಂದೆ ತಂಪಿಡಿದು ಬೀಸುವೆಳೆಗಾಳಿಯಂತೆ ||1||

ಪದವಿಭಾಗ-ಅರ್ಥ:
ವಾಸವಾತ್ಮಜ (ವಾಸವ:ಇಂದ್ರ)ಕೇಳು, ಅಲಂಕಾರದಿಂ ಚಂದ್ರಹಾಸನಂ ಮದವಳಿಗನಂ ಮಾಡುತಿರ್ದರ್ ಸುವಾಸಿನಿಯರು ಉತ್ಸವದೊಳು ಇಂತೆಂದು ಮದನನ ಅಂತಃಪುರದೊಳು=[ಇಂದ್ರನ ಮಗ ಅರ್ಜುನನೇ ಕೇಳು, ಮದನನ ಅಂತಃಪುರದಲ್ಲಿ ಅಲಂಕಾರದಿಂದ ಚಂದ್ರಹಾಸನನ್ನು ಮದುಮಗನನ್ನಾಗಿ ಮಾಡುತಿದ್ದರು ಎಂದು ಸುವಾಸಿನಿಯರು ಉತ್ಸಾಹದಿಂದ ];; ಎಚ್ಚರಿಸಲು ಪ್ರಾಸಾದದ ಅಗ್ರದೊಳ್ ತಪಿಸುತಿಹ ವಿಷಯೆಗೆ ವಿಲಾಸಿನಿಯರು ಐತಂದು ನುಡಿದರು ಅಂಬುಜವನಕೆ ನೇಸರು ಅದಯಿಸುವ ಕಾಲದ ಮುಂದೆ ತಂಪಿಡಿದು ಬೀಸುವ ಎಳೆಗಾಳಿಯಂತೆ=[ಎಚ್ಚರಿಸಲು ಉಪ್ಪರಿಗೆಯ ಮೇಲೆ ವಿರಹದಿಂದ ಸಂಕಟಪಡುತ್ತಿರುವ ವಿಷಯೆಗೆ ವಿಲಾಸಿನಿಯರು ಬಂದು ಹೇಳಿದರು; ಇದು ಕಮಲದ ವನಕ್ಕೆ ಸೂರ್ಯನು ಅದಯಿಸುವ ಕಾಲದ ಮೊದಲು ತಂಪಾದ ಬೀಸುವ ಎಳೆಗಾಳಿಯಂತೆ ಆಯಿತು. (ಕಮಲವು ಆಗ ಸಂತಸದಿಂದ ಅರಳುವುದು)]
 • ತಾತ್ಪರ್ಯ:ಇಂದ್ರನ ಮಗ ಅರ್ಜುನನೇ ಕೇಳು, ಮದನನ ಅಂತಃಪುರದಲ್ಲಿ ಅಲಂಕಾರದಿಂದ ಚಂದ್ರಹಾಸನನ್ನು ಮದುಮಗನನ್ನಾಗಿ ಮಾಡುತಿದ್ದರು ಎಂದು ಸುವಾಸಿನಿಯರು ಉತ್ಸಾಹದಿಂದ ಎಚ್ಚರಿಸಲು ಉಪ್ಪರಿಗೆಯ ಮೇಲೆ ವಿರಹದಿಂದ ಸಂಕಟಪಡುತ್ತಿರುವ ವಿಷಯೆಗೆ ವಿಲಾಸಿನಿಯರು ಬಂದು ಹೇಳಿದರು; ಇದು ಕಮಲದ ವನಕ್ಕೆ ಸೂರ್ಯನು ಅದಯಿಸುವ ಕಾಲದ ಮೊದಲು ತಂಪಾದ ಬೀಸುವ ಎಳೆಗಾಳಿಯಂತೆ ಆಯಿತು. (ಕಮಲವು ಆಗ ಸಂತಸದಿಂದ ಅರಳುವುದು)]
 • (ಪದ್ಯ-೧)

ಪದ್ಯ:-::[ಸಂಪಾದಿಸಿ]

ಸೊಗಯಿಸುವ ಪಚ್ಚುಗಪ್ಪುರದ ಪುಡಿಯಂ ಮೈಗೆ |
ತಿಗುರಿದೊಡೆ ಬಾವನ್ನದೊಳ್ಗೆಸರನೆಸೆವ ಕುಚ |
ಯುಗದೆಡೆಗೆ ಮೆತ್ತಿದೊಡೆ ಕಣ್ಣೆವೆಗೆ ಪನ್ನೀರನೊಡನೊಡನೆ ತೊಡೆದೊಡದಕೆ ||
ಮಿಗೆ ಪೆಚ್ಚಿತುರಿಯಂದು ಮತ್ತೆ ಸಿಡಿಮಿಡಿಗೊಂಡು |
ಮುಗುಳಂಬನುರುಬೆಗಾರದೆ ಪೊರಳುತಿಹ ಮಂತ್ರಿ |
ಮಗಳೆಡೆಗೆ ಪರಿತಂದು ನುಡಿದೊಳೊಸಗೆಯನಾಪ್ತಸಖಿಯೊರ್ವಳವಳಕೂಡೆ ||2||

ಪದವಿಭಾಗ-ಅರ್ಥ:
ಸೊಗಯಿಸುವ ಪಚ್ಚುಗಪ್ಪುರದ ಪುಡಿಯಂ ಮೈಗೆ ತಿಗುರಿದೊಡೆ(ತಿಕ್ಕು) ಬಾವನ್ನದೊಳ್ (ಗಂಧದ) (ಗೆ)ಕೆಸರನು ಎಸೆವ ಕುಚಯುಗದ ಎಡೆಗೆ ಮೆತ್ತಿದೊಡೆ ಕಣ್ಣೆವೆಗೆ ಪನ್ನೀರನು ಒಡನೊಡನೆ ತೊಡೆದೊಡೆ ಅದಕೆ=[ವಿಷಯೆಯ ವಿರಹ ಸಂಕಟ ಕಡಿಮೆ ಮಾಡಲು, ಸೊಗಸಾದ ಪಚ್ಚುಕರ್ಪುರದ ಪುಡಿಯನ್ನು ಮೈಗೆ ತಿಕ್ಕಿದರೆ, ತಣ್ಣನೆಯ ಗಂಧದ ಲೇಪವನ್ನು)(ಕೆಸರನು) ಶೋಭೆಯ ಕುಚಯುಗದ ಬುಡಕ್ಕೆ ಮೆತ್ತಿದರೆ, ಕಣ್ಣುರೆಪ್ಪೆಗೆ ಪನ್ನೀರನ್ನು ಪದೇ ಪದೇ ತೊಡೆದರೆ ಅದಕ್ಕೆ];; ಅವಳ ವಿರಹದ ಉರಿಯು ಮತ್ತೂ ಹೆಚ್ಚಿತು; ಮಿಗೆ ಪೆಚ್ಚಿತು ಉರಿಯಂದು ಮತ್ತೆ ಸಿಡಿಮಿಡಿಗೊಂಡು ಮತ್ತೆ ಸಿಡಿಮಿಡಿಗೊಂಡು ಅವಳು ಮುಗುಳಂಬನ (ಮುಗುಳು:ಹೂವು-ಅಂಬನ-ಬಾಣವುಳ್ಳವನ, ಮದನನ) ಉರುಬೆಗೆ ಆರದೆ ಪೊರಳುತಿಹ ಮಂತ್ರಿ ಮಗಳೆ ಎಡೆಗೆ ಪರಿತಂದು ನುಡಿದೊಳು ಒಸಗೆಯನು ಆಪ್ತಸಖಿಯೊರ್ವಳು ಅವಳಕೂಡೆ=[ಅವಳ ವಿರಹದ ಉರಿಯು ಮತ್ತೂ ಹೆಚ್ಚಿತು; ಮತ್ತೆ ಸಿಡಿಮಿಡಿಗೊಂಡು ಅವಳು ಕಾಮದೇವನ ಹೊಡೆತಗಳನ್ನು ತಾಳಲಾರದೆ ಹೊರಳಾಡುತ್ತಿರುವ ಮಂತ್ರಿ ಮಗಳ ಬಳಿಗೆ ಬಂದು ಅವಳ ಆಪ್ತಸಖಿಯೊಬ್ಬಳು ಅವಳೊಡನೆ ಅವಳ ಮದುವೆಯು ಆ ಕೂಡಲೇ ನೆಡೆಯುವ ವಿಷಯವನ್ನು ಹೇಳಿದಳು].
 • ತಾತ್ಪರ್ಯ:ವಿಷಯೆಯ ವಿರಹ ಸಂಕಟ ಕಡಿಮೆ ಮಾಡಲು, ಸೊಗಸಾದ ಪಚ್ಚುಕರ್ಪುರದ ಪುಡಿಯನ್ನು ಮೈಗೆ ತಿಕ್ಕಿದರೆ, ತಣ್ಣನೆಯ ಗಂಧದ ಲೇಪವನ್ನು)(ಕೆಸರನು) ಶೋಭೆಯ ಕುಚಯುಗದ ಬುಡಕ್ಕೆ ಮೆತ್ತಿದರೆ, ಕಣ್ಣುರೆಪ್ಪೆಗೆ ಪನ್ನೀರನ್ನು ಪದೇ ಪದೇ ತೊಡೆದರೆ ಅದಕ್ಕೆ ಅವಳ ವಿರಹದ ಉರಿಯು ಮತ್ತೂ ಹೆಚ್ಚಿತು; ಮತ್ತೆ ಸಿಡಿಮಿಡಿಗೊಂಡು ಅವಳು ಕಾಮದೇವನ ಹೊಡೆತಗಳನ್ನು ತಾಳಲಾರದೆ ಹೊರಳಾಡುತ್ತಿರುವ ಮಂತ್ರಿ ಮಗಳ ಬಳಿಗೆ ಬಂದು ಅವಳ ಆಪ್ತಸಖಿಯೊಬ್ಬಳು ಅವಳೊಡನೆ ಅವಳ ಮದುವೆಯು ಆ ಕೂಡಲೇ ನೆಡೆಯುವ ವಿಷಯವನ್ನು ಹೇಳಿದಳು].
 • (ಪದ್ಯ-೨)

ಪದ್ಯ:-::[ಸಂಪಾದಿಸಿ]

ಚಿಂತೆಯಂ ಬಿಡು ತರಳೆ ಕೈಸಾರ್ದುದೀಗ ನಿ |
ನ್ನಂತರಂಗದ ಬಯಕೆ ಶಶಿಹಾಸನೆಂಬವಂ |
ಕಂತು ಸಮನಾಗಿಹ ನೀನದೇಂ ಪುಣ್ಯಮಂ ಮಾಡಿದೆಯೊ ಮುನ್ನಿಳೆಯೊಳು ||
ಕುಂತಳೇಂದ್ರನ ಕುವರಿ ನಗುತ ಸರಸದೊಳಾಡಿ |
ದಂತಾಯ್ತು ತಂದೆ ಕಳುಹಿದ ಲೇಖನವನೋದಿ |
ಸಂತಸದೊಳಿಂದು ಮದನಂ ನಿನ್ನನಾತಂಗೆ ಕುಡುವನೆಂದವಳೊರೆದಳು ||3||

ಪದವಿಭಾಗ-ಅರ್ಥ:
ಚಿಂತೆಯಂ ಬಿಡು ತರಳೆ ಕೈಸಾರ್ದುದು ಈಗ ನಿನ್ನ ಅಂತರಂಗದ ಬಯಕೆ ಶಶಿಹಾಸನು ಎಂಬವಂ ಕಂತು (ಮನ್ಮಥ) ಸಮನಾಗಿಹ ನೀನು ಅದೇಂ ಪುಣ್ಯಮಂ ಮಾಡಿದೆಯೊ ಮುನ್ನ ಇಳೆಯೊಳು=['ಚಿಂತೆಯನ್ನು ಬಿಡು ಬಾಲಕಿ, ಈಗ ನಿನ್ನ ಅಂತರಂಗದ ಆಸೆ ಈಡೆರಿದೆ. ಚಂದ್ರಹಾಸ ಎಂಬುವನು ಮನ್ಮಥನಿಗೆ ಸಮನಾಗಿರವನು. ನೀನು ಅದೇನು ಪುಣ್ಯವನ್ನು ಮಾಡಿದ್ದೆಯೋ ಈ ಭೂಮಿಯಲ್ಲಿ ನಿನಗೆ ಚಂದದ ಗಂಡ ಸಿಕ್ಕಿದ್ದಾನೆ,'];; ಕುಂತಳೇಂದ್ರನ ಕುವರಿ ನಗುತ ಸರಸದೊಳು ಆಡಿದಂತಾಯ್ತು, ತಂದೆ ಕಳುಹಿದ ಲೇಖನವನು ಓದಿ ಸಂತಸದೊಳು ಇಂದು ಮದನಂ ನಿನ್ನನು ಆತಂಗೆ ಕುಡುವನೆಂದು ಅವಳ ಒರೆದಳು=[ಎಂದು, 'ಉದ್ಯಾನದಲ್ಲಿ ಕುಂತಳೇಂದ್ರನ ಕುವರಿಯು ನಗುತ್ತಾ ಸರಸದಲ್ಲಿ ಹೇಳಿದಂತೆಯೇ ಆಗಿದೆ. ತಂದೆ ಕಳುಹಿಸಿದದ ಲೇಖನವನ್ನು ಓದಿ ಸಂತೋಷದಿಂದ, ಇಂದು ಮದನನು ನಿನ್ನನು ಚಂದ್ರಹಾಸನಿಗೆ ಕೊಡುವನು,' ಎಂದು ವಿಷೆಯೆಯ ಆಪ್ತಸಖಿ ಹೇಳಿದಳು].
 • ತಾತ್ಪರ್ಯ:'ಚಿಂತೆಯನ್ನು ಬಿಡು ಬಾಲಕಿ, ಈಗ ನಿನ್ನ ಅಂತರಂಗದ ಆಸೆ ಈಡೆರಿದೆ. ಚಂದ್ರಹಾಸ ಎಂಬುವನು ಮನ್ಮಥನಿಗೆ ಸಮನಾಗಿರವನು. ನೀನು ಅದೇನು ಪುಣ್ಯವನ್ನು ಮಾಡಿದ್ದೆಯೋ ಈ ಭೂಮಿಯಲ್ಲಿ ನಿನಗೆ ಚಂದದ ಗಂಡ ಸಿಕ್ಕಿದ್ದಾನೆ,' ಎಂದು,'ಉದ್ಯಾನವನದಲ್ಲಿ ಕುಂತಳೇಂದ್ರನ ಕುವರಿಯು ನಗುತ್ತಾ ಸರಸದಲ್ಲಿ ಹೇಳಿದಂತೆಯೇ ಆಗಿದೆ. ತಂದೆ ಕಳುಹಿಸಿದದ ಲೇಖನವನ್ನು ಓದಿ ಸಂತೋಷದಿಂದ, ಇಂದು ಮದನನು ನಿನ್ನನು ಚಂದ್ರಹಾಸನಿಗೆ ಕೊಡುವನು,' ಎಂದು ವಿಷೆಯೆಯ ಆಪ್ತಸಖಿ ಹೇಳಿದಳು].
 • (ಪದ್ಯ-೩)

ಪದ್ಯ:-::[ಸಂಪಾದಿಸಿ]

ರಜ್ಜುಬಂಧವನುಗಿದ ಮೃಗದಂತೆ ತಾಂ ನೆನೆದ |
ಕಜ್ಜಮೊಡಗೂಡಲ್ಕೆ ಮೊಗಮರಲ್ದುದು ಬಳಿಕ |
ಲಜ್ಜೆ ಮೊಳೆದೋರಿದುದು ತಲೆಬಾಗಿ ನೆಲನ ನುಂಗುಟದಿಂದೆ ಬರೆಯುತಿರಲು ||
ಉಜ್ಜುಗವಿದೇನಬಲೆ ಸಾಕು ನಡೆ ಮಂಗಳ ಸು |
ಮಜ್ಜನದ ಮನೆಗೆಂದು ಕಮಲಾಯತಾಕ್ಷಿಯಂ |
ತಜ್ಜನನಿ ಕಳುಹಿದ ನಿತಂಬಿನಿಯರುಪ್ಪರಿಗೆದುದಿಯಿಂದಿಳುಹಿ ತಂದರು(ತಂದರಂಗನೆಯ) ||4||

ಪದವಿಭಾಗ-ಅರ್ಥ:
ರಜ್ಜುಬಂಧವನು ಉಗಿದ ಮೃಗದಂತೆ ತಾಂ ನೆನೆದ ಕಜ್ಜಂ ಒಡಗೂಡಲ್ಕೆ ಮೊಗಂ ಅರಲ್ದುದು ಬಳಿಕ ಲಜ್ಜೆ ಮೊಳೆದೋರಿದುದು ತಲೆಬಾಗಿ ನೆಲನ ನುಂಗುಟದಿಂದೆ ಬರೆಯುತಿರಲು=[ಕಟ್ಟಿದ ಹಗ್ಗದಿಂದ ಬಿಟ್ಟ ಮೃಗದ ಹಾಗೆ, ತಾನು ಆಸೆಪಟ್ಟ ಕೆಲಸ ಕೈಗೂಡಲು, ವಿಷಯೆಯ ಮುಖವು ಅರಳಿತು. ಬಳಿಕ ಅವಳಲ್ಲಿ ನಾಚಿಕೆ ಉಂಟಾಯಿತು; ಅವಳು ತಲೆಬಗ್ಗಸಿಕೊಂಡು ನೆಲದಮೇಲೆ ಕಾಲು ಉಂಗಷ್ಟದಿಂದ ಸುಮ್ಮನೆ ಬರೆಯುತ್ತಿರಲು, ];; ಉಜ್ಜುಗವಿದೇನು ಅಬಲೆ ಸಾಕು ನಡೆ ಮಂಗಳ ಸುಮಜ್ಜನದ ಮನೆಗೆಂದು ಕಮಲಾಯತಾಕ್ಷಿಯಂ (ಕಮಲದ ಎಸಳಿನಷ್ಟು ಆಗಲದ ಕಣ್ಣಿನವಳನ್ನು) ತತ್ ಜನನಿ ಕಳುಹಿದ ನಿತಂಬಿನಿಯರು ಉಪ್ಪರಿಗೆ (ದು) ತುದಿಯಿಂದ ಇಳುಹಿ ತಂದರು(ತಂದರಂಗನೆಯ)=[ಅವಳ ಸಖಿಯು, 'ಇದೇನು ಉದ್ಯೋಗ ನಿನ್ನದು ಹುಡುಗಿ!, ಸಾಕು ನಡೆ ಮಂಗಳಸ್ನಾನದ ಮನೆಗೆ,'ಎಂದು ಹೇಳಿ ವಿಷಯೆಯನ್ನು ಅವಳ ತಾಯಿಯು ಕಳುಹಿಸಿದ ಹೆಂಗಸರು ಉಪ್ಪರಿಗೆಯ ಮೇಲಿಂದ ಕೆಳಗೆ ಇಳುಹಿಸಿ ಕರೆದುಕೊಂಡು ಬಂದರು.]
 • ತಾತ್ಪರ್ಯ:'ಕಟ್ಟಿದ ಹಗ್ಗದಿಂದ ಬಿಟ್ಟ ಮೃಗದ ಹಾಗೆ, ತಾನು ಆಸೆಪಟ್ಟ ಕೆಲಸ ಕೈಗೂಡಲು, ವಿಷಯೆಯ ಮುಖವು ಅರಳಿತು. ಬಳಿಕ ಅವಳಲ್ಲಿ ನಾಚಿಕೆ ಉಂಟಾಯಿತು; ಅವಳು ತಲೆಬಗ್ಗಸಿಕೊಂಡು ನೆಲದಮೇಲೆ ಕಾಲು ಉಂಗಷ್ಟದಿಂದ ಸುಮ್ಮನೆ ಬರೆಯುತ್ತಿರಲು, ಅವಳ ಸಖಿಯು, 'ಇದೇನು ಉದ್ಯೋಗ ನಿನ್ನದು ಹುಡುಗಿ!, ಸಾಕು ನಡೆ ಮಂಗಳಸ್ನಾನದ ಮನೆಗೆ,'ಎಂದು ಹೇಳಿ ವಿಷಯೆಯನ್ನು ಅವಳ ತಾಯಿಯು ಕಳುಹಿಸಿದ ಹೆಂಗಸರು ಉಪ್ಪರಿಗೆಯ ಮೇಲಿಂದ ಕೆಳಗೆ ಇಳುಹಿಸಿ ಕರೆದುಕೊಂಡು ಬಂದರು.
 • (ಪದ್ಯ-೪)

ಪದ್ಯ:-::[ಸಂಪಾದಿಸಿ]

ವರ ಶಾತಕುಂಭ ಕುಂಭಸ್ತನದ ಪಲ್ಲವಾ |
ಧರದ ಗುಣರಾಜಿ ರಾಜಿತದ ಕೋಮಲೆಗೆ ಸೌಂ |
ದರ ಕುಂಕುಮಾಂಗ ಮಾಂಗಲ್ಯದಬಲೆಯರುದಕಪೂರಿತ ಕನಕಕಲಶದ ||
ಸುರುಚಿವೆತ್ತರುಣ ತರುಣ ಪ್ರವಾಳದ ವಸ್ತ್ರ |
ಪರಿವೃತದ ಕಲ್ಪಕಲ್ಪ ವಿಧಾನಮಾಗಿರದೆ |
ವಿರಚಿಸಿದರಾಗ ರಾಗದೊಳಮಲ ಶೋಭನ ಸ್ನಾನಮಂ ಸೋತ್ಸವದೊಳು ||5||

ಪದವಿಭಾಗ-ಅರ್ಥ:
ವರ ಶಾತಕುಂಭ (ಚಿನ್ನದ) ಕುಂಭಸ್ತನದ ಪಲ್ಲವಾಧರದ (ಪಲ್ಲವ:ಚಿಗುರು) ಗುಣರಾಜಿ ರಾಜಿತದ ಕೋಮಲೆಗೆ ಸೌಂದರ ಕುಂಕುಮಾಂಗ (ಕುಂಕುಮವುಳ್ಳವರು, ಮಾಂಗಲ್ಯದ ಅಬಲೆಯರು: ಮತ್ತೈದೆಯರು)=[ಶ್ರೇಷ್ಠ ಚಿನ್ನದ ಚೊಂಬಿನಂತಿರುವ ಮೊಲೆಗಳ, ಕೆಂಪು ಚಿಗುರಿನಂತಿರುವ ತುಟಿಗಳ, ಉತ್ತಮ ಗುಣಗಳಿಂದ ಶೋಭಿಸುವ ಕೋಮಲೆ ವಿಷಯೆಗೆ ಸುಂದರ ಮುತ್ತೈದೆಯರಾದ ವನಿತೆಯರು,];; ಉದಕಪೂರಿತ ಕನಕ ಕಲಶದ ಸುರುಚಿವೆತ್ತ ಅರುಣ ತರುಣ ಪ್ರವಾಳದ (ಕೆಂಪು, ಹವಳ: ತಿಳಿಗೆಂಪು) ವಸ್ತ್ರಪರಿವೃತದ (ತಿಳಿಗೆಂಪುಬಟ್ಟೆಸುತ್ತಿ) ಕಲ್ಪಕಲ್ಪ ವಿಧಾನಮ್ ಆಗ ಇರದೆ ವಿರಚಿಸಿದರು (ಮಾಡಿಸಿದರು) ಆಗ ರಾಗದೊಳು (ಪ್ರೀತಿ) ಅಮಲ ಶೋಭನ ಸ್ನಾನಮಂ ಸ ಉತ್ಸವದೊಳು=[ನೀರು ತುಂಬಿದ ಕನಕ ಕಲಶದಿಂದ ಸದಭಿರುಚಿಯ ಕೆಂಪು, ತಿಳಿಗೆಂಪು ವಸ್ತ್ರವನ್ನು ಅವಳಗೆ ಉಡಿಸಿ ರೂಢಿ ಪದ್ದತಿಗಳ ವಿಧಾನದಲ್ಲಿ ಆಗ ಅವಸರದಲ್ಲಿ ಪ್ರೀತಿಯಿಂದ ವಿರಚಿಸಿದರು ಪವಿತ್ರ ಶೋಭನಸ್ನಾನವನ್ನು ಒಳ್ಳೆ ಸಂದಸದಿಂದ ಮಾಡಿಸಿದರು].
 • ತಾತ್ಪರ್ಯ:ಶ್ರೇಷ್ಠ ಚಿನ್ನದ ಚೊಂಬಿನಂತಿರುವ ಮೊಲೆಗಳ, ಕೆಂಪು ಚಿಗುರಿನಂತಿರುವ ತುಟಿಗಳ, ಉತ್ತಮ ಗುಣಗಳಿಂದ ಶೋಭಿಸುವ ಕೋಮಲೆ ವಿಷಯೆಗೆ ಸುಂದರ ಮುತ್ತೈದೆಯರಾದ ವನಿತೆಯರು, ನೀರು ತುಂಬಿದ ಕನಕ ಕಲಶದಿಂದ ಸದಭಿರುಚಿಯ ಕೆಂಪು, ತಿಳಿಗೆಂಪು ವಸ್ತ್ರವನ್ನು ಅವಳಗೆ ಉಡಿಸಿ ರೂಢಿ ಪದ್ದತಿಗಳ ವಿಧಾನದಲ್ಲಿ ಆಗ ಅವಸರದಲ್ಲಿ ಪ್ರೀತಿಯಿಂದ ಪವಿತ್ರ ಶೋಭನಸ್ನಾನವನ್ನು ಒಳ್ಳೆ ಸಂತಸದಿಂದ ಮಾಡಿಸಿದರು.
 • (ಪದ್ಯ-೫)

ಪದ್ಯ:-::[ಸಂಪಾದಿಸಿ]

ಮುಟ್ಟಿದೊಡೆ ಕಂದದಿರದವಳ ಸುಕುಮಾರ ತನು |
ದಿಟ್ಟೆಯರದೆಂತೊ ನವ ಕುಂಕುಮವನೀಗ ನುಂ |
ಪಿಟ್ಟರಲ್ಲದೆ ಪೋದ ಮಧ್ಯದೊಳದೆಂತು ನಿಲಿಸಿದರೊ ದಿವ್ಯಾಂಬರವನು ||
ಬಟ್ಟಮೊಲೆಗಳ ಪೊರೆಗೆ ಬಾಗಿ ನಡೆವಳ್ಗೆಂತು |
ಕಟ್ಟಿದರೊ ಹಾರಾವಳಿಯನೆಂದು ಕೌತುಕಂ |
ಬಿಟ್ಟು ನೋಳ್ಪವೊಲೆಸೆದಳಾವಿಷಯೆ ಬಳಿಕಲಂಕಾರ ಮಂಡಿತೆಯಾಗಲು ||6||

ಪದವಿಭಾಗ-ಅರ್ಥ:
ಮುಟ್ಟಿದೊಡೆ ಕಂದದೆ ಇರದು ಅವಳ ಸುಕುಮಾರ ತನು ದಿಟ್ಟೆಯರು ಅದೆಂತೊ ನವ ಕುಂಕುಮವನು ಈಗ ನುಂಪಿಟ್ಟರು ಅಲ್ಲದೆ ಪೋದ (ಬಡವಾಗಿ ಒಳಕ್ಕೆ ಹೋದ) ಮಧ್ಯದೊಳು ಅದೆಂತು ನಿಲಿಸಿದರೊ ದಿವ್ಯಾಂಬರವನು=[ಕೈಯಿಂದ ಮುಟ್ಟಿದರೆ ಕಂದಿ ಹೋಗುವುದೇನೊ,ವಿಷಯೆಯ ಕೋಮಲ ಶರೀರ - ಎನ್ನುವಂತಿತ್ತು! ಜಾಣೆಯರು ಅದು ಹೇಗೆ ಹೊಸ ಕುಂಕುಮಾದಿ ಅಲಂಕಾರವನ್ನು ಈಗ ಮಾಡಿದರು! ಅಲ್ಲದೆ ಅವಳ ಬಲುಸಣ್ಣ ಸೊಂಟದಲ್ಲಿ ಅದು ಹೇಗೆ ದಿವ್ಯಾಂಬರವನ್ನು ನಿಲ್ಲಿಸಿದರೊ!];; ಬಟ್ಟಮೊಲೆಗಳ ಪೊರೆಗೆ ಬಾಗಿ ನಡೆವಳ್ಗೆ ಎಂತು ಕಟ್ಟಿದರೊ ಹಾರಾವಳಿಯನು ಎಂದು ಕೌತುಕಂ ಬಿಟ್ಟು ನೋಳ್ಪವೊಲೆ ಎಸೆದಳು ಆ ವಿಷಯೆ ಬಳಿಕ ಅಲಂಕಾರ ಮಂಡಿತೆಯಾಗಲು=[ದಪ್ಪಮೊಲೆಗಳ ಭಾರಕ್ಕೆ ಬಾಗಿ ನಡೆಯುವವಳಿಗೆ ಹೇಗೆ ಕಟ್ಟಿದರೊ ನಾನಾ ಹಾರಗಳನ್ನು! ಎಂದು ಆಶ್ಚರ್ಯದಿಂದ ನೋಡುವಂತೆ, ಅವಳು- ಆ ವಿಷಯೆ ಶೋಭಿಸಿದಳು; ಅಂತೂ ಬಳಿಕ ಅಲಂಕಾರ ಶೋಬಿತೆಯಾದಳು ].
 • ತಾತ್ಪರ್ಯ: ಕೈಯಿಂದ ಮುಟ್ಟಿದರೆ ಕಂದಿ ಹೋಗುವುದೇನೊ, ಎನ್ನುವಂತಿತ್ತು ವಿಷಯೆಯ ಕೋಮಲ ಶರೀರ! ಜಾಣೆಯರು ಅದು ಹೇಗೆ ಹೊಸ ಕುಂಕುಮಾದಿ ಅಲಂಕಾರವನ್ನು ಈಗ ಮಾಡಿದರು! ಅಲ್ಲದೆ ಅವಳ ಬಲುಸಣ್ಣ ಸೊಂಟದಲ್ಲಿ ಅದು ಹೇಗೆ ದಿವ್ಯಾಂಬರವನ್ನು ನಿಲ್ಲಿಸಿದರೊ! ದಪ್ಪಮೊಲೆಗಳ ಭಾರಕ್ಕೆ ಬಾಗಿ ನಡೆಯುವವಳಿಗೆ ಹೇಗೆ ಕಟ್ಟಿದರೊ ನಾನಾ ಹಾರಗಳನ್ನು! ಎಂದು ಆಶ್ಚರ್ಯದಿಂದ ನೋಡುವಂತೆ, ಅವಳು- ಆ ವಿಷಯೆ ಶೋಭಿಸಿದಳು; ಅಂತೂ ಬಳಿಕ ಅಲಂಕಾರ ಶೋಬಿತೆಯಾದಳು.
 • (ಪದ್ಯ-೫)

ಪದ್ಯ:-::[ಸಂಪಾದಿಸಿ]

ಬಾವನ್ನಗಂಪಿನಂಗದ ಲಲನೆಗನುಲೇಪ |
ನಾವಳಿಗಳೇಕಿನ್ನು ಕನ್ಯಕಾ ತಿಲಕಕ್ಕೆ |
ಭಾವಿಸೆ ಲಲಾಮವೇತಕೆ ಪಣೆಗೆ ಸೊಂಪೊದವಿದವಯಕದೊಳಿಂಪುವಡೆದ ||
ಪೂವೆಸೆವ ಕೋಮಲೆಗದೇಕೆ ಕುಸುಮದ ಮಾಲೆ |
ಲಾವಣ್ಯ ಭೂಷಣದ ಪೆಣ್ಗಾಭರಣಮೇಕೆ |
ಕೋವಿದೆಯರಲ್ಲ ಸೈರಂದ್ರಿಯರೆನಲ್ಕೆ ವಿಷಯೆಗೆ ಸಿಂಗರಂ ಗೈವರು ||7||

ಪದವಿಭಾಗ-ಅರ್ಥ:
ಬಾವನ್ನ (ಗಂಧ)(ಗ)ಕಂಪಿನ ಅಂಗದ ಲಲನೆಗೆ ಅನುಲೇಪನ ಆವಳಿಗಳು ಏಕಿನ್ನು ಕನ್ಯಕಾ ತಿಲಕಕ್ಕೆ ಭಾವಿಸೆ ಲಲಾಮವು ಏತಕೆ ಪಣೆಗೆ ಸೊಂಪು ಒದವಿದ ಅವಯವದೊಳು ಇಂಪುವಡೆದ=[ಗಂಧದ ಕಂಪಿನ ದೇಹದ ಬಾಲೆಗೆ ಅನುಲೇಪನ ನಾನಾಬಗೆಯವು ಏಕಿನ್ನು?(ಕನ್ಯೆಯರಲ್ಲಿ ಅವಳೇ ತಿಲಕದಂತಿದ್ದಾಳೆ) ಕನ್ಯಕಾ ತಿಲಕವಾಗಿರುವ ವಿಷಯೆಗೆ ಹಣೆಗೆ ಕಸ್ಥೂರಿತಿಲಕ ವಿಚಾರ ಮಾಡಿದರೆ ಹಣೆಯಲ್ಲಿ ಇಡುವುದು ಏತಕೆ? ಸೊಂಪಾಗಿರುವ/ ಮೃದುವಾಗಿ ತೋರುವ ಅವಯವದಲ್ಲಿ ಸೊಗಸುಪಡೆದ];; ಪೂ ವೆಸೆವ (ಹೂವಿನಂತೆ+ ತೋರುವ) ಕೋಮಲೆಗೆ ಅದೇಕೆ ಕುಸುಮದ ಮಾಲೆ ಲಾವಣ್ಯ ಭೂಷಣದ ಪೆಣ್ಗೆ ಆಭರಣಮ್ ಏಕೆ ಕೋವಿದೆಯರು ಅಲ್ಲ ಸೈರಂದ್ರಿಯರು ಎನಲ್ಕೆ ವಿಷಯೆಗೆ ಸಿಂಗರಂ ಗೈವರು=[ಹೂವಿನಂತಿರುವ ಕೋಮಲೆ ವಿಷಯೆಗೆ ಹೂವಿನ ಮಾಲೆ ಅದೇಕೆ ಬೇಕು? ಲಾವಣ್ಯ ಅಥವಾ ಸೊಬಗೇ ಭೂಷಣವಾದ ಹೆಣ್ನಿಗೆ ಆಭರಣ ಏಕೆ ಬೇಕು! (ಇದಾವುದೂ ಬೇಡ ಅಗತ್ಯವಿಲ್ಲ ಎಂದು ಭಾವ). ಅಲಂಕರಿಸುವ ಹೆಂಗಸರು ತಜ್ಞರಲ್ಲ, ಎನ್ನುವಂತೆ ವಿಷಯೆಗೆ ಶೃಂಗಾರ ಮಾಡುವರು!].
 • ತಾತ್ಪರ್ಯ:ಗಂಧದ ಕಂಪಿನ ದೇಹದ ಬಾಲೆಗೆ ನಾನಾ ಬಗೆಯ ಅನುಲೇಪನ ಏಕಿನ್ನು?(ಕನ್ಯೆಯರಲ್ಲಿ ಅವಳೇ ತಿಲಕದಂತಿದ್ದಾಳೆ) ಕನ್ಯಕಾ ತಿಲಕವಾಗಿರುವ ವಿಷಯೆಗೆ ಹಣೆಗೆ ಕಸ್ಥೂರಿತಿಲಕ ವಿಚಾರ ಮಾಡಿದರೆ ಹಣೆಯಲ್ಲಿ ಇಡುವುದು ಏತಕೆ? ಸೊಂಪಾಗಿರುವ/ ಮೃದುವಾಗಿ ತೋರುವ ಅವಯವದಲ್ಲಿ ಸೊಗಸುಪಡೆದ ಹೂವಿನಂತಿರುವ ಕೋಮಲೆ ವಿಷಯೆಗೆ ಹೂವಿನ ಮಾಲೆ ಅದೇಕೆ ಬೇಕು? ಲಾವಣ್ಯ ಅಥವಾ ಸೊಬಗೇ ಭೂಷಣವಾದ ಹೆಣ್ನಿಗೆ ಆಭರಣ ಏಕೆ ಬೇಕು! (ಇದಾವುದೂ ಬೇಡ ಅಗತ್ಯವಿಲ್ಲ ಎಂದು ಭಾವ). ಅಲಂಕರಿಸುವ ಹೆಂಗಸರು ತಜ್ಞರಲ್ಲ, ಎನ್ನುವಂತೆ ವಿಷಯೆಗೆ ಶೃಂಗಾರ ಮಾಡುವರು!].
 • (ಪದ್ಯ-೭)

ಪದ್ಯ:-::[ಸಂಪಾದಿಸಿ]

ಅಪರದಿಗ್ಭಾಗದಂತಂಜನೋದ್ಭಾಸಿತಂ |
ವಿಪುಲ ಹರಿಪದದಂತೆ ತಾರಕಾಲಂಕೃತಂ |
ಲಿಪಿಯಂತೆ ದೀರ್ಘಶೋಭಾನ್ವಿತಂ ದ್ವಿಜನಂತೆ ಶ್ರುತಿಯುತಂ ದೈತ್ಯನಂತೆ ||
ಅಪಹೃತಾನಿಮಿಷ ಲೀಲಾವಿಲಾಸಂ ನರಾ |
ಧಿಪನಂತೆ ಕುವಲಯ ಶ್ರೀಧರಂ ಘನದಂತೆ |
ಚಪಲಾಭಿರಾಮಮಾಗಿರ್ದುದಾ ಶಶಿಮುಖಿಯ ನೇತ್ರಯುಗಮೇವೇಳ್ವೆನು ||8||

ಪದವಿಭಾಗ-ಅರ್ಥ:
(ಚಂದ್ರನಂತೆ ಮುಖವುಳ್ಳ ವಿಷಯೆಯ ಎರಡು ಕಣ್ಣುಗಳು): ಅಪರ ದಿಗ್ಭಾಗದಂತೆ (ಅಪರ ದಿಕ್ಕು:ಪಶ್ಚಿಮ) ಅಂಜನ ಉದ್ಭಾಸಿತಂ (ಕಾಂತಿಯುಯ,ಪ್ರಕಾಶಿತ) ವಿಪುಲ ಹರಿಪದದಂತೆ (ಹರಿಪದ:ಆಕಾಶ) ತಾರಕ (ಬೆಳ್ಳಿ)ಅಲಂಕೃತಂ ಲಿಪಿಯಂತೆ (ಲಿಪಿ:ಅಕ್ಷರ))ದೀರ್ಘಶೋಭಾನ್ವಿತಂ=[ಚಂದ್ರನಂತೆ ಮುಖವುಳ್ಳ ವಿಷಯೆಯ ಎರಡು ಕಣ್ಣುಗಳು, ಅಪರ ದಿಕ್ಕಾದ ಪಶ್ಚಿಮದಂತೆ, ಸೂರ್ಯಾಸ್ತದ ನಂತರದ ಕಪ್ಪಿನಂತೆ ಕಣ್ಣಿನ ಕಾಡಿಗೆಯೊಡನೆ ಕಾಂತಿಯುತಳು. ವಿಶಾಲ ಆಕಾಶವು ತಾರೆಗಳಿಂದ ಶೋಭಿಸುವಂತೆ ಅವಳ ಎರಡು ಕಣ್ಣುಗಳಿಂದ (ಎರಡು ತಾರೆಗಳು) ಅಲಂಕೃತಳು; ಅಕ್ಷರಗಳು ದೀರ್ಘಾಕ್ಷರದಿಂದ ಶೋಭಿಸುವಂತೆ ಇವಳು ದೀರ್ಘ(ನೇತ್ರ)ಶೋಭೆಯುಳ್ಳವಳು];; ದ್ವಿಜನಂತೆ ಶ್ರುತಿಯುತಂ(ಶ್ರುತಿ: ವೇದ, ಸುಕುಮಾರತೆ, ಮೆಲುದನಿ) ದೈತ್ಯನಂತೆ ಅಪಹೃತ ಅನಿಮಿಷ (ಅನಿಮಿಷ; ಕಣ್ಣುಮಿಟುಕಿಸದೆ ಇರುವದು-ಅಪಹೃತ-ಅದಕ್ಕೆ ವಿರುದ್ಧ-ಕಣ್ಣು ಮಿಟುಕಿಸುವಳು) ಲೀಲಾವಿಲಾಸಂ ನರಾಧಿಪನಂತೆ ಕುವಲಯ (ಭೂಮಿ, ಕಮಲ) ಶ್ರೀಧರಂ(ಶ್ರೀ :ಕಾಂತಿ, ಮಿಂಚು) ಘನದಂತೆ (ಘನ:ಮೋಡ) ಚಪಲಾ (ಮಿಂಚು) ಅಭಿರಾಮಮ್ (ಮನೋಹರ) ಆಗಿರ್ದುದು ಆ ಶಶಿಮುಖಿಯ ನೇತ್ರಯುಗಂ ಏವೇಳ್ವೆನು=[ ಶ್ರುತಿ ಅಥವಾ ವೇದಗಳನ್ನು ತಿಳಿದ ಬ್ರಾಹ್ಮಣನಂತೆ ಇವಳು ಶ್ರುತಿಯುತಳು ಎಂದರೆ ಸುಕುಮಾರತೆಯುಳ್ಳವಳು; ಕಣ್ಣು ಮಿಟುಕಿಸದೆ ಇರುವ ಅನಿಮಿಷರ ದೇವತೆಗಳ- ಅಪಹೃತ ಗುಣವಾದ ಸದಾ ಕಣ್ಣಮಿಟುಕಿಸುವ ದೈತ್ಯನಂತೆ, ಚಂಚಲತೆಯ ರೆಪ್ಪೆ ಚಲನೆಯ ಲೀಲಾವಿಲಾಸ ಹೊಂದಿದವಳು ವಿಷಯೆ; ರಾಜನು ಕುವಲಯವಾದ ಭೂ ಒಡೆಯನಾದರೆ, ಇವಳು ಅದೇ ಕುವಲಯವಾದ ಮುಖ ಕಮಲವುಳ್ಳವಳು; ಶ್ರೀ/ ಕಾಂತಿಯನ್ನು ಹೊಂದಿದವಳು ಆದ್ದರೀದ ಶ್ರೀಧರಳು; ಮಿಂಚನ್ನು ಹೊಂದಿದ ಘನದಂತೆ(ಮೋಡ) ಇವಳು ಕಾಂತಿಯುತಳು, ಅದಕ್ಕಾಗಿ ಘನಳು; ಹೀಗೆ ಆ ಶಶಿಮುಖಿಯಾದ ವಿಷಯೆಯ ಎರಡು ಕಣ್ಣುಗಳು ಮಿಂಚಿನಂತೆ ಮನೋಹರವಾಗಿದ್ದವು,ಏನು ಹೇಳಲಿ ಎಂದರು ನಾರದರು.]
 • ತಾತ್ಪರ್ಯ:ಚಂದ್ರನಂತೆ ಮುಖವುಳ್ಳ ವಿಷಯೆಯ ಎರಡು ಕಣ್ಣುಗಳು, ಅಪರ ದಿಕ್ಕಾದ ಪಶ್ಚಿಮದಂತೆ, ಸೂರ್ಯಾಸ್ತದ ನಂತರದ ಕಪ್ಪಿನಂತೆ ಕಣ್ಣಿನ ಕಾಡಿಗೆಯೊಡನೆ ಕಾಂತಿಯುತಳು. ವಿಶಾಲ ಆಕಾಶವು ತಾರೆಗಳಿಂದ ಶೋಭಿಸುವಂತೆ ಅವಳ ಎರಡು ಕಣ್ಣುಗಳಿಂದ (ಎರಡು ತಾರೆಗಳು) ಅಲಂಕೃತಳು; ಅಕ್ಷರಗಳು ದೀರ್ಘಾಕ್ಷರದಿಂದ ಶೋಭಿಸುವಂತೆ ಇವಳು ದೀರ್ಘ(ನೇತ್ರ)ಶೋಭೆಯುಳ್ಳವಳು; ಶ್ರುತಿ ಅಥವಾ ವೇದಗಳನ್ನು ತಿಳಿದ ಬ್ರಾಹ್ಮಣನಂತೆ ಇವಳು ಶ್ರುತಿಯುತಳು ಎಂದರೆ ಸುಕುಮಾರತೆಯುಳ್ಳವಳು; ಕಣ್ಣು ಮಿಟುಕಿಸದೆ ಇರುವ ಅನಿಮಿಷರ ದೇವತೆಗಳ- ಅಪಹೃತ ಗುಣವಾದ ಸದಾ ಕಣ್ಣಮಿಟುಕಿಸುವ ದೈತ್ಯನಂತೆ, ಚಂಚಲತೆಯ ರೆಪ್ಪೆ ಚಲನೆಯ ಲೀಲಾವಿಲಾಸ ಹೊಂದಿದವಳು ವಿಷಯೆ; ರಾಜನು ಕುವಲಯವಾದ ಭೂ ಒಡೆಯನಾದರೆ ಇವಳು ಅದೇ ಕುವಲಯವಾದ ಮುಖ ಕಮಲವುಳ್ಳವಳು; ಶ್ರೀ/ ಕಾಂತಿಯನ್ನು ಹೊಂದಿದವಳು ಆದ್ದರೀದ ಶ್ರೀಧರಳು; ಮಿಂಚನ್ನು ಹೊಂದಿ ಘನದಂತೆ ಇವಳು ಕಾಂತಿಯುತಳು, ಅದಕ್ಕಾಗಿ ಘನಳು; ಹೀಗೆ ಆ ಶಶಿಮುಖಿಯಾದ ವಿಷಯೆಯ ಎರಡು ಕಣ್ಣುಗಳು ಮಿಂಚಿನಂತೆ ಮನೋಹರವಾಗಿದ್ದವು,ಏನು ಹೇಳಲಿ ಎಂದರು ನಾರದರು.
 • (ಪದ್ಯ-೮)

ಪದ್ಯ:-::[ಸಂಪಾದಿಸಿ]

ಉಲ್ಲಾಸ ತಿಲಕಮುಂ ಸುತಮಾಲ ಪತ್ರಮುಂ |
ಮೊಲ್ಲೆಯ ಮುಗುಳ್ಗಳುಂ ಚೂತ ಪ್ರವಾಳಮುಂ |
ಮಲ್ಲಿಗೆಯಲರ್ಗಳುಂ ಸಂಪಗೆಯ ಮೊಗ್ಗೆಯುಂ ನಿಂಬದಳಮುಂ ತೊಳಗುವ ||
ಸಲ್ಲಲಿತ ಸಾಲ ಕಾನನದೊಳಿರ್ದಪುವು ಪೊಸ |
ತಲ್ಲೆಂಬ ತೆರನಾದುದೆಂತು ಬಣ್ಣಿಸುವೆನೀ |
ಚೆಲ್ಲೆಗಂಗಳ ಚೆಲ್ವಿಕೆಯೊಳೆಸೆವ ಬಾಲಕಿಯ ನಗೆಮೊಗದ ಸೌಂದರವನು ||9||

ಪದವಿಭಾಗ-ಅರ್ಥ:
ಉಲ್ಲಾಸ ತಿಲಕಮುಂ ಸುತಮಾಲ (ಹೊಂಗೆ,ನೀಲಿ) ಪತ್ರಮುಂ ಮೊಲ್ಲೆಯ ಮುಗುಳ್ಗಳುಂ ಚೂತ ಪ್ರವಾಳಮುಂ ಮಲ್ಲಿಗೆಯ ಅಲರ್ಗಳುಂ ಸಂಪಗೆಯ ಮೊಗ್ಗೆಯುಂ ಬಿಂಬದಳಮುಂ=[ವಿಷಯೆಯು ಅಲಂಕಾರಗೊಂಡಾಗ ಅವಳಲ್ಲಿ, ಸಂತಸ ಕೊಡುವ ತಿಲಕವು, ಚಂದದ ನೀಲಿ ಮಕರ ಪತ್ರವು, ಮಲ್ಲಿಗೆಯ ಮೊಗ್ಗುಗಳು ಚಿಗುರಿದ ಮಾವು, ಮಲ್ಲಿಗೆಯ ಹೂವುಗಳು, ಸಂಪಗೆಯ ಮೊಗ್ಗು, ಬೇವಿನ ಚಿಗುರು,];; ತೊಳಗುವ ಸಲ್ಲಲಿತ ಸಾಲ ಕಾನನದೊಳಿರ್ದಪುವು ಪೊಸ ತಲ್ಲೆಂಬ ತೆರನಾದುದೆಂತು ಬಣ್ಣಿಸುವೆನೀ ಚೆಲ್ಲೆಗಂಗಳ ಚೆಲ್ವಿಕೆಯೊಳೆಸೆವ ಬಾಲಕಿಯ ನಗೆಮೊಗದ ಸೌಂದರವನು=[ಪ್ರಕಾಶಿಸುವ ಸಲ್ಲಲಿತ ಸಾಲಾಗಿರುವ ಕಾಡಿನಲ್ಲಿ ತಿಲಕ ಇತ್ಯಾದಿ ಅದೇ ಹೆಸರಿನ ಮರಗಳಿರುವುವು ಆದರೆ ಅವು, ಹೊಸತಲ್ಲೆಂಬಂತೆ ಈ ಚೆಲ್ಲೆಕಣ್ಣುಗಳ ಚೆಲ್ವಿಕೆಯಲ್ಲಿಯೇ ಶೋಭಿಸುತ್ತಿತ್ತು. ವಿಷಯೆಯ ನಗುಮುಖದ ರೀತಿ ಹೂಬಿಟ್ಟ ಚಿಗುರಿದ ಕಾಡಿನಂತೆ ಇತ್ತು; ಈ ಸೌಂದರ್ಯವನ್ನು ಏನು ವರ್ಣಿಸಲಿ, ಎಂದರು ನಾರದರು.]
 • ತಾತ್ಪರ್ಯ:ವಿಷಯೆಯು ಅಲಂಕಾರಗೊಂಡಾಗ ಅವಳಲ್ಲಿ, ಸಂತಸ ಕೊಡುವ ತಿಲಕವು, ಚಂದದ ನೀಲಿ ಮಕರ ಪತ್ರವು, ಮಲ್ಲಿಗೆಯ ಮೊಗ್ಗುಗಳು ಚಿಗುರಿದ ಮಾವು, ಮಲ್ಲಿಗೆಯ ಹೂವುಗಳು, ಸಂಪಗೆಯ ಮೊಗ್ಗು, ಬೇವಿನ ಚಿಗುರು, ಪ್ರಕಾಶಿಸುವ ಸಲ್ಲಲಿತ ಸಾಲಾಗಿರುವ ಕಾಡಿನಲ್ಲಿ ಈ ತಿಲಕ ಇತ್ಯಾದಿ ಅದೇ ಹೆಸರಿನ ಮರಗಳಿರುವುವು ಆದರೆ ಅವು, ಹೊಸತಲ್ಲೆಂಬಂತೆ ಈ ಚೆಲ್ಲೆಕಣ್ಣುಗಳ ಚೆಲ್ವಿಕೆಯಲ್ಲಿಯೇ ಶೋಭಿಸುತ್ತಿತ್ತು. ವಿಷಯೆಯ ನಗುಮುಖದ ರೀತಿ ಹೂಬಿಟ್ಟ ಚಿಗುರಿದ ಕಾಡಿನಂತೆ ಇತ್ತು; ಈ ಸೌಂದರ್ಯವನ್ನು ಏನು ವರ್ಣಿಸಲಿ, ಎಂದರು ನಾರದರು.]
 • (ಪದ್ಯ-೯)

ಪದ್ಯ:-:೧೦:[ಸಂಪಾದಿಸಿ]

ಶ್ರವಣ ಭೂಷಣದಿಂದೆ ಹಸ್ತಾಭರಣದಿಂದೆ |
ದಿವಿಜ ಪದಮೆಸೆವಂತೆ ಕುಂತಳ ಶ್ರೀಯ ವೈ |
ಭವದಿಂದೆ ರಮಣೀಯ ಕಾಂಚೀಪ್ರದೇಶದಿಂ ಭೂಭಾಗಮೊಪ್ಪುವಂತೆ ||
ತವೆಮೆರೆವ ಸುಗ್ರೀವ ತಾರಾವಲಂಬದಿಂ |
ದವಿಕಲಾಂಗದ ವಿರಾಜಿತದಿಂದೆ ಸನ್ನುತ |
ಪ್ಲವಗ ಕುಲದುನ್ನತಿಯ ಬೆಳೆವಿಗೆಯ ಚೆಲ್ವಿಂದೆ ವಿಷಯೆ ಕಂಗೊಳಿಸಿರ್ದಳು ||10||

ಪದವಿಭಾಗ-ಅರ್ಥ:
ಶ್ರವಣ ಭೂಷಣದಿಂದೆ ಹಸ್ತಾಭರಣದಿಂದೆ ದಿವಿಜಪದಂ (ಆಕಾಶ) ಎಸೆವಂತೆ ಕುಂತಳ (ತಲೆಕೂದಲು)ಶ್ರೀಯ ವೈಭವದಿಂದೆ ರಮಣೀಯ ಕಾಂಚೀಪ್ರದೇಶದಿಂ ಭೂಭಾಗಮೊಪ್ಪುವಂತೆ=[ವಿಷಯೆಯು ಕಿವಿಯ ಆಭರಣದಿಮದ ಶೋಭಿತಳಾಗಿದ್ದಳು; ಹೇಗೆಂದರೆ ಆಕಾಶವು ಶ್ರವಣ ನಕ್ಷತ್ರ ರ್ಭೂಷಣದಿಂದ ಇರುವಂತೆ. ಅದೇರೀತಿ ಕೈಯಿಯ ಆಭರಣಹೊಂದಿದ್ದಳು ಹಸ್ತಾ ನಕ್ಷತ್ರ ಆಭರಣ ಹೊಂದಿದಂತೆ. ಕುಂತಳ ದೇಶವು ಶ್ರೀಯ/ಸಂಪತ್ತಿನ ವೈಭವದಿಂದ ಇರುವಂತೆ ಸುಂದರ ತಲೆಕೂದಲನ್ನು ಹೊಂದಿದ್ದಳು. ಭೂಮಿಯು ರಮಣೀಯವಾದ ಕಾಂಚೀಪ್ರದೇಶದಿಂದ ಶೋಬಿಸುವಂತೆ ಕಾಂಚೀಧಾಮ/ ಸೊಂಟದಲ್ಲಿ ಚಿನ್ನದ ಪಟ್ಟಿಯನ್ನು ಧರಿಸಿದ್ದಳು.];; ತವೆ ಮೆರೆವ ಸುಗ್ರೀವ ತಾರಾವಲಂಬದಿಂದ ವಿಕಲಾಂಗದ ವಿ(ಶಿಷ್ಟ)ವಿ ರಾಜಿತದಿಂದೆ, ಸನ್ನುತ ಪ್ಲವಗಕುಲದ (ಕಪಿಗಳಶ್ರೇಷ್ಠ:ಅಂಗದ ಉನ್ನತಿ) ಉನ್ನತಿಯ ಬೆಳೆವಿಗೆಯ ಚೆಲ್ವಿಂದೆ ವಿಷಯೆ ಕಂಗೊಳಿಸಿರ್ದಳು =[ಬಹಳ ಮೆರೆದ ಸುಗ್ರೀವನ ಪತ್ನಿ ತಾರೆಯ ಅವಲಂಬದಿಂದ ಪ್ರಸಿದ್ಧನಾದಂತೆ ವಿಶಿಷ್ಟಕಲೆಯ ಅಂಗವಾದ, ಸು-ಗ್ರೀವ,ಸುಂದರ ಕುತ್ತಿಗೆ ಹೊಂದಿ ವಿರಾಜಿತಳಾಗಿದ್ದಳು. ದೇಹದ ಅಂಗದ/ ಅಂಗಾಂಗಗಳ ಉನ್ನತಿಯ/ಉತ್ತಮವಾದ ಬೆಳವಣಿಗೆಯ ಚೆಲುವಿನಿಂದ ವಿಷಯೆ ಕಂಗೊಳಿಸಿದ್ದಳು]. (ಟಿಪ್ಪಣಿ:೧.ಶ್ರವಣ: ಕಿವಿಯ ಕೆಲಸ); ದೇಹದ -'ಅಂಗದ' ಎಂಬ ಪದ ಪ್ರಯೋಗ ಮಾಡಲು ಕವಿ ಹಾಸ್ಯ ಮಿಶ್ರಿತ -'ಸನ್ನುತ ಪ್ಲವಗಕುಲದ' (ಶ್ರೇಷ್ಠಕಪಿ ಅಂಗದ:ಹೆಸರು) ಎಂದಿದ್ದಾನೆ, (ಪದ್ಯದ ವಾಕ್ಯ: ವಿಷಯೆ ಶ್ರೇಷ್ಠ ಕಪಿಯ ಉತ್ತಮವಾದ ಬೆಳವಣಿಗೆಯ ಚೆಲುವಿನಿಂದ ಕಂಗೊಳಿಸುತ್ತಿದ್ದಳು.) ಸನ್ನುತ ಪ್ಲವಗ ಎಂದರೆ ಕಪಿ ಕಪಿಶ್ರೇಷ್ಠ-ಅಂಗದ =ದೇಹದ ಎಂದು ಮುಂದಿನ ಪದಪ್ರಯೋಗ ನೋಡಿ ಊಹಿಸಬೇಕು. ಈ ಬಗೆಯ ಚಮತ್ಕಾರ ಪ್ರಯೋಗ ಕಾವ್ಯದಲ್ಲಿ ಎಷ್ಟು ಉಚಿತ? ಕವಿಗೆ ಹೇಳಲು ನಾವು ಯಾರು?)
 • ತಾತ್ಪರ್ಯ::ವಿಷಯೆಯು ಕಿವಿಯ ಆಭರಣದಿಮದ ಶೋಭಿತಳಾಗಿದ್ದಳು; ಹೇಗೆಂದರೆ ಆಕಾಶವು ಶ್ರವಣ ನಕ್ಷತ್ರ ರ್ಭೂಷಣದಿಂದ ಇರುವಂತೆ. ಅದೇರೀತಿ ಕೈಯಿಯ ಆಭರಣಹೊಂದಿದ್ದಳು ಹಸ್ತಾ ನಕ್ಷತ್ರ ಆಭರಣ ಹೊಂದಿದಂತೆ. ಕುಂತಳ ದೇಶವು ಶ್ರೀಯ/ಸಂಪತ್ತಿನ ವೈಭವದಿಂದ ಇರುವಂತೆ ಸುಂದರ ತಲೆಕೂದಲನ್ನು ಹೊಂದಿದ್ದಳು. ಭೂಮಿಯು ರಮಣೀಯವಾದ ಕಾಂಚೀಪ್ರದೇಶದಿಂದ ಶೋಬಿಸುವಂತೆ ಕಾಂಚೀಧಾಮ/ ಸೊಂಟದಲ್ಲಿ ಚಿನ್ನದ ಪಟ್ಟಿಯನ್ನು ಧರಿಸಿದ್ದಳು. ಬಹಳ ಮೆರೆದ ಸುಗ್ರೀವನ ಪತ್ನಿ ತಾರೆಯ ಅವಲಂಬದಿಂದ ಪ್ರಸಿದ್ಧನಾದಂತೆ ವಿಶಿಷ್ಟಕಲೆಯ ಅಂಗವಾದ, (ಸು-ಗ್ರೀವ),ಸುಂದರ ಕುತ್ತಿಗೆ ಹೊಂದಿ ವಿರಾಜಿತಳಾಗಿದ್ದಳು. ದೇಹದ ಅಂಗದ/ ಅಂಗಾಂಗಗಳ ಉನ್ನತಿಯ/ಉತ್ತಮವಾದ ಬೆಳವಣಿಗೆಯ ಚೆಲುವಿನಿಂದ ವಿಷಯೆ ಕಂಗೊಳಿಸಿದ್ದಳು].
 • (ಪದ್ಯ-೧೦)

ಪದ್ಯ:-:೧೧:[ಸಂಪಾದಿಸಿ]

ಲಾವಣ್ಯವಾರಿ ಪೂರಿತಮಾದ ನಾಭೀ ಸ |
ರೋವರದ ತಿವಳಿದೆರೆಗಳ ನಡುವೆ ರಂಜಿಸುವ |
ಶೈವಾಲದಂತೆ ಜಘನಾದ್ರಿಯಂ ವೇಡೈಸಿದಮಲ ಕಾಂಚೀದಾಮದ ||
ದಾವಶಿಖಿಯಿಂದೆ ನಭಕೇಳ್ವ ಕರ್ಬೊಗೆಯಂತೆ |
ಪೀವರ ಸ್ತನದುರ್ಗಕಂಗಜನಡರ್ದಿಳಿವ |
ಠಾವಿನಂತಾ ಚಂದ್ರಮುಖಿಯ ತನುಮಧ್ಯದೊಳ್ ಬಾಸೆ ಕಂಗೊಳಿಸಿರ್ದುದು ||11||

ಪದವಿಭಾಗ-ಅರ್ಥ:
ಲಾವಣ್ಯ ವಾರಿ ಪೂರಿತಮಾದ ನಾಭೀ ಸರೋವರದ ತಿವಳಿದೆರೆಗಳ ನಡುವೆ ರಂಜಿಸುವ ಶೈವಾಲದಂತೆ ಜಘನಾದ್ರಿಯಂ ವೇಡೈಸಿದ ಅಮಲ ಕಾಂಚೀಧಾಮದ=[ಲಾವಣ್ಯವೆಂಬ ನೀರಿನಿಂದ ತುಂಬಿದ ನಾಭೀ (ಹೊಕ್ಕಳು) ಎಂಬ ಸರೋವರದ ತ್ರಿವಳಿ ಗೆರೆಗಳ ನಡುವೆ ಶೋಭಿಸುವ ಹಾವಸೆಯಂತೆ, ಜಘನ/ ನಿತಂಬಗಳೆಂಬ ಬೆಟ್ಟಗಳನ್ನು ಸುತ್ತುವರಿದ ನಿರ್ಮಲವಾದ ಚಿನ್ನದ ಸೊಂಟಪಟ್ಟಿಯನ್ನುಳ್ಳ ಸೊಂಟದಿಂದ,];; ದಾವಶಿಖಿಯಿಂದೆ ನಭಕೇಳ್ವ ಕರ್ಬೊಗೆಯಂತೆ ಪೀವರ ಸ್ತನದುರ್ಗಕೆ ಅಂಗಜನು ಅಡರ್ದು ಇಳಿವ ಠಾವಿನಂತೆ ಆ ಚಂದ್ರಮುಖಿಯ ತನುಮಧ್ಯದೊಳ್ ಬಾಸೆ ಕಂಗೊಳಿಸಿರ್ದುದು=[ಕಾಡುಕಿಚ್ಚಿನಿಂದ ಆಕಾಶಕ್ಕೆ ಏಳುವ ಕಪ್ಪುಹೊಗೆಯಂತೆ, ಬಲಿತ ಸ್ತನವೆಂಬ ದುರ್ಗಕ್ಕೆ ಮನ್ಮಥನು ಹತ್ತಿ ಇಳಿದುಬರುವ ತಾಣದಂತೆ, ಚಂದ್ರಮುಖಿ ವಿಷಯೆಯ ಸೊಂಟದಲ್ಲಿ ನಾಭಿಯಿಂದ ಎದೆಯವರೆಗೆ ಇರುವ ಕೂದಲ ಸಾಲು ಶೋಭಿಸುತ್ತಿತ್ತು].
 • ತಾತ್ಪರ್ಯ:ಲಾವಣ್ಯವೆಂಬ ನೀರಿನಿಂದ ತುಂಬಿದ ಹೊಕ್ಕಳು ಎಂಬ ಸರೋವರದ ತ್ರಿವಳಿ ಗೆರೆಗಳ ನಡುವೆ ಶೋಭಿಸುವ ಹಾವಸೆಯಂತೆ, ನಿತಂಬಗಳೆಂಬ ಬೆಟ್ಟಗಳನ್ನು ಸುತ್ತುವರಿದ ನಿರ್ಮಲವಾದ ಚಿನ್ನದ ಸೊಂಟಪಟ್ಟಿಯನ್ನುಳ್ಳ ಸೊಂಟದಿಂದ, ಕಾಡುಕಿಚ್ಚಿನಿಂದ ಆಕಾಶಕ್ಕೆ ಏಳುವ ಕಪ್ಪುಹೊಗೆಯಂತೆ, ಬಲಿತ ಸ್ತನವೆಂಬ ದುರ್ಗಕ್ಕೆ ಮನ್ಮಥನು ಹತ್ತಿ ಇಳಿದುಬರುವ ತಾಣದಂತೆ, ಚಂದ್ರಮುಖಿ ವಿಷಯೆಯ ಸೊಂಟದ ನಾಭಿಯಿಂದ ಎದೆಯವರೆಗೆ ಇರುವ ತಿಳಿಕೂದಲ ಸಾಲು (ಬಾಸೆ) ಶೋಭಿಸುತ್ತಿತ್ತು.
 • (ಪದ್ಯ-೧೧)

ಪದ್ಯ:-:೧೨:[ಸಂಪಾದಿಸಿ]

ಬಿಡದೆ ಮುಕ್ತಾಹಾರದಿಂದೆ ಸಮರೂಪದಿಂ |
ದೃಢತೆವೆತ್ತೂರ್ಧ್ವ ಮುಖವಾಗಿ ಕರ್ಕಶ ವೃತ್ತ |
ದೊಡಗೂಡಿ ಕುಚಯುಗಂ ಮೆರೆದುದು ಕಠೋರ ತಪದಿಂದೆಸೆವ ಯೋಗಿಯಂತೆ ||
ಬಡವರ ಬಲ್ಲಿದರ ನಡುವೆ ನವೆದಿರ್ದು ಸೊಂ |
ಪಡಗದೆ ವಿಜೃಂಭಿಸುವ ವೀರ ಕಂಠೀರವಕೆ |
ಪಡಿಯಾಗಿ ಸತ್ಪುರುಷನಂದದೊಳ್ ಕಾಣಿಸಿತು ಮಧ್ಯಲತೆಮಂತ್ರಿ ಸುತೆಯ ||12||

ಪದವಿಭಾಗ-ಅರ್ಥ:
ಬಿಡದೆ ಮುಕ್ತಾಹಾರದಿಂದೆ ಸಮರೂಪದಿಂ ದೃಢತೆವೆತ್ತ ಊರ್ಧ್ವ ಮುಖವಾಗಿ ಕರ್ಕಶ ವೃತ್ತ ದೊಡಗೂಡಿ ಕುಚಯುಗಂ ಮೆರೆದುದು ಕಠೋರ ತಪದಿಂದ ಎಸೆವ ಯೋಗಿಯಂತೆ=[ವಿಷಯೆಯ ಎದೆಯು ಮಧ್ಯ ಬಿಡದೆ ಮುತ್ತಿನ ಹಾರದಿಂದ ಅಲಂಕೃತವಾಗಿ ಎರಡೂ ಸಮ ರೂಪದಲ್ಲಿರುವ ದೃಢವಾದ ಮೇಲುಮುಖವಾಗಿರುವ ಗಟ್ಟಿಯಾದ ದುಂಡನೆಯ ಹತ್ತಿರಹತ್ತಿರ ಒಡಗೂಡಿಕೊಂಡ ಎರಡು ಕುಚಗಳು ಶೋಭಿಸಿದವು; ಹೇಗೆಂದರೆ ಕಠೋರ ತಪದಿಂದ ಶೋಭಿಸುವ ಮುಕ್ತ(ಬಿಟ್ಟ)ಆಹಾರದಿಂದ, ಧೃಡತೆಯಿಂದ ಊರ್ಧ್ವ/ ಮೇಲುಮುಖವಾಗಿ ಕಠಿಣನಡತೆಯಿಂದ ಒಡಗೂಡಿದ ಯೋಗಿಯ ಹಾಗೆ ಇತ್ತು];; ಬಡವರ ಬಲ್ಲಿದರ ನಡುವೆ ನವೆದಿರ್ದು ಸೊಂಪಡಗದೆ ವಿಜೃಂಭಿಸುವ ವೀರ ಕಂಠೀರವಕೆ (ಸಿಂಹ) ಪಡಿಯಾಗಿ ಸತ್ಪುರುಷನಂದದೊಳ್ ಕಾಣಿಸಿತು ಮಧ್ಯಲತೆಮಂತ್ರಿ ಸುತೆಯ=[ಬಡವರ ಮತ್ತು ದೊಡ್ಡವರ ನಡುವೆ ಸಿಕ್ಕಿ ಕಷ್ಟದಿಂದ ನಲುಗಿದರೂ ಸೊಂಪು/ಗುಣ ಕಡಿಮೆಯಾಗದೆ ಶೌರ್ಯದಿಂದಿರುವ ವೀರ ಸಿಂಹಕ್ಕೆ ಸಾಟಿಯಾದ ಸತ್ಪುರುಷನಂತೆ ಮಂತ್ರಿ ಸುತೆಯ ಸೊಂಟವು ಕಾಣಿಸುತ್ತಿತ್ತು.]
 • ತಾತ್ಪರ್ಯ:ವಿಷಯೆಯ ಎದೆಯು ಮಧ್ಯ ಬಿಡದೆ ಮುತ್ತಿನ ಹಾರದಿಂದ ಅಲಂಕೃತವಾಗಿ ಎರಡೂ ಸಮ ರೂಪದಲ್ಲಿರುವ ದೃಢವಾದ ಮೇಲುಮುಖವಾಗಿರುವ ಗಟ್ಟಿಯಾದ ದುಂಡನೆಯ ಹತ್ತಿರಹತ್ತಿರ ಒಡಗೂಡಿಕೊಂಡ ಎರಡು ಕುಚಗಳು ಶೋಭಿಸಿದವು; ಹೇಗೆಂದರೆ ಕಠೋರ ತಪದಿಂದ ಶೋಭಿಸುವ ಮುಕ್ತ(ಬಿಟ್ಟ)ಆಹಾರದಿಂದ, ಧೃಡತೆಯಿಂದ ಊರ್ಧ್ವ/ ಮೇಲುಮುಖವಾಗಿ ಕಠಿಣನಡತೆಯಿಂದ ಒಡಗೂಡಿದ ಯೋಗಿಯ ಹಾಗೆ ಇತ್ತು. ಬಡವರ ಮತ್ತು ದೊಡ್ಡವರ ನಡುವೆ ಸಿಕ್ಕಿ ಕಷ್ಟದಿಂದ ನಲುಗಿದರೂ ಸೊಂಪು/ಗುಣ ಕಡಿಮೆಯಾಗದೆ ಶೌರ್ಯದಿಂದಿರುವ ವೀರ ಸಿಂಹಕ್ಕೆ ಸಾಟಿಯಾದ ಸತ್ಪುರುಷನಂತೆ ಮಂತ್ರಿ ಸುತೆಯ ಸೊಂಟವು ಕಾಣಿಸುತ್ತಿತ್ತು.
 • (ಪದ್ಯ-೧೨)

ಪದ್ಯ:-:೧೩:[ಸಂಪಾದಿಸಿ]

ತೊಳಗಿ ಬೆಳಗುವ ಸದ್ಗುಣಾವಳಿಗಳೈಶ್ವರ್ಯ |
ಲಲನೆಯಂ ಗೃಹಪತಿಯ ಮಂದಿರಕೆ ಸಂಘಟಿಸಿ |
ಬೆಳವಿಗೆಯನತಿಶಯಂಮಾಳ್ವಂತೆ ಸಿಂಗರಂಗೈದು ನೀಲಾಳಿಕೆಯರು ||
ಬಳಿಕ ಪೊನ್ನಂದಣದ ಮೇಲೆ ವೈವಾಹ ಮಂ |
ಗಳ ಮಹೋತ್ಸವಕೆ ವಿರಚಿಸಿದ ಮಂಟಪದೆಡೆಗೆ |
ನಳಿನ ಪತ್ರಾಕ್ಷಿಯಂ ತಂದರೊಸಗೆಯೊಳಂದು ವಿಭವದ ವಿಲಾಸದಿಂದೆ ||13||

ಪದವಿಭಾಗ-ಅರ್ಥ:
ತೊಳಗಿ ಬೆಳಗುವ ಸದ್ಗುಣಾವಳಿಗಳ ಐಶ್ವರ್ಯ ಲಲನೆಯಂ ಗೃಹಪತಿಯ ಮಂದಿರಕೆ (ವಿವಾಹ ಮಂಟಪಕ್ಕೆ) ಸಂಘಟಿಸಿ ಬೆಳವಿಗೆಯನು ಅತಿಶಯಂ ಮಾಳ್ವಂತೆ ಸಿಂಗರಂ ಗೈದು ನೀಲಾಳಿಕೆಯರುನೀಲ/ಆಳಿಕೆ:ಮುಂಗುರುಳು, ಕೂದಲು)=[ನಿರ್ಮಲವಾಗಿ ಶೋಭಿಸುವ ಸದ್ಗುಣಗಳ ಸಂಪತ್ತನ್ನು ಹೊಂದಿದ ಬಾಲಕಿಯನ್ನು ಅತಿಶಯವಾಗಿ ಅವಳ ಏಳಿಗೆಯನ್ನು ಮಾಡುವಂತೆ ಶೃಂಗಾರ ಮಾಡಿ ಕಪ್ಪುಮುಂಗುರುಳಿನ ವನಿತೆಯರು ಎಲ್ಲರೂ ಸೇರಿ ಮಂತ್ರಿಯ ಮನೆಯ ಒಳಗೆ ಕರೆತಂದರು];; ಬಳಿಕ ಪೊನ್ನ ಅಂದಣದ ಮೇಲೆ ವೈವಾಹ ಮಂಗಳ ಮಹೋತ್ಸವಕೆ ವಿರಚಿಸಿದ ಮಂಟಪದ ಎಡೆಗೆ ನಳಿನ ಪತ್ರಾಕ್ಷಿಯಂ ತಂದರು ಒಸಗೆಯೊಳು ಅಂದು ವಿಭವದ ವಿಲಾಸದಿಂದೆ=[ಬಳಿಕ ಚಿನ್ನದ ಪಲ್ಲಕಿಯ ಮೇಲೆ ಮೇಲೆ ವಿವಾಹದ ಮಂಗಳ ಮಹೋತ್ಸವಕ್ಕಾಗಿ ವಿಶೇಷವಾಗಿ ರಚಿಸಿದ ಮಂಟಪದ ಹತ್ತಿರ ಕಮಲದ ದಳದಂತಿರುವ ಕಣ್ಣುಳ್ಳ ವಿಷಯೆಯನ್ನು ಸ್ವಾಗತದೊಂದಿಗೆ ಅಂದು ವೈಭವದ ವಿಲಾಸದಿಂದ ತಂದರು].
 • ತಾತ್ಪರ್ಯ:ನಿರ್ಮಲವಾಗಿ ಶೋಭಿಸುವ ಸದ್ಗುಣಗಳ ಸಂಪತ್ತನ್ನು ಹೊಂದಿದ ವಿಷಯೆಯನ್ನು ಅತಿಶಯವಾಗಿ ಅವಳ ಏಳಿಗೆಯನ್ನು ಮಾಡುವಂತೆ ಶೃಂಗಾರ ಮಾಡಿ ಕಪ್ಪುಮುಂಗುರುಳಿನ ವನಿತೆಯರು ಎಲ್ಲರೂ ಸೇರಿ ಮಂತ್ರಿಯ ಮನೆಯ ಒಳಗೆ ಕರೆತಂದರು. ಬಳಿಕ ಚಿನ್ನದ ಪಲ್ಲಕಿಯ ಮೇಲೆ ಮೇಲೆ ವಿವಾಹದ ಮಂಗಳ ಮಹೋತ್ಸವಕ್ಕಾಗಿ ವಿಶೇಷವಾಗಿ ರಚಿಸಿದ ಮಂಟಪದ ಹತ್ತಿರ ಕಮಲದ ದಳದಂತಿರುವ ಕಣ್ಣುಳ್ಳ ವಿಷಯೆಯನ್ನು ಸ್ವಾಗತದೊಂದಿಗೆ ಅಂದು ವೈಭವ ವಿಲಾಸದಿಂದ ತಂದರು.
 • (ಪದ್ಯ-೧೩)

ಪದ್ಯ:-:೧೪:[ಸಂಪಾದಿಸಿ]

ಬಳಸಿದ ಸಮಸ್ತಜನ ಜಂಗುಳಿಯ ಕೈಸೊಡ |
ರ್ಗಳ ಸಾಲ ಹಂದಣೀಯ ಪಾಡುವ ಪುರಂಧ್ರಿಯರ |
ಕಳಸ ಕನ್ನಡಿವಿಡಿದ ಕನ್ನೆಯರ ನಾನಾ ಸುವಸ್ತುಗಳ ವಿಸ್ತರಣದ |
ತೊಳಗುವೊಸಗೆಯ ವಾದ್ಯ ಸಂಕುಲದ ಬಹು ಫಲಾ |
ವಳಿಗಳ ವಿಡಾಯದಿಂದೈತಂದು ದಂಡಿಗೆಯ |
ನಿಳಿದನಾರತಿಗಳ ನಿವಾಳಿಯಿಂ ಚಂದ್ರಹಾಸಂ ಭದ್ರಮಂಟಪದೊಳು ||14||

ಪದವಿಭಾಗ-ಅರ್ಥ:
ಬಳಸಿದ ಸಮಸ್ತಜನ ಜಂಗುಳಿಯ ಕೈಸೊಡರ್ಗಳ ಸಾಲ ಸಂದಣಿಯ ಪಾಡುವ ಪುರಂಧ್ರಿಯರ ಕಳಸ ಕನ್ನಡಿವಿಡಿದ ಕನ್ನೆಯರ ನಾನಾ ಸುವಸ್ತುಗಳ ವಿಸ್ತರಣದ=[ಸುತ್ತುವರಿದ ಸಮಸ್ತ ಜನಜಂಗುಳಿಯು ಹಿಡಿದಿರುವ ಕೈದೀವಟಿಕೆಗಳ ಸಾಲು, ಗುಂಪಿನಲ್ಲಿ ಹಾಡುವ ಮುತ್ತೈದೆಯರು, ಕಳಸ ಕನ್ನಡಿ ಹಿಡಿದ ಕನ್ನೆಯರು, ನಾನಾ ಉತ್ತಮ ವಸ್ತುಗಳನ್ನು ವಿಸ್ತಾರವಾಗಿ ಜೋಡಿಸಿಟ್ಟಿರುವ,];; ತೊಳಗುವ ಒಸಗೆಯ ವಾದ್ಯ ಸಂಕುಲದ ಬಹು ಫಲಾವಳಿಗಳ ವಿಡಾಯದಿಂದ ಐತಂದು ದಂಡಿಗೆಯನು ಇಳಿದನು ಆರತಿಗಳ ನಿವಾಳಿಯಿಂ ಚಂದ್ರಹಾಸಂ ಭದ್ರಮಂಟಪದೊಳು=[ಶೋಬಿಸುವ ಸ್ವಾಗತದ ವಾದ್ಯ ಸಂಕುಲ/ ಸಮುಹದ, ಬಹುವಿಧದ ಹಣ್ಣುಗಳನ್ನು ಜೋಡಿಸಿಟ್ಟಿರವ ರಾಶಿಗಳಿಂದ ಕೂಡಿ ಬಂದು ದಂಡಿಗೆಯನ್ನು/ ಪಲ್ಲಕ್ಕಿಯನ್ನು ಚಂದ್ರಹಾಸನು ಭದ್ರಮಂಟಪದಲ್ಲಿ ಇಳಿದನು. ಆಗ ಆರತಿಗಳನ್ನು ಮಾಡಿ ನಿವಾಳಿಯನ್ನು ತೆಗೆದರು.]
 • (ಟಿಪ್ಪಣಿ:ನಿವಾಳಿಸು:ಕೆಟ್ಟಕಣ್ಣಿನ ನೋಟದ ದೋಷ ನಿವಾರಣೆಯ ಕ್ರಮ: ಯಾರದಾದರು ಕೆಟ್ಟದೃಷ್ಟಿ ಮಗುವಿನಮೇಲೆ ಬಿದ್ದಿದೆಯೆಂದು ನಂಬಿಎಲ್ಲರ ಕಣ್ಣು ದಿಟ್ಟನೆ ಸೀಯಲಿ ಎಂದು ಯಾರಿಗೂ ಕೇಳದಂತೆ ಹೇಳಿ ಆರತಿಯ ನೀರನ್ನು ಮಗುವಿನ ಹಣೆಗೆ ಹಚ್ಚಿ ಮನೆಯ ಹೊರಗಡೆ ಚೆಲ್ಲುತ್ತಾರೆ:ಬುಕ್ಕಾಂಬುಧಿ ಪ್ರಾದೇಶಿಕ ಕನ್ನಡ ಶಬ್ದಕೋಶ. ಮದುಮಕ್ಕಳಿಗೆ ಕುಂಕುಮದ ನೀರನ್ನು ಆರತಿಯಂತೆ ಸುತ್ತಿ ಆ ನೀರು ಚಿಮುಕಿಸಿ ದೂರ ಚೆಲ್ಲುತ್ತಾರೆ; ಅದೇ ರೀತಿ ತೆಂಗಿನ ಕಾಯಿ ಸುಳಿದು ದೂರ ನಲಕ್ಕೆ ಬಡಿದು ಒಡೆಯುತ್ತಾರೆ.)
 • ತಾತ್ಪರ್ಯ:ಸುತ್ತುವರಿದ ಸಮಸ್ತ ಜನಜಂಗುಳಿಯು ಹಿಡಿದಿರುವ ಕೈದೀವಟಿಕೆಗಳ ಸಾಲು, ಗುಂಪಿನಲ್ಲಿ ಹಾಡುವ ಮುತ್ತೈದೆಯರು, ಕಳಸ ಕನ್ನಡಿ ಹಿಡಿದ ಕನ್ನೆಯರು, ನಾನಾ ಉತ್ತಮ ವಸ್ತುಗಳನ್ನು ವಿಸ್ತಾರವಾಗಿ ಜೋಡಿಸಿಟ್ಟಿರುವ ಶೋಭೆ, ಶೋಬಿಸುವ ಸ್ವಾಗತದ ವಾದ್ಯ ಸಂಕುಲ/ ಸಮೂಹ; ಬಹುವಿಧದ ಹಣ್ಣುಗಳನ್ನು ಜೋಡಿಸಿಟ್ಟಿರವ ರಾಶಿಗಳಿಂದ ಕೂಡಿದ ಮಂಟಪದ ಚಾವಡಿ, ಅಲ್ಲಿಗೆ ಚಂದ್ರಹಾಸನು ಬಂದು ದಂಡಿಗೆಯನ್ನು/ ಪಲ್ಲಕ್ಕಿಯಿಂದ ಭದ್ರಮಂಟಪದಲ್ಲಿ ಇಳಿದನು. ಆಗ ಆರತಿಗಳನ್ನು ಮಾಡಿ ನಿವಾಳಿಯನ್ನು ತೆಗೆದರು.
 • (ಪದ್ಯ-೧೪)

ಪದ್ಯ:-:೧೫:[ಸಂಪಾದಿಸಿ]

ವರ ತಾರಕಾಕ್ಷೆಯೆಂಬಾ ಪ್ರಧಾನನ ಪತ್ನಿ |
ಚರಣಮಂ ಪ್ರಕ್ಷಾಳನಂಗೈಯೆ ಮದನನಾ |
ದರಿಸಿ ಮಧುಪರ್ಕಮಂ ಮಾಡೆ ಕನ್ಯಾವರಣದೊಳ್‍ಕುಲ ಪರಂಪರೆಯನು ||
ಒರೆಯೆನಲ್ ಶಶಿಹಾಸನೆನಗೆ ವಾಮನಗೋತ್ರ |
ಮರವಿಂದನಾಭಂ ಪಿತಂ ಹರಿ ಪಿತಾಮಹಂ |
ಮುರಹರಂ ಪ್ರಪಿತಾಮಹಂ ಕುಳಿಂದನುಮವನ ಸತಿಯುಂ ಗುರುಗಳೆಂದನು ||15||

ಪದವಿಭಾಗ-ಅರ್ಥ:
ವರ ತಾರಕಾಕ್ಷೆಯೆಂಬಾ ಪ್ರಧಾನನ ಪತ್ನಿ ಚರಣಮಂ ಪ್ರಕ್ಷಾಳನಂ ಗೈಯೆ ಮದನನು ಆದರಿಸಿ ಮಧುಪರ್ಕಮಂ ಮಾಡೆ ಕನ್ಯಾವರಣದೊಳ್‍ ಕುಲ ಪರಂಪರೆಯನು=[ಶ್ರೇಷ್ಠಳಾದ ತಾರಕಾಕ್ಷೆಯೆಂಬ ಆ ಪ್ರಧಾನ ದುಷ್ಟಬುದ್ಧಿಯ ಪತ್ನಿ ಮದುಮಗನಾದ ಚಂದ್ರಹಾಸನ ಪಾದಗಳನ್ನು ತೊಳೆಯಲು, ಮದನನು ಅವನನ್ನು ಆದರಿಸಿ ಮಧುಪರ್ಕವನ್ನು ನೀಡಿದನು. ಕನ್ಯಾವರಣದಲ್ಲಿ ಕುಲ ಪರಂಪರೆಯನ್ನು];; ಒರೆಯೆನಲ್ ಶಶಿಹಾಸನೆನಗೆ ವಾಮನಗೋತ್ರಂ ಅರವಿಂದನಾಭಂ ಪಿತಂ ಹರಿ ಪಿತಾಮಹಂ ಮುರಹರಂ ಪ್ರಪಿತಾಮಹಂ ಕುಳಿಂದನುಂ ಅವನ ಸತಿಯುಂ ಗುರುಗಳೆಂದನು=[ಹೇಳು ಎನ್ನಲು, ಚಂದ್ರಹಾಸನು ತನಗೆ ವಾಮನಗೋತ್ರವು, ಅರವಿಂದನಾಭನು ಪಿತನು, ಹರಿಯು ಪಿತಾಮಹನು, ಮುರಹರನು ಪ್ರಪಿತಾಮಹನು ಕುಳಿಂದನು ಮತ್ತು ಅವನ ಪತ್ನಿಯು ಗುರುಗಳು ಎಂದನು.]
 • ೧(ಟಿಪ್ಪಣಿ:ವಧುವಿನ ತಂದೆತಾಯಿಗಳು ವರ/ಮದುಮಗನನ್ನು ಬರಮಾಡಿಕೊಂಡು, ಅರ್ಘ್ಯ; ಕೈಗೆ ನೀರು, ಪಾದ್ಯ: ಕಾಲು ತೊಳೆಯುವುದು ಮೊದಲಾದ ಉಪಚಾರ ಮಾಡವರು. ಇಲ್ಲಿ ತಂದೆ ದುಷ್ಟಬುದ್ಧಿ ಇಲ್ಲ.)
 • ೨.(ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು: ಮಧುಪರ್ಕ: ಹೆಸರುಪದ: ಮೊಸರು, ತುಪ್ಪ, ಹಾಲು, ಜೇನು ತುಪ್ಪ, ಸಕ್ಕರೆ - ಈ ಐದರ ಮಿಶ್ರಣ, ಅತಿಥಿಗಳಿಗೆ ಮತ್ತು ವಿವಾಹ ಕಾಲದಲ್ಲಿ ವರನಿಗೆ ಅರ್ಪಿಸುವ ಅಂತಹ ಮಿಶ್ರಣ)
 • ೩.(ಕುಲ ಪರಂಪರೆ: ವರ ಮತ್ತು ವಧುಗಳ ಗೋತ್ರಂ ತಂದೆ,ಅಜ್ಜ, ಮುತ್ತಜ್ಜ ಇವರ ಹೆಸರನ್ನು ವಿವಾಹಕ್ಕೆ ಮೊದಲು ಹೇಳಬೇಕು; ಇದನ್ನು ಅವರವರ ಪುರೋಹಿತರು ಹೇಳುತ್ತಾರೆ. ಇಲ್ಲಿ ಚಂದ್ರಹಾಸನಿಗೆ ಪುರೋಹಿತರು ಇಲ್ಲದಿರುವುದಿಂದ ಅವನೇ ಹೇಳಿದನು. ಅವನ ತಂದೆ ತಾತರು ಅವನಿಗೆ ತಿಳಿಯದ್ದರಿಂದ ಎಲ್ಲದಕ್ಕೂ ಹರಿನಾಮವನ್ನು ಹೇಳಿದನು.)
 • ತಾತ್ಪರ್ಯ:ಶ್ರೇಷ್ಠಳಾದ ತಾರಕಾಕ್ಷೆಯೆಂಬ ಆ ಪ್ರಧಾನ ದುಷ್ಟಬುದ್ಧಿಯ ಪತ್ನಿ ಮದುಮಗನಾದ ಚಂದ್ರಹಾಸನ ಪಾದಗಳನ್ನು ತೊಳೆಯಲು, ಮದನನು ಅವನನ್ನು ಆದರಿಸಿ ಮಧುಪರ್ಕವನ್ನು ನೀಡಿದನು. ಕನ್ಯಾವರಣದಲ್ಲಿ ಕುಲ ಪರಂಪರೆಯನ್ನು ಹೇಳು ಎನ್ನಲು, ಚಂದ್ರಹಾಸನು ತನಗೆ ವಾಮನಗೋತ್ರವು, ಅರವಿಂದನಾಭನು ಪಿತನು, ಹರಿಯು ಪಿತಾಮಹನು, ಮುರಹರನು ಪ್ರಪಿತಾಮಹನು ಕುಳಿಂದನು ಮತ್ತು ಅವನ ಪತ್ನಿಯು ಗುರುಗಳು ಎಂದನು.
 • (ಪದ್ಯ-೧೫)

ಪದ್ಯ:-:೧೬:[ಸಂಪಾದಿಸಿ]

ಅಲ್ಪಭಾಷಿತಮಲ್ಲದಿಹ ಚಂದ್ರಹಾಸನ ಸು |
ಜಲ್ಪಿತಂ ಸೊಗಸೆ ಮದನಂ ಮುದದೊಳಾಗ ಸಂ |
ಕಲ್ಪಿತ ನಿರೀಕ್ಷಣೆಗೆ ಸುಮುಹೂರ್ತಮಂ ಕೇಳ್ದು ತೆರೆದೆಗೆಸಿ ಭೂ ದಿವಿಜರ ||
ನಲ್ಪರಕೆವೆತ್ತು ಜೀರಗೆಬೆಲ್ಲದೊಪ್ಪಮೆಸೆ |
ಯಲ್ಪದದ ಮಟ್ಟಕ್ಕಿ ಸುತ್ತುನೂಲ್ ಮೆರೆಯೆ ಫಣಿ |
ತಲ್ಪನಿದಿರೊಳ್ ತದರ್ಪಿತಮಾಗಲೆಂದವನ ಕೈಗೆ ಧಾರೆಯನೆರೆದನು ||16||

ಪದವಿಭಾಗ-ಅರ್ಥ:
ಅಲ್ಪಭಾಷಿತಂ ಅಲ್ಲದಿಹ ಚಂದ್ರಹಾಸನ ಸುಜಲ್ಪಿತಂ ಸೊಗಸೆ ಮದನಂ ಮುದದೊಳು ಆಗ ಸಂಕಲ್ಪಿತ ನಿರೀಕ್ಷಣೆಗೆ ಸುಮುಹೂರ್ತಮಂ ಕೇಳ್ದು ತೆರೆ (ದೆ) ತೆಗೆಸಿ ಭೂ ದಿವಿಜರ=[ದೋಷವಿಲ್ಲದೆ ಹೇಳಿದ ಚಂದ್ರಹಾಸನ ಒಳ್ಳೆಯ ಮಾತು ಸೊಗಸಲು/ ಇಷ್ಟವಾಗಲು, ಮದನನು ಸಂತೋಷದಿಂದ ಆಗ ಸಂಕಲ್ಪ ಮಾಡಿದ ಸಮಯ ನಿರೀಕ್ಷಣೆಗೆ ಸುಮುಹೂರ್ತವನ್ನು ಕೇಳಿ, ಮದುಮಕ್ಕಳ ಮಧ್ಯೆ ಹಾಕಿದ್ದ ತೆರೆಯನ್ನು ತೆಗೆಸಿದನು. ಬ್ರಾಹ್ಮಣರ];; ನಲ್ ಪರಕೆವೆತ್ತು ಜೀರಗೆಬೆಲ್ಲದೊಪ್ಪಂ ಎಸೆಯಲ್ ಪದದ ಮಟ್ಟಕ್ಕಿ ಸುತ್ತುನೂಲೊರೆಯೆ ಫಣಿತಲ್ಪನಿದಿರೊಳ್ ತದರ್ಪಿತಮಾಗಲೆಂದು ಅವನ ಕೈಗೆ ಧಾರೆಯನು ಎರೆದನು=[ಶುಭದ ಹರಕೆ ಪಡೆದು ಜೀರಗೆಬೆಲ್ಲದ ಪರಸ್ಪರ ಹಾಕುವ ನಿಯಮಮಾಡಿಸಿ, ಪಾದದ ಮಟ್ಟಕ್ಕಿ ಶಾಸ್ತ್ರದಲ್ಲಿ ಸಪ್ತಪದಿ ಮಾಡಿಸಿ, ಸುತ್ತುನೂಲ ಕಟ್ಟಿರುವ ಆವರಣದಲ್ಲಿ ವಿಷ್ಣುಸಾಕ್ಷಿಯಾಗಿ, ಸಾಲಿಗ್ರಾಮದ ಎದುರಲ್ಲಿ 'ತದರ್ಪಿತಂ' ಆಗಲಿ ಎಂದು,ಚಂದ್ರಹಾಸನ ಕೈಗೆ ವಿಷಯೆಯ ಕೈಯನ್ನಿಟ್ಟು ಧಾರೆಯನ್ನು ಎರೆದನು].
 • ತಾತ್ಪರ್ಯ:ದೋಷವಿಲ್ಲದೆ ಹೇಳಿದ ಚಂದ್ರಹಾಸನ ಒಳ್ಳೆಯ ಮಾತು ಇಷ್ಟವಾಗಲು, ಮದನನು ಸಂತೋಷದಿಂದ ಆಗ ಸಂಕಲ್ಪ ಮಾಡಿದ ಸಮಯ ನಿರೀಕ್ಷಣೆಗೆ ಸುಮುಹೂರ್ತವನ್ನು ಕೇಳಿ, ಮದುಮಕ್ಕಳ ಮಧ್ಯೆ ಹಾಕಿದ್ದ ತೆರೆಯನ್ನು ತೆಗೆಸಿದನು. ಬ್ರಾಹ್ಮಣರ ಶುಭದ ಹರಕೆ ಪಡೆದು ಜೀರಗೆಬೆಲ್ಲದ ಪರಸ್ಪರ ಹಾಕುವ ನಿಯಮಮಾಡಿಸಿ, ಪಾದದ ಮಟ್ಟಕ್ಕಿ ಶಾಸ್ತ್ರದಲ್ಲಿ ಸಪ್ತಪದಿ ಮಾಡಿಸಿ, ಸುತ್ತುನೂಲ ಕಟ್ಟಿರುವ ಆವರಣದಲ್ಲಿ ವಿಷ್ಣುಸಾಕ್ಷಿಯಾಗಿ, ಸಾಲಿಗ್ರಾಮದ ಎದುರಲ್ಲಿ 'ತದರ್ಪಿತಂ' ಆಗಲಿ ಎಂದು,ಚಂದ್ರಹಾಸನ ಕೈಗೆ ವಿಷಯೆಯ ಕೈಯನ್ನಿಟ್ಟು ಧಾರೆಯನ್ನು ಎರೆದನು.
 • (ಪದ್ಯ-೧೬)XX|

ಪದ್ಯ:-:೧೭:[ಸಂಪಾದಿಸಿ]

ಮೊರೆವ ಮರಿದುಂಬಿಗಳ ಮಾಲೆಯಂ ತಾಳ್ದ ನವ |
ಪರಿಮಳದ ಮಂದಾರ ಮಾಲೆಯಂ ವಿಷಯೆ ಸೌಂ |
ದರ ಶಿರೀಷದ ಮಾಲೆಯಂ ಪೆÇೀಲ್ವ ನಳಿತೋಳನೆತ್ತಿ ಕಂಧರದೊಳಿಡಲು ||
ಭರಿತ ಲಾವಣ್ಯ ಸಾಕಾರದಿಂ ಮಂಗಳಾ |
ಭರಣಂಗಳೆಸೆವಲಂಕಾರದಿಂ ಪಾರ್ವರು |
ಚ್ಚರಿಪಗ್ನಿಹೋತ್ರ ಪ್ರಕಾರದಿಂ ವಧುವಂ ಕುಳಿಂದಜಂ ಕೈವಿಡಿದನು ||17||

ಪದವಿಭಾಗ-ಅರ್ಥ:
ಮೊರೆವ ಮರಿದುಂಬಿಗಳ ಮಾಲೆಯಂ ತಾಳ್ದ ನವ ಪರಿಮಳದ ಮಂದಾರ ಮಾಲೆಯಂ ವಿಷಯೆ ಸೌಂದರ ಶಿರೀಷದ ಮಾಲೆಯಂ ಪೋಲ್ವ ನಳಿ (ಕಮಲದ ಕಡ್ಡಿ)ತೋಳನೆತ್ತಿ ಕಂಧರದೊಳಿಡಲು=[ಝೇಂಕರಿಸುತ್ತಿರುವ ಮರಿದುಂಬಿಗಳ ಮಾಲೆಯನ್ನು ಕಟ್ಟಿದ ಪರಿಮಳದ ಹೊಸ ಮಂದಾರ ಮಾಲೆಯನ್ನು ವಿಷಯೆಯು ಸುಂದರ ಶಿರೀಷದ (ಬಾಗೆ) ಮಾಲೆಯನ್ನು ಹೋಲುವ ನಳಿತೋಳನ್ನು ಎತ್ತಿ ಚಂದ್ರಹಾಸನ ಕುತ್ತಿಗೆಯಲ್ಲಿ ಇಡಲು/ಹಾಕಿದಳು. ];; ಭರಿತ ಲಾವಣ್ಯ ಸಾಕಾರದಿಂ ಮಂಗಳಾಭರಣಂಗಳು ಎಸೆವ ಅಲಂಕಾರದಿಂ ಪಾರ್ವರು ಉಚ್ಚರಿಪ ಅಗ್ನಿಹೋತ್ರ ಪ್ರಕಾರದಿಂ ವಧುವಂ ಕುಳಿಂದಜಂ ಕೈವಿಡಿದನು=[ತುಂಬಿದ ಲಾವಣ್ಯವೇ ಆಕಾರ ಪಡೆದಿರುವಂತಿರುವ ಮಂಗಳಕರ ಭರಣಂಗಳಿಂದ ಶೊಬಿತನಾದ ಕುಳಿಂದನ ದತ್ತುಮಗ ಚಂದ್ರಹಾಸನು ವಿಪ್ರರು ಮಂತ್ರಗಳನ್ನು ಹೇಳುತ್ತಿರಲು ಅಗ್ನಿಹೋತ್ರ ಪ್ರಕಾರದಿದ ವಧು ವಿಷಯೆಯನ್ನು ಕೈಹಿಡಿದನು].
 • ತಾತ್ಪರ್ಯ:ಝೇಂಕರಿಸುತ್ತಿರುವ ಮರಿದುಂಬಿಗಳ ಮಾಲೆಯನ್ನು ಕಟ್ಟಿದ ಪರಿಮಳದ ಹೊಸ ಮಂದಾರ ಮಾಲೆಯನ್ನು ವಿಷಯೆಯು ಸುಂದರ ಶಿರೀಷದ (ಬಾಗೆ) ಮಾಲೆಯನ್ನು ಹೋಲುವ ನಳಿತೋಳನ್ನು ಎತ್ತಿ ಚಂದ್ರಹಾಸನ ಕುತ್ತಿಗೆಯಲ್ಲಿ ಇಡಲು/ಹಾಕಿದಳು. ತುಂಬಿದ ಲಾವಣ್ಯವೇ ಆಕಾರ ಪಡೆದಿರುವಂತಿರುವ ಮಂಗಳಕರ ಭರಣಂಗಳಿಂದ ಶೊಬಿತನಾದ ಕುಳಿಂದನ ದತ್ತುಮಗ ಚಂದ್ರಹಾಸನು ವಿಪ್ರರು ಮಂತ್ರಗಳನ್ನು ಹೇಳುತ್ತಿರಲು ಅಗ್ನಿಹೋತ್ರ ಪ್ರಕಾರದಿದ ವಧು ವಿಷಯೆಯನ್ನು ಕೈಹಿಡಿದನು].
 • (ಪದ್ಯ-೧೭)

ಪದ್ಯ:-:೧೮:[ಸಂಪಾದಿಸಿ]

ಮುಂದೆ ವಿರಚಿಸಿದ ವೇದಿಯೊಳೆಸೆವ ಹಸೆಗೆ ನಡೆ |
ತಂದು ಪಾಣಿಗ್ರಹಣಮಂ ಗೈದು ಲಾಜಾಜ್ಯ |
ದಿಂದೆ ಹೋಮದೊಳಗ್ನಿಯಂ ಬೆಳಗೆ ವಿಪ್ರರಾಶೀರ್ವಾದಮಂ ಮಾಡಲು ||
ಬಂದು ತಿಲಕವನ್ನಿಟ್ಟು ಪತ್ರಫಲಮಂ ಕೊಟ್ಟು |
ಪೊಂದಳಿಗೆವಿಡಿದಾರತಿಯ ನೆತ್ತಲೈದೆಯರ್ |
ಕಂದರ್ಪ ರತಿಗಳ ವಿವಾಹಮೆನೆ ಕಂಗೊಳಿಸಿತಾ ದಂಪತಿಗಳ ಮದುವೆ ||18||

ಪದವಿಭಾಗ-ಅರ್ಥ:
ಮುಂದೆ ವಿರಚಿಸಿದ ವೇದಿಯೊಳೆಸೆವ ಹಸೆಗೆ ನಡೆತಂದು ಪಾಣಿಗ್ರಹಣಮಂ ಗೈದು ಲಾಜಾಜ್ಯದಿಂದೆ ಹೋಮದೊಳಗ್ನಿಯಂ ಬೆಳಗೆ ವಿಪ್ರರಾಶೀರ್ವಾದಮಂ ಮಾಡಲು=[ನಂತರ ಸುಂದರವಾಗಿ ಕಟ್ಟಿದ ವೇದಿಕೆಯಲ್ಲಿ ಶೋಭಿಸುವ ಹಸೆಮಣೆಗೆ ಬಂದು ಪಾಣಿಗ್ರಹಣವನ್ನು (ಪತ್ನಿಯ ಕೈಯನ್ನು ಹಿಡಿದುಕೊಳ್ಳುವುದು) ಮಾಡಿ ಅರಳು ತುಪ್ಪದಿಂದ ಹೋಮಮಾಡಿ ಅಗ್ನಿಯು ಬೆಳಗುತ್ತಿರಲು, ವಿಪ್ರರು ಆಶೀರ್ವಾದನ್ನು ಮಾಡಲು ];; ಬಂದು ತಿಲಕವನ್ನಿಟ್ಟು ಪತ್ರಫಲಮಂ ಕೊಟ್ಟು ಪೊಂದಳಿಗೆ ವಿಡಿದು ಆರತಿಯನು ಎತ್ತಲು ಐದೆಯರ್ ಕಂದರ್ಪ ರತಿಗಳ ವಿವಾಹಮೆನೆ ಕಂಗೊಳಿಸಿತಾ ದಂಪತಿಗಳ ಮದುವೆ=[ಮುತ್ತೈದೆಯರು ಬಂದು ಹಣೆಗೆ ತಿಲಕವನ್ನಿಟ್ಟು ವೀಳಯದೆಲೆ ಅಡಿಕೆ ಹಣ್ಣುಗಳನ್ನು ವಧೂವರರ ಕೈಯಲ್ಲಿ ಕೊಟ್ಟು ಹೊನ್ನಿನ ಹರಿವಾಣ ಹಿಡಿದು ಆರತಿಯನ್ನು ಎತ್ತಲು, ಆ ದಂಪತಿಗಳ ಮದುವೆ ಮನ್ಮಥ ರತಿಯರ ವಿವಾಹದಂತೆ ಕಂಗೊಳಿಸಿತು].
 • ತಾತ್ಪರ್ಯ:ನಂತರ ಸುಂದರವಾಗಿ ಕಟ್ಟಿದ ವೇದಿಕೆಯಲ್ಲಿ ಶೋಭಿಸುವ ಹಸೆಮಣೆಗೆ ಬಂದು ಪಾಣಿಗ್ರಹಣವನ್ನು (ಪತ್ನಿಯ ಕೈಯನ್ನು ಹಿಡಿದುಕೊಳ್ಳುವುದು) ಮಾಡಿ ಅರಳು ತುಪ್ಪದಿಂದ ಹೋಮಮಾಡಿ ಅಗ್ನಿಯು ಬೆಳಗುತ್ತಿರಲು, ವಿಪ್ರರು ಆಶೀರ್ವಾದನ್ನು ಮಾಡಲು ಮುತ್ತೈದೆಯರು ಬಂದು ಹಣೆಗೆ ತಿಲಕವನ್ನಿಟ್ಟು ವೀಳಯದೆಲೆ ಅಡಿಕೆ ಹಣ್ಣುಗಳನ್ನು ವಧೂವರರ ಕೈಯಲ್ಲಿ ಕೊಟ್ಟು ಹೊನ್ನಿನ ಹರಿವಾಣ ಹಿಡಿದು ಆರತಿಯನ್ನು ಎತ್ತಲು, ಆ ದಂಪತಿಗಳ ಮದುವೆ ಮನ್ಮಥ ರತಿಯರ ವಿವಾಹದಂತೆ ಕಂಗೊಳಿಸಿತು.
 • (ಪದ್ಯ-೧೮)

ಪದ್ಯ:-:೧೮:[ಸಂಪಾದಿಸಿ]

ತತ್ಕಾಲದೊಳ್ ಮದನನಾ ಚಂದ್ರಹಾಸನಂ |
ಸತ್ಕರಿಸಿ ಬಳುವಳಿಗೆ ಬಹಳ ಗೋ ಮಹಿಷಿ ಬಲ |
ವತ್ಕರಿ ತುರಂಗ ರಥ ಶಯ್ಯಾಸನಂಗಳಂ ವಳಿತ ವಾಹನ ಪದವನು ||
ಉತ್ಕೃಷ್ಟ ಪರಿಮಳದ್ರವ್ಯ ಸಂಕುಲಮಂ ಚ |
ಮತ್ಕಾರದಬಲೆಯರನಂಬರಾಭರಣ ವಿಲ |
ಸತ್ಕಂಠಮಾಲೆಗಳನಿತ್ತನೆಂದುಂ ಬಳಸಿ ತೀರಿದ ಸುವಸ್ತುಗಳನು ||19||

ಪದವಿಭಾಗ-ಅರ್ಥ:
ತತ್ಕಾಲದೊಳ್ ಮದನನು ಆ ಚಂದ್ರಹಾಸನಂ ಸತ್ಕರಿಸಿ ಬಳುವಳಿಗೆ ಬಹಳ ಗೋ ಮಹಿಷಿ ಬಲವತ್ ಕರಿ ತುರಂಗ ರಥ ಶಯ್ಯಾಸನಂಗಳಂ ವಳಿತ ವಾಹನ ಪದವನು=[ಆ ವಿವಾಹ ಸಮಯದಲ್ಲಿ ಮದನನು ಆ ಚಂದ್ರಹಾಸನನ್ನು ಸತ್ಕರಿಸಿ ಬಳುವಳಿಗೆ/ ಉಡುಗೊರೆಗೆ ಬಹಳ ಗೋವು, ಮಹಿಷಿ, ಬಲವತ್ ಕರಿ- ಆನೆ, ತುರಗ, ರಥ, ಶಯ್ಯಾಸನ/ ಮಂಚ-ಹಾಸಿಗೆಗಳನ್ನು, ವಳ್ಳೆಯ ವಾಹನ ವಸ್ತುಗಳನ್ನೂ, ];; ಉತ್ಕೃಷ್ಟ ಪರಿಮಳದ್ರವ್ಯ ಸಂಕುಲಮಂ ಚಮತ್ಕಾರದ ಅಬಲೆಯರನು ಅಂಬರಾಭರಣ ವಿಲಸತ್ಕಂಠಮಾಲೆಗಳನು ಇತ್ತನೆಂದುಂ ಬಳಸಿ ತೀರಿದ ಸುವಸ್ತುಗಳನು=[ಉತ್ಕೃಷ್ಟ ಪರಿಮಳದ್ರವ್ಯ ಸಂಕುಲಮಂ ಚಮತ್ಕಾರದ ಸ್ತ್ರೀಯರನ್ನೂ, ಅಂಬರ/ಬಟ್ಟೆ ಆಭರಣ ಉತ್ತಮ ಕಂಠದಮಾಲೆಗಳನೂ, ಮತ್ತು ಬಳಸಿ ತೀರಿದ ಉತ್ತಮ ವಸ್ತುಗಳನು ಕೊಟ್ಟನು.]
 • ತಾತ್ಪರ್ಯ:ಆ ವಿವಾಹ ಸಮಯದಲ್ಲಿ ಮದನನು ಆ ಚಂದ್ರಹಾಸನನ್ನು ಸತ್ಕರಿಸಿ ಬಳುವಳಿಗೆ/ ಉಡುಗೊರೆಗೆ ಬಹಳ ಗೋವು, ಮಹಿಷಿ, ಬಲವತ್ ಕರಿ- ಆನೆ, ತುರಗ, ರಥ, ಶಯ್ಯಾಸನ/ ಮಂಚ-ಹಾಸಿಗೆಗಳನ್ನು, ವಳ್ಳೆಯ ವಾಹನ ವಸ್ತುಗಳನ್ನೂ, ಉತ್ಕೃಷ್ಟ ಪರಿಮಳದ್ರವ್ಯ ಸಂಕುಲಮಂ ಚಮತ್ಕಾರದ ಸ್ತ್ರೀಯರನ್ನೂ, ಅಂಬರ/ಬಟ್ಟೆ ಆಭರಣ ಉತ್ತಮ ಕಂಠದಮಾಲೆಗಳನೂ, ಮತ್ತು ಬಳಸಿ ತೀರಿದ ಉತ್ತಮ ವಸ್ತುಗಳನು ಕೊಟ್ಟನು.
 • (ಪದ್ಯ-೧೯)

ಪದ್ಯ:-:೨೦:[ಸಂಪಾದಿಸಿ]

ಉರ್ವೀಶ್ವರನ ಪುರೋಹಿತ ಗಾಲವಂಗೆ ತನ |
ಗುರ್ವ ಬಾಂಧವ ಪುತ್ರ ಮಿತ್ರರ್ಗೆ ನೆರೆದ ಭೂ |
ಗೀರ್ವಾಣರೆಲ್ಲರ್ಗೆ ಕವಿ ಗಮಕಿ ನಟ ವಿದೂಷಕ ವಂದಿ ಗಾಯಕರ್ಗೆ ||
ಸರ್ವ ಜನಕವರವರ ತರವರಿತು ಸತ್ಕರಿಸಿ |
ತರ್ವಾಯೊಳಗಣಿತ ದ್ರವ್ಯಮಂ ಪೊತ್ತು ಬೇ |
ಸರ್ವಿನಂ ಕೊಟ್ಟನುತ್ಸವದಿಂದೆ ಯಾಚಕರ್ಗಾಗ ದುರ್ಮತಿಯ ಸೂನು ||20||

ಪದವಿಭಾಗ-ಅರ್ಥ:
ಉರ್ವೀಶ್ವರನ ಪುರೋಹಿತ ಗಾಲವಂಗೆ ತನಗೆ ಉರ್ವ(ಇರುವ) ಬಾಂಧವ ಪುತ್ರ ಮಿತ್ರರ್ಗೆ ನೆರೆದ ಭೂಗೀರ್ವಾಣರು ಎಲ್ಲರ್ಗೆ ಕವಿ ಗಮಕಿ ನಟ ವಿದೂಷಕ ವಂದಿ ಗಾಯಕರ್ಗೆ=[ರಾಜನ ಪುರೋಹಿತ ಗಾಲವನಿಗೆ, ತನ್ನ ಬಾಂಧವರು, ಪುತ್ರ ಮಿತ್ರರಿಗೆ, ಅಲ್ಲಿ ನೆರೆದ ವಿಪ್ರರು, ಕವಿ, ಗಮಕಿ, ನಟ, ವಿದೂಷಕ, ವಂದಿ, ಗಾಯಕರು,ಎಲ್ಲರಿಗೆ,];; ಸರ್ವ ಜನಕೆ ಅವರವರ ತರವ ಅರಿತು ಸತ್ಕರಿಸಿ ತರ್ವಾಯೊಳ್ ಅಗಣಿತ ದ್ರವ್ಯಮಂ ಪೊತ್ತು ಬೇಸರ್ವಿನಂ ಕೊಟ್ಟನು ಅತ್ಸವದಿಂದೆ ಯಾಚಕರ್ಗೆ ಆಗ ದುರ್ಮತಿಯ ಸೂನು=[ಸರ್ವ ಜನಕರಿಗೆ, ಅವರವರ ಯೋಗ್ಯತೆ ಅರಿತು ಸತ್ಕರಿಸಿ ತರುವಾಯ ಅಗಣಿತ/ಹೇರಳ ದ್ರವ್ಯವನ್ನು, ಹೊತ್ತು ಬೇಸರಿಸುವಷ್ಟನ್ನು ಸಂತಸದಿಂದ ಬೇಡಿದವರಿಗೆ ದುರ್ಮತಿಯ ಮಗ ಮದನನು ಆಗ ಕೊಟ್ಟನು].
 • ತಾತ್ಪರ್ಯ:ರಾಜನ ಪುರೋಹಿತ ಗಾಲವನಿಗೆ, ತನ್ನ ಬಾಂಧವರು, ಪುತ್ರ ಮಿತ್ರರಿಗೆ, ಅಲ್ಲಿ ನೆರೆದ ವಿಪ್ರರು, ಕವಿ, ಗಮಕಿ, ನಟ, ವಿದೂಷಕ, ವಂದಿ, ಗಾಯಕರು,ಎಲ್ಲರಿಗೆ, ಸರ್ವ ಜನಕರಿಗೆ, ಅವರವರ ಯೋಗ್ಯತೆ ಅರಿತು ಸತ್ಕರಿಸಿ ತರುವಾಯ ಅಗಣಿತ/ಹೇರಳ ದ್ರವ್ಯವನ್ನು, ಹೊತ್ತು ಬೇಸರಿಸುವಷ್ಟನ್ನು ಸಂತಸದಿಂದ ಬೇಡಿದವರಿಗೆ ದುರ್ಮತಿಯ ಮಗ ಮದನನು ಆಗ ಕೊಟ್ಟನು].
 • (ಪದ್ಯ-೨೦)

ಪದ್ಯ:-:೨೧:[ಸಂಪಾದಿಸಿ]

ತದನಂತರದೊಳನಿಬರೆಲ್ಲರಂ ಕಳುಹಿ ನಿಜ |
ಸದನದೆ ಸಮಗ್ರ ವೈಭವದೊಳಿರಲಂದಿರುಳ್ |
ಮದನಂ ಸ್ವಬಾಂಧವರ್ವೆರಸಿ ದಂಪತಿಗಳಂ ಸಹಭೋಜನಂ ಮಾಡಿಸಿ ||
ಇದನಂಗತಾತನಂ ಪೂಜಿಸಿದ ಫಲದೊಳಾ |
ದುದನಂತ ಸೌಭಾಗ್ಯಮೆಂದು ಮುದದಿಂ ಪವಡಿ |
ಸಿದನನ್ನೆಗಂ ಪೂರ್ವಶೈಲ ಶಿಖರದ ಹೊಂಗಳಸದಂತೆ ರವಿ ಮೆರೆದನು ||21||
 

ಪದವಿಭಾಗ-ಅರ್ಥ:
ತದನಂತರದೊಳು ಅನಿಬರು ಎಲ್ಲರಂ ಕಳುಹಿ ನಿಜ ಸದನದೆ ಸಮಗ್ರ ವೈಭವದೊಳು ಇರಲು ಅಂದಿರುಳ್ ಮದನಂ ಸ್ವಬಾಂಧವರ್ವೆರಸಿ ದಂಪತಿಗಳಂ ಸಹಭೋಜನಂ ಮಾಡಿಸಿ=[ಆ ನಂತರದಲ್ಲಿ ಎಲ್ಲಾ ಜನರನ್ನೂ ಕಳುಹಿಸಿ, ತನ್ನ ಮನೆಯಲ್ಲಿ ಸರ್ವ ವೈಭವದಿಂದ ಇರಲು, ಅಂದಿನ ರಾತ್ರಿ ಮದನನು ಸ್ವಂತ ಬಾಂಧವರ ಜೊತೆ ದಂಪತಿಗಳನ್ನು ಸಹಭೋಜನ ಮಾಡಿಸಿದನು.];; ಇದು ಅನಂಗ ತಾತನಂ ಪೂಜಿಸಿದ ಫಲದೊಳು ಆದುದು ಅನಂತ ಸೌಭಾಗ್ಯಮೆಂದು ಮುದದಿಂ ಪವಡಿನಿದನನ್ನೆಗಂ ಪೂರ್ವಶೈಲ ಶಿಖರದ ಹೊಂಗಳಸದಂತೆ ರವಿ ಮೆರೆದನು=[ಅವನು, ತಾನು ಈಗ ಮಾಡಿದ ಕಾರ್ಯ ಮನ್ಮಥನ ತಂದೆ ವಿಷ್ಣುವನ್ನು ಪೂಜಿಸಿದ ಫಲದಿಂದ ಆಯಿತು; ಇದು ತನ್ನ ಅನಂತ ಸೌಭಾಗ್ಯವು ಎಂದು ಭಾವಿಸಿ, ಸಂತಸದಿಂದ ಮಲಗಿದನು. ಆ ಸ್ವಲ್ಪ ಸಮಯಕ್ಕೆ ಪೂರ್ವದ ಬಟ್ಟದ ಶಿಖರದಲ್ಲಿ ಹೊನ್ನಿನ ಕಳಸದಂತೆ ಸೂರ್ಯನು ಪ್ರಕಾಶಿಸಿದನು. ಹೀಗೆ ಚಂದ್ರಹಾಸನು ಆ ಸಂಜೆ ಚಂದನಾವತಿಗೆ ತಲುಪಿದ ನಂತರ ಮರುದಿನ ಬೆಳಗಾಗುವುದರೊಳಗೆ ಅವನಿಗೂ ಮಂತ್ರಿಯ ಮಗಳು ವಿಷೆಯೆಗೂ ಮದುವೆ ಆಗಿಹೋಯಿತು.].
 • ತಾತ್ಪರ್ಯ:ಆ ನಂತರದಲ್ಲಿ ಎಲ್ಲಾ ಜನರನ್ನೂ ಕಳುಹಿಸಿ, ತನ್ನ ಮನೆಯಲ್ಲಿ ಸರ್ವ ವೈಭವದಿಂದ ಇರಲು, ಅಂದಿನ ರಾತ್ರಿ ಮದನನು ಸ್ವಂತ ಬಾಂಧವರ ಜೊತೆ ದಂಪತಿಗಳನ್ನು ಸಹಭೋಜನ ಮಾಡಿಸಿದನು. ಅವನು, ತಾನು ಈಗ ಮಾಡಿದ ಕಾರ್ಯ ಮನ್ಮಥನ ತಂದೆ ವಿಷ್ಣುವನ್ನು ಪೂಜಿಸಿದ ಫಲದಿಂದ ಆಯಿತು; ಇದು ತನ್ನ ಅನಂತ ಸೌಭಾಗ್ಯವು ಎಂದು ಭಾವಿಸಿ, ಸಂತಸದಿಂದ ಮಲಗಿದನು. ಆ ಸ್ವಲ್ಪ ಸಮಯಕ್ಕೆ ಪೂರ್ವದ ಬಟ್ಟದ ಶಿಖರದಲ್ಲಿ ಹೊನ್ನಿನ ಕಳಸದಂತೆ ಸೂರ್ಯನು ಪ್ರಕಾಶಿಸಿದನು. ಹೀಗೆ ಚಂದ್ರಹಾಸನು ಆ ಸಂಜೆ ಚಂದನಾವತಿಗೆ ತಲುಪಿದ ನಂತರ ಮರುದಿನ ಬೆಳಗಾಗುವುದರೊಳಗೆ ಅವನಿಗೂ ಮಂತ್ರಿಯ ಮಗಳು ವಿಷೆಯೆಗೂ ಮದುವೆ ಆಗಿಹೋಯಿತು.
 • (ಪದ್ಯ-೨೧)

ಪದ್ಯ:-:೨೨:[ಸಂಪಾದಿಸಿ]

ಪಂಕರುಹ ಮಿತ್ರನುದಯದೊಳೆದ್ದು ಮದನಂ ಸ್ವ |
ಕಿಂಕರರ್ಗರಿಪಲವರಂದಿನ ಮಹೋತ್ಸವ ಕ |
ಲಂಕರಿಸಿದರ್ ಧ್ವಜಪತಾಕೆಗಳ ರಚನೆಯಿಂದಮಲ ಮಣಿ ಮಂಟಪವನು ||
ಕಂಕಣದ ಘನರವದ ಮಿಂಚುಗಂಗಳ ಸತೀ |
ಸಂಕುಲದ ಮಾಳ್ಕೆಗಳ ಮಂಗಳ ಸ್ನಾನದಿಂ |
ಕುಂಕುಮ ವಿಲಿಪ್ತಾಂಗನಾಗಿ ನಿಜ ಸತಿಸಹಿತ ಚಂದ್ರಹಾಸಂ ಮೆರೆದನು ||22||

ಪದವಿಭಾಗ-ಅರ್ಥ:
ಪಂಕರುಹ ಮಿತ್ರನ ಉದಯದೊಳು ಎದ್ದು ಮದನಂ ಸ್ವಕಿಂಕರರ್ಗೆ ಅರಿಪಲು ಅವರು ಅಂದಿನ ಮಹೋತ್ಸವಕೆ ಅಲಂಕರಿಸಿದರ್ ಧ್ವಜಪತಾಕೆಗಳ ರಚನೆಯಿಂದ ಅಮಲ ಮಣಿ ಮಂಟಪವನು=[ಸುರ್ಯನ ಉದಯದಲ್ಲಿ ಎದ್ದ ಮದನನು ತನ್ನ ಚಾರರಿಗೆ ಹೇಲಲು ಅವರು ಅಂದಿನ ಮಹೋತ್ಸವಕ್ಕೆ ಧ್ವಜಪತಾಕೆಗಳನ್ನು ಕಟ್ಟಿ, ವಿಶೇಷರೀತಿಯಿಂದ ಶುದ್ಧ ಮಣಿ ಮಂಟಪವನ್ನು ಅಲಂಕರಿಸಿದರು. ];; ಕಂಕಣದ ಘನರವದ ಮಿಂಚುಗಂಗಳ (ಕಂಗಳ) ಸತೀ ಸಂಕುಲದ ಮಾಳ್ಕೆಗಳ ಮಂಗಳ ಸ್ನಾನದಿಂ ಕುಂಕುಮ ವಿಲಿಪ್ತಾಂಗನಾಗಿ ನಿಜ ಸತಿಸಹಿತ ಚಂದ್ರಹಾಸಂ ಮೆರೆದನು=[ಕೈ ಕಾಲುಗಳಲ್ಲಿ ಧರಿಸಿದ ಬಳೆ ಕಡಗಗಳ ಇಂಪುಸದ್ದಿನ, ಮಿಂಚುವ ಕಣ್ನುಗಳ ವನಿತೆಯರ ಸಮೂಹದ ಕ್ರಿಯೆಗಳಾದ ಮಂಗಳಸ್ನಾನದಿಂದ ಕುಂಕುಮ ವನ್ನು ದೇಹಕ್ಕೆ ಹಚ್ಚಿದವನಾಗಿ ತನ್ನ ಸತಿ ವಿಷಯೆ ಸಹಿತ ಚಂದ್ರಹಾಸನು ಶೋಭಿಸಿದನು].
 • ತಾತ್ಪರ್ಯ:ಸುರ್ಯನ ಉದಯದಲ್ಲಿ ಎದ್ದು ಮದನನು ತನ್ನ ಚಾರರಿಗೆ ಹೇಲಲು ಅವರು ಅಂದಿನ ಮಹೋತ್ಸವಕ್ಕೆ ಧ್ವಜಪತಾಕೆಗಳನ್ನು ಕಟ್ಟಿ, ವಿಶೇಷರೀತಿಯಿಂದ ಶುದ್ಧ ಮಣಿ ಮಂಟಪವನ್ನು ಅಲಂಕರಿಸಿದರು. ಕೈ ಕಾಲುಗಳಲ್ಲಿ ಧರಿಸಿದ ಬಳೆ ಕಡಗಗಳ ಇಂಪುಸದ್ದಿನ, ಮಿಂಚುವ ಕಣ್ನುಗಳ ವನಿತೆಯರ ಸಮೂಹದ ಕ್ರಿಯೆಗಳಾದ ಮಂಗಳಸ್ನಾನದಿಂದ ಕುಂಕುಮವನ್ನು ದೇಹಕ್ಕೆ ಹಚ್ಚಿದವನಾಗಿ ತನ್ನ ಸತಿ ವಿಷಯೆ ಸಹಿತ ಚಂದ್ರಹಾಸನು ಶೋಭಿಸಿದನು].
 • (ಪದ್ಯ-೨೨)

ಪದ್ಯ:-:೨೩:[ಸಂಪಾದಿಸಿ]

ಚಂಪಕ ಸ್ನೇಹಸಮ್ಮರ್ದನದ ಕುಂಕುಮದ |
ಕಂಪಿನನುಲೇಪನದ ನಿರ್ಮಲ ಜಲ ಸ್ನಾನ |
ದಂಪಿನ ಕಳೇವರದ ರಂಜಿಸುವ ನೊಸಲ ಮುತ್ತಿನ ಬಾಸಿಗದ ಚೆಲ್ವಿನ ||
ದಂಪತಿಗಳೊಪ್ಪಿದರ್ ಪಾಡುವ ಪುರಂಧ್ರಿಯರ |
ನುಂಪಿಡಿದ ಸರದಿಂದೆ ಮಂಗಲ ಸುವಾದ್ಯ ರವ |
ದಿಂ ಪಾರ್ವರಡಿಗಡಿಗೊಡರ್ಚುವ ಶುಭಸ್ಪಸ್ತಿವಾಚನದ ಘೊಂಷದಿಂದೆ ||23||

ಪದವಿಭಾಗ-ಅರ್ಥ:
ಚಂಪಕ ಸ್ನೇಹ ಸಮ್ಮರ್ದನದ ಕುಂಕುಮದ ಕಂಪಿನ ಅನುಲೇಪನದ ನಿರ್ಮಲ ಜಲ ಸ್ನಾನದಂಪಿನ ಕಳೇವರದ (ದೇಹದ) ರಂಜಿಸುವ ನೊಸಲ ಮುತ್ತಿನ ಬಾಸಿಗದ ಚೆಲ್ವಿನ=[ಚಂಪಕ/ ಸಂಪಿಗೆ ಹೂವಿಗೆ ಹಚ್ದದ ನೀರಿನ ಚಿಮುಕಿಸುವುದರಿಂದ, ಕುಂಕುಮದ ಪರಿಮಳದ ಸವರಿಕೆಯಿಂದ, ನಿರ್ಮಲ ನೀರಿನ ಸ್ನಾನದ ಸೊಗಸಿನಿಂದ, ದೇಹದಲ್ಲಿ ಶೋಭಿಸುವ ವಿಶಾಲ ಹಣೆಯ ಮುತ್ತಿನ ಬಾಸಿಗದ ಚೆಲುವಿನಲ್ಲಿ, ];; ದಂಪತಿಗಳೊಪ್ಪಿದರ್ ಪಾಡುವ ಪುರಂಧ್ರಿಯರ ನುಂಪಿಡಿದ ಸರದಿಂದೆ ಮಂಗಲ ಸುವಾದ್ಯ ರವದಿಂ ಪಾರ್ವರು ಅಡಿಗಡಿಗೆ ಒಡರ್ಚುವ ಶುಭಸ್ಪಸ್ತಿವಾಚನದ ಘೊಂಷದಿಂದೆ=[ ಹಾಡುವ ಮುತ್ತೈದೆಯರ ಇಂಪಾದ ದನಿಯಿಂದ ಮಂಗಳವಾದ ಉತ್ತಮ ವಾದ್ಯ ಸ್ವರದಿಂದ ವಿಪ್ರರು ಆಗಿಂದಾಗ್ಯೆ ಪಠಿಸುವ 'ಶುಭಸ್ಪಸ್ತಿವಾಚನ'ದ ಘೋಷದಿಂದ ದಂಪತಿಗಳು ಒಪ್ಪವಾಗಿ ಕಂಡರು.]
 • ತಾತ್ಪರ್ಯ:ಸಂಪಿಗೆ ಹೂವಿಗೆ ಹಚ್ದದ ನೀರಿನ ಚಿಮುಕಿಸುವುದರಿಂದ, ಕುಂಕುಮದ ಪರಿಮಳದ ಸವರಿಕೆಯಿಂದ, ನಿರ್ಮಲ ನೀರಿನ ಸ್ನಾನದ ಸೊಗಸಿನಿಂದ, ದೇಹದಲ್ಲಿ ಶೋಭಿಸುವ ವಿಶಾಲ ಹಣೆಯ ಮುತ್ತಿನ ಬಾಸಿಗದ ಚೆಲುವಿನಲ್ಲಿ, ಹಾಡುವ ಮುತ್ತೈದೆಯರ ಇಂಪಾದ ದನಿಯಿಂದ ಮಂಗಳವಾದ ಉತ್ತಮ ವಾದ್ಯ ಸ್ವರದಿಂದ ವಿಪ್ರರು ಆಗಿಂದಾಗ್ಯೆ ಪಠಿಸುವ 'ಶುಭಸ್ಪಸ್ತಿವಾಚನ'ದ ಘೋಷದಿಂದ ದಂಪತಿಗಳು ಒಪ್ಪವಾಗಿ ಕಂಡರು.
 • (ಪದ್ಯ-೨೩)

ಪದ್ಯ:-:೨೩:[ಸಂಪಾದಿಸಿ]

ಸುತ್ರಾಮ ತನಯ ಕೇಳುತ್ಸವದೊಳೀಪರಿ ದಿ |
ನತ್ರಯಂ ನಡೆಯಲ್ಕೆ ನಾಲ್ಕನೆಯ ದಿವಸದೊಳ್ |
ಚಿತ್ರಮಂ(ದಿಂ) ವಿರಚಿಸಿ ಪೊಳಲ್ಪುಗಿಸಿ ನಾಗವಲ್ಲಿಯ ಸೊಡರ್ಗಳನೊದವಿಸಿ ||
ಕ್ಷತ್ರಿಯ ವಿವಾಹವೈಭವದೊಳಿದು ಪೊಸತೆನೆ ಧ |
ರಿತ್ರಿಯೊಳ್ ಚಂದ್ರಹಾಸಂಗಾಯ್ತು ಮದುವೆ ಶತ |
ಪತ್ರನಾಭನ ಕಿಂಕರರ್ಗೆ ಮಾಡಿದ ಮಿಥ್ಯೆಯದು ತಾನೆ ಪಥ್ಯಮೆನಲು ||24||

ಪದವಿಭಾಗ-ಅರ್ಥ:
ಸುತ್ರಾಮ ತನಯ ಕೇಳು ಉತ್ಸವದೊಳು ಈಪರಿ ದಿನತ್ರಯಂ ನಡೆಯಲ್ಕೆ ನಾಲ್ಕನೆಯ ದಿವಸದೊಳ್ ಚಿತ್ರದಿಂ ವಿರಚಿಸಿ ಪೊಳಲ್ ಪುಗಿಸಿ ನಾಗವಲ್ಲಿಯ ಸೊಡರ್ಗಳನು ಒದವಿಸಿ=[ಇಂದ್ರತನಯ ಅರ್ಜುನನೇ ಕೇಳು, ಉತ್ಸವವು ಈ ರೀತಿ, ಮೂರುದಿನ ನಡೆಯಿತು. ನಾಲ್ಕನೆಯ ದಿವಸ ವಿಶೇಷ ರೀತಿಯಿಂದ ಸಿಂಗರಿಸಿ ನಗರವನ್ನು ಪ್ರವೇಶಮಾಡಿಸಿ ನಾಗವಲ್ಲಿಯ/ ನಾಕಬಲಿಯ ದೀವಟಿಗೆಗಳನ್ನು ಸಿದ್ಧಮಾಡಿ];; ಕ್ಷತ್ರಿಯ ವಿವಾಹವೈಭವದೊಳು ಇದು ಪೊಸತು ಎನೆ ಧರಿತ್ರಿಯೊಳ್ ಚಂದ್ರಹಾಸಂಗಾಯ್ತು ಮದುವೆ ಶತ ಪತ್ರನಾಭನ ಕಿಂಕರರ್ಗೆ ಮಾಡಿದ ಮಿಥ್ಯೆಯದು ತಾನೆ ಪಥ್ಯಮೆನಲು=[ಕ್ಷತ್ರಿಯ ಪದ್ಧತಿಯ ವಿವಾಹ ವೈಭವದಿಂದ ದಿಂದ ನೆಡೆದು ಇದು ನಾಡಿನಲ್ಲಿ ವಿಶೇಷವಾದುದು ಎನ್ನುವಂತೆ ಚಂದ್ರಹಾಸನಿಗೆ ಮದುವೆಯಾಯಿತು. ಹರಿಯ ಭಕ್ತರಿಗೆ ಮಾಡಿದ ಕೆಡುಕಿನಕಾರ್ಯ ತಾನಾಗಿಯೇ ಶುಭವಾಗುವುದು ಎನ್ನವಂತೆ ಆಯಿತು.]
 • ತಾತ್ಪರ್ಯ:ಇಂದ್ರತನಯ ಅರ್ಜುನನೇ ಕೇಳು, ಉತ್ಸವವು ಈ ರೀತಿ, ಮೂರುದಿನ ನಡೆಯಿತು. ನಾಲ್ಕನೆಯ ದಿವಸ ವಿಶೇಷ ರೀತಿಯಿಂದ ಸಿಂಗರಿಸಿ ನಗರವನ್ನು ಪ್ರವೇಶಮಾಡಿಸಿ ನಾಗವಲ್ಲಿಯ/ ನಾಕಬಲಿಯ ದೀವಟಿಗೆಗಳನ್ನು ಸಿದ್ಧಮಾಡಿ ಕ್ಷತ್ರಿಯ ಪದ್ಧತಿಯ ವಿವಾಹವು ವೈಭವದಿಂದ ನೆಡೆದು ಇದು ನಾಡಿನಲ್ಲಿ ವಿಶೇಷವಾದುದು ಎನ್ನುವಂತೆ ಚಂದ್ರಹಾಸನಿಗೆ ಮದುವೆಯಾಯಿತು. ಹರಿಯ ಭಕ್ತರಿಗೆ ಮಾಡಿದ ಕೆಡುಕಿನಕಾರ್ಯ ತಾನಾಗಿಯೇ ಶುಭವಾಗುವುದು ಎನ್ನವಂತೆ ಆಯಿತು.
 • (ಪದ್ಯ-೨೪)

ಪದ್ಯ:-:೨೫:[ಸಂಪಾದಿಸಿ]

ವಿಸ್ತರಿಸಿ ಮೃಷ್ಟಭೋಜನದ ನವಕುಸುಮ ಫಲ |
ವಸ್ತುಗಳ ಕರ್ಪೂರ ವೀಟಿಕೆಯ ಚಂದನದ ||
ಕಸ್ತುರಿ ಜವಾಜಿಗಳ ಪರಿಮಳದ ಕರ್ದಮದ ವಸ್ತ್ರಭೂಷಣದ ವಿತ್ತದ ||
ಪ್ರಸ್ತುತದ ಸನ್ಮಾನದಿಂದೆ ಮನ್ನಿಸಿದಂ ಸ |
ಮಸ್ತ ಜನಮಂ ಮದನನಾಪ್ತ ಬಂಧುಗಳಂ ಪ್ರ |
ಸ್ತ ಪೂಜೆಗಳಿಂದೆ ಸತ್ಕರಿಸಿ ಕೊಟ್ಟನೆಲ್ಲರ್ ತಣಿಯೆ ತಾಂ ತಣಿಯದೆ ||25||

ಪದವಿಭಾಗ-ಅರ್ಥ:
ವಿಸ್ತರಿಸಿ ಮೃಷ್ಟಭೋಜನದ ನವಕುಸುಮ ಫಲವಸ್ತುಗಳ ಕರ್ಪೂರ ವೀಟಿಕೆಯ ಚಂದನದ ಕಸ್ತುರಿ ಜವಾಜಿಗಳ ಪರಿಮಳದ ಕರ್ದಮದ ವಸ್ತ್ರಭೂಷಣದ ವಿತ್ತದ=[ಮದನನು ವಿಶೇಷವಾಗಿ ಎಲ್ಲಾಬಗೆಯ, ಮೃಷ್ಟಾನ್ನ ಭೋಜನ, ಹೊಸ ಹೂವುಗಳು, ಹಣ್ಣು ಮತ್ತು ವಸ್ತುಗಳು, ಕರ್ಪೂರದತಾಂಬೂಲ, ಚಂದನ ಕಸ್ತೂರಿ ಜವಾಜಿ ಪರಿಮಳದ ವಸ್ತುಗಳು, ಕರ್ದಮವೆಂಬ ಗಂಧ, ವಸ್ತ್ರಭೂಷಣಗಳು ಹಣ,];; ಪ್ರಸ್ತುತದ ಸನ್ಮಾನದಿಂದೆ ಮನ್ನಿಸಿದಂ ಸಮಸ್ತ ಜನಮಂ ಮದನನು ಆಪ್ತ ಬಂಧುಗಳಂ ಪ್ರಸ್ತ ಪೂಜೆಗಳಿಂದೆ ಸತ್ಕರಿಸಿ ಕೊಟ್ಟನೆಲ್ಲರ್ ತಣಿಯೆ ತಾಂ ತಣಿಯದೆ =[ಇವುಗಳೆಲ್ಲವನ್ನೂ ಕೊಟ್ಟು ಸನ್ಮಾನಮಢಿ ಸಮಸ್ತ ಜನರನ್ನೂ ಗೌರವಿಸಿದನು. ಮದನನು ಆಪ್ತ ಬಂಧುಗಳನ್ನು ಯೋಗ್ಯ ಪೂಜೆಗಳಿಂದೆ ಸತ್ಕರಿಸಿ ಅವರೆಲ್ಲರಿಗೆ ತೃಪ್ತಿಯಾಗುವಂತೆ ಉಡುಗುರೆ ಕೊಟ್ಟನು. ಆದರೆ ಅವನು ಕೊಟ್ಟು ತಣಿಯಲಿಲ್ಲ.]
 • ತಾತ್ಪರ್ಯ:ಮದನನು ವಿಶೇಷವಾಗಿ ಎಲ್ಲಾಬಗೆಯ, ಮೃಷ್ಟಾನ್ನ ಭೋಜನ, ಹೊಸ ಹೂವುಗಳು, ಹಣ್ಣು ಮತ್ತು ವಸ್ತುಗಳು, ಕರ್ಪೂರದತಾಂಬೂಲ, ಚಂದನ ಕಸ್ತೂರಿ ಜವಾಜಿ ಪರಿಮಳದ ವಸ್ತುಗಳು, ಕರ್ದಮವೆಂಬ ಗಂಧ, ವಸ್ತ್ರಭೂಷಣಗಳು ಹಣ, ಇವುಗಳೆಲ್ಲವನ್ನೂ ಕೊಟ್ಟು ಸನ್ಮಾನಮಢಿ ಸಮಸ್ತ ಜನರನ್ನೂ ಗೌರವಿಸಿದನು. ಮದನನು ಆಪ್ತ ಬಂಧುಗಳನ್ನು ಯೋಗ್ಯ ಪೂಜೆಗಳಿಂದೆ ಸತ್ಕರಿಸಿ ಅವರೆಲ್ಲರಿಗೆ ತೃಪ್ತಿಯಾಗುವಂತೆ ಉಡುಗುರೆ ಕೊಟ್ಟನು. ಆದರೆ ಅವನು ಕೊಟ್ಟು ತಣಿಯಲಿಲ್ಲ.
 • (ಪದ್ಯ-೨೫)

ಪದ್ಯ:-:೨೬:[ಸಂಪಾದಿಸಿ]

ಬಂಡಾರದಖೀಳ ವಸ್ತುವನೊಂದು ತೃಣಮಾಗಿ |
ಕಂಡು ವೆಚ್ಚಿಸಿ ಚಂದ್ರಹಾಸನ ವಿವಾಹಮಂ |
ಕೊಂಡೆಸಗುತಿರ್ದನೊಲವಿಂ ಮದನನಿತ್ತ ಕುಂತಳಪುರದೊಳವನತ್ತಲು ||
ಅಂಡಲೆದು ಚಂದನಾವತಿಯೊಳ್ ಕುಳಿಂದನಂ |
ದಂಡಿಸಿದನಾ ದುಷ್ಟ ಬುದ್ಧಿ ಜರೆದುರೆ ಬೈದು |
ಹಿಂಡಿ ಹಿಳಿದರ್ಥಮಂ ತೆಗೆದು ಸೆರೆಮನೆಗಿಕ್ಕಿ ನಿಗಳಮಂ ಕಾಲ್ಗೆಪೂಡಿ||26||

ಪದವಿಭಾಗ-ಅರ್ಥ:
ಬಂಡಾರದ ಅಖಿಳ ವಸ್ತುವನು ಒಂದು ತೃಣಮಾಗಿ ಕಂಡು ವೆಚ್ಚಿಸಿ ಚಂದ್ರಹಾಸನ ವಿವಾಹಮಂ ಕೊಂಡು ಎಸಗುತಿರ್ದನು ಒಲವಿಂ ಮದನನು ಇತ್ತ ಕುಂತಳಪುರದೊಳು;=[ಈ ಕಡೆ ಕುಂತಳಪುರದಲ್ಲಿ ರಾಜ ಭಂಡಾರದ ಎಲ್ಲಾ ವಸ್ತುಗಳನ್ನು ಒಂದು ಹುಲ್ಲುಕಡ್ಡಿಯಂತೆ ಕಂಡು, ಅದನ್ನು ವೆಚ್ಚಮಾಡಿ, ಚಂದ್ರಹಾಸನ ವಿವಾಹವನ್ನು ಕೈಗೊಂಡು ಮದನನು ಪ್ರೀತಿಯಿಮದ ನೆಡೆಸುತ್ತಿದ್ದನು. ಹೀಗಿರಲು ;];; ಅವನು ಅತ್ತಲು ಅಂಡಲೆದು (ಪೀಡಿಸಿ) ಚಂದನಾವತಿಯೊಳ್ ಕುಳಿಂದನಂ ದಂಡಿಸಿದನು ಆ ದುಷ್ಟ ಬುದ್ಧಿ ಜರೆದು ಉರೆ ಬೈದು ಹಿಂಡಿ ಹಿಳಿದು ಅರ್ಥಮಂ ತೆಗೆದು ಸೆರೆಮನೆಗೆ ಇಕ್ಕಿ ನಿಗಳಮಂ ಕಾಲ್ಗೆಪೂಡಿ=[ಅವನು - ಮಂತ್ರಿ ದುಷ್ಟಬುದ್ಧಿಯು ಅತ್ತ ಅಂಡಲೆದು ಚಂದನಾವತಿಯಲ್ಲಿ ಕುಳಿಂದನನ್ನು ಪೀಡಿಸಿ ದಂಡಿಸಿದನು. ಮತ್ತೆ ಅವನು ಕುಳಿಂದನನ್ನು ಜರೆದು/ ನಿಂದಿಸಿ, ಬಹಳ ಬೈದು, ಹಿಂಡಿ/ನೋವುಕೊಟ್ಟು, ಹಿಸುಕಿ ಅವನಲ್ಲಿದ್ದ ಹಣವನ್ನು ತೆಗೆದುಕೊಂಡು ಸೆರೆಮನೆಗೆ ನೂಕಿ ಕಾಲಿಗೆ ಸಮಕೋಲೆ/ ಬೇಡಿ ಹಾಕಿಸಿದನು.]
 • ತಾತ್ಪರ್ಯ:ಈ ಕಡೆ ಕುಂತಳಪುರದಲ್ಲಿ ರಾಜ ಭಂಡಾರದ ಎಲ್ಲಾ ವಸ್ತುಗಳನ್ನು ಒಂದು ಹುಲ್ಲುಕಡ್ಡಿಯಂತೆ ಕಂಡು, ಅದನ್ನು ವೆಚ್ಚಮಾಡಿ, ಚಂದ್ರಹಾಸನ ವಿವಾಹವನ್ನು ಕೈಗೊಂಡು ಮದನನು ಪ್ರೀತಿಯಿಮದ ನೆಡೆಸುತ್ತಿದ್ದನು. ಇತ್ತ ಹೀಗಿರಲು, ಅತ್ತ ಅವನು- ಮಂತ್ರಿ ದುಷ್ಟಬುದ್ಧಿಯು ಚಂದನಾವತಿಯಲ್ಲಿ ಕುಳಿಂದನನ್ನು ಪೀಡಿಸಿ ದಂಡಿಸಿದನು. ಮತ್ತೆ ಅವನು ಕುಳಿಂದನನ್ನು ಜರೆದು/ ನಿಂದಿಸಿ, ಬಹಳ ಬೈದು, ಹಿಂಡಿ/ನೋವುಕೊಟ್ಟು, ಹಿಸುಕಿ ಅವನಲ್ಲಿದ್ದ ಹಣವನ್ನು ತೆಗೆದುಕೊಂಡು ಸೆರೆಮನೆಗೆ ನೂಕಿ ಕಾಲಿಗೆ ಸಂಕೋಲೆ/ ಬೇಡಿ ಹಾಕಿಸಿದನು.
 • (ಪದ್ಯ-೨೬)

ಪದ್ಯ:-:೨೭:[ಸಂಪಾದಿಸಿ]

ಹೆಕ್ಕಳಿಸಿ ರಾಜ್ಯಮಂ ಕೊಟ್ಟೊಡೆನ್ನಂ ಮರೆದು |
ಸೊಕ್ಕಿ ತನಗೊರ್ವ ಮಗನಂ ಮಾಡಿಕೊಂಡವನ |
ಮಕ್ಕಳಾಟಿಕೆಯಿಂದ ದೇವತಾಲಯ ತಟಾಕಾರಾಮಕೊಡುವೆಗಳನು ||
ಇಕ್ಕಿ ಕಿಡಿಸಿದನೆಂದವನ ವಳಿತಮಂ ತೆಗೆದು |
ಕಕ್ಕಸದ ಬಂಧನದೊಳಿರಿಸಿ ಕುಂತಳನಗರಿ |
ಗಕ್ಕರಿಂದೈತಂದನಾ ದುಷ್ಟಬುದ್ಧಿ ವಾಹಕರನವಗಡಿಸಿ ನಡೆಸಿ ||27||

ಪದವಿಭಾಗ-ಅರ್ಥ:
ಹೆಕ್ಕಳಿಸು (ಅಹಂಕಾರಪಡು) ರಾಜ್ಯಮಂ ಕೊಟ್ಟೊಡೆ ಎನ್ನಂ ಮರೆದು ಸೊಕ್ಕಿ ತನಗೆ ಓರ್ವ ಮಗನಂ ಮಾಡಿಕೊಂಡು ಅವನ ಮಕ್ಕಳಾಟಿಕೆಯಿಂದ ದೇವತಾಲಯ ತಟಾಕಾರಾಮಕೊಡುವೆಗಳನು=['ರಾಜ್ಯವನ್ನು ಕೊಟ್ಟರೆ ಅಹಂಕಾರ ಪಟ್ಟು ನನ್ನನ್ನು ಮರೆತು, ಸೊಕ್ಕಿ ತನಗೆ ಒಬ್ಬ ಮಗನನ್ನು ಮಾಡಿಕೊಂಡು ಅವನ ಮಕ್ಕಳಾಟಿಕೆಯಿಂದ ದೇವತಾಲಯ, ತಟಾಕ, ಆರಾಮ/ ತೋಟ ಕೊಡುವೆ/ ಕೋಟೆ(?)ಗಳನ್ನು];; ಇಕ್ಕಿ ಕಿಡಿಸಿದನೆಂದು ಅವನ ವಳಿತಮಂ ತೆಗೆದು ಕಕ್ಕಸದ ಬಂಧನದೊಳು ಇರಿಸಿ ಕುಂತಳನಗರಿಗೆ ಅಕ್ಕರಿಂದ ಐತಂದನು ಆ ದುಷ್ಟಬುದ್ಧಿ ವಾಹಕರನು ಅವಗಡಿಸಿ ನಡೆಸಿ=[ಇಕ್ಕಿ/ಹೊಡೆದು ಕೆಡಿಸಿದನು,' ಎಂದು ಅವನ ಅಧಿಕಾರವನ್ನು ತೆಗೆದು ಕಠಿಣ ಬಂಧನದಲ್ಲಿ ಇರಿಸಿ, ಆ ದುಷ್ಟಬುದ್ಧಿ ರಥದ ಸಾರಥಿಯವರನ್ನು ಅವಸರಪಡಿಸಿ ವೇಗವಾಗಿ ನಡೆಸಿ ಕುಂತಳ ನಗರಕ್ಕೆ ಸಂತಸದಿಂದ ಬಂದನು.]
 • ತಾತ್ಪರ್ಯ:ದುಷ್ಟಬುದ್ಧಿಯು, 'ರಾಜ್ಯವನ್ನು ಕೊಟ್ಟರೆ ಅಹಂಕಾರ ಪಟ್ಟು ನನ್ನನ್ನು ಮರೆತು, ಸೊಕ್ಕಿ ತನಗೆ ಒಬ್ಬ ಮಗನನ್ನು ಮಾಡಿಕೊಂಡು ಅವನ ಮಕ್ಕಳಾಟಿಕೆಯಿಂದ ದೇವತಾಲಯ, ತಟಾಕ, ಆರಾಮ/ ತೋಟ ಕೊಡುವೆ/ ಕೋಟೆ(?)ಗಳನ್ನು ಹೊಡೆದು ಕೆಡಿಸಿದನು,' ಎಂದು ಅವನ ಅಧಿಕಾರವನ್ನು ತೆಗೆದು ಕಠಿಣ ಬಂಧನದಲ್ಲಿ ಇರಿಸಿ, ಆ ದುಷ್ಟಬುದ್ಧಿ ರಥದ ಸಾರಥಿಯವರನ್ನು ಅವಸರಪಡಿಸಿ ವೇಗವಾಗಿ ನಡೆಸಿ ಕುಂತಳ ನಗರಕ್ಕೆ ಸಂತಸದಿಂದ ಬಂದನು.
 • (ಪದ್ಯ-೨೭)

ಪದ್ಯ:-:೨೮:[ಸಂಪಾದಿಸಿ]

ಕೊಂದಪನೊ ವಿಷವನೂಡಿಸಿ ಚಂದ್ರಹಾಸನಂ |
ಮಂದಮತಿಯಾಗಿ ಮರೆದಿರ್ದಪನೋ ಮಗನೆಂಬ |
ಸಂದೇಹದಿಂ ಚಂದನಾವತಿಯೊಳಿರದೆ ಕುಂತಳಪುರಕೆ ದುಷ್ಟಬುದ್ಧಿ ||
ನಿಂದಲ್ಲಿ ನಿಲ್ಲದೈತರೆ ಪಥದೊಳಿದಿರಾಗಿ |
ಬಂದು ನುಡಿದುದು ಸರ್ಪಮೊಂದು ನಿನ್ನಾಲಯದೊ |
ಳಿಂದುವರೆಗೊಡವೆಯಂ ಕಾದಿರ್ದೆನದು ನಿನ್ನ ಸುತನಿಂದೆ ಪೋದುದೆಂದು ||28||

ಪದವಿಭಾಗ-ಅರ್ಥ:
ಕೊಂದಪನೊ ವಿಷವನು ಊಡಿಸಿ ಚಂದ್ರಹಾಸನಂ ಮಂದಮತಿಯಾಗಿ ಮರೆದಿರ್ದಪನೋ ಮಗನೆಂಬ ಸಂದೇಹದಿಂ ಚಂದನಾವತಿಯೊಳು ಇರದೆ ಕುಂತಳಪುರಕೆ ದುಷ್ಟಬುದ್ಧಿ=[ದುಷ್ಟಬುದ್ಧಿಯು, ತನ್ನ ಮಗ, ವಿಷವನ್ನು ತಿನ್ನಿಸಿ ಚಂದ್ರಹಾಸನನ್ನು ಕೊಲ್ಲುತ್ತಾನೋ, ಮಂದಬುದ್ಧಿಯಿಂದ ತನ್ನ ಮಗನು ಮರೆತು ಬಿಡುವನೊ, ಎಂಬ ಸಂದೇಹದಿಂದ ಚಂದನಾವತಿಯಲ್ಲಿ ಹೆಚ್ಚು ಕಾಲ ಇರದೆ ಕುಂತಳಪುರಕ್ಕೆ ದುಷ್ಟಬುದ್ಧಿ ];; ನಿಂದಲ್ಲಿ ನಿಲ್ಲದೆ ಐತರೆ ಪಥದೊಳು ಇದಿರಾಗಿ ಬಂದು ನುಡಿದುದು ಸರ್ಪಮೊಂದು ನಿನ್ನಾಲಯದೊಳು ಇಂದುವರೆಗೆ ಒಡವೆಯಂ ಕಾದಿರ್ದೆನು ಅದು ನಿನ್ನ ಸುತನಿಂದೆ ಪೋದುದು ಎಂದು=[ನಿಂತಲ್ಲಿ ನಿಲ್ಲದೆ ಬರುತ್ತಿರಲು ದಾರಿಯಲ್ಲಿ ಒಂದು ಸರ್ಪವು ಇವನಿಗೆ ಇದಿರಾಗಿ ಬಂದು ಹೇಳಿತು,'ನಿನ್ನ ಮನೆಯಲ್ಲಿ ಇಂದುವರೆಗೆ ಒಡವೆಗಳನ್ನು ಕಾಯುತ್ತಿದ್ದೆನು, ಅವು ನಿನ್ನ ಮಗನಿಂದ ಎಲ್ಲಾ ಹೊಯಿತು'].
 • ತಾತ್ಪರ್ಯ: ದುಷ್ಟಬುದ್ಧಿಯು, ತನ್ನ ಮಗ, ವಿಷವನ್ನು ತಿನ್ನಿಸಿ ಚಂದ್ರಹಾಸನನ್ನು ಕೊಲ್ಲುತ್ತಾನೋ, ಮಂದಬುದ್ಧಿಯಿಂದ ತನ್ನ ಮಗನು ಮರೆತು ಬಿಡುವನೊ, ಎಂಬ ಸಂದೇಹದಿಂದ ಚಂದನಾವತಿಯಲ್ಲಿ ಹೆಚ್ಚು ಕಾಲ ಇರದೆ ಕುಂತಳಪುರಕ್ಕೆ ದುಷ್ಟಬುದ್ಧಿ ನಿಂತಲ್ಲಿ ನಿಲ್ಲದೆ ಬರುತ್ತಿರಲು ದಾರಿಯಲ್ಲಿ ಒಂದು ಸರ್ಪವು ಇವನಿಗೆ ಇದಿರಾಗಿ ಬಂದು 'ನಿನ್ನ ಮನೆಯಲ್ಲಿ ಇಂದುವರೆಗೆ ಒಡವೆಗಳನ್ನು ಕಾಯುತ್ತಿದ್ದೆನು, ಅವು ನಿನ್ನ ಮಗನಿಂದ ಎಲ್ಲಾ ಹೊಯಿತು.' ಎಂದು ಹೇಳಿತು
 • (ಪದ್ಯ-೨೮)

ಪದ್ಯ:-:೨೯:[ಸಂಪಾದಿಸಿ]

ಮಾನವರ ತೆರದೊಳಿಂತೆಂದೊರೆದು ಫಣಿ ಬಿಲಕೆ |
ತಾನಿಳಿಯೆ ಕೇಳ್ದು ವಿಸ್ಮಿತನಾಗಿ ಮಂತ್ರಿ ದು |
ಮ್ಮಾನದಿಂ ನಗರದ ಸಮೀಪಕೈತರೆ ವಾದ್ಯಘೋಷಿತಂ ಕಿವಿಯೊಳಿಡಿಯೆ ||
ಏನಿದುತ್ಸವಮೂರೊಳೆನೆ ಕಂಡವರ್ ನಿನ್ನ |
ಸೂನು ಮದನಂ ಚಂದ್ರಹಾಸಂಗೆ ವಿಷಯೆಗೆ ವಿ |
ಧಾನದಿಂ ಮದುವೆಯಂ ಮಾಡಿಸಿದನದರೊಸಗೆ ಪೊಳಲೊಳಾದಪುದೆಂದರು ||29||

ಪದವಿಭಾಗ-ಅರ್ಥ:
ಮಾನವರ ತೆರದೊಳು ಇಂತೆಂದು ಒರೆದು ಫಣಿ ಬಿಲಕೆ ತಾನಿಳಿಯೆ ಕೇಳ್ದು ವಿಸ್ಮಿತನಾಗಿ ಮಂತ್ರಿ ದುಮ್ಮಾನದಿಂ ನಗರದ ಸಮೀಪಕೆ ಐತರೆ ವಾದ್ಯಘೋಷಿತಂ ಕಿವಿಯೊಳು ಇಡಿಯೆ=[ಮಾನವರಂತೆ ಆ ಸರ್ಪ ಹೀಗೆಂದು ಹೇಳಿ, ಅದು ಬಿಲದೊಳಕ್ಕೆ ತಾನು ಇಳಿದು ಹೊಗಲು, ಕೇಳಿ ಆಶ್ಚರ್ಯಪಟ್ಟು ಮಂತ್ರಿಯು ದುಗುಡದಿಂದ ಕುಂತಳ ನಗರದ ಸಮೀಪಕ್ಕೆ ಬರಲು, ವಾದ್ಯಘೋಷಗಳು ಅವನ ಕಿವಿಗೆ ಬೀಳಲು];; ಏನಿದುತ್ಸವಂ ಉರೊಳೆನೆ ಕಂಡವರ್ ನಿನ್ನ ಸೂನು ಮದನಂ ಚಂದ್ರಹಾಸಂಗೆ ವಿಷಯೆಗೆ ವಿಧಾನದಿಂ ಮದುವೆಯಂ ಮಾಡಿಸಿದನು ಅದರ ಒಸಗೆ ಪೊಳಲೊಳು ಅದಪುದು ಎಂದರು=[ಅವನು,'ಏನಿದು ಉತ್ಸವವು ಊರಲ್ಲಿ ಎನ್ನಲು, ಅವನನ್ನು ಕಂಡವರು, 'ನಿನ್ನ ಮಗ ಮದನನು ಚಂದ್ರಹಾಸನಿಗೆ ವಿಷಯೆಯನ್ನು ಶಾಸ್ತ್ರವಿಧಿವಿಧಾನದಿಂದ ಮದುವೆಯನ್ನು ಮಾಡಿಸಿದನು. ಅದರ ಹೇಳಿಕೆಯ ಉತ್ಸವವು ನಗರದಲ್ಲಿ ಆಗುತ್ತಿರುವುದು,' ಎಂದರು ].
 • ತಾತ್ಪರ್ಯ:ಮಾನವರಂತೆ ಆ ಸರ್ಪ ಹೀಗೆಂದು ಹೇಳಿ, ಅದು ಬಿಲದೊಳಕ್ಕೆ ತಾನು ಇಳಿದು ಹೊಗಲು, ಕೇಳಿ ಆಶ್ಚರ್ಯಪಟ್ಟು ಮಂತ್ರಿಯು ದುಗುಡದಿಂದ ಕುಂತಳ ನಗರದ ಸಮೀಪಕ್ಕೆ ಬರಲು, ವಾದ್ಯಘೋಷಗಳು ಅವನ ಕಿವಿಗೆ ಬೀಳಲು, ಅವನು,'ಏನಿದು ಉತ್ಸವವು ಊರಲ್ಲಿ ಎನ್ನಲು, ಅವನನ್ನು ಕಂಡವರು, 'ನಿನ್ನ ಮಗ ಮದನನು ಚಂದ್ರಹಾಸನಿಗೆ ವಿಷಯೆಯನ್ನು ಶಾಸ್ತ್ರವಿಧಿವಿಧಾನದಿಂದ ಮದುವೆಯನ್ನು ಮಾಡಿಸಿದನು. ಅದರ ಹೇಳಿಕೆಯ ಉತ್ಸವವು ನಗರದಲ್ಲಿ ಆಗುತ್ತಿರುವುದು,' ಎಂದರು.
 • (ಪದ್ಯ-೨೯)

ಪದ್ಯ:-:೩೦:[ಸಂಪಾದಿಸಿ]

ಕೂರ್ದಸಿಯ ನಿಳುಹಿದಂತಾಯ್ತು ಕುರ್ಣದೊಳಾಗ |
ಕಾರ್ದುವಕ್ಷಿಗಳರುಣತೆಯನುಗ್ರ ಕೋಪದಿಂ |
ಮೀರ್ದನೇ ತನ್ನ ನೇಮವನಕಟ ಮಗನೆಂದು ಪಲ್ಗಡಿಯುತೈತರಲ್ಕೆ ||
ಸಾರ್ದಸಂತೋಷದಿಂ ಬಂದು ಕಾಲ್ಗೆರಗಿದೊಡೆ |
ಚೀರ್ದು ಸುತನಂ ಬೈದು ಮಂತ್ರಿ ನಿಜ ಸದನಮಂ |
ಸೇರ್ದು ಪೊನ್ನಂದಣಮನಿಳದಾತ್ಮಜಾತನಂ ನೋಡಿ ಮುಳೆದಿಂತೆಂದನು ||30||

ಪದವಿಭಾಗ-ಅರ್ಥ:
ಕೂರ್ದಸಿಯನು (ಕೂರ್ದ ಅಸಿ:ಚೂಪು ಕತ್ತಿ) ಇಳುಹಿದಂತಾಯ್ತು ಕುರ್ಣದೊಳು ಆಗ ಕಾರ್ದುವು ಅಕ್ಷಿಗಳು ಅರುಣತೆಯನು ಉಗ್ರ ಕೋಪದಿಂ ಮೀರ್ದನೇ ತನ್ನ ನೇಮವನು ಅಕಟ ಮಗನೆಂದು ಪಲ್ಗಡಿಯುತ ಐತರಲ್ಕೆ=[ಚಂದ್ರಹಾಸನಿಗೂ ತನ್ನ ಮಗಳಿಗೂ ವಿವಾಹವಾಯಿತೆಂದು ಸುದ್ದಿ ಕೇಳಿ, ಅವನಿಗೆ ಅದು ಚೂಪಾದ ಕತ್ತಿಯನ್ನು ಕಿವಿಯಲ್ಲಿಚುಚ್ಚಿದಂತೆ ಆಯಿತು. ಆಗ ಅವನ ಕಣ್ಣುಗಳು ಕೆಂಪು ರಕ್ತವನ್ನು ಕಾರಿದವು; ಉಗ್ರ ಕೋಪದಿಂದ ತನ್ನ ಆಜ್ಞೆಯನ್ನು ಮೀರಿದನೇ ಅಕಟ ಮಗ! ಎಂದು ಹಲ್ಲು ಕಡಿಯುತ್ತ ಬರುತ್ತಿರಲು,];; ಸಾರ್ದ(ಬಂದ,ತಂದೆಯು ಬಮದ) ಸಂತೋಷದಿಂ ಬಂದು ಕಾಲ್ಗೆರಗಿದೊಡೆ ಚೀರ್ದು ಸುತನಂ ಬೈದು ಮಂತ್ರಿ ನಿಜ ಸದನಮಂ ಸೇರ್ದು ಪೊನ್ನಂದಣಮನು ಇಳದ ಆತ್ಮಜಾತನಂ ನೋಡಿ ಮುಳಿದು ಇಂತೆಂದನು=[ಮದನನು ಹತ್ತಿರ ಹೋಗಿ ತಂದೆಯು ಬಂದ ಸಂತೋಷದಿಂದ ಅವನ ಹತ್ತಿರ ಬಂದು ಕಾಲಿಗೆ ಎರಗಿದಾಗ, ಆರ್ಭಟಿಸಿ ಮಗನನ್ನು ಬೈದು, ಮಂತ್ರಿಯು ತನ್ನ ಮನೆಗೆ ಹೋಗಿ ಸೇರಿ ಹೊನ್ನಿನ ಪಲ್ಲಕ್ಕಿಯಿಂದ ಇಳಿದು ಮಗನನ್ನು ನೋಡಿ ಸಿಟ್ಟಿನಿಂದ ಹಿಗೆ ಹೇಳಿದನು.]
 • ತಾತ್ಪರ್ಯ:ಚಂದ್ರಹಾಸನಿಗೂ ತನ್ನ ಮಗಳಿಗೂ ವಿವಾಹವಾಯಿತೆಂಬ ಸುದ್ದಿ ಕೇಳಿ, ಅವನಿಗೆ ಅದು ಚೂಪಾದ ಕತ್ತಿಯನ್ನು ಕಿವಿಯಲ್ಲಿಚುಚ್ಚಿದಂತೆ ಆಯಿತು. ಆಗ ಅವನ ಕಣ್ಣುಗಳು ಕೆಂಪು ರಕ್ತವನ್ನು ಕಾರಿದವು; ಉಗ್ರ ಕೋಪದಿಂದ ತನ್ನ ಆಜ್ಞೆಯನ್ನು ಮೀರಿದನೇ ಅಕಟ ಮಗ! ಎಂದು ಹಲ್ಲು ಕಡಿಯುತ್ತ ಬರುತ್ತಿರಲು, ಮದನನು ಹತ್ತಿರ ಹೋಗಿ ತಂದೆಯು ಬಂದ ಸಂತೋಷದಿಂದ ಅವನ ಹತ್ತಿರ ಬಂದು ಕಾಲಿಗೆ ಎರಗಿದಾಗ, ಆರ್ಭಟಿಸಿ ಮಗನನ್ನು ಬೈದು, ಮಂತ್ರಿಯು ತನ್ನ ಮನೆಗೆ ಹೋಗಿ ಸೇರಿ ಹೊನ್ನಿನ ಪಲ್ಲಕ್ಕಿಯಿಂದ ಇಳಿದು ಮಗನನ್ನು ನೋಡಿ ಸಿಟ್ಟಿನಿಂದ ಹೀಗೆ ಹೇಳಿದನು.
 • (ಪದ್ಯ-೩೦)

ಪದ್ಯ:-:೩೧:[ಸಂಪಾದಿಸಿ]

ಮದನನಂ ಮದುವಕ್ಕಳಂ ಮಹಾವೈಭವದ |
ಮದುವೆಯಂ ತ್ಯಾಗಭೋಗವನುಚಿತ ರಚಿತಮಂ |
ಮುದದಿಂದೆ ಬಣ್ಣಿಸುವ ಭಟ್ಟರಂ ಬಿತ್ತರಿಸಿ ಪರಸುವ ಮಹೀಸುರರನು ||
ಸುದತಿ ವಿಷಯೆಗೆ ತಕ್ಕ ವರನಿಂದುಹಾಸನೆಂ |
ದಿದಿರಾಗಿ ಬಂದಾರತಿಯನೆತ್ತಿ ನುಡಿವ ಶಶಿ |
ವದನೆಯರನವಗಡಿಸಿ ಮಂತ್ರಿ ಬೈದಂ ತನ್ನ ಮನೆಗಾಪ್ತರಾದವರನು ||31||

ಪದವಿಭಾಗ-ಅರ್ಥ:
ಮದನನಂ ಮದುವಕ್ಕಳಂ ಮಹಾವೈಭವದ ಮದುವೆಯಂ ತ್ಯಾಗಭೋಗವನುಚಿತ ರಚಿತಮಂ ಮುದದಿಂದೆ ಬಣ್ಣಿಸುವ ಭಟ್ಟಿರಂ ಬಿತ್ತರಿಸಿ ಪರಸುವ ಮಹೀಸುರರನು=[ಮದನನನ್ನೂ ಮದುವಕ್ಕಳನ್ನೂ ಮಹಾವೈಭವದ ಮದುವೆಯನ್ನು ತ್ಯಾಗ, ಭೋಗವನ್ನೂ ಉಚಿತವನ್ನೂ ರಚಿಸಿದ ವೈಭವವನ್ನೂ, ಸಂತಸದಿಂದ ಬಣ್ಣಿಸುವ ಭಟ್ಟರನ್ನೂ, ವಿಸ್ತಾರವಾಗಿ ಹರಸುವ ವಿಪ್ರರನ್ನೂ, ];; ಸುದತಿ ವಿಷಯೆಗೆ ತಕ್ಕ ವರನಿಂದುಹಾಸನೆಂದಿದಿರಾಗಿ ಬಂದಾರತಿಯನೆತ್ತಿ ನುಡಿವ ಶಶಿವದನೆಯರನವಗಡಿಸಿ ಮಂತ್ರಿ ಬೈದಂ ತನ್ನ ಮನೆಗಾಪ್ತರಾದವರನು=[ಗುಣವತಿ ವಿಷಯೆಗೆ ತಕ್ಕ ವರನು ಚಂದ್ರಹಾಸನೆಂದು ಹೇಳುತ್ತಾ ಎದುರಿಗೆ ಬಂದು ಆರತಿಯನ್ನು ಎತ್ತಿವ ವನಿತೆಯರನ್ನು ಧಿಕ್ಕರಿಸಿ, ಮಂತ್ರಿಯು ತನ್ನ ಮನೆಗೆ ಆಪ್ತರಾದವರನ್ನು ಬೈದನು.].
 • ತಾತ್ಪರ್ಯ:ಮದನನನ್ನೂ ಮದುಮಕ್ಕಳನ್ನೂ ಮಹಾವೈಭವದ ಮದುವೆಯನ್ನು ತ್ಯಾಗ, ಭೋಗವನ್ನೂ ಉಚಿತವನ್ನೂ ರಚಿಸಿದ ವೈಭವವನ್ನೂ, ಸಂತಸದಿಂದ ಬಣ್ಣಿಸುವ ಭಟ್ಟರನ್ನೂ, ವಿಸ್ತಾರವಾಗಿ ಹರಸುವ ವಿಪ್ರರನ್ನೂ, ಗುಣವತಿ ವಿಷಯೆಗೆ ತಕ್ಕ ವರನು ಚಂದ್ರಹಾಸನೆಂದು ಹೇಳುತ್ತಾ ಎದುರಿಗೆ ಬಂದು ಆರತಿಯನ್ನು ಎತ್ತಿವ ವನಿತೆಯರನ್ನು ಧಿಕ್ಕರಿಸಿ, ಮಂತ್ರಿಯು ತನ್ನ ಮನೆಗೆ ಆಪ್ತರಾದವರನ್ನು ಬೈದನು.
 • (ಪದ್ಯ-೩೧)XXII

ಪದ್ಯ:-:೩೨:[ಸಂಪಾದಿಸಿ]

ರಂಜಿಸುವ ಪೊಸಮುತ್ತಿನೆಸವ ಬಾಸಿಗದ ನೊಸ |
ಲಿಂ ಜಡಿವ ಮಣಿಭೂಷಣಾವಳಿಯ ಕಾಂತಿಯಿಂ |
ಮಂಜುಳ ಹರಿದ್ರ ಕುಂಕುಮ ಚರ್ಚಿತಾಂಗದಿಂ ಚೆಲ್ಪಿಂದೆ ಸಂಗಡಿಸಿದ ||
ಅಂಜಲಿಗಳಿಂ ಮೆರೆವ ದಂಪತಿಗಳಭಿನಮಿಸೆ |
ಮಂಜರಂ ಮರಿಗಿಳಿಗಳಂ ನಿರೀಕ್ಷಿಸುವಂತೆ |
ನಂಜಿಡಿದ ಮನದಮಾತ್ಯಂ ನೋಡಿ ತನ್ನ ಸುತನಂ ಬಯ್ವುತಿಂತೆಂದನು ||32||

ಪದವಿಭಾಗ-ಅರ್ಥ:
ರಂಜಿಸುವ ಪೊಸಮುತ್ತಿನ ಎಸವ ಬಾಸಿಗದ ನೊಸಲಿಂ ಜಡಿವ ಮಣಿಭೂಷಣಾವಳಿಯ ಕಾಂತಿಯಿಂ ಮಂಜುಳ ಹರಿದ್ರ ಕುಂಕುಮ ಚರ್ಚಿತಾಂಗದಿಂ ಚೆಲ್ಪಿಂದೆ ಸಂಗಡಿಸಿದ=[ಶೋಭಿಸುವ ಹೊಸಮುತ್ತಿನ ಚಂದದ ಬಾಸಿಗವನ್ನು ಧರಿಸಿದ, ಹಣೆಯಿಂದ ಜೋಲುತ್ತಿರುವ ಮಣಿಭೂಷಣ ಆಭರಣಗಳ ಕಾಂತಿಯಿಂದ, ಮನೋಹರ ಅರಿಸಿನ ಕುಂಕುಮ ಹಚ್ಚಿದ ದೇಹದ ಚೆಲುವಿನಿಂದ ಕೂಡಿದ];;ಅಂಜಲಿಗಳಿಂ ಮೆರೆವ ದಂಪತಿಗಳು ಅಭಿನಮಿಸೆ ಮಂಜರಂ ಮರಿಗಿಳಿಗಳಂ ನಿರೀಕ್ಷಿಸುವಂತೆ ನಂಜು ಇಡಿದ ಮನದ ಅಮಾತ್ಯಂ ನೋಡಿ ತನ್ನ ಸುತನಂ ಬಯ್ವುತ ಇಂತೆಂದನು=[ಕೈಗಳಿಂದ ಶೋಭಿಸುವ ಚಂದ್ರಹಾಸ ವಿಷಯೆ ದಂಪತಿಗಳು ಬಂದು ಅಭಿನಮಿಸಲು, ಬೆಕ್ಕು ಮರಿಗಿಳಿಗಳನ್ನು ನೋಡುವಂತೆ ಮನಸ್ಸಿನಲ್ಲಿ ವಿಷತುಂಬಿದ ಮಂತ್ರಿಯು ನೋಡಿ, ತನ್ನ ಮಗನನ್ನು ಬಯ್ಯುತ್ತಾ ಹೀಗೆ ಹೇಳಿದನು.]
 • ತಾತ್ಪರ್ಯ:ಶೋಭಿಸುವ ಹೊಸಮುತ್ತಿನ ಚಂದದ ಬಾಸಿಗವನ್ನು ಧರಿಸಿದ, ಹಣೆಯಿಂದ ಜೋಲುತ್ತಿರುವ ಮಣಿಭೂಷಣ ಆಭರಣಗಳ ಕಾಂತಿಯಿಂದ, ಮನೋಹರ ಅರಿಸಿನ ಕುಂಕುಮ ಹಚ್ಚಿದ ದೇಹದ ಚೆಲುವಿನಿಂದ ಕೂಡಿದ ಕೈಗಳಿಂದ ಶೋಭಿಸುವ ಚಂದ್ರಹಾಸ ವಿಷಯೆ ದಂಪತಿಗಳು ಬಂದು ಅಭಿನಮಿಸಲು, ಬೆಕ್ಕು ಮರಿಗಿಳಿಗಳನ್ನು ನೋಡುವಂತೆ ಮನಸ್ಸಿನಲ್ಲಿ ವಿಷತುಂಬಿದ ಮಂತ್ರಿಯು ನೋಡಿ, ತನ್ನ ಮಗನನ್ನು ಬಯ್ಯುತ್ತಾ ಹೀಗೆ ಹೇಳಿದನು.
 • (ಪದ್ಯ-೩೨)

ಪದ್ಯ:-:೩೩:[ಸಂಪಾದಿಸಿ]

ಮೂಢನೀನೆಲವೆಲವೊ ಮದನ ನಿನ್ನೆಡೆಗೆ ನಾಂ |
ಗೂಢದಿಂ ಬರೆಸಿ ಕಳುಹಿದೊಡುರುವ ಕಜ್ಜಮಂ |
ರೂಢಿಯಿಂ ಮಾಡಿ ಕೆಡಿಸಿದೆ ಪಾಪಿ ಹೃದಯ ಶೂಲವನೆನಗೆ ಮೇದಿನಿಯೊಳು ||
ಗಾಢದಿಂ ಬಲಿದೆ ಸಾಮ್ರಾಜ್ಯ ಸಿಂಹಾಸನಾ |
ರೂಢನಾಗಿರಲೊಲ್ಲದಾರ್ಜಿಸಿದ ವಿತ್ತಮಂ |
ವೇಡೈಸಿದಖಿಳ ಜನಕಿತ್ತೆ ವನವಾಸವೇ ಗತಿ ನಿನಗೆ ಹೋಗೆಂದನು ||33||

ಪದವಿಭಾಗ-ಅರ್ಥ:
ಮೂಢ ನೀನು, ಎಲವೆಲವೊ ಮದನ ನಿನ್ನೆಡೆಗೆ ನಾಂಗೂಢದಿಂ ಬರೆಸಿ ಕಳುಹಿದೊಡೆ ಉರುವ ಕಜ್ಜಮಂ ರೂಢಿಯಿಂ ಮಾಡಿ ಕೆಡಿಸಿದೆ ಪಾಪಿ ಹೃದಯ ಶೂಲವನೆನಗೆ ಮೇದಿನಿಯೊಳು=[ಮೂಢನು ನೀನು ಎಲವೆಲವೊ! ಮದನನೇ ನಿನ್ನ ಬಳಿಗೆ ನಾನು ಒಂದು ಕಾರ್ಯವನ್ನು ರಹಸ್ಯದಿಂದ ಬರೆಸಿ ಕಳುಹಿಸಿದರೆ ವಿರುದ್ಧ ಕೆಟ್ಟ ಕೆಲಸವನ್ನು ದೊಡ್ಡದಾಗಿ ಮಾಡಿ ಕೆಡಿಸಿದೆ. ಪಾಪಿ ನನಗೆ ನೀನು ಈ ಭೂಮಿಯಲ್ಲಿ ನನ್ನ ಹೃದಯಕ್ಕೆ ಶೂಲವನ್ನು];;ಗಾಢದಿಂ ಬಲಿದೆ ಸಾಮ್ರಾಜ್ಯ ಸಿಂಹಾಸನ ಆರೂಢನಾಗಿ ಇರಲೊಲ್ಲದೆ ಆರ್ಜಿಸಿದ ವಿತ್ತಮಂ ವೇಡೈಸಿದ ಅಖಿಳ ಜನಕಿತ್ತೆ ವನವಾಸವೇ ಗತಿ ನಿನಗೆ ಹೋಗೆಂದನು=[ಆಳವಾಗಿ ಚುಚ್ಚಿದೆ! ಸಾಮ್ರಾಜ್ಯ ಸಿಂಹಾಸನವನ್ನು ಏರಿ ಇರಲು ಇಷ್ಟಪಡದೆ, ಗಳಿಸಿದ ಧನವನ್ನು ಗುಂಪುಗೂಡಿದ ಅಖಿಲ ಜನರಿಗೆ ಕೊಟ್ಟೆ; ನಿನಗೆ ವನವಾಸವೇ ಗತಿ! ಹೋಗು ಎಂದನು ].
 • ತಾತ್ಪರ್ಯ:ಮೂಢನು ನೀನು ಎಲವೆಲವೊ! ಮದನನೇ ನಿನ್ನ ಬಳಿಗೆ ನಾನು ಒಂದು ಕಾರ್ಯವನ್ನು ರಹಸ್ಯದಿಂದ ಬರೆಸಿ ಕಳುಹಿಸಿದರೆ ವಿರುದ್ಧ ಕೆಟ್ಟ ಕೆಲಸವನ್ನು ದೊಡ್ಡದಾಗಿ ಮಾಡಿ ಕೆಡಿಸಿದೆ. ಪಾಪಿ ನನಗೆ ನೀನು ಈ ಭೂಮಿಯಲ್ಲಿ ನನ್ನ ಹೃದಯಕ್ಕೆ ಶೂಲವನ್ನು ಆಳವಾಗಿ ಚುಚ್ಚಿದೆ! ಸಾಮ್ರಾಜ್ಯ ಸಿಂಹಾಸನವನ್ನು ಏರಿ ಇರಲು ಇಷ್ಟಪಡದೆ, ಗಳಿಸಿದ ಧನವನ್ನು ಗುಂಪುಗೂಡಿದ ಅಖಿಲ ಜನರಿಗೆ ಕೊಟ್ಟೆ; ನಿನಗೆ ವನವಾಸವೇ ಗತಿ! ಹೋಗು ಎಂದನು.
 • (ಪದ್ಯ-೩೩)

ಪದ್ಯ:-:೩೪:[ಸಂಪಾದಿಸಿ]

ಪಿತನ ಮಾತಂ ಕೇಳ್ದು ಮದನನುರೆ ಬೆರಗಾಗಿ |
ಖತಿಯೇಕೆ ಜೀಯ ನಿಮ್ಮಡಿಗಳ ನಿರೂಪಮಂ |
ಪ್ರತಿಪಾಲಿಸದೆನಲ್ಲದಾನತಿಕ್ರಮಿಸಿ ಮಾಡಿದ ಕಜ್ಜಮೇನಿದರೊಳು ||
ಕ್ಷಿತಿಗೆ ಕೌತುಕವೆ ತಂದೆಯ ಮಾತಿಗಾಗಿ ರಘು |
ಪತಿ ವರ್ತಿಸನೆ ವಿಪಿನ ವಾಸದೊಳ್ಪತ್ರಸಂ(ಪು?)|
ಮತಿವಿಡಿದು ವಿಷಯೆಗೆ ವಿವಾಹಮಂ ವಿರಚಿಸಿದೊಡಾಯ್ತೆನಗೆ ವನಮೆಂದನು ||34||

ಪದವಿಭಾಗ-ಅರ್ಥ:
ಪಿತನ ಮಾತಂ ಕೇಳ್ದು ಮದನನ ಉರೆ ಬೆರಗಾಗಿ ಖತಿಯೇಕೆ ಜೀಯ ನಿಮ್ಮಡಿಗಳ ನಿರೂಪಮಂ ಪ್ರತಿಪಾಲಿಸದೆನು ಅಲ್ಲದೆ ಆನತಿಕ್ರಮಿಸಿ ಮಾಡಿದ ಕಜ್ಜಮೇನು ಇದರೊಳು=[ತಂದೆಯ ಮಾತನ್ನು ಕೇಳಿ ಮದನನು ಬಹಳ ಬೆರಗಾಗಿ ಸಿಟ್ಟೇಕೆ ಜೀಯ(ತಂದೆಯೇ), ನಿಮ್ಮ ಪಾದಗಳ ಆಜ್ಞೆಯನ್ನು ಯಥಾರೀತಿ ಪಾಲಿಸದೆನು. ಅಲ್ಲದೆ ನಿಮ್ಮ ಪತ್ರದ ನಿರೂಪ ಮೀರಿ ಇದರಲ್ಲಿ ನಾನು ಮಾಡಿದ ಕಾರ್ಯ ಯಾವುದು?];; ಕ್ಷಿತಿಗೆ ಕೌತುಕವೆ ತಂದೆಯ ಮಾತಿಗಾಗಿ ರಘುಪತಿ ವರ್ತಿಸನೆ ವಿಪಿನ ವಾಸದೊಳ್ ಪತ್ರ ಸಂಮತಿ ವಿಡಿದು ವಿಷಯೆಗೆ ವಿವಾಹಮಂ ವಿರಚಿಸಿದೊಡೆ ಆಯ್ತೆನಗೆ ವನಮೆಂದನು=[ಈ ಭೂಮಿಯಲ್ಲಿ ಈ ಬಗೆ ಆಶ್ಚರ್ಯವೆಲ್ಲಿಯದು, ತಂದೆಯ ಮಾತನ್ನು ನೆಡೆಸುವುದಕ್ಕಾಗಿ ರಘುರಾಮನು ಕಾಡಿನ ವಾಸಕ್ಕೆ ನೆಡೆಯಯಲಿಲ್ಲವೆ? ಆದರೆ ಪತ್ರದಂತೆ ಅದರ ಸಹಮತಿ ಹಿಡಿದು ವಿಷಯೆಯ ವಿವಾಹವನ್ನು ಮಾಡಿ, ತಂದೆಯ ಆಜ್ಞೆಯನ್ನು ಪಾಲಿಸಿದ್ದಕ್ಕಾಗಿ, ನನಗೆ ವನವಾಸವಾಯಿತಲ್ಲಾ! ಎಂದನು].
 • ತಾತ್ಪರ್ಯ:ತಂದೆಯ ಮಾತನ್ನು ಕೇಳಿ ಮದನನು ಬಹಳ ಬೆರಗಾಗಿ ಸಿಟ್ಟೇಕೆ ಜೀಯ(ತಂದೆಯೇ), ನಿಮ್ಮ ಪಾದಗಳ ಆಜ್ಞೆಯನ್ನು ಯಥಾರೀತಿ ಪಾಲಿಸದೆನು. ಅಲ್ಲದೆ ನಿಮ್ಮ ಪತ್ರದ ನಿರೂಪ ಮೀರಿ ಇದರಲ್ಲಿ ನಾನು ಮಾಡಿದ ಕಾರ್ಯ ಯಾವುದು? ಈ ಭೂಮಿಯಲ್ಲಿ ಈ ಬಗೆ ಆಶ್ಚರ್ಯವೆಲ್ಲಿಯದು, ತಂದೆಯ ಮಾತನ್ನು ನೆಡೆಸಲು ರಘುರಾಮನು ಕಾಡಿನ ವಾಸಕ್ಕೆ ನೆಡೆಯಯಲಿಲ್ಲವೆ? ಆದರೆ ಪುತ್ರದಂತೆ ಅದರ ಸಹಮತಿ ಹಿಡಿದು ತಂದೆಯ ಆಜ್ಞೆಯನ್ನು ಪಾಲಿಸಲು ವಿಷಯೆಗೆ ವಿವಾಹವನ್ನು ಮಾಡಿದ್ದರಿಂದ, ನನಗೆ ವನವಾಸವಾಯಿತಲ್ಲಾ! ಎಂದನು].
 • (ಪದ್ಯ-೩೪)

ಪದ್ಯ:-:೩೫:[ಸಂಪಾದಿಸಿ]

ಗನ್ನಗತಕದ ಮಾತು ಸಾಕೆನ್ನ ಕಣ್ಣ ಮುಂ |
ದಿನ್ನಿರದೆ ಹೋಗೆಂದು ಮಂತ್ರಿ ಮಗನಂ ಬೈದು |
ಮುನ್ನ ತಾಂ ಬರೆಸಿ ಕಳುಹಿದ ಪತ್ರಮಂ ತರಿಸಿನೋಡಿಕೊಂಡದರೊಳಿರ್ದ ||
ಭಿನ್ನಿಸಿದ ಭಾವಾರ್ಥಮಂ ತಿಳಿದು ತಪ್ಪಿಲ್ಲ |
ವೆನ್ನ ತನಯನೊಳಿನ್ನು ಲೋಕದೊಳ್ ವಿಧಿಲಿಖಿತ |
ವನ್ನಿವಾರಿಪರುಂಟೆ ಶಿವಾಶಿವಾ ಪೊಸತೆಂದು ಬಿಸುಸುಯ್ದ ಬೆರಗಾದನು ||35||

ಪದವಿಭಾಗ-ಅರ್ಥ:
ಗನ್ನಗತಕದ (ಅಹಂಕಾರ) ಮಾತು ಸಾಕೆನ್ನ ಕಣ್ಣ ಮುಂದೆ ಇನ್ನು ಇರದೆ ಹೋಗೆಂದು ಮಂತ್ರಿ ಮಗನಂ ಬೈದು ಮುನ್ನ ತಾಂ ಬರೆಸಿ ಕಳುಹಿದ ಪತ್ರಮಂ ತರಿಸಿನೋಡಿಕೊಂಡು ಅದರೊಳು ಇರ್ದ=['ಅಹಂಕಾರದ ಮಾತು ಸಾಕು, ನನ್ನ ಕಣ್ಣಮುಂದೆ ನಿಲ್ಲಬೇಡ ಹೋಗು,' ಎಂದು ಮಂತ್ರಿ ಮಗನನ್ನು ಬೈದು, ಮೊದಲು ತಾನು ಬರೆದು ಕಳುಹಿಸಿದ ಪತ್ರವನ್ನು ತರಿಸಿದನು. ಅದನ್ನು ನೋಡಿಕೊಂಡು ಅದರಲ್ಲಿದ್ದ,];; ಭಿನ್ನಿಸಿದ ಭಾವಾರ್ಥಮಂ ತಿಳಿದು ತಪ್ಪಿಲ್ಲವು ಎನ್ನ ತನಯನೊಳು ಇನ್ನು ಲೋಕದೊಳ್ ವಿಧಿಲಿಖಿತವಂ ನಿವಾರಿಪರುಂಟೆ ಶಿವಾಶಿವಾ ಪೊಸತೆಂದು ಬಿಸುಸುಯ್ದ ಬೆರಗಾದನು=[ತನ್ನ ಅಭಿಪ್ರಾಯಕ್ಕೆ ಭಿನ್ನ/ ಬೇರೆಯಾಗಿರುವ ಭಾವಾರ್ಥವನ್ನು ನೋಡಿ ತಿಳಿದುಕೊಂಡು, ತನ್ನ ಮಗನಲ್ಲಿ ಇನ್ನು ತಪ್ಪನ್ನು ಹೇಳುವಂತಿಲ್ಲ! ಲೋಕದಲ್ಲಿ ವಿಧಿಲಿಖಿತವನ್ನು/ ಹಣೆಯಬರಹವನ್ನು ನಿವಾರಿಸುವವರು ಇದ್ದಾರೆಯೇ? ಶಿವಾಶಿವಾ ಇದು ಹೊಸತು ಎಂದು ನಿಟ್ಟುಸಿರುಬಿಟ್ಟು ಬೆರಗಾದನು].
 • ತಾತ್ಪರ್ಯ: 'ಅಹಂಕಾರದ ಮಾತು ಸಾಕು, ನನ್ನ ಕಣ್ಣಮುಂದೆ ನಿಲ್ಲಬೇಡ ಹೋಗು,' ಎಂದು ಮಂತ್ರಿ ಮಗನನ್ನು ಬೈದು, ಮೊದಲು ತಾನು ಬರೆದು ಕಳುಹಿಸಿದ ಪತ್ರವನ್ನು ತರಿಸಿದನು. ಅದನ್ನು ನೋಡಿಕೊಂಡು ಅದರಲ್ಲಿದ್ದ, ತನ್ನ ಅಭಿಪ್ರಾಯಕ್ಕೆ ಭಿನ್ನ/ ಬೇರೆಯಾಗಿರುವ ಭಾವಾರ್ಥವನ್ನು ನೋಡಿ ತಿಳಿದುಕೊಂಡು, ತನ್ನ ಮಗನಲ್ಲಿ ಇನ್ನು ತಪ್ಪನ್ನು ಹೇಳುವಂತಿಲ್ಲ! ಲೋಕದಲ್ಲಿ ವಿಧಿಲಿಖಿತವನ್ನು/ ಹಣೆಯಬರಹವನ್ನು ನಿವಾರಿಸುವವರು ಇದ್ದಾರೆಯೇ? ಶಿವಾಶಿವಾ ಇದು ಹೊಸತು ಎಂದು ನಿಟ್ಟುಸಿರುಬಿಟ್ಟು ಬೆರಗಾದನು.
 • (ಪದ್ಯ-೩೫)

ಪದ್ಯ:-:೩೬:[ಸಂಪಾದಿಸಿ]

ವಿಷವ ಮೋಹಿಸುವಂತೆ ಕೊಡುವುದೆನಲೀತಂಗೆ |
ವಿಷಯೆ ಮೋಹಿಸುವಂತೆ ಕೊಡವುದೆಂಬೀ ಲೇಖ |
ವಿಷಯವಿದು ವಿಧಿಕೃತವೋ ತನ್ನ ಮೋಸವೋ ಬರೆದವನ ಮರೆಹೊ ಶಶಿಹಾಸನ ||
ಮೃಷೆಯೊ ಮದನನ ಮೇಲೆ ತಪ್ಪಿಲ್ಲ ಮೊದಲೆನಗೆ |
ಋಷಿಗಳಾಡಿದ ಮಾತು ಪುಸಿಯದೆಂದಾ ಮಂತ್ರಿ |
ವಿಷಮಬುದ್ಧಿಯೊಳೊಂದುಪಾಯಮಂ ಮನದೊಳಗೆ ನೆನೆದು ಚಿಂತಿಸುತಿರ್ದನು ||36||

ಪದವಿಭಾಗ-ಅರ್ಥ:
ವಿಷವ ಮೋಹಿಸುವಂತೆ ಕೊಡುವುದು ಎನಲು ಈತಂಗೆ ವಿಷಯೆ ಮೋಹಿಸುವಂತೆ ಕೊಡವುದು ಎಂಬ ಈ ಲೇಖ ವಿಷಯವಿದು ವಿಧಿಕೃತವೋ ತನ್ನ ಮೋಸವೋ ಬರೆದವನ ಮರೆಹೊ ಶಶಿಹಾಸನ=[ದುಷ್ಟಬುದ್ಧಿಯು ಚಿಂತಿಸಿದನು.'ವಿಷವನ್ನು ಮೋಹಿಸುವಂತೆ ಕೊಡುವುದು' ಎನ್ನಲು, ಈತನಿಗೆ 'ವಿಷಯೆ' ಮೋಹಿಸುವಂತೆ ಕೊಡವುದು ಎಂಬ ಈ ಒಕ್ಕಣೆಯ ವಿಷಯ, ಇದು ವಿಧಿಕೃತವೋ/ ವಿಧಿಯ ಆಟವೋ, ತನ್ನ ಬರವಣಿಗೆಯಲ್ಲಿಯೇ ಕೈತಪ್ಪಿ ಆದ ಮೋಸವೋ ಬರೆದವನಾದ ನನ್ನ ಮರೆಹೊ, ಚಂದ್ರಹಾಸನ ];; ಮೃಷೆಯೊ (ಸುಳ್ಳು, ಮೋಸ) ಮದನನ ಮೇಲೆ ತಪ್ಪಿಲ್ಲ ಮೊದಲು ಎನಗೆ ಋಷಿಗಳಾಡಿದ ಮಾತು ಪುಸಿಯದೆಂದು ಆ ಮಂತ್ರಿ ವಿಷಮ ಬುದ್ಧಿಯೊಳು ಒಂದುಪಾಯಮಂ ಮನದೊಳಗೆ ನೆನೆದು=[ ಮೋಸವೋ ತಿಳಿಯಲು ಆಗದು ಎಂದು ಯೋಚಿಸಿ, ಮದನನ ಮೇಲೆ ತಪ್ಪಿಲ್ಲ ಮೊದಲು ತನಗೆ ಋಷಿಗಳು ಹೇಳಿಡದ ಮಾತು ಸುಳ್ಳಾಗದು ಎಂದು ಆ ಮಂತ್ರಿ ಕೆಡುಕು ಬುದ್ಧಿಯ ಓಂದು ಉಪಾಯವನ್ನು ಮನದೊಳಗೆ ನೆನೆದು ಚಿಂತಿಸುತ್ತಿದ್ದನು].
 • ತಾತ್ಪರ್ಯ:ದುಷ್ಟಬುದ್ಧಿಯು ಚಿಂತಿಸಿದನು.'ವಿಷವನ್ನು ಮೋಹಿಸುವಂತೆ ಕೊಡುವುದು' ಎನ್ನಲು, ಈತನಿಗೆ 'ವಿಷಯೆ' ಮೋಹಿಸುವಂತೆ ಕೊಡವುದು ಎಂಬ ಈ ಒಕ್ಕಣೆಯ ವಿಷಯ, ಇದು ವಿಧಿಕೃತವೋ/ ವಿಧಿಯ ಆಟವೋ, ತನ್ನ ಬರವಣಿಗೆಯಲ್ಲಿಯೇ ಕೈತಪ್ಪಿ ಆದ ಮೋಸವೋ ಬರೆದವನಾದ ನನ್ನ ಮರೆಹೊ, ಚಂದ್ರಹಾಸನ ಮೋಸವೋ ತಿಳಿಯಲು ಆಗದು ಎಂದು ಯೋಚಿಸಿ, ಮದನನ ಮೇಲೆ ತಪ್ಪಿಲ್ಲ ಮೊದಲು ತನಗೆ ಋಷಿಗಳು ಹೇಳಿದ ಮಾತು ಸುಳ್ಳಾಗದು ಎಂದು ಆ ಮಂತ್ರಿ ಕೆಡುಕು ಬುದ್ಧಿಯ ಒಂದು ಉಪಾಯವನ್ನು ಮನದೊಳಗೆ ನೆನೆದು ಚಿಂತಿಸುತ್ತಿದ್ದನು.
 • (ಪದ್ಯ-೩೬)

ಪದ್ಯ:-:೩೭:[ಸಂಪಾದಿಸಿ]

ವಿಧುಹಾಸನಂ ಪಲವು ವುಪಾಯದಿಂದೀಗ ನಾಂ |
ವಧಿಸದಿರ್ದೊಡೆ ತನ್ನ ಸಂತತಿಗೆ ಧರೆಯನಾ |
ಳ್ಪಧಿಕ ಸಂಪದಮಾಗದದರಿಂದೆ ಕುಲಘಾತಕಗೆ ಮದುವೆಯಾದ ವಿಷಯೆ ||
ವಿಧವಯಾಗಿರಲೆಂದು ಹೃದಯದೊಳ್ ನಿಶ್ಚೈಸಿ |
ಮಧುರೋಕ್ತಿಯಿಂದೆ ಮದುಮಕ್ಕಳಂ ಮನ್ನಿಸಿ ವಿ |
ವಿಧ ವೈಭವಂಗಳಂ ನಡೆಸಿ ಜಾಮಾತನಂ ಮಂತ್ರಿ ಕರೆದಿಂತೆಂದನು ||37||

ಪದವಿಭಾಗ-ಅರ್ಥ:
ವಿಧುಹಾಸನಂ ಪಲವು ವುಪಾಯದಿಂದ ಈಗ ನಾಂ ವಧಿಸದೆ ಇರ್ದೊಡೆ ತನ್ನ ಸಂತತಿಗೆ ಧರೆಯನು ಆಳ್ವ ಅಧಿಕ ಸಂಪದಮ್ ಆಗದು ಅದರಿಂದೆ ಕುಲಘಾತಕಗೆ ಮದುವೆಯಾದ ವಿಷಯೆ=[ಮಂತ್ರಿ ದುಷ್ಟಬುದ್ಧಿಯು ಯೋಚಿಸಿದನು. 'ಚಂದ್ರಹಾಸನನ್ನು ಅನೇಕ ಉಪಾಯದಿಂದ ಈಗ ನಾನು ವಧಿಸದೆ ಇದ್ದರೆ, ತನ್ನ ಸಂತತಿಗೆ ಈ ರಾಜ್ಯವನ್ನು ಆಳುವ ದೊಡ್ಡ ಸಂಪತ್ತು ಸಿಗುವುದಿಲ್ಲ. ಅದ್ದರಿಂದ ನಮ್ಮಕುಲಘಾತಕ ಚಂದ್ರಹಾಸನಿಗೆ ಮದುವೆಯಾದ ವಿಷಯೆ];; ವಿಧವೆಯಾಗಿರಲಿ ಎಂದು ಹೃದಯದೊಳ್ ನಿಶ್ಚೈಸಿ ಮಧುರೋಕ್ತಿಯಿಂದೆ ಮದುಮಕ್ಕಳಂ ಮನ್ನಿಸಿ ವಿವಿಧ ವೈಭವಂಗಳಂ ನಡೆಸಿ ಜಾಮಾತನಂ ಮಂತ್ರಿ ಕರೆದು ಇಂತು ಎಂದನು=[ವಿಧವೆಯಾಗಿರಲಿ, ಎಂದು ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡು, ಒಳ್ಳೆಯ ಮಾತಿನಿಂದ ಮದುಮಕ್ಕಳನ್ನು ಉಪಚರಿಸಿ, ನಾನಾ ಬಗೆಯ ವೈಭವ ಕಾರ್ಯಕ್ರಮಗಳನ್ನು ನಡೆಸಿ, ಅಳಿಯ ಚಮದ್ರಹಾಸನನ್ನು ಮಂತ್ರಿ ಕರೆದು ಹೀಗೆ ಹೇಳಿದನು].
 • ತಾತ್ಪರ್ಯ:ಮಂತ್ರಿ ದುಷ್ಟಬುದ್ಧಿಯು ಯೋಚಿಸಿದನು. 'ಚಂದ್ರಹಾಸನನ್ನು ಅನೇಕ ಉಪಾಯದಿಂದ ಈಗ ನಾನು ವಧಿಸದೆ ಇದ್ದರೆ, ತನ್ನ ಸಂತತಿಗೆ ಈ ರಾಜ್ಯವನ್ನು ಆಳುವ ದೊಡ್ಡ ಸಂಪತ್ತು ಸಿಗುವುದಿಲ್ಲ. ಅದ್ದರಿಂದ ನಮ್ಮಕುಲಘಾತಕ ಚಂದ್ರಹಾಸನಿಗೆ ಮದುವೆಯಾದ ವಿಷಯೆ ವಿಧವೆಯಾಗಿರಲಿ, ಎಂದು ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡು, ಒಳ್ಳೆಯ ಮಾತಿನಿಂದ ಮದುಮಕ್ಕಳನ್ನು ಉಪಚರಿಸಿ, ನಾನಾ ಬಗೆಯ ವೈಭವ ಕಾರ್ಯಕ್ರಮಗಳನ್ನು ನಡೆಸಿ, ಅಳಿಯ ಚಮದ್ರಹಾಸನನ್ನು ಮಂತ್ರಿ ಕರೆದು ಹೀಗೆ ಹೇಳಿದನು.
 • (ಪದ್ಯ-೩೪)

ಪದ್ಯ:-:೩೮:[ಸಂಪಾದಿಸಿ]

ವೀರ ಬಾರೈ ಚಂದ್ರಹಾಸ ನೀನಿನ್ನೆಗಂ |
ದೂರಮಾಗಿರ್ದೆ ನಮಗಿನ್ನಳಿಯನಾದ ಬಳಿ ||
ಕೂರ ಹೊರಬನದೊಳಿಹ ಚಂಡಿಕಾಲಯಕೆ ಮದುವೆಯ ನಾಲ್ಕನೆಯ ದಿನದೊಳು||
ನೀರಜಸಖಾಸ್ತ ಸಮಯೆದೊಳೊರ್ವನೇ ಪೋಗಿ |
ಗೌರಿಯಂ ಪೂಜಿಸಿ ಬಹುದು ನಮ್ಮ ವಂಶದಾ |
ಚಾರಮಿದು ವರನಾದವಂಗೆ ನೀನಿಂದಿದಂ ಮಾಡೆಂದು ನೇಮಿಸಿದನು ||38||

ಪದವಿಭಾಗ-ಅರ್ಥ:
ವೀರ ಬಾರೈ ಚಂದ್ರಹಾಸ ನೀನು ಇನ್ನೆಗಂ ದೂರಮಾಗಿರ್ದೆ ನಮಗೆ ಇನ್ನು ಅಳಿಯನಾದ ಬಳಿಕ ಊರ ಹೊರ ಬನದೊಳು ಇಹ ಚಂಡಿಕಾಲಯಕೆ ಮದುವೆಯ ನಾಲ್ಕನೆಯ ದಿನದೊಳು=[ದುಷ್ಟಬುದ್ಧಿಯು ಚಂದ್ರಹಾಸನನ್ನು ಪ್ರೀತಿಯಿಂದ ಕರೆದು ಹೇಳಿದನು: ವೀರನೇ ಬಾರಪ್ಪಾ, ಚಂದ್ರಹಾಸ ನೀನು ಇಲ್ಲಿಯವರೆಗೆ ದೂರವಾಗಿದ್ದೆ, ಇನ್ನು ಹತ್ತಿರದವನು. ನಮಗೆ ಅಳಿಯನಾದ ಬಳಿಕ ಊರ ಹೊರಗಿರುವ ವನದಲ್ಲಿ ಇರುವ ಚಂಡಿಕಾ ದೇವಾಲಯಕ್ಕೆ ಮದುವೆಯ ನಾಲ್ಕನೆಯ ದಿನದಂದು];;ನೀರಜಸಖ (ಕಮಲದ ಸಖ:ಸೂರ್ಯ) ಅಸ್ತ ಸಮಯೆದೊಳು ಓರ್ವನೇ ಪೋಗಿ ಗೌರಿಯಂ ಪೂಜಿಸಿ ಬಹುದು ನಮ್ಮ ವಂಶದಾಚಾರಂ ಇದು ವರನು ಆದವಂಗೆ ನೀನು ಇಂದು ಇದಂ ಮಾಡೆಂದು ನೇಮಿಸಿದನು.=[ಸುರ್ಯನ ಅಸ್ತ ಸಮಯದಲ್ಲಿ ಒಬ್ಬನೇ ಹೋಗಿ ಗೌರಿಯನ್ನು ಪೂಜಿಸಿಬರಬೇಕು. ಇದು ವರನಾದವನಿಗೆ ನಮ್ಮ ವಂಶದ ಆಚಾರ/ ನಿಯಮ. ನೀನು ಇಂದು ಈ ಕಾರ್ಯವನ್ನು ಮಾಡು ಎಂದು ನೇಮಿಸಿದನು.]
 • ತಾತ್ಪರ್ಯ:ದುಷ್ಟಬುದ್ಧಿಯು ಚಂದ್ರಹಾಸನನ್ನು ಪ್ರೀತಿಯಿಂದ ಕರೆದು ಹೇಳಿದನು: ವೀರನೇ ಬಾರಪ್ಪಾ, ಚಂದ್ರಹಾಸ ನೀನು ಇಲ್ಲಿಯವರೆಗೆ ದೂರವಾಗಿದ್ದೆ, ಇನ್ನು ಹತ್ತಿರದವನು. ನಮಗೆ ಅಳಿಯನಾದ ಬಳಿಕ ಊರ ಹೊರಗಿರುವ ವನದಲ್ಲಿ ಇರುವ ಚಂಡಿಕಾ ದೇವಾಲಯಕ್ಕೆ ಮದುವೆಯ ನಾಲ್ಕನೆಯ ದಿನದಂದು ಸುರ್ಯನ ಅಸ್ತ ಸಮಯದಲ್ಲಿ ಒಬ್ಬನೇ ಹೋಗಿ ಗೌರಿಯನ್ನು ಪೂಜಿಸಿಬರಬೇಕು. ಇದು ವರನಾದವನಿಗೆ ನಮ್ಮ ವಂಶದ ಆಚಾರ/ ನಿಯಮ. ನೀನು ಇಂದು ಈ ಕಾರ್ಯವನ್ನು ಮಾಡು ಎಂದು ನೇಮಿಸಿದನು.
 • (ಪದ್ಯ-೩೮)

ಪದ್ಯ:-:೩೯:[ಸಂಪಾದಿಸಿ]

ಲೇಸಾದುದೆಂದು ಮಾವನ ಮಾತಿಗೊಪ್ಪಿ ಶಶಿ |
ಹಾಸಂ ಪ್ರಸೂನ ಗಂಧಾಕ್ಷತೆಗಳಂ ತರಿಸ |
ಲಾ ಸಚಿವನತಿ ಗೂಢದಿಂದೆ ಚಂಢಾಲರಂ ಕರೆಸಿ ನೀವಂದಿನಂತೆ ||
ಮೋಸದಿಂ ಬಿಟ್ಟು ಬಾರದೆ ಚಂಡಿಕಾಲಯಕೆ |
ನೇಸರಂಬುಧಿಗಿಳಿಯಲರ್ಚನೆಗೆ ಬಹನೋರ್ವ |
ನೋಸರಿಸದಡಗಿಕೊಂಡಿರ್ದಾತನಂ ಕೊಲ್ವುದೆಂದು ಬೆಸಸಿದನವರ್ಗೆ ||39||

ಪದವಿಭಾಗ-ಅರ್ಥ:
ಲೇಸಾದುದು ಎಂದು ಮಾವನ ಮಾತಿಗೊಪ್ಪಿ ಶಶಿಹಾಸಂ ಪ್ರಸೂನ ಗಂಧಾಕ್ಷತೆಗಳಂ ತರಿಸಲು ಆ ಸಚಿವನು ಅತಿ ಗೂಢದಿಂದೆ ಚಂಢಾಲರಂ ಕರೆಸಿ ನೀವು ಅಂದಿನಂತೆ=[ಓಳ್ಳೆಯದಯಿತು, ಎಂದು ಮಾವನ ಮಾತಿಗೆ ಒಪ್ಪಿ ಚಂದ್ರಹಾಸನು ಹೂವು ಗಂಧಾಕ್ಷತೆಗಳನ್ನು ತರಿಸಿಕೊಂಡನು. ಆ ಮಂತ್ರಿಯು ಅತಿ ರಹಸ್ಯವಾಗಿ ಚಂಡಾಲರನ್ನು ಕರೆಸಿ ಅವರಿಗೆ ಹೀಗೆ ಹೇಳಿದನು: ನೀವು ಹಿಂದೆ ಬಾಲಕನನ್ನು ಕೊಲ್ಲದೆ ];; ಮೋಸದಿಂ ಬಿಟ್ಟು ಬಾರದೆ ಚಂಡಿಕಾಲಯಕೆ ನೇಸರು ಅಂಬುಧಿಗೆ ಇಳಿಯಲು ಅರ್ಚನೆಗೆ ಬಹನು ಓರ್ವನು ಓಸರಿಸದೆ (ಹಿಂಜರಿಯದೆ:ದಾಸಸಾಹಿತ್ಯ ನಿಘಂಟು) ಅಡಗಿಕೊಂಡಿರ್ದು ಆತನಂ ಕೊಲ್ವುದು ಎಂದು ಬೆಸಸಿದನು ಅವರ್ಗೆ=[ಮೋಸದಿಂದ ಬಿಟ್ಟು ಬಂದಂತೆ, ಮಾಡದೆ ಚಂಡಿಕಾಲಯಕ್ಕೆ ಹೋಗಿ ಅಲ್ಲಿ ಸೂರ್ಯ ಮುಳುಗುವ ಸಮಯದಲ್ಲಿ ಪೂಜೆಗೆ ಒಬ್ಬನು ಬರುವನು; ಹಿಂಜರಿಯದೆ ಅಡಗಿಕೊಂಡಿದ್ದು ದೇವಾಲಯದ ಒಳಗೆ ಬಂದ ಕೂಡಲೆ ಆತನನ್ನು ಕೊಲ್ಲುವುದು ಎಂದು ಅವರಿಗೆ ಹೇಳಿದನು].
 • ತಾತ್ಪರ್ಯ:ಓಳ್ಳೆಯದಯಿತು, ಎಂದು ಮಾವನ ಮಾತಿಗೆ ಒಪ್ಪಿ, ಚಂದ್ರಹಾಸನು ಹೂವು ಗಂಧಾಕ್ಷತೆಗಳನ್ನು ತರಿಸಿಕೊಂಡನು. ಆ ಮಂತ್ರಿಯು ಅತಿ ರಹಸ್ಯವಾಗಿ ಚಂಡಾಲರನ್ನು ಕರೆಸಿ ಅವರಿಗೆ ಹೀಗೆ ಹೇಳಿದನು: ನೀವು ಹಿಂದೆ ಬಾಲಕನನ್ನು ಕೊಲ್ಲದೆ ಮೋಸದಿಂದ ಬಿಟ್ಟು ಬಂದಂತೆ, ಮಾಡದೆ ಚಂಡಿಕಾಲಯಕ್ಕೆ ಹೋಗಿ ಅಲ್ಲಿ ಸೂರ್ಯ ಮುಳುಗುವ ಸಮಯದಲ್ಲಿ ಪೂಜೆಗೆ ಒಬ್ಬನು ಬರುವನು; ಹಿಂಜರಿಯದೆ ಅಡಗಿಕೊಂಡಿದ್ದು ದೇವಾಲಯದ ಒಳಗೆ ಬಂದ ಕೂಡಲೆ ಆತನನ್ನು ಕೊಲ್ಲುವುದು ಎಂದು ಅವರಿಗೆ ಹೇಳಿದನು.
 • (ಪದ್ಯ-೩೯)

ಪದ್ಯ:-:೪೦:[ಸಂಪಾದಿಸಿ]

ವಿಜಯ ಕೇಳಾ ಸಮಯದೊಳ್ ಕುಂತಳೇಶ್ವರಂ |
ನಿಜ ಶರೀರಚ್ಛಾಯೆ ತಲೆಯಿಲ್ಲದಿರೆ ಕಂಡು |
ದ್ವಿಜ ಶಿರೋಮಣಿ ಗಾಲಮಗರುಪಲಾತನಿದು ಮೃತಿಗೆ ಕಾರಣಮೆನಲ್ಕೆ ||
ರುಜೆಗೆ ಮೈಗೊಡಬಾರದೆಂದು ನಿರ್ಮೋಕಮಂ |
ಭುಜಗಪತಿ ಬಿಡುವಂತೆ ಸಕಲ ಸೌಭಾಗ್ಯಮಂ |
ತ್ಯಜಿಸಿ ನಿರುಪಮ ಯೋಗಸಿದ್ಧಿಯಂ ಪಡೆಯೆ ವನವಾಸಕುದ್ಯೋಗಿಸಿದನು ||40||

ಪದವಿಭಾಗ-ಅರ್ಥ:
ವಿಜಯ (ಅರ್ಜುನ) ಕೇಳಾ ಸಮಯದೊಳ್ ಕುಂತಳೇಶ್ವರಂ ನಿಜ ಶರೀರಚ್ಛಾಯೆ ತಲೆಯಿಲ್ಲದೆ ಇರೆ ಕಂಡು ದ್ವಿಜ ಶಿರೋಮಣಿ ಗಾಲವಂಗೆ ಅರಿಪಲು ಆತನಿದು ಮೃತಿಗೆ ಕಾರಣಂ ಎನಲ್ಕೆ=[ಅರ್ಜುನನೇ ಕೇಳು, ಆ ಸಮಯದಲ್ಲಿ ಕುಂತಳೇಶ್ವರನಿಗೆ/ ರಾಜನಿಗೆ ತನ್ನ ದೇಹದ ನೆರಳಿನಲ್ಲಿ ತಲೆಯಿಲ್ಲದೆ ಇರಲು, ಅದನ್ನು ಕಂಡು ವಿಪ್ರ ಶಿರೋಮಣಿ ಗಾಲವನಿಗೆ ಹೇಳಲು, ಆತನು ಇದು ಮರಣಕ್ಕೆ ಕಾರಣವಾದ ಸೂಚನೆ ಎನ್ನಲು, ];; ರುಜೆಗೆ ಮೈಗೊಡಬಾರದೆಂದು ನಿರ್ಮೋಕಮಂ (ಪರೆಯನ್ನು) ಭುಜಗಪತಿ (ಸರ್ಪವು)ಬಿಡುವಂತೆ ಸಕಲ ಸೌಭಾಗ್ಯಮಂ ತ್ಯಜಿಸಿ ನಿರುಪಮ (ಸರಿಸಾಟಿಯಿಲ್ಲದ, ಅತಿ ಶ್ರೇಷ್ಠ) ಯೋಗಸಿದ್ಧಿಯಂ ಪಡೆಯೆ ವನವಾಸಕುದ್ಯೋಗಿಸಿದನು=[ರೋಗಕ್ಕೆ ಮೈಯನ್ನು ಕೊಡಬಾರದೆಂದು ಸರ್ಪವು ಪೊರೆಯನ್ನು ಬಿಡುವಂತೆ ಸಕಲ ಸೌಭಾಗ್ಯ, ಸಂಪತ್ತನ್ನೂ ತ್ಯಜಿಸಿ, ನಿರುಪಮವಾದ ಯೋಗಸಿದ್ಧಿಯನ್ನು ಪಡೆಯಲು ವನವಾಸಕ್ಕೆ ಹೊಗಲು ಉದ್ಯುಕ್ತನಾದನು.]
 • ತಾತ್ಪರ್ಯ:ನಾರದರು ಹೇಳಿದರು, ಅರ್ಜುನನೇ ಕೇಳು, ಆ ಸಮಯದಲ್ಲಿ ಕುಂತಳೇಶ್ವರನಿಗೆ/ ರಾಜನಿಗೆ ತನ್ನ ದೇಹದ ನೆರಳಿನಲ್ಲಿ ತಲೆಯಿಲ್ಲದೆ ಇರಲು, ಅದನ್ನು ಕಂಡು ಪುರೋಹಿತ ವಿಪ್ರ ಶಿರೋಮಣಿ ಗಾಲವನಿಗೆ ಹೇಳಲು, ಆತನು ಇದು ಮರಣಕ್ಕೆ ಕಾರಣವಾದ ಸೂಚನೆ ಎನ್ನಲು, ರೋಗಕ್ಕೆ ಮೈಯನ್ನು ಕೊಡಬಾರದೆಂದು ಸರ್ಪವು ಪೊರೆಯನ್ನು ಬಿಡುವಂತೆ ಸಕಲ ಸೌಭಾಗ್ಯ, ಸಂಪತ್ತನ್ನೂ ತ್ಯಜಿಸಿ, ನಿರುಪಮವಾದ ಯೋಗಸಿದ್ಧಿಯನ್ನು ಪಡೆಯಲು ವನವಾಸಕ್ಕೆ ಹೊಗಲು ಉದ್ಯುಕ್ತನಾದನು.]
 • (ಪದ್ಯ-೪೦)

ಪದ್ಯ:-:೪೧:[ಸಂಪಾದಿಸಿ]

ಗಾಲವನ ಪದಕೆರಗಿ ಕೈಮುಗಿದು ನಿಂದು ಭೂ |
ಪಾಲಕಂ ತನಗಿನ್ನು ಸಾಕು ರಾಜ್ಯದ ಚಿಂತೆ |
ಕಾಲಮಂ ಸಾಧಿಸುವೆನತುಲ ಯೋಗದೊಳೆನಗೆ ಸುತರಿಲ್ಲ ಧರೆಯನಾರ್ಗೆ ||
ಬಾಲೆ ಚಂಪಕಮಾಲಿನಿಯನಾರ್ಗೆ ಕುಡುವೆಂ ವಿ |
ಶಾಲಮತಿ ಬೆಸಸೆಂದು ಬೇಡಿಕೊಳೆ ಲಕ್ಷಣ ಸು |
ಶೀಲನಹ ಚಂದ್ರಹಾಸಂಗೆ ಮೇದಿನಿ ಸಹಿತ ಮಗಳನಿತ್ತಪುದೆಂದನು ||41||

ಪದವಿಭಾಗ-ಅರ್ಥ:
ಗಾಲವನ ಪದಕೆ ಎರಗಿ ಕೈಮುಗಿದು ನಿಂದು ಭೂಪಾಲಕಂ ತನಗೆ ಇನ್ನು ಸಾಕು ರಾಜ್ಯದ ಚಿಂತೆ ಕಾಲಮಂ ಸಾಧಿಸುವೆನು ಅತುಲ ಯೋಗದೊಳು ಎನಗೆ ಸುತರಿಲ್ಲ ಧರೆಯನು ಆರ್ಗೆ=[ರಾಜನು ಪುರೋಹಿತ ಗಾಲವನ ಪಾದಕ್ಕೆ ನಮಿಸಿ, ಕೈಮುಗಿದು ನಿಂತು, ತನಗೆ ಇನ್ನು ರಾಜ್ಯದ ಚಿಂತೆ ಸಾಕು. ಶ್ರೇಷ್ಠ ಯೋಗದಲ್ಲಿ ಅಂತ್ಯಕಾಲದ ಗುರಿಯನ್ನು ಸಾಧಿಸುವೆನು. ತನಗೆ ಗಂಡುಮಕ್ಕಳಿಲ್ಲ, ರಾಜ್ಯವನ್ನು ಯಾರಿಗೆ];; ಬಾಲೆ ಚಂಪಕಮಾಲಿನಿಯನು ಆರ್ಗೆ ಕುಡುವೆಂ ವಿಶಾಲಮತಿ ಬೆಸಸು ಎಂದು ಬೇಡಿಕೊಳೆ, ಲಕ್ಷಣ ಸುಶೀಲನು ಅಹ ಚಂದ್ರಹಾಸಂಗೆ ಮೇದಿನಿ ಸಹಿತ ಮಗಳನು ಇತ್ತಪುದು ಎಂದನು=[ಮಗಳು ಚಂಪಕಮಾಲಿನಿಯನ್ನು ಯಾರಿಗೆ ಕೊಡಲಿ? ಬಹಳತಿಳಿದ ವಿಶಾಲಮತಿಯೇ ಹೇಳು ಎಂದು ಬೇಡಿಕೊಳ್ಳಲು, ರಾಜ ಲಕ್ಷಣವುಳ್ಳ ಸುಶೀಲನಾಗಿ ಇರುವ ಚಂದ್ರಹಾಸನಿಗೆ ರಾಜ್ಯ ಸಹಿತ ಮಗಳನ್ನು ಕೊಡುವುದು ಎಂದನು].
 • ತಾತ್ಪರ್ಯ:ಮರಣ ಹತ್ತಿರ ಬಂದಿದೆ ಎಂದು ತಿಳಿದ ರಾಜನು, ಪುರೋಹಿತ ಗಾಲವನ ಪಾದಕ್ಕೆ ನಮಿಸಿ, ಕೈಮುಗಿದು ನಿಂತು, ತನಗೆ ಇನ್ನು ರಾಜ್ಯದ ಚಿಂತೆ ಸಾಕು. ಶ್ರೇಷ್ಠ ಯೋಗದಲ್ಲಿ ಅಂತ್ಯಕಾಲದ ಗುರಿಯನ್ನು ಸಾಧಿಸುವೆನು. ತನಗೆ ಗಂಡುಮಕ್ಕಳಿಲ್ಲ, ರಾಜ್ಯವನ್ನು ಯಾರಿಗೆ ಕೊಡಲಿ, ಮಗಳು ಚಂಪಕಮಾಲಿನಿಯನ್ನು ಯಾರಿಗೆ ಕೊಡಲಿ? ಬಹಳತಿಳಿದ ವಿಶಾಲಮತಿಯೇ ಹೇಳು ಎಂದು ಬೇಡಿಕೊಳ್ಳಲು, ರಾಜ ಲಕ್ಷಣವುಳ್ಳ ಸುಶೀಲನಾಗಿ ಇರುವ ಚಂದ್ರಹಾಸನಿಗೆ ರಾಜ್ಯ ಸಹಿತ ಮಗಳನ್ನು ಕೊಡುವುದು ಎಂದನು.
 • (ಪದ್ಯ-೪೧)

ಪದ್ಯ:-:೪೨:[ಸಂಪಾದಿಸಿ]

ಎಂದೊಡರಸಂ ಗಾಲವನ ಬುದ್ಧಿಯಂ ಕೇಳ್ದು |
ತಂದೆ ಮಾಡುವ ರಾಜಕಾರ್ಯಮಂ ನಿರ್ವಹಿಸು |
ತಂದು ಬಾಗಿಲೊಳಿರ್ದ ಮವನನಂ ಕರಸಿ ಕೈವಿಡಿದು ಮೆಲ್ಲನೆ ಕಿವಿಯೊಳು ||
ಮುಂದೆ ನಮಗುರ್ವ ಕೆಲಸದ ಪೊರಿಗೆಯುಂಟು ನೀ |
ನಿಂದುಹಾಸನನಿಲ್ಲಿಗೀಗಳೋಡಗೊಂಡು ಬಾ ||
ಸಂದೇಹಿಸದೆ ಪೋಗೆನಲ್ಕೆ ಭೂಪಾಲನಂ ಬೀಳ್ಕೊಂಡು ಪೊರಮಟ್ಟನು ||42||

ಪದವಿಭಾಗ-ಅರ್ಥ:
ಎಂದೊಡೆ ಅರಸಂ ಗಾಲವನ ಬುದ್ಧಿಯಂ ಕೇಳ್ದು ತಂದೆ ಮಾಡುವ ರಾಜಕಾರ್ಯಮಂ ನಿರ್ವಹಿಸುತ ಅಂದು ಬಾಗಿಲೊಳಿರ್ದ ಮವನನಂ ಕರಸಿ ಕೈವಿಡಿದು ಮೆಲ್ಲನೆ ಕಿವಿಯೊಳು=[ಪುರೋಹಿತನು ರಾಜ್ಯವನ್ನೂ ಮಗಳನ್ನೂ ಚಂದ್ರಹಾಸನಿಗೆ ಕೊಡು ಎನ್ನಲು, ಅರಸನು ಗಾಲವನ ಹಿತವಚನವನ್ನು ಕೇಳಿ, ತಂದೆ (ದುಷ್ಟಬುದ್ಧಿಯು) ಮಾಡುವ ರಾಜಕಾರ್ಯಗಳನ್ನು ನಿರ್ವಹಿಸುತ್ತಾ ಅಂದು ಬಾಗಿಲಲ್ಲಿ ಇದ್ದ ಮವನನ್ನು ಕರಸಿ ಅವನ ಕೈಹಿಡಿದು, ಮೆಲ್ಲನೆ ಅವನ ಕಿವಿಯಲ್ಲಿ ];; ಮುಂದೆ ನಮಗೆ ಉರ್ವ (ಉರ್ವ:ಭೂಮಿ,ರಾಜ್ಯ) ಕೆಲಸದ ಪೊರಿಗೆಯುಂಟು(ಹೊರೆ,ಹೊರಿಗೆ:ಭಾರ) ನೀನು ಇಂದುಹಾಸನನು ಇಲ್ಲಿಗೆ ಈಗಳೆ ಒಡಗೊಂಡು ಬಾ ಸಂದೇಹಿಸದೆ ಪೋಗು ಎನಲ್ಕೆ ಭೂಪಾಲನಂ ಬೀಳ್ಕೊಂಡು ಪೊರಮಟ್ಟನು=[ಮುಂದೆ (ನಂತರ) ನಮಗೆ ರಾಜಕಾರ್ಯದ ಕಾರುಭಾರ ಉಂಟು; ನೀನು ಚಂದ್ರಹಾಸನನ್ನು ಇಲ್ಲಿಗೆ ಈಗಲೆ ಜೊತೆಗೂಡಿ ಬಾ. ಯಾವುದೇ ಗೊಂದಲ/ಸಂಶಯ ಪಡದೆ ಹೊಗು ಎನ್ನಲು, ರಾಜನ ಅಪ್ಪಣೆ ಪಡೆದು ಮದನನು ಹೊರಹೊರಟನು].
 • ತಾತ್ಪರ್ಯ:ಪುರೋಹಿತನು ರಾಜ್ಯವನ್ನೂ ಮಗಳನ್ನೂ ಚಂದ್ರಹಾಸನಿಗೆ ಕೊಡು ಎನ್ನಲು, ಅರಸನು ಗಾಲವನ ಹಿತವಚನವನ್ನು ಕೇಳಿ, ತಂದೆ (ದುಷ್ಟಬುದ್ಧಿಯು) ಮಾಡುವ ರಾಜಕಾರ್ಯಗಳನ್ನು ನಿರ್ವಹಿಸುತ್ತಾ ಅಂದು ಬಾಗಿಲಲ್ಲಿ ಇದ್ದ ಮವನನ್ನು ಕರಸಿ ಅವನ ಕೈಹಿಡಿದು, ಮೆಲ್ಲನೆ ಅವನ ಕಿವಿಯಲ್ಲಿ ಮುಂದೆ (ನಂತರ) ನಮಗೆ ರಾಜಕಾರ್ಯದ ಕಾರುಭಾರ ಉಂಟು; ನೀನು ಚಂದ್ರಹಾಸನನ್ನು ಇಲ್ಲಿಗೆ ಈಗಲೆ ಜೊತೆಗೂಡಿ ಬಾ. ಯಾವುದೇ ಗೊಂದಲ/ಸಂಶಯ ಪಡದೆ ಹೊಗು ಎನ್ನಲು, ರಾಜನ ಅಪ್ಪಣೆ ಪಡೆದು ಮದನನು ಹೊರಹೊರಟನು.
 • (ಪದ್ಯ-೪೨)

ಪದ್ಯ:-:೪೩:[ಸಂಪಾದಿಸಿ]

ಉತ್ತಮ ಹಯಾರೂಢನಾಗಿ ಮದನಂ ಜವದೊ |
ಳಿತ್ತಣಿಂದೈದೆ ರವಿ ಪಶ್ಚಿಮಾಂಬುಧಿಗಿಳಿವ |
ಪೊತ್ತು ಪೊಂದಳಿಗೆಯೊಳ್ ಪುಷ್ಪ ಫಲ ತಾಂಬೂಲ ಗಂಧಾಕ್ಷತೆಗಳನಿರಿಸಿ ||
ಎತ್ತಿಕೊಂಡತ್ತಣಿಂ ಬಹ ಚಂದ್ರಹಾಸನ ನಿ |
ದೆತ್ತಪೊದಪೆಯೆಂದು ಬೆಸಗೊಳಲ್ ತವ ಪಿತಂ |
ತೆತ್ತ ಸುವ್ರತಮೆನಲ್ ಚಂಡಿಕಾ ಪೂಜೆಯಂ ಮಾಡಿ ಬಂದಪೆನೆಂದನು ||43||

ಪದವಿಭಾಗ-ಅರ್ಥ:
ಉತ್ತಮ ಹಯಾರೂಢನಾಗಿ ಮದನಂ ಜವದೊಳು ಇತ್ತಣಿಂದ ಐದೆ (ಬರಲು) ರವಿ ಪಶ್ಚಿಮಾಂಬುಧಿಗೆ ಇಳಿವ ಪೊತ್ತು ಪೊಂದಳಿಗೆಯೊಳ್ (ಪೊನ್ನು ತಳಿಗೆ:ಹೊನ್ನಿನ ಹರಿವಾಣ/ ತಟ್ಟೆ) ಪುಷ್ಪ ಫಲ ತಾಂಬೂಲ ಗಂಧಾಕ್ಷತೆಗಳನು ಇರಿಸಿ ಎತ್ತಿಕೊಂಡು ಅತ್ತಣಿಂ ಬಹ ಚಂದ್ರಹಾಸನನು=[ಒಳ್ಳೆಯ ಕುದುರೆಯನ್ನೇರಿ ಮದನನು ವೇಗವಾಗಿ ಈ ಕಡೆಯಿಂದ ಬರಲು, ಸೂರ್ಯನು ಪಶ್ಚಿಮ ಸಮುದ್ರಕ್ಕೆ ಇಳಿಯುವ ಸಮಯದಲ್ಲಿ ಚಿನ್ನದ ತಟ್ಟೆಯಲ್ಲಿ ಹೂವು, ಹಣ್ಣು, ತಾಂಬೂಲ ಗಂಧಾಕ್ಷತೆಗಳನ್ನು ಇರಿಸಿಕೊಂಡು, ಅದನ್ನು ಹಿಡಿದುಕೊಂಡು ಆ ಕಡೆಯಿಂದ ಬರುತ್ತಿರುವ ಚಂದ್ರಹಾಸನನ್ನು];; ಇದು ಎತ್ತ ಪೊದಪೆಯೆಂದು ಬೆಸಗೊಳಲ್ ತವ ಪಿತಂ (ನಿನ್ನ ತಂದೆ) ತೆತ್ತ (ಕೊಟ್ಟ ವ್ರತ)) ಸುವ್ರತಮೆನಲ್ ಚಂಡಿಕಾ ಪೂಜೆಯಂ ಮಾಡಿ ಬಂದಪೆನೆಂದನು=[ಇದು ಎಲ್ಲಿಗೆ ಹೋಗುವೆಯೆಂದು ಮದನನು ಕೇಳಲು, ನಿನ್ನ ತಂದೆಯು ತನಗೆ ಆದೇಶ ಕೊಟ್ಟ ಶ್ರೇಷ್ಠವ್ರತವು; ಚಂಡಿಕಾ ಪೂಜೆಯನ್ನು ಮಾಡಿ ಬರುವೆನು ಎಂದನು].
 • ತಾತ್ಪರ್ಯ:ಒಳ್ಳೆಯ ಕುದುರೆಯನ್ನೇರಿ ಮದನನು ವೇಗವಾಗಿ ಈ ಕಡೆಯಿಂದ ಬರಲು, ಸೂರ್ಯನು ಪಶ್ಚಿಮ ಸಮುದ್ರಕ್ಕೆ ಇಳಿಯುವ ಸಮಯದಲ್ಲಿ ಚಿನ್ನದ ತಟ್ಟೆಯಲ್ಲಿ ಹೂವು, ಹಣ್ಣು, ತಾಂಬೂಲ ಗಂಧಾಕ್ಷತೆಗಳನ್ನು ಇರಿಸಿಕೊಂಡು, ಅದನ್ನು ಹಿಡಿದುಕೊಂಡು ಆ ಕಡೆಯಿಂದ ಬರುತ್ತಿರುವ ಚಂದ್ರಹಾಸನನ್ನು, ಇದೇನು, ಎಲ್ಲಿಗೆ ಹೋಗುವೆಯೆಂದು ಮದನನು ಕೇಳಲು, ನಿನ್ನ ತಂದೆಯು ತನಗೆ ಆದೇಶ ಕೊಟ್ಟ ಶ್ರೇಷ್ಠವ್ರತವು; ಚಂಡಿಕಾ ಪೂಜೆಯನ್ನು ಮಾಡಿ ಬರುವೆನು ಎಂದನು.
 • (ಪದ್ಯ-೪೩)

ಪದ್ಯ:-:೪೪:[ಸಂಪಾದಿಸಿ]

ತಟ್ಟನೆ ತುರಂಗಮವನಿಳಿದಿಳೆಗೆ ಮತ್ಪಿತನ |
ಕಟ್ಟಳೆಯ ಚಂಡಿಕಾ ಪೂಜೆಗಾಂ ವೋದಪೆಂ |
ನೆಟ್ಟನೆ ಮಹೀಶ್ವರಂ ಪಿರಿದು ಕಜ್ಜಕೆ ನಿನ್ನೊಡಗೊಂಡು ಬಾಯೆನಲ್ಕೆ ||
ಕಟ್ಟವಸರಕೆ ಬಂದೆನೆಂದರ್ಚನಾ ದ್ರವ್ಯ |
ಮಿಟ್ಟ ಪೊಂದಳಿಗೆಯಂ ತೆಗೆದುಕೊಂಡಶ್ವಮಂ |
ಕೊಟ್ಟಾತನಂ ಕಳುಹಿ ಪೊರಮಟ್ಟನೇಕಾಕಿಯಾಗಿ ಮದನಂ ಪೊಳಲನು||44||

ಪದವಿಭಾಗ-ಅರ್ಥ:
ತಟ್ಟನೆ ತುರಂಗಮವನು ಇಳಿದು ಇಳೆಗೆ ಮತ್ ಪಿತನ ಕಟ್ಟಿಳೆಯ ಚಂಡಿಕಾ ಪೂಜೆಗೆ ಆ ವೋದಪೆಂ, ನೆಟ್ಟನೆ ಮಹೀಶ್ವರಂ ಪಿರಿದು ಕಜ್ಜಕೆ ನಿನ್ನ ಒಡಗೊಂಡು ಬಾ ಯೆನಲ್ಕೆ=[ಚಂದ್ರಹಾಸನ ಮಾತು ಕೇಳಿ, ಕೋಡಲೆ ಮದನನು ಕುದುರೆಯಿಂದ ನೆಲಕ್ಕೆ ಇಳಿದು, ನನ್ನ ತಂದೆಯ ಧಾರ್ಮಿಕ ಕಟ್ಟಳೆಯ ಚಂಡಿಕಾ ಪೂಜೆಗೆ ನಾನು ಹೋಗುವೆನು, ನೇರವಾಗಿ ರಾಜನ ಮುಖ್ಯ ಕಾರ್ಯಕ್ಕೆ ನಿನ್ನನ್ನು ಕರೆದುಕೊಂಡುಬಾ ಎನ್ನಲು ];; ಕಟ್ಟು ಅವಸರಕೆ ಬಂದೆನು ಎಂದು ಅರ್ಚನಾ ದ್ರವ್ಯಂ ಇಟ್ಟ ಪೊಂದಳಿಗೆಯಂ ತೆಗೆದುಕೊಂಡು ಅಶ್ವಮಂ ಕೊಟ್ಟು ಆತನಂ ಕಳುಹಿ ಪೊರಮಟ್ಟನು ಏಕಾಕಿಯಾಗಿ ಮದನಂ ಪೊಳಲನು=[ನಾನು ಬಹಳ ಅವಸರದಲ್ಲಿ ಬಂದೆನು, ಎಂದು ಪೂಜಾ ದ್ರವ್ಯಗಳನ್ನು ಇಟ್ಟಿದ್ದ ಚಿನ್ನದ ತಟ್ಟೆಯನ್ನು ತೆಗೆದುಕೊಂಡು ಕುದುರೆಯನ್ನು ಚಂದ್ರಹಾಸನಿಗೆ ಕೊಟ್ಟು ಆತನನ್ನು ಕಳುಹಿಸಿ, ಮದನನು ಏಕಾಂಗಿಯಾಗಿ ನಗರದಿಂದ ಹೊರಹೊರಟನು].
 • ತಾತ್ಪರ್ಯ:ಚಂದ್ರಹಾಸನ ಮಾತು ಕೇಳಿ, ಕೋಡಲೆ ಮದನನು ಕುದುರೆಯಿಂದ ನೆಲಕ್ಕೆ ಇಳಿದು, ನನ್ನ ತಂದೆಯ ಧಾರ್ಮಿಕ ಕಟ್ಟಳೆಯ ಚಂಡಿಕಾ ಪೂಜೆಗೆ ನಾನು ಹೋಗುವೆನು, ನೇರವಾಗಿ ರಾಜನ ಮುಖ್ಯ ಕಾರ್ಯಕ್ಕೆ ನಿನ್ನನ್ನು ಕರೆದುಕೊಂಡುಬಾ ಎನ್ನಲು, ನಾನು ಬಹಳ ಅವಸರದಲ್ಲಿ ಬಂದೆನು, ಎಂದು ಪೂಜಾ ದ್ರವ್ಯಗಳನ್ನು ಇಟ್ಟಿದ್ದ ಚಿನ್ನದ ತಟ್ಟೆಯನ್ನು ತೆಗೆದುಕೊಂಡು ಕುದುರೆಯನ್ನು ಚಂದ್ರಹಾಸನಿಗೆ ಕೊಟ್ಟು ಆತನನ್ನು ಕಳುಹಿಸಿ, ಮದನನು ಏಕಾಂಗಿಯಾಗಿ ನಗರದಿಂದ ಚಂಡಿಕಾಲಯಕ್ಕೆ ಹೊರಹೊರಟನು].
 • (ಪದ್ಯ-೪೪)

ಪದ್ಯ:-:೪೫:[ಸಂಪಾದಿಸಿ]

ತನ್ನ ಪಿತನಾಜ್ಞೆಯಂ ನಡೆಸುವ ಕುಲವ್ರತದ |
ನನ್ನಿ ಶಶಿಹಾಸಂಗೆ ಭಂಗಮಾದಪುದೆಂದು |
ಮನ್ನಿಸಿ ನೆರೆದ ಸಕಲ ಸೇವಕರನೆಲ್ಲರಂ ಕಳುಹಿ ತಾನೊರ್ವನಾಗಿ ||
ಉನ್ನತ ದ್ರುಮಷಂಡ ಮಂಡಿತದ ಬನದೊಳ್ ಪ್ರ |
ಸನ್ನೆಯಾಗಿಹಚಂಡಿಕಾಲಯಕೆ ಬರುತಿರ್ದ |
ನನ್ನೆಗಂ ಕರತಳದ ಗಂದಪುಷ್ಪದ ಪಾತ್ರೆಯೋಸರಿಸಿ ಬಿದ್ದುದಿಳೆಗೆ ||45||

ಪದವಿಭಾಗ-ಅರ್ಥ:
ತನ್ನ ಪಿತನ ಆಜ್ಞೆಯಂ ನಡೆಸುವ ಕುಲವ್ರತದ ನನ್ನಿ ಶಶಿಹಾಸಂಗೆ ಭಂಗಂ ಆದಪುದೆಂದು ಮನ್ನಿಸಿ ನೆರೆದ ಸಕಲ ಸೇವಕರನು ಎಲ್ಲರಂ ಕಳುಹಿ ತಾನು ಓರ್ವನಾಗಿ=[ತನ್ನ ತಂದೆಯ ಆಜ್ಞೆಯನ್ನು ನಡೆಸುವ ಕುಲವ್ರತದ ನಿಷ್ಠೆ, ಚಂದ್ರಹಾಸನಿಗೆ ಭಂಗವಾಗುವುದೆಂದು ಆ ನಿಯಮವನ್ನು ಗೌರವಿಸಿ, ಅಲ್ಲಿದ್ದ ಸಕಲ ಸೇವಕರು ಎಲ್ಲರನ್ನೂ ಕಳುಹಿಸಿ ತಾನು ಒಬ್ಬಂಟಿಗನಾಗಿ];; ಉನ್ನತ ದ್ರುಮಷಂಡ (ಸಂ.ಷಂಡ:ಸಮೂಹ) ಮಂಡಿತದ (ಶೋಭಿತ, ಅಲಂಕೃತ, ತುಂಬಿದ) ಬನದೊಳ್ ಪ್ರಸನ್ನೆಯಾಗಿಹ ಚಂಡಿಕಾಲಯಕೆ ಬರುತಿರ್ದನು ಅನ್ನೆಗಂ ಕರತಳದ ಗಂದಪುಷ್ಪದ ಪಾತ್ರೆಯು ಓಸರಿಸಿ ಬಿದ್ದುದು ಇಳೆಗೆ=[ಎತ್ತರದ ಮರಗಳು ದಟ್ಟವಾಗಿರವ ವನದಲ್ಲಿ ಪ್ರಸನ್ನೆಯಾಗಿರುವ ಚಂಡಿಕೆಯ ಆಲಯಕೆ ಬರುತ್ತಿದ್ದನು, ಆಗ ಅವನ ಕೈಯಲ್ಲಿ ಇದ್ದ ಗಂದಪುಷ್ಪದ ಪಾತ್ರೆಯು ಓರೆಯಾಗಿ ಜಾರಿ ನೆಲಕ್ಕೆ ಬಿದ್ದಿತು.]
 • ತಾತ್ಪರ್ಯ:ತನ್ನ ತಂದೆಯ ಆಜ್ಞೆಯನ್ನು ನಡೆಸುವ ಕುಲವ್ರತದ ನಿಷ್ಠೆ, ಚಂದ್ರಹಾಸನಿಗೆ ಭಂಗವಾಗುವುದೆಂದು ಆ ನಿಯಮವನ್ನು ಗೌರವಿಸಿ, ಅಲ್ಲಿದ್ದ ಸಕಲ ಸೇವಕರು ಎಲ್ಲರನ್ನೂ ಕಳುಹಿಸಿ ತಾನು ಒಬ್ಬಂಟಿಗನಾಗಿ ಎತ್ತರದ ಮರಗಳು ದಟ್ಟವಾಗಿರವ ವನದಲ್ಲಿ ಪ್ರಸನ್ನೆಯಾಗಿರುವ ಚಂಡಿಕೆಯ ಆಲಯಕೆ ಬರುತ್ತಿದ್ದನು, ಆಗ ಅವನ ಕೈಯಲ್ಲಿ ಇದ್ದ ಗಂದಪುಷ್ಪದ ಪಾತ್ರೆಯು ಓರೆಯಾಗಿ ಜಾರಿ ನೆಲಕ್ಕೆ ಬಿದ್ದಿತು.
 • (ಪದ್ಯ-೪೫)XXIII

ಪದ್ಯ:-:೪೬:[ಸಂಪಾದಿಸಿ]

ಚೀರುತೆ ಪೊಣರ್ದುವು ಬಿಡಾಲಗಳ್ ಪಕ್ಷಿಗಳ್ |
ಕಾರಿದುವು ರುಧಿರಮಂ ಕೂಗಿದುವು ಗುಗೆಗಳ್ |
ಸಾರುತಿಹ ದುರ್ನಿಮಿತ್ತಂಗಳಂ ಕಂಡವಂ ವ್ರತ ಭಂಗಮಪ್ಪುದೆಂದು ||
ಮೀರಿ ನಡೆಯುತ ಮನದೊಳಿದರಿಂದೆಭೀತಿಗಳ್|
ತೋರದಿರವವನಿಯೊಳ್ ಚಂದ್ರಹಾಸಂಗೆನುತೆ |
ಮೂರಂಬಕದೊಳೆಸೆವ ದೇವನರಸಿಯ ಭವನಕಾ ಮದನೈತಂದನು ||46||

ಪದವಿಭಾಗ-ಅರ್ಥ:
ಚೀರುತೆ ಪೊಣರ್ದುವು ಬಿಡಾಲಗಳ್(ಬೆಕ್ಕುಗಳು) ಪಕ್ಷಿಗಳ್ ಕಾರಿದುವು ರುಧಿರಮಂ ಕೂಗಿದುವು ಗೂಗೆಗಳ್ ಸಾರುತಿಹ ದುರ್ನಿಮಿತ್ತಂಗಳಂ ಕಂಡವಂ ವ್ರತ ಭಂಗಂ ಅಪ್ಪುದೆಂದು=[ಮದನನು ಕಾಡಿನಲ್ಲಿ ಬರುತ್ತಿರುವಾಗ, ಬೆಕ್ಕುಗಳು ಚೀರುತ್ತಾ ಕಾದಾಡಿದವು, ಪಕ್ಷಿಗಳು ರಕ್ತವನ್ನು ಕಾರಿದುವು, ಗೂಗೆಗಳು ಕೂಗಿದುವು, ಹೀಗೆ ಸಾರುತ್ತಿರುವ ಅಪಶಕುನಗಳನ್ನು ಕಂಡು ಅವನು, ವ್ರತಭಂಗವು ಆಗುವುದೆಂದು,];; ಮೀರಿ ನಡೆಯುತ ಮನದೊಳು ಇದರಿಂದೆಭೀತಿಗಳ್ ತೋರದಿರವು ಅವನಿಯೊಳ್ ಚಂದ್ರಹಾಸಂಗೆ ಎನುತೆ ಮೂರಂಬಕದೊಳು (ಮೂರು ಅಂಬಕ:ಕಣ್ಣು) ಎಸೆವ ದೇವನರಸಿಯ ಭವನಕೆ ಅ ಮದನನು ಐತಂದನು=[ಆ ನಿಮಿತ್ತಗಳನ್ನು ಮೀರಿ/ ಲೆಕ್ಕಿಸದೆ ಮುಂದೆ ನಡೆಯುತ್ತಾ, ಮನಸ್ಸಿನಲ್ಲಿ ಇದರಿಂದ ಚಂದ್ರಹಾಸನಿಗೆ ಭೀತಿಗಳು/ ಈ ರಾಜ್ಯದಲ್ಲಿ ತೊಂದರೆಗಳು ಬರದೆ ಇರದು ಎನ್ನುತ್ತಾ ಮುಊರಕಣ್ಣಿನಿಂದ ಶೋಬಿಸುವ ದೇವನ ಪತ್ನಿಯ ಭವನಕ್ಕೆ ಅ ಮದನನು ಬಂದನು].
 • ತಾತ್ಪರ್ಯ:ಮದನನು ಕಾಡಿನಲ್ಲಿ ಬರುತ್ತಿರುವಾಗ, ಬೆಕ್ಕುಗಳು ಚೀರುತ್ತಾ ಕಾದಾಡಿದವು, ಪಕ್ಷಿಗಳು ರಕ್ತವನ್ನು ಕಾರಿದುವು, ಗೂಗೆಗಳು ಕೂಗಿದುವು, ಹೀಗೆ ಸಾರುತ್ತಿರುವ ಅಪಶಕುನಗಳನ್ನು ಕಂಡು ಅವನು, ವ್ರತಭಂಗವು ಆಗುವುದೆಂದು,ಆ ನಿಮಿತ್ತಗಳನ್ನು ಮೀರಿ/ ಲೆಕ್ಕಿಸದೆ ಮುಂದೆ ನಡೆಯುತ್ತಾ, ಮನಸ್ಸಿನಲ್ಲಿ ಇದರಿಂದ ಚಂದ್ರಹಾಸನಿಗೆ ಈ ರಾಜ್ಯದಲ್ಲಿ ತೊಂದರೆಗಳು ಬರದೆ ಇರದು ಎನ್ನುತ್ತಾ ಮೂರಕಣ್ಣಿನಿಂದ ಶೋಬಿಸುವ ದೇವ ಶಿವನ ಪತ್ನಿಯ ಭವನಕ್ಕೆ ಅ ಮದನನು ಬಂದನು.
 • (ಪದ್ಯ-೪೬)

ಪದ್ಯ:-:೪೭:[ಸಂಪಾದಿಸಿ]

ಖಳರಂತರಂಗ ಪ್ರವೇಶದ ವಿವೇಕಮಂ |
ಬಳಸಿದರಿಷಡ್ವರ್ಗಮೊತ್ತಿರಿಸಿ ಮುರಿವಂತೆ |
ಪೊಲಬರಿಯದೊಳಪುಗುವ ಮದನನಂ ಮುತ್ರಿ ಕಳುಹಿದೊಡಲ್ಲಿ ಬಂದಡಗಿದ ||
ಕೊಲೆಗಡಿಗ ಚಂಡಾಲರುಗಿದ ಕೈದುಗಳಿಂದೆ |
ಕೆಲಬಲದೊಳಿರ್ದು ಪೊಯ್ದಿರಿದು ಕೆಡಹಿದೊಡೆ ಭೂ |
ತಳಕೆ ಬೀಳುವತ್ತವಂ ಮಾಧವ ಸ್ಮರಣೆಯಿಂದಸುದೊರೆದನಾಕ್ಷಣದೊಳು ||47||

ಪದವಿಭಾಗ-ಅರ್ಥ:
ಖಳರಂತರಂಗ ಪ್ರವೇಶದ ವಿವೇಕಮಂ ಬಳಸಿದ ಅರಿಷಡ್ವರ್ಗಂ ಒತ್ತಿರಿಸಿ ಮುರಿವಂತೆ ಪೊಲಬರಿಯದೆ ಒಳಪುಗುವ ಮದನನಂ ಮುತ್ರಿ ಕಳುಹಿದೊಡೆ ಅಲ್ಲಿ ಬಂದು ಅಡಗಿದ=[ನೀಚರ ಅಂತರಂಗದಲ್ಲಿ ಪ್ರವೇಶಿಸಿದ/ ತೋರಿದ ವಿವೇಕವನ್ನು ಸುತ್ತುವರಿದ ಅರಿಷಡ್ವರ್ಗಗಳು ಅದುಮಿ ನಾಶಪಡಿಸುವಂತೆ, ಮಂದಿನಜಾಡು ತಿಳಿಯದೆ ಒಳಗೆ ಹೋಗುತ್ತಿರುವ ಮದನನನ್ನು, ಮುತ್ರಿ ಕಳುಹಿಸಿದ, ಅಲ್ಲಿ ಬಂದು ಅಡಗಿದ ];; ಕೊಲೆಗಡಿಗರಾದ ಚಂಡಾಲರು ಒರೆಯಿಂದ ಉಗಿದ ಕೈದುಗಳಿಂದೆ ಕೆಲಬಲದೊಳು ಇರ್ದು ಪೊಯ್ದ ಇರಿದು ಕೆಡಹಿದೊಡೆ ಭೂತಳಕೆ ಬೀಳುವತ್ತ ಅವಂ ಮಾಧವ ಸ್ಮರಣೆಯಿಂದ ಅಸುದೊರೆದನು ಆಕ್ಷಣದೊಳು=[ಕೊಲೆಗಡಿಗ ಚಂಡಾಲರು ಉಗಿದ ಆಯುಧಗಳಿಂದ, ಎಡಬಲ ಎರಡೂ ಕಡೆ ಇದ್ದು, ಹೊಡೆದು ತಿವಿದು ಕೆಡಗಿದಾಗ ಮದನನು ಭೂಮಿಗೆ ಬೀಳುತ್ತಾ ಮಾಧವ ಸ್ಮರಣೆಯನ್ನು ಮಾಡುತ್ತಾ ಆಕ್ಷಣದಲ್ಲಿ ಪ್ರಾಣಬಿಟ್ಟನು].
 • ತಾತ್ಪರ್ಯ:ನೀಚರ ಅಂತರಂಗದಲ್ಲಿ ಪ್ರವೇಶಿಸಿದ/ ತೋರಿದ ವಿವೇಕವನ್ನು ಸುತ್ತುವರಿದ ಅರಿಷಡ್ವರ್ಗಗಳು ಅದುಮಿ ನಾಶಪಡಿಸುವಂತೆ, ಮಂದಿನಜಾಡು ತಿಳಿಯದೆ ಒಳಗೆ ಹೋಗುತ್ತಿರುವ ಮದನನನ್ನು, ಮುತ್ರಿ ಕಳುಹಿಸಿದ, ಅಲ್ಲಿ ಬಂದು ಅಡಗಿದ ಕೊಲೆಗಡಿಗ ಚಂಡಾಲರು ಉಗಿದ ಆಯುಧಗಳಿಂದ, ಎಡಬಲ ಎರಡೂ ಕಡೆ ಇದ್ದು, ಹೊಡೆದು ತಿವಿದು ಕೆಡಗಿದಾಗ ಮದನನು ಭೂಮಿಗೆ ಬೀಳುತ್ತಾ ಮಾಧವ ಸ್ಮರಣೆಯನ್ನು ಮಾಡುತ್ತಾ ಆಕ್ಷಣದಲ್ಲಿ ಪ್ರಾಣಬಿಟ್ಟನು.
 • (ಪದ್ಯ-೪೭)

ಪದ್ಯ:-:೪೮:[ಸಂಪಾದಿಸಿ]

ಅವಗಡಿಸಿ ಮದನನಂ ಘಾತುಕರ್ ಚಂಡಿಕಾ |
ಭವನದೊಳ್ ಕೊಂದು ನಿಲ್ಲದೆ ಪೋದರಿತ್ತಲು |
ತ್ಸವದಿಂದೆ ಚಂದ್ರಹಾಸಂ ಕುಂತಳೇಂದ್ರನು ಕಾಣಲಾ ನೃಪನವಂಗೆ ||
ಅವನಿಯಂ ಕೊಟ್ಟರಸುಪಟ್ಟವಂ ಕಟ್ಟಿ ಗಾ|
ಲವನ ಮತದಿಂದೆ ಗಾಂಧರ್ವ ವೈವಾಹದಿಂ |
ಕುವರಿ ಚಂಪಕಮಾಲಿನಿಯನಿತ್ತು ಸತ್ಕರಿಸಿ ಬನಕೆ ತಾಂ ಪೊರಮಟ್ಟನು ||48||

ಪದವಿಭಾಗ-ಅರ್ಥ:
ಅವಗಡಿಸಿ ಮದನನಂ ಘಾತುಕರ್ ಚಂಡಿಕಾ ಭವನದೊಳ್ ಕೊಂದು ನಿಲ್ಲದೆ ಪೋದರು ಇತ್ತಲು ಉತ್ಸವದಿಂದೆ ಚಂದ್ರಹಾಸಂ ಕುಂತಳೇಂದ್ರನು ಕಾಣಲು ಆ ನೃಪನು ಅವಂಗೆ=[ಆಕ್ರಮಿಸಿ ಮೇಲೆಬಿದ್ದು ಮದನನನ್ನು ಕೊಲೆಗಡುಕರು ಚಂಡಿಕಾಲಯದಲ್ಲಿ ಕೊಂದು, ಅಲ್ಲಿ ನಿಲ್ಲದೆ ಹೊರಟುಹೋದರು. ಇತ್ತ ನಗರದಲ್ಲಿ ಸಂಭ್ರಮ, ಸಡಗರದಿಂದ ಚಂದ್ರಹಾಸನು ಕುಂತಳದ ರಾಜನನ್ನು ಕಾಣಲು ಆ ನೃಪನು ಅವನಿಗೆ ]; ಅವನಿಯಂ ಕೊಟ್ಟು ಅರಸುಪಟ್ಟವಂ ಕಟ್ಟಿ ಗಾಲವನ ಮತದಿಂದೆ ಗಾಂಧರ್ವ ವೈವಾಹದಿಂ ಕುವರಿ ಚಂಪಕಮಾಲಿನಿಯನು ಇತ್ತು ಸತ್ಕರಿಸಿ ಬನಕೆ ತಾಂ ಪೊರಮಟ್ಟನು=[ರಾಜ್ಯವನ್ನು ಕೊಟ್ಟು ಅರಸುಪಟ್ಟವನ್ನು ಕಟ್ಟಿ ಗಾಲವನ ಸಲಹೆಯಂತೆ ಗಾಂಧರ್ವವಿವಾಹ ಕ್ರಮದಿಂದ, ಮಗಳು ಚಂಪಕಮಾಲಿನಿಯನ್ನು ಅವನಿಗೆ ಕೊಟ್ಟು ಸತ್ಕರಿಸಿ ರಾಜನು ತಾನು ವನಕ್ಕೆ ಹೊರಟನು.]
 • ತಾತ್ಪರ್ಯ:ಆಕ್ರಮಿಸಿ ಮೇಲೆಬಿದ್ದು ಮದನನನ್ನು ಕೊಲೆಗಡುಕರು ಚಂಡಿಕಾಲಯದಲ್ಲಿ ಕೊಂದು, ಅಲ್ಲಿ ನಿಲ್ಲದೆ ಹೊರಟುಹೋದರು. ಇತ್ತ ನಗರದಲ್ಲಿ ಸಂಭ್ರಮ, ಸಡಗರದಿಂದ ಚಂದ್ರಹಾಸನು ಕುಂತಳದ ರಾಜನನ್ನು ಕಾಣಲು ಆ ನೃಪನು ಅವನಿಗೆ ರಾಜ್ಯವನ್ನು ಕೊಟ್ಟು ಅರಸುಪಟ್ಟವನ್ನು ಕಟ್ಟಿ, ಗಾಲವನ ಸಲಹೆಯಂತೆ ಗಾಂಧರ್ವವಿವಾಹ ಕ್ರಮದಿಂದ ವಿವಾಹಮಾಡಿ ಮಗಳು ಚಂಪಕಮಾಲಿನಿಯನ್ನು ಅವನಿಗೆ ಕೊಟ್ಟು ಸತ್ಕರಿಸಿ ರಾಜನು ತಾನು ವನಕ್ಕೆ ಹೊರಟನು.
 • (ಪದ್ಯ-೪೮)

ಪದ್ಯ:-:೪೯:[ಸಂಪಾದಿಸಿ]

ಬಾಧಿಸುವ ಸುಖದುಃಖದೊಡಲೆನಿಪ ಸಂಸಾರ |
ಸಾಧನವನೆಲ್ಲಮಂ ತೊರೆದು ಸಮ್ಯಗ್ ಜ್ಞಾನ |
ಬೋದಿತದ ಯೋಗಮಂ ಸತಿ ಸಹಿತ ಗಾಲವನನುಜ್ಞೆಯಿಂದೆ ||
ಗೋಧೂಳೀಲಗ್ನದೊಳ್ ಪೊರಮಟ್ಟನಾ ಕುಂತ |
ಳಾಧಿಪನರಣ್ಯವಾಸಕೆ ಬಳಿಕ ಚಂದ್ರಹಾ |
ಸಾಧಿನವಾಯ್ತವನ ಸಂಪದಂ 'ಪುರುಷಸ್ಯ ಭಾಗ್ಯ'ಮೆಂಬುದು ನಿಜಮೆನೆ ||49||

ಪದವಿಭಾಗ-ಅರ್ಥ:
ಬಾಧಿಸುವ ಸುಖದುಃಖದ ಒಡಲು ಎನಿಪ ಸಂಸಾರ ಸಾಧನವನ ಎಲ್ಲಮಂ ತೊರೆದು ಸಮ್ಯಗ್ ಜ್ಞಾನ ಬೋದಿತದ ಯೋಗಮಂ ಸತಿ ಸಹಿತ ಗಾಲವನ ಅನುಜ್ಞೆಯಿಂದೆ=[ಬಾಧಿಸುವ ಸುಖದುಃಖದ ದೇಹ ಎಂಬ ಸಂಸಾರ ಸಾಧನವನೆಲ್ಲವನ್ನೂ, ತೊರೆದು ಸಮ್ಯಗ್ ಜ್ಞಾನ ಬೋದಿತವಾದ ಯೋಗಮವನ್ನು ಸಾದಿಸಲು ಸತಿಸಹಿತ ಗಾಲವನ ಅನುಜ್ಞೆಯಂತೆ];;ಗೋಧೂಳೀ ಲಗ್ನದೊಳ್ ಪೊರಮಟ್ಟನು ಆ ಕುಂತಳಾಧಿಪನು ಅರಣ್ಯವಾಸಕೆ ಬಳಿಕ ಚಂದ್ರಹಾಸ ಅಧಿನವಾಯ್ತು ಅವನ ಸಂಪದಂ 'ಪುರುಷಸ್ಯ ಭಾಗ್ಯ'ಮೆಂಬುದು ನಿಜಮೆನೆ=[ಗೋಧೂಳೀ ಲಗ್ನದಲ್ಲಿ ಆ ಕುಂತಳ ರಾಜನು ಅರಣ್ಯವಾಸಕೆ ಪೊರಟನು. ಬಳಿಕ ಅವನ ಸಂಪತ್ತು ಚಂದ್ರಹಾಸನ ಅಧಿನವಾಯ್ತು. 'ಪುರುಷಸ್ಯ ಭಾಗ್ಯ'ಎಂಬುದು ನಿಜ ಎನ್ನುವಂತೆ ಆಯಿತು.
 • ತಾತ್ಪರ್ಯ:ಬಾಧಿಸುವ ಸುಖದುಃಖದ ದೇಹ ಎಂಬ ಸಂಸಾರ ಸಾಧನವನೆಲ್ಲವನ್ನೂ, ತೊರೆದು ಸಮ್ಯಗ್ ಜ್ಞಾನ ಬೋದಿತವಾದ ಯೋಗಮವನ್ನು ಸಾದಿಸಲು ಸತಿಸಹಿತ ಗಾಲವನ ಅನುಜ್ಞೆಯಂತೆ ಗೋಧೂಳೀ ಲಗ್ನದಲ್ಲಿ ಆ ಕುಂತಳ ರಾಜನು ಅರಣ್ಯವಾಸಕೆ ಪೊರಟನು. ಬಳಿಕ ಅವನ ಸಂಪತ್ತು ಚಂದ್ರಹಾಸನ ಅಧಿನವಾಯ್ತು. 'ಪುರುಷಸ್ಯ ಭಾಗ್ಯ'ಎಂಬುದು ನಿಜ ಎನ್ನುವಂತೆ ಆಯಿತು.
 • ತಾತ್ಪರ್ಯ:
 • (ಪದ್ಯ-೪೯)

ಪದ್ಯ:-:೫೦:[ಸಂಪಾದಿಸಿ]

ಪಟ್ಟದರಸಾಗಲ್ಕೆ ಚಂದ್ರಹಾಸಂ ಬಳಿಕ |
ಪಟ್ಟಣದ ಜನಮರಿಯಲೆಂದು ಸಿಂಗರಿಸಿ ತೋ |
ರ್ಪಟ್ಟ ಗಜಮಸ್ತಕದಮೇಲೆ ನೃಪಸುತೆಸಹಿತ ಪೊರಮಟ್ಟನುತ್ಸವದೊಳು ||
ದಟ್ಟಿಸಿದ ವಾದ್ಯರವ ಮೊದರಿತೀ ವಾರ್ತೆ ಕಿವಿ |
ದಟ್ಟಿದೊಡೆ ದುಷ್ಟಬುದ್ಧಿಗೆ ಮತ್ತೆ ಭೀತಿ ಹೊ |
ಯ್ದಟ್ಟಿತೇನೆಂಬೆನದು ಪೊಸತಲಾ ದೈವಕೃತಮೆಂದು ಸೈವೆರಗಾದನು ||50||

ಪದವಿಭಾಗ-ಅರ್ಥ:
ಪಟ್ಟದ ಅರಸಾಗಲ್ಕೆ ಚಂದ್ರಹಾಸಂ ಬಳಿಕ ಪಟ್ಟಣದ ಜನಂ ಅರಿಯಲೆಂದು ಸಿಂಗರಿಸಿ ತೋರ್ ಪಟ್ಟ ಗಜಮಸ್ತಕದ ಮೇಲೆ ನೃಪಸುತೆ ಸಹಿತ ಪೊರಮಟ್ಟನು ಉತ್ಸವದೊಳು=[ಚಂದ್ರಹಾಸನು ಪಟ್ಟದ ಅರಸಾದನು; ಬಳಿಕ ಪಟ್ಟಣದ ಜನರು ತಿಳಿಯಲೆಂದು ಸಿಂಗರಿಸಿದ ದೊಡ್ಡ ಪಟ್ಟದಾನೆಯ ತಲೆಯ ಮೇಲೆ, ಚಂದ್ರಹಾಸನು ರಾಜಕುಮಾರಿ ಸಹಿತ ಉತ್ಸವದಿಂದ ಮೆರವಣಿಗೆಯಲ್ಲಿ ಹೊರಹೊರಟನು ];; ದಟ್ಟಿಸಿದ ವಾದ್ಯರವಂ ಒದರಿತು ಈ ವಾರ್ತೆ ಕಿವಿದಟ್ಟಿದೊಡೆ ದುಷ್ಟಬುದ್ಧಿಗೆ ಮತ್ತೆ ಭೀತಿ ಹೊಯ್ದಟ್ಟಿತು ಏನೆಂಬೆನದು ಪೊಸತಲಾ ದೈವಕೃತಂ ಎಂದು ಸೈವೆರಗಾದನು=[ಬಾರಿಸುತ್ತಿರುವ ವಾದ್ಯಗಳ ಶಬ್ದ ದೊಡ್ಡದಾಗಿ ಎಲ್ಲೆಡೆ ಹರಡಿತು. ಈ ವಾರ್ತೆ ಕಿವಿಗೆ ಬಡಿದಾಗ, ದುಷ್ಟಬುದ್ಧಿಗೆ ಮತ್ತೆ ಭೀತಿ ಬಡಿಯಿತು. ಈ ದೈವಕೃತವು ಹೊಸತಲಾ! ಎಂದು ಆಸ್ಚರ್ಯಪಟ್ಟನು, ಅದು ಏನು ಹೇಳಲಿ.]
 • ತಾತ್ಪರ್ಯ:ಚಂದ್ರಹಾಸನು ಪಟ್ಟದ ಅರಸಾದನು; ಬಳಿಕ ಪಟ್ಟಣದ ಜನರು ತಿಳಿಯಲೆಂದು ಸಿಂಗರಿಸಿದ ದೊಡ್ಡ ಪಟ್ಟದಾನೆಯ ತಲೆಯ ಮೇಲೆ, ಚಂದ್ರಹಾಸನು ರಾಜಕುಮಾರಿ ಸಹಿತ ಉತ್ಸವದಿಂದ ಮೆರವಣಿಗೆಯಲ್ಲಿ ಹೊರಹೊರಟನು. ಬಾರಿಸುತ್ತಿರುವ ವಾದ್ಯಗಳ ಶಬ್ದ ದೊಡ್ಡದಾಗಿ ಎಲ್ಲೆಡೆ ಹರಡಿತು. ಈ ವಾರ್ತೆ ಕಿವಿಗೆ ಬಡಿದಾಗ, ದುಷ್ಟಬುದ್ಧಿಗೆ ಮತ್ತೆ ಭೀತಿ ಬಡಿಯಿತು. ಈ ದೈವಕೃತವು ಹೊಸತಲಾ! ಎಂದು ಆಸ್ಚರ್ಯಪಟ್ಟನು, ಅದು ಏನು ಹೇಳಲಿ.
 • (ಪದ್ಯ-೫೦)

ಪದ್ಯ:-:೫೧:[ಸಂಪಾದಿಸಿ]

ಗಾಲವನ ಮತದೊಳೆನ್ನ ಕರೆಸದಿಂದು ಭೂ |
ಪಾಲಂ ಕುಳಿಂದ ತನಯಂಗಿಳೆಯನೊಪ್ಪಿಸಿ ವ |
ನಾಲಯಕೆ ತರಳಿದನೆ ಮದನನಿದ್ದೆಗೈದನೆಂದು ಪಲ್ಮೊರೆದು ಮಗನ ||
ಮೇಲೆ ಕೋಪಿಸುತಿರ್ದನನ್ನೆಗಂ ಭ್ರಮರಾರಿ |
ಮಾಲಿನಿವೆರಸಿ ಮಾವನಂ ಕಾಣಲೆಂದು ಶುಂ |
ಡಾಲ ಮಸ್ತಕದಿಂದಮಿಳಿತಂದ ಶಶಿಹಾಸನೆರಗಿದಂ ಸಚಿವನಡಿಗೆ ||51||

ಪದವಿಭಾಗ-ಅರ್ಥ:
ಗಾಲವನ ಮತದೊಳು ಎನ್ನ ಕರೆಸದೆ ಇಂದು ಭೂಪಾಲಂ ಕುಳಿಂದ ತನಯಂಗೆ ಇಳೆಯನು ಒಪ್ಪಿಸಿ ವನಾಲಯಕೆ ತರಳಿದನೆ ಮದನನು ಇದ್ದು ಏಗೈದನು ಎಂದು ಪಲ್ಮೊರೆದು ಮಗನ ಮೇಲೆ ಕೋಪಿಸುತಿರ್ದನು,=[ದುಷ್ಟಬುದ್ಧಿಯು ಸಿಟ್ಟಾದನು: ತನ್ನನ್ನು ಕರೆಸದೆ ಗಾಲವನ ಅಭಿಪ್ರಾಯದಂತೆ ಇಂದು ರಾಜನು ಕುಳಿಂದನ ಮಗನಿಗೆ ರಾಜ್ಯವನ್ನು ಒಪ್ಪಿಸಿ ವನಕ್ಕೆ ಹೋದನೆ! ಮದನನು ಇದ್ದು ಏನು ಮಾಡಿದನು ಎಂದು, ಹಲ್ಲುಕಡಿಯುತ್ತಾ ಮಗನ ಮೇಲೆ ಕೋಪಿಸುತ್ತಿದ್ದನು.];; ಅನ್ನೆಗಂ ಭ್ರಮರಾರಿ ಮಾಲಿನಿ ವೆರಸಿ ಮಾವನಂ ಕಾಣಲೆಂದು ಶುಂಡಾಲ ಮಸ್ತಕದಿಂದಂ ಇಳಿತಂದ ಶಶಿಹಾಸನು ಎರಗಿದಂ ಸಚಿವನಡಿಗೆ=[ಆ ಸಮಯಕ್ಕೆ ಚಂಪಕಮಾಲಿನಿ ಸಹಿತ ಮಾವನನ್ನು ಕಾಣಲು ಆನೆಯ ಮೇಲಿಂದ ಇಳಿದುಬಂದು ಚಂದ್ರಹಾಸನು ಎರಗಿದಂ ಸಚಿವನ ಪಾದಕ್ಕೆ ನಮಸ್ಕರಿಸಿದನು.]
 • ತಾತ್ಪರ್ಯ:ದುಷ್ಟಬುದ್ಧಿಯು ಸಿಟ್ಟಾದನು: ತನ್ನನ್ನು ಕರೆಸದೆ ಗಾಲವನ ಅಭಿಪ್ರಾಯದಂತೆ ಇಂದು ರಾಜನು ಕುಳಿಂದನ ಮಗನಿಗೆ ರಾಜ್ಯವನ್ನು ಒಪ್ಪಿಸಿ ವನಕ್ಕೆ ಹೋದನೆ! ಮದನನು ಇದ್ದು ಏನು ಮಾಡಿದನು ಎಂದು, ಹಲ್ಲುಕಡಿಯುತ್ತಾ ಮಗನ ಮೇಲೆ ಕೋಪಿಸುತ್ತಿದ್ದನು. ಆ ಸಮಯಕ್ಕೆ ಚಂಪಕಮಾಲಿನಿ ಸಹಿತ ಮಾವನನ್ನು ಕಾಣಲು ಆನೆಯ ಮೇಲಿಂದ ಇಳಿದುಬಂದು ಚಂದ್ರಹಾಸನು ಸಚಿವನ ಪಾದಕ್ಕೆ ನಮಸ್ಕರಿಸಿದನು.
 • (ಪದ್ಯ-೫೧)

ಪದ್ಯ:-:೫೨:[ಸಂಪಾದಿಸಿ]

ಕಳಿವರಿವ ಕೋಪದಿಂ ಮಂತ್ರಿ ವಂಶಾಚಾರ |
ಮುಳಿಯಲಾಗದು ಚಂಡಿಕಾರ್ಚನೆಗೆ ನಡೆಯೆಂದು |
ಕಳುಹಿದೊಡೆ ನೀಂ ಮಾಡಿದುಜ್ಜುಗಮಿದೇನೆಂದು ಕೇಳ್ದೊಡಾ ಶಶಿಹಾಸನು ||
ಅಳವಡಿಸಿಕೊಂಡು ನಾಂ ಪೋಗುತಿರೆ ನಡುವೆ ಕುಂ |
ತಳ ರಾಜನರಮನೆಗೆ ತನಗವಸರವನಿತ್ತು |
ತಳರ್ದನೊರ್ವನೆ ನಿನ್ನಮಗನಂಬಿಕಾ ಪೂಜೆಗಿಂತಾಯ್ತು ಬಳಿಕೆಂದನು ||52||

ಪದವಿಭಾಗ-ಅರ್ಥ:
ಕಳಿವರಿವ (ಕಲಿವರಿ:ಮಿತಿಮೀರು,ಅಧಿಕವಾಗು/ಕೆ.ಶಿ.ಕಾರಂತ) ಕೋಪದಿಂ ಮಂತ್ರಿ ವಂಶಾಚಾರಂ ಉಳಿಯಲಾಗದು ಚಂಡಿಕಾರ್ಚನೆಗೆ ನಡೆಯೆಂದು ಕಳುಹಿದೊಡೆ ನೀಂ ಮಾಡಿದ ಉಜ್ಜುಗಮಿದೇನು ಎಂದು ಕೇಳ್ದೊಡೆ ಆ ಶಶಿಹಾಸನು=[ಮಿತಿಮೀರಿದ ಕೋಪದಿಂದ ಮಂತ್ರಿಯು ವಂಶಾಚಾರವನ್ನು ಬಿಡಬಾರದು, ಚಂಡಿಕಾರ್ಚನೆಗೆ ಹೋಗೆಂದು ಕಳುಹಿಸಿದರೆ ನೀನು ಮಾಡಿದ ಕಾರ್ಯವು ಇದೇನು? ಎಂದು ಕೇಳಿದಾಗ ಚಂದ್ರಹಾಸನು];; ಅಳವಡಿಸಿಕೊಂಡು ನಾಂ ಪೋಗುತಿರೆ ನಡುವೆ ಕುಂತಳ ರಾಜನರಮನೆಗೆ ತನಗವಸರವನಿತ್ತು ತಳರ್ದನೊರ್ವನೆ ನಿನ್ನಮಗನಂಬಿಕಾ ಪೂಜೆಗಿಂತಾಯ್ತು ಬಳಿಕೆಂದನು=[ತಾನು ಪೂಜೆಗೆ ದ್ರವ್ಯವನ್ನು ಅಳವಡಿಸಿಕೊಂಡು ಹೋಗುತ್ತಿರಲು, ದಾರಿ ನಡುವೆ ಕುಂತಳ ರಾಜನ ಅರಮನೆಗೆ ತನ್ನನ್ನು ರಾಜಕಾರ್ಯದ ಕೆಲಸವನ್ನು ಕೊಟ್ಟು ನಿನ್ನ ಮಗನು ಅಂಬಿಕಾ ಪೂಜೆಗೆ ಒಬ್ಬನೇ ಹೋದನು, ಹೀಗಾಯಿತು ನಿಮ್ಮಿಂದ ಹೊರಟ ಬಳಿಕ ಎಂದನು.]
 • ತಾತ್ಪರ್ಯ:ಮಿತಿಮೀರಿದ ಕೋಪದಿಂದ ಮಂತ್ರಿಯು ವಂಶಾಚಾರವನ್ನು ಬಿಡಬಾರದು, ಚಂಡಿಕಾರ್ಚನೆಗೆ ಹೋಗೆಂದು ಕಳುಹಿಸಿದರೆ ನೀನು ಮಾಡಿದ ಕಾರ್ಯವು ಇದೇನು? ಎಂದು ಕೇಳಿದಾಗ ಚಂದ್ರಹಾಸನು, ತಾನು ಪೂಜೆಗೆ ದ್ರವ್ಯವನ್ನು ಅಳವಡಿಸಿಕೊಂಡು ಹೋಗುತ್ತಿರಲು, ದಾರಿ ನಡುವೆ ಕುಂತಳ ರಾಜನ ಅರಮನೆಗೆ ತನ್ನನ್ನು ರಾಜಕಾರ್ಯದ ಕೆಲಸವನ್ನು ಕೊಟ್ಟು ನಿನ್ನ ಮಗನು ಅಂಬಿಕಾ ಪೂಜೆಗೆ ಒಬ್ಬನೇ ಹೋದನು, ಹೀಗಾಯಿತು ನಿಮ್ಮಿಂದ ಹೊರಟ ಬಳಿಕ ಎಂದನು.
 • (ಪದ್ಯ-೫೨)

ಪದ್ಯ:-:೫೩:[ಸಂಪಾದಿಸಿ]

ಹಮ್ಮೈಸಿದಂ ದುಷ್ಟಬುದ್ಧಿ ನಯದೊಳಗಳಿಯ |
ನಮ್ಮನೆಗೆ ಬೀಳ್ಕೊಟ್ಟನರಿದರಿದು ಪರಿಹಿಂಸೆ |
ಯಮ್ಮಾಡಿ ಮಾನವಂ ಬಾಳ್ದಪನೆ ದೀಪಮಂಕೆಡಿಸುವ ಪತಂಗದಂತೆ ||
ನಮ್ಮುಪಾಯವೆ ನಮಗಪಾಯಮಂ ತಂದುದೆಂ |
ದೊಮ್ಮೆ ನಿಜ ಸದನಮಂ ಪೊಕ್ಕಾರುಮರಿಯದವೊ |
ಲುಮ್ಮಳಿಸಿ ಶೋಕದಿಂ ಪೊರಮಟ್ಟನೇರಿಳಿದು ಕೋಟೆಯಂ ಕತ್ತಲೆಯೊಳು ||53||

ಪದವಿಭಾಗ-ಅರ್ಥ:
ಹಮ್ಮೈಸಿದಂ ದುಷ್ಟಬುದ್ಧಿ ನಯದೊಳಗೆ ಅಳಿಯನಂ ಮನೆಗೆ ಬೀಳ್ಕೊಟ್ಟನು ಅರಿದರಿದು ಪರಿಹಿಂಸೆಯಂ ಮಾಡಿ ಮಾನವಂ ಬಾಳ್ದಪನೆ ದೀಪಮಂ ಕೆಡಿಸುವ ಪತಂಗದಂತೆ=[ದುಷ್ಟಬುದ್ಧಿಯು ದುಃಕಿತನಾದನು. ವಿನಯದಿಂದ ಅಳಿಯನನ್ನು (ಅರಮನೆಗೆ) ಕಳುಹಿಸಿದನು. "ಅರಿತು ಅರಿತು ಪರಿಹಿಂಸೆಯನ್ನು ಮಾಡಿ ಮಾನವನು ಬಾಳುವನೆ! ದೀಪವನ್ನು ಕೆಡಿಸುವ ಪತಂಗವು ಸಾಯುಂವಂತೆ ಆಗುವುದು";];; ನಮ್ಮ ಉಪಾಯವೆ ನಮಗೆ ಅಪಾಯಮಂ ತಂದುದೆಂದು ಒಮ್ಮೆ ನಿಜ ಸದನಮಂ ಪೆಒಕ್ಕು ಆರುಂ ಆರಿಯದವೊಲು ಉಮ್ಮಳಿಸಿ ಶೋಕದಿಂ ಪೊರಮಟ್ಟನು ಏರಿಳಿದು ಕೋಟೆಯಂ ಕತ್ತಲೆಯೊಳು=[ನಮ್ಮ ತಂತ್ರವೇ ನಮಗೆ ಅಪಾಯವನ್ನು ತಂದಿತು ಎಂದು ಒಮ್ಮೆ ಚಿಂತಿಸಿ; ತನ್ನ ಮನೆಯನ್ನು ಹೊಕ್ಕು ಶೋಕದಿಂದ ಬಿಕ್ಕಳಿಸಿ, ಯಾರೂ ಆರಿಯದದಂತೆ ಕೋಟೆಯನ್ನು ಹತ್ತಿ ಇಳಿದು ಕತ್ತಲೆಯಲ್ಲಿ ಹೊರಹೊರಟನು.]
 • ತಾತ್ಪರ್ಯ:ದುಷ್ಟಬುದ್ಧಿಯು ದುಃಕಿತನಾದನು. ವಿನಯದಿಂದ ಅಳಿಯನನ್ನು (ಅರಮನೆಗೆ) ಕಳುಹಿಸಿದನು. "ಅರಿತು ಅರಿತು ಪರಿಹಿಂಸೆಯನ್ನು ಮಾಡಿ ಮಾನವನು ಬಾಳುವನೆ! ದೀಪವನ್ನು ಕೆಡಿಸುವ ಪತಂಗವು ಸಾಯುಂವಂತೆ ಆಗುವುದು" (ಕವಿಯ ಉದ್ಗಾರ). ದುಷ್ಟಬುದ್ಧಿಯು, ನಮ್ಮ ತಂತ್ರವೇ ನಮಗೆ ಅಪಾಯವನ್ನು ತಂದಿತು ಎಂದು ಒಮ್ಮೆ ಚಿಂತಿಸಿ; ತನ್ನ ಮನೆಯನ್ನು ಹೊಕ್ಕು ಶೋಕದಿಂದ ಬಿಕ್ಕಳಿಸಿ, ಯಾರೂ ಆರಿಯದದಂತೆ ಕೋಟೆಯನ್ನು ಹತ್ತಿ ಇಳಿದು ಕತ್ತಲೆಯಲ್ಲಿ ಹೊರಹೊರಟನು.
 • (ಪದ್ಯ-೫೩)

ಪದ್ಯ:-:೫೩[ಸಂಪಾದಿಸಿ]

ಮೀಂಟುವಗ್ಗದ ಶೋಕದಿಂದಿರದೆ ಪೊರಮಟ್ಟು |
ನಾಂಟುವೊತ್ತುವ ಮುಳ್ಳುಕಲ್ಗಳಂ ಬಗೆಗೊಳದೆ |
ದೀಂಟುಗುಳಿಗಳನರಿಯದೇಳುತ್ತ ತಲೆಗೆದರಿ ಬಾಯ್ಪಿಡುತ್ತೆ ||
ಕೋಂಟೆಗಳ ನೇರಿಳಿದು ಪರಿಖೆಯ ಜಲಂಗಳಂ |
ದಾಂಟಿ ಕತ್ತಲೆಯೊಳೊರ್ವನೆ ಮಂತ್ರಿ ಪೊಳಲಪೊರ |
ದೋಂಟದೆಡೆಯೊಳ್ ನೆಲಸಿದಂಬಿಕಾ ಭವನಮಂ ಸಾರ್ದನದನೇವೇಳ್ಪೆನು ||54||

ಪದವಿಭಾಗ-ಅರ್ಥ:
ಮೀಂಟುವ (ಮೀಟುವ: ಚಿಮ್ಮುವ, ಉಕ್ಕುವ) ಅಗ್ಗದ (ಅಗ್ಗ:ಅಧಿಕ) ಶೋಕದಿಂದ ಇರದೆ ಪೊರಮಟ್ಟು ನಾಂಟುವ ಒತ್ತುವ ಮುಳ್ಳುಕಲ್ಗಳಂ ಬಗೆಗೊಳದೆ ದೀಂಟುಗುಳಿಗಳನು ಅರಿಯದೆ ಏಳುತ್ತ ತಲೆಗೆದರಿ ಬಾಯ್ಪಿಡುತ್ತೆ=[ಉಕ್ಕಿಬರುತ್ತಿರುವ ಅತಿಯಾದ ಶೋಕದಿಂದ ಮನೆಯಲ್ಲಿ ಇರದೆ ಹೊರಹೊರಟು, ನಾಟುವ ಮುಳ್ಳು, ಒತ್ತುವ ಕಲ್ಲುಗಳನ್ನು ಎಣಿಸದೆ, ದಿಣ್ಣೆ,ಕುಳಿಗಳನ್ನು ಗಮನಿಸದೆ ಮುಗ್ಗರಿಸಿ ಏಳುತ್ತ ತಲೆಗೆದರಿಕೊಂಡು ಆಯಾಸದಿಂದ ಬಾಯಿಬಿಡುತ್ತ];; ಕೋಂಟೆಗಳನು ಏರಿಳಿದು ಪರಿಖೆಯ ಜಲಂಗಳಂ ದಾಂಟಿ ಕತ್ತಲೆಯೊಳು ಓರ್ವನೆ ಮಂತ್ರಿ ಪೊಳಲ ಪೊರದೋಂಟದ (ಹೊರತೋಟದ) ಎಡೆಯೊಳ್ ನೆಲಸಿದ ಅಂಬಿಕಾ ಭವನಮಂ ಸಾರ್ದನು ಅದನೇವೇಳ್ಪೆನು=[ಕೋಟೆಗಳನ್ನು ಏರಿಳಿದು ಕಂದಕದ ನೀರನ್ನು ದಾಟಿ ಕತ್ತಲೆಯಲ್ಲಿ ಒಬ್ಬನೆ ಮಂತ್ರಿ ನಗರದ ಹೊರತೋಟದ ಪ್ರದೇಶದಲ್ಲಿ ಇರುವ ಅಂಬಿಕಾಲಯವನ್ನು ತಲುಪಿದನು; ಅದನ್ನು ಏನು ಹೇಳಲಿ.]
 • ತಾತ್ಪರ್ಯ:ದುಷ್ಟಬುದ್ಧಿಯು ಉಕ್ಕಿಬರುತ್ತಿರುವ ಅತಿಯಾದ ಶೋಕದಿಂದ ಮನೆಯಲ್ಲಿ ಇರದೆ ಹೊರಹೊರಟು, ನಾಟುವ ಮುಳ್ಳು, ಒತ್ತುವ ಕಲ್ಲುಗಳನ್ನು ಎಣಿಸದೆ, ದಿಣ್ಣೆ,ಕುಳಿಗಳನ್ನು ಗಮನಿಸದೆ ಮುಗ್ಗರಿಸಿ ಏಳುತ್ತ ತಲೆಗೆದರಿಕೊಂಡು ಆಯಾಸದಿಂದ ಬಾಯಿಬಿಡುತ್ತ ಕೋಟೆಗಳನ್ನು ಏರಿಳಿದು ಕಂದಕದ ನೀರನ್ನು ದಾಟಿ ಕತ್ತಲೆಯಲ್ಲಿ ಒಬ್ಬನೆ ಮಂತ್ರಿ ನಗರದ ಹೊರತೋಟದ ಪ್ರದೇಶದಲ್ಲಿ ಇರುವ ಅಂಬಿಕಾಲಯವನ್ನು ತಲುಪಿದನು; ಅದನ್ನು ಏನು ಹೇಳಲಿ.
 • (ಪದ್ಯ-೫೩)

ಪದ್ಯ:-:೫೫:[ಸಂಪಾದಿಸಿ]

ಪರಿದ ಪೂಮಾಲೆಗಳ ಬಣ್ಣಗೂಳ್ಗಳ ಬಲಿಯ |
ಮೊರದ ಪಳಗೊಳ್ಳಿಗಳ ಭಸ್ಮದೊಡೆದೋಡುಗಳ |
ಮುರಿದ ಗೂಡಂಗಳ ಕಳಲ್ದಶಿಬಿಕೆಗಳ ಚಿತಿಯೊಳ್‍ಬೇವ ಕುಣಪಂಗಳ ||
ತುರುಗಿದೆಲುವಿನ ಜಂಬುಕಾವಳಿಯ ಗೂಗೆಗಳ |
ಬಿರುದನಿಯ ಭೂತ ಭೇತಾಳ ಸಂಕುಲದಡಗಿ |
ನರಕೆಗಳ ಸುಡುಗಾಡೊಳಾ ಮಂತ್ರಿ ಚಂಡಿಕಾಲಯದೆಡೆಗೆ ನಡೆತಂದನು ||55||

ಪದವಿಭಾಗ-ಅರ್ಥ:
ಪರಿದ ಪೂಮಾಲೆಗಳ ಬಣ್ಣಗೂಳ್ಗಳ (ಬಣ್ಣದ, ಕೂಳುಗಳ,ಅನ್ನ) ಬಲಿಯ, ಮೊರದ ಪಳಗೊಳ್ಳಿಗಳ, ಭಸ್ಮದೊಡೆದೋಡುಗಳ, ಮುರಿದ ಗೂಡಂಗಳ, ಕಳಲ್ದಶಿಬಿಕೆಗಳ, ಚಿತಿಯೊಳ್‍ಬೇವ ಕುಣಪಂಗಳ (ಕುಣಪ:ಹೆಣ) =[ಹರಿದ ಹೂವಿನ ಮಾಲೆಗಳ, ಕೆಂಪು ಬಣ್ಣದ ಕೂಳು ಬಲಿಯ, ಬಲಿಯ ವಸ್ತುಗಳನ್ನು ತಂದ ಬಿದುರಿನ ಮೊರದ, ಹಳೆಯ ಉರಿದ ಕೊಳ್ಳಿಗಳ, ಭಸ್ಮದ/ಬೂದಿ ಒಡೆದ ತಲೆಯ ಎಲುಬಿನ ಓಡುಗಳ, ಮುರಿದ ಚಪ್ಪರಗೂಡುಗಳ, ಕಳಚಿ ಬಿದ್ದ ಹೆಣಹೊರುವ ಚಟ್ಟಗಳ, ಚಿತಿಯಲ್ಲಿ ಬೇಯುತ್ತಿರುವ ಹೆಣಗಳ];; ತುರುಗಿದೆಲುವಿನ ಜಂಬುಕಾವಳಿಯ, ಗೂಗೆಗಳ ಬಿರುದನಿಯ, ಭೂತ ಭೇತಾಳ ಸಂಕುಲದ ಅಡಗಿನ (ಅಡಗು:ಮಾಂಸ) ಅರಕೆಗಳ ಸುಡುಗಾಡೊಳು ಆ ಮಂತ್ರಿ ಚಂಡಿಕಾಲಯದೆಡೆಗೆ ನಡೆತಂದನು=[ರಾಶಿಬಿದ್ದ ಎಲುಬಿನ, ನರಿಗಳ ಹಿಂಡಿನ, ಗೂಗೆಗಳ, ಕೆಟ್ಟದೊಡ್ಡ ದನಿಯ ಭೂತ ಭೇತಾಳ ಸಮೂಹದ, ಮಾಂಸ ತುಂಬಿದ ಅರಕೆಗಳ,ಈ ಬಗೆಯ ಸ್ಮಶಾನದಲ್ಲಿ ಆ ಮಂತ್ರಿ ಚಂಡಿಕಾಲಯದ ಕಡೆಗೆ ಬರುತ್ತಿದ್ದನು/ ಬಂದನು.].
 • ತಾತ್ಪರ್ಯ:(ದುಷ್ಟಬುದ್ಧಿಯು ನೆಡೆದು ಬರುತ್ತಿದ್ದ ಸ್ಮಶಾನದ ದಾರಿಯಲ್ಲಿ,) ಹರಿದ ಹೂವಿನ ಮಾಲೆಗಳ, ಕೆಂಪು ಬಣ್ಣದ ಕೂಳು ಬಲಿಯ, ಬಲಿಯ ವಸ್ತುಗಳನ್ನು ತಂದ ಬಿದುರಿನ ಮೊರದ, ಹಳೆಯ ಉರಿದ ಕೊಳ್ಳಿಗಳ, ಭಸ್ಮದ/ಬೂದಿ ಒಡೆದ ತಲೆಯ ಎಲುಬಿನ ಓಡುಗಳ, ಮುರಿದ ಚಪ್ಪರಗೂಡುಗಳ, ಕಳಚಿ ಬಿದ್ದ ಹೆಣಹೊರುವ ಚಟ್ಟಗಳ, ಚಿತಿಯಲ್ಲಿ ಬೇಯುತ್ತಿರುವ ಹೆಣಗಳ, ರಾಶಿಬಿದ್ದ ಎಲುಬಿನ, ನರಿಗಳ ಹಿಂಡಿನ, ಗೂಗೆಗಳ, ಕೆಟ್ಟದೊಡ್ಡ ದನಿಯ ಭೂತ ಭೇತಾಳ ಸಮೂಹದ, ಮಾಂಸ ತುಂಬಿದ ಅರಕೆಗಳ,ಈ ಬಗೆಯ ಸ್ಮಶಾನದಲ್ಲಿ ಆ ಮಂತ್ರಿ ಚಂಡಿಕಾಲಯದ ಕಡೆಗೆ ಬರುತ್ತಿದ್ದನು/ ಬಂದನು.].
 • (ಪದ್ಯ-೫೫)

ಪದ್ಯ:-:೫೫:[ಸಂಪಾದಿಸಿ]

ತಂಡ ತಂಡದ ಭೂತ ವಿತತಿಗಳ್ ತಲೆಗೆದರಿ |
ಕೊಂಡು ಪೆರ್ಮರುಳಂದೆ ಬಂದ ದುಷ್ಪಬುದ್ಧಿಯಂ |
ಕಂಡು ತಾವತಿಪಾತಕಂಗಳಂ ಮಾಡಿದ ಪಿಶಾಚರಗ್ಗಳೆಯರೆಮ್ಮ ||
ಹಿಂಡೊಳೀವನವೊಲಾರುಮಿಲ್ಲಾವ ಪಾಪ ದು |
ದ್ದಂಡವೊ ಹಿರಣ್ಯಕಶಿಪುವಿನೆದೆಯನುರೆ ಬಗಿದ |
ಚಂಡದೈವದ ಪೆಸರನುಸಿರುವನ ದೆಸೆಗಲ್ಲದಳುಕನಿವನೆನುತಿರ್ದುವು ||56||

ಪದವಿಭಾಗ-ಅರ್ಥ:
ತಂಡ ತಂಡದ ಭೂತ ವಿತತಿಗಳ್ ತಲೆಗೆದರಿಕೊಂಡು ಪೆರ್ (ದೊಡ್ಡ) ಮರುಳಂದೆ (ಹುಚ್ಚ) ಬಂದ ದುಷ್ಪಬುದ್ಧಿಯಂ ಕಂಡು ತಾವು ಅತಿಪಾತಕಂಗಳಂ ಮಾಡಿದ ಪಿಶಾಚರು ಅಗ್ಗಳೆಯರು ಎಮ್ಮ ಹಿಂಡೊಳು=[ಅನೇಕ ತಂಡ ತಂಡದ ಭೂತದ ಗುಂಪುಗಳು ತಲೆ ಕೆದರಿಕೊಂಡು ದೊಡ್ಡ ಹುಚ್ಚನಂತೆ ಬಂದ ದುಷ್ಪಬುದ್ಧಿಯನ್ನು ಕಂಡು ತಾವು ಅತಿಪಾಪಕಾರ್ಯವನ್ನು ಮಾಡಿದ ಪಿಶಾಚರು, ಸಮರ್ಥರೂ ಆಗಿದ್ದೇವೆ. ಆದರೆ ನಮ್ಮ ಹಿಂಡಿನಲ್ಲಿ];; ಇವನವೊಲು ಆರುಂ ಇಲ್ಲ ಅವ ಪಾಪದು ಉದ್ದಂಡವೊ ಹಿರಣ್ಯಕಶಿಪುವಿನ ಎದೆಯನು ಉರೆ ಬಗಿದ ಚಂಡದೈವದ ಪೆಸರನು ಉಸಿರುವನ ದೆಸೆಗಲ್ಲದೆ ಅಳುಕನು ಇವನು ಎನುತಿರ್ದುವು=[ಇವನ ಹಾಗೆ ಯಾರೂ ಇಲ್ಲ. ಅವ ಪಾಪದ ಮಹತ್ತೋ, ಹಿರಣ್ಯಕಶಿಪುವಿನ ಎದೆಯನನು ಚೆನ್ನಾಗಿ ಬಗೆದ ಆ ಭಯಂಕರ ದೈವದ ಹೆಸರನ್ನು ಹೇಳುವುದು (ಉಗ್ರನರಸಿಂಹನು ಇವನನ್ನು ಎದುರಿಸಬಲ್ಲನು) ಇವನ ಸ್ಥಿತಿಗೆ ಸರಿಯಾದುದು, ಅದಲ್ಲದೆ ಹೆದರುವವನಲ್ಲ ಇವನು, ಎನ್ನುತ್ತಿದ್ದವು.].
 • ತಾತ್ಪರ್ಯ:ಅನೇಕ ತಂಡ ತಂಡದ ಭೂತದ ಗುಂಪುಗಳು ತಲೆ ಕೆದರಿಕೊಂಡು ದೊಡ್ಡ ಹುಚ್ಚನಂತೆ ಬಂದ ದುಷ್ಪಬುದ್ಧಿಯನ್ನು ಕಂಡು ತಾವು ಅತಿಪಾಪಕಾರ್ಯವನ್ನು ಮಾಡಿದ ಪಿಶಾಚರು, ಸಮರ್ಥರೂ ಆಗಿದ್ದೇವೆ. ಆದರೆ ನಮ್ಮ ಹಿಂಡಿನಲ್ಲಿ ಇವನ ಹಾಗೆ ಯಾರೂ ಇಲ್ಲ. ಅವ ಪಾಪದ ಮಹತ್ತೋ, ಹಿರಣ್ಯಕಶಿಪುವಿನ ಎದೆಯನನು ಚೆನ್ನಾಗಿ ಬಗೆದ ಆ ಭಯಂಕರ ದೈವದ ಹೆಸರನ್ನು ಹೇಳುವುದು (ಉಗ್ರನರಸಿಂಹನು ಇವನನ್ನು ಎದುರಿಸಬಲ್ಲನು) ಇವನ ಸ್ಥಿತಿಗೆ ಸರಿಯಾದುದು, ಅದಲ್ಲದೆ ಹೆದರುವವನಲ್ಲ ಇವನು, ಎನ್ನುತ್ತಿದ್ದವು.].
 • (ಭಯಾನಕ ರಸಕ್ಕೆ ಉದಾಹರಣೆ)
 • (ಪದ್ಯ-೫೬)

ಪದ್ಯ:-:೫೭:[ಸಂಪಾದಿಸಿ]

ಪಾಕಶಾಸನ ತನಯ ಕೇಳ್ ಬಳಿಕ ಮಂತ್ರಿ ಸುತ |
ತೋಕದಿಂದಲ್ಲಿಹ ಮರುಳ್ಗಳಂ ಕಾಣದವಿ |
ವೇಕದಿಂ ಬೇವ ಕುಣಪದ ಚಿತಿಯೊಳುರಿವ ಕಾಷ್ಟಂಗಳು ತೆಗೆದುಕೊಂಡು ||
ಆ ಕಾಳಿಕಾಲಯಕೆ ಬಂದದರ ಬೇಳಕಿನೊಳ್ |
ವ್ಯಾಕೀರ್ಣ ಕೇಶದ ನಿಮಿರ್ದ ಕೈಕಾಲುಗಳ |
ನೇಕಾಯುಧದ ಗಾಯದೊಡಲ ರುಧಿರದ ಪೊನಲ ಸುಕುಮಾರನಂ ಕಂಡನು ||57||

ಪದವಿಭಾಗ-ಅರ್ಥ:
ಪಾಕಶಾಸನ ತನಯ (ಇಂದ್ರನ ಮಗ ಅರ್ಜುನ) ಕೇಳ್ ಬಳಿಕ ಮಂತ್ರಿ ಸುತ ತೋಕದಿಂದ ಅಲ್ಲಿಹ ಮರುಳ್ಗಳಂ ಕಾಣದ ಅವಿವೇಕದಿಂ ಬೇವ ಕುಣಪದ ಚಿತಿಯೊಳು ಉರಿವ ಕಾಷ್ಟಂಗಳು ತೆಗೆದುಕೊಂಡು=[ಅರ್ಜುನನೇ ಕೇಳು, ಬಳಿಕ ಮಂತ್ರಿಯು ಮಗನ ಸತ್ತ ಶೋಕದಿಂದ ಅಲ್ಲಿರುವ ಪ್ರೇತ ಪಿಶಾಚಿಗಳನ್ನು ಕಾಣದೆ ಅವಿವೇಕದಿಂದ ಬೇಯುತ್ತಿರುವ ಹೆಣದ ಚಿತೆಯಲ್ಲಿ ಉರಿಯುತ್ತಿರುವ ಕಟ್ಟಿಗೆಗಳನ್ನು ತೆಗೆದುಕೊಂಡು];; ಆ ಕಾಳಿಕಾಲಯಕೆ ಬಂದು ಅದರ ಬೇಳಕಿನೊಳ್ ವ್ಯಾಕೀರ್ಣ (ಚದರು, ಹರಡು) ಕೇಶದ ನಿಮಿರ್ದ ಕೈಕಾಲುಗಳ ಅನೇಕ ಆಯುಧದ ಗಾಯದ ಒಡಲ ರುಧಿರದ ಪೊನಲ ಸುಕುಮಾರನಂ ಕಂಡನು=[ಆ ಕಾಳಿಕಾಲಯಕ್ಕೆ ಬಂದು, ಅದರ ಬೇಳಕಿನಲ್ಲಿ ಚದುರಿದ ತಲೆಕೂದಲಿನ ನಿಮಿರಿ ಕಟ್ಟಿಗೆಯಂತಾದ ಕೈಕಾಲುಗಳನ್ನೂ ಅನೇಕ ಆಯುಧದ ಗಾಯದದೇಹವನ್ನೂ, ರಕ್ತದ ಹೊಳೆಯನ್ನೂ, ಅದರಲ್ಲಿ ತನ್ನ ಮಗನನ್ನೂ ಕಂಡನು].
 • ತಾತ್ಪರ್ಯ: ಅರ್ಜುನನೇ ಕೇಳು, ಬಳಿಕ ಮಂತ್ರಿಯು ಮಗನ ಸತ್ತ ಶೋಕದಿಂದ ಅಲ್ಲಿರುವ ಪ್ರೇತ ಪಿಶಾಚಿಗಳನ್ನು ಕಾಣದೆ ಅವಿವೇಕದಿಂದ ಬೇಯುತ್ತಿರುವ ಹೆಣದ ಚಿತೆಯಲ್ಲಿ ಉರಿಯುತ್ತಿರುವ ಕಟ್ಟಿಗೆಗಳನ್ನು ತೆಗೆದುಕೊಂಡು ಆ ಕಾಳಿಕಾಲಯಕ್ಕೆ ಬಂದು, ಅದರ ಬೇಳಕಿನಲ್ಲಿ ಚದುರಿದ ತಲೆಕೂದಲಿನ ನಿಮಿರಿ ಕಟ್ಟಿಗೆಯಂತಾದ ಕೈಕಾಲುಗಳನ್ನೂ ಅನೇಕ ಆಯುಧದ ಗಾಯದದೇಹವನ್ನೂ, ರಕ್ತದ ಹೊಳೆಯನ್ನೂ, ಅದರಲ್ಲಿ ತನ್ನ ಮಗನನ್ನೂ ಕಂಡನು.
 • (ಭೀಭತ್ಸ ರಸಕ್ಕೆ ಉದಾಹರಣೆ)
 • (ಪದ್ಯ-೫೭)

ಪದ್ಯ:-:೫೮:[ಸಂಪಾದಿಸಿ]

ಉನ್ನಿಸಿದ ನಿಜ ಮನೋರಥ ಮುಡಿದೊರಗಿದಂತೆ |
ತನ್ನ ಕುಲತರು ಮುರಿದು ಬಿದ್ದಂತೆ ಸೌಭಾಗ್ಯ |
ದುನ್ನತಪ್ರಾಸಾದಮೊರ್ಗುಡಿಸಿ ಕೆಡೆದಂತೆ ಮುರಿದ ಮೀಸೆಗಳ ಮೊಗದ |
ಬಿನ್ನಣದ ಬಿಟ್ಟಕಂಗಳ ಬಿಗಿದ ಪುರ್ಬುಗಳ |
ಕೆನ್ನೀರೊಳದ್ದ ಕೇಶದ ಶೋಣಿತಾಂಬರದ |
ಭಿನ್ನಮಾದವಯವದ ನಂದನಂ ಕಾತ್ಯಾಯಿನಿಯ ಮುಂದೆ ಮಡಿದಿರ್ದನು ||58||

ಪದವಿಭಾಗ-ಅರ್ಥ:
ಉನ್ನಿಸಿದ (ತೀರ್ಮಾನಿಸಿದ, ನೆನೆಯುತ್ತಿದ್ದ) ನಿಜ ಮನೋರಥಂ ಉಡಿದು ಒರಗಿದಂತೆ ತನ್ನ ಕುಲತರು ಮುರಿದು ಬಿದ್ದಂತೆ ಸೌಭಾಗ್ಯದ ಉನ್ನತಪ್ರಾಸಾದಂ ಒರ್ಗುಡಿಸಿ ಕೆಡೆದಂತೆ ಮುರಿದ ಮೀಸೆಗಳ ಮೊಗದ=[ದುಷ್ಟಬುದ್ಧಿಯು ತನ್ನ ಮಗ ಬಿದ್ದಿರುವುದನ್ನು ಕಾಣುತ್ತಾನೆ: ಬಯಸಿದ ತನ್ನ ಆಸೆಯು ಹುಡಿಯಾಗಿ ಬಿದ್ದಂತೆ, ತನ್ನ ವಂಶವೃಕ್ಷವು ಮುರಿದು ಬಿದ್ದಂತೆ, ಸೌಭಾಗ್ಯದ ಉನ್ನತ ಸೌಧವು ಒಲೆದು ಕೆಡವಿದಹಾಗೆ, ತಿರುಚಿಸಿದ ಮೀಸೆಗಳ, ಮೊಗದ];; ಬಿನ್ನಣದ ಬಿಟ್ಟಕಂಗಳ ಬಿಗಿದ ಪುರ್ಬುಗಳ ಕೆನ್ನೀರೊಳದ್ದ ಕೇಶದ ಶೋಣಿತಾಂಬರದ ಭಿನ್ನಮಾದವಯವದ ನಂದನಂ ಕಾತ್ಯಾಯಿನಿಯ ಮುಂದೆ ಮಡಿದಿರ್ದನು=[ಬಿನ್ನಾಣದ, ಬಿಟ್ಟಕಣ್ಣುಗಳ, ಬಿಗಿದ ಹುಬ್ಬುಗಳ, ರಕ್ತದಲ್ಲಿ ಅದ್ದಿದ ತಲೆಕೂದಲ, ರಕ್ತಮಯವಾದ ಬಟ್ಟೆಯ, ತುಂಡಾದ ಅವಯವದ, ಹೀಗಿದ್ದ ತನ್ನ ಮಗನು ಕಾತ್ಯಾಯಿನಿ ದೇವಿಯ ಮುಂದೆ ಮರಣಬೊಂದಿದ್ದನು.]
 • ತಾತ್ಪರ್ಯ:ದುಷ್ಟಬುದ್ಧಿಯು ತನ್ನ ಮಗ ಮಡಿದು ಬಿದ್ದಿರುವುದನ್ನು ಕಾಣುತ್ತಾನೆ: ಬಯಸಿದ ತನ್ನ ಆಸೆಯು ಹುಡಿಯಾಗಿ ಬಿದ್ದಂತೆ, ತನ್ನ ವಂಶವೃಕ್ಷವು ಮುರಿದು ಬಿದ್ದಂತೆ, ಸೌಭಾಗ್ಯದ ಉನ್ನತ ಸೌಧವು ಒಲೆದು ಕೆಡವಿದಹಾಗೆ, ತಿರುಚಿಸಿದ ಮೀಸೆಗಳ, ಮೊಗದ ಸೊಗಸಿನ, ಬಿಟ್ಟಕಣ್ಣುಗಳ, ಬಿಗಿದ ಹುಬ್ಬುಗಳ, ರಕ್ತದಲ್ಲಿ ಅದ್ದಿದ ತಲೆಕೂದಲ, ರಕ್ತಮಯವಾದ ಬಟ್ಟೆಯ, ತುಂಡಾದ ಅವಯವದ, ಹೀಗಿದ್ದ ತನ್ನ ಮಗನು ಕಾತ್ಯಾಯಿನಿ ದೇವಿಯ ಮುಂದೆ ಮರಣಬೊಂದಿದ್ದನು.
 • (ಕರುಣ ಮತ್ತು ಭಯಾನಕ ರಸಕ್ಕೆ ಉದಾಹರಣೆ)
 • (ಪದ್ಯ-೫೮)

ಪದ್ಯ:-:೫೯:[ಸಂಪಾದಿಸಿ]

ಕಯ್ಯೊಳಿಹ ಕಾಷ್ಠಂಗಳಂ ಬಿಸುಟು ತನು ಭವನ |
ಮೆಯ್ಯ ಗಾಯಂಗಳಂ ತಡಹಿ ತಕ್ಕೈಸಿ ಮಗು |
ಳೊಯ್ಯನೊಯ್ಯನೆ ಕುಳ್ಳಿರಿಸಿ ಮೊಗಕೆ ಮೊಗವಿಟ್ಟು ಚಂಬಿಸಿ ಕುಮಾರ ನಿನ್ನ
ಅಯ್ಯನಾಂ ಬಂದೆನೇಳೈ ತಂದೆ ನಾಡ ನಾ |
ರಯ್ಯಬೇಡವೆ ಕಂದ ಕುಂತಳಾಧೀಶನೇ |
ಗೆಯ್ಯ ಹೇಳಿದನೆನಗೆ ವಿವರಿಸದೆ ಸುಮ್ಮನಿರ್ದಪೆಯೆಂದೊರಲ್ದನವನು ||59||

ಪದವಿಭಾಗ-ಅರ್ಥ:
ಕಯ್ಯೊಳಿಹ ಕಾಷ್ಠಂಗಳಂ ಬಿಸುಟು ತನುಭವನ (ಮಗ) ಮೆಯ್ಯ ಗಾಯಂಗಳಂ ತಡಹಿ ತಕ್ಕೈಸಿ ಮಗುಳು ಒಯ್ಯನೊಯ್ಯನೆ ಕುಳ್ಳಿರಿಸಿ ಮೊಗಕೆ ಮೊಗವಿಟ್ಟು ಚಂಬಿಸಿ ಕುಮಾರ ನಿನ್ನ=[ದುಷ್ಟಬುದ್ಧಿಯು ತನ್ನ ಕಯ್ಯಲ್ಲಿದ್ದ ಉರಿಯುವ ಕಟ್ಟಿಗೆಗಳನ್ನು ಬಿಸುಟು, ಮಗನ ಮಯ್ಯಲ್ಲಿದ್ದ ಗಾಯಗಳನ್ನು ತಡಗಿ, ಉಪಚರಿಸಿ, ಮತ್ತೆ ಮೆಲ್ಲಮೆಲ್ಲನೆ ಕುಳ್ಳಿರಿಸಿ, ಮುಖಕ್ಕೆ ಮುಖವಿಟ್ಟು, ಚಂಬಿಸಿ ಕುಮಾರ ನಿನ್ನ];;ಅಯ್ಯ ನಾಂ ಬಂದೆನು ಏಳೈ ತಂದೆ ನಾಡನಾರಯ್ಯ ಬೇಡವೆ ಕಂದ ಕುಂತಳಾಧೀಶನು ಏಗೆಯ್ಯ ಹೇಳಿದನು ಎನಗೆ ವಿವರಿಸದೆ ಸುಮ್ಮನಿರ್ದಪೆ ಎಂದು ಒರಲ್ದನು ಅವನು=[ತಂದೆ ನಾನು ಬಂದಿರುವೆನು, ಏಳಪ್ಪಾ, ತಂದೆ, (ಪ್ರೀತಿಯಿಂದ ಮಗನೇ) ನಾಡನ್ನು ಪಾಲಿಸಬೇಡವೆ! ಕಂದ ಕುಂತಳ ರಾಜನು ಏನು ಮಾಡಲು ಹೇಳಿದನು, ನನಗೆ ವಿವರಿಸದೆ ಸುಮ್ಮನಿರುವೆ, ಎಂದು ಅವನು ಅತ್ತನು].
 • ತಾತ್ಪರ್ಯ:ದುಷ್ಟಬುದ್ಧಿಯು ತನ್ನ ಕಯ್ಯಲ್ಲಿದ್ದ ಉರಿಯುವ ಕಟ್ಟಿಗೆಗಳನ್ನು ಬಿಸುಟು, ಮಗನ ಮಯ್ಯಲ್ಲಿದ್ದ ಗಾಯಗಳನ್ನು ತಡಗಿ, ಉಪಚರಿಸಿ, ಮತ್ತೆ ಮೆಲ್ಲಮೆಲ್ಲನೆ ಕುಳ್ಳಿರಿಸಿ, ಮುಖಕ್ಕೆ ಮುಖವಿಟ್ಟು, ಚಂಬಿಸಿ, ಕುಮಾರ, ನಿನ್ನ ತಂದೆ ನಾನು ಬಂದಿರುವೆನು, ಏಳಪ್ಪಾ, ತಂದೆ, (ಪ್ರೀತಿಯಿಂದ ಮಗನೇ) ನಾಡನ್ನು ಪಾಲಿಸಬೇಡವೆ! ಕಂದ ಕುಂತಳ ರಾಜನು ಏನು ಮಾಡಲು ಹೇಳಿದನು, ನನಗೆ ವಿವರಿಸದೆ ಸುಮ್ಮನಿರುವೆ, ಎಂದು ಅವನು ಅತ್ತನು.
 • (ಕರುಣ ರಸಕ್ಕೆ ಉದಾಹರಣೆ)
 • (ಪದ್ಯ-೫೯)

ಪದ್ಯ:-:೬೦:[ಸಂಪಾದಿಸಿ]

ಬಂದನಿದೆ ಶಶಿಹಾಸಗನುಜೆಯಂ ಕೊಡು ವಿಪ್ರ |
ವೃಂದಮಂ ತಣಿಸು ಬಹುವಿಧದಿಂದೆ ನಾಂ ಬೈದೆ ||
ನೆಂದು ಮುನಿದಿರಬೇಡ ವೈಷ್ಣವದ್ರೋಹದಿಂದೆನಗಿಂತುಟಾಗದಿಹುದೆ ||
ಕಂದ ನೀ ನಚ್ಯುತ ಪರಾಯಣಂ ಶಿವ ಪೂಜ |
ಕಂ ದೇವ ಗುರು ಧರಾಮರಸೇವಕಂ ಮೋಸ |
ದಿಂದಳಿವುದುಚಿತವೆ ಮದನ ತನ್ನ ಮರಿಯಾನೆ ಹಾ ಯೆಂದೊರಲ್ದನಂದು ||60||

ಪದವಿಭಾಗ-ಅರ್ಥ:
ಬಂದನು ಇದೆ ಶಶಿಹಾಸಗೆ ಅನುಜೆಯಂ ಕೊಡು ವಿಪ್ರ ವೃಂದಮಂ ತಣಿಸು ಬಹುವಿಧದಿಂದೆ ನಾಂ ಬೈದೆನೆಂದು ಮುನಿದಿರಬೇಡ ವೈಷ್ಣವದ್ರೋಹದಿಂದ ಎನಗೆ ಇಂತುಟಾಗದಿಹುದೆ=[ದುಷ್ಟಬುದ್ಧಿಯು ತನ್ನ ತಪ್ಪನ್ನು ನೆನೆದು ಹಲುಬುವನು:(ಚಂದ್ರಹಾಸನು) ಬಂದನು ಇದೆ, ಚಂದ್ರಹಾಸನಿಗೆ ತಂಗಿಯನ್ನು ಕೊಡು; ವಿಪ್ರ ಸಮೂಹವನ್ನು ದಾನಕೊಟ್ಟು ತಣಿಸು; ನಾನಾರೀತಿಯಿಂದದ ನಾನು ಬೈದೆನೆಂದು ಸಿಟ್ಟಿನಲ್ಲಿರಬೇಡ; ವೈಷ್ಣವದ್ರೋಹದಿಂದ ನನಗೆ ಹೀಗೆ ಆಗದಿಹುದೆ?];; ಕಂದ ನೀ ನಚ್ಯುತ ಪರಾಯಣಂ ಶಿವ ಪೂಜ ಕಂದೇವ ಗುರು ಧರಾಮರ (ಧರೆಯ ಅಮರರು:ವಿಪ್ರರು) ಸೇವಕಂ ಮೋಸದಿಂದ ಅಳಿವುದು ಉಚಿತವೆ ಮದನ ತನ್ನ ಮರಿಯಾನೆ ಹಾ ಯೆಂದು ಒರಲ್ದನು ಅಂದು=[ಕಂದ, ನೀನು ಅಚ್ಯುತನ ಭಕ್ತನು, ಶಿವಪೂಜಕನು; ದೇವ ಗುರು ವಿಪ್ರರಸೇವಕನು; ಮೋಸದಿಂದ ಸಾಯುವುದು ನ್ಯಾಯವೆ? ಮದನ ತನ್ನ ಮರಿಯಾನೆ (ಮುದ್ದಿನ ಮಗ) ಹಾ! ಯೆಂದು ಅಂದು ಗೋಳಿಟ್ಟನು].
 • ತಾತ್ಪರ್ಯ:ದುಷ್ಟಬುದ್ಧಿಯು ತನ್ನ ತಪ್ಪನ್ನು ನೆನೆದು ಹಲುಬುವನು:(ಚಂದ್ರಹಾಸನು) ಬಂದನು ಇದೆ, ಚಂದ್ರಹಾಸನಿಗೆ ತಂಗಿಯನ್ನು ಕೊಡು; ವಿಪ್ರ ಸಮೂಹವನ್ನು ದಾನಕೊಟ್ಟು ತಣಿಸು; ನಾನಾರೀತಿಯಿಂದದ ನಾನು ಬೈದೆನೆಂದು ಸಿಟ್ಟಿನಲ್ಲಿರಬೇಡ; ವೈಷ್ಣವದ್ರೋಹದಿಂದ ನನಗೆ ಹೀಗೆ ಆಗದಿಹುದೆ? ಕಂದ, ನೀನು ಅಚ್ಯುತನ ಭಕ್ತನು, ಶಿವಪೂಜಕನು; ದೇವ ಗುರು ವಿಪ್ರರಸೇವಕನು; ಮೋಸದಿಂದ ಸಾಯುವುದು ನ್ಯಾಯವೆ? ಮದನ ತನ್ನ ಮರಿಯಾನೆ (ಮುದ್ದಿನ ಮಗ) ಹಾ! ಯೆಂದು ಅಂದು ಗೋಳಿಟ್ಟನು.
 • (ಕರುಣ ರಸಕ್ಕೆ ಉದಾಹರಣೆ)
 • (ಪದ್ಯ-೬೦)

ಪದ್ಯ:-:೬೧:[ಸಂಪಾದಿಸಿ]

ಮಿತ್ರ ಪ್ರಿಯಂ ರಾಜತೋಷಿತಂ ಮಂಗಳ ಚ |
ರಿತ್ರಂ ಬುಧಾಶ್ರಯಂ ಗುರುಭಾವಿ ಕವಿನುತ ವಿ |
ಚತ್ರಗುಣಿ ಮಂದರನಿಭಂ ಭೋಗಿ ಸಂತತಂ ಧ್ವಜವಜ್ರಶುಭ ಚರಣನು ||
ಪುತ್ರ ನಿನಗಪ್ಪುದು ನವಗ್ರಹ ಸ್ಥಿತಿಗಳ್ ಪ |
ರಿತ್ರಾಣಮಂ ಮಾಡಿದವರಿಲ್ಲ ನಿನಗಾನೆ |
ಶತ್ರುವಾದೆಂ ಮಗನೆ ಹಾಯೆಂದು ಹಲುಬಿದಂ ಮಂತ್ರಿ ಶೋಕಾರ್ತನಾಗಿ ||61|

ಪದವಿಭಾಗ-ಅರ್ಥ:
ಮಿತ್ರ ಪ್ರಿಯಂ ರಾಜತೋಷಿತಂ ಮಂಗಳ ಚರಿತ್ರಂ ಬುಧಾಶ್ರಯಂ ಗುರುಭಾವಿ ಕವಿನುತ ವಿಚತ್ರಗುಣಿ ಮಂದರನಿಭಂ ಭೋಗಿ ಸಂತತಂ ಧ್ವಜವಜ್ರಶುಭ ಚರಣನು=[ದುಷ್ಟಬುದ್ಧಿಯು ಮಗನ ಗುಣಗಳನ್ನು ಹೊಗಳುವನು:ಮದನ ನೀನು ಮಿತ್ರ ಪ್ರಿಯನು, ರಾಜನುನಿಂದ ಸಂತೋಷ ಪಡೆದವನು; ಉತ್ತಮ ನಡತೆಯವನು; ಬುಧರಿಗೆ ಆಶ್ರಯ ಕೊಟ್ಟವನು; ಗುರುಗಳಿಂದ ಕವಿಗಳಿಂದ ಹೊಗಳಿಕೆ ಪಡೆದವನು; ವಿಶೇಷ ಗುಣವುಳ್ಳವನು; ಮಂದರನಂತೆ(ಅಚ್ಯುತ?) ಭೋಗಿ; ಯಾವಾಗಲೂ ಧ್ವಜವಜ್ರ ಶುಭಗರುತು ಇರುವ ಪಾದ ಉಳ್ಳವನು;];;ಪುತ್ರ ನಿನಗೆ ಅಪ್ಪುದು (ಓಳಿತು ಮಾಡುವರು) ನವಗ್ರಹ ಸ್ಥಿತಿಗಳ್ ಪರಿತ್ರಾಣಮಂ ಮಾಡಿದವರಿಲ್ಲ ನಿನಗಾನೆ ಶತ್ರುವಾದೆಂ ಮಗನೆ ಹಾಯೆಂದು ಹಲುಬಿದಂ ಮಂತ್ರಿ ಶೋಕಾರ್ತನಾಗಿ=[ಮಗನೇ ನಿನಗೆ ನವಗ್ರಹ ಸ್ಥಿತಿಗಳು ಒಳ್ಳೆಯವರು, ಕೆಡುಕು ಮಾಡಿದ ಗ್ರಹಗಳು ಇಲ್ಲ; ನಿನಗೆ ನಾನೆ ಶತ್ರುವಾದೆನು ಮಗನೆ! ಹಾ! ಯೆಂದು ಶೋಕದಿಂದ ನೊಂದು ಮಂತ್ರಿ ಹಲುಬಿದನು].
 • ತಾತ್ಪರ್ಯ:ದುಷ್ಟಬುದ್ಧಿಯು ಮಗನ ಗುಣಗಳನ್ನು ಹೊಗಳುವನು:ಮದನ ನೀನು ಮಿತ್ರ ಪ್ರಿಯನು, ರಾಜನುನಿಂದ ಸಂತೋಷ ಪಡೆದವನು; ಉತ್ತಮ ನಡತೆಯವನು; ಬುಧರಿಗೆ ಆಶ್ರಯ ಕೊಟ್ಟವನು; ಗುರುಗಳಿಂದ ಕವಿಗಳಿಂದ ಹೊಗಳಿಕೆ ಪಡೆದವನು; ವಿಶೇಷ ಗುಣವುಳ್ಳವನು; ಮಂದರನಂತೆ(ಅಚ್ಯುತ?) ಭೋಗಿ; ಯಾವಾಗಲೂ ಧ್ವಜವಜ್ರ ಶುಭಗರುತು ಇರುವ ಪಾದ ಉಳ್ಳವನು; ಮಗನೇ ನಿನಗೆ ನವಗ್ರಹ ಸ್ಥಿತಿಗಳು ಒಳ್ಳೆಯವರು, ಕೆಡುಕು ಮಾಡಿದ ಗ್ರಹಗಳು ಇಲ್ಲ; ನಿನಗೆ ನಾನೆ ಶತ್ರುವಾದೆನು ಮಗನೆ! ಹಾ! ಯೆಂದು ಶೋಕದಿಂದ ನೊಂದು ಮಂತ್ರಿ ಹಲುಬಿದನು.
 • (ಕರುಣ ರಸಕ್ಕೆ ಉದಾಹರಣೆ)
 • (ಪದ್ಯ-೬೧)

ಪದ್ಯ:-:೬೨:[ಸಂಪಾದಿಸಿ]

ಕೆಂಬನಿಗಳರುಣಾಂಬುವಂ ತೊಳೆಯೆ ಮುಂಡಾಡಿ |
ಪಂಬಲಿಸಿ ಹಲುಬಿದಂ ಮರುಗಿ ತನ್ನಿಂದಳಿದ |
ನೆಂಬಳಲ್‍ಮಿಗೆ ಮಂತ್ರಿ ಸೈರಿಸದೆ ಕೆಲ ಬಲದ ಕಂಬಂಗಳಂ ಪಾಯಲು ||
ಕುಂಬಳದ ಕಾಯಂತೆ ಚಿಪ್ಪಾಗಿ ನಿಜಮಸ್ತ |
ಕಂ ಬಿರಿದು ಬಿದ್ದ ನುರ್ವಿಗೆ ಪೋದುದಸು ಕಾಯ |
ದಿಂ ಬಳಿಕ ನಂದಿದ ಸೊಡರ್ಗಳೆನೆ ಮೃತರಾಗಿ ಸುತತಾತರಿರುತಿರ್ದರು ||62||

ಪದವಿಭಾಗ-ಅರ್ಥ:
ಕೆಂಬನಿಗಳು ಅರುಣಾಂಬುವಂ ತೊಳೆಯೆ ಮುಂಡಾಡಿ ಪಂಬಲಿಸಿ ಹಲುಬಿದಂ ಮರುಗಿ ತನ್ನಿಂದ ಅಳಿದನೆಂಬ ಅಳಲ್‍ ಮಿಗೆ ಮಂತ್ರಿ ಸೈರಿಸದೆ ಕೆಲ ಬಲದ ಕಂಬಂಗಳಂ ಪಾಯಲು=[ದುಷ್ಟಬುದ್ಧಿಯ ಕಣ್ಣೀರು ಮಗನ ರಕ್ತವನ್ನು ತೊಳೆಯುತ್ತಿರಲು, ಮುದ್ದಾಡಿ, ಹಂಬಲಿಸಿ, ಹಲುಬಿದನು/ಗೋಳಿಟ್ಟನು; ದುಃಖದಿಂದ ತನ್ನಿಂದ ಮಗನು ಸತ್ತನೆಂದು ದುಃಖವು ಮಿತಿಮೀರಲು, ಮಂತ್ರಿ ಸಹಿಸಲಾರದೆ ಅಕ್ಕಪಕ್ಕದಲ್ಲಿದ್ದ ಕಂಬಗಳನ್ನು ಹಾಯಲು/ ತಲೆಯನ್ನು ಅಪ್ಪಳಿಸಲು,];; ಕುಂಬಳದ ಕಾಯಂತೆ ಚಿಪ್ಪಾಗಿ ನಿಜ ಮಸ್ತಕಂ ಬಿರಿದು ಬಿದ್ದನು ಉರ್ವಿಗೆ (ನೆಲ,ಭೂಮಿಗೆ) ಪೋದುದು ಅಸು (ಪ್ರಾಣ) ಕಾಯದಿಂ ಬಳಿಕ ನಂದಿದ ಸೊಡರ್ಗಳು ಎನೆ ಮೃತರಾಗಿ ಸುತ ತಾತರು ಇರುತಿರ್ದರು=[ಕುಂಬಳದ ಕಾಯಿಯಂತೆ ಚಿಪ್ಪಾಗಿ/ ಹೋಳಾಗಿ ಅವನ ತಲೆಬಿರಿದು ನೆಲಕ್ಕೆ ಬಿದ್ದನು. ಅವನ ಪ್ರಾಣ ದೇಹದಿಂದ ಹೋಯಿತು. ಅ ಬಳಿಕ ಮಗತಂದೆಯರು ನಂದಿದ ದೀಪಗಳು ಎನ್ನುವಂತೆ ಮೃತರಾಗಿ ಇರುತಿದ್ದರು ].
 • ತಾತ್ಪರ್ಯ:ದುಷ್ಟಬುದ್ಧಿಯ ಕಣ್ಣೀರು ಮಗನ ರಕ್ತವನ್ನು ತೊಳೆಯುತ್ತಿರಲು, ಮುದ್ದಾಡಿ, ಹಂಬಲಿಸಿ, ಹಲುಬಿದನು/ಗೋಳಿಟ್ಟನು; ದುಃಖದಿಂದ ತನ್ನಿಂದ ಮಗನು ಸತ್ತನೆಂದು ದುಃಖವು ಮಿತಿಮೀರಲು, ಮಂತ್ರಿ ಸಹಿಸಲಾರದೆ ಅಕ್ಕಪಕ್ಕದಲ್ಲಿದ್ದ ಕಂಬಗಳನ್ನು ಹಾಯಲು/ ತಲೆಯನ್ನು ಅಪ್ಪಳಿಸಲು, ಕುಂಬಳದ ಕಾಯಿಯಂತೆ ಚಿಪ್ಪಾಗಿ/ ಹೋಳಾಗಿ ಅವನ ತಲೆಬಿರಿದು ನೆಲಕ್ಕೆ ಬಿದ್ದನು. ಅವನ ಪ್ರಾಣ ದೇಹದಿಂದ ಹೋಯಿತು. ಅ ಬಳಿಕ ಮಗತಂದೆಯರು ನಂದಿದ ದೀಪಗಳು ಎನ್ನುವಂತೆ ಮೃತರಾಗಿ ಇರುತಿದ್ದರು.
 • (ಕರುಣ ರಸಕ್ಕೆ ಉದಾಹರಣೆ)
 • (ಪದ್ಯ-೬೨)

ಪದ್ಯ:-:೬೩:[ಸಂಪಾದಿಸಿ]

ಅರಿಯರಾರುಂ ಪುರದೊಳಿವರಿಲ್ಲಿ ಮಡಿದುದಂ |
ತುರುಗಿದ ತಮೋಂಧಮೊಯ್ಯನೆ ಜಾರಿತಳಿಕುಲದ |
ಸೆರೆಬಿಟ್ಟುದಂಬುಜದೊಳೊಡನೆ ತಲೆದೋರಿದಂ ತರಣಿ ಮೂಡಣ ದೆಸೆಯೊಳು ||
ಪೊರಮಟ್ಟು ಚಂಡಿಕಾಲಯಕೆ ಪೊಸೆಪೂಗಳಂ |
ತಿರಿತಂದು ಪೂಜಿಸುವೊಡೊಳವುಗುವ ತಾಪಸಂ |
ಬೆರೆತು ಬಿದ್ದಿಹ ತಂದೆಮಕ್ಕಳಂ ಕಂಡು ಹ್ಮಮೈಸಿ ವಿಸ್ಮಿತನಾದನು ||63||

ಪದವಿಭಾಗ-ಅರ್ಥ:
ಅರಿಯರು ಆರುಂ ಪುರದೊಳು ಇವರಿಲ್ಲಿ ಮಡಿದುದಂ ತುರುಗಿದ ತಮೋಂಧಮೊಯ್ಯನೆ ಜಾರಿ ತಳಿಕುಲದ ಸೆರೆಬಿಟ್ಟುದು ಅಂಬುಜದೊಳು ಒಡನೆ ತಲೆದೋರಿದಂ ತರಣಿ ಮೂಡಣ ದೆಸೆಯೊಳು=[ ದುಷ್ಟಬುದ್ಧಿ ಮತ್ತು ಮದನ, ಇವರು ಇಲ್ಲಿ ಸತ್ತುದನ್ನು ನಗರದಲ್ಲಿ ಯಾರೂ ತಿಳಿಯರು. ಕವಿದ ಕತ್ತಲೆ ಮೆಲ್ಲಗೆ ಜಾರಿ ಕಮಲದಲ್ಲಿದ್ದ ದುಂಬಿಗಳ ಸೆರೆ ಅವು ಅರಳಲು ಬಿಟ್ಟಿತು. ಒಡನೆ ಸೂರ್ಯನು ಪೂರ್ವ ದಿಕ್ಕಿನಲ್ಲಿ ಕಾಣಿಸಿದನು.];; ಪೊರಮಟ್ಟು ಚಂಡಿಕಾಲಯಕೆ ಪೊಸೆ ಪೂಗಳಂ ತಿರಿತಂದು ಪೂಜಿಸುವೊಡೆ ಒಳವುಗುವ ತಾಪಸಂ ಬೆರೆತು ಬಿದ್ದಿಹ ತಂದೆಮಕ್ಕಳಂ ಕಂಡು ಹ್ಮಮೈಸಿ ವಿಸ್ಮಿತನಾದನು=[ ಆಗ ತಪಸ್ವಿಯಾದ ಅರ್ಚಕನು ಹೊರಟು ಚಂಡಿಕಾಲಯಕ್ಕೆ ಹೊಸ ಹೂವುಗಳನ್ನು ಕಿತ್ತು ತಂದು ಪೂಜಿಸಲು ಒಳಗೆ ಹೊಗಲು ಒಟ್ಟಿಗೆ ಸೇರಿ ಬಿದ್ದಿರುವ ತಂದೆಮಕ್ಕಳನ್ನು ಕಂಡು ದುಃಖದಿಂದ ಚಕಿತನಾದನು].
 • ತಾತ್ಪರ್ಯ:ಅರಿಯರು ಆರುಂ ಪುರದೊಳು ಇವರಿಲ್ಲಿ ಮಡಿದುದಂ ತುರುಗಿದ ತಮೋಂಧಮೊಯ್ಯನೆ ಜಾರಿ ತಳಿಕುಲದ ಸೆರೆಬಿಟ್ಟುದು ಅಂಬುಜದೊಳು ಒಡನೆ ತಲೆದೋರಿದಂ ತರಣಿ ಮೂಡಣ ದೆಸೆಯೊಳು=[ ದುಷ್ಟಬುದ್ಧಿ ಮತ್ತು ಮದನ, ಇವರು ಇಲ್ಲಿ ಸತ್ತುದನ್ನು ನಗರದಲ್ಲಿ ಯಾರೂ ತಿಳಿಯರು. ಕವಿದ ಕತ್ತಲೆ ಮೆಲ್ಲಗೆ ಜಾರಿ ಕಮಲದಲ್ಲಿದ್ದ ದುಂಬಿಗಳ ಸೆರೆ ಅವು ಅರಳಲು ಬಿಟ್ಟಿತು. ಒಡನೆ ಸೂರ್ಯನು ಪೂರ್ವ ದಿಕ್ಕಿನಲ್ಲಿ ಕಾಣಿಸಿದನು.];; ಪೊರಮಟ್ಟು ಚಂಡಿಕಾಲಯಕೆ ಪೊಸೆ ಪೂಗಳಂ ತಿರಿತಂದು ಪೂಜಿಸುವೊಡೆ ಒಳವುಗುವ ತಾಪಸಂ ಬೆರೆತು ಬಿದ್ದಿಹ ತಂದೆಮಕ್ಕಳಂ ಕಂಡು ಹ್ಮಮೈಸಿ ವಿಸ್ಮಿತನಾದನು=[ ಆಗ ತಪಸ್ವಿಯಾದ ಅರ್ಚಕನು ಹೊರಟು ಚಂಡಿಕಾಲಯಕ್ಕೆ ಹೊಸ ಹೂವುಗಳನ್ನು ಕಿತ್ತು ತಂದು ಪೂಜಿಸಲು ಒಳಗೆ ಹೊಗಲು ಒಟ್ಟಿಗೆ ಸೇರಿ ಬಿದ್ದಿರುವ ತಂದೆಮಕ್ಕಳನ್ನು ಕಂಡು ದುಃಖದಿಂದ ಚಕಿತನಾದನು]
 • (ಪದ್ಯ-೬೩)

ಪದ್ಯ:-:೬೪:[ಸಂಪಾದಿಸಿ]

ಪಟ್ಟಣದೊಳಿರುಳೊಸಗೆ ಪಸರಿಸಿತು ರಾಜ್ಯಮಂ |
ಬಿಟ್ಟು ವನಕೈದಿದಂ ಕುಂತಳಾಧೀಶ್ವರಂ |
ಪಟ್ಟಮಾದುದು ಚಂದ್ರಹಾಸಂಗೆ ಸೂನು ಸಹಿತೀ ದುಷ್ಟಬುದ್ಧಿಗಿಲ್ಲಿ ||
ಕೆಟ್ಟೆಣಿಸಿದವರಾರೋ ಶೀವಶಿವಾದ್ಭುತಯೆನುತ |
ನೆಟ್ಟನೆ ನ್ಯಪಾಲಯಕೆ ತಾಪಸಂ ಬಂದು ಮೊರೆ |
ಯಿಂಟ್ಟೊಡೆ ಕುಳಿಂದಜಂ ಕೇಳ್ದಿರದೆ ಪೊರಮಟ್ಟು ಕಾಲ್ನಡೆಯೊಳೈತಂದನು ||64||

ಪದವಿಭಾಗ-ಅರ್ಥ:
ಪಟ್ಟಣದೊಳು ಇರುಳ ಒಸಗೆ ಪಸರಿಸಿತು ರಾಜ್ಯಮಂ ಬಿಟ್ಟು ವನಕೈದಿದಂ ಕುಂತಳಾಧೀಶ್ವರಂ ಪಟ್ಟಮಾದುದು ಚಂದ್ರಹಾಸಂಗೆ;=[ಕುಂತಳರಾಜನು ರಾಜ್ಯಮಂ ಬಿಟ್ಟು ವನಕ್ಕೆ ಹೋದನು, ಚಂದ್ರಹಾಸನಿಗೆ ಪಟ್ಟವಾಯಿತು ಎಂಬ ಒಸಗೆ/ ಸುದ್ದಿ ಪಟ್ಟಣದಲ್ಲಿ ರಾತ್ರಿಯೇ ಹರಡಿತು.];; ಸೂನು ಸಹಿತ ಈ ದುಷ್ಟಬುದ್ಧಿಗೆ ಇಲ್ಲಿ ಕೆಟ್ಟೆಣಿಸಿದವರು ಯಾರೋ ಶೀವಶಿವಾ ಅದ್ಭುತಯೆನುತ ನೆಟ್ಟನೆ ನ್ಯಪಾಲಯಕೆ ತಾಪಸಂ ಬಂದು ಮೊರೆಯಿಟ್ಟೊಡೆ ಕುಳಿಂದಜಂ ಕೇಳ್ದಿರದೆ ಪೊರಮಟ್ಟು ಕಾಲ್ನಡೆಯೊಳು ಐತಂದನು=[ಮಗನ ಸಹಿತ ಈ ದುಷ್ಟಬುದ್ಧಿಗೆ ಇಲ್ಲಿ ಕೆಟ್ಟೆದ್ದನ್ನು ಬಯಸಿದವರು/ ಮಾಡಿದವರು ಯಾರೋ ಶೀವಶಿವಾ ಅದ್ಭುತಯೆನ್ನುತ್ತಾ ನೇರವಾಗಿ ಅರಮನೆಗೆ ತಪಸ್ವಿಯು ಬಂದು ಮಂತ್ರಿ ಮದನರು ದೇವಾಲಯದಲ್ಲಿ ಸತ್ತುಬಿದ್ದ ಸುದ್ದಿ ಹೇಳಿ ಮೊರೆಯಿಟ್ಟಾಗ ಚಂದ್ರಹಾಸನು ಕೇಳಿ ಅಲ್ಲಿರದೆ ಹೊರಟು ಕಾಲುನಡಿಗೆಯಲ್ಲಿ ದೇವಾಲಯಕ್ಕೆ ಬಂದನು.]
 • ತಾತ್ಪರ್ಯ:ಕುಂತಳರಾಜನು ರಾಜ್ಯಮಂ ಬಿಟ್ಟು ವನಕ್ಕೆ ಹೋದನು, ಚಂದ್ರಹಾಸನಿಗೆ ಪಟ್ಟವಾಯಿತು ಎಂಬ ಒಸಗೆ/ ಸುದ್ದಿ ಪಟ್ಟಣದಲ್ಲಿ ರಾತ್ರಿಯೇ ಹರಡಿತು. ಮಗನ ಸಹಿತ ಈ ದುಷ್ಟಬುದ್ಧಿಗೆ ಇಲ್ಲಿ ಕೆಟ್ಟೆದ್ದನ್ನು ಬಯಸಿದವರು/ ಮಾಡಿದವರು ಯಾರೋ ಶೀವಶಿವಾ ಅದ್ಭುತಯೆನ್ನುತ್ತಾ ನೇರವಾಗಿ ಅರಮನೆಗೆ ತಪಸ್ವಿಯು ಬಂದು, ಮಂತ್ರಿ ಮದನರು ದೇವಾಲಯದಲ್ಲಿ ಸತ್ತುಬಿದ್ದ ಸುದ್ದಿ ಹೇಳಿ ಮೊರೆಯಿಟ್ಟಾಗ ಚಂದ್ರಹಾಸನು ಕೇಳಿ ಅಲ್ಲಿರದೆ ಹೊರಟು ಕಾಲುನಡಿಗೆಯಲ್ಲಿ ದೇವಾಲಯಕ್ಕೆ ಬಂದನು.
 • (ಪದ್ಯ-೬೪)XXIV

ಪದ್ಯ:-:೬೫:[ಸಂಪಾದಿಸಿ]

ಚಂಡಿಕಾಲಯಕಖಿಳ ಜನ ಸಹಿತ ನಡೆತಂದು |
ದಿಂಡುಗೆಡೆದಿಹ ಮಾವ ಮೈದುನರ ಹಾನಿಯಂ |
ಕಂಡು ಕಡುಶೋಕದಿಂದುರೆನೊಂದು ಚಂದರಹಾಸಂ ದೇವಿಯಂ ನೋಡುತೆ ||
ಖಂಡಿಸಿದೆಲೌ ತನ್ನ ಭಾಗ್ಯಮಂ ತಪ್ಪಾವು |
ದಂಡಲೆದು ಪಡೆವೆ ನಿವರಸುಗಳಂ ಮೀರಿದೊಡೆ |
ಪುಂಡರೀಕಾಂಬಕನ ಸಾಯುಜ್ಯ ಮೆನಗಾಗಲೆಂದು ನಿಶ್ಚಿತನಾದನು ||65||***

ಪದವಿಭಾಗ-ಅರ್ಥ:
ಚಂಡಿಕಾಲಯಕೆ ಅಖಿಳ ಜನ ಸಹಿತ ನಡೆತಂದು ದಿಂಡುಗೆಡೆದಿಹ(ದಿಂಡುಗೆಡು:ಉರುಳಿ ಬೀಳು;ಸಾ.ಪರಿಷತ್ ನಿಘಂಟು.) ಮಾವ ಮೈದುನರ ಹಾನಿಯಂ ಕಂಡು ಕಡುಶೋಕದಿಂದ ಉರೆನೊಂದು ಚಂದರಹಾಸಂ ದೇವಿಯಂ ನೋಡುತೆ=[ಚಂದರಹಾಸನು ಚಂಡಿಕಾಲಯಕ್ಕೆ ಎಲ್ಲಾ ಜನರ ಸಹಿತ ಬಂದು ದೇಹಕಡಿದು ಉರುಳಿ ಬಿದ್ದಿರುವ ಮಾವ ಮತ್ತು ಪತ್ನಿಯ ಅಣ್ಣ ಮೈದುನರ ಸಾವನ್ನ ಕಂಡು ಬಹಳ ಶೋಕದಿಂದ ಅತಿಯಾಗಿ ನೊಂದು ಚಂದರಹಾಸನು ದೇವಿಯನ್ನು ನೋಡುತ್ತಾ,] ಖಂಡಿಸಿದೆ ಎಲೌ ತನ್ನ ಭಾಗ್ಯಮಂ ತಪ್ಪಾವುದು ಅಂಡಲೆದು (ಕಾಡು, ಪೀಡಿಸು:ಜಿ.ವೆಂ.ನಿಘಂಟು) ಪಡೆವೆನು ಇವರಸುಗಳಂ ಮೀರಿದೊಡೆ ಪುಂಡರೀಕಾಂಬಕನ ಸಾಯುಜ್ಯ ಮೆನಗಾಗಲಿ ಎಂದು ನಿಶ್ಚಿತನಾದನು=[ಎಲೌ ತಾಯಿ, ನಾಶ ಮಾಡಿದೆಯಲ್ಲಾ ತನ್ನ ಭಾಗ್ಯವನ್ನು; ನನ್ನಿಂದ ಆದ ತಪ್ಪು ಯಾವುದು? ಇವರ ಪ್ರಾಣಗಳನ್ನು ಕಾಡಿ, ಪೀಡಿಸಿ ಪಡೆವೆನು. ತಪ್ಪಿದರೆ ತನ್ನ ಪ್ರಾಣ ತ್ಯಾಗದಿಂದ ಪುಂಡರೀಕಾಂಬಕನ/ ಅಚ್ಯುತನ ವೈಕುಂಠದ ಸಾಯುಜ್ಯವು ತನಗಾಗಲಿ ಎಂದು ನಿಶ್ಚಯಮಾಡಿದನು].
 • ತಾತ್ಪರ್ಯ:ಚಂದರಹಾಸನು ಚಂಡಿಕಾಲಯಕ್ಕೆ ಎಲ್ಲಾ ಜನರ ಸಹಿತ ಬಂದು ದೇಹಕಡಿದು ಉರುಳಿ ಬಿದ್ದಿರುವ ಮಾವ ಮತ್ತು (ಪತ್ನಿಯ ಅಣ್ಣ) ಮೈದುನರ ಸಾವನ್ನ ಕಂಡು ಬಹಳ ಶೋಕದಿಂದ ಅತಿಯಾಗಿ ನೊಂದು ಚಂದ್ರಹಾಸನು ದೇವಿಯನ್ನು ನೋಡುತ್ತಾ, ಎಲೌ ತಾಯಿ, ನಾಶ ಮಾಡಿದೆಯಲ್ಲಾ ನನ್ನ ಭಾಗ್ಯವನ್ನು (ಈ ಬಂಧುಗಳೇ ತನ್ನ ಭಾಗ್ಯ ಎಂದು); ನನ್ನಿಂದ ಆದ ತಪ್ಪು ಯಾವುದು? ಇವರ ಪ್ರಾಣಗಳನ್ನು ಕಾಡಿ, ಪೀಡಿಸಿ ಪಡೆವೆನು'. ತಪ್ಪಿದರೆ ತನ್ನ ಪ್ರಾಣ ತ್ಯಾಗದಿಂದ ಪುಂಡರೀಕಾಂಬಕನ/ ಅಚ್ಯುತನ ವೈಕುಂಠದ ಸಾಯುಜ್ಯವು ತನಗಾಗಲಿ ಎಂದು ನಿಶ್ಚಯಮಾಡಿದನು.
 • (ಪದ್ಯ-೬೫)

ಪದ್ಯ:-:೬೬:[ಸಂಪಾದಿಸಿ]

ರಭಸದಿಂದೈತಂದು ಗೋಳಿಡುವ ಬಂಧುಜನ |
ಕಭಯಮಂ ಕೊಟ್ಟು ನಿಶ್ಚಲನಾಗಿ ಶಶಿಹಾಸ |
ನಭವನರಸಿಯ ಮುಂದೆ ಚತುರಶ್ರದೊಳ್‍ಕುಂಡಮಂ ತೆಗೆಸಿ ಬಳಿಕದರೊಳು
ಅಭಿಶೋಭಿಪವೊಲಗ್ನಿಯಂ ಪ್ರತಿಷ್ಟಿಸಿ ವಿಪ್ರ |
ಸಭೆಸಹಿತ ಕುಳ್ಳಿರ್ದು ಬಲಿ ದೀಪ ಮುಂತಾದ |
ವಿಭವಂಗಳಂ ಮಾಡಿ ಘೃತ ಪಾಯಸಾಜ್ಯ ತಿಲ ಹೋಮಂಗಳಂ ಬೇಳ್ಧನು ||66||

ಪದವಿಭಾಗ-ಅರ್ಥ:
ರಭಸದಿಂದ ಐತಂದು ಗೋಳಿಡುವ ಬಂಧುಜನಕೆ ಅಭಯಮಂ ಕೊಟ್ಟು ನಿಶ್ಚಲನಾಗಿ ಶಶಿಹಾಸನು ಅಭವನರಸಿಯ ಮುಂದೆ ಚತುರಶ್ರದೊಳ್‍ ಕುಂಡಮಂ ತೆಗೆಸಿ ಬಳಿಕ ಅದರೊಳು=[ಚಂದ್ರಹಾಸನು ಕೂಡಲೆ ಬಂದು ಗೋಳಿಡುವ ಬಂಧುಜನರಿಗೆ ಅವರ ಜೀವವನ್ನು ಪಡೆಯುವೆನು ಎಂದು ಅಭಯವನ್ನು ಕೊಟ್ಟು, ನಿಶ್ಚಲ ಮನಸ್ಸಿನಿಂದ ಚಂದ್ರಹಾಸನು ಶಿವನ ಪತ್ನಿಯ ಅಂಬೆಯ ಮುಂದೆ ಚೌಕಾಕಾರದಲ್ಲಿ ಯಜ್ಞಕುಂಡವನ್ನು ತೆಗೆಸಿ, ಬಳಿಕ ಅದರಲ್ಲಿ];;ಅಭಿಶೋಭಿಪವೊಲ ಅಗ್ನಿಯಂ ಪ್ರತಿಷ್ಟಿಸಿ ವಿಪ್ರಸಭೆ ಸಹಿತ ಕುಳ್ಳಿರ್ದು ಬಲಿ ದೀಪ ಮುಂತಾದ ವಿಭವಂಗಳಂ ಮಾಡಿ ಘೃತ ಪಾಯಸಾಜ್ಯ ತಿಲ ಹೋಮಂಗಳಂ ಬೇಳ್ಧನು=[ಪ್ರಜ್ವಲಿಸುವಂತೆ ಅಗ್ನಿಯನ್ನು ಪ್ರತಿಷ್ಟಾಪಿಸಿ ವಿಪ್ರಸಮೂಹ ಸಹಿತ ಕುಳಿತು, ಅನ್ನವೇ ಮೊದಲಾದ ಬಲಿವಸ್ತುಗಳು, ದೀಪ, ಮುಂತಾದ ವೈಭವಗಳನ್ನು ಮಾಡಿ, ಘೃತ/ತುಪ್ಪ ಆಜ್ಯಸಹಿತ ಪಾಯಸ ತಿಲ/ಎಳ್ಳು ಹೋಮಗಳ ಆಹುತಿಗಳನ್ನು ಹಾಕಿದನು].
 • ತಾತ್ಪರ್ಯ:ಚಂದ್ರಹಾಸನು ಕೂಡಲೆ ಬಂದು ಗೋಳಿಡುವ ಬಂಧುಜನರಿಗೆ, ಅವರ ಜೀವವನ್ನು ಪಡೆಯುವೆನು ಎಂದು ಅಭಯವನ್ನು ಕೊಟ್ಟು, ನಿಶ್ಚಲ ಮನಸ್ಸಿನಿಂದ ಚಂದ್ರಹಾಸನು ಶಿವನ ಪತ್ನಿಯ ಅಂಬೆಯ ಮುಂದೆ ಚೌಕಾಕಾರದಲ್ಲಿ ಯಜ್ಞಕುಂಡವನ್ನು ತೆಗೆಸಿ, ಬಳಿಕ ಅದರಲ್ಲಿ ಪ್ರಜ್ವಲಿಸುವಂತೆ ಅಗ್ನಿಯನ್ನು ಪ್ರತಿಷ್ಟಾಪಿಸಿ ವಿಪ್ರಸಮೂಹ ಸಹಿತ ಕುಳಿತು, ಅನ್ನವೇ ಮೊದಲಾದ ಬಲಿವಸ್ತುಗಳು, ದೀಪ, ಮುಂತಾದ ವೈಭವಗಳನ್ನು ಮಾಡಿಕೊಂಡು, ಘೃತ/ತುಪ್ಪ ಆಜ್ಯಸಹಿತ ಪಾಯಸ ತಿಲ/ಎಳ್ಳು ಹೋಮಗಳ ಆಹುತಿಗಳನ್ನು ಹಾಕಿದನು].
 • (ಪದ್ಯ-೬೬)

ಪದ್ಯ:-:೬೭:[ಸಂಪಾದಿಸಿ]

ಹೇಳಲೇನೈ ಪಾರ್ಥ ಚಂದ್ರಹಾಸಂ ಬಳಿಕ |
ಬಾಳಿಂದ ನಿಜ ದೇಹ ಮಾಂಸಮಂ ಕೊಯ್ಕೊಯ್ದು |
ಬೇಳಿ ಪೂರ್ಣಾಹುತಿಗೆ ಶಿರವನರಿದಪೆನೆಂದು ಖಡ್ಗಮಂ ಗೋಣ್ಗೆಪೂಡಿ |
ಕಾಳಿ ನೀನಖಿಳಶಕ್ತಿಗಳ ರೂಪಂಗಳಂ |
ತಾಳಿ ಸರ್ವಾತ್ಮಕನ ಕೂಡಿ ರಮಿಸುವೆಯಲಾ |
ವ್ಯಾಳ ಶಾಯಿಗೆ ಸಮರ್ಪಿತಮಾಗಲೊಪ್ಪುಗೊಳ್ಳೆಂದರಿಯಲನುವಾದನು ||67||

ಪದವಿಭಾಗ-ಅರ್ಥ:
ಹೇಳಲು ಏನೈ ಪಾರ್ಥ ಚಂದ್ರಹಾಸಂ ಬಳಿಕ ಬಾಳಿಂದ (ಕತ್ತಿಯಿಂದ) ನಿಜ ದೇಹ ಮಾಂಸಮಂ ಕೊಯ್ಕೊಯ್ದು ಬೇಳಿ (ಹೋಮವನ್ನು ಮಾಡಿ) ಪೂರ್ಣಾಹುತಿಗೆ ಶಿರವನು ಅರಿದಪೆನು ಎಂದು ಖಡ್ಗಮಂ ಗೋಣ್ಗೆ ಪೂಡಿ=[ಏನಯ್ಯಾ ಹೇಳಲಿ ಪಾರ್ಥ, ಚಂದ್ರಹಾಸನು ಬಳಿಕ ಕತ್ತಿಯಿಂದ ತನ್ನ ದೇಹದ ಮಾಂಸವನ್ನು ಕೊಯ್ದು ಕೊಯ್ದು ಹೋಮವನ್ನು ಮಾಡಿ ಪೂರ್ಣಾಹುತಿಗೆ ತನ್ನ ಶಿರವನ್ನು ಕತ್ತರಿಸುವೆನು ಎಂದು ಖಡ್ಗವನ್ನು ಕುತ್ತಿಗೆಗೆ ಹೂಡಿ];; ಕಾಳಿ ನೀನು ಅಖಿಳ ಶಕ್ತಿಗಳ ರೂಪಂಗಳಂ ತಾಳಿ ಸರ್ವಾತ್ಮಕನ ಕೂಡಿ ರಮಿಸುವೆಯಲಾ ವ್ಯಾಳ (ಹಾವು) ಶಾಯಿಗೆ (ಮಲಗಿದವ) ಸಮರ್ಪಿತಂ ಆಗಲು ಒಪ್ಪುಗೊಳ್ಳು ಎಂದು ಅರಿಯಲು ಅನುವಾದನು=[ಮಹಾಕಾಳಿಯೇ, ನೀನು ಅಖಿಲ ಶಕ್ತಿಗಳ ರೂಪಗಳನ್ನು ತಾಳಿ ಸರ್ವಾತ್ಮಕ ಶಿವನ ಕೂಡಿ ಕ್ರೀಡಿಸುತ್ತಿರುವೆಯಲ್ಲವೇ, ಈ ನನ್ನ ಶಿರವು ಶೇಷಶಾಹಿ ವಿಷ್ಣುವಿಗೆ ಸಮರ್ಪಿತವಾಗಲಿಕ್ಕಾಗಿ ನೀನು ಸ್ವಿಕರಿಸು ಎಂದು ತನ್ನ ತಲೆಯನ್ನು ಕತ್ತರಿಸಲು ಅನುವಾದನು].
 • ತಾತ್ಪರ್ಯ:ನಾರದರು ಎಂದರು,ಏನಯ್ಯಾ ಹೇಳಲಿ ಪಾರ್ಥ, ಚಂದ್ರಹಾಸನು ಬಳಿಕ ಕತ್ತಿಯಿಂದ ತನ್ನ ದೇಹದ ಮಾಂಸವನ್ನು ಕೊಯ್ದು ಕೊಯ್ದು ಹೋಮವನ್ನು ಮಾಡಿ ಪೂರ್ಣಾಹುತಿಗೆ ತನ್ನ ಶಿರವನ್ನು ಕತ್ತರಿಸುವೆನು ಎಂದು ಖಡ್ಗವನ್ನು ಕುತ್ತಿಗೆಗೆ ಹೂಡಿ ಮಹಾಕಾಳಿಯೇ, ನೀನು ಅಖಿಲ ಶಕ್ತಿಗಳ ರೂಪಗಳನ್ನು ತಾಳಿ ಸರ್ವಾತ್ಮಕ ಶಿವನ ಕೂಡಿ ಕ್ರೀಡಿಸುತ್ತಿರುವೆಯಲ್ಲವೇ, ಈ ನನ್ನ ಶಿರವು ಶೇಷಶಾಹಿ ವಿಷ್ಣುವಿಗೆ ಸಮರ್ಪಿತವಾಗಲಿಕ್ಕಾಗಿ ನೀನು ಸ್ವಿಕರಿಸು ಎಂದು ತನ್ನ ತಲೆಯನ್ನು ಕತ್ತರಿಸಲು ಅನುವಾದನು.
 • (ಪದ್ಯ-೬೭)

ಪದ್ಯ:-:೬೮:[ಸಂಪಾದಿಸಿ]

ಬೆಚ್ಚಿದಂತೆಸೆವ ಪೀಠವನಿಳೀದು ರುದ್ರಾಣಿ |
ಬೆಚ್ಚರದೊಳೈತಂದು ಕೈಯ ಬಾಳಂ ಪಿಡಿದು |
ನಿಚ್ಚಟದ ಹರಿಭಕ್ತಿಗಾಂ ಪ್ರೀತಿಯಂ ತಳೆದೆನಾತ್ಮವಧೆ ಬೇಡ ನಿನಗೆ ||
ಪೆಚ್ಚಿದ ಕುಮಂತ್ರ ಪಾಪದೊಳಳಿದನೀ ಮಂತ್ರಿ |
ವೆಚ್ಚಿಸಿದನಸುವನಾತನ ಸುತಂ ನಿನಗಾಗಿ |
ಮೆಚ್ಚಿಸಿದೆ ನೀಂ ಮಗನೆ ಬಯಕೆಯಂ ಪೇಳೆರಡು ವರವ ನಿತ್ತಪೆನೆಂದಳು ||68||

ಪದವಿಭಾಗ-ಅರ್ಥ:
ಬೆಚ್ಚಿದಂತೆ ಎಸೆವ ಪೀಠವನು ಇಳಿದು ರುದ್ರಾಣಿ ಬೆಚ್ಚರದೊಳು ಐತಂದು ಕೈಯ ಬಾಳಂ ಪಿಡಿದು ನಿಚ್ಚಟದ ಹರಿಭಕ್ತಿಗೆ ಆಂ ಪ್ರೀತಿಯಂ ತಳೆದೆನು ಆತ್ಮವಧೆ ಬೇಡ ನಿನಗೆ=[ಶೋಭಿಸುವ ಪೀಠವನ್ನು ಗಾಬರಿಯಾದಂತೆ ಇಳಿದು ರುದ್ರಾಣಿ/ಕಾಳಿಯು ತ್ವರಿತವಾಗಿ ಬಂದು ಚಂದ್ರಹಾಸನ ಕೈಯಲ್ಲಿದ್ದ ಖಡ್ಗವನ್ನು ಹಿಡಿದು, ನಿಶ್ಚಲವಾದ ನಿನ್ನ ಹರಿಭಕ್ತಿಗೆ ನಾನು ಪ್ರೀತಿ ಪಟ್ಟೆನು. ನಿನಗೆ ಆತ್ಮವಧೆ ಬೇಡ];; ಪೆಚ್ಚಿದ ಕುಮಂತ್ರ ಪಾಪದೊಳು ಅಳಿದನು ಈ ಮಂತ್ರಿ ವೆಚ್ಚಿಸಿದನು (ಕಳೆದನು) ಅಸುವನು (ಅಸು: ಪ್ರಾಣ) ಆತನ ಸುತಂ ನಿನಗಾಗಿ, ಮೆಚ್ಚಿಸಿದೆ ನೀಂ ಮಗನೆ ಬಯಕೆಯಂ ಪೇಳೆರಡು ವರವ ನು ಇತ್ತಪೆನು ಎಂದಳು=[ಬಹಳ ಕುತಂತ್ರ ಬುದ್ಧಿಯ ಪಾಪದಿಂದ ಈ ಮಂತ್ರಿ ಸತ್ತನು; ಆತನ ಮಗನು ನಿನಗಾಗಿ ಪ್ರಾಣವನ್ನು ಕಳೆದುಕೊಂಡನು. ನೀನು ನಿನ್ನ ಭಕ್ತಿಯಿಂದ ನನ್ನನ್ನು ಮೆಚ್ಚಿಸಿದೆ. ಮಗನೆ ನಿನ್ನ ಬಯಕೆಯ ಎರಡು ವರಗಳನ್ನು ಹೇಳು/ಕೇಳು; ಕೊಡುವೆನು ಎಂದಳು].
 • ತಾತ್ಪರ್ಯ:ಶೋಭಿಸುವ ಪೀಠವನ್ನು ಗಾಬರಿಯಾದಂತೆ ಇಳಿದು ರುದ್ರಾಣಿ/ಕಾಳಿಯು ತ್ವರಿತವಾಗಿ ಬಂದು ಚಂದ್ರಹಾಸನ ಕೈಯಲ್ಲಿದ್ದ ಖಡ್ಗವನ್ನು ಹಿಡಿದು, ನಿಶ್ಚಲವಾದ ನಿನ್ನ ಹರಿಭಕ್ತಿಗೆ ನಾನು ಪ್ರೀತಿ ಪಟ್ಟೆನು. ನಿನಗೆ ಆತ್ಮವಧೆ ಬೇಡ];; ಪೆಚ್ಚಿದ ಕುಮಂತ್ರ ಪಾಪದೊಳು ಅಳಿದನು ಈ ಮಂತ್ರಿ ವೆಚ್ಚಿಸಿದನು (ಕಳೆದನು) ಅಸುವನು (ಅಸು: ಪ್ರಾಣ) ಆತನ ಸುತಂ ನಿನಗಾಗಿ, ಮೆಚ್ಚಿಸಿದೆ ನೀಂ ಮಗನೆ ಬಯಕೆಯಂ ಪೇಳೆರಡು ವರವನು ಇತ್ತಪೆನು ಎಂದಳು=[ಬಹಳ ಕುತಂತ್ರ ಬುದ್ಧಿಯ ಪಾಪದಿಂದ ಈ ಮಂತ್ರಿ ಸತ್ತನು; ಆತನ ಮಗನು ನಿನಗಾಗಿ ಪ್ರಾಣವನ್ನು ಕಳೆದುಕೊಂಡನು. ನೀನು ನಿನ್ನ ಭಕ್ತಿಯಿಂದ ನನ್ನನ್ನು ಮೆಚ್ಚಿಸಿದೆ. ಮಗನೆ ನಿನ್ನ ಬಯಕೆಯ ಎರಡು ವರಗಳನ್ನು ಹೇಳು/ಕೇಳು; ಕೊಡುವೆನು ಎಂದಳು].
 • (ಪದ್ಯ-೬೮)

ಪದ್ಯ:-:೬೯:[ಸಂಪಾದಿಸಿ]

ದೇವಿಯ ಪದಾಂಬುಜದೊಳೆರಗಿ ಕೈಮುಗಿದು ನಿಂ |
ದಾವಾವ ಜನ್ಮ ಜನ್ಮಾಂತರದೊಳೆನಗೆ ರಾ |
ಜೀವನಾಭನ ಭಕ್ತಿ ದೊರೆಕೊಳಲಿದೊಂದು ಮಡಿದಿಹ ಮಂತ್ರಿ ಮಂತ್ರಿಸುತರು ||
ಜೀವಿಸಲಿದೊಂದೀಗಳಿಂತೆರೆಡು ವರಮಂ ಕೃ |
ಪಾವಲೋಕನದೊಳಿತ್ತಪುದೆಂದು ಮತ್ತೆ ಚರ |
ಣಾವನತನಾಗಲ್ಕೆ ಪಿಡಿದೆತ್ತಿ ಕ್ಷತಮಡಗೆ ಮೈದೊಡವುತಿಂತೆಂದಳು ||69||

ಪದವಿಭಾಗ-ಅರ್ಥ:
ದೇವಿಯ ಪದಾಂಬುಜದೊಳು ಎರಗಿ ಕೈಮುಗಿದು ನಿಂದು ಆವಾವ ಜನ್ಮ ಜನ್ಮಾಂತರದೊಳು ಎನಗೆ ರಾಜೀವನಾಭನ ಭಕ್ತಿ ದೊರೆಕೊಳಲಿ, ಇದೊಂದು ಮಡಿದಿಹ ಮಂತ್ರಿ ಮಂತ್ರಿಸುತರು=[ಚಂದ್ರಹಾಸನು ದೇವಿಯ ಪಾದಪದ್ಮಗಳಿಗೆ ನಮಿಸಿ, ಕೈಮುಗಿದು ನಿಂತು, ಮುಂದೆ ಯಾವ ಯಾವ ಜನ್ಮ ಜನ್ಮಾಂತರಬರುವುದೋ ಅದರಲ್ಲಿ ನನಗೆ ರಾಜೀವನಾಭನ/ವಿಷ್ಣುವಿನ ಭಕ್ತಿ ದೊರೆಯಲಿ ಇದೊಂದು ವರ; ಮಡಿದಿರುವ ಮಂತ್ರಿ ಮತ್ತು ಮಂತ್ರಿಸುತ ಇವರು];; ಜೀವಿಸಲಿ ಇದೊಂದು ಈಗಳಿಂತು ಎರೆಡು ವರಮಂ ಕೃಪಾವಲೋಕನದೊಳು ಇತ್ತಪುದು ಎಂದು ಮತ್ತೆ ಚರಣಾವನತನು ಆಗಲ್ಕೆ ಪಿಡಿದೆತ್ತಿ ಕ್ಷತಮಡಗೆ ಮೈದೊಡವುತಿಂತೆಂದಳೂ=[ಜೀವಿಸಲಿ, ಇದೊಂದು ವರ; ಈಗ ಈ ರೀತಿಯ ಎರೆಡು ವರವನ್ನು ನಿನ್ನ ಕೃಪೆಯ ದೃಷ್ಠಿಯಿಂದ ಕೊಡುವುದು, ಎಂದು ಮತ್ತೆ ಪಾದಗಳಿಗೆ ಬಗ್ಗಿ ನಮಿಸಲು, ಆಗ ಹಿಡಿದು ಅವನನ್ನು ಎತ್ತಿ, ಮುಟ್ಟಿ ಎತ್ತಿದಾಗ ಅವನ ದೇಹದಲ್ಲಿ ಹವಿಸ್ಸಿಗಾಗಿ ಕೊಯಿದು ಆದ ಘಾಯಗಳು ಅಡಗಲು, ಅವನ ಮೈಯನ್ನು ತಡವುತ್ತಾ ಹೀಗೆ ಹೇಳಿದಳು].
 • ತಾತ್ಪರ್ಯ:ಚಂದ್ರಹಾಸನು ದೇವಿಯ ಪಾದಪದ್ಮಗಳಿಗೆ ನಮಿಸಿ, ಕೈಮುಗಿದು ನಿಂತು, ಮುಂದೆ ಯಾವ ಯಾವ ಜನ್ಮ ಜನ್ಮಾಂತರ ಬರುವುದೋ ಅದರಲ್ಲಿ ನನಗೆ ರಾಜೀವನಾಭನ/ವಿಷ್ಣುವಿನ ಭಕ್ತಿ ದೊರೆಯಲಿ ಇದೊಂದು ವರ; ಮಡಿದಿರುವ ಮಂತ್ರಿ ಮತ್ತು ಮಂತ್ರಿಸುತ ಇವರು ಜೀವಿಸಲಿ, ಇದೊಂದು ವರ; ಈಗ ಈ ರೀತಿಯ ಎರೆಡು ವರವನ್ನು ನಿನ್ನ ಕೃಪೆಯ ದೃಷ್ಠಿಯಿಂದ ಕೊಡುವುದು, ಎಂದು ಮತ್ತೆ ಪಾದಗಳಿಗೆ ಬಗ್ಗಿ ನಮಿಸಲು, ಆಗ ಹಿಡಿದು ಅವನನ್ನು ಎತ್ತಿ, ಮುಟ್ಟಿ ಎತ್ತಿದಾಗ ಅವನ ದೇಹದಲ್ಲಿ ಹವಿಸ್ಸಿಗಾಗಿ ಕೊಯಿದು ಆದ ಘಾಯಗಳು ಅಡಗಲು, ಅವನ ಮೈಯನ್ನು ತಡವುತ್ತಾ ಹೀಗೆ ಹೇಳಿದಳು.
 • (ಪದ್ಯ-೬೯)

ಪದ್ಯ:-:೭೦:[ಸಂಪಾದಿಸಿ]

ಜಗದೊಳಾರಚ್ಯುತ ಪ್ರೀತಿಯಂ ಮಾಡುವರ್ |
ಮಗನೆ ತನಗಿಷ್ಟರವರಾ ಬಾಲ್ಯದಿಂದೆ ನೀ |
ನಗಧರಧ್ಯಾನಪರನಾಗಿರ್ಪೆ ನಿನ್ನ ಚರಿತವನೋದಿ ಕೇಳ್ವವರ್ಗೆ ||
ಮಿಗೆ ವರ್ಧಿಪುದು ಮುಕುಂದಾಭಿರತಿ ಮುಂದೆ ಕಲಿ |
ಯುಗದೊಳೆನ್ನಾಜ್ಞೆಯಿದು ಹರಿಭಕ್ತಿ ನಿನಗೆ ಬೆಳ |
ವಿಗೆಯಾಗದಿರ್ದಪುದೆ ನಿನ್ನ ವಾಂಛಿತಕಿನ್ನು ತಡೆಯುಂಟೆ ಹೇಳೆಂದಳು ||70||

ಪದವಿಭಾಗ-ಅರ್ಥ:
ಜಗದೊಳು ಆರು ಅಚ್ಯುತ ಪ್ರೀತಿಯಂ ಮಾಡುವರ್ ಮಗನೆ ತನಗಿಷ್ಟರು ಅವರಾ ಬಾಲ್ಯದಿಂದೆ ನೀನು ಅಗಧರ (ಅಗ-ಬೆಟ್ಟ, ಧರ-ಎತ್ತಿದವ) ಧ್ಯಾನಪರನಾಗಿರ್ಪೆ ನಿನ್ನ ಚರಿತವನು ಓದಿ ಕೇಳ್ವವರ್ಗೆ=[ಜಗತ್ತಿನಲ್ಲಿ ಯಾರು ಅಚ್ಯುತನ ಪ್ರೀತಿಯನ್ನು ಮಾಡುವರೋ ಅವರು ಮಗನೆ, ತನಗಿಷ್ಟವಾಗುವರು. ಆ ಬಾಲ್ಯದಿಂದಲೂ ನೀನು ಅಚ್ಯುತನ ಧ್ಯಾನಪರನಾಗಿರುವೆ. ನಿನ್ನ ಚರಿತ್ರವನ್ನು ಓದುವವರಿಗೆ, ಕೇಳುವವರಿಗೆ];; ಮಿಗೆ ವರ್ಧಿಪುದು ಮುಕುಂದ ಅಭಿರತಿ ಮುಂದೆ ಕಲಿಯುಗದೊಳು ಎನ್ನಾಜ್ಞೆಯಿದು ಹರಿಭಕ್ತಿ ನಿನಗೆ ಬೆಳವಿಗೆಯಾಗದೆ ಇರ್ದಪುದೆ ನಿನ್ನ ವಾಂಛಿತಕಿನ್ನು ತಡೆಯುಂಟೆ ಹೇಳೆಂದಳು=[ಮುಂದೆ ಕಲಿಯುಗದಲ್ಲಿ ಮುಕುಂದನ ಬಹಳ ಭಕ್ತಿ ವರ್ಧಿಸುವುದು, ಇದು ನನ್ನಾಜ್ಞೆ; ಹರಿಭಕ್ತಿ ನಿನಗೆ ಅಭಿವೃದ್ಧಿಯಾಗದೆ ಇರುವುದೆ! ನಿನ್ನಲ್ಲಿ ಹರಿಭಕ್ತಿ ಆಗಿಯೇ ಆಗುವುದು. ನಿನ್ನ ಅಪೇಕ್ಷೆಗೆ ಇನ್ನು ತಡೆಯುಂಟೆ ಹೇಳು ಎಂದಳು].
 • ತಾತ್ಪರ್ಯ:ಜಗತ್ತಿನಲ್ಲಿ ಯಾರು ಅಚ್ಯುತನ ಪ್ರೀತಿಯನ್ನು ಮಾಡುವರೋ ಅವರು ಮಗನೆ, ತನಗಿಷ್ಟವಾಗುವರು. ಆ ಬಾಲ್ಯದಿಂದಲೂ ನೀನು ಅಚ್ಯುತನ ಧ್ಯಾನಪರನಾಗಿರುವೆ. ನಿನ್ನ ಚರಿತ್ರವನ್ನು ಓದುವವರಿಗೆ, ಕೇಳುವವರಿಗೆ ಮುಂದೆ ಕಲಿಯುಗದಲ್ಲಿ ಮುಕುಂದನ ಬಹಳ ಭಕ್ತಿ ವರ್ಧಿಸುವುದು, ಇದು ನನ್ನಾಜ್ಞೆ; ಹರಿಭಕ್ತಿ ನಿನಗೆ ಅಭಿವೃದ್ಧಿಯಾಗದೆ ಇರುವುದೆ! ನಿನ್ನಲ್ಲಿ ಹರಿಭಕ್ತಿ ಆಗಿಯೇ ಆಗುವುದು. ನಿನ್ನ ಅಪೇಕ್ಷೆಗೆ ಇನ್ನು ತಡೆಯುಂಟೆ ಹೇಳು ಎಂದಳು].
 • (ಪದ್ಯ-೭೦)

ಪದ್ಯ:-:೭೧:[ಸಂಪಾದಿಸಿ]

ಎಂದು ಕಾರುಣ್ಯದಿಂ ತಾನೊಮ್ಮೆ ಕಣ್ಮುಚ್ಚಿ |
ನಿಂದು ಧ್ಯಾನಿಸಲಾಗ ತಲೆದೋರಿ ತಾಕ್ಷಣದೂ |
ಳೊಂದು ವೈಷ್ಣವಶಕ್ತಿ ಬಳಸಿದಾಯುಧದಿಂದದಂ ಪರಸಿ ಕೊಟ್ಟು ಬಳಿಕ ||
ಇಂದು ಹಾಸನ ಮಸ್ತಕದ ಮೇಲೆ ನಿಜ ಕರವ |
ನೊಂದಿಸಿ ತದೀಯ ಮಂತ್ರೋಪದೇಶಂಗೈದ |
ಳಂದು ಕರ್ಣದೊಳಾನತಪ್ರೀತೆ ಗಿರಿಜಾತೆ ವಿಖ್ಯಾತೆ ಲೋಕಮಾತೆ ||71||

ಪದವಿಭಾಗ-ಅರ್ಥ:
ಎಂದು ಕಾರುಣ್ಯದಿಂ ತಾನು ಒಮ್ಮೆ ಕಣ್ಮುಚ್ಚಿ ನಿಂದು ಧ್ಯಾನಿಸಲು ಆಗ ತಲೆದೋರಿತು ಆಕ್ಷಣದೂಳು ಒಂದು ವೈಷ್ಣವಶಕ್ತಿ ಬಳಸಿದ (ಅವಳನ್ನು ಸುತ್ತುವರಿದ, ಅವಳು ಕೈಯಲ್ಲಿ ಬಳಸಿದ) ಆಯುಧದಿಂದ ಅದಂ ಪರಸಿ ಕೊಟ್ಟು ಬಳಿಕ=[ದೇವಿಯು ಹೀಗೆ ಹೇಳಿ ಕರುಣದಿಂದ ತಾನು ಒಮ್ಮೆ ಕಣ್ಮುಚ್ಚಿ ನಿಂತು ಧ್ಯಾನಿಸಲು, ಆಗ ಆಕ್ಷಣದಲ್ಲಿ ಅವಳ ಕೈಯಲ್ಲಿದ್ದ ಆಯುಧದಿಂದ ಒಂದು ವೈಷ್ಣವಶಕ್ತಿ ಪ್ರತ್ಯಕ್ಷವಾಯಿತು. ಅದನ್ನು ಹರಸಿ ಅವನಿಗೆ ಕೊಟ್ಟು, ಬಳಿಕ];; ಇಂದುಹಾಸನ ಮಸ್ತಕದ ಮೇಲೆ ನಿಜ ಕರವನು ಒಂದಿಸಿ ತದೀಯ (ತದ್ ಈಯ/ಸಂಪತ್ತು) ಮಂತ್ರೋಪದೇಶಂ ಗೈದಳು ಅಂದು ಕರ್ಣದೊಳು ಆನತಪ್ರೀತೆ (ಆನತ-ಬಗ್ಗಿ ನಮಿಸಿದ ಭಕ್ತರ) ಗಿರಿಜಾತೆ (ಹಿಮಗಿರಿಯ ಮಗಳು)ವಿಖ್ಯಾತೆ ಲೋಕಮಾತೆ=[ಚಂದ್ರಹಾಸನ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ಅಂದು ಅವನ ಕಿವಿಯಲ್ಲಿ ಭಕ್ತರಪ್ರೀತೆ ಗಿರಿಜಾತೆ ಪ್ರಸಿದ್ಧ ಲೋಕಮಾತೆ ಸಂಪತ್ಕರವಾದ ಮಂತ್ರೋಪದೇಶವನ್ನು ಮಾಡಿದಳು.]
 • ತಾತ್ಪರ್ಯ:ದೇವಿಯು ಹೀಗೆ ಹೇಳಿ ಕರುಣದಿಂದ ತಾನು ಒಮ್ಮೆ ಕಣ್ಮುಚ್ಚಿ ನಿಂತು ಧ್ಯಾನಿಸಲು, ಆಗ ಆಕ್ಷಣದಲ್ಲಿ ಅವಳ ಕೈಯಲ್ಲಿದ್ದ ಆಯುಧದಿಂದ ಒಂದು ವೈಷ್ಣವಶಕ್ತಿ ಪ್ರತ್ಯಕ್ಷವಾಯಿತು. ಅದನ್ನು ಹರಸಿ ಅವನಿಗೆ ಕೊಟ್ಟು, ಬಳಿಕ ಚಂದ್ರಹಾಸನ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ಅಂದು ಅವನ ಕಿವಿಯಲ್ಲಿ ಭಕ್ತರಪ್ರೀತೆ ಗಿರಿಜಾತೆ ಪ್ರಸಿದ್ಧ ಲೋಕಮಾತೆ ಸಂಪತ್ಕರವಾದ ಮಂತ್ರೋಪದೇಶವನ್ನು ಮಾಡಿದಳು.
 • (ಪದ್ಯ-೭೧)

ಪದ್ಯ:-:೭೨:[ಸಂಪಾದಿಸಿ]

ತಾಯೆ ಪಾರ್ವತಿ ಪರಮ ಕಲ್ಯಾಣಿ ಶಂಕರ |
ಪ್ರೀಯೆ ಸವೇಶ್ವರಿ ಜಗನ್ಮಾತೆ ಸನ್ನುತ |
ಚ್ಛಾಯೆ ಸಾವಿತ್ರಿ ಶಾರದೆ ಸಕಲ ಶಕ್ತಿರೂಪಿಣಿ ಕಾಳಿ ಕಾತ್ಯಾಯನಿ ||
ಶ್ರೀಯೆ ವೈಷ್ಣವಿ ವರದೆ ಚಂಡಿ ಚಾಮುಂಡಿ ನಿರ |
ಪಾಯೆ ನಿಗಮಾಗಮಾರ್ಚಿತೆ ಮಂತ್ರಮಯಿ ಮಹಾ |
ಮಾಯೆ ರಕ್ಷಿಪುದೆಂದು ಕೈಮುಗಿದು ಚಂದ್ರಹಾಸಂ ಬೇಡಿಕೊಳುತಿರ್ದನು ||72|

ಪದವಿಭಾಗ-ಅರ್ಥ:
ತಾಯೆ ಪಾರ್ವತಿ ಪರಮ ಕಲ್ಯಾಣಿ ಶಂಕರ ಪ್ರೀಯೆ ಸವೇಶ್ವರಿ ಜಗನ್ಮಾತೆ ಸನ್ನುತಚ್ಛಾಯೆ ಸಾವಿತ್ರಿ ಶಾರದೆ ಸಕಲ ಶಕ್ತಿರೂಪಿಣಿ ಕಾಳಿ ಕಾತ್ಯಾಯನಿ=:[ತಾಯಿಯೇ, ಪಾರ್ವತಿ! ಪರಮ ಮಂಗಳರೂಪಿನವಳು!, ಶಂಕರನಿಗೆ ಪ್ರಿಯಳು!, ಸರ್ವೇಶ್ವರಿ-ಸರ್ವಕ್ಕೂ ಒಡೆಯಳು! ಜಗನ್ಮಾತೆ! ಸನ್ನುತಚ್ಛಾಯೆ-ಸನ್ನುತ ಉತ್ತಮ ಬಣ್ಣದವಳು! ಸಾವಿತ್ರಿ, ಸಾವಿತ್ರಿಯೂ ನೀನೆ! ನೀನೇ ಶಾರದೆ! ಸಕಲ ಶಕ್ತಿರೂಪಿಣಿ! ಕಾಳಿ! ಕಾತ್ಯಾಯನಿ!];; ಶ್ರೀಯೆ ವೈಷ್ಣವಿ ವರದೆ ಚಂಡಿ ಚಾಮುಂಡಿ ನಿರಪಾಯೆ ನಿಗಮಾಗಮಾರ್ಚಿತೆ ಮಂತ್ರಮಯಿ ಮಹಾಮಾಯೆ ರಕ್ಷಿಪುದೆಂದು ಕೈಮುಗಿದು ಚಂದ್ರಹಾಸಂ ಬೇಡಿಕೊಳುತಿರ್ದನು=[ಶ್ರೀಯೆ- ಲಕ್ಷ್ಮಿ ಸ್ವರೂಪಳೇ! ವೈಷ್ಣವಿಯೂ ನೀನೆ! ವರದೆ! ಚಂಡಿ! ಚಾಮುಂಡಿ! ನಿರಪಾಯೆ- ನಾಶವಿಲ್ಲದವಳೇ! ನಿಗಮ ಆಗಮ ಅರ್ಚಿತೆ- ವೇದಗಳಿಂದ ಪೂಜಿತೆ! ಮಂತ್ರಮಯಿ! ಮಹಾಮಾಯೆ! ರಕ್ಷಿಪುದು ಎಂದು ಕೈಮುಗಿದು ಚಂದ್ರಹಾಸನು ಬೇಡಿಕೊಳುತಿದ್ದನು].
 • ತಾತ್ಪರ್ಯ:ಚಂದ್ರಹಾಸನು ಕೈಮುಗಿದು, ತಾಯಿಯೇ, ಪಾರ್ವತಿ! ಪರಮ ಮಂಗಳರೂಪಿನವಳು!, ಶಂಕರನಿಗೆ ಪ್ರಿಯಳು!, ಸರ್ವೇಶ್ವರಿ-ಸರ್ವಕ್ಕೂ ಒಡೆಯಳು! ಜಗನ್ಮಾತೆ! ಸನ್ನುತಚ್ಛಾಯೆ-ಸನ್ನುತ ಉತ್ತಮ ಬಣ್ಣದವಳು! ಸಾವಿತ್ರಿ, ಸಾವಿತ್ರಿಯೂ ನೀನೆ! ನೀನೇ ಶಾರದೆ! ಸಕಲ ಶಕ್ತಿರೂಪಿಣಿ! ಕಾಳಿ! ಕಾತ್ಯಾಯನಿ! ಶ್ರೀಯೆ- ಲಕ್ಷ್ಮಿ ಸ್ವರೂಪಳೇ! ವೈಷ್ಣವಿಯೂ ನೀನೆ! ವರದೆ! ಚಂಡಿ! ಚಾಮುಂಡಿ! ನಿರಪಾಯೆ- ನಾಶವಿಲ್ಲದವಳೇ! ನಿಗಮ ಆಗಮ ಅರ್ಚಿತೆ- ವೇದಗಳಿಂದ ಪೂಜಿತೆ! ಮಂತ್ರಮಯಿ! ಮಹಾಮಾಯೆ! ರಕ್ಷಿಪುದು ಎಂದು ಬೇಡಿಕೊಳುತಿದ್ದನು].
 • (ಪದ್ಯ-೭೨)

ಪದ್ಯ:-:೭೩:[ಸಂಪಾದಿಸಿ]

ಹರಿಯ ವಕ್ಷಸ್ಥಳವನಜನ ವದನಾಬ್ಜಮಂ |
ಗಿರಿಶನ ಕಳೇಬರಾರ್ಧವನಿಂಬುಗೊಂಡೆಸೆವ |
ಪರಮ ಕಲ್ಯಾಣಿ ಕಾಲತ್ರಯದುಪಾಸ್ತಿಗಧಿದೇವಿ ಗಾಯಿತ್ರಿ ವರದೆ ||
ಗರುಡವಾಹನೆ ಹಂಸಗಮನೆ ವೃಷಭಾರೂಢೆ |
ನಿರುಪಮ ಫಲಪ್ರದಾಯಿನಿ ಪುಣ್ಯಮಯಿ ಸಕಲ |
ದುರಿತಹರೆ ತನ್ನನುದ್ದರಿಸೆಂದು ಚಂದ್ರಹಾಸಂ ಬೇಡಿಕೊಳುತಿರ್ದನು ||73||

ಪದವಿಭಾಗ-ಅರ್ಥ:
ಹರಿಯ ವಕ್ಷಸ್ಥಳ ವನಜನ ವದನಾಬ್ಜಮಂ ಗಿರಿಶನ ಕಳೇಬರಾರ್ಧವನಿಂಬುಗೊಂಡೆಸೆವ ಪರಮ ಕಲ್ಯಾಣಿ ಕಾಳತ್ರಯದ ಉಪಾಸ್ತಿಗೆ ಅಧಿದೇವಿ ಗಾಯಿತ್ರಿ ವರದೆ=[ಚಂದ್ರಹಾಸನು ಮತ್ತೂ ಸ್ತುತಿಸುತ್ತಾನೆ: ಹರಿಯ ಎದೆಯನ್ನೂ, ಬ್ರಹ್ಮನ ಮುಖವನ್ನೂ, ಶಿವನ ದೇಹದ ಅರ್ಧವನ್ನೂ, ತುಂಬಿ ಶೋಭಿಸುವ ಪರಮ ಕಲ್ಯಾಣಿ! ಮೂರುಕಾಲದ ಉಪಾಸನೆಗೆ ಅಧಿದೇವಿ! ಗಾಯಿತ್ರಿ! ವರದೆ!];; ಗರುಡವಾಹನೆ ಹಂಸಗಮನೆ ವೃಷಭಾರೂಢೆ ನಿರುಪಮ ಫಲಪ್ರದಾಯಿನಿ ಪುಣ್ಯಮಯಿ ಸಕಲ ದುರಿತಹರೆ ತನ್ನನುದ್ದರಿಸೆಂದು ಚಂದ್ರಹಾಸಂ ಬೇಡಿಕೊಳುತಿರ್ದನು=[ಗರುಡವಾಹನಳು! ಹಂಸಗಮನಯು! ವೃಷಭ/ಎತ್ತು ಏರಿದವಳು(ಶಿವನ ಜೊತೆ) ನಿರುಪಮ ಫಲಪ್ರದಾಯಿನಿ- ಕೇಳಿದ್ದನ್ನು ಕೊಡುವವಳು! ಪುಣ್ಯಮಯಿ! ಸಕಲ ಪಾಪ ನಾಶ ಮಾಡುವವಳು! ತನ್ನನು ಉದ್ದರಿಸು ಎಂದು ಚಂದ್ರಹಾಸನು ಬೇಡಿಕೊಳುತ್ತಿದ್ದನು].
 • ತಾತ್ಪರ್ಯ:ಚಂದ್ರಹಾಸನು ಮತ್ತೂ ಸ್ತುತಿಸುತ್ತಾನೆ: ಹರಿಯ ಎದೆಯನ್ನೂ, ಬ್ರಹ್ಮನ ಮುಖವನ್ನೂ, ಶಿವನ ದೇಹದ ಅರ್ಧವನ್ನೂ, ತುಂಬಿ ಶೋಭಿಸುವ ಪರಮ ಕಲ್ಯಾಣಿ! ಮೂರುಕಾಲದ ಉಪಾಸನೆಗೆ ಅಧಿದೇವಿ! ಗಾಯಿತ್ರಿ! ವರದೆ! ಗರುಡವಾಹನಳು! ಹಂಸಗಮನಯು! ವೃಷಭ/ಎತ್ತು ಏರಿದವಳು(ಶಿವನ ಜೊತೆ) ನಿರುಪಮ ಫಲಪ್ರದಾಯಿನಿ- ಕೇಳಿದ್ದನ್ನು ಕೊಡುವವಳು! ಪುಣ್ಯಮಯಿ! ಸಕಲ ಪಾಪ ನಾಶ ಮಾಡುವವಳು! ತನ್ನನು ಉದ್ದರಿಸು ಎಂದು ಚಂದ್ರಹಾಸನು ಬೇಡಿಕೊಳುತ್ತಿದ್ದನು.
 • (ಪದ್ಯ-೭೩)

ಪದ್ಯ:-:೭೪:[ಸಂಪಾದಿಸಿ]

ಮೊಳಗಿದುವು ದೇವದುಂದುಭಿಗಳಂತಾಗ ಪೂ |
ಮಳೆಕರೆದುದಭ್ರದೊಳ್ ಕೊಂಡಾಡಿತಮರತತಿ |
ಬಳಿಕ ಶಾಂಭವಿ ಮಾಯವಾದಳಸುಪಸರಿಸಿತು ಮದನ ಮಂತ್ರಿಗಳೊಡಲೊಳು ||
ಬಲ ರೂಪ ಕಾಂತಿಗಳ ಮುನ್ನಿನಂದದೊಳೆಸೆಯೆ |
ಮಲಗಿದವರೇಳ್ವಂತೆ ಕಣ್ಣಿರೆದು ಕುಳ್ಳಿರ್ದ |
ರೊಲವಿನಿಂ ಚಂದ್ರಹಾಸಂ ಮಾವನಡಿಗೆ ಮಣಿದಪ್ಪಿದಂ ಮೈದುನನನು ||74||

ಪದವಿಭಾಗ-ಅರ್ಥ:
ಮೊಳಗಿದುವು ದೇವದುಂದುಭಿಗಳು ಅಂತು ಆಗ ಪೂಮಳೆ ಕರೆದುದು ಅಭ್ರದೊಳ್ ಕೊಂಡಾಡಿತು ಅಮರತತಿ ಬಳಿಕ ಶಾಂಭವಿ ಮಾಯವಾದಳು ಅಸುಪಸರಿಸಿತು ಮದನ ಮಂತ್ರಿಗಳ ಒಡಲೊಳು=[ಚಂದ್ರಹಾಸನಿಗೆ ದೇವಿ ಪ್ರಸನ್ನಳಾಗಲು, ದೇವತೆಗಳ ವಾದ್ಯಘೋಷಗಳು ಮೊಳಗಿದುವು; ಹಾಗೆಯೇ ಅವರು ಆಗ ಹೂವಿನ ಮಳೆ ಕರೆದರು; ದೇವತೆಗಳ ತತಿ/ ಸಮೂಹ ಆಕಾಶದಲ್ಲಿ ಕೊಂಡಾಡಿತು; ಬಳಿಕ ಪಾರ್ವತಿಯು ಮಾಯವಾದಳು; ಮದನ ಮತ್ತು ಮಂತ್ರಿಗಳ ದೇಹದಲ್ಲಿ ಜೀವ ಸಂಚರಿಸಿತು; ];; ಬಲ ರೂಪ ಕಾಂತಿಗಳ ಮುನ್ನಿನಂದದೊಳು ಎಸೆಯೆ ಮಲಗಿದವರು ಏಳ್ವಂತೆ ಕಣ್ಣಿರೆದು ಕುಳ್ಳಿರ್ದರು ಒಲವಿನಿಂ ಚಂದ್ರಹಾಸಂ ಮಾವನ ಅಡಿಗೆ ಮಣಿದು ಅಪ್ಪಿದಂ ಮೈದುನನನು=[ಬಲ, ರೂಪ, ದೇಹಕಾಂತಿಗಳು ಮೊದಲಿನಂತೆಯೇ ತೊರುತ್ತಿರಲು ಮಲಗಿದವರು ಏಳುವಂತೆ ಕಣ್ಣುತೆರೆದು ಕುಳಿತರು. ಒಲವಿನಿಂ ಚಂದ್ರಹಾಸನು ಪ್ರೀತಿಯಿಂದ ಮಾವನ ಪಾದಗಳಿಗೆ ನಮಿಸಿ, ಮೈದುನ ಮದನನ್ನು ಅಪ್ಪಿಕೊಂಡನು.]
 • ತಾತ್ಪರ್ಯ:ಚಂದ್ರಹಾಸನಿಗೆ ದೇವಿ ಪ್ರಸನ್ನಳಾಗಲು, ದೇವತೆಗಳ ವಾದ್ಯಘೋಷಗಳು ಮೊಳಗಿದುವು; ಹಾಗೆಯೇ ಅವರು ಆಗ ಹೂವಿನ ಮಳೆ ಕರೆದರು; ದೇವತೆಗಳ ತತಿ/ ಸಮೂಹ ಆಕಾಶದಲ್ಲಿ ಕೊಂಡಾಡಿತು; ಬಳಿಕ ಪಾರ್ವತಿಯು ಮಾಯವಾದಳು; ಮದನ ಮತ್ತು ಮಂತ್ರಿಗಳ ದೇಹದಲ್ಲಿ ಜೀವ ಸಂಚರಿಸಿತು; ಬಲ, ರೂಪ, ದೇಹಕಾಂತಿಗಳು ಮೊದಲಿನಂತೆಯೇ ತೊರುತ್ತಿರಲು ಮಲಗಿದವರು ಏಳುವಂತೆ ಕಣ್ಣುತೆರೆದು ಕುಳಿತರು. ಒಲವಿನಿಂ ಚಂದ್ರಹಾಸನು ಪ್ರೀತಿಯಿಂದ ಮಾವನ ಪಾದಗಳಿಗೆ ನಮಿಸಿ, ಮೈದುನ ಮದನನ್ನು ಅಪ್ಪಿಕೊಂಡನು.
 • (ಪದ್ಯ-೭೪)

ಪದ್ಯ:-:೭೫:[ಸಂಪಾದಿಸಿ]

ಭೂವಲಯಕಿದು ಪೊಸತು ಮರಣ ಮಾದೊಡೆ ಮತ್ತೆ |
ಜೀವಮಂ ಬರಿಸಿದವರುಂಟೆ ನಿನ್ನವೊಲೆಂದು |
ಕೈವಾರಿಸುವ ನಿಖಿಳ ಪೌರಜನ ಪರಿಜನಕೆ ಚಂದ್ರಹಾಸಂ ಮುದದೊಳು||
ಕಾವರಾರ್ ಕೊಲುವರಾರಳಿವರಾರುಳಿವರಾರ್ |
ಭಾವಿಪೊಡೆ ವಿಷ್ಣು ಮಾಯಾಮಯ ಮಿದೆಂವರಿದು |
ನೀವೆಲ್ಲರುಂ ಕೃಷ್ಣ ಭಜನೆಗೈದಪದೆಂದು ಸಾರಿದಂ ಬೇಡಿಕೊಳುತ ||75||

ಪದವಿಭಾಗ-ಅರ್ಥ:
ಭೂವಲಯಕಿದು ಪೊಸತು ಮರಣ ಮಾದೊಡೆ ಮತ್ತೆ ಜೀವಮಂ ಬರಿಸಿದವರುಂಟೆ ನಿನ್ನವೊಲೆಂದು ಕೈವಾರಿಸುವ ನಿಖಿಳ ಪೌರಜನ ಪರಿಜನಕೆ ಚಂದ್ರಹಾಸಂ ಮುದದೊಳು=[ ಭೂಮಂಡಲದಲ್ಲಿ ಇದು ಹೊಸತು, ಮರಣಹೊಂದಿದರೆ ಮತ್ತೆ ಜೀವವನ್ನು ಬರಿಸಿದವರು ಇದ್ದಾರೆಯೇ ನಿನ್ನಂತೆ ಎಂದು ಹೊಗಳುವ ಎಲ್ಲಾ ಪುರಜನ ಪರಿವಾರ ಜನಕರನ್ನು ಕುರಿತು ಸಂತೋಷದಿಂದ ಬೇಡಿಕೊಳುತ್ತಾ ಚಂದ್ರಹಾಸನು];;ಕಾವರಾರ್ ಕೊಲುವರಾರ್ ಅಳಿವರಾರ್ ಉಳಿವರಾರ್ ಭಾವಿಪೊಡೆ ವಿಷ್ಣು ಮಾಯಾಮಯ ಮಿದೆಂವು ಅರಿದು ನೀವೆಲ್ಲರುಂ ಕೃಷ್ಣ ಭಜನೆ ಗೈದಪದು ಎಂದು ಸಾರಿದಂ ಬೇಡಿಕೊಳುತ=[ಕಾಯುವವರು ಯಾರು! ಕೊಲ್ಲುವವರು ಯಾರು ಮರಣಹೊಂದಿದವರು ಯಾರು,ಉಳಿವರು ಯಾರು, ಭಾವಿಸಿದರೆ ಇದು ವಿಷ್ಣು ಮಾಯಾಮಯವು, ಎಂದು ತಿಳಿದು ನೀವೆಲ್ಲರೂ ಕೃಷ್ಣ ಭಜನೆಯನ್ನು ಮಾಡುವುದು ಎಂದು ಸಾರಿದನು].
 • ತಾತ್ಪರ್ಯ:ಭೂಮಂಡಲದಲ್ಲಿ ಇದು ಹೊಸತು, ಮರಣಹೊಂದಿದರೆ ಮತ್ತೆ ಜೀವವನ್ನು ಬರಿಸಿದವರು ಇದ್ದಾರೆಯೇ ನಿನ್ನಂತೆ ಎಂದು ಹೊಗಳುವ ಎಲ್ಲಾ ಪುರಜನ ಪರಿವಾರ ಜನಕರನ್ನು ಕುರಿತು ಸಂತೋಷದಿಂದ ಬೇಡಿಕೊಳುತ್ತಾ ಚಂದ್ರಹಾಸನು, ಕಾಯುವವರು ಯಾರು! ಕೊಲ್ಲುವವರು ಯಾರು ಮರಣಹೊಂದಿದವರು ಯಾರು,ಉಳಿವರು ಯಾರು, ಭಾವಿಸಿದರೆ ಇದು ವಿಷ್ಣು ಮಾಯಾಮಯವು, ಎಂದು ತಿಳಿದು ನೀವೆಲ್ಲರೂ ಕೃಷ್ಣ ಭಜನೆಯನ್ನು ಮಾಡುವುದು ಎಂದು ಸಾರಿದನು.
 • (ಪದ್ಯ-೭೫)

ಪದ್ಯ:-:೭೬:[ಸಂಪಾದಿಸಿ]

ಇಮ್ಮಡಿತುತ್ಸುವಂ ಬಳಿಕನಿಬರೆಲ್ಲರುಂ |
ಸುಮ್ಮಾನದಿಂದೆ ನಗರ ಪ್ರವೇಶಂಗೈದ |
ರುಮ್ಮಳಿಸುತಿರ್ದಂ ಕುಳಿಂದಕಂ ಪಾರ್ಥ ಕೇಳಾ ಚಂದನಾವತಿಯೊಳು ||
ಸಮ್ಮತದೊಳಾತನಂ ಕರೆಸಿಕೊಂಡಾರಾಜ್ಯ |
ಮಮ್ಮಹಾವಿಭವದಿಂ ವರಿಸಿದಂ ಚಂದ್ರಹಾ |
ಸಮ್ಮುದಾನ್ವಿತನಾಗಿ ವಿಷಯೆ ಚಂಪಕಮಾಲಿನಿಯರ ಸಂಭೊಗದಿಂದೆ ||76||

ಪದವಿಭಾಗ-ಅರ್ಥ:
ಇಮ್ಮಡಿತು ಉತ್ಸುವಂ ಬಳಿಕ ಅನಿಬರು ಎಲ್ಲರುಂ ಸುಮ್ಮಾನದಿಂದೆ ನಗರ ಪ್ರವೇಶಂ ಗೈದರು ಉಮ್ಮಳಿಸುತ ಇರ್ದಂ ಕುಳಿಂದಕಂ ಪಾರ್ಥ ಕೇಳು ಆ ಚಂದನಾವತಿಯೊಳು=[ಪಾರ್ಥ ಕೇಳು, ಉತ್ಸುವವವು/ ಆನಂದವು ಮೊದಲಿನ ಎರಡರಷ್ಟಾಯಿತು, ಬಳಿಕ ಅವರೆಲ್ಲರೂ ಸಂತೋಷದಿಂದ ನಗರವನ್ನು ಪ್ರವೇಶ ಮಾಡಿದರು; ಆ ಚಂದನಾವತಿಯಲ್ಲಿ ಕುಳಿಂದಕನು ವ್ಯಥೆಪಡುತ್ತಾ ಇದ್ದನು];; ಸಮ್ಮತದೊಳು ಆತನಂ ಕರೆಸಿಕೊಂಡು ಆ ರಾಜ್ಯಮಂ ಮಹಾವಿಭವದಿಂ ವರಿಸಿದಂ ಚಂದ್ರಹಾಸಂ ಮುದಾನ್ವಿತನಾಗಿ ವಿಷಯೆ ಚಂಪಕಮಾಲಿನಿಯರ ಸಂಭೊಗದಿಂದೆ=[ಮಂತ್ರಿಗಳ ಸಮ್ಮತಿಯಿಂದ ಆತನನ್ನು ಕರೆಸಿಕೊಂಡು ಆ ರಾಜ್ಯವನ್ನು ಮಹಾವೈಭವದಿಂದ ಚಂದ್ರಹಾಸನು ಸಂತೋಷವಾಗಿ ವಿಷಯೆ ಚಂಪಕಮಾಲಿನಿಯರ ಜೊತೆಗೂಡಿ ಆಳಿದನು.]
 • ತಾತ್ಪರ್ಯ:ಪಾರ್ಥ ಕೇಳು, ಉತ್ಸುವವವು/ ಆನಂದವು ಮೊದಲಿನ ಎರಡರಷ್ಟಾಯಿತು, ಬಳಿಕ ಅವರೆಲ್ಲರೂ ಸಂತೋಷದಿಂದ ನಗರವನ್ನು ಪ್ರವೇಶ ಮಾಡಿದರು; ಆ ಚಂದನಾವತಿಯಲ್ಲಿ ಕುಳಿಂದಕನು ವ್ಯಥೆಪಡುತ್ತಾ ಇದ್ದನು. ಮಂತ್ರಿಗಳ ಸಮ್ಮತಿಯಿಂದ ಆತನನ್ನು ಕರೆಸಿಕೊಂಡು ಆ ರಾಜ್ಯವನ್ನು ಮಹಾವೈಭವದಿಂದ ಚಂದ್ರಹಾಸನು ಸಂತೋಷವಾಗಿ ವಿಷಯೆ ಚಂಪಕಮಾಲಿನಿಯರ ಜೊತೆಗೂಡಿ ಆಳಿದನು.
 • (ಪದ್ಯ-೭೬)

ಪದ್ಯ:-:೭೭:[ಸಂಪಾದಿಸಿ]

ನಂದನಂ ಜನಿಸಿದಂ ಬಳಿಕ ವಿಷಯಾ ಗರ್ಭ |
ದಿಂದೆ ಮಕರಧ್ವಜಾಖ್ಯಂ ಕೂಡೆ ಸೌಭಾಗ್ಯ |
ದಿಂದೆ ಚಂಪಕಮಾಲಿನಿಯ ಬಸಿರೊಳುದಿಸಿದಂ ಪದ್ಮಾಕ್ಷನೆಂಬ ಸೂನು ||
ತಂದೆಗಿಮ್ಮಡಿ ಪರಾಕ್ರಮಿಗಳಾದರ್‍ಧರೆಯೊ |
ಳೀಂದುಹಾಸಂಗೆ ಸಮನಾದ ದೊರೆಯಿಲ್ಲಾದು |
ದಿಂದುವರೆಗಾತಂಗೆ ಮೂನ್ನೂರು ಬರಿಸಮಿರ್ದಪನೀಗ ವೃದ್ಧನಾಗಿ ||77||

ಪದವಿಭಾಗ-ಅರ್ಥ:
ನಂದನಂ ಜನಿಸಿದಂ ಬಳಿಕ ವಿಷಯಾ ಗರ್ಭದಿಂದೆ ಮಕರಧ್ವಜಾಖ್ಯಂ ಕೂಡೆ ಸೌಭಾಗ್ಯದಿಂದೆ ಚಂಪಕಮಾಲಿನಿಯ ಬಸಿರೊಳು ಉದಿಸಿದಂ ಪದ್ಮಾಕ್ಷನೆಂಬ ಸೂನು=[ಚಂದ್ರಹಾಸನಿಗೆ ಬಳಿಕ ವಿಷಯೆಯ ಗರ್ಭದಿಂದ ಮಕರಧ್ವಜ ಹೆಸರಿನ ಮಗನು ಜನಿಸಿದನು; ಆ ಕೂಡಲೆ ಸೌಭಾಗ್ಯವಶದಿಂದ ಚಂಪಕಮಾಲಿನಿಯ ಗರ್ಭದಲ್ಲಿ ಪದ್ಮಾಕ್ಷನೆಂಬ ಮಗನು ಜನಿಸಿದನು.];; ತಂದೆಗೆ ಇಮ್ಮಡಿ ಪರಾಕ್ರಮಿಗಳು ಆದರ್‍ ಧರೆಯೊಳು ಇಂದುಹಾಸಂಗೆ ಸಮನಾದ ದೊರೆಯಿಲ್ಲ ಆದುದು ಇಂದುವರೆಗೆ ಆತಂಗೆ ಮೂನ್ನೂರು ಬರಿಸಂ ಇರ್ದಪನು ಈಗ ವೃದ್ಧನಾಗಿ=[ಇವರು ತಂದೆಗಿಂತ ಇಮ್ಮಡಿ ಪರಾಕ್ರಮಿಗಳು ಆಗಿರುವರು. ಈ ಭೂಮಿಯಲ್ಲಿ ಚಂದ್ರಹಾಸನಿಗೆ ಸಮನಾದ ವಿರ ದೊರೆಯಿಲ್ಲ. ಇದುವರೆಗೆ ಆತನಿಗೆ ಮೂನ್ನೂರು ವರ್ಷ ವಯಸ್ಸು ಆಗಿರುವುದು. ಅವನು ಈಗ ವೃದ್ಧನಾಗಿ ಇರುವನು].
 • ತಾತ್ಪರ್ಯ:ಚಂದ್ರಹಾಸನಿಗೆ ಬಳಿಕ ವಿಷಯೆಯ ಗರ್ಭದಿಂದ ಮಕರಧ್ವಜ ಹೆಸರಿನ ಮಗನು ಜನಿಸಿದನು; ಆ ಕೂಡಲೆ ಸೌಭಾಗ್ಯವಶದಿಂದ ಚಂಪಕಮಾಲಿನಿಯ ಗರ್ಭದಲ್ಲಿ ಪದ್ಮಾಕ್ಷನೆಂಬ ಮಗನು ಜನಿಸಿದನು. ಇವರು ತಂದೆಗಿಂತ ಇಮ್ಮಡಿ ಪರಾಕ್ರಮಿಗಳಾಗಿರುವರು. ಈ ಭೂಮಿಯಲ್ಲಿ ಚಂದ್ರಹಾಸನಿಗೆ ಸಮನಾದ ವೀರ ದೊರೆಯಿಲ್ಲ. ಈ ಸಮಯಕ್ಕೆ ಆತನಿಗೆ ಮೂನ್ನೂರು ವರ್ಷ ವಯಸ್ಸು ಆಗಿರುವುದು. ಅವನು ಈಗ ವೃದ್ಧನಾಗಿರುವನು].
 • (ಪದ್ಯ-೭೭)

ಪದ್ಯ:-:೭೮:[ಸಂಪಾದಿಸಿ]

ಬುದ್ಧಿಪೂರ್ವಕಮಿಲ್ಲದಿಹ ಬಾಲಕಂಗೆ ಪರಿ |
ಶುದ್ಧ ಸಾಲಗ್ರಾಮ ಶಿಲೆ ಸಂಸರ್ಗದಿಂ |
ದುದ್ಧತದ ಸಾಮ್ರಾಜ್ಯ ಪದವಿ ಕೈಸಾರ್ದುದೆನಲಿನ್ನು ಬೇಕೆಂದು ಬಯಸಿ ||
ಶ್ರದ್ಧೆಯಿಂ ಪ್ರತಿದಿನದೊಳರ್ಚಿಸುವ ನರನಾವ |
ಸಿದ್ದಿಯಂ ಪಡೆದಪನೊ ತನಗದರ ಪುಣ್ಯದಭಿ |
ವೃದ್ಧಿಯಂ ಬಣ್ಣಿಸುವೊಡರಿದೆಂದು ಫಲುಗುಣಂಗಾ ನಾರದಂ ಪೇಳ್ದನು ||78||

ಪದವಿಭಾಗ-ಅರ್ಥ:
ಬುದ್ಧಿಪೂರ್ವಕಂ ಇಲ್ಲದಿಹ ಬಾಲಕಂಗೆ ಪರಿಶುದ್ಧ ಸಾಲಗ್ರಾಮ ಶಿಲೆ ಸಂಸರ್ಗದಿಂದ ಉದ್ಧತದ ಸಾಮ್ರಾಜ್ಯ ಪದವಿ ಕೈಸಾರ್ದುದು ಎನಲು ಇನ್ನು ಬೇಕೆಂದು ಬಯಸಿ=[ಬುದ್ಧಿಪೂರ್ವಕ ಅಲ್ಲದೆ ಆಕಸ್ಮಿಕವಾಗಿ ಬಾಲಕನಿಗೆ ಸಿಕ್ಕಿದ ಪರಿಶುದ್ಧವಾದ ಸಾಲಿಗ್ರಾಮಶಿಲೆಯ ಸಂಸರ್ಗದಿಂದ ಉನ್ನತವಾದ ಸಾಮ್ರಾಜ್ಯ ಪದವಿಯು ದೊರಕಿತು ಎನ್ನುವುದಾದರೆ, ಇನ್ನು ಉನ್ನತಿಯು ಬೇಕೆಂದು ಬಯಸಿ];; ಶ್ರದ್ಧೆಯಿಂ ಪ್ರತಿದಿನದೊಳು ಅರ್ಚಿಸುವ ನರನು ಆವ ಸಿದ್ದಿಯಂ ಪಡೆದಪನೊ ತನಗೆ ಅದರ ಪುಣ್ಯದ ಅಭಿವೃದ್ಧಿಯಂ ಬಣ್ಣಿಸುವೊಡೆ ಅರಿದು ಎಮದು ಫಲುಗುಣಂಗೆ ಆ ನಾರದಂ ಪೇಳ್ದನು=[ಶ್ರದ್ಧೆಯಿಂದ ಪ್ರತಿದಿನವೂ ಅರ್ಚಿಸುವ ಮನುಷ್ಯನು ಯಾವ ಫಲವನ್ನು ಪಡೆಯುವನೊ, ತನಗೆ ಅದರ ಪುಣ್ಯದಿಂದಾಗುವ ಏಳಿಗೆಯನ್ನು ವರ್ಣಿಸಲು ಅರಿಯೆನು, ಎಂದು ಫಲ್ಗುಣನಿಗೆ ಆ ನಾರದನು ಹೇಳಿದನು].
 • ತಾತ್ಪರ್ಯ:ಬುದ್ಧಿಪೂರ್ವಕ ಅಲ್ಲದೆ ಆಕಸ್ಮಿಕವಾಗಿ ಬಾಲಕನಿಗೆ ಸಿಕ್ಕಿದ ಪರಿಶುದ್ಧವಾದ ಸಾಲಿಗ್ರಾಮಶಿಲೆಯ ಸಂಸರ್ಗದಿಂದ ಉನ್ನತವಾದ ಸಾಮ್ರಾಜ್ಯ ಪದವಿಯು ದೊರಕಿತು ಎನ್ನುವುದಾದರೆ, ಇನ್ನು ಉನ್ನತಿಯು ಬೇಕೆಂದು ಬಯಸಿ ಶ್ರದ್ಧೆಯಿಂದ ಪ್ರತಿದಿನವೂ ಅರ್ಚಿಸುವ ಮನುಷ್ಯನು ಯಾವ ಫಲವನ್ನು ಪಡೆಯುವನೊ, ತನಗೆ ಅದರ ಪುಣ್ಯದಿಂದಾಗುವ ಏಳಿಗೆಯನ್ನು ವರ್ಣಿಸಲು ಅರಿಯೆನು, ಎಂದು ಫಲ್ಗುಣನಿಗೆ ಆ ನಾರದನು ಹೇಳಿದನು].
 • (ಪದ್ಯ-೭೮)

ಪದ್ಯ:-:೭೯:[ಸಂಪಾದಿಸಿ]

ಹರಿಯ ಸಾಳಗ್ರಾಮಶಿಲೆಯ ಮಹಿಮೆಗಳನಾ |
ದರದಿಂದೆ ವಿಸ್ತಿರಿಸಿ ಚಂದ್ರಹಾಸನ ಪೂರ್ವ |
ಚರಿತಮಂ ಪೇಳ್ದು ವಂದನೆಗೊಂಡು ದೇವಮುನಿ ಸರಿದನಂಬರ ಪಥದೊಳು ||
ವರ ಭಾಗವತ ಶಿರೋಮಣಿಯ ದರ್ಶನದಿಂದ|
ಪರಮ ವೈಷ್ಣವ ಸಂಗತಿಯನಾಲಿಸಿದೆನೆಂದು |
ಸುರನಗರದೆರೆಯ ಲಕ್ಷ್ಮೀಪತಿಯ ಮೈದುನಂ ಪರಿತೋಷಮಂ ತಾಳ್ದನು ||79||

ಪದವಿಭಾಗ-ಅರ್ಥ:
ಹರಿಯ ಸಾಳಗ್ರಾಮ ಶಿಲೆಯ ಮಹಿಮೆಗಳನು ಆದರದಿಂದೆ ವಿಸ್ತಿರಿಸಿ ಚಂದ್ರಹಾಸನ ಪೂರ್ವಚರಿತಮಂ ಪೇಳ್ದು ವಂದನೆಗೊಂಡು ದೇವಮುನಿ ಸರಿದನು ಅಂಬರ ಪಥದೊಳು=[ಹರಿಯ ಸಾಲಿಗ್ರಾಮ ಶಿಲೆಯ ಮಹಿಮೆಗಳನ್ನು ಆದರದಿಂದ ವಿಸ್ತಾರವಾಗಿ ಚಂದ್ರಹಾಸನ ಪೂರ್ವಚರಿತ್ರೆಯನ್ನು ಹೇಳಿ ಅರ್ಜುನನಿಂದ ವಂದನೆಯನ್ನು ಸ್ವೀಕರಿಸಿ, ದೇವಮುನಿ ನಾರದನು ಆಕಾಶಮಾರ್ಗದಲ್ಲಿ ಹೋದನು ];; ವರ ಭಾಗವತ ಶಿರೋಮಣಿಯ ದರ್ಶನದಿಂದ ಪರಮ ವೈಷ್ಣವ ಸಂಗತಿಯನು ಆಲಿಸಿದೆನೆಂದು ಸುರನಗರದೆರೆಯ ಲಕ್ಷ್ಮೀಪತಿಯ ಮೈದುನಂ ಪರಿತೋಷಮಂ ತಾಳ್ದನು=[ಶ್ರೇಷ್ಠ ಭಗವಂತನ ಭಕ್ತ ಶಿರೋಮಣಿಯ ದರ್ಶನದಿಂದ ಪರಮ ವೈಷ್ಣವ ಸಂಗತಿಯನ್ನು ಕೇಳಿದೆನೆಂದು ದೇವನೂರಿನ ಲಕ್ಷ್ಮೀಪತಿಯ ಮೈದುನ ಅರ್ಜುನನು ಬಹಳಸಂತೋಷಪಟ್ಟನು].
 • ತಾತ್ಪರ್ಯ:ಹರಿಯ ಸಾಳಗ್ರಾಮ ಶಿಲೆಯ ಮಹಿಮೆಗಳನು ಆದರದಿಂದೆ ವಿಸ್ತಿರಿಸಿ ಚಂದ್ರಹಾಸನ ಪೂರ್ವಚರಿತಮಂ ಪೇಳ್ದು ವಂದನೆಗೊಂಡು ದೇವಮುನಿ ಸರಿದನು ಅಂಬರ ಪಥದೊಳು=[ಹರಿಯ ಸಾಲಿಗ್ರಾಮ ಶಿಲೆಯ ಮಹಿಮೆಗಳನ್ನು ಆದರದಿಂದ ವಿಸ್ತಾರವಾಗಿ ಚಂದ್ರಹಾಸನ ಪೂರ್ವಚರಿತ್ರೆಯನ್ನು ಹೇಳಿ ಅರ್ಜುನನಿಂದ ವಂದನೆಯನ್ನು ಸ್ವೀಕರಿಸಿ, ದೇವಮುನಿ ನಾರದನು ಆಕಾಶಮಾರ್ಗದಲ್ಲಿ ಹೋದನು ];; ವರ ಭಾಗವತ ಶಿರೋಮಣಿಯ ದರ್ಶನದಿಂದ ಪರಮ ವೈಷ್ಣವ ಸಂಗತಿಯನು ಆಲಿಸಿದೆನೆಂದು ಸುರನಗರದೆರೆಯ ಲಕ್ಷ್ಮೀಪತಿಯ ಮೈದುನಂ ಪರಿತೋಷಮಂ ತಾಳ್ದನು=[ಶ್ರೇಷ್ಠ ಭಗವಂತನ ಭಕ್ತ ಶಿರೋಮಣಿಯ ದರ್ಶನದಿಂದ ಪರಮ ವೈಷ್ಣವ ಸಂಗತಿಯನ್ನು ಕೇಳಿದೆನೆಂದು ದೇವನೂರಿನ ಲಕ್ಷ್ಮೀಪತಿಯ ಮೈದುನ ಅರ್ಜುನನು ಬಹಳಸಂತೋಷಪಟ್ಟನು].
 • (ಪದ್ಯ-೭೯)
 • ಸಂಧಿ ೩೧ಕ್ಕೆ ಪದ್ಯಗಳು:೧೭೫೦.
 • [೧]
 • [೨]

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


 1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
 2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.