ವಿಷಯಕ್ಕೆ ಹೋಗು

ಜೈಮಿನಿ ಭಾರತ/ನಾಲ್ಕನೆಯ ಸಂಧಿ

ವಿಕಿಸೋರ್ಸ್ದಿಂದ

ಜೈಮಿನಿ ಭಾರತ ನಾಲ್ಕನೆಯ ಸಂಧಿ

[ಸಂಪಾದಿಸಿ]

ಪದ್ಯ - ಸೂಚನೆ

[ಸಂಪಾದಿಸಿ]
ಜಡಿದು ಭದ್ರಾವತಿಯೊಳಮಲತರ ವಾಜಿಯಂ |
ಪಿಡಿದುಕಲಿಯೌವನಾಶ್ವನ ಚಾತುರಂಗಮಂ |
ಬಡಿದವನನದಲ್ಲಿ ಕಾಣಿಸಿಕೊಂಡು ಹಸ್ತಿನಾವತಿಗೆ ಭೀಮಂ ಬಂದನು ||
ಪದವಿಭಾಗ-ಅರ್ಥ:
ಜಡಿದು= ಹೊಡೆದು,ಯುದ್ಧಮಾಡಿ, ಭದ್ರಾವತಿಯೊಳಮಲತರ-: ಭದ್ರಾವತಿಯೊಳು ಅಮಲತರ ವಾಜಿಯಂ= ಭದ್ರಾವತಿಯಲ್ಲಿದ್ದ ಶ್ರೇಷ್ಟವಾದ ಕುದುರೆಯನ್ನು,

ಪಿಡಿದು= ಹಿಡಿದು, ಕಲಿಯೌವನಾಶ್ವನ= ಶೂರನಾದ ಯೌವನಾಶ್ವನ, ಚಾತುರಂಗಮಂ= ಚತುರಂಗಸೈನ್ಯವನ್ನು (ರಥ,ಕುದುರೆ,ಆನೆ,ಪದಾತಿ ಸೈನ್ಯ) ಬಡಿದವನನದಲ್ಲಿ-: ಬಡಿದು= ಸೊಲಿಸಿ ಅವನನು ಅಲ್ಲಿ, ಕಾಣಿಸಿಕೊಂಡು= ನೋಡಿಕೊಂದು ಹಸ್ತಿನಾವತಿಗೆ ಭೀಮಂ= ಹಸ್ತನಾವತಿಗೆ ಭೀಮನು ಬಂದನು

  • ತಾತ್ಪರ್ಯ : ಯುದ್ಧಮಾಡಿ,ಭದ್ರಾವತಿಯಲ್ಲಿದ್ದ ಶ್ರೇಷ್ಟವಾದ ಕುದುರೆಯನ್ನು, ಹಿಡಿದು, ಶೂರನಾದ ಯೌವನಾಶ್ವನ ಚತುರಂಗ ಸೈನ್ಯವನ್ನು (ರಥ,ಕುದುರೆ,ಆನೆ,ಪದಾತಿ ಸೈನ್ಯ) ಸೊಲಿಸಿ ಅವನನ್ನು ಅಲ್ಲಿ, ಯೌವನಾಶ್ವನನ್ನು ಕಂಡು, (ಮರ್ಯಾದೆಯಿಂದ ನೋಡಿಕೊಂದು ಹಸ್ತನಾವತಿಗೆ ಬರಲು ಹೇಳಿ) ಹಸ್ತಿನಾವತಿಗೆ ಹಸ್ತನಾವತಿಗೆ ಭೀಮನು ಬಂದನು

(ಪದ್ಯ - ಸೂಚನೆ),

ಪದ್ಯ - ೧

[ಸಂಪಾದಿಸಿ]

ಜನಮೇಜಯಕ್ಷಿತಪ ಕೇಳ್ ಪ್ರಣಯ ಕಲಹದೊಳ್ |
ಮುನಿದ ಕಾಂತೆಯ ಕುಪಿತ ವದನಾರವಿಂದದೊಳ್ |
ಮಿನುಗುವೆಳನಗೆ ತೋರುವನ್ನೆಗಂ ಚಿತ್ತದೊಳ್ ಕುದಿವ ನಾಗರಿಕನಂತೆ ||
ಅನಿಲಸುತನಾಹಯಂ ಪೊಳಲ ಪೊರಮಡುವಿನಂ |
ಮನದುಬ್ಬೆಗದೊಳೆ ಚಿಂತಿಸಿ ಮತ್ತೆ ಕರ್ಣಜಾ |
ತನ ವದನಮಂ ನೋಡುತನುತಾಪದಿಂ ತನ್ನ ಪಳಿದುಕೊಳುತಿಂತೆಂದನು ||1||

ಪದವಿಭಾಗ-ಅರ್ಥ:
ಜನಮೇಜಯಕ್ಷಿತಪ ಕೇಳ್= ಜನಮೇಜಯ ರಾಜನೇ ಕೇಳು,ಬೆಟ್ಟದ ಮೇಲಿಂದ ನಾಡಿದಾಗ ಯಜ್ಞಾಶ್ವವು ಕಾಣದಿರಲು, ಪ್ರಣಯ ಕಲಹದೊಳ್ ಮುನಿದ ಕಾಂತೆಯ ಕುಪಿತ ವದನಾರವಿಂದದೊಳ್-:ಪ್ರಣಯ ಕಲಹದಲ್ಲಿ ಪತ್ನಿಯ ಮುಖದಲ್ಲಿ, ಮಿನುಗುವೆಳನಗೆ ತೋರುವನ್ನೆಗಂ= ಮಿನುಗವ ಎಳೆನಗೆ ಕಾಣುವ ಅನ್ನೆಗಂ=ಅಲ್ಲಿಯವರೆಗೆ, ಚಿತ್ತದೊಳ್=ಮನಸ್ಸಿನಲ್ಲಿ, ಕುದಿವ=ವ್ಯಥೆಪಡುವ, ನಾಗರಿಕನಂತೆ= ಮನುಷ್ಯನಂತೆ,(ಚಿಂತೆಪಡುವಂತೆ) ಅನಿಲಸುತನಾಹಯಂ-; ಅನಿಲಸುತ=ಭೀಮನು, ಆ ಹಯಂ= ಆಕುದುರೆಯು, ಪೊಳಲ ಪೊರಮಡುವಿನಂ= ಪಟ್ಟಣದಿಮದ ಹೊರಬರುವವರೆಗೆ, ಮನದುಬ್ಬೆಗದೊಳೆ ಚಿಂತಿಸಿ-: ಮನದ ಉಬ್ಬೆಗದೊಳ್= ಉದ್ವೇಗದಿಂದ ಚಿಂತಿತನಾಗಿ, ಮತ್ತೆ ಕರ್ಣಜಾತನ ವದನಮಂ= ವೃಷಕೇತುವಿನ ಮುಖವನ್ನು, ನೋಡುತನುತಾಪದಿಂ= ನೋಡುತ ಅನುತಾಪದಿಂದ, ತನ್ನ ಪಳಿದುಕೊಳುತಿಂತೆಂದನು-: ತನ್ನ ಪಳಿದು= ಹಳಿದುಕೊಂಡು, ಇಂತೆಂದನು= ಹೀಗೆ ಹೇಳಿದನು.
  • ತಾತ್ಪರ್ಯ : ಜನಮೇಜಯ ರಾಜನೇ ಕೇಳು,ಬೆಟ್ಟದ ಮೇಲಿಂದ ನಾಡಿದಾಗ ಯಜ್ಞಾಶ್ವವು ಕಾಣದಿರಲು, ಮಿನುಗವ ಎಳೆನಗೆ ಕಾಣುವ ಅಲ್ಲಿಯವರೆಗೆ ಮನಸ್ಸಿನಲ್ಲಿ, ವ್ಯಥೆಪಡುವ, ಮನುಷ್ಯನಂತೆ,(ಚಿಂತೆಪಡುವಂತೆ) ಭೀಮನು, ಆ ಕುದುರೆಯು ಪಟ್ಟಣದಿಮದ ಹೊರಬರುವವರೆಗೆ ಮನದ ಉದ್ವೇಗದಿಂದ ಚಿಂತಿತನಾಗಿ, ಮತ್ತೆ ವೃಷಕೇತುವಿನ ಮುಖವನ್ನು, ನೋಡುತ ಅನುತಾಪದಿಂದ, ತನ್ನನ್ನು ಹಳಿದುಕೊಂಡು,ಹೀಗೆ ಹೇಳಿದನು.

(ಪದ್ಯ - ೧),

ಪದ್ಯ - ೨

[ಸಂಪಾದಿಸಿ]

ಉದ್ರೇಕದಿಂ ಮುನಿವರನೊಳಾಡಿ ತಪ್ಪಿದ ಗು |
ರುದ್ರೋಹಮೊಂದಚ್ಯುತನೊಳಾಡಿ ಹೊಳೆದ ದೈ |
ವದ್ರೋಹಮೆರಡರಸನವಸರಕೊದಗದ ಸ್ವಾಮಿದ್ರೋಹಮೈದೆ ಮೂರು ||
ಮದ್ರಚಿತ ವೀರಪ್ರತಿಜ್ಞೆ ಕೈಗೂಡದಾ |
ತ್ಮದ್ರೋಹಮದುವೆ ನಾಲ್ಕಿದರ ಸಂಗಡಕೆ ಧ |
ರ್ಮದ್ರೋಹಮೈದಾಗದಿಹುದೆ ತನಗಶ್ವಮಂ ಕಂಡು ಕೊಂಡೊಯ್ಯದಿರಲು ||2||

ಪದವಿಭಾಗ-ಅರ್ಥ:
ಉದ್ರೇಕದಿಂ= ಅತಿ ಉತ್ಸಾಹದಿಂದ, ಮುನಿವರನೊಳಾಡಿ-: ಮುನಿವರನೊಳು ಆಡಿ =ಗುರುವೇದವ್ಯಾಸರ ಹತ್ತಿರ ಪ್ರತಿಜ್ಞೆಮಾಡಿ, ತಪ್ಪಿದ ಗುರುದ್ರೋಹಂ=ಪ್ರತಿಜದ್ಞೆಗೆ ತಪ್ಪಿದ ಗುರುದ್ರೋಹ ಒಂದು, ಅಂದುದಚ್ಯುತನೊಳಾಡಿ ಹೊಳೆದ ದೈವದ್ರೋಹಮೆರಡು-:ಅಂದು ಅಚ್ಯುತನೊಳು= ಕೃಷ್ಣನ ಹತ್ತಿರ,ಆಡಿ= ವಚನತಪ್ಪೆನು ಎಂದು ಹೇಳಿ, ಹೊಳೆದ/ಹೋದ/ ಹೊರಳಿದ= ಮಾತಿಗೆ ತಪ್ಪಿದ, ದೈವದ್ರೋಹಂ ಎರಡು=ದೈವದ್ರೋಹವು ಎರಡನೆಯದು; ಅರಸನವಸರಕೊದಗದ ಸ್ವಾಮಿದ್ರೋಹಮೈದೆ ಮೂರು-: ಅರಸನ ಅವಸರಕೆ ಒದಗದ ಸ್ವಾಮಿದ್ರೋಹಂ ಐದೆ ಮೂರು-:ಅರಸನಾದ ಧರ್ಮಜನ ಅವಸರಕೆ= ಕಾರ್ಯಕ್ಕೆ, ಒದಗದ= ಸಹಕರಿಸದ, ಸ್ವಾಮಿದ್ರೋಹಂ=ಸ್ವಾಮಿದ್ರೋಹವು, ಐದೆ= ಮಾಡಿದರೆ, ಮೂರು= ಮೂರನೆಯದು; ಮದ್ರಚಿತ= ನನ್ನಿಂದ ಮಾಡಲ್ಪಟ್ಟ, ವೀರಪ್ರತಿಜ್ಞೆ= ಪ್ರತಿಜ್ಞೆಯನ್ನು, ಕೈಗೂಡದ ಆತ್ಮದ್ರೋಹಂ= ಪೂರ್ಣ ಮಾಡದಿರುವುದು ಆತ್ಮದ್ರೋಹ, ಅದುವೆ= ಅದು ನಾಲ್ಕಿದರ-:ನಾಲ್ಕು ಇದರ ಸಂಗಡಕೆ ಧರ್ಮದ್ರೋಹಮೈದಾಗದಿಹುದೆ-:ಇದರ ಸಂಗಡಕೆ ಧರ್ಮದ್ರೋಹಂ= ಇದರ ಜೊತೆಯಲ್ಲಿ ಧರ್ಮದ್ರೋಹವು ಸೇರಿ, ಐದು ಪಾಪಕೃತ್ಯವು, ತನಗಶ್ವಮಂ-:ತನಗೆ=ತನಗೆ ಬರುವುದು, ತಾನು ಅಶ್ವಮಂ= ಅಶ್ವವನ್ನು, ಕಂಡು=ಹುಡುಕಿ, ಕೊಂಡೊಯ್ಯದಿರಲು-: ಕೊಂಡೊಯ್ಯದೆ ಇರಲು= ತೆಗೆದುಕೊಂಡು ಹೋಗದಿದ್ದರೆ, ಎಂದನು ಭೀಮ.
  • ತಾತ್ಪರ್ಯ :ಅತಿ ಉತ್ಸಾಹದಿಂದ ಗುರುವೇದವ್ಯಾಸರ ಹತ್ತಿರ ಪ್ರತಿಜ್ಞೆಮಾಡಿ, ಪ್ರತಿಜ್ಞೆಗೆ ತಪ್ಪಿದ ಗುರುದ್ರೋಹ ಒಂದು, ಅಂದು ಕೃಷ್ಣನ ಹತ್ತಿರ, ವಚನತಪ್ಪೆನು ಎಂದು ಹೇಳಿ, ಮಾತಿಗೆ ತಪ್ಪಿದ, ದೈವದ್ರೋಹವು ಎರಡನೆಯದು; ಅರಸನಾದ ಧರ್ಮಜನ ಕಾರ್ಯಕ್ಕೆ, ಸಹಕರಿಸದೆ,ಇರುವುದು, ಸ್ವಾಮಿದ್ರೋಹವು, ಮೂರನೆಯದು; ನನ್ನಿಂದ ಮಾಡಲ್ಪಟ್ಟ ಪ್ರತಿಜ್ಞೆಯನ್ನು ಪೂರ್ಣ ಮಾಡದಿರುವುದು ಆತ್ಮದ್ರೋಹ, ಅದು ನಾಲ್ಕು; ಇದರ ಜೊತೆಯಲ್ಲಿ ಧರ್ಮದ್ರೋಹವು ಸೇರಿ, ಐದು ಪಾಪಕೃತ್ಯವು, ತಾನು ಅಶ್ವವನ್ನು ಹುಡುಕಿ ತೆಗೆದುಕೊಂಡು ಹೋಗದಿದ್ದರೆ ತನಗೆ ಆಗುವುದು, ಎಂದನು ಭೀಮ.

(ಪದ್ಯ - ೧),

ಪದ್ಯ - ೩

[ಸಂಪಾದಿಸಿ]

ಪುಸಿದನೆ ಬಯಲ್ಗೆ ವೇದವ್ಯಾಸಮುನಿ ಪುಸಿದೊ |
ಡಸುರಾರಿ ಸೈರಿಪನೆ ಸೈರಿಸಿದೊಡೊಳ್ಳಿತೆಂ |
ಮಸಿರುವುದೆ ಶಕುನಂಗಳುಸಿರಿದೊಡಭಾಗ್ಯಬೇ ಭುವರನಭಾಗ್ಯನಾಗೆ ||
ಮಸುಳಿಪುದೆ ಶಶಿಕುಲಂ ಮಸುಳಿಸಿದೊಡದ್ದಪುದೆ |
ವಸುಧೆಯದ್ದೊಡೆ ತನ್ನ ನುಡಿ ಬಂಜೆಯಪ್ಪುದಿದು |
ಪೊಸತದೇಂ ಪಾಪದಿಂ ಕಾಣಿಸದೊ ತುರಗಮೆಂದನಿಲಜಂ ಚಿಂತಿಸಿದನು ||3||

ಪದವಿಭಾಗ-ಅರ್ಥ:
ಪುಸಿದನೆಬಯಲ್ಗೆ ವೇದವ್ಯಾಸಮುನಿ=ವೇದವ್ಯಾಸಮುನಿ ಇಲ್ಲದಿರವಕುದುರೆ ಇದೆಯೆಂದು,ಪುಸಿದನೆ= ಸುಳ್ಳು ಹೇಳಿದನೇ? ಪುಸಿದೊಡಸುರಾರಿ= ಸುಳ್ಳು ಹೇಳಿದರೆ,ಅಸುರಾರಿ= ಸರ್ವಜ್ಞ ಕೃಷ್ಣ, ಸೈರಿಪನೆ= ಸಹಿಸುತ್ತಾನೆಯೇ? ಸೈರಿಸಿದೊಡೊಳ್ಳಿತೆಂಮಸಿರುವುದೆ-:ಸೈರಿಸಿದೊಡ ಒಳ್ಳಿತೆಂಮ ಉಸಿರುವುದೆ ಶಕುನಂಗಳು= ಒಮ್ಮೆ ಕೃಷ್ಣ ಸುಮ್ಮನಿದ್ದರೆ, ಶಕುನಗಳು ಒಳ್ಳಿತು ಎಂದು= ಒಳ್ಳೆಯದಾಗುವುದು ಎಂದು, ಉಸಿರುವುದೇ? ಉಸಿರಿದೊಡಭಾಗ್ಯನೇ= ಹಾಗೊಮ್ಮೆಹೇಳಿದರೆ, ಧರ್ಮಜನು ಭಾಗ್ಯಹೀನನೇ? ಭೂವರನಭಾಗ್ಯನಾಗೆ ಮಸುಳಿಪುದೆ ಶಶಿಕುಲಂ= ಭೂಪಾಲ ಧರ್ಮಜನು ಅಭಾಗ್ಯನದರೆ, ಮಸುಳಿಪುದೆ ಶಶಿಕುಲಂ=ಚಂದ್ರವಂಶ ಹೆಸರು ಪಡೆಯುವುದೇ? ಮಸುಳಿಸಿದೊಡದ್ದಪುದೆ ವಸುಧೆಯದ್ದೊಡೆ-:ಮಸುಳಿಸಿದೊಡೆ=ಶಶಿಕುಲ ಪ್ರಕಾಶಹೀನವಾದರೆ, ಅದ್ದಪುದೆ ವಸುಧೆಯದ್ದೊಡೆ-:ಅದ್ದಪುದೆ ವಸುಧೆ ಅದ್ದೊಡೆ= ಭೂಮಿ ಭೂಮಿ ಕುಸಿದರೆ ಒಳಿತಾಗವುದೇ? ಆಗವುದೇ ತನ್ನ ನುಡಿ ಬಂಜೆಯಪ್ಪುದಿದು-:ತನ್ನ ಮಾತು ಹುಸಿಯಾಗುವುದು- ಇದು ಪೊಸತದೇಂ-:ಇದು ಹೊಸ ಬಗೆ; ಅದೇಂ ಪಾಪದಿಂ ಕಾಣಿಸದೊ ತುರಗಮೆಂದನಿಲಜಂ_:ತುರಗಂ ಎಂದು ಅನಿಲಜಂ ಚಿಂತಿಸಿದನು-:ಅದು ಏನು ಪಾಪದಿಮದ ಕುದುರೆಯು ಕಾಣಿಸದೆ ಇರುವುದು ಎಂದು ಭೀಮನು ಚಿಂತಿತನಾದನು.
  • ತಾತ್ಪರ್ಯ : ವೇದವ್ಯಾಸಮುನಿ ಇಲ್ಲದಿರವ ಕುದುರೆ ಇದೆಯೆಂದು,ಸುಳ್ಳು ಹೇಳಿದನೇ? ಸುಳ್ಳು ಹೇಳಿದರೆ,ಸರ್ವಜ್ಞ ಕೃಷ್ಣ,ಸಹಿಸುತ್ತಾನೆಯೇ? ಒಮ್ಮೆ ಕೃಷ್ಣ ಸುಮ್ಮನಿದ್ದರೆ, ಶಕುನಗಳು ಒಳ್ಳೆಯದಾಗುವುದು ಎಂದು, ಹೇಳುವುದೇ? ಹಾಗೊಮ್ಮೆ ಕೆಡುಕು ಹೇಳಿದರೆ, ಧರ್ಮಜನು ಭಾಗ್ಯಹೀನನೇ? ಭೂಪಾಲ ಧರ್ಮಜನು ಅಭಾಗ್ಯನದರೆ, ಚಂದ್ರವಂಶ ಹೆಸರು ಪಡೆಯುವುದೇ? ಶಶಿಕುಲ ಪ್ರಕಾಶಹೀನವಾದರೆ, ಭೂಮಿಗೆ (ಕೆಡುಕಾದೀತು). ಭೂಮಿ ಕುಸಿದರೆ ಒಳಿತಾಗವುದೇ? ಹಾಗೆ ಆದರೆ ತನ್ನ ಮಾತು ಹುಸಿಯಾಗುವುದು- ಇದು ಹೊಸ ಬಗೆ; ಅದು ಯಾವ ಪಾಪದಿಂದ ಕುದುರೆಯು ಕಾಣಿಸದೆ ಇರುವುದು ಎಂದು ಭೀಮನು ಚಿಂತಿತನಾದನು.

(ಪದ್ಯ - ೩),

ಪದ್ಯ - ೪

[ಸಂಪಾದಿಸಿ]

ಪಾತಕಿಗೆ ನುಡಿದ ಸೊಲ್ ಪುಸಿಯಹುದು ಪರದಾರ |
ಸೂತಕಿಗೆ ನೆನೆದೆಣಿಕೆ ಬಯಲಹುದು ಗುರುವಿಪ್ರ |
ಪಾತಕಿಗೆ ಕಾಣ್ಬೊಡವೆ ಮರೆಯಹುದು ತಥ್ಯಮಿದು ಜಗದೊಳೆನಗಾವ ಭವದ ||
ಜಾತಕಿಲ್ಬಿಷವೊ ಯಾದವಕುಲ ಮಹಾಂಬುನಿಧಿ |
ಶೀತಕಿರಣಂ ತನ್ನ ಶರಣರನುಳದನೊ ಹಯ |
ಮೇತಕಿಂತಕಟ ಕಾಣಿಸದೊ ಶಿವಶಿವಾಯೆಂದು ಪವನಜಂ ಚಿಂತಿಸಿದನು ||4||

ಪದವಿಭಾಗ-ಅರ್ಥ:
ಪಾತಕಿಗೆ= ಪಾಪಿಗೆ ನುಡಿದ ಸೊಲ್ ಪುಸಿಯಹುದು= ಆಡಿದ ಮಾತು ಸುಳ್ಳಾಗುವುದು, (ಮಾತಿಗೆ ತಪ್ಪುವಂತಾಗುವುದು.) ಪರದಾರ ಸೂತಕಿಗೆ ನೆನೆದೆಣಿಕೆ ಬಯಲಹುದು= ಪರರಪತ್ನಿಯ ಸಂಗಮಾಡಿದವನಿಗೆ ಬಯಸಿದ ಕಾರ್ಯ ಆಗದು, ಗುರುವಿಪ್ರ ಪಾತಕಿಗೆ ಕಾಣ್ಬೊಡವೆ ಮರೆಯಹುದು= ಗುರುಗಳು ವಿಪ್ರರಿಗೆದ್ರೋಹ ಮಾಡಿದವಗೆ (ಸತ್ಯ)ಕಾಣದು, ತಥ್ಯಮಿದು ಜಗದೊಳೆನಗಾವ-:ಜಗದೊಳಗೆ ಆವ= ಜಗತ್ತಿನಲ್ಲಿ ಇದು ನಡೆಯವ ಸತ್ಯತೆ, ಆವ ಭವದ ಜಾತಕಿಲ್ಬಿಷವೊ-:ಜಾತ ಕಿಲ್ಬಿಷ= ಯಾವ ಭವ=ಜನ್ಮದ ಹುಟ್ಟು ಪಾಪವೋ, ಯಾದವಕುಲ ಮಹಾಂಬುನಿಧಿ ಶೀತಕಿರಣಂ ತನ್ನ ಶರಣರನುಳದನೊ=ಯದುವಂಶದ ಸಾಗರದಂತ ತಂಪಿಕಿರಣದ (ಕರುಣೆಯುಳ್ಳ ಕೃಷ್ಣನು)ತನ್ನ ಶರಣರನ್ನ ಉಳುಹನೋ= ಕಾಪಾಡನೋ? ಹಯ ಮೇತಕಿಂತಕಟ ಕಾಣಿಸದೊ= ಕುದುರೆಯು ಏತಕ್ಕೆ ಹೀಗೆ ಕಾಣಿಸದೆಇರುವುದೋ? ಶಿವಶಿವಾಯೆಂದು ಪವನಜಂ= ಶಿವಶಿವಾಯೆಂದು ಭೀಮನು ಚಿಂತಿಸಿದನು.
  • ತಾತ್ಪರ್ಯ : ಪಾಪಿಗೆ ಆಡಿದ ಮಾತು ಸುಳ್ಳಾಗುವುದು, (ಮಾತಿಗೆ ತಪ್ಪುವಂತಾಗುವುದು.) ಪರರಪತ್ನಿಯ ಸಂಗಮಾಡಿದವನಿಗೆ ಬಯಸಿದ ಕಾರ್ಯ ಆಗದು, ಗುರುಗಳು ವಿಪ್ರರಿಗೆದ್ರೋಹ ಮಾಡಿದವಗೆ (ಸತ್ಯ)ಕಾಣದು, ಜಗತ್ತಿನಲ್ಲಿ ಇದು ನಡೆಯವ ಸತ್ಯತೆ, (ನನಗೆ) ಯಾವ ಜನ್ಮದಿಂದ ಬಂದ ಹುಟ್ಟು ಪಾಪವೋ, ಯದುವಂಶದ ಸಾಗರದಂತ ತಂಪುಕಿರಣದ (ಕರುಣೆಯುಳ್ಳ ಕೃಷ್ಣನು)ತನ್ನ ಶರಣರನ್ನು ಕಾಪಾಡನೋ? ಕುದುರೆಯು ಏತಕ್ಕೆ ಹೀಗೆ ಕಾಣಿಸದೆ ಇರುವುದೋ? ಶಿವಶಿವಾ ಎಂದು ಭೀಮನು ಚಿಂತಿಸಿದನು.

(ಪದ್ಯ - ೪),

ಪದ್ಯ - ೫

[ಸಂಪಾದಿಸಿ]

ತಲ್ಲಕ್ಷಣಂಗಳಿಂ ಸಲ್ಲಲಿತಮಾದ ಹಯ |
ಮಿಲ್ಲಿ ವಿಧಿವಶದಿಂದಮಿಲ್ಲದಿರ್ದೊಡೆ ಧರಾ |
ವಲ್ಲಭನ ರಂಜಿಸುವ ಮೆಲ್ಲಡಿಗಳಂ ಕಾಣಬಲ್ಲೆನೆ ಮಹೀತಳದೊಳು ||
ಎಲ್ಲಿರ್ದೊಡಾ ತಾಣದಲ್ಲಿ ಪೊಕ್ಕರಸಿ ತಂ |
ದಲ್ಲದೆನ್ನಯ ಭಾಷೆ ಸಲ್ಲದಿದಕೆಂತೆನುತೆ |
ಘಲ್ಲಿಸುವ ಚಿಂತೆಯಿಂ ನಿಲ್ಲದೆ ವೃಕೋದರಂ ತಲ್ಲಣಿಸುತಿರುತಿರ್ದನು ||5|||

ಪದವಿಭಾಗ-ಅರ್ಥ:
ತಲ್ಲಕ್ಷಣಂಗಳಿಂ-:ತತ್ = ಆ (ಯಜ್ಞದ ಕುದುರೆಯ), ಲಕ್ಷಣಂಗಳಿಂ= ಲಕ್ಷಣಗಳಿಂದ, ಸಲ್ಲಲಿತಮಾದ= ಯೋಗ್ಯವಾದ, ಹಯಮಿಲ್ಲಿ= ಹಯಂ, ಇಲ್ಲಿ, ವಿಧಿವಶದಿಂದಮಿಲ್ಲದಿರ್ದೊಡೆ-:ವಿಧಿವಶದಿಂದಂ= ದೈವಯೊಗದಿಂದ, ಇಲ್ಲದಿರ್ದೊಡೆ= ಇಲ್ಲದಿದ್ದರೆ, ಧರಾವಲ್ಲಭನ= ಧರ್ಮಜನ, ರಂಜಿಸುವ ಮೆಲ್ಲಡಿಗಳಂ ಕಾಣಬಲ್ಲೆನೆ=ಹೊಳೆಯುವ ಮೃದು ಪಾದಗಲನ್ನು ನಾನು ನೋಡಬಲ್ಲೆನೇ? (ನೊಡಲಾರೆನು). ಮಹೀತಳದೊಳು=ಭೂಮಿಯಮೇಲೆ, ಎಲ್ಲಿರ್ದೊಡಾ= ಎಲ್ಲಿ ಇದ್ದರೂ, ತಾಣದಲ್ಲಿ= ಆ ಜಾಗದಲ್ಲಿ, ಪೊಕ್ಕರಸಿ-:ಕೊಕ್ಕು ಅರಸಿ=ಹೊಕ್ಕು ಹುಡುಕಿ, ತಂದಲ್ಲದೆನ್ನಯ=:ತಂದಲ್ಲದೆ ಎನ್ನಯ= ತರದಿದ್ದರೆ ನನ್ನ, ಭಾಷೆ ಸಲ್ಲದಿದಕೆಂತೆನುತೆ-:ಭಾಷೆ ಸಲ್ಲದು=ನೆರವೇರದು, ಇದಕೆ ಎಂತು ಎನುತ= ಇದಕ್ಕೆ ಏನು ಮಾಡಬೇಕು ಎಂದು, ಘಲ್ಲಿಸುವ= ಗಾಢವಾದ ಚಿಂತೆಯಿಂ= ಚಿಂತೆಯಿಂದ, ನಿಲ್ಲದೆ= ಚಡಪಡಿಕೆಯಿಂದ, ವೃಕೋದರಂ=ಭೀಮನು ತಲ್ಲಣಿಸುತಿರುತಿರ್ದನು= ಕಳವಳಿಸುತ್ತಿದ್ದನು.
  • ತಾತ್ಪರ್ಯ : ಆ ಯಜ್ಞದ ಕುದುರೆಯ ಲಕ್ಷಣಗಳಿಂದ ಕೂಡಿದ ಯೋಗ್ಯವಾದ ಹಯವು ಇಲ್ಲಿ ದುರ್ದೈವದಿಂದ ಇಲ್ಲದಿದ್ದರೆ ಮನಸ್ಸಿಗೆ ಹಿತಕೊಡುವ ಧರ್ಮಜನ ಮೃದು ಪಾದಗಳನ್ನು ನಾನು ನೋಡಬಲ್ಲೆನೇ? (ನೊಡಲಾರೆನು). ಭೂಮಿಯಮೇಲೆ ಎಲ್ಲಿ ಇದ್ದರೂ ಆ ಜಾಗದಲ್ಲಿ ಹೊಕ್ಕು ಹುಡುಕಿ ತರದಿದ್ದರೆ ನನ್ನ, ಭಾಷೆ ನೆರವೇರದು, ಇದಕ್ಕೆ ಏನು ಮಾಡಬೇಕು ಎಂದು, ಗಾಢವಾದ ಚಿಂತೆಯಿಂದ ಚಡಪಡಿಕೆಯಿಂದ ಭೀಮನು ಕಳವಳಿಸುತ್ತಿದ್ದನು.

(ಪದ್ಯ - ೫),

ಪದ್ಯ - ೬

[ಸಂಪಾದಿಸಿ]

ಅನಿತರೊಳನೇಕ ಸೇನೆಗಳ ಸನ್ನಾಹದಿಂ |
ಘನವಾದ್ಯ ರಭಸದಿಂ ಸೂತರ ಪೊಗಳ್ಕೆಯಿಂ |
ದನುಕರಿಸಿದಮಲ ವಸ್ತ್ರಾಭರಣ ಗಂಧಮಾಲ್ಯಾನಿಗಳ ಪೂಜೆಯಿಂದೆ ||
ವಿನುತಾತಪತ್ರ ಚಮರಂಗಳಿಂದೆಡಬಲದೊ |
ಳನುವಾಗಿ ವಾಘೆಯಂ ಪಿಡಿದು ನಡೆತಪ್ಪ ನೃಪ |
ತನುಜರಿಂದಾ ಹಯಂ ನೀರ್ಗೆ ಪೊರಮಟ್ಟು ಸಂಭ್ರಮದೊಳೈತರುತಿರ್ದುದು ||6||

ಪದವಿಭಾಗ-ಅರ್ಥ:
ಅನಿತರೊಳನೇಕ-:ಅನಿತರೊಳ್ ಅನೇಕ ಸೇನೆಗಳ ಸನ್ನಾಹದಿಂ= ಅಷ್ಟರಲ್ಲಿ, ಅನೇಕ ಸೇನೆಗಳ ಒಡಗೂಡಿಕೊಂಡು, ಘನವಾದ್ಯ ರಭಸದಿಂ ಸೂತರ ಪೊಗಳ್ಕೆಯಿಂದ= ದೊಡ್ಡ ವಾದ್ಯ ಮೊಳಗುತ್ತಾ, ಹೊಗಳುಭಟ್ಟರ ಹೊಗಳಿಕೆಯಿಂದ ಅನುಕರಿಸಿದಮಲ-:ಅನುಕರಿಸಿದ ಅಮಲ ವಸ್ತ್ರಾಭರಣ ಗಂಧಮಾಲ್ಯಾನಿಗಳ ಪೂಜೆಯಿಂದೆ= ಹಿಂಬಾಲಿಸಿದ ಒಳ್ಳೆಯ ವಸ್ತ್ರಾಭರಣ ಮತ್ತು ಗಂಧ ಮಾಲೆಗಳ ಪೂಜೆಯಿಂದೆ, ವಿನುತಾತಪತ್ರ-:ವಿನುತ ಆತಪತ್ರ ಚಮರಂಗಳಿಂದೆಡಬಲದೊಳನುವಾಗಿ -:ಚಮರಂಗಳಿಂದ ಎಡಬಲದೊಳು ಅನುವಾಗಿ= ಹಿಂಬಾಲಿಸಿದ ಒಳ್ಳೆಯ ವಸ್ತ್ರಾಭರಣ ಮತ್ತು ಗಂಧ ಮಾಲೆಗಳ ಪೂಜೆಯಿಂದ, ಒಳ್ಳೆಯ (ಆತಪತ್ರ) ಛತ್ರಿ ಚಾಮರಗಳಿಂದ ಎಡಬಲದೊಳಗೆ ಅನುಕೂಲಕರವಾಗಿ

ವಾಘೆಯಂ ಪಿಡಿದು ನಡೆತಪ್ಪ= ಲಗಾಮನ್ನು ಹಿಡಿದು ನಡೆದು ಬರುತ್ತಿರುವ, ನೃಪತನುಜರಿಂದಾ= ರಾಜನ ಮಕ್ಕಳಿಂದ. ಹಯಂ= ಕುದುರೆಯು ನೀರ್ಗೆ= ನೀರಿಗೆ, ಪೊರಮಟ್ಟು= ಹೊರಬಂದು ಸಂಭ್ರಮದೊಳೈತರುತಿರ್ದುದು-:ಸಂಭ್ರಮದೊಳು ಐತರುತಿರ್ದುದು= ಸಂಭ್ರಮದಿಂದ ಬರುತ್ತಿತ್ತು.

  • ತಾತ್ಪರ್ಯ : ಅಷ್ಟರಲ್ಲಿ, ಅನೇಕ ಸೇನೆಗಳ ಒಡಗೂಡಿಕೊಂಡು, ದೊಡ್ಡ ವಾದ್ಯದೊಡನೆ ಮೊಳಗುತ್ತಾ, ಹೊಗಳುಭಟ್ಟರ ಹೊಗಳಿಕೆಯಿಂದ, ಹಿಂಬಾಲಿಸಿದ ಒಳ್ಳೆಯ ವಸ್ತ್ರಾಭರಣ ಮತ್ತು ಗಂಧ ಮಾಲೆಗಳ ಪೂಜೆಯಿಂದ, ಒಳ್ಳೆಯ (ಆತಪತ್ರ) ಛತ್ರಿ ಚಾಮರಗಳಿಂದ ಎಡಬಲದೊಳಗೆ ಅನುಕೂಲಕರವಾಗಿ ಲಗಾಮನ್ನು ಹಿಡಿದು ನಡೆದು ಬರುತ್ತಿರುವ ಕುದುರೆಯು ರಾಜನ ಮಕ್ಕಳೊಡನೆ ಹೊರಬಂದು, ನೀರಕುಡಿಯಲು ಸಂಭ್ರಮದಿಂದ ಬರುತ್ತಿತ್ತು.

(ಪದ್ಯ - ೬),

ಪದ್ಯ - ೭

[ಸಂಪಾದಿಸಿ]

ವಿಧುಬಿಂಬದುದಯಮಂ ಕಂಡೊತ್ತರಿಸಿ ಪಯೋ |
ನಿಧಿ ಮೇರೆವರಿದುಕ್ಕುವಂತೆ ನಿರ್ಮಳವಾದ |
ಸುಧೆಯೇಳ್ಗೆಯಂ ಕಂಡ ಪುಳಕುಂ ನೆಗಳ್ದು ಜಂಭಾರಿ ಸಂಭ್ರಮಿಸುವಂತೆ |
ಅಧಿಕಬಲ ಯೌವನಾಶ್ವಾವನಿಪನೈಶ್ವರ್ಯ |
ಪಧುವಿನ ಕಟಾಕ್ಷದಂತೊಪ್ಪುವ ತುರಂಗಮಂ |
ಕುಧರೋಪಮಾನ ಪವಮಾನಜಂ ಕಂಡು ನೆರೆ ಸುಮ್ಮಾನಮಂ ತಾಳ್ದನು ||7||

ಪದವಿಭಾಗ-ಅರ್ಥ:
ವಿಧುಬಿಂಬದುದಯಮಂ= ವಿಧುಬಿಂಬದ= ಪೂರ್ಣಚಂದ್ರನ ಉದಯಮಂ= ಉದಯವನ್ನು, ಕಂಡೊತ್ತರಿಸಿ=ಕಂಡು, ಒತ್ತರಿಸಿ=ಉಬ್ಬಿ, ಪಯೋನಿಧಿ= ಸಮುದ್ರವು ಮೇರೆವರಿದುಕ್ಕುವಂತೆ-: ಮೇರೆವರಿದು= ಗಡಿಮೀರಿ, ಉಕ್ಕುವಂತೆ= ಉಬ್ಬರಹೊಂದುವಂತೆ, ನಿರ್ಮಳವಾದ= ಶುದ್ಧವಾದ, ಸುಧೆಯೇಳ್ಗೆಯಂ ಕಂಡ=ಅಮೃತದ ಉದ್ಭವವನ್ನು ಕಂಡ, ಪುಳಕುಂ ನೆಗಳ್ದು ಜಂಭಾರಿ ಸಂಭ್ರಮಿಸುವಂತೆ= ಪುಳಕಗೊಂಡು ಇಂದ್ರನು ಸಂತಸಗೊಂಡಂತೆ, ಅಧಿಕಬಲ= ದೊಡ್ಡ ಸೈನ್ಯವನ್ನು ಹೊಂದಿದ, ಯೌವನಾಶ್ವಾವನಿಪನೈಶ್ವರ್ಯ ಪಧುವಿನ-: ಯೌವನಾಶ್ವ ಅವನಿಪನ=ರಾಜನ, ಐಶ್ವರ್ಯಕಟಾಕ್ಷದಂತೆ= ಸಂಪತ್ತೆಂಬ ವಧುವಿನ ಕಟಾಕ್ಷ= ಕಣ್ಣಿನಂತೆ, ಒಪ್ಪುವ= ಇರುವ, ತುರಂಗಮಂ= ಕುದುರೆಯನ್ನು, ಕುಧರೋಪಮಾನ= ಕುಧರ= ಬೆಟ್ಟಕ್ಕೆ,ಉಪಮಾನ=ಸಮನಾದ, ಪವಮಾನಜಂ= ಭೀಮನು, ಕಂಡು ನೆರೆ= ತುಂಬಾ ಸುಮ್ಮಾನಮಂ ತಾಳ್ದನು=ಸಂತೋಷ ಪಟ್ಟನು.
  • ತಾತ್ಪರ್ಯ :ಪೂರ್ಣಚಂದ್ರನ ಉದಯವನ್ನು ಕಂಡು ಉಬ್ಬಿ, ಸಮುದ್ರವು ಗಡಿಮೀರಿ ಉಬ್ಬರಹೊಂದುವಂತೆ, ಶುದ್ಧವಾದ, ಅಮೃತದ ಉದ್ಭವವನ್ನು ಕಂಡ ಪುಳಕಗೊಂಡು ಇಂದ್ರನು ಸಂತಸಗೊಂಡಂತೆ, ದೊಡ್ಡ ಸೈನ್ಯವನ್ನು ಹೊಂದಿದ,ಯೌವನಾಶ್ವ ರಾಜನ ಸಂಪತ್ತೆಂಬ ವಧುವಿನ ಕಣ್ಣಿನಂತೆ ಇರುವ, ಕುದುರೆಯನ್ನು, ಬೆಟ್ಟಕ್ಕೆ ಸಮನಾದ ಭೀಮನು, ಕಂಡು ತುಂಬಾ ಸಂತೋಷ ಪಟ್ಟನು.

(ಪದ್ಯ - ೭),

ಪದ್ಯ - ೮

[ಸಂಪಾದಿಸಿ]

ಚತುರಪದಗತಿಯ ಸರಸಧ್ವನಿಯ ವರ್ಣಶೋ |
ಭಿತದಲಂಕಾರದ ಸುಲಕ್ಷಣದ ಲಾಲಿತ |
ಶ್ರುತಿರಂಜನದ ವಿಶೇಷಾರ್ಥಸಂಚಿತದ ವಿಸ್ತಾರದಿಂ ಪೊಸತೆನಿಸುವ ||
ನುತ ಸತ್ಕವಿಪ್ರೌಢತರ ಸುಪ್ರಬಂಧದಂ |
ತತಿ ಮನೋಹರಮೆನಿಪ ವಾಜಿಯಂ ಕಂಡು ಹ |
ರ್ಷಿತನಾಗಿ ನೋಡುತಿರ್ದಂ ಕಲಾವಿದನಪ್ಪ ಮಾರುತಿ ಮಹೋತ್ಸವದೊಳು ||8||

ಪದವಿಭಾಗ-ಅರ್ಥ:
ಚತುರಪದಗತಿಯ= ಚುರುಕಿನ ಜಾಣತನದ ನಡೆಯುಳ್ಳದ್ದು, ಸರಸಧ್ವನಿಯ= ಇಂಪಾದ ಧ್ವನಿಯುಳ್ಳದ್ದು, ವರ್ಣಶೋಭಿತದಲಂಕಾರದ= ಶೋಬಿಸುವ ಬಣ್ನದಿಂದ ಕೂಡಿದ್ದು, ಸುಲಕ್ಷಣದ= ಒಳ್ಳೆಯ ಲಕ್ಷಣದ್ದು, ಲಾಲಿತಶ್ರುತಿರಂಜನದ= ಕೇಳಲು ಇಂಪಾದ ಕಂಠಶೃತಿಯುಳ್ಳದ್ದು, ವಿಶೇಷಾರ್ಥಸಂಚಿತದ= ಹೆಚ್ಚಿನ ಅರ್ಥಸಂಚಯವುಳ್ಳದ್ದು - ಧರ್ಮ,ಅರ್ಥ,ಕಾಮ, ಮೋಕ್ಷ ಈ ನಾಲ್ಕು ಪುರುಷಾರ್ಥಗಳನ್ನು ಕೊಡುವಂಥದ್ದು, ವಿಸ್ತಾರದಿಂ ಪೊಸತೆನಿಸುವ= ಲಕ್ಷಣ ವಿವರಣೆಯಲ್ಲಿ ಹೊಸತು, ನುತ ಸತ್ಕವಿಪ್ರೌಢತರ ಸುಪ್ರಬಂಧದಂತತಿ-:ನುತ=ಹೊಗಳಬಹುದಾದ,ಸತ್ಕವಿ ಪ್ರೌಢತರ= ಸುಕವಿಯ ಕಾವ್ಯದಂತೆ, ಮನೋಹರಮೆನಿಪ= ಮನೋಹರ ಎನಿಪ= ಎನ್ನಬಹುದಾದ, ವಾಜಿಯಂ= ಕುದುರೆಯನ್ನು, ಕಂಡು ಹರ್ಷಿತನಾಗಿ,ಸಂತಸಹೊಂದಿ, ನೋಡುತಿರ್ದಂ ಕಲಾವಿದನಪ್ಪ ಮಾರುತಿ ಮಹೋತ್ಸವದೊಳು-: ಕಲಾವಿದನಂತೆ ಭೀಮನು ಅತಿಸಂತಸದಿಂದ (ಕುದುರೆಯನ್ನು) ನೋಡುತ್ತಿದ್ದನು.
  • ತಾತ್ಪರ್ಯ :(ಆ ಕುದುರೆಯು) ಚುರುಕಿನ ಜಾಣತನದ ನಡೆಯುಳ್ಳದ್ದು, ಇಂಪಾದ ಧ್ವನಿಯುಳ್ಳದ್ದು, ಶೋಬಿಸುವ ಬಣ್ನದಿಂದ ಕೂಡಿದ್ದು, ಒಳ್ಳೆಯ ಲಕ್ಷಣದ್ದು, ಕೇಳಲು ಇಂಪಾದ ಕಂಠಶೃತಿಯುಳ್ಳದ್ದು, ಹೆಚ್ಚಿನ ಧರ್ಮ,ಅರ್ಥ,ಕಾಮ, ಮೋಕ್ಷ ಈ ನಾಲ್ಕು ಪುರುಷಾರ್ಥಗಳನ್ನು ಕೊಡುವಂಥದ್ದು, ಲಕ್ಷಣದ ವಿವರಣೆಯಲ್ಲಿ ಹೊಸತು, ಹೊಗಳಬಹುದಾದ ಸುಕವಿಯ ಕಾವ್ಯದಂತೆ, ಮನೋಹರ ಎನ್ನಬಹುದಾದ, ಕುದುರೆಯನ್ನು ಕಂಡು ಸಂತಸಹೊಂದಿ, ಕಲಾವಿದನಂತೆ ಭೀಮನು ಅತಿಸಂತಸದಿಂದ (ಕುದುರೆಯನ್ನು) ನೋಡುತ್ತಿದ್ದನು.

(ಪದ್ಯ - ೮),

ಪದ್ಯ - ೯

[ಸಂಪಾದಿಸಿ]

ಮೂಜಗದೊಳೀ ತುರಂಗಮವೆ ಪೊಸತೆಂದು ವರ |
ವಾಜಿಯಂ ನಿಟ್ಟಿಸುವ ಭೀಮಸೇನನ ಪದಸ |
ರೋಜಯುಗಳಕ್ಕೆರಗಿ ಮೇಘನಾದಂ ನೀವು ನೋಳ್ಪುದೆನ್ನಧಟನೀಗ ||
ವಾಜಿಯಂ ತಹೆನೆನುತ್ತಲ್ಲಿಂ ತಳರ್ದು ಮಾ |
ಯಜಾಲಮಂ ಬೀಸಿದಂ ನಭೋಮಂಡಲ |
ಕ್ಕಾಜನಪನಶ್ವರಕ್ಷೆಯಬಲಂ ಕಂಗೆಡಲ್ ಭೂಪ ಕೇಳದ್ಭುತವನು ||9||

ಪದವಿಭಾಗ-ಅರ್ಥ:
ಮೂಜಗದೊಳೀ ತುರಂಗಮವೆ ಪೊಸತೆಂದು ವರ ವಾಜಿಯಂ ನಿಟ್ಟಿಸುವ ಭೀಮಸೇನನ= ಮೂರು ಲೋಕದಲ್ಲಿ ಈ ಕುದುರೆ ಹೊಸತು ಎಂದು ದೃಷ್ಟಿಯಿಟ್ಟು ನೋಡುತ್ತಿರುವ ಭೀಮಸೇನನ, ಪದಸರೋಜಯುಗಳಕ್ಕೆರಗಿ-: ಪದಸರೋಜಯಗಳ= (ಯುಗಳ)ಎರಡು,ಪದಸರೋಜ= ಪಾದಪದ್ಮಗಳಿಗೆ, ಎರಗಿ= ನಮಿಸಿ. ಮೇಘನಾದಂ ನೀವು ನೋಳ್ಪುದೆನ್ನಧಟನೀಗ= ನೀವು ನೋಳ್ಪುದು= ಮೇಘನಾದನು, ನೋಡುವುದು, ಎನ್ನ= ನನ್ನ, ಅಧಟನು= ಶೌರ್ಯವನ್ನು,(ಎಂದು ಹೇಳಿ) ಈಗ, ವಾಜಿಯಂ ತಹೆನೆನುತ್ತಲ್ಲಿಂ ತಳರ್ದು-:ಈಗ ವಾಜಿಯಂ= ಕುದುರೆಯನ್ನು , ತಹೆನು= ತರುವೆನು, ಎನುತ್ತ= ಎಂದು ಹೇಳುತ್ತ, ಅಲ್ಲಿಂ= ಅಲ್ಲಿಂದ, ತಳರ್ದು= ಹೊರಟು, ಮಾಯಜಾಲಮಂ ಬೀಸಿದಂ= ಮಾಯಾಜಾಲವನ್ನು ಹರಡಿದನು; ಹೇಗೆಂದರೆ, ನಭೋಮಂಡಲಕ್ಕೆ= ಆಕಾಶಮಂಡಲಕ್ಕೆ, ಆಜನಪನಶ್ವರಕ್ಷೆಯಬಲಂ= ಆ ಜನಪನ = ರಾಜನ ಅಶ್ವಬಲಂ= ಕುದುರೆ ಸೈನ್ಯವು, ಕಂಗೆಡಲ್= ದಿಕ್ಕುತೋರದಂತೆ; ಭೂಪ = ಜನಮೇಜಯರಾಜನೇ ಕೇಳದ್ಭುತವನು-;ಕೇಳು ಅಧ್ಭುತವನು=ಆಶ್ಚರ್ಯವನ್ನು.
  • ತಾತ್ಪರ್ಯ : ಮೂರು ಲೋಕದಲ್ಲಿ ಈ ಕುದುರೆ ಹೊಸತು ಎಂದು ದೃಷ್ಟಿಯಿಟ್ಟು ನೋಡುತ್ತಿರುವ ಭೀಮಸೇನನ, ಎರಡು ಪಾದಪದ್ಮಗಳಿಗೆ,ನಮಿಸಿ, ಮೇಘನಾದನು ನನ್ನ ಶೌರ್ಯವನ್ನು ನೋಡುವುದು,(ಎಂದು ಹೇಳಿ) ಈಗ ಕುದುರೆಯನ್ನು ತರುವೆನು ಎಂದು ಹೇಳುತ್ತ, ಅಲ್ಲಿಂದ ಹೊರಟು, ಮಾಯಾಜಾಲವನ್ನು ಆಕಾಶಮಂಡಲಕ್ಕೆ ಹರಡಿದನು; ಹೇಗೆಂದರೆ, ರಾಜನ ಕುದುರೆ ಸೈನ್ಯವು ದಿಕ್ಕುತೋರದಂತೆ ಆಯಿತು, ಜನಮೇಜಯರಾಜನೇ ಕೇಳು ಆಶ್ಚರ್ಯವನ್ನು ಎಂದನು.

(ಪದ್ಯ - ೯),

ಪದ್ಯ - ೧೦

[ಸಂಪಾದಿಸಿ]

ತುರುಗಿತೆತ್ತೆತ್ತಲುಂ ಪ್ರಳಯಕಾಲದ ಮೇಘ |
ಮೆರಗುತಿವೆ ಬರಿಯ ಬರಸಿಡಲ್ಪಳೆತ್ತೆತ್ತಲುಂ |
ಕರೆಯುತಿದೆ ಬಿರುಗಾಳಿ ದೂಳನೆತ್ತೆತ್ತಲುಂ ಕತ್ತಲೆಗಳಿಟ್ಟಣಿಸಿವೆ ||
ತೆರೆಯಬಾರದು ಕಣ್ಣ ಮರೆದು ಕಣ್ದೆರೆಯೆ ದಿ |
ಕ್ಕರಿಯಬಾರದು ಮಹಾದ್ಭುತಮಿದೆತ್ತಣದೊ ಜಗ |
ದೆರೆಯನೇ ಬಲ್ಲನೆನುತಿರ್ದುದಾ ಸೈನಿಕಂ ಹೈಡಿಂಬಿಕೃತ ಮಾಯೆಗೆ ||10||

ಪದವಿಭಾಗ-ಅರ್ಥ:
ತುರುಗಿತೆತ್ತೆತ್ತಲುಂ ಪ್ರಳಯಕಾಲದ ಮೇಘ ಮೆರಗುತಿವೆ-:ಎತ್ತೆತ್ತೆಲು= ಎಲ್ಲಾಕಡೆ, ಪ್ರಳಯಕಾಲದ ಮೋಡಗಳು ತುರುಗಿತು=ವ್ಯಾಪಿಸಿತು. ಬರಿಯ ಬರಸಿಡಲ್ಗಳೆತ್ತೆತ್ತಲುಂ-: ಬರಿಯ ಬರಸಿಡಿಲ್‍ ಗಳು, ಎತ್ತೆತ್ತಲುಂ= ಎಲ್ಲಾಕಡೆ, ಕರೆಯುತಿದೆ ಬಿರುಗಾಳಿ ದೂಳನೆತ್ತೆತ್ತಲುಂ= ಬಿರುಗಾಳಿ ಬೀಸಿ ಧೂಳನು ಎತ್ತೆತ್ತೆಲುಂ ಎಲ್ಲಾಕಡೆ ಕರೆಯುತಿದೆ=ಬೀರುತ್ತಿದೆ, ಕತ್ತಲೆಗಳಿಟ್ಟಣಿಸಿವೆ= ಕತ್ತಲೆಗಳು ಕತ್ತಲೆ, ಇಟ್ಟಣಿಸಿದೆ= ದಟ್ಟವಾಗಿದೆ, ತೆರೆಯಬಾರದು ಕಣ್ಣ ಮರೆದು ಕಣ್ದೆರೆಯೆ ದಿಕ್ಕರಿಯಬಾರದು, ಕಣ್ಣುಬಿಡುವಂತಿಲ್ಲ, ಬಿಟ್ಟರೆ ದಿಕ್ಕು ಅರಿಯಬಾರದು=ತಿಳಿಯಲಾರದು, ಮಹಾದ್ಭುತಮಿದೆತ್ತಣದ-: ಮಹಾದ್ಭುತಂ ಇದು ಎನೆ=ಎನ್ನಲಾಗಿ, ಜಗದೆರೆಯನೇ= ಜಗದ ಎರೆಯನೇ= ಜಗತ್ತಿನ ತಂದೆಯೇ, ಬಲ್ಲನೆನುತಿರ್ದುದಾ= ಬಲ್ಲನು ಎನುತಿರ್ದುದು ಆ ಸೈನಿಕಂ ಹೈಡಿಂಬಿಕೃತ= ಹೈಡಿಂಬಿ ಕೃತ ಮಾಯೆಗೆ= ಎನ್ನುತ್ತಿತ್ತು ಆ ಸೈನಿಕ ಸಮೂಹ ಮೇಘನಾದ ಮಾಡಿದ ಮಾಯೆಗೆ.
  • ತಾತ್ಪರ್ಯ :ಮೇಘನಾದ ಮಾಡಿದ ಮಾಯೆಗೆ, ಎಲ್ಲಾಕಡೆ, ಪ್ರಳಯಕಾಲದ ಮೋಡಗಳು ವ್ಯಾಪಿಸಿತು. ಬರಿಯ ಬರಸಿಡಿಲುಗಳು, ಎಲ್ಲಾಕಡೆ, ಬಿರುಗಾಳಿ ಬೀಸಿ ಧೂಳನು ಎಲ್ಲಾಕಡೆ ಬೀರುತ್ತಿದೆ, ಕತ್ತಲೆ, ದಟ್ಟವಾಗಿದೆ, ಕಣ್ಣುಬಿಡುವಂತಿಲ್ಲ, ಬಿಟ್ಟರೆ ದಿಕ್ಕು ತಿಳಿಯಲಾರದು, ಮಹಾದ್ಭುತವು ಇದು ಎನ್ನಲಾಗಿ, ಜಗದ ಜಗತ್ತಿನ ತಂದೆಯೇ, ಬಲ್ಲನು ಎನ್ನುತ್ತಿತ್ತು ಆ ಸೈನಿಕ ಸಮೂಹ .

(ಪದ್ಯ - ೧೧),

ಪದ್ಯ - ೧೧

[ಸಂಪಾದಿಸಿ]

ಗಗನದೊಳ್ ಸುಳಿಯುತನಿಮಿಷನೊರ್ವನಿವನ ಮಾ |
ಯೆಗೆ ಭಯಂಗೊಂಡು ಕಡುವೇಗದಿಂ ಪೋಗಿ ವ |
ಜ್ರಿಗೆ ದೂರಲಾತಂ ಚರರ ಕಳುಪಿ ಕೇಳಿದೊಡೀತ ನಾಂ ಭೀಮಸುತನ ||
ಮಗನಧ್ವರಕೆ ಹಯವನೊಯ್ದಪೆನೆನಲ್ಕವಂ |
ಮಗುಳದಂ ಪೋಗಿ ಸುರಪತಿಗೆ ಬಿನ್ನೈಸೆ ನಸು |
ನಗುತವಂ ದೇವರ್ಕಳೊಡಗೂಡಿ ಬಂದನಲ್ಲಿಗೆ ಸಮರಮಂ ನೋಡಲು ||11||

ಪದವಿಭಾಗ-ಅರ್ಥ:
ಗಗನದೊಳ್=ಆಕಾಶದಲ್ಲಿ ಸುಳಿಯುತ= ಸಂಚರಿಸುವ, ಅನಿಮಿಷನು ಓರ್ವನು ಇವನ ಮಾಯೆಗೆ ಭಯಂಗೊಂಡು= ದೇವತೆಗಳಲ್ಲಿಒಬ್ಬನು ಇವನ ಮಾಯೆಗೆ ಭಯಪಟ್ಟು, ಕಡುವೇಗದಿಂ= ಬುಹು ವೇಗದಿಂದ, ಪೋಗಿ ವಜ್ರಿಗೆ= ಹೋಗಿ ಇಂದ್ರನಿಗೆ, ದೂರಲು ಆತಂ ಚರರ ಕಳುಪಿ= ದೂರಲು ಆತನು ಸೇವಕರನ್ನು ಕಳುಹಿಸಿ, ಕೇಳಿದೊಡೀತ= ಅವನು ವಿಚಾರಿಸಿದಾಗ, ನಾಂ ಭೀಮಸುತ= ನಾನು ಭೀಮಸೇನನ ಮಗ, ನಮಗನಧ್ವರಕೆ= ನಮಗೆ ಅಧ್ವರಕೆ= ಯಜ್ಞಕ್ಕೆ, ಹಯವನೊಯ್ದಪೆನೆನಲ್ಕವಂ-:ಹಯವನು ಒಯ್ದಪೆನು= ಕುದುರೆಯನ್ನು ಒಯ್ಯುವೆನು, ಮಗುಳದಂ ಪೋಗಿ ಸುರಪತಿಗೆ ಬಿನ್ನೈಸೆ= ಹಿಂತಿರುಗಿ ಹೋಗಿ ಇಂದ್ರನಿಗೆ ಹೇಳು ಎನಲು, ನಸುನಗುತವಂ= ನಸುನಗುತ ಅವಂ=ಅವನು, ದೇವರ್ಕಳೊಡಗೂಡಿ-: ದೇವರ್ಕಳ ಒಡಗೂಡಿ= ದೇವತೆಗಳನ್ನು ಕೂಡಿಕೊಂಡು, ಬಂದನಲ್ಲಿಗೆ-:ಬಂದನು ಅಲ್ಲಿಗೆ ಸಮರಮಂ ನೋಡಲು= ಯುದ್ಧವನ್ನು ನೋಡಲು ಅಲ್ಲಿಗೆ ಬಂದನು.
  • ತಾತ್ಪರ್ಯ :ಆಕಾಶದಲ್ಲಿ ಸಂಚರಿಸುವ, ದೇವತೆಗಳಲ್ಲಿ ಒಬ್ಬನು ಇವನ ಮಾಯೆಗೆ ಭಯಪಟ್ಟು, ಬುಹು ವೇಗದಿಂದ,ಹೋಗಿ ಇಂದ್ರನಿಗೆ, ದೂರಲು ದೂರಲು ಆತನು ಸೇವಕರನ್ನು ಕಳುಹಿಸಿ, ಅವನು ವಿಚಾರಿಸಿದಾಗ, ನಾನು ಭೀಮಸೇನನ ಮಗ, ನಮಗೆ ಯಜ್ಞಕ್ಕೆ, ಕುದುರೆಯನ್ನು ಒಯ್ಯುವೆನು, ಹಿಂತಿರುಗಿ ಹೋಗಿ ಇಂದ್ರನಿಗೆ ಹೇಳು ಎನಲು, ನಸುನಗುತ ಅವನು, ದೇವತೆಗಳನ್ನು ಕೂಡಿಕೊಂಡು, ಯುದ್ಧವನ್ನು ನೋಡಲು ಅಲ್ಲಿಗೆ ಬಂದನು.

(ಪದ್ಯ - ೧೧),

ಪದ್ಯ - ೧೨

[ಸಂಪಾದಿಸಿ]

ಇತ್ತಲೀಕುದುರೆಗಾಪಿನ ಭಟರ ಕಣ್ಗೆ ಬ |
ಲ್ಗತ್ತಲೆಗಳಂ ಧೂಳ್ಗಳಂ ಕವಿಸಿ ಭೀತಿಯಂ |
ಬಿತ್ತಿ ನೆಲಕಿಳಿದು ಪಡಿವಾಘೆಯಂ ಪಿಡಿದರಸುಮಕ್ಕಳಂ ಬೀಳೆಹೊಯ್ದು |
ತತ್ತುರಗಮಂ ಕೊಂಡು ಚಿಗಿದನಾಗಸಕೆಸರ |
ದತ್ತಣಿಂದಂಚೆ ಬೆಳುದಾವರೆಯನಳ್ತಿಯಿಂ |
ಕಿತ್ತು ನಭಕೇಳ್ವಂತೆ ಮೇಗನಾದಂ ಭೀಮಕರ್ಣಜರ್ ಬೆರೆಗಾಗಲು ||12||

ಪದವಿಭಾಗ-ಅರ್ಥ:
ಇತ್ತಲೀಕುದುರೆಗಾಪಿನ= ಇತ್ತಲು ಈಕಡೆ ಕುದುರೆಗಾಪಿನ= ಕಾವಲಿನವರ, ಭಟರ ಕಣ್ಗೆ ಬಲ್ಗತ್ತಲೆಗಳಂ=ಯೋಧರ ಕಣ್ಣಿಗೆ ಬಲು= ಬಹಳ ಕತ್ತಲೆಗಳಂ= ಕತ್ತಲೆಯನ್ನು, ಧೂಳ್ಗಳಂ= ಧೂಳನ್ನು, ಕವಿಸಿ ಭೀತಿಯಂ=ಹೆದರಿಕೆಯನ್ನು, ಬಿತ್ತಿ=ಉಂಟುಮಾಡಿ, ನೆಲಕಿಳಿದು= ಆಕಾಶದಲ್ಲಿದ್ದ ಮೇಘನಾದನು ನೆಲಕ್ಕೆ ಇಳಿದು, ಪಡಿವಾಘೆಯಂ=(ಕುದುರೆಯನ್ನು) ರಿಕಾಬು (ಕಾಲಿಗಸಿಕ್ಕಿಸಿಕೊಳ್ಳುವ ಕುಣಿಕೆ) ಲಗಾಮುಗಳನ್ನು, ಪಿಡಿದರಸುಮಕ್ಕಳಂ ಬೀಳೆಹೊಯ್ದು= ಅರಸು ಮಕ್ಕಳನ್ನು ಕೆಳಗೆ ಬೀಳುವಂತೆ ಹೊಡೆದು, ತತ್ತುರಗಮಂ-:ತತ್ ಆ ತುರಗಮಂ= ಕುದುರೆಯನ್ನು, ಕೊಂಡು= ತೆಗೆದುಕೊಂಡು, ಚಿಗಿದನಾಗಸಕೆ ಸರದತ್ತಣಿಂದಂಚೆ -:ಚಿಗಿದನು ಆಗಸಕೆ=ಆಕಾಶಕ್ಕೆ ಹಾರಿದನು, ಹೇಗೆಂದರೆ, ಸರದಿಂದ= ಸರೋವರದಿಂದ ಅಂಚೆ= ಹಂಸವು, ಬೆಳುದಾವರೆಯನಳ್ತಿಯಿಂ-:ಬೆಳು ತಾವರಯ= ಬಿಳಿತಾವರೆಯನ್ನು, ಕಿತ್ತು ನಭಕೇಳ್ವಂತೆ-:ನಭಕೆ ಏಳ್ವಂತೆ=ಆಕಾಶಕ್ಕೆ ಹಾರುವಂತೆ ಮೇಗನಾದಂ= ಮೇಘನಾದನು, ಭೀಮಕರ್ಣಜರ್ ಬೆರೆಗಾಗಲು= ಭೀಮ ಮತ್ತು ಕರ್ಣಜನಾದ ವೃಷಕೇತುಗಳು ಬೆರಗಾಗಲು.
  • ತಾತ್ಪರ್ಯ :ಈ ಕಡೆ ಕುದುರೆ ಕಾವಲಿನವರ, ಯೋಧರ ಕಣ್ಣಿಗೆ ಬಲು ಕತ್ತಲೆಯನ್ನು, ಧೂಳನ್ನು, ಕವಿಸಿ ಹೆದರಿಕೆಯನ್ನು, ಉಂಟುಮಾಡಿ,ಆಕಾಶದಲ್ಲಿದ್ದ ಮೇಘನಾದನು ನೆಲಕ್ಕೆ ಇಳಿದು,ಕುದುರೆಯನ್ನು ರಿಕಾಬು (ಕಾಲಿಗಸಿಕ್ಕಿಸಿಕೊಳ್ಳುವ ಕುಣಿಕೆ) ಲಗಾಮುಗಳನ್ನು, ಅರಸು ಮಕ್ಕಳನ್ನು ಕೆಳಗೆ ಬೀಳುವಂತೆ ಹೊಡೆದು,ಆ ಕುದುರೆಯನ್ನು, ತೆಗೆದುಕೊಂಡು, ಸರೋವರದಿಂದ ಹಂಸವು, ಬಿಳಿತಾವರೆಯನ್ನು, ಕಿತ್ತು ಆಕಾಶಕ್ಕೆ ಹಾರುವಂತೆ ಭೀಮ ಮತ್ತು ಕರ್ಣಜನಾದ ವೃಷಕೇತುಗಳು ಬೆರಗಾಗಲು. ಮೇಘನಾದನು ಆಕಾಶಕ್ಕೆ ಹಾರಿದನು,,

(ಪದ್ಯ - ೧೨),

ಪದ್ಯ - ೧೩

[ಸಂಪಾದಿಸಿ]

ರಾಹು ತುಡುಕಿದ ಚಂದ್ರಮಂಡಲವೊ ಗರುಡನು |
ತ್ಸಾಹದಿಂದೆತ್ತಿ ಕೊಂಡೊಯ್ವಮೃತಕಲಶವೊ ಬ |
ಲಾಹಕಂ ತಾಳ್ದ ಬಿಳ್ಮಿಂಚಿನೊಬ್ಬುಳಿಯೊ ಪೊಸತೆನೆ ಘಟೋತ್ಕಚತನಯನು ||
ಬಾಹುಬಲದಿಂದೆಡದ ಕಕ್ಷದೊಳಿರುಂಕಿದ ಮ |
ಹಾಹಯಂ ಗಗನಮಾರ್ಗ ದೊಳ್ಬೆದುತಿರೆ ಕುದುರೆ |
ಗಾಹಿನ ಚತುರ್ಬಲಂ ಕಂಡು ಬೊಬ್ಬರಿದಾರ್ದು ಕಾಳಗಕೆ ಮಂಕೊಂಡುದು ||13||

ಪದವಿಭಾಗ-ಅರ್ಥ:
ರಾಹು ತುಡುಕಿದ=ಹಿಡಿದ ಚಂದ್ರಮಂಡಲವೊ ಗರುಡನುತ್ಸಾಹದಿಂದೆತ್ತಿ-:ಗುರುಡನು ಉತ್ಸಾಹದಿಂದ ಎತ್ತಿ, ಕೊಂಡೊಯ್ವಮೃತಕಲಶವೊ-:ಕೊಂಡೊಯ್ವ=ತೆಗೆದುಕೊಂಡು ಹೋಗುವ ಅಮೃತ ಕಲಶವೋ, ಬಲಾಹಕಂ=ಮೋಡವು ತಾಳ್ದ= ಹೊಂದಿರುವ ಬಿಳ್ಮಿಂಚಿನೊಬ್ಬುಳಿಯೊ-:ಬಿಳ್ ಮಿಂಚಿನ ಒಬ್ಬುಳಿಯೊ= ಬಿಳಿಯ ಮಿಂಚಿನ ಗೊಂಚಲೊ! ಪೊಸತೆನೆ-:ಹೊಸತು ಎನೆ= ಎನ್ನುವಂತೆ, ಘಟೋತ್ಕಚತನಯನುಘಟೋದ್ಘಜ ತನಯನು= ಮೇಘನಾದನು, ಬಾಹುಬಲದಿಂದೆಡದ-:ಬಾಹುಬಲದಿಂದೆ ಎಡದ, ಕಕ್ಷದೊಳಿರುಂಕಿದಕಕ್ಷದೊಳ್ ಇರುಂಕಿಸಿದ= ಬಾಹುಬಲದಿಂಸ ಎಡದ ಕಕ್ಷದೊಳ್= ಎಡದ ಕಂಕುಳಲ್ಲಿ ಅವಚಿಕೊಂಡ, ಮಹಾಹಯಂ= ಮಹಾ ಕುದುರೆಯು, ಗಗನಮಾರ್ಗದೊಳೈದುತಿರೆ=ಗಗನಮಾರ್ಗದಲ್ಲಿ ಐದುತಿರೆ= ಬರುತ್ತಿರಲು, ಕುದುರೆಗಾಹಿನ= ಕದರೆಕಾವಲಿನ ಚತುರ್ಬಲಂ=ಚತರ್ಬಲಸೈನ್ಯವೂ, ಕಂಡು ಬೊಬ್ಬರಿದಾರ್ದು-: ಬೊಬ್ಬಿರಿದು ಆರ್ದು=ಕೂಗಿ, ಕಾಳಗಕೆ ಮಂಕೊಂಡುದು= ಯುದ್ಧಕ್ಕೆ ಸಿದ್ಧವಾಯಿತು.
  • ತಾತ್ಪರ್ಯ :ರಾಹು ಹಿಡಿದ ಚಂದ್ರಮಂಡಲವೊ ಗುರುಡನು ಉತ್ಸಾಹದಿಂದ ಎತ್ತಿ, ತೆಗೆದುಕೊಂಡು ಹೋಗುತ್ತಿರುವ ಅಮೃತ ಕಲಶವೋ, ಮೋಡವು ಹೊಂದಿರುವ ಬಿಳಿಯ ಮಿಂಚಿನ ಗೊಂಚಲೊ! ಹೊಸತು ಎನ್ನುವಂತೆ, ಮೇಘನಾದನು, ಬಾಹುಬಲದಿಂದ ತನ್ನ ಎಡದ ಕಂಕುಳಲ್ಲಿ ಅವಚಿಕೊಂಡ,ಮಹಾ ಕುದುರೆಯು, ಗಗನಮಾರ್ಗದಲ್ಲಿ ಬರುತ್ತಿರಲು, ಕುದರೆ ಕಾವಲಿನ ಚತರ್ಬಲಸೈನ್ಯವೂ, ಅದನ್ನು ಕಂಡು ಬೊಬ್ಬಿರಿದು ಕೂಗಿ, ಯುದ್ಧಕ್ಕೆ ಸಿದ್ಧವಾಯಿತು.

(ಪದ್ಯ - ೧೩),

ಪದ್ಯ - ೧೪

[ಸಂಪಾದಿಸಿ]

ಜೋಡಾಗಿ ಪೂಡುವೊಡೆ ಸಾಲದೇಳೇ ಹಯಂ |
ಜೋಡಿಸುವೆನೀ ತುರಗಮಂ ತನ್ನ ತೇರ್ಗೆಂದು |
ಗಾಢದಿಂ ಬಾಂಗೆತ್ತಿ ಕೊಂಡೊಯ್ಯದಿರನಬ್ಜಸಖನೆಂಬ ಶಂಖೆಯಿಂದೆ ||
ರೂಢಿಸಿದ ಮಂದೇಹಸೇನೆ ಬಂದೆಣ್ದೆಸೆಗ |
ಮಾಡಿದುದೊ ಮುತ್ತಿಗೆಯನೆನೆ ಮೇಘನಾದನ ವಿ |
ಭಾಡಿಸಿ ಚತುರ್ಬಲಂ ಕವಿಯೆ ಲೆಕ್ಕಿಸದವಂ ಸೈವರಿದನಾಗಸದೊಳು ||14||

ಪದವಿಭಾಗ-ಅರ್ಥ:
ಜೋಡಾಗಿ=ಜೋಡಿ ಜೋಡಿಯಾಗಿ , ಪೂಡುವೊಡೆ=(ಹೂಡುವೊಡೆ)ಕಟ್ಟಲು, ಸಾಲದೇಳೇ ಹಯಂ= ಏಳೇ ಕುದುರೆ ಇದೆ,ಎಂಟು ಬೇಕು ಸೂರ್ಯನ ರಥಕ್ಕೆ

ಜೋಡಿಸುವೆನೀ-: ಜೋಡಿಸುವೆನು ಈ ತುರಗಮಂ ತನ್ನ ತೇರ್ಗೆಂದು= ಈ ಕುದುರೆಯನ್ನು ತನ್ನ ರಥಕ್ಕೆ ಸೇರಿಸುವೆನು ಎಂದು, ಗಾಢದಿಂ= ವೇಗದಿಂದ ಬಾಂಗೆತ್ತಿ-:ಬಾನಿಗೆ ಎತ್ತಿ= ಆಕಾಶಕ್ಕೆ ಎತ್ತಿ, ಕೊಂಡೊಯ್ಯದಿರನಬ್ಜಸಖನೆಂಬ ಶಂಖೆಯಿಂದೆ-:ಕೊಂಡು ಒಯ್ಯದಿರನು ಅಬ್ಜ ಸಖನು ಎಂಬ ಶಂಕೆಯಿಂದ= ಅಬ್ಜಸಖ = ಸೂರ್ಯನು (ಈ ಕುದುರೆಯನ್ನು) ತೆಗೆದುಕೊಂಡು ಹೋಗದೆ ಇರಲಾರನು ಎಂಬ ಅನುಮಾನದಿಂದ, ರೂಢಿಸಿದ= ಯುದ್ಧಕ್ಕೆ ಸಿದ್ಧವಾದ, ಮಂದೇಹಸೇನೆ=ಒಗ್ಗೂಡಿದ ಸೈನ್ಯ, ಬಂದೆಣ್ದೆಸೆಗ-:ಬಂದು ಎಣ್(ಎಂಟು) ದೆಸೆಗೆ= ಎಂಟೂ ದಿಕ್ಕಿಗೆ ನುಗ್ಗಿ, ಮಾಡಿದುದೊ ಮುತ್ತಿಗೆಯನೆನೆ= ಮತ್ತಿಗೆಯನ್ನು ಮಾಡಿತೋ ಎನೆ= ಎನ್ನುವಮತೆ, ಮೇಘನಾದನ ವಿಭಾಡಿಸಿ=ಧಿಕ್ಕರಿಸಿ ಚತುರ್ಬಲಂ= ಚತುರ್ಬಲವು, ಕವಿಯೆ= ಮುತ್ತಲು, ಲೆಕ್ಕಿಸದವಂ-:ಲೆಕ್ಕಿಸದೆ ಅವಂ=ಅವನು ಅದನ್ನು ಲಕ್ಷಿಸದೆ, ಸೈವರಿದನಾಗಸದೊಳು-:ಸೈವರಿದನು ಆಗಸದೊಳು= ಆಕಾಶದಲ್ಲಿ ಮುಂದುವರಿದನು.

  • ತಾತ್ಪರ್ಯ :ಜೋಡಿ ಜೋಡಿಯಾಗಿ (ಹೂಡುವೊಡೆ)ಕಟ್ಟಲು ಏಳೇ ಕುದುರೆ ಇದೆ, ಸೂರ್ಯನ ರಥಕ್ಕೆ ಎಂಟು ಬೇಕಾಗುವುದು; ಈ ಕುದುರೆಯನ್ನು ತನ್ನ ರಥಕ್ಕೆ ಜೋಡಿಸುವೆನು/ಸೇರಿಸುವೆನು ಎಂದು, ವೇಗದಿಂದ ಆಕಾಶಕ್ಕೆ ಈ ಕುದುರೆಯನ್ನು ಎತ್ತಿ, ಸೂರ್ಯನು ತೆಗೆದುಕೊಂಡು ಹೋಗದೆ ಇರಲಾರನು ಎಂಬ ಅನುಮಾನದಿಂದ,ಯುದ್ಧಕ್ಕೆ ಸಿದ್ಧವಾದ, ಒಗ್ಗೂಡಿದ ಸೈನ್ಯವು, ಎಂಟೂ ದಿಕ್ಕಿಗೆ ನುಗ್ಗಿ, ಮುತ್ತಿಗೆಯನ್ನು ಹಾಕಿತೋ ಎನ್ನುವಮತೆ, ಮೇಘನಾದನ ಮಾಯೆಯನ್ನು ಧಿಕ್ಕರಿಸಿ, ಚತುರ್ಬಲವು ಮುತ್ತಲು, ಅವನು ಅದನ್ನು ಲಕ್ಷಿಸದೆ, ಆಕಾಶದಲ್ಲಿ ಮುಂದುವರಿದನು.

(ಪದ್ಯ - ೧೪),

ಪದ್ಯ - ೧೫

[ಸಂಪಾದಿಸಿ]

ಬಳಿಕಾಬಲಂ ಕಂಡುದಭ್ರಮಾರ್ಗದೊಳೆ ಮುಂ |
ದಳೆಯುತಿಹ ಮೇಘನಾದನನೆಲವೊ ಬರಿಮಾಯೆ |
ಗಳನೆಸಗಿ ಮೋಸದೊಳ್ ತುರಗಮಂ ಕೊಂಡು ಬಾಂದಳಕಡರ್ದೊಡೆ ನಿನ್ನನು||
ಉಳುಹುವರೆ ಯೌವನಾಶ್ವನ ಸುಭಟರಕಟ ನಿ |
ನ್ನಳವನರಿಯದೆ ಬಂದು ಕೆಣಕಿದೆಯಲಾ ಜೀವ |
ದುಳಿವನಾರೈದುಕೊಳ್ಳೆನುತಾತನಂ ಮುತ್ತಿಕೊಂಡು ಕವಿದಿ(ದೆ)ಸುತಿರ್ದುದು ||15||

ಪದವಿಭಾಗ-ಅರ್ಥ:
ಬಳಿಕಾಬಲಂ-: ಬಳಿಕ ಆ ಬಲಂ= ಸೈನ್ಯವು, ಕಂಡುದಭ್ರಮಾರ್ಗದೊಳೆ-:ಕಂಡುದು=ನೋಡಿತು,ಅಭ್ರ ಮಾರ್ಗದೊಳ್= ಆಕಾಶಮಾರ್ಗದಲ್ಲಿ, ಮುಂದಳೆಯುತಿಹ= ಮಂದುವರಿಯುತ್ತಿರುವ, ಮೇಘನಾದನನೆಲವೊ-: ಮೇಘನಾದನನು=ಮೇಘನಾದನನ್ನು ಎಲವೋ ಬರಿಮಾಯೆಗಳನೆಸಗಿ-: ಬರಿ ಮಾಯೆಗಳನು=ಮಾಯಾವಿದ್ಯೆಯನ್ನು ಎಸಗಿ=ಮಾಡಿ ಮೋಸದೊಳ್=ಮೋಸದಿಂದ, ತುರಗಮಂ=ಕುದುರೆಯನ್ನು, ಕೊಂಡು= ತೆಗೆದುಕೊಂಡು, ಬಾಂದಳಕಡರ್ದೊಡೆ-:ಬಾಂದಳಕ್ಕೆ = ಆಕಾಶಕ್ಕೆ ಅಡರ್ದೊಡೆ= ಹೋದರೆ, ನಿನ್ನನು ಉಳುಹುವರೆ= ಉಳಿಸುವರೆ, ಯೌವನಾಶ್ವನ ಸುಭಟರಕಟ= ಸುಭಟರು ಅಕಟಕಟ! ನಿನ್ನಳವನರಿಯದೆ_; ನಿನ್ನ ಅಳವನು=ಶಕ್ತಿಯನ್ನು ಅರಿಯದೆ, ಬಂದು ಕೆಣಕಿದೆಯಲಾ=ಕೆಣಕದೆಯಲ್ಲಾ! ಜೀವದುಳಿವನಾರೈದುಕೊಳ್ಳೆನುತಾತನಂ-:ಜೀವದುಳಿವನು= ಜೀವವನ್ನು ಉಳಿಸಿಕೊಳ್ಳುವುದನ್ನು ಆರೈದುಕೊಳ್ಳು=ಪ್ರಯತ್ನಮಾಡು, ಎನುತ= ಎನ್ನುತ್ತಾ (ಆ ಸೈನ್ಯವು) ಕವಿದಿ(ದೆ)ಸುತಿರ್ದುದು-:ಕವಿದು= ಮುತ್ತಿಕೊಂಡು,ಎಸೆತಿರ್ದುದು= ಆಯುಧಗಳನ್ನು ಪ್ರಯೋಗಿಸುತ್ತಿದ್ದರು.
  • ತಾತ್ಪರ್ಯ :ಬಳಿಕ ಆ ಸೈನ್ಯವು,ನೋಡಿತು, ಆಕಾಶಮಾರ್ಗದಲ್ಲಿ, ಮಂದುವರಿಯುತ್ತಿರುವ, ಮೇಘನಾದನನ್ನು ಎಲವೋ ಬರಿ ಮಾಯಾವಿದ್ಯೆಯನ್ನು ಮಾಡಿ ಮೋಸದಿಂದ, ಕುದುರೆಯನ್ನು ತೆಗೆದುಕೊಂಡು, ಆಕಾಶಕ್ಕೆ ಹೋದರೆ, ನಿನ್ನನು ಉಳಿಸುವರೆ, ಯೌವನಾಶ್ವನ ಸುಭಟರು ಅಕಟಕಟ!ನಿನ್ನ ಶಕ್ತಿಯನ್ನು ಅರಿಯದೆ, ಬಂದು ಕೆಣಕದೆಯಲ್ಲಾ! ಜೀವವನ್ನು ಉಳಿಸಿಕೊಳ್ಳುವ ಪ್ರಯತ್ನಮಾಡು, ಎನ್ನುತ್ತಾ (ಆ ಸೈನ್ಯವು) ಮುತ್ತಿಕೊಂಡು,ಆಯುಧಗಳನ್ನು ಪ್ರಯೋಗಿಸುತ್ತಿದ್ದರು.

(ಪದ್ಯ - ೧೫),

ಪದ್ಯ - ೧೬

[ಸಂಪಾದಿಸಿ]

ಪಿಂತಿರುಗಿ ನೋಡಿದಂ ಕಂಡೆನಲ್ಲವೆ ಜೀವ |
ಮಂ ತೆಗೆದುಕೊಂಡೊಯ್ವ ಕಾಲನಂ ಪೆಣನಟ್ಟು |
ವಂತಾಯ್ತಲಾ ನಿಮ್ಮ ಸಾಹಸಂ ಜಾಗುಜಾಗೆನುತೆ ಹೈಡಿಂಬಿ ನಗುತೆ ||
ಸಂತತಂ ಕರೆವ ಕಲ್ಮಳೆಗಳಂ ಸೃಜಿಸಿ ಬಲ |
ಮಂ ತವೆ ಪೊರಳ್ಚಿ ಮುಂದಳೆಯಲಾಪುಯ್ಯಲೂ |
ರಂ ತಾಗೆ ಪೊರಮಟ್ಟುದಾ ನೃಪನ ಸೈನ್ಯಮಕ್ಷೌಹಿಣಿಯ ಗಣನೆಯಿಂದೆ ||16||

ಪದವಿಭಾಗ-ಅರ್ಥ:
ಪಿಂತಿರುಗಿ= ಹೀತಿರುಗಿ ನೋಡಿದಂ= ನೋಡಿದನು, ಕಂಡೆನಲ್ಲವೆ-:ಕಂಡೆನು ಅಲ್ಲವೆ,=ಇದು ಹೀಗಲ್ಲವೇ? ಜೀವಮಂ= ಜೀವವನ್ನು, ತೆಗೆದುಕೊಂಡೊಯ್ವ ಕಾಲನಂ=ತೆಗೆದುಕೋಡು ಹೋಗುತ್ತಿರುವ ಯಮನನ್ನು, ಪೆಣನಟ್ಟುವಂತಾಯ್ತಲಾ-:ಪೆಣನು ಅಟ್ಟುವಂತೆ ಆಯ್ತಲಾ= ಹೆಣವು ಅಟ್ಟಿಸಿಕೊಂಡು ಹೋಗುವಂತೆ ಆಯಿತಲ್ಲಾ; ನಿಮ್ಮ ಸಾಹಸಂ ಜಾಗುಜಾಗೆನುತೆ=ನಿಮ್ಮ ಸಾಹಸವು ಭೇಷ್-ಭೇಷ್ ಎನುತ= ಎನ್ನುತ್ತಾ, ಹೈಡಿಂಬಿ ನಗುತೆ= ಮೇಘನಾದನು ನಗುತ್ತಾ, ಸಂತತಂ= ಒಂದೇಸಮನೆ ಕರೆವ= ಸುರಿಯುವ, ಕಲ್ಮಳೆಗಳಂ ಸೃಜಿಸಿ= ಕಲ್ಲಿನ ಮಳೆಯನ್ನು ಸೃಷ್ಟಿಸಿ, ಬಲಮಂ ತವೆ ಪೊರಳ್ಚಿ=ಸೈನ್ಯವನ್ನು ಮತ್ತೆ ಹೊರಳಿಸಿ ಹಿಂತಿರುಗುವಂತೆಮಾಡಿ ಮುಂದಳೆಯಲಾಪುಯ್ಯಲೂರಂ-:ಮುಂದಳೆಯಲ್= ಮುಂದುವರೆಯಲು, ಆ ಸುದ್ದಿ, ಊರಂ ತಾಗೆ= ಊರಿಗೆ ಮುಟ್ಟಲು, ಪೊರಮಟ್ಟುದಾ-:ಪೊರಮಟ್ಟುದು = ಹೊರಹೊರಟಿತು ಆ, ನೃಪನ= ರಾಜನ, ಸೈನ್ಯಮಕ್ಷೌಹಿಣಿಯ-:ಸೈನ್ಯಂ= ಸೈನ್ಯವು, ಅಕ್ಷೌಹಿಣಿಯ ಗಣನೆಯಿಂದೆ= ಸೈನ್ಯವು ಅಕ್ಷೋಹಿಣಿಯ ಲೆಕ್ಕದಲಿ ಪೊರಮಟ್ಟುದು= ಹೊರಟಿತು.
  • ತಾತ್ಪರ್ಯ :ಮೇಘನಾದನು ಹೀತಿರುಗಿ ನೋಡಿದನು, 'ಕಂಡೆನು ಇದು ಹೀಗಲ್ಲವೇ? ಜೀವವನ್ನು ತೆಗೆದುಕೋಡು ಹೋಗುತ್ತಿರುವ ಯಮನನ್ನು, ಹೆಣವು ಅಟ್ಟಿಸಿಕೊಂಡು ಹೋಗುವಂತೆ ಆಯಿತಲ್ಲಾ'; 'ನಿಮ್ಮ ಸಾಹಸವು ಭೇಷ್-ಭೇಷ್', ಎನ್ನುತ್ತಾ, ಮೇಘನಾದನು ನಗುತ್ತಾ, ಒಂದೇಸಮನೆ ಸುರಿಯುವ,ಕಲ್ಲಿನ ಮಳೆಯನ್ನು ಸೃಷ್ಟಿಸಿ, ಸೈನ್ಯವನ್ನು ಮತ್ತೆ ಹಿಂತಿರುಗುವಂತೆಮಾಡಿ, ಮುಂದೆ ಹೋಗುತ್ತಿರಲು, ಆ ಸುದ್ದಿ ಊರಿಗೆ ಮುಟ್ಟಲು, ಆ ರಾಜನ ಸೈನ್ಯವು ಅಕ್ಷೋಹಿಣಿಯ ಲೆಕ್ಕದಲ್ಲಿ ಹೊರ ಹೊರಟಿತು.

(ಪದ್ಯ - ೧೬),

ಪದ್ಯ - ೧೭

[ಸಂಪಾದಿಸಿ]

ತನ್ನೊಳಿರ್ದಮಲ ಹಯರತ್ನಮಂ ಕೊಂಡು ಕಳ |
ವಿನ್ನಭಸ್ಥಳಕೊಯ್ದನೆಂಬ ಕಡುಗೋಪದಿಂ |
ಬೆನ್ನಬಿಡದೆದ್ದುನಡೆದುದೊ ಗಗನಕೀಧರಣಿಯೆನೆ ಘಟೋತ್ಕಚತನುಜನು||
ಮುನ್ನ ಮಾಡಿದ ರಜದ ಮಾಯೆಗಿಮ್ಮಡಿಸಿ ಪಡಿ |
ಯನ್ನೆಗಳ್ಚಿದರೊ ವೈರಿಗಳೆನೆ ರಣೋತ್ಸಾಹ |
ದಿನ್ನಡೆವ ಚಾತುರಂಗದ ಪದಹತಕ್ಕೇಳ್ವ ಧೂಳ್ ಮಸಿಗಿತಂಬರದೊಳು ||17||

ಪದವಿಭಾಗ-ಅರ್ಥ:
ತನ್ನೊಳಿರ್ದಮಲ ಹಯರತ್ನಮಂ ಕೊಂಡು-:ತನ್ನೊಳು ಇರ್ದ ಅಮಲ ಹಯರತ್ನಮಂ ಕೊಂಡು ಕಳವಿಂ ನ್ನಭಸ್ಥಳಕೆ ಒಯ್ದನು ಎಂಬ=ತನ್ನಲ್ಲಿದ್ದ ಶ್ರೇಷ್ಟವಾದರತ್ದಂತಹ ಕುದುರೆಯನ್ನು ಕಳವಿನಿಂದ ತೆಗೆದುಕೊಂಡು ಆಕಾಶಕ್ಕೆ ಒಯ್ದನು= ತೆಗೆದುಕೊಂಡು ಹೋದನು ಎಂಬ,(ವಿಚಾರ ತಿಳಿದು), ಕಡುಗೋಪದಿಂ = ಬಹಳ ಸಿಟ್ಟಿನಿಂದ, ಬೆನ್ನಬಿಡದೆದ್ದುನಡೆದುದೊಗಗನಕೀಧರಣಿಯೆನೆ-: ಬೆನ್ನಬಿಡದೆ ಎದ್ದು ನಡೆದುದೊ= ಹಿಂಬಾಲಿಸಿಕೊಂಡು ಹೋದರು, ಹೇಗೆಂದರೆ ಗಗನಕೀಧರಣಿಯೆನೆ= ಗಗನಕೆ ಈ ಧರಣಿ ಎನೆ= ಆಕಾಶಕ್ಕೆ ಈ ಭೂಮಿಯೇ ಹೋಯಿತೋ ಎನ್ನುವಂತೆ; ಘಟೋತ್ಕಚತನುಜನು-ಘಟೋತ್ಕಜನ ಅನುಜನು= ಘಟೋತ್ಕಚನ ತಮ್ಮ ಮೇಘನಾದನು, ಮುನ್ನ ಮಾಡಿದ ರಜದ ಮಾಯೆಗಿಮ್ಮಡಿಸಿ= ಮೊದಲು ಮಾಡಿದ ಮಾಯಾತಂತ್ರಕ್ಕೆ, ಇಮ್ಮಡಿಸಿ= ಎರಡರಷ್ಟು, ಪಡಿಯನ್ನೆಗಳ್ಚಿದರೊ ವೈರಿಗಳೆನೆ-: ಪಡಿಯನ್ನು ನೆಗಳ್ಚಿದರೋ ಎನೆ= ಪ್ರತಿ ತಂತ್ರವನ್ನು ಮಾಡಿದರೋ ಎನ್ನುವಮತೆ, ರಣೋತ್ಸಾಹದಿನ್ನಡೆವ-:ರಣೋತ್ಸಾಹದಿಂ ನೆಡೆದ= ಯುದ್ಧದಾವೇಶದಿಂದ ನೆಡೆದ, ಚಾತುರಂಗದ ಪದಹತಕ್ಕೇಳ್ವ ಧೂಳ್= ಚತುರಂಗ ಸೈನ್ಯದ ನೆಡಿಗೆಯಿಂದ ಎದ್ದ ಧೂಳು, ಮಸಿಗಿತಂಬರದೊಳು-:ಮಸುಗಿತು ಅಂಬರದೊಳು=ಆಕಾಶದಲ್ಲಿ ಮುಸುಗಿ ತುಂಬಿಕೊಂಡಿತು.
  • ತಾತ್ಪರ್ಯ :(ರಾಕ್ಷಸನು), ತನ್ನಲ್ಲಿದ್ದ ಶ್ರೇಷ್ಟವಾದ ರತ್ನದಂತಹ ಕುದುರೆಯನ್ನು ಕಳವಿನಿಂದ ತೆಗೆದುಕೊಂಡು ಆಕಾಶಕ್ಕೆ ತೆಗೆದುಕೊಂಡು ಹೋದನು ಎಂಬ,(ವಿಚಾರ ತಿಳಿದು), ಬಹಳ ಸಿಟ್ಟಿನಿಂದ ಹಿಂಬಾಲಿಸಿಕೊಂಡು ಹೋದರು, ಹೇಗೆಂದರೆ ಆಕಾಶಕ್ಕೆ ಈ ಭೂಮಿಯೇ ಹೋಯಿತೋ ಎನ್ನುವಂತೆ; ಘಟೋತ್ಕಜನ ತಮ್ಮ ಮೇಘನಾದನು ಮೊದಲು ಮಾಡಿದ ಮಾಯಾತಂತ್ರಕ್ಕೆ, ಎರಡರಷ್ಟು ಮಾಯಾತಂತ್ರ ಮಾಡಿದನು, ಪ್ರತಿ ತಂತ್ರವನ್ನು ಮಾಡಿದರೋ ಎನ್ನುವಂತೆ, ರಣೋತ್ಸಾಹದಿಂದ ನೆಡೆದ, ಚತುರಂಗ ಸೈನ್ಯದ ನೆಡಿಗೆಯಿಂದ ಎದ್ದ ಧೂಳು, ಆಕಾಶದಲ್ಲಿ ಮುಸುಗಿ ತುಂಬಿಕೊಂಡಿತು.

(ಪದ್ಯ - ೧೭),

ಪದ್ಯ - ೧೮

[ಸಂಪಾದಿಸಿ]

ಪಟಹ ನಿಸ್ಸಾಳ ತಮ್ಮಟ ಭೇರಿಗಳ ಸಮು |
ತ್ಕಟನಾದಮುಗ್ರಗಜಘಟೆಯ ಘಂಟಾರವಂ |
ಚಟುಲ ವಾಜಿಗಳ ಖುರಪುಟದ ರಭಸಂ ಹರಿವ ಸುಟಿಯ ರಥಚಕ್ರಧ್ವನಿ ||
ಲಟಕಟಪ ಸಮರಲಂಪಟರ ಭುಜಗಳ ಹೊಯ್ಲ |
ಧಟರ ಚಾಪಸ್ವನಂ ಪಟುಭಟರ ಬೊಬ್ಬೆಯಾ |
ರ್ಭಟೆಗಳೊಂದಾಗಿ ಸಂಘಟಿಸಿತೀಬ್ರಹ್ಮಾಂಡ ಘಟಮಿಂದೊಡೆಯದಿರದೆನೆ ||18||

ಪದವಿಭಾಗ-ಅರ್ಥ:
ಯುದ್ಧದಲ್ಲಿ ಬಾರಿಸುವ ಪಟಹ, ನಿಸ್ಸಾಳ, ತಮ್ಮಟ, ಭೇರಿಗಳ, ಸಮುತ್ಕಟನಾದಮುಗ್ರಗಜಘಟೆಯ-:ಸಮುತ್ಕಟ= ಒಟ್ಟುಸೇರಿದ ದೊಡ್ಡ, ನಾದಂ= ಶಬ್ದ, ಅಗ್ರಗಜಘಟೆಯ=ಮುಂಭಾಗದಲ್ಲಿ ಆನಗೆ ಕಟ್ಟಿದ ಗಂಟೆಯ, ಘಂಟಾರವಂ= ಘಂಟೆಯ ನಾದ; ಚಟುಲ ವಾಜಿಗಳ ಖುರಪುಟದ ರಭಸಂ= ಓಡುವ ಕುದುರೆಗಳ ಗೊರಸಿನ ಖುರಪುಟದ ಶಬ್ದ; ಹರಿವ ಸುಟಿಯ ರಥಚಕ್ರಧ್ವನಿ= ವೇಗದ ರಥದ ಗಾಲಿಯ ಶಬ್ದ; ಲಟಕಟಪ ಸಮರಲಂಪಟರ ಭುಜಗಳ ಹೊಯ್ಲು= ಭುಜಕೀರ್ತಿಗಳನ್ನು ಕಟ್ಟದ ಯೋಧರ ಕೂಗು; ಅಧಟರ ಚಾಪಸ್ವನಂ=ಶೂರರ ಬಿಲ್ಲಿ ಠೇಂಕಾರ; ಪಟುಭಟರ ಬೊಬ್ಬೆಯಾರ್ಭಟೆಗಳು ಒಂದಾಗಿ= ಕಾಲಾಳುಗಳ ಬೊಬ್ಬೆ-ಕೂಗು;ಈ ಎಲ್ಲಾ ಸದ್ದು ಒಂದಾಗಿ, ಸಂಘಟಿಸಿತೀಬ್ರಹ್ಮಾಂಡ ಘಟಮಿಂದೊಡೆಯದಿರದೆನೆ= ಸಂಘಟಿಸಿತು ಈ ಬ್ರಹ್ಮಾಂಡ= ಈ ಬ್ರಹ್ಮಾಂಡವೇ ಒಂದಕ್ಕೊಂದು ಡಿಕ್ಕಿಯಾಯಿತೋ, ಈ ಬ್ರಹ್ಮಾಂಡದ ಘಟಂ(ಮಡಕೆ, ದೇಹ) ಇಂದು ಒಡೆಯದೆ ಇರದೇ?= ಶರೀರವು ಒಡೆಯದೇ ಇರುವುದೇ? ಎಂಬತಿತ್ತು.
  • ತಾತ್ಪರ್ಯ :ಯುದ್ಧದಲ್ಲಿ ಬಾರಿಸುವ ಪಟಹ, ನಿಸ್ಸಾಳ, ತಮ್ಮಟ, ಭೇರಿಗಳ,ಒಟ್ಟುಸೇರಿದ ದೊಡ್ಡ, ಶಬ್ದ, ಮುಂಭಾಗದಲ್ಲಿ ಆನಗೆ ಕಟ್ಟಿದ ಗಂಟೆಯ, ಘಂಟೆಯ ನಾದ; ಓಡುವ ಕುದುರೆಗಳ ಗೊರಸಿನ ಖುರಪುಟದ ಶಬ್ದ; ವೇಗದ ರಥದ ಗಾಲಿಯ ಶಬ್ದ; ಭುಜಕೀರ್ತಿಗಳನ್ನು ಕಟ್ಟದ ಯೋಧರ ಕೂಗು; ಶೂರರ ಬಿಲ್ಲಿನ ಠೇಂಕಾರ; ಕಾಲಾಳುಗಳ ಬೊಬ್ಬೆ-ಕೂಗು; ಈ ಎಲ್ಲಾ ಸದ್ದು ಒಂದಾಗಿ, ಈ ಬ್ರಹ್ಮಾಂಡವೇ ಒಂದಕ್ಕೊಂದು ಡಿಕ್ಕಿಯಾಯಿತೋ, ಈ ಬ್ರಹ್ಮಾಂಡದ ಶರೀರವು ಒಡೆಯದೇ ಇರುವುದೇ? ಎಂಬತಿತ್ತು.

(ಪದ್ಯ - ೧೮),

ಪದ್ಯ - ೧೯

[ಸಂಪಾದಿಸಿ]

ಎತ್ತಿಬಹ ಸತ್ತಿಗೆಯ ಮೊತ್ತಂಗಳೆತ್ತಲುಂ |
ಕತ್ತಲಿಸೆ ಪೊತ್ತ ಮಸೆವೆತ್ತ ಬಲ್ಗತ್ತಿಗಳ |
ಕಿತ್ತು ಭಟರೆತ್ತಿ ಜಡಿಯುತ್ತಿರಲ್ಕತ್ತ ಬೆಳೆಗಿತ್ತುವವು ಮತ್ತೆ ಬಲಕೆ ||
ಸುತ್ತಲುಂ ಕೆತ್ತವೋಲ್ ಮತ್ತಗಜಮೊತ್ತರಿಸಿ |
ಮುತ್ತಿನಡೆಯುತ್ತೆಲರನೊತ್ತಿ ನಿಲಿಸುತ್ತಿರಲು |
ದತ್ತ ಚಮರೋತ್ಥಿತ ಮರುತ್ತತಿಯೊಳುತ್ತಮ ಹಿಮೋತ್ತರಂ ಬಿತ್ತರಿಸಿತು ||19||

ಪದವಿಭಾಗ-ಅರ್ಥ:
ಎತ್ತಿಬಹ= ಎತ್ತಿಕೊಂಡು ಬರುವ, ಸತ್ತಿಗೆಯ= ಛತ್ರಿಯ, ಮೊತ್ತಂಗಳೆತ್ತಲುಂ-:ಮೊತ್ತಂಗಳು=ಗುಂಪುಗಳು, ಎತ್ತಲುಂ= ಎಲ್ಲಾ ಕಡೆಯೂ, ಕತ್ತಲಿಸೆ= ಕತ್ತಲುಂಟಾಗಲು, ಪೊತ್ತ=ಹೊತ್ತಿರುವ, ಮಸೆವೆತ್ತ= ಮಸೆದ, ಬಲ್ಗತ್ತಿಗಳ= ಬಲ್ ಗತ್ತಿಗಳ= ದೊಡ್ಡ ಕತ್ತಿಗಳನ್ನು, ಕಿತ್ತು= ಒರೆಯಿಂದ ತೆಗೆದು ಭಟರೆತ್ತಿ= ಯೋಧರು ಎತ್ತಿ, ಜಡಿಯುತ್ತಿರಲ್ಕತ್ತ-: ಝಳಿಪಿಸುತ್ತರಲು, ಅತ್ತ= ಆ ಪ್ರದೇಶದಲ್ಲಿ ಬೆಳೆಗಿತ್ತುವವು_: ಬೆಳಗಿ ಇತ್ತವವು= ಬೆಳಕನ್ನು ಉಂಟುಮಾಡುವುವು- ಮತ್ತೆ ಬಲಕೆ= ಸೈನ್ಯಕ್ಕೆ; ಸುತ್ತಲುಂ= ಸುತ್ತಲೂ, ಕೆತ್ತವೋಲ್= ಜೋಡಿಸಿದಂತೆ, ಮತ್ತಗಜಮೊತ್ತರಿಸಿ-:ಮತ್ತಗಜಂ ಒತ್ತರಿಸಿ= ಮದಿಸಿದ ಆನೆಯ, ಸುತ್ತಲುಂ= ಸುತ್ತ, ಮುತ್ತಿನಡೆಯುತ್ತೆಲರನೊತ್ತಿ-:ಮತ್ತಿ ನೆಡಯುತ್ತಿರೆ ಅಲರನು=ಗಾಳಿಯನ್ನು, ಒತ್ತಿ ನಿಲಿಸುತ್ತಿರಲು=ಚಲಿಸಲು ಬಿಡದಂತೆ ಹೋಗುತ್ತಿರಲು, ದತ್ತಚಮರೋತ್ಥಿತ-:ದತ್ತ ಚಮರೋತ್ಥತಮರುತ್= ಚಾಮರಗಳಿಂದ ಹೊರಟ ಗಾಳಿಯು, (ಮರುತ್ ತತಿಯೊಳ್ ಉತ್ತಮ) ತತಿಯೊಳ್=ಸಮೂಹದಲ್ಲಿ, ಉತ್ತಮ=ಸೊಗಸಾದ ಹಿಮೋತ್ತರಂ= ತಂಪಾದ (ಗಾಳಿಯನ್ನು) ಬಿತ್ತರಿಸಿತು=(ಹರಡುವಂತೆ ಮಾಡಿತು) ಬೀಸಿತು
  • ತಾತ್ಪರ್ಯ : ಎತ್ತಿಕೊಂಡು ಬರುವ ಛತ್ರಿಯ ಗುಂಪುಗಳಿಂದ ಎಲ್ಲಾ ಕಡೆಯೂ ಕತ್ತಲುಂಟಾಗಲು,ಹೊತ್ತಿರುವ ಮಸೆದ ದೊಡ್ಡ ಕತ್ತಿಗಳನ್ನು ಒರೆಯಿಂದ ತೆಗೆದು ಯೋಧರು ಎತ್ತಿ ಝಳಿಪಿಸುತ್ತರಲು,ಆ ಸೈನ್ಯಕ್ಕೆ ಪ್ರದೇಶದಲ್ಲಿ ಬೆಳಕನ್ನು ಉಂಟುಮಾಡುವುವು; ಸುತ್ತಲೂ ಜೋಡಿಸಿದಂತೆ ಮದಿಸಿದ ಆನೆಯ ಸುತ್ತ, ಮುತ್ತಿ ನೆಡಯುತ್ತಿರೆ ಗಾಳಿಯನ್ನು, ಒತ್ತಿ ಅದು ಚಲಿಸಲು ಬಿಡದಂತೆ ಹೋಗುತ್ತಿರಲು, ಚಾಮರಗಳಿಂದ ಹೊರಟ ಗಾಳಿಯು, ಸಮೂಹದಲ್ಲಿ,ಸೊಗಸಾದ ತಂಪಾದ (ಗಾಳಿಯನ್ನು) ಹರಡುವಂತೆ ಮಾಡಿತು ಅಥವಾ ಬೀಸಿತು

(ಪದ್ಯ - ೧೯),

ಪದ್ಯ - ೨೦

[ಸಂಪಾದಿಸಿ]

ತಡೆಯೊಳಿರ್ದಖಿಳ ಮೇಘಂಗಳಂ ಪ್ರಳಯದೊಳ್ |
ಬಿಡಲು ಘುಡಿಘುಡಿಸುತ್ತೆ ನಡೆವಂದದಿಂದೆ ಬೊ |
ಬ್ಬಿಡುತವಧಿಯಿಲ್ಲದೈತರುತಿರ್ಪ ಯೌವನಾಶ್ವನ ಸೈನ್ಯಮಂ ನೋಡುತೆ ||
ಎಡಗಯ್ಯ ತುರುಗಮಂ ಬಲಿದಡವಳಿಸಿ ತನ್ನ |
ಕಡುಗಮಂ ಜಡಿದನಿಬರೆಲ್ಲರಂ ಚಿತ್ತದೊಳ್ |
ಗಡಣಿಸದೆ ಕಲಿಘಟೋತ್ಕಚಸುತಂ ನಸುನಗುತೆ ಗಗನದೊಳ್ ಬರುತಿರ್ದನು||20||

ಪದವಿಭಾಗ-ಅರ್ಥ:
ತಡೆಯೊಳಿರ್ದಖಿಳ-:ತಡೆಯೊಳ್= ನಿರ್ಬಂಧದಲ್ಲಿ, ಇರ್ದ= ಇದ್ದ, ಮೇಘಂಗಳಂ= ಮೋಡಗಲನ್ನು, ಪ್ರಳಯದೊಳ್=ಪ್ರಳಯಕಾಲದಲ್ಲಿ, ಬಿಡಲು= ಬಿಟ್ಟಾಗ, ಘುಡಿಘುಡಿಸುತ್ತೆ ನಡೆವಂದದಿಂದೆ=(ಗುಡುಗು ಸಿಡಲಿನಿಂದ) ಆರ್ಭಟ ಮಾಡುತ್ತಾ ಚಲಿಸುವಂತೆ, ಬೊಬ್ಬಿಡುತವಧಿಯಿಲ್ಲದೈತರುತಿರ್ಪ-:ಬೊಬ್ಬಿಡುತ ಅವಧಿಯಿಲ್ಲದೆ ಐತರುತಿರ್ಪ= ಆರ್ಭಟಿಸುತ್ತಾ ವೇಗವಾಗಿ ಬರುತ್ತಿರುವ, ಯೌವನಾಶ್ವನ ಸೈನ್ಯಮಂ= ಸೈನ್ಯವನ್ನು, ನೋಡುತೆ= ನೋಡಿ, ಎಡಗಯ್ಯ ತುರುಗಮಂ=ಎಡದ ಕೈ ಕಂಕುಳಲ್ಲಿದ್ದ ಕುದುರೆಯನ್ನು, ಬಲಿದಡವಳಿಸಿ-: ಬಲಿದು ಅಳವಡಿಸಿ= ಅಲ್ಲಿ ಗಟ್ಟಿಯಾಗಿ ಹಿಡಿದುಕೊಂಡು, ತನ್ನ ಕಡುಗಮಂ= ತನ್ನ ಖಡ್ಗವನ್ನು, ಜಡಿದನಿಬರೆಲ್ಲರಂ-: ಜಡಿದು ಅನಿಬರ ಎಲ್ಲರಂ= ಅವರೆಲ್ಲರನ್ನೂ ಹೊಡೆದು, ಚಿತ್ತದೊಳ್= ಮನದಲ್ಲಿ, ಗಡಣಿಸದೆ= ಲಕ್ಷಮಾಡದೆ, ಕಲಿಘಟೋತ್ಕಚಸುತಂ=ವೀರ ಮೇಘನಾದನು, ನಸುನಗುತೆ= ನಸುನಗತ್ತಾ ಗಗನದೊಳ್=ಆಕಾಶದಲ್ಲಿ, ಬರುತಿರ್ದನು= ಬರುತ್ತಿದ್ದನು.
  • ತಾತ್ಪರ್ಯ : ನಿರ್ಬಂಧದಲ್ಲಿ ಇದ್ದ, ಮೋಡಗಳನ್ನು ಪ್ರಳಯಕಾಲದಲ್ಲಿ ಬಿಟ್ಟಾಗ, ಗುಡುಗು ಸಿಡಲಿನಿಂದ ಆರ್ಭಟ ಮಾಡುತ್ತಾ ಚಲಿಸುವಂತೆ, ಆರ್ಭಟಿಸುತ್ತಾ ವೇಗವಾಗಿ ಬರುತ್ತಿರುವ, ಯೌವನಾಶ್ವನ ಸೈನ್ಯವನ್ನು ನೋಡಿ, ಎಡದ ಕೈ ಕಂಕುಳಲ್ಲಿದ್ದ ಕುದುರೆಯನ್ನು ಅಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ತನ್ನ ಖಡ್ಗವನ್ನು ಬೀಸಿ ಅವರೆಲ್ಲರನ್ನೂ ಹೊಡೆದು, ಮನದಲ್ಲಿ ಲಕ್ಷಮಾಡದೆ (ಗಾಬರಿಗೊಳ್ಳದೆ, ವೀರ ಮೇಘನಾದನು ನಸುನಗತ್ತಾ ಆಕಾಶದಲ್ಲಿಬರುತ್ತಿದ್ದನು.

(ಪದ್ಯ - ೨೦),

ಪದ್ಯ - ೨೧

[ಸಂಪಾದಿಸಿ]

ಡಿಳ್ಳಮಾದುದೆ ಯೌವನಾಶ್ವಭೂಪತಿಯ ಬಲ |
ಮೊಳ್ಳೆಗರ ನೂಕು ನೂಕು ನೂಕಾವೆಡೆಯೊಳಾ ಕುದುರೆ |
ಗಳ್ಳನಂ ತೋರು ತೋರೆನುತೆ ನಡೆತಂದು ಹೈಡಿಂಬಿಯಂ ಮುತ್ತಿಕೊಂಡು ||
ಒಳ್ಳಿತೋ ವೀರ ಹಯಚೋರ ಜೀವದೊಳಾಸೆ |
ಯುಳ್ಳೊಡೀಕುದುರೆಯಂ ಬಿಟ್ಟು ಸಾಗಲ್ಲದೊಡೆ |
ಕೊಳ್ಳಾ ಮಹಾಸ್ತ್ರಪ್ರತತಿಯನೆಂದಂಬರವನಂಬಿನಿಂ ತುಂಬಿಸಿದರು ||21||

ಪದವಿಭಾಗ-ಅರ್ಥ:
ಡಿಳ್ಳಮಾದುದೆ=ಅಶಕ್ತವಾದುದೇ? ಯೌವನಾಶ್ವ ಭೂಪತಿಯ ಬಲಂ=ಯೌವನಾಶ್ವ ರಾಜನ ಸೈನ್ಯವು ಅಶಕ್ತವಾದುದೇ? (ಅಲ್ಲ). ಒಳ್ಳೆಗರ(ನೀರುಹಾವು = ಅಶಕ್ತರು) ನೂಕು ನೂಕು ನೂಕು= ಅಶಕ್ತರನ್ನು ಅತ್ತ ಸರಿಸು, ಆವೆಡೆಯೊಳ= ಆ ಕುದುರೆಗಳ್ಳನಂ ತೋರು ತೋರೆನುತೆ-:ತೋರು ಎನುತೆ= ಆ ಕುದರೆಗಳ್ಳನು ಯಾವಕಡೆ ಇರುವನು,ತೋರಿಸು, ತೋರಿಸು ಎನುತೆ= ಎನ್ನುತ್ತಾ ನಡೆತಂದು= ಬಂದು ಹೈಡಿಂಬಿಯಂ= ಮೇಘನಾದನನ್ನು ಮುತ್ತಿಕೊಂಡು, ಒಳ್ಳಿತೋ ವೀರ= ಒಳ್ಳೆಯದೋ? ವೀರ! ಹಯಚೋರ= ಕುದುರೆ ಕಳ್ಳ, ಜೀವದೊಳಾಸೆಯುಳ್ಳೊಡೀಕುದುರೆಯಂ-: ಜೀವದಾಸೆ ಉಳ್ಳೊಡೆ ಕುದುರೆಯಂ= ಜೀವದಾಸೆ ಇದ್ದರೆ ಕುದುರಯನ್ನು, ಬಿಟ್ಟು ಸಾಗಲ್ಲದೊಡೆ-:ಸಾಗು ಅಲ್ಲದೊಡೆ ಕೊಳ್ಳಾ=ಇಲ್ಲದಿದ್ದರೆ, ತೆಗೆದುಕೋ ಮಹಾಸ್ತ್ರಪ್ರತತಿಯನೆಂದಂಬರವನಂಬಿನಿಂ-: ಮಹಾಸ್ತ್ರಪ್ರತತಿಯನು ಎಂದು ಅಂಬರವನು ಅಂಬಿನಿಂ ತುಂಬಿಸಿದರು =ಅನೇಕ ಮಹಾಸ್ತ್ರಗಳ ಹೊಡೆತವನ್ನು ಎಂದು ಆಕಾಶವನ್ನು ಬಾಣಗಳಿಂದ ತುಂಬಿಸಿದರು.
  • ತಾತ್ಪರ್ಯ : ಯೌವನಾಶ್ವ ರಾಜನ ಸೈನ್ಯವು ಅಶಕ್ತವಾದುದೇ? (ಅಲ್ಲ). ಅಶಕ್ತರನ್ನು ನೂಕು ನೂಕು ಅತ್ತ ಸರಿಸು; ಆ ಕುದರೆಗಳ್ಳನು ಯಾವಕಡೆ ಇರುವನು,ತೋರಿಸು, ತೋರಿಸು ಎನ್ನುತ್ತಾ ಬಂದು ಮೇಘನಾದನನ್ನು ಮುತ್ತಿಕೊಂಡು, ಒಳ್ಳೆಯದೋ? ವೀರ! ಕುದುರೆ ಕಳ್ಳ, ಜೀವದಾಸೆ ಇದ್ದರೆ ಕುದುರಯನ್ನು, ಬಿಟ್ಟು ಸಾಗು; ಇಲ್ಲದಿದ್ದರೆ, ತೆಗೆದುಕೋ ಅನೇಕ ಮಹಾಸ್ತ್ರಗಳ ಹೊಡೆತವನ್ನು ಎಂದು ಆಕಾಶವನ್ನು ಬಾಣಗಳಿಂದ ತುಂಬಿಸಿದರು.

(ಪದ್ಯ - ೨೧),

ಪದ್ಯ - ೨೨

[ಸಂಪಾದಿಸಿ]

ನಿಮ್ಮರಾಯನ ಪೊರೆಯ ಪರಿವಾರದೊಳ್ ನೀವೆ |
ದಿಮ್ಮಿದರೊ ಮತ್ತೆ ಕೆಲರೊಳರೊ ಕಳವಲ್ಲ ಹಯ |
ಮಮ್ಮೊಗದ ಮುಂದೆ ಕಂಡೊಯ್ವೆನಾರ್ಪೊಡೆ ಶಕ್ತಿಯಿಂ ಬಿಡಿಸಿಕೊಳ್ಳಿ ಬರಿದೆ ||
ಉಮ್ಮಳಿಸಬೇಡ ನೀವತಿಸಾಹಸಿಗಳಾದೊ |
ಡೊಮ್ಮೆ ಹಮ್ಮೈಸದಿರಿ ಸಾಕೆಂದು ಮೇಘನಾ |
ದಮ್ಮಹಾಮಾಯಾ ಭಯಂಗಳಂ ಸೃಜಿಸಿದಂ ಮೂಜಗಂ ತಲ್ಲಣಿಸಲು ||22||

ಪದವಿಭಾಗ-ಅರ್ಥ:
ನಿಮ್ಮರಾಯನ= ನಿಮ್ಮ ರಾಜನ, ಪೊರೆಯ= ರಕ್ಷಣೆಯ, ಪರಿವಾರದೊಳ್= ಸೈನ್ಯ ಪರಿವಾರದಲ್ಲ, ನೀವೆ ದಿಮ್ಮಿದರೊ= ನೀವೇ ಶೂರರೋ, ಮತ್ತೆ ಕೆಲರೊಳರೊ= ಮತ್ತೂ ಕೆಲವರು ಇದ್ದಾರೋ? ಕಳವಲ್ಲ= ಇದು ಕಳ್ಳತನವಲ್ಲ, ಹಯಮಮ್ಮೊಗದ-:ಹಯಂ ಮೊಗದ ಮುಂದೆ= ಕುದುರೆಯನ್ನು ನಿಮ್ಮ ಎದುರೇ, ಕಂಡೊಯ್ವೆನಾರ್ಪೊಡೆ-:ಕೊಂಡು ಒಯ್ವೆನು ಆರ್ಪಡೆ= ತೆಗೆದುಕೊಂಡು ಹೋಗುತ್ತೇನೆ; ಆರ್ಪೊಡೆ ಶಕ್ತಿಯಿಂ ಬಿಡಿಸಿಕೊಳ್ಳಿ= ಸಾದ್ಯವಾದರೆ ಶಕ್ತಿಯಿಂದ ಬಿಡಿಸಿಕೊಳ್ಳಿ; ಬರಿದೆ ಉಮ್ಮಳಿಸಬೇಡ= ಸುಮ್ಮನೆ ಮಾತನ್ನಾಡಬೇಡಿ; ನೀವತಿಸಾಹಸಿಗಳಾದೊಡೊಮ್ಮೆ-: ನೀವು ಅತಿ ಸಾಹಸಿಗಳು ಆದೊಡೆ ಒಮ್ಮೆ ಹಮ್ಮೈಸದಿರಿ= ನೀವು ಬಹಳ ಶೂರರಾದರೆ ಒಮ್ಮೆ ಸುಮ್ಮನೆ ಮಾತಾಡಬೇಡಿ, ಸಾಕೆಂದು= ಸಾಕು ಮಾತು ಎಂದು, ಮೇಘನಾದಮ್ಮಹಾಮಾಯಾ= ಮೇಘನಾದಂ ಮಹಂ ಮಾಯಾ ಭಯಂಗಳಂ ಸೃಜಿಸಿದಂ ಮೂಜಗಂ ತಲ್ಲಣಿಸಲು= ಮೇಘನಾದನು ಮೂರು ಲೋಕವೂ ಭಯಪಡುವಂತೆ ಮಹಾ ಮಾಯೆಯನ್ನು ಸೃಷ್ಟಿಸಿದನು.
  • ತಾತ್ಪರ್ಯ : ನಿಮ್ಮ ರಾಜನ ರಕ್ಷಣೆಯ ಸೈನ್ಯ ಪರಿವಾರದಲ್ಲಿ, ನೀವೇ ಶೂರರೋ, ಮತ್ತೂ ಕೆಲವರು ಇದ್ದಾರೋ? ಇದು ಕಳ್ಳತನವಲ್ಲ; ಕುದುರೆಯನ್ನು ನಿಮ್ಮ ಎದುರೇ, ತೆಗೆದುಕೊಂಡು ಹೋಗುತ್ತೇನೆ; ಸಾದ್ಯವಾದರೆ ಶಕ್ತಿಯಿಂದ ಬಿಡಿಸಿಕೊಳ್ಳಿ; ಸುಮ್ಮನೆ ಮಾತನ್ನಾಡಬೇಡಿ; ನೀವು ಬಹಳ ಶೂರರಾದರೆ ಒಮ್ಮೆಯೂ ಸುಮ್ಮನೆ ಮಾತಾಡಬೇಡಿ; ಸಾಕು ಮಾತು ಎಂದು, ಮೇಘನಾದನು ಮೂರು ಲೋಕವೂ ಭಯಪಡುವಂತೆ ಮಹಾ ಮಾಯೆಯನ್ನು ಸೃಷ್ಟಿಸಿದನು.

(ಪದ್ಯ - ೨೨),

ಪದ್ಯ - ೨೩

[ಸಂಪಾದಿಸಿ]

ಪೊಡೆವ ಸಿಡಲ್ ಕರೆವ ಮಳೆ ಜಡಿವ ಕಲ್ಗುಂಡು ಧೂ |
ಳಿಡುವ ಬಿರುಗಾಳಿ ಕಂಗೆಡಿಪ ಕತ್ತಲೆ ಮೇಲೆ |
ಕೆಡೆವ ಗಿರಿತರುಗಳುರೆ ಕಡಿವ ವಿವಿಧಾಯುಧಂ ನಡುವ ಶಸ್ತ್ರಾಸ್ತ್ರಂಗಳು ||
ಪಿಡಿವ ಪುಲಿಕರಡಿ ಬಾಯ್ವಿಡುವ ಭೂತಂಗಳಸು |
ಗುಡಿವ ಪಾವುಗಳಟ್ಟಿ ಸುಡುವ ಕಾಳ್ಕಿಚ್ಚುಳಿಯ |
ಗುಡದವನ ಮಾಯೆಯಂ ತಡೆವರಿಲ್ಲಾಬಲಂ ಪುಡಿವಡೆದುದೇವೇಳ್ವೆನು ||23||

ಪದವಿಭಾಗ-ಅರ್ಥ:
ಪೊಡೆವ ಸಿಡಲ್= ಅವನ ಮಾಯೆಯಿಂದ, ಹೊಡೆಯುವ ಸಿಡಲು, ಕರೆವ ಮಳೆ= ಸುರಿಯುವ ಮಳೆ, ಜಡಿವ ಕಲ್ಗುಂಡು= ಬೀಳುವ ಕಲ್ಗುಂಡು, ಧೂಳಿಡುವ ಬಿರುಗಾಳಿ=ಧೂಳಿನಂದ ಕೂಡಿದ ಬಿರುಗಾಳಿ, ಕಂಗೆಡಿಪ ಕತ್ತಲೆ=ಕಂಗೆಡಿಸುವ ಕತ್ತಲೆ, ಮೇಲೆ

ಕೆಡೆವ ಗಿರಿತರುಗಳು= ಇದಲ್ಲದೆ ಮೇಲಿಂದ ಬೀಳುವ ಬೆಟ್ಟ ಮರಗಳು, ಉರೆ ಕಡಿವ ವಿವಿಧಾಯುಧಂ=ಹೆಚ್ಚು, ಕತ್ತರಿಸುವ ನಾನಾ ಆಯುಧಗಳು, ನಡುವ ಶಸ್ತ್ರಾಸ್ತ್ರಂಗಳು= ಚುಚ್ಚುವ ಶಸ್ತ್ರಾಸ್ತ್ರಗಳು, ಪಿಡಿವ ಪುಲಿಕರಡಿ= ಹಿಡಿಯುವ ಹುಲಿಕರಡಿಗಳು, ಬಾಯ್ವಿಡುವ ಭೂತಂಗಳಸು= ದೊಡ್ಡದಾಗಿ ಬಾಯಿಕಳೆದುಕೊಂಡು ಬರುವ ಭೂತಗಳು, ಅಸುಗುಡಿವ ಪಾವುಗಳಟ್ಟಿ= ಪ್ರಾಣ ಹೀರುವ ಹಾವುಗಳ ರಾಶಿ, ಸುಡುವ ಕಾಳ್ಕಿಚ್ಚು=ಸುಡುವ ಕಾಳ್ಗಚ್ಚಿ ನಂತಹ ಬೆಂಕಿ; , ಉಳಿಯ= ಉಳಿಯ ಗುಡದವನ ಮಾಯೆಯಂ= ಬದುಕಲು ಬಿಡದ ಅವನ ಮಾಯರಯಂ ತಡೆವರಿಲ್ಲ ಆ =ಮಾಯೆಯನ್ನು, ತಡೆಯುವವರು ಇಲ್ಲ; ಪುಡಿವಡೆದುದೇವೇಳ್ವೆನು-: ಪುಡಿ ಪುಡಿ ವಡೆದುದು ಏ ವೇಳ್ವೆನು= ಆ ಸೈನ್ಯ, ಪುಡಿಪುಡಿಯಾಯಿತು ಏನೆಂದು ಹೇಳಲಿ.

  • ತಾತ್ಪರ್ಯ : ಅವನ ಮಾಯೆಯಿಂದ, ಹೊಡೆಯುವ ಸಿಡಲು, ಸುರಿಯುವ ಮಳೆ, ಬೀಳುವ ಕಲ್ಗುಂಡು, ಧೂಳಿನಂದ ಕೂಡಿದ ಬಿರುಗಾಳಿ, ಕಂಗೆಡಿಸುವ ಕತ್ತಲೆ, ಇದಲ್ಲದೆ ಮೇಲಿಂದ ಬೀಳುವ ಬೆಟ್ಟ ಮರಗಳು, ಇನ್ನೂ ಹೆಚ್ಚು, ಕತ್ತರಿಸುವ ನಾನಾ ಆಯುಧಗಳು, ಚುಚ್ಚುವ ಶಸ್ತ್ರಾಸ್ತ್ರಗಳು, ಹಿಡಿಯುವ ಹುಲಿಕರಡಿಗಳು, ದೊಡ್ಡದಾಗಿ ಬಾಯಿಕಳೆದುಕೊಂಡು ಬರುವ ಭೂತಗಳು, ಪ್ರಾಣ ಹೀರುವ ಹಾವುಗಳ ರಾಶಿ, ಸುಡುವ ಕಾಳ್ಗಚ್ಚಿ ನಂತಹ ಬೆಂಕಿ; ಬದುಕಲು ಬಿಡದ ಅವನ, ಮಾಯೆಯನ್ನು, ತಡೆಯುವವರು ಇಲ್ಲ; ಆ ಸೈನ್ಯ, ಪುಡಿಪುಡಿಯಾಯಿತು ಏನೆಂದು ಹೇಳಲಿ.

(ಪದ್ಯ - ೨೩),

ಪದ್ಯ - ೨೪

[ಸಂಪಾದಿಸಿ]

ಮಾಯೆಯಿಂ ಪಡೆಯೆಲ್ಲಮಂ ಕೊಂದು ಹಯಮಂ ವಿ |
ಹಾಯಸಪಥದೊಳೊಯ್ವ ಹೈಡಿಂಬಿಯಂ ಕಂಡ |
ಜೇಯರಂಬರದ ವಿವರಂಗಳಂ ಪುಗುವೆಂಟುಸಾವಿರ ಮಹಾರಥರನು ||
ಆ ಯೌವನಾಶ್ವ ನೃಪನಟ್ಟಿದೊಡೆ ನಭದೊಳಸ |
ಹಾಯಶೂರನ ಮಾರ್ಗಮಂ ಕಟ್ಟಿ ನಿಲ್ಲು ಖಳ ||
ಸಾಯದಿರ್ ಬಿಡುಬಿಡು ತುರಂಗಮವನೆನುತೆ ಸೈಗರೆದರಂಬಿನ ಮಳೆಯನು ||24||

ಪದವಿಭಾಗ-ಅರ್ಥ:
ಮಾಯೆಯಿಂ ಪಡೆಯೆಲ್ಲಮಂ ಕೊಂದು= ಮಾಯೆಯಿಂದ ಶತ್ರುಸೈನ್ಯವನ್ನು ಕೊಂದು, ಹಯಮಂ ವಿಹಾಯಸಪಥದೊಳ್(ಆಕಾಶಮಾರ್ಗ) ಒಯ್ವ ಹೈಡಿಂಬಿಯಂ= ಕುದುರೆಯನ್ನು ಆಕಾಶಮಾರ್ಗದಲ್ಲಿ ಒಯ್ಯುವ ಮಾಘನಾದನನ್ನು, ಕಂಡಜೇಯರಂಬರದ-:ಕಂಡು ಅಜೇಯರ್ ಅಂಬರದ= ಆಕಾಶದಲ್ಲಿ ಅಜೇಯರಾದ, ವಿವರಂಗಳಂ= ಆಕಾಶದ ಪ್ರದೇಶಗಳನ್ನು, ಪುಗುವೆಂಟುಸಾವಿರ ಮಹಾರಥರನು-:ಪುಗುವ ಎಂಟು ಸಾವಿರ= ಹೊಗುವ ಎಂಟುಸಾವಿರ ಮಹಾರಥರನ್ನು, ಆ ಯೌವನಾಶ್ವ ನೃಪನಟ್ಟಿದೊಡೆ= ಆ ಯೌವನಾಶ್ವ ನೃಪನು ಅಟ್ಟಿದೊಡೆ= ಕಳಿಸಿದಾಗ, ನಭದೊಳ್ ಅಸಹಾಯಶೂರನ ಮಾರ್ಗಮಂ=ಆಕಾಶದಲ್ಲಿ ಅಸಹಾಯಶೂರನನ್ನು, ಕಟ್ಟಿ= ಅಡ್ಡಗಟ್ಟಿ, ನಿಲ್ಲು ಖಳ ಸಾಯದಿರ್ ಬಿಡುಬಿಡು ತುರಂಗಮವನೆನುತೆ- ತುರಂಗಮನು ಎನುತೆ= ನಿಲ್ಲು ನೀಚನೇ,ಸಾಯಬೇಡ, ಬಿಟ್ಟುಬಿಡು ಕುದುರೆಯನ್ನು ಎನ್ನುತ್ತಾ, ಸೈಗರೆದರಂಬಿನ ಮಳೆಯನು-: ಸೈಗರೆದರು ಅಂಬಿನ ಮಳೆಯನು= ಬಾಣದ ಮಳೆಯನ್ನು ಸುರಿಸಿದರು.
  • ತಾತ್ಪರ್ಯ :ಮಾಯೆಯಿಂ ಪಡೆಯೆಲ್ಲಮಂ ಕೊಂದು= ಮಾಯೆಯಿಂದ ಶತ್ರುಸೈನ್ಯವನ್ನು ಕೊಂದು, ಹಯಮಂ ವಿಹಾಯಸಪಥದೊಳ್(ಆಕಾಶಮಾರ್ಗ) ಒಯ್ವ ಹೈಡಿಂಬಿಯಂ= ಕುದುರೆಯನ್ನು ಆಕಾಶಮಾರ್ಗದಲ್ಲಿ ಒಯ್ಯುವ ಮೇಘನಾದನನ್ನು ಕಂಡು, ಆಕಾಶದಲ್ಲಿ ಅಜೇಯರಾದ, ಆಕಾಶದ ಪ್ರದೇಶಗಳನ್ನು, ಹೊಗುವ ಎಂಟುಸಾವಿರ ಮಹಾರಥರನ್ನು, ಆ ಯೌವನಾಶ್ವ ನೃಪನು ಕಳಿಸಿದಾಗ, ಆಕಾಶದಲ್ಲಿ ಅಸಹಾಯಶೂರ ಮೇಘನಾದನನ್ನು, ಅಡ್ಡಗಟ್ಟಿ, ಬಿಡುಬಿಡು ಸಾಯಬೇಡ, ನಿಲ್ಲು ನೀಚನೇ, ಬಿಟ್ಟುಬಿಡು ಕುದುರೆಯನ್ನು ಎನ್ನುತ್ತಾ, ಬಾಣದ ಮಳೆಯನ್ನು ಸುರಿಸಿದರು.

(ಪದ್ಯ - ೨೪),

ಪದ್ಯ - ೨೫

[ಸಂಪಾದಿಸಿ]

ಪದ್ಯ - ೨೫[ಸಂಪಾದಿಸಿ]
ವೀರರಹುದೋ ಜಗಕೆ ನೀವಲಾ ಸ್ವಾಮಿಹಿತ |
ಕಾರಿಗಳ್ ತಲೆಯಾಸೆಯಿಲ್ಲೆನುತೆ ಹೈಡಿಂಬಿ |
ತೋರಗದೆಯಿಮದವರ ತೇರ್ಗಳಂ ಚಾಪಬಾಣಂಗಳಂ ಕುದುರೆಗಳನು ||
ಸಾರಥಿಗಳಂ ಧ್ವಜಪತಾಕೆಗಳನಪ್ಪಳಿಸಿ |
ವಾರುವಂಬೆರಸಿ ಕಡುವೇಗದಿಂದೈತಂದು |
ಮಾರುತಸುತನ ಮುಂದೆ ನಿಲುತಿರ್ದನನ್ನೆಗಂ ಮತ್ತೆ ಪಡಿಬಲಮೊದವಿತು ||25||

ಪದವಿಭಾಗ-ಅರ್ಥ:
ವೀರರಹುದೋ ಜಗಕೆ ನೀವಲಾ= ಜಗತ್ತಿದಲ್ಲಿ ನೀವು ವೀರರು ಆಗಿದ್ದೀರೋ? ಸ್ವಾಮಿಹಿತಕಾರಿಗಳ್ ನಿಮಗೆ ತಲೆಯಾಸೆಯಿಲ್ಲೆನುತೆ-:ತಲೆಯಾಸೆ= ಜೀವದಾಸೆ ಇಲ್ಲ ಇಲ್ಲವೇ ಎನ್ನುತ್ತಾ, ಹೈಡಿಂಬಿ ತೋರಗದೆಯಿಮದವರ-: ಹೈಡಿಂಬಿ=ಮೇಘನಾದನು, ತೋರಗದೆಯಿಮದವರ-:ತೋರ= ದೊಡ್ಡ, ಗದೆಯಿಂದ ಅವರ, ತೇರ್ಗಳಂ= ರಥಗಳನ್ನು, ಚಾಪಬಾಣಂಗಳಂ= ಬಿಲ್ಲ ಬಾಣಗಳನ್ನು, ಕುದುರೆಗಳನು ಸಾರಥಿಗಳಂ= ಕುದರೆ ಸಾರಥಿಗಳನ್ನು, ಧ್ವಜಪತಾಕೆಗಳನಪ್ಪಳಿಸಿ= ಧ್ವಜ ಪತಾಕೆಗಳನ್ನು ಅಪ್ಪಳಿಸಿ, ವಾರುವಂಬೆರಸಿ-:ವಾರುವಂ ಬೆರಸಿ= ಕುದುರೆಯ ಜೊತೆಗೂಡಿ, ಕಡುವೇಗದಿಂದೈತಂದು- ಕಡು= ಹೆಚ್ಚಿನ,ವೇಗದಿಂದ,ಐತಂದು= ಬಂದು, ಮಾರುತಸುತನ= ವಾಯುಸುತನ= ಭೀಮನ ಮುಂದೆ, ನಿಲುತಿರ್ದನನ್ನೆಗಂ-:ನಿಂತಿರ್ದನು ಅನ್ನೆಗಂ= ಆ ಸಮಯಕ್ಕೆ. ಮತ್ತೆ= ಪುನಃ, ಪಡಿಬಲಮೊದವಿತು-: ಪಡಿಬಲ= ಮತ್ತೊಂದು ಸೈನ್ಯ, ಒದವಿತು= ಬಂದಿತು.
  • ತಾತ್ಪರ್ಯ : ಜಗದಲ್ಲಿ ನೀವು ವೀರರಾಗಿದ್ದೀರೋ? ಸ್ವಾಮಿಹಿತಕಾರಿಗಳು, ನಿಮಗೆ ಜೀವದಾಸೆ, ಇಲ್ಲವೇ ಎನ್ನುತ್ತಾ, ಮೇಘನಾದನು, ದೊಡ್ಡ, ಗದೆಯಿಂದ ಅವರ, ರಥಗಳನ್ನು, ಬಿಲ್ಲು ಬಾಣಗಳನ್ನು, ಕುದುರೆ ಸಾರಥಿಗಳನ್ನು, ಧ್ವಜ ಪತಾಕೆಗಳನ್ನು ಅಪ್ಪಳಿಸಿ, ಕುದುರೆಯ ಜೊತೆಗೂಡಿ, ಹೆಚ್ಚಿನ ವೇಗದಿಂದ ಬಂದು, ಭೀಮನ ಮುಂದೆ,ನಿಂತಿದ್ದನು. ಆ ಸಮಯಕ್ಕೆ. ಪುನಃ, ಮತ್ತೊಂದು ಸೈನ್ಯ,ಬಂದಿತು.

(ಪದ್ಯ - ೨೫),

ಪದ್ಯ - ೨೬

[ಸಂಪಾದಿಸಿ]

ಹರಿಗಳೀಂ ನಾಗಂಗಳಿಂ ಸ್ಯಂದನಂಗಳಿಂ |
ಶರಝಾಲ ಕದಳಿದಳ ಪುಂಡರೀಕಂಗಳಿಂ|
ಸುರಗಿಖಡ್ಗಂಗಳಿಂ ನಡೆವ ಕಾಂತಾರದಂತೆಸವ ಚತುರಂಗದೊಡನೆ ||
ಭರದಿಂ ಸುವೇಗನೆಂಬಾ ಯೌವನಾಶ್ವ ಭೂ |
ವರನ ತನುಜಾತನಾಹನಕೆ ನಿರ್ಭೀತನು |
ಬ್ಬರದ ಬಿಲ್ದಿರುವಿನಬ್ಬರದ ಕೋಳಾಹಳಕೆ ಧರೆ ಬಿರಿಯೆ ನಡೆತಂದನು ||26||

ಪದವಿಭಾಗ-ಅರ್ಥ:
ಹರಿಗಳೀಂ= ಸಿಂಹಗಳಿಂದ / ಕುದುರೆಗಳಿಂದ, ನಾಗಂಗಳಿಂ= ಹಾವುಗಳಿಂದ/ ಆನೆಗಳಿಂದ, ಸ್ಯಂದನಂಗಳಿಂ= ಹುಳಗಳಿಂದ /ರಥಗಳಿಂದ, ಶರಝಾಲ= ಹುಲ್ಲುಗಳ /ಬಾಣಗಳಿಂದಲೂ,

ಕದಳಿದಳ=ಬಾಳೆ ಎಲೆಗಳಿಂದ / ಗಿಡ್ಡ ಖಡ್ಗದಿಂದ, ಪುಂಡರೀಕಂಗಳಿಂ=ಹುಲಿಗಳಿಂದಲೂ /ಬಿಳಿ ಪತಾಕೆಗಳಿಂದಲೂ, ಸುರಗಿ ಮರದಿಂದಲೂ,/ ಹುಲಿಗಳಿಂದಲೂ, ಸುರಗಿಖಡ್ಗಂಗಳಿಂಸುರಗಿಮರದಿಂದಲೂ / ಖಡ್ಗಗಳಿಂದಲೂ,ಕೂಡಿರುವ ಈ ಸೈನ್ಯ, ನಡೆವ ಕಾಂತಾರದಂತೆಸವ-:ನಡೆವ ಕಾಂತಾರದಂತೆ ಎಸೆವ=ಕಾಣುವ, ಚತುರಂಗದೊಡನೆ=ಚತುರಂಗ ಸೈನ್ಯದೊನೆ, ಭರದಿಂ= ವೇಗವಾಗಿ ಸುವೇಗನೆಂಬಾ= ಸುವೇಗನು ಎಂಬ ಯೌವನಾಶ್ವ ಭೂವರನ ತನುಜಾತನು= ಮಗನು, ಆಹವಕೆ= ಯುದ್ಧಕ್ಕೆ, ನಿರ್ಭೀತನುಬ್ಬರದ-:ನಿರ್ಭೀತನು ಉಬ್ಬರದ ಬಿಲ್ದಿರುವಿನಬ್ಬರದ= ಬಿಲ್ಲು ತಿರುಗಿಸುವ= ನಾಣಿನ ಹಗ್ಗಕ್ಕೆ, ಕೋಳಾಹಳಕೆ= ಗಲಾಟೆಯ ಗದ್ದಲಕ್ಕೆ, ಧರೆ= ಭೂಮಿ ಬಿರಿಯೆ=ಒಡೆತುವಂತೆ, ರಾಜನು ನಡೆತಂದನು ||26||

  • ತಾತ್ಪರ್ಯ : ಒಂದೇ ಪದಕ್ಕೆ ಎಡು ಅರ್ಥ ಬರುವಂತೆ ಕಾಡಿಗೂ ಸೈನ್ಯಕ್ಕೂ ಹೋಲಿಸಿ ಹೇಳಿದೆ : ಸಿಂಹಗಳಿಂದ / ಕುದುರೆಗಳಿಂದ, ಹಾವುಗಳಿಂದ/ ಆನೆಗಳಿಂದ, ಹುಳಗಳಿಂದ /ರಥಗಳಿಂದ, ಹುಲ್ಲುಗಳಿಂದ /ಬಾಣಗಳಿಂದಲೂ, ಬಾಳೆ ಎಲೆಗಳಿಂದ / ಗಿಡ್ಡ ಖಡ್ಗದಿಂದ, ಹುಲಿಗಳಿಂದಲೂ /ಬಿಳಿ ಪತಾಕೆಗಳಿಂದಲೂ, ಸುರಗಿ ಮರದಿಂದಲೂ,/ ಹುಲಿಗಳಿಂದಲೂ, ಖಡ್ಗಗಳಿಂದಲೂ,ಕೂಡಿರುವ ಈ ಸೈನ್ಯ, ನಡೆಯುತ್ತಿರುವ ಕಾಡಿನಂತೆ, ಕಾಣುವ, ಚತುರಂಗ ಸೈನ್ಯದೊನೆ, ವೇಗವಾಗಿ ಸುವೇಗನೆಂಬ ಸುವೇಗನು ಎಂಬ ಯೌವನಾಶ್ವರಾಜನ ಮಗನು, ಯುದ್ಧಕ್ಕೆ ನಿರ್ಭೀತನು ಬಿಲ್ಲು ನಾಣಿನ ಹಗ್ಗದ ಠೇಂಕಾರ ಮೊದಲಾದ ಗದ್ದಲಕ್ಕೆ, ಭೂಮಿ ಒಡೆಯುವಂತಿರಲು, ರಾಜನು ಬಂದನು.

(ಪದ್ಯ - ೨೬),

ಪದ್ಯ - ೨೭

[ಸಂಪಾದಿಸಿ]

ಅಂಬರದೊಳಡ್ಡೈಸಿದೊಡೆ ನಮ್ಮ ರಥಿಕರ್ಕ |
ಳಂ ಬಗೆಯದಹಿತಂ ಹಯಂಬೆರಸಿ ಸೈವರಿದ |
ನೆಂಬುದಂ ಕೇಳ್ದಾಗಳಾ ಯೌವನಾಶ್ವಭೂಪಂ ತಾನೆ ಕೋಪದಿಂದೆ ||
ತುಂಬಿವರಿ ಸಂಪಗೆಯಲರ ಪರಿಮಳದ ಸೂರೆ |
ಗಂ ಬಯಸಿ ಬಂದುದಿದು ಮಿಗೆ ಪೊಸತೆನುತೆ ಹರಿಸಿ |
ದಂ ಬೇಗದಿಂ ಮಣೀವರೂಥಮಂ ಕೆಲಬಲದ ಮನ್ನೆಯರ ಗಡಣದಿಂದೆ ||27||

ಪದವಿಭಾಗ-ಅರ್ಥ:
ಅಂಬರದೊಳ್= ಆಕಾಶದಲ್ಲಿ, ಅಡೈಸಿದೊಡೆ= ಅಡ್ಡಹಾಕಿದಾಗ, ನಮ್ಮ ರಥಿಕರ್ಕಳಂ= ನಮ್ಮ ರಥಿಕರನ್ನು, ಬಗೆಯದಹಿತಂ-:ಬಗೆಯದೆ=ಲೆಕ್ಕಿಸದೆ, ಅಹಿತಂ+ಶತ್ರುವು, ಹಯಂಬೆರಸಿ-ಹಯಂ=ಕುದುರೆಯ, ವೆರಿಸಿ= ಸಹಿತ, ಸೈವರಿದನೆಂಬುದಂ-:ಸೈವರಿದನು ಎಂಬುದಂ= ಹೋದನು ಎಂಬುದಂ, ಕೇಳ್ದಾಗಳಾ-:ಕೇಳ್ದು ಆಗಳು ಆ ಯೌವನಾಶ್ವಭೂಪಂ= ಕೇಳಿ ಆಗ ಆ ಯೌವನಾಶ್ವರಾಜನು, ತಾನೆ ಕೋಪದಿಂದೆ= ಕೋಪದಿಂದ ತಾನೆ, ತುಂಬಿವರಿಸಂಪಗೆಯಲರ-:ತುಂಬಿ, ಅರಿ(ಶತ್ರು) ಸಂಪಿಗೆಯ= ತನ್ನ ಸಾವಿಗೆಕಾರಣವಾಗುವ ಸಂಪಿಗೆಯ ಅಲರ= ಹೂವುಗಳ, ಪರಿಮಳದ ಸೂರೆಗಂ= ಕಂಪಿಗೆ ಅದನ್ನು ಹೀರಲು, ಬಯಸಿ ಬಂದುದಿದು-:ಬಂದುದು =ಮಂದಂತಾಗಿದೆ. ಇದು ಮಿಗೆ= ಬಹಳ ಪೊಸತೆನುತೆ-:ಪೊಸತು ಎನುತೆ= ಹೊಸದು ಎಂದು, ಹರಿಸಿದಂ= ಓಡಿಸಿದನು, ಬೇಗದಿಂ= ಅವಸದಿಂದ, ಮಣೀವರೂಥಮಂ= ತನ್ನ ಮಣಿರಥವನ್ನು, ಕೆಲಬಲದ ಮನ್ನೆಯರ ಗಡಣದಿಂದೆ= ಅಕ್ಪಕ್ಕದಲ್ಲಿದ್ದ ಹೊಗಳಿಹಾಡುವ ಹೆಂಗಸರ ಗುಂಪು ಹೊಗಳಿ ಹಾಡುತ್ತಿರಲು.
  • ತಾತ್ಪರ್ಯ :ಶತ್ರುವನ್ನು, ಆಕಾಶದಲ್ಲಿ, ಅಡ್ಡಹಾಕಿದಾಗ, ನಮ್ಮ ರಥಿಕರನ್ನು ಲೆಕ್ಕಿಸದೆ, ಶತ್ರುವು ಕುದುರೆಯ ಸಹಿತ, ಹೊರಟುಹೋದನು ಎಂಬುದನ್ನು ಕೇಳಿ ಆಗ ಆ ಯೌವನಾಶ್ವರಾಜನು, ಕೋಪದಿಂದ ತಾನೆ, 'ತುಂಬಿ, (ಅರಿ)ತನ್ನ ಸಾವಿಗೆಕಾರಣವಾಗುವ ಸಂಪಿಗೆಯ ಹೂವುಗಳ ಪರಿಮಳದ ಕಂಪಿಗೆ ಅದನ್ನು ಹೀರಲುಬಯಸಿ ಮಂದಂತಾಗಿದೆ. ಇದು ಬಹಳ ಹೊಸದು ಎಂದು, , ಅಕ್ಕಪಕ್ಕದಲ್ಲಿದ್ದ ಹೊಗಳಿಹಾಡುವ ಹೆಂಗಸರ ಗುಂಪು ಹೊಗಳಿ ಹಾಡುತ್ತಿರಲು,ಅವಸರದಿಂದ, ತನ್ನ ಮಣಿರಥವನ್ನು ಶತ್ರುವಿನ ಕಡೆ ಓಡಿಸಿದನು,

(ಪದ್ಯ - ೨೭),

ಪದ್ಯ - ೨೮

[ಸಂಪಾದಿಸಿ]

ಇದು ಭಗೀರಥ ರಥವ ಬೆಂಕೊಂಡು ಪರಿವ ಸುರ |
ನದಿಯ ಪ್ರವಾಹಮೆನಲಾ ನೃಪನ ವರವರೂ |
ಥದ ಪಿಂತೆ ಬಹುವಾದ್ಯರಭಸದಿಂದೆಡೆವರಿಯದೈತಪ್ಪ ಚತುರಂಗದ ||
ಪದಹತಿಗೆ ಧರೆ ನಡುಗುತಿರೆ ಜಹ್ನುಮುನಿಪನಂ |
ತದರ ಸಂಭ್ರಮಕೆ ಸೈರಿಸದಂತರಂಗದೊಳ್ |
ಕುದಿಯುತಿರ್ದಂ ಕರ್ಣಸುತನವನ ಭಾವಮಂ ಪವನಜಾತಂ ಕಂಡನು ||28||

ಪದವಿಭಾಗ-ಅರ್ಥ:
(ಯೌವನಾಶ್ವನ ಸೈನ್ಯ) ಇದು ಭಗೀರಥನ ರಥವನ್ನು ಬೆಂಕೊಂಡು= ಅನುಸರಿಸಿ, ಪರಿವ= ಹರಿವ ಸುರನದಿಯ= ಗಂಗೆಯ, ಪ್ರವಾಹಮೆನಲಾ- ಪ್ರವಾಹಂ ಎನಲು ಆ ನೃಪನ ವರವರೂ ಥದ ಪಿಂತೆ= ಪ್ರಹಾವೋ ಎನ್ನುವಂತೆ ಆ ರಾಜನ ವರ= ಉತ್ತಮ ರಥದ ಹಿಂದೆ, ಬಹುವಾದ್ಯರಭಸದಿಂದೆಡೆವರಿಯದೈತಪ್ಪ-:ಬಹುವಾದ್ಯ ರಭಸದಿಂದ ಎಡವರಿಯದೆ ಐತಪ್ಪ= ಬಹುವಾದ್ಯ ರಭಸದಿಂದ ಮಧ್ಯೆ ಎಡೆಯಿಲ್ಲದಂತೆ ಬರುತ್ತಿರುವ, ಚತುರಂಗದ ಪದಹತಿಗೆ ಧರೆ ನಡುಗುತಿರೆ= ಚತುರಂಗಸೈನ್ಯದ ಹೆಜ್ಜೆಯಹೊಡೆತಕ್ಕೆ ಭೂಮಿ ನಡುಗುತ್ತಿದೆ, ಜಹ್ನುಮುನಿಪನಂತದರ ಸಂಭ್ರಮಕೆ= ಜಹ್ನು ಋಷಿಯು ಗಂಗೆಅವನ ಆಶ್ರಮಕ್ಕೆ ಹರಿದು ಬರಲು ಅದನ್ನು ಸಹಿಸದ ಋಷಿ ಗಂಗೆಯನ್ನು ಕುಡಿದುಬಿಟ್ಟ, ಅದೇರೀತಿ, ಸೈರಿಸದಂತರಂಗದೊಳ್ ಕುದಿಯುತಿರ್ದಂ ಕರ್ಣಸುತನು-:ಸೈರಿಸದೆ ಅಂತರಂಗದೊಳ್ ಕುದಿಯುತಿರ್ದಂ ಕರ್ಣಸುತ= ಕರ್ಣನಮಗ ವೃಷಕೇತು ಗಂಗಾಪ್ರವಾಹದಂತೆ ಬರುತ್ತಿರುವ ಅನುಸಾಲ್ವನ ಸೈನ್ಯವನ್ನು ತಡೆಯಲು ಕುದಿಯುತಿರ್ದಂ= ಉದ್ವೇಗದಿಂದ ಉತ್ಸಾಹಭರಿತನಾಗಿದ್ದನು. ಅವನ ಭಾವಮಂ= ಇ ಭಾವನೆಯನ್ನು, ಪವನಜಾತಂ= ಭೀಮನು ಕಂಡನು= ನೋಡಿದನು.
  • ತಾತ್ಪರ್ಯ :ಯೌವನಾಶ್ವನ ಸೈನ್ಯ, ಭಗೀರಥನ ರಥವನ್ನು ಅನುಸರಿಸಿ,ಹರಿದ ಗಂಗೆಯ ಪ್ರಹಾವೋ ಎನ್ನುವಂತೆ ಆ ರಾಜನ ಉತ್ತಮವಾದ ರಥದ ಹಿಂದೆ, ಬಹುವಾದ್ಯ ರಭಸದಿಂದ ಮಧ್ಯೆ ಎಡೆಯಿಲ್ಲದಂತೆ ಬರುತ್ತಿರುವ, ಚತುರಂಗಸೈನ್ಯದ ಹೆಜ್ಜೆಯ ಹೊಡೆತಕ್ಕೆ ಭೂಮಿ ನಡುಗುತ್ತಿತ್ತು. ಗಂಗೆಯು ಜಹ್ನು ಋಷಿಯು ಆಶ್ರಮಕ್ಕೆ ಹರಿದು ಬರಲು ಅದನ್ನು ಸಹಿಸದ ಋಷಿ ಗಂಗೆಯನ್ನು ಕುಡಿದುಬಿಟ್ಟ, ಅದೇ ರೀತಿ, ಕರ್ಣನಮಗ ವೃಷಕೇತುವು ಗಂಗಾಪ್ರವಾಹದಂತೆ ಬರುತ್ತಿರುವ ಅನುಸಾಲ್ವನ ಸೈನ್ಯವನ್ನು ತಡೆಯಲು ಉದ್ವೇಗದಿಂದ ಕಾತರಿಸುತ್ತಿದ್ದನು. ಅವನ ಈ ಭಾವನೆಯನ್ನು ಭೀಮನು ನೋಡಿದನು.

(ಪದ್ಯ - ೨೮),

ಪದ್ಯ - ೨೯

[ಸಂಪಾದಿಸಿ]

ಕಟ್ಟಿ ತರುಮೂಲಕಶ್ವಮನದರ ಕಾವಲ್ಗೆ |
ದಿಟ್ಟಹೈಡಿಂಬಿಯಂ ಬೈಚಿಟ್ಟು ತಮ್ಮನುರೆ |
ಯಟ್ಟಿ ಬಹಯೌವನಾಶ್ವನ ಪಡೆಗೆ ಕಾರ್ಣಿಯಂ ಕಳುಹಿ ಕಾಲಾಗ್ನಿಯಂತೆ ||
ಇಟ್ಟಿಣಿಸುತೈದುವ ಸುವೇಗನ ಬಲೌಘಕಿದಿ |
ರಿಟ್ಟು ನಿಂದಂ ಭೀಮನುತ್ಸಾಹದಿಂದೆ ಪೆ |
ರ್ಬೆಟ್ಟೊತ್ತಿ ನೂಕುವ ಮಹಾವಾತಘಾತಮಂ ತಡೆದೊಲೆಯದಿಪ್ಪಂತಿರೆ ||29||

ಪದವಿಭಾಗ-ಅರ್ಥ:
ಕಟ್ಟಿ ತರುಮೂಲಕೆ=ಮರದಬುಡಕ್ಕೆ ಅಶ್ವಮನು ಅದರ ಕಾವಲ್ಗೆ ದಿಟ್ಟಹೈಡಿಂಬಿಯಂ ಬೈಚಿಟ್ಟು= ಕುದುರೆಯನ್ನುಮರದಬುಡಕ್ಕೆ ಕಟ್ಟಿ, ದಿಟ್ಟ=ದೈರ್ಯಶಾಲಿ ಮೇಘನಾದನನ್ನು ಅದರ ಕಾವಲಿಗೆ ಗುಟ್ಟಾಗಿ ಇಟ್ಟು, ತಮ್ಮನರೆಯಟ್ಟಿ-:ತಮ್ಮನು= ತಮ್ಮನ್ನು, ಉರೆಯಟ್ಟಿ= ವೇಗವಾಗಿ ಅಟ್ಟಿಸಿಕೊಂಡು, ಬಹಯೌವನಾಶ್ವನ-: ಬಹ= ಬರುತ್ತಿರುವ ಯೌವನಾಶ್ವನ, ಪಡೆಗೆ= ಸೈನ್ಯಕ್ಕೆ ಕಾರ್ಣಿಯಂ= ಕರ್ಣನಮಗನನ್ನು ಕಳುಹಿ= ಕಳುಹಿಸಿ, ಕಾಲಾಗ್ನಿಯಂತೆ= ಪ್ರಳಯಕಾಲದ ಬೆಂಕಿಯಂತೆ ಇಟ್ಟಿಣಿಸುತೈದುವ-: ಇಟ್ಟನಿಸುತ ಐದುವ= ಒತ್ತೊತ್ತಾಗಿ ಬರುತ್ತಿರುವ, ಸುವೇಗನ ಬಲೌಘಕಿದಿರಿಟ್ಟು-:ಬಲ ಔಘಕೆ= ಸೈನ್ಯದ ಸಮೂಹಕ್ಕೆ,ಇದಿರಿಟ್ಟು= ಎದುರಾಗಿ, ನಿಂದಂ ಭೀಮನುತ್ಸಾಹದಿಂದೆ-:ನಿಂತನು, ಭೀಮನು ಉತ್ಸಾಹದಿಂದೆ= ಬೀಮನು (ಯುದ್ಧದ)ಉತ್ಸಾಹದಿಂದ ನಿಂತನು,ಹೇಗೆಂದರೆ, ಪೆರ್ಬೆಟ್ಟೊತ್ತಿ ನೂಕುವ ಮಹಾವಾತಘಾತಮಂ ತಡೆದೊಲೆಯದಿಪ್ಪಂತಿರೆ-: ಪೆರು ಬೆಟ್ಟು ಒತ್ತಿ= ದೊಡ್ಡಬೆಟ್ಟವು ಒತ್ತಿ ನೂಕುವ,ಮಹಾವಾತ ಆಘಾತವಂ= ಮಹಾಬಿರುಗಳಿಯ ಹೊಡೆತವನ್ನು,ತಡೆದು, ಒಲೆಯದೆ ಇಪ್ಪಂತೆ ಇರೆ= ಅಲುಗಾಡದೆ ಇರುವಂತೆ (ಭೀಮನು ನಿಂತನು).
  • ತಾತ್ಪರ್ಯ : ಕುದುರೆಯನ್ನು ಮರದ ಬುಡಕ್ಕೆ ಕಟ್ಟಿ,ದೈರ್ಯಶಾಲಿ ಮೇಘನಾದನನ್ನು ಅದರ ಕಾವಲಿಗೆ ಗುಟ್ಟಾಗಿ ಇಟ್ಟು, ತಮ್ಮನ್ನು ವೇಗವಾಗಿ ಅಟ್ಟಿಸಿಕೊಂಡು, ಬರುತ್ತಿರುವ ಯೌವನಾಶ್ವನ ಸೈನ್ಯಕ್ಕೆ ಕರ್ಣನಮಗನನ್ನು ಕಳುಹಿಸಿ, ಪ್ರಳಯಕಾಲದ ಬೆಂಕಿಯಂತೆ ಒತ್ತೊತ್ತಾಗಿ ಬರುತ್ತಿರುವ ಸುವೇಗನ ಸೈನ್ಯದ ಸಮೂಹಕ್ಕೆ ಎದುರಾಗಿ, ದೊಡ್ಡಬೆಟ್ಟವು ಒತ್ತಿ ನೂಕುವ ಮಹಾಬಿರುಗಾಳಿಯ ಹೊಡೆತವನ್ನು ತಡೆದು, ಅಲುಗಾಡದೆ ಇರುವಂತೆ ಬೀಮನು ಯುದ್ಧದ ಉತ್ಸಾಹದಿಂದ ನಿಂತನು,

(ಪದ್ಯ - ೨೯),

ಪದ್ಯ - ೩೦

[ಸಂಪಾದಿಸಿ]

ಕೇಳ್ ಮಹೀಪಾಲಕ ಸುವೇಗನ ಭಟರ್ ಚೂಣಿ |
ಯೊಳ್ ಮುತ್ತಿಕೊಂಡರ್ ವೃಕೋದರನನಿತ್ತ ಕೆಂ |
ಧೂಳ್ ಮುಸುಕಲೆಣ್ದೆಸೆಗಳಂ ನೃಪರ ಮಣಿಭೂಷಣದಕಾಂತಿ ಝಗಝಗಿಸಲು||
ತೋಳ್ ಮಿಡುಕಿನಿಂದಾರ್ದು ಝಳಪಿಸುವ ಭಟರ ಕರ |
ವಾಳ್ ಮಿಂಚೆ ಛತ್ರಚಮರಂಗಳ ವಿಡಾಯಿ ಮಿಗೆ |
ಸೂಳ್ ಮೆರೆಯೆ ನಿಸ್ಸಾಳಠೋಟಿ ಕಲಿಯೌವನಾಶ್ವಕ್ಷಿತಿಪನೈತಂದನು ||30||

ಪದವಿಭಾಗ-ಅರ್ಥ:
ಕೇಳ್ ಮಹೀಪಾಲಕ= ಜನಮೇಜಯ ರಾಜನೇ ಕೇಳು, ಸುವೇಗನ ಭಟರ್= ಸೈನ್ಯದ ಭಟರು, ಚೂಣಿಯೊಳ್=ಮುಂದಿನ ಸಾಲಿನವರು ತಮ್ಮೆದುರು ಇರುವ, ಮುತ್ತಿಕೊಂಡರ್ ವೃಕೋದರನನು= ಭೀಮನನ್ನು ಮುತ್ತಿಕೊಂಡರು, ಇತ್ತ ಕೆಂಧೂಳ್ ಮುಸುಕಲೆಣ್ದೆಸೆಗಳಂ-: ಮುಸುಕಲು ಎಣ್ ದೆಸೆಗಳಂ= ಈ ಕಡೆ ಕೆಂಪು ಧೂಳು ಎಂಟು ದಿಕ್ಕುಗಳಲ್ಲೂ ಮುಸುಕುತ್ತಿರಲು, ನೃಪರ= ರಾಜರು ಧರಿಸಿದ ಮಣಿಭೂಷಣದ ಕಾಂತಿ ಝಗಝಗಿಸಲು, ತೋಳ್ ಮಿಡುಕಿನಿಂದ ಆರ್ದು=ಬಾಹು ಬಲದ ಪರಾಕ್ರಮದಿಂದ ಝಳಪಿಸುವ ಭಟರ= ಯೋದರ ಕರವಾಳ್= ಕತ್ತಿಗಳು ಮಿಂಚೆ ಛತ್ರಚಮರಂಗಳ= ಛತ್ರ ಚಾಮರಗಳ, ವಿಡಾಯಿ= ಸಾಲುಗಳು, ಮಿಗೆ ಸೂಳ್ ಮೆರೆಯೆ= ಬಹಳ ಕೂಗಿನ ಆರ್ಭಟ ಹೆಚ್ಚಲು, ನಿಸ್ಸಾಳಠೋಟಿ= ಕಹಳೆ ಮೊದಲಾದ ವಾದ್ಯಗಳು, ಕಲಿಯೌವನಾಶ್ವಕ್ಷಿತಿಪನೈತಂದನು-: ಕಲಿ= ಶೂರ, ಯೌವನಾಶ್ವ ಕ್ಷಿತಿಪ= ಯೌವನಾಶ್ವ ರಾಜನು, ಐತಂದನು= ಬಂದನು. .
  • ತಾತ್ಪರ್ಯ : ಜನಮೇಜಯ ರಾಜನೇ ಕೇಳು, ಸೈನ್ಯದ ಭಟರ ಮುಂದಿನ ಸಾಲಿನವರು ತಮ್ಮೆದುರು ಇರುವ, ಭೀಮನನ್ನು ಮುತ್ತಿಕೊಂಡರು. ಈ ಕಡೆ ಕೆಂಪು ಧೂಳು ಎಂಟು ದಿಕ್ಕುಗಳಲ್ಲೂ ಮುಸುಕುತ್ತಿರಲು,ರಾಜರು ಧರಿಸಿದ ಮಣಿಭೂಷಣದ ಕಾಂತಿ ಝಗಝಗಿಸಲು, ಬಾಹು ಬಲದ ಪರಾಕ್ರಮದಿಂದ ಝಳಪಿಸುವ ಯೋದರ ಕತ್ತಿಗಳು ಮಿಂಚೆ ಛತ್ರ ಚಾಮರಗಳ ಸಾಲುಗಳು ಮೆರೆಯೆ, ಅತಿಯಾಗಿ ಕೂಗಿನ ಆರ್ಭಟ ಹೆಚ್ಚಲು, ಕಹಳೆ ಮೊದಲಾದ ವಾದ್ಯಗಳು ಮೊಳಗುತ್ತಿರಲು, ಶೂರ ಯೌವನಾಶ್ವ ರಾಜನು ಬಂದನು.

(ಪದ್ಯ - ೩೦),

ಪದ್ಯ - ೩೦

[ಸಂಪಾದಿಸಿ]

ಒತ್ತಿಬಹ ಯೌವನಾಶ್ವನ ಪಡೆಯ ಚೂಣಿಯಂ |
ಕಿತ್ತು ನಿಂದಂ ಕರ್ಣಸುತನದಂ ಕಂಡು ಕವಿ |
ದತ್ತವನಮೇಲೆ ಕರಿ ತುರಗ ರಥ ಪಾಯದಳವೊಂದಾಗಿ ಸಂದಣಿಯೊಳು ||
ಹತ್ತಿಸಿದ ಚಾಪಮಂ ಜೇಗೈದು ಕೂಡೆ ಮಸೆ |
ವೆತ್ತ ಕೂರಂಭುಗಳನಾರ್ದಿಸಲ್ ಸೇನೆ ಮುರಿ |
ದತ್ತವನ ಬಾಣಘಾತಿಗೆ ಹಯದ ಚೋರನೇಂ ವೀರನೋ ಜಗದೊಳೆನುತೆ ||31||

ಪದವಿಭಾಗ-ಅರ್ಥ:
ಒತ್ತಿಬಹ= ಮುಂದಕ್ಕೆ ಬರುತ್ತಿರುವ ಯೌವನಾಶ್ವನ ಪಡೆಯ= ಸೈನ್ಯದ, ಚೂಣಿಯಂ ಕಿತ್ತು= ಎದುರುಭಾಗದವರನ್ನು ಓಡಿಸಿ, ನಿಂದಂ+ ಧೃಡವಾಗಿನಿಂತನು ಕರ್ಣಸುತನು; ಅದಂ= ಅದನ್ನು, ಕಂಡು ಕವಿದತ್ತವನಮೇಲೆ-:ಕವಿದು ಅತ್ತ ಅವನ ಮೇಲೆ= ಅದನ್ನು ಕಂಡು, ಅವನ ಮೇಲೆ ಕರಿ ತುರಗ ರಥ ಪಾಯದಳ ಒಂದಾಗಿ ಸಂದಣಿಯೊಳು= ಸಮೂಹದಲ್ಲಿ ಕವಿದು ಬಿದ್ದರು, ಆಗ ಹತ್ತಿಸಿದ= ಹೆದೆ ಏರಿಸಿದ ಚಾಪಮಂ= ಬಿಲ್ಲನ್ನು, ಜೇಗೈದು= ಠೇಂಕಾರ ಮಾಡಿ, ಕೂಡೆ ಮಸೆವೆತ್ತ= ಕೂಡಲೆ ಮಸೆದ, ಕೂರಂಭುಗಳನಾರ್ದಿಸಲ್-: ಕೂರಂಬುಗಳನು= ಚೂಪಾದ= ಬಾಣಗಳನ್ನು ಆರ್ದಿಸಲು=ಜೋರಾಗಿ ಬಿಡಲು, ಸೇನೆ ಮುರಿದತ್ತವನ= ಹಿಮ್ಮಟ್ಟಿತು, ಬಾಣಘಾತಿಗೆ= ಬಾಣದ ಹೊಡೆತಕ್ಕೆ, ಹಯದ= ಕುದುರೆಯ, ಚೋರನೇಂ= ಕಳ್ಳನುಏಂ= ಎಷ್ಟೊಂದು ವೀರನೋ= ವೀರನಪ್ಪಾ, ಜಗದೊಳೆನುತೆ= ಲೋಕದಲ್ಲಿ.
  • ತಾತ್ಪರ್ಯ : ಮುಂದಕ್ಕೆ ಬರುತ್ತಿರುವ ಯೌವನಾಶ್ವನ ಸೈನ್ಯದ, ಎದುರು ಭಾಗದವರನ್ನು ಓಡಿಸಿ,ಕರ್ಣಸುತನು ಧೃಡವಾಗಿನಿಂತನು; ಅದನ್ನು ಕಂಡು, ಅವನ ಮೇಲೆ ಕರಿ ತುರಗ ರಥ ಪಾಯದಳ ಒಂದಾಗಿ ಒಗ್ಗಟ್ಟಿನಲ್ಲಿ ಕವಿದುಬಿದ್ದರು. ಆಗ ಹೆದೆ ಏರಿಸಿದ ಬಿಲ್ಲನ್ನು ಠೇಂಕಾರ ಮಾಡಿ, ಕೂಡಲೆ ಮಸೆದ ಚೂಪಾದ ಬಾಣಗಳನ್ನು ಜೋರಾಗಿ ಬಿಡಲು, ಲೋಕದಲ್ಲಿ ಕುದುರೆಯಕಳ್ಳನು ಎಷ್ಟೊಂದು ವೀರನಪ್ಪಾ, ಎನ್ನುತ್ತಾ ಬಾಣದ ಹೊಡೆತಕ್ಕೆ ಸೇನೆ ಹಿಮ್ಮಟ್ಟಿತು,

(ಪದ್ಯ - ೩೦),

ಪದ್ಯ - ೩೨

[ಸಂಪಾದಿಸಿ]

ಎಲ್ಲಿ ಹಯಚೋರನಂ ತೋರವನ ನೆತ್ತರಂ |
ಚೆಲ್ಲುವೆಂ ಭೂತಗಣಕೆನುತೆ ಖತಿಯಿಂದೆ ನಿಂ |
ದಲ್ಲಿ ನಿಲ್ಲದೆ ಬರ್ಪ ಯೌವನಾಶ್ವನ ರಥಕೆ ಮಾರಾಂತು ಕರ್ಣಸೂನು ||
ಬಿಲ್ಲೊಳಂಬಂ ಪೂಡಲಾರು ನೀನೆಲವೊ ನ |
ಮ್ಮಲ್ಲಿ ಸೆಣಸಿದೆ ನೋಡಿದೊಡೆ ಬಾಲಕಂ ನಿನ್ನೊ |
ಳೊಲ್ಲೆನಾಹವಕೆಮ್ಮ ಕುದುರೆಯಂ ಬಿಟ್ಟು ಪೋಗೆಂದೊಡವನಿಂತೆಂದನು ||32||

ಪದವಿಭಾಗ-ಅರ್ಥ:
ಎಲ್ಲಿ ಹಯಚೋರನಂ= ಕುದುರೆ ಕಳ್ಳನನ್ನು ತೋರಿಸು, ತೋರವನ ನೆತ್ತರಂ ಚೆಲ್ಲುವೆಂ ಭೂತಗಣಕೆ= ಅವನ ರಕ್ತವನ್ನು ಭೂತಗಣಕ್ಕೆ ಹಾಕುವೆ, ಎನುತೆ= ಎನ್ನುತ್ತಾ, ಖತಿಯಿಂದೆ = ಸಿಟ್ಟಿನಿಂದ, ನಿಂದಲ್ಲಿ ನಿಲ್ಲದೆ ಬರ್ಪ= (ಕೂಗುತ್ತಾ) ನಿಂತಲ್ಲಿ ನಿಲ್ಲದೆಬರುತ್ತಿರುವ, ಯೌವನಾಶ್ವನ ರಥಕೆ ಮಾರಾಂತು ಕರ್ಣಸೂನು= ಯೌವನಾಶ್ವನ ರಥಕ್ಕೆ, ಮಾರಾಂತು= ಎದುರುಬಂದು ಕರ್ಣಸೂನು= ವೃಷಕೇತು, ಬಿಲ್ಲೊಳಂಬಂ-:ಬಿಲ್ಲೊಳು ಅಂಬಂ=ಬಿಲ್ಲಿನಲ್ಲಿ ಬಾಣವನ್ನು ಪೂಡಲಾರು-ಪೊಡಲು ಆರು ನೀನೆಲವೊ=ನೀನು ಎಲವೊ=ಹೂಡಲು, ಎಲವೊ ನೀನು ಯಾರು, ನಮ್ಮಲ್ಲಿ ಸೆಣಸಿದೆ ನೋಡಿದೊಡೆ ಬಾಲಕಂ= ನಮ್ಮೊಡನೆ ಯುದ್ಧಕ್ಕೆಬಂದೆ, ನೋಡಿದರೆ ಬಾಲಕನು; ನಿನ್ನೊಳೊಲ್ಲೆನಾಹವಕೆಮ್ಮ-:ನಿನ್ನೊಳು=ನಿನ್ನೊಡನೆ, ಒಲ್ಲೆನು= ಇಷ್ಟವಿಲ್ಲ, ಆಹವಕೆ= ಯುದ್ಧಕ್ಕೆ, ಕುದುರೆಯಂ ಬಿಟ್ಟು= ಕುದುರೆಯನ್ನು ಬಿಟ್ಟು, ಪೋಗೆಂದೊಡವನಿಂತೆಂದನು-:ಪೋಗು ಎಂದೊಡೆ ಇಂತೆಂದನು= ಹೋಗು ಎಂದಾಗ, ಹೀಗೆ ಹೇಳಿದನು.
  • ತಾತ್ಪರ್ಯ : ಕುದುರೆ ಕಳ್ಳನನ್ನು ತೋರಿಸು, ಅವನ ರಕ್ತವನ್ನು ಭೂತಗಣಕ್ಕೆ ಹಾಕುವೆ, ಎನ್ನುತ್ತಾ,ಸಿಟ್ಟಿನಿಂದ ಕೂಗುತ್ತಾ ನಿಂತಲ್ಲಿ ನಿಲ್ಲದೆ ಬರುತ್ತಿರುವ, ಯೌವನಾಶ್ವನ ರಥಕ್ಕೆ, ಎದುರು ಬಂದು, ವೃಷಕೇತು ಬಿಲ್ಲಿನಲ್ಲಿ ಬಾಣವನ್ನು ಹೂಡಲು, ಎಲವೊ ನೀನು ಯಾರು? ನಮ್ಮೊಡನೆ ಯುದ್ಧಕ್ಕೆ ಬಂದೆ, ನೋಡಿದರೆ ಬಾಲಕನು; ನಿನ್ನೊಡನೆ ಯುದ್ಧಕ್ಕೆ ತೊಡಗಲು ಇಷ್ಟವಿಲ್ಲ, ಕುದುರೆಯನ್ನು ಬಿಟ್ಟು ಹೋಗು ಎಂದಾಗ, ವೃಷಕೇತು ಹೀಗೆ ಹೇಳಿದನು.

(ಪದ್ಯ - ೩೨),

ಪದ್ಯ - ೩೩

[ಸಂಪಾದಿಸಿ]

ಆರಾದೊಡೇನಶ್ವಮಂ ಬಿಡುವನಲ್ಲ ಮದ |
ವಾರಣಂ ಪಿರಿದಾದೊಡೆಳಸಿಂಗಮಂಜಿ ಕೆಲ |
ಸಾರುವುದೆ ನಿನ್ನ ತನುವಿನ ತೋರದಾಯತಕೆ ಕಲಿಗಳೆದೆ ಕಾತರಿಪುದೆ ||
ವೀರನಾದೊಡೆ ಕೈದುಮುಟ್ಟಿಗಳ ಘೋರ ಪ್ರ |
ಹಾರಮಂ ತೋರಿಸೀ ಸ್ಥೂಲಸೂಕ್ಷ್ಮಂಗಳ ವಿ |
ಚಾರಮೇಕೆನುತ ವೃಷಕೇತು ತೆಗೆದೆಚ್ಚನಾ ನೃಪನ ಕಾಯಂ ನೋಯಲು ||33||

ಪದವಿಭಾಗ-ಅರ್ಥ:
ಆರಾದೊಡೇನಶ್ವಮಂ-: ಆರಾದೊಡೆ ಏನು ಅಶ್ವಮಂ ಬಿಡುವನಲ್ಲ= ನಾನು ಯಾರಾದರೇನು ಕುದುರೆಯನ್ನು ಬಿಡುವವನಲ್ಲ, ಮದವಾರಣಂ= ಮದಗಜವು ಪಿರಿದಾದೊಡೆಳಸಿಂಗಮಂಜಿ-: ಪಿರಿದಾದೊಡೆ ಎಳೆಸಿಂಗಂ ಅಂಜಿ= ಮದಗಜವು ದೊಡ್ಡದಾರೆ, ಸಿಂಹದ ಮರಿಯು, ಕೆಲಸಾರುವುದೆ= ಓಡಿಹೋಗುವುದೇ? ನಿನ್ನ ತನುವಿನ ತೋರದ ಆಯತಕೆ= ನಿನ್ನ (ದೇಹದ) ದೊಡ್ಡ ಆಕಾರಕ್ಕೆ, ಕಲಿಗಳೆದೆ-:ಕಲಿಗಳ ಎದೆ= ಶೂರರ ಎದೆ, ಕಾತರಿಪುದೆ= ಹೆದರುವುದೆ?/ನಡುಗುವುದೆ? ವೀರನಾದೊಡೆ= ವೀರನಾಗಿದ್ದರೆ, ಕೈದುಮುಟ್ಟಿಗಳ: ಕೈದು= ಆಯುಧ, ಮಟ್ಟಿಗಳ= ಮಷ್ಟಿಗಳ, ಘೋರ ಪ್ರಹಾರಮಂ= ಶಕ್ತಿಯುಳ್ಳಹೊಡೆತದಿಂದ, ತೋರಿಸೀ-:ತೋರಿಸು ಈ ಸ್ಥೂಲಸೂಕ್ಷ್ಮಂಗಳ= ದೊಡ್ಡವನು ಚಿಕ್ಕವನು ಎನ್ನುವ ವಿಚಾರಮೇಕೆನುತ-:ವಿಚಾರಂ ಏಕೆ ಎನುತ= ವಿಚಾರಗಳು ಏಕೆ ಎನ್ನುತ್ತಾ, ವೃಷಕೇತು ತೆಗೆದೆಚ್ಚನಾ-:ತೆಗೆದು ಎಚ್ಚನು= ಹೊಡೆದನು ನೃಪನ ಕಾಯಂ ನೋಯಲು= ವೃಷಕೇತು ವೃಷಕೇತುವಿಗೆ ನೋವಾಗುವಂತೆ ಬಾಣದ ಪ್ರಯೋಗ ಮಾಡಿದನು.
  • ತಾತ್ಪರ್ಯ : ನಾನು ಯಾರಾದರೇನು ಕುದುರೆಯನ್ನು ಬಿಡುವವನಲ್ಲ, ಮದಗಜವು ದೊಡ್ಡದಾರೆ, ಸಿಂಹದ ಮರಿಯು ಓಡಿಹೋಗುವುದೇ? ನಿನ್ನ (ದೇಹದ) ದೊಡ್ಡ ಆಕಾರಕ್ಕೆ, ಶೂರರ ಎದೆ, ಹೆದರುವುದೆ?/ನಡುಗುವುದೆ? ವೀರನಾಗಿದ್ದರೆ ಆಯುಧ, ಮಷ್ಟಿಗಳ ಶಕ್ತಿಯುಳ್ಳ ಹೊಡೆತದಿಂದ,ತೋರಿಸು ಈ ದೊಡ್ಡವನು ಚಿಕ್ಕವನು ಎನ್ನುವ ವಿಚಾರಗಳು ಏಕೆ ಎನ್ನುತ್ತಾ, ವೃಷಕೇತು ಯವೌನಾಸ್ವನಿಗೆ ನೋವಾಗುವಂತೆ ಬಾಣದ ಪ್ರಯೋಗ ಮಾಡಿದನು.

(ಪದ್ಯ - ೩೩),

ಪದ್ಯ - ೩೪

[ಸಂಪಾದಿಸಿ]

ಲೋಕದೊಳ್ ತನ್ನೊಳ್ ಪೊಣರ್ವ ಭಟರಿಲ್ಲ ನೀ |
ನೇ ಕಲಿಕಣಾ ಪಸುಳೆಯೆಂದು ಸೈರಿಸಿದೆ ನಿನ |
ಗಾಕೆವಾಳಿಕೆಯ ಧೀರತ್ವಮುಂಟಾದೊಡದು ಬಳಿಕೆಮ್ಮ ಪುಣ್ಯಮೆನಂತೆ ||
ಆಕರ್ಣಪೂರದಿಂ ತೆಗೆದೆಚ್ಚನಾ ಭೂಪ |
ನೀಕರ್ಣಸಂಭವಂ ಕಡಿದನೆಡೆಯೊಳ್ ಸರಳ |
ನೇಕಾರ್ಣವಂ ಮೇರೆದಪ್ಪಿತೆನೆ ಮುಸುಕಿದಂ ಕಣೆಯಿಂದವನ ರಥವನು ||34||

ಪದವಿಭಾಗ-ಅರ್ಥ:
ಲೋಕದೊಳ್= ಈ ಜಗತ್ತಿನಲ್ಲಿ, ತನ್ನೊಳ್= ತನ್ನೊಡನೆ ಪೊಣರ್ವ= ಹೋರಾಡುವ ಭಟರಿಲ್ಲ= ಯೋಧರಿಲ್ಲ, ನೀನೇ ಕಲಿಕಣಾ= ಶೂರನು ಕಣಯ್ಯಾ, ಪಸುಳೆಯೆಂದು= ಎಳೆಯ ಪ್ರಾಯದವನೆಂದು,ಸೈರಿಸಿದೆ= (ನಿನ್ನ ಕುದುರೆ ಕದ್ದ ತಪ್ಪನ್ನು) ಸಹಿಸಿದೆ ನಿನಗಾಕೆವಾಳಿಕೆಯ-: ನಿನಗೆ ಆಕೆವಾಳಿಕೆಯ= ಶೂರತನದ, ಧೀರತ್ವಮುಂಟಾದೊಡದು-: ಧೀರತ್ವಂ ಉಂಟಾದೊಡೆ ಅದು= ಶೌರ್ಯದ ಧೀರತನವಿದ್ದರೆ ಅದು, ಬಳಿಕೆಮ್ಮ ಪುಣ್ಯಮೆನಂತೆ= ಬಳಿಕ ಎಮ್ಮ= ನಮ್ಮ ಪುಣ್ಯಮಂತೆ= ಅದು ನಮ್ಮ ಪುಣ್ಯವೆಂದು ಹೇಳುತ್ತಾ, ಆಕರ್ಣಪೂರದಿಂ= ಕಿವಿಯವರೆಗೂ ಬಾಣವನ್ನು . ತೆಗೆದೆಚ್ಚನಾ ಭೂಪನು= ಎಳೆದು ಬಿಟ್ಟನು ಆ ರಾಜನು, ಈ ಕರ್ಣಸಂಭವಂ=ವೃಷಕೇತು, ಕಡಿದನೆಡೆಯೊಳ್=ಕಡಿದನು ಎಡೆಯೊಳ್=(ಅದನ್ನು) ಮಧ್ಯದಲ್ಲಿ. ಸರಳನೇಕಾರ್ಣವಂ-: ಸರಳನು ಏಕಾರ್ಣವ= ಸಮುದ್ರಗಳೆಲ್ಲಾ ಮೇರೆದಪ್ಪಿತೆನೆ= ಒಂದಾಗಿ ಉಕ್ಕಿಬಂದಿತೋ ಎನ್ನುವಂತೆ ಬಾಣಗಳನ್ನು, ಮುಸುಕಿದಂ=ಮುಚ್ಚಿದನು, ಕಣೆಯಿಂದವನ-:ಕಣೆಯಿಂದ= ಬಾಣದಿಂದ, ಅವನ ರಥವನು= ರಥವನ್ನು.
  • ತಾತ್ಪರ್ಯ : ಈ ಜಗತ್ತಿನಲ್ಲಿ, ತನ್ನೊಡನೆ ಹೋರಾಡುವ ಯೋಧರಿಲ್ಲ, ನೀನೇ ಶೂರನು ಕಣಯ್ಯಾ, ಎಳೆಯ ಪ್ರಾಯದವನೆಂದು (ಕುದುರೆ ಕದ್ದ ನಿನ್ನ ತಪ್ಪನ್ನು) ಸಹಿಸಿದೆ. ನಿನಗೆ ಶೂರತನದ, ಶೌರ್ಯದ ಧೀರತನವಿದ್ದರೆ ಅದು ನಮ್ಮ ಪುಣ್ಯವೆಂದು ಹೇಳುತ್ತಾ, ಆ ರಾಜನು ಕಿವಿಯವರೆಗೂ ಬಾಣವನ್ನು ಎಳೆದು ಬಿಟ್ಟನು, ವೃಷಕೇತು,(ಅದನ್ನು) ಮಧ್ಯದಲ್ಲಿ ಕಡಿದನು. ಅವನು ಸಮುದ್ರಗಳೆಲ್ಲಾ ಒಂದಾಗಿ ಉಕ್ಕಿ ಬಂದಿತೋ ಎನ್ನುವಂತೆ ಬಾಣಗಳಿಂದ ರಾಜನನ್ನು ಅವನ ರಥವನ್ನು ಮುಚ್ಚಿದನು.

(ಪದ್ಯ - ೩೪),

ಪದ್ಯ - ೩೫

[ಸಂಪಾದಿಸಿ]

ಮಾರ್ಗದೊಳ್ ಮಾರ್ಗಣಂಗಳನರಿದು ಕರ್ಣಜಂ |
ಕೂರ್ಗಣೆಯ ಕಾರ್ಗಾಲಮಂ ಸೃಜಿಸಲಾ ನೃಪನ |
ತೇರ್ಗೆರಗಿ ಕೂರ್ಗೊಂಡು ಮುತ್ತಿತು ಶರೌಘಮದನೇನೆಂಬೆನಾಕ್ಷಣದೊಳು ||
ಏರ್ಗಳಿಂದೊರ್ಗುಡಿಸಿ ಸಾರಥಿ ಬೀಳಲ್ಕೆ ಕೆ |
ನ್ನೀರ್ಗಾರಿ ದೀರ್ಘಶಯನಂಗೆಯ್ಯೆ ಕುದುರೆಗಳ್ |
ನೇರ್ಗೋಲ ಪೋರ್ಗಳಾ ನೃಪನಂಗದೊಳ್ ಕಾಣಿಸಿದುವು ಜಾಳಂದ್ರದಂತೆ ||35||

ಪದವಿಭಾಗ-ಅರ್ಥ:
ಕರ್ಣಜಂ= ವೃಷಕೇತು, ಮಾರ್ಗದೊಳ್= ದಾರಿಮಧ್ಯದಲ್ಲಿ, ಮಾರ್ಗಣಂಗಳನು ಅರಿದು= ಬಾಣಗಳನ್ನು ಕತ್ತರಿಸಿ, ಕೂರ್ಗಣೆಯ= ಚೂಪಾದ ಬಾಣಗಳ, ಕಾರ್ಗಾಲಮಂ=ಮಳೆಯನ್ನು ಸೃಜಿಸಲಾ= ಉಂಟುಮಾಡಲು ಆ ನೃಪನ=ರಾಜನ, ತೇರ್ಗೆರಗಿ-:ತೇರ್ಗೆ ಎರಗಿ, ಕೂರ್ಗೊಂಡು=ಹೊಕ್ಕು, ಮುತ್ತಿತು ಶರೌಘಮದನೇನೆಂಬೆನಾಕ್ಷಣದೊಳು-: ಶರೌಘಂ ಅದನು ಏನೆಂಬೆನು ಆ ಕ್ಷಣದೊಳು=ಆಕ್ಷಣದಲ್ಲಿ ಬಾಣಗಳು ಮುತ್ತಿತು, ಅದನ್ನು ಏನಂದು ಹೇಳಲಿ. ಏರ್ಗಳಿಂದೊರ್ಗುಡಿಸಿ-: ಏರ್ಗಳಿಂದ=ಬಾಣಗಳಿಂದ ಓರ್ಗುಡಿಸಿ=ಒಲೆದಾಡಿ, ಸಾರಥಿ=ಸಾರಥಿಯು ಬೀಳಲ್ಕೆ= ಬೀಳಲು, ಕೆನ್ನೀರ್ಗಾರಿ-:ಕೆನ್ನೀರ್ ಕಾರಿ, ದೀರ್ಘಶಯನಂಗೆಯ್ಯೆ-:ದೀರ್ಘಶಯನಂ=ಎಚ್ಚರಾದ ನಿದ್ದೆ (ಮರಣ)ಗೈಯೆ= ಮಾಡಲು, ಕುದುರೆಗಳ್=ಕುದುರಗಳು ನೇರ್ಗೋಲ- ನೇರ ಕೋಲ= ಉದ್ದ ಬಾಣಗಳು, ಪೋರ್ಗಳಾ-:ಪೋರ್ಗಳ್=ಹೊಗಲು, ಆ ನೃಪನಂಗದೊಳ್ ಆ ರಾಜನ ಅಂಗದೊಳ್ = ದೇಹದಲ್ಲಿ, ಕಾಣಿಸಿದುವು= ಕಾಣಿಸುವಂತೆ ಮಾಡಿದವು ಜಾಳಂದ್ರದಂತೆ= ತೂತುಗಳ ಜರಡಿಯಂತೆ.
  • ತಾತ್ಪರ್ಯ :ವೃಷಕೇತು, ದಾರಿಮಧ್ಯದಲ್ಲಿಯೇ ಆ ಬಾಣಗಳನ್ನು ಕತ್ತರಿಸಿ, ಚೂಪಾದ ಬಾಣಗಳ ಮಳೆಯನ್ನು ರಾಜನ ಮೇಲೆ ಸುರಿಸಲು, ರಾಜನ, ತರಥಕ್ಕೆ ಅವು ಎರಗಿ ಹೊಕ್ಕು ಮುತ್ತಿತು; ಆ ಕ್ಷಣದಲ್ಲಿ ಬಾಣಗಳು ಮುತ್ತಿತು, ಅದನ್ನು ಏನಂದು ಹೇಳಲಿ. ಬಾಣಗಳಿಂದ ಒಲೆದಾಡಿ ಸಾರಥಿಯು ರಕ್ತ ಕಾರಿ, ಮರಣಹೊದಲು ಕುದುರಗಳಿಗೆ ಉದ್ದ ಬಾಣಗಳು, ಹೊಗಲು, ಆ ನೃಪನ ದೇಹದಲ್ಲಿ, ತೂತುಗಳ ಜರಡಿಯು ಕಾಣಿಸುವಂತೆ ಮಾಡಿದವು .

(ಪದ್ಯ - ೩೫),

ಪದ್ಯ - ೩೬

[ಸಂಪಾದಿಸಿ]

ಒಡಲೊಳಿಡಿದಸ್ತ್ರಮಂ ಕಿತ್ತೊಡನೆ ಚಿತ್ತದೊಳ್ |
ಕಿಡಿಯಿಡುವ ಕಡುಗೋಪದುರಿ ಮೆಯೊೈಳಿರದೆ ಪೊರ |
ಮಡುವುದೋ ಕಣ್ಗಳಿಂದೆನೆ ಕೆಂಪಡರ್ದಾಲಿಗಳ್ ಭಯಂಕರಮಾಗಲು ||
ತುಡುಕಿ ಪಾವಕಮಹಾಬಾಣಮಂ ತಿರುವಿನೊಳ್ |
ತುಡಿಸಿ ಕಿವಿವರೆಗೆ ತೆಗೆದೆಚ್ಚೊಡವನಂದು ಕೈ |
ಗೆಡದೆ ಕರ್ಣಾತ್ಮಜಂ ವಾರುಣಾಸ್ತ್ರ ಪ್ರಯೋಗದೊಳದಂ ತಂಪಿಸಿದನು||36||

ಪದವಿಭಾಗ-ಅರ್ಥ:
ಒಡಲೊಳಿಡಿದ= ದೇಹದೊಳಗೆ ಅಸ್ತ್ರಮಂ= ಬಾಣವನ್ನು, ಕಿತ್ತೊಡನೆ-: ಕಿತ್ತು=ತೆಗೆದು, ಒಡನೆ=ಕೂಡಲೆ ಚಿತ್ತದೊಳ್ ಕಿಡಿಯಿಡುವ= ಮನಸ್ಸಿನಲ್ಲಿ ಕಿಡಿ ಏಳುವಷ್ಟು, ಕಡುಗೋಪದುರಿ-:ಕಡು= ಬಹಳ, ಕೋಪದ ಉರಿ= ಬೆಂಕಿ ಮೆಯೊೈಳಿರದೆ-: ಮೈಯೊಳ್= ಸಿಟ್ಟಿನ ಬೆಂಕಿ ಮೈಯೊಳಗೆ ಇರದೆ, ಪೊರ ಮಡುವುದೋ= ಹೊರಬರುವುದೋ ಕಣ್ಗಳಿಂದೆನೆ-: ಕಂಣ್ಗಳಿಂದ ಎನೆ= ಕಣ್ಣುಗಳಿಂದ ಎನ್ನುವಂತೆ, ಕೆಂಪಡರ್ದಾಲಿಗಳ್-: ಕೆಂಪು ಅಡರ್ದ ಆಲಿಗಳ್=ಕಣ್ನಾಲಿಗಳು ಕೆಂಪು ಆಗಿ, ಭಯಂಕರಮಾಗಲು= ಭಯಯಾನಕವಾಗಿ ಕಾಣಲು, ತುಡುಕಿ ಪಾವಕ(ಅಗ್ನಿ) ಮಹಾಬಾಣಮಂ= ಅಗ್ನಿಯ ಅಸ್ತ್ರದ ಬಾಣವನ್ನು ತೆಗೆದುಕೊಂಡು, ತಿರುವಿನೊಳ್ ತುಡಿಸಿ= ನಾಣಿಗೆ ಹೂಡಿ, ಕಿವಿವರೆಗೆ ತೆಗೆದೆಚ್ಚೊಡೆ= ಎಳದು ಬಾಣಹೊಡೆಯಲು, ಅವನಂದು=ಅವನು/ ವೃಷಕೇತು ಕೈಗೆಡದೆ= ಎಚ್ಚರತಪ್ಪದೆ ಕರ್ಣಾತ್ಮಜಂ=ವೃಷಕೇತು ವಾರುಣಾಸ್ತ್ರ ಪ್ರಯೋಗದೊಳದಂ ತಂಪಿಸಿದನು= ವರುಣಾಸ್ತ್ರ ಪ್ರಯೋಗಿಸಿ ಅದನ್ನು ಶಾಂತಗೊಳಿಸಿದನು.
  • ತಾತ್ಪರ್ಯ :ಅವನು(ರಾಜನು) ಆಂದು ದೇಹದೊಳಗೆ ಬಾಣವನ್ನು, ಕಿತ್ತು ತೆಗೆದು ಕೂಡಲೆ ಮನಸ್ಸಿನಲ್ಲಿ ಕಿಡಿ ಏಳುವಷ್ಟು ಅತಿಯಾದ ಸಿಟ್ಟಿನ ಬೆಂಕಿ ಮೈಯೊಳಗೆ ಇರದೆ, ಕಣ್ಣುಗಳಿಂದ ಹೊರಬರುವುದೋ ಎನ್ನುವಂತೆ ಕಣ್ನಾಲಿಗಳು ಕೆಂಪು ಆಗಿ, ಭಯಯಾನಕವಾಗಿ ಕಾಣಲು, ಅಗ್ನಿಯಾಸ್ತ್ರದ ಬಾಣವನ್ನು ತೆಗೆದುಕೊಂಡು, ನಾಣಿಗೆ ಹೂಡಿ, ಕಿವಿವರೆಗೆ ಎಳೆದು ಬಾಣಹೊಡೆಯಲು, ವೃಷಕೇತು ಎಚ್ಚರತಪ್ಪದೆ ವೃಷಕೇತು ವಾರುಣಾಸ್ತ್ರ ವರುಣಾಸ್ತ್ರ ಪ್ರಯೋಗಿಸಿ ಅದನ್ನು ಶಾಂತಗೊಳಿಸಿದನು.

(ಪದ್ಯ - ೩೬),

ಪದ್ಯ - ೩೭

[ಸಂಪಾದಿಸಿ]

ಹವ್ಯವಾಹಾಸ್ತ್ರಮಂ ವರುಣಾಸ್ತ್ರದಿಂ ಗೆಲ್ದು |
ನವ್ಯಮೇಘಾಸ್ತ್ರಮಂ ಕರ್ಣಜಂ ಪೂಡೆ ವಾ |
ಯವ್ಯಾಸ್ತ್ರದಿಂದೆ ಬರಿಕೈದವಂ ತಿಮಿರಾಸ್ತ್ರಮಂ ಜೋಡಿಸಲ್ಕೀತನು ||
ರವ್ಯಸ್ತ್ರದಿಂದೆ ಬರಿಕೈದವಂ ಶೈಲಾಸ್ತ್ರಮಂ ತುಡಲ್ |
ದಿವ್ಯ ಕುಲಿಶಾಸ್ತ್ರದಿಂ ಮುರಿದಾ ನೃಪಾಲನು |
ಗ್ರವ್ಯಾಳದಸ್ತ್ರಮಂ ತೆಗೆಯಲ್ಕೆ ಗರುಡಾಸ್ತ್ರದಿಂದಿವಂ ಖಂಡಿಸಿದನು ||37||

ಪದವಿಭಾಗ-ಅರ್ಥ:
ಹವ್ಯವಾಹಾಸ್ತ್ರಮಂ= ಆಗ್ನೇಯಾಸ್ತ್ರವನ್ನು, ವರುಣಾಸ್ತ್ರದಿಂ ಗೆಲ್ದು= ವರುಣಾಸ್ತ್ರದಿಂದ ಗೆದ್ದು, ನವ್ಯಮೇಘಾಸ್ತ್ರಮಂ= ನವ್ಯಮೇಘಾಸ್ತ್ರವನ್ನು ಕರ್ಣಜಂ= ವೃಷಕೇತು ಪೂಡೆ= ಹೂಡಲು, ವಾಯವ್ಯಾಸ್ತ್ರದಿಂದೆ= ವಾಯವ್ಯಾಸ್ತ್ರದಿಂದ ಅದನ್ನು ಬರಿಕೈದವಂ= ಶಾಂತಗೋಳಿಸಿದನು, ತಿಮಿರಾಸ್ತ್ರಮಂ= ತಿಮಿರಾಸ್ತ್ರವನ್ನು(ಕತ್ತಲೆ) ಜೋಡಿಸಲ್ಕೀತನು-:ಜೋಡಿಸಲ್ಕೆ= ಬಿಡಲು, ಈತನು ಅದನ್ನು ರವ್ಯಸ್ತ್ರದಿಂದೆ= ರವ್ಯಸ್ತ್ರದಿಂದ(ಸೂರ್ಯ) ಬರಿಕೈದವಂ= ಶಾಂತಗೊಳಿಸಿದನು, ಶೈಲಾಸ್ತ್ರಮಂ= ಶೈಲಾಸ್ತ್ರವನ್ನು ತುಡಲ್= ತೊಡಲು ಅದನ್ನು ದಿವ್ಯ ಕುಶಾಸ್ತ್ರದಿಂ= ವಜ್ರಾಸ್ತ್ರದಿಂದ ಅದನ್ನು ಮುರಿದಾ= ಮುರಿದನು ಆ ನೃಪಾಲನು= ರಾಜನು, ಗ್ರವ್ಯಾಳದಸ್ತ್ರಮಂ= ಸರ್ಪಗಳ ಅಸ್ತ್ರವನ್ನು ತೆಗೆಯಲ್ಕೆ= ತೆಗೆಯಲು, ಅದನ್ನು ಗರುಡಾಸ್ತ್ರದಿಂದ ಇವಂ ಗರುಡಾಸ್ತ್ರದಿಂದ ಖಂಡಿಸಿದನು= ನಿಶ್ಕ್ರಿಯಗೊಳಿಸಿದನು.
  • ತಾತ್ಪರ್ಯ :ಯೌವನಾಶ್ವನ ಆಗ್ನೇಯಾಸ್ತ್ರವನ್ನು, ವರುಣಾಸ್ತ್ರದಿಂದ ಗೆದ್ದು, ನವ್ಯಮೇಘಾಸ್ತ್ರವನ್ನು ಹೂಡಲು,ವೃಷಕೇತು ವಾಯವ್ಯಾಸ್ತ್ರದಿಂದ ಅದನ್ನು ಶಾಂತಗೋಳಿಸಿದನು, ತಿಮಿರಾಸ್ತ್ರವನ್ನು(ಕತ್ತಲೆ) ಬಿಡಲು, ಈತನು ಅದನ್ನು ರವ್ಯಸ್ತ್ರದಿಂದ(ಸೂರ್ಯ) ಶಾಂತಗೊಳಿಸಿದನು, ಶೈಲಾಸ್ತ್ರವನ್ನು ತೊಡಲು ಅದನ್ನು ದಿವ್ಯ ವಜ್ರಾಸ್ತ್ರದಿಂದ ಅದನ್ನು ಮುರಿದನು, ರಾಜನು, ಸರ್ಪಗಳ ಅಸ್ತ್ರವನ್ನು ತೆಗೆದ ಬಿಡಲು, ಅದನ್ನು ಗರುಡಾಸ್ತ್ರದಿಂದ ಇವಮು ಗರುಡಾಸ್ತ್ರದಿಂದ ನಿಶ್ಕ್ರಿಯಗೊಳಿಸಿದನು.

(ಪದ್ಯ - ೩೭),

ಪದ್ಯ - ೩೮

[ಸಂಪಾದಿಸಿ]

ಫೂತುರೇ ತರುಣ ಮಂತ್ರಾಸ್ತ್ರಪ್ರತೀಕಾರ |
ಚಾತುರ್ಯಮುಂಟಲಾ ನಿನ್ನೊಳದು ಲೇಸು ಗೆ |
ಲ್ವಾತುರಮದೇಕೆ ನಿನಗೆನುತವಂ ಕೈದೋರಿಸಲ್ ಕಣೆಗಳಾಗಸದೊಳು ||
ಸೇತುವಂ ಕಟ್ಟಿದವೊಲಿಟ್ಟಣಿಸಲಾಗ ವೃಷ |
ಕೇತು ತರಿದೊಡ್ಡುತಿರಲವರಿರ್ವರೆಡೆಯೊಳ |
ಡ್ಡಾತು ನಿಂದುದು ಬಳೆದು ಚಿನಗಡಿದ ಶರಗಿರಿಯದೇನೆಂಬೆನದ್ಭುತವನು ||38||

ಪದವಿಭಾಗ-ಅರ್ಥ:
ಫೂತುರೇ=ಭಲೇ! ತರುಣ= ತರುಣನೇ, ಮಂತ್ರಾಸ್ತ್ರಪ್ರತೀಕಾರ ಚಾತುರ್ಯಮುಂಟಲಾ= ಮಂತ್ರಾಸ್ತ್ರಗಳಿಗೆ ಪ್ರತೀಕಾರ ಮಂತ್ರಾಸ್ತ್ರ ಪ್ರಯೋಗಿಸುವ ಚತುರತೆ ನಿನಗೆ ಉಂಟಲ್ಲವೇ! ನಿನ್ನೊಳದು ಲೇಸು ಗೆಲ್ವಾತುರಮದೇಕೆ-: ಗೆಲ್ವ ಆತುರವು ಅದು ಏಕೆ= ಗೆಲ್ಲಲು ಅವಸರ ಮಾಡಬೇಡ, ನಿನಗೆನುತವಂ-:ನಿನಗೆ, ಎನುತ ಅವಂ=ಎಂದು ಹೇಳುತ್ತಾ ಅವನು, ಕೈದೋರಿಸಲ್= ಕೈತೋರಿಸುತ್ತಾ, ಕಣೆಗಳಾಗಸದೊಳು= ಕಣೆಗಳು ಆಗಸದೊಳು ಸೇತುವಂ ಕಟ್ಟಿದವೊಲಿಟ್ಟಣಿಸಲಾಗ_:ಕಟ್ಟಿದವೊಲ್ ಇಟ್ಟಣಿಸಲು ಆಗ= ಆಕಾಶದಲ್ಲಿ ಬಾಣಗಳ ಸೇತುವೆ ಕಟ್ಟಿದಂತೆ ತುಂಬಿಹೋಗಲು, ವೃಷಕೇತು ತರಿದೊಡ್ಡುತಿರಲವರಿರ್ವರೆಡೆಯೊಳಡ್ಡಾತು-:ತರಿದು ಒಡ್ಡುತಿರಲ್ ಅವರ ಇರ್ವರ= ಈರ್ವರ ಎಡೆಯೊಳಡ್ಡ ಆತು ನಿಂದುದು ಬಳೆದು ಚಿನಗಡಿದ=ಸಣ್ಣದಾಗಿ ಕತ್ತರಿಸಿದ ಶರಗಿರಿಯು ಅದೇನೆಂಬೆನು ಅದ್ಭುತವನು=ವೃಷಕೇತು ಆ ಬಾಣಗಳನ್ನು ಕತ್ತರಿಸಿ ಹಾಕುತ್ತಿರಲು, ಅವರಿಬ್ಬರ ಮಧ್ಯದಲ್ಲಿ ಸಣ್ಣದಾಗಿ ಕತ್ತರಿಸಿದ ಬಾಣಗಳ ಬೆಟ್ಟವು ರಾಶಿಯಾಗಿ ಬೆಳೆದು ನಿಂತಿತು. ಅದ್ಭುತವನ್ನು ಏನೆಂಬೆನು= ಏನೆಂದು ಹೇಳಲಿ
  • ತಾತ್ಪರ್ಯ :ಭಲೇ! ತರುಣನೇ, ಮಂತ್ರಾಸ್ತ್ರಗಳಿಗೆ ಪ್ರತೀಕಾರ ಮಂತ್ರಾಸ್ತ್ರ ಪ್ರಯೋಗಿಸುವ ಚತುರತೆ ನಿನಗೆ ಉಂಟಲ್ಲವೇ! ಗೆಲ್ಲಲು ಅವಸರ ಮಾಡಬೇಡ, ನಿನಗೆ, ಎಂದು ಹೇಳುತ್ತಾ ಅವನು, ಕೈತೋರಿಸುತ್ತಾ, ಆಕಾಶದಲ್ಲಿ ಬಾಣಗಳ ಸೇತುವೆ ಕಟ್ಟಿದಂತೆ ತುಂಬಿಹೋಗಲು, ವೃಷಕೇತು ಅವನ್ನು ತರಿದು ರಾಶಿ ಮಾಡುತ್ತಿರಲು, ವೃಷಕೇತು ಆ ಬಾಣಗಳನ್ನು ಕತ್ತರಿಸಿ ಹಾಕುತ್ತಿರಲು, ಅವರಿಬ್ಬರ ಮಧ್ಯದಲ್ಲಿ ಸಣ್ಣದಾಗಿ ಕತ್ತರಿಸಿದ ಬಾಣಗಳ ಬೆಟ್ಟವು ರಾಶಿಯಾಗಿ ಬೆಳೆದು ನಿಂತಿತು. ಅದ್ಭುತವನ್ನು ಏನೆಂದು ಹೇಳಲಿ. (ಉತ್ಪ್ರೇಕ್ಷಾಲಂಕಾರ)

(ಪದ್ಯ - ೩೮),

ಪದ್ಯ - ೩೯

[ಸಂಪಾದಿಸಿ]

ಅವರಿರ್ವರೆಸುಗೆಯೊಳ್ ಮಂಡಲಾಕೃತಿಯೊಳೊ |
ಪ್ಪುವ ಕಾರ್ಮುಕಂಗಳುದಯಾಸ್ತಮಯಮಪ್ಪ ಶಶಿ |
ರವಿಬಿಂಬದಾಯತದೊಲಿರೆ ನಡುವಣಂಬುಗಳ್ ತನ್ಮರೀಚಿಗಳಂತಿರೆ ||
ಅವಯವದ ಗಾಯದೊಳುಗುವ ರಕ್ತಧಾರೆಗಳ್ |
ತವೆ ಸಂಜೆಗೆಂಪಿಡಿದ ತೆರದಿಂದೆ ಕಂಗೊಳಿಸೆ |
ಭುವನದೊಳ್ ಪೊಸತಾಯ್ತು ಸಂಗರಂ ಸಂಧ್ಯಾಗಮವನಂದು ಸೂಚಿಪಂತೆ||39||

ಪದವಿಭಾಗ-ಅರ್ಥ:
ಅವರಿರ್ವರ= ಅವರಿಬ್ಬರ, ಎಸುಗೆಯೊಳ್=(ಬಾಣಗಳ) ಪ್ರಯೋಗದಲ್ಲಿ ಮಂಡಲಾಕೃತಿಯೊಳ್=ವೃತ್ತದಂತೆ, ಒಪ್ಪುವ=ಕಾಣುವ ಕಾರ್ಮುಕಂಗಳು= ಬಾಣಗಳು, ಉದಯಾಸ್ತಮಯಮಪ್ಪ ಶಶಿರವಿಬಿಂಬದ ಆಯತದ ಒಲ್ ಇರೆ=ಉದಯ ಅಸ್ತಮ ಸಮಯದ ಚಂದ್ರ ಸೂರ್ಯರ ಬಿಂಬ/ಮಂಡಲದಂತೆ ಇರಲು, ನಡುವಣಂಬುಗಳ್= ನಡುವಿನ ಅಂಬುಗಳು/ಬಾಣಗಳು, ತನ್ಮರೀಚಿಗಳಂತಿರೆ-ತನ್ ಮರೀಚಿಗಳಂತೆ ಇರೆ= ಅದರ ಕಿರಣಗಳಂತೆ ಇರಲು, ಅವಯವದ= ದೇಹದ, ಗಾಯದೊಳು ಉಗುವ= ಗಾಯದಿಂದ ಹೊರಡುವ, ರಕ್ತಧಾರೆಗಳ್,= ರಕ್ತದ ಹರಿವು, ತವೆ= ಅತಿಯಾದ, ಸಂಜೆಗೆಂಪಿಡಿದ= ಸಂಜೆಯ ಕೆಂಪು ಇಡಿದ=ಹಚ್ಚಿದ, ತೆರದಿಂದೆ= ರೀತಿಯಲ್ಲಿ, ಕಂಗೊಳಿಸೆ= ಪ್ರಕಾಶಿಸಲು, ಭುವನದೊಳ್= ಭೂಮಿಯಮೇಲೆ, ಪೊಸತಾಯ್ತು ಸಂಗರಂ= ಯುದ್ಧವು ಹೊಸಬಗೆಯಾಯಿತು, ಹೇಗೆಂದರೆ ಅದು, ಸಂಧ್ಯಾಗಮವನಂದು ಸೂಚಿಪಂತೆ= ಪ್ರಕೃತಿಯಲ್ಲಿ ಸಂದ್ಯಾಗಮನವನ್ನು ಸೂಚಿಸುವಂತಿತ್ತು.
  • ತಾತ್ಪರ್ಯ :ಅವರಿಬ್ಬರ, ಬಾಣಗಳ ಪ್ರಯೋಗವು ವೃತ್ತದಂತೆ ಕಾಣುವ ಬಾಣಗಳು, ಉದಯ ಮತ್ತು ಅಸ್ತಮ ಸಮಯದ ಚಂದ್ರ ಸೂರ್ಯರ ಬಿಂಬ/ಮಂಡಲದಂತೆ ಇರಲು,ನಡುವಿನ ಅಂಬುಗಳು/ಬಾಣಗಳು, ಅದರ ಕಿರಣಗಳಂತೆ ಇರಲು, ದೇಹದ ಗಾಯದಿಂದ ಹೊರಡುವ ರಕ್ತದ ಹರಿವು ಅತಿಯಾದ ಸಂಜೆಯ ಕೆಂಪುಬಣ್ಣ ಹಚ್ಚಿದ ರೀತಿಯಲ್ಲಿ ಪ್ರಕಾಶಿಸಲು, ಭೂಮಿಯಮೇಲೆ ಈ ಯುದ್ಧವು ಹೊಸಬಗೆಯಾಯಿತು, ಹೇಗೆಂದರೆ ಅದು, ಪ್ರಕೃತಿಯಲ್ಲಿ ಅಂದು ಸಂದ್ಯಾಗಮನವನ್ನು ಸೂಚಿಸುವಂತಿತ್ತು.

(ಪದ್ಯ - ೩೯),

ಪದ್ಯ - ೪೦

[ಸಂಪಾದಿಸಿ]

ಎಚ್ಚು ಕೈಗೆಡನಾ ನೃಪಾಲನಾ ಕಣಿಗಳಂ |
ಕೊಚ್ಚಿ ಬೇಸರನೀ ವೃಷಧ್ವಜಂ ಬಳಿಕದಕೆ |
ಮೆಚ್ಚಿ ಕೇಳ್ದಂ ಯೌವನಾಶ್ವನೆಲೆ ಬಾಲ ನೀಂ ಪಸುಳೆಯಾಗಿರ್ದೊಡೇನು ||
ಕೆಚ್ಚೆದೆಯ ಭಟನಪ್ಪೆ ನಿನ್ನ ಪಡೆದವನಾವ |
ನೆಚ್ಚರಿಸು ನಿಮ್ಮ ಮುತ್ತಯ್ಯನಾರೆನುತೆ ತೆಗೆ |
ದೆಚ್ಚೊಡಾತನ ಕೋಲ್ಗಳಂ ಕಡಿದು ನಸುನಗುತೆ ಕರ್ಣಸುತನಿಂತೆಂದನು ||40||

ಪದವಿಭಾಗ-ಅರ್ಥ:
ವೃಷಕೇತುವು, ಎಚ್ಚು= ಬಾಣದಿಂದ ಹೊಡೆದು ಕೈಗೆಡನಾ= ಕೈಸೋಲನು, ನೃಪಾಲನಾ ಕಣಿಗಳಂ ಕೊಚ್ಚಿ ಬೇಸರನೀ ವೃಷಧ್ವಜಂ= ರಾಜನ ಬಾಣಗಳನ್ನು ಕತ್ತರಿಸಿ ಬೇಸರಪಡನು (ಈ ವೃಷಧ್ವಜನು), ಬಳಿಕದಕೆಬಳಿಕ= ನಂತರ ಅದಕೆ= ಅದರಿಂದ, ಮೆಚ್ಚಿ ಕೇಳ್ದಂ= ಅದನ್ನು ಮೆಚ್ಚಿ, ಯೌವನಾಶ್ವನೆಲೆ=ಯೌವನಾಶ್ವನು ಎಲೆ, ಬಾಲ ನೀಂ ಪಸುಳೆಯಾಗಿರ್ದೊಡೇನು ಕೆಚ್ಚೆದೆಯ ಭಟನಪ್ಪೆ= ಎಲೈ ಬಾಲಕನೆ ನೀನು ಹರೆಯದವನಾದರೂ,ಕೆಚ್ಚದೆಯುಳ್ಳ ಯೋಧನಾಗಿರುವೆ, ನಿನ್ನ ಪಡೆದವನ=ಹೆತ್ತವನು, ಆವನು= ಯಾರು ಎಚ್ಚರಿಸು= ಹೇಳು, ನಿಮ್ಮ= ನಿನ್ನ ಮುತ್ತಯ್ಯನಾರೆನುತೆ= ಮುತ್ತಯ್ಯನು=ಅಜ್ಜನು ಯಾರು, ಎನುತ= ಎನ್ನುತ್ತಾ, ತೆಗೆದೆಚ್ಚೊಡಾತನ= ತೆಗದುಎಚ್ಚೊಡೆ= ಬಾಣದಿಂದ ಹೊಡೆದಾಗ,ಆತನ= ಅವನ, ಕೋಲ್ಗಳಂ=ಬಾಣಗಳನ್ನು, ಕಡಿದು= ಕತ್ತರಿಸಿ, ನಸುನಗುತೆ= ನಸುನಗುತ್ತಾ, ಕರ್ಣಸುತನಿಂತೆಂದನು= ಕರ್ಣನಮಗನು, ಇಂತು= ಹೀಗೆ, ಎಂದನು= ಹೇಳಿದನು.
  • ತಾತ್ಪರ್ಯ :ವೃಷಕೇತುವು, ಬಾಣದಿಂದ ಹೊಡೆದು ಕೈಸೋಲನು, ರಾಜನ ಬಾಣಗಳನ್ನು ಕತ್ತರಿಸಿ ಬೇಸರಪಡನು ನಂತರ ಅದರಿಂದ, ಅದನ್ನು ಮೆಚ್ಚಿ, ಯೌವನಾಶ್ವನು ಎಲೈ ಬಾಲಕನೆ ನೀನು ಹರೆಯದವನಾದರೂ,ಕೆಚ್ಚದೆಯುಳ್ಳ ಯೋಧನಾಗಿರುವೆ,ಹೆತ್ತವನು ಯಾರು? ಹೇಳು, ನಿನ್ನ ಅಜ್ಜನು ಯಾರು, ಎನ್ನುತ್ತಾ, ಬಾಣಪ್ರಯೋಗ ಮಾಡಿದಾಗ, ಅವನ,ಆ ಬಾಣಗಳನ್ನು, ಕತ್ತರಿಸಿ, ನಸುನಗುತ್ತಾ, ಕರ್ಣನಮಗನು ಹೀಗೆ ಹೇಳಿದನು.

(ಪದ್ಯ - ೩೭),

ಪದ್ಯ - ೪೧

[ಸಂಪಾದಿಸಿ]

ಪುಯ್ಯಲೊಳ್ ಬಂದಳವುದೋರುತಿರ್ಪಾಗ ನಿ |
ಮ್ಮಯ್ಯ ಮುತ್ತಯ್ಯನಾರೆಂದು ತನ್ನಂ ಕೇಳ್ವೆ |
ಕಯ್ಯರಿದು ಕಾಣಬೇಡವೆ ಕರ್ಣ ಕಮಲಹಿತಕರರವರನುಸಿರಬಹುದೆ ||
ಪೊಯ್ಯಲೆಳಸಿದ ವಿರೋಧಿಯ ಕಿವಿಗೆ ವಿರಹಿತಂ |
ಗೆಯ್ಯಬೇಕಲ್ಲದೆಲೆ ಮರುಳೆ ಕೋವಿದನಾದೊ |
ಡೊಯ್ಯನೆ ಪರೋಕ್ಷದೊಳ್ ತಿಳಿದುಕೊಳ್ ಸಾಕೆನುತೆ ವೃಷಕೇತುತೆಗೆದೆಚ್ಚನು||41||

ಪದವಿಭಾಗ-ಅರ್ಥ:
ಪುಯ್ಯಲೊಳ್= ಯುದ್ಧದಲ್ಲಿ, ಬಂದಳವುದೋರುತಿರ್ಪಾಗ-:ಬಂದು ಅಳವು ತೋರುತಿರ್ಪಾಗ= ಬಂದು ಶಕ್ತಿ ಪ್ರದರ್ಶಿಸತ್ತಿರುವಾಗ, ನಿಮ್ಮಯ್ಯ= ನಮ್ಮ ತಂದೆ, ಮುತ್ತಯ್ಯನಾರೆಂದು-: ಅಜ್ಜನು ಯಾರೆಂದು, ತನ್ನಂ=ತನ್ನನ್ನು, ಕೇಳ್ವೆ= ಕೇಳುವೆ, ಕಯ್ಯರಿದು= ಕೈಚಳಕನೋಡಿ, ಕಾಣಬೇಡವೆ= ತಿಳಿದುಕೊಳ್ಳಬೇಡವೇ? ಕರ್ಣ ಕಮಲಹಿತಕರರವರನುಸಿರಬಹುದೆ-:ಕರ್ಣನು, ಕಮಲಹಿತಕರ= ಸೂರ್ಯನ (ಹೆಸರ) ಉಸಿರಬಹುದೆ= ಹೆಸರು ಹೇಳಬಹುದೇ, ಪೊಯ್ಯಲು= ಯುದ್ಧಕ್ಕೆ, ಎಳಸಿದ=ಮಾಡಲು ಬಂದ, ವಿರೋಧಿಯ ಕಿವಿಗೆ ವಿರಹಿತಂ= ಅಹಿತವನ್ನು ಗೆಯ್ಯಬೇಕಲ್ಲದೆಲೆ-: ಗೈಯ್ಯಬೇಕು= ಮಾಡಬೇಕು, ಅಲ್ಲದೆ= ಅದಲ್ಲದೆ, ಮರುಳೆ ಕೋವಿದನಾದೊಡೆ= ತಿಳಿದವನಾದೊಡೆ ಒಯ್ಯನೆ=ಉಪಾದಲ್ಲಿ, ಪರೋಕ್ಷದೊಳ್= ಪ್ರತ್ಯೇಕವಾಗಿ, ತಿಳಿದುಕೊಳ್= ತಿಳಿದುಕೋ. ಸಾಕೆನುತೆ= ಸಾಕು ಎನತೆ=ಎನ್ನುತ್ತಾ, ವೃಷಕೇತುತೆಗೆದೆಚ್ಚನು=ವೃಷಕೇತು ಬಾಣತೆಗೆದು ಎಚ್ಚನು= ಹೊಡೆದನು.
  • ತಾತ್ಪರ್ಯ :ಯುದ್ಧದಲ್ಲಿ ಬಂದು ಶಕ್ತಿ ಪ್ರದರ್ಶಿಸತ್ತರುವಾಗ ನಮ್ಮ ತಂದೆ, ಅಜ್ಜನು ಯಾರೆಂದು, ತನ್ನನ್ನು, ಕೇಳುವೆ, ಕೈಚಳಕನೋಡಿ ತಿಳಿದುಕೊಳ್ಳಬೇಡವೇ? ಕರ್ಣನು, ಸೂರ್ಯನ (ಹೆಸರ)ಹೆಸರು ಹೇಳಬಹುದೇ,(ಗುರು ಹಿರಿಯರ ಹೆಸರನ್ನು ಸಭೆಯಲ್ಲಿ- ಬಹಿರಂಗವಾಗಿ ಹೇಳುವುದು ಸಭ್ಯತೆ ಅಲ್ಲ, ಹೇಳಬಾರದು ಎಂದು ಭಾವ) ಯುದ್ಧ ಮಾಡಲು ಬಂದ ವಿರೋಧಿಯ ಕಿವಿಗೆ ಅಹಿತವನ್ನು ಮಾಡಬೇಕು ಅದಲ್ಲದೆ, ಮರುಳೆ, ತಿಳಿದವನಾದೊಡೆ ಉಪಾಯದಲ್ಲಿ ಪ್ರತ್ಯೇಕವಾಗಿ ತಿಳಿದುಕೋ; ಸಾಕು ಎನ್ನುತ್ತಾ, ವೃಷಕೇತು ಬಾಣತೆಗೆದು ಹೊಡೆದನು.

(ಪದ್ಯ - ೪೧),

ಪದ್ಯ - ೪೨

[ಸಂಪಾದಿಸಿ]

ಅಪ್ರತಿಮನಪ್ಪೆ ಬಾಲಕ ಲೇಸುಲೇಸು ಬಾ |
ಣಪ್ರಯೋಗಂಗಳೆನುತೊಂದು ಕಣಿವೂಡಿ ಕ |
ರ್ಣಪ್ರದೇಶಕೆ ತೆಗೆದವಂ ಬಿಡಲ್ಕಿವನುರವನುಗಿಯೆ ಮೈಮರೆದು ಕೂಡೆ ||
ಸಪ್ರಾಣಿಸುತೆ ಕೆರಳ್ದಿನ್ನು ನೋಡೀ ಸಾಯ |
ಕಪ್ರಭಾವವನೆನುತೆ ದೆಸೆದೆಸೆಗುಗುಳ್ವ ಕನ |
ಕಪ್ರಭೇಯೊಳೆಸೆವ ಸರಳಂ ತೊಟ್ಟು ಕೆನ್ನೆಗೆಳೆದಾರ್ದೆಚ್ಚನಾನೃಪನನು ||42||

ಪದವಿಭಾಗ-ಅರ್ಥ:
ಅಪ್ರತಿಮನಪ್ಪೆ ಬಾಲಕ ಲೇಸುಲೇಸು= ಬಾಲಕನೇ ನೀನು ಸರಿಸಾಟಿ ಇಲ್ಲದವನು, ಬಾಣಪ್ರಯೋಗಂಗಳು ಲೇಸು ಲೇಸು! ಎನುತ, ಒಂದು ಕಣಿವೂಡಿ= ಒಂದು ಬಾಣ ಹೂಡಿ, ಕರ್ಣಪ್ರದೇಶಕೆ ತೆಗೆದವಂ= ಕಿವಿಯವರೆಗೆ (ತೆಗೆದು)ಎಳೆದು ಅವಂ=ಅವನು ಬಿಡಲ್ಕಿವನುರವನುಗಿಯೆ-:ಬಿಡಲ್ಕೆ=ಬಿಡಲು ಇವನು, ಉರವನು= ಎದೆಯನ್ನು, ಉಗಿಯೆ=ಹೊಗಲು, ಮೈಮರೆದು=ಎಚ್ಚರತಪ್ಪಿ ಕೂಡೆ= ತಕ್ಷಣ, ಸಪ್ರಾಣಿಸುತೆ= ಚೇತರಿಸಿಕೊಂಡು, ಕೆರಳ್ದಿನ್ನು- ಕೆರಳ್ದು ಇನ್ನುನಂತರ ಸಿಟ್ಟಿನಿಂದ, ನೋಡೀ=ನೋಡು ಈ ಸಾಯಕಪ್ರಭಾವವನು= ಬಾಣದ ಶಕ್ತಿಯನ್ನು ನೋಡು ಎನುತೆ= ಎನ್ನುತ್ತಾ, ದೆಸೆದೆಸೆಗುಗುಳ್ವ= ದಿಕ್ಕುದಿಕ್ಕಿಗೆ /ಎಲ್ಲಾದಿಕ್ಕುಗಳಿಗೆ ಉಗುಳ್ವ= ಸೂಸುವ, ಕನಕಪ್ರಭೇಯೊಳೆಸೆವ= ಚಿನ್ನದ ಪ್ರಬೆಯನ್ನು ಎಸೆವ= ಬೀರುವ, ಸರಳಂ= ಬಾಣವನ್ನು ತೊಟ್ಟು= ಹೂಡಿ, ಕೆನ್ನೆಗೆಳೆದು ಕೆನ್ನವರೆಎಳೆದು,ಆರ್ದು= ಆರ್ಭಟಿಸಿ, ಎಚ್ಚನಾನೃಪನನು= ಎಚ್ಚನು= ಹೊಡೆದನು ಆ ನೃಪನನು= ಆ ರಾಜನನ್ನು.
  • ತಾತ್ಪರ್ಯ : ಬಾಲಕನೇ ನೀನು ಸರಿಸಾಟಿ ಇಲ್ಲದವನು, ಬಾಣಪ್ರಯೋಗಗಳು ಲೇಸು ಲೇಸು! ಎನ್ನುತಾ, ಒಂದು ಬಾಣ ಹೂಡಿ, ಕಿವಿಯವರೆಗೆ (ತೆಗೆದು)ಎಳೆದು ಅವನು ಬಿಡಲು ಇವನು, ಅದು ಎದೆಯನ್ನು (ಕವಚಕ್ಕೆ)ತಾಗಲು/ಹೊಗಲು,ಎಚ್ಚರತಪ್ಪಿ, ತಕ್ಷಣ,ಚೇತರಿಸಿಕೊಂಡು, ನಂತರ ಸಿಟ್ಟಿನಿಂದ, ಈ ಬಾಣದ ಶಕ್ತಿಯನ್ನು ನೋಡು ಎನ್ನುತ್ತಾ, ದಿಕ್ಕುದಿಕ್ಕಿಗೆ /ಎಲ್ಲಾದಿಕ್ಕುಗಳಿಗೆ ಸೂಸುವ,ಚಿನ್ನದ ಪ್ರಬೆಯನ್ನು ಬೀರುವ, ಬಾಣವನ್ನು ಹೂಡಿ, ಕೆನ್ನೆಯವರೆಗೆ ಎಳೆದು, ಆರ್ಭಟಿಸಿ, ಆ ರಾಜನನ್ನು ಹೊಡೆದನು.

(ಪದ್ಯ - ೪೨),

ಪದ್ಯ - ೪೩

[ಸಂಪಾದಿಸಿ]

ಏನೆಂಬೆನರಸ ಕರ್ಣಜನ ಬಾಣದ ಘಾತ |
ಕಾ ನರೇಂದ್ರಂ ಕರದ ಚಾಪಮಂ ಬಿಟ್ಟು ಮೂ |
ರ್ಛಾನುಗತನಾಗಲಾತನ ಬಲಂ ಮುಂಕೊಂಡು ಬಂದಿವನಮೇಲೆ ಕವಿಯೆ ||
ಆನೆಯಂ ವೊಯ್ದೆಳೆವ ಸಿಂಗಮಂ ಮುತ್ತುವ ಮೃ |
ಗಾನೀಕಮಂ ಕಂಡೆವಿಂದೆನುತೆ ತುಳುಕಿದನ |
ನೂನ ಶರಜಾಲಮಂ ಕರಿ ತುರಗ ರಥ ಪದಾತಿಗಳ ಸಂದಣಿ ದಣಿಯಲು ||43||

ಪದವಿಭಾಗ-ಅರ್ಥ:
ಏನೆಂಬೆನರಸ= ಏನನು=ಏನನ್ನು, ಎಂಬೆನು= ಹೇಳಲಿ, ಅರಸ ಜನಮೇಜಯನೇ, ಕರ್ಣಜನ= ವೃಷಕೇತುವಿನ, ಬಾಣದ ಘಾತಕೆ= ಬಾಣದ ಪಟ್ಟಿಗೆ, ನರೇಂದ್ರಂ= ರಾಜನು, ಕರದ ಚಾಪಮಂ ಬಿಟ್ಟು= ಕೈಯಲ್ಲರುವ ಬಿಲ್ಲನ್ನು ಬಿಟ್ಟು, ಮೂರ್ಛಾನುಗತನಾಗಲಾತನ-: ಮೂರ್ಛಾನುಗತನು ಆಗಲು= ಮೂರ್ಛೆಹೋಗಲು, ಆತನ ಬಲಂ=ಆತನ ಸೈನ್ಯ, ಮುಂಕೊಂಡು ಬಂದಿವನಮೇಲೆ-:ಬಂದು ಇವನ ಮೇಲೆ ಕವಿಯೆ= ಮುಂದೆ ಬಂದು,ಇವನ ಮೇಲೆ ಮುತ್ತಿಗೆ ಹಾಕಲು, ಆನೆಯಂ ವೊಯ್ದೆಳೆವ= ಆನೆಯನ್ನು ಪೊಯ್ದು=ಹೊಡೆದು,ಎಳೆವ= ಎಳೆದುಕೊಂಡುಹೋಗುವ, ಸಿಂಗಮಂ= ಸಿಂಹವನ್ನು, ಮುತ್ತುವ ಮೃಗಾನೀಕಮಂ-: ಮೃಗ= ಜಿಂಕೆಗಳ ಸಮೂಹವನ್ನು, ಕಂಡೆವಿಂದೆನುತೆ= ಕಂಡೆವು ಇಂದು ಎನುತೆ=ಎನ್ನುತ್ತಾ, (ತುಳುಕಿದನು,) ಅನೂನ= ಮಿತಿ ಇಲ್ಲದಷ್ಟು ಶರಜಾಲಮಂ= ಬಾಣಗಳ ಜಾಲವನ್ನು ಕರಿ=ಆನೆ ತುರಗ=ಕುದುರೆ ರಥ ಪದಾತಿಗಳ=ಭಟರ ಸಂದಣಿ=ಗುಂಪು ದಣಿಯಲು= ಬಳಲುವಂತೆ ತುಳುಕಿದನು= ತುಂಬಿದನು/ಪ್ರಯೋಗಿಸಿದನು.
  • ತಾತ್ಪರ್ಯ : ಏನನ್ನು ಹೇಳಲಿ, ಅರಸ ಜನಮೇಜಯನೇ,ವೃಷಕೇತುವಿನ ಬಾಣದ ಪಟ್ಟಿಗೆ ರಾಜನು ಕೈಯಲ್ಲರುವ ಬಿಲ್ಲನ್ನು ಬಿಟ್ಟು,ಮೂರ್ಛೆಹೋಗಲು, ಆತನ ಸೈನ್ಯ, ಮುಂದೆ ಬಂದು ಇವನ ಮೇಲೆ ಮುತ್ತಿಗೆ ಹಾಕಲು, ಆನೆಯನ್ನು ಹೊಡೆದು, ಎಳೆದುಕೊಂಡುಹೋಗುವ ಸಿಂಹವನ್ನು ಮುತ್ತುವ ಜಿಂಕೆಗಳ ಸಮೂಹವನ್ನು, ಕಂಡೆವು ಇಂದು ಎನ್ನುತ್ತಾ,ವೃಷಕೇತು, ಮಿತಿ ಇಲ್ಲದಷ್ಟು ಬಾಣಗಳ ಜಾಲವನ್ನು ಆನೆ ಕುದುರೆ ರಥ ಭಟರ ಗುಂಪು ಬಳಲುವಂತೆ ಪ್ರಯೋಗಿಸಿದನು.

(ಪದ್ಯ - ೪೩),

ಪದ್ಯ - ೪೪

[ಸಂಪಾದಿಸಿ]

ತರಿತರಿದು ಕತ್ತರಿಸಿ ಚುಚ್ಚಿ ನಟ್ಟುಚ್ಚಳಿಸಿ |
ಕೊರೆದರೆದು ಕಡಿದಿರಿದು ಬಗಿದುಗಿದು ಗಬ್ಬರಿಸಿ |
ಪರಿದು ಸೀಳ್ದುತ್ತರಿಸಿ ಕೆತ್ತಿ ಖಂಡಿಸಿ ಬಿಳಿಚಿ ತಿವಿದಿಕ್ಕಿ ಕೊಯ್ದು ಪೊಯ್ದು ||
ಎರಗಿ ಕವಿದಿಡಿದೊತ್ತಿ ಕದುಕಿ ಕೀಲಿಸಿ ಕೇರಿ |
ತುರುಗಿ ತುಂಡಿಸಿ ತುಳುಕಿ ನಾಂಟಿ ಮರುಮೊನೆಗೊಂಡು |
ನೆರೆ ಪೊರಳ್ಚಿದುವರಿಚತುರ್ಬಲವನೆಲ್ಲಮಂ ಕರ್ಣಜನಿಸುವ ಕಣೆಗಳು ||44||

ಪದವಿಭಾಗ-ಅರ್ಥ:
ಕರ್ಣಜನಿಸುವ= ವೃಷಕೇತು ಬಿಟ್ಟ ಕಣೆಗಳು= ಬಾನಗಳು, ತರಿತರಿದು=ಸೀಳಿಸೀಳಿ, ಕತ್ತರಿಸಿ ಚುಚ್ಚಿ ನಟ್ಟುಚ್ಚಳಿಸಿ= ನಾಟಿ ಗಾಯವನ್ನು ಉಬ್ಬಿಸಿ, ಕೊರೆದು ಅರೆದು=ಪಡಿಮಾಡಿ, ಕಡಿದಿರಿದು= ಕಡಿದು ಅರಿದು= ಕತ್ತರಿಸಿ, ಬಗಿದುಗಿದು=ದೇಹವನ್ನು ಬಗೆದು ಕಿತ್ತು, ಗಬ್ಬರಿಸಿ=ರಕ್ತಬರಿಸಿ/ಗಾಯಮಾಡಿ, ಪರಿದು= ಹರಿದು, ಸೀಳ್ದುತ್ತರಿಸಿ= ಸೀಳಿ, ಉತ್ತರಿಸಿ= ಪೆಟ್ಟುಮಾಡಿ, ಕೆತ್ತಿ ಖಂಡಿಸಿ= ತುಂಡುಮಾಡಿ, ಬಿಳಿಚಿ= ಬಿಳುಚುವಂತೆಮಾಡಿ, ತಿವಿದಿಕ್ಕಿ= ತಿವಿದು ಇಕ್ಕಿ= ಹೊಡೆದು, ಕೊಯ್ದು= ಕತ್ತರಿಸಿ, ಪೊಯ್ದು= ಹೊಡೆದು, ಎರಗಿ= ಮೇಲೆಬಿದ್ದು, ಕವಿದಿಡಿದೊತ್ತಿ= ಕವಿದು ಇಡಿದು ಒತ್ತಿ=ಒತ್ತೊತ್ತಿ, ಕದುಕಿ= ಅಲ್ಲಾಡಿಸಿ, ಕೀಲಿಸಿ= ನಾಟಿಸಿ, ಕೇರಿ ತುರುಗಿ= ತಿಕ್ಕಿ, ತುಂಡಿಸಿ= ತುಂಡುಮಾಡಿ, ತುಳುಕಿ ನಾಂಟಿ= ನೆಟ್ಟು, ಮರುಮೊನೆಗೊಂಡು=ಮತ್ತೆಮತ್ತೆ ಚುಚ್ಚಿ, ನೆರೆ= ಬಹಳ ಪೊರಳ್ಚಿದುವರಿಚತುರ್ಬಲವನೆಲ್ಲಮಂ-: ಚತುರ್ಬಲವನು = ಚತುರ್ಬಲ ಸೈನ್ಯವನ್ನೂ ಪೊರಳ್ಚಿ=ಹೊರಳಿಸಿದುವು ಹಿಮ್ಮಟಿಸಿದವು (ಕರ್ಣಜನಿಸುವ ಕಣೆಗಳು)
  • ತಾತ್ಪರ್ಯ :ವೃಷಕೇತು ಬಿಟ್ಟ ಬಾಣಗಳು ಭಟರನ್ನು, ಸೀಳಿಸೀಳಿ, ಕತ್ತರಿಸಿ ಚುಚ್ಚಿ ನಾಟಿ ಗಾಯವನ್ನು ಉಬ್ಬಿಸಿ, ಕೊರೆದು ಅರೆದು ಕಡಿದು ದೇಹವನ್ನು ಬಗೆದು ಕಿತ್ತು, ರಕ್ತಬರಿಸಿ/ಗಾಯಮಾಡಿ, ಹರಿದು, ಸೀಳಿ, ಪೆಟ್ಟುಮಾಡಿ, ಕೆತ್ತಿ ತುಂಡುಮಾಡಿ, ಬಿಳುಚುವಂತೆಮಾಡಿ, ತಿವಿದು ಹೊಡೆದು, ಕತ್ತರಿಸಿ,ಹೊಡೆದು,ಮೇಲೆಬಿದ್ದು, ಕವಿದು ಇಡಿದು ಒತ್ತೊತ್ತಿ, ಅಲ್ಲಾಡಿಸಿ, ನಾಟಿಸಿ,ತಿಕ್ಕಿ, ತುಂಡುಮಾಡಿ, ನೆಟ್ಟು, ಮತ್ತೆಮತ್ತೆ ಚುಚ್ಚಿ,ಚತುರ್ಬಲ ಸೈನ್ಯವನ್ನೂ ಹೊರಳಿಸಿದುವು ಹಿಮ್ಮಟಿಸಿದವು (ಕರ್ಣಜನಿಸುವ ಕಣೆಗಳು). (ಇದರಲ್ಲಿ ದ್ವಿರುಕ್ತಿ ಮತ್ತು ಅನುಪ್ರಾಸದ ಅಲಂಕಾರವನ್ನು ಉಪಯೋಗಿಸಿದೆ)

(ಪದ್ಯ - ೪೪),

ಪದ್ಯ - ೪೫

[ಸಂಪಾದಿಸಿ]

ತಲೆ ಬೀಳಲಟ್ಟೆಗಳ್ ಕಾದಿದುವು ಮೇಣಟ್ಟೆ |
ನೆಲಕುರುಳೆ ತಲೆಗಳೆದ್ದಾಡಿದುವು ಕೈದುಗಳ |
ನಲುಗಿದುವು ಖಂಡಿಸಿದ ತೋಳ್ಗಳುರೆ ಕಡಿದ ಕಾಲ್ಗಳ್ ಮುಂದಕಡಿಯಿಟ್ಟುವು ||
ಕಲಿತನಮದೆಂತೊ ಪಟುಭಟರಳವಿಗೊಟ್ಟಾಗಿ |
ಸಲೆ ಸರಳ ಸಾರದಿಂ ಮುಡಿಯುತಿರ್ದರು ಸಮು |
ಜ್ವಲ ದೀಪದೆಡೆಗೆ ಮುಗ್ಗುವ ಪತಂಗಪ್ರಸರಮೆನೆ ವೃಷಧ್ವಜನಿದಿರೊಳು ||45||

ಪದವಿಭಾಗ-ಅರ್ಥ:
ತಲೆ ಬೀಳಲ್= ತಲೆ ಕಡಿದು ಬಿದ್ದಾಗ, ಅಟ್ಟೆಗಳ್ ಕಾದಿದುವು= ಮುಂಡಗಳೇ ಹೊಡೆದಾಡಿದವು, ಮೇಣ್ ಅಟ್ಟೆ ನೆಲಕುರುಳೆ= ಮುಂಡಗಳು ನೆಲಕ್ಕೆ ಬಿದ್ದರೆ, ತಲೆಗಳೆದ್ದಾಡಿದುವು= ತಲೆಗಳು ಎದ್ದು ಆಡಿದವು= ಕಾದಿದವು, ಖಂಡಿಸಿದ ತೋಳ್ಗಳುರೆ= ಕತ್ತರಿಸಿದ ತೋಳುಗಳು ಉರೆ=ಹೆಚ್ಚು,ಕೈದುಗಳನು ಅಲುಗಿದುವು= ಆಯುಧಗಳನ್ನು ಬೀಇದವು, ಕಡಿದ ಕಾಲ್ಗಳ್= ಕತ್ತರಿಇದ ಕಾಲುಗಳು, ಮುಂದಕಡಿಯಿಟ್ಟುವು= ಮುಂದಕ್ಕೆ ಅಡಿ ಇಟ್ಟವು= ನಡೆದವು, ಕಲಿತನಮದೆಂತೊ= ಕಲಿತನವನು ಅದು ಎಂತೊ= ವೃಷಕೇತುವಿನ ಶೌರ್ಯ ಅದು ಎಂತೊ=ಎಷ್ಟೊ! ಪಟುಭಟರ = ಯೋದರ ಅಳವಿಗೆ =ಸಾಮರ್ಥ್ಯದಿಂದ ಒಟ್ಟಾಗಿ ಸಲೆ=ಪೂರಾ ಸರಳ= ಬಾಣದಿಂದ, ಸಾರದಿಂ= ಶಕ್ತಿಯಿಂದ/ಏಟಿನಿಂದ ಮುಡಿಯುತಿರ್ದರು= ಸಾಯುತ್ತಿದ್ದರು, ಹೇಗೆಂದರೆ, ಸಮುಜ್ವಲ= ದೊಡ್ಡದಾಗಿ ಉರಿಯುತ್ತಿರುವ, ದೀಪದೆಡೆಗೆ= ದೀಪದ ಎಡೆಗೆ=ಕಡೆಗೆ ಮುಗ್ಗುವ= ಮತ್ತುವ, ಪತಂಗಪ್ರಸರಮೆನೆ= ಪತಂಗ ಪ್ರಸರಂ=ಸಮೂಹ ಎನೆ= ಎಂಬಂತೆ ವೃಷಧ್ವಜನಿದಿರೊಳು-:ವೃಷಧ್ವಜನ ಇದಿರೊಳು.
  • ತಾತ್ಪರ್ಯ :ತಲೆ ಕಡಿದು ಬಿದ್ದಾಗ,ಮುಂಡಗಳೇ ಹೊಡೆದಾಡಿದವು, ಮುಂಡಗಳು ನೆಲಕ್ಕೆ ಬಿದ್ದರೆ,ತಲೆಗಳು ಎದ್ದು ಕಾದಿದವು, ಕತ್ತರಿಸಿದ ತೋಳುಗಳು ಆಯುಧಗಳನ್ನು ಬೀಸಿದವು, ಕತ್ತರಿಇದ ಕಾಲುಗಳು, ಮುಂದಕ್ಕೆ ನಡೆದವು, ವೃಷಕೇತುವಿನ ಶೌರ್ಯ ಅದು ಎಷ್ಟೊ! ವೃಷಧ್ವಜನ ಇದಿರಿನಲ್ಲಿ, ದೊಡ್ಡದಾಗಿ ಉರಿಯುತ್ತಿರುವ,ದೀಪದ ಕಡೆಗೆ ಮತ್ತುವ ಪತಂಗಸಮೂಹದಂತೆ ಅವನನ್ನು ಮುತ್ತಿದ ಶೂರ ಯೋದರು ಪೂರಾ ಅವನ ಬಾಣದ ಏಟಿನಿಂದ ಸಾಯುತ್ತಿದ್ದರು.

(ಪದ್ಯ - ೪೫),

ಪದ್ಯ - ೪೬

[ಸಂಪಾದಿಸಿ]

ಕಡಿಕಿಡದು ಬಿದ್ದ ಕೈಕಾಲ್ಗಳಿಂ ತೋಳ್ಗಳಿಂ |
ಪೊಡಗೆಡೆದ ಹೇರೊಡಲ ಸೀಳ್ಗಳಿಂ ಪೋಳ್ಗಳಿಂ |
ಮಡಿಮಡಿದುರುಳ್ವ ಕಟ್ಟಾಳ್ಗಳಿಂ ಬಾಳ್ಗಳಿಂದೊಡೆದ ತಲೆವೋಳ್ಗಳಿಂದೆ ||
ಕಡುಭಯಂಕರಮಾಗಲಾರಣದ ಮಾರಣದ |
ನಡುವೆ ಕಲ್ಪಾಂತಭೈರವನಂತೆ ಜವನಂತೆ |
ಕಡುಮುಳಿದವನ ಕಾಣುತವೆ ಬಿಟ್ಟು ಸಲೆ ಕೆಟ್ಟು ಸರಿದರೆಣ್ದೆಸೆಗೆ ಭಟರು ||46||

ಪದವಿಭಾಗ-ಅರ್ಥ:
ಕಡಿಕಡಿದು ಬಿದ್ದ ಕೈಕಾಲ್ಗಳಿಂ ತೋಳ್ಗಳಿಂ= ಕೈಕಾಲುಗಳಿಂದ ಮತ್ತು ತೋಳುಗಳಿಂದ ಪೊಡಗೆಡೆದ-:ಪೊಡೆ ಕಡೆದ= ಬಿದ್ದ ಹೇರೊಡಲ=ಹಡೆದು ಬಿದ್ದ ದೊಡ್ಡ ಹೊಟ್ಟಗಳ, ಸೀಳ್ಗಳಿಂ= ಸೀಳುಗಳು, ಪೋಳ್ಗಳಿಂ= ಹೋಳುಗಳಿಂದ

ಮಡಿಮಡಿದು ಉರುಳ್ವ= ಸತ್ತು ಉರುಳಿಬಿದ್ದ ಕಟ್ಟಾಳ್ಗಳಿಂ= ಯೋಧರಿಂದ, ಬಾಳ್ಗಳಿಂದೊಡೆದ-:ಬಾಳ್ಗಳಿಂದ ಬಾಳ್‍ಗಳಿಂದ=ಕತ್ತರಿಸಿದ,ಒಡೆದ ತಲೆವೋಳ್ಗಳಿಂದೆ= ತಲೆಯ ಹೋಳುಗಳಿಂದ,ಕಡು= ಬಹಳ ಭಯಂಕರಂ= ಭಯಾನಕ ಆಗಲು ಆ ರಣದ= ರಣರಂಗದ, ಮಾರಣದ= ಸತ್ತವರ ನಡುವೆ, ಕಲ್ಪಾಂತಭೈರವನಂತೆ= ಪ್ರಳಯ ಕಾದ ಭೈರವನಂತೆ, ಜವನಂತೆ= ಯಮನಂತೆ, ಕಡು ಮುಳಿದವನ= ಬಹಳ ಕೋಪದ ಅವನ ಕಾಣುತವೆ= ನೋಡುತ್ತಲೆ, ಬಿಟ್ಟು= ಯುದ್ಧವನ್ನು ಬಿಟ್ಟು ಸಲೆ=ಬಹಳ ಕೆಟ್ಟು= ಬಹಳ ನೊಂದು, ಸರಿದರೆಣ್ದೆಸೆಗೆ= ಸರಿದರು= ಓಡಿದರು,ಎಣ್ ದೆಸೆಗೆ= ಎಂಟುದಿಕ್ಕಿಗೆ ಭಟರು= ಯೋಧರು.

  • ತಾತ್ಪರ್ಯ :ಕಡಿಕಡಿದು ಬಿದ್ದ ಕೈಕಾಲುಗಳಿಂದ ಮತ್ತು ತೋಳುಗಳಿಂದ ಬಿದ್ದ, ಹೊಡೆದು ಬಿದ್ದ ದೊಡ್ಡ ಹೊಟ್ಟಗಳು, ಅದರ ಸೀಳುಗಳು, ಹೋಳುಗಳಿಂದ ಸತ್ತು ಉರುಳಿಬಿದ್ದ ಯೋಧರಿಂದ, ಕತ್ತರಿಸಿದ,ಒಡೆದ ತಲೆಯ ಹೋಳುಗಳಿಂದ,ಬಹಳ ಭಯಾನಕ ಆಗಲು ಆ ರಣರಂಗದ, ಸತ್ತವರ ನಡುವೆ, ಪ್ರಳಯ ಕಾದ ಭೈರವನಂತೆ, ಯಮನಂತೆ, ಬಹಳ ಕೋಪದ ಅವನನ್ನು ನೋಡುತ್ತಲೆ,ಯೋಧರು ಯುದ್ಧವನ್ನು ಬಿಟ್ಟು ಬಹಳ ನೊಂದು,ಎಂಟು ದಿಕ್ಕಿಗೆ ಓಡಿದರು. (ಭಯಾನಕ ಭೀಬತ್ಸ ರಸದ ಪದ್ಯಗಳು)

(ಪದ್ಯ - ೪೬),

ಪದ್ಯ - ೪೭

[ಸಂಪಾದಿಸಿ]

ಮೈಮರೆದ ಭೂಪನಂ ಬಿಟ್ಟು ಪಟುಭಟರುಳಿದೆ |
ವೈಮಹಾದೇವೆನುತೆ ಸರಿದರೆಣ್ದೆಸೆಗಿವಂ |
ಕೈಮಾಡಲೋರ್ವರಂ ಕಾಣದೆ ಬಳಲ್ದ ರಿಪು ಚೇತರಿಸಿಕೊಳ್ಳದಿರಲು ||
ವೈಮನಸ್ಯದೊಳಕಟ ತಪ್ಪಿತೆ ರಣಾಟೋಪ |
ವೈಮೊಗಂ ಬಲ್ಲನೆನುತವನೆಡೆಗೆ ಬಂದಿದೇ |
ನೈಮೂರ್ಛೆ ನಿನಗೆನಲ್ ನುಡಿಯದಿರಲೊಯ್ಯನಾ ನೃಪನುಸಿರನಾರೈದನು ||47||

ಪದವಿಭಾಗ-ಅರ್ಥ:
ಮೈಮರೆದ= ಎಚ್ಚರತಪ್ಪಿದ ಭೂಪನಂ= ರಾಜನನ್ನು ಬಿಟ್ಟು, ಪಟುಭಟರು= ಯೋಧರು, ಉಳಿದೆವೈಮಹಾದೇವೆನುತೆ= ಉಳಿದೆವು ಮಹಾದೇವ ಎನ್ನುತ್ತಾ ಸರಿದರೆಣ್ದೆಸೆಗಿವಂ-:ಎಣ್ ದೆಸೆಗೆ ಸರಿದರು ಇವಂ= ದಿಕ್ಕು ದಿಕ್ಕಿಗೆ ಓಡಿದರು. ಇವನು ಕೈಮಾಡಲು ಓರ್ವರಂ= ಒಬ್ಬರನ್ನೂ ಕಾಣದೆ, ಬಳಲ್ದ= ಬಳಲಿದ ರಿಪು= ಶತ್ರುವು ಚೇತರಿಸಿಕೊಳ್ಳದಿರಲು, ವೈಮನಸ್ಯದೊಳಕಟ= ವೈಮನಸ್ಸಿನೊಳು= ಸಿಟ್ಟಿನಲ್ಲಿ ಅಕಟ ತಪ್ಪಿತೆ= ತಪ್ಪಾಯಿತೆ, ರಣಾಟೋಪವು= ಶೂರತನ, ಐಮೊಗಂ ಬಲ್ಲನೆನುತ= ಶಿವನೇ ಬಲ್ಲನು ಎನ್ನುತ್ತಾ, ಅವನೆಡೆಗೆ= ಅವನ ಹತ್ತಿರ ಬಂದು ಇದೇನೈಮೂರ್ಛೆ ನಿನಗೆನಲ್= ಏನಯ್ಯಾ ನಿನಗೆ ಎಚ್ಚರತಪ್ಪಿತೇ ಎನ್ನಲು, ನುಡಿಯದಿರಲೊಯ್ಯನಾ= ನುಡಿಯದೆ ಇರಲು- ಮಾತಾಡದಿರಲು, ನೃಪನುಸಿರನಾರೈದನು-:ನೃಪನ ಉಸಿರನು ಆರೈದನು= ರಾಜನು ಉಸಿರಾಟವನ್ನು ಮಾಡುವಂತೆ ಉಪಚರಿಸಿದನು.
  • ತಾತ್ಪರ್ಯ :ಎಚ್ಚರತಪ್ಪಿದ ರಾಜನನ್ನು ಬಿಟ್ಟು ಯೋಧರು, ಉಳಿದೆವು ಮಹಾದೇವ ಎನ್ನುತ್ತಾ ದಿಕ್ಕು ದಿಕ್ಕಿಗೆ ಓಡಿದರು. ಇವನು ಕೈಮಾಡಲು ಒಬ್ಬರನ್ನೂ ಕಾಣದೆ, ಶತ್ರುವು ಚೇತರಿಸಿಕೊಳ್ಳದಿರಲು, ಸಿಟ್ಟಿನಲ್ಲಿ ಅಕಟ ತಪ್ಪಾಯಿತೆ ಶೂರತನವು, ಶಿವನೇ ಬಲ್ಲನು ಎನ್ನುತ್ತಾ, ಅವನ ಹತ್ತಿರ ಬಂದು ಏನಯ್ಯಾ ನಿನಗೆ ಎಚ್ಚರತಪ್ಪಿತೇ ಎನ್ನಲು,ನೃಪನು ಮಾತಾಡದಿರಲು, ರಾಜನು ಉಸಿರಾಟವನ್ನು ಮಾಡುವಂತೆ ವೃಷಕೇತು ಉಪಚರಿಸಿದನು.

(ಪದ್ಯ - ೪೭),

ಪದ್ಯ - ೪೮

[ಸಂಪಾದಿಸಿ]

ಸತ್ಯಮೆನಗಂಟಾದೊಡಾಂ ಧೀರನಾದೊಡಾ |
ದಿತ್ಯಂಗೆ ಪೌತ್ರನಾದೊಡೆ ತನ್ನ ತಾತಂಗ |
ಪತ್ಯ ನಾನಾದೊಡೀ ನೃಪತಿ ಜೀವಿಸಲೆನುತ ಕರ್ಣಜಂ ಪಗೆಮಾಡುವ ||
ಕೃತ್ಯಮಂ ಬಿಟ್ಟಾ ಮಹೀಶನ ಬಳಲ್ಕೆಗೌ |
ಚಿತ್ಯಮಾದುಪಚಾರದಿಂದೆ ಸಮರಶ್ರಮ ಪ |
ರಿತ್ಯಾಗಮಪ್ಪಂತೆ ಸಂತೈಸುತಿರಲಾ ಧರಾಧಿಪಂ ಮೈಮುರಿದನು ||48||

ಪದವಿಭಾಗ-ಅರ್ಥ:
ವೃಷಕೇತುವು ರಾಜನ ಸ್ಥಿತಿಗೆ ನೊಂದು, ಸತ್ಯಮೆನಗಂಟಾದೊಡಾಂ ಧೀರನಾದೊಡಾದಿತ್ಯಂಗೆ-:ಸತ್ಯಂಎನಗೆಉಂಟುಆದೊಡೆ= ನಾನು ಸತ್ಯವಂತನಾಗಿದ್ದರೆ,ಆಂ=ನಾನು ಧೀರನಾದೊಡೆ ಆದಿತ್ಯಂಗೆ= ನಾನು ಧೀರನಾಗಿದ್ದರೆ,ಸೂರ್ಯನಿಗೆ,ಪೌತ್ರನಾದೊಡೆ= ಮೊಮ್ಮೊಗನಾಗಿದ್ದರೆ, ತನ್ನತಾತಂಗಪತ್ಯನಾನಾದೊಡೆ= ನನ್ನತಂದೆಯ ಮಗನೇ ಆಗಿದ್ದರೆ, ನೃಪತಿ ಜೀವಿಸಲಿ ಎನುತ= ರಾಜನು ಜೀವಿಸಲಿ ಎನ್ನತ್ತಾ, ಕರ್ಣಜಂ= ವೃಷಕೇತು, ಪಗೆಮಾಡುವ= ಶತ್ರು ಮಾಡುವ, ಕೃತ್ಯಮಂ= ಕಾರ್ಯವನ್ನು ಬಿಟ್ಟಾ= ಬಿಟ್ಟು ಆ ಮಹೀಶನ= ರಾಜನ, ಬಳಲ್ಕೆಗೌಚಿತ್ಯಮಾದುಪಚಾರದಿಂದೆ-:ಬಳಲ್ಕೆಗೆ=ಬಳಲಿಕೆಗೆ, ಔಚಿತ್ಯಮಾದ=ಉಚಿತವಾದ ಉಪಚಾರದಿಂದೆ= ಉಪಚಾರದಿಂದ, ಸಮರಶ್ರಮ= ಯುದ್ಧದ ಆಯಾಸವು, ಪರಿತ್ಯಾಗಮಪ್ಪಂತೆ= ಹೋಗುವಂತೆ, ಸಂತೈಸುತಿರಲಾ= ಸಂತೈಸುತಿರಲು ಆ ಧರಾಧಿಪಂ= ರಾಜನು, ಮೈಮುರಿದನು= ಎಚ್ಚರಗೊಂಡನು
  • ತಾತ್ಪರ್ಯ :ವೃಷಕೇತುವು ರಾಜನ ಸ್ಥಿತಿಗೆ ನೊಂದು, ನಾನು ಸತ್ಯವಂತನಾಗಿದ್ದರೆ, ನಾನು ಧೀರನಾಗಿದ್ದರೆ, ನಾನು ಧೀರನಾಗಿದ್ದರೆ,ಸೂರ್ಯನಿಗೆ ಮೊಮ್ಮೊಗನಾಗಿದ್ದರೆ, ನನ್ನತಂದೆಯ ಮಗನೇ ಆಗಿದ್ದರೆ, ರಾಜನು ಜೀವಿಸಲಿ ಎನ್ನತ್ತಾ, ವೃಷಕೇತು, ಶತ್ರು ಮಾಡುವ ಕಾರ್ಯವನ್ನು ಬಿಟ್ಟು ಆ ರಾಜನ, ಬಳಲಿಕೆಗೆ, ಉಚಿತವಾದ ಉಪಚಾರದಿಂದ ಯುದ್ಧದ ಆಯಾಸವು ಹೋಗುವಂತೆ ಸಂತೈಸುತಿರಲು ಆ ರಾಜನು, ಮೈಮುರಿದನು= ಎಚ್ಚರಗೊಂಡನು.

(ಪದ್ಯ - ೪೮),

ಪದ್ಯ - ೪೯

[ಸಂಪಾದಿಸಿ]

ಅರಸ ಕೇಳಾ ಯೌವನಾಶ್ವನಿಂತಾಗ ಮೈ |
ಮುರಿದು ಕಣ್ದೆರೆವನಿತರೊಳಗಾತನರಿಯದಂ |
ತಿರೆ ಕರ್ಣಸಂಭವಂ ಮುನ್ನ ತಾನಿರ್ದ ಪ್ರದೇಶಕೈತಂದು ನಿಂದು ||
ಕರದ ಕಾರ್ಮುಕವನೊದರಿಸಿ ದಿವ್ಯಬಾಣಮಂ |
ತಿರುಪುತಾರ್ದಿಸುವ ತೆರದಿಂ ಬರಿದೆ ಮುಳಿಸಿನು |
ಬ್ಬರಮಂ ನೆಗಳ್ಚಿ ತನ್ನಾಳ್ತನದ ಬಿಂಕಮಂ ಕಾಣಿಸಿದನೇವೇಳ್ವೆನು ||49||

ಪದವಿಭಾಗ-ಅರ್ಥ:
ಅರಸ ಕೇಳಾ-:ಅರಸನೇ ಕೇಳು ಆ ಯೌವನಾಶ್ವನು ಇಂತು= ಈ ರೀತಿಯಲ್ಲಿ ಆಗ ಮೈಮುರಿದು ಕಣ್ದೆರೆವ= ಕಣ್ಣು ತೆರೆಯುವ ಅನಿತರೊಳಗೆ= ಅಷ್ಟರಲ್ಲಿ, ಆತನು ಅರಿಯದಂತೆ= ತಿಳಿಯದಂತೆ ಇರೆ= ಇರಲು, ಕರ್ಣಸಂಭವಂ= ವೃಷಕೇತು, ಮುನ್ನ ತಾನು ಇರ್ದ= ಮೊದಲು ತಾನು ಇದ್ದ, ಪ್ರದೇಶಕೆ ಐತಂದು= ಬಂದು ನಿಂದು= ನಿಂತುಕೊಂಡು, ಕರದ ಕಾರ್ಮುಕವನು ಒದರಿಸಿ= ಕೈಯಲ್ಲಿದ್ದ ಬಿಲ್ಲನ್ನು ಠೇಂಕಾರ ಮಾಡಿ, ದಿವ್ಯಬಾಣಮಂ ತಿರುಪುತ= ದಿವ್ಯವಾದ ಬಾಣವನ್ನು ತಿರಗಿಸುತ್ತಾ, ಆರ್ದಿಸುವ= ಘರ್ಜಿಸುವ ತೆರದಿಂ= ರೀತಿಯಲ್ಲಿ, ಬರಿದೆ ಮುಳಿಸಿನ= ಸುಳ್ಳೇ ಸಿಟ್ಟಿನ ಉಬ್ಬರಮಂ= ಆವೇಶವನ್ನು ನೆಗಳ್ಚಿ= ಮಾಡಿ, ತನ್ನ ಆಳ್ತನದ= ಶೌರ್ಯದ ಬಿಂಕಮಂ= ಗಾಂಭೀರ್ಯವನ್ನು ಕಾಣಿಸಿದನು= ಪ್ರದರ್ಶಿಸಿದನು; ಏವೇಳ್ವೆನು= ಏನೆಂದು ಹೇಳಲಿ?
  • ತಾತ್ಪರ್ಯ :ಅರಸನೇ ಕೇಳು ಆ ಯೌವನಾಶ್ವನು ಈ ರೀತಿಯಲ್ಲಿ ಆಗ ಮೈಮುರಿದು ಕಣ್ಣು ತೆರೆಯುವ ಅಷ್ಟರಲ್ಲಿ, ಆತನು ತಿಳಿಯದಂತೆ ಇರಲು, ವೃಷಕೇತು, ಮೊದಲು ತಾನು ಇದ್ದ, ಪ್ರದೇಶಕ್ಕೆ ಬಂದು ನಿಂತುಕೊಂಡು, ಕೈಯಲ್ಲಿದ್ದ ಬಿಲ್ಲನ್ನು ಠೇಂಕಾರ ಮಾಡಿ, ದಿವ್ಯವಾದ ಬಾಣವನ್ನು ತಿರಗಿಸುತ್ತಾ, ಘರ್ಜಿಸುವ ರೀತಿಯಲ್ಲಿ, ಸುಳ್ಳೇ ಸಿಟ್ಟಿನ ಆವೇಶವನ್ನು ತೋರಿಸುತ್ತಾ, ಶೌರ್ಯದ ಗಾಂಭೀರ್ಯವನ್ನು ಪ್ರದರ್ಶಿಸಿದನು. ಏನೆಂದು ಹೇಳಲಿ?

(ಪದ್ಯ - ೪೯),

ಪದ್ಯ - ೫೦

[ಸಂಪಾದಿಸಿ]

ಕೂಡೆ ಕಣ್ದೆರೆದೆದ್ದು ಚೇತರಿಸಿ ದೆಸೆಗಳಂ |
ನೋಡಿ ತನ್ನವರೊರ್ವರಂ ಕಾಣದಿದಿರೆ ಕೈ |
ಮಾಡದೆ ವೃಥಾಟೋಪಮಂ ನೆಗಳ್ಚುವ ವಿರೋಧಿಯ ವಿಕ್ರಮವನೆ ಕಂಡು ||
ಮೂಡಿದ ವಿರಕ್ತಿಯಿಂ ನಾಚಿ ಮನದೊಳ್ ಪಂತ |
ಪಾಡಿವನೊಳಿನ್ನು ಸಲ್ಲದು ತನಗೆ ಕಾರುಣ್ಯ |
ಕೀಡಾದ ಬಳಿಕದೇತಕೆ ಸಮರವೆನುತವಂ ಕರ್ಣಜಂಗಿಂತೆಂದನು ||50||

ಪದವಿಭಾಗ-ಅರ್ಥ:
ರಾಜನು,ಕೂಡೆ ಕಣ್ದೆರೆದು= ಸ್ವಲ್ಪದರಲ್ಲಿ ಕಣ್ಣುಬಿಟ್ಟು, ಎದ್ದು ಚೇತರಿಸಿ ದೆಸೆಗಳಂ= ಎದ್ದು ಚೇತರಿಸಿಕೊಂಡು ನೋಡಿ= ಸುತ್ತಲೂ ನೋಡಿದಾಗ ತನ್ನವರು ಓರ್ವರಂ= ಒಬ್ಬರನ್ನೂ ಕಾಣದೆ ಇದಿರೆ= ಎದುರಿನಲ್ಲಿ, ಕೈಮಾಡದೆ= ತನ್ನ ಮೇಲೆ ಪ್ರಹಾರಮಾಡದೆ, ವೃಥಾಟೋಪಮಂ ಸುಮ್ಮನೆ ಆಟೋಪವನ್ನು, ನೆಗಳ್ಚುವ= ನಟಿಸುತ್ತಾ ಇರುವ ವಿರೋಧಿಯ= ಶತ್ರುವಿನ ವಿಕ್ರಮವನೆ= ಪರಾಕ್ರಮವನ್ನು ಕಂಡು, ಮೂಡಿದ=ತನ್ನಲ್ಲಿ ಉಂಟಾದ ವಿರಕ್ತಿಯಿಂ= ಯುದ್ಧದ ಅನಾಸ್ಥೆಯನ್ನು ಕಂಡು, ನಾಚಿ= ನಾಚಿಕೆ ಪಟ್ಟು ಮನದೊಳ್= ಮನಸ್ಸಿನಲ್ಲಿ ಪಂತಪಾಡಿವನೊಳಿನ್ನು= ಇನೊಳು ಇನ್ನು ಯುದ್ಧಮಾಡುವುದು ಸಲ್ಲದು= ಸರಿಯಲ್ಲ. ತನಗೆ ಕಾರುಣ್ಯಕೀಡಾದ= ತಾನು ಅವನ ಕರುಣೆಗೆ ಒಳಪಟ್ಟ ಬಳಿಕ, ಅದೇತಕೆ= ಏಕೆ ಸುಮ್ಮನೆ ಸಮರವು ಎನುತ ಅವಂ= ಅವನು ಕರ್ಣಜಂಗೆ ಇಂತೆಂದನು= ಹೀಗೆ ಹೇಳಿದನು.
  • ತಾತ್ಪರ್ಯ :ರಾಜನು, ಸ್ವಲ್ಪದರಲ್ಲಿ ಕಣ್ಣುಬಿಟ್ಟು, ಎದ್ದು ಚೇತರಿಸಿಕೊಂಡು ಸುತ್ತಲೂ ನೋಡಿದಾಗ ತನ್ನವರು ಒಬ್ಬರನ್ನೂ ಕಾಣದೆ ಎದುರಿನಲ್ಲಿ, ತನ್ನ ಮೇಲೆ ಪ್ರಹಾರಮಾಡದೆ, ಸುಮ್ಮನೆ ಆಟೋಪವನ್ನು ನಟಿಸುತ್ತಾ ಇರುವ ಶತ್ರುವಿನ ಪರಾಕ್ರಮವನ್ನು ಕಂಡು,ತನ್ನಲ್ಲಿ ಉಂಟಾದ ಯುದ್ಧದ ಅನಾಸ್ಥೆಯನ್ನು ಕಂಡು, ನಾಚಿಕೆ ಪಟ್ಟು ಮನಸ್ಸಿನಲ್ಲಿ ಇವನ ಜೊತೆ ಇನ್ನು ಯುದ್ಧಮಾಡುವುದು ಸರಿಯಲ್ಲ. ತಾನು ಅವನ ಕರುಣೆಗೆ ಒಳಪಟ್ಟ ಬಳಿಕ, ತನಗೆ ಏಕೆ ಸುಮ್ಮನೆ ಸಮರವು ಎನ್ನುತ್ತಾ ಅವನು ಕರ್ಣಜಮಿಗೆ ಹೀಗೆ ಹೇಳಿದನು.

(ಪದ್ಯ - ೫೦),

ಪದ್ಯ - ೫೧

[ಸಂಪಾದಿಸಿ]

ಮೂಲೋಕದೊಳ್ ತನಗೆ ಸಮರಾದ ಮೇದಿನೀ ||
ಪಾಲರಂ ಸುಭಟರಂ ಕಾಣೆನೆಂದಾನಿನಿತು |
ಕಾಲಮುಂ ಬೆರೆತಿರ್ದೆನೆನ್ನುವಂ ಗೆಲ್ದು ನೀನತಿಬಲನೆನಿಸಿಕೊಂಡೆಲಾ ||
ಬಾಲ ನೀನಾರವಂ ನಿನ್ನ ಪೇಸರೇನಿಳೆಗೆ |
ಮೇಲೆನಿಸುವೀ ಹಯಂ ನಿನಗದೇತಕೆ ನಿನ್ನ |
ಶೀಲಕಾಂ ಮಾರುವೋದೆಂ ಕಾದಲೊಲ್ಲೆನಿನ್ನುಸಿರೆಂದೊಡೆಂತೆಂದನು ||51||

ಪದವಿಭಾಗ-ಅರ್ಥ:
ಮೂಲೋಕದೊಳ್= ಮೂರುಲೋಕದಲ್ಲಿ ತನಗೆ ಸಮರಾದ ಮೇದಿನೀಪಾಲರಂ ಸುಭಟರಂ= ರಾಜರನ್ನಾಗಲಿ, ಶೂರರನ್ನಾಗಲಿ ಕಾಣೆನೆಂದಾನಿನಿತು-: ಕಾಣೆನು ಎಂದು ಆನು= ನಾನು ಇನಿತು= ಇಷ್ಟು ಕಾಲಮುಂ=ಕಾಲ ಬೆರೆತಿರ್ದೆನು= ಗರ್ವಪಡುತ್ತಿದ್ದೆನು. ಎನ್ನುವಂ= ನನ್ನನ್ನು ಗೆಲ್ದು= ಗೆದ್ದು ನೀನತಿಬಲನೆನಿಸಿಕೊಂಡೆಲಾ= ನೀನು ಅತಿಬಲನು ಎನಿಸಿಕೊಂಡೆಲಾ= ನಿಸಿಕೊಂಡೆಯಲ್ಲಾ; ಬಾಲ= ಬಾಲಕನೇ ನೀನಾರವಂ= ನೀನು ಯಾರ ಕಡೆಯವನು? ನಿನ್ನ ಪೇಸರೇನ್ ಇಳೆಗೆ= ನಿನ್ನ ಹೆಸರೇನು? ಭೂಮಿಯಲ್ಲಿ ಮೇಲೆನಿಸುವೀ= ಶ್ರೇಷ್ಟವೆನಿಸಿರುವ ಹಯಂ= ಕುದುರೆಯು ನಿನಗದೇತಕೆ= ನಿನಗೆ ಅದು ಏತಕೆ? ನಿನ್ನ ಶೀಲಕಾಂ= ಸಜ್ಜನಿಕೆಯ ನಡತೆಗೆ ಮಾರುವೋದೆಂ= ಮಾರುಹೋದೆನು. ಕಾದಲೊಲ್ಲೆನು ಇನ್ನು ಉಸಿರು ಎಂದೊಡೆ ಇಂತು ಎಂದನು= ಇನ್ನು ಯುದ್ಧವನ್ನು ಮಡುವುದಿಲ್ಲ, ನಿನ್ನವಿಚಾರ ಹೇಳು ಎಂದಾಗ ವೃಷಕೇತು ಹೀಗೆ ಹೇಳಿದನು.
  • ತಾತ್ಪರ್ಯ : ಮೂರುಲೋಕದಲ್ಲಿ ತನಗೆ ಸಮರಾದ ರಾಜರನ್ನಾಗಲಿ, ಶೂರರನ್ನಾಗಲಿ ಕಾಣೆನು ಎಂದು ನಾನು ಇಷ್ಟು ಕಾಲವೂ ಗರ್ವಪಡುತ್ತಿದ್ದೆನು. ಹೀಗಿರುವ ಎನ್ನುವ ನನ್ನನ್ನು ಗೆದ್ದು ನೀನು ಅತಿಬಲನು ಎನಿಸಿಕೊಂಡೆಯಲ್ಲಾ; ಬಾಲಕನೇ ನೀನು ಯಾರ ಕಡೆಯವನು? ನಿನ್ನ ಹೆಸರೇನು? ಭೂಮಿಯಲ್ಲಿ ಶ್ರೇಷ್ಟವೆನಿಸಿರುವ ಈ ಕುದುರೆಯು ನಿನಗೆ ಏತಕ್ಕೆ? ನಿನ್ನ ಸಜ್ಜನಿಕೆಯ ನಡತೆಗೆ ಮಾರುಹೋದೆನು. ಇನ್ನು ಯುದ್ಧವನ್ನು ಮಡುವುದಿಲ್ಲ, ನಿನ್ನ ವಿಚಾರ ಹೇಳು ಎಂದಾಗ ವೃಷಕೇತು ಹೀಗೆ ಹೇಳಿದನು.

(ಪದ್ಯ - ೫೧),

ಪದ್ಯ - ೫೨

[ಸಂಪಾದಿಸಿ]

ಆದೊಡೀ ಜಗಕೆ ಲೋಚನನೆನಿಸಿ ನಭದೊಳೆಸೆ |
ವಾದಿತ್ಯನಿಂದೊಗೆದ ಕರ್ಣನಂ ಕೇಳ್ದರಿವೆ |
ಯಾದೊಡಾತನಸುತಂ ಪೆಸರೆನಗೆ ವೃಷಕೇತುವೆಂದು ನರಲೀಲೆಗಾಗಿ ||
ಯಾದವರ್ಗರಸಾದ ಕೃಷ್ಣಂ ಭರತಕುಲದ |
ಮೇದಿನೀಶ್ವರ ಯುಧಿಷ್ಠರನಿಂ ಮಖಂಗೈಸ |
ಲೀ ದಿವ್ಯಹಯಕೆ ಭೀಮನಟ್ಟಲವನೊಡನೆ ಬಂದೆನಿದು ಹದನೆಂದನು ||52||

ಪದವಿಭಾಗ-ಅರ್ಥ:
ಆದೊಡೀ-:ಆದೊಡೆ ಈ= ಹಾಗಿದ್ದರೆ ಕೇಳು, ಈ ಜಗಕೆ= ಜಗತ್ತಿಗೆ ಲೋಚನನೆನಿಸಿ= ಕಣ್ಣು ಎನಿಸಿರುವ, ನಭದೊಳು ಎಸೆವ ಆದಿತ್ಯನಿಂದ ಒಗೆದ=ಆಕಾಸದಲ್ಲಿ ತೋರುವ ಆದಿತ್ಯನಿಂದ ಜನಿಸಿದ ಕರ್ಣನಂ= ಕರ್ಣನ ಹೆಸರನ್ನು ಕೇಳ್ದು ಅರಿವೆಯಾದೊಡೆ= ಕೇಳಿ ತಿಳಿದಿದ್ದರೆ ಆತನಸುತಂ= ಅವನ ಮಗ ನಾನು. ಪೆಸರೆನಗೆ= ಹೆಸರು ಎನಗೆ= ನನಗೆ ವೃಷಕೇತುವೆಂದು; ನರಲೀಲೆಗಾಗಿ ಯಾದವರ್ಗೆ=ಯಾದವರಿಗೆ ಅರಸಾದ ಕೃಷ್ಣಂ= ಕೃಷ್ಣನು ಭೂಲೋಕದ ಲೀಲೆಗಾಗಿ ಭರತಕುಲದ ಮೇದಿನೀಶ್ವರ= ರಾಜನಾದ ಯುಧಿಷ್ಠರನಿಂ= ಯುಧಿಷ್ಟಿರನಿಂದ ಮಖಂ= ಯಜ್ಞವನ್ನು ಗೈಸಲೀ=ಮಾಡಿಸಲಯ ಈ ದಿವ್ಯಹಯಕೆ= ದಿವ್ಯ ಕುದುರೆಯನ್ನು ತರಲು, ಭೀಮನಟ್ಟಲು= ಭೀಮನನ್ನು ಕಳಿಸಲು ಅವನೊಡನೆ ಬಂದೆನು ಇದು ಹದನು= ವಿಚಾರ ಎಂದನು.
  • ತಾತ್ಪರ್ಯ : ಹಾಗಿದ್ದರೆ ಕೇಳು, ಈ ಜಗತ್ತಿಗೆ ಕಣ್ಣು ಎನಿಸಿರುವ, ಆಕಾಶದಲ್ಲಿ ತೋರುವ ಆದಿತ್ಯನಿಂದ ಜನಿಸಿದ ಕರ್ಣನ ಹೆಸರನ್ನು ಕೇಳಿ ತಿಳಿದಿದ್ದರೆ ಅವನ ಮಗ ನಾನು.ಹೆಸರು ನನಗೆ ವೃಷಕೇತುವೆಂದು; ಯಾದವರಿಗೆ ಅರಸಾದ ಕೃಷ್ಣನು ಭೂಲೋಕದ ಲೀಲೆಗಾಗಿ ಭರತಕುಲದ ರಾಜನಾದ ಯುಧಿಷ್ಟಿರನಿಂದ ಯಜ್ಞವನ್ನು ಮಾಡಿಸಲಯ ಈ ದಿವ್ಯವಾದ ಕುದುರೆಯನ್ನು ತರಲು,ಭೀಮನನ್ನು ಕಳುಹಿಸಲು, ಅವನೊಡನೆ ಬಂದಿರುವೆನು. ಇದು ವಿಚಾರ ಎಂದನು.

(ಪದ್ಯ - ೫೨),

ಪದ್ಯ - ೫೩

[ಸಂಪಾದಿಸಿ]

ಎಂದೊಡೆಲೆ ಕುವರ ನೀನಿನ್ನೆಗಂ ತನ್ನೊಳಿಂ |
ತೆಂದುದಿಲ್ಲಕಟ ಧರ್ಮದ ರೂಪು ತಾನೀತ |
ನೆಂದೆಂಬರಾ ಯುಧಿಷ್ಠಿರಮಹೀಪತಿಯನವನಿಂ ಮಖಂಗೈಸಿದಪನೆ ||
ಇಂದಿರಾವಲ್ಲಭನ ಪದಕೆ ನಮ್ಮೀಹಯವ |
ನೊಂದನೊಯ್ವರೆ ತನ್ನ ಸರ್ವಸ್ವಮಂ ತಾನೆ |
ತಂದು ಹರಿಪದಕರ್ಪಿಸುವೆನೆಲ್ಲಿ ಭೀಮನಂ ತೋರೆಂದನಾ ಭೂಪನು ||53||

ಪದವಿಭಾಗ-ಅರ್ಥ:
ಎಂದೊಡೆಲೆ-:ಎಂದೊಡೆ= ವೃಷಕೇತು ಹೀಗೆ ಹೇಳಲು, ಎಲೆ ಕುವರ= ಕುಮಾರ ನೀನಿನ್ನೆಗಂ= ನೀನು ಇನ್ನೆಗಂ = ಇದುವರೆಗೂ ತನ್ನೊಳಿಂತೆಂದುದಿಲ್ಲಕಟ-:ಎನ್ನೊಳು ಇಂತು = ಹೀಗೆ ಎಂದುದಿಲ್ಲ = ಹೇಳಿದುದಿಲ್ಲ; ಧರ್ಮದ ರೂಪು ತಾನೀತನೆಂದೆಂಬರಾ-:ತಾನು ಈತನು ಎಂದು ಎಂಬರು ಯುಧಿಷ್ಠಿರಮಹೀಪತಿಯನು= ಯುಧಿಷ್ಠಿರಮಹೀಪತಿಯನ್ನು ಈತನು ಧರ್ಮದ ರೂಪು ಎನ್ನುವರು, ಅವನಿಂ= ಅವನಿಂದ ಮಖಂಗೈಸಿದಪನೆ= ಯಜ್ಞವನ್ನು ಮಾಡಿಸುವನೇ ಕೃಷ್ಣನು? ಆ ಇಂದಿರಾವಲ್ಲಭನ= ಲಕ್ಷ್ಮೀಪತಿಯ ಪದಕೆ= ಪಾದಕ್ಕೆ ನಮ್ಮೀಹಯವನೊಂದನೊಯ್ವರೆ= ನಮ್ಮ ಈ ಕುದುರಯನ್ನು ಒಂದನ್ನೇ ಒಯ್ವರೇ= ತೆಗೆದುಕೊಂಡು ಹೋಗುವರೇ? ತನ್ನ ಸರ್ವಸ್ವಮಂ ತಾನೆ ತಂದು= ತನ್ನ ಸರ್ವಸ್ವವನ್ನೂ ಹರಿಪದಕೆ= ಹರಿಯ ಪಾದಕ್ಕೆ ಅರ್ಪಿಸುವೆನು. ಎಲ್ಲಿ ಭೀಮನಂ= ಭೀಮನನ್ನು ತೋರು= ತೊರಿಸು ಎಂದನು ಆ ಭೂಪನು=ರಾಜನು.
  • ತಾತ್ಪರ್ಯ :ವೃಷಕೇತು ಹೀಗೆ ಹೇಳಲು, ಎಲೆ ಕುಮಾರ ನೀನು ಇದುವರೆಗೂ ಹೀಗೆ ಹೇಳಿದುದಿಲ್ಲ; ಧರ್ಮದ ರೂಪು ಯುಧಿಷ್ಠಿರಮಹೀಪತಿಯನ್ನು ಈತನು ಧರ್ಮದ ರೂಪು ಎನ್ನುವರು, ಅವನಿಂದ ಯಜ್ಞವನ್ನು ಮಾಡಿಸುವನೇ ಕೃಷ್ಣನು? ಆ ಲಕ್ಷ್ಮೀಪತಿಯ ಪಾದಕ್ಕೆ ನಮ್ಮ ಈ ಕುದುರಯನ್ನು ಒಂದನ್ನೇ ತೆಗೆದುಕೊಂಡು ಹೋಗುವರೇ? ತನ್ನ ಸರ್ವಸ್ವವನ್ನೂ ಹರಿಯ ಪಾದಕ್ಕೆ ಅರ್ಪಿಸುವೆನು. ಎಲ್ಲಿ ಭೀಮನನ್ನು ತೋರಿಸು, ಎಂದನು ಆ ರಾಜನು.

(ಪದ್ಯ - ೫೩),

ಪದ್ಯ - ೫೪

[ಸಂಪಾದಿಸಿ]

ಎನಲಚ್ಯುತನ ಪದಕೆ ಸರ್ವಸ್ವಮೊಪ್ಪಿಸುವ |
ಮನಮುಳ್ಳನಾವನಾತಂಗೆ ಪಾಂಡವರೊಳೆರ |
ವಿನಿತಿಲ್ಲಮಾ ಪಾರ್ಥಿವರ ಸಖ್ಯಮಾವಂಗೆ ದೊರೆವುದಾತಂಗೆ ಹರಿಯ ||
ಮುನಿಸಿಲ್ಲಮವರಿಂದೆ ಭೀಮನಂ ಕಾಣ್ಬುದೀ |
ಗನುನಯಂ ನಿನಗೆಂದು ಕರ್ಣಜಂ ನುಡಿದೊಡಾ |
ಜನಪನುತ್ಸವದೊಳಳವಡಿಸಿದಂ ತನ್ನ ಮಣಿರಥವನಿರ್ವರುಮೈದಲು ||54||
|

ಪದವಿಭಾಗ-ಅರ್ಥ:
ಎನಲು=ಎನ್ನಲು, ಅಚ್ಯುತನ ಪದಕೆ ಸರ್ವಸ್ವಮಂ ಒಪ್ಪಿಸುವ ಮನಂ ಉಳ್ಳನು= ಅfಯನ ಪಾದಕ್ಕೆ ಸರ್ವಸ್ವವನ್ನು ಒಪ್ಪಿಸುವ ಮನಸ್ಸು ಉಳ್ಳವನು, ಆವನು= ಯಾವನೋ ಆತಂಗೆ= ಅವನಿಗೆ ಪಾಂಡವರೊಳು ಎರವು= ಬೇಧವು ಇನಿತಿಲ್ಲಂ= ವಿರೋಧವು ಸ್ವಲ್ಪವೂ ಇಲ್ಲ. ಆ ಪಾರ್ಥಿವರ= ಆ ದೊರೆಗಳ ಸಖ್ಯಮು= ಸ್ನೇಹವು ಆವಂಗೆ= ಯಾರಿಗೆ ದೊರೆವುದು ಆತಂಗೆ= ದೊರೆವುದೋ= ದೊರಕುವುದೋ ಅವನಿಗೆ, ಹರಿಯ ಮುನಿಸಿಲ್ಲಂ ಅವರಿಂದೆ= ಕೃಷ್ಣನ ಅಪ್ರಸನ್ನತೆ ಇಲ್ಲದಿರುವುದರಿಂದ ಭೀಮನಂ= ಭೀಮನನ್ನು ಕಾಣ್ಬುದು= ಕಾಣುವುದು ಈಗ ಅನುನಯಂ= ಉಚಿತವು, ನಿನಗೆಂದು= ನಿನಗೆ ಎಂದು ಕರ್ಣಜಂ= ವೃಷಕೇತು ನುಡಿದೊಡೆ= ಹೇಳೀದಾಗ ಆ ಜನಪನು= ರಾಜನು ಉತ್ಸವದೊಳು= ಉತ್ಸಾಹದಿಂದ ಅಳವಡಿಸಿದಂ= ಸಿದ್ಧಪಡಿಸಿದನು, ತನ್ನ ಮಣಿರಥವನು= ಮಣಿರಥವನ್ನು ಇರ್ವರುಂ= ಇಬ್ಬರೂ ಐದಲು= ಬೀಮನ ಬಳಿಗೆ ಬರಲು.
  • ತಾತ್ಪರ್ಯ : ಎಎನ್ನಲು, ಅಚ್ಯುತನ ಪಾದಕ್ಕೆ ಸರ್ವಸ್ವವನ್ನು ಒಪ್ಪಿಸುವ ಮನಸ್ಸು ಉಳ್ಳವನು ಯಾವನೋ ಅವನಿಗೆ ಪಾಂಡವರೊಳು ವಿರೋಧವು ಸ್ವಲ್ಪವೂ ಇಲ್ಲ. ಆ ದೊರೆಗಳ ಸ್ನೇಹವು ಯಾರಿಗೆ ದೊರಕುವುದೋ ಅವನಿಗೆ, ಕೃಷ್ಣನ ಅಪ್ರಸನ್ನತೆ ಇಲ್ಲದಿರುವುದರಿಂದ ಭೀಮನನ್ನು ಕಾಣುವುದು ಈಗ ನಿನಗೆ ಉಚಿತವು ಎಂದು ವೃಷಕೇತು ಹೇಳೀದಾಗ, ಆ ರಾಜನು ಉತ್ಸಾಹದಿಂದ, ಇಬ್ಬರೂ ಬೀಮನ ಬಳಿಗೆ ಬರಲು ಮಣಿರಥವನ್ನು ಸಿದ್ಧಪಡಿಸಿದನು,

(ಪದ್ಯ - ೫೪),

ಪದ್ಯ - ೫೫

[ಸಂಪಾದಿಸಿ]

ಮಾನವಾಧೀಶ ಕೇಳ್ ಬಳಿಕ ವೃಷಕೇತು ಸು |
ಮ್ಮಾನದಿಂದಾ ಯೌವನಾಶ್ವಭೂಪತಿಗೆ ಪವ |
ಮಾನಸುತನಂ ಕಾಣಿಸುವೆನೆಂಬ ತವಕದಿಂದಾತನ ವರೂಥದೊಳಗೆ ||
ಮಾನದಿಂದಡರ್ದವಂವೆರಸಿ ನಡೆತರುತಿರೆ ವಿ |
ಮಾನದಿಂ ನೋಡುವನಿಮಿಷನಿಕರಮೀತನ ಸ |
ಮಾನದವರಿಲ್ಲೆಂದು ಕೊಂಡಾಡುತಾಗಸದೊಳಲರ ಸರಿಯಂ ಕರೆದರು ||55||
|

ಪದವಿಭಾಗ-ಅರ್ಥ:
ಮಾನವಾಧೀಶ=ರಾಜನೇ ಕೇಳ್= ಕೇಳು ಬಳಿಕ ವೃಷಕೇತು ಸುಮ್ಮಾನದಿಂದ= ಸಂತೋಷದಿಂದ, ಆ ಯೌವನಾಶ್ವಭೂಪತಿಗೆ ಪವಮಾನಸುತನಂ= ಭೀಮನನ್ನು ಕಾಣಿಸುವೆನು= ಭೇಟಿಮಾಡಿಸುವೆನು ಎಂಬ ತವಕದಿಂದ ಆತನ ವರೂಥದೊಳಗೆ= ರಾಜನ ರಥದೊಳಗೆ ಮಾನದಿಂದ= ಗವರವ ಪೂರ್ವಕವಾಗಿ ಅಡರ್ದು= ಹತ್ತಿ ಅವಂವೆರಸಿ= ಅವನ ಗೊತೆಯಲ್ಲಿ ನಡೆತರುತಿರೆ= ಬರುತ್ತಿರಲು, ವಿಮಾನದಿಂ= ವಿಮಾನದಲ್ಲಿ ನೋಡುವ ಅನಿಮಿಷ ನಿಕರಂದೇವತೆಗಳ ಗುಂಪು ಈತನ ಸಮಾನದವರಿಲ್ಲ ಎಂದು ಕೊಂಡಾಡುತ= ಕೊಂಡಾಡುತ್ತಾ ಆಗಸದೊಳು= ಆಕಾಶದಲ್ಲಿ ಅಲರ= ಹೂವಿನ ಸರಿಯಂ=ಮಳೆಯನ್ನು ಕರೆದರು.
  • ತಾತ್ಪರ್ಯ :ರಾಜನೇ, ಕೇಳು ಬಳಿಕ ವೃಷಕೇತು ಸಂತೋಷದಿಂದ, ಆ ಯೌವನಾಶ್ವಭೂಪತಿಗೆ ಭೀಮನನ್ನು ಭೇಟಿಮಾಡಿಸುವೆನು ಎಂಬ ತವಕದಿಂದ ಆ ರಾಜನ ರಥದೊಳಗೆ ಗೌರವ ಪೂರ್ವಕವಾಗಿ ಹತ್ತಿ ಅವನ ಜೊತೆಯಲ್ಲಿ ಬರುತ್ತಿರಲು, ವಿಮಾನದಲ್ಲಿ ನೋಡುವ ದೇವತೆಗಳ ಸಮೂಹ ಈತನ ಸಮಾನದವರಿಲ್ಲ ಎಂದು ಕೊಂಡಾಡುತ್ತಾ ಆಕಾಶದಲ್ಲಿ ಹೂವಿನಮಳೆಯನ್ನು ಕರೆದರು.

(ಪದ್ಯ - ೫೫),

ಪದ್ಯ - ೫೬

[ಸಂಪಾದಿಸಿ]

ಪದ್ಯ - ೫೬[ಸಂಪಾದಿಸಿ]
ಅನ್ನೆಗಂ ಭದ್ರಾವತೀಶ್ವರನ ಸುತನ ಸೈ |
ನ್ಯನ್ನಡೆದು ಬಂದಾ ವೃಕೋದರನ ಮುತ್ತಿದೊಡ |
ವನ್ನಿಜಗದಾದಂಡಮಂ ಕೊಂಡು ದಿಂಡುಗೆಡಪಿದೊಡಾ ನೃಪಾಲಸೂನು ||
ತನ್ನ ಸಾಹಸದೊಳನಿಲಜನ ಕೋಪಾಟೋಪ |
ಮನ್ನಿಲಿಸಿ ಕಾದುತಿರಲಾ ಸಮಯಕಿವರೊಂದೆ |
ರನ್ನದೇರೊಳಗಿರ್ವರುಂ ಬರುತಿರಲ್ ಕಂಡು ಬೆರಗಾದರವರತ್ತಲು ||56||

ಪದವಿಭಾಗ-ಅರ್ಥ:
ಅನ್ನೆಗಂ= ಆಸಮಯದಲ್ಲಿ ಭದ್ರಾವತೀಶ್ವರನ ಸುತನಯವ‍ನಾಸ್ವನ ಮಗ ಸುವೇಗನ ಸೈನ್ಯ ನೆಡೆದು ಬಂದು ಆ ವೃಕೋದರನ= ಭೀಮನನ್ನು ಮುತ್ತಿದೊಡೆ= ಮುತ್ತಿದಾಗ, ಅವನು ನಿಜ= ತನ್ನ ಗದಾದಂಡಮಂ= ಗದೆಯನ್ನು ಕೊಂಡು= ತೆಗೆದುಕೊಂಡು, ದಿಂಡುಗೆಡಪಿದೊಡೆ= ಅವರ ಶಕ್ತಿಯನ್ನು ಕೆಡುಪಿದೊಡೆ= ಇಲ್ಲದಂತೆ ಮಾಡಿದಾಗ ಆ ನೃಪಾಲಸೂನು= ಸುವೇಗನು ತನ್ನ ಸಾಹಸದೊಳ್= ತನ್ನ ಸಾಹಸದಿಂದ ಅನಿಲಜನ= ಭೀಮನ ಕೋಪಾಟೋಪಮಂ ನಿಲಿಸಿ= ತಡೆದು ಕಾದುತಿರಲು= ಯುದ್ಧಮಾಡುತ್ತಿರಲು, ಆ ಸಮಯಕೆ= ಅದೇ ಸಮಯದಲ್ಲಿ ಇವರು ಒಂದೆ ರನ್ನದೇರೊಳಗಿರ್ವರುಂ= ರಥದಲ್ಲಿ ಬರುತಿರಲ್=ಇದ್ದುದನ್ನು ಕಂಡು ಬೆರಗಾದರು ಅವರು ಅತ್ತಲು.
  • ತಾತ್ಪರ್ಯ :ಆ ಸಮಯದಲ್ಲಿ ಯೌವ‍ನಾಸ್ವನ ಮಗ ಸುವೇಗನ ಸೈನ್ಯ ನೆಡೆದು ಬಂದು ಆ ಭೀಮನನ್ನು ಮುತ್ತಿದಾಗ, ಅವನು ತನ್ನ ಗದೆಯನ್ನು ತೆಗೆದುಕೊಂಡು, ಅವರನ್ನು ಶಕ್ತಿಹೀನರನ್ನಾಗಿ ಮಾಡಿದಾಗ ಆ ಸುವೇಗನು ತನ್ನ ಸಾಹಸದಿಂದ ಭೀಮನ ತಡೆದು ಯುದ್ಧಮಾಡುತ್ತಿರಲು, ಅದೇ ಸಮಯದಲ್ಲಿ ಅವರು ಅತ್ತಲು ಒಂದೇ ರಥದಲ್ಲಿ ಬರುತ್ತಿದ್ದುದನ್ನು ಇವರು ಕಂಡು ಬೆರಗಾದರು.

(ಪದ್ಯ - ೫೬),

ಪದ್ಯ - ೫೭

[ಸಂಪಾದಿಸಿ]

ಪವಮಾನನಂದನ ಸುವೇಗರನ್ನೋನ್ಯಮಾ |
ಹವದ ಬೇಳಂಬಮಂ ಮರೆದೊಂದೆ ಪೊಂದೇರೊ |
ಳವರಿರ್ವರುಂ ಬರಲ್ ಕಂಡು ವಿಸ್ಮಿತರಾಗಿ ನಿಂದರನಿತರೊಳಿತ್ತಲು ||
ರವಿಸುತನ ಸೂನು ಕಲಿಯೌವನಾಶ್ವಂಗೆ ಪಾಂ |
ಡವರಾಯನನುಜನಂ ತೋರಿಸಿದೊಡಾ ವರೊ |
ಘೌನಿಳಿದು ನಡೆಯುತಾ ಭೂವರಂ ತನ್ನ ತನುಸಂಭವಂಗಿಂತೆಂದನು ||57||

ಪದವಿಭಾಗ-ಅರ್ಥ:
ಪವಮಾನನಂದನ=ಭೀಮ ಸುವೇಗರು ಅನ್ನೋನ್ಯಂ=ಪರಸ್ಪರ ಆಹವದ= ಯುದ್ಧದ ಬೇಳಂಬಮಂ= ಪ್ರಯತ್ನವನ್ನು ಮರೆದು= ಮರೆತು ಒಂದೆ ಪೊಂದೇರೊಳು= ಒಂದೇ ಹೊನ್ನುರಥದಲ್ಲಿ ಅವರಿರ್ವರುಂ=ಅವರಿಬ್ಬರೂ ಬರಲ್ ಕಂಡು= ಬಂದುದನ್ನು ಕಂಡು, ವಿಸ್ಮಿತರಾಗಿ ನಿಂದರು= ಆಶ್ಚರ್ಯದಿಂದ ನಿಂತುಬಿಟ್ಟರು. ಅನಿತರೊಳಿತ್ತಲು= ಅಷ್ಟರಲ್ಲಿ ಇತ್ತ ರವಿಸುತನ ಸೂನು= ವೃಷಕೇತುವು, ಕಲಿಯೌವನಾಶ್ವಂಗೆ= ಶೂರನಾದ ಯೌವನಾಶ್ವಂನಿಗೆ ಪಾಂಡವರಾಯನ ಅನುಜನಂ= ಭೀಮನನ್ನು ತೋರಿಸಿದೊಡೆ= ತೋರಿಸಿದಾಗ ಆ ವರೊಘೌನು ಇಳಿದು ನಡೆಯುತಾ ಭೂವರಂ= ಆ ಶ್ರೇಷ್ಠರಥವನ್ನು ಇಳಿದು, ತನ್ನ ತನುಸಂಭವಂಗೆ= ತನ್ನ ಮಗ ಸುವೇಗನಿಗೆ ಇಂತೆಂದನು= ಹೀಗೆ ಹೇಳಿದನು.
  • ತಾತ್ಪರ್ಯ : ಭೀಮ ಸುವೇಗರು ಪರಸ್ಪರ ಯುದ್ಧದ ಕಾರ್ಯವನ್ನು ಮರೆತು ಒಂದೇ ಹೊನ್ನುರಥದಲ್ಲಿ ಅವರಿಬ್ಬರೂ ಬಂದುದನ್ನು ಕಂಡು,ಆಶ್ಚರ್ಯದಿಂದ ನಿಂತುಬಿಟ್ಟರು. ಅಷ್ಟರಲ್ಲಿ ಇತ್ತ ವೃಷಕೇತುವು, ಶೂರನಾದ ಯೌವನಾಶ್ವಂನಿಗೆ ಭೀಮನನ್ನು ತೋರಿಸಿದಾಗ ಆ ಶ್ರೇಷ್ಠರಥವನ್ನು ಇಳಿದು,ತನ್ನ ಮಗ ಸುವೇಗನಿಗೆ ಹೀಗೆ ಹೇಳಿದನು.

(ಪದ್ಯ - ೫೭),

ಪದ್ಯ - ೫೮

[ಸಂಪಾದಿಸಿ]

ತನಯ ದಿವ್ಯಾಶ್ವಮಂ ಪಿಡಿದರಿವರೆಂಬ ಮನ |
ದನುತಾಪವಂ ಬಿಡು ಸರೋಜಾಂಬಕಂ ಪಾಂಡು |
ಜನಪನಂದನ ಯುಧಿಷ್ಠಿರನರೇಶ್ವರನ ಮಖಕೆಂದು ನಮ್ಮೀ ಕುದುರೆಗೆ ||
ಅನಿಲಸುತನಂ ಕಳುಹಿದೊಡೆ ಬಂದನಾತಂಗೆ |
ವಿನಯದಿಂದೆಮ್ಮ ಸರ್ವಸ್ವಮಂ ಕುಡುವೆವಿ |
ನ್ನುನುವರವದೇಕೆ ನಿಲ್ಲೆನಲವಂ ಶರಧನುವನಿಳುಹಿ ಪಿತನಂ ಸಾರ್ದನು ||58||

ಪದವಿಭಾಗ-ಅರ್ಥ:

ದನುತಾಪವಂ ಬಿಡು= ನಮ್ಮ ದಿವ್ಯ ಅಶ್ವವನ್ನು ಇವರು ಹಿಡಿದರು ಎಂಬ ಕೋಪವನ್ನು ಬಿಡು. ಸರೋಜಾಂಬಕಂ= ಕೃಷ್ಣನು ಪಾಂಡು ಜನಪನಂದನ= ಪಾಂಡುರಾಜನ ಮಗ ಯುಧಿಷ್ಠಿರ ನರೇಶ್ವರನ ಮಖಕೆಂದು= ಯುಧಿಷ್ಟಿರರಾಜನ ಯಜ್ಞಕ್ಕೆಂದು, ನಮ್ಮ ಈ ಕುದುರೆಗೆ ಅನಿಲಸುತನಂ= ಭೀಮನನ್ನು ಕಳುಹಿದೊಡೆ= ಕಳಹಿಸಿದಾಗ ಅವನು ಬಂದನು= ಬಂದಿರುವನು. ಆತಂಗೆ ವಿನಯದಿಂದ ಎಮ್ಮ ಸರ್ವಸ್ವಮಂ ಕುಡುವೆವು= ಅವನಿಗೆ ನಮ್ಮ ಸರ್ವಸ್ವವನ್ನೂ ಕೊಡುವೆವು. ಇನ್ನು ಅನುವರವು ಅದೇಕೆ=ಸಂಶಯವು ಅದೇಕೆ- ಬೇಡ. ನಿಲ್ಲ ಎನಲು ಅವಂ= ನಿಲ್ಲು ಎನಲು ಅವನು, ಶರಧನುವನು ಇಳುಹಿ ಪಿತನಂ ಸಾರ್ದನು= ಬಿಲ್ಲ ಬಾಣಗಳನ್ನು ಕೆಳಗಿಳಿಸಿ ತಂದೆಯ ಹತ್ತಿರ ಹೋದನು.

  • ತಾತ್ಪರ್ಯ : ಮಗನೇ, ನಮ್ಮ ದಿವ್ಯ ಅಶ್ವವನ್ನು ಇವರು ಹಿಡಿದರು ಎಂಬ ಕೋಪವನ್ನು ಬಿಡು. ಕೃಷ್ಣನು ಪಾಂಡುರಾಜನ ಮಗ ಯುಧಿಷ್ಟಿರರಾಜನ ಯಜ್ಞಕ್ಕೆಂದು, ನಮ್ಮ ಈ ಕುದುರೆಗೆ ಭೀಮನನ್ನು ಕಳಹಿಸಿದಾಗ ಅವನು ಬಂದಿರುವನು. ಅವನಿಗೆ ನಮ್ಮ ಸರ್ವಸ್ವವನ್ನೂ ಕೊಡುವೆವು. ಇನ್ನು ಸಂಶಯವು ಅದೇಕೆ- ಬೇಡ.ನಿಲ್ಲು ಎನಲು ಅವನು, ಬಿಲ್ಲ ಬಾಣಗಳನ್ನು ಕೆಳಗಿಳಿಸಿ ತಂದೆಯ ಹತ್ತಿರ ಹೋದನು.

(ಪದ್ಯ - ೫೮),

ಪದ್ಯ - ೫೯

[ಸಂಪಾದಿಸಿ]

ಬಳಿಕ ತನುಜಾತನಂ ಕೂಡಿಕೊಂಡಾ ನೃಪಂ |
ನಳಿನಸುಖಸುತನ ಮಗನೊಡನೆ ಬಂದನಿಲಜನ |
ಬಳಿಸಾರ್ದು ಕಾಲ್ಗೆರಗಲವನೀ ವೃಷಧ್ವಜನ ಮೊಗನೋಡುತಿವರಾರೆನೆ ||
ಎಳನಗೆಯೊಳ್ ಆತನಿವನೀಗಳೀ ಮೇದಿನೀ |
ತಳಕರಸೆನಿಪ ಯೌವನಾಶ್ವನೀತಂಗೆ ಮೈ |
ನೆಳಲೆನಿಪ ಕುವರಂ ಸುವೇಗನೆಂಬವನೀತನೆನುತೆ ಮಣಿದಂ ಪದದೊಳು ||59||

ಪದವಿಭಾಗ-ಅರ್ಥ:
ಬಳಿಕ= ನಂತರ ತನುಜಾತನಂ= ಮಗನನ್ನ ಕೂಡಿಕೊಂಡಾ= ಒಡಗೊಂಡು ನೃಪಂ= ರಾಜನು ನಳಿನಸುಖಸುತನ(ನಳಿನಸಖ= ಸೂರ್ಯ-ಅವನಮಗನ ಮಗ) ವೃಷಕೇತುವಿನೊಡನೆ ಬಂದು, ಬಂದು ಅನಿಲಜನ ಬಳಿಸಾರ್ದು= ಭೀಮನ ಬಳಿಬಂದು ಕಾಲ್ಗೆ ಎರಗಲು=ಕಾಲಿಗೆ ನಮಸ್ಕರಿಸಲು, ಅವನು ಈ ವೃಷಧ್ವಜನ ಮೊಗನೋಡುತ ಇವರು ಆರೆನೆ= ಭೀಮನು ವೃಷಧ್ವಜನ ಮುಖ ನೋಡುತ್ತಾ 'ಇವರು ಯಾರು?' ಎನ್ನಲು; ಎಳನಗೆಯೊಳ್ ಆತನು ಇವನು , ಈಗಳ ಈ ಮೇದಿನೀ ತಳಕೆ ಅರಸು ಎನಿಪ ಯೌವನಾಶ್ವನು= ಮುಗುಳುನಗುತ್ತಾ ಇವನು ಈಗ ಈ ರಾಜ್ಯಕ್ಕೆ ಅರಸನು, ಯೌವನಾಶ್ವನು, ಈತಂಗೆ ಮೈನೆಳಲು ಎನಿಪ ಕುವರಂ ಸುವೇಗನೆಂಬವನು ಈತನು= ಇವನು ಅವನಿಗೆ ಮೈನೆರಳಿನಂತಿರುವ ಮಗ ಸುವೇಗನೆಂಬ ಹೆಸರಿನವನು, ಎನುತೆ= ಎನ್ನುತ್ತಾ ಮಣಿದಂ ಪದದೊಳು= ಕಾಲಿಗೆ ವೃಷಕೇತು ನಮಸ್ಕರಿಸಿದನು.
  • ತಾತ್ಪರ್ಯ : ನಂತರ ಮಗನನ್ನ ಒಡಗೊಂಡು ರಾಜನು (ನಳಿನಸಖ= ಸೂರ್ಯ-ಅವನಮಗನ ಮಗ) ವೃಷಕೇತುವಿನೊಡನೆ ಬಂದು, ಭೀಮನ ಬಳಿಬಂದು ಕಾಲಿಗೆ ನಮಸ್ಕರಿಸಲು, ಅವನು ಈ ವೃಷಧ್ವಜನ ಭೀಮನು ವೃಷಧ್ವಜನ ಮುಖ ನೋಡುತ್ತಾ, 'ಇವರು ಯಾರು?' ಎನ್ನಲು; ಮುಗುಳುನಗುತ್ತಾ ಇವನು ಈಗ ಈ ರಾಜ್ಯಕ್ಕೆ ಅರಸನು, ಯೌವನಾಶ್ವನು, ಈ ಇವನು, ಅವನಿಗೆ ಮೈನೆರಳಿನಂತಿರುವ ಮಗ, ಸುವೇಗನೆಂಬ ಹೆಸರಿನವನು, ಎನ್ನುತ್ತಾ ಭೀಮನ ಕಾಲಿಗೆ ವೃಷಕೇತು ನಮಸ್ಕರಿಸಿದನು.

(ಪದ್ಯ - ೫೯),

ಪದ್ಯ - ೬೦

[ಸಂಪಾದಿಸಿ]

ಇವರಚ್ಯುತಾಂಘ್ರಿ ದರ್ಶನಲಂಪಟ್ಟತ್ವದಿಂ |
ದವನಿಪತಿಕುಲಶಿರೋಮಣಿಯೆನಿಪ ಧರ್ಮಸಂ |
ಭವನಡಿಯನೊಳೈಸಲೆಂದು ನಿನ್ನಂ ಕಾಣಲೋಸುಗಂ ಬಂದರೆಂದು ||
ಪವನಜಂಗಾ ವೃಷಧ್ವಜನೊರೆದೊಡಾತನು |
ತ್ಸವದೊಳಾ ಭೂಪಾಲನಂ ತೆಗೆದು ತಕ್ಕೈಸು |
ತವನ ತನುಜಾತನಂ ಬಿಗಿಯಪ್ಪಲಾ ನೃಪಂ ಬಕವೈರಿಗಿಂತೆಂದನು ||60||

ಪದವಿಭಾಗ-ಅರ್ಥ:
ಇವರು ಅಚ್ಯುತಾಂಘ್ರಿ= ಕೃಷ್ಣನ ಪಾದಗಳ, ದರ್ಶನಲಂಪಟತ್ವದಿಂ= ದರ್ಶನದ ಅತಿ ಬಯಕೆಯಿಂದ, ಅವನಿಪತಿಕುಲಶಿರೋಮಣಿಯೆನಿಪ= ರಾಜರಕುಲಕ್ಕೆ ಭೂಷಣನಾದ ಧರ್ಮಸಂಭವನ ಅಡಿಯನೋಲೈಸಲೆಂದು= ಧರ್ಮಜನ ಪಾದಸೇವೆಮಾಡಲು, ನಿನ್ನಂ ಕಾಣಲೋಸುಗಂ= ನಿನ್ನನ್ನು ಕಾಣಲು ಬಂದರು ಎಂದು ಪವನಜಂಗೆ= ಆ ಭೀಮನಿಗೆ ಆ ವೃಷಧ್ವಜನು ಒರೆದೊಡೆ ಆತನು ಉತ್ಸವದೊಳು=ಹೇಳಲು ಭೀಮನು ಸಂತಸದಿಂದ, ಆ ಭೂಪಾಲನಂ ತೆಗೆದು ತಕ್ಕೈಸುತ= ಅವನು ಆ ರಾಜನನ್ನು ಅಪ್ಪಿಕೊಂಡು ಉಪಚರಿಸುತ್ತಾ, ತನುಜಾತನಂ ಬಿಗಿಯಪ್ಪಲ ಆ= ಅವನ ಮಗನನ್ನೂ ಬಿಗಿದಪ್ಪಿಕೊಳ್ಳಲು, ನೃಪಂ= ರಾಜನು ಬಕವೈರಿಗೆ=ಭೀಮನಿಗೆ ಗಿಂತೆಂದನು= ಹೀಗೆ ಹೇಳಿದನು
  • ತಾತ್ಪರ್ಯ :ಇವರು ಕೃಷ್ಣನ ಪಾದಗಳ ದರ್ಶನದ ಅತಿ ಬಯಕೆಯಿಂದ ರಾಜರಕುಲಕ್ಕೆ ಭೂಷಣನಾದ, ಧರ್ಮಜನ ಪಾದಸೇವೆಮಾಡಲು, ನಿನ್ನನ್ನು ಕಾಣಲು ಬಂದರು ಎಂದು ಆ ಭೀಮನಿಗೆ ವೃಷಧ್ವಜನು ಹೇಳಲು ಭೀಮನು ಸಂತಸದಿಂದ ಆ ರಾಜನನ್ನು ಅಪ್ಪಿಕೊಂಡು ಉಪಚರಿಸುತ್ತಾ, ಅವನ ಆ ಮಗನನ್ನೂ ಬಿಗಿದಪ್ಪಿಕೊಳ್ಳಲು, ಆ ರಾಜನು, ಭೀಮನಿಗೆ,ಹೀಗೆ ಹೇಳಿದನು.

(ಪದ್ಯ - ೬೦),

ಪದ್ಯ - ೬೦

[ಸಂಪಾದಿಸಿ]

ಎಲೆ ವೈಕೋದರ ಬಾಹುಬಲಮುಳ್ಳ ವೀರರುಂ |
ಪಲಬರುಂಟಿಳೆಯೊಳವರಂ ಕಂಡು ಬಲ್ಲೆನಾಂ |
ಕಲಹದೊಳ್ ಮಲೆತವಂ ಮೈಮರೆದೊಡಿರಿವರಲ್ಲದೆ ಪಗೆಯ ಪೊರೆಗೆ ಬಂದು||
ಅಲಸಿದವನಿವಂ ಧುರದೊಳೆಂದವನನುಪಚರಿಸಿ |
ಸಲಹಿದ ಪರಾಕ್ರಮಿಗಳಾರ್ ಮಹೀತಲದೊಳೀ |
ಕಲಿವೃಷಧ್ವಜನಲ್ಲದಮರ ದಾನವ ಮಾನವರೊಳೊಗೆದ ಪಟುಭಟರೊಳು ||61||

ಪದವಿಭಾಗ-ಅರ್ಥ:
ಎಲೆ ವೈಕೋದರ= ಭೀಮನೇ ಬಾಹುಬಲಂ ಉಳ್ಳ ವೀರರುಂ=ಬಾಹುಬಲವನ್ನು ಉಳ್ಳ ವೀರರನ್ನು ಪಲಬರುಂಟು= ಹಲವರು ಇದ್ದಾರೆ, ಟಿಳೆಯೊಳು ಭೂಮಿಯಲ್ಲಿ ಅವರಂ ಕಂಡು ಬಲ್ಲೆನಾಂ= ನಾನು ಅವರನ್ನು ನೋಡಿದ್ದೇನೆ. ಕಲಹದೊಳ್ ಮಲೆತವಂ =ಯುದ್ಧದಲ್ಲಿ ಎದುರಿನವನು, ಮೈಮರೆದೊಡೆ ಇರಿವರಲ್ಲದೆ= ಎಚ್ಚರ ತಪ್ಪಿದರೆ ಇರಿದುಕೊಲ್ಲುವರು ಅದಲ್ಲದೆ, ಪಗೆಯ ಶತ್ರುವಿನ, ಪೊರೆಗೆ= ಹತ್ತಿರ ಬಂದು, ಅಲಸಿದವನಿವಂ= ಆಯಾಸಪಟ್ಟಿದ್ದಾನೆ ಇವಂ=ಇವನು, ಧುರದೊಳೆಂದು ಅವನನು ಉಪಚರಿಸಿ ಸಲಹಿದ= ಯುದ್ಧದಲ್ಲಿ ಎಂದು ಅವನನ್ನು ಉಪಚರಿಸಿ ಸಲಹಿದ, ಪರಾಕ್ರಮಿಗಳಾರ್ ಮಹೀತಲದೊಳು= ಈ ಭೂಮಂಡಲದಲ್ಲಿ ಪರಾಕ್ರಮಿಗಳು ಯಾರು, ಈ ಕಲಿವೃಷಧ್ವಜನಲ್ಲದೆ= ಈ ಶೂರ ವೃಷಧ್ಜನನ್ನು ಬಿಟ್ಟು? ಅಮರ ದಾನವ ಮಾನವರೊಳು ಒಗೆದ ಪಟುಭಟರೊಳು= ದೇವ ದಾನವ ಮನುಷ್ಯರಲ್ಲಿರುವ ವೀರರಲ್ಲಿ?
  • ತಾತ್ಪರ್ಯ :ಎಲೆ ಭೀಮನೇ ಬಾಹುಬಲವನ್ನು ಉಳ್ಳ ವೀರರು ಹಲವರು ಭೂಮಿಯಲ್ಲಿ ಇದ್ದಾರೆ. ನಾನು ಅವರನ್ನು ನೋಡಿದ್ದೇನೆ.ಯುದ್ಧದಲ್ಲಿ ಎದುರಿನವನು, ಇರಿದು ಕೊಲ್ಲುವರು ಅದಲ್ಲದೆ, ಹತ್ತಿರ ಬಂದು, ಯುದ್ಧದಲ್ಲಿ ಆಯಾಸಪಟ್ಟಿದ್ದಾನೆ ಇವನು ಎಂದು, ಯುದ್ಧದಲ್ಲಿ ಅವನನ್ನು ಉಪಚರಿಸಿ ಸಲಹಿದ ಪರಾಕ್ರಮಿಗಳು ಈ ಭೂಮಂಡಲದಲ್ಲಿ ದೇವ ದಾನವ ಮನುಷ್ಯ ವೀರರಲ್ಲಿ ಯಾರು ಇದ್ದಾರೆ ಈ ಶೂರ ವೃಷಧ್ಜನನ್ನು ಬಿಟ್ಟು? ಯಾರೂ ಇಲ್ಲ!

(ಪದ್ಯ - ೬೦),

ಪದ್ಯ - ೬೨

[ಸಂಪಾದಿಸಿ]

ಆವನ ವಿನೋದಮಾತ್ರದೊಳೀ ಸಮಸ್ತಭುವ |
ನಾವಳಿಗಳಾಗಿ ಬಾಳ್ದಳಿವುದಾ ವಿಭು ನಿಮ್ಮ |
ಸೇವೆಯಾಳ್ ಗಡ ನಾನದೇಸರವನೆಂದೆನ್ನ ಮೇಲೆ ಸಾಹಸವನೆಸಗಿ ||
ಈ ವಾಜಿಯಂಪಿಡಿದಿರಕಟ ತಪ್ಪಿದಿರಿ ಲ |
ಕ್ಷ್ಮೀವರನ ಕಿಂಕರರ್ಗೀಯದನೆ ತಾನೆನ್ನ |
ಜೀವಮಂ ಸಮರದೊಳ್ ಕಾಮಳಿಪಿದಂ ಕರ್ಣತನಯನದನೇವೇಳ್ವೆನು ||62||

ಪದವಿಭಾಗ-ಅರ್ಥ:
ಆವನ= ಯಾವನ ವಿನೋದಮಾತ್ರದೊಳು= ವಿನೋದಮಾತ್ರದಿಂದ ಈ ಸಮಸ್ತ, ಭುವನಾವಳಿಗಳು=ಲೋಕಗಳು, ಆಗಿ ಬಾಳ್ದಳಿವುದು= ಉಂಟಾಗಿ ಬಾಳಿ ಅಳಿವುವೊ, ಆ ವಿಭು=ಆ ಕೃಷ್ಣನು, ನಿಮ್ಮ ಸೇವೆಯಾಳ್ ಗಡ= ನಿಮ್ಮ ಸೇವೆ ಸಹಾಕನಾಗಿದ್ದಾನಲ್ಲಾ ಗಡ (ಅಚ್ಚರಿ)!, ನಾನು ಅದು ಏಸರವನು ಎಂದು ಎನ್ನ ಮೇಲೆ ಸಾಹಸವನು ಎಸಗಿ= ನಾನು ಅದು ಎಷ್ಟರವನು ಎಂದು ನನ್ನ ಮೇಲೆ ಯುದ್ಧವನ್ನು ಮಾಡಿ, ಈ ವಾಜಿಯಂಈ ಕುದುರೆಯನ್ನು ಪಿಡಿದಿರಕಟ= ಹಿಡಿದಿರಿ ಅಕಟ(ಅಯ್ಯೋ)! ತಪ್ಪಿದಿರಿ= ತಪ್ಪು ಮಾಡಿದಿರಿ! ಲಕ್ಷ್ಮೀವರನ=ಕೃಷ್ಣನ ಕಿಂಕರರಿಗೆ= ಭಕ್ತರಿಗೆ, ಈಯದನೆ=ಕೊಡದೆ ಇರುವೆನೆ ತಾನು? ಎನ್ನ ಜೀವಮಂ ಸಮರದೊಳ್ ಕಾದು(ಎಚ್ಚರಕೆಯಿಂದ ಉಪಚರಿಸಿ) ಉಳಿಪಿದಂ ಕರ್ಣತನಯನು ಅದನು ಏವೇಳ್ವೆನು= ಕರ್ಣನ ಮಗನು ಯುದ್ಧದಲ್ಲಿ ನನ್ನ ಜೀವವನ್ನು ಉಪಚರಿಸಿ ಉಳಿಸಿದನು!
  • ತಾತ್ಪರ್ಯ :ಯಾವನ ವಿನೋದಮಾತ್ರದಿಂದ ಈ ಸಮಸ್ತ ಲೋಕಗಳು ಉಂಟಾಗಿ ಬಾಳಿ ನಾಶವಾಗುವುವೊ, ಆ ಕೃಷ್ಣನು, ನಿಮ್ಮ ಸೇವೆಗೆ ಸಹಾಯಕ್ಕೆ ಇದ್ದಾನಲ್ಲಾ ಗಡ (ಅಚ್ಚರಿ)!,ನಾನು ಅದು ಎಷ್ಟರವನು ಎಂದು ನನ್ನ ಮೇಲೆ ಯುದ್ಧವನ್ನು ಮಾಡಿ, ಈ ಕುದುರೆಯನ್ನು ಹಿಡಿದಿರಿ ಅಕಟ(ಅಯ್ಯೋ)!ತಪ್ಪು ಮಾಡಿದಿರಿ! ಕೃಷ್ಣನ ಭಕ್ತರಿಗೆ, ಕೊಡದೆ ಇರುವೆನೆ ತಾನು? ಕೇಳಿದ್ದರೆ ಸಾಕು ಕೊಡುತ್ತಿದ್ದೆ. ಈ ಕರ್ಣನ ಮಗನು ಯುದ್ಧದಲ್ಲಿ ನನ್ನ ಜೀವವನ್ನು ಉಪಚರಿಸಿ ಉಳಿಸಿದನು! (ಇಲ್ಲದಿದ್ದರೆ ವಿನಾಕಾರಣ ಸಾಯುತ್ತಿದ್ದೆ ಎಂದು ಭಾವ)

(ಪದ್ಯ - ೬೨),

ಪದ್ಯ - ೬೩

[ಸಂಪಾದಿಸಿ]

ಈ ವೃಷಧ್ವಜನಿಂದು ಸಮರದೊಳ್ ಕಾಯದೊಡೆ |
ಹಾ ವೃಥಾಕೃತಮಾಗಿ ಪೋಗುತಿರ್ದುದು ಜನ್ಮ |
ಮಾವೃತಸಮಸ್ತಯಾದವನಾಗಿ ನಿಮ್ಮೊಳಗೆ ನರಲೀಲೆಯಂ ನಟಿಸುವ ||
ಶ್ರೀ ವೃತ್ತಕುಚ ಕುಂಕುಮಾಂಕನಂ ಕಂಡಪೆನ |
ಲಾ ವೃಕೋದರ ನೀವು ಮಾಡಿದುಪಕಾರಕಬ |
ಲಾವೃಂದ ಸಹಿತ ಬಂದೆನ್ನ ಸರ್ವಸ್ವಮಂ ಹರಿಗರ್ಪಿಸುವೆನೆಂದನು ||63||

ಪದವಿಭಾಗ-ಅರ್ಥ:
ಈ ವೃಷಧ್ವಜನು ಇಂದು ಸಮರದೊಳ್ ಕಾಯದೊಡೆ ಹಾ ವೃಥಾಕೃತಮಾಗಿ ಪೋಗುತಿರ್ದುದು ಜನ್ಮಂ = ಈ ವೃಷಧ್ವಜನು ಈ ದಿನ ಯುದ್ಧದಲ್ಲಿ ಕಾಪಾಡದಿದ್ದರೆ ಹಾ/ಅಯೋ! ನಿಷ್ಪ್ರಯೋಜಕವಾಗಿ ಹೋಗುತ್ತಿತ್ತು ಈ ಜನ್ಮ, ಆವೃತ ಸಮಸ್ತಯಾದವನಾಗಿ= ಒಟ್ಟಾಗಿರುವ ಎಲ್ಲಾ ಯಾದವರಿಗಾಗಿ ಮತ್ತು, ನಿಮ್ಮೊಳಗೆ ನರಲೀಲೆಯಂ ನಟಿಸುವ= ನಿಮ್ಮ ಜೊತೆ ನರಲೀಲೆಯನ್ನು ನಟಿಸುತ್ತಿರುವ, ಶ್ರೀ ವೃತ್ತಕುಚ ಕುಂಕುಮಾಂಕನಂ ಕಂಡಪೆನಲಾ= ಪೂಜ್ಯ ದುಂಡಾದ ಎದೆಯುಳ್ಳ ಕುಂಕುಮ ಅಲಂಕಾರವುಳ್ಳವನನ್ನು ನೋಡುವೆನಲ್ಲಾ! ವೃಕೋದರ ನೀವು ಮಾಡಿದ ಉಪಕಾರಕೆ ಅಬಲಾವೃಂದ ಸಹಿತ ಬಂದು ಎನ್ನ ಸರ್ವಸ್ವಮಂ ಹರಿಗರ್ಪಿಸುವೆನು ಎಂದನು= ಭೀಮ ನೀವಿ ಮಾಡಿದ ಉಪಕಾರಕ್ಕೆ ಎಲ್ಲರೊಂದಿಗೆ ಬಂದು ನನ್ನ ಸರ್ವಸ್ವವನ್ನೂ ಶ್ರೀ ಕೃಷ್ಣನಿಗೆ ಅರ್ಪಿಸುತ್ತೇನೆ ಎಂದನು.
  • ತಾತ್ಪರ್ಯ :ಈ ವೃಷಧ್ವಜನು ಈ ದಿನ ಯುದ್ಧದಲ್ಲಿ ಕಾಪಾಡದಿದ್ದರೆ ಹಾ/ಅಯೋ! ನಿಷ್ಪ್ರಯೋಜಕವಾಗಿ ಹೋಗುತ್ತಿತ್ತು ಈ ಜನ್ಮ, ಒಗ್ಗಟ್ಟಾಗಿರುವ ಎಲ್ಲಾ ಯಾದವರಿಗಾಗಿ ಮತ್ತು, ನಿಮ್ಮ ಜೊತೆ ನರಲೀಲೆಯನ್ನು ನಟಿಸುತ್ತಿರುವ,ಪೂಜ್ಯ ದುಂಡಾದ ಎದೆಯುಳ್ಳ ಕುಂಕುಮ ಅಲಂಕಾರವುಳ್ಳ ಕೃಷ್ಣನನ್ನು ನೋಡುವೆನಲ್ಲಾ! ವೃಕೋದರ ನೀವು ಮಾಡಿದ ಉಪಕಾರಕೆ

ಭೀಮ ನೀವು ಮಾಡಿದ ಉಪಕಾರಕ್ಕೆ ಎಲ್ಲರೊಂದಿಗೆ ಬಂದು ನನ್ನ ಸರ್ವಸ್ವವನ್ನೂ ಶ್ರೀ ಕೃಷ್ಣನಿಗೆ ಅರ್ಪಿಸುತ್ತೇನೆ ಎಂದನು. (ಪದ್ಯ - ೬೩),

ಪದ್ಯ - ೬೪

[ಸಂಪಾದಿಸಿ]

ಎಂದೊಡರಸಂಗೆ ಸೋದರರಾವು ನಾಲ್ವರುಂ |
ಟಿಂದುವರೆಗಿನ್ನು ನೀಂ ಸಹಿತೈವರಾದೆವಿದ|
ರಿಂದೆ ಹರಿದರ್ಶನಮಸಾಧ್ಯಮಪ್ಪುದೆ ನಿನಗೆ ಧಮರ್ಜನ ವರಮಖವನು ||
ನಿಂದು ಮಾಡಿಸುವ ಭಾರಕನಸುರಹರನಾ ಮು |
ಕುಂದನಂ ಕಾಣ್ಬುದುಳ್ಳೊಡೆ ತನ್ನ ಕೂಡೆ ನೀಂ |
ಬಂದು ಸೇವಿಪುದೆನಲ್ ಮಾರುತಿಗೆ ವಿನಯದಿಂದಾ ಭೂಪನಿಂತೆಂದನು ||64||

ಪದವಿಭಾಗ-ಅರ್ಥ:
ಎಂದೊಡೆ ಅರಸಂಗೆ ಸೋದರರು ಆವು(ನಾವು ನಾಲ್ವರುಂಟು ಇಂದುವರೆಗೆ= ಅರಸ ಧರ್ಮಜನಿಗೆ ಸೋದರರು ನಾವು ನಾಲ್ವರು ಇದ್ದೇವೆ. ಇನ್ನು ನೀಂ=ನಿನ್ನ ಸಹಿತ ಐವರಾದೆವು=ಐದುಜನರಾದೆವು. ಇದರಿಂದೆ ಹರಿದರ್ಶನಂ ಅಸಾಧ್ಯಮಪ್ಪುದೆ ನಿನಗೆ= ಇದರಿಂದ ನಿನಗೆ ಹರಿಯನ್ನು ನೋಢವುದು ಕಷ್ಟವೇ? (ಸುಲಭ); ಧಮರ್ಜನ ವರಮಖವನು= ಶ್ರೇಷ್ಟಯಜ್ಞವನ್ನು, ನಿಂದು= ನಿಂತು ಮಾಡಿಸುವ ಭಾರಕನು= ಹೊಣೆಗಾರನು, ಅಸುರಹರನು= ಕೃಷ್ಣನು. ಆ ಮುಕುಂದನಂ= ಅವನನ್ನು, ಕಾಣ್ಬುದು=ಕಾಣುವುದು ಉಳ್ಳೊಡೆ= ಇದ್ದರೆ, ತನ್ನ ಕೂಡೆ ನೀಂಬಂದು ಸೇವಿಪುದು= ನನ್ನ ಜೊತೆ ಬಂದು ಸಹಕರಿಸುವುದು, ಎನಲ್= ಎನ್ನಲು, ಮಾರುತಿಗೆ= ಭೀಮನಿಗೆ ವಿನಯದಿಂದ ಆ ಭೂಪನು ಇಂತೆಂದನು= ಹೀಗೆ ಹೇಳಿದನು.
  • ತಾತ್ಪರ್ಯ : ಅರಸ ಧರ್ಮಜನಿಗೆ ಸೋದರರು ನಾವು ನಾಲ್ವರು ಇದ್ದೇವೆ. ಇನ್ನು ನಿನ್ನ ಸಹಿತ ಐವರಾದೆವು. ಇದರಿಂದ ನಿನಗೆ ಹರಿಯನ್ನು ನೋಢವುದು ಕಷ್ಟವೇ? (ಸುಲಭ); ಧಮರ್ಜನ ಶ್ರೇಷ್ಟಯಜ್ಞವನ್ನು, ನಿಂತು ಮಾಡಿಸುವ ಹೊಣೆಗಾರನು ಕೃಷ್ಣನು. ಅವನನ್ನು ಕಾಣುವುದಿದ್ದರೆ, ನನ್ನ ಜೊತೆ ಬಂದು ಸಹಕರಿಸುವುದು, ಎನ್ನಲು,ಭೀಮನಿಗೆ ವಿನಯದಿಂದ ಆ ಭೂಪನು ಹೀಗೆ ಹೇಳಿದನು.

(ಪದ್ಯ - ೬೪),

ಪದ್ಯ - ೬೫

[ಸಂಪಾದಿಸಿ]

ಅಹುದು ನೀನೆಂದುದಂ ಮೀರೆನೆನ್ನೂರ್ವುಗದೆ |
ಬಹಿರಂಗದಿಂ ತೆರಳ್ವುದು ನೀತಿಯಲ್ಲೆನ್ನೊ |
ಳಹ ಸೇವೆಯಂ ಪುರದೊಳೊಂದೆರಡು ದಿವಸಂಗಳಿರ್ದು ಕೈಕೊಂಡ ಬಳಿಕ ||
ಬಹುವಸ್ತುಚಯ ಸಹಿತ ಪಡೆವೆರಸಿ ನಿನ್ನೊಡನೆ |
ಬಹೆನೆನ್ನನೊಡಗೊಂಡು ಮುದದೆ ಪೋಪಂತನು |
ಗ್ರಹಿಸೆಂದವಂ ಬೇಡಿಕೊಳಲೊಪ್ಪಿದಂ ಕೀಚಕಾಂತಕಂ ಸಂತಸದೊಳು ||65||
 

ಪದವಿಭಾಗ-ಅರ್ಥ:
ಅಹುದು ನೀನೆಂದುದಂ ಮೀರೆನು ಎನ್ನ ಊರ್ ವೊಗದೆ ಬಹಿರಂಗದಿಂ ತೆರಳ್ವುದು ನೀತಿಯಲ್ಲ= ನಿಜ ನೀನು ಹೇಳಿದುದನ್ನು ಮೀರುವುದಿಲ್ಲ, (ಆದರೆ ಸ್ನೇಹಿತರಾದ ಮೇಲೆ) ನೀವು,ನನ್ನ ಊರನ್ನು ಪ್ರವೇಶಿಸದೆ ಹೊರಗಿನಿಂದಲೇ ಹೋಗುವುದು ಉಚಿತವಲ್ಲ. ಎನ್ನೊಳಹ ಸೇವೆಯಂ ಪುರದೊಳ್ ಒಂದೆದೆರಡು ದಿವಸಂಗಳ್ ಇರ್ದು ಕೈಕೊಂಡ ಬಳಿಕ ಬಹುವಸ್ತುಚಯ ಸಹಿತ ಪಡೆವೆರಸಿ ನಿನ್ನೊಡನೆ ಬಹೆನು= ಪುರದಲ್ಲಿ ಒಂದೆರಡು ದಿವಸಂಗಳಕಾಲ ಇದ್ದು ನನ್ನಿಂದಾಗುವ ಸೇವೆಯನ್ನು ಪಡೆದ ಬಳಿಕ ಬಹುಧನಕನಕವಸ್ತುಗಳ ಸಹಿತ ಸೈನ್ಯಸಮೇತ ನಿನ್ನೊಡನೆ ಬರುವೆನು.

ಎನ್ನನೊಡಗೊಂಡು ಮುದದೆ ಪೋಪಂತೆ ಅನುಗ್ರಹಿಸೆಂದು ಅವಂ ಬೇಡಿಕೊಳಲು ಒಪ್ಪಿದಂ ಕೀಚಕಾಂತಕಂ ಸಂತಸದೊಳು= ನನ್ನನ್ನೂ ಸೇರಿಸಿಕೊಡು ಸಂತಸದಿಂದ ಹೋಗುವಂತೆ ಅನುಗ್ರಹಿಸೆಂದು ಅವನು ಬೇಡಿಕೊಳ್ಳಲು ಭೀಮನು ಸಂತಸದಿಂದ ಒಪ್ಪಿದನು.

  • ತಾತ್ಪರ್ಯ : ನಿಜ ನೀನು ಹೇಳಿದುದನ್ನು ಮೀರುವುದಿಲ್ಲ, (ಆದರೆ ಸ್ನೇಹಿತರಾದ ಮೇಲೆ) ನೀವು,ನನ್ನ ಊರನ್ನು ಪ್ರವೇಶಿಸದೆ ಹೊರಗಿನಿಂದಲೇ ಹೋಗುವುದು ಉಚಿತವಲ್ಲ. ಪುರದಲ್ಲಿ ಒಂದೆರಡು ದಿವಸಂಗಳಕಾಲ ಇದ್ದು ನನ್ನಿಂದಾಗುವ ಸೇವೆಯನ್ನು ಪಡೆದ ಬಳಿಕ ಬಹುಧನಕನಕವಸ್ತುಗಳ ಸಹಿತ ಸೈನ್ಯಸಮೇತ ನಿನ್ನೊಡನೆ ಬರುವೆನು. ನನ್ನನ್ನೂ ಸೇರಿಸಿಕೊಡು ಸಂತಸದಿಂದ ಹೋಗುವಂತೆ ಅನುಗ್ರಹಿಸೆಂದು ಅವನು ಬೇಡಿಕೊಳ್ಳಲು ಭೀಮನು ಸಂತಸದಿಂದ ಒಪ್ಪಿದನು.

(ಪದ್ಯ - ೬೫),

ಪದ್ಯ - ೬೬

[ಸಂಪಾದಿಸಿ]

ತರಿಸಿ ಕೋಳ್ವಿಡಿದ ಹಯಮಂ ಸುವೇಗನ ವಶದೊ |
ಳಿರಿಸಿ ಬಳಿಕನಿಲಜಂ ಹೈಡಿಂಬಿಕರ್ಣಜ |
ರ್ವೆರಸಿ ಭದ್ರಾವತಿಗೆ ಬರಲಾನೃಪಂ ಪೊಳಲ ಸಿಂಗರಿಸಿ ಮೇಣಿವರನು ||
ಅರಸಿಯರ ಗಡಣದೊಳಿದಿರ್ಗೊಂಡು ಮನೆಯೊಳಾ |
ದರಿಸಿ ದಿವಸತ್ರಯಂ ತಡೆದೊಡನೆ ಮಂತ್ರಿಯಂ |
ಕರೆಸಿ ರಾಜ್ಯದ ಭಾರಮಂ ಪೊರಿಸಿ ಹಸ್ತಿನಾಪುರಕೈದಲನುವಾದನು ||66||

ಪದವಿಭಾಗ-ಅರ್ಥ:
ತರಿಸಿ ಕೋಳ್= ಕೊಳ್ಳೆಯಲ್ಲಿ ವಿಡಿದ= ಹಿಡಿದ ಹಯಮಂ=ಕುದುರೆಯನ್ನು, ಸುವೇಗನ ವಶದೊಳಿರಿಸ;ವಶದೊಳ್=ವಶದಲ್ಲಿ ಇರಿಸಿ ಬಳಿಕ ಅನಿಲಜಂ=ಭೀಮನು ಹೈಡಿಂಬಿ=ಮೇಘನಾದ, ಕರ್ಣಜರ್ವೆರಸಿ-:ಕರ್ಣಜರ್=ನೃಷಕೇತುಗಳ ವೆರೆಸಿ= ಜೊತೆಗೊಂಡು, ಭದ್ರಾವತಿಗೆ ಬರಲು ಆ ನೃಪಂ=ರಾಜನು ಪೊಳಲ= ನಗರವನ್ನು ಸಿಂಗರಿಸಿ ಮೇಣ್ ಇವರನು= ಮತ್ತೆ ಇವರನ್ನು,ಅರಸಿಯರ= ರಾಣಿಯರ ಗಡಣದೊಳ್=ಸಮೂಹದ ಜೊತೆ ಇದಿರ್ಗೊಂಡು= ಎದುರುಗೊಂಡು ಮನೆಯೊಳು ಆದರಿಸಿ ದಿವಸತ್ರಯಂ= ಮೂರುದಿವಸದ ತಡೆದು=ಕಳೆದ ನಂತರ ಒಡನೆ= ಕೂಡಲೆ ಮಂತ್ರಿಯಂ= ಮಂತ್ರಿಯನ್ನು

ಕರೆಸಿ ರಾಜ್ಯದ ಭಾರಮಂ= ಆಡಳಿತವನ್ನು, ಪೊರಿಸಿ= ಹೊರಿಸಿ, ಹಸ್ತಿನಾಪುರಕ್ಕೆ ಐದಲು= ಹೋಗಲು ಆನುವಾದನು.

  • ತಾತ್ಪರ್ಯ : ತರಿಸಿ ಯುದ್ಧದಲ್ಲಿ ಹಿಡಿದ ಕುದುರೆಯನ್ನು ಸುವೇಗನ ವಶದಲ್ಲಿ ಇರಿಸಿ ಬಳಿಕ ಭೀಮನು ಮೇಘನಾದ ನೃಷಕೇತುಗಳ ಜೊತೆಗೊಂಡು ಭದ್ರಾವತಿಗೆ ಬರಲು ಆ ರಾಜನು ನಗರವನ್ನು ಸಿಂಗರಿಸಿ ಇವರನ್ನು ರಾಣಿಯರ ಸಮೂಹದ ಜೊತೆ ಎದುರುಗೊಂಡು ಅರಮನೆಯಲ್ಲಿ ಆದರಿಸಿ ಮೂರು ದಿವಸ ಕಳೆದಕೂಡಲೆ ಮಂತ್ರಿಯನ್ನು ಕರೆಸಿ ರಾಜ್ಯದ ಆಡಳಿತವನ್ನು ವಹಿಸಿ, ಹಸ್ತಿನಾಪುರಕ್ಕೆ ಬರಲು ಆನುವಾದನು.

(ಪದ್ಯ - ೬೬),

ಪದ್ಯ - ೬೭

[ಸಂಪಾದಿಸಿ]

ತೀವಿರ್ದ ನಿಖಿಳಭಂಡಾರಮಂ ತೆಗಿಸಿ ನಾ |
ನಾವಸ್ತುನಿಚಯಮಂ ಪೇರಿಸಿ ಸಮಸ್ತಸೇ |
ನಾವಿತತಿ ಸಹಿತಾಹಯಂ ಸಹಿತ ಸುತ ಸಹೋದರ ಬಂಧುವರ್ಗ ಸಹಿತ ||
ಆ ವಸುಮತೀವಲ್ಲಭಂ ಪ್ರಭಾವತಿಯೆಂಬ |
ದೇವಿಸಹಿತಗಣಿತ ವಧೂಜಾಲಸಹಿತ ಭ |
ದ್ರಾವತಿಯ ಪುರಜನಂಸಹಿತ ಪೊರಮಟ್ಟನೊಲವಿಂ ಭೀಮಸೇನನೊಡನೆ ||67||

ಪದವಿಭಾಗ-ಅರ್ಥ:
ತೀವಿರ್ದ= ತುಂಬಿದ ನಿಖಿಳಭಂಡಾರಮಂ= ಎಲ್ಲಾ ಸಂಪತ್ತನ್ನೂ ತೆಗಿಸಿ ನಾನಾವಸ್ತುಗಳ ನಿಚಯಮಂ= ಸಂಗ್ರಹವನ್ನು ಪೇರಿಸಿ= (ಬಂಡಿಯಲ್ಲಿ) ಹೇರಿಸಿ ಸಮಸ್ತ ಸೇನಾವಿತತಿ= ಸೇನಾಸಮುಹದ ಸಹಿತ ಆ ಹಯಂ= ಕುದುರೆಯ ಸಹಿತ ಸುತ=ಮಗ, ಸಹೋದರ= ತಮ್ಮ, ಬಂಧುವರ್ಗ= ಬಂಧುಗಳ ಸಹಿತ ಆ ವಸುಮತೀವಲ್ಲಭಂ=(ಭೂಮಿಯ ಒಡೆಯ) ರಾಜನು ಪ್ರಭಾವತಿಯೆಂಬ ದೇವಿ= ಪತ್ನಿ ಸಹಿತ ಅಗಣಿತ ವಧೂಜಾಲ= ಅನೇಕ ಹೆಂಗಸರ ಸಹಿತ ಭದ್ರಾವತಿಯ ಪುರಜನಂ=ಪುರಜನರ ಸಹಿತ ಪೊರಮಟ್ಟನು= ಹೊರಟನು ಒಲವಿಂ= ಸಂತೋಷದಿಂದ ಭೀಮಸೇನನೊಡನೆ.
  • ತಾತ್ಪರ್ಯ :ರಾಜನು ತನ್ನ ಭಂಡಾರದಲ್ಲಿ ತುಂಬಿದ ಎಲ್ಲಾ ಸಂಪತ್ತನ್ನೂ ತೆಗಿಸಿ, ನಾನಾವಸ್ತುಗಳ ಸಂಗ್ರಹವನ್ನು ಬಂಡಿಯಲ್ಲಿ ಹೇರಿಸಿ, ಸಮಸ್ತ ಸೇನಾಸಮೂಹದ ಸಹಿತ, ಯಜ್ದದಕುದುರೆ, ಮಗ, ತಮ್ಮ, ಬಂಧುಗಳ ಸಹಿತ ಆ ರಾಜನು ಪ್ರಭಾವತಿಯೆಂಬ ಪತ್ನಿಯನ್ನೂ ಅನೇಕ ಹೆಂಗಸರನ್ನೂ ಭದ್ರಾವತಿಯ ಪುರಜನರನ್ನು ಕೂಡಿಕೊಂಡು ಸಂತೋಷದಿಂದ ಭೀಮಸೇನನೊಡನೆ ಹೊರಟನು.

(ಪದ್ಯ - ೬೭),

ಪದ್ಯ - ೬೮

[ಸಂಪಾದಿಸಿ]

ಎಲ್ಲರುಂ ಪೊರಮಟ್ಟ ಬಳಿಕಾನೃಪಂ ರಮಾ |
ವಲ್ಲಭನ ದರ್ಶನಕೆ ಮಾತೆಯಂ ಕರೆಯಲವ |
ಳೊಲ್ಲೆ ನಾನಿಲ್ಲಿರದೊಡೀಬದುಕ ಸಾಗಿಸುವರಾರೆಂದು ಚಂಡಿಗೊಳಲು ||
ಪುಲ್ಲನಾಭಂಗೆ ಸರ್ವಸ್ವಮೊಪ್ಪಿಸುವೊಡಿವ |
ಳಿಲ್ಲದಿರಬಾರದೆಂದಾಕೆಯಂ ಬಲ್ಪಿನಿಂ |
ನಿಲ್ಲದಂದಳವನೇರಿಸಿ ಮತ್ತೆ ಮಾರುತಿಯೊಡನೆ ಪಯಣಕನುವಾದನು ||68|||

ಪದವಿಭಾಗ-ಅರ್ಥ:
ಎಲ್ಲರುಂ= ಎಲ್ಲರೂ ಪೊರಮಟ್ಟ= ಹೊರಟ ಬಳಿಕ ಆ ನೃಪಂ= ರಾಜನು ರಮಾವಲ್ಲಭನ= ಕೃಷ್ಣನ ದರ್ಶನಕೆ= ದರ್ಶನಕ್ಕೆ ಮಾತೆಯಂ= ತಾಯಿಯನ್ನು ಕರೆಯಲು ಅವಳು ಒಲ್ಲೆನು= ಬರಲಾರೆ ಆನು= ನಾನು ಇಲ್ಲಿ ಇರದೊಡೆ=ಇರದಿದ್ದರೆ, ಈ ಬದುಕ= ಅರಮನೆಯ ಕೆಲಸವನ್ನು ಸಾಗಿಸುವರು= ನೋಡಿಕೊಳ್ಳುವವರು ಆರೆಂದು= ಯಾರಿದ್ದಾರೆ ಎಂದು ಚಂಡಿಗೊಳಲು= ಹಠಮಾಡಲು, ಪುಲ್ಲನಾಭಂಗೆ(ಪದ್ಮನಾಭಂಗೆ =ವಿಷ್ಣು) ಸರ್ವಸ್ವಮಂ ಒಪ್ಪಿಸುವೊಡೆ ಇವಳಿಲ್ಲದೆ ಇರಬಾರದೆಂದು ಆಕೆಯಂ ಬಲ್ಪಿನಿಂ ನಿಲ್ಲದೆ ಅಂದಳವನು(ಪಲ್ಲಕ್ಕಿ) ಏರಿಸಿ= ಕೃಷ್ಣನಿಗೆ ಸರ್ವಸ್ವನ್ನೂ ಅರ್ಪಿಸುವಾಗ ತಾಯಿಯು ಇಲ್ಲದೆ ಇರಬಾರದು, ಅವಳೂ ಇರಬೇಕು ಎಂದು ಅವಳನ್ನು ಒತ್ತಾಯದಿಂದ ಪಲ್ಲಕ್ಕಿಯಲ್ಲಿ ಹತ್ತಿಸಿ, ಮತ್ತೆ ಮಾರುತಿಯೊಡನೆ= ಭೀಮನೊಡನೆ ಪಯಣೆ ಅನುವಾದನು= ಪ್ರಯಾಣಮಾಡಲು ಸಿದ್ಧನಾದನು.
  • ತಾತ್ಪರ್ಯ :ಎಲ್ಲರೂ ಹೊರಟ ಬಳಿಕ ರಾಜನು ಕೃಷ್ಣನ ದರ್ಶನಕ್ಕೆ ತಾಯಿಯನ್ನು ಕರೆಯಲು ಅವಳು ಬರಲಾರೆ ನಾನು ಇಲ್ಲಿ ಇರದಿದ್ದರೆ, ಈ ಅರಮನೆಯ ಕೆಲಸವನ್ನು ನೋಡಿಕೊಳ್ಳುವವರು ಯಾರಿದ್ದಾರೆ ಎಂದು, ಹಠಮಾಡಲು, ಕೃಷ್ಣನಿಗೆ ಸರ್ವಸ್ವನ್ನೂ ಅರ್ಪಿಸುವಾಗ ತಾಯಿಯು ಇಲ್ಲದೆ ಇರಬಾರದು, ಅವಳೂ ಇರಬೇಕು ಎಂದು ಅವಳನ್ನು ಒತ್ತಾಯದಿಂದ ಪಲ್ಲಕ್ಕಿಯಲ್ಲಿ ಹತ್ತಿಸಿ, ಮತ್ತೆ ಭೀಮನೊಡನೆ ಪಯಣೆ ಪ್ರಯಾಣಮಾಡಲು ಸಿದ್ಧನಾದನು.

(ಪದ್ಯ - ೬೮),

ಪದ್ಯ - ೬೯

[ಸಂಪಾದಿಸಿ]

ಪಟ್ಟಣದೊಳಾರುಮಿಲ್ಲೆನಿಸಿ ತನ್ನೊಡನೆ ವೊರ |
ಮಟ್ಟುವಖಿಳಪ್ರಜೆಗಳಿವರ ನಡೆಸಲ್ ದಿನಂ |
ತಟ್ಟಿದಲ್ಲದೆ ಮಾಣದನ್ನೆಗಂ ಧರ್ಮಜಂಗೀ ರಾಜಕಾರ್ಯದನುವ ||
ಮುಟ್ಟಿಸದಿರಲ್ ಬಾರದೆಂದಾ ಮಹೀಶ್ವರನ |
ಬಟ್ಟೆಗಾವಲ್ಗೆ ಕರ್ಣಜ ಮೇಘನಾದರಂ |
ಕೊಟ್ಟು ನಿಂದಲ್ಲಿನಿಲ್ಲದೆ ಬಂದು ಭೀಮಸೇನಂ ವೊಕ್ಕನಿಭಪುರಿಯನು ||69||

ಪದವಿಭಾಗ-ಅರ್ಥ:
ಪಟ್ಟಣದೊಳು ಆರುಂ ಇಲ್ಲೆನಿಸಿ ತನ್ನೊಡನೆ ವೊರಮಟ್ಟುವು ಅಖಿಳಪ್ರಜೆಗಳು ಇವರ ನಡೆಸಲ್ ದಿನಂತಟ್ಟಿತು ಅಲ್ಲದೆ ಮಾಣದು= ಪಟ್ಟಣದಲ್ಲಿ ಯಾರೂ ಇಲ್ಲದೆ ತನ್ನೊಡನೆ ಎಲ್ಲಾ ಪ್ರಜೆಗಳೂ ಹೊರಟವು,ಇವರನ್ನು ನಡೆಸಿಕೊಂಡು ಹೋಗಲು, ಅನೇಕದಿನಗಳಾಗದೆ ಇರದು. ಅನ್ನೆಗಂ ಧರ್ಮಜಂಗೆ ಈ ರಾಜಕಾರ್ಯದ ಅನುವ ಮುಟ್ಟಿಸದಿರಲ್ ಬಾರದು ಎಂದು= ಅಲ್ಲಿಯ ವರೆಗೆ ಧರ್ಮಜನಿಗೆ ಈ ಕುದುರೆ ವಿಜಯದ ರಾಜಕಾರ್ಯದಲ್ಲಿ ಆದ ಅನುಕೂಲತೆಯ ವಿಷಯವನ್ನು ತಿಳಿಸದೆ ಇರಬಾರದು ಎಂದು, ಆ ಮಹೀಶ್ವರನ= ರಾಜನ, ಬಟ್ಟೆಗಾವಲ್ಗೆ= ದಾರಿಕಾವಲಿಗೆ, ಕರ್ಣಜ ಮೇಘನಾದರಂ ಕೊಟ್ಟು= ಕರ್ಣಜ ಮೇಘನಾದರಿಗೆ ವಹಿಸಿ, ನಿಂದಲ್ಲಿ ನಿಲ್ಲದೆ ಬಂದು ಭೀಮಸೇನಂ= ಭೀಮಸೇನನು ವೊಕ್ಕನು ಇಭಪುರಿಯನು (ಇಭ=ಆನೆ) = ಹಸ್ತಿನಾವತಿಯನ್ನು ಸೇರಿದನು.
  • ತಾತ್ಪರ್ಯ :ಭದ್ರಾವತಿ ಪಟ್ಟಣದಲ್ಲಿ ಯಾರೂ ಇಲ್ಲದೆ ತನ್ನೊಡನೆ ಎಲ್ಲಾ ಪ್ರಜೆಗಳೂ ಹೊರಟರು, ಇವರನ್ನು ನಡೆಸಿಕೊಂಡು ಹೋಗಲು, ಅನೇಕ ದಿನಗಳಾಗದೆ ಇರದು. ಅಲ್ಲಿಯ ವರೆಗೆ ಧರ್ಮಜನಿಗೆ ಈ ಕುದುರೆ ವಿಜಯದ ರಾಜಕಾರ್ಯದಲ್ಲಿ ಆದ ಅನುಕೂಲತೆಯ ವಿಷಯವನ್ನು ತಿಳಿಸದೆ ಇರಬಾರದು ಎಂದು, ರಾಜನ ದಾರಿಕಾವಲನ್ನು, ಕರ್ಣಜ ಮೇಘನಾದರಿಗೆ ವಹಿಸಿ, ನಿಂದಲ್ಲಿ ನಿಲ್ಲದೆ ಬಂದು ಭೀಮಸೇನನು ಹಸ್ತಿನಾವತಿಯನ್ನು ಸೇರಿದನು.

(ಪದ್ಯ - ೬೯),

ಪದ್ಯ - ೭೦

[ಸಂಪಾದಿಸಿ]

ನುತವಸಂತಾಗಮವನೆಚ್ಚರಿಪ ಮಲಯಮಾ |
ರುತನುಪವನಸ್ಥಳಕೆ ಸುಳಿವಂತೆ ಪವನಜಂ |
ಕ್ಷಿತಿಪನಾಸ್ಥಾನಮಂ ಪೊಕ್ಕರಸನಂ ಕಂಡು ಪಾದಪಲ್ಲವಕೆರಗಲು ||
ಅತಿಶಯಪ್ರೀತಿಯಿಂ ತೆಗೆದು ಬಿಗಿಯಪ್ಪಿ ರವಿ |
ಸುತಜ ಹೈಡಿಂಬಿಗಳದೆಲ್ಲಿ ನೀಂ ಪೋದಸಂ |
ಗತಿಯದೆಂತೈ ನಿನ್ನ ಭಾಷೆಗಳಿವಿಲ್ಲಲಾ ತುರಗವಿಷಯದೊಳೆಂದನು ||70||

ಪದವಿಭಾಗ-ಅರ್ಥ:
ನುತವಸಂತಾಗಮವನು ಎಚ್ಚರಿಪ ಮಲಯಮಾರುತನು ಉಪವನಸ್ಥಳಕೆ ಸುಳಿವಂತೆ=(ಹೊಗಳಲ್ಪಡುವ) ಇಷ್ಟವಾದ ವಸಂತಕಾಲದ ಆಗಮನವನ್ನು ಸೂಚಿಸುವ ಮಲಯಮಾರುತವು ವನದಲ್ಲಿ ಬೀಸುವಂತೆ, ಪವನಜಂ= ಭೀಮನು ಕ್ಷಿತಿಪನ ಆಸ್ಥಾನಮಂ ಪೊಕ್ಕು ಅರಸನಂ ಕಂಡು ಪಾದಪಲ್ಲವಕೆ ಎರಗಲು= ಭೀಮನು ಧರ್ಮರಾಜನ ಆಸ್ಥಾನವನ್ನು ಹೊಕ್ಕು ಅರಸನನ್ನು ಕಂಡು ಅವನ ಪಾದಪದ್ಮಕ್ಕೆ ನಮಿಸಲು, ಅತಿಶಯಪ್ರೀತಿಯಿಂ ತೆಗೆದು ಬಿಗಿಯಪ್ಪಿ= ಅತಿಯಾದ ಪ್ರೀತಿಯಿಂದ ಅವನನ್ನು ಬಿಗಿಯಾಗಿ ಅಪ್ಪಿಕೊಂಡು, ರವಿಸುತಜ ಹೈಡಿಂಬಿಗಳು ಅದೆಲ್ಲಿ= ವೃಷಕೇತು ಮೇಘನಾದರು ಎಲ್ಲಿ? ನೀಂ ಪೋದಸಂಗತಿಯದೆಂತೈ= ನೀನು ಹೋದ ವಿಚಾರ ಸದು ಏನಾಯಿತು? ನಿನ್ನ ಭಾಷೆಗೆ ಅಳಿವಿಲ್ಲಲಾ ತುರಗವಿಷಯದೊಳು ಎಂದನು= ನೀನು ಕುದುರೆ ತರುವೆನೆಂದು ನುಡಿದ ಮಾತು ಸುಳ್ಳಾಗದು ಅಲ್ಲವೇ, ಎಂದನು
  • ತಾತ್ಪರ್ಯ :ಇಷ್ಟವಾದ ವಸಂತಕಾಲದ ಆಗಮನವನ್ನು ಸೂಚಿಸುವ ಮಲಯಮಾರುತವು ವನದಲ್ಲಿ ಬೀಸುವಂತೆ, ಭೀಮನು ಧರ್ಮರಾಜನ ಆಸ್ಥಾನವನ್ನು ಹೊಕ್ಕು ಅರಸನನ್ನು ಕಂಡು ಅವನ ಪಾದಪದ್ಮಕ್ಕೆ ನಮಿಸಲು, ಅತಿಯಾದ ಪ್ರೀತಿಯಿಂದ ಅವನನ್ನು ಬಿಗಿಯಾಗಿ ಅಪ್ಪಿಕೊಂಡು, ವೃಷಕೇತು ಮೇಘನಾದರು ಎಲ್ಲಿ? ನೀನು ಹೋದ ವಿಚಾರ ಅದು ಏನಾಯಿತು? ನೀನು ಕುದುರೆ ತರುವೆನೆಂದು ನುಡಿದ ಮಾತು ಸುಳ್ಳಾಗದು ಅಲ್ಲವೇ, ಎಂದನು.

(ಪದ್ಯ - ೭೦),

ಪದ್ಯ - ೭೧

[ಸಂಪಾದಿಸಿ]

ಎನಲವನಿಪತಿಗೆ ಬಿನ್ನೈಸಿದಂ ಪವಮಾನ |
ತನಯನಲ್ಲಿಂದೆ ಭದ್ರಾವತಿಗೆ ನಡೆದುದಂ |
ವಿನುತ ಹಯರತ್ನಮಂ ಪಿಡಿದುದಂ ಮುಂಕೊಂಡು ಸೇನೆಯಂ ಸದೆಬಡಿದುದಂ ||
ಅನುವರದೊಳಹಿತನಂ ಜಡಿದುದಂ ಬಳಿಕವಂ |
ತನಗೆರಗಿ ನುಡಿದುದಂ ತನ್ನ ಸರ್ವಸ್ವಮಂ |
ದನುಜಾರಿಗೀಯಲ್ ಕುದುರೆವೆರಸಿ ಹೈಡಿಂಬಿಕರ್ಣಜರೊಡನೆ ಬಹುದನು ||71||

ಪದವಿಭಾಗ-ಅರ್ಥ:
ಎನಲು ವನಿಪತಿಗೆ ಬಿನ್ನೈಸಿದಂ= ಧರ್ಮಜ ವಿಚಾರಿದ್ದಕ್ಕೆ ಪವಮಾನತನಯನು= ಭೀಮನು, ಅಲ್ಲಿಂದೆ ಭದ್ರಾವತಿಗೆ ನಡೆದುದಂ= ಹಸ್ಇನಾವತಿಯಿಂದ ಭದ್ರಾವತಿಗೆ ಹೋದುದನ್ನೂ, ವಿನುತ ಹಯರತ್ನಮಂ ಪಿಡಿದುದಂ= ಉತ್ತಮ ಆಶ್ವವನ್ನು ಹಿಡಿದುದನ್ನೂ, ಮುಂಕೊಂಡು ಸೇನೆಯಂ ಸದೆಬಡಿದುದಂ= ಮೇಲೆಬಿದ್ದು ಸೇನೆಯನ್ನು ಸೋಲಿಸಿದುದನ್ನೂ, ಅನುವರದೊಳ್ ಅಹಿತನಂ ಜಡಿದುದಂ= ಯುದ್ಧದಲ್ಲಿ ವಿರೋಧಿಯನ್ನು ಸೋಲಿಸಿದುದನ್ನೂ, ಬಳಿಕ ಅವಂ ತನಗೆ ಎರಗಿ ನುಡಿದುದಂ= ನಂತರ ಅವನು ತನಗೆ ನಮಸ್ಕರಿಸಿ ಹೇಳಿದುದನ್ನೂ, ತನ್ನ ಸರ್ವಸ್ವಮಂ ದನುಜಾರಿಗೀಯಲ್= ಅವನು ತನ್ನ ಸರ್ವಸ್ವವನ್ನೂ ಕೃಷ್ಣನಿಗೆ ಕೊಡಲು, ಕುದುರೆವೆರಸಿ ಹೈಡಿಂಬಿಕರ್ಣಜರೊಡನೆ ಬಹುದನು= ಕುದುರೆ ಸಹಿತ ಮೇಘನಾದ,ಕರ್ಣಜರ ಸಂಗಡ ಬರುತ್ತಿರುವುದನ್ನೂ ತಿಳಿಸಿದನು.
  • ತಾತ್ಪರ್ಯ :ಧರ್ಮಜ ವಿಚಾರಿಸಿದ್ದಕ್ಕೆ ಭೀಮನು, ಹಸ್ತಿನಾವತಿಯಿಂದ ಭದ್ರಾವತಿಗೆ ಹೋದುದನ್ನೂ, ಉತ್ತಮ ಆಶ್ವವನ್ನು ಹಿಡಿದುದನ್ನೂ, ಮೇಲೆಬಿದ್ದು ಸೇನೆಯನ್ನು ಸೋಲಿಸಿದುದನ್ನೂ, ಯುದ್ಧದಲ್ಲಿ ವಿರೋಧಿಯನ್ನು ಸೋಲಿಸಿದುದನ್ನೂ, ನಂತರ ಅವನು ತನಗೆ ನಮಸ್ಕರಿಸಿ ಹೇಳಿದುದನ್ನೂ, ಅದಕ್ಕಾಗಿ,ಅವನು ತನ್ನ ಸರ್ವಸ್ವವನ್ನೂ ಕೃಷ್ಣನಿಗೆ ಕೊಡಲು, ಕುದುರೆ ಸಹಿತ ಮೇಘನಾದ,ಕರ್ಣಜರ ಸಂಗಡ ಬರುತ್ತಿರುವುದನ್ನೂ ತಿಳಿಸಿದನು.

(ಪದ್ಯ - ೭೧)

ಪದ್ಯ - ೭೨

[ಸಂಪಾದಿಸಿ]

ಕೇಳಿನೃಪನುತ್ಸವದೊಳನುಜನಂ ತಕ್ಕೈಸಿ |
ಬೀಳುಕೊಡಲರಸಿಯರ ತಂಡದಾರತಿಗಳ ನೀ |
ವಾಳಿಗಳ ಸಡಗರದೊಳರಮನೆಗೆ ಬಂದು ಪಾಂಚಾಲಿಗೀ ಸಂಗತಿಯನು ||
ಹೇಳಿ ಮುರಹರನ ಮಂದಿರಕೆ ನಡೆತಂದು ನಿಜ |
ಭಾಳಮಂ ಚರಣದೊಳ್ ಚಾಚಿ ತಮ್ಮಯ ವಿಜಯ |
ದೇಳಿಗೆಯನೊರೆಯಲ್ಕೆ ಮನ್ನಿಸಿದತಾತನಂ ದೇವಪುರ ಲಕ್ಷ್ಮೀಶನು ||72||

ಪದವಿಭಾಗ-ಅರ್ಥ:
ಕೇಳಿ ನೃಪನು ಉತ್ಸವದೊಳು ಅನುಜನಂ ತಕ್ಕೈಸಿ ಬೀಳುಕೊಡಲು= ಧರ್ಮಜನು ಕೇಳಿ, ಸಂತಸದಿಂದ ಉಪಚರಿಸಿ ಕಳಹಿಸಲು, ಅರಸಿಯರ ತಂಡದಾರತಿಗಳ ನೀವಾಳಿಗಳ ಸಡಗರದೊಳು= ಹೆಂಗಸರು ಒಟ್ಟಾಗಿ ಎತ್ತಿದಾರತಿಯನ್ನೂ ದೃಷ್ಠಿನಿವಾಳಿಕೆಯನ್ನೂ ಸ್ವೀಕರಿಸಿ, ಅರಮನೆಗೆ ಬಂದು ಪಾಂಚಾಲಿಗೆ ಈ ಸಂಗತಿಯನ್ನು ಹೇಳಿ, ಮುರಹರನ ಮಂದಿರಕೆ ನಡೆತಂದು= ಕೃಷ್ಣನಿದ್ದ ಮನೆಗೆಬಂದು, ನಿಜ=ತನ್ನ ಭಾಳಮಂ= ಹಣೆಯನ್ನು, ಚರಣದೊಳ್ ಚಾಚಿ= ಅವನ ಪಾದಗಳಿಗೆ ಚಾಚಿ, ತಮ್ಮಯ ವಿಜಯ ದೇಳಿಗೆಯನ್ನು = ತಾವು ವಿಜಯವಾದುದನ್ನು, ನೊರೆಯಲ್ಕೆ= ಹೇಳಲು, ಮನ್ನಿಸಿದನು ಆತನಂ ದೇವಪುರ ಲಕ್ಷ್ಮೀಶನು. ಕೃಷ್ಣನು ಆತನನ್ನು ಗೌರವಿಸಿದನು.
  • ತಾತ್ಪರ್ಯ :ಧರ್ಮಜನು ಭೀಮನ ವಿಜಯದ ವಿಷಯ ಕೇಳಿ, ಸಂತಸದಿಂದ ಉಪಚರಿಸಿ ಕಳಹಿಸಲು, ಹೆಂಗಸರು ಒಟ್ಟಾಗಿ ಎತ್ತಿದಾರತಿಯನ್ನೂ ದೃಷ್ಠಿನಿವಾಳಿಕೆಯನ್ನೂ ಸ್ವೀಕರಿಸಿ, ಅರಮನೆಗೆ ಬಂದು ಪಾಂಚಾಲಿಗೆ ಈ ಸಂಗತಿಯನ್ನು ಹೇಳಿ, ಕೃಷ್ಣನಿದ್ದ ಮನೆಗೆ ಬಂದು, ಅವನಿಗೆ ನಮಸ್ಕರಿಸಿ, ತಾವು ವಿಜಯವಾದುದನ್ನು ಹೇಳಲು, ಕೃಷ್ಣನು ಆತನನ್ನು ಗೌರವಿಸಿದನು.
  • (ಪದ್ಯ - ೭೨)
ಸಂಧಿ ೪ಕ್ಕೆ ಒಟ್ಟು ಪದ್ಯ-೧೯೩
♥♥♥ ॐ ♥♥♥
XV-VII- II0XVII
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.