ಸೂಚನೆ || ಊರ್ಜಿತ ಪ್ರಬಲ ರಿಪುವೀರರಂ ಗೆಲ್ದು ಕೃ |
ಷ್ಣಾ ರ್ಜುನರನಾಹವದೊಳೊಟ್ಟೈಸಿ ಭುಜ ವಿಕ್ರ |
ಮಾರ್ಜಿತ ವಿನಯದೊಡನೆ ತ್ರಾಮಧ್ವಜಂ ತುರಗಮಂ ತಂದೆಗೊಪ್ಪಿಸಿದನು ||
|
ಪದವಿಭಾಗ-ಅರ್ಥ:
|
- ಊರ್ಜಿತ ಪ್ರಬಲ ರಿಪುವೀರರಂ ಗೆಲ್ದು ಕೃಷ್ಣಾ ರ್ಜುನರನಾಹವದೊಳು ಒಟ್ಟೈಸಿ ಭುಜ ವಿಕ್ರಮಾರ್ಜಿತ ವಿನಯದೊಡನೆ ತ್ರಾಮಧ್ವಜಂ ತುರಗಮಂ ತಂದೆಗೊಪ್ಪಿಸಿದನು=[ಬಹಳ ಶಕ್ತಿವಂತರಾದ ಮತ್ತು ಪ್ರಬಲರಾದ ಕೃಷ್ಣಾರ್ಜುನರನ್ನೂ ಅವರ ಜೊತೆಯಲ್ಲಿದ್ದ ಶತ್ರುವೀರರನ್ನು ಗೆದ್ದು ಕೃಷ್ಣಾ ರ್ಜುನರನು ಯುದ್ಧದಲ್ಲಿ ಕೆಡವಿ ಬಾಹುಬಲದಿಂದ ಗಳಿಸಿದ ವಿಜಯವನ್ನೂ, ಯಜ್ಞದ ಕುದುರೆಯನ್ನೂ ವಿನಯದೊಡನೆ ತ್ರಾಮಧ್ವಜನು ತಂದೆಗೆ ತಂದು ಒಪ್ಪಿಸಿದನು.].
- ತಾತ್ಪರ್ಯ:ಬಹಳ ಶಕ್ತಿವಂತರಾದ ಮತ್ತು ಪ್ರಬಲರಾದ ಕೃಷ್ಣಾರ್ಜುನರನ್ನೂ ಅವರ ಜೊತೆಯಲ್ಲಿದ್ದ ಶತ್ರುವೀರರನ್ನು ಗೆದ್ದು ಕೃಷ್ಣಾ ರ್ಜುನರನು ಯುದ್ಧದಲ್ಲಿ ಕೆಡವಿ ಬಾಹುಬಲದಿಂದ ಗಳಿಸಿದ ವಿಜಯವನ್ನೂ, ಯಜ್ಞದ ಕುದುರೆಯನ್ನೂ ವಿನಯದೊಡನೆ ತ್ರಾಮಧ್ವಜನು ತಂದೆಗೆ ತಂದು ಒಪ್ಪಿಸಿದನು.
- (ಪದ್ಯ-ಸೂಚನೆ)xiix-xi
|
ಎಲೆ ಮುನಿಪ ಸದಮಲಂ ಮೊದಲೆ ಪಾಲ್ಗಡಲದಕೆ |
ಮಲಯಾನಿಲಂ ತೀಡೆ ಬೆಳುದಿಂಗಳಂ ಪೂಡೆ |
ಲಲಿತ ಸುಮನೋವಾಸಿತಂ ಕೂಡೆ ಮೇಲೆಮೇಲಿನಿದಾಗಿ ತೋರುವಂತೆ ||
ಸಲೆ ಸೋಗಸು ನಿನ್ನ ನುಡಿ ಸರಸಮಚ್ಚರಿ ಪುಣ್ಯ |
ನಿಲಯಮೆನೆ ಕೃಷ್ಣ ಚರಿತಾಮೃತವ ನೀಕಿವಿಗ |
ಳೊಲಿದೀಂಟಿ ತಣಿದಪುವೆ ಮುಂಗತೆಯನುಸಿರೆಂದು ಬೆಸಗೊಂಡನವನೀಶನು ||1||
|
ಪದವಿಭಾಗ-ಅರ್ಥ:
|
- ಎಲೆ ಮುನಿಪ ಸದಮಲಂ ಮೊದಲೆ ಪಾಲ್ಗಡಲು ಅದಕೆ ಮಲಯಾನಿಲಂ ತೀಡೆ ಬೆಳುದಿಂಗಳಂ ಪೂಡೆ (ಹೂಡು:ಜೊಡಿಸು) ಲಲಿತ ಸುಮನೋವಾಸಿತಂ ಕೂಡೆ ಮೇಲೆಮೇಲೆ ಇನಿದಾಗಿ ತೋರುವಂತೆ=[ಎಲೆ ಜೈಮಿನಿ ಮುನಿಪನೇ, ಮೊದಲೇ ಬಹಳ ಪವಿತ್ತವಾದುದು ಹಾಲಿನಕಡಲು, ಅದಕ್ಕೆ ಮಲಯ ಮಾರತ ಬೀಸಲು, ಬೆಳುದಿಂಗಳು ಅದರಮೇಲೆ ಬೀಳಲು, ಲಲಿತವಾದ ಸುವಾಸನೆಯು ಕೂಡಿದರೆ, ಮೇಲಿಂದಮೇಲೆ ಇಂಪಾಗಿ ತೋರುವಂತೆ];; ಸಲೆ ಸೋಗಸು ನಿನ್ನ ನುಡಿ ಸರಸಂ ಅಚ್ಚರಿ ಪುಣ್ಯ ನಿಲಯಂ ಎನೆ ಕೃಷ್ಣ ಚರಿತಾಮೃತವನು ಈ ಕಿವಿಗಳು ಒಲಿದು ಈಂಟಿ ತಣಿದಪುವೆ=[ಬಹಳ ಸೋಗಸಾಗಿದೆ ನಿನ್ನ ಮಾತು,ಸರಸವಾಗಿ, ಅಚ್ಚರಿ ಪುಣ್ಯದನಿಲಯ ಎನ್ನುವಂತೆ, ಕೃಷ್ಣ ಚರಿತಾಮೃತವನ್ನು ಈ ನನ್ನ ಕಿವಿಗಳು ಪ್ರೀತಿಯಿಂದ ಕುಡಿದು ತೃಪ್ತಿಡುವುವೇ? ಇಲ್ಲ,];; ಮುಂಗತೆಯನು ಉಸಿರೆಂದು ಬೆಸಗೊಂಡನು ಅವನೀಶನು=[ಮುಂದಿನ ಕಥೆಯನ್ನು ಹೇಳು ಎಂದು ಜನಮೇಜಯ ರಾಜನು ಜೈಮಿನಿಯನ್ನು ಕೇಳಿಕೊಂಡನು.]
- ತಾತ್ಪರ್ಯ:ಎಲೆ ಜೈಮಿನಿ ಮುನಿಪನೇ, ಮೊದಲೇ ಬಹಳ ಪವಿತ್ತವಾದುದು ಹಾಲಿನಕಡಲು, ಅದಕ್ಕೆ ಮಲಯ ಮಾರತ ಬೀಸಲು, ಬೆಳುದಿಂಗಳು ಅದರಮೇಲೆ ಬೀಳಲು, ಲಲಿತವಾದ ಸುವಾಸನೆಯು ಕೂಡಿದರೆ, ಮೇಲಿಂದಮೇಲೆ ಇಂಪಾಗಿ ತೋರುವಂತೆ,ಬಹಳ ಸೋಗಸಾಗಿದೆ ನಿನ್ನ ಮಾತು,ಸರಸವಾಗಿ, ಅಚ್ಚರಿ ಪುಣ್ಯದನಿಲಯ ಎನ್ನುವಂತೆ, ಕೃಷ್ಣ ಚರಿತಾಮೃತವನ್ನು ಈ ನನ್ನ ಕಿವಿಗಳು ಪ್ರೀತಿಯಿಂದ ಕುಡಿದು ತೃಪ್ತಿಡುವುವೇ? ಇಲ್ಲ, ಮುಂದಿನ ಕಥೆಯನ್ನು ಹೇಳು ಎಂದು ಜನಮೇಜಯ ರಾಜನು ಜೈಮಿನಿಯನ್ನು ಕೇಳಿಕೊಂಡನು.
- (ಪದ್ಯ-೧)
|
ಕೈಮುಗಿಯುತಾದರದೊಳವನಿಪಂ ಬೆಸಗೊಳಲ್ |
ಜೈಮಿನಿ ಮುನೀಶ್ವರಂ ಪೇಳ್ದನೆಲೆ ನೃಪತಿ ಕೇ |
ಳೈ ಮುಂದಣಾಶ್ಚರ್ಯಮಂ ಭೀಮಸೇನನಂ ಗಜಪುರಕೆ ಕಳುಹಿ ಬಳಿಕ ||
ಹೈಮಾಂಬರಂ ಸಕಲ ದಳಸಹಿತ ಮೈದುನನ |
ಮೈಮೆಚ್ಚಿಕೆಗೆ ಮಖ ತುರಂಗದೊಡನೈದಿದಂ |
ವೈಮಾನಿಕ ಪ್ರತತಿ ಬೆರಗಾಗೆ ಕಲಿ ಬಭ್ರುವಾಹನಂ ಕೂಡೆ ಬರಲು ||2||
|
ಪದವಿಭಾಗ-ಅರ್ಥ:
|
- ಕೈಮುಗಿಯುತ ಆದರದೊಳು ಅವನಿಪಂ ಬೆಸಗೊಳಲ್=[ಕೈಮುಗಿಯುತ್ತಾ ಆದರದಿಂದ ರಾಜನು ಕೇಳಲು,];; ಜೈಮಿನಿ ಮುನೀಶ್ವರಂ ಪೇಳ್ದನು ಎಲೆ ನೃಪತಿ ಕೇಳೈ ಮುಂದಣ ಆಶ್ಚರ್ಯಮಂ ಭೀಮಸೇನನಂ ಗಜಪುರಕೆ ಕಳುಹಿ ಬಳಿಕ=[ಜೈಮಿನಿ ಮುನೀಶ್ವರನು ಹೇಳಿದನು, ಎಲೆ ನೃಪತಿ ಕೇಳು, ಮುಂದಿನ ಆಶ್ಚರ್ಯವನ್ನು, ಭೀಮಸೇನನ್ನು ಹಸ್ತಿನಾಪುರಕ್ಕೆ ಕಳುಹಿಸಿ, ನಂತರ];; ಹೈಮಾಂಬರಂ (ಪೀತಾಂಬರ ಧರಿಸಿದವನು) ಸಕಲ ದಳಸಹಿತ ಮೈದುನನ ಮೈಮೆಚ್ಚಿಕೆಗೆ ಮಖ ತುರಂಗದೊಡನೆ ಐದಿದಂ ವೈಮಾನಿಕ ಪ್ರತತಿ (ದೇವತೆಗಳು) ಬೆರಗಾಗೆ ಕಲಿ ಬಭ್ರುವಾಹನಂ ಕೂಡೆ ಬರಲು=[ ದೇವತೆಗಳು ಬೆರಗಾಗಲು ಶೂರನಾದ ಬಭ್ರುವಾಹನು ಜೊತೆಯಲ್ಲಿ ಬರಲು,ಕೃಷ್ಣನು ಸಕಲ ದಳಸಹಿತ ಮೈದುನನ ರಕ್ಷಣೆಗೆ ಯಜ್ಞತುರಗದೊಡನೆ ಹೋದನು.]
- ತಾತ್ಪರ್ಯ:ಕೈಮುಗಿಯುತ್ತಾ ಆದರದಿಂದ ರಾಜನು ಕೇಳಲು, ಜೈಮಿನಿ ಮುನೀಶ್ವರನು ಹೇಳಿದನು, ಎಲೆ ನೃಪತಿ ಕೇಳು, ಮುಂದಿನ ಆಶ್ಚರ್ಯವನ್ನು, ಭೀಮಸೇನನ್ನು ಹಸ್ತಿನಾಪುರಕ್ಕೆ ಕಳುಹಿಸಿ, ನಂತರ ದೇವತೆಗಳು ಬೆರಗಾಗಲು ಶೂರನಾದ ಬಭ್ರುವಾಹನು ಜೊತೆಯಲ್ಲಿ ಬರಲು,ಕೃಷ್ಣನು ಸಕಲ ದಳಸಹಿತ ಮೈದುನನ ರಕ್ಷಣೆಗೆ ಯಜ್ಞತುರಗದೊಡನೆ ಹೋದನು.
- (ಪದ್ಯ-೨)
|
ತುರಗಂ ನಡೆದುದು ಮಣಿಪುರದಿಂ ಶರದ್ದಿನದೊ |
ಳರಸಂಜೆ ಸಂಚರಿಸತೊಡಗಿದುವು ನದಿಗಳು |
ಬ್ಬರಮಡಗಿ ತಿಳಿದು ಪರಿದುವು ಬೆಳತುದಾಗಸಂ ಮೆರೆದುದುಡುರಾಜಿಕೂಡೆ ||
ತರಣಿ ಶಶಿಗಳ ಕಿರಣಮೈದೆ ನಿರ್ಮಲವಾದು |
ವರವಿಂದದಲರನರಸಿದುವಳಿಗಳೆಣ್ದೆಸೆಯ |
ತರುಣಿಯರ ಗುರುಕುಚದ ಮೇಲುದಂ ಸೆಳೆದಂತೆ ಗಿರಿನಿಕರಮೆಸೆದಿರ್ದುದು ||3||
|
ಪದವಿಭಾಗ-ಅರ್ಥ:
|
- ತುರಗಂ ನಡೆದುದು ಮಣಿಪುರದಿಂ ಶರದ್ದಿನದೊಳು ಅರಸಂಜೆ ಸಂಚರಿಸ ತೊಡಗಿದುವು ನದಿಗಳು ಉಬ್ಬರಮ್ ಅಡಗಿ ತಿಳಿದು ಪರಿದುವು ಬೆಳತುದು ಆಗಸಂ ಮೆರೆದುದು ಉಡುರಾಜಿ ಕೂಡೆ=[ಕುದುರೆಯು ಮಣಿಪುರದಿಂದ ಹೊರಟು ಮುಂದೆ ನಡೆಯಿತು. ಶರದೃತು ಆರಂಬವಾಯಿತು, ಆಗ ಹಂಸಗಳು ಸಂಚರಿಸ ತೊಡಗಿದುವು, ನದಿಗಳ ಪ್ರವಾಹ ಅಡಗಿ ತಿಳಿನೀರು ಹರಿಯತೊಡಗಿತು; ಆಕಾಶವು, ಮೋಡ ಸರಿದು ಬೆಳಕು ಹೊಂದಿತು; ರಾತ್ರಿ ನಕ್ಷತ್ರಗಳು ಮೆರೆದವು; ಜೊತೆಗೆ];; ತರಣಿ ಶಶಿಗಳ ಕಿರಣಮ್ ಐದೆ ನಿರ್ಮಲವಾದುವುಅರವಿಂದದ ಅಲರನು ಅರಸಿದುವು ಅಳಿಗಳೆಉ ಎಣ್ದೆಸೆಯ ತರುಣಿಯರ ಗುರುಕುಚದ ಮೇಲುದಂ ಸೆಳೆದಂತೆ ಗಿರಿನಿಕರಮ್ ಎಸೆದಿರ್ದುದು=[ಸೂರ್ಯ ಚಂದ್ರರಿಂದ ಬರುವ ಕಿರಣಗಳು ನಿರ್ಮಲವಾದುವು; ಕಮಲದ ಹೂವನ್ನು ಜೇನುಗಳು ಹುಡುಕಿದವು; ಶುಭ್ರ ದಿಗಂತದ ಎಂಟುದಿಕ್ಕಿಗೂ ದುರದ ಬೆಟ್ಟಗಳು ತೋರಿದವು, ಅವು ತರುಣಿಯರ ಸೆರಗು ಸರಿದಾಗ ಕಾಣುವ ಗುರುಕುಚದಂತೆ ತೋರುತ್ತಿತ್ತು.]
- ತಾತ್ಪರ್ಯ:ಕುದುರೆಯು ಮಣಿಪುರದಿಂದ ಹೊರಟು ಮುಂದೆ ನಡೆಯಿತು. ಶರದೃತು ಆರಂಬವಾಯಿತು, ಆಗ ಹಂಸಗಳು ಸಂಚರಿಸ ತೊಡಗಿದುವು, ನದಿಗಳ ಪ್ರವಾಹ ಅಡಗಿ ತಿಳಿನೀರು ಹರಿಯತೊಡಗಿತು; ಆಕಾಶವು, ಮೋಡ ಸರಿದು ಬೆಳಕು ಹೊಂದಿತು; ರಾತ್ರಿ ನಕ್ಷತ್ರಗಳು ಮೆರೆದವು; ಜೊತೆಗೆ ಸೂರ್ಯ ಚಂದ್ರರಿಂದ ಬರುವ ಕಿರಣಗಳು ನಿರ್ಮಲವಾದುವು; ಕಮಲದ ಹೂವನ್ನು ಜೇನುಗಳು ಹುಡುಕಿದವು; ಶುಭ್ರ ದಿಗಂತದ ಎಂಟುದಿಕ್ಕಿಗೂ ದುರದ ಬೆಟ್ಟಗಳು ಉನ್ನತವಾಗಿ ತೋರಿದವು, ಅವು ತರುಣಿಯರ ಸೆರಗು ಸರಿದಾಗ ಕಾಣುವ ಗುರುಕುಚದಂತೆ ತೋರುತ್ತಿತ್ತು.
- (ಪದ್ಯ-೩)xiix
|
ಪುಳಿನ ಜಘನಂ ಮತ್ಸ್ಯಲೋಚನಂ ಹಂಸಗತಿ |
ಸುಳಿನಾಭಿ ಕೋಕಸ್ತನಂ ಪಂಕಜಾನನಂ |
ಸೆಳೆನಡು ಸುಕಂಬು ಕಂಠಂ ತರಂಗ ತ್ರಿವಳಿ ಶೈವಾಲ ರೋಮಾವಳಿ ||
ಲಿಲಿತಪ್ರವಾಹ ಲಾವಣ್ಯ ಲಹರಿಗಳೆಸೆಯೆ |
ತೊಳತೊಳಗಿ ಬೆಳಗುವ ನದೀವಧುಗಳುಳ್ಗದಡು |
ತಿಳಿದು ನಿಜಕಾಂತನಾಗಿಹ ಸಿಂಧುರಾಜನಂ ನೆರೆಯದಿರರೆಂಬೊಲಾಯ್ತು||4||
|
ಪದವಿಭಾಗ-ಅರ್ಥ:
|
- ಪುಳಿನ ಜಘನಂ, ಮತ್ಸ್ಯಲೋಚನಂ, ಹಂಸಗತಿ ಸುಳಿನಾಭಿ ಕೋಕಸ್ತನಂ={ನದಿಯ ದಡದಲ್ಲಿ ರಾಶಿಬಿದ್ದ ಮರಳು ದಿನ್ನಯೇ ನಿತಂಬ (ಸೊಂಟದ ಹಿಂಭಾಗ);ಮೀನುಗಳೇ ಕಣ್ಣುಗಳು; ನೆಡಿಗೆಗೆ ದಡದಲ್ಲಿರುವ ಹಂಸಗಳ ನೆಡಿಗೆ; ನದಿಯ ಸುಳಿಯೇ ಹೊಕ್ಕಳು; ನದಿಯಲ್ಲಿರುವ ಕೋಕಪಕ್ಷಿಗಳು ನದಿಯ ಮೊಲೆಗಳು];; ಪಂಕಜ ಆನನಂ, ಸೆಳೆನಡು, ಸುಕಂಬು ಕಂಠಂ, ತರಂಗ ತ್ರಿವಳಿ, ಶೈವಾಲ ರೋಮಾವಳಿ=[ಪಂಕಜ/ ಕಮಲವೇ ಅದರ ಮುಖ; ಕಿರಿದಾಗಿ ಹರಿಯುವ ಸೆಳೆವು ಅದರ ಸೊಂಟ; ನದಿಯಲ್ಲಿರುವ ಸುಂದರವಾದ ಶಂಖವೇ ಕುತ್ತಿಗೆ; ತರಂಗಗಳು ಸಂಟದಲ್ಲಿ ಕಾಣುವ ಮೂರು ಸಣ್ನ ಮಡಿಕೆ ಗೆರೆ; ಹಾವಸೆ ಅಥವಾ ಪಾಚಿಯೇ ರೋಮಾವಳಿ,];; ಲಿಲಿತಪ್ರವಾಹ ಲಾವಣ್ಯ ಲಹರಿಗಳೆಸೆಯೆ ತೊಳತೊಳಗಿ ಬೆಳಗುವ ನದೀವಧುಗಳು ಗ/ಕದಡುತ+ಇಳಿದು ನಿಜಕಾಂತನಾಗಿಹ ಸಿಂಧುರಾಜನಂ ನೆರೆಯದಿರರು ಎಂಬೊಲಾಯ್ತು=[ಲಿಲಿತ ಪ್ರವಾಹವು ಅದರ ಲಾವಣ್ಯ ಮತ್ತು ಮುಖಭಾವನೆಗಳು, ಹೀಗೆ ಪಳಪಳನೆ ಹೊಳೆದು ಹರಿಯುವ ಬೆಳಗುವ ನದಿಗಳೆಂಬ ವಧುಗಳು ಕದಡುತ/ ಕುಲುಕಾಡುತ /ಉರುಳುತ ಇಳಿದು ತಮ್ಮ ಪತಿಯಾದ ಸಮುದ್ರರಾಜನನನ್ನು ಸೇರದೇ ಇರರು ಎಂಬಂತೆ ಅಯಿತು ಆ ಋತುವಿನಲ್ಲಿ.]
- ತಾತ್ಪರ್ಯ:ನದಿಗಳೆಂಬ ವಧುಗಳು ತಮ್ಮ ಪತಿ ಸಮುದ್ರವನ್ನು ಸೇರತ್ತವೆ ಎಂಬ ವರ್ಣನೆ: ನದಿಯ ದಡದಲ್ಲಿ ರಾಶಿಬಿದ್ದ ಮರಳು ದಿನ್ನಯೇ ನಿತಂಬ (ಸೊಂಟದ ಹಿಂಭಾಗ);ಮೀನುಗಳೇ ಕಣ್ಣುಗಳು; ನೆಡಿಗೆಗೆ ದಡದಲ್ಲಿರುವ ಹಂಸಗಳ ನೆಡಿಗೆ; ನದಿಯ ಸುಳಿಯೇ ಹೊಕ್ಕಳು; ನದಿಯಲ್ಲಿರುವ ಕೋಕಪಕ್ಷಿಗಳು ನದಿಯ ಮೊಲೆಗಳು, ಪಂಕಜ/ ಕಮಲವೇ ಅದರ ಮುಖ; ಕಿರಿದಾಗಿ ಹರಿಯುವ ಸೆಳೆವು ಅದರ ಸೊಂಟ; ನದಿಯಲ್ಲಿರುವ ಸುಂದರವಾದ ಶಂಖವೇ ಕುತ್ತಿಗೆ; ತರಂಗಗಳು ಸಂಟದಲ್ಲಿ ಕಾಣುವ ಮೂರು ಸಣ್ನ ಮಡಿಕೆ ಗೆರೆ; ಹಾವಸೆ ಅಥವಾ ಪಾಚಿಯೇ ರೋಮಾವಳಿ, ಲಿಲಿತ ಪ್ರವಾಹವು ಅದರ ಲಾವಣ್ಯ ಮತ್ತು ಮುಖಭಾವನೆಗಳು, ಹೀಗೆ ಪಳಪಳನೆ ಹೊಳೆದು ಹರಿಯುವ ಬೆಳಗುವ ನದಿಗಳೆಂಬ ವಧುಗಳು ಕುಲುಕಾಡುತ/ಉರುಳುತ ಇಳಿದು ತಮ್ಮ ಪತಿಯಾದ ಸಮುದ್ರರಾಜನನನ್ನು ಸೇರದೇ ಇರರು- ಸೇರುವರು, ಎಂಬಂತೆ ಅಯಿತು ಆ ಋತುವಿನಲ್ಲಿ.
- (ಪದ್ಯ-೪)
|
ಕರೆಕರೆದ ತಮ್ಮ ಮಳೆವೊನಲಿಂದೆ ಶಶಿಕಾಂತ |
ದೊರತೆವೊನಲುರೆ ವೆಗ್ಗಳಿಸೆ ನಾಚಿ ಬೆಳ್ಪಾದ |
ತೆರದಿಂ ಮುಗಿಲ್ಗಳಿರೆ ಬೆಳುದಿಂಗಳೊಪ್ಪಿದುದು ಬೆಳಸುಗಳ ಪಣ್ದೆನೆಗಳ ||
ಮಿರುಪಹೊಂಬಣ್ಣದ ಹರಿದ್ರಾನುಲೇಪನದ |
ಮೆರೆವ ಮೈಸಿರಿಯ ಮಾಂಗಲ್ಯದಿಂ ಭೂದೇವಿ |
ನೆರೆ ಶೋಭಿಸುವ ಶರತ್ಕಾಲದೊಳ್ ತಿರುಗಿತಧ್ವರ ಹಯಂ ಧರೆಯಮೇಲೆ ||5||
|
ಪದವಿಭಾಗ-ಅರ್ಥ:
|
- ಕರೆಕರೆದ ತಮ್ಮ ಮಳೆವೊನಲಿಂದೆ ಶಶಿಕಾಂತದ ಒರತೆವೊನಲು ಉರೆ ವೆಗ್ಗಳಿಸೆ ನಾಚಿ ಬೆಳ್ಪಾದ ತೆರದಿಂ ಮುಗಿಲ್ಗಳರೆ ಬೆಳುದಿಂಗಳು ಒಪ್ಪಿದುದು=[ಬಹಳವಾಗಿ ಮಳೆ ಸುರಿಸಿ, ತಮ್ಮ ಮಳೆಯ ಪ್ರವಾಹದಿಂದ ಶಶಿಕಾಂತದ ಬಿಳಿಶಿಲೆಯಿಂದ ಒರತೆಯ ಪ್ರವಾಹ ಬಹಳೆ ಹೆಚ್ಚಾಗಿರಲು, ಅದನ್ನು ನೋಡಿ ನಾಚಿ ಬೆಳ್ಳಗಾಗಿರುವ ರೀತಿಯಲ್ಲಿ, ಮೋಡಗಳಿದ್ದು ಅದಕ್ಕೆ ಬೆಳುದಿಂಗಳು ಹೊಂದಿತ್ತು];; ಬೆಳಸುಗಳ ಪಣ್ದೆನೆಗಳ (ಹಣ್ಣು+ತೆನೆಗಳ) ಮಿರುಪ ಹೊಂಬಣ್ಣದ ಹರಿದ್ರ ಅನುಲೇಪನದ ಮೆರೆವ ಮೈಸಿರಿಯ ಮಾಂಗಲ್ಯದಿಂ ಭೂದೇವಿ ನೆರೆ ಶೋಭಿಸುವ ಶರತ್ಕಾಲದೊಳ್ ತಿರುಗಿತು ಅಧ್ವರ ಹಯಂ ಧರೆಯಮೇಲೆ=[ಬೆಳೆಗಳ ಬೆಳೆದ ತೆನೆಗಳ ಮಿರುಗುವ ಹೊನ್ನಿನಬಣ್ಣದ ಹಳದಿಯಬಣ್ಣ ಹಚ್ಚಿ ಶೋಭಿಸುವ (ದೇಹ-ತೆನೆಗಳ)ಸೊಬಗಿನ ಮಾಂಗಲ್ಯದಿಂದ ಭೂದೇವಿ ತುಂಬಾ ಶೋಭಿಸುವ ಶರತ್ಕಾಲದಲ್ಲಿ ಅಧ್ವರದ ಕುದುರೆಯು ಭೂಮಿಯಮೇಲೆ ತಿರುಗಿತು.]
- ತಾತ್ಪರ್ಯ:ಬಹಳವಾಗಿ ಮಳೆ ಸುರಿಸಿ, ತಮ್ಮ ಮಳೆಯ ಪ್ರವಾಹದಿಂದ ಶಶಿಕಾಂತದ ಬಿಳಿಶಿಲೆಯಿಂದ ಒರತೆಯ ಪ್ರವಾಹ ಬಹಳೆ ಹೆಚ್ಚಾಗಿರಲು, ಅದನ್ನು ನೋಡಿ ನಾಚಿ ಬೆಳ್ಳಗಾಗಿರುವ ರೀತಿಯಲ್ಲಿ, ಮೋಡಗಳಿದ್ದು ಅದಕ್ಕೆ ಬೆಳುದಿಂಗಳು ಹೊಂದಿತ್ತು. ಬೆಳೆಗಳ ಬೆಳೆದ ತೆನೆಗಳ ಮಿರುಗುವ ಹೊನ್ನಿನಬಣ್ಣದ ಹಳದಿಯಬಣ್ಣ ಹಚ್ಚಿ ಶೋಭಿಸುವ (ದೇಹ-ತೆನೆಗಳ)ಸೊಬಗಿನ ಮಾಂಗಲ್ಯದಿಂದ ಭೂದೇವಿಯು ತುಂಬಾ ಶೋಭಿಸುವ ಶರತ್ಕಾಲದಲ್ಲಿ ಅಧ್ವರದ ಕುದುರೆಯು ಭೂಮಿಯಮೇಲೆ ತಿರುಗಿತು.]
- (ಪದ್ಯ-೫)
|
ವಿಟನಂತೆ ಕಾಂತಾರತಲಸದ್ವಿಲಾಸ ಪ |
ರ್ಯಟನದಿಂದೊಪ್ಪಿದುದು ಸುಕವೀಂದ್ರನಂತೆ ಸಂ |
ಘಟಿತ ಚಾತುರ್ಯ ಪದ ರಚನೆಯಿಂ ವಿವಿಧ ವಿಷಯಂಗಳೊಳ್ ಕಾಣಿಸಿದುದು ||
ಭಟನಂತೆ ಸಮ್ಯಗ್ವಿರಾಜಿತ ಭೂಮಿ ಭೃ |
ತ್ಕಟಕಂಗಳಲ್ಲಿ ಸಂಚರಿಸಿದುದು ಪಾಂಡವನ |
ಪಟುತರ ಮಹಾಧ್ವರ ತುರಂಗಮಂ ಬೆಂಬಿಡದೆ ಬಹ ನೃಪರ ಸೇನೆ ಸಹಿತ ||6||
|
ಪದವಿಭಾಗ-ಅರ್ಥ:
|
- ವಿಟನಂತೆ ಕಾಂತಾರತ ಲಸದ್ವಿಲಾಸ (ಕಾಂತಾ ರತ-ಪ್ರಿಯ ಸ್ತ್ರೀಯರಲ್ಲಿ ಶೃಂಗಾರ ಚೇಷ್ಟೆಯಲ್ಲಿ ತೊಡಗಿದ, ಲಸತ್- ಶೋಭಿಸುವ, ವಿಲಾಸದಿಂದ=ಒಯ್ಯಾರ, ಬಿನ್ನಾಣದಿಂದ) ಪರ್ಯಟನದಿಂದ ಒಪ್ಪಿದುದು=[ಅಶ್ವಮೇಧದ ಕುದುರೆಯು, ಹೆಣ್ಣಿನ ಹಿಂದೆ ಬಿದ್ದ ಪ್ರಿಯ ಸ್ತ್ರೀಯರಲ್ಲಿ ಶೃಂಗಾರ ಚೇಷ್ಟೆಯಲ್ಲಿ ತೊಡಗಿ ಶೋಭಿಸುವ ಒಯ್ಯಾರ, ಬಿನ್ನಾಣದ ಸಂಚಾರ ಮಾಡುವ ವಿಟನಂತೆ ಕಾಣುತ್ತಿತ್ತು];; ಸುಕವೀಂದ್ರನಂತೆ ಸಂಘಟಿತ ಚಾತುರ್ಯ ಪದ ರಚನೆಯಿಂ ವಿವಿಧ ವಿಷಯಂಗಳೊಳ್ ಕಾಣಿಸಿದುದು=[ಭಾಷೆಯ ಚತುರ ಪದಗಳ ವಿನ್ಯಾಸ ರಚನೆಯಿಂದ ಕಾವ್ಯ ರಚಿಸುವ ಉತ್ತಮ ಕವಿಶ್ರೇಷ್ಠನಂತೆ ಜೋಡಿಸಿದ ತನ್ನ ಪಾದಗಳ ಪದವಿನ್ಯಾಸ ಚಾತುರ್ಯ ರಚನೆಯಿಂದ ವಿವಿಧ ಪ್ರದೇಶಗಳಲ್ಲಿ ಕುದುರೆ ಕಾಣಿಸಿತು. ಕವಿಯು ಭಾಷೆಯ ಪದಗಳನ್ನು ಚತುರತೆಯಿಂದ ಉಪಯೋಗಿಸಿದರೆ, ಈ ಕುದುರೆ ತನ್ನ ಪಾದಗಳ ನಡೆಯಲ್ಲಿ ಚಾತುರ್ಯ ತೋರುತ್ತಿತ್ತು ಎಂದು ಭಾವ.];; ಭಟನಂತೆ ಸಮ್ಯಕ್ ವಿರಾಜಿತ ಭೂಮಿಭೃತ್ ಕಟಕಂಗಳಲ್ಲಿ ಸಂಚರಿಸಿದುದು=[ವೀರ ಸೈನಿಕ ಭಟನಂತೆ ಚನ್ನಾಗಿ ಶೋಭಿಸುವ ಭೂಮಿ ಪರ್ವತ ತೊಪ್ಪಲುಗಳಲ್ಲಿ ಸಂಚರಿಸಿತು.(ಭೂಮಿಭೃತ್ ಕಟಕ (ರಾಜರ ಸೈನ್ಯ ಮಧ್ಯದಲ್ಲಿ ಎಂದೂ ಅರ್ಥಮಾಡಬಹುದು, ಆದರೆ ಕುದುರೆ ಇನ್ನೂ ಮಂದಿನ ರಾಜ್ಯ ತಲುಪಿಲ್ಲ)];; ಪಾಂಡವನ ಪಟುತರ ಮಹಾಧ್ವರ ತುರಂಗಮಂ ಬೆಂಬಿಡದೆ ಬಹ ನೃಪರ ಸೇನೆ ಸಹಿತ=[ಹೀಗೆ, ಧರ್ಮಜನ ಚುರುಕಾದ ಮಹಾಧ್ವರ ಕುದುರೆಯು, ಬೆಂಬಿಡದೆ ಬರುತ್ತಿರುವ ರಾಜರ ಸೇನೆ ಸಹಿತ ಮುಂದೆ ಹೊಗುತ್ತಿತ್ತು.].
- ತಾತ್ಪರ್ಯ:ಅಶ್ವಮೇಧದ ಕುದುರೆಯು, ಹೆಣ್ಣಿನ ಹಿಂದೆ ಬಿದ್ದ, ಪ್ರಿಯ ಸ್ತ್ರೀಯರಲ್ಲಿ ಶೃಂಗಾರ ಚೇಷ್ಟೆಯಲ್ಲಿ ತೊಡಗಿ ಶೋಭಿಸುವ ಒಯ್ಯಾರ, ಬಿನ್ನಾಣದ ಸಂಚಾರ ಮಾಡುವ ವಿಟನಂತೆ ಕಾಣುತ್ತಿತ್ತು. ಭಾಷೆಯ ಚತುರ ಪದಗಳ ವಿನ್ಯಾಸ ರಚನೆಯಿಂದ ಕಾವ್ಯ ರಚಿಸುವ ಉತ್ತಮ ಕವಿಶ್ರೇಷ್ಠನಂತೆ ಜೋಡಿಸಿದ ತನ್ನ ಪಾದಗಳ ಪದವಿನ್ಯಾಸ ಚಾತುರ್ಯ ರಚನೆಯಿಂದ ವಿವಿಧ ಪ್ರದೇಶಗಳಲ್ಲಿ ಕುದುರೆ ಕಾಣಿಸಿತು. ಕವಿಯು ಭಾಷೆಯ ಪದಗಳನ್ನು ಚತುರತೆಯಿಂದ ಉಪಯೋಗಿಸಿದರೆ, ಈ ಕುದುರೆ ತನ್ನ ಪಾದಗಳ ನಡೆಯಲ್ಲಿ ಚಾತುರ್ಯ ತೋರುತ್ತಿತ್ತು ಎಂದು ಭಾವ. ವೀರ ಸೈನಿಕ ಭಟನಂತೆ ಚನ್ನಾಗಿ ಶೋಭಿಸುವ ಭೂಮಿ ಪರ್ವತ ತೊಪ್ಪಲುಗಳಲ್ಲಿ ಸಂಚರಿಸಿತು. ಹೀಗೆ, ಧರ್ಮಜನ ಚುರುಕಾದ ಮಹಾಧ್ವರ ಕುದುರೆಯು, ಬೆಂಬಿಡದೆ ಬರುತ್ತಿರುವ ರಾಜರ ಸೇನೆ ಸಹಿತ ಮುಂದೆ ಹೊಗುತ್ತಿತ್ತು.].
- (ಪದ್ಯ-೬)
|
ಪೋದುದಧ್ವರವಾಜಿ ರತ್ನಪುರಮೆಂಬ ಪುಟ |
ಭೇದನದ ಪತಿ ಮಯೂರಧ್ವಜನ ರಾಷ್ಟ್ರಕವ |
ನಾದಿಯೊಳ್ ತುರಗಮೇಧಂಗಳೇಳಂ ಮಾಡಿ ನರ್ಮದಾತಟಕೆ ಬಂದು ||
ಸಾದರದೊಳೆಂಟನೆಯ ಮಖಕೆ ದೀಕ್ಷಿತನಾಗಿ |
ಮೇದಿನಿಯ ಮೇಲೆ ಹಯಮಂ ಬಿಡಲ್ಕಿದಿರಾಗಿ |
ಬೀದಿಯೊಳ್ ಬರುತಿರ್ದುದಾನೃಪನ ಸೂನು ತಾಮ್ರಧ್ವಜನ ಕಾಪಿನಿಂದೆ ||7||
|
ಪದವಿಭಾಗ-ಅರ್ಥ:
|
- ಪೋದುದು (ಹೊಯಿತು) ಅಧ್ವರವಾಜಿ ರತ್ನಪುರಮೆಂಬ ಪುಟಭೇದನದ (ನಗರದ?) ಪತಿ ಮಯೂರಧ್ವಜನ ರಾಷ್ಟ್ರಕೆ=[ಅಧ್ವರದಕುದುರೆ ರತ್ನಪುರವೆಂಬ ನಗರದ ಒಡೆಯ ಮಯೂರಧ್ವಜನ ರಾಷ್ಟ್ರಕ್ಕೆ ಹೋಯಿತು];; ಅವನು ಆದಿಯೊಳ್ ತುರಗಮೇಧಂಗಳು ಏಳಂ ಮಾಡಿ ನರ್ಮದಾತಟಕೆ ಬಂದು ಸಾದರದೊಳು ಎಂಟನೆಯ ಮಖಕೆ ದೀಕ್ಷಿತನಾಗಿ ಮೇದಿನಿಯ ಮೇಲೆ ಜಯಮಂ ಬಿಡಲ್ಕೆ=[ಅವನು ಮೊದಲು ಏಳು ತುರಗಮೇಧಗಳನ್ನು ಮಾಡಿ ನರ್ಮದಾ ತಟಕ್ಕೆ ಬಂದು ಶ್ರದ್ಧೆಯಿಂದ ಎಂಟನೆಯ ಯಜ್ಞಕ್ಕೆ ದೀಕ್ಷಿತನಾಗಿ ದೇಶಗಳ ಮೇಲೆ ಕುದುರೆಯನ್ನು ಬಿಡಲು];; ಇದಿರಾಗಿ ಬೀದಿಯೊಳ್ ಬರುತಿರ್ದುದು ಆ ನೃಪನ ಸೂನು ತಾಮ್ರಧ್ವಜನ ಕಾಪಿನಿಂದೆ=[ ಆ ರಾಜನ ಮಗ ತಾಮ್ರಧ್ವಜನ ಕಾವಲಿನಲ್ಲಿ ಅರ್ಜುನನ ಕುದುರೆಗೆ ಎದುರಾಗಿ ಬೀದಿಯಲ್ಲಿ ಬರುತ್ತಿತ್ತು.]
- ತಾತ್ಪರ್ಯ:ಅಧ್ವರದ ಕುದುರೆ ರತ್ನಪುರವೆಂಬ ನಗರದ ಒಡೆಯ ಮಯೂರಧ್ವಜನ ರಾಷ್ಟ್ರಕ್ಕೆ ಹೋಯಿತು. ಅವನು ಮೊದಲು ಏಳು ತುರಗಮೇಧಗಳನ್ನು ಮಾಡಿ ನರ್ಮದಾ ತಟಕ್ಕೆ ಬಂದು ಶ್ರದ್ಧೆಯಿಂದ ಎಂಟನೆಯ ಯಜ್ಞಕ್ಕೆ ದೀಕ್ಷಿತನಾಗಿ ದೇಶಗಳ ಮೇಲೆ, ಆ ರಾಜನ ಮಗ ತಾಮ್ರಧ್ವಜನ ಕಾವಲಿನಲ್ಲಿ ಕುದುರೆಯನ್ನು ಬಿಡಲು, ಅದು ಅರ್ಜುನನ ಕುದುರೆಗೆ ಎದುರಾಗಿ ಬೀದಿಯಲ್ಲಿ ಬರುತ್ತಿತ್ತು.
- (ಪದ್ಯ-೭)
|
ಕ್ಷೋಣೀಂದ್ರ ಕೇಳೀ ತುರಂಗಮಾ ಕುದುರೆಯಂ |
ಕಾಣುತುಂ ಧ್ವನಿಗೈದು ಪರಿತಂದು ಮೊಗವನಾ |
ಘ್ರಾಣಿಸಿ ಮಿಳರ್ಚ ಕಿವಿಗಳ ನೊಡನೆ ಪೆರದೆಗೆದು ಮುಂಗಾಲ್ಗಳಿಂದಡರ್ದು ||
ಮೇಣೊಂದನೊಂದದು ಹಿಂದಣ ಖುರಂಗಳಿಂ |
ಮಾಣದಡಿಗಡಿಗೆ ಕಂದದ ತೀಟೆಗಳನಾಡಿ |
ಮಾಣಿಕ್ಯಮುಕ್ತಾಳಿಗಳ ಭೂಷಣಂಗಳಂ ಪರಿದಿಕ್ಕಿ ಬಿರುಗೊಂಡುವು ||8||
|
ಪದವಿಭಾಗ-ಅರ್ಥ:
|
- ಕ್ಷೋಣೀಂದ್ರ ಕೇಳು ಈ ತುರಂಗಮು ಆ ಕುದುರೆಯಂ ಕಾಣುತುಂ ಧ್ವನಿಗೈದು ಪರಿತಂದು ಮೊಗವನಾ ಘ್ರಾಣಿಸಿ ಮಿಳರ್ಚ ಕಿವಿಗಳ ನೊಡನೆ ಪೆರದೆಗೆದು (ಧೂಳೆಬ್ಬಿಸು)=[ರಾಜನೇ ಕೇಳು, ಈ ತುರಗವು ಆ ಕುದುರೆಯನ್ನು ಕಾಣುತ್ತಲೆ, ಹೇಷಾ ಧ್ವನಿಮಾಡಿ ಹತ್ತಿರ ಬಂದು ಅದರ ಮುಖವನ್ನು ಮೂಸಿನೋಡಿ, ನಿಮರಿದ ಕಿವಿಗಳ ನೊಡನೆ ಕಾಲಿನಿಂದ ಧೂಳೆಬ್ಬಿಸಿ,];ಮುಂಗಾಲ್ಗಳಿಂದಡರ್ದು ಮೇಣ್ ಅವು ಒಂದನೊಂದು ಹಿಂದಣ ಖುರಂಗಳಿಂ ಮಾಣದೆ ಅಡಿಗಡಿಗೆ ಕಂದದ ತೀಟೆಗಳನಾಡಿ ಮಾಣಿಕ್ಯ ಮುಕ್ತಾಳಿಗಳ ಭೂಷಣಂಗಳಂ ಪರಿದಿಕ್ಕಿ ಬಿರುಗೊಂಡುವು.=[ಮುಂಗಾಲುಗಳಿಂದ ಆಕ್ರಮಿಸಿ, ಮತ್ತ ಒಂದನ್ನೊಂದು ಹಿಂದಿನ ಕಾಲುಗಳಿಂದ ಖುರಗಳಿಂದ ಒದೆದು, ಮತ್ತೆಮತ್ತೆ ಚಿಕ್ಕ ಮರಿಯ ತಂಟೆಗಳನ್ನು ಆಡಿ, ಮಾಣಿಕ್ಯ ಮುಕ್ತಾಳಿ ಸರಗಳನ್ನು ಅಲಂಕಾರಗಳನ್ನು ಹರಿದುಹಾಕಿ, ಚೆಲ್ಲಾಡಿ, ಬಿರುಗುಟ್ಟಿ ನೋಡಿದವು.]
- ತಾತ್ಪರ್ಯ:ಕ್ಷೋಣೀಂದ್ರ ಕೇಳು ಈ ತುರಂಗಮು ಆ ಕುದುರೆಯಂ ಕಾಣುತುಂ ಧ್ವನಿಗೈದು ಪರಿತಂದು ಮೊಗವನಾ ಘ್ರಾಣಿಸಿ ಮಿಳರ್ಚ ಕಿವಿಗಳ ನೊಡನೆ ಪೆರದೆಗೆದು (ಧೂಳೆಬ್ಬಿಸು)=[ರಾಜನೇ ಕೇಳು, ಈ ತುರಗವು ಆ ಕುದುರೆಯನ್ನು ಕಾಣುತ್ತಲೆ, ಹೇಷಾ ಧ್ವನಿಮಾಡಿ ಹತ್ತಿರ ಬಂದು ಅದರ ಮುಖವನ್ನು ಮೂಸಿನೋಡಿ, ನಿಮರಿದ ಕಿವಿಗಳ ನೊಡನೆ ಕಾಲಿನಿಂದ ಧೂಳೆಬ್ಬಿಸಿ,];ಮುಂಗಾಲ್ಗಳಿಂದಡರ್ದು ಮೇಣ್ ಅವು ಒಂದನೊಂದು ಹಿಂದಣ ಖುರಂಗಳಿಂ ಮಾಣದೆ ಅಡಿಗಡಿಗೆ ಕಂದದ ತೀಟೆಗಳನಾಡಿ ಮಾಣಿಕ್ಯ ಮುಕ್ತಾಳಿಗಳ ಭೂಷಣಂಗಳಂ ಪರಿದಿಕ್ಕಿ ಬಿರುಗೊಂಡುವು (ಬಿರುಗು= ಹೆದರಿಸುವುದು) .=[ಮುಂಗಾಲುಗಳಿಂದ ಆಕ್ರಮಿಸಿ, ಮತ್ತ ಒಂದನ್ನೊಂದು ಹಿಂದಿನ ಕಾಲುಗಳಿಂದ ಖುರಗಳಿಂದ ಒದೆದು, ಮತ್ತೆಮತ್ತೆ ಚಿಕ್ಕ ಮರಿಯ ತಂಟೆಗಳನ್ನು ಆಡಿ, ಮಾಣಿಕ್ಯ ಮುಕ್ತಾಳಿ ಸರಗಳನ್ನು ಅಲಂಕಾರಗಳನ್ನು ಹರಿದುಹಾಕಿ, ಚೆಲ್ಲಾಡಿ, ಬಿರುಗುಟ್ಟಿ ನೋಡಿದವು.]
- (ಪದ್ಯ-೮)
|
ಭಾರಣೆಯ ಬಲದೊಡನೆ ಕುದುರೆಗಾವಲೊಳಿರ್ದ |
ವೀರತಾಮ್ರಧ್ವಜನ ಮಂತ್ರಿ ನಕುಲಧ್ವಜಂ |
ದೂರದೊಳ್ ಕಂಡನೀ ತೆರನಂ ವಿಚಾರಿದನೆತ್ತಣ ತುರಂಗಮೆಂದು ||
ಚಾರರಂ ಕಳುಹಿ ತರಿಸಿದನದರಮಸ್ತಕದೊ |
ಳಾರಾಜಿಸುವ ಕನಕಪಟ್ಟ ಲಿಖಿತವನೋದಿ |
ಭೂರಮಣ ಧರ್ಮಜನ ಬಿರುದುಗಳ ವಿಸ್ತರವನೊಡೆಯಂಗೆ ಕೇಳಿಸಿದನು ||9||
|
ಪದವಿಭಾಗ-ಅರ್ಥ:
|
- ಭಾರಣೆಯ ಬಲದೊಡನೆ ಕುದುರೆಗಾವಲೊಳು ಇರ್ದ ವೀರತಾಮ್ರ ಧ್ವಜನ ಮಂತ್ರಿ ನಕುಲಧ್ವಜಂ ದೂರದೊಳ್ ಕಂಡನೀ ತೆರನಂ=[ಪರಾಕ್ರಮದ ಸೈನ್ಯದೊಡನೆ ಕುದುರೆಯ ಕಾವಲಲ್ಲಿ ಇದ್ದ ವೀರ ತಾಮ್ರಧ್ವಜನ ಮಂತ್ರಿ, ನಕುಲಧ್ವಜನು ದೂರದಲ್ಲಿ ಈ ತರದಲ್ಲಿ ಕುದುರೆಗಳ ಜಗಳವನ್ನು ಕಂಡನು.]; ವಿಚಾರಿದನು ಎತ್ತಣ ತುರಂಗಮೆಂದು ಚಾರರಂ ಕಳುಹಿ ತರಿಸಿದನು ಅದರಮಸ್ತಕದೊಳು ಆರಾಜಿಸುವ ಕನಕಪಟ್ಟ ಲಿಖಿತವನು ಓದಿ ಭೂರಮಣ ಧರ್ಮಜನ ಬಿರುದುಗಳ ವಿಸ್ತರವನು ಒಡೆಯಂಗೆ ಕೇಳಿಸಿದನು=[ ಅದು ಎಲ್ಲಿಯ ತುರಗವೆಂದು ವಿಚಾರಿದನು; ಚಾರರನ್ನು ಕಳುಹಿಸಿ ಅದರ ಹಣೆಯಲ್ಲಿ ಶೋಭಿಸುವ ಕನಕಪಟ್ಟ ಬರಹವನ್ನು ತರಿಸಿದನು. ರಾಜಾಧರ್ಮಜನ ಬಿರುದುಗಳ ವಿಸ್ತಾರವನ್ನು ಓದಿ, ಅದರ ವಿವರವನ್ನು ಒಡೆಯ ತಾಮ್ರಧ್ವಜನಿಗೆ ಬಿನ್ನವಿಸಿದನು].
- ತಾತ್ಪರ್ಯ:ಪರಾಕ್ರಮದ ಸೈನ್ಯದೊಡನೆ ಕುದುರೆಯ ಕಾವಲಲ್ಲಿ ಇದ್ದ ವೀರ ತಾಮ್ರಧ್ವಜನ ಮಂತ್ರಿ, ನಕುಲಧ್ವಜನು ದೂರದಲ್ಲಿ ಈ ತರದಲ್ಲಿ ಕುದುರೆಗಳ ಜಗಳವನ್ನು ಕಂಡನು. ಅದು ಎಲ್ಲಿಯ ತುರಗವೆಂದು ವಿಚಾರಿದನು; ಚಾರರನ್ನು ಕಳುಹಿಸಿ ಅದರ ಹಣೆಯಲ್ಲಿ ಶೋಭಿಸುವ ಕನಕಪಟ್ಟ ಬರಹವನ್ನು ತರಿಸಿದನು. ರಾಜಾಧರ್ಮಜನ ಬಿರುದುಗಳ ವಿಸ್ತಾರವನ್ನು ಓದಿ, ಅದರ ವಿವರವನ್ನು ಒಡೆಯ ತಾಮ್ರಧ್ವಜನಿಗೆ ಬಿನ್ನವಿಸಿದನು.
- (ಪದ್ಯ-೯)
|
ಕೇಳುತ ಕನಲ್ದು ತಾಮ್ರಧ್ವಜಂ ಕಟ್ಟಿದಂ |
ತೋಳ ಬಲ್ಪಿಂದೆ ಪಾರ್ಥನ ತುರಗಮಂ ಬಳಿಕ |
ಮೇಳೈಸಿ ನಿಲಿಸಿದಂ ನಿಜಬಲದ ಪೌಜುಗಳನರ್ಧಚಂದ್ರಾಕೃತಿಯೊಳು ||
ಏಳಧ್ವರಂ ಪಿಂತೆ ಕೃಷ್ಣ ವರ್ಜಿತಮಾಯ್ತು |
ಪೇಳಲೇನಿದು ಕೃಷ್ಣಸಂಯುಕ್ತಮಾದಪುದು |
ಕಾಳೆಗಂ ಕೃಷ್ಣನೊಳ್ ದೊರಕೊಳ್ವುದೀಗಳೆಂದುಬ್ಬೇರಿದಂ ಮನದೊಳು ||10||
|
ಪದವಿಭಾಗ-ಅರ್ಥ:
|
- ಕೇಳುತ ಕನಲ್ದು ತಾಮ್ರಧ್ವಜಂ ಕಟ್ಟಿದಂ ತೋಳ ಬಲ್ಪಿಂದೆ ಪಾರ್ಥನ ತುರಗಮಂ=[ಧರ್ಮಜನ ಅಶ್ವಮೇಧ ಕುದುರೆ ಬಂದಿರುವುದನ್ನು ಕೇಳುತ್ತಲೆ ಸಿಟ್ಟುಗೊಂಡು, ತಾಮ್ರಧ್ವಜನು ತನ್ನ ತೋಳಬಲವ ಮೇಲೆ ಭರವಸೆ ಇಟ್ಟು ಪಾರ್ಥನ ತುರುಗವನ್ನು ಕಟ್ಟಿದನು.];; ಬಳಿಕ ಮೇಳೈಸಿ ನಿಲಿಸಿದಂ ನಿಜಬಲದ ಪೌಜುಗಳನು ಅರ್ಧಚಂದ್ರಾಕೃತಿಯೊಳು ಏಳಧ್ವರಂ ಪಿಂತೆ ಕೃಷ್ಣ ವರ್ಜಿತಮಾಯ್ತು=[ಬಳಿಕ ತನ್ನ ಸೈನ್ಯವನ್ನು ಒಟ್ಟು ಸೇರಿಸಿ ಅರ್ಧಚಂದ್ರಾಕೃತಿಯಲ್ಲಿ ನಿಲ್ಲಿಸಿದನು. ಏಳು ಅಶ್ವಮೇಧಗಳೂ ಹಿಂದೆ ಕೃಷ್ಣನಿಲ್ಲದೆ ಆಯಿತು.];; ಪೇಳಲು ಏನು ಇದು ಕೃಷ್ಣ ಸಂಯುಕ್ತಂ ಆದಪುದು ಕಾಳೆಗಂ ಕೃಷ್ಣನೊಳ್ ದೊರಕೊಳ್ವುದು ಈಗಳೆಂದು ಉಬ್ಬೇರಿದಂ ಮನದೊಳು=[ ಏನು ಹೇಳಲಿ! ಇದು ಕೃಷ್ಣನ ಜೊತೆಗೂಡಿ ಆಗುವುದು! ಈಗ ಕೃಷ್ಣನೊಡನೆ ಕಾಳಗವು ಒದಗುವುದು! ಎಂದು ಮನಸ್ಸಿನಲ್ಲಿ ಸಂತೋಷಗೊಂಡು ಬಹಳ ಉಬ್ಬಿಹೋದನು.]
- ತಾತ್ಪರ್ಯ:ಧರ್ಮಜನ ಅಶ್ವಮೇಧ ಕುದುರೆ ಬಂದಿರುವುದನ್ನು ಕೇಳುತ್ತಲೆ ಸಿಟ್ಟುಗೊಂಡು, ತಾಮ್ರಧ್ವಜನು ತನ್ನ ತೋಳಬಲವ ಮೇಲೆ ಭರವಸೆ ಇಟ್ಟು ಪಾರ್ಥನ ತುರುಗವನ್ನು ಕಟ್ಟಿದನು. ಬಳಿಕ ತನ್ನ ಸೈನ್ಯವನ್ನು ಒಟ್ಟು ಸೇರಿಸಿ ಅರ್ಧಚಂದ್ರಾಕೃತಿಯಲ್ಲಿ ನಿಲ್ಲಿಸಿದನು. ಏಳು ಅಶ್ವಮೇಧಗಳೂ ಹಿಂದೆ ಕೃಷ್ಣನಿಲ್ಲದೆ ಆಯಿತು. ಏನು ಹೇಳಲಿ! ಇದು ಕೃಷ್ಣನ ಜೊತೆಗೂಡಿ ಆಗುವುದು! ಈಗ ಕೃಷ್ಣನೊಡನೆ ಕಾಳಗವು ಒದಗುವುದು! ಎಂದು ಮನಸ್ಸಿನಲ್ಲಿ ಸಂತೋಷಗೊಂಡು ಬಹಳ ಉಬ್ಬಿಹೋದನು.
- (ಪದ್ಯ-೧೦)
|
ತಂದೆಯ ಮಹಾಧ್ವರಕೆ ಕೃಷ್ಣನೊಡಗೂಡುವಂ |
ಮುಂದೆ ಪಾಂಡವ ವೀರರೊಳ್ ತನಗೆ ಕಾಳೆಗಂ |
ಬಂದಪುದು ಲೇಸಾದುದೆಂದು ತಾಮ್ರಧ್ವಜಂ ನಕುಲಧ್ವಜನೊಳಾಡಲು ||
ಮಂದ ಪೌರುಷದಲ್ಪ ಭಾಗ್ಯದತಿಕೃಶಮಾದ |
ಮಂದಿ ಕುದುರೆಯ ಮೇದಿನೀಶ್ವರರ್ ಕಾಳೆಗಕೆ |
ನಿಂದಪರೆ ನಿನ್ನೊಳಿದು ಪುಸಿಯೆನುತೆ ಮತ್ತವಂ ನಸುನಗೆಯೊಳಿಂತೆಂದನು ||11||
|
ಪದವಿಭಾಗ-ಅರ್ಥ:
|
- ತಂದೆಯ ಮಹಾಧ್ವರಕೆ ಕೃಷ್ಣನು ಒಡಗೂಡುವಂ ಮುಂದೆ ಪಾಂಡವ ವೀರರೊಳ್ ತನಗೆ ಕಾಳೆಗಂ ಬಂದಪುದು ಲೇಸಾದುದು ಎಂದು ತಾಮ್ರಧ್ವಜಂ ನಕುಲಧ್ವಜನೊಳು ಆಡಲು=[ತಂದೆಯ ಮಹಾಧ್ವರಕ್ಕೆ ಕೃಷ್ಣನು ಬರುವನು, ಮುಂದೆ ಪಾಂಡವ ವೀರರ ಜೊತೆ ತನಗೆ ಕಾಳಗವು ನೆಡೆಯುದು, ಇದು ಬಹಳ ಒಳ್ಳೆಯದಾಯಿತು, ಎಂದು ತಾಮ್ರಧ್ವಜನು ನಕುಲಧ್ವಜನೊಡನೆ ಹೇಳಲು,]; ಮಂದ ಪೌರುಷದಲ್ಪ ಭಾಗ್ಯದತಿಕೃಶಮಾದ ಮಂದಿ ಕುದುರೆಯ ಮೇದಿನೀಶ್ವರರ್ ಕಾಳೆಗಕೆ ನಿಂದಪರೆ ನಿನ್ನೊಳಿದು ಪುಸಿಯೆನುತೆ ಮತ್ತವಂ ನಸುನಗೆಯೊಳಿಂತೆಂದನು=[ಸಾಮಾನ್ಯ ಪೌರುಷವುಳ್ಳ ಅಲ್ಪ ಭಾಗ್ಯದ ಬಹಳ ಕೃಶವಾದ ಜನರು, ಕುದುರೆಯ ಒಡೆಯರಾದ ರಾಜರು ನಿನ್ನೊಡನೆ ಕಾಳೆಗಕ್ಕೆ ನಿಲ್ಲುವರೆ! ನಿನ್ನ ವಿಚಾರದಲ್ಲಿ ಇದು ಹುಸಿ- ಆಗದು ಎನ್ನತ್ತಾ ಮತ್ತೆ ಅನು ನಸುನಗುತ್ತಾ ಹೀಗೆ ಹೇಳಿದನು.]
- ತಾತ್ಪರ್ಯ:ತನ್ನ ತಂದೆಯ ಮಹಾಧ್ವರಕ್ಕೆ ಕೃಷ್ಣನು ಬರುವನು, ಮುಂದೆ ಪಾಂಡವ ವೀರರ ಜೊತೆ ತನಗೆ ಕಾಳಗವು ನೆಡೆಯುದು, ಇದು ಬಹಳ ಒಳ್ಳೆಯದಾಯಿತು, ಎಂದು ತಾಮ್ರಧ್ವಜನು ನಕುಲಧ್ವಜನೊಡನೆ ಹೇಳಲು, ಸಾಮಾನ್ಯ ಪೌರುಷವುಳ್ಳ ಅಲ್ಪ ಭಾಗ್ಯದ ಬಹಳ ಕೃಶವಾದ ಜನರು, ಈ ಕುದುರೆಯ ಒಡೆಯರಾದ ರಾಜರು ನಿನ್ನೊಡನೆ ಕಾಳೆಗಕ್ಕೆ ನಿಲ್ಲುವರೆ! ನಿನ್ನ ವಿಚಾರದಲ್ಲಿ ಇದು ಹುಸಿ- ಆಗದು ಎನ್ನತ್ತಾ ಮತ್ತೆ ಅನು ನಸುನಗುತ್ತಾ ಹೀಗೆ ಹೇಳಿದನು.
- (ಪದ್ಯ-೧೧)
|
ಚಪ್ಪನ್ನದೇಶದೊಳ್ ನಿನಗೆ ಮಲೆತಿದಿರಾಗಿ |
ಬಪ್ಪ ಭೂಮಿಪರಿಲ್ಲ ನಿಮ್ಮಯ್ಯನರಮನೆಯೊ |
ಳೊಪ್ಪಂಬಡೆದ ನರ್ತಕೀಜನದ ನಿತ್ಯ ಪುಷ್ಟಾಂಜಲಿಯ ಸಂಗ್ರಹಕ್ಕೆ ||
ತಪ್ಪದೆಂದು ತೆರುವ ಕಟ್ಟಳೆಯ ಮುತ್ತುಗಳ |
ಕಪ್ಪಮಂ ಕೊಂಡು ಬಂದನೊ ಬಭ್ರುವಾಹನಂ |
ಸಪ್ಪುಳಿದು ಪೊಸತೆತ್ತಣದೊ ಸೈನ್ಯಮೆನೆ ತಾಮ್ರಕೇತು ಮಗುಳಿಂತೆಂದನು ||12||
|
ಪದವಿಭಾಗ-ಅರ್ಥ:
|
- ಚಪ್ಪನ್ನದೇಶದೊಳ್ ನಿನಗೆ ಮಲೆತು ಇದಿರಾಗಿ ಬಪ್ಪ ಭೂಮಿಪರು ಇಲ್ಲ=[ಐವತ್ತಾರು ದೇಶದಲ್ಲಿ ನಿನಗೆ ಪ್ರತಿಭಟಿಸಿ ಎದುರಾಗಿ ಬರುವ ರಾಜರೇ ಇಲ್ಲ.];; ನಿಮ್ಮಯ್ಯನ ಅರಮನೆಯೊಳ ಒಪ್ಪಂಬಡೆದ ನರ್ತಕೀಜನದ ನಿತ್ಯ ಪುಷ್ಟಾಂಜಲಿಯ ಸಂಗ್ರಹಕ್ಕೆ ತಪ್ಪದೆಂದು ತೆರುವ ಕಟ್ಟಳೆಯ ಮುತ್ತುಗಳ ಕಪ್ಪಮಂ ಕೊಂಡು ಬಂದನೊ ಬಭ್ರುವಾಹನಂ=[ನಿಮ್ಮ ತಂದೆಯ ಅರಮನೆಯಲ್ಲಿ ನೇಮಿಸಿಕೊಂಡ ನರ್ತಕಿಯರ ನಿತ್ಯ ಪುಷ್ಟಾಂಜಲಿಯ ಕಾರ್ಯದ ಸಂಗ್ರಹಕ್ಕೆ ತಪ್ಪದೆ ಯಾವಾಗಲೂ ಕಟ್ಟಳೆಯಂತೆ (ಒಪ್ಪಂದದಂತೆ) ತೆರುವ/ತಂದೊಪಪ್ಪಿಸುವ ಮುತ್ತುಗಳ ಕಪ್ಪವನ್ನು ಬಭ್ರುವಾಹನನು ತೆಗೆದುಕೊಂಡು ಬಂದನೊ!];; ಸಪ್ಪುಳ ಇದು ಪೊಸತು ಎತ್ತಣದೊ ಸೈನ್ಯಮ್ ಎನೆ, ತಾಮ್ರಕೇತು ಮಗುಳ್ ಇಂತೆಂದನು=[ ಆದರೆ ಸೈನ್ಯದ ಈ ಸಪ್ಪುಳವು ಹೊಸತು, ಈ ಸೈನ್ಯವು ಎಲ್ಲಿಯದೊ ಎನ್ನಲು, ತಾಮ್ರಕೇತು ತಿರುಗಿ ಹೀಗೆ ಹೇಳಿದನು.]
- ತಾತ್ಪರ್ಯ:ಐವತ್ತಾರು ದೇಶದಲ್ಲಿ ನಿನಗೆ ಪ್ರತಿಭಟಿಸಿ ಎದುರಾಗಿ ಬರುವ ರಾಜರೇ ಇಲ್ಲ.ನಿಮ್ಮ ತಂದೆಯ ಅರಮನೆಯಲ್ಲಿ ನೇಮಿಸಿಕೊಂಡ ನರ್ತಕಿಯರ ನಿತ್ಯ ಪುಷ್ಟಾಂಜಲಿಯ ಕಾರ್ಯದ ಸಂಗ್ರಹಕ್ಕೆ ತಪ್ಪದೆ ಯಾವಾಗಲೂ ಕಟ್ಟಳೆಯಂತೆ (ಒಪ್ಪಂದದಂತೆ) ತೆರುವ/ತಂದೊಪಪ್ಪಿಸುವ ಮುತ್ತುಗಳ ಕಪ್ಪವನ್ನು ಬಭ್ರುವಾಹನನು ತೆಗೆದುಕೊಂಡು ಬಂದನೊ! ಆದರೆ ಸೈನ್ಯದ ಈ ಸಪ್ಪುಳವು ಹೊಸತು, ಈ ಸೈನ್ಯವು ಎಲ್ಲಿಯದೊ ಎನ್ನಲು, ತಾಮ್ರಕೇತು ತಿರುಗಿ ಹೀಗೆ ಹೇಳಿದನು.
- (ಪದ್ಯ-೧೨)
|
ಧಾತ್ರಿಯೊಳ್ ವೀರರಿಲ್ಲೆನ್ನದಿರ್ ನಾರದಂ |
ರಾತ್ರಿಯೊಳ್ ಬಂದೆನ್ನೊಳಾಡಿದಂ ಧರೆಗತಿ |
ಕ್ಷಾತ್ರಪೌರುಷದಿಂದೆ ವರ್ತಿಪರ್ ಬಭ್ರುವಾಹನ ಕರ್ಣತನಯರೆಂದು ||
ಗೋತ್ರಾರಿ ಪುತ್ರ ದಾನವ ಸೂದನರ್ ಮನುಜ |
ಮಾತ್ರರಲ್ಲೆಯ್ದೆ ನರನಾರಾಯಣರ್ ಕಮಲ |
ನೇತ್ರಸಮರನಿರುದ್ಧ ಸಾತ್ಯಕಿ ಪ್ರದ್ಯುಮ್ನ ಬೋಜಾದಿ ಯದುಗಳೆಂದು ||13||
|
ಪದವಿಭಾಗ-ಅರ್ಥ:
|
- ಧಾತ್ರಿಯೊಳ್ ವೀರರಿಉ ಇಲ್ಲ ಎನ್ನದಿರ್ ನಾರದಂ ರಾತ್ರಿಯೊಳ್ ಬಂದು ಎನ್ನೊಳು ಆಡಿದಂ=[ಭೂಮಿಯಲ್ಲಿ ವೀರರಿಲ್ಲ ಎನ್ನಬೇಡ; ನಾರದರನು ರಾತ್ರಿಯಲ್ಲಿ ಬಂದು ನನ್ನೊಡನೆ ಇದನ್ನು ತಿಳಿಸಿರುವನು];; ಧರೆಗತಿ ಕ್ಷಾತ್ರಪೌರುಷದಿಂದೆ ವರ್ತಿಪರ್ ಬಭ್ರುವಾಹನ ಕರ್ಣತನಯರೆಂದು ಗೋತ್ರಾರಿ ಪುತ್ರ (ಬೆಟ್ಟಗಳಿಗೆ ಅರಿ-ಶತ್ರು ಇಂದ್ರ)ದಾನವ ಸೂದನರ್ ಮನುಜ ಮಾತ್ರರಲ್ಲ ಐಯ್ದೆ (ಬರುವ) ನರನಾರಾಯಣರ್ ಕಮಲ ನೇತ್ರ ಸಮರು,=[ಭೂಮಿಯಲ್ಲಿ ಕ್ಷಾತ್ರಪೌರುಷವಿರುವ ಬಭ್ರುವಾಹನ, ಕರ್ಣತನಯನಾದ ವೃಷಕೇತುಗಳು ಇರುವರು. ಬಂದಿರುವ ಇಂದ್ರನ ಮಗ ಅರ್ಜುನ, ಮಧುಸೂದನರು ಮನುಜ ಮಾತ್ರರಲ್ಲ, ನರನಾರಾಯಣರು ವಿಷ್ಣುವಿಗೆ ಸಮರು,];; ಅನಿರುದ್ಧ ಸಾತ್ಯಕಿ ಪ್ರದ್ಯುಮ್ನ ಬೋಜಾದಿ ಯದುಗಳೆಂದು=[ಅನಿರುದ್ಧ ಸಾತ್ಯಕಿ ಪ್ರದ್ಯುಮ್ನ ಬೋಜಾದಿ ಯದುಗಳು ಎಂದು ಹೇಳಿರುವನು.]
- ತಾತ್ಪರ್ಯ:ಭೂಮಿಯಲ್ಲಿ ವೀರರಿಲ್ಲ ಎನ್ನಬೇಡ; ನಾರದರನು ರಾತ್ರಿಯಲ್ಲಿ ಬಂದು ನನ್ನೊಡನೆ ಇದನ್ನು ತಿಳಿಸಿರುವನು. ಭೂಮಿಯಲ್ಲಿ ಕ್ಷಾತ್ರಪೌರುಷವಿರುವ ಬಭ್ರುವಾಹನ, ಕರ್ಣತನಯನಾದ ವೃಷಕೇತುಗಳು ಇರುವರು. ಬಂದಿರುವ ಇಂದ್ರನ ಮಗ ಅರ್ಜುನ, ಮಧುಸೂದನರು ಮನುಜ ಮಾತ್ರರಲ್ಲ, ನರನಾರಾಯಣರು ವಿಷ್ಣುವಿಗೆ ಸಮರು; ಅನಿರುದ್ಧ ಸಾತ್ಯಕಿ ಪ್ರದ್ಯುಮ್ನ ಬೋಜಾದಿ ಯದುಗಳು ಎಂದು ಹೇಳಿರುವನು.
- (ಪದ್ಯ-೧೩)
|
ಉದ್ಧತ ಪರಾಕ್ರಮಿಗಳನಿಬರಿಂದಿವರೊಡನೆ |
ಯುದ್ಧಮಾದಪುದೆಮಗೆ ನಮ್ಮಖಿಳಸೇನೆ ಸ |
ನ್ನದ್ಧಮಾಗಿರಲರ್ಧಚಂದ್ರಾಕೃತಿಯೊಳೆಂದು ತಾಮ್ರಧ್ವಜಂ ಮಂತ್ರಿಗೆ ||
ಬುದ್ಧಿಗಲಿಸಿದನಿತ್ತ ಪಾಂಡವನ ಬಲದೊಳ್ ಪ್ರ |
ಸಿದ್ಧಭಟ ರನುಸಾಲ್ವ ಕರ್ಣಸುತ ಸಾಂಬಾನಿ |
ರುದ್ಧ ಕೃತವರ್ಮಾದಿಗಳ್ ಮಸಗಿದರ್ ತುರಂಗಮಂ ಬಿಡಿಸುವುಜ್ಜುಗದೊಳು ||14||
|
ಪದವಿಭಾಗ-ಅರ್ಥ:
|
- ಉದ್ಧತ ಪರಾಕ್ರಮಿಗಳು ಅನಿಬರು (ಎಲ್ಲರೂ) ಇಂದಿವರೊಡನೆ ಯುದ್ಧಮಾದಪುದು ಎಮಗೆ=[ಎಲ್ಲರೂ ಮೇಲುಮಟ್ಟದ ಪರಾಕ್ರಮಿಗಳು; ಇಂದು ಇವರೊಡನೆ ನನಗೆ ಯುದ್ಧವು ಘಟಿಸುವುದು.]; ನಮ್ಮ ಅಖಿಳ ಸೇನೆ ಸನ್ನದ್ಧಮಾಗಿರಲಿ ಅರ್ಧಚಂದ್ರಾಕೃತಿಯೊಳೆಂದು ತಾಮ್ರಧ್ವಜಂ ಮಂತ್ರಿಗೆ ಬುದ್ಧಿಗಲಿಸಿದನು=[ನಮ್ಮ ಎಲ್ಲಾ ಸೇನೆ ಅರ್ಧಚಂದ್ರಾಕೃತಿಯಲ್ಲಿ ಸನ್ನದ್ಧವಾಗಿರಲಿ; ಎಂದು ತಾಮ್ರಧ್ವಜನು ಮಂತ್ರಿಗೆ ಸೂಚಿಸಿದನು];; ಇತ್ತ ಪಾಂಡವನ ಬಲದೊಳ್ ಪ್ರಸಿದ್ಧಭಟರು ಅನುಸಾಲ್ವ ಕರ್ಣಸುತ ಸಾಂಬ ಅನಿರುದ್ಧ ಕೃತವರ್ಮಾದಿಗಳ್ ಮಸಗಿದರ್ ತುರಂಗಮಂ ಬಿಡಿಸುವ ಉಜ್ಜುಗದೊಳು=[ಇತ್ತ ಪಾರ್ಥನ ಸೈನ್ಯದಲ್ಲಿ ಪ್ರಸಿದ್ಧಭಟರಾದ ಅನುಸಾಲ್ವ, ಕರ್ಣಸುತ, ಸಾಂಬ, ಅನಿರುದ್ಧ, ಕೃತವರ್ಮಾದಿಗಳು ತುರಗವನ್ನು ಬಿಡಿಸಿಕೊಳ್ಳುವ ಕಾರ್ಯದಲ್ಲಿ ಶತ್ರುವನ್ನು ಮುತ್ತಿದರು.]
- ತಾತ್ಪರ್ಯ:ಎಲ್ಲರೂ ಮೇಲುಮಟ್ಟದ ಪರಾಕ್ರಮಿಗಳು; ಇಂದು ಇವರೊಡನೆ ನನಗೆ ಯುದ್ಧವು ಘಟಿಸುವುದು. ನಮ್ಮ ಎಲ್ಲಾ ಸೇನೆ ಅರ್ಧಚಂದ್ರಾಕೃತಿಯಲ್ಲಿ ಸನ್ನದ್ಧವಾಗಿರಲಿ; ಎಂದು ತಾಮ್ರಧ್ವಜನು ಮಂತ್ರಿಗೆ ಸೂಚಿಸಿದನು. ಇತ್ತ ಪಾರ್ಥನ ಸೈನ್ಯದಲ್ಲಿ ಪ್ರಸಿದ್ಧಭಟರಾದ ಅನುಸಾಲ್ವ, ಕರ್ಣಸುತ, ಸಾಂಬ, ಅನಿರುದ್ಧ, ಕೃತವರ್ಮಾದಿಗಳು ತುರಗವನ್ನು ಬಿಡಿಸಿಕೊಳ್ಳುವ ಕಾರ್ಯದಲ್ಲಿ ಶತ್ರುವನ್ನು ಮುತ್ತಿದರು.
- (ಪದ್ಯ-೧೪)
|
ಕುದುರೆಯಂ ಕಟ್ಟಿ ಪಡೆಸಹಿತ ತಾಮ್ರಧ್ವಜಂ |
ಕದನಕಿದಿರಾಗಲಸುರಾಂತಕಂ ಕಂಡು ತೋ |
ರಿಸಿದನರ್ಜುನಂಗಿವಂ ಬರ್ಹಿಧ್ವಜನ ತನುಜನನಸೂಯಕಂ ಧೀರನು ||
ಉದಿತ ಕಾಮಂ ಸತ್ಯವಾದಿ ಶುಚಿ ವೈಷ್ಣವಂ |
ಸದರಮಲ್ಲಿವನೊಡನೆ ಕಾಳಗಂ ನರ್ಮದಾ |
ನದಿಯ ತೀರದೊಳಿವನ ತಂದೆ ದೀಕ್ಷಿತನಾಗಿಹಂ ಗೆಲ್ವುದರಿದೆಂದನು ||15||
|
ಪದವಿಭಾಗ-ಅರ್ಥ:
|
- ಕುದುರೆಯಂ ಕಟ್ಟಿ ಪಡೆಸಹಿತ ತಾಮ್ರಧ್ವಜಂ ಕದನಕೆ ಇದಿರಾಗಲು ಅಸುರಾಂತಕಂ ಕಂಡು ತೋರಿಸಿದನು ಅರ್ಜುನಂಗೆ=[ಕುದುರೆಯನ್ನು ಕಟ್ಟಿ ಸೈನ್ಯಸಹಿತ ತಾಮ್ರಧ್ವಜನು ಯುದ್ಧಕ್ಕೆ ಎದಿರು ನಿಲ್ಲಲು, ಕೃಷ್ಣನು ಕಂಡು ಅವನನ್ನು ಅರ್ಜುನನಿಗೆ ತೋರಿಸಿದನು.];; ಇವಂ ಬರ್ಹಿಧ್ವಜನ (ನವಿಲು/ಮಯೂರ ಧ್ವಜ) ತನುಜನು ಅನಸೂಯಕಂ ಧೀರನು ಉದಿತ ಕಾಮಂ ಸತ್ಯವಾದಿ ಶುಚಿ ವೈಷ್ಣವಂ ಸದರಮಲ್ಲ ಇವನೊಡನೆ ಕಾಳಗಂ=[ಇವನು ಮಯೂರಧ್ವಜನ ಮಗನು, ಅಸೂಯೆ ಇಲ್ಲದವನು, ಧೀರನು, ಉತ್ತಮ ಬಯಕೆಯುಳ್ಳವನು, ಸತ್ಯವಾದಿಯು, ಶುಚಿ, ವಿಷ್ಣುಭಕ್ತನು ಇವನೊಡನೆ ಕಾಳಗವು ಸುಲಭವಲ್ಲ];; ನರ್ಮದಾ ನದಿಯ ತೀರದೊಳು ಇವನ ತಂದೆ ದೀಕ್ಷಿತನಾಗಿಹಂ ಗೆಲ್ವುದು ಅರಿದು ಎಂದನು=[ನರ್ಮದಾ ನದಿಯ ತೀರದಲ್ಲಿ ಇವನ ತಂದೆ ಅಶ್ವಮೇಧ ಯಜ್ಷಕ್ಕೆ ದೀಕ್ಷಿತನಾಗಿರುವನು. ಇವನನ್ನು ಹೇಗೆ ಗೆಲ್ಲಬೇಕೆಂಬುದು ತಿಳಿಯದು, ಎಂದನು].
- ತಾತ್ಪರ್ಯ:ಕುದುರೆಯನ್ನು ಕಟ್ಟಿ ಸೈನ್ಯಸಹಿತ ತಾಮ್ರಧ್ವಜನು ಯುದ್ಧಕ್ಕೆ ಎದಿರು ನಿಲ್ಲಲು, ಕೃಷ್ಣನು ಕಂಡು ಅವನನ್ನು ಅರ್ಜುನನಿಗೆ ತೋರಿಸಿದನು. ಇವನು ಮಯೂರಧ್ವಜನ ಮಗನು, ಅಸೂಯೆ ಇಲ್ಲದವನು, ಧೀರನು, ಉತ್ತಮ ಬಯಕೆಯುಳ್ಳವನು, ಸತ್ಯವಾದಿಯು, ಶುಚಿ, ವಿಷ್ಣುಭಕ್ತನು ಇವನೊಡನೆ ಕಾಳಗವು ಸುಲಭವಲ್ಲ. ನರ್ಮದಾ ನದಿಯ ತೀರದಲ್ಲಿ ಇವನ ತಂದೆ ಅಶ್ವಮೇಧ ಯಜ್ಷಕ್ಕೆ ದೀಕ್ಷಿತನಾಗಿರುವನು. ಇವನನ್ನು ಹೇಗೆ ಗೆಲ್ಲಬೇಕೆಂಬುದು ತಿಳಿಯದು, ಎಂದನು.
- (ಪದ್ಯ-೧೫)XIX
|
ಎಂದಖಿಳಸೇನೆಯಂ ಗೃಧ್ರದಾಕಾರಕ್ಕೆ |
ತಂದು ನಿಲಿಸಿದನಸುರಮರ್ದನಂ ಮೇಣದರ |
ಮುಂದೆಸೆಯೆ ಕೊರಲೊಳನುಸಾಲ್ವನಂ ಕಂಗಳೊಳ್ ನೀಲ ಹಂಸಧ್ವಜನರನು ||
ಕಂದರ್ಪಕಾನಿರುದ್ಧರನುಭಯ ಪಕ್ಷದೆಡೆ |
ಗಂದದಿಂದಡಿಗಳ್ಗೆ ಭೋಜ ಸಾತ್ಯಕಿಗಳಂ |
ಹಿಂದಣಗರಿಗೆ ಮೇಘನಾದನಂ ಕಲಿಯೌವನಾಶ್ವನಂ ಜೋಡಿಸಿದನು ||16||
|
ಪದವಿಭಾಗ-ಅರ್ಥ:
|
- ಎಂದು ಅಖಿಳ ಸೇನೆಯಂ ಗೃಧ್ರದಾಕಾರಕ್ಕೆ ತಂದು ನಿಲಿಸಿದನು ಅಸುರಮರ್ದನಂ ಮೇಣದರ ಮುಂದೆ ಎಸೆಯೆ ಕೊರಲೊಳು ಅನುಸಾಲ್ವನಂ ಕಂಗಳೊಳ್ ನೀಲ ಹಂಸಧ್ವಜನರನು=[ಕೃಷ್ಣನು ತಾಮ್ರಧ್ವಜನನ್ನು ಗೆಲ್ಲವುದು ಕಷ್ಟ, ಎಂದು ಹೇಳಿ, ತಾಮ್ರಧ್ವಜನ ಚಂದ್ರಾಕಾರ ಸೈನ್ಯದ ಎದುರು, ತಮ್ಮ ಅಖಿಲ ಸೇನೆಯನ್ನೂ ಹದ್ದಿನ ಆಕಾರಕ್ಕೆ ತಂದು ನಿಲ್ಲಿಸಿದನು. ನಂತರ ಅದರ ಮುಂದೆ ಎದ್ದುತೋರುವಂತೆ ಹದ್ದಿನಕೊರಳ ಸ್ಥಾನದಲ್ಲಿ ಅನುಸಾಲ್ವನನ್ನೂ ಕಣ್ಣುಗಳಲ್ಲಿ ನೀಲ ಹಂಸಧ್ವಜನರನ್ನೂ, ];; ಕಂದರ್ಪಕ ಅನಿರುದ್ಧರನು ಅಭಯ ಪಕ್ಷದೆಡೆಗೆ ಅಂದದಿಂದ ಅಡಿಗಳ್ಗೆ ಭೋಜ ಸಾತ್ಯಕಿಗಳಂ ಹಿಂದಣ ಗರಿಗೆ ಮೇಘನಾದನಂ ಕಲಿಯೌವನಾಶ್ವನಂ ಜೋಡಿಸಿದನು=[ಪ್ರದ್ಯುಮ್ನ ಅನಿರುದ್ಧರನ್ನು ಎರಡು ರೆಕ್ಕೆಗಳಕಡೆಗೆ ಈ ಕ್ರಮದಿಂದ ಪಾದಗಳ ಸ್ಥಾನಗಳಲ್ಲಿ ಭೋಜ ಸಾತ್ಯಕಿಗಳನ್ನೂ, ಹಿಂದಿನ ಗರಿಯ ಭಾಗದಲ್ಲಿ ಮೇಘನಾದನನ್ನೂ ಕಲಿಯೌವನಾಶ್ವನನ್ನೂ ಜೋಡಿಸಿ ನಿಲ್ಲಸಿದನು.]
- ತಾತ್ಪರ್ಯ:ಕೃಷ್ಣನು ತಾಮ್ರಧ್ವಜನನ್ನು ಗೆಲ್ಲವುದು ಕಷ್ಟ ಎಂದು ಹೇಳಿ, ತಾಮ್ರಧ್ವಜನ ಚಂದ್ರಾಕಾರ ಸೈನ್ಯದ ಎದುರು, ತಮ್ಮ ಅಖಿಲ ಸೇನೆಯನ್ನೂ ಹದ್ದಿನ ಆಕಾರಕ್ಕೆ ತಂದು ನಿಲ್ಲಿಸಿದನು. ನಂತರ ಅದರ ಮುಂದೆ ಎದ್ದುತೋರುವಂತೆ ಹದ್ದಿನಕೊರಳ ಸ್ಥಾನದಲ್ಲಿ ಅನುಸಾಲ್ವನನ್ನೂ, ಕಣ್ಣುಗಳಲ್ಲಿ ನೀಲ ಹಂಸಧ್ವಜನರನ್ನೂ, ಪ್ರದ್ಯುಮ್ನ ಅನಿರುದ್ಧರನ್ನು ಎರಡು ರೆಕ್ಕೆಗಳಕಡೆಗೆ ಈ ಕ್ರಮದಿಂದ ಪಾದಗಳ ಸ್ಥಾನಗಳಲ್ಲಿ ಭೋಜ ಸಾತ್ಯಕಿಗಳನ್ನೂ, ಹಿಂದಿನ ಗರಿಯ ಭಾಗದಲ್ಲಿ ಮೇಘನಾದನನ್ನೂ ಕಲಿಯೌವನಾಶ್ವನನ್ನೂ ಜೋಡಿಸಿ ನಿಲ್ಲಸಿದನು.]
- (ಪದ್ಯ-೧೬)
|
ವ್ಯೂಹಚಂಚು ಸ್ಥಾನಕಿರಿಸಿದಂ ಕಲಿ ಬಭ್ರು |
ವಾಹನ ವ್ವಷಧ್ವಜನನುಳಿದ ಭಟರಂ ಗೃಧ್ರ |
ದೇಹದವಯವದೆಡೆಗೆ ನೆಲೆಗೊಳಿಸಿ ಬಳಿಕದರ ಹೃದಯದೊಳ್ ಫಲುಗುಣನು ||
ವಾಹಿನಿ ಸಹಿತ ನಿಲಿಸಿ ದಾರುಕನೆಸಗೆ ರಥಾ |
ರೋಹಣಂಗೈದು ಮುರಮಥನಂ ಪಿಡಿದನಾ ಮ |
ಹಾಹವಕೆ ವರಪಾಂಚಜನ್ಯಮಂ ಘೋರ ರವದಿಂದಹಿತರೆದೆಗಳೊಡೆಯೆ ||17||
|
ಪದವಿಭಾಗ-ಅರ್ಥ:
|
- ವ್ಯೂಹಚಂಚು ಸ್ಥಾನಕೆ ಇರಿಸಿದಂ ಕಲಿ ಬಭ್ರುವಾಹನ ವ್ವಷಧ್ವಜನನು ಉಳಿದ ಭಟರಂ ಗೃಧ್ರ ದೇಹದ ಅವಯವದೆಡೆಗೆ ನೆಲೆಗೊಳಿಸಿ ಬಳಿಕದರ ಹೃದಯದೊಳ್ ಫಲುಗುಣನು=[ಕೃಷ್ಣನು ನಂತರ, ಸೈನ್ಯವ್ಯೂಹದ ಕೊಕ್ಕಿನ ಸ್ಥಾನಕ್ಕೆ ಕಲಿ ಬಭ್ರುವಾಹನ ವ್ವಷಧ್ವಜರನ್ನು ಎರಿಸಿದನು; ಉಳಿದ ಭಟರನ್ನು ಹದ್ದಿನದೇಹದ ಅವಯವದ ಭಾಗದಲ್ಲಿ ನೆಲೆಗೊಳಿಸಿ ಬಳಿಕ ಅದರ ಹೃದಯದ ಭಾಗದಲ್ಲಿ ಫಲುಗುಣನನ್ನು];; ವಾಹಿನಿ ಸಹಿತ ನಿಲಿಸಿ ದಾರುಕನ ಎಸಗೆ ರಥಾ ರೋಹಣಂ ಗೈದು ಮುರಮಥನಂ ಪಿಡಿದನ ಆ ಮಹಾಹವಕೆ ವರ ಪಾಂಚಜನ್ಯಮಂ ಘೋರ ರವದಿಂದ ಅಹಿತರ ಎದೆಗಳು ಒಡೆಯೆ=[ಸೈನ್ಯ ಸಹಿತ ನಿಲ್ಲಿಸಿ, ತನ್ನ ಸಾರಥಿ ದಾರುಕನು ರಥನಡೆಸಲು ರಥವನ್ನೇರಿ ಕೃಷ್ಣನು ಆ ಮಹಾಯುದ್ಧಕ್ಕೆ ಅನುವಾಗಿ ತನ್ನ ವರ ಪಾಂಚಜನ್ಯವನ್ನು ಹಿಡಿದು ಶತ್ರುಗಳ ಎದೆಗಳು ಒಡೆಯುವಂತೆ ಘೋರವಾದ ಶಂಖಧ್ವನಿ ಮಾಡಿದನು.]
- ತಾತ್ಪರ್ಯ:ಕೃಷ್ಣನು ನಂತರ, ಸೈನ್ಯವ್ಯೂಹದ ಕೊಕ್ಕಿನ ಸ್ಥಾನಕ್ಕೆ ಕಲಿ ಬಭ್ರುವಾಹನ ವ್ವಷಧ್ವಜರನ್ನು ಎರಿಸಿದನು; ಉಳಿದ ಭಟರನ್ನು ಹದ್ದಿನದೇಹದ ಅವಯವದ ಭಾಗದಲ್ಲಿ ನೆಲೆಗೊಳಿಸಿ ಬಳಿಕ ಅದರ ಹೃದಯದ ಭಾಗದಲ್ಲಿ ಫಲುಗುಣನನ್ನು ಸೈನ್ಯ ಸಹಿತ ನಿಲ್ಲಿಸಿ, ತನ್ನ ರಥವನ್ನೇರಿ ಕೃಷ್ಣನು ಸಾರಥಿ ದಾರುಕನು ರಥನಡೆಸಲು ಆ ಮಹಾಯುದ್ಧಕ್ಕೆ ಅನುವಾಗಿ ತನ್ನ ವರಪಾಂಚಜನ್ಯವನ್ನು ಹಿಡಿದು ಶತ್ರುಗಳ ಎದೆಗಳು ಒಡೆಯುವಂತೆ ಘೋರವಾದ ಶಂಖಧ್ವನಿ ಮಾಡಿದನು.]
- (ಪದ್ಯ-೧೭)
|
ಪಾಂಚಜನ್ಯಧ್ವನಿಗೆ ಬೆದರದುಬ್ಬೇರಿ ರೋ |
ಮಾಂಚನದೊಳಾಗ ತಾಮ್ರಧ್ವಜಂ ಶ್ರೀವತ್ಸ |
ಲಾಂಛನಂಗಿದಿರಾಗಿ ನುಡಿದನೆಲೆ ದೇವ ಕಟ್ಟಿದೆನರ್ಜುನನ ಹಯವನು ||
ವಾಂಛೆಯುಳ್ಳೊಡೆ ಬಿಡಿಸು ಪಾಲಿಸು ಕಿರೀಟಯಂ |
ನೀಂ ಚಕ್ರಮಂ ತುಡುಕು ಶಾರ್ಙ್ಗ ಮಂ ಪಿಡಿ ರಣಕೆ |
ನಾಂ ಚಲಿಸೆನಿದೆಯೆನ್ನ ವಾಜಿಯಂ ತಡೆ ಸತ್ವಮುಳ್ಳೊಡೆನುತಾರ್ದೆಚ್ಚನು ||18||
|
ಪದವಿಭಾಗ-ಅರ್ಥ:
|
- ಪಾಂಚಜನ್ಯಧ್ವನಿಗೆ ಬೆದರದೆ ಉಬ್ಬೇರಿ ರೋಮಾಂಚನದೊಳು ಆಗ ತಾಮ್ರಧ್ವಜಂ ಶ್ರೀವತ್ಸ ಲಾಂಛನಂಗೆ ಇದಿರಾಗಿ ನುಡಿದನು=[ಪಾಂಚಜನ್ಯದ ಧ್ವನಿಗೆ ಹೆದರದೆ ಉತ್ತ್ಸಾಹಗೊಂಡು ರೋಮಾಂಚನಹೊಂದಿದನು. ಆಗ ತಾಮ್ರಧ್ವಜನು, ಎದೆಯಲ್ಲಿ ಶ್ರೀವತ್ಸ ಗುರುತುಳ್ಳ ಕೃಷ್ಣನಿಗೆ ಎದುರಾಗಿ ಬಂದು ಹೇಳಿದನು,];; ಎಲೆ ದೇವ ಕಟ್ಟಿದೆನು ಅರ್ಜುನನ ಹಯವನು ವಾಂಛೆಯು ಉಳ್ಳೊಡೆ ಬಿಡಿಸು ಪಾಲಿಸು ಕಿರೀಟಯಂ=['ಎಲೆ ದೇವ, ಅರ್ಜುನನ ಕುದುರೆಯನ್ನು ಕಟ್ಟಿದ್ದೇನೆ. ಅದನ್ನು ಬಿಸಿಕೊಳ್ಳಬೇಕೆಂಬ ಅಪೇಕ್ಷೆ ಇದ್ದರೆ, ಅದನ್ನು ಬಿಡಿಸು, ಅರ್ಜುನನ್ನು ರಕ್ಷಿಸು,' ಎಂದನು.];; ನೀಂ ಚಕ್ರಮಂ ತುಡುಕು ಶಾರ್ಙ್ಗಮಂ ಪಿಡಿ ರಣಕೆ ನಾಂ ಚಲಿಸೆನು ಇದೆಯೆನ್ನ ವಾಜಿಯಂ ತಡೆ ಸತ್ವಮುಳ್ಳೊಡೆ ಎನುತ ಆರ್ದು ಎಚ್ಚನು=[ನೀನು ಚಕ್ರವನ್ನು ತೆಗೆದುಕೊ, ನಿನ್ನು ಶಾರ್ಙ್ಗ ಧನುಸ್ಸನ್ನು ಹಿಡಿ, ಯುದ್ಧಕ್ಕೆ ನಾನು ಕದಲದೆ ನಿಲ್ಲುವೆನು; ಶಕ್ತಿ ಇದ್ದರೆ ನನ್ನ ಕುದುರೆ ಇದೆ, ಅದನ್ನು ತಡೆ ಎನ್ನುತ್ತಾ ಆರ್ಭಟಿಸಿ ಬಾಣ ಹೊಡೆದನು.]
- ತಾತ್ಪರ್ಯ: ಪಾಂಚಜನ್ಯದ ಧ್ವನಿಗೆ ಹೆದರದೆ ಉತ್ತ್ಸಾಹಗೊಂಡು ರೋಮಾಂಚನಹೊಂದಿದನು. ಆಗ ತಾಮ್ರಧ್ವಜನು, ಎದೆಯಲ್ಲಿ ಶ್ರೀವತ್ಸ ಗುರುತುಳ್ಳ ಕೃಷ್ಣನಿಗೆ ಎದುರಾಗಿ ಬಂದು ಹೇಳಿದನು,'ಎಲೆ ದೇವ, ಅರ್ಜುನನ ಕುದುರೆಯನ್ನು ಕಟ್ಟಿದ್ದೇನೆ. ಅದನ್ನು ಬಿಸಿಕೊಳ್ಳಬೇಕೆಂಬ ಅಪೇಕ್ಷೆ ಇದ್ದರೆ, ಅದನ್ನು ಬಿಡಿಸು, ಅರ್ಜುನನ್ನು ರಕ್ಷಿಸು,' ಎಂದನು. 'ನೀನು ಚಕ್ರವನ್ನು ತೆಗೆದುಕೊ, ನಿನ್ನು ಶಾರ್ಙ್ಗ ಧನುಸ್ಸನ್ನು ಹಿಡಿ, ಯುದ್ಧಕ್ಕೆ ನಾನು ಕದಲದೆ ನಿಲ್ಲುವೆನು; ಶಕ್ತಿ ಇದ್ದರೆ ನನ್ನ ಕುದುರೆ ಇದೆ, ಅದನ್ನು ತಡೆ,' ಎನ್ನುತ್ತಾ ಆರ್ಭಟಿಸಿ ಬಾಣ ಹೊಡೆದನು.]
- (ಪದ್ಯ-೧೮)
|
ಹರಿಗೆ ಕೂರ್ಗಣೆ ಮೂರು ದಾರುಕಂಗೈದು ರಥ |
ಹರಿಗಳ್ಗೆ ನಾಲ್ಕು ಸಿತವಾಹನಂಗಿಪ್ಪತ್ತು |
ವರಭೋಜಪತಿಗೆಂಟು ಶಿನಿಸುತಂಗೊಂಬತ್ತು ಹಂಸಧ್ವಜಂಗೆ ಪತ್ತು ||
ತರಣಿತನಯಜ ಬಭ್ರುವಾಹಾನುಸಾಲ್ವಕ |
ಸ್ಮರ ಯೌವನಾಶ್ವಾನಿರುದ್ಧ ನೀಲಧ್ವಜ |
ರ್ಗೆರಡೆರಡು ಮೇಘನಾದಂಗೇಳು ಕೋಲ್ಗಳಂ ಕರೆದವಂ ಬೊಬ್ಬಿರಿದನು ||19||
|
ಪದವಿಭಾಗ-ಅರ್ಥ:
|
- ಹರಿಗೆ ಕೂರ್ಗಣೆ ಮೂರು ದಾರುಕಂಗೈದು ರಥ ಹರಿಗಳ್ಗೆ ನಾಲ್ಕು ಸಿತವಾಹನಂಗೆ ಇಪ್ಪತ್ತು ವರಭೋಜಪತಿಗೆ ಎಂಟು ಶಿನಿಸುತಂಗೆ ಒಂಬತ್ತು ಹಂಸಧ್ವಜಂಗೆ ಪತ್ತು=[ತಾಮ್ರಧ್ವಜನು ಈ ರೀತಿ ಬಾಣಗಳನ್ನು ಹೊಡೆದನು: ಕೃಷ್ಣನಿಗೆ ಮೂರು ಹರಿತ ಬಾಣಗಳು, ದಾರುಕನಿಗೆ ಐದು, ರಥ ಕುದುರೆಗಳಿಗೆ ನಾಲ್ಕು, ಅರ್ಜುನನಿಗೆ ಇಪ್ಪತ್ತು, ವರಭೋಜಪತಿ ಕೃತವರ್ಮನಿಗೆ ಎಂಟು, ಶಿನಿಯಮಗನಿಗೆ ಒಂಬತ್ತು, ಹಂಸಧ್ವಜನಿಗೆ ಹತ್ತು ];; ತರಣಿತನಯಜ ಬಭ್ರುವಾಹಾನುಸಾಲ್ವಕ ಸ್ಮರ ಯೌವನಾಶ್ವಾನಿರುದ್ಧ ನೀಲಧ್ವಜ ರ್ಗೆರಡೆರಡು ಮೇಘನಾದಂಗೇಳು ಕೋಲ್ಗಳಂ ಕರೆದವಂ ಬೊಬ್ಬಿರಿದನು=[ವೃಷಕೇತುವಿಗೆ ಮತ್ತು ಬಭ್ರುವಾಹನ ಅನುಸಾಲ್ವ, ಪ್ರದ್ಯುಮ್ನ, ಯೌವನಾಶ್ವ ಅನಿರುದ್ಧ ನೀಲಧ್ವಜರಿಗೆ ಎರಡೆರಡು, ಮೇಘನಾದನಿಗೆ ಏಳು, ಬಾಣಗಳನ್ನು ಹೊಡೆದು ಬೊಬ್ಬಿರಿದು ಆರ್ಭಟಿಸಿದನು.]
- ತಾತ್ಪರ್ಯ:ತಾಮ್ರಧ್ವಜನು ಈ ರೀತಿ ಬಾಣಗಳನ್ನು ಹೊಡೆದನು: ಕೃಷ್ಣನಿಗೆ ಮೂರು ಹರಿತ ಬಾಣಗಳು, ದಾರುಕನಿಗೆ ಐದು, ರಥ ಕುದುರೆಗಳಿಗೆ ನಾಲ್ಕು, ಅರ್ಜುನನಿಗೆ ಇಪ್ಪತ್ತು, ವರಭೋಜಪತಿ ಕೃತವರ್ಮನಿಗೆ ಎಂಟು, ಶಿನಿಯಮಗನಿಗೆ ಒಂಬತ್ತು, ಹಂಸಧ್ವಜನಿಗೆ ಹತ್ತು ವೃಷಕೇತುವಿಗೆ ಮತ್ತು ಬಭ್ರುವಾಹನ ಅನುಸಾಲ್ವ, ಪ್ರದ್ಯುಮ್ನ, ಯೌವನಾಶ್ವ ಅನಿರುದ್ಧ ನೀಲಧ್ವಜರಿಗೆ ಎರಡೆರಡು, ಮೇಘನಾದನಿಗೆ ಏಳು, ಬಾಣಗಳನ್ನು ಹೊಡೆದು ಬೊಬ್ಬಿರಿದು ಆರ್ಭಟಿಸಿದನು.
- (ಪದ್ಯ-೧೯)
|
ಅಚ್ಯುತಂ ಬೆರಗಾದನಾತನ ಪರಾಕ್ರಮಕೆ |
ಮೆಚ್ಚಿದಂ ಫಲುಗುಣಂ ಮಿಕ್ಕುಳಿದ ಪಟುಭಟರ್ |
ಬೆಚ್ಚಿದರ್ ಮಸಗಿ ವೀರಾವೇಶದಿಂದೆ ತಮತಮಗೆ ಬಳಿಕನಿರುದ್ಧನು ||
ಎಚ್ಚನೆಲವೆಲವೊ ತಾಮ್ರಧ್ವಜ ವಿಚಾರಿಸದೆ |
ಕೆಚ್ಚೆದೆಯೊಳಿದಿರಾದೆ ಮುರಹರನ ಮೊಮ್ಮನಾಂ |
ಬೆಚ್ಚುವೊಡೆ ಬಿಡು ಹಯವನಲ್ಲದೊಡೆ ನೋಡೆನ್ನ ಬಾಣ ಜಾತವನೆಂದನು ||20||
|
ಪದವಿಭಾಗ-ಅರ್ಥ:
|
- ಅಚ್ಯುತಂ ಬೆರಗಾದನಾತನ ಪರಾಕ್ರಮಕೆ ಮೆಚ್ಚಿದಂ ಫಲುಗುಣಂ ಮಿಕ್ಕುಳಿದ ಪಟುಭಟರ್ ಬೆಚ್ಚಿದರ್=[ಆತನ ಪರಾಕ್ರಮಕ್ಕೆ ಅಚ್ಯುತನು ಬೆರಗಾದನು. ಫಲ್ಗುಣನು ಮೆಚ್ಚಿದನು; ಮತ್ತೆ ಉಳಿದ ವೀರರು ಹೆದರಿದರು, ];; ಮಸಗಿ ವೀರಾವೇಶದಿಂದೆ ತಮತಮಗೆ ಬಳಿಕ ಅನಿರುದ್ಧನು ಎಚ್ಚನು ಎಲವೆಲವೊ ತಾಮ್ರಧ್ವಜ ವಿಚಾರಿಸದೆ ಕೆಚ್ಚೆದೆಯೊಳು ಇದಿರಾದೆ=[ಸಿಟ್ಟು ಮತ್ತು ವೀರಾವೇಶದಿಂದ ಅವರವರು ಸೇರಿಕೊಂಡರು, ಬಳಿಕ ಅನಿರುದ್ಧನು ಬಾಣಪ್ರಯೋಗ ಮಾಡಿ ಹೇಳಿದನು, 'ಎಲವೆಲವೊ ತಾಮ್ರಧ್ವಜ ವಿಚಾರಮಾಡದೆ ಕೆಚ್ಚೆದೆಯಿಂದ ಯುದ್ಧಕ್ಕೆ ತೊಡಗಿದೆ. ];; ಮುರಹರನ ಮೊಮ್ಮನಾಂ ಬೆಚ್ಚುವೊಡೆ ಬಿಡು ಹಯವನು ಅಲ್ಲದೊಡೆ ನೋಡೆನ್ನ ಬಾಣ ಜಾತವನು ಎಂದನು=[ಕೃಷ್ಣನ ಮೊಮ್ಮಗ ನಾನು, ಜೀವಕ್ಕೆ ಭಯಪಟ್ಟು ಕುದುರೆಯನ್ನು ಬಿಡು, ಅದಿಲ್ಲದಿದ್ದರೆ ನೋಡು ನನ್ನ ಬಾಣಬಿಡುವ ಕೌಶಲವನ್ನು, ಎಂದನು ].
- ತಾತ್ಪರ್ಯ: ಆತನ ಪರಾಕ್ರಮಕ್ಕೆ ಅಚ್ಯುತನು ಬೆರಗಾದನು. ಫಲ್ಗುಣನು ಮೆಚ್ಚಿದನು; ಮತ್ತೆ ಉಳಿದ ವೀರರು ಹೆದರಿದರು, ಸಿಟ್ಟು ಮತ್ತು ವೀರಾವೇಶದಿಂದ ಅವರವರು ಸೇರಿಕೊಂಡರು, ಬಳಿಕ ಅನಿರುದ್ಧನು ಬಾಣಪ್ರಯೋಗ ಮಾಡಿ ಹೇಳಿದನು, 'ಎಲವೆಲವೊ ತಾಮ್ರಧ್ವಜ ವಿಚಾರಮಾಡದೆ ಕೆಚ್ಚೆದೆಯಿಂದ ಯುದ್ಧಕ್ಕೆ ತೊಡಗಿದೆ. ಕೃಷ್ಣನ ಮೊಮ್ಮಗ ನಾನು, ಜೀವಕ್ಕೆ ಭಯಪಟ್ಟು ಕುದುರೆಯನ್ನು ಬಿಡು, ಅದಿಲ್ಲದಿದ್ದರೆ ನೋಡು ನನ್ನ ಬಾಣಬಿಡುವ ಕೌಶಲವನ್ನು, ಎಂದನು.
- (ಪದ್ಯ-೨೦)
|
ಬಾಣಜಾತವನೀಗ ನೋಡಲಿರ್ದಪುದೆ ನೀಂ |
ಬಾಣಜಾತೆಯ ರಮಣನಂತುಮಲ್ಲದೆ ಪುಷ್ಪ |
ಬಾಣಜಾತಂ ಮೇಲೆ ತನ್ನ ಮಗಳುಷೆಗೆ ನೀಂ ಪ್ರಾಣೇಶನೆಂದು ರಣದೆ ||
ಬಾಣನುಳುಹಿದನಂದು ಕೈಗಾಯ್ವುವಲ್ಲೆಮ್ಮ |
ಬಾಣಂಗಳೀಕ್ಷಿಸೆಂದಾರ್ದು ತಾಮ್ರಧ್ವಜಂ |
ಬಾಣಾಯುತಂಗಳಂ ಸುರಿಯಲ್ಕೆ ಮಧ್ಯದೊಳ್ ತರಿದೀತನಿಂತೆಂದನು||21||
|
ಪದವಿಭಾಗ-ಅರ್ಥ:
|
- ಬಾಣಜಾತವನು ಈಗ ನೋಡಲಿರ್ದಪುದೆ ನೀಂ ಬಾಣಜಾತೆಯ ರಮಣನಂ ಅಂತುಮಲ್ಲದೆ ಪುಷ್ಪಬಾಣಜಾತಂ=[ಬಾಣವಿದ್ಯೆಯನ್ನು ಈಗ ನೋಡಲು ಏನಿದೆ? ನೀನು ಬಾಣ ರಾಕ್ಷಸನ ಮಗಳು ಉಷೆಯ ರಮಣನು ಅಷ್ಟಲ್ಲದೆ ಪ್ರದ್ಯುಮ್ನನ ಮಗನು;];; ಮೇಲೆ ತನ್ನ ಮಗಳು ಉಷೆಗೆ ನೀಂ ಪ್ರಾಣೇಶನೆಂದು ರಣದೆ ಬಾಣನು ಉಳುಹಿದನು ಅಂದು=[ಅಲ್ಲದೆ ತನ್ನ ಮಗಳು ಉಷೆಗೆ ನೀನು ಗಂಡನೆಂದು ಅಂದು ರಣದಲ್ಲಿ ಬಾಣನು ಕೊಲ್ಲದೆ ಉಳಿಸಿದನು.];; ಕೈಗಾಯ್ವುವಲ್ಲ ಎಮ್ಮ ಬಾಣಂಗಳ ಈಕ್ಷಿಸೆಂದು ಆರ್ದು ತಾಮ್ರಧ್ವಜಂ ಬಾಣಾಯುತಂಗಳಂ ಸುರಿಯಲ್ಕೆ ಮಧ್ಯದೊಳ್ ತರಿದು ಈತನು ಇಂತೆಂದನು=[ ನಮ್ಮ ಬಾಣಗಳು ಕಾಪಾಡುವುವುಲ್ಲ ಕೊಲ್ಲುವುವು,ನೋಡು ಎಂದು, ಆರ್ಭಟಿಸಿ, ತಾಮ್ರಧ್ವಜನು ಬಾಣಗಳ ಸಮೂಹವನ್ನೇ ಸುರಿಯಲು, ಅವನ್ನು ಮಧ್ಯದಲ್ಲಿ ಕತ್ತರಿಸಿ ಈತನು ಹೀಗೆ ಹೇಳಿದನು].
- ತಾತ್ಪರ್ಯ:ಬಾಣವಿದ್ಯೆಯನ್ನು ಈಗ ನೋಡಲು ಏನಿದೆ? ನೀನು ಬಾಣ ರಾಕ್ಷಸನ ಮಗಳು ಉಷೆಯ ರಮಣನು ಅಷ್ಟಲ್ಲದೆ ಪ್ರದ್ಯುಮ್ನನ ಮಗನು;ಅಲ್ಲದೆ ತನ್ನ ಮಗಳು ಉಷೆಗೆ ನೀನು ಗಂಡನೆಂದು ಅಂದು ರಣದಲ್ಲಿ ಬಾಣನು ಕೊಲ್ಲದೆ ಉಳಿಸಿದನು. ನಮ್ಮ ಬಾಣಗಳು ಕಾಪಾಡುವುವುಲ್ಲ ಕೊಲ್ಲುವುವು,ನೋಡು ಎಂದು, ಆರ್ಭಟಿಸಿ, ತಾಮ್ರಧ್ವಜನು ಬಾಣಗಳ ಸಮೂಹವನ್ನೇ ಸುರಿಯಲು, ಅವನ್ನು ಮಧ್ಯದಲ್ಲಿ ಕತ್ತರಿಸಿ ಈತನು ಹೀಗೆ ಹೇಳಿದನು].
- (ಪದ್ಯ-೨೧)
|
ಸಂಗರಕೆ ಸಾಹಸವೊ ಮಾತುಗಳೊ ಪೂರ್ವಪ್ರ |
ಸಂಗಮೇತಕೆ ಮರುಳೆ ತರಹರಿಸಿಕೊಳ್ಳೆನುತೆ |
ಸಮಗಡಿಸಿದವನ ರಥದಚ್ಚು ನೊಗ ಗಾಲಿ ಟೆಕ್ಕೆಯ ಕುದುರೆ ಸಾರಥಿಗಳ ||
ಅಂಗಿ ಬಿಲ್ಬತ್ತಳಿಕೆ ಸೀಸಕಂಗಳ ಜಂಜ |
ಡಂಗಳಿಲ್ಲೆನಿಸಿ ಕೆಲಬಲದ ರಕ್ಷೆಯ ಚಾತು |
ರಂಗಮಂ ಸವರಿ ರಿಪುಮೋಹರಕೆ ಪೊಕ್ಕನನಿರುದ್ಧನದನೇವೇಳ್ವೆನು ||22||
|
ಪದವಿಭಾಗ-ಅರ್ಥ:
|
- ಸಂಗರಕೆ ಸಾಹಸವೊ ಮಾತುಗಳೊ ಪೂರ್ವಪ್ರಸಂಗಂ ಏತಕೆ ಮರುಳೆ ತರಹರಿಸಿಕೊಳ್ಳು ಎನುತೆ=[ಯುದ್ಧಕ್ಕೆ ಸಾಹಸ ಮುಖ್ಯವೊ, ಮಾತುಗಳೊ, ಹಳೆಯಕಥೆ ಏಕೆ? ಮರುಳೆ! ಸುಧಾರಿಸಿಕೊ ಎನ್ನುತ್ತಾ,];; ಸಮಗಡಿಸಿದ ಅವನ ರಥದಚ್ಚು ನೊಗ ಗಾಲಿ ಟೆಕ್ಕೆಯ ಕುದುರೆ ಸಾರಥಿಗಳ ಅಂಗಿ ಬಿಲ್ಬತ್ತಳಿಕೆ ಸೀಸಕಂಗಳ ಜಂಜಡಂಗಳು ಇಲ್ಲೆನಿಸಿ=[ತನ್ನನ್ನು ಸರಿಗಟ್ಟಿದ ಅವನ ರಥದ ಅಚ್ಚು, ನೊಗ, ಗಾಲಿ, ಟೆಕ್ಕೆಯ/ಧ್ವಜ, ಕುದುರೆ ಸಾರಥಿಗಳನ್ನೂ, ಅಂಗಿ, ಬಿಲ್ಲು, ಬತ್ತಳಿಕೆ ಸೀಸದ ಕವಚಗಳನ್ನೂ, ಜಂಜಡಗಳನ್ನು ನಾಶಮಾಡಿ];; ಕೆಲಬಲದ ರಕ್ಷೆಯ ಚಾತುರಂಗಮಂ ಸವರಿ ರಿಪುಮೋಹರಕೆ ಪೊಕ್ಕನು ಅನಿರುದ್ಧನು ಅದನು ಏವೇಳ್ವೆನು=[ಅಕ್ಕಪಕ್ಕದ ರಕ್ಷಕರ ಚತುರಂಗಸೈನ್ಯವನ್ನು ಸವರಿ ಅನಿರುದ್ಧನು ಶತ್ರು ಸೈನ್ಯವನ್ನು ಹೊಕ್ಕನು. ಅದನು ಏನೆಂದು ಹೇಳಲಿ!].
- ತಾತ್ಪರ್ಯ:ಯುದ್ಧಕ್ಕೆ ಸಾಹಸ ಮುಖ್ಯವೊ, ಮಾತುಗಳೊ, ಹಳೆಯಕಥೆ ಏಕೆ? ಮರುಳೆ! ಸುಧಾರಿಸಿಕೊ ಎನ್ನುತ್ತಾ, ತನ್ನ ಬಾಣಗಳಿಗೆ ಸರಿಗಟ್ಟಿದ ಅವನ ರಥದ ಅಚ್ಚು, ನೊಗ, ಗಾಲಿ, ಟೆಕ್ಕೆಯ/ಧ್ವಜ, ಕುದುರೆ ಸಾರಥಿಗಳನ್ನೂ, ಅಂಗಿ, ಬಿಲ್ಲು, ಬತ್ತಳಿಕೆ ಸೀಸದ ಕವಚಗಳನ್ನೂ, ಜಂಜಡಗಳನ್ನು ನಾಶಮಾಡಿ ಅಕ್ಕಪಕ್ಕದ ರಕ್ಷಕರ ಚತುರಂಗಸೈನ್ಯವನ್ನು ಸವರಿ ಅನಿರುದ್ಧನು ಶತ್ರು ಸೈನ್ಯವನ್ನು ಹೊಕ್ಕನು. ಅದನು ಏನೆಂದು ಹೇಳಲಿ!]
- (ಪದ್ಯ-೨೨)
|
ರಣದೊಳನಿರುದ್ಧನಾಟೋಪದಿಂ ಚಾಪದಿಂ ||
ಕಣೆಗಳಂ ತೆಗೆದಿಸಲ್ಕರಿಗಳಂ ಹರಿಗಳಂ |
ಮಣಿಮಯ ರಥಂಗಳಂ ಕಾಲಾಳ ಮೇಳಾಳ ಸಂದಣಿಯ ಮಂದಿಗಳನು ||
ಹಣಿದು ವಾಡಿದುದಹಿತ ಬಲದೊಳಗೆ ನೆಲದೊಳಗೆ |
ಪೆಣನ ಮೆದೆ ಕೆಡೆಯಲಕ್ಷೌಹಿಣಿಯ ವಾಹಿನಿಯ |
ಗಣನೆ ಮೂರಳಿದುದೊಂದೇ ಕ್ಷಣಕೆ ವೀಕ್ಷಣಕೆ ನೆರೆ ಭಯಂಕರಮಾಗಲು ||23||
|
ಪದವಿಭಾಗ-ಅರ್ಥ:
|
- ರಣದೊಳು ಅನಿರುದ್ಧನು ಆಟೋಪದಿಂ ಚಾಪದಿಂ ಕಣೆಗಳಂ ತೆಗೆದು ಇಸಲ್ಕೆ ಅರಿಗಳಂ ಹರಿಗಳಂ ಮಣಿಮಯ ರಥಂಗಳಂ ಕಾಲಾಳ ಮೇಳಾಳ ಸಂದಣಿಯ ಮಂದಿಗಳನು=[ರಣರಂಗದಲ್ಲಿ ಅನಿರುದ್ಧನು ಆಟಾಟೋಪದಿಂದ ಬಿಲ್ಲಿನಿಂದ ಬಾಣಗಳನ್ನು ತೆಗೆದು ಹೊಡೆಯಲು, ಶತ್ರುಗಳ ಕುದುರೆಗಳ, ಮಣಿಮಯ ರಥಗಳ, ಕಾಲಾಳುಗಳ, ವೀರರ ಸಮೂಹದ ಜನರನ್ನು,];; ಹಣಿದು ವಾಡಿದುದು ಅಹಿತ ಬಲದೊಳಗೆ ನೆಲದೊಳಗೆ ಪೆಣನ ಮೆದೆ ಕೆಡೆಯಲು ಅಕ್ಷೌಹಿಣಿಯ ವಾಹಿನಿಯ ಗಣನೆ ಮೂರು ಅಳಿದುದು ಒಂದೇ ಕ್ಷಣಕೆ ವೀಕ್ಷಣಕೆ ನೆರೆ ಭಯಂಕರಮಾಗಲು=[ಶತ್ರು ಸೈನ್ಯದಲ್ಲಿಬಡಿದು ತಟ್ಟಾಡಿಸಿ (ಧ್ವಂಸಮಾಡಿ) ನೆಲದಮೇಲೆ ಹೆಣದ ಮೆದೆ/ರಾಶಿ ಕೆಡಗಿದನು. ಲೆಕ್ಕದಲ್ಲಿ ಮೂರು ಅಕ್ಷೌಹಿಣಿಯ ಸೈನ್ಯ ಒಂದೇ ಕ್ಷಣಕ್ಕೆ ನಾಶವಾಯಿತು. ನೋಡಲು ಅದು ಬಹಳ ಭಯಂಕರವಾಯಿತು.].
- ತಾತ್ಪರ್ಯ:ರಣರಂಗದಲ್ಲಿ ಅನಿರುದ್ಧನು ಆಟಾಟೋಪದಿಂದ ಬಿಲ್ಲಿನಿಂದ ಬಾಣಗಳನ್ನು ತೆಗೆದು ಹೊಡೆಯಲು, ಶತ್ರುಗಳ ಕುದುರೆಗಳ, ಮಣಿಮಯ ರಥಗಳ, ಕಾಲಾಳುಗಳ, ವೀರರ ಸಮೂಹದ ಜನರನ್ನು, ಶತ್ರು ಸೈನ್ಯದಲ್ಲಿಬಡಿದು ತಟ್ಟಾಡಿಸಿ (ಧ್ವಂಸಮಾಡಿ) ನೆಲದಮೇಲೆ ಹೆಣದ ಮೆದೆ/ರಾಶಿ ಕೆಡಗಿದನು. ಲೆಕ್ಕದಲ್ಲಿ ಮೂರು ಅಕ್ಷೌಹಿಣಿಯ ಸೈನ್ಯ ಒಂದೇ ಕ್ಷಣಕ್ಕೆ ನಾಶವಾಯಿತು. ನೋಡಲು ಅದು ಬಹಳ ಭಯಂಕರವಾಯಿತು.
- ಅಕ್ಷೋಹಿಣಿ:ಸೈನ್ಯದ ತುಕಡಿಯೊಂದರಲ್ಲಿ ೨೧,೮೭೦ ರಥಗಳು,೨೧,೮೭೦ ಆನೆಗಳು,೬೫,೬೧೦ ಕುದುರೆಗಳು ಮತ್ತು ೧,೦೯,೩೫೦/೧,೧೯,೩೫೯ ರಷ್ಟು ಸಂಖ್ಯೆಯ ಪದಾತಿದಳವನ್ನು ಹೊಂದಿರುವ ತುಕಡಿಯು ಒಂದು ಅಕ್ಷೋಹಿಣಿ ಸೈನ್ಯ.
- (ಪದ್ಯ-೨೩)
|
ಒತ್ತಿಬಹ ರಥಿಕರಂ ವ್ಯಥಿಕರಂ ಮಾಡಿದುವು |
ಮುತ್ತುವ ತುರಂಗಮದ ತುಂಗ ಮದದಂತಿಗಳ |
ಮೊತ್ತಮಂ ಪೋಳಾಗಿ ಸೀಳಾಗಿ ಕೆಢಹಿದುವು ಕೊಡಹಿದುವು ವಾಹಕರನು ||
ಮತ್ತೆ ಭಟರಂಗಮಂ ಭಂಗಮಂ ಪಡಿಸಿದುವು |
ಕತ್ತರಿಸಿ ತಲೆಗಳಂ ಕೊಲೆಗಳಂ ಕೊಂದು ಬಿಸಿ |
ನೆತ್ತರಂ ಪರಪಿದುವು ನೆರಪಿದುವು ಮರುಳ್ಗಮನನಿರುದ್ಧನಸ್ತ್ರಂಗಳು||24||
|
ಪದವಿಭಾಗ-ಅರ್ಥ:
|
- ಒತ್ತಿಬಹ ರಥಿಕರಂ ವ್ಯಥಿಕರಂ ಮಾಡಿದುವು ಮುತ್ತುವ ತುರಂಗಮದ ತುಂಗ ಮದದಂತಿಗಳ ಮೊತ್ತಮಂ ಪೋಳಾಗಿ ಸೀಳಾಗಿ ಕೆಢಹಿದುವು ಕೊಡಹಿದುವು ವಾಹಕರನು=[ಅನಿರುದ್ಧನ ಬಳಿಗೆ ಹಿಂತಿರುಗಿ ಬರುವ ಅವನ ಅಸ್ತ್ರಗಳು, ಮುಂದೆ ನುಗ್ಗಿಬರುವ ರಥಿಕರನ್ನು, ವ್ಯಥೆಪಡುವಂತೆ ಮಾಡಿದುವು, ಅನಿರುದ್ಧನನ್ನು ಮುತ್ತುವ ಕುದುರೆಗಳನ್ನು, ಎತ್ತರದ ಮದದ ಆನೆಗಳ ಸಮೂಹವನ್ನು ಹೋಳಾಗಿ ಸೀಳುಮಾಡಿ ಕೆಡವಿದುವು, ಸಾರಥಿ ರಾವುತರು ಮಾವುತರನ್ನು ಕೊಡಹಿ ಕೆಡಗಿದುವು,]; ಮತ್ತೆ ಭಟರ ಅಂಗಮಂ ಭಂಗಮಂ ಪಡಿಸಿದುವು ಕತ್ತರಿಸಿ ತಲೆಗಳಂ ಕೊಲೆಗಳಂ ಕೊಂದು ಬಿಸಿ ನೆತ್ತರಂ ಪರಪಿದುವು ನೆರಪಿದುವು (ಮರುಳ್ಗಮನ:ಮರುಳಿ ಗಮನವುಳ್ಳಹಿಂತಿರುಗಿಬರುವ) (<-ಅನಿರುದ್ಧನ ಅಸ್ತ್ರಂಗಳು)=[ಮತ್ತೆ ಸೈನಿಕರ ಅವಯುವಗಳನ್ನು ತುಂಡು ಮಾಡಿದವು, ತಲೆಗಳನ್ನು ಕತ್ತರಿಸಿ ಕೊಂದು ಕೊಲೆಗಳಿಂದ ಬಿಸಿ ರಕ್ತವನ್ನು ಹರಡಿದವು, ರಾಶಿಮಾಡಿದುವು. (<-ಮರುಳ್ಗಮನ ಅನಿರುದ್ಧನ ಅಸ್ತ್ರಂಗಳು)].
- ತಾತ್ಪರ್ಯ:ಅನಿರುದ್ಧನ ಬಳಿಗೆ ಹಿಂತಿರುಗಿ ಬರುವ ಅವನ ಅಸ್ತ್ರಗಳು, ಮುಂದೆ ನುಗ್ಗಿಬರುವ ರಥಿಕರನ್ನು, ವ್ಯಥೆಪಡುವಂತೆ ಮಾಡಿದುವು, ಅನಿರುದ್ಧನನ್ನು ಮುತ್ತುವ ಕುದುರೆಗಳನ್ನು, ಎತ್ತರದ ಮದದ ಆನೆಗಳ ಸಮೂಹವನ್ನು ಹೋಳಾಗಿ ಸೀಳುಮಾಡಿ ಕೆಡವಿದುವು, ಸಾರಥಿ ರಾವುತರು ಮಾವುತರನ್ನು ಕೊಡಹಿ ಕೆಡಗಿದುವು, ಮತ್ತೆ ಸೈನಿಕರ ಅವಯುವಗಳನ್ನು ತುಂಡು ಮಾಡಿದವು, ತಲೆಗಳನ್ನು ಕತ್ತರಿಸಿ ಕೊಂದು ಕೊಲೆಗಳಿಂದ ಬಿಸಿ ರಕ್ತವನ್ನು ಹರಡಿದವು, ರಾಶಿಮಾಡಿದುವು.
- (ಪದ್ಯ-೨೪)
|
ಪೊಸರಥದೊಳೈದಿದಂ ಮತ್ತೆ ತಾಮ್ರಧ್ವಜಂ |
ಮುಸುಕಿತಗಣಿತ ಚಾತುರಂಗಮನಿರುದ್ಧನಂ |
ಮುಸುಗಿತು ತಮಸ್ತೋಮ ಮಾದಿತ್ಯಮಂಡಲದ ಗಸಣಿಯಿಲ್ಲೆನೆ ನಭದೊಳು ||
ವಸುಧೆಯದಿರಿತು ಗುರುಶೈಲಮಲ್ಲಾಡಿದುದು |
ಬಸವಳಿದನಹಿ ಕೂರ್ಮನೆದೆಗೆಟ್ಟ ನುಡುಗಿದವು |
ದೆಸೆಯಾನೆ ಕಡಲುಕ್ಕಿತಾಹವಂಘೋರಮಾದುದು ರೋಮಹರ್ಷಣದೊಳು ||25||
|
ಪದವಿಭಾಗ-ಅರ್ಥ:
|
- ಪೊಸರಥದೊಳು ಐದಿದಂ ಮತ್ತೆ ತಾಮ್ರಧ್ವಜಂ ಮುಸುಕಿತು ಅಗಣಿತ ಚಾತುರಂಗಂ ಅನಿರುದ್ಧನಂ ಮುಸುಗಿತು ತಮಸ್ತೋಮಂ ಆದಿತ್ಯಮಂಡಲದ ಗಸಣಿಯಿಲ್ಲೆನೆ ನಭದೊಳು=[ಮತ್ತೆ ತಾಮ್ರಧ್ವಜನು ಹೊಸರಥದಲ್ಲಿ ಬಂದನು, ಮುತ್ತಿತು ಲೆಕ್ಕವಿಲ್ಲದಷ್ಟು ಚತುರಂಗಸೈನ್ಯವು, ಅನಿರುದ್ಧನನ್ನು ಸುತ್ತುವರಿಯಿತು, ಕತ್ತಲೆಯ ರಾಶಿ ಸೂರ್ಯಮಂಡಲದ ಸಂಚಾರಯಿಲ್ಲ ಎನ್ನುವಂತೆ ಮುತ್ತಿದಂತೆ ಆಯಿತು.];; ವಸುಧೆಯು ಅದಿರಿತು ಗುರುಶೈಲಂ ಅಲ್ಲಾಡಿದುದು ಬಸವಳಿದನು ಅಹಿ ಕೂರ್ಮನು ಎದೆಗೆಟ್ಟ ನುಡುಗಿದವು ದೆಸೆಯ ಆನೆ ಕಡಲುಕ್ಕಿತು ಆಹವಂ ಘೋರಮಾದುದು ರೋಮಹರ್ಷಣದೊಳು=[ಭೂಮಿಯು ನಡುಗಿತು, ದೊಡ್ಡಬೆಟ್ಟವು/ಮೇರುಪರ್ವತ ಅಲ್ಲಾಡಿತು, ಅಹಿರಾಜ ಶೇಷನು ಆಯಾಸಪಟ್ಟನು, ಕೂರ್ಮನು ಎದೆಗೆಟ್ಟನು, ನುಡುಗಿದವು ದಿಗ್ಗಜಗಳು, ಕಡಲು ಉಕ್ಕಿತು ಹೀಗೆ, ಯುದ್ಧವು ಘೋರವಾಯಿತು, ಇದರಿಂದ ರೋಮಾಂಚನವಾಯಿತು.]
- ತಾತ್ಪರ್ಯ:ಮತ್ತೆ ತಾಮ್ರಧ್ವಜನು ಹೊಸರಥದಲ್ಲಿ ಬಂದನು, ಮುತ್ತಿತು ಲೆಕ್ಕವಿಲ್ಲದಷ್ಟು ಚತುರಂಗಸೈನ್ಯವು, ಅನಿರುದ್ಧನನ್ನು ಸುತ್ತುವರಿಯಿತು, ಕತ್ತಲೆಯ ರಾಶಿ ಸೂರ್ಯಮಂಡಲದ ಸಂಚಾರಯಿಲ್ಲ ಎನ್ನುವಂತೆ ಮುತ್ತಿದಂತೆ ಆಯಿತು. ಭೂಮಿಯು ನಡುಗಿತು, ದೊಡ್ಡಬೆಟ್ಟವು/ಮೇರುಪರ್ವತ ಅಲ್ಲಾಡಿತು, ಅಹಿರಾಜ ಶೇಷನು ಆಯಾಸಪಟ್ಟನು, ಕೂರ್ಮನು ಎದೆಗೆಟ್ಟನು, ನುಡುಗಿದವು ದಿಗ್ಗಜಗಳು, ಕಡಲು ಉಕ್ಕಿತು, ಹೀಗೆ ಯುದ್ಧವು ಘೋರವಾಯಿತು, ಇದರಿಂದ ರೋಮಾಂಚನವಾಯಿತು.
- (ಪದ್ಯ-೨೫)XX
|
ಕೋಪದಿಂ ಪ್ರಳಯಾಗ್ನಿಯಂದದ ಶರಂಗಳಂ |
ಚಾಪದಿಂ ತೆಗೆದಿಸುತ್ತನಿರುದ್ಧನಮಿತ ಪ್ರ |
ತಾಪದಿಂದುಜ್ವಲಿಸುತಿರ್ದಂ ವಿಧೂಮ ಪಾವಕನಂತೆ ಪರಬಲದೊಳು ||
ಶ್ರೀಪತಿಯ ಪೌತ್ರನೆಂದಿನ್ನೆಗಂ ತಾಳ್ದೊ ಡಾ |
ಟೋಪಮೇ ನಿನಗೆನುತೆ ತಾಮ್ರಧ್ವಜಂ ಕನ |
ಲ್ದಾಪುಷ್ಪಬಾಣ ತನುಜನ ಮೇಲೆ ಕಣೆಗರೆದನಂಬರಂ ತುಂಬುವಂತೆ ||26||
|
ಪದವಿಭಾಗ-ಅರ್ಥ:
|
- ಕೋಪದಿಂ ಪ್ರಳಯಾಗ್ನಿಯಂದದ ಶರಂಗಳಂ ಚಾಪದಿಂ ತೆಗೆದು ಇಸುತ್ತ ಅನಿರುದ್ಧನು ಅಮಿತ ಪ್ರತಾಪದಿಂದ ಉಜ್ವಲಿಸುತಿರ್ದಂ ವಿಧೂಮ ಪಾವಕನಂತೆ ಪರಬಲದೊಳು=[ಕೋಪದಿಂದ ಪ್ರಳಯಾಗ್ನಿಯಂತಿರವ ಬಾಣಗಳನ್ನು ಬಿಲ್ಲಿನಿಂದ ತೆಗೆದು ಹೊಡೆಯುತ್ತ ಅನಿರುದ್ಧನು ಬಹಳ ಪ್ರತಾಪದಿಂದ ಹೊಗೆಯಿಲ್ಲದ ಬೆಂಕಿಯಂತೆ ಶತ್ರುಸೈನ್ಯದಲ್ಲಿ ಉರಿಯುತ್ತಿದ್ದನು.];; ಶ್ರೀಪತಿಯ ಪೌತ್ರನೆಂದು ಇನ್ನೆಗಂ ತಾಳ್ದೊ ಡೆ ಆಟೋಪಮೇ ನಿನಗೆ ಎನುತೆ ತಾಮ್ರಧ್ವಜಂ ಕನಲ್ದು ಆಪುಷ್ಪಬಾಣ ತನುಜನ ಮೇಲೆ ಕಣೆಗರೆದನು ಅಂಬರಂ ತುಂಬುವಂತೆ=[ಕೃಷ್ಣನ ಮೊಮ್ಮೊಗನೆಂದು ಇಲ್ಲಿಯವರೆಗೆ ತಾಲಿಕೊಂಡರೆ, ಬಹಳಪ್ರತಾಪವೇ ನಿನಗೆ ಎನ್ನುತ್ತ ತಾಮ್ರಧ್ವಜನು ಸಿಟ್ಟುಗೊಂಡು,ಪುಷ್ಪಬಾಣ ತನುಜನಾದ ಅನಿರುದ್ಧನ ಮೇಲೆ ಆಕಾಶ ತುಂಬುವಂತೆ ಬಾಣಗಳ ಮಳೆ ಕರೆದನು ].
- ತಾತ್ಪರ್ಯ:ಕೋಪದಿಂದ ಪ್ರಳಯಾಗ್ನಿಯಂತಿರವ ಬಾಣಗಳನ್ನು ಬಿಲ್ಲಿನಿಂದ ತೆಗೆದು ಹೊಡೆಯುತ್ತ ಅನಿರುದ್ಧನು ಬಹಳ ಪ್ರತಾಪದಿಂದ ಹೊಗೆಯಿಲ್ಲದ ಬೆಂಕಿಯಂತೆ ಶತ್ರುಸೈನ್ಯದಲ್ಲಿ ಉರಿಯುತ್ತಿದ್ದನು. ಕೃಷ್ಣನ ಮೊಮ್ಮೊಗನೆಂದು ಇಲ್ಲಿಯವರೆಗೆ ತಾಲಿಕೊಂಡರೆ, ಬಹಳಪ್ರತಾಪವೇ ನಿನಗೆ ಎನ್ನುತ್ತ ತಾಮ್ರಧ್ವಜನು ಸಿಟ್ಟುಗೊಂಡು,ಪುಷ್ಪಬಾಣ ತನುಜನಾದ ಅನಿರುದ್ಧನ ಮೇಲೆ ಆಕಾಶ ತುಂಬುವಂತೆ ಬಾಣಗಳ ಮಳೆ ಕರೆದನು.
- (ಪದ್ಯ-೨೬)
|
ಪರ್ಬಿದುವು ತೆಗೆದಿಸಲ್ ತಾಮ್ರಧ್ವಜನ ಕಣೆಗೆ |
ಳರ್ಬುದಂಗಳ ಸಂಖ್ಯೆಯಿಂದೊಡನೆ ನರನ |
ಪೆರ್ಬಡೆಯ ಮೇಲೆ ಕವಿದುದು ನೊಂದನನಿರುದ್ಧನೇರ್ವಡೆದು ಮೂರ್ಛೆಯಿಂದೆ ||
ಸರ್ಬದಳಮಂ ತಗಳ್ದುವು ಬೇಸಗೆಯ ಬಿರುವೆ |
ಲರ್ಬೀಸಿ ರಜಮಂ ತೆರಳ್ಚುವಂತಾಗ ವೀ |
ರರ್ಬಿಂಕದಿಂದಾಂತು ನಿಂದರನುಸಾಲ್ವಕ ಪ್ರದ್ಯುಮ್ನ ಸಾತ್ಯಕಿಗಳು ||27||
|
ಪದವಿಭಾಗ-ಅರ್ಥ:
|
- ಪರ್ಬಿದುವು ತೆಗೆದು ಇಸಲ್ (ಹೊಡೆಯಲು) ತಾಮ್ರಧ್ವಜನ ಕಣೆಗೆಳು ಅರ್ಬುದಂಗಳ ಸಂಖ್ಯೆಯಿಂದ ಒಡನೆ ನರನ ಪೆರ್ಬಡೆಯ (ಪೆರು ಪಡೆ) ಮೇಲೆ ಕವಿದುದು ನೊಂದನು ಅನಿರುದ್ಧನು ಏರ್ವಡೆದು(ಏರ್+ ಪಡೆದು, ಹೆಚ್ಚು ಏಟುಪಡೆದು?) ಮೂರ್ಛೆಯಿಂದೆ=[ತಾಮ್ರಧ್ವಜನು ತೆಗೆದು ಬಾಣಗಳನ್ನು ಹೊಡೆಯಲು ಅವನ ಬಾಣಗಳು ಕೋಟಿಗಳ ಸಂಖ್ಯೆಯಿಂದ ಕೂಡಲೆ ಅರ್ಜುನನ ದೊಡ್ಡ ಸೈನ್ಯದ ಮೇಲೆ ಹಬ್ಬಿದವು, ಸೈನ್ಯದ ಮೇಲೆ ಕವಿಯಿತು. ಅನಿರುದ್ಧನು ಬಹಳ ಪೆಟ್ಟಾಗಿ ಮೂರ್ಛೆಯಾಗವಷ್ಟು ನೊಂದನು ];; ಸರ್ಬ(ಸರ್ವ) ದಳಮಂ ತಗಳ್ದುವು (ಬಾಣಗಳು ತಗುಲಿದವು) ಬೇಸಗೆಯ ಬಿರುವೆಲರ್ಬೀಸಿ (ಬಿರು ಎಲರ್ ಬೀಸಿ, ಬಿರುಗಾಳಿ ಬೀಸಿ) ರಜಮಂ (ರಜ-ಧೂಳು) ತೆರಳ್ಚುವಂತಾಗ ವೀರರ್ ಬಿಂಕದಿಂದ ಆಂತು (ಎದುರಿಸಿ) ನಿಂದರು ಅನುಸಾಲ್ವಕ ಪ್ರದ್ಯುಮ್ನ ಸಾತ್ಯಕಿಗಳು=[ ಬೇಸಗೆಯ ಬಿರುಗಾಳಿ ಬೀಸಿ ಧೂಳೆಬ್ಬಿಸಿ ಮುಚ್ಚುವಂತೆ, ಎಲ್ಲಾ ಸೈನ್ಯವನ್ನೂ, ಆ ಬಾಣಗಳು ತಗುಲಿದವು; ಅನುಸಾಲ್ವಕ ಪ್ರದ್ಯುಮ್ನ ಸಾತ್ಯಕಿಗಳು ಮೊದಲಾದ ವೀರರು ಬಿಂಕದಿಂದ ಕೆಚ್ಚಿನಿಂದ ಎದುರಿಸಿ ನಿಂತರು.]
- ತಾತ್ಪರ್ಯ:ತಾಮ್ರಧ್ವಜನು ತೆಗೆದು ಬಾಣಗಳನ್ನು ಹೊಡೆಯಲು ಅವನ ಬಾಣಗಳು ಕೋಟಿಗಳ ಸಂಖ್ಯೆಯಿಂದ ಕೂಡಲೆ ಅರ್ಜುನನ ದೊಡ್ಡ ಸೈನ್ಯದ ಮೇಲೆ ಹಬ್ಬಿದವು, ಅವು ಸೈನ್ಯದ ಮೇಲೆ ಕವಿಯಿತು. ಅನಿರುದ್ಧನು ಬಹಳ ಪೆಟ್ಟಾಗಿ ಮೂರ್ಛೆಯಾಗವಷ್ಟು ನೊಂದನು. ಬೇಸಗೆಯ ಬಿರುಗಾಳಿ ಬೀಸಿ ಧೂಳೆಬ್ಬಿಸಿ ಮುಚ್ಚುವಂತೆ, ಎಲ್ಲಾ ಸೈನ್ಯವನ್ನೂ, ಆ ಬಾಣಗಳು ತಗುಲಿದವು; ಅನುಸಾಲ್ವಕ ಪ್ರದ್ಯುಮ್ನ ಸಾತ್ಯಕಿಗಳು ಮೊದಲಾದ ವೀರರು ಬಿಂಕದಿಂದ/ಕೆಚ್ಚಿನಿಂದ ಎದುರಿಸಿ ನಿಂತರು.
- (ಪದ್ಯ-೨೭)
|
ಹಂಸಕೇತುವನೆಚ್ಚು ಕೃತವರ್ಮ ಸಾತ್ಯಕಿಗ |
ಳೆಂ ಸದೆದು ಬಭ್ರುವಾಹನ ಯೌವನಾಶ್ವರ್ಗೆ |
ಹಿಂಸೆಯಂ ಕೈಗೈದು ನೀಲಧ್ವಜಾನುಸಾಲ್ವಾದಿ ಭಟರಂ ಘಾತಿಸಿ ||
ಕಂಸಾರಿ ಸುತನಂ ಪಚಾರಿಸಿ ವಿಜಯ ಮುರ |
ಧ್ವಂಸಿಗಳ ಮೇಲೆ ನಡೆತೆರ ಕಂಡು ಕರ್ಣ ತನ |
ಯಂ ಸರಸಕಿದಿರಾಗಿ ಕತ್ತರಿಸಿ ಕೆಡಹಿದಂ ತಾಮ್ರಧ್ವಜನ ರಥವನು ||28||
|
ಪದವಿಭಾಗ-ಅರ್ಥ:
|
- ಹಂಸಕೇತುವನು ಎಚ್ಚು ಕೃತವರ್ಮ ಸಾತ್ಯಕಿಗಳೆಂ ಸದೆದು ಬಭ್ರುವಾಹನ ಯೌವನಾಶ್ವರ್ಗೆ ಹಿಂಸೆಯಂ ಕೈಗೈದು ನೀಲಧ್ವಜ ಅನುಸಾಲ್ವ ಆದಿ ಭಟರಂ ಘಾತಿಸಿ=[ತಾಮ್ರಧ್ವಜನು, ಹಂಸಕೇತುವನ್ನು ಬಾನಗಳಿಂದ ಹೊಡೆದು, ಕೃತವರ್ಮ ಸಾತ್ಯಕಿಗಳನ್ನು ಸದೆಬಡಿದು, ಬಭ್ರುವಾಹನ ಯೌವನಾಶ್ವರಿಗೆ ಹಿಂಸೆಮಾಡಿ, ನೀಲಧ್ವಜ ಅನುಸಾಲ್ವ ಮೊದಲಾದ ವೀರರನ್ನು, ಪೆಟ್ಟುಕೊಟ್ಟು,];; ಕಂಸಾರಿ ಸುತನಂ ಪಚಾರಿಸಿ (ಹೀಯಾಳಿಸು) ವಿಜಯ ಮುರಧ್ವಂಸಿಗಳ ಮೇಲೆ ನಡೆತೆರ ಕಂಡು ಕರ್ಣ ತನಯಂ ಸರಸಕೆ ಇದಿರಾಗಿ ಕತ್ತರಿಸಿ ಕೆಡಹಿದಂ ತಾಮ್ರಧ್ವಜನ ರಥವನು=[ಕೃಷ್ಣನ ಮಗ ಪ್ರದ್ಯುಮ್ನನ್ನು ಹೀಯಾಳಿಸಿ ಕೃಷ್ಣಾರ್ಜುನರ ಮೇಲೆ ನುಗ್ಗಿ ಬರಲು, ಅದನ್ನು ಕಂಡು ಕರ್ಣತನಯ ವೃಷಕೇತು ಯುದ್ಧಕ್ಕೆ ಎದುರುನಿಂತು, ತಾಮ್ರಧ್ವಜನ ರಥವನ್ನು ಕತ್ತರಿಸಿ ಕೆಡವಿದನು.]
- ತಾತ್ಪರ್ಯ:ತಾಮ್ರಧ್ವಜನು, ಹಂಸಕೇತುವನ್ನು ಬಾನಗಳಿಂದ ಹೊಡೆದು, ಕೃತವರ್ಮ ಸಾತ್ಯಕಿಗಳನ್ನು ಸದೆಬಡಿದು, ಬಭ್ರುವಾಹನ ಯೌವನಾಶ್ವರಿಗೆ ಹಿಂಸೆಮಾಡಿ, ನೀಲಧ್ವಜ ಅನುಸಾಲ್ವ ಮೊದಲಾದ ವೀರರನ್ನು, ಪೆಟ್ಟುಕೊಟ್ಟು,ಕೃಷ್ಣನ ಮಗ ಪ್ರದ್ಯುಮ್ನನ್ನು ಹೀಯಾಳಿಸಿ ಕೃಷ್ಣಾರ್ಜುನರ ಮೇಲೆ ನುಗ್ಗಿ ಬರಲು, ಅದನ್ನು ಕಂಡು ಕರ್ಣತನಯ ವೃಷಕೇತು ಯುದ್ಧಕ್ಕೆ ಎದುರುನಿಂತು, ತಾಮ್ರಧ್ವಜನ ರಥವನ್ನು ಕತ್ತರಿಸಿ ಕೆಡವಿದನು.
- (ಪದ್ಯ-೨೮)
|
ತೇರುಡಿಯೆ ಮತ್ತೊಂದು ತೇರ ನಳವಡಿಸಲಾ |
ತೇರನಿಸಲೊಡನೆ ಪೊಸತೇರೊಳವನೈದಲಾ |
ತೇರುಮಂ ಕತ್ತರಿಸೆ ತೇರೈಸದಂತಿಂತು ನೂರುತೇರಂ ಖಂಡಿಸಿ ||
ಸೇರಿಸೇರಿದ ಸೇನೆಯಂ ಸವರಿ ಕರ್ಣಜಂ |
ಸೇರಿಬರೆ ತಾಮ್ರಧ್ವಜಂ ಕನಲ್ದವನಿಯಂ |
ಸೇರಿ ಬಾಣತ್ರಯದೊಳಾತನಂ ಘಾತಿಸಿ ರಥಾರೋಹಣಂಗೈದನು ||29||
|
ಪದವಿಭಾಗ-ಅರ್ಥ:
|
- ತೇರು ಉಡಿಯೆ ಮತ್ತೊಂದು ತೇರನು ಅಳವಡಿಸಲು ಆ ತೇರನು ಇಸಲು ಒಡನೆ ಪೊಸತೇರೊಳು ಅವನು ಐದಲು ಆ ತೇರುಮಂ ಕತ್ತರಿಸೆ ತೇರು ಏಸದಂತು ಇಂತು ನೂರು ತೇರಂ ಖಂಡಿಸಿ=[ವೃಷಕೇತುವಿನ ಬಾಣದಿಂದ ತಾಮ್ರಧ್ವಜನ ರಥ ಪುಡಿಯಾಗಲು, ಅವನು ಮತ್ತೊಂದು ರಥಮನ್ನು ಅಳವಡಿಸಿಕೊಂಡನು. ಆ ತೇರನ್ನೂ ಹೊಡೆದು ಕೆಡವಲು, ಕೂಡಲೆ ಹೊರಥದಲ್ಲಿ ಅವನು ಬರಲು ಆ ರಥವನ್ನೂ ಕತ್ತರಿಸಿದನು; ರಥ ಎಷ್ಟು ಬಂದಿತೊ ಅಷ್ಟು ಪುಡಿಮಾಡಿದನು. ಹಿಗೆ ನೂರು ತೇರನ್ನು ಖಂಡಿಸಿ ಪುಡಿಮಾಡಿ];; ಸೇರಿ ಸೇರಿದ ಸೇನೆಯಂ ಸವರಿ ಕರ್ಣಜಂ ಸೇರಿಬರೆ ತಾಮ್ರಧ್ವಜಂ ಕನಲ್ದು ಅವನಿಯಂ (ನೆಲವನ್ನು) ಸೇರಿ ಬಾಣತ್ರಯದೊಳು ಆತನಂ ಘಾತಿಸಿ ರಥಾರೋಹಣಂ ಗೈದನು=[ಒಟ್ಟಾಗಿ ಸೇರಿಸೇರಿಕೊಂಡು ಬಂದ ಸೇನೆಯನ್ನು ನಾಶಮಾಡಿ ಕರ್ಣಜ ವೃಷಕೇತುವು ಒಟ್ಟುಸೇರಿ ಬರಲು, ತಾಮ್ರಧ್ವಜನು ಕೋಪಗೊಂಡು, ನೆಲದಮೇಲೆ ನಿಂತು ಮೂರು ಬಾಣದಿಂದ ಆತನನ್ನು ಹೊಡೆದು ಮತ್ತೆ ರಥವನ್ನು ಹತ್ತಿದನು.]
- ತಾತ್ಪರ್ಯ:ವೃಷಕೇತುವಿನ ಬಾಣದಿಂದ ತಾಮ್ರಧ್ವಜನ ರಥ ಪುಡಿಯಾಗಲು, ಅವನು ಮತ್ತೊಂದು ರಥಮನ್ನು ಅಳವಡಿಸಿಕೊಂಡನು. ಆ ತೇರನ್ನೂ ಹೊಡೆದು ಕೆಡವಲು, ಕೂಡಲೆ ಹೊರಥದಲ್ಲಿ ಅವನು ಬರಲು ಆ ರಥವನ್ನೂ ಕತ್ತರಿಸಿದನು; ರಥ ಎಷ್ಟು ಬಂದಿತೊ ಅಷ್ಟು ಪುಡಿಮಾಡಿದನು. ಹಿಗೆ ನೂರು ತೇರನ್ನು ಖಂಡಿಸಿ ಪುಡಿಮಾಡಿ, ಒಟ್ಟಾಗಿ ಸೇರಿಸೇರಿಕೊಂಡು ಬಂದ ಸೇನೆಯನ್ನು ನಾಶಮಾಡಿ ಕರ್ಣಜ ವೃಷಕೇತುವು ಇತರರೊಡನೆ ಒಟ್ಟು ಸೇರಿ ಬರಲು, ತಾಮ್ರಧ್ವಜನು ಕೋಪಗೊಂಡು, ನೆಲದಮೇಲೆ ನಿಂತು ಮೂರು ಬಾಣದಿಂದ ಆತನನ್ನು ಹೊಡೆದು ಮತ್ತೆ ರಥವನ್ನು ಹತ್ತಿದನು.
- (ಪದ್ಯ-೨೯)
|
ಅನಿರುದ್ಧನಂ ಗೆಲ್ದು ವೃಷಕೇತುವಂ ಕೆಡಹ |
ಲನುಸಾಲ್ವನಿದಿರಾದೊಡಾತನ ಪರಾಕ್ರಮವ |
ನನುವರದೊಳುರೆ ಮುರಿದು ಕೃತವರ್ಮ ಸಾತ್ಯಕಿ ಪ್ರದ್ಯುಮ್ನರಂ ಸೋಲಿಸಿ ||
ಅನುಪಮ ಬಲಂ ಬಭ್ರುವಾಹನಂ ಕಾದಲವ |
ನನುವನೊಪ್ಪಂಗೆಡಿಸಿ ಹಂಸಧ್ವಜನ ಜಯವ |
ನನುಕರಿಸಿ ಯೌವನಾಶ್ವಾಸಿ(ಶಿ)ತಧ್ವಜರಂ ತಗುಳ್ದವಂ ಬೊಬ್ಬಿರಿದನು ||30||
|
ಪದವಿಭಾಗ-ಅರ್ಥ:
|
- ಅನಿರುದ್ಧನಂ ಗೆಲ್ದು ವೃಷಕೇತುವಂ ಕೆಡಹಲು ಅನುಸಾಲ್ವನು ಇದಿರಾದೊಡೆ ಆತನ ಪರಾಕ್ರಮವನು ಅನುವರದೊಳು ಉರೆ ಮುರಿದು ಕೃತವರ್ಮ ಸಾತ್ಯಕಿ ಪ್ರದ್ಯುಮ್ನರಂ ಸೋಲಿಸಿ=[ತಾಮ್ರಧ್ವಜನು ನಂತರ,ಅನಿರುದ್ಧನನ್ನು ಗೆದ್ದು, ವೃಷಕೇತುವನ್ನು ಕೆಡವಲು,ಅನುಸಾಲ್ವನು ಎದುರಿಸಿದನು; ಅವನನ್ನು ಆತನ ಪರಾಕ್ರಮವನ್ನು ಯುದ್ಧದಲ್ಲಿ ಮುರಿದು, ಕೃತವರ್ಮ ಸಾತ್ಯಕಿ ಪ್ರದ್ಯುಮ್ನರನ್ನು ಸೋಲಿಸಿ];; ಅನುಪಮ ಬಲಂ ಬಭ್ರುವಾಹನಂ ಕಾದಲು ಅವನ ಅನುವನು (ಸ್ಥಿತಿ) ಒಪ್ಪಂಗೆಡಿಸಿ ಹಂಸಧ್ವಜನ ಜಯವನು ಅನುಕರಿಸಿ ಯೌವನಾಶ್ವಾಸಿ(ಶಿ)ತಧ್ವಜರಂ ತಗುಳ್ದವಂ ಬೊಬ್ಬಿರಿದನು=[ಸರಿಸಾಟಿಯಿಲ್ಲದ ಬಲಶಾಲಿಯಾದ ಬಭ್ರುವಾಹನನು ಯುದ್ಧಕ್ಕೆ ಬರಲು ಅವನ ಸ್ಥಿತಿಯನ್ನು ಹದಗೆಡಿಸಿ, ಹಂಸಧ್ವಜನ ಜಯವನ್ನು ಜಯಿಸಿ ಯೌವನಾಶ್ವ ಸಿತಧ್ವಜರನ್ನು/ ನೀಲಧ್ವಜರನ್ನು ತಗುಲಿಕೊಂಡು / ಎದುರಿಸಿ ಆರ್ಭಟಿಸಿದನು].
- ತಾತ್ಪರ್ಯ:ತಾಮ್ರಧ್ವಜನು ನಂತರ,ಅನಿರುದ್ಧನನ್ನು ಗೆದ್ದು, ವೃಷಕೇತುವನ್ನು ಕೆಡವಲು,ಅನುಸಾಲ್ವನು ಎದುರಿಸಿದನು; ಅವನನ್ನು ಆತನ ಪರಾಕ್ರಮವನ್ನು ಯುದ್ಧದಲ್ಲಿ ಮುರಿದು, ಕೃತವರ್ಮ ಸಾತ್ಯಕಿ ಪ್ರದ್ಯುಮ್ನರನ್ನು ಸೋಲಿಸಿ, ಸರಿಸಾಟಿಯಿಲ್ಲದ ಬಲಶಾಲಿಯಾದ ಬಭ್ರುವಾಹನನು ಯುದ್ಧಕ್ಕೆ ಬರಲು ಅವನ ಸ್ಥಿತಿಯನ್ನು ಹದಗೆಡಿಸಿ, ಹಂಸಧ್ವಜನ ಜಯವನ್ನು ಜಯಿಸಿ/ ಸೋಲಿಸಿ, ಯೌವನಾಶ್ವ ಸಿತಧ್ವಜರನ್ನು/ ನೀಲಧ್ವಜರನ್ನು ತಗುಲಿಕೊಂಡು / ಎದುರಿಸಿ ಆರ್ಭಟಿಸಿದನು]
- (ಪದ್ಯ-೩೦)
|
ಬಲದೊಳಗೆ ಮಿಡುಕುಳ್ಳ ವೀರರೊಳ್ ಧೀರರೊಳ್ |
ಕಲಿತನದೊಳಿದಿರಾಗಿ ನಿಲ್ವರಂ ಗೆಲ್ವರಂ |
ಸಲೆ ಪಲಾಯನಕೆ ಮೈಗುಡುವರಂ ಬಿಡುವರಂ ವಾಹನಾಯುಧ ತತಿಯನು ||
ಫಲುಗುಣಂ ಕಾಣುತತ್ಯುಗ್ರದಿಂ ವ್ಯಗ್ರದಿಂ |
ಸೆಳೆದು ಕೋದಂಡಮಂ ತೀಡಿದಂ ಪೂಡಿದಂ |
ಪೊಳೆವ ಕೆಂಗರಿಯ ನಿಡುಗೋಲ್ಗಳಂ ಸಾಲ್ಗಳಂ ಕಟ್ಟಿದಂ ಗಗನ ಪಥಕೆ ||31||
|
ಪದವಿಭಾಗ-ಅರ್ಥ:
|
- ಬಲದೊಳಗೆ ಮಿಡುಕುಳ್ಳ ವೀರರೊಳ್ ಧೀರರೊಳ್ ಕಲಿತನದೊಳು ಇದಿರಾಗಿ ನಿಲ್ವರಂ ಗೆಲ್ವರಂ ಸಲೆ ಪಲಾಯನಕೆ ಮೈಗುಡುವರಂ ಬಿಡುವರಂ ವಾಹನ ಆಯುಧ ತತಿಯನು=[ಅರ್ಜುನನು ತನ್ನ ಸೈನ್ಯದಲ್ಲಿ ಶೌರ್ಯವುಳ್ಳ ವೀರರಲ್ಲ', ಧೀರರಲ್ಲಿ ಶೌರ್ಯದಿಂದ ಎದುರು ನಿಲ್ಲುವವರನ್ನು, ಗೆಲ್ಲುವವವರನ್ನು, ಮತ್ತೆ ಪಲಾಯನ ಮಾಡುವವರನ್ನು, ಯುದ್ಧವನ್ನು ಬಿಡುವರನ್ನು, ವಾಹನವನ್ನು, ನಾಣಾ ಆಯುಧಗಳನ್ನು];; ಫಲುಗುಣಂ ಕಾಣುತ ಅತ್ಯುಗ್ರದಿಂ ವ್ಯಗ್ರದಿಂ ಸೆಳೆದು ಕೋದಂಡಮಂ ತೀಡಿದಂ ಪೂಡಿದಂ ಪೊಳೆವ ಕೆಂಗರಿಯ ನಿಡುಗೋಲ್ಗಳಂ ಸಾಲ್ಗಳಂ ಕಟ್ಟಿದಂ ಗಗನ ಪಥಕೆ[ಫಲ್ಗುಣನು ನೋಡುತ್ತಾ ಬಹಳ ಕೋಪದಿಂದ, ವ್ಯಗ್ರನಾಗಿ/ ಉದ್ವೇಗದಿಂದ ಕೋದಂಡವನ್ನು ತೆಗೆದುಕೊಂಡು ಹೆದಯನ್ನುಕಟ್ಟಿ ಪೂಡಿದಂ ಹೊಳೆಯುವ ಕೆಂಪುಗರಿಯ ನಿಡಿದಾದ ಬಾಣಗಳನ್ನು ಆಕಾಶ ಮಾರ್ಗ ತುಂಬುವಂತೆ ಸಾಲು ಸಾಲಾಗಿ ಬಾಣವನ್ನು ಕಟ್ಟಿದನು/ ಎಲ್ಲ ಕಡೆ ಬಾಣದಿಂದ ತುಂಬಿದನು].
- ತಾತ್ಪರ್ಯ:ಅರ್ಜುನನು ತನ್ನ ಸೈನ್ಯದಲ್ಲಿ, ಶೌರ್ಯವುಳ್ಳ ವೀರರಲ್ಲಿ', ಧೀರರಲ್ಲಿ ಶೌರ್ಯದಿಂದ ಎದುರು ನಿಲ್ಲುವವರನ್ನು, ಗೆಲ್ಲುವವವರನ್ನು, ಮತ್ತೆ ಪಲಾಯನ ಮಾಡುವವರನ್ನು, ಯುದ್ಧವನ್ನು ಬಿಡುವರನ್ನು, ವಾಹನವನ್ನು, ನಾನಾ ಆಯುಧಗಳನ್ನು ಫಲ್ಗುಣನು ನೋಡುತ್ತಾ ಬಹಳ ಕೋಪದಿಂದ, ವ್ಯಗ್ರನಾಗಿ/ ಉದ್ವೇಗದಿಂದ ಕೋದಂಡವನ್ನು ತೆಗೆದುಕೊಂಡು ಹೆದಯನ್ನು ಕಟ್ಟಿ ಹೊಳೆಯುವ ಕೆಂಪುಗರಿಯ ನಿಡಿದಾದ ಬಾಣಗಳನ್ನು ಹೂಡಿ ಆಕಾಶ ಮಾರ್ಗ ತುಂಬುವಂತೆ ಸಾಲು ಸಾಲಾಗಿ ಬಾಣವನ್ನು ಕಟ್ಟಿದನು/ ತುಂಬಿಸಿನು]
- (ಪದ್ಯ-೩೧)
|
ಲೇಸಾದುದೈ ಪಾರ್ಥ ಕೃಷ್ಣನ ಸಹಾಯದಿಂ |
ದೀಸು ದಿನಮಾಹವದೊಳೆಲ್ಲರಂ ಗೆಲ್ದೆ ಬಿಡು |
ವಾಸಿಯಂ ತನ್ನೊಡನೆ ಗೋತ್ರಹತ್ಯಾದೋಷಮಂ ಕಳೆದುಕೊಂಬ ಮಖಕೆ ||
ಏಸು ಹರಿಗಳ್ ಬೇಕು ನಿನಗೈಸನೀವೆ ನಾ |
ನೀ ಸರೋಜಾಕ್ಷನಿರಲೇತಕೆಲೆ ಮರುಳೆ ಧನ |
ದಾಸೆಯಿಂ ಧರ್ಮಮಂ ಮಾಣ್ದನಂತಾದೆ ಹೋಗೆನುತವಂ ತೆಗೆದೆಚ್ಚನು ||32||
|
ಪದವಿಭಾಗ-ಅರ್ಥ:
|
- ಲೇಸಾದುದೈ ಪಾರ್ಥ ಕೃಷ್ಣನ ಸಹಾಯದಿಂದೀಸು ದಿನಮಾಹವದೊಳೆಲ್ಲರಂ ಗೆಲ್ದೆ ಬಿಡು ವಾಸಿಯಂ ತನ್ನೊಡನೆ ಗೋತ್ರಹತ್ಯಾದೋಷಮಂ ಕಳೆದುಕೊಂಬ ಮಖಕೆ=[ಪಾರ್ಥನೇ ಒಳ್ಳಯದಯ್ಯಾ! ಕೃಷ್ಣನ ಸಹಾಯದಿಂದ ಇಷ್ಟು ದಿನ,ಯುದ್ಧದಲ್ಲಿ ಎಲ್ಲರನೂ ಗೆದ್ದೆ. ಆ ಭಾನೆಯನ್ನು ತನ್ನೊಡನೆ ಬಿಡು; ಗೆಲ್ಲಲಾರೆ! ಗೋತ್ರಹತ್ಯಾದೋಷವನ್ನು ಕಳೆದುಕೊಳ್ಳುವ ಯಜ್ಞಕ್ಕೆ ];; ಏಸು ಹರಿಗಳ್ ಬೇಕು ನಿನಗೆ ಐಸನು ಈವೆ ನಾನು, ಈ ಸರೋಜಾಕ್ಷನು ಇರಲು ಏತಕೆ ಎಲೆ ಮರುಳೆ? ಧನದ ಆಸೆಯಿಂ ಧರ್ಮಮಂ ಮಾಣ್ದನಂತಾದೆ ಹೋಗು ಎನುತವಂ ತೆಗೆದು ಎಚ್ಚನು=[ನಿನಗೆ ಎಷ್ಟು ಕುದುರೆಗಳು ಬೇಕು? ನಿನಗೆ ಬೇಕಾದರೆ ಅಷ್ಟು ಕುದುರೆಗಳನ್ನು ನಾನು ಕೊಡುವೆ. ಈ ಸರೋಜಾಕ್ಷ ಕೃಷ್ಣನು ಬಳಿ ಇರಲು ಏತಕ್ಕೆ ಯಜ್ಞ? ; ಎಲೆ ಮರುಳೆ ಧನದ ಆಸೆಯಿಂದ ಧರ್ಮಕಾರ್ಯ ಮಾಡಿದವನಂತೆ ನೀನು ಆದೆ! ಹೋಗು ಎನ್ನತ್ತಾ ಅವನು ತೆಗೆದು ಹೊಡೆದನು].
- ತಾತ್ಪರ್ಯ:ಪಾರ್ಥನೇ ಒಳ್ಳಯದಯ್ಯಾ! ಕೃಷ್ಣನ ಸಹಾಯದಿಂದ ಇಷ್ಟು ದಿನ,ಯುದ್ಧದಲ್ಲಿ ಎಲ್ಲರನೂ ಗೆದ್ದೆ. ಆ ಭಾನೆಯನ್ನು ತನ್ನೊಡನೆ ಬಿಡು; ಗೆಲ್ಲಲಾರೆ! ಗೋತ್ರಹತ್ಯಾದೋಷವನ್ನು ಕಳೆದುಕೊಳ್ಳುವ ಯಜ್ಞಕ್ಕೆ ನಿನಗೆ ಎಷ್ಟು ಕುದುರೆಗಳು ಬೇಕು? ನಿನಗೆ ಬೇಕಾದರೆ ಅಷ್ಟು ಕುದುರೆಗಳನ್ನು ನಾನು ಕೊಡುವೆ. ಈ ಸರೋಜಾಕ್ಷ ಕೃಷ್ಣನು ಬಳಿ ಇರಲು ಏತಕ್ಕೆ ಯಜ್ಞ? ; ಎಲೆ ಮರುಳೆ ಧನದ ಆಸೆಯಿಂದ ಧರ್ಮಕಾರ್ಯ ಮಾಡಿದವನಂತೆ ನೀನು ಆದೆ! ಹೋಗು ಎನ್ನತ್ತಾ ಅವನು ತೆಗೆದು ಹೊಡೆದನು.
- (ಪದ್ಯ-೩೨)XXI
|
ಎಲವೊ ತಾಮ್ರಧ್ವಜ ಸುವಿತ್ತದಿಂ ಧರ್ಮಮಂ |
ನಿಲಿಸಬೇಕಲ್ಲದೆ ನಿರರ್ಥಕದೊಳಾದಪುದೆ |
ಜಲಜಾಕ್ಷನಂ ಬರಿದೆ ಸಾಕ್ಷಾತ್ಕರಿಸಬಹುದೆ ವಿಧಿ ವಿಧಾನದೊಳಲ್ಲದೆ ||
ಪಲವು ಮಖದಿಂದೆ ಪರಿಪೂರ್ಣನಾಗಿಹ ಹರಿಯ |
ನೆಲೆಯ ನೀನೆಂತರಿವೆ ಮೂಢ ಫಡ ಹೋಗೆನುತೆ |
ಫಲುಗುಣಂ ತೆಗೆದೆಚ್ಚನಾತನ ವರೂಥ ಹಯ ಸಾರಥಿಗಳೆಡೆಗೆಡೆಯಲು ||33||
|
ಪದವಿಭಾಗ-ಅರ್ಥ:
|
- ಎಲವೊ ತಾಮ್ರಧ್ವಜ ಸುವಿತ್ತದಿಂ ಧರ್ಮಮಂ ನಿಲಿಸಬೇಕು ಅಲ್ಲದೆ ನಿರರ್ಥಕದೊಳು ಆದಪುದೆ ಜಲಜಾಕ್ಷನಂ ಬರಿದೆ ಸಾಕ್ಷಾತ್ಕರಿಸಬಹುದೆ ವಿಧಿ ವಿಧಾನದೊಳು ಅಲ್ಲದೆ=[ಎಲವೊ ತಾಮ್ರಧ್ವಜ, ಉತ್ತಮ ಮಾರ್ಗದಿಂದ ಗಳಿಸಿದ ಹಣದಿಂದ ಧರ್ಮವನ್ನು ರಕ್ಷಿಸಬೇಕು, ಅಲ್ಲದೆ ನಿರರ್ಥಕವಾಗಿ ಆಗುವುದೆ? ಕೃಷ್ಣನನ್ನು ಬರಿದೆ ಸಾಕ್ಷಾತ್ಕರಿಸಲು ಸಾಧ್ಯವೇ? ಅದಕ್ಕೆ ವಿಧಿ ವಿಧಾನವನ್ನು ಅನುಸರಿಸದೆ ಆಗುವುದೆ? ];; ಪಲವು ಮಖದಿಂದೆ ಪರಿಪೂರ್ಣನಾಗಿ ಇಹ ಹರಿಯ ನೆಲೆಯ ನೀನು ಎಂತರಿವೆ ಮೂಢ ಫಡ ಹೋಗೆನುತೆ ಫಲುಗುಣಂ ತೆಗೆದು ಎಚ್ಚನು ಆತನ ವರೂಥ ಹಯ ಸಾರಥಿಗಳು ಎಡೆಗೆಡೆಯಲು=[ಹಲವು ಯಜ್ಞದಿಂದ ಪರಿಪೂರ್ಣನಾಗಿರುವ ಹರಿಯ ನೆಲೆಯನ್ನು ನೀನು ಹೇಗೆ ತಿಳಿಯುವೆ? ಮೂಢನೇ, ಫಡ ಹೋಗು ಎನ್ನುತ್ತಾ,ಫಲ್ಗುಣನು ತೆಗೆದು ಹೊಡೆದನು, ಆಗ ಆತನ ರಥ ಕುದುರೆ ಸಾರಥಿಗಳು ಕೆಳಗೆ ಬಿದ್ದರು.].
- ತಾತ್ಪರ್ಯ:ಎಲವೊ ತಾಮ್ರಧ್ವಜ, ಉತ್ತಮ ಮಾರ್ಗದಿಂದ ಗಳಿಸಿದ ಹಣದಿಂದ ಧರ್ಮವನ್ನು ರಕ್ಷಿಸಬೇಕು, ಅಲ್ಲದೆ ನಿರರ್ಥಕವಾಗಿ ಆಗುವುದೆ? ಕೃಷ್ಣನನ್ನು ಬರಿದೆ ಸಾಕ್ಷಾತ್ಕರಿಸಲು ಸಾಧ್ಯವೇ? ಅದಕ್ಕೆ ವಿಧಿ ವಿಧಾನವನ್ನು ಅನುಸರಿಸದೆ ಆಗುವುದೆ? ಹಲವು ಯಜ್ಞದಿಂದ ಪರಿಪೂರ್ಣನಾಗಿರುವ ಹರಿಯ ನೆಲೆಯನ್ನು ನೀನು ಹೇಗೆ ತಿಳಿಯುವೆ? ಮೂಢನೇ, ಫಡ ಹೋಗು ಎನ್ನುತ್ತಾ,ಫಲ್ಗುಣನು ತೆಗೆದು ಹೊಡೆದನು, ಆಗ ಆತನ ರಥ ಕುದುರೆ ಸಾರಥಿಗಳು ಕೆಳಗೆ ಬಿದ್ದರು.].
- (ಪದ್ಯ-೩೩)
|
ಆ ರಥಂ ಮುರಿಯೆ ಪೊಸರಥವನವನೇರಿ ಬರ |
ಲಾರಥಂ ಪುಡಿಯಾಗೆ ನರನಿಸಲ್ ಬಳಿಕಾ ಮ |
ಹಾ ರಥಂ ಮತ್ತೊಂದು ರಥದೊಳುರವಣಿಸಲದನರ್ಜುನಂ ತಡೆಗಡಿದನು ||
ಆ ರಣದೊಳಿಂತವನ ಸ್ಯಂದನ ಸಹಸ್ರಮಂ |
ಬಾರಿಬಾರಿಗೆ ಕತ್ತರಿಸಿ ಕೆಡಹಿ ಫಲುಗುಣಂ |
ಪೂರೈಸಿದಂ ದೇವದತ್ತಮಂ ಕೊಂದನಿರ್ಕೆಲದ ಚಾತುರ್ಬಲವನು ||34||
|
ಪದವಿಭಾಗ-ಅರ್ಥ:
|
- ಆ ರಥಂ ಮುರಿಯೆ ಪೊಸರಥವನು ಅವನು ಏರಿ ಬರಲು ಆರಥಂ ಪುಡಿಯಾಗೆ ನರನು ಇಸಲ್ ಬಳಿಕ ಆ ಮಹಾ ರಥಂ ಮತ್ತೊಂದು ರಥದೊಳು ಉರವಣಿಸಲು ಅದನು ಅರ್ಜುನಂ ತಡೆಗಡಿದನು=[ಆ ರಥವು ಮುರಿಯಲು ಹೊಸರಥವನ್ನು ಅವನು ಏರಿ ಬರಲು ಆ ರಥವೂ ಅರ್ಜುನನ ಬಾಣದ ಹೊಡೆತಕ್ಕೆ ಪುಡಿಯಾಗಲು, ಬಳಿಕ ಆ ಮಹಾರಥನಾದ ತಾಮ್ರಧ್ವಜನು ಮತ್ತೊಂದು ರಥದಲ್ಲಿ ಬಂದು ಪರಾಕ್ರಮಿಸಲು, ಅದನ್ನೂ ಅರ್ಜುನನು ತಡೆದು ಕಡಿದು ಕೆಡಗಿದನು.];; ಆ ರಣದೊಳು ಇಂತು ಅವನ ಸ್ಯಂದನ ಸಹಸ್ರಮಂ ಬಾರಿಬಾರಿಗೆ ಕತ್ತರಿಸಿ ಕೆಡಹಿ ಫಲುಗುಣಂ ಪೂರೈಸಿದಂ ದೇವದತ್ತಮಂ ಕೊಂದನು ಇರ್ಕೆಲದ ಚಾತುರ್ಬಲವನು=[ಆ ಯುದ್ಧದಲ್ಲಿ ಹೀಗೆ ಅವನ ಸಹಸ್ರ ರಥಗಳನ್ನು ಬಾರಿಬಾರಿಗೂ ಕತ್ತರಿಸಿ ಕೆಡಗಿ ಫಲ್ಗುಣನು ದೇವದತ್ತ ಶಂಖವನ್ನು ಊದಿದನು. ಅಕ್ಕ ಪಕ್ಕದ ಚತುರ್ಬಲ ಸೈನ್ಯವನ್ನು ಕೊಂದನು]
- ತಾತ್ಪರ್ಯ:ಆ ರಥವು ಮುರಿಯಲು ಹೊಸರಥವನ್ನು ಅವನು ಏರಿ ಬರಲು ಆ ರಥವೂ ಅರ್ಜುನನ ಬಾಣದ ಹೊಡೆತಕ್ಕೆ ಪುಡಿಯಾಗಲು, ಬಳಿಕ ಆ ಮಹಾರಥನಾದ ತಾಮ್ರಧ್ವಜನು ಮತ್ತೊಂದು ರಥದಲ್ಲಿ ಬಂದು ಪರಾಕ್ರಮಿಸಲು, ಅದನ್ನೂ ಅರ್ಜುನನು ತಡೆದು ಕಡಿದು ಕೆಡಗಿದನು.ಆ ಯುದ್ಧದಲ್ಲಿ ಹೀಗೆ ಅವನ ಸಹಸ್ರ ರಥಗಳನ್ನು ಬಾರಿಬಾರಿಗೂ ಕತ್ತರಿಸಿ ಕೆಡಗಿ ಫಲ್ಗುಣನು ದೇವದತ್ತ ಶಂಖವನ್ನು ಊದಿದನು. ಅಕ್ಕ ಪಕ್ಕದ ಚತುರ್ಬಲ ಸೈನ್ಯವನ್ನು ಕೊಂದನು.
- (ಪದ್ಯ-೩೪)
|
ಅರ್ಜುನನ ಸಾಹಸಕೆ ಮೆಚ್ಚಿ ತಾಮ್ರಧ್ವಜಂ |
ಗರ್ಜಿಸಿ ಕನಲ್ದಮಮ ತಾನದೇಂ ಪೌರುಷ ವಿ |
ವರ್ಜಿತನೆ ಫಡಯೆನುತ ತೆಗದಿಸಲ್ ಬರಸಿಡಿಲ್ ಪೊಡೆದು ಗಿರಿ ಜರಿವಂತಿರೆ ||
ನಿರ್ಜರೇಂದ್ರನ ಸೂನು ಪೊನಲಿಡಲ್ ಬಿಸಿಯ ನೆ |
ತ್ತರ್ಜೊಂಪಿಸುತೆ ಮೈಮರೆದು ಬಿದ್ದನಿಳೆಯೊಳ್ ಪು |
ನರ್ಜನ್ಮಮೆನೆ ಕೂಡೆ ಚೇತರಿಸಿ ನರನೆಚ್ಚು ಕಡಿದನಾತನ ಧನುವನು ||35||
|
ಪದವಿಭಾಗ-ಅರ್ಥ:
|
- ಅರ್ಜುನನ ಸಾಹಸಕೆ ಮೆಚ್ಚಿ ತಾಮ್ರಧ್ವಜಂ ಗರ್ಜಿಸಿ ಕನಲ್ದು ಅಮಮ ತಾನು ಅದೇಂ ಪೌರುಷ ವಿವರ್ಜಿತನೆ ಫಡಯೆನುತ ತೆಗದು ಇಸಲ್ ಬರಸಿಡಿಲ್ ಪೊಡೆದು ಗಿರಿ ಜರಿವಂತಿರೆ=[ಅರ್ಜುನನ ಸಾಹಸಕ್ಕೆ ಮೆಚ್ಚಿ ತಾಮ್ರಧ್ವಜು ಗರ್ಜಿಸಿ ಸಿಟ್ಟುಗೊಂಡು- ಅಮಮ! ತಾನು ಅದೇನು ಪೌರುಷ ಹೀನನೆ? ಫಡ! ಎಂದು ತೆಗದು ಹೊಡೆಯಲು, ಅದು ಬರಸಿಡಿಲು ಹೊಡೆದು ಬೆಟ್ಟ ಜರಿಯುವಂತೆ ಇತ್ತು;];; ನಿರ್ಜರೇಂದ್ರನ ಸೂನು (ದೇವೇಂದ್ರನ ಮಗ)ಪೊನಲಿಡಲ್ (ಹೊನಲು-ಪ್ರವಾಹ, ಹರಿಯುವುದು) ಬಿಸಿಯ ನೆತ್ತರ್ಜೊಂಪಿಸುತೆ ಮೈಮರೆದು ಬಿದ್ದನು ಇಳೆಯೊಳ್ ಪುನರ್ಜನ್ಮಂ ಎನೆ ಕೂಡೆ ಚೇತರಿಸಿ ನರನು ಎಚ್ಚು ಕಡಿದನು ಆತನ ಧನುವನು=[ಅರ್ಜುನನು, ಬಿಸಿರಕ್ತ ಹರಿಯಲು, ರಕ್ತಸೋರಿಕೆಯಿಂದ ಜೋಂಪು ಹತ್ತಿ ಮೈಮರೆದು ನೆಲಕ್ಕೆ ಬಿದ್ದನು. ಆದರೆ ಪುನರ್ಜನ್ಮ ಬಂತೇ ಎನ್ನುವಂತೆ, ಕೂಡಲೆ ಚೇತರಿಸಿಕೊಂಡು, ಅರ್ಜುನನು ತಾಮ್ರಧ್ವಜನ ಧನುಸ್ಸನ್ನು ಹೊಡೆದು ಕಡಿದನು.]
- ತಾತ್ಪರ್ಯ:ಅರ್ಜುನನ ಸಾಹಸಕ್ಕೆ ಮೆಚ್ಚಿ ತಾಮ್ರಧ್ವಜು ಗರ್ಜಿಸಿ ಸಿಟ್ಟುಗೊಂಡು- ಅಮಮ! ತಾನು ಅದೇನು ಪೌರುಷ ಹೀನನೆ? ಫಡ! ಎಂದು ತೆಗದು ಹೊಡೆಯಲು, ಅದು ಬರಸಿಡಿಲು ಹೊಡೆದು ಬೆಟ್ಟ ಜರಿಯುವಂತೆ ಇತ್ತು;ಅರ್ಜುನನು, ಬಿಸಿರಕ್ತ ಹರಿಯಲು, ರಕ್ತಸೋರಿಕೆಯಿಂದ ಜೋಂಪು ಹತ್ತಿ ಮೈಮರೆದು ನೆಲಕ್ಕೆ ಬಿದ್ದನು. ಆದರೆ ಪುನರ್ಜನ್ಮ ಬಂತೇ ಎನ್ನುವಂತೆ, ಕೂಡಲೆ ಚೇತರಿಸಿಕೊಂಡು, ಅರ್ಜುನನು ತಾಮ್ರಧ್ವಜನ ಧನುಸ್ಸನ್ನು ಹೊಡೆದು ಕಡಿದನು.
- (ಪದ್ಯ-೩೫)
|
ಬಿಲ್ಮುರಿಯೆ ಮತ್ತೊಂದು ಬಿಲ್ಗೊಂಡು ಕೋಪದಿಂ |
ಪಲ್ಮೊರೆಯುತೊಡನೆ ತಾಮ್ರಧ್ವಜಂ ತೆಗೆದಾರ್ದಿ |
ಸಲ್ಮಹಿಯೊಳರ್ಜುನನ ತೇರೊಂದುಯೋಜನಂ ಪೋಗೆ ತರಹರಿಸಿಕೊಳುತೆ ||
ನಿಲ್ಮೋರೆದೋರೆನುತೆ ಫಲುಗುಣಂ ಬೊಬ್ಬಿರಿದಿ |
ಸಲ್ಮುಗಿಲ ಬಟ್ಟೆಯ ನಡರ್ದುದಾತನ ರಥಂ |
ಬಲ್ಮೆಗೆ ಮುರಧ್ವಂಸಿ ಮೆಚ್ಚಿ ತೆಲದೂಗಿದಂ ಭೂಪಕೇಳದ್ಭುತವನು ||36||
|
ಪದವಿಭಾಗ-ಅರ್ಥ:
|
- ಬಿಲ್ ಮುರಿಯೆ ಮತ್ತೊಂದು ಬಿಲ್ ಕೊಂಡು ಕೋಪದಿಂ ಪಲ್ಮೊರೆಯುತ (ಪಲ್ ಮೊರೆಯುತ: ಹಲ್ಲುಕಡಿಯುತ್ತಾ)ಒಡನೆ ತಾಮ್ರಧ್ವಜಂ ತೆಗೆದು ಆರ್ದು ಇಸಲ್=[ತಾಮ್ರಧ್ವಜನ ಬಿಲ್ಲು ಮುರಿಯಲು ಮತ್ತೊಂದು ಬಿಲ್ಲನ್ನು ತೆಗೆದುಕೊಂಡು, ಕೋಪದಿಂದ ಹಲ್ಲುಕಡಿಯುತ್ತಾ,ಕೂಡಲೆ ತಾಮ್ರಧ್ವಜನು ಆರ್ಭಟಿಸಿ ತೆಗೆದು ಹೊಡೆಯಲು,];; ಮಹಿಯೊಳು ಅರ್ಜುನನ ತೇರು ಒಂದು ಯೋಜನಂ ಪೋಗೆ ತರಹರಿಸಿಕೊಳುತೆ=[ನೆಲದಮೇಲೆ ಅರ್ಜುನನ ರಥ ಒಂದು ಯೋಜನ ದೂರ ಹೋಗಲು ಸುಧಾರಿಸಿಕೊಂಡು,];; ನಿಲ್ ಮೋರೆ ತೋರೆನುತೆ ಫಲುಗುಣಂ ಬೊಬ್ಬಿರಿದು ಇಸಲ್ ಮುಗಿಲ ಬಟ್ಟೆಯನು ಅಡರ್ದುದು ಆತನ ರಥಂ ಬಲ್ಮೆಗೆ ಮುರಧ್ವಂಸಿ ಮೆಚ್ಚಿ ತೆಲದೂಗಿದಂ ಭೂಪ ಕೇಳು ಅದ್ಭುತವನು=[ನಿಲ್ಲು ಮುಖ ತೋರಿಸು,ಎನ್ನುತ್ತಾ ಫಲ್ಗುಣನು ಆರ್ಭಟಿಸಿ ಹೊಡೆಯಲು, ಆತನ ರಥವು ಮೋಡಗಳ ದಾರಿಯನ್ನು ಹಿಡಿದು ಹೋಯಿತು; ಈ ಸಾಹಸಕ್ಕೆ ಮುರಧ್ವಂಸಿ ಕೃಷ್ಣನು ಮೆಚ್ಚಿ ತೆಲದೂಗಿದನು, ಭೂಪನೇ ಅದ್ಭುತವನ್ನು ಕೇಳು ಎಂದನು ಮುನಿ.]
- ತಾತ್ಪರ್ಯ:ತಾಮ್ರಧ್ವಜನ ಬಿಲ್ಲು ಮುರಿಯಲು ಮತ್ತೊಂದು ಬಿಲ್ಲನ್ನು ತೆಗೆದುಕೊಂಡು, ಕೋಪದಿಂದ ಹಲ್ಲುಕಡಿಯುತ್ತಾ,ಕೂಡಲೆ ತಾಮ್ರಧ್ವಜನು ಆರ್ಭಟಿಸಿ ತೆಗೆದು ಹೊಡೆಯಲು, ನೆಲದಮೇಲೆ ಅರ್ಜುನನ ರಥ ಒಂದು ಯೋಜನ ದೂರ ಹೋಗಲು ಸುಧಾರಿಸಿಕೊಂಡು, ನಿಲ್ಲು ಮುಖ ತೋರಿಸು,ಎನ್ನುತ್ತಾ ಫಲ್ಗುಣನು ಆರ್ಭಟಿಸಿ ಹೊಡೆಯಲು, ಆತನ ರಥವು ಮೋಡಗಳ ದಾರಿಯನ್ನು ಹಿಡಿದು ಹೋಯಿತು; ಈ ಸಾಹಸಕ್ಕೆ ಮುರಧ್ವಂಸಿ ಕೃಷ್ಣನು ಮೆಚ್ಚಿ ತೆಲದೂಗಿದನು. ಭೂಪನೇ ಅದ್ಭುತವನ್ನು ಕೇಳು ಎಂದನು ಮುನಿ.]
- (ಪದ್ಯ-೩೬)
|
ಎಡಬಲದ ಮಂಡಲದ ಭೇದದಿಂ ಖೇದದಿಂ |
ದಡಿಗಡಿಗೆಸೆವ ಪರಾಕ್ರಮದಿಂದೆ ಕ್ರಮದಿಂದೆ |
ತುಡುವ ಬಿಡುವಂಬಿನ ತರಂಗದಿಂ ರಂಗದಿಂ ತೊಲಗದಗ್ಗಳಿಕಯಿಂದೆ ||
ದೃಢಚಾಪ ಘೋಷ ಭೀಕರದಿಂದೆ ನಿಕರದಿಂದೆ |
ಜಡತೆ ಪೋದ್ದದ ಸಾಹಸತ್ವದಿಂ ಸತ್ವದಿಂ |
ಕಡುಗಿ ತಾಮ್ರಧ್ವಜ ವಿಜಯರಾಗ ಜಯರಾಗಕೆ(ರೆ)ಚ್ಚಾಡಿದರ್ ಧುರದೊಳು ||37||
|
ಪದವಿಭಾಗ-ಅರ್ಥ:
|
- ಎಡಬಲದ ಮಂಡಲದ (ಸುತ್ತುವಿಕೆ, ಗುಂಪು, ಪ್ರದೇಶ/ಭೂಮಂಡಲ) ) ಭೇದದಿಂ ಖೇದದಿಂದ(ನೋವು, ಆಯಾಸ) ಅಡಿಗಡಿಗೆ ಎಸೆವ ಪರಾಕ್ರಮದಿಂದೆ ಕ್ರಮದಿಂದೆ ತುಡುವ ಬಿಡುವ ಅಂಬಿನ ತರಂಗದಿಂ ರಂಗದಿಂ ತೊಲಗದ ಅಗ್ಗಳಿಕಯಿಂದೆ=[ತಾಮ್ರಧ್ವಜ ಮತ್ತು ವಿಜಯರು/ಅರ್ಜುನರು, ಆಗ ಜಯ ಗಳಿಸಲು, ಎಡ ಮತ್ತು ಬಲದ ಸುತ್ತುವಿಕೆಯ ಚಮತ್ಕಾರದ ನಾನಾ ವಿಧದಿಂದ, ನೋವು, ಆಯಾಸದಿಂದ ಮತ್ತೆ ಮತ್ತೆ ತೋರುವ ಪರಾಕ್ರಮದಿಂದ, ಯುದ್ಧಕ್ರಮದಿಂದ, ಒಂದಾದ ಮೇಲೊಂದು ಬಾಣ ತೊಡುವ ಬಿಡುವ ತರಂಗದಿಂದ/ಅಲೆಯಿಂದ, ಯುದ್ಧರಂಗದಿಂದ ಹಿಂದೆಸರಿಯದ ಸಾಮರ್ಥ್ಯದಿಂದ,];; ದೃಢಚಾಪ ಘೋಷ ಭೀಕರದಿಂದೆ ನಿಕರದಿಂದೆ(ನಿಕರ- ಮನಸ್ಸು;ನಿ+ಕರ?) ಜಡತೆ ಪೋದ್ದದ ಸಾಹಸತ್ವದಿಂ ಸತ್ವದಿಂ ಕಡುಗಿ ತಾಮ್ರಧ್ವಜ ವಿಜಯರಾಗ ಜಯರಾಗಕೆ(ರೆ)ಎಚ್ಚಾಡಿದರ್ ಧುರದೊಳು=[ದೃಢವಾದ ಬಿಲ್ಲುಗಾರಿಕೆ, ಘೋಷಗಳ ಭೀಕರತೆಯ ಮನಸ್ಸಿನ ಭಾವದಿಂದ, ಜಡತೆಹೊಂದದ ಸಾಹಸತ್ವದಿಂದ, ಶಕ್ತಿಯಿಂದ ಕಠೋರವಾಗಿ (<-ತಾಮ್ರಧ್ವಜ ವಿಜಯರು ಆಗಕೆ-ಆಗಲಿಕ್ಕೆ, ವಿಜಯರಾಗಕೆ/ರೆ?) ಯುದ್ಧದಲ್ಲಿ ಹೊಡೆದಾಡಿದರು].
- ತಾತ್ಪರ್ಯ:ತಾಮ್ರಧ್ವಜ ಮತ್ತು ವಿಜಯರು/ಅರ್ಜುನರು, ಆಗ ಜಯ ಗಳಿಸಲು, ಎಡ ಮತ್ತು ಬಲದ ಸುತ್ತುವಿಕೆಯ ಚಮತ್ಕಾರದ ನಾನಾ ವಿಧದಿಂದ, ನೋವು, ಆಯಾಸದಿಂದ ಮತ್ತೆ ಮತ್ತೆ ತೋರುವ ಪರಾಕ್ರಮದಿಂದ, ಯುದ್ಧಕ್ರಮದಿಂದ, ಒಂದಾದ ಮೇಲೊಂದು ಬಾಣ ತೊಡುವ ಬಿಡುವ ತರಂಗದಿಂದ/ಅಲೆಯಿಂದ, ಯುದ್ಧರಂಗದಿಂದ ಹಿಂದೆಸರಿಯದ ಸಾಮರ್ಥ್ಯದಿಂದ, ದೃಢವಾದ ಬಿಲ್ಲುಗಾರಿಕೆ, ಘೋಷಗಳ ಭೀಕರತೆಯ ಮನಸ್ಸಿನ ಭಾವದಿಂದ, ಜಡತೆಹೊಂದದ ಸಾಹಸತ್ವದಿಂದ, ಶಕ್ತಿಯಿಂದ ಕಠೋರವಾಗಿ ಯುದ್ಧದಲ್ಲಿ ಹೊಡೆದಾಡಿದರು].
- (ಪದ್ಯ-೩೭)
|
ಧಾತ್ರೀಶ ಕೇಳ್ ಕೌತುಕವನೇಳುದಿನ ಮಹೋ |
ರಾತ್ರಿಗಳೊಳಂ ಬಿಡದೆ ಕಾದಿದರ್ ಪಂಕರುಹ |
ನೇತ್ರಂ ಸಮೀಪದೊಳ್ ನೋಡುತಿರೆ ತಾಮ್ರಧ್ವಜಾರ್ಜುನರ್ ಬಳಿಕದರೊಳು ||
ಗೋತ್ರಾರಿಸುತನವಂ ಮತ್ತೆ ಜೋಡಿಸಿ ತಂದ |
ಮಾತ್ರದೊಳ್ ಸಾಸಿರ ರಥಂಗಳಂ ಕಡಿದತಿ |
ಕ್ಷಾತ್ರದಿಂ ಕಡಹಿದಂ ಪಡೆಯೊಳಕ್ಷೌಹಿಣಿಗಳಿನ್ನೂರನಾಹವದೊಳು ||38||***
|
ಪದವಿಭಾಗ-ಅರ್ಥ:
|
- ಧಾತ್ರೀಶ ಕೇಳ್ ಕೌತುಕವನು ಏಳುದಿನಂ ಅಹೋರಾತ್ರಿಗಳೊಳಂ ಬಿಡದೆ ಕಾದಿದರ್ ಪಂಕರುಹ ನೇತ್ರಂ (ಕಮಲದ ಕಣ್ಣಿನ ಕೃಷ್ಣ) ಸಮೀಪದೊಳ್ ನೋಡುತಿರೆ ತಾಮ್ರಧ್ವಜ ಆರ್ಜುನರ್ (ಆರ್ಜುನ-ಬಭ್ರುವಾಹನ) ಬಳಿಕ ಅದರೊಳು=[ರಾಜನೇ ಕೇಳು ಆಶ್ಚರ್ಯವನ್ನು, ಏಳು ದಿನಗಳ ಕಾಲ ಅಹೋರಾತ್ರಿಗಳಲ್ಲಿಯೂ ಬಿಡದೆ ಯುದ್ಧಮಾಡಿದರು; ಕೃಷ್ಣನು ತಾಮ್ರಧ್ವಜ ಬಭ್ರುವಾಹನ ಸಮೀಪದಲ್ಲಿ ನೋಡುತ್ತಿರಲು,ಬಳಿಕ ಅದರಲ್ಲಿ,];; ಗೋತ್ರಾರಿಸುತನು ಅವಂ (ಇಂದ್ರನ ಮಗ ಅರ್ಜುನ) ಮತ್ತೆ ಜೋಡಿಸಿ ತಂದ ಮಾತ್ರದೊಳ್ ಸಾಸಿರ ರಥಂಗಳಂ ಕಡಿದು ಅತಿ ಕ್ಷಾತ್ರದಿಂ ಕಡಹಿದಂ ಪಡೆಯೊಳು ಅಕ್ಷೌಹಿಣಿಗಳ ಇನ್ನೂರನು ಆಹವದೊಳು=[ಇಂದ್ರನ ಮಗ ಅರ್ಜುನನು ತಾಮ್ರಧ್ವಜನು ಮತ್ತೆ ಜೋಡಿಸಿ ತಂದ ಮಾತ್ರದಲ್ಲಿ ಅತಿ ಕ್ಷಾತ್ರದಿಂದ ಸಾವಿರ ರಥಂಗಳನ್ನು ಕಡಿದು ಕೆಡವಿದನು, ಅಲ್ಲದೆ ಆ ಯುದ್ಧದಲ್ಲಿ ಇನ್ನೂರು ಅಕ್ಷೌಹಿಣಿಗಳ ಸೈನ್ಯವನ್ನು ಕಡಿದು ಕೆಡವಿದನು.]
- ತಾತ್ಪರ್ಯ:ರಾಜನೇ ಕೇಳು ಆಶ್ಚರ್ಯವನ್ನು, ಏಳು ದಿನಗಳ ಕಾಲ ಅಹೋರಾತ್ರಿಗಳಲ್ಲಿಯೂ ಬಿಡದೆ ಯುದ್ಧಮಾಡಿದರು; ಕೃಷ್ಣನು ತಾಮ್ರಧ್ವಜ ಬಭ್ರುವಾಹನ ಸಮೀಪದಲ್ಲಿ ನೋಡುತ್ತಿರಲು,ಬಳಿಕ ಅದರಲ್ಲಿ, ಇಂದ್ರನ ಮಗ ಅರ್ಜುನನು, ತಾಮ್ರಧ್ವಜನು ಮತ್ತೆ ಜೋಡಿಸಿ ತಂದಮಾತ್ರದಲ್ಲಿ, ಅತಿ ಕ್ಷಾತ್ರದಿಂದ ಸಾವಿರ ರಥಗಳನ್ನು ಕಡಿದು ಕೆಡವಿದನು, ಅಲ್ಲದೆ ಆ ಯುದ್ಧದಲ್ಲಿ ಇನ್ನೂರು ಅಕ್ಷೌಹಿಣಿಗಳ ಸೈನ್ಯವನ್ನು ಕಡಿದು ಕೆಡವಿದನು.]
- (ಪದ್ಯ-೩೮)
|
ಆ ತಾಮ್ರಕೇತು ಪಾಂಡವಸೇನೆಯೊಳ್ ಪ್ರಯುತ |
ಚಾತುರಂಗಮನೈದೆ ಸಂಹರಿಸಿ ಪಾರ್ಥನಂ |
ಘಾತಿಸಿದನಡಿಗಡಿಗೆ ಪಳವಿಗೆಯ ಹನುಮನಂ ಪಲ್ಗಿರಿಸಿ ಹರಿಯನೆಚ್ಚು ||
ಸೂತವಾಜಿಗಳಿನೊಡನೆ ಜವಗೆಡಿಸಿ ವಿ |
ಖ್ಯಾತ ಚಾಪದ ನಾರಿಯಂ ಕಡಿದು ಕಲಿ ಕರ್ಣ |
ಜಾತಾನುಸಾಳ್ವ ಸಾತ್ಯಕಿ ಬಭ್ರುವಾಹನಾದಿಗಳನುರೆ ನೋಯಿಸಿದನು ||39||
|
ಪದವಿಭಾಗ-ಅರ್ಥ:
|
- ಆ ತಾಮ್ರಕೇತು/ತಾಮ್ರಧ್ವಜ ಪಾಂಡವಸೇನೆಯೊಳ್ ಪ್ರಯುತ (ಹತ್ತುಲಕ್ಷ) ಚಾತುರಂಗಮನೈದೆ ಸಂಹರಿಸಿ ಪಾರ್ಥನಂ ಘಾತಿಸಿದನು ಅಡಿಗಡಿಗೆ ಪಳವಿಗೆಯ ಹನುಮನಂ ಪಲ್ಗಿರಿ=[ಆ ತಾಮ್ರಧ್ವಜನು ಪಾಂಡವನ ಸೇನೆಯಲ್ಲಿ ಹತ್ತುಲಕ್ಷ ಚತುರಂಗವು ಬರಲು, ಸಂಹರಿಸಿ ಪಾರ್ಥನನ್ನು ಘಾತಿಸಿದನು. ಮತ್ತೆಮತ್ತೆ ಧ್ವಜದ ಹನುಮನನ್ನು ಹೊಡೆದು ಅವನ ಹಲ್ಲುಕಿರಿಸಿ,];; ಹರಿಯನು ಎಚ್ಚು ಸೂತವಾಜಿಗಳಿನು ಒಡನೆ ಜವಗೆಡಿಸಿ ವಿಖ್ಯಾತ ಚಾಪದ ನಾರಿಯಂ ಕಡಿದು ಕಲಿ ಕರ್ಣಜಾತ ಅನುಸಾಳ್ವ ಸಾತ್ಯಕಿ ಬಭ್ರುವಾಹನಾದಿಗಳನು ಉರೆ ನೋಯಿಸಿದನು=[ಕೃಷ್ಣನಿಗೆ ಹೊಡೆದು, ಸಾರಥಿ ಕುದುರೆಗಳನ್ನು ಶಕ್ತಿಗುಂದಿಸಿ, ವಿಖ್ಯಾತ ಬಿಲ್ಲಿನ (ಗಾಂಡೀವ) ನಾಣನ್ನು ಕಡಿದು, ಶೂರ ಕರ್ಣಜಾತ/ವೃಷಕೇತು, ಅನುಸಾಳ್ವ, ಸಾತ್ಯಕಿ, ಬಭ್ರುವಾಹನಾದಿಗಳನ್ನು ಬಹಳ ನೋಯಿಸಿದನು].
- ತಾತ್ಪರ್ಯ:ಆ ತಾಮ್ರಧ್ವಜನು ಪಾಂಡವನ ಸೇನೆಯಲ್ಲಿ ಹತ್ತುಲಕ್ಷ ಚತುರಂಗವು ಬರಲು, ಸಂಹರಿಸಿ ಪಾರ್ಥನನ್ನು ಘಾತಿಸಿದನು. ಮತ್ತೆಮತ್ತೆ ಧ್ವಜದ ಹನುಮನನ್ನು ಹೊಡೆದು ಅವನ ಹಲ್ಲುಕಿರಿಸಿ, ಕೃಷ್ಣನಿಗೆ ಹೊಡೆದು, ಸಾರಥಿ ಕುದುರೆಗಳನ್ನು ಶಕ್ತಿಗುಂದಿಸಿ, ವಿಖ್ಯಾತ ಬಿಲ್ಲಿನ (ಗಾಂಡೀವದ) ನಾಣನ್ನು ಕಡಿದು, ಶೂರ ಕರ್ಣಜಾತ/ವೃಷಕೇತು, ಅನುಸಾಳ್ವ, ಸಾತ್ಯಕಿ, ಬಭ್ರುವಾಹನಾದಿಗಳನ್ನು ಬಹಳ ನೋಯಿಸಿದನು.
- (ಪದ್ಯ-೩೯)
|
ತೆತ್ತಿಸಿದುವುಭಯವೀರರ ಮೈಯೊಳಂಬುಗಳ್ |
ನೆತ್ತರಭ್ರಕೆ ಚಿಮ್ಮಿ ಮಳೆವನಿಗಳಂತೆ ಹರಿ |
ಯುತ್ತಮಾಂಗದಮೇಲೆ ಸೂಸಿದುವು ವಾಯುವಶದಿಂದೆ ಕೇಳದ್ಭುತವನು ||
ಮತ್ತೆ ಫಲುಗುಣನವನ ಧನುವನಿಕ್ಕಡಿಯಾಗಿ |
ಕತ್ತರಿಸೆ ಖತಿಯೊಳೈತಂದು ಪಾರ್ಥನ ರಥವ |
ನೆತ್ತಿಕೊಂಡಾಗಸಕೆ ಪುಟನೆಗೆದು ಧರೆಯೊಳಪ್ಪಳಿಸಿದಂ ತಾಮ್ರಕೇತು ||40||
|
ಪದವಿಭಾಗ-ಅರ್ಥ:
|
- ತೆತ್ತಿಸಿದುವು (ಕೂಡು,ಒಗ್ಗೂಡು), ಸೇರು, ಕಚ್ಚು,ಚುಚ್ಚು ) ಉಭಯ ವೀರರ ಮೈಯೊಳು ಅಂಬುಗಳ್ ನೆತ್ತರು ಅಭ್ರಕೆ ಚಿಮ್ಮಿ ಮಳೆವನಿಗಳಂತೆ ಹರಿಯ ಉತ್ತಮಾಂಗದಮೇಲೆ ಸೂಸಿದುವು ವಾಯುವಶದಿಂದೆ ಕೇಳು ಅದ್ಭುತವನು,=[ತಾಮ್ರಧ್ವಜ ಅರ್ಜುನ ಈ ಉಭಯ ವೀರರ ಮೈಯಲ್ಲಿ ಅಂಬುಗಳು ಚುಚ್ಚಿದವು; ರಕ್ತವು ಆಕಾಶಕ್ಕೆ ಚಿಮ್ಮಿ ಗಾಳಿಯಿಂದ ಮಳೆಯ ಹನಿಗಳಂತೆ ಕೃಷ್ಣನ ತಲೆಯ ಮೇಲೆ ಸುರಿದುವು. ರಾಜನೇ ಕೇಳು ಅದ್ಭುತವನ್ನು,];; ಮತ್ತೆ ಫಲುಗುಣನು ಅವನ ಧನುವನು ಇಕ್ಕಡಿಯಾಗಿ ಕತ್ತರಿಸೆ ಖತಿಯೊಳು ಐತಂದು ಪಾರ್ಥನ ರಥವನು ಎತ್ತಿಕೊಂಡು ಆಗಸಕೆ ಪುಟನೆಗೆದು ಧರೆಯೊಳು ಅಪ್ಪಳಿಸಿದಂ ತಾಮ್ರಕೇತು=[ಮತ್ತೆ ಫಲ್ಗುಣನು ಅವನ ಧನುವನ್ನು ಎರಡುತುಂಡಾಗಿ ಕತ್ತರಿಸಲು, ಸಿಟ್ಟಿನಿಂದ ಬಂದು ಪಾರ್ಥನ ರಥವನ್ನು ಎತ್ತಿಕೊಂಡು ಆಕಾಶಕ್ಕೆ ಪುಟನೆಗೆದು ಭೂಮಿಯಮೇಲೆ ಅಪ್ಪಳಿಸಿದನು ತಾಮ್ರಕೇತು.]
- ತಾತ್ಪರ್ಯ:ತಾಮ್ರಧ್ವಜ ಅರ್ಜುನ ಈ ಉಭಯ ವೀರರ ಮೈಯಲ್ಲಿ ಅಂಬುಗಳು ಚುಚ್ಚಿದವು; ರಕ್ತವು ಆಕಾಶಕ್ಕೆ ಚಿಮ್ಮಿ ಗಾಳಿಯಿಂದ ಮಳೆಯ ಹನಿಗಳಂತೆ ಕೃಷ್ಣನ ತಲೆಯ ಮೇಲೆ ಸುರಿದುವು. ರಾಜನೇ ಕೇಳು ಅದ್ಭುತವನ್ನು, ಮತ್ತೆ ಫಲ್ಗುಣನು ಅವನ ಧನುವನ್ನು ಎರಡುತುಂಡಾಗಿ ಕತ್ತರಿಸಲು, ತಾಮ್ರಧ್ವಜನು ಸಿಟ್ಟಿನಿಂದ ಬಂದು ಪಾರ್ಥನ ರಥವನ್ನು ಎತ್ತಿಕೊಂಡು ಆಕಾಶಕ್ಕೆ ಪುಟನೆಗೆದು ಭೂಮಿಯಮೇಲೆ ಅಪ್ಪಳಿಸಿದನು.
- (ಪದ್ಯ-೪೦)
|
ನಭಕೆ ವಿಜಯನ ರಥವನೀಡಾಡಿ ಬಳಿಕದಂ |
ರಭಸದಿಂದಿಳೆಗಪ್ಪಳಸುವಿನಂ ಪರಿತಂದು |
ಶುಭಕರ ಕರಾಗ್ರದಿಂ ಪಿಡಿದಾ ವರೂಥಮಂ ಸ್ವಸ್ಥಾನಮಾಗಿ ನಿಲಿಸಿ ||
ಅಭಯಮಂ ಪಾರ್ಥಂಗೆ ಮಾಡಿದಂ ಮುರಹರಂ |
ತ್ರಿಭವನದೊಳಚ್ಯುತನ ಭಕ್ತರ್ಗೆ ಬರ್ಪುದೆ ಪ |
ರಿಬವಮೆಂದನಿಮಿಷರ್ ಕೊಂಡಾಡೆ ಬಲೆರಡಕಾಶ್ಚರ್ಯಮಾಗೆ ಕೂಡೆ ||41||
|
ಪದವಿಭಾಗ-ಅರ್ಥ:
|
- ನಭಕೆ ವಿಜಯನ ರಥವನು ಈಡಾಡಿ ಬಳಿಕ ಅದಂ ರಭಸದಿಂದ ಇಳೆಗೆ ಅಪ್ಪಳಸುವ ಇನಂ=[ತಾಮ್ರಧ್ವಜನು, ಆಕಾಶಕ್ಕೆ ಅರ್ಜುನನ ರಥವನ್ನು ಎಳೆದಾಡಿ ಬಳಿಕ ಅದನ್ನು ರಭಸದಿಂದ ಭೂಮಿಗೆ ಅಪ್ಪಳಿಸುವ ಅಷ್ಟರಲ್ಲಿ,];; ಪರಿತಂದು ಶುಭಕರ ಕರಾಗ್ರದಿಂ(ಕರ ಅಗ್ರ -ಅಂಗೈ) ಪಿಡಿದು ಆ ವರೂಥಮಂ ಸ್ವಸ್ಥಾನಮಾಗಿ ನಿಲಿಸಿ ಅಭಯಮಂ ಪಾರ್ಥಂಗೆ ಮಾಡಿದಂ ಮುರಹರಂ=[ ಅಲ್ಲಿಗೆ ಬಂದು ಶುಭಕರವಾದ ತನ್ನ ಅಂಗೈಯಿಂದ ಹಿಡಿದು ಆ ರಥವನ್ನು ಸ್ವಸ್ಥಾನದಲ್ಲಿ ಸರಿಯಾಗಿ ನಿಲ್ಲಿಸಿ, ಕೃಷ್ಣನು ಪಾರ್ಥನಿಗೆ ಅಭಯವನ್ನು ನೀಡಿದನು.];; ತ್ರಿಭವನದೊಳು ಅಚ್ಯುತನ ಭಕ್ತರ್ಗೆ ಬರ್ಪುದೆ ಪರಿಬವಂ ಅಂದು ಅನಿಮಿಷರ್ ಕೊಂಡಾಡೆ ಬಲ ಎರಡಕೆ ಆಶ್ಚರ್ಯಮಾಗೆ ಕೂಡೆ=[ಮೂರುಲೋಕದಲ್ಲಿ ಅಚ್ಯುತನ ಭಕ್ತರಿಗೆ ಬರುವುದೆ ಕಷ್ಟ/ಸೋಲು, ಬರಲಾರದು! ಎಂದು ದೇವತೆಗಳು ಕೊಂಡಾಡಿದರು. ಈ ನೋಟ ಎರಡೂ ಸೈನ್ಯಕ್ಕೆ ಆಶ್ಚರ್ಯವಾಗಿ ಕಂಡಿತು.]
- ತಾತ್ಪರ್ಯ:ತಾಮ್ರಧ್ವಜನು ಆಕಾಶಕ್ಕೆ ಅರ್ಜುನನ ರಥವನ್ನು ಎಳೆದಾಡಿ ಬಳಿಕ ಅದನ್ನು ರಭಸದಿಂದ ಭೂಮಿಗೆ ಅಪ್ಪಳಿಸುವ ಅಷ್ಟರಲ್ಲಿ,];; ಪರಿತಂದು ಶುಭಕರ ಕರಾಗ್ರದಿಂ(ಕರ ಅಗ್ರ -ಅಂಗೈ) ಪಿಡಿದು ಆ ವರೂಥಮಂ ಸ್ವಸ್ಥಾನಮಾಗಿ ನಿಲಿಸಿ ಅಭಯಮಂ ಪಾರ್ಥಂಗೆ ಮಾಡಿದಂ ಮುರಹರಂ=[ ಅಲ್ಲಿಗೆ ಬಂದು ಶುಭಕರವಾದ ತನ್ನ ಅಂಗೈಯಿಂದ ಹಿಡಿದು ಆ ರಥವನ್ನು ಸ್ವಸ್ಥಾನದಲ್ಲಿ ಸರಿಯಾಗಿ ನಿಲ್ಲಿಸಿ, ಕೃಷ್ಣನು ಪಾರ್ಥನಿಗೆ ಅಭಯವನ್ನು ನೀಡಿದನು.];; ತ್ರಿಭವನದೊಳು ಅಚ್ಯುತನ ಭಕ್ತರ್ಗೆ ಬರ್ಪುದೆ ಪರಿಬವಂ ಅಂದು ಅನಿಮಿಷರ್ ಕೊಂಡಾಡೆ ಬಲ ಎರಡಕೆ ಆಶ್ಚರ್ಯಮಾಗೆ ಕೂಡೆ=[ಮೂರುಲೋಕದಲ್ಲಿ ಅಚ್ಯುತನ ಭಕ್ತರಿಗೆ ಬರುವುದೆ ಕಷ್ಟ/ಸೋಲು, ಬರಲಾರದು! ಎಂದು ದೇವತೆಗಳು ಕೊಂಡಾಡಿದರು. ಈ ನೋಟ ಎರಡೂ ಸೈನ್ಯಕ್ಕೆ ಆಶ್ಚರ್ಯವಾಗಿ ಕಂಡಿತು.]
- (ಪದ್ಯ-೪೧)
|
ಭೂರಮಣ ಕೇಳ್‍ಬಳಿಕ ನಸುನಗುತ ನುಡಿದನಸು |
ರಾರಾತಿ ಪಾಂಡವಂಗಳು ಕದಿರಧರ್ಮಮೆಂ |
ದೀರಣದಳೀತನಂ ಗೆಲ್ದೊಡಾವಿರ್ವರುಂ ಸಾಹಸಂಗೈದಲ್ಲದೆ ||
ತೀರದೆ(ದಿ)ಸು ನೀನೊಂದು ಕಡೆಯೊಳಾನಿಸುವೆನೀ |
ವೀರನಂ ಮತ್ತೊಂದು ದೆಸೆಯೊಳೆಂದರುಪಿ ನರ |
ನಾರಾಯಣರ್ ಕರೆದರಂಬುಗಳ ನೋರೊರ್ವರೊಂದೊಂದು ಮುಖದೊಳಿರ್ದು ||42||
|
ಪದವಿಭಾಗ-ಅರ್ಥ:
|
- ಭೂರಮಣ ಕೇಳ್‍ಬಳಿಕ ನಸುನಗುತ ನುಡಿದನು ಅಸುರಾರಾತಿ ಪಾಂಡವಂಗೆ ಅಳುಕದಿರು ಅಧರ್ಮಮೆಂದು=[ಭೂರಮಣ ಜನಮೇಜಯನೇ ಕೇಳ್ಉ, ಬಳಿಕ ನಸುನಗುತ್ತಾ ಕೃಷ್ಣನು ಅರ್ಜುನನಿಗೆ ಹೇಳಿದನು, 'ನಾನು ನಿಬ್ಬರ ಮಧ್ಯದಲ್ಲ ಪ್ರವೇಶ ಮಾಡಿದ್ದು ಅಧರ್ಮವೆಂದು ಅಳುಕಬೇಡ/ ಚಿಂತಿಸಬೇಡ.];; ಈ ರಣದಳು ಈತನಂ ಗೆಲ್ದೊಡೆ ಆವಿರ್ವರುಂ ಸಾಹಸಂ ಗೈದಲ್ಲದೆ ತೀರದು ಇಸು ನೀನೊಂದು ಕಡೆಯೊಳು ಆನು ಇಸುವೆನು=[ಈ ಯುದ್ಧದಲ್ಲಿ ಈತನನ್ನು ಗೆಲ್ಲಲು ನಾವು ಇಬ್ಬರೂ ಒಟ್ಟಾಗಿ ಸಾಹಸಮಾಡಿದ್ದಲ್ಲದೆ ಆಗದು; ನೀನೊಂದುಕಡೆ ಬಾಣ ಹೊಡಿ, ನಾನೊಂದು ಕಡೆಯಲ್ಲಿ ಇವನಿಗೆ];; ಈ ವೀರನಂ ಮತ್ತೊಂದು ದೆಸೆಯೊಳು ಎಂದು ಅರುಪಿ ನರ ನಾರಾಯಣರ್ ಕರೆದರು ಅಂಬುಗಳನು ಓರೊರ್ವರು ಒಂದೊಂದು ಮುಖದೊಳು ಇರ್ದು=[,ಈ ವೀರನನ್ನು ಮತ್ತೊಂದು ದಿಕ್ಕಿನಿಂದ ಹೊಡೆಯುವೆನು' ಎಂದು ಹೇಳಿ ನರ ನಾರಾಯಣರು ಒಬ್ಬೊಬ್ಬರು ಒಂದೊಂದು ಕಡೆ ಇದ್ದು ಬಾಣಗಳನ್ನು ಕರೆದರು].
- ತಾತ್ಪರ್ಯ:ಭೂರಮಣ ಜನಮೇಜಯನೇ ಕೇಳ್ಉ, ಬಳಿಕ ನಸುನಗುತ್ತಾ ಕೃಷ್ಣನು ಅರ್ಜುನನಿಗೆ ಹೇಳಿದನು, 'ನಾನು ನಿಬ್ಬರ ಮಧ್ಯದಲ್ಲ ಪ್ರವೇಶ ಮಾಡಿದ್ದು ಅಧರ್ಮವೆಂದು ಅಳುಕಬೇಡ/ ಚಿಂತಿಸಬೇಡ. ಈ ಯುದ್ಧದಲ್ಲಿ ಈತನನ್ನು ಗೆಲ್ಲಲು ನಾವು ಇಬ್ಬರೂ ಒಟ್ಟಾಗಿ ಸಾಹಸಮಾಡಿದ್ದಲ್ಲದೆ ಆಗದು; ನೀನೊಂದುಕಡೆ ಬಾಣ ಹೊಡಿ, ನಾನೊಂದು ಕಡೆಯಲ್ಲಿ ಈ (ಇವನಿಗೆ) ವೀರನನ್ನು ಮತ್ತೊಂದು ದಿಕ್ಕಿನಿಂದ ಹೊಡೆಯುವೆನು' ಎಂದು ಹೇಳಿ ನರ ನಾರಾಯಣರು ಒಬ್ಬೊಬ್ಬರು ಒಂದೊಂದು ಕಡೆ ಇದ್ದು ಬಾಣಗಳನ್ನು ಕರೆದರು.
- (ಪದ್ಯ-೪೨)
|
ಪಾಂಡವ ಮುಕುಂದರೊಂದೇ ಬಾರಿ ಮುಳಿದು ವರ |
ಗಾಂಡೀವ ಶಾಙ್ರ್ಗ ಚಾಪಂಗಳಂ ಕೊಂಡಬ್ಜ |
ಜಾಂಡಕಧಿಕ ಕ್ಷೋಭಮಾಗೆ ತಾಮ್ರಧ್ವಜನ ಮೇಲೆ ತೆಗೆದಿಸುತಿರಲ್ಕೆ |
ಕಾಂಡವಿಲ್ಲದೆ ಕವಿದುವಂಬುಗಳಡಗಿತು ಮಾ |
ರ್ತಾಂಡ ಮಂಡಲಮಾಗ ಶಿಖಿಕೇತು ನಂದನಂ |
ತಾಂ ಡಿಬಿಕಮರ್ದನಕಿರೀಟಿಗಳನಡಿಗಡಿಗೆ ಘಾತಿಸಿದನಾಹವದೊಳು ||43||
|
ಪದವಿಭಾಗ-ಅರ್ಥ:
|
- ಪಾಂಡವ ಮುಕುಂದರು ಒಂದೇ ಬಾರಿ ಮುಳಿದು ವರ ಗಾಂಡೀವ ಶಾಙ್ರ್ಗ ಚಾಪಂಗಳಂ ಕೊಂಡು, ಅಬ್ಜಜ ಅಂಡಕೆ (ಅಬ್ಜಜ ಬ್ರಹ್ಮ ಅಂಡ,ಲೋಕ:ಬ್ರಹ್ಮಾಂಡಕ್ಕೆ) ಅಧಿಕ ಕ್ಷೋಭಮಾಗೆ ತಾಮ್ರಧ್ವಜನ ಮೇಲೆ ತೆಗೆದು ಇಸುತಿರಲ್ಕೆ=[ಅರ್ಜುನ ಮತ್ತು ಕೃಷ್ಣರು ಒಂದೇ ಬಾರಿ ಸಿಟ್ಟಿನಿಂದ ಅವರ ಗಾಂಡೀವ ಮತ್ತು ಶಾಙ್ರ್ಗ ಬಿಲ್ಲುಗಳನ್ನು ತೆಗೆದುಕೊಂಡು, ಬ್ರಹ್ಮಾಂಡಕ್ಕೆ ಬಹಳ ಸಂಕಟವಾಗಲು, ತಾಮ್ರಧ್ವಜನ ಮೇಲೆ ತೆಗೆದು ಬಾಣಗಳನ್ನು ಹೊಡೆಯುತ್ತಿರಲು,];; ಕಾಂಡವಿಲ್ಲದೆ (ಬಿಡುವು ಇಲ್ಲದೆ) ಕವಿದುವು ಅಂಬುಗಳು. ಅಡಗಿತು ಮಾರ್ತಾಂಡ ಮಂಡಲಮಾಗ, ಶಿಖಿಕೇತು ನಂದನಂ
ತಾಂ ಡಿಬಿಕ ಮರ್ದನ (ಹಂನನ ಸೋದರ ಡಿಬಿಕನನ್ನು ಕೊಂದವನು ಕೃಷ್ಣ) ಕಿರೀಟಿಗಳನು (ಕಿರೀಟಿ-ಅರ್ಜುನ) ಅಡಿಗಡಿಗೆ ಘಾತಿಸಿದನು ಆಹವದೊಳು (ಆಹವ-ಯುದ್ಧ)=[ ಬಿಡುವಿಲ್ಲದೆ ಬಾಣಗಳು ಎಲ್ಲಾಕಡೆ ಕವಿದುವು. ಆಗ ಸೂರ್ಯಮಂಡಲವು ಅಡಗಿತು, ಮುಯೂರಧ್ವಜನ ಮಗ ತಾಮ್ರಧ್ವಜನು ತಾನು ಕೃಷ್ಣ ಮತ್ತು ಅರ್ಜುನರನ್ನು ಯುದ್ಧದಲ್ಲಿ, ಮತ್ತೆ ಮತ್ತೆ ನೋಯಿಸಿದನು].
- ತಾತ್ಪರ್ಯ:ಅರ್ಜುನ ಮತ್ತು ಕೃಷ್ಣರು ಒಂದೇ ಬಾರಿ ಸಿಟ್ಟಿನಿಂದ ಅವರ ಗಾಂಡೀವ ಮತ್ತು ಶಾಙ್ರ್ಗ ಬಿಲ್ಲುಗಳನ್ನು ತೆಗೆದುಕೊಂಡು, ಬ್ರಹ್ಮಾಂಡಕ್ಕೇ ಬಹಳ ಸಂಕಟವಾಗುವಂತೆ, ತಾಮ್ರಧ್ವಜನ ಮೇಲೆ ತೆಗೆದು ಬಾಣಗಳನ್ನು ಹೊಡೆಯುತ್ತಿರಲು, ಬಿಡುವಿಲ್ಲದೆ ಬಾಣಗಳು ಎಲ್ಲಾಕಡೆ ಕವಿದುವು. ಆಗ ಸೂರ್ಯಮಂಡಲವು ಅಡಗಿತು, ಆಗ ಮುಯೂರಧ್ವಜನ ಮಗ ತಾಮ್ರಧ್ವಜನು ತಾನು ಕೃಷ್ಣ ಮತ್ತು ಅರ್ಜುನರನ್ನು ಯುದ್ಧದಲ್ಲಿ, ಮತ್ತೆ ಮತ್ತೆ ನೋಯಿಸಿದನು].
- ಡಿಬಿಕ=ಡಿಂಬಿಕ:ಸಾಳ್ವರಾಜನಾದ ಬ್ರಹ್ಮದತ್ತನ ಮಗ. ರಾಕ್ಷಸನಾದ ಹಂಸನ ಸೋದರ.ಇವರಿಬ್ಬರೂ ಶಸ್ತ್ರಗಳಿಂದ ಸಾವುಬರದಂತೆ ಶಿವನಿಂದ ವರ ಪಡೆದಿದ್ದರು. ಶ್ರೀ ಕೃಷ್ಣನೊಡನೆ ಯುದ್ಧಮಾಡುವಾಗ ಹಂಸನು ಮೂರ್ಚಿತನಾಗಲು, ಡಿಬಿಕನು ಅವನು ಸತ್ತನೆಂದು ಭಾವಿಸಿ ಯಮುನೆಗೆ ಹಾರಿ ಸತ್ತನು. ಹಂಸನು ಎಚ್ಚರಾಗಿ ತಮ್ಮನು ಸತ್ತಿದ್ದಕ್ಕೆ ಅವನೂ ಯಮುನೆಗೆ ನಾಲಿಗೆ ಕಿತ್ತುಕೊಂಡು ಹಾರಿ ಸತ್ತನು.(ಮ.ವ.ಹರಿ)
- (ಪದ್ಯ-೪೩)
|
ಮೀರಿದ ಪರಾಕ್ರಮದೊಳಕ್ಷಿಗಳರಲ್ದುವು |
ಬ್ಬೇರಿ ಪುಳಕೋತ್ಸವದೊಳಾ ತಾಮ್ರಕೇತು ಕೈ |
ದೋರಿ ಬೊಬ್ಬಿರಿದು ನಸುನಗುತೆ ಕೃಷ್ಣನೊಳೆಂದನೆಲೆ ದೇವ ತನ್ನ ಕೂಡೆ ||
ಬೇರೆ ನೀಂ ಬಿಲ್ವಡಿದು ಕಾದಿ ಕೌಂತೇಯನಂ |
ಗಾರುಮಾಡದಿರರ್ಜುನಂಗೆ ಸಾರಥಿಯಾಗು |
ಸಾರಿದೆಂ ಸಾಕೆಂದು ತೆಗೆದೆಚ್ಚೊಡಚ್ಯುತಂ ಮೆಚ್ಚಿನೊಳೊಡೊಂಬಟ್ಟನು ||44||
|
ಪದವಿಭಾಗ-ಅರ್ಥ:
|
- ಮೀರಿದ ಪರಾಕ್ರಮದೊಳು ಅಕ್ಷಿಗಳು ಅರಲ್ದುವು ಉಬ್ಬೇರಿ ಪುಳಕೋತ್ಸವದೊಳು ಆ ತಾಮ್ರಕೇತು ಕೈದೋರಿ ಬೊಬ್ಬಿರಿದು ನಸುನಗುತೆ ಕೃಷ್ಣನೊಳು ಎಂದನು=[ಮಿತಿಮೀರಿದ ಪರಾಕ್ರಮದಲ್ಲಿ ಕಣ್ಣುಗಳು ಹಿಗ್ಗಿದವು, ಮೈ ಉಬ್ಬಿ ಪುಳಕದ ಸಂತೋಷದಲ್ಲಿ ಆ ತಾಮ್ರಕೇತು ಕೈತೋರಿಸುತ್ತಾ ಆರ್ಭಟಿಸಿ, ನಸುನಗುತ್ತಾ ಕೃಷ್ಣನಿಗೆ ಎಂದನು];; ಎಲೆ ದೇವ ತನ್ನ ಕೂಡೆ ಬೇರೆ ನೀಂ ಬಿಲ್ ವಿಡಿದು ಕಾದಿ ಕೌಂತೇಯನಂ ಗಾರು (ಕಷ್ಟ) ಮಾಡದಿರು ಅರ್ಜುನಂಗೆ ಸಾರಥಿಯಾಗು ಸಾರಿದೆಂ ಸಾಕು ಎಂದು ತೆಗೆದು ಎಚ್ಚೊಡೆ ಅಚ್ಯುತಂ ಮೆಚ್ಚಿನೊಳು ಒಡೊಂಬಟ್ಟನು=[ಎಲೆ ದೇವನೇ, ತನ್ನ ಜೊತೆ ನೀನು ಬೇರೆ ಬಿಲ್ಲು ಹಿಡಿದು ಯುದ್ಧಮಾಡಿ ಕೌಂತೇಯ ಅರ್ಜುನನ್ನು ಕಷ್ಟಕ್ಕೆ ಈಡು ಮಾಡಬೇಡ; ಅರ್ಜುನನಿಗೆ ನೀನು ಸಾರಥಿಯಾಗು ಸಾಕು, ಇದು ನನ್ನ ಘೋಷಣೆ! ಎಂದು ತೆಗೆದು ಹೊಡೆದಾಗ ಅಚ್ಯುತನು ಮೆಚ್ಚಿ ಒಪ್ಪಿದನು.]
- ತಾತ್ಪರ್ಯ:ಮಿತಿಮೀರಿದ ಪರಾಕ್ರಮದಲ್ಲಿ ಕಣ್ಣುಗಳು ಹಿಗ್ಗಿದವು, ಮೈ ಉಬ್ಬಿ ಪುಳಕದ ಸಂತೋಷದಲ್ಲಿ ಆ ತಾಮ್ರಕೇತು ಕೈತೋರಿಸುತ್ತಾ ಆರ್ಭಟಿಸಿ, ನಸುನಗುತ್ತಾ ಕೃಷ್ಣನಿಗೆ ಎಂದನು; ಎಲೆ ದೇವನೇ, ತನ್ನ ಜೊತೆ ನೀನು ಬೇರೆ ಬಿಲ್ಲು ಹಿಡಿದು ಯುದ್ಧಮಾಡಿ ಕೌಂತೇಯ ಅರ್ಜುನನ್ನು ಕಷ್ಟಕ್ಕೆ ಈಡು ಮಾಡಬೇಡ; ಅರ್ಜುನನಿಗೆ ನೀನು ಸಾರಥಿಯಾಗು ಸಾಕು, ಇದು ನನ್ನ ಘೋಷಣೆ! ಎಂದು ತೆಗೆದು ಹೊಡೆದಾಗ ಅಚ್ಯುತನು ಮೆಚ್ಚಿ ಒಪ್ಪಿದನು.
- (ಪದ್ಯ-೪೪)
|
ಹರಿ ಬಳಿಕ ತನ್ನ ರಥಮಂ ಬಿಟ್ಟು ಫಲುಗುಣನ |
ವರವರೂಥಾಗ್ರದೊಳ್ ಚಮ್ಮಟಿಕೆ ವಾಘೆಯಂ |
ಧರಿಸಿ ತುರಗಂಗಳಂ ಚಪ್ಪರಿಸಲೆಡಬಲಕೆ ವಾಯುವೇಗದೊಳಡರ್ದು ||
ಮುರಿದು ಮಂಡಲಭೇದ ಚಳವಳಿಕೆ ಚದುರೋಜೆ |
ವೆರಸಿ ರಣರಂಗದೊಳ್ ಕಾರಮಿಂಚಿನ ತೆರದೊ |
ಳುರವಣಿಸಿದುವು ಕೂಡೆ ಶಕ್ರಸುತನೆಚ್ಚನಡಿಗಡಿಗೆ ತಾಮ್ರಧ್ವಜನನು ||45||
|
ಪದವಿಭಾಗ-ಅರ್ಥ:
|
- ಹರಿ ಬಳಿಕ ತನ್ನ ರಥಮಂ ಬಿಟ್ಟು ಫಲುಗುಣನ ವರವರೂಥಾಗ್ರದೊಳ್ ಚಮ್ಮಟಿಕೆ(ಚಾಟಿ) ವಾಘೆಯಂ (ಕುದುರೆಯ ಹಗ್ಗ)ಧರಿಸಿ ತುರಗಂಗಳಂ ಚಪ್ಪರಿಸಲು=[ಕೃಷ್ನನು ಬಳಿಕ ತನ್ನ ರಥವನ್ನು ಬಿಟ್ಟು ಫಲ್ಗುಣನ ಉತ್ತಮ ರಥದ ಎದುರು ಚಮ್ಮಟಿಕೆ ವಾಘೆಯನ್ನು ಹಿಡಿದು, ತುರಗಗಳನ್ನು ಚಪ್ಪರಿಸಲು];;ಎಡಬಲಕೆ ವಾಯುವೇಗದೊಳು ಅಡರ್ದು ಮುರಿದು ಮಂಡಲಭೇದ ಚಳವಳಿಕೆ ಚದುರೋಜೆವೆರಸಿ (ಚತುರ + ಓಜೆ /ವಿದ್ಯೆ, ವೆರಸಿ- ಸೇರಿಸಿ) ರಣರಂಗದೊಳ್ ಕಾರಮಿಂಚಿನ ತೆರದೊಳು ಉರವಣಿಸಿದುವು ಕೂಡೆ ಶಕ್ರಸುತನು ಎಚ್ಚನು ಅಡಿಗಡಿಗೆ ತಾಮ್ರಧ್ವಜನನು=[ಎಡಕ್ಕೆ ಬಲಕ್ಕೆ ವಾಯುವೇಗದಲ್ಲಿ ನುಗ್ಗಿ ಶತ್ರುಗಳನ್ನು ಮುರಿದು/ ತಿರುಗಿ ತಿರುಗಿ ಮಂಡಲಭೇದ ತಂತ್ರದಿಂದ ರಥ ನೆಡೆಸಿ ಶತ್ರುಗಳ ಬಾಣಗಳನ್ನು ತಪ್ಪಿಸಿ ಚಟುವಟಿಕೆಯಿಂದ ಚತುರ ಅಶ್ವವಿದ್ಯ ಯೊಡನೆ ರಣರಂಗದಲ್ಲಿ ಕಾರಮಿಂಚಿನ ರೀತಿಯಲ್ಲಿ ಕುದುರೆಗಳು ಪರಾಕ್ರಮಿಸಿದವು. ಜೊತೆಗೆ,ಅರ್ಜುನನು ಮತ್ತೆ ಮತ್ತೆ ತಾಮ್ರಧ್ವಜನನ್ನು ಬಾಣಗಳಿಂದ ಹೊಡೆದನು.]
- ತಾತ್ಪರ್ಯ:ಕೃಷ್ನನು ಬಳಿಕ ತನ್ನ ರಥವನ್ನು ಬಿಟ್ಟು ಫಲ್ಗುಣನ ಉತ್ತಮ ರಥದ ಎದುರು ಚಮ್ಮಟಿಕೆ ವಾಘೆಯನ್ನು ಹಿಡಿದು, ತುರಗಗಳನ್ನು ಚಪ್ಪರಿಸಲು; ಎಡಕ್ಕೆ ಬಲಕ್ಕೆ ವಾಯುವೇಗದಲ್ಲಿ ನುಗ್ಗಿ ಶತ್ರುಗಳನ್ನು ಮುರಿದು/ ತಿರುಗಿ ತಿರುಗಿ ಮಂಡಲಭೇದ ತಂತ್ರದಿಂದ ರಥ ನೆಡೆಸಿ ಶತ್ರುಗಳ ಬಾಣಗಳನ್ನು ತಪ್ಪಿಸಿ ಚಟುವಟಿಕೆಯಿಂದ ಚತುರ ಅಶ್ವವಿದ್ಯ ಯೊಡನೆ ರಣರಂಗದಲ್ಲಿ ತೀಷ್ಣವಾದ ಮಿಂಚಿನ ರೀತಿಯಲ್ಲಿ ಕುದುರೆಗಳು ಪರಾಕ್ರಮಿಸಿದವು. ಜೊತೆಗೆ,ಅರ್ಜುನನು ಮತ್ತೆ ಮತ್ತೆ ತಾಮ್ರಧ್ವಜನನ್ನು ಬಾಣಗಳಿಂದ ಹೊಡೆದನು.]
- (ಪದ್ಯ-೪೫)
|
ಹರಿ ನಂದನನ ದಿವ್ಯ ಹರಿಮಯ ವರೂಥಮಂ |
ಹರಿವೇಗದಿಂದೆಸೆವ ಹರಿ ಚತುಷ್ಟಯಮುಮಂ |
ಹರಿಯುಮಂ ಪಳವಿಗೆಯ ಹರಿಯುಮಂ ಪಾರ್ಥನ ಲಹರಿಯುಮಂ ಧಾತುಗೆಡಿಸಿ ||
ಹರಿಬದ ಕಲಿಗಳಂ ಪ್ರಹರಿಸಿ ತಾಮ್ರಧ್ವಜಂ |
ಹರಿನಾದಮಂ ಮಾಡಿ ಹರಿದಾಡುತಿರೆ ಕೂಡೆ |
ಹರಿಣಾಂಕ ಕುಲಜಂ ವಿಹರಿಸಿದಂ ಬಾಣದಿಂ ಹರಿಕಿರಣಮಡಗುವಂತೆ ||46||
|
ಪದವಿಭಾಗ-ಅರ್ಥ:
|
- ಹರಿ(ಇಂದ್ರ) ನಂದನನ ದಿವ್ಯ ಹರಿ(ಕುದುರೆ)ಮಯ ವರೂಥಮಂ ಹರಿ (ವಾಯು)ವೇಗದಿಂದೆಸೆವ ಹರಿ (ಕುದುರೆ) ಚತುಷ್ಟಯಮುಮಂ ಹರಿ(ಕೃಷ್ಣ)ಯುಮಂ ಪಳವಿಗೆಯ ಹರಿಯುಮಂ ಪಾರ್ಥನ ಲಹರಿಯುಮಂ ಧಾತುಗೆಡಿಸಿ=[ಇಂದ್ರನ ಮಗ ಅರ್ಜುನನ ದಿವ್ಯ ಕುದುರೆಗಳ ರಥವನ್ನು, ವಾಯುವೇಗದಿಂದ ಶೋಭಿಸುವ ನಾಲ್ಕು ಕುದುರೆಗಳನ್ನು, ಕೃಷ್ಣನನ್ನು ಧ್ವಜದಲ್ಲಿದ್ದ ಕಪಿಯನ್ನ, ಪಾರ್ಥನ ಮನಸ್ಸನ್ನು ಶಕ್ತಿಗುಂದಿಸಿ];; ಹರಿಬದ ಕಲಿಗಳಂ ಪ್ರಹರಿಸಿ ತಾಮ್ರಧ್ವಜಂ ಹರಿ (ಸಿಂಹ)ನಾದಮಂ ಮಾಡಿ ಹರಿದಾಡುತಿರೆ ಕೂಡೆ ಹರಿಣಾಂಕ ಕುಲಜಂ (ಚಂದ್ರವಂಶ) ವಿ(ಹೆಚ್ಚು)-ಹರಿಸಿದಂ ಬಾಣದಿಂ ಹರಿ (ಸೂರ್ಯ)ಕಿರಣಮ್ ಅಡಗುವಂತೆ=[ಯುದ್ಧಕಾರ್ಯದಲ್ಲಿ ತೊಡಗಿದ ಶೂರರನ್ನು ಹೊಡೆದು ತಾಮ್ರಧ್ವಜನು ಸಿಂಹನಾದವನ್ನು ಮಾಡಿ, ಸಂಚರಿಸುತ್ತರಲು, ಕೂದಲೆ, ಅರ್ಜುನನು ಸೂರ್ಯ ಕಿರಣಗಳು ಕಾಣದಂತೆ ಬಾಣವನ್ನು ವಿಷೇಶವಾಗಿ ಹರಿಸಿದನು.]
- ತಾತ್ಪರ್ಯ:ಇಂದ್ರನ ಮಗ ಅರ್ಜುನನ ದಿವ್ಯ ಕುದುರೆಗಳ ರಥವನ್ನು, ವಾಯುವೇಗದಿಂದ ಶೋಭಿಸುವ ನಾಲ್ಕು ಕುದುರೆಗಳನ್ನು, ಕೃಷ್ಣನನ್ನು ಧ್ವಜದಲ್ಲಿದ್ದ ಕಪಿಯನ್ನ, ಪಾರ್ಥನ ಮನಸ್ಸನ್ನು ಶಕ್ತಿಗುಂದಿಸಿ; ಯುದ್ಧಕಾರ್ಯದಲ್ಲಿ ತೊಡಗಿದ ಶೂರರನ್ನು ಹೊಡೆದು ತಾಮ್ರಧ್ವಜನು ಸಿಂಹನಾದವನ್ನು ಮಾಡಿ, ಸಂಚರಿಸುತ್ತರಲು, ಕೂದಲೆ, ಅರ್ಜುನನು ಸೂರ್ಯ ಕಿರಣಗಳು ಕಾಣದಂತೆ ಬಾಣವನ್ನು ವಿಷೇಶವಾಗಿ ಹರಿಸಿದನು.
- (ಪದ್ಯ-೪೬)
|
ಮತ್ತೆ ಮುರಹರನ ನೀರೈದುಕೂರ್ಗಣೆಯೊಳರು |
ವತ್ತು ಮಾರ್ಗಣದಿಂದೆ ಸುರಪ ಸುತನಂ ಘಾತಿ |
ಸುತ್ತವಂ ಬೊಬ್ಬಿರಿಯೆ ನರನವನ ರೋಮರೋಮಂಗಳ ಭೇದಿಪವೊಲು ||
ತೆತ್ತಿಸಿದನಂಬುಗಳನವನು ಮತ್ತಿಸುತಿರ್ದ |
ನಿತ್ತಂಡದಾಹವಂ ಸಮವಾಗಿ ಬರೆ ವಿಜಯ |
ನೊತ್ತಾಯದಿಂದವನ ಕುದುರೆ ಸಾರಥಿ ರಥವನೆಚ್ಚು ಹುಡಿಹುಡಿಗೈದನು ||47||
|
ಪದವಿಭಾಗ-ಅರ್ಥ:
|
- ಮತ್ತೆ ಮುರಹರನನು ಈರೈದು (ಎರಡು+ಐದು) ಕೂರ್ಗಣೆಯೊಳು ಅರುವತ್ತು ಮಾರ್ಗಣದಿಂದೆ ಸುರಪ ಸುತನಂ ಘಾತಿಸುತ್ತ ಅವಂ ಬೊಬ್ಬಿರಿಯೆ,=[ತಾಮ್ರಧ್ವಜನು ಮತ್ತೆ ಕೃಷ್ಣನನ್ನು ಹತ್ತು ಬಾಣಗಳಿಂದ, ಅರುವತ್ತು ಬಾಣದಿಂದ ಅರ್ಜುನನ್ನು ಹೊಡೆಯುತ್ತಾ ಅವನು ಆರ್ಭಟಿಸಲು,,];;; ನರನು ಅವನ ರೋಮರೋಮಂಗಳ ಭೇದಿಪವೊಲು ತೆತ್ತಿಸಿದನು ಅಂಬುಗಳನು ಅವನು ಮತ್ತೆ ಇಸುತಿರ್ದನು ಇತ್ತಂಡದ ಆಹವಂ ಸಮವಾಗಿಬರೆ=[ಅರ್ಜುನನು ಅವನ ರೋಮರೋಮಗಳನ್ನೂ ಭೇದಿಸುವಂತೆ ಬಾಣಗಳು ಕುಕ್ಕುವಂತೆ ಹೊಡೆದನು. ಅವನು ತಿರುಗಿ ಇವನನ್ನು ಹೊಡೆಯುತ್ತಿದ್ದನು; ಹೀಗೆ ಎರಡೂ ಕಡೆಯ ಯುದ್ಧವು ಸಮವಾಗಿ ಬರಲು.];; ವಿಜಯನು ಒತ್ತಾಯದಿಂದ ಅವನ ಕುದುರೆ ಸಾರಥಿ ರಥವನು ಎಚ್ಚು ಹುಡಿಹುಡಿಗೈದನು=[ಅರ್ಜುನನು ಅವಸರದಿಂದ ಅವನ ಕುದುರೆ, ಸಾರಥಿ, ರಥವನ್ನು ಹೊಡೆದು ಹುಡಿಹುಡಿ ಮಾಡಿದನು].
- ತಾತ್ಪರ್ಯ:ತಾಮ್ರಧ್ವಜನು ಮತ್ತೆ ಕೃಷ್ಣನನ್ನು ಹತ್ತು ಬಾಣಗಳಿಂದ, ಅರುವತ್ತು ಬಾಣದಿಂದ ಅರ್ಜುನನ್ನು ಹೊಡೆಯುತ್ತಾ ಅವನು ಆರ್ಭಟಿಸಲು, ಅರ್ಜುನನು ಅವನ ರೋಮರೋಮಗಳನ್ನೂ ಭೇದಿಸುವಂತೆ ಬಾಣಗಳು ಕುಕ್ಕುವಂತೆ ಹೊಡೆದನು. ಅವನು ತಿರುಗಿ ಇವನನ್ನು ಹೊಡೆಯುತ್ತಿದ್ದನು; ಹೀಗೆ ಎರಡೂ ಕಡೆಯ ಯುದ್ಧವು ಸಮವಾಗಿ ಬರಲು. ಅರ್ಜುನನು ಅವಸರದಿಂದ ಅವನ ಕುದುರೆ, ಸಾರಥಿ, ರಥವನ್ನು ಹೊಡೆದು ಹುಡಿಹುಡಿ ಮಾಡಿದನು.
- (ಪದ್ಯ-೪೭)
|
ಚೂರ್ಣ ದೊಡೆ ರಥಂ ತಾಮ್ರಧ್ವಜಂ ರೋಷ |
ಪೂರ್ಣಮುಖನಾಗಿ ಕಲಿ ಪಾರ್ಥನ ಸಮೀಪಮಂ |
ತೂರ್ಣದಿಂದೈದಿ ಪೊಯ್ವನಿತರೊಳ್ ಚರಣಾಗ್ರದಿಂದೆ ಮುರಹರನೊದೆಯಲು ||
ಜೀರ್ಣತರು ಮುರಿದು ಬೀಳ್ವಂತಿಳೆಗೆ ಬಿದ್ದೊಡನೆ |
ಕೀರ್ಣ ಪ್ರತಾಪದಿಂದೆದ್ದು ಮತ್ತೊಂದು ವಿ |
ಸ್ತ್ರೀರ್ಣಮಾಗಿರ್ದ ಮದಕುಂಜರಕಡರ್ದು ಶರಪಂಜರವ ನೊದವಿಸಿದನು ||48||
|
ಪದವಿಭಾಗ-ಅರ್ಥ:
|
- ಚೂರ್ಣ ದೊಡೆ ರಥಂ ತಾಮ್ರಧ್ವಜಂ ರೋಷ ಪೂರ್ಣಮುಖನಾಗಿ ಕಲಿ ಪಾರ್ಥನ ಸಮೀಪಮಂ ತೂರ್ಣದಿಂದೈದಿ ಪೊಯ್ವನಿತರೊಳ್=[ರಥವು ಪುಡಿಯಾಗಲು, ತಾಮ್ರಧ್ವಜನು ಮುಖದಲ್ಲಿ ರೋಷ ತುಂಬಿಕೊಂಡು, ಶೂರನಾದ ಪಾರ್ಥನ ಸಮೀಪಕ್ಕೆ ವೇಗದಿಂದ ಬಂದು ಹೊಡೆಯುವಷ್ಟರಲ್ಲಿ];; ಚರಣಾಗ್ರದಿಂದೆ ಮುರಹರನೊದೆಯಲು ಜೀರ್ಣತರು ಮುರಿದು ಬೀಳ್ವಂತೆ ಇಳೆಗೆ ಬಿದ್ದ ಒಡನೆ=[ಪಾದದ ತುದಿಯಿಂದ ಕೃಷ್ಣನು ಅವನನ್ನು ಒದೆಯಲು ಲಡ್ಡಾದ ಮರ ಮುರಿದು ಬೂಮಿಗೆ ಬೀಳುವಂತೆ ಬಿದ್ದನು. ಕೂಡಲೆ];; ಕೀರ್ಣ(ಹರಡಿದ, ತುಂಬಿದ) ಪ್ರತಾಪದಿಂದೆದ್ದು ಮತ್ತೊಂದು ವಿಸ್ತ್ರೀರ್ಣಮಾಗಿರ್ದ ಮದಕುಂಜರಕೆ (ಕುಂಜರ -ಆನೆ) ಅಡರ್ದು ಶರ (ಬಾಣಗಳ)ಪಂಜರವನು ಒದವಿಸಿದನು=[ತಾಮ್ರಧ್ವಜನು ಮೈತುಂಬಿದ ಪ್ರತಾಪದಿಂದ ಎದ್ದು ಮತ್ತೊಂದು ದೊಡ್ಡದಾದ ಮದದ ಆನೆಯನ್ನು ಹತ್ತಿ ಬಾಣಗಳನ್ನು ಬಿಟ್ಟು ಅದರ ಪಂಜರವನ್ನೇ ನಿರ್ಮಿಸಿದನು.]
- ತಾತ್ಪರ್ಯ:ರಥವು ಪುಡಿಯಾಗಲು, ತಾಮ್ರಧ್ವಜನು ಮುಖದಲ್ಲಿ ರೋಷ ತುಂಬಿಕೊಂಡು, ಶೂರನಾದ ಪಾರ್ಥನ ಸಮೀಪಕ್ಕೆ ವೇಗದಿಂದ ಬಂದು ಹೊಡೆಯುವಷ್ಟರಲ್ಲಿ, ಪಾದದ ತುದಿಯಿಂದ ಕೃಷ್ಣನು ಅವನನ್ನು ಒದೆಯಲು, ಲಡ್ಡಾದ ಮರ ಮುರಿದು ಬೂಮಿಗೆ ಬೀಳುವಂತೆ ಬಿದ್ದನು. ಕೂಡಲೆ ತಾಮ್ರಧ್ವಜನು ಮೈತುಂಬಿದ ಪ್ರತಾಪದಿಂದ ಎದ್ದು ಮತ್ತೊಂದು ದೊಡ್ಡದಾದ ಮದವೇರಿದ ಆನೆಯನ್ನು ಹತ್ತಿ ಬಾಣಗಳನ್ನು ಬಿಟ್ಟು ಅದರ ಪಂಜರವನ್ನೇ ನಿರ್ಮಿಸಿದನು.
- (ಪದ್ಯ-೪೮)
|
ಬೀದಿವರಿಸಿದನಾತನಾನೆಯಂ ಬಭ್ರುವಾ |
ಹಾದಿ ವೀರರ ಮೇಲೆ ಕಣೆಗಳಂ ಕರೆದನಿದಿ |
ರಾದ ಭಟರೆಲ್ಲರುಂ ಮೂರ್ಛೆಮೃತಿಯಂ ತಳೆದರರ್ಜುನಂ ಮೈಮರೆದನು ||
ಕಾದುವವರಿಲ್ಲ ಪಾಂಡವ ಬಲದೊಳಾಗ ಮಧು |
ಸೂದನಂ ಬೆರಗಾಗಿ ಕಡುಗೋಪದಿಂದೆ ತಾ |
ನೇ ದಿವ್ಯಚಕ್ರಮಂ ತುಡಿಕು ನಡೆದಂ ಧುರಕೆ ಮೂಜಗಂ ತಲ್ಲಣಿಸಲು ||49||
|
ಪದವಿಭಾಗ-ಅರ್ಥ:
|
- ಬೀದಿ ವರಿಸಿದನು ಆತನು ಆನೆಯಂ ಬಭ್ರುವಾಹ ಅದಿ ವೀರರ ಮೇಲೆ ಕಣೆಗಳಂ ಕರೆದನು ಇದಿರಾದ ಭಟರೆಲ್ಲರುಂ ಮೂರ್ಛೆಮೃತಿಯಂ ತಳೆದರು ಅರ್ಜುನಂ ಮೈಮರೆದನು={ತಾಮ್ರಧ್ವಜನು ಮದ್ದಾನೆಯನ್ನು ಬಭ್ರುವಾಹನ ಮತ್ತು ಇತರ ವೀರರ ಮೇಲೆ ಬೀದಿಯಲ್ಲಿ ನುಗ್ಗಿಸಿದಂತೆ ನುಗ್ಗಿಸಿದನು; ಮತ್ತೆ ಬಾಣಗಳನ್ನು ಸುರಿಸಿದನು; ಅವನಿಗೆ ಎದುರುನಿಂತ ವೀರರೆಲ್ಲರೂ ಮೂರ್ಛೆಯನ್ನೂ ಕೆಲವರು ಮರಣವನ್ನೂ ಹೊಂದಿದರು. ಅರ್ಜುನನು ಮೈಮರೆತನು/ ಎಚ್ಚರತಪ್ಪಿದನು.];; ಕಾದುವವರು ಇಲ್ಲ ಪಾಂಡವ ಬಲದೊಳು ಆಗ ಮಧುಸೂದನಂ ಬೆರಗಾಗಿ ಕಡುಗೋಪದಿಂದೆ ತಾನೇ ದಿವ್ಯಚಕ್ರಮಂ ತುಡಿಕು ನಡೆದಂ ಧುರಕೆ ಮೂಜಗಂ ತಲ್ಲಣಿಸಲು=[ ಪಾಂಡವರ ಸೈನ್ಯದಲ್ಲಿ ಕಾದುವವರು ಇಲ್ಲದಂತಾಯಿತು. ಆಗ ಮಧುಸೂದನನು ಬೆರಗಾಗಿ ಬಹಳ ಕೋಪದಿಂದ ತಾನೇ ದಿವ್ಯಚಕ್ರವನ್ನು ಹಿಡಿದು ಯುದ್ಧಕ್ಕೆ ನೆಡೆದನು. ಅದನ್ನು ನೋಡಿ ಮೂರು ಜಗತ್ತೂ ನಡುಗಿತು/ ಕಳವಳಗೊಂಡಿತು].
- ತಾತ್ಪರ್ಯ:ತಾಮ್ರಧ್ವಜನು ಮದ್ದಾನೆಯನ್ನು ಬಭ್ರುವಾಹನ ಮತ್ತು ಇತರ ವೀರರ ಮೇಲೆ ಬೀದಿಯಲ್ಲಿ ನುಗ್ಗಿಸಿದಂತೆ ನುಗ್ಗಿಸಿದನು; ಮತ್ತೆ ಬಾಣಗಳನ್ನು ಸುರಿಸಿದನು; ಅವನಿಗೆ ಎದುರುನಿಂತ ವೀರರೆಲ್ಲರೂ ಮೂರ್ಛೆಯನ್ನೂ ಕೆಲವರು ಮರಣವನ್ನೂ ಹೊಂದಿದರು. ಅರ್ಜುನನು ಮೈಮರೆತನು/ ಎಚ್ಚರತಪ್ಪಿದನು. ಪಾಂಡವರ ಸೈನ್ಯದಲ್ಲಿ ಕಾದುವವರು ಇಲ್ಲದಂತಾಯಿತು. ಆಗ ಮಧುಸೂದನನು ಬೆರಗಾಗಿ ಬಹಳ ಕೋಪದಿಂದ ತಾನೇ ದಿವ್ಯಚಕ್ರವನ್ನು ಹಿಡಿದು ಯುದ್ಧಕ್ಕೆ ನೆಡೆದನು. ಅದನ್ನು ನೋಡಿ ಮೂರು ಜಗತ್ತೂ ಕಳವಳಗೊಂಡಿತು.
- (ಪದ್ಯ-೪೯)
|
ಉರಗೇಂದ್ರ ಕಮಠ ದಿಕ್ಕರಿಗಳುಂ ಗಿರಿಗಳುಂ |
ಶರಧಿಯುಂ ದೆಸೆಗಳುಂ ಧರಣಿಯುಂ ತರಣಿಯುಂ |
ಪಿರಿದು ಕಂಪಿಸಲಾ ತ್ರಿವಿಕ್ರಮಂ ಚಕ್ರಮಂ ಕೊಂಡು ಕಾಳೆಗಕೆ ಬರಲು ||
ಅರುಣಧ್ವಜಂ ಕಂಡು ಕೋಪದಿಂ ಚಾಪದಿಂ |
ಸರಳ ಮಳೆಯಂ ಕರೆಯುತುರುಬಿದಂ ತರುಬಿದಂ |
ಹರಿಯನದ್ಭುತಮಾಗೆ ಸಂಗರಂ ಸಿಂಗರಂ ಮೆರೆಯಲಂತಕಪುರದೊಳು ||50||
|
ಪದವಿಭಾಗ-ಅರ್ಥ:
|
- ಉರಗೇಂದ್ರ ಕಮಠ ದಿಕ್ಕರಿಗಳುಂ ಗಿರಿಗಳುಂ ಶರಧಿಯುಂ ದಎಸೆಗಳುಂ ಧರಣಿಯುಂ ತರಣಿಯುಂ ಪಿರಿದು ಕಂಪಿಸಲು ಆ ತ್ರಿವಿಕ್ರಮಂ ಚಕ್ರಮಂ ಕೊಂಡು ಕಾಳೆಗಕೆ ಬರಲು=[ಭೂಮಿಯನ್ನು ಹೊತ್ತ ಆದಿಶೇಷ, ಮೇರು ಪರ್ವತವನ್ನು ಹೊತ್ತ ಕೂರ್ಮ, ಎಂಟುದಿಕ್ಕಿನಲ್ಲಿ ಭೂಮಿಯನ್ನು ಹೊತ್ತ ದಿಗ್ಗಜಗಳು, ದೊಡ್ಡ ಕುಲ ಪರ್ವತಗಳು, ಸಮುದ್ರ, ದಿಕ್ಕುಗಳು, ಭೂಮಿ, ಸೂರ್ಯ, ಎಲ್ಲಾ, ಆ ತ್ರಿವಿಕ್ರಮನು ಚಕ್ರವನ್ನು ಹಿಡಿದುಕೊಂಡು ಯುದ್ಧಕ್ಕೆ ಬರಲು ಬಹಳ ನಡುಗಿವು,];; ಅರುಣಧ್ವಜಂ ಕಂಡು ಕೋಪದಿಂ ಚಾಪದಿಂ ಸರಳ ಮಳೆಯಂ ಕರೆಯುತುರುಬಿದಂ ತರುಬಿದಂ ಹರಿಯನದ್ಭುತಮಾಗೆ ಸಂಗರಂ ಸಿಂಗರಂ ಮೆರೆಯಲಂತಕಪುರದೊಳು=[ತಾಮ್ರಧ್ವಜನು ಕಂಡು ಕೋಪದಿಂದ ಬಿಲ್ಲಿನಿಂದ ಬಾಣಗಳ ಮಳೆಯನ್ನು ಕರೆಯುತ್ತಾ ಪರಾಕ್ರಮದಿಂದ ಕೃಷ್ಣನನ್ನು ಅಡ್ಡ ಹಾಕಿದನು. ಈ ಯುದ್ಧ ಅದ್ಭುತವಾಗಿ ನೆಡೆದು ಯಮನ ಪಟ್ಟಣದಲ್ಲಿ ವೀರಸ್ವರ್ಗ ಪಡೆದವರ ಸ್ವಾಗತಕ್ಕೆ ಸಿಂಗರಿಸಿ ಮೆರೆಯಿತು.]
- ತಾತ್ಪರ್ಯ:ಭೂಮಿಯನ್ನು ಹೊತ್ತ ಆದಿಶೇಷ, ಮೇರು ಪರ್ವತವನ್ನು ಹೊತ್ತ ಕೂರ್ಮ, ಎಂಟುದಿಕ್ಕಿನಲ್ಲಿ ಭೂಮಿಯನ್ನು ಹೊತ್ತ ದಿಗ್ಗಜಗಳು, ದೊಡ್ಡ ಕುಲ ಪರ್ವತಗಳು, ಸಮುದ್ರ, ದಿಕ್ಕುಗಳು, ಭೂಮಿ, ಸೂರ್ಯ, ಎಲ್ಲಾ, ಆ ತ್ರಿವಿಕ್ರಮನು ಚಕ್ರವನ್ನು ಹಿಡಿದುಕೊಂಡು ಯುದ್ಧಕ್ಕೆ ಬರಲು ಬಹಳ ನಡುಗಿವು,ತಾಮ್ರಧ್ವಜನು ಕಂಡು ಕೋಪದಿಂದ ಬಿಲ್ಲಿನಿಂದ ಬಾಣಗಳ ಮಳೆಯನ್ನು ಕರೆಯುತ್ತಾ ಪರಾಕ್ರಮದಿಂದ ಕೃಷ್ಣನನ್ನು ಅಡ್ಡ ಹಾಕಿದನು. ಈ ಯುದ್ಧ ಅದ್ಭುತವಾಗಿ ನೆಡೆದು ಯಮನ ಪಟ್ಟಣದಲ್ಲಿ ವೀರಸ್ವರ್ಗ ಪಡೆದವರ ಸ್ವಾಗತಕ್ಕೆ ಸಿಂಗರಿಸಿ ಮೆರೆಯಿತು.
- (ಪದ್ಯ-೫೦)
|
ಕಟ್ಟುಗ್ರಕೋಪದಿಂದೈತಪ್ಪ ದಾನವ ಘ |
ರಟ್ಟನಂ ತಡೆದು ತಾಮ್ರಧ್ವಜಂ ಕಾಳೆಗಂ |
ಗೊಟ್ಟನಳವಿಗೆ ಸೇರಿತಾತನ ಚತುರ್ಬಲಂ ಸರ್ವಸನ್ನಾಹದಿಂದೆ ||
ಇಟ್ಟಣಿಸಿ ತಾಹವಂ ಬಳಿಕ ಮುರವೈರಿ ತಿರು |
ಪಿಟ್ಟ ಚಕ್ರದ ಫಲವು ಧಾರೆಗಳ ಸೋಂಕಿನಿಂ |
ಥಟ್ಟುಗೆಡೆದುದು ಪಗೆಯ ಪಡೆಯೊಳಕ್ಷೌಹಿಣಿಯ ಶತಕಮೊಂದೇಕ್ಷಣದೊಳು ||51||
|
ಪದವಿಭಾಗ-ಅರ್ಥ:
|
- ಕಟ್ಟುಗ್ರಕೋಪದಿಂದ ಈತಪ್ಪ ದಾನವ ಘರಟ್ಟನಂ(ಘರಟ್ಟ:ರಾಕ್ಷಸರಿಗೆ ಬೀಸುವ ಕಲ್ಲಿನಂತೆ ಇರುವವನು-ಶ್ರೀಹರಿ) ತಡೆದು ತಾಮ್ರಧ್ವಜಂ ಕಾಳೆಗಂ ಗೊಟ್ಟನು=[ಅತಿಯಾದ ಉಗ್ರಕೋಪದಿಂದ ಬರುತ್ತಿರುವ ಕೃಷ್ನನನ್ನು ತಡೆದು ತಾಮ್ರಧ್ವಜನು ಯುದ್ಧವನ್ನು ಕೊಟ್ಟನು.];; ಅಳವಿಗೆ ಸೇರಿತು ಆತನ ಚತುರ್ಬಲಂ ಸರ್ವಸನ್ನಾಹದಿಂದೆ ಇಟ್ಟಣಿಸಿತು ಆಹವಂ=[ ಚತುರ್ಬಲ ಸೈನ್ಯ ಸರ್ವಸನ್ನಾಹದಿಂದ ಆತನ ಸಹಾಯಕ್ಕೆ ಸೇರಿತು; ಯುದ್ಧವು ತೀವ್ರವಾಯಿತು.];; ಬಳಿಕ ಮುರವೈರಿ ತಿರುಪಿಟ್ಟ ಚಕ್ರದ ಫಲವು ಧಾರೆಗಳ ಸೋಂಕಿನಿಂ ಥಟ್ಟುಗೆಡೆದುದು(ಥಟ್ಟು-ಸೈನ್ಯ, ಸಮೂಹ, ಕಡೆ-ಬೀಳು), ಪಡೆ ಪಗೆಯ ಪಡೆಯೊಳು ಅಕ್ಷೌಹಿಣಿಯ ಶತಕಮು ಒಂದೇಕ್ಷಣದೊಳು=[ಬಳಿಕ ಕೃಷ್ಣನು ತಿರುಗಿಸಿ ಬಿಟ್ಟ ಚಕ್ರದ ಅನೇಕ ಧಾರೆ ಹಲ್ಲುಅರೆಗಳ ಪರಿಣಾಮಶತ್ರು ಸೈನ್ಯದಲ್ಲಿ ನೂರು ಅಕ್ಷೌಹಿಣಿಯ ಒಂದೇ ಕ್ಷಣದಲ್ಲಿ ಸೈನ್ಯಸಮೂಹವು ಶಕ್ತಿ ಕುಂದಿ ಬಿತ್ತು].
- ತಾತ್ಪರ್ಯ:ಅತಿಯಾದ ಉಗ್ರಕೋಪದಿಂದ ಬರುತ್ತಿರುವ ಕೃಷ್ನನನ್ನು ತಡೆದು ತಾಮ್ರಧ್ವಜನು ಯುದ್ಧವನ್ನು ಕೊಟ್ಟನು. ಚತುರ್ಬಲ ಸೈನ್ಯ ಸರ್ವಸನ್ನಾಹದಿಂದ ಆತನ ಸಹಾಯಕ್ಕೆ ಸೇರಿತು; ಯುದ್ಧವು ತೀವ್ರವಾಯಿತು. ಬಳಿಕ ಕೃಷ್ಣನು ತಿರುಗಿಸಿ ಬಿಟ್ಟ ಚಕ್ರದ ಅನೇಕ ಧಾರೆ ಹಲ್ಲುಅರೆಗಳ ಪರಿಣಾಮ ಶತ್ರು ಸೈನ್ಯದಲ್ಲಿ ನೂರು ಅಕ್ಷೌಹಿಣಿಯ ಒಂದೇ ಕ್ಷಣದಲ್ಲಿ ಸೈನ್ಯಸಮೂಹವು ಶಕ್ತಿ ಕುಂದಿ ಬಿತ್ತು.
- (ಪದ್ಯ-೫೧)
|
ಪಡೆ ಮಡಿಯೆ ರೋಷದಿಂದಾಗ ತಾಮ್ರಧ್ವಜಂ |
ನುಡಿದನಸುರಾಂತಕನೊಳೆಲೆ ದೇವ ಸೈನ್ಯಮಂ |
ತಡೆಗಡಿದೊಡೇನಹುದು ಹಿಂದೆ ಪಾರ್ಥಂಗಾಗಿ ನಿನ್ನ ಪುಣ್ಯವನಿತ್ತಲಾ ||
ಕುಡದಿರು ಧನಂಜಯಗಾಗಿ ತನಗೀಗ ನಿ|
ನ್ನೊಡಲನಿದು ನಿಶ್ಚಯಂ ನಿನ್ನಂ ಕಿರೀಟಿಯಂ |
ಪಿಡಿದು ತಾತನ ಮಖವನಾಗಿಪೆಂ ನೋಡೆಂದು ಹರಿಯಂ ಪಚಾರಿಸಿದನು ||52||
|
ಪದವಿಭಾಗ-ಅರ್ಥ:
|
- ಪಡೆ ಮಡಿಯೆ ರೋಷದಿಂದಾಗ ತಾಮ್ರಧ್ವಜಂ ನುಡಿದನು ಅಸುರಾಂತಕನೊಳು ಎಲೆ ದೇವ ಸೈನ್ಯಮಂ ತಡೆಗಡಿದೊಡೆ ಏನಹುದು ಹಿಂದೆ ಪಾರ್ಥಂಗಾಗಿ ನಿನ್ನ ಪುಣ್ಯವನಿತ್ತಲಾ=[ಸೈನ್ಯವು ಸಾವಿಗೀಡಾಗಲು, ಆಗ ರೋಷದಿಂದ ತಾಮ್ರಧ್ವಜನು ಕೃಷ್ಣನೊಡನೆ ನುಡಿದನು, ಎಲೆ ದೇವ ಸೈನ್ಯವನ್ನು ತಡೆದು ನಾಶಮಾಡಿದರೆ ಏನು ಉಪಯೋಗ? ಹಿಂದೆ ಪಾರ್ಥನಿಗಾಗಿ ನಿನ್ನ ಪುಣ್ಯವನ್ನು ಕೊಟ್ಟೆಯಲ್ಲಾ,];; ಕುಡದಿರು ಧನಂಜಯಗಾಗಿ ತನಗೀಗ ನಿನ್ನೊಡಲನು ಇದು ನಿಶ್ಚಯಂ ನಿನ್ನಂ ಕಿರೀಟಿಯಂ ಪಿಡಿದು ತಾತನ ಮಖವನು ಆಗಿಪೆಂ ನೋಡೆಂದು ಹರಿಯಂ ಪಚಾರಿಸಿದನು=[ ಅದೇ ರೀತಿ ಈಗ ಧನಂಜಯಗಾಗಿ ತನಗೆ, ಉಳಿದಿರುವ ನಿನ್ನ ದೇಹವನ್ನು ಕೊಡಬೇಡ. ನಿನ್ನ ಅರ್ಜುನನ್ನು ಹಿಡಿದು ನನ್ನ ತಂದೆಯ ಯಜ್ಞವನ್ನು ಮಾಡಿಸಿ ಮುಗಿಸುವೆನು, ಇದು ನಿಶ್ಚಯವು. ನೋಡು ಎಂದು, ಹರಿಯನ್ನು ಬಾಣದಿಂದ ಹೊಡೆದನು.]
- ತಾತ್ಪರ್ಯ:ಸೈನ್ಯವು ಸಾವಿಗೀಡಾಗಲು, ಆಗ ರೋಷದಿಂದ ತಾಮ್ರಧ್ವಜನು ಕೃಷ್ಣನೊಡನೆ ನುಡಿದನು, ಎಲೆ ದೇವ ಸೈನ್ಯವನ್ನು ತಡೆದು ನಾಶಮಾಡಿದರೆ ಏನು ಉಪಯೋಗ? ಹಿಂದೆ ಪಾರ್ಥನಿಗಾಗಿ ನಿನ್ನ ಪುಣ್ಯವನ್ನು ಕೊಟ್ಟೆಯಲ್ಲಾ, ಅದೇ ರೀತಿ ಈಗ ಧನಂಜಯಗಾಗಿ ತನಗೆ, ಉಳಿದಿರುವ ನಿನ್ನ ದೇಹವನ್ನು ಕೊಡಬೇಡ! ನಿನ್ನ ಅರ್ಜುನನ್ನು ಹಿಡಿದು ನನ್ನ ತಂದೆಯ ಯಜ್ಞವನ್ನು ಮಾಡಿಸಿ ಮುಗಿಸುವೆನು, ಇದು ನಿಶ್ಚಯವು. ನೋಡು ಎಂದು, ಹರಿಯನ್ನು ಬಾಣದಿಂದ ಹೊಡೆದನು.
- (ಪದ್ಯ-೫೨)
|
ಧರಣೀಂದ್ರ ಕೇಳ್ ಚಕ್ರಪಾಣಿಯಾಗಿರ್ದ ಮುರ |
ಹರನಂ ರಣಾಗ್ರದೊಳ್ ಮೇಲ್ವಯ್ದು ತುಡುಕಿ ನಿಜ |
ಕರವೊಂದರಿಂದೆರಡು ಕೈಗಳಂ ಮತ್ತೊಂದು ಹಸ್ತದಿಂ ಪದಯುಗವನು ||
ಹಿರಿದು ಸತ್ವದೊಳೊತ್ತಿ ಪಿಡದೊಂದುಗೂಡಿ ಹರಿ |
ಚರಣಮಂ ನೊಸಲೆಡೆಯೊಳಿಟ್ಟು ತಾಮ್ರಧ್ವಜಂ |
ಪರಿದನರ್ಜುನನಿದ್ದಬಳಿಗಾಗಿ ಸಾಹಸಕೆ ಮೂಜಗಂ ಬೆರಗಾಗಲು ||53||
|
ಪದವಿಭಾಗ-ಅರ್ಥ:
|
- ಧರಣೀಂದ್ರ ಕೇಳ್ ಚಕ್ರಪಾಣಿಯಾಗಿರ್ದ ಮುರಹರನಂ ರಣಾಗ್ರದೊಳ್ ಮೇಲ್ವಯ್ದು ( ಮುಂದೆ ನುಗ್ಗಿ ) ತುಡುಕಿ ನಿಜಕರವೊಂದರಿಂದ ಎರಡು ಕೈಗಳಂ ಮತ್ತೊಂದು ಹಸ್ತದಿಂ ಪದಯುಗವನು=[ರಾಜನೇ ಕೇಳು, ಚಕ್ರವನ್ನು ಹಿಡಿದ ಕೃಷ್ಣನ ರಣರಂಗದಲ್ಲಿ ಮುಂದೆ ನುಗ್ಗಿ ಹಿಡಿದು, ತನ್ನ ಒಂದು ಕೈಯಿಂದು ಕೃಷ್ಣನ ಎರಡು ಕೈಗಳನ್ನೂ ಮತ್ತೊಂದು ಹಸ್ತದಿಂದ ಅವನ ಎರದೂ ಪಾದಗಳನ್ನೂ ಹಿಡಿದುಕೊಂಡನು; ];; ಹಿರಿದು ಸತ್ವದೊಳು ಎತ್ತಿ ಪಿಡದು ಒಂದುಗೂಡಿ ಹರಿ ಚರಣಮಂ ನೊಸಲ ಎಡೆಯೊಳು ಇಟ್ಟು ತಾಮ್ರಧ್ವಜಂ ಪರಿದನು ಅರ್ಜುನನು ಇದ್ದ ಬಳಿಗಾಗಿ ಸಾಹಸಕೆ ಮೂಜಗಂ ಬೆರಗಾಗಲು=[ಹೀಗೆ ಅಸಾಧಾರಣ ಸತ್ವದಿಂದ ಎತ್ತಿ ಪಿಡದು ಒಂದುಗೂಡಿಸಿ ಹರಿ ಪಾದಗಳನ್ನು ಹಣೆಯ ಬಳಿ ಒತ್ತಿಟ್ಟು ಹಿಡಿದುಕೊಂಡು, ತಾಮ್ರಧ್ವಜನು ಪರಿದನು ಅರ್ಜುನನು ಇದ್ದ ಕಡೆ ಹೋದನು. ಇವನ ಸಾಹಸಕ್ಕೆ ಮೂರು ಜಗತ್ತೂ ಬೆರಗಾಯಿತು.]
- ತಾತ್ಪರ್ಯ:ರಾಜನೇ ಕೇಳು, ಚಕ್ರವನ್ನು ಹಿಡಿದ ಕೃಷ್ಣನ ರಣರಂಗದಲ್ಲಿ ಮುಂದೆ ನುಗ್ಗಿ ಹಿಡಿದು, ತನ್ನ ಒಂದು ಕೈಯಿಂದು ಕೃಷ್ಣನ ಎರಡು ಕೈಗಳನ್ನೂ ಮತ್ತೊಂದು ಹಸ್ತದಿಂದ ಅವನ ಎರದೂ ಪಾದಗಳನ್ನೂ ಹಿಡಿದುಕೊಂಡನು; ಹೀಗೆ ಅಸಾಧಾರಣ ಸತ್ವದಿಂದ ಎತ್ತಿ ಪಿಡದು ಒಂದುಗೂಡಿಸಿ ಹರಿ ಪಾದಗಳನ್ನು ಹಣೆಯ ಬಳಿ ಒತ್ತಿಟ್ಟು ಹಿಡಿದುಕೊಂಡು, ತಾಮ್ರಧ್ವಜನು ಅರ್ಜುನನು ಇದ್ದ ಕಡೆ ಹೋದನು. ಇವನ ಸಾಹಸಕ್ಕೆ ಮೂರು ಜಗತ್ತೂ ಬೆರಗಾಯಿತು.
- (ಪದ್ಯ-೫೩XXIII)
|
ಹಿಡಿಗೈಯ್ಯೊಳಿರ್ದಸುರರಿಪು ಪಾರ್ಥನಂ ಕರೆದು |
ತುಡು ಮಹಾಸ್ತ್ರವನೆಂದು ನೇಮಿಸಲ್ ಫಲುಗುಣಂ |
ಪಡಯೆನುತೆ ಬಾಣಮಂ ಗಾಂಡೀವದೊಳ್ ಪೂಡುವನ್ನೆಗಂಭರದೊಳೊದಗಿ ||
ತಡೆಗಾಲೊಳಾತನಂ ಕೆಡಹಿ ಭುಜಯುಗ್ಮದಿಂ |
ತೊಡರಿಕೊಂಡುಪ್ಪರಿಸಿ ನರ ಕೃಷ್ಣರಿರ್ವರಂ |
ಮಿಡುಕಲೀಯದೆ ಬಿಗಿದು ತಾಮ್ರಧ್ವಜಂ ಧರೆಗೆ ಬಿದ್ದನಗಧರನೊದೆಯಲು ||54||
|
ಪದವಿಭಾಗ-ಅರ್ಥ:
|
- ಹಿಡಿಗೈಯ್ಯೊಳು ಇರ್ದ ಅಸುರರಿಪು ಪಾರ್ಥನಂ ಕರೆದು ತುಡು ಮಹಾಸ್ತ್ರವನೆಂದು ನೇಮಿಸಲ್=[ತಾಮ್ರಧ್ವಜನ ಕೈಯಹಿಡಿತದಲ್ಲಿ ಇದ್ದ ಅಸುರರಿಪು ಕೃಷ್ಣನು, ಪಾರ್ಥನನ್ನು ಕರೆದು,'ತೊಡು ಮಹಾಸ್ತ್ರವನ್ನು,' ಎಂದು ಆಜ್ಞಾಪಿಸಲು,];; ಫಲುಗುಣಂ ಪಡ ಯೆನುತೆ ಬಾಣಮಂ ಗಾಂಡೀವದೊಳ್ ಪೂಡುವ ಅನ್ನೆಗಂ ಭರದೊಳು ಒದಗಿ=[ಫಲ್ಗುಣನು ಪಡ! ಎನ್ನುತ್ತಾ ಬಾಣವನ್ನು ಗಾಂಡೀವದಲ್ಲಿ ಹೂಡುವ ಅಷ್ಟರಲ್ಲಿ ತಾಮ್ರಧ್ವಜನು ವೇಗವಾಗಿ ಬಂದು,];; ತಡೆಗಾಲೊಳು ಆತನಂ ಕೆಡಹಿ ಭುಜಯುಗ್ಮದಿಂ ತೊಡರಿಕೊಂಡು ಉಪ್ಪರಿಸಿ ನರ ಕೃಷ್ಣರು ಇರ್ವರಂ ಮಿಡುಕಲು ಈಯದೆ ಬಿಗಿದು ತಾಮ್ರಧ್ವಜಂ ಧರೆಗೆ ಬಿದ್ದನು ಅಗಧರನು ಒದೆಯಲು=[ಅರ್ಜುನನ್ನು ತೊಡರುಕಾಲಿನಿಂದ ಕೆಡವಿ, ಅರ್ಜುನ ಕೃಷ್ಣ ಇಬ್ಬರನ್ನೂ ಅಲುಗಾಡಲು ಬಿಡದಂತೆ ಎರಡೂ ಭುಜ/ತೋಳುಗಳಿಂದ ಬಿಗಿದು ಅವುಚಿಕೊಂಡು ಒತ್ತಿಹಿಡಿದಿರಲು, ಕೃಷ್ನನು ಕಾಲು ಬಿಡಿಸಿಕೊಂಡು ತಾಮ್ರಧ್ವಜನನ್ನು ಒದೆಯಲು, ಅವನು ಭೂಮಿಗೆ ಬಿದ್ದನು].
- ತಾತ್ಪರ್ಯ:ತಾಮ್ರಧ್ವಜನ ಕೈಯಹಿಡಿತದಲ್ಲಿ ಇದ್ದ ಅಸುರರಿಪು ಕೃಷ್ಣನು, ಪಾರ್ಥನನ್ನು ಕರೆದು,'ತೊಡು ಮಹಾಸ್ತ್ರವನ್ನು,' ಎಂದು ಆಜ್ಞಾಪಿಸಲು, ಫಲ್ಗುಣನು ಪಡ! ಎನ್ನುತ್ತಾ ಬಾಣವನ್ನು ಗಾಂಡೀವದಲ್ಲಿ ಹೂಡುವ ಅಷ್ಟರಲ್ಲಿ ತಾಮ್ರಧ್ವಜನು ವೇಗವಾಗಿ ಬಂದು, ಅರ್ಜುನನ್ನು ತೊಡರುಕಾಲಿನಿಂದ ಕೆಡವಿ, ಅರ್ಜುನ ಕೃಷ್ಣ ಇಬ್ಬರನ್ನೂ ಅಲುಗಾಡಲು ಬಿಡದಂತೆ ಎರಡೂ ಭುಜ/ತೋಳುಗಳಿಂದ ಬಿಗಿದು ಅವುಚಿಕೊಂಡು ಒತ್ತಿಹಿಡಿದಿರಲು, ಕೃಷ್ನನು ಕಾಲು ಬಿಡಿಸಿಕೊಂಡು ತಾಮ್ರಧ್ವಜನನ್ನು ಒದೆಯಲು, ಅವನು ಭೂಮಿಗೆ ಬಿದ್ದನು.
- (ಪದ್ಯ-೫೪)
|
ಉದ್ದಂಡ ಭುಜಬಲದೊಳೊರ್ವರೊರ್ವರ ನೊತ್ತಿ |
ಬಿದ್ದರಿಳೆಗಾ ಮೂವರುಂ ನೊಂದು ಮೂರ್ಛೆಗೊಂ |
ಡಿದ್ದರದರೊಳ್ ಪಾರ್ಥ ಶೌರಿಗಳ್ ಬಳಿಕ ತಾಮ್ರಧ್ವಜಂ ಸತ್ವದಿಂದೆ ||
ಎದ್ದುನೋಡಿದನಲ್ಲಿ ತನ್ನೊಡನೆ ಕಾಳೆಗಕೆ |
ಹೊದ್ದುವದಟರನಾರುಮಂ ಕಾಣದೆಲ್ಲರಂ |
ಗೆದ್ದೆರಡು ಕುದುರೆಯಂ ಕೊಂಡುಳಿದ ಪಡೆ ಸಹಿತ ನಿಜನಗರಿಗೈತಂದನು ||55||
|
ಪದವಿಭಾಗ-ಅರ್ಥ:
|
- ಉದ್ದಂಡ ಭುಜಬಲದೊಳು ಓರ್ವರು ಓರ್ವರನು ಒತ್ತಿ ಬಿದ್ದರು ಇಳೆಗ ಆ ಮೂವರುಂ ನೊಂದು ಮೂರ್ಛೆಗೊಂಡಿದ್ದರು ಅದರೊಳ್ ಪಾರ್ಥ ಶೌರಿಗಳ್=[ಭುಜಬಲದಲ್ಲಿ ಪ್ರಚಂಡರಾದ ಮೂವರೂ, ಒಬ್ಬರನ್ನು ಒಬ್ಬರು ಒತ್ತಿ ರಥದಿಂದ ಭೂಮಿಗೆ ಬಿದ್ದರು. ಆ ಮೂವರೂ ಬಹಳ ಬಾಧೆಪಟ್ಟರು; ಅದರಲ್ಲಿ ಪಾರ್ಥ ಕೃಷ್ಣ ಮೂರ್ಛೆಹೋದರು;];; ಬಳಿಕ ತಾಮ್ರಧ್ವಜಂ ಸತ್ವದಿಂದೆ ಎದ್ದು ನೋಡಿದನು ಅಲ್ಲಿ ತನ್ನೊಡನೆ ಕಾಳೆಗಕೆ ಹೊದ್ದುವ ಅದಟರನು ಆರುಮಂ ಕಾಣದೆ ಎಲ್ಲರಂ ಗೆದ್ದು ಎರಡು ಕುದುರೆಯಂ ಕೊಂಡು ಉಳಿದ ಪಡೆ ಸಹಿತ ನಿಜನಗರಿಗೆ ಐತಂದನು=[ಬಳಿಕ ತಾಮ್ರಧ್ವಜನು ಸುಧಾರಿಸಿಕೊಂದು ತನ್ನ ಸತ್ವದಿಂದ ಎದ್ದು ನೋಡಿದನು. ಅಲ್ಲಿ ತನ್ನೊಡನೆ ಕಾಳಗಕ್ಕೆ ನಿಲ್ಲುವ ವೀರರು ಯಾರೂ ಕಾಣದೆ, ಎಲ್ಲರನ್ನೂ ಗೆದ್ದು ಎರಡು ಕುದುರೆಯನ್ನೂ ಕೂಡಿಕೊಂಡು ಉಳಿದ ಸೈನ್ಯದ ಸಹಿತ ತನ್ನ ನಗರಕ್ಕೆ ಬಂದನು.]
- ತಾತ್ಪರ್ಯ:ಭುಜಬಲದಲ್ಲಿ ಪ್ರಚಂಡರಾದ ಮೂವರೂ, ಒಬ್ಬರನ್ನು ಒಬ್ಬರು ಒತ್ತಿ ರಥದಿಂದ ಭೂಮಿಗೆ ಬಿದ್ದರು. ಆ ಮೂವರೂ ಬಹಳ ಬಾಧೆಪಟ್ಟರು ಅದರಲ್ಲಿ ಪಾರ್ಥ ಕೃಷ್ಣ ಮೂರ್ಛೆಹೋದರು; ಬಳಿಕ ತಾಮ್ರಧ್ವಜನು ಸುಧಾರಿಸಿಕೊಂದು ತನ್ನ ಸತ್ವದಿಂದ ಎದ್ದು ನೋಡಿದನು. ಅಲ್ಲಿ ತನ್ನೊಡನೆ ಕಾಳಗಕ್ಕೆ ನಿಲ್ಲುವ ವೀರರು ಯಾರೂ ಕಾಣದೆ, ಎಲ್ಲರನ್ನೂ ಗೆದ್ದು ಎರಡು ಕುದುರೆಯನ್ನೂ ಕೂಡಿಕೊಂಡು ಉಳಿದ ಸೈನ್ಯದ ಸಹಿತ ತನ್ನ ನಗರಕ್ಕೆ ಬಂದನು.
- (ಪದ್ಯ-೫೬)
|
ಪಟ್ಟಣದ ಪೊರವಳಯದೊಳ್ ಚಿತ್ರಮಯಮಾಗಿ |
ಕಟ್ಟಿದಧ್ವರ ಮಂಟಪದ ನಡುವೆ ದೀಕ್ಷೆಯಿಂ |
ನೆಟ್ಟೆನೆ ಪರಿಗ್ರಹಿಸಿ ಭೂಸುರರ್ ವೆರಸಿ ಕುಳ್ಳಿರ್ಪ ಪಿತನೆಡೆಗೆ ಬಂದು ||
ಮುಟ್ಟಿ ಚರಣಂಗಳಂ ಸಾಷ್ಟಾಂಗದಿಂದೆ ಪೊಡ |
ಮಟ್ಟು ತಾಮ್ರಧ್ವಜಂ ಕೈಮುಗಿದು ತರಿಸಿ ಮುಂ |
ದಿಟ್ಟನೆರಡಶ್ವಂಗಳಂ ಬಳಿಕ ಶಿಖಿಕೇತು ನಂದನಂಗಿಂತೆಂದನು ||56||
|
ಪದವಿಭಾಗ-ಅರ್ಥ:
|
- ಪಟ್ಟಣದ ಪೊರವಳಯದೊಳ್ ಚಿತ್ರಮಯಮಾಗಿ ಕಟ್ಟಿದ ಅಧ್ವರ ಮಂಟಪದ ನಡುವೆ ದೀಕ್ಷೆಯಿಂ ನೆಟ್ಟೆನೆ ಪರಿಗ್ರಹಿಸಿ ಭೂಸುರರ್ ವೆರಸಿ ಕುಳ್ಳಿರ್ಪ ಪಿತನ ಎಡೆಗೆ ಬಂದು=[ರತ್ನಪುರ ಪಟ್ಟಣದ ಹೊರವಲಯದಲ್ಲಿ ಅಲಂಕಾರವಾಗಿ ಕಟ್ಟಿದ್ದ ಯಜ್ಞಮಂಟಪದ ನಡುವೆ ದೀಕ್ಷೆಯನ್ನು ವಿಧಿಪೂರ್ವಕ ಪರಿಗ್ರಹಿಸಿ ಬ್ರಾಹ್ಮಣರ ಪುರೋಹಿತರ ಜೊತೆ ಕುಳಿತಿದ್ದ ತಂದೆಯ ಬಳಿಗೆ ಬಂದು];; ಮುಟ್ಟಿ ಚರಣಂಗಳಂ ಸಾಷ್ಟಾಂಗದಿಂದೆ ಪೊಡಮಟ್ಟು ತಾಮ್ರಧ್ವಜಂ ಕೈಮುಗಿದು ತರಿಸಿ ಮುಂದಿಟ್ಟನು ಎರಡು ಅಶ್ವಂಗಳಂ ಬಳಿಕ ಶಿಖಿಕೇತು ನಂದನಂಗೆ ಇಂತೆಂದನು=[ಅವನ ಪಾದಗಳನನ್ನು ಮುಟ್ಟಿ ಸಾಷ್ಟಾಂಗವಾಗಿ ನಮಸ್ಕರಿಸಿ, ತಾಮ್ರಧ್ವಜನು ಕೈಮುಗಿದು ಎರಡು ಅಶ್ವಗಳನ್ನು ಅವನ ಎದುರು ತರಿಸಿ ನಿಲ್ಲಿಸಿದನು. ಬಳಿಕ ಮಯೂರಧ್ವಜನು ಮಗನಿಗೆ ಹೀಗೆ ಹೇಳಿದನು.]
- ತಾತ್ಪರ್ಯ:ರತ್ನಪುರ ಪಟ್ಟಣದ ಹೊರವಲಯದಲ್ಲಿ ಅಲಂಕಾರವಾಗಿ ಕಟ್ಟಿದ್ದ ಯಜ್ಞಮಂಟಪದ ನಡುವೆ ದೀಕ್ಷೆಯನ್ನು ವಿಧಿಪೂರ್ವಕ ಪರಿಗ್ರಹಿಸಿ ಬ್ರಾಹ್ಮಣರು ಮತ್ತು ಪುರೋಹಿತರ ಜೊತೆ ಕುಳಿತಿದ್ದ ತಂದೆಯ ಬಳಿಗೆ ಬಂದು, ಅವನ ಪಾದಗಳನನ್ನು ಮುಟ್ಟಿ ಸಾಷ್ಟಾಂಗವಾಗಿ ನಮಸ್ಕರಿಸಿ, ತಾಮ್ರಧ್ವಜನು ಕೈಮುಗಿದು ಎರಡು ಅಶ್ವಗಳನ್ನು ಅವನ ಎದುರು ತರಿಸಿ ಮುಂದೆ ನಿಲ್ಲಿಸಿದನು. ಬಳಿಕ ಮಯೂರಧ್ವಜನು ಮಗನಿಗೆ ಹೀಗೆ ಹೇಳಿದನು.]
- (ಪದ್ಯ-೫೬)
|
ವತ್ಸರಂ ತುಂಬದೇತಕೆ ತಿರುಗಿತೀ ಹಯಂ |
ವತ್ಸ ಹೇಳಿದರೊಡನೆ ಮತ್ತೊಂದು ವಾಜಿ ಬಲ |
ವತ್ಸಮರ ಮುಖದಿಂದೆ ಜಯಸಿದಂತಿರ್ದುಪುದಿದೆತ್ತಣದು ನಿನಗಿಳೆಯೊಳು ||
ಮತ್ಸರದ ಕದನದಿಂದಾವ ಭೂಪನೊಳಾಯ್ತು |
ಮತ್ಸಮೀಪಕೆ ಬಂದ ಹದನಾವುದೆಂದು ಶ್ರೀ |
ಮತ್ಸಭಾಮಧ್ಯದೊಳ್ ನಸುನಗುತೆ ಶಿಖಿಕೇತು ತನಯನಂ ಬೆಸಗೊಂಡನು ||57||
|
ಪದವಿಭಾಗ-ಅರ್ಥ:
|
- ವತ್ಸರಂ ತುಂಬದೆ ಏತಕೆ ತಿರುಗಿತು ಈ ಹಯಂ, ವತ್ಸ ಹೇಳು ಇದರೊಡನೆ ಮತ್ತೊಂದು ವಾಜಿ ಬಲವತ್ ಸಮರ ಮುಖದಿಂದೆ ಜಯಸಿದಂತೆ ಇರ್ದುಪುದು=[(ಯಜ್ಞದ ಕುದುರೆಯನ್ನು ತಿರುಗಲು ಬಿಟ್ಟ ಒಂದು ವರ್ಷದ ನಣತರ ಹಿಂದಕ್ಕೆ ತರಬೇಕು. ಅದಕ್ಕಾಗಿ ಮಯೂರಧ್ವಜನು ಚಕಿತನಾಗಿ ಮಗನನ್ನು ಕೇಳಿದನು. ನಮ್ಮ ಅಶ್ವಮೇಧದ ಕುದುರೆಯು ಒಂದು ವರ್ಷ ವರ್ಷವು ತುಂಬದೆ ಏತಕ್ಕೆ ಈ ಹಯವು ಹಿಂತಿರುಗಿತು, ವತ್ಸ ಹೇಳು; ಇದರೊಡನೆ ಮತ್ತೊಂದು ಕುದುರೆಯು ಬಲವಾದ ಯುದ್ಧದ ಮೂಲಕ ಜಯಸಿದಂತೆ ಇರುವುದು!];; ಇದು ಎತ್ತಣದು ನಿನಗೆ ಇಳೆಯೊಳು ಮತ್ಸರದ ಕದನದಿಂದ ಆವ ಭೂಪನೊಳು ಆಯ್ತು=[ಇದು ಎಲ್ಲಿಯದು? ನಿನಗೆ ಈ ಭೂಮಿಯಲ್ಲಿ ಶತ್ರುವಿನೊಡನೆ ಯುದ್ಧವು ಯಾವ ರಾಜನೊಡನೆ ಆಯಿತು?]; ಮತ್ ಸಮೀಪಕೆ ಬಂದ ಹದನು ಆವುದು ಎಂದು ಶ್ರೀ ಮತ್ಸಭಾ ಮಧ್ಯದೊಳ್ ನಸುನಗುತೆ ಶಿಖಿಕೇತು ತನಯನಂ ಬೆಸಗೊಂಡನು=[ನನ್ನ ಸಮೀಪಕ್ಕೆ ಬಂದ ಕಾರಣ ಯಾವುದು? ಎಂದು ಸಂಪತ್ ಶೋಭಿತ ಸಬೆಯ ಮಧ್ಯದಲ್ಲಿ ಮಯೂರಧ್ವಜನು ನಸುನಗುತ್ತಾ ಮಗನನ್ನು ಕೇಳಿದನು].
- ತಾತ್ಪರ್ಯ:ಯಜ್ಞದ ಕುದುರೆಯನ್ನು ತಿರುಗಲು ಬಿಟ್ಟ ಒಂದು ವರ್ಷದ ನಣತರ ಹಿಂದಕ್ಕೆ ತರಬೇಕು. ಅದಕ್ಕಾಗಿ ಮಯೂರಧ್ವಜನು ಚಕಿತನಾಗಿ ಮಗನನ್ನು ಕೇಳಿದನು. ನಮ್ಮ ಅಶ್ವಮೇಧದ ಕುದುರೆಯು ಒಂದು ವರ್ಷ ವರ್ಷವು ತುಂಬದೆ ಏತಕ್ಕೆ ಈ ಹಯವು ಹಿಂತಿರುಗಿತು, ವತ್ಸ ಹೇಳು; ಇದರೊಡನೆ ಮತ್ತೊಂದು ಕುದುರೆಯು ಬಲವಾದ ಯುದ್ಧದ ಮೂಲಕ ಜಯಸಿದಂತೆ ಇರುವುದು! ಇದು ಎಲ್ಲಿಯದು? ನಿನಗೆ ಈ ಭೂಮಿಯಲ್ಲಿ ಶತ್ರುವಿನೊಡನೆ ಯುದ್ಧವು ಯಾವ ರಾಜನೊಡನೆ ಆಯಿತು? ನನ್ನ ಸಮೀಪಕ್ಕೆ ಬಂದ ಕಾರಣ ಯಾವುದು? ಎಂದು ಸಂಪತ್ ಶೋಭಿತ ಸಬೆಯ ಮಧ್ಯದಲ್ಲಿ ಮಯೂರಧ್ವಜನು ನಸುನಗುತ್ತಾ ಮಗನನ್ನು ಕೇಳಿದನು.
- (ಪದ್ಯ-೫೭)
|
ಚಿತ್ತಯಿಸು ತಾತ ನೃಪವರ ಯುಧಿಷ್ಠಿರ ಮಖ |
ದುತ್ತಮ ತುರಂಗಮಿದು ರಕ್ಷೆಗರ್ಜುನ ಕೃಷ್ಣ |
ರಿತ್ತಂಡಮುಂ ಪಡೆವೆರಸಿ ಬಂದೊಡಾನದಂ ಕಟ್ಟಿದೊಡೆ ತನಗವರೊಳು ||
ತೆತ್ತುದಾಹವಮೆಂದು ನಿಜಸುತಂ ಬಿನ್ನೈಸೆ |
ಮತ್ತೆ ಸಂಶಯದಿಂದೆ ಭೂಪಾಲಕಂ ತನ್ನ |
ಹತ್ತಿರಿಹ ನಿಜಮಂತ್ರಿ ನಕುಲಕೇತುವನೀಕ್ಷಿಸಲ್ಕಾತನಿಂತೆಂದೆನು ||58|||
|
ಪದವಿಭಾಗ-ಅರ್ಥ:
|
- ಚಿತ್ತಯಿಸು ತಾತ ನೃಪವರ ಯುಧಿಷ್ಠಿರ ಮಖದ ಉತ್ತಮ ತುರಂಗಮ್ ಇದು ರಕ್ಷೆಗೆ ಅರ್ಜುನ ಕೃಷ್ಣರು ಇತ್ತಂಡಮುಂ ಪಡೆವೆರಸಿ ಬಂದೊಡೆ ಆನು ಅದಂ ಕಟ್ಟಿದೊಡೆ ತನಗೆ ಅವರೊಳು ತೆತ್ತುದು ಆಹವಮ್ ಎಂದು ನಿಜಸುತಂ ಬಿನ್ನೈಸೆ=[ತಂದೆಯೇ, ದಯಮಾಡಿ ಕೇಳಿ, ರಾಜಶ್ರೇಷ್ಠನಾದ ಯುಧಿಷ್ಠಿರನ ಯಜ್ಞದ ಕುದುರೆ ಇದಿ. ಇದರ ರಕ್ಷಣೆಗೆ ಅರ್ಜುನ ಕೃಷ್ಣರು ಅದರ ಹಿಂದೆಮುಂದೆ ಸೈನ್ಯ ಸಮೇತ ನಮ್ಮರಾಜ್ಯದೊಳಗೆ ಬಂದಾಗ, ನಾನು ಅದನ್ನು ಕಟ್ಟಿದಾಗ, ತನಗೆ ಅವರೊಡನೆ ಯುದ್ಧವು ಸಂಬವಿಸಿತು, ಎಂದು ಅವನ ಮಗನು ಹೇಳಲು.];; ಮತ್ತೆ ಸಂಶಯದಿಂದೆ ಭೂಪಾಲಕಂ ತನ್ನ ಹತ್ತಿರಿಹ ನಿಜಮಂತ್ರಿ ನಕುಲಕೇತುವನು ಈಕ್ಷಿಸಲ್ಕೆ ಆತನು ಇಂತೆಂದೆನು=[ನಂಬಿಗೆಯಾಗದೆ, ಮತ್ತೆ ಸಂಶಯದಿಂದ ರಾಜನು ತನ್ನ ಹತ್ತಿರ ಇದ್ದ ನಿಜಮಂತ್ರಿಯಾದ ನಕುಲಕೇತುವನ್ನು ಪ್ಶ್ನಾರ್ಥಕವಾಗಿ ನೋಡಿದನು. ಆಗ ಮಂತ್ರಿಯು ಹೀಗೆ ಹೇಳಿದನು.]
- ತಾತ್ಪರ್ಯ:ತಾಮ್ರಧ್ವಜನು,'ತಂದೆಯೇ, ದಯಮಾಡಿ ಕೇಳಿ, ರಾಜಶ್ರೇಷ್ಠನಾದ ಯುಧಿಷ್ಠಿರನ ಯಜ್ಞದ ಕುದುರೆ ಇದಿ. ಇದರ ರಕ್ಷಣೆಗೆ ಅರ್ಜುನ ಕೃಷ್ಣರು ಅದರ ಹಿಂದೆಮುಂದೆ ಸೈನ್ಯ ಸಮೇತ ನಮ್ಮರಾಜ್ಯದೊಳಗೆ ಬಂದಾಗ, ನಾನು ಅದನ್ನು ಕಟ್ಟಿದಾಗ, ತನಗೆ ಅವರೊಡನೆ ಯುದ್ಧವು ಸಂಬವಿಸಿತು, ಎಂದು ಅವನ ಮಗನು ಹೇಳಲು.ನಂಬಿಗೆಯಾಗದೆ, ಮತ್ತೆ ಸಂಶಯದಿಂದ ರಾಜನು ತನ್ನ ಹತ್ತಿರ ಇದ್ದ ನಿಜಮಂತ್ರಿಯಾದ ನಕುಲಕೇತುವನ್ನು ಪ್ಶ್ನಾರ್ಥಕವಾಗಿ ನೋಡಿದನು. ಆಗ ಮಂತ್ರಿಯು ಹೀಗೆ ಹೇಳಿದನು.
- (ಪದ್ಯ-೫೮)
|
ಜೀಯ ಪುಸಿಯಲ್ಲ ಪಾಂಡವರಾಯನಶ್ವಮಂ |
ಕಾಯಬಂದಿಹ ಬಭ್ರುವಾಹನಾದಿಗಳ ನೊ |
ತ್ತಾಯದಿಂದೆಲ್ಲರಂ ಸದೆಬಡಿದುರುಳ್ಚಿ ಬಳಿಕೈದೆ ಕೃಷ್ಪಾರ್ಜುನರನು ||
ಸಾಯದಂತಡಗೆಡಹಿ ಪಿಡಿದು ಬಿಟ್ಟೊಡನೆ ಕೌಂ |
ತೇಯನ ತುರಗಮಂ ಕೊಂಡು ನಿನ್ನಾತ್ಮಜಂ |
ನೋಯದೈತಂದನೆನೆ ಮರುಗುತೆ ಮಯೂರಧ್ವಜಂ ಮಂತ್ರಿಗಿಂತೆಂದನು ||59||
|
ಪದವಿಭಾಗ-ಅರ್ಥ:
|
- ಜೀಯ ಪುಸಿಯಲ್ಲ ಪಾಂಡವರಾಯನ ಅಶ್ವಮಂ ಕಾಯಬಂದಿಹ ಬಭ್ರುವಾಹನಾದಿಗಳನು ಒತ್ತಾಯದಿಂದೆ ಎಲ್ಲರಂ ಸದೆಬಡಿದು ಉರುಳ್ಚಿ=[ಒಡೆಯನೇ, ಅವನು ಹೇಳಿದುದು ಸುಳ್ಳಲ್ಲ. ಪಾಂಡವರಾಯ ಧರ್ಮಜನ ಕುದುರೆಯನ್ನು ಕಾಯಲು ಬಂದಿದ್ದ ಬಭ್ರುವಾಹನ ಮೊದಲಾದ ವೀರರನ್ನು ಶಕ್ತಿ ಉಪಯೋಗಿಸಿ ಎಲ್ಲರನ್ನೂ ಸದೆಬಡಿದು ಸೋಲಿಸಿ,];; ಬಳಿಕ ಐದೆ ಕೃಷ್ಪಾರ್ಜುನರನು ಸಾಯದಂತೆ ಅಡಗೆಡಹಿ ಪಿಡಿದು ಬಿಟ್ಟೊಡನೆ ಕೌಂತೇಯನ ತುರಗಮಂ ಕೊಂಡು ನಿನ್ನ ಆತ್ಮಜಂ ನೋಯದೆ ಐತಂದನ ಎನೆ=[ಬಳಿಕ ಕೃಷ್ಪ ಮತ್ತು ಅರ್ಜುನರು ಯುದ್ಧಕ್ಕೆ ಬರಲು, ಸಾಯದಂತೆ ಅಡ್ಡ ಹಿಡಿದು ಕೆಡಗಿ, ಅವರನ್ನು ಅಲ್ಲೇ ಬಿಟ್ಟು, ಕೂಡಲೆ ಅರ್ಜುನನ ತುರಗವನ್ನು ಹಿಡಿದುಕೊಂಡು ನಿನ್ನ ಮಗನು, ತನಗೆ ಪೆಟ್ಟಾಗದೆ ಬಂದಿರುವನು ಎನ್ನಲು,];; ಮರುಗುತೆ ಮಯೂರಧ್ವಜಂ ಮಂತ್ರಿಗೆ ಇಂತೆಂದನು=[ಮಯೂರಧ್ವಜನು ಮರುಗುತ್ತಾ, ಮಂತ್ರಿಗೆ ಹೀಗೆ ಎಂದನು].
- ತಾತ್ಪರ್ಯ:ಒಡೆಯನೇ, ಅವನು ಹೇಳಿದುದು ಸುಳ್ಳಲ್ಲ. ಪಾಂಡವರಾಯ ಧರ್ಮಜನ ಕುದುರೆಯನ್ನು ಕಾಯಲು ಬಂದಿದ್ದ ಬಭ್ರುವಾಹನ ಮೊದಲಾದ ವೀರರನ್ನು ಶಕ್ತಿ ಉಪಯೋಗಿಸಿ ಎಲ್ಲರನ್ನೂ ಸದೆಬಡಿದು ಸೋಲಿಸಿ, ಬಳಿಕ ಕೃಷ್ಪ ಮತ್ತು ಅರ್ಜುನರು ಯುದ್ಧಕ್ಕೆ ಬರಲು, ಸಾಯದಂತೆ ಅಡ್ಡ ಹಿಡಿದು ಕೆಡಗಿ, ಅವರನ್ನು ಅಲ್ಲೇ ಬಿಟ್ಟು, ಕೂಡಲೆ ಅರ್ಜುನನ ತುರಗವನ್ನು ಹಿಡಿದುಕೊಂಡು ನಿನ್ನ ಮಗನು, ತನಗೆ ಪೆಟ್ಟಾಗದೆ ಬಂದಿರುವನು ಎನ್ನಲು, ಮಯೂರಧ್ವಜನು ಮರುಗುತ್ತಾ, ಮಂತ್ರಿಗೆ ಹೀಗೆ ಎಂದನು.
- (ಪದ್ಯ-೫೯)
|
ಅಕಟ ಕೆಡಿಸಿದನಲಾ ಕಾರ್ಯಮಂ ನಮಗಿದೇ |
ತಕೆ ಯಜ್ಞ ಮಿನ್ನು ನಮಗೀ ಮಗಂ ಪಗೆಯಲ್ತೆ|
ಸ್ವಕರಸ್ಥನಾದ ಹರಿಯಂ ಬಿಟ್ಟು ಕಟ್ಟಿದಂ ಗರ್ದಭಾಕೃತಿ ಹರಿಯನು ||
ವಿಕಳಮತಿಯಾಗಿರ್ದ ನೀತನೇವೇಳ್ವೆನು |
ತ್ಸುಕದಿಂದಮೊಡಗೂಡಿ ಮಂಚದೊಳ್ ಪ್ರಾಣನಾ |
ಯಕನಿರಲ್ ಮರೆದೊರಗಿದಧಮಾಂಗನೆಯವೊಲೆಂದವನಿಪಂ ಬಿಸುಸುಯ್ದನು ||60||
|
ಪದವಿಭಾಗ-ಅರ್ಥ:
|
- ಅಕಟ ಕೆಡಿಸಿದನಲಾ ಕಾರ್ಯಮಂ ನಮಗೆ ಇದೇತಕೆ ಯಜ್ಞಮ್ ಇನ್ನು ನಮಗೆ=[ಅಕಟ! ಕಾರ್ಯವನ್ನು ಕೆಡಿಸಿದನಲ್ಲಾ! ನಮಗೆ ಇನ್ನು ನಮಗೆ ಈ ಯಜ್ಞವು ಏಕೆ?];; ಈ ಮಗಂ ಪಗೆಯಲ್ತೆ ಸ್ವಕರಸ್ಥನಾದ ಹರಿಯಂ ಬಿಟ್ಟು ಕಟ್ಟಿದಂ ಗರ್ದಭಾಕೃತಿ ಹರಿ(ಕುದುರೆ)ಯನು=[ಈ ಮಗನು ಶತ್ರುವಲ್ಲವೇ? ಸ್ವಂತ ಕೈಗೆ ಸಿಕ್ಕಿದ ಭಗವಂತನಾದ ಹರಿಯನ್ನು ಬಿಟ್ಟು, ಕತ್ತೆಯ ರೂಪದ ಈ ಕುದುರೆಯನ್ನು ಕಟ್ಟಿ ತಂದನಲ್ಲಾ!];; ವಿಕಳಮತಿಯಾಗಿ ಇರ್ದನು ಈತನು ಏವೇಳ್ವೆನು ಉತ್ಸುಕದಿಂದಂ ಒಡಗೂಡಿ ಮಂಚದೊಳ್ ಪ್ರಾಣನಾಯಕನು ಇರಲ್ ಮರೆದೊರಗಿದ (ಮರೆತು ಒರಗಿದ-ನಿದ್ದೆಮಾಡಿದ?) ಅಧಮ ಅಂಗನೆಯವೊಲ್ ಎಂದು ಅವನಿಪಂ ಬಿಸುಸುಯ್ದನು=[ವಿವೇಕವಿಲ್ಲದ ಬುದ್ಧಿಯುಳ್ಳವನು ಇದ್ದಾನೆ ಇವನು, ಏನು ಹೇಳಲಿ!];; ಉತ್ಸುಕದಿಂದ ಒಡಗೂಡಿ ಮಂಚದೊಳ್ ಪ್ರಾಣನಾಯಕನು ಇರಲ್ ಮರೆದೊರಗಿದ ಅಧಮ ಅಂಗನೆಯವೊಲು ಎಂದು ಅವನಿಪಂ ಬಿಸುಸುಯ್ದನು =[ಪ್ರೀತಿ ಉತ್ಸಾಹದಿಂದ ಇರುವ ಪ್ರಾಣನಾಯಕ ಪತಿ ಮಂಚದಲ್ಲಿ ಇರಲು, ಅವನನ್ನು ಮರೆತು ನಿದ್ದೆಮಾಡಿದ ದಡ್ಡ ಹೆಣ್ಣಿನಂತಾಯಿತು, ಎಂದು ರಾಜ ಮಯೂರಧ್ವಜನು ನಿಟ್ಟುಸಿರುಬಿಟ್ಟನು.]
- ತಾತ್ಪರ್ಯ:ಅಕಟ! ಕಾರ್ಯವನ್ನು ಕೆಡಿಸಿದನಲ್ಲಾ! ನಮಗೆ ಇನ್ನು ನಮಗೆ ಈ ಯಜ್ಞವು ಏಕೆ? ಈ ಮಗನು ಶತ್ರುವಲ್ಲವೇ? ಸ್ವಂತ ಕೈಗೆ ಸಿಕ್ಕಿದ ಭಗವಂತನಾದ ಹರಿಯನ್ನು ಬಿಟ್ಟು, ಕತ್ತೆಯ ರೂಪದ ಈ ಕುದುರೆಯನ್ನು ಕಟ್ಟಿ ತಂದನಲ್ಲಾ! ವಿವೇಕವಿಲ್ಲದ ಬುದ್ಧಿಯುಳ್ಳವನು ಇದ್ದಾನೆ ಇವನು, ಏನು ಹೇಳಲಿ! ಪ್ರೀತಿ ಉತ್ಸಾಹದಿಂದ ಇರುವ ಪ್ರಾಣನಾಯಕ ಪತಿ ಮಂಚದಲ್ಲಿ ಇರಲು, ಅವನನ್ನು ಮರೆತು ನಿದ್ದೆಮಾಡಿದ ದಡ್ಡ ಹೆಣ್ಣಿನಂತಾಯಿತು, ಎಂದು ರಾಜ ಮಯೂರಧ್ವಜನು ನಿಟ್ಟುಸಿರುಬಿಟ್ಟನು.]
- (ಪದ್ಯ-೬೦)
|
ಮತ್ತೆ ಸುತನಂ ನೋಡಿ ಬೈದನೆಲವೊ ಪೋ |
ಗತ್ತ ನಿನ್ನಂ ಮಾಳ್ಪುದೇನಮಲ ತುಲಸಿಯಂ |
ದುತ್ತಿವಿಡಿದಬ್ಜಮಂ ಮಾಣ್ದುದತ್ತುರದ ಕುಸುಮದ ತೊಡವುಗಟ್ಟುವಂತೆ ||
ವುತ್ತಮವಿದೆಂದು ಕೃಷ್ಣಾರ್ಜುನರ ಬಿಟ್ಟು ತಂ |
ದಿತ್ತೆ ತುರಂಗಂಗಳಂ ಸಾಕಿನ್ನು ಯಜ್ಞ ಮವ |
ರೆತ್ತಲಿರ್ದಪರೆಂಬುದಂ ಪೇಳ್ದೊಡುಳುಹಿದವನೆಂದು ಭೂಪತಿ ಸುಯ್ದನು ||61||
|
ಪದವಿಭಾಗ-ಅರ್ಥ:
|
- ಮತ್ತೆ ಸುತನಂ ನೋಡಿ ಬೈದನು ಎಲವೊ ಪೋಗತ್ತ ನಿನ್ನಂ ಮಾಳ್ಪುದೇನು=[ಮತ್ತೆ ಮಗನನ್ನು ನೋಡಿ ನಿಂದಿಸಿದನು; ಎಲವೊ! ಆಚೆ ಹೊಗು! ನಿನ್ನನ್ನು ಏನು ಮಾಡಬೇಕು?];; ಅಮಲ ತುಲಸಿಯಂದುತ್ತಿವಿಡಿದ (ತುಳಸಿಯಂ+ ತುತ್ತುವಿಡಿದ) ಅಬ್ಜಮಂ ಮಾಣ್ದು ದತ್ತುರದ ಕುಸುಮದ ತೊಡವುಗಟ್ಟುವಂತೆ (ತೊಡವು:ಆಭರಣ, ಮಾಲೆ)=[ಪವಿತ್ರವಾದ ತುಲಸಿಯನ್ನು ಸೇರಿಸಿ ಕಟ್ಟಿದ ಕಮಲದ ಮಾಲೆಯನ್ನು ತಿರಸ್ಕರಿಸಿ, ವಿಷಪೂರಿತ ಹೂವಾದ ದತ್ತೂರಿ ಹೂವಿನ ಮಾಲೆಯನ್ನು ಕುತ್ತಿಗೆಗೆ ಕಟ್ಟುವಂತೆ/ ಕಟ್ಟಿಕೊಳ್ಳುವಂತೆ.];; ವುತ್ತಮವು ಇದೆಂದು ಕೃಷ್ಣಾರ್ಜುನರ ಬಿಟ್ಟು ತಂದಿತ್ತೆ ತುರಂಗಂಗಳಂ ಸಾಕಿನ್ನು ಯಜ್ಞಂ ಅವರು ಎತ್ತಲು ಇರ್ದಪರು ಎಂಬುದಂ ಪೇಳ್ದೊಡೆ ಉಳುಹಿದವನೆಂದು ಭೂಪತಿ ಸುಯ್ದನು=[ಕುದುರೆಯೇ ಉತ್ತಮವು ಇದೆಂದು, ಕೃಷ್ಣಾರ್ಜುನರನ್ನು ಬಿಟ್ಟು ತುರಗಗಳನ್ನು ತಂದಿತ್ತೆ; ಯಜ್ಞವು ಇನ್ನು ಸಾಕು, ಅವರು ಎಲ್ಲಿರುವರು ಎನ್ನುವುದನ್ನು ಹೇಳಿದರೆ ನನ್ನನ್ನು ನೀನು ಬದುಕಿಸಿದಂತಾಗುವುದು ಎಂದು ಮಯೂರಧ್ವಜನು ಭೂಪತಿಯು ನಿಟ್ಟುಸಿರುಬಿಟ್ಟನು.]
- ತಾತ್ಪರ್ಯ:ಮತ್ತೆ ಮಗನನ್ನು ನೋಡಿ ನಿಂದಿಸಿದನು; ಎಲವೊ! ಆಚೆ ಹೊಗು! ನಿನ್ನನ್ನು ಏನು ಮಾಡಬೇಕು? ಪವಿತ್ರವಾದ ತುಲಸಿಯನ್ನು ಸೇರಿಸಿ ಕಟ್ಟಿದ ಕಮಲದ ಮಾಲೆಯನ್ನು ತಿರಸ್ಕರಿಸಿ, ವಿಷಪೂರಿತ ಹೂವಾದ ದತ್ತೂರಿ ಹೂವಿನ ಮಾಲೆಯನ್ನು ಕುತ್ತಿಗೆಗೆ ಕಟ್ಟುವಂತೆ/ ಕಟ್ಟಿಕೊಳ್ಳುವಂತೆ, ಕುದುರೆಯೇ ಉತ್ತಮವು ಇದೆಂದು, ಕೃಷ್ಣಾರ್ಜುನರನ್ನು ಬಿಟ್ಟು ತುರಗಗಳನ್ನು ತಂದಿತ್ತೆ; ಯಜ್ಞವು ಇನ್ನು ಸಾಕು, ಅವರು ಎಲ್ಲಿರುವರು ಎನ್ನುವುದನ್ನು ಹೇಳಿದರೆ ನನ್ನನ್ನು ನೀನು ಬದುಕಿಸಿದಂತಾಗುವುದು ಎಂದು ಮಯೂರಧ್ವಜನು ಭೂಪತಿಯು ನಿಟ್ಟುಸಿರುಬಿಟ್ಟನು.]
- (ಪದ್ಯ-೬೧)
|
ಕಡೆಯಾದುದಧ್ವರಕೆ ಸಾಕಿನ್ನು ತುರಗಮಂ |
ಪೊಡೆಯೆತ್ತಲಾದೊಡಂ ಮುರಮಥನ ಪಾರ್ಥರಾ |
ವೆಡೆ ತನಗದಂ ತೋರವೇಳ್ಪುದೆಂದಾ ಮಯೂರಧ್ಜಜಂ ಮರುಗಿ ಮರುಗಿ ||
ಬಿಡದೆ ನಿಜ ತನಯನಂ ಬೈದು ಗರ್ಜಿಸಿ ತನ್ನ |
ಮಡದಿಸಹಿತಿರುತಿರ್ದನಾ ದಿನಂ ದೇವಪುರ |
ದೊಡೆಯ ಲಕ್ಷ್ಮೀಶನಂ ಕಣ್ಣಾರೆ ಕಾಣಬೇಕೆಂಬ ಕಡುತವಕದಿಂದೆ ||62||
|
ಪದವಿಭಾಗ-ಅರ್ಥ:
|
- ಕಡೆಯಾದುದು ಅಧ್ವರಕೆ ಸಾಕು ಇನ್ನು ತುರಗಮಂ ಪೊಡೆಯೆತ್ತಲು=[ಅಶ್ವಮೇಧ ಯಜ್ಞಕ್ಕೆ ನಿಲುಗಡೆ ಬಂತು; ಸಾಕು, ಇನ್ನು ಕುದರೆಯನ್ನು ಅತ್ತ ಹೊಡೆ!];; ಆದೊಡಂ ಮುರಮಥನ ಪಾರ್ಥರು ಆವೆಡೆ ತನಗೆ ಅದಂ ತೋರವೇಳ್ಪುದು ಎಂದು ಆ ಮಯೂರಧ್ಜಜಂ ಮರುಗಿ ಮರುಗಿ=[ಆದರೂ, ಕೃಷ್ಣ ಮತ್ತು ಪಾರ್ಥರು ಯಾವಕಡೆ ಇದ್ದಾರೆ? ತನಗೆ ಅದನ್ನು ತೋರಿಸಿ/ನಿರ್ದಿಷ್ಟವಾಗಿ ಹೇಳಬೇಕು, ಎಂದು ಆ ಮಯೂರಧ್ಜಜನು ಬಹಳ ನೊಂದು ಮರುಗಿ, ಆ ದಿನ];; ಬಿಡದೆ ನಿಜ ತನಯನಂ ಬೈದು ಗರ್ಜಿಸಿ ತನ್ನ ಮಡದಿಸಹಿತ ಇರುತಿರ್ದನು ಆ ದಿನಂ=[ಬಿಡದೆ ತನ್ನ ಮಗನನ್ನು ಬೈದು ಗರ್ಜಿಸಿ ತನ್ನ ಪತ್ನಿಸಹಿತ ಇದ್ದನು];; ದೇವಪುರದ ಒಡೆಯ ಲಕ್ಷ್ಮೀಶನಂ ಕಣ್ಣಾರೆ ಕಾಣಬೇಕೆಂಬ ಕಡುತವಕದಿಂದೆ=[ ದೇವಪುರದ ಒಡೆಯ ಲಕ್ಷ್ಮೀಶನನ್ನು ಕಣ್ಣಾರೆ ಕಾಣಬೇಕೆಂಬ ಅತೀವ ತವಕದಿಂದ ಇದ್ದನು.]
- ತಾತ್ಪರ್ಯ:ಅಶ್ವಮೇಧ ಯಜ್ಞಕ್ಕೆ ನಿಲುಗಡೆ ಬಂತು; ಸಾಕು, ಇನ್ನು ಕುದರೆಯನ್ನು ಅತ್ತ ಹೊಡೆ! ಆದರೂ, ಕೃಷ್ಣ ಮತ್ತು ಪಾರ್ಥರು ಯಾವಕಡೆ ಇದ್ದಾರೆ? ತನಗೆ ಅದನ್ನು ತೋರಿಸಿ/ನಿರ್ದಿಷ್ಟವಾಗಿ ಹೇಳಬೇಕು, ಎಂದು ಆ ಮಯೂರಧ್ಜಜನು ಬಹಳ ನೊಂದು ಮರುಗಿ, ಆ ದಿನ ಬಿಡದೆ ತನ್ನ ಮಗನನ್ನು ಬೈದು ಗರ್ಜಿಸಿ, ದೇವಪುರದ ಒಡೆಯ ಲಕ್ಷ್ಮೀಶನನ್ನು ಕಣ್ಣಾರೆ ಕಾಣಬೇಕೆಂಬ ಅತೀವ ತವಕದಿಂದ ತನ್ನ ಪತ್ನಿಸಹಿತ ಇದ್ದನು.]
- (ಪದ್ಯ-೬೨)XXIV-II
|
- [೧]
- [೨]
- ಸಂಧಿ ೨೫ಕ್ಕೆ ಪದ್ಯಗಳು;೧೩೭೨.
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.