ಜೈಮಿನಿ ಭಾರತ/ಮೂರನೆಯ ಸಂಧಿ
ಜೈಮಿನಿ ಭಾರತ ಮೂರನೆಯ ಸಂಧಿ
[ಸಂಪಾದಿಸಿ]ಪದ್ಯ - ಸೂಚನೆ
[ಸಂಪಾದಿಸಿ]ಸೂಚನೆ :ಹಸ್ತಿನಾವತಿಯಿಂ ತಳರ್ದು ಭದ್ರಾವತಿಯ |
ವಿಸ್ತಾರಮಂ ತೋರಿದಂ ಸಮೀಪದ ಗಿರಿಯ
ಮಸ್ತಕದೊಳಿರ್ದನಿಲಸಂಭವಂ ಕರ್ಣತನಯಂಗೆ ಸಂಪ್ರೀತಿಯಿಂದ ||
ಸೂಚನೆ :ಹಸ್ತಿನಾವತಿಯಿಂ ತಳರ್ದು = ಹಸ್ತಿನಾವತಿಯನ್ನು ಬಿಟ್ಟು ಕರ್ಣತನಯಂಗೆ = ವೃಷಕೇತುವಿಗೆ ಸಂಪ್ರೀತಿಯಿಂದ =ಪ್ರೀತಿಯಿಂದ ಭದ್ರಾವತಿಯ ವಿಸ್ತಾರಮಂ = ವಿಸ್ತಾರವನ್ನು ತೋರಿದಂ = ತೋರಿದನು. ಸಮೀಪದ ಗಿರಿಯ = ಬೆಡ್ಡದ ಮಸ್ತಕದೊಳಿರ್ದನಿಲಸಂಭವಂ->ಮಸ್ತಕದೊಳ್ ಇರ್ದ ಅನಿಲಸಂಭವಂ.= ಬೆಟ್ಟದ ತುದಿಯಲ್ಲಿ ಇದ್ದ ಭೀಮನು.
(ಪದ್ಯ - ೬೭) ♣♣♣ |
ಪದ್ಯ – ೧
[ಸಂಪಾದಿಸಿ]ಭೂವಧುರಮಣ ಕೇಳೈ ಮುಂದೆ ನಡೆವ ಸುಕ |
ಧಾವಿಸ್ತರವನಿನ್ನು ಪಯಣಗತಿಯಿಂದೆ ಭ |
ದ್ರಾವತೀದೇಶಮಂ ಪೊಕ್ಕರನಿಲಜ ವೃಷಧ್ವಜ ಘಟೋತ್ಕಚತನುಜರು ||
ಆವಗಂ ನಿರ್ಮಲಶ್ರೀಕರಗ್ರಾಹಿ ಮ ||
ತ್ತಾವಗಂ ಪ್ರಣುತವನಮಾಲಾ ಸುಶೋಭಿ ತಾ |
ನಾವಗಂ ಮನ್ಮಥೋದ್ಭವಕಾರಿ ಹರಿವೊಲಾನೆಂಬ ಪೆಂಪಿಂದೆಸೆದುದು ||1||
*ಭೂವಧುರಮಣ = ಭೂಮಿಯ ಒಡೆಯನಾದ ಜನಮೇಜಯನೇ ಕೇಳೈ = ಕೇಳು ಮುಂದೆ ನಡೆವ ಸುಕಧಾವಿಸ್ತರವನಿನ್ನು = ಮುಂದಿನ ಕಥೆಯ ವಿಸ್ತಾರವನ್ನು, ಪಯಣಗತಿಯಿಂದೆ ಭದ್ರಾವತೀದೇಶಮಂ ಪೊಕ್ಕರನಿಲಜ->ಪೊಕ್ಕರು ಅನಿಲಜ ವೃಷಧ್ವಜ ಘಟೋತ್ಕಚತನುಜರು =ಪ್ರಯಾಣ ಮಾಡಿ ಭದ್ರಾವತೀ ದೇಶವನ್ನು ಅನಿಲಜ=ಭೀಮ, ವೃಷಧ್ವಜ, ಘಟೋತ್ಕಚತನುಜರು = ಘಟೊದ್ಘಜನ ಮಗ ಮೇಘನಾದರು ಹೊಕ್ಕರು. ಆ ದೇಶವು ಆವಗಂ = ಯಾವಾಗಲೂ ನಿರ್ಮಲಶ್ರೀಕರಗ್ರಾಹಿ =ಪರಿಶುದ್ಧವಾದ ಶ್ರೀಕರಗ್ರಾಹಿ =ಸಂಪತ್ ಕರಗ್ರಾಹಿ =ಸಂಪತ್ತಹೊಂದಿರುವಂತಹದು, ಮತ್ತಾವಗಂ = ಮತ್ತು ಯಾವಾಗಲೂ ಪ್ರಣುತವನಮಾಲಾ = ಹೊಗಳಿಕೆಗೆ ತಕ್ಕುದಾಗಿ ಸುಶೋಭಿ = ಶೋಭಿಸುತ್ತರಿವುದು ತಾನು ಆವಗಂ =ಅದು ಯಾವಾಗಲೂ ಮನ್ಮಥೋ ದ್ಭವಕಾರಿ ಮನ್ಮಥ ಉದ್ಭವಕಾರಿ = ಹರಿಯಿಮದ ಜನಿಸಿದ ಮನ್ಮಥನಂತೆ ಕಾಮೋತ್ತೇಜನಕಾರಿಯಾಗಿದ್ದು ಹರಿವೊಲಾನೆಂಬ->ಹರಿವೊಲ್ ಆನು = ನಾನು ಎಂಬ = ವಿಷ್ಣುವಿಗೆ ತಾನು ಸಮ ಎಂಬ, ಪೆಂಪಿಂದೆಸೆದುದು ಪೆಂಪು = ಸೊಬಿಗಿನಿಂದ ಎಸೆದುದು = ಕಾಣುತ್ತಿರವುದು.
(ಪದ್ಯ - ೧) |
ಪದ್ಯ – ೨
[ಸಂಪಾದಿಸಿ]ಎಲ್ಲಿಯುಂ ಪರಿವ ಪೆರ್ದೊರೆಯಿಂದೆ ಕೆರೆಯಿಂದೆ |
ಯೆಲ್ಲಿಯುಂ ಕುಸುಮದಾಗರದಿಂದೆ ಸರದಿಂದೆ |
ಯೆಲ್ಲಿಯುಂ ರತ್ನಮಯದಿಳೆಯಿಂದೆ ಬೆಳೆಯಿಂದೆ ಮಣಿಕೃತಕ ಶೈಲದಿಂದ ||
ಎಲ್ಲಿಯುಂ ಸುಳಿವ ಗೋವ್ರಜದಿಂದೆ ಗಜದಿಂದೆ |
ಯೆಲ್ಲಿಯುಂ ಕತ್ತುರಿಯ ಮೃಗದಿಂದೆ ಖಗದಿಂದೆ |
ಯೆಲ್ಲಿಯುಂ ವಿರಚಿತ ಭವನದಿಂದೆ ಜನದಿಂದೆಯಾನಾಡ ಸಿರಿ ಮೆರೆದುದು ||2||
ಎಲ್ಲಿಯುಂ = ಎಲ್ಲೆಡೆಯೂ ಪರಿವ = ಹರಿವ ಪೆರ್ದೊರೆಯಿಂದೆ-> ಪೆರ್ದು=ಹಿರಿದು= ದೊಡ್ಡ ತೊರೆ ಹಳ್ಳ,,ದೊಡ್ಡದು ಕೆರೆಯಿಂದೆ,
ಯೆಲ್ಲಿಯುಂ = ಎಲ್ಲೆಡೆಯೂ ಕುಸುಮದ = ಹೋವಿನ ಆಗರದಿಂದೆ ಸರದಿಂದೆ=ಸರಸ್ಸಿನಿಂದ, ಯೆಲ್ಲಿಯುಂ = ಎಲ್ಲೆಡೆಯೂ ರತ್ನಮಯದಿಳೆಯಿಂದೆ->ರತ್ನಮಯದ ಇಳೆ=ಭೂಮಿಯಿಂದ ಬೆಳೆಯಿಂದೆ ಮಣಿಕೃತಕ ಶೈಲದಿಂದ = ಕೃತಕ ಮಣಿಯ ಬೆಟ್ಟದಿಂದಲೂ, ಎಲ್ಲಿಯುಂ = ಎಲ್ಲೆಡೆಯೂ ಸುಳಿವ ಗೋವ್ರಜದಿಂದೆ ==ತಿರುಗಾಡುತ್ತಿರುವ ದನಗಳ ಹಿಂಡಿನಿಂದ, ಗಜದಿಂದೆ =ಆನೆಗಳಿಂದ, ಯೆಲ್ಲಿಯುಂ = ಎಲ್ಲೆಡೆಯೂ ಕತ್ತುರಿಯ ಮೃಗದಿಂದೆ =ಕಸ್ತೂರಿ ಮೃಗದಿಂದಲೂ, ಖಗದಿಂದೆ = ಪಕ್ಷಿಗಳಿಂದಲೂ, ಯೆಲ್ಲಿಯುಂ = ಎಲ್ಲೆಡೆಯೂ ವಿರಚಿತ =ಸಂದರವಾಗಿ ರಚಿಸಿದ ಭವನದಿಂದೆ=ಮನೆಗಳಿಂದಲೂ, ಜನದಿಂದೆ= ಜನರಿಂದಲೂ ಆ ನಾಡ ಸಿರಿ=ಸಂಪತ್ತು ಮೆರೆದುದು.
(ಪದ್ಯ - ೨) |
ಪದ್ಯ - ೩
[ಸಂಪಾದಿಸಿ]ಅಂಚೆವಿಂಡಾಡದಕೊಳಂ ಕೊಳಗಳೊಳು ಸಲೆ ಪ |
ಳಂಚಿ ಸುಳೀಯದ ಗಾಳಿ ಗಾಳಿಗಳ ಬಳಿವಿಡಿದು |
ಸಂಚರಿಸದೆಳದುಂಬಿ ತುಂಬಿಗಳ ಬಿಡಯಕಿಂಪೆನಿಸದಚ್ಚಲರಲರ್ಗಳ |
ಗೊಂಚಲೆರಗಿಸದ ಲತೆ ಲತೆಗಳಡರದತಳ್ಕಿ |
ನಿಂ ಚಿಗುರದಿಮ್ಮಾವು ಮಾವುಗಳ ಚೆಂದಳಿರ್ |
ಮಿಂಚದ ಬನಂ ಬನಗಳಿಂ ಬಳಸದೂರೂರ್ಗಳಿಲ್ಲದೆಡೆಯಿಲ್ಲಿಳೆಯೊಳು ||3||
ಅಂಚೆವಿಂಡಾಡದಕೊಳಂ->ಅಂಚೆವಿಂಡು = ಹಂಸಗಳ ಹಿಂಡು, ಆಡದಕೊಳಂ = ಆಡದ ಕೊಳವು, ಕೊಳಗಳೊಳು ಸಲೆ ಪಳಂಚಿ ಸುಳೀಯದ ಗಾಳಿ->ಕೊಳಗಳಲ್ಲಿ ಪಳಂಚಿ = ಸುತ್ತಿ ಸುಳಿಯದ ಗಾಳಿ, ಗಾಳಿಗಳ ಬಳಿವಿಡಿದು ಸಂಚರಿಸದೆಳದುಂಬಿ-> ಗಾಳಿಗಳ ಬಳಿವಿಡಿದು = ಗಾಳಿಯ ದಿಕ್ಕನ್ನು ಅನುಸರಿಸದ ಎಳೆದುಂಬಿ =ಮರಿಜೇನುಹುಳಗಳು, ತುಂಬಿಗಳ ಬಿಡಯಕಿಂಪೆನಿಸದಚ್ಚಲರಲರ್ಗಳ-> ತುಂಬಿಗಳ ಬಿಡಯಕೆ=ಗುಂಪಿಗೆ, ಇಂಪೆನಿಸದ= ಸವಿ ಎನಿಸದ,ಅಚ್ಚಲರ್ಗಳ = ಹೊಸ ಹೂವುಗಳ, ಗೊಂಚಲೆರಗಿಸದ ಲತೆ = ಹೊಸ ಹೂವುಗಳ ಗೊಂಚಲನ್ನು ಎರಗಿಸದ ಲತೆ= ಬಿಡದ ಬಳ್ಳಿ, ಲತೆಗಳಡರದತಳ್ಕಿನಿಂಚಿಗುರದಿಮ್ಮಾವು-> ಲತೆಗಳ ಅಡರದ ತಳ್ಕಿನಿಂ ಚಿಗುರದ ಇಮ್ಮಾವು = ಬಳ್ಳಿಗಳು ಹಬ್ಬಿದ ಹೊಳೆಯುವ ಇಮ್ಮಾವುಗಳ ಚೆಂದಳಿರ್ =(ಇಮ್ಮು= ಎರಡು)ಅನೇಕ ಮಾವಿನ ಮರಗಳ ಚಿಗುರುಗಳು, ಮರಗಳ ಚಿಗುರುಗಳಿಂದ ಮಿಂಚದ ಬನಂ =ಕಾಡು, ಬನಗಳಿಂ = ಅನೇಕ ಕಾಡುಗಳಿಂದ ಮತ್ತು ತೋಟಗಳಿಂದ , ಬಳಸದೂರೂರ್ಗಳಿಲ್ಲದೆಡೆಯಿಲ್ಲಿಳೆಯೊಳು->ಬಳಸದ ಊರ್ಗಳು ಇಲ್ಲದ ಎಡೆಯಿಲ್ಲ ಇಳೆಯೊಳು = ಬಳಸದ= (ತೋಟಗಳಿಂದ) ಸುತ್ತುವರಿಯಲ್ಪಡದ, ಊರ್ಗಳು = ಊರುಗಳು ಇಲ್ಲದ ಎಡೆಯಿಲ್ಲ ಸ್ಥಳವು ಇಲ್ಲ, ಇಳೆಯೊಳು =ಭದ್ರಾವತಿಯ ಈ ಭೂಮಿಯಲ್ಲಿ.
(ಪದ್ಯ - ೩) |
ಪದ್ಯ – ೪
[ಸಂಪಾದಿಸಿ]ಬೆಳೆಯದ ಪೊಲಂಗಳಂ ಬೆಳ್ದಾವರೆಗಳಲ |
ರ್ದಳೆಯದಕೊಳಂಗಳಂ ಮಣಿಶಿಲಾ ರೋಚಿಯಿಂ |
ಪೊಳೆಯದಚಲಗಳಂ ತರುಣಾರುಣ ಪ್ರಭಾಲಕ್ಷ್ಮಿಯಂ ನಗುವಂತಿರೆ ||
ತಳೆಯದ ಬನಂಗಳಂ ಕಿವಿಯೊಳಿಡಿದಾಸರಂ |
ಕಳೆಯದ ಸೊನಂಗಳಂ ಮನಕನವರತಸುಖಂ |
ಮೊಳೆಯದ ಜನಂಗಳಂ ಮುಳಿದರಸಲಾಂ ಕಾಣೆನಾಮಹೀಮಂಡಲದೊಳು ||4||
ಬೆಳೆಯದ ಪೊಲಂಗಳಂ= ಬೆಳೆಯದ ಹೊಲಗಳನ್ನು, ಬೆಳ್ದಾವರೆಗಳಲರ್ದಳೆಯದಕೊಳಂಗಳಂ-> ಬೆಳ್ದಾವರೆಗಳು = ಬಿಳಿತಾವರೆ, ಅಲರ್ = ಹೂವು, ದ(ತ)ಳೆಯದ = ಬಿಡದ ಕೊಳಂಗಳಂ = ಕೊಳಗಳನ್ನು, ಮಣಿಶಿಲಾ =ರತ್ನಮಣಿಯಂತೆ ರೋಚಿಯಿಂ =ಕಾಂತಿಯಿಂದ ಪೊಳೆಯದ ಅಚಲಗಳಂ = ಹೊಳೆಯದ ಬೆಟ್ಟಗಳನ್ನು, ತರುಣಾರುಣ-> ತರುಣ = ಎಳೆಯ ಅರುಣ = ಸೂರ್ಯೋದಯದ ಪ್ರಭಾಲಕ್ಷ್ಮಿಯಂ = ಕಾಂತಿಯ ಲಕ್ಷ್ಮಿಯಂ = ಸಿರಿಸಂಪತ್ತು, ನಗುವಂತಿರೆ = ಸಂತಸವನ್ನು ಕೋಡುವಂತಿದ್ದವು. ತಳೆಯದ ಬನಂಗಳಂ ಕಿವಿಯೊಳಿಡಿದಾಸರಂ-> ಚಿಗುರಿಸದೇ ಇರುವ ವನಗಳನ್ನು, ಕಿವಿಯೊಳು ಇಡಿದ ಆಸರಂ = ಕಿವಿಯಲ್ಲಿ ಹೊಕ್ಕು ಆಯಾಸವನ್ನು, ಕಳೆಯದ ಸೋನಂಗಳಂ = ಸ್ವನಂಗಳಂ = ಗಾನವನ್ನು, ಮನಕನವರತಸುಖಂ-> ಮನಕೆ ಅನವರತ = ಸದಾ, ಸುಖಂ =ಆನಂದವನ್ನು ಮೊಳೆಯದ = ಉಂಟಾಗದ, ಜನಂಗಳಂ = ಜನರನ್ನು, ಮುಳಿದರಸಲಾಂ-> ಮುಳಿದು = ಬೇಸರದಿಂದ ಅರಸಲು = ಹುಡುಕಲು ಆಂ = ನಾನು ಕಾಣೆನಾಮಹೀಮಂಡಲದೊಳು-> ಕಾಣೆನು ಆ ಮಹೀಮಂಡಲದೊಳು = ಭದ್ರಾವತೀ ಮಹೀಮಂಡಲದಲ್ಲಿ ಬೆಳೆಯದ ಹೊಲ ಇತ್ಯಾದಿ ಆನಂದವಿಲ್ಲ ಬೇಸರದ ಜನರನ್ನು ಕಾಣೆನು ಎಂದು ಭೀಮನು ಹೇಳಿದನು).
(ಪದ್ಯ - ೪) |
ಪದ್ಯ – ೫
[ಸಂಪಾದಿಸಿ]ಉರ್ವರೆಯ ಶಾಲಿಗಳ ಪಾಲ್ದೆನೆಗೆ ನಭದಿಂ ಮು |
ಸುರ್ವ ಗಿಳಿವಿಂಡುಗಳನುಲಿಯಿಂದೆ ಪಾಮರಿಯ |
ರೆರ್ವಿಸಿದೊಡಿರದೆ ಬಾಂದಳಕೆ ಮುಗುಳೇಳ್ವವೊಲ್ ಕಲಮಂಗಳಿಕ್ಕೆಲದೊಳು ||
ಕೊರ್ವಿ ನಳನಳಿಸಿ ನೀಳ್ದುರೆ ಬೆಳೆದ ರಸದಾಳಿ |
ಗರ್ವುಗಳ ಸೋಗೆಗಳ ಪಸುರುವೊಗರಾಗಸಕೆ |
ರ್ಪುತಿಹುದಾನಾಡೊಳೆಲ್ಲಿಯುಂ ದಾರಿಗರ ಕಣ್ಗೆ ಕೌತುಕಮಾಗಲು ||5||
ಉರ್ವರೆಯ = ಪೈರು ಪಚ್ಚೆಯಿಂದ ಕೂಡಿದ ಭೂಮಿಯ, ಶಾಲಿಗಳ =ಭತ್ತದಗದ್ದೆಗಳ, ಪಾಲ್ದೆನೆಗೆ = ಹಾಲುಗೂಡಿದ ತೆನೆಗೆ, ನಭದಿಂ = ಆಕಾಶದಿಂದ ಮುಸುರ್ವ = ಮುಗಿಬೇಳುವ ಗಿಳಿವಿಂಡುಗಳನುಲಿಯಿಂದೆ-> ಗಿಳಿವಿಂಡುಗಳ ನುಲಿಯಿಂದೆ = ಗಿಳಿಯ ಹಿಂಡುಗಳನ್ನು ಕವಣೆಯಿಂದ, ಪಾಮರಿಯರ್ ರೈತ ಹೆಣ್ಣುಗಳು ಏರ್ವಿಸಿದೊಡೆ = ಕಲ್ಲುಬೀಸಿ ಹಾರಿಸಿದರೆ, ಇರದೆ ಬಾಂದಳಕೆ ಮುಗುಳೇಳ್ವವೊಲ್ = ಆಗಿಳಿಗಳು ಅಲ್ಲಿರದೆ ಆಕಾಶಕ್ಕೆ ಹಾರುವಂತೆ, (ಎಲ್ಲಿಯೆಂದರೆ) ಕಲಮಂಗಳು ಇಕ್ಕೆಲದೊಳು = ಎರಡೂಕಡೆ ಇರುವ, ಕಲಮಂಗಳು=ಗದ್ದೆಗಳಲ್ಲಿ
ಕೊರ್ವಿ= ಕೊಬ್ಬಿ ನಳನಳಿಸಿ = ಸೊಂಪಾಗಿ ನೀಳ್ದುರೆ->ನೀಳ್ದು ಉರೆ (ಹೆಚ್ಚು) = ನಿಂತು ಚೆನ್ನಾಗಿ ಬೆಳೆದ ರಸದಾಳಿ = ರಸದಾಳಿ ಗರ್ವುಗಳ=ರಸದಾಳಿಕಬ್ಬುಗಳ ಸೋಗೆಗಳ = ಉದುದ್ದ ಎಲೆಗಳ ಪಸುರು = ಹಸುರು ವೊಗರು= ಹಸಿರು ಬಣ್ಣ ಆಗಸಕೆ=ಆಕಾಶಕ್ಕೆ ವರ್ಪುತಿಹುದು= ಹಬ್ಬಿಹುದು, ನಾಡೊಳೆಲ್ಲಿಯುಂ-> ನಾಡೋಳ್ = ಈ ನಾಡಿನ ಎಲ್ಲಿಯುಂ = ಎಲ್ಲಡೆಯೂ, ದಾರಿಗರ = ದಾರಿಹೊಕರ ಕಣ್ಗೆ = ಕಣ್ಣಿಗೆ ಕೌತುಕಮಾಗಲು = ಅಚ್ಚರಿಯನ್ನಂಟು ಮಾಡುತ್ತಿರಲು.
(ಪದ್ಯ - ೫), |
ಪದ್ಯ – ೬
[ಸಂಪಾದಿಸಿ]ತಂಬೆಲರ ಸೊಗಸಿಂಗೆ ತಲೆದೂಗುವಂತೆ ತಳೆ |
ದಂಬುಜದ ಪರಿಮಳಕೆ ಶಿರವನೊಲೆವಂತೆ ಮರಿ |
ದುಂಬಿಗಳ ಗಾನಕ್ಕೆ ಕೊರಲನೊಲೆದಾಡುವಂತೊಯ್ಯೊಯ್ಯನೊಲೆದಾಡುವ ||
ಪೊಂಬಣ್ಣಮೆಸೆವ ಕಳಮಶ್ರೀಯ ಪರಿಚರ್ಯೆ |
ಯಂ ಬಿಡದೆ ಮಾಳ್ವ ಕೆಳದಿಯರೆನಲ್ ಕೀರ ನಿಕು |
ರುಂಬಮಂ ಸೋವಲೆಂದಲ್ಲಿರ್ದ ಪಾಮರಿಯರಧ್ವಗರನೆಡೆಗೆಡಿಪರು ||6||
ತಂಬೆಲರ ಸೊಗಸಿಂಗೆ = ತಂಪಾದ ಗಾಳಯ ಸೊಗಸಿಗೆ, ತಲೆದೂಗುವಂತೆ, ತಳೆದಂಬುಜದ ಪರಿಮಳಕೆ ಶಿರವನೊಲೆವಂತೆ = ಕರೆಯಲ್ಲಿರುವ ಕಮಲದ ಪರಿಮಳಕ್ಕೆ ತಲೆಯನ್ನಲ್ಲಾಡಿಸುವಂತೆ, ಮರಿದುಂಬಿಗಳು = ಜೇನುಹುಳುಗಳ ಹಾರುವ ಘೇಂಕಾರದ ಗಾನಕ್ಕೆ ಕೊರಲನೊಲೆದಾಡುವಂತೆ-> ಕೊರಳನ್ನು ಒಲಿದಾಡವಹಾಗೆ ತೊಯ್ಯೊಯ್ಯನೊಲೆದಾಡುವ ಹಾಗೆ, ಪೊಂಬಣ್ಣಮೆಸೆವ ಕಳಮಶ್ರೀಯ ಪರಿಚರ್ಯೆಯಂ-> ಪೊಂಬಣ್ಣಂ = ಬಂಗಾರದ ಬಣ್ಣವನ್ನು ಎಸೆವ = ಹೋಲುವ ಕಳಮಶ್ರೀಯ = ಭತ್ತದ ಧಾನ್ಯಲಕ್ಷಿಯ ಪರಿಚೆರ್ಯೆಯಂ= ಸೇವೆಯನ್ನು, ಬಿಡದೆ ಮಾಳ್ವ = ಮಾಡುವ, ಕೆಳದಿಯರೆನಲ್ = ಸಖಿಯರೋ ಎನ್ನುವಂತೆ, ಕೀರ = ಗಿಳಿಗಳ, ನಿಕುರುಂಬಮಂ = ಸಮೂಹವನ್ನು ಸೋವಲೆಂದಲ್ಲಿರ್ದ-> ಸೋವಲು ಎಂದು ಅಲ್ಲಿರ್ದ = ಓಡಿಸಲು ಎಂದು ಅಲ್ಲಿದ್ದ, ಪಾಮರಿಯರಧ್ವಗರನಡೆಗೆಡೆಪರು-> ಪಾಮರಿಯರ್ ಅಧ್ವಗರ ನೆಡೆಗೆಡೆಪರು =ರೈತ ಹೆಂಗಸರು ಪಯಣಿಗರ ನಡಿಗೆಯನ್ನು ನಡಿಗೆಯನ್ನು ಕೆಡಿಪರು = ನಿಲ್ಲಿಸುವರು.(ಪಾಮರಿಯರರ್ಧ್ವಗರನಡಿಗೆಡಪರು ಪಾಮರಿಯರು ಅಧ್ವಗರನು ಅಡಿಗೆಡಪರು = ರೈತ ಹೆಣ್ಣುಮಕ್ಕಳು ಅಧ್ವಗರನು= ದಾರಿಹೋಕರನ್ನು ಅಡಿಗೆಡಪರು = ನಡಿಗೆ ತಪ್ಪಿಸುವರು.) ಈ ರೈತ ಹೆಂಗಸರು ತಮ್ಮ ಮುಗ್ಧ ಲಾವಣ್ಯದಿಂದ ದಾರಿಹೋಕರ ಗಮನವನ್ನು ಪೂರಾ ಸೆಳೆದು ಅವರು ನಿಂತು ನೋಡುವಂತೆ ಮಾಡುವರು.(ಪಾಮರಿಯರರ್ಧ್ವಗರನಡಿಗೆಡಪರು ಪಾಮರಿಯರು ಅಧ್ವಗರನು ಅಡಿಗೆಡಪರು = ರೈತ ಹೆಣ್ಣುಮಕ್ಕಳು ಅಧ್ವಗರನು= ದಾರಿಹೋಕರನ್ನು ಅಡಿಗೆಡಪರು = ನಡಿಗೆ ತಪ್ಪಿಸುವರು.)
(ಪದ್ಯ - ೬), |
ಪದ್ಯ – ೭
[ಸಂಪಾದಿಸಿ]ಪಾಲ್ದೆನೆಯೊಳಂಡಿಸಿದ ಗಿಳೀವಿಂಡನಬಲೆಯರ್ |
ಕಾಲ್ದೆಗೆಯಲಾರ್ದು ಕೈಪರೆಗುಟ್ಟುವಂಡಲೆಗೆ |
ತೇಲ್ದು ಮೇಲುದು ಜಾರೆ ತೋರ್ಪ ಪೊಂಗೊಡಮೊಲೆಯನಂಬುಜದ ಮುಕುಳ(+ಮೆಂದು)||
ಸೋಲ್ದೆರಗಿ ತಿರುತಿರುಗಿ ಬರುತಿರ್ಪ ತುಂಬಿಗಳ |
ಸಾಲ್ದಿವಿಜಗಿರಿಯ ಬಳಸುವ ತಮೋರಾಜಿಯಂ |
ಪೊಲ್ದು ಸಲೆ ಕಂಗೊಳಿಸುತಿರ್ಪುದಾ ಭೂತಲದೊಳೇನೆಂಬೆನಚ್ಚರಿಯನು ||7||
ಪಾಲ್ದೆನೆಯೊಳಂಡಿಸಿದ-> ಪಾಲ್ದೆನೆಯೊಳು = ಹಾಲುತುಂಬಿದ ಭತ್ತದ ತೆನೆಯಲ್ಲಿ ಅಂಡಿಸಿದ = ಕುಳಿತ ಗಿಳೀವಿಂಡನು ಗಳಿಗಳ ಗುಂಪನ್ನು, ಅಬಲೆಯರ್ =ಹೆಣ್ಣುಮಕ್ಕಳು, ಕಾಲ್ದೆಗೆಯಲಾರ್ದು->ಕಾಲ್ದೆಗಯಲು ಹಾರಿಸಲು, ಆರ್ದು = ಕೂಗಿ ಕೈಪರೆಗುಟ್ಟುವಂಡಲೆಗೆ-> ಕೈಪರಗುಟ್ಟುವ = ಚಪ್ಪಾಳೆ ತಟ್ಟುವ,ಅಂಡಲೆಗೆ = ಪರಿಶ್ರಮಕ್ಕೆ, ತೇಲ್ದು ಮೇಲುದು ಜಾರೆ-> ತೇಲ್ದು = ಸೆರಗು ಸರಿದು, ಮೇಲುದು ಜಾರೆ = ಹೊದೆದ ಸೆರಗು ಜಾರಲು, ತೋರ್ಪ = ಕಾಣುವ ಪೊಂಗೊಡಮೊಲೆಯನಂಬುಜದ-> ಕಾಣುವ ಪೊಂಗೊಡ = ಚಿನ್ನದ ಕೊಡದಂತಿರುವ, ಮೊಲೆಯನು = ಮೊಲೆಯನ್ನು ಅಂಬುಜದ = ಕಮಲದ, ಮುಕುಳಮೆಂದು = ಮೊಗ್ಗೆಂದು ಭ್ರಮಿಸಿ, ಸೋಲ್ದೆರಗಿ = ಸೋಲ್ದು = ಆಸೆಪಟ್ಟು ಎರಗಿ =ಬಂದು (ಓಡಿಸಿದಾಗ್ಯೂ) ಅದಕ್ಕೆ ತಿರುತಿರುಗಿ ಬರುತಿರ್ಪ = ಬರುತ್ತಿರುವ ತುಂಬಿಗಳ = ಜೇನುಹುಳುಗಳ ಸಾಲ್=ಸಾಲು ದಿವಿಜಗಿರಿಯ = ಮೇರು ಪರ್ವತವನ್ನು, ಬಳಸುವ = ಸುತ್ತಯತ್ತಿರುವ, ತಮೋರಾಜಿಯಂ ಕತ್ತಲೆಯ ಸಾಲನ್ನು ಪೊಲ್ದು = (ಕಪ್ಪು ತುಂಬಿಗಳು) ಹೋಲುತ್ತಾ ಸಲೆ = ಬಹಳ, ಕಂಗೊಳಿಸುತಿರ್ಪುದಾ = ಮನೋಹರವಾಗಿರುವುದು, ಭೂತಲದೊಳೇನೆಂಬೆನಚ್ಚರಿಯನು-> ಭೂತಲದುಳು ಏನೆಂಬನು ಅಚ್ಚರಿಯನು = ಈ ಭೂಮಿಯಲ್ಲಿ, ಅಶ್ಚರ್ಯವನ್ನು ಏನೆಂದು ಹೇಳಲಿ. (ಮೇರು ಪರ್ವತವನ್ನು ಹಗಲು ರಾತ್ರಿಗಳು ಸುತ್ತುತ್ತಿವೆ ಎಂಬ ನಂಬುಗೆ)
(ಪದ್ಯ - ೭), |
ಪದ್ಯ – ೮
[ಸಂಪಾದಿಸಿ]ಶಾಲಿಗಳ ಕೈಗಂಪ ಪೊಲಗಾವ ಪಾಮರಿಯ |
ರೋಳಿಗಳ ಮೈಗಂಪ ಸತತ ಕುಸುಮಿತ ತರು ಲ |
ತಾಳಿಗಳ ಪೂಗಂಪ ತಿಳಿಗೊಳಂಗಳೋಳಲರ್ದ ಪೊಚ್ಚ ಪೊಂದಾವರೆಗಳ ||
ಧೂಳಿಗಳ ತನಿಗಂಪನುಂಡು ಮಿಂಡೆದ್ದ ಭೃಂ |
ಗಾಳಿಗಳ ಬಳಗಂ ಪರಿಯಲೊಡನೆ ಸುಳಿವ ತಂ |
ಗಾಳಿಗಳ ಕಡುಗಂಪ ಸೇವಿಸುತೆ ಪಥಿಕರಾಸರ್ಗಳೆವರಾನಾಡೊಳು ||8||
(ಆ ನಾಡಿನಲ್ಲಿ) ಶಾಲಿಗಳ = ಭತ್ತದ ಕೈಗಂಪ->ಕೈ= ತೆನೆಗಳ ಕಂಪ = ಪರಿಮಳ, ಪೊಲಗಾವ = ಹೊಲಕಾಯುವ ಪಾಮರಿಯರ ಓರೋಳಿಗಳ= ರೈತ, ಮೈಗಂಪ, ಮಹಿಳೆಯರ ಓಳಿಗಳ ಮೈಗಂಪ = ಸಮೂಹದ ಮೈಯ ಕಂಪು, ಸತತ ಕುಸುಮಿತ ತರು ಲತಾಳಿಗಳ ಪೂಗಂಪ =ಯಾವಾಗಳೂ ಅರಳಿರುವ ಹೂಗಳುಳ್ಳ ಮರ ಬಳ್ಳಿಗಳ ಕಂಪು, ತಿಳಿಗೊಳಂಗಳೋಳಲರ್ದ-> ತಿಳಿ ಕೊಳಂಗಳೊಳ್ ಅಲರ್ದ = ತಿಳಿನೀರಿನ ಕೊಳದಲ್ಲಿ ಅರಳಿದ, ಪೊಚ್ಚ ಪೊಂದಾವರೆಗಳ = ಹೊಸ ಹೊನ್ನಿನ ಬಣ್ಣದ ತಾವರೆಗಳ, ಧೂಳಿಗಳ = ಮಕರಂದದ, ತನಿಗಂಪನುಂಡು = ಹೊಸಪರಿಮಳವನು ಉಂಡು, ಮಿಂಡೆದ್ದ = ಸೊಕ್ಕಿನಿಂದ ಹಾರುತ್ತಿರುವ, ಭೃಂಗಾಳಿಗಳ ಬಳಗಂ = ಜೇನಿನ ಗುಂಪು, ಪರಿಯಲೊಡನೆ =ಹರಿಯಲು = ಹೋಗುತ್ತಿರಲು ಒಡನೆ = ಅದೇ ಸಮಯದಲ್ಲಿ ಸುಳಿವ = ಬೀದುವ ತಂಗಾಳಿಗಳ ಕಡುಗಂಪ = ಪರಿಮಳವನ್ನು ಸೇವಿಸುತೆ = ಸೇವಿಸುತ್ತಾ ಪಥಿಕರಾಸರ್ಗಳೆವರಾನಾಡೊಳು-> ಪಥಿಕರು ಆಸರ = ಆಯಾಸವನ್ನು ಕಳೆವರು ಆ ನಾಡೊಳು.
(ಪದ್ಯ - ೮), |
ಪದ್ಯ – ೯
[ಸಂಪಾದಿಸಿ]ಬಟ್ಟೆಬಟ್ಟೆಯೊಳೆಲ್ಲಿಯುಂ ಕುಳಿರ್ವೆರಸಿದರ |
ವಟ್ಟಿಗೆಯ ಸದನಂಗಳೀಂದೆ ಬಾಗಿಲ್ಗೆ ಪೊರ |
ಮಟ್ಟು ಕಲಶಮನೆತ್ತಿ ನೀರೆರೆವ ಕಾಮಿನಿಯರುರುಬಾಹುಮೂಲದೆಡೆಗೆ ||
ದಿಟ್ಟಿ ಪರಿಪರಿದು ಮೊಗಮೊರ್ಗುಡಿಸೆ ಸರಿಸಕಳ |
ವಟ್ಟಜಲಧಾರೆ ಪೊರಸೂಸೆ ಬಯಲಿಗೆ ಬಾಯ |
ಬಿಟ್ಟು ನಗಿಸುವರಲ್ಲಿ ತೃಷೆಯಿಂದೆ ಬಂದ ಪಥಿಕರ್ಕಳಾ ಬಾಲೆಯರನು ||9||
ಬಟ್ಟೆಬಟ್ಟೆಯೊಳೆಲ್ಲಿಯುಂ = ಬಟ್ಟೆ = ದಾರಿ;ದಾರಿ ದಾರಿಯಲ್ಲಿ ಎಲ್ಲಿಯುಂ= ಎಲ್ಲಾ ಕಡೆ ಕುಳಿರ್ = ತಂಪು (ಹಿಮ) ವೆರಸಿದ = ಸೇರಿಸಿದ ಅರವಟ್ಟಿಗೆಯ = ನೀರುಕೊಡುವ ಸದನಂಗಳೀಂದೆ = ಮನೆಗಳಿಂದ, ಬಾಗಿಲ್ಗೆ = ಬಾಗಿಲಿಗೆ, ಪೊರಮಟ್ಟು = ಹೊರಬಂದು, ಕಲಶಮನೆತ್ತಿ ತಂಬಿಗೆಯನ್ನು ಎತ್ತಿ, ನೀರೆರೆವ = ನೀರು ಹೊಯ್ಯುವ, ಕಾಮಿನಿಯರ = ಹೆಂಗಸರ, ಉರುಬಾಹುಮೂಲದೆಡೆಗೆ-> ಉರು = ಉಬ್ಬಿದ ಬಾಹುಮೂಲ ತೋಳಿನ ಬುಡದ, ಎಡೆಗೆ =ಕಡೆ ದಿಟ್ಟಿ ಪರಿಪರಿದು = ನೀರುಕುಡಿವ ಪಥಿಕರ ದೃಷ್ಟಿ ಹರಿದು, ಮೊಗಮೊರ್ಗುಡಿಸೆ-> ಮೊಗಂ =ಮುಖಕ್ಕೆ ಒರ್ಗುಡಿಸೆ =ಓರೆಮಾಡಿ (ಬೊಗಸೆಗೆ ಬಿದ್ದ ನೀರನ್ನು ಕುಡಿಯಲು ಮುಖವನ್ನು ಓರೆ ಮಾಡಿ ಮೇಲೆ ನೋಡುವುದು) ಸರಿಸಕೆ = ಕೈಹತ್ತಿರಕ್ಕೆ ಅಳವಟ್ಟ = ಬಂದ ಜಲಧಾರೆ ನೀರು, ಪೊರಸೂಸೆ = ಕುಡಿಯದೆ ಹೊರಬೀಳಲು, ಬಯಲಿಗೆ ಬಾಯಬಿಟ್ಟು = ಮೇಲೆ ನೋಡುತ್ತಾ (ಬಯಲಿಗೆ)ನೀರಿಲ್ಲದ ಕಡೆ ಬಾಯಿ ತೆರದು, ನಗಿಸುವರಲ್ಲಿ-> ನಗಿಸುವರು ಅಲ್ಲಿ, ತೃಷೆಯಿಂದೆ = ಬಾಯಾರಿ ಬಂದ ಪಥಿರ್ಕಳಾ-> ಫಥಿರ್ಗಳು = ಪಯಣಿಗರು ಆ ಬಾಲೆಯರನು.
(ಪದ್ಯ - ೯), |
ಪದ್ಯ – ೧೦
[ಸಂಪಾದಿಸಿ]ಸ್ವಾದು ಸ್ವಚ್ಛತೆ ಶೈತ್ಯಮಾಮೋದಮೊಂದಿ ಸೊಗ |
ಸಾದ ಲಲಿತಾಂಗಿಯರ ಕರತಳದ ವಿಮಲ ಕಲ |
ಶೋದಕವನೊಲಿದೀಂಟುತಿರ್ದೊಡಂ ಮನದಣಿಯದಧ್ವರ್ಗಾಹೆಂಗಳ ||
ಮಾದಳಿರ ಪಳಿವ ಚೆಂದುಟಿಯ ಸವಿಗೆಳನಗೆಯೊ |
ಳಾದರಿಪ ಕಡೆಗಣ್ಣ ನಿಚ್ಚಳಕೆ ಪೀವರಪ |
ಯೋಧರದ್ವಯವನಪ್ಪುವ ತಂಪಿಗೆಸೆವ ಮೈಗಂಪಿಂಗೆ ಬಯಸಿ ಬಯಸಿ ||10||
ಸ್ವಾದು = ಸವಿಯಾದ ಸ್ವಚ್ಛತೆ = ಶುದ್ಧ ಶೈತ್ಯಮ್ ==ತಂಪಿನ, ಆಮೋದಮೊಂದಿ = ಪರಿಮಳಹೊಂದಿದ ಸೊಗಸಾದ ಲಲಿತಾಂಗಿಯರ = ಹೆಂಗಸರ ಕರತಳದ = ಕೈಯಿಂದ ನೀಡುವ ವಿಮಲ ಕಲಶೋದಕವನು = ಶುದ್ಧವಾದ ಚೊಂಬಿನ ನೀರನ್ನು, ಒಲಿದು ಈಂಟುತ ಇರ್ದೊಡಂ = ಪ್ರೀತಿಯಿಂದ ಕುಡಿಯುತ್ತಿದ್ದರೂ, ಮನದಣಿಯದ = ತೃಪ್ತಿಯಾಗದ ಅಧ್ವಗರ್ಗೆ =ದಾರಿಗರಿಗೆ, ಆ ಹೆಂಗಳ = ಹೆಂಗಸರ, ಮಾದಳಿರ ಪಳಿವ = ಮಾವಿನ ಚಿಗುರೆಲೆಯನ್ನು ಹಳಿಯುವ-ಮೀರಿಸುವ ಚೆಂದುಟಿಯ ಸವಿಯಾದ ಎಳನಗೆಯೊಳ್ ಮುಗುಳುನಗೆಯಲ್ಲಿ, ಆದರಿಪ = ಆದರಿಸುತ್ತಿರುವ, ಕಡೆಗಣ್ಣ ನಿಚ್ಚಳಕೆ = ನಿಷ್ಕಪಟ ಕಣ್ಣೊಟಕ್ಕೆ, ಪೀವರ ಪಯೋಧರದ್ವಯವನು = ಬಲಿತ ಎರಡು ಸ್ತನಗಳನ್ನು, ಅಪ್ಪುವ =ಅಪ್ಪಿಕೊಳ್ಳುವ ತಂಪಿಗೆಸೆವ = ಸುಖಕ್ಕೆ ಮೈಗಂಪಿಂಗೆ = ಮೈಸುವಾಸನೆಗೆ ಬಯಸಿ ಬಯಸಿ ನೀರುಕುಡಿದಷ್ಟೂ (ತೃಪ್ತಿಯಾಗದು).
(ಪದ್ಯ - ೧೦), |
ಪದ್ಯ – ೧೧
[ಸಂಪಾದಿಸಿ]ತಳಿರೆಡೆಯೊಳಿರ್ದ ಮಾವಿನ ತೋರ ತನಿವಣ್ಣ |
ಗಿಳಿ ಕರ್ದುಂಕಿದೊಡೆ ರಸಮೊಸರಿ ಸೋರ್ವಂತೆ ಹೆಂ |
ಗಳ ಕರತಳದ ಪೊಂಗಳಸದ ಜುಳಿಗೆಯೊಳಿಟ್ಟ ಬೆರಲಂ ತೆಗೆದು ಬಿಡಲ್ಕೆ ||
ಲಲಿತ ಚಂಪಕ ತನುಚ್ಛಾಯೆಯಿಂ ಕೆಂಪಿಡಿದ |
ಜಳಧಾರೆ ಕಂಗೊಳಿಸುತಿರ್ಪುದದ್ವಶ್ರಮಂ |
ಗಳನಾಂತು ಬಂದ ಪಥಿಕರ್ಕಳೀಂಟುವ ಸಮಯದೊಳ್ ಪ್ರಪಾಶಾಲೆಗಳೊಳು ||11||
ತಳಿರೆಡೆಯೊಳಿರ್ದ:ತಳಿರ್ ಎಡೆಯೊಳಿರ್ದ =ಚಿಗುರು ಎಲೆಗಳನಡುವೆ ಇರ್ದ=ಇದ್ದ ಮಾವಿನ ತೋರ=ದಪ್ಪ ತನಿವಣ್ಣ =ಕಳಿತ ಹಣ್ಣನ್ನು
ಗಿಳಿ ಕರ್ದುಂಕಿದೊಡೆ = ಕಚ್ಚಲು, ರಸಮೊಸರಿ =ರಸವು ಒಸರಿ ಸೋರ್ವಂತೆ =ಸೋರುವಂತೆ, ಹೆಂಗಳ =ಹೆಂಗಸರ ಕರತಳದ = ಕೈಯೊಳಗಿನ ಪೊಂಗಳಸದ = ಹನ್ನಿನ ಕೊಂಬುಳ್ಳ ತಂಬಿಗೆಯಿಂದ (ಕೊಂಬಿನಗಿಂಡಿ) ಜುಳಿಗೆಯೊಳಿಟ್ಟ =ಕೊಂಬಿನ ತುದಿಯಲ್ಲಟ್ಟ ಬೆರಲಂ = ಬೆರಳನ್ನು ತೆಗೆದು ಬಿಡಲ್ಕೆ = ತೆಗೆದು ನೀರುಬಿಡಲು ಲಲಿತ ಚಂಪಕ = ಕೋಮಲ ಸಂಪಿಗೆಯ ತನುಚ್ಛಾಯೆಯಿಂ: ತನು ಛಾಯೆಯಿಂ ದೇಹ ಕಾಂತಿಯಿಂದ ಕೆಂಪಿಡಿದ ಜಳಧಾರೆ =ನೀರಿನ ಧಾರೆ ಕಂಗೊಳಿಸುತಿರ್ಪುದದ್ವಶ್ರಮಂ: ಕಂಗೊಳಿಸುತ=ನೋಡಲು ಅಂದವಾಗಿ ಇರ್ಪುದು=ಇರುವುದು, ಅದ್ವಶ್ರಮಂ- ಚಂದವಾಗಿ ಕಾಣುವುದು; ದಾರಿ ಪಯಣದ ಆಯಾಸಗಳನಾಂತು: ಆಯಾಸಗಳನು ಆಂತು= ಆಯಾಸಹೊಂದಿ ಬಂದ ಪಥಿಕರ್ಕಳೀಂಟುವ: ಪಥಿಕರ್ಗಳು ಈಂಟುವ= ದಾರಿಗರು ಕುಡಿಯುವ, ಸಮಯದೊಳ್ ಪ್ರಪಾಶಾಲೆಗಳೊಳು->ಸಮಯದಲ್ಲಿ ಅರವಂಟಿಕೆಗಳಲ್ಲಿ .
(ಪದ್ಯ - ೧೧), |
ಪದ್ಯ - ೧೨
[ಸಂಪಾದಿಸಿ]ಲಲಿತ ಕರತಳದೊಳ್ ಪಿಡಿದ ಚಂದ್ರಕಾಂತಕೃತ |
ಕಲಶಮಾಸ್ಯೇಂದುಮಂಡಲರುಚಿಗೊಸರ್ವನಿ |
ರ್ಮಲ ಜಲಮಿದೆಂಭಂದಿಂದೆ ಸೊಗಯಿಸುವ ಶೀತಾಂಬುಧಾರೆಯನೀಂಟುತೆ ||
ಲಲನೆಯರ ಕೋಮಲಾವಯವ ಲಾವಣ್ಯಮಂ |
ಸಲೆಕಂಡು ಮೆಚ್ಚಿ ಮನಮುಳುಗಿದಾನಂದದಿಂ |
ತಲೆದೂಗುವರ್ ಪಥಿಕರಾನೀರ್ಗೆ ತಣಿವ ನೆವದಿಂದಮಾ ಜನಪದದೊಳು ||12|
ಲಲಿತ =ಕೋಮಲ, ಕರತಳದೊಳ್=ಕೈಯಲ್ಲಿ ಪಿಡಿದ ಚಂದ್ರಕಾಂತಕೃತ = ಹಿಡಿದ ಚಂದ್ರಕಾಂತ ಶಿಲೆಯಿಂದ ಮಾಡಿದ, ಕಲಶಮಾಸ್ಯೇಂದುಮಂಡಲರುಚಿಗೊಸರ್ವನಿರ್ಮಲ -> ಕಲಶಂ =ಪಾತ್ರೆಯು, ಆಸ್ಯ = ಮುಖವೆಂಬ, ಇಂದುಮಂಡಲ = ಚಂದ್ರಮಂಡಲದ, ರುಚಿಗೆ = ಕಾಂತಿಗೆ, ಒಸರ್ವ = ಒಸರುವ, ನಿರ್ಮಲ =ಶುದ್ಧ, ಜಲಮಿದೆಂಬಂದಿಂದೆ = ಜಲಂ =ನೀರು, ಇದು ಎಂಬ ಅಂದದಿಂ = ರೀತಿಯಲ್ಲಿ, ಸೊಗಯಿಸುವ =ಸೊಗಸಾದ, ಶೀತಾಂಬುಧಾರೆಯನೀಂಟುತೆ = ಶೀತ =ತಣ್ಣನೆಯ ಅಂಬುಧಾರೆ = ನೀರಿನ ಧಾರೆಯನ್ನು ಈಂಟುತೆ = ಕುಡಿಯುತ್ತಾ, ಲಲನೆಯರ = ಯುವತಿಯರ, ಕೋಮಲಾವಯವ-> ಕೋಮಲ ಅವಯುವ =ಅವಯುವದ ಲಾವಣ್ಯಮಂ = ಸಂದರ್ಯವನ್ನು ಸಲೆಕಂಡು ಮೆಚ್ಚಿ = ನೋಡಿ ಮೆಚ್ಚಿ ಮನಮುಳುಗಿದಾನಂದದಿಂ-> ಮನಸು ಅದರಲ್ಲಿ ಮುಳುಗಿದ =ತಲ್ಲೀನವಾದ, ಆನಂದದಲ್ಲಿ ತಲೆದೂಗುವರ್ = ತಲೆದೂಗುವರು, ಪಥಿಕರಾನೀರ್ಗೆ-> ಪಥಿಕರು ಆ ನೀರ್ಗೆ ನೀರಿಗೆ ತಣಿವ ನೆವದಿಂದಮಾ = ನೆವದಿಂದಂ ಆ ಜನಪದದೊಳು = ಆ ಜನರಲ್ಲಿ. (ನೀರು ಸವಿಯಾಗಿದೆ, ಚೆನ್ನಾಗಿದೆ ಎಂದಾಗ, ಅವರ ಮನಸ್ಸು ನೀರು ಕೊಡುವವರ ಕುರಿತು ಹೊಗಳಿಕೆಯೇ ಮುಖ್ಯವಾಗಿರುತ್ತದೆ ಎಂದು ಭಾವ)
(ಪದ್ಯ - ೧೨), |
ಪದ್ಯ - ೧೩
[ಸಂಪಾದಿಸಿ]ಏಂ ತಾಳ್ದುದೋ ಚೆಲ್ವನೀದೇಶಮೆಂದು ನಲ |
ವಾಂತು ಮುಂದಳೆಯುತಿರೆ ಕಂಡರವರಾ ಪುರ |
ವ್ರಾಂತದೊಳ್ ಸನ್ನೆಗೈದಿನಿಯರಂ ಬರಿಸಿ ನವರತಿಕಲಾಪ್ರೌಢಿಯಿಂದೆ ||
ಸ್ವಾಂತಸುಖಮಂ ಪಡೆವ ಪೌರನಾರಿಯರ ವಿ |
ಶ್ರಾಂತಿಗಮರಿದ ರನ್ನವಾಸರೆಗಳಿಂದ ಶಶಿ |
ಕಾಂತಶಿಲೆಗಳ ಕಂದರಂಗಳಿಂದತಿಮನೋಹರಮಾದ ಗಿರಿಯೊಂದನು ||13||
ಏಂ ತಾಳ್ದುದೋ ಚೆಲ್ವನೀದೇಶಮೆಂದು- ಚೆಲ್ವಂ ಈ ದೇಶಂ ಎಂದು = ಈ ದೇಶವು ಇಷ್ಟೊಂದು ಚಂದವನ್ನು ಹೇಹೆ ತಳೆಯಿತೋ ಎನ್ನುತ್ತಾ, ನಲವಾಂತು =ಸಂತೋಷದಿಂದ, ಮುಂದಳೆಯುತಿರೆ - ಮುಂದೆ ಅಳವುತಿರೆ= ಮುಂದಕ್ಕೆ ಹೋಗುತ್ತಿರಲು, ಕಂಡರವರಾ = ಕಂಡರು ಅವರು ಆ ಪುರ ವ್ರಾಂತದೊಳ್= ನಗರದ ಬಳಿಯಲ್ಲಿ, ಸನ್ನೆಗೈದಿನಿಯರಂ = ಸನ್ನೆ ಮಾಡಿ, ಇನಿಯರಂ = ಸ್ನೇಹಿರನ್ನು, ಬರಿಸಿ = ಕರೆಸಿಕೊಂಡು, ನವರತಿಕಲಾಪ್ರೌಢಿಯಿಂದೆ = ಹೊಸ ರತಿಕಲೆಯಲ್ಲಿ ಜಾಣತನದಿಂದ, ಸ್ವಾಂತಸುಖಮಂ =ತಮಗೆ ಬೇಕಾದ ಸುಖವನ್ನು, ಪಡೆವ ಪೌರನಾರಿಯರ = ನಗರದ ನಾರಿಯರನ್ನು (ಕಂಡರು). ವಿಶ್ರಾಂತಿಗಮರಿದ = ವಿಶ್ರಾಂತಿಗೆ ಅನುಕೂಲವಾದ, ರನ್ನವಾಸರೆಗಳಿಂದ = ರತ್ನಮಯವಾದ ಕಲ್ಲು ಮಂಚಗಳಿಂದ, ಶಶಿಕಾಂತಶಿಲೆಗಳ ಕಂದರಂಗಳಿಂದ =ತಂಪು ಕಲ್ಲಿನ ಗುಹೆಗಳಿಂದ- ಕೂಡಿದ, ಅತಿಮನೋಹರಮಾದ ಗಿರಿಯೊಂದನು = ಅತಿಮನೋಹರವಾದ ಬೆಟ್ಟವೊಂದನ್ನು ಕಂಡರು.
(ಪದ್ಯ - ೧೩), |
ಪದ್ಯ - ೧೪
[ಸಂಪಾದಿಸಿ]ಆ ಗಿರಿಯ ಮಸ್ತಕವನಡರಲ್ಕದರ ಪೂರ್ವ |
ಭಾಗದೊಳ್ ಮೆರೆವ ಭದ್ರಾವತಿಯ ಸಿರಿಗೆ ತಲೆ |
ದೂಗುತ ವೃಕೋದರಂ ನುಡಿದೆನೆಲೆ ವೃಷಕೇತು ನೋಡಿದೈ ಕೌತುಕವನು ||
ಈಗಳೀ ನಗರಂ ಮಹೀಲಲನೆಗಾಸ್ಯಾಬ್ದ |
ಮಾಗಿರ್ಪುದೆತ್ತಲುಂ ಗಗನದೆಡೆಗೇಳ್ವ ಬಹು |
ಯಾಗಧೂಮಂಗೆಳೆಂಬಾಲೋಲನೀಲಾಳಕಾವಳಿಯ ಚೆಲ್ವಿನಿಂದೆ ||14||
ಆ ಗಿರಿಯ ಮಸ್ತಕವನಡರಲ್ಕದರ-:ಈ ಗಿರಿಯ =ಆ ಬೆಟ್ಟದ ಮಸ್ತಕವನು = ಶಿಖರವನ್ನು ಅಡರಲ್ಕೆ = ಹತ್ತಲು, ಅದರ ಪೂರ್ವಭಾಗದೊಳ್ =ಪೂರ್ವಭಾಗದಲ್ಲಿ ಮೆರೆವ =ಇರುವ ಭದ್ರಾವತಿಯ ಸಿರಿಗೆ = ಸಂಪತ್ತಿಗೆ ತಲೆದೂಗುತ = ಮೆಚ್ಚುತ್ತಾ ವೃಕೋದರಂ = ಭೀಮನು, ನುಡಿದೆನೆಲೆ ವೃಷಕೇತು ನೋಡಿದೈ ಕೌತುಕವನು = ನುಡಿದೆನು ಎಲೆ ವೃಷಕೇತು ನೋಡಿದೆಯಾ ಕೌತುಕವನು = ವಿಶೇಷವನ್ನು, ಈಗಳೀ = ಈಗ ಈ ನಗರಂ =ನಗರವು, ಮಹೀಲಲನೆಗಾಸ್ಯಾಬ್ದ ಮಾಗಿರ್ಪುದು ಮಹೀ ಲಲನೆಗೆ = ಭೂದೇವಿಗೆ ಅಸ್ಯಾಬ್ಜ = ಮುಖಕಮಲ ವಾಗಿರುವುದು. ಹೇಗೆಂದರೆ, ಎತ್ತಲುಂ ಗಗನದೆಡೆಗೇಳ್ವ = ಎಲ್ಲಾ ಕಡೆ ಆಕಾಶದ ಕಡೆಗೆ ಏಳುತ್ತಿರುವ, ಬಹುಯಾಗಧೂಮಂಗೆಳೆಂಬ = ಅನೇಕ ಯಾಗದ ಹೊಗೆ, ಆಲೋಲ=ಚಲಿಸುತ್ತರುವ, ನೀಲ = ಕಪ್ಪಾದ ಅಳಕಾವಳಿಯ = ಮಂಗುಳಿನಂತೆ ಕಾಣುವ, ಚೆಲ್ವಿನಿಂದೆ ಸೌಂದರ್ಯದಿಂದ ಕೂಡಿದೆ.
(ಪದ್ಯ - ೧೪), |
ಪದ್ಯ - ೧೫
[ಸಂಪಾದಿಸಿ]ಎನಿಸು ಜನಮಿರ್ದೊಡಂ ತ್ರಿದಶಜನಕಾವಾಸ |
ಮೆನಿಪುದಮರಾವತೀ ಪತ್ತನಂ ಮೂಜಗದೊ |
ಳೆನಿಸು ಜಸವಡೆದೊಡಂ ಗುಹ್ಯಕಾಸ್ಪದಮೆನಿಪುದಳಕಾಪುರಂ ತಿಳಿವೊಡೆ ||
ಎನಿಸುಜನಮಿರಲೆನಿಸು ಜಸವಡೆಯಲದರಿಂದೆ |
ತನಗಿನಿಸು ಕುಂದಿಲ್ಲಮೆಂಬ ಪೆಂಪಿಂದ ಪುರ |
ವನಿತೆ ಗಹಗಹಿಸಿ ನಗುವಂತೆಸೆವ ಸೌಧಂಗಳ ಮರೀಚಿ (ಮರೀಚಿ)ನೋಡೆಂದನು ||15||
ಎನಿಸು = ಎಷ್ಟು ಜನಮಿರ್ದೊಡಂ-ಜನಂ ಇರ್ದೊಡಂ =ಜನವಿದ್ದರೂ ತ್ರಿದಶಜನಕಾವಾಸ- ತ್ರಿದಶಜನಕೆ = ಮೂವತ್ತು ಮಂದಿಗೆ (ದೇವತೆಗಳಿಗೆ), ಆವಾಸ ಎನಿಪುದು ಅಮರಾವತೀ ಪತ್ತನಂ ಎನಿಸು ಜಸವಡೆದೊಡಂ ಮೂಜಗದೊಳು= ಮೂರು ಲೋಕದಲ್ಲಿ ಎಷ್ಟೇ ಪ್ರಸಿದ್ಧಪಡೆದರೂ ಮೂವತ್ತು ಮಂದಿಗೆ (ದೇವತೆಗಳಿಗೆ ಮಾತ್ರಾ ವಾಸಕ್ಕೆ ಅವಕಾಶವಿದೆ ಅಮರಾವತಿ ಪಟ್ಟಣದಲ್ಲಿ; ಮೂರು ಲೋಕದಲ್ಲಿ ಎಷ್ಟೇ ಪ್ರಸಿದ್ಧಪಡೆದರೂ ಗುಹ್ಯಕಾಸ್ಪದಮೆನಿಪುದಳಕಾಪುರಂ ತಿಳಿವೊಡೆ - ಗುಹ್ಯಕೆ ಆಸ್ಪದಂ ಎನಿಪುದು ಅಳಕಾಪುರಂ = ಅಳಕಾಪುರವು ಲೋಕದಲ್ಲಿ ಎಷ್ಟೇ ಪ್ರಸಿದ್ಧಪಡೆದರೂ ಅದು ಗುಹ್ಯಕೆ = ನಿಂದೆಗೆ ಯಕ್ಷಲೋಕ ಎಂದು ನಿಂದೆಗೆ ಒಳಗಾಗಿದೆ; ಎನಿಸುಜನಮಿರಲ್ = ಎಷ್ಟೇಜನರಿದ್ದರೂ,ತನಗೆ ಅನಿಸು ಜಸವಡೆಯಲದರಿಂದೆ ಅ ತನಗಿನಿಸು ಕುಂದಿಲ್ಲಮೆಂಬ ಪೆಂಪಿಂದ = ತನಗೆ ಅಷ್ಟು ಯಶ ಪಡೆಯಲು ಆಗದಿದ್ದರೂ, ತನಗೆ ಇನಿಸು ಸ್ವಲ್ಪಯೂ ಕುಂದು ಇಲ್ಲ, ಎಂಬ ಪೆಂಪಿಂದ = ಘನತೆಯಿಂದ ಪುರವನಿತೆ ಭದ್ರಾವತಿನಗರವೆಂಬ ವನಿತೆಯು, ಗಹಗಹಿಸಿ ನಗುವಂತೆಸೆವ = ನಗುವಂತೆ ಎಸವ = ಕಾಣುವ, ಸೌಧಂಗಳ =ದೊಡ್ಡ ಉಪ್ಪರಿಗೆ ಮನೆಗಳ ಮರೀಚಿ =ಕಾಂತಿಯನ್ನು ನೋಡೆಂದನು.
(ಪದ್ಯ - ೧೫), |
ಪದ್ಯ - ೧೬
[ಸಂಪಾದಿಸಿ]ಶ್ವೇತಾದ್ರಿಶಿಖರದೊಳ್ ಕಂಗೊಳಿಸುವುಜ್ಜ್ವಲ |
ಜ್ಯೋತಿರ್ಲತೆಯೊ ಮೇಣು ಸಲ್ಲಲಿತ ಶುಭ್ರ ಜೀ !
ಮೂತದೊಡ್ಡಿನಮೇಲೆ ಪೊಳೆವ ಸೌದಾಮಿನಿಯೊ ಶಿವನ ಮಸ್ತಕದೊಳೆಸೆವ ||
ಶೀತಾಂಶುರೇಖೆಯೋ ಬಗೆವೊಡೀನಗರದ ವಿ |
ನೂತನ ಪ್ರಾಸಾದದಗ್ರದೊಳ್ ಸುಳಿವಂಬು |
ಜಾತನಯನೆಯರ ತನುವಲ್ಲರಿಯ ಕಾಂತಿಯೋ ಕರ್ಣಸುತ ನೋಡೆಂದನು ||16||
ಶ್ವೇತಾದ್ರಿಶಿಖರದೊಳ್ = ಕೈಲಾಸ ಪರ್ತದ ಶೀಖರದಲ್ಲಿ ಕಂಗೊಳಿಸುವ, ವುಜ್ಜ್ವಲ = ಕಾಂತಿಯುತ ಜ್ಯೋತಿರ್ಲತೆಯೊ =ದೀಪದ ಬಳ್ಳಿಯೋ ಮೇಣು = ಮತ್ತೂ, ಸಲ್ಲಲಿತ = ಲಲಿತವಾದ, ಶುಭ್ರ ಜೀಮೂತದೊಡ್ಡಿನಮೇಲೆ-> ಜೀಮೂತದ = ಮೋಡದ ,ಒಡ್ಡಿನ ಮೇಲೆ, ಪೊಳೆವ =ಹೋಳೆಯುವ ಸೌದಾಮಿನಿಯೊ = ಮಿಂಚೋ, ಶಿವನ ಮಸ್ತಕದೊಳೆಸೆವ = ಶಿವನ ತಲೆಯಲ್ಲರುವ
ಶೀತಾಂಶುರೇಖೆಯೋ = ಚಂದ್ರನ ರೇಖೆಯೋ, ಬಗೆವೊಡೀನಗರದ =ಬಗೆವೊಡೆ = ಯೋಚಿಸಿದರೆ, ಈ ನಗರದ, ವಿನೂತನ = ಹೊಸಬಗೆಯ, ಪ್ರಾಸಾದದಗ್ರದೊಳ್ - ಪ್ರಸಾದದ =ಉಪ್ಪರಿಗೆಯ ಅಗ್ರದಲ್ಲಿ = ಸುಳಿವ =ಓಡಾಡುವ ಅಂಬುಜಾತ ನಯನೆಯರ = ಕಮಲದಂತೆ ಕಣ್ಣುಳ್ಳವರ ತನುವಲ್ಲರಿಯ = ದೇಹವೆಂಬ ಬಳ್ಳಿಯ ಕಾಂತಿಯೋ ಕರ್ಣಸುತ ನೋಡೆಂದನು ಭೀಮ.
(ಪದ್ಯ - ೧೬), |
ಪದ್ಯ - ೧೭
[ಸಂಪಾದಿಸಿ]ನಳನಳಿಪ ತರುಣತೆಯ ಸೊಂಪುವೆತ್ತರುಣತೆಯ |
ತಳಿರಿಡಿದ ತೋರಣದ ಚೆಲ್ವನಾಂತೋರಣದ |
ತೊಳಪ ಕಳಸದ ಗುಡಿಯ ಸಾಲ್ದಳೆದ ಕನ್ನಡಿಯ ಸೆಳೆಯ ಸೀಗುರಿ ಚಮರಿಯ||
ಚಲಿತ ಲೀಲಾಸ್ಯದ ಪತಾಕೆಗಳ ಲಾಸ್ಯದ ಪ |
ವಳದ ಮುತ್ತುಗಳ ಗೊಂಚಲ್ಗಳೊತ್ತುಗಳ ಗೊಂ |
ದಳದ ಬಗೆ ಕಂಗಳಿಂಬಿಗೆ ಕೌತುಂಕಂಗಳಿಂ ಬೀದಿಗಳೊಳೆಸೆದಿರ್ಪುವು ||17|||
ನಳನಳಿಪ = ಥಳಥಳಿಸುವ, ತರುಣತೆಯ = ತಾರುಣ್ಯದ, ಸೊಂಪುವೆತ್ತ =ಸೊದಸಾದ ಅರುಣತೆಯ= ಕೆಂಪುಬಣ್ಣದ, ತಳಿರಿಡಿದ =ಹಸಿರಿನ ತೋರಣದ, ಚೆಲ್ವನಾಂತೋರಣದ ತೊಳಪ = ಹೋಳೆಯುವ, ಕಳಸದ = ಶೃಂಗದ ಗುಡಿಯ, ಸಾಲ್ದಳೆದ ಕನ್ನಡಿಯ = ಸಾಲು ಕನ್ನಡಿಯ, ಸೆಳೆಯ ಸೀಗುರಿ ಚಮರಿಯ = ಬೀಸುವಾಗ ಬಳುಕುವ ಚಾಮರದ, ಚಲಿತ ಲೀಲಾಸ್ಯದ ಪತಾಕೆಗಳ = ಹಾರುವಾಗ ಲಾಲಿತ್ಯದಿಂದ ಕುಣಿಯುತ್ತಿರುವ ಪತಾಕೆ ಅಥವಾ ಬಾವುಟಗಳ, ಲಾಸ್ಯದ ಪವಳದ ಮುತ್ತುಗಳ ಗೊಂಚಲ್ಗಳೊತ್ತುಗಳ = ತೂಗಾಡುತ್ತಿರುವ ಹವಳ ಮುತ್ತುಗಳ ಒತ್ತಾಗಿರುವ ಅನೇಕ ಗೊಂಚಲುಗಳ, ಗೊಂದಳದ ಬಗೆಗಳು = ಇವುಗಳೊಡನೆ ಜನರ ಸಮೂಹದ ರೀತಿ-ನಡೆನುಡಿಗಳು, ಕಂಗಳಿಂಬಿಗೆ = ಕಣ್ಣಿನ ಸವಿನೋಟಕ್ಕೆ, ಕೌತುಂಕಂಗಳಿಂ =ಆಶ್ಚರ್ಯಗಳಿಸುವಂತೆ, ಬೀದಿಗಳೊಳೆಸೆದಿರ್ಪುವು = ಆ ನಗರದ ಬೀದಿಗಳು ಕಂಗೊಳಿಸುತ್ತಿದ್ದವು. (ಅತಿಶಯೋಕ್ತಿ - ಉತ್ಪ್ರೇಕ್ಷಾಲಂಕಾರ)
(ಪದ್ಯ - ೧೬), |
ಪದ್ಯ - ೧೮
[ಸಂಪಾದಿಸಿ]ಒತ್ತರಿಸಿದುನ್ನತ ಪ್ರಾಸಾದದಬಲೆಯರ
ವೃತ್ತವದನೇಂದು ಮಂದಸ್ಮೇರಚಂದ್ರಿಕೆಯೊ
ಳುತ್ತುಂಗ ದೇವಾಲಯದ ಗೋಪುರದ ಮಾಣಿಕದ ಕಲಶದೆಳಿವಿಸಿಲೊಳು ||
ಕತ್ತಲೆ ಪರಿವುದಲ್ಲದೀ ನಗರದೊಳ್ ಬೇರೆ |
ಮತ್ತೆ ಸೋಮಾದಿತ್ಯ ಕಿರಣಂಗಳೈದುವೊಡೆ |
ಸುತ್ತಲುಂಮುಗಿಲ ಮುಟ್ಟಿದ ಕೋಟೆಗಳ ವಳಯವಣುಗ ನೋಡಚ್ಚರಿಯನು ||18||
ಒತ್ತರಿಸಿದುನ್ನತ = ಒತ್ತೊತ್ತಾಗಿರುವ ಉನ್ನತ = ಎತ್ತರದ, ಪ್ರಾಸಾದದಬಲೆಯರ- ಮಹಡಿ ಮನೆಗಳಲ್ಲಿರುವ ಸ್ತ್ರೀಯರ, ವೃತ್ತವದನೇಂದು-ವೃತ್ತ ವದನ ಇಂದುಮಂದಸ್ಮೇರ ಚಂದ್ರಿಕೆಯೊಳುತ್ತುಂಗ-. ಮಂದಸ್ಮೇರ ಚಂದ್ರಿಯೊಳು, ಉತ್ತಂಗ =ದುಂಡಾದ ಮುಖದ ಚಂದ್ರಕಾಂತಿಯಲ್ಲಿ, ಉತ್ತಂಗ ದೇವಾಲಯದ ಗೋಪುರದ ಮಾಣಿಕದ ಕಲಶದೆಳಿವಿಸಿಲೊಳು = ಎತ್ತರದ ದೇವಾಲಯದ ಗೋಪುರದಲ್ಲಿರುವ ಮಾಣಿಕ್ಯ ಕಳಶದ ಎಳೆ-ಬಿಸಿಲಿನಲ್ಲಿ (ಮಾಣಿಕ್ಯದ ಬೆಳಕಿನಲ್ಲಿ) ಕತ್ತಲೆ ಪರಿವುದಲ್ಲದೀ ನಗರದೊಳ್ = ಕತ್ತಲೆಯು, ಪರಿವುದು = ಹರಿವುದು, ಹೊರಟುಹೋಗುವುದು, ಅಲ್ಲದೆ ಈ, ಬೇರೆ ಮತ್ತೆ ಸೋಮಾದಿತ್ಯ =ಚಂದ್ರಸೂರ್ಯರ ಕಿರಣಂಗಳೈದುವೊಡೆ ಕಿರಣಗಳೂ (ಈ ನಗರದ ಮೇಲೆ) ಐದುವರೆ = ಬಂದರೆ - ಬಿದ್ದರೆ, ಸುತ್ತಲುಂ ಮುಗಿಲ ಮುಟ್ಟಿದ ಕೋಟೆಗಳ ವಳಯವಣುಗ-> ವಳಯವು =ಮಂಡಲವು (ಕಾಣುವುದು ನೋಡು) ಅಣುಗ = ಮಗನೇ ವೃಷಕೇತುವೇ, ನೋಡಚ್ಚರಿಯನು - ನೊಡು ಅಚ್ಚರಿಯನು = ನೋಡು ಆಶ್ಚರ್ಯವನ್ನು.
(ಪದ್ಯ - ೧೮), |
ಪದ್ಯ - ೧೯
[ಸಂಪಾದಿಸಿ]ಕುಸಿದು ಪಾತಾಳದೊಳಗಿರ್ದು ಪಲಕಾಲಮಂ |
ದ್ವಿಸಹಸ್ರ ನಯನಂಗಳಿಂದೆ ನೋಡಿದೊಡೆ ಕಾ |
ಣಿಸಿ ಕೊಳ್ಳದೀ ಪುರದಗಳ ಘಾತಮಿದನಜಂ ಬಲ್ಲನೋ ಕೇಳ್ವೆನೆಂದು ||
ಬಿಸಜಸಂಭವನ ಪೊರೆಗೆಂದಿಳೆಯನುಗಿದುಚ್ಚ |
ಳಿಸಿ ಬಳೆದ ಫಣಿಪತಿಯ ಮಣಿವಡೆಯ ಸಾಲಿವೆನ |
ಲೆಸವುವಾಗಸದೊಳೀ ಪೊಳಲ ಕೋಟೆಯ ರನ್ನದೆನೆಗಳೆಲ್ಲಾ ದೆಸೆಯೊಳು ||19||
ಕುಸಿದು ಪಾತಾಳದೊಳಗಿರ್ದು ಪಲಕಾಲಮಂ-:ಕುಸಿದು ಪಾತಾಳದೊಳಗೆ ಇರ್ದು ಪಲಕಾಲಮಂ = ಈ ನಗರವು ಅಕಸ್ಮಾತ್ ಕೆಲಕಾಲ ಕುಸಿದು ಪಾತಾಳಕ್ಕೆ ಹೋದರೆ ಅಲ್ಲಿ ಆದಿಶೇಷನು ತನ್ನ, ದ್ವಿಸಹಸ್ರ ನಯನಂಗಳಿಂದೆ ನೋಡಿದೊಡೆ ಕಾಣಿಸಿ ಕೊಳ್ಳದೀ ಪುರದಗಳ ಘಾತಂ = ಎರಡುಸಾವಿರ ಕಣ್ಣುಗಳಿಂದ ನೋಡಿದರೂ ಈ ನಗರದ ಉದ್ದ ಅಗಲ ಎಷ್ಟೆಂದು ಕಾಣದು, ಇದನಜಂ ಬಲ್ಲನೋ ಕೇಳ್ವೆನೆಂದು = ಇದರ ಉದ್ದ ಅಗಲಗಳನ್ನು ಅಜನು/ ಬ್ರಹ್ಮನು ಬಲ್ಲನೋ ಅವನನ್ನು ಕೇಳುವೆನು ಎಂದು, ಬಿಸಜಸಂಭವನ ಪೊರೆಗೆಂದಿಳೆಯನುಗಿದುಚ್ಚಳಿಸಿ-: ಬಿಸಜ ಸಂಭವನ= ಕಮಲದಲ್ಲಿ ಹುಟ್ಟಿದ ಬ್ರಹ್ಮನ ಪೊರೆಗೆಂದು =ಬಳಿಗೆಂದು, ಇಳೆಯನು= ಭೂಮಿಯನ್ನು ಉಗಿದು =ಸೀಳಿಕೊಂಡು,ಉಚ್ಚಳಿಸಿ = ಮೇಲೆಬಂದು, ಬಳೆದ = ಹಡೆಬಿಚ್ಚಿ ಬೆಳದ, ಫಣಿಪತಿಯ = ಆದಿಶೇಷನ ಮಣಿವಡೆಯ = ಹೆಡಯ ಮಣಿಗಳ, ಸಾಲು ಇವು ಎನಲು = ಇವು ಮಣಿಗಳ ಸಾಲು ಎನ್ನುವಂತೆ, ಎಸವುವಾಗಸದೊಳೀ-: ಎಸೆವುದು ಆಗಸದೊಳು ಈ ಪೊಳಲ = ಈ ನಗರದ ಕೋಟೆಯ ರನ್ನದೆನೆಗಳೆಲ್ಲಾ= ರನ್ನದ ತೆನೆಗಳು ಎಲ್ಲಾ ದೆಸೆಯೊಳು= ದಿಕ್ಕಿನಲ್ಲಿ ಎಸೆವುದು =ಕಾಣುವುದು..
(ಪದ್ಯ - ೧೯), |
ಪದ್ಯ - ೨೦
[ಸಂಪಾದಿಸಿ]ವಾಯುವಾಶಂ ಪರಿಯೆ ಧರೆಗುರುಳ್ದವೆವಿದಕು |
ಪಾಯಮಿನ್ನೇನೆಂದು ನವರತ್ನ ಖಚಿತ ಕಮ |
ನೀಯ ಕಾಂಚನಮಯೋನ್ನತ ದೃಢಪ್ರಾಕಾರದೊತ್ತುಗೊಂಡಲ್ಲಲ್ಲಿಗೆ |
ದಾಯ ಮಿಗೆ ನಿಲಿಸಿದರೊ ಖೇಚರರ್ ತಮ್ಮ ಶೋ |
ಭಾಯಮಾನಾಲಯಂಗಳನೆನಲ್ ಕಣ್ಗೆ ರಮ |
ಣೀಯಮಾಗಿವೆ ಕರ್ಣತನಯ ನೋಡೀಪುರದ ಮುಗಿಲಟ್ಟಳೆಯ ಸಾಲ್ಗಳು ||20||
ವಾಯುವಾಶಂ = ಆಧಾರವಾದ ವಾಯವಿನ ಹಗ್ಗದ ಆಧಾರವು, ಪರಿಯೆ =ಹರಿದರೆ, ಧರೆಗುರುಳ್ದವೆವಿದಕೆ = ಧರೆಗೆ= ಭೂಮಿಗೆ, ಉರಿಳ್ದಪೆವು =ಬೀಳುವೆವು ಇದಕೆ = ಇದಕ್ಕೆ, ಉಪಾಯಮಿನ್ನೇನೆಂದು-ಉಪಾಯಂ ಎನ್ನು ಏನೆಂದು = ಪಾರಾಗಲು ಉಪಾಯವು ಏನೆಂದು, ನವರತ್ನ ಖಚಿತ ಕಮನೀಯ = ಸುಂದರ, ಕಾಂಚನಮಯೋನ್ನತ-ಕಾಂಚನಮಯ ಉನ್ನತ =ಬಂಗಾರದ ಉನ್ನತ = ಉದ್ದವಾದ, ದೃಢಪ್ರಾಕಾರದೊತ್ತುಗೊಂಡಲ್ಲಲ್ಲಿಗೆ-> ಧೃಡ ಪ್ರಾಕಾರ =ಗಟ್ಟಿ ಆವರಣದ, ಒತ್ತುಗೊಂಡು = ಸೇರಿಕೊಂಡಿರುವ, ಅಲ್ಲಲ್ಲಿಗೆ = ಆಯಾಯಾ ಸ್ಥಳಕ್ಕೆ, ದಾಯ ಮಿಗೆ = ದಾಯಕ್ಕೆ ಸರಿಯಾಗಿ, ನಿಲಿಸಿದರೊ =ನಿಲ್ಲಿಸಿರುವರೋ, ಖೇಚರರ್ = (ಆಕಾಶಗಾಮಿಗಳು) ದೇವತೆಗಳು, ತಮ್ಮ ಶೋಭಾಯಮಾನಾಲಯಂಗಳನೆನಲ್ = ಶೋಭಾಯಮಾನ = ಪ್ರಕಾಶಿಸುವ ಆಲಯಂಗಳನು = ಅರಮನೆಗಳನ್ನು, ಎನಲ್ =ಎನ್ನುವಂತೆ; ಕಣ್ಗೆ ರಮಣೀಯಮಾಗಿವೆ = ಕಣ್ನಿಗೆ ರಮಣೀಯವಾಗಿವೆ, ಕರ್ಣತನಯ ವೃಷಕೇತುವೇ, ನೋಡೀಪುರದ ಮುಗಿಲಟ್ಟಳೆಯ ಸಾಲ್ಗಳು-> ನೋಡು ಈ ಪುರದ ಮುಗಿಲಟ್ಟಳೆಯ = ಮುಗಿಲು ಮುಟ್ಟುವ ಮಹಡಿಗಳ ಸಾಲುಗಳನ್ನು ' ಎಂದನು ಭೀಮ.
(ಪದ್ಯ - ೨೦), |
ಪದ್ಯ - ೨೧
[ಸಂಪಾದಿಸಿ]ಮೇಲೆ ನಿಚ್ಚಂ ಪರಿವ ದಿನಮಣಿಯ ಮಣಿರಥದ |
ಗಾಲಿಗಳ ನೇಮಿಗಳ ಪೊಯ್ಲಿಂದ ಪುಡಿವಡೆದ |
ಸಾಲ ಹೊಂಗೋಟೆದೆನೆಗೊನೆಗಳಿಂದೇಳ್ವ ಧೂಳಲ್ಲಿಗಲ್ಲಿಗೆ ನಭದೊಳು |
ಸ್ಥೂಲದಂಡಾಕೃತಿಯನಾಂತಪೋಲ್ ಪ್ರಾಕಾರ |
ಜಾಲಮಂ ಮೀರ್ವ ಹೇಮದ ಡೆಂಕಣಿಯ ಕೈಗ |
ಳಾಲಿಗಚ್ಚರಿಯೆನಿಸಿ ತೋರುತಿವೆ ತನಯ ನೋಡೀ ನಗರದೆಣ್ದೆಸೆಯೊಳು ||21||
ಮೇಲೆ = ಆಕಾಶದಲ್ಲಿ, ನಿಚ್ಚಂ = ನಿತ್ಯವೂ, ಪರಿವ = ಸಂಚರಿಸುವ, ದಿನಮಣಿಯ ಮಣಿರಥದ =ಸೂರ್ಯನ ಮಣಿರಥದ ಗಾಲಿಗಳ ನೇಮಿಗಳ = ಪಟ್ಟಿಗಳ, ಪೊಯ್ಲಿಂದ ಪುಡಿವಡೆದ = ರಭಸದ ಶಬ್ದದಿಂದ ಪುಡಿಪುಡಿಯಾದ, ಸಾಲ ಹೊಂಗೋಟೆದೆನೆಗೊನೆಗಳಿಂದೇಳ್ವ ಧೂಳಲ್ಲಿಗಲ್ಲಿಗೆ ನಭದೊಳು-> ಸಾಲ ಹೊಂಗೋಟೆದೆನೆಗೊನೆ =ಚಿನ್ನದ ತೆನೆಯ ಗೊಂಚಲಕೊನೆಯಿಂದ ಏಳ್ವ= ಏಳುವ, ಧೂಳಲ್ಲಿಗಲ್ಲಿಗೆ ನಭದೊಳು =ಧೂಳು ಅಯಾಯಾ ಪ್ರದೇಶಕ್ಕೆ, ಆಕಾಶದಲ್ಲಿ, ಸ್ಥೂಲದಂಡಾಕೃತಿಯನಾಂತಪೋಲ್- ಸ್ಥೂಲ =ದಪ್ಪ, ದಂಡಾಕೃತಿಯನಾಂತ = ದೊಣ್ಣೆಯ ರೂಪವನ್ನು ಪಡೆದಂತಿರುವಂತಿರುವ (ನೇರವಾಗಿ ನಿಂತಂತಿರುವ), ಪ್ರಾಕಾರಜಾಲಮಂ = ಗೋಡೆಗಳ ಸಾಲುಗಳನ್ನು, ಮೀರ್ವ ಹೇಮದ ಡೆಂಕಣಿಯಕೈಗಳು= ಕೋಟೆಯ ಬುರುಜುಗಳು, ಆಲಿಗಚ್ಚರಿಯೆನಿಸಿ-> ಆಲಿಗೆ = ಕಣ್ಣಿಗೆ ಅಚ್ಚರಿಎನಿಸಿ ತೋರುತಿವೆ ತನಯ =ಮಗನೇ, ನೋಡೀ-. ನೋಡು ಈ ನಗರದೆಣ್ದೆಸೆಯೊಳು- ಈನಗರದ ಎಣ್ದೆಸೆಯಲು= ಎಂಟುದಿಕ್ಕಿನಲ್ಲಿ.
(ಪದ್ಯ - ೨೧), |
ಪದ್ಯ - ೨೨
[ಸಂಪಾದಿಸಿ]ಈ ನಗರವಧು ತನ್ನಡೆಯೊಳಾವಗಂ ಬಾಳ್ವ |
ಮಾನಿಸಗೆಯ್ದೆ ಸೌಖ್ಯಂ ಪೆಚ್ರ್ಚಲೆಂದೊಮ್ಮೆ
ತಾನಿಷ್ಟದೇವತೆಯ ಬೇಡಿಕೊಳುತಿರ್ದೊಡಾ ಪರಕೆ ಕೈಗೂಡಲೊಡನೆ ||
ಸಾನುರಾಗದೊಳುಟ್ಟ ಪಸುರುಡಿಗೆಯೆನೆ ಧರಾ |
ಮಾನಿನಿಯ ಮೊಗದಾವರೆಯ ಮುಸುಕಿಕೊಂಡಿಹ ನ |
ವೀನಪತ್ರಾವಳಿಗಳೆನೆ ನಗರಮಂ ಬಳಸಿದುಪವನಂಗಳ್ ಮೆರೆವುವು ||22||
ಈ ನಗರವಧು (ಈ ನಗರವೇ ಒಂದು ವಧು ಎಂಬ ಭಾವ) ತನ್ನಡೆಯೊಳಾವಗಂ ಬಾಳ್ವ = ತನ್ನ ಎಡೆಯಲ್ಲ = ತನ್ನೊಳಗೆ ಬಾಳುವ, ಮಾನಿಸಗೆ = ಮಾನವರಿಗೆ, ಐಯ್ದೆ = ಆಗಲು = ಸೌಖ್ಯಂ ಪೆಚ್ರ್ಚಲೆಂದೊಮ್ಮೆ-: ಪೆರ್ಚಲೆಂದು ಒಮ್ಮೆ ಹೆಚ್ಚಾಗಲಿ ಎಂದು ಒಮ್ಮೆ, ತಾನಿಷ್ಟದೇವತೆಯ ಬೇಡಿಕೊಳುತಿರ್ದೊಡಾ = ತನ್ನ ಇಷ್ಟದೇವತೆಯನ್ನು ಬೇಡಿಕೊಳ್ಳುತ್ತಿರಲು, ಆ ಪರಕೆ ಕೈಗೂಡಲೊಡನೆ = ಆ ಹರಕೆ /ಪ್ರಾರ್ಥನೆ ಕೈಗೂಡಲು, ಒಡನೆ = ಕೂಡಲೆ, ಸಾನುರಾಗದೊಳುಟ್ಟ = ಆ ಸಂತೋಷದಲ್ಲಿ ಉಟ್ಟ ಪಸುರುಡಿಗೆಯೆನೆ = ಹಸಿರು ಉಡುಗೆ ಎಂಬಂತೆ, ಧರಾ ಮಾನಿನಿಯ = ಭೂಮಿಯ ಮೊಗದಾವರೆಯ ಮುಸುಕಿಕೊಂಡಿಹ = ಮುಖಕಮಲವನ್ನು ಆವರಿಸಿದ, ನವೀನಪತ್ರಾವಳಿಗಳೆನೆ =ಹೊಸ ಹಸಿರೆಲೆಯ ತೋರಣವೆಂಬಂತೆ, ನಗರಮಂ = ನಗರವನ್ನು, ಬಳಸಿದುಪವನಂಗಳ್ ಮೆರೆವುವು = ಸುತ್ತುವರಿದ ಹಸಿರು ಉಪವನಗಳು ಕಂಗೊಳಿಸುತ್ತಿವೆ.
(ಪದ್ಯ - ೨೨), |
ಪದ್ಯ - ೨೩
[ಸಂಪಾದಿಸಿ]ಆವಗಂ ಪುಷ್ಟಿಣಿಯರಾಗಿರ್ಪರಿಲ್ಲಿಯ ಲ |
ತಾವಧುಗಳೀವರ ಸೋಂಕಲೆ ಬಾರದೆಂದು ರಆ |
ಜೀವಮಿತ್ರಂ ತನ್ನ ನಿರ್ಮಲ ಕರಂಗಳಂ ಪೆರದೆಗೆದನೆಂಬಂತಿರೆ ||
ಆವೆಡೆಯೊಳಂ ಛಿದ್ರಮಿಲ್ಲೆನಿಸಿ ವಿವಿಧದ್ರು |
ಮಾವಳಿಯ ನಿಬಿಡಪತ್ರಚ್ಛಾಯೆಗಳ ಸೊಂಪು |
ದೀವಿದಾರಾಮಂಗಳೆಂದುಮೀ ಪುರಜನರ್ಗೇಂ ವಿಲಾಸವನೀವುವೋ ||23||
ಆವಗಂ = ಯಾವಾಗಲೂ, ಪುಷ್ಟಿಣಿಯರಾಗಿರ್ಪರಿಲ್ಲಿಯ ಲತಾವಧುಗಳೀವರ-: ಲತಾವಧುಗಳು = ಬಳ್ಳಿಗಳು ಎಂಬ ಹೆಣ್ಣುಮಕ್ಕಳು, ಹೂವುಬಿಟ್ಟುಕೊಂಡು (ಯಾವಾಗಲೂ) ಪುಷ್ಪಿಣಿಯರು ಆಗಿರುವರು (ಪುಷ್ಪವತಿ ಎಂದರೆ ರಜಸ್ವಲೆ ಅಥವಾ ಮುಟ್ಟಾಗಿರುವವರು,- ಮೈಲಿಗೆಯವರು), ಆದ್ಧರಿಂದ, ಸೋಂಕಲೆ ಬಾರದೆಂದು = ಈ ಲತಾವಧುಗಳನ್ನು ಸೋಂಕಲೇಬಾರದು = ಮುಟ್ಟಬಾರದು ಎಂದು ರಾಜೀವಮಿತ್ರಂ = ಸೂರ್ಯನು,ತನ್ನ ನಿರ್ಮಲ ಕರಂಗಳಂ = ತನ್ನ ಶುದ್ಧವಾದ ಕಿರಣಗಳೆಂಬ ಕರ =ಕೈಗಳನ್ನು ಪೆರದೆಗೆದನೆಂಬಂತಿರೆ = ಹೊರಕ್ಕೆ ಚಾಚಿಕೊಂಡಿದ್ದಾನೆ ಎನ್ನುವಂತೆ, ಆವೆಡೆಯೊಳಂ ಛಿದ್ರಮಿಲ್ಲೆನಿಸಿ = ಎಲ್ಲಿಯೂ,ವನಗಳಲ್ಲಿ ಸೂರ್ಯಕಿರಣ ಬೀಳಲು ಛಿದ್ರ= ಸಂದು ರಂದ್ರ) ಇಲ್ಲವು. ಹಾಗೆ, ವಿವಿಧದ್ರುಮರಗಳಮಾವಳಿಯ ನಿಬಿಡಪತ್ರಚ್ಛಾಯೆಗಳ ಸೊಂಪು = ನಾನಾ ಬಗೆಯ ಮರಗಳ ದಟ್ಟ ಎಲೆಗಳ ನೆರಳಿನ ಹಿತ ವಾತಾವರಣದ
ದೀವಿದಾರಾಮಂಗಳೆಂದುಮೀ =ಉದ್ಯಾನವನಗಳು ಈ ಪುರಜನರ್ಗೇಂ =ನಗರದ ಜನರಿಗೆ, ವಿಲಾಸವನೀವುವೋ = ಆಹ್ಲಾದವನ್ನು ನೀಡುವುವೋ ಎಂದು ಭೀಮ ಉದ್ಗಾರ ಮಾಡಿದನು.
(ಪದ್ಯ - ೨೩), |
ಪದ್ಯ - ೨೪
[ಸಂಪಾದಿಸಿ]ನಿಚ್ಚಳದೊಳೆಸೆವ ತಿಳಿಗೊಳನ ಕಲಕಾಡಿ ಬಿರಿ |
ದಚ್ಚಲರ ಧೂಳಿಗಳ ಚೆಲ್ಲಾಡಿ ಸಲೆ ಮದಂ |
ವೆಚ್ಚೆತರುಲತೆಯನಣಿದಾಡಿ ಮರಿದುಂಬಿಗಳ ಕೂಡಿಕೊಂಡೀಬನದೊಳು ||
ನಿಚ್ಚಮಲೆವೆಲರೆಂಬ ಸೊಕ್ಕಾನೆ ತಾನೆ ತ |
ನ್ನಿಚ್ಚೆಯಿಂ ತಿರುಗುತಿದೆ ತೊಲತೊಲಗಿ ವಿರಹಿಗಳ್ |
ಬೆಚ್ಚರಗೊಳೆಂದೆತ್ತಲುಂ ಪುಯ್ಯಲಿಡುವಂತೆ ಕೂಗುತಿವೆ ಕೋಗಿಲೆಗಳು ||24||
ನಿಚ್ಚಳದೊಳೆಸೆವ ತಿಳಿಗೊಳನ-: ನಿಚ್ಚದೊಳು =ಸ್ವಚ್ಛತೆಯಿಂದ, ಎಸೆವ = ಕಾಣುವ, ತಿಳಿಕೊಳನ = ತಿಳಿನೀರಿನ ಕೊಳವನ್ನು, ಕಲಕಾಡಿ =ಕದಡಿ, ಬಿರಿದಚ್ಚಲರ = ಅರಳಿದ ಹೂವುಗಳ, ಧೂಳಿಗಳ ಚೆಲ್ಲಾಡಿ =ಮಕರಂದಗಳನ್ನು ಹರಡಿ, ಸಲೆ=ತುಂಬಾ, ಮದಂವೆಚ್ಚೆತರುಲತೆಯನಣಿದಾಡಿ-:ಮದಂ ವೆಚ್ಚೆ=ಹೆಚ್ಚಲು, ತರುಲತೆಯನು =ಮರ ಬಳ್ಳಿಗಳನ್ನು, ಮರಿದುಂಬಿಗಳ ಕೂಡಿಕೊಂಡು ಈ ಬನದೊಳು = ಈ ಅರಣ್ಯದಲ್ಲಿ, ನಿಚ್ಚಮಲೆವೆಲರೆಂಬ ಸೊಕ್ಕಾನೆ-: ನಿಚ್ಚಂ = ಸದಾ ಎಲೆವೆಲರೆಂಬ = ಮಂದಮಾರುತವೆಂಬ, ಸೊಕ್ಕಾನೆ =ಸೊಕ್ಕಿದ ಆನೆಯು, ತಾನೆ ತನ್ನಿಚ್ಚೆಯಿಂ ತಿರುಗುತಿದೆ = ಮನಸ್ಸಿಗೆಬಂದಂತೆ ಸುತ್ತಾಡುತ್ತಿದೆ; ಅದು ತೊಲತೊಲಗಿ ವಿರಹಿಗಳ್ = ವಿರಹಿಗಳು ಸರಿಯಿರಿ ಸರಿಯಿರಿ, ಬೆಚ್ಚರಗೊಳೆಂದೆತ್ತಲುಂ-> ಬೆಚ್ಚರಗೊಳು ಎಂದು ಎತ್ತಲುಂ =ಎಚ್ಚರಿಕೆಯಿಂದ ಎಂದು ಎಲ್ಲಾಕಡೆಯೂ, ಪುಯ್ಯಲಿಡುವಂತೆ = (ಹೊಯಿಲು) ಹೊಯ್ಯಲಿಡುವಂತೆ ಕೂಗುತಿವೆ ಕೋಗಿಲೆಗಳು-> ಕೋಗಿಲೆಗಳು ಕೂಗುತ್ತಿವೆ
(ಪದ್ಯ - ೨೪), |
ಪದ್ಯ - ೨೫
[ಸಂಪಾದಿಸಿ]ಮಿಗೆಮುತ್ತಿ ಮೊರೆವ ತುಂಬಿಗಳ ತಿಂತಿಣಿಯನೇ |
ಮುಗಿಲೆಂದು ಸುಳಿವ ಗಾಳಿಗೆ ಬಿಡದೆ ನರ್ತಿಪಲ |
ತೆಗಳ ಕುಡಿಗೋನರ ನುಣ್ಬೊಗರನೇ ಮಿಂಚೆಂದು ಸೊಗಯಿಸುವ ಪೂಗಳಿಂದೆ ||
ಉಗುವ ಮಕರಂದ ಬಿಂದುಗಳನೇ ಮಳೆಗಳೆಂ |
ದೊಗೆದಸಂತಸದೊಳಾವಗಮೆಯ್ದೆ ಕುಣಿವ ಸೋ |
ಗೆಗಳ ಬಳಗಂಗಳಂ ಮಗನೆ ಕಂಡೈ ತಳಿತ ನಗರೋಪವನದೆಡೆಯೊಳು ||25||
ಮಿಗೆ = ಹೆಚ್ಚಾಗಿ ಮುತ್ತಿ = ಮುತ್ತಿಕೊಂಡು, ಮೊರೆವ =ಶಬ್ದಮಾಡುವ, ತುಂಬಿಗಳ ತಿಂತಿಣಿಯನೇ=ದೊಡ್ಡ ಗಂಪನ್ನು ಮುಗಿಲೆಂದು (ತಿಳಿದು) ಸುಳಿವ ಗಾಳಿಗೆ ಬಿಡದೆ = ಒಂದೇಸಮ, ನರ್ತಿಪಲತೆಗಳ ಕುಡಿಗೋನರ ನುಣ್ಬೊಗರನೇ-> ಒಂದೇಸಮ, ಕುಣಿಯುತ್ತಿರುವ ಲತೆಗಳ ಕುಡಿಯ ತುದಿಯನ್ನು ಮಿಂಚೆಂದು ಸೊಗಯಿಸುವ ಪೂಗಳಿಂದೆ= ಹೂವುಗಳಿಂದ, ಉಗುವ=ಹೊರಡುವ ಮಕರಂದ ಬಿಂದುಗಳನೇ= ಮಕರಂದ ರಸದ ಹನಿಯನ್ನು ಮಳೆಗಳೆಂದೊಗೆದು= ಮಳೆ ಎಂದು ಭಾವಿಸಿ, ಸಂತಸದೊಳಾವಗಮೆಯ್ದೆ = ಸಂತಸದೊಳು ಆವಗಂ = ಆಗ / ಯಾವಾಗಲೂ ಕುಣಿವ ಸೋಗೆಗಳ= ನವಿಲುಗಳ, ಬಳಗಂಗಳಂ = ಗುಂಪನ್ನು, ಮಗನೆ ಕಂಡೈ = ನೋಡಿದೆಯಾ? ತಳಿತ= ಚಿಗುರಿದ, ನಗರೋಪವನದೆಡೆಯೊಳು-> ನಗರದ ಉಪವನದೊಳು.
(ಪದ್ಯ - ೨೫), |
ಪದ್ಯ - ೨೬
[ಸಂಪಾದಿಸಿ]ಪೂಗಳ ಪರಾಗಮೊಕ್ಕಿರ್ದಿಳೆಯ ಮೇಲೆ ಹಂ |
ಸೀಗಣಂ ನಡೆಯಲದರಡಿವಜ್ಜೆ ಪತ್ತಿ ಸಾ |
ಲಾಗಿರಲ್ಕೀ ಬನವ ವಿರಹಿಗಳ್ ಪುಗದಂತೆ ಮನ್ಮಥಂ ಬರೆದಿರಿಸಿದ ||
ನಾಗರದ ಯಂತ್ರದಕ್ಕರಗಳೆಂಬಂದದಿಂ |
ದಾಗೆ ತಮಗಿರುಳಹ ವಿಯೋಗಮಂ ನೆನೆದಂಜಿ |
ಬೇಗದಿಂ ತೊಡೆವಂತೆ ಪೊರಳ್ದು ರತಿಗೈವ ಕೋಕಂಗಳಂ ನೋಡೆಂದನು ||26||
ಪೂಗಳ= ಹೂಗಳ, ಪರಾಗಮೊಕ್ಕಿರ್ದಿಳೆಯ-:ಪರಾಗಂ ಒಕ್ಕಿರ್ದ(ಚೆಲ್ಲಿದ) ಇಳೆ =ಪರಾಗ ಹೆಚ್ಚಾಗಿಬಿದ್ದ ನೆಲದ ಮೇಲೆ ಹಂಸೀಗಣಂ = ಹಂಸದ ಗುಂಪು, ನಡೆಯಲದರಡಿವಜ್ಜೆ-: ನಡೆಯಲು ಅದರ ಅಡಿವಜ್ಜೆ=ಪಾದದ ಪತ್ತಿ=ಗುರುತು ಹತ್ತಿ ಅದು, ಸಾಲಾಗಿರಲ್ಕೀ-: ಸಾಲಾಗಿ ಇರಲು, ಈ ಬನವ = ಕಾಡನ್ನು, ವಿರಹಿಗಳ್ ಪುಗದಂತೆ= ವರಹಿಗಳು ಒಳಬರದಂತೆ, ಮನ್ಮಥಂ ಬರೆದಿರಿಸಿದ= ಮನ್ಮಥನು ಬರೆದು ಇಟ್ಟ ನಾಗರದ ಯಂತ್ರದಕ್ಕರಗಳೆಂಬಂದದಿಂದಾಗೆ= ನಾಗಯಂತ್ರ ಅಕ್ಷರದಂತೆ, ತಮಗಿರುಳಹ-:ತಮಗೆ ಇರುಳಹ = ರಾತ್ರಿ ಆಗುವ, ವಿಯೋಗಮಂ ನೆನೆದಂಜಿ= ತಮಗೆ, ಆಗಬಹುದಾದ ಅಗಲಿಕೆಯನ್ನ ನೆನೆದುಕೊಂಡು ಹೆದರಿ, ಬೇಗದಿಂ= ಬೇಗ ತೊಡೆವಂತೆ= ಆ ಲಿಪಿಯನ್ನು ಅಳಿಸುವಹಾಗೆ, ಪೊರಳ್ದು ರತಿಗೈವ= ಹೊರಳಿ ರತಿಕ್ರೀದೆಮಾಡುವ, ಕೋಕಂಗಳಂ= ಚಕ್ರವಾಕ ಪಕ್ಷಿಗಳನ್ನು ನೋಡೆಂದನು, ಭೀಮ.
(ಪದ್ಯ - ೨೬), |
ಪದ್ಯ - ೨೭
[ಸಂಪಾದಿಸಿ]ನಸುಗಾಳಿ ಸಂಧಿಸೆ ಕೆದರ್ದ ಪೊಂಬಾಳೆಗಳ |
ಕುಸುರಿಗಳ್ ತಳಿವಕ್ಷತೆಗಳಮಲಮಂಜರಿಯ |
ಕುಸುಮಂಗಳಾಂತ ಪುಷ್ಟಾಂಜಲಿಗಳೊಂದಿ ಕಿಕ್ಕಿರಿದ ಪೆರ್ಗೊನೆಗಳಿಂದೆ ||
ಎಸೆವ ಚೆಂದೆಂಗಾಯ್ಗಳೊಂದೊಂದನೊಡೆಯುತ್ತ |
ಲೊಸರಿ ಸೋರ್ವೆಳನೀರ್ಗಳಘ್ರ್ಯಂಗಳಾಗೆ ರಂ |
ಜಿಸುವ ಬನದೇವಿ ಭೂದೇವತೆಯನರ್ಚಿಪವೊಲಿದೆ ಕುವರ ನೋಡೆಂದನು ||27||
ನಸುಗಾಳಿ ಸಂಧಿಸೆ ಕೆದರ್ದ ಪೊಂಬಾಳೆಗಳ = ತಂಗಾಳಿ ಬೀಸಲು ಕೆದರಿದ=ಬಿಚ್ಚದ ಹೊಂಬಾಳೆಗಳ (ಅಡಿಕೆಯ/ ತೆಂಗಿನ ಹೂವಿನಗೊನೆಗೆ ಮುಚ್ಚಿದ ಹಳದಿ ಬಣ್ಣದ ಹೊದಿಕೆ), ಕುಸುರಿಗಳ್ = ಕಸುಮದಕಾಳುಗಳು, ತಳಿವಕ್ಷತೆಗಳ = ಹಾಕುವ ಅಕ್ಷತೆಗಳ, ಅಮಲಮಂಜರಿಯ = ಪರಿಶುದ್ಧ ಗೊಂಚಲ, ಕುಸುಮಂಗಳಾಂತ =ಹೂವಿನ ಕುಸುಮಗಳನ್ನು ಹೊಂದಿದ, ಪುಷ್ಟಾಂಜಲಿಗಳೊಂದಿ= ಕೈಯಲ್ಲಿಹಿಡಿದ ಹೂವುಗಳ ಹಾಗೆ, ಕಿಕ್ಕಿರಿದ ಪೆರ್ಗೊನೆಗಳಿಂದೆ= ಒತ್ತೊತ್ತಾಗಿ ಇರುವ ದೊಡ್ಡ ಕೊನೆಗಳಿಂದ, ಎಸೆವ= ಕಾಣುವ, ಚೆಂದೆಂಗಾಯ್ಗಳೊಂದೊಂದನೊಡೆಯುತ್ತಲೊಸರಿ-: ಚಂದಕಾಯ್ಗಳು = ಸುಂದರ ತೆಂಗಿನಕಾಯಿಗಳು ಒಡೆಯುತ್ತ, ಒಸರುವ, ಸೋರ್ವೆಳನೀರ್ಗಳಘ್ರ್ಯಂಗಳಾಗೆ= ಸೋರುವ ಎಳೆನೀರು ಅರ್ಘ್ಯದಂತೆ, ರಂಜಿಸುವ = ಚಂದ ಕಾಣುವ, ಬನದೇವಿ= ವನದೇವಿಯು, ಭೂದೇವತೆಯನರ್ಚಿಪವೊಲಿದೆ ಕುವರ ನೋಡೆಂದನು= ಭೂದೇವಿಯನ್ನ ಅರ್ಚಿಸುವ ರೀತಿಯಲ್ಲಿದೆ, ನೋಡು ಎಂದನು, ಭೀಮ.
(ಪದ್ಯ - ೨೭), |
ಪದ್ಯ - ೨೮
[ಸಂಪಾದಿಸಿ]ತರುಣ ಪಲ್ಲವದ ವಿಸ್ತಾರದಿಂ ನೇರದಿಂ |
ಸರಗೈವ ಕಲಪಿಕೋಚ್ಚಾರದಿಂ ಸಾರದಿಂ |
ಸುರಿವ ಪೂದೊಂಗಲ ತುಷಾರದಿಂ ಸ್ವೈರದಿಂ ಸಲ್ಲಾಪಕೆಳಸಿ ಬಳಸಿ ||
ಮೊರೆವ ತುಂಬಿಗಳ ಝಂಕಾರದಿಂ ತೋರದಿಂ |
ಪರಿಪಕ್ವಮಾದ ಫಲಭಾರದಿಂ ಕೀರದಿಂ |
ಕರಮೆಸೆಯುತಿಪ್ರ್ಪ ಸಹಕಾರದಿಂ ತೀರದಿಂಪೆಲ್ಲಿಯುಂ ನಂದನದೊಳು ||28||
ತರುಣ = ಹೊಸ,ಪಲ್ಲವದ = ಚಿಗುರಿನ, ವಿಸ್ತಾರದಿಂ ನೇರದಿಂ: = ವಿಶಾಲವಾದ ನೇರವಾದ, ಸರಗೈವ: = ಹಾಡುತ್ತಿರುವ, ಕಲಪಿಕೋಚ್ಚಾರದಿಂ ಸಾರದಿಂ: = ಕಪ್ಪು ಕೋಗಿಲೆಯ ಹಾಡಿನಿಂದ, ಅದರ ಇಂಪಿನಿಂದ, ಸುರಿವ ಪೂದೊಂಗಲ ತುಷಾರದಿಂ ಸ್ವೈರದಿಂ := ಉದುರುತ್ತಿರುವ ಪೂ-ಹೂವಗಳ ಗೊಂಚಲ ಹನಿಗಳಿಂದ ಸ್ವೇಚ್ಛೆಯಿಂದ, ಸಲ್ಲಾಪಕೆಳಸಿ ಬಳಸಿ ಮೊರೆವ ತುಂಬಿಗಳ ಝಂಕಾರದಿಂ ತೋರದಿಂ:ಸರಸವನ್ನು ಬಯಸಿ ಸಂಚರಿಸುತ್ತಾ ಘೇಂಕಾರ ತೋರ /ದೊಡ್ಡ ಸದ್ದು ಮಾಡುವ ದುಂಬಿಗಳಿಂದ, ಪರಿಪಕ್ವಮಾದ ಫಲಭಾರದಿಂ ಕೀರದಿಂ:ಚೆನ್ನಾಗಿ ಕಳಿತ ಹಣ್ಣುಗಳಿಂದ ಅಲ್ಲಿ ಗಿಳಿಗಳೀಂದ, ಕರಂ = ಬಹಳ ಎಸೆಯುತಿಪ್ರ್ಪ = ತೋರುತ್ತಿರುವ ಸಹಕಾರದಿಂ = ಹಣ್ಣಿನ (ಮಾವಿನ) ಮರದಿಂದ, ತೀರದಿಂಪೆಲ್ಲಿಯುಂ-: ತೀರದ ಇಂಪು ಎಲ್ಲಿಯುಂ ನಂದನದೊಳು: ಈ ಉದ್ಯಾನ ವನಗಳಲ್ಲಿ ಇಂಪಾದ (ಇಂಪು)ಗಾನ ಸುಖ ತೀರದು ಮುಗಿಯದು, ಎಲ್ಲಡೆಯೂ ಇರುವುದು. (ನದೀತೀರದ ದಡದಲ್ಲಿ ಗಾನದ ಇಂಪು ಎಲ್ಲೆಡೆಯೂ ಇರುವುದು)
(ಪದ್ಯ - ೨೮), |
ಪದ್ಯ - ೨೯
[ಸಂಪಾದಿಸಿ]ಎಮ್ಮಂತೆ ಕೂರ್ಪರಂ ಬಿಡದಪ್ಪಿಕೊಂಡಿರದೊ |
ಡೊಮ್ಮೆಯುಂ ನಿಲಲೀಯನೀ ಬನದೊಳಂಗೊದ್ಬ |
ಮಮ್ಮೋಹಿಗಳನೆಂದು ದೃಷ್ಟಾಂತಮಂ ತೋರಿ ಭೋಗಿಸುವ ಮಾನವರ್ಗೆ ||
ತಮ್ಮಿಂದ ವಸ್ತುವಂ ಪಡೆಯಲ್ಕೆ ಸಂಯೋಗ |
ವಮ್ಮಾಳ್ವವೊಳ್ ನಾಗವಲ್ಲಿಗಳ್ ಫಲಭಾರ |
ದಿಮ್ಮೆರೆವ ಪೂಗವೃಕ್ಷಂಗಳಂ ಪರ್ವಿ ಕಂಗೊಳಿಸುತಿವೆ ನೋಡೆಂದನು ||29|||
ಎಮ್ಮಂತೆ = ನಮ್ಮಂತೆ ಕೂರ್ಪರಂ = ಪ್ರಿಯರನ್ನು ಬಿಡದೆ ಅಪ್ಪಿಕೊಂಡು ಇರದೊಡೆ =ಇರದೇ ಹೋದರೆ; ಒಮ್ಮೆಯುಂ = ಒಂದು ಸಲವಾದರೂ, ನಿಲಲೀಯನೀ =ನಿಲ್ಲಲು ಈಯನು = ಬಿಡನು ಬನದೊಳಂಗೊದ್ಬಮಮ್ಮೋಹಿಗಳನೆಂದು-: ಬನದೊಳಗೆ ಅಂಗೋಧ್ಬವನು =ಮನ್ಮಥನು ಮೋಹಿಗಳನು ಎಂದು,(ಒಮ್ಮೆಯುಂ =ಒಂದು ಸಲವಾದರೂ ಅಂಗೋಧ್ಬವನು =ಮನ್ಮಥನು ಈ ಬನದೊಳಗೆ ಸ್ತ್ರೀಯರಲ್ಲಿ ಮೋಹಿಗಳನು ನಿಲಲೀಯನೀ =ನಿಲ್ಲಲು ಈಯನು = ಬಿಡುವುದಿಲ್ಲ, ಎಂದು,)ದೃಷ್ಟಾಂತಮಂ = ಉದಾಹರಣೆಯನ್ನು ತೋರಿ ಭೋಗಿಸುವ = ಸುಖಪಡುವ, ಮಾನವರ್ಗೆ =ಮಾನವರಿಗೆ, ತಮ್ಮಿಂದ ವಸ್ತುವಂ =ವಸ್ತುಗಳನ್ನು, ಪಡೆಯಲ್ಕೆ = ಪಡೆಯಲು, ಸಂಯೋಗವಮ್ಮಾಳ್ವವೊಳ್-:ಸಂಯೋಗವಂ ಮಾಳ್ಪವೊಲ್ =ಕೂಟವನ್ನು ಮಾಡುವಹಾಗೆ, ನಾಗವಲ್ಲಿಗಳ್ = ನಾಗವಳ್ಳಿ ವೀಳೆಯದ ಎಲೆಗಳ ಬಳ್ಳಿಗಳು, ಫಲಭಾರದಿಂ ಮೆರೆವ ಪೂಗವೃಕ್ಷಂಗಳಂ= ಫಲ-ಅಡಿಕೆ ಕೊನೆಗಳ ಭಾರದಿಂದ ತೋರುವ ಅಡಿಕೆಮರಗಳನ್ನು ಪರ್ವಿ= ಹಬ್ಬಿಕೊಂಡು ಕಂಗೊಳಿಸುತಿವೆ = ಚಂದವಾಗಿ ಕಾಣಿಸುತ್ತಿವೆ, ನೋಡೆಂದನು.
(ಪದ್ಯ - ೨೯), |
ಪದ್ಯ - ೩೦
[ಸಂಪಾದಿಸಿ]ಭೂತಳದ ಬೋಗಿಸಂಕುಲಕೆ ಬಹುವಿಧ ಸುಗಂ |
ಧಾತಿಶಯ ಸೌಖ್ಯದಿಂ ನೆರೆತಣಿಸಿ ಬಳಿಕ ಸಂ |
ಪ್ರೀತಿಯಿಂದತಳದ ಮಹಾಭೋಗಿಚಯಕೊಂದುಬಗೆಯ ಕಂಪಿನ ಸೊಂಪನು ||(ಪ್ರೀತಿಯಿಂದತಳದ ಮಹಾ)
ಏತಕುಣಿಸದೆ ಬಿಡುವಳೀ ವನಾಂಗನೆಯೆಂಬ |
ರೀತಿಯಿಂ ಬೇರ್ವರಿದ ಮುಡಿವಾಳಮಿರಲಳಿ |
ವ್ರಾತಮರಿಯದೆ ತಿರುಗುತಿದೆ ನಿಧಾನವನಭಾಗ್ಯಂ ಕಾಣದಿರ್ಪಂತಿರೆ ||30||
ಭೂತಳದ =ಭೂಮಿಯಲ್ಲಿರುವ, ಬೋಗಿಸಂಕುಲತಕೆ= ಸುಖಿಗಳ ಸಮೂಹಕ್ಕೆ, ಬಹುವಿಧ = ಅನೇಕ ವಿಧದ, ಸುಗಂಧಾತಿಶಯ ಸೌಖ್ಯದಿಂ= ಸುಗಂಧದ ಅತಿಶಯದ ಸುಖದಿಂದ, ನೆರೆತಣಿಸಿ =ಚೆನ್ನಾಗಿ ತೃಪ್ತಿಪಡಿಸಿ, ಬಳಿಕ ಸಂಪ್ರೀತಿಯಿಂ =ಸಂತೋಷವನ್ನು, ಅತಳದ = ಪಾತಾಳದ ಮಹಾಭೋಗಿ =ಸರ್ಪಗಳ ಚಯಕೆ = ಸಮೂಹಕ್ಕೆ, ಒಂದು ಬಗೆಯ ಕಂಪಿನ ಸೊಂಪನು =ಸುವಾಸನೆಯ ಸುಖವನ್ನು, ಏತಕೆ ಉಣಿಸದೆ ಬಿಡುವಳು ಎಂಬ; ಈ ವನಾಂಗನೆ =ಈ ವನವು ಏತಕೆ =ಯಾಕೆ ಉಣಿಸದೆ ಬಿಡುವಳು = ಕೊಡದೆ ಬಿಡುವುದು ಎಂಬ ರೀತಿಯಿಂ = ರೀತಿಯಿಂದ, ಬೇರ್ವರಿದ = ಬೇರುಬಿಟ್ಟ, ಮುಡಿವಾಳಂ = ಲಾವಂಚ ಗಿಡವು ಇರಲು, ಅಳಿವ್ರಾತಂ = ದುಂಬಿಗಳ ಸಮೂಹವು ಸುವಾಸನೆಯ ಮೂಲವನ್ನು ಹುಡುಕುತ್ತಾ, ಅರಿಯದೆ ತಿರುಗುತಿದೆ = ಇದನ್ನು ತಿಳಿಯದೆ = ಮಡಿವಾಳದ ಸುವಾಸನೆ ಬೇರು ಭೂಮಿಯೊಳಗಿರುವುದನ್ನು ತಿಳಿಯದೆ ಗಿಡವನ್ನು ಸುತ್ತುತ್ತಿದೆ. ಹೇಗೆಂದರೆ ನಿಧಾನವನಭಾಗ್ಯಂ ಕಾಣದಿರ್ಪಂತಿರೆ: ನಿಧಾನವನು = ನಿಧಿಯನ್ನು ಅಭಾಗ್ಯಂ = ದರಿದ್ರನು; ಕಾಲುಬುಡದ ಭೂಮಿಯೊಳಗಿರುವ ನಿಧಿಯನ್ನು ಕಾಣದಿರ್ಪಂತೆ = ಕಾಣದಿರುವಂತೆ,ದುಂಬಿಗಳ ಸಮೂಹವು ಗಿಡವನ್ನು ಸುತ್ತುತ್ತಿದೆ.
(ಪದ್ಯ - ೩೦), |
ಪದ್ಯ - ೩೦
[ಸಂಪಾದಿಸಿ]ಕುದ್ದಾಲಹತಿಯನುರೆ ತಾಳ್ದೆಮ್ಮನಿನ್ನೆಗಂ |
ಮುದ್ದುಗೈದೀ ವಸುಧೆ ಬೆಳೆಯಿಸಿದಳೆಂದು ತುರು |
ಗಿದ್ದ ತನಿವಣ್ಗಳಿಂದೆಸೆವ ಪೆರ್ಗೊನೆಗಳಂ ಸಲೆ ಸಮರ್ಪಿಸಲೊಡರ್ಚಿ ||
ಎದ್ದಿರದೆ ಬಾಗಿದುವೊ ಕದಳಿಗಳ್ ಧರಣಿಗೆನ |
ಲಿದ್ದಪರೆ ಮರೆದು ಪುರುಷಾರ್ಥಮಂ ಮಾಡಿದರ |
ನುದ್ದಾಮಗುಣಮುಳ್ಳ ಜೀವಿಗಳ್ ತನುಜ ನೋಡೆಂದನಾ ಪವನಸೂನು ||31||
(ಭೂಮಿಯು), ಕುದ್ದಾಲಹತಿಯನುರೆ-:ಕುದ್ದಾಲ =ಗುದ್ದಲಿಯ, ಹತಿಯನು= ಪೆಟ್ಟನ್ನು, ಉರೆ=ಬಹಲ, ತಾಳ್ದೆಮ್ಮನಿನ್ನೆಗಂ-: ತಾಳ್ದು= ಸಹಿಸಿಕೊಂಡು, ಎಮ್ಮನು= ನಮ್ಮನ್ನು,ಇನ್ನೆಗಂ= ಇದುವರೆಗೆ, ಮುದ್ದುಗೈದೀ ವಸುಧೆ ಬೆಳೆಯಿಸಿದಳೆಂದು-: ಮುದ್ದುಗೈದು= ಪ್ರೀತಿಯಿಂದ,ವಸುಧೆ= ಭೂಮಿಯು, ಬೆಳೆಯಿಸಿದಳೆಂದು= ಬೆಳಸಿದಳು ಎಂದು, ತುರುಗಿದ್ದ= ತಂಬಿರುವ ತನಿವಣ್ಗಳಿಂದೆಸೆವ-: ತನಿ ವಣ್ಗಳಿಂದ ಎಸೆವ= ಕಳಿತ ಹಣ್ಣುಗಳಿಂದ ತೋರುವ, ಪೆರ್ಗೊನೆಗಳಂ-;ಪೆರ್ ಕೊನೆಗಳಿಂ= ದೊಡ್ಡ ಕೊನೆಗಳನ್ನು, ಸಲೆ= ಪೂರ್ಣ, ಸಮರ್ಪಿಸಲೊಡರ್ಚಿ= ಸಮರ್ಪಿಸಲ್ ಒಡರ್ಚಿ= ಸಿದ್ಧವಾಗಿ, ಎದ್ದಿರದೆ ಬಾಗಿದುವೊ ಕದಳಿಗಳ್= ನೆಟ್ಟಗೆ ನಿಲ್ಲದೆ ಬಾಗಿಕೊಂಡಿರುವುದೋ ಬಾಳೆಗಿಡಗಳು, ಧರಣಿಗೆನಲಿದ್ದಪರೆ= ಧರಣಿಗೆ ಎನಲ್ ಇದ್ದಪರೆ= ಭೂಮಿಗೆ ಎನ್ನುವಂತೆ (ಇರುವರೆ) ಮರೆದು ಪುರುಷಾರ್ಥಮಂ= (ಮರೆತು) ಪುರಷಾರ್ಥವನ್ನು / ಉಪಕಾರವನ್ನು ಮಾಡಿದರನುದ್ದಾಮಗುಣಮುಳ್ಳ-:ಮಾಡಿದರ ಉದ್ದಾಮಗುಣಮುಳ್ಳ= ಮಾಡಿದವರ +ಮರತು ಇರುವರೆ? ಜೀವಿಗಳ್= ಪ್ರಾಣಿಗಳು, ತನುಜ= ಮಗನೇ, ನೋಡೆಂದನಾ=ನೋಡು ಎಂದನು ಆ ಪವನಸೂನು=ಭೀಮನು.
(ಪದ್ಯ - ೩೦), |
ಪದ್ಯ - ೩೨
[ಸಂಪಾದಿಸಿ]ಕಡುಗೆಂಪೆಸೆವ ತಳಿರ ತನಿಗೆಂಡಮಂ ಕಲಕಿ |
ನಡೆದು ಮೊನೆಮುಗುಳ ಶಸ್ತ್ರಂಗಳಂ ಪಾಯ್ದು ಮಾ |
ಮಿಡಿಯ ಜೊಂಪದ ವಜ್ರಮುಷ್ಟಿಯಂ ಜಡಿದು ಲತೆಗಳ ಕೊನರಚಾಟಿಯಿಂದ ||
ಬಡಿದು ಕೋಗಿಲೆಯ ನಿಡುಸರದ ಬೊಬ್ಬೆಯೊಳಾರ್ದು |
ಬಿಡದೆ ವನದೇವಿಯೋಲಗದೊಳುತ್ಸವದಿಂದ |
ಮಡಿಗಡಿಗೆ ತೂಣಗೊಂಡವನಂತಿಸೆವ ಮಂದಮಾರುತನ ನೋಡೆಂದನು ||32||
ಕಡುಗೆಂಪೆಸೆವ-: ಕಡು=ಅತಿ, ಕೆಂಪು ಎಸೆವ= ಅತಿ ಕೆಂಪಾಗಿ ಕಾಣುವ, ತಳಿರ= ಚಿಗುರೆಲೆಯ, ತನಿಗೆಂಡಮಂ ಕಲಕಿ= ತನಿ ಕೆಂಡವನ್ನು ಕೆದರಿ, ನಡೆದು = ತುಳಿದು ಮೊನೆಮುಗುಳ ಶಸ್ತ್ರಂಗಳಂ= ಚೂಪಾದ ಮಲ್ಲಿಗೆಮೊಗ್ಗಿನ ಶಸ್ತ್ರವನ್ನು ಪಾಯ್ದು= ಹಾದು ಮಾಮಿಡಿಯ ಜೊಂಪದ= ಮಾವಿನ ಮಿಡಿಯ ನಡುಗುವ, ವಜ್ರಮುಷ್ಟಿಯಂ ಜಡಿದು= ಗಟ್ಟಿಯಾದ ಮಷ್ಟಿಯನ್ನು ಹೊಡೆದು, ಲತೆಗಳ ಕೊನರಚಾಟಿಯಿಂದ ಬಡಿದು= ಬಳ್ಳಿಗಳ ತುದಿಯ ಚಾಟಿಯಿಂದ ಬಡಿದು, ಕೋಗಿಲೆಯ ನಿಡುಸರದ ಬೊಬ್ಬೆಯೊಳಾರ್ದು= ಕೋಗಿಲೆಯ ಉದ್ದ ಕೂಗನ್ನು ಆರ್ದು=ಆಲಿಸಿ ಬಿಡದೆ ವನದೇವಿಯೋಲಗದೊಳುತ್ಸವದಿಂದಮಡಿಗಡಿಗೆ-: ಬಿಡದೆ ವನದೇವಿಯ ಓಲಗದ ಉತ್ಸವದಿಂದಂ ಅಡಿಗಡಿಗೆ=ಪುನಃ ಪುನಃ, ತೂಣಗೊಂಡವನಂತಿಸೆವ-: ತೂಣಗೊಂಡವನಂತೆ= ಆವೇಶಬಂದವನಂತೆ, ಎಸೆವ= ತೋರುವ, ಮಂದಮಾರುತನ= ಮೆಲ್ಲನ ಗಾಳಿಯನ್ನು ನೋಡೆಂದನು ಭೀಮ.
(ಪದ್ಯ - ೩೦), |
ಪದ್ಯ - ೩೩
[ಸಂಪಾದಿಸಿ]ಬಕುಳ ಮಂದಾರ ಕರ್ಣಿಕಾರ ಚಂ |
ಪಕ ಕೋವಿದಾರ ಪ್ರಿಯಂಗು ಕರವೀರ ಕುರ |
ವಕ ತಿಲಕ ಸುರಗಿ ನಂದ್ಯಾವರ್ತ ಮೇರು ಸೇವಂತಿಗೆ ಶಿರೀಷಮೆಂಬ ||
ಸಕಲ ತರುನಿಚಯಂಗಳಂಗಜನ ವಿವಿಧ ಸಾ |
ಯಕದ ಮೂಡಿಗೆಗಳಂತೆಸೆವ ನವಕುಸುಮಸ್ತ |
ಬಕದಿಂದದೊಪ್ಪುತಿವೆ ಕುಂದಮಾಲತಿಮಲ್ಲಿಕಾದಿಪೂವಲ್ಲಿಗೂಡಿ ||33||
ಹೂಗಳಾದ ಬಕುಳ, ಮಂದಾರ, ಕರ್ಣಿಕಾರ (ಬೆಟ್ಟಸೋಗೆ), ಚಂಪಕ (ಸಂಪಿಗೆ), ಕೋವಿದಾರ (ದೇವಕಾಂಚನ) ಪ್ರಿಯಂಗು(ಕುಂಕುಮಗಿಡ), ಕರವೀರ, ಕುರವಕ, ತಿಲಕ, ಸುರಗಿ, ನಂದ್ಯಾವರ್ತ, ಮೇರು(ಧೂಪ), ಸೇವಂತಿಗೆ, ಶಿರೀಷಮೆಂಬ= ಶಿರೀಷಗಳೆಂಬ ಸಕಲ ತರುನಿಚಯಂಗಳಂಗಜನ= ಗಿಡ ನಾನಾ ಸಸ್ಯಗಳು ವಿವಿಧ ಸಾಯಕದ= ಬಾಣದ, ಮೂಡಿಗೆಗಳಂತೆಸೆವ-: ಮೂಡಿಗೆಗಲಂತೆ= ಬತ್ತಳಿಕೆಗಳಂತೆ ಎಸೆವ= ಕಾಣುವ ನವಕುಸುಮಸ್ತಬಕದಿಂದದೊಪ್ಪುತಿವೆ-:ನವಕುಸುಮ=ಹೊಸ ಕುಸುಮದ, ಸ್ತಬಕದಿಂದ=ಗೊಂಚಲುಗಳಿಂದ, ಒಪ್ಪುತಿವೆ= ಶೋಭಿಸುತ್ತವೆ; ಕುಂದಮಾಲತಿಮಲ್ಲಿಕಾದಿಪೂವಲ್ಲಿಗೂಡಿ-:ಕುಂದ =ಕೋಲುಮಲ್ಲಿಗೆ, ಮಾಲತಿ= ಜಾಜಿ, ಮಲ್ಲಿಕಾ=ದುಂಡು ಮಲ್ಲಿಗೆ, ಆದಿ= ಮೊದಲಾದ, ಪೂವಲ್ಲಿ ಕೂಡಿ.
(ಪದ್ಯ - ೩೩), |
ಪದ್ಯ - ೩೪
[ಸಂಪಾದಿಸಿ]ಸಾಲಸಾಲಂಗಳಿಂ ಬಕುಳ ಕುಳದಿಂದೆ ಹಿಂ |
ತಾಲತಾಲಂಗಳಿಂ ಮಾದಲದಲರ್ಗಳಿಂ ತ |
ಮಾಲಮಾಲತಿಗಳಿಂ ಸಂರಂಭರಂಭದಿಂ ಮಂದಮಂದಾರದಿಂದೆ ||
ಜಾಲಜಾಲಂಗಳಿಂ ಸುರಹೊನ್ನೆ ಹೊನ್ನೆ ಬಗೆ |
ಪಾಲ ಪಾಲಾಶತರು ತರುಣಾಮ್ರಚಯ ಕಿಂಕಿ |
ಲಾಲಿ ಲಾಲಲಿತ ನವಾಶೋಕದಿಂದುದ್ಯದುದ್ಯಾನಮೇಂ ಚೆಲ್ವಿನಿಪುದೋ||34||
ಸಾಲ=ಸಾಲವೃಕ್ಷದ:ಮತ್ತಿಮರದ, ಸಾಲಂಗಳಿಂ=ಸಾಲುಗಳಿಂದ, ಬಕುಳವೃಕ್ಷಗಳ ಕುಳದಿಂದೆ= ಕಲಗಳಿಂದ, ಹಿಂತಾಲ= ತಾಳೆಗಿಡಗಳ ತಾಲಂಗಳಿಂ=ಸಮೂಹದಿಂದ, ಮಾದಲ = ಮಾದಲಗಿಡಗಳ /ಬಳ್ಳಿಗಳ, ದಲರ್ಗಳಿಂ=ದಳ- ದಳ/ಗುಂಪಿನಿಂದ, ತಮಾಲ= ಹೊಗೇಮರಗಳಿಂದ, ಮಾಲತಿಗಳಿಂ= ಜಾಜಿಬಳ್ಳಿಗಳಿಂದ,ಸಂರಂಭ=ದೊಡ್ಡಬಾಳೆಗಿಡ ಮತ್ತು ರಂಭದಿಂ=ಚಿಕ್ಕಬಾಳೇಗಿಡಗಳಿಂದ, ಮಂದ=ಶಮೀಮರಗಳಿಂದ, ಮಂದಾರದಿಂದೆ=ಮಂದಾರಗಿಡಗಳಿಂದ, ಜಾಲ= ಜಾಲಲೀ ಗಿಡಗಳ ಜಾಲಂಗಳಿಂ= ಸಾಲಿನಿಂದ, ಸುರಹೊನ್ನೆ ಮತ್ತು ಹೊನ್ನೆ, ಬಗೆಪಾಲ(ಚಿಪ್ಪಾಲೆಮರ) ಮತ್ತು ಪಾಲಾಶತರು= ಮುತ್ತುಗದ ಮರ, ತರುಣಾಮ್ರಚಯ= ತರುಣ=ಎಳೆಯ ಆಮ್ರ ಚಯ=ಮಾವಿನ ಮರಗಳ ಸಮೂಹ, ಕಿಂಕಿ ಲಾಲಿ= ಕೋಗಿಲೆಯ ಲಾಲಿ=ಲಾಲಿತ್ಯ, ಲಾಲಲಿತ=ಮನೋಹರ ನವಾಶೋಕದಿಂದ= ಹೊಸ ಅಶೋಕ ಮರಗಳಿಂದ, ಉದ್ಯತ್=ಬೆಳೆಯುತ್ತರುವ ಉದ್ಯಾನಮೇಂ=ಉದ್ಯಾನವನವು ಏಂ=ಎಷ್ಟೊಂದು ಚೆಲ್ವಿನಿಪುದೋ=ಚಂದಕಾಣುವುದು.
(ಪದ್ಯ - ೩೪), |
ಪದ್ಯ - ೩೫
[ಸಂಪಾದಿಸಿ]ಬಗೆವೊಡಿವು ಮುನ್ನಮಾಡಿರ್ದ ದೈವದ್ರೋಹ |
ದಘದಿಂದೆ ಬನದ ಪೊರವಳಯದೊಳ್ ಬಹುಕಂಟ |
ಕಿಗಳಾಗಿ ಬಂದು ಸಂಭವಿಸಿರಲ್ ತಳಿತ ಹೊಂಗೇದಗೆಗಳವರೊಳಾಡಿ ||
ಮಿಗೆ ಮಲಿನವಾಯ್ತು ಸರ್ವಾಂಗಮುಂ ಭ್ರಮರಾವ |
ಳಿಗೆ ತಮಗದರ ಸಂಗಮೇಕೆಂದು ಪೂತ ಸಂ |
ಪಗೆಗಳತಿಶುಚಿಗಳಂತೆಸೆಯುತಿವೆ ನೋಡು ನಂದನ ಪುರದ ನಂದನದೊಳು ||35||
ಬಗೆವೊಡಿವು-:ಬಗೆವೊಡೆ ಇವು = ಯೋಚಿಸಿದರೆ (ಈ ಕೇದಿಗೆ ಗಿಡವು), ಮುನ್ನಮಾಡಿರ್ದ= ಹಿಂದೆ ಮಾಡಿದ್ದ, ದೈವದ್ರೋಹದಘದಿಂದೆ-: ದೈವದ್ರೋಹದ ಅಘದಿಂದೆ= ದೇವರಿಗೆ ಮಾಡಿದ ಅಪಚಾರದ ಪಾಪದಿಂದ, ಬನದ ಪೊರವಳಯದೊಳ್= ಈ ವನದ ಹೊರಭಾಗಲ್ಲಿ, ಬಹುಕಂಟಕಿಗಳಾಗಿ= ಬಹಳ ಮುಳ್ಳಿನಿಂದಕೂಡಿ, ಬಂದು ಸಂಭವಿಸಿರಲ್= ಹುಟ್ಟಿರಲು, ತಳಿತ=ಎಳೆಯ ಹೊಂಗೇದಗೆಗಳವರೊಳಾಡಿ-:ಹೊಂಗೇದಗೆಗಳ ಅವರೊಳು ಆಡಿ= ಹೊಂಬಣ್ಣದ ಕೇದಗೆಗಳಲ್ಲಿ ಆಡಿ, ಭ್ರಮರಾವಳಿಗೆ=ಜೇನುಹುಳುಗಳಿಗೆ ಮಿಗೆ=ತುಂಬಾ ಸರ್ವಾಂಗಮುಂ=ಮೈಪೂರಾ ಮಲಿನವಾಯ್ತು=ಕಪ್ಪಾಯಿತು; ತಮಗೆ ಅದರ=ಕೇದಿಗೆಯ ಮತ್ತು ಜೇನುಹುಳುಗಳ, ಸಂಗಮೇಕೆಂದು=ಸಂಗಮು ಏಕೆಂದು= ಸಹವಾಸವು ಏಕೆ? ಬೇಡ ಎಂದು, ಪೂತ= ಹೂವುಬಿಟ್ಟ ಸಂಪಗೆಗಳು ಅತಿಶುಚಿಗಳಂತೆ ಎಸೆಯುತಿವೆ ನೋಡು ನಂದನ ಪುರದ ನಂದನದೊಳು= ಹೂವುಬಿಟ್ಟ ಸಂಪಗೆ ಮರಗಳು ಅತಿಶುದ್ಧರೆಂಬಂತೆ ಶೋಬಿಸುತ್ತವೆ ನಂದನ ನಗರದೊಳಗೆ ನೋಡು', ಎಂದನು ಭೀಮ.
(ಪದ್ಯ - ೩೫), |
ಪದ್ಯ - ೩೬
[ಸಂಪಾದಿಸಿ]ಪದ್ಯ - ೩೬
[ಸಂಪಾದಿಸಿ]ಮುಡಿವಾಳ ಲಾಮಂಚಗಳ ಬೇರ್ಗಳಿಂ ಬೇರ್ಗ |
ಳಿಡಿದಗರುಚಂದನಂಗಳ ಕೊಂಬಿನಿಂ ಕೊಂಬು |
ತೊಡರಿದಚ್ಚೆಸಳು ಮಲ್ಲಿಗೆ ಜಾಜಿಗಳ ಪೂಗಳಿಂ ಪೂಗಳೊಂದುಗೂಡಿ ||
ಕಡುಗಂಪುವಡೆದುವಾಮೂಲಾಗ್ರಮೀ ಬನದ |
ನಡುವೆ ಪುಟ್ಟಿದ ಕಾಳ್ಮರಂಗಳೆಲ್ಲಂ ಸೋಂಕಿ |
ದೊಡೆ ತಂಬೆಲರ್ಗೆ ಪರಿಮಳವನೀಯದ ಕುಜಂ ನಂದನದೊಳೊಂದಿಲ್ಲೆನೆ ||36||
ಮುಡಿವಾಳ ಲಾಮಂಚಗಳ ಬೇರ್ಗಳಿಂ= ಮಡಿವಾಳ ಲಾವಂಚದ ಬೇರುಗಳಿಂದ, ಬೇರ್ಗಳಿಡಿದಗರುಚಂದನಂಗಳ-:ಬೇರ್ಗಳು ಇಡಿದ ಅಗರು ಚಂದನಂಗಳ= ಬೇರುಗಳು, ಇಡಿದ=ಕೂಡಿದ ಅಗರು ಚಂದನಗಳನ್ನು, ಅಗರು=ಕಪ್ಪು ಅರಗು, ಚಂದನಂಗಳ= ಶ್ರೀಗಂಧದ ಕೊಂಬಿನಿಂ= ರೆಂಬೆಯಿಂದ ಕೊಂಬು=ರೆಂಬೆಗೆ ತೊಡರಿದಚ್ಚೆಸಳು-:ತೊಡರಿದ ಅಚ್ಚಸೆಳು=ಸುತ್ತಿದ ಬಿಳಿಯ ಮಲ್ಲಿಗೆ ಜಾಜಿಗಳ ಪೂಗಳಿಂ=ಹೂಗಳಿಂದ, ಪೂಗಳೊಂದುಗೂಡಿ= ಹೂವುಗಳು ಒಂದು ಗೂಡಿ, ಕಡುಗಂಪುವಡೆದುವು=ಕಡು=ಹೆಚ್ಚಿನ ಕಂಪು= ಪರಿಮಳವನ್ನು ಪಡೆದವು, ಆಮೂಲಾಗ್ರಮೀ= ಆಮೂಲಾಗ್ರಂ=ಬುಡದಿಂದ ಮೇಲಿನವರೆಗೂ ಈ ಬನದ ನಡುವೆ ಪುಟ್ಟಿದ= ಹುಟ್ಟಿದ, ಕಾಳ್ಮರಂಗಳೆಲ್ಲಂ=ಕಾಡು ಮರಗಳೆಲ್ಲವೂ, ಸೋಂಕಿದೊಡೆ= ಮುಟ್ಟಿದ ಕೂಡಲೆ, ತಂಬೆಲರ್ಗೆ=ತಂಪುಗಾಳಿಗೆ, ಪರಿಮಳವನೀಯದ= ಪರಿಮಳವನ್ನು ಈಯದ=ಕೊಡದ ಕುಜಂ= ಮರವು, ನಂದನದೊಳೊಂದಿಲ್ಲೆನೆ-: ನಂದನ ವನದೊಳು= ನಂದನವನದಲ್ಲಿ ಒಂದೂ ಇಲ್ಲ ಎನೆ= ಒಂದೂ ಇಲ್ಲ ಎನ್ನುವಂತೆ.
(ಪದ್ಯ - ೩೬), |
ಪದ್ಯ - ೩೭
[ಸಂಪಾದಿಸಿ]ಈ ವನದ ನಡುನಡುವೆ ತೊಳತೊಳಗುತಿರುತಿಹ ಸ |
ರೋವರವರದೊಳೆ ದಳೆದಳೆದು ಬೆಳೆಬೆಳೆದು ರಾ |
ಜೀವದಲರಲರ ತುಳಿತುಳಿದಿಡಿದಿಡಿದ ಬಂಡನೊಡನೊಡನೆ ಸವಿದು ಸವಿದು ||
ಆವಗಮಗಲದೆ ಯುಗಯುಗಮಾಗಿ ನೆರೆನೆರೆದು |
ಕಾವ ಸೊಗಸೊಗಸಿನಲಿ ನಲಿದು ಮೊರೆಮೊರೆವ ಭೃಂ |
ಗಾವಳಿಯ ಗಾವಳಿಯ ಕಳಕಳಂಗಳ ನೋಡುನೋಡು ರವಿತನಯತನಯ ||37||
ಈ ವನದ ನಡುನಡುವೆ ತೊಳತೊಳಗುತಿರುತಿಹ= ಥಳಥಳಿಸುತ್ತಾ, ಇರುತಿಹ= ಇರುವ, ಸರೋವರವರದೊಳೆ= ಸರೋವರವರದಲ್ಲಿಯೇ, ದಳೆದಳೆದು= ಒತ್ತೊತ್ತಾಗಿ ಬೆಳೆಬೆಳೆದು=ಚೆನ್ನಾಗಿ ಬೆಳೆದು, ರಾಜೀವದಲರಲರಕಮಲದ ಹೂವಿನ ದಳಗಳ, ತುಳಿತುಳಿದಿಡಿದಿಡಿದ= ತೂಳಿದು ತುಳಿದು ಹಿಡಿದ, ಬಂಡನೊಡನೊಡನೆ-: ಬಂಡನು=ಧೂಳಿಯನ್ನು (ರಸವನ್ನು)ಪದೆ ಪದೇ, ಸವಿದು ಸವಿದು= ಚೆನ್ನಾಗಿ ಸವಿದು, ಆವಗಮಗಲದೆ-:ಆವಗಂ ಯಾವಾಗಲೂ ಅಗಲದೆ=ಬೇರೆಯಾಗದೆ, ಯುಗಯುಗಮಾಗಿ= ಯುಗ ಯುಗಗಳಿಂದ ನೆರೆನೆರೆದು= ಒಟ್ಟುಗೂಡಿ, ಕಾವ= ಕಾಯುವ, ಸೊಗಸೊಗಸಿನಲಿ= ಸೊಗಸಿನಿಂದ, ನಲಿದು= ಸಂತೋಷಪಟ್ಟು, ಮೊರೆಮೊರೆವ= ಝೇಂಕಾರ ಮಾಡುತ್ತಿರುವ, ಭೃಂಗಾವಳಿಯ ಗಾವಳಿಯ=ಜೇನುಹುಳುಗಳ ಹಾವಳಿಯನ್ನೂ ಗುಂಪುಗಳನ್ನೂ, ಕಳಕಳಂಗಳ=ಅವುಗಳ ಝೇಂಕಾರದ ಶಬ್ದವನ್ನೂ, ನೋಡುನೋಡು= ಚನ್ನಾಗಿನೋಡು, ರವಿತನಯತನಯ=ರವಿಯ ಮಗನ ಮಗನೇ ನೋಡು ಎಂದು ಭೀಮನು ಹೇಳಿದನು.
(ಪದ್ಯ - ೩೭), |
ಪದ್ಯ - ೩೮
[ಸಂಪಾದಿಸಿ]ಸಗ್ಗದಾಣ್ಮನ ವಜ್ರಹತಿಯಿಂದೆ ಸಾಗರಕೆ |
ಮುಗ್ಗುವ ಕುಲಾದ್ರಿಗಳ ಮರಿಗಳ ಸಮೂಹಮೆನ |
ಲೊಗ್ಗಿನಿಂ ಪೆರ್ಗಡಲ ನೀರ್ಮೊಗೆಯಲಿಳಿದ ಕಾರ್ಮುಗಿಲ ಬಳಗಂಗಳೆನಲು ||
ದಿಗ್ಗಜಮನೇ ಕಂಗಳಾದುವೆನೆ ಕರಿಘಟೆಯ |
ಮೊಗ್ಗರಂ ತಿಳಿಗೊಳಂಗಳ ಸಲಿಲಪಾನಕಿಳೆ |
ನೆಗ್ಗಿದಲ್ಲದೆ ಮಾಣದೆಂಬಿನಂ ಪೊಳಲ ಪೊರೆಮುಟ್ಟು ಬಂದಪುದೆಂದನು ||38||
ಸಗ್ಗದಾಣ್ಮನ-;ಸಗ್ಗದ ಆಣ್ಮ(ಒಡೆಯ)= ಇಂದ್ರನ, ವಜ್ರಹತಿಯಿಂದೆ ಸಾಗರಕೆ ಮುಗ್ಗುವ= ವಜ್ರಾಯುಧದ ಪೆಟ್ಟಿನಿಂದ ಬಿದ್ದ, ಕುಲಾದ್ರಿಗಳ ಮರಿಗಳ ಸಮೂಹಮೆನಲೊಗ್ಗಿನಿಂ= ದೊಡ್ಡ ಪರ್ವತಗಳ ಮರಿಗಳ ಸಮೂಹವು,ಅಥವಾ, ಪೆರ್ಗಡಲ ನೀರ್ಮೊಗೆಯಲಿಳಿದ ಕಾರ್ಮುಗಿಲ ಬಳಗಂಗಳೆನಲು= ನೀರು ಕುಡಿಯಲು ಇಳಿದ, ಅಥವಾ ಕಪ್ಪುಮೋಡಗಳ ಬಳಗಗಳುನೀರು ಮೊಗೆಯಲು ಬಂದವೋ ಎನಲು,, ದಿಗ್ಗಜಮನೇಕಂಗಳಾದುವೆನೆ= ಅಥವಾ ಅನೇಕ ದಿಗ್ಗಜಗಳು ಬಂದಂತೆ, ಕರಿಘಟೆಯ ಮೊಗ್ಗರಂ=ಆನೆಗಳ ಗುಂಪು, ತಿಳಿಗೊಳಂಗಳ= ಸರೋವರಗಳನ್ನು, ಸಲಿಲಪಾನಕೆ ಇಳೆ ನೆಗ್ಗಿದು ಅಲ್ಲದೆ= ನೀರು ಕುಡಿಯಲು, ಭೂಮಿಯು ಕುಸಿಯದೆ ಮಾಣದೆಂಬಿನಂ-:ಮಾಣದು ಎಂಬಿನಂ=ಇರದು ಎಂಬಂತೆ, ಪೊಳಲ= ನಗರದಿಂದ ಪೊರೆಮುಟ್ಟು=ಹೊರಟು, ಬಂದಪುದೆಂದನು-: ಬಂದಪುದು ಎಂದನು, ಭೀಮ
(ಪದ್ಯ - ೩೮), |
ಪದ್ಯ - ೩೯
[ಸಂಪಾದಿಸಿ]ಖಳರ ಪುರುಷಾರ್ಥಮಂ ಕಾಮಿಸುವ ಯಾಚಕಾ |
ವಳಿಯಂತೆ ಪೊಳಲಿಂದೆ ಪೊರಮಟ್ಟು ಸರಸಿಯೊಳ್ |
ಮುಳುಗುತಿರ್ಪ್ಪಾನೆಗಳ ದಾನಾಭಿಲಾಷೆಯಂ ಬಿಟ್ಟಳಿಕುಳಂ ತೊಲಗಲು ||
ಕಳಕಳಿಸಿ ನಗುವ ಸಜ್ಜನರವೊಲ್ ಸರಸ ಪರಿ |
ಮಳದ ಮಕರಂದಮಂ ಭ್ರಮರಾವಳಿಗೆ ಮಾಜ |
ದೊಲಿದಿತ್ತು ಮರೆವ ಬೆಳ್ದಾವರೆಯ ಬಿಚ್ಚಲರ್ಗಳ ಪೆರ್ಚ ನೋಡೆಂದನು ||
ಖಳರ= ದುಷ್ಟರ,ದುಷ್ಟರಿಂದ, ಪುರುಷಾರ್ಥಮಂ ಕಾಮಿಸುವ ಯಾಚಕಾ ವಳಿಯಂತೆ= ಒಳ್ಳಯದನ್ನು ಅಪೇಕ್ಷಿಸುವ ಬೇಡುವವರ ಸಮೂಹದಂತೆ, ಪೊಳಲಿಂದೆ= ಪಟ್ಟಣದಿಂದ, ಪೊರಮಟ್ಟು= ಹೊರಟು, ಸರಸಿಯೊಳ್= ಸರೋವರದಲ್ಲಿ, ಮುಳುಗುತಿರ್ಪ್ಪಾನೆಗಳ= ಮುಳುಗುತ್ತಿರುವ ಆನೆಗಳ, ದಾನಾಭಿಲಾಷೆಯಂ=ಮದೋದಕವನ್ನು ಕೊಡುವ ಆಸೆಯನ್ನು ಬಿಟ್ಟಳಿಕುಳಂ-: ಬಿಟ್ಟು ಅಳಿಕುಂ= ಸ್ವೀಕರಿಸದೆ ತೊಲಗಲು= ಹೊರಟುಹೋಗಲು, ಕಳಕಳಿಸಿ ನಗುವ= ಸಂತಸದಿಂದ ನಗುವ, ಸಜ್ಜನರವೊಲ್= ಸಜ್ಜನರಂತೆ, ಸರಸ ಪರಿಮಳದ ಮಕರಂದಮಂ= ಮಧುರ ಸುವಾಸನೆಯ ಮಕರಂದವನ್ನು ಭ್ರಮರಾವಳಿಗೆ= ದುಂಬಿಗಳಿಗೆ, ಮಾಜದೊಲಿದಿತ್ತು-: ಮಾಜದೆ ಒಲಿದು ಇತ್ತು= ಮುಚ್ಚಿಡದೆ ಪ್ರೀತಿಯಿಂದ ಕೊಟ್ಟು, ಮರೆವ ಬೆಳ್ದಾವರೆಯ ಬಿಚ್ಚಲರ್ಗಳ ಪೆರ್ಚ= ಹೊಳೆಯುವ ಬಿಳಿತಾವರೆಯ ಅರಳಿದೆಸಳುಗಳ ಹಿರಿಮೆಯನ್ನು, ನೋಡೆಂದನು, ಭೀಮ.
(ಪದ್ಯ - ೩೯), |
ಪದ್ಯ - ೪೦
[ಸಂಪಾದಿಸಿ]ಕಾರ್ಗಾಲದಭ್ರಮಾಲೆಗಳಮರಸರಣಿಯೊಳ್ |
ತಾರ್ಗೂಡುತೆತ್ತಲುಂ ನಿಬಿಡಮಪ್ಪಂದದಿಂ |
ನೀರ್ಗುಡಿಯೆ ಪೊಳಲ ಪೆರ್ಬಾಗಿಲ್ಗಳಿಂದೆ ಪೊರಮಡುವ ವರಸರಸಿಯಿಂದೆ ||
ಊರ್ಗೆ ಮರಳುವ ತೇಜಿಗಳ ಸಾಲ್ಗಳಾ ಮಧ್ಯ |
ಮಾರ್ಗದೊಳ್ ತವೆ ತೀವಿ ಸಂದಣಿಸುತಿವೆ ನೃಪರೊ |
ಳಾರ್ಗಿವನ ಸೌಭಾಗ್ಯಮುಂಟಮಮ ಪೊಗಳ್ವೆನೆಂತಣುಗ ನೋಡಚ್ಚರಿಯನು ||40||
ಕಾರ್ಗಾಲದಭ್ರಮಾಲೆಗಳಮರಸರಣಿಯೊಳ್-:ಕಾರ್ಗಾಲದ= ಮಳೆಗಾಲದ ಅಭ್ರಮಾಲೆಗಳ= ಮೋಡದ ಮಾಲೆಗಳ, ಅಮರಸರಣಿಯೊಳ್= ಆಕಾಶಮಾರ್ಗದಲ್ಲಿ ತಾರ್ಗೂಡುತ=ಒಂದಕ್ಕೊಂದು ಸೇರುತ್ತಾ ಎತ್ತಲುಂ ನಿಬಿಡಮಪ್ಪಂದದಿಂ-:ಎತ್ತಲುಂ ನಿಬಿಡಂ ಅಪ್ಪ ಅಂದದಿಂ;ಎಲ್ಲಾಕಡೆಯೂ ಒತ್ತೊತ್ತಾಗಿ ಇರುವರೀತಿಯಲ್ಲಿ, ನೀರ್ಗುಡಿಯೆ=ನೀರುಕುಡಿಯಲು, ಪೊಳಲ= ಪಟ್ಟಣದ, ಪೆರ್ಬಾಗಿಲ್ಗಳಿಂದೆದೊಡ್ಡಬಾಗಿಲಿಂದ, ಪೊರಮಡುವವರ= ಹೊರಡುವವರ, ಸರಸಿಯಿಂದೆ= ಸರಸ್ಸಿನಿಂದ, ಊರ್ಗೆ= ಊರಿಗೆ, ಮರಳುವ= ಹಿಂತಿರುಗುವ ತೇಜಿಗಳ= ಕುದುರೆಗಳ, ಸಾಲ್ಗಳು= ಶಾಲುಗಳು, ಆ ಮಧ್ಯ ಮಾರ್ಗದೊಳ್ದಾರಿಯ ಮಧ್ಯದಲ್ಲಿ, ತವೆ ತೀವಿ= ಹೆಚ್ಚಾಗಿ, ಸಂದಣಿಸುತಿವೆ= ಸೇರಿಕೊಳ್ಳುತ್ತಿವೆ; ನೃಪರೊ ಳು ಆರ್ಗಿವನ ಸೌಭಾಗ್ಯಮುಂಟುರಾಜರಲ್ಲಿ ಯಾರಿಗೆ ಇವನ ಭಾಗ್ಯವಿದೆ! ಯಾರಿಗೂ ಇಲ್ಲ. ಅಮಮ! ಪೊಗಳ್ವೆನೆಂತು= ಹೇಗೆ ಹೊಗಳಲಿ! ಅಣುಗ= ಬಾಲಕನೇ ನೋಡು ಅಚ್ಚರಿಯನು= ಆಶ್ಚರ್ಯವನ್ನು', ಎಂದನು ಭೀಮ.
(ಪದ್ಯ - ೪೦), |
ಪದ್ಯ - ೪೧
[ಸಂಪಾದಿಸಿ]ಬೇರೆಬೇರಿನಿತೆಲ್ಲಮಂ ಕರ್ಣತನಯಂಗೆ |
ತೋರುತಿರ್ದಂ ಭೀಮನನ್ನೆಗಂ ಬಿಸಿಯ ಬಿಸಿ |
ಲೇರಿದುದು ಭದ್ರಾವತಿಯೊಳುಳ್ಳ ತೇಜಿಗಳ ಚಪಲತೆಯ ಸೌರಂಭದೆ ||
ಮೀರಿದ ಜವಂಗಳಂ ಕಂಡು ಕಾಲ್ಗೆಟ್ಟೆಳೆಯ |
ಲಾರದೊಯ್ಯನೆ ನಡೆವ ತೇರ್ಗುದುರೆಯಂ ಕಂಡು |
ನೂರೆಲೆಗೆಳೆಯನುಗ್ರಕೋಪದಿಂದುರಿಯನುಗುಳದೆ ಮಾಣನೆಂಬಂತಿರೆ ||41||
ಬೇರೆಬೇರಿನಿತೆಲ್ಲಮಂ-:ಬೇರೆ ಬೇರೆ ಇನತು ಎಲ್ಲಮುಂ-:ಪ್ರತ್ಯೇಕ ಪ್ರತ್ಯೇಕವಾಗಿ ಕರ್ಣತನಯನಿಗೆ ತೋರಿಸುತ್ತದ್ದನು ಭೀಮನು. ಅನ್ನೆಗಂ= ಅಷ್ಟುಹೊತ್ತಿಗೆ ಬಿಸಿಯ ಬಿಸಿಲೇರಿದುದು= ಬಿಸಿಲೇರಿ ಸೆಖೆಯಾಯಿತು. ಭದ್ರಾವತಿಯೊಳು ಉಳ್ಳ= ಇರುವ, ತೇಜಿಗಳ= ಕುದುರೆಗಳ, ಚಪಲತೆಯ= ಚುರುಕಿನ ಸೌರಂಭದೆ= ವೇಗದ, ಮೀರಿದ ಜವಂಗಳಂ ಕಂಡು= ಹೆಚ್ಚಿ ವೇಗದವುಗಳನ್ನು ಕಂಡು, ಕಾಲ್ಗೆಟ್ಟೆಳೆಯಲಾರದೊಯ್ಯನೆ= ಆದರೂ ಕಾಲ್ಗೆಟ್ಟು= ಕಾಲುಸೋತು ಎಳೆಯಲಾದೆ ಒಯ್ಯನೆ= ಮೆಲ್ಲಗೆ ನಡೆವ ತೇರ್ಗುದುರೆಯಂ ಕಂಡು= ನಡೆಯುವ ರಥದ ಕುದುರೆಯನ್ನು ನೋಡಿ, ನೂರೆಲೆಗೆಳೆಯನುಗ್ರಕೋಪದಿಂದುರಿಯನುಗುಳದೆ ಮಾಣನೆಂಬಂತಿರೆ-: ನೂರೆಲೆ ಗೆಳೆಯನು= ಸೂರ್ಯನು, ಉಗ್ರಕೋಪದಿಂದ= ಸಿಟ್ಟಿನಿಂದ, ಉರಿಯನು= ಬೆಂಕಿಯನ್ನು, ಉಗುಳದೆ ಮಾಣನು-:ಬೀರದೆ ಬಿಡನು, ಎಂಬಂತೆ ಇರೆ= ಎನ್ನುವ ಹಾಗೆ (ಬಿಸಿಲೇರಿತು).
(ಪದ್ಯ - ೪೧), |
ಪದ್ಯ - ೪೨
[ಸಂಪಾದಿಸಿ]ಭಾನು ಮಧ್ಯಾಹ್ನಗತನಾದನೀ ಕುದುರೆಗಳೊ |
ಳಾನುತ್ತಮಾಶ್ವಮಂ ಕಂಡುದಿಲ್ಲದರಿಂದ |
ಮೇನದಂ ಪೊರಮಡಿಸರೋ ಪೊಳಲೊಳಿಲ್ಲವೋ ಕಣ್ಗೆ ಗೋಚರಮಾಗದೋ ||
ಈ ನಿದಾನವನರಿವೊಡೆಂತುಟೆಮಗೆಲೆ ಕರ್ಣ |
ಸೂನು ಪೇಳೆಂದು ಚಿಂತಾವಿಷ್ಟನಾಗಿ ಪವ |
ಮಾನಜಂ ಚಿತ್ತದೊಳ್ ದೇವಪುರ ಲಕ್ಷ್ಮೀಶನಂಘ್ರಿಯಂ ಧ್ಯಾನಿಸಿದನು ||42||
ಭಾನು ಮಧ್ಯಾಹ್ನಗತನಾದನು= ಸೂರ್ಯನು ಮಧ್ಯಾಹ್ನದ ಸಮಯಕ್ಕೆ ಬಂದನು, ಈ ಕುದುರೆಗಳೊಳು= ಈ ನೀರು ಕುಡಿಯಲು ಬಂದ ಕುದುರೆಗಳಲ್ಲಿ ಉನುತ್ತಮಾಶ್ವಮಂ ಕಂಡುದಿಲ್ಲ= ಉತ್ತಮ ಯಜ್ಞಕುದುರೆಯನ್ನು ಕಾಣಲಿಲ್ಲ. ಅದರಿಂದ ಮೇಣ್ ಅದಂ ಪೊರಮಡಿಸರೋ= ಅದ್ದರಿಂದ ಅದನ್ನು ಹೊರತರುವರೋ ಇಲ್ಲವೋಎಂಬ ಚಿಂತೆಯಾಗಿದೆ. ಪೊಳಲೊಳಿಲ್ಲವೋ= ಅಥವಾ ಈನಗರದಲ್ಲಿ ಇಲ್ಲವೋ? ಕಣ್ಗೆ ಗೋಚರಂ ಆಗದೋ= ಅಥವಾ ಅದು ಕಣ್ಣಿಗೆ ಗೋಚರಿಸದೋ? ಈ ನಿದಾನವನು= ಇದರ ಕಾರಣವನ್ನು, ಅರಿವೊಡೆ= ತಿಳಿಯಲು, ಎಂತುಟೆ ಎಮಗೆ ಎಲೆ ಕರ್ಣಸೂನು ಪೇಳು= ನಮಗೆ ಹೇಗೆ (ಸಾಧ್ಯ) ಹೇಳು ಎಂದು ಚಿಂತಾವಿಷ್ಟನಾಗಿ= ಚಿಂತಿತನಾಗಿ, ಪವಮಾನಜಂ= ಭೀಮನು, ಚಿತ್ತದೊಳ್= ಮನಸ್ಸಿನಲ್ಲಿ, ದೇವಪುರ ಲಕ್ಷ್ಮೀಶನಂಘ್ರಿಯಂ ಧ್ಯಾನಿಸಿದನು= ಲಕ್ಷ್ಮೀಶನ ಪಾದವನ್ನು ಧ್ಯಾನಿಸಿದನು.
</poem>
(ಪದ್ಯ - ೪೨), |
- ~~ಓಂ~~
- V.VII.II00IIIXX
ಹೋಗಿ
[ಸಂಪಾದಿಸಿ]ನೋಡಿ
[ಸಂಪಾದಿಸಿ]ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
[ಸಂಪಾದಿಸಿ]- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.