ವಿಷಯಕ್ಕೆ ಹೋಗು

ಜೈಮಿನಿ ಭಾರತ/ಮುವತ್ನಾಲ್ಕನೆಯ ಸಂಧಿ

ವಿಕಿಸೋರ್ಸ್ದಿಂದ

ಮೂವತ್ತುನಾಲ್ಕನೆಯ ಸಂಧಿ

[ಸಂಪಾದಿಸಿ]

ಪದ್ಯ:-:ಸೂಚನೆ:

[ಸಂಪಾದಿಸಿ]

ಸೂಚನೆ: ಮಿಗೆ ಮೂಜಗಂ ತಣಿಯೆ ಹಯಮೇಧ ಯಜ್ಞಮಂ |
ಮುಗಿಸಿ ಧರ್ಮಾತ್ಮಜಂ ಕೃಷ್ಣಾದಿ ಸಕಲ ನೃಪ |
ತಿಗಳನವರವರ ನಗರಂಗಳ್ಗೆ ಕಳುಹಿ ಸುಖದಿಂದೆ ರಾಜ್ಯಂ ಗೈದನು ||

ಪದವಿಭಾಗ-ಅರ್ಥ:
ಕಥಾಸಾರ:: ಮಿಗೆ (ಬಹಳ) ಮೂಜಗಂ ತಣಿಯೆ ಹಯಮೇಧ ಯಜ್ಞಮಂ ಮುಗಿಸಿ ಧರ್ಮಾತ್ಮಜಂ ಕೃಷ್ಣಾದಿ ಸಕಲ ನೃಪತಿಗಳನವರವರ ನಗರಂಗಳ್ಗೆ ಕಳುಹಿ ಸುಖದಿಂದೆ ರಾಜ್ಯಂ ಗೈದನು==[ಮೂರು ಜಗತ್ತೂ ಪೂರ್ಣ ತೃಪ್ತಿ ಪಡುವಂತೆ ಅಶ್ವಮೇಧ ಯಜ್ಞವನ್ನು ಮುಗಿಸಿ, ಯಮಧರ್ಮನ ಮಗ ಯುಧಿಷ್ಠಿರನು ಕೃಷ್ಣನೇ ಮೊದಲಾದದ ಸಕಲ ರಾಜರುಗಳನ್ನು ಅವರವರ ನಗರಗಳಿಗೆ ಕಳುಹಿಸಿ ಸುಖದಿಂದ ರಾಜ್ಯವನ್ನು ಪರಿಪಾಲನೆ ಮಾಡಿದನು.]
  • ತಾತ್ಪರ್ಯ:ಕಥಾಸಾರ::ಮೂರು ಜಗತ್ತೂ ಪೂರ್ಣ ತೃಪ್ತಿ ಪಡುವಂತೆ ಅಶ್ವಮೇಧ ಯಜ್ಞವನ್ನು ಮುಗಿಸಿ, ಯಮಧರ್ಮನ ಮಗ ಯುಧಿಷ್ಠಿರನು ಕೃಷ್ಣನೇ ಮೊದಲಾದದ ಸಕಲ ರಾಜರುಗಳನ್ನು ಅವರವರ ನಗರಗಳಿಗೆ ಕಳುಹಿಸಿ ಸುಖದಿಂದ ರಾಜ್ಯವನ್ನು ಪರಿಪಾಲನೆ ಮಾಡಿದನು.
  • (ಪದ್ಯ-ಸೂಚನೆ)II-I-XIIX

ಪದ್ಯ:-::

[ಸಂಪಾದಿಸಿ]

ಅರಸ ಕೇಳರುವತ್ತು ನಾಲ್ಕು ದಂಪತಿಗಳ |
ಧ್ವರವ ಋತ್ವಿಕ್ಕುಗಳ್ವೆರಸಿ ವೇದವ್ಯಾಸ |
ಪರಮ ಋಷಿ ಗಂಗೆಯೊಳ್ ಜಲದೇವತೆಯನರ್ಚಿಸಿದ ಮಂತ್ರಿತೋದಕವನು ||
ವರ ಪುಷ್ಪ ಪಲ್ಲವದ ಪೊಂಗಳಸಮಂ ತುಂಬಿ |
ಕರದೊಳನಸೂಯೆಗೀಯಲ್ಕವಳರುಂಧತಿಯ |
ಶಿರಕೆ ಪೊರಿಸಿದೊಡಾಕೆ ರುಕ್ಮಿಣಿಯ ಸಿರಿಮುಡಿಯೊಳಿರಿಸಿ ನಗುತಿಂತೆಂದಳು ||1||

ಪದವಿಭಾಗ-ಅರ್ಥ:
ಅರಸ ಕೇಳು ಅರುವತ್ತು ನಾಲ್ಕು ದಂಪತಿಗಳು ಅಧ್ವರವ ಋತ್ವಿಕ್ಕುಗಳ್ ವೆರಸಿ ವೇದವ್ಯಾಸ ಪರಮ ಋಷಿ ಗಂಗೆಯೊಳ್ ಜಲದೇವತೆಯನು ಅರ್ಚಿಸಿದ ಮಂತ್ರಿತ ಉದಕವನು==[ಜನಮೇಜಯ ಅರಸನೇ ಕೇಳು, ಅರುವತ್ತು ನಾಲ್ಕು ದಂಪತಿಗಳು ಅಧ್ವರವ ಋತ್ವಿಕ್ಕುಗಳು ಸೇರಿ ವೇದವ್ಯಾಸ ಪರಮ ಋಷಿ ಗಂಗೆಯಲ್ಲಿ ಜಲದೇವತೆಯನ್ನು ಅರ್ಚಿಸಿದ ಮಂತ್ರಿತ ಉದಕವನ್ನು/ ಜಲವನ್ನು ];; ವರ ಪುಷ್ಪ ಪಲ್ಲವದ ಪೊಂಗಳಸಮಂ ತುಂಬಿ ಕರದೊಳು ಅನಸೂಯೆಗೆ ಈಯಲ್ಕೆ ಅವಳು ಅರುಂಧತಿಯ ಶಿರಕೆ ಪೊರಿಸಿದೊಡೆ ಆಕೆ ರುಕ್ಮಿಣಿಯ ಸಿರಿಮುಡಿಯೊಳು ಇರಿಸಿ ನಗುತ ಇಂತೆಂದಳು==[ಪೂಜ್ಯವಾದ ಹೂವು ಚಿಗುರೆಲೆಯಿಂದ ಅಲಂಕರಿಸಿದ ಚಿನ್ನದ ಕಳಸವನ್ನು ತುಂಬಿ ಕೈಯಿಂದ ಅನಸೂಯೆಗೆ ಕೊಡಲು, ಅವಳು ಅರುಂಧತಿಯ ತಲೆಯಮೇಲೆ ಹೊರಿಸಿದಾಗ, ಆಕೆ ರುಕ್ಮಿಣಿಯ ಸಿರಿಮುಡಿಯಲ್ಲಿ ಇರಿಸಿ ನಗುತ್ತ ಹೀಗೆ ಕೇಳಿದಳು].
  • ತಾತ್ಪರ್ಯ:ಜನಮೇಜಯ ಅರಸನೇ ಕೇಳು, ಅರುವತ್ತು ನಾಲ್ಕು ದಂಪತಿಗಳು ಅಧ್ವರವ ಋತ್ವಿಕ್ಕುಗಳು ಸೇರಿ ವೇದವ್ಯಾಸ ಪರಮ ಋಷಿ ಗಂಗೆಯಲ್ಲಿ ಜಲದೇವತೆಯನ್ನು ಅರ್ಚಿಸಿದ ಮಂತ್ರಿತ ಉದಕವನ್ನು/ ಜಲವನ್ನು ಪೂಜ್ಯವಾದ ಹೂವು ಚಿಗುರೆಲೆಯಿಂದ ಅಲಂಕರಿಸಿದ ಚಿನ್ನದ ಕಳಸವನ್ನು ತುಂಬಿ ಕೈಯಿಂದ ಅನಸೂಯೆಗೆ ಕೊಡಲು, ಅವಳು ಅರುಂಧತಿಯ ತಲೆಯಮೇಲೆ ಹೊರಿಸಿದಾಗ, ಆಕೆ ರುಕ್ಮಿಣಿಯ ಸಿರಿಮುಡಿಯಲ್ಲಿ ಇರಿಸಿ ನಗುತ್ತ ಹೀಗೆ ಕೇಳಿದಳು.
  • (ಪದ್ಯ-೧)

ಪದ್ಯ:-::

[ಸಂಪಾದಿಸಿ]

ದೇವಿ ಸಿರಿಮುಡಿಗಲರ್ ಪೊರೆಯಹುದು ನಿನಗೆ ನೀರ್ |
ತೀವಿರ್ದ ಪೊಂಗಳಸಮಿದು ತಿಣ್ಣಮಾಗದೆಂ |
ದಾ ವಶಿಷ್ಠನ ರಮಣಿ ರುಕ್ಮಿಣಿಗೆ ವಿನಯದಿಂ ನುಡಿದೊಡೆ ಸುಭದ್ರೆ ಕೇಳ್ದು ||
ಗೋವರ್ಧನವನಾಂತ ವಿರ್ಶವಕುಕ್ಷಿಯ ನೆದೆಯೊ |
ಳಾವಗಂ ಧರಿಸಿಕೊಂಡಿರ್ದ ಮಾನಿನಿಗೆ ಬಿ |
ಣ್ಣಾವುದು ಪತಿವ್ರತಾಧರ್ಮಮಿದಕಳುಕಲೇತಕೆ ತಾಯೆ ನೀನೆಂದಳು ||2||

ಪದವಿಭಾಗ-ಅರ್ಥ:
ದೇವಿ ಸಿರಿಮುಡಿಗೆ ಅಲರ್ ಪೊರೆಯಹುದು ನಿನಗೆ ನೀರ್ ತೀವಿರ್ದ ಪೊಂಗಳಸಂ ಇದು ತಿಣ್ಣಮಾಗದೆಂದು ಆ ವಶಿಷ್ಠನ ರಮಣಿ ರುಕ್ಮಿಣಿಗೆ ವಿನಯದಿಂ ನುಡಿದೊಡೆ ಸುಭದ್ರೆ ಕೇಳ್ದು==[ಅರುಂದತಿಯು ಹೇಳಿದಳು, ದೇವಿರುಕ್ಮಿಣಿಯ ತಲೆಗೆ ಚಿಗುರಿನ ಕಳಸ ಹೊರೆಯಾಗುವುದು; ನಿನಗೆ ನೀರು ತುಂಬಿದ ಹೊನ್ನಿನ ಕಳಸವು ಇದು ಕಷ್ಟವಾಗದು ಎಂದು, ಆ ವಶಿಷ್ಠನ ಪತ್ನಿ ಅರುಂಧತಿ ರುಕ್ಮಿಣಿಗೆ ವಿನಯದಿಂದ ಹೇಳಿದಾಗ, ಸುಭದ್ರೆ ಕೇಳಿ ];; ಗೋವರ್ಧನವನು ಆಂತ ವಿಶ್ವಕುಕ್ಷಿಯನು ಎದೆಯೊಳು ಆವಗಂ (ಯಾವಾಗಲೂ) ಧರಿಸಿಕೊಂಡಿರ್ದ ಮಾನಿನಿಗೆ ಬಿಣ್ಣಾವುದು ಪತಿವ್ರತಾಧರ್ಮಂ ಇದಕೆ ಅಳುಕಲು ಏತಕೆ ತಾಯೆ ನೀನೆಂದಳು==[ಗೋವರ್ಧನ ಪರ್ವತವನ್ನು ಹೊತ್ತ, ಹೊಟ್ಟೆಯಲ್ಲಿ ವಿಶ್ವವನ್ನು ಹೊಂದಿದವನನ್ನು ಯಾವಾಗಲೂ ಎದೆಯಲ್ಲಿ ಧರಿಸಿಕೊಂಡಿರುವ ಮಾನಿನಿಯಾದ ರುಕ್ಮಿಣಿಗೆ ಕಷ್ಟವಾವುದು! ಪತಿವ್ರತಾಧರ್ಮವು ಇದಕ್ಕೆ ಹಿಂಜರಿಯುವುದೇಕೆ ತಾಯೆ ನೀನು ಎಂದು ಸುಭದ್ರೆ ಅರುಂದತಿಗೆ ಹೇಳಿದಳು].
  • ತಾತ್ಪರ್ಯ:ಅರುಂದತಿಯು ಹೇಳಿದಳು, ದೇವಿರುಕ್ಮಿಣಿಯ ತಲೆಗೆ ಚಿಗುರಿನ ಕಳಸ ಹೊರೆಯಾಗುವುದು; ನಿನಗೆ ನೀರು ತುಂಬಿದ ಹೊನ್ನಿನ ಕಳಸವು ಇದು ಕಷ್ಟವಾಗದು ಎಂದು, ಆ ವಶಿಷ್ಠನ ಪತ್ನಿ ಅರುಂಧತಿ ರುಕ್ಮಿಣಿಗೆ ವಿನಯದಿಂದ ಹೇಳಿದಾಗ, ಸುಭದ್ರೆ ಕೇಳಿ ಗೋವರ್ಧನ ಪರ್ವತವನ್ನು ಹೊತ್ತ, ಹೊಟ್ಟೆಯಲ್ಲಿ ವಿಶ್ವವನ್ನು ಹೊಂದಿದವನನ್ನು ಯಾವಾಗಲೂ ಎದೆಯಲ್ಲಿ ಧರಿಸಿಕೊಂಡಿರುವ ಮಾನಿನಿಯಾದ ರುಕ್ಮಿಣಿಗೆ ಕಷ್ಟವಾವುದು! ಪತಿವ್ರತಾ ಧರ್ಮವು ಇದಕ್ಕೆ ತಾಯೆ ನೀನು ಹಿಂಜರಿಯುವುದೇಕೆ ಎಂದು ಸುಭದ್ರೆ ಅರುಂದತಿಗೆ ಹೇಳಿದಳು.
  • (ಪದ್ಯ-೨)

ಪದ್ಯ:-::

[ಸಂಪಾದಿಸಿ]

ನಸುನಗುತರುಂಧತಿಗೆ ಬಳಿಕ ರುಕ್ಮಿಣಿ ನುಡಿದ |
ಳುಸಿರಲಂಜುವೆನೀ ಸುಭದ್ರೆಯ ವಿಶೇಷ ಗುಣ |
ದೆಸಕಮಂ ನಮ್ಮಂತೆ ಬಿಡದೆರಮಣನ ನೆದೆಯೊಳಾವಗಂ ಧರಿಸಳೊಮ್ಮೆ ||
ಒಸೆದೊಡೆ ವಿಚಾರಿಸುವಳಲ್ಲದೊಡೆ ವಲ್ಲಭನ
ಗಸಣಿಯಂಪಾರಳ್ ಪತಿವ್ರತಾಧರ್ಮದೊಳ್ |
ಪೊಸತೆಂದು ಸರಸವಂ ಮಾಡುತೈದೆಯರೊಡನೆ ಪೊಂಗಳಸಮಂ ತಾಳ್ದಳು ||3||

ಪದವಿಭಾಗ-ಅರ್ಥ:
ನಸುನಗುತ ಅರುಂಧತಿಗೆ ಬಳಿಕ ರುಕ್ಮಿಣಿ ನುಡಿದಳು ಉಸಿರಲು ಅಂಜುವೆನು ಈ ಸುಭದ್ರೆಯ ವಿಶೇಷ ಗುಣದ ಎಸಕಮಂ (ಎಸಕ: ಸೊಬಗು) ನಮ್ಮಂತೆ ಬಿಡದೆ ರಮಣನನು ಎದೆಯೊಳು ಆವಗಂ ಧರಿಸಳು==[ನಸುನಗುತ್ತ ಅರುಂಧತಿಗೆ ಬಳಿಕ ರುಕ್ಮಿಣಿ ಹೇಳಿದಳು, 'ಹೇಳಲು ಅಂಜುವೆನು ಈ ಸುಭದ್ರೆಯ ವಿಶೇಷ ಗುಣದ ಸೊಬಗನ್ನು; ನಮ್ಮಂತೆ ಬಿಡದೆ ರಮಣನನ್ನು ಎದೆಯಲ್ಲಿ ಯಾವಾಗಲೂ ಧರಿಸುವುದಿಲ್ಲ.];; ಒಮ್ಮೆ ಒಸೆದೊಡೆ (ಒಸೆ:ಪ್ರೀತಿಸು) ವಿಚಾರಿಸುವಳು ಅಲ್ಲದೊಡೆ ವಲ್ಲಭನ ಗಸಣಿಯಂಪಾರಳ್ (ಘರ್ಷಣೆ) ಪತಿವ್ರತಾಧರ್ಮದೊಳ್ ಪೊಸತೆಂದು ಸರಸವಂ ಮಾಡುತ ಐದೆಯರೊಡನೆ ಪೊಂಗಳಸಮಂ ತಾಳ್ದಳು==[ಒಮ್ಮೆ ಪ್ರೀತಿಸಿ ಸೇರಿದರೆ ವಿಚಾರಿಸುವಳು, ಇಲ್ಲದಿದ್ದರೆ ವಲ್ಲಭನಿಗೆ ತೊಂದರೆ ಕೊಡಲು ಹೋಗುವುದಿಲ್ಲ. ಪತಿವ್ರತಾಧರ್ಮದಲ್ಲಿ ಇಉ ಹೊಸತು ಎಂದು ಸರಸವನ್ಉ ಮಾಡುತ್ತ ಮುತ್ತೈದೆಯರೊಡನೆ ಹೊನ್ನಿನ ಕಳಸವನ್ನು ಹೊತ್ತಳು.]
  • ತಾತ್ಪರ್ಯ:ನಸುನಗುತ್ತ ಅರುಂಧತಿಗೆ ಬಳಿಕ ರುಕ್ಮಿಣಿ ಹೇಳಿದಳು, 'ಹೇಳಲು ಅಂಜುವೆನು ಈ ಸುಭದ್ರೆಯ ವಿಶೇಷ ಗುಣದ ಸೊಬಗನ್ನು; ನಮ್ಮಂತೆ ಬಿಡದೆ ರಮಣನನ್ನು ಎದೆಯಲ್ಲಿ ಯಾವಾಗಲೂ ಧರಿಸುವುದಿಲ್ಲ. ಒಮ್ಮೆ ಪ್ರೀತಿಸಿ ಸೇರಿದರೆ ವಿಚಾರಿಸುವಳು, ಇಲ್ಲದಿದ್ದರೆ ವಲ್ಲಭನಿಗೆ ತೊಂದರೆ ಕೊಡಲು ಹೋಗುವುದಿಲ್ಲ. ಪತಿವ್ರತಾಧರ್ಮದಲ್ಲಿ ಇದು ಹೊಸತು ಎಂದು ಸರಸವನ್ನು ಮಾಡುತ್ತ ಮುತ್ತೈದೆಯರೊಡನೆ ಹೊನ್ನಿನ ಕಳಸವನ್ನು ಹೊತ್ತಳು.
  • (ಪದ್ಯ-೩)

ಪದ್ಯ:-::

[ಸಂಪಾದಿಸಿ]

ಅರುವತ್ತು ನಾಲ್ಕು ದಂಪತಿಗಳೊಪ್ಪುವ ಗಂಗೆ |
ದೊರೆಯಿಂದೆ ಬಳಿಕ ಮಖ ಮಂಟಪಕೆ ನೀರ್ದುಂಬಿ |
ಮೆರೆವ ಪ೦ಂಗಳಸಂಗಳಂ ಕೊಂಡು ಬಂದರುತ್ಸವದಿಂದೆ ಮುನಿಗಳೊಡನೆ ||
ಕರೆದುವನಿಬರ ಮೇಲೆ ಮುತ್ತುಗಳ ಸೇಸೆಗಳ್ |
ನೆರೆ ಮೊಳಗಿದುವು ಸಕಲ ವಾದ್ಯಂಗಳರ್ಭರದೊಳ್ |
ತುರುಗಿತನಿಮಿಷ ವಿತತಿ ಕೌತುಕಕೆ ನೆರೆದುದು ಮಹಾಜನಂ ಮೇದಿನಿಯೊಳು ||4||

ಪದವಿಭಾಗ-ಅರ್ಥ:
ಅರುವತ್ತು ನಾಲ್ಕು ದಂಪತಿಗಳೊಪ್ಪುವ ಗಂಗೆದೊರೆಯಿಂದೆ ಬಳಿಕ ಮಖ ಮಂಟಪಕೆ ನೀರ್ ತುಂಬಿ ಮೆರೆವ ಪೊಂಗಳಸಂಗಳಂ ಕೊಂಡು ಬಂದರು ಉತ್ಸವದಿಂದೆ ಮುನಿಗಳೊಡನೆ==[ಅರುವತ್ತು ನಾಲ್ಕು ದಂಪತಿಗಳು ಯೋಗ್ಯವಾದ ಗಂಗಾನದಿಯಿಂದ ತಂದಿರುವ ನೀರನ್ನು, ತುಂಬಿ ಬಳಿಕ ಯಜ್ಞಮಂಟಪಕ್ಕೆ ಶೋಭಿಸುವ ಹೊನ್ನಿನ ಕಳಸಗಳನ್ನು ಸಂತೋಷದಿಂದ ಮುನಿಗಳೊಡನೆ ತೆಗೆದುಕೊಂಡು ಬಂದರು];; ಕರೆದುವು ಅನಿಬರ ಮೇಲೆ ಮುತ್ತುಗಳ ಸೇಸೆಗಳ್ ನೆರೆ ಮೊಳಗಿದುವು ಸಕಲ ವಾದ್ಯಂಗಳು ಅಭ್ರರದೊಳ್ ತುರುಗಿತು ಅನಿಮಿಷ ವಿತತಿ ಕೌತುಕಕೆ ನೆರೆದುದು ಮಹಾಜನಂ ಮೇದಿನಿಯೊಳು==[ ಆಗ ಅವರೆಲ್ಲರ ಮೇಲೆ ಮುತ್ತುಗಳ ಸೇಸೆಗಳು ಸೂಸಿದವು, ಸುರಿದವು. ಆಗ ಅದರ ಜೊತೆ ಆಕಾಶದಲ್ಲಿ ಸಕಲ ವಾದ್ಯಂಗಳು ಮೊಳಗಿದುವು ಮತ್ತು ಅಲ್ಲಿ ದೇವತೆಗಳ ಸಮೂಹ ತುಂಬಿತು. ಈ ಆಶ್ಚರ್ಯವನ್ನು ನೊಡಲು ಭೂಮಿಯಲ್ಲಿ ಮಹಾಜನರು ನೆರೆದುರು.]
  • ತಾತ್ಪರ್ಯ:ಅರುವತ್ತು ನಾಲ್ಕು ದಂಪತಿಗಳು ಯೋಗ್ಯವಾದ ಗಂಗಾನದಿಯಿಂದ ತಂದಿರುವ ನೀರನ್ನು, ತುಂಬಿ ಶೋಭಿಸುವ ಹೊನ್ನಿನ ಕಳಸಗಳನ್ನು ಬಳಿಕ ಯಜ್ಞಮಂಟಪಕ್ಕೆಸಂತೋಷದಿಂದ ಮುನಿಗಳೊಡನೆ ತೆಗೆದುಕೊಂಡು ಬಂದರು. ಆಗ ಅವರೆಲ್ಲರ ಮೇಲೆ ಮುತ್ತುಗಳ ಸೇಸೆಗಳು ಸೂಸಿದವು, ಸುರಿದವು. ಆಗ ಅದರ ಜೊತೆ ಆಕಾಶದಲ್ಲಿ ಸಕಲ ವಾದ್ಯಂಗಳು ಮೊಳಗಿದುವು ಮತ್ತು ಅಲ್ಲಿ ದೇವತೆಗಳ ಸಮೂಹ ತುಂಬಿತು. ಈ ಆಶ್ಚರ್ಯವನ್ನು ನೊಡಲು ಭೂಮಿಯಲ್ಲಿ ಮಹಾಜನರು ನೆರೆದುರು.
  • (ಪದ್ಯ-೪)II-I

ಪದ್ಯ:-::

[ಸಂಪಾದಿಸಿ]

ಆ ಪುಣ್ಯ ಸಲಿಲದೊಳ್ ಸೇಚನಂಗೈದೆಸೆವ |
ಯೂಪದೊಳ್ ಕಟ್ಟಿ ಪೂಜಿಸಿದ ರಮಲಾಶ್ವಮಂ |
ಭೂಪನುಂ ದ್ರೌಪದಿಯುಮಭಿಷಿಕ್ತರಾದರ್ ಸುಮಂತ್ರಿತ ಜಲಂಗಳಿಂದೆ ||
ವ್ಯಾಪಿಸಿದ ವಿಧಿ ವಿಧಾನಂಗಳಿಂದಾವುದುಂ |
ಲೋಪಮಿಲ್ಲದೆ ನಡೆಯತೊಡಗಿತು ಮಹಾಧ್ವರಂ |
ತಾಪಸ ಪ್ರತತಿ ಸಂದಿಗ್ಧಂಗಳಂ ತಿಳಿದು ಸಮ್ಮತದೊಳಹುದೆನಲ್ಕೆ ||5||

ಪದವಿಭಾಗ-ಅರ್ಥ:
ಆ ಪುಣ್ಯ ಸಲಿಲದೊಳ್ ಸೇಚನಂಗೈದು ಎಸೆವ ಯೂಪದೊಳ್ ಕಟ್ಟಿ ಪೂಜಿಸಿದರು ಅಮಲಾಶ್ವಮಂ ಭೂಪನುಂ ದ್ರೌಪದಿಯುಂ ಅಭಿಷಿಕ್ತರಾದರ್ ಸುಮಂತ್ರಿತ ಜಲಂಗಳಿಂದೆ==[ಆ ಪುಣ್ಯ ನೀರಿನಲ್ಲಿ ಸಿಂಚನಮಾಡಿ ಶೋಭಿಸುವ ಯೂಪ ಕಂಬಕ್ಕೆ ಕಟ್ಟಿ ಅಮಲ ಅಶ್ವವನ್ನು ಪೂಜಿಸಿದರು. ಧರ್ಮರಾಜನೂ ದ್ರೌಪದಿಯೂ ಸುಮಂತ್ರಿತ ಗಂಗಾಜಲದಿಂದ ಅಭಿಷಿಕ್ತರಾದರು/ಸ್ನಾನ ಮಾಡಿದರು.];; ವ್ಯಾಪಿಸಿದ ವಿಧಿ ವಿಧಾನಂಗಳಿಂದ ಆವುದುಂ ಲೋಪಮಿಲ್ಲದೆ ನಡೆಯತೊಡಗಿತು ಮಹಾಧ್ವರಂ ತಾಪಸ ಪ್ರತತಿ ಸಂದಿಗ್ಧಂಗಳಂ ತಿಳಿದು ಸಮ್ಮತದೊಳು ಅಹುದು ಎನಲ್ಕೆ==[ಆನೇಕ ಬಗೆಯ ವಿಧಿ ವಿಧಾನಗಳಿಂದ ಯಾವುದೂ ಲೋಪಮಿಲ್ಲದಂತೆ ಮಹಾ ಯಜ್ಞವು ನಡೆಯತೊಡಗಿತು. ತಪಸ್ವಿಗಳ ಸಮೂಹ ಸಂದಿಗ್ಧ ವಿಧಿವಿಧಾನದಲ್ಲಿ ಚರ್ಚಿಸಿ ಸಮ್ಮತದಿಂದ- ಅಹುದು ಅದೇಸರಿ ಎನ್ನಲು ಯಜ್ಞವು ಮುಂದುವರಿಯಿತು.]
  • ತಾತ್ಪರ್ಯ:ಆ ಪುಣ್ಯದ ನೀರಿನಲ್ಲಿ ಸಿಂಚನಮಾಡಿ ಶೋಭಿಸುವ ಯೂಪ ಕಂಬಕ್ಕೆ ಕಟ್ಟಿ ಅಮಲ ಅಶ್ವವನ್ನು ಪೂಜಿಸಿದರು. ಧರ್ಮರಾಜನೂ ದ್ರೌಪದಿಯೂ ಸುಮಂತ್ರಿತ ಗಂಗಾಜಲದಿಂದ ಅಭಿಷಿಕ್ತರಾದರು/ಸ್ನಾನ ಮಾಡಿದರು. ಆನೇಕ ಬಗೆಯ ವಿಧಿ ವಿಧಾನಗಳಿಂದ ಯಾವುದೂ ಲೋಪಮಿಲ್ಲದಂತೆ ಮಹಾ ಯಜ್ಞವು ನಡೆಯತೊಡಗಿತು. ತಪಸ್ವಿಗಳ ಸಮೂಹ ಸಂದಿಗ್ಧ ವಿಧಿವಿಧಾನದಲ್ಲಿ ಚರ್ಚಿಸಿ ಸಮ್ಮತದಿಂದ- ಅಹುದು ಅದೇಸರಿ ಎನ್ನಲು ಯಜ್ಞವು ಮುಂದುವರಿಯಿತು.
  • (ಪದ್ಯ-೫)

ಪದ್ಯ:-::

[ಸಂಪಾದಿಸಿ]

ಬಂದ ಮುನಿಗಳ ಪಾದಮಂ ತೊಳೆದು ಸತ್ಕಾರ |
ದಿಂದೆ ಪೂಜಿಸಿ ನಿವಾಸ ಸ್ಥಾನಮಂ ಕೊಟ್ಟು |
ವಂದಿಸುವನಚ್ಯುತಂ ತಾನೆ ಕುಳ್ಳಿಪೆರೊಡಾಸನವ ನೀವಂ ಸಾತ್ಯಕಿ |
ಚಂದನ ಸುಕರ್ಪೂರ ಕುಸುಮ ತಾಂಬೂಲಂಗ |
ಳಿಂದಲಂಕರಿಸುವಂ ಪ್ರದ್ಯುಮ್ನನವರವರ |
ಮಂದಿರಕೆ ಬೇಕಾದ ವಸ್ತುಗಳ ನೊದವಿಸುವನಡಿಗಡಿಗೆ ಸಹದೇವನು ||6||

ಪದವಿಭಾಗ-ಅರ್ಥ:
ಬಂದ ಮುನಿಗಳ ಪಾದಮಂ ತೊಳೆದು ಸತ್ಕಾರ ದಿಂದೆ ಪೂಜಿಸಿ ನಿವಾಸ ಸ್ಥಾನಮಂ ಕೊಟ್ಟು ವಂದಿಸುವನು ಅಚ್ಯುತಂ ತಾನೆ ಕುಳ್ಳಿಪೆರೊಡೆ ಆಸನವ ನೀವಂ ಸಾತ್ಯಕಿ==[ಯಜ್ಞ ಕಾರ್ಯಕ್ಕೆ ಬಂದ ಮುನಿಗಳ ಪಾದದಳನ್ನು ತೊಳೆದು, ಸತ್ಕಾರಮಾಡಿ ಪೂಜಿಸಿ, ನಿವಾಸಸ್ಥಾನವನ್ನು ಕೊಟ್ಟು, ಅಚ್ಯುತನು ವಂದಿಸುವನು; ಅಥಿತಿಗಳಿಗೆ ಕುಳಿತುಕೊಳ್ಳಲು ತಾನೆ ಆಸನವನ್ನು ಕೊಡುವನು ಸಾತ್ಯಕಿ.];; ಚಂದನ ಸುಕರ್ಪೂರ ಕುಸುಮ ತಾಂಬೂಲಂಗಳಿಂದ ಅಲಂಕರಿಸುವಂ ಪ್ರದ್ಯುಮ್ನನು ಅವರವರ ಮಂದಿರಕೆ ಬೇಕಾದ ವಸ್ತುಗಳನು ಒದವಿಸುವನು ಅಡಿಗಡಿಗೆ ಸಹದೇವನು==[ಚಂದನ ಸುಕರ್ಪೂರ, ಹೂವು, ತಾಂಬೂಲಗಳಿಂದ ಅಲಂಕರಿಸುವನು, ಪ್ರದ್ಯುಮ್ನನು; ಸಹದೇವನು ಆಗಾಗ ಅವರವರ ಮಂದಿರಕ್ಕೆ ಬೇಕಾದ ವಸ್ತುಗಳನ್ನು ಒದಗಿಸುವನು].
  • ತಾತ್ಪರ್ಯ:ಯಜ್ಞ ಕಾರ್ಯಕ್ಕೆ ಬಂದ ಮುನಿಗಳ ಪಾದದಳನ್ನು ತೊಳೆದು, ಸತ್ಕಾರಮಾಡಿ ಪೂಜಿಸಿ, ನಿವಾಸಸ್ಥಾನವನ್ನು ಕೊಟ್ಟು, ಅಚ್ಯುತನು ವಂದಿಸುವನು; ಅಥಿತಿಗಳಿಗೆ ಕುಳಿತುಕೊಳ್ಳಲು ತಾನೆ ಆಸನವನ್ನು ಕೊಡುವನು ಸಾತ್ಯಕಿ. ಚಂದನ ಸುಕರ್ಪೂರ, ಹೂವು, ತಾಂಬೂಲಗಳಿಂದ ಅಲಂಕರಿಸುವನು, ಪ್ರದ್ಯುಮ್ನನು; ಸಹದೇವನು ಆಗಾಗ ಅವರವರ ಮಂದಿರಕ್ಕೆ ಬೇಕಾದ ವಸ್ತುಗಳನ್ನು ಒದಗಿಸುವನು.
  • (ಪದ್ಯ-೬)

ಪದ್ಯ:-::

[ಸಂಪಾದಿಸಿ]

ಸಕಲ ಜನ ಜಾಳಮಂ ತಾರತಮ್ಯನವರಿತು |
ನಕುಲನಾದರಿಸುವಂ ಪಗಲಿರುಳ್ ಪರಿಮಳೋ |
ದಕವನಳವಡಿಸುವಂ ಕರ್ಣಸುತನೆಲ್ಲರಾರೈಕೆ ಹೈಡಿಂಬಿಗಾಯ್ತು ||
ಶಕಟ ಸಂದೋಹದಿಂ ಪೂಡಿಸುವ ಸಂಭಾರ |
ನಿಕರಕಧಿಪತಿಯಾದನನಿರುದ್ಧನನ್ನವಾ |
ಟಿಕೆಗಳೊಳ್ ಪಾಕಮಂ ಮಾಡಿಸುವ ಮಣಿಹಮಂ ಕೃತವರ್ಮಕಂ ತಾಳ್ದನು ||7||

ಪದವಿಭಾಗ-ಅರ್ಥ:
ಸಕಲ ಜನ ಜಾಳಮಂ ತಾರತಮ್ಯನವ ಅರಿತು ನಕುಲನು ಆದರಿಸುವಂ ಪಗಲಿರುಳ್ ಪರಿಮಳೋದಕವನು ಅಳವಡಿಸುವಂ ಕರ್ಣಸುತನು ಎಲ್ಲರ ಆರೈಕೆ ಹೈಡಿಂಬಿಗಾಯ್ತು==[ಸಕಲ ಜನ ಜಾಲದ ಯೋಗ್ಯತೆ ತಿಳಿದು ನಕುಲನು ಆದರಿಸುವನು; ಹಗಲಿರುಳು ಪರಿಮಳದ ನೀರನ್ನು ಚಿಮುಕಿಸುವ ಕೆಲಸ ಕರ್ಣಸುತ ವೃಷಧ್ವಜನದು; ಎಲ್ಲರನ್ನೂ ಉಪಚಾರ ಮಾಡುವ ಕೆಲಸ ಮೇಘನಾದನಿಗೆ ಕೊಟ್ಟರು.];;ಶಕಟ ಸಂದೋಹದಿಂ ಪೂಡಿಸುವ ಸಂಭಾರ ನಿಕರಕೆ ಅಧಿಪತಿಯಾದನು ಅನಿರುದ್ಧನು ಅನ್ನವಾಟಿಕೆಗಳೊಳ್ ಪಾಕಮಂ ಮಾಡಿಸುವ ಮಣಿಹಮಂ(ಪಾರುಪತ್ಯ) ಕೃತವರ್ಮಕಂ ತಾಳ್ದನು==[ಶಕಟ/ಗಾಡಿಗಳ ಸಂದಣಿಯನ್ನು ವ್ಯವಸ್ಥಿತವಾಗಿ ಹೂಡಿಸುವ,ಅದರಲ್ಲಿರುವ ಸಂಭಾರ ರಾಶಿಗೆ ಅನಿರುದ್ಧನು ಅಧಿಪತಿಯಾದನು; ಅಡಿಗೆಮನೆ /ಅನ್ನವಾಟಿಕೆಗಳಲ್ಲಿ ಪಾಕ/ಅಡಿಗೆ ಮಾಡಿಸುವ ಕಾರ್ಯ/ಪಾರುಪತ್ಯವನ್ನು ಕೃತವರ್ಮಕನು ವಹಿಸಿಕೊಂಡನು].
  • ತಾತ್ಪರ್ಯ:ಸಕಲ ಜನ ಜಾಲದ ಯೋಗ್ಯತೆ ತಿಳಿದು ನಕುಲನು ಆದರಿಸುವನು; ಹಗಲಿರುಳು ಪರಿಮಳದ ನೀರನ್ನು ಚಿಮುಕಿಸುವ ಕೆಲಸ ಕರ್ಣಸುತ ವೃಷಧ್ವಜನದು; ಎಲ್ಲರನ್ನೂ ಉಪಚಾರ ಮಾಡುವ ಕೆಲಸ ಮೇಘನಾದನಿಗೆ ಕೊಟ್ಟರು.ಶಕಟ/ಗಾಡಿಗಳ ಸಂದಣಿಯನ್ನು ವ್ಯವಸ್ಥಿತವಾಗಿ ಹೂಡಿಸುವ,ಅದರಲ್ಲಿರುವ ಸಂಭಾರ ರಾಶಿಗೆ ಅನಿರುದ್ಧನು ಅಧಿಪತಿಯಾದನು; ಅಡಿಗೆಮನೆ /ಅನ್ನವಾಟಿಕೆಗಳಲ್ಲಿ ಪಾಕ/ಅಡಿಗೆ ಮಾಡಿಸುವ ಕಾರ್ಯ/ಪಾರುಪತ್ಯವನ್ನು ಕೃತವರ್ಮಕನು ವಹಿಸಿಕೊಂಡನು].
  • (ಪದ್ಯ-೭)

ಪದ್ಯ:-::

[ಸಂಪಾದಿಸಿ]

ಯೋಜನತ್ರಯದ ಚಪ್ಪರದೊಳೆಡವಿಡದೆ ನಾ |
ನಾ ಜನಕೆ ಬೇಕಾದ ಷಡ್ರಸದ ಶಾಲ್ಯಾ(ಲ್ಯ)ನ್ನ |
ಭೋಜನವನೈದೆ ಮಾಡಿಸುತಿಹುದು ಸಾಂಬಾದಿ ಯಾದವರ್ಗಾಯ್ತು ಬಳಿಕ ||
ಶ್ರೀ ಜನಾರ್ಧನನ ಸಾನ್ನಿಧ್ಯಮಾಗಿರೆ ಧರ್ಮ |
ಜನ ಮಹಾಧ್ವರಂ ಸಾಂಗಮಾಗದೆ ಮೇಣ್ ಸ |
ರೋಜನಾಭಂ ತಾನೆ ಯಜ್ಞಸ್ವರೂಫನಲ್ಲವೆ ಭೂಪ ಹೇಳೆಂದನು ||8||

ಪದವಿಭಾಗ-ಅರ್ಥ:
ಯೋಜನತ್ರಯದ ಚಪ್ಪರದೊಳು ಅಡವು ಇಡದೆ ನಾನಾ ಜನಕೆ ಬೇಕಾದ ಷಡ್ರಸದ ಶಾಲ್ಯಾನ್ನ (ಅಕ್ಕಿಯ ಅನ್ನ) ಭೋಜನವನು ಐದೆ ಮಾಡಿಸುತಿಹುದು ಸಾಂಬ ಆದಿ ಯಾದವರ್ಗೆ ಆಯ್ತು ಬಳಿಕ==[ ಬಳಿಕ ಮೂರು ಯೋಜನದ ಚಪ್ಪರದಲ್ಲಿ ಮಧ್ಯ ತಾಣಬಿಡದೆ ನಾನಾ ಜನರಿಗೆ ಬೇಕಾದ ಷಡ್ರಸದ ಶಾಲ್ಯಾನ್ನ ಭೋಜನವನ್ನು ಜನರು ಬಂದಹಾಗೆ ಮಾಡಿಸುವ ಹೊಣೆ, ಸಾಂಬ ಮೊದಲಾದ ಯಾದವರಿಗೆ ಆಯ್ತು.];; ಶ್ರೀ ಜನಾರ್ಧನನ ಸಾನ್ನಿಧ್ಯಮಾಗಿರೆ ಧರ್ಮಜನ ಮಹಾಧ್ವರಂ ಸಾಂಗಮಾಗದೆ ಮೇಣ್ ಸರೋಜನಾಭಂ ತಾನೆ ಯಜ್ಞಸ್ವರೂಫನಲ್ಲವೆ ಭೂಪ ಹೇಳೆಂದನು==[ಶ್ರೀ ಜನಾರ್ಧನನ ಸಾನ್ನಿಧ್ಯವು ಇರಲು ಧರ್ಮಜನ ಮಹಾಧ್ವರವು ಸಾಂಗವಾಗಿ ಆಗದೆ ಮತ್ತೆ ಇರುವುದೇ? ಸಾಂಗವಾಗಿ ನೆಡೆಯುವುದು. ಸರೋಜನಾಭ ಕೃಷ್ಣನು ತಾನೆ ಯಜ್ಞಸ್ವರೂಫನಲ್ಲವೆ, ಜನಮೇಜಯ ಭೂಪನೇ ಹೇಳು ಎಂದನು ].
  • ತಾತ್ಪರ್ಯ:ಬಳಿಕ ಮೂರು ಯೋಜನದ ಚಪ್ಪರದಲ್ಲಿ ಮಧ್ಯ ತಾಣಬಿಡದೆ ನಾನಾ ಜನರಿಗೆ ಬೇಕಾದ ಷಡ್ರಸದ ಶಾಲ್ಯಾನ್ನ ಭೋಜನವನ್ನು ಜನರು ಬಂದಹಾಗೆ ಮಾಡಿಸುವ ಹೊಣೆ, ಸಾಂಬ ಮೊದಲಾದ ಯಾದವರಿಗೆ ಆಯ್ತು. ಶ್ರೀ ಜನಾರ್ಧನನ ಸಾನ್ನಿಧ್ಯವು ಇರಲು ಧರ್ಮಜನ ಮಹಾಧ್ವರವು ಸಾಂಗವಾಗಿ ಆಗದೆ ಮತ್ತೆ ಇರುವುದೇ? ಸಾಂಗವಾಗಿ ನೆಡೆಯುವುದು. ಸರೋಜನಾಭ ಕೃಷ್ಣನು ತಾನೆ ಯಜ್ಞಸ್ವರೂಫನಲ್ಲವೆ, ಜನಮೇಜಯ ಭೂಪನೇ ಹೇಳು ಎಂದನು.
  • (ಪದ್ಯ-೮)

ಪದ್ಯ:-::

[ಸಂಪಾದಿಸಿ]

ಸುರೆಯ(ದೊ)ನೊಂದಲ್ಲದೆ ಪಯೋಧಿಗಳನಾರ ನಾ |
ಕರುಷಣಂಗೈದರೆನೆ ಸುರಸಂಗಳೆಸೆಯೆ ಕುಲ |
ಗಿರಿಗಳಂ ನಗುವಂತೆ ಮಿರುಪ ಶಾಲ್ಯೋದನದ ರಾಶಿಗಳ್ ಕಂಗೊಳಿಸಲು ||
ಪರಿಪರಿಯ ಭಕ್ಷ್ಯ ಪಾಯಸ ವಿವಿಧ ಶಾಕಾದಿ |
ಪರಿಕರಮದೆಂತೊದಗಿದುವೊ ಕೃಷ್ಣಸುರಭಿ ತಾಂ |
ಪೊರೆಯೊಳಿರಲರಿದಾವುದೆಂಬಿನಂ ತಣಿದುಂಡರಾಮಖದೊಳಖಿಳ ಜನರು ||9||

ಪದವಿಭಾಗ-ಅರ್ಥ:
ಸುರೆಯದೊಂದಲ್ಲದೆ ಪಯೋಧಿಗಳನು ಆರನು ಆಕರುಷಣಂ ಗೈದರೆನೆ ಸುರಸಂಗಳು ಎಸೆಯೆ ಕುಲಗಿರಿಗಳಂ ನಗುವಂತೆ ಮಿರುಪ ಶಾಲ್ಯೋದನದ ರಾಶಿಗಳ್ ಕಂಗೊಳಿಸಲು==[ಸುರೆಯ ಎಂಬ ಸಮುದ್ರ ಒಂದು ಅಲ್ಲದೆ ಆರು ಸಮುದ್ರಗಳನ್ನು ಆಕರ್ಷಣಮಾಡಿದರೋ ಎನ್ನುವಂತೆ ಸು/ಉತ್ತಮ ರಸಂಗಳು/ಸಾರು,ಸಾಂಬಾರುಗಳು ಶೋಭಿಸಲು, ಅನ್ನದ ರಾಶಿಗಳು ಕುಲಗಿರಿಗಳನ್ನು ನೋಡಿ ನಗುವಂತೆ (ನೀವು ಚಕ್ಕವರೆಂದು) ಮಿರುಗುತ್ತಿರುವ, ಶಾಲ್ಯದ/ಅಕ್ಕಿಯ ಅನ್ನದ ರಾಶಿಗಳು ಕಂಗೊಳಿಸುತ್ತಿದ್ದವು.];; ಪರಿಪರಿಯ ಭಕ್ಷ್ಯ ಪಾಯಸ ವಿವಿಧ ಶಾಕಾದಿ ಪರಿಕರಂ ಅದೆಂತು ಒದಗಿದುವೊ! ಕೃಷ್ಣಸುರಭಿ ತಾಂ ಪೊರೆಯೊಳು ಇರಲು ಅರಿದಾವುದು ಎಂಬಿನಂ ತಣಿದು ಉಂಡರು ಆಮಖದೊಳು ಅಖಿಳ ಜನರು==[ಅಲ್ಲದೆ ಪರಿಪರಿಯ ಭಕ್ಷ್ಯ ಪಾಯಸ ವಿವಿಧ ಶಾಕಾದಿ ಪರಿಕರಗಳು, ಅದು ಹೇಗೆ ಬಮದು ಸೇರಿದವೊ! ಅಶ್ಚರ್ಯವು. ಕೃಷ್ಣನೆಂಬ ಕಾಮಧೇನು ತಾನು ಪಕ್ಕದಲ್ಲಿ ಇರಲು, ಅಸಾಧ್ಯ ಯಾವುದು ಎನ್ನುವಂತ, ತಣಿದು/ ತೃಪ್ತಿಯಾಗಿ ಆ ಯಜ್ಞದಲ್ಲಿ ಎಲ್ಲ ಜನರೂ ಉಂಡರು.]
  • ತಾತ್ಪರ್ಯ:ಸುರೆ ಎಂಬ ಸಮುದ್ರ ಒಂದು ಅಲ್ಲದೆ ಆರು ಸಮುದ್ರಗಳನ್ನು ಆಕರ್ಷಣಮಾಡಿದರೋ ಎನ್ನುವಂತೆ ಸು/ಉತ್ತಮ ರಸಂಗಳು/ಸಾರು,ಸಾಂಬಾರುಗಳು ಶೋಭಿಸಲು, ಅನ್ನದ ರಾಶಿಗಳು ಕುಲಗಿರಿಗಳನ್ನು ನೋಡಿ ನಗುವಂತೆ (ನೀವು ಚಕ್ಕವರೆಂದು) ಮಿರುಗುತ್ತಿರುವ, ಶಾಲ್ಯದ/ಅಕ್ಕಿಯ ಅನ್ನದ ರಾಶಿಗಳು ಕಂಗೊಳಿಸುತ್ತಿದ್ದವು. ಅಲ್ಲದೆ ಪರಿಪರಿಯ ಭಕ್ಷ್ಯ ಪಾಯಸ ವಿವಿಧ ಶಾಕಾದಿ ಪರಿಕರಗಳು, ಅದು ಹೇಗೆ ಬಮದು ಸೇರಿದವೊ! ಅಶ್ಚರ್ಯವು. ಕೃಷ್ಣನೆಂಬ ಕಾಮಧೇನು ತಾನು ಪಕ್ಕದಲ್ಲಿ ಇರಲು, ಅಸಾಧ್ಯ ಯಾವುದು ಎನ್ನುವಂತ, ತಣಿದು/ ತೃಪ್ತಿಯಾಗಿ ಆ ಯಜ್ಞದಲ್ಲಿ ಎಲ್ಲ ಜನರೂ ಉಂಡರು.
  • (ಪದ್ಯ-೯)

ಪದ್ಯ:-:೧೦:

[ಸಂಪಾದಿಸಿ]

ಊಟದ ಸುಗಂಧಾನುಲೇಪನದ ಕಪ್ಪುರದ |
ವೀಟಿಕಾವಳಿಯ ಮಾಲ್ಯಾಂಬರ ವಿಭೂಷಣದ |
ಮೀಟು ಸಿಂಗರದಿಂಪುವಡೆಯೆ ಮಿಗೆ ಬಯಸಿದ ಸುವಸ್ತುಗಳನಿತ್ತು ||
ಪಾಟಿಸುವ ಭೀಮ ಫಲ್ಗುಣರ ಸನ್ಮಾನದ ಸ |
ಘಾಟಿಕೆಯ ನೃಪ ಕುಲದ ಪುಣ್ಯಮುನಿಗಳ ಯಜ್ಞ |
ವಾಟದತಿ ಕೌತುಕದಮಾಳ್ಕೆಯಂ ಕಂಡು ನಲಿದಾಡಿತು ಜನಂ ಮುದದೊಳು ||10||

ಪದವಿಭಾಗ-ಅರ್ಥ:
ಊಟದ ಸುಗಂಧ ಅನುಲೇಪನದ ಕಪ್ಪುರದ ವೀಟಿಕಾವಳಿಯ ಮಾಲ್ಯಾಂಬರ ವಿಭೂಷಣದ ಮೀಟು ಸಿಂಗರದಿಂಪುವಡೆಯೆ ಮಿಗೆ ಬಯಸಿದ ಸುವಸ್ತುಗಳನು ಇತ್ತು==[ಉತ್ತಮ ಊಟದ, ಆಸಮಯದಲ್ಲಿ ಕೊಟ್ಟ ಸುಗಂಧ ಅನುಲೇಪನದ(ಹಚ್ಚಿಕೊಳ್ಳುವ); ಪಚ್ಚ ಕಪ್ಪುರದ ತಾಂಬೂಲಗಳ; ಊಟದ ಸಮಯದಲ್ಲಿ ಹೂಮಾಲೆ ಹಾಕಿ ಅಲಂಕರಿಸುವ; ಬಹಳ ಸಿಂಗರಸಿದ್ದರಿಂದ ಸುಖಭಾವನೆ ತೋರುವ; ಮತ್ತೆ ಬಯಸಿದ ಸುವಸ್ತುಗಳನ್ನು ಕೊಟ್ಟು ಉಪಚರಿಸುವ,];; ಪಾಟಿಸುವ ಭೀಮ ಫಲ್ಗುಣರ ಸನ್ಮಾನದ ಸಘಾಟಿಕೆಯ ನೃಪ ಕುಲದ ಪುಣ್ಯಮುನಿಗಳ ಯಜ್ಞವಾಟದ ಅತಿ ಕೌತುಕದ ಮಾಳ್ಕೆಯಂ ಕಂಡು ನಲಿದಾಡಿತು ಜನಂ ಮುದದೊಳು==[ಹೀಗೆ ಸರಿಯಾಗಿ ವ್ಯವಸ್ಥೆಮಾಡುವ ಭೀಮ ಫಲ್ಗುಣರ ಸನ್ಮಾನದ ವೈಭವದ ರಾಜಕುಲದ, ಪುಣ್ಯಮುನಿಗಳಿರುವ ಯಜ್ಞಶಾಲೆಯ; ಈ ಎಲ್ಲಾ ಅತಿ ಕೌತುಕದ ಕಾರ್ಯವನ್ನು ಕಂಡು ಜನರು ಮುದದಿಂದ ನಲಿದಾಡಿದರು].
  • ತಾತ್ಪರ್ಯ:ವ್ಯವಸ್ಥೆಯ ವಿವರಣೆ: ಉತ್ತಮ ಊಟದ, ಆಸಮಯದಲ್ಲಿ ಕೊಟ್ಟ ಸುಗಂಧ ಅನುಲೇಪನದ(ಹಚ್ಚಿಕೊಳ್ಳುವ); ಪಚ್ಚ ಕಪ್ಪುರದ ತಾಂಬೂಲಗಳ; ಊಟದ ಸಮಯದಲ್ಲಿ ಹೂಮಾಲೆ ಹಾಕಿ ಅಲಂಕರಿಸುವ; ಬಹಳ ಸಿಂಗರಸಿದ್ದರಿಂದ ಸುಖಭಾವನೆ ತೋರುವ; ಮತ್ತೆ ಬಯಸಿದ ಸುವಸ್ತುಗಳನ್ನು ಕೊಟ್ಟು ಉಪಚರಿಸುವ, ಹೀಗೆ ಸರಿಯಾಗಿ ವ್ಯವಸ್ಥೆಮಾಡುವ ಭೀಮ ಫಲ್ಗುಣರ ಸನ್ಮಾನದ ವೈಭವದ ರಾಜಕುಲದ, ಪುಣ್ಯಮುನಿಗಳಿರುವ ಯಜ್ಞಶಾಲೆಯ; ಈ ಎಲ್ಲಾ ಅತಿ ಕೌತುಕದ ಕಾರ್ಯವನ್ನು ಕಂಡು ಜನರು ಮುದದಿಂದ ನಲಿದಾಡಿದರು.
  • (ಪದ್ಯ-೧೦)

ಪದ್ಯ:-:೧೧:

[ಸಂಪಾದಿಸಿ]

ಹೇಮ ವಸ್ತ್ರಾಭರಣ ಮುಕ್ತಾಫಲಂಗಳಂ |
ಸಾಮಜ ತುರಂಗ ರಧ ರತ್ನ ಜಾಲಂಗಳಂ |
ಗೋ ಮಹಿಷಿ ದಾಸೀ ನಿಕರಮಂ ಮೃಗಾಜಿನ ಕಂಬಳಾದಿಗಳನು ||
ಚಾಮರ ವ್ಯಜನಾತಪತ್ರ ಯಾನಂಗಳಂ |
ಭೂಮಿಗಳ ನಗುರುಚಂದನ ಮುಖ್ಯವಸ್ತುವಂ |
ಭೀಮ ಫಲ್ಗುಣರಖಿಳ ಯಾಚಕಾವಳಿ ತಣಿಯೆಕುಡುತಿರ್ದರಾದರದೊಳು ||11||

ಪದವಿಭಾಗ-ಅರ್ಥ:
ಹೇಮ ವಸ್ತ್ರಾಭರಣ ಮುಕ್ತಾಫಲಂಗಳಂ ಸಾಮಜ ತುರಂಗ ರಧ ರತ್ನ ಜಾಲಂಗಳಂ ಗೋ ಮಹಿಷಿ ದಾಸೀ ನಿಕರಮಂ ಮೃಗಾಜಿನ ಕಂಬಳಾದಿಗಳನು==[ಚಿನ್ನ, ವಸ್ತ್ರಾಭರಣ, ಮುತ್ತಿನಾಭರಣ, ಆನೆ, ತುರಗ, ರಧ, ರತ್ನ, ಇವನ್ನು ಹೇರಳವಾಗಿ, ಗೋವು ಎಮ್ಮೆ, ದಾಸೀಜನ, ಇವನ್ನೂ, ಕೃಷ್ಣಾಜಿನಗಳು, ಕಂಬಳಿಗಳು ಮೊದಲಾದವನ್ನೂ,];; ಚಾಮರ ವ್ಯಜನಾತಪತ್ರ ಯಾನಂಗಳಂ ಭೂಮಿಗಳ ನಗುರುಚಂದನ ಮುಖ್ಯವಸ್ತುವಂ ಭೀಮ ಫಲ್ಗುಣರಖಿಳ ಯಾಚಕಾವಳಿ ತಣಿಯೆಕುಡುತಿರ್ದರಾದರದೊಳು==[ಚಾಮರ, ವ್ಯಜನ/ಬೀಸಣಿಕೆ,ಆತಪತ್ರ/ಛತ್ರಿ,, ವಾಹನಗಳನ್ನೂ, ಭೂಮಿಗಳನ್ನೂ, ಅಗುರುಚಂದನ ಮುಖ್ಯ ವಸ್ತುಗಳನ್ನೂ, ಭೀಮ ಫಲ್ಗುಣರು ಎಲ್ಲಾ ಯಾಚಕ ಜನರಿಗೆ ತೃಪ್ತಿಯಾಗುವಂತೆ ಆದರದಿಂದ ಕೊಡುತ್ತಿದ್ದರು,].
  • ತಾತ್ಪರ್ಯ:ಚಿನ್ನ, ವಸ್ತ್ರಾಭರಣ, ಮುತ್ತಿನಾಭರಣ, ಆನೆ, ತುರಗ, ರಧ, ರತ್ನ, ಇವನ್ನು ಹೇರಳವಾಗಿ, ಗೋವು ಎಮ್ಮೆ, ದಾಸೀಜನ, ಇವನ್ನೂ, ಕೃಷ್ಣಾಜಿನಗಳು, ಕಂಬಳಿಗಳು ಮೊದಲಾದವನ್ನೂ, ಚಾಮರ, ವ್ಯಜನ/ಬೀಸಣಿಕೆ,ಆತಪತ್ರ/ಛತ್ರಿ,, ವಾಹನಗಳನ್ನೂ, ಭೂಮಿಗಳನ್ನೂ, ಅಗುರುಚಂದನ ಮುಖ್ಯ ವಸ್ತುಗಳನ್ನೂ, ಭೀಮ ಫಲ್ಗುಣರು ಎಲ್ಲಾ ಯಾಚಕ ಜನರಿಗೆ ತೃಪ್ತಿಯಾಗುವಂತೆ ಆದರದಿಂದ ಕೊಡುತ್ತಿದ್ದರು.
  • (ಪದ್ಯ-೧೧)

ಪದ್ಯ:-:೧೨:

[ಸಂಪಾದಿಸಿ]

ಯಾಗ ದೀಕ್ಷೆಯ ನೃಪಂ ಮಂತ್ರವಾರಿ ಸ್ನಾತ |
ನಾಗಿ ಬಳಿಕನುಪಮ ಸುಪರ್ಣಚಯನದ ಪೊರೆಗೆ |
ಪೋಗಿ ಹಯಮಂ ತರಿಸಲುಚ್ಚರಿಸಿ ಯಜ್ಞಪಶುವಾದುದೆಂದಭಿವರ್ಣಿ(ರ್ಧಿ)ಸೆ ||
ಮೇಗೆ ಶ್ರುತಿವಾಕ್ಯಂಗಳಂ ಪಠಿಸುತಿರೆ ಘೋಟ |
ಪೋಗು ನೀನಶ್ವಲೋಕದೊಳಮರಪದಮಪ್ಪು |
ದೀಗ ನಿನಗೆಂದೆಂದುಮಳಿವಿಲ್ಲದತ್ತುಮ ಸ್ವರ್ಗಮಂ ಪಡೆಯೆಂದನು ||12||

ಪದವಿಭಾಗ-ಅರ್ಥ:
ಯಾಗ ದೀಕ್ಷೆಯ ನೃಪಂ ಮಂತ್ರವಾರಿ ಸ್ನಾತನಾಗಿ ಬಳೀಕನುಪಮ ಸುಪರ್ಣಚಯನದ ಪೊರೆಗೆ ಪೋಗಿ ಹಯಮಂ ತರಿಸಲುಚ್ಚರಿಸಿ ಯಜ್ಞಪಶುವಾದುದೆಂದು ಅಭಿವರ್ಣಿಸೆ==[ಯಾಗ ದೀಕ್ಷೆಯಲ್ಲಿದ್ದ ರಾಜನು ಮಂತ್ರಜಲದಿಂದ ಸ್ನಾನಮಾಡಿದವನಾಗಿ, ಬಳಿಕ ಅನುಪಮ ಗರುಡವೇದಿಕೆಯ ಹತ್ತಿರ ಪೋಗಿ, ಕುದುರೆಯನ್ನು ತರಿಸಲು ಹೇಳಿದನು. ತಂದ ಅವುಗಘಳನ್ನು ಯಜ್ಞಪಶುವಾದುದೆಂದು ಅಭಿವರ್ಣಿಸಿದನು,];; ಮೇಗೆ ಶ್ರುತಿವಾಕ್ಯಂಗಳಂ ಪಠಿಸುತಿರೆ, ಘೋಟ (ಕುದುರೆ) ಪೋಗು ನೀನು ಅಶ್ವಲೋಕದೊಳ್ ಅಮರಪದಮಪ್ಪುದು ಈಗ ನಿನಗೆ ಎಂದೆಂದುಮ್ ಅಳಿವಿಲ್ಲದ ಉತ್ತುಮ ಸ್ವರ್ಗಮಂ ಪಡೆಯೆಂದನು==[ನಂತರ ಶ್ರುತಿವಾಕ್ಯಗಳನ್ನು ಪಠಿಸುತ್ತಿರಲು, ರಾಜನು,'ಎಲೆ ಆಶ್ವವೇ, ಹೋಗು, ನೀನು ಅಶ್ವಲೋಕದಲ್ಲಿ ಅಮರಪದವು ಆಗುವುದು, ಈಗ ನಿನಗೆ ಎಂದೆಂದೂ ನಾಶವಿಲ್ಲದ ಉತ್ತುಮ ಸ್ವರ್ಗವನ್ನು ಪಡೆಯೆಂದನು'].
  • ತಾತ್ಪರ್ಯ:ಯಾಗ ದೀಕ್ಷೆಯಲ್ಲಿದ್ದ ರಾಜನು ಮಂತ್ರಜಲದಿಂದ ಸ್ನಾನಮಾಡಿದವನಾಗಿ, ಬಳಿಕ ಅನುಪಮ ಗರುಡವೇದಿಕೆಯ ಹತ್ತಿರ ಪೋಗಿ, ಕುದುರೆಯನ್ನು ತರಿಸಲು ಹೇಳಿದನು. ತಂದ ಅವುಗಘಳನ್ನು ಯಜ್ಞಪಶುವಾದುದೆಂದು ಅಭಿವರ್ಣಿಸಿದನು, ನಂತರ ಶ್ರುತಿವಾಕ್ಯಗಳನ್ನು ಪಠಿಸುತ್ತಿರಲು, ರಾಜನು,'ಎಲೆ ಆಶ್ವವೇ, ಹೋಗು, ನೀನು ಅಶ್ವಲೋಕದಲ್ಲಿ ಅಮರಪದವು ಆಗುವುದು, ಈಗ ನಿನಗೆ ಎಂದೆಂದೂ ನಾಶವಿಲ್ಲದ ಉತ್ತುಮ ಸ್ವರ್ಗವನ್ನು ಪಡೆಯೆಂದನು'.
  • (ಪದ್ಯ-೧೨)

ಪದ್ಯ:-:೧೩:

[ಸಂಪಾದಿಸಿ]

ನೃಪನ ಮಾತಂ ಕೇಳ್ದು ವಾಜಿ ತಲೆಗೊಡಹಿ ಮುರ |
ರಿಪುವನೀಕ್ಷಿಸುವಭಿಪ್ರಾಯಮಂ ಮೋದದಿಂ |
ವಿಪುಲ ಮತ ನಕುಲಂಗೆ ಸೂಚಿಸಿದೊಡಾತನದರಿಂಗಿತವನರಿದು ಬಳಿಕ ||
ತಪನಸುತ ನಂದನಂಗೆಂದನವಧರಿಸು ಹಯ |
ಮುಪರಿಲೋಕದೊಳಶ್ವಪದವಿಯಂ ತಾನೊಲ್ಲೆ |
ನುಪಮೆಗೈದವ ಕೃಷ್ಣಸಾಯುಜ್ಯಮಂ ಪಡೆವೆನೆಂದೆಂಬುದೆನ್ನೊಳೆಂದು ||13||

ಪದವಿಭಾಗ-ಅರ್ಥ:
ನೃಪನ ಮಾತಂ ಕೇಳ್ದು ವಾಜಿ ತಲೆಗೊಡಹಿ ಮುರರಿಪುವನು ಈಕ್ಷಿಸುವ ಅಭೀಪ್ರಾಯಮಂ ಮೋದದಿಂ ವಿಪುಲ ಮತ ನಕುಲಂಗೆ ಸೂಚಿಸಿದೊಡೆ ಆತನು ಅದರ ಇಂಗಿತವನು ಅರಿದು ಬಳಿಕ==[ರಾಜನ ಮಾತನ್ನು ಕೇಳಿ ಕುದುರೆ ತಲೆಗೊಡಹಿತು; ಕೃಷ್ಣನನ್ನು ನೋಡುವ ಅಭಿಪ್ರಾಯವನ್ನು ಸಂತಸದಿಂದ ಬಹಳ ಪ್ರಾಣಿಭಾಷೆ ತಿಳಿದ ನಕುಲನಿಗೆ ಸೂಚಿಸಿದಾಗ, ಆತನು ಅದರ ಮನಸ್ಸಿನ ಭಾವವನ್ನು ತಿಳಿದನು; ಬಳಿಕ];; ತಪನಸುತ ನಂದನಂಗೆ (ತಪನ:ಸೂರ್ಯ,ಸುತ:ಮಗ -ಯಮ, ಅವನ ನಂದನ:ಮಗ ಯುಧಿಷ್ಠರ) ಎಂದನು ಅವಧರಿಸು ಹಯಮು ಉಪರಿಲೋಕದೊಳ್ ಅಶ್ವಪದವಿಯಂ ತಾನು ಒಲ್ಲೆನು ಉಪಮೆಗೆ ಐದವ ಕೃಷ್ಣಸಾಯುಜ್ಯಮಂ ಪಡೆವೆನು ಎಂದೆಂಬುದು ಎನ್ನೊಳೆಂದು==[ಯುಧಿಷ್ಠಿರನಿಗೆ ಹೇಳಿದನು,'ಕೇಳು, ಕುದುರೆಯು ಮೇಲಿನ ಲೋಕದಲ್ಲಿ ಅಶ್ವಪದವಿಯನ್ನು ತಾನು ಒಲ್ಲೆನು/ಇಷ್ಟಪಡುವುದಿಲ್ಲ, ಸಾಟಿ ಇಲ್ಲದ ಕೃಷ್ಣಸಾಯುಜ್ಯವನ್ನು ಪಡೆವೆನು ಎಂದು ನನ್ನಲ್ಲಿ ಹೇಳುವುದು,'ಎಂದನು.]
  • ತಾತ್ಪರ್ಯ:ರಾಜನ ಮಾತನ್ನು ಕೇಳಿ ಕುದುರೆ ತಲೆಗೊಡಹಿತು; ಕೃಷ್ಣನನ್ನು ನೋಡುವ ಅಭಿಪ್ರಾಯವನ್ನು ಕಂಡು, ಸಂತಸದಿಂದ ಪ್ರಾಣಿಭಾಷೆ ಬಹಳ ತಿಳಿದ ನಕುಲನಿಗೆ ಅದರ ಅಭಿಪ್ರಾಯ ತಿಳಿಯಲು, ಸೂಚಿಸಿದಾಗ, ಆತನು ಅದರ ಮನಸ್ಸಿನ ಭಾವವನ್ನು ತಿಳಿದನು; ಬಳಿಕ ಯುಧಿಷ್ಠಿರನಿಗೆ ಹೇಳಿದನು,'ಕೇಳು, ಕುದುರೆಯು ಮೇಲಿನ ಲೋಕದಲ್ಲಿ ಅಶ್ವಪದವಿಯನ್ನು ತಾನು ಒಲ್ಲೆನು/ಇಷ್ಟಪಡುವುದಿಲ್ಲ, ಸಾಟಿ ಇಲ್ಲದ ಕೃಷ್ಣಸಾಯುಜ್ಯವನ್ನು ಪಡೆವೆನು ಎಂದು ನನ್ನಲ್ಲಿ ಹೇಳುವುದು,'ಎಂದನು.
  • (ಪದ್ಯ-೧೩)

ಪದ್ಯ:-:೧೪:

[ಸಂಪಾದಿಸಿ]

ಫಣಿ ಶಯನ ಸಾನ್ನಿಧ್ಯಮಿಂತಿಲ್ಲದೀಶ್ವರಾ |
ರ್ಪಣಮಲ್ಲದನ್ಯ ಯಜ್ಞಂಗಳೋಳ್ ಮಡಿದ ಪಶು |
ಗಣಕೆ ಮೇಣಾಕರ್ತೃಗಳ್ಗತಿಶಯ ಸ್ವರ್ಗಭೋಗಮಾದಪುದು ನಿನ್ನ ||
ಪ್ರಣುತ ಸತ್ಕ್ರತು ಫಲಂ ಶ್ರೀಕಾಂತನಾ ಕಾ |
ರಣದಿಂದೆ ಕೃಷ್ಣನ ಶರೀರಮಂ ಪುಗುವೆನೀ |
ಕ್ಷಣದೊಳಿದನೆಲ್ಲರುಂ ನೋಡಲೆನುತಿದೆ ತುರುಗಮೆಂದು ನಕುಲಂ ನುಡಿದನು ||14||

ಪದವಿಭಾಗ-ಅರ್ಥ:
ಫಣಿಶಯನ ಸಾನ್ನಿಧ್ಯಂ ಇಂತು ಇಲ್ಲದ ಈಶ್ವರಾರ್ಪಣಂ ಅಲ್ಲದ ಅನ್ಯ ಯಜ್ಞಂಗಳೋಳ್ ಮಡಿದ ಪಶುಗಣಕೆ ಮೇಣ್ ಆ ಕರ್ತೃಗಳ್ಗೆ ಅತಿಶಯ ಸ್ವರ್ಗಭೋಗಮಾದಪುದು ನಿನ್ನ==['ವಿಷ್ಣು ಸಾನ್ನಿಧ್ಯವು ಹೀಗೆ ಇಲ್ಲದ ಈಶ್ವರಾರ್ಪಣವು ಅಲ್ಲದ ಅನ್ಯ ಯಜ್ಞಗಳಲ್ಲಿ ಮಡಿದ ಪಶುಗಣಕ್ಕೆ ಮತ್ತೆ ಆ ಕರ್ತೃಗಳಿಗ ಅತಿಶಯವಾದ ಸ್ವರ್ಗಭೋಗ ಆಗುವುದು. ನಿನ್ನ];;ಪ್ರಣುತ ಸತ್ಕ್ರತು ಫಲಂ ಶ್ರೀಕಾಂತನು ಆ ಕಾರಣದಿಂದೆ ಕೃಷ್ಣನ ಶರೀರಮಂ ಪುಗುವೆನು ಈ ಕ್ಷಣದೊಳು ಇದನು ಎಲ್ಲರುಂ ನೋಡಲಿ ಎನುತಿದೆ ತುರುಗಮೆಂದು ನಕುಲಂ ನುಡಿದನು==[ಉತ್ತಮ ಸತ್ಕ್ರತು ಫಲವು ಶ್ರೀಕಾಂತನು, ಆ ಕಾರಣದಿಂದ ಕೃಷ್ಣನ ಶರೀರವನ್ನು ಈ ಕ್ಷಣದಲ್ಲಿ ಹೊಗುವೆನು. ಇದನ್ನು ಎಲ್ಲರೂ ನೋಡಲಿ,' ಎನ್ನುತ್ತಿದೆ ತುರುಗ ಎಂದು ನಕುಲನು ಹೇಳಿದನು].
  • ತಾತ್ಪರ್ಯ:'ವಿಷ್ಣು ಸಾನ್ನಿಧ್ಯವು ಇಲ್ಲಿ ನೆಡೆಯುವಂತೆ ಇಲ್ಲದ ಈಶ್ವರಾರ್ಪಣವು ಅಲ್ಲದ ಅನ್ಯ ಯಜ್ಞಗಳಲ್ಲಿ ಮಡಿದ ಪಶುಗಣಕ್ಕೆ ಮತ್ತೆ ಆ ಕರ್ತೃಗಳಿಗ ಅತಿಶಯವಾದ ಸ್ವರ್ಗಭೋಗ ಆಗುವುದು. ನಿನ್ನ ಉತ್ತಮ ಸತ್ಕ್ರತು ಫಲವು ಶ್ರೀಕಾಂತನು, ಆ ಕಾರಣದಿಂದ ಕೃಷ್ಣನ ಶರೀರವನ್ನು ಈ ಕ್ಷಣದಲ್ಲಿ ಹೊಗುವೆನು. ಇದನ್ನು ಎಲ್ಲರೂ ನೋಡಲಿ,' ಎನ್ನುತ್ತಿದೆ ತುರುಗ ಎಂದು ನಕುಲನು ಹೇಳಿದನು.
  • (ಪದ್ಯ-೧೪)

ಪದ್ಯ:-:೧೫:

[ಸಂಪಾದಿಸಿ]

ತುರಗದಂತರ್ಭಾವಮಂ ತಿಳಿದು ನಕುಲನಿಂ |
ತರಸಂಗೆ ಬಿನ್ನಪಂಗೈದುದಂ ಕೇಳ್ದಖಿಳ |
ಧರಣೀಶ್ವರರ್ ಮುನಿಗಳಂಗನಾನಿಕುರುಂಬ ಮಾಶ್ಚರ್ಯಮಂ ನೋಡಲು ||
ನೆರೆದುದು ಸುಮಂತ್ರಿತದ ಯೂಪದೊಳ್ ಕಟ್ಟುತ |
ಧ್ವರ ಹಯವ ನಭಿಮಂತ್ರಿಸಿದರಚ್ಚುತನಮುಂದೆ |
ಪರಮಋಷಿಗಳ್ ಬಳಿಕ ಭೀಮನಂ ಕರೆದು ಮುದದಿಂ ಧೌಮ್ಯನಿಂತೆಂದನು ||15||

ಪದವಿಭಾಗ-ಅರ್ಥ:
ತುರಗದ ಅಂತರ್ಭಾವಮಂ ತಿಳಿದು ನಕುಲನು ಇಂತು ಅರಸಂಗೆ ಬಿನ್ನಪಂ ಗೈದುದಂ ಕೇಳ್ದು ಅಖಿಳ ಧರಣೀಶ್ವರರ್ ಮುನಿಗಳು ಅಂಗನಾ ನಿಕುರುಂಬ ಮಾಶ್ಚರ್ಯಮಂ ನೋಡಲು==[ಕುದುರೆಯ ಮನಸ್ಸಿನ ಭಾವನೆಯನ್ನು ತಿಳಿದು ನಕುಲನು ಹೀಗೆ ಅರಸನಿಗೆ ಬಿನ್ನಹ ಮಾಡಿದುದನ್ನು ಕೇಳಿ ಎಲ್ಲಾ ರಾಜರೂ, ಮುನಿಗಳು ಮಹಿಳೆಯರ ಸಮೂಹ ಈ ಆಶ್ಚರ್ಯವನ್ನು ನೋಡಲು ];; ನೆರೆದುದು ಸುಮಂತ್ರಿತದ ಯೂಪದೊಳ್ ಕಟ್ಟುತಧ್ವರ ಹಯವನು ಅಭಿಮಂತ್ರಿಸಿದರು ಅಚ್ಚುತನ ಮುಂದೆ ಪರಮಋಷಿಗಳ್ ಬಳಿಕ ಭೀಮನಂ ಕರೆದು ಮುದದಿಂ ಧೌಮ್ಯನು ಇಂತೆಂದನು==[ಅಲ್ಲಿ ಬಂದು ಸೇರಿತು. ಓಳ್ಳೆಯರೀತಿಯಲ್ಲಿ ಮಂತ್ರಿತವಾದ ಯೂಪದಕಂಬಕ್ಕೆ ಕಟ್ಟುತ್ತಾ ಅಧ್ವರದ ಕುದುರೆಯನ್ನು ಅಚ್ಚುತನ ಮುಂದೆ ಅಭಿಮಂತ್ರಿಸಿದರು; ಪರಮಋಷಿಗಳು ಬಳಿಕ ಭೀಮನನ್ನು ಕರೆದು ಮುದದಿಂದ ಧೌಮ್ಯನು ಹೀಗೆ ಹೇಳಿದನು].
  • ತಾತ್ಪರ್ಯ:ಕುದುರೆಯ ಮನಸ್ಸಿನ ಭಾವನೆಯನ್ನು ತಿಳಿದು ನಕುಲನು ಹೀಗೆ ಅರಸನಿಗೆ ಬಿನ್ನಹ ಮಾಡಿದುದನ್ನು ಕೇಳಿ ಎಲ್ಲಾ ರಾಜರೂ, ಮುನಿಗಳು ಮಹಿಳೆಯರ ಸಮೂಹ ಈ ಆಶ್ಚರ್ಯವನ್ನು ನೋಡಲು ಅಲ್ಲಿ ಬಂದು ಸೇರಿತು. ಓಳ್ಳೆಯರೀತಿಯಲ್ಲಿ ಮಂತ್ರಿತವಾದ ಯೂಪದಕಂಬಕ್ಕೆ ಕಟ್ಟುತ್ತಾ ಅಧ್ವರದ ಕುದುರೆಯನ್ನು ಅಚ್ಚುತನ ಮುಂದೆ ಅಭಿಮಂತ್ರಿಸಿದರು; ಪರಮಋಷಿಗಳು ಬಳಿಕ ಭೀಮನನ್ನು ಕರೆದು ಮುದದಿಂದ ಧೌಮ್ಯನು ಹೀಗೆ ಹೇಳಿದನು.
  • (ಪದ್ಯ-೧೫)

ಪದ್ಯ:-:೧೬:

[ಸಂಪಾದಿಸಿ]

ಈಕ್ಷಿಪುದು ಸಲಕ ಜನಮೆಲೆ ವೃಕೋದರ ನಾಂ ಪ|
ರೀಕ್ಷೆಯಂ ತೋರಿಸುವೆನೀತುರಂಗಮದೊಳೊಂ |
ದೇಕ್ಷಣಂ ಖಡ್ಗಮಂ ಕೊಂಡು ನಿಶ್ಚಲನಾಗಿ ನಿಲ್ವುದೆಂದಾ ಧೌಮ್ಯನು ||
ಪ್ರೋಕ್ಷಿಸಿ ಕರಾಗ್ರದಿಂ ಪಿಡಿದು ಹಯದೆಡಗಿವಿಯ |
ನಾಕ್ಷೋಭದಿಂ ಸೀಳಿದೊಡೆ ನೆತ್ತರಿಲ್ಲದೆ ಮ |
ಹಾಕ್ಷೀರಧಾರೆ ಪೊರಮಟ್ಟುದು ಸಮಸ್ತಲೋಕಂ ಕಂಡು ಬೆರಗಾಗಲು ||16||

ಪದವಿಭಾಗ-ಅರ್ಥ:
ಈಕ್ಷಿಪುದು ಸಕಲ ಜನಂ ಎಲೆ ವೃಕೋದರ ನಾಂ ಪರೀಕ್ಷೆಯಂ ತೋರಿಸುವೆನು ಈತುರಂಗಮದೊಳು ಒಂದೇ ಕ್ಷಣಂ ಖಡ್ಗಮಂ ಕೊಂಡು ನಿಶ್ಚಲನಾಗಿ ನಿಲ್ವುದೆಂದಾ ಧೌಮ್ಯನು==[ಈಕ್ಷಿಪುದು ಸಕಲ ಜನರೂ,ನೋಡುವುದು, ಎಲೆ ವೃಕೋದರ ಈ ತುರಗದಲ್ಲಿ ನಾನು ಪರೀಕ್ಷೆಯನ್ನು ಮಾಡಿ ತೋರಿಸುವೆನು; ಒಂದೇ ಕ್ಷಣವು; ಖಡ್ಗವನ್ನು ಹಿಡಿದುಕೊಂಡು ನಿಶ್ಚಲನಾಗಿ ನಿಲ್ಳುವುದು, ಎಂದು ಆ ಧೌಮ್ಯನು ಹೇಳಿದನು.];; ಪ್ರೋಕ್ಷಿಸಿ ಕರಾಗ್ರದಿಂ ಪಿಡಿದು ಹಯದೆ ಎಡಗಿವಿಯನು ಆಕ್ಷೋಭದಿಂ ಸೀಳಿದೊಡೆ ನೆತ್ತರು ಇಲ್ಲದೆ ಮಹಾಕ್ಷೀರಧಾರೆ ಪೊರಮಟ್ಟುದು ಸಮಸ್ತಲೋಕಂ ಕಂಡು ಬೆರಗಾಗಲು==[ಕೈಬೆರಳುಗಳಿಂದ ನೀರನ್ನು ಪ್ರೋಕ್ಷಣೆಮಾಡಿ, ಕುದುರೆಯ ಎಡ ಕಿವಿಯನ್ನು ಹಿಡಿದು, ನೋವಾಗದಂತೆ ಅದನ್ನು ಸೀಳಿದಾಗ ರಕ್ತಬರದೆ ಮಹಾಕ್ಷೀರಧಾರೆ ಹೊರಬಂದಿತು. ಸಮಸ್ತಲೋಕವಿದನ್ನು ಕಂಡು ಬೆರಗಾಯಿತು].
  • ತಾತ್ಪರ್ಯ:ಈಕ್ಷಿಪುದು ಸಕಲ ಜನರೂ,ನೋಡುವುದು, ಎಲೆ ವೃಕೋದರ ಈ ತುರಗದಲ್ಲಿ ನಾನು ಪರೀಕ್ಷೆಯನ್ನು ಮಾಡಿ ತೋರಿಸುವೆನು; ಒಂದೇ ಕ್ಷಣವು; ಖಡ್ಗವನ್ನು ಹಿಡಿದುಕೊಂಡು ನಿಶ್ಚಲನಾಗಿ ನಿಲ್ಳುವುದು, ಎಂದು ಆ ಧೌಮ್ಯನು ಹೇಳಿದನು.ಕೈಬೆರಳುಗಳಿಂದ ನೀರನ್ನು ಪ್ರೋಕ್ಷಣೆಮಾಡಿ, ಕುದುರೆಯ ಎಡ ಕಿವಿಯನ್ನು ಹಿಡಿದು, ನೋವಾಗದಂತೆ ಅದನ್ನು ಸೀಳಿದಾಗ ರಕ್ತ ಬರದೆ ಮಹಾಕ್ಷೀರಧಾರೆ ಹೊರಬಂದಿತು. ಸಮಸ್ತಲೋಕವಿದನ್ನು ಕಂಡು ಬೆರಗಾಯಿತು.
  • (ಪದ್ಯ-೧೬)

ಪದ್ಯ:-:೧೭:

[ಸಂಪಾದಿಸಿ]

ಮತ್ತೆ ಧೌಮ್ಯಂ ಭೀಮಸೇನನಂ ಕರೆದು ಪುರು |
ಷೋತ್ತಮಂ ಪ್ರೀತನಪ್ಪವೊಲಿನ್ನು ಬಾಳಿಂದ |
ಕತ್ತರಿಸು ಕುದುರೆಯ ತಲೆಯನೆಂದು ನೇಮಿಸಿದೊಡನಿಲಸುತನಾ ಕ್ಷಣದೊಳು ||
ಒತ್ತಿಡಿದ ವಾದ್ಯಘೋಷದೊಳಮಲ ಬರ್ಹಗಳ |
ಬಿತ್ತರದ ಪರಿಪೂತ ವಾಜಿ ಶಿರಮಂ ಭೇದಿ |
ಸುತ್ತಿರಲದಿಳೆಗೆ ಬೀಳದೆ ನಭಸ್ಥಳ ಕಡರ್ದಡಗಿತಿನಮಂಡಲದೊಳು ||17||

ಪದವಿಭಾಗ-ಅರ್ಥ:
ಮತ್ತೆ ಧೌಮ್ಯಂ ಭೀಮಸೇನನಂ ಕರೆದು ಪುರುಷೋತ್ತಮಂ ಪ್ರೀತನಪ್ಪವೊಲು ಇನ್ನು ಬಾಳಿಂದ ಕತ್ತರಿಸು ಕುದುರೆಯ ತಲೆಯನೆಂದು ನೇಮಿಸಿದೊಡೆ ಅನಿಲಸುತನು ಆ ಕ್ಷಣದೊಳು==[ಮತ್ತೆ ಧೌಮ್ಯನು ಭೀಮಸೇನನ್ನು ಕರೆದು ಪುರುಷೋತ್ತಮನು ಪ್ರೀತವಾಗುವಂತೆ ಇನ್ನು ಕತ್ತಿಯಿಂದ ಕುದುರೆಯ ತಲೆಯನ್ನು ಕತ್ತರಿಸು ಎಂದು ಆಜ್ಞಾಪಿಸಿದಾಗ ಭೀಮನು ಆ ಕೂಡಲೆ,];; ಒತ್ತಿಡಿದ (ಒತ್ತಿ ಇಡಿದ:ತುಂಬಿದ)ವಾದ್ಯಘೋಷದೊಳು ಅಮಲ ಬರ್ಹಗಳ ಬಿತ್ತರದ ಪಪೂತ ವಾಜಿ ಶಿರಮಂ ಭೇದಿಸುತ್ತಿರಲು ಅದು ಇಳೆಗೆ ಬೀಳದೆ ನಭಸ್ಥಳ ಕಡರ್ದು ಅಡಗಿತು ಇನಮಂಡಲದೊಳು==[ಒಟ್ಟಾಗಿ ಬಾರಿಸಿದ ವಾದ್ಯಘೋಷದ ನಡುವೆ ನಿರ್ಮಲವಾದ ದರ್ಭೆಗಳಿಂದ ಬಹಳವಾಗಿ ಅಲಂಕರಿಸಿದ ಆ ಪುಣ್ಯವಂತ ಶುದ್ಧಿಗೊಳಿಸಿದ ಕುದುರೆಯ ತಲೆಯನ್ನು ಕತ್ತರಿಸಲು, ಅದು ನೆಲಕ್ಕೆ ಬೀಳದೆ ಆಕಾಶ ಸ್ಥಳಕ್ಕೆ ಹಾರಿ ಅಲ್ಲಿ ಸೂರ್ಯಮಂಡಲದಲ್ಲಿ ಅಡಗಿತು].
  • ತಾತ್ಪರ್ಯ:ಮತ್ತೆ ಧೌಮ್ಯನು ಭೀಮಸೇನನ್ನು ಕರೆದು ಪುರುಷೋತ್ತಮನು ಪ್ರೀತವಾಗುವಂತೆ ಇನ್ನು ಕತ್ತಿಯಿಂದ ಕುದುರೆಯ ತಲೆಯನ್ನು ಕತ್ತರಿಸು ಎಂದು ಆಜ್ಞಾಪಿಸಿದಾಗ ಭೀಮನು ಆ ಕೂಡಲೆ, ಒಟ್ಟಾಗಿ ಬಾರಿಸಿದ ವಾದ್ಯಘೋಷದ ನಡುವೆ ನಿರ್ಮಲವಾದ ದರ್ಭೆಗಳಿಂದ ಬಹಳವಾಗಿ ಅಲಂಕರಿಸಿದ ಆ ಪುಣ್ಯವಂತ ಶುದ್ಧಿಗೊಳಿಸಿದ ಕುದುರೆಯ ತಲೆಯನ್ನು ಕತ್ತರಿಸಲು, ಅದು ನೆಲಕ್ಕೆ ಬೀಳದೆ ಆಕಾಶ ಸ್ಥಳಕ್ಕೆ ಹಾರಿ ಅಲ್ಲಿ ಸೂರ್ಯಮಂಡಲದಲ್ಲಿ ಅಡಗಿತು.
  • (ಪದ್ಯ-೧೭)

ಪದ್ಯ:-:೧೮:

[ಸಂಪಾದಿಸಿ]

ಪರಿಶುದ್ಧಮಾಗಿರ್ಪುದೀ ತುರಗಮೆಂದೊರೆದು |
ಹರಿಹೊಯ್ದನದರುರಸ್ಥಳದೊಳುರ್ವಿಗೆ ಬಿದ್ದು |
ದಿರದೆ ಪೊರಮಟ್ಟು ಜೀವಾತ್ಮನತಿತೇಜದಿಂದಚ್ಯುತಾಸ್ಯದೊಳಡಗಲು ||
ವರ ಮುನಿಗಳಮಲ ಧರ್ಮಮಿದೆಂದರೆಲೆ ಯುಧಿ |
ಷ್ಠಿರ ಪೂರ್ವ ಯುಗದಧ್ವರಂಗಳೊಳ್ ಕಾಣೆವೀ |
ಪರಿ ಪವಿತ್ರದ ಪಶುವನಿದು ನಿನಗೆ ದೊರೆಕೊಂಡು ಕ್ರತು ಸಫಲಮಾಯ್ತೆಂದರು ||18||

ಪದವಿಭಾಗ-ಅರ್ಥ:
ಪರಿಶುದ್ಧಮಾಗಿ ಇರ್ಪುದು ಈ ತುರಗಮೆಂದು ಒರೆದು ಹರಿ ಹೊಯ್ದನು ಅದರ ಉರಸ್ಥಳದೊಳು ಉರ್ವಿಗೆ ಬಿದ್ದುದು ಇರದೆ ಪೊರಮಟ್ಟು ಜೀವಾತ್ಮನು ಅತಿತೇಜದಿಂದ ಅಚ್ಯುತ ಆಸ್ಯದೊಳು ಅಡಗಲು==['ಪರಿಶುದ್ಧವಾಗಿ ಇರುವುದು ಈ ಕುದುರೆ' ಎಂದು, ಕೃಷ್ಣನು ಅದರ ಎದೆಯ ಸ್ಥಳದಲ್ಲಿ ಹೊಡೆದನು. ಆಗ ಅದು ನೆಲಕ್ಕೆ ಬಿತ್ತು. ಅದರ ಜೀವಾತ್ಮನು ಅತಿ ತೇಜಸ್ಸಿನಿಂದ ದೇಹದಲ್ಲಿ ಇರದೆ ಹೊರಟು ಕೃಷ್ಣನ ಮುಖದೊಳಗೆ ಅಡಗಿತು. ಆಗ] ವರ ಮುನಿಗಳು ಅಮಲ ಧರ್ಮಮ್ ಇದೆಂದರು ಎಲೆ ಯುಧಿಷ್ಠಿರ ಪೂರ್ವ ಯುಗದ ಅಧ್ವರಂಗಳೊಳ್ ಕಾಣೆವು ಈಪರಿ ಪವಿತ್ರದ ಪಶುವನು ಇದು ನಿನಗೆ ದೊರೆಕೊಂಡು ಕ್ರತು ಸಫಲಮಾಯ್ತು ಎಂದರು==[ಪೂಜ್ಯ ಮುನಿಗಳು ಪವಿತ್ರ ಧರ್ಮವು ಇದು ಎಂದರು. ಎಲೆ ಯುಧಿಷ್ಠಿರ ಪೂರ್ವ ಯುಗದಲ್ಲಿ ನೆಡೆದ ಅಧ್ವರಗಳಲ್ಲಿ ಈ ಪರಿಯ ಪವಿತ್ರದ ಪಶುವನ್ನು ಕಾಣೆವು. ಇದು ನಿನಗೆ ದೊರೆತಿದ್ದುದರಿಂದ ಕ್ರತು/ಯಜ್ಞವು ಸಫಲವಾಯ್ತು,' ಎಂದರು].
  • ತಾತ್ಪರ್ಯ:'ಪರಿಶುದ್ಧವಾಗಿ ಇರುವುದು ಈ ಕುದುರೆ' ಎಂದು, ಕೃಷ್ಣನು ಅದರ ಎದೆಯ ಸ್ಥಳದಲ್ಲಿ ಹೊಡೆದನು. ಆಗ ಅದು ನೆಲಕ್ಕೆ ಬಿತ್ತು. ಅದರ ಜೀವಾತ್ಮನು ಅತಿ ತೇಜಸ್ಸಿನಿಂದ ದೇಹದಿಂಧ ಹೊರಟು ಕೃಷ್ಣನ ಮುಖದೊಳಗೆ ಅಡಗಿತು. ಆಗ ಪೂಜ್ಯ ಮುನಿಗಳು ಪವಿತ್ರ ಧರ್ಮವು ಇದು ಎಂದರು. ಎಲೆ ಯುಧಿಷ್ಠಿರ ಪೂರ್ವ ಯುಗದಲ್ಲಿ ನೆಡೆದ ಅಧ್ವರಗಳಲ್ಲಿ ಈ ಪರಿಯ ಪವಿತ್ರದ ಪಶುವನ್ನು ಕಾಣೆವು. ಇದು ನಿನಗೆ ದೊರೆತಿದ್ದುದರಿಂದ ಕ್ರತು/ಯಜ್ಞವು ಸಫಲವಾಯ್ತು,' ಎಂದರು.
  • ಟಿಪ್ಪಣಿ:(ಯಜ್ಞಕ್ಕೆ ಬಲಿಪಶುವಾಗಿ ಪಾಂಡವರ ಕುದುರೆಯನ್ನು ಮಾತ್ರಾ ತಂದಿರುತ್ತೆ; ಮಯೂರಧ್ವಜನ ಯಾಗದ ಕುದುರೆಯೂ ಬಂದಿತ್ತು. ಹಿಂತಿರುಗಿ ಬಂದ ಎರಡು ಯಜ್ಞದ ಕುದುರೆಗಳನ್ನು ಬಲಿಕೊಡಬೇಕಾಗಿತ್ತು, ಕವಿ ಇಲ್ಲಿ ಉದ್ದೇಶಪೂರ್ವಕ ಮತ್ತೊಂದು ಕುದುರೆಯನ್ನು ಅಹುತಿಗೆ ಕರೆತರುವುದನ್ನು ಬಿಟ್ಟಿದ್ದಾನೋ, ಅಥವಾ ಮರೆತನೋ ತಿಳಿಯದು. ಒಟ್ಟು ಇಪ್ಪತ್ತೊಂದು ಯೂಪಸ್ಥಂಬ/ ಬಲಿಕಂಬಗಳಲ್ಲಿ ವಧಾಪ್ರಾಣಿಗಳನ್ನು ಕಟ್ಟಿದ್ದರು. ಪೂರ್ಣಾಹುತಿಯ ನಂತರ ಅವೆಲ್ಲಅ ಪ್ರಾಣಿಗಳನ್ನೂ ಯಜ್ಞಕ್ಕೆ ಬಲಿಕೊಡದೆ ಬಿಡಲಾಯಿತು. ಆದರೆ ಇನ್ನೊಂದು ಯಜ್ಞಕುದುರೆಯ ವಿಷಯ ಪ್ರತ್ಯೇಕ ಹೇಳಿಲ್ಲ.)
  • (ಪದ್ಯ-೧೮)

ಪದ್ಯ:-:೧೯:

[ಸಂಪಾದಿಸಿ]

ಏವೇಳ್ವೆನಾಶ್ಚರ್ಯಮಂ ಬಳಿಕ ವಾಜಿಯ ಕ |
ಳೇವರಂ ಕರ್ಪೂರಮಾದುದತಿಶುಭ್ರದಿಂ |
ಭಾವಿಸಿ ಮಹಾಮುನಿಗಳಿದುವೆ ಕೃಷ್ಣನ ಮಹಿಮೆಯೆಂದು ವಿಸ್ಮಿತರಾಗಲು ||
ಭೂವರಂ ಹರಿಸಹಿತ ಪತ್ನಿಯಂ ಕೂಡಿ ಕೊಂ |
ಡಾವೇಷ್ಟಿಸಿದ ಸಕಲ ಬಾಂಧವರ ಗಡಣದಿಂ ||
ಪಾವಕನ ಮುಂದೆ ಕುಳ್ಳಿರ್ದನದರಿಂದೆ ಹೋಮಂಗಳಂ ಮಾಡಿಸಲ್ಕೆ ||19||

ಪದವಿಭಾಗ-ಅರ್ಥ:
ಏವೇಳ್ವೆನು ಆಶ್ಚರ್ಯಮಂ ಬಳಿಕ ವಾಜಿಯ ಕಳೇವರಂ ಕರ್ಪೂರಮಾದುದು ಅತಿಶುಭ್ರದಿಂ ಭಾವಿಸಿ ಮಹಾಮುನಿಗಳು ಇದುವೆ ಕೃಷ್ಣನ ಮಹಿಮೆಯೆಂದು ವಿಸ್ಮಿತರಾಗಲು==[ಏನುಹೇಳಲಿ ಆಶ್ಚರ್ಯವನ್ನು! ಬಳಿಕ ಕುದುರೆಯ ದೇಹವು ಅತಿಶುಭ್ರವಾದ ಕರ್ಪೂರವಾಯಿತು, ಯೋಚಿಸಿ ಮಹಾಮುನಿಗಳು ಇದು ಕೃಷ್ಣನ ಮಹಿಮೆಯೆಂದು ವಿಸ್ಮಯಪಟ್ಟರು.];; ಭೂವರಂ ಹರಿಸಹಿತ ಪತ್ನಿಯಂ ಕೂಡಿ ಕೊಂಡಾವೇಷ್ಟಿಸಿದ ಸಕಲ ಬಾಂಧವರ ಗಡಣದಿಂ ಪಾವಕನ ಮುಂದೆ ಕುಳ್ಳಿರ್ದನು ಅದರಿಂದೆ ಹೋಮಂಗಳಂ ಮಾಡಿಸಲ್ಕೆ==[ರಾಜ ಧರ್ಮಜನು ಕೃಷ್ನನ ಸಹಿತ ಪತ್ನಿಯನ್ನು ಕೂಡಿಕೊಂಡು ಸುತ್ತುವರಿದ ಸಕಲ ಬಾಂಧವರ ಸಮೂಹದೊಡನೆ, ಅದರಿಂದ ಹೋಮಗಳನ್ನು ಮಾಡಿಸಲು ಅಗ್ನಿಯ ಮುಂದೆ ಕುಳಿತಿದ್ದನು].
  • ತಾತ್ಪರ್ಯ:'ಏನುಹೇಳಲಿ ಆಶ್ಚರ್ಯವನ್ನು, ಬಳಿಕ ಕುದುರೆಯ ದೇಹವು ಅತಿಶುಭ್ರವಾದ ಕರ್ಪೂರವಾಯಿತು, ಯೋಚಿಸಿ ಮಹಾಮುನಿಗಳು ಇದು ಕೃಷ್ಣನ ಮಹಿಮೆಯೆಂದು ವಿಸ್ಮಯಪಟ್ಟರು. ರಾಜ ಧರ್ಮಜನು ಕೃಷ್ನನ ಸಹಿತ ಪತ್ನಿಯನ್ನು ಕೂಡಿಕೊಂಡು ಸುತ್ತುವರಿದ ಸಕಲ ಬಾಂಧವರ ಸಮೂಹದೊಡನೆ, ಅದರಿಂದ ಹೋಮಗಳನ್ನು ಮಾಡಿಸಲು ಅಗ್ನಿಯ ಮುಂದೆ ಕುಳಿತಿದ್ದನು.
  • (ಪದ್ಯ-೧೯)

ಪದ್ಯ:-:೧೯:

[ಸಂಪಾದಿಸಿ]

ಧಾರಿಣಿಗೆ ಕುಪ್ಪಳಿಸಿದಾ ತುರಗದೊಡಲ ಕ |
ರ್ಪೂರಮಂ ಸ್ರುವದಿಂದೆ ಸಂಗ್ರಹಿಸಿ ಶಾಸ್ತ್ರ ಪ್ರ |
ಕಾರದಿಂದಾಗ ವೇದವ್ಯಾಸ ಮುನಿಪನಮರೇಂದ್ರನಂ ಕರೆದು ಬರಿಸಿ ||
ಈ ರಾಜಕುಲತಿಲಕನಧ್ವರದೊಳೀವ ಘನ |
ಸಾರಾಹುತಿಯನಿದ ಸ್ವೀಕರಿಸು ಮುಂದೆ ನಿನ |
ಗಾರು ಕೊಡುವವರಿಲ್ಲ ಕಲಿಯುಗದೊಳೀ ತೆರದೊಳೆನೆ ಶಕ್ರನಿಂತೆಂದನು ||20||

ಪದವಿಭಾಗ-ಅರ್ಥ:
ಧಾರಿಣಿಗೆ ಕುಪ್ಪಳಿಸಿದ ಆ ತುರಗದ ಒಡಲ ಕರ್ಪೂರಮಂ ಸ್ರುವದಿಂದೆ ಸಂಗ್ರಹಿಸಿ ಶಾಸ್ತ್ರ ಪ್ರಕಾರದಿಂದಾಗ ವೇದವ್ಯಾಸ ಮುನಿಪನು ಅಮರೇಂದ್ರನಂ ಕರೆದು ಬರಿಸಿ==[ಭೂಮಿಗೆ ರಾಶಿಯಾಗಿ ಬಿದ್ದಿರುವ ಆ ಕುದುರೆಯ ಕರ್ಪೂರವನ್ನು ಹೋಮಪಾತ್ರೆಯಿಂದ ಸಂಗ್ರಹಿಸಿ ಶಾಸ್ತ್ರ ಪ್ರಕಾರದಿಂದ ಆಗ ವೇದವ್ಯಾಸ ಮುನಿಯು, ದೇವೇಂದ್ರನನ್ನು ಕರೆದು ಅವನೇ ಬರುವಂತೆಮಾಡಿ];; ಈ ರಾಜಕುಲತಿಲಕನು ಅಧ್ವರದೊಳು ಈವ (ಕೊಡುವ) ಘನಸಾರ ಆಹುತಿಯನು ಇದ ಸ್ವೀಕರಿಸು ಮುಂದೆ ನಿನಗಾರು ಕೊಡುವವರಿಲ್ಲ ಕಲಿಯುಗದೊಳು ಈ ತೆರದೊಳು ಎನೆ ಶಕ್ರನು ಇಂತೆಂದನು==[ಈ ರಾಜಕುಲತಿಲಕನಾದ ಯುಧಿಷ್ಠಿರನು ಅಶ್ವಮೇಧ ಯಾಗದಲ್ಲಿ ಕೊಡುವ ಕರ್ಪೂರವಾದ ಆಹುತಿಯನ್ನು 'ಇದನ್ನು ಸ್ವೀಕರಿಸು' ಮುಂದೆ ನಿನಗೆ ಯಾರೂ ಕಲಿಯುಗದಲ್ಲಿ ಈ ತೆರದಲ್ಲಿ ಕೊಡುವವರಿಲ್ಲ.' ಎನ್ನಲು ಇಂದ್ರನು ಹೀಗೆ ಹೇಳಿದನು.].
  • ತಾತ್ಪರ್ಯ:ಭೂಮಿಗೆ ರಾಶಿಯಾಗಿ ಬಿದ್ದಿರುವ ಆ ಕುದುರೆಯ ಕರ್ಪೂರವನ್ನು ಹೋಮಪಾತ್ರೆಯಿಂದ ಸಂಗ್ರಹಿಸಿ ಶಾಸ್ತ್ರ ಪ್ರಕಾರದಿಂದ ಆಗ ವೇದವ್ಯಾಸ ಮುನಿಯು, ದೇವೇಂದ್ರನನ್ನು ಕರೆದು ಅವನೇ ಬರುವಂತೆಮಾಡಿ, ಈ ರಾಜಕುಲತಿಲಕನಾದ ಯುಧಿಷ್ಠಿರನು ಅಶ್ವಮೇಧ ಯಾಗದಲ್ಲಿ ಕೊಡುವ ಕರ್ಪೂರವಾದ ಆಹುತಿಯನ್ನು 'ಇದನ್ನು ಸ್ವೀಕರಿಸು' ಮುಂದೆ ನಿನಗೆ ಯಾರೂ ಕಲಿಯುಗದಲ್ಲಿ ಈ ತೆರದಲ್ಲಿ ಕೊಡುವವರಿಲ್ಲ.' ಎನ್ನಲು ಇಂದ್ರನು ಹೀಗೆ ಹೇಳಿದನು.
  • (ಪದ್ಯ-೨೦)

ಪದ್ಯ:-:೨೧:

[ಸಂಪಾದಿಸಿ]

ಸರ್ಪ ನಕ್ಷತ್ರ ಸಂಯುತದ ಗುರುವಾರಮಾ |
ಗಿರ್ಪುದಿಂದೆಲೆ ಮುನೀಶ್ವರ ಮಹೀಪಾಲಂ ಸ |
ಮರ್ಪಿಸುವ ಘನಸಾರಾಹುತಿಯನಗ್ನಿ ಮುಖದಿಂದೆ ನೀನೆನಗಿತ್ತೊಡೆ ||
ದರ್ಪದಿಂ ತೃಪ್ತನಾದಪೆನೆಂದು ಸುರಪನೆ |
ಲ್ಲರ್‍ಪೊಗಳೆ ಪ್ರತ್ಯಕ್ಷಮಾಗಿ ಬಂದಿರಲಾಗ |
ಕರ್ಪೂರಮಂ ಸ್ರುವದೊಳನಲನೊಳ್ ಬೇಳಿದಂ ವ್ಯಾಸಮುನಿ ಮಂತ್ರದಿಂದೆ ||21||

ಪದವಿಭಾಗ-ಅರ್ಥ:
ಸರ್ಪ ನಕ್ಷತ್ರ ಸಂಯುತದ ಗುರುವಾರಮ್ ಆಗಿರ್ಪುದಿಂದು ಎಲೆ ಮುನೀಶ್ವರ ಮಹೀಪಾಲಂ ಸಮರ್ಪಿಸುವ ಘನಸಾರ ಆಹುತಿಯನು ಅಗ್ನಿ ಮುಖದಿಂದೆ ನೀನು ಎನಗಿತ್ತೊಡೆ==[ಇಂದ್ರ ಹೇಳಿದನು: ಸರ್ಪ/ಆಶ್ಲೇಷಾ ನಕ್ಷತ್ರದಿಂದ ಕೂಡಿರುವ ಗುರುವಾರವು ಆಗಿದೆ ಇಂದು; ಎಲೆ ಮುನೀಶ್ವರನೇ, ಮಹೀಪಾಲ ಧರ್ಮಜನು ಸಮರ್ಪಿಸುವ ಘನಸಾರ/ಕರ್ಪೂರದ ಆಹುತಿಯನ್ನು ಅಗ್ನಿ ಮುಖದಿಂದ ನೀನು ನನಗೆ ಕೊಟ್ಟರೆ];; ದರ್ಪದಿಂ (ದರ್ಪ:ಅತಿಶಯ) ತೃಪ್ತನಾದಪೆನು ಎಂದು ಸುರಪನು ಎಲ್ಲರ್‍ ಪೊಗಳೆ ಪ್ರತ್ಯಕ್ಷಮಾಗಿ ಬಂದಿರಲು ಆಗ ಕರ್ಪೂರಮಂ ಸ್ರುವದೊಳು ಅನಲನೊಳ್ ಬೇಳಿದಂ ವ್ಯಾಸಮುನಿ ಮಂತ್ರದಿಂದೆ==[ಅತಿಶಯವಾಗಿ ತೃಪ್ತನಾಗುವೆನು, ಎಂದು ಇಂದ್ರನು ಹೇಳಲು, ಎಲ್ಲರೂ ಹೊಗಳಲು, ಅವನ ಪ್ರತ್ಯಕ್ಷವಾಗಿ ಬಂದಿರಲು, ವ್ಯಾಸಮುನಿಯು ಮಂತ್ರಪೂರ್ವಕ ಆಗ ಕರ್ಪೂರವನ್ನು ಸ್ರುವ/ಆಹುತಿಕೊಡುವ ಪಾತ್ರೆಯಿಂದ ಅಗ್ನಿಯಲ್ಲಿ ಬೀಳಿಸಿದನು /ಹಾಕಿದನು].
  • ತಾತ್ಪರ್ಯ:ಇಂದ್ರ ಹೇಳಿದನು: ಆಶ್ಲೇಷಾ ನಕ್ಷತ್ರದಿಂದ ಕೂಡಿರುವ ಗುರುವಾರವು ಆಗಿದೆ ಇಂದು; ಎಲೆ ಮುನೀಶ್ವರನೇ, ಮಹೀಪಾಲ ಧರ್ಮಜನು ಸಮರ್ಪಿಸುವ ಘನಸಾರ/ಕರ್ಪೂರದ ಆಹುತಿಯನ್ನು ಅಗ್ನಿ ಮುಖದಿಂದ ನೀನು ನನಗೆ ಕೊಟ್ಟರೆ, ಅತಿಶಯವಾಗಿ ತೃಪ್ತನಾಗುವೆನು, ಎಂದು ಇಂದ್ರನು ಹೇಳಲು, ಎಲ್ಲರೂ ಹೊಗಳಲು, ಅವನ ಪ್ರತ್ಯಕ್ಷವಾಗಿ ಬಂದಿರಲು, ವ್ಯಾಸಮುನಿಯು ಮಂತ್ರಪೂರ್ವಕ ಆಗ ಕರ್ಪೂರವನ್ನು ಸ್ರುವದಿಂದ ಅಗ್ನಿಯಲ್ಲಿ ಹಾಕಿದನು.
  • (ಪದ್ಯ-೨೦)

ಪದ್ಯ:-:೨೨:

[ಸಂಪಾದಿಸಿ]

ಪ್ರತ್ಯಕ್ಷಮಾದ ಶಕ್ರಾದಿ ದೇವತೆಗಳ್ಗೆ |
ಶ್ರುತ್ಯುಕ್ತ ಮಂತ್ರವಿಧಿಗಳ ವಿಧಾನಂಗಳಿಂ |
ದತ್ಯಧಿಕ ಘಿನಸಾರದಾಹುತಿಗಳಂ ಯಥಾಕ್ರಮದಿಂದೆ ಹುತವನೊಳು ||
ಸತ್ಯ ಸಂಪನ್ನ ವೇದವ್ಯಾಸನೀಯಲ್ಕೆ |
ಸುತ್ಯಾಗದೊಳ್ (ಸುತ್ಯಾಗದಿಂ) ಸವನ ಸಮಯದೊಳ್ ವಿರಚಿಸುವ |
ಕೃತ್ಯಂಗಳಿಂದೆ ನಡೆದುದು ಮಖಂ ತ್ರಿಜಗದ ಚರಾಚರಂ ಮಿಗೆತಣಿಯಲು ||22||

ಪದವಿಭಾಗ-ಅರ್ಥ:
ಪ್ರತ್ಯಕ್ಷಮಾದ ಶಕ್ರಾದಿ ದೇವತೆಗಳ್ಗೆ ಶ್ರುತ್ಯುಕ್ತ ಮಂತ್ರವಿಧಿಗಳ ವಿಧಾನಂಗಳಿಂದ ಅತ್ಯಧಿಕ ಘಿನಸಾರದ ಆಹುತಿಗಳಂ ಯಥಾಕ್ರಮದಿಂದೆ ಹುತವನೊಳು==[ಪ್ರತ್ಯಕ್ಷವಾದ ಇಂದ್ರಾದಿ ದೇವತೆಗಳಿಗೆ ಶ್ರುತ್ಯುಕ್ತ ಮಂತ್ರವಿಧಿಗಳ ವಿಧಾನಗಳಿಂದ ಅತ್ಯಧಿಕ ಘಿನಸಾರ/ಕರ್ಪೂರದ ಆಹುತಿಗಳನ್ನು ಯಥಾಕ್ರಮದಿಂದ ಅಗ್ನಿಯಲ್ಲಿ,];; ಸತ್ಯ ಸಂಪನ್ನ ವೇದವ್ಯಾಸನು ಈಯಲ್ಕೆ ಸುತ್ಯಾಗದೊಳ್ ಸವನ ಸಮಯದೊಳ್ ವಿರಚಿಸುವ ಕೃತ್ಯಂಗಳಿಂದೆ ನಡೆದುದು ಮಖಂ ತ್ರಿಜಗದ ಚರಾಚರಂ ಮಿಗೆ ತಣಿಯಲು==[ಸತ್ಯ ಸಂಪನ್ನನಾದ ವೇದವ್ಯಾಸನು ಕೊಡಲು, ಉತ್ತಮ ತ್ಯಾಗದಿಂದ ಯಜ್ಞ ಸಮಯದಲ್ಲಿ ಮಾಡುತ್ತಿರುವ ಕೃತ್ಯಗಳಿಂದ ಮೂರೂ ಲೋಕದ ಚರಾಚರ ಜೀವಿಗಳು ಬೇಕಾದಷ್ಟು ತೃಪ್ತಿಪಡೆಯುವಂತೆ ಯಜ್ಞವು ನಡೆಯಿತು.]
  • ತಾತ್ಪರ್ಯ:ಪ್ರತ್ಯಕ್ಷವಾದ ಇಂದ್ರಾದಿ ದೇವತೆಗಳಿಗೆ ಶ್ರುತ್ಯುಕ್ತ ಮಂತ್ರವಿಧಿಗಳ ವಿಧಾನಗಳಿಂದ ಅತ್ಯಧಿಕ ಘಿನಸಾರ/ಕರ್ಪೂರದ ಆಹುತಿಗಳನ್ನು ಯಥಾಕ್ರಮದಿಂದ ಅಗ್ನಿಯಲ್ಲಿ, ಸತ್ಯ ಸಂಪನ್ನನಾದ ವೇದವ್ಯಾಸನು ಕೊಡಲು, ಉತ್ತಮ ತ್ಯಾಗದಿಂದ ಯಜ್ಞ ಸಮಯದಲ್ಲಿ ಮಾಡುತ್ತಿರುವ ಕೃತ್ಯಗಳಿಂದ ಮೂರೂ ಲೋಕದ ಚರಾಚರ ಜೀವಿಗಳು ಬೇಕಾದಷ್ಟು ತೃಪ್ತಿಪಡೆಯುವಂತೆ ಯಜ್ಞವು ನಡೆಯಿತು.]
  • (ಪದ್ಯ-೨೨)

ಪದ್ಯ:-:೨೩:

[ಸಂಪಾದಿಸಿ]

ಸಾಕ್ಷಾತ್ಸುಯಜ್ಞಸ್ವರೂಪನಂತರ್ಯಾಮಿ |(ಸಾಕ್ಷಾತ್ಸುಯಜ್ಞಸ್ವರೂಪನಚ್ಯುತನೆ ತಾಂ|)
ಸಾಕ್ಷಿಯಾಗಿರ್ದು ಮಾಡಿಸುವವಂ ಶ್ರೌತ ವಿ |
ದ್ಯಾಕ್ಷಮನೆನಿಪ್ಪ ಧೌಮ್ಯನೆ ಕರ್ಮ ಕರ್ತೃ ವಿಂಶತಿ ಕಮಲಸಂಭವರನು ||
ಈಕ್ಷಿಸಿದ ಬಕದಾಲ್ಭ್ಯನೇ ಬ್ರಹ್ಮನಾಚಾರ್ಯ |
ನೇ ಕ್ಷಿತಿಸುರಾಗ್ರ್ಯ ವೇದವ್ಯಾಸನಧ್ವರಕೆ |
ದೀಕ್ಷಿತನೆ ಯಮಜಂ ಮಹಾಮುನಿಗಳೇಋತ್ವಿಜರ್ ಪೊಸತಿದೆನಿಸದಿಹುದೆ ||23||

ಪದವಿಭಾಗ-ಅರ್ಥ:
ಸಾಕ್ಷಾತ್ ಸುಯಜ್ಞಸ್ವರೂಪನು ಅಂತರ್ಯಾಮಿ (ಸಾಕ್ಷಾತ್ ಸುಯಜ್ಞಸ್ವರೂಪನು ಅಚ್ಯುತನೆ ತಾಂ) ಸಾಕ್ಷಿಯಾಗಿರ್ದು, ಮಾಡಿಸುವವಂ ಶ್ರೌತ ವಿದ್ಯಾಕ್ಷಮನು ಎನಿಪ್ಪ ಧೌಮ್ಯನೆ ಕರ್ಮ ಕರ್ತೃ,==[ಈ ಯಜ್ಞಕ್ಕೆ, ಸಾಕ್ಷಾತ್ ಶ್ರೇಷ್ಠ (ಯಜ್ಞಸ್ವರೂಪನು ಅಂತರ್ಯಾಮಿ) ಯಜ್ಞಸ್ವರೂಪನು ಅಚ್ಯುತನೇ ತಾನು ಸಾಕ್ಷಿಯಾಗಿರುವನು, ಶ್ರೌತ ವಿದ್ಯೆಯಲ್ಲಿ ಕ್ಷಮ/ ಸಮರ್ಥನು ಎನ್ನಸಿದ ಧೌಮ್ಯನೇ ಮಾಡಿಸುವವನು, ,];; ವಿಂಶತಿ ಕಮಲಸಂಭವರನು ಈಕ್ಷಿಸಿದ ಬಕದಾಲ್ಭ್ಯನೇ ಬ್ರಹ್ಮನಾಚಾರ್ಯನೇ ಕ್ಷಿತಿ ಸುರ ಅಗ್ರ್ಯ (ಕ್ಷಿತಿ:ಭೂಮಿಯ,ಸುರ:ದೇವತೆ, ಅಗ್ರ್ಯ:ಶ್ರೇಷ್ಠ) ವೇದವ್ಯಾಸನು ಅಧ್ವರಕೆ ದೀಕ್ಷಿತನೆ ಯಮಜಂ ಮಹಾಮುನಿಗಳೇ ಋತ್ವಿಜರ್ ಪೊಸತು ಇದೆನಿಸದೆ ಇಹುದೆ ==[ಇಪ್ಪತ್ತು ಬ್ರಹ್ಮರನ್ನು ಕಂಡ ಬಕದಾಲ್ಭ್ಯನೇ ಬ್ರಹ್ಮನು, ಆಚಾರ್ಯನೇ ವಿಪ್ರರಲ್ಲಿ ಶ್ರೇಷ್ಠ ವೇದವ್ಯಾಸನು, ಅಧ್ವರಕ್ಕೆ ದೀಕ್ಷಿತನೇ ಯಮನ ಮಗ ಧರ್ಮಜನು, ಮಹಾಮುನಿಗಳೇ ಋತ್ವಿಜರು, ಈ ಯಜ್ಞ ಹೊಸತು ಎನಿಸದೆ ಇರುವುದೆ!]
  • ತಾತ್ಪರ್ಯ:ಈ ಯಜ್ಞಕ್ಕೆ, ಸಾಕ್ಷಾತ್ ಶ್ರೇಷ್ಠ ಯಜ್ಞಸ್ವರೂಪನಾದ ಅಚ್ಯುತನೇ ತಾನು ಸಾಕ್ಷಿಯಾಗಿರುವನು, ಶ್ರೌತ ವಿದ್ಯೆಯಲ್ಲಿ ಕ್ಷಮೆ/ ಸಮರ್ಥನು ಎನ್ನಸಿದ ಧೌಮ್ಯನೇ ಮಾಡಿಸುವವನು, ಇಪ್ಪತ್ತು ಬ್ರಹ್ಮರನ್ನು ಕಂಡ ಬಕದಾಲ್ಭ್ಯನೇ ಬ್ರಹ್ಮನು, ಆಚಾರ್ಯನೇ ವಿಪ್ರರಲ್ಲಿ ಶ್ರೇಷ್ಠ ವೇದವ್ಯಾಸನು, ಅಧ್ವರಕ್ಕೆ ದೀಕ್ಷಿತನೇ ಯಮನ ಮಗ ಧರ್ಮಜನು, ಮಹಾಮುನಿಗಳೇ ಋತ್ವಿಜರು, ಈ ಯಜ್ಞ ಹೊಸತು ಎನಿಸದೆ ಇರುವುದೆ!
  • (ಪದ್ಯ-೨೩)

ಪದ್ಯ:-:೨೪:

[ಸಂಪಾದಿಸಿ]

ಆಹುತಿಗಳಂ ಕೊಂಡು ಮಿಗೆ ತೇಜದಿಂದೊಪ್ಪು |
ವಾ ಹುತವಹ ಜ್ವಾಲೆಗಳ ಪುಣ್ಯದರ್ಶನದೊ |
ಳಾ ಹೋಮಧೂಮ ಸಂಸ್ಪರ್ಶನದೊಳಾ ಕರ್ಮಕೃತ ಸೋಮಪಾನದಿಂದೆ ||
ಆ ಹೋತ್ರದುರು ಮಂತ್ರ ಘೋಷಣಶ್ರವಣದಿಂ |
ದಾ ಹವಿರ್ಗಂಧದಾಘ್ರಾಣದಿಂದಾ ಮಖದೊ |
ಳಾ ಹಿಮಕರಾನ್ವಯ ಲಲಾಮನೆಸೆದಂ ಪೂತನಾಗಿ ಸಂತೋಷದಿಂದೆ ||24||

ಪದವಿಭಾಗ-ಅರ್ಥ:
ಆಹುತಿಗಳಂ ಕೊಂಡು ಮಿಗೆ ತೇಜದಿಂದೊಪ್ಪುವ ಆ ಹುತವಹ (ಬೆಂಕಿಯಲ್ಲಿ ಸುಡುತ್ತಿರುವ) ಜ್ವಾಲೆಗಳ ಪುಣ್ಯದರ್ಶನದೊಳು ಆ ಹೋಮಧೂಮ ಸಂಸ್ಪರ್ಶನದೊಳು ಆ ಕರ್ಮಕೃತ ಸೋಮಪಾನದಿಂದೆ==[ಆಹುತಿಗಳ್ನು ತೆಗೆದುಕೊಂಡು ಬಹಳ ತೇಜಸ್ಸಿನಂದ ಕಾಣುವ ಆ ಹುತವಾಗುತ್ತಿರುವ ಜ್ವಾಲೆಗಳ ಪುಣ್ಯದರ್ಶನದಿಂದ, ಆ ಹೋಮದ ಹೊಗೆಯ ಸಂಸ್ಪರ್ಶನದಲ್ಲಿ ಆ ಕರ್ಮಕೃತ ಸೋಮಪಾನದಿಂದ];; ಆ ಹೋತ್ರದುರು ಮಂತ್ರ ಘೋಷಣ ಶ್ರವಣದಿಂದ ಆ ಹವಿರ್ಗಂಧದ ಆಘ್ರಾಣದಿಂದ ಆ ಮಖದೊಳು ಆ ಹಿಮಕರಾನ್ವಯ (ಚಂದ್ರ ವಂಶ)ಲಲಾಮನು ಎಸೆದಂ ಪೂತನಾಗಿ ಸಂತೋಷದಿಂದೆ==[ಆ ಹೋತ್ರದ ಹೆಚ್ಚಿನ ಮಂತ್ರ ಘೋಷದ ಶ್ರವಣದಿಂದ, ಆ ಹವಿಸ್ಸಿನಂದ ಬಂದ ಗಂಧ/ಪರಿಮಳದ ಆಘ್ರಾಣದಿಂದ, ಆ ಯಜ್ಞದಲ್ಲಿ ಆ ಚಂದ್ರವಂಶದ ಶ್ರೇಷ್ಠನಾದ ಯುಧಿಷ್ಠಿರನು ಪರಿಶುದ್ಧನಾಗಿ ಸಂತೋಷದಿಂದ ಶೋಭಿಸಿದನು.].
  • ತಾತ್ಪರ್ಯ:ಆಹುತಿಗಳ್ನು ತೆಗೆದುಕೊಂಡು ಬಹಳ ತೇಜಸ್ಸಿನಂದ ಕಾಣುವ ಆ ಹುತವಾಗುತ್ತಿರುವ ಜ್ವಾಲೆಗಳ ಪುಣ್ಯದರ್ಶನದಿಂದ, ಆ ಹೋಮದ ಹೊಗೆಯ ಸಂಸ್ಪರ್ಶನದಲ್ಲಿ ಆ ಕರ್ಮಕೃತ ಸೋಮಪಾನದಿಂದ, ಆ ಹೋತ್ರದ ಹೆಚ್ಚಿನ ಮಂತ್ರ ಘೋಷದ ಶ್ರವಣದಿಂದ, ಆ ಹವಿಸ್ಸಿನಂದ ಬಂದ ಗಂಧ/ಪರಿಮಳದ ಆಘ್ರಾಣದಿಂದ, ಆ ಯಜ್ಞದಲ್ಲಿ ಆ ಚಂದ್ರವಂಶದ ಶ್ರೇಷ್ಠನಾದ ಯುಧಿಷ್ಠಿರನು ಪರಿಶುದ್ಧನಾಗಿ ಸಂತೋಷದಿಂದ ಶೋಭಿಸಿದನು.
  • (ಪದ್ಯ-೨೪)IV

ಪದ್ಯ:-:೨೫:

[ಸಂಪಾದಿಸಿ]

ಯಾಗದಿಂ ತಣಿದು ಪಾವನಮಾದುದಿಳೆ ಹವಿ |
ರ್ಭಾಗದಿಂ ತುಷ್ಟಿವಡೆದುದು ದೇವತಾವಳಿ ಸ |
ರಾಗದಿಂದಸುರಾರಿ ಸಂತುಷ್ಟನಾಗಿ ತೆಗೆದಪ್ಪಿ ಭೂಪಾಲಕಂಗೆ ||
ಈಗ ನಿನ್ನಧ್ವರಂ ಸಾಂಗದಿಂ ಸಂಪೂರ್ಣ |
ಮಾಗಿ ಮುಗಿದುದು ಮಾಳ್ಪುದವಭೃತ ಸ್ನಾನಮಂ |
ಭಾಗೀರಥಿಯೊಳೆಂದು ನೇಮಿಸಿದನಖಿಳ ಮುನಿಜನಮೈದೆ ಕೊಂಡಾಡಲು ||25||

ಪದವಿಭಾಗ-ಅರ್ಥ:
ಯಾಗದಿಂ ತಣಿದು ಪಾವನಮಾದುದು ಇಳೆ ಹವಿರ್ಭಾಗದಿಂ ತುಷ್ಟಿವಡೆದುದು ದೇವತೆ ಆವಳಿ ಸರಾಗದಿಂದ ಅಸುರಾರಿ ಸಂತುಷ್ಟನಾಗಿ ತೆಗೆಉ ಅಪ್ಪಿ ಭೂಪಾಲಕಂಗೆ==[ಈ ಅಶ್ವಮೇಧ ಯಾಗದಿಂದ ಭೂಮಿ ತಣಿದು ಪಾವನವಾಯಿತು. ಹವಿರ್ಭಾಗದಿಂದ ಸಂತುಷ್ಟಿ ಪಡೆದರು ದೇವತೆಗಳ ಸಮೂಹ. ಬಹಳ ಪ್ರೇಮದಿಂದ ಕೃಷ್ಣನು ಸಂತುಷ್ಟನಾಗಿ ಕರೆದು ಅಪ್ಪಿಕೊಂಡು ಧರ್ಮಜನಿಗೆ ಹೇಳಿದನು,'];; ಈಗ ನಿನ್ನಧ್ವರಂ ಸಾಂಗದಿಂ ಸಂಪೂರ್ಣಮಾಗಿ ಮುಗಿದುದು ಮಾಳ್ಪುದು ಅವಭೃತ ಸ್ನಾನಮಂ ಭಾಗೀರಥಿಯೊಳು ಎಂದು ನೇಮಿಸಿದನು ಅಖಿಳ ಮುನಿಜನಂ ಐದೆ ಕೊಂಡಾಡಲು==[ಈಗ ನಿನ್ನ ಯಜ್ಞವು ಸಾಂಗವಾಗಿ ಸಂಪೂರ್ಣವಾಗಿ ಮುಗಿಯಿತು. ಇನ್ನು ನೀನು ಅವಭೃತ ಸ್ನಾನವನ್ನು ಭಾಗೀರಥಿ ಜಲದಿಂದ ಮಾಡುವುದು,' ಎಂದು ಅಪ್ಪಣೆಮಾಡಿದನು/ ತಿಳಿಸಿದನು. ಆಗ ಎಲ್ಲಾ ಮುನಿಜನರೂ ಬಂದು ಕೊಂಡಾಡಿದರು.].
  • ತಾತ್ಪರ್ಯ:ಈ ಅಶ್ವಮೇಧ ಯಾಗದಿಂದ ಭೂಮಿ ತಣಿದು ಪಾವನವಾಯಿತು. ಹವಿರ್ಭಾಗದಿಂದ ಸಂತುಷ್ಟಿ ಪಡೆದರು ದೇವತೆಗಳ ಸಮೂಹ. ಬಹಳ ಪ್ರೇಮದಿಂದ ಕೃಷ್ಣನು ಸಂತುಷ್ಟನಾಗಿ ಕರೆದು ಅಪ್ಪಿಕೊಂಡು ಧರ್ಮಜನಿಗೆ ಹೇಳಿದನು,'ಈಗ ನಿನ್ನ ಯಜ್ಞವು ಸಾಂಗವಾಗಿ ಸಂಪೂರ್ಣವಾಗಿ ಮುಗಿಯಿತು. ಇನ್ನು ನೀನು ಅವಭೃತ ಸ್ನಾನವನ್ನು ಭಾಗೀರಥಿ ಜಲದಿಂದ ಮಾಡುವುದು,' ಎಂದು ಅಪ್ಪಣೆಮಾಡಿದನು/ ತಿಳಿಸಿದನು. ಆಗ ಎಲ್ಲಾ ಮುನಿಜನರೂ ಬಂದು ಕೊಂಡಾಡಿದರು.
  • (ಪದ್ಯ-೨೫)IV

ಪದ್ಯ:-:೨೬:

[ಸಂಪಾದಿಸಿ]

ವಿಪ್ರ ವಧೆ ಮೊದಲಾದ ಬಹು ಪಾಪ ಸಂಚಿತಂ |
ಕ್ಷಿಪ್ರದಿಂ ಪೋಗಿ ಪರಿಶುದ್ಧಮಹುದೆಂಬ ವೇ |
ದಪ್ರಮಾಣದ ವಾಜಿಮೇಧಾವಭೃತಮಂ ಮುನೀಶ್ವರರ್ ಮಾಡಿಸಲ್ಕೆ ||
ಸುಪ್ರಸನ್ನತೆಯಿಂದೆ ಸಾನ್ನಿಧ್ಯಮಾಗಿ ಬಿಡ |
ದಪ್ರಮೇಯಂ ತಾನಿರಲ್ಕೆ ನೃಪ ಮೌಳಿ ಪರ |
ಮಪ್ರೀತನಾಗಿ ತೊಳಗಿದನಧ್ವರಂ ಮುಗಿಯೆ ರಾಜ ಮುನಿಗಣದ ನಡುವೆ ||26||

ಪದವಿಭಾಗ-ಅರ್ಥ:
ವಿಪ್ರ ವಧೆ ಮೊದಲಾದ ಬಹು ಪಾಪ ಸಂಚಿತಂ ಕ್ಷಿಪ್ರದಿಂ ಪೋಗಿ ಪರಿಶುದ್ಧಮಹುದೆಂಬ ವೇದಪ್ರಮಾಣದ ವಾಜಿಮೇಧ ಅವಭೃತಮಂ ಮುನೀಶ್ವರರ್ ಮಾಡಿಸಲ್ಕೆ==[ವಿಪ್ರರ ವಧೆ ಮೊದಲಾದ ಬಹುವಿಧದ ಪಾಪಗಳೂ, ಸಂಚಿತಕರ್ಮವೂ,ಬೇಗನೆ ಹೋಗಿ ಪರಿಶುದ್ಧವಾಗುವುದೆಂಬ ವೇದಪ್ರಮಾಣದ ಅಶ್ವಮೇಧಯಾಗ ಮತ್ತು ಮುಕ್ತಾಯದ ಅವಭೃತಸ್ನಾನವನ್ನು ಮುನೀಶ್ವರರು ಮಾಡಿಸಲು ];; ಸುಪ್ರಸನ್ನತೆಯಿಂದೆ ಸಾನ್ನಿಧ್ಯಮಾಗಿ ಬಿಡದ ಪ್ರಮೇಯಂ ತಾನಿರಲ್ಕೆ ನೃಪ ಮೌಳಿ ಪರಮಪ್ರೀತನಾಗಿ ತೊಳಗಿದನು ಅಧ್ವರಂ ಮುಗಿಯೆ ರಾಜ ಮುನಿಗಣದ ನಡುವೆ==[ಬಹಳ ಸಂತೋಷದ ಕೃಷ್ಣನ ಸಾನ್ನಿಧ್ಯವಿರಲು, ಎಲ್ಲಿಯೂ ಬಿಡದೆ ಅಪ್ರಮೇಯನಾದ ಕೃಷ್ಣನು ತಾನೇ ಇರಲು, ಯಜ್ಞವು ಮುಗಿಯಲು ರಾಜ ಮುನಿಗಳ ಸಮೂಹದ ನಡುವೆ ನೃಪಮೌಳಿಯಾದ ಧರ್ಮಜನು ಪರಮ ಸಂತೋಷದಿಂದ ಪ್ರಕಾಶಿಸಿದನು].
  • ತಾತ್ಪರ್ಯ:ವಿಪ್ರರ ವಧೆ ಮೊದಲಾದ ಬಹುವಿಧದ ಪಾಪಗಳೂ, ಸಂಚಿತಕರ್ಮವೂ,ಬೇಗನೆ ಹೋಗಿ ಪರಿಶುದ್ಧವಾಗುವುದೆಂಬ ವೇದಪ್ರಮಾಣದ ಅಶ್ವಮೇಧಯಾಗ ಮತ್ತು ಮುಕ್ತಾಯದ ಅವಭೃತಸ್ನಾನವನ್ನು ಮುನೀಶ್ವರರು ಮಾಡಿಸಲು, ಬಹಳ ಸಂತೋಷದ ಕೃಷ್ಣನ ಸಾನ್ನಿಧ್ಯವಿರಲು, ಎಲ್ಲಿಯೂ ಬಿಡದೆ ಅಪ್ರಮೇಯನಾದಕೃಷ್ಣನು ತಾನೇ ಇರಲು, ಯಜ್ಞವು ಮುಗಿಯಲು ರಾಜ ಮುನಿಗಳ ಸಮೂಹದ ನಡುವೆ ನೃಪಮೌಳಿಯಾದ ಧರ್ಮಜನು ಪರಮ ಸಂತೋಷದಿಂದ ಪ್ರಕಾಶಿಸಿದನು.
  • (ಪದ್ಯ-೨೬)

ಪದ್ಯ:-:೨೭:

[ಸಂಪಾದಿಸಿ]

ರಮಣೀಸಹಿತರಸನಭಿಷಿಕ್ತನಾದಂ ಯಥಾ |
ಕ್ರಮದಿಂದೆ ಸೋಮ ಪಾನಂಗೈದರೆಲ್ಲರುಂ |
ವಿಮಲ ಹೋಮಂಗಳ ಪುರೋಡಾಶ ಶೇಷಮಂ ಪ್ರಾಶಿಸಿದರುತ್ಸವದೊಳು ||
ತಮತಮಗೆ ವಂದಿಗಳ್ ಕೊಂಡಾಡೆ ಗಾಯಕೋ |
ತ್ತಮರೊಲಿದು ಪಾಡಿ(ಡೆ) ನರ್ತನದ ಮೇಳವದ ಸಂ |
ಭ್ರಮದಿಂದೆ ವೀಣಾದಿ ವಾದಿತ್ರ ಘೋಷಮಂ ಮಾಡೆ ನೃಪವರನೆಸೆದನು ||27||

ಪದವಿಭಾಗ-ಅರ್ಥ:
ರಮಣೀಸಹಿತ ಅರಸನು ಅಭಿಷಿಕ್ತನಾದಂ ಯಥಾ ಕ್ರಮದಿಂದೆ ಸೋಮ ಪಾನಂಗೈದರು ಎಲ್ಲರುಂ ವಿಮಲ ಹೋಮಂಗಳ ಪುರೋಡಾಶ ಶೇಷಮಂ ಪ್ರಾಶಿಸಿದರು ಉತ್ಸವದೊಳು==[ಪತ್ನಿಯ ಸಹಿತ ಅರಸ ಧರ್ಮಜನು ಯಥಾ ಕ್ರಮದರೀತಿಯಲ್ಲಿ ಅವಭೃತ ಸ್ನಾನ ಮಾಡಿದನು. ನಂತರ ಸೋಮ ಪಾನವನ್ನು ಎಲ್ಲರೂ ಮಾಡಿದರು, ಪರಿಸುದ್ಧ ಹೋಮಗಳ ಪುರೋಡಾಶ ಶೇಷವನ್ನು (ಹೋಮಕ್ಕೆ ಹಾಕಿ ಉಳಿದ ಭಕ್ಷವನ್ನು) ಸಂತೋಷದಿಂದ ತಿಂದರು];; ತಮತಮಗೆ ವಂದಿಗಳ್ ಕೊಂಡಾಡೆ ಗಾಯಕೋತ್ತಮರು ಒಲಿದು ಪಾಡೆ ನರ್ತನದ ಮೇಳವದ ಸಂಭ್ರಮದಿಂದೆ ವೀಣಾದಿ ವಾದಿತ್ರ ಘೋಷಮಂ ಮಾಡೆ ನೃಪವರನು ಎಸೆದನು==[ಆದೇಶವಿಲ್ಲದಿದ್ದರೂ ತಾವು ತಾವೇ ವಂದಿಮಾಗಧರು ರಾಜನನ್ನೂ ಪ್ರಮುಖರನ್ನೂ ಹೊಗಳಿದರು. ಉತ್ತಮಗಾಯಕರು ಪ್ರಿತಿಯಿಂದ ಹಾಡಲು, ನರ್ತನದ ಮೇಳವು ಅದರ ಜೊತೆ ಇರಲು, ಸಂಭ್ರಮದಿಂದ ವೀಣೆಯೇ ಮೊದಲಾದ ವಾದ್ಯತ್ರಯಗಳು ನುಡಿಯುತ್ತಿರಲು ನೃಪವರ ಯುಧಷ್ಠಿರನು ಪ್ರಕಾಶಿಸಿದನು ].
  • (ಪುರೋಡಾಶ:ಯಜ್ಞ ಯಾಗಾದಿಗಳಲ್ಲಿ ಅರ್ಪಿಸುವ ಹವಿಸ್ಸು ಇತ್ಯಾದಿ ೨ ಹೋಮ ಮಾಡಿ ಉಳಿದ ಹವಿಸ್ಸು; ಹುತಶೇಷ)
  • ತಾತ್ಪರ್ಯ:ಪತ್ನಿಯ ಸಹಿತ ಅರಸ ಧರ್ಮಜನು ಯಥಾ ಕ್ರಮದರೀತಿಯಲ್ಲಿ ಅವಭೃತ ಸ್ನಾನ ಮಾಡಿದನು. ನಂತರ ಸೋಮ ಪಾನವನ್ನು ಎಲ್ಲರೂ ಮಾಡಿದರು, ಪರಿಸುದ್ಧ ಹೋಮಗಳ ಪುರೋಡಾಶ ಶೇಷವನ್ನು (ಹೋಮಕ್ಕೆ ಹಾಕಿ ಉಳಿದ ಭಕ್ಷವನ್ನು) ಸಂತೋಷದಿಂದ ತಿಂದರು. ಆದೇಶ ವಿಲ್ಲದಿದ್ದರೂ ತಾವು ತಾವೇ ವಂದಿಮಾಗಧರು ರಾಜನನ್ನೂ ಪ್ರಮುಖರನ್ನೂ ಹೊಗಳಿದರು. ಉತ್ತಮಗಾಯಕರು ಪ್ರಿತಿಯಿಂದ ಹಾಡಲು, ನರ್ತನದ ಮೇಳವು ಅದರ ಜೊತೆ ಇರಲು, ಸಂಭ್ರಮದಿಂದ ವೀಣೆಯೇ ಮೊದಲಾದ ವಾದ್ಯತ್ರಯಗಳು ನುಡಿಯುತ್ತಿರಲು ನೃಪವರ ಯುಧಷ್ಠಿರನು ಪ್ರಕಾಶಿಸಿದನು.
  • (ಪದ್ಯ-೨೮)

ಪದ್ಯ:-:೨೮:

[ಸಂಪಾದಿಸಿ]

ವಿನುತ ರತ್ನಾದ್ರಿ ಶಿಖರಸ್ಥಮಾಗಿರುತಿರ್ಪ |
ಕನಕ ವೃಷಮಂ ಕೊಟ್ಟನವನಿಪಂ ಬಕದಾಲ್ಭ್ಯ |
ಮುನಿಗೆ ಬಳಿಕೊಂದೊಂದು ರಥವನೊಂದೊಂದಿಭವನೀರೈದು ವಾಜಿಗಳನು ||
ಅನುಚರ ಚತುಷ್ಟಯವನೊಂದು ಕೊಳಗದ (ಬಳ್ಳದ) ಮುತ್ತ |
ನನುಪಮ ಸುವರ್ಣ ಶತ ಭಾರಮಂ ನೂರು ಕಾಂ |
ಚನ ವಿಭೂಷಿತ ಸುರಭಿಗಳನಿತ್ತು ಮನ್ನಿಸಿದನಖಿಳ ಋತ್ವಿಕ್ಕುಗಳನು ||28||

ಪದವಿಭಾಗ-ಅರ್ಥ:
ವಿನುತ ರತ್ನ ಅದ್ರಿ ಶಿಖರಸ್ಥಂ (ಅದ್ರಿ ಶಿಖರಸ್ಥ: ಬೆಟ್ಟದ ರಾಶಿಯಷ್ಟು) ಆಗಿರುತಿರ್ಪ ಕನಕ ವೃಷಮಂ ಕೊಟ್ಟನವನಿಪಂ ಬಕದಾಲ್ಭ್ಯ ಮುನಿಗೆ ಬಳಿಕೊಂದೊಂದು ರಥವನು ಒಂದೊಂದು ಇಭವನು ಈರೈದು (ಎರಡು X ಐದು) ವಾಜಿಗಳನು==[ಶ್ರೇಷ್ಠವಾದ ರತ್ನಗಳು, ಬೆಟ್ಟದ ರಾಶಿಯಷ್ಟು ಆಗಿರುವ ಚಿನ್ನವನ್ನೂ, ಎತ್ತುಗಳನ್ನೂ, ರಾಜನು ಕೊಟ್ಟನು, ಬಕದಾಲ್ಭ್ಯ ಮುನಿಗೆ; ಬಳಿಕ ಒಂದೊಂದು ರಥವನ್ನು ಒಂದೊಂದು ಆನೆಯನ್ನು, ಹತ್ತು ಕುದುರೆಗಳನ್ನೂ,];; ಅನುಚರ ಚತುಷ್ಟ(೪)ಯವನು ಒಂದು ಕೊಳಗದ (ಬಳ್ಳದ) ಮುತ್ತನು ಅನುಪಮ ಸುವರ್ಣ ಶತ ಭಾರಮಂ ನೂರು ಕಾಂಚನ ವಿಭೂಷಿತ ಸುರಭಿಗಳನಿತ್ತು ಮನ್ನಿಸಿದನು ಅಖಿಳ ಋತ್ವಿಕ್ಕುಗಳನು==[ನಾಲ್ಕು ಸೇವಕರನ್ನೂ, ಒಂದು ಕೊಳಗದ (ಬಳ್ಳದ) ಮುತ್ತನ್ನೂ, ಹೆಚ್ಚನ ಚಿನ್ನ ನೂರು ಮಣವನ್ನೂ, ನೂರು ಹಣದಿಂದ ಸಿಂಗರಿಸಿದ ಗೋವುಗಳನ್ನೂ ಕೊಟ್ಟು, ಎಲ್ಲಾ ಋತ್ವಿಕ್ಕುಗಳನ್ನು ಮನ್ನಣೆ ಮಾಡಿದನು/ ಗೌರವಿಸಿದನು.]
  • ತಾತ್ಪರ್ಯ:ಶ್ರೇಷ್ಠವಾದ ರತ್ನಗಳು, ಬೆಟ್ಟದ ರಾಶಿಯಷ್ಟು ಆಗಿರುವ ಚಿನ್ನವನ್ನೂ, ಎತ್ತುಗಳನ್ನೂ, ರಾಜನು ಕೊಟ್ಟನು, ಬಕದಾಲ್ಭ್ಯ ಮುನಿಗೆ; ಬಳಿಕ ಒಂದೊಂದು ರಥವನ್ನು ಒಂದೊಂದು ಆನೆಯನ್ನು, ಹತ್ತು ಕುದುರೆಗಳನ್ನೂ, ನಾಲ್ಕು ಸೇವಕರನ್ನೂ, ಒಂದು ಕೊಳಗದ (ಬಳ್ಳದ) ಮುತ್ತನ್ನೂ, ಹೆಚ್ಚನ ಚಿನ್ನ ನೂರು ಮಣವನ್ನೂ, ನೂರು ಹಣದಿಂದ ಸಿಂಗರಿಸಿದ ಗೋವುಗಳನ್ನೂ ಕೊಟ್ಟು, ಎಲ್ಲಾ ಋತ್ವಿಕ್ಕುಗಳನ್ನು ಗೌರವಿಸಿದನು.
  • (ಪದ್ಯ-೨೮)

ಪದ್ಯ:-:೨೯:

[ಸಂಪಾದಿಸಿ]

ಇಂತಖಿಳ ಋತ್ವಿಕ್ಕುಗಳ್ಗಿತ್ತು ಮನ್ನಿಸಿದ |
ನಂತಾದರಿಸಿದನೆಲ್ಲಾ ದ್ವಾರಪಾಲಕರ |
ನಂತರಿಸದುಳಿದ ಮುನಿ ನಿಕರಕಿಚ್ಛಾ ದಾನವಂ ಕೊಟ್ಟನುಚಿತದಿಂದೆ ||
ತಿಂತಿಣಿಸಿ ನೆರೆದಿಹ ಸಮಸ್ತ ಭೂನಿರ್ಜರರ |
ಸಂತತಿಗಳಂ ತಣೀಸಿದಂ ಮಹಾಧನದಿಂದೆ |
ನಂತರದೊಳರಸುಪಚರಿಸಿದಂ ಚಂದ್ರಹಾಸಾದಿ ಪೃಥ್ವೀಶ್ವರರನು ||29||

ಪದವಿಭಾಗ-ಅರ್ಥ:
ಇಂತು ಅಖಿಳ ಋತ್ವಕ್ಕುಗಳಿಗೆ ಇತ್ತು ಮನ್ನಿಸಿದನು ಅಂತು ಆದರಿಸಿದನು ಎಲ್ಲಾ ದ್ವಾರಪಾಲಕರನು ಅಂತರಿಸದೆ ಉಳಿದ ಮುನಿ ನಿಕರಕೆ ಇಚ್ಛಾ ದಾನವಂ ಕೊಟ್ಟನು ಉಚಿತದಿಂದೆ==[ಹೀಗೆ ಅಖಿಲ ಋತ್ವಿಕ್ಕುಗಳಿಗೆ ದಾನಕೊಟ್ಟು ಮನ್ನಿಸಿದನು. ಕೊನೆಯಲ್ಲಿ ಎಲ್ಲಾ ಯಜ್ಞದ ದ್ವಾರಪಾಲಕರನನ್ನು ಬೇಧವಿಲ್ಲದೆ ಆದರಿಸಿದನು; ಉಳಿದ ಮುನಿ ಸಮೂಹಕ್ಕೆ ಅವರ ಅಪೇಕ್ಷೆಯ ದಾನವನ್ನು ಉದಾರವಾಗಿ ಕೊಟ್ಟನು.];; ತಿಂತಿಣಿಸಿ ನೆರೆದಿಹ ಸಮಸ್ತ ಭೂನಿರ್ಜರರ ಸಂತತಿಗಳಂ ತಣೀಸಿದಂ ಮಹಾಧನದಿಂದೆ ನಂತರದೊಳು ಅರಸು ಉಪಚರಿಸಿದಂ ಚಂದ್ರಹಾಸ ಆದಿ ಪೃಥ್ವೀಶ್ವರರನು==[ಹೇರಳವಾಗಿ ಸೇರಿದ್ದ ಸಮಸ್ತ ವಿಪ್ರರ ಸಮೂಹಗಳನ್ನೂ ಮಹಾಧನದ ದಾನದಿಂದ ತೃಪ್ತಿಪಡಿಸಿದನು; ನಂತರದಲ್ಲಿ ಅರಸನು ಚಂದ್ರಹಾಸ ಮೊದಲಾದ ರಾಜರನ್ನು ಉಪಚರಿಸಿದನು].
  • ತಾತ್ಪರ್ಯ:ಹೀಗೆ ಅಖಿಲ ಋತ್ವಿಕ್ಕುಗಳಿಗೆ ದಾನಕೊಟ್ಟು ಮನ್ನಿಸಿದನು. ಕೊನೆಯಲ್ಲಿ ಎಲ್ಲಾ ಯಜ್ಞದ ದ್ವಾರಪಾಲಕರನನ್ನು ಬೇಧವಿಲ್ಲದೆ ಆದರಿಸಿದನು; ಉಳಿದ ಮುನಿ ಸಮೂಹಕ್ಕೆ ಅವರ ಅಪೇಕ್ಷೆಯ ದಾನವನ್ನು ಉದಾರವಾಗಿ ಕೊಟ್ಟನು. ಹೇರಳವಾಗಿ ಸೇರಿದ್ದ ಸಮಸ್ತ ವಿಪ್ರರ ಸಮೂಹಗಳನ್ನೂ ಮಹಾಧನದ ದಾನದಿಂದ ತೃಪ್ತಿಪಡಿಸಿದನು; ನಂತರದಲ್ಲಿ ಅರಸನು ಚಂದ್ರಹಾಸ ಮೊದಲಾದ ರಾಜರನ್ನು ಉಪಚರಿಸಿದನು.
  • (ಪದ್ಯ-೨೯)

ಪದ್ಯ:-:೩೦:

[ಸಂಪಾದಿಸಿ]

ಘೋಟಕ ಸಹಸ್ರಮಂ ಶತಶತ ಗಜಂಗಳಂ |
ಕೋಟಿ ಪರಿಮಿತ ಸುವರ್ಣಂಗಳಂ ಮಣಿಮಯ ಕಿ |
ರೀಟಾದಿ ಭೂಷಣಾವಳಿಗಳಂ ಕೊಟ್ಟಖಿಳ ಭೂಪಾಲರಂ ಮನ್ನಿಸಿ ||
ಪಾಟಿ ಮಿಗೆ ರುಕ್ಮೀಣೀದೇವಿ ಮೊದಲಾಗಿಹ ವ |
ಧೂಟಿಯರ ವರ್ಗಮಂ ನೃಪತಿ ಸತ್ಕರಿಸಿದಂ |
ಮೀಟೆನಿಪ ವಿವಿಧ ರತ್ನಾಭರಣ ರಾಜಿಗಳನಿತ್ತಲಂಕಾರದಿಂದೆ ||30||

ಪದವಿಭಾಗ-ಅರ್ಥ:
ಘೋಟಕ ಸಹಸ್ರಮಂ ಶತಶತ ಗಜಂಗಳಂ ಕೋಟಿ ಪರಿಮಿತ ಸುವರ್ಣಂಗಳಂ ಮಣಿಮಯ ಕಿರೀಟಾದಿ ಭೂಷಣಾವಳಿಗಳಂ ಕೊಟ್ಟಖಿಳ ಭೂಪಾಲರಂ ಮನ್ನಿಸಿ==[ಘೋಟಕ ಸಹಸ್ರಕುದುರೆಗಳನ್ನು, ನೂರು ನೂರು ಆನೆಗಳನ್ನೂ, ಕೋಟಿ ಸಂಖ್ಯೆಯ ಸುವರ್ಣಗಳನ್ನೂ, ಮಣಿಮಯವಾದ ಕಿರೀಟಾದಿ ಭೂಷಣಗಳನ್ನೂ,ಕೊಟ್ಟು ಅಖಿಲ ರಾಜರನ್ನೂ ಅವರ ಗೌರವಿಸಿದನು.];;ಪಾಟಿ ಮಿಗೆ ರುಕ್ಮೀಣೀದೇವಿ ಮೊದಲಾಗಿಹ ವಧೂಟಿಯರ ವರ್ಗಮಂ ನೃಪತಿ ಸತ್ಕರಿಸಿದಂ ಮೀಟು ಎನಿಪ ವಿವಿಧ ರತ್ನಾಭರಣ ರಾಜಿಗಳನು ಇತ್ತು ಅಲಂಕಾರದಿಂದೆ==[ರುಕ್ಮೀಣೀದೇವಿ ಮೊದಲಾಗಿಹ ವನಿತೆಯರ ವರ್ಗವನ್ನು ಅವರ ಪಾಟಿ ಮಿಗೆ/ಯೋಗ್ಯತೆ ಮೀರಿ ನೃಪತಿ ಧರ್ಮಜನು ಸತ್ಕರಿಸಿದನು. ಮೀಟು/ಹೆಚ್ಚಿನಿದು ಎನ್ನಿಸುವ ವಿವಿಧ ರತ್ನಾಭರಣಗಳ ರಾಜಿಗಳನು ಅಲಂಕಾರದಿಂದ ಇತ್ತು ಸತ್ಕರಿಸಿದನು.]
  • ತಾತ್ಪರ್ಯ:ಘೋಟಕ ಸಹಸ್ರಕುದುರೆಗಳನ್ನು, ನೂರು ನೂರು ಆನೆಗಳನ್ನೂ, ಕೋಟಿ ಸಂಖ್ಯೆಯ ಸುವರ್ಣಗಳನ್ನೂ, ಮಣಿಮಯವಾದ ಕಿರೀಟಾದಿ ಭೂಷಣಗಳನ್ನೂ,ಕೊಟ್ಟು ಅಖಿಲ ರಾಜರನ್ನೂ ಅವರ ಗೌರವಿಸಿದನು. ರುಕ್ಮೀಣೀದೇವಿ ಮೊದಲಾಗಿಹ ವನಿತೆಯರ ವರ್ಗವನ್ನು ಅವರ ಪಾಟಿ ಮಿಗೆ/ಯೋಗ್ಯತೆ ಮೀರಿ ನೃಪತಿ ಧರ್ಮಜನು ಸತ್ಕರಿಸಿದನು. ಮೀಟು/ಹೆಚ್ಚಿನಿದು ಎನ್ನಿಸುವ ವಿವಿಧ ರತ್ನಾಭರಣಗಳ ರಾಜಿಗಳನು ಅಲಂಕಾರದಿಂದ ಇತ್ತು ಸತ್ಕರಿಸಿದನು.
  • (ಪದ್ಯ-೩೦)

ಪದ್ಯ:-:೩೧:

[ಸಂಪಾದಿಸಿ]

ನಯದೊಳರಸಂ ಬಳಿಕ ಮುನಿನಿಕರ ಭೂಪಾಲ |
ಚಯದಿಂದೆ ಸಕಲ ಜನ ಜಾಲದಿಂದೆಸೆವ ಮಣಿ |
ಮಯ ಸಭಾ ಮಧ್ಯದೊಳ್ ದಿವ್ಯ ಸಿಂಹಾಸನದ ಮೇಲೆ ಮುರಹರನನಿರಿಸಿ ||
ಪ್ರಿಯದಿಂದಲಂಕಾರ ಪೂಜೆಗಳೊಳುಪಚರಿಸಿ |
ಹಯಮೇಧ ಫಲವನಚ್ಯುತ ಕರದೊಳೀಯಲ್ಕೆ |
ಜಯ ಜಯೆಂದುದು ಲೋಕವರಳ ಮಳೆಗರೆದು ಮೊಳಗಿದವು ಸುರದುಂದುಭಿಗಳು ||31||

ಪದವಿಭಾಗ-ಅರ್ಥ:
ನಯದೊಳು ಅರಸಂ ಬಳಿಕ ಮುನಿನಿಕರ ಭೂಪಾಲ ಚಯ (ಸಮೂಹ)ದಿಂದೆ ಸಕಲ ಜನ ಜಾಲದಿಂದ ಎಸೆವ ಮಣಿಮಯ ಸಭಾ ಮಧ್ಯದೊಳ್ ದಿವ್ಯ ಸಿಂಹಾಸನದ ಮೇಲೆ ಮುರಹರನನು ಇರಿಸಿ==[ವಿನಯದಿಂದ ಅರಸ ಯುಧಿಷ್ಠಿರನು ಬಳಿಕ ಮುನಿಗಳ ಸಮೂಹ ಮತ್ತು ಅನೇಕ ರಾಜರ ಚಯದಿಂದ ಸಕಲ ಜನರ ಜಾಲದಿಂದ ಶೋಭಿಸುವ ಮಣಿಮಯ ಸಭಾ ಮಧ್ಯದಲ್ಲಿ ದಿವ್ಯ ಸಿಂಹಾಸನದ ಮೇಲೆ ಕೃಷ್ಣನನ್ನು ಕೂರಿಸಿ];; ಪ್ರಿಯದಿಂದ ಅಲಂಕಾರ ಪೂಜೆಗಳೊಳು ಉಪಚರಿಸಿ ಹಯಮೇಧ ಫಲವನ ಅಚ್ಯುತ ಕರದೊಳು ಈಯಲ್ಕೆ ಜಯ ಜಯೆಂದುದು ಲೋಕವು ಅರಳ ಮಳೆಗರೆದು ಮೊಳಗಿದವು ಸುರದುಂದುಭಿಗಳು==[ಪ್ರೀತಿಯಿಂದ/ ಸಂತೋಷದಿಂದ ಅಲಂಕಾರ (ಉಪಚಾರ) ಪೂಜೆಗಳಿಂದ ಉಪಚರಿಸಿ ಅಶ್ವಮೇಧ ಯಾಗದ ಫಲವನ್ನು ಕೃಷ್ಣನ ಕೈಯಲ್ಲಿ "ಕೃಷ್ಣಾರ್ಪಣ' ಎಂದು ಕೊಟ್ಟನು (ತುಳಸೀದಳದ ಮೂಲಕ ಕೃಷ್ಣನ ಕೈಯಲ್ಲಿ ನೀರು ಬಿಡುವುದು). ಆಗ ಜಯ ಜಯ ಎಂದು ಲೋಕವು ಘೋಷಿಸಿತು; ಮೇಲಿನಿಂದ ಅರಳ ಮಳೆಗರೆಯಿತು; ಆಕಾಶದಲ್ಲಿ ಸುರದುಂದುಭಿಗಳು/ದೇವತೆಗಳ ವಾದ್ಯಗಳು ಮೊಳಗಿದವು].
  • ತಾತ್ಪರ್ಯ:ವಿನಯದಿಂದ ಅರಸ ಯುಧಿಷ್ಠಿರನು ಬಳಿಕ ಮುನಿಗಳ ಸಮೂಹ ಮತ್ತು ಅನೇಕ ರಾಜರ ಚಯದಿಂದ ಸಕಲ ಜನರ ಜಾಲದಿಂದ ಶೋಭಿಸುವ ಮಣಿಮಯ ಸಭಾ ಮಧ್ಯದಲ್ಲಿ ದಿವ್ಯ ಸಿಂಹಾಸನದ ಮೇಲೆ ಕೃಷ್ಣನನ್ನು ಕೂರಿಸಿ ಪ್ರೀತಿಯಿಂದ/ ಸಂತೋಷದಿಂದ ಅಲಂಕಾರ (ಉಪಚಾರ) ಪೂಜೆಗಳಿಂದ ಉಪಚರಿಸಿ ಅಶ್ವಮೇಧ ಯಾಗದ ಫಲವನ್ನು ಕೃಷ್ಣನ ಕೈಯಲ್ಲಿ "ಕೃಷ್ಣಾರ್ಪಣ' ಎಂದು ಕೊಟ್ಟನು (ತುಳಸೀದಳದ ಮೂಲಕ ಕೃಷ್ಣನ ಕೈಯಲ್ಲಿ ನೀರು ಬಿಡುವುದು). ಆಗ ಜಯ ಜಯ ಎಂದು ಲೋಕವು ಘೋಷಿಸಿತು; ಮೇಲಿನಿಂದ ಅರಳ ಮಳೆಗರೆಯಿತು; ಆಕಾಶದಲ್ಲಿ ಸುರದುಂದುಭಿಗಳು/ದೇವತೆಗಳ ವಾದ್ಯಗಳು ಮೊಳಗಿದವು.
  • (ಪದ್ಯ-೩೧)

ಪದ್ಯ:-:೩೨:

[ಸಂಪಾದಿಸಿ]

ಬಳಸಿದ ಮಹೀಪಾಲರೊಡಹುಟ್ಟಿದರ್ ಬಂಧು |
ಬಳಗಂಗಳಖಿಳ ಮುನಿ ಮುಖ್ಯರುಪಚಿತರಾಗೆ |
ನಳಿನಾಂಬಕನ ಕರದೊಳಧ್ವರದ ಸುಕೃತಮಂ ಕೊಟ್ಟು ತನ್ನಮಲ ಮಖಕೆ ||
ಕಳಸಮಿಡೆ ಮೂಜಗಂ ಮಿಗೆ ತಣಿದು ಕೊಂಡಾಡ |
ಲುಳಿದ ಯೂಪಂಗಳೊಳ್ ಕಟಟಿರ್ದ ಪಶುಗಳಂ |
ಕಳೆದೆಲ್ಲಮಂ ಬಿಡಿಸಿ ತೊಳಗಿ ಬೆಳಗಿದನಿಂದ್ರ ತೇಜದಿಂ ಮನಜೇಂದ್ರನು ||32||

ಪದವಿಭಾಗ-ಅರ್ಥ:
ಬಳಸಿದ ಮಹೀಪಾಲರು ಒಡಹುಟ್ಟಿದರ್ ಬಂಧು ಬಳಗಂಗಳ ಅಖಿಳ ಮುನಿ ಮುಖ್ಯರು ಉಪಚಿತರಾಗೆ ನಳಿನಾಂಬಕನ ಕರದೊಳು ಅಧ್ವರದ ಸುಕೃತಮಂ ಕೊಟ್ಟು ತನ್ನ ಅಮಲ ಮಖಕೆ==[ಸುತ್ತುವರಿದ ರಾಜರು, ಒಡಹುಟ್ಟಿದರು, ಬಂಧು ಬಳಗಗಳು ಎಲ್ಲಾ ಮುನಿ ಮುಖ್ಯರು ಉಪಚರಿಸಲ್ಪಡಲು, ಕೃಷ್ಣನ ಕೈಯಲ್ಲಿ ಯಜ್ಞದ ಸುಕೃತ ಫಲವನ್ನು ಕೊಟ್ಟು, ತನ್ನ ಪವಿತ್ರ ಯಜ್ಞಕ್ಕೆ ];; ಕಳಸಮಿಡೆ ಮೂಜಗಂ ಮಿಗೆ ತಣಿದು ಕೊಂಡಾಡಲು ಉಳಿದ ಯೂಪಂಗಳೊಳ್ ಕಟ್ಟಿರ್ದ ಪಶುಗಳಂ ಕಳೆದು ಎಲ್ಲಮಂ ಬಿಡಿಸಿ ತೊಳಗಿ ಬೆಳಗಿದನು ಇಂದ್ರ ತೇಜದಿಂ ಮನಜೇಂದ್ರನು==[ಕಳಸವಿಟ್ಟಂತೆ, ಮೂರು ಜಗತ್ತೂ ಬಹಳ ತಣಿದು/ತೃಪ್ತಿಪಟ್ಟು ಹೊಗಳುತ್ತಿದ್ದರು. ಆಗ ಉಳಿದ ಯೂಪದ ಕಂಬಗಳಿಗೆ ಕಟ್ಟಿದ್ದ ಪ್ರಾಣಿಗಳನ್ನು ಕಂಬದ ಹಗ್ಗದಿಂದ ಕಳಚಿ, ಎಲ್ಲವನ್ನೂ ಸ್ವತಂತ್ರವಾಗಿ ಬಿಡಿಸಿ, ಯುಧಿಷ್ಠಿರನು ಇಂದ್ರ ತೇಜದಿದ ತೊಳಗಿ ಬೆಳಗಿದನು / ಪ್ರಕಾಶಿಸಿದನು].
  • ತಾತ್ಪರ್ಯ:ಸುತ್ತುವರಿದ ರಾಜರು, ಒಡಹುಟ್ಟಿದರು, ಬಂಧು ಬಳಗಗಳು ಎಲ್ಲಾ ಮುನಿ ಮುಖ್ಯರು ಉಪಚರಿಸಲ್ಪಡಲು, ಕೃಷ್ಣನ ಕೈಯಲ್ಲಿ ಯಜ್ಞದ ಸುಕೃತ ಫಲವನ್ನು ಕೊಟ್ಟು, ತನ್ನ ಪವಿತ್ರ ಯಜ್ಞಕ್ಕೆ ಕಳಸವಿಟ್ಟಂತೆ, ಮೂರು ಜಗತ್ತೂ ಬಹಳ ತಣಿದು/ತೃಪ್ತಿಪಟ್ಟು ಹೊಗಳುತ್ತಿದ್ದರು. ಆಗ ಉಳಿದ ಯೂಪದ ಕಂಬಗಳಿಗೆ ಕಟ್ಟಿದ್ದ ಪ್ರಾಣಿಗಳನ್ನು ಕಂಬದ ಹಗ್ಗದಿಂದ ಕಳಚಿ, ಎಲ್ಲವನ್ನೂ ಸ್ವತಂತ್ರವಾಗಿ ಬಿಡಿಸಿ, ಯುಧಿಷ್ಠಿರನು ಇಂದ್ರ ತೇಜದಿದ ತೊಳಗಿ ಬೆಳಗಿದನು.
  • (ಪದ್ಯ-೩೨)

ಪದ್ಯ:-:೩೩:

[ಸಂಪಾದಿಸಿ]

ವಾಜಿ ಮೇಧಕ್ರತು ಸಮಾಪ್ತಮಾದುದು ಬಳಿಕ |
ರಾಜ ಮುನಿನಿಕರಮಂ ಪ್ರಾರ್ಥಿಸಿ ವೃಕೋದರಂ |
ರಾಜಿಸುವ ಕನಕಮಯ ಮಂಡಪದೊಳರುಣ ಕಂಬಳದ ಪಸೆಗಳ ಮಿಸುನಿಯ ||
ಭಾಜನದ ಕೆಲ ಬಲದ ರತ್ನ ದೀಪದ ಪೊನ್ನ |
ಹೂಜಿಗಳ ಪನ್ನೀರ ಪರಿವಿಡಿಯಲೆಡೆಯಾಗೆ |
ಭೋಜನಕೆ ಬೇಕಾದ ಭಕ್ಷ್ಯ ಭೋಜ್ಯಾದಿಗಳನೊದವಿಸಿದನಾದರದೊಳು ||33||

ಪದವಿಭಾಗ-ಅರ್ಥ:
ವಾಜಿ ಮೇಧಕ್ರತು ಸಮಾಪ್ತಮಾದುದು ಬಳಿಕ ರಾಜ ಮುನಿ ನಿಕರಮಂ ಪ್ರಾರ್ಥಿಸಿ ವೃಕೋದರಂ ರಾಜಿಸುವ ಕನಕಮಯ ಮಂಡಪದೊಳು ಅರುಣ ಕಂಬಳದ ಪಸೆಗಳ ಮಿಸುನಿಯ==[ಅಶ್ವಮೇಧ ಯಜ್ಞ ಸಮಾಪ್ತಿಯಾಯಿತು. ಬಳಿಕ ರಾಜ, ಮುನಿಗಳ ಸಮೂಹವನ್ನು ಪ್ರಾರ್ಥಿಸಿ ವೃಕೋದರನು ಎಡೆಯನ್ನು ಹಾಕಿದ ಮಂಟಪಕ್ಕೆ ಊಟಕ್ಕೆ ಕರೆದನು. ಆ ಊಟದ ಪಂಟಪವು ಪ್ರಕಾಶಿಸುವ ಚಿನ್ನಮಯದ ಮಂಡಪವಾಗಿತ್ತು; ಕೆಂಪುಬಣ್ನದ ರತ್ನ ಕಂಬಳಿಯನ್ನು ಹಾಸಿತ್ತು, ಅಲ್ಲಿದ್ದ ಹಸೆಮಣೆಗಳು ಬಂಗಾರದವು;];; ಭಾಜನದ (ಭೋಜನದ ಪಾತ್ರೆ) ಕೆಲ ಬಲದ ರತ್ನ ದೀಪದ ಪೊನ್ನ ಹೂಜಿಗಳ ಪನ್ನೀರ ಪರಿವಿಡಿಯಲು ಎಡೆಯಾಗೆ ಭೋಜನಕೆ ಬೇಕಾದ ಭಕ್ಷ್ಯ ಭೋಜ್ಯಾದಿಗಳನು ಒದವಿಸಿದನು ಆದರದೊಳು==[ಭೋಜನಮಾಡುವ ಪಾತ್ರೆಯ ಆಚೆ ಈಚೆ ಕೆಲ ಬಲದಲ್ಲಿ ರತ್ನದ ದೀಪವೂ, ಹೊನ್ನಿನ ಹೂಜಿಗಳೂ ಇದ್ದವು; ಅಲ್ಲಿ ಆಗಾಗ ಪರಿಮಳದ ಪನ್ನೀರನ್ನು ಚಿಮುಕಿಸುತ್ತಿದ್ದರು; ಹೀಗಿರಲು ಎಡೆಯನ್ನು/ಬಾಳೆಲೆಯನ್ನು/ ಚಿನ್ನದ ಬೆಳ್ಳಿಯ ತಟ್ಟೆಗಳನ್ನು ಭೋಜನಕ್ಕೆಹಾಕಿತ್ತು; ಭೀಮನು ಭೋಜನದಲ್ಲಿ ಬೇಕಾದ ಭಕ್ಷ್ಯ ಭೋಜ್ಯಾದಿಗಳನ್ನು ಆದರದಿಂದ ಒದಗಿಸಿದನು].
  • ತಾತ್ಪರ್ಯ:ಅಶ್ವಮೇಧ ಯಜ್ಞ ಸಮಾಪ್ತಿಯಾಯಿತು. ಬಳಿಕ ರಾಜ, ಮುನಿಗಳ ಸಮೂಹವನ್ನು ಪ್ರಾರ್ಥಿಸಿ ವೃಕೋದರನು ಎಡೆಯನ್ನು ಹಾಕಿದ ಮಂಟಪಕ್ಕೆ ಊಟಕ್ಕೆ ಕರೆದನು. ಆ ಊಟದ ಪಂಟಪವು ಪ್ರಕಾಶಿಸುವ ಚಿನ್ನಮಯದ ಮಂಡಪವಾಗಿತ್ತು; ಕೆಂಪುಬಣ್ನದ ರತ್ನ ಕಂಬಳಿಯನ್ನು ಹಾಸಿತ್ತು, ಅಲ್ಲಿದ್ದ ಹಸೆಮಣೆಗಳು ಬಂಗಾರದವು; ಭೋಜನಮಾಡುವ ಪಾತ್ರೆಯ ಆಚೆ ಈಚೆ ಕೆಲ ಬಲದಲ್ಲಿ ರತ್ನದ ದೀಪವೂ, ಹೊನ್ನಿನ ಹೂಜಿಗಳೂ ಇದ್ದವು; ಅಲ್ಲಿ ಆಗಾಗ ಪರಿಮಳದ ಪನ್ನೀರನ್ನು ಚಿಮುಕಿಸುತ್ತಿದ್ದರು; ಹೀಗಿರಲು ಎಡೆಯನ್ನು/ಬಾಳೆಲೆಯನ್ನು/ ಚಿನ್ನದ ಬೆಳ್ಳಿಯ ತಟ್ಟೆಗಳನ್ನು ಭೋಜನಕ್ಕೆಹಾಕಿತ್ತು; ಭೀಮನು ಭೋಜನದಲ್ಲಿ ಬೇಕಾದ ಭಕ್ಷ್ಯ ಭೋಜ್ಯಾದಿಗಳನ್ನು ಆದರದಿಂದ ಒದಗಿಸಿದನು.
  • (ಯಜ್ಞವೂ ಅದರ ಕಾರ್ಯ ಸಮಾಪ್ತಿ ಎಲ್ಲವೂ ಉತ್ಪ್ರೇಕ್ಷಾಲಂಕಾರದಿಂದ ಕೂಡಿದೆ; ಇಡೀ ಕಾವ್ಯವೇ ಉತ್ಪ್ರೇಕ್ಷಾಲಂಕಾರ)
  • (ಪದ್ಯ-೩೩)

ಪದ್ಯ:-:೩೪:

[ಸಂಪಾದಿಸಿ]

ನಾನಾ ವಿಧದ ರಸದೊಳೆಸೆವ ಪರಿಕರದನ್ನ |
ಪಾನಾದಿ ಭಕ್ಷ್ಯಭೋಜ್ಯಾವಳಿಗಳಿಂದೆ ಪವ |
ಮಾನಾತ್ಮಜಂ ಮಹೀಸುರ ತತಿಯನಾದರಿಸಿ ಭೋಜನಾನಂತರದೊಳು ||
ಭೂನುತ ಸುಗಂಧ ಕರ್ದಮದಿಂದೆ ವಿತತ ಪ್ರ |
ಸೂನಾವಳಿಗಳಿಂದೆ ವೀಟಿಕಾ ವಿಭವದಿಂ |
ದಾನಾತಿಶಯದಿಂದೆ ಸತ್ಕರಿಸಿ ತಣಿಪಿದಂ ಪ್ರತಿದಿನಂ ಪ್ರೀತಿಯಿಂದೆ ||34||

ಪದವಿಭಾಗ-ಅರ್ಥ:
ನಾನಾ ವಿಧದ ರಸದೊಳು ಎಸೆವ ಪರಿಕರದ ಅನ್ನ ಪಾನಾದಿ ಭಕ್ಷ್ಯಭೋಜ್ಯ ಆವಳಿಗಳಿಂದೆ ಪವಮಾನಾತ್ಮಜಂ (ವಾಯು ಸುತ) ಮಹೀಸುರ ತತಿಯನು ಆದರಿಸಿ ಭೋಜನ ಆನಂತರದೊಳು==[ನಾನಾ ವಿಧದ ಪಾಕದ ರಸದಲ್ಲಿ ಶೋಭಿಸುವ ಪರಿಕರಗಳು ಇದ್ದವು; ಅನ್ನ ಪಾನ ಇತ್ಯಾದಿ ಭಕ್ಷ್ಯ ಭೋಜ್ಯಗಳು ನಾನಾ ಬಗೆಯವು; ಇವುಗಳಿಂದ ಭೀಮನು ರಾಜರ ಸಮೂಹವನ್ನು ಆದರಿಸಿ ಭೋಜನ ಮಾಡಿಸಿದನು. ಭೋಜನದ ಆನಂತರದಲ್ಲಿ];;ಭೂ ನುತ (ಹೊಗಳುವ) ಸುಗಂಧ ಸುಗಂಧ, ಕರ್ದಮದಿಂದೆ ವಿತತ ಪ್ರಸೂನ ಆವಳಿಗಳಿಂದೆ ವೀಟಿಕಾ (ತಾಂಬೂಲ) ವಿಭವದಿಂ ದಾನ ಆತಿಶಯದಿಂದೆ ಸತ್ಕರಿಸಿ ತಣಿಪಿದಂ ಪ್ರತಿದಿನಂ ಪ್ರೀತಿಯಿಂದೆ==[ಭೂಮಿಯಲ್ಲಿ ಉತ್ತಮವೆಂದು ಹೊಗಳುವ ಕರ್ದಮ ಪರಿಮಳ ದ್ರವ್ಯದಿಂದಲೂ, ನಾನಾ ಹೂವುಗಳಿಂದಲೂ, ತಾಂಬೂಲದಿಂದಲೂ, ವೈಭವದಿಂದ, ದಾನಗಳಿಂದಲೂ, ಆತಿಶಯವಾಗಿ ಪ್ರತಿದಿನವೂ ಪ್ರೀತಿಯಿಂದ ಸತ್ಕರಿಸಿ ತಣಿಸಿದನು/ತೃಪ್ತಿಪಡಿಸಿದನು].
  • (ಕರ್ದಮ: ಸುಗಂಧದ್ರವ್ಯಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿ ತಯಾರಿಸಿದ ಒಂದು ಬಗೆಯ ಲೇಪನ ದ್ರವ್ಯ)
  • (ವಿತತ ಪ್ರಸೂನ ಆವಳಿ: ನಾನಾಬಗೆ ಹೂವುಗಳು)
  • ತಾತ್ಪರ್ಯ: ನಾನಾ ವಿಧದ ಪಾಕದ ರಸದಲ್ಲಿ ಶೋಭಿಸುವ ಪರಿಕರಗಳು ಇದ್ದವು; ಅನ್ನ ಪಾನ ಇತ್ಯಾದಿ ಭಕ್ಷ್ಯ ಭೋಜ್ಯಗಳು ನಾನಾ ಬಗೆಯವು; ಇವುಗಳಿಂದ ಭೀಮನು ರಾಜರ ಸಮೂಹವನ್ನು ಆದರಿಸಿ ಭೋಜನ ಮಾಡಿಸಿದನು. ಭೋಜನದ ಆನಂತರದಲ್ಲಿ ಭೂಮಿಯಲ್ಲಿ ಉತ್ತಮವೆಂದು ಹೊಗಳುವ ಕರ್ದಮ ಪರಿಮಳ ದ್ರವ್ಯದಿಂದಲೂ, ನಾನಾ ಹೂವುಗಳಿಂದಲೂ, ತಾಂಬೂಲದಿಂದಲೂ, ವೈಭವದಿಂದ, ದಾನಗಳಿಂದಲೂ, ಆತಿಶಯವಾಗಿ ಪ್ರತಿದಿನವೂ ಪ್ರೀತಿಯಿಂದ ಸತ್ಕರಿಸಿ ತಣಿಸಿದನು/ತೃಪ್ತಿಪಡಿಸಿದನು.
  • (ಪದ್ಯ-೩೪)

ಪದ್ಯ:-:೩೫:

[ಸಂಪಾದಿಸಿ]

ಬಹಳ ಸನ್ಮಾನಮಂ ತಳೆದಖಿಳ ಭೂಸುರ ನಿ |
ವಹಮೈದೆ ಕೊಂಡಾಡಿತಂಬುಜದಳಾಂಬಕನ |
ಮಹಿಮೆಯಂ ಧರ್ಮಜನ ಚರಿತಮಂ ಭೀಮನ ವಿಶೇಷ ಗುಣಮಂ ಪಾರ್ಥನ ||
ವಿಹಿತ ವಿಭವಂಗಳಂ ನಕುಲನ ವಿವೇಕಮಂ |
ಸಹದೇವನುಚಿತಮಂ ಧೌಮ್ಯನ ವಿಚಾರಮಂ |
ಮಹಿಯ ಮನ್ನೆಯರ ಸನ್ಮೈತ್ರಿಯಂ ಮುನಿ ವರಾಧಿಕ್ಯಮಂ ತತ್ಕ್ರತುವನು ||35||

ಪದವಿಭಾಗ-ಅರ್ಥ:
ಬಹಳ ಸನ್ಮಾನಮಂ ತಳೆದ ಅಖಿಳ ಭೂಸುರ ನಿವಹಂ [ಐದೆ (ಬಹಳವಾಗಿ) ಕೊಂಡಾಡಿತು->] ಅಂಬುಜದಳಾಂಬಕನ (ಕೃಷ್ಣನ) ಮಹಿಮೆಯಂ ಧರ್ಮಜನ ಚರಿತಮಂ ಭೀಮನ ವಿಶೇಷ ಗುಣಮಂ ಪಾರ್ಥನ==[ಬಹಳ ಸನ್ಮಾನವನ್ನು ಪಡೆದ ಅಖಿಲ ವಿಪ್ರರ ಸಮೂಹ ಕೃಷ್ಣನ ಮಹಿಮೆಯನ್ನೂ ಧರ್ಮಜನ ಉತ್ತಮನೆಡತೆಯನ್ನೂ, ಭೀಮನ ವಿಶೇಷ ಗುಣವನ್ನೂ, ಪಾರ್ಥನ];; ವಿಹಿತ ವಿಭವಂಗಳಂ ನಕುಲನ ವಿವೇಕಮಂ ಸಹದೇವನ ಉಚಿತಮಂ (ಉಚಿತ ಅನುಚಿತ ತಿಳಿಯುವುದು) ಧೌಮ್ಯನ ವಿಚಾರಮಂ ಮಹಿಯ ಮನ್ನೆಯರ ಸನ್ ಮೈತ್ರಿಯಂ ಮುನಿ ವರಾಧಿಕ್ಯಮಂ ತತ್ ಕ್ರತುವನು=[ಯೋಗ್ಯ ಪರಾಕ್ರಮಗಳನ್ನೂ ನಕುಲನ ವಿವೇಕವನ್ನೂ, ಸಹದೇವನ ವಿವೇಕವನ್ನೂ, ಧೌಮ್ಯನ ವಿಚಾರಶಕ್ತಿಯನ್ನೂ, ರಾಣಿಯರ ಮತ್ತು ಅರಮನೆಯ ಮನ್ನೆಯರ/ ವನಿತೆಯರ ಸ್ನೇಹಭಾವವನ್ನೂ, ಬಹಳ ಶ್ರೇಷ್ಠ ಮುನಿಗಳು ಅಧಿಕವಾಗ ಬಂದಿರುವುದನ್ನೂ ಮತ್ತು ಯಜ್ನವನ್ನೂ ಐದೆ/ ಬಹಳ ಕೊಂಡಾಡಿತು].
  • (ಮಹಿ:ಪಟ್ಟಮಹಿಷಿ ಹೆಸರುಪದ(ಸಂ) ರಾಜನೊಂದಿಗೆ ಪಟ್ಟಾಭಿಷಿಕ್ತಳಾದ ರಾಣಿ, ಪಟ್ಟದ ರಾಣಿ;ಪ್ರೊ.ಜಿ.ವೆಂ.)
  • ತಾತ್ಪರ್ಯ:ಬಹಳ ಸನ್ಮಾನವನ್ನು ಪಡೆದ ಅಖಿಲ ವಿಪ್ರರ ಸಮೂಹ ಕೃಷ್ಣನ ಮಹಿಮೆಯನ್ನೂ, ಧರ್ಮಜನ ಉತ್ತಮನೆಡತೆಯನ್ನೂ, ಭೀಮನ ವಿಶೇಷ ಗುಣವನ್ನೂ, ಪಾರ್ಥನ ಯೋಗ್ಯ ಪರಾಕ್ರಮಗಳನ್ನೂ ನಕುಲನ ವಿವೇಕವನ್ನೂ, ಸಹದೇವನ ವಿವೇಕವನ್ನೂ, ಧೌಮ್ಯನ ವಿಚಾರಶಕ್ತಿಯನ್ನೂ, ರಾಣಿಯರ ಮತ್ತು ಅರಮನೆಯ ಮನ್ನೆಯರ/ ವನಿತೆಯರ ಸ್ನೇಹಭಾವವನ್ನೂ, ಬಹಳ ಶ್ರೇಷ್ಠ ಮುನಿಗಳು ಅಧಿಕವಾಗ ಬಂದಿರುವುದನ್ನೂ ಮತ್ತು ಯಜ್ನವನ್ನೂ ಐದೆ/ ಬಹಳ ಕೊಂಡಾಡಿತು.
  • (ಪದ್ಯ-೩೫)

ಪದ್ಯ:-:೩೬:

[ಸಂಪಾದಿಸಿ]

ಬಕದಾಲ್ಭ್ಯ ಮೊದಲಾದ ಋಷಿಗಳಂ ಕೃಷ್ಣಾದಿ |
ಸಕಲ ಭೂಪಾಲರಂ ಕೂಡಿಕೊಂಡವನೀಶ |
ಮುಕುಟನಧ್ವರ ಸಭಾಸ್ಥಾನದೊಳ್ ನಾನಾ ಸುಕಥೆಗಳಂ ಕೇಳುತಿರ್ದು ||
ವಿಕಸಿತ ಹೃದಯನಾಗಿ ಮುದದಿಂದೆ ಭೂ ದೇವ |
ನಿಕರಕುಳಿದರ್ಥಂಗಳೆಲ್ಲಮಂ ಚೆಲ್ಲಿ ಸಮ |
ಧಿಕ ವೈಭವಂಗಳಿಂ ನಗರಪ್ರವೇಶಮಂ ಮಾಡಿದಂ ಸಂಭ್ರಮದೊಳು ||36||

ಪದವಿಭಾಗ-ಅರ್ಥ:
ಬಕದಾಲ್ಭ್ಯ ಮೊದಲಾದ ಋಷಿಗಳಂ ಕೃಷ್ಣಾದಿ ಸಕಲ ಭೂಪಾಲರಂ ಕೂಡಿಕೊಂಡು ಅವನೀಶ ಮುಕುಟನು ಅಧ್ವರ ಸಭಾಸ್ಥಾನದೊಳ್ ನಾನಾ ಸುಕಥೆಗಳಂ ಕೇಳುತಿರ್ದು==[ಬಕದಾಲ್ಭ್ಯ ಮೊದಲಾದ ಋಷಿಗಳನ್ನೂ, ಕೃಷ್ಣಾದಿ ಸಕಲ ಭೂಪಾಲರನ್ನೂ, ಕೂಡಿಕೊಂಡು ರಾಜರಿಗೆ ಮುಕುಟದಂತಿರುವ ಧರ್ಮಜನು ಯಜ್ಞದ ಸಭಾಸ್ಥಾನದಲ್ಲಿ ನಾನಾ ಉತ್ತಮ ಕಥೆಗಳನ್ನು ಕೇಳುತ್ತಿದ್ದು,];; ವಿಕಸಿತ ಹೃದಯನಾಗಿ ಮುದದಿಂದೆ ಭೂ ದೇವ ನಿಕರಕೆ ಉಳಿದರ್ಥಂಗಳೆಲ್ಲಮಂ ಚೆಲ್ಲಿ ಸಮಧಿಕ ವೈಭವಂಗಳಿಂ ನಗರಪ್ರವೇಶಮಂ ಮಾಡಿದಂ ಸಂಭ್ರಮದೊಳು==[ಅದರಿಂದ ಅಳಿದ ಹೃದಯದವನಾಗಿ ಮುದದಿಂದ ವಿಪ್ರರ ಸಮೂಹಕ್ಕೆ ಉಳಿದ ಹಣದ್ರವ್ಯಗಳೆಲ್ಲವನ್ನು ಕೊಟ್ಟು, ಯೋಗ್ಯ ಅಧಿಕವಾದ ವೈಭವದಿಂದ ನಗರಪ್ರವೇಶವನ್ನು ಸಂಭ್ರಮದಿಂದ ಮಾಡಿದನು].
  • ತಾತ್ಪರ್ಯ:ಬಕದಾಲ್ಭ್ಯ ಮೊದಲಾದ ಋಷಿಗಳನ್ನೂ, ಕೃಷ್ಣಾದಿ ಸಕಲ ಭೂಪಾಲರನ್ನೂ, ಕೂಡಿಕೊಂಡು ರಾಜರಿಗೆ ಮುಕುಟದಂತಿರುವ ಧರ್ಮಜನು ಯಜ್ಞದ ಸಭಾಸ್ಥಾನದಲ್ಲಿ ನಾನಾ ಉತ್ತಮ ಕಥೆಗಳನ್ನು ಕೇಳುತ್ತಿದ್ದು, ಅದರಿಂದ ಅಳಿದ ಹೃದಯದವನಾಗಿ ಮುದದಿಂದ ವಿಪ್ರರ ಸಮೂಹಕ್ಕೆ ಉಳಿದ ಹಣದ್ರವ್ಯಗಳೆಲ್ಲವನ್ನು ಕೊಟ್ಟು, ಯೋಗ್ಯ ಅಧಿಕವಾದ ವೈಭವದಿಂದ ನಗರಪ್ರವೇಶವನ್ನು ಸಂಭ್ರಮದಿಂದ ಮಾಡಿದನು.
  • (ಪದ್ಯ-೩೬)

ಪದ್ಯ:-:೩೭:

[ಸಂಪಾದಿಸಿ]

ಮೃಷ್ಟಭೋಜನದಿಂದೆ ಭೂರಿ ದಕ್ಷಿಣೆಗಳಿಂ |
ದಿಷ್ಟ ದಾನದೊಳಾದ ವಸ್ತು ಸಂಮೋಹದಿಂ |
ತುಷ್ಟಿವಡೆದಖಿಳ ಭೂಸುರ ತತಿ ನರೇಂದ್ರನಂ ಪರಸಿ ಬೀಳ್ಕೊಂಡ ಬಳಿಕ ||
ದೃಷ್ಟಿಗಾಶ್ಚರ್ಯಮಾಗಿಹ ಯಜ್ಞಮಂ ಪೊಗಳು |
ತಷ್ಟ ದಿಗ್ವಲಯದಾಶ್ರಮ ಜನಪದಂಗಳ್ಗೆ |
ಹೃಷ್ಟತೆಯೊಳೈದಿದುದು ತಮತಮಗೆ ಪೆÇತ್ತ ಬಹುಧನದ ಭಾರಂಗಳಿಂದೆ ||37||

ಪದವಿಭಾಗ-ಅರ್ಥ:
ಮೃಷ್ಟಭೋಜನದಿಂದೆ ಭೂರಿ ದಕ್ಷಿಣೆಗಳಿಂದ ಇಷ್ಟ ದಾನದೊಳು ಆದ ವಸ್ತು ಸಂಮೋಹದಿಂ ತುಷ್ಟಿವಡೆದ ಅಖಿಳ ಭೂಸುರ ತತಿ ನರೇಂದ್ರನಂ ಪರಸಿ ಬೀಳ್ಕೊಂಡ ಬಳಿಕ==[ಮೃಷ್ಟಾನ್ನ ಭೋಜನದಿಂದ ಮತ್ತು ಭೂರಿ/ಹೆಚ್ಚಿನ ದಕ್ಷಿಣೆಗಳಿಂದ, ಇಷ್ಟವಾದ ದಾನಪಡೆದು, ಅದರಿಂದ ಆದ ವಸ್ತುಗಳ ರಾಶಿಯಿಂದ ಹೆಚ್ಚಾಗಿ ಪಡೆದ ಎಲ್ಲಾ ವಿಪ್ರರ ಸಮೂಹ ರಾಜನನ್ನು ಹರಸಿ ಹೋದ ಬಳಿಕ];; ದೃಷ್ಟಿಗೆ ಆಶ್ಚರ್ಯಮಾಗಿಹ ಯಜ್ಞಮಂ ಪೊಗಳುತ ಅಷ್ಟದಿಗ್ವಲಯದ ಆಶ್ರಮ ಜನಪದಂಗಳ್ಗೆ ಹೃಷ್ಟತೆಯೊಳ್ ಐದಿದುದು (ಹೋದರು) ತಮತಮಗೆ ಪೊತ್ತ ಬಹುಧನದ ಭಾರಂಗಳಿಂದೆ==[ನೋಡಲು ಆಶ್ಚರ್ಯವಾಗಿದ್ದ ಯಜ್ಞವನ್ನು ಹೊಗಳುತ್ತ ಎಂಟುದಿಕ್ಕಿನ ಆಶ್ರಮ ಜನಪದ ನಿವಾಸ (ಊರು)ಗಳಿಗೆ ಸಂತೋಷದಿಂದ ತಾವು ತಾವೇ ಬಹುಧನದ ಭಾರವನ್ನು ಹೊತ್ತುಕೊಂಡು ಹೋದರು].
  • (ಸಂತುಷ್ಟಿ:ತೃಪ್ತಿ; ತುಷ್ಟಿ:ಅಗತ್ಯಕ್ಕಿಂತ ಹೆಚ್ಚು)
  • ತಾತ್ಪರ್ಯ:ಮೃಷ್ಟಾನ್ನ ಭೋಜನದಿಂದ ಮತ್ತು ಭೂರಿ/ಹೆಚ್ಚಿನ ದಕ್ಷಿಣೆಗಳಿಂದ, ಇಷ್ಟವಾದ ದಾನಪಡೆದು, ಅದರಿಂದ ಆದ ವಸ್ತುಗಳ ರಾಶಿಯಿಂದ ಹೆಚ್ಚಾಗಿ ಪಡೆದ, ಎಲ್ಲಾ ವಿಪ್ರರ ಸಮೂಹ ರಾಜನನ್ನು ಹರಸಿ ಹೋದ ಬಳಿಕ, ನೋಡಲು ಆಶ್ಚರ್ಯವಾಗಿದ್ದ ಯಜ್ಞವನ್ನು ಹೊಗಳುತ್ತ ಎಂಟುದಿಕ್ಕಿನ ಆಶ್ರಮ ಜನಪದ ನಿವಾಸ (ಊರು)ಗಳಿಗೆ ಸಂತೋಷದಿಂದ ತಾವು ತಾವೇ ಬಹುಧನದ ಭಾರವನ್ನು ಹೊತ್ತುಕೊಂಡು ಹೋದರು.
  • (ಪದ್ಯ-೩೭)

ಪದ್ಯ:-:೩೮:

[ಸಂಪಾದಿಸಿ]

ರೋಮಶ ವಸಿಷ್ಠ ಬಕದಾಲ್ಭ್ಯ ವೇದವ್ಯಾಸ |
ವಾಮದೇವಾದಿ ಮುನಿ ಮುಖ್ಯರವನೀಶನಂ |
ಪ್ರೇಮದಿಂ ಪರಸಿ ಮಾನಿತರಾಗಿ ಬೀಳ್ಕೊಂಡು ತಳರ್ದರಾಶ್ರಮಕೆ ಬಳಿಕ ||
ಭೂಮಿಪತಿಗಳನೆಲ್ಲರಂ ಸಕಲ ಯಾದವ |
ಸ್ತೋಮ ಸಹಿತಂಬುಜದಳಾಕ್ಷನಂ ಸತ್ಕರಿಸಿ |
ಭೀಮ ಪಾರ್ಥರನೊಡನೊಡನೆ ಕಳುಹಿದಂ ಯುಧಿಷ್ಠಿರನವರವರ ನಗರಿಗೆ ||38||

ಪದವಿಭಾಗ-ಅರ್ಥ:
ರೋಮಶ ವಸಿಷ್ಠ ಬಕದಾಲ್ಭ್ಯ ವೇದವ್ಯಾಸ ವಾಮದೇವಾದಿ ಮುನಿ ಮುಖ್ಯರು ಅವನೀಶನಂ ಪ್ರೇಮದಿಂ ಪರಸಿ ಮಾನಿತರಾಗಿ ಬೀಳ್ಕೊಂಡು ತಳರ್ದರು ಆಶ್ರಮಕೆ ಬಳಿಕ==[ರೋಮಶ, ವಸಿಷ್ಠ, ಬಕದಾಲ್ಭ್ಯ, ವೇದವ್ಯಾಸ, ವಾಮದೇವ, ಮೊದಲಾದ ಮುನಿ ಮುಖ್ಯರು ರಾಜ ಯುಧಿಷ್ಠಿರನನ್ನು ಪ್ರೇಮದಿಂದ ಹರಸಿ, ತಾವು ಸನ್ಮಾನಿತರಾಗಿ ಅವನನ್ನು ಬೀಳ್ಕೊಂಡು ತಳರ್ದರು ಆಶ್ರಮಕ್ಕೆ ತೆರಳಿದರು. ಬಳಿಕ];; ಭೂಮಿಪತಿಗಳನು ಎಲ್ಲರಂ ಸಕಲ ಯಾದವಸ್ತೋಮ ಸಹಿತ ಅಂಬುಜದಳಾಕ್ಷನಂ ಸತ್ಕರಿಸಿ ಭೀಮ ಪಾರ್ಥರನು ಒಡನೊಡನೆ ಕಳುಹಿದಂ ಯುಧಿಷ್ಠಿರನು ಅವರವರ ನಗರಿಗೆ==[ರಾಜರುಗಳು ಎಲ್ಲರನ್ನೂ, ಸಕಲ ಯಾದವ ಸಮೂಹವನ್ನೂ, ಕೃಷ್ಣನ ಸಹಿತ ಸತ್ಕರಿಸಿದರು, ಯುಧಿಷ್ಠಿರನು ಅವರನ್ನು ಅವರವರ ನಗರಿಗೆ ಬೀಳ್ಕೊಡಲು ಭೀಮ ಪಾರ್ಥರನ್ನು ಅವರ ಒಡನೊಡನೆ ಕಳುಹಿಸಿದನು]. (ಆತ್ಮೀಯರನ್ನು ಸ್ವಲ್ಪ ದೂರ ಅವರೊಡನೆ ಹೋಗಿ ಕಳುಹಿಸಿ ಬರುವುದು ಬೀಳ್ಕೊಡಿಗೆಯ ಕ್ರಮ)
  • ತಾತ್ಪರ್ಯ: ರೋಮಶ, ವಸಿಷ್ಠ, ಬಕದಾಲ್ಭ್ಯ, ವೇದವ್ಯಾಸ, ವಾಮದೇವ, ಮೊದಲಾದ ಮುನಿ ಮುಖ್ಯರು ರಾಜ ಯುಧಿಷ್ಠಿರನನ್ನು ಪ್ರೇಮದಿಂದ ಹರಸಿ, ತಾವು ಸನ್ಮಾನಿತರಾಗಿ ಅವನನ್ನು ಬೀಳ್ಕೊಂಡು ತಳರ್ದರು ಆಶ್ರಮಕ್ಕೆ ತೆರಳಿದರು. ಬಳಿಕ ರಾಜರುಗಳು ಎಲ್ಲರನ್ನೂ, ಸಕಲ ಯಾದವ ಸಮೂಹವನ್ನೂ, ಕೃಷ್ಣನ ಸಹಿತ ಸತ್ಕರಿಸಿದರು, ಯುಧಿಷ್ಠಿರನು ಅವರನ್ನು ಅವರವರ ನಗರಿಗೆ ಬೀಳ್ಕೊಡಲು ಭೀಮ ಪಾರ್ಥರನ್ನು ಅವರ ಒಡನೊಡನೆ ಕಳುಹಿಸಿದನು. (ಆತ್ಮೀಯರನ್ನು ಸ್ವಲ್ಪ ದೂರ ಅವರೊಡನೆ ಹೋಗಿ ಕಳುಹಿಸಿ ಬರುವುದು ಬೀಳ್ಕೊಡಿಗೆಯ ಕ್ರಮ)
  • (ಪದ್ಯ-೩೮)

ಪದ್ಯ:-:೩೯:

[ಸಂಪಾದಿಸಿ]

ಸಂಭಾವಿಸಿದನಧ್ವರದೊಳೆಲ್ಲರಂ ಬಳಿಕ |
ಸಂಭೋಗಮಜುರ್ನಂಗಾ ಪ್ರಮೀಳೆಯ ಕೂಡೆ |
ಸಂಭವಿಸುವಂತೆ ನೇಮಿಸಿದನಿಭ ನಗರದೊಳ್ ಕುಂತಿ ಸಹಿತನುಜರೊಡನೆ ||
ತೊಂಭತ್ತು ವರುಷಪರಿಯಂತರದೊಳೈದೆ ಸುಖ |
ದಿಂ ಭೂವಲಯದ ಸಾಮ್ರಾಜ್ಯಮಂ ಮಾಡುತಿ |
ರ್ದಂ ಭಾರತಾಗ್ರಣಿ ಯುಧಿಷ್ಠಿರಂ ದೇವಪುರ ಲಕ್ಷ್ಮೀಶನಾಜ್ಞೆಯಿಂದೆ ||39||

ಪದವಿಭಾಗ-ಅರ್ಥ:
ಸಂಭಾವಿಸಿದನು ಅಧ್ವರದೊಳು ಎಲ್ಲರಂ ಬಳಿಕ ಸಂಭೋಗಮು (ಸೇರುವಿಕೆ) ಅರ್ಜುನಂಗೆ ಆ ಪ್ರಮೀಳೆಯ ಕೂಡೆ, ಸಂಭವಿಸುವಂತೆ ನೇಮಿಸಿದನು (ಆಡಳಿತ ಮಾಡಿದನು) ಇಭ ನಗರದೊಳ್ ಕುಂತಿ ಸಹಿತ ಅನುಜರೊಡನೆ==[ಅಧ್ವರದಲ್ಲಿ ಎಲ್ಲರನ್ನೂ ಗೌರವಿಸಿದನು ಯುಧಿಷ್ಠಿರ. ಬಳಿಕ ಅರ್ಜುನನಿಗೆ ಆ ಪ್ರಮೀಳೆಯ ಜೊತೆ ಸಂಭವಿಸುವ ಯೋಜನೆಯಂತೆ ಗಾಂಧರ್ವ ವಿವಾಹವಾಗಿ ಸೇರಿದರು. ಹಸ್ತಿನಾವತಿಯಲ್ಲಿ ಕುಂತಿ ಸಹಿತ ತಮ್ಮಂದಿರೊಡನೆ ಧರ್ಮಜನು ಆಳಿತ ನೆಡೆಸಿದನು. ];; ತೊಂಭತ್ತು ವರುಷ ಪರಿಯಂತರದೊಳು ಐದೆ ಸುಖದಿಂ ಭೂವಲಯದ ಸಾಮ್ರಾಜ್ಯಮಂ ಮಾಡುತಿರ್ದಂ ಭಾರತಾಗ್ರಣಿ ಯುಧಿಷ್ಠಿರಂ ದೇವಪುರ ಲಕ್ಷ್ಮೀಶನಾಜ್ಞೆಯಿಂದೆ==[ಹೀಗೆ ಅವನು ತೊಂಭತ್ತು ವರುಷ ಪರಿಯಂತ ಪೂರ್ಣವಾಗಿ ಸುಖದಿಂದ ಭೂವಲಯದ ಸಾಮ್ರಾಜ್ಯವನ್ನು ಭಾರತಾಗ್ರಣಿ ಯುಧಿಷ್ಠಿರನು ದೇವಪುರ ಲಕ್ಷ್ಮೀಶನ ಆಜ್ಞೆಯಿಂದೆ ಮಾಡುತ್ತಿದ್ದನು].
  • ತಾತ್ಪರ್ಯ:ಅಧ್ವರದಲ್ಲಿ ಎಲ್ಲರನ್ನೂ ಗೌರವಿಸಿದನು ಯುಧಿಷ್ಠಿರ. ಬಳಿಕ ಅರ್ಜುನನಿಗೆ ಆ ಪ್ರಮೀಳೆಯ ಜೊತೆ ಸಂಭವಿಸುವ ಯೋಜನೆಯಂತೆ ಅವರು ಗಾಂಧರ್ವ ವಿವಾಹವಾಗಿ ಸೇರಿದರು. ಹಸ್ತಿನಾವತಿಯಲ್ಲಿ ಕುಂತಿ ಸಹಿತ ತಮ್ಮಂದಿರೊಡನೆ ಧರ್ಮಜನು ಆಳಿತ ನೆಡೆಸಿದನು. ಹೀಗೆ ಅವನು ತೊಂಭತ್ತು ವರುಷ ಪರಿಯಂತ ಪೂರ್ಣವಾಗಿ ಸುಖದಿಂದ ಭೂವಲಯದ ಸಾಮ್ರಾಜ್ಯವನ್ನು ಭಾರತಾಗ್ರಣಿ ಯುಧಿಷ್ಠಿರನು ದೇವಪುರ ಲಕ್ಷ್ಮೀಶನ ಆಜ್ಞೆಯಿಂದೆ ಮಾಡುತ್ತಿದ್ದನು.
  • (ಪದ್ಯ-೩೯)V

ಕವಿಯ ಬಿನ್ನಹ

[ಸಂಪಾದಿಸಿ]

ಪದ್ಯ:-:೪೦:

[ಸಂಪಾದಿಸಿ]

ಈ ಚತುರ್ದಶ ಭೂವನದೊಳ್ ಪಾಂಡವ ಸ್ಥಾಪ |
ನಾಚಾರ್ಯನೆನಿಸಿಕೊಂಬುದೆ ಪೆರ್ಮೆಯೆಂದು ಮನು |
ಜೋಚಿತದ ಲೀಲೆಯಂ ತಳೆದ ಯಾದವ ಸಾರ್ವಭೌಮಂ ನಿಜಾನತರ್ಗೆ ||
ಭೂಚಕ್ರದೊಳ್ ಪಸರಿಸುವ ಕೀರ್ತಿಯಂ(ಕೀರ್ತಿಲತೆ) ಮೂಡ |
ಲಾಚಂದ್ರಮಾಗಿರ್ಪ ತೆರದಿಂದ ಕವಿಮತಿಗೆ |
ಗೋಚರಿಸೆ ಕೃತಿಗೆ ನಾಯಕನಾದನಮರಪುರದೊಡೆಯ ಲಕ್ಷ್ಮೀಕಾಂತನು ||40||

ಪದವಿಭಾಗ-ಅರ್ಥ:
ಈ ಚತುರ್ದಶ ಭೂವನದೊಳ್ ಪಾಂಡವ ಸ್ಥಾಪನಾಚಾರ್ಯನು ಎನಿಸಿಕೊಂಬುದೆ ಪೆರ್ಮೆಯೆಂದು ಮನುಜೋಚಿತದ ಲೀಲೆಯಂ ತಳೆದ ಯಾದವ ಸಾರ್ವಭೌಮಂ ನಿಜ ಆನತರ್ಗೆ==[ಈ ಹದಿನಾಲ್ಕು ಲೋಕದಲ್ಲಿ ಪಾಂಡವ ಸ್ಥಾಪನಾಚಾರ್ಯನು ಎನಿಸಿಕೊಳ್ಳುವುದೆ ಹೆಮ್ಮೆಯೆಂದು ಮಾನವ ಸಹಜ ಲೀಲೆಯನ್ನು ಹೊಂದಿ ಯಾದವ ಸಾರ್ವಭೌಮ ಕೃಷ್ಣನು ತನ್ನ ಶರಣಾಗತರಿಗೆ ];; ಭೂಚಕ್ರದೊಳ್ ಪಸರಿಸುವ ಕೀರ್ತಿಯಂ(ಕೀರ್ತಿಲತೆ) ಮೂಡಲು ಆಚಂದ್ರಮಾಗಿ ಇರ್ಪ ತೆರದಿಂದ ಕವಿಮತಿಗೆ ಗೋಚರಿಸೆ ಕೃತಿಗೆ ನಾಯಕನಾದನು ಅಮರಪುರದೊಡೆಯ ಲಕ್ಷ್ಮೀಕಾಂತನು ==[ಭೂಮಂಡಲದಲ್ಲಿ ಹಬ್ಬುವ ಕೀರ್ತಿಯೆಂಬ ಬಳ್ಳಿಯು ಆಚಂದ್ರಾರ್ಕವಾಗಿರುವ ರೀತಿಯಿಂದ ಮೂಡುವಂತೆ ಕವಿಯ ಬುದ್ಧಿಗೆ ಗೋಚರಿಸಲು, ಈ ಕೃತಿಗೆ ಅಮರಪುರದೊಡೆಯ ಲಕ್ಷ್ಮೀಕಾಂತನು ನಾಯಕನಾದನು].
  • ತಾತ್ಪರ್ಯ:ಈ ಹದಿನಾಲ್ಕು ಲೋಕದಲ್ಲಿ ಪಾಂಡವ ಸ್ಥಾಪನಾಚಾರ್ಯನು ಎನಿಸಿಕೊಳ್ಳುವುದೆ ಹೆಮ್ಮೆಯೆಂದು ಮಾನವ ಸಹಜ ಲೀಲೆಯನ್ನು ಹೊಂದಿರುವ ಯಾದವ ಸಾರ್ವಭೌಮ ಕೃಷ್ಣನು ತನ್ನ ಶರಣಾಗತರಿಗೆ 'ನೆರವಾಗುವಂತೆ', ಭೂಮಂಡಲದಲ್ಲಿ ಹಬ್ಬುವ ಕೀರ್ತಿಯೆಂಬ ಬಳ್ಳಿಯು ಆಚಂದ್ರಾರ್ಕವಾಗಿರುವ ರೀತಿಯಲ್ಲಿ 'ಈ ಕಾವ್ಯವು' ಮೂಡುವಂತೆ ಕವಿಯ ಬುದ್ಧಿಗೆ ಗೋಚರಿಸಲು, ಈ 'ಜೈನಿನಿ ಭಾರತವೆಂಬ' ಕೃತಿಗೆ ಅಮರಪುರದೊಡೆಯ (ದೇವನೂರಿನ) ಲಕ್ಷ್ಮೀಕಾಂತನು ನಾಯಕನಾದನು].
  • (ಪದ್ಯ-೪೦)

ಪದ್ಯ:-:೪೧:

[ಸಂಪಾದಿಸಿ]

ಈ ಪರಿಯೊಳಾಶ್ವಮೇಧಿಕದ ವೃತ್ತಾಂತಮಂ |
ತಾಪಸೋತ್ತಮನಾದ ಜೈಮಿನಿ ಮುನೀಶ್ವರಂ |
ಭೂಪಾಲ ತಿಲಕ ಜನಮೇಜಯಂಗೊರೆದ ಸಂಗತಿಗಳಂ ಸಕಲ ಜನಕೆ ||
ವ್ಯಾಪಿಸಿದ ಸುಪ್ರೌಢಿ ಮೆರೆಯೆ ಕನ್ನಡದ ಭಾ |
ಷಾ ಪದ್ಧತಿಯೊಳಣ್ಣಮಾಂಕನ ಕುಮಾರ ಲ |
ಕ್ಷ್ಮೀಪತಿಯ ಮುಖದಿಂದೆ ರಚಿಸಿದಂ ಕೃತಿಯಾಗಿ ಸುರಪುರದ ಶ್ರೀಕಾಂತನು (ಲಕ್ಷ್ಮೀಶನು) ||41||

ಪದವಿಭಾಗ-ಅರ್ಥ:
ಈ ಪರಿಯೊಳು ಅಶ್ವಮೇಧಿಕದ ವೃತ್ತಾಂತಮಂ ತಾಪಸೋತ್ತಮನಾದ ಜೈಮಿನಿ ಮುನೀಶ್ವರಂ ಭೂಪಾಲ ತಿಲಕ ಜನಮೇಜಯಂಗೆ ಒರೆದ (ಹೇಳಿದ) ಸಂಗತಿಗಳಂ ಸಕಲ ಜನಕೆ==[ಈ ರೀತಿಯಿಂದ ಅಶ್ವಮೇಧ ಯಜ್ಞದ ವೃತ್ತಾಂತವನ್ನು ತಾಪಸೋತ್ತಮನಾದ ಜೈಮಿನಿ ಮುನೀಶ್ವರನು, ಭೂಪಾಲರಲ್ಲಿ ತಿಲಕನಂತಿರುವ ಜನಮೇಜಯನಿಗೆ ಹೇಳಿದ ಸಂಗತಿಗಳನ್ನು, ಸಕಲ ಜನರಿಗೂ, ];; ವ್ಯಾಪಿಸಿದ ಸುಪ್ರೌಢಿ ಮೆರೆಯೆ ಕನ್ನಡದ ಭಾಷಾ ಪದ್ಧತಿಯೊಳು ಅಣ್ಣಮಾಂಕನ ಕುಮಾರ ಲಕ್ಷ್ಮೀಪತಿಯ ಮುಖದಿಂದೆ ರಚಿಸಿದಂ ಕೃತಿಯಾಗಿ ಸುರಪುರದ (ಲಕ್ಷ್ಮೀಶನು) ಶ್ರೀಕಾಂತನು==[ಈ ನಾಡನಲ್ಲಿ ವ್ಯಾಪಕವಾಗಿ ಹರಡಿರುವ, ಒಳ್ಳೆಯ ಪಾಂಡಿತ್ಯ ಮತ್ತು ಕೌಶಲ್ಯಗಳನ್ನು ಹೊಂದಿ ಪ್ರಸಿದ್ಧವಾಗಿರುವ ಕನ್ನಡದ ಭಾಷಾ ಲಕ್ಷಣ ಪದ್ಧತಿಯಲ್ಲಿ, ಅಣ್ಣಮಾಂಕನ ಮಗ ಲಕ್ಷ್ಮೀಪತಿಯ (ಲಕ್ಷ್ಮೀಶನ) ಮುಖದಿಂದ ಸುರಪುರದ (ದೇವನೂರಿನ) ಶ್ರೀಕಾಂತನು ಕೃತಿಯಾಗಿ ರಚಿಸಿದನು].
  • ತಾತ್ಪರ್ಯ:ಈ ರೀತಿಯಿಂದ ಧರ್ಮರಾಯನು ಮಾಡಿದ ಅಶ್ವಮೇಧ ಯಜ್ಞದ ವೃತ್ತಾಂತವನ್ನು ತಾಪಸೋತ್ತಮನಾದ ಜೈಮಿನಿ ಮುನೀಶ್ವರನು, ಭೂಪಾಲರಲ್ಲಿ ತಿಲಕನಂತಿರುವ ಜನಮೇಜಯನಿಗೆ ಹೇಳಿದ ಸಂಗತಿಗಳನ್ನು, ಸಕಲ ಜನರಿಗೂ, ಈ ನಾಡನಲ್ಲಿ ವ್ಯಾಪಕವಾಗಿ ಹರಡಿರುವ, ಒಳ್ಳೆಯ ಪಾಂಡಿತ್ಯ ಮತ್ತು ಕೌಶಲ್ಯಗಳನ್ನು ಹೊಂದಿ ಪ್ರಸಿದ್ಧವಾಗಿರುವ ಕನ್ನಡದ ಭಾಷಾ ಲಕ್ಷಣ ಪದ್ಧತಿಯಲ್ಲಿ, ಅಣ್ಣಮಾಂಕನ ಮಗ ಲಕ್ಷ್ಮೀಪತಿಯ (ಲಕ್ಷ್ಮೀಶನ) ಮುಖದಿಂದ ಸುರಪುರದ (ದೇವನೂರಿನ) ಶ್ರೀಕಾಂತನು ಕೃತಿಯಾಗಿ ರಚಿಸಿದನು. (ಲಕ್ಷ್ಮಿಯಪತಿಯಾದ ಶ್ರೀಹರಿಯು ಅಥವಾ ಶ್ರೀ ಕಷ್ಣನೇ ಈ ಕಾವ್ಯವನ್ನು ಕವಿಯ ಮೂಲಕ ರಚಿಸಿದನು.)
  • (ಪದ್ಯ-೪೧)

ಫಲಶ್ರುತಿ

[ಸಂಪಾದಿಸಿ]

ಪದ್ಯ:-:೪೨:

[ಸಂಪಾದಿಸಿ]

ಅಶ್ವಮೇಧಿಕ ಪರ್ವದಮಲ ಸತ್ಕಥೆ ಯೌವ |
ನಾಶ್ವಾದಿ ನೃಪರ ಚರಿತಂಗೇಳ್ದ ಮಾನವ |
ರ್ಗೈಶ್ವರ್ಯಮಾರೋಗ್ಯಮಾಯುಷ್ಯಮಭಿವೃದ್ಧಿ ಕಲಿನಾಶನಂ ಧರೆಯೊಳು ||
ಆಶ್ವೇತ ಕೀರ್ತಿ ಸುತ೦೦ಲಾಭ ಶತ್ರುಕ್ಷಯಂ |
ಶಾಶ್ವತ ಸ್ವರ್ಗ ಭೋಗಂಗಳಾದಪುವು ಸ |
ರ್ವೇಶ್ವರನ ಭಕ್ತಿ ದೊರೆಕೊಂಡಪುದು ದೇವಪುರ ಲಕ್ಷ್ಮೀಶನಾಜ್ಞೆಯಿಂದೆ ||42||

ಪದವಿಭಾಗ-ಅರ್ಥ:
ಅಶ್ವಮೇಧಿಕ ಪರ್ವದ ಅಮಲ ಸತ್ಕಥೆ ಯೌವನಾಶ್ವಾದಿ ನೃಪರ ಚರಿತಂ ಕೇಳ್ದ ಮಾನವರ್ಗೆ ಐಶ್ವರ್ಯಮ್ ಆರೋಗ್ಯಮ್ ಆಯುಷ್ಯಮ್ ಅಭಿವೃದ್ಧಿ ಕಲಿನಾಶನಂ ಧರೆಯೊಳು==[ಅಶ್ವಮೇಧ ಪರ್ವದ ಪವಿತ್ರವಾದ ಸತ್ಕಥೆಯನ್ನೂ, ಯೌವನಾಶ್ವ ಮೊದಲಾದ ರಾಜರ ಚರಿತ್ರೆಯನ್ನೂ, ಈ ಭೂಮಿಯಲ್ಲಿ ಕೇಳಿದ ಮಾನವರಿಗೆ ಐಶ್ವರ್ಯವೂ, ಆರೋಗ್ಯವು< ಆಯುಷ್ಯವೂ, ಅಭಿವೃದ್ಧಿ ಮತ್ತು ಕಲಿಯುಗ ದೋಷನಾಶವೂ,];; ಆಶ್ವೇತ ಕೀರ್ತಿ ಸುತ೦೦ಲಾಭ ಶತ್ರುಕ್ಷಯಂ ಶಾಶ್ವತ ಸ್ವರ್ಗ ಭೋಗಂಗಳು ಆದಪುವು ಸರ್ವೇಶ್ವರನ ಭಕ್ತಿ ದೊರೆಕೊಂಡಪುದು ದೇವಪುರ ಲಕ್ಷ್ಮೀಶನ ಆಜ್ಞೆಯಿಂದೆ==[ಪರಿಶುದ್ಧವಾದ ಕೀರ್ತಿ, ಸುತಪ್ರಾಪ್ತಿಯೂ, ಶತ್ರುಕ್ಷಯವೂ, ಶಾಶ್ವತ ಸ್ವರ್ಗ ಭೋಗಗಳೂ ದೇವಪುರ ಲಕ್ಷ್ಮೀಶನ ಆಜ್ಞೆಯಿಂದ ಆಗುವುವು; ಸರ್ವೇಶ್ವರನ ಭಕ್ತಿ ದೊರೆಕುವುದು].
  • ತಾತ್ಪರ್ಯ:ಅಶ್ವಮೇಧ ಪರ್ವದ ಪವಿತ್ರವಾದ ಸತ್ಕಥೆಯನ್ನೂ, ಯೌವನಾಶ್ವ ಮೊದಲಾದ ರಾಜರ ಚರಿತ್ರೆಯನ್ನೂ, ಈ ಭೂಮಿಯಲ್ಲಿ ಕೇಳಿದ ಮಾನವರಿಗೆ ಐಶ್ವರ್ಯವೂ, ಆರೋಗ್ಯವು< ಆಯುಷ್ಯವೂ, ಅಭಿವೃದ್ಧಿ ಮತ್ತು ಕಲಿಯುಗ ದೋಷನಾಶವೂ, ಪರಿಶುದ್ಧವಾದ ಕೀರ್ತಿ, ಸುತಪ್ರಾಪ್ತಿಯೂ, ಶತ್ರುಕ್ಷಯವೂ, ಶಾಶ್ವತ ಸ್ವರ್ಗ ಭೋಗಗಳೂ ದೇವಪುರ ಲಕ್ಷ್ಮೀಶನ ಆಜ್ಞೆಯಿಂದ ಆಗುವುವು; ಸರ್ವೇಶ್ವರನ ಭಕ್ತಿ ದೊರೆಕುವುದು].
  • (ಪದ್ಯ-೪೨)

ಪದ್ಯ:-:೪೩:

[ಸಂಪಾದಿಸಿ]

ಉಪವನ ತಟಾಕ ಪ್ರತಿಷ್ಠೆ ದೇವಾಲಯ |
ಪ್ರಪೆಗಳ ಸಕಲ ದಾನ ಧರ್ಮೋಪಕಾರ ವೇ |
ದ ಪುರಾಣದಪರಿಮಿತವಾದ ಪುಣ್ಯಕ್ಷೇತ್ರ ವಾಸ ತೀರ್ಥಸ್ನಾನದ ||
ಜಪ ಹೋಮ ಸುವ್ರತ ಸಮಾಧಿ ಯೋಗಧ್ಯಾನ |
ತಪಸುಗಳ ಹರಿಹರಾರ್ಚನೆಯ ಸುಕೃತಂಗಳಾ |
ದಪುದು ಜೈಮಿನಿ ಭಾರತದೊಳೊಂದು ವರ್ಣಮಂ ಪ್ರೀತಿಯಿಂ ಕೇಳ್ದವರ್ಗೆ ||43||

ಪದವಿಭಾಗ-ಅರ್ಥ:
ಉಪವನ ತಟಾಕ ಪ್ರತಿಷ್ಠೆ ದೇವಾಲಯ ಪ್ರಪೆಗಳ (ಪ್ರಪ:ಪ್ರಪಾಂಗನೆ, ಸಂ. ಪ್ರಪಾಂಗನಾ ಅರವಟ್ಟಿಗೆಯಲ್ಲಿ ನೀರು ಕೊಡುವವಳು) ಸಕಲ ದಾನ, ಧರ್ಮೋಪಕಾರ ವೇದ ಪುರಾಣದ ಅಪರಿಮಿತವಾದ ಪುಣ್ಯಕ್ಷೇತ್ರ ವಾಸ ತೀರ್ಥಸ್ನಾನದ==[ಈ ಕಥೆಯನ್ನು ಕೇಳಿದವರಿಗೆ, ಉಪವನ, ತಟಾಕ, ಪ್ರತಿಷ್ಠೆ, ದೇವಾಲಯ, ಪ್ರಪೆಗಳ/ ನೀರು ಕೊಡುವ ಅರವಟ್ಟಿಗೆ ಸ್ಥಾಪನೆ, ಸಕಲ ದಾನ, ಉಪಕಾರ, ವೇದ ಪುರಾಣ ಶ್ರವಣದ, ಅಪರಿಮಿತವಾದ ಪುಣ್ಯಕ್ಷೇತ್ರ ವಾಸ ಮತ್ತು ತೀರ್ಥಸ್ನಾನದ, ];; ಜಪ ಹೋಮ ಸುವ್ರತ ಸಮಾಧಿ ಯೋಗಧ್ಯಾನ ತಪಸುಗಳ ಹರಿಹರ ಅರ್ಚನೆಯ ಸುಕೃತಂಗಳು ಆದಪುದು ಜೈಮಿನಿ ಭಾರತದೊಳು ಒಂದು ವರ್ಣಮಂ ಪ್ರೀತಿಯಿಂ ಕೇಳ್ದವರ್ಗೆ==[ಜಪ, ಹೋಮ, ಸುವ್ರತ, ಸಮಾಧಿ, ಯೋಗಧ್ಯಾನ, ತಪಸ್ಸುಗಳ, ಹರಿಹರ ಅರ್ಚನೆಯ, ಸುಕೃತಗಳು/ಒಳ್ಳೆಯ ಫಲಗಳು ಜೈಮಿನಿ ಭಾರತದಲ್ಲಿ ಒಂದು ವರ್ಣವನ್ನು ಪ್ರೀತಿಯಿಂದ ಕೇಳಿದವರಿಗೆ ಆಗುವುದು.].
  • ತಾತ್ಪರ್ಯ:ಈ ಕಥೆಯನ್ನು ಕೇಳಿದವರಿಗೆ, ಉಪವನ, ತಟಾಕ, ಪ್ರತಿಷ್ಠೆ, ದೇವಾಲಯ, ಪ್ರಪೆಗಳ/ ನೀರು ಕೊಡುವ ಅರವಟ್ಟಿಗೆ ಸ್ಥಾಪನೆ, ಸಕಲ ದಾನ, ಉಪಕಾರ, ವೇದ ಪುರಾಣ ಶ್ರವಣದ, ಅಪರಿಮಿತವಾದ ಪುಣ್ಯಕ್ಷೇತ್ರ ವಾಸ ಮತ್ತು ತೀರ್ಥಸ್ನಾನದ,ಜಪ, ಹೋಮ, ಸುವ್ರತ, ಸಮಾಧಿ, ಯೋಗಧ್ಯಾನ, ತಪಸ್ಸುಗಳ, ಹರಿಹರ ಅರ್ಚನೆಯ, ಸುಕೃತಗಳು/ಒಳ್ಳೆಯ ಫಲಗಳು ಜೈಮಿನಿ ಭಾರತದಲ್ಲಿ ಒಂದು ವರ್ಣವನ್ನು ಪ್ರೀತಿಯಿಂದ ಕೇಳಿದವರಿಗೆ ಆಗುವುದು.
  • (ಪದ್ಯ-೪೩)

ಕೃತಿ ಲಲನೆಯ ಸೊಬಗು ಮತ್ತು ಕವಿಯ ಆತ್ಮವಿಶ್ವಾಸ

[ಸಂಪಾದಿಸಿ]

ಪದ್ಯ:-:೪೪:

[ಸಂಪಾದಿಸಿ]

ತೊಳಗುವ ಸುವರ್ಣ ಭೂಷಣದಿಂದೆ ಸೇರಿಸಿದ |
ಲಲಿತ ಮುಕ್ತಾಭರಣದಿಂದೆ ಮಿಗೆ(ಪರಿ)ರಂಜಿಸುವ |
ಪಲವಲಂಕಾರಂಗಳಿಡಿದ ಚೆಲ್ವಿನ ದೇವಪುರದ ಲಕ್ಷ್ಮೀಕಾಂತನ ||
ವಿಲಸಿತದ ಕೃತಿ ಲಲನೆ ಮೃದು ಪದ ವಿಲಾಸದಿಂ |
ಸಲೆ ಸೊಗಸಲಡಿಗಡಿಗೆ ನಡೆಯಲ್ಕೆ ಚಿತ್ತಂಗ |
ಳೊಲಿದೆರಗದಿರ್ದಪುವೆ ಧರೆಯೊಳಗೆ ರಸಿಕರಾಗಿರ್ದ ಭಾವಕ ನಿಕರದ ||44||

ಪದವಿಭಾಗ-ಅರ್ಥ:
ತೊಳಗುವ ಸುವರ್ಣ ಭೂಷಣದಿಂದೆ ಸೇರಿಸಿದ ಲಲಿತ ಮುಕ್ತಾಭರಣದಿಂದೆ ಮಿಗೆ(ಪರಿ)ರಂಜಿಸುವ ಪಲವು ಅಲಂಕಾರಂಗಳು ಇಡಿದ (ತುಂಬಿದ) ಚೆಲ್ವಿನ ದೇವಪುರದ ಲಕ್ಷ್ಮೀಕಾಂತನ==[ಹೊಳೆಯುವ ಚಿನ್ನದ ಆಭರಣಗಳಿಂದ ಪೋಣಿಸಿದ ಲಲಿತ/ ಮನೋಹರವಾದ ಮುತ್ತಿನ ಆಭರಣದಿಂದ, ಬಹಳ ಉಲ್ಲಾಸಗೊಳಿಸುವ ಹಲವು ಅಲಂಕಾರಂಗಳು ತಂಬಿದ ಚೆಲುವಾದ ದೇವಪುರದ ಲಕ್ಷ್ಮೀಕಾಂತನ];; ವಿಲಸಿತದ ಕೃತಿ ಲಲನೆ ಮೃದು ಪದ ವಿಲಾಸದಿಂ ಸಲೆ ಸೊಗಸಲು ಅಡಿಗಡಿಗೆ ನಡೆಯಲ್ಕೆ ಚಿತ್ತಂಗಳು ಒಲಿದು ಎರಗದೆ ಇರ್ದಪುವೆ ಧರೆಯೊಳಗೆ ರಸಿಕರಾಗಿರ್ದ ಭಾವಕ ನಿಕರದ==[ಪ್ರಕಾಶಿಸುವ ಕೃತಿ ಲಲನೆ- ಕಾವ್ಯಕೃತಿ ಎಂಬ ವಧು ಮೃದು ಪದ ವಿಲಾಸದಿಂದ ಬಹಳ ಸೊಗಸಲು ಅಡಿಗಡಿಗೆ, ಈ ಭೂಮಿಯ ಭಾವಕರ ಸಮೂಹದಲ್ಲಿ ರಸಿಕರಾಗಿದ್ದವರು ಹೆಜ್ಜೆ ಹೆಜ್ಜೆಗೆ ನಡೆಯಲು ಜನ ಚಿತ್ತಗಳು ಮನಸೋತು ನಮಸ್ಕರಿಸದೆ ಇರುಪುವೆ! ಇಲ್ಲ]. ಅಥವಾ, ಪ್ರಕಾಶಿಸುವ ಕಾವ್ಯ ಲಕ್ಷಣಗಳೆಂಬ ಆಭರಣಗಳಿಂದ ಸರ್ವಾಲಂಕಾರಭೂಷಿತಳಾದ ಲಕ್ಷ್ಮೀಕಾಂತನಿಂದ ರಚಿತವಾದ ದೇವೀಸ್ವರೂಪದ ಈ ಕೃತಿ (ಲಲನೆ)ಯ ಹಲವು ಕಾವ್ಯಾಲಂಕಾರಗಳಿಂದ ತುಂಬಿದ ಸಂತಸದ ಪದ ಜೋಡಣೆಯ ನಡಿಗೆಯ ಎಂದರೆ ಪದಗಳ ಲಾಲಿತ್ಯದ ಸೊಗಸಿಗೆ ಪ್ರೀತಿಯಿಂದ ನಮಿಸದವರು ಯಾರಿದ್ದಾರೆ! ಎಲ್ಲರೂ ಮೆಚ್ಚುವರು. (ಹೀಗೆ ತನ್ನ ಕಾವ್ಯಕ್ಕೆ 'ಕೃತಿಲಲನೆ' ಎಂಬ ಅಧ್ಬುತ ರೂಪಕವನ್ನು ಹೆಣೆದಿದ್ದಾನೆ ಕವಿ.)
  • ತಾತ್ಪರ್ಯ:ಹೊಳೆಯುವ ಚಿನ್ನದ ಆಭರಣಗಳಿಂದ ಪೋಣಿಸಿದ ಲಲಿತ/ ಮನೋಹರವಾದ ಮುತ್ತಿನ ಆಭರಣದಿಂದ, ಬಹಳ ಉಲ್ಲಾಸಗೊಳಿಸುವ ಹಲವು ಅಲಂಕಾರಂಗಳು ತಂಬಿದ ಚೆಲುವಾದ ದೇವಪುರದ ಲಕ್ಷ್ಮೀಕಾಂತನ ಪ್ರಕಾಶಿಸುವ ಕೃತಿ ಲಲನೆ- ಕಾವ್ಯಕೃತಿ ಎಂಬ ವಧು ಮೃದು ಪದ ವಿಲಾಸದಿಂದ ಬಹಳ ಸೊಗಸಲು ಅಡಿಗಡಿಗೆ/ ಪದಪದಜೋಡನೆಗೆ, ಈ ಭೂಮಿಯ ಭಾವಕರ ಸಮೂಹದಲ್ಲಿ ರಸಿಕರಾಗಿದ್ದವರು ಹೆಜ್ಜೆ ಹೆಜ್ಜೆಗೆ ನಡೆಯಲು ಜನ ಚಿತ್ತಗಳು ಮನಸೋತು ನಮಸ್ಕರಿಸದೆ ಇರುಪುವೆ! ಇಲ್ಲ.]
  • (ಪದ್ಯ-೪೨)

ಶ್ರೀಹರಿ ಕೃಪೆಗೆ

[ಸಂಪಾದಿಸಿ]

ಪದ್ಯ:-:೪೫:

[ಸಂಪಾದಿಸಿ]

ಲೋಕದೊಳಖಿಳ ಪುಣ್ಯ ಕರ್ಮದಿಂ ಧರ್ಮದಿಂ |
ದೇಕಾಗ್ರಮಾಗಿರ್ದ ಯೋಗದಿಂ ಯಾಗದಿಂ |
ಭೂ ಕನಕಮಣಿ ಧೇನು ದಾನದಿಂ ಧ್ಯಾನದಿಂ ಪಡೆವ ಸದ್ಗತಿಯನೀವ |
ಈ ಕಥೆಯನೊಲವಿಂದೆ ಕೇಳ್ದರ್ಗೆ ಪೇಳ್ದರ್ಗೆ |
ಶೋಕ ಭಯ ದುಃಖ ಸಂತಾಪಮಂ ಪಾಪಮಂ |
ನೂಕಿ ನಿರ್ಮಲತರ ಸುಬುದ್ಧಿಯಂ ಸಿದ್ಧಿಯಂ ಹರಿ ಕೊಡುತಿಹಂ ಕೃಪೆಯೊಳು ||45||

ಪದವಿಭಾಗ-ಅರ್ಥ:
ಲೋಕದೊಳು ಅಖಿಳ ಪುಣ್ಯ ಕರ್ಮದಿಂ ಧರ್ಮದಿಂದ ಏಕಾಗ್ರಮಾಗಿರ್ದ ಯೋಗದಿಂ ಯಾಗದಿಂ ಭೂ ಕನಕಮಣಿ ಧೇನು ದಾನದಿಂ ಧ್ಯಾನದಿಂ ಪಡೆವ ಸದ್ಗತಿಯನು ಈವ (ಕೊಡುವ)==[ಲೋಕದಲ್ಲಿ ಅಖಿಲ ಪುಣ್ಯ ಕರ್ಮದಿಂದ, ಧರ್ಮದಿಂದ, ನಿಶ್ಚಲ ಮನಸ್ಸನ್ನು ಯೋಗದಿಂದ, ಯಾಗದಿಂದ, ಭೂಮಿ, ಚಿನ್ನ ಮಣಿ, ಗೋವು ಇವುಗಳ ದಾನದಿಂದ, ಧ್ಯಾನದಿಂದ ಪಡೆಯುವ ಸದ್ಗತಿಯನ್ನು ಕೊಡುವ];;ಈ ಕಥೆಯನು ಒಲವಿಂದೆ ಕೇಳ್ದರ್ಗೆ ಪೇಳ್ದರ್ಗೆ ಶೋಕ ಭಯ ದುಃಖ ಸಂತಾಪಮಂ ಪಾಪಮಂ ನೂಕಿ ನಿರ್ಮಲತರ ಸುಬುದ್ಧಿಯಂ ಸಿದ್ಧಿಯಂ ಹರಿ ಕೊಡುತಿಹಂ ಕೃಪೆಯೊಳು==[ಈ ಕಥೆಯನ್ನು ಪ್ರೀತಿಯಿಂದ ಕೇಳಿದವರಿಗೆ, ಹೇಳಿದವರಿಗೆ, ಶೋಕ, ಭಯ, ದುಃಖ, ಸಂತಾಪಮತ್ತು ಪಾಪವನ್ನು ತೊಲಗಿಸಿ ನಿರ್ಮಲತರವಾದ ಸುಬುದ್ಧಿಯನ್ನೂ, ಸಿದ್ಧಿಯನ್ನೂ ಶ್ರೀಹರಿ ಕೃಪೆಯಿಂದ ಕೊಡುತ್ತಿರುವನು.]
  • ತಾತ್ಪರ್ಯ: ಲೋಕದಲ್ಲಿ ಅಖಿಲ ಪುಣ್ಯ ಕರ್ಮದಿಂದ, ಧರ್ಮದಿಂದ, ನಿಶ್ಚಲ ಮನಸ್ಸನ್ನು ಯೋಗದಿಂದ, ಯಾಗದಿಂದ, ಭೂಮಿ, ಚಿನ್ನ ಮಣಿ, ಗೋವು ಇವುಗಳ ದಾನದಿಂದ, ಧ್ಯಾನದಿಂದ ಪಡೆಯುವ ಸದ್ಗತಿಯನ್ನು ಕೊಡುವ ಈ ಕಥೆಯನ್ನು ಪ್ರೀತಿಯಿಂದ ಕೇಳಿದವರಿಗೆ, ಹೇಳಿದವರಿಗೆ, ಶೋಕ, ಭಯ, ದುಃಖ, ಸಂತಾಪಮತ್ತು ಪಾಪವನ್ನು ತೊಲಗಿಸಿ ನಿರ್ಮಲತರವಾದ ಸುಬುದ್ಧಿಯನ್ನೂ, ಸಿದ್ಧಿಯನ್ನೂ ಶ್ರೀಹರಿ ಕೃಪೆಯಿಂದ ಕೊಡುತ್ತಿರುವನು.
  • (ಪದ್ಯ-೪೫)

ಮತ್ತೆ ಫಲಶ್ರುತಿ & ಕಾವ್ಯ ಶ್ಲಾಘನೆ

[ಸಂಪಾದಿಸಿ]

ಪದ್ಯ:-:೪೬:

[ಸಂಪಾದಿಸಿ]

ಪುಣ್ಯಮಿದು ಕೃಷ್ಣಚರಿತಾಮೃತಂ ಸುಕವೀಂದ್ರ |
ಗಣ್ಯಮಿದು ಶೃಂಗಾರ ಕುಸುಮ ತರು ತುರುಗಿದಾ |
ರಣ್ಯಮಿದು ನವರಸ ಪ್ರೌಢಿ ಲಾಲಿತ್ಯ ನಾನಾ ವಿಚಿತ್ರಾರ್ಥಂಗಳ ||
ಗಣ್ಯಮಿದು ಶಾರದೆಯ ಸನ್ಮೋಹನಾಂಗ ಲಾ |
ವಣ್ಯವಿದು ಭಾವಕರ ಕಿವಿದೊಡವಿಗೊದವಿದ ಹಿ |
ರಣ್ಯಮಿದು ಭೂತಳದೊಳೆನೆ ವಿರಾಜಿಪುದು ಲಕ್ಷ್ಮೀಪತಿಯ ಕಾವ್ಯರಚನೆ ||46||

ಪದವಿಭಾಗ-ಅರ್ಥ:
ಪುಣ್ಯಮಿದು ಕೃಷ್ಣಚರಿತಾಮೃತಂ ಸುಕವೀಂದ್ರ ಗಣ್ಯಮಿದು(ಗಣ್ಯ:ಗಮನಿಸುದು) ಶೃಂಗಾರ ಕುಸುಮ ತರು ತುರುಗಿದಾ ರಣ್ಯಮಿದು ನವರಸ ಪ್ರೌಢಿ ಲಾಲಿತ್ಯ ನಾನಾ ವಿಚಿತ್ರಾರ್ಥಂಗಳ==[ಇದು ಕೃಷ್ಣಚರಿತಾಮೃತವು ಪುಣ್ಯವು, ಉತ್ತಮ ಕವೀಂದ್ರರಿಂದ ಗಮನಿಸಲ್ಪಡುವುದು; ಶೃಂಗಾರ ವೆಂಬ ಹೂವುಗಳಿಂದ ತುಂಬಿದ ಗಿಡ ಮರಗಳಿಂದ ದಟ್ಟೈಸುರುವ ಅರಣ್ಯವು ಇದು; ನವರಸ ಪ್ರೌಢವಾದ, ಮನೋಹರವಾದ ನಾನಾ ವಿಚಿತ್ರಾರ್ಥಗಳನ್ನು ಹೊಂದಿ ];; ಗಣ್ಯಮಿದು ಶಾರದೆಯ ಸನ್ಮೋಹನಾಂಗ ಲಾವಣ್ಯವಿದು ಭಾವಕರ ಕಿವಿದೊಡವೆಗೆ ಒದವಿದ ಹಿರಣ್ಯಮಿದು ಭೂತಳದೊಳು ಎನೆ ವಿರಾಜಿಪುದು ಲಕ್ಷ್ಮೀಪತಿಯ ಕಾವ್ಯರಚನೆ==[ಗಮನಿಸುವಂತೆ ಇರುವುದು; ಈ ಕಾವ್ಯ ಶಾರದೆಯ ಸನ್ಮೋಹನವಾದ ದೇಹದ ಲಾವಣ್ಯವು; ಈ ಭೂಮಿಯಲ್ಲಿ ಮಾನವನ ಭಾವಗಳನ್ನು ಅರಿತವರ ಕಿವಿಯ ಒಡವೆಗೆ ಒದಗಿಸಿದ ಚಿನ್ನವು ಇದು, ಎನ್ನುವಂತೆ ಲಕ್ಷ್ಮೀಪತಿಯ ಕಾವ್ಯರಚನೆ ವಿರಾಜಿಸುವುದು ].
  • ತಾತ್ಪರ್ಯ:ಇದು ಕೃಷ್ಣಚರಿತಾಮೃತವು ಪುಣ್ಯವು, ಉತ್ತಮ ಕವೀಂದ್ರರಿಂದ ಗಮನಿಸಲ್ಪಡುವಂತಿರುವದು; ಶೃಂಗಾರ ವೆಂಬ ಹೂವುಗಳಿಂದ ತುಂಬಿದ ಗಿಡ ಮರಗಳಿಂದ ದಟ್ಟೈಸುರುವ ಅರಣ್ಯವು ಇದು; ನವರಸ ಪ್ರೌಢವಾದ, ಮನೋಹರವಾದ ನಾನಾ ವಿಚಿತ್ರಾರ್ಥಗಳನ್ನು ಹೊಂದಿ ಗಮನಿಸುವಂತೆ ಇರುವುದು; ಈ ಕಾವ್ಯಶಾರದೆಯ ಸನ್ಮೋಹನವಾದ ದೇಹದ ಲಾವಣ್ಯವು; ಈ ಭೂಮಿಯಲ್ಲಿ ಮಾನವನ ಭಾವಗಳನ್ನು ಅರಿತವರ ಕಿವಿಯ ಒಡವೆಗೆ ಒದಗಿಸಿದ ಚಿನ್ನವು ಇದು, ಎನ್ನುವಂತೆ ಲಕ್ಷ್ಮೀಪತಿಯ ಕಾವ್ಯರಚನೆ ವಿರಾಜಿಸುವುದು]. (ಕಾವ್ಯವು ಶಾರದೆಯ ಸ್ವರೂಪದಲ್ಲಿರುವುದು)
  • []
  • []
  • (ಪದ್ಯ-೪೬)VI-I-XIIX

ಮಂಗಳಮಸ್ತು -ಶ್ರೀ ಕೃಷ್ಣಾರ್ಪಣಮಸ್ತು

  • (ಒಟ್ಟು ಪದ್ಯ : ೧೯೦೭)

ಹಿಂದಕ್ಕೆ

[ಸಂಪಾದಿಸಿ]
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.